diff --git "a/Data Collected/Kannada/MIT Manipal/\340\262\225\340\263\201\340\262\260\340\263\201\340\262\241\340\262\260_\340\262\266\340\262\277\340\262\225\340\263\215\340\262\267\340\262\243.txt" "b/Data Collected/Kannada/MIT Manipal/\340\262\225\340\263\201\340\262\260\340\263\201\340\262\241\340\262\260_\340\262\266\340\262\277\340\262\225\340\263\215\340\262\267\340\262\243.txt" new file mode 100644 index 0000000000000000000000000000000000000000..fbf0232ead25c8681cf7dafca0fbedce98bb3405 --- /dev/null +++ "b/Data Collected/Kannada/MIT Manipal/\340\262\225\340\263\201\340\262\260\340\263\201\340\262\241\340\262\260_\340\262\266\340\262\277\340\262\225\340\263\215\340\262\267\340\262\243.txt" @@ -0,0 +1,80 @@ +ಜ್ಞಾನಸಂಗ್ರಹಣೆಯಲ್ಲಿ ಪ್ರಧಾನೇಂದ್ರಿಯವಾದ ದೃಷ್ಟಿ ಶೂನ್ಯವಾದಾಗ ಅಥವಾ ಸಮರ್ಪಕವಾಗಿ ಕ್ರಿಯಾಶೀಲವಾಗಲು ಅಸಮರ್ಥವಾದಾಗ ಅಂಥ ವ್ಯಕ್ತಿಗೆ ಪ್ರಧಾನವಾಗಿ ಶ್ರವಣ ಮತ್ತು ಸ್ಪರ್ಶೇಂದ್ರಿಯಗಳ ಮೂಲಕ ಒದಗಿಸುವ ಶಿಕ್ಷಣ . +1960ರಲ್ಲಿ ಮಾಡಿದ ಒಂದು ಅಂದಾಜಿನ ಪ್ರಕಾರ ಪ್ರಪಂಚದ ಕುರುಡರ ಸಂಖ್ಯೆ ಸುಮಾರು 14 ದಶಲಕ್ಷ . +ಇಂದಿನವರೆಗೆ (1972) ಈ ಸಂಖ್ಯೆ ವಾರ್ಷಿಕವಾಗಿ 1.55 % - 2 % ದರದಲ್ಲಿ ಏರಿರಬಹುದೇ ವಿನಾ ಕಡಿಮೆ ಆಗಿರಲಾರದು , ಸ್ಥಗಿತವಾಗಿಯೂ ಉಳಿದಿರಲಾರದು ಎಂದು ತಜ್ಞರ ಮತ . +ಇಷು ಭಾರೀ ಸಂಖ್ಯೆಯ ಮನುಷ್ಯಶಕ್ತಿಯಲ್ಲಿ ಸುಪ್ತವಾಗಿರುವ ಪ್ರತಿಭೆ ವಿಕಸಿಸಿ ಹೊರಸೂಸಲು ಯುಕ್ತ ಸನ್ನಿವೇಶವನ್ನು ಒದಗಿಸುವುದು ಮತ್ತು ತನ್ಮೂಲಕ ಕುರುಡರ ಜೀವನವನ್ನು ಅರ್ಥಪೂರ್ಣವನ್ನಾಗಿಸುವುದು ಕುರುಡರ ಶಿಕ್ಷಣದ ಉದ್ದೇಶ . +ಕುರುಡರಿಗೆ ಜೀವನನಿರ್ವಹಣೆ ಮಾಡಲು ಮೊದಲು ಇದ್ದದ್ದು ಎರಡೇ ಮಾರ್ಗಗಳು - ಜನ್ಮದಾತರನ್ನು ಮತ್ತು ಸಂಬಂಧಿಗಳನ್ನು ಆಶ್ರಯಿಸಿ ಬಾಳುವುದು ; ತಿರುಪೆಯೆತ್ತಿ ಹೊಟ್ಟೆ ಹೊರೆಯುವುದು . +ಉಭಯ ಮಾರ್ಗಗಳಲ್ಲೂ ಅಂತಿಮ ಫಲ ಒಂದೇ - ಸಮಾಜದ ಮೇಲೆ ಪರಾನ್ನ ಜೀವಿಗಳಾಗಿ ಹೊರೆಯಬಾಳು . +ಇಂಥ ಸನ್ನಿವೇಶವನ್ನು ತಪ್ಪಿಸಿ ಕುರುಡರಿಗೆ ಸಹ ತಮ್ಮ ಅನ್ನವನ್ನು ಸ್ವಸಾಮಥ್ರ್ಯದಿಂದ ಸಂಪಾದಿಸಲು ಆಸ್ಪದ ಮಾಡಿಕೊಡುವಲ್ಲಿ ಕುರುಡರ ಶಿಕ್ಷಣದ ಪಾತ್ರ ಮಹತ್ತ್ವ ಪೂರ್ಣವಾದದ್ದು. +ಕುರುಡರ ವಿಚಾರದಲ್ಲಿ ಸಮಾಜ ಮೊದಲಿನಿಂದಲೂ ದಯೆ , ದಾಕ್ಷಿಣ್ಯ ತೋರಿರುವುದಕ್ಕೆ ಸಾಕಷ್ಟು ಆಧಾರಗಳು ದೊರೆಯುತ್ತವೆ . +ಅಶೋಕ ಸಾಮ್ರಾಟನ ಆಳ್ವಿಕೆಯಷ್ಟು ಪ್ರಾಚೀನದಲ್ಲಿಯೇ ಭಾರತದಲ್ಲಿ ಕುರುಡರ ರಕ್ಷಣಾಲಯಗಳು , ಪುನರ್ನಿವೇಶನ ವಸತಿಗಳು ಏರ್ಪಟ್ಟಿದ್ದುವು . +ಕುರುಡರಲ್ಲಿ ಪ್ರತಿಭಾನ್ವಿತರಾಗಿ ಸಂಗೀತಗಾರರೋ ಕವಿಗಳೋ ಆಗಿದ್ದವರನ್ನು ರಾಜರೂ ಶ್ರೀಮಂತರೂ ಪ್ರೋತ್ಸಾಹಿಸುತ್ತಿದ್ದುದಕ್ಕೆ ಸಾಕ್ಷ್ಯಗಳಿವೆ . +ಹತ್ತನೆಯ ಶತಮಾನದಿಂದೀಚೆಗೆ ಪ್ರಪಂಚದ ಬೇರೆಬೇರೆ ರಾಷ್ಟ್ರಗಳಲ್ಲಿ ಕುರುಡರ ಸೇವಾರ್ಥ ಆಸ್ಪತ್ರೆಗಳು , ಶಾಲೆಗಳು , ನಿಲಯಗಳು ಇತ್ಯಾದಿ ಆರಂಭವಾದುವು . +ಆದರೆ ಕುರುಡರ ಶಿಕ್ಷಣ ಒಂದು ವ್ಯವಸ್ಥಿತ ವಿಧಾನದಲ್ಲಿ ಮೈದಳೆಯಲು ಆರಂಭವಾದದ್ದು 18ನೇಯ ಶತಮಾನದಲ್ಲಿ . +ವೇಲೆಂಟೀನ್ ಆವುಈ (1745 - 1822) ಅಂಧಶಿಕ್ಷಣ ವ್ಯವಸ್ಥೆಯ ಪಿತಾಮಹ . +ಸ್ಪರ್ಶ ಮತ್ತು ಶ್ರವಣ ಇಂದ್ರಿಯಗಳ ಮೂಲಕ ಕುರುಡರಿಗೆ ಯುಕ್ತ ಶಿಕ್ಷಣ ನೀಡಲು ಇವನು ಮೊದಲಿಗೆ 12 ಜನ ಕುರುಡರನ್ನು ಆಯ್ದು ಪ್ಯಾರಿಸಿನಲ್ಲಿ ಒಂದು ಶಾಲೆಯನ್ನು ತೊಡಗಿದ . +ಆವುಈಯ ಪ್ರಥಮ ಪ್ರಯತ್ನದ ಗಮನಾರ್ಹ ಯಶಸ್ಸಿಗೆ ಯೂರೋಪ್ ಖಂಡವಿಡೀ ಪ್ರಚಾರ ಲಭಿಸಿತು . +ಬೇರೆ ಬೇರೆ ಸರ್ಕಾರಗಳು ಈ ದಿಶೆಯಲ್ಲಿ ವ್ಯವಸ್ಥಿತ ಯೋಜನೆಗಳನ್ನು ರೂಪಿಸಿ ಕಾರ್ಯೋದ್ಯುಕ್ತವಾದುವು . +ತನ್ನ ಶಾಲೆಯಲ್ಲಿದ್ದ ಓರ್ವ ವಿದ್ಯಾರ್ಥಿ ಆ ಶಾಲೆಗೆ ಬಂದಿದ್ದ ಒಂದು ಮುದ್ರಿತ ಆಹ್ವಾನ ಪತ್ರವನ್ನು ಓದಲು ಪ್ರಯತ್ನಿಸುತ್ತಿದ್ದುದು ಆವುಈಯ ಗಮನಕ್ಕೆ ಅಕಸ್ಮಾತ್ತಾಗಿ ಬಂತು . +ಆ ಅಂಧ ವಿದ್ಯಾರ್ಥಿ ಮುದ್ರಿತ ಪತ್ರದ ತಳಭಾಗದಲ್ಲಿ ಬಲು ಸೂಕ್ಷ್ಮವಾಗಿ ತನ್ನ ಅಂಗೈಯನ್ನು ಆಡಿಸುತ್ತಿದ್ದ . +ಅಚ್ಚಿನಲ್ಲಿ ಅಕ್ಷರಗಳ ಮೇಲೆ ಬಿದ್ದ ಹೆಚ್ಚಿನ ಒತ್ತಡದ ಪರಿಣಾಮವಾಗಿ ಕಾಗದದ ತಳಭಾಗ ಸ್ವಲ್ಪ ಉಬ್ಬಿರುವುದನ್ನೂ ಈ ಉಬ್ಬುವಿಕೆಯ ಮೇಲೆ ಕೈಯ್ಯಾಡಿಸಿ ಅಕ್ಷರಗಳ ವಿಚಾರ ಮಾಹಿತಿ ತಿಳಿಯಬಹುದೆನ್ನುವುದನ್ನೂ ಆ ವಿದ್ಯಾರ್ಥಿ ಮನಗಂಡಿದ್ದ . +(ಅದಕ್ಕೆ ಮೊದಲೇ ಬಿಡಿಬಿಡಿಯಾದ ಅಕ್ಷರಗಳ ದೊಡ್ಡ ಅಚ್ಚುಗಳನ್ನು ಕುರುಡ ವಿದ್ಯಾರ್ಥಿಗಳಿಗೆ ಕೊಟ್ಟು ಅಕ್ಷರ ಪರಿಚಯವನ್ನು ಅವರಿಗೆ ಮಾಡಿಸುತ್ತಿದ್ದುದು ವಾಡಿಕೆ.) ಅಂಧ ವಿದ್ಯಾರ್ಥಿಯ ಈ ಹಸ್ತಕೌಶಲವನ್ನು ಗ್ರಹಿಸಿದ ಆವುಈಗೆ ತತ್‍ಕ್ಷಣವೇ ಕುರುಡರ ವಾಚನಾರ್ಥ ತಯಾರಿಸಬೇಕಾದ ಪುಸ್ತಕದ ರೂಪರೇಖೆ ಸ್ಫುರಿಸಿತು - ಕಾಗದದ ಹಾಳೆಗಳ ಮೇಲೆ ಉಬ್ಬಕ್ಷರಗಳಿಂದ ವಿಷಯ ನಿರೂಪಣೆ ಮಾಡಿದರೆ ಅವನ್ನು ಸ್ಪರ್ಶಿಸಿ ಕುರುಡರು ಓದಬಲ್ಲರು ಎಂಬುದೇ ಈ ತೀರ್ಮಾನ. +ಅಂಧರ ಲಿಪಿಯನ್ನು ಕುರಿತಂತೆ ಲಭ್ಯವಾಗಿರುವ ಮೊದಲ ದಾಖಲೆ 1517ನೇ ವರ್ಷದ್ದು . +ಸ್ಪೇನಿನ ಒಬ್ಬ ಉತ್ಸಾಹಿ ಮರದ ತುಂಡುಗಳ ಮೇಲೆ ಸಾಂಪ್ರದಾಯಿಕ ಅಕ್ಷರಗಳನ್ನು ಕೊರೆದು ಕುರುಡರಿಗೆ ಓದಲು ಅನುಕೂಲವಾಗುವ ಸ್ಪರ್ಶಜ್ಞಾನವನ್ನು ಒದಗಿಸಿದ . +ಆದರೆ ಇಂಥ ಒಂದು ಪುಸ್ತಕ ಒತ್ತಟ್ಟಿಗಿರಲಿ , ಒಂದು ಹಾಳೆಯನ್ನು ಸಹ ರಚಿಸುವುದು ಮತ್ತು ಕೊಂಡೊಯ್ಯುವುದು ಎಷ್ಟು ಉಪದ್ರವಕಾರಿ ಎಂಬುದನ್ನು ಉಹಿಸಿಕೊಳ್ಳಬಹುದು . +ಈ ದಿಶೆಯಲ್ಲಿ ಮುಂದೆ ನಡೆದ ಸುಧಾರಣೆಗಳು ಹೀಗಿವೆ - - ಚಲಿಸಬಲ್ಲ ಸೀಸದ ಅಕ್ಷರಗಳು ಉಪಯೋಗ , ಮೆತ್ತೆಗಳ ಮೇಲೆ ಚುಚ್ಚಿದ ಸೂಜಿಗಳು , ಮರದ ದೊಡ್ಡ ಅಕ್ಷರಗಳು , ಲೋಹನಿರ್ಮಿತ ದೊಡ್ಡ ಅಕ್ಷರಗಳು ಇತ್ಯಾದಿ . +ಇವೆಲ್ಲ ವಿಧಾನಗಳೂ ಆವುಈ ಆವಿಷ್ಕರಿಸಿದ ಉಬ್ಬಕ್ಷರ ವಿಧಾನ ಬಳಕೆಗೆ ಬರುವ ಮೊದಲೇ ಪ್ರಚಲಿತವಿದ್ದವು . +ಒಂದು ರೀತಿಯಲ್ಲಿ ಇವುಗಳ ಪರಿಣಾಮವಾಗಿಯೇ ಉಬ್ಬಕ್ಷರ ವಿಧಾನ ರೂಪುಗೊಂಡಿತು ಎನ್ನಬಹುದು . +ಉಬ್ಬು ಅಕ್ಷರಗಳನ್ನು ಸ್ಪರ್ಶಿಸಿ ಕುರುಡರು ಓದುತ್ತಾರೆ . +ಅಂಧರ ವಾಚನಾರ್ಥವಾಗಿ ಮೊದಲ ಪುಸ್ತಕ ಪ್ರಕಟವಾದದ್ದು ಗ್ರೇಟ್ ಬ್ರಿಟನ್ನಿನಲ್ಲಿ ( 1827. ) ಏಡಿನ್‍ಬರೋದ ಜೇಮ್ಸ್‍ಗಾಲ್ ಎಂಬಾತ ಅದರ ನಿರ್ಮಾಪಕ . +ಅಲ್ಲಿಂದ ಮುಂದೆ ಕುರುಡರ ಲಿಪಿಯಲ್ಲಿ ಸಾಕಷ್ಟು ಸುಧಾರಣೆಗಳಾದುವು . +ಎದುರಿದ್ದ ಚಿತ್ರ ಭಾರತೀ ಬ್ರೇಲ್ ಲಿಪಿಯಲ್ಲಿ ಸ್ವರಗಳು ವ್ಯಂಜನಗಳು ಕಾಗುಣಿತ ಮತ್ತು ಸಂಖ್ಯೆಗಳು ಒಂದು ಮುಖ್ಯ ಸಮಸ್ಯೆ ಕುರುಡರ ಬರವಣಿಗೆ . +ಸಾಂಪ್ರದಾಯಿಕ ಅಕ್ಷರಗಳನ್ನೇತದ್ವತ್ತಾಗಿ ಉಪಯೋಗಿಸಿದರೆ ಅವು ಕುರುಡರ ಎದುರೊಡ್ಡುವ ಪ್ರಾಯೋಗಿಕ ಸಮಸ್ಯೆಗಳು ಬಲು ಸಂಕೀರ್ಣ . +ಮತ್ತೆ ,ಒಂದೊಂದು ಭಾಷೆಯ ಲಿಪಿಯನ್ನು ಅವಲಂಬಿಸಿ ಈ ಸಮಸ್ಯೆಗಳ ರೂಪಗಳು ಬದಲಾಗುತ್ತವೆ . +ಈ ದಿಶೆಯಲ್ಲಿ ಬಂದ ಉತ್ತಮ ಸುಧಾರಣೆ ಲೂಯಿ ಬ್ರೇಲ್ (1809 - 52) ಎಂಬಾತನದು . +ಸ್ವತಃ ಅಂಧನಾಗಿದ್ದ ಈತ ಬೇರೆ ಎಲ್ಲರಿಗಿಂತ ( ಅಂದರೆ ಅಂಧರಲ್ಲದವರಿಗಿಂತ ) ಹೆಚ್ಚಾಗಿ ಅಂಧರ ಲಿಪಿಯಲ್ಲಿದ್ದ ಅಡಚಣೆಗಳನ್ನು ತಿಳಿದುಕೊಂಡು ಅವುಗಳಿಗೆ ಪರಿಹಾರ ಸೂಚಿಸಲು ಸಮರ್ಥನಾಗಿದ್ದ . +ಉಬ್ಬು ಚುಕ್ಕಿಗಳ ನೆರವಿನಿಂದ ಅಕ್ಷರಗಳನ್ನು ಸಂಕೇತಗಳನ್ನು ಕಾಗದದ ಮೇಲೆ ಗುರುತಿಸುವುದು - ಇವು ಓದಲು ಮತ್ತು ಬರೆಯಲು ಬ್ರೇಲ್ ಸೂಚಿಸಿದ ಪರಿಹಾರಗಳು . +ಇಂದು ಪ್ರಪಂಚದಾದ್ಯಂತ ಪ್ರಚಲಿತವಿರುವ ಕುರುಡರ ಲಿಪಿ ಬ್ರೇಲ್ ಲಿಪಿಯ ಆಧಾರದ ಮೇಲೆ ರಚಿತವಾದವುಗಳೇ . +ಬ್ರೇಲ್ ಲಿಪಿ ಮತ್ತು ಭಾರತೀ ಬ್ರೇಲ್ ಲಿಪಿಯ ವಿವರಗಳಿಗೆ ( ನೋಡಿ - ಬ್ರೇಲ್ - ಲಿಪಿ ) +ಯಂತ್ರವಿಜ್ಞಾನದ ತೀವ್ರ ಪ್ರಗತಿ ಆಗಿರುವ ಈ ಶತಮಾನದಲ್ಲಿ ಕುರುಡರ ವಿಶೇಷ ಆವಶ್ಯಕತೆಗಳನ್ನು ಪೂರೈಸುವಂಥ ಬಗೆತರದ ಸಾಧನಗಳು ತಯಾರಾಗಿವೆ . +ಹೊಲಿಗೆ ಯಂತ್ರಗಳು ,ಬೆರಳಚ್ಚು ಯಂತ್ರಗಳು, ವಿದ್ಯುನ್ಮಾಪನ ಯಂತ್ರಗಳು , ಗಡಿಯಾರಗಳು , ಹಲವಾರು ಸೂಕ್ಷೋಪಕರಣಗಳು -ಇವೆಲ್ಲವೂ ಕುರುಡರ ಸುಪ್ತ ಸಾಮಥ್ರ್ಯಗಳನ್ನು ಪ್ರಕಟಗೋಳಿಸಲು ಇರುವ ಸಾಧನಗಳು ಮೈಯಕ್ತಿಕ ಗಮನವನ್ನು ಕೊಡುವುದು ಕೂಡ ಈಗ ಸಾಧ್ಯವಾಗಿದೆ . +ಪೂರ್ಣಾಂಧರಲ್ಲದವರಿಗೆ ಅವರ ಮಂದದೃಷ್ಟಿಯನ್ನು ಪುಷ್ಟೀಕರಿಸಲು ಸಾಕಷ್ಟುದೃಗುಪಕರಣಗಳು, ವೈದ್ಯಕೀಯ ಸಹಾಯ ಇಂದು ಲಭಿಸುತ್ತವೆ . +ಸಂಗೀತ, ನೃತ್ಯ , ಶಲ್ಪ ಮುಂತಾದ ಕಲಾವಿಭಾಗಗಳಲ್ಲೂ ಬಗೆತರಹದ ಒಳಾಂಗಣ ಹಾಗೂ ಹೊರಾಂಗಣದ ಆಟಗಳಲ್ಲೂ ಕುರುಡರಿಗೋಸ್ಕರವಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವ ಸಾಧ್ಯವಾಗಿದೆ . +ಕುರುಡರಿಗೆ ಮಾರ್ಗದರ್ಶನ ಮಾಡಲು ವಿಶೇಷವಾಗಿ ತರಬೇತುಗೊಂಡ ನಾಯಿಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲಿವೆ . +ಅಮೃತಸರದಲ್ಲಿ ಮೊದಲ ಕುರುಡರ ಶಾಲೆಯನ್ನು ಸ್ಥಾಪಿಸಲಾಯಿತು ( 1887 ) . +1905ರಲ್ಲಿ ಇದನ್ನು ಡೆಹರಾಡೂನಿಗೆ ಸ್ಥಳಾಂತರಿಸಿದರು . +ತಮಿಳುನಾಡಿನ ಪಾಳೆಯಂಕೋಟಿಯಲ್ಲಿನ ಶಾಲೆ ( 1890 ) ಮೈಸೂರಿನ ಕುರುಡ ಮತ್ತು ಮೂಗರ ಶಾಲೆ ( 1991 ) , ಮುಂಬಯಿಯಲ್ಲಿರುವ ದಾದರ್ ಸ್ಕೂಲ್ ಫಾರ್ ದಿ ಬ್ಲೈಂಡ್ ಮತ್ತು ವಿಕ್ಟೋರಿಯಾ ಮೆಮೋರಿಯಲ್ ಸ್ಕೂಲ್ ಫಾರ್ ದಿ ಬ್ಲೈಂಡ್ - ಇವೇ ಮುಂತಾದವು ಭಾರತದಲ್ಲಿ ಮೊದಲಾಗಿ ಸ್ಥಾಪಿಸಲಾದ ಕುರುಡರ ಶಾಲೆಗಳು . +ಕ್ರಮೇಣ ಈ ಶಾಲೆಗಳ ಸಂಖ್ಯೆ ಬೆಳೆದ ಈಗ (1972 ) ಅವು ಭಾರತದಲ್ಲಿ ನೂರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ದೇಶಾದ್ಯಂತ ವ್ಯಾಪಿಸಿವೆ . +ಇವುಗಳಲ್ಲಿ ಹೆಚ್ಚಿನವುಗಳಲ್ಲಿ ವಸತಿ ,ಆಹಾರ ಮತ್ತು ವಿದ್ಯೆ ಉಚಿತವಾಗಿಯೆ ನೀಡಲಾಗುತ್ತದೆ . +ವಯಸ್ಕ ಅಂಧರ ಶಿಕ್ಷಣ ಕೇಂದ್ರವೊಂದು ಡೆಹರಾಡೂನಿನಲ್ಲಿದೆ . +ಆ ದರ್ಜೆಯ ಕುರುಡರಿಗೆ ವಿಶಿಷ್ಟವಾದ ಶಿಕ್ಷಣ ನೀಡುವ ಏರ್ಪಾಡು ಇಲ್ಲಿ ಉಂಟು . +ಶಿಕ್ಷಣ ಸಂಸ್ಥೆಗಳ ಸೇವೆಗೆ ಪೂರಕವಾಗಿರಲು ಹಾಗೂ ಅಂಧರಿಗೆ ಇತರ ಸೌಲಭ್ಯಗಳನ್ನು ಒದಗಿಸಲು ದೇಶಾದ್ಯಂತ ಹಲವಾರು ಅಂಧ ಪರಿಹಾರ ಸಂಸ್ಥೆಗಳು ಇವೆ . +ಇವು ಹೆಚ್ಚಾಗಿ ಸ್ವಸಹಾಯ ಸಂಸ್ಥೆಗಳು . +ಅನುಕಂಪಪೂರಿತ ವ್ಯಕ್ತಿಗಳ ಒಕ್ಕೂಟದಿಂದ ನಿರ್ಮಿತವಾದವು . +ಇವುಗಳ ಪೈಕಿ ಮದ್ರಾಸಿನ ಅಂಧಸಂಸ್ಥೆ 1920ರಲ್ಲಿ ಪ್ರಾರಂಭವಾಯಿತು . +ಅದು ಅಂದಿನ ಮದ್ರಾಸು ಅಧಿಪತ್ಯವನ್ನಿಡೀ ತನ್ನ ಪರಿಧಿಯಲ್ಲಿ ಒಳಗೊಂಡಿತ್ತು . +ಈಗ ಮುಂಬಯಿಯಲ್ಲಿರುವ ರಾಷ್ಟ್ರೀಯ ಅಂಧ ಸಂಸ್ಥೆ ಅಖಿಲ ಭಾರತೀಯ ಕಾರ್ಯಕ್ರಮ ರೂಪಿಸಿಕೊಂಡು ಕೆಲಸ ಮಾಡುತ್ತಿವೆ . +ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಈ ಸ್ವಸಹಾಯ ಸಂಸ್ಥೆಗಳಲ್ಲಿ ಕೆಲಸಕ್ಕೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸುತ್ತಿವೆ . +ದೇಶಾದ್ಯಂತ ಅಂಧ ಶಿಕ್ಷಣವನ್ನು ವ್ಯವಸ್ಥಿತಗೊಳಿಸಲು ಯುಕ್ತ ಸಲಹೆ ನೀಡಲು ಒಂದು ಸಮಿತಿಯನ್ನು ಭಾರತ ಸರ್ಕಾರ 1943 ರಲ್ಲಿ ನೇಮಿಸಿತು . +ಸಮಿತಿಯ ಸಲಹೆಗಳನ್ನು ತತ್ತ್ವಶಃ ಭಾರತ ಸರ್ಕಾರ ಅಂಗೀಕರಿಸಿ ಅವನ್ನು ಕಾರ್ಯಗತಗೊಳಿಸಲು ಉದ್ಯುಕ್ತವಾಗಿದೆ . +ಭಾರತ ಸರ್ಕಾರದ ವಿದ್ಯಾ ಸಚಿವಾಲಯದಲ್ಲಿ ಕುರುಡರ ಹಾಗೂ ಇತರ ಅಂಗವಿಕಲರ ಯೋಗಕ್ಷೇಮಗಳನ್ನು ರೂಪಿಸಿ ನಿಯಂತ್ರಿಸಲು ಒಂದು ವಿಶೇಷ ಖಾತೆಯನ್ನು ರಚಿಸಲಾಗಿದೆ ( 1947 ) . +ಈಗ ಕಾರ್ಯಗತವಾಗಿರುವ ಕೆಲವು ಸಲಹೆಗಳು ಹೀಗಿವೆ :1.ಡೆಹರಾಡೂನಿನಲ್ಲಿ ವಯಸ್ಕ ಅಂಧರ ಶಿಕ್ಷಣ ಕೇಂದ್ರದ ಸ್ಥಾಪನೆ . +2.ಡೆಹರಾಡೂನಿನಲ್ಲಿ ಬ್ರೇಲ್ ಮುದ್ರಣಾಲಯ . +3.ಅಂಧರ ಉಪಯೋಗಕ್ಕೋಸ್ಕರ ಒಂದು ಕೇಂದ್ರೀಯ ಪುಸ್ತಕ ಭಂಡಾರ ಸ್ಥಾಪನೆ . +4.ವಿಶೇಷ ಉಪಕರಣಗಳ ಆಮದು ಮತ್ತು ದೇಶದಲ್ಲಿ ಅವುಗಳ ನಿರ್ಮಾಣಕ್ಕೆ ಯುಕ್ತ ನಿರ್ದೇಶನ ಮತ್ತು ಪ್ರೋತ್ಸಾಹ . +5.ಸರ್ಕಾರದ ನೇತೃತ್ವದಲ್ಲಿ ದೇಶದ ಭಾಗಗಳಲ್ಲಿ ಅಂಧರ ಶಾಲೆಗಳ ಸ್ಥಾಪನೆ ಮತ್ತು ಪ್ರೌಢಶಿಕ್ಷಣವನ್ನು ಅಂಧರಿಗೆ ನೀಡುವಲ್ಲಿ ಪ್ರೋತ್ಸಾಹ . +ಬ್ರಿಟಿಷ್ ಭಾರತದ ದೇಶ ಸಂಸ್ಥಾನಗಳಲ್ಲಿ ಕುರುಡರ ಶಿಕ್ಷಣಶಾಲೆ ಮೊದಲು ಪ್ರಾರಂಭವಾದ್ದು ಮೈಸೂರು ಸಂಸ್ಥಾನದಲ್ಲಿ , ಮೈಸೂರು ನಗರದಲ್ಲೇ ಪ್ರಾರಂಭವಾದ ( 1901 ) ಆ ಶಾಲೆಯ ಮೊದಲ ಪ್ರವರ್ತಕರು ಎಂ.ಶ್ರೀನಿವಾಸರಾಯರು . +ಮೊದಲು ಒಬ್ಬ ಕುರುಡ ಮತ್ತು ಮೂರು ಜನ ಮೂಗರಿಂದ ಅವರ ಮನೆಯಲ್ಲಿಯೇ ತೆರೆಯಲಾದ ಈ ಶಾಲೆ ಮರುವರ್ಷವೇ (1902) ಸರ್ಕಾರದ ನೆರವು ಲಭಿಸಿತು . +ಆ ವರ್ಷ ಒಬ್ಬ ಉಪಾಧ್ಯಾಯನ ನೇಮಕವನ್ನು ಸರ್ಕಾರ ಮಂಜೂರು ಮಾಡಿತು . +ಏರುತ್ತಿದ್ದ ವಿದ್ಯಾರ್ಥಿಗಳ ಸೌಕರ್ಯಕ್ಕಾಗಿ 1905 ರಲ್ಲಿ ಒಂದು ವಿದ್ಯಾರ್ಥಿ ನಿಲಯವನ್ನು ಆರಂಭಿಸಿದರು . +1908ರ ಹೊತ್ತಿಗೆ ವಿದ್ಯಾರ್ಥಿಗಳ ಸಂಖ್ಯೆ 34 ಕ್ಕೆ ಏರಿತ್ತು . +1927ನೇಯ ಇಸವಿಯಲ್ಲಿ ಸರ್ಕಾರವೇ ಶಾಲೆಯನ್ನು ಪೂರ್ಣವಾಗಿ ವಹಿಸಿಕೊಂಡಿತು . +1932ರ ವರೆಗೆ ಈ ಶಾಲೆಯಲ್ಲಿ ಸಹವಿದ್ಯಾಭ್ಯಾಸ ಜಾರಿಯಲ್ಲಿತ್ತು . +ಆ ವರ್ಷ ಈ ಶಾಲೆಯ ಓರ್ವ ಅಧ್ಯಾಪಕಿ ಮತ್ತು 7 ಮೂಕ ಹುಡುಗಿಯರನ್ನು ಮೈಸೂರು ನಗರದ ವೃತ್ತಿಶಿಕ್ಷಣ ಶಾಲೆಗೆ ವರ್ಗಾಯಿಸಿದರು . +ಅಂದಿನಿಂದ 1968ರ ವರೆಗೆ ಈ ಶಾಲೆ ಕೇವಲ ಕುರುಡ ಬಾಲಕರಿಗಾಗಿ ಮಾತ್ರ ಇತ್ತು . +1968ರಿಂದ ಈಚೆಗೆ ಇಲ್ಲಿ ಪುನಃ ಸಹವಿದ್ಯಾಭ್ಯಾಸ ನಡೆಯುತ್ತಿದೆ . +ಇಲ್ಲಿನ ವಿದ್ಯಾಥ್ಯಿಗಳ ಬೌದ್ಧಿಕ , ಶೈಕ್ಷಣಿಕ ಮತ್ತು ವೃತ್ತಿ ತರಬೇತಿಯನ್ನು ಮೂಲಪಾಠಗಳಿಂದ ತೊಡಗಿ ಪ್ರೌಢಶಾಲೆಯ ಮಟ್ಟದವರೆಗೂ ನುರಿತ ಅಧ್ಯಾಪಕರು ನೀಡುತ್ತಾರೆ . +ಶಾಲೆಗೆ ಲಗತ್ತಾಗಿ ಒಂದು ವಿದ್ಯಾರ್ಥಿ ನಿಲಯ , ಶಿಕ್ಷಣ ಯಂತ್ರಾಗಾರ , ಬ್ರೇಲ್ ಮುದ್ರಾಲಯ ಮತ್ತು ಪುಸ್ತಕ ಭಂಡಾರ ಇವೆ . +ಇಲ್ಲಿ ಶಿಕ್ಷಣ ಸಾಮಾನ್ಯವಾಗಿ ಉಚಿತ . +ಸರ್ಕಾರದ ವತಿಯಿಂದ ಕರ್ಣಾಟಕದಲ್ಲಿ ನಡೆಯುತ್ತಿರುವ ಕುರುಡರ ಶಾಲೆಗಳು ಹುಬ್ಬಳ್ಳಿಯಲ್ಲೂ ಗುಲ್ಬರ್ಗದಲ್ಲೂ ಇವೆ . +ಬೆಂಗಳೂರು ನಗರದ ಸಮೀಪದ ವೈಟ್‍ಫೀಲ್ಡಿನಲ್ಲಿ ಖಾಸಗೀ ಸಂಸ್ಥೆ ನಡೆಸುತ್ತಿರುವ ಕುರುಡ ವಿದ್ಯಾರ್ಥಿ ವಿದ್ಯಾರ್ಥಿನಿಲಯರ ಶಾಲೆ ಉಂಟು . +ಇದರಲ್ಲಿ ಸಹ ಸಾಮಾನ್ಯವಾಗಿ ಶಿಕ್ಷಣ,ವಸತಿ , ಆಹಾರ ಉಚಿತ .