diff --git "a/Data Collected/Kannada/MIT Manipal/Kannada-Scrapped-dta/\340\262\250\340\262\277\340\262\260\340\262\276\340\262\263_.txt" "b/Data Collected/Kannada/MIT Manipal/Kannada-Scrapped-dta/\340\262\250\340\262\277\340\262\260\340\262\276\340\262\263_.txt" new file mode 100644 index 0000000000000000000000000000000000000000..e5b0aec5857728899b353671877d493d2338eaed --- /dev/null +++ "b/Data Collected/Kannada/MIT Manipal/Kannada-Scrapped-dta/\340\262\250\340\262\277\340\262\260\340\262\276\340\262\263_.txt" @@ -0,0 +1,203 @@ +ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. +ಜೇಬಿಗೆ ಕೈ ಹಾಕಿ ನೋಡಿದ. +ಬರೇ ಇಪ್ಪತ್ತೇಳು ರೂಪಾಯಿ ಮಾತ್ರ ಉಳಿದಿದೆ. +ಇದರಲ್ಲಿ ಮನೆಗೆ ಹಿಂತಿರುಗಿ ಹೋಗಲು ಬಸ್ಸಿಗೆ ಸುಮಾರು ಹದಿನೆಂಟು ರೂಪಾಯಿ ಬೇಕು. +ಮತ್ತೆ ಉಳಿಯುವುದು ಬರೇ ಒಂಭತ್ತು ರೂಪಾಯಿ. +ಇದರಲ್ಲಿ ಚಹಾ, ತಿಂಡಿ ಸಿಗುವುದು ಕಷ್ಟ. +ಖಾಲಿ ಚಹಾ ಕುಡಿದರೂ ಹಸಿವು ನೀಗಲಾರದು. +ಕಡ್ಲೆ ಮಾರುವ ಹುಡುಗ ಪಕ್ಕದಲ್ಲೇ ಹಾದು ಹೋದಾಗ ಪುರಂದರನ ಮುಖದಲ್ಲಿ ನಗು ಅರಳಿತು. +ಐದು ರೂಪಾಯಿ ಕೊಟ್ಟು, ಒಂದು ಕಡ್ಲೆಕಾಯಿ ಪೊಟ್ಟಣ ತೆಗೆದುಕೊಂಡು ತಿನ್ನತೊಡಗಿದ. +ತನ್ನ ಕೈಯಲ್ಲಿದ್ದ ಫೈಲನ್ನು ಕಲ್ಲು ಬೆಂಚಿನ ಮೇಲಿಟ್ಟು, ಕಾಲನ್ನು ಚಪ್ಪಲಿಯಿಂದ ಕಳಚಿ ಮೇಲೆಳೆದು ಕೊಂಡು ಮಡಚಿ ಕುಳಿತು ಕಡಲೆ ತಿನ್ನುವ ಕಾರ್ಯವನ್ನು ಮುಂದುವರಿಸಿದ. +ಸ್ವಲ್ಪ ಹಾಯೆನಿಸಿತು. +ಪುರಂದರ ಈಗ ವಾಸ್ತವಕ್ಕೆ ಬಂದ. +ಅವನು ಮೈದಾನದ ಮೂಲೆಯನ್ನು ದೃಷ್ಟಿಸಿದ. +ಅಲ್ಲಿ ಬೃಹದಾಕಾರದ ವೇದಿಕೆ ಸಜ್ಜುಗೊಂಡಿತ್ತು. +ವೇದಿಕೆಯ ಮೇಲೆ ಬೆಲೆ ಬಾಳುವ ಅಲಂಕರಿಸಿದ ಕುರ್ಚಿ ಮೇಜುಗಳನ್ನು ಸಾಲಾಗಿ ಇಟ್ಟಿದ್ದರು. +ವೇದಿಕೆಯ ಒಳಗೆ ಹಾಗೂ ಹೊರಗೆ ದೊಡ್ಡ ದೊಡ್ಡ ಬ್ಯಾನರುಗಳು ರಾರಾಜಿಸುತ್ತಿದ್ದುವು. +ಈಗಾಗಲೇ ಅರ್ಧಾಂಶ ಕುರ್ಚಿಗಳು ಜನರಿಂದ ತುಂಬಿದ್ದು ಜನ ಸಾಗರ ತಂಡೋಪ ತಂಡವಾಗಿ ಮೈದಾನದ ಕಡೆಗೆ ನುಗ್ಗುತಿತ್ತು. +ಕೆಲವರ ಕೈಯಲ್ಲಿ ಪತಾಕೆಗಳು, ಹೆಗಲಿನಲ್ಲಿ ಚಿತ್ರಗಳಿಂದ ಮುದ್ರಿತವಾದ ಬಣ್ಣದ ಶಾಲುಗಳು, ಕೆಲವರ ತಲೆಯಲ್ಲಿ ಬಣ್ಣದ ಮುಂಡಾಸು, ಟೋಪಿಗಳು, ಲೋರಿಗಳಲ್ಲಿ, ಮೆಟಡೋರು ವಾಹನಗಳಲ್ಲಿ, ಕಾರುಗಳಲ್ಲಿ ಬಂದ ಜನರು ಉಲ್ಲಾಸದಿಂದ ಮೈದಾನದಲ್ಲಿ ಜಮಾಯಿಸಿದರು. +ಕೆಲವೇ ಗಂಟೆಗಳಲ್ಲಿ ಮೈದಾನ ಜನಸಾಗರದಿಂದ ತುಂಬಿ ಹೋಯಿತು. +ಧ್ವನಿವರ್ಧಕ ಅರ್ಭಟಿಸ ತೊಡಗಿತು. +“ಹಲೋ, ವನ್… ಟೂ…. ತ್ರೀ…. . +ಮೈಕ್ ಟೆಸ್ಟಿಂಗ್… ಹಲೋ…… ಎಲ್ಲಾ ಬಾಂಧವರಿಗೆ ಸ್ವಾಗತ. +ನಿಮ್ಮ ನೆಚ್ಚಿನ ಜನ ನಾಯಕ, ಯುವ ಶಕ್ತಿಯ ನೇತಾರರಾದ ಮಾನ್ಯ ಸಚಿವರು ಇನ್ನು ಕೆಲವೇ ಕ್ಷಣಗಳಲ್ಲಿ ವೇದಿಕೆಯನ್ನು ಅಲಂಕರಿಸಲಿದ್ದಾರೆ. +ದಯವಿಟ್ಟು ಎಲ್ಲರೂ ಕುಳಿತು ಕೊಂಡು ಅವರ ಮಾತನ್ನು ಆಲಿಸಬೇಕು. +ಗಲಾಟೆ ಗೊಂದಲಕ್ಕೆ ಅವಕಾಶ ನೀಡದೆ ಶಾಂತ ರೀತಿಯಲ್ಲಿ ಸಭೆಯನ್ನು ನಡೆಸಿ ಕೊಡಬೇಕಾಗಿ ವಿನಂತಿಸುತ್ತಿದ್ದೇವೆ.” +ಪುರಂದರನ ಕೈಯಲ್ಲಿದ್ದ ಕಡಲೆ ಮುಗಿಯಿತು. +ಖಾಲಿ ಕಾಗದವನ್ನು ಬಿಡಿಸಿ ಅದರ ತಳದಲ್ಲಿದ್ದ ಕೊನೆಯ ಕಡಲೆಯನ್ನು ಬಾಯಿಗೆ ಹಾಕಿ ಕಾಗದವನ್ನು ಓದ ತೊಡಗಿದ. +ಅದೂ ಅಂದಿನ ಕಾರ್ಯಕ್ರಮದ ಕರಪತ್ರ, ಸಚಿವರ ಫೋಟೋದೊಂದಿಗೆ ಅವರ ಜನಪರ ಕಾಳಜಿಯ ಬಗ್ಗೆ ವಿವರ ಕೊಡಲಾಗಿತ್ತು. +ತನ್ನ ಜೀವನದಲ್ಲಿ ರಾಜಕೀಯ ಹಾಗೂ ಧರ್ಮ ಎರಡಕ್ಕೂ ನಿಕೃಷ್ಟ ಸ್ಥಾನ ಕೊಟ್ಟಿದ್ದ ಪುರಂದರ, ಕರಪತ್ರ ಬಿಸಾಡಿ, ಕಾಲನ್ನು ಕೆಳಕ್ಕೆ ಬಿಟ್ಟು ಚಪ್ಪಲಿ ಸಿಕ್ಕಿಸಲು ನೋಡಿದಾಗ ಬರೇ ಒಂದು ಚಪ್ಪಲಿ ಮಾತ್ರ ಉಳಿದಿತ್ತು. +ಪುರಂದರ ಲಕ್ಷ ರೂಪಾಯಿ ಕಳಕೊಂಡವನಂತೆ ಗಾಬರಿಗೊಂಡ. +ಇದ್ದ ಒಂದು ಚಪ್ಪಲಿಯನ್ನು ಕಾಲಿಗೆ ಸಿಕ್ಕಿಸಿ ಜನರ ಮಧ್ಯದಿಂದ ದಾರಿ ಮಾಡಿಕೊಂಡು ಮೈದಾನದ ಮೂಲೆಗೆ ಬೇಲಿ ಹಾಕಿದ ಸ್ಥಳದ ಕಡೆ ಓಡಿದ. +ದೂರದಲ್ಲಿ ನಾಯಿಯೊಂದು ಅವನ ಚಪ್ಪಲಿಯನ್ನು ಬಾಯಲ್ಲಿ ಕಚ್ಚಿಕೊಂಡು ದೂರ ಓಡುತಿತ್ತು. +ಮೈದಾನದ ಪೆವಲಿನಿನ ಕಟ್ಟಡದ ಹಿಂಬದಿಗೆ ಓಡಿದ ನಾಯಿ ಅಲ್ಲಿಯೇ ಇದ್ದ ಮರದ ಕೆಳಗೆ ಅಡ್ಡಾದಿಡ್ಡಿ ಬಿದ್ದು ಕೊಂಡಿರುವ ಭಿಕ್ಷುಕರ ಮಧ್ಯೆ ಅದನ್ನು ಬಿಸಾಡಿ ಓಡಿ ಹೋಯಿತು. +ಪುರಂದರ ಓಡಿ ಹೋಗಿ ಚಪ್ಪಲಿಯನ್ನು ತನ್ನ ಕಾಲಿಗೆ ಸಿಕ್ಕಿಸಿದ. +ಅದರ ಅಂಗುಷ್ಟ ಕಿತ್ತು ಹೋಗಿತ್ತು. +ನಾಯಿಗೆ ಹಿಡಿಶಾಪ ಹಾಕಿ ಮನೆಗೆ ಹೋಗಲು ಸರ್ವಿಸ್ ಬಸ್‌ಸ್ಟಾಂಡಿಗೆ ಕುಂಟುತ್ತಾ ಸಾಗಿದ. +ಧ್ವನಿವರ್ಧಕ ಮತ್ತೆ ಆರ್ಭಟಿಸಿತು. +“ಯುವ ನೇತಾರ, ಯುವ ಶಕ್ತಿ, ಬಡವರ ಬಂಧು, ಮಾನ್ಯ ಸಚಿವರು ವೇದಿಕೆ ಏರುತ್ತಿದ್ದಾರೆ. +ಎಲ್ಲರೂ ಎದ್ದು ನಿಂತು ಚಪ್ಪಾಳೆಯೊಂದಿಗೆ ಸ್ವಾಗತಿಸಬೇಕು.” +ಇಡೀ ಜನಸ್ತೋಮ ಸಮ್ಮೋಹನಕ್ಕೆ ಒಳಗಾದಂತೆ ಎದ್ದು ನಿಂತು ಜಯಕಾರ ಕೂಗಿತು. +ಪುರಂದರ ಮನೆ ಕಡೆಗೆ ಹೊರಟವನು ಒಮ್ಮೆ ವೇದಿಕೆಯತ್ತ ನೋಡಿದ. +ವೇದಿಕೆಯಿಂದ ಸುಮಾರು ಅರ್ಧ ಪರ್ಲಾಂಗು ದೂರದಲ್ಲಿದ್ದ ಅವನಿಗೆ ವೇದಿಕೆಯಲ್ಲಿದ್ದ ಗಣ್ಯರ ಮುಖ ಚರ್ಯೆ ಸರಿಯಾಗಿ ಕಾಣಲಿಲ್ಲ. +ಧ್ವನಿವರ್ಧಕ ಮತ್ತೆ ಅರ್ಭಟಿಸಿತು. +“ಕ್ಷಮಿಸಬೇಕು ಸಚಿವರು ದಿನದ ಇಪ್ಪತ್ತನಾಲ್ಕು ಗಂಟೆಯೂ ಜನಪರ ಕಾಳಜಿಯಲ್ಲಿದ್ದು ಸಮಯವಕಾಶ ಇಲ್ಲವಾದುದರಿಂದ ಮತ್ತೆ ಮುಂದಿನ ಅವರ ಕಾರ್ಯಕ್ರಮಕ್ಕೆ ವಿಳಂಬವಾಗುವ ಸಾಧ್ಯತೆಯಿರುವುದರಿಂದ ಬಾಂಧವರನ್ನು ಉದ್ದೇಶಿಸಿ ನೇರವಾಗಿ ಎರಡು ಮಾತು ಆಡಲಿದ್ದಾರೆ….” +ಪುರಂದರ ಮನಸ್ಸು ಬದಲಿಸಿದ. +ಹೇಗೂ ಮನೆಗೆ ತಡವಾಗುತ್ತದೆ. +ಹೋಗಿ ಮಾಡುವಂತದ್ದು ಏನೂ ಇಲ್ಲ. +ಎರಡು ನಿಮಿಷ ಭಾಷಣ ಕೇಳಿ ಬಿಡುವ ಎಂದು ತೀರ್ಮಾನಕ್ಕೆ ಬಂದ. +ಬಿಳಿ ಜುಬ್ಬಾ, ಬಿಳಿ ಧೋತಿ ಉಟ್ಟಮಾನ್ಯ ಸಚಿವರು ಅತ್ಯುತ್ಸಾಹದಿಂದ ಮಾತಿಗಿಳಿದರು. +ಬಾಂಧವರೇ, ಸಾಧಿಸಬೇಕು ಎಂಬ ಛಲ ಇದ್ದರೆ ನಮ್ಮ ಸರಕಾರದಿಂದ ಸಹಾಯ, ಸಹಕಾರ ಖಂಡಿತ ಇದೆ. +ಮುಖ್ಯವಾಗಿ ವಿದ್ಯಾವಂತ ಯುವ ಪೀಳಿಗೆ ಮುಂದೆ ಬರಬೇಕು. +ಸ್ವ ಉದ್ಯೋಗ ಮಾಡಲು ಎಷ್ಟೋ ಯೋಜನೆಗಳು ಕಾರ್ಯ ನಿರತವಾಗಿವೆ. +ಬ್ಯಾಂಕ್ ಉದ್ದಿಮೆಗಳು ನಿಮ್ಮ ಸೇವೆಗೆ ಸದಾ ಸಿದ್ದವಾಗಿ ನಿಂತಿವೆ. +ಬೃಹತ್ ಉದ್ದಿಮೆ ಸಂಸ್ಥೆಗಳು ಅಲ್ಲಲ್ಲಿ ತಲೆ ಎತ್ತಿವೆ. +ಉದ್ಯೋಗಕ್ಕೆ ಬರವಿಲ್ಲ. +ಮೊದಲಾಗಿ ನಿಮಗೆ ಬೇಕಾದುದು ಆತ್ಮಬಲ, ಆತ್ಮ ಸ್ಥೆರ್ಯ, ಮನೋಬಲ, ಯುವ ಜನತೆಯ ಕೈಯಲ್ಲಿ ಈ ದೇಶದ ಚುಕ್ಕಾಣಿ ಇದೆ. +ನಿಮ್ಮ ಶಕ್ತಿಯಲ್ಲಿ ಈ ದೇಶದ ಬಲ ಅಡಗಿದೆ. +ಬನ್ನಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ನಮ್ಮಲ್ಲಿ ಹಲವಾರು ಯೋಜನೆಗಳಿವೆ. +ಹತಾಶರಾಗುವ ಅಗತ್ಯವಿಲ್ಲ. +ಯಾವುದೇ ಘಳಿಗೆಯಲ್ಲಿ, ಎಲ್ಲಾದರೂ ಸರಿ, ನನ್ನನ್ನು ನೇರ ಸಂಪರ್ಕಿಸಿದರೆ ನಿಮಗೆ ಪೂರ್ಣ ರೀತಿಯ ಸಹಾಯ ಸಹಕಾರ ನೀಡಲಾಗುವುದು…. . ” +ಮಾತು ಮುಗಿದಿಲ್ಲ. +ಕರತಾಡನ ಮುಗಿಲು ಮುಟ್ಟಿತು. +ಅದರೊಂದಿಗೆ ಜಯಕಾರ. +ಪುರಂದರ ತನ್ನ ಪಕ್ಕದಲ್ಲಿ ನಿಂತುಕೊಂಡು ಎರಡೂ ಕೈಯ ಕುಣಿ ಕುಣಿದು ಚಪ್ಪಾಳೆ ತಟ್ಟುವ ಯುವಕನನ್ನು ನೋಡಿದ. +ಅವನು ಚಪ್ಪಾಳೆ ತಟ್ಟಿ ಸುಸ್ತಾಗಿ ನಿಂತುಕೊಂಡ ನಂತರ ಪುರಂದರ ಅವನ ಹೆಗಲು ಮುಟ್ಟಿ ಕೇಳಿದ. +“ಈ ಮಂತ್ರಿಗಳು ಹೇಳಿದ ಮಾತಿನಲ್ಲಿ ನಿಮಗೆ ನಂಬಿಕೆಯಿದೆಯೇ?” +ಆ ತರುಣನ ಮುಖ ಗಂಭೀರವಾಯಿತು. +ಪುರಂದರನ ಪ್ರಶ್ನೆಗೆ ಉತ್ತರಿಸುವಷ್ಟು ವ್ಯವಧಾನ ಅವನಲ್ಲಿರಲಿಲ್ಲ. +ಅವನು ಗಳಿಗೆಗೊಮ್ಮೆ ವೇದಿಕೆಯನ್ನು ನೋಡುತಿದ್ದ. +ಪುರಂದರ ತನ್ನ ಪ್ರಶ್ನೆ ವ್ಯರ್ಥವಾಯಿತೇನೋ ಎಂದು ಆಲೋಚಿಸುವಾಗ ಆ ಯುವಕ ಒಂದೇ ಸವನೆ ಹೇಳ ತೊಡಗಿದ. +“ನಾನು ನೋಡಿದ ಮಂತ್ರಿಗಳಲ್ಲಿ ಅತ್ಯಂತ ಜನಪರ ಕಾಳಜಿಯಿರುವ ವ್ಯಕ್ತಿಯೆಂದರೆ ಇವರೊಬ್ಬರೇ. +ನುಡಿದಂತೆ ನಡೆಯುವ ವ್ಯಕ್ತಿತ್ವ. +ತನ್ನ ಬಳಿ ಬಂದ ಯಾರೇ ಆಗಲಿ, ಅವರ ಕೆಲಸ ಪೂರೈಸಿಕೊಡದೆ ಇರುವುದಿಲ್ಲ. +ಅವರ ಮಾತು, ಕೃತಿ ಎರಡೂ ಒಂದೇ. +ಮತ್ತೆ ನಿಮಗೇನಾದರೂ ಸಮಸ್ಯೆ ಇದೆಯಾ?” +ಆ ತರುಣ ಪುರಂದರನಿಗೆ ಮರು ಪ್ರಶ್ನೆ ಹಾಕಿದ. +“ಸಮಸ್ಯೆ ಇದೆ. +ಅವರನ್ನು ವೈಯುಕ್ತಿಕವಾಗಿ ಕಾಣಬೇಕಾಗಿತ್ತು.” + ಪುರಂದರ ಸಪ್ಪೆ ಮುಖ ಮಾಡಿಕೊಂಡು ಹೇಳಿದ. +“ಅದಕ್ಕೇನಂತೆ, ನೀವೊಂದು ಕೆಲಸ ಮಾಡಿ, ನಾಳೆ ಉಪ್ಪಿನಂಗಡಿಯ ಕರಾಯ ಗ್ರಾಮದಲ್ಲಿ ಅವರ ಗ್ರಾಮ ವಾಸ್ತವ್ಯಯಿದೆ. +ನಾಳೆ ಬೆಳಿಗ್ಗೆ ಎಂಟು ಗಂಟೆಗೆ ನೀವು ಅಲ್ಲಿ ಹಾಜರಾದರೆ ನಿಮಗೆ ಖಂಡಿತ ಮಾತಾಡಲು ಸಿಗುತ್ತಾರೆ. +ಇದಕ್ಕೆ ಯಾರ ಪರಿಚಯ ಪತ್ರದ ಅಗತ್ಯವಿಲ್ಲ. +ಅವರೇ ತುಂಬಾ ಆತ್ಮೀಯವಾಗಿ ಮಾತಾಡಿ ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತಾರೆ.” +ಮಂತ್ರಿಗಳು ವೇದಿಕೆಯಿಂದ ಕೆಳಗಿಳಿಯುವುದನ್ನೇ ಕಾಯುತಿದ್ದ ಯುವಕ ವೇದಿಕೆಯತ್ತ ದೌಡಾಯಿಸಿದ. +ಮರುದಿನ ಬೆಳಿಗ್ಗೆ ಪುರಂದರ ಮಂತ್ರಿ ಮಹಾಶಯರ ಗ್ರಾಮ ವಾಸ್ತವ್ಯ ಸ್ಥಳದಲ್ಲಿ ಹಾಜರಾದ. +ಅದೊಂದು ಕುಗ್ರಾಮವಾದರೂ ಈಗ ಗ್ರಾಮ ವಾಸ್ತವ್ಯದ ಹೆಸರಲ್ಲಿ ಪ್ರಚಾರಕ್ಕೆ ಬಲಿಯಾದ ಊರು. +ಹೊಸದಾಗಿ ನಿರ್ಮಾಣವಾದ ಮಣ್ಣಿನ ರಸ್ತೆ, ರಸ್ತೆಯ ಇಕ್ಕಲಗಳಲ್ಲಿ ಸಾಲು ಸಾಲಾಗಿ ನಿಂತ ವಾಹನಗಳು, ಬ್ಯಾನರ್‌ಗಳು ಮತ್ತು ಮಂತ್ರಿವರ್ಯರ ಕಟೌಟುಗಳು, ಮಾನ್ಯ ಮಂತ್ರಿಗಳು ಇದ್ದಾರೆ ಎಂದು ಪುರಂದರನಿಗೆ ಖಾತ್ರಿಯಾದಾಗ ಅವನ ಪ್ರಯಾಣದ ಶ್ರಮವೆಲ್ಲಾ ಮಾಯವಾಯಿತು. +ಪುರಂದರ ಸ್ಥಳಕ್ಕೆ ಮುಟ್ಟುವ ಮೊದಲೇ ನೂರಾರು ಜನರು ಸಮಸ್ಯೆಯೊಂದಿಗೆ ಕ್ಯೂ ನಿಂತಿದ್ದರು. +ಕೈಯಲ್ಲಿ ಅಹವಾಲು ಪತ್ರ, ಪುರಂದರ ಕೂಡಾ ಆ ಕ್ಯೂನಲ್ಲಿ ನಿಂತುಕೊಂಡ. +ತನ್ನ ಪೈಲನ್ನು ಒಮ್ಮೆ ತೆರೆದು ನೋಡಿ ಎಲ್ಲಾ ಸರಿಯಿದೆ ಎಂದು ತೃಪ್ತಿ ಪಟ್ಟುಕೊಂಡ. +ಪುರಂದರನ ಸರದಿ ಬಂದಾಗ ಸೂರ್ಯ ನೆತ್ತಿಗೇರಿದ್ದ. +ಹೊಟ್ಟೆ ಚುರುಗುಟ್ಟುತ್ತಿತ್ತು. +ಬೆಳಿಗ್ಗೆಯಿಂದ ಹೊಟ್ಟೆಗೆ ಏನೂ ಬಿದ್ದಿರಲಿಲ್ಲ. +ಆದರೂ ತನ್ನ ಆಸೆ ಈಡೇರಿದರೆ ಸಾಕು ಎಂಬ ಆತ್ಮವಿಶ್ವಾಸದೊಂದಿಗೆ ಜನರ ನೂಕು ನುಗ್ಗಲು ಮಧ್ಯೆ ದಾರಿ ಮಾಡಿಕೊಂಡು ಪುರಂದರ ಮಂತ್ರಿಗಳ ಕೋಣೆ ಹೊಕ್ಕಿದ. +ಅದೊಂದು ಖಾಸಗಿ ಕಟ್ಟಡ. +ಆ ವಿಶಾಲವಾದ ಕೋಣೆಯಲ್ಲಿ ಸುಮಾರು ಹತ್ತು ಹದಿನೈದು ಮಹಾನುಭಾವರು ಮಾನ್ಯ ಮಂತ್ರಿಗಳನ್ನು ಸುತ್ತುವರಿದಿದ್ದರು. +ಬಹುಶಃ ಮಂತ್ರಿಗಳಿಗೆ ತೀರಾ ಆಪ್ತರಾದವರು ಇರಬೇಕು ಎಂದೆನಿಸಿತು ಪುರಂದರನಿಗೆ. +ಅವರ ಹಾವಭಾವ, ಮಾತಿನ ಗಂಭೀರತೆ, ಬೆಲೆ ಬಾಳುವ ಉಡುಗೆ ತೊಡುಗೆ ಎಲ್ಲವನ್ನೂ ಒಂದರೆ ಕ್ಷಣದಲ್ಲಿ ನೋಡಿದ ಪುರಂದರ ತೀರಾ ಕುಬ್ಜನಾಗಿ ಹೋದ. +ಆದರೂ ಧೈರ್ಯ ಮಾಡಿ ಮಾನ್ಯ ಮಂತ್ರಿಯವರ ಎದುರು ನಿಂತು ಪೈಲು ಸಮೇತ ಕೈ ಮುಗಿದ. +ಮಾನ್ಯ ಮಂತ್ರಿಯವರು ನಗುತ್ತಾ ಬಲಗೈ ಮುಂದೆ ಮಾಡಿದರು. +ಪುರಂದರ ಕ್ಷಣ ಮಾತ್ರದಲ್ಲಿ ತನ್ನ ಪೈಲಿನಿಂದ ರೆಸ್ಯೂಮು ತೆಗೆದು ಬಾಗಿದ ಭಂಗಿಯಲ್ಲಿ ಅವರ ಕೈಗಿತ್ತ. +ರೆಸ್ಯೂಮಿನ ಮೇಲೆ ಕಣ್ಣಾಡಿಸಿದ ಮಾನ್ಯ ಮಂತ್ರಿಯವರು ಒಂದು ದೇಶಾವರಿ ನಗು ನಕ್ಕರು. +“ಕುಳಿತು ಕೊಳ್ಳಿ ಪುರಂದರ ರೇ”. +ಮಾನ್ಯ ಮಂತ್ರಿಗಳು ಪುರಂದರನ ಹೆಗಲ ಮೇಲೆ ಆತ್ಮೀಯವಾಗಿ ಕೈ ಹಾಕಿ ತನ್ನ ಪಕ್ಕದಲ್ಲಿ ಕುಳ್ಳಿರಿಸಿದರು. +ಪುರಂದರ ಮಾನ್ಯ ಮಂತ್ರಿಗಳ ಸೌಜನ್ಯತೆಯಿಂದ ಬೆವತು ಹೋದ. +ಅವನ ಬಾಯಿಯಿಂದ ಮಾತೇ ಹೊರಡಲಿಲ್ಲ. +ಅಲ್ಲಿ ನೆರೆದಿದ್ದ ಮಹಾನುಭಾವರು ಗುಂಪು ಗುಂಪಾಗಿ ಹರಟೆ ಹೊಡೆಯುತ್ತಾ, ನಗೆ ಕಡಲಲ್ಲಿ ತೇಲಾಡುತಿದ್ದರು. +ಕೆಲವರು ಮೊಬೈಲ್ ಕರೆಗಳಲ್ಲಿ ತಲ್ಲೀನರಾಗಿದ್ದರು. +ಮತ್ತೆ ಕೆಲವರು ಚಹಾ, ಕಾಫಿ ಹೀರುತ್ತಿದ್ದರು. +“ಏನಾಗ ಬೇಕಿತ್ತು?” ಮಾನ್ಯ ಮಂತ್ರಿಗಳು ಮತ್ತೊಮ್ಮೆ ಪುರಂದರನ ಬೆನ್ನು ತಟ್ಟಿದರು. +ಪುರಂದರ ಮಾತಾಡಲು ಬಾಯಿ ತೆರೆದ. + “ಸಾರ್…. ನನಗೆ…. . ”ಮಾನ್ಯ ಮಂತ್ರಿಗಳ ಆಪ್ತ ಕಾರ್ಯದರ್ಶಿ ಮೊಬೈಲ್‌ನೊಂದಿಗೆ ಹಾಜರಾದ. +ಮಂತ್ರಿ-ವರ್ಯರು ಮೊಬೈಲ್‌ನಲ್ಲಿ ಸಂಭಾಷಣೆಗೆ ನಿರತರಾದರು. +ಸುಮಾರು ಹತ್ತು ನಿಮಿಷದವರೆಗೆ ನಡೆದ ಮಾತುಕತೆಯನ್ನು ಆಲಿಸುತ್ತಾ ಪುರಂದರ ಕುಳಿತಿದ್ದ, ಕರೆ ಮುಗಿಯಿತು. +ಆಪ್ತ ಸಹಾಯಕ ಹೊರಟು ಹೋದ. +“ಹೇಳಿ ಪುರಂದರರೇ” ಪುನಃ ಬೆನ್ನು ತಟ್ಟಿದರು ಮಂತ್ರಿ ವರ್ಯರು. +“ಸಾರ್…. ನನಗೆ ಒಂದು……”ಮಾನ್ಯ ಮಂತ್ರಿಯವರ ವಾಹನ ಚಾಲಕ ಹಾಜರಾಗಿ ಮಾನ್ಯ ಮಂತ್ರಿಯವರ ಕಿವಿಯಲ್ಲಿ ಏನೋ ಅರುಹಿದ. +“ಸರಿ, ಸರಿ, ನೀನು ಅಮ್ಮಾವ್ರನ್ನು ದೇವಸ್ಥಾನಕ್ಕೆ ಕರಕೊಂಡು ಹೋಗಿ ಪೂಜೆ ಮುಗಿಸಿ ಬೇಗ ಕರಕೊಂಡು ಬಾ, ಮಧ್ಯಾಹ್ನದ ಮೇಲೆ ಬೇರೆ ಕಾರ್ಯಕ್ರಮ ಇದೆ. ಹುಷಾರು. ” ವಾಹನ ಚಾಲಕ ಹೊರಟು ಹೋದ. +“ಹೇಳಿ ಪುರಂದರರೇ…. +ಹೇಳಿ… ಹೇಳಿ…” ಮಾನ್ಯ ಮಂತ್ರಿಯವರು ಅವಸರ ಪಡಿಸಿದರು. +“ಸಾರ್, ನಾನು ಸ್ನಾತಕೋತ್ತರ ಪದವೀಧರ, ಸ್ವ ಉದ್ಯೋಗ ಮಾಡಬೇಕೆಂಬ ಆಸೆ. +ನನಗೆ ಬ್ಯಾಂಕಿಗೆ ಮತ್ತು ಇತರ ಕಛೇರಿಗಳಿಗೆ ಅಲೆದು ಅಲೆದು ಸಾಕಾಯಿತು. +ಸ್ವಾವಲಂಬನೆಯ ಕೆಲಸ ಬೇಡ ಅಂತ ನಿರ್ಣಯಕ್ಕೆ ಬಂದಿದ್ದೇನೆ. +ದಯವಿಟ್ಟು ನನಗೊಂದು ಉದ್ಯೋಗ ದೊರಕಿಸಿ ಕೊಡಿ.” ಪುರಂದರ ಎದ್ದು ನಿಂತು ಎರಡೂ ಕೈ ಮುಗಿದ. +“ಕುಳಿತು ಕೊಳ್ಳಿ ನಿಮ್ಮಂತಹ ಸ್ನಾತಕೋತ್ತರ ಪದವೀಧರರಿಗೆ ಕೆಲಸ ಸಿಗದೆ ಇರಲು ಸಾಧ್ಯವಿಲ್ಲ, ಹಟ ಬೇಕು, ಹಟ, ಇರಲಿ ಬಿಡಿ, ನಿಮಗೆ ಮಂಗಳೂರಿನಲ್ಲಿ ಕೆಲಸ ಕೊಡಿಸುವುದು ಕಷ್ಟ. +ನೀವು ಬೆಂಗಳೂರಿನಲ್ಲಿ ಕೆಲಸ ಮಾಡುವುದಾದರೆ ನಾನು ಮಾಡಿಸಿಕೊಡ ಬಲ್ಲೆ.” + ಮಾನ್ಯ ಮಂತ್ರಿಯವರು ಪುರಂದರನ ರೆಸ್ಯೂಮನ್ನು ಬಲಗೈಯಲ್ಲಿ ತಿರುಗಿಸುತ್ತಾ ಹೇಳಿದರು. +“ಎಲ್ಲಿಯೂ ಆಗಬಹುದು ಸಾರ್…. . ” ಪುರಂದರನ ಮುಖ ಅರಳಿತು. +“ಸರಿ, ನೀವು ಒಳಗೆ ಹೋಗಿ ನನ್ನ ಆಪ್ತ ಸಹಾಯಕರನ್ನು ಕಂಡು ಅವರ ಮೊಬೈಲ್ ನಂಬ್ರ ಪಡಕೊಳ್ಳಿ, ನಾನು ಬೆಂಗಳೂರಿನಲ್ಲಿದ್ದಾಗ ನನ್ನನ್ನು ಭೇಟಿಯಾಗಿ, ಉದ್ಯೋಗ ಮಾಡಿಸಿಕೊಡುತ್ತೇನೆ ಭಯಬೇಡ. ” ಮಾನ್ಯ ಮಂತ್ರಿಯವರು ಪುರಂದರನ ಭುಜ ತಟ್ಟಿ ಅಭಯ ನೀಡಿದರು. +ಪುರಂದರ ಆಪ್ತ ಸಹಾಯಕರನ್ನು ಕಂಡು ಅವರ ಮೊಬೈಲ್ ನಂಬ್ರ ಪಡೆದು ಹೊರ ಬರುವಾಗ ಸಾಕು ಸಾಕಾಯಿತು. +ಆ ಜನ ಸಂದಣಿಯಿಂದ ದೂರ ಬಂದು ನಿಂತಾದ ಮೇಲೆಯೇ ಅವನಿಗೆ ನೆಮ್ಮದಿಯಾಯಿತು. +ದಿನಗಳು ಉರುಳಿದುವು. +ಮಾನ್ಯ ಮಂತ್ರಿಗಳು ಜನ ಸಂಪರ್ಕ ಕಾರ್ಯಕ್ರಮ, ಹಾಗೂ ಗ್ರಾಮ ವಾಸ್ತವ್ಯ ಮುಗಿಸಿ ರಾಜಧಾನಿಗೆ ಹಿಂತಿರುಗುವಾಗ ಒಂದು ವಾರ ಹಿಡಿಯಬಹುದೆಂದು ಆಪ್ತ ಸಹಾಯಕರು ಹೇಳಿದುದ್ದರಿಂದ ಪುರಂದರ ಒಂದು ವಾರ ದಾಟುವುದನ್ನೇ ಕಾಯುತಿದ್ದ. +ಹಾಗೆಯೇ ವಾರ ಕಳೆದ ಮೇಲೆ ಪುರಂದರ ಆಪ್ತ ಸಹಾಯಕರನ್ನು ಮೊಬೈಲ್‌ನಲ್ಲಿ ಸಂಪರ್ಕಿಸಲು ಯತ್ನಿಸಿದ. +ಕೆಲವೊಮ್ಮೆ ಮೊಬೈಲ್ ಬಿಝಿಎಂತಲೂ, ಮತ್ತೊಮ್ಮೆ ಸಂಪರ್ಕವಿಲ್ಲವೆಂತಲೂ ಬರುತಿತ್ತು. +ಒಂದು ಮೂರು ದಿನದ ಎಡೆ ಬಿಡದ ಪ್ರಯತ್ನದಿಂದಾಗಿ ಕೊನೆಗೂ ಮಾನ್ಯ ಮಂತ್ರಿಗಳ ಆಪ್ತ ಸಹಾಯಕರು ಮಾತಾಡಲು ಸಿಕ್ಕಿದರು. +ಮಾನ್ಯ ಮಂತ್ರಿಗಳಿಗಿಂತಲೂ ಅವರು ತುಂಬಾ ಒತ್ತಡದಲ್ಲಿದ್ದಂತೆ ಪುರಂದರನಿಗೆ ಕಂಡು ಬಂತು. +“ಇನ್ನೊಂದು ಮೂರು ದಿನದಲ್ಲಿ ಬೆಂಗಳೂರಿಗೆ ಬರಬಹುದು.” ಆಪ್ತ ಸಹಾಯಕರಿಂದ ಸಂಕ್ಷಿಪ್ತ ಉತ್ತರ ಬಂತು. +ಮುಂದೆ ಮಾತಾಡಲು ಅವಕಾಶ ಸಿಗದೆ ಮೊಬೈಲ್ ಸಂಪರ್ಕ ನಿಂತು ಹೋಯಿತು. +ಪುರಂದರ ಆಲೋಚನೆಗೆ ಬಿದ್ದ. +ಏನೇ ಆಗಲಿ ಬೆಂಗಳೂರಿಗೆ ಹೊರಟೇ ಬಿಡುವಾ. +ಹೇಗೂ ಉದ್ಯೋಗ ಇಲ್ಲ. +ಈ ಅವಕಾಶ ಬಿಟ್ಟರೆ ಮತ್ತೆ ಮಾನ್ಯ ಮಂತ್ರಿಯವರು ತನ್ನನ್ನು ಮರೆತು ಬಿಟ್ಟರೇ? +ಹಟ ಹಿಡಿದು ಕೆಲಸ ಮಾಡಿಸಿ ಕೊಳ್ಳಬೇಕು ಎಂದು ನಿರ್ಣಯಿಸಿ, ಮನೆಯವರಿಂದ ಸ್ವಲ್ಪ ಹಣ ಒಟ್ಟು ಮಾಡಿಸಿ ರಾಜಧಾನಿಗೆ ಪ್ರಯಾಣ ಬೆಳೆಸಿದ. +ರಾಜಧಾನಿಯಲ್ಲಿ ಆಪ್ತ ಸಹಾಯಕರನ್ನು ಬೇಟಿಯಾಗಿ ಮಾನ್ಯ ಮಂತ್ರಿಯವರ ಬೆಂಗಳೂರಿನ ಕಾರ್ಯಕ್ರಮವನ್ನು ವಿಚಾರಿಸಿದ. +ಇನ್ನೆರಡು ದಿನಗಳಲ್ಲಿ ಮಾನ್ಯ ಮಂತ್ರಿಗಳು ನಗರ ನೈರ್ಮಲ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುತ್ತಾರೆ ಎಂದು ತಿಳಿದುಕೊಂಡ ಪುರಂದರ, ಎರಡು ದಿನ ಕಳೆದು ಮಾನ್ಯ ಮಂತ್ರಿಗಳು ಬರುವುದು ಖಾತ್ರಿಯಾಯಿತು. +ಪುರಂದರ ನಿಗಧಿತ ಸಮಯಕ್ಕೆ ಸುಮಾರು ಮೂರು ಗಂಟೆ ಮೊದಲೇ ಮಾನ್ಯ ಮಂತ್ರಿಗಳ ಭೇಟಿಗಾಗಿ ವಿಶ್ರಾಂತಿ ಗೃಹದಲ್ಲಿ ಕಾದು ಕುಳಿತ. +ಸಂಜೆಯವರೆಗೂ ಕಾದರೂ ಮಾನ್ಯ ಮಂತ್ರಿಗಳ ಆಗಮನವಾಗಲಿಲ್ಲ. +ಪುನಃ ವಿಚಾರಿಸಲಾಗಿ ಹವಾಮಾನ ಪ್ರತಿಕೂಲದಿಂದಾಗಿ ಮಾನ್ಯ ಮಂತ್ರಿಗಳ ರಾಜಧಾನಿ ಬೇಟಿ ಒಂದು ದಿನ ತಡವಾಗಬಹುದೆಂಬ ಮಾಹಿತಿ ಸಿಕ್ಕಿ ಪುರಂದರನಿಗೆ ನಿರಾಶೆಯಾಯಿತು. +ಮೂರು ದಿನದಲ್ಲಿ ಇದ್ದ ಹಣ ಖರ್ಚಾಗಿ ಜಾಸ್ತಿ ದಿನ ಉಳಕೊಳ್ಳುವುದು ದುಸ್ತರವಾಯಿತು. +ಆದರೂ ಒಂದು ದಿನ ಜಾಸ್ತಿ ಉಳಕೊಂಡು ಮಾನ್ಯ ಮಂತ್ರಿಗಳ ಭೇಟಿಗಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತ. +ಮರುದಿನ ಆಪ್ತ ಸಹಾಯಕರನ್ನು ಭೇಟಿಯಾಗಿ ತನ್ನ ಅಹವಾಲನ್ನು ಹೇಳಿಕೊಂಡ. +ಹಲವಾರು ಸಾರಿ ಮಾತಾಡಿ ಮುಖ ಪರಿಚಯವಾದುದರಿಂದಲೋ ಏನೋ ಅಥವಾ ಪುರಂದರನ ದುರವಸ್ಥೆಗೆ ಮರುಗಿಯೋ ಏನೋ ಆಪ್ತ ಸಹಾಯಕ ಒಂದು ಸೂಚನೆಯನ್ನು ಪುರಂದರನಿಗೆ ಕೊಟ್ಟ. +ಇವತ್ತಿನ ನಗರ ನೈರ್ಮಲ್ಯ ಕಾರ್ಯಕ್ರಮ ರದ್ದಾಗಿದ್ದು ಆ ಕಾರ್ಯಕ್ರಮವನ್ನು ನಾಳೆ ಹತ್ತು ಘಂಟೆಗೆ ಪುನಃ ಆಯೋಜಿಸಲಾಗಿದೆ. +ನೀವು ನಾಳೆ ಬೆಳಿಗ್ಗೆ ಎಂಟು ಗಂಟೆಗೆ ವಿಶ್ರಾಂತಿ ಗೃಹಕ್ಕೆ ಹೋದರೆ ಮಾನ್ಯ ಮಂತ್ರಿಗಳನ್ನು ಕಾಣಬಹುದು ಎಂದು ಗೋಪ್ಯವಾಗಿ ಹೇಳಿದ. +ಪುರಂದರ ಎರಡೂ ಕೈಯಿಂದ ಆಪ್ತ ಸಹಾಯಕನಿಗೆ ಕೈ ಮುಗಿದು ಧನ್ಯವಾದ ಸಮರ್ಪಿಸಿದ. +ಆದರೆ ಇಲ್ಲೊಂದು ಸಮಸ್ಯೆ ಪುರಂದರನಿಗೆ ಎದುರಾಗಿತ್ತು. +ಮನೆಯವರು ಕೊಟ್ಟಹಣ ಖಾಲಿಯಾಗಿ ಬರೇ ಬಸ್ಸಿನ ಹಣ ಮಾತ್ರ ಉಳಿದಿತ್ತು. +ನಾಳೆಗೆ ರೂಮನ್ನು ಮುಂದುವರಿಸಿದರೆ ಬಾಡಿಗೆ ಕೊಡಲು ದುಸ್ತರವಾಗಬಹುದು. +ಪುರಂದರ ರೂಮಿಗೆ ಬಂದು ರೂಮು ಖಾಲಿ ಮಾಡಿದ . +ಇವತ್ತಿನ ರಾತ್ರಿಯನ್ನು ಸರಕಾರಿ ಬಸ್ ನಿಲ್ದಾಣದಲ್ಲಿ ಕಳೆದು ನಾಳೆ ಬೆಳಿಗ್ಗೆ ಮಾನ್ಯ ಮಂತ್ರಿಗಳನ್ನು ಕಂಡು ಅಂದೇ ಮಂಗಳೂರಿಗೆ ಹಿಂತಿರುಗುವುದೆಂದು ನಿರ್ಣಯಿಸಿದ. +ಮರುದಿನ ಒಂದು ಗಂಟೆ ಮುಂಚಿತವಾಗಿ ಪುರಂದರ ವಿಶ್ರಾಂತಿ ಗೃಹಕ್ಕೆ ಬಂದ. +ರಾತ್ರಿ ಇಡೀ ಬಸ್ ನಿಲ್ದಾಣದಲ್ಲಿ ಸೊಳ್ಳೆಗಳೊಂದಿಗೆ ಜಾಗರಣೆ ಮಾಡಿರುವುದರಿಂದ ಅವನ ಮನಸ್ಸು ಸ್ಥಿಮಿತದಲ್ಲಿರಲಿಲ್ಲ. +ಸುಸ್ತು, ನಿಶ್ಯಕ್ತಿಯನ್ನು ಹೊತ್ತು ಕೊಂಡು ಮಾನ್ಯ ಮಂತ್ರಿಗಳ ಇರುವಿಕೆಯನ್ನು ಸ್ಥಿರೀಕರಿಸಿಕೊಂಡ. + ಮಾನ್ಯ ಮಂತ್ರಿಗಳ ಭೇಟಿಗೆ ಅಣಿಯಾದಾಗ ಸಮಯ ಹತ್ತು ಘಂಟೆ ದಾಟಿತ್ತು. +ಜನ ಸಂದಣಿಯ ಮಧ್ಯೆ ಹೇಗಾದರೂ ದಾರಿ ಮಾಡಿಕೊಂಡು ಪುರಂದರ ಮಾನ್ಯ ಮಂತ್ರಿಗಳ ವಿಶ್ರಾಂತಿ ಗೃಹ ಪ್ರವೇಶಿಸಿದ. +ವಿಶ್ರಾಂತಿಗೃಹದ ಕೋಣೆಯೊಂದರಲ್ಲಿ ಮಾನ್ಯ ಮಂತ್ರಿಗಳು ಹೊರಡುವ ತುರಾತುರಿಯಲ್ಲಿದ್ದರು. +ಅವರ ಸುತ್ತಲೂ ರಾಜಕೀಯ ಮುಖಂಡರು, ಎಲ್ಲರೂ ನಗರ ನೈರ್ಮಲ್ಯ ಕಾರ್ಯಕ್ರಮಕ್ಕೆ ಅಣಿಯಾಗಿ ನಿಂತವರು. +ಎಲ್ಲಾ ಕಡೆ ಗಡಿಬಿಡಿ, ಎಲ್ಲರ ಮುಖದಲ್ಲೂ ಉದ್ವೇಗ, ರಾಜಕಾರಿಣಿಗಳ ನೂಕು ನುಗ್ಗಲ ಮಧ್ಯೆ ಪುರಂದರ ಧೈರ್ಯ ಮಾಡಿ, ದಾರಿ ಮಾಡಿಕೊಂಡು ಮಾನ್ಯ ಮಂತ್ರಿಗಳ ಕೋಣೆ ಹೊಕ್ಕು ಎರಡೂ ಕೈ ಜೋಡಿಸಿದ. +ಮಾನ್ಯ ಮಂತ್ರಿಗಳಿಗೆ ಪುರಂದರ ಎದುರು ನಿಂತರೂ ಅವನ ಜೋಡಿಸಿದ ಕೈ ಕಾಣಲೇ ಇಲ್ಲ. +ಪುರಂದರ ತನ್ನ ದೇಹವನ್ನು ಕಿರಿದು ಮಾಡಿಕೊಂಡು, ಹಿಂದೆ ಮುಂದೆ ಹೋಗಿ ಮತ್ತೊಮ್ಮೆ ಕೈ ಜೋಡಿಸಿದ, ಈಗ ಮಾನ್ಯ ಮಂತ್ರಿಗಳ ಗಮನ ಅವನತ್ತ ಹೋಯಿತು. +ಏನು ಎಂಬಂತೆ ಅವನನ್ನೊಮ್ಮೆ ನೋಡಿದರು. +ಇದೇ ಸದವಕಾಶ ಎಂಬಂತೆ ಪುರಂದರ ತನ್ನ ರೆಸ್ಯೂಮನ್ನು ಅವರ ಕೈಗೆ ಕೊಡುತ್ತಾ ಅಂದ. + “ಸಾರ್…. . ನಾನು ಪುರಂದರ, ಮಂಗಳೂರಿನ ಕರಾಯ ಗ್ರಾಮ ವಾಸ್ತವ್ಯ ಕಾರ್ಯಕ್ರಮದಂದು ತಮ್ಮನ್ನು ಭೇಟಿಯಾಗಿದ್ದೆ. +ತಾವು ಬೆಂಗಳೂರಿಗೆ ಬಂದು ಕಾಣಲು ಹೇಳಿರುವಿರಿ. ನನಗೊಂದು…. ” + “ಯಾರು….?ಏನು? …. ” ಮಾನ್ಯ ಮಂತ್ರಿಗಳು ರೆಸ್ಯೂಮನ್ನು ಒಮ್ಮೆ ಮೇಲೆ ಕೆಳಗೆ ಮಾಡಿದರು. +ಬಿಡಿಸಿ ನೋಡಲೇ ಇಲ್ಲ. +ಪುರಂದರ ಕೈಕೈ ಹಿಸುಕಿ ಕೊಂಡ. +ಮತ್ತೊಮ್ಮೆ ಧೈರ್ಯ ಮಾಡಿ ಅಂದ. +“ಸಾರ್…. . ನಾನು ಪುರಂದರ, ಕರಾಯ ಗ್ರಾಮ ವಾಸ್ತವ್ಯದಂದು……. ”ಮಂತ್ರಿಗಳಿಗೆ ಅವನ ಅಹವಾಲು ಕೇಳಲೇ ಇಲ್ಲ. +ಆದರೂ ಏನೋ ಒಣನಗು ನಕ್ಕು ಪುರಂದರನ ಭುಜ ತಟ್ಟಿದರು. +ಪುರಂದರನ ಕಿಸೆಯಿಂದ ಪೆನ್ನು ತೆಗೆದು ರೆಸ್ಯುಮ್‌ನ ಮೇಲೆ ಏನೋ ಬರೆದು ಹಿಂದೆ ನಿಂತಿದ್ದ ರಾಜಕಾರಿಣಿಯೊಬ್ಬರ ಕೈಗಿತ್ತು ನಗರ ನೈರ್ಮಲ್ಯ ಕಾರ್ಯಕ್ರಮಕ್ಕೆ ನಡೆದೇ ಬಿಟ್ಟರು. +ಪುರಂದರ ನಿಂತಲೇ ನಿಂತ. +ಐದು ನಿಮಿಷದಲ್ಲಿ ಜನ ಜಂಗುಳಿ ಖಾಲಿಯಾಯಿತು. +ವಾಹನಗಳೆಲ್ಲಾ ಮಾಯವಾದುವು. +ರೆಸ್ಯೂಮು ಪಡೆದ ರಾಜಕಾರಿಣಿಯೂ ಮಾಯಾವಾದ. +ಕೊನೆಗೆ ವಿಶ್ರಾಂತಿ ಗೃಹದಲ್ಲಿ ಉಳಿದದ್ದು ಪುರಂದರ ಮತ್ತು ನೆಲಗುಡಿಸುತ್ತಿರುವ ಮೇಟಿ ಮಾತ್ರ. +ಪುರಂದರ ನಿರಾಶೆಯಿಂದ ಊರಿಗೆ ಮರಳಿದ. +ತಿಂಗಳುಗಳು ಉರುಳಿದುವು. +ಪುರಂದರ ಮಂಗಳೂರು ಟೌನ್ ಹಾಲ್‌ನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಚಪ್ಪಡಿಯ ಮೇಲೆ ಕುಳಿತಿದ್ದ. +ಉದ್ಯೋಗದ ಆಶೆಯನ್ನು ಎಂದೋ ತೊರೆದಿದ್ದ. +ಭಾನುವಾರವಾದುದರಿಂದ ಮೈದಾನದಲ್ಲಿ ಜನಸಾಗರ ತುಂಬಿ ತುಳುಕುತ್ತಿತ್ತು. +ಅವನ ಗಮನ ದೂರದ ಬೃಹದಾಕಾರದ ಸ್ಟೇಜಿನತ್ತ ಹೋಯಿತು. +ರಾಜಕಾರಿಣಿಗಳ ಕಟೌಟುಗಳು, ವೇದಿಕೆಯ ಮೇಲೆ ಕುಳಿತು ಕೊಂಡ ಜನ ನಾಯಕರುಗಳು, ಸುತ್ತಲೂ ಹಾರಾಡುವ ಧ್ವಜಗಳು, ಧ್ವನಿವರ್ಧಕದ ಅಬ್ಬರ, ನೆರೆದಿದ್ದ ಜನಸಾಗರ, ಜಯ ಘೋಷಣೆ, ಚಪ್ಪಾಳೆ, ಭಾಷಣ ಅಲೆ-ಅಲೆಯಾಗಿ ಕೇಳಿ ಬರುತಿತ್ತು. +“ವಿದ್ಯಾವಂತ ಯುವಕರೇ, ಎದ್ದೇಳಿ, ಯುವ ಶಕ್ತಿಯಲ್ಲಿ ದೇಶದ ಅಭಿವೃದ್ಧಿ ಅಡಗಿದೆ. +ನಿಮ್ಮ ಸೋಮಾರಿತನ, ಆಲಸ್ಯ, ಹಿಂಜರಿಕ ಬದಿಗಿಟ್ಟು ನಮ್ಮಲ್ಲಿಗೆ ಬನ್ನಿ. +ನಿಮ್ಮ ಭವಿಷ್ಯ ಉಜ್ವಲಗೊಳಿಸಲು ನಮ್ಮಲ್ಲಿ ಯೋಜನೆಗಳಿವೆ. +ಕೆಲಸಗಳಿವೆ ಹತಾಶರಾಗುವ ಅಗತ್ಯವಿಲ್ಲ. +ಯಾವುದೇ ಘಳಿಗೆಯಲ್ಲಿ, ಎಲ್ಲಾದರೂ ಸರಿ, ನನ್ನನ್ನು ನೇರ ಸಂಪರ್ಕಿಸಿದರೆ ನಿಮಗೆ ಪೂರ್ಣ ರೀತಿಯ ಸಹಕಾರ ನೀಡಲಾಗುವುದು…. . ” +ಮಾನ್ಯ ಮಂತ್ರಿಗಳು ಭಾಷಣ ಬಿಗಿಯುತ್ತಾ ಇದ್ದರು. +ಜನರ ಚಪ್ಪಾಳೆ ತಾರಕಕ್ಕೇರಿತು. +ಪುರಂದರ ಎದ್ದು ನಿಂತ. +ತನ್ನ ಫೈಲನ್ನು ಬಿಡಿಸಿ ಅದರಲ್ಲಿದ್ದ ಎಲ್ಲಾ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಸರ್ಟಿಫಿಕೆಟ್‌ಗಳನ್ನು ಹರಿದು ಹತ್ತಿರದಲ್ಲಿದ್ದ ಸಿಮೆಂಟಿನ ತೊಟ್ಟಿಯೊಳಗೆ ಬಿಸಾಕಿ, ನಿರಾಳ ಮನಸ್ಸಿನೊಂದಿಗೆ ಮನೆಯ ಕಡೆ ಸಾಗಿದ.