diff --git "a/Data Collected/Kannada/MIT Manipal/Kannada-Scrapped-dta/Book4-\340\262\266\340\263\201\340\262\247\340\263\215\340\262\247_\340\262\255\340\262\276\340\262\267\340\263\206\340\262\257_\340\262\225\340\262\245\340\263\206\340\262\227\340\262\263\340\263\201.txt" "b/Data Collected/Kannada/MIT Manipal/Kannada-Scrapped-dta/Book4-\340\262\266\340\263\201\340\262\247\340\263\215\340\262\247_\340\262\255\340\262\276\340\262\267\340\263\206\340\262\257_\340\262\225\340\262\245\340\263\206\340\262\227\340\262\263\340\263\201.txt" new file mode 100644 index 0000000000000000000000000000000000000000..0671a03b28a254ec8321a893e5135d88cf0b98c6 --- /dev/null +++ "b/Data Collected/Kannada/MIT Manipal/Kannada-Scrapped-dta/Book4-\340\262\266\340\263\201\340\262\247\340\263\215\340\262\247_\340\262\255\340\262\276\340\262\267\340\263\206\340\262\257_\340\262\225\340\262\245\340\263\206\340\262\227\340\262\263\340\263\201.txt" @@ -0,0 +1,3570 @@ +ನಮ್ಮ ಪೂಜ್ಯ ತಂದೆಯವರಾದ ಡಾ|| ಎಲ್. ಆರ್. ಹೆಗಡೆಯವರು ಕನ್ನಡ ಜಾನಪದ ಸಾರಸ್ವತ ಲೋಕದಲ್ಲಿ ಚಿರಪರಿಚಿತರು. +ಅವರು ತಮ್ಮ ಪೂರ್ತಿ ಜೀವನವನ್ನು ಉತ್ತರ ಕನ್ನಡದ ನಶಿಸಿಹೋಗುತ್ತಿರುವ ಜಾನಪದ ಸಂಪತ್ತನ್ನು ಸಂಗ್ರಹಿ,ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. +ಯಕ್ಷಗಾನ ಅಕಾಡೆಮಿಯವರು ಪ್ರಕಟಿಸಿದ, ತಮ್ಮ ಕೊನೆಯ ದಿನಗಳಲ್ಲಿ ಅವರೇ ಬರೆದ- ‘ಕ್ಷೇತ್ರದಲ್ಲಿ ಕಾರ್ಯದ ನೆನಪುಗಳು’ ಗ್ರಂಥವನ್ನು ಓದಿದರೆ ಜಾನಪದ ಕ್ಷೇತ್ರದಲ್ಲಿ ಅವರ ಅಪೂರ್ವ ಸಾಧನೆಯ, ಪಟ್ಟ ಕಷ್ಟಗಳ ಪರಿಚಯವಾಗುತ್ತದೆ. +ಅವರಿರುವಾಗ ಪ್ರಕಟವಾದ ಪುಸ್ತಕಗಳು ಹಾಗೂ ಅವರೇ ಬರೆದ ಪಾಂಡಿತ್ಯ ಪೂರ್ಣ ಪೀಠಿಕೆಗಳು, ಮುನ್ನುಡಿಗಳು ಜಾನಪದ ಕ್ಷೇತ್ರದಲ್ಲಿ ಅವರ ಅಳವಾದ ಅಧ್ಯಯನವನ್ನು ಎತ್ತಿ ತೋರಿಸುತ್ತವೆ. +ತುಲನಾತ್ಮಕ ವಿಶ್ಲೇಷಣೆಗಳು ನಿಜವಾಗಿಯೂ ಶ್ಲಾಘನೀಯ. +ಉತ್ತರ ಕನ್ನಡದ ಬುಡಕಟ್ಟು ಜನಾಂಗಗಳ ಕುರಿತ ಅಧ್ಯಯನಗಳು ಅನನ್ಯವಾಗಿದೆ. +ಸಂಶೋಧನಾ ಪ್ರಬಂಧಗಳು, ಭಾಷಣಗಳು, ಜಾನಪದ ಲೇಖನಗಳು ಉಲ್ಲೇಖನೀಯ. +ಜಾನಪದ ಅಧ್ಯಯನದ ಜೊತೆಗೆ ಹೋಮಿಯೋಪಥಿ, ಆಯುರ್ವೇದ, ಹಳ್ಳಿಯ ಚಿಕಿತ್ಸಾ ಪದ್ಧತಿಗಳಲ್ಲಿಯೂ ಕೂಡ ಅಪಾರ ಜ್ಞಾನ ಮತ್ತು ಅನುಭವಗಳನ್ನು ಪಡೆದುಕೊಂಡಿದ್ದರು. +ಸಾವಿರಾರು ರೋಗಿಗಳು ಇದರ ಲಾಭವನ್ನು ಪಡೆದುಕೊಂಡಿದ್ದಾರೆ. +ಉಚಿತವಾಗಿ ಔಷಧಿಗಳನ್ನು ಕೊಡುತ್ತಿದ್ದರು. +ಕೆಲಸ ಮಾಡುವ ವೈಖರಿಯನ್ನು ನೋಡಿದಾಗ ಇಂಗ್ಲೀಷಿನ ‘One man army’ ನೆನಪಾಗುತ್ತದೆ. +ನಾವು ನಾಲ್ಕು ಮಕ್ಕಳು ರೇಣುಕಾ, ರಾಮಕೃಷ್ಣ, ಸುನಂದಾ ಹಾಗು ಸವಿತಾ. +ನಾವು ಚಿಕ್ಕವರಿರುವಾಗ, ‘‘ಯಾಕಪ್ಪಾ ಈ ಹಳ್ಳಿಗರ ಹಾಡು, ಕಥೆ, ಸಾಹಿತ್ಯಗಳನ್ನಾದರೂ ಸಂಗ್ರಹಿಸುತ್ತಾರೋ’’ ಏನೂ ಪ್ರಯೋಜನವಿಲ್ಲದ ಉಪಯೋಗವಿಲ್ಲದ ಕೆಲಸವೆಂದೂ, ವೇಳೆ ಹರಣವೆಂದೂ ಅನ್ನಿಸುತ್ತಿತ್ತು. +ಆದರೆ,ಈಗ ಕಷ್ಟಪಟ್ಟು ಸಂಗ್ರಹಿಸಿದ್ದರಲ್ಲಿ ಕೆಲವನ್ನಾದರೂ ಉಳಿಸಬೇಕೆಂಬ ಹಂಬಲದಿಂದ ಕೆಲಸ ಮಾಡತೊಡಗಿದಾಗ ಇದೆಷ್ಟು ಕಷ್ಟತರವಾದ, ಕ್ಲಿಷ್ಟವಾದ ಕೆಲಸವೆಂದು ತಿಳಿಯಹತ್ತಿದೆ. +ಆದರೂ ಜಾನಪದ ವಿಷಯಗಳನ್ನು ಸಂಗ್ರಹಿಸುವಾಗ ಹೇಳಿದವರ ಹೆಸರು, ಬರೆಸಿಕೊಂಡ ದಿನಾಂಕ, ವಿವಿಧ ವಿಷಯಗಳ ವಿಂಗಡಣೆ, ಸಂಸ್ಕರಣೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ, ಅಂದಿನ ದಿನಗಳಲ್ಲಿ ಅಷ್ಟೊಂದು ಶ್ರಮ ವಹಿಸದಿದ್ದಾರೆ ಸಂಗ್ರಹಿಸಿದ್ದೆಲ್ಲವೂ ನಶಿಸಿಹೋಗುತ್ತಿದ್ದವೆಂಬ ಅನುಭವವಾಗುತ್ತದೆ. +ದೂರದೃಷ್ಟಿ ಮೆಚ್ಚುವಂಥದ್ದು. +ಬಹುಶಃ ನಿರೂಪಕರಾರೂ ಈಗಿಲ್ಲ. +ಅವರ ಸಂಗ್ರಹಗಳೂ ಅವರ ಜೊತೆಯೇ ಆಧುನಿಕತೆಯ ಜೀವನಶೈಲಿಯಲ್ಲಿ ಅಡಗಿಹೋಗಿದೆ. +ಈಗಿನ ತಲೆಮಾರಿನವರ ಹತ್ತಿರ ಸ್ವಲ್ಪವೂ ಸಿಗುವ ಆಸೆಯಿಲ್ಲ. +ಮಾಡಿದ ಸಂಗ್ರಹವನ್ನು ಅವಲೋಕಿಸಿದಾಗ ಜನಪದರ ಮುಗ್ಧ ಮನಸ್ಸು, ಸ್ವಚ್ಛಂದ ವಾತಾವರಣ, ಆಗಿನ ಸಾಮಾಜಿಕ ರೀತಿ-ನೀತಿಗಳ ಕಲ್ಪನೆ, ಜೀವನದ ಸರಳತೆ, ಸರಳ-ಸುಲಭ ಚಿಕಿತ್ಸಾಪದ್ಧತಿ ಎಲ್ಲ ತಿಳಿಯ ಹತ್ತಿದೆ. +ತಂದೆಯವರೇ ಹೇಳಿಕೊಂಡಂತೆ ಅವರಿಗೆ ಹಳ್ಳಿಯ ಹಾಡುಗಳನ್ನು ಕಲಿತು, ಹೇಳುವ ಹವ್ಯಾಸ ಚಿಕ್ಕಂದಿನಿಂದೇ ಇತ್ತು. +ಧ್ವನಿ ಬಹಳ ಮಧುರವಾಗಿತ್ತು; ಸುಶ್ರಾವ್ಯವಾಗಿ ಹೇಳುತ್ತಿದ್ದರು. +ಹವ್ಯಕ ಹೆಂಗಸರಲ್ಲಿ ಹಬ್ಬ-ಹರಿದಿನಗಳಲ್ಲಿ, ಮದುವೆ ಮುಂಜಿಗಳಲ್ಲಿ, ಮುಂಜಾನೆ, ಸಂಜೆ ಕೆಲಸ ಮಾಡುವಾಗ ಹಾಡುಗಳನ್ನು ಹೇಳುವ ಪರಿಪಾಠವಿತ್ತು. +ಹೀಗಾಗಿ ಅರಿವಿಲ್ಲದಂತೆ ಜಾನಪದದತ್ತ ವಾಲಿದ್ದರು. +ಮೊದಮೊದಲು ಸಮಯದ ಅಭಾವದಿಂದ, ಹೋಮಿಯೋಪಥಿ ಔಷಧಗಳ ಅಭ್ಯಾಸ, ದಿನಾಲೂ ಬರುವ ರೋಗಿಗಳ ಉಪಚಾರ, ಕಾಲೇಜಿನ ಕೆಲಸಗಳ ಮೂಲಕ ಹೆಚ್ಚು ಸಮಯ ಸಿಗುತ್ತಿರಲಿಲ್ಲ. +ಕೆನರಾ ಕಾಲೇಜಿಂದ ಅಧ್ಯಾಪಕ ಕೆಲಸದಿಂದ ನಿವೃತ್ತಿಯ ನಂತರ ಉಳಿದ ಪೂರ್ತಿ ಆಯುಷ್ಯವನ್ನು ಜಾನಪದಕ್ಕಾಗಿಯೇ, ಆದರ ಸಂಗ್ರಹ, ಉಳಿಸುವ ಕೆಲಸಕ್ಕೇ ಮೀಸಲಿಟ್ಟಿದ್ದರು. +ಉತ್ತರ ಕನ್ನಡದ ಬಹುತೇಕ ಎಲ್ಲ ಹಳ್ಳಿಗಳನ್ನು ತಿರುಗಿ ಸಾಕಷ್ಟು ವೈವಿಧ್ಯಪೂರ್ಣ ಜಾನಪದ ಸಾಹಿತ್ಯವನ್ನು ಸಂಗ್ರಹಿಸಿದ್ದರು. +ಸಾಧ್ಯವಾದಷ್ಟು ಪ್ರಕಟಣೆ ಕಂಡಿವೆ. +ಈ ಕ್ಷೇತ್ರದಲ್ಲಿ ಅವರ ಏಳ್ಗೆಯನ್ನು ಕಂಡು ಪ್ರಕಟಣೆಗಳಿಗೆ ತೊಡಕನ್ನು ತಂದು ಒಡ್ಡುವವರೂ ಇದ್ದರು. +ಗಮನಕ್ಕೆ ಬಂದರೂ ಅಷ್ಟಾಗಿ ಹಚ್ಚಿಕೊಳ್ಳದೆ ತಮ್ಮ ಕೈಯಿಂದ ಖರ್ಚು ಮಾಡಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದರು. +ಜಾನಪದ ವೈದ್ಯಕೀಯದಲ್ಲಿ, ಅಂದರೆ- ಹಳ್ಳಿಯ ಚಿಕಿತ್ಸಾ ಪದ್ಧತಿಗಳನ್ನು ಅವರಷ್ಟು ಸಂಗ್ರಹಿಸಿ ಪ್ರಕಟಿಸಿದವರು ವಿರಳವೆಂದೇ ನನ್ನ ಭಾವನೆ. +ಆದರೆ, ಕೊನೆಗಾಲದಲ್ಲಿ ಪರಿಷ್ಕರಿಸಿ, ವಿಂಗಡಿಸಿ, ನಾವಿಬ್ಬರೂ ಕೂಡಿ ತಯಾರಿಸಿದ ಹಸ್ತಪ್ರತಿಗಳು-- ಸುಮಾರು ಮೂವತ್ತೈದು ಹಸ್ತಪ್ರತಿಗಳು. +ನಮಗಾರಿಗೂ ಅರಿವಿಲ್ಲದಂತೆ ಅವೆಲ್ಲವೂ ಯಾರದೋ ಕೈ ಸೇರಿದೆ; ಅವೆಲ್ಲ ಅತ್ಯಮೂಲ್ಯವಾಗಿದ್ದವು. +ಎಷ್ಟು ಪ್ರಯತ್ನಿಸಿದರೂ ಲಭ್ಯವಾಗಲಿಲ್ಲ. +ಆದರೆ,ಒಂದು ಮಾತು ಪರಿಷ್ಕರಿಸಿ,ವಿಂಗಡಿಸುವ ಮೊದಲು ಅವುಗಳ ಎರಡು-ಮೂರು ಮೂಲಪ್ರತಿಗಳು ಇರುತ್ತಿದ್ದವು. +ಆ ಸಂಗ್ರಹಗಳನ್ನು ನಮ್ಮ ಮನೆಗೆ ತಂದು, ಆ ಮೂಲ ಪ್ರತಿಗಳಿಂದ ಸುಮಾರು ೨೪-೨೫ ಹಸ್ತ ಪ್ರತಿಗಳನ್ನು ತಯಾರಿಸಿ ಅದನ್ನು ಇ-ಪ್ರಕಟಣೆಯ ಮೂಲಕ ಜಾನಪದ ಪ್ರೇಮಿಗಳಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ. +ನಾವಂತೂ ಈ ಕೆಲಸದ ಆಶೆಯನ್ನೇ ಬಿಟ್ಟಿದ್ದೆವು. +ಅನೇಕ ಜಾನಪದ ಕ್ಷೇತ್ರದಲ್ಲಿದ್ದವರ ಸಂಪರ್ಕ ಮಾಡುವ ಪ್ರಯತ್ನ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ. +ಎಲ್ಲರೂ ಹೆಗಡೆಯವರ ಬಗ್ಗೆ ಗೌರವದ ಮಾತನಾಡುವವರೇ ಹೊರತು ಸಹಾಯಕ್ಕೆ ಅಥವಾ ಮಾರ್ಗದರ್ಶನಕ್ಕೆ ಯಾರೂ ಮುಂದೆ ಬರಲಿಲ್ಲ. +ಕೊನೆಯಲ್ಲಿ ಶ್ರೀಯುತ ನಂದಕುಮಾರರ ಪರಿಚಯವಾಗಿ ಅವರು ಶ್ರೀಯುತ ಬೇಳೂರು ಸುದರ್ಶನರ ಬಗ್ಗೆ ಹೇಳಿದರು. +ನಾನು ನಿರಾಸೆಯಿಂದಲೇ ಕೊನೆಯ ಪ್ರಯತ್ನವೆಂದು ಅವರಿಗೆ ಫೋನ್ ಮಾಡಿದೆ. +ಅವರು ಸಹಾಯ ಹಾಗೂ ಮಾರ್ಗದರ್ಶನ ಮಾಡಲು ಮುಂದೆ ಬಂದರು. +ಇಂದು ಅವರ ಜೊತೆಯಲ್ಲಿ ಅವರ ಅನೇಕ ಸ್ನೇಹಿತರೂ ಕೈ ಜೋಡಿಸಿದ್ದಾರೆ. +ತಂದೆಯವರೇ ಹೇಳಿಕೊಂಡಂತೆ ೧೫ ಸಾವಿರ ಪುಟಗಳ ಸಂಗ್ರಹದಲ್ಲಿದ್ದ ಸ್ವಲ್ಪ ಭಾಗವನ್ನು ಉಳಿಸುವ ಪ್ರಯತ್ನ ಸಾಗಿದೆ. +ಇಷ್ಟು ಉಳಿದರೂ ನಮ್ಮೆಲ್ಲರ ಪ್ರಯತ್ನ ಸಾರ್ಥಕವಾಯಿತೆಂದು ತಿಳಿಯುತ್ತೇನೆ. +ಈ ನಿಟ್ಟಿನಲ್ಲಿ ಸಹಾಯ ಮಾಡಿದ ಎಲ್ಲರಿಗೂ ನಾವು ಚಿರಋಣಿಗಳು. +ಒಂದು ಊರಿನಲ್ಲಿ ಒಬ್ಬ ಅರಸನಿದ್ದನಂತೆ. +ಅವನಿಗೆ ಒಬ್ಬ ಹೆಂಡತಿಯಿದ್ದಳು. +ಬೆಳಿಗ್ಗೆ ಹೆಂಡತಿ ಎದ್ದು ಗಂಡನ ಪಾದಸೇವೆ ಮಾಡಿ, ಬಾಕಿ ಕೆಲಸ ಮಾಡುತ್ತಿದ್ದಳು. +ಒಂದು ದಿನ ಗಂಡನು ರಾಜ ಕಚೇರಿಗೆ ಹೋಗಿ ಬಂದ ಕೂಡಲೇ ಅವಳು, “ನಮಗೆ ಇಷ್ಟೆಲ್ಲಾ ಜಮೀನು. . . ರಾಜ್ಯ ಇದ್ದೂ ಏನು ಫಲ? +ಮಕ್ಕಳ ಸಂತತಿ ಇಲ್ಲ” ಅಂತ ಹೇಳಿದಳು. +ರಾಜನು, ‘‘ನಮಗೆ ಸಂತತಿಯೋಗ ಇದೆ. . . ಎಂಟು ವರ್ಷ ಅಜ್ಞಾತವಾಸ ಕಳೆಯಬೇಕು; +ಹದಿನಾಲ್ಕು ವರ್ಷ ಅರಣ್ಯವಾಸವೇ ಕಳೆಯಬೇಕು. +ಅದರ ನಂತರ ಸಂತತಿಯೋಗ ಇದೆ’’ ಎಂದು ಹೇಳಿದನು. +‘‘ನಾನು ಹೋಗುವ ಕೆಲಸಕ್ಕೆ (ಅಂದರೆ ರಾಜಕಾರ್ಯಕ್ಕೆ) ನೀನು ಹೋಗುವದಾದರೆ ನಾನು ಅರಣ್ಯಕ್ಕೆ ಹೋಗಿ ಬರುತ್ತೇನೆ’’ ಅಂತ ಹೆಂಡತಿಯ ಹತ್ತಿರ ಹೇಳಿದನೆಂಬುದಾಯಿತು. +‘‘ನೀನು ನಡೆಸಿದಂತೆ ಕಚೇರಿ ವ್ಯವಹಾರ ನಾನು ನಡೆಸುತ್ತೇನೆ. +ನೀನು ಹೋಗಿ ಬರಲಿಕ್ಕೆ ಅಡ್ಡಿಯಿಲ್ಲ’’ ಅಂತ ಅವಳು ಹೇಳಿದಳು. +ಹೀಗೆ ಅವನು ತಪಸ್ಸಿಗೆ ಹೋಗಿ ಕುಂತನು. +ಕುಂತ ಕೂಡಲೇ ಅಲ್ಲಿ ಪುಣ್ಯ ಸ್ವಾಮಿಗಳು, ಬ್ರಾಹ್ಮಣರು ಎಲ್ಲರಿಗೂ ಉರಿ ಉಪಟಳ ಸುರುವಾಯಿತು. +ಆ ಕೂಡಲೇ ಬ್ರಹ್ಮ-ವಿಷ್ಣು- ಮಹೇಶ್ವರರು ಕೈಲಾಸಕ್ಕೆ ಹೋದರು. +“ನಾನು ಊರಲ್ಲಿ ಉಳಿಯಬೇಕೋ? +ಸಾಯಬೇಕೋ?’’ ಎಂದು ಕೇಳಿದರು. +ಆ ಕೂಡಲೇ, ‘‘ನೀವು ಹೆದರಬೇಡಿರಿ. . . ಧೈರ್ಯಸ್ತರಾಗಿರಿ. ನಾನು ನಿಮಗೆ ಬಂದ ಕಷ್ಟವನ್ನು ದೂರ ಮಾಡುತ್ತೇನೆ’’ ಅಂತ ಹೇಳಿದ ಈಶ್ವರನು, ಗುಹೆಗಾಗಿ ಬಂದನು. +ಅರಸನನ್ನು ಕರೆದು, ‘‘ಇಲ್ಲಿ ನಿನಗೆ ತಪಸ್ಸು ಯೋಗ್ಯವಲ್ಲ. +ನೀನು ಮನೆಗೆ ಹೋಗು. +ಮೂರನೇ ದಿವಸಕ್ಕೆ ನಾನು ಬಂದು, ನಿನಗೆ ಸಂತತಿಯೋಗವನ್ನೇ ಕೊಡುತ್ತೇನೆ’’ ಎಂದು ಹೇಳಿದ ಕೂಡಲೇ ಆ ಅರಸನು ಮನೆಗೆ ಬಂದನು. +ರಾಜನು ಕಚೇರಿಯ ವ್ಯವಹಾರದ ಮೇಲೆ ಉಳಿಯುತ್ತಿರುವಾಗ-- ಬ್ರಾಹ್ಮಣ ವೇಷವನ್ನೇ ಧಾರಣೆ ಮಾಡಿ ಈಶ್ವರನು ಅವನ ಮನೆಗೆ ಬಂದಿದ್ದಾನೆ. +ಹೆಂಡತಿ ಯಾರೋ ಬ್ರಾಹ್ಮಣರು ಮನೆಗೆ ಬಂದಿದ್ದಾರೆ ಅಂತ ಪಡಿ (ಭಿಕ್ಷೆಯ ಅಕ್ಕಿ) ತರುವುದರೊಳಗೆ ಅಲ್ಲಿಲ್ಲ ಅವರು. +ಅವಳು ಚಿಂತೆ ಮಾಡುತ್ತಲಿದ್ದಳು. +ಗಂಡನು ಬಂದು ಕೂಡಲೇ, ‘‘ಏನು ಚಿಂತೆ ಮಾಡುತ್ತೀ? +’’ ಅಂತ ಕೇಳಿದನು. +ಆಗ, ‘‘ಮತ್ತೇನಿಲ್ಲ, ನಮ್ಮ ಮನೆಗೆ ಒಬ್ಬ ಬ್ರಾಹ್ಮಣರು ಬಂದಿದ್ದರು. . . ಭಿಕ್ಷೆ ತರುವುದರೊಳಗೆ ಅವರು ಇಲ್ಲ’’ ಅಂದಳು. +‘‘ಅವರು ನನಗೆ ಮೂರು ದಿನಗಳ ವಾಯಿದೆಯನ್ನೇ ಕೊಟ್ಟಿದ್ದರು. +‘ನಿನಗೆ ಹುಡುಗರ ಸಂತತಿ ಯೋಗವನ್ನೇ ಮೂರು ದಿನಗಳಲ್ಲಿ ಕೊಡುತ್ತೇನೆ. +ನೀನು ಮನೆಗೆ ಹೋಗು’ ಅಂತ ಹೇಳಿದ್ದರು. +ಒಂದು ದಿನ ಕಳೆದಿದೆ. +ನಾನು ನಾಳೆ ಕಚೇರಿಯಿಂದ ಬರುವುದರೊಳಗೆ ನೀನು ಹರಿವಾಣದೊಳಗೆ ಹಾಲು-ಹಣ್ಣುಗಳನ್ನು ಹಾಕಿ ಇಟ್ಟುಕೊಳ್ಳಬೇಕು. +ನಾನು ಊಟಕ್ಕೆ ಬಂದು ಕುಂತಾಗ, ನೀನು ಹೊಳ್ಳಿಯ ಮೇಲೆ ಕೂತುಕೊಳ್ಳಬೇಕು. +ಅಲ್ಲಿ ಬ್ರಾಹ್ಮಣರು ಬಂದ ಕೂಡಲೇ ನಮಸ್ಕಾರ ಮಾಡಬೇಕು. +‘ಗಂಡ ಎಲ್ಲಿ ಹೋಗಿದ್ದಾನೆ’ ಅಂತ ಕೇಳುತ್ತಾರೆ ಅವರು. +ಊಟಕ್ಕೆ ಕುಂತಿದ್ದಾರೆ ಅಂದ ಕೂಡಲೇ ಸಮಾಧಾನವಾಗಿ ಕುಳ್ಳುತ್ತಾರೆ. +’’ಮಾರನೇ ದಿವಸ ರಾಜ ಕಚೇರಿ ಕೆಲಸವನ್ನೇ ಮುಗಿಸಿ ಊಟಕ್ಕೆ ಬಂದಿರುವನು. +ಹೆಂಡತಿ ಕೆಲಸವನ್ನೆಲ್ಲಾ ಸರಿಯಾಗಿ ಮಾಡಿ ಇಟ್ಟಿದ್ದಾಳೆ. +ಅವನು ಊಟಕ್ಕೆ ನಡೆದನು. +ಊಟವನ್ನು ಮಾಡಲು ಕುಳಿತ ಕೂಡಲೇ ಬ್ರಾಹ್ಮಣನು ಬಂದನು. +ಹರಿವಾಣವನ್ನು ಅವರ ಕೈಯಲ್ಲಿ ಕೊಟ್ಟು ನಮಸ್ಕಾರ ಮಾಡಿದಳು. +ಆಗ, ‘‘ನಿನ್ನ ಗಂಡ ಎಲ್ಲಿ ಹೋಗಿದ್ದಾನೇ? +’’ ಅಂತ ಕೇಳಿದನು. +‘‘ಊಟಕ್ಕೆ ಕುಂತಿದ್ದಾರೆ’’ ಅಂತ ಹೆಂಡತಿ ತಿಳಿಸಿದಳು. +ಬ್ರಾಹ್ಮಣನು ಹಾಲು-ಸಕ್ಕರೆಯನ್ನು ಸ್ವೀಕಾರ ಮಾಡಿದನು. +ಆಗ ಗಂಡ ಬಂದನು, “ಎಲೇ ಅರಸಾ. . . ಮೂರು ದಿವಸಗಳೊಳಗೆ ನಿನಗೆ ಸಂತತಿ ಕೊಡುತ್ತೇನೆಂದು ತಿಳಿಸಿದ್ದೆನಲ್ಲವೋ? +ಸಂತತಿಯನ್ನು ಕೊಟ್ಟೇಬಿಟ್ಟೆ” ಅಂತ ಹೇಳಿ ಬ್ರಾಹ್ಮಣನು, “ಹುಡುಗ ಹುಟ್ಟುತ್ತಾನೆ. +ಅವನಿಗೆ ಹದಿನೈದು ವರ್ಷ ಆಯುಷ್ಯ. . . ” ಅಂದನು. +“ನಾವು ಅವನ ಮರಣವನ್ನು ತಪ್ಪಿಸುವುದು ಹೇಗೆ? +” ಅಂತ ಕೇಳಿದ ಅರಸು. +“ಇದೇ ಊರಿನ ಆಸುಪಾಸಿನಲ್ಲಿನ ಊರಿನಲ್ಲಿ ಅರಗಂಗೆ ಎಂಬ ಹುಡುಗಿಯನ್ನು ಹಡೆದ ಹೆಂಗಸಿದ್ದಾಳೆ. +ಅವಳ ಆ ಹುಡುಗಿಯನ್ನೇ ತಂದು ಅವನಿಗೆ ಲಗ್ನ ಮಾಡಿದರೆ, ಅವನ ಮರಣವನ್ನು ಅವಳು ತಪ್ಪಿಸುತ್ತಾಳೆ” ಅಂತ ಹೇಳಿ ಬ್ರಾಹ್ಮಣನು ಹೋದನು. +ಆ ಕೂಡಲೇ ನಾಲ್ಕು ಜನ ಆಳುಗಳನ್ನು ಅರಗಂಗೆಯನ್ನು ಅರಸಲು ಅರಸನು ಕಳಿಸಿದನು. +ಅವರಿಗೆ ಹುಡುಗಿ ಎಲ್ಲಿಯೂ ಸಿಗದೆ, ಅವರು ತಿರುಗಿ ಬಂದು-- ‘‘ಅವಳನ್ನು ಹುಡುಕುವದು ನಮ್ಮಿಂದ ಸಾಧ್ಯವಿಲ್ಲ’’ ಅಂತ ತಿಳಿಸಿದರು. +‘‘ಆದದ್ದಾಗಲಿ, ನಾನೇ ಸ್ವತಃ ಹೋಗಿ ನೋಡುತ್ತೇನೆ’’ ಅಂತ ಹೇಳಿ ಅರಸನು ಹೋದನು. +‘‘ಹುಡುಗನಿಗಾಗಿ ಅರಗಂಗೆ ಸಿಕ್ಕ ವಿನಾ ನಾನು ಮನೆಗೆ ಬರುವುದಿಲ್ಲ’’ ಎಂದು ಪಣವನ್ನು ಮಾಡಿ, ಮನೆಯ ಹೊರಗೆ ಬಿದ್ದನು. +ಊರನ್ನು ಬಿಟ್ಟು ಹೊರಗಿನ ರಾಷ್ಟ್ರಕ್ಕೆ ಹೋಗಿ ಸೇರಿದನು. +ಸಂಜೆಯ ವೇಳೆಯಲ್ಲಿ ಒಂದು ಅಶ್ವತ್ಥಕಟ್ಟೆಯ ಮೇಲೆ ಒರಗಿದನು. +ಪೂರ್ವ ದಿಕ್ಕಿನಿಂದ ಒಂದು ಹೆಣ್ಣು ಗರುಡ ಪಕ್ಷಿಯೂ, ಒಂದು ಗಂಡು ಪಕ್ಷಿಯೂ ಅದೇ ಮರದ ಮೇಲೆ ಬಂದು ಕುಳಿತಿದ್ದವು. +ಆ ಹೆಣ್ಣು ಹಕ್ಕಿಯು, “ಗಂಡಸರೇ, ರಾತ್ರಿಯನ್ನು ಕಳೆಯಲಿಕ್ಕಾಗುವುದಿಲ್ಲ. +ಒಂದು ಕತೆ ಹೇಳಿರಿ. . . ” ಅಂತ ಹೇಳಿತು. +‘‘ಕತೆ ಏನು? +ನಮ್ಮ ಸಂಸಾರದಲ್ಲಿದ್ದ ಕತೆಯೇ’’ ಅಂತ ಗಂಡು ಗರುಡ ಪಕ್ಷಿ ಹೇಳಿತು. +‘‘ಅದನ್ನಾದರೂ ಹೇಳಿರಿ. . . ’’‘‘ಒಬ್ಬ ಅರಸನು ಅರಗಂಗೆ ಎಂಬ ಹೆಣ್ಣನ್ನು ಅರಸುವ ಬಗ್ಗಾಗಿ ಬಂದು ಸಂಜೆಯಾಯಿತೆಂದು ಈ ಕಟ್ಟೆಯ ಮೇಲೆ ಬಂದು ಒರಗಿದ್ದಾನೆ’’ ಅಂತ ಗಂಡು ಪಕ್ಷಿ ಹೇಳಿತು. +“ಅರಗಂಗೆ ಎಲ್ಲಿಗೆ ಹೋದರೆ ಸಿಕ್ಕತ್ತಾಳೆ? +” ಅಂತ ಹೆಣ್ಣು ಹಕ್ಕಿ ಕೇಳಿತು. +‘ಇದೇ ಕಟ್ಟೆಯ ಕೆಳಗೆ ಒಂದು ಕೆರೆಯಿದೆ. +ಬೆಳಿಗ್ಗೆ ಎದ್ದು ಕೆರೆಯಲ್ಲಿ ಮೋರೆ ತೊಳೆದು, ದೇವರಿಗೆ ನಮಸ್ಕಾರವನ್ನು ಮಾಡಿ, ಅರಸನು ಅಲ್ಲೇ ಮೇಲೆ ಪೂರ್ವ ದಿಕ್ಕಿಗೆ ಒಂದು ಬೈಲಿದೆ. . . ಆ ಬಯಲಲ್ಲೇ ಮುಂದೆ ಹೋದ ಕೊಡಲೇ, ಆ ಅರಗಂಗೆ ಮನೆಗೇ ಹಾದಿ ಹೋಗುತ್ತದೆ. +ಅಲ್ಲಿಗೆ ಹೋದರೆ ಅರಗಂಗೆ ಸಿಗುತ್ತಾಳೆ’’ ಅಂತ ಹೇಳಿತು. +ಅವನು ಬೆಳಿಗ್ಗೆ ಬೇಗನೆ ಎದ್ದು ಕೆರೆಯಲ್ಲಿ ಮುಖ ತೊಳೆದು, ದೇವರಿಗೆ ನಮಸ್ಕಾರ ಮಾಡಿ ಪೂರ್ವ ದಿಕ್ಕಿಗೆ ಹೋದನು. +ಅರಗಂಗೆಯ ಮನೆಗೆ ಹೋದನು. +ಅಲ್ಲಿ ಅವನಿಗೆ ತಕ್ಕ ವ್ಯವಸ್ಥೆಯನ್ನು ಮಾಡಿ ಮನ್ನಿಸಿದರು. +“ಯಾವೂರಾಯಿತು? +ಯಾವ ದೇಶವಾಯಿತು? +ಯಾತಕ್ಕೆ ಬಂದದ್ದು? +” ಅಂತ ವಿಚಾರಿಸಿದರು. +“ಅರಗಂಗೆ ಎಂಬ ಹುಡುಗಿ ನಿಮ್ಮ ಮನೆಯಲ್ಲಿದ್ದಾಳೆ ಅಂತ ಕೇಳಿ ಬಂದೆನು. +ಅವಳನ್ನು ನನ್ನ ಹುಡುಗನಿಗೆ ಲಗ್ನಮಾಡಿ ಕೊಡಬೇಕು. +”‘‘ನಮ್ಮಲ್ಲಿ ಅರಗಂಗೆ ಎಂಬ ಹುಡುಗಿಯಿರುವುದು ಹೌದು. . . ನಿಮ್ಮ ಮಗನಿಗೆ ಲಗ್ನ ಮಾಡಿಕೊಡುತ್ತೇವೆ’’ ಎಂದು ಹೇಳಿ, ಆದಿತ್ಯವಾರ ದಿವಸಕ್ಕೆ ಲಗ್ನ ಮೂಹೂರ್ತವನ್ನು ಇಟ್ಟಿದ್ದರು. +ಆಗ ಮಂಟಪದಲ್ಲಿ ಕುಳಿತು ಧಾರೆಯನ್ನು ಮಾಡುತ್ತಿರುವಾಗ ಹುಡುಗನ ಪ್ರಾಣವು ಹಾರಿಹೋಯಿತು. +ಆ ಹೊತ್ತಿಗೆ ಹದಿನೈದು ವರ್ಷಗಳಾಗಿದ್ದವು. +‘ಇನ್ನು ಮಾಡುವುದೇನು? +ಹುಡುಗನ ಕೆಲಸ ಹೀಗಾಯಿತು’ ಅಂತ ತಿಳಿದು, ಮುಂದೆ ಮಾಡುವ ವ್ಯವಸ್ಥೆಯ ಕುರಿತು ಮಾತಾಡಿದರು. +ಹುಡುಗ ತೀರಿಹೋದನೆಂದು ಮಸಣಕ್ಕೆ ತಕ್ಕೊಂಡು ಹೋಗಬೇಕಾದರೆ, ‘ಬಾಸಿಂಗವನ್ನು ಕಳಚಬೇಕು’ ಅಂತ ಮಾತಾಡಿದರು. +ಆಗ ಹುಡುಗನ ಹೆಂಡತಿ ಅರಗಂಗೆ-- “ಅವರ ಮೈಮೇಲೆ ಹಾಕಿದ ವಸ್ತ್ರವನ್ನಾಗಲಿ, ಬಾಸಿಂಗವನ್ನಾಗಲಿ, ಯಾವುದನ್ನೂ ತೆಗೆಯಬಾರದು. +ತೆಗೆಯುವುದಿದ್ದರೆ ಗಂಡನ ಬೆನ್ನಿಗೇ ನನ್ನ ಜೀವವನ್ನು ತೆಗೆದುಬಿಡಿ” ಅಂತ ಹೇಳಿದಳು. +ಅವನ ಹೆಣವನ್ನು ತಕ್ಕೊಂಡು ಹೋಗಿ ಒಂದು ಗುಡ್ಡದ ಮೇಲೆ ಭಸ್ಮ ಮಾಡಿದರು. +ಅಲ್ಲಿಂದ ತಿರುಗಿ ಬರುವಾಗ, ‘‘ನನ್ನ ಗಂಡ ನನಗೆ ಸಿಕ್ಕ ಹೊರತು ನಾನು ಮನೆಯನ್ನು ಸೇರುವುದಿಲ್ಲ. . . ’’ ಎಂದು ತಿಳಿಸಿದಳು ಅರಗಂಗೆ. +ಅರಗಂಗೆ ಉಳಿಯುವ ಸಲುವಾಗಿ ಅಲ್ಲೇ ಒಂದು ಬಿಡಾರವನ್ನು ಕಟ್ಟಿ, ಒಬ್ಬ ಆಳು ಮಗನನ್ನು ಕರೆದುಕೊಂಡು ಹೋಗಿ ಅಲ್ಲಿ ಇಟ್ಟರು. +ಆ ಆಳು ಕಟ್ಟಿಗೆಯನ್ನು, ನೀರನ್ನು ತರುವುದು. . . ಮುಂತಾದ ಕೆಲಸ ಮಾಡುತ್ತ ಅಲ್ಲಿ ಉಳಿದನು. +ಆ ಹುಡುಗನು ಒಂದು ದಿನ ಕಟ್ಟಿಗೆಗೆ ಹೋದಾಗ ಸಂಜೆಯಾಗಿ ಹೋಯಿತು. +ಅವನು ಅಲ್ಲೇ ಒಂದು ಆಲದ ಮರಕ್ಕೆ ಕಟ್ಟಿಗೆ ಹೊರೆಯನ್ನು ಚಾಚಿ, ಆಲದ ಮರದ ಮೇಲೆ ಕೂತನು. +‘‘ಅಯ್ಯೋ. . . ನನ್ನ ತಮ್ಮ ಕಟ್ಟಿಗೆ ತರಲಿಕ್ಕೆ ಹೋದವನು ಇನ್ನೂ ಬರಲಿಲ್ಲ’’ ಎಂದು ಹೇಳಿ ಅರಗಂಗೆ ಬೊಬ್ಬೆ ಹಾಕಿದಳು. +ಇತ್ತ ಅವನು ಮರದ ಮೇಲೆ ಕುಳಿತುಕೊಂಡಿರುವಾಗ ದೊಡ್ಡ ದೊಡ್ಡ ರಾಕ್ಷಸರೂ, ಯಮನೂ, ಅಗ್ನಿಯೂ, ವಾಯುವೂ ಮಸಣದಿಂದ ಸ್ವರ್ಗಕ್ಕೆ ಹೋಗಲು ಹೊರಟಿದ್ದರು. +ಮತ್ತೊಂದು ತಾಸಿನ ಮೇಲೆ ಮಸಣದಿಂದ ಒಂದು ಆಕಳು ಬಂತು. +“ಇನ್ನು ಮನೆಗೆ ಹೋಗಿ ಸೇರಬೇಕು” ಎಂದು ಹುಡುಗನು ಮರದಿಂದ ಇಳಿದನು. +ಆಕಳು ಸ್ವರ್ಗದ ಬಾಗಿಲಿಗೆ ಹೋಗಿ ನಿಂತಿತು. +ಈ ಹುಡುಗನು ಒಂದು ಹಿಂಡಿನ ಒಳಗೆ ಹೊಕ್ಕು ಕುಳಿತಿದ್ದನು. +ಮದುವೆಯಾಗಿ ಬಾಸಿಂಗ ಕಟ್ಟಿಕೊಂಡಿದ್ದ ರಾಜನ ಮಗನು ಸ್ವರ್ಗದಿಂದ ಒಂದು ಕರುವನ್ನು ಬಿಟ್ಟುಕೊಂಡು ಹೊರಗೆ ಬಂದನು. +ಆಕಳ ಹತ್ತಿರ ಹೋಗಿ ಕುಳಿತು, ಒಂದು ಚಂಬು ಹಾಲನ್ನು ಕರೆದನು. +ಸ್ವಲ್ಪ ಹಾಲನ್ನು ಕೆಳಗೆ ಚೆಲ್ಲಿದನು. +“ನನ್ನ ತಂದೆ-ತಾಯಿ ನನ್ನದೇ ಧ್ಯಾನದಲ್ಲಿದ್ದಾರೆಯೋ? +ಅತ್ತೆ-ಮಾವ ನನ್ನದೇ ಧ್ಯಾನದಲ್ಲಿದ್ದಾರೆಯೋ? +ನನ್ನ ಕೈ ಹಿಡಿದಂಥಾ ಅರಗಂಗೆ ನನ್ನದೇ ಧ್ಯಾನದಲ್ಲಿದ್ದಾಳೆಯೋ? +” ಅಂತ ಆಕಳ ಹತ್ತಿರ ಅವನು ಕೇಳಿದನು. +‘‘ಎಲ್ಲರೂ ನಿನ್ನದೇ ಧ್ಯಾನದಲ್ಲಿದ್ದಾರೆ’’ ಅಂತ ಆಕಳು ಹೇಳಿತು. +ಕರುವನ್ನು ಪುನಃ ತಕ್ಕೊಂಡು ಅವನು ಸ್ವರ್ಗಕ್ಕೆ ಹೋದನು. +ಇತ್ತ ಈ ಆಳು ಮಗನು ಕಟ್ಟಿಗೆ ಹೊರೆಯನ್ನು ಹೊತ್ತುಕೊಂಡು ಅಕ್ಕನ ಹತ್ತಿರ ಬಂದನು. +‘‘ನಿನ್ನೆ ಕಟ್ಟಿಗೆಗೆ ಹೋದವನು ಬರಲೇ ಇಲ್ಲ ಎಂದು ನಾನು ಬಹಳ ಚಿಂತೆಯಲ್ಲಿದ್ದೆನು’’ ಅಂತ ಅರಗಂಗೆ ಅವನೊಡನೆ ಹೇಳಿದಳು. +“ನಾನು ರಾತ್ರಿಯಾಗಿ ಹೋದ್ದರಿಂದ ಅಲ್ಲೇ ಒಂದು ಆಲದ ಮರವನ್ನು ಹತ್ತಿ ಕುಳಿತಿದ್ದೆ. +ಬೆಳಗಾದ ಕೂಡಲೇ ಒಂದು ಆಕಳು ಮಸಣದಿಂದ ಸ್ವರ್ಗಕ್ಕೆ ಹೋಗಲಿಕ್ಕಾಗಿ ಹೊರಟಿತು. +ಆಕಳ ಬೆನ್ನು ಹತ್ತಿ ನಾನು ಹೋಗಿ, ಒಂದು ಹಿಂಡಿನ ಒಳಗೆ ಕುಳಿತುಕೊಂಡಿದ್ದೆನು. +ಸ್ವರ್ಗದಿಂದ ಭಾವನು ಒಂದು ಕರುವನ್ನು ಹೊಡೆದುಕೊಂಡು ಬಂದು ಒಂದು ಚಂಬು ಹಾಲನ್ನು ಕರೆದು, ಅರ್ಧ ಹಾಲನ್ನು ಚೆಲ್ಲಿದನು. +ಚೆಲ್ಲಿ ಉಳಿದ ಹಾಲನ್ನು ಕುಡಿದು, ‘ನನ್ನ ಅಪ್ಪ-ಅವ್ವ, ಅತ್ತೆ-ಮಾವ. . . ಅಲ್ಲದೆ, ನನ್ನ ಕೈಹಿಡಿದ ಅರಗಂಗೆ ನನ್ನದೇ ಧ್ಯಾನದಲ್ಲಿದ್ದಾರೆಯೋ? +’ ಅಂತ ಆಕಳ ಹತ್ತರ ಕೇಳಿದನು. +ಆಕಳು, ‘ಎಲ್ಲರೂ ನಿನ್ನದೇ ಧ್ಯಾನದಲ್ಲಿದ್ದಾರೆ’ ಅಂತ ಹೇಳಿತು. +ಆಗ ಅವನು ಕರುವನ್ನು ತೆಗೆದುಕೊಂಡು ಸ್ವರ್ಗಕ್ಕೆ ಹೋದನು. +ನೀನೂ ಬೇಕಾದರೆ ಬಾ. . . ಭಾವನನ್ನು ತೋರಿಸಿಕೊಡುತ್ತೇನೆ” ಅಂದನು. +ಸಂಜೆ ಸಾಧಾರಣ ಐದು ಗಂಟೆಯ ಸಮಯದಲ್ಲಿ ಊಟವನ್ನು ಮುಗಿಸಿ, ಅಕ್ಕ-ತಮ್ಮ ಇಬ್ಬರೂ ಕೂಡಿ ಮರದ ಮೇಲೆ ಹೋಗಿ ಕುಳಿತಿದ್ದರು. +ಸಾಧಾರಣ ಬೆಳಗು ಜಾವಕ್ಕೆ ಆಕಳು ಸ್ವರ್ಗಕ್ಕೆ ಹೋಗಲು ಬಂದಿತ್ತು. +ಇಬ್ಬರೂ ಅಕ್ಕ-ತಮ್ಮ ಮರದಿಂದ ಕೆಳಗಿಳಿದರು. +ಆಕಳ ಬೆನ್ನ ಹಿಂದೆ ಹೋದರು. +ಅಲ್ಲಿ ಹೋಗಿ ಸ್ವರ್ಗದ ಬಾಗಿಲಲ್ಲಿ ಒಂದು ಹಿಂಡಿನೊಳಗೆ ಇವರು ಕುಳಿತರು. +ಸ್ವರ್ಗದಿಂದ ಭಾವನು ಕರುವನ್ನು ಕಟ್ಟುಕೊಂಡು ಹೊರಗೆ ಬಂದನು. +ಹಾಲನ್ನು ಕರೆದು, ಅರ್ಧ ಹಾಲನ್ನು ಚೆಲ್ಲಿ, ‘‘ತಾಯಿ-ತಂದೆ, ಅತ್ತೆ-ಮಾವ, ನನ್ನ ಕೈಹಿಡಿದುಕೊಂಡು ಬಂದಂಥಾ ಅರಗಂಗೆ ಎಲ್ಲರೂ ನನ್ನದೇ ಧ್ಯಾನದಲ್ಲಿದ್ದಾರೆಯೋ? +’’ ಅಂತ ಕೇಳಿದನು. +ಕೂಡಲೇ ಅರಗಂಗೆ ಗಂಡನನ್ನು ಕಂಡವಳು, ಅವನನ್ನು ಹಿಡಿಯಲಿಕ್ಕೆ ಹೋಗಲು ಪ್ರಾರಂಭಿಸಿದಳು. +‘‘ಎಲಾ ಹೆಂಡತಿಯೇ. . . ಮರುಳು ಹುಡುಗಿಯೇ. + . . ನನ್ನನ್ನು ಕಿಟ್ಟಬೇಡ. +ಕಿಟ್ಟಿದರೆ ನೀನು ಭಸ್ಮವಾಗಿಹೋಗುತ್ತಿದ್ದೆ. +ನಾನು ನಿನಗೆ ಬೇಕೆಂದಿದ್ದರೆ, ನೀನು ಸಾವಿರಗಟ್ಟಲೆ ಹೂವಿನ ಗಿಡಗಳನ್ನು ನೀನಿದ್ದ ಜಾಗದಲ್ಲಿ ನೆಡಬೇಕು. +ಬಹಳ ಹೂಗಳಾಗಿ ಸುಗಂಧಿಕವಾಗಿರುವ ಹೂಗಳ ಪರಿಮಳವು ದಿಗ್ದೇಶಗಳಿಗೆ ಹರಡುತ್ತದೆ. +ಕೈಲಾಸದಲ್ಲಿರುವ ಈಶ್ವರನೂ, ಪಾರ್ವತಿಯೂ ವೈಭವಸಂಪನ್ನರಾಗಿ ಬರುತ್ತಿರುವಾಗ, ‘ಈ ಉದ್ಯಾನವನ್ನು ತಯಾರು ಮಾಡಿದವರು ಯಾರು? +’ ಅಂತ ಕೇಳುತ್ತ ಈ ಉದ್ಯಾನವನಕ್ಕೆ ಬರುತ್ತಾರೆ. +ಅವರು ಬರುವ ಸಮಯದಲ್ಲಿ ಉದ್ಯಾನದ ನಡುಮಧ್ಯದಲ್ಲಿ ನೀನು ಕುಳ್ಳಬೇಕು. +’’ ಇಷ್ಟು ಮಾತನ್ನು ಹೇಳಿ ಅರಗಂಗೆಯ ಗಂಡನು ಸ್ವರ್ಗಕ್ಕೆ ಬಂದನು. +ಅಕ್ಕನೂ, ತಮ್ಮನೂ ಕೂಡಿಕೊಂಡು ಹಿಂದೆಯೇ ಮನೆಗೆ ಬಂದರು. +ಸಾವಿರಗಟ್ಟಲೆ ಹೂಗಿಡಗಳನ್ನು ತಂದು ಬಿಡಾರದ ಮುಂಭಾಗದಲ್ಲಿ ನೆಟ್ಟರು. +ನೆಟ್ಟು ನೀರನ್ನು ಹಾಕುತ್ತಿದ್ದರು. +ಹೂ ಗಿಡಗಳು ಹೂಬಿಡಲು ಪ್ರಾರಂಭಿಸಿದವು. +ಸುಗಂಧಿಕವಾದ ಹೂಗಳ ಸುವಾಸನೆಯು ದೇಶ-ದೇಶಗಳಿಗೆ ಹಬ್ಬಿ ಕೈಲಾಸದವರೆಗೆ ಹೋಗಿ ಮುಟ್ಟಿತು. +ಪಾರ್ವತಿಯು ಗಂಡನ ಹತ್ತಿರ-- ‘‘ಇದು ಏನು ವಿಚಿತ್ರ? +ಭೂಲೋಕದಲ್ಲಿ ಯಾರೋ ನರಮನುಷ್ಯರು ಉದ್ಯಾನವನವನ್ನು ತಯಾರು ಮಾಡಿದ್ದಾರೆ. +ಅಲ್ಲಿಗೆ ನಾವು ಹೋಗಲೇಬೇಕು’’ ಎಂದು ತಿಳಿಸಿದಳು. +ಕೈಲಾಸದಿಂದ ಭೂಲೋಕಕ್ಕೆ ಬರುತ್ತಿರುವಾಗ ಉದ್ಯಾನವನಕ್ಕೆ ಬಂದು ಮುಟ್ಟಿದರು. +ಅಲ್ಲಿ ಅರಗಂಗೆಯು ಒಂದು ಬದಿಗೆ ಹೂವಿನ ಗಿಡದ ನಡುವೆ ಕುಳಿತಿದ್ದಳು. +ಆಗ, “ಇದು ಏನು ವಿಚಿತ್ರ! +ಗುಡ್ಡದ ಮೇಲೆ ಇಂಥ ಬೆಣದಲ್ಲಿ ಈ ಉದ್ಯಾನವನವನ್ನು ತಯಾರು ಮಾಡಿರುವರಲ್ಲ. +ತಯಾರು ಮಾಡಿದವರು ಕೇಳಿದ ವರವನ್ನೇ ನಾನು ಕೊಡುತ್ತಿದ್ದೆ” ಎಂದು ಈಶ್ವರನು ಹೇಳಿಬಿಟ್ಟನು. +ಆಗ ಅರಗಂಗೆಯು, ‘‘ಸ್ವಾಮೀ. . . ’’ ಎಂದು ಈಶ್ವರನ ಪಾದಕ್ಕೆ ಹೋಗಿ ನಮಸ್ಕಾರ ಮಾಡಿದಳು, ‘‘ನನ್ನ ಗಂಡನನ್ನು ನನಗೆ ಕೊಟ್ಟುಬಿಟ್ಟರೆ ನನಗೆ ಯಾವ ವರವೂ ಬೇಡ ಸ್ವಾಮೀ. + . . ’ ಅಂದಳು. +ಈಶ್ವರನು, ‘‘ನೀನು ಮತ್ತೆ ಯಾವ ವರವನ್ನೇ ಕೇಳು. +ಇದನ್ನು ಮಾತ್ರ ಎತ್ತಬೇಡ. . . ’’ ಅಂತ ಹೇಳಿದನು. +“ಹಾಗಾದರೆ, ನಿಮ್ಮ ಹೆಂಡತಿ ನಿಮ್ಮ ವಶದಲ್ಲಿದ್ದರೆ ಎಷ್ಟು ಚಂದವಾಗುತ್ತದೆ. +ನನ್ನ ಗಂಡನು ನನ್ನ ಬೆನ್ನಿಗೆ ಇದ್ದರೆ ನನಗೆ ಒಂದು ಚಂದ. +ಗಂಡನಿಲ್ಲದ ಮೇಲೆ ಮುಂಡೆಯಾಗಲಿಲ್ಲವೇ ನಾನು ಸ್ವಾಮಿ? +” ಎಂದು ತಿಳಿಸುತ್ತಿರುವಾಗ, ಪಾರ್ವತಿಯು- “ವಲ್ಲಭಾ. . . ಅದು ಒಂದು ಹೌದು. +ನನ್ನ ಸಂಗಡ ನೀವಿದ್ದರೆ ನನ್ನ ಚೆಂದ. +ಅವಳ ಸಂಗಡ ಅವಳ ಗಂಡನಿದ್ದರೆ ಅವಳಿಗೆ ಒಂದು ಚೆಂದ” ಎಂದು ಹೇಳಿದಳು. +ಈಶ್ವರನು ಪಾರ್ವತಿಯನ್ನು, ಅರಗಂಗೆಯನ್ನೂ ಉದ್ಯಾನದಲ್ಲಿ ಕುಳ್ಳಿರಿಸಿ ಸ್ವರ್ಗಕ್ಕೆ ಹೋದನು. +ಹೋಗಿ ಅರಗಂಗೆಯ ಗಂಡನನ್ನು, ‘‘ಹೊರಗೆ ಬಾ. . . ’’ ಎಂದು ಕರೆದನು. +ಹಿಂದಿನಿಂದ ಕಮಂಡಲದಿಂದ ನೀರನ್ನು ಅವನಿಗೆ ಹೊಡೆದನು-- ‘ಬಾ. . . ತನ್ನ ಬೆನ್ನಿಗೆ’ ಅಂತ ಹೇಳಿದನು. +ಅವನನ್ನು ಕರೆದುಕೊಂಡು ಉದ್ಯಾನವನಕ್ಕೆ ಬಂದನು. +ಗಂಡನಿಗೆ ನೂರಾ ಒಂದು ವರ್ಷ, ಹೆಂಡತಿಗೆ ನೂರು ವರ್ಷ ಆಯುಷ್ಯವನ್ನು ಕೊಟ್ಟು ಕೈಲಾಸಕ್ಕೆ ಪಾರ್ವತಿ-ಪರಮೇಶ್ವರರು ಹೋದರು. +ಅರಗಂಗೆಯೂ, ಗಂಡನೂ, ಆ ಹುಡುಗನೂ ಅವರ ಬಿಡಾರದ ಕಡೆಗೆ ಬಂದರು. +ಒಂದು ದಿನ ತಮ್ಮನೊಡನೆ, ‘‘ಅಪ್ಪನ ಕಡೆಗೆ ಹೋಗಿ ಭಾವ ಬಂದಿದ್ದಾನೆ ಎಂದು ಹೇಳು’’ ಎಂದು ತಿಳಿಸಿ, ‘‘ತಾಯಿ-ತಂದೆಯರನ್ನು ಇಲ್ಲಿಗೆ ಕರೆದುಕೊಂಡು ಬಾ’’ ಎಂದು ಅರಗಂಗೆ ಹೇಳಿದಳು. +ಅವನು ಅಲ್ಲಿಗೆ ಹೋಗಿ ಅವಳ ತಾಯಿ-ತಂದೆಗೆ ತಿಳಿಸಿ, ‘‘ಭಾವ ಬಂದಿದ್ದಾನೆ’’ ಅಂತ ಅಣ್ಣಂದಿರನ್ನೂ ಕರೆದುಕೊಂಡು ಬಂದನು. +ಅವರು ಬಂದವರು ಅರಗಂಗೆಯನ್ನು, ಅವಳ ಗಂಡನನ್ನೂ ತಮ್ಮೊಡನೆ ಕರೆದುಕೊಂಡು ತಮ್ಮ ಮನೆಗೆ ಬಂದರು. +ಅವನು ಮದುಮಗನ ಅಪ್ಪನಿಗೂ, ಅವ್ವನಿಗೂ, ಬ್ರಾಹ್ಮಣರಿಗೂ, ಎಲ್ಲರಿಗೂ ಸುದ್ದಿ ತಿಳಿಸಿ ಅವರ ಹತ್ತಿರ ಬರುವಂತೆ ತಿಳಿಸಿದನು. +“ನಿಮ್ಮ ಮಗ ಬಂದಿದ್ದಾನೆ. . . ಎಲ್ಲ ಸಿದ್ಧತೆ ಮಾಡಿ, ಅವನನ್ನು ಅರಮನೆಗೆ ಕರೆದುಕೊಂಡು ಬರಬೇಕು” ಎಂದು ಹೇಳಿದನು. +ಅಪ್ಪನೂ, ಅವ್ವನೂ ಬಹಳ ಆನಂದಭರಿತರಾದರು. +ಬ್ರಾಹ್ಮಣರ ಸಮೇತವಾಗಿ ತಾಯಿ-ತಂದೆ, ಸೂರ್ಯ-ಶುಕ್ರರಾದಿ ಅರಸನ ಮನೆಗೆ ಬಂದರು; +ಬಂದವರು ಮಗನನ್ನು ಹರಸಿದರು. +ಬಂದವರಿಗೆ ಮನ್ನಣೆಯನ್ನು ಮಾಡಿ ಕುಳ್ಳಿರಿಸಿ, ಆಸರ (ಕುಡಿಯಲು) ಕೊಟ್ಟರು. +ಮಂಟಪವನ್ನು ರಚಿಸಿ ಶೃಂಗಾರ ಮಾಡಿ, ಹುಡುಗನಿಗೂ-ಸೊಸೆಗೂ ಅಲಂಕಾರ ಮಾಡಿ ಮಂಟಪದಲ್ಲಿ ಕುಳ್ಳಿಸಿ, ಬ್ರಾಹ್ಮಣರಿಂದ ಹೋಮದ ಕೆಲಸವನ್ನು ಮುಗಿಸಿದರು. +ಕನ್ನೆ ಕೈಧಾರೆ ಮಾಡಿ ಹುಡುಗಿಯನ್ನು ಮದುಮಗನಿಗೆ ಕೊಟ್ಟರು. +ಬಂದ ನೆಂಟರಿಗೆ ವಸ್ತ್ರ ದಾನವನ್ನೂ, ಭಟ್ಟರಿಗೆ ದುಡ್ಡಿನ ದಾನವನ್ನೂ ಮಾಡಿದರು. +ಮದು-ಮಕ್ಕಳಿಗೆ ಕೊಡುವಂಥ ಬಣ್ಣ-ಬಂಗಾರ ಕೊಟ್ಟರು. +ಊಟ-ಉಪಚಾರಗಳನ್ನು ಮುಗಿಸಿದರು. +ಮಗಳ ಕೈಯೆತ್ತಿ ಅಳಿಯನಿಗೆ ಕೊಟ್ಟು ಮನೆಗೆ ಕಳಿಸಿದರು. +ಅಪ್ಪ-ಅವ್ವ, ಮಗ-ಸೊಸೆ ಇವರನ್ನು ಕರೆದುಕೊಂಡು ಬಂದು ಸುಖದಿಂದ ರಾಜ್ಯವನ್ನು ಆಳುತ್ತ ಉಳಿಯುವಂಥವರಾದರು. +ಒಂದು ಊರಿನಲ್ಲಿ ಶಿದ್ದಕ್ಕಿ ಭಟ್ಟ ಇದ್ದನು. +ನೂರು ಮನೆ ತಿರುಗಿ ಬಿಕ್ಕೆ ನೀಡಿದ್ದು ಆಗುತ್ತಿದ್ದದ್ದು ಒಂದು ಶಿದ್ದೆ ಅಕ್ಕಿ ಮಾತ್ರ. +ಅವನ ಹೆಂಡತಿ ತುಂಬಿದ ಗರ್ಭಿಣಿಯಾಗಿದ್ದಳು. +ದೊರೆಗಳ ಹೆಂಡತಿ ಅವನ ಮನೆಯ ಕೆರೆಗೆ ಮೊಕ ತೊಳೆಯಲಿಕ್ಕೆ ಬಂದಳು-- ಭಟ್ಟನ ಹೆಂಡತಿಯ ಬಹಳ ದೊಡ್ಡ ಹೊಟ್ಟೆಯನ್ನು ನೋಡಿ ಹೇಳಿದಳು. +“ಎಲಾ ಶಿದ್ದಕ್ಕಿ ಭಟ್ಟಾ. . . ನಿನ್ನ ಹೆಂಡತಿಯ ಹೊಟ್ಟೆಯೊಳಗೆ ಮೂರು ಪಟ್ಟು ದೊಡ್ಡ ಶಿಶು ಇದ್ದಾನೆ. +ಈ ಮಾಣಿಯ ಸಂರಕ್ಷಣೆ ಮಾಡಲು ನಿನ್ನಿಂದ ಸಾಧ್ಯವಿಲ್ಲ’’ ಅಂತ ಹೇಳಿ ಹೋದಳು. +ಭಟ್ಟನು ಬಡಗಿಯ ಮನೆಗೆ ಹೋದನು. +“ಎಲಾ ಬಡಗೀರಣ್ಣ. . . ಒಂದು ತೊಟ್ಟಿಲ ಗೆಯ್ದು ಕೊಡು” ಅಂದನು. +ಬಡಗಿರಣ್ಣ ಊಟ ಬಿಟ್ಟು; ತೊಟ್ಟಿದ್ದ ಕೆಲಸ ಬಿಟ್ಟು ತೊಟ್ಲ ಗೆಯ್ದು ಕೊಟ್ಟನು. +ಭಟ್ಟನು ತೊಟ್ಟಿಲು ಮಾಡಿದ್ದಕ್ಕೆ ತಾಗಿದ ಮಜೂರಿ ರೊಕ್ಕ ಕೊಟ್ಟು, ತೊಟ್ಟಿಲ ತಕ್ಕೊಂಡು ಬಂದನು. +ಗಂಡ-ಹೆಂಡತಿ ಊಟ ಮಾಡಿಕೊಂಡು ಎಲೆಪಟ್ಟಿ ತಿಂದರು. +ಭಟ್ಟನು ತೆಂಗಿನ ಕಾಯಿಗೆಂಟಿನ ಫಲಗಾಯಿ ಹಿಡಿದುಕೊಂಡ ಹೆಂಡತಿಯನ್ನು ಕರೆದುಕೊಂಡು, ತೊಟ್ಟಿಲ ಹೊತ್ತುಕೊಂಡು ಆನಂದಡವಿಗೆ ಹೋದನು. +ಅಲ್ಲಿ ಕಂಚ(ಪಂಚ) ಪಾಂಡವರು ಕಡಿದ ಕೆರೆಯೇರಿಯ ಮೇಲಿನ ಕಟ್ಟೆಯ ಮೇಲೆ ತೊಟ್ಟಿಲನ್ನಿಟ್ಟರು. +ಭಟ್ಟನ ಹೆಂಡತಿಗೆ ಹಡೆವ ಕೋಟಲೆ ತೊಡಗಿತು. +ಹಡೆವಾಗ ಹಿಡಿದು ಜೋತುಕೊಳ್ಳಲು ನೆಲೆಬಳ್ಳಿ ಕಟ್ಟುವುದು ಪದ್ಧತಿ. +‘‘ನೆಲೆಬಳ್ಳಿ ಕಟ್ಟಿ ಹೋಗಿ. . . ’’ ಅಂದಳು ಹೆಂಡತಿ. +ಅವನು ನೆಲೆಬಳ್ಳಿಯನ್ನು ಅಶ್ವತ್ಥಮರದ ಟೊಂಗೆಗೆ ಕಟ್ಟಿ, ಕಟ್ಟೆಯ ಮೇಲೆ ಹೋಗಿ ಕೂತನು. +ಶಿಶುವಿನ ಜನನವಾಯಿತು-- ನೂತನ ಮಾಣಿ ಹುಟ್ಟಿದ. +ಬಾಣಂತಿಯನ್ನು, ಶಿಶುವನ್ನು ಅದೇ ಕೆರೆಯ ನೀರಿನಲ್ಲಿ ಮೀಯಿಸಿ, ಮರದ ಟೊಂಗೆಗೆ ತೊಟ್ಟಿಲು ಕಟ್ಟಿ-- ಶಿಶುವನ್ನು ತೊಟ್ಟಲಲ್ಲಿ ಮಲಗಿಸಿ, ಎಲೆ ಪಟ್ಟಿಯನ್ನು ತೊಟ್ಟಿಲಲ್ಲಿಟ್ಟು ಭಟ್ಟನು ಹೆಂಡತಿಯ ಸಂಗಡ ತಿರುಗಿ ಬಂದನು. +ಬರುವ ದಾರಿಯಲ್ಲಿ ಮದ ಸೊಕ್ಕಿದ ಆನೆಗಳು ಮೇಯುತ್ತಿದ್ದವು. +ಭಟ್ಟನೂ, ಅವನ ಹೆಂಡತಿಯೂ ಆನೆಗಳನ್ನು ಕಂಡು ಹೆದರಿ ಓಡಿಹೋದರು. +ಒಂದು ಆನೆ ಕಟ್ಟೆಯ ಕಡೆಗೆ ಓಡಿ ಬಂದಿತು. +ಹೋಗಿ ಕಟ್ಟೆ ಹತ್ತಿದ ಕೂಡಲೇ ಶಿಶು ತೊಟ್ಟಿಲಿನ ಒಳಗೆ ಇದ್ದುದು ತೀಡಿತು. +‘‘ಮಕ್ಕಳು-ಮರಿ ಹೆಚ್ಚಾದವರು ಶಿಶುವನ್ನು ಬಿಟ್ಟು ಹೋಗಿದ್ದಾರೆ’’ ಅಂತ ತಿಳಿದು, ಆನೆ ಶಿಶುವನ್ನು ನೆಗಿದು (ಎತ್ತಿ) ತನ್ನ ಮೊಲೆ ಕೊಟ್ಟಿತು. +ಮೊಲೆ ಕೊಟ್ಟು ಒಂದು ತಿಂಗಳು ಸಾಕಿತು. +ತನಗೆ ಹುಟ್ಟಿದ ಮರಿಗಳನ್ನೂ, ತನ್ನ ಜೊತೆಯ ಆನೆಗಳನ್ನೂ ಬಿಟ್ಟು ಶಿಶುವನ್ನು ಸಾಕಿತು. +ಶಿಶು ದೊಡ್ಡದಾಯಿತು. +ಮಾಣಿಯನ್ನು ಊರ ಮೊಕದಲ್ಲಿ ಬಿಟ್ಟುಹೋಗಬೇಕು ಎಂದು ಬೆನ್ನ ಮೇಲಿಟ್ಟುಕೊಂಡು ಬಂತು. +ಮಾಣಿ ಒಂತಟಿ (ಒಮ್ಮೆ) ಮರಕ್ಕೆ ಹಾರುತ್ತಿದ್ದನು, ಒಮ್ಮೆ ಆನೆಯ ಬೆನ್ನ ಮೇಲೆ ಹಾರುತ್ತಿದ್ದನು. +ಆನೆ ಕೇರಿಯ ಬಳಿ ಬಂತು. +ಮಾಣಿ ಬೆನ್ನ ಮೇಲಿರಲಿಲ್ಲ! +‘ಬಿದ್ದನೋ ಎನೋ. . . ’ ಅಂತ ಅದೇ ದಾರಿಯಲ್ಲಿ ಮತ್ತೆ ಹೋಯಿತು. +ಬೆನ್ನು ಹಾರಿ ಮರದ ಮೇಲೆ ಹುಡುಗ ಕೂತಿದ್ದನು. +ಹುಡುಗ ಆನೆಗೆ ಕಾಣಿಸಿಕೊಳ್ಳಲಿಲ್ಲ. +ತಿರುಗಿ ಅದೇ ಕಟ್ಟೆಗೆ ಹೋದ ಆನೆ, ‘‘ಹುಡುಗನಿಗೆ ಹಸಿವೆಯೂ ಆಗಬಾರದು. . . ಅಸ್ರಿ (ನೀರಡಿಕೆ)ಯೂ ಆಗಬಾರದು. + . . ಊರ ಮೊಗಕ್ಕೆ ಹೋಗಿ ಸೇರಬೇಕು” ಎಂದು ಹರಕೆ ಕಟ್ಟಿ ಹೋಯಿತು. +ಅದೇ ಕಟ್ಟೆಯ ಕೆಳಗೆ ಒಂದು ಅರಸುತನವಿತ್ತು. +ಅರಸನ ಹುಡುಗಿ ಮಿಂದು (ರುತುವಾಗಿ) ಏಳು ದಿವ್ಸ ಕಳೆದಿದ್ದವು. +ಅವಳು-- ‘ಆನೆ ಹಾಲು ಕುಡಿದವನನ್ನೇ ಲಗ್ನಾವಾಗಬೇಕು’ ಎಂದು ಪಣಕಟ್ಟಿ, ಮದುವೆಯಾಗದೆ ಇದ್ದಳು. +ಅರಸನು ಪ್ರಧಾನಿಗೆ ಕರೆ ಕಳಿಸಿದನು. +‘‘ಆನೆಯ ಹಾಲನ್ನು ಕುಡಿದವನು ಎಲ್ಲಿದ್ದರೂ ತಪಾಸ ಮಾಡಿಕೊಂಡು ಬರಬೇಕು. +ಇಲ್ಲದಿದ್ದರೆ, ನಿನ್ನ ತಲೆ ಹೊಡೆವ ಹುಕ್ಕುಂ ಕೊಡುವೆ’’ ಅಂದನು. +ಪ್ರಧಾನಿಯು ಆನೆ ಹಾಲನ್ನು ಕುಡಿದವನನ್ನು ಅರಸಲು ಹೊರಟು ಹೋದನು. +ಎಲ್ಲೆಲ್ಲಿ ಹೋಗಿ ಹುಡುಕಿದರೂ ಸಿಗಲಿಲ್ಲ; ಕಾಲುಗಳಿಗೆ ಹಾಕಿದ ಜೋಡು ಸವೆದು ಸೊಪ್ಪಾದರೂ ‘ಆನೆ ಹಾಲು ಕುಡಿದವನನ್ನು ಕಂಡೆ. . . ’ ಅಂತ ಹೇಳಿದವರೇ ಇರಲಿಲ್ಲ. +‘ಅರಸು ತಲೆ ಹೊಡೆಸುವ ಹುಕುಂ ಕೊಟ್ಟರೂ ಕೊಡಲಿ’ ಎಂದು ಮನೆಗೆ ಹೋಗಲು ಬಂದನು. +ದಾರಿಯಲ್ಲಿ ಒಂದು ಕೆರೆಯಿತ್ತು. +ಕೆರೆಎರಿಯ ಮೇಲೆ ಮರ. . . ಮರದ ಮೇಲೆ ಆನೆಯ ಹಾಲು ಕುಡಿದ ಹುಡುಗ ಕೂತಿದ್ದನು. +ಪ್ರಧಾನಿ ಮೊಕ ತೊಳೆಯಬೇಕೆಂದು ಅದೇ ಕೆರೆಗೆ ಹೋದನು. +ಮೊಕ ತೊಳೆಯುವಾಗ ಮರದ ಮೇಲಿದ್ದ ಹುಡುಗ ಪ್ರಧಾನಿಯ ಬೆನ್ನ ಮೇಲೆ ಎಂಜಲನ್ನು ಉಗಿದುಬಿಟ್ಟನು. +ಪ್ರಧಾನಿ ಮೇಲೆ ನೋಡಿದನು. +ಮೂರು ಜನರಷ್ಟು ಮೈಕಟ್ಟು ಬೆಳೆದಿದ್ದ ಹುಡುಗನನ್ನು ನೋಡಿ, ‘‘ನೀನು ಆನೆ ಹಾಲು ಕುಡಿದವನೋ? +’’ ಅಂತ ಕೇಳಿದನು. +ಹುಡುಗ, ‘‘ಹೌದು. . . ” ಅಂದನು. + “ತಮ್ಮಾ. . . ಮರ ಇಳಿದು ಬಾ. +ಕೆಳಗಿನ ರಾಜ್ಯದ ಅರಸರ ಹುಡುಗಿ, ‘ಆನೆಹಾಲು ಕುಡಿದವನನ್ನೇ ಲಗ್ನವಾಗುವೆ’ ಅಂತ ಪಣ ಇಟ್ಟು ಕೂತಿದ್ದಾಳೆ. +‘ಅರ್ಧರಾಜ್ಯ ಉಂಬಳಿ ಬರೆದುಕೊಟ್ಟು ಹುಡುಗಿಯ ಲಗ್ನ ಮಾಡಿಕೊಡುವೆ. . . ’ ಅಂತ ಅರಸರು ಕಾದುಕೊಂಡಿದ್ದಾರೆ. +ಒಂದು ಗಳಿಗೆಯ ಮಾತಿಗೆ ಬಾ” ಅಂದನು. +ಆಗ ಹುಡುಗ ಇಳಿದು ಬಂದನು. +ಅವನನ್ನು ಕರೆದುಕೊಂಡು ಅರಸನ ಬಳಿಗೆ ಹೋದನು. +‘‘ನೀನು ಆನೆಯ ಹಾಲು ಕುಡಿದವನೋ? +ಹೌದೋ? +” ಅಂತ ಕೇಳಿದನು. “ಹೌದು. . . ” ಅಂದನು ಹುಡುಗ. +‘‘ಆನಂದಡವಿಯಲ್ಲಿ ಆನೆಯ ಹಾಲು ಕುಡಿದು ಬೆಳೆದಿದ್ದೇನೆ” ಅಂದನು. +ಮದುವೆಯ ತಯಾರಿ ಮಾಡಿ, ಮಂಗಳವಾರ ಮದುವೆ ನಿಕ್ಕಿ ಇಟ್ಟರು. +ಕೇಳದ ರಾಜ್ಯಕ್ಕೆ ಓಲೆ ಬರೆದು, ಕೇಳುವ ರಾಜ್ಯಕ್ಕೆ ಡಂಗುರ ಸಾರಿದರು. . . ಮದುವೆಯಾಯಿತು. +ಗಂಡನನ್ನೂ, ಹೆಂಡತಿಯನ್ನೂ ಹಗಲು-ರಾತ್ರಿ ಕೋಣೆಯಲ್ಲಿ ಹಾಕಿ ಇಟ್ಟರು. +ಆನೆ ಹಾಲು ಕುಡಿದ ಹುಡುಗ ಎದ್ದು ಹೋಗಲು ಪ್ರಯತ್ನ ಮಾಡಿದಾಗ ಹೆಂಡತಿ ತಡೆಯುತ್ತಿದ್ದಳು. +ಮಲಗಿದವನು ಮತ್ತೆ ಎದ್ದನು. +“ಎಲ್ಲಿಗೆ ಹೋಗುತ್ತೀರಿ? +’’ ಅಂತ ಕೇಳಿದಳು. +‘‘ಮೈನೀರಿಗೆ (ಮೂತ್ರ ಮಾಡಲು) ಹೋಗಬೇಕು” ಮೆತ್ತಿನ ಕೋಣೆಯ ಕಿಡಕಿಯ ಒಂದು ಗೂಟ ಕಿತ್ತಳು. +ಅಲ್ಲಿಂದಲೇ ಕಿಟಕಿಯಲ್ಲಿ ಮೈನೀರನ್ನು ಹಾರಿಸಿ ಬಿಟ್ಟು ಮಲಗಿಕೊಂಡನು. +ಅವಳಿಗೆ ನಿದ್ರೆ ಬಂತು. +ಆಗ ಎದ್ದು, ಕಿಡಕಿಯ ಕಂಡಿಯಿಂದ ಹಾರಿ ತಾನು ಕೂತುಕೊಳ್ಳುತ್ತಿದ್ದ ಮರಕ್ಕೆ ಬಂದು ಕೂತನು. +ಬೆಳಗು ಮುನ್ನ ಅತ್ತೆ ಕಂಚಿನ ಚಂಬಿನಲ್ಲಿ ನೀರನ್ನು ತಂದಳು. +ಮೆತ್ತಿಗೆ ಬಂದು ನೋಡಿದಾಗ ಅಳಿಯ ಇರಲಿಲ್ಲ. +“ಆನೆ ಹಾಲು ಕುಡಿದವ ಎಲ್ಲಿ ಹೋದನೋ, ಯಾವ ಊರೋ? +ಯಾವ ದೇಶದವನೋ? +” ಎಂದು ಮರುಗಿದಳು. +ಮಗಳು, ‘‘ಮರುಗಬೇಡ. . . ನಾಳೆ ಬೆಳಗಾಗ ಕರೆತಂದು ಕೊಡುತ್ತೇನೆ’’ ಅಂದಳು. +ಮರುದಿನ ರಾತ್ರಿ- ‘‘ಎಲ್ಲಿದ್ದೀರಿ? +’’ ಅಂತ ಕೇಳಿದಳು. +‘‘ನೂಲನ್ನು ಇಲ್ಲಿಗೆ ಬಿಡಿ. +ನಾನು ಬರುತ್ತೇನೆ’’ ಅಂತ ಪ್ರಾರ್ಥನೆ ಮಾಡಿದಳು. +ನೂಲನ್ನು ಬಿಟ್ಟನು. +ನೂಲನ್ನು ಗೋತು (ಜೋತುಹಾಕಿ) ಕೊಂಡು ಮರಕ್ಕೆ ಹೋದಳು. +“ಹೀಗೆ ಮಾಡಿ ಹೋಗುವುದು ಯೋಗ್ಯವಲ್ಲ. +ನಿಮ್ಮ ಅತ್ತೆ-ಮಾವ ಮರುಗುತ್ತಾರೆ” ಅಂತ ಹೇಳಿ ಕರೆತಂದು, ತನ್ನ ಬಳಿ ಹಮ್ಮಿಸಿ(ಮಲಗಿಸಿ)ಕೊಂಡಳು. +ಒಂದು ತಿಂಗಳಲ್ಲಿ ರಾಜನೂ, ಮತ್ತೊಂದು ತಿಂಗಳಲ್ಲಿ ರಾಣಿಯೂ ತೀರಿಹೋದರು. +ಇವರೇ ರಾಜ-ರಾಣಿಯರಾದರು. +ಇವರು ಸಂತೋಷದಿಂದ ಇರುತ್ತಿರುವಾಗ ಶಿದ್ದಕ್ಕಿ ಭಟ್ಟನೂ, ಅವನ ಹೆಂಡತಿಯೂ ಬೇಡುತ್ತ ಬಂದರು. +ಭಿಕ್ಷೆ ತಂದವಳು ಅವರನ್ನು ನೋಡಿ, ಗಂಡನ ಹತ್ತಿರ- ‘‘ಹೊರಗೆ ಬನ್ನಿ. . . ಇದೊಂದು ಚೋದ್ಯ ನೋಡಿ. +ಇವರು ನಿಮ್ಮ ಹಾಗೆಯೇ ಕಾಣುತ್ತಾರೆ’’ ಅಂದಳು. +ಒಳಗಿನಿಂದ ಆನೆ ಹಾಲು ಕುಡಿದವ ಬಂದನು. +ಭಟ್ಟನು, “ಈತ ನನ್ನ ಮಗ. . . ಶಿಶುವಾಗಿದ್ದಾಗ ಆನಂದಡವಿಯಲ್ಲಿ ಬಿಟ್ಟು ಬಂದಿದ್ದೆ” ಅಂದನು. +ಹುಡುಗ, ‘ಇವರೇ ನನ್ನ ತಂದೆ-ತಾಯಿ’ ಅಂತ ತಿಳಿದನು. +ಹೆಂಡತಿಯ ಹತ್ತಿರ, ‘‘ಇವರೇ ನಿನ್ನ ಅತ್ತೆ-ಮಾವ. +ಚೆನ್ನಾಗಿ ನೋಡಿಕೋ. . . ” ಅಂತ ಹೇಳಿದನು. +ಒಂದಾನೊಂದು ಊರಿನಲ್ಲಿ ಭಟ್ಟನು ಮತ್ತು ಅವನ ಹೆಂಡತಿ (ಭಡತಿ) ಇದ್ದರು. +ಭಟ್ಟನು ಸತ್ಯವಂತನೂ, ನಿಷ್ಠಾವಂತನಾಗಿಯೂ ಇದ್ದನು. +ಪ್ರಾತಃಕಾಲದಲ್ಲಿ ದಿನಾದಿನಾ ಅವನ ಮನೆಯ ಮುಂದಿನ ಬೀದಿಯ ಪಕ್ಕದಲ್ಲಿದ್ದ ಅಶ್ವತ್ಥಕಟ್ಟೆಗೆ ಹೋಗಿ-- ಅಶ್ವತ್ಥನಾರಾಯಣನನ್ನು ಭಕ್ತಿಯಿಂದ ಪ್ರಾರ್ಥಿಸಿ, ಪ್ರದಕ್ಷಿಣೆ ಮಾಡಿಕೊಂಡು ಬರುತ್ತಿದ್ದನು. +ಭಡತಿಯೂ ನಿಷ್ಠಾವಂತೆ. +ಆದರೆ, ಅವಳಿಗೆ ಹಣದಾಸೆ. +ಭಟ್ಟ ಬಡವ. +ತಾನು ಬಡವನ ಹೆಂಡತಿಯೆಂದು ಅವಳಿಗೆ ಭಟ್ಟನ ಮೇಲೆ ಬೇಸರ. +ಅವರಿಗೆ ಒಬ್ಬಳೇ ಮಗಳಿದ್ದಳು. +ಭಟ್ಟನು ಅವಳನ್ನು ದೂರದ ಊರಿಗೆ ಮದುವೆ ಮಾಡಿಕೊಟ್ಟಿದ್ದನು. +ಅವನ ಅಳಿಯನ ಹೆಸರು ನಾರಾಯಣ. +ಭಟ್ಟನಿಗೆ ಕಾಶೀಯಾತ್ರೆ ಮಾಡಿ ಬರಬೇಕೆಂದು ಮನಸ್ಸಾಯಿತು. +ಆದರೆ, ಸಾಕಷ್ಟು ಹಣವಿರಲಿಲ್ಲ. +ಆ ಊರಿನ ರಾಜಕುಮಾರನ ಹತ್ತಿರ ಹೋಗಿ-- ತನಗೆ ಕಾಶೀಯಾತ್ರೆಗೆ ಹೋಗಿ ಬರುವುದಕ್ಕೆ ಹಣ ಸಹಾಯ ಮಾಡಬೇಕೆಂದು ಪ್ರಾರ್ಥಿಸಿದನು. +ರಾಜಕುಮಾರನು ಅಗತ್ಯವಿದ್ದಷ್ಟು ಹಣವನ್ನು ಕೊಡಬೇಕೆಂದು ಮನಸ್ಸಿನಲ್ಲಿ ಮಾಡಿಕೊಂಡನು. +ಅವನಿಗೆ ಭಟ್ಟನ ಹೆಂಡತಿಯ ಕಣ್ಣು, ಮೂಗು ಮಾಟಾಗಿದ್ದುದರಿಂದ ಅವಳ ಮೇಲೆ ಮೋಹವುಂಟಾಗಿತ್ತು. +ಭಟ್ಟನನ್ನು ಪರಸ್ಥಳಕ್ಕೆ ಕಳಿಸಿದರೆ, ತನ್ನ ಕಾರ್ಯಸಿದ್ಧಿಯಾದಂತೆಯೇ ಎಂದು ಅವನ ಮನಸ್ಸು ಎಣಿಕೆ ಹಾಕಿತು. +ಆದರೆ, ಕೂಡಲೇ ಮತ್ತೊಂದು ವಿಚಾರವೂ ಅವನ ಮನಸ್ಸಿನಲ್ಲಿ ಬಂತು. +‘ಭಟ್ಟನು ಕಾಶಿಗೆ ಹೋದವನು ಮರಳಿ ಬಾರದೆ ಅಲ್ಲಿಯೇ ಇರುವುದಾದರೆ ನನ್ನ ಕಾರ್ಯ ರೂಪಾಯಿಗೆ ಹದಿನಾರಾಣಿ ಆದ ಹಾಗೆ, ಭಟ್ಟನ ಹೆಂಡತಿ ಊಟಕ್ಕೆ ಗತಿಯಿಲ್ಲದೆ ನನಗೆ ಶರಣು ಹೋಗಬೇಕು. +‘ಕಾಂಚನೇನ ಕಾರ್ಯಸಿದ್ಧಿ’ ಎಂಬಂತೆ ಎರಡೂ ಕಾರ್ಯ ಆಗಬೇಕು. +ಭಟ್ಟನು ಕಾಶಿಗೆ ಹೋಗಲು ಸಾಲುವಷ್ಟೇ ಹಣ ಕೊಟ್ಟರಾಯಿತು’ ಎಂದು, ಭಟ್ಟನು ಕೇಳಿದಷ್ಟು ಹಣದಲ್ಲಿ ಅರ್ಧ ಹಣವನ್ನು ಕೊಡುವುದಕ್ಕೆ ಒಪ್ಪಿದನು. +ನಂತರ ಭಟ್ಟನು ಮರಳಿ ಬರುವ ಸಮಯಕ್ಕೆ ಕಾಗದ ಬರೆದರೆ. . . ಮತ್ತೆ ಹಣವನ್ನು ಕೊಡುವೆನೆಂದು ಹೇಳಿದನು. +ಭಟ್ಟನು, ‘ಇದು ಒಂದು ರೀತಿಯಲ್ಲಿ ಅನುಕೂಲ. . . ’ ಎಂದು ತಿಳಿದು ರಾಜಕುಮಾರನಿಂದ ಹಣವನ್ನು ತೆಗೆದುಕೊಂಡು ಮನೆಗೆ ಬಂದನು. +ಅಳಿಯನಿಗೂ, ಮಗಳಿಗೂ ಹೇಳಿ ಕಳಿಸಿ, ಅವರು ಬಂದ ಮೇಲೆ ಅವರನ್ನು ನಾಲ್ಕು ದಿನ ಉಳಿಸಿಕೊಂಡಿದ್ದು, ನಂತರ ಕಾಶಿಗೆ ಹೋಗಲು ಸಿದ್ಧತೆ ಮಾಡಿದನು. +ಹೊರಡುವ ದಿನ ಪ್ರಾತಃಕಾಲ ಅಶ್ವತ್ಥ ನಾರಾಯಣನನ್ನು ಪ್ರದಕ್ಷಿಣೆ ಮಾಡಿ, ‘‘ಮನೆಯಲ್ಲಿ ಹೆಂಡತಿಯೊಬ್ಬಳೇ. . . ಅವಳ ಸಂರಕ್ಷಿಸುವ ಅಧಿಕಾರ ನಿನ್ನದು’’ ಎಂದು ಪ್ರಾರ್ಥನೆ ಮಾಡಿ ಹೊರಟನು. +ಅಳಿಯ-ಮಗಳು ಮತ್ತೆರಡು ದಿನವಿದ್ದು ಊರಿಗೆ ಮರಳಿದರು. +ಅವರು ಹೋದುದನ್ನು ತಿಳಿದು ರಾಜಕುಮಾರನ ಸವಾರಿಯು ಆ ದಿನ ರಾತ್ರಿಯೇ ಭಟ್ಟನ ಮನೆಗೆ ಬಂದಿತು. +ಭಟ್ಟನ ಮನೆ-- ಸಣ್ಣ ಮನೆ. . . ಜಗುಲಿ, ಅಡಿಗೆ ಕೋಣೆ, ದೇವರ ಕೋಣೆ ಇಷ್ಟೇ ಇದ್ದವು. +ತೆಂಗಿನ ಗರಿಗಳಿಂದ ಕಟ್ಟಿದ ಬಚ್ಚಲು ಅಂಗಳದಲ್ಲಿತ್ತು. +ರಾಜಕುಮಾರನು ಅಡಿಗೆ ಕೋಣೆಯ ಕಿಟಕಿಯಿಂದ ಪೀತಾಂಬರದ ಸೀರೆಯನ್ನು ಒಳಗೆ ಚಲ್ಲಿ, ಹಿತ್ತಿಲ ಬಾಗಿಲನ್ನು- ‘ಕಟಕಟೆ’ ಎಂದು ಬಡಿದನು. +ಭಟ್ಟನ ಹೆಂಡತಿಯು ಶಬ್ದಕೇಳಿ ಎಚ್ಚತ್ತು ದೀಪ ಹಚ್ಚಿಕೊಂಡು ಪೀತಾಂಬರವನ್ನು ಕೈಗೆತ್ತಿಕೊಂಡಳು. +ಬಾಗಿಲನ ‘ಕಟಕಟ. . . ’ ಶಬ್ದ ಕೇಳಿದಳು. +‘ಯಾರೂ ಕಳ್ಳರಲ್ಲ. . . ’ ಎಂದು ಅರ್ಥವಾಯಿತು. +ಯಾರೆಂದು ಕಿಟಕಿಯಲ್ಲಿ ನೋಡಿ, ರಾಜಕುಮಾರನ ಗುರುತು ಹಿಡಿದಳು. +ರಾಜಕುಮಾರ ಅವಳಿಗಿಂತ ಐದು ವರ್ಷ ಕಿರಿಯ. +ಆದರೆ, ಗಂಡನು ಊರನ್ನು ಬಿಟ್ಟುಹೋದ ಮೇಲೆ ತನ್ನ ಚರಿತಾರ್ಥಕ್ಕೆ ಯಾರ ಮನೆಯ ಕೆಲಸಕ್ಕೆ ಹೋಗ ಬೇಕಾಯಿತೆಂದು ಚಿಂತಿಸುತ್ತಿದ್ದ ಅವಳಿಗೆ ಚಿಂತಾಮಣಿಯೇ ದೊರೆತಂತೆ ಅನಿಸಿತು. +ಬಾಗಿಲು ತೆರೆದಳು. +ರಾಜಕುಮಾರನು ಒಳಗೆ ಬಂದು ಬಾಗಿಲು ಹಾಕಿಕೊಂಡನು. +ಭಡತಿಯು ರಾಜಕುಮಾರನಿಗೆ ಮಣಿ ನೀಡಿದಳು. +“ಬಡವರ ಮನೆಗೆ ಭಾಗ್ಯ ಬಂದ ಹಾಗೆ ಬಂದಿರಿ. . . ’’ ಎಂದಳು. +“ಭಾಗ್ಯಲಕ್ಷ್ಮಿ ನೀನು. . . ಈ ಪೀತಾಂಬರವನ್ನುಟ್ಟು ಕೊಂಡರೆ ಸಾಕ್ಷತ್ ಲಕ್ಷ್ಮಿಯ ಹಾಗೆಯೇ ಕಾಣುವೆ. +ಇದನ್ನು ಉಟ್ಟುಕೊಂಡೇ ನನಗೆ ನಮಸ್ಕಾರ ಮಾಡು” ಎಂದನು. +ಅವಳು ಪೀತಾಂಬರವನ್ನು ಉಡಲು ಮುಂದಾದಳು. +ಬಾಗಿಲು ಮತ್ತೆ ಶಬ್ದವಾಯಿತು. +ಈ ಸಲ ಮುಂದಿನ ಜಗುಲಿಯ ಬಾಗಿಲಿನ ಶಬ್ದ. “ಅತ್ತೆಯವರೇ. . . ಅತ್ತೆಯವರೇ. . . ’’ ಎಂಬ ಕೂಗು ಕೇಳಿ, ‘ಅಳಿಯ ಬಂದ. + . . ಕೆಲಸ ಕೆಟ್ಟಿತು’ ಎಂದುಕೊಂಡು, ‘‘ನಾರಾಯಣನೇನೋ? +ಈ ರಾತ್ರೆಗೆಟ್ಟು ಎಲ್ಲಿಂದ ಬಂದೆಯೋ?’’ ಎಂದು ಕೇಳಿದಳು. +ಅಷ್ಟರಲ್ಲಿ ಸಂಜ್ಞೆ ಮಾಡಿ, ಅರಸನ ಮಗನನ್ನು ಹಾಸಿಗೆಯ ಸುರುಳಿಯಲ್ಲಿ ಅಡಗಿಸಿದಳು. +“ಬಾಗಿಲು ತೆಗೆ, ಎಲ್ಲಾ ಹೇಳುತ್ತೇನೆ” ಎಂದು ಬಾಗಿಲು ತೆಗೆಸಿ ಒಳಗೆ ಬಂದ. +‘‘ಅತ್ತೇ. . . ಮಾವನು ‘ಹಸೆ ತಕ್ಕೊಂಡು ಬಾ.. . ’ ಅಂತ ಹೇಳಿ ಕಳಿಸಿದ್ದಾನೆ. +ರಾತ್ರೋರಾತ್ರಿ ಹೋಗಿ ಅವನಿಗೆ ತಲ್ಪಿಸಬೇಕು. +ಕಲ್ಲು ಹೊತ್ತಷ್ಟು ಭಾರ ಈ ಹಾಸಿಗೆ. . . ” ಎಂದು, ಹಾಗೇ ಹೊತ್ತುಕೊಂಡು ಹೋಗುವಾಗ-- ರಾಜಕುಮಾರನು ಹೇಗೋ ಹಾಸಿಗೆಯಿಂದ ಉರುಳಿ, ಕಲ್ಲಿನ ಮೇಲೆ ಬಿದ್ದು ಪೆಟ್ಟಾದರೂ ಕತ್ತಲಿನಲ್ಲಿ ಓಡಿಹೋದನು. +ಮತ್ತೆ ಎಂಟು ದಿನಗಳ ಮೇಲೆ ರಾಜಕುಮಾರನು ಬಂದ. +ರಾಜಕುಮಾರನಿಗೆ ಬದಾಮು ಹಾಲನ್ನು ಕೈಯಾರೆ ನೀಡುತ್ತಿದ್ದ ಹೊತ್ತಿನಲ್ಲಿ, ಅಷ್ಟರಲ್ಲಿ ಬಾಗಿಲಿನ ದನಿಯಾಯಿತು. + “ಅತ್ತೇ. . . ಅತ್ತೇ. . . ” ‘‘ರಾತ್ರಿಯಲ್ಲಿ ಬರಬೇಡ ಎಂದಿದ್ದೆನಲ್ಲೋ? + ನಾರಾಯಣ. . . ’’ ಅತ್ತೆಯೆಂದಳು. +ರಾಜಕುಮಾರನನ್ನು ಕೊಳಗ ತಪ್ಪೇಲಿಯಲ್ಲಿ ಕೂಡ್ರಿಸಿ, ಅದರ ಮೇಲೆ ಮತ್ತೊಂದು ಪಾತ್ರೆಯನ್ನು ಮುಚ್ಚಿದಳು. +ಬಾಗಿಲು ತೆಗೆದಳು, “ಮಾವ ಕೊಳಗ ತಪ್ಪೇಲಿಯನ್ನು ಮರೆತುಹೋಗಿದ್ದನು. +ಸಮಾರಾಧನೆಗೆ ಅಂತ ಬೇರೆ ಮನೆಯಿಂದ ತಂದದ್ದು ಅವಶ್ಯ ಬೇಕಂತೆ. +ಅದರಿಂದ ‘ರಾತ್ರೋರಾತ್ರಿ ಹೋಗಿ ತೆಗೆದುಕೊಂಡು ಬಾ. . . ’ ಎಂದು ಹೇಳಿದನು’’ ಎಂದು ಕೊಳಗ ತಪ್ಪೇಲಿಯನ್ನು ಹೊತ್ತುಕೊಂಡು ಹೋದನು. +ಮುಂದೆ ಬಂದು ಕಲ್ಲು ಜಾಗದಲ್ಲಿ ತಪ್ಪೇಲಿಯನ್ನು ಮಗುಚಿ ಹಾಕಲು, ರಾಜಕುಮಾರನು ಬಿದ್ದನು. +ಕತ್ತಲೆಯಲ್ಲಿ ಆತನು ಬಿದ್ದರೆ-- ಒಂದು ಕಲ್ಲೂ ಸಿಕ್ಕದ ಹಾಗೆ ಓಡಿಹೋದನು. +ಆಮೇಲೆ ಬಿಸಿನೀರು ಕಾಯಿಸಿ, ತೈಲ ಹಚ್ಚಿಕೊಂಡು, ಬಿಸಿನೀರು ಮಿಂದು ನೋವನ್ನು ಕಡಿಮೆ ಮಾಡಿಕೊಂಡ ರಾಜಕುಮಾರನಿಗೆ ಭಟ್ಟನ ಹೆಂಡತಿಯ ಮೋಹ ಬಿಡಲಿಲ್ಲ. +ಎರಡು ಮೂರು ದಿನ ರಾತ್ರಿ ನಾರಾಯಣನೂ ಬರಲಿಲ್ಲವೆಂಬ ವರ್ತಮಾನವನ್ನು ತಿಳಿದುಕೊಂಡು, ಮಾರನೆಯ ದಿನ ರಾತ್ರಿ ರಾಜಕುಮಾರನು ಮತ್ತೆ ಬಂದನು. +ಬಾಗಿಲು ಹಾಕಿಕೊಂಡು ಹಾಲು ಕುಡಿವಾಗ ಮತ್ತೆ ಕದ ತಟ್ಟಿದ ಶಬ್ದವಾಯಿತು. +“ನಾರಾಯಣ, ಇನ್ನು ರಾತ್ರಿ ಬರಬೇಡ, ಹಗಲಿಗೇ ಬಾ. . . ” ಎಂದಳು ಅತ್ತೆ. +“ಹಗಲಿಗೆ ಅರಮನೆಗೆ ನೀರು ಹೊರಬೇಕು, ರಾತ್ರಿಗೆ ಹೊರತು ಪುರಸತ್ತಾಗದು. . . ” ಅಷ್ಟರಲ್ಲಿ ಕಂಬಳಿಯೊಳಗೆ ತನ್ನ ಗೆಣಿಯನನ್ನು ಅಡಗಿಸಿಟ್ಟು ಬಾಗಿಲು ತೆಗೆದಳು. +“‘ದೇವಕಾರ್ಯಕ್ಕೆ ತಂದ ಕಂಬಳಿ ನಮ್ಮ ಮನೆಯಲ್ಲೇ ಇದೆ. +ಬೇರೆ ಮನೆಯದು. . . ಅವರಿಗೆ ಮುಟ್ಟಿಸಬೇಕು’ ಎಂದು ಮಾವ ಹೇಳಿದ್ದಾನೆ” ಎಂದು ಕೂಡಲೇ ಕಂಬಳಿ ಸಮೇತ ರಾಜಕುಮಾರನನ್ನು ಹೊತ್ತು ನಡೆದನು. +ದಾರಿಯಲ್ಲಿ ಮರಗಳ ನೆರಳಿನ ಕತ್ತಲೆಯ ಜಾಗದಲ್ಲಿ ಕಂಬಳಿಯಿಂದ ಉಳುಚಿಕೊಂಡು ರಾಜಕುಮಾರನು ಬಿದ್ದು, ಪೆಟ್ಟಾದರೂ ತಟ್ಟನೆ ಓಡಿ ಹೋದನು. +ಆ ಮರುದಿನ ಭಟ್ಟನು ಮನೆಗೆ ಮರಳಿ ಬಂದನು. +ಅವನು ಬಂದು ಮುಟ್ಟುವುದರೊಳಗೆ ಅಶ್ವತ್ಥ ನಾರಾಯಣನು ಬಂದನು. +“ನಾನು ಬಂದ ಸುದ್ದಿಯನ್ನು ಯಾರು ನಿನಗೆ ಹೇಳಿದರೋ ನಾರಾಯಣ? +ಕಾಗೆ ಕಾಲಿಗೆ ಚೀಟಿ ಬರೆದದ್ದು ಹೋಗಿ ಮುಟ್ಟಿತೋ? +’’ ಎಂದು ಭಟ್ಟ ನಗೆಯಾಡಿದನು. +ಆಗ ನಾರಾಯಣನು, ‘‘ಮನೆಗೆ ಸಾಮಾನಿಗೆಂತಾ ಪೇಟೆಗೆ ಬಂದಿದ್ದೆ, ನೀವು ಬಂದ ವರ್ತಮಾನವಾಯಿತು. +ಬಂದು ಹೋಗೋಣವೆಂತ ಬಂದೆ. +ಹೊತ್ತಾಯಿತು. . . ದೇವರ ಪೂಜೆ ಮಾಡಬೇಕು. + ಹೊರಟೆ. . . ’’ ಎಂದು ಹೊರಟುಬಿಟ್ಟನು. + ‘‘ನಾರಾಯಣ. . . ತಡೆ ನಿಲ್ಲು. + . . ನಾನು ಕಾಶೀಸಮಾರಾಧನೆ ಸಂತರ್ಪಣೆ ಮಾಡಬೇಕು ಹೆಂಡತಿಯನ್ನು ಕರೆದುಕೊಂಡು ನೀನು ಅವಶ್ಯ ಬರಬೇಕು’’ ಎಂದನು. + ‘‘ಮಾವ. . . ನೀವು ಯಾವ ದಿನ ಎಂದು ಹೇಳಿ ಬಿಡಿ. +ಇದೇ ಕರೆ ಅಂತ ತಿಳಿದು ಹೆಂಡತಿ-ಗಂಡ, ಮಗಳು-ಅಳಿಯ ನಿಮ್ಮ ಮನೆಗೆ ಹಾಜರಾಗುತ್ತೇವೆ” ಎಂದನು. +ಭಟ್ಟನು, ‘‘ನಾಳಿನ ಬಿಳಿ ಬುಧವಾರ ಇಡುತ್ತೇನೆ. . . ’’ ಎಂದು ಹೇಳಲು-- ನಾರಾಯಣನು, ‘‘ಹೂಂ ಬಂದರಾಯಿತು’’ ಎಂದು ಹೊರಟನು. +ಭಟ್ಟನ ಸಾಮಾನು, ಸರಂಜಾಮು ಬಂದವು. +ನೂರಾರು ಮನೆಗಳಿಗೆ ಆಮಂತ್ರಣ ಕೊಟ್ಟಿದ್ದನು. +ಸಾಲ ಕೊಟ್ಟಿದ್ದ ರಾಜಕುಮಾರನಿಗೆ ವಿಶೇಷ ಆಮಂತ್ರಣವಿತ್ತು. +ಅರಮನೆಯವರನ್ನೂ ಆಮಂತ್ರಿಸಿದ್ದನು. +ಬಿಳಿ ಬುಧವಾರ ತಾಸು ಹೊತ್ತೇರುವುದರೊಳಗೇ ನಾರಾಯಣ ಬಂದು ಕೆಲಸಕ್ಕೆ ಟೊಂಕ ಕಟ್ಟಿದನು. +‘‘ಹೆಂಡತಿ-ಮಕ್ಕಳನ್ನೇಕೆ ಕರೆತರಲಿಲ್ಲ? +’’ ಎಂದು ಕೇಳಿದ ಅತ್ತೆ-ಮಾವಂದಿರಿಗೆ, ‘‘ಅವರಿಗೆ ಹುಶಾರಿಲ್ಲ. . . ಮಕ್ಕಳನ್ನು ಬಿಟ್ಟು ತಾಯಿ ಬರುವ ಹಾಗಿಲ್ಲ. +ಇನ್ನೊಂದು ದಿನ ಮನೆ ಸಮಾರಾಧನೆ ಅಂತ ಮಗಳು–ಅಳಿಯನನ್ನು ಕರೆದರಾಯಿತು’’ ಎಂದು ನಾರಾಯಣನು ನಗೆಯಾಡಿದನು. +ಮಧ್ಯಾಹ್ನ ಅಡಿಗೆ ಸಿದ್ಧವಾಗಿ, ಊಟದ ತಯಾರಿಯಲ್ಲಿ ಬಾಳೆಗಳನ್ನು ಹಾಕಿದರು. +ರಾಜಕುಮಾರನಿಗೆ ಬೆಳ್ಳಿ ತಾಟು ಹಾಕಿ ಒಂದೆಡೆ ಕೂಡ್ರಿಸಿದ್ದರು. +ನಾರಾಯಣನು ಅಭಗಾರ (ತುಪ್ಪದ) ಪಾತ್ರೆ ಹಿಡಿದು ಹೊರಟನು. +ತುಪ್ಪದ ಅಭಿಗಾರ ಮಾಡುತ್ತ ಹೋದನು ಅಳಿಯ. +ಆಮೇಲೆ ಹೋಳಿಗೆಯನ್ನು ಬಡಿಸಿದರು. +ಮತ್ತೆ ಹೋಳಿಗೆಗಳ ಮೇಲೆ ತುಪ್ಪದ ಅಭಿಷೇಕ ಮಾಡುತ್ತಾ ಬಂದನು ನಾರಾಯಣ. +ರಾಜಕುಮಾರನ ತಾಟಿನ ಹತ್ತಿರ ಹೋಗುವುದರೊಳಗೆ ತುಪ್ಪ ಖರ್ಚಾಯಿತು. +ಅವನ ಹತ್ತಿರ ಹೋಗಿ ಸಣ್ಣ ದನಿಯಿಂದ, “ಆ ದಿವಸ ಕೊಳಗ ತಪ್ಪೇಲಿಯಲ್ಲಿ ಕುಳಿತಿದ್ದವನು ನೀನೇಯೋ? +” ಎಂದು ಕೇಳಲು- “ಊಹೂಂ. . . ” ಎಂದು ರಾಜಕುಮಾರನು ತಲೆಯಲ್ಲಾಡಿಸಿದನು. +ಹಾಗೆಯೇ ಮರಳಿದನು. ‘‘ನಾರಾಯಣ. . . ರಾಜಕುಮಾರನಿಗೆ ತುಪ್ಪ ಬಡಿಸು’’ ಎಂದು ಭಡತಿ ಹೇಳಿದಳು. +“ಅವನು ಬೇಡ ಎನ್ನುತ್ತಾನೆ” ಎಂದನು. +ಭಡತಿ, “ಮತ್ತೊಮ್ಮೆ ಕೇಳಿ ನೋಡು” ಅಂದಳು. +“ತುಪ್ಪ ಖರ್ಚಾಗಿದೆ” ಎಂದು ಅತ್ತೆಯ ಹತ್ತರ ಮತ್ತಷ್ಟು ತುಪ್ಪ ತುಂಬಿಸಿಕೊಂಡು ಬಂದು, ಹತ್ತಿರದಿಂದ ಪಿಸು ಮಾತಾಡಿ- “ಆ ದಿವಸ ಹಸೆಯಲ್ಲಿ ಬೆಕ್ಕಿನ ಮರಿಯ ಹಾಗೆ ಹೊಕ್ಕವನು ನೀನೇಯೋ? +” ಎಂದು ಕೇಳಲು ರಾಜಕುಮಾರನು ಆಗಲೂ, “ಊಹೂಂ” ಎಂದು ತಲೆಯಲ್ಲಾಡಿಸಿದನು. +ರಾಜಕುಮಾರನಿಗೆ “ತುಪ್ಪದ ಮೇಲೆ ಮನಸಿಲ್ಲ” ಮತ್ತು ‘ಬೇಡ. . . ’ ಅಂದು ತಲೆಯಲ್ಲಾಡಿಸಿದ್ದನ್ನು ಭಟ್ಟನು ನೋಡಿದ್ದರಿಂದ, “ರಾಜಕುಮಾರರಿಗೆ ತುಂಬಾ ದಾಕ್ಷಿಣ್ಯ, ಮಾಡುವುದೇನು? +’’ ಅನ್ನಲು, ಮತ್ತೆ ಅವನ ಬಳಿಗೆ ಹೋಗಿ ಕೇಳಿದನು. +‘‘ಈಗ ಹೋಳಿಗೆ, ತುಪ್ಪ ಎರಡನ್ನೂ ತೆಕ್ಕೊಂಡು ಹೋಗಿ’’ ಎಂದಳು ಭಡತಿ. +ಆಗ ಹೋಳಿಗೆಗಳ ಹೆಡಿಗೆಯನ್ನು ಕೈಯಲ್ಲಿ ಹಿಡಿದು, ‘ಬೇರೆಯವರಿಗೆ ಬಡಿಸಿ, ಮತ್ತೆ ಅವರಿಗೆ ಕೇಳಿ ಬಾ. . . ’’ ಹೇಳಿದನು. +ಹೋಳಿಗೆಗಳ ಮೇಲೆ ತುಪ್ಪ ಸುರಿದು, ಆಮೇಲೆ ನಾಲಕ್ ಹೋಳಿಗೆಗಳನ್ನು ಎಡಗೈಯಲ್ಲಿ ಹಿಡಿದುಕೊಂಡು, ತುಪ್ಪದ ಪಾತ್ರೆಯನ್ನು ಬಲಗೈಯಲ್ಲಿ ಹಿಡಿದುಕೊಂಡು ರಾಜಕುಮಾರನಿದ್ದಲ್ಲೆ ಹೋಗಿ- “ಆ ದಿನ ಕಂಬಳಿ ಸುರುಳಿಯಲ್ಲಿ ಸುತ್ತಿಕೊಂಡು ಸತ್ತ ಹೆಣದ ಹಾಗೆ ಬಿದ್ದುಕೊಂಡವನು ನೀನೇಯೋ? +” ಎಂದು ಸಣ್ಣದಾಗಿ ಕೇಳಿ ನಾರಾಯಣನು ನಕ್ಕನು. +ಆಗಲೂ ರಾಜಕುಮಾರನು ನಾಚಿಕೆಯಿಂದ, ‘ಊಹೂಂ. . . ಊಹೂಂ. . . ’ ಎಂದು ತಲೆಯನ್ನಲ್ಲಾಡಿಸಿದನು. +“ಅವರಿಗೆ ಹೋಳಿಗೆ, ತುಪ್ಪ ಎರಡೂ ಬೇಡವೆಂತ ತಲೆ ಅಲ್ಲಾಡಿಸುತ್ತಾರೆ. . . ” ಎಂದು ಹೇಳಿ ನಾರಾಯಣನು ಅವನ್ನು ಹಿಂದೆಯೇ ತಂದನು. +ಊಟ ಮುಗಿಯಿತು. +ನಾರಾಯಣ ಎಂಜಲು ತೆಗೆಯಲು ಎದ್ದನು. +ರಾಜಕುಮಾರನೂ, ಇತರರೂ ಹೊರಟರು. +“ಹೆಂಡತಿ-ಮಕ್ಕಳಿಗೆ ಹುಶಾರಿಲ್ಲ. +ಹೋಳಿಗೆಗಳನ್ನು ಪ್ರಸಾದದ ಲೆಕ್ಕಕ್ಕೆ, ಗಂಗೋದಕವನ್ನು ತೀರ್ಥದ ಲೆಕ್ಕಕ್ಕೆ ತಕ್ಕೊಂಡು ಹೋಗುತ್ತೇನೆ” ಎಂದು ಹೇಳಿ ನಾರಾಯಣನು ಹೊರಟನು. +ನಾಲ್ಕಾರು ದಿನಗಳ ಅನಂತರ ಭಟ್ಟನ ಅಳಿಯ-ಮಗಳು ಮಕ್ಕಳ ಸಹಿತ ಬಂದರು. +“ಅಪ್ಪ ಬಂದ ಸುದ್ದಿಯನ್ನು ಹೇಳಿ ಕಳಿಸಲಿಲ್ಲ” ಎಂದು ಮಗಳು ದುಃಖಿಸಿದಳು. +“ನಿನ್ನ ಗಂಡನ ಹತ್ತರ ಹೇಳಿ ಕಳಿಸಿದ್ದೆ. +ಅವನು ಸಮಾರಾಧನೆಗೆ ಬಂದಿದ್ದ. +ಅವನನ್ನೇ ಕೇಳು. . . ’’ ಅಂದರು ಅತ್ತೆ-ಮಾವ. +ಅಳಿಯನು, ‘‘ಛೇ. . . ನನಗೆ ಸಂತರ್ಪಣೆಯ ವಿಷಯವೇ ಗೊತ್ತಿಲ್ಲ. +ನಾನು ಬಂದಿದ್ದೂ ಇಲ್ಲ” ಎಂದು ತಲೆಯನ್ನು ಅಲ್ಲಾಡಿಸಿದನು. +“ಮಕ್ಕಳಿಗೆ ಹುಶಾರಿಲ್ಲ, ಅದಕ್ಕೇ ಹೆಂಡತಿ ಬರಲಿಲ್ಲ ಎಂದೆಯಲ್ಲ ಆ ದಿನ? +” ಎಂದು ಮಾವನೆಂದನು. +ಅವನು, “ಮಕ್ಕಳಿಗೆ ಏನೂ ಆಗಿರಲಿಲ್ಲ, ನಾನು ಹಾಗೆ ಹೇಳಿದ್ದೂ ಇಲ್ಲ. . . ಬಂದದ್ದೂ ಇಲ್ಲ. + . . ಮನೆಯಲ್ಲೇ ಇದ್ದೆ” ಅಂದನು. +ಭಟ್ಟನಿಗೆ ತನ್ನ ಅಶ್ವತ್ಥನಾರಾಯಣನೇ ತನ್ನ ಮನೆಯನ್ನು, ಹೆಂಡತಿಯನ್ನು ಕಾದುಕೊಂಡಿದ್ದವನು. +ತನ್ನ ಅಳಿಯನ ರೂಪದಿಂದ ಬಂದು ಸಂತರ್ಪಣೆಯ ದಿನ ವ್ಯವಸ್ಥೆ ಮಾಡಿದವನೂ ಅವನೇ ಎಂದು ಬೋಧೆಯಾಯಿತು. +ಅಳಿಯನೊಡನೆ, “ಸರಿ. . . ಆಗ ಬರದಿದ್ದರೆ ಏನಾಯಿತು? +ಈಗಾದರೂ ಬಂದಿರಲ್ಲ. . . ಮನೆಯ ಸಂತರ್ಪಣೆ ಇಂದಾಗಲಿ” ಎಂದು ಭಟ್ಟನು, ಆ ದಿನ ವಿಶೇಷವಾಗಿ ಅಶ್ವತ್ಥನಾರಾಯಣವನನ್ನು ಪೂಜಿಸಿ, ಅವನ ಪ್ರಸಾದವನ್ನು ಸ್ವೀಕರಿಸಿ ಮನಸ್ಸಿನಲ್ಲಿಯೇ ಅವನ ಕುರಿತು ಕೃತಜ್ಞತೆಯನ್ನರ್ಪಿಸಿದನು. +ದುರ್ಯೋಧನನು ಧರ್ಮರಾಜನಿಗೆ, ‘‘ನಾನು ಕೌರವರಲ್ಲಿ ಜ್ಯೇಷ್ಠ. +ನೀನು ಪಾಂಡವರಲ್ಲಿ ಜ್ಯೇಷ್ಠ. +ನನ್ನ ಸಂಗಡ ಯುದ್ಧಕ್ಕೆ ಬಾ. . . ’’ ಎಂದು ಹೇಳಿ ಕಳಿಸಿದನು. +‘‘ಯುದಿಷ್ಠಿರ ಒಪ್ಪದಿದ್ದರೆ ಅವನು ಏನು ಮಾಡಬೇಕು?’’ ಎಂದು ಕೃಷ್ಣ ಕೇಳಿಸಿದನು. +“ತಮ್ಮಂದಿರನ್ನು, ನಾಲ್ವರನ್ನು ಅವನು ಪೂಜಿಸಬೇಕು” ಎಂದು ದುರ್ಯೋಧನ ಹೇಳಿ ಕಳಿಸಿದನು. +ಕೃಷ್ಣನು- ‘‘ಯುಧಿಷ್ಟಿರನು ದುರ್ಯೋಧನನೊಡನೆ ಯುದ್ಧ ಮಾಡಲು ಒಪ್ಪದಿದ್ದುದರಿಂದ ತಮ್ಮಂದಿರನ್ನೂ, ನಾಲ್ವರನ್ನೂ ಪೂಜಿಸುವನು’’ ಎಂದು ಹೇಳಿ, ಮತ್ತು ಉಪಾಯ ಮಾಡಿ, ಭಗವದ್ಗೀತೆಯ ನಾಲ್ಕು ಪ್ರತಿಗಳನ್ನು ಒಂದೊಂದನ್ನು ಧರ್ಮರಾಜನ ಒಬ್ಬೊಬ್ಬ ತಮ್ದಿರ ಕಂಕುಳಲ್ಲಿಟ್ಟು, ಧರ್ಮರಾಜನಿಗೆ-- “ತಾನು ಕೃಷ್ಣನನ್ನು ಪೂಜಿಸುತ್ತೇನೆ ಎಂಬ ಭಾವನೆಯಿಂದ ಪೂಜಿಸು. . . ” ಎಂದು ಹೇಳಿದನು. +ಧರ್ಮರಾಜ ಹಾಗೆಯೇ ಮಾಡಿದನು. +ಆಮೇಲೆ ಕೌರವ-ಪಾಂಡವರ ಯುದ್ಧವಾಗುವುದು ನಿಶ್ಚಿತವಾಯಿತು. +ಕೌರವ-ಪಾಂಡವರಲ್ಲಿ ಯುದ್ಧವಾಗುವುದೆಂದು ಹೇಳಿ, ಯುದ್ಧದಲ್ಲಿ ಭಾಗವಹಿಸಲು ಊರ್ಧ್ವರೋಮ ಹೊರಟನು. +ದಾರಿಯಲ್ಲಿ ಅವನಿಗೆ ಒಬ್ಬ ಬ್ರಾಹ್ಮಣ ಭೆಟ್ಟಿಯಾದನು. +ಅವನೊಡನೆ- ‘‘ಕೌರವ ಪಾಂಡವರಲ್ಲಿ ಯುದ್ಧವಾಗುವುದಿದೆಯಂತೆ. +ಕೌರವರು ನೂರು ಜನರು, ಪಾಂಡವರು ಐವರು. . . ಹಾಗಾದರೆ, ಯುದ್ಧದಲ್ಲಿ ಯಾರಿಗೆ ಜಯ?’’ ಎಂದು ಕೇಳಿದನು. +ಬ್ರಾಹ್ಮಣ- ‘‘ಕೌರವರಿಗೆ. . . ’’ ಎಂದು ಹೇಳಿದನು. +ಊರ್ಧ್ವರೋಮನು- ‘ಸೋಲುವ ಪಾಂಡವರ ಪಕ್ಷದಿಂದ ಯುದ್ಧ ಮಾಡುತ್ತೇನೆ’ ಎಂದು ನಿಶ್ಚಯಿಸಿ, ಬಂದು ತಾಯಿಗೆ ಹೇಳಿದನು. +ಅವಳು, “ಪಾಂಡವರ ಭೀಮ ನಿನ್ನ ತಂದೆ. . . ನಾನು ಹಿಡಂಬ ರಾಕ್ಷಸನ ತಂಗಿ ಹಿಡಿಂಬೆ. +ನಾನು ರಾಕ್ಷಸಿಯಾದರೂ ಭೀಮನನ್ನು ಮೋಹಿಸಿ, ಅವನು ಒಪ್ಪದಿದ್ದರೂ ಕುಂತಿ ತಾಯಿಯ ಒತ್ತಾಯದಿಂದ ಅವನು ನನ್ನನ್ನು ಮದುವೆಯಾದನು. +ನೀನು ಹುಟ್ಟುವಾಗಲೇ ಬಿಲ್ಲು-ಬಾಣ ಸಮೇತನಾಗಿ ಹುಟ್ಟಿದೆ. +ನೀನು ಬಹು ಪರಾಕ್ರಮಿ. +ಪಾಂಡವ ಪಕ್ಷದಿಂದಲೇ ಯುದ್ಧದಲ್ಲಿ ಹೋರಾಡು. . . ” ಎಂದು ಹೇಳಿದಳು. +ದಾರಿಯಲ್ಲಿ ಬರುವಾಗ ಕೃಷ್ಣ ಎದುರಾದನು. +“ಯಾರು ನೀನು? +ಎಲ್ಲಿಗೆ ಹೋಗುವೆ? +’ ಎಂದು ಕೇಳಿದನು. +“ನಾನು ಊರ್ಧ್ವರೋಮ. . . ಭೀಮನ ಮಗ. +ಕೌರವ-ಪಾಂಡವರ ಯುದ್ಧದಲ್ಲಿ ಪಾಂಡವರ ಪಕ್ಷದಿಂದ ಹೋರಾಡಲು ಹೋಗುತ್ತೇನೆ” ಎಂದು ಹೇಳಿದನು. +ಕೃಷ್ಣ ಅವನ ಲಲಾಟವನ್ನು ನೋಡಿದನು. +ಅದರಲ್ಲಿ- ‘ಮಗನ ಮುಖ ನೋಡಿದರೆ ತಂದೆಗೆ ಮೃತ್ಯು. . . ತಂದೆಯ ಮುಖ ನೋಡಿದರೆ ಮಗನಿಗೆ ಮೃತ್ಯು. . . ’ ಎಂದು ಬ್ರಹ್ಮ ಸಂಕಲ್ಪ ಬರೆದಿದ್ದುದನ್ನು ನೋಡಿದನು. +“ನೀನು ಭೀಷ್ಮರಂಥ ಪರಾಕ್ರಮಿಗಳ ಸಂಗಡ ಕಾದುವ ಪರಾಕ್ರಮವುಳ್ಳವನೋ?’’ ಎಂದು ಕೇಳಿದನು. +‘‘ಹೌದು’’ ಎಂದನು ಊರ್ಧ್ವರೋಮ. +‘‘ನೀನು ಅಂಥ ಪರಾಕ್ರಮಿಯಾದರೆ ಈ ಅರಳಿ ಮರಕ್ಕೆ ಬಾಣ ಹೊಡೆದು, ಎಲ್ಲ ಎಲೆಗಳನ್ನು ಉದುರಿಸು’’ ಎಂದು ಹೇಳಿದನು ಕೃಷ್ಣ. +ಊರ್ಧ್ವರೋಮ ಬಾಣ ಹೊಡೆದು, ಮರದ ಎಲ್ಲಾ ಎಲೆಗಳನ್ನು ಉದುರಿಸಿ ಐದೂವರೆ ಎಲೆಗಳನ್ನು ಮಾತ್ರ ಉಳಿಸಿದನು. +“ಪಾಂಡವರು ಐವರು. . . ಅವರನ್ನು ಉಳಿಸುವೆನು. +ಕೃಷ್ಣನನ್ನು ಅರ್ಧ ಉಳಿಸುವೆನು” ಎಂದನು. +ಊರ್ಧ್ವರೋಮನ ಪರಾಕ್ರಮಕ್ಕೆ ಕೃಷ್ಣ ಮೆಚ್ಚಿದನು. +‘‘ನಿನ್ನ ಸಂಗಡ ನಾನು ಬಂದರೆ ಅವರ (ಕೌರವರ) ಶಸ್ತ್ರ ನನಗೆ ಬಿದ್ದೀತು. +ನೀನು ನನ್ನ ಚೀಲದಲ್ಲಿ ಅಡಗಿಕೋ. . . ನಾನು ನಿನ್ನನ್ನು ಹೊತ್ತುಕೊಂಡು ಹೋಗಿ ರಣಸ್ತಂಭದ ಹತ್ತಿರ ಬಿಡುವೆ” ಎಂದನು. +ಊರ್ಧ್ವರೋಮನಿಗೆ ‘ಇವನು ಕೃಷ್ಣ’ ಎಂದು ತಿಳಿಯಲೇ ಇಲ್ಲ. +‘‘ನೀನು ಚೀಲದಲ್ಲಿ ಸೇರು. . . ಕುರುಕ್ಷೇತ್ರದಲ್ಲಿ ಚೀಲ ಬಿಡಿಸುವೆನು’’ ಎಂದು ಕೃಷ್ಣ ಹೇಳಿದನು. +ಅವನನ್ನು ಚೀಲದಲ್ಲಿ ಸೇರಿಸಿ, ಕುರುಕ್ಷೇತ್ರಕ್ಕೆ ಚೀಲ ಒಯ್ದು ಚೀಲ ಬಿಡಿಸದೆ ಇಳುಹಿಸಿ ಇಟ್ಟು, ಭೀಮನಿಗೆ ಹೇಳಿ ಕಳಿಸಿದನು. +ಭೀಮ ಬರುವಾಗ ದಾರಿಯಲ್ಲಿ ಮಧ್ಯದಲ್ಲೇ- ‘‘ಭೀಮಾ. . . ಈ ಚೀಲದಲ್ಲಿ ಕೋರೆಹಲ್ಲು, ಕೆಂಚುಮೀಸೆ ಉಳ್ಳ ರಾಕ್ಷಸ.. . ನಿನ್ನ ವೈರಿ ಇದ್ದಾನೆ. . . ಅವನನ್ನು ಕೊಲ್ಲು. +ಕಾಲು ಬದಿಯಿಂದ ಕೊಚ್ಚು’’ ಅಂದನು. +ಅದರಂತೆ ಭೀಮ ಕೊಚ್ಚುತ್ತ ಬಂದನು. +ಕೃಷ್ಣನೇ ಕೊಲ್ಲುವನೆಂದು ಆಗ ಊರ್ಧ್ವರೋಮನಿಗೆ ಅನುಮಾನವಾಗಿತ್ತು. +ಕುತ್ತಿಗೆಯವರೆಗೆ ಕೊಚ್ಚಿದಾಗ ಅಪ್ಪನೇ ತನ್ನನ್ನು ಕೊಲ್ಲುತ್ತಿದ್ದಾನೆ ಎಂದು ತಿಳಿದು, ‘‘ಅಪ್ಪಾ. . . ’’ ಎಂದು ನರಳುತ್ತಲೇ ಕರೆದನು. +ಭೀಮನಿಗೆ ತನ್ನ ತಪ್ಪು ತಿಳಿಯಿತು. +ಸಿಟ್ಟಿನಿಂದ ಕೃಷ್ಣನನ್ನು ನೋಡುವಷ್ಟರಲ್ಲಿ, ಕೃಷ್ಣ ಮಾಯವಾಗಿದ್ದನು. +ಊರ್ಧ್ವರೋಮ, ‘‘ತನ್ನ ತಲೆಯನ್ನು ರಣಸ್ತಂಭದ ಧ್ವಜದ ಮೇಲೆ ಇಡು. . . ಯುದ್ಧ ನೋಡುವೆ’’ ಎಂದನು. +ಭೀಮನು ಮೋರೆ ಸಹಿತ ತಲೆ ಮಾತ್ರ ಉಳಿದ ಊರ್ಧ್ವರೋಮನ ತಲೆಯನ್ನು ರಣಸ್ತಂಭದ ಮೇಲೆ ನಟ್ಟು, ಭಾರತ ಯುದ್ಧವನ್ನು ನೋಡುವಂತೆ ಇಟ್ಟನು. +ಯುದ್ಧ ಮುಗಿಯಿತು, ‘‘ಭಾರತ ಯುದ್ಧವನ್ನು ನಾನೇ ಗೆಲಿದೆ. . . ನಾನೇ ಗೆಲಿದೆ.. . ’’ ಎಂದು ಭೀಮ-ಅರ್ಜುನ ಜಗಳವಾಡ ಹತ್ತಿದರು. +ಭೀಮನು ಗದೆಯನ್ನು ಮೇಲೆತ್ತಿ, ಎದೆ ಉಬ್ಬಿಸಿ, ಅರ್ಜುನನ ಸಂಗಡ ಹೋರಾಟಕ್ಕೆ ನಿಂತನು. +ಅರ್ಜುನ ಗಾಂಢೀವ ಧನುಸ್ಸಿಗೆ ಬಾಣ ಹೂಡಿ, ಭೀಮನ ಮೇಲೆ ಬಾಣ ಬಿಡುವವನಿದ್ದನು. +ಕೃಷ್ಣ ಇಬ್ಬರ ಮಧ್ಯದಲ್ಲಿ ನಿಂತು-- “ನೀವಿಬ್ಬರೂ ಯುದ್ಧ ಗೆಲ್ಲಲಿಲ್ಲ, ಸುದರ್ಶನ ಚಕ್ರ ಅರಿಯಿತು. +ಶಕ್ತಿಯು ಬಿದ್ದ ರಕ್ತ ಮೋರಿತು (ಕುಡಿಯಿತು)’’ ಎಂದು ಹೇಳಿ ಜಗಳ ನಿಲ್ಲಿಸಿದನು. +ಪೂಜ್ಯ ಸನ್ಮಾರ್ಗ ಕೃಷ್ಣ ಶೇಟ್, ಮಂಗಳೂರು ಅವರಿಗೆ ಪೂಜ್ಯ ಬಾಬಾ ತಪಸ್ವಿಯವರು ಹೇಳಿದ್ದ ಕಥೆಯನ್ನು ಶ್ರೀ ಕೃಷ್ಣ ಶೇಟ್ ಅವರು ನನಗೆ ಹೇಳಿದ್ದರು. +ಇಲ್ಲಿ ‘ಶಕ್ತಿ’ ಎಂದರೆ ದ್ರೌಪದಿ, ಶಕ್ತಿದೇವತೆಯ ಅವತಾರ ‘ಕಾಳೀ’ ಎಂದು ತಿಳಿಯಬೇಕು. +‘ದ್ರೌಪದಿಯೇ ಕಾಳಿಕಾದೇವತೆ’ ಎಂದೂ ಶ್ರೀಮನ್‌ ಮಧ್ವಾಚಾರ್ಯರಿಂದ ರಚಿತವಾದ ಮಹಾಭಾರತದ ತಾತ್ಪರ್ಯ ನಿರ್ಣಯದ (ಅಧ್ಯಾಯ 2, ಶ್ಲೋಕ 129) ‘ಚಂದ್ರೇ ಅವತಾರ’ದ ಕಥೆಯಲ್ಲಿ ಪ್ರತ್ಯೇಕವಾಗಿ ಹೇಳಲಾಗಿದೆ. +ಭಟ್ಟ (ಮೈಸೂರು ವಿ. ವಿ. ) ಅವರು ‘ಹಸಲರ ಸಂಸ್ಕೃತಿ’ ಎಂಬ ಗ್ರಂಥದ 81ನೇ ಪುಟದಲ್ಲಿ ತಿಳಿಸಿದ್ದಾರೆ. +ಒಬ್ಬ ಅರಸನಿದ್ದನು. +ಶಾಲೆಗೆ ಹೋಗುವ ವಯಸ್ಸಿನಲ್ಲಿ ಅವನು ಓದು-ಬರಹ ಕಲಿಯುತ್ತಾ, ‘ಪ್ರಾಯ ಬಂತು, ಮದುವೆಯಾಗಬೇಕೆಂದು ಅಲೋಚನೆ ಮಾಡಿ, ಸಮೀಪದ ಹೆಣ್ಣನ್ನೇ ಕೇಳಿ ಮದುವೆಯಾದನು. +ಎರಡು ವರ್ಷಗಳಲ್ಲಿ ಇಬ್ಬರು ಗಂಡುಮಕ್ಕಳು ಹುಟ್ಟಿದರು. +ಮುಂದೆ ಅವನಿಗೆ ಹುಡುಗರೇ ಆಗಲಿಲ್ಲ. +ಹೀಗೆ ಹತ್ತು-ಹನ್ನೆರಡು ವರ್ಷ ಕಳೆದವು. +ಹುಡುಗರು ಇಬ್ಬರನ್ನೂ ಶಾಲೆಗೆ ಕಳಿಸಿದನು. +ರಾಜನು ಮತ್ತೊಂದು ಮದುವೆಯಾದ. +ಹುಡುಗರು ಶಾಲೆಗೆ ಹೋಗುತ್ತಿದ್ದ ದಾರಿಯಲ್ಲಿ ರಾಜನ ಕಿರಿ ಹೆಂಡತಿ, ಹುಡುಗರ ಚಿಕ್ಕ ತಾಯಿ ನೀರಿಗೆ ಹೋಗುತ್ತಿದ್ದಳು. +ಅದೇ ದಾರಿಯಲ್ಲಿ ಆ ಹುಡುಗರು ಚಂಡಿನಾಟ ಆಡುತ್ತ ಬಂದು, ಚೆಂಡು ಹೋಗಿ ಅವಳಿಗೆ ತಾಕಿತು. +ಅವಳು ಕೂಡಲೆ ಚೆಂಡನ್ನು ಹೆಕ್ಕಿ, ತನ್ನ ಮಡಿಲಲ್ಲಿ ಹಾಕಿಕೊಂಡು ಬಿಟ್ಟಳು. +‘‘ಚೆಂಡನ್ನು ಕೊಡು’’ ಅಂತ ಇಬ್ಬರೂ ಅವಳಿಗೆ ಹೇಳಿದರು. +‘‘ಚೆಂಡನ್ನು ಕೊಡುವುದಿಲ್ಲ’’ ಅಂತ ಹೇಳಿದಳು. +ಎಷ್ಟು ಹೇಳಿದರೂ ಕೊಡಲೇ ಇಲ್ಲ. +ಕಿರಿತಮ್ಮನಿಗೆ ಸಿಟ್ಟು ಬಂತು. +ಅವನು ಹೋಗಿ ಮತ್ತೆ-- ‘‘ಚೆಂಡನ್ನು ಕೊಡು’’ ಅಂದನು. +ಅವಳು ಕೊಡಲಿಲ್ಲ. +ಅವನು ಅವಳ ಮಡಿಲಿನಲ್ಲಿದ್ದ ಚೆಂಡನ್ನು ಕೈಹಾಕಿ ಕಸಿದೇ ಬಿಟ್ಟನು. +ಆಗ ಅವಳು ಕೊಡಪಾನ ಅಲ್ಲೇ ಒಗೆದು ಮನೆಗೆ ಬಂದಳು. +ಬಳೆಗಳನ್ನು ಜರಿದು ಒಡೆದುಕೊಂಡು, ಕುತ್ತಿಗೆಯಲ್ಲಿದ ಕರಿಮಣಿಯನ್ನು ಹರಿದುಕೊಂಡು-- ಗಂಡನು ಕೂಡ್ರುವ ಮಂಚದ ಅಡಿಗೆ ಕರೀ ಕಂಬಳಿ ಹೊದೆದುಕೊಂಡು ಮಲಗಿದಳು. +ಅರಸನು ಆ ಕಡೆಗೆ ತಿರುಗಾಟಕ್ಕೆ ಹೋದವನು ಮನೆಗೆ ಬಂದನು. +ಅವನು ಬಂದ ಕೂಡಲೇ ಪ್ರತಿದಿನ ಈ ಕಿರಿ ಹೆಂಡತಿ ಕಾಲು ತೊಳೆಯಲು ನೀರನ್ನು ತಂದು ಕೊಟ್ಟು, ಅಸ್ರಿ ಪಾನೀಯ ತಂದು ಕೊಡುತ್ತಿದ್ದಳು. +ಆದರೆ, ಆ ದಿನ ಬಂದ ಅರಸನು ಹೆಂಡತಿಯನ್ನು ಕಾಣಲೇ ಇಲ್ಲ. +ಅವಳನ್ನು ಹುಡುಕಿದನು. +‘ಎಲ್ಲಿಗೆ ಹೋದಳು. . . ? +’ ಎಂದು ಬಹಳ ಹುಡುಕಿದನು. +ಎಲ್ಲಿ ಹುಡುಕಿದರೂ ಹೆಂಡತಿ ಕಾಣಲಿಲ್ಲ. +‘ಇನ್ನೇನು ಮಾಡುವುದು? +’ ಅಂತ ಹೇಳಿ, ಹಾಗೇಯೇ ಮಂಚದ ಮೇಲೆ ಕಾಲು ತೂಗಿಸುತ್ತಾ ಕೂತುಕೊಂಡನು. +ಮಂಚದ ಕೆಳಗೆ ಮಲಗಿದ್ದ ಇವಳ ಮೈ ಅವನ ಕಾಲಿಗೆ ತಾಕಿತು. +ಮಂಚದ ಅಂಚಿಗೆ ಬಾಗಿ ನೋಡಿದನು. +ಹೆಂಡತಿ ಕರಿ ಕಂಬಳಿ ಮುಚ್ಚಿ ಹಾಕಿಕೊಂಡು ಮಲಗಿದ್ದಳು. +ಕರೆದರೂ ಅವಳು ಮಾತನಾಡಲಿಲ್ಲ. +ಏನೇನು ಕೇಳಿದರೂ ಅವಳು ಹೇಳಲೇ ಇಲ್ಲ. +“ಏನಾದರೂ ನಾನು ನೋಡಿಕೊಳ್ಳುತ್ತೇನೆ. +ಏನಾಯಿತು ಎಂದು ಹೇಳು” ಅಂತ ಹೇಳಿದನು. +ಆಗ ಅವಳು ಹೇಳಿದಳು-- “ನಿಮ್ಮ ಮಕ್ಕಳಿಬ್ಬರೂ ನಾನು ನೀರಿಗೆ ಹೋದಾಗ ಚೆಂಡಿನಿಂದ ಹೊಡೆದು, ಬಳೆಗಳನ್ನು ಜರಿದು ಹಾಕಿ, ಕುತ್ತಿಗೆಯ ಕರಿಮಣಿ ಹರಿದು ಹಾಕಿದರು. +ನೀವು ಅವರನ್ನು ಇಟ್ಟುಕೊಳ್ಳಬಾರದು” ಎಂದು ಹೇಳಿದಳು. +ಆಗ ಅರಸನು, ‘ತನ್ನ ಹೆಂಡತಿಗೆ ಮಕ್ಕಳು ಹೀಗೆಲ್ಲ ಮಾಡಿದರು. . . ಅವರನ್ನು ಇಟ್ಟುಕೊಂಡರೆ ಸುಖವಿಲ್ಲ. +ನೀರಿಲ್ಲದ ಕಡೆ ಅವರ ತಲೆಹೊಡೆಸಬೇಕು’ ಅಂತ ಆಲೋಚನೆ ಮಾಡಿದನು. +ಪೋಲಿಸರಿಗೆ ಹೇಳಿಕಳಿಸಿ ಕರೆಸಿದನು. +ಅವರ ಹತ್ತಿರ- “ಈ ಮಕ್ಕಳನ್ನು ನೀರಿಲ್ಲದಲ್ಲಿ ತಕ್ಕೊಂಡು ಹೋಗಿ ತಲೆ ಹೊಡೆಯಬೇಕು” ಅಂತ ಹೇಳಿದನು, ಅವರು, “ಏಳಿ ಹೋಗೋಣ. . . ಅರಸರು ಹೀಗೆ ಹೇಳಿದ್ದಾರೆ.. . ” ಅಂತ ಹುಡುಗರ ಹತ್ತಿರ ಹೇಳಿದರು. +ಅವರು ತಾಯಿಯ ಹತ್ತಿರ, ‘‘ಹೋಗಿ ಬರುತ್ತೇವೆ. . . ’’ ಅಂತ ಹೇಳಿ, ತಾಯಿಯ ಬಳಿಗೆ ಹೋಗಿ-- ‘‘‘ನಮ್ಮನ್ನು ನೀರಿಲ್ಲದಲ್ಲಿ ತಕ್ಕೊಂಡು ಹೋಗಿ ತಲೆಹೊಡೆಯಬೇಕು’’ ಅಂತ ಹೇಳಿದ್ದಾರೆ. +ಪೋಲಿಸರು ‘ಹೋಗೋಣ’ ಅಂತ ಹೇಳುತ್ತಿದ್ದಾರೆ” ಅಂದರು. +ತಾಯಿ-- ‘‘ಮಕ್ಕಳೇ. . . ನಿಮಗೆ ಊಟಕ್ಕೆ ಬುತ್ತಿ ಕಟ್ಟಿ ಕೊಡುವೆ, ತಡೆಯಿರಿ.. . ’’ ಎಂದು ಹೇಳಿ ಅನ್ನ ಮಾಡಿ, ಬುತ್ತಿಗೆ ಹಾಕಲು ಬೇರೆ ಏನೂ ಇಲ್ಲದೆ-- ತನ್ನ ಮೊಲೆಹಾಲನ್ನೇ ಹಿಂಡಿ, ಬುತ್ತಿಗೆ ಹಾಕಿ ಬುತ್ತಿ ಕಟ್ಟಿದಳು. +ಪೋಲಿಸರು, “ಏಳಿ ಹೋಗೋಣ. . . ” ಅಂತ ಹೇಳಿ ಕರೆದುಕೊಂಡು ಹೋದರು. +ಸಾಧಾರಣ ದಾರಿ ನಡೆಯುತ್ತ ಬೆಟ್ಟದಲ್ಲಿ ಹೋಗುವಾಗ ಸ್ವಲ್ಪ ನೀರಿನ ಆಶ್ರಯ ಕಂಡಿತು. +ಆಗ ಪೋಲಿಸರು ಹುಡುಗರಿಗೆ ಹೇಳಿದರು-- “ಮುಂದೆ ನೀರು ಸಿಗುವುದಿಲ್ಲ, ಇಲ್ಲೇ ಬುತ್ತಿ ಅನ್ನ ಊಟ ಮಾಡಿ” ಎಂದರು. +“ನೀವೂ ಊಟ ಮಾಡಿದರೆ ನಾವು ಉಣ್ಣಲು ಅಡ್ಡಿಯಿಲ್ಲ. . . ಬನ್ನಿ” ಎಂದರು. +ಎರಡು ಬುತ್ತಿ ಕಟ್ಟಿ ಕೊಟ್ಟಿದ್ದನ್ನು ಒಂದೊಂದನ್ನು ಎರಡೆರಡು ಪಾಲು ಮಾಡಿ, “ಎರಡು ಪಾಲು ತಗೊಂಡು ಊಟ ಮಾಡಿ” ಅಂತ ಪೋಲೀಸರಿಗೆ ಹೇಳಿದರು. +ಅವರು ಮೊದಲು ಊಟ ಮಾಡಲು ಒಪ್ಪದಿದ್ದರೂ, ಇವರು ಒತ್ತಾಯ ಮಾಡಿದ್ದರಿಂದ ಊಟ ಮಾಡಿದರು. +ಊಟವಾದ ಮೇಲೆ ಹುಡುಗರು- ‘‘ನಮ್ಮ ತಾಯಿ ಕಟ್ಟಿಕೊಟ್ಟ ಬುತ್ತಿಯ ಅನ್ನಕ್ಕೆ ಸೇರಿಸಲು ಏನೂ ಇಲ್ಲದೆ, ನಮ್ಮ ತಾಯಿ ತನ್ನ ಮೊಲೆ ಹಾಲನ್ನೇ ಹಿಂಡಿ ಅನ್ನಕ್ಕೆ ಸೇರಿಸಿ ಬುತ್ತಿ ಕಟ್ಟಿ ಕೊಟ್ಟಿದ್ದಳು. +ನೀವು ಆ ಬುತ್ತಿ ಅನ್ನ ಉಂಡಿದ್ದರಿಂದ ನಾಲ್ವರೂ ಒಬ್ಬ ತಾಯಿಯ ಹಾಲು ಕುಡಿದವರಾಗಿ, ನಾಲ್ವರೂ ಒಬ್ಬ ತಾಯಿಯದೇ ಮಕ್ಕಳಾದಂತಾಯಿತು. +ಇನ್ನು ಬೇಕಾದರೆ ನೀವು ನಮ್ಮ ತಲೆಹೊಡೆಯಲು ಅಡ್ಡಿಯಿಲ್ಲ. . . ’’ ಎಂದು ಹೇಳಿದರು. +ಪೋಲೀಸರು ಆಲೋಚನೆ ಮಾಡಿದರು. +‘ನಾವು ನಾಲ್ವರೂ ಒಬ್ಬ ತಾಯಿಯ ಮಕ್ಕಳಾದ ಹಾಗಾಯಿತು. +ನಾವು ಇವರ ತಲೆಯನ್ನು ಯಾಕೆ ಕಡಿಯಬೇಕು? +’ ಅಂತ ವಿಚಾರಿಸಿ, “ಎಲೋ ಹುಡುಗರೇ. . . ನಿಮ್ಮ ತಲೆಕಡಿಯದೆ, ಹೋಗಲು ಬಿಡುತ್ತೇವೆ. +ನೀವು ಎರಡು-ಮೂರು ವರ್ಷ ಈ ಊರಿಗೆ ಬರಲೇ ಬಾರದು. +ದೂರ ಹೋಗಿ. . . ” ಎಂದು ಹೇಳಿದರು ಮತ್ತು ಬೆಟ್ಟ ಹೊನ್ನ ಮರದ ಬೊಡ್ಡೆ ಕೆತ್ತಿ, ಅದರ (ಕೆಂಪು) ಹೀಣನ್ನು (ರಸ) ತಂದು, ‘‘ನಿಮ್ಮ ಮಕ್ಕಳ ತಲೆಹೊಡೆದ ರಕ್ತ’’ ಎಂದು ಹೇಳಿ, ಅರಸನ ಹಣೆಗೆ ಹಚ್ಚಿದರು. +ಅರಸ, ‘ಮಕ್ಕಳ ತಲೆಹೊಡೆದು ಬಂದು ಪೋಲೀಸರು ಕುರುಹು ತೋರಿಸಿದರು’ ಅಂತ ಖುಷಿಪಟ್ಟನು. +ಹುಡುಗರು ಬೆಟ್ಟದಲ್ಲಿ ಹೋಗಿ ಬಹಳ ದೂರ ಹೋದರು. +ಅಣ್ಣನಿಗೆ ಬಹಳ ಹಸಿವಿನಿಂದ ನಡೆಯಲು ಶಕ್ತಿ ಉಳಿಯಲಿಲ್ಲ. +ತಮ್ಮ ಒಂದಿಷ್ಟು ಹೊತ್ತು ಅಣ್ಣನನ್ನು ಹೊತ್ತುಕೊಂಡೇ ಹೋದನು. +ಒಂದು ಮಾವಿನ ಮರದ ಅಡಿಗೆ ಹೋಗುವಾಗ ಅಲ್ಲಿ ಒಂದು ಮಾವಿನ ಹಣ್ಣು ದಾರಿಯಲ್ಲಿ ಬಿದ್ದಿದ್ದು ಕಂಡಿತು. +ಮಾವಿನ ಹಣ್ಣಿನಲ್ಲಿ ಹೀಗೆ ಬರೆದದ್ದು ಇತ್ತು. +‘ಇದರ ಖಂಡ ತಿಂದವಗೆ ಕಷ್ಟಕಾಲ ಬರುತ್ತದೆ. +ಅದರ ಗೊರಟೆ (ಒಟೆ) ತಿಂದವನಿಗೆ ಅರಸತನ’ ಎಂದಿತ್ತು. +ಅದನ್ನು ಕೊರೆದು (ಕೊಯ್ದು) ಖಂಡವನ್ನೆಲ್ಲ ತಮ್ಮನೇ ತಿಂದನು. +ಅಣ್ಣನಿಗೆ ಒರಟೆ (ಓಟೆ) ಕೊಟ್ಟನು. +ಅಣ್ಣ ಅದನ್ನು ತಿಂದನು. +ನಡೆಯಲಾರದ ಅಣ್ಣನನ್ನು ಮತ್ತಿಷ್ಟು ದೂರ ತಮ್ಮ ಹೊತ್ತುಕೊಂಡು ಹೋದನು. +ಮುಂದೆ ಹೋಗುವಾಗ ಒಂದು ಅಶ್ವತ್ಥ ಕಟ್ಟೆ ಸಿಕ್ಕಿತು. +ತಮ್ಮನು ಅಶ್ವತ್ಥ ಕಟ್ಟೆಯ ಮೇಲೆ ತಾನು ಹೊತ್ತುಕೊಂಡು ಹೋಗಿದ್ದ ಅಣ್ಣನನ್ನು ಕುಳ್ಳಿರಿಸಿದನು. +ಆಗ, ‘‘ಸ್ವಲ್ಪ ನೀರನ್ನು ತಂದು ಕೊಡು. . . ನನಗೆ ಬಹಳ ನೀರಡಿಕೆ’’ ಎಂದು ತಮ್ಮನಿಗೆ ಹೇಳಿದನು. +‘ನಡುಬೆಟ್ಟದಲ್ಲಿ ನೀರು ಎಲ್ಲಿ ಇದೆ? +’ ಅಂತ ತಮ್ಮನು ಯೋಚನೆ ಮಾಡಿ, ಅಶ್ವತ್ಥ ಮರ ಹತ್ತಿ ತುದಿಗೆ ಹತ್ತಿಹೋಗಿ ಒಂದು ಹೆಂಕೆ (ಟೊಂಗೆಯ) ಮೇಲೆ ನಿಂತು ಸುತ್ತಲೂ ನೋಡಿದನು. +ಒಂದು ಕಣ್ಣಳತೆಯಷ್ಟು ದೂರ ಒಂದು ಕುಡಿತೆಯಷ್ಟು ಆಕಾರದಲ್ಲಿ ಅವನಿಗೆ ನೀರು ಕಂಡಿತು. +ಅದೇ ಗುರುತು ನೋಡಿಕೊಂಡು ಕೆಳಗಿಳಿದನು. +ನೀರನ್ನು ತರಲು ಹೊರಟನು. +ಮುಂದೆ ಒಂದು ಬೆಟ್ಟದ ದಾರಿಯಲ್ಲಿ ಹೋಗುವಾಗ ಹಾಳು ಕೆರೆಯಲ್ಲಿ, ನೀರಿಲ್ಲದೆ ಬತ್ತಿ ಹೋದ ಕೆರೆಯಲ್ಲಿ ಒಂದು ಕೂಮ (ಆಮೆ) ಹುಡಿಯಲ್ಲಿ ಹೊರಳಾಡುತ್ತ ಬಿದ್ದಿತ್ತು. +ಇವನನ್ನು ಕಂಡ ಕೂಡಲೆ, ‘‘ಎಲೋ ಹುಡುಗಾ. . . ನನ್ನನ್ನು ಜಲಕ್ಕೆ ತಕ್ಕೊಂಡು ಹೋಗಿ ಸೇರಿಸು’’ ಅಂದಿತು, ‘‘ನೀನು ಎಣಿಸಿದ ಕಾರ್ಯಕ್ಕೆ ಬಂದು ಸಹಾಯ ಮಾಡುವೆ’’ ಎಂದಿತು. +ಅದನ್ನು ತಕ್ಕೊಂಡು ಕಂಕುಳಲ್ಲಿ ಹಾಕಿ ಇಟ್ಟುಕೊಂಡು ಹೋದನು. +ಮುಂದೆ ಸಾಧಾರಣ ದೂರ ನಡೆದು ಹೋದ ಮೇಲೆ ಜಲ ಕಂಡಿತು. +ನೀರಿನಲ್ಲಿ ಅದನ್ನು ಬಿಟ್ಟನು. +ಕೂಮನು, ‘‘ನೀನು ಎಷ್ಟು ಹೊತ್ತಿಗೆ ನನ್ನನ್ನು ನೆನೆದರೂ ನಾನು ಬಂದು ನಿನ್ನ ಕಾರ್ಯಕ್ಕೆ ಸಹಾಯ ಮಾಡಲು ಬಂದು ತಲ್ಪುವೆ” ಎಂದಿತು. +ನೀರನ್ನು ತಕ್ಕೊಂಡು ಹೋಗಲು ಅವನು ಯಾವುದೇ ಪಾತ್ರೆ ತಂದಿರಲಿಲ್ಲ. +ಗಿಡದಲ್ಲಿ ಸಣ್ಣ ಸಣ್ಣ ಎಲೆಗಳು. . . ಹೆಗಲಿನ ಮೇಲೆ ಪಂಜಿ ಇತ್ತು- ಅನ್ನದ ಬುತ್ತಿ ತಕ್ಕೊಂಡು ಹೋದದ್ದು. +ಅದನ್ನೇ ನೀರಲ್ಲಿ ಅದ್ದಿಸಿಕೊಂಡು ತಂದನು. +ಅಲ್ಲಿ ಅಣ್ಣನು ಇದ್ದ ದೇಶದಲ್ಲಿನ ಅರಸನಿಗೆ ಮಕ್ಕಳಿರಲಿಲ್ಲ. +‘ತನ್ನ ಅರಸುತನ ಆಳಲು ಆನೆಯೇ ಯೋಗ್ಯನಾದವನನ್ನು ಹುಡುಕಿಕೊಂಡು ಬರಬೇಕು’ ಎಂದು ತನ್ನ ಆನೆಯ ಕುತ್ತಿಗೆಗೆ ಹೂವಿನ ಮಾಲೆ ಹಾಕಿ ಅದನ್ನು ಬಿಟ್ಟಿದ್ದನು. +ಆನೆ ಇದೇ ಮಾರ್ಗದಲ್ಲಿ ಬಂದು ಈ ಹಿರಿಹುಡುಗ ಕೂತಿದ್ದಲ್ಲೇ ಬಂತು. +ಆ ಹೂವಿನ ಮಾಲೆಯನ್ನು ತೆಗೆದು ಆನೆ ಅವನ ಕೊರಳಿಗೆ ಹಾಕಿತು. +ಅವನು ನೀರಡಿಕೆಯಾಗಿ ಹಸಿವಾಗಿ ಕುಳಿತಿದ್ದನು. +ಆನೆಯ ಮೈಮೇಲೆ ಹತ್ತಲೂ ಸಾಧ್ಯವಾಗುತ್ತಿರಲಿಲ್ಲ ಅವನಿಗೆ. +ಆನೆಯೇ ತನ್ನ ಸೊಂಡಿಲಿನಿಂದ ಎತ್ತಿ ತನ್ನ ಬೆನ್ನ ಮೇಲೆ ಕೂಡ್ರಿಸಿಕೊಂಡು ಹೋಯಿತು. +‘ತಮ್ಮ ನೀರನ್ನು ತರಲು ಹೋದವ ಬರಲಿಲ್ಲ’ ಎಂದು ಇವನಿಗೆ ಆನೆಯ ಮೇಲೆ ಹೋಗುವ ಮನಸ್ಸಿರಲಿಲ್ಲ. +ಆದರೆ, ತಮ್ಮನಿಗೆ ತಾನು ಹೋದ ದಾರಿ ಗುರುತಿಗೆ-- ತನ್ನ ಕೈಲಿದ್ದ ಬುತ್ತಿಗಂಟು ಕಟ್ಟಿ ತಂದಿದ್ದ ಪಂಜಿಯನ್ನೇ ಹರಿದು, ದಾರಿಯಲ್ಲಿ ಒಗೆಯುತ್ತ ಆನೆಯ ಮೇಲೆ ಹೋದನು. +ಮುಂದೆ ಮೂರು ಕವಲು ಹಾದಿ ಟಿಸಿಲೊಡೆಯಿತು. +ಅಲ್ಲಿಗೆ ಹೋಗುವಷ್ಟರಲ್ಲಿ ಪಂಜಿ ತುಂಡೂ ಸಹ ಖರ್ಚಾದವು. +ಆಗ ಆಚೀಚಿನ ಮರಗಳ ಸೊಪ್ಪಿನ ಟೊಂಗೆ ಮುರಿದು ಚೆಲ್ಲುತ್ತಲಿದ್ದನು, ಆನೆ ರಾಜನ ಅರಮನೆ ಬದಿಗೆ ಹೋಯಿತು. +ಇತ್ತ ತಮ್ಮನ್ನು ನೀರಿಗೆ ಹೋಗಿದ್ದವನು ಬಂದು ಅಣ್ಣನನ್ನು ಹುಡುಕಿ ನೋಡಿದನು. +ಅಣ್ಣ ಇರಲಿಲ್ಲ. +ಅಲ್ಲೆಲ್ಲಾ ಹುಡುಕಿದರೂ ಅಣ್ಣ ಕಾಣದೆ, ‘ಬೆಟ್ಟದಲ್ಲಿ ಸಿಂಹ ತಿಂದಿತೋ? +ಹುಲಿ ತಿಂದಿತೋ? +ಅಣ್ಣನಿಗೆ ಏನಾಯಿತೋ. . . ’ ಎಂದು ಅಳಹತ್ತಿದನು. + ಅತ್ತು. . . ಅತ್ತು. . . ಬಳಲಿ ಅವನೂ ಹೊರಟನು-- ಅಣ್ಣ ಅರಿವೆಯನ್ನು ಹರಿದು ಚೂರು ಮಾಡಿ, ಒಗೆದ ದಾರಿ ಹಿಡಿದುಕೊಂಡು-- ‘ತನ್ನ ಅಣ್ಣ ಇದೇ ದಾರಿಯಲ್ಲಿ ಹೋಗಿದ್ದಾನೆ’ ಎಂದು ತಿಳಿದು ಮುಂದೆ ಹೋದನು. +‘‘ಈ ಅರಿವೆ ನಮ್ಮಣ್ಣನದೇ. . . ’’ ಅಂತ ಹೇಳಿ ಮುಂದೆ ಹೋದನು. +ಮೂರು ದಾರಿ ಕೂಡಿದಲ್ಲಿ ಹೋದಾಗ- ತಾನು ಇನ್ನು ಯಾವ ದಾರಿಯಲ್ಲಿ ಹೋಗಬೇಕು ಅಂತ ತಮ್ಮನಿಗೆ ಗೊತ್ತಾಗಲಿಲ್ಲ. +ಸೊಪ್ಪಿನ ತುಮಕೆಗಳನ್ನು ಮಾರಿಗೆ ಒಂದರಂತೆ ಅಣ್ಣ ಹರಿದು ಒಗೆಯುತ್ತ ಹೋಗಿದ್ದನು, ಅದನ್ನು ಇವನು ನೋಡಲೇ ಇಲ್ಲ. +ಅಣ್ಣ ಒಂದು ದಾರಿಯಲ್ಲಿ ಹೋದನು; ತಮ್ಮ ಬೇರೆ ಒಂದು ದಾರಿಯಲ್ಲಿ ಹೋದನು. +ಅಣ್ಣ ಅರಸುತನದಲ್ಲಿ ಉಳಿದನು. +ತಮ್ಮ ಒಬ್ಬ ಪಟ್ಟಣಶೆಟ್ಟಿಯ ಮನೆಗೆ ಹೋದನು. + ಪಟ್ಟಣಶೆಟ್ಟಿಯ ಮನೆಯಲ್ಲಿ ಅವನ ಹೆಂಡತಿಯಿದ್ದಳು. +ಇವನು ಅವರ ಮನೆಗೆ ಹೋಗಿ ಶೆಟ್ಟಿಯ ಹೆಂಡತಿಯ ಹತ್ತಿರ, ‘‘ಅಮ್ಮಾ. . . ಸ್ವಲ್ಪ ನೀರನ್ನು ಕೊಡಿ’’ ಎಂದನು. +ಕೊಟ್ಟ ನೀರನ್ನು ಕುಡಿದನು. +ಅವನಿಗೆ ಬಹಳ ಹಸಿವೆಯೂ ಆಗಿತ್ತು. +‘‘ಸ್ವಲ್ಪ ಅನ್ನ ಹಾಕಿ. . . ’’ ಎಂದನು. +‘ಅನ್ನ ಹಾಕಿ. . . ’ ಎಂದ ಕೂಡಲೇ ಅವಳು, “ಇಲ್ಲೇ ಕೆಳಗೆ ಹೋಗಿ ಒಂದು ಚೂಳಿ ಹುಲ್ಲನ್ನು ಕಿತ್ತುಕೊಂಡು ಬಾ” ಅಂದಳು. +ಇವನಿಗೆ ಹುಲ್ಲು ಕಿತ್ತು ಕೆಲಸ ಮಾಡಿ ರೂಢಿಯೇ ಇರಲಿಲ್ಲ. +ಅವನಿಗೆ ಕೆಲಸದ ಮಾಹಿತಿ ಇಲ್ಲದಿದ್ದರೂ ಗಡಬಡೆಯಿಂದ ಹಸಿವಾಗಿದ್ದ ಕಾರಣ-- ಅರ್ಧ ಚೂಳಿ ಹುಲ್ಲನ್ನು ಕಿತ್ತುಕೊಂಡು ಬಂದನು. +ಈ ಪಟ್ಟಣಶೆಟ್ಟಿಯ ಹೆಂಡತಿ ಮೂರು ದಿನಗಳ ಹಳಸಿದ ಅನ್ನ ಮತ್ತು ಹುಳಿ ಮಜ್ಜಿಗೆ ಹಾಕಿದಳು. +ಹಸಿವಾದದ್ದಕ್ಕೆ ಅರ್ಧ ಉಂಡು, ಅರ್ಧ ಒಗೆದನು. +ಆಗ ಪಟ್ಟಣಶೆಟ್ಟಿ ಬಂದನು. +ಸ್ವಾರಿಗೆ ಹೋಗಿ ಬಂದ ಪಟ್ಟಣಶೆಟ್ಟಿ, ‘‘ಇವನಿಗೆ ಎಲ್ಲಿ ಆಯಿತು? +(ಇವ ಎಲ್ಲಿಯವ?)” ಅಂತ ಕೇಳಿದನು. +ಅವಳು, “ನಮ್ಮ ಮನೆಗೆ ಹೀಗೆ ಬಂದಿದ್ದ ಹುಡುಗ, ‘ಅನ್ನ ಹಾಕಿ’ ಅಂದನು. +‘ನಾಲ್ಕು ಹುಲ್ಲನ್ನು ಕಿತ್ತುಕೊಂಡು ಬಾ’ ಅಂತ ಹೇಳಿದೆ. +ಹುಲ್ಲನ್ನು ಕಿತ್ತುಕೊಂಡು ಬಂದ. +ಅನ್ನ ಹಾಕಿದೆ. +ಅವನು ಎಲ್ಲಿಯವನೋ ನನಗೆ ಗೊತ್ತಿಲ್ಲ” ಅಂದಳು. + ‘‘ಇರಲಿ. . . ’’ ಎಂದು ಹೇಳಿ, ಶೆಟ್ಟಿ ಅವನನ್ನು ಕೆಲಸ ಮಾಡಲು ಇಟ್ಟುಕೊಂಡನು ಮತ್ತು ಒಂದು ದೊಡ್ಡ ಹಡಗನ್ನು ಮಾಡಿಸಿದನು. +ಎಷ್ಟು ಪ್ರಯತ್ನ ಮಾಡಿದರೂ ಆ ಹಡಗನ್ನು ಜಲಕ್ಕೆ ಹಾಕಲು ಸಾಧ್ಯ ಆಗಲೇ ಇಲ್ಲ. . . ಅದು ಮನಷ್ಯರ ರಕ್ತ (ಬಲಿ) ಬೇಡುತ್ತಿತ್ತು. +ಆ ಹುಡುಗನ ಹತ್ತಿರ ಒಂದು ದಿನ, ‘‘ನಾನೊಂದು ಹಡಗನ್ನು ಗೆಯಿಸಿದ್ದೆ(ಮಾಡಿಸಿದ್ದೆ). +ಏನೇನು ಪ್ರಯತ್ನ ಮಾಡಿದರೂ ಅದನ್ನು ಜಲಕ್ಕೆ ಹಾಕಲು ಸಾಧ್ಯವಾಗಲೇ ಇಲ್ಲ’’ ಅಂದನು. +ಆಗ ಹುಡುಗನು, ‘‘ನಾನೇನು ಮಾಡಬೇಕು? +’’ ಅಂತ ಕೇಳಿದನು. +“ನೀನು ಏನನ್ನೂ ಮಾಡುವುದು ಬೇಡ, ಹಡಗಿನ ಮೇಲೆ ನಿನ್ನ ಕುತ್ತಿಗೆಯ ಕಡಿಯಬೇಕು ಎಂದು (ವಿಚಾರ) ಮಾಡಿದ್ದೇನೆ. . . ” ಎಂದನು. +ಹುಡುಗನು, “ಹಡಗನ್ನು ನಾನು ಜಲಕ್ಕೆ ಹಾಕಿದರೆ ನನ್ನನ್ನು ಕಡಿಯುವದು ಬೇಡ. . . ಜಲಕ್ಕೆ ಹಾಕದಿದ್ದರೆ ಕಡಿಯಿರಿ.. . ” ಎಂದ ಹುಡುಗನು ಒಂದು ಚಾಕು ತಕ್ಕೊಂಡು ಹಡಗಿಗೆ ಹೋಗಿ, ಹಡಗಿನ ಮೇಲೆ ಕಿರುಬೆರಳನ್ನು ಇಟ್ಟುಕೊಂಡು ಬಟ್ಟಿನ ತುದಿಯನ್ನು ಕಡಿದು ಹಾಕಿ ಬಿಟ್ಟನು. +ಬೆರಳಿನ ಎಲ್ಲಾ ರಕ್ತವನ್ನು ಅಲ್ಲಿ ಹರಿಸಿದನು. +ಆಗ ಹಡಗು ತಾನಾಗಿಯೇ ನೀರಿಗೆ ಹೋಯಿತು. +ಅವನು- ‘‘ಅರಸರೆ. . . ನೂರುಗಟ್ಟಲೆ ಜನರು ಬಂದರೂ ಜಲಕ್ಕೆ ಹಾಕಲು ಸಾಧ್ಯವಾಗದೇ ಇದ್ದ ಹಡಗನ್ನು ನಾನು ಜಲಕ್ಕೆ ಹಾಕಿದೆ” ಎಂದನು. +ಶೆಟ್ಟಿ ಅವನನ್ನು ತನ್ನ ಮನೆಯಲ್ಲೇ ಇಟ್ಟುಕೊಂಡನು. +ಶೆಟ್ಟಿ ಸ್ವಾರಿಗೆ ಹೋಗುವಾಗ ಅವನನ್ನೂ ಹಡಗಿನ ಮೇಲೆ ಕರೆದು ಇಟ್ಟುಕೊಂಡನು. +ಹಡಗನ್ನು ಹತ್ತಿ ಹೊರಟನು. +ಅಲ್ಲಿ ಹೊಳೆಯ ಆಚೆಗೆ ಒಂದು ಊರಲ್ಲಿ ಒಬ್ಬ ಅರಸು ಹುಡುಗಿಯನ್ನು ಕೋಣೆಯಲ್ಲಿ ಇಟ್ಟು ಪಂಥವನ್ನು ಇಟ್ಟಿದ್ದನು. +‘ಆ ಹುಡುಗಿಯ ಎಡಗೈಯಲ್ಲಿ ಏನಿದೆ. . . ಬಲಗೈಯಲ್ಲಿ ಏನಿದೆ ಅಂತ ಹೇಳಿದವನಿಗೆ ಅವಳನ್ನು ಲಗ್ನ ಮಾಡಿಕೊಡುವೆ. . . ’ ಅಂತ ಒಂದು ಬೋರ್ಡನ್ನು ಕೊನೆಯ ಬಾಗಿಲಿನ ಮೇಲೆ ಹಾಕಿದ್ದನು. +ಹುಡುಗ ಹೋಗಿ ಆ ಬೋರ್ಡನ್ನು ಓದಿದನು. +ಕೋಣೆಯ ಕದ ಹಾಕಿ ಇಟ್ಟಿದ್ದರು. +“ನಿನ್ನ ಹುಡುಗಿಯ ಬಲಗೈಯಲ್ಲಿ ಏನಿದೆ? +ಎಡಗೈಯಲ್ಲಿ ಏನಿದೆ ಎಂದು ಹೇಳಿದರೆ ಅವಳನ್ನು ನನಗೆ ಮದುವೆ ಮಾಡಿ ಕೊಡುವದು ಹೌದೋ?” ಅಂತ ಅರಸನನ್ನು ಕೇಳಿದನು. +‘‘ಬೋರ್ಡಿನಲ್ಲಿ ಇರುವ ಹಾಗೆಯೇ ಲಗ್ನ ಮಾಡಿಕೊಡುವೆ’’ ಎಂದನು ಅರಸು. +ಹುಡುಗನು, ‘‘ಬಲಗೈಯಲ್ಲಿ ಸಗಣಿ, ಎಡಗೈಯಲ್ಲಿ ಹಾಳಿಕಡಿ’’ ಎಂದನು. +ಹೇಗೆ ಗೊತ್ತಾಯಿತೋ ಏನೋ ಅಂತೂ ಹುಡುಗ ಹೇಳಿದ. +ಆಗ ಹುಡುಗಿಯ ತಂದೆ, ‘‘ಕದ ತೆಗೆ. . . ’’ ಎಂದು ಹುಡುಗಿಯ (ಕಡೆ) ನೋಡಿದಾಗ ಬಲಗೈಯಲ್ಲಿ ಸಗಣಿ, ಎಡಗೈಯಲ್ಲಿ ಹಾಳಿಕಡಿ ಇದ್ದವು. +ಹುಡುಗನಿಗೆ ಅವಳನ್ನು ಮದುವೆ ಮಾಡಿಕೊಡಬೇಕಾಯಿತು. +ಅವರ ಮನೆಯಲ್ಲೇ ಹುಡುಗನನ್ನು ಇಟ್ಟುಕೊಂಡರು. +ಮದುವೆ ಮಾಡಲು ತಯಾರಿ ಮಾಡಿದರು. +ಅರಸು ಕೇಳುವ ಊರಿಗೆಲ್ಲಾ ಡಂಗುರ ಸಾರಿಸಿದನು. +ಕೇಳದ ಊರಿಗೆಲ್ಲಾ ಓಲಿ ಬರೆದು ಕಳಿಸಿ, ಮದುವೆಯ ತಯಾರಿ ಮಾಡಿದನು. +ಮದುವೆಯೆಂದು ಗೊತ್ತಾದವರೆಲ್ಲಾ ಬಂದರು. +ತಯಾರಿ ಮಾಡಿ ಮದುವೆ ಮಾಡಿದರು. +ಹದಿನೈದು ದಿನ ಅವನನ್ನು ಅಲ್ಲೇ ಉಳಿಸಿಕೊಂಡನು. +ಮಾವ ಎರಡು ಉಂಗುರ ಮಾಡಿಸಿ ಅಳಿಯನಿಗೊಂದು, ಮಗಳಿಗೊಂದು ಉಂಗುರ ಹಾಕಿದನು. +ಆಗೊಂದು ಹಡಗನ್ನು ಗೈಸಿದನು. +ಹಡಗಿನ ಮೇಲೆ ಕುಳ್ಳಿರಿಸಿ ಅಳಿಯ, ಮಗಳಿಬ್ಬರನ್ನೂ ಅರಸು ಕಳಿಸಿದನು. +‘‘ಯಾರ್ಯಾರು ಹಡಗನ್ನು ತಾಡು (ದಡಕ್ಕೆ ನಿಲ್ಲಿಸು) ಅಂದರೂ ಹಡಗನ್ನು ತಾಡಬೇಡ. . . ’’ ಅಂತ ಹೇಳಿ (ಅಳಿಯನಿಗೆ ಬುದ್ಧಿ ಹೇಳಿ) ಕಳಿಸಿದನು. +ಅರ್ಧ ಹೊಳೆಗೆ ಹೋದ ಕೂಡಲೆ ಆ ಕಡೆಯಿಂದ ಪಟ್ಟಣಶೆಟ್ಟಿ ಹಡಗನ್ನು ತಕ್ಕೊಂಡು ಬಂದನು. +“ಎಲೊ ಹುಡುಗಾ. . . ಹಡಗನ್ನು ನಿಲ್ಲಿಸು” ಎಂದನು. +ಆ ಅರಸನ ಹುಡುಗಿ, ‘‘ಹಡಗನ್ನು ನಿಲ್ಲಿಸುವುದು ಬೇಡ’’ ಎಂದಳು. +ಮತ್ತೂ ಮುಂದೆ ಹಡಗನ್ನು ತಕ್ಕೊಂಡು ಹೋದನು. +“ಹಡಗನ್ನು ನಿಲಿಸುವೆಯೋ ಇಲ್ಲವೋ?” ಅಂತ ಪಟ್ಟಣಶೆಟ್ಟಿ ಕೇಳಿದನು. +‘‘ನಿಲ್ಲಿಸುವದಿಲ್ಲ. . . ’’ ಎಂದನು ಹುಡುಗ. +‘‘ಮೂರು ದಿನಗಳ ತಂಗುಳನ್ನದ ಹಂಗೂ ಇಲ್ಲವೋ?’’ ಅಂತ ಪಟ್ಟಣಶೆಟ್ಟಿ ಕೇಳಿದನು. +ಆಗ, ‘ಊಟದ ಹಂಗು ಅಂದರೆ ದೊಡ್ಡದು. . . ’ ಅಂತ ಹುಡುಗನಿಗೆ ಆಲೋಚನೆ ಬಂದು ಹಡಗನ್ನು ನಿಲ್ಲಿಸಿದನು. +ಪಟ್ಟಣಶೆಟ್ಟಿಯೂ, ಅವನೂ ಮಾತಾಡುತ್ತ ಹಡಗ ಬಿಟ್ಟುಕೊಂಡು ಹೋದರು. +ಪಟ್ಟಣಶೆಟ್ಟಿ ಹುಡುಗ ಮದುವೆಯಾಗಿ ಬಂದ ಹೆಣ್ಣನ್ನು ತನ್ನ ಹಡಗಿನ ಮೇಲೆ ಕುಳ್ಳರಿಸಿಕೊಂಡು, ಅವನ ಹಡಗನ್ನು ನೀರಿನಲ್ಲಿ ಮುಳುಗಿಸಿಬಿಟ್ಟನು. +ಹಡಗನ್ನು ನಡೆಸಿಕೊಂಡು ಪಟ್ಟಣಶೆಟ್ಟಿ ಹೊರಟನು. +ಹುಡುಗಿ ಬಹಳ ಹೊತ್ತು ಅತ್ತಳು. +ಹೊಳೆಯಲ್ಲಿ ಹಾರಲು ನೋಡಿದಳು. +ಶೆಟ್ಟಿ ಹೊಳೆಯಲ್ಲಿ ಹಾರಲು ಕೊಡಲಿಲ್ಲ-- ಮನೆಗೇ ಕರೆತಂದನು. +ಹುಡುಗ ಈಜಾಡಿ. . . ಈಜಾಡಿ. . . ಹೋಗುವಾಗ ಹೇಮೀರಾಯನ (ಕೂಮನ) ನೆನಪು ಬಂತು. +ಅದು ಅವನನ್ನು ದಂಡೆಯ ಮೇಲೆ ತಕ್ಕೊಂಡು ಹೋಗಬೇಕು ಎಂದು ನಿಶ್ಚಯ ಮಾಡಿತು. +ಅದು ಅವನನ್ನು ಹೊತ್ತುಕೊಂಡು ಬಂದು ಪಟ್ಟಣಶೆಟ್ಟಿ ಬಂದ ಬದಿಯ ದಡದ ಮೇಲೆ ಎತ್ತಿ ತಂದು ಹಾಕಿತು. +ಹೊಳೆಯ ಬೇಲೆ(ತೀರ)ಯ ಮೇಲೆ ಒಬ್ಬ ಮೀನಗಾರನು ಬಲೆ ತಕ್ಕೊಂಡು ಆ ಹೊಳೆಯ ಮೀನ ಹಿಡಿಯಬೇಕು ಅಂತ ಬಂದನು. +ಇವನು ಬಂದು ಬದಿಗೆ ಮುದುಡಿಕೊಂಡು ಅರಳು ಮರುಳನ ಹಾಗೆ ಕೂತುಕೊಂಡಿದ್ದನು. +ಮೀನುಗಾರನು ಇವನ ಹತ್ತಿರ, ‘‘ಏನಾಯಿತು?’’ ಎಂದು ಕೇಳಿದನು. +‘‘ಆಚೆಯಿಂದ ಬರುವಾಗ ಪಟ್ಟಣಶೆಟ್ಟಿ ನನ್ನ ಹಡಗಿನ ಬೆನ್ನಿಗೆ ಬರುತ್ತಾ ಇದ್ದನು. +ಹಡಗಿನ ಮೇಲೆ ಬರುತ್ತಿರುವಾಗ ಹಡಗನ್ನು ಮುಳುಗಿಸಿ ಹಾಕಿಬಿಟ್ಟ. . . ’’ ಎಂದನು. +“ಹೇಮೀರಾಯನನ್ನು ನೀರಿಲ್ಲದ ಕೆರೆಯಿಂದ ನೀರಿಗೆ ತಕ್ಕೊಂಡು ಹೋಗಿಬಿಟ್ಟಿದ್ದೆ. +‘ನಿನಗೆಂಥಾ ಕಷ್ಟ ಬಂದರೂ ನನ್ನನ್ನು ನೆನೆದ ಕೂಡಲೆ ಬರುವೆ’ ಎಂದು ಹೇಳಿತ್ತು. +ಹೇಮಿರಾಯ ಬಂದು ನನ್ನನ್ನು ಮೇಲಕ್ಕೆ ಹಾಕಿತು. +ನನಗೆ ನೀರನ್ನು ಕುಡಿದು. . . ಕುಡಿದು. . . ಸಾಕಾಗಿದೆ. +ಏನಾದರೂ ಆಹಾರ ತಂದುಕೊಡು” ಅಂತ ಹೇಳಿದನು. +ಮೀನುಗಾರನು ಮನೆಗೆ ಓಡಿ ಹೋಗಿ ಬಂದು ತಟ್ಟೆಯಲ್ಲಿ ರಾಗಿ ಗಂಜಿ ತಂದುಕೊಟ್ಟನು. +ಅದನ್ನು ಕುಡಿದುಕೊಂಡು ತೆವಳುತ್ತ, ಹರಿಯುತ್ತ ಬಂದು ಹೊಳೆಯ ದಂಡೆಯ ಮೇಲೆ ಕೂತನು-- ನಡೆದು ಹೋಗುವಷ್ಟು ಧೈರ್ಯ ಬಂತು. +ಸಾವಕಾಶವಾಗಿ ನಡೆದು ಬಂದನು. +ಬಂದು ಒಬ್ಬ ಅಜ್ಜಿ ಮುದುಕಿಯ ಮನೆಗೆ ಬಂದನು. +ಅವಳ ಮನೆಯಲ್ಲಿ ಅಜ್ಜಿ ಮುದುಕಿ ಒಬ್ಬಳೇ ಇದ್ದಳು. +ಮತ್ತಾರೂ ಇರಲಿಲ್ಲ ಅವಳ ಮನೆಗೆ ಹೋಗಿ, ‘‘ಅಜ್ಜಮಾ. . . ’’ ಅಂತ ಕರೆದನು. +‘‘ಯಾರು ನೀನು ಮೊಮ್ಮಗನೇ? +’’ ಅಂತ ಅವಳು ಕೇಳಿದಳು. +‘‘ನಾನು ನಿಮ್ಮ ಮನೆಗೆ ಬಂದೆ-- ಇಲ್ಲಿ ಉಳಿಯಬೇಕೆಂದು ದಿಕ್ಕಿಲ್ಲದ ಪರದೇಶಿ. +ನೀನು ದಿನಾ ಯಾವ ಕೆಲಸ ಮಾಡುತ್ತಿದ್ದೀ?’’ ಅಂತ ಕೇಳಿದನು. +‘‘ಹೂಕೊಯ್ದು ಪಟ್ಟಣಶೆಟ್ಟಿಯ ಮನೆಗೆ ಹೂ ತಕ್ಕೊಂಡು ಹೋಗಿ ಕೊಡುತ್ತೇನೆ’’ ಎಂದಳು. +‘‘ಶೆಟ್ಟಿ ಮನೆಗೆ ಹೋಗಿ ಕೆಲಸ ಮಾಡಿ, ಅವರು ಕೊಟ್ಟ ಅಕ್ಕಿ ತಂದು ಬೇಯಿಸಿಕೊಂಡು ಉಣ್ಣುತ್ತೇನೆ’’ ಎಂದಳು. +ಒಂದು ದಿನ ಹುಡುಗನು, ‘‘ಅಜ್ಜವ್ವಾ. . . ನೀನು ಅಡಿಗೆ ಮಾಡಬೇಕಾಗುತ್ತದೆ. +ನೀನು ಅಡಿಗೆ ಮಾಡು. . . ನಾನು ಹೂಗಳನ್ನು ಕಟ್ಟುವೆ’’ ಎಂದನು. +ಅವಳು ಅಡಿಗೆ ಮಾಡಿದಳು. +ಇವನು ಹೂ ಕಟ್ಟಿದನು. +ಅಜ್ಜವ್ವ ಮರುದಿನ ಬೆಳಗಾದ ಮೇಲೆ ಹೂದಂಡೆ ಕಟ್ಟಿದನ್ನು ತಕ್ಕೊಂಡು ಹೋಗಿ ಹುಡುಗಿಗೆ ಕೊಟ್ಟಳು. +ಅವಳು, ‘‘ಅಜ್ಜವ್ವಾ. . . ನಿಮ್ಮ ಮನೆಗೆ ಯಾರು ಬಂದಿದ್ದಾರೆ? +ಹೂದಂಡೆಯನ್ನು ಲೈಕಾಗಿ ಕಟ್ಟಿದ್ದಾರೆ’’ ಅಂದಳು. +ಅಜ್ಜವ್ವ ಯಾರು ಹೂ ದಂಡೆ ಕಟ್ಟಿದವರು ಎಂದು ಹೇಳದೆ, ‘‘ಯಾರೂ ಬರಲಿಲ್ಲ. . . ಕೆಲಸ ಮಾಡಿ ಪುರುಸೊತ್ತಾಗಿತ್ತು. +ನಾನೇ ಕಟ್ಟಿದೆ’’ ಎಂದಳು. +ಅಜ್ಜವ್ವ ಹೂದಂಡೆ ಕೊಟ್ಟು, ಪಾತ್ರೆ-ಗೀತ್ರೆ ತಿಕ್ಕಿ ತಿರುಗಿ ಬರುವಾಗ ಈ ಹುಡುಗಿಯೇ ಅಕ್ಕಿಯನ್ನು ಕೊಡುವವಳಾಗಿದ್ದಳು-- ಸ್ವಲ್ಪ ಹೆಚ್ಚು ಅಕ್ಕಿಯನ್ನು ಕೊಟ್ಟಳು. +ತಿರುಗಿ ಬಂದ ಕೂಡಲೇ ಹೇಳಿದನು, ‘‘ಅಜ್ಜವ್ವಾ. . . ದಿವಸ ಹೂದಂಡೆ ತಕ್ಕೊಂಡು ಹೋಗುತ್ತೀ.. . ಯಾರಿಗೆ ಎಂದು ತಕ್ಕೊಂಡು ಹೋಗುವೆ?’’ ಎಂದು ಕೇಳಿದನು. +ಆಗ ಅಜ್ಜಿ, “ಅರಸರು ಒಬ್ಬ ಹೆಣ್ಣನ್ನು ತಂದಿದ್ದಾರೆ. +ಆ ಹೆಣ್ಣಿಗೆ ಹೂದಂಡೆ ತಕ್ಕೊಂಡು ಹೋಗಿ ಕೊಡುತ್ತೇನೆ” ಎಂದಳು. +ಆಗ ಇವನು ತನ್ನ ಹೆಂಡತಿಯೇ ಆಗಿರಬೇಕು ಎಂದು ನಿಶ್ಚಯ ಮಾಡಿದನು. +ಮರುದಿವಸ, ‘‘ಅಜ್ಜವ್ವಾ. . . ಇಂದೂ ನಾನೇ ಹೂದಂಡೆ ಕಟ್ಟುವೆನು.. . ಹೂ ಕೊಯ್ದುಕೊಂಡು ಬಾ’’ ಎಂದನು. +ಕೊಯ್ದು ತಂದು ಕೊಟ್ಟಳು. +ಹೂದಂಡೆ ಅರ್ಧ ಕಟ್ಟಿದಾಗ ತನ್ನ ಉಂಗುರವನ್ನು ಬೆರಳಿನಿಂದ ಕಳಚಿ ದಂಡೆಯ ನಡುವೆ ಹಾಕಿ, ದಂಡೆಯನ್ನು ಪೂರ್ತಿಮಾಡಿ ಅಜ್ಜಿಯ ಹತ್ತಿರ ಕೊಟ್ಟು, “ಅಜ್ಜವ್ವಾ. . . ದಂಡೆಯ ಹೂಗಳಲ್ಲಿ ಮುಳ್ಳುಗಿಳ್ಳು ಇರಬಹುದು. +ಮುಡಿಯುವ ಹತ್ತಿರ, ‘ಬಿಸಲಿಗೆ ತಕ್ಕೊಂಡು ಹೋಗಿ, ಬಿಸಿಲಿನಲ್ಲಿ ಬಿಡಿಸಿ ನೋಡಿಕೊಂಡು ಮುಡಿ. . . ’ ಎಂದು ಹೇಳು” ಎಂದು ಹೇಳಿದನು. +ಅಜ್ಜವ್ವ ದಂಡೆ ತಕ್ಕೊಂಡು ಹೋಗಿ ಕೊಟ್ಟು- “ಮೊಮ್ಮಗಳೇ. . . ಬಿಸಲಿಗೆ ತಕ್ಕೊಂಡು ಹೋಗಿ ಮುಡಿದುಕೋ, ಮುಳ್ಳು ಇರಬಹುದು” ಎಂದಳು. +ಬಿಸಿಲಿನಲ್ಲಿ ತಕ್ಕೊಂಡು ಹೋಗಿ ಹೂಗಳನ್ನು ಬಿಡಿಸಿ ನೋಡಿದಳು. +ಬಿಸಿಲಿನಲ್ಲಿ ಆ ಉಂಗುರ ಹೊಳೆಯಿತು. +ನೋಡಿದ ಕೂಡಲೇ, ‘ತನ್ನ ಗಂಡನೇ ಅಜ್ಜವ್ವನ ಮನೆಗೆ ಬಂದಿದ್ದಾನೆ’ ಎಂದು ತಿಳಿದುಕೊಂಡಳು. +ಆ ದಿನ ಅಜ್ಜವ್ವನ ಹತ್ತಿರ ಅಕ್ಕಿಯನ್ನು ಕೊಡುವಾಗ ತನ್ನ ಉಂಗುರವನ್ನು ಅಕ್ಕಿಯಲ್ಲಿ ಹಾಕಿ ಅಜ್ಜವ್ವನ ಕೂಡ ಅಕ್ಕಿಯನ್ನು ಕೊಟ್ಟಳು. +ಕೊಟ್ಟು ಹೇಳಿದಳು-- “ಅಜ್ಜವ್ವಾ. . . ನಿನಗೇನು ಕಣ್ಣು ಕಾಣುವುದಿಲ್ಲ, ಕಣ್ಣು ಚೆನ್ನಾಗಿ ಕಾಣುವವರು ನಿಮ್ಮ ಮನೆಯಲ್ಲಿದ್ದಾರೆ. +ಅಕ್ಕಿಯನ್ನು ಹೆಕ್ಕಿಕೊಡಲು ಹೇಳು; ನೆಲ್ಲು ಇರಬಹುದು’’ ಅಂದಳು. +ಅಜ್ಜಿ ಅಕ್ಕಿ ತಗೊಂಡು ಬಂದು ಮೊಮ್ಮಗನ ಕೈಯಲ್ಲಿ ಕೊಟ್ಟಳು. +‘‘ಇಂದು ಕೊಟ್ಟ ಅಕ್ಕಿಯಲ್ಲಿ ಕಲ್ಲು ಇವೆಯಂತೆ ಹೆಕ್ಕು’’ ಅಂದಳು. +ಅವನು ಅಕ್ಕಿಯನ್ನು ಆಯ್ದಾಗ ಅವನಿಗೆ ಹೆಂಡತಿಯ ಉಂಗುರ ಅಕ್ಕಿಯಲ್ಲಿ ಕಂಡಿತು. +ನೋಡಿದ ಕೂಡಲೇ, ‘ಇದು ನನ್ನ ಮಾವನ ಮನೆಯಲ್ಲಿ ಮಾಡಿಸಿದ ಉಂಗುರ ಇದರಿಂದ ಬಂತು’ ಎಂದು ನೋಡಿ-- ತನ್ನ ಹೆಂಡತಿಯೇ ಪಟ್ಟಣ ಶೆಟ್ಟಿಯ ಮನೆಯಲ್ಲಿ ಇದ್ದವಳು ಎಂದೂ, ಅವಳ ಮನೆಗೆ ಅಜ್ಜಿ ದಿನಾಲೂ ಹೂ ದಂಡೆ ತಗೊಂಡು ಹೋಗಿ ಕೊಡುತ್ತಾಳೆ ಎಂದೂ ಅವನಿಗೆ ಗೊತ್ತಾಯಿತು. +ಹುಡುಗಿ ಪಟ್ಟಣಶೆಟ್ಟಿಗೆ, ‘ತನ್ನನ್ನು ಒಂದು ವರ್ಷದವರೆಗೆ ಮುಟ್ಟಬಾರದು ತನಗೆ ಕನ್ನೆಸೂತಕ ಇದೆ’ ಅಂತ ಹೇಳಿ, ‘ಒಂದು ವರುಷದ ನಂತರ ತನ್ನನ್ನು ಮುಟ್ಟಬಹುದು’ ಎಂದೂ ಹೇಳಿದ್ದಳು. +ಅವಳನ್ನು ಒಂದು ವರ್ಷದ ಅನಂತರ ಒಳಗೆ ತಕ್ಕೊಳ್ಳುವಾಗ ಒಂದು ಸಣ್ಣ ದೇವಕಾರ್ಯ ಮಾಡಬೇಕು ಅಂತ ಅವನು ಆಲೋಚನೆ ಮಾಡಿದನು. +ಅಜ್ಜವ್ವನ ಹತ್ತಿರ, ‘‘ನಾನು ತಂದ ಹೆಣ್ಣಿಗೆ ಇನ್ನು ಹದಿನೈದು ದಿನಗಳ ಮೇಲೆ ಕನ್ನೆ ಸೂತಕ ಕಳೆಯುತ್ತದೆ. +ಅವಳನ್ನು ಒಳಗೆ ತಕ್ಕೊಳ್ಳುವಾಗ ಒಂದು ಸಣ್ಣ ದೇವಕಾರ್ಯ ಮಾಡಬೇಕು, ಆಗ ನೀನು ಬರಬೇಕು’’ ಎಂದು ಹೇಳಿದನು. +ಅಜ್ಜವ್ವ ಇದನ್ನು ಮೊಮ್ಮಗನ ಹತ್ತಿರ ಹೇಳಿದಳು, ‘‘ಪಟ್ಟಣಶೆಟ್ಟಿ ಅರಸನ ಮನೆಯಲ್ಲಿ ದೇವಕಾರ್ಯ ಮಾಡುತ್ತಾರೆ, ನಾವು ಹೋಗಬೇಕು’’ ಎಂದು ಹೇಳಿದಳು. +ಅವನು, ‘‘ಅಜ್ಜವ್ವಾ. . . ನಾವು ಕಾರ್ಯದ ಊಟಕ್ಕೆ ಹೋದರೆ ಮೂರು ಬಾಳೆ ಇಟ್ಟುಕೊಳ್ಳಬೇಕು, ಆ ಮೂರು ಬಾಳೆಗಳಲ್ಲಿ ಎರಡು ಬಾಳೆಗಳಲ್ಲಿ ನಾವಿಬ್ಬರೂ ಊಟ ಮಾಡಬೇಕು. +ಒಂದು ಬಾಳೆಯನ್ನು ಕಟ್ಟಿಕೊಂಡು ಬರಬೇಕು’’ ಎಂದನು. +ಕಾರ್ಯದ ದಿನ ಅವರ ಮನೆಗೆ ಊಟಕ್ಕೆ ಹೋದರು. +ಅಜ್ಜವ್ವ, ‘‘ಮೂರು ಬಾಳೆ ಬೇಕು’’ ಎಂದು ತಕೊಂಡಳು. +ಪಂಕ್ತಿ ಬಿಟ್ಟು ಒಂದು ಬದಿಗೆ ಅಜ್ಜಿ-ಮೊಮ್ಮಗ ಇಬ್ಬರೇ ಕೂತರು ಇಬ್ಬರ ನಡುವೆ ಒಂದು ಬಾಳೆ ಇಟ್ಟುಕೊಂಡರು. +ಎಲ್ಲರಿಗೂ ಊಟ ಬಡಿಸುತ್ತ ಬಂದರು, ಈ ಹೆಣ್ಣು ಉಪ್ಪಿನಕಾಯಿ ಬಡಿಸುತ್ತ ಬಂದಳು. +ಅಜ್ಜಿ-ಮೊಮ್ಮಗ ಇದ್ದ ಕಡೆ ಬಡಿಸಲು ಬಂದಳು. +ಅಜ್ಜಿಯ ಮತ್ತು ಮೊಮ್ಮಗನ ಬಾಳೆಗಳಿಗೆ ಬಡಿಸಿದ ಕೂಡಲೇ ನಡುವಿನ ಬಾಳೆಯಲ್ಲಿ ಇವಳು ಕೂತುಬಿಟ್ಟಳು. +ಊಟಕ್ಕೆ ಬಂದವರೆಲ್ಲಾ ನೋಡಿ ನಗೆಯಾಡಿದರು, ‘‘ಶೆಟ್ಟಿ ಅರಸು ತಂದ ಹೆಣ್ಣು ಅಜ್ಜಿ-ಮೊಮ್ಮಗನ ಬಾಳೆಯಲ್ಲಿ ಕೂತಿತು’’ ಅಂತ ನಕ್ಕರು. +ಆಗ ಈ ಅರಸು ಆಲೋಚನೆಯಲ್ಲಿ ಬಿದ್ದನು. +‘ಆ ಹುಡುಗನನ್ನು ಹೊಳೆಯಲ್ಲಿ ಹಾಕಿ ನಾನು ಬಂದಿದ್ದೆ. +ಅವಳ ಗಂಡನೇನಲ್ಲ ಈ ಹುಡುಗ, ಅಜ್ಜಿಯ ಮೊಮ್ಮಗನೇ’ ಎಂದು ತಿಳಿದುಕೊಂಡನು. +(ಊಟವಾದ ಮೇಲೆ) ‘ನಾನು ತಂದ ಹೆಣ್ಣು, ಅಜ್ಜಿಯ ಮೊಮ್ಮಗನ ಬಾಳೆಯಲ್ಲಿ ಹೋಗಿ ಕೂತಳು, ಇದರ ವಿಚಾರಣೆ ಮಾಡಬೇಕು’ ಅಂತ ಹುಡುಗನನ್ನೂ, ಹೆಣ್ಣನ್ನೂ, ಅಜ್ಜಿಯನ್ನೂ ಕಡೆದುಕೊಂಡು ಅರಸನ ಸಭೆಗೆ ಹೋದನು. +ಅರಸನು- ‘‘ಏನಾಯಿತು?’’ ಎಂದು ಪಟ್ಟಣಶೆಟ್ಟಿಯ ಹತ್ತಿರ ಕೇಳಿದನು. +‘‘ನಾನು ಒಂದು ಹೆಣ್ಣನ್ನು ಕರೆತಂದಿದ್ದೆ. +ನಮ್ಮ ಮನೆಯಲ್ಲಿ ಒಂದು ಸಣ್ಣ (ದೇವ) ಕಾರ್ಯವಾದಾಗ ಎಲ್ಲರೂ ಊಟಕ್ಕೆ ಕೂತಿದ್ದಾಗ ಈ ಹೆಣ್ಣು ಅಜ್ಜಿ-ಮೊಮ್ಮಗನ ಬಾಳೆಯಲ್ಲಿ ಕೂತಳು. +’’ ಅರಸನು ಹುಡುಗನ ಹತ್ತಿರ- ‘‘ಇದೇನು?’’ ಅಂತ ಕೇಳಿದನು, ಹಿಂದೆ ನಡೆದುದೆಲ್ಲವನ್ನೂ ಹುಡುಗ ಹೇಳಿದನು-- ತಾವು ಚಿಕ್ಕವರಾಗಿದ್ದಾಗ ಚಂಡಾಡಲು ಹೋಗಿದ್ದು. . . ಮುಂತಾಗಿ ಎಲ್ಲ ಹೇಳಿದನು. +“ನಾನು ನೀರು ತರಲು ಹೋದೆನು. +ಅಷ್ಟರಲ್ಲಿ ಏನಾಯಿತು ಎಂದು ನನಗೆ ಗೊತ್ತಿಲ್ಲ, ಅಣ್ಣನನ್ನು ಯಾವ ಪ್ರಾಣಿ ತಿಂದುಕೊಂಡು ಹೋಯಿತೋ ತನಗೇನೂ ಗೊತಿಲ್ಲ, ಅದೇ ಹಾದಿಯಲ್ಲಿ (ತೀಡುತ್ತ) ಅಳುತ್ತ ಬಂದೆ. +ಬರುವಾಗ ಅವನು ಹರಿದ ಚೆಲ್ಲಿದ ಪಂಜೆಯ ಗುರುತಿನ ಮೇಲೆ ಸುಮಾರು ದೂರ ಬಂದೆ. . . ಮೂರು ಹಾದಿ ಕೂಡಿದಲ್ಲಿ ಬಂದ ಕೂಡಲೇ ಯಾವ ಹಾದಿಯಲ್ಲಿ ಹೋಗಬೇಕೆಂಬದು ಗೊತ್ತಾಗಲಿಲ್ಲ. +ಆ ನಂತರ ಪಟ್ಟಣಶೆಟ್ಟಿಯ ಮನೆಗೆ ಹೋದೆ ಹೀಗೆಲ್ಲ ಆಯಿತು” ಅಂತ ಅಲ್ಲಿಯವರೆಗೆ ನಡೆದ ಸಂಗತಿ ಹೇಳಿದನು. +ಕಡೆಗೆ ಅರಸನಿಗೆ ಇವನು ತನ್ನ ತಮ್ಮನೇ ಅಂತ ಗೊತ್ತಾಯಿತು. +‘‘ಪಟ್ಟಣಶೆಟ್ಟಿಯನ್ನು ಮೂರು ಹಾದಿ ಕೂಡಿದಲ್ಲಿ ತಕ್ಕೊಂಡು ಹೋಗಿ, ಅಲ್ಲಿ ಸೀಳಿ ತೋರಣ ಹಾಕಬೇಕು’’ ಅಂತ ಹುಕುಂ ಕೊಟ್ಟನು. +ಅದರಂತೆ ಅವನನ್ನು ಸೀಳಿ ತೋರಣ ಹಾಕಿ ಬಂದರು. +ಅಲ್ಲಿಯ ಅರಸುತನ ಬಿಟ್ಟು ಮನೆಗೆ ಬರಬೇಕೆಂದು ತನ್ನ ಹೆಂಡತಿ, ತಮ್ಮ, ತಮ್ಮನ ಹೆಂಡತಿ ಸಹಿತ ಮನೆಗೆ ಬಂದರು. +ತಾಯಿಗೆ ಯಾರೆಂದು ಮೊದಲು ತಿಳಿಯಲಿಲ್ಲ. +ಅಣ್ಣ-ತಮ್ಮ, ‘‘ಅಮ್ಮಾ. . . ’’ ಅಂತ ಕರೆದ ಮೇಲೆ ಅವಳಿಗೆ ಮಕ್ಕಳೆಂದು ಗೊತ್ತಾಯಿತು. +ಕಿರಿರಾಣಿ ಒಂದು ದಿನ ಅಕ್ಕನ ಹತ್ತಿರ ಹೋಗಿ, ‘‘ಇವರು ಯಾರು? +’’ ಅಂತ ಕೇಳಿದಾಗ, ‘‘ತನ್ನ ಮಗಂದಿರೇ’. . . ’ ಎಂದು ಹೇಳಿದಳು. +ಅವಳು ರಾಜನ ಹತ್ತಿರ ಬಂದು, ಈ ಸಂಗತಿ ಹೇಳಿದಳು. +‘ತಾನು ಇವರ ತಲೆ ಕಡಿಯಲು ಹುಕುಂ ಹೊಟ್ಟಿದ್ದೆ, ಪೋಲೀಸರು ಕಡಿದ ಕುರುಹು ತಂದು ತೋರಿದ್ದರು. +ಇವರು ಹೇಗೆ ಬಂದರು?’ ಎಂದು ವಿಚಾರ ಮಾಡಿದರೂ ಅವನಿಗೆ ನಡೆದ ಸಂಗತಿ ತಿಳಿಯಲಿಲ್ಲ. + ‘ಇವರಿಬ್ಬರಿದ್ದಾರೆ ಅವರ ತಲೆ ಕಡಿಯಲು ಮತ್ತೆ ಹುಕುಂ ಕೊಟ್ಟರೆ ತನ್ನನ್ನು ಜೀವದಿಂದ ಉಳಿಸಲಿಕ್ಕೆಲ್ಲ’ ಎಂದು ತಿಳಿದು ಸುಮ್ಮನೆ ಉಳಿದನು. +ಕತ್ತಗಾಲಿನಲ್ಲಿ ಒಬ್ಬ ಕುಂಬಾರನೂ, ಅವನ ಹೆಂಡತಿಯೂ ಇದ್ದರು-- ಅವರು ಬಡವರಾಗಿದ್ದರು. +ಅವನು ದಿನಾಲೂ ಎರಡು-ಮೂರು ಮಡಕೆಗಳನ್ನು ಮಾಡುತ್ತಿದ್ದನು. +ಅವನ ಹೆಂಡತಿ ಪೇಟೆಗೆ ಹೋಗಿ ಅವನ್ನು ಮಾರಾಟ ಮಾಡಿಕೊಂಡು ಬರುತ್ತಿದ್ದಳು. +ಬಂದ ಹಣದಲ್ಲಿ ಅವರಿಬ್ಬರೂ ಕಷ್ಟದಿಂದ ಜೀವನ ಮಾಡುತ್ತಿದ್ದರು. +ಕುಂಟ ಕುಂಬಾರ ಎಂದು ಅವನ ಹೆಸರು. +ಅವನು ನಿಜವಾಗಿಯೂ ಕುಂಟನಲ್ಲ. +ಆದರೆ, ಅವನ ಒಂದು ಕಾಲು ಉದ್ದ, ಒಂದು ಕಾಲು ಗಿಡ್ಡ. +ಅದರಿಂದ ಅವನು ನಡೆಯುವಾಗ ಉದ್ದ ಕಾಲು ಮುಂದೆ ಮೊಣಕಾಲು ಬಾಗಿಸಿ ಬೀಳುತ್ತಿತ್ತು. +ಬಲ ಬದಿಯ ಗಿಡ್ಡ ಕಾಲನ್ನು ಎತ್ತಿಡುವಾಗ ಅವನು ಆ ಕಾಲಿನ ಬದಿಯಿಂದ ಹಾರಿ ಹೆಜ್ಜೆಯಿಟ್ಟ ಹಾಗೆ ಕಾಣುತ್ತಿತ್ತು. +ಅದಕ್ಕೆ ಅವನಿಗೆ ‘ಕುಂಟ ಕುಂಬಾರ’ ಎಂದು ಹೆಸರು ಬಿದ್ದು, ಅವನ ಮೊದಲಿನ ಹೆಸರು ಏನೆಂದು ಅವನಿಗೂ ಮರೆತುಹೋಗಿತ್ತು. +ಒಂದು ದಿನ ಅವನ ಹೆಂಡತಿ ಮಡಕೆ ಮಾಡಿದ ಒಂದು ರೂಪಾಯಿ ಹಣದಲ್ಲಿ ನಾಲ್ಕು ಅಂಗಡಿ ತಿರುಗಿ ಚೌಕಶಿ ಮಾಡಿ, ಸಾಮಾನು ತೆಗೆದುಕೊಂಡು ನಾಲ್ಕಾಣೆಗಳನ್ನು ಉಳಿಸಿಕೊಂಡಳು. +ಬರುವಾಗ ಹಲಸಿನ ಹಣ್ಣು ಮಾರುವವನಿಂದ ಒಂದು ಹಲಸಿನ ಹಣ್ಣಿನ ಕಡಿಯನ್ನು ತೆಗೆದುಕೊಂಡಳು. +ಅವಳಿಗೆ ಹಸಿವಾಗಿತ್ತು. +ಆದರೂ, ‘ಪಾಪ. . . ಗಂಡನನ್ನು ಬಿಟ್ಟು ತಾನು ತಿನ್ನಬಾರದು, ಸಂಗಡ ಕೂತುಕೊಂಡೇ ಸಾವಕಾಶ ಹಲಸಿನ ಹಣ್ಣಿನ ತೊಳೆಗಳನ್ನು ತಿಂದರಾಯಿತು’ ಎಂದು ಅವಳು ಸಾಮಾನುಗಳ ಜತೆಗೆ ಅದನ್ನು ತಂದು ಮನೆಗೆ ಬಂದಳು. +ಗಂಡನು ಕೋಣೆಯ ಜಗಲಿಯ ಮೇಲೆ ಮಡಕೆಯ ಮಣ್ಣಿನ ಮುದ್ದೆ ಇಟ್ಟುಕೊಂಡು ತಿಗರಿ ತಿರುಗಿಸುತ್ತ ಇದ್ದನು. +ಅವಳು, ‘ಅವನು ಆ ಮಣ್ಣಿನ ಮುದ್ದೆಗೆ ಒಂದು ರೂಪ ಕೊಟ್ಟ ಹೊರತು ಕೆಲಸವನ್ನು ಮಧ್ಯದಲ್ಲಿ ನಿಲ್ಲಿಸುವ ಹಾಗಿಲ್ಲ, ಕಡೆಗೆ ತಿಂದರಾಯಿತು’ ಎಂದುಕೊಂಡು ಹಲಸಿನ ಹಣ್ಣಿನ ಕಡಿಯನ್ನು ಅವನ ಹತ್ತಿರ ಇಟ್ಟು ಮನೆಕೆಲಸ ಮಾಡುವುದಕ್ಕೆ ಹೋದಳು. +ಹಣ್ಣಿನ ವಾಸನೆಗೆ ನೊಣಗಳು ಬಂದು ಮುಕುರಿದವು. +ನೊಣಗಳು ಎಲ್ಲೂ ಕಾಲನ್ನಿಡಲಿಕ್ಕೂ ಜಾಗವಿಲ್ಲದ ಹಾಗೆ ಕಡಿಯ ಮೇಲೆ ಕೂತು, ಹಣ್ಣಿನ ರುಚಿಯನ್ನು ನೋಡಲು ಹತ್ತಿದವು. +ಕುಂಬಾರನು ಅದನ್ನು ನೋಡಿದನು. +ಅವನಿಗೆ ನೊಣಗಳ ಮೇಲೆ ವಿಪರೀತ ಸಿಟ್ಟು ಬಂತು. +“ಹತ. . . ದುಷ್ಟ ನೊಣಗಳೇ. . . ನಾನೂ, ನನ್ನ ಹೆಂಡತಿಯೂ ಕೂಡಿ ತಿನ್ನಬೇಕು ಎಂದು ಇಟ್ಟ ಹಲಸಿನ ಹಣ್ಣನ್ನು ನೀವು ತಿನ್ನಲಿಕ್ಕೆ ಹತ್ತಿದಿರಾ? +ನಿಮಗೆ ಜೀವದಾಶೆಗಿಂತ ಹಲಸಿನ ಹಣ್ಣಿನ ಆಶೆ ಹೆಚ್ಚಾಯಿತು’’ ಎಂದು ಮಣ್ಣನ್ನು ಬಡಿದು ಹದ ಮಾಡಲಿಕ್ಕೆ ಉಪಯೋಗಿಸುವ ಪೆಟ್ಟುಮಣಿಯನ್ನು ಹಿಡಿದುಕೊಂಡು ಜೋರಾಗಿ ಹಣ್ಣಿನ ಕಡಿಯ ಮೇಲೆ ಒಮ್ಮೆಲೆ ಬಡಿದನು. +ಅವನ ಪೆಟ್ಟುಮಣಿಯ ಹೊಡೆತದ ರಭಸಕ್ಕೆ ಸಿಕ್ಕ ನೊಣಗಳು ನೂರಾರು ಸತ್ತು ಬಿದ್ದವು. +ಹಣ್ಣಿನ ಕಡಿಯೂ ಜೊತೆಗೆ ಜಜ್ಜಿ ಪಿಚ್ಚಾಗಿ ಹೋಯಿತು. +ಅವನ ಹೆಂಡತಿ ಹಣ್ಣಿನ ಕಡಿಯನ್ನು ಗಂಡನ ಸಂಗಡ ತಿನ್ನಬೇಕು ಎಂದು ಬಂದಳು. +ಹಲಸಿನ ಹಣ್ಣಿನ ಕಡಿಯನ್ನು ತಿನ್ನಲಿಕ್ಕೆ ಬಾರದ ಹಾಗೆ ತಾನು ಜಜ್ಜಿದ್ದನ್ನು ಮರೆಸಲು ಕುಂಬಾರನು ತನ್ನ ಪರಾಕ್ರಮವನ್ನು ಕುಟ್ಟಿಕೊಳ್ಳಲಿಕ್ಕೆ ಹಣಕಿದನು. +“ನಾನು ಒಂದೇ ಪೆಟ್ಟಿಗೆ 1000 ಪ್ರಾಣಿಗಳನ್ನು ಕೊಂದುಬಿಟ್ಟೆನು. +ನನ್ನಂಥವರು ಈ ಜಗತ್ತಿನಲ್ಲಿ ಯಾರಿದ್ದಾರೆ? +ಒಮ್ಮೆಲೇ ಸಾವಿರಾರು ಪ್ರಾಣಿಗಳನ್ನು ಕೊಲ್ಲುವವರಾದರೂ ಯಾರು? +ನನ್ನ ಮೀಸೆಯ ಮೇಲಿನ ಕೂದಲುಗಳನ್ನಾದರೂ ಲೆಕ್ಕ ಮಾಡಬಹುದು. +ಆದರೆ, ನಾನು ಕೊಂದ ಪ್ರಾಣಿಗಳ ಲೆಕ್ಕ ಮಾಡುವದಕ್ಕೆ ಯಾರಿಂದಲೂ ಸಾಧ್ಯವಿಲ್ಲ” ಎಂದು ಹೆಂಡತಿಯನ್ನು ನೋಡಿ, ಮೀಸೆಯನ್ನು ತಿರುವಿಕೊಂಡು ಮೇಲೆ ಕೈಯೆಳೆದುಕೊಂಡನು. +ಅವನ ಹೆಂಡತಿಗೆ ಗಂಡನ ಮೇಲೆ ಬಹಳ ಗೌರವವಿತ್ತು. +ಮಣ್ಣಿನ ಮುದ್ದೆಯನ್ನು ತಿಗರಿಯ ತಲೆಯ ಮೇಲಿಟ್ಟು ಅದನ್ನ ತಿರುಗಿಸಿ, ಜಾದುಗಾರನ ಹಾಗೆ ಮಡಕೆಯ ಚಂದವಾದ ರೂಪುಕೊಡುವ ಗಂಡನನ್ನು ಅವಳು ಜಾದುಗಾರನೆಂಬಷ್ಟು ಆಶ್ಚರ್ಯದಿಂದ ಕಾಣುತ್ತಿದ್ದಳು. +ಅವಳಿಗೆ ಹಲಸಿನ ಹಣ್ಣಿನ ಕಡಿ ಹಾಳಾದ ಪಶ್ಚಾತ್ತಾಪಕ್ಕಿಂತ, ತನ್ನ ಗಂಡ ಮಹಾಸಾಹಸಿ ಎಂದೆನಿಸಿ ಅವಳು ಗಂಡನನ್ನು ಮತ್ತಷ್ಟು ಮೆಚ್ಚಿಕೊಂಡಳು. +ಅವನು ಕಾಲು ಹಾರಿಸುತ್ತ ನಡೆಯುವಾಗ ಅವಳಿಗೆ ಅವನು ನವಿಲಿನ ಹಾಗೆ ನಡೆಯುತ್ತಿದ್ದನೆಂದು ಕಂಡು ಆನಂದವಾಗಿ ನೋಡುತ್ತಿದ್ದಳು. +ಮರುದಿನ ಅವನೇ ಮಾಡಿದ ಮೂರು-ನಾಲ್ಕು ಮಡಕೆಗಳನ್ನು ತೆಗೆದುಕೊಂಡು ಅವಳು ರಾಜನ ಮನೆಗೆ ಹೋದಳು. +ಆಗ ರಾಜನ ಗದ್ದೆಗಳಿಗೆ ತೆನೆ ಬರುವ ಸಮಯ- ಹಂದಿಗಳ ಕಾಟ ಬಹಳವಾಗಿತ್ತು. +ಆದರೆ, ರಾತ್ರಿ ಗದ್ದೆಯ ಮಾಳದಲ್ಲಿ ಕೂತು ಹಂದಿ ಹೊಡೆಯುವದು ಯಾರಿಗೂ ಸಾಧ್ಯವಾಗಿರಲಿಲ್ಲ. +ರಾಜನು ಕುಂಬಾರತಿಯನ್ನು ನೋಡಿ ಕೇಳಿದನು, “ಕುಂಬಾರತೀ. . . ನಿನ್ನ ಕೇರಿಯ ಬದಿಗೆ ಹಂದಿಯನ್ನು ಹೊಡೆಯುವವರಿದ್ದಾರೋ ಹ್ಯಾಗೆ? +ಇದ್ದರೆ ನೀನು ತಿಳಿಸಬಹುದು. +ಅವರಿಗೆ ವರ್ತಮಾನ ಕೊಟ್ಟು ಕರೆಸಿಕೊಳ್ಳುತ್ತೇನೆ” ಎಂದನು. +‘‘ನನ್ನ ಗಂಡ ಬಹಳ ಶಕ್ತಿವಂತರು, ಅವನನ್ನು ಕೇಳಿ ನೋಡುತ್ತೇನೆ’’ ಎಂದು ಹೇಳಿ ಕುಂಬಾರತಿ ಮನೆಗೆ ಹೋದಳು. +ಮನೆಗೆ ಬಂದವಳು ಗಂಡನಿಗೆ ಹೇಳಿದಳು-- “ರಾಜರು ‘ಹಂದಿ ಹೊಡೆಯುವ ಸಮರ್ಥರು ಯಾರಾದರೂ ಇದ್ದರೆ ತಿಳಿಸು’ ಎಂದು ಹೇಳಿದ್ದಾರೆ, ಅವರ ಗದ್ದೆಯಲ್ಲಿ ಕೂತು ಹಂದಿ ಹೊಡೆಯಬೇಕಂತೆ. +ನೀವೇ ಅದಕ್ಕೆ ಸಮರ್ಥರು ಎಂದು ಹೇಳಿ ಬಂದೆ” ಅಂದಳು. +ಅವನು- “ಅಯ್ಯೋ ಮಳ್ಳಿ. . . ನಾನು ಸಾವಿರ ನೊಣಗಳನ್ನು ಹೊಡೆದಂತೆ ಹಂದಿಯನ್ನು ಹೊಡೆಯುವುದು ಹೌದೋ? +ಹಂದಿಯನ್ನು ಕೊಯ್ದು ಅದರ ಪದಾರ್ಥ ಮಾಡಿ ಬಾಳೆಯಲ್ಲಿ ಹಾಕಿದರೆ, ಬೇಕಾದರೆ ಕಮಾಯ(ರುಚಿ)ಯಾಗಿ ಹಂದಿ ಹೊಡೆಯಬಹುದು” ಎಂದು ಕುಂಬಾರ ನಗೆಯಾಡಿದನು. +ಅವಳು, “ನೀವು ಅಂಥ ಸಮರ್ಥರು ಎಂದು ರಾಜರ ಹತ್ತಿರ ಹೊಗಳಿ ಬಂದುಬಿಟ್ಟೆ. +ಒಮ್ಮೆಲೇ ಸಾವಿರ ಪ್ರಾಣಿಗಳನ್ನು ಕೊಲ್ಲುವ ಧೀರರು ನೀವು. . . ನೀವು ಆಗುವದಿಲ್ಲವೆಂದು ಇಲ್ಲೇ ಕೂತರೂ, ನಿಮಗೆ ರಾಜರಿಂದ ಕರೆ ಬರದೆ ಹೋಗಲಿಕ್ಕಿಲ್ಲ. +ಕರೆಸಿದ ಮೇಲೆ ನೀವು ಹೋಗಲೇಬೇಕಾಗುತ್ತದೆ. +ಮೇಲಾಗಿ ‘ಹಂದಿ ಹೊಡೆದವರಿಗೆ ಒಂದು ಸಾವಿರ ರೂಪಾಯಿ ಇನಾಮ ಕೊಡುತ್ತಾರೆ’ ಎಂದು ಈಗಾಗಲೇ ಜಾಹೀರು ಮಾಡಿದ್ದಾರೆ. +ಅದರಿಂದ ನೀವು ಪ್ರಯತ್ನ ಮಾಡಿ ನೋಡಿ. +ನಮ್ಮ ನಶೀಬದಲ್ಲಿ ಇದ್ದಂತಾಗುತ್ತದೆ’’ ಎಂದಳು. +‘‘ಹಾಗಾದರೆ, ನೀನು ತಿರುಗಿ ರಾಜರ ಹತ್ತಿರ ಹೋಗಿ ಗದ್ದೆಗಳ ಸುತ್ತು ಮುತ್ತಲೂ ಪಾಗಾರವಾಗಬೇಕು. +ಮೂರು ಆಳು ಆಳವಾದ ಬಾವಿಯನ್ನು ತೋಡಬೇಕು. +ಗದ್ದೆಯಲ್ಲಿ ಕಾಯಲಿಕ್ಕೆ, ರಾತ್ರಿ ಕೂತುಕೊಳ್ಳಲಿಕ್ಕೆ ಒಂದು ಮಾಳವಾಗಬೇಕು. +ಮತ್ತು ಒಂದು ಬಂದೂಕು. . . ಐದು ಈಡುಗಳ ಮದ್ದು ಕೊಡಬೇಕು ಎಂದು ತಿಳಿಸು. +ನಾನು ಹಂದಿಯನ್ನು ಹೊಡೆಯಲಿಕ್ಕೆ ಬರುತ್ತೇನೆ. +ಇಷ್ಟೆಲ್ಲ ತಯಾರಿ ಮಾಡಿಸಿ ರಾಜರು ನನಗೆ ಹೇಳಿ ಕಳಿಸಲಿ’’ ಎಂದು ಹೇಳಿ ಕಳಿಸಿದನು. +ಅವಳು ರಾಜನ ಮನೆಗೆ ಹೋಗಿ ಹಾಗೆಯೇ ಹೇಳಿ ಬಂದಳು. +ರಾಜನು ಗದ್ದೆಗಳ ಸುತ್ತಲೂ ಪಾಗಾರ ಹಾಕಿಸಿದನು. +ಮೂರು ಆಳು ಆಳವಾದ ಬಾವಿಯನ್ನು ಕಡಿಸಿದನು. +ಗದ್ದೆಯ ನಡುವೆ ಒಂದು ಮಾಳವನ್ನು ಕಟ್ಟಿಸಿದನು. +ಮದ್ದು, ಬಂದೂಕು ಸಿದ್ಧಮಾಡಿಟ್ಟು ಕುಂಟ ಕುಂಬಾರನಿಗೆ ಹೇಳಿ ಕಳಿಸಿದನು. +ಕುಂಟ ಕುಂಬಾರನು ರಾತ್ರಿ ಊಟ ಮಾಡಿ ಮಾಳಕ್ಕೆ ಹೋಗಲು ಹೊರಟನು. +ಕುಂಬಾರನ ಹೆಂಡತಿ- ‘‘ನಿಮ್ಮ ಸಂಗಡ ನಾನೂ ಬರುತ್ತೇನೆ. . . ’’ ಎಂದು ಹೇಳಿದಳು. +ಕುಂಬಾರನು, ‘‘ಹಂದಿ ಹೊಡೆಯುವದೆಂದರೆ ಹಂದಿಯ ಮಾಂಸವನ್ನಲ್ಲ. +ಹೆಂಗಸು ನೀನು. . . ಹಂದಿಯ ಡುರುಕಿ ಕೇಳಿಕೊಂಡೇ ನೀನು ಮಾಳದಿಂದ ಕೆಳಗೆ ಬೀಳಬಹುದು’’ ಎಂದನು. +ಅವನ ಹೆಂಡತಿಯು- ‘‘ಹಂದಿ ಹೊಡೆಯುವ ಕೆಲಸದಂಥ ಗಂಡಾಂತರದ ಕೆಲಸಕ್ಕೆ ನಾನು ನಿಮ್ಮನ್ನು ನೂಕಿ ಗುರಿಕೊಟ್ಟು ಮನೆಯಲ್ಲಿ ಬೆಚ್ಚಗೆ ಹಸೆಯ ಮೇಲೆ ಮಲಗಿಕೊಳ್ಳಲಾರೆ. +ನಿಮಗೆ ಬಂದ ಗಂಡಾಂತರ ನನಗೂ ಇರಲಿ. +ನಾನೂ ನಿಮ್ಮ ಸಂಗಡ ಬರುವವಳೇ. . . ’’ ಎಂದು ಹಟ ಮಾಡಿದಳು. +ಹಾಗಾದರೆ, ಕುಂಬಾರ-ಕುಂಬಾರಿತಿಯರಿಗೆ ಮತ್ತೆ ಹೊಸ ಹರೆಯದ ಹುರುಪು. +ಗಂಡ-ಹೆಂಡತಿ ಮಾಳದ ಮೇಲೆ ಮಲಗಿಕೊಳ್ಳಲು ಸುರು ಮಾಡಿದರು. +‘ಜನ ನಕ್ಕರೂ ನಗಲಿ. . . ಹೋಗೋಣ. . . ’ ಎಂದು ಅವಳನ್ನೂ ಜತೆಗೆ ಕರೆದುಕೊಂಡು ಹೋದನು. +ಬಂದೂಕು, ಮದ್ದುಗುಂಡು ತೆಗೆದುಕೊಂಡು ಕುಂಟ ಕುಂಬಾರನು ಮಾಳದ ಮೇಲೆ ಹೋಗಿ ಹೆಂಡತಿಯ ಸಂಗಡ ಮಲಗಿಕೊಂಡನು. +ಕುಂಬಾರ ಒಬ್ಬನೇ ಆಗಿದ್ದರೆ ಹೆದರಿ ನಿದ್ರೆ ಮಾಡುತ್ತಿರಲಿಲ್ಲ. +ಹೆಂಡತಿಯೂ ಸಂಗಡ ಮಲಗಿದ್ದರಿಂದ ಅವನಿಗೆ ಮಾಳದ ಮೇಲೆ ಸಹ ನಿದ್ದೆ ಬಂತು. +ಮಧ್ಯರಾತ್ರಿಯ ಸುಮಾರಿಗೆ ಹಂದಿ ಬಂತು. +ಪಾಗಾರದ ಮೂಲಕ ಅದಕ್ಕೆ ಎಲ್ಲೂ ಹಾದಿ ಕಾಣದೆ ಬಾವಿಯಿದ್ದ ಬದಿಗಿನ ದಣಪೆ(ಪಾಗಾರದ ಬಾಗಿಲು)ಯ ದಾರಿಯಿಂದ ಓಡಿ ಬರುವಾಗ, ದಾರಿಯಲ್ಲಿದ್ದ ಬಾವಿಯಲ್ಲಿ ಬಿತ್ತು. +ಕೂಡಲೇ ಹಂದಿ ಆರ್ಭಟ ಮಾಡಿ ಕೂಗಿತು. +ಕುಂಬಾರನಿಗೆ ಹಂದಿ ಕೂಗಿದಾಗ ಎಚ್ಚರವಾಯಿತು. +ಹೆದರಿಕೆಯಿಂದ ಕೂತಲ್ಲಿಂದಲೇ ಮಾಳದ ಮೇಲುಬದಿಗೆ ಬಂದೂಕಿನ ತುದಿಯನ್ನು ಏರಿಸಿ ಗುಂಡು ಹಾರಿಸಿದ. . . ಆಮೇಲೆ ಸುಮ್ಮನೆ ಮಲಗಿಕೊಂಡನು. +ಬಾವಿಯಲ್ಲಿ ಸ್ವಲ್ಪ ನೀರಿತ್ತು. +ಹಂದಿಯು ಬಾವಿಯಲ್ಲಿ ಬಿದ್ದದ್ದು ಸಾಯದೆ ಆರ್ಭಟ ಮಾಡುತ್ತಿತ್ತು. +ಪೋಲೀಸರು ಬೆಳಿಗ್ಗೆ ಮುಂದೆ-- ‘ಕುಂಬಾರನು ಹಂದಿಯನ್ನು ಹೊಡೆದನೋ’ ಎಂದು ನೋಡಲಿಕ್ಕೆ ಬಂದಿದ್ದರು. +ಅದರ ಆರ್ಭಟವನ್ನು ಕೇಳಿ ಬಾವಿಯಲ್ಲಿ ಎರಗಿ ನೋಡಿ ಹಂದಿಗೆ ಒಂದು ಬಾರು ಗುಂಡು ಹಾಕಿಬಿಟ್ಟರು. +ಹಂದಿಯು ಸತ್ತು ಬಿತ್ತು. +ಕುಂಟ ಕುಂಬಾರನಿಗೆ ಗುಂಡಿನ ಶಬ್ದ ಕೇಳಿ ಎಚ್ಚರವಾಯಿತು. +ಅವನು ಮಾಳದಿಂದ ಇಳಿದು ಬಂದು ನೋಡಿದನು. +ಹಂದಿ ಕೂಗುವುದು ನಿಂತಿತ್ತು. +ಅದರಿಂದ ಇವರೇ ಈಡು ಹೊಡೆದಿರಬೇಕು ಎಂದು ಅವನಿಗೆ ಗೊತ್ತಾಯಿತು. +“ಯಾರೋ ಇಲ್ಲಿ ಬಂದೂಕು ಬಾರು ಮಾಡಿದವರು? +ಇಲ್ಲಿ ನಿಮಗೇನು ಕೆಲಸವಿತ್ತು? +’’ ಎಂದು ಜೋರು ಮಾಡಿದನು. +ಪೋಲಿಸರು, ‘‘ಹಂದಿ ಬಾವಿಯಲ್ಲಿ ಬಿದ್ದು ಆರ್ಭಟ ಮಾಡುತ್ತಿತ್ತು ನಾವು ಅದನ್ನು ಹೊಡೆದೆವು’’ ಅಂದರು. +“ಹಂದಿಯನ್ನು ಹೊಡೆಯುವದಕ್ಕೆ ಸ್ವತಃ ರಾಜರೇ ನನ್ನನ್ನು ನೇಮಿಸಿದ್ದಾರೆ. +ನನಗೆ ಅದನ್ನು ಬಾವಿಯಲ್ಲಿ ಕೆಡವಲಿಕ್ಕೆ ತಿಳಿಯುತ್ತದೆ. +ಗುಂಡು ಹೊಡೆದು ಸಾಯಿಸಲಿಕ್ಕೆ ತಿಳಿಯುವುದಿಲ್ಲವೋ? +ನನ್ನ ಹತ್ತಿರ ಬಂದೂಕು ಇಲ್ಲವೇ? +ನಾನು ಜೀವಂತ ಹಂದಿಯನ್ನು ರಾಜರಿಗೆ ತೋರಿಸಬೇಕು ಅಂತ ಅದನ್ನು ಹೊಡೆಯದೆ ಇಟ್ಟಿದ್ದೆ. +ನಿಮಗೆ ಅಧಿಕ ಪ್ರಸಂಗ ಮಾಡಲಿಕ್ಕೆ ಹೇಳಿದವರು ಯಾರು? +ರಾಜರಿಗೆ ಹೇಳಿ ನಿಮ್ಮ ನೌಕರಿಯನ್ನೇ ತೆಗೆಸುತ್ತೇನೆ’’ ಎಂದು ಜೋರು ಮಾಡಿದನು. +ಪೋಲೀಸರು ಅವನ ಕಾಲಿಗೆ ಬಿದ್ದು, ‘‘ಮಹಾರಾಯಾ. . . ಅಷ್ಟೊಂದು ಮಾಡಿ ನಮ್ಮ ಹೊಟ್ಟೆಗೆ ಕಲ್ಲು ಹಾಕಬೇಡ. + ದಮ್ಮಯ್ಯಾ. . . ನಮ್ಮ ಹೆಸರು ರಾಜರಿಗೆ ಹೇಳಬೇಡ’’ ಎಂದರು. +ಅವನು, ‘‘ಹಾಗಾದರೆ, ನೀವು ಹಂದಿಗೆ ಗುಂಡು ಹಾಕಿ ಕೊಂದಿರಿ ಎಂದು ಯಾರ ಹತ್ತಿರವೂ ಉಸುರು ಒಡೆಯಬೇಡಿ (ಹೇಳಬೇಡಿ). . . ಅಂದರೆ ಈ ಕೆಲಸಕ್ಕೆ ನಿಮ್ಮನ್ನು ಬಿಡುತ್ತೇನೆ’’ ಎಂದನು. +ಕುಂಟ ಕುಂಬಾರನು ರಾಜನ ಹತ್ತಿರ-- ‘‘ತಾನು ಹಂದಿಯನ್ನು ಬಾವಿಯಲ್ಲಿ ಕೆಡವಿ ಹೊಡೆದಿದ್ದೇನೆ. +ಬಂದು ನೋಡಬಹುದು’’ ಎಂದು ಹೇಳಿದನು. +ರಾಜನು ಬಂದು ನೋಡಿ ಕುಂಬಾರನಿಗೆ ಒಂದು ಸಾವಿರ ರೂಪಾಯಿ ಬಹುಮಾನ ಕೊಟ್ಟನು. +‘‘ಕುಂಬಾರಿತಿ ತನ್ನ ಗಂಡನನ್ನು ಈ ಕೆಲಸಕ್ಕೆ ಹಚ್ಚಿದ್ದಲ್ಲದೆ, ತಾನೂ ಸಹ ಅವನ ಜೊತೆಗೆ ಮಾಳದಲ್ಲಿ ಮಲಗಿ, ಕಾದ ಬಗ್ಗೆ ಅವಳಿಗೂ ಒಂದು ಸೀರೆಯನ್ನು ಬಹುಮಾನ ಕೊಟ್ಟಿದ್ದೇನೆ. . . ’’ ಎಂದು ರಾಜನು ಅವಳಿಗೆ ಉಡುಗರೆ ಕೊಟ್ಟನು. +ಕುಂಬಾರತಿ ನಗೆಯಾಡುತ್ತ ಸೀರೆಯನ್ನು ತೆಗೆದುಕೊಂಡು ರಾಜನಿಗೆ ಕೈಮುಗಿದು, ಗಂಡನ ಸಂಗಡ ಹೊರಟಳು. +“ನೋಡಿ. . . ನಶೀಬ ಅಂದರೆ ಹೇಗೆ ಅಂತ.. . ಪೋಲೀಸರು ಗುಂಡು ಹೊಡೆದರು. +ಆದರೆ, ನಶೀಬ ಇದ್ದದ್ದು ನಮಗೆ. . . ” ಹೀಗೆಲ್ಲ ಮಾತಾಡುತ್ತ ಅವರು ಮನೆಗೆ ಬಂದರು. +ಕುಂಬಾರನ ಕೈಯಲ್ಲಿ ಅಷ್ಟು ದುಡ್ಡು ಯಾವಾಗಲೂ ಇರಲಿಲ್ಲ. +ಅವನು ಗಡದ್ದು ಮೇಜವಾನಿ ಮಾಡಲು ಅಕ್ಕ, ತಂಗಿ, ಬಾವ, ನೆಂಟ ಎಂತ ನೂರಾರು ಜನರನ್ನು ಕರೆದು, ಕೋಳಿ, ಸಂಡಿಗೆ, ಮಟನ್. . . ಹೀಗೆಲ್ಲ ಮಾಡಿಸಿ, ಸರಾಯಿ ಕುಡಿಸಿ ಮೂರು ನಾಲ್ಕು ದಿನಗಳಲ್ಲಿ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ, ಮತ್ತೆ ಮಡಿಕೆಗಳನ್ನು ಮಾಡಲು ಸುರು ಮಾಡಿದನು. +ಕುಂಬಾರಿತಿ ಇನ್ನೊಂದು ದಿನ ಮಡಿಕೆಗಳನ್ನು ತೆಗೆದುಕೊಂಡು ರಾಜನ ಮನೆಗೆ ಹೋದಳು. +ಆ ದಿನ ರಾಜನ ದನಗಳ ಕೊಟ್ಟಿಗೆಯಲ್ಲಿ ಹುಲಿ ಹೊಕ್ಕು ಮೂರು ನಾಲ್ಕು ದನಗಳನ್ನು ಮುರಿದು ಹಾಕಿತ್ತು. +ಕುಂಬಾರತಿಯನ್ನು ನೋಡಿ ರಾಜನು ಹೇಳಿದ, ‘‘ಕುಂಬಾರತೀ. . . ನೀನು ಯೋಗ್ಯ ಸಮಯಕ್ಕೆ ಬಂದೆ. . . ಚಲೋದಾಯಿತು. +ಬಾ. . . ನಮ್ಮ ಮನೆಯ ಕೊಟ್ಟಿಗೆಗೆ. +ನಿನ್ನೆ ರಾತ್ರಿ ಹುಲಿ ಬಂದು, ದನಕರ ಮುರಿದು, ಸಾಕಷ್ಟು ಹಾನಿ ಮಾಡಿದೆ. +ನಿಮ್ಮ ತರ್ಪಿನಲ್ಲಿ ಯಾರಾದರೂ ಹುಲಿ ಹೊಡೆದರೆ ನಾನು ಎರಡು ಸಾವಿರ ರೂಪಾಯಿ ಬಹುಮಾನ ಕೊಡುತ್ತಿದ್ದೆ’’ ಎಂದನು. +ಅವಳು-- ‘‘ಹಂದಿ ಹೊಡೆದ ನಮ್ಮ ಮನೆಯ ಯಜಮಾನರಿದ್ದಾರೆ. +ಅವರು ಹೊಡೆದರೆ ಹೊಡೆಯಬೇಕು. +ಅವರನ್ನೇ ಕಳಿಸುತ್ತೇನೆ’’ ಎಂದಳು. +ರಾಜನು, ‘ಒಳ್ಳೇ ವಿಚಾರ ಅವನನ್ನು ಕಳಿಸು’’ ಎಂದು ಹೇಳಿದನು. +ಕುಂಬಾರತಿ ತಿರುಗಿ ಬಂದು ರಾಜನ ಹೇಳಿಕೆಯನ್ನು ತಿಳಿಸಿದಳು. +‘‘ನೀನು ಹೆಂಡತಿಯೋ. . . ನನ್ನ ಪ್ರಾಣ ಹಿಂಡುತಿಯೋ? +ಹಂದಿ ಅಕಸ್ಮಾತ ಬಾವಿಯಲ್ಲಿ ಬಿದ್ದು ನಾನು ಬಚಾವಾದೆ. +ಹಂದಿಯನ್ನು ಪೋಲೀಸರು ಹೊಡೆದರು. +ನಾನು ಹೊಡೆದದ್ದು ಬರೀ ಹುಸಿಗುಂಡು. +ಈಗ ಹುಲಿಯನ್ನು ನಾನು ಹೊಡೆಯುವದು ಖರೆಯೋ? +ಹೊಡೆಯದಿದ್ದರೆ ರಾಜ ನನ್ನ ಪ್ರಾಣ ಇಡುವುದಿಲ್ಲ. . . ಏನು ಮಾಡಲಿ?’’ ಎಂದು ಪೇಚಾಡಿದನು. +‘‘ಈಗ ಹಿಂದೆ ಸರಿಯಲಿಕ್ಕೆ ಆಗದ ಹಾಗೆ ಮಾಡಿದೆ ನೀನು. +ಆಗಲಿ. . . ನಮ್ಮ ನಶೀಬ ಹೇಗಿದೆಯೋ? +ರಾಜನಿಗೆ-- ‘ಎರಡು ಮಣ ಸರಪಳಿ, ಒಂದು ಬಂದೂಕು, ಐದು ಈಡುಗಳು ಮದ್ದು ತಯಾರಾಗಬೇಕು’ ಎಂದು ಹೇಳು. . . ’’ ಎಂದನು. +ಅವಳು ಹೋಗಿ ರಾಜನಿಗೆ ಹೇಳಿ ಬಂದಳು. +ರಾತ್ರಿ ಗಂಡ-ಹೆಂಡತಿ ಇಬ್ಬರೂ ರಾಜನ ಮನೆಗೆ ಹೋದರು. +ರಾಜನನ್ನು ಕಂಡು ಬಂದರು. +ಸರಪಳಿ, ಹೊರೆ ಎಲ್ಲಾ ತೆಗೆದುಕೊಂಡು ರಾಜನ ದನದ ಕೊಟ್ಟಿಗೆಗೆ ಹೋಗಿ ಕೂತರು. +ಕುಂಬಾರನು ಹೆಂಡತಿಗೆ, ‘‘ಮಳ್ಳೀ. . . ನಾವು ಹುಲಿಯನ್ನು ಹೊಡೆಯುವದು ಶಕ್ಯವಿಲ್ಲ. +ಇಲ್ಲಿದ್ದರೂ ಹುಲಿಯ ಬಾಯಿಗೆ ಬೀಳಬೇಕು. . . ಇಲ್ಲ, ರಾಜನ ಫಾಶಿಗೆ ಕುತ್ತಿಗೆ ಕೊಡಬೇಕು. +ಆದ್ದರಿಂದ, ರಾತ್ರಿ ಹೊತ್ತು ಈಗ ರಾಜನ ಕೊಟ್ಟಿಗೆಯ ಎತ್ತನ್ನು ಹೊಡೆದುಕೊಂಡು ದೂರದ ಊರಿಗೆ ಹೋಗಿಬಿಡುವ’’ ಎಂದು ಹೇಳಿದನು. +ಹೆಂಡತಿ ಅದನ್ನು ಒಪ್ಪಿದಳು. +ರಾತ್ರಿಯಲ್ಲಿ ಹುಲಿ ಕೊಟ್ಟಿಗೆಯನ್ನು ಹೊಕ್ಕಿತ್ತು. +ಅವನ ಹೆಂಡತಿ-- ‘‘ಕೊಂಬಿಲ್ಲದ ಎಳೆ ಎತ್ತನ್ನು ತೆಗೆದುಕೊಂಡು ಹೋಗುವಾ. . . ’’ ಎಂದಳು. +ಒಂದು ಎತ್ತನ್ನು ಮುಟ್ಟಿದ ಅವನು, ‘‘ಇದು ಬಹಳ ಹಪ್ಪು (ಮುದಿ) ಎತ್ತು’’ ಎಂದು ಹೇಳಿ, ಒಂದು ಎತ್ತನ್ನು ಬಿಟ್ಟು, ಹುಲಿಯ ತಲೆಯ ಮೇಲೂ ಮೈಮೇಲೂ ಕೈಯಾಡಿಸಿ, ‘‘ಇದು ಗಡುತರವಾದ ಕೊಬ್ಬಿದ ಗೂಳಿ. . . ’’ ಎಂದು, ಅದರ ಕುತ್ತಿಗೆಗೆ ಸರಪಳಿ ಬಿಗಿದನು, ಹಾಗೇ ಹುಲಿಯ ಸರಪಳಿಯ ಮತ್ತೊಂದು ತುದಿ ಹಿಡಿದು ಅವನ ಹೆಂಡತಿ ಎಳೆದಳು. +ಹುಲಿ ಆರ್ಭಟ ಮಾಡಿ ಕೂಗಿದ ಹೊಡೆತಕ್ಕೆ ಗುಪ್ಪನೆ ಹಾರಿ ಕುಂಬಾರನು ಕೊಟ್ಟಿಗೆ ದಾಟಿ ಓಡಿದನು. +ಅವನ ಹೆಂಡತಿ ಸರಪಳಿಯನ್ನು ಹಿಡಿದುಕೊಂಡೇ ಓಡಿದಂತೆ ದೂರದಿಂದ ಹುಲಿಯೂ ಬಂತು. +ಅವಳು ತೆಂಗಿನ ಮರಕ್ಕೆ ಹುಲಿಯ ಸರಪಳಿಯನ್ನು ಬಿಗಿದು ದೂರ ಹೋಗಿ ನಿಂತಳು. +ಇಬ್ಬರಿಗೂ ಮೈ ಬೆವರಿ ಒದ್ದೆಯಾಗಿತ್ತು. +ಕುಂಬಾರನು ಬಂದೂಕಿನಿಂದ ಎರಡು ಮೂರು ಈಡು ಹಾರಿಸಿದನು. +ಗುಂಡಿನ ಶಬ್ದ ಕೇಳಿ ರಾತ್ರಿ ಇಡೀ ಹುಲಿ ಆರ್ಭಟ ಮಾಡುತ್ತಲೇ ಇತ್ತು. +ಬೆಳಗಾಯಿತು. . . ಇಬ್ಬರು ಪೋಲೀಸರು ಹುಲಿಯ ಆರ್ಭಟ ಕೇಳಿ, ‘‘ಹುಲಿ ಸಾಯಲಿಲ್ಲ ಅರೆ ಜೀವವಾಗಿ ಉಳಿದಿದೆ; +ಗಾಯಗೊಂಡ ಹುಲಿ ಬಹಳ ಗಂಡಾಂತರಕಾರಿ’’ ಎಂದು ಮರಕ್ಕೆ ಕಟ್ಟಿಕೊಂಡು ಅರಚುತ್ತಿದ್ದ ಹುಲಿಯ ಮೇಲೆ ಇಬ್ಬರೂ ಗುಂಡು ಹಾರಿಸಿ, ಅದನ್ನು ಕೊಂದರು. +ಕುಂಟ ಕುಂಬಾರನು ಬೆಳಿಗ್ಗೆ ಎದ್ದು ಬಂದು ನೋಡುವಾಗಲೇ ಪೋಲೀಸರು ಗುಂಡು ಹಾರಿಸಿ ಹುಲಿಯನ್ನು ಕೊಂದದ್ದು. +“ನಾನು ರಾತ್ರಿ ಕಷ್ಟಪಟ್ಟು ಹುಲಿಯ ಸಂಗಡ ಗುದ್ದಾಡಿ, ಅದನ್ನು ಕೊಲ್ಲದೆ, ಸರಪಳಿಯಿಂದ ಮರಕ್ಕೆ ಕಟ್ಟಿಹಾಕಿಹೋಗಿದ್ದೆ. +ನನ್ನ ಹತ್ತಿರ ಕೋವಿಯಿತ್ತು. +ನಾನು ಬೇಕೆಂತ ರಾಜರಿಗೆ ಜೀವಂತ ಹುಲಿಯನ್ನು ಹಿಡಿದು ಕಾಣಕೆಯಾಗಿ ಕೊಡಬೇಕು; + ಅದನ್ನು ಅವರು ಅಂತಃಪುರದಲ್ಲಿ ಪಂಜರದಲ್ಲಿ ಇಡಿಸುತ್ತಾರೆ ಎಂದು ಕೊಲ್ಲದೆ ಉಳಿಸಿದ್ದೆ, ಅರಸರ ಹತ್ತಿರ ಹೇಳಿ ನಿಮಗೆ ಫಾಶಿ ಶಿಕ್ಷೆ ಕೊಡಿಸುತ್ತೇನೆ’’ ಎಂದನು. +ಪೋಲೀಸರು, ‘‘ಮಹಾರಾಯ. . . ನಿನ್ನ ಪ್ರತಾಪ ಕೇಳಿ ಬಲ್ಲೆವು. +ಪ್ರಾಣಿಗಳ ಮೇಲೂ ಮಾಟ ಮಾಡಿ, ಅವುಗಳನ್ನು ಹಿಡಿಯುವ ಶಕ್ತಿ ನಿನಗಿದೆಯೆಂದು ರಾಜರನ್ನೂ ಮಾಟದಲ್ಲಿ ಸಿಕ್ಕಿಸಿಕೊಂಡ ಹಾಗೆ ಕಾಣುತ್ತದೆ. +ನಮ್ಮ ವಿರುದ್ಧ ರಾಜರಿಗೆ ಹೇಳಿಕೊಟ್ಟು ನಮ್ಮನ್ನು ಕೊಲ್ಲಿಸಬೇಡ’’ ಎಂದರು. +ಅವನು, “ಹಾಗಾದರೆ. . . ತಪ್ಪಿನಿಂದ ಹುಲಿ ಕೊಂದ ತಪ್ಪಿಗೆ, ‘ನೀವೇ ಅದನ್ನು ಹೊಡೆದು ಕೊಂದಿರಿ’ ಎಂದು ಯಾರ ಹತ್ತಿರವೂ ಉಸುರು ಬಿಡಬೇಡಿ.. . ಹಾಗೆ ಹೇಳಿದ್ದೇ ಆದರೆ, ನಿಮ್ಮ ತಲೆಗಳು ನಿಮ್ಮ ನಿಮ್ಮ ಧಡದ ಮೇಲೆ ಇರಲಿಕ್ಕಿಲ್ಲ. +ನೀವೇ ಹೋಗಿ ನಾನು ಹುಲಿಯನ್ನು ಕೊಂದೆನೆಂದು ರಾಜರಿಗೆ ತಿಳಿಸಿ. +ಜಾಗ್ರತೆ. . . ’’ ಎಂದು ಹೆದರಿಸಿದನು. +ಅವರು ಅದಕ್ಕೆ ಒಪ್ಪಿಕೊಂಡು ರಾಜರ ಹತ್ತಿರ ಹೋಗಿ, ‘‘ಕುಂಟ ಕುಂಬಾರನು ಹುಲಿಯನ್ನು ಹೊಡೆದು ಕೊಂದನು’’ ಎಂದು ತಿಳಿಸಿದರು. +ರಾಜನು ಸತ್ತ ಹುಲಿಯನ್ನು ನೋಡಲಿಕ್ಕೆ ಬಂದು, ಕುಂಟ ಕುಂಬಾರನು ಜೀವಂತ ಹುಲಿಯನ್ನು ರಾತ್ರಿ ಕಟ್ಟಿ ಹಾಕಿ, ಬೆಳಿಗ್ಗೆ ಅದನ್ನು ಗುಂಡು ಹೊಡೆದು ಕೊಂದನು ಎಂಬುದನ್ನು ಕೇಳಿ ಕುಂಬಾರನನ್ನು ಬಹಳ ಹೊಗಳಿ ಅವನಿಗೆ 2000 ರೂ.ಬಹುಮಾನ ಕೊಟ್ಟನು. +ಕುಂಬಾರನು ಈ ಸಲವೂ ತನ್ನ ನೆಂಟರಿಷ್ಟರನ್ನು ಕರೆಸಿಕೊಂಡು 2000 ರೂ.ಗಳನ್ನು ನಾಲ್ಕೈದು ದಿನಗಳಲ್ಲಿ ಧೂಳಿ ಹಾರಿಸಿದನು. +ಮತ್ತೆ ಮೊದಲಿನ ಹಾಗೇ ಮಡಿಕೆಗಳನ್ನು ಮಾಡಲಿಕ್ಕೆ ಸುರುಮಾಡಿದನು. +ಕುಂಬಾರನ ಹೆಂಡತಿಯು ಮಡಿಕೆಯನ್ನು ತೆಗೆದುಕೊಂಡು ರಾಜನ ಮನೆಗೆ ಹೋದಳು. +ರಾಜನು ಕಳ್ಳರ ಉಪ್ಟಳದ ವಿಚಾರವನ್ನೇ ಮಾಡುತ್ತಿದ್ದನು. +‘‘ಕಳ್ಳರನ್ನು ಹಿಡಿದು ಕೊಟ್ಟವರಿಗೆ ನಾನು ನಾಲ್ಕು ಸಾವಿರ ರೂಪಾಯಿಗಳನ್ನು ಬಹುಮಾನವಾಗಿ ಕೊಡುತ್ತಿದ್ದೆನು. +ಕಳ್ಳರನ್ನು ಹಿಡಿದುಕೊಡುವವರು ಮುಂದೆ ಬರಬಹುದು. . . ’’ ಎನ್ನುವಷ್ಟರಲ್ಲಿ ಕುಂಬಾರತಿಯು-- ‘‘ನನ್ನ ಗಂಡ ಬಹಳ ಸಾಹಸಿ. +ನಿಮಗೆ ಅವನ ವಿಷಯ ಹೊಸದಾಗಿ ಹೇಳಬೇಕಿಲ್ಲ. . . ಅವನಿಗೆ ಹೇಳಿದರೆ ಈ ಕೆಲಸವಾಗುತ್ತದೆ’’ ಎಂದು ಕೂಡಲೆ ಹೇಳಿಬಿಟ್ಟಳು. +ರಾಜನು, ‘‘ಹಾಗಾದರೆ, ನಿನ್ನ ಗಂಡನನ್ನು ಕಳ್ಳರನ್ನು ಹಿಡಿಯುವುದಕ್ಕೆ ಕಳಿಸಿಕೊಡು’’ ಎಂದು ಹೇಳಿದನು. +“ಹೌದಾ. . . ಕತ್ತಗಾಲಿನ ರಾಜನ ಊರಿನಲ್ಲಿ ಕಳ್ಳರ ಹಾವಳಿಯಂತೆ, ಕಳ್ಳನನ್ನು ಹಿಡಿದುಕೊಟ್ಟವರಿಗೆ ನಾಲ್ಕು ಸಾವಿರ ರೂಪಾಯಿ ಬಹುಮಾನ ಕೊಡುತ್ತಾರಂತೆ. . . ನಾನು, ‘ನೀವು ಈ ಕೆಲಸ ಮಾಡುತ್ತೀರಿ’ ಅಂತ ಹೇಳಿ ಬಂದಿದ್ದೇನೆ. +ಇಂದೇ ಮಧ್ಯಾಹ್ನದ ಮೇಲೆ ಆ ರಾಜನ ಪಟ್ಟಣಕ್ಕೆ ಹೊರಡುವಾ. . . ” ಎಂದು ಹೇಳಿದಳು. +“ಅಯ್ಯೋ ಶಿವನೇ. . . ಎರಡು ಸಲ ನನ್ನ ಜೀವಕ್ಕೆ ನೀನು ಕಂಟಕ ತಂದುಹಾಕಿದೆ. +ನಶೀಬದಿಂದ ಎರಡೂ ಸಲ ನಾನು ಜೀವದಿಂದ ಪಾರಾದೆ. +ಒಟ್ಟಿನ ಮೇಲೆ ನಾನು ಕುಂಟ. . . ‘ಕುಂಟ ಗಂಡನ ಹೆಂಡತಿ’ ಎಂತ ಹೇಳಿಸಿಕೊಳ್ಳುವುದು ನಿನಗೆ ಬೇಡವಾಗಿದೆ ಅಂತ ಕಾಣುತ್ತದೆ. +ನೀನೇ ಕೈಯೆತ್ತಿ ಕೊಲ್ಲುವ ಬದಲು ಈ ರೀತಿ ಗಂಡಾಂತರ ತಂದುಹಾಕುತ್ತಿದ್ದಿ. +ಈಗ ಮೂರನೇ ಗಂಡಾಂತರದಿಂದ ಹೇಗೂ ಪಾರಾಗುವ ಹಾಗಿಲ್ಲ. +ರಾಜನ ಪೋಲೀಸವರಿಂದ ಆಗದ ಕೆಲಸ ನನ್ನಿಂದ ಆಗುತ್ತದೆಯೋ? +ಎಷ್ಟು ಜನ ಕಳ್ಳರಿದ್ದಾರೆಯೋ, ಯಾವ ರೂಪದಲ್ಲಿ ಬರುತ್ತಾರೆಯೋ ಹರಹರಾ. . . ! +ಕಳ್ಳರ ಕೈಲಿ ಜೀವ ಕೊಡುವ ಪ್ರಸಂಗ ಬಂತಲ್ಲ” ಎಂದು ದುಃಖ ಮಾಡಿದನು. +ಆಗ ಕುಂಬಾರತಿ-- “ಕಳ್ಳರ ಗೊಡವೆ ಇಷ್ಟು ಗಂಡಾಂತರ ಎಂದು ಕಲ್ಪನೆಯೂ ನನಗೆ ಇಲ್ಲ. . . ನೀವು ಹೇಳಿದ ಹಾಗೆ-- ನಿಮ್ಮ ಜೀವಕ್ಕೆ ಗಂಡಾಂತರ ತರುವ ಕಲ್ಪನೆಯೂ ನನಗಿಲ್ಲದೆ, ಒಮ್ಮೆಲೆ ರಾಜರ ಹತ್ತಿರ ನಿಮ್ಮ ಹೆಸರು ಹೇಳಿದೆ. +ನೀವು ಸಾಯುವುದಾದರೆ ನಿಮ್ಮ ಜೊತೆಗೆ ನಾನೂ ಸಾಯುವವಳೆ. . . ನಿಮ್ಮನ್ನು ಒಬ್ಬರನ್ನೇ ಗಂಡಾಂತರದಲ್ಲಿ ನೂಕಿ ನಾನು ಹಿಂದೆ ಉಳಿಯುವವಳಲ್ಲ. . . ಈ ಗಂಡಾಂತರದಿಂದ ಹೇಗೆ ಪಾರಾಗುವಾ” ಎಂದು ಕೇಳಿದಳು. +ಆಗ ಕುಂಬಾರನು, ‘‘ಇಷ್ಟು ಅಕ್ಕಿ ನೆನಸಿ, ಬೀಸಿ ರೊಟ್ಟಿ ಹಿಟ್ಟು ಕಲಸು. +ನಾಲ್ಕು ದಿನ ಸಾಲುವಷ್ಟು ರೊಟ್ಟಿ ಸುಡು. . . ರೊಟ್ಟಿ ಬುತ್ತಿ ಕಟ್ಟಿಕೊಂಡು ರಾತ್ರೋರಾತ್ರಿ ಊರು ಬಿಟ್ಟು ಹೋಗಿ.. . ಬೇರೆ ರಾಜನ ರಾಜ್ಯ ಸೇರಿ, ಜೀವ ಬಚಾವ್ ಮಾಡಿಕೊಳ್ಳುವಾ. +ಇದರ ಹೊರತು ಬೇರೆ ಉಪಾಯವೇ ಇಲ್ಲ. +ಸುಮ್ಮನೆ ಕೂತರೆ, ರಾಜನು ಹಿಂದೆ ಎಚ್ಚರಿಕೆ ಕೊಟ್ಟ ಹಾಗೆಯೇ ಫಾಶಿ ಶಿಕ್ಷೆ ಕೊಡುವುದೇ ಖಂಡಿತ” ಎಂದು ಹೇಳಿದನು. +ಕುಂಬಾರತಿಯು ಅಕ್ಕಿಯನ್ನು ನೆನಸಿ, ಒರಳು ಕಲ್ಲಿನಲ್ಲಿ ಹಾಕಿ ಬೀಸುತ್ತಿದ್ದಳು. +ಮಾಡಿನ ಮೇಲಿಂದ ಒಂದು ಹಾವಿನ ಮರಿ ಅವಳ ಮುಂದಿನ ಬದಿಯಿಂದ ಒರಳಿನಲ್ಲಿ ಬಿತ್ತು. +ಅವಳು ಅದನ್ನು ನೋಡಲಿಲ್ಲ, ಜೀವದ ಗಾಬರಿಯಲ್ಲಿ ಜೋರಾಗಿ ಬೀಸುವಾಗ ಹಾವು ಅಕ್ಕಿಯ ಸಂಗಡ ಅರೆದುಹೋಯಿತು. +ಆ ಹಿಟ್ಟಿನಿಂದ ಅವಳು ಇಪ್ಪತೊಂದು ರೊಟ್ಟಿ ಸುಟ್ಟಳು; ಸಂಜೆ ಊಟಕ್ಕೆ ಗಂಜಿ ಮಾಡಿದ್ದಳು. +ಗಂಜಿ ಉಂಡು ಬೊಕ್ಕಸದಲ್ಲಿ ರೊಟ್ಟಿ ಗಂಟು ಕಟ್ಟಿದಳು. +ರಾತ್ರಿ ಹತ್ತು ಗಂಟೆಗೆ-- ಮನೆ ಬಾಗಿಲಿಗೆ ಕೀಲಿ ಹಾಕಿ ಅವರಿಬ್ಬರೂ ಹೊರಟರು. +ಊರು ಬಿಟ್ಟು ಅಡವಿಯಲ್ಲಿ ಏಳೆಂಟು ಮೈಲು ದೂರ ಹೋದರು. +ಕಳ್ಳರು ರಾತ್ರಿ ರಾಜನ ಮನೆಗೆ ಕನ್ನ ಹಾಕಿ, ಬಂಗಾರ ಕಳವು ಮಾಡಿಕೊಂಡು ತಮ್ಮ ಜಾಗಕ್ಕೆ ಹೊರಟಿದ್ದರು. +ಕುಂಬಾರನು ಅದನ್ನು ನೋಡಿ, ಹೆಂಡತಿಯ ಹತ್ತಿರ-- ‘‘ಕಳ್ಳರ ದಂಡು ಬಂದ ಹಾಗೆ ಕಾಣುತ್ತದೆ. +ಈಗ ಓಡಿಹೋಗುವ ಹಾಗಿಲ್ಲ. +ನೀನು ಈ ಹಿಂಡಿನ ಬದಿ ಕೂತುಕೋ. . . ’’ ಎಂದನು. +ಅವಳನ್ನು ಕೂರಿಸಿ, ತಾನು ಕಳ್ಳರು ಬರುವ ನಡುದಾರಿಯಲ್ಲೇ ಬಿದ್ದುಕೊಂಡನು. +ಕಳ್ಳರು ಅವನನ್ನು ದಾಟಿ ಹೋಗುವಾಗ ಕುಂಬಾರನು, ‘‘ಒಂದು. . . ಎರಡು. . . ಮೂರು. . . ನಾಲ್ಕು. . . ’ ಹೀಗೆ ಕಳ್ಳರ ಲೆಕ್ಕ ಮಾಡುತ್ತಾ ಇದ್ದನು. +ಇಪ್ಪತ್ತೊಂದು ಜನರು ದಾಟಿದ ಮೇಲೆ, “ಹತ. . . ನೀವ್ ಎಲ್ಲಿಗೆ ಹೋಗುತ್ತೀರೋ?” ಎಂದು ಕೂಗಿದನು. +ಕಳ್ಳರು, ‘ಇವನು ನಮ್ಮನ್ನು ಹಿಡಿಯಲಿಕ್ಕೆ ಸಾಧಿಸುತ್ತಾ ಅಡವಿಯಲ್ಲಿ ಕೂತವನು’ ಎಂದುಕೊಂಡು-- ‘‘ಹೊಡೆಯಿರಿ. . . ಬಡಿಯಿರಿ. . . ’’ ಎಂದು, ಇವನಿಗೆ ನಾಲ್ಕಾರು ಜನ ಕತ್ತಿಯನ್ನು ಎತ್ತಿಕೊಂಡು ಬಂದರು. +“ಅಯ್ಯೋ! +ನಿಮ್ಮ ದಮ್ಮಯ್ಯ! +ನಾನು ನಿಮಗೆ ಕೈ ಮುಗಿಯುತ್ತೇನೆ, ಕಾಲಿಗೆ ಬೀಳುತ್ತೇನೆ! +ನಾನು ಪರದೇಶಿ. . . ನನ್ನ ಹೆಂಡತಿ ಮತ್ತೂ ಪರದೇಶಿ. +ನಾವೂ ನಿಮ್ಮ ಸಂಗಡವೇ ಸೇರಿಕೊಳ್ಳುತ್ತೇವೆ. +ನನ್ನ ಹೆಂಡತಿ ನಿಮಗೆ ಅಡಿಗೆ ಮಾಡಿ ಹಾಕುತ್ತಾಳೆ. +ನಾನು ನಿಮ್ಮ ಸಂಗಡ ನೀವು ಹೋದಲ್ಲಿ ಹೋಗಿ ಬಂದು, ನೀವು ಹೇಳಿದ ಚಾಕರಿ ಮಾಡಿಕೊಂಡು ನಿಮ್ಮ ಮೊಟ್ಟೆ ಹೊತ್ತು ಹೊಟ್ಟೆ ಹೊರೆದುಕೊಳ್ಳುತ್ತೇನೆ. . . ನೀವೇ ನನಗೆ ಗತಿ!” ಎಂದು ದಾರಿಯಲ್ಲೇ ಕೈಮುಗಿದುಕೊಂಡು ಹೊರಳಾಡಿದನು. +‘‘ನಿನ್ನ ಹೆಂಡತಿ ಎಲ್ಲಿ?’’ ಎಂದು ಕೇಳಿದಾಗ, ಕುಂಬಾರತಿ ಹಿಂಡಿನ ಮರೆಯಿಂದ ಹೊರಬಿದ್ದು, ‘‘ಬಂದೆ ಸ್ವಾಮೀ! +ನಾವು ಗಂಡ-ಹೆಂಡತಿ ನಿಮ್ಮ ಗುಲಾಮರು. +ಬಚಾವು ಮಾಡಿ’’ ಎಂದು ಕೈ ಮುಗಿದಳು. +“ನಮ್ಮ ಗುಟ್ಟು ಯಾರಿಗೂ ಕೊಡುವುದಿಲ್ಲ ಅಂತ ಪ್ರಮಾಣ ಮಾಡಿ. . . ” ಎಂದು ಕಳ್ಳರ ಯಜಮಾನ, ಅವರ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿಸಿದನು. +ಕಳ್ಳರು ಅಲ್ಲೇ ಕೂತರು. +ಒಬ್ಬ, ‘‘ಹಾಲು, ಸಕ್ಕರೆ ಇದೆ. +ಚಹಾ ಮಾಡುವಾ’’ ಎಂದನು. +ಮೂರು ಕಲ್ಲು ಹೂಡಿ, ಬಿದ್ದ ಒಣ ಕಟ್ಟಿಗೆ ತಂದು ಬೆಂಕಿ ಹೊತ್ತಿಸಿದರು. +ಹತ್ತಿರ ಹೊಳೆಯಿಂದ ಒಬ್ಬ ನೀರು ತಂದು ಪಾತ್ರೆಗೆ ಹಾಕಿದನು. +ಚಹಾ ಆಗುವಷ್ಟರಲ್ಲಿ ಅವರಲ್ಲಿ ಒಬ್ಬನು, ‘‘ತಿನ್ನಲಿಕ್ಕೆ ಏನಿಲ್ಲ. . . ಬರೀ ಚಹಾ ಹೇಗೆ ಕುಡಿಯುವದು?’’ ಎಂದನು. +ಕುಂಬಾರನು, ‘‘ನಾವು ರೊಟ್ಟಿ ತಂದಿದ್ದೇವೆ. . . ’’ ಎಂದನು. +‘‘ಇಕಣಿ ರೊಟ್ಟಿ ಗಂಟು. . . ’’ ಎಂದು ಕುಂಬಾರತಿ-- ಅದನ್ನು ಮುಂದಿಟ್ಟುಕೊಂಡು ಬಿಡಿಸಿ, ಎಲ್ಲರಿಗೂ ರೊಟ್ಟಿ ಹಂಚಿದಳು. +ಇಪ್ಪತ್ತೊಂದು ಕಳ್ಳರಿಗೂ ರೊಟ್ಟಿಗಳು ಸಮನಾದವು. +‘‘ಇವರಿಗೆ ರೊಟ್ಟಿ ಇಲ್ಲ. . . ’’ ಎಂದ ಒಬ್ಬ ಕಳ್ಳ. +‘‘‘ಹಂಚಿದವರಿಗೆ ಕೊಡಲು ಚೂರುಪಾರು. . . ’ ಎಂದು ಗಾದೆ. +ನಾವೆಲ್ಲ ಒಂದೊಂದು ಚೂರು ಕೊಡುವಾ” ಎಂದ ಕಳ್ಳರ ಯಜಮಾನ. +ಕುಂಬಾರನು, ‘‘ನಾವು ಸಂಜೆ ಗಂಜಿ ಊಟ ಉಂಡು ಹೊರಟಿದ್ದೇವೆ. +ನಮಗೆ ಹಸಿವಿಲ್ಲ. +ನೀವು ಕಳುವುದಕ್ಕೆ ಹೋಗಿ ಬಹಳ ಮಹಿನತ್ತು ಮಾಡಿದವರು. +ನೀವೇ ತಿನ್ನಿ. . . ನಮಗೆ ಗಂಡ-ಹೆಂಡತಿಗೆ ಒಂದೊಂದು ಗುಟುಕು ತೀರ್ಥವನ್ನು ಬೇಕಾದರೆ ಕೊಡಿ’’ ಎಂದು ಹೇಳಿದನು. +ಅವರು ರೊಟ್ಟಿ ತಿಂದು, ಚಹಾ ಕುಡಿದು ಮಲಗಿದರು. +ಬೆಳಗಾಗ ಕುಂಬಾರ ಕುಂಟ ಎದ್ದು ನೋಡಿದಾಗ ಇಪ್ಪತ್ತೊಂದು ಕಳ್ಳರಲ್ಲಿ ಒಬ್ಬನೂ ಎದ್ದಿರಲಿಲ್ಲ. “ಯಜಮಾನರೇ. . . ” ಎಂದು ಕರೆದ. +ಯಾರೂ ಮಾತಾಡಲಿಲ್ಲ. +‘‘ಎಷ್ಟು ರಾತ್ರಿ ಕಳುವು ಮಾಡುತ್ತ ನಿದ್ರೆ ಗೆಟ್ಟಿದ್ದರೋ ಎಬ್ಬಿಸುತ್ತೇನೆ. . . ’’ ಎಂದು ಹತ್ತಿರ ಹೋಗಿ ನೋಡಿದ. +ಯಾರ ಮೈ ಅಲಗುವುದೂ ಇಲ್ಲ. +ಒಬ್ಬನನ್ನು ಅಲುಗಿಸಿ ನೋಡಿದ, ಮತ್ತೊಬ್ಬನನ್ನು ಅಲುಗಿಸಿ ನೋಡಿದ, ಯಾರೂ ಮಾತಿಲ್ಲ. . . ಅಲುಗುವುದೂ ಇಲ್ಲ! +“ಕಳ್ಳರೆಲ್ಲ ಸತ್ತು ನೆಟ್ಟಗಾಗಿ ಹೋದರು ಅಂತ ಕಾಣುತ್ತದೆ. +ನಮ್ಮ ಮನೆಯ ಸಹಾಯದ ದೆವ್ವ ಬಂದು ರಾತ್ರಿ ಅವರೆಲ್ಲರ ಉಸಿರು ಬಂದ ಮಾಡಿತು. +ಆದರೆ, ಇವರನ್ನೆಲ್ಲ ನಾನೇ ಕೊಂದೆ ಎಂದು ರಾಜನಿಗೆ ಕಾಣಿಸುವ ಕುರುಹು ಮಾಡಬೇಕು” ಎಂದನು. +ಅವರ ಮೈ ಕೈಗಳ ಮೇಲೆ ಅಲ್ಲೇ ಬಿದ್ದಿದ್ದ ಕಟ್ಟಿಗೆಯ ಗುಟ್ಟದಿಂದ ಹೊಡೆದನು. +“ನಾನು ರಾಜನ ಮನೆಗೆ ಹೋಗಿ, ಅವರನ್ನೆಲ್ಲಾ ನಾನೇ ಕೊಂದೆನೆಂದು ವರ್ತಮಾನ ಕೊ.”ಡುತ್ತೇನೆ. +ನೀನು ಈ ಹೆಣಗಳನ್ನೂ ಕಾಯುತ್ತ ಇಲ್ಲಿಯೇ ಕೂತುಕೋ” ಎಂದು ಹೇಳಿ, ಅವನು ಕತ್ತಗಾಲಿನ ಕಡೆಗೆ ಹೊರಟನು. +ರಾಜನನ್ನು ಅರಮನೆಯಲ್ಲಿ ಕಂಡು, ‘‘ಅರಸರೇ. . . ನೀವು ಅಪ್ಪಣಿ ಮಾಡಿದ ಪ್ರಕಾರ-- ನಿಮ್ಮ ಮನೆಯಲ್ಲಿ ಕಳವು ಮಾಡಿ, ಹಿಂತಿರುಗಿದ ಕಳ್ಳರನ್ನು ಕೊಂದುಬಿಟ್ಟಿದ್ದೇನೆ. +ಸಾಂತಗಲ್ಲ, ಅಡವಿಯಲ್ಲಿ ಅವರ ಹೆಣಗಳನ್ನು ಕಾಯಲಿಕ್ಕೆ ನನ್ನ ಹೆಂಡತಿಯನ್ನು ಬಿಟ್ಟುಬಂದಿದ್ದೇನೆ. +ಕಳವಿನ ದಾಗಿನೆಗಳನ್ನು ಹೊತ್ತು ತಂದಿದ್ದೇನೆ” ಎಂದು ತೋರಿಸಿದನು. +ರಾಜನು, “ಶಹಬಾಸ್. . . ಕುಂಬಾರ, ಒಂದಕ್ಕಿಂತ ಒಂದು ಹೆಚ್ಚಿನ ಸಾಹಸ ಮಾಡಿದವ ನೀನು. +ನಿನಗೆ ನಾನು ಮೊದಲೇ ಹೇಳಿದ ಪ್ರಕಾರ-- ನಾಲ್ಕು ಸಾವಿರ ರೂಪಾಯಿ, ಅರ್ಧ ರಾಜ್ಯ ಕೊಡುತ್ತೇನೆ. +ಕಳ್ಳರನ್ನು ತೋರಿಸು. . . ” ಎಂದು ಕುದುರೆಯಲ್ಲಿ ತನ್ನ ಅಂಗರಕ್ಷಕರೊಡನೆ ಅಡವಿಗೆ ಹೋಗಿ ನೋಡಿದನು. +ಕುಂಬಾರನ ಸಾಹಸವನ್ನು ಎಲ್ಲರೂ ಕೊಂಡಾಡಿದರು. +ಒಂದು ರಾಜ್ಯದಲ್ಲಿ ಒಂದು ದೊಡ್ಡ ಆಲದ ಮರವಿತ್ತು. +ಅದಕ್ಕೆ ಹಣ್ಣಾಗುವ ಸಮಯದಲ್ಲಿ ಹಣ್ಣು ತಿನ್ನಲಿಕ್ಕೆಂದು ಬಹಳ ಹಕ್ಕಿಗಳು ಬರುತ್ತಿದ್ದವು. +ಒಬ್ಬ ಬೇಡರವನು ರಾತ್ರಿಯಲ್ಲಿ ಬಂದು-- ಅಲ್ಲಿ ಒಂದು ಬಲೆಯನ್ನು ಹರವಿ, ನಡುವೆ ಕಾಳುಗಳನ್ನು ಬೀರಿದ್ದನು. +ಹಗಲಿನಲ್ಲಿ ನೂರಾ ಒಂದು ಗಿಳಿಗಳೂ, ಒಂದು ಕಾಮಿಳ್ಳಿಯೂ ಅಲ್ಲಿ ಕಾಳು ಮೇಯಲಿಕ್ಕೆ ಬಂದು ಬಲೆಯಲ್ಲಿ ಸಿಕ್ಕಿಕೊಂಡವು. +ಆಗ ಬುದ್ಧಿವಂತ ಗಿಳಿಯು, “ಎಲ್ಲವೂ ಸತ್ತ ಹಾಗೆ ಬಿದ್ದುಕೊಳ್ಳಬೇಕು. +ಬೇಡರವನು ಹಕ್ಕಿಗಳಿಗೆ ಜೀವವಿಲ್ಲವೆಂದು ತಿಳಿದು, ಎಲ್ಲವನ್ನೂ ಬಲೆಯಿಂದ ಎಣಿಕೆ ಮಾಡಿ, ಬಲೆಯಿಂದ ಬಿಡಿಸಿ ನೆಲಕ್ಕೆ ಒಗೆಯುತ್ತಾನೆ. +ನೂರಾ ಒಂದು ಎನ್ನುವಾಗ ಎಲ್ಲವೂ ಎದ್ ಹಾರಿಹೋಗಿ ಬಿಡಬೇಕು” ಎಂದು ಹೇಳಿತು. +ಬೇಡರವನು ಬಲೆಯಲ್ಲಿ ಬಿದ್ದ ಹಕ್ಕಿಗಳನ್ನು ನೋಡಿದನು. +ಕಾಮಿಳ್ಳಿ ಹಕ್ಕಿ ಬಹಳ ಚೆಂದವಾಗಿತ್ತು. +ಅದನ್ನು ಮೊದಲು ತೆಗೆದು ತನ್ನ ಕೈಚೀಲದಲ್ಲಿ ಸೇರಿಸಿಕೊಂಡನು. +ಈ ಗಿಳಿಗಳೆಲ್ಲ ಸತ್ತ ಹಾಗೆ ಬಿದ್ದಿದ್ದವು. +ಅದರಿಂದ ಅವು ಸತ್ತವೆಂದೇ ತಿಳಿದು ಗಿಳಿಗಳನ್ನು ಒಂದೊಂದಾಗಿ ಎಣಿಸಿ ನೆಲಕ್ಕೆ ಚೆಲ್ಲುತ್ತಿದ್ದನು. +‘ನೂರಾ ಒಂದು. . . ’ ಎಂದು ಹೇಳಿ, ಗಿಳಿಯನ್ನು ಬಲೆಯಿಂದ ಬಿಡಿಸಲು ಕೈಹಾಕಿದ ಕೂಡಲೆ ಸತ್ತಂತೆ ಬಿದ್ದುಕೊಂಡಿದ್ದ ನೂರು ಹಕ್ಕಿಗಳು ಪುರ್ರನೆ ಹಾರಿಹೋದವು. +ಬುದ್ಧಿವಂತ ಗಿಳಿ ಅವನ ಕೈಯಲ್ಲಿ ಸಿಕ್ಕಿತು. +“ಹಕ್ಕಿಗಳು ನನಗೆ ಧಗ ಕೊಟ್ಟವು. +ಇದೂ ಹಾಗೆಯೇ ಹಾರಿಹೋದೀತು” ಎಂದು ಅದರ ಕುತ್ತಿಗೆಯನ್ನು ಮುರಿಯಲಿಕ್ಕೆ ಅವನು ಕೈ ಹಾಕಿದನು. +ಆಗ ಬುದ್ಧಿವಂತ ಗಿಳಿಯು, “ಹ. . . ಹ. . . ಹಾ. . . ನಿನಗೆ ನಾನು ಒಂದು ತುತ್ತು ಆಹಾರ ಮಾತ್ರ ಆಗುವೆ. +ನನ್ನನ್ನೂ, ಕಾಮಿಳ್ಳಿಯನ್ನೂ ಸಹ ಕೊಲ್ಲದೆ ಉಳಿಸು. +ನಾವು ನಿನಗೆ ಒಂದು ವರ್ಷ ಸಾಲುವಷ್ಟು ಆಹಾರವನ್ನು ಕೊಡುತ್ತೇವೆ” ಎಂದಿತು. +ಕಾಮಿಳ್ಳಿ ಅವನಿಗೆ ಹೇಳಿತು, “ನಾವು ಮಾತಾಡುವ ಹಕ್ಕಿಗಳು, ‘ಹಕ್ಕಿಯನ್ನು ಕೊಂಡುಕೊಳ್ಳುತ್ತೇವೆ’ ಎಂದು ನಿನ್ನ ಹತ್ತಿರ ಹೇಳಿದವರಿಗೆ ‘ಹಕ್ಕಿಗೆ ಒಂದು ಸಾವಿರ ವರಹಾ’ ಎಂದು ಹೇಳು” ಎಂದು ಹೇಳಿತು. +ಬೇಟೆಗಾರನು ಎರಡೂ ಹಕ್ಕಿಗಳನ್ನು ತೆಗೆದುಕೊಂಡು ರಾಜನ ಮನೆಗೆ ಹೋದನು. +ರಾಜನು, “ಹಕ್ಕಿಗಳಿಗೆ ಏನು ಬೆಲೆ?” ಎಂದು ಕೇಳಿದನು. +“ಒಂದೊಂದಕ್ಕೆ ಒಂದು ಸಾವಿರ ವರಹಾ” ಎಂದನು ಬೇಟೆಗಾರ. +ರಾಜನು, ‘‘ಸಾವಿರ ವರಹಾ ಕೊಟ್ಟು ತಕ್ಕೊಳ್ಳಬೇಕಾದರೆ ಈ ಹಕ್ಕಿಗಳ ವಿಶೇಷವೇನು?” ಎಂದು ಕೇಳಿದನು. +ಬುದ್ಧಿವಂತ ಗಿಳಿಯು, “ನೀನು ಸಾವಿರ ವರಹಾದಂತೆ ಕೊಟ್ಟು ನಮ್ಮಿಬ್ಬರನ್ನೂ ತೆಗೆದುಕೊ. +ನಿನಗೆ ಇದರಿಂದ ಎರಡು ತರಗಳಿಂದ ಲಾಭವಾಗುವ ಹಾಗೆ ಮಾಡುತ್ತೇವೆ” ಎಂದಿತು. +ಹಕ್ಕಿಗಳು ಮಾತಾಡುತ್ತವೆ. +ರಾಜನಿಗೆ ಸಂತೋಷವಾಯಿತು. +ಕಾಮಳ್ಳಿ ಹಕ್ಕಿಯೂ, ‘‘ನನ್ನನ್ನು ತೆಗೆದುಕೊಳ್ಳುವುದರಿಂದ ನಿನಗೆ ಲಾಭವೇ ಇದೆ’’ ಎಂದು ಹೇಳಿತು. +ರಾಜನು ಎರಡು ಸಾವಿರ ವರಹಾಗಳನ್ನು ಕೊಟ್ಟು ಹಕ್ಕಿಗಳನ್ನು ಕೊಂಡುಕೊಂಡನು. +ಅರಸನ ಹೆಗಲ ಮೇಲೆ ಅವು ಕೂಡುತ್ತವೆ. +ಸಿಂಹಾಸನದ ಮೇಲೂ ಕೂತುಕೊಂಡು ರಾಜನ ಮುಂದೆ ಬಂದ ನಂಬರಗಳ ನಿಕಾಲೆ ಮಾಡುತ್ತವೆ. +ಇವನು ಅವುಗಳ ಸಂಗಡ ಆಡುತ್ತ, ತನಗೊಬ್ಬ ರಾಣಿಯಿದ್ದದ್ದನ್ನೂ ಮರೆತುಬಿಡುತ್ತಾನೆ. +ರಾಣಿಗೆ ಇದರಿಂದ ಸಿಟ್ಟು ಬಂತು. +“ಈ ಹಕ್ಕಿಗಳನ್ನು ಕೊಂಡಾಗಿನಿಂದ ರಾಜನಿಗೆ ನನ್ನ ಮೇಲೆ ತಾತ್ಸಾರ ಭಾವನೆಯಾಗಿದೆ. +ಆ ಹಕ್ಕಿಗಳ ಮಾತು ಕೇಳುತ್ತ. . . ಕೇಳುತ್ತ. . . ರಾಜನು ತನ್ನ ಎಲ್ಲ ಕೆಲಸಗಳನ್ನೂ ಮರೆತುಬಿಡುತ್ತಾನೆ. +ಹಕ್ಕಿಗಳು ಅರಮನೆ ಹೊಕ್ಕಿದ್ದು ಅರಿಷ್ಟ ಹೊಕ್ಕ ಹಾಗಾಯಿತು” ಎಂದು ಕರೆಕರೆ ಮಾಡಿದಳು. +“ದಾಸೀ. . . ಎರಡೂ ಹಕ್ಕಿಗಳನ್ನು ಹಿಡಿದುಕೊಂಡು ಬಾ, ಅವುಗಳ ಕುತ್ತಿಗೆ ಮುರಿದು, ಕೊಂದುಹಾಕು ರಾಜನಿಗೆ ಎಚ್ಚರಿಕೆಯಾಗಲಿ” ಎಂದಳು. +ದಾಸಿಯು ಆ ಎರಡೂ ಹಕ್ಕಿಗಳನ್ನು ಹಿಡಿದುಕೊಂಡು ಬಂದು, ಅವುಗಳ ಪುಕ್ಕದ ಗರಿಗಳನ್ನು ಕಿತ್ತು, ಅವನ್ನು ಕೊಯ್ದು, ಅಡಿಗೆ ಮಾಡಬೇಕೆಂದು ಅಡಿಗೆ ಕೋಣೆಗೆ ತೆಗೆದುಕೊಂಡು ಹೋಗಿ ಇಟ್ಟ ಕೂಡಲೇ ರಾಮಗಿಳಿ ಹಾರಿಹೋಯಿತು. +ಒಂದು ಬಾವಿಯ ಒಳಗೆ ಒಂದು, ಬದಿ ಹಿಸಿದು ಬಿದ್ದು ಅಲ್ಲಿದ್ದ ಮರದ ಬೇರು ಹೊರಗೆ ಬಂದಿತ್ತು. +ಆ ಬೇರಿನ ಮೇಲೆ ಕೂತಿತು. +ಮೇಲೆ ಅತ್ತಿಯ ಮರವಿತ್ತು. +ಅತ್ತಿಯ ಹಣ್ಣು ಬಾವಿಯಲ್ಲಿ ಬೀಳುತ್ತಿತ್ತು. +ಆ ಹಣ್ಣುಗಳನ್ನು ತಿಂದುಕೊಂಡು ಅದು ಜೀವನ ಮಾಡುತ್ತಿತ್ತು. +ಯಾರಾದರೂ ಬಾವಿಗೆ ಬರುವ ಕಾಲ ಸಪ್ಪಳ ಕೇಳಿದ ಕೂಡಲೆ ಬಾವಿಯ ಬದಿಯ ಹೊದರಿನೊಳಗೆ ಅಡಗಿರುತ್ತಿತ್ತು. +ದಾಸಿಯು ಹಕ್ಕಿಗಳು ಕೈಗೆ ಸಿಗದ ಹಾಗೆ ಹಾರಿಹೋದವೆಂದು ಒಂದು ಕೋಳಿಯನ್ನು ಹಿಡಿದು ತಂದು-- ಕೊಯ್ದು, ಅಡಿಗೆ ಮಾಡಿ ರಾಜ-ರಾಣಿಯರ ಊಟಕ್ಕೆ ನೀಡಿದಳು. +ರಾಣಿ ಹಕ್ಕಿಗಳನ್ನು ಕೊಂದು, ಅವುಗಳ ತೊಂದರೆಯನ್ನು ತಪ್ಪಿಸಿದಳೆಂದು ಅವಳಿಗೆ ಬಹುಮಾನ ಕೊಟ್ಟಳು. +ರಾಜನಿಗೆ ಹಕ್ಕಿಗಳ ಸಹವಾಸ ತಪ್ಪಿಹೋದದ್ದರಿಂದ ಬಹಳ ದುಃಖವಾಯಿತು. +ಮೋಸ ಮಾಡಿ ಹಕ್ಕಿಗಳು ಹಾರಿಹೋದವೆಂದು ತಿಳಿದನು. +ರಾಮಗಿಳಿ ರೆಕ್ಕೆಯ ಗರಿಗಳು ಮತ್ತೆ ಚಿಗುರಿ, ರೆಕ್ಕೆ ಹಾರುವಷ್ಟು ಬಲಿತ ಕೂಡಲೆ ಅತ್ತಿಯ ಮರದ ಟೊಂಗೆಯ ಮೇಲೆ ಹೋಗಿ ಕೂತಿತು. +ರಾಜನು ದಿನದಿನವೂ ಅವು ಮರಳಿ ಬರಬಹುದೆಂದು ನಿರೀಕ್ಷೆ ಮಾಡುತ್ತಿದ್ದನು. +ಹೋಗಿ ಒಂದು ತಿಂಗಳಾದ ಮೇಲೆ ಮನೆಯ ಮುಂದಿನ ಮರದ ಮೇಲೆ ಬಂದು ಕುಳಿತು-- ರಾಜನು ತನ್ನ ಗುರುತು ಹಿಡಿಯುವನೋ, ಹೇಗೆ ಎಂದು ನೋಡುವದಕ್ಕೆ ತಾನಾಗಿ ಮಾತನಾಡದೆ ಸುಮ್ಮನೆ ಕುಳಿತುಕೊಳ್ಳುತ್ತಿತ್ತು. +ರಾಜನು ಗಿಳಿಯ ಗುರುತು ಹಿಡಿದನು. +‘ಅಯ್ಯೋ ರಾಮಣ್ಣಾ. . . ಎಲ್ಲಿಗೆ ಓಡಿಹೋದೆ? +ಯಾಕೆ ನನ್ನನ್ನು ಬಿಟ್ಟು ಹೋದೆ?’’ ಹೀಗೆ ಕೇಳಿದನು. +ರಾಮಗಿಳಿಯು ಆಗ ಅವನ ಹೆಗಲಿನ ಮೇಲೆ ಬಂದು ಕೂತಿತು. +ರಾಜನಿಗೆ ಆಗ ತುಂಬಾ ಸಂತೋಷವಾಯಿತು. +ರಾಮಗಿಳಿ, ‘‘ಏನು ಹೇಳಲಿ ಸ್ವಾಮೀ. . . ಹಿಮಾಲಯ ಪರ್ವತಕ್ಕೆ ಹಾರಿಹೋಗಿ, ಪಕ್ಷಿಕೂಟದಲ್ಲಿ ಉಂಟಾದ ಮಹತ್ವದ ತಂಟೆಯನ್ನು ನಿಕಾಲೆ ಮಾಡಿ ಬಂದೆನು’’ ಎಂದಿತು. +ರಾಜನು ಹಕ್ಕಿಯನ್ನು ಹಿಡಿದುಕೊಂಡು ಅರಮನೆಯ ಕೋಣೆಯೊಳಗೆ ಬಂದನು. +ಆಗ ರಾಮಗಿಳಿಯು-- “ರಾಜಾ. . . ನಾವು ಲೋಕಸಂಚಾರ ಮಾಡಿ, ಲೋಕದ ಅದ್ಭುತಗಳನ್ನು ನೋಡಿ ಬರೋಣ” ಎಂದಿತು. +ರಾಜನು, ‘‘ರಾಜ್ಯವನ್ನು ನೋಡಿಕೊಳ್ಳುವವರಾರು?” ಎಂದು ಕೇಳಿದನು. +ರಾಮಗಿಳಿ, “ಎರಡು ದಿನಗಳ ಮಾತಿಗೆ ಮಂತ್ರಿಯ ಕೈಯಲ್ಲಿ ರಾಜ್ಯದಾಡಳಿತವನ್ನು ಕೊಟ್ಟು ಬರಬೇಕು” ಎಂದು ಹೇಳಿತು. +ರಾಜನು ಹಾಗೆಯೇ ಮಾಡಿದನು. +ರಾಮಗಿಳಿಯೂ, ರಾಜನೂ ಕೂಡಿ ದೇಶಸಂಚಾರಕ್ಕೆ ಹೊರಟರು. +ಭರಣ ರಾಜ್ಯಕ್ಕೆ ಹೋಗಿ ಮುಟ್ಟಿದರು. +ಅಲ್ಲಿ ಒಂದು ದೊಡ್ಡ ಕೆರೆ, ಕೆರೆಯ ಕಟ್ಟೆಯ ಮೇಲೆ ನಾಗದೇವರ ಸ್ಥಾನ (ಗುತ್ತು). +“ಅಲ್ಲಿ ಕೆರೆಯಲ್ಲಿ ಸ್ನಾನ ಮಾಡಿ ಬಂದು ನಾಗದೇವರನ್ನು ಪೂಜಿಸು. +ಇಲ್ಲಿಯೇ ಉಳಿದುಕೊಂಡು ರಾತ್ರಿಯ ಹೊತ್ತಿನಲ್ಲಿ ನಡೆಯುತ್ತಿರುವ ಆಶ್ಚರ್ಯಗಳನ್ನು ನೋಡು. . . ರಾತ್ರಿ ವೇಳೆಯಲ್ಲಿ ನಾಗಲೋಕದ ಕನ್ನಿಕೆಯು ಇಲ್ಲಿಯ ನಾಗರಪೂಜೆ ಮಾಡಲಿಕ್ಕೆ ಬರುತ್ತಾಳೆ. +ಅವಳು ಅವಳ ತಲೆಯ ಮೇಲಿನ ಮಾಣಿಕ್ಯದ ಬೆಳಕಿನಲ್ಲಿ ನಡೆದು ಬರುತ್ತಾಳೆ. +ಕೆರೆಯಲ್ಲಿ ಸ್ನಾನ ಮಾಡಿಕೊಂಡು ಬಂದು ದೇವರ ಪೂಜೆ ಮಾಡಿ, ಪ್ರದಕ್ಷಿಣೆಯನ್ನು ಮಾಡುತ್ತ ಬರುವಾಗ ನೀನು ಕೂಡಲೆ ಅವಳನ್ನು ಹಿಡಿದು ಬಿಡು” ಎಂದು ಹೇಳಿತು. +ಮಧ್ಯರಾತ್ರಿಯ ವೇಳೆಯಲ್ಲಿ ಸರ್ಪಗಳು ಬುಸುಗುಟ್ಟುವ ದೊಡ್ಡ ಶಬ್ದ ಕೇಳಿಬಂತು. +ಆಗ ನಾಗಕನ್ಯೆಯು ಭೂಮಿಯ ಬಿಲದಿಂದ ಮೇಲೆದ್ದು ಬಂದಳು. +ಗಿಳಿಯು ಮರದ ಮೇಲೆ ಕೂತಿತ್ತು. +ನಾಗಕನ್ನಿಕೆಯು ಕೆರೆಯಲ್ಲಿಳಿದು ಸ್ನಾನ ಮಾಡಿದಳು. +ಪಾತಾಳದ ನಾಗಸಂಪಿಗೆ ಹೂವುಗಳಿಂದ ನಾಗದೇವರನ್ನು ಪೂಜೆ ಮಾಡಿದಳು. +ಅಶ್ವತ್ಥ ಮರದ ಸುತ್ತಲೂ ಪ್ರದಕ್ಷಿಣೆ ತಿರುಗಿದಳು. +ಮೂರನೆಯ ಸುತ್ತಿಗೆ ರಾಜನು ನಾಗಕನ್ಯೆಯ ಕೈಯನ್ನು ಹಿಡಿದನು. +ಅವಳು ಕಂಗಾಲಾಗಿ, ‘‘ಬಿಡು. . . ’’ ಎಂದು ಹೇಳಿ, ಅವನನ್ನು ನೋಡಿದಳು. +ಅವನ ಸುಂದರ ರೂಪಿಗೆ ಮೆಚ್ಚಿದಳು. +“ನಾನು ಇನ್ನೂ ಲಗ್ನವಾಗದವಳು. +ನೀನೇ ಗಂಡ. . . ನಾನೇ ಹೆಂಡತಿ ಆಗೋಣ” ಎಂದಳು. +ಅವರಲ್ಲಿ ಗಾಂಧರ್ವ ವಿವಾಹವಾಯಿತು. +ನಾಗಕನ್ಯೆಯು, “ನಾವು ನಾಗಲೋಕಕ್ಕೆ ಹೋಗೋಣ. +ನಾನು ಅಲ್ಲಿ ಹೋಗದಿದ್ದರೆ ನನ್ನನ್ನು ಹುಡುಕಲಿಕ್ಕೆ ಬರುತ್ತಾರೆ. +ನಾವು ಮದುವೆಯಾದದ್ದನ್ನು ನಾಗರಾಜನಿಗೆ ತಿಳಿಸಿ ಬರೋಣ” ಎಂದು ಹೇಳಿದಳು. +‘ನಾಗಲೋಕದಲ್ಲಿ ಹಾವುಗಳು ಕಚ್ಚುವ ಹೆದರಿಕೆಯಿದೆ. . . ’ ಎಂದು ರಾಜನು ಅನುಮಾನ ಮಾಡಿದನು. +ನಾಗಕನ್ಯೆಯು, ‘‘ನೀನು ಹೆದರಬೇಕಾದ ಕಾರಣವಿಲ್ಲ. +ನಾನು ನಿನಗೇನೂ ಆಗದಂತೆ ಬೇರನ್ನು ಕೊಡುತ್ತೇನೆ’’ ಎಂದು ಹೇಳಿ, ಮೂಲಿಕೆಯನ್ನು ಕೊಟ್ಟಳು. +ನಾಗಕನ್ಯೆಯ ಸಂಗಡ ರಾಜನು ಗುಹೆಯೊಳಗೆ ಇಳಿದು ಪಾತಾಳಲೋಕಕ್ಕೆ ಹೋದನು. +ನಾಗರಾಜನು ಪಾತಾಳದ ಅಳಿಯನಾದ ರಾಜನನ್ನು ಬಹಳ ಸಂತೋಷದಿಂದ ಎದುರ್ಗೊಂಡು, ಅವನಿಗೆ ಆದರ-ಸತ್ಕಾರ ಮಾಡಿದನು. +ಅಲ್ಲಿ ಹತ್ತು ಹನ್ನೆರಡು ದಿನ ಉಳಿದು ರಾಜನು, ‘‘ಇನ್ನು ನನ್ನ ರಾಜ್ಯಕ್ಕೆ ನನ್ನ ಮಡದಿಯನ್ನು ಕರೆದುಕೊಂಡು ಹೋಗುತ್ತೇನೆ’’ ಎಂದನು. +ನಾಗರಾಜನು, ‘‘ಭೂಲೋಕದಲ್ಲಿ ಸತ್ತವರನ್ನು ಬದುಕಿಸುವ ಜೀವರತ್ನದ ಮಣಿಯಿಲ್ಲ. +ಇದನ್ನು ನಾನು ನಿನಗೆ ಕಾಣಿಕೆಯಾಗಿ ಕೊಡುತ್ತೇನೆ. +ಇದನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳಬೇಕು’’ ಎಂದು ಹೇಳಿ, ಜೀವರತ್ನದ ಮಣಿಯನ್ನು ಕೊಟ್ಟನು. +ರಾಮಗಿಳಿಯೂ ರಾಜನ ಸಂಗಡ ಪಾತಾಳಕ್ಕೆ ಹೋಗಿತ್ತು. +ರಾಜನು ನಾಗಕನ್ಯೆಯ ಜೊತೆಗೆ ರಾಮಗಿಳಿಯನ್ನೂ ಒಡಗೊಂಡು, ರಾಜ್ಯಕ್ಕೆ ಬಂದನು. +ರಾಜನ ಹೆಂಡತಿಗೆ-- ರಾಜನು ಮತ್ತೊಬ್ಬಳನ್ನು ಮದುವೆಯಾಗಿ ಕರೆದುಕೊಂಡು ಬಂದನೆಂದು ಅವನ ಮೇಲೆ ಬಹಳ ಸಿಟ್ಟು ಬಂತು. +ರಾಮಗಿಳಿಗೆ, ‘ಇವಳು ಮುನಿದರೆ ಏನು ಮಾಡುವಳೋ. . . ’ ಎಂದು ಎದೆಗುದಿ ಪ್ರಾರಂಭವಾಯಿತು. +ಅದರಿಂದ ರಾಮಗಿಳಿ ರಾಜನ ಸಂಗಡವೇ ಇರುತ್ತಿತ್ತು. +ಜೀವರತ್ನದ ಮಣಿಯನ್ನು ಒಂದು ಉಂಗುರದಲ್ಲಿ ಜೋಡಿಸಿ ರಾಜನು ನಾಗಕನ್ನಿಕೆಗೆ ಧರಿಸುವುದಕ್ಕೆಂದು ಕೊಟ್ಟನು. +ಯಾರಾದರೂ ಎಳೆ ವಯಸ್ಸಿನಲ್ಲಿ, ಪ್ರಾಯದ ವಯಸ್ಸಿನಲ್ಲಿ ಸತ್ತರೆ-- ಅವಳು ತನ್ನ ಉಂಗುರವನ್ನು ಒಂದು ಸುತ್ತು ತೇದು ನೀರನ್ನು ಕುಡಿಸಿ ಅವರನ್ನು ಬದುಕಿಸುತ್ತಿದ್ದಳು. +ಅರಮನೆಗೆ ಹೂದಂಡೆಗಳನ್ನು ಮಾರಲು ಒಬ್ಬ ಅಜ್ಜಿ ಮುದುಕಿ ಬರುತ್ತಿದ್ದಳು. +ಅವಳಿಗೆ ನಾಗಕನ್ಯೆಯು ತನ್ನ ಉಂಗುರದ ಜೀವರತ್ನ ಮಣಿಯಿಂದ ಸತ್ತವರನ್ನು ಬದುಕಿಸುವದು ತಿಳಿದುಹೋಯಿತು. +ನಾಗಕನ್ಯೆಯು ಒಂದು ದಿನ ಮಧ್ಯಾಹ್ನ ಊಟ ಮಾಡಿ ಪಲ್ಲಂಗದ ಮೇಲೆ ನಿದ್ದೆ ಮಾಡುತ್ತಿದ್ದಳು. +ಅಜ್ಜಿಯು ಯಾರೂ ಆಚೆ ಸುಳಿಯದ ಸಮಯವನ್ನು ಸಾಧಿಸಿ, ನಾಗಕನ್ಯೆಯ ಬೆರಳಿನಲ್ಲಿದ್ದ ಉಂಗುರವನ್ನು ಹಾರಿಸಿಕೊಂಡು ಹೋದಳು. +ಅವಳು ಈ ರಾಜ್ಯದಲ್ಲಿದ್ದರೆ ತನ್ನ ಕಳ್ಳತನ ಪತ್ತೆಯಾಗಿ, ತನಗೆ ಶಿಕ್ಷೆಯಾಗಬಹುದೆಂದು ಹೆದರಿ-- ಮೂಡಲ ರಾಜ್ಯಕ್ಕೆ ತನ್ನ ಅಕ್ಕನ ಮನೆಗೆ ಹೋಗಿ ಬಿಟ್ಟಳು. +ನಾಗಕನ್ನಿಕೆಯು ಎಚ್ಚತ್ತುಕೊಂಡು ನೋಡುತ್ತಾಳೆ. . . ಬೆರಳಿನಲ್ಲಿ ಜೀವರತ್ನದ ಮಣಿಯ ಉಂಗುರವಿಲ್ಲ! +ನಾಗಕನ್ಯೆಯು ತನ್ನ ದಾಸಿಯರನ್ನು ಕರೆದು, ತನ್ನ ಬೆರಳಿನ ಉಂಗುರವನ್ನು ಹುಡುಕಿರೆಂದು ಹೇಳಿದಳು. +ಅವರು ಅರಮನೆಯಲ್ಲೆಲ್ಲ ಅದನ್ನು ಹುಡುಕಿದರೂ ಉಂಗುರ ದೊರೆಯಲಿಲ್ಲ. +ಅವಳು ರಾಜನನ್ನು ತನ್ನ ಕೋಣೆಗೆ ಕರೆಸಿ ಅವನಿಗೆ ಆ ಸುದ್ದಿಯನ್ನು ತಿಳಿಸಿದಳು. +ರಾಜನು ರಾಮಗಿಳಿಯನ್ನು ಕರೆದು ಅದಕ್ಕೆ ಈ ವರ್ತಮಾನವನ್ನು ಕೊಟ್ಟನು. +ರಾಮಗಿಳಿಯು, “ನಾನು, ಕಾಮಿಳ್ಳಿಯೂ ಇದರ ಶೋಧ ಮಾಡಿಕೊಂಡು ಬರುತ್ತೇವೆ” ಎಂದು ಹೇಳಿ, ಕಾಮಿಳ್ಳಿಯನ್ನು ಕರೆದು ತಂದಿತು. +ಮರುದಿನ ರಾಜನ ಮನೆಗೆ ದಿನದಿನವೂ ಹೂದಂಡೆಯನ್ನು ತರುವ ಅಜ್ಜಿ ಮುದುಕಿ ಬರಲಿಲ್ಲ. +ನಾಗಕನ್ಯೆಗೆ ಅವಳ ಮೇಲೆ ಸಂಶಯವಾಯಿತು. +ರಾಮಗಿಳಿಯೂ-ಕಾಮಿಳ್ಳಿಯೂ, “ಆ ಮುದುಕಿ ಎಲ್ಲಿದ್ದರೂ ನಿಮ್ಮ ಉಂಗುರವನ್ನು ತಿರುಗಿ ತಂದುಕೊಡುತ್ತೇವೆ” ಎಂದು ಹೇಳಿ ಹಾರಿಹೋದವು. +ರಾಜ್ಯದೊಳಗಿನ ಮುದುಕಿಯರನ್ನೆಲ್ಲ ನೋಡಿ ಬಂದು ಅವಳು ರಾಜ್ಯಬಿಟ್ಟು ಹೋಗಿರುವಳೆಂದು ನಿಶ್ಚಯ ಮಾಡಿ, ಅವು ಮೂಡಲ ರಾಜ್ಯಕ್ಕೆ ಹಾರಿ ಹೋದವು. +ನಾಗಕನ್ಯೆಯು ಬಂದ ಮೇಲೆ ರಾಜನು ತನ್ನನ್ನು ಅಲಕ್ಷ್ಯ ಮಾಡಿದನೆಂದು ಹಿರಿರಾಣಿ ರಾಜನ ಮೇಲೆ ಮತ್ತಿಷ್ಟು ಸಿಟ್ಟಾದಳು. +ನಾಗಕನ್ಯೆ ಉಂಗುರ ಕಳೆಯಿತೆಂಬ ವ್ಯಸನದಲ್ಲುಳಿದಳು. +ರಾಜನು ಹಿರಿಹೆಂಡತಿಯ ಹತ್ತಿರ ಹೋಗದೆ, ನಾಗಕನ್ಯೆಯ ಬಳಿಯಲ್ಲಿಯೇ ಉಳಿದು ಅವಳ ಸಹವಾಸದಲ್ಲಿ ಕಾಲ ಕಳೆಯುತ್ತಿದ್ದನು. +ರಾಮಗಿಳಿಯು, ‘ಅಜ್ಜಿ ಮುದುಕಿ ಎಲ್ಲಿ ಹೋಗುತ್ತಾಳೆ. +ಏನು ಮಾಡುತ್ತಾಳೆ, ಅವಳು ರಾತ್ರಿ ಉಂಗುರವನ್ನು ಎಲ್ಲಿ ಇಡುತ್ತಾಳೆ’ ಎಂಬ ಶೋಧದಲ್ಲಿ ಬಿದ್ದಿತು. +ಮುದುಕಿ ಹಗಲು ಹೊತ್ತಿನಲ್ಲಿ ಉಂಗುರವನ್ನು ಕೈಯಲ್ಲೇ ಇಟ್ಟುಕೊಳ್ಳುತ್ತಿದ್ದಳು. +ರಾತ್ರಿ ಅದನ್ನು ಪೆಟ್ಟಿಗೆಯಲ್ಲಿ ಇಡದೆ ಬಾಯಲ್ಲಿಟ್ಟುಕೊಂಡು ನಿದ್ದೆ ಮಾಡುತ್ತಿದ್ದಳು. +ಮಣಿ ಬಾಯಿಯ ಒಳಗಿನಿಂದಲೇ ಹೊರಗೂ ಸಹ ಪ್ರಕಾಶವನ್ನು ಬೀರುತ್ತಿತ್ತು. +ರಾಮಗಿಳಿ ಉದ್ದವಾದ ಸಪೂರ ಚುಂಚಿರುವ ಕಾಮಿಳ್ಳಿಯ ಹತ್ತಿರ ಈ ವಿಷಯವನ್ನು ತಿಳಿಸಿ, “ಅಜ್ಜಿ ಮುದುಕಿ ನಿದ್ದೆಯಲ್ಲಿ ಗೊರೆಯುತ್ತ ಇರುವಾಗ ಅವಳ ಬಾಯಿ ಸ್ವಲ್ಪ ತೆರೆದಿರುತ್ತದೆ. +ಆಗ ನೀನು ಅವಳ ಬಾಯಿಯಲ್ಲಿ ಹೊಳೆಯುವ ಉಂಗುರವನ್ನು ಚುಂಚಿನಿಂದ ಸೊಗಿದು ತೆಗೆ” ಎಂದು ಹೇಳಿತು. +ಕಾಮಿಳ್ಳಿಯು ಅಜ್ಜಿಯ ಬಾಯಿಂದ ಉಂಗುರವನ್ನು ತೆಗೆದುಕೊಂಡಿತು. +ಬೆಳಗಾದ ಮೇಲೆ ರಾಮಗಿಳಿಯೂ-ಕಾಮಿಳ್ಳಿಯೂ ಹಾರಿಬಂದವು. +ದಾರಿಯಲ್ಲಿ ದೊಡ್ಡ ಹೊಳೆಯಿತ್ತು. +ಅದರ ಮೇಲೆ ಹಾರಿ ಬರುವಾಗ ಕಾಮಿಳ್ಳಿ ಸುದ್ದಿ ಹೇಳುತ್ತ ದಾರಿ ಸಾಗಿಸುತ್ತಿತ್ತು. +ಸುದ್ದಿ ಹೇಳಬೇಕಾದರೆ ಕಾಮಿಳ್ಳಿಗೆ ಆಕಳಿಕೆ ಬಂತು. +ಆಕಳಿಸಲು ಬಾಯಿ ತೆರೆದಾಗ ಉಂಗುರ ಹೊಳೆಯಲ್ಲಿ ಬಿತ್ತು. +ಗಿಳಿ-ಕಾಮಿಳ್ಳಿ ‘ನೀರಿನಲ್ಲಿ ಮುಳುಗಿ ಉಂಗುರವನ್ನು ಶೋಧಮಾಡುವುದು ಹೇಗೆ?’ ಎಂದು ಚಿಂತೆ ಮಾಡುತ್ತಿದ್ದವು. +ನೀರ ಮುಳಕನ ಹಕ್ಕಿ ಸೂರ್ಯನ ಬಿಸಿಲಿನಲ್ಲಿ ಥಳಥಳನೆ ಹೊಳೆಯುತ್ತ ಕಾಮಿಳ್ಳಿಯ ಬಾಯಿಂದ ಬಿದ್ದ ಉಂಗುರವನ್ನು ನೋಡಿತ್ತು. +ಅದು, “ಉಂಗುರವನ್ನು ಹುಡುಕಿ ತೆಗೆಯುತ್ತೇನೆಂ”ದು ಹೇಳಿ ನೀರಿನಲ್ಲಿ ಮುಳುಗಿ ಆಚೆ-ಈಚೆ ಹುಡುಕಿ, ಹೊಳೆಯುವ ಉಂಗುರವನ್ನು ಕಚ್ಚಿ ತಂದು ರಾಮಗಿಳಿಯ ಹತ್ತಿರ ಕೊಟ್ಟಿತು. +ಹಕ್ಕಿಗಳು ಉಂಗುರವನ್ನು ತಂದು ರಾಜನಿಗೆ ಸಮರ್ಪಣೆ ಮಾಡಿದವು. +ಹಿರಿ ಹೆಂಡತಿಗೆ ಉಂಗುರ ಪುನಃ ರಾಜನಿಗೆ ದೊರೆತ ವಿಚಾರ ಗೊತ್ತಾಗಿ, ಈ ಹಕ್ಕಿಗಳೇ ಅವನ್ನು ತಂದುಕೊಟ್ಟವೆಂಬ ಸಮಾಚಾರವನ್ನು ತಿಳಿದು, ‘ಇವು ಸತ್ತವೆಂದೂ ಇವುಗಳ ಮೇಲೋಗರವನ್ನು ಮಾಡಿ ಹಾಕಿದೆನೆಂದೂ ದಾಸಿ ಸುಳ್ಳು ಹೇಳಿದಳು. +ಅವಳಿಗೆ ತಕ್ಕ ಶಿಕ್ಷೆ ಮಾಡುತ್ತೇನೆ’ ಎಂದು ಹೇಳಿ ದಾಸಿಯನ್ನು ಕರೆದು ಜೋರು ಮಾಡಿ, ‘‘ನೀನು ಆ ಹಕ್ಕಿಗಳನ್ನು ಜೀವಂತವಾಗಲಿ, ಕೊಂದಾಗಲಿ ತಂದು ನನ್ನ ಕಡೆಗೇ ಒಪ್ಪಿಸಬೇಕು. +ಇಲ್ಲದಿದ್ದರೆ, ಅವುಗಳನ್ನು ಹಿಂದಿನ ಸಲ ಕೊಲ್ಲದೆ ಬಿಟ್ಟಿದ್ದಕ್ಕೆ ನಿನ್ನನ್ನೇ ಕೊಲ್ಲಿಸುತ್ತೇನೆ” ಎಂದು ಹೆದರಿಕೆ ಹಾಕಿದಳು. +ದಾಸಿಯು ಮತ್ತೆ ಈ ಹಕ್ಕಿಗಳನ್ನು ಹಿಡಿಯಲಿಕ್ಕೆ ಪ್ರಯತ್ನ ಮಾಡಿದಳು. +ಅವು ಅವಳ ಕೈಗೆ ಸಿಕ್ಕದೆ, ರಾಜನ ಹತ್ತಿರ ದೂರು ಕೊಟ್ಟು, “ಇದಕ್ಕೆಲ್ಲ ನಿನ್ನ ಹಿರಿಹೆಂಡತಿಯೇ ಕಾರಣ” ಎಂದು ರಾಮಗಿಳಿ ಹೇಳಿತು. +‘‘ನಾನು ಹಿಂದೆ ಕಾಣದಿದ್ದಾಗ ಹಿಮಾಲಯಕ್ಕೆ ಹೋಗಿದ್ದೆನೆಂದು ಸುಳ್ಳು ಹೇಳಿದೆ. +ನಮ್ಮ ಸಂಗಡ ಆಟ ಮಾಡಿ, ತನ್ನನ್ನು ಆಲಕ್ಷಿಸಿದೆಯೆಂದು ಹಿರಿರಾಣಿ ನಮ್ಮನ್ನೇ ಕೊಲ್ಲಲಿಕ್ಕೆ ದಾಸಿಯ ಹತ್ತಿರ ಹೇಳಿದಳು. +ದಾಸಿ ನಮ್ಮನ್ನು ಹಿಡಿದು ಕೊಲ್ಲಲು ಹವಣಿಸಿದಾಗ ನಾವು ಪಾರಾಗಿ ಬಂದೆವು. +ಮತ್ತೆ ಈಗ ನಮ್ಮನ್ನು ಕೊಲ್ಲಿಸಲು ಯತ್ನ ಮಾಡುತ್ತಿದ್ದಾಳೆ. +ಈ ಸಂಗತಿಯನ್ನು ಹಿರಿರಾಣಿಯನ್ನು ಕರೆಸಿ ವಿಚಾರ ಮಾಡಿದರೆ ತಿಳಿಯಬಹುದು’’ ಎಂದು ಹೇಳಿತು. +ರಾಜನು ಹಿರಿರಾಣಿಯನ್ನೂ, ಅವಳ ದಾಸಿಯನ್ನೂ ಕರೆಸಿ, ಆಚೆ-ಈಚೆ ಬಿಚ್ಚುಗತ್ತಿಯ ಪಹರೆಯವರನ್ನು ನಿಲ್ಲಿಸಿ ವಿಚಾರ ಮಾಡಿದನು. +“ನೀವು ನಿಜ ಸಂಗತಿಯನ್ನು ಹೇಳಿದರೆ ನಿಮ್ಮನ್ನು ಕ್ಷಮಿಸುತ್ತೇನೆ. +ಇಲ್ಲದಿದ್ದರೆ ನಿಮ್ಮ ತಲೆ ಹೊಡೆಸುತ್ತೇನೆ” ಎಂದು ರಾಣಿಗೂ, ದಾಸಿಗೂ ಹೆದರಿಕೆ ಹಾಕಿದನು. +ರಾಣಿ, ‘‘ದಾಸಿಯ ಹತ್ತಿರ ಅವನ್ನು ಹಿಡಿದುಕೊಂಡು, ಅವುಗಳ ಮಾಂಸದಿಂದ ಅಡಿಗೆ ಮಾಡಿ ಹಾಕು ಎಂದು ಹೇಳಿದ್ದು ಹೌದು. . . ಅವಳು ಹಕ್ಕಿಗಳ ಪುಕ್ಕಗಳನ್ನು ಕಿತ್ತಿದ್ದೂ ಹೌದು. +ಮುಂದೇನಾಯಿತೋ ಹಕ್ಕಿಗಳನ್ನು ಕೊಂದು ಹಕ್ಕಿಗಳ ಮಾಂಸದ ಅಡಿಗೆ ಮಾಡಿದ್ದನ್ನು ಉಂಡೂ ಆಯಿತು ಎಂದು ದಾಸಿಗೆ ಬಹುಮಾನವನ್ನು ಕೊಟ್ಟಿದ್ದೆ. +ಹಕ್ಕಿಗಳು ಹೇಗೆ ತಪ್ಪಿ ಜೀವದಿಂದುಳಿದವೋ ಗೊತ್ತಿಲ್ಲ. . . ’’ ಎಂದಳು. +ದಾಸಿಯು, ‘‘ಹಕ್ಕಿಗಳ ಪುಕ್ಕಗಳನ್ನು ಕಿತ್ತು ಅವನ್ನು ಆಶೆ ಮಾಡಬೇಕೆಂದು ಅಡಿಗೆ ಮನೆಯೊಳಗೆ ತೆಗೆದುಕೊಂಡು ಹೋಗಿ ಇಟ್ಟು ಅವನ್ನು ಕೊಯ್ದು, ಅಡಿಗೆ ಮಾಡಲು ಮೆಟ್ಟುಕತ್ತಿಯನ್ನು ತರಲಿಕ್ಕೆ ಹೊರಟಾಗ ಅವೆರಡೂ ಹಕ್ಕಿಗಳು ಹಾರಿಹೋದವು. +ಕಡೆಗೆ ಕೋಳಿಯನ್ನು ತಂದು ಅದನ್ನೇ ಕೊಯ್ದು ಅಡಿಗೆಯನ್ನು ಮಾಡಿ ತಿಂದಾಯಿತು. +ಇವು ತಪ್ಪಿಸಿಕೊಂಡು ಹೋದದ್ದನ್ನು ರಾಣಿಗೆ ತಿಳಿಸದೇ ಅವಳಿಂದ ಬಹುಮಾನವನ್ನು ಪಡೆದೆ’’ ಎಂದು ಹೇಳಿದಳು. +ರಾಜನು ರಾಣಿಗೆ ಬೇರೆ ಮನೆಯನ್ನು ಕಟ್ಟಿಸಿ, ದಿನಾಲೂ ಅವಳಿಗೆ ಊಟಕ್ಕೆ ನೀಡಲು ವ್ಯವಸ್ಥೆ ಮಾಡಿ, ಅವಳನ್ನು ಪಹರೆಯಲ್ಲಿ ಇಟ್ಟನು. +ದಾಸಿಯದೇನೂ ತಪ್ಪಿಲ್ಲವೆಂದು ಅವಳಿಗೆ ಬಹುಮಾನವನ್ನು ಕೊಟ್ಟನು. +ರಾಜನು ರಾಣಿಯರೊಡನೆ ಸುಖ-ಸಂತೋಷದಿಂದ ಉಳಿದನು. + ಅಂಕೋಲೆ ರಾಜನಿಗೆ ಒಬ್ಬ ಮಗ. +ಫೋಟೋ ಕಳಿಸಿ (ಹುಡುಗಿಯನ್ನು ನಿಕ್ಕಿ ಮಾಡಿ) ಮದುವೆ ನಿಶ್ಚಯ ಮಾಡಿದ. +ಮದುವೆಗೆ ದಿಬ್ಬಣ ಹೊರಡುವಾಗ ರಾಜನು ಮರಣ ಹೊಂದಿದ್ದ. +ಸೂತಕ ಬಂದು, ದಿಬ್ಬಣ ತಡೆದು ನಿಂತಿತು. +ಈ ವಿಷಯ ದಾಯಾದಿ ರಾಜಕುಮಾರನಿಗೆ ತಿಳಿದು, ಅವನು ಕುಂಟು ಕುದುರೆ ಹತ್ತಿ ಹೊನ್ನಾವರ ರಾಜನ ಮನೆಗೆ ದಿಬ್ಬಣ ತಕ್ಕೊಂಡು ಹೋದ. +ಅಲ್ಲಿ ಮಂಟಪಕ್ಕೆ ಬಂದ ರಾಜಕುಮಾರಿಯು, “ನನ್ನ ಫೋಟೋಕ್ಕೆ ಜತೆಯಾದ ರಾಜಕುಮಾರನ ಫೋಟೊ ನನ್ನ ಹತ್ತಿರ ಇದೆ. +ಆ ರಾಜಕುಮಾರ ಇವನಲ್ಲ. . . ನಾನು ಇವನನ್ನು ಮದುವೆಯಾಗುವುದಿಲ್ಲ” ಎಂದಳು. +ಆಗ ಅವರಿವರಲ್ಲಿ ಜಗಳವಾಯಿತು. +ಆದರೂ ಕುಂಟ ಕುದುರೆ ಏರಿಕೊಂಡು ಬಂದ ವರನು ಹದಿನಾಲ್ಕು ದಿನ ಅಲ್ಲೇ ಉಳಿದನು. +ಅಂಕೋಲೆ ರಾಜನ ಮಗನು ತನ್ನ ದಿಬ್ಬಣ ಹಿಂತಿರುಗಿ ಬರಲಿಲ್ಲ. +ದಿಬ್ಬಣ ತಕ್ಕೊಂಡು ಹೋದವರು ಬೇರೆಯವರಿಗೆ ನಿಕ್ಕಿ ಮಾಡಿ, ಮದುವೆ ಮಾಡುತ್ತಾರೆಯೋ ಎಂದು ನೋಡಲಿಕ್ಕಾಗಿ ಕುದುರೆ ಹತ್ತಿ ಹೊನ್ನಾವರ ರಾಜನ ಮನೆಗೆ ಹೊರಟನು. +ಆ ರಾಜನ ಮಗಳು ಗೆಳತಿಯರ ಸಂಗಡ ಹೂವುಗಳನ್ನು ಕೊಯ್ಯುತ್ತಾ ಉಪವನಕ್ಕೆ ಬಂದಿದ್ದಳು. +ಉಪವನದಲ್ಲಿದ್ದ ಕುದುರೆಯನ್ನು ಗೌರಿ ಎಂಬ ದಾಸಿ ನೋಡಿದಳು. +ಈ ರಾಜಕುಮಾರನನ್ನೂ, ಅವನ ಶ್ರೇಷ್ಠ ಕುದುರೆಯನ್ನೂ ನೋಡಿದ ಆ ದಾಸಿಯು ಓಡಿ ಬಂದು, ಅಂತರಂಗದಲ್ಲಿ ಈ ಸಂಗತಿಯನ್ನು ರಾಜಕುಮಾರಿಗೆ ಹೇಳಿದಳು. +ಆಗ ರಾಜಕುಮಾರಿಯು ಗಂಡುಗತ್ತರಿಗಿ, ಹೆಣ್ಣು ಕತ್ತರಿಗಿ ತೆಗೆದುಕೊಂಡು ಕುದುರೆ ಹತ್ತಿ ಬಂದಳು. +ಅವಳು ಈ ಕತ್ತರಿಗಿ ಆಯುಧ ಹಿಡಿದುಕೊಂಡು ಜೋರಿನಿಂದ ಕುದುರೆ ಹತ್ತಿ ಬರುವುದನ್ನು ನೋಡಿ, ಹೆದರಿ ಕುದುರೆಯನ್ನು ಓಡಿಸಿದನು. +ಇವಳು, ‘‘ನಿಲ್ಲು ನಿಲ್ಲು. . . ’’ ಎನ್ನುತ್ತಾ ಕುದುರೆಯನ್ನು ಓಡಿಸಿಕೊಂಡು ಬಂದಳು. +ಅವನು ಹೆದರಿ ಮತ್ತೂ ಜೋರಾಗಿ ಕುದುರೆ ಓಡಿಸಿದನು. +ಮೂರು ಹಗಲು, ಮೂರು ರಾತ್ರೆ ಕುದುರೆ ಓಡಿಸಿದರು. +ಕಡೆಗೆ- “ನನ್ನ ಮದುವೆಯಾಗಲು ನಿಶ್ಚಯವಾದ ರಾಜಕುಮಾರ ನೀನು” ಎಂದರೂ ಅವನು ಕೇಳಲಿಲ್ಲ. +ಮುಂದೆ ದೊಡ್ಡ ಹೊಳೆಯಿತ್ತು. +ರಾಜಕುಮಾರನು ಕುದುರೆಯಿಂದಿಳಿದನು. +ಅವಳೂ ಕುದುರೆ ಇಳಿದು ಹೋಗಿ ಅವನ ಕೈ ಹಿಡಿದು, “ನೀನೇ ಗಂಡ. . . ನಾನೇ ಹೆಂಡತಿ” ಎಂದು ಹೇಳಿ ಅವನಿಗೆ ಮಾಲೆ ಹಾಕಿದಳು. +ಅವರು- ‘ಹಸಿವೆಯಾಗಿದೆ. +ಊಟ ಮಾಡಬೇಕು’ ಎಂದು ತಿರುಗಿ ಬಂದರು. +ಎಲ್ಲಿಯೂ ಮನೆ ಕಾಣಲಿಲ್ಲ. +“ಅಶ್ವತ್ಥಮರ ಹತ್ತಿ ತುದಿಗೆ ಹೋಗಿ ನೋಡು, ಎಲ್ಲಿ ಹೊಗೆ ಕಾಣುತ್ತದೆ? +ಎಂದು ನೋಡು. . . ” ಅಂತ ಹೇಳಿದಳು. +ಅವನು ಮರಹತ್ತಿ ನೋಡಿದನು. +ಒಂದು ಕಡೆಗೆ ಪೂರ್ವ ದಿಕ್ಕಿನಲ್ಲಿ ಮಾತ್ರ ಹೊಗೆ ಮೂಡೆ ಎದ್ದು ಕಾಣುತ್ತಿತ್ತು. +ಅದೇ ದಿಕ್ಕಿಗೆ ಹೋದಳು. +ಅಲ್ಲಿ ಒಬ್ಬ ರಾಕ್ಷಸಿಯ ಮನೆಯಿತ್ತು. +ರಾಕ್ಷಸಿ, “ನಿನ್ನನ್ನು ತಿನ್ನುತ್ತೇನೆ” ಎಂದಳು. +“ನನ್ನನ್ನು ತಿನ್ನಬೇಡ. +ನಾನು ನಿನಗೆ ಎಷ್ಟು ಆಹಾರವಾಗುವೆ? +ತಿನ್ನಬೇಡ’’ ಎಂದಳು. +‘‘ನಿನಗೆ ಹನ್ನೆರಡು ಮಕ್ಕಳು ಇದ್ದದ್ದು ನನಗೆ ಗೊತ್ತು. +ಹನ್ನೆರಡು ಹರದಾರಿಯ ಒಳಗೆ ಬಂದವರನ್ನು ನೀನು ತಿನ್ನುವದೂ ನನಗೆ ಗೊತ್ತು. +ನನ್ನ ಸಂಗಡ ಒಬ್ಬ ಭಟ್ಟ ಬಂದಿದ್ದಾನೆ, ಅವನಿಗೆ ಹಸಿವಾಗಿದೆ. +ಅಡಿಗೆ ಮಾಡಿ ಊಟ ಹಾಕಿ ಬರುವೆ. +ನಿನ್ನ ಹಿರಿ ಮಗನನ್ನು ಮದುವೆಯಾಗುವೆ” ಎಂದಳು. +ಅವಳು, “ಸರಿ. . . ನೀನು ಆ ಕೋಣೆಯಿಂದ ಬೇಕಷ್ಟು ಸಣ್ಣಕ್ಕಿ, ಕಾಯಿ, ಬೆಲ್ಲ, ತೊಗರಿಬೇಳೆ. . . ಎಲ್ಲ ತಕ್ಕೊಂಡು ಹೋಗು” ಅಂದಳು. +ಅವಳು ಕೋಣೆಗೆ ಹೋದಾಗ ಮಕ್ಕಳಿಗೆ ಸೀಟಿ(ಸಿಳ್ಳು) ಹಾಕಿದಳು. +ಗದ್ದೆ ಕೆಲಸದ ಗದ್ದಲದಲ್ಲಿದ್ದ ಅವರಿಗೆ ಇವಳ ಸೀಟಿ ಶಬ್ದ ಕೇಳಲಿಲ್ಲ. +ಇವಳು ಅಡಿಗೆ ಸಾಮಗ್ರಿ ತೆಗೆದುಕೊಂಡು ಹೊರಟು ಹೋದಳು. +ಅಶ್ವತ್ಥ ಮರದ ಹತ್ತಿರ ಬಂದು, ಅಡಿಗೆಗೆ ಮೂರು ಕಲ್ಲು ಹೂಡಿ, ಒಲೆ ಮಾಡಿ, ಬೆಂಕಿ ಒಟ್ಟಿ ಅಡಿಗೆಗೆ ಎತ್ತುಗಡೆ ಮಾಡಿದಳು. +ಗಂಡನು ಮಲಗಿದ್ದನು. +ಅವನ ತಲೆ ದೆಸೆಗೆ ನೋಡುತ್ತ ಅಡಿಗೆ ಮಾಡುತ್ತಿದ್ದಳು. +ಹೊಲದ ಕೆಲಸ ಮುಗಿಸಿ ಹನ್ನೆರಡೂ ಜನ ರಾಕ್ಷಸರು ಮನೆಗೆ ಬಂದರು. +ತಾಯಿಯು, “ಇಲ್ಲಿಗೆ ಒಬ್ಬ ಹೆಣ್ಣು ಬಂದಿದ್ದಳು. +ಅದನ್ನು ತಿಳಿಸಲು ನಿಮಗೆ ಸೀಟಿ (ಸಿಳು) ಹಾಕಿದೆನು. +ಆದರೆ, ನೀವು ಬರಲಿಲ್ಲ” ಎಂದು ಬಯ್ದಳು. +‘‘‘ನಿನ್ನ ಹಿರಿಮಗನನ್ನು ಮದುವೆಯಾಗುವೆ’ ಎಂದಳು. +ಅಲ್ಲದಿದ್ದರೆ ಅವಳನ್ನು ತಿನ್ನಲಿಕ್ಕಾಗುತ್ತಿತ್ತು. . . . ಹೀಗೆ ಹೋದಳು.. . ’’ ಅಂದಳು. +‘‘ನಾವು ಅವಳನ್ನು ಹಿಡಿದುಕೊಂಡು ತರುವೆವು’’ ಎಂದು ಹೇಳಿ, ಹನ್ನೆರಡು ಜನರೂ ತಮ್ಮ ತಮ್ಮ ಕುದುರೆ ಹತ್ತಿ ಹೋದರು. +ಹನ್ನೆರಡು ಜನ ರಾಕ್ಷಸರೂ ಅಶ್ವತ್ಥ ಮರದ ಹತ್ತಿರ ಬಂದರು. +ಅವಳು, ‘‘ನಾನು ಭಟ್ಟರಿಗೆ ಅಡಿಗೆ ಮಾಡಿ, ಊಟ ಹಾಕಿ ಬರುವೆ ಎಂದು ನಿಮ್ಮ ತಾಯಿಗೆ ಹೇಳಿದ್ದೆ. +ತಡೆಯಿರಿ. . . ಅವರ ಊಟವಾಗಲಿ’’ ಎಂದಳು. +ಇಬ್ಬರದೂ ಊಟ ಮುಗಿಯಿತು. +ಆ ಮೇಲೆ ಅವಳು, ‘‘ನಾನು ನಿಮ್ಮ ಸಂಗಡ ಬರುವೆ’’ ಎಂದು ಹೇಳಿ ಕುದುರೆ ಹತ್ತಿ ಹೊರಟಳು. +ಅವರ ಕುದುರೆಗಳು ವೇಗವಾಗಿ ಹೋಗುವಂಥವಲ್ಲ, ಇವಳು, ‘‘ನಾನು ಮುಂದಾಗುವೆ. . . ’’ ಅಂದಳು. +ಇವರು, ‘‘ನೀನು ಮಧ್ಯದಲ್ಲಿದ್ದು ನಮ್ಮ ಸಂಗಡ ಬಾ. . . ’’ ಅಂದರು. +ಅವಳು ಅವರ ಮಧ್ಯದಲ್ಲಿ ಕುದುರೆಯ ಮೇಲಿದ್ದು ಅವರೊಡನೆ ಹೊರಟಳು. +ಮಧ್ಯ ದಾರಿಯಲ್ಲಿ ಅವಳು ಗಂಡು ಕತ್ತರಿಗಿ, ಹೆಣ್ಣು ಕತ್ತರಿಗಿ ಒಂದೊಂದನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು ಬೀಸಿದಳು. +ಹನ್ನೊಂದು ಜನರ ರುಂಡಗಳು ಕತ್ತರಿಸಿ ಬಿದ್ದವು. +ಕಿರಿಯನು ಗಿಡ್ಡವಾಗಿದ್ದರಿಂದ ಅವನ ತಲೆಯ ಚರ್ಮ ಮಾತ್ರ ಕಿತ್ತು ಬಂತು. +ಅವನನ್ನು ಹಿಡಿದು ತಂದು, ಗಂಡನ ಹತ್ತಿರ-- ‘‘ಕೊಲ್ಲು. . . ’’ ಎಂದು ಹೇಳಿದಳು. +ಅವನು, ‘‘ದಮ್ಮಯ್ಯ. . . ನನ್ನನ್ನು ಕೊಲ್ಲಬೇಡಿ!’’ ಎಂದು ಕಾಲಿಗೆ ಬಿದ್ದನು. +ರಾಜಕುಮಾರನಿಗೆ ಅವನ ಮೇಲೆ ಕರುಣೆಯಾಯಿತು. +‘ಅವನನ್ನು ಜೀವಂತ ಉಳಿಸುವದು ಗಂಡಾಂತರಕಾರಿ. . . ಕೊಲ್ಲು’ ಎಂದರೂ ಕೊಲ್ಲದೆ ಬಿಟ್ಟನು. +ಆ ರಾಕ್ಷಸನು ತಾಯಿಯ ಹತ್ತಿರ ಹೋಗಿ, ‘‘ಅಣ್ಣಂದಿರು ಹನ್ನೊಂದು ಜನರನ್ನು ಆ ಹೆಣ್ಣು ಕೊಂದಳು. +ನನ್ನ ತಲೆ ಚರ್ಮ ಕೆತ್ತಿ ಬಿಟ್ಟಳು. +ಏನು ಮಾಡುವಾ?’’ ಅಂತ ಕೇಳಿದನು. +ಅವಳು, ‘‘ನಲವತ್ತೊಂದು ಜನ ರಾಕ್ಷಸರು ನಮ್ಮ ಬಳಗದವರು ಇದ್ದಾರೆ. +ಅವರಿದ್ದಲ್ಲಿ ಹೋಗಿ ಕರೆದುಕೊಂಡು ಬಾ’’ ಅಂದಳು. +‘‘ಅವರೆಲ್ಲರೂ ಕೂಡಿ ಅವರಿಬ್ಬರನ್ನೂ ಕೊಲ್ಲಲಿ’’ ಎಂದು ಹೇಳಿದಳು. +ಕಿರಿರಾಕ್ಷಸನು ಅವರನ್ನು ಕರೆದುಕೊಂಡು ಬರಲು ಹೋದನು. +ಇವರು ಗಂಡ-ಹೆಂಡತಿ ಇಬ್ಬರೂ ಬೇರೆ ಕಡೆ ಹೊರಟು ಕಾಳಿಕಾ ದೇವಾಲಯಕ್ಕೆ ಹೋದರು. +ಅಲ್ಲಿ ಕೊಟ್ಟ ಸಣ್ಣಕ್ಕಿ, ಕಾಯಿ, ಬೇಳೆ ಎಲ್ಲಾ ತಕ್ಕೊಂಡು ಅಟ್ಟಕ್ಕೆ ಹೋಗಲು ಏಣಿ ಹತ್ತಿದಳು. +ಅಲ್ಲಿಂದ ಮತ್ತೊಂದು ಏಣಿ ಇಳಿದು ಕೋಣೆಗೆ ಹೋದಳು. +ನಲ್ವತ್ತೊಂದು ರಾಕ್ಷಸರೂ, ರಾಕ್ಷಸಿಯ ಕಿರಿಮಗನೂ ದೂರದಿಂದ ಬರುವಾಗಿನ ಗದ್ದಲವನ್ನು ಕೇಳಿ ಬಾಗಿಲು ಹಾಕಿದರು. +ಬಂದ ರಾಕ್ಷಸರು ಸಿಟ್ಟಿನಿಂದ ಬಾಗಿಲನ್ನು ತುಳಿದ ಹೊಡೆತಕ್ಕೆ ಕಾಳಿಕಾ ದೇವಾಲಯವು ನಡುಗಿತು. +ಆಗ ರಾಜಕುಮಾರಿಯು, ‘‘ಹೀಗೆ ಬಾಗಿಲು ತುಳಿದರೆ ಕಾಳಿಕಾ ದೇವಾಲಯವು ಬಿದ್ದು, ಒಳಗಿರುವ ನಾನೂ ಸಾಯುವೆನು. +ನಾನು ಸತ್ತರೆ ನಿಮಗೇನು ಪ್ರಯೋಜನ? +ನಾನು ಜೀವಂತ ಇದ್ದರೆ ನಿಮ್ಮ ಪೈಕಿಯ ಹಿರಿಯನನ್ನು ಮದುವೆಯಾಗುವೆ’’ ಎಂದಳು. +ಆಗ, ‘‘ಹಾಗಾದರೆ. . . ಬಾಗಿಲು ತೆಗೆ’’ ಎಂದರು. +‘‘ಬಾಗಿಲು ತೆಗೆವೆ. . . ನೀವು ಅಟ್ಟ ಹತ್ತಿ ಇಳಿದು ನಾವಿರುವ ಕೋಣೆಗೆ ಬನ್ನಿ’’ ಎಂದಳು. +ಬಾಗಿಲು ತೆಗೆದಳು. +ಅವರು ಒಬ್ಬೊಬ್ಬರೇ ಅಟ್ಟ ಹತ್ತಿ, ಅಟ್ಟ ಇಳಿದಾಗ ಗಂಡು ಕತ್ತರಗಿ, ಹೆಣ್ಣು ಕತ್ತರಗಿ ಬೀಸಿ ಅವರ ರುಂಡ ಕಡಿಯುತ್ತಿದ್ದಳು. +ಅವರು ಶಬ್ದ ಮಾಡದೆ ಉರುಳುತ್ತಿದ್ದರು. +ನಲ್ವತ್ತೊಂದು ಜನರೂ ಹೀಗೇ ಸತ್ತರು. +ಕಿರಿ ರಾಕ್ಷಸನಿಗೆ ಅವಳ ಕತ್ತರಿಗಿ ರುಚಿ ಗೊತ್ತಿತ್ತು. +ಅವರ ಮಾತೇ ಇಲ್ಲ. . . ಸದ್ದೂ ಇಲ್ಲ.. . ಅವರನ್ನು ಇವಳು ಕೊಂದಳು ಎಂದು ಇಳಿದು ಹೋಗಿ, ಕುದುರೆ ಹತ್ತಿ, ತಿರುಗಿ ಓಡಿ ತಾಯಿಯ ಹತ್ತಿರ ಹೋದನು. +ತಾಯಿ, ‘‘ಹಳೆಯ ಫಿರಂಗಿ ಗುಂಡಿದೆ, ಅದನ್ನು ಕಾಯಿಸಿ ಅವರ ತಲೆಗೆ ಒಗೆದು ಕೊಲ್ಲು. . . ಇದೊಂದೇ ಉಪಾಯ’’ ಅಂದಳು. +ಫಿರಂಗಿ ಗುಂಡನ್ನು ಕಾಯಿಸಿ ತಕ್ಕೊಂಡು ಹೊರಟನು, ಅಶ್ವತ್ಥ ಕಟ್ಟೆಯ ಮೇಲೆ ಅಡಿಗೆ ಮಾಡುತ್ತ ಇದ್ದಳು. +ರಾಜಕುಮಾರನು ಮಲಗಿದ್ದನು. +ತಲೆಗೆ ಬೀಸಿ ಫಿರಂಗಿ ಗುಂಡನ್ನು ಹೊಡೆದನು. +ಅದು ತಲೆಗೆ ತಾಗಿ ರಾಜಕುಮಾರ ಸತ್ತನು. +ಅವಳು ದುಃಖ ಮಾಡಿದಳು. +ಅವಳು ಬಹಳ ಅಳುತ್ತಿರುವಾಗ ಇವನು ಹೋಗಿ ಅವಳ ರಟ್ಟೆ ಹಿಡಿದು, ‘‘ನೀನು ನನ್ನ ಕೆಳಗೆ ಸಿಕ್ಕೆ. . . ನಿನ್ನನ್ನು ಬಿಡುವದಿಲ್ಲ’’ ಅಂದನು. +ಅವಳು, ‘‘ಭಟ್ಟನನ್ನು ಸುಟ್ಟ ಹೊರತು ನಾನು ಎಲ್ಲಿಗೂ ಹೊರಡಲಾರೆ. +ದೊಡ್ಡ ಕೊಂಡ ಮಾಡು. . . ಆನಂತರ ಹೆಣ ಸುಟ್ಟು ಹಾಕಿ ಬರುವೆ!’’ ಅಂದಳು. +ಅವನು ದೊಡ್ಡ ದೊಡ್ಡ ಸೌದಿ ಹೊರೆತಂದು ರಾಶಿ ಹಾಕಿ, ಕೊಂಡ ಮಾಡಿದನು. +‘‘ಹೆಣವನ್ನು ಹಿಡಿ, ಐದು ಸುತ್ತು ತಿರುಗಿ ನಾವಿಬ್ಬರೂ ಈ ಹೆಣವನ್ನು ಕೊಂಡದಲ್ಲಿ ಎತ್ತಿ ಹಾಕುವಾ’’ ಅಂದಳು. +ಇಬ್ಬರೂ ಹೆಣವನ್ನು ಹೊತ್ತು ಸುತ್ತ ತಿರುಗುವಾಗ-- ಐದನೆಯ ಸುತ್ತಿನಲ್ಲಿ ಅವನನ್ನು ಎಳೆದು, ಕೊಂಡದ ಉರಿವ ಬೆಂಕಿಯಲ್ಲಿ ಒಗೆದು, ಗಂಡನ ಹೆಣವನ್ನು ಮರದ ಕೆಳಗೆ ಇಟ್ಟು ದುಃಖ ಮಾಡಿದಳು. +ತಾನು ಮರಹತ್ತೇ ಕೆಳಗೆ ಟೊಂಗೆಯ ಮೇಲೆ ಕತ್ತರಿಗಿ ಇಟ್ಟು, ಸಾಯಬೇಕೆಂದು ಮೇಲಿನಿಂದ ಹಾರಿದಳು. +ದೈವಯೋಗದಿಂದ ಕತ್ತರಿಗಿ ತಪ್ಪಿ ನೆಲಕ್ಕೆ ಬಿದ್ದು ಮೂರ್ಛೆಹೋದಳು, ಹಾಗೇ ನಿದ್ದೆ ಬಂದು ಸ್ವಪ್ನದಲ್ಲಿ ದೇವರು ಬಂದು, ‘‘ದೂರದಲ್ಲಿದ್ದ ಮುಸರಿ ಕೆರೆಯ ಹಾಲುನೀರನ್ನು ತಂದು ಹಾಕಿದರೆ-- ಎಚ್ಚರಾಗಿ, ನಿದ್ದೆಯಿಂದ ಎದ್ದವರಂತೆ ನಿನ್ನ ಗಂಡ ಎದ್ದುಕೊಳ್ಳುತ್ತಾನೆ’’ ಎಂದನು. +ಎಚ್ಚೆತ್ತುಕೊಂಡು ಕೆರೆಯ ಹಾಲಿನಂತಹ ನೀರನ್ನು ತಂದು ಹೆಣದ ಮೇಲೆ ಹಾಕಿದಳು. +ಎದ್ದು ಕೂತುಕೊಂಡನು. +ಕಡೆಗೆ ನಡೆದ ಸಂಗತಿ ಎಲ್ಲ ಹೇಳಿದಳು. +ದ್ರವ್ಯ ತಕ್ಕೊಂಡು ಹೋಗಿ ಮಿರ್ಜಾನಲ್ಲಿ ಒಂದು ಕಡೆ ಉಳಿದರು. +ಗಂಡನು ಎಲ್ಲ ಕಡೆ ತಿರುಗುವವನು. +ರಾಜನ ದರ್ಬಾರದಲ್ಲಿ ಎರಡು ದಿನ ದಶಾವತಾರ (ಯಕ್ಷಗಾನ) ಆಟ ಕುಣಿವುದನ್ನು ನೋಡುತ್ತಾ ಕೂತನು. +ಆಟ ಕುಣಿತ ನೋಡಿ ಮರುಳಾಗಿ ಎರಡು ದಿನಗಳ ನಂತರ ಬಂದು ಹೆಂಡತಿಗೆ, ‘‘ನಾನು ವೇಷ ಹಾಕಿ ಆಟ ಕುಣಿವ ಆಶೆ. . . ’’ ಎಂದನು. +‘‘ಹೋಗಿ ಕುಣಿ. . . ’’ ಅಂದಳು. +‘‘ಆಟ ಮಾಡಲು ಶ್ರುತಿಬರುಡೆ (ಪರಂಗಿಯಂತೆ ಕಾಣುವ ಊದುವ ವಾದನ), ಮೃದಂಗ, ತಾಳ ಬೇಕು’’ ಅಂದನು. +ಅವನ್ನು ತಂದುಕೊಟ್ಟಳು. +ಅವನು ಹೊರಟು ವೇಷ ಹಾಕಿಕೊಂಡು ದರ್ಬಾರಕ್ಕೆ ಹೋದನು. +ಆಟ ಆಡುವವರು ಆಟವನ್ನು ನಿಲ್ಲಿಸಿ, ಇವನಿಗೇ ಆಟ ಆಡಲು ಕೊಟ್ಟರು. +ಮೂಗಿನಿಂದ ಶ್ರುತಿ ನುಡಿಸುವ, ಬಾಯಿಂದ ಪದ ಹೇಳುವ, ಕೈಯಿಂದ ಡಿಪ್ಪೆ (ಮೃದಂಗ) ಬಡಿವ. +ಇವನ ಕುಣಿತ, ಪದ ಎಲ್ಲರಿಗೂ ರೈಸಿದವು. +ರಾಜನ ಹೆಂಡಂದಿರೂ ರಾತ್ರಿ ಹನ್ನೆರಡು ಗಂಟೆಯವರೆಗೆ ಆಟ ನೋಡಿದರು. +ಮಾಣಿಕ್ಯ ಸರವನ್ನು ಇವನಿಗೆ ಬಹುಮಾನವಾಗಿ ಕೊಟ್ಟ ರಾಜ. +ಮಾಣಿಕ್ಯದ ಸರವನ್ನು ಮೃದಂಗಕ್ಕೆ ಹಾಕಿಕೊಂಡು ಬರುವಾಗ ಆ ಸರವು ಎಲ್ಲೋ ತಾಟಿ ಬಿತ್ತು. +ಇವನಿಗೆ ಅದರ ಲಕ್ಷ್ಯವೇ ಇರಲಿಲ್ಲ-- ಮನೆಗೆ ಹೋದನು. +ಹೆಂಡತಿ ಕಿಸೆ, ಚೀಲ ಎಲ್ಲ ಅರಸಿದಳು. +‘‘ಮನೆಗೆ ಬರುವಾಗ ನೀವು ಏನನ್ನೂ ತರಲಿಲ್ಲವೋ?’’ ಅಂತ ಕೇಳಿದಳು. +‘‘ರಾಜನು ಅಂತಿಂಥದ್ದನ್ನಲ್ಲ ಮಾಣಿಕ್ಯ ಹಾರವನ್ನೇ ಕೊಟ್ಟಿದ್ದಾನೆ. +ಅದು ಮೃದಂಗದ ಮೇಲಿದೆ. +ಅದನ್ನು ಕೊರಳಿಗೆ ಹಾಕಿಕೋ. . . ’’ ಅಂದನು. +ನೋಡಿದರೆ ಆ ಸರ ಅಲ್ಲಿರಲಿಲ್ಲ ‘‘ಇಲ್ಲ. . ’’ ಎಂದಳು. +ಅವನು, ‘‘ಎಲ್ಲೋ ಬಿದ್ದಿರಬೇಕು. . . ಹುಡುಕುವೆ’’ ಎಂದು ಹೇಳಿ ತಿರುಗಿದನು. +ಮಾಣಿಕ್ಯದ ಸರದ ಬೆಳಕಿನಲ್ಲಿ ಎಪ್ಪತ್ತೆರಡು ಹೆಡೆಗಳ ಮಹಾಶೇಷ ಮೇಯುತ್ತಿತ್ತು. +ಅವನು ಸರವನ್ನು ಹೆಕ್ಕಿದಾಗ ಅದು ಅವನನ್ನು ಕಚ್ಚಿತು. +ಅವನು ಸರವನ್ನು ತಂದು ಹೆಂಡತಿಗೆ ಕೊಟ್ಟು, ವಿಷವೇರಿ ಬಿದ್ದು ಸತ್ತನು. +ಅವಳು ಬಹಳ ದುಃಖ ಮಾಡಿದಳು. +ಜನರು ಕೂಡಿದರು. +ಎಲ್ಲರೂ, ‘ಇವ ಸತ್ತ’ ಎಂದು ತಿಳಿದು, ಹೆಣ ಸುಡಲು ಸ್ಮಶಾನಕ್ಕೆ ತಕ್ಕೊಂಡು ಹೋದರು. +ಹೆಣವನ್ನು ಸುಡಲು ತಕ್ಕೊಂಡು ಹೋಗುವಾಗ ಅಲ್ಲಿಯ ಗೌಡನ ಮಗಳು, ಹೆಣ ಹೊತ್ತು ತಂದ ನಾಲ್ವರಿಗೆ-- ‘‘ನಾನು ನಿಮಗೆ ನಾಲ್ಕು ಸಾವಿರ ರೂಪಾಯಿ ಕೊಡುತ್ತೇನೆ. +ನಾನು ಸುಡುವೆ’’ ಅಂದಳು. +ಅವರು ರೂಪಾಯಿಗಳನ್ನು ತಕ್ಕೊಂಡು ಹೆಣವನ್ನು ಅವಳಿಗೆ ಕೊಟ್ಟರು. +ಹಾವು ಕಚ್ಚಿ ಸತ್ತು ಎಷ್ಟೋ ದಿನಗಳಾದರೂ ಬದುಕಿಸುವ ವಿದ್ಯೆಯನ್ನು ಅವಳು ಬಲ್ಲವಳು. +ಅವಳು ಅವನ ಉಗುರು ಸ್ವಚ್ಛ ಮಾಡಿ, ಮದ್ದನ್ನು ಹಾಕಿ ಅವನನ್ನು ಬದುಕಿಸಿ, ‘‘ನೀನೇ ಗಂಡ. . . ನಾನೇ ಹೆಂಡತಿ’’ ಎಂದು ಹೇಳಿ, ಅವನ ಸಂಗಡ ಉಳಿದುಕೊಂಡಳು. +ಅವನಿಗೆ ದೊಡ್ಡ ಅಂಗಡಿಯನ್ನು ಮಾಡಿಕೊಟ್ಟಳು. +ಅವನು ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದನು. +ಮಿರ್ಜಾನಿನ ಒಬ್ಬಳು ಅವನ ಅಂಗಡಿಗೆ ಬಂದು ನೋಡಿ, ‘‘ಸತ್ತ ರಾಜಕುಮಾರ ಹೇಗೋ ಬದುಕಿದ?’’ ಎಂದು ರಾಜಕುಮಾರಿಗೆ ಬಂದು ಹೇಳಿದಳು. +ಅವಳು ಕವಳ (ವೀಳ್ಯದ) ಸಾಮಾನು ಕೊಳ್ಳುವ ನೆವದಿಂದ ಬಂದು ಸಾಮಾನು ತಕ್ಕೊಂಡಳು. +ಅವನು ಅವಳನ್ನು ಸರಿಯಾಗಿ ನೋಡಿರಲಿಲ್ಲ. +ಅವಳು ಕವಳ ಹಾಕಿಕೊಂಡು ಜಗದು (ಅಗಿದು) ಅಂಗಡಿಯ ಬಟ್ಟೆ(ಸಣ್ಣ ಜಗುಲಿ)ಗೆ ತೂಪಿದಳು. +ಅವನು, ‘‘ಹೊಲಸು ಹೊಯ್ಮಾಲೆ ಹೆಂಗಸು’’ ಎಂದು ಬಯ್ದನು. +‘‘ಬಯ್ದವನೇ ನನ್ನ ಗಂಡ’’ ಎಂದು ಅವಳು, ಅವನ ರಟ್ಟೆ ಹಿಡಿದಳು. +ಗೌಡನ ಮಗಳು ನೋಡಿ ಓಡಿ ಬಂದು, ‘‘ಅವ ನನ್ನ ಗಂಡ. . . ’’ ಎಂದು, ಅವನ ಇನ್ನೊಂದು ರಟ್ಟೆ ಹಿಡಿದು ಎಳೆದಳು. +ಈ ಗದ್ದಲ ಕೇಳಿ ಕೂಡಿದ ಜನರು ಪಂಚಾಯತಿ ಮಾಡಿ ನಿರ್ಣಯ ಮಾಡಿ, ರಾಜಕುಮಾರಿಗೆ ಅವನನ್ನು ಕೊಡಿಸಿದರು. +ಮನೆಗೆ ಅವಳನ್ನು ಕರೆದುಕೊಂಡು ಕುದುರೆ ಓಡಿಸಿದನು. +ಇಬ್ಬರ ಕುದುರೆಗಳು ವೇಗವಾಗಿ ಬರುತ್ತಿದ್ದವು. +ಇವನ ತಂದೆ ತೀರಿ ಮೂರು ವರ್ಷಗಳಾಗಿದ್ದವು. +ಮನೆಯಲ್ಲಿ ಒಂದು ಕಣಜ ಹೊನ್ನಿತ್ತು. +ಇವರು ಕುದುರೆಯೇರಿ ವೇಗವಾಗಿ ಬರುವದನ್ನು ನೋಡಿದ ತಾಯಿಯು ಯಾರೋ ಮುತ್ತಿಗೆ ಹಾಕುತ್ತಾರೆ ಎಂದು ಹೆದರಿ, ಅವಳು ಹುಲ್ಲ ಗೋದನೆ ಬಿಗಿದು ಅದರೊಳಗೆ ಹೊಕ್ಕಿದಳು. +ಮಗನು, ‘‘ತಾಯೀ. . . ’’ ಎಂದು ಕರೆದನು. +‘ಮಗ ಬದುಕಿ ಬಂದ. . . ’ ಎಂದು, ಅವಳು ಹುಲ್ಲ ಗೋದನೆಯಿಂದ ಹೊರಗೆ ಬಂದಳು, ಅವರು ಸುಖ-ಸಂತೋಷದಲ್ಲಿ ಉಳಿದರು. +ಒಂದಾನೊಂದು ರಾಜ್ಯದಲ್ಲಿ ಒಬ್ಬ ಸ್ವರ್ಣಕಾರ ಶೆಟ್ಟಿಯಿದ್ದನು. +ಅವನಿಗೆ ನಾಲ್ವರು ಗಂಡು ಮಕ್ಕಳಿದ್ದರು. +ಅವನು ತಾನು ದುಡಿದು, ಹಣ ಸಂಪಾದನೆ ಮಾಡಿ, ಮಕ್ಕಳನ್ನು ಸಾಕಿ ದೊಡ್ಡವರಾಗುವವರೆಗೆ ಪಾಲನೆ ಮಾಡಿದನು. +ಇನ್ನು ತನಗೆ ಮುಪ್ಪಿನ ಕಾಲ ಬಂತು. . . ತಾನು ಮಕ್ಕಳ ಖರ್ಚು-ವೆಚ್ಚ ತೂಗಿಸಿಕೊಂಡು ಹೋಗಲು ಮೊದಲಿನಂತೆಯೇ ದುಡಿಯಲು ತನ್ನಿಂದ ಸಾಧ್ಯವಿಲ್ಲವೆಂದು ತಿಳಿದುಕೊಂಡನು. +ಒಂದು ದಿನ ರಾತ್ರಿ ಊಟವಾದ ಕೂಡಲೇ ಮಕ್ಕಳು ನಾಲ್ವರನ್ನೂ ಕರೆದು ಹತ್ತಿರ ಕೂಡ್ರಿಸಿಕೊಂಡು, ಅವರೊಡನೆ ಹೀಗೆ ಹೇಳಿದನು--“ಮಕ್ಕಳೇ. . . ಇಷ್ಟು ವರ್ಷ ನಾನು ನಿಮ್ಮನ್ನು ಸಾಕಿ-ಸಲಹಿ ನೀವು ದೊಡ್ಡವರಾಗುವವರೆಗೆ ದುಡಿದೆನು. +ಇನ್ನು ನನ್ನಿಂದ ಮೊದಲಿನಂತೆ ದುಡಿಯಲು ಸಾಧ್ಯವಾಗದು” ಎಂದು ಹೇಳಿ, ಹಿರಿಮಗನನ್ನು ಕರೆದು- “ಮಗನೇ, ನೀನು ನಾನು ದುಡಿದಂತೆಯೇ ದುಡಿದು ನಿನ್ನ ತಮ್ಮಂದಿರ ಜವಾಬ್ದಾರಿಯನ್ನು ಹೊತ್ತುಕೊಂಡು ಹೇಗೆ ಸಂಸಾರದ ಭಾರ ಹೊರುವೆ?” ಅಂತ ಕೇಳಿದನು. +ಹಿರಿಮಗನು ಏನು ಹೇಳಿದನೆಂದರೆ, “ಅಪ್ಪಾ. . . ನೀನು ದುಡಿದ ಪ್ರಕಾರದಲ್ಲೇ ನಾನೂ ದುಡಿಯುವೆನು. +ನೀನೇನೂ ಈ ಬಗ್ಗಾಗಿ ಹೆದರುವುದು ಬೇಡ. +ನೀನು ನಮ್ಮೆಲ್ಲರನ್ನೂ ಸಾಕಿದಂತೆಯೇ ನಾನೂ ನನ್ನ ತಮ್ಮಂದಿರನ್ನು ಸಾಕುವೆನು. +”“ಯಾವ ಲೆಕ್ಕದಿಂದ ನೀನು ದುಡಿಯುವೆ ಅಂತ ನೀನು ನನಗೆ ಹೇಳು” . +“ಮತ್ತೇನಲ್ಲ ಅಪ್ಪಾ. . . ಯಾರಾದರೂ ನನಗೆ ಒಂದು ತೂಕ ಬಂಗಾರ ಕೊಟ್ಟರೆ, ನಾನು ಬಂಗಾರ ಹಣಿದು ನಾಲ್ಕಾಣಿ ತೂಕದ ಚಿನ್ನ ತೆಗೆದು ಕದ್ದು ಇಟ್ಟುಕೊಂಡು, ನಾಲ್ಕಾಣಿ ತೂಕದ ತಾಮ್ರ ಹಾಕಿ ಒಂದು ತೊಲೆ ತೂಕ ಸರಿಯಾಗಿ ಆಗುವ ಹಾಗೆ ಮಾಡಿ, ನಾನು ಅವರಿಗೆ ದಾಗೀನೆ ಮಾಡಿಕೊಡುವೆ” ಅಂತ ಹೇಳಿದನು. +ಶೆಟ್ಟಿಯು, ‘‘ನಾನು ಮಾಡುತ್ತಿದ್ದ ಕಸಬು ನಿನಗೂ ಗೊತ್ತು” ಅಂತ ಹೇಳಿದನು. +ಆ ನಂತರ ಮತ್ತೊಬ್ಬ ಮಗನನ್ನು ಕರೆದು, ಆ ಮಗನ ಹತ್ತಿರ ಹೀಗೆ ಹೇಳಿದನು-- “ಮಗನೇ. . . ನಿನ್ನ ಮದುವೆ ಮಾಡಿದ ಮೇಲೆ ಅಣ್ಣನು ನಿನ್ನನ್ನೂ, ನಿನ್ನ ಹೆಂಡತಿಯನ್ನೂ ಮನೆಯಿಂದ ಹೊರಗೆ ಹಾಕಿಬಿಟ್ಟರೆ ನೀನು ಹೇಗೆ ಹೊಟ್ಟೆ ಹೊರೆದುಕೊಳ್ಳುವೆ?” +“ಅಪ್ಪಾ. . . ನನ್ನ ವಿಷಯದಲ್ಲಿ ನೀನು ವ್ಯಥೆ ಮಾಡುವುದೇ ಬೇಡ. +ಯಾರಾದರೂ ನನಗೆ ಒಂದು ತೊಲೆ ಬಂಗಾರವನ್ನು ದಾಗೀನೆ ಮಾಡಿಕೊಡಲು ಕೊಟ್ಟರೆ, ಎಂಟಾಣೆ ತೂಕದ ಚಿನ್ನವನ್ನು ಅದರಿಂದ ತೆಗೆದು, ಎಂಟಾಣೆ ತೂಕದ ತಾಮ್ರ ಹಾಕಿ ಒಂದು ತೊಲೆ ತೂಕಕ್ಕೆ ಬರಾಬರಿ ಒಂದು ತೂಕ ಆಗುವ ಹಾಗೆ ಮಾಡಿ, ಅವರಿಗೆ ಚಿನ್ನದ ದಾಗಿನೆಯೇ ಅಂತ ತೋರಿಕೆ ಮಾಡಿಕೊಡುವೆ” ಎಂದನು. +ಆಗ ಅಪ್ಪನು, “ಹಾಗಾದರೆ. . . ನೀನೂ ನನ್ನ ಹಾಗೆಯೇ ದುಡಿಯಬಲ್ಲೆ; ನಿನ್ನ ಮೇಲೆ ನನಗೆ ಏನೂ ಬೇಸರವಾಗದು” ಅಂದನು. +ಉಳಿದ ಇನ್ನಿಬ್ಬರು ಮಗಂದಿರಲ್ಲಿ ಮತ್ತೊಬ್ಬನನ್ನು ಕರೆದನು. +ಕರೆದು, “ಮಗನೇ. . . ಅಣ್ಣಂದಿರು ಇಬ್ಬರು ತಾವು ದುಡಿವ ಕ್ರಮ ತಿಳಿಸಿದರು. +ನೀನು ಅವರಿಗಿಂತ ಕಿರಿಯ. . . ನೀನು ಯಾವ ಲೆಕ್ಕದಿಂದ ಹೊಟ್ಟೆ ಹೊರೆದುಕೊಳ್ಳುವೆ?ಅಂತ ಹೇಳಬೇಕು” ಅಂತ ಕೇಳಿದನು. +ಅವನು, “ನಾನು ಯಾವ ಲೆಕ್ಕದಲ್ಲಾದರೂ ಜೀವನ ಹೊರೆದುಕೊಳ್ಳುವೆ. +ಹೇಗಾದರೇನು?” ಅಂದನು. +“ಹೇಗೆ ಜೀವನ ಹೊರೆದುಕೊಳ್ಳುವೆ?ಅಂತ ಹೇಳು”. + “ಯಾರಾದರೂ ಒಂದು ತೊಲೆ ಬಂಗಾರ ಕೊಟ್ಟರೆ ಹನ್ನೆರಡಾಣೆ ತೂಕದ ಚಿನ್ನ ತೆಗೆದು, ಹನ್ನೆರಡಾಣೆ ತೂಕದ ತಾಮ್ರ ಬೆರಕೆ ಮಾಡಿ, ಒಂದು ತೊಲೆ ತೂಕಕ್ಕೆ ಬರಾಬರಿ ಮಾಡಿ, ಚಿನ್ನಕ್ಕೆ ಚಿನ್ನವೆಂದೇ ತೋರಿಕೆ ಮಾಡಿ ಕೊಡುವೆ” ಅಂದನು. +“ನಿನ್ನ ಬಗ್ಗೆ ನನಗೇನೂ ಹೆದರಿಕೆಯಿಲ್ಲ” ಅಂದನು ಅಪ್ಪ. +ತೀರ ಕಿರಿಯ ಮಗನೊಬ್ಬ ಉಳಿದನು. +ಅವನನ್ನೂ ಕರೆದು ಮಾತಾಡಬೇಕು ಎಂದು ಅವನನ್ನು ಕರೆದನು. +“ಅಪ್ಪಾ. . . ಅಣ್ಣಂದಿರೆಲ್ಲರೂ ಅವರವರ ವಿದ್ಯೆಯಿಂದ ಕಸಬು ಮಾಡುತ್ತಾರೆ. +ನಾನೂ ನನ್ನ ವಿದ್ಯೆಯಿಂದ ಕಸಬು ಮಾಡುವೆ” ಅಂದನು ಕಿರಿಮಗ. +“ಮಗನೇ. . . ನೀನು ಸಣ್ಣ ಹುಡುಗ. +ನೀನು ಯಾವ ತರದಿಂದ ಹೊಟ್ಟೆ ಹೊರೆದುಕೊಳ್ಳುವೆ ನನಗೆ ಹೇಳು”. +“ಅಪ್ಪಾ. . . ಅಣ್ಣಂದಿರು ಮಾಡಿದುದಕ್ಕಿಂತಲೂ ಮೂರು ಪಟ್ಟು ಕಸಬಿನಲ್ಲಿ ನನ್ನ ಚಾಲಾಕಿ ತೋರಿಸುವೆ. +ನನ್ನ ಬಗ್ಗೆ ನೀನು ಆಲೋಚನೆ ಮಾಡುವುದೇ ಬೇಡ”. + “ಹೇಗೆ ಮಾಡುವೆ ಮಗನೇ? +ಅದನ್ನು ಹೇಳಲೇಬೇಕು”. + “ಒಂದು ತೊಲೆ ಬಂಗಾರ ಕೊಟ್ಟು ದಾಗೀನೆ ಮಾಡಿಕೊಡು ಅಂತ ನನಗೆ ಕೊಟ್ಟರೆ-- ಒಂದು ತೊಲೆ ಬಂಗಾರವನ್ನೂ ನಾನು ಅಡಗಿಸಿ ಇಟ್ಟುಕೊಂಡು, ಒಂದು ತೊಲೆ ತಾಮ್ರವನ್ನೇ ಹಾಕಿ, ಚಿನ್ನವೇ ಅಂತ ಮಾಡಿ ತೋರಿಸುವೆ ನಾನು” ಅಂದನು. +ಅಪ್ಪನಿಗೆ ಬಹಳ ಸಂತೋಷವಾಯಿತು. +ಅಪ್ಪ-ಮಕ್ಕಳು ರಾತ್ರಿ ಮಲಗಿಕೊಂಡರು. +ಆ ಸಮಯದಲ್ಲಿ ಆ ಊರಿನ ರಾಜರೂ, ಅವರ ಮಂತ್ರಿಯೂ ಹಾದಿಯಲ್ಲಿ ಹೋಗುತ್ತಿದ್ದವರು ಇವರೆಲ್ಲರೂ ಆಡಿದ್ದ ಇಷ್ಟೂ ಮಾತುಗಳನ್ನು ಕೇಳಿಕೊಂಡಿದ್ದರು. +ಎಲ್ಲ ಮಾತು ಕೇಳಿ ಮನೆಗೆ ಬಂದ ರಾಜರು-- ‘ಈ ಸ್ವರ್ಣಕಾರನು ಮಾಡುವ ಕುಯುಕ್ತಿಯ ಕೆಲಸ ಅವರ ಮಾತುಗಳಿಂದಲೇ ತಿಳಿದುಬಂತು. +ಇವರ ಸೊಕ್ಕನ್ನು ಯಾವ ತರದಿಂದ ಮುರಿಯಬೇಕು. . . ’ ಅಂತ ಆಲೋಚನೆ ಮಾಡಿದರು. +ಬಹಳ ಆಲೋಚನೆ ಮಾಡಿ, ‘ನಮ್ಮದೊಂದು ದೇವರಿದೆ. +ಆ ದೇವರ ತಲೆಗೆ ಕಿರೀಟವಿಲ್ಲ. +ನಮಗೆ ಬಂಗಾರಕ್ಕೇನೂ ಕಡಿಮೆಯಿಲ್ಲ. +ಈ ಕಿರಿಯ ಸೊನಗಾರ ಶೆಟ್ಟಿ ಮಗನನ್ನು ಕರೆದುಕೊಂಡು ಬಂದು, ನಮ್ಮ ಮನೆಯಲ್ಲೆ ಇಟ್ಟುಕೊಂಡು ಬೆಳಗಾದ ಮೇಲೆ ಎಂಟು ಗಂಟೆಗೆ ನಮ್ಮ ಮನೆಯಲ್ಲೆ ಅವನಿಂದ ಕೆಲಸ ಮಾಡಿಸಿಕೊಳ್ಳಬೇಕು. +ಸಂಜೆ ಆರು ಗಂಟೆಗೆ ಅವನನ್ನು ಕರೆದುಕೊಂಡು ಹೋಗಿ ಅವನ ಮನೆಯಲ್ಲಿ ಬಿಟ್ಟು ಬರಬೇಕು. +ಮರುದಿನ ಬೆಳಗಾದ ಮೇಲೆ ಎಂಟು ಗಂಟೆಗೆ ಮತ್ತೆ ಅವನನ್ನು ಕರೆದುಕೊಂಡು ಬಂದು-- ಅವನ ಮೈ, ಅಂಗಿ ಎಲ್ಲ ಶೋಧಿಸಿ ಅವನನ್ನು ನಮ್ಮ ಮನೆಯೊಳಗೆ ತಕ್ಕೊಳ್ಳಬೇಕು. +ಆ ದಿನದ ಅವನ ಕೆಲಸ ಆದ ಮೇಲೆ ಮತ್ತೆ ಅವನನ್ನು ಅವನ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬರುವಾಗ, ಅವನು ಹೊರಡುವಾಗಲೇ ಅವನ ಮೈಯನ್ನೆಲ್ಲ ಶೋಧಿಸಿ ಅವನು ಏನನ್ನೂ ತಕ್ಕೊಂಡು ಹೋಗದ ಹಾಗೆ ಮಾಡಿ, ಅವನನ್ನು ಅವನ ಮನೆಗೆ ಕರೆದುಕೊಂಡು ಹೋಗಿ ಬಿಡಬೇಕು. +ಇದೇ ಪ್ರಕಾರ ಮಾಡಿ ಅವನ ಕೈಯಿಂದ ದೇವರ ತಲೆಗೆ ಒಂದು ಚಿನ್ನದ ಕಿರೀಟ ಮಾಡಿಸಬೇಕು. +ಯಾವ ರೀತಿಯಿಂದ ಅವನು ತನ್ನ ಬಂಗಾರ ಕಳುವ ಉದ್ಯೋಗ ಮಾಡುವನು ಎಂದು ನಾನು ಕಾಣಬೇಕು’. + ಹೀಗೆ ವಿಚಾರ ಮಾಡಿ ರಾಜರು ತನ್ನ ಮನೆಗೆ ಹೋದರು. +ಬೆಳಗಾದ ಮೇಲೆ, “ಸೊನಗಾರ ಶೆಟ್ಟಿಯ ಕಿರಿ ಮಗನ ಹತ್ತಿರ ಹೋಗಿ ಅವನನ್ನು ನಮ್ಮ ಮನೆಗೆ ಕರೆದುಕೊಂಡು ಬಾ” ಎಂದು ಹೇಳಿ ಮಂತ್ರಿಯನ್ನು ಕಳಿಸಿದರು. +ಮಂತ್ರಿ ಬಂದವನು ಶೆಟ್ಟಿಯ ಕಿರಿ ಮಗನ ಕೂಡ, “ಸೊನಗಾರ ಶೆಟ್ಟರೇ. . . ನಮ್ಮ ರಾಜರು ಇಂದು ನೀವು ನಮ್ಮ ಮನೆಗೆ ಬರಲು ಹೇಳಿದ್ದಾರೆ” ಅಂದನು. +ಕೇಳಿದ ಕೂಡಲೆ ಶೆಟ್ಟಿಯ ಕಿರಿ ಮಗನು ತಡ ಮಾಡಲಿಲ್ಲ. +ದಡದಡ ಎದ್ದು, ‘ರಾಜರ ಅಪ್ಪಣಿಯೆಂದ ಮೇಲೆ ಒಂದು ಕ್ಷಣ ಸಹ ತಡೆ ಮಾಡಬಾರದು’ ಎಂದು ಹೇಳಿ, ರಾಜರ ಮನೆಗೆ ಹೋಗಿ ಹೆಬ್ಬಾಗಿಲಿನಲ್ಲಿ ನಿಂತು ಕೈ ಮುಗಿದನು. + “ರಾಜರೇ. . . ನನ್ನನ್ನು ಕರೆಸಿದ್ದು ಯಾಕೆ?” ಅಂತ ಕೇಳಿದನು. +‘‘ಕರೆದ ಕರೆ ಮತ್ತೆ ಯಾತಕ್ಕೂ ಅಲ್ಲ. . . ನಮ್ಮ ದೇವರ ತಲೆಗೆ ಕಿರೀಟವಿಲ್ಲ. +ಅದಕ್ಕಾಗಿ ನಿನ್ನನ್ನು ಬರಲು ಹೇಳಿ ಕಳಿಸಿದ್ದು. +ನಾನು ಬಂಗಾರ ಕೊಡುತ್ತೇನೆ. +ಎಷ್ಟು ಬಂಗಾರ ಕಿರೀಟ ಮಾಡಲು ಬೇಕೋ ಅಷ್ಟು ಬಂಗಾರ ಕೊಡುತ್ತೇನೆ. +ಬಂಗಾರದ ಕಿರೀಟಕ್ಕೆ ಜೋಡಿಸಲು ನಾನಾ ನಮೂನೆ ಹರಳು (ರತ್ನ) ನಾನು ಕೊಡುವೆ. +ಬೆಳಗಾದ ಮೇಲೆ ಎಂಟು ಗಂಟೆಗೆ ನೀನು ನಮ್ಮ ಮನೆಯೊಳಗೆ ಬಂದು ಹೊಕ್ಕಬೇಕು. +ಸಂಜೆ ಆರು ಗಂಟೆಗೆ ನಿನ್ನ ಮೈ ಜಪ್ತಿ (ಶೋಧ) ಮಾಡಿಯೇ ನಾನು ನಿನ್ನನ್ನು ಹೊರಗೆ ಹೋಗಲು ಬಿಡುವೆನು. +ನಿನಗೆ ಕೆಲಸಕ್ಕೆ ಏನೇನು ಸಾಹಿತ್ಯ ಸಾಮಗ್ರಿ ಬೇಕೋ ಎಲ್ಲಾ ಹಿಡಿದುಕೊಂಡು ನಾಳೆ ನಮ್ಮ ಮನೆಗೆ ಎಂಟು ಗಂಟೆಗೆ ಬರಬೇಕು” ಅಂತ ಹೇಳಿದರು. +ತನಗೆ ಬೇಕಾದ ಹತ್ಯಾರ ತಕ್ಕೊಂಡು ಮರುದಿನ ಎಂಟು ಗಂಟೆಗೆ ಸೊನಗಾರ ಶೆಟ್ಟಿಯ ಕಿರಿ ಮಗನು ರಾಜರ ಮನೆಗೆ ಬಂದನು. +ಆಗ ರಾಜರು ಒಂದು ಮಣ ಬಂಗಾರ ಕೊಟ್ಟರು. +“ಕಿರೀಟಕ್ಕೆ ಜೋಡಿಸಲು ಎಲ್ಲೆಲ್ಲಿ, ಯಾವ ಯಾವ ಹರಳು ಬೇಕು ಅಂತ ಹೇಳು. . . ಕೂಡುವೆ” ಅಂದರು. +ಒಂದು ದಿವಸದಲ್ಲಿ ಮಾಡುವ ಕೆಲಸ ಅಷ್ಟೂ ಮಾಡಿ ಹಸರು, ನೀಲಿ, ಕೆಂಪು ಮುಂತಾದ ಹರಳುಗಳು ಏನೇನು ಬೇಕು ಎಂಬುದನ್ನು ಚೀಟಿಯಲ್ಲಿ ಬರೆದುಕೊಟ್ಟನು ಶೆಟ್ಟಿ ಮಗ. +ಸಂಜೆ ಆರು ಗಂಟೆಯಾಯಿತು. +ಅವನ ಜಪ್ತಿ ಮಾಡಿ ಅವನನ್ನು ಹೊರಗೆ ಬಿಟ್ಟರು. +ಮನೆಗೆ ಹೋಗುವಾಗ ಅವನು ಒಂದು ಮಣ ತಾಮ್ರ ತಕ್ಕೊಂಡನು. +ಅಲ್ಲಿ ರಾಜರ ಮನೆಯಲ್ಲಿ ಎಷ್ಟು ಕೆಲಸ ಮಾಡಿದ್ದನೋ, ಅಷ್ಟೇ ಕೆಲಸವನ್ನು ರಾತ್ರಿ ತಾಮ್ರದ ಕಿರೀಟ ತಯಾರಿಸಲು ಮಾಡಿದನು. +ಬೆಳಿಗ್ಗೆ ಎಂಟು ಗಂಟೆಗೆ ಸೀದಾ ರಾಜರ ಮನೆಗೆ ಬಂದನು. +ಒಂದು ದಿನ ಏನು ಎಷ್ಟು ಕೆಲಸ ಮಾಡಬಹುದೋ ಅಷ್ಟು ಕೆಲಸ ಅಲ್ಲಿ ಮಾಡಿದನು. +ಸಂಜೆ ಆರು ಗಂಟೆಯಾಯಿತು. +‘‘ನನ್ನ ಮನೆಗೆ ನಾನು ಇನ್ನು ಹೋಗುವೆ’’ ಅಂದನು. +ಅವನ ಮೈ ಜಪ್ತಿ ಮಾಡಿ ಅವನನ್ನು ಮನೆಗೆ ಹೋಗಲು ಬಿಟ್ಟರು. +ರಾಜರ ಮನೆಯಲ್ಲಿ ಎಷ್ಟು ಚಿನ್ನದ ಕಿರೀಟದ ಕೆಲಸ ಮಾಡಿದ್ದನೋ-- ಅಷ್ಟು ಕೆಲಸವನ್ನು ತನ್ನ ಮನೆಯಲ್ಲಿ ತಾಮ್ರದ ಕಿರೀಟದ ಬಗ್ಗೆ ಮಾಡಿದನು. +ಎರಡೂ ಕಡೆ ಕಿರೀಟ ಮಾಡಿ ಮುಗಿಯಿತು. +ಕಿರೀಟಕ್ಕೆ ಎಲ್ಲೆಲ್ಲಿ ಹರಳನ್ನು ಇಡಬೇಕೋ ಅಲ್ಲಲ್ಲಿ ಇಟ್ಟನು. +ಬಳೆ ಓಡಿನ ಹರಳುಗಳನ್ನು ಅದೇ ನಮೂನೆಯಲ್ಲಿ ಮಾಡಿ ತಾಮ್ರದ ಕಿರೀಟಕ್ಕೆ ಇಟ್ಟನು. +ಎರಡೂ ಕಡೆ ಕೆಲಸ ಮುಗಿಯಿತು. +ಅಷ್ಟಾದ ಆನಂತರ ರಾಜರ ಹತ್ತಿರ ಏನು ಹೇಳಿದನೆಂದರೆ, “ರಾಜರೇ, ಕಿರೀಟ ಈ ಹೊತ್ತಿಗೆ ಮಾಡಿ ಮುಗಿಯಿತು. +ನನಗೆ ಸ್ವಲ್ಪ ಹಣ ಕೊಡಬೇಕು”. +ಆಗ ರಾಜರು, “ನಾಳೆ ದೇವರ ತಲೆಗೆ ಕಿರೀಟ ಏರಿಸಬೇಕು. +ನೀನು ಆಗ ಬರಲೇ ಬೇಕು. +ನಿನ್ನ ಲೆಕ್ಕಾಚಾರ ನಾಳೆಗೇ ಮಾಡಿಕೊಡು” ಅಂತ ಹೇಳಿದರು. +ಕಿರಿಶೆಟ್ಟಿ ತನ್ನ ಮನೆಗೆ ಹೋದನು. +ಆ ದೇವಸ್ಥಾನದ ಬಾಗಿಲಿನ ಮುಂದೆ ಒಂದು ಕೆರೆಯಿತ್ತು. +ತಾಮ್ರದ ಕಿರೀಟವನ್ನು ಮನೆಯಿಂದ ತಕ್ಕೊಂಡು ಬಂದು ಆ ಕೆರೆಯೊಳಗೆ ಹುಗ್ಗಿಸಿ ಇಟ್ಟನು. +ಬೆಳಗಾಯಿತು, ಸೀದಾ ರಾಜರ ಮನೆಗೆ ಬಂದನು. +ರಾಜರು ಭಟ್ಟರಿಗೆ ಹೇಳಿ ಹೋಮ-ನೇಮದ ವ್ಯವಸ್ಥೆ ಮಾಡಿಸಿದ್ದರು. +ಅದು ಮುಗಿದ ಮೇಲೆ ರಾಜರು ಈ ಸೊನಗಾರ ಶೆಟ್ಟಿ ಮಗನ ಹತ್ತಿರ ಕಿರೀಟ ಕೊಟ್ಟು, “ದೇವರ ಕೆರೆಯಲ್ಲಿ ಚಂದವಾಗಿ ತೊಳೆದು ತಂದು ಭಟ್ಟರ ಹತ್ತಿರ ಕಿರೀಟ ಕೊಡು” ಅಂತ ಹೇಳಿದರು. +“ಅಡ್ಡಿಯಿಲ್ಲ ಸ್ವಾಮೀ. . . ” ಅಂತ ಹೇಳಿ ಕೈ ಮುಗಿದನು. +ಶೆಟ್ಟಿ ಮಗ ಕಿರೀಟ ತಕ್ಕೊಂಡು ಕೆರೆಯಲ್ಲಿ ಕಿರೀಟ ತೊಳೆದು ತರಲು ಹೋದನು. +ಜನರೆಲ್ಲರೂ ಎದ್ದು ಬಂದರು. +ಕೆರೆಯೊಳಗೆ ಕಿರೀಟ ತೊಳೆಯಲು ತೊಡಗಿದ ಶೆಟ್ಟಿ ಮಗನು ಬಂಗಾರದ ಕಿರೀಟವನ್ನು ಅಲ್ಲೇ ಮುಳುಗಿಸಿ ಬಿಟ್ಟು, ತಾಮ್ರದ ಕಿರೀಟವನ್ನು ಎತ್ತಿಕೊಂಡನು. +ಹೀಗೆ ಹೆಕ್ಕಿ ತಕ್ಕೊಂಡು ಬಂದು ಭಟ್ಟರ ಕೈಯಲ್ಲಿ ಕೊಟ್ಟನು. +ಭಟ್ಟರು ಹೋಮ ನಿಯಮ ಮುಗಿಸಿ ಕಿರೀಟವನ್ನು ದೇವರ ತಲೆಗೆ ಏರಿಸಿದರು. +ರಾಜರೂ ಅಲ್ಲಿಯೇ ದೇವಸ್ಥಾನದ ಗರ್ಭಗುಡಿಯ ಒಳಗೆ ಇದ್ದರು. +ಭಟ್ಟರಿಗೆ ಕೊಡುವ ಹಣವನ್ನು ಅವರಿಗೆ ಕೊಟ್ಟರು. +ರಾಜರು ಸೊನಗಾರ ಶೆಟ್ಟಿಯನ್ನು ಕರೆದು, ‘‘ಮುಂದೆ ಬಾ. . . ’’ ಅಂದರು. +ಭಟ್ಟರೂ, ರಾಜರೂ, ಮಂತ್ರಿಯೂ ಎಲ್ಲರೂ ಮೇಜಿನ ಸುತ್ತಲು ಕೂತುಕೊಂಡರು. +ಆಗ ರಾಜರು ಶೆಟ್ಟಿಯ ಹತ್ತಿರ ಕೇಳಿದರು. +ಏನಂತ ಕೇಳಿದರೆಂದರೆ, ‘‘ಆ ಒಂದು ದಿವಸ ರಾತ್ರಿ ನಾನು ಬರುವ ಸಮಯದಲ್ಲಿ ನೀವು ಅಪ್ಪ-ಮಕ್ಕಳು ಐವರು ಕೂಡಿ ಮಾತಾಡುತ್ತಾ ಇದ್ದಿರಲ್ಲ? +ನೀವು ಏನು ಮಾತಾಡಿದಿರಿ?’’ ಅಂತ ಕೇಳಿದರು. +‘‘ಏನು ಮಾತೋ? +ತಿಂಗಳುಗಟ್ಟಲೆ ಆದವು. . . ನನಗೆ ಏನೂ ನೆನಪಿಲ್ಲ’’ ಅಂದನು. +ರಾಜರು, “ಏನೆಂತ ನಾನು ಹೇಳುತ್ತೇನೆ. +ನನಗೇನೂ ನೆನಪು ಹೋಗಲಿಲ್ಲ” ಅಂದರು. +ಅವರು ಮಾತಾಡಿ ಹೇಳಿದ್ದ ಮಾತನ್ನೆಲ್ಲಾ ರಾಜರು ಹೇಳಿಬಿಟ್ಟರು. +“ನಿನ್ನ ಲೆಕ್ಕಾಚಾರ ಮಾಡಬೇಕಾದರೆ, ನೀನು ಈ ಹೊತ್ತು ದೇವರ ಮುಂದೆ ನಿಂತು ನೀನು ಚಿನ್ನ ಕದ್ದಿದ್ದನ್ನು ಹೇಳಬೇಕು. +ನಾನು ನಿನಗೆ ಕೊಟ್ಟಂಥ ಬಂಗಾರದಲ್ಲಿ ನೀನು ಒಂದಾಣಿ ತೂಕದ ಚಿನ್ನ ಕದ್ದುಕೊಂಡು ಹೋಗಿದ್ದರೂ ನಿನಗೇನೂ ತೊಂದರೆಯಿಲ್ಲ. +ನೀನು ಕಳುವಂಥಾ ಉಪಾಯ ಹೇಳಬೇಕು. +ನೀನು ಹೇಳಲಿಕ್ಕೆ ಅಡ್ಡಿಯಿಲ್ಲ. +ನೀನು ಕಳದೆ ಇದ್ದ ಸಂಗತಿ ಹೇಳಿದರೆ ಮಾತ್ರ ನಾನು ನಿನ್ನ ಕುಟುಂಬವನ್ನೇ ಬಿಡುವುದಿಲ್ಲ. +ನೀನು ಕದ್ದದ್ದೇ ಆದರೆ, ನಿನ್ನ ಮನೆಯ ಗಂಟಿದನಗಳನ್ನು ನಾನು ಮೇಯಿಸುತ್ತೇನೆ. +ನನ್ನ ಮನೆ, ಆಸ್ತಿ ಸಹ ನಿನಗೇ ಕೊಡುತ್ತೇನೆ. +ನಾನು ನಿನ್ನ ಕೈಕೆಳಗೆ ಕೆಲಸ ಮಾಡುತ್ತೇನೆ” ಅಂದರು ರಾಜರು, ‘‘ಕದ್ದದ್ದೇ ಹೌದಂತ ತೋರಿಸಿದರೆ ನಿನಗೆ ಏನೂ ಶಿಕ್ಷೆ ಇಲ್ಲ. . . ’’ “ಎಂಥಾ ಮಾತು? +ಅದೆಲ್ಲ ಸಾಧ್ಯವಿಲ್ಲ. +ತಾವು ಅಪ್ಪ-ಮಕ್ಕಳು ಸಹಿತವಾಗಿ ಮಾತಾಡಿದ್ದು ಹೌದು. . . ” ಅಂದನು. +“ಹಾಗಾಗುವುದಿಲ್ಲ, ಸೊನಗಾರ ಶೆಟ್ಟೀ. . . ಕದ್ದರೆ, ನಿನ್ನ ಮನೆಯ ಗಂಟಿದನ ನಾನು ಮೇಯಿಸುವೆ.. . ಕಳದೇ ಇದ್ದರೆ ನಿನ್ನ ಕುಟುಂಬ ಬಿಡುವುದಿಲ್ಲ” ಅಂತ ಹೇಳಿಬಿಟ್ಟರು. +ಅಷ್ಟು ಮಾತಾಡಿದ ಕೂಡಲೆ, “ದೇವರ ತಲೆಯ ಮೇಲಿನ ಕಿರೀಟ ತೆಗೆಯಿರಿ. +ಅದು ಬಂಗಾರದ್ದೋ, ತಾಮ್ರದ್ದೋ ಎನ್ನುವುದನ್ನು ಕಂಡುಕೊಳ್ಳಿರಿ’’ ಅಂದನು. +ಆಗ ತೆಗೆದು ನೋಡಿದರೆ ಕಿರೀಟ ಬಂಗಾರದ್ದಲ್ಲ ಪಕ್ಕಾ ತಾಮ್ರದ್ದು. +“ಚಿನ್ನದ ಕಿರೀಟ ಎಲ್ಲಿದೆ?” ಅಂತ ಕೇಳಿದರು. +ಕೆರೆಯಿಂದ ಚಿನ್ನದ ಕಿರೀಟವನ್ನು ಹೆಕ್ಕಿ ತೆಗೆದನು. +“ಇದು ಚಿನ್ನವೋ, ತಾಮ್ರವೋ ಎಂದು ಕಂಡುಕೊಳ್ಳಿ’’ ಅಂದನು. +“ಪಕ್ಕಾ ಚಿನ್ನ. +ನಾನು ಕದ್ದ ವಿಷಯ ಹೀಗೆ. +ಚಿನ್ನದ ಕಿರೀಟವನ್ನು ನಾನು ಇಲ್ಲಿಯೇ ಕೆರೆಯಲ್ಲಿ ಕಂತಿಸಿದ್ದೆನು. +ತಾಮ್ರದ ಕಿರೀಟವನ್ನು ನಾನು ಕೆರೆಯಲ್ಲಿ ಕಂತಿಸಿ ಇಟ್ಟಿದ್ದನ್ನು ತೆಗೆದು ನಿಮಗೆ ಕೊಟ್ಟೆ” ಅಂದನು. +“ಇನ್ನು ದೇವಸ್ಥಾನದ ವಹಿವಾಟು, ನನ್ನ ಆಸ್ತಿ, ಮನೆ ಎಲ್ಲಾ ನಿನಗೇ ಆದವು” ಅಂತ ರಾಜರು ಹೇಳಿದರು. +“ನಿಮ್ಮ ಮಾತು ನಿಮ್ಮ ಕೈಯಲ್ಲಿರಲಿ. +ನಿಮ್ಮ ಮನೆ, ಮಾರು, ಆಸ್ತಿ ಎಲ್ಲ ನಿಮ್ಮ ಕೂಡ ಇರಲೀ. +ನನಗೆ ಬೇಡ” ಅಂದನು ಶೆಟ್ಟಿ. +ರಾಜರು ಮೆಚ್ಚಿ ಶೆಟ್ಟಿಗೆ ಬಹುಮಾನ ಕೊಟ್ಟರು. +ಚಿನ್ನದ ನವಿಲುಒಂದು ಊರಿನಲ್ಲಿ ಒಬ್ಬ ಅಜ್ಜಿಯೂ, ಅವಳ ಮೊಮ್ಮಗನೂ ಇದ್ದರು. +ಅವರು ಪ್ರತಿದಿನ ಬೆಳಿಗ್ಗೆ ಎದ್ದು ಒಬ್ಬ ಅರಸನ ಮನೆಗೆ ಹೋಗುತ್ತಿದ್ದರು. +ಅಜ್ಜಿ ಕಸ ತೆಗೆಯುವದು, ಏನಾದರೂ ಕುಂಟಮಣೆ ಮಾಡುವುದು. . . ಇಂಥ ಏನಾದರೂ ಕೆಲಸ ಮಾಡುತ್ತಿದ್ದಳು. +ಮೊಮ್ಮಗನು ಅವಳಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದನು. +ಊರಿನವರು ಬೆಟ್ಟದಲ್ಲಿ ಒಂದು ಕುಮರಿ ಕಡಿಯಲಿಕ್ಕೆ ತಯಾರಿ ಮಾಡಿದರು. +ಆಮೇಲೆ ಅಜ್ಜಿ, ಮೊಮ್ಮಗನಿಗೆ ಹೇಳಿದಳು-- “ಮೊಮ್ಮಗನೇ. . . ಊರಿನವರೆಲ್ಲಾ ಕೂಡಿ ಕುಮರಿ ಕಡಿಯುತ್ತಾರಂತೆ, ಗುಡ್ಡದ ಮೇಲೆ ನಾವೂ ಒಂದು ಸಣ್ಣ ತುಂಡು ಜಾಗದಲ್ಲಿ ಕುಮರಿ ಬಿತ್ತೋಣ” ಅಂದಳು. +ಮೊಮ್ಮಗನು, “ಅಜ್ಜವ್ವಾ, ನಾವೂ ಒಂದು ತುಂಡು ಕುಮರಿ ಗದ್ದೆ ಮಾಡಬಹುದಾಗಿತ್ತು. +ಆದರೆ, ನಮ್ಮ ಕೂಡ ಕತ್ತಿಯಿಲ್ಲ. . . ಕೊಡಲಿಯೂ ಇಲ್ಲ’’ ಅಂದನು. +ಅಜ್ಜಿ ಹೇಳಿದಳು, ‘‘ಮೊಮ್ಮಗನೇ, ಕತ್ತಿ-ಕೊಡಲಿ ಇಲ್ಲ ಅಂತ ನೀನು ಬೇಸರ ಮಾಡಬೇಡ. +ನಾನು ಅರಸರ ಮನೆಗೆ ಹೋಗಿ ತಕ್ಕೊಂಡು ಬರುತ್ತೇನೆ” ಅಂತ ಹೇಳಿ, ಹೋಗಿ ತಂದುಕೊಟ್ಟಳು. +ಕೊಟ್ಟ ಕೂಡಲೆ ತಕ್ಕೊಂಡನು. +ಬೆಳಗು ಮುಂಚೆ ಎದ್ದು, ಊಟ ಮಾಡಿಕೊಂಡು ಕುಮರಿ ಕಡಿಯಲಿಕ್ಕೆ ಗುಡ್ಡದ ಮೇಲೆ ಹೋದನು. +ಹೋಗಿ ಒಂದು ಎಕರೆ ಜಾಗ ತಕ್ಕೊಂಡು ಕಡಿದನು. +ಕಡಿದ ಕುಮರಿ ಜಾಗ ಒಣಗಿತು. +ಒಣಗಿದ ಮೇಲೆ ಊರವರೆಲ್ಲಾ ಕೂಡಿಕೊಂಡು ಅದಕ್ಕೆ ಬೆಂಕಿ ಹಾಕಿದರು. +ಮಳೆಗಾಲ, ಗಡಿಗಾಲ ಬಂತು. +ಆಗ ‘ಕುಮರಿ ಬಿತ್ತಲಿಕ್ಕೆ ಹೋಗಬೇಕಾಯಿತು’ ಅಂತ ಹೇಳಿ ಊರವರೆಲ್ಲಾ ತಯಾರಾಗಿ ಬಿತ್ತಲಿಕ್ಕೆ ಹೋದರು. +ಅಜ್ಜಿ ಮನೆಯಲ್ಲಿ ಬಿತ್ತುವದಕ್ಕೆ ಬೀಜವಿರಲಿಲ್ಲ. + “ಅಜ್ಜವ್ವಾ. . . ಕುಮರಿ ಬಿತ್ತಲಿಕ್ಕೆ ಹೋಗಬೇಕಾಗಿತ್ತು. +ಆದರೆ, ರಾಗಿ ಬೀಜವಿಲ್ಲ. +ಏನು ಮಾಡಬೇಕಾಯಿತು?” ಅಂತ ಅಜ್ಜಿಯ ಹತ್ತಿರ ಕೇಳಿದನು ಮೊಮ್ಮಗ. +ಕೂಡಲೆ, “ಮೊಮ್ಮಗನೆ, ಬೀಜಕ್ಕಾಗಿ ಏಕೆ ಹೆದರುತ್ತೀಯಾ? +ನಾನು ಅರಸರ ಮನೆಗೆ ಹೋಗಿ ತೆಗೆದುಕೊಂಡು ಬರುತ್ತೇನೆ” ಅಂದಳು. +ಹೋಗಿ, ಒಂದು ಶಿದ್ದೆ ಬೀಜ ತೆಗೆದುಕೊಂಡು ಬಂದಳು. +‘‘ಅಜ್ಜವ್ವಾ, ಬೀಜ ಮಾತ್ರ ತಂದರಾಗಲಿಲ್ಲ. . . ನೆಲ ಅಗೆಯಲಿಕ್ಕೆ ಪಿಕಾಸಿಲ್ಲ” ಅಂದನು. +“ನಾನು ಅರಸರ ಮನೆಗೆ ಹೋಗುತ್ತೇನೆ. +ಪಿಕಾಸನ್ನು ಬೇಡಿಕೊಂಡು ಬರುತ್ತೇನೆ” ಅಂತ ಹೇಳಿ ಪಿಕಾಸನ್ನು ಬೇಡಿಕೊಂಡು ಬಂದಳು; +ತಂದು ಮೊಮ್ಮಗನ ಕೂಡ ಕೊಟ್ಟಳು. +ಮೊಮ್ಮಗನು ಈಗ ಬೀಜ ಮತ್ತು ಪಿಕಾಸನ್ನು ತೆಗೆದುಕೊಂಡು ರಾಗಿ ಬಿತ್ತಲಿಕ್ಕೆ ಕುಮರಿ ಗುಡ್ಡದ ಮೇಲೆ ಹೋದನು. +ಹೋಗಿ ಪಿಕಾಸಿನಿಂದ ನೆಲಕೆದರಿ ಬಿತ್ತಿದನು. +ಒಂದು ದಿನದಲ್ಲಿ ಒಂದು ಎಕರೆ ತಲೆಭೂಮಿಯಲ್ಲಿ ಬಿತ್ತಿದನು. +ಹದಿನೈದು ದಿನಗಳಲ್ಲಿ ಮೊಳಕೆಯೊಡೆದ ರಾಗಿ ಸಸಿಯಾಯಿತು. +ಕಳೆ-ಬೆಳೆ ಎಲ್ಲ ತೆಗೆದಾಯಿತು. +ಸಸಿಗಳಿಲ್ಲದ ಜಾಗದಲ್ಲಿ ರಾಗಿ ಸಸಿ ತಂದು ನೆಟ್ಟರು. +ಕುಮರಿ ಬೆಳೆ ಅದ್ಭುತವಾಗಿ ಎದ್ದು ಬಂತು. +ದೊಡ್ಡ ದೊಡ್ಡ ರಾಗಿ ತೆನೆಗಳು ಗುಂಪುಗುಂಪಾಗಿ ತುಂಬಿದವು. +ಪಾತಾಳದಿಂದ ಒಂದು ನವಿಲು ರಾಗಿ ಕುಮರಿಯ ತೆನೆಗಳನ್ನು ತಿನ್ನಲಿಕ್ಕೆ ಬರುತ್ತಿತ್ತು. +ಒಂದು ದಿನ ಮೊಮ್ಮಗನು ಹೀಗೆಯೇ ಹೋಗಿ ನೋಡಿದನು. +ಕುಮರಿಯನ್ನು ನೋಡುವುದರೊಳಗೆ ಒಂದು ಕಡೆ ತೆನೆಗಳನ್ನು ತಿಂದು ನವಿಲು ಹೋಗಿ ಬಿಟ್ಟಿತ್ತು. +ಕುಮರಿ ಕಾಯಲಿಕ್ಕೆ ಒಳ್ಳೆ ಹೊತ್ತನ್ನು ಸಾಧಿಸಿ ಹೋದನು. +ಚಿನ್ನದ ನವಿಲು ಪಾತಾಳ ಲೋಕದಲ್ಲಿಂದ ಒಂದು ಕುಮರಿ ರಾಗಿ ಗೊಂಡೆಗಳನ್ನು ತಿನ್ನಲಿಕ್ಕೆ ಹಣುಕಿತು. +ಕೂಡಲೆ ಹೋದವನು ಅದರ ಚಿನ್ನದ ಗರಿ ಉಳ್ಳ ಪುಕ್ಕವನ್ನು ಹಿಡಿದುಬಿಟ್ಟನು. +ಹಿಡಿದ ಕೂಡಲೆ ಒಂದು ಗರಿ ಕಿತ್ತು ಬಂದುಬಿಟ್ಟಿತು. +ನವಿಲು ಓಡಿ ಹೋಯಿತು. +ಬೆಳಗು ಮುಂಚೆ ಎದ್ದು ಚಿನ್ನದ ಗರಿ ತಂದು ಅಜ್ಜಿಯ ಹತ್ತಿರ ಕೊಟ್ಟನು. +“ಅಜ್ಜವ್ವಾ, ನನಗೆ ಇದೊಂದು ಗರಿ ಸಿಕ್ಕಿತು, ನೋಡು’’ ಅಂದನು. +ಅವಳು ನೋಡಿದಳು. +“ಅಯ್ಯೋ ಮೊಮ್ಮಗನೇ, ಈ ಗರಿಯನ್ನು ಎಲ್ಲಿಂದ ತಂದೆ? +ಚಿನ್ನದ ಗರಿ. . . ಇದನ್ನು ತಕ್ಕೊಂಡು ಹೋಗಿ ಅರಸರ ಮನೆಗೆ ಕೊಟ್ಟು ಬಿಡುವಾ. +ನಮಗೆ ಸಂಸಾರದ ಖರ್ಚಿಗೆ ಅವರು ಏನಾದರೂ ಕೊಡಬಹುದು. +”ಅಜ್ಜಿ ಚಿನ್ನದ ಗರಿಯನ್ನು ಅರಸರ ಮನೆಗೆ ತೆಗೆದುಕೊಂಡು ಹೋಗಿ ಅರಸರ ಕೂಡ ಕೊಟ್ಟಳು. +ಅರಸರು ನೋಡಿದರು. +“ಅಜ್ಜವ್ವಾ, ಇದು ಎಲ್ಲಿತ್ತು?’’ ಅಂತ ಕೇಳಿದರು. +‘‘ನನ್ನ ಮೊಮ್ಮಗ ಕುಮರಿಗೆ ಹೋಗಿದ್ದ, ಅಲ್ಲಿ ಈ ಗರಿ ಸಿಕ್ಕಿತು” ಅಂದಳು. +“ನೀನು ಗರಿಯನ್ನಂತೂ ತಂದು ಕೊಟ್ಟೆ, ಈ ಚಿನ್ನದ ನವಿಲು ಎಲ್ಲಿದ್ದರೂ ಅದನ್ನು ತಂದುಕೊಡಬೇಕು. +ತಂದು ಕೊಡದಿದ್ದಲ್ಲಿ ನಿನ್ನ ಮತ್ತು ನಿನ್ನ ಮೊಮ್ಮಗ ಇಬ್ಬರನ್ನೂ ದಾವಣೆ ಕಟ್ಟಿಸಿ ನಿಲ್ಲಿಸಿ, ತಲೆ ಹೊಡೆಯಿಸುತ್ತೇನೆ” ಅಂದುಬಿಟ್ಟನು. +ಅವಳಿಗೆ ಕಣ್ಣಿನಲ್ಲಿ ನೀರು ಬಂದುಹೋಯಿತು. +ಅಳುತ್ತಲೇ ಮನೆಗೆ ಬಂದಳು. +ಮೊಮ್ಮಗನು ನೋಡಿ, “ಅಜ್ಜವ್ವಾ, ನಿನಗೇನಾಯಿತು? +ಯಾಕೆ ಅಳುತ್ತ ಬಂದೆ?” ಅಂತ ಕೇಳಿದನು. +‘‘ಮೊಮ್ಮಗನೇ. . . ನೀನು ಚಿನ್ನದ ಗರಿ ತಂದುಕೊಟ್ಟಿದ್ದೆಯಲ್ಲ? +ಈ ಗರಿಯಿದ್ದ ಚಿನ್ನದ ನವಿಲನ್ನು ತಂದುಕೊಡಬೇಕಂತೆ. +ತಂದುಕೊಡದಿದ್ದರೆ ದಾವಣೆ ಕಟ್ಟಿ ನಿಲ್ಲಿಸಿ, ನಮ್ಮಿಬ್ಬರ ತಲೆ ಹೊಡೆಯಿಸುತ್ತಾನಂತೆ’’ ಅಂತ ಹೇಳಿದಳು. + “ಅಜ್ಜವ್ವಾ. . . ನೀನು ಅಷ್ಟಕ್ಕಾಗಿಯೇ ಮರುಗಬೇಡ. +ಅರಸರ ಕೂಡ ‘ಐನೂರು ಮಾರು ಕಬ್ಬಿಣದ ಸರಪಳಿ ಮತ್ತು ಅದಕ್ಕೆ ಒಂದು ತೊಟ್ಟಿಲು ಇಷ್ಟು ತಯಾರಿಸಿ ಕೊಡು’ ಅಂತ ಹೇಳು. +ನಾನು ಚಿನ್ನದ ನವಿಲನ್ನು ತಂದುಕೊಡುತ್ತೇನೆ ಅಂತ ಹೇಳು” ಅಂದನು. +ಅಜ್ಜಿ ಅರಸರ ಮನೆಗೆ ಹೋದಳು. +“ರಾಜರೇ, ಐದುನೂರು ಮಾರು ಕಬ್ಬಿಣದ ಸರಪಳಿ ಮತ್ತು ತೊಟ್ಟಿಲು ತಯಾರಿಸಿ ಕೊಟ್ಟರೆ ನನ್ನ ಮೊಮ್ಮಗನು ಚಿನ್ನದ ನವಿಲನ್ನು ತಂದು ಕೊಡುತ್ತೇನೆ ಅಂತ ಹೇಳಿದ್ದಾನೆ” ಅಂತ ಹೇಳಿದಳು. +ಅರಸನು ಐನೂರು ಮಾರು ಕಬ್ಬಿಣದ ಸರಪಳಿ ಮತ್ತು ತೊಟ್ಟಿಲನ್ನು ಗೆಯ್ಯಿಸಿಕೊಟ್ಟನು. +“ಕುಮರಿಯಲ್ಲಿ ದೊಡ್ಡ ಬಿಲವಿದೆ. +ಅದರ ಬಾಗಿಲ ತೆಗೆದುಕೊಂಡು ಅವನ್ನು ಅಲ್ಲಿ ಇಟ್ಟು ಬರಲಿಕ್ಕೆ ಹೇಳು” ಅಂದ ಮೊಮ್ಮಗ. +ಆಳುಗಳು ಸರಪಣಿ, ತೊಟ್ಟಿಲು ಹೊತ್ತುಕೊಂಡು ಹೋಗಿ ಅಲ್ಲಿ ಒಗೆದು ಬಂದರು. +ಸರಪಳಿಯನ್ನು ತೊಟ್ಟಿಲಿಗೆ ಕಟ್ಟಿ, ಸರಪಳಿಯ ತುದಿಯನ್ನು ಒಂದು ಮರದ ಬೊಡ್ಡೆಗೆ ಕಟ್ಟಿದನು. +ಆ ಸರಪಳಿ ಸಮೇತ ತೊಟ್ಟಿಲನ್ನು ಕೆಳಗೆ ಪಾತಾಳಕ್ಕೆ ಬಿಟ್ಟನು. +ಈ ಸರಪಳಿ ಪಾತಾಳಕ್ಕೆ ಹೋಯಿತು. +ಇವನು ಊಟ-ಗೀಟ ಮಾಡಿಕೊಂಡು, ಹತ್ತೆಂಟು ಲಿಂಬೆಹಣ್ಣು ತೆಗೆದುಕೊಂಡು ಹೊರಟನು. +ಬಿಲದ ಬಾಗಿಲಿಗೆ ಹೋಗಿ, ಸರಪಳಿಯ ಮೇಲೆ ಕೆಳಗಿಳಿದು ಹೋದನು. +ಹೋಗಿ, ಪಾತಾಳದ ಭೂಮಿಯಲ್ಲಿ ಇಳಿದನು. +ಇಳಿದುಕೊಂಡು ಪೂರ್ವದಿಕ್ಕಿಗೆ ಮುಖ ಮಾಡಿಕೊಂಡು ಹೊರಟನು. +ಅಲ್ಲಿ ಎಲುಬುರಾಯ ಎಂಬವನಿದ್ದನು. +ಆ ರಾಯನ ಮಗಳು ಬಚ್ಚಲಿನಲ್ಲಿ ಮೀಯಲಿಕ್ಕೆ ಬಂದಿದ್ದಳು. +ಅವಳು ಜಳಕ ಮಾಡುತ್ತಿರುವಾಗ ಆ ನೀರು ಇವನ ಹಾದಿಯಲ್ಲೆ ಹೋಗುತ್ತಿತ್ತು. +ಅವನು ನೀರನ್ನು ದಾಟಬೇಕಾದರೆ, ಒಂದು ಲಿಂಬೆಹಣ್ಣನ್ನು ತೆಗೆದನು. +ತೆಗೆದು ಅದನ್ನು ಕೊರೆದು, ಆ ಕಾಲಿಗೆಲ್ಲಾ ಲಿಂಬೆಹಣ್ಣಿನ ರಸವನ್ನು ಉಜ್ಜಿಕೊಂಡು ಹಾರಿಹೋದನು. +ಆ ಅರಸನ ಹುಡುಗಿ ನೋಡುತ್ತಲೇ ಇದ್ದಳು. +“ಅಪ್ಪಯ್ಯ, ಅಲ್ಲೆ ಹೋಗುವ ಹುಡುಗನೇ ನನ್ನ ಗಂಡ. . . ನಾನು ಅವನನ್ನೇ ಮದುವೆಯಾಗಬೇಕು” ಅಂದಳು. +ರಾಜನು ಸಿಪಾಯಿಯನ್ನು ಅವನ ಹತ್ತಿರ ಕಳಿಸಿದನು. +ಸಿಪಾಯಿ ಅವನನ್ನು ಕರೆದುಕೊಂಡು ಬಂದನು. +ಅರಸನು, ‘‘ನನ್ನ ಹುಡುಗಿಯನ್ನು ನಿನಗೇ ಕೊಟ್ಟು ಮದುವೆ ಮಾಡುತ್ತೇನೆ” ಅಂದನು. +“ಏನೂ ಅಡ್ಡಿಯಿಲ್ಲ. +ನಾನು ಅವಳನ್ನು ಮದುವೆಯಾಗುತ್ತೇನೆ” ಅಂದ ಹುಡುಗ. +ಪೇಟೆ-ಪಟ್ಟಣ, ಗುಡಿಗಟ್ಟ ಕೇಳುವ ಊರಿಗೆ ಡಂಗುರ ಸಾರಿ, ಕೇಳದ ಊರಿಗೆ ಓಲೆ ಬರೆದು, ಮದುವೆಗೆ ತಯಾರಿ ಮಾಡಿ ಮದುವೆ ಮಾಡಿಬಿಟ್ಟರು. +ಮೂರು ನಾಲ್ಕು ದಿನ ಅಲ್ಲೇ ಉಳಿದುಕೊಂಡನು. +ಆಮೇಲೆ ಮಾವನ ಹತ್ತರ ಹೇಳಿದನು. +“ನಾನು ಮುಂದೆ ಹೋಗಿ ಬರುತ್ತೇನೆ. +ಕೆಲಸವುಂಟು” ಅಂದನು. +ಅರಸನು, ‘‘ಅಡ್ಡಿಯಿಲ್ಲ” ಅಂತ ಹೇಳಿದನು. +ಅಲ್ಲೇ ಒಂದು ಫರ್ಲಾಂಗು ಹೋದ ಕೂಡಲೆ ರಕ್ತರಾಯನ ಹುಡುಗಿ ಇವನನ್ನೇ ಮದುವೆಯಾದಳು. +ಮುಂದೆ ಹೋದನು- ಅಲ್ಲಿ ಚಂದರಾಯನ ಮಗಳೂ ಹಾಗೆಯೇ ಮಾಡಿದಳು. +ಮುಂದೆ-- ಬೊಮ್ಮರಾಯನ ಮಗಳು, ರೋಮರಾಯನ ಮಗಳು, ಜೀವರಾಯನ ಮಗಳು, ಉಗುರುರಾಯನ ಮಗಳು. . . ಇವರೆಲ್ಲರೂ ಅವನನ್ನೇ ಮದುವೆಯಾದರು. +ಅವನು ಮತ್ತೂ ಮುಂದೆ ಹೋದನು. +ಅಲ್ಲಿ ಒಬ್ಬ ಅಜ್ಜಿ ಮುದುಕಿಯ ಮನೆ ಸಿಕ್ಕತು. +ಅಲ್ಲಿ ಹೋಗಿ ಕೂತನು. +“ಅಜ್ಜವ್ವಾ, ನಿಮ್ಮೂರಲ್ಲಿ ಏನು ಸುದ್ದಿ?” ಅಂತ ಕೇಳಿದನು. +ಕೇಳಿದ ಕೂಡಲೆ, ‘‘ಮೊಮ್ಮಗನೇ, ಯಾವ ಸುದ್ದಿಯೂ ಇಲ್ಲ. +ಒಂದು ಚಿನ್ನದ ನವಿಲು ನಮ್ಮ ಮನೆಯ ಹೊಂಡದ ಗದ್ದಗೆ ಬರುತ್ತದೆ. +ಅಲ್ಲಿ ಕುಣಿಯುತ್ತಾ ಇರುತ್ತದೆ. +ಮತ್ತೆ ಬೇರೆ ಸುದ್ದಿಯಿಲ್ಲ” ಅಂದಳು. +“ಅಜ್ಜವ್ವಾ, ನಾಳೆ ಒಂದು ಚಂಬು ಎಣ್ಣೆ ತರಬೇಕು. +ಒಂದು ಬಾಚಣಿಗೆಯನ್ನು ತರಬೇಕು. +ಈ ಊರಲ್ಲಿ ಎಷ್ಟು ಜನ ಹೆಣ್ಣು-ಗಂಡು ಇದ್ದಾರೆಯೋ ಅವರಿಗೆಲ್ಲ ತಲೆಗೆ ಎಣ್ಣೆ ಹಾಕು, ಮಂಡೆ ಬಾಚಿ, ಅವರ ಮಂಡೆ ಕೂದಲು ತೆಗೆದುಕೊಂಡು ಬರಬೇಕು. +ಹೇಳಿದ ಸಾಮಾನು ತಕ್ಕೊಂಡು ಬಾ, ಹೇಳಿದ ಕೆಲಸ ಅಷ್ಟು ಮಾಡು” ಅಂತ ಇಷ್ಟು ರೂಪಾಯಿ ಕೊಟ್ಟನು. +ಅವಳು ಹಾಗೆಯೇ ಮಾಡಿದಳು. +ಯಾರಾರು ಸಿಕ್ಕರೋ ಅವರದೆಲ್ಲಾ ಮಂಡೆ ಕೂದಲು ಕೂಡಿಸಿ, ಅಂಗೈ ತುಂಬ ತಂದಳು. +ಮೊಮ್ಮಗನ ಹತ್ತಿರ ಕೊಟ್ಟಳು. +ಅಜ್ಜಿ ಅಡಿಗೆಯ ಅನುಕೂಲ ಮಾಡಿದಳು. +ಅವನು ಊಟ ಮಾಡಿದನು. +ಕೂದಲನ್ನು ತೆಗೆದುಕೊಂಡು ಹೊರಟನು. +ಚಿನ್ನದ ನವಿಲು ಕುಣಿದು, ದೂಳಾಟ ಮಾಡುವ ಆ ಹೊಂಡಕ್ಕೆ ಹೋಗಿ ಕೂದಲನ್ನು ಹಾಸಿದನು. +ಅಲ್ಲೊಂದು ಸಣ್ಣ ಮಾವಿನ ಮರವಿತ್ತು. +ಆ ಮಾವಿನ ಮರದ ಬುಡದಲ್ಲಿ ಹತ್ತಿ ಕೂತನು. +ಆರು ತಾಸು ರಾತ್ರಿಯ ಸಮಯದಲ್ಲಿ ನವಿಲು ಆ ಹೊಂಡಕ್ಕೆ ಬಂದು ಹುಡಿಯಲ್ಲಿ ಆಟವಾಡಲಿಕ್ಕೆ ಹತ್ತಿತು. +ಹುಡಿಯಾಡಿ, ಹುಡಿಯಾಡಿ. . . ಆ ಮಂಡೆ ಕೂದಲೆಲ್ಲ ಅದರ ಎರಡೂ ಕಾಲುಗಳಿಗೆ ಸುತ್ತಿ. . . ಸುತ್ತಿ. . . ಕಾಲುಗಳನ್ನು ಕಟ್ಟಿದವು. +ಅದಕ್ಕೆ ಹಾರಲಾಗಲಿಲ್ಲ. +ಬೆಳಗಾಗುತ್ತ ಬಂತು, ಇವನು ಹೀಗೆ ನೋಡಿ ಚಿನ್ನದ ನವಿಲನ್ನು ಹಿಡಿಯಲಿಕ್ಕೆ ಓಡಿ ಹೋದನು. +ಅದನ್ನು ಹಿಡಿದುಬಿಟ್ಟನು. +ಎಲ್ಲಾ ಕೂದಲುಗಳನ್ನೂ ಕಾಲುಗಳಿಂದ ಬಿಡಿಸಿಕೊಂಡು ಅದನ್ನು ಹಿಡಿದುಕೊಂಡು ಅಜ್ಜಿ ಮುದುಕಿಯ ಮನೆಗೆ ಬಂದನು. +“ಅಜ್ಜವ್ವಾ, ಚಿನ್ನದ ನವಿಲನ್ನು ಹಿಡಿದುಕೊಂಡು ಬಂದೆ. +ನಾನು ಬಂದು ಐದಾರು ದಿವಸಗಳಾದವು. +ಊರಿಗೆ ಹೋಗಬೇಕು” ಅಂದನು. +“ಮೊಮ್ಮಗನೇ, ಹೋಗು’’ ಅಂದಳು. +ಅವಳಿಗೆ ಇಪ್ಪತ್ತೈದು ರೂಪಾಯಿ ಕೊಟ್ಟನು. +ಉಗುರುರಾಯ ಮಾವನ ಮನೆಗೆ ಬಂದನು. +ಎಲ್ಲ ಮಾವಂದಿರ ಮನೆಗಳಲ್ಲಿಯೂ ಒಂದೊಂದು ದಿನ ಉಳಿದುಕೊಂಡು ಅವರನ್ನೆಲ್ಲಾ ಕರೆದುಕೊಂಡು ಬಂದನು. +ತೊಟ್ಟಿಲಿನ ಹತ್ತಿರ ಬಂದನು. +ತೊಟ್ಟಿಲ ಸರಪಳಿಯನ್ನು ಅಗಳಾಡಿಸಿ ನೋಡಿದನು. +ಸರಪಳಿ ಗಟ್ಟಿಯಾಗಿಯೇ ಇದೆ. +‘ನಾನು ಮೇಲೆ ಹತ್ತಿ ಹೋಗಿ ನೋಡುತ್ತೇನೆ’ ಅಂತ ಹೇಳಿ ಹತ್ತಿದನು. +ಮೇಲೆ ಬಂದು ಮುಟ್ಟುತ್ತಾನೆ ಎಂಬ ಸಮಯಕ್ಕೆ ಬಿದ್ದುಬಿಟ್ಟನು. +ಐದುನೂರು ಮಾರು ಮೇಲಿನಿಂದ ಬಿದ್ದು ಸತ್ತುಹೋದನು, ಮೈಯೆಲ್ಲಾ ಪುಡಿಪುಡಿಯಾಗಿತ್ತು. +ಹೆಂಡತಿಯರ ಬೊಬ್ಬೆ ಬಿತ್ತು. +ಆಮೇಲೆ ಎಲುಬುರಾಯನ ಮಗಳು ಎಲುಬುಗಳನ್ನು ಕೂಡಿಸಿ ಜೋಡಿಸಿದಳು. +ರಕ್ತರಾಯನ ಮಗಳು ರಕ್ತ ಮಾಡಿದಳು. +ಚಂದರಾಯನ ಮಗಳು ಮಾಂಸ ತುಂಬಿದಳು. +ಬೊಮ್ಮರಾಯನ ಮಗಳು ಮೇಲೆ ಚರ್ಮವನ್ನು ಜೋಡಿಸಿದಳು. +ಉಗುರುರಾಯನ ಮಗಳು ಉಗುರುಗಳನ್ನು ಮಾಡಿದಳು, ಜೀವರಾಯನ ಮಗಳು ಅವನ ದೇಹದಲ್ಲಿ ಜೀವವನ್ನು ಪಡೆದಳು. +ಜೀವ ಬಂದು ಎದ್ದು ಕೂತ, “ಆಮೇಲೆ ಹೋಗುವದು ಹ್ಯಾಗೆ?” ಅಂತ ಕೇಳಿದನು. +ಚಿನ್ನದ ನವಿಲು, “ನನ್ನ ರೆಕ್ಕೆಗಳ ಮೇಲೆ ನೀವೆಲ್ಲರೂ ಗರಿ ಹಿಡಿದುಕೊಂಡು ಕೂತುಕೊಳ್ಳಿ, ನಾನು ಮೇಲೆ ತೆಗೆದುಕೊಂಡು ಹೋಗುತ್ತೇನೆ” ಅಂದಿತು. +ಕೂತರು. . . ಅದು ಹಾರಿ ಮೇಲೆ ತೆಗೆದುಕೊಂಡು ಹೋಯಿತು- ಬಿಲದ ಬಾಗಿಲಿಗೆ ತಂದು ನಿಲ್ಲಿಸಿತು. +ಅಲ್ಲಿಂದ ಅಜ್ಜಿಯ ಮನೆಗೆ ಹೋದರು. +ಅವಳ ಮನೆ ತೆಂಗಿನ ಹೆಡೆಗಳಿಂದ ಕಟ್ಟಿದ ಗುಡಿಸಲು, ಇಷ್ಟೂ ಜನರು ಅಲ್ಲಿ ಹೊಕ್ಕು ಉಳಿಯುವದು ಹೇಗೆ? +ಅವನಿಗೆ ದುಃಖ ಬಂದು ಕಣ್ಣೀರು ಬಿಟ್ಟನು. +“ಯಾಕೆ ಅಳುತ್ತೀರಿ?” ಅಂತ ಹೆಂಡರು ಕೇಳಿದರು. +“ನಾನು ಗತಿ-ಗೋತ್ರವಿಲ್ಲದ ಮನುಷ್ಯ, ನಿಮ್ಮನ್ನೆಲ್ಲ ಸುಖದಿಂದ ಹೇಗೆ ಆಳಿಕೊಂಡಿರಲಿ?’’ ಅಂತ ಕೇಳಿದನು. +ಆಗ ಎಲುಬುರಾಜನ ಮಗಳು ಹಿರೆ ಹೆಂಡತಿ ಮೂರು ಮಂತ್ರಿಸಿದ ಹರಳುಗಳನ್ನು ಕೊಟ್ಟು, ‘‘ಈ ಕಲ್ಲು ಹರಳುಗಳನ್ನು ಒಂದೊಂದಾಗಿ ಹೊಡೆಯಿರಿ. +ಒಂದು ಹರಳನ್ನು ‘ದೊಡ್ಡ ಎಳುಪ್ಪರಿಗೆ ಮನೆಯಾಗಲಿ’ ಅಂತ ಹೊಡೆಯಿರಿ. +ಮತ್ತೊಂದು ಹರಳು ಒಗೆದು, ‘ದನಕರ-ಭೂಮಿ ಎಲ್ಲ ಆಗಲಿ’ ಎಂದು ಹೊಡೆಯಿರಿ. +ಮತ್ತೊಂದು ಹರಳನ್ನು, ‘ಕೆರೆ–ಬಾವಿ ಎಲ್ಲಾ ಆಗಲಿ. +ನೀರಿನಿಂದ ತುಂಬಲಿ’ ಅಂತ ಹೊಡೆಯಿರಿ” ಅಂದಳು. +ಅವಳು ಹೇಳಿದ ಹಾಗೆಯೇ ಎಲ್ಲಾ ಆದವು. +ಅವರನ್ನು ಮನೆಯೊಳಗೆ ಕರೆದುಕೊಂಡು ಬಂದನು. +ಮನೆಯೊಳಗೆ ಹೊಕ್ಕು, ಅಜ್ಜಿ ಮುದುಕಿಯನ್ನು ಕರೆದು ಎಬ್ಬಿಸಿದನು. +ಅವರನ್ನೆಲ್ಲ ನೋಡಿದ ಕೂಡಲೆ ಅವಳಿಗೆ ಎಚ್ಚರ ತಪ್ಪಿಹೋಯಿತು. +ನೀರನ್ನು ತಳಿದು, ಅವಳಿಗೆ ಎಚ್ಚರಿಕೆಯಾಗುವ ಹಾಗೆ ಮಾಡಿ ಸಮಾಧಾನ ಮಾಡಿದರು. +ಅಡಿಗೆ ಅನುಕೂಲ ಎಲ್ಲಾ ಮಾಡಿಕೊಂಡು ಊಟ ಮಾಡಿದರು. +“ಅಜ್ಜೀ, ಚಿನ್ನದ ನವಿಲನ್ನು ಅರಸರಿಗೆ ಕೊಟ್ಟು ಬಾ” ಅಂದನು. +ಅಜ್ಜಿ ಹೋಗಿ ಅದನ್ನು ಅರಸರಿಗೆ ಕೊಟ್ಟಳು, ಅರಸನಿಗೆ ಸಂತೋಷವಾಯಿತು. +ಸುಮ್ಮನೆ ಉಳಿದರು. +ಹುಡುಗನು ಅಜ್ಜಿಯ ಹತ್ತಿರ, “ನನ್ನ ಗಡ್ಡ ನೆರೆದು ಬಹಳ ದಿವಸ ಆಯಿತು. +ಕೆಲಸಿ ಗಣೀಶನನ್ನು ಕರೆದುಕೊಂಡು ಬಾ” ಅಂತ ಹೇಳಿದನು. +ಅಜ್ಜಿ ಹೋದಳು. +“ನನ್ನ ಮೊಮ್ಮಗನಿಗೆ ಗಡ್ಡ ಬಹಳ ಬಂದಿದೆ. +ನಿನ್ನ ಕೂಡ ಬಾ ಅಂತ ಹೇಳಿದ್ದಾನೆ” ಅಂತ ಹೇಳಿದಳು. +ಕೆಲಸಿ ಬಂದವನು ಮನೆ ನೋಡಿಕೊಂಡು, ‘ದೊಡ್ಡ ಸಾವುಕಾರನೇ ಕರೆದ’ ಅಂತ ತಿಳಿದನು. +ಮನೆಗೆ ಹೋಗಿ ಕೂತನು. +‘‘ನನ್ನನ್ನು ಕರೆಸಿದ್ದು ಯಾಕೆ?’’ ಅಂತ ಕೇಳಿದನು. +‘‘ಕ್ಷೌರ ಮಾಡಿಕೊಡು’’ ಅಂದನು ಹುಡುಗ. +ಕ್ಷೌರವನ್ನು ಗೈದನು. +‘‘ಊಟ ಮಾಡಿಕೊಂಡು ಹೋಗು’’ ಅಂದನು. +ಹುಡುಗ ‘ಅದೀತು’ ಅಂತ ಹೇಳಿ ನೀರನ್ನು ಮಿಂದನು. +ಹುಡುಗನ ಹೆಂಡಿರಲ್ಲಿ ಒಬ್ಬಳು ಬಾಳೆ ತಂದುಕೊಟ್ಟಳು; ಇನ್ನೊಬ್ಬಳು ಚಂಬಿನಲ್ಲಿ ನೀರು ತಂದುಕೊಟ್ಟಳು. +ಒಬ್ಬಳು ಅನ್ನ ತಂದಳು. +ಏಳು ಜನರೂ ಮಾಡಿದ ಅಡಿಗೆ ಪದಾರ್ಥಗಳನ್ನು ಒಬ್ಬೊಬ್ಬರಾಗಿ ತಂದು ಬಡಿಸಿದರು. +ಅವನಿಗೆ ಆ ಹೆಂಗಸರನ್ನು ನೋಡಿ ಎದೆ ಹಾರಿಹೋದಂತಾಯಿತು-- ಅಷ್ಟು ಚಂದವಾಗಿದ್ದರು. +ಊಟ ಮಾಡಿದವನು ಅವಸರದಲ್ಲಿ ಹೊರಟನು. +‘‘ಗಣೇಶ ನಿಲ್ಲು. . . ’’ ಅಂತ ಹೇಳಿ, ಹುಡುಗನು ಹತ್ತು ರೂಪಾಯಿ ನೋಟನ್ನು ಕೊಟ್ಟನು. +ಗಣೇಶನು ಸೀದಾ ಅರಸರ ಮನೆಗೆ ಹೋದನು. +‘‘ಅರಸರೇ, ನಿಮಗೆ ನಾಲ್ಕು; ನನಗೆ ಮೂರು. . . ’’ ಅಂದನು. +“ಏನೋ?” ಅಂತ ಕೇಳಿದರೂ, ಹಾಗೆಯೇ ಹೇಳಿದನು. +ಮತ್ತೆ ಕೇಳಿದ ಮೇಲೆ, “ಅಜ್ಜಿ ಮೊಮ್ಮಗ ಒಂದು ಮನೆ ಕಟ್ಟಿದ್ದಾನೆ. +ನಿಮ್ಮ ಅರಮನೆಗಿಂತ ಚೆನ್ನಾಗಿದೆ. +ಏಳು ಜನ ಹೆಂಡಿರನ್ನೂ ತಂದಿದ್ದಾನೆ. +ನಿಮಗೆ ತಕ್ಕಾದ ಹೆಂಡಿರು. . . ನೀವು ಅವನಿಗೆ ಹೀಗೆ ಹೇಳಬೇಕು. +‘ಹುಲಿಯ ಹಾಲು ತಂದು ಕೊಡು. . . ’ ಅಂತ, ಹುಲಿಯನ್ನು ತರಬೇಕಿದ್ದರೆ ಅವನು ಬದುಕುವುದಿಲ್ಲ’’ ಅಂದನು. +ಅರಸನು ಹುಡುಗನನ್ನು ಕರೆಸಿಕೊಂಡು, ‘‘ಹುಲಿಯ ಹಾಲನ್ನು ತೆಗೆದುಕೊಂಡು ಬಾ’’ ಅಂದನು. +ಹುಡುಗನು ಮನೆಗೆ ಹೋಗಿ ದುಃಖದಲ್ಲಿದ್ದನು. +ಅವನ ಹೆಂಡಿರು ವಿಚಾರ ಮಾಡಿ ಹರಳು ಮಂತ್ರಿಸಿ ಕೊಟ್ಟರು. +ಮೂರು ಮಂತ್ರಿಸಿದ ಹರಳುಗಳನ್ನು ತೆಗೆದುಕೊಂಡು ಹೋಗಿ, ‘‘ಹುಲಿಯೆಂಬ ಹುಲಿಗಳೆಲ್ಲಾ ಬರಲಿ’’ ಎಂದು ಹೊಡೆದನು; ಹುಲಿಗಳು ಬಂದವು. +‘‘ಹುಲಿ ಹಾಲು ಕರೆಯಲಿ. . . ’’ ಎಂದು ಒಂದು ಹರಳು ಹೊಡೆದನು- ಹುಲಿಗಳು ಹಾಲನ್ನು ಕೊಟ್ಟವು. +‘‘ಹುಲಿಯೆಂಬ ಹುಲಿಗಳೆಲ್ಲಾ ಅಡವಿಗೆ ಹೋಗಲಿ’’ ಎಂದು ಮೂರನೆಯ ಹರಳನ್ನು ಒಗೆದನು- ಅವೆಲ್ಲಾ ಹೋದವು. +“ಹುಲಿ ಹಾಲು ತಂದರೂ ಸಾಯಲಿಲ್ಲ. . . ಅವನ ಹತ್ತರ, ‘ಸತ್ತು ಹೋದ ನಿಮ್ಮ ಹಳೆಯರನ್ನು ಮಾತಾಡಿಸಿಕೊಂಡು ಬಾ’ ಅಂತ ಹೇಳಿ. +‘ಒಂದು ಕೊಂಡ ಮಾಡಿಸಿ ಅದರಲ್ಲಿ ಬಿದ್ದು ಹೋಗಿ ಬಾ’ ಅಂತ ಹೇಳಿ” ಅಂದನು. +ಕೆಲಸಿಯಿಂದ ಕೊಂಡ ತಯಾರು ಮಾಡಿಸಿ ಅರಸನು ಅವನ ಹತ್ತರ ಹಾಗೆಯೇ ಹೇಳಿ ಕಳಿಸಿದನು. +ಅವನು ಹೆಂಡಿರ ಹತ್ತರ, “ಇದಕ್ಕೆ ಯಾವ ಉಪಾಯ ಮಾಡಬೇಕು?” ಅಂತ ಕೇಳಿದನು. +ಅವರು, “ಒಂದು ಮುಂಗುಲಿಯನ್ನು ಹಿಡಿದುಕೊಂಡು ಬಾ” ಅಂತ ಹೇಳಿದರು. +ಅವನು ದನಕಾಯುವ ಮಕ್ಕಳ ಹತ್ತರ ಹೇಳಿದನು. +ಅವರು ಹಿಡಿದು ತಂದುಕೊಟ್ಟರು. +ಅವರಿಗೆ ಹತ್ತು ರೂಪಾಯಿ ಕೊಟ್ಟನು. +‘‘ಅರಸರ ಮನೆಯ ಕೊಂಡಕ್ಕೂ ನಮ್ಮ ಮನೆಯ ಬಾಗಿಲಿಗೂ ಒಂದು ಸುರಂಗ ಮಾಡಬೇಕು’’ ಅಂತ ಮುಂಗುಲಿಗೆ ಹೇಳಿದನು. +ಅದು ಸುರಂಗ ಮಾಡಿತು. +ಅವನು ಕೊಂಡದಲ್ಲಿ ಬೀಳುವದನ್ನು ನೋಡಲಿಕ್ಕೆ ತುಂಬಾ ಜನರು ನೆರೆದರು. +ಕೊಂಡದ ಸುತ್ತಲೂ ಅವನ ಏಳು ಜನ ಹೆಂಡಿರು ನಿಂತುಕೊಂಡರು. +‘‘ನಿಮ್ಮ ಹಳೆಯರ ಹತ್ತರ ಹೋಗಿ ಬರುತ್ತೇನೆ’’ ಅಂತ ಹೇಳಿದನು. +ಅವನು ಹಾರುವಾಗ ಅವನನ್ನು ಅವನ ಹೆಂಡಿರು ಎಳೆದುಕೊಂಡು ಬಿಲದಲ್ಲಿ ಸೇರಿಸಿಬಿಟ್ಟರು. +ಸುರಂಗ ಮಾರ್ಗದಲ್ಲಿ ಹೋಗಿ ಅವನು ಮನೆ ಸೇರಿದನು. +ಒಂದು ದಿನ ಕಳೆಯಿತು. +ಎರಡನೇ ದಿನ ಕೆಲಸಿ ಗಣೇಶ ಬಂದು ನೋಡಿದನು. +ಅಜ್ಜಿ ಮೊಮ್ಮಗ ಅಲ್ಲಿಯೇ ಇದ್ದಾನೆ. +ತಿರುಗಿ ಅರಸನ ಹತ್ತಿರ ಹೋಗಿ ಹೇಳಿದನು. +ಅರಸರು ಅವನನ್ನು ಕರೆಸಿದರು. +“ನಮ್ಮ ಹಳೆಯರು ಚೆನ್ನಾಗಿದ್ದಾರೋ?” ಅಂತ ಕೇಳಿದನು. +‘ಅವರೆಲ್ಲಾ ಆರಾಮಾಗಿದ್ದಾರೆ. +ಆದರೆ, ಅವರಿಗೆ ಬಹಳ ಗಡ್ಡ ಬಂದಿದೆ. +‘ಕೆಲಸಿ ಗಣೇಶನನ್ನು ಕಳಿಸು. . . ಕ್ಷೌರ ಮಾಡಿ ಹೋಗಲಿ’ ಅಂತ ಹೇಳಿದ್ದಾರೆ. + ಅಂದನು. ಅರಸನು, “ನಾನೂ ಹಳೆಯರನ್ನು ನೋಡಿ ಬರಬೇಕು’’ ಅಂದನು. +“ಸ್ವಲ್ಪ ತಡೆಯಿರಿ. +ಗಣೇಶ ಹೋಗಿ ಬರಲಿ” ಅಂದನು ಹುಡುಗ. +‘ತಾನು ಹೋಗಿ ಬರುತ್ತೇನೆ’ ಅಂದ ಗಣೇಶನು ಕೊಂಡದಲ್ಲಿ ಬಿದ್ದು, ಸುಟ್ಟುಕೊಂಡು ಸತ್ತುಹೋದನು, ಗಣೇಶ ಕೈಲಾಸಕ್ಕೆ ಹೋದನು. +ಇವರೆಲ್ಲಾ ಚಂದದಿಂದ ಉಳಿದರು. +ಒಂದು ಊರಿನಲ್ಲಿ ಒಬ್ಬ ಸಾವುಕಾರನಿದ್ದನು. +ಅವನಿಗೆ ಒಬ್ಬ ಮಗನೂ,ಒಬ್ಬ ಮಗಳೂ ಇದ್ದರು. +ಮಗನಿಗೆ ಮದುವೆ ಮಾಡಿದ್ದನು. +ಮಗಳ ಹೆಸರು ಬಂಗಾರಿ. +ಬಂಗಾರಿ ಹನ್ನೆರಡು ವರ್ಷ ಪ್ರಾಯದ ಹುಡುಗಿಯಾದಾಗ ಅವಳ ಮದುವೆಗೆ ನೆರೆಯೂರಿನ ಒಬ್ಬ ಹುಡುಗನನ್ನು ವರನೆಂದು ಗೊತ್ತು ಮಾಡಿದ್ದನು ತಂದೆ. +ಬಂಗಾರಿ ಓರಿಗೆಯ ಗೆಳತಿಯರೊಡನೆ ದಿನಾಲು ಕಬಡ್ಡಿ ಆಟ ಆಡಲು ಹೋಗುತ್ತಿದ್ದಳು. +ಆ ಗೆಳತಿಯರು ಒಂದು ದಿನ ಬಂಗಾರಿಯ ಹತ್ತರ ಹೇಳಿದರು--“ಬಂಗಾರೀ, ಬಂಗಾರೀ, ನೀನು ಹೆಸರಿನಲ್ಲಿ ಮಾತ್ರ ಬಂಗಾರಿ. +ಆದರೆ, ನಿನ್ನ ಅಣ್ಣನ ಹೆಂಡತಿಯ ಹತ್ತರ ಇರುವ ಬಂಗಾರದ ಗೊಂಡೆಯಿದ್ದ ಸೀರೆಯನ್ನು ಉಟ್ಟುಕೊಂಡು ಆಡಲು ಬಂದರೆ ಮಾತ್ರ ನೀನು ನಿಜವಾದ ಬಂಗಾರಿ. . . ಬೆಡಗಿನ ಸಿಂಗಾರಿಯಾಗುವೆ” ಎಂದರು. +ಬಂಗಾರಿ ಮನೆಗೆ ಹೋದಳು. +ಅತ್ತಿಗೆಯ ಹತ್ತರ ಹೇಳಿದಳು, “ಅತ್ತಿಗೆ. . . ಅತ್ತಿಗೆ, ನಿನ್ನ ಬಂಗಾರದ ಗೊಂಡೆಯಿರುವ ಸೀರೆಯನ್ನುಟ್ಟುಕೊಂಡು ನಾಳೆ ನಾನು ಸುರಗುದ್ದು (ಕಬಡ್ಡಿ) ಆಟ ಆಡಲಿಕ್ಕೆ ಹೋಗಬೇಕೆಂದು ಮನಸ್ಸಾಗಿದೆ. +ನನಗೆ ನಾಳೆ ಒಂದು ದಿನದ ಮಟ್ಟಿಗೆ ನಿನ್ನ ಚಿನ್ನದ ಗೊಂಡೆಗಳಿರುವ ಸೀರಯನ್ನು ಕೊಡು” ಅಂತ ಕೇಳಿಕೊಂಡಳು. +ಅತ್ತಿಗೆಯು, “ನಿನಗೆ ನನ್ನ ಚಿನ್ನದ ಗೊಂಡೆಯಿರುವ ಸೀರೆಯನ್ನು ಕೊಡಲು ಅಡ್ಡಿಯಿಲ್ಲ. +ಆದರೆ, ಅದರ ಸೆರಗಿನಲ್ಲಿರುವ ಹನ್ನೆರಡು ಚಿನ್ನದ ಗೊಂಡೆಗಳಲ್ಲಿ ಒಂದೇ ಒಂದು ಗೊಂಡೆಯನ್ನು ನೀನು ಕಳೆದು ಹಾಕಿದರೆ ನಿನ್ನ ತಲೆ ಹೊಡೆಯಿಸುತ್ತೇನೆ. +ಇದಕ್ಕೆ ನಿನ್ನ ಒಪ್ಪಿಗೆಯಿದ್ದರೆ ನೀನು ನಾಳೆ ಆ ಸೀರೆಯನ್ನುಟ್ಟುಕೊಂಡು ಹೋಗಲಿಕ್ಕೆ ಅಡ್ಡಿಯಿಲ್ಲ. +ಇಲ್ಲದಿದ್ದರೆ ನೀನು ಆ ಸೀರೆಯನ್ನುಡುವ ಆಸೆ ಮಾಡಬೇಡ. +”ಆದರೂ ಬಂಗಾರಿ ಚಿನ್ನದ ಗೊಂಡೆಯ ಸೀರೆಯನ್ನು ಉಟ್ಟು ಮರುದಿನ ಕಬಡ್ಡಿ ಆಟಕ್ಕೆ ಹೋದಳು. +ಆಡುವಾಗ, ಒಂದು ಚಿನ್ನದ ಗೊಂಡೆ ಕಾಣದಂತಾಗಿ ಬಿದ್ದಿತು. +ಆಟದ ಭರದಲ್ಲಿ ಬಂಗಾರಿ ಅದನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಮನೆಗೆ ಬಂದಳು. +ಅವಳ ಸೀರೆಯನ್ನು ಬಿಚ್ಚಿ, ತನ್ನ ಲಂಗ ಉಟ್ಟಳು. +“ಅತ್ತಿಗೇ, ನಿನ್ನ ಸೀರೆಯನ್ನು ತಿರುಗಿ ತಕ್ಕೋ” ಎಂದು ಹೇಳಿ ಕೊಟ್ಟಳು. +ಅತ್ತಿಗೆ ಸೀರೆ ತೆಗೆದುಕೊಂಡು, ಆದರಲ್ಲಿನ ಎಲ್ಲಾ ಚಿನ್ನದ ಗೊಂಡೆಗಳನ್ನು ಲೆಕ್ಕ ಮಾಡಿದಳು. +ಸೆರಗಿನ ನಡುವೆ ಇದ್ದ ಚಿನ್ನದ ಗೊಂಡೆ ಬಿದ್ದುಹೋಗಿತ್ತು. +ಆ ಚಿನ್ನದ ಗೊಂಡೆಯಿಲ್ಲವೆಂದು ಹೇಳಿ, ಸಿಟ್ಟಿನಿಂದ ಮುಸುಕು ಹಾಕಿಕೊಂಡು ಮಂಚದ ಮೇಲೆ ಮಲಗಿಕೊಂಡಳು. +ಅವಳ ಗಂಡ ಬಂದನು. +“ನಿಮ್ಮ ತಂಗಿ ನನ್ನ ಚಿನ್ನದ ಗೊಂಡೆ ಸೀರೆ ಉಟ್ಟುಕೊಂಡು ಸುರಗುದ್ದು ಆಟಕ್ಕೆ ಹೋಗಿದ್ದಳು. +ಒಂದು ಗೊಂಡೆಯನ್ನು ಕಳೆದುಕೊಂಡು ಬಂದಿದ್ದಾಳೆ. +ನಾನು ಅವಳು ಅದನ್ನು ಉಟ್ಟುಕೊಂಡು ಹೋಗುವಾಗಲೇ ಎಚ್ಚರಿಕೆ ಕೊಟ್ಟಿದ್ದೆನು. +‘ನೀನು ಆ ಸೀರೆಯ ಒಂದು ಚಿನ್ನದ ಗೊಂಡೆಯನ್ನು ಕಳೆದು ಹಾಕಿದರೂ ಸಹ ನಿನ್ನ ತಲೆ ಹೊಡೆಯಿಸುತ್ತೇನೆ’ ಕಳೆದು ಹಾಕಿ ಬಂದು, ಸುಮ್ಮನೆ ನನ್ನ ಸೀರೆಯನ್ನು ನನಗೆ ಕೊಟ್ಟಳು. +ಈಗ ಅವಳ ತಲೆ ಹೊಡೆಯಿಸಬೇಕು. +ಇಲ್ಲದಿದ್ದರೆ, ನಾನು ಉಪವಾಸ ಬಿದ್ದುಕೊಂಡು ಪ್ರಾಣ ಕಳಕೊಳ್ಳುತ್ತೇನೆ” ಎಂದು ಹೇಳಿದಳು. +ಅವಳ ಗಂಡನು ತಂಗಿಯನ್ನು ಕಡಿದು ಬರಲಿಕ್ಕೆ ಸಿದ್ದನಾದನು. +ಅನಂತರ ತಂಗಿಯನ್ನು ಕರೆದುಕೊಂಡು ದೂರ ಹೋದನು. +ಅಲ್ಲೊಂದು ಅಶ್ವತ್ಥ ಕಟ್ಟೆಯಿತ್ತು. +ಕಟ್ಟೆಯ ಮೇಲೆ ಅವಳನ್ನು ಕರೆದುಕೊಂಡು ಹೋಗಿ ಅಲ್ಲಿ ನಿಲ್ಲಿಸಿಕೊಂಡನು. +ಪಟ್ಟಾ ಕತ್ತಿ ತೆಗೆದು ಅವಳ ಕುತ್ತಿಗೆ ಕಡಿದನು. +ಅಲ್ಲೇ ಕೆಳಗೆ ಹೊಂಡಿ ತೋಡಿ ಅವಳ ದೇಹವನ್ನು ಹುಗಿದು ಬಂದನು. +ಅವಳನ್ನು ಹುಗಿದ ಜಾಗದಲ್ಲಿ ಒಂದು ನಿಂಬೆಯ ಗಿಡ ಹುಟ್ಟಿತು. +ನಿಂಬೆಯ ಗಿಡ ನೀರು ಹೊಯ್ಯದಿದ್ದರೂ ತಾನಾಗಿಯೇ ದೊಡ್ಡದಾಯಿತು. +ಅದರಲ್ಲಿ ಒಂದು ನಿಂಬೆ ಹಣ್ಣಾಯಿತು. +ಆ ದಿನ ಅವಳ ಮದುವೆಯೆಂದು ನಿಶ್ಚಯ ಮಾಡಿದ್ದರು. +ಗಂಡಿನ ಮನೆಯವರು ದಿಬ್ಬಣ ತೆಗೆದುಕೊಂಡು ಅದೇ ದಾರಿಯಲ್ಲಿ ಬಂದರು. +ಹೆಣ್ಣಿನ ಮನೆಯಲ್ಲಿ ಮದುವಣಗಿತ್ತಿಗೂ, ಅವಳ ಅತ್ತಿಗೆಗೂ ಆದ ಮಾತಿನ ತಂಟೆಯ ಸುದ್ದಿ ಅವರ ಕಿವಿಗೆ ಬಿತ್ತು. +ಅವಳ ತಲೆ ಕಡಿದ ಸುದ್ದಿಯೂ ಅವರಿಗೆ ತಿಳಿಯಿತು. +ಅವಳನ್ನು ಕಡಿದು ಹುಗಿದ ಜಾಗದಲ್ಲಿ ನಿಂಬೆಗಿಡ ಹುಟ್ಟಿ ನಿಂಬೆಕಾಯಿ ಆಗಿತ್ತು. +ಈ ಸುದ್ದಿಯನ್ನು ಅವಳ ಅಣ್ಣನೇ ಮೊದಲು ತಿಳಿದು ಆ ಜಾಗಕ್ಕೆ ಹೋಗಿದ್ದನು. +ನಿಂಬೆಕಾಯನ್ನು ಕೊಯ್ಯಲು ಕೈಚಾಚಿದಾಗ ಆ ನಿಂಬೆಕಾಯಿ ಹೀಗೆ ಮಾತಾಡಿತ್ತು. +“ಮುಟ್ಟಬೇಡಾ ದುಸ್ಮಾನಾ, ಕಿಟ್ಟಬೇಡಾ ಯನ್ನ ವೈರೀ ಚಿನ್ನದಾ ಗೊಂಡೆಗಾಗೀ ಕೊಟ್ಟಿನೋ ಪ್ರಾಣವಾ”- ಎಂತ ಹೇಳಿತು. +ಕೈಗೆ ಸಿಕ್ಕದಂತೆ ಟೊಂಗೆ ಮೇಲೇರಿತು. +ಅಣ್ಣನು ತಿರುಗಿ ಹೋಗಿದ್ದನು. +ಅದು ತಿಳಿದು ಅತ್ತಿಗೆ ಬಂದು ನಿಂಬೆಕಾಯನ್ನು ಕೊಯ್ಯಲು ಕೈಚಾಚಿದ್ದಳು. +ಆಗ ನಿಂಬೆಕಾಯಿ ಹೀಗೆ ಹೇಳಿತ್ತು--“ಮುಟ್ಟಬೇಡಾ ಯನ್ನ ವೈರೀ, ಕಿಟ್ಟಬೇಡಾ ಯನ್ನ ವೈರೀ ಚಿನ್ನದಾ ಗೊಂಡೆಗಾಗೀ ಕೊಟ್ಟೆನೇ ಪ್ರಾಣವಾ”ಆದರೂ ಅವಳ ಅತ್ತಿಗೆ ನಿಂಬೆಕಾಯನ್ನು ಕೊಯ್ಯಲು ಕೈಮೇಲೆತ್ತಿದಳು. +ಅವಳ ಕೈಗೂ ಸಿಕ್ಕದಂತೆ ನಿಂಬೆಕಾಯಿದ್ದ ಟೊಂಗೆ ಮೇಲಕ್ಕೆ ಏರಿತು. +ಕಡೆಗೆ ಬಂಗಾರಿಯ ಮೈದುನನು ‘ಲಿಂಬೆಕಾಯನ್ನು ತಾನು ಕೊಯ್ಯತ್ತೇನೆ’ ಎಂದು ಹೇಳಿ ಅಲ್ಲಿಗೆ ಬಂದನು. +ಅವನು ಕೈಚಾಚಿದಾಗಲೂ ಲಿಂಬೆ ಕಾಯಿದ್ದ ಟೊಂಗೆ ಮೇಲಕ್ಕೇರುತ್ತಲೇ ಲಿಂಬೆಕಾಯಿ ಹೀಗೆ ಹೇಳಿತು-- “ಮುಟ್ಟಬೇಡಾ ಯನ್ನ ವೈರೀ, ಕಿಟ್ಟಬೇಡಾ ಯನ್ನ ವೈರೀ ಚಿನ್ನದಾ ಗೊಂಡೆಗಾಗೀ ಕೊಟ್ಟೆನೋ ಪ್ರಾಣವಾ” ಎಂದು ಹೇಳಿತು. +ಹೀಗೆಯೇ ಅವಳ ಅಪ್ಪನೂ, ಅವಳ ತಾಯಿಯೂ ಬಂದು ಲಿಂಬೆಕಾಯನ್ನು ಕೊಯ್ಯಲು ನೋಡಿದಾಗಲೂ ಲಿಂಬೆಕಾಯಿ ಇದೇ ರೀತಿ ಹೇಳುತ್ತ, ಅವರ ಕೈಗೆ ಸಿಗದಂತೆ ಮೇಲೇರುತ್ತಿತ್ತು. +ಅವರೂ ಸಹ ಮೋರೆವಣಗಿಸಿಕೊಂಡು ತಿರುಗಿ ಹೋದರು. +ಹೀಗೆಯೇ ಕೆಲವು ದಿನ ಕಳೆದು ನಿಂಬೆಗಿಡದಲ್ಲಿ ಬೆಳೆದ ನಿಂಬೆಕಾಯಿ ದೊಡ್ಡದಾಗಿ ಹಣ್ಣಾಯಿತು. +ಅವಳ ಮಾವನಾಗಬೇಕಾದ ಮುದುಕನು ಬಂದು ನಿಂಬೆ ಹಣ್ಣವನ್ನು ಕೊಯ್ಯಲು ನೋಡಿದನು. +ಆಗ ಲಿಂಬೆಹಣ್ಣು--“ಮುಟ್ಟಬೇಡಿ ಮಾವನವರೇ, ಕಿಟ್ಟಬೇಡಿ ಮಾವನವರೇ ಚಿನ್ನದಾ ಗೊಂಡೆಗಾಗೀ ಕೊಟ್ಟೆನೋ ಪ್ರಾಣವಾ”-ಎಂದು ಹೇಳಿ ಅತ್ತಿತು. +ಅವಳ ಅತ್ತೆಯಾಗಬೇಕಾದ ಮುದುಕಿ ತಾನು ನಿಂಬೆಹಣ್ಣನ್ನು ಕೊಯ್ಯಬೇಕೆಂದು ಕೈಚಾಚಿದಳು. +ಆಗ ನಿಂಬೆಹಣ್ಣು -“ಮುಟ್ಟಬೇಡಿ ಅತ್ತೆಯವರೇ, ಕಿಟ್ಟಬೇಡಿ ಅತ್ತೆಯವರೇ ಚಿನ್ನದಾ ಗೊಂಡೆಗಾಗೀ ಕೊಟ್ಟಿನೇ ಪ್ರಾಣವಾ”- ಎಂದು ಹೇಳಿ ಅತ್ತಿತು. +ಕಡೆಗೆ ಮದುವೆಯಾಗಲು ಬಂದ ವರನೇ ನಿಂಬೆಹಣ್ಣನ್ನು ಕೊಯ್ಯಲು ಕೈಚಾಚಿದನು. +ಆಗ ನಿಂಬೆಹಣ್ಣು -“ಮುಟ್ಟಬೇಡ ಪುರುಷರೇ, ಕಿಟ್ಟಬೇಡೀ ಪುರುಷರೇ,ಚಿನ್ನದಾ ಗೊಂಡೆಗಾಗೀ ಕೊಟ್ಟೆನೋ ಪ್ರಾಣವಾ”- ಎಂದು ಅಳಹತ್ತಿತು. +ಆದರೂ ನಿಂಬೆಹಣ್ಣನ್ನು ಕೊಯ್ದು ಬಿರುಸಿನಿಂದ ನೆಲಕ್ಕೆ ಒಗೆದುಬಿಟ್ಟನು. +ಕೂಡಲೇ ಆ ನಿಂಬೆಹಣ್ಣು ಹದಿನಾರು ವರ್ಷ ವಯಸ್ಸಿನ ಹುಡುಗಿಯಾಗಿ ಎದ್ದು ನಿಂತಳು. +ಆ ಕಟ್ಟೆಯ ಮೇಲೆಯೇ ಅವಳನ್ನು ಮದುವೆಯಾಗಿ ದಿಬ್ಬಣವನ್ನು ಹಿಂದೆಯೇ ತನ್ನ ಮನೆಗೇ ಹೊರಡಿಸಿಕೊಂಡು ಹೋದನು. +ಅಲ್ಲಿ ಅವರೆಲ್ಲ ಸುಖದಿಂದ ಉಳಿದರು. +ಒಂದು ಹುಲಿಯು ಅಡವಿಯಲ್ಲಿ ಮರಿಯನ್ನು ಹೊರಬದ್ಯಲ್ಲಿ ಹಾಕಿತ್ತು. +ಹುಲಿಯಿಲ್ಲದ ವೇಳೆಯಲ್ಲಿ ಒಂದು ಆಕಳು ಮತ್ತು ಒಂದು ಕರುವೂ ಆ ಜಾಗಕ್ಕೆ ಹೋಗಿತ್ತು. +ಹುಲಿ ಮರಿಯು ಆಕಳಿನ ಹತ್ತರ, “ಆಕಾ. . . ನನಗೆ ಈ ತಮ್ಮನನ್ನು ಕೊಡು ಅಂದಿತು” ‘‘ಮಗಾ, ಹಾಗೆ ನನ್ನ ಕರುವನ್ನು ಕೊಡಲಿಕ್ಕೆ ಸಾಧ್ಯವಾಗುವುದೇ?’’ ಅಂತ ಕೇಳಿತು. +ಹುಲಿ ಮರಿಯು, “ನಾನು ಅದನ್ನು ಜೋಪಾನ ಮಾಡಿಕೊಂಡಿರುವೆ ಕೊಡು” ಅಂದಿತು. +ಆಕಳು ಹೇಳಿತು, ‘‘ನಾನೂ ಕರುವಿನ ಸಂಗಡಲೇ ಬರುವೆನು ಹಾಗೆಯೇ ನನ್ನ ಕರುವನ್ನು ಕೊಡಲಾಗದು” ಅಂದಿತು. +“ಹಾಗಾದರೆ, ಒಂದು ಕೆಲಸ ಮಾಡಬೇಕು; ಒಳಗೆ ಹೊರಬ್ಯ(ಗುಹೆ)ದಲ್ಲಿ ಹೊಕ್ಕು ಬಿಡಿ” ಅಂದಿತು ಹುಲಿಮರಿ. +‘‘ನಾನು ಹೊರಬದ್ಯಯ ಬಾಗಿಲಿನಲ್ಲಿ ಕುಳ್ಳಿರುತ್ತೇನೆ” ಅಂತ ಹುಲಿ ಮರಿ ಹೇಳಿತು ಮತ್ತು ಬಾಗಿಲಿನಲ್ಲಿ ಕೂತಿತ್ತು. +ಅಷ್ಟರಲ್ಲಿ ಹುಲಿ ಬಂತು ‘‘ಅವ್ವಾ. . . ’’ ಎಂದಿತು, “ನನಗೊಬ್ಬ ತಮ್ಮನನ್ನು ತಂದು ಕೊಡಬೇಕು” ಅಂದಿತು. +‘‘ತಮ್ಮ ಸಿಗುವುದಿಲ್ಲ’’ ಅಂದಿತು ಹುಲಿ. +“ನಾನು ತಮ್ಮನನ್ನು ತಂದುಕೊಂಡರೆ ನೀನು ಆ ನನ್ನ ತಮ್ಮನನ್ನು ತಿನ್ನುವುದಿಲ್ಲ ಅಲ್ಲವೋ? +ಇದು ಖರೆಯೊ, ಸುಳ್ಳೋ?ಭಾಷೆ ಕೊಡು” ಅಂತ ಹೇಳಿತು. +“ ‘ತಮ್ಮನನ್ನು ಕೊಲ್ಲುವುದಿಲ್ಲ’ ಎಂದು ಭಾಷೆ ಕೊಡು” ಅಂದಿತು, ಹುಲಿ ಭಾಷೆ ನೀಡಿತು. +ಆಗ ಆಕಳನ್ನೂ, ಕರುವನ್ನೂ ಹುಲಿ ಮರಿ ಹೊರಗೆ ತಂದಿತು. +ತಾಯಿಯು (ಹುಲಿ) ಮರಿಯ ಹತ್ತರ, ‘‘ನೀನು ಪ್ರಾಣಿಗಳ ಮಾಂಸ ಹಿಡಿದುಕೊಂಡು ತರಲಿಕ್ಕೆ ಹೋಗು. . . ‘’ ಅಂದಿತು. +ಆಕಳೂ, ಕರವೂ, ಹುಲಿಯೂ ಒಂದೇ ಕಡೆ ಹೋದವು. +ಹೀಗೆ ಮೂರು ದಿನ ಕಳೆದವು. +(ಆಕಳಿಗೆ ಹುಲಿಯ ಭೀತಿ ಕಡಿಮೆಯಾಯಿತು) ನಾಲ್ಕನೇ ದಿನ ಆಕಳೂ, ಹುಲಿಯೂ ಒಂದೇ ಕಡೆಗೆ ಆಹಾರ ಹುಡುಕಲು ಹೋದವು. +ಅಲ್ಲಿ ಆಕಳೂ, ಕರುವೂ ಮೇಯುತ್ತಿದ್ದವು. +ನಾಲ್ಕನೆಯ ದಿನ ಹಳ್ಳದಲ್ಲಿ ಕೆಳಭಾಗದಲ್ಲಿ ಹುಲಿಯು ನೀರನ್ನು ಕುಡಿಯಲು ಹೋಯಿತು. +ಆಕಳು ಮೇವನ್ನು ತಿಂದು, ಮೆಲಕು ಮಾಡಿ ಹಳ್ಳದಲ್ಲಿ ಮೇಲ್ಭಾಗದಲ್ಲಿ ನೀರನ್ನು ಕುಡಿಯಿತು. +ಹುಲಿಯು ಕೆಳಗೆ ನೀರನ್ನು ಕುಡಿಯಿತು. +ಆಗ ಆಕಳ ಬಾಯೊಳಗಿನ ಮೇದ ಹುಲ್ಲು (ಮೇಕೆ) ನೀರನಲ್ಲಿ ಬಿದ್ದು ಕೆಳಗಡೆ ಹೋಯಿತು. +ಹುಲಿಯ ಬಾಯಿಗೆ ಆಕಳು ತಿಂದ ಮೇವಿನ ಮೆಲಕು ಹಾಕಿದ ಬುರುಗಿನ ಮೇಕೆ ಹೋಯಿತು. +ಹುಲಿಯು, “ಅಬ್ಬಾ! +ಈ ಆಕಳು ತಿಂದ ಮೇಕೆ ಬಹಳ ರುಚಿ! +ಇದರ ನೆತ್ತರು ಎಷ್ಟು ರುಚಿಯಾಗಬಹುದು!” ಅಂದಿತು. +ಮತ್ತು ಆಕಳನ್ನು ಹಿಡಿದುಕೊಂಡು ಮುರಿದು ತಿಂದಿತು. +ಮರಿಯಿದ್ದಲ್ಲಿ ತಾಯಿ ಹುಲಿ ಹೋಯಿತು. + ‘‘ಅವ್ವಾ. . . ತಮ್ಮನ ಅವ್ವ ಯಾಕೆ ಇನ್ನು ಬರಲಿಲ್ಲ?’’ ಅಂತ ಕೇಳಿತು. +‘‘ಮಗನೇ, ಆಕಳನ್ನು ನಾನು ಹಿಡಿದು, ಕೊಂದು ತಿಂದುಬಿಟ್ಟೆ’’ ಅಂದಿತು. +ಮರಿ, “ಹೇಗೆ ತಿಂದೆ?” ಅಂತ ಕೇಳಿತು. +ಹುಲಿಯು, ‘‘ಹೀಗೆ ತಿಂದೆ’’ ಅಂದಿತು. +‘‘ಆಕಳ ಮೇಲೆ ಹೇಗೆ ಹಾರಿದೆ? +ಹೇಗೆ ತಿಂದೆ?’’ ಅಂತ ಕೇಳಿತು. +‘‘ಹೀಗೆ ಹಾರಿದೆ. . . ಹೀಗೆ ತಿಂದೆ. . . ’’ ಎಂದು ಹುಲಿ ತೋರಿಸಿತು. +ಆಗ ಮರಿಯು ತಾಯಿಯ ಕುತ್ತಿಗೆಗೆ ಬಾಯಿ ಹಾಕಿ ಅದನ್ನು ಕೊಂದುಬಿಟ್ಟಿತು. +ಕರುವಿಗೂ ತಾಯಿ ಹಾಲಿಲ್ಲ; ಹುಲಿಮರಿಗೂ ತಾಯಿಯ ಹಾಲಿಲ್ಲ. +ಕರು ಹುಲ್ಲನ್ನು ಮೇಯುತ್ತಿತ್ತು. +“ತಮ್ಮಾ, ನೀನು ಇಲ್ಲೆ ಇರು. +ನಾನು ಬೇಗ ಬರುವೆ” ಅಂತ ಹೇಳಿ ಓಡಿ ಹೋಗಿ, ಗಾಡಿಕಾರನು ಎತ್ತುಗಳನ್ನು ಗಾಡಿಗೆ ಕಟ್ಟಿದಾಗ ಹೋಗಿ, ‘‘ಎತ್ತಿನ ಗಂಟಿಸರ ಕೊಡುವಿಯೋ? +ಎತ್ತನ್ನು ಹಿಡಿದು ಮುರಿದು ತಿನ್ನಲೋ?’’ ಅಂತ ಕೇಳಿತು. +ಎತ್ತಿನ ಕೊರಳಿನ ಗಂಟಿಸರವನ್ನು ಕೊಟ್ಟಿದ್ದನ್ನು ತಂದು ತಮ್ಮನ (ಕರುವಿನ) ಕೊರಳಿಗೆ ಕಟ್ಟಿತು. +“ತಮ್ಮಾ, ನಾನು ನೀರಿರುವ ಹೊಂಡಕ್ಕೆ ಹೋಗುತ್ತೇನೆ. +ಯಾರಾದರೂ ಬಂದರೆ, ಕೊರಳಿನ ಗಂಟಿಸರದ (ಕೊರಳನ್ನು ಅಗಳಾಡಿಸಿ) ವಲಿ (ಶಬ್ದ) ಮಾಡು” ಎಂದು ಹೇಳಿ ಹೋಯಿತು. +ಒಂದು ಕಡ (ಕಡವೆ, ಕಾಡಾಕಳು) ನೀರನ್ನು ಕುಡಿಯಲು ಅಲ್ಲಿಗೆ ಬಂದು. +ಕರು ಗಂಟೆಸರವನ್ನು ಗಿಣಿಗಿಣಿ ಶಬ್ದವಾಗುವ ಹಾಗೆ ಅಗಳಾಡಿಸಿತು. +ಹುಲಿಮರಿ ಕೂಡಲೇ ಓಡಿ ಬಂತು. +“ತಮ್ಮಾ, ಯಾಕೆ ಗಂಟೆಸರ ಗಿಣಿಗಿಣಿ ಮಾಡಿದೆ?” ಅಂತ ಕೇಳಿತು. +‘‘ನೀನು ಬರುವೆಯೋ ಅಂತ ನೋಡೋಣ ಅಂತ ನಾನು ಗಂಟೆಸರದ ಶಬ್ದ ಮಾಡಿದೆ ಕಡವು ಬಂದಿಲ್ಲ” ಅಂದಿತು. +“ಕಡ ಬಂದರೆ ನಿನ್ನನ್ನು ತಿನ್ನುವದಿಲ್ಲ ಕಾರಣವಿಲ್ಲದೆ ಶಬ್ದ ಮಾಡಿದೆ” ಅಂದಿತು. +ಮಾರನೇ ದಿನವೂ ಹುಲಿಮರಿ ಮೊದಲಿನಂತೆಯೇ ಹೇಳಿ ನೀರಿಗೆ ಹೋಯಿತು. +ಮತ್ತೆ ಕಡವು ಬರುವಷ್ಟರಲ್ಲಿ ಗಂಟೆಸರ ಅಗಳಾಡಿಸಿ, ‘ಗಿಣಿಗಿಣಿ’ ಶಬ್ದ ಮಾಡಿತು ಅಕಳ ಕರು. +ಹುಲಿ ಮರಿ ಮತ್ತೆ ಓಡಿ ಬಂದು, “ಏನೋ, ಯಾಕೆ ಗಿಣಿಗಿಣಿ ಶಬ್ದ ಮಾಡಿದೆ?’’ ಅಂತ ಕೇಳಿತು. +‘‘ನುಸಿ (ಗುಂಗಾಡು) ಬಂದಿತ್ತು’’ ಅಂದಿತು. +‘‘ಹುಲ್ಲು ಮೇವ ಕಡ ಬಂದದ್ದಕ್ಕೆ ಕಾರಣವಿಲ್ಲದೆ ಸಿಕ್ಕಸಿಕ್ಕ ಹಾಗೆ ಶಬ್ದ ಮಾಡಿದರೆ, ನಿನ್ನನ್ನೇ ಹಿಡಿದು ತಿಂದೇ ಬಿಡುವೆ’’ ಅಂದಿತು. +ಮರುದಿನ ಮತ್ತೆ ಕಡ ಬರುವಷ್ಟರಲ್ಲಿ ‘ಗಿಣಿಗಿಣಿ’ ಶಬ್ದ ಮಾಡಿತು ಕರು, ಹುಲಿ ಬಂತು. +ಸಿಟ್ಟಿನಿಂದ ಕಡವನ್ನೇ ಹಿಡಿದು ಮುರಿದು ತಿಂದಿತು. +ಒಬ್ಬ ಹೊಲೆಯರವನು ಕರುವನ್ನು ಕೊಂದು, ಅದರ ಚರ್ಮ ಸುಲಿದು ಮಾಂಸದ ಹೊರೆ ಕಟ್ಟಿದನು. +ಅಷ್ಟರಲ್ಲಿ ಹುಲಿ ಓಡಿ ಬಂತು, ‘‘ತಮ್ಮ ಪಡ್ಚ!’’“ಹೊಲಿಯರವನೇ, ನಿನ್ನ ಜೀವದ ಬಚಾವು (ಆಶೆ) ಬೇಕಾದರೆ ಕರುವಿನ, ಚರ್ಮ, ನೆತ್ತರ, ಎಲುವು ಎಲ್ಲ ಒಂದೇ ಕಡೆ ಕೂಡಿಸಿ ಸೌದಿ ಮಾಡು, ಇಲ್ಲದಿದ್ದರೆ ನಿನ್ನನ್ನೇ ತಿನ್ನುವೆ” ಅಂದಿತು ಹುಲಿ. +ಅದರಂತೆ ಅವನು ಸೌದೆ ರಾಶಿ ಹಾಕಿ, ಅದರಲ್ಲಿ ಕರುವಿನ ಎಲುವು ಚರ್ಮ, ಮಾಂಸ ಎಲ್ಲ ಹಾಕಿದನು. +“ಇದಕ್ಕೆ ಸೌದೆಗೆ ಬೆಂಕಿ ಹಾಕು” ಅಂದಿತು. +ಅವನು ಸೌದೆ ರಾಶಿಗೆ ಬೆಂಕಿ ಮಾಡಿದನು. +ಹುಲಿಯು ಆ ಬೆಂಕಿಯಲ್ಲಿ ತಾನೂ ಬಿದ್ದು ಸುಟ್ಟು ಸತ್ತು ಹೋಯಿತು. +ಸುಟ್ಟ ಜಾಗದಲ್ಲಿ ಮನುಷ್ಯ ಜನ್ಮ ಪಡೆದು, ಅಣ್ಣ-ತಮ್ಮ ಆಗಿ ಹುಟ್ಟಿದರು. +(ತಾಯಿ-ತಂದೆ ಸುದ್ದಿಯನ್ನು ನಿರೂಪಕ ತಿಳಿಸಲಿಲ್ಲ. +ತಾಯಿ-ತಂದೆ ಇದ್ದು ಅವರಿಗೆ ಈ ಗಂಡು ಮಕ್ಕಳು ಹುಟ್ಟಿ, ಹುಡುಗ ಪ್ರಾಯಕ್ಕೆ ಬರುವಾಗ ತಾಯಿ-ತಂದೆ ತೀರಿ ಹೋಗಿದ್ದರು ಎಂದು ಊಹೆ ಮಾಡಬಹುದು). +ಅಣ್ಣನು ತಮ್ಮನ ಹತ್ತಿರ ಹೇಳಿದನು. +“ತಮ್ಮಾ, ಬೆಟ್ಟ ಇದು. +ಇಲ್ಲಿದ್ದು ನಾವೇನು ಮಾಡಬೇಕು? +ಯಾವುದಾದರೂ ಊರಿಗೆ ಹೋಗುವಾ. +ದೂರದಲ್ಲಿ ಬೆಂಕಿಯ ಹೊಗೆ ಏಳುತ್ತಿದ್ದರೆ ಅಲ್ಲಿ ಊರಿರುತ್ತದೆ, ಜನರಿರುತ್ತಾರೆ. +ನೀನು ಮರ ಹತ್ತಿ ನೋಡು” ಅಂದ ಅಣ್ಣ. +ತಮ್ಮನು ದೊಡ್ಡ ಮರ ಹತ್ತಿ ನೋಡಿದನು. + ಅಲ್ಲಿ. . . ದೂರದಲ್ಲಿ ಒಂದು ಕಡೆಗೆ ಹೊಗೆ ಏಳುತ್ತಿತ್ತು. +ಅಣ್ಣನು ಬೆಂಕಿ ತರಲು ಹೊಗೆ ಏಳುವ ದಿಕ್ಕಿಗೆ ಹೋದನು. +ತಮ್ಮನು ಬೆಟ್ಟದಲ್ಲೇ ಉಳಿದನು. +ಅಣ್ಣ ಹೋದ ರಾಜ್ಯದಲ್ಲಿ ಅರಸ ಸತ್ತುಹೋಗಿದ್ದನು. +ಆ ಸಂಸ್ಥಾನಕ್ಕೆ ರಾಜ ಪದವಿಗೆ ಆಯ್ಕೆ ಮಾಡಿ, ರಾಜಪಟ್ಟ ಕಟ್ಟಬೇಕೆಂದು ಆನೆಯ ಸೊಂಡಲಿಗೆ ಮಾಲೆಯನ್ನು ಕೊಟ್ಟು ‘ರಾಜನಾಗುವವನನ್ನು ಹುಡುಕಿ ಅವನಿಗೆ ಮಾಲೆ ಹಾಕಿ, ಪಟ್ಟಕ್ಕೆ ತಂದು ಅವನನ್ನು ಕೂಡ್ರಿಸು’ ಏಂದು ಹೇಳಿ ಕಳಿಸಿದರು. +ಸಾವಿರಾರು ಮಂದಿ ಸಭೆಯಲ್ಲಿ ಕೂಡಿದ್ದರು. +ಇವನು ಅಲ್ಲಿಗೆ ಹೋಗಿ, ‘ಬೆಂಕಿ ಕೊಡಿ’ ಅಂತ ಕೇಳಲು ಸಾಧ್ಯಾವಾಗಲಿಲ್ಲ. +ಬೇರೆ ಯಾರಿಗೂ ಕೊರಳಿಗೆ ಮಾಲೆ ಹಾಕಿ ತಂದು ಪಟ್ಟಕ್ಕೆ ಕುಳ್ಳಿರಿಸದ ಆನೆಯು, ಇವನ ಕೊರಳಿಗೆ ಮಾಲೆ ಹಾಕಿ, ಅವನನ್ನು ಸೊಂಡಿಲಿನಿಂದ ಎತ್ತಿ ತಂದು ಪಟ್ಟಕ್ಕೆ ಕೂಡ್ರಿಸಿತು. +ಇವನಿಗೆ ತಮ್ಮನ ನೆನಪೇ ಹೋಗಿಬಿಟ್ಟಿತು. +ಅಣ್ಣ ಬರುವದನ್ನು ಕಾದು ನೋಡಿ-- ಅಣ್ಣನು ಬಾರದೆ, ಬೇಸರಾಗಿ ತಮ್ಮನು ಅದೇ ಪಟ್ಟಣಕ್ಕೆ ಹೋದನು. +ಆ ಪಟ್ಟಣದಲ್ಲಿ ಪದ್ಮಾಕ್ಷಿ ಸೂಳೆ ದೊಡ್ಡ ಹಡಗನ್ನು ಕಟ್ಟಿಸಿದ್ದಳು. +ಇವನು ಅಲ್ಲಿಗೆ ಹೋದನು. +ಆ ಹಡಗನ್ನು ನೀರಿನಲ್ಲಿ ಹಾಕಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. +ಅಲ್ಲಿ ನೋಡಿ, ಇಲ್ಲಿ ನೋಡಿ ಈ ಹುಡುಗನನ್ನು ಪದ್ಮಾಕ್ಷಿ ಸೂಳೆ ಕಂಡಳು. +‘‘ಹುಡುಗಾ. . . ಹಡಗಿಗೆ ಕೈಹಾಕು, ಮುಂದೆ ದೂಡು’’ ಅಂತ ಹೇಳಿದಳು. +ಕೈಹಾಕಿದನು ಹುಡುಗ,ಹಡಗು ನೀರಿಗೆ ಹೋಯಿತು. +ಪದ್ಮಾಕ್ಷಿ ಸೂಳೆಯು, ‘ಇವನಲ್ಲಿ ಏನೋ ಮಹತ್ವ ಇದೆ’ ಅಂತ ಹೇಳಿ, ಅವನನ್ನು ಕರೆದುಕೊಂಡು ಹೋದಳು. +ಸೂಳೆ ಅವನಿಗೆ ದೊಡ್ಡ ಪದವಿ (ಅಧಿಕಾರ) ಕೊಟ್ಟು ಅವನನ್ನು ಇಟ್ಟುಕೊಂಡಳು. +ಆ ಅಧಿಕಾರದಲ್ಲಿದ್ದು ಪದ್ಮಾಕ್ಷಿಯ ಮನೆಗೆ ಹೋಗುತ್ತಿರುವಾಗ, ಅದೇ ರಾಜ್ಯದ ಪಟ್ಟಣಶೆಟ್ಟಿ ಪದ್ಮಾಕ್ಷಿ ಸೂಳೆಯನ್ನು ಕರೆದುಕೊಂಡು ಅವಳನ್ನು ಲಗ್ನವಾಗಬೇಕೆಂದು ನಿಶ್ಚಯ ಮಾಡಿದ್ದನು +ಪದ್ಮಾಕ್ಷಿ ಸೂಳೆಯ ಮನೆಯಲ್ಲಿ ದೊಡ್ಡ ಪದವಿಯಲ್ಲಿದ್ದ ಹುಡುಗನನ್ನು ಪಟ್ಟಣಶೆಟ್ಟಿಯೇ ಗೋಣಿ ಚೀಲದಲ್ಲಿ ಹಾಕಿ, ಕಟ್ಟಿಸಿ ನೀರಿನಲ್ಲಿ ಒಗೆದಿದ್ದ ಎಂಬುದು . +ನೀರಿನಲ್ಲಿ ಒಗೆದ ಕೂಡಲೇ ಒಂದು ಕೂರ್ಮವು ಅವನನ್ನು ಎತ್ತಿಕೊಂಡು, ಹಡಗು ಬಂದ ಹಾಗೆಯೇ ಅದೇ ದಿಕ್ಕಿನಲ್ಲಿ ಬಂತು. +ಹಡಗು ಬೇಲೆಗೆ ತಾಗಿತು. +ಕೂರ್ಮವೂ ಅವನನ್ನು ಎತ್ತಿ ತಂದು ಬೇಲೆಯಲ್ಲಿ ತಂದು ಹಾಕಿತು. +ಚೀಲವನ್ನು ನೋಡಿದ ಒಬ್ಬ ಮೀನುಗಾರನು ಬಂದು ಚೀಲವನ್ನು ಬಿಚ್ಚಿನೋಡಿ, ಇವನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಇಟ್ಟುಕೊಂಡಿರುವುದು ಮೂಲದಲ್ಲಿದ್ದಿರಬಹುದು. +ಪಟ್ಟಣಶೆಟ್ಟಿಯು ಪದ್ಮಾಕ್ಷಿ ಸೂಳೆಯನ್ನು ಲಗ್ನವಾದನು. +ಹುಡುಗನು ಹಸಿವಾಗಿ ಮದುವೆಯ ಊಟದ ಸಮಯದಲ್ಲಿ ಊಟ ಮಾಡಬೇಕೆಂದು ಪಂಕ್ತಿಯಲ್ಲಿ ಕೂತನು. +ಆಗ ಅನ್ನ ಬಡಿಸಿದ ಮೇಲೆ, ಪದ್ಮಾಕ್ಷಿ ಸೂಳೆಯು ತುಪ್ಪ ಬಡಿಸಲು ತುಪ್ಪದ ಪಾತ್ರೆಯನ್ನು ತಕ್ಕೊಂಡು ಬಂದಳು. +ಇವನು ಊಟಕ್ಕೆ ಕೂತಿದ್ದಲ್ಲಿಗೆ ಬಂದ ಕೂಡಲೇ ಇವನನ್ನು ನೋಡಿದ ಪದ್ಮಾಕ್ಷಿಗೆ ಮುಂದೆ ಹೋಗಿ ಬೇರೆಯವರಿಗೆ ತುಪ್ಪ ಬಡಿಸಲು ಮನಸ್ಸು ಬರಲಿಲ್ಲ. +ಅವನ ಎಲೆಯ ಅನ್ನದ ಮೇಲೆ ತುಪ್ಪ ಹಾಕಿ ಅವನ ಎಲೆಯಲ್ಲಿಯೇ ಸಂಗಡ ಉಂಡುಬಿಟ್ಟಳು. +ಶೆಟ್ಟಿಯು, ‘‘ಅವನ ಎಲೆಯಲ್ಲಿ ಯಾಕೆ ಉಂಡೆ?’’ ಅಂತ ಕೇಳಿದನು. +ಸೂಳೆಯು, ‘‘ಇವನೇ ನನ್ನ ಗಂಡ. +ಇವನನ್ನೇ ನನ್ನ ಗಂಡನನ್ನಾಗಿ ಮಾಡಿಕೊಳ್ಳಬೇಕೆಂದೇ ನನ್ನ ಇಚ್ಛೆಯಿತ್ತು. +ಇವನು ಸತ್ತುಹೋಗಲಿಲ್ಲ. +ನನ್ನ ಪಾಲಿಗೆ ಬದುಕಿ ಉಳಿದಿದ್ದಾನೆ. +ಶೆಟ್ಟಿಯು ನನ್ನ ಗಂಡನಲ್ಲ. +ಇವನೇ ನನ್ನ ಗಂಡ” ಎಂದಳು. +ಇವನನ್ನೇ ಗಂಡ ಎಂದು ಮನೆಯಲ್ಲಿಟ್ಟುಕೊಂಡು ಉಳಿದಳು. +ಪಟ್ಟಣಶೆಟ್ಟಿಯನ್ನು ಜನರೇ ಹೊರಗೆ ದೂಡಿಬಿಟ್ಟರು. +ಪಂಚಗಾವಿ ಪಟ್ಟಣದಲ್ಲಿ ಒಬ್ಬ ಸಾವುಕಾರನಿದ್ದನು. +ಅವನಿಗೆ ಭೂಮಿಕಾಣಿ ಬಹಳ ಇದ್ದವು. +ಅವನಿಗೆ ಒಬ್ಬ ಮಗ ಹುಟ್ಟಿದನು. +ಅವನಿಗೆ ತಿಮ್ಮಪ್ಪ ಎಂದು ಹೆಸರಿಟ್ಟನು. +ಐದಾರು ವರುಷಗಳ ನಂತರ ಇನ್ನೊಬ್ಬ ಮಗನೂ ಹುಟ್ಟಿದ್ದನು. +ಅವನು ಮೂಲಾ ನಕ್ಷತ್ರದಲ್ಲಿ ಹುಟ್ಟಿದನು. +ಅವನಿಗೆ ಮಲ್ಲಪ್ಪ ಎಂದು ಹೆಸರಿಟ್ಟನು. +ಆದರೆ, ಮಗ ಹುಟ್ಟಿ ವರ್ಷ ಕಳೆಯುವದರೊಳಗೆ ತಂದೆ-ತಾಯಿ ಕಾಲರಾ ರೋಗದಿಂದ ಮರಣ ಹೊಂದಿದರು. +ತಿಮ್ಮಪ್ಪನು ಬಹಳ ದುಃಖದಿಂದ, ‘ತಂದೆ-ತಾಯಿ ವೈಕುಂಠ ಸೇರಿದರು. +ಇನ್ನು ತಮ್ಮನ ಜೋಪಾನ ನನ್ನ ಪಾಲಿಗೆ ಬಂತು’ ಎಂದು ಮನೆಕೆಲಸ ಮಾಡುವದಕ್ಕೆ ಒಬ್ಬ ಹೆಣ್ಣುಮಗುವನ್ನು ನೇಮಿಸಿಕೊಂಡು, ತಾನು ತಮ್ಮನ ಅರೈಕೆಗೆ ನಿಂತನು. +ಮಗನಿಗೆ ಹಾಲು ಕುಡಿಸಿ, ಎಣ್ಣೆ ತಿಕ್ಕಿ ಮೀಯಿಸಿ, ಅವನನ್ನು ತೊಟ್ಟಿಲಿನಲ್ಲಿ ಹಾಕಿ ತೂಗುತ್ತಿದ್ದನು. +ತಮ್ಮ ದೊಡ್ಡವನಾದ ಮೇಲೆ ಅವನಿಗೆ ಎರಡು ಎಮ್ಮೆ ಕರೆದ ಹಾಲನ್ನು ಕುಡಿಸಿ, ಒಂದು ಸೇರು ಎಣ್ಣೆಯನ್ನು ಹಚ್ಚಿ ಅವನ ಮೈ ತಿಕ್ಕುತ್ತಿದ್ದನು. +ಪಂಚಾಮೃತ ಪಾನ ಮಾಡಿಸಿ ತಮ್ಮನಿಗೆ ಉಣಿಸುತ್ತಿದ್ದನು. +ಹೀಗೆಯೇ ತಮ್ಮನ ಅರೈಕೆ ಮಾಡುತ್ತಿದ್ದಾಗ ತಮ್ಮನಿಗೆ ಹದಿನಾರು ವರ್ಷ ವಯಸ್ಸಾಯಿತು. +ತಮ್ಮನಿಗೆ ಯಾವ ಕೆಲಸಕ್ಕೂ ಹಚ್ಚುತ್ತಿರಲಿಲ್ಲ. +ಯಾವ ಕೆಲಸದ ಮಾಹಿತಿಯನ್ನೂ ಮಾಡಿಕೊಡಲಿಲ್ಲ. +ಅಚೀಚೆಯ ಜನರು, “ತಿಮ್ಮಪ್ಪಾ, ನಿನಗೆ ಇಪ್ಪತ್ತೆರಡು ವರ್ಷ ವಯಸ್ಸಾಯಿತು. +ಹೀಗೇ ತಿಂದುಂಡು ತಿರುಗಿದರೆ ಏನು ಪ್ರಯೋಜನ? +ಲಗ್ನವಾಗಿ ಮನೆ ತೂಗಿಸಿಕೊಂಡು ಹೋಗುವ ಹೆಣ್ಣನ್ನು ಕಂಡು ಕೊಂಡು ಬಾ. +ತಮ್ಮನಿಗೆ ಮನೆ ಕೆಲಸ ಕಲಿಸಿ, ನೀನು ಯಜಮಾನನಾಗಿ ಮನೆಯ ವ್ಯವಹಾರದ ಮೇಲ್ವಿಚಾರಣೆ ಮಾಡುವದನ್ನು ಬಿಟ್ಟು, ತಮ್ಮನನ್ನು ಬಸವನನ್ನು ಬಿಟ್ಟ ಹಾಗೆ ಮೇಯಿಸಿ ಉಂಡಾಡಿಯಾಗಿ ತಿರುಗುವದಕ್ಕೆ ಬಿಡಬೇಡ” ಎಂದು ಬುದ್ಧಿ ಹೇಳಿದರು. +ತಿಮ್ಮಪ್ಪನು, “ತಮ್ಮನಿಗೆ ಲಗ್ನ ಮಾಡಿದರೆ ಮನೆಗೊಬ್ಬ ಹೆಣ್ಣು ಬರುತ್ತಾಳೆ. +ತಮ್ಮನ ಕಷ್ಟ-ಸುಖ ನೋಡಿಕೊಳ್ಳಲಿಕ್ಕೆ ಯಾರಾದರೂ ಬೇಕು. +ನಾನು ಮನೆಯ ವ್ಯವಹಾರ ನೋಡಿಕೊಳ್ಳಲಿಕ್ಕೆ ಸಲೀಸಾಗುತ್ತದೆ” ಎಂದು ಹೇಳಿಕೊಂಡು ಮನೆಗೆ ಬಂದನು. +“ತಮ್ಮ, ನಿನಗೆ ಪ್ರಾಯ ಬಂತು. +ನಿನಗೆ ಯೋಗ್ಯ ಹೆಣ್ಣನ್ನು ಗೊತ್ತು ಮಾಡಿ, ಲಗ್ನ ಮಾಡುತ್ತೇನೆ” ಎಂದನು. +ಮಲ್ಲಪ್ಪನು, ‘‘ಅಣ್ಣಾ. . . ನೀನೇ ಹಿರಿಯ. +ನಾನು ಕಿರಿಯ. +ನೀನು ಲಗ್ನವಾಗದೇ ಇರುವುದು ಯಾವ ಧರ್ಮ? +ನೀನು ನನ್ನನ್ನು ತಂದೆಯ ಹಾಗೆ ಜೋಪಾನ ಮಾಡಿದವನು. +ನೀನೆ ಲಗ್ನವಾಗುವದು ಯೋಗ್ಯ. +ನನಗೆ ಒಬ್ಬ ತಾಯಿ ದೊರೆಯಲಿ. +ನೀನೇ ಲಗ್ನವಾಗು” ಎಂದು ಹೇಳಿದನು. +ತಿಮ್ಮಪ್ಪನು ಬೀರನ ಹಳ್ಳಿಯ ಶ್ರೀಮಂತರ ಮನೆಯ ಹೆಣ್ಣನ್ನು ಗೊತ್ತು ಮಾಡಿ, ತಮ್ಮನನ್ನು ಕರೆದುಕೊಂಡು ಹೋಗಿ ಅವಳನ್ನು ಲಗ್ನಮಾಡಿಕೊಂಡು ಬಂದನು. +ಹೆಂಡತಿಯ ಹೆಸರು ಶ್ರೀದೇವಿ. +“ನನ್ನ ತಮ್ಮ ತಾಯಿ-ತಂದೆ ತೀರಿ ಚಿಕ್ಕಂದಿನಲ್ಲೇ ನನ್ನ ಆರೈಕೆಯಲ್ಲಿ ಬೆಳೆದವನು. +ಅವನಿಗೆ ಕಡ್ಡಿ ಕೆಲಸ ಮಾಡಿ ತಿಳಿಯದು. +ಸುಖವಾಗಿ ಬೆಳೆದ ಪಿಂಡ. +ಅವನಿಗೆ ನಾನು ತುಂಬಿದ ಚಂಬು ನೆಗಿಯಲಿಕ್ಕೂ ಕೊಡಲಿಲ್ಲ; ಹೊಲಕ್ಕೆ ಕೂಡ ಕಳಿಸಲಿಲ್ಲ. +ಕಷ್ಟವನ್ನೇ ಕಂಡು ಅರಿಯದ ಜೀವ ಅವನು. +ಅವನಿಗೆ ಎಣ್ಣಿತಿಕ್ಕಿ ಬಿಸಿನೀರ ಸ್ನಾನ ಮಾಡಿಸಬೇಕು. +ಕುಡಿಯಲಿಕ್ಕೆ ಎರಡು ತಂಬಿಗೆ ಹಾಲನ್ನು ಕೊಡಬೇಕು. +ಪಂಚಾಮೃತ ಅಡಿಗೆ ಮಾಡಿ, ಅವನಿಗೆ ಹೊಟ್ಟೆ ತುಂಬ ಊಟ ಬಡಿಸಬೇಕು. +ಅವನಿಗೆ ಮನಸ್ಸು ನೋಯುವ ಹಾಗೆ ಯಾವ ಮಾತನ್ನೂ ಆಡಬಾರದು” ಎಂದು ಹೇಳಿದನು. +ಶ್ರೀದೇವಿಯು, “ನಿನಗೆ ಅವನು ತಮ್ಮನಾದರೆ, ನನಗೆ ಮೈದುನ. . . ನಿನಗೆ ಮಗನ ಹಾಗಿದ್ದರೆ, ಅವನು ನನಗೂ ಮಗನೇ ಸರಿ. +ನಿನಗೆ ಅವನ ಕಾಳಜಿ ಬೇಡ” ಎಂದು ಹೇಳಿದಳು. +“ಲ್ಯಾಕಾಯಿತು’’ ಎಂದು ಅವನು ರೈತಾಪಿ ಕೆಲಸ ಮಾಡಲಿಕ್ಕೆ ಹೊಲಕ್ಕೆ ಹೋದನು. +ಶ್ರೀದೇವಿಯು ಅವನಿಗೆ ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಿದ್ದಳು ಅವನು ಹೇಳಿದ ಪ್ರಕಾರ ತಮ್ಮನಿಗೆ ಸೇವೆ ಮಾಡುತ್ತಿದ್ದಳು. +ತಿಮ್ಮಪ್ಪ ಹತ್ತು ಹನ್ನೆರಡು ಎಕರೆ ಹೊಲಕ್ಕೆ ಮೆಣಸಿನ ಗಿಡಗಳನ್ನು ನೆಟ್ಟನು. +ಮೆಣಸಿನ ಬೆಳೆಯೇನೋ ಬಹಳ ಚೆನ್ನಾಗಿ ಬಂತು. +ಎಳೆಂಟು ಲಾರಿಗಳು ತುಂಬುವಷ್ಟು ಮೆಣಸಾಯಿತು. +ಆದರೆ, ದರ ಮಾತ್ರ ಬಹಳ ಇಳಿದುಹೋಯಿತು. +ಸಮೀಪದ ಪೇಟೆಯಲ್ಲಿ ಮಾರಿದರಂತೆ ಬೆಳೆ ತೆಗೆಯಲಿಕ್ಕೆ ಹಾಕಿದ ಖರ್ಚಿನ ಹಣ ಹುಟ್ಟುವ ಹಾಗೇ ಕಾಣಲಿಲ್ಲ. +‘ಮುಂಬಯಿಗೆ ಕಳಿಸಿದರೆ ತುಂಬಾ ಧಾರಣಿ ಬರಬಹುದು. +ಆದರೆ, ಮೊದಲನೆಯ ಸಲ ಕಳಿಸುವದಾದ್ದರಿಂದ ತಾನೇ ಹೋಗಬೇಕು. +ಹೋದರೆ ಎಳೆಂಟು ದಿನ ತಡವಾದೀತು. +ತಮ್ಮನ ಯೋಗಕ್ಷೇಮ ನೋಡಿಕೊಳ್ಳುವಲ್ಲಿ ಶ್ರೀದೇವಿ ಹೆಚ್ಚು ಕಡಿಮೆ ಮಾಡಿದರೆ?’ ಎಂದು ಚಿಂತೆ ಮಾಡಿ, ತಮ್ಮನನ್ನು ಕರೆದು ಹೇಳಿದನು-- “ತಮ್ಮಾ, ಹೀಗೆ ನಾನು ಮೆಣಸಿನ ವ್ಯಾಪಾರಕ್ಕೆ ಮುಂಬಯಿಗೆ ಹೋಗಿ ಬರಬೇಕೆಂದು ಮಾಡಿದ್ದೇನೆ. +ನಿನ್ನನ್ನು ಬಿಟ್ಟು ಹೋಗಲಿಕ್ಕೆ ಮನಸ್ಸಾಗುವದಿಲ್ಲ. +ನಿನಗೆ ನಾನಿಲ್ಲವೆಂದು ಬೇಸರವಾಗಿ ನಿನ್ನ ಆರೋಗ್ಯ ಕೆಟ್ಟುಹೋದರೆ? +ಅಥವಾ ನಿನ್ನ ಅತ್ತಿಗೆ ನಿನ್ನ ಕಾಳಜಿ ತಕ್ಕೊಳ್ಳವಲ್ಲಿ ಅಲಕ್ಷ್ಯ ಮಾಡಿದರೆ ಎಂದೇ ಚಿಂತೆಯಾಗುತ್ತದೆ” ಎಂದನು. +“ಅಣ್ಣಾ, ಅತ್ತಿಗೆ ನನ್ನನ್ನು ತಾಯಿಯ ಹಾಗೆ ನೋಡಿಕೊಳ್ಳುತ್ತಾಳೆ. +ನೀನು ಹೋಗಿ ಬಾ. . . ಸುಮ್ಮನೆ ನಷ್ಟ ಮಾಡಿಕೊಳ್ಳಬೇಡ” ಎಂದು ಹೇಳಿದನು. +ಹೆಂಡತಿಯ ಹತ್ತರ ಇದೇ ಪ್ರಸ್ತಾಪ ಮಾಡಿದನು. +ಅವಳು, “ನೀವು ಇಲ್ಲಿ ಎಂಟು ದಿನ ಇಲ್ಲವೆಂತ ನಾನು ನಿಮ್ಮ ತಮ್ಮನ ಉಪಚಾರದಲ್ಲಿ ತೊಂದರೆ ಮಾಡುವದಿಲ್ಲ. +ಬೇಕಾದರೆ ಒಂದು ತಿಂಗಳವರೆಗೆ ಸಹ ಆ ಬದಿ ತಿರುಗಾಡಿಕೊಂಡು ಬನ್ನಿ. +ಇಲ್ಲಿಯ ಕಾಳಜಿ ನಿಮಗೆ ಬೇಡ” ಎಂದು ಹೇಳಿದಳು. +ಅವನಿಗೆ ಸಂತೋಷವಾಗಿ, ಮೆಣಸನ್ನು ಎಳೆಂಟು ಲಾರಿಗಳಲ್ಲಿ ತುಂಬಿಸಿಕೊಂಡು ತಾನೂ ಮುಂಬಯಿಗೆ ಹೋದನು. +ಅಲ್ಲಿ ದಲಾಲರಿಗೆ ಮೆಣಸಿನ ಅಂಡಿಗೆಗಳನ್ನು ವಹಿಸಿಕೊಟ್ಟನು. +ಆದರೆ, ಎಲ್ಲ ಮಾಲು ವಿಕ್ರಿಯಾಗಿ ಪೂರಾ ಹಣ ಕೈಗೆ ಸಿಗುವದಕ್ಕೆ ತಡವಾಯಿತು. +ಆದರಿಂದ ತಿಮ್ಮಪ್ಪನು ಮುಂಬಯಿಯಲ್ಲಿ ಕೆಲವು ದಿನ ಉಳಿಯಬೇಕಾಯಿತು. +ಇತ್ತ ಶ್ರೀದೇವಿಯು, “ಮಲ್ಲಪ್ಪನಿಗೆ ಸೇವೆ ಮಾಡಿ, ಮಾಡಿ ಸಾಕಾಯಿತು. +ನನ್ನ ಗಂಡ ಹೆಡ್ಡಪರದೇಶಿ. . . ತಮ್ಮನನ್ನು ದೇವರ ಹಾಗೆ ಸೇವೆ ಮಾಡಿದ್ದಲ್ಲದೆ, ನನಗೂ ಸೇವೆ ಮಾಡಲಿಕ್ಕೆ ಹಚ್ಚಿ ಅವನನ್ನು ಕೊಬ್ಬಿಸಿ ಬೆಳೆಸಿದ್ದಾನೆ. +ಅವನಿಗೆ ಈಗ ಮೈಕೈ ತಿರುಗಿಸಿ ಕೆಲಸ ಮಾಡುವ ಬುದ್ಧಿಯಿಲ್ಲ. +ಹೀಗೆ ಅವನನ್ನು ಕೂಳಿಗೆ ದಂಡ ಎಂಬಂತೆ ಬೆಳೆಸಬಾರದು” ಎಂದು ನಿಶ್ಚಯ ಮಾಡಿ, ‘ಈಗಲೇ ಭೋಳೆ ನನ್ನ ಗಂಡ ಬರುವ ಮೊದಲು ಈ ಗೂಳಿಯನ್ನು ಹೂಡಲಿಕ್ಕೆ ತಿದ್ದಬೇಕು’ ಎಂದುಕೊಂಡು- ‘‘ಮಲ್ಲಪ್ಪಾ, ಕುಂತು ಉಂಡ ಸುಖ ನಿನಗೆ ಇನ್ನು ಸಾಕು. +ನಿನ್ನ ಸೇವೆ ಮಾಡಿ. . . ಮಾಡಿ. . . ನನ್ನ ರಟ್ಟೆ ನೊಂದಿತು. +ನೀನು ಹೊಲಕ್ಕೆ ಹೋಗಿ ದುಡಿ’’ ಎಂದಳು. +“ನಾನು ಯಾವಾಗಲೂ ದುಡಿದವನಲ್ಲ. +ಅಣ್ಣನಿಗೆ ನಾನು ದುಡಿಯುವದೆಂದರೆ ಸೇರುತ್ತಿರಲಿಲ್ಲ. +ನಾನು ಹೀಗೇ ಇರಬೇಕೆಂದು ಅವನ ಇಚ್ಛೆ” ಎಂದನು. +‘‘‘ಗದ್ದೆಯ ಅಂಚಿನಲ್ಲಿ ದೊಡ್ಡ ಮಾವಿನ ಮರವಿದೆ. +ಅದನ್ನು ಕಡಿದು ಕಟ್ಟಿಗೆ ಮಾಡಿ, ರಾಸಿ ಹಾಕಲಿಕ್ಕೆ ಮಲ್ಲಪ್ಪನಿಗೆ ಹೇಳು’ ಎಂದು, ನಿನ್ನ ಅಣ್ಣನೇ ಹೇಳಿ ಹೋಗಿದ್ದಾನೆ” . +‘‘ಅಣ್ಣ ನನ್ನ ಹತ್ತರ ಹೇಳಿಲ್ಲ. +ಮೇಲಾಗಿ ಕಟ್ಟಿಗೆ ಕಡಿದು ರೂಢಿಯಿಲ್ಲ. +ಹೇಗೆ ಮರ ಕಡಿಯಲಿ?’’ ಎಂದನು. +‘‘ಕೊಡಲಿಯಿಂದ ಕಚ್ಚು ಮಾಡು. +ನೀರಿಗೆ ಬೀಳದೆ ಈಸಲಿಕ್ಕೆ ಕಲಿಯಲಿಕ್ಕೆ ಬರುವದಿಲ್ಲ’’ ಎಂದಳು, ಕೊಡಲಿಯನ್ನು ಕೊಟ್ಟಳು. +ಮಲ್ಲಪ್ಪನು ಮತ್ತೆ ಮಾತಾಡದೆ ಕೊಡಲಿಯನ್ನು ಹೆಗಲ ಮೇಲಿಟ್ಟುಕೊಂಡು ಹೊರಡುವಾಗ ಸೇರು ಮೆಣಸಿನ ಕಾಯಿ ಹಾಕಿ ಚಟ್ನಿ ಮಾಡಿ, ಗುಂಡುಕಲ್ಲಿನಷ್ಟು ದೊಡ್ಡ ಗುಂಡು ಮಾಡಿ ರಾಗಿ ರೊಟ್ಟಿಗಳ ಜತೆಗೆ ಕಟ್ಟಿಕೊಟ್ಟಳು. +ಅವನ ಕಣ್ಣಲ್ಲಿ ನೀರು ಬಂತು. +ಅಂಥ ಆಹಾರವನ್ನು ಅವನು ತಿಂದೇ ಇರಲಿಲ್ಲ. +ಅದನ್ನು ತಿಪ್ಪೆಗೊಗೆದು, ನೀರನ್ನು ಹಾಲೆಂದು ತಿಳಿದು ಕುಡಿದು ಕೊಡಲಿಯನ್ನು ತೆಗೆದುಕೊಂಡು ಹೋದನು. +‘ಅವನಿಗೆ ಮರ ಕಡಿದು ಗೊತ್ತಿಲ್ಲ. +ಮರ ಕಡಿದು ಮೈಮೇಲೆ ಹಾಕಿಕೊಂಡು ಸಾಯುತ್ತಾನೆ. +ನಾವು ಗಂಡ-ಹೆಂಡತಿ ಸುಖದಿಂದ ಉಳಿದರಾಯಿತು’ ಎಂದು ಅವಳ ಯೋಚನೆ. +ಆದರೆ, ಮರ ಕಡಿದದ್ದು ಬೇರೆ ದಿಕ್ಕಿಗೆ ಮುರಿದು ಬಿತ್ತು. +ಅವನು ಟೊಂಗೆಗಳನ್ನು ತುಂಡು ಮಾಡಿ ಬಿಟ್ಟುಬಂದನು. +“ಮರ ಕಡಿದು ಬಂದೆಯಾ?” ‘‘ಹೌದು. . . ತುಂಡು ಮಾಡಿ ಬಂದೆ”. + ಮತ್ತೆ ಎರಡು ರಾಗಿ ರೊಟ್ಟಿ, ಚಟ್ನಿ, ಚಂಬು ನೀರು ತಂದಿಟ್ಟಳು. +ಅವನು ಕೊಡದಿಂದ ನೀರಿನ್ನೆತ್ತಿಕೊಂಡು ತಣ್ಣೀರನ್ನೇ ಮೈಮೇಲೆ ಹೊಯ್ದಕೊಂಡು ಬಂದು, ರೊಟ್ಟಿ-ಚಟ್ನಿಗಳನ್ನು ತಿನ್ನಲಿಕ್ಕಾಗದೆ ಅವನ್ನೂ ತಿಪ್ಪೆಗೆ ಬಿಸಾಕಿ, ನೀರನ್ನು ಕುಡಿದು ತಂಬಿಗೆ ಖಾಲಿ ಮಾಡಿ ಮಲಗಲಿಕ್ಕೆ ಹೋದನು. +ಅವಳು, “ಟೊಂಗೆಗಳನ್ನು ತುಂಡು ಮಾಡಿದವನು ಅವನ್ನು ಲೆಕ್ಕ ಮಾಡಿ ರಾಶಿ ಹಾಕಿ ಬಂದೆಯಾ?” ಎಂದು ಕೇಳಿದಳು. +“ಇಲ್ಲ ಹೇಗೆ ರಾಶಿ ಹಾಕಬೇಕು?” +“ಅವನ್ನು ಕೋಲು ಸೌದೆ ಮಾಡಿ, ಲೆಕ್ಕ ಮಾಡಿ ಸಾಲಿನಲ್ಲಿಟ್ಟು ರಾಶಿ ಮಾಡಿಡಬೇಕು. +ನಿನ್ನ ಅಣ್ಣ ಬಂದವನು ಲೆಕ್ಕ ಮಾಡಿ, ಸರಿಯಾಗಿದೆಯೋ ನೋಡುತ್ತಾನೆ” ಎಂದಳು. +ಅವನು ಮತ್ತೆ ಕೊಡಲಿ ಹಿಡಿದು ಹೊರಟು ಕೋಲು ಸೌದೆ ಮಾಡಿ, ರಾಶಿ ಮಾಡಿಟ್ಟು ಬಂದನು. +ರಾತ್ರಿ ಮಲಗಿದಲ್ಲಿಯೇ ಶ್ರೀದೇವಿಯು, ‘ಈ ಮಲ್ಲಣ್ಣನು ಇದರಲ್ಲಿಯೂ ಸಾಯಲಿಲ್ಲ. +ಅವನನ್ನು ಹೇಗೆ ಮಾಡಿ ತೆಗೆಯಬೇಕು?’ ಎಂದು ವಿಚಾರ ಮಾಡಿ, ‘ಪೂರ್ವದಿಕ್ಕಿನ ಮೇಲ್ಬದಿಗೆ ಬನ್ನಿ ಮಾಂಕಾಳಿ ದೇವಾಲಯವಿದೆ. +ಅದರ ಆಚೆಯ ಕರಿಕಾಂಚಾಳ ಮರದ ಮೇಲೆ ಏಳು ಹೆಡೆ ಸರ್ಪವಿದೆ. +ಆ ಮರವನ್ನು ಕಡಿಯಲಿಕ್ಕೆ ಹೇಳಿದರೆ ಸರ್ಪ ಕಡಿಯುತ್ತದೆ; ಅವನು ವಿಷವೇರಿ ಸಾಯುತ್ತಾನೆ. +ಗಂಡ ಬಂದು ಕೇಳಿದರೆ, ‘ಅವನು ಹೇಳಿದ ಮಾತು ಕೇಳದೆ ಕಾಂಚಾಳ ಮರ ಕಡಿದು ಸರ್ಪಕಚ್ಚಿ ಸತ್ತು ಹೋದ’ ಎಂದು ಹೇಳಿದರಾಯಿತು’ ಎಂದು, ಮರುದಿನ ಬೆಳಿಗ್ಗೆ- ‘‘ಮಲ್ಲಣ್ಣ, ಬನ್ನಿಮಂಕಾಳಿ ದೇವಾಲಯದ ಅಚೆಗಿದ್ದ ದೊಡ್ಡ ಕರಿಕಾಂಚಾಳ ಮರ ಕಡಿ. +ನಿನ್ನ ಅಣ್ಣ ಹೇಳಿ ಹೋಗಿದ್ದಾನೆ’’ ಎಂದು ಹೇಳಿದಳು. +ಆ ದಿನವೂ ಖಾರ ರೊಟ್ಟಿ ಕೊಟ್ಟಳು. +ಅವನು ಚಂಬಿನ ನೀರು ಕುಡಿದು, ರೊಟ್ಟಿಯನ್ನು ನಾಯಿಗೆ ಕೊಟ್ಟು, ಕೊಡಲಿ ಹಿಡಿದು ಹೊರಟು ಕರಿಕಾಂಬಾಳ ಗಿಡವನ್ನು ಕಡಿಯಲು ಸುರು ಮಾಡಿದನು. +ಏಳು ಹೆಡೆ ಮಾಶೇಷನು ಇವನಿಗೆ ಏನೂ ಮಾಡದೆ ಇಳಿದುಹೋಯಿತು. +ಮರ ಕಡಿದು ರಾಶಿ ಹಾಕಿ, ಅವನು ಮನೆಗೆ ಹೋದನು. +ಮಾರನೇ ದಿನ- “ಕಾಂಚಾಳ ಮರವನ್ನು ಸಣ್ಣದಾಗಿ ಕೊಚ್ಚಿ ರಾಶಿ ಮಾಡಿ ಬಾ” ಎಂದು ಅವನನ್ನು ಕಳಿಸಿದಳು. +ಒಬ್ಬ ಸಾಧು ಅವಳ ಮನೆಗೆ ಬಂದು, “ಭಿಕ್ಷಾಂದೇಹಿ” ಎಂದು ಹೇಳಿದನು. +ಶ್ರೀದೇವಿಯು, “ಸಾಧುಗಳೇ, ನನಗೆ ಬಂದ ಕಷ್ಟ ಪರಿಹಾರ ಮಾಡಿದರೆ ನಾನು ನಿಮಗೆ ಯೋಗ್ಯ ದಕ್ಷಿಣೆ ಕೊಡುತ್ತೇನೆ” ಎಂದಳು. +ಅವನು, ‘‘ನಿನ್ನ ಕಷ್ಟ ಯಾರಿಂದ ಬಂದಿದೆ?’’ ಎಂದು ಕೇಳಿದನು. +ಅವಳು, “ನನ್ನ ಮೈದುನ ಬಹಳ ಕಷ್ಟ ಕೊಡುತ್ತಾನೆ. +ಅವನು ನಾಶವಾಗುವಂತೆ ಮಾಡುವ ಉಪಾಯವನ್ನು ತಿಳಿಸಿಕೊಡಿ” ಎಂದಳು. +‘‘ಪಾಪದ ಮಾತನ್ನು ಹೇಳಬೇಡ’’ ಎಂದು ಸಾಧು ಹೇಳಿದನು. +‘‘ದಾಂಡಿಗ ಗಂಡಸು ಹೆಂಗಸಿಗೆ ಕಷ್ಟ ಕೊಡುವದನ್ನು ನೋಡುವದು ನಿಮಗೆ ಧರ್ಮವೇ?” ಎಂದು, ಅವಳು ಮತ್ತೆ ಕೇಳಿ- ‘‘ಅವನು ನಾಶವಾಗುವಂತೆ ನೀವು ಮಾಡಿದರೆ ನಾನು ಹೊನ್ನು ಕೊಡುತ್ತೇನೆ” ಅಂದಳು. +“ಕಾರೆ ಮುಳ್ಳು ತಕ್ಕೊಂಡು ಬಾ” ಎಂದನು. +ಅವನು ಮಂತ್ರ ಮಾಡಿ, ಮಂತ್ರ ಬೂದಿಯನ್ನು ಚಿಮುಕಿಸಿ, ಮುಳ್ಳು ಅವಳ ಹತ್ತರ ಕೊಟ್ಟನು. +“ಅದನ್ನು ಅವನ ನೆತ್ತಿಯ ಮೇಲೆ ಇಟ್ಟು ಕಲ್ಲಿನಿಂದ ಹೊಡೆ. +ಅವನು ನಾಯಿಯಾಗುತ್ತಾನೆ. +ಬಡಿಗೆಯಿಂದ ಹೊಡೆಯಲಿಕ್ಕೆ ಹೋಗು ಅವನು ದೇಶಾಂತರಕ್ಕೆ ಓಡಿಹೋಗುತ್ತಾನೆ” ಎಂದು ಹೇಳಿ, ಅವನು ಅವಳು ಕೊಟ್ಟ ಹೊನ್ನನ್ನು ತೆಗೆದುಕೊಂಡು ಹೋದನು. +ಮೈದುನ ಬಂದನು. +‘‘ಕಂಚಾಳ ಮರದ ಟೊಂಗೆ ಕೊಚ್ಚಿ ರಾಶಿ ಹಾಕಿ ಬಂದೆಯಾ?’’ “ಹೌದು’’. +“ಎಣ್ಣೆ ಹಚ್ಚಿ ತಿಕ್ಕುತ್ತೇನೆ” ಎಂದು, ಅವನು ಬೇಡವೆಂದರೂ ಆ ದಿನ ಅವಳು ಅವನ ಮೈಗೆ ಎಣ್ಣೆ ಹಚ್ಚಿ ತಿಕ್ಕಿದಳು. +‘‘ಬಿಸಿನೀರು ಮೀಯಲಿಕೆ ತಯಾರಾಗಿದೆ” ಎಂದು ಹೇಳಿ, ಅವನನ್ನು ಸ್ನಾನ ಮಾಡಿಸಲಿಕ್ಕೆ ನಿಂತಳು. +ಮಲ್ಲಪ್ಪನು ಬೇಡವೆಂದರೂ ಕೇಳದೆ, ‘‘ಪಾಪ. . . ಈ ಮೂರು ದಿನ ನಿನ್ನನ್ನು ಬಹಳ ದುಡಿಸಿದೆ. +ಬಹಳ ಮೈಕೈ ನೋವಾಗಿರಬಹುದು. +ಕಟ್ಟಗಿನ ಬಿಸಿನೀರು (ತಾಪಬಿಸಿಯಾದ) ಹೊಯ್ಯುತ್ತೇನೆ’’ ಎಂದಳು. +“ಅಣ್ಣ ಹೇಳಿದ್ದು ನಿಜ. +ದುಡಿಯದೆ ಉಣ್ಣುವದು ತರವಲ್ಲ” ಎಂದನು. +‘ಆದರೂ, ಅತ್ತಿಗೆ ಮೊದಲಿನ ಹಾಗೆ ತನ್ನನ್ನು ಪ್ರೀತಿಯಿಂದ ನಡೆಸಿಕೊಳ್ಳುತ್ತಾಳೆ’ ಎಂದು ಅವನಿಗೆ ಸಂತೋಷವಾಯಿತು. +ಅವನ ಮೈತಿಕ್ಕಿದ ಸೋಗು ಮಾಡಿ, ಅವನ ತಲೆಗೆ ಕಾರೆ ಮುಳ್ಳನ್ನಿಟ್ಟು ಕಲ್ಲು ಬಡಿದು ಕೂಡ್ರಿಸಿದ ಕೂಡಲೇ ಮಲ್ಲಪ್ಪನು ನಾಯಿಯ ಆಕಾರವನ್ನು ತಾಳಿ, ‘ಕುಂಯ್. . . ’ ಅನ್ನ ಹತ್ತಿದನು. +ಅವನಿಗೆ ನಾಯಿಯ ಆಕಾರ ಬಂದರೂ, ತಾನು ಮಲ್ಲಪ್ಪನಾಗಿದ್ದುದ್ದರ ನೆನಪು ಮರೆತುಹೋಗಲಿಲ್ಲ. +ಅದರಿಂದ ಅವನ ದುಃಖ ಕಣ್ಣೀರಿನ ರೂಪವಾಗಿ ಇಳಿಯಿತು. +ಶ್ರೀದೇವಿಯು ದೊಣ್ಣೆ ತೆಗೆದುಕೊಂಡು ನಾಯಿಗೆ ಬಡಿಯಲಿಕ್ಕೆ ಬಂದಳು. +ನಾಯಿಯು ಓಡಿ ಹೋಗಿ, “ಅಣ್ಣ ದೇಶಾಂತರಕ್ಕೆ ಹೋಗಿದ್ದಾನೆ. +ನಾನೂ ಅವನು ಹೋದಲ್ಲಿ ಹೋಗಬೇಕು” ಎಂದು ಓಡಿಹೋಯಿತು. +ಅಷ್ಟರಲ್ಲಿ ಮುಂಬಯಿಯಲ್ಲಿ ಅಣ್ಣನಿಗೆ ವಿಪರೀತ ಸ್ವಪ್ನಬಿತ್ತು. +‘ತಮ್ಮನಿಗೆ ಶ್ರೀದೇವಿಯಿಂದ ಏನೋ ಕಷ್ಟವಾಗಿರಬೇಕು. +ತಮ್ಮನು ಮೀಯ ಬೇಕಾದರೆ ನಾಯಿಯ ಹಾಗೆ ಕೂಗಿದ ಸ್ವಪ್ನ ಬಿತ್ತು. +ಏನೋ ಗಂಡಾಂತರ ಬಂತು. +ಇನ್ನು ಸಿಕ್ಕಷ್ಟು ಹಣ ತಕ್ಕೊಂಡು ಊರಿಗೆ ಹೋಗಬೇಕು’ ಎಂದು ತಿಮ್ಮಪ್ಪನು ಮರುದಿನ ಸಾವುಕಾರನ ಹತ್ತಿರ ಹಣ ವಸೂಲು ಮಾಡಿಕೊಂಡು, ಉಳಿದ ಹಣವನ್ನು ಮೆಣಸಿನ ವ್ಯಾಪಾರವಾದ ಮೇಲೆ ತನಗೆ ಕಳಿಸಬೇಕೆಂದು ಹೇಳಿ ಊರಿಗೆ ಹೊರಟನು. +ಮನೆಗೆ ಬಂದ ಕೂಡಲೇ ಕಾಲು ತೊಳೆಯಲಿಕ್ಕೆ ನೀರು ತಂದ ಶ್ರೀದೇವಿಯ ಹತ್ತಿರ ಅವನು ಮೊದಲನೆ ಪ್ರಶ್ನೆಯನ್ನು ಮಾಡಿದನು-- “ತಮ್ಮ ಎಲ್ಲಿ?’’ +“ತಮ್ಮ ಇಲ್ಲ”. + “ತಮ್ಮ ಎಲ್ಲಿ ಹೋದ?” + “ಅವನಿಗೆ ಮೂರು ನಾಲ್ಕು ದಿನಗಳಲ್ಲೇ ನಿಮ್ಮ ನೆನಪು ಹೆಚ್ಚಾಗಿ ಊಟ-ತಿಂಡಿ ತಿನ್ನುವುದನ್ನು ಬಿಟ್ಟನು. +ನಾನು ಗದರಿಕೆ ಹಾಕಿದೆ. +ಅದರಿಂದ ಸಿಟ್ಟು ಬಂದು, ನಿಮ್ಮ ಹತ್ತಿರ ಹೋಗುವೆನೆಂದು ಹೇಳಿ ನಿಮ್ಮನ್ನು ಹುಡುಕುತ್ತಾ ಹೋದನು”. +“ಅಯ್ಯೋ, ನಾನು ಅವನನ್ನು ಸಾಕಿದ್ದೂ ವ್ಯರ್ಥವಾಯಿತೇ? +ತಮ್ಮ ಮಲ್ಲಣ್ಣ. . . ಎಲ್ಲಿಗೆ ಹೋದೆ? +‘ಅಣ್ಣ’ ಎಂದು ಕರೆಯುತ್ತ ನನ್ನನ್ನು ಹುಡುಕುತ್ತ ಎಲ್ಲೆಲ್ಲಿ, ಅಲೆಯುತ್ತಿದ್ದೀಯೋ? +ಎಂಟು ದಿನ ತಡೆಯುವ ತಾಳ್ಮೆ ನಿನ್ನಲ್ಲಿ ಇರಲಿಲ್ಲವೋ?” ಎನ್ನುತ್ತ, ಅವನು ದೊಡ್ಡ ದೊಡ್ಡ ಪಟ್ಟಣಗಳಲ್ಲಿ ನೋಡುತ್ತ, ಊರೂರು ತಿರುಗಲಿಕ್ಕೆ ಹೊರಟನು. +ನಾಯಿಯು ದೇಶಾಂತರ ತಿರುಗಿ, ತಿರುಗಿ ಅಣ್ಣನನ್ನು ಕಾಣದೆ ಮತ್ತೆ ಊರಿಗೆ ಬಂತು. +ತಿಮ್ಮಪ್ಪನು ಮತ್ತೊಮ್ಮೆ ಮುಂಬಯಿಯವರೆಗೂ ಹೋಗಿ ತಮ್ಮನ ಹಂಬಲದಿಂದ ಪುನಃ ಊರಿಗೆ ಬಂದನು. +ಎಲ್ಲಿ ಹೋದರೂ ಅವನಿಗೆ ತಮ್ಮನ ಹಂಬಲ ಕಾಡುತ್ತಿತ್ತು. +ಅದನ್ನು ಸ್ವಲ್ಪವಾದರೂ ಮರೆಯಬೇಕೆಂದು ಅವನು ಮತ್ತೆ ಗದ್ದೆ ಬೇಸಾಯದ ಕೆಲಸದಲ್ಲಿ ತೊಡಗಿದನು. +ಅವನು ಗದ್ದೆಯಲ್ಲಿ ನೇಗಿಲು ಕಟ್ಟಿಕೊಂಡು ಗದ್ದೆ ಊಳುತ್ತಲಿದ್ದನು. +ಊಳುವಾಗ ಕಣ್ಣೀರು ಸುರಿಸುತ್ತ ನಾಯಿಯು ನೇಗಿಲಿಗೆ ಅಡ್ಡ ಬಂದು, ಊಳಲಿಕ್ಕೆ ಅಡ್ಡಿ ಮಾಡುವಂತೆ ನಿಂತಿತು. +“ಹಾಳು ನಾಯಿ ಇದು, ಎಂಥ ಉಪದ್ರವ ಕೊಡುತ್ತದೆ’’ ನೇಗಿಲ ಮುಂದೆ ಅಡ್ಡಗಟ್ಟಿ ನಿಲ್ಲುವ ನಾಯಿಯನ್ನು ಎಂದೂ ಕಂಡಿರಲಿಲ್ಲ. +‘‘ತೊಲಗಾಚೆ. . . ’’ ಎಂದು ಗದರಿಸಿ ಅವನು ಎತ್ತುಗಳಿಗೆ ಹೊಡೆಯುವ ಕೋಲಿನಿಂದ ಅದಕ್ಕೆ ಹೊಡೆದನು. +ಅದು ಬಗುಳಿದ್ದಲ್ಲದೆ ಅವನ ಕಾಲನ್ನು ನೆಕ್ಕುತ್ತ ನಿಂತಿತು. +ಜೋಲು ನಾಯಿ. . . ಸುಂದರವಾದ ನಾಯಿ. +ಆದರೆ, ಅದು ಅವನ ಕೆಲಸದಲ್ಲಿ ಉಪದ್ರವ ಕೊಡುತ್ತಿತ್ತು. +ಮತ್ತೆ ಹೊಡೆಯಲಿಕ್ಕೆ ಕೈ ಎತ್ತಿದಾಗ, “ಅಣ್ಣನಿಗೆ ನಾನು ನಾಯಿಯ ರೂಪದಲ್ಲಿರುವುದು ಗೊತ್ತಿಲ್ಲ. +ಅಣ್ಣನ ಋಣ ನನಗೆ ಇನ್ನು ತೀರಿತು” ಎಂದು ಬೊಗಳುತ್ತಾ ದೇಶಾಂತರ ಹೋಗಿ, ಹನ್ನೆರಡು ಗಾವುದದ ಅಚೆ ಇದ್ದ ಸುಂದರ ಶೇಖರ ಪಟ್ಟಣಕ್ಕೆ ಹೋಯಿತು. +ಅಲ್ಲಿಯ ಸುಂದರ ಶೇಖರ ರಾಜನ ಅರಮನೆಯಲ್ಲಿ ರಾತ್ರಿ ಕನ್ನ ಹಾಕಿ, ಇಬ್ಬರು ಕಳ್ಳರು ರತ್ನಗಳ ಕೊಠಡಿಯನ್ನು ಹೊಕ್ಕು, ಮುತ್ತು-ರತ್ನಗಳನ್ನು ಕದ್ದುಕೊಂಡು ಹೋಗಿ ಅಡವಿಯಲ್ಲಿ ಒಂದು ಮರದ ಬಳಿ ಹುಗಿದರು. +ಜೋಲು ನಾಯಿಯು ಕಳ್ಳರು ರಾತ್ರಿಯಲ್ಲಿ ಕದ್ದುಕೊಂಡು ಹೋಗುವುದನ್ನು ನೋಡಿ, ಅವರ ಹಿಂದೆಯೇ ಹೋಗಿ ಅವರು ದ್ರವ್ಯ ಹುಗಿದಿದ್ದ ಜಾಗವನ್ನು ನೋಡಿಕೊಂಡು ಬಂದಿತು. +ಮರುದಿನ ರಾಜನ ಅರಮನೆಗೆ ಹೋಯಿತು. +ರಾಜನು ಅದನ್ನು ನೋಡಿ, “ಎಷ್ಟು ಸುಂದರ ನಾಯಿ” ಎಂದು ಆನಂದ ಪಟ್ಟು, ಅದನ್ನು ಹಿಡಿದು ಕಟ್ಟಿ ಹಾಕಿಸಿದ. +ಅದಕ್ಕೆ ಊಟ ಹಾಲು, ಕೋಳಿತತ್ತಿ ಮುಂತಾದ ಆಹಾರ ಕೊಡಿಸಿ ಅದನ್ನು ಮೀಯಿಸಿದನು. +ರಾಜರ ಪೇದೆಗಳು ಕಳ್ಳರನ್ನು ಹುಡುಕಲಾರದೆ ಸೋತು ಹೋದರು. +ರತ್ನದ ಪೆಟ್ಟಿಗೆಯೇ ಕದ್ದುಹೋದದ್ದರಿಂದ ರಾಜರು ಆದಷ್ಟು ಬೇಗ ಕಳ್ಳರ ತಲಾಸು ಮಾಡಿಸಬೇಕೆಂದು ನಿಶ್ಚಯ ಮಾಡಿ, ಕಳ್ಳರನ್ನು ಹಿಡಿದುಕೊಟ್ಟವರಿಗೆ ತನ್ನ ಮಗಳು ಸುಂದರಾವತಿಯನ್ನು ಮದುವೆ ಮಾಡಿಕೊಡುವೆನೆಂದು ಡಂಗುರ ಹೊಡೆಸಿದನು. +ರಾತ್ರಿ ಕಳ್ಳರ ಬಾಧೆಯೆಂದು ರಾಜನು ಜೋಲು ನಾಯಿಯ ಕಟ್ಟು ಕಳಚಿಸಿ ಅದನ್ನು ಬಿಟ್ಟು ಹಾಕಿಸಿದನು. +ಅರಮನೆಯ ಬಾಗಲ ಕಾಯುವ ಪೇದೆಗಳ ಹತ್ತಿರ ಹೋಗಿ, ಅವರ ಧೋತರ ತುದಿಯನ್ನು ಹಿಡಿದು ಜಗ್ಗಹತ್ತಿತು. +ಅವರು ಅದನ್ನು ರಾಜನ ಪ್ರೀತಿಪಾತ್ರ ನಾಯಿಯಂದು ಹೊಡೆಯಲಿಕ್ಕೆ ಹೆದರಿ, ರಾಜನಿಗೆ ಈ ವರ್ತಮಾನವನ್ನು ತಿಳಿಸಿದರು. +ರಾಜನು ಬಂದನು. +ಅದು ಮತ್ತೆ ಅವನ ಪೀತಾಂಬರವನ್ನು ಹಿಡಿದುಕೊಂಡಿತು. +ಆಗ ರಾಜನು, ‘ಇದು ಏನೋ ಕಳ್ಳರ ತನಿಖೆ ನಡೆಸಿದ ಹಾಗೆ ಕಾಣುತ್ತದೆ. +ಅದರ ಹಿಂದೆಯೇ ಹೋಗೋಣ’ ಎಂದು ಪೇದೆಗಳನ್ನು ಕರೆದುಕೊಂಡು ಹೊರಟನು. +ಅದು ಸೀದಾ ಅಡವಿಯ ದಾರಿಯನ್ನು ಹಿಡಿಯಿತು. +ಆಗ ಕಳ್ಳರಿಬ್ಬರೂ ತಮ್ಮ ಕೊಳ್ಳೆಯನ್ನು ಪಾಲು ಮಾಡಿಕೊಳ್ಳುವುದರಲ್ಲಿ ತೊಡಗಿದ್ದರು. +ಪೇದೆಗಳು ಅವರ ಸುತ್ತು ತಿರುಗಿ, ಸುತ್ತು ಹಾಕಿ ನಿಂತರು. +ಕಳ್ಳರು ಏನಾಯಿತೆಂದು ತಿಳಿದು ಎದ್ದು ನಿಲ್ಲುವುದರೊಳಗೆ ಪೇದೆಗಳು ಅವರನ್ನು ಹಿಡಿದುಬಿಟ್ಟಿದ್ದರು. +ಹೀಗಾಗಿ ಕದ್ದುಹೋದ ಎಲ್ಲ ರತ್ನಗಳೂ ದೊರತವು. +ರಾಜನು ನಾಯಿ ಕಳ್ಳರನ್ನು ಹಿಡಿದುಕೊಟ್ಟಿತು. +‘ನನ್ನ ವಚನದ ಪ್ರಕಾರ- ನನ್ನ ಮಗಳನ್ನು ನಾಯಿಗೆ ಲಗ್ನ ಮಾಡಿ ಕೊಡಬೇಕು ಏನು ಮಾಡಲಿ?’ ಎಂದು ವಿಚಾರ ಮಾಡಿ, ಸುಂದರಾವತಿಯ ಅರಮನೆಗೆ ಬಂದು- “ಮಗಳೇ. . . ನಾನು ಈಗ ಧರ್ಮಸಂಕಟದಲ್ಲಿ ಸಿಕ್ಕುಬಿದ್ದೆ. +ಜೋಲು ನಾಯಿ ಕಳ್ಳರನ್ನು ಹಿಡಿಯಿತು. +ಮಾತಿನ ಪ್ರಕಾರ, ನಿನ್ನನ್ನು ನಾನು ಅದಕ್ಕೆ ಮದುವೆ ಮಾಡಿಕೊಡಬೇಕು. +ನನ್ನ ಮಾತನ್ನು ಸುಳ್ಳು ಮಾಡಬಾರದೆಂದಿದ್ದರೆ ನೀನು ಅದನ್ನು ಮದುವೆಯಾಗಲಿಕ್ಕೆ ತಯಾರಾಗಬೇಕು” ಎಂದು ಹೇಳಿದನು. +ಸುಂದರಾವತಿ, “ಅಪ್ಪಾ, ನಿನ್ನ ಮಾತನ್ನು ಸತ್ಯ ಮಾಡದಿದ್ದರೆ ನಾನು ನಿನ್ನ ಮಗಳಾದದ್ದು ನಿರರ್ಥಕವಾಗುತ್ತದೆ. +ನನ್ನ ಪಾಲಿಗೆ ಬಂದದ್ದು ಪಂಚಾಮೃತ ಎಂದು ನಾನು ನಿನ್ನ ವಚನ ನಡೆಸುವುದಕ್ಕೆ ಒಪ್ಪಿಗೆ ಕೊಡುತ್ತೇನೆ” ಎಂದಳು. +ರಾಜನು ಆಕಾಶಕ್ಕೆ ಚಪ್ಪರ ಕಟ್ಟಿಸಿ, ಪೇಟೆ-ಪಟ್ಟಣ ಗುಡಿ ಕಟ್ಟಿಸಿ ಕೇಳುವ ಊರಿಗೆ ಡಂಗುರ, ಹಾಗೇ ದೂರದ ಊರುಗಳಿಗೆ ಓಲೆ ಬರೆದು, ವಾಲಗದ ಮೇಲೆ ಮಗಳನ್ನು ನಾಯಿಗೆ ಮದುವೆ ಮಾಡಿಕೊಟ್ಟನು. +‘ರಾಜನ ಮಗಳ ಮದುವೆ ನಾಯಿಯೊಡನೆ ಆಗುತ್ತದೆ. . . ಜಗತ್ತಿನ ಆಶ್ಚರ್ಯ ಸಂಗತಿ!’ ಎಂದು ಸಾವಿರಾರು ಜನರು ದೂರ ದೂರದಿಂದ ಮದುವೆಯನ್ನು ನೋಡಲಿಕ್ಕೆ ಬಂದಿದ್ದರು. +ಸುಂದರಾವತಿ ತನ್ನ ಹಿಂದಿನ ಜನ್ಮದ ಋಣಾನುಬಂಧದ ಸಂಬಂಧವೆಂಬಂತೆ ನಾಯಿಯನ್ನು ಮೀಯಿಸುವಾಗ ಅದರ ಮೈಯುಜ್ಜಿ ತೊಳೆಸ ಹತ್ತಿದಳು. +ನೆತ್ತಿಯ ಮೇಲೆ ಕೈಯಾಡಿದಾಗ ನಾಯಿಯ ನೆತ್ತಿಯಲ್ಲಿ ದೊಡ್ಡ ಬಾವಿನ ಹಾಗೆ ಕಂಡಿತು. +ಆ ಉಬ್ಬಿನ ಮೇಲೆ ಕೈಯಿಂದ ಸೂಕ್ಮವಾಗಿ ಕೂದಲನ್ನು ಬಿಡಿಸಿ ನೋಡಿ ಮುಳ್ಳನ್ನು ಕಂಡುಹಿಡಿದಳು. +ಆ ಮುಳ್ಳನ್ನು ಕಿತ್ತ ಕೂಡಲೆ ನಾಯಿಯ ಬದಲಾಗಿ, ಸುಂದರನಾದ ಮನುಷ್ಯನು ಅವಳ ಮುಂದೆ ಕಾಣಸಿಕೊಂಡನು. +ಸುಂದರಾವತಿ ತನ್ನ ಗಂಡ ಮಾಟದ ಕೈಯಲ್ಲಿ ಸಿಕ್ಕು ನಾಯಿಯಾಗಿದ್ದವನು. +ಈಗ ಮನುಷ್ಯನಾದನೆಂದು ತಿಳಿದುಕೊಂಡಳು. +‘‘ಇದೇನು ನಾಯಿಯ ರೂಪದಲ್ಲಿದ್ದೀರಿ? +ಕಳ್ಳರನ್ನು ಹಿಡಿಯುವುದಕ್ಕಾಗಿಯೇ ನಾಯಿಯ ರೂಪವನ್ನು ಧಾರಣ ಮಾಡಿದ್ದೀರಾ? +ದೇವರು ನನ್ನ ಕೈಗೆ ಸಿಕ್ಕ ಭಾಗ್ಯ ಕೈತಪ್ಪದ ಹಾಗೆ ನಾಯಿಯ ರೂಪದಲ್ಲಿ ನೀವು ಇದ್ದರೂ, ನಿಮ್ಮನ್ನು ಮದುವೆಯಾಗಿ ಅಪ್ಪನ ಮಾತು ಮುರಿಯಬಾರದೆಂದು ಬುದ್ಧಿ ಕೊಟ್ಟನು. +ನೀವು ನಾಯಿಯಾದದ್ದು ಹೇಗೆ?’’ ರಾಜಕುಮಾರನು, “ನಿನ್ನಿಂದಾಗಿ ನನಗೆ ಹೊಸ ಜನ್ಮ ಬಂದ ಹಾಗಾಯಿತು” ಎಂದು ಹೇಳಿ, ತನ್ನ ಅತ್ತಿಗೆ ಮಾಡಿದ ದುಷ್ಟತಂತ್ರಗಳನ್ನೆಲ್ಲ ಒಂದೊಂದಾಗಿ ಹೇಳಿದನು. +ಸುಂದರಾವತಿಯು ಮಲ್ಲಪ್ಪನನ್ನು ತಬ್ಬಿಕೊಂಡು ಆನಂದದ ಕಣ್ಣೀರು ಸುರಿಸಿದಳು. +“ಆದರೆ, ನಾನು ನಿನ್ನನ್ನು ಹೀಗೆಯೇ ಕರೆದುಕೊಂಡು ಹೋಗಿ ನನ್ನ ತಂದೆಗೆ ತೋರಿಸಿದರೆ ಅವರು ಇದನ್ನು ನಂಬಲಿಕ್ಕಿಲ್ಲ. +ನಾನು ನಾಯಿಯನ್ನು ಹೊಡೆದುಕೊಂಡು ಬೇರೆ ಗಂಡನನ್ನು ಮಾಡಿಕೊಂಡೆನೆಂದು ತಿಳಿಯುತ್ತಾರೆ. +ಅದರಿಂದ, ನಿನ್ನನ್ನು ನಾಯಿಯ ರೂಪದಲ್ಲಿಯೇ ಕರೆದುಕೊಂಡು ಹೋಗುತ್ತೇನೆ. +ಕ್ಷಮಿಸಬೇಕು” ಎಂದು ಹೇಳಿ ಅವನ ತಲೆಗೆ ಮತ್ತೆ ಮುಳ್ಳು ಚುಚ್ಚಿ ತಂದೆಯ ಹತ್ತರ ತೆಗದುಕೊಂಡು ಹೋದಳು. +“ಅಪ್ಪಾ, ನನ್ನ ಪತಿ ಕಾಣಲಿಕ್ಕೆ ನಾಯಿಯ ರೂಪಧಾರಣ ಮಾಡಿದ್ದರೂ ನಾಯಿಯಲ್ಲ, ದಿವ್ಯಪುರುಷ. + ನಿನ್ನ ಪ್ರಜೆಗಳ ಸಮ್ಮುಖದಲ್ಲಿಯೇ ಇವನ ರೂಪ ಬದಲಾಗುವದನ್ನು ತೋರಿಸುತ್ತೇನೆ. +ಪ್ರಜೆಗಳನ್ನು ಕೂಡಿಸಿ ಸಭೆ ಮಾಡು” ಎಂದು ಹೇಳಿದಳು. +ರಾಜನು ಸಭೆ ಕೂಡಿಸಿದನು. +ಸಭೆಯಲ್ಲಿ ಸುಂದರಾವತಿಯು ಜೋಲು ನಾಯಿಯ ತಲೆಯಿಂದ ಮುಳ್ಳು ತೆಗೆದಾಗ ಅವನು ಸುಂದರಪುರುಷನಾದನು. +ಅದನ್ನು ನೋಡಿ ಪ್ರಜೆಗಳಿಗೆಲ್ಲ ಆಶ್ಚರ್ಯವಾಯಿತು. +ರಾಜನು ಕೇಳಿಕೊಂಡ ಮೇರೆಗೆ ಮಲ್ಲಪ್ಪನು ತನ್ನ ವೃತ್ತಾಂತವನ್ನು ತಿಳಿಸಿದನು. +ಜನರು ಲೋಕದಲ್ಲಿ ಸ್ವಾರ್ಥಕ್ಕಾಗಿ ಏನೇನೆಲ್ಲ ಪಾಪ ಮಾಡುವರೆಂದು ತಿಳಿದು ಆಶ್ಚರ್ಯಪಟ್ಟರು. +ರಾಜನು ಆಕಾಶಕ್ಕೆ ಚಪ್ಪರ ಕಟ್ಟಿ, ಭೂದೇವಿಗೆ ಶೆಳವು ಕೊಟ್ಟು, ಎಲ್ಲ ಜನರಿಗೆ ಅಮಂತ್ರಣ ಕೊಟ್ಟು, ತನ್ನ ಮಗಳ ಮದುವೆಯನ್ನು ಮತ್ತೆ ರಾಜಕುಮಾರನೊಡನೆ ನೆರವೇರಿಸಿದನು. +ಆ ದಿವಸ ಅವನ ಅಣ್ಣನು ಕಟ್ಟಿಗೆ ಹೊರೆಯನ್ನು ರಾಜನ ಮನೆಗೆ ತಂದು ಹಾಕಿ, ರಾಜನಿಂದ ನಾಲ್ಕಾಣಿ ತಕ್ಕೊಳ್ಳಬೇಕೆಂದು ಬಂದನು. +ಅಣ್ಣ-ಅತ್ತಿಗೆ ಭೂಮಿಯ ಬೆಳೆ ಹಾಳಾಗಿ, ಊಟಕ್ಕೆ ಗತಿಯಿಲ್ಲದೆ ಭೂಮಿಯನ್ನು ಸಾವುಕಾರರಿಗೆ ಕೊಟ್ಟು ನಿರ್ಗತಿಕರಾಗಿದ್ದರು. +ಅಣ್ಣನು ಕಟ್ಟಿಗೆ ಹೊರೆ ಹೊತ್ತು ತಂದು ರಾಜನ ಮನೆಗೆ ಹಾಕಿ ನಾಲ್ಕಾಣಿ ತಂದು ಉಪ ಜೀವನ ಮಾಡುತ್ತಿದ್ದನು. +ಮದುವೆ ಮಂಟಪದಲ್ಲಿ ತಮ್ಮನನ್ನು ನೋಡಿ ಅವನಿಗೆ ಅತ್ಯಂತ ಆನಂದವಾಗಿ, ಮಂಟಪದಲ್ಲಿದ್ದ ತಮ್ಮನ ಕಾಲು ಹಿಡಿದುಕೊಂಡು ಅತ್ತನು. + “ಅಣ್ಣಾ. . . ನಿನ್ನ ಹೆಂಡತಿ ನನ್ನನ್ನು ಹಾಳು ಮಾಡಲಿಕ್ಕೆ ಅನೇಕ ತಂತ್ರ ಮಾಡಿ, ಸಾಧುವಿನ ಸಲಹೆ ಕೇಳಿ ನನ್ನನ್ನು ನಾಯಿಯನ್ನಾಗಿ ಮಾಡಿದ್ದಳು. +ನನ್ನ ಪುಣ್ಯದಿಂದ ನಾನು ಹೀಗೆ ಮನುಷ್ಯನಾಗಿ ಭಾಗ್ಯವಂತನಾದೆ” ಎಂದು ತನ್ನ ಕಥೆ ಹೇಳಿದನು. +“ಅಣ್ಣ, ನಿನಗೆ ಕಟ್ಟಿಗೆ ಹೊರೆ ಹೊರುವ ಅವಸ್ಥೆ ಹೇಗೆ ಬಂತು? +ಅತ್ತಿಗೆ ನನ್ನ ಸುದ್ದಿಯನ್ನಾದರೂ ತೆಗೆಯುತ್ತಾಳೆಯೋ?’’ ಹೀಗೆಲ್ಲ ಕೇಳಿದನು. +ಅಣ್ಣನು ಕಣ್ಣೀರು ಬಿಟ್ಟು, “ನಾನು ಅವಳ ಪಾಪದ ಫಲವಾಗಿ ಭೂಮಿ-ಮನೆ ಮಾರಿ, ಊರು ಬಿಟ್ಟು ಬಂದು ಈ ಊರಿನಲ್ಲಿ ಈ ರೀತಿ ಕಷ್ಟಸೋಸುತ್ತಿದ್ದೇನೆ” ಎಂದು ಹೇಳಿ, “ಹೆಂಡತಿಯ ನಂಬಿಕೆ ನನಗೆ ಇನ್ನು ಹೇಗೆ ಉಳಿದೀತು?” ಎಂದು ದುಃಖ ಮಾಡಿದನು. +ಅಣ್ಣನಿಗೆ ಒಳ್ಳೆ ಗೌರವದಿಂದ ರಾಜನು ಸತ್ಕಾರ ಮಾಡಿದನು. +ಮರುದಿನ ಅಣ್ಣ-ತಮ್ಮ ಇಬ್ಬರೂ ಅಣ್ಣನ ಮನೆಗೆ ಹೋದರು. +ಅಣ್ಣನು ತನ್ನ ಹೆಂಡತಿಯನ್ನು ಸುಣ್ಣದ ನೀರಿನಲ್ಲಿ ಅದ್ದಿ ಉರುಲು ಹಾಕಿ ಕೊಲ್ಲಬೇಕೆಂದು ರಾಜನ ಅಪ್ಪಣೆಯನ್ನು ತಂದು, ಅದರಂತೆ ರಾಜಸೇವಕರು ಕೊಲೆಗಡುಕರ ಸಹಾಯದಿಂದ ಅವಳ ಕುತ್ತಿಗೆಗೆ ಜೋಡಿನ ಸರ ಹಾಕಿ, ಅವಳನ್ನು ಕತ್ತೆಯ ಮೇಲೆ ಮೆರವಣೆಗೆ ಮಾಡಿಸಿ, ಸುಣ್ಣ ನೀರಲ್ಲಿ ಉರುಲು ಹಾಕಿಸಿ ಕೊಲ್ಲಿಸಿದನು. +ತಮ್ಮನು ಅಣ್ಣನಿಗೆ ಬೇರೆ ಮದುವೆ ಮಾಡಿಸಿದನು. +ಒಂದು ಊರಿನಲ್ಲಿ ಒಬ್ಬ ಭಟ್ಟನೂ, ಅವನ ಹೆಂಡತಿಯೂ ಇದ್ದರು. +ಅವರಿಗೆ ಒಬ್ಬ ಮಗನಿದ್ದನು. +ಮಗನಿಗೆ ಮಂತ್ರ ಬರುತ್ತಿರಲಿಲ್ಲ. +ಭಟ್ಟರ ಉದ್ಯೋಗಕ್ಕೆ ಮಂತ್ರ ಬೇಕು. +‘‘ಮಗನೇ. . . ನೀನು ಎಲ್ಲಿಗಾದರೂ ಹೋಗಿ ಮೂರು ಮಂತ್ರ ಕಲಿತುಕೊಂಡು ಬಾ. +ಅದರಿಂದ ನೀನು ಹಣ ಸಂಪಾದಿಸಬಹುದು’’ ಅಂದರು ತಾಯಿ-ತಂದೆ. +“ಅಪ್ಪಾ, ನಾನು ಮಂತ್ರ ಕಲಿಯಲಿಕ್ಕೆ ಹೋಗುತ್ತೇನೆ. +ನನಗೆ ಹಾದಿಯ ಖರ್ಚಿಗೆ ಏನು ಕೊಡುತ್ತೀರಿ?” ಅಂತ ಕೇಳಿದನು. +“ನಾಲ್ಕು ರೊಟ್ಟಿಗಳನ್ನು ಬುತ್ತಿ ಕಟ್ಟಿ ಕೊಡುತ್ತೇನೆ. +ನಾಲ್ಕು ಬೆಣ್ಣೆ ಗುಂಡುಗಳನ್ನು ಬುತ್ತಿಯಲ್ಲಿ ಸೇರಿಸಿ ಕಟ್ಟುತ್ತೇನೆ” ಅಂತ ತಾಯಿ ಹೇಳಿದಳು. +ಹುಡುಗನು ರೊಟ್ಟಿ ಬೆಣ್ಣೆ ಬುತ್ತಿ ಕಟ್ಟಿಕೊಂಡು ಹಾದಿ ಹಿಡಿದನು. +ದಾರಿಯಲ್ಲಿ ಒಂದು ಜಟ್ಟಿಗ ದೇವರ ಕಂಬವಿತ್ತು. +“ಏ ಹುಡುಗಾ, ಎಲ್ಲಿಗೆ ಹೊರಟೆ?” ಅಂತ ಜಟ್ಟಿಗ ಕೇಳಿತು. +“ಜಟ್ಟಿಗ ದೇವರೇ. . . ಜಟ್ಟಿಗ ದೇವರೇ. . . ನಾನು ಮಂತ್ರ ಕಲಿತುಕೊಂಡು ಬರಲಿಕ್ಕೆ ಹೋಗುವೆ” ಅಂದನು ಹುಡುಗ. +“ನಾನು ನಿನಗೆ ಮಂತ್ರ ಹೇಳಿಕೊಡುತ್ತೇನೆ. +ನನಗೆ ನೀನು ಏನು ಕೊಡುವೆ” ಎಂದು ಜಟ್ಟಿಗ ಕೇಳಿತು. +“ನಾನು ನಿನಗೆ ಒಂದು ರೊಟ್ಟಿಯನ್ನು, ಒಂದು ಬೆಣ್ಣೆ ಗುಂಡಿನ ಸಮೇತ ಕೊಡುತ್ತೇನೆ” ಎಂದನು ಹುಡುಗ. +“ಜಟ್ಟಿಗ ಕಂಬ ನಿಂತ ಹಾಗೇ ನಿಂತ” ಅಂತ ಹೇಳು ಅಂದಿತು. +ಹುಡುಗನು ಹಾಗೆಯೇ ಹೇಳಿದನು. +ತನ್ನ ಮಾತಿನ ಪ್ರಕಾರ ರೊಟ್ಟಿ, ಬೆಣ್ಣೆ ಗುಂಡು ಕೊಟ್ಟು ಮುಂದೆ ಹೋದನು. +ಮುಂದೆ ಒಂದು ಕೊಕ್ಕರೆ ಕೆರೆದಂಡೆಯ ಮೇಲೆ “ಕೊಕ್ ಕೊಕ್. . . ” ಎಂದು ಕೂಗುತ್ತ ಹಾರುತ್ತ ಬಂದು ದಂಡೆಯ ಮೇಲೆ ಕೂತಿತ್ತು. +“ಹುಡುಗಾ, ನೀನು ಎಲ್ಲಿಗೆ ಹೊರಟೆ?” ಅಂತ ಕೇಳಿತು. +“ನಾನು ಮಂತ್ರ ಕಲಿತು ಬರಲಿಕ್ಕೆ ಹೊರಟೆ”. +“ನಾನು ಒಂದು ಮಂತ್ರ ಹೇಳಿಕೊಡುತ್ತೇನೆ. +ನನಗೆ ಏನು ಕೊಡುವೆ?’’ +“ನಿನಗೆ ಒಂದು ಬೆಣ್ಣೆ ಗುಂಡು ಸಮೇತ ರೊಟ್ಟಿ ಕೊಡುವೆ” ಎಂದನು ಹುಡುಗ. +‘‘ಕೊಕ್ಕರೆ ಹಕ್ಕಿ ಕೂತಲ್ಲೇ ಕೂತ ಅಂತ ಹೇಳು’’ ಅಂದಿತು. +ಹಾಗೆಯೇ ಹೇಳಿದನು. +ಅದಕ್ಕೆ ರೊಟ್ಟಿ, ಬೆಣ್ಣೆ ಗುಂಡು ಕೊಟ್ಟು ಮುಂದೆ ಹೋದನು. +ಅಲ್ಲಿ ಒಂದು ಹೆಬ್ಬಾವು ಮಲಗಿಕೊಂಡಿತ್ತು. +“ಹುಡುಗಾ. . . ಹುಡುಗಾ. . . ನೀನು ಎಲ್ಲಿಗೆ ಹೋಗುವೆ?’’ ಅಂತ ಕೇಳಿತು. +‘‘ನಾನು ಮಂತ್ರ ಕಲಿತು ಬರಲು ಹೊರಟಿರುವೆ’’ ಅಂದನು. +“ನಾನೊಂದು ಮಂತ್ರ ಹೇಳಿಕೊಟ್ಟರೆ ನೀನು ನನಗೆ ಏನು ಕೊಡುವೆ?” ಅಂತ ಕೇಳಿತು ಹೆಬ್ಬಾವು. +“ಒಂದು ರೊಟ್ಟಿಯನ್ನೂ, ಒಂದು ಬೆಣ್ಣೆ ಗುಂಡನ್ನೂ ಕೊಡುತ್ತೇನೆ” ಹುಡುಗ ಹೇಳಿದನು. +“‘ಹೆಬ್ಬಾವು ಮಲಗಿದ ಹಾಗೆಯೇ ಮಲಗಿದೆ’ ಎಂದು ಹೇಳು” ಅಂದಿತು. +ಅವನು ಹಾಗೆಯೇ ಹೇಳಿಕೊಂಡು ಆ ಮಾತನ್ನು ಕಲಿತು, ಅದಕ್ಕೆ ರೊಟ್ಟಿ, ಬೆಣ್ಣೆ ಕೊಟ್ಟವನು ಮತ್ತೂ ಮುಂದೆ ಹೊರಟನು. +ಮುಂದೊಂದು ಕುದುರೆ ಸಿಕ್ಕಿತು. + “ಹುಡುಗಾ. . . ಹುಡುಗಾ. . . ಎಲ್ಲಿಗೆ ಹೊರಟಿರುವೆ?” ಎಂದು ಕೇಳಿತು. +‘‘ಮಂತ್ರ ಕಲಿತು ಬರಲು ಹೋಗುತ್ತೇನೆ’’ ಎಂದನು. +‘‘ನಾನು ನಿನಗೆ ಒಂದು ಮಂತ್ರ ಹೇಳಿಕೊಡುತ್ತೇನೆ. +ನೀನು ನನಗೆ ಏನು ಕೊಡುವೆ?” ಅಂತ ಕೇಳಿತು ಕುದುರೆ. +“ರೊಟ್ಟಿ, ಬೆಣ್ಣೆ ಗುಂಡು ಕೊಡುತ್ತೇನೆ” ಹುಡುಗ ಹೇಳಿದನು. +‘‘ಕುದುರೆ ಹುಲ್ಲ ಕರಡ ಕಚ್ಚಿಕೊಂಡು ಓಡಿ ಹೋದ ಹಾಗೆಯೇ ಓಡಿದ-- ಎನ್ನುವುದನ್ನು ಕಲಿತುಕೋ” ಅಂದಿತು ಕುದುರೆ. +ಹುಡುಗ ಹಾಗೆಯೇ ಹೇಳಿ ಅದನ್ನು ಕಲಿತುಕೊಂಡನು. +ಅದಕ್ಕೆ ಬೆಣ್ಣೆ ಗುಂಡು, ರೊಟ್ಟಿ ಕೊಟ್ಟು ಮುಂದೆ ಹೋದನು. +ತಿರುಗಿ ಮನೆಗೆ ಬಂದನು. +“ಅವ್ವಾ. . . ನಾಲ್ಕು ಮಂತ್ರಗಳನ್ನು ಕಲಿತು ಬಂದೆ” ಅಂತ ಹೇಳಿದನು. +ತಾಯಿ, ‘ಅದೇನು ಮಂತ್ರ ಕಲಿತು ಬಂದೆ?ಹೇಳು’ ಅಂತ ಹೇಳಿದಳು. +ಅಡಿಗೆ ಕೋಣೆಯ ಒಲೆಯ ಮುಂದೆ? ತಾಯಿಯಿದ್ದಳು. + ಇವನೂ ಅಲ್ಲಿಗೆ ಹೋಗಿ ಕೂತು ಒಂದೊಂದಾಗಿ ಮಂತ್ರ ಹೇಳಿದನು. +ಆ ದಿನ ರಾತ್ರಿ ಅವರ ಮನೆಗೆ ಕಳುವುದಕ್ಕೆ ಕಳ್ಳರು ಬಂದಿದ್ದರು. +ಹಿತ್ತಲ ಕಡೆಗಿನ ಗೋಡೆಯ ಹತ್ತರ ನಿಂತಿದ್ದರು. +“ಜಟಗನ ಕಂಬ ನಿಂತ ಹಾಗೆಯೇ ನಿಂತ” ಅಂತ ಮೊದಲನೆಯ ಮಂತ್ರ ಹೇಳಿದನು. +ಕಳ್ಳರು ಅಲ್ಲೇ ಕೂತುಕೊಂಡರು. +ಹುಡುಗನು, “ಕೊಕ್ಕರೆ ಹಕ್ಕಿ ಕೂತ ಹಾಗೆಯೇ ಕೂತ” ಅಂದನು. +‘ಓಹೋ. . . ನಾವು ಬಂದುದ್ದನ್ನು ಇಲ್ಲಿ ಕೂತುದನ್ನು ಹುಡುಗ ಕಂಡ’ನೆಂದು ಅನುಮಾನ ಅವರಿಗಾಯಿತು. +ಅಲ್ಲಿಯೇ ‘ಅಡಗಿ ನೋಡೋಣ’ ಎಂದು ಮಲಗಿಕೊಂಡರು. +“ಹೆಬ್ಬಾವು ಮಲಗಿದ ಹಾಗೆಯೇ ಮಲಗಿದ’’ ಎಂದು ಮೂರನೆಯ ಮಂತ್ರ ಹೇಳಿದನು. +ಆಗ ಕಳ್ಳರು, ‘ತಮ್ಮ ಕಳ್ಳತನದ ಸುಳಿವು ಇವನಿಗೆ ಖಂಡಿತವಾಗಿಯೂ ಆಗಿದೆ’ ಎಂದು ಹೆದರಿದರು. +ತಮ್ಮ ಕನ್ನಗತ್ತಿಗಳನ್ನು ಬಾಯಲ್ಲಿ ಕಚ್ಚಿಕೊಂಡೇ ಓಟಕಿತ್ತರು. +“ಕುದುರೆ ಹುಲ್ಲ ಕರಡ ಕಚ್ಚಿಕೊಂಡು ಓಡಿಹೋದ ಹಾಗೆಯೇ ಓಡಿದ” ಅಂತ ನಾಲ್ಕನೆಯ ಮಂತ್ರವನ್ನು ಹೇಳಿದನು. +ಕಳ್ಳರು ಇನ್ನಿಷ್ಟು ಹೆದರಿ ಹಿಂತಿರುಗಿ ನೋಡದೆಯೇ ಓಡಿಹೋದರು. +ಹೋಗುವಾಗ ಕಂಗಾಲಾಗಿ ತಾವು ಕದ್ದುಕೊಂಡು ಬಂದಿದ್ದ ನಾಣ್ಯದ ಚೀಲಗಳನ್ನು ಅಲ್ಲೇ ಬಿಟ್ಟು ಓಡಿದ್ದರು. +ಆ ನಾಣ್ಯದ ಚೀಲಗಳು ಮರುದಿನ ಬೆಳಗಿನಲ್ಲಿ ಭಟ್ಟನಿಗೆ ಸಿಕ್ಕವು. +ಮಗನ ಮಂತ್ರದ ಮಹಿಮೆಯಿಂದ ಅವು ದೊರೆತವೆಂದು ಅವರಿಗೆ ತಿಳಿಯಿತು. +ಸುಖ-ಸಂತೋಷದಿಂದ ಉಳಿದರು. +ಮಗಧ ದೇಶದಲ್ಲಿ ರಾಜಗೃಹವೆನ್ನುವ ಪಟ್ಟಣವು ಸೊಬಗಿನ ಬೀಡಾಗಿ ಮೆರೆಯುತ್ತಿತ್ತು. +ಅಲ್ಲಿ ಸಂಗ್ರಾಮ ಶೂರನೆಂಬ ರಾಜನು ಆಳುತ್ತಿದ್ದ ಕಾಲದಲ್ಲಿ ವೃಷಭದಾಸನೆಂಬ ಸಿರಿವಂತನಾದ ಶೆಟ್ಟಿಯು ತನ್ನ ಸುಂದರಿಯಾದ ಜಿನದತ್ತೆಯೆಂಬ ಪತ್ನಿಯೊಡನೆ ಸುಖದಿಂದ ಇದ್ದನು. +ಆ ವೈಶ್ಯದಂಪತಿಗಳು ದಾನ, ಪೂಜೆ, ಉಪವಾಸಗಳಿಂದ ಯಾವಾಗಲೂ ಕಾಲ ಕಳೆಯುತ್ತಿದ್ದರು. +ಒಂದು ದಿನ ಮಧ್ಯಾಹ್ನ ಕಾಲದಲ್ಲಿ ಅತಿಥಿಗಳ ಬರವನ್ನು ಹಾರೈಸುತ್ತ ಜಿನದತ್ತೆ ಬಾಗಿಲಿನಲ್ಲಿ ಬಂದು ನಿಂತಿದ್ದಳು. +ಎಡಗೈಯಲ್ಲಿ ಕಮಂಡಲವನ್ನು, ನವಿಲುಗರಿಗಳ ದೊಂದೆಯನ್ನು ಹಿಡಿದು ಕರುಣೆಯ ದೃಷ್ಟಿಯಿಂದ ಎಲ್ಲ ಪ್ರಾಣಿಗಳನ್ನೂ ನೋಡುತ್ತಾ ಒಬ್ಬ ಜೈನಯತಿಯು ಪಟ್ಟಣದ ಬೀದಿಯಲ್ಲಿ ಬರುತ್ತಿದ್ದನು. +ಜಿನದತ್ತೆ ಯತಿಯನ್ನು ನೋಡಿ, ಬಂದು ಅವನ ಕಾಲಿಗೆರಗಿ, ‘‘ನಮ್ಮ ಮನೆಗೆ ಬನ್ನಿ, ನಿಲ್ಲಿ’’ ಎಂದಳು. +ಯತಿಯು ಅಲ್ಲಿಂದ ತಿರುಗಿ ಮುಂದೆ ಹೋಗಿಬಿಟ್ಟನು. +ಮರಮರನೆ ಮರುಗಿ ಜಿನದತ್ತೆಯು ಬಸದಿಗೆ ಬಂದು ಯತಿಯ ಪಾದಕ್ಕೆರಗಿ, “ತಾನು ‘ಮನೆಗೆ ಭಿಕ್ಷದೂಟಕ್ಕೆ ನಿಲ್ಲಿ’ ಎಂದರೂ ಮುರಿದುಹೋದಿರೇಕೆ?” ಎಂದು ಕೇಳಿದಳು. +“ಹೆಂಗಸು ಯತಿಯನ್ನು ಭಿಕ್ಷೆಗೆ ನಿಲ್ಲಿಸಿಕೊಳ್ಳಬೇಕಾದರೆ ಮಗನ ಸಹಿತ ಬಂದು ಕರೆಯಬೇಕು, ಬರಿದೆ ಹೆಂಗಸರು ಬಂದು ಕರೆಯಬಾರದು” ಎಂದರು. +ಇದನ್ನು ಕೇಳಿ ಜಿನದತ್ತೆ ಕಣ್ಣೀರುಗರೆಯುತ್ತ ಮನೆಗೆ ಬಂದು, ತನ್ನ ಪತಿಯ ಹತ್ತರ ಈ ವಿಷಯವನ್ನು ಹೇಳಿ ದುಃಖ ಮಾಡಿದಳು. +“ಸ್ವಾಮೀ, ನಮ್ಮ ಮನೆಯಲ್ಲಿ ಉಣ್ಣಲು, ಉಡಲು, ಬೇಡಿದವರಿಗೆ ಕೊಡಲು ಹಣವು ಬೇಕಾದಷ್ಟಿದೆ. +ಹಣವೆಂದರೆ ನಮಗೆ ಕಾಲ ಕಸ. + ಇಷ್ಟೆಲ್ಲಾ ಶ್ರೀಮಂತಿಕೆಯಿದ್ದರೇನು ಪ್ರಯೋಜನ? +ಮಕ್ಕಳಿಲ್ಲದವರ ಶರೀರ, ಹಣ್ಣುಗಳನ್ನು ಪಡೆಯದ ಮರದ ಹಾಗೆ ವ್ಯರ್ಥ. +ಗಣನೆಯಿಲ್ಲದಷ್ಟು ಗಳಿಸಿದ್ದರೂ ಅರ್ಥ ವ್ಯರ್ಥ. +ಅದು ರಾಜರ ಬೊಕ್ಕಸಕ್ಕೆ ಸೇರುತ್ತದೆ” ಎಂದು ದುಃಖಿಸಿದಳು. +“ಮಾನಿನೀ, ಪುತ್ರಸಂತತಿಯಿದ್ದರೇನು ಪ್ರಯೋಜನ? +ಅವರು ನಾವು ಮಾಡಿದ ಪುಣ್ಯ-ಪಾಪಗಳನ್ನು ಹಂಚಿಕೊಳ್ಳುವರೋ? +ಈ ಭ್ರಾಂತಿ ನಿನಗೇಕೆ ಕಾಂತೆ?” ಎಂದು ವೃಷಭದಾಸನು ಕೇಳಿದನು. +ಆಗ ಜಿನದತ್ತೆ, “ಹಾಗಲ್ಲ ವಲ್ಲಭಾ, ಪುತ್ರಸಂತಾನವೇ ಗೃಹಸ್ಥರಿಗೆ ಮುಖ್ಯ. +ಅದರಿಂದಲೇ ಎಲ್ಲ ದುಃಖಗಳೂ ದೂರವಾಗುತ್ತವೆ” ಎಂದಳು. +“ಈ ಮಕ್ಕಳ ಕೂಸಾಟ, ಬೆಳವಣಿಗೆ, ಹರೆಯದ ವಿಲಾಸ ಇವೆಲ್ಲ ಪುಣ್ಯವ್ರತವನ್ನು ಹಿಂದೆ ಮಾಡಿದವರಿಗೆ ಲಭಿಸುವುದು ಬೇರೆಯವರಿಗಲ್ಲ”. + “ಮಕ್ಕಳನ್ನು ಹಡೆಯುವದು ಸ್ವರ್ಗ ದೊರೆತಷ್ಟು ಫಲ ಕೊಡುತ್ತದೆ ಎಲ್ಲವನ್ನೂ ಮಕ್ಕಳಿಗೊಪ್ಪಿಸಿ, ಸಂಸಾರ ಭಾರವನ್ನು ತೊರೆದು, ದೀಕ್ಷೆಯಿಂದ ಮುಕ್ತಿ ಪಡೆಯಬಹುದು”. + ಆಗ, “ಬಾರದುದನ್ನು ಬಯಸಿ ಬಾಯಾರುವದು ಬೇಡ, ನಮಗೆ ಮಕ್ಕಳ ಫಲವಿಲ್ಲ” ಎಂದ ವೃಷಭದಾಸ. +“ನನ್ನ ಹೊಟ್ಟೆಯಲ್ಲಿ ಮಕ್ಕಳಾಗದಿದ್ದರೆ ಹೆಂಗಸರೆಲ್ಲ ಬಂಜೆಯರೆನ್ನಲಾಗದು, ನಿನಗೆ ಒಬ್ಬ ಸುಂದರಿಯಾದ ಹುಡುಗಿಯನ್ನು ತಂದು ಮದುವೆ ಮಾಡಿದರೆ ಮಕ್ಕಳಾಗುತ್ತವೆ. +ನಾನು ನಿಮಗೆ ಒಬ್ಬ ಚಂದವಾದ ಹೆಣ್ಣನ್ನು ಹುಡುಕಿ ಗೊತ್ತು ಮಾಡುತ್ತೇನೆ ಲಗ್ನವಾಗಿ ”. +ಹೆಣ್ಣಿನ ಮೇಲೆ ಹೆಣ್ಣನ್ನು ತರುವ ಮನಸ್ಸು ನನಗಿಲ್ಲ. +‘ಪ್ರಾಯ ಇಳಿತರವಾಗುವಾಗ ಸೆಟ್ಟಿಗೆ ಮದುವೆಯ ಹುಚ್ಚು ಬಂದಿದೆ’ ಎಂದು ಲೋಕದ ಜನರು ನಗುವರು. +ಆಗ ಜಿನದತ್ತೆಯು, “ಮನೆತನ ನಡೆಯಲು ಮಕ್ಕಳು ಬೇಕು ಎಂದು ಮದುವೆಯಾದರೆ ತಪ್ಪೇನಿಲ್ಲ. +ನೀವು ಪ್ರಾಯಸ್ಥರೇ ಹೊರತು ಪ್ರಾಯ ಹೋದವರಲ್ಲ. +ನಾನೇ ನಿಮಗೆ ಯೋಗ್ಯಳಾದ ಹುಡುಗಿಯನ್ನು ಗೊತ್ತು ಮಾಡುತ್ತೇನೆ. +ಅವಳನ್ನು ಸಂಬಾಳಿಸಿಕೊಂಡು ಹೋಗುವದು ನನ್ನ ಕೈಯಲ್ಲಿದೆ. +ನನ್ನ ಮೇಲಿನ ನಿಮ್ಮ ಪ್ರೇಮಕ್ಕೆ ನಿಮ್ಮ ಇನ್ನೊಂದು ಮದುವೆ ಧಕ್ಕೆ ತರಲಾರದು. +ನೀವು ‘ಹೂಂ’ ಎಂದು ಹೇಳಿ ನಾನು ಮುಂದಾಗುತ್ತೇನೆ” ಎಂದು ಪ್ರೀತಿಯ ಮಾತುಗಳನ್ನಾಡಿ ಗಂಡನನ್ನು ಮದುವೆಗೆ ಒಪ್ಪಿಸಿದಳು. +ಅವಳ ತಂದೆ ಗುಣಭದ್ರಸೆಟ್ಟಿಯು ತನಗೆ ಗಂಡು ಮಕ್ಕಳು ಹುಟ್ಟಲಿಲ್ಲವೆಂದು ಬಂಧುಶ್ರೀ ಎಂಬುವಳನ್ನು ಮದುವೆಯಾಗಿದ್ದನು. +ಅವನು ಬಂಧುಶ್ರೀಯಲ್ಲಿ ಸುಂದರವಾದ ಮಗಳನ್ನು ಪಡೆದಿದ್ದನು. +ಆ ಹುಡುಗಿಗೆ ಕನಕಶ್ರೀ ಎಂಬ ಹೆಸರನ್ನಿಟ್ಟಿದ್ದನು. +ಮುಪ್ಪಿನವನಾಗಿ ಗುಣಭದ್ರ ಸೆಟ್ಟಿ ಕಾಲ ಕಳೆದುಕೊಂಡು ಹೋಗಿದ್ದನು. +ಅವಳು ತವರಮನೆಗೆ ಹೋಗಿ, “ಚಿಕ್ಕಮ್ಮ, ನನಗೆ ಮಕ್ಕಳಾಗಲಿಲ್ಲ ಎಂಬ ಚಿಂತೆ. +ನಮ್ಮವರಿಗೆ ನಿನ್ನ ಮಗಳು ನನ್ನ ತಂಗಿ ಕನಕಶ್ರೀಯನ್ನೇ ಮದುವೆ ಮಾಡಿಕೊಂಡು ತರಬೇಕು. +ಅವಳಲ್ಲಿ ಪುತ್ರಸಂತಾನ ಬಂದೀತು ಎಂದು ಆಸೆ ನನಗೆ. +ನಾನೂ ನಿನಗೆ ಮಗಳೇ ಅಲ್ಲವೇ? +ಬೇರೆ ಯಾವ ಹೆಣ್ಣನ್ನಾದರೂ ತಂದುಕೊಂಡರೆ ನನ್ನವರಿಗೆ ನಾನು ಎರವಾಗಬೇಕಾಗುತ್ತದೆ. +ಕಿರಿತಂಗಿ ಕನಕಶ್ರೀ ಮದುವೆಯ ವಯಸ್ಸಿಗೆ ಬಂದಿದ್ದಾಳೆ. +ಅವಳನ್ನು ನಮ್ಮವರಿಗೆ ಅತಿ ಹರ್ಷದಿಂದ ಮದುವೆ ಮಾಡಿಕೊಡು” ಎಂದು ಕೇಳಿಕೊಂಡಳು. +ಆಗ ಬಂಧುಶ್ರೀ ಹೇಳಿದಳು, “ಮಗಳೇ. . . ನೀನು ರೂಪಿನಲ್ಲಿ ರತಿಯಂಥ ಚೆಲುವೆ ಕನಕಶ್ರೀ ನಿನಗಿಂತ ವಯಸ್ಸಿನಲ್ಲಿ ಕಿರಿಯವಳಾದರೂ ರೂಪದಲ್ಲಿ ಮತ್ತೂ ಕಿರಿಯಳು, ಅವಳನ್ನು ಮದುವೆಯಾದರೂ ನಿನ್ನ ಗಂಡನು, ನಿನ್ನ ರೂಪದಲ್ಲೇ ಆಸಕ್ತನಾಗಿ ನನ್ನ ಮಗಳ ಸಂಗಡ ಒಗೆತನ ಮಾಡುವದಿಲ್ಲ. +ಇದು ಕನಕಶ್ರೀಗೆ ಹಿತವಾದ ಸಂಬಂಧವಾಗಲಾರದು ಬೇಡ”. +“ಚಿಕ್ಕಮ್ಮ, ನಿನಗೆ ಈ ರೀತಿ ಸಂಶಯವಿದ್ದರೆ ನಿನ್ನ ಸಂಶಯ ಪರಿಹಾರಕ್ಕೆ ನಾನು ಪ್ರತಿಜ್ಞೆಯನ್ನು ಮಾಡುತ್ತೇನೆ, ಕೇಳು. . . ನಾನು ಈ ಜನ್ಮ ಪರ್ಯಂತವೂ ಬ್ರಹ್ಮಚರ್ಯ ವ್ರತವನ್ನು ಕೈಕೊಳ್ಳುತ್ತೇನೆ. +ನಿನಗೆ ಈ ಬಗ್ಗೆ ಸ್ವಲ್ಪವೂ ಸಂದೇಹ ಬಾರದ ಹಾಗೆ ನಾನು ಜಿನೇಶ್ವರನ ಸಾಕ್ಷಿಯಾಗಿಯೂ ಈ ವ್ರತವನ್ನು ಕೈಕೊಂಡು ಪಾಲಿಸುತ್ತೇನೆ. +ನಾನು ನಿನ್ನ ಹಿರಿಮಗಳು ನನ್ನ ಮಾತನ್ನು ನಂಬು. +ಇನ್ನಾದರೂ ಕನಕಶ್ರೀಯನ್ನು ಅವರಿಗೆ ಮದುವೆ ಮಾಡಿಕೊಂಡಲು ಸಿದ್ಧಳಾಗು”. +ಬಂಧುಶ್ರೀಗೆ ಇದರಿಂದ ಸಮಾಧಾನವಾಯಿತು. +‘ಬಹಳ ಶ್ರೀಮಂತನಾದ ಗಂಡ ನನ್ನ ಮಗಳಿಗೆ ಅನಾಯಾಸವಾಗಿ ದೊರಕಿದ ಹಾಗಾಯಿತು’ ಎಂದು ಸಂತೋಷ ಹೊಂದಿ, ಈ ಮದುವೆಗೆ ಒಪ್ಪಿಗೆ ಕೊಟ್ಟಳು. +ಕನಕಶ್ರೀಯನ್ನು ತನ್ನ ಗಂಡನ ಜತೆಗೆ ಮದುವೆಯಾಗುವ ಹಾಗೆ ಮಾಡಿ, ಸಂಸಾರದ ಭಾರವನ್ನು ಅವಳಿಗೆ ವಹಿಸಿಕೊಟ್ಟು , ಯಾವಾಗಲೂ ಊಟದ ಹೊತ್ತಿನಲ್ಲೆ ಮಾತ್ರ ಮನೆಗೆ ಬಂದು ಊಟ ಮುಗಿಸಿ, ಬಸದಿಗೆ ಹೋಗಿ ಅಲ್ಲಿ ಜಿನಪೂಜೆ, ಜಿನಪುರಾಣ ಶ್ರವಣದಲ್ಲಿ ಮನಸ್ಸನ್ನಿಟ್ಟು ಜಿನದತ್ತೆ ಕಾಲವನ್ನು ಕಳೆಯುತ್ತಿದ್ದಳು. +ಇದರಿಂದ ಸಂತೋಷಗೊಂಡ ವೃಷಭದಾಸನು ಬಹಳ ಹರ್ಷದಿಂದ ಅವಳ ಜೊತೆಯಲ್ಲಿ ಸೇರಿ ಜಿನಕಥೆಗಳನ್ನು ಕೇಳುವದರಲ್ಲಿಯೇ ಆಸಕ್ತಿಯನ್ನು ತಾಳಿ ಬಸದಿಯಲ್ಲಿಯೇ ಹೆಚ್ಚು ಉಳಿಯುತ್ತಿದ್ದನು. + ಹೀಗಿರುತ್ತಿರಲು. . . ಒಂದು ದಿನ ಕನಕಶ್ರೀಯು ತನ್ನ ತಾಯಿಯ ಬಳಿಗೆ ಬಂದಳು. +ಆಗ ಬಂಧುಶ್ರೀಯು, “ಎಲೆ ಮಗಳೇ. . . ನಿನ್ನ ವಲ್ಲಭನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವನೋ?” ಎಂದು ಕೇಳಿದಳು. +ಆಗ ಆ ಕನಕಶ್ರೀ ಉಕ್ಕಿ ಬರುವ ಕಣ್ಣೀರನ್ನು ತನ್ನ ಉಗುರುಗಳಿಂದ ಮಿಡಿದು, “ಅಮ್ಮಾ. . . ನಾನು ಅವನ ಮನೆಯನ್ನು ಬಲಗಾಲು ಮುಂದಿಟ್ಟು ಹೊಕ್ಕ ದಿನದಿಂದಲೂ ನನಗೆ ಕೆಲಸದ ಭಾರ ವಿಪರೀತವಾಗಿದೆ. +ತಲೆಯನ್ನು ತುರಿಸಲು ಸ್ವಲ್ಪವಾದರೂ ಹೊತ್ತನ್ನು ಕನಸಿನಲ್ಲಿಯೂ ಕಾಣೆನು. +‘ಸವತಿಯ ಮಗಳಿಗೆ ನನ್ನನ್ನು ಸವತಿಯಾಗು’ ಎಂದು ಕೊಟ್ಟು, ಈಗ ‘ನಿನ್ನ ವಲ್ಲಭನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವನೋ?’ ಎಂದು ಕೇಳುವಿಯಲ್ಲ”. +“ಹಸಿದ ಹೊತ್ತಿಗೆ ಬಂದು ಮಿಂದು, ಉಂಡು, ಬಳಿಕ ವ್ರತವನ್ನು ನೋಡಬೇಕೆಂಬ ನೆವದಿಂದ ಕಜ್ಜಾಯ, ಹೂವು, ಕರ್ಪೂರ, ವೀಳೆಯ ಎಲ್ಲಾ ತೆಗೆದುಕೊಂಡು ಹೋಗಿ ಅವಳೊಡನೆ ಸಂತಸದಿಂದ ಕಾಲ ಕಳೆಯುತ್ತಾನೆ. +ನನ್ನ ಕಡೆಗೆ ಕಣ್ಣಿತ್ತಿ ಕೂಡ ನೋಡದವನೊಡನೆ ನನ್ನದು ಏತರ ಬಾಳ್ವೆ? +ನಾನು ಮುಟ್ಟಾಗಿ ಮಿಂದು, ಉಟ್ಟ ಸೀರೆಯನ್ನು ಮತ್ತೆ ಮುಟ್ಟಾದಾಗ ಮೀವ ಸಮಯದಲ್ಲಿ ಬಿಡಿಸುವದಲ್ಲದೆ ಉಳಿದ ದಿನಗಳಲ್ಲಿ ಸೀರೆಯನ್ನು ಸಡಿಲಿಸುವುದನ್ನೇ ಅರಿಯೆನು. +ಹೊತ್ತು ಮೂಡಿ ಮುಳುಗುವವರೆಗೆ ತೊತ್ತು ಕೆಲಸಗೈದು, ಬೆಂದ ಒಡಲ ಬೇಗೆಯನ್ನು ಏತರಿಂದ ತಂಪು ಮಾಡಿಕೊಳ್ಳಲಿ? +ಜಗುಲಿಯ ಮೇಲೆ ಒಬ್ಬಳೇ ಮುರುಟಿಕೊಂಡು ಬಿದ್ದು ರಾತ್ರಿಯನ್ನು ಕಳೆಯುತ್ತೇನೆ”. +“ಮಗಳೇ, ಈ ಪ್ರಾಯ ಭರದಲ್ಲಿ ನೀನು ಲಜ್ಜೆಗೆಟ್ಟಾದರೂ ಸುಖ ಪಡೆಯಬೇಕು” ಎಂದು ತಾಯಿ ಹೇಳಿದಳು. +ಅದಕ್ಕೆ ಮಗಳು, “ಪರಸತಿಯನ್ನು ಮೋಹಿಸಿದ ಚಂದ್ರನಿಗೆ ಕ್ಷಯರೋಗ ಬಂತಲ್ಲವೇ? +ಸಾಮಾನ್ಯ ಮನುಷ್ಯರು ನೀತಿಗೆಟ್ಟರೆ ಅವರ ಗತಿಯೇನು?” ಎಂದು ಕೇಳಿದಳು. +ಆಗ ಬಂಧುಶ್ರೀಯು, “ಆ ಬಣಜಗಿತ್ತಿಯ ಕಾಲು-ಕೀಲನ್ನು ಕುರಿತು ಆಡಿ ಕೆಡಿಸುವದೇಕೆ? +ನಿನಗೆ ಈ ಅವಸ್ಥೆಯನ್ನು ಮಾಡಿದವಳನ್ನು ಕೊಂದು, ನಿನ್ನ ಗಂಡನೊಡನೆ ನೀನು ಒಲವಿನಿಂದ ಬಾಳುವಂತೆ ಮಾಡದಿದ್ದರೆ ನಾನು ಈ ಮೊಲೆಗಳನ್ನು ಹೊತ್ತಿದ್ದು ಯಾಕೆ? +ನಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ಅವಳಿಗೆ ತಕ್ಕ ಶಾಸ್ತಿ ಮಾಡುತ್ತೇನೆ” ಎಂದು ಶಪಥ ಮಾಡಿ ಮಗಳನ್ನು ಸಂತೈಸಿ ಕಳಿಸಿದಳು. +ಬಂಧುಶ್ರೀಯ ಮನೆಗೆ ಒಂದು ದಿನ ಒಬ್ಬ ಕಾಪಾಲಿಕನು ಶೂಲ, ಡಮರುಗ ಹಿಡಿದು, ಹುಲಿ ದೊವಲನುಟ್ಟು ಭಸ್ಮಲೇಪನ ಮಾಡಿಕೊಂಡು, ಅತಿರೌದ್ರ ರೂಪದಿಂದ ಬಂದು “ಭವತಿ ಭಿಕ್ಷಾಂ ದೇಹಿ” ಎಂದು ಹೇಳಿದನು. +ಆ ಸಿದ್ಧನನ್ನು ಅಂಗಣದಲ್ಲಿ ನೋಡಿ, ‘ಈ ಮಹಾತ್ಮನಿಂದ ನನ್ನ ಕಾರ್ಯವನ್ನು ಸಾಧಿಸಿಕೊಳ್ಳಬೇಕು’ ಎಂದು ತಿಳಿದು, ಅವನು ತೃಪ್ತಿಯಾಗುವ ಹಾಗೆ ರುಚಿರುಚಿಯಾದ ಒಂಬತ್ತು ಬಗೆಯ ಕಜ್ಜಾಯಗಳನ್ನು ತಂದು ಅವನ ಕಯ್ಯ ಪಾತ್ರೆಯಲ್ಲಿ ಹಾಕಿದಳು. +ಆ ಕಜ್ಜಾಯಗಳನ್ನು ಸವಿಯುತ್ತ, “ಈ ರೀತಿಯಲ್ಲಿ ನನಗೆ ಸತ್ಕಾರ ಮಾಡುವ ನೀನು ನನ್ನ ತಾಯಿಯೇ ಸರಿ. +ನಿನಗೆ ನಾನು ಉಪಕಾರ ಮಾಡುತ್ತೇನೆ. +ನನಗೆ ಬಾರದ ವಿದ್ಯೆಯೇ ಇಲ್ಲ. +ನಿನ್ನ ಮನಸ್ಸಿನಲ್ಲಿ ಏನು ಅಪೇಕ್ಷೆಯಿದೆಯೋ ಅದನ್ನು ಈಡೇರಿಸಿಕೊಡುತ್ತೇನೆ” ಅಂದನು. +ಅವಳು ಅತಿ ಆನಂದದಿಂದ, “ನನ್ನ ಮಗಳಿಗೆ ಕಷ್ಟದಲ್ಲಿ ನೂಕಿದ ಜಿನದತ್ತೆಯನ್ನು ಕೊಲ್ಲಬೇಕು” ಎಂದು ತಿಳಿಸಿದಳು. +“ನಾನು ಬರುವ ಕೃಷ್ಟಪಕ್ಷದ ಚತುರ್ದಶಿಯ ದಿನ ನಿನ್ನ ಆಸೆಯನ್ನು ನೆರವೇರಿಸುತ್ತೇನೆ. +ಇಲ್ಲವಾದರೆ. . . ನಾನು ಕಾಪಾಲಿಕ ಸಿದ್ಧನೇ ಅಲ್ಲ” ಎಂದು ಅವನು ಪ್ರತಿಜ್ಞೆ ಮಾಡಿದನು. +ತಾನು ಹೇಳಿದ ದಿನದ ರಾತ್ರಿ ತಕ್ಕುದಾದ ಅರ್ಚನಾದ್ರವ್ಯಸಹಿತ ಪುರದ ಹೊರಗಣ ರುದ್ರಭೂಮಿಗೆ ಬಂದು ಹೆಣದ ಕೈಯಲ್ಲಿ ಒಂದು ಕತ್ತಿಯನ್ನು ಕೊಟ್ಟು ಅದನ್ನ ಪೂಜಿಸಿ, ಅದರ ಮೇಲೆ ಒಂದು ಬೇತಾಳನನ್ನು ಆಹ್ವಾನಿಸಿದನು. +ಆಗ ಹೆಣದ ಮೇಲೆ ಬೇತಾಳನ ಆವೇಶವಾಗಿ ಹೆಣವು ಎದ್ದು, “ನನಗೆ ಏನು ಕೆಲಸ ಎಂದು ಅಪ್ಪಣೆ ಕೊಡು. . . ತಡ ಮಾಡಬೇಡ” ಎಂದು ಹೆಣವು ಖಡ್ಗವನ್ನು ಜಡಿಯುತ್ತ ರುದ್ರಭೂಮಿಯಿಂದ ಹೊರಟಿತು. +ಈ ರೀತಿ ಆಸ್ಫೋಟಿಸುತ್ತ ಬಂದು ಪಟ್ಟಣವನ್ನು ನಡುಗಿಸುವಂತೆ ಘುಡುಘುಡಿಸುತ್ತ ಬಸದಿಗೆ ಬಂದಿತು. +ಆ ದಿನ ಪರ್ವದ ಉಪವಾಸ ಮಾಡಿ, ಹೃದಯ ಶುದ್ಧಿಯಿಂದ ಜಾಗರಣೆಯಲ್ಲಿದ್ದು ಪೂಜೆಯನ್ನು ತೀರ್ಥಂಕರರಿಗೆ ಮಾಡುತ್ತಿದ್ದ ವೃಷಭದಾಸ-ಜಿನದತ್ತೆಯರ ಮಹಾತ್ಮೆಯನ್ನು, ಆ ಬಸದಿಯಲ್ಲಿದ್ದ ಯಕ್ಷರ ಶಕ್ತಿಯನ್ನು ಕಂಡು ಹೆದರಿ ದೂರದಲ್ಲೇ ನಿಂತಿತು. +ಬೆದರಿ ಕಂಗೆಟ್ಟ ಆ ಭೂತವು ಮೂರು ಸಲ ಬಲವಂದು ಕೈಮುಗಿದು ಹಿಂದಿರುಗಿ ಬಂದಿತು. +ಆಗ ಕಾಪಾಲಿಕನು, “ಹೆಣ್ಣುಗೂಸನ್ನು ಕೊಲ್ಲಲು ಅಂಜಿ ಬಂದೆಯಾ ಹೇಡಿ?” ಎಂದು ಅದನ್ನು ಬಯ್ದನು. +ಮತ್ತೆ ಎರಡು ರಾತ್ರಿ ಮೊದಲಿನಂತೆ ಬೇತಾಳನನ್ನು ಆಹ್ವಾನಿಸಿ ಕಳಿಸಿದರೂ ಮರಳಿ ಬಂತು. +ನಾಲ್ಕನೆಯ ರಾತ್ರಿಯಲ್ಲಿ ಆಹ್ವಾನ ಮಾಡಲು ಕತ್ತಿಯನ್ನು ಜಡಿಯುತ್ತ, “ನಿರ್ದೋಷಿಯನ್ನು ಕೊಲ್ಲ ಹೇಳಿದರೆ ಸಾಧ್ಯವಿಲ್ಲ. +ದೋಷಿಯನ್ನು ತೋರಿಕೊಡು. . . ಇಲ್ಲವಾದರೆ, ನಿನ್ನ ತಲೆಯನ್ನೇ ನಿಮಿಷಾರ್ಧದಲ್ಲಿ ಕಡಿಯುವೆನು” ಎಂದು ಗರ್ಜಿಸಿತು. +ದೋಷಿ ಯಾರೆಂದು ತಿಳಿಸಿ, ‘ಕೊಲ್ಲು. . . ’ ಎಂದು ಹೇಳಿ ಕಳಿಸಲು, ಅದು ಕನಕಶ್ರೀಯನ್ನೇ ದೋಷಿಯೆಂದು ಮೂದಲಿಸಿಕೊಂಡು ಒಡಲನ್ನು ಬಗಿದು ಸೀಳಿ ಸ್ಮಶಾನಕ್ಕೆ ಬಂದು ಕಾಪಾಲಿಕನಿಗೆ ತಿಳಿಸಿತು. +ಕಾಪಾಲಿಕನ ತಂತ್ರದಿಂದ ಜಿನದತ್ತೆ ಸತ್ತಳೋ ಏನೆಂದು ತವಕದಿಂದ ಬಂದು ಬಂಧುಶ್ರೀ ನೋಡಿದಳು. +ಕಡಿಯಲ್ಪಟ್ಟು ತುಂಡುತುಂಡಾಗಿ ಬಿದ್ದ ಮಗಳನ್ನು ನೋಡಿ, ಕಡುದುಃಖ ಮಾಡಿ, ಅರಸನ ಮಂದಿರಕ್ಕೆ ನಡೆದು ಬಂದು, ಜಿನದತ್ತೆ ತನ್ನ ಮಗಳನ್ನು ಕೊಲಿಸಿದಳೆಂದು ದೂರನ್ನು ಕೊಟ್ಟಳು. +ರಾಜನು, “ದೋಷಿಗಳನ್ನು ಶಿಕ್ಷಿಸಿರಿ” ಎಂದು ದೂತರಿಗೆ ಹೇಳಿದನು. +ಆಗ ವೃಷಭದಾಸನ ಮನೆಗೆ ಬಂದರು. +ಪುಣ್ಯದೇವತೆಗಳು ತಳವಾರರ ಕೈಕಾಲ್ಗಳನ್ನು ಮರದಂತೆ ಸ್ತಂಭಿಸಿಬಿಟ್ಟರು. +ಆಗ ಜಿನದತ್ತೆ ನಿರ್ದೋಷಿಯೆಂದು ತಿಳಿದು, ಆ ತಳವಾರರು ಬೇತಾಳನನ್ನು ಹಿಡಿತಂದು ,“ನೀನು ಇವಳನ್ನು ಕೊಂದ ರೀತಿಯನ್ನು ಹೇಳೆ”ನ್ನಲು, ಬೇತಾಳ ನಿಜ ಸಂಗತಿಯನ್ನು ಹೇಳಿದನು. +ರಾಜನು ಬಂಧುಶ್ರೀಯನ್ನು ಕತ್ತೆಯ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡಿ ರಾಜ್ಯದಿಂದ ಹೊರಗೆ ಹಾಕಿದನು. +ಒಂದು ರಾಜ್ಯದಲ್ಲಿ ಒಬ್ಬ ಭಟ್ಟನೂ, ಅವನ ಹೆಂಡತಿಯೂ ಇದ್ದರು. +ಅವರಿಗೆ ಮೂರು ಜನ ಗಂಡು ಮಕ್ಕಳಿದ್ದರು. +ಭಟ್ಟನು ಮೂವರಿಗೂ ಲಗ್ನ ಮಾಡಿದನು. +ಒಬ್ಬನು ನೌಕರಿ ಸೇರಿದನು. +ಒಬ್ಬನು ಹೆಂಡತಿಯನ್ನು ಬಿಟ್ಟು ದೇಶಾಂತರಕ್ಕೆ ಹೋದನು. +ಹಿರಿಯ ಮಗನು ಮಾತ್ರ ಮನೆಯಲ್ಲಿ ಉಳಿದನು. +ಅವನ ತಂದೆ-ತಾಯಿಗಳಿಗೆ ಆಕಸ್ಮಾತ್ತಾಗಿ ಶೀಕಾಗಿ ಅವರು ಇಬ್ಬರೂ ಸತ್ತುಹೋದರು. +ಹಿರಿಮಗನು ಅವರ ಉತ್ತರ ಕ್ರಿಯೆಗಳನ್ನೆಲ್ಲಾ ತೀರಿಸಿದನು. +ತಮ್ಮನಿಗೆ ಪತ್ರ ಬರೆದರೂ ಅವನು ಬರಲೇ ಇಲ್ಲ. +‘ತಾನು ಅಲ್ಲೇ ತಂದೆಯ ಉತ್ತರ ಕ್ರಿಯೆಯನ್ನು ಮುಗಿಸುತ್ತೇನೆ’ ಎಂದು ಪತ್ರ ಬರೆದನು. +ಹಿರಿ ಅಣ್ಣನಿಗೆ ಇಬ್ಬರು ಹುಡುಗಿಯರು ಹುಟ್ಟಿದರು. +ಒಬ್ಬಳಿಗೆ ಮೂರು ವರ್ಷ, ಎರಡನೆಯವಳಿಗೆ ಎರಡು ವರ್ಷ ಆದಾಗ ಅವನ ಹೆಂಡತಿ ಮತ್ತೆ ಗರ್ಭಿಣಿಯಾದಳು. +ಅವನಿಗೆ ತಮ್ಮಂದಿರು ಊರಿಗೆ ಬರುವದಿಲ್ಲವೆಂದು ಬಹಳ ಬೇಸರವಾಯಿತು. +ಅದೇ ವಿಚಾರದಲ್ಲಿ ಅವನಿಗೆ ಒಂದು ರೀತಿಯಲ್ಲಿ ಹುಚ್ಚು ಹಿಡಿದ ಹಾಗಾಯಿತು. +ಅವನಿಗೆ ಕಿರಿ ತಮ್ಮನ ಮೇಲೆ ಬಹಳ ಪ್ರೀತಿಯಿತ್ತು. +ಅವನು ಎಲ್ಲಿಗೆ ಹೋಗಿದ್ದನೆಂಬುದೇ ಪತ್ತೆಯಿರಲಿಲ್ಲ. +ಅವನಿಗೆ ಅದೇ ಕಾರಣದಿಂದ ಭ್ರಾಂತಿಯಾಯಿತು. +ಅವನಿಗೆ ಸಂಸಾರದ ಕಡೆ ಲಕ್ಷ್ಯವಿರಲಿಲ್ಲ. +ಹೆಂಡಿರು-ಮಕ್ಕಳು ಉಂಡರೋ ಇಲ್ಲವೋ, ಉಪವಾಸ ಬಿದ್ದರೋ ಎಂದೂ ಅವನು ನೋಡುತ್ತಿರಲಿಲ್ಲ. +ಹೆಂಡಿರು-ಮಕ್ಕಳಿಗೆ ಹೊಡೆಯುತ್ತಿದ್ದನು. +ಅವನ ಹೆಂಡತಿ ಒಂಬತ್ತು ತಿಂಗಳು ತುಂಬಿ ಒಂದು ಗಂಡು ಮಗುವಿಗೆ ಜನ್ಮ ಕೊಟ್ಟಳು. +ಹೆಂಡತಿ ಬಾಣಂತಿಯಾಗಿದ್ದಾಗಲೂ ಹೊಡೆದು, ಬಡಿದು ಬಹಳ ಕಷ್ಟಕೊಡುತ್ತಿದ್ದನು. +ಒಂದು ಒಂದೂವರೆ ತಿಂಗಳಿನ ಶಿಶುವನ್ನು ಬಿಟ್ಟು, ಇವನು ಕೊಡುವ ಕಷ್ಟ ತಾಳಲಾರದೆ, ಅವಳು ತನ್ನಿಂದ ಇದನ್ನು ತಡೆದುಕೊಳ್ಳಲಿಕ್ಕೆ ಸಾಧ್ಯವಿಲ್ಲವೆಂದು ಓಡಿಹೋದಳು. +ತನ್ನ ಅಕ್ಕನ ಮನೆಗೆ ಹೋಗಿ ಉಳಿದಳು. +ಆ ಶಿಶು ಹಸಿವಿನಿಂದ ಕೂಗುತ್ತಿತ್ತು. +ಶಿಶು ಕೂಗುತ್ತಲೇ ಇತ್ತು. +ಅವನು ಅದನ್ನು ಹೊಡೆದು ಸಾಯಿಸಿಬಿಟ್ಟನು. +ಆ ಶಿಶುವನ್ನು ತೆಗೆದುಕೊಂಡು ಹೋಗಿ ಹುಗಿದನು. +ಇಬ್ಬರು ಹೆಣ್ಣು ಮಕ್ಕಳನ್ನೂ ಕರೆದುಕೊಂಡು ಹೋದನು. +ತನ್ನ ಅಜ್ಜಿಯ ಮನೆಗೆ ತೆಗೆದುಕೊಂಡು ಹೋಗಿಬಿಟ್ಟನು. +ಅಲ್ಲಿ ಅಜ್ಜಿಯೊಬ್ಬಳಿದ್ದಳು. +ಅವಳು ಆ ಹೆಣ್ಣು ಮಕ್ಕಳನ್ನು ಸಾಕಿದಳು. +ಅವನಿಗೆ ಆಮೇಲೆ ತನ್ನ ಹೆಂಡತಿ ಎಲ್ಲಿ ಹೋದಳೆಂದು ಹುಡುಕುವುದೇ ಕೆಲಸವಾಯಿತು. +ತನ್ನ ಮಾವನ ಮನೆಗೆ ಹೋಗಿ ಕೇಳಿದನು. +ಅವಳು ಅಲ್ಲಿಗೆ ಹೋಗಿರಲಿಲ್ಲ ಎಂದು ತಿಳಿಯಿತು. +ಅವಳ ಅಕ್ಕನ ಮನೆಗೆ ಹೋಗಿ ಹುಡುಕಿದನು. +ಅಲ್ಲಿಯೂ ಸಹ ಅವಳು ಇರಲಿಲ್ಲ. +ಅಲ್ಲಿ ಅವನ ಹೆಂಡತಿಯ ಅಣ್ಣನಿದ್ದನು. +ಅವನಿಂದ ತನ್ನ ಹೆಂಡತಿ ಸತ್ತಳೆಂದು ತಿಳಿಯಿತು. +ಅವಳು ಐದಾರು ತಿಂಗಳು ರೋಗದಿಂದ ನರಳಿ ಸತ್ತುಹೋಗಿದ್ದಳು. +ತಮ್ಮಂದಿರೂ ಅವನಿಂದ ದೂರವಾಗಿದ್ದರು. +ಅವನಿಗೆ ಏನು ಮಾಡಬೇಕೆಂಬುದೇ ತಿಳಿಯದಾಯಿತು. +ಆ ಸಮಯದಲ್ಲಿ ಶ್ಯಾನುಭೋಗನಾಗಿದ್ದ ಅವನ ತಮ್ಮನಿಗೆ ಅಣ್ಣನ ಪರಿಸ್ಥಿತಿಯನ್ನು ಯಾರೋ ಹೇಳಿದರು. +ಆ ಸುದ್ದಿ ತಿಳಿದ ತಮ್ಮನು ಮನೆಗೆ ಬಂದನು. +ಒಬ್ಬ ತಮ್ಮನಾದರೂ ಮನೆಗೆ ಬಂದನೆಂದು ಅಣ್ಣನಿಗೆ ಸಂತೋಷವಾಯಿತು. +ತಮ್ಮನು, ‘ಅಣ್ಣ ಯಾವ ಪರಿಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದ’ನೆಂದು ಕೇಳಿದನು. +‘ಅವನಿಗೆ ಹುಡುಗರೆಷ್ಟು?’ ಎಂಬುದನ್ನು ವಿಚಾರಿಸಿ ತಿಳಿದುಕೊಂಡನು. +“ತನ್ನ ಶಿಶುವನ್ನು ತಾನೇ ಹೊಡೆದು ಕೊಂದೆ ಎಂದು ಬೊಬ್ಬೆಯಿದೆ. +ಆದರೆ, ತಾನೇನು ಅದನ್ನು ಹೊಡೆದು ಕೊಲ್ಲಲಿಲ್ಲ” ಎಂದು ತಮ್ಮನ ಹತ್ತರ ಹೇಳಿದನು. +‘‘ಇನ್ನು ನೀನು ಏನು ಮಾಡಬೇಕೆಂದಿರುವೆ?’’ ಎಂದು ತಮ್ಮನು ಕೇಳಿದನು. +‘‘ಇನ್ನು ನನ್ನಿಂದ ಇಲ್ಲಿ ಮನೆ ನೋಡಿಕೊಂಡು ಹೋಗಲು ಸಾಧ್ಯವಿಲ್ಲ’’ ಎಂದು ಅಣ್ಣನು ಹೇಳಿದನು. +‘ಹಾಗಾದರೆ, ನಿನ್ನ ಹಿಸೆಗೆ ಬರುವ ಆಸ್ತಿಯನ್ನೂ ನನಗೆ ಬರೆದು ಕೊಡುತ್ತೀಯಾ?’ ಎಂದು ತಮ್ಮನು ಹೇಳಿದನು. +‘ಅಡ್ಡಿಯಿಲ್ಲ. . . ’ ಎಂದು ಒಪ್ಪಿದನು. +ತಮ್ಮನ ಹೆಸರಿಗೆ ಆಸ್ತಿಯನ್ನು ಬರೆದು ಕೊಡುವಾಗ ಅಣ್ಣನು ಹೇಳಿದನು, ‘‘ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. +ನೀನು ಅವರಿಬ್ಬರ ಲಗ್ನ ಮಾಡಬೇಕು.’’ ಆ ಮಾತಿಗೆ ತಮ್ಮನು ಒಪ್ಪಿದನು. +ಅಲ್ಲದೆ, ಪ್ರತಿ ವರ್ಷದಲ್ಲೂ ಆ ಹೆಣ್ಣು ಮಕ್ಕಳಿಗೆ ಐವತ್ತು-ಐವತ್ತು ರೂಪಾಯಿಗಳನ್ನು ಕೊಡುವದಕ್ಕೂ ತಮ್ಮನು ಒಪ್ಪಿದನು. +ಅದನ್ನು ದಸ್ತಾವೇಜಿನಲ್ಲಿ ಕಾಣಿಸಿದರು. +ತಮ್ಮನನ್ನು ಅಜ್ಜಿಯ ಮನೆಗೆ ಕರೆದುಕೊಂಡು ಹೋಗಿ ಹೆಣ್ಣು ಮಕ್ಕಳನ್ನು ತೋರಿಸಿದನು. +“ನಿಮ್ಮನ್ನೆಲ್ಲಾ ಇನ್ನು ಮುಂದೆ ತಾನೇ ನೋಡಿಕೊಳ್ಳುತ್ತೇನೆ” ಎಂದು ಚಿಕ್ಕಪ್ಪನು ಮಕ್ಕಳ ಹತ್ತರ ಹೇಳಿದನು; ಅಜ್ಜಿಗೂ ಅದರಂತೆ ತಿಳಿಸಿದನು. +ಅಣ್ಣನ ಹೆಂಡತಿಯ ಉತ್ತರ ಕ್ರಿಯೆಯನ್ನು ಅವನ ಹತ್ತರ ಮಾಡಿಸಿ, ಇವನು ತನ್ನ ಕೆಲಸಕ್ಕೆ ಪುನಃ ಹಾಜರಾದನು. +ಅಣ್ಣನಿಗೆ ಆಕಸ್ಮಾತ್ತಾಗಿ ಜೋರು ಜ್ವರ ಬಂತು. +ಅವನು ಬಹಳ ಭಯಂಕರವಾಗಿ ಬಡಬಡಿಸಿದನು. +ಅಚೀಚೆಯ ಜನರು ಬಂದು ಅವನ ಉಪಚಾರ ಮಾಡಿದರು. +ಅವನಿಗೆ ಮೈಲಿಯ ಹುಗುಳುಗಳು ಕಾಣಿಸಿಕೊಂಡವು. +ಮೈಲಿಬೇನೆಯಿಂದ ಅವನು ಸತ್ತುಹೋದನು. +ಹೆಣ್ಣು ಮಕ್ಕಳು ಬೆಳೆಯುತ್ತಿದ್ದರು. +ಒಬ್ಬಳಿಗೆ ಒಂಬತ್ತು ವರ್ಷಗಳಾದವು. +ಮತ್ತೊಬ್ಬಳಿಗೆ ಎಂಟನೆಯ ವಯಸ್ಸು. +ಅಲ್ಲಿ ಒಬ್ಬಳು ಸಣ್ಣಜ್ಜಿ ಎಂಬ ಹೆಸರಿನವಳಿದ್ದಳು. +ಅವಳು ಹಿರಿಯ ಹುಡುಗಿಯನ್ನು ಯಾರಿಗೂ ಗೊತ್ತಿಲ್ಲದ ಹಾಗೆ ಕದ್ದುಕೊಂಡು ನಡೆದಳು. +ಬೇರೆ ಊರಿಗೆ ಹೋಗಿ, ಅಲ್ಲಿ ಅವಳ ಲಗ್ನ ಮಾಡಲು ಸಿದ್ಧತೆ ಮಾಡಿದಳು. +ಅದು ಅವಳನ್ನು ಸಾಕಿದ ಅಜ್ಜಿಗೆ ಗೊತ್ತಾಯಿತು. +ಅವಳು ಬಹಳ ಮಡಿವಂತಿಕೆಯವಳು. +ಆ ಸಣ್ಣಜ್ಜಿಯು ಇದ್ದ ಊರಿಗೆ ಹೋಗವಾಗ ಅವಳು ಸ್ನಾನ ಮಾಡಿಕೊಂಡೇ ಹೋದಳು. +ದೇವರ ಕೋಣೆಗೆ ಹೋಗಿ ದೇವರ ಮುಂದೆ ಕೂತಳು. . . ಅಲ್ಲಿ ಅಜ್ಜಿಯ ಮೈಮೇಲೆ ದೇವರು ಬಂದಿತು. +ಆ ಆವೇಶದಲ್ಲಿ ಕುಣಿದೇ ಕುಣಿದಳು. +“ಆ ಹುಡುಗಿಯ ಮದುವೆ ನಿಶ್ಚಯ ಮಾಡಿದ್ದೀ. +ಅಲ್ಲಿ ಈಗೇನೋ ಶ್ರೀಮಂತಿಕೆಯಿದೆ. +ಆದರೆ, ಆರು ವರ್ಷಗಳಲ್ಲಿಯೇ ಸಂಪತ್ತೆಲ್ಲಾ ಹೊರಟು ಹೋಗುತ್ತದೆ. +ಈ ಸಂಬಂಧವನ್ನು ನಿಶ್ಚಯ ಮಾಡಿದವರಾರು? +ಆ ಹುಡುಗಿಯ ಮುಂದಿನ ಭವಿಷ್ಯವನ್ನು ಹಾಳು ಮಾಡಬೇಡ. +ಅವಳ ಕುತ್ತಿಗೆ ಮುರಿಯಬೇಡ” ಎಂದು ಕೂಗುತ್ತಿದ್ದಳು. +ಲಗ್ನದ ಮುಹೂರ್ತವನ್ನು ನಿಶ್ಚಯ ಮಾಡಿಕೊಂಡು ಹೋಗಲು ಗಂಡಿನವರು ಬಂದಿದ್ದರು. +‘ಅವಳನ್ನು ಕಟ್ಟಿಹಾಕಿ ಹೊಡೆಯಿರಿ’ ಎಂದು ಮನೆಯವರೆಲ್ಲ ಹೇಳಿದರು. +ಆಗ, “ನಾನೇನು ಲಗ್ನವನ್ನು ನಿಲ್ಲಿಸಲಿಕ್ಕೆ ಬರಲಿಲ್ಲ. +ಇದು ನಿಜವಾದ ಸಂಗತಿ. +ಆರು ವರ್ಷಗಳ ಮೇಲೆ ಆ ಗಂಡನು ಬದುಕುವುದಿಲ್ಲ. +ಅವಳ ಕುತ್ತಿಗೆ ಮುರಿಯಬೇಡ” ಎಂದು ಮತ್ತೆ ಹೇಳಿದಳು. +ಒಂದು ನಿಮಿಷ ನಿಂತು, “ಇನ್ನು ನಾನು ಹೋಗುತ್ತೇನೆ. +ನೀನು ಅವಳ ಲಗ್ನ ಮಾಡು. +ಅವಳು ತನ್ನ ಹಣಿಯಲ್ಲಿ ಬರೆದಿದ್ದನ್ನು ಅನುಭವಿಸುತ್ತಾಳೆ. +ನಾನು ನನ್ನ ಸ್ಥಾನಕ್ಕೆ ಹೋಗುತ್ತೇನೆ” ಎಂದು ಹೇಳಿದೊಡನೆ, ಅವಳ ಮೈಮೇಲೆ ಬಂದ ಆವೇಶ ಇಳಿದು ಹೋಯಿತು. +ಕಡೆಗೆ ಆ ದೊಡ್ಡಜ್ಜಿ ಇವರೆಲ್ಲ ಹೇಳಿದರು, ‘‘ನೀನು ಸುದ್ದಿಯಿಲ್ಲದೆ ಅವಳ ಲಗ್ನಕ್ಕೆ ಹೇಗೆ ತಯಾರಿ ಮಾಡಿದೆ? +ಎರಡನೆಯ ಸಂಬಂಧದವನಿಗೆ ಕೊಡಲಿಕ್ಕೆ ಹೇಗೆ ಒಪ್ಪಿಗೆ ಕೊಟ್ಟೆ? +ಈ ರೀತಿ ನಡೆದಿದೆ ಎಂದು ನನಗೆ ಗೊತ್ತೇ ಇರಲಿಲ್ಲ. +ನೀನು ನನಗೆ ಈ ಬಗ್ಗಾಗಿ ಸುದ್ದಿ ಹೇಳಿ ಕಳಿಸಲಿಲ್ಲ. +‘ನಾವು ಹೆತ್ತ ವಿನಃ ಮಕ್ಕಳಲ್ಲ; ತಾಯಿ ಇದ್ದ ವಿನಃ ತೌರಲ್ಲ’ ಎಂದು ಒಂದು ಕತೆಗಾದೆಯಿದೆ. +ಹಾಗೆ ಈ ಹೆಣ್ಣುಮಗಳ ಹಣೆಯಲ್ಲಿ ಬರೆಯಿತು ಎಂದು ಕಾಣುತ್ತದೆ. +ತಂದೆ-ತಾಯಿ ಇಬ್ಬರೂ ಇಲ್ಲದೆ ಕದ್ದುಕೊಂಡು ಬಂದು ಅವಳ ಮದುವೆ ಮಾಡುವ ಪರಿಸ್ಥಿತಿ ಬಂತು”. +ಮದುವೆಯ ಸಂಬಂಧ ಒಳ್ಳೆಯದಾಗಬಹುದೋ ಎಂದು ನೋಡಲು ಮೊದಲಿನ ಕಾಲದಲ್ಲಿ ವಾಯಸ ಶಕುನ ಎಂಬುದನ್ನು ನೋಡುತ್ತಿದ್ದರು. +ಅಚೆ ಈಚೆ ಎರಡು ಕೊಡುಬಾಳೆಗಳನ್ನು ಇಡುತ್ತಿದ್ದರು. +ಒಂದು ಬಾಳೆಯಲ್ಲಿ ಅರಿಸಿಣ-ಕುಂಕುಮ ಇಡುತ್ತಿದ್ದರು. +ಇನ್ನೊಂದು ಬಾಳೆಯಲ್ಲಿ ಮಸಿ-ಇದ್ದಿಲನ್ನು ಇಡುತ್ತಿದ್ದರು. +ಆ ಎರಡು ಬಾಳೆಗಳನ್ನು ಮನೆಯ ಹೊರಗೆ ಇಡುತ್ತಿದ್ದರು. +ಕಾಗೆ ಬಂದು ಅರಿಸಿಣ-ಕುಂಕುಮ ಇದ್ದ ಬಾಳೆಯನ್ನು ಕಚ್ಚಿಕೊಂಡು ಹೋದರೆ ಒಳ್ಳೆಯ ಶಕುನ ಎಂದು ತಿಳಿಯುತ್ತಿದ್ದರು. +ಸಣ್ಣಜ್ಜಿಯು ದೊಡ್ಡಜ್ಜಿಯ ಹತ್ತರ, “ನಾವು ಈ ಸಂಬಂಧದ ಸಲುವಾಗಿ ವಾಯಸ ಶಕುನ ನೋಡಿದ್ದೆವು. +ಶಕುನ ಒಳ್ಳೆಯದಾಯಿತು” ಎಂದಳು. +ದೊಡ್ಡಜ್ಜಿಯು, “ನೀನು ಸುಳ್ಳು ಹೇಳಿದೆಯಂತ ಕಾಣುತ್ತದೆ” ಎಂದಳು. +ಸಣ್ಣಜ್ಜಿ, ‘‘ಇಲ್ಲ. . . ನಿಜವಾಗಿಯೂ ಒಳ್ಳೆಯದಾಗಿದೆ” ಎಂದಳು. +ಆಗ ಮದುಮಗಳು ಬಂದು, “ದೊಡ್ಡಜ್ಜಿ. . . ವಾಯಸ ಶಕುನವಾಗಲಿಲ್ಲ. +ನನ್ನ ಹತ್ತರ ‘ಕಾಗೆ ಈ ಬಾಳೆಯನ್ನು ಮುಟ್ಟಿತೋ, ಆ ಬಾಳೆಯನ್ನು ಮುಟ್ಟಿತೋ’ ಎಂದು ನೋಡು ಎಂದು ನಿಲ್ಲಿಸಿದ್ದಳು. +ಕಾಗೆ ಮಸಿ-ಇದ್ದಿಲಿನ ಬಾಳೆಯನ್ನು ಕಚ್ಚಿಕೊಂಡು ಹೋಯಿತು. +ಅರಿಸಿಣ-ಕುಂಕುಮ ಇದ್ದ ಬಾಳೆಯನ್ನು ಕಚ್ಚಿಕೊಂಡು ಹೋಗಲಿಲ್ಲ. +ನಾನೇನೂ ಸುಳ್ಳು ಹೇಳುವುದಿಲ್ಲ. +ಅದೂ ಆ ಕಾಗೆಯು ಆ ಮಸಿ-ಇದ್ದಿಲಿನ ಬಾಳೆಯನ್ನು ಕಚ್ಚಿಕೊಂಡು ಹೋಗಿ ಒಂದು ಒಣ ಮರದ ಮೇಲೆ ಹೋಗಿ ಕೂತಿತು” ಎಂದು ಹೇಳಿದಳು. +ಆದರೆ, ವಾಯಸ ಶಕುನವಾಗಿದೆಯೆಂದು ಮದುವೆ ಮಾಡಿಸಲು ಮುಂದಾದ ಯಜಮಾನನು ಅಜ್ಜಿಯನ್ನು ನಂಬಿಸಿದ್ದನು; +ಆಗ ಸಣ್ಣಜ್ಜಿ ಹೇಳಿದಳು, “ನಾನು ಹುಡುಗಿಯನ್ನು ಹಾಳು ಮಾಡಬೇಕೆಂದು ಎಂದು ಮನಸ್ಸು ಮಾಡಿಲ್ಲ. +ಆ ಯಜಮಾನನ ಮಗಳನ್ನೇ ಮೊದಲು ಆ ವರನಿಗೆ ಕೊಟ್ಟಿದ್ದರು. +ಇನ್ನು ಮಾತನ್ನಂತೂ ಕೊಟ್ಟಾಗಿದೆ. +ಅವಳನ್ನು ಅವನಿಗೆ ಕೊಟ್ಟು ಲಗ್ನಮಾಡುವದೇ ಸೈ. +ಅವಳ ಹಣೆಯಲ್ಲಿ ಒಳ್ಳೆಯದಾಗುವದಾದರೆ ಆಗುತ್ತದೆ” ಎಂದು ಸಣ್ಣಜ್ಜಿ ದೊಡ್ಡಜ್ಜಿಯ ಹತ್ತರ ಹೇಳಿದಳು. +ಹುಡುಗಿ ಗೋಳೋ ಎಂದು ಅತ್ತಳು. +“ನನ್ನನ್ನೂ ಹಾಳು ಮಾಡಬೇಕೆಂದು ಸಣ್ಣಜ್ಜಿ ಈ ಮದುವೆಯ ಸಿದ್ಧತೆ ಮಾಡಿದ್ದಾಳೆ. +ನಾನು ಮದುವೆಯಾಗಲಿಕ್ಕೆ ತಯಾರಿಲ್ಲ” ಎಂದು ಹೇಳಿದಳು. +ಅವಳು ನಿಶ್ಚಯ ಮಾಡಿದ್ದು ವಯಸ್ಸಾದ ಮರುಮದುವೆಯ ವರನಿಗೆ. +ಆದ್ದರಿಂದಲೇ ಹುಡುಗಿ-- ತಾನು ಮದುವೆಯಾಗುವುದಿಲ್ಲವೆಂದು ಹಟ ಮಾಡಿದಳು. +ಊಟ ಬಿಟ್ಟಳು. +ತಿಂಡಿ ತಿನ್ನುವದಿಲ್ಲ-- ಎಂದು ಹೇಳಿದಳು. +ಆಗಿನ ಕಾಲದಲ್ಲಿ ಮದುವೆಯ ಕಾರ್ಯ ಹೆಣ್ಣಿನ ಮನೆಯಲ್ಲಿ ನಾಲ್ಕು ದಿನಗಳದಾಗಿತ್ತು. +ಮದುವೆ ಧಾರೆಯೆರೆದ ದಿನ ಮಧ್ಯಾಹ್ನ ಯಜಮಾನನ ಹೆಂಡತಿ ತಯಾರಾಗಿ ಹೋದಳು. +ಶ್ರೀಮಂತನಾದ ವರನನ್ನು ವಿಷ ಹಾಕಿ ಕೊಲ್ಲಿಸಬೇಕೆಂಬುದೇ ಅವಳ ಉದ್ದೇಶವಾಗಿತ್ತು. +ಅವಳು ವಿಷವನ್ನು ತೆಗೆದುಕೊಂಡು ಹೋಗಿದ್ದಳು. +ವಿಷವನ್ನು ಹಾಲಿನಲ್ಲಿ ಕದಡಿ, ಒಬ್ಬನ ಹತ್ತಿರ, ‘‘ವರನಿಗೆ ಇದನ್ನು ಕುಡಿಯಲು ಕೊಡು’’ ಎಂದು ಕೊಟ್ಟಳು. +ಅವನು ವಿಷವನ್ನು ವರನಿಗೆ ಕೊಡಲು ಸಿದ್ಧನಾಗಲಿಲ್ಲ. +ಐದನೆಯ ದಿವಸ ದಿಬ್ಬಣ ವರನ ಮನೆಗೆ ಹೊರಡಬೇಕಾಯಿತು. +ಹಿಂದಿನ ಕಾಲದಲ್ಲಿ ಚಕ್ಕಡಿಯ ಮೇಲೆ ದಿಬ್ಬಣದವರು ಹೋಗುತ್ತಿದ್ದರು. +ಚಕ್ಕಡಿ ಹತ್ತಲು ರಸ್ತೆಗೆ ಬರಲು ಒಂದು ಮೈಲು ನಡೆದುಹೋಗಬೇಕಾಗಿತ್ತು. +ಹೋಗುವಾಗ ಒಂದು ಗದ್ದೆ ಬಯಲಿನೊಳಗೆ ಒಂದು ನಾಗರಹಾವು ಮದುಮಗಳ ಮುಂದೆ ಹೆಡೆಯನ್ನು ಬಿಚ್ಚಿ ನಿಂತುಬಿಟ್ಟಿತ್ತು. +ಮುಂದೆ ಹೋಗಲೂ ಕೊಡಲಿಲ್ಲ; ಹಿಂದೆ ಹೋಗಲೂ ಕೊಡಲಿಲ್ಲ. +ಮದುಮಗಳು, ‘‘ಹಾವು. . . ಹಾವು. . . ಹಾವು. . . ’’ ಎಂದು ಮೂರು ಸಾರೆ ಕೂಗಿದಳು. +ದಿಬ್ಬಣದ ಸಂಗಡ ಸೇರಿ ಹೋಗಲು ಬಂದ ಜನರೆಲ್ಲರೂ ಅಲ್ಲಿ ಬಂದರು. +ಬಂದು, “ನಮ್ಮಿಂದ ಏನು ತಪ್ಪಿದ್ದರೂ ಕ್ಷಮಿಸು. +ನಮಗೆ ಹೋಗಲು ದಾರಿ ಬಿಡು” ಎಂದು ಹೇಳಿ ಕೈಮುಗಿದು ಪ್ರಾರ್ಥನೆ ಮಾಡಿದರು. +ಅಲ್ಲೊಂದು ತೆಂಗಿನಕಾಯನ್ನು ಒಡೆದರು. +ಆಗ ಅದು ಮೂರು ಸಾರೆ ತಲೆಯನ್ನು ನೆಲಕ್ಕೆ ಬಡಿಯಿತು. +ಆಮೇಲೆ ತನ್ನ ಜಾಗಕ್ಕೆ ತಾನು ಹೊರಟುಹೋಯಿತು. +ಗೃಹಪ್ರವೇಶ ಮತ್ತು ಮದುವೆಯ ಕೊನೆಯ ದಿನದ ಸಟಿಮುಡಿ ಮುಂತಾದ ಎಲ್ಲಾ ಕಾರ್ಯಕ್ರಮಗಳು ಮುಗಿದವು. +ಮದುವೆಯಾಗಿ ಆರು ವರ್ಷಗಳಿಗೆ ಹುಡುಗಿಯ ಗಂಡನಿಗೆ ರೋಗ ಹಿಡಿಯಿತು-- ಅದು ಮಾರಿಕಾ ಉಪದ್ರವ. +ಉಪ್ಪಾರ ಜಾತಿಯ ಒಬ್ಬನಿಗೆ ಮೈಮೇಲೆ ದೇವರ ಆವೇಶ ಬಂತು. +ಆಗ ಜನರು ಇವನಿಗಾದ ಶೀಕಿನ ಪರಿಹಾರದ ಬಗ್ಗೆ ಕೇಳಿಕೊಂಡರು. +“ಇವನಿಗಾದ್ದು ಮಾರಿಕಾ ಉಪದ್ರವ. +ಹಿಂದೆ ನಾನು ಶಕುನದಲ್ಲಿ ಕೇಡನ್ನು ತಿಳಿಸಿದ್ದೆನು. +ಈ ರೋಗ ನಿಲ್ಲದೆ ಅವನನ್ನು ಕೊಂಡು ಹೋಗುತ್ತದೆ. +ಧೈರ್ಯವಿದ್ದವರು ಪ್ರಸಾದ ತಕ್ಕೊಂಡು ಹೋಗಿ ಅವನಿಗೆ ಹಾಕಬೇಕು”. + ಆಗ, ‘‘ನಾನು ತಕ್ಕೊಂಡು ಹೋಗಿ ಹಾಕುತ್ತೇನೆ?’’ ಎಂದು ಒಬ್ಬನು ಮುಂದೆ ಬಂದು ಹೇಳಿದನು. +ಆದರೆ, ಅವನ ವಯಸ್ಸಾದ ತಂದೆ ಹೇಳಿದನು, ‘‘ಖಂಡಿತ ನೀನು ಪ್ರಸಾದವನ್ನು ತೆಗೆದುಕೊಂಡು ಹೋಗಿ ಅವನಿಗೆ ಕೊಡಬೇಡ. +ರೋಗ ಸಾಮಾನ್ಯವಾದದ್ದಲ್ಲ. +ಅದು ಹನ್ನೆರಡು ವರ್ಷ ಆಯುಷ್ಯವಿದ್ದರೂ ತೆಗೆದುಕೊಂಡು ಹೋಗುತ್ತದೆ. +ನನಗಿದ್ದವ ನೀನೊಬ್ಬ ಮಗ. . . ನೀನು ಪ್ರಸಾದ ತೆಗೆದುಕೊಂಡು ಹೋಗಿ ಅವನಿಗೆ ಕೊಟ್ಟರೆ, ರೋಗ ಅವನನ್ನು ಬಿಟ್ಟು ನಿನ್ನನ್ನು ಹಿಡಿಯುತ್ತದೆ. +ನಾನು ನಿನ್ನನ್ನು ಖಂಡಿತ (ಹರ್ಗಿಸ) ಬಿಡುವುದಿಲ್ಲ. +ನೀನು ಪ್ರಸಾದ ತೆಗೆದುಕೊಂಡು ಹೋಗಬೇಡ’’ ಎಂದು ಹೇಳಿ ತಡೆದನು. +ಅವನು ಸುಮ್ಮನೆ ಹಿಂದೆಯೇ ಹೋದನು. +ಯಾರೂ ಪ್ರಸಾದ ತೆಗೆದುಕೊಂಡು ಹೋಗಿ ಹಾಕಲಿಲ್ಲ. +ಮದುವೆಯಾದವನು ಸತ್ತುಹೋದನು. +ನೆಂಟರಿಷ್ಟರೆಲ್ಲಾ ಬಂದು ಬೊಬ್ಬೆ ಹೊಡೆದರು. +ಸಣ್ಣಜ್ಜಿಯು, ‘ಅವನು ತನಗೆ ಮೋಸ ಮಾಡಿದ’ ಎಂದು ಪಶ್ಚಾತ್ತಾಪಪಟ್ಟಳು. +ಒಂದು ದೇಶದಲ್ಲಿ ರಾಜನಿದ್ದ. +ಅವನಿಗೆ ಒಂಬತ್ತು ಜನ ಹೆಂಡಿರು. +ಹುಡುಗರಿರಲಿಲ್ಲ ರಾಜನು ರಾಜ್ಯವನ್ನು ಮಂತ್ರಿಗೆ ವಹಿಸಿಕೊಟ್ಟು ಅರಣ್ಯಕ್ಕೆ ಬೇಟೆಗೆ ನಡೆದನು. +ದೊಡ್ಡ ಅರಣ್ಯ ಬಿಸಿಲು ತಾಪಕ್ಕೆ ಅವನಿಗೆ ಆಸರ (ನೀರಡಿಕೆ) ಆಯಿತು. +ಹತ್ತಿರ ಒಂದು ಕೆರೆ ಕಂಡಿತು. +ಆ ಕೆರೆಗೆ ಹೋದನು. +ಅಲ್ಲಿ ಕೆರೆ ದಂಡೆಯ ಮೇಲೆ ಕಾಲು ಇಳಿಬಿಟ್ಟು ಒಬ್ಬ ಹುಡುಗಿ ಕುಳಿತಿದ್ದಳು. +ಅವಳು ಚಂದವಾಗಿದ್ದಳು. +ನೋಡಿ ಅವನಿಗೆ ಅವಳ ಮೇಲೆ ಮನಸ್ಸಾಯಿತು. +‘‘ನೀನು ಯಾರು?’’ ಎಂದು ಕೇಳಿದನು. +‘‘ತಾನು ವನದೇವತೆ’ ಎಂದಳು. +‘‘ನಿನಗೆ ಸಂಬಂಧಿಕರು ಯಾರು ಯಾರಿದ್ದಾರೆ?’’ ಕೇಳಿದನು. +‘‘ಯಾರೂ ಇಲ್ಲ. . . ’’ ಎಂದಳು. +‘‘ಇಲ್ಲಿಗೆ ಯಾಕೆ ಬಂದೆ?’’ ಎಂದು ಕೇಳಿದನು. +‘‘ಊರೂರು ತಿರುಗಿದೆ. +ಇಲ್ಲಿ ಕೆರೆಯಲ್ಲಿ ಬಿದ್ದು ಜೀವ ಕೊಡಲಿಕ್ಕೆ ಬಂದೆ’’ . +ರಾಜ, “ನನಗೆ ನಿನ್ನ ಮೇಲೆ ಮನಸ್ಸಾಗಿದೆ ಲಗ್ನವಾಗುವೆ” ಎಂದನು. +“ನಾನು ಹಾಗೆಯೇ ನಿಮ್ಮನ್ನು ಲಗ್ನವಾಗುವೆನು. +ನನ್ನ ಕರಾರಿದೆ. . . ” ಎಂದಳು. +‘‘ನಿನ್ನ ಕರಾರೇನು?’’ +‘‘ನನ್ನಲ್ಲಿ ಹುಟ್ಟಿದ ಹುಡುಗನಿಗೆ ಪಟ್ಟ ಕಟ್ಟಿದರೆ ಆಗಬಹುದು’’ . +“ಅಡ್ಡಿಯಿಲ್ಲ ಕುದುರೆ ಹತ್ತು. . . ” ಅಂದನು. +ಅವಳನ್ನು ಕರೆದು ತಂದನು. +ನಿತ್ಯದಲ್ಲೂ ಅರಸು ಬಂದಾಗ ಒಂಬತ್ತು ಜನ ರಾಣಿಯರು ಕಾಲು ತೊಳೆಯಲು ನೀರು ತರುತ್ತಿದ್ದರು. +ಸಂಗಡ ಆ ದಿನ ಒಬ್ಬ ಹೆಣ್ಣು ಇದೆ. +ಮಂತ್ರಿಗೆ ಹೇಳಿದನು ರಾಜ, “ಇವಳನ್ನು ಮೆಚ್ಚಿ ತಂದೆ. +ನಾಳೆ ಇವಳನ್ನು ಲಗ್ನವಾಗಬೇಕು” ಎಂದನು. +ಮಾರನೇ ದಿನ ಮಂತ್ರಿ ಲಗ್ನದ ತಯಾರಿ ಮಾಡಿ, ಲಗ್ನವಾಯಿತು. +ಐದಾರು ತಿಂಗಳು ಕಳೆದವು. +ಒಂದು ದಿನ ಕಿರಿ ಹೆಂಡತಿಗೆ ಹೊಟ್ಟೆ ಕಚ್ಚುವದು ಶುರುವಾಯಿತು. +ರಾಜನಿಗೆ ಹೇಳಿದರು. +ರಾಜ ಬಂದ, ‘‘ಏನಾಯಿತು?’’ ಎಂದು ಕೇಳಿದನು. +‘‘ಭಯಂಕರ ಹೊಟ್ಟೆ ಕಚ್ಚಣವಾಗಿದೆ. +ಗುಣವಾಗುತ್ತಿಲ್ಲ. . . ’’ “ಏನು ಮಾಡಿದರೆ ಗುಣವಾಗುವುದು?” ರಾಜ ಕೇಳಿದ. +‘‘ಒಂಬತ್ತು ಮಂದಿ ಅಕ್ಕಂದಿರನ್ನೂ ಅರಣ್ಯಕ್ಕೆ ಅಟ್ಟಿದರೆ ಗುಣವಾಗುವುದು’’ ಅಂದಳು. +‘‘ಅಡ್ಡಿಯಲ್ಲ. . . ’’ ಎಂದನು. +ಮಾರನೇ ದಿನ ಬೆಳಿಗ್ಗೆ ಮಂತ್ರಿಗೆ ಹೇಳಿದನು. +“ಒಂಬತ್ತೂ ಜನ ರಾಣಿಯರನ್ನೂ ಕಾಡಿಗೆ ಅಟ್ಟು” ಎಂದನು. +ಕಿರಿ ರಾಣಿ ಒಬ್ಬೊಬ್ಬ ಅಕ್ಕನನ್ನೂ ಕರೆದಳು. +“ಅಕ್ಕ. . . ನನ್ನಕ್ಕ ಕಾಡಿಗೆ ಕೊಟ್ಟಿದ್ದಾಳೆ. +ಊರು ಬಿಟ್ಟು ಹೋಗುವಾಗ ಹಚ್ಚಿಕೊಳ್ಳಬೇಕು” ಎಂದು ಕಾಡಿಗೆ ಹಚ್ಚಿದಳು. +ಒಂಬತ್ತೂ ಜನರ ಕಣ್ಣುಗಳೂ ಕುರುಡಾದವು. +ಅರಣ್ಯಕ್ಕೆ ಕಳಿಸಿದಳು. +ಕಳಿಸುವಾಗ, ‘‘ಈ ಬಟ್ಟೆ ಉಡಬೇಡರಿ. . . ’’ ಎಂದು ಹೇಳಿ, ಹಳೆ ಬಟ್ಟೆ ಕೊಟ್ಟಳು. +ಒಂಬತ್ತೂ ಜನ ರಾಣಿಯರೂ ಗರ್ಭಿಣಿಯರಾಗಿದ್ದರು. +ಮಂತ್ರಿ ಅವರನ್ನು ಕಾಡಿಗೆ ಬಿಟ್ಟು ಬಂದನು. +ಕಣ್ಣು ಕಾಣದ ಇವರಿಗೆ ಊಟಕ್ಕೆ ಏನೂ ವ್ಯವಸ್ಥೆ ಮಾಡಿರಲಿಲ್ಲ. +ಒಬ್ಬಳು ಆಕಸ್ಮಾತ್ ಹಡೆದಳು. +ಹಡೆದ ಶಿಶುವನ್ನು ಒಂಬತ್ತು ಪಾಲು ಮಾಡಿದಳು. +ಒಂಬತ್ತು ಜನರೂ ಹಂಚಿಕೊಂಡರು. +ಮತ್ತೊಬ್ಬಳು ಹಡೆದಳು. +ಅವಳೂ ತನ್ನ ಶಿಶುವನ್ನು ಒಂಬತ್ತು ಪಾಲು ಮಾಡಿ ಅವರಿಗೆ ಹಂಚಿ ತಾನೂ ಒಂದು ಪಾಲನ್ನು ತಿಂದಳು. +ಒಂಬತ್ತೂ ಜನರು ಹಡೆದರು. +ಕಿರಿಯವಳು ಮಾತ್ರ ತನಗೆ ಅಕ್ಕಂದಿರು ಕೊಟ್ಟಿದ್ದ ಎಂಟು ಶಿಶುಗಳ ಪಾಲನ್ನು ತಿನ್ನದೆ ಇಟ್ಟುಕೊಂಡಿದ್ದಳು. +ಅವಳೂ ಹಡೆದಳು. +ತಾನು ತಿನ್ನದೇ ಉಳಿಸಿದ್ದ ಎಂಟು ಪಾಲುಗಳನ್ನು ಎಂಟು ಜನ ಅಕ್ಕಂದಿರಿಗೆ ತಿನ್ನಲು ಕೊಟ್ಟಳು. +ನೀರನ್ನು ಕುಡಿಯಲು ಹುಲಿಯು ಎರಡು ಮರಿಗಳ ಸಂಗಡ ಕೆರೆಗೆ ಬರುತ್ತಿತ್ತು. +ಶಿಶು ಅತ್ತಿದ್ದನ್ನು ಕೇಳಿ ಅದು ಶಿಶುವನ್ನು ಎತ್ತಿಕೊಂಡು ಹೋಗಿ ಸಾಕಿತು. +ಸಾಕಿ ಅವನು ದೊಡ್ಡವನಾದನು. +ಎಂಟು ಹತ್ತು ವರ್ಷಗಳಾದವು ಅವನಿಗೆ. +ಹುಲಿಯ ಗುಹೆಯಿಂದ ಈ ರಾಣಿಯರು ಉಳಿದಿದ್ದ ಸ್ಥಳ ಸಮೀಪವಿತ್ತು. +ಮನುಷ್ಯರು ಮಾತಾಡಿಕೊಳ್ಳುವದು ಅವನಿಗೆ ಕೇಳಿ ಬಂದವನು, ‘‘ಯಾರು ನೀವು?’’ ಎಂದು ಕೇಳಿದನು. +ಅವರು, ‘‘ಯಾರು ನೀನು?’’ ಎಂದು ಕೇಳಿದರು. +“ನನ್ನ ತಾಯಿ ಹುಲಿ. . . ನನಗೆ ಅಣ್ಣ-ತಂಗಿ ಇಬ್ಬರಿದ್ದಾರೆ. +ಆಡಲಿಕ್ಕೆ ಚಂಡು ಬೇಕು ಕೊಡಿ” ಎಂದನು. +ಕಿರಿ ರಾಣಿಯು ತನ್ನ ಸೀರೆಯ ಸೆರಗನ್ನು ಹರಿದು ಮುದ್ದೆ ಮಾಡಿ (ಕಟ್ಟಿ) ಕೊಟ್ಟಳು. +ಚಂಡನ್ನು ತಕ್ಕೊಂಡ ಅವನು ತನ್ನ ಹುಲಿ ಗವಿಗೆ ಹೋದನು. +ಕೆಲವು ವರ್ಷಗಳು ಕಳೆದ ಮೇಲೆ ಅವನು ಊರಿಗೆ ಬಂದನು. +ಅಲ್ಲಿ ಹುಡುಗರು ಚಂಡಿನ ಆಟ ಆಡುತ್ತಿದ್ದರು. +ಇವನೂ ಚಂಡನ್ನು ತಕ್ಕೊಂಡು ಅವರೊಡನೆ ಆಡಿದನು. +ಅದನ್ನು ರಾಜನ ಹೆಂಡತಿ ಕಂಡಳು. +ಚೆಂಡು ಅವಳಿದ್ದಲ್ಲಿಗೆ ಹೋಯಿತು. +ಚೆಂಡನ್ನು ಅವಳು ಕೊಂಡೊಯ್ದಳು. +ಮರುದಿನ ಅವಳಿಗೆ ಹೊಟ್ಟೆ ಕಚ್ಚಣ ಬಂತು. +ಉಪಚಾರ ಮಾಡಿದರು. ಕಡಿಮೆಯಾಗಲಿಲ್ಲ. +ರಾಜನು, “ಏನು ಮಾಡಿದರೆ ಗುಣವಾಗುವದು?” ಎಂದು ಹೇಳಿದನು. +“ನನಗೆ ಯಾತರಿಂದಲೂ ಗುಣವಿಲ್ಲ. +ಈ ಚೆಂಡನ್ನು ಯಾರು ತಂದಿದ್ದನೋ ಆ ಹುಡುಗನ ಹತ್ತಿರ ಹುಲಿಯ ಹಾಲನ್ನು ತಂದುಕೊಡುವಂತೆ ಹೇಳಿರಿ. +ಅದನ್ನು ನಾನು ಕುಡಿದರೆ ನನಗೆ ಗುಣವಾದೀತು. +ನನಗೆ ಆದರಿಂದ ಹೊಟ್ಟೆ ಕಚ್ಚಣ ಕಡಿಮೆಯಾಗದಿದ್ದರೆ ಅವನ ತಲೆ ಹೊಡೆಸಬೇಕು. +”ರಾಜನು ಮಂತ್ರಿಗೆ ಹೇಳಿದನು. +ಆ ಹುಡುಗನನ್ನು ಹಿಡಿಯುತ್ತಾರೆ. +ಮರುದಿನ ಮಂತ್ರಿ ಹುಡುಗನ್ನು ರಾಜನ ಮುಂದೆ ಕರೆದು ತಂದನು. +ರಾಜ ಕೇಳಿದನು, “ನೀನು ಯಾರು?” +“ನಾನು ಹುಲಿಯ ಹುಡುಗ” . +‘‘ನಿನ್ನ ಹೆಸರೇನು?’’ + “ಮುಗಿದರೆ ಸಾವಿರ, ನಾನು ಕೈ ಮುಗಿದರೆ ನನಗೆ ಒಂದು ಸಾವಿರ ರೂಪಾಯಿ ಕೊಡಬೇಕು” ಎಂದು ಹೇಳಿ ಕೈ ಮುಗಿದನು. +ರಾಜ ಒಂದು ಸಾವಿರ ರೂಪಾಯಿ ಕೊಟ್ಟನು. +“ನೀನು ಹುಲಿಯ ಹಾಲನ್ನು ನಾಳೆ ಬೆಳಿಗ್ಗೆಯಾಗುವಷ್ಟರಲ್ಲಿ ತರಬೇಕು. +ಇಲ್ಲದಿದ್ದರೆ, ನಿನ್ನ ತಲೆಯನ್ನು ಹೊಡೆಯಿಸುವೆನು” ಎಂದನು. +ಇವನು, ‘‘ನನಗೆ ಗೊತ್ತಿಲ್ಲ, ತಾಯನ್ನು ಕೇಳಿ ಹೇಳುವೆ’’ ಎಂದು ಹೇಳಿ ಬಂದನು. +ಗುಹೆಯಲ್ಲಿ ಸುಮ್ಮನೆ ಮಲಗಿದನು. +ಹುಲಿ ಬಂತು ನೋಡಿತು. + “ಏಕೆ ಮಲಗಿದೆ?’’ ಎಂದು ಕೇಳಿತು. +ರಾಜ ಹೇಳಿದ್ದನ್ನು ತಿಳಿಸಿದನು. +‘‘ಆಗಬಹುದು ನಾಳೆ ಹುಲಿಯನ್ನು ತಂದು ಕೊಡವೆನು. +ಹಾಲನ್ನು ಕರೆದುಕೊಳ್ಳಬೇಕು ಎನ್ನು” ಅಂದಿತು. +ಹಾಗೆಯೇ ಹೋಗಿ ಹೇಳಿ ಬಂದನು. +ಬೆಳಿಗ್ಗೆ ಮುಂಚೆ ಹುಲಿ ಮೂರು ಕಲ್ಲು ಹರಳು ಕೊಟ್ಟಿತು. +“‘ಹಾಲ ಕರೆವ ಹುಲಿಯೆಂಬ ಹುಲಿಯೆಲ್ಲ ಬರಬೇಕು’ ಎಂದು ಒಂದು ಕಲ್ಲು ಹರಳು ಒಗೆ. . . ” ಅದರಂತೆ ಒಗೆದಾಗ ರಾಜನ ಮನೆಗೆ ಹುಲಿಗಳು ಬಂದವು. +ಸಾಕಿದ ಈ ಹುಲಿಯೂ ಬಂತು. +ಹುಲಿಗಳ ಗೋಲೆ (ಹಿಂಡು) ಬಂದದ್ದನ್ನು ನೋಡಿ ಜನರು ಓಡಿಹೋದರು. +ರಾಜನ ಮನೆಯಲ್ಲಿ ಹೆದರಿಕೊಂಡು ಹೆಬ್ಬಾಗಿಲು ಬಂದ್ ಮಾಡಿದರು. +ಹುಡುಗ, ‘‘ಹುಲಿಗಳ ಹಾಲನ್ನು ಕರೆದುಕೊಳ್ಳಿರಿ’’ ಅಂದನು. +ರಾಜ ಉಪ್ಪರಿಗೆಯಿಂದಲೇ ಹುಲಿಗಳು ಬಂದದ್ದನ್ನು ನೋಡಿದನು. +“ನಿನ್ನ ಹುಲಿಗಳನ್ನು ತಿರುಗಿ ಕರೆದುಕೊಂಡು ಹೋಗು. +ನೀನು ಕೇಳಿದಷ್ಟು ಹಣ ಕೊಡುವೆ” ಎಂದನು. +ಹುಡುಗ, ‘‘ಚೆಂಡನ್ನು ಕೊಡಿಸು’’ ಎಂದನು. +ಅವಳು ಚೆಂಡನ್ನು ಕೊಡಲಿಲ್ಲ. +ಹಣ ತೆಗೆದುಕೊಂಡು ಹುಲಿಗಳನ್ನು ಪರತ್ ಕರೆದುಕೊಂಡು ಹೋಗಿ, ‘‘ನಿಮ್ಮ ಜಾಗಕ್ಕೆ ಹೋಗಿ’’ ಎಂದು ಒಂದು ಕಲ್ಲು ಹರಳನ್ನು ಒಗೆದನು. +ಅವು ಹೋದವು. +ಬಂದವನು ರಾಜನ ಒಂಬತ್ತು ಮಂದಿ ಹೆಂಡಿರ ಹತ್ತರ ಕೇಳಿದನು, ‘‘ನೀವು ಯಾರು?’’ +‘‘ನಾವು ಈ ಊರ ರಾಜನ ಹೆಂಡಿರು. +ರಾಜನು ಹತ್ತನೇ ಹೆಂಡತಿಯನ್ನು ಲಗ್ನವಾಗಿ ನಮ್ಮನ್ನು ಹೊರಹಾಕಿದನು. +ನಮಗೆ ಕಣ್ಣುಗಳು ಕಾಣುವುದಿಲ್ಲ. +ನಮಗೆ ಹೊಟ್ಟೆಗಿಲ್ಲ’’. + ‘‘ನೀನು ಯಾರು?’’ ಎಂದು ಕೇಳಿದರು. +‘‘ನಾನು ಹುಲಿಯ ಮಗ. +ಮುಗಿದರೆ ಸಾವಿರ ಎಂದು ನನ್ನ ಹೆಸರು. . . ನನ್ನಿಂದೇನಾಗಬೇಕು?” +“ನಮಗೆ ಹೊಟ್ಟೆಗಿಲ್ಲ. +ನೀನು ಏನಾದರೂ ತಂದು ಕೊಟ್ಟರೆ ನಾವು ತಿನ್ನುವೆವು. +”ಇವನು ಪೇಟೆಗೆ ಹೋಗಿ ಸಾಮಗ್ರಿಗಳನ್ನು ತಕ್ಕೊಂಡು ಗಾಡಿಯ ಮೇಲೆ ಹಾಕಿಕೊಂಡು ಒಬ್ಬ ಮುದುಕಿಯನ್ನು ಕರೆದುಕೊಂಡು ಬಂದು, ‘‘ಇಲ್ಲಿ ಅಡಿಗೆ ಮಾಡಿಕೊಂಡು, ಈ ಹೆಂಗಸರಿಗೂ ಊಟಕ್ಕೆ ಹಾಕಿ, ನೀನೂ ಊಟ ಮಾಡಿಕೊಂಡು ಇರು’’ ಎಂದನು. +ತಾನೂ ಅಲ್ಲಿ ಉಳಿದನು. +ಊರೊಳಗೆ ಹೋಗಿ ಗುರುತು ಪರಿಚಯ ಮಾಡಿಕೊಂಡು ಅವರಿವರ ಮನೆಗಳಲ್ಲಿ ಉಳಿದನು. +ರಾಜನ ಮನೆಯ ರಸ್ತೆಯಲ್ಲಿ ಅವನು ತಿರುಗಿದ್ದನ್ನು ರಾಣಿ ಕಂಡಳು. +ಮತ್ತೆ ಅವಳಿಗೆ ಹೊಟ್ಟೆ ಶೂಲೆ ಶುರುವಾಯಿತು. +ರಾಜನು, “ಮತ್ತೇನು ತೊಂದರೆ?” ಎಂದು ಕೇಳಿದನು. +“ಹೊಟ್ಟೆ ಶೂಲೆ ಕಮ್ಮಿಯಾಗದು. +” ‘ಯಾಕೆ?’ ಎಂದು ಕೇಳಿದನು. +‘‘ಮೊದಲು ನನಗೆ ಈ ಶೀಕಾದಾಗ ನನ್ನ ಅಕ್ಕ ಹುಳಸೆ ಸೊಪ್ಪಿನ ಕಷಾಯ ಮಾಡಿಕೊಡುತ್ತಿದ್ದಳು. +ಅವಳು ಈಗ ಸಮೀಪದಲ್ಲಿ ಇಲ್ಲ’’ ಎಂದಳು. +“ಹುಳಸೆ ಸೊಪ್ಪಿಗೆ ಬಡತನವೋ (ಕೊರತೆಯೋ)?” ಎಂದು ರಾಜ ಕೇಳಿದ. +“ಇಲ್ಲಿಯ ಹುಳಸೆ ಮರದ ಸೊಪ್ಪಲ್ಲ. +ನನ್ನ ಅಕ್ಕನ ಮನೆಯ ಮುಂದೆ ಪುರಾತನ ಕಾಲದ ಹುಳಸೆ ಮರವಿದೆ. . . ಅದರ ಸೊಪ್ಪು, ತೊಗಟೆ, ಬೇರು ತಂದು ಕಷಾಯ ಮಾಡಿಕೊಟ್ಟರೆ ಗುಣವಾಗುವದು. +ಇಲ್ಲದಿದ್ದರೆ ಸಾವೇ. . . ” ಎಂದಳು. +‘‘ಅದು ಎಲ್ಲಿದೆ? +ಅದನ್ನು ತರುವವರು ಯಾರು?’’ “ಇಲ್ಲಿಂದ ಪೂರ್ವಕ್ಕೆ ಒಂದು ಸಾವಿರ ಯೋಜನಗಳ ಆಚೆ ಏಳು ಸಮುದ್ರ ದಾಟಿ, ಕೀಳು ಸಮುದ್ರದಾಚೆಗೆ ಆ ಜಾಗವಿದೆ. +ಅಲ್ಲಿಂದ ತರಬೇಕು”. + “ಅದನ್ನು ಯಾರು ತಂದಾರು?” + “ಮುಗಿದರೆ ಸಾವಿರ ಎಂಬವನ ಹತ್ತಿರ ತರಲು ಹೇಳಬೇಕು; + ತರಲಿಲ್ಲವಾದರೆ ಅವನ ತಲೆ ಹೊಡೆಸಬೇಕು. +ತಂದರೆ ನನ್ನ ಶೀಕು ಗುಣವಾಗುವುದು”. +ಮರುದಿನ ಅವನನ್ನು ಕರೆಸಿದನು. +ಅವನು ಬಂದು ಕೈಮುಗಿದನು. +ಅವನಿಗೆ ರಾಜ ಒಂದು ಸಾವಿರ ರೂಪಾಯಿಗಳನ್ನು ಕೊಟ್ಟನು. +“ನನ್ನನ್ನು ರಾಜರು ಕರೆಸಿದ್ದೇಕೆ?’’ ಎಂದು ಕೇಳಿದನು. +“ನೋಡು, ನೀನೊಂದು ಕೆಲಸ ಮಾಡು. +ಏಳು ಸಮುದ್ರಗಳ ಅಚೆಗೆ ಕೀಳು ಸಮುದ್ರದ ಮುಂದೆ ರಾಣಿಯ ಅಕ್ಕನ ಮನೆಯಿದೆ. +ಅಲ್ಲಿಂದ ನೀನು ಹುಳಸೆ ಸೊಪ್ಪು, ತೊಗಟೆ, ಬೇರು ತಂದುಕೊಡು. +ತಂದುಕೊಟ್ಟರೆ ಒಳ್ಳೆಯದು. . . ಇಲ್ಲದಿದ್ದರೆ, ನಿನ್ನ ತಲೆ ಹೊಡೆಯಿಸುವೆನು”. + ‘‘ತಾಯನ್ನು ಕೇಳಿ ಹೇಳುವೆ’’ ಎಂದನು. +ಹಾಗೇ ಮನೆಗೆ ಬಂದು ಮಲಗಿಕೊಂಡನು. +ಹುಲಿ ಬಂತು‘‘ಏನಾಯಿತು? ಮಲಗಿದೆ. . . ’’ ಎಂದು ಕೇಳಿತು. +ಇವನು, “ರಾಜರಿಗೆ ಹೀಗೆ ಆಗಬೇಕಂತೆ; +ಇಲ್ಲದಿದ್ದರೆ ತಲೆ ಹೊಡೆಯಿಸುವರಂತೆ” ‘‘ಅಡ್ಡಿಯಿಲ್ಲ, ಹೋಗಿ ಅರಸರಿಗೆ ಹೇಳಿ, ಆರು ತಿಂಗಳು ಮುದ್ದತ್ತು ತಕ್ಕೊಂಡು ಬಾ’’ ಎಂದಿತು. +ಬೆಳಿಗ್ಗೆ ಹೋದನು. +ರಾಜನಿಗೆ ‘‘ಆರು ತಿಂಗಳು ಮುದ್ದತು ಕೊಡಿ” ಎಂದು ಹೇಳಿ, “ಹೋಗುವ ದಾರಿ ಹೇಳಬೇಕು” ಎಂದನು. +ರಾಜನು ಹೆಂಡತಿಯ ಹತ್ತರ ಹುಡುಗ ಆರು ತಿಂಗಳು ಮುದ್ದತ್ತು ಕೇಳಿದ ವಿಷಯ ಹೇಳಿ, “ಅಷ್ಟರವರೆಗೆ ಬದುಕಿ ಉಳಿವೆಯೋ?” ಎಂದು ಕೇಳಿದನು. +“ಆರು ತಿಂಗಳಲ್ಲ; ಒಂದು ವರ್ಷ ಬದುಕಿರುವನು. +ಅದನ್ನು ಅವನು ತರಬೇಕು” . +“ಆದೀತು ಹೋಗುವೆ” ಎಂದನು. +“ಯಾವಾಗ ಹೋಗುವೆ?” ಎಂದು ಕೇಳಿದಾಗ ‘‘ಈ ಹೊತ್ತೇ ಹೋಗುವೆ’’ ಎಂದು ಹೇಳಿ, ಕೈಮುಗಿದನು. +ರಾಜ ಅವನಿಗೆ ಒಂದು ಸಾವಿರ ರೂಪಾಯಿ ಕೊಟ್ಟನು. +“ಹೋಗುವಾಗ ಚೀಟಿ ಕೊಡುವೆ’’ ಎಂದಳು. +ರಾಣಿ ಅಕ್ಕನಿಗೆ ಚೀಟಿ ಬರೆದಳು. +‘ಅಕ್ಕನ ಮಗ ಬರುವನು. +ಅವನನ್ನು ನೀನು ಕೊಲ್ಲಬೇಕು’ ಎಂದು ಬರೆದು ಕೊಟ್ಟಳು. +ಅವನು ಚೀಟಿ ತಕ್ಕೊಂಡು ಹೋಗುವಾಗ, ರಾಜನಿಗೆ ಮತ್ತೆ ಕೈಮುಗಿದನು. +ಆರು ತಿಂಗಳು ಆಹಾರದ ವ್ಯವಸ್ಥೆ ಮಾಡಲು ಹಣಕ್ಕಾಗಿ. +ಮತ್ತೆ ಕೈ ಮುಗಿದಾಗ ರಾಜ ಒಂದು ಸಾವಿರ ರೂಪಾಯಿಗಳನ್ನು ಮತ್ತೆ ಕೊಟ್ಟನು. +ಪೇಟೆಗೆ ಬಂದು, ಆರು ತಿಂಗಳ ಆಹಾರ ಸಾಮಗ್ರಿ ತಂದು ಹಾಕಿದನು. +ಅಜ್ಜಿ ಅಡಿಗೆ ಮಾಡಿ ಹಾಕಲು ಅಲ್ಲಿಯೇ ಇದ್ದಳು. +ಹುಲಿ, “ನೀನು ಇದೇ ದಾರಿಯಲ್ಲಿ ಹೋಗಿ ಹದಿನಾರು ನಿಂಬೆಹಣ್ಣು ತಕ್ಕೊಂಡು ಹೋಗು. +ಚಾಕು ತೆಗೆದುಕೋ, ಉಳಿದದ್ದನ್ನು ಏನು ಮೆಟ್ಟಿದರೂ ಸರಿ; +ಹೆಂಗಸರ ಮಲಮೂತ್ರ, ಉಚ್ಚಿಷ್ಟ (ಎಂಜಲು) ಮೆಟ್ಟಬೇಡ. +ಅಂಥ ಪ್ರಸಂಗ ಬಂದಲ್ಲಿ ನಿಂಬೆಹಣ್ಣು (ಕಡಿ) ಕಾಲ ಕೆಳಗೆ ಇಟ್ಟುಕೊಂಡು ದಾಟು; ಲಿಂಬೆ ಕಡಿ ಮೆಟ್ಟಿ ಹೋಗು” ಎಂದಿತು. +ಆಗ ಕೈಮುಗಿದು ಹೊರಟು ಹೋದನು. +ಮೂರು ಯೋಜನ ದಾಟಿ ಹೋದನು. +ಆಮೇಲೆ ಮುಂದೆ, ಅಲ್ಲಿ ಹಾರಿಹೋಗುವಂಥದಲ್ಲ; ಹಾದು ಹೋಗುವಂಥದಲ್ಲ, ನಡೆದು ಹೋಗುವಂಥದಲ್ಲ ತರದಲ್ಲಿ ಏಳು ಹಳ್ಳಗಳು. +ರಾಜ್ಯ ದಾಟುವಾಗ ದಾಟಿ ಹೋಗಬೇಕು. +ಆಲೋಚನೆ ಮಾಡಿದನು. +ಹೊಲಸನ್ನು ದಾಟುವುದು ಹೇಗೆ. +ನಿಂಬೆಹಣ್ಣನ್ನು ಕೊಯ್ದನು. +ಒಂದು ಕಾಲಿಗೆ ಬರುವಷ್ಟು ಇಟ್ಟನು. +ಹಾರಿ ದಾಟಿದನು. +ಅಲ್ಲಿಯ ರಾಜನ ಹುಡುಗಿ ಏಳುಪ್ಪರಿಗೆಯ ಮೇಲೆ ಕೂತು ನೋಡುತ್ತಿದ್ದಳು. +ಕೆಳಗಿಳಿದು ಬಂದಳು. +ಅಪ್ಪನ ಹತ್ತರ ಅಂದಳು, “ಇವನೇ ನನ್ನ ಗಂಡ. +ಇವನಿಗೆ ನನ್ನನ್ನು ಲಗ್ನ ಮಾಡಿಕೊಡು” . +ರಾಜ ಲಗ್ನ ಮಾಡಿಕೊಟ್ಟನು. +ಕೆಲವು ದಿನ ಅಲ್ಲಿ ಉಳಿದನು. +ಅಲೋಚನೆ ಮಾಡಿದನು. +ಹೆಂಡತಿಯ ಹತ್ತರ ರಾತ್ರಿ ಹೇಳಿದನು, “ತಾನು ಇಲ್ಲೇ ಇರಲ್ಲಿಕ್ಕೆ ಸಾಧ್ಯವಿಲ್ಲ. +ಬೆಳಿಗ್ಗೆ ಎದ್ದು ಹೊರಡಬೇಕು. +ಇಂಥ ಕಾರ್ಯಕ್ಕೆ ಹೀಗೆ ಹೋಗಬೇಕು” ಅಂದನು, “ಏಳು ಸಮುದ್ರ ದಾಟಿ, ಕೀಳು ಸಮುದ್ರದ ಕಡೆಗೆ ಹೋಗಬೇಕು. +ಇದು ಶಕ್ಯವಿಲ್ಲ. +ಅಲ್ಲಿಯ ಹುಳಸೆ ಸೊಪ್ಪು, ತೊಗಟೆ, ಬೇರು ತಂದುಕೊಡಬೇಕು. +ಇಲ್ಲದಿದ್ದರೆ ತಲೆ ಹೊಡೆಯಿಸುವೆ ಎಂದು ಹೇಳಿದ್ದಾನೆ ರಾಜ. +ಆರು ತಿಂಗಳೊಳಗೆ ತರಲೇಬೇಕು. +ಹೋಗುವೆನು ಬೆಳಿಗ್ಗೆ” ಎಂದನು. +“ಇಲ್ಲಿ ಸಮುದ್ರದಂಚಿಗೆ ಒಬ್ಬ ಋಷಿಯಿದ್ದಾನೆ. +ಋಷಿಯನ್ನು ಕೇಳಿ ಕೆಲಸ ಮಾಡು. +ಇಲ್ಲದಿದ್ದರೆ ಸಾಧ್ಯವಿಲ್ಲ”. + “ಹೇಗೆ ಹೋಗಿ ಋಷಿಯನ್ನು ಕೇಳಲಿ?” ಅಂತ ಕೇಳಿದನು. +“ಋಷಿ ಸಾಯಂಕಾಲ ಹೊರಟು ಹೋಗಿ, ಬೆಳಿಗ್ಗೆಯ ಒಳಗೆ ಗುಡಿಸಲಿಗೆ ಬರುತ್ತಾನೆ. +ಅಷ್ಟರಲ್ಲಿ ಕಸ ತೆಗೆದು, ಗೋಮಯ ಚೆಲ್ಲಿ ಒಳಹೊಕ್ಕು ಕೂತು ಬಾಗಿಲನ್ನು ಹಾಕಿಕೊಳ್ಳಬೇಕು. +‘ನಿನ್ನ ಕೆಲಸ ಪೂರೈಸಿಕೊಡುತ್ತೇನೆ’ ಎಂದರೆ ಮಾತ್ರ ಬಾಗಿಲನ್ನು ತೆಗೆ. +ಅವನ ಕೈಯಿಂದ ಅಭಯ ತೆಗೆದುಕೋ. +ಇಲ್ಲವಾದರೆ ಬಾಗಿಲು ತೆಗೆಯಬೇಡ. +ನಾಳೆ ಈ ಕೆಲಸ ಮಾಡು. +ಕಡೆಗೆ ಹೋಗು” ಎಂದಳು. +ಅದಕ್ಕೆ ಒಪ್ಪಿದನು. +ಮಾರನೆ ದಿನ ಬೆಳಗಾಗುವ ಮೊದಲು ರಾತ್ರಿಯಿರುವಾಗಲೇ ಕಸ-ಗೋಮಯ ಕೆಲಸ ಮಾಡಿ, ಒಳಗೆ ಹೋಗಿ ಬಾಗಿಲನ್ನು ಹಾಕಿಕೊಂಡನು. +ಋಷಿ ಬೆಳಿಗ್ಗೆಯೊಳಗೆ ಬಂದನು. +ಬಾಗಿಲನ್ನು ಹಾಕಿದ್ದು ತೆಗೆಯಲಿಲ್ಲ. +ಬಯ್ದನು; ಕೂಗಿದನು. +ಆಗಲೂ ತೆಗೆಯಲಿಲ್ಲ. +ಆಗ, “ಏನು ಮಾಡಿದರೆ ಬಾಗಿಲು ತೆಗೆವೆ?” ಎಂದು ಕೇಳಿದನು. +ಋಷಿ ರಾತ್ರಿಸಂಚಾರಿ. +ಅವನನ್ನು ಕಂಡವರಿರಲಿಲ್ಲ. +ಬೆಳಿಗ್ಗೆಯೊಳಗೆ ಗುಡಿಸಲನ್ನು ಸೇರಿಕೊಳ್ಳಬೇಕು. +“ಏಳು ಸಮುದ್ರ ದಾಟಿ ಕೀಳು ಸಮುದ್ರದಾಚೆಗೆ ಹುಳಸೆ ಮರವಿದೆಯಂತೆ. +ಅದರ ಸೊಪ್ಪು, ತೊಗಟೆ, ಬೇರು ತರಬೇಕು. +ನಿಮ್ಮಿಂದ ಈ ಸಹಾಯವಾಗಬೇಕು. +ಅಂದರೆ ತೆರೆಯುವೆನು” ಅಂದನು. +ಋಷಿ, ‘ಹೇಗೂ ಅವಳಿಗೆ (ರಾಣಿಗೆ) ಮರಣ ಕಾಲ ಬಂದಿದೆ. +ಅಕ್ಕ ಅಲ್ಲಿ ಇದ್ದವಳ ಸಹಾಯ ದೊರೆಯಲು ಇದೇ ಸಕಾಲ. +ರಾಜನ ಹುಡುಗಿಯನ್ನು ಲಗ್ನವಾಗಬೇಕು ಇವ. +ಇವನೇ ಧೀರ’. + ‘‘ಆಯ್ತು ಸಹಾಯ ಮಾಡುವೆ’’ ಎಂದನು. +ಅವನು ಕದ ತೆಗೆದನು. +ಒಳಗೆ ಹೋಗಿ ಕದ ಹಾಕಿದನು. +“ಚೀಟಿ ಕೊಟ್ಟಿದ್ದಾಳೆ” ಎಂದು ಖುಷಿಗೆ ಹೇಳಿದನು. +‘‘ತನಗೆ ಚೀಟಿ ಕೊಡು’’ ಅಂತ ಹೇಳಿ ಚೀಟಿಯನ್ನು ತಕ್ಕೊಂಡು ಓದಿ ನೋಡಿದನು. +ಓದಿ ನೋಡಿ ಚೀಟಿಯನ್ನು ಬದಲು ಮಾಡಿದನು. +“ನನ್ನ ಮಗ ಬರುತ್ತಾನೆ. +ಅವನಿಗೆ ಹುಳಸೆ ಸೊಪ್ಪು, ತೊಗಟೆ, ಬೇರು ಅಷ್ಟು ಕೊಟ್ಟು ಕಳಿಸಬೇಕು” ಅಂತ ಬರೆದನು. +ಅವಳು ಬರೆದಿದ್ದ ಚೀಟಿಯನ್ನು ಹರಿದುಹಾಕಿಬಿಟ್ಟನು. +ಬೆತ್ತದ ಕೋಲನ್ನು ಕೊಟ್ಟನು. +‘‘ಸಮುದ್ರದ ಹತ್ತರ ಹೋಗಿ ಮುಂದೆ ಹೋಗಬೇಕಾದರೆ ಬೆತ್ತದ ಕೋಲನ್ನು ಅಡ್ಡ ಹೊಡೆ. +ಸಮುದ್ರ ದಾರಿ ಬಿಡುತ್ತದೆ. +ಮುಂದೆ ಹೋಗು. +ಅಚೆ ದಾಟಿದ ನಂತರ ಮತ್ತೆ ಹಾಗೇ ಬಡಿ. +ಸಮುದ್ರ ಎರಡೂ ಭಾಗ ಅದದ್ದು ಕೂಡುತ್ತದೆ ಮೊದಲಿನಂತೆ; ಇದೇ ರೀತಿ ಏಳನೇ ಸಮುದ್ರ ದಾಟಿ ಹೋಗು. +ಏಳು ಸಮುದ್ರ ದಾಟಬೇಕಾದರೆ ಈಚೆ ದಡದಲ್ಲಿ ನಿಂತು ‘‘ಹಿರಿಯಬ್ಬೇ; ಎಂದು ಮೂರಾವರ್ತಿ ಕೂಗು’’ ಅದು ಬರುತ್ತದೆ. +ನಿನ್ನನ್ನು ಕರೆದುಕೊಂಡು ಹೋಗುತ್ತದೆ’’. +ಅರಸನ ಮನೆಗೆ ಬಂದು ಹೆಂಡತಿಯ ಹತ್ತಿರ ಹೇಳಿ, ಹೊರಬಿದ್ದು ಬಂದನು. +ಬಂದವನು ಹೊರಟು ನಡೆದನು. +ಸಮುದ್ರದ ಹತ್ತರ ಹೋಗಿ ರಾಮನಿಗೆ ಪ್ರಾರ್ಥನೆ ಮಾಡಿ, ಕೋಲಿನಿಂದ ಹೊಡೆದನು. +ಹೀಗೆ ಏಳು ಸಮುದ್ರ ದಾಟಿದನು. +ಕೀಳು ಸಮುದ್ರದ ದಂಡೆಗೆ ಹೋಗಿ ನಿಂತನು. +‘‘ಓ ಹಿರಿಯಬ್ಬೇ. . . ’’ ಎಂದು ಮೂರು ಸಾರೆ ಕೂಗಿದನು. +ಅದು ಬಂತು. +ಈ ಚೀಟಿ ಅವಳಿಗೆ ಕೊಟ್ಟನು. +ಅವಳು ಓದಿದಳು. “ಅಯ್ಯೋ. . . ನನಗೆ ಲಗ್ನವೇ ಇಲ್ಲ. +ತಂಗಿ ಮಗನನ್ನು ಹಡೆದಳು. +ಬಹಳ ಚಲೋದಾಯಿತು. +ಏಳು ಹೋಗುವಾ” ಎಂದು ಕರೆದುಕೊಂಡು ಹೋದಳು. +ಬಹಳ ಆದರಾತಿಥ್ಯ ಮಾಡಿದಳು. +ಎಲ್ಲ ಸುದ್ದಿ ಕೇಳಿದಳು. +“ಅಬ್ಬೆ ಹುಷಾರಿದ್ದಾಳೆಯೋ?” + “ಅವಳಿಗೆ ಹೊಟ್ಟೆ ಶರಿಕೆ (ಶೂಲೆ) ಔಷಧಿ ಬೇಕು. +ನಾನು ಬಂದು ಬಹಳ ದಿವಸಗಳಾದವು. +ಹೋಗಬೇಕು” ಎಂದನು. +“ಇಲ್ಲಿ ಬಹಳ ವಸ್ತುಗಳಿವೆ ತೋರಿಸುತ್ತೇನೆ” ಎಂದಳು. +‘‘ಏನು?’’ “ಅಯ್ಯೋ ಮಗನೇ, ನಿನಗೆ ಗೊತ್ತಿಲ್ಲ. . . ತೋರಿಸುವೆ ಬಾ’’ ಎಂದು ಹೇಳಿ ಕೀಲಿಕೈ ತೆಗೆದು ಒಳಗೆ ಕರೆದುಕೊಂಡು ಹೋದಳು. +ದೊಡ್ಡ ಗೋಪುರದಲ್ಲಿ ಒಂದು ಸಣ್ಣ ಗೂಡು. +ಗೂಡಿನಲ್ಲಿ ಒಂದು ಪಂಜರ. +ಅಲ್ಲಿ ಒಂದು ಗಿಳಿ. +“ಅದೆಂತ ಗಿಳಿಯೇ ಹಿರಿಯಬ್ಬೆ?’’ ಅಂತ ಕೇಳಿದನು. +‘‘ಯಾರಿಗೂ ಹೇಳುವದಲ್ಲ ಇದು. +ನನ್ನ ಮತ್ತು ನಿನ್ನ ಅಬ್ಬೆಯ ಜೀವ ಇದರಲ್ಲಿದೆ. +ಇದರ ಕಾಲು ಮುರಿದರೆ ಇಬ್ಬರ ಕಾಲುಗಳೂ ಮುರಿಯುತ್ತವೆ. +ರಟ್ಟೆ ಮುರಿದರೆ ರಟ್ಟೆ ಮುರಿಯುವದು. +ಕುತ್ತಿಗೆ ಮುರಿದರೆ ನಮ್ಮಿಬ್ಬರ ಕುತ್ತಿಗೆ ಮುರಿಯುವದು” ಎಂದಳು. +“ಹೇಗೂ ಇರಲಿ; ನನಗೇಕೆ? +ಅದೆಂತ ಕರಡಿಗೆ?” ಎಂದು ಕೇಳಿದನು. +‘‘ತಮ್ಮ, ಅದು ಅಂಜನ. +ಅಂಜನ ಕಣ್ಣಿಗೆ ಹಚ್ಚಿದರೆ ಕಣ್ಣು ಕಾಣುವವರಿಗೂ ಕಣ್ಣು ಕುರುಡಾಗುತ್ತದೆ’’. + ‘‘ಇದೆಂತದೇ?’’ ಎಂದು ಕೇಳಿದನು. +‘ಅಯ್ಯೋ ತಮ್ಮ, ಈ ಅಂಜನ ಹಚ್ಚಿದರೆ ಕುರುಡಾದವರಿಗೆ ಕಣ್ಣು ಬರುತ್ತದೆ’’. + ‘‘ಇದೆಂತದೇ?ಮತ್ತೊಂದು?ಕೊರಡು ಅದೇನೇ?’’ ಅಂತ ಕೇಳಿದನು. +“ಅಯ್ಯೋ ತಮ್ಮಾ, ಕಾಲು-ಕೈಯಿಲ್ಲದವರಿಗೆ ಈ ಕೊರಡಿನಿಂದ ಮೂರು ಸರತಿ ಹೊಡೆದರೆ ಕೂಡಲೇ ಅವರಿಗೆ ಕಾಲು-ಕೈ ಬರುತ್ತವೆ” ಅಂದಳು. +‘‘ಇದು ನನಗೆ ಯಾಕೆ?’’ ಅಂದನು. +ಅಲ್ಲಿಂದ ಮೇಲೆ ಬಂದಳು. +ಮೇಲೆ ದೊಡ್ಡ ಗುಡ್ಡ ಬಿದ್ದಂತೆ ದೊಡ್ಡ ಕಟ್ಟಿಗೆ ಬಿದ್ದಿತ್ತು. +“ಹಿರಿಯಬ್ಬೇ, ಅದೇನೇ?” ಅಂದನು. +“ತಮ್ಮಾ, ಅದು ಕುದುರೆ. +ಎಡಕಿವಿ ತಿರುಪಿದರೆ ಎದ್ದುಕೊಳ್ಳುತ್ತದೆ. +ಎದ್ದ ಮೇಲೆ ಅದರ ಮುಕುಳಿ ಬದಿ ಮುಖ ಹಾಕಿಕೊಂಡು ಬಲಕಿವಿ ತಿರುಪಿದರೆ ಹಾರಿಹೋಗುತ್ತದೆ”. + ‘‘ಎಲ್ಲಿ ಹೋಗುತ್ತದೆ?’’ “ನಮ್ಮ ಇಚ್ಛೆ ಎಲ್ಲಿಗೆ ಹೋಗಬೇಕು ಎಂದು ಇದೆಯೋ ಅಲ್ಲಿಗೆ ಹೋಗುತ್ತದೆ. +ಬೆನ್ನು ತಟ್ಟಿದ ಕೂಡಲೇ ಇಳಿಯುವದು. +ಅದರ ಅಳ್ಳೆ ಕಣ್ಣು ತಟ್ಟಿದ ಕೂಡಲೇ ಬಿದ್ದುಕೊಳ್ಳುವದು” ‘‘ಆದರ ಬಾಲದಲ್ಲಿ ಇರುವುದು ಏನೇ?’’ +‘‘ತಮ್ಮ, ಬಿಲ್ಲು ಬಾಣ’’. +‘‘ಅದು ಯಾತಕ್ಕೆ?’’ ‘‘ಹೋಗುವಾಗ ಯಾರಾದರೂ ತಡೆದರೆ ಬಾಣ ಬಿಟ್ಟರೆ ಅವರು ಕೆಳಗೆ ಬಿದ್ದು ಸತ್ತುಹೋಗುವರು’’. + “ಆಗಲಿ. . . ನನಗೆ ಯಾಕೆ ಹಿರಿಯಬ್ಬೇ?” ಅಂದನು. +ಕೆಳಗೆ ಬಂದು ಅವಳೆಂದಳು. +‘‘ನಾಳೆ ನೀನು ಹೋಗುವೆ. +ಏನಾದರೂ ತಂದು ಪಾಯಸ ಮಾಡಿ ಹಾಕಬೇಕು. +ನೀನಿಲ್ಲೇ ಇರು. +ಮತ್ತೆಲ್ಲೂ ಹೋಗಬೇಡ. +ಚಂದವಾಗಿ ಆಡುವುದಕ್ಕೆ ಕೀಲಿಕೈ ಪೊತ್ತೆ (ಗೊಂಚಲು) ಕೊಟ್ಟು ಹೋಗುವೆ. +ಆಡುತ್ತಿರು’’ ಎಂದು ಹೇಳಿ ಆಹಾರ ತರಲು ಹೊರಬದಿಗೆ ಆಕಾಶದಲ್ಲಿ ಹಾರಿಹೋದಳು. +ಕೀಲಿಕೈ ತಕ್ಕೊಂಡು ಹೋಗಿ ಗಿಳಿಪಂಜರ, ಅಂಜನ ಕರಡಿಗೆ, ಕೊರಡಿನ ತುಂಡು ಎಲ್ಲ ತಕ್ಕೊಂಡು ಹೊರಬಿದ್ದನು. +ಹುಳಸೆ ಮರದ ಕೆಳಗೆ ಹೋದನು. +ಹುಳಸೆ ಸೊಪ್ಪು, ತೊಗಟೆ, ಬೇರು ಎಲ್ಲ ತಂದು ಕುದುರೆಯ ಬೆನ್ನಿಗೆ ಕಟ್ಟಿದು. +ಅದರ ಎಡಕಿವಿ ತಿರುಗಿಸಿದನು; ಎದ್ದು ನಿಂತಿತು. +ಹತ್ತಿ ಹಿಂದುಮುಂದಾಗಿ ಕೂತು ಬಲಕಿವಿ ತಿರುಗಿಸಿದನು. +“ತನ್ನ ಮಾವನ ಮನೆ ಹತ್ತರ ಹೋಗು” ಅಂದನು. +ಆಕಾಶ ಮಾರ್ಗವಾಗಿ ಹೊರಟಿತು. +ರಾಕ್ಷಸಿ ದಾರಿಯಲ್ಲಿ ಕೂಗುತ್ತ ಬಂದಳು. +ಅವನು ಬಿಲ್ಲು ಬಾಣ ಹಿಡಿದು ಅವಳಿಗೆ ಬಾಣಬಿಟ್ಟನು. +ಸತ್ತು ಸಮುದ್ರದಲ್ಲಿ ಬಿದ್ದಳು. +ಇವನು ಮಾವನ ಮನೆಗೆ ಬಂದು ಬೆನ್ನ ತಟ್ಟಿದನು. +ಅಳ್ಳೆ ಕಣ್ಣ ತಟ್ಟಿದನು ಕೊರಡಿನಂತೆ ಬಿದ್ದುಬಿಟ್ಟಿತು. +ಯಥಾ ಪ್ರಕಾರ ಋಷಿಯು ಇದ್ದಲ್ಲಿ ಬಂದನು. +ಅವನಿಗೆ ನಮಸ್ಕಾರ ಮಾಡಿದನು. +‘‘ನಾಳೆ ಊರಿಗೆ ಹೋಗುವೆ. +ಆಶೀರ್ವಾದ ಮಾಡಿ’’ ಅಂತ ಹೇಳಿ ಆಶೀರ್ವಾದ ಪಡೆದು, ಅಲ್ಲಿಂದ ಹೊರಟು ಮಾವನ ಮನೆಗೆ ಬಂದು ಸ್ವಲ್ಪ ದಿನ ಅಲ್ಲಿ ಉಳಿದನು. +ಹೆಂಡತಿಯನ್ನು ಕರೆದುಕೊಂಡು ಕುದುರೆಯ ಮೇಲೆ ಕೂಡ್ರಿಸಿಕೊಂಡು ಹೊರಟನು. +‘‘ತನ್ನ ಗುಹೆಗೆ ಬರುವಂತಾಗಲೆಂದು ಕುದುರೆಯನ್ನು ತಟ್ಟಿದನು’’ ಕುದುರೆ, ಬಂತು. +ಕರಡಿಗೆ ತೆಗೆದನು. +ಅವರೊಳಗೆ ಕಣ್ಣು ಕಾಣುವ ಅಂಜನ ತೆಗೆದು ಒಂಬತ್ತು ಹೆಂಗಸರಿಗೂ ಹಚ್ಚಿದನು. +ಕಣ್ಣು ಬಂದು, “ನೀವು ಯಾರು?” ಎಂದು ಕೇಳಿದಾಗ ಎಲ್ಲ ಹೇಳಿದರು. +ಮಾರನೆಯ ದಿನ ರಾಜನ ಮನೆಗೆ ಹೋಗಿ ಹೇಳಿದನು. +“ನಾಳೆ ಹುಳಸೆ ಸೊಪ್ಪು ಬೇರು, ತೊಗಟೆ ಎಲ್ಲ ಕೊಡುವೆ. +ದೊಡ್ಡ ಸಭೆ ಮಾಡು, ಸಭೆ ಮಾಡಿ, ಕುಂಟರು, ಕುರುಡರು ಎಲ್ಲರೂ ಬರಬೇಕು. +ಹನ್ನೊಂದು ಜನರು ಕೂಡ್ರುವಷ್ಟು ಜಾಗ ಪ್ರತ್ಯೇಕ ಇಡಬೇಕು. +ಮತ್ತೆ ಒಂದು ಬದಿಗೆ ಸ್ವಲ್ಪ ಜಾಗ ಬಿಟ್ಟು ಇಡಬೇಕು. +ನೀನೂ, ನಿನ್ನ ಹೆಂಡತಿಯೂ ಒಂದು ಬದಿಗೆ, ಪರಿವಾರ ಒಂದು ಕಡೆ ಇರಬೇಕು. +ಸಭೆ ತಯಾರು ಮಾಡು. +ನಾಳೆ ಬೆಳಿಗ್ಗೆ ತರುವೆ” ಎಂದನು. +ಮರುದಿನ ಬೆಳಗುಮುಂಚೆ ಒಂಬತ್ತು ಮಂದಿ ರಾಣಿಯರನ್ನು, ಹುಲಿಯನ್ನು, ಹುಲಿ ಮರಿಯನ್ನು ಕರೆದುಕೊಂಡು ಹೋದನು. +ಕುರುಡರನ್ನು ಕರೆದು ಎಲ್ಲರಿಗೂ ಅಂಜನ ಹಚ್ಚಿ ಕಣ್ಣು ಬರುವಂತೆ ಮಾಡಿ, ಕುಂಟರು, ಮೆಂಟರನ್ನು ಕರೆದು ಕೈಕಾಲು ಬರುವಂತೆ ಮಾಡಿದನು. +“ಹೆಂಡತಿ ನಿನ್ನವಳಲ್ಲ. . . ರಾಕ್ಷಸಿ. . . . ಒಂಬತ್ತು ಜನ ನಿನ್ನ ಹೆಂಡಿರು ಇಲ್ಲಿದ್ದಾರೆ. +ನಾನು ನಿನ್ನ ಮಗ. +ಈ ರಾಕ್ಷಸಿ ತನ್ನನ್ನು ಕೊಲ್ಲಲು ಇಷ್ಟು ಮಂತ್ರ (ತಂತ್ರ) ಮಾಡಿದ್ದು. +ಇವಳ ಜೀವ ಈ ಗಿಳಿಯಲ್ಲಿದೆ. +ತೋರುವೆ” ಎಂದು ಹೇಳಿ ಪಂಜರದಿಂದ ಗಿಳಿಯನ್ನು ತೆಗೆದು ರಟ್ಟೆ ಮುರಿದನು. +ಅವಳ ರಟ್ಟೆ ಮುರಿಯಿತು. +ಗಿಳಿಯ ಕಾಲು ಮುರಿದ ಕೊಡಲೇ ಅವಳ ಕಾಲೂ ಮುರಿದವು. +ಗಿಳಿಯ ಕುತ್ತಿಗೆ ಮುರಿದನು. +ಸತ್ತು ಬಿದ್ದಳು. +ರಾಜ ನೋಡಿದನು. +ರಾಣಿಯರನ್ನು ಇಟ್ಟುಕೊಂಡು, ಮಗನಿಗೆ ಪಟ್ಟಕ್ಕೆ ಅರಮನೆಯಲ್ಲಿ ಇಟ್ಟುಕೊಂಡನು, ಸುಖದಿಂದ ಉಳಿದರು. +ಮಂತ್ರವಾದಿಗೆ ತಂತ್ರ ಪ್ರಯೋಗ ಒಂದು ಊರಿನಲ್ಲಿ ಒಬ್ಬ ಬಡವನಿಗೆ ಒಬ್ಬ ಹೆಡ್ಡ ಮಗನಿದ್ದನು. +ಅವನಿಗೆ ಏನೂ ತಿಳಿಯುತ್ತಿರಲಿಲ್ಲ. +ಒಂದು ಕಾಗದವನ್ನು ಸುತ್ತಿ ಕೊಟ್ಟರೆ ಬಾಯಲ್ಲಿ ಹಾಕಿಕೊಳ್ಳುತ್ತಿದ್ದನು. +ಒಂದು ಪಾತ್ರೆಯನ್ನು ತೊಳಿಯಲು ಕೊಟ್ಟರೆ ‘ತಕ್ಕೊಂಡು ಬಾ’ ಅಂತ ಹೇಳುವವರೆಗೆ ಅದನ್ನು ತೊಳೆಯುತ್ತಾ ಇರುತ್ತಿದ್ದನು. +ಊಟದಲ್ಲಿ ಹೊಟ್ಟೆ ತುಂಬಿತು ಎಂಬುದೂ ತಿಳಿಯುತ್ತಿರಲಿಲ್ಲ. +ಉಣ್ಣುತ್ತಲೇ ಕೂತಿರುತ್ತಿದ್ದನು. +ಯಾರಾದರೂ ಬಂದು, ‘ಏಳು ಉಂಡಿದ್ದು ಸಾಕು’ ಎಂದ ಮೇಲೆಯೇ ಊಟ ಬಿಟ್ಟ ಏಳುತ್ತಿದ್ದನು. +ಕುಡಿಯಲು ಎಷ್ಟು ಕೊಟ್ಟರೂ ಕುಡಿಯುತ್ತಲೇ ಇರುತ್ತಿದ್ದನು. +ಅಷ್ಟನ್ನೂ ಕುಡಿದು, ‘ಸಾಕು’ ಎಂದು ಅವನಿಗೆ ತಿಳಿಯುತ್ತಿರಲಿಲ್ಲ. +‘ಸ್ನಾನ ಮಾಡಿಕೊಂಡು ಬಾ’ ಅಂದರೆ, ಸ್ನಾನ ಮಾಡುವದೇ ಕೆಲಸ ಅವನಿಗೆ. +ಅವನನ್ನು ಎಳೆದುಕೊಂಡು ಬರಬೇಕಾಗಿತ್ತು. +ಎಲ್ಲಾ ನೀರನ್ನೂ ಖರ್ಚು ಮಾಡುತ್ತಿದ್ದನು. +‘ಅಂಗಡಿಗೆ ಹೋಗಿ ಬಾ’ ಅಂದರೆ, ‘ಸಾಮಾನು ತಕ್ಕೊಂಡು ಬಾ’ ಅಂದರೂ ಏನನ್ನೂ ತಾರದೇ ಬರುತ್ತಿದ್ದನು. +‘ಎಮ್ಮೆಯ ಮೈಯನ್ನು ತೊಳೆಯಿಸಿಕೊಂಡು ಬಾ’ ಅಂದರೆ, ಹೊಳೆಗೆ ಹೋಗಿ ಅದರ ಮೈ ತೊಳೆಯುತ್ತಲೇ ಇರುತ್ತಿದ್ದನು. +ಹಸಿವಾಯಿತೆಂಬುದು ತಿಳಿಯುತ್ತಿರಲಿಲ್ಲ. +ಯಾರಾದರೂ ಹೋಗಿ ಅವನನ್ನು ಕರೆದುಕೊಂಡು ಬರಬೇಕಾಗಿತ್ತು. +ಆ ಊರಿನ ರಾಜನ ಶರತ್ತು ಏನಿತ್ತೆಂದರೆ, ‘ತನ್ನ ಹುಡುಗಿ ನಗುವಂತೆ ಮಾಡಿದರೆ ಅಂಥವನಿಗೆ ಅರ್ಧ ರಾಜ್ಯ ಕೊಟ್ಟು ತನ್ನ ಹುಡುಗಿಯನ್ನು ಮದುವೆ ಮಾಡಿ ಕೊಡುವೆ’ ಅಂತ ಇತ್ತು. +ಹುಡುಗಿಯನ್ನು ನಗುವಂತೆ ಮಾಡಲು ಸಾಧ್ಯವಾಗದಿದ್ದರೆ ಅಂಥ ಹುಡುಗನಿಗೆ ನಾಲ್ಕು ಸಾರೆ ಧಡಿ ಏಟು ಕೊಡಿಸುತ್ತಿದ್ದನು. +ಹೀಗೆ ಹೋಗಿ ಹೊಡೆತ ತಿಂದು ಬಂದ ನಾಲ್ಕೈದು ಜನರು ಇವನನ್ನು ಒತ್ತಾಯ ಮಾಡಿ, ರಾಜನ ಮನೆಗೆ ಕರೆದುಕೊಂಡು ಹೋದರು. +ಅವನಿಗೆ ‘ಹೆಡ್ಡ’ ಎಂತಲೇ ಕರೆಯುತ್ತಿದ್ದರು. +“ನೀನೊಂದು ಕೆಲಸ ಮಾಡು. +ನಮ್ಮ ಸಂಗಡ ರಾಜನ ಮನೆಗೆ ಬಾ. +ನಿನ್ನನ್ನು ನೋಡಿದ ಕೂಡಲೇ ರಾಜನ ಹುಡುಗಿ ನಗೆಯಾಡಲೇಬೇಕು. +ಆ ರೀತಿಯಲ್ಲಿ ನೀನು ಬಾ” ಅಂತ ಹೇಳಿದರು. +ಹೋಗುವ ಹಾದಿಯಲ್ಲಿ ಅವನಿಗೆ ಒಂದು ಕುರಿಮರಿಯೋ, ಕತ್ತೆಮರಿಯೋ ಅಂತ ತಿಳಿಯದಿದ್ದರೂ ಒಂದು ಕತ್ತೆಮರಿ ಕಂಡಿತು. +ಅದು ಇವನಿಗೆ ಚಂದವಾಗಿ ಕಂಡಿತು. +ಅದನ್ನು ಹಿಡಿದುಕೊಂಡು, ಕಂಕುಳಿನಲ್ಲಿ ಹಾಕಿಕೊಂಡು, ಅದಕ್ಕೆ ಪಪ್ಪಿ (ಮುತ್ತು) ಕೊಡುತ್ತ ಹೋದನು. +ಆ ಸಂಗಡಿಗರು ಅವನನ್ನು ರಾಜವಾಡೆಗೆ ಕರೆದುಕೊಂಡು ಹೋದರು. +ರಾಜವಾಡೆಯ ಬಾಗಲಿನಲ್ಲಿ ಕಾಯಲು ಸಿಪಾಯಿಗಳು ಇದ್ದರು. +ಇವರು ಅವನ ಹತ್ತಿರ, ‘‘ಈ ಹುಡುಗ ರಾಜನ ಮಗಳನ್ನು ನಗಿಸಲು ಬಂದವನು. +ಇವನನ್ನು ಒಳಗೆ ಬಿಡಿ’’ ಅಂದರು. +ಅವರು ಅವನನ್ನು ಒಳಗೆ ಬಿಟ್ಟರು. +ಅವನನ್ನು ಅಂತಃಪುರಕ್ಕೆ ಕರೆದುಕೊಂಡು ಹೋಗಿ ಬಿಟ್ಟರು. +ಅವನನ್ನು ನೋಡಿ ಅವಳಿಗೆ ಬಹಳ ಖುಷಿಯಾಯಿತು. +ಅವನು ಕತ್ತೆಮರಿಗೆ ಪಪ್ಪಿ ಕೊಡುತ್ತಲೇ ಇದ್ದನು. +ಅಲ್ಲಿನ ಶೃಂಗಾರ ನೋಡಿ ಅವನಿಗೆ ಬಹಳ ಖುಷಿಯಾಯಿತು. +ಕುಣಿಯುತ್ತಲೇ ಕತ್ತೆಮರಿಗೆ ಪಪ್ಪಿ ಕೊಡುತ್ತ ಒಳಗೆ ಹೋಗಿದ್ದನು. +ಅವ ಮಾಡಿದಂಥ ವಿದ್ಯೆ ನೋಡಿಕೊಂಡು ಅವಳಿಗೆ ‘ಗಿಸಿಗಿಸಿ’ ನಗೆ ಬಂದು ಹೋಯಿತು. +ರಾಜನು ಆಗ ಅಲ್ಲಿಯೇ ಇದ್ದನು. +ರಾಜನು, ‘‘ನಾಳಿಗೆ ನನ್ನ ಮಗಳ ಮದುವೆ. +ಅವಳನ್ನು ನಗೆಯಾಡಿಸಿದವನಿಗೆ ಮದುವೆ ಮಾಡಿ ಕೊಡುತ್ತೇನೆ’’ ಅಂತ ಡಂಗುರೆ ಸಾರಿಸಿದನು. +ಅದು ಅವನ ತಾಯಿಗೆ ತಿಳಿಯಿತು. +ತಾಯಿಯು ರಾಜವಾಡೆಗೆ ಓಡಿಬಂದಳು. +ರಾಜನ ಹತ್ತರ ಹೋಗಿ ಕೈ ಮುಗಿದು ಬೇಡಿಕೊಂಡಳು. +“ನನ್ನ ಮಗ ಹೆಡ್ಡ. +ಅವನಿಗೆ ನಿಮ್ಮ ಹುಡುಗಿಯನ್ನು ಮದುವೆ ಮಾಡಿಕೊಡಬೇಡಿ. +ಅವನಿಗೆ ಮದುವೆ ಮಾಡಿ, ಅರ್ಧ ರಾಜ್ಯ ಕೊಡಬೇಕು ಅಂತಲೂ ಡಂಗುರ ಸಾರಿಸಿದಿರಿ. +ಅವನು ಭಾರೀ ಹೆಡ್ಡ. +ನೀವು ಅವನಿಗೆ ಅರ್ಧ ರಾಜ್ಯ ಕೊಟ್ಟರೆ ಅದನ್ನು ಇಟ್ಟುಕೊಳ್ಳುವ ತಾಕತ್ತು ಅವನಿಗಿಲ್ಲ. +ಕೊಡಬೇಡಿ” ಅಂತ ಹೇಳಿ ರಾಜನ ಕಾಲುಗಳನ್ನು ಹಿಡಿದುಕೊಂಡು ಅತ್ತಳು. +ಆಗ ರಾಜನು, “ಇದು ರಾಜಾಜ್ಞೆ. . . ನಾನು ಏನೇ ಆದರೂ ಆಡಿದ ಮಾತಿಗೆ ತಪ್ಪುವದಿಲ್ಲ. +ಅವನಿಗೆ ನಾಳೆ ನನ್ನ ಹುಡುಗಿಯನ್ನು ಕೊಟ್ಟು ಮದುವೆ ಮಾಡದೆ ಬಿಡುವದಿಲ್ಲ” ಅಂದನು. +ಅವಳು, “ನನ್ನದೊಂದು ಶರತ್ತಿದೆ. +ಇವನು ಏನನ್ನಾದರೂ ಮಹತ್ವದ ಕೆಲಸ ಸಾಧಿಸಿಕೊಂಡು ಬರಬೇಕು ಅಂತ ಹೇಳಿ ಅವನನ್ನು ಕಳಿಸಿರಿ. +ಅವನು ಅಂಥಾ ಕೆಲಸ ಸಾಧಿಸಿಕೊಂಡು ಬಂದರೆ ಹೆಣ್ಣು ಕೊಡುವೆ ಅಂತ ಹೇಳಿ” ಅಂದಳು. +ಅವನು ಅದರಂತೆ ಅವನಿಗೆ ತಿಳಿಸಿದನು. +‘‘ಇವನ ಕಣ್ಣು ಕಟ್ಟಿ ಕರೆದುಕೊಂಡು ಹೋಗಿ ಬಂದು ಗೊಂಡಾರಣ್ಯರದಲ್ಲಿ ಬಿಟ್ಟು ಬನ್ನಿ’’ ಅಂತ ಹೇಳಿದನು. +ತಾಯಿಯೇ ಅವನ ಕಣ್ಣು ಕಟ್ಟಿ ಅವನನ್ನು ಗೊಂಡಾರಣ್ಯದಲ್ಲಿ ಬಿಟ್ಟು ಬಂದಳು. +ಇವನಿಗೆ ಅಡವಿಯಲ್ಲಿ ಎಲ್ಲಿ ಹೋಗಬೇಕೆಂದು ತಿಳಿಯಲಿಲ್ಲ. +ಕಣ್ಣು ಕಟ್ಟಿದ್ದನ್ನು ಬಿಚ್ಚಿಕೊಂಡು ತಿರುಗಹತ್ತಿದನು. +ಅವನು ಅಲ್ಲಿ ಏನು ಮಾಡುವದೆಂದು ತಿಳಿಯದಿದ್ದರೂ ಅಡವಿಯಲ್ಲಿ ಹೀಗೆಯೇ ತಿರುಗುತ್ತಿದ್ದನು. +ಹುಲಿ, ಸಿಂಹ, ನರಿ ಮುಂತಾದ ಕಾಡುಪ್ರಾಣಿಗಳ ಗರ್ಜನೆ ಅವನಿಗೆ ಕೇಳುತ್ತಿತ್ತು. +ಅಲ್ಲಿ ಒಂದು ಕಡೆಯಲ್ಲಿ ಒಂದು ಈಶ್ವರ ಲಿಂಗ ಇತ್ತು. +‘‘ಇದು ಏನು?’’ ಅಂತ ಅವನು ಅಲ್ಲಿ ನಿಂತು ನೋಡಿದನು. +ಇದು ಬಹಳ ಎತ್ತರವಿದ್ದ ಕಲ್ಲಿನ ಶಿವಲಿಂಗ. +‘ದೊಡ್ಡ ಕಲ್ಲು ಇದು’ ಅಂತ ಅದನ್ನೇ ನೋಡುತ್ತಿದ್ದನು. +ಆಗ ‘ಪಾಪ ಇದಕ್ಕೆ ಶೀತವಾಗುತ್ತದೆ’ ಅಂತ ಹೇಳಿ ಗಿಡಗಳ ಸೊಪ್ಪನ್ನು ಕೊಯ್ದು ಅದನ್ನು ಮುಚ್ಚುತ್ತಿದ್ದನು. +ಆಗ ಒಬ್ಬನು ಅದೇ ದಾರಿಯಲ್ಲಿ ಬಂದನು. +“ಏ ಮಹಾರಾಯಾ! +ಇದಕ್ಕೆ ಸೊಪ್ಪನ್ನು ಮುಚ್ಚಬೇಡ. +ಕಲ್ಲು ತಂದು ಮುಚ್ಚು” ಅಂತ ಹೇಳಿ ನಡೆದನು. +ಇವನು ಸುತ್ತಮುತ್ತಲು ಇದ್ದ ಕಲ್ಲುಗಳನ್ನು ಹೆಕ್ಕಿ ತಂದು ಈಶ್ವರ ಲಿಂಗಕ್ಕೆ ಒಗೆಯ ಹತ್ತಿದನು. +ಹೀಗೆ ಕಲ್ಲು ಒಗೆಯುತ್ತಲಿದ್ದನು. +ಮೇಲಿನವರೆಗೆ ಶಿವಲಿಂಗಕ್ಕೆ ಕಲ್ಲುಗಳಿಂದ ಮುಚ್ಚಿದನು. +ಆಗ ಈಶ್ವರನು, ‘‘ಒಬ್ಬ ಬಡ ಭಕ್ತ ಅಡವಿಯಲ್ಲಿ ನನ್ನ ಲಿಂಗದ ಮೇಲೆ ಕಲ್ಲು ಒಗೆದು ಪೂಜೆ ಮಾಡುತ್ತಾನೆ. +ಅ ಕಲ್ಲುಗಳು ಇಲ್ಲಿಗೆ ಬಂದು ಬೀಳುತ್ತವೆ. +ಏನು ಮಾಡಲೂ ಸಾಧ್ಯವಿಲ್ಲ’’ ಅಂತ ಹೇಳಿ ಆ ಅಡವಿಗೆ ಹೋದನು. +ಪಾರ್ವತಿಯೂ ಈಶ್ವರನೊಡನೆ ಹೋಗಿ ಅಲ್ಲೇ ಬರುತ್ತಿದ್ದಳು. +ಆಗ ಪಾರ್ವತಿಯ ಇವನಿದ್ದಲ್ಲಿ ಬರುವಷ್ಟರಲ್ಲಿ ಇವನು ಒಂದು ಮಹಾದೊಡ್ಡ ಬಂಡೆಗಲ್ಲನ್ನು ಎತ್ತಿಕೊಂಡು ಬಂದು ಲಿಂಗದ ತಲೆಯ ಮೇಲೆ ಹೊತ್ತು ಹಾಕುವ ತಯಾರಿಯಲ್ಲಿದ್ದನು. +ಆಗ ಹೋಗಿ, ‘‘ನಡೆನಡೆ’’ ಅಂದಳು. +ಅಲ್ಲಿಗೆ ಒಬ್ಬ ಹೆಂಗಸು ಬಂದವಳು, “ಅವ ಹೆಡ್ಡ, ಅವನಿಗೆ ಹೊಡೆಯಬೇಡ” ಅಂತ ಹೇಳಿ, ‘’ಹೆಡ್ಡಾ, ನಿನ್ನನ್ನು ನಾನು ಒಂದು ಬದಿಗೆ ಕರೆದುಕೊಂಡು ಹೋಗುವೆ ಬಾ’’ ಅಂತ ಹೇಳಿ ಅವನನ್ನು ಕೈಲಾಸಕ್ಕೆ ಕರೆದುಕೊಂಡು ಹೋದಳು. +ಶಿವನು ಕರೆದುಕೊಂಡು ಹೋಗಿದ್ದರಿಂದಲೇ ಇವಳೂ ಕೈಲಾಸಕ್ಕೆ ಹೋದಳು ಎಂದು ತಿಳಿಯಬೇಕು. +ಕೈಲಾಸದಲ್ಲಿ ಕಲ್ಲುಗಳ ರಾಶಿಯನ್ನು ನೋಡಿದ ಹೆಡ್ಡನು, ‘‘ನಾನು ಹೊತಾಕಿದ ಕಲ್ಲುಗಳು ಇಲ್ಲಿ ಹ್ಯಾಗೆ ಬಂದು ಬಿದ್ದವು?’’ ಅಂತ ಕೇಳಿದನು. +ಆಗ ಆ ಹೆಂಗಸು, ‘‘ಈಶ್ವರನಿಗೆ ನಮಸ್ಕಾರ ಮಾಡು’’ ಅಂದಳು. +ಹೇಗೆ ನಮಸ್ಕಾರ ಮಾಡಬೇಕು ಅಂತ ಅವನಿಗೆ ಗೊತ್ತಿರಲಿಲ್ಲ. +ಅವಳ ಮೋರೆಯನ್ನೆ ನೋಡಿದನು. +ಅವಳು ನಮಸ್ಕಾರ ಮಾಡಿ, ‘‘ಹೀಗೆ ಮಾಡು’’ ಅಂತ ಹೇಳಿ ತೋರಿಸಿದಳು. +ಅದೇ ರೀತಿಯಿಂದ ಆಗ ಅವನು ನಮಸ್ಕಾರ ಮಾಡಿದನು. +ಆಗ ಈಶ್ವರ ಅವನ ತಲೆಯ ಮೇಲೆ ಕೈಯನ್ನೆಳೆದನು. +ಕೈಯೆಳೆದ ಕೂಡಲೇ ಹೆಡ್ಡನಿಗೆ ಜ್ಞಾನೋದಯವಾಯಿತು. . . ಚೇಂಜ್ ಆಗಿಬಿಟ್ಟನು. +ಅವನು, “ಸ್ವಾಮೀ, ನನಗೆ ಜ್ಞಾನೋದಯವಾಯಿತು” ಅಂತ ಹೇಳಿ, ಕೈಮುಗಿದು, ‘‘ನನ್ನದು ತಪ್ಪಾಯಿತು ಅಂತ ಜ್ಞಾನೋದಯ ಆದ ಮೇಲೆ ತಿಳಿಯಿತು. +ನಾನು ರಾಜನ ಹುಡುಗಿಯನ್ನು ಮದುವೆಯಾಗಲು ಹೋಗಬೇಕು” ಎಂದನು. +ಆಗ ಈಶ್ವರನು ಒಂದು ದೊಣ್ಣಿಯನ್ನು ಕೊಟ್ಟನು. +“ನೀನು ಇದನ್ನು ಇಟ್ಟುಕೊ. . . ಇದನ್ನು ತಕ್ಕೊಂಡು ಹೋಗಿ ಆ ರಾಜನ ಹುಡುಗಿಯನ್ನು ಮದುವೆಯಾಗಿ ಬಾ ಹೋಗು” ಅಂದನು. +ಅಷ್ಟರಲ್ಲಿ ಒಬ್ಬ ಮಂತ್ರವಾದಿ ರಾಜನ ಹುಡುಗಿಯನ್ನು ತಕ್ಕೊಂಡು ಹೋಗಿ ಕಾಳಿಕಾದೇವಿಗೆ ಅವಳನ್ನು ಬಲಿ ಕೊಡಬೇಕೆಂದು ಸಾಧನೆ ಮಾಡುತ್ತಲೇ ಇದ್ದನು. +ತನ್ನ ಮಂತ್ರಶಕ್ತಿಯಿಂದ ಆ ರಾಜನ ಹುಡುಗಿಯನ್ನು ಕರೆದುಕೊಂಡು ಹೋದನು. +ಇವನು ದಾರಿಯಲ್ಲಿ ಬರುತ್ತಾ ಇದ್ದನು. +ಅದೇ ಹಾದಿಯ ಮೇಲೆ ಒಬ್ಬ ಸಿಕ್ಕನು. +“ಎಲ್ಲಿಗೆ ಹೋಗುತ್ತೀಯಪ್ಪಾ?’’ ಅಂತ ಕೇಳಿದನು. +‘‘ರಾಜನ ಹುಡುಗಿಯನ್ನು ಮದುವೆಯಾಗಲು ಹೋಗುತ್ತೇನೆ’’ ಅಂದನು. +‘‘ನೋಡು ಮಹಾರಾಯಾ, ರಾಜನ ಹುಡುಗಿಯನ್ನು ಒಬ್ಬ ಮಂತ್ರವಾದಿಯು ಕಾಳಿಕಾದೇವಿಗೆ ಬಲಿ ಕೊಡುತ್ತಾನೆ ಎಂದು ಕೇಳಿದ್ದೇನೆ. . . ’’ ‘‘ನಾನು ಅದನ್ನು ತಪ್ಪಿಸಲಿಕ್ಕೆ ಹೋಗುತ್ತೇನೆ’’ ಎಂದನು ಹುಡುಗ. +ಆಗ ಅವನು, “ಮಹಾರಾಯ, ಹೀಗೆ ಹೋದರೆ ಮಂತ್ರವಾದಿಯನ್ನು ನಿನ್ನ ಹತ್ತರ ಜಯಿಸಲಿಕ್ಕೆ ಆಗುವುದಿಲ್ಲ” ಎಂದನು. +‘‘ಹಾಗಾದರೆ ಏನು ಮಾಡಬೇಕು?’’ ಅಂತ ಕೇಳಿದನು. +“ನೀನು ಒಬ್ಬ ಸುಂದರ ಹೆಣ್ಣು ರೂಪ ತಾಳಿಕೊಂಡು ಹೋಗು’’ ಅಂತ ಹೇಳಿ, ಅವನು ಹೋದನು. +‘‘ಹೆಣ್ಣು ರೂಪ ಹೇಗೆ ತಾಳಬೇಕು?’’ ಅಂತ ಇವನು ಕೇಳಿಕೊಂಡಿರಲೇ ಇಲ್ಲ. +ಓಡಿ ಹೋದನು. +ಆಗ ಒಂದು ಕೆರೆ ದಂಡೆಯ ಮೇಲೆ ಕಾಳಿಕಾದೇವಿಯ ಗುಡಿ ಕಂಡಿತು. +ಇವನು ಈಶ್ವರ ಕೊಟ್ಟಿದ್ದ ದೊಣ್ಣೆಯನ್ನು ಹೀಗೆ ಮೈಗೆ ತಾಗಿಸಿಕೊಂಡನು. +ಆಗ ಇವನು ಸುಂದರಳಾದ ಒಬ್ಬ ಹೆಣ್ಣಾಗಿ ಬಿಟ್ಟನು. +ಕಾಳಿಕಾದೇವಿಯ ಮುಂದೆ ಹೋಗಿ ಕುಣಿಯಹತ್ತಿದನು(ಳು). +ಸುಮಾರು ಹನ್ನೊಂದು ಗಂಟೆ ರಾತ್ರಿಗೆ ಮಂತ್ರವಾದಿ ಬಲಿ ಕೊಡಲು ಆ ಹುಡುಗಿಯನ್ನು ಕರೆದುಕೊಂಡು ಬಂದನು. +‘‘ಈ ಹುಡುಗಿ ಎಂಥ ಸುಂದರ ರೂಪಿನವಳು. +ಎಷ್ಟು ಚೆನ್ನಾಗಿ ಡ್ಯಾನ್ಸ ಮಾಡುತ್ತಾಳೆ ಎಂಥಾ ಹುಡುಗಿ ಇವಳು?’’ ಅಂತ ಹೇಳಿ, ಅವಳು ಡ್ಯಾನ್ಸ ಮಾಡುವುದನ್ನು ನೋಡುತ್ತಲೇ ನಿಂತುಬಿಟ್ಟನು. +ಅದರಲ್ಲೇ ತಲ್ಲೀನನಾಗಿಬಿಟ್ಟನು. +ಹನ್ನೊಂದು ಗಂಟೆಯ ಮುಹೂರ್ತ ಕಳೆದುಹೋಯಿತು. +ಆಗ ಕಾಳಿಕಾದೇವಿಗೆ ಬಹಳ ಸಿಟ್ಟು ಬಂದುಬಿಟ್ಟಿತು. +ಅವಳು ಚಂಡಿಯ ರೂಪ ತಾಳಿಕೊಂಡು ಮಂತ್ರವಾದಿಯನ್ನು ಕೊಂದುಬಿಟ್ಟಳು. +ಆಮೇಲೆ ಇವನು ತನ್ನ ನಿಜರೂಪ ತಾಳಿಕೊಂಡು, ಆ ಹುಡುಗಿಯನ್ನು ಕರೆದುಕೊಂಡು ರಾಜವಾಡೆಗೆ ಬಂದನು. +ಅವಳನ್ನು ಮದುವೆಯಾಗಿ ಅರ್ಧ ರಾಜ್ಯ ಪಡೆದುಕೊಂಡು ಅದನ್ನು ಆಳುತ್ತಾ ಇದ್ದನು. +ಒಂದಿಲ್ಲೊಂದು ದೇಶದಲ್ಲಿ ಒಬ್ಬ ಅರಸನಿದ್ದನು. +ಅವನಿಗೆ ಇಬ್ಬರು ಗಂಡುಮಕ್ಕಳು. +ರಾಜನ ಇಬ್ಬರು ಗಂಡು ಹುಡುಗರಲ್ಲಿ ಒಬ್ಬನಿಗೆ ಲಗ್ನ ಮಾಡಿದ್ದನು. +ಬಾಲ ವಿವಾಹ 14ನೇ ವರ್ಷ. +14 ವರ್ಷ ಪ್ರಾಯದಲ್ಲಿ ಶೋಭನವಾಯಿತು. +ಅಲ್ಲಿಗೆ ಬಹಳ ಬರುತ್ತ-ಹೋಗುತ್ತ ಇದ್ದನು ಪ್ರಧಾನಿ ಹುಡುಗ. +ಇಬ್ಬರಿಗೂ ಸಮವಯಸ್ಸು. . . ದೇಶಾಂತರ ತಿರುಗಾಟಕ್ಕೆ ಹೋಗಲು ಹೊರಟರು. +ದೇಶ ನೋಡಲು ತಾಯಿಗೆ, ‘ಮದ್ದತು ಮಾಡಿಕೊಡು’ ಎಂದರು. +ಒಂದೊಂದು ಮಣ್ಣ ಉಂಡೆ ಮಾಡಿ ಕೊಟ್ಟಳು. +ಪ್ರಧಾನಿ ಹೆಂಡ್ತಿಯೂ ಮಣ್ಣುಂಡೆ ಕೊಟ್ಟಳು. +“ಇದರಿಂದ ಬಂದಂತ ತ್ರಾಸಿಗೆ ಪರಿಹಾರ ನೀಡುತ್ತದೆ” ಎಂದಳು. +ಪ್ರಧಾನಿ ಹುಡುಗ ಹುಶಾರಿ, ಲಗ್ನವಾಗಿರಲಿಲ್ಲ. +ಕುದುರೆ ಹತ್ತಿಕೊಂಡು ಹೋದರು. +ಕುದುರೆ ಅರಣ್ಯ ಬಿದ್ದಿತು. +ಅರಣ್ಯದಲ್ಲಿ ತಿರುಗಾಟ ಮಾಡುತ್ತ ಮಾಡುತ್ತ ಆ ದಿವಸ ರಾತ್ರಿ ಅಶ್ವತ್ಥ ಮರದಡಿಗೆ ಮಲಗಿಕೊಂಡರು. +ಆಗ ರಾತ್ರಿ ಮಧ್ಯರಾತ್ರಿ. +ಯಾರೋ ಇಬ್ಬರು ಕುದುರೆಗಳನ್ನು ತಕ್ಕೊಂಡು ಪಾರಾಗಿದ್ರು. +ಕುದುರೆಗಳು ಇರಲಿಲ್ಲ. +ಮಣ್ಣ ಉಂಡೆಗಳು ಮಾತ್ರ ಇದ್ದವು. +ಬೆಟ್ಟದಲ್ಲಿರುವಾಗ ಒಂದು ದಿನ ಉಪವಾಸ. +ಮೂರನೇ ದಿನ ಅರಣ್ಯದಲ್ಲಿ ಸುತ್ತಾಡಿಕೊಂಡು ಬೇರೆ ರಾಜ್ಯಕ್ಕೆ ಹೋಗಿ ಮುಟ್ಟಿದರು. +ಆ ರಾಜ್ಯದ ಗಾಣಿಗರ ಮನೆಗೆ ಹೋದರು. +ಅಲ್ಲಿ ಒಬ್ಬ ಅಜ್ಜಿ ಮುದುಕಿಯನ್ನು ಕೇಳಿದರು, ‘‘ಇಲ್ಲಿ ಏನು ನಡೆಯುತ್ತದೆ, ಅರಸು ಯಾರು? +ಪ್ರಧಾನಿ ಯಾರು? +’’ಮಾರನೇ ದಿನ ನಂತರ ಪ್ರಧಾನಿ ಹುಡುಗ ದೇಶ ತಿರುಗಿ ಬರಲು ಹೋದನು. +ಅರಸನ ಹುಡುಗನೂ ಅವನ ಜೊತೆ ಹೋದ. +ಕೋಸಲ ರಾಜ್ಯದ ಅರಸನ ಮುಂದೆ- ಕೆಲವು ಡೊಂಬರವರು ಮೇಲೆ ಹಾರುವುದು ಹೀಗೆಲ್ಲಾ ತೋರಿಸಿದರು. +ಉಪ್ಪರಿಗೆ ಮೇಲೆ ನೋಡಿದಾಗ ಅರಸನ ಹುಡುಗಿಯನ್ನು ಕಂಡರು. +‘‘ಈ ರಾಜ್ಯದಲ್ಲಿ ಚಲೋ ಕುದುರೆ ಕೆಲಸ ಮಾಡಿ, ಯುದ್ಧಕಲೆ ಕಲಿತವರಿಗೆ ಮದುವೆ ಮಾಡಿ ಕೊಡುವೆ’’ ಎಂದನು. +ಪ್ರಧಾನಿ ಹುಡುಗಗೆ ಲಗ್ನವಾಗಿರಲಿಲ್ಲ. +“ಇವಳನ್ನು ಲಗ್ನವಾಗುವೆಯೋ ಹ್ಯಾಗೇ?” “ಇವಳ ಗುರ್ತಿಲ್ಲ, ಪರಿಚಯವಿಲ್ಲ, ಹೇಗೆ ಲಗ್ನವಾಗಲಿ?” ಹಟದಿಂದ, ‘‘ಲಗ್ನವಾಗಲೇ ಬೇಕು’’ ಅಂದನು ರಾಜನ ಮಗ. +‘‘ಹಾಗಿದ್ದರೆ ಆಗುತ್ತೇನೆ” ಎಂದ ಪ್ರಧಾನಿ ಹುಡುಗ. +ಮೂರು ಮೈಲು ದೂರ ಒಂದು ಮನೆಯಲ್ಲಿ ಕೃಷಿದಂಧೆ ಮಾಡುತ್ತಿದ್ದರು. +ಪ್ರಧಾನಿ ಹುಡುಗ ಅಲ್ಲಿ ನಿಂತನು. +ಹೋಗಿ ಅರಸನ ಮಗ ೧ ವರ್ಷ, ೩ ತಿಂಗಳು ಸಂಚಾರ ಮಾಡಿದ. +೩ನೇ ತಿಂಗಳು ಅರಣ್ಯದಲ್ಲಿ ಸನ್ಯಾಸಿ ಸಿಕ್ಕು, ಅವನು ಹಣ್ಣು-ಹಂಪಲ ಅಲ್ಲಿ ತಿಂದು ತಂಗಿದ್ದನು. +ಸನ್ಯಾಸಿ ಅವನಿಗೆ ಒಂದು ಮರದ ಬೊಂಬೆ ಕುದುರೆ ಕೊಟ್ಟನು. +‘‘ಇದನ್ನು ತಕ್ಕೊಂಡು ತಾನು ಮಾಡುವದೇನು?’’ ಎಂದು ಕೇಳಿದ ರಾಜಕುಮಾರ. +ಅದರಲ್ಲಿ ಒಂದು ಸೂತ್ರವಿದೆ. +ಸೂತ್ರ: ಕುದುರೆ ಬೆನ್ನ ಮೇಲೆ ಬ್ರಹ್ಮ-ವಿಷ್ಣು-ಮಹೇಶ್ವರ ಎಂದು ಹೆಸರು ಬಟನ್ನಿಗೆ ಕ್ರಮವಿದೆ. +ಶಿವ ಜಪ, ವಿಷ್ಣು ಜಪ, ಬ್ರಹ್ಮ ಜಪ ೩೦೦೦ ಸಾರಿ ಮಾಡಬೇಕು. +ಕುದುರೆ ಇಚ್ಛಿತ ಪದಾರ್ಥ ಕೊಡುತ್ತದೆ. +ಅದರಂತೆ ಮಾಡಿದ. +ಕುದುರೆ ಮೇಲೆ ಕೂತು ಹಕ್ಕಿಯಂತೆ ಹಾರಿಹೋಗಿ ಬಂದು ಕೋಸಲ ರಾಜ್ಯಕ್ಕೆ ಮೂರು ಮೈಲು ದೂರದ ಸಾವುಕಾರನಂಗಡಿಗೆ ಬಂದನು. +೧ ವರ್ಷ ೩ ತಿಂಗಳಾಗಿತ್ತು-- ಪ್ರಧಾನಿ ಹುಡುಗನಿಗೆ ಸಿಗಬೇಕಾದರೆ. +ಪ್ರಧಾನಿ ಹುಡುಗ ಅತಿ ಸುಖದಲ್ಲಿ ಜೀವನ ಮಾಡುತ್ತಿದ್ದ. +ರಾಜನ ಹುಡುಗ ಕ್ಷೀಣನಾಗಿ, ಗಡ್ಡ ಬೆಳೆದು ಹೋಗಿತ್ತು. +ಅವನ ಹತ್ತರ, ‘‘ಆಸ್ರಿ ಕೊಡು’’ ಎಂದು ಹೇಳಿದ. +ಕುದುರೆ ಇಳಿದು, ‘‘ನಿನ್ನ ದನಿ ನೋಡಿದರೆ ಸಂಶಯ ಬರುತ್ತದೆ. +ಗುರ್ತು ಇಲ್ಲ. +ಯಾರು?” ಕೇಳಿದ ಪ್ರಧಾನಿ ಹುಡುಗ. +ಹೊರಗೆ ಕೂತಿದ್ದ ಸಾವುಕಾರ, ‘‘ನೀನು ಹೊರಗೆ ನಡೆ” ಅಂದ. +ರಾಜಕುಮಾರ ಅವನಿಗೆ ಬಹಳ ಜರೆದನು, “ಇಷ್ಟು ಬೇಗ ಗುರ್ತು ಮರೆತೆಯಾ? +ಇಲ್ಲಿ ನೀನು ಏನ ಮಾಡುವೆ?’’ ಪ್ರಧಾನಿ ಹುಡ್ಗಗೆ ಬಿಸಿ ನೀರು ಹೊಯ್ದಂತಾಯಿತು. +ಪ್ರೀತಿಯಿಂದ ಉಪಚಾರ ಮಾಡಿದನು. +ಇಬ್ಬರು ಕೂಡಿ ಕೋಸಲ ದೇಶದ ಗಾಣಿಗರ ಮನೆಯಲ್ಲುಳಿದು ಒಂದು ತಿಂಗಳು ಸಾಧನೆ ಮಾಡಿದರು. +ಹುಡುಗಿಯ ಲಗ್ನವೆಂದು ರಾಜ ಜಾಹೀರ ಹೊರಡಿಸಿದ್ದನು. +ರಾಜನ ಹುಡುಗ ಹೋದ. +ರಾಜ ಹೀಗೆ ಹೇಳಿದ, ‘‘ಲಗ್ನವಾಗುವವರು ಮೆತ್ತಿಗೆ ಹೋಗಿ, ವಾಗ್ವಾದ ಮಾಡಿ ಮಗಳ ಹತ್ತಿರ ಗೆಲ್ಲಬೇಕು”. + “ವಾಗ್ವಾದ ಮಾಡುವುದಾದರೆ ೧ ತಿಂಗಳ ೮ ದಿನ ಮುದ್ದತ್ತು ಕೊಡಬೇಕು” ಎಂದ ರಾಜಕುಮಾರ. +ರಾಜ ‘‘ಅಡ್ಡಿಯಿಲ್ಲ, ಮಾತಾಡಿ ಗೆಲ್ಲಬೇಕು’’ ಎಂದನು. +ಗಾಣಿಗರ ಮನೆಯಲ್ಲುಳಿದರು. +ರಾಜನ ಮಗಳಿಗೆ ಮಂಡೆ(ಕೂದಲು) ಬಾಚಿಕೊಡಲು ಗಾಣಿಗರ ಹೆಂಗಸು ಹೋಗುತ್ತಿದ್ದಳು. +ರಾಜನ ಹುಡುಗ ದಂಡೆಯಲ್ಲಿ ಚೀಟಿ ಹಾಕಿ ಕಳಿಸಿದನು. +ಚೀಟಿಯಲ್ಲಿ ಇಬ್ಬರಿದ್ದದ್ದನ್ನು ಬರೆದನು. +“ಅಷ್ಟು ನಿಪುಣರಾಗಿ ಹುಶಾರಿದ್ದರೆ, ೮ ಗಂಟೆ ನಂತರ ಏಳು ಉಪ್ಪರಿಗೆ ಮೇಲೆ ಇರುವೆ ಹುಸಿಯದ ನೂಲುಂಡೆ ಬಿಡುವೆ ಏರಿ ಬನ್ನಿ” ಎಂದು ಚೀಟಿ ಕಳಸಿದಳು. +ಮಾರನೇ ದಿನ ಸಾಯಂಕಾಲ ಇಬ್ಬರು ನೂಲುಂಡೆ ಹತ್ತಿ ಮೇಲಿಗೆ ಹೋದರು. +ಅಲ್ಲಿ ವಾಗ್ವಾದದಲ್ಲಿ, ‘‘ಯಾರು ಸವಾರಿಯಲ್ಲಿ ಕುದುರೆ ಹಾರಿಸುತ್ತಾನೋ ಅವನನ್ನು ಮೆಚ್ಚಿ, ಅದರಂತೆ ತಾನು ಮದುವೆಯಾಗುವೆ’’ ಎಂದಳು. +ಮಾರನೆ ದಿನ, “ಕುದುರೆ ಮೇಲೆ ನಿನ್ನ ಕೋಣೆಗೆ ನಾವು ಬರುತ್ತೇವೆ. +ಖುಲ್ಲಾ ಮಾಡಿಡಬೇಕು” ಎಂದನು. +ಬ್ರಹ್ಮನ ಬಟನ್ ಒತ್ತಿದರೆ ಸಾಮಾನ್ಯ ನಡೆದಂತೆ, ವಿಷ್ಣು ಬಟನ್ ಒತ್ತಿದರೆ ಆಕಾಶದ ಮೇಲೆ ಹಾರುತ್ತದೆ ಆ ಕುದುರೆ. +ಮರದ ಕುದುರೆಗೆ ಸೂತ್ರ ಪ್ರಕಾರ ಅಕ್ಳಿಸಿದರು. +ಹಾರಿ ಹೋದದ್ದ ನೋಡಿ ರಾಜಕುಮಾರಿ ಮರುಳಾದಳು. +“ನಾನು ಇಬ್ಬರನ್ನೂ ಹೇಗೆ ಲಗ್ನವಾಗಲಿ; ನೀವೇ ಹೇಳಿ” ಎಂದು ಶರಣಾದಳು. +ರಾಜನ ಹುಡುಗ, ‘‘ಪ್ರಧಾನಿ ಹುಡುಗನಿಗೆ ಲಗ್ನವಾಗಿಲ್ಲ. +ಅವನನ್ನು ಲಗ್ನವಾಗು” ಎಂದನು. +ಒಂದು ತಿಂಗಳಿಗೆ ಲಗ್ನವಾಯಿತು. +ರಾಜನ ಮನೆಗೆ ಎರಡನೇ ವರ್ಷ ಇಬ್ಬರೂ ದಿಬ್ಬಣ ಸಮೇತ ಹೋಗಿ ಸಂತೋಷದಲ್ಲಿದರು. +ಅರ್ಧ ರಾಜ್ಯಕ್ಕೆ ಪ್ರಧಾನಿ ಹುಡುಗ ರಾಜನಾದ. +ಒಂದಿಲ್ಲೊಂದು ದೇಶದಲ್ಲಿ ಒಬ್ಬ ರಾಜನಿಗೆ ಒಬ್ಬ ಹೆಣ್ಣು ಮಗಳು ಹುಟ್ಟಿದ್ದಳಂತೆ. +ಅವಳ ಹೆಸರು ರತ್ನಾವತಿ. +ಅವಳು ಸರಿಯಾಗಿ ಪ್ರಾಯಕ್ಕೆ ಯಾವಾಗ ಬಂದಳೋ-- ಆಗ ತಂದೆ ಅವಳಿಗೆ ಮದುವೆ ಮಾಡಬೇಕು; + ಚಲೋ ನೆಂಟಸ್ತನ ನೋಡಿ ಕೊಡಬೇಕು ಅಂತ ಇಚ್ಛೆ ಮಾಡಿಕೊಂಡಿದ್ದನು. +ಯಾವದೊಂದೂ ಕುಂದಿಲ್ಲದ ದೊಡ್ಡ ರಾಜ ಅವನು. +“ನನ್ನನ್ನು ಹೇಗಾದರೂ ಮದುವೆ ಮಾಡಿಕೊಡುವುದು ಯೋಗ್ಯವಲ್ಲ. +ಒಂದು ಬೆಳ್ಳಿಯ ನಗಾರಿ ಕಟ್ಟಿಸಬೇಕು; ಚಿನ್ನದ ನಗಾರಿ ಕಟ್ಟಿಸಬೇಕು. +ಅರಮನೆಗೆ ಬರುವಾಗ ಕಲ್ಲಿನ ಪಾಗಾರ ಇರುವುದಲ್ಲ? +ಅದರ ಬಾಗಿಲಿನ ಎಡಬದಿಗೆ ಬೆಳ್ಳಿ ನಗಾರಿಯನ್ನಿಡಬೇಕು; ಬಂಗಾರದ ನಗಾರಿಯನ್ನು ಬಲಕ್ಕೆ ಇಡಬೇಕು. +ಬೆಳ್ಳಿಯ ನಗಾರಿಗೆ ಒಂದು ಕೋಲು ಹೊಡೆದರೆ, ಹೊಡೆದವನು ಒಂದು ಸಾವಿರ ರೂಪಾಯಿ ಕೊಡಬೇಕು. +ಬಂಗಾರದ ನಗಾರಿಗೆ ಹೊಡೆದರೆ ಎರಡು ಸಾವಿರ ರೂಪಾಯಿ ಬೆಲೆಯನ್ನು ನಗಾರಿ ಹೊಡೆದವನು ಕೊಡಬೇಕು ಎಂದು ರಸ್ತೆ, ರಸ್ತೆಗೆ ನಾಲ್ಕೂ ಬದಿಗೂ ಬೋರ್ಡು ಹಚ್ಚಬೇಕು. +ಆಸ್ಥಾನದ ಬಾಗಿಲಿಗೂ ಬೋರ್ಡು ಹಚ್ಚಬೇಕು. +“ಅಲ್ಲಲ್ಲಿ ಪಹರೆಗೆ ಪೋಲೀಸರು ಇರಬೇಕು. +ನನ್ನ ಹನ್ನೆರಡು ಸವಾಲುಗಳಿಗೂ ಜವಾಬು ಕೊಡುತ್ತೇನೆ ಎಂಬ ಯೋಗ್ಯತೆ ಇದ್ದವನು ಮಾತ್ರ ಬೋರ್ಡ ಬಡಿಯಬೇಕು. +ಈ ಪೋಲೀಸರ ಪರವಾನಿಗೆಯನ್ನು ತೆಗೆದುಕೊಂಡು ಮೇಲೆ ಬರಬೇಕು. +ಆ ಜಬಾಬು ಕೊಡದೇ ಹೋದರೆ, ನಾನು ಹೇಳಿದ ಯಾವ ಕೆಲಸವನ್ನಾದರೂ ಮಾಡಬೇಕು. +‘ದನ ಕಾಯಬೇಕು’ ಎಂದು ಹೇಳಿದರೆ ದನ ಕಾಯಬೇಕು. +‘ಕುರಿ ಕಾಯಬೇಕು’ ಎಂದು ಹೇಳಿದರೆ ಕುರಿ ಕಾಯಬೇಕು. +‘ಕುದುರೆ ಕಾಯಬೇಕು’ ಎಂದು ಹೇಳಿದರೆ ಕುದುರೆ ಕಾಯಬೇಕು. +‘ಹೂವಿನ ಗಿಡಕ್ಕೆ ನೀರು ಹೊಯ್ಯಿ’ ಎಂದು ಹೇಳಿದರೆ ಅದೇ ಕೆಲಸ ಮಾಡಬೇಕು. +ವಸ್ತ್ರ ಒಗೆಯುವ ಕೆಲಸ ಕೊಡಿಸಿದರೆ ವಸ್ತ್ರ ಒಗೆಯಬೇಕು” ಅಂತ ಹೇಳಿದಳು. +ಅದರಂತೆ ಬೋರ್ಡ್ ಬರೆದು ಹಚ್ಚಿದರು. +ಎಷ್ಟೋ ರಾಜರ ಮಕ್ಕಳು ಅದರಂತೆ ಬಂದು ನಗಾರಿ ಬಡಿದು ಸವಾಲಿಗೆ ಜವಾಬು ಕೊಡಲಿಕ್ಕೆ ಸಾಧ್ಯವಾಗದೆ, ಸೋತು ಆಳಿನ ಲೆಕ್ಕದಲ್ಲಿ ಉಳಿದಿದ್ದರು. +ಇದೇ ಸುದ್ದಿ ಹಬ್ಬಿ ದಿಗ್ದೇಶಗಳಿಗೆ ಹೋಯಿತು. +ಹೈದರ ಸಿಂಗ್ ಎಂಬ ಒಬ್ಬ ದೊಡ್ಡ ರಾಜ. +ಅವನಿಗೆ ಬಹಾದ್ದೂರ್ ಸಿಂಗ್ ಎಂಬ ಒಬ್ಬನೇ ಒಬ್ಬ ಮಗನು ಹುಟ್ಟಿದ್ದನು. +ಈ ರಾಜನ ಮಗಳು ರತ್ನಾವತಿ, “ತನಗೆ ತನ್ನ ಹನ್ನೆರಡು ಸವಾಲಿಗೆ ಜವಾಬು ಕೊಟ್ಟವನೇ ತನ್ನ ಗಂಡನಾಗಬೇಕು. +ಇಲ್ಲದೆ ಹೋದರೆ, ತಾನು ಮದುವೆಯೇ ಆಗುವುದಿಲ್ಲ” ಎಂದು ಪಣ ತೊಟ್ಟಿದ್ದಳು. +ಇದು ಬಹಾದ್ದೂರ್ ಸಿಂಗನಿಗೆ ಗೊತ್ತಾಯಿತು. +ತಂದೆಯ ಹತ್ತಿರ ಅಂದನಂತೆ. +“ಅಪ್ಪಾ, ಇಂಥಾ ರಾಜನ ಮಗಳು ರತ್ನಾವತಿ ಎಂಬವಳು ಬಹಳ ಶಿಸ್ತಿನ ಹುಡುಗಿ. +ಅವಳನ್ನು ಲಗ್ನವಾಗುವದಕ್ಕೆ ಹೋದವರು ಅವಳ ಹನ್ನೆರಡು ಸವಾಲುಗಳಿಗೆ ಜವಾಬು ಕೊಟ್ಟು ಲಗ್ನವಾಗಬೇಕು. +ಇಲ್ಲವಾದರೆ, ಆ ಹುಡುಗಿ ನೇಮಿಸಿದ ಕೆಲಸಕ್ಕೆ ಅಲ್ಲೇ ಉಳಿದರಾಯಿತು. +ನಾನು ಆ ಹುಡುಗಿ ಎಷ್ಟು ಪರಾಕ್ರಮವುಳ್ಳವಳು! +ಯಾವ ಸವಾಲುಗಳನ್ನು ಇಟ್ಟದ್ದಾಳೆ. . . ಅದೇನೆಂದು ಹೋಗಿ ನೋಡಿಯೇ ತೀರಬೇಕಾಗಿದೆ. +ನಾನು ರತ್ನಾವತಿಯ ಪುರಕ್ಕಾಗಿ ಹೋಗಬೇಕು”. + “ಅಪ್ಪಾ ಮಗನೇ, ಹಾಗಲ್ಲ. . . ಅಷ್ಟೆಲ್ಲಾ ಪಣಕಟ್ಟಿಕೊಂಡವಳು ಆ ಹುಡುಗಿ”. + ಏನೂ ಹೇಳಿದರೂ ಮಗನು ಕೇಳದೆ, “ತಾನು ಹೋಗಿ ನೋಡಿಕೊಂಡೇ ಬರುತ್ತೇನೆ” ಅಂತ ಹೇಳಿ, ತನ್ನ ಖರ್ಚಿಗೆ ಏನು ಬೇಕೋ ಅಷ್ಟೆಲ್ಲಾ ಸಂಗ್ರಹ ತಕ್ಕೊಂಡು ಒಂದು ಕುದುರೆ ಹತ್ತಿ ಬಂದನು. +ಬಂದವನು ಆ ರತ್ನಾವತಿ ಪುರವನ್ನು ಹೊಕ್ಕನು. +ಅವನು ಆ ರಾಜನ ಮನೆಗೆ ಹೋಗಲಿಲ್ಲ. +ಒಬ್ಬ ಅಜ್ಜಿ ಮುದುಕಿಯ ಮನೆಗೆ ಹೋಗಿ ಅಲ್ಲಿ ಉಳಿದನು. +ಆ ಅಜ್ಜಿಗೂ ಒಬ್ಬ ಮಗ ಇದ್ದನು. +ಅಲ್ಲಿ ಅಂತಃಪುರದ ಒಳಹೊರಣ (ರಹಸ್ಯ) ತಿಳಿದುಕೊಳ್ಳುವ ಬಗ್ಗೆ ಅಜ್ಜಿಯ ಮಗನ ಬೆನ್ನಿಗೇ ತಿರುಗುತ್ತಾ ಉಳಿದುಬಿಟ್ಟನು. +ಒಂದು ದಿನ ಅಜ್ಜಿಯ ಹತ್ತಿರ ಆ ರಾಜ್ಯದ ಸುದ್ದಿಯನ್ನೆಲ್ಲಾ ಕೇಳಿದನು. +ಅಜ್ಜಿ ಹೇಳಿದಳು, “ಅಪ್ಪಾ ಮಗನೇ, ಅಲ್ಲಿ ಎಷ್ಟೋ ರಾಜರ ಮಕ್ಕಳು ಬಂದು, ಸವಾಲಿಗೆ ಜವಾಬು ಕೊಡಲಿಕ್ಕೆ ಸಾಧ್ಯವಾಗದೆ ಆ ಹುಡುಗಿ ನೇಮಿಸಿದ ಕೆಲಸ ಮಾಡುತ್ತಾ ಇದ್ದಾರೆ. +ನಿನಗೆ ಯಾಕೆ ಈ ಉಸಾಬರಿ? +ಬೇಡ ಮಗನೇ. . . ನೀನು ಸುಮ್ಮನೆ ಬಂದ ದಾರಿ ಹಿಡಿದುಕೊಂಡು ತಿರುಗಿ ಹೋಗು”. + “ಅಜ್ಜೀ, ಅಲ್ಲಿ ನಡೆವಂಥ ಸಂಪೂರ್ಣ ಸಂಗತಿ ಹೇಳು ನಾನೇನು ಅಲ್ಲಿಗೆ ಹೋಗುವುದಿಲ್ಲ. +ಆದರೆ, ಕೇಳಿಕೊಳ್ಳುವಷ್ಟು ಚಮತ್ಕಾರವನ್ನು ಹೇಳಬೇಕು ನೀನು”. +ಆಗ ಅಜ್ಜಿ ಹೇಳಿದಳು, “ತಮ್ಮಾ, ಅಲ್ಲೆ ಮನೆಯ ಪಾಗಾರದ ಬಾಗಿಲಿಗೆ ಎಡದಿಕ್ಕಿನಲ್ಲಿ ಬೆಳ್ಳಿ ನಗಾರಿ ಇಟ್ಟಿದ್ದಾರೆ. +ಬಲಕ್ಕೆ ಚಿನ್ನದ ನಗಾರಿ ಇಟ್ಟಿದ್ದಾರೆ. +ಬಂಗಾರದ ನಗಾರಿಯನ್ನು ಒಂದು ಕೋಲಿನಿಂದ ತಟ್ಟಿದರೆ ಎರಡು ಸಾವಿರ ರೂಪಾಯಿ ಕೊಡಬೇಕು. +ಅಷ್ಟಾದ ನಂತರ ದಡಾದಡಿ ಏಳು ಮೆತ್ತಿನ (ಉಪ್ಪರಿಗೆ) ಮೇಲೆ ಹೋಗಿ, ಆ ಹುಡುಗಿಯ ಎದುರಿಗೆ ನಿಂತು, ‘ಹನ್ನೆರಡು ಸವಾಲಿಗೆ ಯಾವನು ಜವಾಬು ಕೊಡುತ್ತಾನೋ ಅವನನ್ನೇ ಮದುವೆಯಾಗುತ್ತೇನೆ’ ಅಂತ ಪಣಕಟ್ಚಿಕೊಂಡಿದ್ದಾಳೆ”. +“ಇಷ್ಟೇ ಅಲ್ಲವೇ ಅಜ್ಜೀ? +ನಮ್ಮಂಥವರಿಗೆ ಇದು ಬೇಡವೇ” ಅಂತ ಹೇಳಿದನು ಬಹಾದ್ದೂರ್ ಸಿಂಗ. +ಅಲ್ಲಿಯೇ ಉಳಿದನು. +ಉಳಿದು, ನಾಲ್ಕೈದು ತಿಂಗಳು ಯಾವಾಗ ಆದವೊ ಆಗ-- ಅಲ್ಲಿ ತಿರುಗಿದ, ಇಲ್ಲಿ ತಿರುಗಿದ ಹಾಗೆ ಮಾಡಿ, ಒಂದು ಕೈಚೀಲ ತಕ್ಕೊಂಡು ಹೊಳೆಗೆ ಹೋದನು. +ಸಣ್ಣ ಸಣ್ಣ ಕಲ್ಲುಗಳನ್ನು ಹಕ್ಕಿ ಒಂದು ಕೈಚೀಲದಲ್ಲಿ ತುಂಬಿದನು. +ಕಲ್ಲುಗಳ ಮೇಲೆ ಒಂದು ನೂರು ರೂಪಾಯಿಗಳನ್ನು ತುಂಬಿ ಮೇಲೆ ಇಟ್ಟನು. +ದಡಾದಡಿ ರಾಜನ ಆಸ್ಥಾನಕ್ಕೆ ಹೋದನು. +ಅಲ್ಲಿ ಪೋಲೀಸರನ್ನು ಕಾವಲಿಗೆ ಇಟ್ಟಿದ್ದರು. +ಇವನು, “ನೀವು ಯಾರು?’’ ಅಂತ ಕೇಳಿದನು. +“ಅಬ್ಬಾ!ನಾವು ರಾಜನ ಬಾಗಿಲು ಕಾಯುವ ಪೋಲೀಸರು. +ನೀನು ಯಾಕೆ ಬಂದೆ ಇಲ್ಲಿ?’’ ಅಂತ ಕೇಳಿದರು. +ಆಗ, “ನೀನು ಹೋಗುವದಾದರೆ ಅಡ್ಡಿಯಿಲ್ಲ. +ಬಾಗಿಲಗೆ ಚಾಚಿ ಇಟ್ಟ ನಗಾರಿಯನ್ನು ನೋಡಿದ್ದೀಯೋ?’’ ಅಂತ ಕೇಳಿದರು. +“ನಗಾರಿ ನೋಡಿಯಾಯಿತು” ಅಂತ ಹೇಳಿ, “ನಾನು ಬಂಗಾರದ ನಗಾರಿ ಬಡಿಯುತ್ತೇನೆ. +ನೀವು ಲೆಕ್ಕ ಮಾಡುತ್ತಾ ಉಳಿಯಿರಿ’’ ಎಂದು ಹೇಳಿ, ಬಡಬಡನೆ ಲೆಕ್ಕದ ಹೊರಗೆ ಬಡಿದುಬಿಟ್ಟನು. +ಇವರಿಗೆ ಲೆಕ್ಕವೂ ತಪ್ಪಿಹೋಯಿತು. +ಅವರಿಗೂ, ಇವನಿಗೆ ಸ್ವಲ್ಪ ಜಗಳ(ನ್ಯಾಯ)ವಾಯಿತು. +‘‘ಹೊಡದ ಕೋಲುಗಳಿಗೆ ಒಂದೊಂದಕ್ಕೆ ಎರಡು ಸಾವಿರ ರೂಪಾಯಿಗಳಂತೆ ಕೊಡಬೇಕು” ಅಂತ ಹೇಳಿದರು. +“ನೀವು ಸರಿಯಾಗಿ ಲೆಕ್ಕ ಮಾಡಲಿಲ್ಲ. +ನಾನು ರೂಪಾಯಿಗಳನ್ನು ಬೀರಿ(ಚೆಲ್ಲಿ) ಬಿಡುತ್ತೇನೆ. +ನೀವು ಲೆಕ್ಕ ಮಾಡಿ ಹೆಕ್ಕಿಕೊಳ್ಳಿ” ಅಂದನು. +ಅಷ್ಟು ಮಾಡಿ ಕೊಡಲೇ ಕೈಚೀಲವನ್ನೆ ಬೀರಿದನು. +ಮೆತ್ತು ಹತ್ತಿ ಕೂಡಲೇ ಹೋಗಿಬಿಟ್ಟನು. +ಅಲ್ಲಿ ಹೋಗಿ ರತ್ನಾವತಿಯ ಎದುರಿಗೆ ನಿಂತನು. +ಎದುರಿಗೆ ನಿಲ್ಲುತ್ತಲೇ ಅವಳು ಕೇಳಿದಳು, ‘ನನ್ನ ಸವಾಲುಗಳಿಗೆ ಜವಾಬು ಕೊಡಲಿಕ್ಕೆ ಎಂದು ಬಂದಿದ್ದೆಯೋ?’ ಅಂತ. +“ಹೌದು” ಅಂದನು. +ಒಂಬತ್ತು ಸವಾಲುಗಳಿಗೆ ಉತ್ತರ ಕೊಟ್ಟನು. +ಮೂರು ಸವಾಲುಗಳು ಬಾಕಿ ಉಳಿದವು. +ರಾಜನ ಮಗನು ಸೋತನು. +ರತ್ನಾವತಿ ಅವನ ಕೈರಟ್ಟೆ ಹಿಡಿಯಬೇಕೆಂದು ಏಳುವ ತನಕ ಇವನು ಹೊರಗೆ ಬಿದ್ದು (ಓಡಿ) ಬಿಟ್ಟನು. +ಯಾರಿಗೂ ಸಿಗಲೇ ಇಲ್ಲ. +ಇಂಥ ಜಾಗಕ್ಕೆ ಹೋದನೆಂದು ಪತ್ತೆಯೇ ಇರಲಿಲ್ಲ. +ಅಜ್ಜಿ ಮುದುಕಿಯ ಮನೆಗೆ ಬಂದು ಉಳಿದನು. +ಅಜ್ಜಿಯ ಮಗನೂ, ಇವನೂ ಒಟ್ಟು ಜೋಡಿಯಾಗಿ ಸಾವಕಾಶ ಪೇಟೆಯ ಬದಿ ತಿರುಗಲು ಶುರು ಮಾಡಿದರು. +ಹಾಗೆ ಮಾಡಿ, ಹೀಗೆ ಮಾಡಿ, ಒಂದು ದಿನ, ‘ರಾಜನ ಮನೆಯಲ್ಲಿಯೇ ಕಳವು ಮಾಡಬೇಕು’ ಎಂದು ಇವರ ಭಾವನೆಯಾಯಿತು. +‘ರಾಜನ ಮನೆಯಲ್ಲಿ ಕಳವು ಮಾಡಬೇಕು’ ಎಂದು ರಾತ್ರಿ ಊಟ ಮಾಡಿ ಮಲಗಿದರು. +ಇಂಥಾ ಕಡೆಗೆ ಖೋಲಿಯಲ್ಲಿ ದುಡ್ಡಿನ ಗಂಟನ್ನು ಇಟ್ಟಿರುತ್ತಾರೆ ಎಂದು, ಅವನೂ ರಾಜನ ಮಗನೇ ಆಗಿದ್ದರಿಂದ ಅವನಿಗೆ ತಿಳಿದಿತ್ತು. +ಇಬ್ಬರೂ ರಾತ್ರಿ ಜೊತೆ(ಜೋಡಿ)ಯಲ್ಲಿ ರಾಜನ ಆಸ್ಥಾನಕ್ಕೆ ಹೋದರು. +ಒಂದು ಹಾರೆ ತಕ್ಕೊಂಡು ಗೋಡೆಗೆ ಸುರಂಗ ಹೊಡೆದರು. +ಅಜ್ಜಿಯ ಮಗನ ಹತ್ತರ, “ನೀನು ಸಾವಕಾಶ (ಹಗುರವಾಗಿ) ಒಳಗೆ ಹೋಗಪ್ಪ. +ಅಲ್ಲಿರುವ ಟ್ರಂಕನ್ನು ಹೊರಗೆ ನನ್ನ ಕೈಗೆ ತಂದುಕೊಡು” ಅಂತ ಹೇಳಿದನು. +ಹುಡುಗನು ಒಳಗೆ ಹೊಕ್ಕು ನೋಡಿದನು. +ನಾಲ್ಕು ಜನರ ಹತ್ತರ ಅದನ್ನು ತೆಗೆಯಲಿಕ್ಕೆ ಸಾಧ್ಯ ಆಗುತ್ತಿರಲಿಲ್ಲ. +ಸಾವಕಾಶವಾಗಿ ಜಾರಿಸುತ್ತಾ ಅದನ್ನು ತರಲು ಶುರು ಮಾಡಿದನು. +ಎತ್ತಿದ್ದು ಸರಿಯಾಗದೇ (ಹೆಚ್ಚು ಕಡಿಮೆಯಾಗಿ) ಟ್ರಂಕು ಬಿತ್ತು, ದೊಡ್ಡ ಸಪ್ಪಳವಾಯಿತು. +ಆ ಸಪ್ಪಳ ಕೇಳಿ ರಾಜರು ಎಚ್ಚೆತ್ತರು. +ಎಚ್ಚರವಾಗುತ್ತಲೇ ತಡಮಾಡಲಿಲ್ಲ. +ದೀಪಹಚ್ಚಿ ತಲವಾರ ತಕ್ಕೊಂಡು ಬಂದು ನೋಡಿದರು. +ಹೊರಗೆ ನಿಂತವನು ಆ ಟ್ರಂಕನ್ನು ತಕ್ಕೊಂಡಿದ್ದನು. +ಇವನು ಮಾತ್ರ ಕನ್ನ ಹೊಡೆದ ಕಿಂಡಿಯಿಂದ ಅರ್ಧ ಹೊರಗೆ ಬಿದ್ದಿದ್ದನು. +ಹಿಂದುಗಡೆ ಬಂದು ರಾಜರು ಕಾಲನ್ನು ಹಿಡಿದು ಬಿಟ್ಟರು. +ಕಡೆಗೆ ಇವನು ಆ ಹುಡುಗನ ಕುತ್ತಿಗೆಯನ್ನೇ ಕಡಿದುಬಿಟ್ಟನು. +ಅವನ ಕುತ್ತಿಗೆ ಕಡಿದು, ಟ್ರಂಕನ್ನು ಅವನ ತಲೆಯನ್ನು ತಕ್ಕೊಂಡು ಹೋದನು. +ಎಲ್ಲೋ ತಕ್ಕೊಂಡು ಹೋಗಿ, ಟ್ರಂಕನ್ನು ಚಲೋ ಮಾಡಿಟ್ಟು, ತಲೆಯನ್ನು ಆ ಮುದುಕಿಯ ಮನೆಗೆ ತಕ್ಕೊಂಡು ಹೋದನು. +ಮುದುಕಿಯ ಹತ್ತರ ಅಂದನು, ‘ಅಜ್ಜೀ, ಹೀಗೆ ಹೀಗೆ ಮೋಸವಾಯಿತು. +ಇನ್ನು ನೀನು ಹೆದರುವುದು ಬೇಡ, ನೀನು ಸಾಯುವವರೆಗೆ ನಾನೇ ನಿನ್ನ ಮಗ ಅಂತ ತಿಳಿದುಕೋ. +ನಾನು ಹೇಳಿದಂತೆ ನೀನು ಕೇಳಬೇಕು” ಅಂತ ಅಜ್ಜಿಗೆ ನಂಬಿಗೆಯಾಗುವ ಹಾಗೆ ಹೇಳಿದನು. +ಅಜ್ಜಿ, “ಅಯಿತು ಮಗನೇ, ನೀನು ಹೇಳಿದಂತೆಯೇ ನಾನು” ಅಂದಳು, ಇವನು ಅಲ್ಲೇ ಉಳಿದನು. +ಇಲ್ಲಿ ಬೆಳಿಗ್ಗೆ ಸಿಪಾಯಿಗಳಿಗೆ ಆಜ್ಞೆ ಕೊಟ್ಟನು ರಾಜ. +“ಈ ಕಳ್ಳನ ದೇಹ ಪೂರಾ ನನ್ನ ಬದಿಗಾಯಿತು. +ಆದರೆ, ಶಿರವನ್ನು ಮಾತ್ರ ಕಳಲಿಕ್ಕೆ ಬಂದ ಯಾರೋ ಒಬ್ಬ ಕಳ್ಳ ತೆಗೆದಕೊಂಡು ಹೋದನು. +ಶಿರವನ್ನು ಒಂದು ಜಾಗದಲ್ಲಿಯೂ, ದೇಹವನ್ನು ಒಂದು ಜಾಗದಲ್ಲಿಯೂ ಸುಡಲಿಕ್ಕೇನು ಬರುವದಿಲ್ಲ. +ಹಾಗಾಗಿ, ಈ ದೇಹವನ್ನು ಈಗ ಎತ್ತಿನ ಗಾಡಿಯ ಮೇಲೆ ಹೇರಿ, ಬೀದಿ ಬೀದಿಗಳಲ್ಲೆಲ್ಲಾ ತಿರುಗಿಸಬೇಕು. +ಈ ದೇಹ ನೋಡಿ ಯಾವನು ಆಳುತ್ತಾನೋ ಅವನೇ ಕಳ್ಳ. +ಅವನನ್ನು ಹಿಡಿದುಕೊಂಡು ಬರಬೇಕು” ಅಂತ ರಾಜನ ಅಪ್ಪಣೆಯಾಯಿತು. +ಎರಡು ಮೂರು ಜನ ಪೋಲೀಸರು ಎತ್ತಿನ ಗಾಡಿ ಕಟ್ಟಿ, ಆ ದೇಹವನ್ನು ಗಾಡಿಯ ಮೇಲೆ ಹಾಕಿ, ಅದನ್ನು ತಮ್ಮ ದೇಶದಲ್ಲಿ ಪ್ರತಿಯೊಂದು ಬೀದಿಯಲ್ಲಿಯೂ ತಿರುಗಿಸಿದರು. +ಅಜ್ಜಿ ಮುದುಕಿಯ ಮನೆಯ ಬೀದಿಯಲ್ಲಿ ಬರಬೇಕಾದರೆ ಅಜ್ಜಿಯ ಹತ್ತರ ಹೇಳಿದನು. +“ಅಯ್ಯೋ ಅಜ್ಜೀ. . . ಈಗ ಗಾಡಿಯ ಮೇಲೆ ದೇಹವನ್ನು ಹೇರಿ ತರುತ್ತಾರೆ. +ಆಳಬೇಕೆಂದರೆ ಈಗ ಆಗುವ ಹಾಗಿಲ್ಲ. . . ಅಳದೇ ಉಳಿಯಲಿಕ್ಕೂ ಆಗುವುದಿಲ್ಲ. +ಆದರಿಂದ ಈಗ ಸುಲಭ (ಸಸಾರ) ಉಪಾಯ ಮಾಡುತ್ತೇನೆ. +ನಾನು ನುಗ್ಗಿಮರದ ಮೇಲೆ ಹತ್ತಿ ನುಗ್ಗಿಕಾಯಿ ಕೊಯ್ಯತ್ತಾ ಉಳಿಯುತ್ತೇನೆ. +ಆ ದೇಹವನ್ನು ಗಾಡಿಯ ಮೇಲೆ ತರುತ್ತಾರೆ. +ಆಗ ನಾನು ಒಂದು ಟೊಂಗೆ(ಹೆಣಿ) ಮುರಿದು ಬಿದ್ದ ಲೆಕ್ಕ ಮಾಡಿ, ಬೀಳುತ್ತೇನೆ. +ನೀನು, ‘ಅಯ್ಯೋ ನನ್ನ ಮಗನೇ. . . ’ ಅಂತ ಅಳುತ್ತಾ ಬಾ. +ನನ್ನನ್ನು ಎತ್ತು. +‘ಅಯ್ಯೋ, ಎತ್ತಲಿಕ್ಕೆ ಆಗುವುದಿಲ್ಲ’ ಅಂತ ಹೇಳಿ ಅಳು. +ಆ ದೇಹ ತಂದ ಪೋಲೀಸರು ನನ್ನನ್ನು ಎತ್ತಿ ಮನೆಯ ಒಳಗೆ ತಂದು ಹಾಕುತ್ತಾರೆ. +ನೀನು ಅಳುತ್ತಾ ಉಳಿ” ಅಂತ ಹೇಳಿದನು. +“ಅಡ್ಡಿಯಿಲ್ಲ ಮಗನೇ” ಅಂತ ಹೇಳಿದಳು ಅಜ್ಜಿ. +ಅಷ್ಟು ಹೊತ್ತಿಗೆ ಆ ದೇಹವನ್ನು ತಂದರು. +ಇವನು ಅದರಂತೆ (ಹೇಳಿದಂತೆ) ಮಾಡಿದನು. +ಮುದುಕಿ ಅಳುತ್ತ ಉಳಿದಳು. +“ಅಯ್ಯೋ ಮಗನೇ” ಅನ್ನುತ್ತಿದ್ದಳು. +ಆ ಪೋಲೀಸರು ಅವನನ್ನು ತಂದು ಮನೆಯೊಳಗೆ ಹಾಕಿದರು. +ಆ ದೇಹವನ್ನು ಹಾಕಿದ ಎತ್ತಿನ ಗಾಡಿಯನ್ನು ಮುಂದೆ ಆ ರಾಜ್ಯದಲ್ಲಿ ತಿರುಗಿಸುತ್ತಾ ಪೋಲೀಸರು ಹೋದರು. +ತಿರುಗಿಸಿ, ತಿರುಗಿಸಿ, ಪುನಃ ರಾಜನ ಮನೆಗೆ ತಂದರು. +ಆಗ, ಪೋಲೀಸರ ಹತ್ತರ ರಾಜ ಕೇಳಿದನು. +“ಈ ದೇಹವನ್ನು ನೋಡಿ ಅತ್ತವರು ಯಾರೂ ಇದ್ದಾರೆಯೋ ? +” “ಯಾರೂ ಇಲ್ಲ” ಅಂದರು ಪೋಲೀಸರು. +“ಒಂದು ನುಗ್ಗಿ ಮರದ ಮೇಲಿನಿಂದ ಒಂದು ಟೊಂಗೆ ಮುರಿದು, ಒಬ್ಬ ಮುದುಕಿಯ ಮಗ ಬಿದ್ದು, ಮುದುಕಿ ಅತ್ತಿದ್ದೇ ಹೊರತು ಇನ್ನೂ ಯಾರೂ ಅಳಲಿಲ್ಲ” ಅಂತ ರಾಜನ ಹತ್ತರ ಹೇಳಿದರು. +ಆಗ, “ಅಯ್ಯೋ, ಇನ್ನೇನು ಉಪಾಯ ಮಾಡಬೇಕಾಯಿತು. +ಇನ್ನು ಸುಲಭದ ಉಪಾಯ ಬೇರೆ ಏನೂ ಇಲ್ಲ. +ಹೆಣ ಸುಡುವ ಜಾಗಕ್ಕೆ ಶಿರವನ್ನು ಕಳ್ಳನು ತಂದೇ ತರುವನು. +ಗುಡ್ಡದ ಮೇಲೆ ಸೌದೆ ಕುಂಟೆ ಕೂಡಿಸಿ ಹೆಣ ಸುಡಬೇಕು” ಅಂತ ರಾಜನ ಅಪ್ಪಣೆಯಾಯಿತು. +“ಕಳ್ಳನನ್ನು ಹಿಡಿಯಬೇಕಾದರೆ ಬೇರೆ ಯಾವನ ಹತ್ತಿರವೂ ಸಾಧ್ಯವಿಲ್ಲ. +ಸ್ವತಃ ನಾನೇ ಹೋಗಿ ಆ ಹೆಣ ಸುಡುವ ಜಾಗದಲ್ಲಿ ರಾತ್ರಿ ಕಾಯುತ್ತೇನೆ” ಎಂದು ಹೇಳಿ ಒಂದೆರಡು ಜನ ಆಳುಗಳನ್ನು ಕರೆದುಕೊಂಡು ಆ ಸೊಡ್ಲೆಗುಡ್ಡೆಗೆ ಹೋಗಿ ಉಳಿದನು. +ಅಜ್ಜಿ ಮುದುಕಿಯ ಹತ್ತಿರ ಬಹಾದ್ದೂರ್‌ ಸಿಂಗನು ಏನು ಹೇಳಿದನು? +“ಅಜ್ಜೀ, ನಾನು ಹೇಳಿದಂತೆ ನೀನು ಕೇಳಬೇಕು” ಅಂದನು. +ಒಂದು ಚೀಲದಲ್ಲಿ ಆ ಕಳ್ಳನ ತಲೆಯನ್ನು ಹಾಕಿದನು. +ಪೇಟೆಗೆ ಹೋಗಿ, ಊದಬತ್ತಿ ಕಡ್ಡಿ, ಪರಿಮಳದ ಎಣ್ಣೆ ಬಾಟಲಿ, ಕರ್ಪೂರ ಮತ್ತು ಬೇಕುಬೇಕಾಗಿದ್ದ ವಸ್ತುಗಳನ್ನು ಎರಡು ಮೂರು ಚೀಲದಲ್ಲಿ ತುಂಬಿದನು. +ಒಂದು ಎತ್ತಿನ ಬೆನ್ನ ಮೇಲೆ ಆ ಚೀಲ ಹೇರಿ, ಅಜ್ಜಿ ಮತ್ತು ಮೊಮ್ಮಗ ಎರಡೂ ಜನರು ಸಂಜೆ ಕಡೆಗೆ ಹೊರಬಿದ್ದರು. +ರಾತ್ರಿ ಸರಿಯಾಗಿ ಮಧ್ಯರಾತ್ರಿಯಾಗಿತ್ತು. +ಇವನು ಎತ್ತಿನ ಮೇಲೆ ಇದ್ದ ಗೋಣಿಚೀಲ ಏರಿಹೋಗುತ್ತಿದ್ದನು. +ಮುದುಕಿ ಎತ್ತನ್ನು ಹೊಡೆದುಕೊಂಡು ಹೋಗುತ್ತಿದ್ದಳು. +ಇವನು ಅಜ್ಜಿಯ ಹತ್ತಿರ, ‘‘ನಿಂತುಕೋ’’ ಅಂತ ಹೇಳಿದನು. +“ಸಟ್ಟನೆ ನಾನು ಒಂದು ಜಾಗಕ್ಕೆ ಹೋಗಿ ಬರುತ್ತೇನೆ” ಅಂತ ಹೇಳಿ, ರಾಜನ ಮನೆಗೆ ಬಂದನು. +ಯಾರಿಗೂ ಸುದ್ದಿಯಿಲ್ಲದಂತೆ ರಾಜನ ಅರಮನೆ (ಆಸ್ಥಾನ) ಹೊಕ್ಕು, ರಾಜನ ಹೆಂಡತಿ ಮಲಗಿದ್ದ ಜಾಗಕ್ಕೆ ಹೋದನು. +ಹಗಲಿಗೆ ತೊಟ್ಟಿದ್ದ ಬಟ್ಟೆಗಳನ್ನೆಲ್ಲಾ ರಾಜನ ಹೆಂಡತಿ ತೆಗೆದಿಟ್ಟು, ಬೇರೆ ಬಟ್ಟೆ ಉಟ್ಟು ಅವಳು ಮಲಗಿದ್ದಳು. +ಹಗಲಿಗೆ ಬೇರೆ ಬಟ್ಟೆ, ರಾತ್ರಿಗೆ ಬೇರೆ ಬಟ್ಟೆ ಆಗಬೇಕಂತೆ-- ರಾಜರ ಮನೆಯಲ್ಲಿ ಇದು ರಾಜರ ಪದ್ಧತಿ. +ಅವಳಿಗೆ ಜೋರು ನಿದ್ರೆ ಬಿದ್ದ ಸಮಯದಲ್ಲಿ ಇವನು ಹಗುರ ಹೋಗಿ ಮುಟ್ಟಿದನು. +ಅವಳ ಸೀರೆ, ರವಿಕೆ, ಆಭರಣ ಎಲ್ಲಾ ಹಗುರವಾಗಿ ತಕ್ಕೊಂಡನು. +ಕೊರಳಲ್ಲಿ ಹಾಕುವ ಪವನ ಸರ, ಕೈಬಳೆ ಪ್ರತಿಯೊಂದನ್ನೂ ತಕ್ಕೊಂಡು ಹೊರಬಿದ್ದನು. +ಅಷ್ಟು ಮಾಡಿ ಹೊರಬಿದ್ದು, ಅಜ್ಜಿ ಮುದುಕಿ ಇದ್ದಲ್ಲಿ ಬಂದನು. +“ಅಜ್ಜೀ, ಈಗ ನಾನು ರಾಜನ ಹೆಂಡತಿಯಾಗುತ್ತೇನೆ. +ನೀನು ಈ ಎತ್ತಿನ ಬೆನ್ನ ಮೇಲಿದ್ದ ಚೀಲ ತಕ್ಕೊಂಡು ಹೋಗಿ, ಆ ದೇಹವನ್ನು ಎಲ್ಲಿ ಸುಟ್ಟಿರುವರೋ ಅಲ್ಲಿ ಒಗೆಯಬೇಕು. +ಆದರೆ, ರಾಜನು ಅಲ್ಲಿ ನಿನ್ನನ್ನು ಮುಂದೆ ಹೋಗಲು ಬಿಡುವಂತಿಲ್ಲ. +ರಾಜನಿಗೂ, ನಿನಗೂ ನ್ಯಾಯ(ಜಗಳ)ವಾಗಿ, ಆ ಎತ್ತಿನ ಬೆನ್ನ ಮೇಲಿದ್ದ ಚೀಲ ತೆಗೆದು, ಆ ದೇಹ ಸುಟ್ಟ ಜಾಗಕ್ಕೆ ಹೊತ್ತು ಹಾಕು. +ಅಷ್ಟು ಹೊತ್ತಿಗೆ ನಾನು ಬರುತ್ತೇನೆ. +”ಆಗ ಮುದುಕಿ ಎತ್ತಿನ ಬೆನ್ನ ಮೇಲೆ ಚೀಲ ಹೇರಿಕೊಂಡು ಹೋದಳು. +ಪೋಲೀಸರು ಕಾಯುತ್ತಾ ಇದ್ದರು. +ರಾಜನು ಮಲಗಿದ್ದನು. +ಈ ಮುದುಕಿ, “ಹೈ ಹೇಕೆ. . . ಹೈ ಹೇಕೆ” ಎಂದು ಹೇಳುತ್ತಾ ರಾತ್ರಿ ಎತ್ತನ್ನು ಹೊಡೆದುಕೊಂಡು ಹೋಗುತ್ತಿದ್ದಳು. +ಆಗ ಪೋಲೀಸರು, “ಇದು ಏನಪ್ಪಾ? +ಕಳ್ಳರು ಬರ್ತಾರೆ ಈಗ” ಅಂತ ಹೇಳುತ್ತ ರಾಜನನ್ನು ಎಬ್ಬಿಸಿದರು. +“ರಾಜರೇ, ಏಳಿ. . . ಕಳ್ಳರು ಬರುತ್ತಾರೆ ಈಗ” . +ಅಷ್ಟು ಹೊತ್ತಿಗೆ ಅವಳು ಅಲ್ಲಿಗೆ ಹೋಗಿ ಮುಟ್ಟಿದಳು. +ರಾಜನು ಕೇಳಿದನು, ‘‘ಅಯ್ಯೋ!ನೀನು ಯಾರು?ಏಲ್ಲಿಗೆ ಹೋಗುವೆ?’’ + ‘‘ನಾನು ಊರ ಮೇಲೆ ಹೋಗುವವಳು. +ವ್ಯವಹಾರಕ್ಕೆ ಹೊರಟವಳು. +ನನ್ನನ್ನು ತಡೆಯಬೇಡ. +ನಾನು ಊರ ಮೇಲೆ ಹೋಗುವವಳು’’ ಅನ್ನುತ್ತ ಜೋರು ಮಾಡಿದಳು. +ಮುದುಕಿಗೂ, ರಾಜನಿಗೂ ಜಗಳ ಬಿದ್ದು, ‘‘ಇದು ಯಾರಿಗೂ ಬೇಡ” ಎಂದು ಹೇಳಿ ಆ ಎತ್ತಿನ ಬೆನ್ನ ಮೇಲಿದ್ದ ಗೋಣಿ ಚೀಲವನ್ನು ಏಕ್ದಂ ತೆಗೆದು, ಬೆಂಕಿ ಉರಿಯುತ್ತಾ ಇತ್ತು. +ಆ ದೇಹ ಸುಟ್ಟ ಜಾಗಕ್ಕೆ ತೆಗೆದು ಹೊತ್ತು ಹಾಕಿದಳು. +ಎಣ್ಣೆ, ಊದಬತ್ತಿ, ಕರ್ಪೂರ ಮುಂತಾದ ಏನೇನು ವಸ್ತುಗಳಿದ್ದವೆಂದು ಬೆಲೆ ಕಟ್ಟಲು ಸಾಧ್ಯವಿರಲಿಲ್ಲ. +ಅವೆಲ್ಲ ಸುಟ್ಟು, ಬೆಂಕಿ ದೊಡ್ಡದಾಗಿ ಬೂದಿಯಾಯಿತು. +ಊರಲ್ಲೆಲ್ಲ ಪರಿಮಳ ಹರಡಿಹೋಯಿತು. +ಆಗ ರಾಜನೇ ಅಂದನು, “ಅಯ್ಯೋ! +ಎಷ್ಟು ಲಕ್ಷ ರೂಪಾಯಿಗಳ ಸಾಮಾನುಗಳು ಇದ್ದವಪ್ಪಾ ಇದರಲ್ಲಿ? +ಹೀಗೆ ಮಾಡಿ ಪಾಪ ಇವಳಿಗೆ ಜೋರು ಮಾಡಿ, ಇವಳು ಅವನ್ನೆಲ್ಲ ಸಿಟ್ಟಿನಿಂದ ಹೊತ್ತು ಹಾಕಿದಳಲ್ಲ” ಅಂತ ಬಹಳ ಪಶ್ಚಾತ್ತಾಪ ಮಾಡಿದನು. +ಅಷ್ಟು ಮಾಡಿ, ಆ ಮುದುಕಿ ಮುಂದೆ ಹೋದಳು. +ಅಂಥಾ ರಾತ್ರಿ ಸಮಯದಲ್ಲಿ ಅವಳು ದಾರಿ ನಡೆಯುತ್ತಾ ಇದ್ದಳು. +ಅಷ್ಟು ಹೊತ್ತಿಗೆ ರಾಜನ ಹುಡುಗನು ರಾಣಿಯ ವೇಷ ಹಾಕಿಕೊಂಡು ಮತ್ತೆ ಎರಡು ಜನರನ್ನು ಕರೆದುಕೊಂಡು ಮಾತಾಡುತ್ತಾ ಬರುತ್ತಿದ್ದನು. “ಓಹೋ. . . ಈಗ ಕಳ್ಳರು ಬಂದರು” ಅಂತ ಹೇಳಿ, ಪೋಲೀಸರು ರಾಜನನ್ನು ಎಬ್ಬಿಸಿ ಬಿಟ್ಟರು. +ಅಷ್ಟು ಹೊತ್ತಿಗೆ ಇವರು ಹೋಗಿ ಮುಟ್ಟಿದರು ಅಲ್ಲಿ. “ಅಯ್ಯೋ. . . ನೀನು ಏತಕ್ಕೆ ಬಂದೆ ಇಲ್ಲಿ?” ಅಂತ ರಾಜನು ಕೇಳಿದನು. +ಆಗ “ಅಯ್ಯೋ!ಕೆಟ್ಟ ಕನಸಾಯಿತು. +ಪೋಲೀಸರನ್ನು ಕರೆದುಕೊಂಡು ತಮ್ಮನ್ನು ನೋಡಬೇಕೆಂದು ನಾನು ಓಡಿ ಬಂದು ಬಿಟ್ಟಿದ್ದೇನೆ” ಅಂದಳು(ನು). +“ಕಳ್ಳರು ಬರುವ ಹೊತ್ತಿಗೆ ನೀನು ಬಂದು ಮುಟ್ಟಿದೆ. +ಅಯ್ಯೋ, ಈಗಿಂದೀಗ ಹೊರಡಿ. +ಈಗ ಹಾಲಿ ಕಳ್ಳರು ಬರುತ್ತಾರೆ” ಆಗ ರಾಜನ ಹತ್ತಿರ ಹೇಳಿದಳು(ನು), “ಅಯ್ಯೋ, ಹೆಣ ಸುಡುವುದೆಂದರೆ ಹೀಗೆಯೋ? +ನಾನು ಇನ್ನೂ ನೋಡಿದ್ದಿರಲಿಲ್ಲ. +ಇದು ಎಂಥ ಪರಿಮಳ; ಈ ನಮೂನೆಯಿಂದ ಗಾಳಿಯಲ್ಲಿ ಹರಡುತ್ತಿದೆ” ಅಂತ ಬಗ್ಗಿ ಬಗ್ಗಿ ನೋಡಿದನು. +ಕೊರಳಿನಲ್ಲಿದ್ದ ಪವನ ಸರವನ್ನು ಹರಿದು ಹಾಕಿದನು. +“ಅಯ್ಯೋ, ಪವನ ಸರ ಕೊರಳಿನಲ್ಲಿದ್ದದ್ದು ಇಲ್ಲಿ ಹರಿದು ಬಿತ್ತು. +ಇಲ್ಲಿ ಬಗ್ಗಿ ನೋಡುತ್ತಿದ್ದೆನು” ಎಂದು ಗದ್ದಲ (ಗೌಜಿ) ಕೊಟ್ಟುಬಿಟ್ಟನು. +ಆಗ, “ಆ ಸರ ಹಾಕಿದ ಜಾಗದಲ್ಲಿ ಬೂದಿ ಕೂಡಿಸಿ ನನ್ನ ಹೆಂಡತಿಯ ಹತ್ತಿರ ಕೊಡಿ. +ನಾಳೆ ಅವಳು ಎಲ್ಲಾ ಪವನಗಳನ್ನು ಹೆಕ್ಕಿ ಸರಿ ಮಾಡಲಿಕ್ಕೆ ಆಗುತ್ತದೆ” ಅಂತ ಹೇಳಿದನು. +ರಾಜ ನೀರನ್ನು ಹಾಕಿ ಬೆಂಕಿಯನ್ನು ಆರಿಸಿ(ನಂದಿಸಿ)ದನು. +ಅವರು ಬೂದಿಯ ಪೊಟ್ಟಣ ಕಟ್ಟಿ ಕೊಟ್ಟರು. +ರಾಜನೂ, ಅವನ ಪೋಲೀಸರೂ ಅಲ್ಲಿ ಉಳಿದರು. +ರಾಜನ ಹೆಂಡತಿಯ ವೇಷ ಹಾಕಿದ ಬಹಾದ್ದೂರ್‌ ಸಿಂಗನೂ, ಅವನ ಸಂಗಡ ಬಂದ ಪೋಲೀಸರೂ ಅರಮನೆಗೆ ಬಂದರು. +ಅವನು ರಾಜನ ಮನೆಗೆ ಹೋದ ಹಾಗೆ ಮಾಡಿ, ಅಲ್ಲಿಂದ ಹೊರಬಿದ್ದು ಮುದುಕಿಯ ಮನೆಗೆ ಬಂದನು. +ಮುದುಕಿ ಅಷ್ಟು ನಾಟಕ ಮಾಡಿ ಹಿಂದೆಯೇ ಮನೆಗೆ ಹೋಗಿದ್ದಳು. +ಇಲ್ಲಿ ರಾಜನು ಇಡೀ ರಾತ್ರಿ ಸೊಡ್ಲೆಗುಡ್ಡ(ಸ್ಮಶಾನ)ದಲ್ಲಿ ಕುಳಿತನು. +ಬೆಳಗಾಯಿತು. ರಾಜನ ಆಸ್ಥಾನದಲ್ಲಿ ರಾಜನ ಹೆಂಡತಿಯ ಮೈಮೇಲಿಂದ ದಾಗೀನಿಗಳನ್ನು, ಬಟ್ಟೆಗಳನ್ನು ಎಲ್ಲವನ್ನೂ ಕಳ್ಳರು ಕದ್ದುಕೊಂಡು ಹೋದರೆಂದು ಗದ್ದಲವಾಯಿತು. + “ಹರಹರಾ. . . ” ಅಂದನು. +ರಾಜ ಬಂದು ಹೆಂಡತಿಯ ಹತ್ತಿರ ಕೇಳಿದನು. +ಆಗ ರಾಣಿ, “ನಾನು ಸೊಡ್ಲೆಗೆ ಬರಲಿಲ್ಲ’’ ಅಂದಳು. +‘‘ಅಯ್ಯೋ, ಮೋಸ(ಫರಾಮಶಿ)ದಿಂದ ಈ ನಮೂನೆಯಾಯಿತು” ಅಂತ ರಾಜನೆಂದನು. +“ಕೈಗೆ ಸಿಕ್ಕಿದ ಕಳ್ಳನನ್ನು ಬಿಟ್ಟು ಬಿಟ್ಟವನು ನಾನು ಎಂಥವನಪ್ಪಾ” ಅಂತ ಅವನಿಗೆ ದೊಡ್ಡ ವ್ಯಥೆಯಾಯಿತು. +ರಾಜನು ಮಂತ್ರಿಯ ಹತ್ತಿರ, ‘‘ಇನ್ನು ಯಾರಪ್ಪಾ ಕಳ್ಳನನ್ನು ಹಿಡಿವವನು? +ದೊಡ್ಡ ಕಷ್ಟ ಬಂತು” ಅಂದನು. +ಮಂತ್ರಿ, “ಹೆಣ ಸುಟ್ಟ ಜಾಗದಲ್ಲಿ ಮೂರು ದಿನಗಳ ಶಾಸ್ತ್ರವುಂಟು. +ಹೊಳೆಯಲ್ಲಿ ಪಿಂಡ ಹಾಕುವದು ಎಂದಿರುತ್ತದೆ. +ನೀನು ಹೆದರುವ ಕಾರಣವಿಲ್ಲ. +ಈವತ್ತೇ ನಾನು ಕಳ್ಳನನ್ನು ಹಿಡಿಯುತ್ತೇನೆ” ಅಂತ ರಾಜನಿಗೆ ಧೈರ್ಯ ಕೊಟ್ಟನು. +ಮುದುಕಿಯ ಮನೆಯಲ್ಲಿ ಬಹಾದ್ದೂರ್‌ ಸಿಂಗನು ಒಂದು ಸಣ್ಣ ಟ್ರಂಕನ್ನು ತೆಗೆದುಕೊಂಡು, “ಅಜ್ಜೀ, ನೀನು ಈ ಟ್ರಂಕನ್ನು ಹೊತ್ತುಕೊಳ್ಳಬೇಕು. +ಪಿಂಡ ತೊಳೆಯುವ ಶಾಸ್ತ್ರವನ್ನು ನಾವು ಹೊಳೆಗೆ ಹೋಗಿ ಮಾಡಬೇಕಾಯ್ತು” ಅಂತ ಹೇಳಿದನು. +ಟ್ರಂಕನ್ನು ಮುದುಕಿಯ ತಲೆಯ ಮೇಲೆ ಹೊರಿಸಿದನು. +ಹೊತ್ತು ಮುಳುಗಲು ಒಂದು ತಾಸು ಹೊತ್ತು ಇರುವಾಗ ಅವರು ಹೊಳೆಗೆ ಹೊರಟರು. +ಹೊಳೆಗೆ ಹೋಗೀ ಅಡಿಗೆ ಮಾಡಲಿಕ್ಕೆ ಸುರು ಮಾಡಿದರು. +ಒಂದು ಬಾಳೆಕುಂಟೆ(ಬಾಳೆ ದಿಮ್ಮಿ) ತೆಗೆದುಕೊಂಡು ಹೋಗಿದ್ದರು. +ಅಷ್ಟರಲ್ಲಿ ಕಪ್ಪಾಯಿತು. +“ಅಜ್ಜೀ, ಅಡಿಗೆ ಮಾಡುತ್ತ ಇರು” ಅಂತ ಹೇಳಿ, ಬಾಳೆಯ ದಿಮ್ಮಿಗೆ ಎರಡು ಜುಂಜಿಗಳನ್ನು ಚುಚ್ಚಿದನು. +ದೊಡ್ಡ ಗುಂಡಿ(ಆಳವಾದ ಸ್ಥಳ)ಯಿತ್ತಂತೆ ಹೊಳೆಯಲ್ಲಿ. +ಆ ಜುಂಜಿ(ದೊಂದೆ)ಗಳನ್ನು (ದೀಪದಂತೆ) ಹಚ್ಚಿ, ಆ ದಿಮ್ಮಿಯನ್ನು ಅಲ್ಲಿ ಹೊಳೆಯಲ್ಲಿ ಬಿಟ್ಟನು. +ಪಿಂಡವನ್ನು ನೀರಿನಲ್ಲಿ ಬಿಡುವ ಶಾಸ್ತ್ರ ಮಾಡಬೇಕಾಗಿತ್ತು. +ಮುದುಕಿಗೆ ಇಷ್ಟು ಅನ್ನ ಹಾಕಿದನು. +ಉಳಿದ ಅನ್ನವನ್ನು ಪೂರಾ ಇವನು ಬಡಿಸಿಕೊಂಡನು. +ಇಲ್ಲಿ ತಾಯಿಗೂ, ಮಗನಿಗೂ ನ್ಯಾಯ ಬಿತ್ತು. +‘‘ಅಯ್ಯೋ ಮಗನೇ. . . ಇಂಥಾ ದೊಡ್ಡ ಟ್ರಂಕನ್ನು ನಾನು ಹೊತ್ತುಕೊಳ್ಳಬೇಕು. +ನನಗೆ ಇಷ್ಟು ಸ್ವಲ್ಪ ಅನ್ನ ಹಾಕಿದೆ. +ಇಷ್ಟು ಅನ್ನ ತಿಂದು, ನಾನು ದೊಡ್ಡ ಹೊರೆಯನ್ನು ಹೇಗೆ ಹೊರಲಿ?” ಅಂತ ನ್ಯಾಯವೇ ನ್ಯಾಯವಾಯಿತು ತಾಯಿಗೂ, ಮಗನಿಗೂ. +ಅಷ್ಟು ಹೊತ್ತಿಗೆ ಮಂತ್ರಿ ಕಳ್ಳರನ್ನು ಹಿಡಿಯಲಿಕ್ಕೆ ಹುಡುಕುತ್ತಾ ಹೋಗುತ್ತಿದ್ದನು. +“ಇಲ್ಲಿ ಯಾರೋ ಮಾತಾಡುತ್ತಾರೆ. +ಅವರೇ ಕಳ್ಳರಾಗಿರಬೇಕು” ಅಂತ ಅವರು ಮಾತಾಡುವ ಜಾಗಕ್ಕೆ ಹೋಗಿ ಮುಟ್ಟಿದನು. +ಇವನನ್ನು ನೋಡುತ್ತಲೇ ಮುದುಕಿ ಮತ್ತಿಷ್ಟು ಅಳಲಿಕ್ಕೆ ಸುರು ಮಾಡಿದಳು. +‘‘ಅಯ್ಯೋ, ನೋಡಿರಿ. . . ನನಗೆ ಇಷ್ಟು ಅನ್ನ ಬಡಿಸಿದ್ದಾನೆ. +ಪೂರಾ ಅನ್ನ ಅವನೇ ಬಡಿಸಿಕೊಂಡಿದ್ದಾನೆ. +ಇಂತಾ ದೊಡ್ಡ ಟ್ರಂಕನ್ನು ನನ್ನ ತಲೆಯ ಮೇಲೆ ಹೊರಿಸುತ್ತಾನೆ. +ಈ ಅನ್ನ ಊಟ ಮಾಡಿ ನಾನು ಇನ್ನು ಹೇಗೆ ಹೊರೆಯನ್ನು ಹೊರಲಿ?” ಅಂತ ಅಳುತ್ತಿದ್ದಳು. +ಆಗ ಆ ಮಂತ್ರಿ ಅಂದನು, “ಇವರು ಕಳ್ಳರಲ್ಲ. +ಎಲ್ಲೋ ಊರ ಮೇಲೆ ಹೋಗುವ ಮಂದಿ” ಅಂದುಕೊಂಡು, “ಎಲೋ ಹುಡುಗಾ, ಈ ಮುದುಕಿಗೆ ಮತ್ತಿಷ್ಟು ಅನ್ನ ಬಡಿಸೋ. +ನೀನೇ ಪೂರಾ ಅನ್ನ ಬಡಿಸಿಕೊಂಡಿದ್ದೀ” ಅಂತ ಹೇಳಿ ಜೋರು ಮಾಡಿದನು. +ಆಗ ಮಂತ್ರಿಗೂ, ಅವನಿಗೂ ನ್ಯಾಯ ಬಿತ್ತು. +ನ್ಯಾಯ ಬೀಳುತ್ತಲೇ, “ದೊಡ್ಡ ಗದ್ದಲ(ಗೌಜಿ) ಮಾಡಬೇಡಿ ಮಹಾರಾಯರೇ. . . ನಾನು ಕಳ್ಳರನ್ನು ಹಿಡಿಯಲಿಕ್ಕೆ ಬಂದಿದ್ದೇನೆ” ಅಂದನು ಮಂತ್ರಿ. +ಈಗ, “ಧತ್ತೆ, ಈ ಅನ್ನ ಯಾರಿಗೂ ಬೇಡ” ಅಂದವನೇ ಆ ಮುದುಕಿಯ ಬಾಳೆಯನ್ನೂ ತನ್ನ ಬಾಳೆಯನ್ನೂ ಎರಡನ್ನೂ ಎತ್ತಿಕೊಂಡು, ತಕ್ಕೊಂಡು ಹೋಗಿ ಹೊಳೆಯಲ್ಲಿ ಬಿಟ್ಟನು. +“ಈಗಲಾದರೂ ಸರಿಯಾಯಿತೋ?” ಅಂತ ಕೇಳಿ, ‘‘ದೊಡ್ಡ ಗದ್ದಲ ಮಾಡಬೇಡಿ. +ಕಳ್ಳರು ಬರುವ ಹೊತ್ತಾಯಿತು” ಅಂತ ಮಂತ್ರಿ ಹೇಳಿದನು. +“ಅದೋ, ಅಲ್ಲಿ ಕಳ್ಳ ಬರುತ್ತಾ ಇದ್ದಾನೆ. +ಜುಂಜಿ ಹಿಡಿದುಕೊಂಡಿದ್ದಾನೆ” ಅಂತ ತೋರಿಸಿಕೊಟ್ಟನು. +“ಹಾಗಾದರೆ, ಹ್ಯಾಗೆ ಅಲ್ಲಿ ಹೋಗಬೇಕು” ಅಂತ ಕೇಳುತ್ತಲೇ, “ನಡೆಯಿರಿ, ನಾನು ತೋರಿಸುತ್ತೇನೆ” ಅಂತ ಹೇಳಿ, ಗುಂಡಿಯ ಬದಿಗೆ ಹೋಗಿ ನಿಂತು ಮಂತ್ರಿಯ ಹತ್ತಿರ ಹೇಳಿದನು. +“ಕಳ್ಳನನ್ನು ಹೀಗೆ ಹಿಡಿಯುವದಲ್ಲ. +ಅಂಗಿ ಕಳಚಿ, ಎಲ್ಲಾ ಬಟ್ಟೆಗಳನ್ನೂ ಕಳಚಿಟ್ಟು ಬೀಸಾಡಿ ಹೋಗಿ ಸುಮ್ಮನೆ ಕಳ್ಳನನ್ನು ಹಿಡಿಯಬೇಕು. +ಮಾತಾಡಬೇಡಿ” ಅಂದನು. +ಮಂತ್ರಿ ಎಲ್ಲಾ ಬಟ್ಟೆಯನ್ನು ಕಳಚಿಟ್ಟು ಹೊಳೆಗುಂಡಿಯಲ್ಲಿ ಬಿದ್ದು, ಆ ದೀಪ ಇದ್ದಲ್ಲಿ ಈಸಾಡುತ್ತ ಹೋದನು. +ಬಹಾದ್ದೂರ್‌ ಸಿಂಗನು ಕಳಚಿ ಇಟ್ಟಿದ್ದ ವಸ್ತ್ರಗಳನ್ನೆಲ್ಲ ಹೆಕ್ಕಿಕೊಂಡು ಹಿಂದೆಯೇ ಓಡಿ ಬಂದನು. +ಮಂತ್ರಿ ಹೊಳೆಗುಂಡಿಗೆ ಹೋಗಿ ನೋಡಿದಾಗ, ಬಾಳೆ ಕುಂಟೆಗೆ ಜುಂಜಿ ಹಚ್ಚಿದ್ದು ಕಂಡಿತು. . . ಕಳ್ಳರಿರಲಿಲ್ಲ. +ಪುನಃ ದಡಕ್ಕೆ ಬಂದು ನೋಡುವ ತನಕ, ಅಲ್ಲಿ ಕಳಚಿ ಇಟ್ಟಿದ್ದ ಬಟ್ಟೆಯೇ ಇರಲಿಲ್ಲ. +‘ಅಯ್ಯೋ’ ಅಂದನು. +‘ಇವನೇ ಕಳ್ಳನಾಗಿದ್ದನು. +ನನ್ನ ವಸ್ತ್ರಗಳನ್ನು ಸಹ ಹೊತ್ತುಕೊಂಡು ಹೋದನಲ್ಲ’ ಅಂತ ಪಶ್ಚಾತ್ತಾಪ ಮಾಡುತ್ತಾ, ಇಡೀ ರಾತ್ರಿ ಬತ್ತಲೆಯಾಗಿ (ದುಂಡಗೆ) ತಿರುಗಿ, ಕತ್ತಲೆಯಿರುವಾಗಲೇ ಮನೆಗೆ ಬಂದನು. +ಮರುದಿವಸ ಮಂತ್ರಿ ಬೆಳಿಗ್ಗೆ ಬಂದು ಹೇಳಿದನು. +‘‘ಕಳ್ಳನು ಸಿಗಲಿಲ್ಲ. . . ಈ ನಮೂನೆಯಾಯಿತು. +ಇನ್ನು ಹೇಗಪ್ಪ ಕಳ್ಳನನ್ನು ಹಿಡಿಯುವದು?’’ ಅಂತ ಹೇಳಿದನು. +ಕಳ್ಳನನ್ನು ಹಿಡಿಯಲಿಕ್ಕೆ ಹೋಗಲು ಪ್ರಧಾನಿ ತಯಾರಾದನು. +“ಹಾಗಾದರೆ ರಾಜರೇ, ನೀವು ಹೆದರುವದು ಬೇಡ. +ಇವತ್ತು ರಾತ್ರಿ ಕಳ್ಳನನ್ನು ನಾನು ಹಿಡಿದುಕೊಡುತ್ತೇನೆ” ಅಂತ ರಾಜನಿಗೆ ಧೈರ್ಯ ಕೊಟ್ಟನು. +‘‘ನನಗೆ ಬೇಕುಬೇಕಾಗಿರುವ ಸಂಗ್ರಹವನ್ನೆಲ್ಲಾ ನೀವು ಕೊಡಬೇಕು’’ ಅಂತ ಹೇಳಿ ಪ್ರಧಾನಿ ಹೇಳಿದನು. +‘‘ಇಂದು ಹಗಲಿನಲ್ಲಿಯೇ ಫರ್ಲಾಂಗಿಗೆ ಒಂದರಂತೆ ಇಡಸಲು (ಕೋಳ) ತಯಾರ ಮಾಡಬೇಕು. +ಸುಲಭ ಉಪಾಯದಿಂದ ಇಂದು ಕಳ್ಳನನ್ನು ಹಿಡಿದುಕೊಡುತ್ತೇನೆ’’ ಅವನ ಹೇಳಿಕೆಯಿತ್ತು. +ರಾಜನಿಗೆ ಜನರ ಕೊರತೆಯೇನಿರಲಿಲ್ಲ. +ಎಲ್ಲಾ ಸಂಗ್ರಹ ತಯಾರು ಮಾಡಿದರು,ಸಂಜೆಯಾಯಿತು. +ಸಂಜೆ ಕಪ್ಪಾಗುವ ವೇಳೆಗೆ ಬಹಾದ್ದೂರ್‌ ಸಿಂಗನು ಪೇಟೆಗೆ ಬಂದು, ಅಕ್ಕನಿಗೆ ಇನ್ನೂರು ರೂಪಾಯಿಗಳ ಒಂದು ಚಲೋ ಸೀರೆ, ಒಂದು ರವಿಕೆ, ಮೊಮ್ಮಕ್ಕಳಿಗೆ ಬೇಕಾದಂಥ ನಮೂನೆಯ ಅಂಗಿ ವಸ್ತ್ರಗಳನ್ನು, ಭಾವನಿಗೂ ವಸ್ತ್ರ ಬಟ್ಟೆ ಎಲ್ಲಾ ತಕ್ಕೊಂಡು- ಮಕ್ಕಳಿಗೆ ತಿನ್ನಲಿಕ್ಕೆ ಮಂಡಕ್ಕಿ, ಮಿಠಾಯಿ ತಕ್ಕೊಂಡು ಪ್ರಧಾನಿಯ ಮನೆಗೆ ಬಂದನು. +“ಓ ಭಾವಾ. . . ” ಅಂತ ಕರೆದನು. +ಕರೆಯುತ್ತಲೇ ಪ್ರಧಾನಿ ಹೊರಗೆ ಬಂದು ನೋಡಿದನು. +“ಓಹೋ, ನನ್ನ ಹೆಂಡತಿಯ ತಮ್ಮ” ಅಂತ ಹೇಳಿ, ಬಹಳ ಪ್ರೀತಿಯಿಂದ ಅವನನ್ನು ಒಳಗೆ ಕರೆದುಕೊಂಡು ಹೋದನು. +ಊಟ, ಆಸ್ರಿ(ಪಾನೀಯ) ಎಲ್ಲಾ ತಯಾರು ಮಾಡಿದರು. +ಮಕ್ಕಳಿಗೆಲ್ಲಾ ಮಂಡಕ್ಕಿ, ಮಿಠಾಯಿ ಕೊಟ್ಟನು. +ವಸ್ತ್ರ, ಬಟ್ಟೆ ತಕ್ಕೊಂಡು ಹೋಗಿದ್ದನ್ನೆಲ್ಲಾ ಅಕ್ಕನಿಗೂ-ಭಾವನಿಗೂ, ಎಲ್ಲಾ ಮಕ್ಕಳಿಗೂ ಕೊಟ್ಟನು. +ಪ್ರಧಾನಿಯ ಭಾವ ನೆಂಟ ಎಲ್ಲಿಗೋ ಹೋಗಿ ಬಹಳ ವರ್ಷಗಳಾಗಿದ್ದವು. +ಭಾವನಲ್ಲವೆಂದು ಪರೀಕ್ಷೆ ಮಾಡಲಿಕ್ಕೆ ಸಾಧ್ಯವಿರಲಿಲ್ಲ. +“ಭಾವಾ, ಇಂದು ರಾತ್ರಿ ನಾನು ಕಳ್ಳನನ್ನು ಹಿಡಿಯುತ್ತೇನೆ ಎಂದು ರಾಜರಿಗೆ ವಚನ ಕೊಟ್ಟಿದ್ದೇನೆ. +ನೀನು ಇಲ್ಲಿಯೇ ಉಳಿ. +ನಾನು ಈಗ ಕಳ್ಳನನ್ನು ಹಿಡಿಯಲಿಕ್ಕೆ ಹೋಗುತ್ತೇನೆ” ಅಂತ ಹೇಳಿದನು. +“ಅಯ್ಯೋ ಭಾವಾ. . . ನೀನು ಒಬ್ಬನೇ ಕಳ್ಳನನ್ನು ಹಿಡಿಯಲಿಕ್ಕೆ ಹೋಗುವುದಕ್ಕಿಂತ ನಾವಿಬ್ಬರೂ ಕೂಡಿಯೇ ಹೋಗೋಣ. +ನಿನ್ನ ಸಂಗತಿಗೆ ಬರುತ್ತೇನೆ” ಅಂದನು ಬಹಾದ್ದೂರ್‌ ಸಿಂಗ. +‘ಬೇಡ’ವೆಂದರೂ ಕೇಳದೆ ಅವನೂ ಹೊರಟನು. +ಒಂದು ಫರ್ಲಾಂಗಿಗೊಂದರಂತೆ ಇಡಿಸಲನ್ನು ಇಟ್ಟದ್ದರು. +“ಅಯ್ಯೋ ಭಾವಾ, ಇದರಲ್ಲಿ ಕಳ್ಳನನ್ನು ಹೇಗೆ ಹಿಡಿಯುವದು? +” ಅಂತ ಕೇಳಿದನು. “ಹೀಗೆ. . . ಹೀಗೆ” ಅಂತ ಹೇಳಿ, ತೋರಿಸಲಿಕ್ಕೆ ಸುರು ಮಾಡಿದನು. +‘‘ಭಾವಾ, ಹೇಗೆ? +ನೀನು ಕೈಹಾಕಿ ತೋರಿಸು ನೋಡುವಾ. +ಕಳ್ಳ ಹೇಗೆ ಇದರಲ್ಲಿ ಸಿಗುತ್ತಾನೆ?’’ ಅಂತ ಬಹಾದ್ದೂರ್‌ ಸಿಂಗನು ಅಂದನು. +“ಹಾಗಾದರೆ ಹೀಗೆ ಕೈಹಾಕಿದರೆ ಸೈ, ಭಾವಾ. . . ” ಅಂತ ಹೇಳಿ ಕೋಳದಲ್ಲಿ ಕೈಹಾಕಿದನು. +ಆಗ ಕೋಳ ಬಿತ್ತು. +“ಅದು ಗಟ್ಟಿಯಾಗುವ ಲೈನು ಯಾವದು ಭಾವಾ?” “ಈ ತಿರುಗಣ ಮೊಳೆಯ ಮೇಲೆ ಗಟ್ಟಿಯಾಗಿ ಸುತ್ತಿಗೆಯಿಂದ ಹೊಡೆದರೆ ಸೈ” ಅಂದನು ಪ್ರಧಾನಿ. +ಸಾವಕಾಶ ತಟ್ಟಿದನು. +ಭಾವನ ಕೈಕೋಳ ಗಟ್ಟಿಯಾಯಿತು. +ಕೋಳ ಗಟ್ಟಿಯಾದ ಕೊಡಲೇ, ‘‘ಇದನ್ನು ಬಿಡಿಸಿ ಹಾಕು’’ ಅಂದನು ಪ್ರಧಾನಿ. +ಗಾಬರಿಯಾದ ಹಾಗೆ ಮಾಡಿ, ಕೋಳ ಮತ್ತಷ್ಟು ಗಟ್ಟಿಯಾಗುವ ಹಾಗೆಯೇ ಮಾಡಿದನು. +“ಓಹೋ, ಭಾವಾ, ಇದು ಹೀಗೆ ಮಾಡಿದರೆ ಆಗುವದಲ್ಲ. +ಮನೆಗೆ ಹೋಗಿ ದೊಡ್ಡ ಕತ್ತಿ ತಕ್ಕೊಂಡು ಬಾ. . . ” ಆಗ, ಬಹಾದ್ದೂರ್‌ ಸಿಂಗನು ಓಡಿದನು. +“ಅಕ್ಕಾ, ಅಕ್ಕಾ. . . ಭಾವ ದೊಡ್ಡ ಟ್ರಂಕನ್ನು ಹೊರಗೆ ತಂದು ನನಗೆ ಕೊಡಬೇಕಂತ ಹೇಳಿದ್ದಾನೆ. +ಇಲ್ಲಿ ಕಳ್ಳರು ಬರಬಹುದು. +ತಾನೇ ಇಟ್ಟುಕೊಳ್ಳುತ್ತೇನೆ ಅಂತ ಹೇಳಿದ್ದಾನೆ” ಅಂತ ಹೇಳಿದನು. +“ಎಷ್ಟಾದರೂ ಚಿನ್ನ-ಹಣ ಇರುವ ಟ್ರಂಕನ್ನು ಹೊರಗೆ ಹಾಕಲಿಕ್ಕೆ ಬುದ್ಧಿ ಬರುತ್ತದೆಯೇನ್ರೀ? +ನಾನು ಕೊಡುವದಿಲ್ಲ” ಅಂದಳು. +ಆಗ ದೊಡ್ಡ ದನಿಯಲ್ಲಿ ಭಾವನನ್ನು ಕರೆದು ಹೇಳಿದನು. +‘‘ಅಕ್ಕ ಕೊಡುವದಿಲ್ಲವಂತೆ. +” ಪ್ರಧಾನಿ ಅಲ್ಲಿಂದಲೇ ಕೂಗಿದನು. +‘‘ಬೇಗ ತಂದುಕೊಡೆ. . . ಬೇಗ’’ ಅಂದನು. +ಆಗ, ದೊಡ್ಡ ಟ್ರಂಕನ್ನು ಇಬ್ಬರೂ ಹಿಡಿದುಕೊಂಡು ಹೊರಗೆ ತಂದರು. +ಅದನ್ನು ಅವಳು ಅಣ್ಣನ ತಲೆಯ ಮೇಲೆ ಹೊರಿಸಿದಳು. +ಟ್ರಂಕನ್ನು ಹೊತ್ತು ಓಡಿ ಪರಾರಿಯಾದನು. +ಪ್ರಧಾನಿ ಅಲ್ಲೇ ಸಿಕ್ಕಬಿದ್ದನು, ಬೆಳಗಾಯಿತು. +ರಾಜನ ಪೋಲೀಸರು ಹೋಗಿ ನೋಡಿದರು. +ಪ್ರಧಾನಿಯೇ ಕೋಳದಲ್ಲಿ ಸಿಕ್ಕಬಿದ್ದಿದ್ದನು. +‘‘ಪ್ರಧಾನಿಯ ಮನೆಯ ಕಡೆಗೆ ಕತ್ತಿ ತಕ್ಕೊಂಡು ಬರಲು ಹೋದವನು ಅವನ ಮನೆಯ ಟ್ರಂಕನ್ನು ಹಾರಿಸಿಕೊಂಡು ಹೋಗಿದ್ದಾನೆ’’ ಎಂದು ದೊಡ್ಡ ಗುಲ್ಲು ಬಿತ್ತು. +“ಇನ್ನು ಕಳ್ಳನನ್ನು ಹಿಡಿದ ಹಾಗಾಯಿತು” ಅಂತ ರಾಜನಂತೂ ಬಹಳ ಕಂಗಾಲಾದನು. +ಆ ಸಮಯದಲ್ಲಿ ರಾಜನ ಮಗಳು ರತ್ನಾವತಿ ತಂದೆಯ ಹತ್ತಿರ ಬಂದು ಹೇಳಿದಳು. +‘‘ಅಪ್ಪಾ, ನೀವೆಲ್ಲಾ ಕಳ್ಳನನ್ನು ಹಿಡಿದಿರಿ. +ಇವತ್ತು ನಾನು ಕಳ್ಳನನ್ನು ಹಿಡಿದು ಕೊಡುತ್ತೇನೆ. +ರಾತ್ರಿ ಫರ್ಲಾಂಗಿಗೆ ಒಂದರಂತೆ ದೀಪವನ್ನು ಹಚ್ಚಿ ತಯಾರು ಮಾಡಬೇಕು’’ ಅಂದಳು. +ಅದರಂತೆ ಹಗಲಿಗೆ ಎಲ್ಲಾ ಸಂಗ್ರಹ ಮಾಡಿದರು. +ಕಳ್ಳನು ಎಲ್ಲಾ ಸುದ್ದಿಯನ್ನೂ ಕೇಳುತ್ತಿದ್ದನು. +“ಸಂಜೆ ಮೂರು ಸಂಜೆ (ಮೂರು ಕಪ್ಪು) ಆಗುವ ಸಮಯಕ್ಕೆ ಯಾರೂ ಪೇಟೆಯಲ್ಲಿ ಅಂಗಡಿ ಇಟ್ಟುಕೊಳ್ಳಬಾರದು” ಎಂದು ರತ್ನಾವತಿಯ ಹೇಳಿಕೆಯಾಯಿತು. +ಒಬ್ಬ ಶೆಟ್ಟಿಯ ಅಂಗಡಿಯಲ್ಲಿ ಶೆಟ್ಟಿ ಬಾಗಿಲನ್ನು ಬಂದ ಮಾಡಿ, ಒಳಗೆ ದೀಪವನ್ನು ಹಾಗೆಯೇ ಹಚ್ಚಿ ಇಟ್ಟಿದ್ದನು. +ಬಹಾದ್ದೂರ್‌ ಸಿಂಗ್ ವೀಳ್ಯ(ಕವಳ)ಕ್ಕೆ ಎಲೆ-ಅಡಿಕೆ ತಕ್ಕೊಳ್ಳುವ ಉದ್ದೇಶದಿಂದ ಹೋಗಿ ಶೆಟ್ಟಿಯ ಹತ್ತಿರ ಕೇಳಿದನು, “ಒಂದು ರೂಪಾಯಿಯ ವೀಳ್ಯದ ಸಾಮಾನು ಕೊಡಿ” ಅಂದನು. +ಶೆಟ್ಟಿ, ‘‘ಅಂಗಡಿ ಬಂದ ಮಾಡಿದ್ದಾಯಿತು. +ಇನ್ನು ಬಾಗಿಲು ತೆಗೆಯುವುದಿಲ್ಲ. +ರಾಜರ ಆಜ್ಞೆಯಾಗಿದೆ’’ ಅಂದನು. +“ನನಗೆ ಅವಶ್ಯ ಬೇಕಾಗಿದೆ. +ಕೊಡಬೇಕು” ಅಂದನು. +ಆಗ, ‘‘ಒಂದು ರೂಪಾಯಿ ಕವಳದ ಸಾಮಾನು ಕೊಡಿ’’ ಅಂದನು. +ಆಗ, ‘‘ಒಂದು ರೂಪಾಯಿ ಕವಳದ ಸಾಮಾನು ಕಿಡಕಿಯಲ್ಲಿ ಕೈ ಹೊರಗೆ ಹಾಕಿ ಕೊಡು’’ ಅಂದನು. +ಕಿಡಕಿಯಲ್ಲಿ ಕೈಹಾಕಿ ಶೆಟ್ಟಿ ಕೊಡುತ್ತಲೇ ಅಂಗಡಿ ಶೆಟ್ಟಿಯ ಕೈಹಿಡಿದುಬಿಟ್ಟನು. +ಕೈಹಿಡಿದು ಕೈಯ ಸಂದನ್ನೆ ಕಡಿದು ಬಿಟ್ಟನು. +ಆಗ, ಗೌಜಿ ಮಾಡಬೇಕೆಂದರೆ, ‘ಪೇಟೆಯಲ್ಲಿ ಯಾರೂ ಮಾತಾಡಲಿಕ್ಕಿಲ್ಲ; ತಿರುಗಾಡಲಿಕ್ಕಿಲ್ಲ’ ಎಂದು ರತ್ನಾವತಿಯ ಅಜ್ಞೆಯಾಗಿದೆ. +ಬಹಾದ್ದೂರ್‌ ಸಿಂಗನು ಆ ಕೈಯನ್ನು ತಕ್ಕೊಂಡನು ರಾತ್ರಿಯಾಯಿತು. +ಆಗ, ರತ್ನಾವತಿ ಕಳ್ಳನನ್ನು ಹಿಡಿಯಲಿಕ್ಕೆ ಹೊರಬಿದ್ದಳು. +ಪೇಟೆಯಲ್ಲಿ ತಿರುಗಲಿಕ್ಕೆ ಸುರು ಮಾಡಿದಳು. +ತಿರುಗಿ, ತಿರುಗಿ, ತಿರುಗಿ ಸೋತಳು. +ಒಂದು ಗಳಿಗೆ ಎಲ್ಲಿಯೂ ಕೂಡ್ರಲಿಲ್ಲ. +ಒಂದು ಗಂಟೆಯ ಸಮಯದಲ್ಲಿ ಕಳ್ಳನು ಅವನು ಅವನಾಗಿಯೇ ಕಾಣಿಸಿಕೊಂಡನು. +ಏನೇನೋ ಪ್ರಯತ್ನ ಮಾಡಿ ಅವನ ಬೆನ್ನು ಹತ್ತಿ, ಅವನನ್ನು ಹಿಡಿದಳು. +“ತನ್ನ ಇಚ್ಛೆಯ ಪ್ರಕಾರ ಇರುವ ಗಂಡನೆ ಸಿಕ್ಕನು, ಇಂಥ ರಾತ್ರಿಯ ಸಮಯಕ್ಕೆ ಇವನನ್ನು ಬಿಡಲಿಕ್ಕಲ್ಲ” ಅಂತ ಕೈರಟ್ಟೆ ಹಿಡಿದು ಅಂತು ಕರೆದುಕೊಂಡು ಹೋದಳು. +ತನ್ನ ಅರಮನೆಯಲ್ಲಿ ಏಳನೆಯ ಮೆತ್ತಿನ ಮೇಲೆ ಕರೆದುಕೊಂಡು ಹೋದಳು. +ಎರಡೂ ಜನರು ಸುಮಾರು ಹೊತ್ತು ಮಾತುಕತೆಯಾಡುತ್ತಾ ಕೂತರು. +ರಾಜನ ಮಗಳು ತಿರುಗಿ. . . ತಿರುಗಿ. . . ತಿರುಗಿ. . . ಸೋತುಹೋಗಿದ್ದಳು. +ಯಾವಾಗಲೂ ರಾಜನ ಮಗಳು ಹೀಗೆ ತಿರುಗಿದವಳಲ್ಲ. +ಅವಳಿಗೆ ನಿದ್ರೆ ಬಂದು ಹೋಯಿತು. +ಇವನು ಕುಳಿತಲ್ಲಿಂದಲೇ ಹಗುರವಾಗಿ ಹಿಡಿದಿದ್ದ ತನ್ನ ಕೈಯನ್ನು ಜಾರಿಸಿಕೊಂಡನು. +ಕಡಿದುಕೊಂಡು ಹೋಗಿದ್ದ ಕೈಯಿತ್ತಲ್ಲಾ? +ಅದನ್ನು ಹುಡುಗಿಯ ಕೈಯಲ್ಲಿ ಕೊಟ್ಟನು. +ಅವನು ಹಗೂರವಾಗಿ ಎದ್ದು ಓಡಿ ಪರಾರಿಯಾದನು. +ಹುಡುಗಿ ಎಚ್ಚರವಾಗಿ ಎದ್ದು ನೋಡಿದಳು. +‘ಅಯ್ಯೋ, ನಾನು ಎಂಥ ಪಾಪಿಷ್ಠಳಾಗಿ ಹುಟ್ಟಿದೆನಪ್ಪಾ’ ಅಂತ ಹೇಳಿ ಬಹಳ ದುಃಖ ಮಾಡಿದಳು. +‘ನಾನು ಹಿಡಿದಿದ್ದ ಕೈ ನನ್ನ ಕೈಯಲ್ಲಿ ಇರಬೇಕಾದರೆ ತನ್ನ ಕೈಯನ್ನೇ ತಾನು ಕಡಿದುಕೊಂಡು ಕಳ್ಳ ಓಡಿಹೋದನಲ್ಲಾ’ ಅಂತ ಹೇಳಿ ದುಃಖ ಮಾಡಿದಳು. +ಬೆಳಗಾಯಿತು. ಬೆಳಗಾಗುತ್ತಲೇ ಬಂದು ತನ್ನ ತಂದೆಯ ಹತ್ತಿರ ಹೇಳಿದಳು, ‘‘ಅಯ್ಯೋ ಅಪ್ಪಾ. . . ನಾನು ಕಳ್ಳನನ್ನು ಹಿಡಿದುಕೊಂಡು ತಂದಿದ್ದೆ. +ಅವನ ಕೈಹಿಡಿದು ಕೂತ ಸಮಯದಲ್ಲಿ ಸ್ವಲ್ಪ ನಿದ್ರೆ ಬಂತು. +ನನಗೆ ನಿದ್ರೆ ಬಂದ ಸಮಯದಲ್ಲಿ ತನ್ನ ಕೈಯನ್ನೇ ತಾನು ಕಡಿದುಕೊಂಡು ಕಳ್ಳನು ಓಡಿಹೋದನಲ್ಲಾ. +”ರಾಜನು ಸಿಪಾಯಿಗಳ ಹತ್ತರ, “ಇವತ್ತು ಯಾವನು ಪೇಟೆಯಲ್ಲಿ ತನ್ನ ಕೈಯೇ ಇಲ್ಲವೆಂದು ಹೇಳಿ ಅಳುತ್ತಾನೋ ಅವನೇ ಕಳ್ಳ ಅಂತ ತರಬೇಕು” ಎಂದು ಆಜ್ಞೆ ಕೊಟ್ಟನು. +ಪೇಟೆಯಲ್ಲಿ ಅಂಗಡಿ ಶೆಟ್ಟಿ, “ತನ್ನ ಕೈ ಕಡಿದುಹೋಗಿದೆ” ಅಂತ ಅಳುತ್ತಿದ್ದನು. +“ಮೂರು ಕಪ್ಪಿಗೇ ಒಬ್ಬ ಎಲೆ, ಅಡಕೆ, ವೀಳ್ಯದ ಸಾಮಾನಿಗೆಂದು ಬಂದಿದ್ದ. +‘ಒಂದು ರೂಪಾಯಿ ವೀಳ್ಯ ಕೊಡಬೇಕು’ ಅಂದನು. +‘ಈಗ ಕೊಡಲಿಕ್ಕೆ ಬರುವುದಿಲ್ಲ. +ರಾಜರ ಅಜ್ಞೆಯಾಗಿದೆ’ ಅಂದಾಗ, ‘ಬಹಳ ಅರ್ಜಂಟಿದೆ. +ಈ ಕಿಡಕಿಯಲ್ಲಿ ಕೊಡಿರಿ ಮಹಾರಾಯರೇ’ ಅಂತ ಹೇಳಿದನು. +ನಾನು ಕಿಡಕಿಯಲ್ಲಿ ಕೈ ಹೊರಗೆ ಹಾಕಿ ವೀಳ್ಯಕೊಟ್ಟೆ, ಆಗ ಕೈಹಿಡಿದು ಕೈ ಕಡಿದುಕೊಂಡು ಹೋಗಿಬಿಟ್ಟ” ಅಂತ ಅಂದನು. +ಆದರೂ ಪೋಲೀಸರು, “ಸುಳ್ಳು ಹೇಳುತ್ತಾನೆ” ಅಂತ ಅವನನ್ನು ಹಿಡಿದುಕೊಂಡು ರಾಜನ ಮನೆಗೆ ತೆಗೆದುಕೊಂಡು ಹೋದರು. +ರಾಜನು ಎಲ್ಲಾ ಸಂಗತಿ ವಿಚಾರ ಮಾಡುವ ತನಕ ಶೆಟ್ಟಿಗೆ ಇಷ್ಟು ಗುದ್ದು ಹೊಡೆದದ್ದೇ ಲಾಭ. +“ನಾನು ಕಳ್ಳನಲ್ಲ” ಅಂತ ಹೇಳಿ, “ಹೀಗೆ ಹೀಗಾಯಿತು. . . ” ಅಂತ ಹೇಳಿ, ಶೆಟ್ಟಿಯನ್ನು ಬಿಟ್ಟರು. +‘ಇನ್ನು ಇವನನ್ನು ಯಾವ ಪ್ಲಾನಿನಿಂದ ಹಿಡಿಯಬೇಕು? +’ ಅಂತ ಪ್ಲೇನ್ ಮಾಡುತ್ತಾ ಇದ್ದರು. +ಅವನಾಗಿಯೇ ಬಂದನು. +“ನಾನು ರತ್ನಾವತಿಯ ಸವಾಲಿಗೆ ಜವಾಬು ಕೊಡಲಿಕ್ಕೆ ಬಂದವನು. +ಒಂಬತ್ತು ಸವಾಲುಗಳಿಗೆ ಜವಾಬು ಕೊಟ್ಟಿದ್ದೆ. +ಮೂರು ಸವಾಲುಗಳ ಉತ್ತರಗಳು ಬಾಕಿಯಾಗಿದ್ದವು. +ಅದಕ್ಕಾಗಿಯೇ ಓಡಿಹೋದೆ. +ಅದಕ್ಕೆ ತಕ್ಕ ಉಪಾಯ ಹೂಡಿದೆ” ಅಂದನು. +ಆಗ ರತ್ನಾವತಿ ತನ್ನನ್ನು “ಮದುವೆಯಾಗು” ಅಂದಳು. +ಮದುವೆಯಾಗಿ, ಏನೇನನ್ನೆಲ್ಲಾ ಕಳವು ಮಾಡಿಕೊಂಡು ಹೋಗಿದ್ದನೋ ಅದನ್ನೆಲ್ಲಾ ಅವರವರ ಮನೆಗೆ ತಂದು ಒಪ್ಪಿಸಿದನು. +ಆ ಮುದಕಿಯನ್ನೂ, ರತ್ನಾವತಿಯನ್ನೂ ತನ್ನ ಸಂಗಡವೇ ಕರೆದುಕೊಂಡು ತನ್ನ ತಂದೆಯಾದ ಹೈದರ ಸಿಂಗ್ ರಾಜನ ಆಸ್ಥಾನಕ್ಕೆ ಹೋದನು. +ವಂದೂರಿನ ರಾಜನಿಗೊಬ್ಬ ಮಗಳಿದ್ದಳು. +ಒಬ್ಬ ಜೋಯಿಸನು, ‘ಇವಳು ಹದಿನೇಳನೆಯ ವಯಸ್ಸಿನಲ್ಲಿ ಹದಿನೇಳನೆಯ ದಿನ ನಡೆಯುವಾಗ ರಾತ್ರಿಯಲ್ಲಿ ತನ್ನನ್ನು ಲಗ್ನವಾದವನನ್ನು ಬಿಟ್ಟು ಬೇರೆಯವನನ್ನು ಕೂಡಿಕೊಂಡು ಹೋಗುವಳು’ ಎಂದು ಭವಿಷ್ಯ ಹೇಳಿದ್ದನು. +ರಾಜನ ಮಗಳು ದೊಡ್ಡವಳಾದರೂ ಅವಳನ್ನು ಮದುವೆಯಾಗಲು ರಾಜಕುಮಾರರು ಯಾರೂ ಒಪ್ಪಲಿಲ್ಲ. +ಅರಸನು ವರನನ್ನು ಹುಡುಕಿ, ಹುಡುಕಿ ಬೇಸರ ಬಂದು, “ಬೇಡುವ ಭಟ್ಟನು ಬಂದು ಕೇಳಿದರೂ ಮಗಳನ್ನು ಮದುವೆ ಮಾಡಿ ಕೊಡುತ್ತೇನೆ” ಎಂದು ಡಂಗುರ ಸಾರಿಸಿದನು. +ಒಬ್ಬ ಬಡ ಬ್ರಾಹ್ಮಣನು ಡಂಗುರವನ್ನು ಕೇಳಿ, ‘‘ನನ್ನಂಥ ಬಡವನಿಗೆ ಹಣೆಗೆ ಗಂಧ ಹಚ್ಚಿಕೊಂಡಿರುವ ಯೋಗ ಹೇಗೆ ತಪ್ಪಬಹುದು?ಎಂಬ ಚಿಂತೆಯಾಗಿತ್ತು. +ಈಗ, ‘ಅರಸನ ಮಗಳನ್ನು ನನಗೆ ಮದುವೆ ಮಾಡಿಕೊಡು’ ಎಂದು ಕೇಳಿಬಿಡುತ್ತೇನೆ. +‘ಮುಂದಿನದು ಮುಂದೆ. . . ’’ ಎಂದು ರಾಜನ ಮನೆಗೆ ಹೋಗಿ ಹಾಗೆಯೇ ಕೇಳಿದನು. +ರಾಜನು, “ನನ್ನ ಮಗಳ ಭವಿಷ್ಯದ ವರ್ತಮಾನ ಗೊತ್ತಿದ್ದೂ ಸಹ ಅವಳನ್ನು ಮದುವೆಯಾಗಲಿಕ್ಕೆ ಸಿದ್ಧನಾಗಿದ್ದೀಯಾ?” ಎಂದು ಕೇಳಿದನು. +ಭಟ್ಟನು, “ಹೌದು. +ಆದರೆ, ನನ್ನದೊಂದು ಕರಾರು. +ಮದುವೆಯಾದ ಮೇಲೆ ನಾನು ಅವಳ ಸಂಗಡ ಅಡವಿಯಲ್ಲಿಯೇ ಉಳಿಯುವವನು. +ಅದಕ್ಕಾಗಿ ನನಗೆ ಅಡವಿಯಲ್ಲಿ ಮನೆಯನ್ನು ಕಟ್ಟಿಸಿಕೊಡಬೇಕು ಅಮೇಲೆ ಮದುವೆ. +ಏರ್ಪಾಡು ಮಾಡು” ಎಂದನು. +ರಾಜನು ಅಡವಿಯಲ್ಲಿ ಮನೆ ಕಟ್ಟಿಸಿ, ಲಗ್ನದ ತಯಾರಿ ಮಾಡಿದನು. +ರಾಜನ ಮಗಳಿಗೆ ಗಂಡನು ಸಿಕ್ಕಿದರೆ ಸಾಕಾಗಿತ್ತು. +ಬಡ ಭಟ್ಟನನ್ನು ಮದುವೆಯಾಗಲಿಕ್ಕೆ ಒಪ್ಪಿದಳು. +ಮದುವೆ ವಿಜೃಂಭಣೆಯಿಂದ ನಡೆಯಿತು. +ನಾಲ್ಕು ದಿನಗಳ ಅನಂತರ ರಾಜನು ದನ-ಕರ, ದವಸ-ಧಾನ್ಯ ಎಲ್ಲವನ್ನೂ ಅಡವಿಯ ಮನೆಗೆ ಹೊರಿಸಿದನು. +ಅಲ್ಲಿ ಕೆಲಸ ಮಾಡಲಿಕ್ಕೆ ರಾಜನು ಕಳಿಸಿದ ಆಳುಗಳನ್ನೆಲ್ಲ ಭಟ್ಟನು ಹಿಂದೆಯೇ ಕಳಿಸಿದನು. +ರಾಜಕುಮಾರಿ ಮನೆಕೆಲಸಗಳನ್ನು ತಾನೇ ಮಾಡಬೇಕಾಯಿತು. +ಭಟ್ಟನು ಹೆಂಡತಿಯ ಸಂಗಡ ಮಲಗಿದ್ದರೂ ಅವಳ ಮೈಯನ್ನು ಮುಟ್ಟಿರಲಿಲ್ಲ. +ಅಡವಿಯ ಮನೆಯಲ್ಲಿ ರಾತ್ರಿ ಮಲಗಿದಾಗ, ರಾಜಕುಮಾರಿ, “ಇದೇನು? +ನೀನು ಮದುವೆಯಾಗಿ ಐದು ದಿನವಾದರೂ ನನ್ನ ಮೈಮುಟ್ಟಿಲಿಕ್ಕೆ ಬರುವದಿಲ್ಲ. +ನನ್ನನ್ನು ಯಾಕೆ ಮದುವೆಯಾದೆ? +ನೀನೇನು ಗಂಡಸೋ, ನಪುಂಸಕನೋ?” ಎಂದು ಕೇಳಿದಳು. +ಭಟ್ಟನು, “ನಾನು ಗಂಡಸೇನೋ ಹೌದು. +ಆದರೆ, ‘ನನಗೆ ಮದುವೆಯಾಗಿ ಹದಿನೇಳು ದಿವಸಕ್ಕೆ ಸಂಧಿಕಾಲ. +ನನ್ನ ಪ್ರಾಣಕ್ಕೆ ಕಂಟಕ’ ಎಂದು ಜೋಯಿಸರು ಹೇಳಿದ್ದಾರೆ. +ಅಲ್ಲಿಯವರೆಗೆ ಬ್ರಹ್ಮಚರ್ಯದಿಂದಲೇ ಇರಬೇಕು. +ನೀನೂ ಸಹ ನಾನು ಹೇಳಿದ ಹಾಗೆ ನಡೆಯಬೇಕು. +ಅಂದರೆ ಮಾತ್ರ ನನ್ನ ಪ್ರಾಣ ಉಳಿಯುತ್ತದೆ’’ ಎಂದು ಹೇಳಿ, “ದಿನಾಲೂ ಮೂರು ಸಂಜೆ ಹೊತ್ತಿಗೆ ನೀನು ವೀರಗಾಸೆ ಹಾಕಿ, ಹಣೆಗೆ ಪಟ್ಟೆ ಕುಂಕುಮ ಬಳಿದುಕೊಂಡು, ಎರಡು ಕೈಗಳಲ್ಲಿ ಎರಡು ಸೂಡಿಗಳನ್ನು ಹಿಡಿದುಕೊಂಡು, ಕೂಗುತ್ತ ಮನೆಯ ಸುತ್ತಲೂ ಮೂರು ಸಲ ತಿರುಗಬೇಕು. +ಇಲ್ಲವಾದರೆ ನಿನಗೆ ಬೇಗನೆ ವೈಧವ್ಯ ಪ್ರಾಪ್ತಿಯಾಗುತ್ತದೆ” ಎಂದು ಹೇಳಿದನು. +ಮರುದಿನ ಭಟ್ಟನು, “ನಾನು ಪೇಟೆಗೆ ಹೋಗುತ್ತೇನೆ ರಾತ್ರಿ ಬರುವದಿಲ್ಲ” ಎಂದು ಹೇಳಿ ಹೊರಟನು. +ಮೂರು ಸಂಜೆ ಹೊತ್ತಿಗೆ ದಾರಿಯಲ್ಲಿ ಒಬ್ಬ ಗಂಡಸು ಭಟ್ಟನಿಗೆ ಎದುರಾದನು. +ಭಟ್ಟನು, ‘‘ಎಲ್ಲಿಗೆ ಹೊರಟಿರಿ?’’ ಎಂದು ಕೇಳಿದನು. +“ರಾಜನ ಮನೆಗೆ ಹೋಗಬೇಕು. +ಎಲ್ಲಿಯೂ ಮನೆ ಕಾಣಿಸುವದಿಲ್ಲ. +ಎಲ್ಲಿ ಹೋಗಲಿ?” ಎಂದು ಕೇಳಿದನು. +ಭಟ್ಟನು, “ಇಲ್ಲಿಯೇ ಸಮೀಪ ಒಂದು ಮನೆಯಿದೆ ಅಲ್ಲಿ ಒಬ್ಬ ಹೆಂಗಸಿದ್ದಾಳೆ ಅವಳ ಮನೆಗೆ ಹೋಗಿ ಊಟ ಮಾಡಿ, ಸ್ವಸ್ಥ ಮಲಗಿದ್ದು ಬೆಳಿಗ್ಗೆ ಹೋಗು” ಎಂದನು. +ಅವನು ಭಟ್ಟನ ಮನೆಗೆ ಹೋದನು. +ರಾಜನ ಮಗಳು ಆ ಗಂಡಸನ್ನು ಒಳ್ಳೇ ಆನಂದದಿಂದ ಸತ್ಕರಿಸಿದಳು. +ಊಟವಾದ ಮೇಲೆ ಅವನಿಗೆ ಹಾಸಿಗೆ ಹಾಸಿಕೊಟ್ಟು. +‘‘ನೀವು ಮಲಗಿಕೊಳ್ಳಿ, ನನ್ನ ಗಂಡನು ಇಂದು ಬರುವದಿಲ್ಲವೆಂದು ಹೇಳಿ ಹೋಗಿದ್ದಾನೆ. +ನಾನು ಬೇಗ ಕೆಲಸ ತೀರಿಸಿ ಬರುತ್ತೇನೆ” ಎಂದು ಹೇಳಿ ಬಚ್ಚಲಿಗೆ ಹೋಗಿ ಹಣೆಗೆ ಪಟ್ಟೆ ಕುಂಕುಮವನ್ನು, ಕೆನ್ನೆಗೆ ಅರಿಸಿನದ ಪುಡಿಯನ್ನು ಸವರಿಕೊಂಡು, ಕೂದಲು ಬಿಚ್ಚಿ ಹರಡಿಕೊಂಡು, ಬೆಂಕಿಪೆಟ್ಟಿಗೆ ಕೆರೆದು ಎರಡು ಕೈಗಳಲ್ಲಿ ಎರಡು ಸೂಡಿಗಳನ್ನು ಹೊತ್ತಿಸಿಕೊಂಡು ‘ಅವ್ ಅವ್. . . ’ ಎಂದು ಕೂಗುತ್ತ ಮನೆಯ ಸುತ್ತಲು ತಿರುಗಹತ್ತಿದಳು. +ಮಲಗಿದ್ದ ಗಂಡಸು ಇವಳ ಆರ್ಭಾಟವನ್ನು ಕೇಳಿ ಎಚ್ಚತ್ತು ಎದ್ದು ನೋಡಿದನು. +“ಇವಳೇನು ಚೌಡಿಯೋ, ರಾಕ್ಷಸಿಯೋ?’’ ಎಂದು ಕಂಗಾಲಾದನು. +ಅವಳು ಎರಡನೆಯ ಸುತ್ತು ತಿರುಗುವಾಗ ಅವಳು ಬಾಗಿಲಿನ ಆಚೆ ಗಳಿದು ಹೋದ ಮೇಲೆ, ಬಾಗಿಲಿನ ಹೊರಬಿದ್ದು ಓಡಿಹೋದನು. +ಅವಳು ವೇಷವನ್ನು ತೊಳೆದು ಹಾಕಿಕೊಂಡು ಮನೆಯೊಳಗೆ ಬಂದು ನೋಡಿದರೆ, ಹಾಸಿಗೆ ಬರಿದು ಆ ಗಂಡಸು ಎಲ್ಲಿ ಹೋದನೆಂದು ಆಚೀಚೆ ಹುಡುಕಿದಳು. +“ಗಂಡನ ಮಾತನ್ನು ಕೇಳಿ ಕೈಗೆ ಸಿಕ್ಕಿದ ಅದೃಷ್ಟವನ್ನು ಕಳೆದುಕೊಂಡೆ” ಎಂದು ಪೇಚಾಡಿದಳು. +ರಾತ್ರಿ ಹೆದರಿ ಕಂಗಾಲಾಗಿ ಓಡಿಹೋದ ಗಂಡಸು ಅಡವಿ ಮನೆಯಲ್ಲಿ ದೆವ್ವವು ರಾತ್ರಿಯಲ್ಲಿ ಎದ್ದು ಕುಣಿಯುತ್ತದೆಂದು ಎಲ್ಲ ಕಡೆ ಸುದ್ದಿ ಬೀರಿದನು. +ಅದರಿಂದ ಹಗಲಿನಲ್ಲಿಯೂ ಜನರು ಆ ಕಡೆ ಸುಳಿಯಲಿಕ್ಕೆ ಹೆದರ ಹತ್ತಿದರು. +ಅವಳನ್ನು ಮದುವೆಯಾದ ಹದಿನೇಳನೆಯ ದಿವಸದಲ್ಲಿ ಭಟ್ಟನು, “ಇಂದು ನಾನು ಪೇಟೆಗೆ ಹೋಗುತ್ತೇನೆ ರಾತ್ರಿ ಮನೆಗೆ ಬರುವದಿಲ್ಲ. +ಮನೆಯ ಕಡೆ ಹುಶಾರಿ” ಎಂದು ಹೇಳಿ ಅಟ್ಟದ ಮೇಲೆ ಹೋಗಿ ಕೋಣೆಯಲ್ಲಿ ಅಡಗಿಕೊಂಡು ಕುಳಿತನು. +ಬೇರೆ ರಾಜ್ಯದಿಂದ ಹೊರಟ ಒಬ್ಬ ಮುದುಕನೂ, ಅವನ ಮಗನೂ ದಾರಿ ತಪ್ಪಿ ಆ ಮನೆಯ ಹಾದಿಯಲ್ಲಿ ಬಂದರು. +ಆಗ ಮೂರು ಸಂಜೆ ಹೊತ್ತಾಗಿತ್ತು. +ರಾಜಕುಮಾರಿಗೆ ಅವರನ್ನು ನೋಡಿ ಬಹಳ ಸಂತೋಷವಾಯಿತು. +“ನಮ್ಮ ಮನೆಗೆ ಬನ್ನಿ” ಎಂದು ಕರೆದಳು. +ಅವರಿಗೂ ಎಲ್ಲಿಯಾದರೂ ಆಶ್ರಯ ಸಿಕ್ಕರೆ ಸಾಕಾಗಿತ್ತು. +ಅವರು ಮನೆಯೊಳಗೆ ಬಂದರು. +ಅವರು ಬಂದ ಮೇಲೆ ಅವಳು ಅವರಿಗಾಗಿಯೇ ಕಜ್ಜಾಯದ ಊಟವನ್ನು ತಯಾರು ಮಾಡಿದಳು. +ಬಡಿಸುವಾಗ ಮುದುಕನ ಮಗನಿಗೆ ಬಹಳ ಆದರೋಪಚಾರ ಮಾಡಿ ವಿಶೇಷ ಸಮ್ಮಾನ ಮಾಡಿದಳು. +ಈ ಉಪಚಾರದ ಮಾತುಗಳನ್ನು ಅವಳ ಗಂಡನು ಮೆತ್ತಿನ ಮೇಲಿನಿಂದಲೇ ಆಲಿಸುತ್ತಿದ್ದನು. +‘‘ಈ ಚಾಳಿಯನ್ನು ಇಂದೇ ಉಚ್ಘಾಟನೆ ಮಾಡುತ್ತೇನೆ” ಎಂದುಕೊಂಡನು. +ಅವಳು ಮುದುಕನಿಗೂ, ಅವನ ಮಗನಿಗೂ ಜಗಲಿಯ ಮೇಲೆ ಹಾಸಿಗೆ ಬಿಡಿಸಿಕೊಟ್ಟು ಊಟಕ್ಕೆ ಹೋದಳು. +ಅವಳು ಮೊದಲಿನ ಹಾಗೆ ಅವತಾರ ತಾಳಿಕೊಂಡು ಕೂಗುತ್ತ ತಿರುಗಿದರೆ ಬಂದವರು ಓಡಿಹೋಗಬಹುದೆಂದು ಹೆದರಿ ಆ ಉಸಾಬರಿಗೆ ಹೋಗಲಿಲ್ಲ. +ಭಟ್ಟನು ಇದರ ಅಂದಾಜನ್ನು ಮೊದಲೇ ತಿಳಿದಿದ್ದನು. +ಅದರಿಂದ ಆ ದಿನದ ಸಂಧಿಕಾಲವನ್ನು ತಪ್ಪಿಸಲಿಕ್ಕೆ ತನ್ನದೇ ಅವತಾರ ತಾಳುವ ಸಲುವಾಗಿ ಮುಖವಾಡವನ್ನು ಸಿದ್ಧ ಮಾಡಿಸಿ, ತಂದು ಅದನ್ನು ಮೆತ್ತಿನ ಟ್ರಂಕಿನಲ್ಲಿ ಬೀಗದಲ್ಲಿಟ್ಟಿದ್ದನು. +ಹೆಂಡತಿಯು ಊಟ ಮಾಡುತ್ತಿದ್ದಾಗಲೇ ಅವರನ್ನು ಓಡಿಸಬೇಕೆಂದು, ಅವನು ಮುಖವಾಡ ತೆಗೆದುಕೊಂಡು ಅವರಿಗೆ ತಿಳಿಯದ ಹಾಗೆ ಕೆಳಗಿಳಿದನು. +ಮನೆಯ ಹೊರಗೆ ಹೋಗಿ, ಮುಖವಾಡ ಹಾಕಿಕೊಂಡು ಎರಡು ಕೈಗಳಲ್ಲಿಯೂ ಒಂದೊಂದು ಜುಂಜಿಯನ್ನು ಹೊತ್ತಿಸಿ ಹಿಡಿದುಕೊಂಡು, ‘ಅವ್. . . ’ ಎಂದು ಕೂಗುತ್ತ, ಹಾರಿ ಹಾರಿ ಕುಣಿಯುತ್ತ ಆರ್ಭಾಟ ಮಾಡುತ್ತ, ಮನೆಯ ಸುತ್ತಲೂ ಓಡಲಿಕ್ಕೆ ಸುರುಮಾಡಿದನು. +ಮುದುಕನೂ, ಅವನ ಮಗನೂ ಎಂಥ ಪ್ರಕಾರವೆಂದು ತಿಳಿಯದೆ, ‘ಇದು ಭೂತ ಚೇಷ್ಟೆಯೋ, ರಾಕ್ಷಸರ ಮಾಟದ ಮನೆಯೋ?’ ಎಂದು ಹೆದರಿ ಓಡಿಹೋದರು. +ಭಟ್ಟನ ಹೆಂಡತಿ ಹೆದರಿ ಊಟ ಬಿಟ್ಟು ಎದ್ದಳು. +ಭಟ್ಟನು ವೇಷವನ್ನು ಕಳಚಿಬಿಟ್ಟು ಬಂದು ಹೆಂಡತಿಯನ್ನು ಕರೆದನು. +ಅವಳು ಗಂಡನ ದನಿ ಕೇಳಿ, ಧೈರ್ಯ ಮಾಡಿ ಜಗಲಿಗೆ ಬಂದಳು. +ಅವನು, “ಇಂದು, ನಮಗೆ ಹಿಡಿದಿದ್ದ ಗ್ರಹಚಾರ ಕಳೆದುಹೋಯಿತು. +ನನ್ನನ್ನು ಹಿಡಿದುಕೊಂಡಿದ್ದ ಭೂತವೂ ಕೂಗಿಕೊಂಡು ಉಚ್ಘಾಟನೆಯಾಗಿ ಹೋಯಿತು. +ಇನ್ನು ಯಾವ ಹೆದರಿಕೆಯಿಲ್ಲ. +ಇಂದು ನಿನ್ನ ಮೈಮುಟ್ಟುತ್ತೇನೆ. +ನಾಳೆ ನಾವು ಊರಿಗೆ ಹೋಗೋಣ” ಎಂದು ಹೇಳಿದನು. +ಆ ರಾತ್ರಿ ಗಂಡ-ಹೆಂಡಿರು ಸಂತೋಷದಲ್ಲಿ ಕಳೆದರು. +ಮರುದಿನ ಊರಿಗೆ ಹೋಗಿ ಸಂತೋಷದಿಂದ ಸುಖವಾಗಿ ಉಳಿದರು. +ಒಂದಾನೊಂದು ಕಾಲದಲ್ಲಿ ಒಕ್ಕಲತನದಿಂದ ಜೀವಿಸುವ ಇಬ್ಬರು ಅಣ್ಣ-ತಮ್ಮಂದಿರಿದ್ದರು. +ಅವರಲ್ಲಿ ಹಿರಿಯನಾದ ಡಿಮಿಟ್ರಿಯು ಒಬ್ಬ ಶ್ರೀಮಂತನ ಒಬ್ಬಳೇ ಮಗಳನ್ನು ಮದುವೆಯಾಗಿ, ಶ್ರೀಮಂತಿಕೆಯ ಸುಖವನ್ನು ಅನುಭವಿಸಹತ್ತಿದನು. +ಅವನ ತಮ್ಮನು ಮೊದಲಿನಂತೆ ಬಡತನದಲ್ಲಿ ಹೊಲದಲ್ಲಿ ದುಡಿಯುತ್ತ ಕಷ್ಟದಿಂದ ಜೀವನ ಮಾಡುತ್ತಿದ್ದನು. +ತಮ್ಮನು ಆಗಾಗ ಅಣ್ಣನ ಹತ್ತಿರ ಸಹಾಯ ಕೇಳಲು ಬರುತ್ತಿದ್ದನು. +ಒಂದು ದಿನ ತಮ್ಮ ಫಿಲಿಪ್ಪನ ಕುದುರೆಯು ಸತ್ತುಹೋಯಿತು. +ಅಡವಿಯಿಂದ ಕಟ್ಟಿಗೆ ಹೊರೆ ತರುವುದಕ್ಕೆ ಒಂದು ಕುದುರೆಯ ಅಗತ್ಯ ವಿಶೇಷವಾಗಿತ್ತು. +ಅವನು ಅಣ್ಣನ ಹತ್ತಿರ ಬಂದು ತನಗೆ ಕೆಲವು ದಿನಗಳವರೆಗೆ ಒಂದು ಕುದುರೆಯನ್ನು ಉಪಯೋಗಿಸುವುದಕ್ಕೆ ಕೊಡಬೇಕೆಂದು ಕೇಳಿಕೊಂಡನು. +ಅಣ್ಣನು, “ನಿನಗೆ ನಾನು ಎಷ್ಟೋ ಸಹಾಯ ಮಾಡಿದರೂ ಮತ್ತೆ ಮತ್ತೆ ಕೇಳಲು ಬರುವುದನ್ನು ಬಿಡುವುದಿಲ್ಲ. +ಎಷ್ಟೆಂದು ಸಹಾಯ ಮಾಡಲಿ?” ಎಂದು ಕೇಳಿದನು. +ಆದರೂ ತನ್ನದೊಂದು ಕುದುರೆಯನ್ನೇನೋ ಕೊಟ್ಟನು. +‘‘ಮತ್ತೆ ಸಹಾಯ ಮಾಡು ಎಂದು ಕೇಳುತ್ತ ಬರಬೇಡ’’ ಎಂದು ಹೇಳಿ ಕಳುಹಿಸಿದನು. +ತಮ್ಮ ಫಿಲಿಪ್ಪನು ಕುದುರೆಯನ್ನು ಮನೆಗೆ ತಂದು ಹಿಮದ ಮೇಲೆ ಎಳೆದುಕೊಂಡು ಹೋಗುವ ಚಕ್ರವಿಲ್ಲದ ಜಾರು ಬಂಡಿಗೆ ಕಟ್ಟಿದನು. +ಅದನ್ನು ಹತ್ತಿ ಅಡವಿಗೆ ತೆಗೆದುಕೊಂಡು ಹೋದನು. +ಮರ ಕಡಿದು ಕಟ್ಟಿಗೆಯ ತುಂಡು ಮಾಡಿ, ಜಾರುಬಂಡಿಯ ಮೇಲೆ ಕಟ್ಟಿಗೆಯನ್ನು ಹೇರಿದನು. +ಅದನ್ನು ಮನೆಗೆ ಹೊಡೆದುಕೊಂಡು ಮನೆಯ ಗೇಟಿನ ಬಾಗಿಲು ತೆರೆದು, ಚಾಬೂಕಿನಿಂದ ಎರಡು ಏಟು ಕೊಟ್ಟನು. +ಆದರೆ, ಗೇಟುಗಳ ತಳಭಾಗದ ಕಬ್ಬಿಣದ ಹಳಿಯನ್ನು ತೆಗೆಯುವುದಕ್ಕೆ ಆತನು ಮರೆತುಬಿಟ್ಟಿದನು. +ಇದರಿಂದ ವೇಗವಾಗಿ ಗಾಡಿಯನ್ನೆಳೆದುಕೊಂಡು ನುಗ್ಗುತ್ತಿದ್ದ ಕುದುರೆಯ ಬಾಲವು ಆ ಹಳಿಗೆ ಸಿಕ್ಕು ಕತ್ತರಿಸಿ ಹೋಯಿತು. +ಕುದುರೆಯನ್ನು ಮರಳಿ ಅಣ್ಣನ ಮನೆಗೆ ತಂದಾಗ ಅಣ್ಣನು ತನ್ನ ಕುದುರೆಯ ಬಾಲ ಕತ್ತರಿಸಿ ಹೋಗಿದ್ದುದನ್ನು ನೋಡಿದನು. +ತನ್ನ ಕುದುರೆಯ ಬಾಲವನ್ನು ವ್ಯರ್ಥವಾಗಿ ತುಂಡು ಮಾಡಿದ್ದಕ್ಕಾಗಿ ತಮ್ಮನಿಗೆ ಬಹಳವಾಗಿ ಬಯ್ದನು. +ಆ ಕುದುರೆಯನ್ನು ಆ ಸ್ಥಿತಿಯಲ್ಲಿ ತಾನು ಮರಳಿ ತೆಗೆದುಕೊಳ್ಳಲಾರೆನೆಂದು ತಿಳಿಸಿ, ಆತನು ನ್ಯಾಯಾಧೀಶನಾದ ಶಾಮಕನ ಎದುರಿಗೆ ಫೀರ್ಯಾದಿಯನ್ನು ಮಾಡಬೇಕೆಂದು ಪಟ್ಟಣಕ್ಕೆ ಹೊರಟನು. +ತನ್ನ ಅಣ್ಣನು ತನ್ನ ವಿರುದ್ಧ ಫೀರ್ಯಾದಿ ಮಾಡಲು ಹೊರಟಿದ್ದರಿಂದ ಇನ್ನು ತಾನೂ ತಾನಾಗಿಯೇ ಶಾಮಕ ನ್ಯಾಯಾಧೀಶನಲ್ಲಿಗೆ ಹೋಗದಿದ್ದರೆ, ನ್ಯಾಯಾಧೀಶನ ಸಮನ್ಸನ್ನು ತಂದ ಬೇಲೀಫನ ಭತ್ಯೆಯ ಖರ್ಚನ್ನು ತೆರಬೇಕಾಗಬಹುದೆಂದು ಹೆದರಿ ಫಿಲಿಪ್ಪನು ತಾನೂ ಪಟ್ಟಣಕ್ಕೆ ಹೊರಟನು. +ಕೆಲದಾರಿ ಕ್ರಮಿಸಲು ಆಗಲೇ ಕತ್ತಲೆಯಾಗುತ್ತ ಬಂದಿತು. +ಪಟ್ಟಣವು ಇನ್ನೂ ದೂರವಿತ್ತು. +ಅಷ್ಟರಲ್ಲಿ ಅವರು ಬೇರೆ ಬೇರೆಯಾಗಿಯೇ ಒಂದು ಹಳ್ಳಿಗೆ ಬಂದು ಮುಟ್ಟಿದರು. +ಅಲ್ಲಿಯ ಪುರೋಹಿತನ ಮನೆಯಲ್ಲಿ ಆ ರಾತ್ರಿ ತಂಗಬೇಕೆಂದು ಶ್ರೀಮಂತ ಡಿಮಿಟ್ರಿಯು ನಿಶ್ಚಯಿಸಿದನು. +ಆ ಪುರೋಹಿತನು ಆತನ ಮಿತ್ರನಾಗಿದ್ದನು. +ಬಡ ಫಿಲಿಪ್ಪನೂ ಆ ಪುರೋಹಿತನ ಮನೆಗೇ ಹೋದನು. +ಪುರೋಹಿತನ ಮನೆಯ ಅಟ್ಟದ ಏಣಿಯ ತುದಿಯ ಬಾಗಿಲಲ್ಲಿ ಹೋಗಿ ಕುಳಿತನು. +ಅಣ್ಣ ಡಿಮಿಟ್ರಿಯು ತನ್ನ ತಮ್ಮನು ತನಗೆ ಮಾಡಿದ ನಷ್ಟವನ್ನು ಕುರಿತು ಹೇಳಿ, ತಾನು ಹೊರಟ ಉದ್ದೇಶವನ್ನು ತಿಳಿಸಿದನು. +ನಂತರ ಪುರೋಹಿತನೂ, ಡಿಮಿಟ್ರಿಯೂ ಭೋಜನ ಮಾಡುವುದಕ್ಕೆ ಕುಳಿತರು. +ಸೊಗಸಾದ ಊಟವನ್ನು ಮನದಣಿ ಭೋಜನ ಮಾಡುತ್ತಿದ್ದ ಈ ಇಬ್ಬರನ್ನೂ ನೋಡುತ್ತಿದ್ದ ಫಿಲಿಪ್ಪನ ಹಸಿದ ಹೊಟ್ಟೆಯಲ್ಲಿ ಬಹಳ ಕಸಿವಿಸಿಯಾಯಿತು. +ಭೋಜನವನ್ನು ನೋಡುತ್ತ ಇಳಿಯಬೇಕೆಂದು ಬಗ್ಗಿದಾಗ, ಏಣಿಯಲ್ಲಿನ ಮೆಟ್ಟಲ ಮೇಲೆ ಕಾಲನ್ನಿಡುವಾಗ ಕಾಲು ಜಾರಿ ಏಣಿಯ ಕೆಳಗೆ ಆಡುತ್ತಿದ್ದ ಶಿಶುವಿನ ಮೇಲೆ ದೊಪ್ಪನೆ ಬಿದ್ದುಬಿಟ್ಟನು. +ಬಿದ್ದ ಹೊಡೆತಕ್ಕೆ ಪುರೋಹಿತನ ಚಿಕ್ಕ ಮಗು ಸತ್ತುಹೋಯಿತು. +ಪುರೋಹಿತನು ಎಂಜಲ ಕೈಯಲ್ಲಿಯೇ ಫಿಲಿಪ್ಪನಿಗೆ ಬಡಿದುದಲ್ಲದೆ ನ್ಯಾಯಾಧೀಶನಲ್ಲಿ ಫಿರ್ಯಾದಿ ಕೊಟ್ಟು, ತನ್ನ ಮಗುವನ್ನು ಕೊಂದದ್ದಕ್ಕೆ ಫಾಶೀ ಶಿಕ್ಷೆಯನ್ನು ಕೊಡಿಸುವೆನೆಂದು ಹೆದರಿಸಿ, ಫಿಲಿಪ್ಪನನ್ನು ಮನೆಯಿಂದ ಓಡಿಸಿದನು ಮತ್ತು ಪೋಷಾಕು ಹಾಕಿಕೊಂಡು ಫಿರ್ಯಾದಿ ಕೊಡಲು ಪಟ್ಟಣಕ್ಕೆ ಹೊರಟನು. +ಬಡ ಫಿಲಿಪ್ಪನು ದುಃಖದಿಂದ ಭಾರವಾದ ಹೆಜ್ಜೆಯಿಡುತ್ತ ಪಟ್ಟಣಕ್ಕೆ ಹೊರಟನು. +ಪಟ್ಟಣದ ಹತ್ತಿರ ಒಂದು ಅಗಳವಿತ್ತು. +ಅದರ ಮೇಲೆ ಎತ್ತರವಾದ ಸೇತುವೆಯನ್ನು ರಚಿಸಿದ್ದರು. +ಸೇತುವೆಯ ಕೆಳಗೆ ಅಗಳದ ದಾರಿಯಲ್ಲಿ ಒಬ್ಬನು ತನ್ನ ರೋಗಿ ತಂದೆಯನ್ನು ಕರೆದುಕೊಂಡು ಸಾರ್ವಜನಿಕ ಸ್ನಾನಗೃಹಕ್ಕೆ ಕೊಂಡೊಯ್ಯುವದಕ್ಕೆ ಹೋಗುತ್ತಿದ್ದನು. +ಸೇತುವೆಯ ಮೇಲೆ ನಡೆದು ಬರುತ್ತಿದ್ದ ಫಿಲಿಪ್ಪನು ತನ್ನ ಅಣ್ಣ ಮತ್ತು ಪುರೋಹಿತರ ಫಿರ್ಯಾದಿಯಿಂದ ತನಗೆ ಉಳಿಗಾಲವಿಲ್ಲವೆಂದು ಚಿಂತಿಸುತ್ತ ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಸೇತುವೆಯಿಂದ ಅಗಳದಲ್ಲಿ ಧುಮುಕಿದನು. +ಆದರೆ, ರೋಗಿಯಾದ ಮುದುಕನ ಮೈಮೇಲೆ ಅವನು ಬಿದ್ದು, ಮುದುಕನು ಸತ್ತುಹೋದನು. +ಮುದುಕನ ಮಗನು ಕುಪಿತನಾಗಿ ಫಿಲಿಪ್ಪನ ರಟ್ಟೆ ಹಿಡಿದು, ಎಳೆದುಕೊಂಡು ನ್ಯಾಯಾಧೀಶ ಶಾಮಕನ ಮುಂದೆ ಹೋದನು. +ಈ ಸಂಕಟದಿಂದ ಹೇಗೆ ಪಾರಾಗಬೇಕೆಂದು ಚಿಂತಿಸುತ್ತ ಫಿಲಿಪ್ಪನು ದಾರಿಯಲ್ಲಿ ಬಿದ್ದಿದ್ದ ಒಂದು ಕಲ್ಲು ಗುಂಡನ್ನು ಎತ್ತಿ, ತನ್ನ ಕರವಸ್ತ್ರದಲ್ಲಿ ಅದನ್ನು ಸುತ್ತಿ, ತನ್ನ ಟೊಪ್ಪಿಗೆಯಲ್ಲಿ ಅಡಗಿಸಿಕೊಂಡನು. +ಶ್ರೀಮಂತ ಡಿಮಿಟ್ರಿಯು ಫಿರ್ಯಾದಿಯನ್ನು ನ್ಯಾಯಾಧೀಶ ಶಾಮಕನ ಮುಂದೆ ಸಾದರಪಡಿಸಿ, ತನ್ನ ಕುದುರೆಯ ಬಾಲವನ್ನು ತುಂಡುಮಾಡಿದ್ದಕ್ಕೆ ಪರಿಹಾರವನ್ನು ಕೊಡಿಸಬೇಕೆಂದು ಕೇಳಿಕೊಂಡನು. +ಫಿರ್ಯಾದಿಯ ಹೇಳಿಕೆಯನ್ನು ಕೊನೆವರೆಗೆ ಕೇಳಿಕೊಂಡು ಶಾಮಕನು ಬಡ ಫಿಲಿಪ್ಪನಿಗೆ, “ನಿನ್ನ ಅಂಬೋಣವನ್ನು ಹೇಳು” ಎಂದು ತಿಳಿಸಿದನು. +ಆದರೆ, ಬಡ ಫಿಲಿಪ್ಪನಿಗೆ ಏನು ಉತ್ತರ ಕೊಡಬೇಕೆಂದು ತಿಳಿಯಲಿಲ್ಲ. +ತನ್ನ ಟೊಪ್ಪಿಗೆಯನ್ನು ತೆಗೆದು ಅದರಲ್ಲಿನ ಕಲ್ಲು ಗುಂಡನ್ನು ಕಟ್ಟಿದ ಕರವಸ್ತ್ರವನ್ನು ಎತ್ತಿ ಹಿಡಿದು ಬಗ್ಗಿ ನ್ಯಾಯಾಧೀಶನಿಗೆ ನಮಸ್ಕಾರ ಮಾಡಿದನು. +ನ್ಯಾಯಾಧೀಶನು ತನ್ನ ಪರವಾಗಿ ನಿರ್ಣಯ ಕೊಟ್ಟರೆ ಆರೋಪಿಯು ತನಗೆ ಪುರಸ್ಕಾರ ಕೊಡುವೆನೆಂದು ಸೂಚಿಸಿದನೆಂದು ತಿಳಿದನು. +ಆತನು ಶ್ರೀಮಂತ ಡಿಮಿಟ್ರಿಗೆ ಹೇಳಿದನು, “ಅವನು ನಿನ್ನ ಕುದುರೆಯ ಬಾಲವನ್ನು ಕತ್ತರಿಸಿದ್ದರಿಂದ ಕುದುರೆಗೆ ಹೊಸದಾಗಿ ಬಾಲ ಬೆಳೆಯುವ ತನಕ ನೀನು ಕುದುರೆಯನ್ನು ನಿನ್ನ ತಮ್ಮನಿಂದ ತಿರುಗಿ ತೆಗೆದುಕೊಳ್ಳಬೇಡ. +ಆದರೆ, ಕುದುರೆಗೆ ಹೊಸ ಬಾಲ ಚಿಗುರಿ ಮೊದಲಿನ ಹಾಗೆ ಬಾಲ ಬಂದರೆ ನೀನು ಅದನ್ನು ಮರಳಿ ತೆಗೆದುಕೊಳ್ಳಬೇಕು. +”ಅನಂತರ ಎರಡನೆಯ ಫಿರ್ಯಾದಿಯ ವಿಚಾರಣೆ ಆರಂಭವಾಯಿತು. +ಪುರೋಹಿತನು ತನ್ನ ಚಿಕ್ಕ ಮಗುವನ್ನು ಕೊಂದದ್ದರಿಂದ ಈತನನ್ನು ಗಲ್ಲಿಗೆ ಹಾಕಬೇಕೆಂದು ನ್ಯಾಯಾಧೀಶನಿಗೆ ವಿನಂತಿ ಮಾಡಿಕೊಂಡನು. +ಆದರೆ, ಬಡ ಫಿಲಿಪ್ಪನು ಮೊದಲಿನಂತೆಯೇ ತನ್ನ ಟೊಪ್ಪಿಗೆಯಿಂದ ಕಲ್ಲು ಗುಂಡನ್ನು ಸುತ್ತಿದ್ದ ಕರವಸ್ತ್ರವನ್ನು ತೆಗೆದು, ಆ ಗಂಟನ್ನು ನ್ಯಾಯಾಧೀಶನಿಗೆ ತೋರಿಸಿದನು. +ನ್ಯಾಯಾಧೀಶನು ಅದನ್ನು ನೋಡಿಕೊಂಡು ಎರಡನೆಯ ಫಿರ್ಯಾದಿಯಲ್ಲಿ ತನಗೆ ಅನುಕೂಲ ನಿರ್ಣಯ ಕೊಟ್ಟರೆ, ಆರೋಪಿಯು ಚಿನ್ನ ತುಂಬಿದ ಮತ್ತೊಂದು ಚೀಲವನ್ನು ಕೊಡುವೆನೆಂದು ಸೂಚಿಸಿದನೆಂದು ಗ್ರಹಿಸಿದನು. +ಪುರೋಹಿತನಿಗೆ ತನ್ನ ನಿರ್ಣಯವನ್ನು ಹೇಳಿದನು-- “ನಿನ್ನ ಮಗನನ್ನು ಆತನು ಕೊಂದದ್ದರಿಂದ ಅವನು ನಿನಗೆ ಒಬ್ಬ ಮಗನನ್ನು ತಿರುಗಿ ಕೊಡುವದಕ್ಕೆ ಬಾಧ್ಯನಾಗಿದ್ದಾನೆ. +ಆದಕ್ಕಾಗಿ ನೀನು ನಿನ್ನ ಹೆಂಡತಿಯನ್ನು ಅವನ ವಶಕ್ಕೆ ಬಿಡಬೇಕು. +ಅವಳಲ್ಲಿ ಅವನು ಒಬ್ಬ ಮಗುವನ್ನು ಪಡೆದುಕೊಳ್ಳುವಷ್ಟು ದಿನ ನಿನ್ನ ಹೆಂಡತಿಯು ಅವನಲ್ಲಿರಲಿ. +ನಂತರ ನಿನ್ನ ಹೆಂಡತಿಯನ್ನೂ, ಅವಳಲ್ಲಿ ಹುಟ್ಟಿದ ಮಗನನ್ನೂ ಅವನು ನಿನಗೆ ಮರಳಿ ಒಪ್ಪಿಸಬೇಕು. +”ಆಮೇಲೆ ಮೂರನೆಯ ಫಿರ್ಯಾದಿಯ ವಿಚಾರಣೆ ಆರಂಭವಾಯಿತು. +ಸೇತುವೆಯ ಮೇಲಿಂದ ಹಾರಿ ತನ್ನ ರೋಗಿ ತಂದೆಯನ್ನು ಕೊಂದದ್ದಕ್ಕಾಗಿ ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಪಟ್ಟಣಿಗನು ನ್ಯಾಯಾಧೀಶನಿಗೆ ಬಿನ್ನವಿಸಿದನು. +ಆಗಲೂ ಬಡ ಫಿಲಿಪ್ಪನು ತನ್ನ ಟೊಪ್ಪಿಗೆಯಿಂದ ಕಲ್ಲು ಗುಂಡನ್ನು ಕಟ್ಟಿದ್ದ ಕರವಸ್ತ್ರದ ಗಂಟನ್ನು ಎತ್ತಿ ತೋರಿಸಿದನು. +ಆರೋಪಿಗೆ ಅನುಕೂಲವಾಗಿ ಮೂರನೆಯ ಫಿರ್ಯಾದಿಯಲ್ಲಿ ತಾನು ನಿರ್ಣಯ ಕೊಟ್ಟರೆ, ತಾನು ಮೂರನೆಯ ಸಲವೂ ಚಿನ್ನದ ಚೀಲವನ್ನು ಕೊಡುವೆನೆಂದು ಆತನು ಸೂಚಿಸಿದನೆಂದು ತಿಳಿದ ನ್ಯಾಯಾಧೀಶನು- ‘‘ನೀನು ಸೇತುವೆಯ ಮೇಲೆ ಹೋಗು. +ನಿನ್ನ ತಂದೆಯನ್ನು ಕೊಂದ ಈ ಅಪರಾಧಿಯು ನಿನ್ನ ಸತ್ತ ತಂದೆ ನಿಂತಿದ್ದ ಜಾಗದಲ್ಲಿರಲಿ. +ನೀನು ಆತನ ಮೇಲೆ ಹಾರಿ ಆತನು ನಿನ್ನ ತಂದೆಯ ಮೈಮೇಲೆ ಬಿದ್ದು ಆತನನ್ನು ಕೊಂದಂತೆಯೇ ನೀನೂ ಆರೋಪಿಯ ಮೇಲೆ ಹಾರಿ ಆರೋಪಿಯನ್ನು ಕೊಂದು ಬಿಡು” ಎಂದು ಪಟ್ಟಣಿಗನಿಗೆ ಹೇಳಿದನು. +ವಿಚಾರಣೆ ಮುಗಿದ ನಂತರ ವಾದಿಗಳು ಪ್ರತಿವಾದಿಯೊಡನೆ ನ್ಯಾಯಾಲಯವನ್ನು ಬಿಟ್ಟು ಹೊರಟರು. +ಶ್ರೀಮಂತ ಡಿಮಿಟ್ರಿಯು ತಮ್ಮನ ಹತ್ತಿರ ಹೋಗಿ ತನ್ನ ಕುದುರೆಯನ್ನು ಮರಳಿ ಕೊಡಬೇಕೆಂದು ಹೇಳಿದನು. +ತಮ್ಮನು, “ನೀನು ಕುದುರೆಯ ಬಾಲವು ತುಂಡಾದದ್ದರ ಸಲುವಾಗಿ ಫಿರ್ಯಾದಿಯನ್ನು ಮಾಡಿದ್ದೀಯೆ. +ಅದರ ನಿರ್ಣಯದಂತೆ ನಡೆದುಕೊಳ್ಳಬೇಕಲ್ಲವೆ? +ಕುದುರೆ ಪುನಃ ಹೊಸದಾಗಿ ಬಾಲವನ್ನು ಬೆಳೆದುಕೊಂಡ ಕೂಡಲೆ ಅದು ನಿನಗೆ ಒಪ್ಪಿಸಲ್ಪಡುವದು”. + ಆಗ ಅಣ್ಣನು ಅವನಿಗೆ ಐದು ರೂಬಲು (ರಶಿಯನ್ ನಾಣ್ಯ)ಗಳನ್ನು, ಹದಿನೇಳು ಚೀಲ ಗೋಧಿಯನ್ನು, ಹಾಲು ಹಿಂಡುವ ಒಂದು ಆಡನ್ನು ಕೊಡವೆನೆಂದು ಹೇಳಿ, ‘ತನ್ನ ಕುದುರೆಯನ್ನು ಮರಳಿ ಕೊಡು’ ಎಂದು ಹೇಳಿದನು. +‘ಬಾಲವಿಲ್ಲದ ಕುದುರೆಯನ್ನೇ ಮರಳಿ ಒಪ್ಪಿಸುವೆ’ನೆಂದು ತಮ್ಮನು ಒಪ್ಪಿದನು. +ಫಿಲಿಪ್ಪನು ಪುರೋಹಿತನ ಹತ್ತಿರ ಹೋಗಿ, ‘ಶಾಮಕನ ನಿರ್ಣಯದಂತೆ ಪುರೋಹಿತನು ತನಗೆ ಆತನ ಹೆಂಡತಿಯನ್ನು ಒಪ್ಪಿಸಬೇಕೆಂದು ಹೇಳಿದನು. +ಅಲ್ಲದೆ, ತಾನು ಬಡವನಾಗಿದ್ದರಿಂದ ತನಗೆ ಹೆಂಡತಿಯಿಲ್ಲವೆಂದೂ, ನ್ಯಾಯಾಧೀಶನ ನಿರ್ಣಯದಂತೆ ಪುರೋಹಿತನ ಹೆಂಡತಿಯಲ್ಲಿಯೇ ಮಗನನ್ನು ಪಡೆದು, ಮರಳಿ ಹೆಂಡತಿ ಮತ್ತು ಮಗನನ್ನು ಪುರೋಹಿತನಿಗೆ ಒಪ್ಪಿಸುವೆನೆಂದೂ ಆಶ್ವಾಸನವಿತ್ತನು. +ಪುರೋಹಿತನು ಆತನ ಕಾಲಿಗೆ ಬಿದ್ದು, ‘ತಾನು ಅವನಿಗೆ ಐವತ್ತು ರೂಬಲನ್ನೂ, ಇಪ್ಪತ್ತಮೂರು ಗೋಧಿಯ ಚೀಲಗಳನ್ನೂ, ಒಂದು ಕರು ಹಾಕಿದ ಆಕಳನ್ನೂ, ಒಂದು ಗಂಡು ಮತ್ತು ಹೆಣ್ಣು. . . ಹೀಗೆ ಎರಡು ಹೇಸರಗತ್ತೆಗಳನ್ನೂ ಕೊಡುವೆ’ನೆಂದು ಬೇಡಿಕೊಂಡನು. +ಆಮೇಲೆ ಪಟ್ಟಣಿಗನ ಹತ್ತಿರ ಫಿಲಿಪ್ಪನು ಹೇಳಿದನು. +“ನಿರ್ಣಯದ ಪ್ರಕಾರ ನಾನು ಸೇತುವೆಯ ಕೆಳಗೆ ನಿಂತಿರುತ್ತೇನೆ. +ನೀನು ಸೇತುವೆಯಿಂದ ನನ್ನ ಮೈಮೇಲೆ, ನಾನು ನಿನ್ನ ತಂದೆಯ ಮೈಮೇಲೆ ಹಾರಿದಂತೆ ಹಾರು” ಎಂದು ತಿಳಿಸಿದನು. +ಆದರೆ, ಪಟ್ಟಣಿಗನು ಮನಸ್ಸಿನಲ್ಲೇ ಯೋಚಿಸಿದನು-- ‘ನಾನು ಸೇತುವೆಯಿಂದೇನೋ ಹಾರಬಹುದು. +ಆದರೆ, ಈತನ ಮೈಮೇಲೆ ಬೀಳುವುದರ ಬದಲಾಗಿ ಯಾವುದಾದರೂ ಬಂಡೆಯ ಮೇಲೆ ಬಿದ್ದು ನಾನೇ ಸತ್ತುಹೋಗುವ ಪ್ರಸಂಗ ಬಂದರೆ? +ಸತ್ತ ತಂದೆಯಂತೆ ನಾನೂ ಪ್ರಾಣ ಕಳಕೊಳ್ಳಬೇಕಾದೀತು. +ಮನೆಯಲ್ಲಿದ್ದ ಹೆಂಡತಿ-ಮಕ್ಕಳನ್ನೂ, ಸಂಪತ್ತನ್ನೂ ಬಿಟ್ಟು, ಸತ್ತ ತಂದೆಯನ್ನು ಹಿಂಬಾಲಿಸುವುದಕ್ಕೆ ನನಗೇನು ಆತುರ?’ ಹೀಗೆ ವಿಚಾರಿಸಿ, ಫಿಲಿಪ್ಪನೊಡನೆ ಆತನು-- ಇನ್ನೂರು ರೂಬಲುಗಳನ್ನೂ, ಇಪ್ಪತ್ತೊಂಭತ್ತು ಗೋಧಿ ಚೀಲಗಳನ್ನೂ, ಒಂದು ಎತ್ತನ್ನೂ ಕೊಟ್ಟು ನ್ಯಾಯವನ್ನು ಬಗೆಹರಿಸಿಕೊಳ್ಳುವುದಾಗಿ ಹೇಳಿದನು. +ಮೂವರಿಂದಲೂ ಫಿರ್ಯಾದಿಯ ರಾಜಿಯ ಶರ್ತಿನಂತೆ ಫಿಲಿಪ್ಪನು ರೂಬಲುಗಳನ್ನೂ, ಗೋಧಿಯ ಚೀಲಗಳನ್ನೂ, ಪ್ರಾಣಿಗಳನ್ನೂ ವಸೂಲು ಮಾಡಿಕೊಂಡನು. +ಆಮೇಲೆ ಒಂದು ದಿನ ನ್ಯಾಯಾಧೀಶ ಶಾಮಕನು ಫಿಲಿಪ್ಪನ ಹತ್ತಿರ ತನ್ನ ಆಳನ್ನು ಕಳಿಸಿ, ‘ತನಗೆ ಅವನು ಕೊಡುವೆನೆಂದು ತಿಳಿಸಿದ್ದ ಮೂರು ಚಿನ್ನ ತುಂಬಿದ ಚೀಲಗಳನ್ನು ಕಳಿಸಬೇಕೆಂದು ಹೇಳಿ ಕಳುಹಿಸಿದನು. +ನ್ಯಾಯಾಧೀಶನ ಸೇವಕನಿಗೆ, ‘ತಾನು ಮೂರು ಚಿನ್ನದ ಚೀಲಗಳನ್ನು ನ್ಯಾಯಾಧೀಶನಿಗೆ ಕೊಡುವೆನೆಂದು ತಿಳಿಸಿಲ್ಲ’ವೆಂದು ತಿಳಿಸಿದನು. +ಆಗ ಸೇವಕನು, ‘ನ್ಯಾಯ ವಿಚಾರಣೆಯ ಕಾಲಕ್ಕೆ ನಿನ್ನ ಟೊಪ್ಪಿಗೆಯೊಳಗಿನಿಂದ ನೀನು ತೋರಿಸಿದ ಮೂರು ಗಂಟುಗಳನ್ನು ನಿನ್ನಿಂದ ವಸೂಲ ಪಡೆಯುವುದಕ್ಕೆ ನನ್ನನ್ನು ಕಳಿಸಿದ್ದಾನೆ’ ಎಂದು ಹೇಳಿದನು. +ಫಿಲಿಪ್ಪನು ತನ್ನ ಟೊಪ್ಪಿಗೆಯಿಂದ ಕರವಸ್ತ್ರದಿಂದ ಕಟ್ಟಿದ್ದ ಕಲ್ಲನ್ನು ಬಿಡಿಸಿ, ‘‘ಇದನ್ನೇ ನಾನು ನ್ಯಾಯಾಧೀಶನಿಗೆ ತೋರಿಸಿದ್ದು’’ ಎಂದನು. +“ನೀನು ಈ ಕಲ್ಲನ್ನೇಕೆ ತೋರಿಸಿದ್ದಿ?” ಎಂದು ಕೇಳಿದ ಸೇವಕನಿಗೆ, ಫಿಲಿಪ್ಪನು ಉತ್ತರ ಕೊಟ್ಟನು- “ನಾನು ನನ್ನ ವಿರುದ್ಧ ನಿರ್ಣಯ ಕೊಡಬಾರದೆಂದು ನ್ಯಾಯಾಧೀಶನಿಗೆ ಈ ಕಲ್ಲನ್ನು ತೋರಿಸಿದೆ; + ನನ್ನ ವಿರುದ್ಧ ನಿರ್ಣಯ ಕೊಟ್ಟಿದ್ದೇ ಆದರೆ ಈ ಕಲ್ಲನ್ನು ಅವನ ತಲೆಗೆ ಹೊಡೆಯವೆನೆಂದು ಹೆದರಿಸುವುದು ನನ್ನ ಅಭಿಪ್ರಾಯವಾಗಿತ್ತು ಮತ್ತು ಪ್ರಸಂಗದಲ್ಲಿ ಹಿಂದು-ಮುಂದು ನೋಡದೆ ಈ ಕಲ್ಲು ಹೊಡೆದು ನ್ಯಾಯಾಧೀಶನ ತಲೆಯನ್ನು ನಾನು ಒಡೆದು ಹಾಕುತ್ತಿದ್ದೆ”. + ಸೇವಕನು ಮರಳಿ ನ್ಯಾಯಾಧೀಶನಿಗೆ ಫಿಲಿಪ್ಪನು ಹೇಳಿದ ಮಾತುಗಳನ್ನು ತಿಳಿಸಿದನು. +ಈ ಮಾತು ಕೇಳಿದ ನ್ಯಾಯಾಧೀಶನು, “ನಾನು ಅವನ ಪರವಾಗಿ ನಿರ್ಣಯ ಕೊಟ್ಟಿದ್ದೇ ಒಳಿತಾಯಿತು. +ಅದಕ್ಕಾಗಿ ನಾನು ದೇವರನ್ನು ಸ್ತುತಿಸುತ್ತೇನೆ. +ಅಲ್ಲದಿದ್ದರೆ, ಅವನು ನನ್ನ ತಲೆಯನ್ನೊಡೆದು ಮಿದುಳನ್ನು ಹೊರಹಾಕುತ್ತಿದ್ದನು” ಎಂದು ಆನಂದಪಟ್ಟನು. +ಫಿಲಿಪ್ಪನು ತನಗೆ ದೊರೆತ ಸಂಪತ್ತಿನಿಂದ ಶ್ರೀಮಂತಿಕೆಯನ್ನು ಗಳಿಸಿ, ಸುಂದರಿಯಾದ ತರುಣಿಯನ್ನು ಮದುವೆಯಾಗಿ ಸುಖದಿಂದ ಜೀವನ ಮಾಡಿದನು.