From 3437c3c5601774b0f19cb8e054e847b57730e3be Mon Sep 17 00:00:00 2001 From: Narendra VG Date: Mon, 17 Apr 2023 15:36:32 +0530 Subject: [PATCH] Upload New File --- ...6\340\262\227\340\262\263\340\263\201.txt" | 5860 +++++++++++++++++ 1 file changed, 5860 insertions(+) create mode 100644 "Data Collected/Kannada/MIT Manipal/Kannada-Scrapped-dta/\340\262\256\340\262\262\340\263\206\340\262\227\340\262\263\340\262\262\340\263\215\340\262\262\340\262\277_\340\262\256\340\262\246\340\263\201\340\262\256\340\262\227\340\262\263\340\263\201.txt" diff --git "a/Data Collected/Kannada/MIT Manipal/Kannada-Scrapped-dta/\340\262\256\340\262\262\340\263\206\340\262\227\340\262\263\340\262\262\340\263\215\340\262\262\340\262\277_\340\262\256\340\262\246\340\263\201\340\262\256\340\262\227\340\262\263\340\263\201.txt" "b/Data Collected/Kannada/MIT Manipal/Kannada-Scrapped-dta/\340\262\256\340\262\262\340\263\206\340\262\227\340\262\263\340\262\262\340\263\215\340\262\262\340\262\277_\340\262\256\340\262\246\340\263\201\340\262\256\340\262\227\340\262\263\340\263\201.txt" new file mode 100644 index 0000000..a37890d --- /dev/null +++ "b/Data Collected/Kannada/MIT Manipal/Kannada-Scrapped-dta/\340\262\256\340\262\262\340\263\206\340\262\227\340\262\263\340\262\262\340\263\215\340\262\262\340\262\277_\340\262\256\340\262\246\340\263\201\340\262\256\340\262\227\340\262\263\340\263\201.txt" @@ -0,0 +1,5860 @@ +ಮಲೆಗಳಲ್ಲಿ ಮದುಮಗಳು : +ಸಿಂಬಾವಿ ಭರಮೈಹೆಗ್ಗಡೆಯವರ ದೊಡ್ಡ ಚೌಕಿಮನೆಯ ಹೆಬ್ಬಾಗಿಲು ದಾಟಿದ ಅವರ ಜೀತದಾಳು, ಹೊಲೆಯರ ನಾಯಿಗುತ್ತಿ, ಹೊರ ಅಂಗಳದ ಕಡೆಯ ಮೆಟ್ಟಲಲ್ಲಿ ನಿಂತು ಆಕಾಶದ ಕಡೆಗೆ ಬಿಡುಗಣ್ಣಾಗಿ ನೋಡುತ್ತಿದ್ದನು. +ಮನೆಯ ಪಕ್ಕದಲ್ಲಿದ್ದ ಅಡಕೆಯ ತೋಟದಿಂದ, ಒಂದು ಕೈಯಲ್ಲಿ ಒಂದು ಕರಿಬಾಳೆಯ ಗೊನೆಯನ್ನೂ ಮತ್ತೊಂದು ಕೈಯಲ್ಲಿ ಬಾಳೆಯೆಲೆಗಳ ಕಟ್ಟೊಂದನ್ನೂ ಹಿಡಿದು, ಆರಡಿ ಎತ್ತರವಿದ್ದರೂ ಅತಿ ನಿಧಾನವಾಗಿ ಬರುತ್ತಿದ್ದ ಮನೆಗೆಲಸದ ಮರಾಟಿ ಮಂಜನು “ಏನೋ, ಗುತ್ತೀ, ಮುಗಿಲ ಕಡೆ ನೋಡ್ತಾ ನಿಂತೆ? +ದೂರಾ?ಒಳ್ಳೆ ದರೋಬಸ್ತಾಗಿದ್ದೀಯಲ್ಲಾ!ಹ್ಞಾ” ಎಂದು ತನ್ನ ನಡೆಗಿಂತಲೂ ನಿಧಾನವಾಗಿ ರಾಗಧ್ವನಿಯಿಂದ ಪ್ರಶ್ನಿಸುತ್ತಾ ಹತ್ತಿರಕ್ಕೆ ಬಂದನು. +ಬಲದಲ್ಲಿ ಮಂಜನಿಗಿಂತ ಮಿಗಿಲಾಗಿದ್ದರೂ ಎತ್ತರದಲ್ಲಿ ಬಹಳ ಕುಳ್ಳಾಗಿದ್ದ ಗುತ್ತಿ ಮುಗಿಲನ್ನೂ ಮುಖವನ್ನೂ ಒಟ್ಟಿಗೆ ನೋಡುತ್ತಾ “ಹಾಳ್ ಮಳೆ ಸಾಯ್ತದೋ ಏನೋ ಅಂತ ನೋಡ್ತಾ ಇದ್ದೆ” ಎಂದು, ಸ್ವಲ್ಪ ಅವಸರದಿಂದ “ಮಳೆ ಫಕ್ಕನೆ ಬತ್ತದೇನ್ರೋ?” ಎಂದು ಪ್ರಶ್ನಿಸಿದನು. +ಮಂಜನೂ ತನ್ನ ಕುತ್ತಿಗೆಯ ನರಗಳು ಎದ್ದು ಕಾಣುವ ರೀತಿಯಲ್ಲಿ ಮುಗಿಲ ಕಡೆಗೆ ನೋಡುತ್ತಾ “ನೀನು ಎಲ್ಲಿಗೆ ಹೋಗಬೇಕು ಹೇಳು?ಹ್ಞಾ” ಎಂದನು. +“ಲಕ್ಕುಂದಕ್ಕೆ ಕಣ್ರೋ”. +“ಹಾಂಗಾದ್ರೇನು ಹೋಗ್ದೇ? +ನಾನಾದ್ರೆ ಒಂದು ಚಣಕ್ಕೆ ಹೋಗ್ತಿದ್ದೆ….”ಮಂಜನಿನ್ನೂ “ಹ್ಞಾ” ಎಂದು ಮಾತು ಪೂರೈಸಿರಲಿಲ್ಲ. +ಅಷ್ಟರಲ್ಲಿ ಮನೆಯೊಳಗೆ ಹಿತ್ತಲ ಕಡೆಯಿಂದ ಹೆಂಗಸರ ಬಾಯಿ ಗಟ್ಟಿಯಾಗಿ ಕೇಳಿಸಿತು. +ಗುತ್ತಿ ಸ್ವಲ್ಪ ಬೆರಗಿನಿಂದ ಹುಬ್ಬು ನಿಮಿರಿಸಿ “ಏನ್ರೋ ಅದು?” ಎಂದನು. +ಮಂಜನು ಒಂದಿನಿತೂ ಬೆರಗಾಗದೆ ಉದಾಸೀನ ಧ್ವನಿಯಿಂದ ತನ್ನಷ್ಟಕ್ಕೆ ತಾನೇ ಹೇಳಿಕೊಂಡನು; +“ಮತ್ತೆ ಸುರುವಾಯ್ತಪ್ಪಾ! +ಈ ಹೆಗ್ಗಡ್ತೇರಿಂದ ಸುಖಾ ಇಲ್ಲ. +ಮೂರ್ಹೊತ್ತೂ ಜಗಳಾ! +ಜಗಳಾ!ಜಗಳಾ! +ಜಟ್ಟಮ್ಮ ಲಕ್ಕಮ್ಮ!ಲಕ್ಕಮ್ಮ ಜಟ್ಟಮ್ಮ! +ನೀ ಮುಂಡೆ ನೀ ಮುಂಡೆ! +ನೀ ರಂಡೆ ನೀ ರಂಡೆ! +ನಾನಾಗೋ ಹೊತ್ತಿಗೆ ಕಾಲಾ ಮಾಡ್ತೀನಿ, ಹ್ಞಾ!”ಗುತ್ತಿ ಮಂಜನ ಕಣ್ಣನ್ನೆ ನೋಡುತ್ತಾ ಏನೋ ರಹಸ್ಯವನ್ನು ಕೇಳಬೇಕೆಂದು ಬಾಯಿ ತೆರೆಯುವುದರೊಳಗೆ ಮಂಜನು ಸೊಂಟದಿಂದ ಹರಡಿನವರೆಗೂ ದಪ್ಪವಾದ ಬಿದಿರು ಬೊಂಬಿನಂತೆ ಒಂದೇ ಸಮನಾಗಿದ್ದ ಸ್ಥೂಲಗಳೆರಡನ್ನೂ ಎತ್ತಿ ಎತ್ತಿ ಇಡುತ್ತಾ  ಮನೆಯೊಳಗೆ ಹೋಗಲು ಮೆಟ್ಟಿಲೇರುತ್ತಿದ್ದನು. +“ಕಪ್ಪಾಯ್ತು ಕಣ್ರೋ: ನಾನು ಸುಮಾರು ದೂರ ಹೋರಬೇಕು” ಎನ್ನುತ್ತಾ ಗುತ್ತಿ ತನ್ನ ಕುಳ್ಳು ದೇಹದ ಕುಳ್ಳುಗಾಲುಗಳನ್ನು ಬೀಸಿ ಬೀಸಿ ಹಾಕುತ್ತಾ ತೋಟದ ದಾರಿ ಹಿಡಿದು ಹೊರಟನು. +ಅವನು ತೋಟ ದಾಟುವವರೆಗೂ ಮನೆಯಲ್ಲಾಗುತ್ತಿದ್ದ ಜಗಳದ ಸದ್ದು ಕೇಳಿಸುತ್ತಲೇ ಇತ್ತು. +ನಾಯಿಗುತ್ತಿ ಅಥವಾ ಗುತ್ತಿ ಮಂಜನೊಡನೆ ತಾನು ಲಕ್ಕುಂದಕ್ಕೆ ಹೊರಟಿದ್ದೇನೆಂದು ಸುಳ್ಳು ಹೇಳಿದ್ದನು. +ಅವನು ಲಕ್ಕುಂದದ ಮೇಲೆಯೇ ಹೋಗಬೇಕಾಗಿತ್ತು. +ಆದರೆ ಅದು ಅವನ ಪ್ರಯಾಣದ ಗುರಿಯಾಗಿರಲಿಲ್ಲ. +ಸಿಂಬಾವಿಗೆ ಸುಮಾರು ಮೂರು ನಾಲ್ಕು ಮೈಲಿ ದೂರದಲ್ಲಿದ್ದ ಲಕ್ಕುಂದಕ್ಕೆ ಹೋಗುವುದಾಗಿದ್ದರೆ ಅವನು ಅಷ್ಟು ಅವಸರ ಪಡಬೇಕಾಗಿರಲಿಲ್ಲ. +ಬೈಗಾಗಿದ್ದರೂ, ದಾರಿಯಲ್ಲಿ ಹೆಗ್ಗಾಡು ತುಂಬಿ ಎತ್ತರವಾಗಿದ್ದ ಸೀತೂರು ಗುಡ್ಡವನ್ನು ಏರಿ ದಾಟಬೇಕಾಗಿದ್ದರೂ, ಗುತ್ತಿ ಹೆದರಬೇಕಾಗಿರಲಿಲ್ಲ. +ಅಂತಹ ಕಬ್ಬಿಣದಾಳು ಅವನು! +ಮತ್ತೊಂದು ವಿಷಯವೆಂದರೆ ಅವನ ಉಡುಪು! +ಮಂಜನು ಅವನನ್ನು ಕಂಡೊಡನೆ “ಒಳ್ಳೇ ದರೋಬಸ್ತಾಗಿದ್ದೀಯಲ್ಲಾ” ಎಂದುದಕ್ಕೆ ಕಾರಣ, ಅವನ ಉಡುಪಿನಲ್ಲಾಗಿದ್ದ ಮಾರ್ಪಾಡು. +ಸೊಂಟಕ್ಕೆ ಸುತ್ತಿದ್ದ ಮೋಟು ಪಂಚೆ ವಿನಾ ಬತ್ತಲೆಯಾಗಿದ್ದ ಮರಾಟಿಯವನ ಮುಂದೆ, ಹೊಲೆಯನು, ಕೊಳೆ ಸರ್ವವ್ಯಾಪ್ತಿಯಾಗಿದ್ದರೂ, ಷೋಕಿಯಾಗಿದ್ದನು. +ತಲೆಗೆ ಒಂದು ಕೆಂಪು ವಸ್ತ್ರ ಸುತ್ತಿದ್ದನು. +ಮೈಗೊಂದು ಕಸೆ ಅಂಗಿ ಹಾಕಿದ್ದನು. +ಪಂಚೆಯ ತುದಿ ಮೊಳಕಾಲನ್ನು ದಾಟಿತ್ತು. +ಕಿವಿಗೆ ಬೇರೆ ಒಂಟಿ! +ಒಂಟಿಗಳನ್ನು ಹೊಸದಾಗಿ ಹಾಕಿರಲಿಲ್ಲವಾದರೂ ಹೊಸ ವೇಷದಿಂದ ಅವುಗಳಿಗೊಂದು ಹೊಸ ಷೋಕಿ ಬಂದಿತ್ತು. +ಎಲ್ಲಕ್ಕೂ ತಿಲಕಪ್ರಾಯವಾಗಿ ಮುಖ ಕ್ಷೌರ. +ಹೊಲೆಯನಾದರೂ ಬೆಳ್ಳಗಿದ್ದುದರಿಂದ ಮಲೆಯನಂತೆ ಕಾಣುತ್ತಿದ್ದನು. +ಹೆಗಲ ಮೇಲೆ ಮಡಿಸಿ ಹಾಕಿಕೊಂಡಿದ್ದ ಕಂಬಳಿಕೊಪ್ಪೆ ಅವನು ಮಳೆಗೆ ತಯಾರಾಗಿ ಹೊರಟಿದ್ದನ್ನೂ, ಬಗಲಲ್ಲಿ ಇರುಕಿಕೊಂಡಿದ್ದ ಬಗನಿಯ ಮರದ ಕರಿಯ ದೊಣ್ಣೆ ಹೊಡೆದಾಟಕ್ಕೂ ಕೂಡ ಅವನು ಸಿದ್ಧನಾಗಿದ್ದಾನೆ ಎಂಬುದನ್ನೂ ಸೂಚಿಸುತ್ತಿದ್ದುವು. +ಗುತ್ತಿ ಸೀತೂರು ಗುಡ್ಡಕ್ಕೆ ಏರಲು ಮೊದಲು ಮಾಡಿದಾಗಲೆ ಬೈಗುಗಪ್ಪಿನೊಂದಿಗೆ ಮುಗಿಲುಗಪ್ಪು ಮುಸುಕಿ ಮಿಣುಕು ಹುಳುಗಳ ಮಿನುಗು ಕಾಣತೊಡಗಿತ್ತು. +ಜೀರುಂಡೆಗಳ ಕೂಗು ಕಿವಿಗೆ ಚಿಟ್ಟು ಹಿಡಿಸುತ್ತಿತ್ತು. +ಮಳೆಗಾಲದ ಪ್ರಾರಂಭ ಸಮಯವಾಗಿದ್ದರೂ ಮಲೆಗಾಡು ಭಯಂಕರವಾಗಿದ್ದ ಸಿಂಬಾವಿ, ಸೀತೂರು, ಲಕ್ಕುಂದ ಈ ಕಡೆಗಳಲ್ಲಿ ಇಂಬಳದ ಕಾಟವೂ ಹೆಚ್ಚಾಗಿಯೆ ಶುರುವಾಗಿತ್ತು. +ಗುತ್ತಿ ಅಲ್ಲಲ್ಲಿಯೆ ನಿಂತು ಕಣ್ಣಿಗೆ ಕಂಡ ಇಂಬಳಗಳನ್ನು ಕಾಲಿನಿಂದ ಕಿತ್ತೊಗೆಯುತ್ತಾ, ಅದೇ ಕೈಯಲ್ಲಿಯೇ ಜೇಬಿನಿಂದ ಎಲೆಯಡಕೆ ಸುಣ್ಣ ಹೊಗೆಸೊಪ್ಪುಗಳನ್ನು ತೆಗೆದು ಬಾಯಿಗೆ ಹಾಕಿಕೊಳ್ಳುತ್ತಾ, ಕುಳ್ಳಗಾಲುಗಳನ್ನು ಬಿರಬಿರನೆ ಬೀಸಿ ಬೀಸಿ ಹಾಕುತ್ತಾ, ಸೀತೂರು ಗುಡ್ಡದ ಹಳುವಿಡಿದ ಕಾಡುದಾರಿಯಲ್ಲಿ ಮುಂಬರಿದನು. +ಕತ್ತಲೆ ಬರುಬರುತ್ತಾ ದಡ್ಡವಾಯ್ತು. +ಜೀರ್ದುಂಬಿಗಳ ಜೀರುದನಿ ಘೋರವಾಯ್ತು. +ತಾನು ನಡೆಯುತ್ತಿದ್ದ ಹಾದಿಯಾಗಲಿ ತನ್ನ ಕಾಲುಗಳಾಗಲಿ ನೆತ್ತರು ಹೀರುತ್ತಿದ್ದ ಇಂಬಳಗಳಾಗಲಿ ಒಂದಿನಿತೂ ಕಾಣಿಸುವಂತಿರಲಿಲ್ಲ. +ಗುತ್ತಿ ಅಂದಾಜಿನ ಮೇಲೆ ಕಾಲು ಹಾಕುತ್ತಿದ್ದನು. +ನಾಗರಿಕರಿಗೆ ಭೀಕರವಾಗಿ ಕಾಣುವ ವರ್ಷಾಕಾಲದ ಆ ಭಯಂಕರ ಪರ್ವತಾರಣ್ಯದ ರುದ್ರ ಪ್ರಕೃತಿ ಅವನಿಗೆ ಬಹುಕಾಲದ ಪರಿಚಯದಿಂದ ಸಾಧಾರಣವಾಗಿತ್ತು. +ಅವನೂ ಆ ಪ್ರಕೃತಿಯ ಒಂದಂಶವಾಗಿದ್ದನು; +ಬೆಟ್ಟದಲ್ಲಿ ಬಂಡೆಯಂತೆ, ಕಾಡಿನಲ್ಲಿ ಮರದಂತೆ ಅದರ ಒಂದಂಗವಾಗಿದ್ದನು. +ಗುತ್ತಿ ಯಾವುದನ್ನೂ ಲೆಕ್ಕಿಸದೆ ಕಾಲು ಹಾಕುತ್ತಿದ್ದುದಕ್ಕೆ ಮತ್ತೊಂದು ಕಾರಣವಿತ್ತು. +ಅವನ ಮನಸ್ಸು ಬಹುರ್ಮುಖವಾಗಿರಲಿಲ್ಲ. +ತನ್ನ ಸಂಕಲ್ಪಕಾರ್ಯವನ್ನೂ ಅದನ್ನು ಸಾಧಿಸುವ ವಿಧಾನಗಳನ್ನೂ ಉಪಾಯಗಳನ್ನು ಕಷ್ಟ ಸಾಹಸಗಳನ್ನೂ ಕುರಿತು ನಾನಾ ವಿಧವಾಗಿ ಕಲ್ಪಿಸುತ್ತಾ ನಡೆಯುತ್ತಿದ್ದನು. +ಒಂದು ಸಾರಿ ಸಿಂಬಾವಿ ಹೆಗ್ಗಡೆಯವರ ಹಳೆಮನೆ ದೊಡ್ಡ ಹೆಗ್ಗಡೆಯವರಿಗೆ ಕೊಟ್ಟಿದ್ದ ಚೀಟಿಯನ್ನು ಸೊಂಟಕ್ಕೆ ಕೈ ಹಾಕಿ ಮುಟ್ಟಿ ನೋಡುವನು. +ಮತ್ತೊಂದು ಸಾರಿ ಆವೊತ್ತುತಾನೆ ನೀಟಾಗಿ ಕತ್ತರಿಸಿದ್ದ ಮೀಸೆಗಳನ್ನು ನೀವಿಕೊಳ್ಳುವನು. +ಒಂದೊಂದು ಸಾರಿ ತನ್ನ ಮನಸ್ಸಿನಲ್ಲಾಗುತ್ತಿದ್ದ ಹೋರಾಟವನ್ನು ಮಾತಿನಲ್ಲಿ ಹೊರಗೆಡಹುವನು. +“ಈ ಸಾರಿ ನಾನು ಅವಳನ್ನು ಹಾರಿಸಿಕೊಂಡು ಬರದೇ ಇದ್ದರೆ ನಮ್ಮ ಅಪ್ಪ ಅವ್ವಗೆ ಹುಟ್ಟಿದ ಗಂಡೇ ಅಲ್ಲ ನಾನು” ಎಂದು ತಿರಸ್ಕಾರ ಸೂಚಕವಾದ ಹೂಂಕಾರ ಮಾಡಿದಾಗ ಹಿಂದೆ ಹುಳುವಿನಲ್ಲಿ ಯಾವುದೋ ಒಂದು ಜಂತು ಸದ್ದು ಮಾಡಿದ ಹಾಗಾಯಿತು. +ಗುತ್ತಿ ತಟಕ್ಕನೆ ಬೆಚ್ಚಿ, ಸಂಪೂರ್ಣವಾಗಿ ಬಹಿರ್ಮುಖಿಯಾಗಿ, ದೊಣ್ಣೆ ಬೀಸುತ್ತಾ “ಹಡ್ಡಿಡ್ಡಿಡ್ಡಿಡ್ಡೀ” ಎಂದು ಕೂಗಿದನು. +ಹುಳುವಿನಲ್ಲಿ ಆ ಪ್ರಾಣಿ ಬೆದರಿ ಹಿಂದೋಡಿದ ಸದ್ದಾಯ್ತು. +ಗುತ್ತಿ ಗಟ್ಟಿಯಾಗಿ “ಇದರ ಮನೆ ಹಾಳಾಗ್ಲೋ! +ಈ ನರಿಯಿಂದ ಸುಖಾ ಎಲ್ಲ!” ಎನ್ನುತ್ತಾ ಬಿರಬಿರನೆ ನಡೆದನು, ಆ ನಡಿಗೆಯಲ್ಲಿ ಭಯ ಅಷ್ಟೇನೂ ಅವ್ಯಕ್ತವಾಗಿರಲಿಲ್ಲ. +“ಈ ನರಿಯಿಂದ ಸುಖಾ ಇಲ್ಲ!” ಎಂದು ಅವನು ಹೇಳಿದ್ದರೂ ಅವನ ಮಾತು ಮನಸ್ಸಿನಂತಿರಲಿಲ್ಲ. +“ಹುಲಿ” ಎನ್ನುವುದಕ್ಕೆ ಬದಲಾಗಿ “ನರಿ” ಎಂದಿದ್ದನು. +ಹುಲಿಯನ್ನು ನರಿ ಎಂದು ಕೂಗಿದರೆ ಈ ಮುನುಷ್ಯ ತನ್ನನ್ನು ನರಿಗೆ ಸಮಾನವಾಗಿ ಕಾಣುತ್ತಾನೆ ಎಂದು ತಿಳಿದು ಹುಲಿ ಹೆದರುತ್ತದಂತೆ, “ಹಾವು ಕಚ್ಚಿದೆ” ಎಂದರೆ ಅಪಶಕುನವಾಗುತ್ತದೆಂದು “ಬಳ್ಳಿ ಮುಟ್ಟಿದೆ” ಎನ್ನುತ್ತಾರಲ್ಲಾ ಹಾಗೆ. +ಗುತ್ತಿ ಇನ್ನೂ ಸೀತೂರು ಗುಡ್ಡದ ನೆತ್ತಿಗೇರಿರಲಿಲ್ಲ. +ಗಾಳಿ ಪ್ರಾರಂಭವಾಗಿ ಹಾಡು ಹೋ ಎನ್ನತೊಡಗಿತು. +ಮುಗಿಲು ಮೊಳಗಿತು; ಮಿಂಚಿತು. +ಮೊದಮೊದಲು ಅಲ್ಲೊಂದಿಲ್ಲೊಂದು ತೋರ ಹನಿ ಮರದೆಲೆಯ ಮೇಲೆ ಬಿದ್ದ ಸದ್ದಾಯಿತು. +ಗುತ್ತಿ ಹೆಗಲಮೇಲಿದ್ದ ಕಂಬಳಿಕೊಪ್ಪೆಯನ್ನು ಬೇಗ ಬೇಗನೆ ತೆಗೆದು ಸೂಡಿಕೊಳ್ಳುತ್ತಿದ್ದಾಗಲೆ ಮುಂಗಾರು ಮಳೆ ಕಾಡೆಲ್ಲ ಕಂಗಾಲಾಗುವಂತೆ ದನಗೋಳಾಗಿ ಸುರಿಯತೊಡಗಿತು. +“ಇದರ ಕಣ್ಣಿಂಗಿ ಹೋಗಾಕೆ ನೆತ್ತಿ ದಾಟೋವರಿಗಾದ್ರೂ ತಡೀಬಾರ್ದಾಗಿತ್ತೇ?” ಎಂದು ಮಳೆಯನ್ನು ಶಪಿಸುತ್ತಾ ಕಂಬಳಿಕೊಪ್ಪೆಯನ್ನು ಮೈಗೆ ಭದ್ರವಾಗಿ ಸುತ್ತಿಕೊಂಡು ಹಳುವಿನ ನಡುವೆ ಕಗ್ಗತ್ತಲೆಯಲ್ಲಿ ತಡವುತ್ತಾ ನಡೆದನು. +ಗುತ್ತಿ ಸೀತೂರು ಗುಡ್ಡವನ್ನು ಹತ್ತಿ ಇಳಿದು ಅದರ ಬುಡದಲ್ಲಿ ಲಕ್ಕುಂದದ ಗದ್ದೆ ಕೋಗಿಗೆ ಉತ್ತರದಿಕ್ಕಿನ ಗಡಿಯಾಗಿ ಹರಿಯುತ್ತಿದ್ದ ಹಳ್ಳವನ್ನು ಸಮೀಪಿಸುತ್ತಿದ್ದಾಗಲೆ ತೊರೆಯ ನೀರಿನ ಭೋರಾಟವನ್ನು ಆಲಿಸಿ “ಆಯ್ತಾ!ಇನ್ನು ಈ ಹಳ್ಳದ ಹೆಣಾ ಬೇರೆ ಕಾಯಬೇಕು!” ಎಂದು ಗೊಣಗಿದನು. +ಹಳ್ಳದ ಅಂಚಿಗೆ ಬಂದು ನಿಂತು ನೋಡಿದಾಗ ಕತ್ತಲೆಯಲ್ಲದೆ ಮತ್ತೇನೂ ಕಾಣಿಸಲಿಲ್ಲ. +ನೀರಿನ ಭೋರಾಟದಿಂದಲೆ ಹಳ್ಳದ ಏರಿಕೆಯನ್ನು ಊಹಿಸುತ್ತಾ ನಿಂತಿದ್ದಾಗ ಒಂದು ಸಾರಿ ಮಿಂಚಿತು. +ವೈರಿದಳದ ಮೇಲೆ ರಭಸದಿಂದ ದಾಳಿ ನುಗ್ಗುವ ತುರಂಗ ಸೇನೆಯಂತೆ ಉನ್ಮತ್ತ ವೇಗದಿಂದ ಹರಿದೊಡುತ್ತಿದ್ದ ತೊರೆಯ ತೆರೆಗಳು ಪಳಪಳನೆ ಮಿಂಚಿದುವು. +ಹೊನಲಿನ ಮಧ್ಯೆ ವೇಗವಾಗಿ ಹೋಗುತ್ತಿದ್ದ ಮರದ ತುಂಡುಗಳೂ ಕಸಕಡ್ಡಿಗಳೂ ಅದರ ರಭಸಕ್ಕೆ ಸಾಕ್ಷಿಯಾಗಿದ್ದುವು. +ಬೇಸಗೆಯಲ್ಲಿ ಒಂದೆರಡು ಅಡಿಗಳಗಲವಾಗಿರುತ್ತಿದ್ದ ಆ ಹಳ್ಳ ಈಗ ಸುಮಾರು ಇಪ್ಪತ್ತೈದು ಮೂವತ್ತು ಅಡಿಗಳಷ್ಟು ಅಗಲವಾಗಿ ಹರಿಯುತ್ತಿತ್ತು. +ಗುತ್ತಿ ಕತ್ತಲೆಯನ್ನು ನೋಡುತ್ತಾ, ಮಳೆಯ ಮತ್ತು ತೊರೆಯ ನಿರ್ಮೊರೆಯನ್ನೂ ಮರಗಳಲ್ಲಾಗುತ್ತಿದ್ದ ಗಾಳಿಗರ್ಜನೆಯನ್ನೂ ಆಲಿಸುತ್ತಾ ಕೈಯಂದಾಜಿನ ಮೇಲೆ ಕಾಲಿನಲ್ಲಿ ನುಣ್ಣಗೆ ಸಿಕ್ಕಿದ ಇಂಬಳಗಳನ್ನು ತೆಗೆದು ಬಿಸಾಡಲು ಪ್ರಯತ್ನಿಸುತ್ತಾ ನಿಂತನು. +ಸ್ವಲ್ಪ ಹೊತ್ತಿನಲ್ಲಿಯೆ ಹಳ್ಳದ ಆಚೆಯ ದೂರದಲ್ಲಿ ಲಕ್ಕುಂದದ ಗದ್ದೆಕೋಗಿನ ಜಡ್ಡಿನಲ್ಲಿ, ಪದೇ ಪದೇ ಬೀಸುತ್ತಿದ್ದ ದೊಂದಿಗಳೂ ಲಾಟೀನುಗಳೂ ಕಾಣಿಸಿತು. +“ಈ ಮಳೇಲಿ ಮೀನು ಕಡಿಯಾಕೆ ಹೊರಟಾರಲ್ಲಪ್ಪಾ? +ಈ ದೀವರು ಮಕ್ಕಳಿಗೆ ಕಳ್ಳು ಹೆಚ್ಚಾಗಿದ್ದೇ!” ಎಂದುಕೊಂಡು ಗುತ್ತಿಗೆ ಮಳೆ ನಿಂತಿದ್ದುದು ಅನುಭವಕ್ಕೆ ಬಂತು. +ಆದರೆ ಹಳ್ಳ ಇಳಿಯುವವರೆಗೂ ಅದನ್ನು ದಾಟುವ ಹಾಗಿರಲಿಲ್ಲ. +ನಿಂತು ಬೇಸರವಾಗಿದ್ದದರಿಂದ ಕಂಬಳಿಕೊಪ್ಪೆಯ ಒಂದು ಭಾಗವನ್ನೆ ಹಾಸನ್ನಾಗಿ ಉಪಯೋಗಿಸಿಕೊಂಡು (ಕಂಬಳಿಕೊಪ್ಪೆ ಅವನ ಹರಡಿಗೆ ಹತ್ತಿರ ಹತ್ತಿರ ಬರುತ್ತಿತ್ತು!) ಹಸುರು ಬೆಳೆದೊಂದು ಮಣ್ಣು ದಿಬ್ಬದ ಮೇಲೆ “ಹಳ್ಳದ ಹೆಣಾ ಕಾಯ್ತಾ” ಕುಳಿತನು. +ಮಳೆ ಸಂಪೂರ್ಣವಾಗಿ ನಿಂತಿತ್ತು. +ತೊರೆಯ ಮೊರೆ ಮೊದಲಿನಷ್ಟು ಇರಲಿಲ್ಲ. +ಮಳೆ ತೊರೆಗಳ ಜಲಘೋಷದಲ್ಲಿ ಹಿಂದೆ ಕೇಳಿದದಿದ್ದ ಕಪ್ಪೆಗಳ ವಟಗುಟ್ಟುವಿಕೆ ಚಿತ್ರವಿಚಿತ್ರವಾಗಿ ಕೃತವಿಕೃತವಾಗಿ ಕೇಳಿಸುತ್ತಿತ್ತು. +ಗಾಳಿ ಬೀಸಿದಂತೆಲ್ಲ ಮರದ ಹನಿ ತಟಪಟನೆ ಉದುರುತ್ತಿತ್ತು. +ಕಾಣಿಸದಿದ್ದರೂ ತೊರೆಯ ಮೇಲೆ ಕಣ್ಣಿಟ್ಟು, ಯಾವ ಆಲೋಚನೆಯನ್ನೂ ಮಾಡದೆ, ಶೂನ್ಯ ಮನಸ್ಸಿನಿಂದ ತೊರೆಯ ಮೊರೆಯನ್ನು ಆಲಿಸುತ್ತಾ ಆಲಿಸುತ್ತಾ ಆಲಿಸುತ್ತಾ ತಾನೇ ರೊತೆಯ ಮೊರೆಯಾದನೋ ಎಂಬಂತೆ ಕುಳಿತಿದ್ದ ಗುತ್ತಿ ತಟಕ್ಕನೆ ಎಚ್ಚತ್ತು, ಮೂಗನ್ನು ಅರಳಿಸಿ, ಮೂಸಿ ಮೂಸಿ, ಗಾಳಿ ಹಿಡಿಯತೊಡಗಿದನು. +ಅವನ ಮೂಗಿಗೆ ಬಿದ್ದುದ್ದು ನಾಯಿಯ ವಾಸನೆ! +ಮಳೆಯಲ್ಲಿ ತೊಪ್ಪನೆ ತೊಯ್ದು ಮೈಯಿಂದ ಆವಿ ಏರುತ್ತಿರುವ ಕಂತ್ರಿ ನಾಯಿಯ ಸಿನುಗು ವಾಸನೆ! +ಗುತ್ತಿ ಸುತ್ತ ನೋಡಿದರೂ ಏನೂ ಕಾಣಿಸಲಿಲ್ಲ. +ಆದರೂ ವಾಸನೆ ಸ್ಪಷ್ಟವಾಗಿತ್ತು. +ಕಣ್ಣಿಗೆ ನಾಯಿ ಕಂಡಿದ್ದರೆ ಎಷ್ಟರಮಟ್ಟಿಗೆ ಅದು ನಿಜವಾಗಿರುತ್ತಿತ್ತೋ ಅಷ್ಟರಮಟ್ಟಿಗೇ ನಿಜವಾಗಿತ್ತು ಮೂಗಿಗೆ ನಾಯಿಯ ಮೈಗಂಪು. +“ಹಡಬೇಗ್ಹುಟ್ಟಿದ್ದು ದಾರಿ ಹುಡಕ್ಕೊಂಡು ಬಂತೋ ಏನೋ?” ಎನ್ನುತ್ತಾ, ನಯನೇಂದ್ರಿಯಕ್ಕೆ ಗೋಚರವಾಗದಿದ್ದರೂ ಘ್ರಾಣೇಂದ್ರಿಯದಲ್ಲಿ ತನಗಿದ್ದ ಶ್ರದ್ಧೆಯಿಂದಲೋ ಎಂಬಂತೆ “ಬಾ, ಹುಲಿಯಾ ಬಾ”!ಎಂದು ಮುದ್ದಾಗಿ ಕರೆದನು. +ಕರೆದನೋ ಇಲ್ಲವೋ, ಮಂತ್ರಸೃಷ್ಟಿಯಾದಂತೆ, ದೈತ್ಯಾಕೃತಿಯ ಅವನ ಕಂತ್ರಿ ನಾಯಿ ಬಾಣದಂತೆ ನೆಗೆದುಬಂದು ಹತ್ತಿರ ನಿಂತು ಬಾಲವಲ್ಲಾಡಿಸುತ್ತಾ ಕುಂಯ್ಯಿ ಕುಂಯ್ಯಿಗುಟ್ಟುತ್ತಾ ಗುಣಿದಾಡಿತು. +ಮಿಂಚಿನ ಬೆಳಕಿನಲ್ಲಿ ಮಿಂಚಿಗಳುಕಿ ಕತ್ತಲೆಯೆ ನಾಯಿಯಾಯಿತೆಂಬಂತೆ ಕರ್ರಗಿದ್ದ ಹುಲಿಯನ ದೊಡ್ಡ ಮೈ ಕಾಣಿಸಲು, ಗಿಡ್ಡನಾದ ಗುತ್ತಿಗೆ ಮುದ್ದು ಹೆಮ್ಮೆ ಸೂಸಿದಂತಾಗಿ, ಅದರ ಒದ್ದೆಯಾಗಿದ್ದ ತಲೆಯ ಮೇಲೆ ಕೈ ಸವರುತ್ತಾ “ಥೂ ಕಳ್ಳಾ, ಬರಬೇಡ ಅಂತಾ ಹೇಳಿ ಹೊಡೆದಟ್ಟಿ ಬಿಟ್ಟುಬಂದಿದ್ದರೂ ಮತ್ತೆ ಬಂದೀಯಾ? +ಒಂದಿವಸ ಕುರ್ಕನ ಪಾಲಿಗೆ ಆಗ್ತೀಯ!ಥೂ ಕಳ್ಳಾ! +ಇನ್ನು ಹೋದಲ್ಲಿ ತನಕ ನಾಯಿ ಬೊಗಳಿಸುತ್ತಾ ಬಾ! +ಥೂಯ್, ಹಾಳು ಮುಂಡೇದು ಬಾಯಿನೂ ನೆಕ್ಕಿತಲ್ಲೋ! +ಹೋಗು, ದೂರ ಹೋಗು” ಎಂದು ದಬ್ಬಿದರೂ ಹುಲಿಯನು ಹತ್ತಿರದಿಂದ ಹೋಗಲೂ ಇಲ್ಲ; + ಗುತ್ತಿಗೂ ಒಬ್ಬನೇ ಕೂತು ಕೂತು ಬೇಜಾರಾಗಿ ಜೊತೆ ಬೇಕಾಗಿದ್ದುದರಿಂದ ಅದು ದೂರ ಹೋಗಲೇಬೇಕೆಂದು ಅವನೂ ಸಹ ಹಟ ಹಿಡಿಯಲೂ ಇಲ್ಲ. +ಹುಲಿಯನ ದೆಸೆಯಿಂದಲೆ ಗುತ್ತಿಗೆ “ನಾಯಿಗುತ್ತಿ” ಎಂಬ ಅಡ್ಡ ಹೆಸರು ಬಂದಿತ್ತು. +ಅವನು ಎಲ್ಲಿ ಹೋಗಲಿ ಆ ನಾಯಿ ಅವನ ಜೊತೆ ಬಿಡುತ್ತಿರಲಿಲ್ಲ. +ಬಿಡಾರದಲ್ಲಿ ಕಟ್ಟಿ ಹಾಕಿ ಹೋದರೆ, ಕೂಗಾಡಿ ಒದ್ದಾಡಿ ಮಿಣಿ ಕಿತ್ತುಕೊಂಡು ಬರುತ್ತಿತ್ತು. +ಇಲ್ಲವೆ ಮಲಮೂತ್ರಕ್ಕೆ ಬಿಟ್ಟ ಕೂಡಲೆ ದಾರಿ ಹುಡುಕಿ ಒಡೆಯನನ್ನು ಹಿಂಬಾಲಿಸುತ್ತಿತ್ತು. +ಒಂದು ವೇಳೆ ಗುತ್ತಿ ಕಲ್ಲಿನಿಂದ ಹೊಡೆದು ಹಿಂದಕ್ಕಟ್ಟಿದರೆ ಬಿಡಾರಕ್ಕೆ ಹಿಂತಿರುಗಿದಂತೆ ನಟಿಸಿ ಅಲ್ಲಿಯೇ ಎಲ್ಲಿಯಾದರೂ ಅವಿತುಕೊಂಡಿದ್ದು, ತರುವಾಯ ಕದ್ದು ಹಿಂಬಾಲಿಸುತ್ತಿತ್ತು. +ಸರಿ, ಆಮೇಲೆ, ಅವನು ಹೋದ ಹಳ್ಳಿಗಳಲ್ಲಿ ಮನೆಗಳಲ್ಲಿ ನಾಯಿಯ ಬೊಬ್ಬೆ! +ಹೀಗಾಗಿ ಜನರ ಮನದಲ್ಲಿ ಗುತ್ತಿಗೂ ಅವನ ನಾಯಿಗೂ ಒಂದು ಗಂಟುಬಿದ್ದು,  ಅವನನ್ನು “ನಾಯಿಗುತ್ತಿ” ಎಂದೂ, ನಾಯಿಯನ್ನು “ಗುತ್ತಿನಾಯಿ” ಎಂದೂ ಕರೆದರು. +ಆ ಹೆಸರು ಎಷ್ಟರಮಟ್ಟಿಗೆ ಬಳಕೆಗೆ ಬಂದು ಹೋಯಿತೆಂಗರೆ, ಯಾರಾದರೂ ಗುತ್ತಿಯ  ಹೆಸರನ್ನು ಬರಿದೇ ಹೇಳಿದರೆ “ಯಾರು? +ನಾಯಿಗುತ್ತಿಯೇ?” ಎಂಬ ಪ್ರಶ್ನೆ ಅನಿವಾರ್ಯವಾಗಿ ಬರುತ್ತಿತ್ತು. +ಹುಲಿಯನು (ಆ ನಾಯಿಗೆ ಗುತ್ತಿ ಇಟ್ಟಿದ್ದ ಹೆಸರು)  ಇನ್ನೂ ಹೆಸರಿಲ್ಲದ ಮರಿಯಾಗಿ, ತಬ್ಬಲಿಯಾಗಿ, ಮೇಗರವಳ್ಳಿಯ ಬೀದಿಯಲ್ಲಿ ತೂರಾಡುತ್ತಿದ್ದಾಗ ಗುತ್ತಿ ಅದನ್ನು ಎತ್ತಿ ತಂದು ಸಾಕಿದ್ದನು. +ಅದಕ್ಕೆ ಅವನು ಹೊಟ್ಟೆಗೆ ಹಾಕುತ್ತಿದ್ದುದು ಗಂಜೀನೀರಾದರೂ ಆ ಮರಿ ದುಮ್ಮುದುಮ್ಮಾಗಿ ಬೆಳೆಯಿತು. +ಕುಳ್ಳಾಗಿದ್ದ ಗುತ್ತಿ ಎತ್ತರವಾಗಿ ಬೆಳೆಯುತ್ತಿದ್ದ ನಾಯಿಯನ್ನು ಕಂಡು ಹಿಗ್ಗಿ ಸ್ವಲ್ಪ ಹೆಚ್ಚಾಗಿ ಬಾಡು ಹಾಕಿ ಸಾಕಿದನು. +ನಾಯಿಯೂ ಸ್ವಯಂ ಸಂಪಾದನೆ ಮಾಡುವುದನ್ನು ಕಲಿತು ದೈತ್ಯವಾಗಿ ಬೆಳೆಯಿತು. +ಅದರ ಗಾತ್ರ, ಅದರ ಧೈರ್ಯ, ಅದರ ಮೋರೆ ಇವುಗಳನ್ನು ನೋಡಿ ಅದಕ್ಕೆ “ಹುಲಿಯ” ಎಂದು ನಾಮಕರಣ ಮಾಡಿದನು. +ಕೆಲವರು ಅದರ ಬಣ್ಣವನ್ನು ನೋಡಿ, “ಕರಿಯ” ಎಂದು ಹೆಸರಿಡಲು ಸೂಚನೆ ಕೊಟ್ಟಿದ್ದರೂ, ಗುತ್ತಿ ಗುಣಕ್ಕೇ ಮರ್ಯಾದೆ ಕೊಟ್ಟು ತಾನಿಟ್ಟ ಹೆಸರನ್ನೇ ಸಮರ್ಥಿಸಿದ್ದನು. +ಗುತ್ತಿಯ ಸೊಂಟದೆತ್ತರಕ್ಕೂ ಮಿಗಿಲೆತ್ತರವಾಗಿತ್ತು ಆ ಹುಲಿಯ. +ನಾಯಿಗಳ ಭಯವಿರಲಿ ಚಿರತೆಗೂ ಅದು ಹೆದರುತ್ತಿರಲಿಲ್ಲ. +ಒಂದು ಸಾರಿ ಇರುಳು  ನಿದ್ದೆ ಮಾಡುತ್ತಿದ್ದಾಗ ತನ್ನನ್ನು ಹೊತ್ತುಕೊಂಡು ಹೋಗಲು ಪ್ರಯತ್ನಿಸಿದ್ದ ಚಿರತೆಗೆ ಎಲ್ಲಾ ಬರುವಂತೆ ಮಾಡಿ ಕಳುಹಿಸಿತ್ತು. +ಗುತ್ತಿ ಆ ಕಥೆಯನ್ನೂ ಅದಕ್ಕೆ ಸಂಬಂಧಿಸಿದ ಇತರ ಕಥೆಗಳನ್ನೂ, ಎಷ್ಟೋ ಸಾರಿ ಕೇಳಿದವರಿಗೂ, ಬೇಜಾರಾದರೂ ಬೇಸರಪಡದೆ ಹೇಳುತ್ತಿದ್ದನು. +ನಾಯಿಯ ಮತ್ತು ಹೊಲೆಯನ ಮನೋಮನ ಕೋಶಗಳೆರಡೂ ಒಂದನ್ನೊಂದು ಆಲಿಂಗಿಸಿದ್ದುವು. +ಆದ್ದರಿಂದಲೇ ಹೊರಡುವಾಗ ಹಿಂದಕ್ಕಟ್ಟಿ ಬಂದಿದ್ದರೂ ಹುಲಿಯನು ಬಂದಾಗಿ ಗುತ್ತಿಗೆ ಸಿಟ್ಟಿಗೆ ಬದಲಾಗಿ ಸಂತೋಷವಾದದ್ದು. +ಸುಮಾರು ಅರ್ಧಗಂಟೆಯ ಮೇಲೆ ಹಳ್ಳ ತಕ್ಕಮಟ್ಟಿಗೆ ಇಳಿಯಿತು. +ಗುತ್ತಿ ಕೊಪ್ಪೆಯ ತುದಿಯನ್ನೂ ಸೊಂಟದ ಪಂಚೆಯನ್ನೂ ಕತ್ತಲೆಯಲ್ಲಿ ನಿಸ್ಸಂಕೋಚವಾಗಿ ಎತ್ತಿಕೊಂಡು ದಾಟತೊಡಗಿದನು. +ಹುಲಿಯನೂ ಹಿಂಬಾಲಿಸಿತು. +ನಡುಹಳ್ಳಕ್ಕೆ ಬಂದಾಗ, ತುದಿಬೆರಳಿನಲ್ಲಿ ನಡೆಯುವ ಸರ್ಕಸ್ಸು ಮಾಡಿದರೂ ಸಫಲವಾಗದೆ, ಗುತ್ತಿಯ ಇಷ್ಟಕ್ಕೆ ವಿರೋಧವಾಗಿ ಕೆಲವು ದೇಹಭಾಗಗಳು ತೋಯ್ದು ಹೋದುವು. +ಅವನಿಗೆ ತುಂಬಾ ಸಿಟ್ಟಾಗಿ ಅಸಹ್ಯವಾದ ರೀತಿಯಲ್ಲಿ ತೊರೆಯನ್ನು ಬಯ್ದನು. +ನಾಯಿ ಅವನಿಗಿಂತಲೂ ಬಹಳ ಮೊದಲೆ ಆಚೆಯ ದಡವನ್ನು ಸೇರಿ ಒಡೆಯನಿಗಾಗಿ ಕಾಯುತ್ತಾ ನಡುಗುತ್ತಿತ್ತು. +ಹಳ್ಳ ದಾಟಿದ ಗುತ್ತಿ ಅರೆಪಾಲಿಗೆ ಹೆಚ್ಚಾಗಿಯೆ ಒದ್ದೆಯಾಗಿದ್ದನು. +ಜೇಬಿನಲ್ಲಿದ್ದ ಎಲೆ ಅಡಕೆ ಹೊಗೆಸೊಪ್ಪು, ಹೆಗ್ಗಡೆಯವರು ಕೊಟ್ಟಿದ್ದ ಚೀಟಿ ಎಲ್ಲಾ ನೆನೆದಿದ್ದುವು. +ಆ ಕೆಸರಿನಲ್ಲಿ ಆ ಕತ್ತಲೆಯಲ್ಲಿ ಶಪಿಸುವುದೊಂದು ವಿನಾ ಮತ್ತೇನನ್ನೂ ಮಾಡಲು ತೋಚದೆ, ಮಳೆಯ ಅವ್ವನನ್ನೂ ತೊರೆಯ ಅಪ್ಪನನ್ನೂ ಹಿನಾಯವಾಗಿ ಬಯ್ಯುತ್ತಾ ಗದ್ದೆಯಂಚಿನ ಮೇಲೆ ಕಾಲೂಹೆಯಿಂದ ಮುಂದುವರಿದನು. +ಹಿಂದೆ ಕಾಣಿಸಿದ್ದ ಹತ್ತು ಮೀನು ಕಡಿಯಲು ಹೊರಟವರ ಕೈಬೆಳಕುಗಳೊಂದೂ ತೋರಲಿಲ್ಲ. +ಮೇಗರವಳ್ಳಿಯಾಚೆ ಹಳೆಮನೆಗೆ ಹೋಗಬೇಕೆಂದಿದ್ದವನು ಲಕ್ಕುಂದದ ಹಳೆಪೈಕದವರ ಮನೆಯಲ್ಲಿ ಆ ರಾತ್ರಿ ಕಳೆಯಲು ನಿಶ್ಚಯಿಸಿದನು. +“ಈ ಗದ್ದೆಕೋಗು ದಾಟಿ, ಆ ಕರಡದ ಬ್ಯಾಣ ದಾಟಿದರೆ ಸೈ. +ಸೇಸನಾಯ್ಕರ ಮನೆ ಸಿಗ್ತದೆ. +ಮೊದೂಲಷ್ಟು ಮೈ ಒಣಗಿಸಿಕೊಳ್ಬೇಕು…. +ಅನ್ನಾ ಇಲ್ದಿದ್ರೆ ಗಂಜೀನಾದ್ರೂ ಹಾಕ್ದೆ ಇರ್ತಾರೇನು? +ಹೆಗ್ಡೇರ ಮನೆ ಆಳೂ ಅಂತಾ! …. ಕಳ್ಳಿಲ್ದೆ ಇದ್ರೆ ಒಂದು ಗಲ್ಟಾ ಹೆಂಡಾನಾದ್ರೂ ಸಿಕ್ಕಬಹುದು! +ಬಾ ಹುಲಿಯ, ಬಾ, ನಿನ್ನ ಹಿಡುಕೊಳ್ಳದೆ ಇದ್ರೆ ಹೋದಲ್ಲಿ ತನಕಾ ಕೊಂಬು ಹುಯ್ಲೆ!” +ಲಕ್ಕುಂದದ ಹಳೆಪೈಕದ ಸೇಸನಾಯ್ಕನ ಮನೆಯ ಜಗಲಿಯ ತುದಿ ಕೆಸರಲಿಗೆಯ ಮೇಲೆ ಹಾಸಿದ್ದ ಕರಿಗಂಬಳಿಯ ಮೇಲೆ, ಮುಂಡಿಗೆಗೆ ಒರಗಿ ಎದುರು ಬದುರಾಗಿ ಕುಳಿತು ಸೇಸನಾಯ್ಕನೂ ಅವನ ನೆಂಟಬಾವ ಸೀತೂರು ತಿಮ್ಮನಾಯ್ಕನೂ ಗಹನ ಸಂಭಾಷಣೆಯಲ್ಲಿ ಮಗ್ನರಾಗಿದ್ದರು. +ದನಗೋಳಾಗಿ ಹೊಯ್ದುದ್ದ ಮುಂಗಾರು ಮಳೆ ಅವರ ಪ್ರಜ್ಞಾವಲಯದ ನೇಮಿಯಲ್ಲಿ ಸುಳಿದಿಣಿಕಿ ಮಾಯವಾಗಿತ್ತು. +ಅಡಕೆಯ ಸೋಗೆ ಗರಿ ಹೊದಿಸಿದ್ದ ಮಾಡಿನಿಂದ ಇರಿಚಲು ಬೀಸಿದಾಗ ಅಭ್ಯಾಸ ಬಲದಿಂದ ಸ್ವಲ್ಪ ದೂರ ಸರಿದು ಕುಳಿತಿದ್ದರೇ ವಿನಾ ಮಾತಿನ ಕಳ್ಳನ್ನು ಹೀರುತ್ತಿದ್ದ ಮನಸ್ಸಿನ ಬಾಯಿಗೆ ಒಂದಿನಿತೂ ವಿರಾಮ ಕೊಟ್ಟಿರಲಿಲ್ಲ. +ಕತ್ತಲಾದ ಮೇಲೆ ನೆರೆಮನೆಯ ಪುಟ್ಟನಾಯ್ಕನ ಅತ್ತೆ, ಕಾಡಿ, ಹಣತೆದೀಪ ತಂದಿಟ್ಟು ಹೋಗುತ್ತಿದ್ದಾಗ ಸೇಸನಾಯ್ಕನ ನೋಟ ಅಪ್ರಯತ್ನವಾಗಿ ಅತ್ತಕಡೆ ಹರಿದು “ಕಾಡೀ, ತಿಮ್ಮ ಬಾವಗೆ ಏನಾದರೂ ಕೊಡೂದಿಲ್ಲೇನೆ?” ಎಂದನು. +ತಿಮ್ಮನಾಯ್ಕನೂ ಕಾಡಿಯ ಕಡೆ ನೋಡುತ್ತಿದ್ದನು. +ಆದರೆ ಅವನ ದೃಷ್ಟಿ ಕಳವು ಮಾಲನ್ನು ಪತ್ತೆ ಮಾಡಲು ಹೊರಟಿದ್ದ ಗುಪ್ತ ಪೊಲೀಸಿನವನಂತೆ ಕಾಡಿಯ ಮೋರೆಯ ಕಡೆಗೆ ತೆರಳದೆ ಅವಳ ಹೊಟ್ಟೆಯೆಡೆ ಸಂಚರಿಸುತ್ತಿತ್ತು. +ಅದೇ ಕಾರಣವಾಗಿಯೇ ಸೀತೂರು ಸೀಮೆಯ ಹಳೆ ಪೈಕದವರ ಪ್ರತಿನಿಧಿಯೂ ಮುಖಂಡನೂ ಆಗಿದ್ದ ಅವನು ಆ ದಿನ ಲಕ್ಕುಂದಕ್ಕೆ ಬಂದಿದ್ದನು. +ಲಕ್ಕುಂದದ ಜಮೀನಿನಲ್ಲಿ ಮುಕ್ಕಾಲುಪಾಲು ಸಿಂಬಾವಿ  ಭರಮೈ ಹೆಗ್ಗಡೆಯವರಿಗೆ ಸೇರಿತ್ತು. +ಇನ್ನುಳಿದ ಕಾಲುಪಾಲು ಹಳೆಪೈಕದ ಸೇಸನಾಯ್ಕನ ಸ್ವಂತದ್ದಾಗಿತ್ತು. +ಸಾಧಾರಣವಾಗಿ ಒಕ್ಕಲಿಗ ಒಡೆಯರ ಒಕ್ಕಲುಗಳಾಗಿದ್ದುಕೊಂಡು, ಬಗನಿಯ ಮರದಿಂದ ಕಳ್ಳು ಇಳಿಸಿ ಕುಡಿದು, ಮಾರಿ, ಜೀವನ ಮಾಡುವ ಕಳೆಪೈಕದವರಿಗೆ (ಅವರಿಗೆ “ದೀವರು” ಎಂದು ಹೆಸರೂ ಉಂಟು) ಸ್ವಂತ ಜಮೀನಿರುವುದು ಬಹಳ ಅಪೂರ್ವ; +ಮಹಾ ಅನಾಚಾರವೆಂದೂ ಅನೇಕರ ಮನಸ್ಸು. +ವೇದ ಕಲಿಯುವುದು ಶೂದ್ರರಿಗೆ ಹೇಗೆ ನಿಷಿದ್ದವೋ ಹಾಗೆಯೇ ಸ್ವಂತ ಜಮೀನಿ ಮಾಡುವುದು ಹಳೆಪೈಕದವರಿಗೆ ನಿಷಿದ್ಧ ಎಂದು ಒಕ್ಕಲಿಗರಾಗಿದ್ದ ಹೆಗ್ಗಡೆ ಗೌಡ ನಾಯಕರುಗಳೆಲ್ಲ ಸೇರಿ ತೀರ್ಮಾನಮಾಡಿದ್ದರು. +ಅಷ್ಟೇ ಅಲ್ಲದೆ, ಮದುವೆ ಮೊದಲಾದ ಸಂಭ್ರಮಗಳಲ್ಲಿ ಹಳೆಪೈಕದವರು ಒಕ್ಕಲಿಗರನ್ನು ಯಾವ ವಿಧದಲ್ಲಿಯೂ ಅನುಕರಿಸಕೂಡದೆಂದೂ ಮಾಮೂಲು ಕಟ್ಟಾಗಿತ್ತು. +ದಿಬ್ಬಣದಲ್ಲಿ ಮದುವೆಯ ಗಂಡು ಕುದುರೆಯ ಮೇಲೆ ಸವಾರಿ ಮಾಡಬಾರದು; + ದಂಡಿಗೆಯ ಮೇಲೆ ಕೂತರಂತೂ ಮದುಮಕ್ಕಳಿಗೂ ದಿಬ್ಬಣದವರಿಗೂ ಉಳಿಗತಿಯಿರಲಿಲ್ಲ. +ಈ ಚರ್ಚೆ ಸರ್ಕಾರದವರೆಗೂ ಹೋಗಿ, ಅದೂ ಒಕ್ಕಲಿಗರ ಪರವಾಗಿಯೇ ತೀರ್ಮಾನ ಕೊಟ್ಟಿದ್ದರಿಂದ ಮಾಮೂಲಿಗೂ ಮಾತ್ಸಯ್ಯಕ್ಕೂ ಕಾನೂನಿನ ಮುದ್ರೆ ಬೇರೆ ಬಿದ್ದಿತ್ತು. +ಸರ್ಕಾರದ ಇತ್ಯರ್ಥಕ್ಕೆ ಕಾರಣ ನ್ಯಾಯಪಕ್ಷಪಾತವಾಗಿರಲಿಲ್ಲ; +ಬಲ ಪಕ್ಷಪಾತವಾಗಿತ್ತು. +ಬಲಿಷ್ಠರೂ ಬಹುಸಂಖ್ಯೆಯವರೂ ಆದವರ ಕಡೆ ಸರ್ಕಾರವಿದ್ದರೆ ಅದಕ್ಕೂ ಕ್ಷೇಮ; + ನ್ಯಾಯ ರಕ್ಷಣೆಯೂ ಸುಲಭಸಾಧ್ಯ. +ಅದರಲ್ಲಿಯೂ ಮೈಸೂರು ಸಂಸ್ಥಾನದ ಅಂಚಾಗಿ, ದುರ್ಗಮವಾದ ಪರ್ವತಾರಣ್ಯಗಳ ಬೀಡಾಗಿ, ಆಗತಾನೆ ನಗರ, ಕೌಲೆದುರ್ಗ ಮೊದಲಾದ ಪಾಳೆಯ ಪಟ್ಟುಗಳ ಕಿರುಕುಳದಿಂದ ಪಾರಾಗಿದ್ದ ಮಲೆನಾಡಿಗೆ ಅಲ್ಲಿದ್ದ ಬಹುಸಂಖ್ಯೆಯ ಬಲಿಷ್ಠರ ಇಚ್ಛೆಯಂತೆ ಸರ್ಕಾರದ ಕಾನೂನಾದುದರಲ್ಲಿ ಆಶ್ಚರ್ಯವೇನಿಲ್ಲ. +ಸರ್ಕಾರದಿಂದ ಕಾನೂನಾಗಿ ಬಂದ ಮಾತ್ರಕ್ಕೇ ಅನ್ಯಾಯ ನ್ಯಾಯವಾಗುತ್ತದೆಯೇ ಎಂದು ಕೆಲವು ಸ್ವತಂತ್ರದೃಷ್ಟಿಯ ಕಳೆಪೈಕದ ನಾಯಕರು ಅದಕ್ಕೆ ವ್ಯತಿರಿಕ್ತವಾಗಿ ನಡೆಯಲು ಪ್ರಯತ್ನಿಸುತ್ತಿದ್ದರು. +ಅವರ ಆ ಪ್ರಯತ್ನಕ್ಕೆ ಸರ್ಕಾರವೆಂದಿಗೂ ಅಡ್ಡಿ ಬರುತ್ತಿರಲಿಲ್ಲವೆಂದು ದೇವರಾಣೆ ಹಾಕಿ ಬೇಕಾದರೂ ಹೇಳಬಹುದು. +ಆದರೆ ಒಕ್ಕಲಿಗರು ತಮ್ಮ ಹಕ್ಕಿನ ರಕ್ಷಣೆಗಾಗಿ ಪಣತೊಟ್ಟಿದ್ದರು! +ಒಕ್ಕಲಿಗ ಜಮೀನುದಾರರ ಆಳುಗಳೂ ಒಕ್ಕಲುಗಳೂ ಆಗಿದ್ದ ಹಳೆಪೈಕದವರು ಬಹಿರಂಗವಾಗಿ ಯಾವ ತಂಟೆ ತಕರಾರುಗಳ ಗೋಜಿಗೂ ಹೋಗುತ್ತಿರಲಿಲ್ಲ. +ಆದರೆ ಸೇಸನಾಯ್ಕನಂತಹ ಸ್ವಂತ ಜಮೀನುದಾರರಿಗೆ “ಅವರಿಗಿಂತ ನಾವೇನು ಕಡಿಮೆ? +ನಮ್ಮ ಕುದುರೆ, ನಮ್ಮ ದಂಡಿಗೆ, ನಮ್ಮ ವಾದ್ಯ, ನಮ್ಮ ಬೋವಿಗಳು! +ನಮ್ಮ ದುಡ್ಡು ನಾವು ಖರ್ಚು ಮಾಡುವುದಕ್ಕೆ ಇವರದೇನು ಅಡ್ಡಿ?” ಎಂಬ ಹುಮ್ಮಸ್ಸು ಇರುತ್ತಿತ್ತು. +ಮುಖಂಡರು ಸೇರಿ ಕಳ್ಳು ಕುಡಿದಾಗಲಂತೂ ಆ ಗರ್ವ ಗುಟುರು ಹಾಕುತ್ತಿತ್ತು. +ಅದರಲ್ಲಿಯೂ ಒಕ್ಕಲಿಗರ ಮನೆಗಳಿರದಿದ್ದ ಲಕ್ಕುಂದದಂತಹ ಹಳ್ಳಿಗಳಲ್ಲಿ ಆ ಸೊಕ್ಕಿನ ಗೂಳಿ ನಿರ್ಭಯವಾಗಿ ಗುಟುರು ಹಾಕಬಹುದಾಗಿತ್ತು. +ಲಕ್ಕುಂದದಲ್ಲಿದ್ದ ಹಳೆಪೈಕದವರ ಮನೆಗಳು ಮೂರು. +ಒಂದು ಸೇಸನಾಯ್ಕನ ಮನೆ. +ಮತ್ತೊಂದು ರಂಗನ ಮನೆ. +ಇನ್ನೊಂದು ಪುಟ್ಟನ ಮನೆ. +ಅದರಲ್ಲಿ ನಿಜವಾಗಿಯೂ ಮನೆ ಎಂಬ ಹೆಸರಿಗೆ ಅಯೋಗ್ಯವಾಗಿರದಿದ್ದುದು ಸೇಸನಾಯ್ಕನ ಮನೆ ಮಾತ್ರ. +ಉಳಿದವು ಎರಡೂ ಗುಡಿಸಲು. +ಆದರೆ ಗುಡಿಸಲು, ಬಿಡಾರ ಮೊದಲಾದ ಪದಗಳನ್ನು ಹೊಲೆಯರು, ಬೇಲರು, ಮಾದಿಗರು, ಬಿಲ್ಲವರು, ಹಸಲವರು ಇತ್ಯಾದಿ ಕೀಳುಜನರ ನಿವಾಸಗಳಿಗೆ  ಉಪಯೋಗಿಸುತ್ತಿದ್ದುದರಿಂದ ತಮ್ಮ ನಿವಾಸಗಳಿಗೆ ಆ ಪದಗಳನ್ನು ಪ್ರಯೋಗಿಸುವುದು ಅವಮಾನಕರವೆಂದು ತಿಳಿದು, ಹಳೆಪೈಕದವರು ತಮ್ಮ ಜೋಪಡಿಗಳನ್ನು ಕೂಡ ‘ಮನೆ’ ಎಂದು ಕರೆದುಕೊಳ್ಳುತ್ತಿದ್ದರು. +ಇತರರನ್ನೂ ಹಾಗೆಯೇ ಕರೆಯುವಂತೆ ಒತ್ತಾಯ ಪಡಿಸುತ್ತಲೂ ಇದ್ದರು. +ಸೇಸನಾಯ್ಕನ ಮನೆ ಏಳೆಂಟು ಅಂಕಣದ್ದಾಗಿತ್ತು. +ಸೋಗೆ ಹೊದಿಸಿದ್ದನು. +ಮಣ್ಣಿನ ಗೋಡೆ ಹಾಕಿದ್ದನು. +ಮುಂಭಾಗಕ್ಕೆ ಕೆಮ್ಮಣ್ಣು ಜೇಡಿಗಳನ್ನು ಬಳಿದಿದ್ದನು. +ಸಿಂಬಾವಿ ಭರಮೈ  ಹೆಗ್ಗಡೆಯವರ ಒಕ್ಕಲುಗಳಾಗಿದ್ದ ರಂಗ, ಪುಟ್ಟ ಇವರ ಮನೆಗಳು ನಿಜವಾಗಿಯೂ ಗುಡಿಸಲುಗಳಾಗಿದ್ದುವು. +ಬಿಳಿಹುಲ್ಲು ಹೊದಿಸಿದ್ದರು. +ಅಡಕೆ ದಬ್ಬೆಯ ತಟ್ಟಿಗೋಡೆಗಳನ್ನು ಹಾಕಿದ್ದರು. +ಕೋಳಿ, ಕುರಿ, ನಾಯಿ, ದನ, ಎತ್ತು, ಸೆಗಣಿ, ಬೂದಿ, ಗಲೀಜು ಮೊದಲಾದುವುಗಳ ವಿಚಾರದಲ್ಲಿ ಆ ಮೂರು ಮನೆಗಳೂ ಒಂದನ್ನೊಂದು ಸೆಣಸುವಂತಿದ್ದುವು. +ಲಕ್ಕುಂದಕ್ಕಿಂತಲೂ ಸ್ವಲ್ಪ ಹೆಚ್ಚು ಚೊಕ್ಕಟವಾಗಿರುತ್ತಿದ್ದ ಸೀತೂರಿನಿಂದ ಬಂದಿದ್ದ ತಿಮ್ಮನಾಯ್ಕನಿಗೆ ಲಕ್ಕುಂದದ ಹಳೆಪೈಕದವರ ಮೇಲೆ ತಮ್ಮೂರಿನ ಹಳೆಪೈಕದವರಿಗಿದ್ದ ತಿರಸ್ಕಾರದಲ್ಲಿ ಮತ್ತಷ್ಟು ಶ್ರದ್ಧೆ ಹೆಚ್ಚಿತು. +ಸುವಾಸನೆಗಿಂತಲೂ ದುರ್ವಾಸನೆ ಬೇಗ ಹಬ್ಬುತ್ತದೆ; +ಬೇಗ ಮೂಗಿಗೆ ಬೀಳುತ್ತದೆ; +ಅನೇಕರಿಗೆ ಬೇಗ ಗೊತ್ತಾಗುತ್ತದೆ. +ಸತ್ಕೀರ್ತಿ ಹಬ್ಬುವುದು ನಿಧಾನ; +ದುಷ್ಕೀರ್ತಿ ಕಾಡುಕಿಚ್ಚಿನಂತೆ ಹರಡಿಕೊಳ್ಳುತ್ತದೆ. +ಪುಟ್ಟನ ಅತ್ತೆ ಕಾಡಿ ಮುಂಡೆ ಬಸುರಾಗಿದ್ದಾಳೆ ಎಂಬ ಸಿದ್ದಿ ಪಿಸುಮಾತಿನ ಕುದುರೆಯ ಮೇಲೆ ಊರೂರು ಅಲೆಯುವ ನಾಡಾಡಿಯಾಗಿತ್ತು. +ಅವಳನ್ನು ಜಾತಿಯಿಂದ ಹೊರಗೆ ಹಾಕಬೇಕೆಂಬ ಚಳವಳಿಯೆದ್ದಿತು. +ಅಥವಾ ತಪ್ಪೊಪ್ಪಿಕೊಂಡು ದಂಡಾಕೊಟ್ಟು, ಜಾತಿಯವರನ್ನೆಲ್ಲಾ ಸಂತೈಸುವ ಸಮಾರಾಧನೆ ಮಾಡಿದ್ದರೂ ಸಾಕಿತ್ತು. +ಆದರೆ ಕಾಡಿಯ ಕೈಯಲ್ಲಾಗಲಿ ಪುಟ್ಟನ ಕೈಯಲ್ಲಾಗಲಿ ಹಣವಿರಲಿಲ್ಲ. +ಒಡೆಯರಾಗಿದ್ದ ಸಿಂಬಾವಿ ಹೆಗ್ಗಡೆಯವರನ್ನು ಕೇಳುವ ಧೈರ್ಯವಿರಲಿಲ್ಲ. +ಇನ್ನು ಕಾಡಿಯ ಸ್ಥಿತಿಗೆ ಯಾರು ಕಾರಣರೊ ಅವರಿಂದ ತಪ್ಪುಗಾಣಿಕೆ ವಸೂಲು ಮಾಡಿಕೊಳ್ಳಬೇಕೆಂದು ಜಾತಿಯ ಮುಖಂಡರು ನಿರ್ಣಯಿಸಿದರು. +ಆದರೆ ಆ ಕಾರಣ ಪುರುಷನನ್ನು ಕಂಡು ಹಿಡಿಯುವುದಕ್ಕೆ ಸಾಧ್ಯವಾಗಲಿಲ್ಲ. +ಜಾತಿಯ ಮುಖಂಡರಿಗೆ ಸಾಧ್ಯವಾಗದಿದ್ದುದು ಹಾಗಿರಲಿ, ಕಾಡಿಗೂ ಅದನ್ನು ನಿರ್ಣಯಿಸುವುದು ಕಷ್ಟವಾಯಿತು. +ವರ್ಷಗಳಲ್ಲಿಯೆ ಮಾವನನ್ನೂ ಹೆಂಡತಿಯನ್ನೂ ಕಳೆದುಕೊಂಡಿದ್ದ, ತನ್ನ ಅಳಿಯ ಪುಟ್ಟನ ಹೆಸರನ್ನು ಸೂಚಿಸುವಳು. +ಬೇರೊಂದು ಸಾರಿ, ತನ್ನ  ಸ್ವಂತ ಹೆಂಡತಿಯಿದ್ದರೂ ಪ್ರಣಯ ಸಾಹಸಗಳಲ್ಲಿ ಪ್ರವೀಣನೆಂದು ಹೆಸರು ಪಡೆದಿದ್ದ ನೆರೆಮನೆಯ ರಂಗನ ಹೆಸರನ್ನು ಸೂಚಿಸುವಳು. +ಮತ್ತೊಂದು ಸಾರಿ, ಕೇಳಿದವರೆಲ್ಲ ಮೂಗು ಬೆರಳಾಗಿ ಬೆರಗಾಗುವಂತೆ, ಹಳೆಪೈಕದ ಮುಖಂಡರಲ್ಲೆಲ್ಲ ಅಗ್ರಗಣ್ಯನೂ ಸನ್ಮಾನ್ಯನೂ ಜಮೀನುದಾರನೂ ಆಗಿ, ನಾಲ್ವತ್ತನೆಯ ವಯಸ್ಸಿಗಾಗಲೆ ಮೂವರು ಹೆಂಡಿರನ್ನು ಕಳೆದುಕೊಂಡು ಇನ್ನು ಮೇಲೆ ಮದುವೆಯಾಗುವುದೇ ಇಲ್ಲವೆಂದು ಹಟಹಿಡಿದು ವ್ರತಿಯಾಗಿದ್ದ ಲಕ್ಕುಂದದ ಸೇಸನಾಯ್ಕನ ಹೆಸರನ್ನೂ ಸೂಚಿಸುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. +ಅಂತೂ ಮುಖಂಡರ ಅನ್ವೇಷಣೆಯ ನೌಕೆಗೆ ಧ್ರುವತಾರೆಯೂ ಅಗೋಚರವಾಗಿ, ಉತ್ತರಮುಖಿಯೂ ಕೆಟ್ಟು ಹೋಗಿ, ನಡುಗಡಲಿನಲ್ಲಿ ದೆಸೆಗೆಟ್ಟಂತಾಯ್ತು. +ಕಡೆಗೆ ಸೇಸನಾಯ್ಕನೇ ಮುಂದೆ ಬಂದು, ಮೇಗರವಳ್ಳಿಯ ಕಣ್ಣಾ ಪಂಡಿತರಿಂದ ಮದ್ದು ತರಿಸಿಕೊಟ್ಟು, ಹೊಟ್ಟೆಯ ಹೊರೆಯಿಳಿಸಿ ಕಾಡಿಯನ್ನು ಕಷ್ಟದಿಂದ ಪಾರುಗಾಣಿಸಿದ್ದನು. +ಆ ದಿನ ವಿಚಾರಣೆಗೆ ಬಂದಿದ್ದ ಮುಖಂಡರಿಗೆಲ್ಲಾ ಚೆನ್ನಾಗಿ ತುಂಡುಕಡುಬು ಕಳ್ಳುಗಳ ಹಬ್ಬ ಮಾಡಿಸಿ ಬಾಯಿಗೆ ಬೀಗಮುದ್ರೆ ಮಾಡಿ ಕಳುಹಿಸಿದ್ದನು. +ಅವನ ನೆಂಟಬಾವ ತಿಮ್ಮನಾಯ್ಕನನ್ನು ಮಾತ್ರ ಒತ್ತಾಯಮಾಡಿ ಉಳಿಸಿಕೊಂಡಿದ್ದನು. +ಕಾಡಿಯ ವಿಚಾರಣೆಗಾಗಿಯೇ ಆ ದಿನ ಬೆಳಿಗ್ಗೆ ಲಕ್ಕುಂದದಲ್ಲಿ ಸೇಸನಾಯ್ಕನ ಮನೆಯಲ್ಲಿ ಸೇರಿದ್ದ ಮುಖಂಡರು ಅದೊಂದನ್ನು ಬಿಟ್ಟು ಉಳಿದ ಅನೇಕ ವಿಚಾರಗಳನ್ನು ಚರ್ಚಿಸಿದ್ದರು. +ಕಾರಣವೇನೆಂದರೆ ಅನೇಕರಿಗೆ ಕಾಡಿಯ ಆ ಸ್ಥಿತಿಗೆ ಸೇಸನಾಯ್ಕನೇ ಕಾರಣನಾಗಿದ್ದಾನೆ ಎಂಬ ಒಳಗುಟ್ಟು ಹೊಳೆಯತೊಡಗಿತ್ತು. +ಜೊತೆಗೆ ಸೇಸನಾಯ್ಕನೂ ಒಳ್ಳೆಯ ಉಪಾಯದಿಂದ ಬೇರೆಯ ಪ್ರಸ್ತಾಪಗಳನ್ನೆತ್ತಿ ತನಗೆ ತೊಂದರೆಯಾಗದ ರೀತಿಯಲ್ಲಿ ವಾದಮುಖವನ್ನು ತಿರುಗಿಸಿದ್ದನು. +“ನಮ್ಮ ದಂಡಿಗೆ ಹಕ್ಕಿಗೆ, ಕುದುರೆ ಹಕ್ಕಿಗೆ, ಗೌಡ ಮಕ್ಕಳು ಅಡ್ಡ ಬರುವುದು ಯಾವ ನ್ಯಾಯ? +ನಾವೇಕೆ ಹೊಡೆದಾಟಕ್ಕೆ ಹೆದರಬೇಕು? +ನಾಳೆ ನನ್ನ ಮಗನ ಮದುವೆ ಮಾಡುವಾಗ ದಂಡಿಗೆ ಸಿಕ್ಕದೆ ಇದ್ದರೂ ಕುದುರೆ ಮೇಲಾದರೂ ಹೆಣ್ಣೂ ಗಂಡೂ ಕೂರಿಸಿ ದಿಬ್ಬಣ ತಗೊಂಡು ಹೋಗಲೇ ಬೇಕು. +ಜಾತಿಯವರು ನೀವೆಲ್ಲಾ ಸಹಾಯ ಮಾಡಿದರೆ ನಾನೊಂದು ಕೈ ನೋಡೇ ಬಿಡ್ತೀನಿ” ಎಂದು ಮೊದಲಾಗಿ ವೀರಾವೇಶದಿಂದ ಮಾತಾಡಿದ ಸೇಸನಾಯ್ಕನನ್ನು ನೋಡಿ ಎಲ್ಲರಿಗೂ ಹೆಮ್ಮೆಯಾಯಿತು. +ಒಬ್ಬೊಬ್ಬರೂ ಸಹಾಯ ಮಾಡುವುದಾಗಿ ಪ್ರೋತ್ಸಾಹವಿತ್ತರು. +ಕಳ್ಳನ್ನು ಚೆನ್ನಾಗಿ ಹೀರಿದರು; +ಹಣ್ಣು ಹಣ್ಣಾಗಿ, ಮೀಸೆ ತಿರುವಿದರು. +ಇಳಿಹಗಲಿನಲ್ಲಿ ಇತರ ಮುಖಂಡರೆಲ್ಲ ಹೊರಟುಹೋದ ಮೇಲೆ ಸೇಸನಾಯ್ಕನಿಗೆ ಮನಸ್ಸೂ ನೆಮ್ಮದಿಯಾಗಿ ತನ್ನ ನೆಂಟಬಾವ ಸೀತೂರು ತಿಮ್ಮನಾಯ್ಕನೊಡನೆ ಮಗನ ಮದುವೆ ವಿಚಾರವಾಗಿಯೂ ಕುದುರೆಯ ಮೇಲೆ ಗಂಡನ್ನು ಕೂರಿಸಿ ದಿಬ್ಬಣ ತೆಗೆದುಕೊಂಡು ಹೋಗುವಾಗ ಮಾಡಿಕೊಳ್ಳಬೇಕಾದ ಸಲಕರಣೆಗಳ ವಿಚಾರವಾಗಿಯೂ ರಸಾವೇಶದಿಂದ ಮಾತಾಡತೊಡಗಿದನು. +ಕತ್ತಲೆಯಾದುದಾಗಲಿ, ಮಳೆ ಜೋರಾಗಿ ಹೊಯ್ದುದಾಗಲಿ, ನೆರಮನೆಯ ಪುಟ್ಟ ರಂಗ ಮೊದಲಾದವರು ಬಂದು ತನ್ನ ಮಗನನ್ನು ಕರೆದುಕೊಂಡು ಹತ್ತು ಮೀನು ಕಡಿಯುವುದಕ್ಕೆ ಹೋದುದಾಗಲಿ ಅವನ ಗಮನಕ್ಕೆ ಬಂದಿರಲಿಲ್ಲ. +ಕಾಡಿ ಬಂದು ಮೊಗೆಯ ತುಂಬಾ ನೊರೆಗಳ್ಳನ್ನೂ, ಕೀಸಿ ನುಣ್ಣಗೆ ಮಾಡಿದ ಎರಡು ಗಂಡುಗರಟಗಳನ್ನೂ ತಂದು ಮುಂದಿಟ್ಟು, ನಸುನಾಚಿಗೆಯಿಂದಲೆಂಬಂತೆ, ಕುತ್ತಿಗೆಯವರೆಗೂ ಕಂಬಳಿ ಹೊದೆದು ಕುಳಿತಿದ್ದ ಇಬ್ಬರನ್ನೂ ಮಿಂಚಿನೋಡಿ ಒಳಗೆ ಹೋದಮೇಲೆ, ಇಬ್ಬರೂ ಅರ್ಥಪೂರ್ಣವಾಗಿ ಒಬ್ಬರೊಬ್ಬರನ್ನು ನೋಡಿ, ಹುಳ್ಳಗೆ ನಗುತ್ತಾ, ಕೆಲಸಕ್ಕೆ ಪ್ರಾರಂಭಿಸಿದರು. +ಸೆಸನಾಯ್ಕನು ಹುಳಿಗಂಪಿನ ನರುಗಳ್ಳನ್ನು ಕರಟ ತುಳುಕುವಷ್ಟರಮಟ್ಟಿಗೆ ಬೊಗ್ಗಿಸಿ ತುಂಬಿ “ತಗಾಳಿ!ತಗಾಳಿ!ಏನ್ ನೋಡಾದು, ಬಾವ?” ಎಂದನು. +“ಮಾರಾಯ್ರಾ, ನಂಗೇನು ಬ್ಯಾಡಾಗಿತ್ತು!” ಎಂದು ರಾಗಧ್ವನಿ ಮಾಡುತ್ತಾ ಪಿಚ್ಚನೆ ಹಲ್ಲು ಬಿಡುತ್ತಾ ರೋಮಮಯವಾಗಿದ್ದ ತನ್ನ ಬಲಗೈಯನ್ನು ಕಂಬಳಿಯಿಂದ ಹೊರಗೆ ತೆಗೆದು ನೀಡಿ ಕರಟವನ್ನೆತ್ತಿ, ನೀಳವಾಗಿ ಕೊಂಚ ಮುಂದಕ್ಕೆ ಬಾಗಿದ್ದ ಮೀಸೆಗೂದಲಿಗೆ ಮದ್ಯದಲ್ಲಿ ತೀರ್ಥಸ್ನಾನವಾಗುತ್ತಿರುವುದನ್ನು ಒಂದಿನಿತೂ ಲಕ್ಷ್ಯಕ್ಕೆ ತಾರದೆ, ಬಾಯಿಗಿಟ್ಟು, ಸೊರ್ರೆಂದು ಕುಡಿಯತೊಡಗಿದನು. +ಸೇಸನಾಯ್ಕನೂ ಕೂದಲಿಲ್ಲದೆ ನುಣುಪಾಗಿದ್ದ ತನ್ನ ಬಡಕಲು ಕೈಯಿಂದ ಕರಟವನ್ನೆತ್ತುತ್ತಾ ಹಣತೆಯ ಮಬ್ಬುಬೆಳಕಿನಲ್ಲಿ ಅಂಗಳದಲ್ಲಿ ನಿಂತಿದ್ದ ನೀರನ್ನು ನೋಡಿ ಬೆರಗು ದನಿಯಲ್ಲಿ “ಹೌದೇನ್ರೋ!ಘನಾಗೆ ಬಂದದೆ ಒಂದು ಮಳೆ!” ಎಂದನು. +ತಿಮ್ಮನಾಯ್ಕನು ಖಾಲಿಯಾದ ಗರಟವನ್ನು ಕೆಳಗಿಟ್ಟು, ತೊಯ್ದಿದ್ದ ಚೌರಿಮೀಸೆಗಳನ್ನು ನೀಪಿಕೊಳ್ಳುತ್ತಾ, ಗಂಟಲು ಕ್ಯಾಕರಿಸಿ ಅಂಗಳಕ್ಕೆ ತುಪ್ಪಿ “ಬರ್ಲಿ, ಮಾರಾಯ್ರಾ, ನಮ್ಮ ಅಗೋಡಿಗೆ ನೀರುಕಾಣದೆ ಕಂಗಾಲಾಗಿದ್ದೆ ನಾನು!” ಎಂದನು. +ಬಾವನ ಮಾತಿಗೆ ಮಾರ್ನುಡಿಯಾಗಿ ಸೇಸನಾಯ್ಕನು ಕರಟವನ್ನೆಲ್ಲಾ ಬರಿದು ಮಾಡಿ ಕೆಳಗಿಟ್ಟು, ತರಕಲಾದ ಗಡ್ಡಮೀಸೆಯ ಮೇಲ್ದುಟಿಗಳನ್ನು ಸವರುತ್ತಿದ್ದವನು “ಹಚಾ!ಹಚಾ!” ಎನ್ನುತ್ತಾ ಎದ್ದುನಿಂತು ದಾರಿಯ ಕಡೆ ಕಿರುಗಣ್ಣಾಗಿ ದಿಟ್ಟಿಸಿದನು. +ದದ್ದು ಹಿಡಿದು ಬಡಕಲಾದ ಬೂದಿಬುಕ್ಕಗಳಾಗಿದ್ದ ಅವನ ಮನೆಯ ನಾಯಿಗಳೂ ರಂಗ ಪುಟ್ಟರೆ ಮನೆಯ ನಾಯಿಗಳೂ ಒಟ್ಟಿಗೆ ಸೇರಿ ಬಾಯಿ ಬಡುಕೊಳ್ಳುವಂತೆ ಕೂಗತೊಡಗಿದ್ದುವು. +ಸೇಸನಾಯ್ಕನು ನೋಡುತ್ತಿದ್ದ ಹಾಗೆ ಕತ್ತಲೆಯ ಗರ್ಭದಿಂದ ಹೊಮ್ಮಿದ ನಾಯಿಗುತ್ತಿ ದೀಪದ ಬೆಳಕಿನ ಮಬ್ಬುವಲಯಕ್ಕೆ ಮೂಡಿಬಂದನು. +ಬಲಗಡೆಗೆ ನಸುಬಾಗಿ ತನ್ನ ದೈತ್ಯನಾಯಿಯ ಕುತ್ತಿಗೆಯನ್ನು ಬಲಗೈಯಲ್ಲಿ ತಬ್ಬಿ ಹಿಡಿದುಕೊಂದೇ ಬರುತ್ತಿದ್ದವನು ಸೇಸನಾಯ್ಕನ ಪ್ರಶ್ನೆಗೆ “ನಾನು ಕಣ್ರೋ-ಗುತ್ತಿ” ಎಂದನು. +“ಕಂಡ ಹಾಗೆ ಇದೆಯೆಲ್ಲಾ! +ನೀನು ಹೋದಲ್ಲಿ ತನಕಾ ಆ ನಾಯಿ ಯಾಕೆ ಕರಕೊಂಡು ಹೋಗ್ತೀಯೊ, ಮಾರಾಯ?” ಎಂದನು ತಿಮ್ಮನಾಯ್ಕ. +“ಏನು ಮಾಡೋದ್ರೋ? +ಹೊಡೆದಟ್ಟಿ ಬಂದೀನಿ; +ನಡೂದಾರೀಲಿ ಹಿಂದಕ್ಕೆ ಬಂದದೆ” ಎಂದು ಮಾತಾಡುತ್ತಿದ್ದಾಗಲೆ ಕೈ ಸಡಿಲವಾಗಿದ್ದುದನ್ನು ಅರಿತು ಹುಲಿಯನು ಚಂಗನೆ ಒಂದು ನೆಗತ ನೆಗದು, ಕಿವಿ ಕೆಟ್ಟು ಹೋಗುವಂತೆ ಅರಚುತ್ತಿದ್ದ ಕುನ್ನಿಗಳ ಕಡೆಗೆ ನುಗ್ಗಿತು. +ನುಗ್ಗಿತೋ ಇಲ್ಲವೋ, ಸತ್ತೆನೋ ಕೆಟ್ಟೆನೋ ಎಂದು ಆ ದದ್ದು ಹಿಡಿದ ಬಡಕಲು ಕಂತ್ರಿ ನಾಯಿಗಳು ದಿಕ್ಕಾಪಾಲಾಗಿ ಕೂಗಿಕೊಳ್ಳುತ್ತಾ ಓಡಿಹೋದುವು. +ಒಂದಂತೂ ನಿಂತಿದ್ದ ಸೇಸನಾಯ್ಕನಿಗೆ ಡಿಕ್ಕಿ ಹೊಡೆದು ನೆಲವನ್ನು ಒದ್ದೆ ಮಾಡುತ್ತಾ ಹಿತ್ತಲ ಕಡೆಗೆ ಪರಾರಿಯಾಯಿತು. +ಅದನ್ನು ನೋಡಿದ ತಿಮ್ಮನಾಯ್ಕನು “ಅಯ್ಯಯ್ಯೋ, ಇದರ ಮನೆ ಮಂಟೆನಾಗಲ್ರೊ! +ಹಚೀ!ಹಚೀ!ಹಚ್ಚಿಚ್ಚಿಚ್ಚೀ” ಎಂದು ಗದರಿಸಿದನು. +ಗುತ್ತಿ  ತನ್ನ ನಾಯಿಯನ್ನು ಗದರಿಸಿ ಕರೆದನು. +ಅದು ಅವನ ಪಕ್ಕಕ್ಕೆ ಸರಿದು ನಿಂತು, ಹೊಳೆವ ಕಣ್ಣುಗಳಿಂದ ನೋಡತೊಡಗಿತು. +“ಇದೇನೋ?ಈಟ್ಹೊತ್ತನಾಗೆ?ಈ ಮಳೇಲಿ?” +ಆಗಲೇ ಮಾಂಸದ ಪಲ್ಯದ ವಾಸನೆಯನ್ನೂ ಕಳ್ಳು ಹೆಂಡಗಳ ಹುಳಿಗಂಪನ್ನೂ ಮೂಗಾಳಿ ಹಿಡಿದು ಮನಸ್ಸಿನಲ್ಲಿಯೆ ಸಂತೋಷಪಡುತ್ತಿದ್ದ ಗುತ್ತಿ ಪೆಚ್ಚು ಪೆಚ್ಚಾಗಿ ನಗುತ್ತಾ, ನಿರ್ನಿಮಿತ್ತವಾಗಿ ತೊಡೆ ತುರಿಸಿಕೊಳ್ಳುತ್ತಾ “ಏನಿಲ್ಲ ಕಣ್ರೋ! +ಮಳೆ ಹೊಡೀತೂ ಹೊಡೀತೂ! +ಕಾದೂ ಕಾದೂ ಸಾಕಾಯ್ತು! +ನೀರು ಇಳೀಲೆ ಇಲ್ಲ”. +ಎಂದು ಮೊದಲಾಗಿ ಪ್ರಶ್ನೆಯನ್ನೂ ಒಂದಿನಿತೂ ಲೆಕ್ಕಿಸದೆ ಮಾತನಾಡಿದನು. +ಹಳೆಪೈಕದವನಿಗೆ ಹೊಲೆಯನ ಉತ್ತರದಲ್ಲಿ ಯಾವ ನ್ಯೂನತೆಯೂ ಗೋಚರವಾಗಲಿಲ್ಲ. +“ಅಂಗಳದಾಗೆ ಯಾಕೆ ನಿಂತೀಯಾ? +ಮ್ಯಾಲೆ ಬಂದು ಕೂತಗಾ” ಎಂದು ಸೇಸನಾಯ್ಕನೂ ಮುಂಡಿಗೆಗೆ ಒರಗಿ ಕೂತುಕೊಂಡನು. +ಗುತ್ತಿ ನಿಂತಲ್ಲಿಂದ ಅಲುಗಾಡದೆ ಮೊದಲಿನಂತೆಯೆ ಬೆಪ್ಪುನಗೆ ನಗುತ್ತಾ “ಇಲ್ಲ, ಅಷ್ಟೇನು ಹೊಟ್ಟೆ ಹಸಿದಿಲ್ಲ. +ಸ್ವಲೂಪ ದಾವಾಗದೆ” ಎಂದು, ತಟಸ್ಥವಾಗಿಯೆ ನಿಂತಿದ್ದ ನಾಯಿಯನ್ನು “ಸುಮ್ಮನಿರು, ಹುಲಿಯ!” ಎಂದು ಗದರಿಸಿದನು. +ನಾಯಿ ವಿಸ್ಮಯದಿಂದ ಒಡೆಯನ ಮುಖ ನೋಡಿತು. +“ಮ್ಯಾಲೆ ಬಂದು ಕೂತುಕೊಳ್ಳೋ ಅಂದ್ರೆ ನೀರಿನಾಗೆ ನಿಂತ್ಕೊಂಡು ಪರ್ಸಂಗ ಮಾಡ್ತಾನೆ! +ಒಳ್ಳೆ ಮಾರಾಯ!” ಎಂದು ತಿಮ್ಮನಾಯ್ಕ ಗಟ್ಟಿಯಾಗಿ ಹೇಳಿದ ಮೇಲೆಯೆ ಗುತ್ತಿ ಕಿರುಜಗಲಿಯ ಮೂಲೆಯಲ್ಲಿ, ಮುರುವಿನ ಒಲೆಯ ಬೆಂಕಿಗೆ ಸ್ವಲ್ಪ ಹತ್ತಿರವಾಗಿ, ಕೊಪ್ಪೆಗಂಬಳಿಯನ್ನು ಕೊಡವಿ ಗಳುವಿನ ಮೇಲೆ ಹರಡಿ, ಬೆನ್ನು ಕಾಯಿಸುತ್ತಾ ತುರಿಸಿಕೊಳ್ಳುತ್ತಾ ಮಾತಾಡುತ್ತಾ ಕುಳಿತುಕೊಂಡನು. +ಹುಲಿಯನೂ ಒಡೆಯನಿಗೆ ಸಮೀಪದಲ್ಲಿ ಬೆಚ್ಚಗೆ ಬೆಂಕಿ ಕಾಯಿಸುತ್ತಾ, ಅರೆಗಣ್ಣು ಮಾಡಿಕೊಂಡು ನೋಡುತ್ತಾ, ಹೊಟ್ಟೆಯಡಿಯಾಗಿ, ಮುನ್ನೀಡಿದ ಮುಂಗಾಲುಗಳ ಮೇಲೆ ಮೋರೆಯಿಟ್ಟು ಮಲಗಿಕೊಂಡಿತು. +ಗುತ್ತಿ ಬಹಳ ಹೊತ್ತು ಬೆನ್ನು ಕಾಯಿಸಿರಲಿಲ್ಲ. +ಪಕ್ಕದಲ್ಲಿ ಮಲಗಿದ್ದ ಹುಲಿಯ ಸೀನತೊಡಗಿತು. +ಸೀನು ಒಂದರಮೇಲೊಂದು ಬರತೊಡಗಿ ಮಲಗಿದ್ದ ನಾಯಿ ಎದ್ದು ನಿಂತಿತು. +ಮುಂದಿನ ಕಾಲುಗಳಿಂದ ಮೂಗಿನೆಡೆಯ ಮೋರೆಯನ್ನು ಕೆರೆದುಕೊಳ್ಳುತ್ತಾ ಮತ್ತೆ ಮತ್ತೆ ಸೀನುತ್ತಾ ಕುಣಿದಾಡತೊಡಗಿತು. +ಹುಲಿಯ ಮೊದಲು ಸೀನಿದಾಗ “ಹಚಾ ನಿನ್ನ ಹುಲಿ ಹಿಡಿಯಾ!” ಎಂದು  ಉದಾಸೀನತೆಯಿಂದ ಗದರಿಸಿದ್ದ ಗುತ್ತಿ ನಾಯಿ ಕುಣಿದಾಡತೊಡಗಲು ಸ್ವಲ್ಪ ಗಾಬರಿಗೊಂಡವನಾಗಿ ಅದರ ಕಡೆಗೆ ತಿರುಗಿ “ಇದ್ಕೆನಾಗಿದೆರೋ ಹಿಂಗೆ ಕುಣಿಯಾಕೆ?” ಎಂದು ಅದನ್ನು ಹತ್ತಿರಕ್ಕೆ ಕರೆಯುತ್ತಾ ಕೈಚಾಚಿದನು. +“ಬಾ, ಇಲ್ಲಿ!ಬಾ ಇಲ್ಲಿ!”ನಾಯಿ ಬರಲಿಲ್ಲ. +ಮತ್ತೂ ಜೋರಾಗಿ ಮೂಗು ಕೆರೆದುಕೊಂಡು ಸೀನಿ ಕುಣಿದಾಡಿಕೊಳ್ಳುತ್ತಿತ್ತು. +“ಏನೋ?ದಾರೀಲಿ ಬಳ್ಳಿಗಿಳ್ಳಿ ಮುಟ್ಟಿತೇನೋ?” ಎಂದು ಗುತ್ತಿಯನ್ನು ಕುರಿತು ಪ್ರಶ್ನಿಸಿದ ತಿಮ್ಮಾನಾಯ್ಕನಿಗೆ ಸೇಸನಾಯ್ಕನು,“ನಿಮಗೆ ಕಸಬಿಲ್ಲ, ತೆಗೀರಿ! +ಬಳ್ಳಿ ಮುಟ್ಟಿದರೆ ಇಲ್ಲಿ ತನಕಾ ಬರಬೇಕಾ ಅದು?” ಎಂದು ಹಣತೆ ಎತ್ತಿಕೊಂಡ ಮುರುವಿನ ಒಲೆಯ ಬಳಿಗೆ ಹೋದನು. +ತಿಮ್ಮನಾಯ್ಕನು ತಾನು ಕೂತಲ್ಲಿಂದಲೆ ಪ್ರಶ್ನೆಗಳನ್ನು ಕೇಳುತ್ತಾ, ಸಲಹೆಗಳನ್ನು ಕೊಡುತ್ತಾ, ನಡುನಡುವೆ ತನ್ನ ಅಪ್ಪಣೆಯಂತೆ ನಡೆಯದಿದ್ದಾಗ ಭರ್ತ್ಸನೆ ಮಾಡುತ್ತಾ, ಎಲೆಯಡಿಕೆ ಹಾಕಿಕೊಳ್ಳುತ್ತಾ ವ್ಯವಹಾರ ಮಾಡುತ್ತಿದ್ದನು. +ಸೇಸನಾಯ್ಕನು ದೀಪ ತರುವಷ್ಟರಲ್ಲಿಯೆ ಗುತ್ತಿ ನಾಯಿಯ ಒದ್ದಾಟಕ್ಕೆ ಕಾರಣವನ್ನು ಅಂದಾಜಿನಿಂದಲೆ ಪತ್ತೆ ಹಚ್ಚಿದ್ದನು. +ದೀಪ ತಂದ ಸೇಸನಾಯ್ಕನನ್ನು ಉದ್ದೇಶಿಸಿ, ಅವನ ಕಡೆಗೆ ತಿರುಗದೆ, ತನ್ನ ಕೆಲಸದಲ್ಲಿಯೆ ಮಗ್ನನಾಗಿ “ಹಡಬೇಗೆ ಹುಟ್ಟಿದ್ದಕ್ಕೆ ಮೂಗಿನ ಸೊಳ್ಳೆ ಒಳೂಗೆ ಕಚ್ಚಿಬಿಟ್ಟಾದೆ ಕಣ್ರೋ ಇಂಬಳಾ!ಹಛಾ! +ನಿನ್ನ ಕುರ್ಕ ಹೊತ್ತುಕೊಂಡು ಹೋಗಾ!” ಎಂದು ಒದ್ದಾಡುತ್ತಿದ್ದ ನಾಯಿಯನ್ನು ಗದರಿಸಿ ಗುದ್ದಿದನು. +ಸೇಸನಾಯ್ಕನು ಗುತ್ತಿ ಹಿಡಿದುಕೊಂಡಿದ್ದ ನಾಯಿಯ ಮೋರೆಯ ಹತ್ತಿರಕ್ಕೆ ದೀಪ ಹಿಡಿದು “ಅಯ್ಯೋ. . ಅಯ್ಯೋ. . ಎಷ್ಟು ದೊಡ್ಡ ಇಂಬಳಾನೊ? +ನೆತ್ತರಾ ಕುಡ್ದು ಹಣ್ಣಾಗದಲ್ಲೋ! +ಎಳದ್ದು ತೆಗೆಯೋ! ಎಂದನು. + “ತೆಗೆಯಾಕೆ ಅದು ಸಿಗಬೇಕಲ್ಲಾ ಕೈಗೆ? +ಬೆಳ್ಳು ಹಾಕಾದೇ ತಡಾ ಒಳಗೆ ಹೋತದೆ!” ಎಂದು ಮತ್ತೆ ಪ್ರಯತ್ನಿಸುತ್ತಿದ್ದಾಗಲೆ ನಾಯಿ ಒದ್ದಾಡಿ ಕೊಂಡುದರಿಂದ ಆ ಕರೀ ಕೆಂಬಣ್ಣದ ಲೋಳಿಲೋಳಿಯಾದ ಇಂಬಳ ನುಣುಚಿಕೊಂಡು ಮತ್ತೆ ಮೂಗಿನೊಳಗೆ ಮಾಯವಾಯಿತು. +“ಕಾಲಾಗೆ ಒತ್ತಿ ಹಿಡುಕೊಳ್ಳೊ” ಎಂದನು ಸೇಸನಾಯ್ಕ. +ಗುತ್ತಿ ಎದ್ದುನಿಂತು, ಕೆಸರು ಹಿಡಿದು ಇನ್ನೂ ಒದ್ದೆಯೊದ್ದೆಯಾಗಿದ್ದ ಆ ದೊಡ್ಡ ನಾಯಿಯ ಮೇಲೆ ಬಲಕ್ಕೊಂದು ಎಡಕ್ಕೊಂದು ಕಾಲು ಹಾಕಿ, ತೊಡೆಯ ಸಂದಿಯಲ್ಲಿ ಒತ್ತಿ ಹಿಡಿದುಕೊಂಡು, ಇಂಬಳ ತೆಗೆಯಲು ಪ್ರಯತ್ನಿಸಿದನು. +ನಾಯಿ ಅವನನ್ನು ಹೊತ್ತುಕೊಂಡು ಚಲಿಸಲು ಪ್ರಯತ್ನಿಸಿದುದರಿಂದ ಹತಾಶನಾದ ಗುತ್ತಿ “ಏನಾದರೂ ಸಾಯಿ!” ಎಂದು ಶಪಿಸುತ್ತಾ ದೂರ ನಿಂತನು. +“ನೆತ್ತರಾ ಕುಡಿದ ಮೇಲೆ ಅದ್ಹಾಂಗೆ ಬಿದ್ದು ಹೋಗ್ತದೋ” ಎಂದಿತು, ದೂರದಲ್ಲಿ ಕುಳಿತು ನೋಡಿ ನಗುತ್ತಿದ್ದ ತಿಮ್ಮನಾಯ್ಕನ ಸವಾರಿ. +ಪ್ರತಿಭೆ ತಟ್ಕಕನೆ ಮಿಂಚಿದವನಂತೆ ಸೇಸನಾಯ್ಕನು “ಅಲ್ಲಿ ಹೋಗೋ ಸೀತೂರು ಬಾವನ ಹತ್ತಿರ ಒಂದೀಟು ಹೊಗೆಸೊಪ್ಪು ಈಸಿಕೊಂಡು ಬಾರೋ. +ನಾ ಮಾಡ್ತೀನಿ ಮದ್ದ” ಎಂದನು. +“ಹೌದು ಕಣ್ರೋ! +ಹಾಂಗಂತಾ ಉಪಾಯ ಸುಲೂಬದಾಗದೆ” ಎಂದು ಗುತ್ತಿ ಎಲೆಯಡಿಕೆ ಹಾಕುತ್ತಿದ್ದ ತಿಮ್ಮನಾಯ್ಕನಿಂದ ಹೊಗೆಸೊಪ್ಪಿನ ಚೂರೊಂದನ್ನು ತೆಗೆದುಕೊಂಡು ಬಂದು, ಅಂಗೈ ಮೇಲೆ ಮಡ್ಡೀ ನಶ್ಯ  ತಿಕ್ಕುವಂತೆ ತೀಡಿ, ಹುಡಿ ಹುಡಿ ಮಾಡಿ, ನಾಯಿಯ ಸೊಳ್ಳೆಗೆ ಪುಸುಕ್ಕನೆ ಹಾಕಿದನು. +ಹಾಕಿದನೊ ಇಲ್ಲವೊ, ಹುಲಿಯ ಹಾರಿ ಹಾರಿ ಕುಣಿದು ಮನೆ ಮರುದನಿ ಗುಡುವಂತೆ ಸೀನುತ್ತಾ ಮೂಲೆಯಿಂದ ಮೂಲೆಗೆ ಓಡತೊಡಗಿತು. +ಮೂವರೂ ಗಟ್ಟಿಯಾಗಿ ನಗತೊಡಗಿದರು. +ಇತರ ನಾಯಿಗಳೂ ಬೆಚ್ಚಿ ಕೂಗತೊಡಗಿದುವು. +ಪುಟ್ಟನ ಅತ್ತೆ ಕಾಡಿ, ರಂಗನ ತಾಯಿ ಮತ್ತು ರಂಗನ ಹೆಂಡತಿ ಚೌಡಿ ಎಲ್ಲರೂ ಅಲ್ಲಿಗೆ ಬಂದು ಇಣಿಕಿ ನೋಡಿ ಹೋದರು. +ನಾಯಿಯ ಮೂಗಿನಿಂದ ಇಂಬಳವೇನೊ ನೆಲಕ್ಕೆ ಬಿತ್ತು. +ಜೊತೆಗೆ ನೆತ್ತರು ಜೊಲ್ಲು ಸಿಂಬಳಗಳಿಂದಲೂ ನೆಲ ಗಲೀಜಾಯಿತು. +“ಇಂಬಳಾನ ಹಾಂಗೇ ಬಿಡಬಾರದ್ರೋ, ಸುಟ್ಟು ಹಾಕ್ಬೇಕು” ಎಂದು ತಿಮ್ಮನಾಯ್ಕನು ಸಲಹೆ ಕೂಗಿ ಹೇಳಿದಂತೆ ದೀಪದ ಬೆಳಕನ್ನೊಡ್ಡಿಯೊಡ್ಡಿ ಹುಡುಕತೊಡಗಿದರು. +ಕಡೆಗೂ ಆ ಇಂಬಳ ಸಿಕ್ಕಿತು. +ಗುತ್ತಿ ಅದನ್ನು ಮುರುವಿನ ಒಲೆಯ ಕೆಂಡಕ್ಕೆ ಹಾಕುತ್ತಿದ್ದಾಗಲೆ ಸೇಸನಾಯ್ಕನು ಅವನ ಹಿಮ್ಮಡಿಯನ್ನು ನೋಡಿ “ಅಯ್ಯೋ! +ನಿನ್ನ ಮನೆಹಾಳಾಯ್ತಲ್ಲೊ!” ಎಂದನು. +“ಏನಾಯ್ತಿರೋ?” +“ಏನಾಯ್ತೆ ಸೈ! +ನೀನು ಬಿಡೂ ನಿನ್ನ ನಾಯಿಗಿಂತ ದೊಡ್ಡ ಕತ್ತೆ! +ಅಯ್ಯೊ!ಅಯ್ಯೊ! +ಇಲ್ಲಿ ನೋಡೋ ಇಲ್ಲಿ! +ಇಲ್ಲೀ!” ಎಂದು ಹಿಮ್ಮಡಿಯ ಬುಡಕ್ಕೆ ದೀಪ ಹಿಡಿದನು. +ಗುತ್ತಿ ನೋಡುತ್ತಾನೆ, ಇಂಬಳಗಳ ಪಿಂಡಿ! +ಮೂರು ನಾಲ್ಕು ಇಂಬಳಗಳು ಸಿಡಿದೊಡೆಯುವಷ್ಟರ ಮಟ್ಟಿಗೆ ರಕ್ತ ಕುಡಿದು ಕೆಂಪೇರಿ ಕಚ್ಚಿಕೊಂಡು ಬಿದ್ದಿವೆ! +ಒಂದು ಕಡೆ ನೆತ್ತರು ಕುಡಿದು ಇಂಬಳ ತನಗೆ ತಾನೆ ಬಿದ್ದುಹೋದ ತಾವಿನಿಂದ ರಕ್ತ ಹರಿಯುತ್ತಿದೆ. +ಮತ್ತೂ ನೋಡುತ್ತಾನೆ; ಒಂದೆಡೆಯಲ್ಲ; ಎರಡೆಡೆಯಲ್ಲ; ಹತ್ತಾರು ಕಡೆ. +ಅದೂ ಎಂತೆಂತಹ ಸ್ಥಾನಗಳಲ್ಲಿ! +ಮರ್ಮ, ಗೋಪ್ಯ ಒಂದನ್ನೂ ಲೆಕ್ಕಿಸದೆ! +“ನಿನ್ನ ಮನೆ ಮಂಟೇನಾಗಲೋ! +ದೀಪ ಇಲ್ಲೇ ಇಟ್ಟು ಹೋಗ್ತೀನಿ, ಬಟ್ಟೆ ಗಿಟ್ಟೇ ಬಿಚ್ಚಿ ಸರಿಯಾಗಿ ನೋಡ್ಕೋ!” ಎಂದು ವ್ಯಂಗ್ಯವಾಗಿ ನಗುತ್ತಾ ಸೇಸನಾಯ್ಕನು “ಇನ್ನೊಂದು ಗಂಟೇನೆ ಬೇಕು ಅಂತ ಕಾಣ್ತದೆ ಎಲ್ಲಾ ತೆಗೆದು ಪೂರೈಸಾಕೆ!ಹ್ಹ ಹ್ಹ! +ಹೊಲೆ ಮುಂಡೇಗಂಡ!” ಎಂದು ಕಂಬಳಿ ಹೊದೆದು ಕುಳಿತನು. +ಗುತ್ತಿ ತನ್ನ ದೇಹದ  ನಾನಾ ಸ್ಥಾನಗಳಿಂದಲೂ ನೆತ್ತರು ಕುಡಿದು ಕೆಂಪಾಗಿದ್ದ ಇಂಬಳಗಳನ್ನು ಹುಡುಕಿ ತೆಗೆದು ಮುರುವಿನೊಲೆಯ ಕೆಂಡದ ರಾಶಿಯ ಮೇಲೆ ಹಾಕತೊಡಗಿದನು. +ಅವು ಚಟ್ಟಪಟ್ಟೆಂದು ಸೀದು, ಹೊಗೆದೋರಿ, ಸಿನಗು ವಾಸನೆ ಹಬ್ಬಿತು. +ಅವನು ಕೆಲಸವನ್ನೆಲ್ಲಾ ಪೂರೈಸಿ ಜಗಲಿಯ ಕಡೆಗೆ ಗಮನವಿಟ್ಟಾಗ ಸೇಸನಾಯ್ಕ ತಿಮ್ಮನಾಯ್ಕರಿಬ್ಬರೂ ಮಾಯವಾಗಿದ್ದರು. +ಮೂಗನ್ನು ಸೊಗಸುಗೊಳಿಸಿ ಸೊಂಪಾಗಿ ತೀಡುತ್ತಿದ್ದ ತುಂಡು ಕಡುಬು ಕಳ್ಳು ಹೆಂಡಗಳ ಗುಂಪುಗಂಪಿನಿಂದ ಅವರು ಊಟಕ್ಕೆ ಹೋಗಿದ್ದಾರೆ ಎಂಬುದನ್ನು ಅರಿತು, ಹಣತೆಯ ದೀಪವನ್ನು ತಾನೆ ತೆಗೆದುಕೊಂಡು ಹೋಗಿ ಅಂಗಳದಲ್ಲಿ ನಿಕ್ಕುಳಿಸಿ ನಿಂತು, ತೋಳು ನೀಡಿ, ಜಗಲಿಯಂಚಿನ ಕೆಸರುಹಲಗೆಯ ಮೇಲೆ ಇಟ್ಟು, ಹಿಂತಿದುಗಿ ಬಂದು ಬೆಂಕಿಯ ಕಾಲಿನಲ್ಲಿ ಬೆನ್ನು ಕಾಯಿಸುತ್ತಾ ಎಲೆಯಡಿಕೆ ಹಾಕಿಕೊಳ್ಳುತ್ತಾ ಕುಳಿತನು. +ಬಹಳ ಹೊತ್ತಾದ ಮೇಲೆ ತೇಗುಗಳ ಸದ್ದು ಕೇಳಿಬಂತು. +ಅದನ್ನು ಹಿಂಬಾಲಿಸಿ, ಬಹಳ ಹುಮ್ಮಸ್ಸಿನಿಂದಲೆಂಬಂತೆ ಮಾತನಾಡುತ್ತಾ ನಾಯ್ಕರಿಬ್ಬರೂ ಜಗಲಿಗೆ ಬಂದರು. +“ನಾಯಿಗುತ್ತೀ” ಸೇಸನಾಯ್ಕ ಕರೆದನು. +“ಹ್ಞಾ!” ಗುತ್ತಿ ನಿಡುವಾಗಿ ಓಕೊಂಡನು. +“ಎಲ್ಲಾ ಪೂರೈಸ್ತೇನೋ?”ಗುತ್ತಿ ಉತ್ತರವಾಗಿ ನಕ್ಕನು. +“ಅಲ್ಲಾ ಇನ್ನೂ ಬಾಕಿಯಿದೆಯೊ?” ಎಂದು ತಿಮ್ಮನಾಯ್ಕ ನಗುತ್ತಾ ಕೇಳಿದನು. +“ಇಲ್ಲಾ ಏನೂ ಬಾಕಿಯಿಲ್ಲ!” +“ಹಿತ್ತಲ ಕಡೆಗೆ ಹೋಗೋ, ಅನ್ನ ಹಾಕಿ ಕೊಡ್ತಾರೆ” ಎಂದ ಸೇಸನಾಯ್ಕ. +“ತೆಣೇ ಮ್ಯಾಲೆ ಹೋಗುವಾಗ ಜಾರಿಗೀರಿ ಬಿದ್ದೀಯ?” ಎಂದು ಮತ್ತೆ ಎಚ್ಚರಿಕೆ ಹೇಳಿದನು, ಮಳೆ ಹೊಯ್ದಿದ್ದು ನೆನಪಾಗಿ. +ಆದರೆ ಅದನ್ನು ಕೇಳಲು ಗುತ್ತಿ ಅಲ್ಲಿರಲಿಲ್ಲ. +ಅವನಾಗಲೆ ಹಿತ್ತಲ ಕಡೆಗೆ ಹಾಕಿದ್ದನು. +ದನದ ಹಟ್ಟಿಯ, ಕೋಳಿಯೊಡ್ಡಿಯ ಮತ್ತು  ಕುರಿಯೊಡ್ಡಿಯ ನಾತವಾವುದೂ  ಹೊಲೆಯನ ಮೂಗಿಗೆ ಅರಿವಾಗಲಿಲ್ಲ. +ಹಣತೆಯ ಸೊಡರಿನ ಮಬ್ಬು ಬೆಳಕಿನಲ್ಲಿ, ಇರಿಚಲು ಬೀಸಿ ನಸುವೊದ್ದೆಯಾದಂತಿದ್ದ. +ಕರಿಬೆರಸಿ ಸಗಣಿ ಬಳಿದು ಕರ್ರಗಿದ್ದ ನೆಲದ ಮೇಲೆ ಕೂತು, ತಾನು ಬಂದಿದ್ದೇನೆ ಎಂಬುದನ್ನು ಸೂಚಿಸುವ ಸಲುವಾಗಿ, ಕೃತಕವಾಗಿ, ಗಟ್ಟಿಯಾಗಿ ಕೆಮ್ಮಿ, ಗಂಟಲು ಸರಿಮಾಡಿಕೊಂಡು, ತನಗೆ ಒಂದು ಮಾರು ದೂರದಲ್ಲಿ ಕುಳಿತು, ತನ್ನ ಕಡೆಗೇ ನೋಡುತ್ತಿದ್ದ ಹುಲಿಯನ ಹೆಗ್ಗಣ್ಣುಗಳನ್ನು ನೋಡತೊಡಗಿದನು. +ಐದು ನಿಮಿಷ ಕಳೆದಿರಲಿಲ್ಲ. +ಕಾಡಿ ಮೊರವೊಂದನ್ನು ಎರಡು ಕೈಯಲ್ಲಿಯೂ ಎತ್ತಿಕೊಂಡು ಬಂದಳು. +ಬಾಳೆ ಎಲೆಯ ಮೇಲೆ ಹಾಕಿಟ್ಟಿದ್ದ ಎಡೆಯನ್ನು ಮೊರದಿಂದ ಜಾರಿಸಿ, ಗುತ್ತಿಯ ಮುಂದೆ ನೆಲದ ಮೇಲಿಡುತ್ತಲೇ ಮಾತಾಡತೊಡಗಿದಳು. +ದನಿ ಪಿಸು ಮಾತಾಗಿರದಿದ್ದರೂ ಗಟ್ಟಿಯಾಗಿರಲಿಲ್ಲ. +“ಜಟ್ಟಮ್ಮ ಹ್ಯಾಂಗಿದಾರೋ, ಗುತ್ತಿ?” +“ಹ್ಯಾಂಗಿರಾದೇನೂ?ಹಾಂಗಿದಾರೆ!” ಎಂದ ಗುತ್ತಿಯ ಕಣ್ಣು ಬಾಳೆಯೆಲೆಯನ್ನು ಬಕಾಸುರನಂತೆ ನೋಡುತ್ತಿತ್ತು. +ಮೂಗಿನ ಸೊಳ್ಳೆಗಳು ಅರಳಿ ಅರಳಿ ಗಾಳಿ ಹಿಡಿದು ಸೊಗಸುತ್ತಿದ್ದವು. +ತುಂಡೂ (ಮಾಂಸದ ಪಲ್ಯ) ಕಡುಬೂ ಕಾಡಿಯ ಕಣ್ಣಿಗೆ ಯಥೇಚ್ಛವಾಗಿ ಕಾಣುತ್ತಿದ್ದರೂ ಗುತ್ತಿಗೆ ಬಹಳ ಸ್ವಲ್ಪವಿದ್ದಂತೆ ಭಾಸವಾಗಿ ಅವನಿಗೆ ಸ್ವಲ್ಪ ಅಸಮಾಧಾನವಾಗಿತ್ತು. +“ಅಲ್ಲಾ, ಅವರಿಗೆ ಯಾವಾಗಲೂ ಏನೋ ಜಡಾ ಅಂತಾ ಹೇಳ್ತಿದ್ರು, ಹೌದೇನೂ ಅಂತೆ ಕೇಳ್ದೆ.” ಕಾಡಿ ಎಡೆತಂದಿದ್ದ ಮೊರವನ್ನು ಬಲಗೈಯಲ್ಲಿ ಹಿಡಿದು ನಿಂತಿದ್ದಳು. +“ಜಡಾನೂ ಇಲ್ಲ ಗಿಡಾನೂ ಇಲ್ಲ. +ತುಂಡು ದೊಣ್ಣೆ ಇದ್ದ್ಹಾಂಗ ಇದಾರೆ” ಎಂದ ಗುತ್ತಿ ಮೊಗವೆತ್ತಿ ನೋಡದೆ, ಸಿಟ್ಟಿನಿಂದ ಯಾರನ್ನೊ ಕತ್ತು ನುಲಿಯುವಂತೆ ಕಡುಬು ನುರಿಯತೊಡಗಿದನು. +“ಗಸಿ ಸಾಲದು ಅಂತ ಕಾಣ್ತದೊ, ತಡಿ, ಬಂದೆ” ಎನ್ನುತ್ತಾ ಕಾಡಿ ಒಳಗೆ ಹೋದಳು. +ಅವಳಿಗೂ ಗುತ್ತಿಯ ಅತೃಪ್ತಿ ಅವನ ಧ್ವನಿಯಿಂದ ಗೊತ್ತಾಗಿತ್ತು. +ಒಳಗೆ ಹೋದವಳು ಮರದ ಕೈಬಟ್ಟಲಲ್ಲಿ ರಾಶಿ ಕಡುಬನ್ನೂ ದೊಡ್ಡದೊಂದು ಮಣ್ಣಿನ ಗುಂಡಾಲದಲ್ಲಿ ತುಂಬಿ ತುಳುಕುವಷ್ಟಿದ್ದ ಮಾಂಸದ ಪಲ್ಯವನ್ನೂ ತಂದಳು. +ನೋಡಿದ ಗುತ್ತಿ ಹಲ್ಲುಬಿಟ್ಟು, ಮುಖ ಅಗಲಿಸಿ “ಒಂದು ಚೂರು ಗಸಿ ಸಾಕ್ರೋ; ಹಮಾ ಬ್ಯಾಡ” ಎಂದನು. +ಕಾಡಿ ತಂದದ್ದನ್ನೆಲ್ಲಾ ಇಕ್ಕಿದಳು. +“ಸಾಕ್ರಾ!ಸಾಕ್ರಾ! +ನೆಲಕ್ಕೆ ಬೀಳ್ತದೆ! +ಹಾಳು ಬಳ್ಳೆ!” ಎಂದು ಗುತ್ತಿ ಗಸಿಯನ್ನು ತಡೆಗಟ್ಟಲು ಎಡಗೈಯ ಸಹಾಯವನ್ನೂ ನಿರ್ವಾಹವಿಲ್ಲದೆ ತೆಗೆದುಕೊಳ್ಳುತ್ತಾ “ಈವತ್ತೇನ್ರೋ ಹೆಚ್ಚುಗಟ್ಲೆ?” ಎಂದು ಕೇಳಿದನು. +“ನೆಂಟರು ಬಂದಿದ್ರೊ!” ಎಂದು ಉದಾಸೀನತೆಯನ್ನು ನಟಿಸಿ ಉತ್ತರವಿತ್ತ ಕಾಡಿ ಬೇಗ ಬೇಗನೆ ಎಂದಳು, “ನಿಮ್ಮ ಹೆಗ್ಗಡೇರಿಗೆ ಮತ್ತೊಂದು ಮದುವೆಯಂತೆ ಹೌದೇನೊ?” +“ನಂಗೇನ್ರೋ ಗೊತ್ತು?” ಎನ್ನುತ್ತಾ ಗುತ್ತಿ ಮಾಂಸದ ಗಡಿಯಲ್ಲಿ ಒದ್ದೆಯಾಗಿದ್ದ ನುರಿದ ಕಡುಬಿನ ದೊಡ್ಡ ಮುದ್ದೆಯೊಂದನ್ನು ತೆಗೆದು, ಬಾಯನ್ನು ಸಾಧ್ಯವಾದಷ್ಟೂ ತೆರೆದು, ಒಳಗೆ ನುಗ್ಗಿಸಿದನು. +“ನನ್ನ ಹತ್ರ ಸುಳ್ಳು ಹೇಳ್ತಿಯಲ್ಲಾ! +ಸುಳ್ಳೋ ಬದ್ದೋ?ಹೇಳು!”ಗುತ್ತಿ ಉತ್ತರವಾಗಿ ತಲೆಯಲ್ಲಾಡಿಸುತ್ತಾ, ಕೆನ್ನೆಗಳನ್ನುಬ್ಬಿಸಿ ಮೀಸೆ ಮೇಲಕ್ಕೂ ಕೆಳಕ್ಕೂ ಸರ್ಕಸ್ಸು ಮಾಡುವಂತೆ ಮುಕ್ಕುತ್ತಿದ್ದುದನ್ನು ಕಂಡು “ಪೂರ ಹುಡಿಯಾಯ್ತೇನೊ? +ಸ್ವಲ್ಪ ಗಸಿ ಹಾಕ್ತೀನಿ. +ಕಲಸಿಕೊ” ಎಂದು ಕಾಡಿ ಗಸಿ ಹನಿಸಿದಳು. +ಹಲೆಯನೂ ಬೇಡ ಎಂದು ಸನ್ನೆ ಮಾಡುತ್ತಲೇ ಕಲಸಿಕೊಳ್ಳತೊಡಗಿದನು. +ಹಸಿದಿದ್ದ ಹುಲಿಯನೂ ಬಾಲವಲ್ಲಾಡಿಸುತ್ತಾ ಒಮ್ಮೆ ಕೂರುತ್ತಾ, ಒಮ್ಮೆ ನಿಲ್ಲುತ್ತಾ, ಒಮ್ಮೆ ಒಡೆಯನ ಕಡೆಗೂ, ಒಮ್ಮೆ ಕಾಡಿಯ ಕಡೆಗೂ ಕಣ್ಣು ಕಣ್ಣು ಬಿಡುತ್ತಾ ಅಸ್ಥಿರವಾಗಿದ್ದುದನ್ನು ಗಮನಿಸಿ ಗುತ್ತಿ “ಹಛೀ ನಿನ್ನ ಹೊಟ್ಟೆ ಕಡಿಯಾ! +ಏನು ಬೇಗ್ತದೋ ಹಡಬೇಗ್ಹುಟ್ಟಿದ್ದು!” ಎಂದು ಹೆದರಿಸಿದನು. +ನಾಯಿ ಸುಮ್ಮನೆ ಕುಳಿತು ಒಡೆಯನಿಗಿಂತಲೂ ಹೆಚ್ಚು ಸಂಯಮಿಯಾಯಿತು. +ಕಾಡಿಯ ಔದಾರ್ಯಕ್ಕೆ ಗುತ್ತಿಯ ಮನಸ್ಸು ಸಮಾಧಾನವಾಗಿತ್ತು. +ತೃಪ್ತಿಸೂಚಕವಾದ ಧ್ವನಿಯಿಂದ “ನಿಮಗೆ ಹ್ಯಾಂಗೆ ಗೊತ್ತಾಯ್ತೂ ಆ ಇಚಾರ?” ಎಂದು, ಮಾಂಸವನ್ನೆಲ್ಲ ಸಿಗಿದು ತಿಂದು ಉಳಿದಿದ್ದ ಎಲುಬಿನ ತುಂಡೊಂದನ್ನು ನಾಯಿಯ ಕಡೆಗೆ ಎಸೆದನು. +ಹುಲಿಯನು ಹಾರಿ ಅದನ್ನು ತುಡುಕಿ ಹಿಡಿದು ಕಟಕಟಕಟನೆ ಅಗಿಯತೊಡಗಿತು. +“ಹೌದೇನು ಹೇಳು!” ಎಂದಳು ಕಾಡಿ. +“ಯಾರಿಗೂ ಹೇಬ್ಬ್ಯಾಡಿ ಮತ್ತೆ” ಎಂದು ಗುತ್ತಿ ವಿಷಯದ ಗಾಂಭೀರ್ಯವನ್ನು ಮುಖದಲ್ಲಿ ತೋರಿಸಲು ಯತ್ನಿಸಿದನು. +“ನಾನ್ಯಾರಿಗೆ ಹೇಳೋಕೆ ಹೋಗ್ತೀನೋ?” +“ಅಲ್ಲಾ ಮಾರಾಯ್ರ, ನಮಗ್ಯಾಕೆ ದೊಡ್ಡೋರ ಇಚಾರ ಬಡವರಿಗೆ? + ಹಾಂಗೇನೋ ವರ್ತಮಾನ ಇತ್ತಪ್ಪಾ.” + ಹೊಲೆಯನ ಬಾಯಿಂದ “ವರ್ತಮಾನ” ಎಂಬ ಮಾತನ್ನು ಕೇಳಿದ ಕಾಡಿಗೆ ಅವನು ಹೆಗ್ಗಡೆಯವರ ನೆಚ್ಚಿನ ತಳವಾರ ಎಂಬುದು ಮನಸ್ಸಿಗೆ ಬಂದಿತು. +“ಹೆಣ್ಣು ಎಲ್ಲೀದಂತೆ? +ನಿಂಗೆ ಗೊತ್ತೇನು?” +“ಕುಡೀಬೇಕು ಕಣ್ರೋ. +ಕಡುಬು ಗಂಟಲಾಗೆ ಇಳಿಯಾದಿಲ್ಲ!” +“ಅಯ್ಯಯ್ಯೊ! +ಮರ್ತಿದ್ದೆ ಕಣೊ!” ಎಂದು ಕಾಡಿ ಒಳಗೆ ಹೋಗಿ ಒಂದು ಬಳ್ಳೆ ಕೀತನ್ನೂ, ಒಂದು ದೊಡ್ಡ ತಾಲಿಯಲ್ಲಿ ಹೆಂಡವನ್ನೂ ತಂದಳು. +ಬಾಳೆಯೆಲೆಯ ಕೀತನ್ನು ದೊನ್ನೆಯಾಗಿ ಮಾಡಿ, ಮುಂದಿಟ್ಟು, ಹೆಂಡ ಬೊಗ್ಗಿಸಿದಳು. +ಗುತ್ತಿ ಎರಡೂ ಕೈಗಳಿಂದಲೂ ಎತ್ತಿ ಗೊಟಗೊಟನೆ ಕುಡಿದು ಕೆಳಗಿಟ್ಟನು. +ಕಾಡಿ ಮತ್ತೆ ಬೊಗ್ಗಿಸಿದಳು. +ಮತ್ತೆ ಕುಡಿದಿಟ್ಟನು. +ಮತ್ತೆ ತಟಕ್ಕನೆ ಬೊಗ್ಗಿಸಲಿಲ್ಲ. +“ಹೆಣ್ಣು ಗೊತ್ತಾಗಿದೆಯೇನೊ?” ಎಂದಳು. +ಗುತ್ತಿ ಎಲೆಯ ಮೂಲೆಯಲ್ಲಿ ರಾಶಿ ಹಾಕಿದ್ದ ಎಲುಬನ್ನೆಲ್ಲಾ ಒಟ್ಟಿಗೆ ಒತ್ತಿ ಹುಲಿಯನ ಮುಂದೆ ಹಾಕುತ್ತಾ “ಹಳೇಮನೇ ದೊಡ್ಡ ಹೆಗ್ಗಡೇರ ಮಗಳೂ ಅಂತಾ ಕಾಣ್ತದಪ್ಪಾ!” ಎಂದನು. +“ಯಾರು?ಸಣ್ಣ ಹೆಗ್ಗಡೇರ ತಂಗೀನೇನೋ?” +“ತಿಮ್ಮಪ್ಪ ಹೆಗ್ಗಡೇರ ತಂಗಿ” +“ಮಂಜಮ್ಮೋರೇನೊ?” +“ಅವರನ್ನೇ ಅಂತಾ ಮಾತಾಡ್ತಿದ್ರು!” ಎಂದ ಗುತ್ತಿ ಕಾಡಿಯ ಮುಖದ ಕಡೆಗೆ ನೋಡುತ್ತಾ, ಆಗತಾನೆ ಹೊಸದಾಗಿ ಕಂಡುಹಿಡಿದವನಂತೆ ಬೆರಗಾಗಿ ಕೇಳಿದನು: “ನಿಮಗೇನು ಜಡಾಗಿಡಾ ಆಗಿತ್ತೇನ್ರೊ? +ಬಾಳ ಬಡಕಟ್ಟೆ ಆಗಿ ಕಾಣ್ತೀರಿ!” +“ಹೌದು, ಪುಣ್ಯಾತ್ಮಾ, ಹೋದ ಗದ್ದೆ ಕೊಯಿಲಿನಿಂದ ಒಡಲಜರ, ಮೂರಕ್ಕೆ ನಾಕಕ್ಕೆ ಬರ್ತಾನೇ ಅದೆ!” +ಅವಳ ಮೋರೆಯನ್ನೇ ನೋಡುತ್ತಿದ್ದ ಗುತ್ತಿಗೆ ಇದ್ದಕ್ಕಿದ್ದಹಾಗೆ ಏನೋ ಜ್ಞಾಪಕಕ್ಕೆ ಬಂದಂತಾಗಿ, ಜುಗುಪ್ಸೆಯಿಂದ ಮುಖ ಅಸಹ್ಯ ವಿಕಾರವಾಯಿತು. +ಅದನ್ನು ಕಂಡ ಕಾಡಿ “ಏನೋ?ಕಲ್ಲು ಗಿಲ್ಲು ಸಿಗ್ತೇನೋ?” ಎಂದಳು. +“ಇಲ್ಲ!ಇಲುಗಿನ ಚೂರು ಅಂತಾ ಕಾಣ್ತದೆ!” ಎಂದು ಗುತ್ತಿ ಹುಸಿನುಡಿದು ತನ್ನ ಬಾಯಿಗೆ ಬೆರಳು ಹಾಕಿಕೊಂಡು ಎಲುಬಿನ ಚೂರನ್ನು ತೆಗೆದು ಬಿಸಾಡುವವನಂತೆ ನಟಿಸಿದನು. +ಕಾಡಿ ತಾಲಿಯಲ್ಲಿ ಉಳಿದಿದ್ದ ಹೆಂಡವನ್ನೆಲ್ಲಾ ದೊನ್ನೆಗೆ  ಬಗ್ಗಿಸಿ “ಏನಾರೂ ಬೇಕಾರೆ ಕರೀ” ಎಂದು ಹೇಳಿ ಬಿರುಬಿರನೆ ಹೊರಟು ಹೋದಳು. +ಗುತ್ತಿ ತಾನೂ ಉಂಡು, ತನ್ನ ನಾಯಿಗೂ ಸಾಕಷ್ಟನ್ನು ಹಾಕಿ, ಮುಂಚೆಕಡೆಯ ಮುರುವಿನ ಒಲೆಯ ಬಳಿಗೆ ಬರುವಷ್ಟರಲ್ಲಿಯೆ ಸೀತೂರ ತಿಮ್ಮನಾಯ್ಕನು ಜಗಲಿಯ ಮೇಲೆ ಮಲಗಿಬಿಟ್ಟಿದ್ದನು. +ಸೇಸನಾಯ್ಕನೂ ಒಳಗೆ ಕಾಡಿಯೊಡನೆ ಗೊಣಗೊಣನೆ ಮಾತಾಡುತ್ತಿದ್ದುದು ಕೇಳಿಬರುತ್ತಿತ್ತು. +ಬಾಯಿಗೆ ಹಾಕಿಕೊಂಡಾದ ಮೇಲೆ, ಆರಲು ಹರಡಿದ್ದ ತನ್ನ ಕಂಬಳಿಯನ್ನೆ ಸುತ್ತಿಕೊಂಡು ಒಲೆಗೆ ತುಸು ದೂರದಲ್ಲಿ ಬೆಂಕಿಯ ಶಾಖ ಅಪ್ಯಾಯಮಾನವಾಗುವಷ್ಟು ಹತ್ತಿರದಲ್ಲಿ ಮಲಗಿಕೊಂಡನು. +ಹಗಲೆಲ್ಲ ಗದ್ದೆಯುತ್ತು ಸಂಜೆಯಲ್ಲಿ ಬೆಟ್ಟ ದಾಟಿ ಬಂದು ದಣಿದಿದ್ದ ಅವನಿಗೆ ಚೆನ್ನಾಗಿ ನಿದ್ದೆ ಬರಬೇಕಾಗಿತ್ತು. +ನಿದ್ದೆ ಬರುತ್ತಲೂ ಇತ್ತು. +ಆದರೆ ಜಗಲಿಯ ಮೇಲೆ ಮಲಗಿದ್ದ ತಿಮ್ಮನಾಯ್ಕ ಮಾರಾಯನು ಕೊರೆಯಲು ಪ್ರಾರಂಭಿಸಿದನು. +ಅವನು ಗೊರಕೆ ಹೊಡೆದರೆ ಇವನಿಗೆ ನಿದ್ದೆ ಮಾಡುವುದಕ್ಕೇನಾಗುತ್ತಿತ್ತು ಎನ್ನುವಂತಿರಲಿಲ್ಲ ಆ ಗೊರಕೆ! +ಇತರ ಎಲ್ಲದರಲ್ಲಿಯೂ ಇರುವಂತೆ ಗೊರಕೆಯಲ್ಲಿಯೂ ಸಾತ್ವಿಕ ರಾಜಸ ತಾಮಸಗಳೆಂದು ಮೂರು ವಿಧವಿದೆಯಲ್ಲವೆ? +ತಿಮ್ಮನಾಯ್ಕನ ಗೊರಕೆ ರಭಸದಲ್ಲಿ ರಾಜಸವಾಗಿಯೂ ರಸದಲ್ಲಿ ತಾಮಸವಾಗಿಯೂ ಇದ್ದು ಭೀಕರವಾಗಿತ್ತು. +ಶ್ವಾಸೋಚ್ಛ್ವಾಸದ ಗರಗಸದಿಂದ ನಿಃಶಬ್ದತೆಯ ಗೋನಾಳಿಯನ್ನು ಘರಿಲ್ ಘರಿಲ್ ಗರಾಗರಾ ಗೊರ್ ಗೊರ್ ಎಂದು ಮೊದಲಾಗಿ ನಾನಾ ನಾದವಿನ್ಯಾಸಗಳಿಂದ ಕೊಯ್ಯುತ್ತಿತ್ತು. +ಬಡ ಗುತ್ತಿಯ ನಿದ್ದೆಯ ಕುತ್ತಿಗೆಯನ್ನೇನೊ ಕೊಯ್ದೇ ಬಿಟ್ಟಿತ್ತು! +ಅವನು ಎಷ್ಟು ಪ್ರಯತ್ನಪಟ್ಟರೂ ನಿದ್ದೆ ಮಾಡಲಾಗಲಿಲ್ಲ. +ನಿದ್ದೆ ಹಾಳಾದದ್ದಲ್ಲದೆ ಯಾವುದೋ ಒಂದು ತೆರನಾದ ಅರ್ಥವಿಲ್ಲದ ಹೆದರಿಕೆಯೂ ಉಂಟಾಯಿತು. +ಎದ್ದು ಕೂತು “ಅಯ್ಯಾ!ಅಯ್ಯಾ!ಅಯ್ಯಾ!” ಎಂದು ಕರೆದನು. +ವ್ಯರ್ಥ!ತಿಮ್ಮನಾಯ್ಕನು ಎಷ್ಟು ತಿಂದು ಕುಡಿದಿದ್ದನೆಂದರೆ, ಕಡುಬು, ತುಂಡು, ಕಳ್ಳು ಹೆಂಡ ತುಂಬಿದ ಸರಗೋಲಾಗಿ ಹೋಗಿದ್ದನು! +ಇದ್ದಕ್ಕಿದ್ದ ಹಾಗೆ ತಿಮ್ಮನಾಯ್ಕನು ಭಯಂಕರವಾಗಿ ಹೂಂಕಾರ ಮಾಡತೊಡಗಿದನು. +ಗುತ್ತಿ ದಿಗಿಲುಬಿದ್ದನು. +ನಾಯಿಗಳೆಲ್ಲ ಬೆಚ್ಚಿಬಿದ್ದು ಕೂಗಾಡಿದುವು. +ದೀಪ ಹಿಡಿದು ಹೊರಗೆ ಓದಿ ಬಂದ ಸೇಸನಾಯ್ಕನು ಮಾತ್ರ ನಿರುದ್ವಿಗ್ನವಾಗಿ, ಹೆದರುಗಣ್ಣಾಗಿದ್ದ ಗುತ್ತಿಗೆ “ಏನೂ ಇಲ್ಲ ಕಣ್ರೋ! +ಅವರಿಗೆ ಆಗಾಗ್ಗೆ ಹೀಂಗೆ ಆಗ್ತದೆ!ಮಲರೋಗ!” ಎಂದು ನೀರೆರಚುವುದೇ ಮೊದಲಾದ ಕಾರ್ಯಗಳಲ್ಲಿ ಆಸಕ್ತನಾದನು. +ಸುಮಾರು ಕಾಲು ಗಂಟೆ ಹೊಡೆಯಿತು. +ತಿಮ್ಮನಾಯ್ಕನು ಸರಿಯಾದ ಸ್ಥಿತಿಗೆ ಬರಬೇಕಾದರೆ! +ಹೊಟ್ಟೆಯೊಳಗಿದ್ದ ತುಂಡು ಕಡುಬು ಹೆಂಡ ಕಳ್ಳು ಎಲ್ಲ ಒಟ್ಟಿಗೆ  ವಾಂತಿಯಾಯಿತು! +ಆ ದುರ್ವಾಸನೆ ಹೊಲೆಯನ ಮೂಗಿಗೂ ಹೇಸಿಗೆ ಹುಟ್ಟಿಸುವಂತಿತ್ತು. +ಅಂತೂ ಆಮೇಲೆ ತಿಮ್ಮನಾಯ್ಕನು ಸದ್ದು ಮಾಡಲಿಲ್ಲ. +ಗುತ್ತಿ ಚೆನ್ನಾಗಿ ನಿದ್ದೆ ಮಾಡಿದನು. +ಸುಮಾರು ನಡು ರಾತ್ರಿಯ ಹೊತ್ತಿಗೆ ಹತ್ತು ಮೀನು ಕಡಿಯಲು ಹೋಗಿದ್ದ ರಂಗ, ಪುಟ್ಟ, ಹಮೀರ ಮೊದಲಾದವರು ಹಿಂತಿರುಗಿ ಬಂದಾಗಲೂ ಅವನಿಗೆ ಎಚ್ಚರವಾಗಲಿಲ್ಲ. +ಸೇಸನಾಯ್ಕನ ಮಗ ಹಮೀರನಾಯ್ಕನು ಗುತ್ತಿ ಮಲಗಿದ್ದನ್ನು ಕಂಡು “ಮಲಗಿದ್ರೆ ಮಲಗ್ಬೇಕು ಹೀಂಗೆ; +ಒನಕೆ ತುಂಡು ಬಿದ್ದ್ಹಾಂಗೆ!” ಎಂದನು. +ಎರಡನೆಯ ಸಲ ಕೋಳಿ ಕೂಗುವ ಹೊತ್ತಿಗೆ ಗುತ್ತಿಗೆ ಎಚ್ಚರವಾಯಿತು. +ಸ್ವಲ್ಪ ಚಳಿಯೂ ಆಯಿತು. +ಕಂಬಳಿಯನ್ನು ಮತ್ತಷ್ಟು ಬಲವಾಗಿ ಮೈಗೆ ಸುತ್ತಿ ಹೊದೆದು, ಮುದುರಿ, ಕಣ್ಣು ಬಿಟ್ಟುಕೊಂಡೇ ಮಲಗಿದನು. +ತುಸು ಹೊತ್ತಿನಲ್ಲಿ ಮನೆಯ ಮುಂದೆ ಬೇಲಿಯ ಸಾಲಿನಲ್ಲಿ ಹಂಡಹಕ್ಕಿ ಸಿಳ್ಳು ಹಾಕತೊಡಗಿತು. +ಗುತ್ತಿ ಮೇಲೆದ್ದು ಕಂಬಳಿಯನ್ನು ಹೆಗಲ ಮೇಲೆ ಹಾಕಿಕೊಂಡು ಅಂಗಳಕ್ಕಿಳಿದನು. +ಬೆಳಿಗ್ಗೆ ಇನ್ನೂ ನಸುಕು ನಸುಕಾಗಿತ್ತು. +ಮನೆಯಲ್ಲಿ ಯಾರೂ ಎದ್ದಿದ್ದಂತೆ ಕಾಣಲಿಲ್ಲ. +ತಾನು ಅವೊತ್ತು ಮಾಡಲೇಬೇಕಾಗಿದ್ದ ಕೆಲಸಗಳನ್ನೆಲ್ಲಾ ನೆನೆದು ಗುತ್ತಿ ಬೇಗ ಬೇಗನೆ ಮುಂದುವರಿದನು. +ತಡಬೆಯನ್ನು ದಾಟಿ ಮೇಗರವಳ್ಳಿಗೆ ಹೋಗುವ ಕೊರಕಲು ಗಾಡಿದಾರಿಗೆ ಬಂದಾಗ ಹುಲಿಯನ ನೆನಪಾಯಿತು. +ಮೆಲ್ಲಗೆ ಸಿಳ್ಳು ಹಾಕಿದನು. +ನಾಯಿಗಳೆಲ್ಲವೂ ಹಿಂಡಾಗಿ ನುಗ್ಗಿಬಂದವು. +ಹೊಲೆಯನ ನಾಯಿ ಹಳೇಪೈಕದವರ ನಾಯಿಗಳೊಡನೆ ಆಗಲೆ ಸ್ನೇಹ ಸಂಬಂಧಗಳನ್ನು ಚೆನ್ನಾಗಿ ಸಂಪಾದಿಸಿತ್ತು. +“ಬಾ ಹುಲಿಯ!” ಎಂದು ಒಂದು ಸಾರಿ ಕರೆದು ಗುತ್ತಿ ಮುಂದೆ ಮುಂದೆ ನಡೆಗೊಂಡನು. +ಸುಮಾರು ಅರ್ಧ ಫರ್ಲಾಂಗು ಹೋಗಿ ನೋಡುತ್ತಾನೆ: +ಹುಲಿಯನ ಸವಾರಿ ಪತ್ತೆ ಇಲ್ಲ! +ಮತ್ತೆ ಗಟ್ಟಿಯಾಗಿ ಸಿಳ್ಳುಹಾಕಿ ಕರೆದನು. +ಹುಲಿಯ ದೂರದಿಂದ ಓಡಿಬಂತು. +ಬೇರೆ ಯಾವ ನಾಯಿಯೂ ಜೊತೆ ಬರಲಿಲ್ಲ. +ಹುಲಿಯ ಮರಳಿ ಮರಳಿ ಹಿಂದಕ್ಕೆ ತಿರುಗಿ ನೋಡುತ್ತಿತ್ತು. +ಅದನ್ನು ಕಂಡು ಗುತ್ತಿ “ಏ ನಿನ್ನ ಹುಲಿ ಹಿಡಿಯಾ! +ಹೆಡಬೇಗ್ಹುಟ್ಟಿದ್ದಕ್ಕೆ ಹೋದಲ್ಲಿ ತನಕಾ ಬಾಲಾ ಮೂಸಾದೆ!” ಎಂದು “ಥ್ಫೂ!ನಿನ್ನ!” ಎಂದು ಉಗುಳಿದನು. +ಹುಲಿಯನಿಗೆ ಎಲ್ಲಿಯಾದರೂ ತನ್ನ ಯಜಮಾನನ ಮನಸ್ಸು ಗೊತ್ತಾಗಿದ್ದರೆ ಎಂತಹ ಪ್ರತ್ಯುತ್ತರ ಕೊಡಬಹುದಾಗಿತ್ತು! +ಯಾಕೆಂದರೆ ಗುತ್ತಿ ಯಾವ ಉದ್ದೇಶ ಸಾಧನೆಗಾಗಿ ಸಿಂಬಾವಿಯಿಂದ ಹೊರಟ್ಟಿದ್ದನೊ ಆ ಉದ್ದೇಶವೂ ಬೇಟವೆ ಆಗಿತ್ತು! +ಬೆಟ್ಟಳ್ಳಿ ಕಲ್ಲಯ್ಯ ಗೌಡರ ಜೀತದಾಳು ಹೊಲೆಯರ ದೊಡ್ಡ ಬೀರನ ಮಗಳು ತಿಮ್ಮಿಯನ್ನು ಹೇಗಾದರೂ ಮಾಡಿ ಹಾರಿಸಿಕೊಂಡು ಬರುವುದಕ್ಕಾಗಿ ಹೊರಟಿದ್ದ ಗುತ್ತಿ ಬೇಗ ಬೇಗ ನಡೆಯತೊಡಗಿದನು. +ಮುಂದಿನ ಸಾಹಸದ ಆಲೋಚನೆಯಲ್ಲಿ ನಟ್ಟಮನಸ್ಸಾಗಿ ಸಾಗಿದ್ದನು ಅವನು ಹುಲಿಯ ಹಿಂತಿರುಗಿ ಪರಾರಿಯಾದುದನ್ನು ಗಮನಿಸಲಿಲ್ಲ. +ಹೋದ ರಾತ್ರಿ ಹೊಯ್ದ ಮಳೆಯಿಂದ ತಣ್ಣಗಾಗಿದ್ದ ಕಾಡಿನ ತಂಪು ಗಾಳಿಯಲ್ಲಿ ಗುತ್ತಿ ಚಟುವಟಿಕೆಯಾಗಿ ಸಾಗಿದನು. +ಹಾದಿಯಲ್ಲಿ ಒಂದು ಕಡೆ ಹಂದಿಯ ಹಿಂಡು ಉತ್ತಿದ್ದುದನ್ನು ಕಂಡಾಗಲೆ ಅವನಿಗೆ ಹುಲಿಯನ ನೆನಪಾಗಿ ಕೂಗಿದನು. +ನಿಃಶಬ್ದವಾದ ಕಾಡಿನಲ್ಲಿ ಆ ಕೂಗು ಮೊಳಗಿತು. +ನಾಯಿ ಎಲ್ಲಿಯೂ ಕಾಣಿಸಲಿಲ್ಲ. +ಲಕ್ಕುಂದದಿಂದ ಸುಮಾರು ಎರಡು ಮೈಲಿ ದೂರದಲ್ಲಿದ್ದ  ಮೇಗರವಳ್ಳಿಗೆ ಅವನು ಮುಟ್ಟಿದಾಗ ಆಗ ತಾನೆ ಬೆಳ್ಳಗೆ ಬೆಳಗಾಗಿತ್ತು. +ಮರಗಳ ನೆತ್ತಿಯಲ್ಲಿ ಎಳಬಿಸಿಲು ಆಡತೊಡಗಿತ್ತು. +ತೀರ್ಥಹಳ್ಳಿಯಿಂದ ಆಗುಂಬೆಗೆ ಹೋಗುವ ಹೆದ್ದಾರಿಯಲ್ಲಿದ್ದ ಮೇಗರವಳ್ಳಿ ಗುತ್ತಿಯಂಥಾ ಹಳ್ಳಿಗರಿಗೆ ಪೇಟೆಯಾಗಿದ್ದರೂ ನಿಜವಾಗಿಯೂ ಬರಿಯ ಕೊಂಪೆಯಾಗಿತ್ತು. +ರಸ್ತೆಯ ಇಕ್ಕೆಲಗಳಲ್ಲಿದ್ದ ನಾಲ್ಕಾರು ಹುಲ್ಲಿನ ಮನೆಗಳೂ ಎರಡು ಮೂರು ಹೆಂಚಿನ ಮನೆಗಳೂ ಆ ಪೇಟೆಗೆ ಪರಮಾವಧಿ. +ಜನಸಂಖ್ಯೆ ಈರೈದು ಮೂರೈದುಗಳಲ್ಲಿಯೆ ಮುಗಿಯುತ್ತಿತ್ತು. +ಎತ್ತಿನ ಗಾಡಿಯೂ ದುರ್ಲಭವಾಗಿದ್ದ ಆಗಿನ ಸ್ಥಿತಿಯಲ್ಲಿ ಎಂಟೊಂಬತ್ತು ಮೈಲಿ ದೂರದಲ್ಲಿದ್ದ ತೀರ್ಥಹಳ್ಳಿಯನ್ನು ಖ್ಯಾತಿಯಿಂದ ಮಾತ್ರ ಅರಿತಿದ್ದ ಸುತ್ತಮುತ್ತಣ ಹಳ್ಳಿಗರಿಗೆ ಮೇಗರವಳ್ಳಿಯೆ ಪಟ್ಟಣವಾಗಿದ್ದುದರಲ್ಲಿ ಆಶ್ಚರ್ಯವೇನಿಲ್ಲ. +ಆಗಿನ ಮೇಗರವಳ್ಳಿಯಲ್ಲಿ ಆಸ್ಪತ್ರೆ, ಸ್ಕೂಲು, ಷಾಪು, ಹೋಟಲು, ಮಿಲ್ಲು ಯಾವುವೂ ಇರಲಿಲ್ಲ. +ಆದರೆ ಮಲೆಯಾಳಿಯ ವೈದ್ಯರಾದ ಕಣ್ಣಾ ಪಂಡಿತರಿದ್ದರು. +ಮಾಪಿಳ್ಳೆಯವರಾಗಿದ್ದ ಕರಿಮೀನು ಸಾಬರು ಅಂಗಡಿಯಿಟ್ಟಿದ್ದರು. +ಒಂದು ಕಳ್ಳಿನ ಅಂಗಡಿಯೂ ಇದ್ದ ಆಟ ಊಟ ಕೂಟಗಳಿಗೆ ಒಂದು ತೆರನಾದ ಕ್ಲಬ್ಬೂ ಆಗಿತ್ತು. +ಸೆಟ್ಟಿಗಿತ್ತಿ ಅಂತಕ್ಕನ ಮನೆ ತಕ್ಕಮಟ್ಟಿಗೆ ಹೋಟಲೂ ಆಗಿತ್ತು. +ತೀರ್ಥಹಳ್ಳಿ ಆಗುಂಬೆಯ ಮುಖಾಂತರವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಿ ಬರುತ್ತಿದ್ದ ವ್ಯಾಪಾರಿಗಳೂ, ಸೇರೆಗಾರರೂ, ಕೂಲಿಯಾಳುಗಳೂ, ಗಂಧದ ಮರಗಳನ್ನು ಸಾಗಿಸುತ್ತಿದ್ದ ಗುಪ್ತ ದಳ್ಳಾಲಿಗಳೂ, ಮುಂತಾದವರೂ ಆಗಾಗ ತಂಗುತ್ತಿದ್ದುದರಿಂದ ಆ ಸ್ಥಳಕ್ಕೊಂದು ಪ್ರಮುಖತೆ ಬಂದಿತ್ತು. +ಗುತ್ತಿ ಅಲ್ಲಿಗೆ ಬಂದಾಗ ಸ್ವಲ್ಪ ಪ್ರತ್ಯೇಕವಾಗಿದ್ದ ಅಂತಕ್ಕ ಸೆಟ್ತಿಯ ಹುಲ್ಲುಮನೆಯಿಂದ ಅಡುಗೆಹೊಗೆ ಏಳುತ್ತಿತ್ತು. +ಅದು ವಿನಾ ಮೇಗರವಳ್ಳಿಯಲ್ಲಿ ಮತ್ತಾವ ಎಚ್ಚರದ ಸೂಚನೆಯೂ ಕಂಡುಬರಲಿಲ್ಲ. +ಆದರೂ ನೇರವಾಗಿ ಕಣ್ಣಾ ಪಂಡಿತರ ಮನೆಯ ಮುಂಭಾಗಕ್ಕೆ ಹೋಗಿ, ಸ್ವಲ್ಪ ಹೊತ್ತು ನಿಂತು ಆಲೋಚನೆ ಮಾಡಿ ಕರೆದನು:“ಕಣ್ಣಪ್ಪಯ್ಯಾ! +ಕಣ್ಣಪ್ಪಯ್ಯಾ!”ಯಾವ ಪ್ರತ್ಯತ್ತರವೂ ಬರಲಿಲ್ಲ, ಮತ್ತೆ ಕೂಗಿ ಕರೆದನು. +ಬಾಗಿಲು ತೆರೆಯದಿದ್ದರೂ ಒಳಗಡೆಯಿಂದ ಒಂದು ದನಿ ವಿದೇಶಿಯವಾದ ಕಾಕು ಸ್ವರದಿಂದ “ಅದು ಯಾರು? +ಹೊತ್ತಾರೆ ಬಂದು ಕೂಗುವವರು?” ಎಂದಿತು. +“ನಾನು ಕಣ್ರೋ, ಸಿಂಬಾವಿ ಗುತ್ತಿ. +ಹೆಗ್ಗಡೇರ ಕಡೆ ಆಳು” +“ಸ್ವಲ್ಪ ಕೂತುಕೊಳ್ಳೊ ಅಲ್ಲಿ; +ಬರುತ್ತೇನೆ.”ಕೂತುಕೊಳ್ಳುವುದಕ್ಕೆ ಯಾವ ಅನುಕೂಲವೂ ಇರಲಿಲ್ಲ. +ಗುತ್ತಿ ತನ್ನ ಕಂಬಳಿಯನ್ನು ಹಾಸಿ, ಕೂತು, ಎಲೆಯಡಿಕೆ ಹಾಕಿಕೊಳ್ಳಲಾರಂಭಿಸಿದನು. +ಗುತ್ತಿ ಕೂತ ಜಾಗಕ್ಕೆ ಎದುರಾಗಿ, ರಸ್ತೆಯ ಆಚೆಕಡೆ ಇದ್ದ ಮನೆ ಊರು ಹೆಂಚಿನದಾಗಿತ್ತು. +ವರ್ಷ ವರ್ಷವೂ ಹಳು ಹುಟ್ಟಿ ಬೆಳೆದು ಒಣಗಿ ಹೊದಿಸಿದ್ದ ಹೆಂಚುಗಳಲ್ಲಿ ಅರೆಪಾಲು ಮುಚ್ಚಿಹೋಗಿದ್ದವು. +ಮನೆಯ ಮುಂಭಾಗದಲ್ಲಿ ಹಲಗೆಗಳನ್ನು ಜೋಡಿಸಿ ಮಳಿಗೆ ಮಾಡಿದ್ದರು. +ಗುತ್ತಿ ನೋಡುತ್ತಿದ್ದ ಹಾಗೆಯೇ ಮಳಿಗೆಯ ಒಣಗಣಿಂದ ಯಾರೋ ಹಲಗೆಯ ಬಾಗಿಲೊಂದನ್ನು ಎತ್ತಿ ತೆರೆಯಲು ಪ್ರಯತ್ನಿಸುತ್ತಿದ್ದುದು ಅವನ ಕಣ್ಣಿಗೆ ಬಿತ್ತು. +ಹಾಗೆ ಎತ್ತಿ ತೆರೆಯುವುದಕ್ಕಾಗಿಯೆ ಮಾಡಿದ್ದ ಆ ಹಲಗೆಯ ಬಾಗಿಲಿನ ನಡುವಣ ಅರ್ಧಚಂದ್ರಾಕೃತಿಯ ರಂಧ್ರದಲ್ಲಿ ಮಡಿಸಿ ಹಿಡಿದಿದ್ದ ನಾಲ್ಕು  ಕೈಬೆರಳುಗಳನ್ನು ನೋಡಿದೊಡನೆಯೆ ಗುತ್ತಿ ಸ್ವಲ್ಪ ಅಪ್ರತಿಭನಾದನು. +“ಕರಿಮೀನು ಸಾಬರ ಕೈ ಬೆಳ್ಳು!ಮತ್ತೇ? +ಆ ಊರಾಗೆ ಅಷ್ಟು ಕರ್ರಗೆ ಯಾರಿದ್ದಾರೆ? +ಸೈ, ಇನ್ನು ಕಂಡ ಕೂಡಲೆ ಹಳೆ ಸಾಲಕ್ಕೆ ತಗಾದೆ ಮಾಡುತ್ತಾರೆ! +ಬೆಳಿಗ್ಗೆ ಎದ್ದು ಸನಿ ಮುಖಾ ನೋಡ್ತೀನಲ್ಲಾ!” ಎಂದು ಮೋರೆಯನ್ನು ಬೇರೆಯ ಕಡೆಗೆ ತಿರುಗಿಸಿದರೂ ಗುತ್ತಿಯ ಕಣ್ಣು ಆ ಕೈಬೆರಳಿನ ಮೇಲೆಯೇ ನೆಟ್ಟಿತ್ತು. +ಬಾಗಿಲು ತೆರೆಯಿತು. +ಕರೀಂ ಸಾಬಿಯ ದೇಹ ತೂರಿ ಹೊರಗೆ ಬಂದಿತು. +ಸೊಂಟದ ಕೆಳಗೆ ಕಣ್ಣು ಕಣ್ಣಿನ ಕೆಂಪು ದುಪ್ಪಟಿಯನ್ನು ಸುತ್ತಿದ್ದು, ಮೈ ಬತ್ತಲೆಯಾಗಿದ್ದ ಅವನ ಎಡಗೈಯಲ್ಲಿ ನೀರು ತುಂಬಿದ್ದ ಒಂದು ಕರಿಯ ಮಣ್ಣಿನ ಪಾತ್ರೆಯಿತ್ತು. +ಬಲಗೈಯಲ್ಲಿದ್ದ ಇದ್ದಲಿನ ಚೂರನ್ನು ಹಲ್ಲಿಗೆ ತಿಕ್ಕುತ್ತಾ ಅಂಗಡಿಯ ಮುಂದೆಯೇ ಮೆಟ್ಟಲ ಮೇಲೆ ಕೂತುಕೊಂಡು ಮುಖ ತೊಳೆಯಲಾರಂಭಿಸಿದನು. +ಮಸಿಯಾದ ಕಲ್ಲು ಗಡಿಗೆಯ ಬೆನ್ನಿನಂತೆ ಕರ್ರಗೆ ನುಣ್ಣಗಿದ್ದ ಮುಂಡೆಯನ್ನೂ ಕರಿಬಲೆಯಂತೆ ನೇತಾಡುತ್ತಿದ್ದ ಹೊದೆ ಗಡ್ಡವನ್ನೂ ಒಟ್ಟಿಗೆ ತೊಳೆದು, ಉಟ್ಟಿದ್ದ ದುಪ್ಪಟಿಯಿಂದಲೆ ಎರಡನ್ನೂ ಉಜ್ಜಿಕೊಂಡ ಮೇಲೆ, ಗುತ್ತಿಯನ್ನು ನೋಡುತ್ತಾ “ಏಯ್, ಕಂಬಳೀ, ಇಲ್ಲಿ ಬಾ!” ಎಂದು ಕೂಗಿದನು. +ಕರೀಂ ಸಾಬಿ ಗಟ್ಟದ ಮೇಲಕ್ಕೆ ಬಂದು ಬಹಳ ವರ್ಷಗಳಾಗಿತ್ತು. +ಮೊದಲು ಬಂದಾಗ ಅವನು ಕರಿಮೀನು ಹೊತ್ತುಕೊಂಡು ಮನೆ ಮನೆಗೂ ತಿರುಗಿ ಅಕ್ಕಿಗೋ ಬತ್ತಕ್ಕೋ ಅಡಕೆಯೋ ವಿನಿಮಯ ವ್ಯಾಪಾರ ಮಾಡುತ್ತಿದ್ದನಾದ್ದರಿಂದಲೂ, ಹಳ್ಳಿಗರ ಕಿವಿಗೆ ಕರೀಂ ಮತ್ತು ಕರಿಮೀನು ಎಂಬ ಪದಗಳು ಸಮಪದಗಳಾಗಿ ತೋರಿದುದರಿಂದಲೂ ಅಂಕಿತನಾಮವನ್ನು ಅನ್ವರ್ಥನಾಮವನ್ನಾಗಿ ಮಾಡಿದ್ದರು. +ತರುವಾಯ ಕರೀಂ ಸಾಬಿ ಇತರ ಪದಾರ್ಥಗಳನ್ನು ಮಾರತೊಡಗಿದ್ದರೂ ಅವನು ಮೊದಲಿನ ಹೆಸರು ಬದಲಾಯಿಸಲಿಲ್ಲ. +ಹಾಗೆಯೇ ಮಂಗಳೂರು ನಶ್ಯಪುಡಿಯನ್ನು ತಯಾರುಮಾಡಿ ಮಾರುತ್ತಿದ್ದ ಅವನ ತಮ್ಮನಿಗೆ “ಪುಡೀ ಸಾಬಿ” ಎಂದು ಹೆಸರು ಬಂದಿತ್ತು. +ಅಂತೂ ಕರಿಮೀನು ಸಾಬರು ಮತ್ತು ಪುಡಿ ಸಾಬರು ಎಂದರೆ ಗುತ್ತಿಯಂತಹ ಜನಗಳಿಗೆ ತಕ್ಕಮಟ್ಟಿಗೆ ಗೌರವ ವ್ಯಕ್ತಿಗಳೆ ಆಗಿದ್ದರು. +ಅವನು ಚಿಲ್ಲರೆ ಸಾಲವನ್ನು ಕೊಡುತ್ತಿದ್ದುದರಿಂದ ಆ ಹಂಗಿಗೆ ಒಳಗಾದವರೆಲ್ಲರಿಗೂ ಅವರಲ್ಲಿ ದ್ವೇಷಮಿಶ್ರವಾದ ಭಯಭಕ್ತಿಯೂ ಇತ್ತು. +ಕರೀಂ ಸಾಬಿ ಕರೆದೊಡನೆಯೆ ಗುತ್ತಿ ನಿರುತ್ಸಾಹದಿಂದ ನಿಧಾನವಾಗಿ ಎದ್ದು ಬಂದನು. +ಮುಖಸ್ತುತಿ ಮಾಡುವುದಕ್ಕಾಗಿಯೊ ಎಂಬಂತೆ ಸಾಬರಿಗೆ ಸೊಂಟ ಬಗ್ಗಿಸಿ ಸಲಾಂ ಮಾಡಿನು. +ಸಾಬಿ ಒಂದಿನಿತೂ ಪ್ರಸನ್ನನಾಗದೆ ಗಡ್ಡ ನೀವುತ್ತಾ “ಸಲಾಮು ಇರಲಿ! +ನನ್ನ ಹಣ ಎಲ್ಲಿಯೋ?” ಎಂದು ವಿದೇಶೀಯ ವಿರಳಶೈಲಿಯಲ್ಲಿ ಪ್ರಾರಂಭಿಸಿದನು. +“ಇನ್ನೆಂಟು ದಿನಾ ತಡೀರಿ. +ನನ್ನ ಮದೇಗೆ ಹೆಗ್ಗಡೇರ ಕೈಲಿ ದುಡ್ಡು ಕೇಳೀನಿ. +ಅದರಾಗೆ ನಿಮ್ಮ ಚಿಳ್ರೇನೂ ತೀರ್ಸಿಬಿಡ್ತೀನಿ” ಎಂದು ಕುಳ್ಳಗುತ್ತಿ ತನಗಿಂತಲೂ ಬಹುಪಾಲು ಕರ್ರಗಿದ್ದ ಉದ್ದನೆಯ ಮಾಪಿಳ್ಳೆಯನ್ನು ನೋಡುತ್ತಾ ಹಲ್ಲು ಬಿಟ್ಟು ಸಪ್ಪೆಯಾಗಿ ನಕ್ಕನು. +“ಎಷ್ಟು ದಿನಾ ನೀನು ನನ್ನ ಸತಾಯಿಸುವುದು? +ನಿಮ್ಮದು ಹೆಗ್ಗಡೇರು ಕೊಟ್ಟರೆ ಕೊಡಲಿ. +ಬಿಟ್ಟರೆ ಬಿಡಲಿ, ಒಟ್ಟಾರೆ ನಮಗೆ ನಮ್ಮ ದುಡ್ಡು ಕಾಸು ಬಂದರೆ ಸೈ! +ಆಗಲಿ ನೀನು ಹೇಳಿದ ಹಾಗೆ ಇನ್ನು ಎಂಟು ದಿನ ನೋಡುವಾ; +ದುಡ್ಡು ಬಡ್ಡಿ ಬರದೇ ಹೋದರೆ ನಾನು ಹೆಗ್ಗಡೆಯರ ಬಳಿಗೆ ಬರುತ್ತೇ! +ನನಗೂ ಕೆಲಸವುಂಟು ಅವರಲ್ಲಿಗೆ! +ಗೊತ್ತಾಯಿತೋ?”ಅಷ್ಟು ಹೊತ್ತಿಗೆ ಕಣ್ಣಾಪಂಡಿತರು ಎದುರು ಮನೆಯಿಂದ ಬಾಗಿಲು ತೆರೆದು ಹೊರಬಂದುದನ್ನು ನೋಡಿ ಗುತ್ತಿ ಸಾಬರಿಗೆ ಸಲಾಂ ಮಾಡಿ, ಅಲ್ಲಿಂದ ಅವಸರ ಅವಸರವಾಗಿ ಜಾರಿದನು. +ಕರೀಂ ಸಾಬಿ “ಲೌಡೀ ಮಗನಿಗೆ ಏನು ದೌಲತ್ತು? +ಅವನು ಎಷ್ಟು ರೂಪಾಯಿ ಕೊಡಬೇಕಾಗಿದೆ; +ಅದನ್ನು ಚಿಲ್ಲರೆ ಅನ್ನುತ್ತಾನೆ! +ಹೆಗ್ಗಡೇರ ಜವಾನ ಅಂತ ಮುಲಾಜು ನೋಡದೆ ಮಾತಾಡುತ್ತಾನಲ್ಲಾ!” ಎಂದುಕೊಂಡು ಕ್ಯಾಕರಿಸಿ ಉಗಿದು ಒಳಗೆ ಹೋದನು. +ಬೆಳ್ಳಗಿದ್ದ ತೆಳು ಪಂಚೆಯನ್ನುಟ್ಟು, ಅದೇ ತೆರನಾದ ಬಟ್ಟೆಯ ಒಂದು ಗೀರು ಗೀರಿನ ಷರ್ಟನ್ನೂ ಹಾಕಿ, ಮಲೆಯಾಳಿಗಳ ರೀತಿಯಲ್ಲಿ ತಲೆಯ ಹಿಂಭಾಗವನ್ನು ಬೋಳಿಸಿ, ಮುಂಭಾಗದಲ್ಲಿ ಉದ್ದವಾದ ಬೆಳೆದಿದ್ದ ಕೂದಲನ್ನೆಲ್ಲಾ ಸೇರಿಸಿ ಮುಡಿ ಕಟ್ಟಿ, ಸ್ವಲ್ಪ ಕರ್ರಗಿದ್ದರೂ, ಆಪಾದಮಸ್ತಕವಾಗಿ ಚೊಕ್ಕಟವಾಗಿದ್ದ ಕಣ್ಣಾಪಂಡಿತರು ಮನೆಮೊಗದಿಂದ ಬೆಳ್ಳಗೆ ಹಲ್ಲು ಬಿಟ್ಟು ಗುತ್ತಿಯನ್ನು ನೋಡಿ ಅರ್ಥಪೂರ್ವಕವಾಗಿ ನಕ್ಕರು. +ಅವನು ಹತ್ತಿರಕ್ಕೆ ಬರಲು ಅಭ್ಯಾಸದಂತೆ ಹುಬ್ಬನ್ನು ನಿಮಿರಿ ಮೇಲಕ್ಕೆ ಹಾರಿಸುತ್ತಾ “ಏನೋ, ಗುತ್ತಿ, ಮದುಮಗನ ಹಾಂಗೆ ಬಟ್ಟೆಯುಟ್ಟು ಹೊರಟಿದ್ದೀಯಲ್ಲವೊ!” ಎಂದರು. +ಅವರ ಹೆಣ್ಗೊರಳಿನ ಕೀಚುದನಿಯನ್ನೂ ವಿಲಕ್ಷಣವಾಗಿದ್ದ ದಕಾರ ತಕಾರಗಳ ಗಲಿಬಿಲಿಯ ಕನ್ನಡದ ಉಚ್ಛಾರಣೆಯನ್ನೂ ಹಿಂದೆ ಎಷ್ಟೋ ಸಲ ಕೇಳಿದ್ದರೂ ಗುತ್ತಿಗೆ ಸಲಸಲವೂ ಅದು ವಿನೋದಕರವಾಗಿಯೆ ತೋರುತ್ತಿತ್ತು. +ಅದಕ್ಕಾಗಿಯೆ ನಗುತ್ತಿದ್ದರೂ ಪ್ರಶ್ನೆಗಾಗಿ ನಗುವನಂತೆ ನಟಿಸುತ್ತಾ “ತಮ್ಮಂಥಾ ಒಡೇರು ಕೊಟ್ಟರೆ ನಮ್ಮಂಥಾ ಬಡೋರಿಗೆ ಉಂಟು” ಎಂದನು. +“ಹೆಣ್ಣು ಕೇಳುತ್ತಿದ್ದೆಯಲ್ಲವೆ? +ಬೆಟ್ಟಳ್ಳಿ ದೊಡ್ಡಬೀರನ ಮಗಳು ತಿಮ್ಮಿಯನ್ನು? +ಒಪ್ಪಿಗೆಯಾಯಿತೋ?”ಗುತ್ತಿ ಇದ್ದಕ್ಕಿದ್ದಹಾಗೆ ಗಂಭೀರವಾದನು. +ಅವನ ಮುಖದಲ್ಲಿ ಏನೋ ಒಂದು ದೃಢನಿಶ್ಚಯದ ಕರಾಳ ಛಾಯೆ ಸುಳಿಯಿತು. +ಹಣೆ ಸುಕ್ಕಾಯಿತು. +ತುಟಿ ಸ್ವಲ್ಪ ಕೊಂಕಿತು. +“ಅಯ್ಯಾ, ನೀವು ದೇವರಿಗೆ ಸಮ; + ನನ್ನ ಮನಸ್ಸಿನಲ್ಲಿರೋದನ್ನ, ನಾ ಹೇಳಬೇಕಾರೆ ಮೊದಲೆ, ನೀವೆ ಕೇಳಿಬಿಟ್ಟಿರಿ. +ನಿಜವಾಗಿಯೂ ನೀವು ದೇವರಂತಾ ಮನುಷ್ಯರು” ಎಂದನು. +“ಆ ಬಚ್ಚ ಏನೊ ತಂಟೆಮಾಡುತ್ತಿದ್ದ ಎಂದು ಹೇಳಿದ್ದೀಯಲ್ಲಾ ನೀನು, ತಿಮ್ಮಿಯನ್ನು ತಾನು ಮದುವೆಯಾಗಬೇಕೆಂದು”. +ಗುತ್ತಿಯ ಮುಖದಲ್ಲಿ ಒಂದಿನಿತು ರೋಷ ಸಂಚಾರವಾಯಿತು. +“ಬಚ್ಚನ ಹೆಣಾ, ಅವನೇನು ಮಾಡ್ತಾನೆ? +ನನ್ನ ಮಾವ ದೊಡ್ಡ ಬೀರನ ಮನಸ್ಸೇ ಅತ್ತಾ ಇತ್ತಾ ಆಗ್ತಾ ಇದೆ. +ಬೆಟ್ಟಳ್ಳಿ ಗೌಡ್ರೂ ಅಡ್ಡಾ ಹಾಕ್ತಾ ಇದ್ದಾರೆ. +ತಿಮ್ಮಿ ಮನಸ್ಸೇನೋ ಈ ಕಡೇನೆ ಇದೆ. +ಆದ್ರೇನ್ಮಾಡೋದು-ಈವತ್ತು ನಮ್ಮ ಹೆಗ್ಗಡೇರು ಒಂದು ಕಾಗ್ದ-” ಎಂದವನು ನಾಲಿಗೆ ಕಚ್ಚಿಕೊಂಡು ಅದನ್ನು ಅರ್ಧಕ್ಕೆ ನಿಲ್ಲಿಸಿ, “ನಮ್ಮ ಹೆಗ್ಗಡೇರಿಗೆ ಏನೋ ಔಸ್ತಿ ಕೊಟ್ಟಿದ್ರಂತೆ ನೀವು. +ಸೊಲ್ಪಾ ಗುಣಾ ಅದೆಯಂತೆ. +ಮತ್ತೀಟು ಔಸ್ತಿ ಇಸುಕೊಂಡು ಬಾ ಅಂತ ಅಂದ್ರು” ಎಂದನು. +“ಹಿಂದಕ್ಕೆ ಹೋಗುವಾಗ ಮತ್ತೆ ಬಾ ಕೊಡುತ್ತೇನೆ”ಗುತ್ತಿ ತಟಕ್ಕನೆ ಆಲೋಚನಾಪರನಾಗಿ “ಹಿಂದಕ್ಕೆ ಹೋಗಾಗ ಬರಾಕೆ ಹೆಂಗೆ ಆತದ್ರೋ?” ಎಂದವನು ಕಣ್ಣಾ ಪಂಡಿತರ ಹಾರು ಹುಬ್ಬಿನ ಪ್ರಶ್ನೆಚಿಹ್ನೆಗೆ ಸರಿಯಾದ ಉತ್ತರ ಹೇಳಲು ಸಾಧ್ಯವಿಲ್ಲದ್ದರಿಂದ “ಹ್ಞೂ ಆಗ್ಲಿ, ಬಂದು ತಗೊಂಡು ಹೋಗ್ತಿನಿ” ಎಂದನು. +“ಮತ್ತೆ ನೀನು ಹೊರಡಬಹುದು.”ಕಣ್ಣಾಪಂಡಿತರು ಹೊರಡಬಹುದು ಎಂದು ಹೇಳಿದರೂ ಗುತ್ತಿ ಹೊರಡಲಿಲ್ಲ. +ಇನ್ನೂ ಏನೋ ಹೇಳುವವನಂತೆ ನಿಂತನು. +ಕಣ್ಣಾಪಂಡಿತರು “ಮತ್ತೆ ಏನು ನಿಂತದ್ದು?” ಎಂದನು. +ಗುತ್ತಿ ಎಂಜಲು ನುಂಗುತ್ತಾ ಗಂಟಲು ಸರಿಮಾಡಿಕೊಳ್ಳುತ್ತಾ ತಡಬಡಿಸುತ್ತಿದ್ದುದನ್ನು ನೋಡಿ ಪಂಡಿತರು ಸ್ವಲ್ಪ ರಹಸ್ಯ ಧ್ವನಿಯಿಂದಲೆಂಬಂತೆ “ಮತ್ತೆ ಜಟ್ಟಮ್ಮ  ಹೆಗ್ಗಡತಿಯವರು ಏನಾದರೂ ಹೇಳಿದ್ದರೇನೋ?” ಎಂದು ಕೇಳಿದರು. +“ಹೌದೇ ಸೈ, ಮರತೇ ಬಿಟ್ಟಿದ್ದೆ.” +“ಅದನ್ನೂ ಕೊಡ್ತೀನೊ, ಆ ಮೇಲೆ ಬಾ” +“ಮಕ್ಕಳಾಗಾಕೆ ಔಸ್ತಿ ಕೊಡ್ತೀರಂತೆ ಹೌದೇನ್ರೋ?” ಎಂದು ಗುತ್ತಿ ಬೆಪ್ಪು ನಗು ನಕ್ಕನು. +“ಆಗುವುದಕ್ಕೊ, ಹೋಗುವುದಕ್ಕೊ ನಿನಗ್ಯಾತಕ್ಕೆ?” +“ಅಲ್ಲ, ಪಾಪ, ಅವರು ಮಕ್ಕಳಿಲ್ಲದೆ ನಕ್ಕಬಡೀತಿದಾರೆ. +ಹೆಗ್ಗಡೇರು ಬ್ಯಾರೆ ಮತ್ತೊಂದು ಮದೇಗೆ ಗಾಣ ಹಾಕ್ತಿದಾರೆ. +ಬೇಗ ಮಕ್ಕಳಾದ್ರೂ ಆದ್ರೆ-” ಎಂದು ಒಡೆನೆಯೆ ಕನಿಕರದ ದನಿಯನ್ನು ಉದಾಸೀನಕ್ಕೆ ಬದಲಾಯಿಸಿ “ಅಲ್ಲಾ ಹೋಗ್ಲಿ ಬಿಡೀ. +ಗರೀಬನಿಗೆ ಯಾಕೆ ಆ ಇಚಾರ-” ಎಂದು ಮತ್ತೆ ಧ್ವನಿ ಬದಲಾಯಿಸಿ. +“ನನಗೊಂದು ಅಂತ್ರ ಬೇಕಿತ್ತಲ್ರೋ” ಎಂದನು. +“ಯಾವುದಕ್ಕೊ?” +“ಅದೇ ನೀವು ಹೇಳಿದ್ರಲ್ಲಾ ಅದಕ್ಕೆ”“ಅಂದರೆ?” +“ಈಗ ನೋಡಿ ತಿಮ್ಮಿನ ನಾ ಮದುವ್ಯಾಗಬೇಕು ಅಂತಾ ಸುಮಾರು ಕಾಲದಿಂದ ಕೇಳ್ತಿದ್ದೀನಿ. +ಆ ಬಚ್ಚ ಮನ್ನೆ ಮನ್ನೆ ಸುರು ಮಾಡ್ಯಾನೆ. +ತಿಮ್ಮಿಮನ್ಸು ನನ್ನ ಕಡೆ ಆಗಿ, ನಾ ಹೇಳ್ದ ಹಂಗೆ ಕೇಳಾಕೆ ಒಂದು ಅಂತ್ರ ಕೊಟ್ರೆ ನನ್ನ ಪರಾಣ ಇರೋ ತನಕ ನಿಮ್ಮ  ಗುಲಾಮನಾಗಿರ್ತೀನಿ”. +ಗುತ್ತಿಯ ದೈನ್ಯ ಸ್ಥಿತಿಯನ್ನು ಕಂಡು ಪಂಡಿತನಿಗೆ ನಗು ಬಂದರೂ ಅದನ್ನು ತೋರಗೊಡಲಿಲ್ಲ. +ಅದಕ್ಕೆ ಬದಲಾಗಿ ಮುಖಮುದ್ರೆಯನ್ನು ಅತ್ಯಂತ ಗಂಭೀರ ಮಾಡಿಕೊಂಡು ನಿಧಾನವಾಗಿ ಮಂಡೆ ಅಲ್ಲಾಡಿಸಿದನು. +ಗುತ್ತಿ ಅತಿ ದೈನ್ಯತೆಯಿಂದ “ದಮ್ಮಯ್ಯಾ ಅಂತೀನಿ. +ಒಷ್ಟು ಉಪಕಾರ ಮಾಡಿ. +ನಿಮ್ಮ ಕಾಲಿಗೆ ಬೀಳ್ತೀನಿ” ಎಂದು ತನ್ನ ಕುಳ್ಳನ್ನು ಮತ್ತಷ್ಟು ಕುಗ್ಗಿಸಿಕೊಂಡನು. +ಆ ಹೊಲೆಯನಿಂದ ಹಣ ವಸೂಲು ಮಾಡಿಕೊಳ್ಳುವುದೂ, ಹಸುವಿನ ಕೊಂಬಿನಿಂದ ಹಾಲು ಕರೆಯುವುದೂ ಒಂದೇ ಎಂದು ಚೆನ್ನಾಗಿ ಅರಿತಿದ್ದ ಕಣ್ಣಾಪಂಡಿತರು “ನನಗೆ ನಿನ್ನಿಂದ ದುಡ್ಡು ಕಾಸೂ ಏನೂ ಬೇಡ.” +“ಮತ್ತೇನು ಬೇಕು ಹೇಳಿ?” +“ಸ್ವಲ್ಪ ಸುಮ್ಮನೆ ನಿಲ್ಲೋ– ನಿನ್ನ ದುಡ್ಡು ಕಾಸು ನನಗೆ ಬೇಡ. +ನಿನ್ನ ಹೊಟ್ಟೆಯ ಮೇಲೆ ನಾನು ಹೊಡೆಯುವುದಿಲ್ಲ…. +ನನಗೆ ಬೇಕಾದಾಗ ಒಂದೊಂದು ಕೋಳಿ ಕೊಟ್ಟರೆ ಸಾಕು" + “ಬದಕಿದೆ, ನನ್ನೊಡ್ಯಾ” + “ಹೋಗಿ ಬಾ, ಆಮೇಲೆ ಕೊಡ್ತೀನಿ.”ಗುತ್ತಿ ತಟಕ್ಕನೆ ಹತಾಶನಾದಂತೆ “ಈಗಲೆ ಕೊಟ್ಟಿದ್ರೆ…” ಎಂದನು. +“ಈಗ ಹ್ಯಾಂಗೆ ಕೊಡುವುದೊ? +ಅದನ್ನು ಬರೆಯಬೇಕೋ ಬೇಡವೊ? +ಸಾಬರ ಅಂಗಡಿಯ ದಿನಸಿ ಅಲ್ಲ!” +“ಇಲ್ಲೆ ಕೂತ್ಕೊತೀನಿ-ಬರ್ಕೊಡಿ” ಎಂದು ಹಲ್ಲು ಹಲ್ಲು ಬಿಟ್ಟು ಅಂಗಲಾಚ ತೊಡಗಿದ. +ಗುತ್ತಿಯನ್ನು ಅಂಗಳದಲ್ಲಿಯೆ ಬಿಟ್ಟು ಕಣ್ಣಾಪಂಡಿತರು ಮನೆ ಒಳಗೆ ನುಸುಳಿದರು. +ಅವನು, ಎಳಬಿಸಿಲಿನಲ್ಲಿ ಕಂಬಳಿ ಹಾಕಿಕೊಂಡು, ಅದರ ಮೇಲೆ ಕೂತು, ಎಲೆಯಡಿಕೆ ಜಗಿಯುತ್ತಾ ಅಂತ್ರದ ಆಗಮನವನ್ನೆ ನಿರೀಕ್ಷಿಸುತ್ತಾ ಕುಳಿತನು. +ಹಳೆಮನೆಗೆ ಮೇಗರವಳ್ಳಿಯಿಂದ ಸುಮಾರು ಒಂದು ಹರಿದಾರಿ. +ಆಗುಂಬೆಗೆ ಹೋಗುವ ರಸ್ತೆಯ ಎಡಪಕ್ಕಕ್ಕೆ ಒಂದು ಗುಡ್ಡ ಹತ್ತಿ ಇಳಿದರೆ ಸರಿ, ಹಳೆಮನೆಯ ಗದ್ದೆಯ ಕೋಗೂ ಅಡಿಕೆ ತೋಟವೂ ಕಾಣಿಸುತ್ತವೆ. +ಕಾಡು ದಟ್ಟವಾಗಿ ಬೆಳೆದ ಒಂದು ಗುಡ್ಡಕ್ಕೂ ಅಡಿಕೆ ತೋಟಕ್ಕೂ ನಡುವೆ ಹಳೆಮನೆಯ ದೊಡ್ಡದಾದ ಚೌಕಿಮನೆ. +ಸಂಸ್ಕೃತಿಯ ದೃಷ್ಟಿಯಿಂದಲ್ಲ ಆಕೃತಿಯ ದೃಷ್ಟಿಯಿಂದ ನಿಜವಾಗಿಯೂ ದೊಡ್ಡ ಮನೆ. +ಮನೆ ಒಂದಾದರೂ ಅದರ ಕಾಲುಭಾಗಕ್ಕೆ ಊರು ಹೆಂಚು ಹೊದಿಸಿತ್ತು. +ಉಳಿದುದಕ್ಕೆ ಅಡಿಕೆ ಸೋಗೆ, ಹೆಂಚಿನ ಮೇಲೆ ಅಲ್ಲಲ್ಲಿ ಪಾಚಿ ಬೆಳೆದು ಒಣಗಿ ಕರಿಮಚ್ಚೆಗಳು ತೋರುತ್ತಿದ್ದರೂ ಒಟ್ಟಿನಲ್ಲಿ ಅವುಗಳ ಹೊಸತನ ಸಂಪೂರ್ಣವಾಗಿ ಮಾಸಿರಲಿಲ್ಲ. +ಆ ಒಂದು ಮನೆಯಲ್ಲಿ ಎರಡು ಸಂಸಾರಗಳಿದ್ದುವು. +ಅಥವಾ ಸರಿಯಾಗಿ ಹೇಳುವುದಾದರೆ, ಎರಡು ವರ್ಷದ ಹಿಂದೆ ಆ ಮನೆಯಲ್ಲಿ ಒಂದಾಗಿದ್ದ ಸಂಸಾರ ಒಡೆದು ಪಾಲಾಗಿ ಎರಡಾಗಿತ್ತು. +ತರುವಾಯ ಅವರವರ ಮನಸ್ಸಿನಂತೆ ಅವರವರ ಪಾಲಿಗೆ ಬಂದ ಮನೆಯಲ್ಲಿ ಒಳಗೂ ಹೊರಗೂ ಮಾರ್ಪಾಡಾಗಿತ್ತು. +ಜನರೂ ಕೂಡ ಬದಲಾಗಿ ‘ಹೆಂಚಿನ ಮನೆಯವರು, ಸೋಗೆ ಮನೆಯವರು’ ಎಂದು ಕರೆಯುವುದಕ್ಕೆ ತೊಡಗಿದ್ದರು. +ಆದರೆ ಮನೆಯವರ ಮುಂದೆ ಹಾಗೆ ಮಾತಾಡಿಕೊಳ್ಳುತ್ತಿರಲಿಲ್ಲ. +ಅದರಲ್ಲಿಯೂ ಸೋಗೆ ಮನೆಯವರು ಮುಂದೆ. +ಏಕೆಂದರೆ ದೊಡ್ಡ ಜಮೀನು ಆಳುಕಾಳು ಎಲ್ಲದರಲ್ಲಿಯೂ ಪ್ರಬಲವಾಗಿದ್ದದ್ದು ಕಾಲು ಪಾಲಿನ ಹೆಂಚಿನ ಮನೆಯಲ್ಲ, ಮುಕ್ಕಾಲು ಪಾಲಿನ ಸೋಗೆಮನೆ. +ಹಿರಿಯವರೂ, ಯಜಮಾನರೂ, ಸಂಪಾದನೆಯ ಮತ್ತು ಕೂಡಿಡುವ ವಿಚಾರದಲ್ಲಿ ಅದ್ಭುತ ಕರ್ತೃತ್ವಶಾಲಿಗಳೂ ಆಗಿದ್ದ ಸುಬ್ಬಣ್ಣ ಹೆಗ್ಗಡೆಯವರಿಗೆ ಆಸ್ತಿಯಲ್ಲಿ ಬಂದಿದ್ದಂತೆ ಮನೆಯಲ್ಲಿಯೂ ಮುಕ್ಕಾಲು ಪಾಲು ಬಂದಿತ್ತು. +ಬಹುಕಾಲದ ಹಿಂದೆಯೆ ಗತಿಸಿಹೋಗಿದ್ದ ಅವರ ಅಣ್ಣನ ಮಗ ಶಂಕರ ಹೆಗ್ಗಡೆಯವರಿಗೆ ಕಾಲು ಪಾಲು ಸಿಕ್ಕುವುದೂ ಶ್ರಮಸಾಧ್ಯವಾಯಿತೆಂದ ಮೇಲೆ ಸುಬ್ಬಣ್ಣ ಹೆಗ್ಗಡೆಯವರ ಇದಿರಾಗಲಿ ಅಥವಾ ಅವರ ಮಗ ತಿಮ್ಮಪ್ಪ ಹೆಗ್ಗಡೆಯವರ ಇದಿರಾಗಲಿ ‘ಹೆಂಚಿನ ಮನೆ’ ‘ಸೋಗೆಮನೆ’ ಎಂದು ಯಾರೂ ಮಾತಾಡುತ್ತಿರಲಿಲ್ಲ. +ಅಂತಹ ಸನ್ನಿವೇಶಗಳಲ್ಲಿ ಅವರು ಉಪಯೋಗಿಸುತ್ತಿದ್ದ ಹೆಸರು ‘ದೊಡ್ಡ ಮನೆ’ ‘ಸಣ್ಣ ಮನೆ’. +ಒಟ್ಟಾಗಿದ್ದ ಮನೆ ಒಡೆದುಹೋಗುವುದಕ್ಕೆ ಮುಖ್ಯ ಕಾರಣವಾಗಿದ್ದುದು ತಿಮ್ಮಪ್ಪ ಹೆಗ್ಗಡೆ. +ಆತನು ಶಂಕರ ಹೆಗ್ಗಡೆಯವರಿಗಿಂತಲೂ ಬಹಳ ಕಿರಿಯವನು. +ಇನ್ನೂ ಮದುವೆಯಾಗಿರಲಿಲ್ಲ. +ಶಂಕರ ಹೆಗ್ಗಡೆಯವರಿಗೆ ಮದುವೆಯೂ ಆಗಿ ಮಕ್ಕಳೂ ಆಗಿತ್ತು. +ಅಷ್ಟೊಂದು ಅಸಮಾನ ವಯಸ್ಕರಾಗಿದ್ದರೂ ಅವನಿಗೆ ಶಂಕರ ಹೆಗ್ಗಡೆಯವರ ಮೇಲೆ ಸಹಿಸಲಾರದ ಹೊಟ್ಟೆಕಿಚ್ಚು. +ಅಚ್ಚ ಕರ್ರಗಿದ್ದ ಅವನಿಗೆ ಶಂಕರಣ್ಣಯ್ಯನ ಬಿಳಿ ಮೈ ಕಂಡರಾಗುತ್ತಿರಲಿಲ್ಲ. +ತನ್ನ ತಂದೆಯಂತೆಯ ಕುಳ್ಳಾಗಿದ್ದ ಆತನಿಗೆ ದೊಡ್ಡಪ್ಪನ ಮಗನ ಎತ್ತರವನ್ನು ಕಂಡರೆ ಸಹಿಸುತ್ತಿರಲಿಲ್ಲ. +ತನ್ನ ಹಲ್ಲು ಯದ್ವಾತದ್ವಾ ಹುಟ್ಟಿ ಹುಳು ಹಿಡಿದಿರುವಾಗ ಶಂಕರಣ್ಣಯ್ಯನ ಹಲ್ಲು ಬೆಳ್ಳಗೆ ಶುಚಿಯಾಗಿ ಸಾಲಾಗಿ ಏಕಿರಬೇಕು? +ಸೌಮ್ಯವಾಗಿದ್ದ ಶಂಕರ ಹೆಗ್ಗಡೆಯವರ ಚೆಲುವಾದ ಕಣ್ಣುಗಳನ್ನು ನೋಡಿದಾಗಲೆಲ್ಲಾ ತಿಮ್ಮಪ್ಪ ಹೆಗ್ಗಡೆಗೆ ಭಯಂಕರವಾಗಿ ಡೊಳ್ಳುಬ್ಬಿದಂತಿರುವ ತನ್ನ ಮೆಣ್ಣೆಗಣ್ಣಿನ ವಿಕಾರದ ನೆನಪಾಗಿ ಎದೆ ಕುದಿಯುತ್ತಿತ್ತು. +ಯಾವ ತರ್ಕದಿಂದಲೊ ಏನೊ ತನಗೆ ಎಲ್ಲ ರೀತಿಯಿಂದಲೂ ಶಂಕರ ಹೆಗ್ಗಡೆಯವರಿಂದ ಅನ್ಯಾಯವಾಗಿದೆ ಎಂಬುದು ಅವನ ತಲೆಗೆ ಹೊಕ್ಕು ಹೋಗಿತ್ತು. +ಶಂಕರ ಹೆಗ್ಗಡೆ ತನಗಿಂತಲೂ ಮೊದಲೆ ಹುಟ್ಟಿ ತನಗೆ ಬರಬೇಕಾಗಿದ್ದ ಸಲ್ಲಕ್ಷಣಗಳನ್ನೆಲ್ಲಾ ಸುಲಿದುಕೊಂಡುಬಿಟ್ಟಿದ್ದಾನೆ ಎನ್ನುವಷ್ಟರಮಟ್ಟಿಗೆ ಅವರನ್ನು ಕಂಡರೆ ಅವನಿಗೆ ಆಗುತ್ತಿರಲಿಲ್ಲ. +ತಿಮ್ಮಪ್ಪ ಹೆಗ್ಗಡೆಯ ಕರುಬಿಗೂ ದ್ವೇಷಕ್ಕೂ ಒಳಗಾಗಿದ್ದರೂ ಶಂಕರ ಹೆಗ್ಗಡೆ ವಾಸ್ತವವಾಗಿ ಬಹಳ ಸಾಮಾನ್ಯ ವ್ಯಕ್ತಿ. +ಜೋಯಿಸರಾಗಿದ್ದ ಕಲ್ಲೂರು ಮಂಜಯ್ಯನವರ ಪ್ರಭಾವದಿಂದ ಆತನಿಗೆ ಒಂದು ವಿಧವಾದ ಅನುಕರಣದ ಸಂಸ್ಕೃತಿ ಲಭಿಸಿತ್ತು. +ಉಳಿದವರು ಶನಿವಾರದ ದಿನ ಮಾತ್ರ ಮಿಂದರೆ ಅವನು ದಿನವೂ ಮೀಯುತ್ತಿದ್ದನು. +ಉಳಿದವರ ಬಟ್ಟೆ ಕೊಳೆಯಿಂದ ರಟ್ಟಾಗಿದ್ದರೆ ಅವನದು ಬೆಳ್ಳಗಿರದಿದ್ದರೂ ಹಳ್ಳಿಯ ಹಾರುವರ ಪಾಣಿಪಂಚೆಯಷ್ಟರಮಟ್ಟಿಗಾದರೂ ಶುಚಿಯಾಗಿರುತ್ತಿತ್ತು. +ಜೋಯಿಸರು ಹಳೆಮನೆಗೆ ಬಂದಾಗ ಅವರೊಡನೆ ಇತರರಿಂತಲೂ ಸ್ವಲ್ಪ ಹೆಚ್ಚು ಕಾಲ ಮಾತಾಡುತ್ತಿದ್ದದ್ದಲ್ಲದೆ ಅವರನ್ನು ಕಳುಹಿಸುತ್ತಾ ಸ್ವಲ್ಪ ದೂರ ಹೋಗಿ ಹಳ್ಳ ದಾಟಿಸಿ ಬರುತ್ತಿದ್ದನು. +ಈ ಎಲ್ಲ ಕಾರಣಕ್ಕಾಗಿ ಜೋಯಿಸರಿಗೂ ಅವನನ್ನು ಕಂಡರೆ ವಿಶ್ವಾಸ. +‘ಏನಪ್ಪಾ ಶಂಕರಪ್ಪಾ, ಹೇಗಿದ್ದೀಯಾ?’ ಎಂದು ನಗೆಮೊಗದಿಂದ ಕುಶಲಪ್ರಶ್ನೆ ಮಾಡುತ್ತಿದ್ದರು. +ಇದನ್ನೆಲ್ಲಾ ಕಂಡು ಹುಡುಗನಾಗಿದ್ದ ತಿಮ್ಮಪ್ಪ ಹೆಗ್ಗಡೆಗೆ ಕರುಬು ಹೆಚ್ಚಾಯಿತು. +ಜೋಯಿಸರ ವಿಶ್ವಾಸ ಸಂಪಾದನೆಗಾಗಿ ಶಂಕರ ಹೆಗ್ಗಡೆಯೊಡನೆ ಪೈಪೋಟಿ ಮಾಡಿದನು. +ಅದರ ಪರಿಣಾಮ ವಿಪರೀತವಾಯಿತು. +ಅವನ ಕೊಳಕು ಬಟ್ಟೆ, ಹುಳುಕು ಹಲ್ಲು, ಡೊಳ್ಳೇರಿದ ಮೆಳ್ಳೆಗಣ್ಣು, ಯಾವಾಗಲೂ ಅಸಹ್ಯವಾಗಿ ತೆರೆದಿರುತ್ತಿದ್ದ ದಪ್ಪ ತುಟಿ, ತುಟಿಯ ಮೇಲೆ ತೊನ್ನಿನಂತಿದ್ದ ಬಿಳಿಯ ಮಚ್ಚೆ, ಬೆವರಿನ ದುರ್ಗಂಧ, ಮಾತಾಡಿದರೆ ಹಲ್ಲಿನ ಸಂಧಿಗಳಿಂದ ಚಿಮ್ಮುತ್ತಿದ್ದ ಎಂಜಲು ಹನಿ- ಇವುಗಳನ್ನೆಲ್ಲಾ ಸಹಿಸಲು ಪ್ರಯತ್ನಪಟ್ಟರೂ ಸಾಧ್ಯವಾಗದೆ ಮಂಜಯ್ಯ ಜೋಯಿಸರು ಒಂದು ದಿನ ಬಹಳ ಸಂಕೋಚದಿಂದ, ಆದರೂ ಅನಿವಾರ್ಯವಾಗಿ, “ತಿಮ್ಮಪ್ಪ, ನೀನು ಸ್ವಲ್ಪ ದೂರ ನಿಂತುಕೊಂಡು ಮಾತಾಡಪ್ಪಾ” ಎಂದುಬಿಟ್ಟರು. +ನಾಲ್ಕು ಮಂದಿಯ ಮುಂದೆ ತನಗಾಗಿದ್ದ ಅವಮಾನಕ್ಕಾಗಿ ಅಂದಿನಿಂದ ಅವನಿಗೆ ಜೋಯಿಸರನ್ನು ಕಂಡರೆ ಆಗುತ್ತಿರಲಿಲ್ಲ. +ಜೋಯಿಸರಿಗೆ ನೇರವಾಗಿ ತಾನೇನನ್ನೂ ಮಾಡಲಾರದೆ ಅವರವನಾಗಿದ್ದ ಶಂಕರ ಹೆಗ್ಗಡೆಯ ಮೇಲೆ ಮುಯ್ಯಿ ತೀರಿಸಿಕೊಳ್ಳುತ್ತಿದ್ದನು. +ಮನೆ ಪಾಲಾಗಿ ಶಂಕರ ಹೆಗ್ಗಡೆ ಬೇರೆ ಸಂಸಾರ ಹೂಡಿದ ಮೇಲೆ ತಿಮ್ಮಪ್ಪ ಹೆಗ್ಗಡೆಯ ಮನಸ್ಸಿಗೆ ಸ್ವಲ್ಪ ತೃಪ್ತಿಯಾಯಿತು. +ತಮ್ಮ ಪಾಲಿಗೆ ಬಂದಿದ್ದ ಮುಕ್ಕಾಲು ಪಾಲು ಜಮೀನು ಮನೆ ಇತ್ಯಾದಿಗಳಿಂದ ತಾವು ಶ್ರೀಮಂತರೆಂದೂ ದಾಯಾದಿಗಳು ದರಿದ್ರರೆಂದೂ ಹೆಮ್ಮೆ ಹುಟ್ಟಿ ಸಂತೋಷವಾಗಿತ್ತು. +ಆದರೆ ಒಂದೇ ವರ್ಷದ ಒಳಗಾಗಿ ಆ ತೃಪ್ತಿಗೂ ದಕ್ಕೆ ತಗುಲಿತು. +ಕಾರಣ ಶಂಕರ ಹೆಗ್ಗಡೆಯ ಏಳಿಗೆ. +ಶಂಕರ ಹೆಗ್ಗಡೆಯ ಹಿಸ್ಸೆಗೆ ಬಂದಿದ್ದ ಕಾಲು ಪಾಲು ಆ ಮನೆಯ ನೀಚಾಂಶವಾಗಿದ್ದರೂ ಕೊಂಚ ಬದಲಾವಣೆಗಳಿಂದ ಅದನ್ನು ಉತ್ತಮಾಂಶವಾಗಿ ಕಾಣುವಂತೆ ಮಾಡಿಕೊಂಡಿದ್ದನು. +ಆಗಲೂ ತಂಟೆ ತಕರಾರು ತಂದೊಡ್ಡಲು ಹವಣಿಸಿದ್ದನು ತಿಮ್ಮಪ್ಪ ಹೆಗ್ಗಡೆ. +ತಮ್ಮ ಮನೆಗೂ ಅಪಾಯವಾಗುತ್ತದೆಂದು ಅದನ್ನು ಬಲಾತ್ಕಾರವಾಗಿ ನಿಲ್ಲಿಸಲು ಮುಂದುವರಿದಿದ್ದನು. +ಸುಬ್ಬಣ್ಣ ಹೆಗ್ಗಡೆಯವರು ಅವನನ್ನು ತಡೆದು ಒಳಗೆ ಕರೆದುಕೊಂಡು ಹೋಗಿ “ನೀ ಸುಮ್ಮನಿರೊ, ಅವ ಏನಾರೂ ಸಾಯಲಿ; +ಗ್ವಾಡೆಗೆ ಕಿಡಕೀನಾದ್ರೂ ಇಡಿಸ್ಲಿ; +ಮನೇಗೆ ಕಳಾಸಾನಾದ್ರೂ ಹಾಕಸ್ಲಿ; +ಇನ್ನೊಂದು ವರ್ಸದೊಳಗೇ ಸಾಲಮಾಡಿ ದಿವಾಳಿ ತೆಗೆದ್ರೆ ಸೈಯಲ್ಲಾ. +ಹಾರ್ರು ಮಾಡಿದ್ಹಾಂಗೇ ಬಿಳೀ ಬಟ್ಟೆ ಹಾಕ್ಕೊಂಡು ಜಗಲಿಗೆ ಗಾಳಿ ಬೆಳಕು ಬಿಟ್ಟಕೊಂಡ್ರೆ ಮನೆ ಬಯಲಾಗದೆ ಏಟು ದಿನ ಇದ್ದಾತು!” ಎಂದು ಏಕಾಂತ ಹೇಳಿದ ಮೇಲೆ ಪಾಲುದಾರರ ವಿನಾಶಕ್ಕೆ ತಾನೇಕೆ ತಡೆಯಾಗಬೇಕೆಂದು ತಟಸ್ಥನಾಗಿದ್ದನು. +ಆದರೆ ಶಂಕರ ಹೆಗ್ಗಡೆ ತನ್ನ ಪಾಲಿನ ಮನೆಗೆ ಸೋಗೆಗೆ ಬದಲಾಗಿ ಊರು ಹೆಂಚು ಹಾಕಿಸುತ್ತಾನೆಂದು ವಾರ್ತೆ ಹಬ್ಬಿದಮೇಲೆ ತಿಮ್ಮಪ್ಪ ಹೆಗ್ಗಡೆಗೆ ಸಹಿಸಲಾರದಷ್ಟು ಹೊಟ್ಟೆಯುರಿಯಾಯ್ತು. +ಅಪ್ಪಯ್ಯನ ಹತ್ತಿರ ಹೋಗಿ “ನಾವೇನು ಕಡಿಮೆ ಅವನಿಗೆ” ಅವ ಮನೀಗೆ ಹೆಂಚು ಹಾಕಿಸೋವಾಗ ನಾವು ಸೋಂಗೆ ಹಾಕಿಸಿಕೊಂಡು ಕಾಲಮಾಡೋದು ಹ್ಯಾಂಗೆ?” ಎಂದು ತಮ್ಮ ಗೌರವಕ್ಕಾಗಿಯಾದರೂ ತಾವೂ ಹೆಂಚು ಹಾಕಿಸಬೇಕೆಂದು ಕೇಳಿಕೊಂಡನು. +ಸುಬ್ಬಣ್ಣ ಹೆಗ್ಗಡೆಯವರ ಹುಟ್ಟು ಜಿಪುಣತೆಗೆ ಒದೆ ಬಿದ್ದಂತಾಗಿ, ಹಣೆ ಬಡಿದುಕೊಳ್ಳುತ್ತಾ, “ಅಯ್ಯಯ್ಯಯ್ಯಯ್ಯೊ ನೀ ಎಲ್ ಕಲಿತಪ್ಪಾ ಈ ಮನೆಹಾಳ್ ಬುದ್ದೀನಾ? +ನಮ್ಮ ಅಪ್ಪ, ಅಜ್ಜ, ಮುತ್ತಜ್ಜ ಎಲ್ಲಾ ಸೋಂಗೆ ಮನೇಲೆ ಕಾಲ ಹಾಕಲಿಲ್ಲೇನೋ? +ಅವರಿಗಿಲ್ದೇ ಇದ್ದ ಬಹುಮಾನಾ ನಿಮಗೆಲ್ಲ ಈಗ ಬಂದುಬಿಡ್ತಲ್ಲೇ? +ಅಯ್ಯೋ, ಮನೆಹಾಳ್ ಮುಂಡೆ ಮಕ್ಕಳ್ರಾ, ನೀವು ಬಾಳಿರೇನೋ? +ಬೂದಿ ಹುಯ್ಕೊಂಡು ಹೋಗ್ತೀರೋ!” ಎಂದು ಮೊದಲಾಗಿ ಆಶೀರ್ವಾದ ಮಾಡಿ ಕಳುಹಿಸಿದ್ದರು. +ತಿಮ್ಮಪ್ಪ ಹೆಗ್ಗಡೆಗೆ ತಂದೆಯ ಮೇಲೆಯೂ ಬಹಳ ಬೇಜಾರಾಗಿ “ನೀನಿನ್ನೆಷ್ಟು ದಿವ್ಸ ಇದ್ದೀಯೊ? +ನೀ ಹೋದ ಮೇಲಾದ್ರೂ ನಾ ಹೆಂಚು ಹಾಕ್ಸೋಕೆ ಆಗ್ತದೋ ಇಲ್ಲೋ ನೋಡ್ತೀನಿ” ಎಂದು ಮನದಲ್ಲಿಯೆ ಬುಸುಗುಟ್ಟಿದ್ದನು. +ಹೀಗಿರುತ್ತಿರುವಾಗಲೆ ಶಂಕರ ಹೆಗ್ಗಡೆಯ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಒಂದು ಅವಕಾಶ ಸಿಕ್ಕಿತು. +ಸುಬ್ಬಣ್ಣ ಹೆಗ್ಗಡೆಯವರಿಗೆ ಬೇಕಾದಷ್ಟು ಆಸ್ತಿಪಾಸ್ತಿ ನಗನಟ್ಟುಗಳಿದ್ದರೂ ತಿಮ್ಮಪ್ಪ ಹೆಗ್ಗಡೆಗೆ ಹೆಣ್ಣು ಕೊಡುವುದಕ್ಕೆ ಹೆದರುತ್ತಿದ್ದರುನ ಹಡೆದ ತಂದೆ ತಾಯಿಗಳು. +ಅದಕ್ಕೆ ಕಾರಣ ತಿಮ್ಮಪ್ಪ ಹೆಗ್ಗಡೆಯ ಬಣ್ಣ, ರೂಪ ಮತ್ತು ವಿಕಾರಗಳು ಮಾತ್ರವೇ ಆಗಿರಲಿಲ್ಲ. +ಅವನ ಹಿಂಸಾ ಸ್ವಭಾವ, ಕ್ರೂರಬುದ್ಧಿ, ದುಷ್ಟ ಪ್ರಾಣಿಗೆ ಸಹಜವಾದ ಕಾಡುತನ ಇವುಗಳ ಪ್ರಸಿದ್ಧಿ ಅನೇಕರ ಕಿವಿಗೆ ಬಿದ್ದಿತ್ತು. +ಅದೂ ಅಲ್ಲದೆ ಸುಬ್ಬಣ್ಣ ಹೆಗ್ಗಡೆಯವರು ತಮ್ಮ ಮನೆಯ ಹೆಂಗಸರಿಗೆ ಸೋಮಾರಿತನದಿಂದಿರುವುದಕ್ಕೆ ಸ್ವಲ್ಪವೂ ಅವಕಾಶ ಕೊಡುತ್ತಿರಲಿಲ್ಲ. +ಎಂದರೆ ಅಡುಗೆ ಮಾಡುವುದೇ ಮೊದಲಾದ ಮನೆಯೊಳಗಿನ ಕೆಲಸಗಳ ಜೊತೆಗೆ ಅವರ ಕೈಲಿ ಮನೆಗೆ ಕಟ್ಟಿಗೆ ಹೊರಿಸುತ್ತಿದ್ದರು; +ಕೊಟ್ಟಿಗೆಗೆ ಸೊಪ್ಪು ತರಗು ಹೊರಿಸುತ್ತಿದ್ದರು; +ಗದ್ದೆಗೆ ಗೊಬ್ಬರ ಹಾಕಿಸುತ್ತಿದ್ದರು; + ಸಸಿ ನಡಿಸುತ್ತಿದ್ದರು; + ಕಳೆ ಕೀಳಿಸುತ್ತಿದ್ದರು. +ಅದೂ ಇದೂ ಏನು? +ಗೃಹಿಣಿಯರಿಂದ ಗೃಹಕಾರ್ಯಗಳೆಲ್ಲವನ್ನೂ ಚಾಚೂ ತಪ್ಪದೆ ಮಾಡಿಸುತ್ತಿದ್ದರು! +ಎಂಟು ದಿನಕ್ಕೊಮ್ಮೆಯಲ್ಲದೆ ಮೀಯಗೊಡುತ್ತಿರಲಿಲ್ಲ. +ಕೊಡುತ್ತಿದ್ದುದು ಜಡ್ಡು ಸೀರೆ. +ಅದನ್ನೂ ಹರಡು ಮುಚ್ಚುವಂತೆ ಉಟ್ಟುಕೊಂಡರೆ ಗ್ರಹಚಾರ ಬಿಡಿಸುತ್ತಿದ್ದರು. +‘ಒಕ್ಕಲು ಮಕ್ಕಳಿಗೆ ಮೊಳಕಾಲು ಮುಚ್ಚಿದರೆ ಸಾಕು. +ಬಿರಾಂಬರು ಉಟ್ಟ ಹಾಂಗೆ ಉಟ್ಟರೋ ಮನೆ ತೊಳೆದು ಹೋಗ್ತದೆ’ ಎಂದು ಮುಖದ ಮೇಲೆ ನೀರಿಳಿಯುವಂತೆ ಬಯ್ಯುತ್ತಿದ್ದರು. +ಈ ಎಲ್ಲಾ ಕಾರಣಗಳಿಗಾಗಿ ಹಳೆಮನೆಗೆ ಹೆಣ್ಣು ಕೊಡಲು ಜನ ಹೆದರುತ್ತಿದ್ದರು. +ಒಮ್ಮೆ ಸಿಂಬಾವಿ ಭರಮೈ ಹೆಗ್ಗಡೆಯವರು ತಮ್ಮ ನೆಂಟಬಾವ ಶಂಕರ ಹೆಗ್ಗಡೆಯವರ ಮನೆಗೆ ಬಂದಿದ್ದಾಗ ಸುಬ್ಬಣ್ಣ ಹೆಗ್ಗಡೆಯವರು ಅವರನ್ನು ಕಳ್ಳಿನ ಉಪಚಾರಕ್ಕೆ ಕರೆದಿದ್ದರು. +ಸುಬ್ಬಣ್ಣ ಹೆಗ್ಗಡೆಯವರು ಇಳಿವಯಸ್ಸಿನವರಾಗಿದ್ದರೂ ನಡುವಯಸ್ಸಿನವಾಗಿದ್ದ ಭರಮೈ ಹೆಗ್ಗಡೆಯವರಲ್ಲಿ ಬಹಳ ಸಲಿಗೆ. +ಬಹು ವಿಷಯಗಳಲ್ಲಿ ಅವರಿಬ್ಬರೂ ಸಮಪ್ರಕೃತಿಯವರಾಗಿದ್ದುದೇ ಅವರ ಸ್ನೇಹಕ್ಕೆ ಮೂಲಕಾರಣ. +ಆ ಸ್ನೇಹಕ್ಕೆ ಶಾಶ್ವತ ಬಾಂಧವ್ಯದ ಮುದ್ರೆಯನ್ನೊತ್ತುವ ಸಲುವಾಗಿಯೇ ಶಂಕರ ಹೆಗ್ಗಡೆಯ ತಂಗಿ ಜಟ್ಟಮ್ಮನನ್ನು, ಹಳೆ ಮನೆ ಪಾಲಾಗುವುದಕ್ಕೆ ಮೂರು ನಾಲ್ಕು ವರ್ಷಗಳ ಮುಂಚೆ, ಭರಮೈ ಹೆಗ್ಗಡೆಯವರಿಗೆ ಧಾರೆಯೆರೆದುಕೊಟ್ಟಿದ್ದರು. +ಕಳ್ಳು ಕುಡಿಯುತ್ತಾ ಕುಡಿಯುತ್ತಾ ಸುಬ್ಬಣ್ಣ ಹೆಗ್ಗಡೆಯವರು ತಮ್ಮ ಮಗನ ಮದುವೆಯ ಪ್ರಸ್ತಾಪವೆತ್ತಿ ಭರಮೈ ಹೆಗ್ಗಡೆಯವರ ತಂಗಿ ಲಕ್ಕಮ್ಮನನ್ನು ತಂದುಕೊಳ್ಳುವ ಇಚ್ಛೆಯನ್ನು ಸೂಚಿಸಿದರು. +ಸಿಂಬಾವಿ ಹೆಗ್ಗಡೆಯವರಿಗೂ ಬಹುದಿನಗಳಿಂದ ಮನಸ್ಸಿನಲ್ಲಿ ಒಂದು ಕೊರತೆ ಕೊರೆಯುತ್ತಿತ್ತು. +ಜಟ್ಟಮ್ಮಗೆ ಇದುವರಿಗೂ ಮಕ್ಕಳಾಗಿರಲಿಲ್ಲವಾದ್ದರಿಂದ ಮತ್ತೊಂದು ಮದುವೆಯಾಗುವ ಆಸೆ ಅವರಲ್ಲಿ ಆಗತಾನೆ ಕಣ್ದೆರೆಯುತ್ತಿತ್ತು. +ಹಳೆಮನೆ ಹೆಗ್ಗಡೆಯವರ ಸೂಚನೆ ಅವರಿಗೆ ದೈವೇಚ್ಛೆಯಂತೆಯೇ ತೋರಿ, ತಮ್ಮ ಮನಸ್ಸನ್ನು ಬಿಚ್ಚಿ ಹೇಳಿದರು; +ಸುಬ್ಬಣ್ಣ ಹೆಗ್ಗಡೆಯವರ ಕಿರಿಯ ಮಗಳೂ ತಿಮ್ಮಪ್ಪ ಹೆಗ್ಗಡೆಯ ತಂಗಿಯೂ ಆದ ಮಂಜಮ್ಮನನ್ನು ತಮಗೆ ತಂದುಕೊಂಡು ತಮ್ಮ ತಂಗಿ ಲಕ್ಕಮ್ಮನನ್ನು ತಿಮ್ಮಪ್ಪ ಹೆಗ್ಗಡೆಗೆ ಕೊಡಲು ಅಡ್ಡಿಯಿಲ್ಲ ಎಂದು. +ಸುಬ್ಬಣ್ಣ ಹೆಗ್ಗಡೆಯವರು ಯಾವುದನ್ನೂ ಹಿಂದಿನಿಂದ ತಿಳಿಸುತ್ತೇನೆ ಎಂದಿದ್ದರು. +ಮಗಳ ಮೇಲಿನ ಕನಿಕರದಿಂದ ಭರಮೈ ಹೆಗ್ಗಡೆಯವರಿಗೆ ಆಕೆಯನ್ನು ಬಲಿಕೊಡಲು ಅವರು ತಟಕ್ಕನೆ ಒಪ್ಪಿಕೊಳ್ಳದೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದರು. +ಆದರೆ ಅಂತಹ ವಿಷಯಗಳಲ್ಲೆಲ್ಲ ವಾಡಿಕೆಯಾಗಿ ನಡೆಯುವಂತೆ ಆ ರಹಸ್ಯ ಬಹಳ ಕಾಲ ರಹಸ್ಯವಾಗಿರಲಿಲ್ಲ. +ಪಿಸುಮಾತಾಗಿ ಕಿವಿಗೆ ಬಿದ್ದು ಗುಸು ಗುಸು ಹರಡುತ್ತಿತ್ತು. +ಹಾಗೆ ಹರಡುವುದಕ್ಕೆ ಇತ್ತ ಕಡೆಯಿಂದ ತಿಮ್ಮಪ್ಪ ಹೆಗ್ಗಡೆಯೂ ಅತ್ತ ಕಡೆಯಿಂದ ಭರಮೈ ಹೆಗ್ಗಡೆಯವರೂ ಕಾರಣರಾಗಿದ್ದರು. +ಸುದ್ದಿ ಕಿವಿಗೆ ಬಿದ್ದೊಡನೆಯೆ ಎದೆಗೆ ಸಿಡಿಲು ಬಿದ್ದಂತಾಗಿ ಜಟ್ಟಮ್ಮ ಹಳೆಮನೆಗೆ ಬಂದು ತನ್ನಣ್ಣನನ್ನು “ಏನೋ ಸುದ್ದಿ ಹಬ್ಬಿದೆಯಲ್ಲಾ ಹೌದೆ?” ಎಂದು ವಿಚಾರಿಸಿದಳು. +ಶಂಕರ ಹೆಗ್ಗಡೆಯವರು “ಸುದ್ದಿಯೇನೋ ಹಬ್ಬಿದೆ. +ಆದರೆ ನನಗೊಂದೂ ಗೊತ್ತಿಲ್ಲ. +ಚಿಕ್ಕಪ್ಪಯ್ಯನನ್ನೇ ಹೋಗಿ ಕೇಳು” ಎಂದರು. +“ನನಗೇನು ಅಂಜಿಕೆ? +ಹೋಗಿ ಕೇಳ್ತೀನಿ” ಎಂದು ಜಟ್ಟಮ್ಮ ಆಚೆಮನೆಗೆ ಹೋದಳು. +ಮನೆ ಪಾಲಾಗುವುದಕ್ಕೆ ಮೊದಲೆ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದ ಜಟ್ಟಮ್ಮನಿಗೆ ಮನೆ ಪಾಲಾದ ಮೇಲೆಯೂ ಸುಬ್ಬಣ್ಣ ಹೆಗ್ಗಡೆಯವರಲ್ಲಿ ಮೊದಲಿನಿಂದಲೂ ತನಗಿದ್ದ ಸಲಿಗೆಗೆ ಊನ ಬಂದಿರಲಿಲ್ಲ. +ಸುಬ್ಬಣ್ಣ ಹೆಗ್ಗಡೆಯವರು ಜಟ್ಟಮ್ಮನನ್ನು ಆದರದಿಂದ ಬರಮಾಡಿಕೊಂಡರು. +ಅಕ್ಕರೆಯಿಂದ ಮಾತಾಡಿಸಿದರು. +ಆ ಸುದ್ದಿಯ ವಿಚಾರ ಮಾತು ಬಂದಾಗ “ಅಯ್ಯೋ ಜಟ್ಟೂ, ನಿನಗೇನು ಬಿರಾಂತೇನೆ? +ಏನೋ ಮಾತಿಗೆ ಮಾತು ಬಂತು. +ಅತ್ತ ಹೋಗೊ ಮಾತು ಇತ್ತ ಹೋಯ್ತು!” ಎಂದು ನಗುತ್ತಾ ಕುಟ್ಟೊರಳಲ್ಲಿ ಅಡಕೆ ಕುಟ್ಟತೊಡಗಿದ್ದರು. +ಜಟ್ಟಮ್ಮನಿಗೆ ಮನಸ್ಸು ಸಮಾಧಾನವಾಗಿ ಗಂಡನ ಮನೆಗೆ ಹಿಂತಿರುಗಿದ್ದಳು. +ಹಿಂತಿರುಗಿದ ಮೇಲೆ ಬಹಳ ಆಲೋಚಿಸಿದಳು: +ಇವರು ಎರಡನೆ ಮದುವೆ ಆಗುವುದೇತಕ್ಕೆ? +ನನಗೆ ಮಕ್ಕಳಾಗಲಿಲ್ಲ ಎಂದಲ್ಲವೇ? +ನಾನು ಸತ್ತಮೇಲಾದರೂ ರಗಳೆಯಿರಲಿಲ್ಲ. +ಈಗ ನಾನೇ ಹೋಗಿ, ನಮ್ಮ ದಾಯಾದಿಗಳ ಮನೆ ಹೆಣ್ಣು ಕೇಳಿ ಇವರಿಗೆ ಮತ್ತೊಂದು ಮದುವೆ ಮಾಡಿಸಿ, ಸವತಿಯನ್ನು ಮನೆದುಂಬಿಸಿಕೊಳ್ಳಬೇಕೆಂದರೆ ಅದಕ್ಕಿಂತಲೂ ಕೆರೆ ಬಾವಿ ತಳ ನೋಡುವುದು ಲೇಸು. +ಆಮೇಲೆ ತನಗೆ ಬೇಗನೆ ಮಕ್ಕಳಾಗುವುದಕ್ಕೆ ಧಾರ್ಮಿಕ ಕಾರ್ಮಿಕ ಉಪಾಯಗಳನ್ನೆಲ್ಲಾ ಕೈಕೊಂಡಳು. +ದೇವರು ದಿಂಡರಿಗೆ ಹೇಳಿಕೊಂಡಳು. +ಮತ್ತು ಮೇಗರವಳ್ಳಿಯಲ್ಲಿ ಮಲೆಯಾಳದ ಪಂಡಿತರೆಂದು ಪ್ರಸಿದ್ಧಿ ಪಡೆದಿದ್ದ ಕಣ್ಣಾ ಪಂಡಿತರಿಂದ ಔಷಧ ತರಿಸಿಕೊಂಡಳು. +ಅಲ್ಲದೆ ಗಂಡನ ತಂಗಿ ಲಕ್ಕಮ್ಮನೊಡನೆ ಜಗಳವನ್ನೂ ಹೆಚ್ಚಿಸಿದಳು. +“ಹಂದೀ ಒಡ್ಡೀಗೆ ಹಾಕ್ತಾರಂತಲ್ಲೇ ನಿನ್ನಾ” ಎಂದು ಜಟ್ಟಮ್ಮ ಹೀನೈಸಿದರೆ, ಲಕ್ಕಮ್ಮ “ಹಂದೀ ಒಡ್ಡಿನಿಂದಲೇ ಬರ್ತದಂತಲ್ಲಾ ನಿನ್ನ ಸವತಿ!” ಎಂದು ಅತ್ತಿಗೆಯ ಕುತ್ತಿಗೆ ಹಿಸುಕುವಂತೆ ಮಾತಾಡುತ್ತಿದ್ದಳು. +ಅವರಿಬ್ಬರ ಮಾತಿನ ತೋರುಬೆರಳೂ ಹಳೆಮನೆಯಲ್ಲಿ ಸೋಗೆ ಪಾಲಿನವರು ಸಾಕುತ್ತಿದ್ದ ಹಂದಿಗಳನ್ನು ಕುರಿತದ್ದಾಗಿತ್ತು. +ಸುಬ್ಬಣ್ಣ ಹೆಗ್ಗಡೆಯವರ ಮನೆಯ ಮುಂದೆಯೇ ಹಂದಿಗಳಿಗೆ ಒಡ್ಡಿಗಳನ್ನು ಮಾಡಿದ್ದರಿಂದ ಎಲ್ಲಿ ನೋಡಿದರೂ ಗಲೀಜಾಗಿ ಗಬ್ಬುವಾಸನೆ ಸದಾ ಹಬ್ಬಿರುತ್ತಿತ್ತು. +ಜನಿವಾರದವರಂತೂ ಅವರಲ್ಲಿಗೆ ಸಾಲಕ್ಕಾಗಿಯಾಗಲಿ ಇತರ ಕಾರ್ಯಗಳಿಗಾಗಲಿ ಹೋದಾಗ ಮೂಗು ಮುಚ್ಚಿಕೊಂಡು ತುದಿಗಾಲಲ್ಲಿ ನಡೆಯುತ್ತಾ ಉಗುಳುತ್ತಾ ಜಗಲಿಗೆ ಓಡುತ್ತಿದ್ದರು. +ಸುಬ್ಬಣ್ಣ ಹೆಗ್ಗಡೆಯವರಿಗೆ ಮಾತ್ರ ಸ್ವಲ್ಪವೂ ಅಸಹ್ಯವಾಗುತ್ತಿರಲಿಲ್ಲ. +ಅವರಿಗೆ ಕೋಳಿ ಒಡ್ಡಿ, ಕುರಿಒಡ್ಡಿ, ಹಂದಿಒಡ್ಡಿಗಳೆಂದರೆ ಗದ್ದೆ ತೋಟಗಳಷ್ಟೆ ಮುಖ್ಯವಾಗಿದ್ದುವು; ಅಮೂಲ್ಯವಾಗಿದ್ದುವು. +ಸಹಸ್ರಾರು ರೂಪಾಯಿಗಳಿಗೆ ಸ್ವಾಮಿಯಾಗಿದ್ದರೂ ಕಂಬಳಿ ಹೊದೆದುಕೊಂಡು, ಕೊಳಕಲು ಪಂಚೆಯೊಂದನ್ನು ಮೊಳಕಾಲಿನವರೆಗೆ ಸುತ್ತಿಕೊಂಡು, ಕುಟುಂಬದ ಯೋಗಕ್ಷೇಮವನ್ನು ವಿಚಾರಿಸುವುದಕ್ಕಿಂತಲೂ ಸಾವಿರ ಪಾಲು ಹೆಚ್ಚಿನ ಮಮತೆಯಿಂದಲೂ ಕುತೂಹಲದಿಂದಲೂ ಆ ಪ್ರಾಣಿಗಳ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಾ ಸೇವೆ ಮಾಡುತ್ತಿದ್ದರು. +ಅವುಗಳಿರುವ ಒಡ್ಡಿಗಳು ಕಣ್ಣಿನಿಂದ ಮರೆಯಾಗಿದ್ದರೆ ಮನಸ್ಸಿನಿಂದಲೂ ಎಲ್ಲಿಯಾದರೂ ಮರೆಯಾಗಿ ಬಿಟ್ಟಾವು ಎಂಬ ಅಳುಕಿನಿಂದಲೇ ಜಗಲಿಯ ಎದುರುಗಡೆ, ನೇರವಾಗಿ ಕಾಣುವಂತೆ, ಒಡ್ಡಿಗಳನ್ನೆಲ್ಲಾ ಕಟ್ಟಿಸಿದ್ದರು. +ಜನರು ತಮ್ಮನ್ನು ನೋಡಿ ಒಳಗೊಳಗೆ ಇಸ್ಸಿ ಎಂದುಕೊಂಡರೆ, ಮುದುಕರಾಗಿದ್ದ ಸುಬ್ಬಣ್ಣ ಹೆಗ್ಗಡೆಯವರಿಗೆ ಅದು ಲಕ್ಷಕ್ಕೇ ಬರುತ್ತಿರಲಿಲ್ಲ. +ಬಂದರೂ ಅಂಥವರನ್ನು ಕಂಡು ಕನಿಕರಪಡುತ್ತಿದ್ದರೇ ಹೊರತು ತಾವೇ ನಾಚಿಕೆ ಪಟ್ಟುಕೊಳ್ಳುವಷ್ಟರ ಮಟ್ಟಿಗೆ ಸೂಕ್ಷ್ಮ ರುಚಿಗಳಾಗಿರಲಿಲ್ಲ ಅವರು. +ಮುಪ್ಪಿಗೆ ಇರುಳೆಂದರೆ ಅನಿವಾರ್ಯವಾದ ಒಂದು ಮಹಾ ಈತಿಬಾಧೆ. +ಸಾವಿನ ಅನಂತ ನಿದ್ರೆ ಬಳಿಸಾರುವುದರಿಂದಲೋ ಏನೋ ಬಾಳೆಲ್ಲ ದುಃಸ್ವಪ್ನವೆಂಬಂತೆ ಆಯಾಸಕರವಾಗಿ ಪರಿಣಮಿಸುತ್ತದೆ. +ಇಷ್ಟವಿರಲಿ ಬಿಡಲಿ ಮರಣಕ್ಕೆ ಮುಳುಗಲೇ ಬೇಕಾಗುತ್ತದೆ ಎಂಬ ಅರಿವಿನಿಂದ ಮೈದೋರುವ ಆತ್ಮದ ಅಶಾಂತಿ ನಿರಾಕಾರವಾಗಿದ್ದರೂ ಸಾಂಸಾರಿಕವಾದ ನೂರಾರು ಕೋಟಲೆಗಳ ಆಕಾರ ತಾಳಿ ನಿದ್ದೆಯನ್ನೆಲ್ಲಾ ಕದಡಿಬಿಡುತ್ತದೆ. +ಅದರಲ್ಲಿಯೂ ದೇವರು, ಧರ್ಮ, ಕಲೆ, ಸಂಸ್ಕೃತಿ ಇತ್ಯಾದಿಗಳಿಂದ ದೂರವಾಗಿ, ಹಗಲೂ ಬೈಗೂ ಐಹಿಕ ಸಂಪತ್ತಿನ ಸಂಪಾದನೆ ಮತ್ತು ಸಂರಕ್ಷಣೆಗಳಲ್ಲಿಯೇ ಮನಸ್ಸು ಮುಳುಗಿ, ಕ್ರಿಯಾಪೂರ್ಣ ನಾಸ್ತಿಕತೆಯ ಸಜೀವ ಸಾಹಸಕ್ಕಿಂತಲೂ ಸಾವಿರ ಪಾಲು ನಿರ್ಜೀವವಾದ ಸಂಪ್ರದಾಯದ ಆಸ್ತಿಕತೆಯ ಮಂದ ಔದಾಸೀನ್ಯದ ಮೃತ್ಯುವಿಗೆ ತುತ್ತಾದ ಮುದುಕನಿಗಂತೂ ಇರುಳೆಂದರೆ ನರಕಶಿಕ್ಷೆ. +ಸಹಧರ್ಮಿಣಿಯ ಸೇವೆಯೂ ಆಕೆಯ ಮರಣದಿಂದ ನಷ್ಟವಾಗಿದ್ದರಂತೂ ಮನಸ್ಸಿನ ಖಾಲಿ ಪಿಶಾಚಿಯ ಕಾರ್ಖಾನೆಯಾಗುತ್ತದೆ. +ಅಂತಹ ಪಿಶಾಚಿಯ ಕಾರ್ಖಾನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರು ಬೆಳಗಾಗುವುದಕ್ಕೆ ಬಹಳ ಮುಂಚೆಯೆ ಏಳುತ್ತಿದ್ದರು. +ಆವೊತ್ತೂ ಕಡೆಯ ಜಾವದ ಮೊದಲ ಪಾದದಲ್ಲಿಯೆ ಎದ್ದಿದ್ದರು. +ಹಿಂದಿನ ದಿನ ಬೈಗಿನಲ್ಲಿ ಬಹಳ ಜೋರಾಗಿ ಮುಂಗಾರು ಮಳೆ ಬಿದ್ದಿದ್ದರಿಂದ ಬೆಳಗಿನ ಜಾವದ ಹವಾ ಬಹಳ ತಂಪಾಗಿತ್ತು. +ಮುಪ್ಪಿನ ಮೈಗೆ ಅದು ಚಳಿಚಳಿಯಾಗಿ ಕಂಡದ್ದರಿಂದ ಸುಬ್ಬಣ್ಣ ಹೆಗ್ಗಡೆಯವರು ತಮ್ಮ ಕಗ್ಗವಿ ಕೋಣೆಯಿಂದ ಜಗಲಿಗೆ ಬಂದವರು, ಅಲ್ಲಿಯೆ ಕೆಸರಲಿಗೆಯ ಮೇಲೆ, ವಾಡಿಕೆಯ ಜಾಗದಲ್ಲಿ ವಾಡಿಕೆಯಂತೆ ಮುಂಡಿಗೆಗೆ ಒಡಗಿಕೊಂಡು, ಹೊದೆದಿದ್ದ ಕಂಬಳಿಯನ್ನು ಇನ್ನೂ ಸ್ವಲ್ಪ ಬಲವಾಗಿ ಸುತ್ತಿ ಹೊದೆದು, ಕತ್ತಲೆಯಲ್ಲಿಯೆ ಕೈತಡವಿ ಕುಟ್ಟೊರಳನ್ನೂ ಎಲೆಯಡಿಕೆಯ ಚೀಲವನ್ನೂ ಹತ್ತಿರಕ್ಕೆ ಎಳೆದು, ಚೀಲದಿಂದ ಕೈಯಂದಾಜಿನ ಮೇಲೆ ಗಂಡಡಿಕೆಯೊಂದನ್ನು ಆಯ್ದು ತೆಗೆದು, ಉಫ್ ಎಂದು ಊದಿ, ಲೋಹದ ಕುಟ್ಟೊರಳಿಗೆ ಟಣಕ್ಕನೆ ಹಾಕಿ, ಕುಟ್ಟತೊಡಗಿದರು. +ಬಹಿರ್ಮುಖ ಜೀವದ ಮುಪ್ಪಿನ ಭಾಗಕ್ಕೆ ಮೌನವು ಮಹಾಪಿಶಾಚಿ. +ಕುಟ್ಟವ ಸದ್ದಿಗೆ ಆ ಪಿಶಾಚಿ ತೊಲಗಿದಂತಾಗಿ ಹೆಗ್ಗಡೆಯವರಿಗೆ ಎದೆ ಭಾರ ಕಡಿಮೆಯಾಗಿ ಮನಸ್ಸಿಗೆ ಧೈರ್ಯವಾಯಿತು; +ನೆಮ್ಮದಿಯೂ ಆಯಿತು. +ಬೇರೆ ಇನ್ನಾವ ಸದ್ದೂ ಇರದೆ ನಿಃಶಬ್ದವಾಗಿದ್ದ ಹಳೆಮನೆಯ ಆ ವಟಾರದಲ್ಲಿ ಸುಬ್ಬಣ್ಣ ಹೆಗ್ಗಡೆಯವರ ಕುಟ್ಟೊರಳಿನ ಸದ್ದೊಂದೇ ಸಾಮ್ರಾಟವಾಗಿತ್ತು. +ತುಸುಹೊತ್ತಿನಲ್ಲಿಯೆ ಜಗಲಿಗೆ ಎದುರಾಗಿ ಅಂಗಳದಲ್ಲಿದ್ದ ಒಡ್ಡಿಗಳಲ್ಲಿಯೂ, ಒಡ್ಡಿಗಳ ಹಿಂದಿದ್ದ ಕೊಟ್ಟಿಗೆಯಲ್ಲಿಯೂ ಗೊರಸಿನ ಸದ್ದು, ಕೊಂಬಿನ ಸದ್ದು, ದೊಂಟೆಯ ಸದ್ದು, ಹೋತದ ಸೀನಿನ ಸದ್ದು, ಸಲಗನ ಗುರುಗುರು ಸದ್ದು, ಒಂದಾದ ಮೇಲೊಂದು ಕೇಳಿಸತೊಡಗಿತು. +ಹಾಗೆಯೆ ತೋಟದ ಬೇಲಿಯಲ್ಲಿಯೂ ಅಥವಾ ಅಮಟೆಯ ಮರದಲ್ಲಿಯೊ ಹಂಡಹಕ್ಕಿಗಳೆರಡು ಸಿಳ್ಳು ಪಡಿಸಿಳ್ಳುಗಳಿಂದ ಪ್ರಣಯ ಸಂಭಾಷಣೆಗೆ ಮೊದಲು ಮಾಡಿದುವು. +ಅದಾದ ಸ್ವಲ್ಪ ಹೊತ್ತಿನಲ್ಲಿಯೆ, ಎಲೆಯುದುರಿ ಬರಲಾಗಿ ಕೆಂಪು ಹೂ ಮಾತ್ರ ತುಂಬಿ ಹೋಗಿದ್ದ ಹಾಲಿವಾಣದ ಮರದಲ್ಲಿ ಎಂದು ತೋರುತ್ತದೆ, ಕಾಜಾಣವೊಂದು ಆಲಾಪನೆಗೆ ತೊಡಗಿತು. +ಸುಬ್ಬಣ್ಣ ಹೆಗ್ಗಡೆಯವರ ಗಮನ ಹಂಡಹಕ್ಕಿಯ ಸಿಳ್ಳಿನ ಕಡೆಗಾಗಲಿ, ಕಾಜಾಣದ ಆಲಾಪನೆಯ ಕಡೆಗಾಗಲಿ ಒಂದಿನಿತೂ ಹೊರಳಿರಲಿಲ್ಲ. +ಕುಟ್ಟುವುದನ್ನು ಸ್ವಲ್ಪ ಸಿಲ್ಲಿಸಿ, ಕತ್ತೆತ್ತಿ, ಕಿರುದಿಟ್ಟಿಯಿಂದ ಅಂಗಳದ ಕಡೆಗೆ ನೋಡಿದರು. +ಮನೆಯ ಕತ್ತಲೆಯಲ್ಲಿದ್ದ ಅವರಿಗೆ ಬಯಲಿನ ಕತ್ತಲೆಯಲ್ಲಿದ್ದ ಒಡ್ಡಿಗಳ ಆಕೃತಿ ಆಹ್ವಾನಕರವಾಗಿ ಗೋಚರಿಸಿತು. +ಒಡ್ಡಿಗಳೊಳಗೆ ಆಗುತ್ತಿದ್ದ ಸದ್ದುಗಳೆಂದರೆ ಹೆಗ್ಗಡೆಯವರಿಗೆ ಬಹುಕಾಲದ ಸಾಧನದಿಂದ ಸಾಕ್ಷತ್ಕಾರವಾಗಿದ್ದು ಅವರಿಗೆ ಮಾತ್ರವೇ ಸಂವೇದ್ಯವಾಗುತ್ತಿದ್ದ ಯಾವುದೋ ಗುಪ್ತ ಲಿಪಿಯ ಸಂಕೇತ ಸ್ವರ ವಿಜ್ಞಾನವಾಗಿತ್ತು. +ಊರು ಹಂದಿಯ ದಡ್ಡೆಯ ಸದ್ದೊ, ಸಲಗನ ಸದ್ದೊ, ಮರಿಗಳ ಸದ್ದೊ, ಹೋತನ ಸೀನೊ, ಆಡಿನ ಸೀನೊ, ಕೆಂಪು ಹುಂಜದ ಕೂಗೊ, ತಿಮ್ಮಪ್ಪ ಹೆಗ್ಗಡೆ ಕೋಳಿ ಅಂಕದಲ್ಲಿ ಗೆದ್ದು ತಂದಿದ್ದ ಬಿಳಿ ಸಳಗದ ಕೂಗೊ, ಹೆಗ್ಗಡೆಯವರಿಗೆ ಒಂದೊಂದೂ ಅರ್ಥವಾಗುತ್ತಿತ್ತು; ಭಾವವಾಗುತ್ತಿತ್ತು. +ಮಹಾಕವಿ ಮಹಾಛಂದಸ್ಸಿನ ನಾದವಿನ್ಯಾಸವನ್ನು ಸವಿಯುವಂತೆ ಸವಿದು ಸುಖಿಸುತ್ತಲೂ ಇದ್ದರು. +ಅಷ್ಟರಮಟ್ಟಿಗೆ ಆ ಒಂದೊಂದು ಸದ್ದಿಗೂ ಅವರ ಭಾವಕೋಶ ಬೆಳೆದುಹೋಗಿತ್ತು. +ಬೆಳಕುಬೆಳಕಾಗಿ ಕತ್ತಲೆ ಹರಿಯತೊಡಗಿತು. +ಹೆಗ್ಗಡೆಯವರು ಎಲೆಯಡಿಕೆಯನ್ನು ಜಗಿಯುತ್ತಾ ಗಂಟಲಿನೊಳಗೆ ಯಜಮಾನ ಸದ್ದು ಮಾಡುತ್ತಾ ಕೆಸರಲಿಗೆ ಬಿಟ್ಟೆದ್ದರು. +ಗಂಡಲಿನೊಳಗೇ ಕೆಮ್ಮಿನ ವೇಷದಿಂದ ಅವರು ಮಾಡುತ್ತಿದ್ದ ಆ ಯಜಮಾನನ ಸದ್ದೆಂದರೆ ಹಳೆಮನೆಗೆ ‘ಅಲಾರಾಂ’ ಇದ್ದಂತೆ. +ಸೋಗೆ ಮನೆಯಲ್ಲಿಯೂ ಹೆಂಚಿನ ಮನೆಯಲ್ಲಿಯೂ ಮಲಗಿದ್ದವರು ಎಚ್ಚತ್ತು ಗೃಹ ಕಾರ್ಯಗಳಲ್ಲಿ ತೊಡಗುತ್ತಿದ್ದ ಸದ್ದು ಪ್ರಾರಂಭವಾದುವು. +ಮುರುವಿನ ಒಲೆಯ ಬೂದಿ ಗುಡ್ಡೆಯಲ್ಲಿ ಮಲಗಿದ್ದ ಕಂತ್ರಿನಾಯಿಗಳಿಗೂ ನಿದ್ರಾಭಂಗವಾಯಿತು. +ಕರೆಯುವ ಕೊಟ್ಟಿಗೆಗೆ ಮುರುಹಾಕುವ ಕರ್ತವ್ಯಕ್ಕೆ ಮರದ ಮರಿಗೆ ಹಿಡಿದು ಬಂದ ಹಳೆಪೈಕದ ಹೂವಿ ದಿನವೂ ಒದರುತ್ತಿದ್ದಂತೆ “ಹಛಾ!ಹಛಾ!ಇವಕ್ಕೇನು ಜ್ಞವನಿದ್ದೆ ಬಂದವಪ್ಪಾ?” ಎಂದು ಗದರಿದಳು. + ಪಾಪ ಒಂದು ಕಂತ್ರಿ ನಾಯಿ ಇನ್ನೂ ಆಕಳಿಸಿ, ಬೆನ್ನು ನೀಳಿ, ಮೈನುರಿದಿರಲಿಲ್ಲ! +ಬಿತ್ತು ಒಂದೇಟು, ಮರದ ಮರಿಗೆಯಿಂದಲೆ! +ನಾಯಿ ಬೆಚ್ಚಿತೆ ವಿನಾ ಕೂಗಲಿಲ್ಲ! +ಇನ್ನೂ ಸರಿಯಾಗಿ ಎಚ್ಚರವಾಗಿರಲಿಲ್ಲ ಅದಕ್ಕೆ, ನೋವನ್ನು ಅನುಭವಿಸಿ ಕೂಗುವುದಕ್ಕೆ! +ಬೆಳಗೇನೊ ಆಗಿತ್ತು. +ಸುಬ್ಬಣ್ಣ ಹೆಗ್ಗಡೆಯವರು, ತಮ್ಮ ಕುಳ್ಳಾದ ಗುಜ್ಜು ದೇಹವನ್ನು ಮೊಣಕಾಲಿನವರೆಗೂ ಕರಿಕಂಬಳಿಯಿಂದ ಸುತ್ತಿ, ಭದ್ರವಾಗಿ ಹೊದೆದುಕೊಂಡು ಅಂಗಳಕ್ಕಿಳಿದರು. +ಹಿಂದಿನ ದಿನ ಚೌರಮಾಡಿಸಿದ್ದರಿಂದ ಲಾಳದಾಕಾರದಲ್ಲಿ ನುಣ್ಣಗಿದ್ದ ತಲೆಯ ಮುಂಭಾಗಕ್ಕೆ ಶೀತ ತಗುಲಿದಂತಾಗಲು ಮತ್ತೆ ಹಿಂದಕ್ಕೆ ಹೋಗಿ ಒಂದು ಪುರಾತನವಾದ ದಗಲೆತೋಪಿಯನ್ನು ಸಿಕ್ಕಿಸಿಕೊಂಡು ಬಂದರು. +ಮಳೆಗೆ ಕೆಸರೇಳುವ ಅಂಗಳದಲ್ಲಿ ಕೆಸರು ತುಳಿಯದೆ ನಡೆಯಲೆಂದು ಸಾಲಾಗಿ ಹಾಕಿದ್ದ ಕಲ್ಲುಗಳ ಮೇಲೆ ನಡೆದು ಒಡ್ಡಿಗಳ ಸಮೀಪ್ಕಕೆ ಹೋದರು. +ಆ ಪ್ರಾಣಿಗಳಿಗೂ ಆ ಪ್ರಾಣಿಯನ್ನು ಕಂಡರೆ ವಿಶ್ವಾಸವೋ ಏನೊ? +ಒಡ್ಡಿಯ ಕಂಡಿಕಂಡಿಗಳಲ್ಲಿ ಗಲಿಬಿಲಿ ಮಾಡುತ್ತಾ ಕೋಳಿ ಕುಣಿದಾಡಿದುವು. +ಬಾಗಿಲು ತೆಗೆಯುತ್ತಾರೆಂಬ ಸಂತಸಕ್ಕಾಗಿ ಒಂದರಮೇಲೊಂದು ನಾಮುಂದೆ ತಾಮುಂದೆ ಎಂದು ಒಡ್ಡಿಯ ಕದವಿದ್ದೆಡೆಗೆ ಕುರಿ ನುಗ್ಗತೊಡಗಿದುವು. +ಹಂದಿಗಳೂ, ಸಲಗ ದಡ್ಡೆ ಮರಿ ಎಲ್ಲಾ, ಗುರುಗುರು ಗುಟ್ಟುತ್ತಾ ಓಡಾಡಲಾರಂಭಿಸಿದುವು. +ಸುಬ್ಬಣ್ಣ ಹೆಗ್ಗಡೆಯವರು ಹಿಗ್ಗಿನಿಂದಲೆಂಬಂತೆ ತಮ್ಮ ಮೂಕ ಕುಟುಂಬದ ಕಡೆಗೆ ಸ್ವಲ್ಪ ಹೊತ್ತು ನೋಡಿ, ಯಾವ ಒಡ್ಡಿಯ ಬಳಿಗೆ ಮೊದಲು ಹೋಗುವುದೆಂದು ಮನಸ್ಸು ತುಯ್ಯುತ್ತಾ ನಿಂತು, ಕೊನೆಗೆ ಮೊನ್ನೆ ಮೊನ್ನೆ ಮರಿಹಾಕಿದ್ದ ದಡ್ಡೆಯ ಬಾಣಂತಿತನದ ಯೋಗ ಕ್ಷೇಮವನ್ನೆ ಪ್ರಧಾನವನ್ನಾಗಿ ಭಾವಿಸಿ ಹಂದಿಒಡ್ಡಿಯ ಕಡೆಗೆ ಸರಿದರು. +ಕೆಸರು ತುಳಿಯದಿರುವುದಕ್ಕಾಗಿ ಹಾಕಿದ್ದ ಕಲ್ಲುಗಳಿಂದ ಕೆಳಗಿಳಿಯುತ್ತಲೆ ಕೋಳಿಯ, ಕುರಿಯ, ಹಂದಿಯ ಹೇಸಿಗೆಯೊಡನೆ ಕಲಬೆರಕೆಯಾಗಿದ್ದ ಕೆಸರುಮಣ್ಣು ಕಾಲ್‌ಬೆರಳು ಸಂಧಿಗಳಲ್ಲಿ ಪಿಚಕ್ಕನೆ ನುಗ್ಗತೊಡಗಿದರೂ ಅತ್ತ ಕಡೆಗೆ ಸ್ವಲ್ಪವೂ ಗಮನಕೊಡದೆ ಹೆಗ್ಗಡೆಯವರು ಹಂದಿಯೊಡ್ಡಿಯ ಬಾಗಿಲಿಗೆ ಹೋದರು. +ನಿತ್ಯಪರಿಚಯದಿಂದ ಮನಸ್ಸಿನಲ್ಲಿ ಮೈತ್ರಿಯನ್ನೇ ಪ್ರಚೋದಿಸುತ್ತಿದ್ದ ಆ ಮಿಶ್ರವಾಸನೆ ಸ್ನೇಹಿತನ ಆಗಮನದಂತೆ ಸಂತೋಷಕರವಾಯಿತು. +ಹೆಗ್ಗಡೆಯವರು ಒಡ್ಡಿಯ ಸುತ್ತಲೂ ಪ್ರದಕ್ಷಿಣೆಮಾಡುತ್ತಾ ಕಂಡಿಗಳಲ್ಲಿ ಕಣ್ಣಿಟ್ಟು ನೋಡತೊಡಗಿದರು. +ಮೃಗಶಾಲೆಯಲ್ಲಿ ಪ್ರಾಣಿಗಳ ಗುಂಪನ್ನು ಒಟ್ಟುನೋಡುವ ಪ್ರೇಕ್ಷಕರಂತಲ್ಲ; +ತನ್ನ ‘ನರಮಂದೆ’ಯಲ್ಲಿ ಒಂದೊಂದು ಕುರಿಯ ಆತ್ಮಕಲ್ಯಾಣವನ್ನೂ ಗಮನಿಸುವ ‘ಪಾದ್ರಿ’ಯಂತೆ! +ಆಸ್ಪತ್ರೆಯಲ್ಲಿ ಒಬ್ಬೊಬ್ಬ ರೋಗಿಯನ್ನೂ ಕಣ್ಣಿಟ್ಟು ಕಾಣುವ ‘ಡಾಕುದಾರ’ನಂತೆ! +ಒಂದರ ಕಿವಿಚಟ್ಟೆಯ ಬುಡದ ಗಾಯ; + ಇನ್ನೊಂದರ ಕಾಲ್‌ಕೊಳಗಿನ ಬಿರಕು; + ಮತ್ತೊಂದರ ಬಾಯಿ ಹುಣ್ಣು; + ಒಂದೊಂದನ್ನೂ ಮನಸ್ಸಿಟ್ಟು ನೋಡಿದರು. +ಸಮೀಪದಲ್ಲಿ ಮನುಷ್ಯರಾರೂ ಇರದಿದ್ದರೂ ಮುಂದೆ ಆಳುಗಳಿಗೆ ಹೇಳುವುದನ್ನೆಲ್ಲಾ ಅಭ್ಯಾಸಮಾಡಿಕೊಳ್ಳುವಂತೆ ಆಗಾಗ ಬಾಯಲ್ಲಿ ಏನೇನನ್ನೊ ಹೇಳಿಕೊಳ್ಳುತ್ತಿದ್ದರು. +ಒಂದು ನಡು ವಯಸ್ಸಿನ ಮರಿಸಲಗದ ಕಾಮಚೇಷ್ಟೆಯಿಂದ ಇದ್ದಕ್ಕಿದ್ದ ಹಾಗೆ ಒಡ್ಡಿಯೊಳಗೆ ಗಡಬಿಡಿ ಮೊದಲಾಗಲು ಹೆಗ್ಗಡೆಯವರು ‘ಎಲಾ ನಿನ್ನ ಸೊಕ್ಕೆ! +ಅಲ್ಲಾ, ಆ ಹೂವಳ್ಳಿ ಎಂಕಟಣ್ಣ ನಿನ್ನೆ ಬತ್ತೀನಿ ಅಂದಿದ್ದ. +ಬರ್ಲೇ ಇಲ್ಲಾ ಗಿರಾಸ್ತಾ. +ಇದ್‌ನೊಂದು ಕೊಟ್ಟ ಹೊರ್ತೂ ಒಡ್ಡೀಗೆ ಸುಖಾ ಇಲ್ಲ” ಎಂದುಕೊಂಡು, ಮಲೆಗಾಡುಗಳ ನಡುವೆ ಕಣಿವೆಯಲ್ಲಿ ಬಹು  ದೀರ್ಘವಾಗಿ ಹಬ್ಬಿದ್ದ, ಹಸುರಿನಿತೂ ಇಲ್ಲದ, ಗದ್ದೆಯ ಕೋಗಿನ ಕಡೆಗೆ ದಿಟ್ಟಿನಟ್ಟು ನೋಡತೊಡಗಿದರು. +ಬೆಳ್ಳಗೆ ಬೆಳಗಾಗಿತ್ತು. +ಹಿಂದಿನ ದಿನದ ಮಳೆಯಲ್ಲಿ ತೊಯ್ದು ಅಂಚಿನ ಗೆರೆ ಬರೆ ಬರೆಯಾಗಿದ್ದ ಗದ್ದೆಯ ಕೋಗಿನ ಕಂದುಬಣ್ಣವು ಬೂದಿಗಪ್ಪಿಗೆ ತಿರುಗಿತ್ತು. +ಆದರೂ ಹಾವು ಹರಿಯುವಂತೆ ಡೊಂಕುಡೊಂಕಾಗಿ ಹರಿದು, ಒಮ್ಮೆ ಅಂಚಿನ ಮೇಲೆ, ಒಮ್ಮೆ ಗದ್ದೆಯ ಮಧ್ಯೆ ಏರಿ ಇಳಿದು ಮುಂಬರಿದು ಬಹುದೂರದಲ್ಲಿ ಗಡಿಬೇಲಿಯ ಮುಂಡುಗದ ಹಿಂಡಲಿನಲ್ಲಿ ಕಣ್ಮರೆಯಾಗಿದ್ದ ಕಾಲುದಾರಿಯ ಸಮೆದ ನುಣ್ಪಿನ ಬೂದುಬಣ್ಣದ ರೇಖೆ, ಅತ್ತ ಕಣ್ಣಾದವನ ದೃಷ್ಟಿಯನ್ನು ತಟಕ್ಕನೆ ಸೆಳೆಯುವಂತೆ, ಪ್ರಧಾನವಾಗಿತ್ತು. +ಹೆಗ್ಗಡೆಯವರು ನೋಡುತ್ತಿದ್ದುದು ಅದನ್ನೆ. +ಮಲೆಯ ಹಸುರನ್ನೇ ಸದಾ ನೋಡುತ್ತಿದ್ದ ಆ ಕಣ್ಣಿಗೆ ಮುಪ್ಪಾಗಿದ್ದರೂ ದೃಷ್ಟಿ ಮಂದವಾಗಿರಲಿಲ್ಲ. +ಅಥವಾ ದೃಷ್ಟಿ ಸ್ವಲ್ಪ ಮಂದವಾಗಿದ್ದರೂ ಅದಕ್ಕೆ ಕಾರಣದ ಮೂಲ ಕಣ್ಣಿನ ನಿಃಶಕ್ತಿಯಾಗಿರಲಿಲ್ಲ, ಮನಸ್ಸಿನ ಮಾಂದ್ಯವಾಗಿತ್ತು. +ಆ ಕಾಲುದಾರಿಯ ದೂರದ ಕೊನೆಯಲ್ಲಿ ಯಾರೋ ನಡೆದು ಬರುವಂತಿತ್ತು. +ಹೆಗ್ಗಡೆಯವರು ಹುಬ್ಬು ಸುಕ್ಕಿಸಿ ಕಿರುಗಣ್ಣು ಮಾಡಿ ನೋಡಿದರೂ ಪ್ರಯೋಜನವಾಗಲಿಲ್ಲ. +ಹೂವಿಯ ವಕ್ರ ಬೈತಲೆಯ ಗೆರೆಯಲ್ಲಿ ಹರಿದಾಡುವ ಹೇನು ಕೂಡ ಅಷ್ಟು ಅಸ್ಪಷ್ಟವಾಗಿರುತ್ತದೆಯೋ ಇಲ್ಲವೋ! +ನೋಡಿ ನೋಡಿ, ಸಾಕಾಗಿ, ಮತ್ತೆ ಗೊಣಗುತ್ತಾ ಒಡ್ಡಿಯ ಕಡೆಗೆ ತಿರುಗಿದರು: + “ಅವನೇ ಇರಬೈದು! +ದುಡ್ಡಿಟ್ಟು ತಗೊಂಡು ಹೋಗು ಅಂತೀನಿ.” +ಆದರೂ ಮನಸ್ಸು ತಡೆಯದೆ ಮತ್ತೆ ಅತ್ತಕಡೆ ತಿರುಗು ನೋಡಿದರು. +ಬರುವವರು ಯಾರೆಂದು ಗೊತ್ತಾಗದೆ ಕಣ್ಣಿನ ಮೇಲೆ ಸಿಟ್ಟಿನಿಂದ ಎಂಬಂತೆ “ತಿಮ್ಮೂ! +ಏ ತಿಮ್ಮೂ!” ಎಂದು ಕೂಗಿ ಕರೆದರು. +ಆ ಕೂಗಿಗೆ ಒಡ್ಡಿಗಳಲ್ಲಾಗುತ್ತಿದ್ದ ಸದ್ದು ಕ್ಷಣಮಾತ್ರ ನಿಂತು ಮತ್ತೆ ಮುಂಬರಿಯಿತು. +“ತಿಮ್ಮೂ!ಏ ತಿಮ್ಮೂ!” ಇನ್ನೂ ರಭಸದಿಂದ ಕೂಗಿದರು. +ಈ ಸಾರಿ ಒಡ್ಡಿಗಳ ಸದ್ದು ನಿಲ್ಲುವುದಕ್ಕೆ ಬದಲಾಗಿ ಮತ್ತೂ ಹೆಚ್ಚಾಯಿತು. +ಪಂಜರ ಮೋಕ್ಷಕ್ಕಾಗಿ ಪ್ರಾಣಿಗಳೆಲ್ಲಾ ಒಂದೇ ತಡವೆ ಮುಮುಕ್ಷುಗಳಾಗಿ ನುಗ್ಗತೊಡಗಿದುದರಿಂದ ಗಲಾಟೆ ನೆರೆಯೇರಿತು. +ತಿಮ್ಮಪ್ಪ ಹೆಗ್ಗಡೆ ಓಡೋಡಿ ಬಂದನು. +ಮೈಗೆ ಕೆಸರು ಹಾರುತ್ತದೆಂದು ಹೆದರಿ ನೀರು ಚೆನ್ನಾಗಿ ಆರಿದ್ದ ಸ್ಥಳಗಳಲ್ಲಿಯೇ ಜಾಗರೂಕತೆಯಿಂದ ಕಾಲಿಡುತ್ತಿದ್ದುದನ್ನು ನೋಡಿ ಅವನ ತಂದೆ “ಎಲಲಲಲಾ ನಿನ್ನ ಜಂಭಾನೆ! +ಹಾರುವರು ಹಾರ್ದಾಂಗೆ ತುದೀ ಬೆಳ್ಳಾಗೆ ಹಾರ್ಕೋಂಡು ಬತ್ತೀಯಲ್ಲೋ! +ಬಿಳೀ ಬಟ್ಟೆ ಕೆಸರಾಗ್ತದಲ್ಲೇನೋ ನಿಂಗೆ?” ಎಂದರು ಅಪ್ಪ ಈ ರೀತಿ ಮಾತಾಡುವುದು ಮಗನಿಗೇನೂ ಹೊಸದಾಗಿರಲಿಲ್ಲ. +ಆದ್ದರಿಂದ ಯಾವುದನ್ನೂ ಗಮನಿಸದಂತೆ ಬಳಿಗೆ ಬಂದು ನಿಂತನು. +“ಏನೋ ನಿನ್ನ ನೆರೆಮನೆ ಅಣ್ಣನಹಾಗೆ ಮಳೆಹಾಳ್  ಚಾಳೀನೆಲ್ಲಾ ಕಲೀತಾ ಬರ್ತೀಯಲ್ಲೊ? +ನಿನ್ನ ಈ ಕರೀ ಬೂಲಕ್ಕೆ ಯಾಕೋ ಈ ಬಿಳೀ ಬಟ್ಟೆ?” +ತಿಮ್ಮಪ್ಪ ಹೆಗ್ಗಡೆ ಹುಲ್ಲು ಕಚ್ಚಿಕೊಂಡು ಹೇಳಿದ: “ಕರೆದದ್ದು ಯಾಕೆ?” +ದೂರದಲ್ಲಿ ಗದ್ದೆ ಕೋಗಿನ ಕಾಲುದಾರಿಯಲ್ಲಿ ಬರುತ್ತಿದ್ದ ವ್ಯಕ್ತಿ ಹೂವಳ್ಳಿ ವೆಂಕಟಣ್ಣನೋ ಯಾರೆಂದು ನೋಡಿ ಹೇಳುವುದಕ್ಕಾಗಿಯೇ ಹೆಗ್ಗಡೆಯವರು ಮಗನನ್ನು ಕರೆದಿದ್ದು. +ಆದರೆ ಮಗನ ಬಟ್ಟೆಬರೆಗಳನ್ನು ಕಂಡು ಸಿಟ್ಟಿಗೇರಿದ ತಂದೆ “ಹೋಗಿ ನೋಡು, ಆರು ಕಟ್ಟಾಕೆ ಸತ್ತರೋ ಇಲ್ಲೋ ಹೊಲೆ ಮಕ್ಕಳು! +ಮಳೆ ಬಂದ ಮರುದಿನಾನೂ ಬಿಸಿಲು ಬರೋ ತನಕ ಮಲಗಿಕೊಳ್ಳೋ ನೀವು ಮನೆ ಇಟ್ಟುಕೊಂಡ್ಹಾಂಗೆ ಅಂತಾ ಕಾಣ್ತದೆ! +ಏನಾದ್ರೂ ಆಗ್ಲಿ! +ಅತ್ತ ಮಖಾ ಹೋಗಾ ತನಕ ಗೆಯ್ತೀನಿ! +ಆಮೇಲೆ ಮನೆ ಇಟ್ಟುಕೊಂಡ್ರೆ ಇಟ್ಟುಕೋ ಬಿಟ್ರೆ ಬಿದು!ನಂಗೇನು!!” +ತಿಮ್ಮಪ್ಪ ಹೆಗ್ಗಡೆ ತಂದೆ ಕರೆದಾಗ ಬಚ್ಚಲಲ್ಲಿ ಹಲ್ಲುಜ್ಜಿಕೊಳ್ಳುತ್ತಿದ್ದನು. +ಹಾಗೆಯೇ ಓಡಿಬಂದಿದ್ದ ಅವನ ತುಟಿಯೆಲ್ಲ ಮಸಿಯೆಂಜಲಿಂದ ಅಸಹ್ಯವಾಗಿತ್ತು. +ಅವನು ಬಾಯಿ ತೆರೆಯದಿದ್ದುದಕ್ಕೆ ಬಹುಶಃ ಅದೂ ಒಂದು ಕಾರಣವಾಗಿತ್ತೊ ಏನೋ? +ಸುಬ್ಬಣ್ಣ ಹೆಗ್ಗಡೆಯವರ ರೇಗಿಗೆ ಮಗನ ಬಿಳಿ ಬಟ್ಟೆ ಎಷ್ಟರಮಟ್ಟಿಗೆ ಕಾರಣವಾಗಿತ್ತೊ ಅವನ ಮಸೀಮಯವಾದ ಕರೀತುಟಿಯೂ ಅಷ್ಟಮಟ್ಟಿಗೇ ಕಾರಣವಾಗಿತ್ತು. +ಎಂದರೆ ಅರ್ಥ: ಎರಡೂ ಕಾರಣವಾಗಿರಲಿಲ್ಲ. +ನಿಜವಾದ ಕಾರಣ ಒಂದಲ್ಲ, ಎರಡಲ್ಲ: +ತಂದೆಯಾದವನು ಮಗನನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾದರೆ ಯಾವಾಗಲೂ ಬಿಗಿಯಾಗಿ ವರ್ತಿಸಬೇಕು ಎಂಬುದೊಂದು. +ಮಗನ ವಿರೂಪದ ದೆಸೆಯಿಂದಲೆ ಜನ ತಮ್ಮ ಮನೆಗೆ ಹೆಣ್ಣು ಕೊಡಲು ಹಿಂಜರಿಯುತ್ತದೆ ಎಂಬ ನಂಬುಗೆ ಮತ್ತೊಂದು ಆ ವಿರೂಪಕ್ಕೆ ಆಗುತ್ತಿರುವ ಅವಮಾನ ಅದರ ಸೃಷ್ಟಿಗೆ ಕಾರಣನಾದ ತನಗೂ ಸಲ್ಲುತ್ತಿದೆಯಲ್ಲಾ ಎಂಬ ಒಳಗುಟ್ಟು ಇನ್ನೊಂದು. +ಮಗನು ಸುರೂಪಿಯಾಗಬೇಕೆಂದು ಮಾಡುತ್ತಿರುವ ಪ್ರಯತ್ನದಿಂದ ಮನೆ ಹಾಳಾಗುವುದೆಂಬ ಭೀತಿ ಮಗುದೊಂದು. +ಹೆಂಡತಿಯಿಲ್ಲದ ಮುದುಕನ ಅತೃಪ್ತಿ ಇನ್ನೊಂದು. +ಇತ್ಯಾದಿಯಾಗಿ ಅಸಂಬದ್ಧವೂ ಪರಸ್ಪರ ವಿರುದ್ದವೂ ಆದ ಅನೇಕ ನೆವಗಳೆಲ್ಲ ಒಟ್ಟುಗೂಡಿ ಹೆಗ್ಗಡೆಯವರನ್ನು ಕುದಿಸುತ್ತಿದ್ದುವು. +ಆದ್ದರಿಂದಲೆ ತಂದೆಯ ಅಪ್ಪಣೆಯಂತೆ ತಿಮ್ಮಪ್ಪ ಹೆಗ್ಗಡೆ ಮರುಮಾತಾಡದೆ ಹೊಲಗೇರಿಯ ಕಡೆಗೆ ಬಿರುಬಿರನೆ ನಡೆಯತೊಡಗಿದಾಗ, ಅವರು ಮತ್ತೂ ರೇಗಿ “ಇಲ್ಲಿ ಬಾರೊ! +ಬಾರೋ!! +ನಿನ್ನ  ಮುಖಾ ನೋಡಿದ್ರೆ ನಿನ್ನ ಮಾತು ಕೇಳ್ತಾರೇನೋ ಹೊಲೇರು? +ಥೂ!ನಿನ್ನ ಬೂಲಕ್ಕೆ ಬೆಂಕಿ ಹಾಕಾ! +ಹೋಗಿ ಬಾಯಾದ್ರೂ ಸರಿಯಾಗಿ  ತೊಳಕೊಂಡು ಹೋಗೋ!!” ಎಂದು ಕೂಗಿದ್ದು. +ತಿಮ್ಮಪ್ಪ ಹೆಗ್ಗಡೆಗೆ ತುಟಿ ನಡುಗಿತು; +ಸಿಟ್ಟಿನಿಂದ, ದುಃಖದಿಂದ ಬೇರೆ ಇನ್ನಾರಾದರೂ ಆಗಿದ್ದರೆ ಒರಟಾಗಿ ಹಲ್ಲು ಮುರಿಯುವಂತೆ ವರ್ತಿಸಿಬಿಡಬಹುದಾಗಿತ್ತಲ್ಲಾ, ಈಗ ಇಲ್ಲಿ ಸಾಧ್ಯವಾಗಲಿಲ್ಲವಲ್ಲಾ ಎಂಬೊಂದು ಸಂಕಟದಿಂದ ಹಲ್ಲು ಕಚ್ಚಿ, ಹುಬ್ಬು ಗಂಟಿಕ್ಕಿ, ಮುಖವೆಲ್ಲಾ ಸುಕ್ಕಾಗಿ ತಡೆದು ಕೊಂಡನು. +ಆದರೆ ಕಣ್ಣು ಹನಿ ತುಂಬಿತು. +ಅದು ತೊಟ್ಟಿಕ್ಕುವುದರೊಳಗೆ ಅಲ್ಲಿಂದ ಮೊಗದಿರುಹಿ ಹೊರಟನು: + ಮುಖ ತೊಳೆಯುವುದಕ್ಕಾಗಿ ಬಚ್ಚಲಿಗಲ್ಲ; + ಆರು ಕಟ್ಟಲು ಹೇಳುವುದಕ್ಕಾಗಿ ಹೊಲೆಗೇರಿಗೆ. +ಮಗನ ಕಣ್ಣಿನಲ್ಲಿ ನೀರು ತುಂಬಿದ್ದು ಕಂಡು ಸುಬ್ಬಣ್ಣ ಹೆಗ್ಗಡೆಯವರ ಮನಸ್ಸು ಸ್ವಲ್ಪ ಮೃದುವಾಗಿತ್ತು. +ಆದರೆ ಅವನು ತಟಕ್ಕನೆ ಬೆನ್‌ದಿರುಗಿದ ಪ್ರತಿಭಟನಾ ಭಂಗಿಯನ್ನೂ ಹೊಲೆಗೇರಿಯ ಕಡೆಗೆ ರೋಷ ರಭಸದಿಂದ ಹೋದುದನ್ನೂ ಕಂಡು, ಸಿಗ್ಗುರಿದು, ಮುದುಕನ ಕುಳ್ಳು ಮೈ ಕಂಪಿಸಿತು. +ಕೃತನವಾಗಿ ಗಟ್ಟಿಯಾಗಿ, ಕೆಮ್ಮ, ಅವನು ಹೋದ ಕಡೆಗೆ ನೋಡುತ್ತಾ ಕ್ಯಾಕರಿಸಿ ತುಪ್ಪಿದರು. +ಯೌವನದಲ್ಲಿ ದರ್ಪದಿಂದ ಬಾಳು ಸಾಗಿಸಿದ್ದ ಆ ಮುದುಕನಿಗೆ ಮುಪ್ಪಿನಲ್ಲಿ ಲೋಕವೆಲ್ಲ ಅವಿಧೇಯವಾಗಿರುವಂತೆ ತೋರಿತು. +“ಕೆಡ್ತಪ್ಪಾ ಕಾಲ, ಕೆಡ್ತು! +ಇನ್ ನಮ್ಮಂತೋರ್ ಕಾಲ್ ಕೀಳಾದೆ ಮೇಲು! +ಇನ್ ಹೇಳ್ಸಿದ್ದಲ್ಲ ಈ ಜಲ್ಮ!” ಎಂದು ಗೊಣಗುತ್ತಾ ಮತ್ತೆ ಗದ್ದೆಯ ಕಡೆಗೆ ನಡೆದರು. +ಕಾಲುದಾರಿಯಲ್ಲಿ ಬರುತ್ತಿದ್ದ ವ್ಯಕ್ತಿ ಅಂಗಗಳೆಲ್ಲಾ ತಕ್ಕಮಟ್ಟಿಗೆ ಸ್ಪಷ್ಟವಾಗುವಷ್ಟರ ಮಟ್ಟಿಗೆ ಸಮೀಪಿಸಿದ್ದನಾದರೂ ಆಗತಾನೆ ಮೂಡಿಬರುತ್ತಿದ್ದ ಎಳೆಬಿಸಲಿನ ರಶ್ಮಿ ಚಾಮರದ ದೆಸೆಯಿಂದ ಹೆಗ್ಗಡೆಯವರಿಗೆ ಅದು ಯಾರು ಎಂದು ಗೊತ್ತಾಗಲಿಲ್ಲ. +ಕೈಯೆತ್ತಿ ಹಣೆಗಿಟ್ಟು ಬಿಸಿಲಿಗೆ ಕೊಡೆ ಮಾಡಿ ನೋಡಿ “ಹಾಳ್ ಕಣ್ಣು! +ಅವಕ್ಕೂ ಬ್ಯಾಡಾದೆ ನಾನು!” ಎನ್ನುತ್ತಾ ಮನೆಯ ಕಡೆಗೆ ತಿರುಗಿದಾಗ, ತೋಟದ ಬಾವಿಯಿಂದ ನೀರು ತುಂಬಿದ ಕೊಡಪಾನವನ್ನು ಸೊಂಟದ ಮೇಲಿಟ್ಟು, ಬೆಳ್ಳಿಯ ಕಡಗ ಮತ್ತು ಕಣ್ಣು ಕೊರಿಸಿದ ಗಾಜಿನ ಬಳೆಗಳನ್ನು ತೊಟ್ಟಿದ್ದ ತನ್ನ ಕೈಯಿಂದ ಆ ತಾಮ್ರದ ಕೊಡದ ಕೊರಳನ್ನು ಅವುಕಿ ಹಿಡಿದು ನಿಧಾನವಾಗಿ ಮೆಟ್ಟಲು ಹತ್ತುತ್ತಿದ್ದ ತಮ್ಮ ಮಗಳನ್ನು ಕಂಡರು. +ಎತ್ತರದಲ್ಲಿ, ಬಣ್ಣದಲ್ಲಿ, ಮೈಕಟ್ಟಿನಲ್ಲಿ, ರೂಪಿನಲ್ಲಿ ಸರ್ವಾಂಶದಲ್ಲಿಯೂ ತಮ್ಮ ಗತಿಸಿದ ಸತಿಯನ್ನೇ ಹೋಲುತ್ತಿದ್ದ ಆಕೆಯನ್ನು ಕಂಡೊಡನೆ ಹೆಗ್ಗಡೆಯವರು ಮರಳಿ ಮೃದುವಾದರು. +ಅವರ ಮನಸ್ಸಿಗೆ ತಂಗಾಳಿ ಬೀಸಿದಂತಾಯಿತು. +ಆಗತಾನೆ ಮರುಭೂಮಿಯಾಗಿ ಕಾಣುತ್ತಿದ್ದ ಜಗತ್ತಿನಲ್ಲಿ ಫಕ್ಕನೆ ಮರುವನ ಗೋಚರಿಸಿದಂತಾಯಿತು. +ಕಡಲ ನಡುವೆ ಹಡಗೊಡೆದು ತೆರೆಗಳ ತಾಡನಕ್ಕೆ ಸಿಕ್ಕಿ ತೇಲುತ್ತಾ ಬರುವಾತನು ದ್ವೀಪದ ದಡಕ್ಕೇರುವಂತೆ ಹೃದಯದ ಮೃದುತ್ವವನ್ನೂ ಮೈತ್ರಿಯನ್ನೂ ಅಕ್ಕರೆಯನ್ನೂ ಸೂಚಿಸುವ ದೀರ್ಘಸ್ವರದಿಂದ ಕರೆದರು. +“ಬುಚ್ಚೀ!”ಮಂಜಮ್ಮ ಏರುತ್ತಿದ್ದವಳು ಹಾಗೇ ಮೆಟ್ಟಲ ಮೇಲೆ ನಿಂತು “ಏನಪ್ಪಯ್ಯಾ?” ಎಂದಳು. +ಸ್ವರದಲ್ಲಿ ಆಯಾಸವಿದ್ದರೂ ಇಂಪಾಗಿತ್ತು. +“ಇಲ್ಲಿ ಬಾರಕ್ಕಾ ಸ್ವಲ್ಪ. ” +“ಬರ್ತೀನಿ…. ” +“ಕೊಡಪಾನ ಅಲ್ಲೇ ಇಟ್ಟು ಬಾ.”ಮಂಜಮ್ಮ ಹಾಗೆಯೇ ಮಾಡಿ, ಮೂಡು ಬಿಸಿಲಿಗೆ ಮನೆಯ ಪಕ್ಕದಲ್ಲಿದ್ದ ತೋಟದ ಅಡಕೆಯ ಮರಗಳ ನೀಳವಾದ ನೆಳಲುಗಳು ಪಟ್ಟೆಪಟ್ಟೆಯಾಗಿ ಬಿದ್ದಿದ್ದ ಅಂಗಳದಲ್ಲಿ ನಡೆದು ಬಂದಳು. +ನೆರೆಹೊರೆಯವರು ಮಗಳಿಗೆ ಮದುವೆಯ ವಯಸ್ಸು ಮೀರಿ ಹೋಯಿತೆಂದು ಹೇಳುತ್ತಿದ್ದರೂ ಸುಬ್ಬಣ್ಣ ಹೆಗ್ಗಡೆಯವರಿಗೆ ಹಾಗೇನೂ ತೋರುತ್ತಿರಲಿಲ್ಲ. +ಚೆನ್ನಾಗಿ ಕೆಲಸ ಮಾಡಿ ಹೊಟ್ಟೆ ತುಂಬಾ ತಿನ್ನುವ ಹಳ್ಳಿಯ ಹೆಣ್ಣು ಬೆಳೆಯುವಂತೆ ಮಂಜಮ್ಮ ಸುಪುಷ್ಟವಾಗಿ ಬೆಳೆದಿದ್ದ ಮಾತ್ರಕ್ಕೆ ಮದುವೆಯ ವಯಸ್ಸು ಮೀರಿತೆಂದು ಹೇಳುವುದು ಯಾವ ನ್ಯಾಯ? +ಮದುವೆಗೆ ವಯಸ್ಸು ಮೀರುವುದೆಂದರೆ ಅರ್ಥವಾದರೂ ಏನು? +ಅವಳೇನು ಹಾರುವರ ಮನೆಯ ಹೆಣ್ಣೇ? +ಮದುವೆಯಾಗುವುದಕ್ಕೆ ಮೊದಲೆ ದೊಡ್ಡವಳಾಗಿಬಿಟ್ಟರೆ ಕಾಡಿಗಟ್ಟಬೇಕೆಂಬ ಹೆದರಿಕೆಯೇನು ತಮಗೆ? +ಒಂದು ವರ್ಷ ಹೆಚ್ಚು ಕಡಿಮೆ, ಸರಿಯಾದ ಮನೆಗೆ ಕೊಟ್ಟರಾಯಿತು. +ಅಲ್ಲದೆ ತಾಯ ಸತ್ತ ಹುಡುಗಿ. +ಸ್ವಲ್ಪ ತಿಳುವಳಿಕೆ ಬಂದ ಮೇಲೆಯೇ ಗಂಡನ ಮನೆಗೆ ಹೋದರೆ ನೆಮ್ಮದಿ. +ಒಂಟಿಬಾಳು ಬಾಳುತ್ತಿರುವ ತಮಗೂ ಮಗಳನ್ನು ತಟಕ್ಕನೆ ಅಗಲಿರಬೇಕೆಂದರೆ ಸಂಕಟ: +ಮಗನೇನೋ ಇದ್ದಾನೆ. +ಆದರೆ ತಿಮ್ಮಪ್ಪ ಹೆಗ್ಗಡೆ ಕಂತ್ರಿ, ಸ್ವತಂತ್ರಿ. +ಯಾವಾಗಲೂ ಇತರರಿಗೆ ಆಶ್ರಯಕೊಡುತ್ತಾ ಬಾಳಿದವರಿಗೆ ಆಶ್ರಿತರು ದೂರವಾದರೆ ಆಶ್ರವೆ ತಪ್ಪಿದಂತಾಗುತ್ತದೆ. +ಮುಪ್ಪು ಎಳೆತನಕ್ಕೆ ಆಶ್ರಯ ಮಾತ್ರವಲ್ಲ, ಆಶ್ರಿತವೂ ಹೌದು. +ಹಳೆಯ ಚಪ್ಪರಕ್ಕೆ ಹೊಸ ತೊಂಡೆಯ ಬಳ್ಳಿ ಹಬ್ಬಿದ್ದರೆ ತೊಂಡೆಯ ಕಾಯಿಯ ಆಸೆಗಾದರೂ ಚಪ್ಪರ ಬೀಳದಂತೆ, ಹಾಳಾಗದಂತೆ, ಒರಲೆ ಹಿಡಿಯದಂತೆ ನೋಡಿ ಕೊಳ್ಳುತ್ತಾರೆ. +ಕೆಲಸ ಮಾಡದ ಕತ್ತಿಗೆ ತುಕ್ಕು ಹಿಡಿಯುತ್ತದೆ. +ಉಪಯೋಗಿಸದೆ ಪಿಟಾರಿಯಲ್ಲಿಟ್ಟರೆ ಪೀತಾಂಬರಕ್ಕಾದರೂ ಬೂಷಲು ಬರುತ್ತದೆ. +ಪ್ರವೃತ್ತಿಪ್ರೇರಕವಾದ ಆಧಾರಸ್ತಂಭಗಳೆಲ್ಲಾ ಉರುಳಿದರೆ ಮುಪ್ಪು ಬೇಸತ್ತೇ ಸತ್ತು ಹೋಗುತ್ತದೆ. +ಸುಬ್ಬಣ್ಣ ಹೆಗ್ಗಡೆಯವರ ಆಲೋಚನೆಗೆ ಇಷ್ಟೆಲ್ಲಾ ಮೀರಿದ್ದರೂ ಆತ್ಮಕ್ಕೆ ಅದು ವೇದ್ಯವಾಗಿದ್ದುದರಿಂದಲೆ ಮಗಳ ಮದುವೆಗೆ ಮಗನ ಮದುವೆಯ ಅಡಚಣೆಯನ್ನೊಡ್ಡಿ ಕಾಲವಂಚನೆ ಮಾಡುತ್ತಿದ್ದುದ್ದು. +ಬಿರಾಂಬರುಡುಗೆಯ ಸಡಿಲ ಚೆಲುವು ಹಳೆಮನೆಯಂತಹ ಹಳೆತನದ ಮನೆತನಗಳಿಗೆ ಆಗಿನ್ನೂ ಸೋಂಕಿರಲಿಲ್ಲ. +ಮಂಜಮ್ಮ ಗೊಬ್ಬೆ ಸೆರಗು ಬಿಗಿದು ಕಟ್ಟಿ, ಸೀರೆಯ ಬಹುಭಾಗದ ವಿಸ್ತೀರ್ಣವನ್ನೆಲ್ಲಾ ಸೊಂಡಕ್ಕೆ ಸುತ್ತಿ, ಉಳಿದಿದ್ದನ್ನು ಆದಷ್ಟು ಕೃಪಣತೆಯಿಂದ ನಿರಿಮಾಡಿ ಹರಡಿಗೆ ಮೇಲೆ ಮೊಳಕಾಲಿನ ನಡುವರೆಗೆ ನೀಡಿ ಉಟ್ಟಿದ್ದಳು. +ಮೀಯುವುದರಲ್ಲಿಯೂ ಒಗೆಯುವುದರಲ್ಲಿಯೂ ಹೊತ್ತು ಕಳೆಯ ಬಾರದೆಂದು ಅಪ್ಪಯ್ಯ ಹೇಳುತ್ತಿದ್ದುದರಿಂದ ಆಕೆಯ ಸೀರೆ ಕೊಳಕಾಗಿತ್ತು. +ಆ ಕೊಳಕನ್ನು ಯಾರೂ ಲೆಕ್ಕಿಸುತ್ತಿರಲಿಲ್ಲವಾದ್ದರಿಂದ ಅವಳೂ ಲೆಕ್ಕಿಸುತ್ತಿರಲಿಲ್ಲ. +ತನ್ನ ಮೈಯ ಬಿಳಿಯ ಬಣ್ಣದಲ್ಲಿ ಮಾತ್ರ ಆಕೆಗೆ ಅಪಾರ ಅಭಿಮಾನವಿತ್ತು. +ಆ ಅಭಿಮಾನ ಒಮ್ಮೊಮ್ಮೆ ಗರ್ವದ ಮಟ್ಟಕ್ಕೂ ಏರಿ, ಆಕೆ, ಮೇಲೆ ಹೇಗೇ ಇರಲಿ, ಅಂತರಂಗದಲ್ಲಿ ತಿಮ್ಮಪ್ಪ ಹೆಗ್ಗಡೆಯ ತಂಗಿ  ಎಂಬುದನ್ನು ನೆನಪಿಗೆ ತಂದುಕೊಡುತ್ತಿತ್ತು. +ಆ ಮೈಯ್ಯ ಬಣ್ಣದ ಅಭಿಮಾನವನ್ನು ಒಡವೆಯ ಸಿಂಹಾಸನದ ಮೇಲೆ ಕೂರಿಸಿ, ಆಗಾಗ, ಸಮಯ ಸಿಕ್ಕಾಗ, ಮೆರವಣಿಗೆ ಮಾಡುತ್ತಿದ್ದಳು. +ಆಂತರ್ಯದ ಅಹಂಕಾರ ಬಲಿತಷ್ಟೂ ಅನಿವಾರ್ಯವಾಗಿ ಬಲಿಯುತ್ತದೆ, ಪರದಲ್ಲಿ ತಿರಸ್ಕಾರ. +ತಿರಸ್ಕಾರಕ್ಕೆ ತಿರಸ್ಕಾರ ಪ್ರತೀಕಾರವಾಗುತ್ತದೆ. +ಅಸೂಯೆ, ಆತ್ಮಪ್ರಶಂಸೆ, ಪರನಿಂದೆಗಳು ಇಕ್ಕೆಲಗಳಲ್ಲಿಯೂ ಮಲೆಯುತ್ತವೆ. +ಹಾಗಾಗಿಯೆ ಮಂಜಮ್ಮನ ವಿಚಾರವಾಗಿ ನಂಟರಿಷ್ಟರಲ್ಲಿ ಸದಭಿಪ್ರಾಯವಿರಲಿಲ್ಲ. +ಮಗಳ ಮೇಲೆ ಹೆರರ ಮಾತಿನ ಚುಚ್ಚು ಹೆಚ್ಚಾದ ಹಾಗೆಲ್ಲಾ ಅವಳ ಮೇಲೆ ಅಪ್ಪಯ್ಯನ ಮೆಚ್ಚು ಅಷ್ಟಷ್ಟೂ ಅತಿಯಾಗುತ್ತಿತ್ತು. +ಹೀಗೆ ತಂದೆ ಮಗಳಿಬ್ಬರೂ ಒಬ್ಬರಿನ್ನೊಬ್ಬರಿಗೆ ರಕ್ಷೆಯಾಗಿ ಪರಸ್ಪರ ನೆಮ್ಮದಿಗಳಾಗಿದ್ದರು. +ಮಗಳು ತೊಟ್ಟಿದ್ದ ಮೂಗುತಿ, ಬುಗುಡಿ ಎಸಳ ಸರಪಣಿ ಮೊದಲಾದ ಆಗಿನ ಕಾಲದ ಮೆಚ್ಚಿನ ಸ್ಥೂಲಾಭಿರುಚಿಯ ಭಾರಾಲಂಕಾರಗಳನ್ನು ನೋಡುತ್ತಾ ಮುದವುಕ್ಕಿ ಸುಬ್ಬಣ್ಣ ಹೆಗ್ಗಡೆಯವರು “ಬುಚ್ಚಿ, ಲಚ್ಚಾಚಾರಿ ಬಂದಿದ್ದನೇನೆ?” ಎಂದು ಕೊಟ್ಟಿದ್ದ ಅಡ್ಡಿಕೆಯ ನೆನಪಾಗಿ ಕೇಳಿದರು. +ಮಂಜಮ್ಮ “ಅವನ ಮನೆ ಹಾಳಾಗಾಕೆ ಎತ್ತ ಸತ್ತನೋ” ಎಂದು ಮೂತಿ ಮಾಡಿ, ಗದ್ದೆಯ ಕಡೆ ನೋಡಿ, “ಅದ್ಯಾರು ಅಲ್ಲಿ ಬರೋರು? +ಹೂವಳ್ಳಿ ಎಂಕ್ಟಣ್ಣಬಾವನ್ನು ಕಂಡ್ಹಾಗೆ ಕಾಣ್ತದೆ?” ಎಂದಳು. +“ಹೌದು ಅಂತೀನಿ. + ಮರ್ತೇಹೋಗಿತ್ತು ಅದಕ್ಕೆ ನಿನ್ನ ಕರ್ದಿದ್ದು. +ನನ್ನ ಕಣ್ಣೇ ಈಗ್ಯಾಕೋ ಸರಿಯಾಗಿ ಕಾಣ್ರೋದಿಲ್ಲಾಪ್ಪಾ.” ಹೆಗ್ಗಡೆಯವರು ಸುಯ್ದು ಮುಂದೆ ಹೇಳಿದರು: +“ನೀನೊಬ್ಬಳು ಮನೇಲಿ ಇರಾಹೊತ್ತಿಗೆ ನಾನೂ ಒಬ್ಬ ಮನಿಸ್ಯ ಅನಿಸಿಕೊಂಡಿದ್ದೀನವ್ವಾ. ಇನ್ನು…. ” +ಅಪ್ಪನ ಮಾತು ಎಲ್ಲಿಗೆ ಹೋಗುತ್ತಿದೆ ಎಂಬುದನ್ನರಿತು ಮಂಜಮ್ಮ “ಹೌದು ಎಂಕ್ಟಣ್ಣ ಬಾವನೇ!” ಎಂದಳು. +ಹೆಗ್ಗಡೆಯವರು ಅತ್ತ ನೋಡಿ “ನಿನ್ನೇನೆ ಬತ್ತೀನಿ ಅಂದಿದ್ದ. +ಒಂದ ಹಂದೀಮರಿ ಬೇಕು ಅಂತಾ ಹೇಳಿದ್ದಾ. +ಬಾ ಕೊಡ್ತೀನಿ ಅಂದಿದ್ದೆ.” +“ಯಾವುದನ್ನ ಕೊಡ್ತೀಯಾ, ಅಪ್ಪಯ್ಯಾ?” +“ಯಾವುದ್ನಾದ್ರೂ ಕೊಡಾದಪ್ಪ. +ಸುಮ್ಮನೆ ಒಡ್ಡೀಲಿಟ್ಟುಕೊಂಡು ಮಾಡಾದೇನು. +ಮದೇಮನೆ ಕರ್ಚಿಗೆ ಎಷ್ಟು ಬೇಕೋ ಅಷ್ಟು ಇಟ್ಕೋಂಡು ಇಳಿದ್ನೆಲ್ಲಾ ಕೊಟ್ಟು ಬಿಡ್ತೀನಿ. +ನನಗೂ ವಯಸ್ಸಾತು. +ನೋಡಿಕೊಳ್ಳೋರು ಯಾರೂ ಇಲ್ಲಾ. +ನಿನ್ನ ಅಣ್ಣ ಒಬ್ಬ ಇದಾನೆ ಕೂಳು ಖರ್ಚಿಗೆ. +ನೀನಾದ್ರೂ ಇನ್ನೆಷ್ಟು ದಿನ ಅಂತ ಇರ್ತೀಯಾ ಇಲ್ಲಿ…?” +“ಆ ದಡ್ಡೆ ಮರಿ ನನಗಿರಲಪ್ಪಯ್ಯಾ. +ಸರಿಪಾಲಿಗೆ ಸಾಕಾಕೆ ಕೊಡ್ತೀನಿ. +ಹೊಲೇರ ಗುತ್ತಿ ಸಾಕ್ತೀನಿ ಅಂದಾನೆ” ಮಂಜಮ್ಮ ಗೊಬ್ಬೆಸರಗು ಸರಿಮಾಡಿಕೊಳ್ಳುತ್ತಾ ನಾಚಿಕೆಯಿಂದಲೆಂಬಂತೆ ಮಾತಾಡಿದಳು. +“ಯಾವ ಗುತ್ತೀನೆ?” +“ಆ ಜಟ್ಟಕ್ಕನ ಜತಿ ಬಂದಿದ್ದನ್ಲಲಾ….” +“ಸಿಂಬಾವಿಯವನೇನೇ?”ಮಂಜಮ್ಮ ಮಾತಾಡಲಿಲ್ಲ. +ನಸುನಾಚಿ, ಗದ್ದೆಕಡೆ ನೋಡುವವಳಂತೆ ನಟಿಸಿದಳು. +“ಯಾರು? +ಆ ನಾಯಿ ಗುತ್ತೀನೇನೆ?” +“ಹ್ಞೂ ಹ್ಞೂ!ಅವನೆ, ಅವನೇ!” +“ಆ ಹೊಲಿಯ ಲೌಡಿಮಗ ಹಂದಿ ಸಾಕ್ತಾನೇನೇ? +ತಿಂದು ಹಾಕ್ತಾನೆ! +ತಿಂದೇ ಹಾಕ್ತಾನೆ; ನೋಡ್ತಿರು ಬೇಕಾದ್ರೆ!” ಎಂದು ಮುದಿ ದೇಹ ಕುಣಿಯುವಂತೆ ನಗತೊಡಗಿದರು ಸುಬ್ಬಣ್ಣ ಹೆಗ್ಗಡೆಯವರು. +ಅನತಿ ದೂರದಲ್ಲಿಯೆ ಕುಂಟುತ್ತಾ ಬಳಿಸಾರುತ್ತಿದ್ದ ಹೂವಳ್ಳಿ ವೆಂಕಟಣ್ಣನನ್ನು ಕಂಡು ಮಂಜಮ್ಮ “ಅಪ್ಪಯ್ಯಾ, ನಿನ್ನ ಕಸಾಯ ಮಾಡಿಟ್ಟೀನಿ, ಕುಟಕೊಂಡು ಹೋಗು ಬಾ” ಎನ್ನುತ್ತಾ ಹಿಂದಿರುಗಿ ಕೊಡಪಾನದ ಬಳಿಗೆ ಹೋದಳು. +ಹಸುಳೆಬಿಸಿಲಿನ ಬಾಲ್ಯದ ಬೆಚ್ಚನೆಯ ಸೋಂಕಿಗೆಳಸಿ ಸುಬ್ಬಣ್ಣ ಹೆಗ್ಗಡೆಯವರು ಮುಪ್ಪಿನ ಮೆಯ್ಗೆ ಸುತ್ತಿದ್ದ ಕರಿಕಂಬಳಿಯನ್ನು ಬಿಚ್ಚಿ ಹಂದಿಯೊಡ್ಡಿಯ ಮೇಲಿಟ್ಟರು. +ಸುಕ್ಕಿನ ಕಿರುದೆರೆ ನಿರಿನಿರಿಯಾಗಿದ್ದ ಅವರ ಎಣ್ಣೆಗಪ್ಪಿನ ಒಡಲಿಗೆ ಬೆಚ್ಚನೆಯ ಬಿಸಿಲು ಮುತ್ತಿಟ್ಟೊಡನೆ ಸುಪ್ತಚಿತ್ತದ ಆಳದಲ್ಲಿ ಗುಪ್ತವಾಗಿದ್ದ ನೂರಾರು ಹೋದಕಾಲದ ಮುದ್ದಾಟಗಳ ನೆನಹಿನ ಸೊಗಸು ಜಾಗ್ರಚ್ಚಿತ್ತದ ಸರೋವರದಲ್ಲಿ ಪುಲಕಿಸಿತು. +ಏಕೊ ಏನೊ ಅವರಿಗೆ ಗೊತ್ತಾಗಲಿಲ್ಲ; +ಅಂತೂ ಮೈಗೆ ಬಹಳ ಹಿತವಾಯಿತು; +ಮನಸ್ಸಿಗೂ ಸಂತೋಷವಾಯಿತು. +ತಿಮ್ಮಪ್ಪ ಹೆಗ್ಗಡೆಯಿಂದ ಉಂಟಾಗಿದ್ದ ನಿರಾಶೆಯ ಕತ್ತಲೆ ಮಂಜಮ್ಮನ ಆಗಮನದ ಉಷಃಕಾಂತಿಯಿಂದ ಹರಿದು ಹೋಗಿತ್ತು. +ಈಗ ಆ ಮುಂಬೆಳಗೆ ಹೊಂಬೆಳಗಾಗಿ ಮನಸ್ಸು ಪ್ರಸನ್ನವಾಯಿತು. +ಮನುಷ್ಯನು ತಿಳಿದುಕೊಂಡಿರುವುದಕ್ಕಿಂತಲೂ ಹೆಚ್ಚಾಗಿಯೆ ಅವನ ಅತಃಪ್ರಕೃತಿ ಸೃಷ್ಟಿಯ ಬಹಿಃಪ್ರಕೃತಿಗೆ ಅನುಯಾಯಿಯಾಗಿರುತ್ತದೆ. +ಆತನ ಆತ್ಮಕೋಶವು ಬಹು ಜನ್ಮಗಳ ಸಂಸ್ಕರಗಳಿಂದ ತುಂಬಿರುವಂತೆ ಆತನ ಅನ್ನಮಯಕೋಶವೂ ಪೃಥ್ವಿಯಲ್ಲಿ ಪ್ರಾಣೋತ್ಪತ್ತಿಯಾದಂದಿನಿಂದ ಮೊದಲುಗೊಂಡು ಇಂದಿನವರೆಗೆ ಜೀವವು ಕೈಕೊಂಡ ನಾನಾರೂಪದ ನಾನಾ ಪ್ರಯೋಗದ ನಾನಾ ಕಷ್ಟ ಸಂಕಟಗಳ ನಾನಾ ಸುಖ ಸಂತೋಷಗಳ ಮಹಾ ಸಾಹಸಯಾತ್ರಯ ಸಮಗ್ರ ಪರಿಣಾಮ ಮುದ್ರೆಯನ್ನೂ ‘ಅಸ್ಮೃತಿ’ ರೂಪದಲ್ಲಿ ಪಡೆದಿರುತ್ತದೆ. +ಆ ಅಪಾರ್ಥಿವ ಮತ್ತು ಪಾರ್ಥಿವ ಸಂಸ್ಕಾರಕೋಶಗಳೆರಡೂ ನಮ್ಮ ಬಾಳ್ವೆಯ ಹೃದಯದ ಇಕ್ಕೆಲಗಳಲ್ಲಿ ಶ್ವಾಸಕೋಶಗಳಂತಿವೆ. +ಅಪ್ರಜ್ಞಾಸೀಮೆಯಲ್ಲಿರುವ ಆ ಸಂಸ್ಕಾರಗಳಲ್ಲಿ ಯಾವುದನ್ನಾದರೂ ಮುಟ್ಟಿ ಎಚ್ಚರಿಸುವಂತಹ ಸನ್ನಿವೇಶ ಒದಗಿದರೆ ನಮಗೆ ಅಹೇತುಕ ಆನಂದವೊ ಅಕಾರಣ ಸಂಕಟವೊ ಸಂಭವಿಸಿದಂತಾಗುತ್ತದೆ. +ಅಲ್ಪ ಕಾರಣದಿಂದ ಮಹತ್ತಾದ ಅನುಭವ ಉಂಟಾದಂತೆ ಭಾಸವಾಗಿ ಆಶ್ಚರ್ಯವಾಗುತ್ತದೆ. +ಎಳೆಬಿಸಿಲಿನಲ್ಲಿ ಹಸುರು ಗರಿಕೆಯ ಕುಡಿಯಲ್ಲಿ ಮಿರುಗುವ ದುಂಡು ಮುತ್ತಿನ ತೆರೆದ ಇಬ್ಬನಿ, ಪ್ರಾಣದ ಪ್ರಪ್ರಾಚೀನಾನುಭವದ ಮಹಾ ಸಾಗರದ ‘ಅಸ್ಮೃತಿ’ಯನ್ನು ಕೆರಳಿಸಿ, ಸಮುದ್ರ ದರ್ಶನದ ಭೂಮಾನುಭೂತಿಯನ್ನುಂಟುಮಾಡಬಹುದು. +ಕಾಡಿನಂಚಿನಲ್ಲಿ, ಬೈಗುಗಪ್ಪಿನ ಮಬ್ಬಿನಲ್ಲಿ, ಹೆಮ್ಮರದ ದಿಂಡಿನಲ್ಲಿರುವ ಮರಕುಟಿಗನ ಗೂಡಿನ ಪೊಟ್ಟರೆ, ಅತ್ಯಂತ ಪೂರ್ವಕಾಲದ ಬಾಳಿನ ಯಾವುದೊ ಒಂದು ಕಗ್ಗವಿಯನ್ನೊ ಪೆಡಂಭೂತದ ಕಣ್ಣನ್ನೊ ‘ಅಸ್ಮೃತಿ’ಗೆ ತಂದು, ಅನಿರ್ವಚನೀಯವಾದ ಭೀತಿಯನ್ನುಂಟು ಮಾಡಬಹುದು. +ಪರ್ವತಾರಣ್ಯಗಳ ಭಯಂಕರ ಪ್ರಕೃತಿಯ ಮಧ್ಯೆ ವಾಸಮಾಡುವವರಿಗೆ ಅರ್ಥವಾಗದ, ಆದ್ದರಿಂದ ಅರ್ಥವಿಲ್ಲದ, ಆ ಅನುಭವಗಳು ಪಿಶಾಚಿಗಳಂತೆಯೊ ದೆಯ್ಯ ದ್ಯಾವರುಗಳಂತೆಯೊ ತೋರುತ್ತವೆ. +ಕತ್ತಲೆಯಲ್ಲಿ ಆಕಾಶಕ್ಕೆದುರಾಗಿ ಚಾಚಿರುವ ಭೀಮಾಕಾರದ ಕೋಡುಗಲ್ಲಿನಲ್ಲಿ ಪ್ರಾಚೀನಾನುಭವ ಸಮಷ್ಟಿರೂಪದ ‘ಅಸ್ಕೃತಿ’ ಆವಿರ್ಭಾವ ವಾಯಿತೆಂದರೆ ಬ್ರಹ್ಮರಾಕ್ಷಸ ದರ್ಶನವಾಗುವುದರಲ್ಲಿ ಆಶ್ಚರ್ಯವೇನಿದೆ? +ಕಬ್ಬಿಣದ ಪೆಟ್ಟಿಗೆಯ ಖಜಾನೆಯನ್ನು ತೆರೆಯುವುದಕ್ಕೆ ಸಣ್ಣ ಬೀಗದ ಕೈ ಸಾಕಾಗುವಂತೆ ‘ಅಸ್ಮೃತಿ’ಯ ಮಹದೈಶ್ವರ್ಯವನ್ನು ಕೆರಳಿಸಲು ಅತ್ಯಲ್ಪ ಕಾರಣಗಳೂ ಸಾಕಾಗುತ್ತವೆ. +ಮಳೆ ತೊಯ್ದ ಮಲೆನಾಡಿನ ಮೇಲೆ ಮೂಡಿದೆಳಬಿಸಿಲಿಗೆ ಮೈಯ್ಯೊಡ್ಡಿದ ಸುಬ್ಬಣ್ಣ ಹೆಗ್ಗಡೆಯವರಿಗೆ ಸಂಭವಿಸಿದ ಸಂತೋಷಕ್ಕೆ ಬಹುಮಟ್ಟಿಗೆ ಕಾರಣವಾಗಿತ್ತು ಆ ‘ಅಸ್ಮೃತಿ’. +ಯಾವ ಯಾವ ಕಾಲದಲ್ಲಿ, ಯಾವ ಯಾವ ದೇಶದಲ್ಲಿ, ಯಾವ ಯಾವ ರೂಪದಲ್ಲಿ, ಯಾವ ಯಾವ ಸನ್ನಿವೇಶದಲ್ಲಿ, ಯಾವ ಸಾಗರತೀರದಲ್ಲಿ, ಯಾವ ಪರ್ವತ ಶಿಖರದಲ್ಲಿ, ಯಾವ ಅರಣ್ಯಕುಂಜಸೀಮೆಯಲ್ಲಿ ಅಂತಹ ಸೂರ್ಯೋದಯದ ಸೊಂಪನ್ನು ಹಿಂದೆ ಎನಿತು ಸಾರಿ ಅನುಭವಿಸಿದ್ದರೋ ಏನೋ? +ಆ ಸಂಸ್ಕಾರ ಕೋಶದ ಖಜಾನೆಗೆ ಬೀಗದ ಕೈ ಮಾತ್ರವಾಗಿತ್ತು, ಆವೊತ್ತಿನ ಸೂರ್ಯೋದಯ! +ಹಳೆಮನೆಯಾದರೇನಂತೆ? +ಹಂದಿಯೊಡ್ಡಿಯ ಬಳಿಯಾದರೇನಂತೆ? +ಅಕ್ಷರಹೀನ ಅಸಂಸ್ಕೃತ ಒಕ್ಕಲಿಗನಾದರೇನಂತೆ? +ಮುಪ್ಪಡಸಿದ್ದರೇನಂತೆ? +ಸುಬ್ಬಣ್ಣ ಹೆಗ್ಗಡೆಯೂ ವಿಶ್ವಪ್ರಜೆ! . +ಬೆನ್ನಿಗೆ ಬಿದ್ದ ಬಿಸಿಲು ನಾಲಗೆಗೆ ಬೀಳುವ ಜೇನಾಗಿತ್ತು. +ಹೆಗ್ಗಡೆಯವರು ‘ಸ ಸ್‌ ಸ್ ಆಯ್’ ಎನ್ನುತ್ತಾ ಮುಂಡಾಡುವ ರೀತಿಯಲ್ಲಿ ಬೆನ್ನು ನೀವಿಕೊಂಡರು. +ಲೋಕವೆಲ್ಲಾ ಅಶೋಕವಾಗಿ ಸುಖಮಯವಾಯಿತು. +ಮನದಲ್ಲಿ ವಿಶ್ವಮೈತ್ರಿ ಮೂಡಿತು. +ಹಂದಿ, ಕೋಳಿ, ಕುರಿ, ಮರ, ಕಾಡು, ಆಕಾಶ, ಹಾಡುತ್ತಿದ್ದ ಕಾಡು ಹಕ್ಕಿಗಳ ಹಿಂಡು, ನೆರೆ ಹೊರೆ-ಎಲ್ಲದರ ಮೇಲೆಯೂ ಅಕ್ಕರೆವುಕ್ಕಿತು. +ಹೆಗ್ಗಡೆಯವರ ಜೀವಮಾನ ಕಟ್ಟಡದಲ್ಲಿ ಆ ಒಂದು ಕ್ಷಣದ ಬಾಳು ಗೋಪುರದ ತುದಿಯ ಕಳಶದ ಚಿನ್ನದ ಡೆಂಕಣಿಯಾಗಿ ಸ್ವಗರಗದೊಡನೆ ಸರಸವಾಡಿತು. +ಸರಸರನೆ ಮುಂಬರಿದು ಕೋಳಿಯ ಒಡ್ಡಿಯ ಬಾಗಿಲು ತೆರೆದರು. +ಹುಂಜಗಳು ಹೇಟೆಗಳು ಮರಿಗಳು ಸಳಗಗಳು, ಕೆಂಪು, ಬಿಳುಪು, ಕಪ್ಪು, ಹಂಡಹಂಡ, ಕಡ್ಲೆಕಡ್ಲೆ, ಚ್ಞಿಯ್ಞೊ, ಪ್ಞಿಯ್ಞೊ, ಕೊಕ್ ಕೊಕ್, ಕೊಕ್ಕೋ! +ಕೋಳಿಗಳೆಲ್ಲಾ ಒಂದರಮೇಲೊಂದು ನುಗ್ಗಿ ಹೊರಬಿದ್ದುವು. +ರೆಕ್ಕೆಯ ಗಾಳಿ ಬೀಸಿದ ಪೊಲ್ಗಂಪು ಹೆಗ್ಗಡೆಯವರಿಗೆ ಸ್ವಾಭಾವಿಕವಾಗಿಯೆ ಇತ್ತು. +ಅವಸರ ಅವಸರವಾಗಿ ಹೊರನುಗ್ಗಿ, ಕೆಲವು ಕೆಸರು ಕೆದರಿದುವು; +ಕೆಲವು ಕಸದ ರಾಶಿಯಲ್ಲಿ ಕೊಕ್ಕಾಡಿದುವು; +ಕೆಲವು ಗೊಬ್ಬರದ ಗುಂಡಿಯ ಕಡೆಗೆ ಓಡಿದುವು, ಎಲ್ಲವನ್ನೂ ಯಜಮಾನ್ಯದ ಪ್ರಶಂಸನೀಯ ದೃಷ್ಟಿಯಿಂದ ನೋಡುತ್ತಾ ನಿಂತಿದ್ದ ಸುಬ್ಬಣ್ಣ ಹೆಗ್ಗಡೆಯವರು ನಗೆಮೊಗದಿಂದ “ಗೊಬ್ರಾ ಕಿದ್ರಾಕೆ ಹೋಗಾಕೆ ಇಷ್ಟೊಂದು ಅವಸರ ಇವಕ್ಕೆ!” ಎಂದು ಹಂದಿಯ ಒಡ್ಡಿಯ ಮೇಲಿಟ್ಟಿದ್ದ ಕಂಬಳಿಯನ್ನು ತೆಗೆದು, ಇದ್ದುದರಲ್ಲಿ ಸ್ವಲ್ಪ ಅಚ್ಚುಕಟ್ಟಾಗಿ ಸ್ಥಳದಲ್ಲಿ ಹಾಕಿ, ಅದರ ಮೇಲೆ ಮೂಡಲಿಗೆ ಬೆನ್ನಾಗಿ ಕುಳಿತು, ಕುಂಟಿ ಕುಂಟಿ ಬಳಿ ಸಾರುತ್ತಾ ದಿಬ್ಬವೇರಿ ಬರುತ್ತಿದ್ದ ಹೂವಳ್ಳಿ ವೆಂಕಟಣ್ಣನನ್ನು ನೋಡುತ್ತಿದ್ದರು. +ಅವನಿನ್ನೂ ಹತ್ತಿರ ಬಂದಿರಲಿಲ್ಲ. +ಬಹಳ ಹೊತ್ತಿನಿಂದ ತಡೆದುಕೊಂಡಿದ್ದ ಮಾತು ಹೆಗ್ಗಡೆಯವರ ಗಂಟಲಿನಿಂದ ತುಟಿ ಮೀರಿ ಹೊರಟಿತು. +“ನೀ ಒಳ್ಳೆ ಗಿರಾಸ್ತ ಕಣ್ರೋ! ಅಲ್ಲಾ…. ನಿನ್ನೆ ಬತ್ತೀನಿ ಅಂದಾಂವ….!”ಹೇಳಬೇಕೆಂದಿದ್ದ ಉತ್ತರವನ್ನು ಹಾದಿಯಲ್ಲಿಯೆ ಕಡೆದು ಅಣಿ ಮಾಡಿಕೊಂಡು ಬಂದಿದ್ದ ವೆಂಕಟಣ್ಣನೂ ಹೆಗ್ಗಡೆಯವರ ಮಾತು ಮುಗಿಯುವುದರೊಳಗಾಗಿ ಹೇಳಿಯೆ ಬಿಟ್ಟನು: +“ನಾ ಏನ್ ಮಾಡಾದ್ರಾ? +ಹಾಂಗ್ಯಾರೆ, ಆ ಸನಿ ಮುಂಡೇ ಮಕ್ಳು ಬತ್ತೀನಿ ಅಂದೋರು ಬರ್ಲೆ ಇಲ್ಲ. +ಕಾದೆ, ಕಾದೆ…. ಹೊತ್ತಾಗಿಹೋತು. +ನಿನ್ನೇನ್ ಮಾಡಾದು…. +ನಾಳೆ ಬೆಳಗ್ಗೆ ಹೋಗಾನ ಅಂತ ಹೇಳಿ ನಿಂತುಬಿಟ್ಟೆ.” +“ಯಾರಿಗೆ ಹೇಳಿದ್ಯೋ?” +“ನಿಮ್ಮ ಹೊಲೇರಿಗೆ ಹೇಳಿದ್ದೆ.” +“ನೀ ಒಳ್ಳೆ ಗಿರಾಸ್ತ. +ಅವರು ತ್ವಾಟದ ಬೇಲಿ ಮಾಡಾದ್ ಬಿಟ್ಕುಂಡು ನಿನ್ನ ಹಂದಿ ಹೊರಾಕೆ ಬತ್ತಾರೆ? +ನೀ ಬೇಕಾರೆ ಒಳ್ಳೆ ಗಿರಾಸ್ತ!” +“ಹಾಂಗ್ಯಾರೆ ಏನ್ ಮಾಡ್ಲಿ ಹೇಳಿ? +ನಿನ್ ನಾನೆ ಹೊತ್ಕುಂಡು ಹೋ’ಬೇಕು…. +ಅದಕೂ ಸೈ ಅಂತಿದ್ದೆ. +ಕಾಲುಂದ್ ಹೀಂಗಾತಲ್ಲ ಹೇಳಿ….” ಎಂದು ಬಟ್ಟೆ ಸುತ್ತಿದ ಮೊಳಕಾಲನ್ನು ತೋರಿಸುವಂತೆ ಅದರ ಕಡೆ ನೋಡಿದನು. +ಹೆಗ್ಗಡೆಯವರೂ ಸಹಾನುಭೂತಿಯಿಂದ ಅದನ್ನು ನೋಡುತ್ತಾ “ಏನಾತೋ?” ಎಂದು ಹೇಳಿದರು. +ವೆಂಕಟಣ್ಣನು ಊರಿಕೊಂಡಿದ್ದ ದೊಣ್ಣೆಯನ್ನು ಮೆಲ್ಲಗೆ ಕೆಳಗಿಟ್ಟು, ನಿಧಾನವಾಗಿ ಕೂತು, ಕಾಲಿಗೆ ಸುತ್ತಿದ್ದ ಕಂಬಳಿಯ ಕರೆಯನ್ನೂ ಹಾಕಿಕೊಂಡಿದ್ದ ಸರಿಗೆ ಬಳೆಯನ್ನೂ ಸಾವಧಾನವಾಗಿ ಜಾರಿಸುತ್ತಾ “ಹಾಂಗ್ಯಾರೆ, ಅವತ್ತು ಮರಸಿಗೆ ಕೂತಿದ್ದೆ; +ಹೋದ ತಿಂಗಳು ಬೆಳಕಿನಾಗೆ. +ಒಂದು ಮಲ ಬಂತು. +ಹೊಡೆದೆ, ಇಳಿದು ಹೆರಕಿಕೊಳ್ಳಾಕೆ ಹೋಗಾಕೂ ತೆವಳಿಕೂತ ತೆವಳಿಕೂತ ಹೋಗಾಕೆ ಸುರುಮಾಡ್ತು. +ಓಟು ಓಡ್ಸಾಡಿದ್ರೂ ಸಿಕ್ಕ್ಒಲ್ಲ್‌ದು. +ಬಯ್‌ಲು ತುಂಬಾ ಓಡ್ಸ್ಯಾಡಿ ಸಾಕಾಗಿ ಹೋತು ಅಂತೀನಿ. +ಹ್ಯಾಂಗ್ಯಾರೆ, ಹಾಳು ಮುಂದೇದಕ್ಕೆ ದೊಣ್ಣೇನೆ ಸೈ ಅಂತಾ, ಒಂದು ಬಡಿಕೆ  ತಗೊಂಡು ಜಪ್ಪ್‌ದೆ. +ಅದರ ಕೊಡರ್ಲು ಹೊಡ್ದುಬಿಡ್ತು ನೋಡಿ. +ಹಾಂಗ್ಯಂತ, ಹೆಚ್ಚಿನ ನೆತ್ರೂ ಬರ್ಲೂ ಇಲ್ಲ… ಅದೇ ಗಾಯ ದೊಡ್ಡಾಯ್ತು, ದೊಡ್ಡಾಯ್ತು, ಕಡೀಗೆ ಕುಂಟನ ಹುಣ್ಣಿಗೆ ತಿರಿಗ್ತು…. +ಆ ಮೇಗ್ರೊಳ್ಳಿ ಕಣ್ಣಾ ಪಂಡಿತರು ಏನೋ ಔಸ್ತಿ ಮಾಡಿಕೊಟ್ಟಾರ… ಹಾಕಿ ಕಟ್ಟೀನಿ…. +ನೋಡ್ಬೇಕು, ಹಾಂಗ್ಯಾರೆ, ಏನಾಗ್ತದೆ ಅಂತಾ….” +“ಹಂದಿ ತಗೊಂಡು ಹೋಗ್ತಿಯೋ ಬಿಡ್ತೀಯೋ, ಬಿಸಿಲು ಏರಿಹೋತು. +ಅವನ್ಯಾಕೆ ಸುಮ್ಮನೆ ಒಡ್ಡಿ ಒಳಗೆ ಕೂಡಿ ಹಾಕ್‌ಬೇಕು? +ಬಿಟ್ಟಾರು ಬಿಡ್ತೀನಿ,” ಎಂದು ಹೆಗ್ಗಡೆಯವರು ತಟಕ್ಕನೆ ಯೋಗಕ್ಷೇಮದ ಮಾತಿನಿಂದ ವ್ಯಾಪಾರಧ್ವನಿಗೆ ದುಮುಕಿ ಬಿಟ್ಟರು. +ವೆಂಕಟಣ್ಣ ಅದನ್ನು ಗಮನಿಸುವ ಗೋಜಿಗೆ ಹೋಗಲಿಲ್ಲ. +ತಟಕ್ಕನೆ ತಲೆಯೆತ್ತಿ “ಅದ್ಯಾಕೆ ಹಾಂಗಂತೀರಿ, ಮಾರಾಯ್ರ. +ನಿಮ್ಮ ಹೊಲೇರ ಕೈಲೇ ಹೊರ್ಸಿ ಕಳ್ಸಿ. +ನಾ ಹ್ಯಾಂಗೆ ಹೊತ್ಕುಂಡು ಹೋಗ್ಲಿ?” ಎಂದು ಮೆಲ್ಲನೆ ಎದ್ದು ಹಂದಿಯೊಡ್ಡಿಯ ಕಡೆಗೆ ಮೆಲ್ಲಗೆ ಸರಿದನು. +ಹೆಗ್ಗಡೆಯವರೂ ಎದ್ದು ಅತ್ತ ಕಡೆ ಸರಿಯುತ್ತಾ “ನೀ ಒಳ್ಳೆ ಗಿರಾಸ್ತ. +ಮಳೇ ಬಂದ್ ಹದಾ ಆಗ್ಯಾದೆ. +ಇವತ್ತು ಆರು ಕಟ್ಟಾಕೆ ಹೇಳಿ ಕಳ್ಸೀನಿ. +ಇವತ್ತೆಲ್ಲಿ ಸಿಗ್ತಾರೆ ನಮ್ಮ ಹೊಲೇರು?” +“ಅಯ್ಯಯ್ಯೊ, ಅಷ್ಟುಂದು ಉಪಕಾರ ಮಾಡಿ. +ನಿಮ್ಮ ದಮ್ಮಯ್ಯ ಅಂತೀನಿ.” +“ಸಿಗಾದಾದ್ರೂ ಮಜ್ಜಾನದ ಮ್ಯಾಲೆ ಸೈ.” +“ಹಾಂಗಾದ್ರೆ ಹಂಗೇನೆ”. +ಹೆಗ್ಗಡೆಯವರು ಸ್ವಲ್ಪ ಉದಾಸೀನದ ಧ್ವನಿಯಿಂದ: + “ಮಾರಾಯ, ನಮ್ಮ ಮನೆ ಕಷ್ಟ ಹೇಳಿದ್ರೆ ತೀರದು. +ಹುಡುಗಿ ಒಂದೇ ನೀರು ಹೊತ್ತು ಅಡಿಗೆ ಮಾಡಬೇಕಾಗ್ಯದೆ.” +“ಯಾಕೆ?ಮಂಜಮ್ಮನ ಅತ್ತಿಗೆ ಇಲ್ಲೇನು? ” +“ಅದೆ. ಹೊರಗೆ ಕೂತದೆ.” +“ಸಣ್ಣಮನೆ ಶಂಕರಪ್ಪ ಹೇಳಿ ಕಳ್ಸಿದ್ದ, ಹೋಗಿ ಬರ್ತೀನಿ” ಎಂದು ವೆಂಕಟಣ್ಣ ಅತ್ತ ಕಡೆ ನೋಡಿದಾಗ, ಮಿಂದು ಬಂದ ಶಂಕರಪ್ಪ ಹೆಗ್ಗಡೆ ಅಂಗಳದಲ್ಲಿದ್ದ ತುಳಸಿಗೆ ನೀರು ಹಾಕಿ ಪ್ರದಕ್ಷಿಣೆ ಮಾಡುತ್ತಿದ್ದುದು ಕಣ್ಣಿಗೆ ಬಿತ್ತು. +ಅದನ್ನು ನೋಡಿದ ದೊಡ್ಡ ಹೆಗ್ಗಡೆಯವರು ವ್ಯಂಗ್ಯಹಾಸ್ಯದಿಂದಲೆಂಬಂತೆ “ಓಹೋ ನಮ್ಮ ಬಿರಾಂಬರ ಮಡಿಪೂಜೆ ಆಗ್ತಾ ಇದೆ!” ಎಂದರು. +“ಹಾಂಗ್ಯಾರೆ ಮಜ್ಜಾನ ಕಳ್ಸಿಕೊಡ್ತೀರಷ್ಟೆ? ” +“ಹೋಗ್ಲಿ. ಈಗ್ಲೆ ತಗೊಂಡು ಹೋಗಿಬಿಡಪ್ಪಾ.” +“ಹಾಂಗಾದ್ರೆ ಹಂಗೆ ನಂಗೇನಂತೆ. ” +“ದುಡ್ಡು ತಂದೀಯೇನು?” +“ಈಗ ಕೈಲಿಲ್ಲ. +ಲೆಕ್ಕಕ್ಕೆ ಬರ್ಕೊಂಡುಬಿಡಿ.” +“ಅದು ಮಾತ್ರ ಆಗಾದಿಲ್ಲ…. +ನೀನು ಕೊಡಾದೇ ಇನ್ನೂ ಕೊಟ್ಟಿಲ್ಲ. +ಸುಮಾರು ಹಣ ಬಾಕಿ ಇದೆ… ಮತ್ತೂ ಲೆಕ್ಕಕ್ಕೆ ಬರ್ಕೊಳ್ಳಿ ಅಂದ್ರೆ?” ಸುಬ್ಬಣ್ಣ ಹೆಗ್ಗಡೆಯವರ  ಮಾತು ಬಿರುಸಾಗತೊಡಗಿತು. +“ಈಗ ಎಲ್ಲಿಂದ ತರ್‌ಲಿ, ನೀವೇ ಹೇಳಿ.” +“ಎಲ್ಲಿಂದ?ಶಂಕರಪ್ಪನ್ನೇ ಕೇಳು.” +“ಅವನಿಗೇ ಬೆಟ್ಟಳ್ಳಿ ಗೌಡ್ರ ಹತ್ರ ಸಾಲ ಆಗ್ಯಾದೆ. +ನನಗೆಲ್ಲಿಂದ ಕೊಟ್ಟಾನು?” +“ಮನೆಗೆ ಹೆಂಚು ಹಾಕಿಸ್ತಾ ಕೂತ್ರೆ ಸಾಲ ಆಗ್ದೆ ಬಿಡ್ತದೇನು? …. ಹೊಗ್ಲಿ ನಂಗ್ಯಾಕೆ ಆ ಇಚಾರ….” +“ನೀವೇನು ಕೆಟ್ಟದ್ದಕ್ಕೆ ಹೇಳ್ತೀರೇನು? +ಎಷ್ಟಂದರೂ ಅವನಿಗೆ ಚಿಕ್ಕಪ್ಪ. +ನೀವಲ್ಲದೆ ಇನ್ಯಾರು ಹೇಳ್ಬೇಕು?” +“ಹೇಳ್ತೀನಿ ನೋಡೂ, ಎಂಕ್ಟಣ್ಣ; +ನೀನೂ ಹಳಬ ನಾನೂ ಹಳಬ….” +“ಸೈ ಸೈ ನಾನೆಂಥ ಹಳಬ? …. ನಿಮ್ಮ ವಯಸ್ಸಿನವರು ಈ ಪರಾಂತದಾಗೆ ಯಾರೂ ಇಲ್ಲ…. +ನಮ್ಮ ಕಲ್ಲೂರು ದೋಯಿಸಲು ಒಬ್ಬರನ್ನ ಬಿಟ್ರೆ ನಿಮ್ಮಷ್ಟು ಹಳಬರು ಮತ್ಯಾರೂ ಇಲ್ಲ.” +“ಹೂವೀ!ಏ ಹೂವೀ!” +“ಹೆಗ್ಗಡೆಯವರು ಇದ್ದಕ್ಕಿದ್ದಹಾಗೆ ಕೂಗಿ ಕರೆಯತೊಡಗಿದರು. +ಕೊಟ್ಟಿಗೆ ಕೆಲಸದಲ್ಲಿದ್ದ  ಹೂವಿ ಕೈಕಾಲ್ ಸೆಗಣಿಯಾಗಿ ಬೇಗ ಬೇಗ ಬಂದಳು.” +“ನಿನ್ನ ಗಂಟಲು ಕಟ್ಟಿ ಹೋಗಾ! +ಓಕೊಳ್ಳಬಾರದೇನೆ?” ಎಂದು ಭರ್ತ್ಸನೆಮಾಡಿ, ಹೆಗ್ಗಡೆಯವರು “ಅಲ್ಲಿ ಓಡಿ ಹೋಗು; +ನಮ್ಮ ತಿಮ್ಮೂಗೆ ಹೇಳು ಯಾರಾದ್ರೂ ಇಬ್ರು ಹೊಲೇರನ್ನ ಕಳ್ಸಬೇಕಂತೆ ಅಂತಾ.” +“ಹಾಂಗಾರೆ, ನಾನೀಗ ಬಂದು ಬಿಡ್ತೀನಿ” ಎಂದು ಹೇಳಿ ಹೂವಳ್ಳಿ ವೆಂಕಟಣ್ಣ ತೇಪೆ ಹಾಕಿದ ತನ್ನ ದಗಲೆಯನ್ನು ಸರಿಮಾಡಿಕೊಂಡು, ದೊಣ್ಣೆಯೂರಿ, ಕುಂಟುತ್ತಾ ಆಚೆ ಮನೆಗೆ ಹೋದನು. +ಕಣ್ಣಾಪಂಡಿತರ ಕಷಾಯ ಕುಡಿಯುವುದಕ್ಕಾಗಿ ಸುಬ್ಬಣ್ಣ ಹೆಗ್ಗಡೆಯವರು ‘ಬುಚ್ಚಿ’ಯಿದ್ದ ಅಡಿಗೆಮನೆಗೆ ಹೋದರು. +ಕಾಲಿಗೆ ಹಿಡಿದಿದ್ದ ಕೆಸರು ಒಣಗಿ ಹೋಗಿತ್ತಾದ್ದರಿಂದ ಮುದುಕನಿಗೆ ಅದನ್ನು ತೊಳೆದುಕೊಳ್ಳುವುದಕ್ಕೆ ನೆನಪೂ ಆಗಲಿಲ್ಲ. +ಸ್ವಲ್ಪ ಹೊತ್ತಾದಮೇಲೆ ಕಣ್ಣಾಪಂಡಿತರು ಹೊರಗೆ ಬಂದು ಕರೆದರು; + “ಏ ಗುತ್ತೀ!” ಗುತ್ತಿ ಎಲೆಯಡಿಕೆಯನ್ನು ಯಾಂತ್ರಿಕವಾಗಿ ಎಂಬಂತೆ ಜಿಗಿಯುತ್ತಾ ನೆಲದ ಕಡೆ ನೋಡುತ್ತಾ ಕುಳಿತವನು ತಲೆ ಎತ್ತಲಿಲ್ಲ. +ಮರದಳಕಲಿನ ಎಳಬಿಸಿಲು ಅವನ ಸುತ್ತಲೂ ಬಲೆಬಲೆ ನೆಯ್ದಿತ್ತುಅಲ್ಲಾಡುತ್ತಿದ್ದ ದವಡೆಯೊಂದು ವಿನಾ ವಿಗ್ರಹದೋಪಾದಿಯಲ್ಲಿ ಕುಳಿತಿದ್ದ ಹೊಲೆಯನನ್ನು ನೋಡಿ ಮಲೆಯಾಳಿ ಪಂಡಿತನಿಗೆ ಸೋಜಿಗವಾಯಿತು. +ಅರೆನಗೆಗೂಡಿ ಮತ್ತೊಮ್ಮೆ ತುಸು ಗಟ್ಟಿಯಾಗಿಯೆ ಕೂಗಿದರು: “ಏ ನಾಯೀ ಗುತ್ತೀ!” ಆದರೂ ಗುತ್ತಿ ಮೊದಲಿನಂತೆಯೆ ಕುಳಿತಿದ್ದುದನ್ನು ಕಂಡು ಪಂಡಿತರು ವಕ್ರವಕ್ರವಾಗಿ ದರಿಸಿಹೋಗಿದ್ದ ಕಲ್ಲು ಕಟ್ಟಣೆಯ ಮೆಟ್ಟಲುಗಳನ್ನು ಕಾಲು ಜಾರೀತೆಂದು ನಿಧಾನವಾಗಿ ಎಚ್ಚರಿಕೆಯಿಂದ ಇಳಿಯತೊಡಗಿದರು. +ಗುತ್ತಿ ನೆಲದ ಕಡೆ ನೋಡುತ್ತಿದ್ದುದೇನೋ ಹೌದು. +ಹೋದ ರಾತ್ರಿಯ ಮಾರಿ ಮಳೆಯಲ್ಲಿ ತೇಲಿಬಂದು ಕುತ್ತುರೆಯಾದಂತಿದ್ದ ಹಲಸಿನ ತರಗಿನ ನಡುವೆ ಬಿದ್ದಿದ್ದ ಒಂದು ಸಗಣಿ ಮುದ್ದೆಯಿಂದ ಒಂದು ಓಡುಹುಳು ಸಣ್ಣದೊಂದು ಉಂಡೆಯನ್ನು ಅದನ್ನು ಹಿಂದುಮುಂದಾಗಿ ತನ್ನ ಹಿಂಗಾಲುಗಳಿಂದ ನೂಕಿಕೊಂಡು ಹೋಗುತ್ತಿತ್ತು. +ಅತ್ಯಮೂಲ್ಯವಾದ ಪದಾರ್ಥವನ್ನು ಅತಿಪ್ರಯಾಸದಿಂದ ಸಾಗಿಸುವ ಸಾಹಸದಲ್ಲಿ ತೊಡಗಿದಂತಿತ್ತು ಅದರ ದೃಢಪ್ರಯತ್ನ. +ಆ ಉಂಡೆ ಒಂದು ಸಣ್ಣ ದಿಬ್ಬವನ್ನು ಹತ್ತಿ ಅದರ ನೆತ್ತಿಗೆ ಬಂದೊಡನೆ ಮತ್ತೆ ಕೆಳಕ್ಕುರುಳಿತು. +ಓಡುಹುಳು ಮತ್ತೆ ಅದನ್ನು ಬಳಿಸಾರಿ ತನ್ನ ಹಿಂಗಾಲುಗಳಿಂದ ತಬ್ಬಿಹಿಡಿದು ದಬ್ಬತೊಡಗಿತು. +ಹೀಗೆ ಒಂದೆರಡು ಗೇಣು ಹೋಗುವುದರೊಳಗಾಗಿ ನಾನಾ ಅಡಚಣೆಗಳಿಗೆ ಒಳಗಾದರೂ ಧೃತಿಗೆಡದೆ ನಿರಾಶವಾಗದೆ ಕಿನಿಸಿಕೊಳ್ಳದೆ ಪ್ರಶಾಂತವಾಗಿಯೆ ತನ್ನ ಕೆಲಸವನ್ನು ಸಾಗಿಸುತ್ತಿತ್ತು. +ಗುತ್ತಿಯ ಕಣ್ಣೇನೋ ಅದನ್ನೆ ಕುತೂಹಲದಿಂದ ನೋಡುತ್ತಿತ್ತು. +ಅವನ ಮನಸ್ಸಿನ ಹೊರ ಅಂಚು ಅದರ ದೃಢತೆಯ ವಿಚಾರವಾಗಿ ಚಿಂತಿಸಿ ಶ್ಲಾಘಿಸುತ್ತಲೂ ಇತ್ತು. +ಆದರೆ ಅಷ್ಟರಿಂದಲೆ ಅವನು ಆ ಪರಿ ತಲ್ಲೀನನಾಗಿ ಕುಳಿತಿರಲು ಸಾಧ್ಯವಾಗುತ್ತಿರಲಿಲ್ಲ. +ಕಣ್ಣಾಪಂಡಿತರು ಎರಡು ಸಾರಿ ಕರೆದೂ ಓಕೊಳ್ಳದಿರುವಷ್ಟು. +ಅವನ ಮನಸ್ಸಿನ ಕೇಂದ್ರವನ್ನೆಲ್ಲಾ ವ್ಯಾಪಿಸಿದ್ದ ವಿಚಾರ ಬೇರೆಯಾಗಿತ್ತು. +ಓಡುಹುಳುವಿನ ಸೆಗಣಿ ಉಂಡೆಯ ಸಾಹಸ ಒಳಗಿನ ಏಕಾಗ್ರತೆಗೆ ಆಲಂಬನರೂಪವಾದ ಬಹಿರಿಂದ್ರಿಯ ಘಟನೆ ಮಾತ್ರವಾಗಿತ್ತು. +ಅವನ ಅಂತಃಕರಣವನ್ನೆಲ್ಲ ಆಕ್ರಮಿಸಿದ್ದ ವಿಚಾರವೆಂದರೆ ತಿಮ್ಮಿಯ ಅಪಹರಣ! +ಅದರ ಸಾಧ್ಯಸಾಧ್ಯತೆ, ಅದರ ಅಪಾಯ, ಅದರಿಂದ ತಪ್ಪಿಸಿಕೊಳ್ಳುವ ಉಪಾಯ, ತಿಮ್ಮಿಯ ಅವ್ವ ಸೇಸಿಯಿಂದ ಒದಗಬಹುದಾದ ಸಹಾಯ, ತಿಮ್ಮಿಯ ಅಪ್ಪ ದೊಡ್ಡ ಬೀರನಿಂದ ಸಂಭವಿಸಬಹುದಾದ ಅಡಚಣೆ, ಎಲ್ಲಿಯಾದರೂ ಸಿಕ್ಕಿ ಬಿದ್ದರೆ ಗೌಡರಿಂದ ತನಗೆ….. +“ಏನೋ, ಕುತ್ತಿ, ಹೀಗೆ ಕೂತುಬಿಟ್ಟಿದ್ದೀಯಲ್ಲಾ?” +ಗುತ್ತಿ ದಿಗಿಲುಬಿದ್ದವನಂತೆ ಎದ್ದುನಿಂತು ಅಚ್ಚರಿಯಿಂದ “ಅಯ್ಯೊ ಯಾವ ಮಾಯಕದಾಗೆ ಬಂದುಬಿಟ್ರಿ ಈಟು ಹತ್ರ?” ಎಂದು ಹಲ್ಲುಬಿಟ್ಟನು. +“ಏನು ನೋಡುತ್ತಾ ಇದ್ದೆಯಲ್ಲಾ? +ನಾನು ಎರಡು ಸಲ ಕೂಗಿದೆ; +ನಿನಗೆ ಇತ್ತ ಧ್ಯಾಸವೇ ಇರಲಿಲ್ಲಾ?”ಪಂಡಿತರು ಕೇಳಿದ ಪ್ರಶ್ನೆಯನ್ನೇ ಗಮನಿಸದೆ ಗುತ್ತಿ ಅವರ ಕೈಯಲ್ಲಿದ್ದ ಅಂತ್ರವನ್ನೆ ಬಯಸಿ ನೋಡುತ್ತಾ ತನ್ನ ಎರಡು ಕೈಗಳನ್ನೂ ಅಂಜಲಿಬದ್ದವನ್ನಾಗಿ ಮಾಡಿ ಯಾಚಿಸುವಂತೆ ನೀಡಿದನು. +ಹಾಗೆ ಮಾಡುವಾಗ ಅವನ ಕೈಯಲ್ಲಿದ್ದ ಬಗನಿ ದೊಣ್ಣೆ ಕಂಕುಳು ಸೇರಿತ್ತು. +“ಕೈಯಲ್ಲಿ ಶರಣಾರ್ತಿ ಬಗಲಲ್ಲಿ ದೊಣ್ಣೆ”  ಎಂಬ ಗಾದೆ ನಿನ್ನದು…. +ಮತ್ತೆ ನಾನು ಹೇಳಿದ್ದು ಮರೆಯಬೇಡ ತಿಳಿಯಿತೇ?” ಎನ್ನುತ್ತಾ ಕಣ್ಣಾ ಪಂಡಿತರು ಅವನ ಕೈಗೆ ಅಂತ್ರ ಹಾಕಿದರು, ಕೈ ಸೋಕೀತೆಂದು ಹೆದರಿ ತುಸು ಎತ್ತರದಿಂದಲೆ! +ತುಂಬ ಗೌರವದಿಂದಲೂ ಆ ಪವಿತ್ರ ವಸ್ತುವನ್ನು ಬೊಗಸೆ ಕೈಯಲ್ಲಿ ಅಪ್ಪಿಹಿಡಿದು, ಆ ಜೋಡಿಸಿದ್ದ ಕೈಯಿಂದಲೆ ಸೊಂಟಬಗ್ಗಿ ನಮಸ್ಕಾರ ಮಾಡಿ, ಹೊರಟೇಬಿಟ್ಟನು ಗುತ್ತಿ. +ಪಂಡಿತರು “ಏನೋ ಅಮಸರ?ಓಡುತ್ತಿದ್ದೀಯಲ್ಲಾ?” ಎಂದು ಕೇಳಿದರೂ ನಿಲ್ಲದೆ “ಹೊತ್ತಾಯ್ತು ಕಣ್ರಾ ಬತ್ತೀನಿ” ಎನ್ನುತ್ತಾ ಬಿರುಬಿರನೆ ಕುಳ್ಳುಗಾಲು ಹಾಕಿದನು. +ತುಸು ವಯಸ್ಸಾಗಿದ್ದ ಕಣ್ಣಾಪಂಡಿತರು ಕುಳ್ಳಗೆ ಗಟ್ಟಿಮುಟ್ಟಾಗಿದ್ದ ತರುಣ ಗುತ್ತಿಯನ್ನೆ ನೋಡುತ್ತಾ ನಗುತ್ತಾ ‘ಲವಡೀ ಮಗನಿಗೆ ಹೆಣ್ಣಿನ ಹುಚ್ಚು ಅಮರಿತ್ತಲ್ದಾ?” ಎಂದುಕೊಂಡು ಮನೆಗೆ ಹಿಂತಿರುಗಿದರು. +ಗುತ್ತಿ ‘ಹೊತ್ತಾಯ್ತು ಕಣ್ರಾ’ ಎಂದು ಒಡೋಡುತ್ತಲೆ ಅವಸರವಸರವಾಗಿ ಅಂತ್ರ ದಾನಮಾಡಿದ ಕಣ್ಣಾಪಂಡಿತರನ್ನು ಬೀಳುಕೊಂಡಿದ್ದರೂ ಹತ್ತುಮಾರು ಹೋಗುವುದರೊಳಗೆ ಅವನ ವೇಗ ಕಡಿಮೆಯಾಗುತ್ತಾ ಬಂದು ಅಂತಕ್ಕಸೆಟ್ತಿಯ ಮನೆಯ ಸಮೀಪದಲ್ಲಿ ನಿಂತೇ ಹೋಯಿತು. +ಅಷ್ಟು ಹಿತಕರವಾಗಿ ಅವನ ಮೂಗನ್ನು ಆಹ್ವಾನಿಸುತ್ತಿತ್ತು ದೋಸೆಯ ವಾಸನೆ!” ಬೆಳಗಿನಿಂದ ಏನನ್ನೂ ತಿಂದು ಕುಡಿದು ಮಾಡದೆ ಇದ್ದ ಅವನಿಗೆ ಆ ದೋಸೆಯ ಕಂಪಿನ ಪ್ರಲೋಭನೆಯನ್ನು ಮೀರಿ ಮುಂದೆ ಅಡಿಯಿಡಲು ಆಗಲಿಲ್ಲ. +ಇನ್ನೊಂದು ನಾಲ್ಕುಮಾಡು ಮುಂದುವರಿದಿದ್ದರೆ ಕೋಣೂರಿಗೆ ಹೆದ್ದಾರಿಯಿಂದ ಅಗಚುವ ಕಾಲುದಾರಿ ಸಿಕ್ಕುತ್ತಿತ್ತು. +ಕಾಲುನಡಿಗೆಯಲ್ಲಿ ಹೋಗುವವರೆಲ್ಲ ಕೋಣೂರಿನ ಮೇಲೆಯೆ ಹಾದು ಹೋಗಬೇಕಾಗಿತ್ತು ಹಳೆಮನೆಗೆ. +ಆದರೆ ಗುತ್ತಿಯ ಮನಸ್ಸು ಅಥವಾ ಹೊಟ್ಟೆ ಅಥವಾ ಬಾಯಿ-ಅವನ ಮಟ್ಟಿಗೆ ಅವುಗಳಲ್ಲಿ ಅಂತಹ ಭೇದವೇನಿರಲಿಲ್ಲ! + ‘ಉಂದು ಚೂರು ಬಾಯಿ ಹುಳ್ಳಗೆ ಮಾಡಿಕೊಂಡೇ ಹೋಗಾನ’ ಎಂದು ವಾದಿಸಿತು. +ಮನೆಯ ಎದುರು ಹೆದ್ದಾರಿಯ ಅಂಚಿಗೆ ಹಾಕಿದ್ದ ಬಿದಿರಡ್ಡೆಯ ಬೇಲಿಯನ್ನು ಉಣುಗೋಲಿನ ಬದಿಯೆ ಇದ್ದ ತಡಬೆಯ ಮೇಲೆ ಹತ್ತಿ ದಾಟಿ ಮುಂಚೆಕಡೆಯ ಅಂಗಳಕ್ಕೆ ಹೋದನು. +ಅಂತಕ್ಕಸೆಟ್ತಿಯ ಮನೆ ಒಂದು ರೀತಿಯಲ್ಲಿ  ಅರವಟ್ಟಿಗೆ, ಅನ್ನಸತ್ರ, ಭೋಜನಗೃಹ, ಕಳ್ಳಂಗಡಿ, ಜೂಜಿನ ಕಟ್ಟೆ, ಆಟದಮನೆ, ಇತ್ಯಾದಿ ಇತ್ಯಾದಿ ಸಂಸ್ಥೆಗಳ ಸಂಸ್ಕಾರಗಳನ್ನೆಲ್ಲ ಒಳಗೊಂಡ ಸಾಮೂಹಿಕ ಕ್ಷೇತ್ರವಾಗಿತ್ತು. +ಆಗದವರು ಕೆಲವರು ಇನ್ನೂ ಏನೇನೋ ಆಗಿದೆ ಎಂದು ಕಿವಿ ಮಾತು ಹೇಳುತ್ತಿದ್ದರು. +ಆದರೆ ಗುತ್ತಿಯ ಮಟ್ಟಿಗೆ ಅದು ‘ಮೇಗ್ರೊಳ್ಳಿ ಹಲಸಿನ ಮರದ ಮನೆ’, ಆ ಮನೆಯ ಎದುರಿಗಿದ್ದ ಹೆಬ್ಬಲಸಿನ ಮರವನ್ನು ಎಂದೋ ಕಡಿದುಹಾಕಿದ್ದರೂ ಅದು ಕೀರ್ತಿಶೇಷವಾಗಿ ಆ ರೀತಿ ಹೆಸರುಳಿಸಿಕೊಂಡಿತ್ತು. +ಅವನು ಸಿಂಬಾವಿಯಿಂದ ಕೋಣೂರು, ಹಳೆಮನೆ, ಹೂವಳ್ಳಿ, ಬೆಟ್ಟಳ್ಳಿ ಮೊದಲಾದೆಡೆಗಳಿಗೆ ಹೋಗಿ ಬರುವಾಗಲೆಲ್ಲ ‘ಹಲಸಿನಮರದ ಮನೆಯಲ್ಲಿ’ ತುಸುಕಾಲವಾದರೂ ತಂಗಿ ಬಾಯಾರಿಕೆಯನ್ನೊ ಹಸಿವೆಯನ್ನೊ ಆಯಾಸವನ್ನೊ ಪರಿಹರಿಸಿಕೊಂಡು ಹೋಗುತ್ತಿದ್ದುದು ವಾಡಿಕೆ. +ಬೆಲ್ಲ ನೀರುಗಳನ್ನೊ, ಹೆಂಡ ಕರಿಮೀನು, ಚಟ್ನಿಯನ್ನೊ, ಕಳ್ಳು ಸ್ವಾರ್ಲು ಮೀನನ್ನೊ, ಕಡೆಗೆ ಮಜ್ಜಿಗೆ ಉಪ್ಪಿನಕಾಯಿಯನ್ನೊ ಸವಿದೆ ಮುಂದುವರಿಯುತ್ತಿದ್ದನು. +ಅದಕ್ಕೆ ಬದಲಾಗಿ ಅವನು ಇತರ ಪ್ರಯಾಣಿಕರಂತೆ ದುಡ್ಡು ಕಾಸು ಕೊಡುತ್ತಿರಲಿಲ್ಲ. +ಅವನ ಹತ್ತಿರ ಆ ಪದಾರ್ಥ ಇರುತ್ತಿದ್ದುದೂ ಅಷ್ಟಕ್ಕಷ್ಟೇ! +ಜಾತ್ರೆಗೊ ತೇರಿಗೊ ಹೋಗುವಾಗ ಹೆಗ್ಗಡೇರ ಹತ್ತಿರ ಗೋಗರೆದು ಒಂದೆರಡಾಣೆ ದಕ್ಕಿಸಿಕೊಂಡರೆ ಅದೇ ಯಥೇಚ್ಛ. +ಆದರೆ ಕಾಡಿನಲ್ಲಿ ಬರುವಾಗ, ಅದು ಸಮಯವಾಗಿದ್ದರೆ, ಒಳ್ಳೆಯ ಎಲೆ ಕಳಲೆ ಮುರಿದು ತಂದುಕೊಡುತ್ತಿದ್ದನು. +ಪಯಣ ಕೈಕೊಳ್ಳುವ ಸಮಯದಲ್ಲಿ ತಾನು ಒಡ್ಡಿದ ಶೆಬೆಗೆ ಕಾಡುಕೋಳಿಯೊ ಚಿಟ್ಟಿಕೋಳಿಯೊ ಸಿಕ್ಕಿಬಿದ್ದರೆ ಅದನ್ನೂ ಎಷ್ಟೋ ಸಾರಿ ತಂದುಕೊಟ್ಟಿದ್ದನು. +ಅಣಬೆಯ ಕಾಲದಲ್ಲಿ ಅಕ್ಕಿಅಳಿಬಿ, ಹೆಗ್ಗಾಲಳಿಬಿ, ಚುಳ್ಳಳಿಬಿ, ಕಾಸರ್ಕನಳಿಬಿ ಇವುಗಳನ್ನೂ ತಂದುಕೊಡುತ್ತಿದ್ದನು. +ಒಮ್ಮೊಮ್ಮೆ ಇತರರ ಅಡಕೆ ಬಾಳೆ ತೋಟಗಳಲ್ಲಿ ಹಾದು ಬೇಲಿಯ ತಡಬೆ ದಾಟಿ ಬರುವ ಪ್ರಮೇಯ ಒದಗಿದಾಗ ಬಾಳೆಯ ಗೊನೆಗಳನ್ನೂ ತಂದುಕೊಡುತ್ತಿದ್ದುದೂ ಉಂಟು! +ಅಲ್ಲದೆ ತಾನು ಅಲ್ಲಿಗೆ ಬಂದಾಗ ಅಂತಕ್ಕಸೆಟ್ತಿಯವರಿಗೆ ಏನಾದರೂ ತುರುತ್ತಾಗಿ ಆಗಬೇಕಾದ ಸಣ್ಣಪುಟ್ಟ ಕೆಲಸಗಳನ್ನೂ ಮಾಡಿಕೊಡುತ್ತಿದ್ದನು. +ಅಂಗಳಕ್ಕೆ ಹೋದವನು ಮುಂದುಗಡೆ ನೇತುಹಾಕಿದ್ದ ಮಂತ್ರದ ತೆಂಗಿನಕಾಯಿಯನ್ನು ನೋಡಿ ದೂರದಲ್ಲಿಯೆ ನಿಂತನು. +ಹುಲ್ಲಿನ ಮಾಡು ಕುಸಿಯಾಗಿದ್ದುದರಿಂದ ಜಗಲಿ ಕಿರುಜಲಿಗಳಲ್ಲಿ ಕವಿದಿದ್ದ ಅರೆ ಗತ್ತಲೆಯಲ್ಲಿ ಯಾರು ಯಾರೊ ಮೇಲುಜಾತಿಯವರು ಚಾಪೆಯ ಮೇಲೆ ಮಲಗಿಯೊ ಕಂಬಳಿಯ ಮೇಲೆ ಕುಳಿತೋ ಮೂಲೆಯಲ್ಲಿ ಕರಿಹಿಡಿದು ಕೊಳೆಯಾಗಿದ್ದ ಬೆಂಚಿನ ಮೇಲೆ ಒರಗಿಯೊ ಇದ್ದುದರಿಂದ ಅಲ್ಲಿ ತನಗೆ ಸ್ವಾಗತವಾಗಲಿ ಪ್ರವೇಶವಾಗಲಿ ಎಂದೆಂದೂ ದೊರೆಯದೆಂದು ಹುಟ್ಟಿನಿಂದಲೆ ಅರಿತಿದ್ದ ಗುತ್ತಿ ಮಾಡು ಸಂದಿಯ ಕಡೆಯಿಂದ ಮೂಗುಮುಚ್ಚಿ ಹಿಡಿದುಕೊಂಡು ಹಿತ್ತಲುಕಡೆಯ ಅಂಗಳಕ್ಕೆ ಬೇಗಬೇಗನೆ ಜಾರಿದನು. +ಅಷ್ಟೊಂದು ಮಲಮೂತ್ರಾದಿ ಸಂಮಿಶ್ರಣದ ದುರ್ಗಂಧವಿತ್ತು ಅಲ್ಲಿ. +ಹಿತ್ತಲುಕಡೆಯಿದ್ದ ಒಂದು ಹುಲ್ಲು ಜೋಪಡಿ ದನದ ಕೊಟ್ಟಿಗೆಯಾಗಿತ್ತು. +ಅದಕ್ಕೆ ಗೋಡೆಯಿರಲಿಲ್ಲ. +ಕಂಬದಿಂದ ಕಂಬಕ್ಕೆ ಬಿದಿರಡ್ಡೆಗಳನ್ನು ಕಟ್ಟಿ ಬೇಲಿಯ ತರಹದ ಒಡ್ಡು ಹಾಕಿದ್ದರು. +ಬಡಕಲು ಬಡಕಲು ಆದ ಒಂದೆರಡು ದನಗಳೂ ಒಂದು ಸುಪುಷ್ಟವೆನ್ನಬಹುದಾದ ಎಮ್ಮೆಯೂ ಇದ್ದುವು. +ಗುತ್ತಿಯ ಕಣ್ಣಿಗೆ ತಟಕ್ಕನೆ ಗೋಚರವಾದುದೆಂದರೆ ಕೊಟ್ಟಿಗೆಯ ತುಂಬಾ ತುಂಬಿದ್ದ ಬೆಳಕು. +ನೋಡುತ್ತಾನೆ ಅದರ ಹುಲ್ಲು ಮಾಡೆಲ್ಲ ಹಾರಿಹೋಗಿದೆ! +ಹಾರಿದ ಹುಲ್ಲು ಅಲ್ಲಿಯೆ ಅಲ್ಲಲ್ಲಿ ಕೆದರಿ ಬಿದ್ದಿದೆ. +ಕಳೆದ ರಾತ್ರಿಯ ಮಳೆಗಾಳಿಯ ಪ್ರಭಾವ ಸಿಂಬಾವಿ, ಸೀತೂರುಗುಡ್ಡ, ಲಕ್ಕುಂದಗಳಲ್ಲಿ ಮಾತ್ರವಲ್ಲದೆ ಮೇಗರವಳ್ಳಿಯಲ್ಲಿಯೂ ಪೂರಾ ಕೆಲಸ ಮಾಡಿದೆ ಎಂದುಕೊಂಡು, ತನ್ನ ಆಗಮನದ ಸೂಚನಾರ್ಥವಾಗಿ ಒಂದೆರಡು ಬಾರಿ ಕೆಮ್ಮಿದನು. +ಪರಿಣಾಮವಾಗಿ ಹಿತ್ತಲುಕಡೆ ಅಂಗಳಕ್ಕೆ ತೆರೆಯುವ ಬಾಗಿಲು ಸಶಬ್ದವಾಗಿ ಅಲ್ಲಾಡಲು ಪ್ರಾರಂಭವಾಯಿತು. +ಕಿರ್ರೊ ದಡಾರ್ ಬಡಾರ್ ಎಂದು ಹಿಂದಕ್ಕೂ ಚಲಿಸಿತು. +ಬಳೆ ತೊಟ್ಟಿದ್ದ ಬಿಳಿಯ ಕೈಯೊಂದು ಬಾಗಿಲನ್ನು ಸಶ್ರಮವಾಗಿ ಎತ್ತಿ, ನೂಕಿ, ಅಲುಗಿಸಿ, ದಬ್ಬುತ್ತಿದ್ದುದು ಕಾಣಿಸಿತು. +ಗುತ್ತಿ ನೋಡುತ್ತಿದ್ದಂತೆ ಅಂತಕ್ಕನ ಮಗಳು ಕಾವೇರಿ ಹೊರಗೆ ತಲೆ ಹಾಕಿ ನೋಡಿದಳು. +ನೋಡಿ, ಗುರುತಿಸಿ, ನಗುಮೊಗಳಾಗಿ “ಇದೇನೋ, ಗುತ್ತೀ, ಇಷ್ಟು ಹೊತ್ತಾರೆ? +ಎಲ್ಲಿಂದ ಬಂದೆಯೋ? +ಹಳೆಮನೆಯಿಂದಲೋ ಬೆಟ್ಟಳ್ಳಿಯಿಂದಲೋ?” ಎಂದು ಪ್ರಾಯದ ಹೆಣ್ಣಿನ ಇನಿದನಿಯಿಂದ ಮುದ್ದಾಗಿ ಕೇಳಿದಳು. +ಮತ್ತು, ತನಗಿಂತಲೂ ಕುಳ್ಳಾಗಿದ್ದರೂ ಬೆಳ್ಳಗೆ, ಜಟ್ಟಿಯಂತೆ ದೃಢಕಾಯನಾಗಿ, ಲಕ್ಷಣವಾಗಿದ್ದ ಹೊಲೆಯನನ್ನು ಪ್ರಶಂಸನೀಯ ದೃಷ್ಟಿಯಿಂದ ಈಕ್ಷಿಸಿದಳು. +ಹೊಲೆಯನಾಗಿದ್ದುದರಿಂದಲೆ ಹಾಗೆ ಈಕ್ಷಿಸುವುದರಲ್ಲಿ ಕಾವೇರಿಗೆ ಅಭ್ಯಂತರವೇನೂ ಕಾಣಲಿಲ್ಲ. +ತನ್ನ ವರ್ಗಕ್ಕೆ ಸೇರದಿರುವ ಮತ್ತೊಂದು ಸ್ಫುರದ್ರೂಪಿ ಗಂಡುಪ್ರಾಣಿಯನ್ನು, ಒಂದು ಮನೋಹರವಾದ ಪಕ್ಷಿಯನ್ನೊ ಒಂದು ಸುಲಕ್ಷಣವಾದ ಅಂಕದ ಕೋಳಿ ಹುಂಜನನ್ನೊ ಒಂದು ಸುಪುಷ್ಟವಾದ ಸುಂದರ ಗೂಳಿಯನ್ನೊ ನೋಡುವುದರಲ್ಲಿ ತಪ್ಪೇನು? +ಅಸ್ಪೃಶ್ಯನಾದ ಹೊಲೆಯ ಮನುಷ್ಯಜಾತಿಯವನಾಗಿದ್ದರೂ ತನ್ನ ಜಾತಿಯೂ ಅಲ್ಲದೆ, ತನಗೆ ಸರಿಸಮಾನ ಜಾತಿಯೂ ಅಲ್ಲದೆ, ಅತ್ಯಂತ ಕೊನೆಯ ಕೀಳುಜಾತಿಯವನಾಗಿದ್ದುದರಿಂದ ಹರೆಯರೆಯ ಕೊಂಬಿನ ಚೆಲುವಿನ ಹೋರಿಮಿಗವನ್ನು ಮೆಚ್ಚಿ ನೋಡುವಂತೆ ನೋಡಿದಳು. +ತನಗೂ ಅವನಿಗೂ ಮಾನವೀಯವಾದ ಗಂಡು-ಹೆಣ್ಣಿನ ಸಂಬಂಧ ಭಾವನೆಯ ಸುಳಿವೂ ಸರ್ವಥಾ ಅಸಂಭವ, ನಿಸರ್ಗ ವಿರುದ್ಧ, ಅಸ್ವಾಭಾವಿಕ, ಅಸಾಧ್ಯ ಎಂಬ ಪ್ರಚ್ಛನ್ನ ಧೈರ್ಯ ಅವಳ ನೋಟಕ್ಕೆ ನಿಸ್ಸಂಕೋಚತೆಯೀಯುವ ಧರ್ಮರಕ್ಷೆಯಾಗಿತ್ತು. +ಅದೇ ಕೆಚ್ಚಿನಿಂದಲೆ ಹೊಲೆಯನೂ ಸೆಟ್ಟರ ಹೆಣ್ಣಿನ ಚೆಲುವನ್ನು ನೋಡುತ್ತಾ ಪ್ರಸನ್ನಮುಖಿಯಾಗಿ “ಸಿಂಬಾವಿಯಿಂದ್ಲೆ ಬಂದೆ ಕಣೊ; ರಾತ್ರಿ ಮಳೆ ಜಪ್ಪಿ, ಲಕ್ಕುಂದದಾಗೆ ಉಳಿದಿದ್ದೆ. +ಹಳೆಮನೆ ಹೆಗ್ಗಡೇರಿಗೆ ಕಾಗದ ಕೊಟ್ಟಾರೆ ನಮ್ಮ ಹೆಗ್ಗಡೇರು. +ಅದಕ್ಕೆ ಬರ್ದಂಡು ದ್ವಾಗ್ತಿದ್ದೀನಿ.” +“ಯಾರ ಹತ್ರಾನೆ ಪಟ್ಟಂಗ ಹೊಡಿತಿದ್ದೀಯಾ?” ಹೆಣ್ಣು ದನಿಯೊಂದು ಒಳಗಿನಿಂದ ನೀಳವಾಗಿ ಕೇಳಿಸಿತು, ತುಳುಭಾಷೆಯಲ್ಲಿ. +ಕಾವೇರಿ ಕನ್ನಡದಲ್ಲಿಯೆ ರಾಗವಾಗಿ ಕೂಗಿದಳು. + “ಆ ನಾಯಿಗುತ್ತಿ ಬಂದಿದಾನೆ, ಅಬ್ಬೇ, ಸಿಂಬಾವಿ ನಾಯಿಗುತ್ತಿ” ಎಂದವಳೆ ಗುತ್ತಿಯ ಕಡೆ ತಿರುಗಿ “ಹೌದಾ?ಎಲ್ಲಿ ಹೋಯಿತೋ ನಿನ್ನ ಹುಲಿಯ?” ಎಂದು ಪ್ರಶ್ನಿಸಿ ಗಟ್ಟಿಯಾಗಿ ನಕ್ಕುಬಿಟ್ಟಳು. +“ಅದರದ್ದು ಇದೆಯಲ್ಲಾ ಹೋದಲ್ಲಿ ತನಕಾ ಬಾಲ ಮೂಸೋದು. +ಲಕ್ಕುಂದದಾಗೆ ಸಣುಬಿನ ನಾಯಿ ಇತ್ತು ಅಂತ ಕಾಣ್ತದೆ. +ಅಲ್ಲೇ ಕೂತು ಬಿಡ್ತು.”ಗುತ್ತಿ ಇನ್ನೂ ಮಾತು ಮುಂದುವರಿಸುತ್ತಿದ್ದನೊ ಏನೊ ಅಷ್ಟರಲ್ಲಿ ಅಂಗಳದ ಮೂಲೆಯಲ್ಲಿ, ಕೊಟ್ಟಿಗೆಯ ಹತ್ತಿರ ಇದ್ದ ನುಗ್ಗಿಮರದ ಬುಡದಲ್ಲಿ ಬಿದ್ದಿದ್ದ ದೊಡ್ಡ ಬೂದಿಯ ರಾಸಿಯಲ್ಲಿ, ಬೂದಿಬುಕ್ಕನಾಗಿ ಬೂದಿಯೊಡನೆ ಅಭೇದವೆಂಬಂತೆ ಮಲಗಿದ್ದ, ಬಿಳಿಗೆಂಪು ಬಣ್ಣಗೆಟ್ಟ ಮೂಳು ನಾಯಿಯೊಂದು ಕಂಯ್ಯಂಯ್ಯೊ ಕಂಯ್ಯಂಯ್ಯೊ ಎಂದು ಒರಲುತ್ತಾ ಅಂಗಳವನ್ನೆಲ್ಲ ಒದ್ದೆ ಮಾಡುತ್ತಾ ತೆಣಿಯ ಮೇಲೆ ಸೌದೆ ಕೂಡಿದ್ದರ ಮೇಲೆ ಹಾಕಿದ್ದ ಜಿಗ್ಗಿನಲ್ಲಿ ಹುದುಗಿತು. +ಗುತ್ತಿ ನೋಡುತ್ತಾನೆ: ಹುಲಿಯ! +ನಿಡಿದಾಗ ಉಸಿರೆಳೆದು ಕೆನ್ನಾಲಗೆಯನ್ನು ಚಾಚಿ ಏದುತ್ತಿದ್ದುದರಿಂದ ತನ್ನನ್ನು ಹುಡುಕಿಕೊಂಡು ಮೂಗಾಳಿಹಿಡಿದು ಲಕ್ಕುಂದದಿಂದ ಓಡುತ್ತಲೇ ಬಂದಿರಬೇಕು ಎಂದು ಗೊತ್ತಾಗಿ ಗುತ್ತಿ: “ಅಕ್ಕಳ್ರೋ!ನೀವು ನೆನೀತಿದ್ದಹಾಂಗೆ ಹಾಜರು, ಹಡಬೇಗೆ ಹುಟ್ಟಿದ್ದು!” ಎಂದನು. +“ಹಿಡ್ಕೊಳ್ಳೋ!ಹಿಡುಕೊಳ್ಳೋ!ನಮ್ಮ ನಾಯೀನ ಮುರಿದು ಹಾಕೀತು?” ಎಂದು ಎಚ್ಚರಿಸಿದ ಕಾವೇರಿಗೆ“ಇಲ್ಲ ಕಣ್ರೋ. +ಹೆಣ್ಣುನಾಯೀನ ಹಾಂಗೆಲ್ಲಾ ಮುರಿಯಾದಿಲ್ಲ!” ಎಂದು ಗುತ್ತಿ ಹುಲಿಯನನ್ನು ಹತ್ತಿರಕ್ಕೆ ಕರೆದು ತಲೆ ಸವರತೊಡಗಿದನು. +“ಏನೆ ಅದು ಗಲಾಟೆ?” ಎನ್ನುತ್ತಾ ಹೊರಗೆ ಬಂದ ಅಂತಕ್ಕ ಮಗಳನ್ನು ತುಳುವಿನಲ್ಲಿ ಗದರಿಸಿದಳು, ಸಂಗಡ ಯಾರೂ ಇರದಿರುವಾಗ ಹೊಲೆಯನೊಡನೆ ಅಷ್ಷು ದೀರ್ಘಕಾಲ ಮಾತಿನಲ್ಲಿ ತೊಡಗುವುದು ಪ್ರಾಯಕ್ಕೆ ಬಂದ ಹೆಣ್ಣಿಗೆ ತರವಲ್ಲ ಎಂಬಂರ್ಥದಲ್ಲಿ. +ಕಾವೇರಿಗೆ ಮುಖಭಂಗವಾದಂತಾಗಿ ಮುನಿದ ಮೋರೆಯಲ್ಲಿ ಸರಕ್ಕನೆ ಒಳಗೆ ಹೋದಳು, ಬಾಯಲ್ಲಿ ಏನನ್ನೊ ಮಿಟಿಮಿಟಿಗುತ್ತಾ. +ಅಂತಕ್ಕ ಬಂದವಳೆ ಕ್ಷಣಮಾತ್ರವೆಂಬಂತೆ ಸಮೀಕ್ಷಿಸಿ ನೋಡಿದಳು ಗುತ್ತಿಯ ಕೈಯಲ್ಲಿ ಏನಾದರೂ ಕಾಣಿಕೆಯಿದೆಯೇ ಎಂದು. +ನಿರಾಶಳಾದರೂ ಅದನ್ನು ತೋರಗೊಡದೆ ಹುಸಿನಗೆ ಬೀರಿ, ಸಿಂಬಾವಿ ಹೆಗ್ಗಡಿತಮ್ಮನವರ ಯೋಗಕ್ಷೇಮ ವಿಚಾರಿಸಿದಳು. +ಆ ಮಾತು ಈ ಮಾತು ಆಡಿ, ಕೊಟ್ಟಿಗೆಯ ಕಡೆ ನೋಡುತ್ತಾ ಅರ್ಥಪೂರ್ಣವಾಗಿ ಕಿರುನಗೆದೋರಿ “ಒಳ್ಳೆ ಸಮಯಕ್ಕೆ ಕರೆಸಿದಂತೆ ಬಂದೆ, ಮಾರಾಯ. +ಅಷ್ಟೊಂದು ಉಪಕಾರ ಆಗುತ್ತದೆ, ನಮ್ಮ ಕೊಟ್ಟಿಗೆಯ…” ಎನ್ನುತ್ತಿರುವಷ್ಟರಲ್ಲಿಯೆಗುತ್ತಿಗೆ ಸರ್ವವೂ ವಿದಿತವಾಗಿ “ನೀವು ಹೇಳಬೇಕೆ? +ಒಂದು ಒಪ್ಪೊತ್ತಿನಲ್ಲೆ ಹೊಚ್ಚಿ ಕೊಡ್ತಿದ್ದೆ. +ಆದರೆ ನಾನೀಗ ಹಳೆಮನೆ ಹೆಗ್ಗಡೇರಿಗೆ ಬೇಗ ಕಾಗ್ದ ಕೊಟ್ಟು, ಅಲ್ಲಿಂದ ಬೆಟ್ಟಳ್ಳಿಗೆ ಹೋಗಬೇಕಾಗದೆ” ಎಂದು, ನಂಟರ ಮನೆಗೆ ಹೋಗುವಾಗ ತಾನು ಹಾಕಿಕೊಂಡಿರುವ ವಿಶೇಷ ಉಡುಪಿನ ಕಡೆಗೆ ಅಂತಕ್ಕನ ಗಮನ ಸೆಳೆಯುವ ಸಲುವಾಗಿ ತಾನೆ ತನ್ನನ್ನು ಕೊರಳು ಬಾಗಿಸಿ ನೋಡಿಕೊಂಡನು. +ಹಾಗೆ ‘ದರೋಬಸ್ತಾ’ಗಿ ಇರುವಾಗ ಹುಲ್ಲು ಹೊದಿಸುವ ಕೈಕೆಲಸ ಮಾಡುವುದಾದರೂ ಹೇಗೆ? +“ನಿನ್ನೆ ಬೆಟ್ಟಳ್ಳಿ ದೊಡ್ಡಬೀರ ಬಂದಿದ್ದ ಕಣ್ರೋ. +ನಿನ್ನ ಮೇಲೆ ಬಹಳ ಸಿಟ್ಟಾಗಿದ್ದ.”ಗುತ್ತಿಗೆ ಮೈಮೇಲೆ ಬಿಸಿನೀರು ಹೊಯ್ದಂತಾಯ್ತು. +ತಟಸ್ಥವಾಗಿ ಬೇಸರಿನ ಮಟ್ಟಕ್ಕೂ ಇಳಿದಿದ್ದ ಆ ಮನೆ, ಅಂಗಳ, ಕೊಟ್ಟಿಗೆ, ನಾಯಿ, ಕೋಳಿ ಎಲ್ಲ ಇದ್ದಕ್ಕಿದ್ದ ಹಾಗೆ ಉಜ್ವಲ ಕುತೂಹಲ ವಸ್ತುಗಳಾಗಿ ಪರಿಣಮಿಸಿಬಿಟ್ಟವು. +ಸ್ವಲ್ಪ ಜೋರಾಗಿ ಉಸಿರುಬಿಡುತ್ತಲೇ ಕೇಳಿದ “ಯಾಕೆ ಬಂದಿದ್ದ? +ಏನು ಹೇಳಿದ?” +“ಅವನ ಮಗಳನ್ನು ನೀನು ಕೇಳುತ್ತಿದ್ದೀಯಂತೆ. +ನಿಮ್ಮ ಹೆಗ್ಗಡೇರೂ ನಿನ್ನ ಹಿಂದುಗಡೆ ನಿಂತುಕೊಂಡು ಹುನಾರು ಮಾಡುತ್ತಿದ್ದಾರಂತೆ. +‘ಅವರಿಗೇನು?ದುಡಿಯುವುದಕ್ಕೆ ಒಂದು ಹೆಣ್ಣಾಳು ಸಿಗುತ್ತದೆಯಲ್ಲಾ? +ಅಷ್ಟೆ!’ ಅಂದ. +ಬೆಟ್ಟಳ್ಳಿ ಗೌಡರು ಮಾತ್ರ ಬಿಲ್‌ಕುಲ್ ಆಗದು ಅಂತಾರಂತೆ. +‘ನಮ್ಮ ಕೇರಿ ಹೆಣ್ಣುಗಳನ್ನು ಹೊರಗಡೆ ಕೊಡುವುದೆಂದರೇನು? +ನಾನು ಅಪ್ಪಗೆ ಹುಟ್ಟಿದ ಮಗಾ ಆದರೆ ಎಂದಿಗಾದ್ರೂ ಬಿಟ್ಟೇನೆ? +ನೀನು ನಿನ್ನ ಅಪ್ಪ ನಿನ್ನ ಅಜ್ಜ ಎಲ್ಲ ಮಾಡಿರುವ ಸಾಲ ಬಿದ್ದಿದೆಯಲ್ಲಾ ಅದನ್ಯಾರೋ ತೀರಿಸೋರು?’ ಎಂದು ಉರಿದು ಬಿದ್ದರಂತೆ. +ಅದಕ್ಕೇ ದೊಡ್ಡಬೀರ ಗಂಡುಗಳು ಇವೆಯಂತೆ. +ಕರಿಮೀನು ಸಾಬರ ಮಳಿಗೇಲಿ ಏನೇನೊ ಯಾಪಾರ ಮಾಡಕ್ಕೆ ಬಂದಿದ್ದನಂತೆ, ಅವರ ಗೌಡ್ರಿಂದ ಸಾಬರಿಗೆ ಕಾಗ್ದ ತಗೊಂಡು”ಆಲೈಸುತ್ತಾ ನಿಂತಿದ್ದ ಗುತ್ತಿ ಬಹಳ ದಣಿದವನಂತೆ ಸುಯ್ದು ನೆಲ ನೋಡುತ್ತಾ ನಿಂತನು. +ಮತ್ತೆ ತಟಕ್ಕನೆ ತಲೆಯೆತ್ತಿ ‘ಹಂಗಾದ್ರೆ ನಾ ಹೋಗಿ ಬರ್ತೀನಿ’ ಎಂದವನೆ ಬಗನಿದೊಣ್ಣೆಯನ್ನು ಬಗಲಿಗೆ ಹಾಕಿಕೊಂಡು ತಿರುಗಿದನು. +“ನಿಲ್ಲೊ!ನಿಲ್ಲೊ!ಹೊತಾರೆ ಬಂದವನ್ನ ಬರೀ ಹೊಟ್ಟೇಲಿ ಕಳಿಸಬಾರದು. +ಪಾಪ ಬರ್ತದೆ” ಎಂದು ಅಂತಕ್ಕ ಒಳಗೆ ನಡೆದು, ಬಾಳೆಯ ಕೀತಿನಲ್ಲಿ ಸ್ವಲ್ಪ ತಂಗಳನ್ನೂ ಕರಿಮೀನು ಚಟ್ನಿಯನ್ನೂ ಹಾಳೆಕೊಟ್ಟೆ ದೊನ್ನೆಯಲ್ಲಿ ಹೆಂಡವನ್ನೂ ತಂದುಕೊಟ್ಟಳು. +ನಡೆದು ದಣಿದು ಹಸಿದಿದ್ದ ಹೊಲೆಯ ಅದನ್ನೆಲ್ಲ ಬೇಗಬೇಗನೆ ಪೂರೈಸಿ, ಅಲ್ಲಿಂದ ಹೊರಟನು. +ಅವನು ತಿಂದು ಕುಡಿಯುವುದನ್ನೆ ನೋಡುತ್ತಿದ್ದ ಹುಲಿಯ ಅವನು ಎಸೆದ ಬಾಳೆಯ ಕೀತನ್ನು ನೆಕ್ಕಿಯೆ ನೆಕ್ಕಿತು, ಅಲ್ಲಿ ಏನೂ ಇರದಿದ್ದರೂ, ಬರಿಯ ಕಂಪಿನ ರುಚಿಗಾಗಿ! +ದೋಸೆಯ ವಾಸನೆಯಿಂದಲೆ ಆಕೃಷ್ಟನಾಗಿ ಅಂತಕ್ಕನ ಮನೆಗೆ ನುಗ್ಗಿದ್ದ ಗುತ್ತಿಗೂ ಆವೂತ್ತು ದೊರತಿದ್ದುದೆಲ್ಲಾ ದೋಸೆಯ ವಾಸನೆ ಮಾತ್ರವೆ ತಾನೆ? +ಗುತ್ತಿ ತನ್ನ ಕುಳ್ಳುಗಾಲುಗಳನ್ನೆ ಬೀಸಿ ಬೀಸಿ ಹಾಕುತ್ತಾ ಹೆದ್ದಾರಿಯಲ್ಲಿ ತುಸು ದೂರ ಹೋಗಿ ಪಕ್ಕನೆ ನಿಂತನು. +ನೋಡುತ್ತಾನೆ ಕೋಣೂರಿಗೆ ಅಗಚುವ ಕಾಲುದಾರಿಯಿಂದ ಮುಂದೆ ನಡೆದು ಬಂದುಬಿಟ್ಟಿದ್ದಾನೆ! +‘ಹಾಳು ದಾರೀನಾ ಬಿಸಾಕ! +ಇವತ್ತೇನಾಗದೆ ನನ್ನ ಕಾಲಿಗೆ?’ ಎಂದು ದಾರಿಯನ್ನೂ ತನ್ನ ಕಾಲ್ಗಳನ್ನೂ ಶಪಿಸುತ್ತಾ ಮತ್ತೆ ಹಿಂತಿರುಗಿ ನಡೆದು ಕೋಣೂರಿಗೆ ಹೋಗುವ ಕಾಲುದಾರಿ ಸೇರಿದನು. +ಅವನ ನಾಯಿ ಅವನ ಹಿಂದೆ ಮುಂದೆ ಅತ್ತ ಇತ್ತ ಸುತ್ತಲೂ ಹಳುವಿನಲ್ಲಿ ನೆಲ ಮೂಸುತ್ತಾ, ಅಡ್ಡಾಡುತ್ತಾ, ಕಂಡ ಕಂಡ ಗಿಡದ ಬುಡದಲ್ಲಿ, ಹುತ್ತದ ಮೇಲೆ, ಎದ್ದುಕಾಣುವ ಕಲ್ಲುಗುಂಡುಗಳ ಮೇಲೆ ಆಗಾಗ್ಗೆ ನಿಂತು ಕಾಲೆತ್ತಿ ಪ್ರೋಕ್ಷಣೆ ಮಾಡುತ್ತಾ ಒಡೆಯನನ್ನು ಹಿಂಬಾಲಿಸುತ್ತಿತ್ತು. +ಗುತ್ತಿ ಮತ್ತೆ ಅಂತರ್ಮುಖಿಯಾಗಿ ತನ್ನ ಆಲೋಚನೆಗಳಲ್ಲಿಯೆ ಮಗ್ನನಾಗಿ ಅಭ್ಯಾಸ ಬಲದಿಂದಲೆಂಬಂತೆ ನೋಡುತ್ತಿದ್ದರೂ ಯಾವುದನ್ನೂ ಗಮನಿಸದೆ ಕಾಲುಹಾಕುತ್ತಿದ್ದನು. +ಅವನು ನಡೆಯುತ್ತಿದ್ದ ದಾರಿಯ ಕಾಡು ಮೊದಮೊದಲು ತುಸು ಹೆದ್ದಳಕಲಾಗಿ ಅಷ್ಟೇನೂ ನಿಬಿಡವಾಗಿರಲಿಲ್ಲ. +ಹಿಂದಿನ ರಾತ್ರಿ ಹೊಡೆದ ಮಳೆಯಲ್ಲಿ ಮಿಂದು ತೊಳೆದಂತಿದ್ದ ಪೊದೆ ಮರಗಳ ಹಸುರು, ದನಬಿಡುವ ಆ ಹೊತ್ತಿನಲ್ಲಿ ಬಿಸಿಲಿನಲ್ಲಿ, ತಂಪಾಗಿ ಮಿರುಗುತ್ತಿದ್ದುವು. +ಆದರೆ ಗುತ್ತಿ ಎಂದಿನಂತೆ ಕಾಡಿನ, ಹಕ್ಕಿಯ, ಮಿಗದ ಸೊಬಗನ್ನಾಗಲಿ ವ್ಯಾಪಾರವನ್ನಾಗಲಿ ಲಕ್ಷಿಸುವ ಮನಃಸ್ಥಿತಿಯಲ್ಲಿರಲಿಲ್ಲ. +ಪಿಕಳಾರಗಳ ಸಿಳ್ಳುಲಿಯಾಗಲಿ ಹೊರಸಲು ಹಕ್ಕಿಗಳ ಗುಬ್ಬಳಿಕೆಗಳಾಗಲಿ ಮರಕುಟಿಕನ ಕೊಟಾ ಕೊಟಾ ಸದ್ದಾಗಲಿ ಕಡೆಗೆ ಕಾಡುಕೋಳಿ ಹುಂಜನ ನಿಡುನೀಳ್ದ ಕೇಕೆಯಾಗಲಿ ಅವನ ಕಿವಿಗೆ ಬೀಳುತ್ತಿದ್ದರೂ ಅವನಿಗೆ ಕೇಳಿಸುತ್ತಿರಲಿಲ್ಲ; +ಕಣ್ಣಿಗೆ ಬಿದ್ದರೂ ಕಾಣಿಸುತ್ತಿರಲಿಲ್ಲ. +ಬರಬರುತ್ತಾ ಮೇಲೆ  ಏರತೊಡಗಿತು. +ಕಾಡು ದಟ್ಟವಾಯಿತು. +ಹಕ್ಕಿಪಕ್ಷಿಗಳ ಹಾರಾಟವೂ ಉಲಿಹವೂ ವಿರಳವಾಗಿ ಕಡೆ ಕಡೆಗೆ ನಿಂತೆ ಹೋಯಿತು. +ಆ ಅರಣ್ಯನಿಬಿಡತೆಯಲ್ಲಿ ಬಿಸಿಲೂ ಅಡಗಿದಂತಾಗಿ ಮರಗತ್ತಲು ಹೆಚ್ಚಾಯಿತು. +ಅವನು ಕಾಡು ಭಯಂಕರವಾಗಿದ್ದ ಆ ಹುಲಿಕಲ್ಲು ಗುಡ್ಡವನ್ನೇರಿ ಇಳಿದರೆ ಆ ಕಡೆಯ ಕಣಿವೆಯಲ್ಲಿ ಕೋಣೂರ ರಂಗಪ್ಪಗೌಡರ ಮನೆ ಗದ್ದೆ ತೋಟ ಸಿಗುತ್ತಿತ್ತು. +ಆ ‘ಹುಲಿಕಲ್ಲು’ ಗುಡ್ಡದ ಕಾಡು ಆ ಕಡೆಯಲ್ಲೆಲ್ಲ ಅತ್ಯಂತ ದಡ್ಡವಾದುದೆಂದೂ ಜೀವಾದಿಗಳಿಗೆ ನೆಲೆಬೀಡೆಂದೂ ಹೆಸರುವಾಸಿಯಾಗಿತ್ತು. +ಅದರ ಕಡಿಪೂ ನಿಬಿಡತೆಯೂ ಎಷ್ಟರಮಟ್ಟಿನದಾಗಿತ್ತೆಂದರೆ ‘ದೊಡ್ಡಬೇಟೆ’ಗೆ ಹೋಗುವವರು ಆ ಕಾಡಿಗೆ ಹೋಗಲು ಹಿಂಜರಿಯುತ್ತಿದ್ದರು. +ಕಡಿದಾದ ದರಿಕಂದರಗಳಿಂದ ದುರ್ಗಮವಾಗಿದ್ದ ಅದನ್ನು  ಸೋವಲು ಹಳುನುಗ್ಗಲಿಕ್ಕೇ ಕನಿಷ್ಠ ಪಕ್ಷ ನೂರು ನೂರೈವತ್ತು ಜನರಾದರೂ ಬೇಕಾಗುತ್ತಿತ್ತು. +ಇನ್ನಿ ಬಿಲ್ಲಿಗೆ ಕೂರಲು ಕಡಮೆ ಎಂದರೆ ಐವತ್ತು ಅರವತ್ತು ಕೋವಿಗಾರರಾದರೂ ಬೇಕಿತ್ತು. +ಎಲ್ಲಿಂದ ತರುವುದು ಅಷ್ಟು ಕೋವಿಗಳನ್ನು? +ಆ ನಾಡಿನಲ್ಲೆಲ್ಲ ಕೇಪಿನ ಕೋವಿ ಇಟ್ಟುಕೊಂಡವರ ಸಂಖ್ಯೆಯೆ ಬೆರಳೆಣಿಸುವಷ್ಟಿತ್ತು. +ಇನ್ನುಳಿದ ಕಂಡಿಗಳಿಗೆ ಹಂದಿಬಲೆ ಮಿಗದ ಬಲೆ ಮೊಲದ ಬಲೆಗಳೆ ಗತಿ! +ಅದಕ್ಕಾಗಿಯೆ ವರುಷಕ್ಕೊಮ್ಮೆಯೊ ಎರಡು ವರುಷಕ್ಕೊಮ್ಮೆಯೊ ಹುಲಿಕಲ್ಲು ಕಾಡಿಗೆ ‘ದೊಡ್ಡಬೇಟೆ’ಗೆ ಬಂದರೆ ಅದೇ ಹೆಚ್ಚು. +ಬೆಟ್ಟಳ್ಳಿ ಸೇರೆಗಾರರು ಹಳೆಮನೆ ಸೇರೆಗಾರರು ತಮ್ಮ ಕಡೆಯ ಆಳುಗಳಿಗೆಲ್ಲ ಒಂದು ದಿನ ಉಳಿ ಕೊಟ್ಟು, ಅವರಿಗೆಲ್ಲ ಧೈರ್ಯ ಹೇಳಿ, ಹಳು ಹೊಡೆಯಲು ಕಳಿಸುತ್ತಿದ್ದರು. +ಕೋಣೂರಿನ ಗಟ್ಟದ ತಗ್ಗಿನವರ ಬಿಡಾರಗಳಿಂದಲೂ ಸ್ವಲ್ಪ ಹಳುವಿನವರು ಒದಗುತ್ತಿದ್ದರು. +ಇನ್ನು ಬೇಲರು, ಹೊಲೆಯರು, ಮಾದಿಗರು, ಕರಾದಿಯವರೂ ಆ ಸಾಹಸದಲ್ಲಿ ಭಾಗಿಯಾಗುತ್ತಿದ್ದರು. +ಅಂತಹ ಸಮಯಗಳಲ್ಲಿ ಅನೇಕರಲ್ಲಿ ಜೀವದಾಸೆಯನ್ನು ಗೆಲ್ಲುತ್ತಿತ್ತು ಬಾಡಿನಾಸೆ; +ಕೆಲವರು ಬೇಟೆಯ ಸಾಹಸದ ಹುಚ್ಚಿನಿಂದಲೂ ಬಂದು ಸೇರುತ್ತಿದ್ದರು. +ಬತ್ತಿಕೋವಿ, ಭರ್ಜಿ, ಈಟಿ, ಉದ್ದಗತ್ತಿ, ಬಿಲ್ಲುಬಾಣಗಳ ಸಾಹಸಿಗಳೂ ಅಲ್ಪಸ್ವಲ್ಪ ಇರುತ್ತಿದ್ದರು. +ಕನ್ನಡ ಜಿಲ್ಲೆಯಿಂದ ದುಡಿಮೆಗಾಗಿ ಬಂದ ಗಟ್ಟದ ತಗ್ಗಿನವರಂತೂ ತಮ್ಮ ಮಕ್ಕಳನ್ನು ಹೆದರಿಸಿ ಸುಮ್ಮನಿರುವುಸುದಕ್ಕೂ ಆ ‘ಹುಲಿಮಲೆ’ಯ ಹೆಸರನ್ನೆ ಹೆಚ್ಚಾಗಿ ಬಳಸುತ್ತಿದ್ದರು! +ಗುತ್ತಿ ‘ಬೆತ್ತದ ಸರ’ದ ಹತ್ತಿರಕ್ಕೆ ಬಂದಿದ್ದನು. +ಅವನು ಹೋಗುತ್ತಿದ್ದ ಕಾಲುದಾರಿಯ ಬಲಪಕ್ಕದ ಇಳಿಜಾರಿನ ತುದಿಯೆ ‘ಬೆತ್ತದ ಸರ.’ + ಬೆತ್ತದ ಹಿಂಡಿಲು, ವಾಟೆಯ ಹಿಂಡಿಲು, ಬಿದಿರ ಹಿಂಡಿಲು, ಗುರಗಿ ಹಳು ಎಲ್ಲ ಕಿಕ್ಕಿರಿದು ಬೆಳೆದಿದ್ದು, ಯಾವಾಗಲೂ ಸರಲು ನೀರು ಹರಿಯುತ್ತಿದ್ದ ತಾಣ. +ಒಂದೊಂದು ಕಡೆ ಹಳುವಿನ ಸಾಂದ್ರತೆ ಪರಮಾವಧಿ ಮುಟ್ಟಿದಂತಿತ್ತು. +ಇದ್ದಕ್ಕಿದ್ದ ಹಾಗೆ ಗುತ್ತಿಯ ಅಂತರ್ಮುಖತೆಯನ್ನು ಹರಿದು ಸೀಳುವಂತೆ ಹುಲಿಯ ಬೊಗಳತೊಡಗಿತು. +ಗುತ್ತಿ ತಟಕ್ಕನೆ ಎಚ್ಚತ್ತು ಸೆಟೆದು ನಿಂತು ಆಲಿಸಿದನು; +ಸುತ್ತಲೂ ಕಣ್ಣಟ್ಟಿ ನೋಡಿದನು. +ಆದರೆ ನಾಯಿ ಕಾಣಲಿಲ್ಲ. +ಅದರ ಕರ್ಕಶವಾದ ತೀವ್ರವಾದ ಬೊಗಳು ಮಾತ್ರ ಹೊಡೆದೆಬ್ಬಿಸುವಂತೆ ಕೇಳುತ್ತಿತ್ತು. +ಹುಲಿ ಕಾಡುಹಂದಿಯಂತಹ ದೊಡ್ಡ ಪ್ರಾಣಿಗಳನ್ನು ತಡೆದು ನಿಲ್ಲಿಸಿದಾಗ ಮಾತ್ರ ನಾಯಿಗಳು ಹಾಗೆ ಬೊಗಳುವುದು. +ಹೆದರಿ ಓಡಿಹೋಗುವ ಮಿಗ ಬರ್ಕ ಮೊಲ ಇಂತಹ ಪ್ರಾಣಿಗಳನ್ನು ಕಂಡಾಗ ಕಂಯ್‌ ಕಂಯ್ ಕಂಯ್ ಎಂದು ಕೂಗುತ್ತಾ ಅಟ್ಟುತ್ತವೆ; +ಸದ್ದೂ ಬರಬರುತ್ತಾ ದೂರವಾಗುತ್ತದೆ. +ಆದರೆ ದೊಡ್ಡ ‘ಜೀವಾದಿ’ಗಳು ಹಾಗಲ್ಲ. +ಒಡನೆಯೆ ಹೆದರಿ ಓಡುವುದಿಲ್ಲ ಮಲೆತೂ ನಿಲ್ಲುತ್ತವೆ. +ಆಗ ಹುಲಿಯನಂತಹ ದೊಡ್ಡ ಬೇಟೆನಾಯಿಗಳು ಬೊವ್ ಬೊವ್ ವವ್ವವೌ ಎಂದು ಹೆದ್ದನಿಯಲ್ಲಿ ಕೂಗುತ್ತವೆ. + ಒಂದೇ ಕಡೆ ನಿಂತು ಈ ಸೂಕ್ಷ್ಮವನ್ನೆಲ್ಲ ಅನುಭವದಿಂದ ಚೆನ್ನಾಗಿ ಅರಿತಿದ್ದ ಗುತ್ತಿ, ಹುಲಿಯ ಒಂಟಿಗ ಹಂದಿಯನ್ನೊ ಹುಲಿಯನ್ನೊ ಕಂಡೇ ಬೊಗಳುತ್ತಿದೆ ಎಂದು ನಿಶ್ಚಯಿಸಿದ. +ಆದರೆ ಆ ದಟ್ಟವಾದ ಹಳುವಿನಲ್ಲಿ ಸದ್ದು ಯಾವ ದಿಕ್ಕಿನಿಂದ ಬರುತ್ತದೆ ಎಂದು ಸುಲಭವಾಗಿ ಗೊತ್ತಾಗುತ್ತಿರಲಿಲ್ಲ. +ಅಂತೂ ದಾರಿಯಿಂದ ಕೆಳಗಡೆಯ ಬೊಗಳುತ್ತಿದೆ ಎಂದು ಅಂದಾಜು ಮಾಡಿ ಆ ಕಡೆಗೆ ಹಳುವಿನಲ್ಲಿ ನುಗ್ಗಿದ. +ಅವನು ಹಾಗೆ ನುಗ್ಗಿದುದರ ಉದ್ದೇಶ ನಾಯಿಯ ರಕ್ಷಣೆಯಾಗಿತ್ತೆ ಹೊರತು ಪ್ರಾಣಿಯ ಬೇಟೆಯಾಗಿರಲಿಲ್ಲ. +ಬೇಟೆಯಾಡುವುದಕ್ಕೆ ಗುತ್ತಿಯ ಕೈಲಿ ಕೋವಿಯಿತ್ತೇ? +ಕತ್ತಿಯಿತ್ತೇ?ಭರ್ಜಿಯಿತ್ತೇ? +ಕಡೆಗೊಂದು ಹಕ್ಕಿ ಹೊಡೆಯುವ ಚಿಟ್ಟು ಬಿಲ್ಲಾದರೂ ಇತ್ತೇ? +ಕೆಚ್ಚೆದೆಯ ಹುಲಿಯ ಎಲ್ಲಿಯಾದರೂ ಒಂಟಿಗ ಹಂದಿಯ ಮೇಲೆಯೊ ಬೀಳಲು ಹೋಗಿ ತನ್ನ ಪ್ರಾಣಕ್ಕೆ ಹಾನಿ ತಂದುಕೊಂಡೀತು ಎಂದು ಹೆದರಿ ಅದನ್ನು ಅಪಾಯದಿಂದ ತಪ್ಪಿಸುವ ಸಲುವಾಗಿ ಹಿಂದಕ್ಕೆ ಕರೆಯಲೆಂದೇ ಅವನು ‘ಹುಲಿಯಾ! +ಹುಲಿಯಾ!ಬಾ ಹುಲಿಯಾ! +ಕ್ರೂ!ಕ್ರೂ!’ ಎಂದು ಕೂಗುತ್ತಾ ನುಗ್ಗಿ ಬೊಗಳು ಸದ್ದಿನ ಕಡೆಗೆ ಓಡಿದನು. +ಹೋಗಿ ನೋಡುತ್ತಾನೆ ನಾಯಿಯೇನೊ ಒಂದೇ ದಿಕ್ಕಿಗೆ ನೋಡಿ ನೋಡಿ ಬೊಗಳುತ್ತಿದೆ. +ಆದರೆ ಆ ದಿಕ್ಕಿನಲ್ಲಿ ಯಾವ ಜಂತುವೂ ಗುತ್ತಿಗೆ ಕಾಣಿಸುತ್ತಿಲ್ಲ. +ಹಂದಿ ಹುಲಿ ಯಾವುದಾಗಿದ್ದರೂ ಗುತ್ತಿ ಹಾಗೆ ಬೊಬ್ಬೆಯಿಡುತ್ತಾ ಹತ್ತಿರಕ್ಕೆ ಬಂದಾಗ ಅಲ್ಲಿ ಎಂದಿಗೂ ನಿಲ್ಲುತ್ತಿರಲಿಲ್ಲ. +ಒಂದು ವೇಳೆ ನಿಂತಿದ್ದ ಪ್ರಾಣಿ ಓಡಿಹೋಗಿದ್ದರೆ ನಾಯಿ ಅಟ್ಟದೆ ಬಿಡುತ್ತಲೂ ಇರಲಿಲ್ಲ. +ಕಾಡು, ಬೇಟೆ, ಪ್ರಾಣಿಗಳ ವಿಚಾರದಲ್ಲಿ ಅನುಭವಶಾಲಿಯಾಗಿದ್ದ ಗುತ್ತಿ ನೆಲದ ಕಡೆ ನೋಡುವುದನ್ನು ಬಿಟ್ಟು, ತಲೆಯೆತ್ತಿ ದಟ್ಟೈಸಿದ್ದ ಮರಗಳ ಮೇಲೆ ನೋಡತೊಡಗಿದನು, ಕಬ್ಬೆಕ್ಕು ಎಲ್ಲಿಯಾದರೂ ಮೇಲೆ ಹತ್ತಿ ಕುಳಿತಿದೆಯೋ ಅಥವಾ ಮುಸಿಯ ಮರದೆಲೆಗಳ ನಡುವೆ ಅಡಗಿದೆಯೋ ಎಂದು. +ಹಾಗೆ ಕತ್ತೆತ್ತಿ  ಮೇಲೆ ನೋಡುತ್ತಲೆ ಮುಂದುವರಿಯುತ್ತಿರುವುದನ್ನು ನೋಡಿ ಹುಲಿಯ ಇನ್ನೂ ರಭಸದಿಂದ ಬೊಗಳತೊಡಗಿತು. +ಮತ್ತು ಅವನನ್ನೇ ತಡೆಯುವಂತೆ ಅಡ್ಡಬರತೊಡಗಿತು. +ಗುತ್ತಿ ನೋಡುತ್ತಾನೆ, ನಾಯಿ ತುಸುದೂರವೆ ಹಳುವಿನಲ್ಲಿ ಬಿದ್ದಿರುವ ಒಂದು ಮರದ ದಿಮ್ಮಿಯ ಕಡೆ ನೋಡಿ ಬೊಗಳುತ್ತಿದೆ! +ಹಾಗಾದರೆ ಆ ದಿಮ್ಮಿಯ ಹತ್ತಿರ ಯವುದಾದರೂ ಕಾಳಿಂಗನ ಹಾವೊ ಸರ್ಪನ ಹಾವೊ ಇರಬಹುದುದೆಂದು ಗುತ್ತಿ ನೆಲವನ್ನು ಪರೀಕ್ಷಿಸುತ್ತಾ ಮುಂದುವರಿಯುವಷ್ಟರಲ್ಲಿ ನಾಯಿ ಬೊಗಳಿ ಬೊಗಳಿ ಹಾರಿ ನೆಗೆದು ಆ ದಿಮ್ಮಿಯನ್ನು ಕಚ್ಚಿಬಿಟ್ಟಿತು! +ಅಯ್ಯಯ್ಯೊ!ನೋಡುತ್ತಾನೆ ಆ ದಿಮ್ಮಿಯೆ ಜೀವಂತ ಹೆಬ್ಬಾವು! ಚಲಿಸುತ್ತಿಲ್ಲ. +ಮೊಲವೊ ಬರ್ಕವೊ ಅಥವಾ ಇನ್ನಾವ ಪ್ರಾಣಿಯನ್ನೊ ಇಡೀಯೆ ನುಂಗಿ ನಿಶ್ಚಲವಾಗಿ ಬಿದ್ದಿದೆ! +ಅದರ ತಲೆ ಎಲ್ಲಿದೆಯೋ ಬಾಲವೆತ್ತಕಡೆಯೋ ಅದೂ ಗೊತ್ತಾಗುತ್ತಿರಲಿಲ್ಲ ಆ ಹಳುವಿನಲ್ಲಿ! +ಕೈಯಲ್ಲಿ ಬಗನಿದೊಣ್ಣೆ ವಿನಾ ಬೇರೆಯೇನೂ ಆಯುಧವಿಲ್ಲದ ಗುತ್ತಿ, ಇನ್ನೇನು ಒಂದು ಹೆಜ್ಜೆ ಮುಂದಿಟ್ಟಿದ್ದರೆ ಹೆಬ್ಬಾವಿನ ಮೈಮೇಲೆಯೆ ಕಾಲಿಡುತ್ತಿದ್ದವನು, ಸತ್ತೆನೊ ಕೆಟ್ಟೆನೊ ಎಂದು ಚಂಗನೆ ಹಿಂದಕ್ಕೆ ನೆಗೆದು, ದೂರ ಓಡಿ ನಿಂತು, ದೀರ್ಘವಾಗಿ ಉಸಿರುಬಿಡತೊಡಗಿದನು. +ಹುಲಿಯನನ್ನು ತನ್ನ ಹತ್ತಿರಕ್ಕೆ ಹೆದರಿಸಿ ಕರೆಯತೊಡಗಿದನು. +ತನ್ನ ಹತ್ತಿರವಿದ್ದ ಬಹನಿದೊಣ್ಣೆಯಿಂದ ಆ ಹೆಬ್ಬಾವಿಗೆ ತಾನು ಏನನ್ನೂ ಮಾಡಲಾರೆನೆಂದು ಗುತ್ತಿಗೆ ಗೊತ್ತಿತ್ತು. +ಕೋವಿ ಇದ್ದಿದ್ದರೂ ಒಂದೆರಡು ಗುಂಡುಗಳಿಂದ ಏನೂ ಪ್ರಯೋಜನವಾಗುತ್ತಿರಲಿಲ್ಲ. +ಹೀಗಿರುವಾಗ ನಾಯಿಯನ್ನು ಹೇಗಾದರೂ ತನ್ನ ಹತ್ತಿರಕ್ಕೆ ಕರೆದು, ಹಿಡಿದು, ಸುರಕ್ಷತೆಗೆ ಕೊಂಡೊಯ್ಯುವುದೊಂದೆ ದಾರಿಯಾಗಿತ್ತು ಅವನಿಗೆ. +ಬೇಗಬೇಗನೆ ಒಂದು ಬಳ್ಳಿಯನ್ನು ಉಗಿದು, ಅದರ ಎರಡು ಮೂರು ಎಳೆಯನ್ನು ಉಡಿದು ಹಗ್ಗಮಾಡಿದನು. +ಅವನು ಕರೆದಂತೆಲ್ಲ ಹತ್ತಿರಕ್ಕೆ ಬಂದೂ ಮತ್ತೆ ಮತ್ತೆ ಹಾವಿನ ಬಳಿಗೆ ನುಗ್ಗುತ್ತಿದ್ದ ಹುಲಿಯನನ್ನು ಒಮ್ಮೆ ಹತ್ತಿರ ಬಂದಾಗ ಎರಡು ಕೈಯಿಂದಲೂ ಅಮರಿಹಿಡಿದು, ಕೊರಳಿಗೆ ಬಳ್ಳಿಹಗ್ಗವನ್ನು ಬಿಗಿದು, ಬರಲೊಲ್ಲದೆ ಜಗ್ಗಿ ಜಗ್ಗಿ, ಎಳೆದು ಬೊಗಳುತ್ತಿದ್ದ ಅದನ್ನು ಜಗ್ಗಿಸಿ ಎಳೆಯುತ್ತಾ ಅಲ್ಲಿಂದ ಆದಷ್ಟು ಬೇಗನೆ ಕಾಲುಕಿತ್ತು ದಾರಿಗೆ ಸೇರಿಕೊಂಡನು. +ಮೈ ಬೆವರುತ್ತಿತ್ತು, ತಕ್ಕಮಟ್ಟಿಗೆ! +ಗುತ್ತಿ ಸ್ವಲ್ಪ ದೂರ ಮುಂದುವರಿದಿದ್ದನು. +ಬಳ್ಳಿಹಗ್ಗದಲ್ಲಿ ಕಟ್ಟಿ ಹಿಡಿದುಕೊಂಡಿದ್ದ ಹುಲಿಯ ಅವನ ಮಗ್ಗುಲಲ್ಲಿಯೆ ಅತ್ತಿತ್ತ ನೋಡುತ್ತಾ, ಕಿವಿನಿಮಿರಿ ಆಲಿಸುತ್ತಾ, ನೆಲವನ್ನು ಮೂಸುತ್ತಾ, ಒಮ್ಮೆ ಹಿಂದೆ ಬಿದ್ದು ಒಮ್ಮೆ ಮುಂದೆ ಹೋಗಿ, ಜೋಲುನಾಲಗೆಯಿಂದ ಜೊಲ್ಲು ಸುರಿಸುತ್ತ ನಡೆಯುತ್ತಿತ್ತು. +ಇದ್ದಕ್ಕಿದ್ದ ಹಾಗೆ ನಾಯಿ ಮುಂದಕ್ಕೆ ದೃಷ್ಟಿಯಟ್ಟಿ ಸಣ್ಣಗೆ ಬೊಗಳಿತು. +ದಟ್ಟಕಾಡಿನ ಅಂಕುಡೊಂಕು ಕಾಲುದಾರಿಯಲ್ಲಿ ಬಹುದೂರ ನೋಡಲೂ ಸಾಧ್ಯವಿರಲಿಲ್ಲ. +ಕಾಣುತ್ತಿತ್ತ ದಾರಿಯಷ್ಟರಲ್ಲಿ ಗುತ್ತಿಗೆ ಏನೂ ಕಾಣಿಸಲಿಲ್ಲ. +ಆದರೆ ನಾಯಿಗೆ ವಾಸನೆಯೊ ಸದ್ದೊ ಯಾವುದೊ ಗೊತ್ತಾದಂತೆ ತೋರಿತು. +ಗುತ್ತಿ ಬಿರುಬಿರನೆ ಕಾಲು ಹಾಕಿದ. +ಸ್ವಲ್ಪ ದೂರ ಮುಂಬರಿಯುವುದರಲ್ಲಿ ಯಾರೊ ಇಬ್ಬರು ಹೆಂಗಸರು ಹೋಗುತ್ತಿದ್ದುದು ಕಾಣಿಸಿತು. +ಹಳುವಿನ ನಡುವೆ ಇಕ್ಕಟ್ಟಾದ ಕಾಲುದಾರಿಯಲ್ಲಿ ಒಬ್ಬರ ಹಿಂದೆ ಒಬ್ಬರು ಹೋಗುತ್ತಿದ್ದುದರಿಂದ ಗುತ್ತಿಗೆ ಸರಿಯಾಗಿ ಕಾಣಿಸಿದ್ದು ಹಿಂದೆ ಹೋಗುತ್ತಿದ್ದವರು ಮಾತ್ರ. +ಕೊರಳಿಗೆ ಕಟ್ಟಿದ ವಲ್ಲಿ ಬೆನ್ನಿನ ಮೇಲೆ ಸೊಂಟದವರೆಗೂ ಬಿದ್ದಿದ್ದುದನ್ನೂ ಸ್ವಲ್ಪ ಗಿಡ್ಡಾಗಿಯೆ ಉಟ್ಟಿದ ಗೊಬ್ಬೆಸೀರೆ ಹರಡಿನ ಮೇಲಿದ್ದುದನ್ನೂ ಗಮನಿಸಿ ‘ಯಾರೊ ಹೆಗ್ಗಡಿತಮ್ಮನವರು!’ ಎಂದುಕೊಂಡನು. +ಗುತ್ತಿ ಮನಸ್ಸಿನಲ್ಲಿಯೆ, ‘ಇಷ್ಟು ಹೊತಾರೆ ನೆಂಟರಮನೆಗೆ ಹೊರಟಾರಲ್ಲಪ್ಪಾ! +ಇಬ್ರೆ ಹೆಂಗಸ್ರು! +ಗಟ್ಟಿ ಗುಂಡಿಗೇರಿರಬೇಕು! +ಈ ಹುಲಿಕಲ್ಲು ಗುಡ್ಡದ ಕಾಡಿನಗೆ!’ನಾಯಿ ಬೊಗಳಿದ ಸದ್ದುಕೇಳಿ ಹಿಂದೆ ಹೋಗುತ್ತಿದ್ದ ಸ್ತ್ರೀ ವ್ಯಕ್ತಿ ನಿಂತು ತಿರುಗಿ ನೋಡಿದಳು. +ಮುಂದೆ ಹೋಗುತ್ತಿದ್ದಾಕೆ ಯಾವುದನ್ನೂ ಗಮನಿಸದವಂತೆ ಮುಂಬರಿಯುತ್ತಲೆ ಇದ್ದಳು. +ಹಿಂದೆ ಹೋಗುತ್ತಿದ್ದ ಸ್ತ್ರಿವ್ಯಕ್ತಿ ನಿಂತು ತನ್ನ ಕಡೆಗೆ ತಿರುಗಿದೊಡನೆಯೆ, ಗುತ್ತಿಗೆ ಗುರುತುಹತ್ತಿ, ತನ್ನೊಳಗೆ ತಾನೆ ‘ಓಹೊ ಈ ಬಾವಿಕೊಪ್ಪದ ಸೀರುಡಿಕೆ ಜೋಡಿಯೊ? +ನಾಗತ್ತೆ!ನಾಗಕ್ಕ!ಎಂದುಕೊಂಡು, ತನ್ನಲ್ಲಿ ಮೂಡಿಬಂದ ಲಘುತ್ವಭಾವನೆಯನ್ನು ಕೊಂಕುನಗೆಯಿಂದ ಪ್ರಕಟಿಸದೆ ಇರಲಾರದವನಾದನು. +ಹೊಲೆಯನ ಹಾಸ್ಯಕ್ಕೂ ಪಕ್ಕಾಗುವಷ್ಟರಮಟ್ಟಿಗೆ ಹಬ್ಬಿತ್ತು ಅವರಿಬ್ಬರ ಕೀರ್ತಿ! +ನಾಗಣ್ಣ, ನಾಗಕ್ಕ ಮತ್ತು ನಾಗತ್ತೆಯರ ಸುದ್ದಿ ಆ ನಾಡಿನವರ ಮಾತುಕತೆಗೆ ಸ್ವಾರಸ್ಯವೀಯುವ ಉಪ್ಪಿನಕಾಯಿಯಾಗಿತ್ತು. +ನಾಗಣ್ಣ ಗತಿಸಿ ನಾಲ್ಕಾರು ವರುಷಗಳಾಗಿದ್ದರೂ, ನಾಗಣ್ಣನ ಬದುಕು ನಗೆಗಿಂತಲೂ ಹೆಚ್ಚಾಗಿ ಕಣ್ಣೀರಿಗೆ ಕಾರಣವಾಗುವಂತಹುದಾಗಿದ್ದರೂ, ಜನರು ನಗೆಗೆ ನಿಜವಾಗಿ ಕಾರಣವಾಗುವಂತಹ ವರ್ತನೆ ನಾಗತ್ತೆಯದೆ ಮಾತ್ರ ಆಗಿದ್ದರೂ ನಾಗಣ್ಣ, ನಾಗಕ್ಕ, ನಾಗತ್ತೆಯರ ಮೂರು ಹೆಸರುಗಳೂ ಒಂದರೊಡನೊಂದು ಹೆಣೆದುಕೊಂಡು ಸಿಕ್ಕಾಗಿಬಿಟ್ಟಿದ್ದುವು. +ಬಾವಿಕೊಪ್ಪದ ನಾಗಣ್ಣ ‘ನಾಗತ್ತೆಯ ಎರಡನೆಯ ಗಂಡನಿಗೆ ಹುಟ್ಟಿದವನು. +ನಾಗಣ್ಣನ ತಂದೆ ಬಾವಿಕೊಪ್ಪದಲ್ಲಿ ಸಿಂಬಾವಿ ಭರಮೈ ಹೆಗ್ಗಡೇರ ಗದ್ದೆತೋಟ ಮಾಡಿಕೊಂಡು ಒಕ್ಕಲಾಗಿ ತಕ್ಕಮಟ್ಟಿಗೆ ನೆಮ್ಮದಿಯಾಗಿಯೆ ಇದ್ದನು.’ +ಒಂದಾದ ಮೇಲೊಂದು ಮದುವೆಯಾಗಿ ಮೂರನೆ ಹೆಂಡತಿಯ ಇತರರಂತೆಯೆ ಹೆರಿಗೆ ಸಮಯದಲ್ಲಿ, ಹಳೆಪೈಕದವಳ ಹುಳದೌಷಧವೂ ಸೂಲಗಿತ್ತಿತನವೂ ವಿಫಲವಾಗಿ, ತೀರಿಕೊಂಡ ಮೇಲೆ, ನಾಲ್ಕನೆಯ ಮದುವೆಗೆ ಸಿಂಬಾವಿ ಹೆಗ್ಗಡೆಯವರು ಸಾಲಕೊಡಲು ಒಪ್ಪದೆ ಹೋದರು. +ಒಂಟಿ ಬಾಳಿಗೆ ಬೇಸತ್ತು ಅವನು ತಪಿಸುತ್ತಿದ್ದಾಗ ಈ ‘ನಾಗತ್ತೆ’ ಎಲ್ಲಿಂದಲೋ ಪ್ರತ್ಯಕ್ಷವಾದಳು! +ಅವಳಿಗೂ ತನ್ನ ಗಂಡ ಸತ್ತು, ಒಂಟಿ ಬಾಳು ಬೇಸರವಾಗಿ, ಜಂಟಿಬಾಳಿಗಾಗಿ ಊರಿಂದೂರಿಗೆ ಅಲೆಯುತ್ತಿದ್ದಳಂತೆ. +ಆದರೆ ಅವಳನ್ನು ಚೆನ್ನಾಗಿ ತಿಳಿದಿದ್ದ ಯಾವ ಊರಿನಲ್ಲಿಯೂ ಅವಳಿಗೆ ಜಂಟಿಬಾಳು ಗಿಟ್ಟದೆ, ಬಾವಿಕೊಪ್ಪದ ನಾಗಣ್ಣನ ತಂದೆಯ ಒಂಟಿಬಾಳಿನ ಬೇಸರಿನ ವಿಚಾರವಾಗಿ ಮಾರ್ತೆಗೇಳಿ, ಅದನ್ನು ಪರಿಹರಿಸಲು ಬಾವಿಕೊಪ್ಪಕ್ಕೆ ಬಂದಳಂತೆ. +ಒಂಟಿಬಾಳು ಸಾಕಾಗಿದ್ದ ಇಬ್ಬರೂ ಜಂಟಿಬಾಳಿಗೆ ಒಪ್ಪಿ ‘ಸೀರುಡಿಕೆ’ ಮಾಡಿಕೊಂಡರು. +ಆದರೆ ಎಂತಹ ಕ್ಷೇಮವನ್ನು ತೆತ್ತು ಆ ‘ಕೂಡಿಕೆ’ಯ ಸುಖದ ಬಾಳನ್ನು ಕೊಂಡುಕೊಂಡೆನೆಂಬುದು ನಾಗಣ್ಣನ ತಂದೆಗೆ ಆಮೇಲೆ ಚೆನ್ನಾಗಿ ಅನುಭವಕ್ಕೆ ಬಂತಂತೆ! +‘ನಾಗತ್ತೆ’ಯನ್ನು ಕೂಡಿಕೆ ಮಾಡಿಕೊಂಡ ಆರೇಳು ವರುಷದಲ್ಲಿಯೆ ನಾಗಣ್ಣನ ತಂದೆ ತೀರಿಕೊಂಡನು. +ಆಗ ನಾಗಣ್ಣ ಸಣ್ಣ ಹುಡುಗ. +ನಾಗಣ್ಣ ಹದಿನೈದು ಹದಿನಾರು ವರುಷದವನಾಗುತ್ತಿದ್ದಂತೆಯೆ ಅವನ ತಾಯಿ ಅವನಿಗೆ ಬಡ ಒಕ್ಕಲೊಬ್ಬನ ಮಗಳಾಗಿದ್ದ ನಾಗಕ್ಕನನ್ನು ತಂದುಕೊಂಡು ಸೊಸೆಯನ್ನಾಗಿ ಮಾಡಿಕೊಂಡಳು. +ಅಂದಿನಿಂದ ಅವಳು ‘ನಾಗತ್ತೆ’ಯಾಗಿ ಮಗ ಮತ್ತು ಸೊಸೆ ಇಬ್ಬರನ್ನೂ ತನ್ನ ಅಧಿಕಾರದ ಮುಷ್ಟಿಯಲ್ಲಿ ಭದ್ರವಾಗಿಟ್ಟುಕೊಂಡಳು. +ತಾಯಿಯ ಬಡಿತ ಮತ್ತು ದುಡಿತದ ಪರಿಣಾಮವಾಗಿಯೊ ಅಥವಾ ತನ್ನ ತಾಯಿಯಿಂದ ತನ್ನ ತಂದೆಗೆ ಅಂಟಿದ್ದ ರೋಗಕ್ಕೆ ತಾನು ಹಕ್ಕುದಾರನಾಗಿದ್ದರಿಂದಲೋ ಏನೋ ನಾಗಣ್ಣನಿಗೆ ಆರೋಗ್ಯ ಕೆಟ್ಟು, ಹೊಟ್ಟೆಯಲ್ಲಿ ಹುಣ್ಣಾಗಿ, ಗದ್ದೆ ತೋಟದ ಕೆಲಸ ಮಾಡಲಾರದೆ, ಅದನ್ನೆಲ್ಲ ಬಿಟ್ಟು, ಹೆಗ್ಗಡೇರ ಸಾಲ ತೀರಿಸಲು ಸಿಂಬಾವಿ ಮನೆಯಲ್ಲಿ ನಾಗಣ್ಣ ನಾಗಕ್ಕ ನಾಗತ್ತೆ ಮೂವರೂ ದುಡಿಮೆಯಾಳುಗಳಾಗಿ ನಿಂತರು. +ಅನಾರೋಗ್ಯದ ನಿಮಿತ್ತ ಹೆಗ್ಗಡೆಯವರು ನಾಗಣ್ಣನಿಗೆ ಕಷ್ಟದ ಕೆಲಸ ಕೊಡದೆ, ಕೂತೇ ಮಾಡುವ ಕೆಲಸಗಳಿಗೆ ನೇಮಿಸಿದರು. +ಬುಟ್ಟಿ ಮಾಡುವುದು, ವಾಟೆ ಬಿದಿರು ಬೆತ್ತ ಇವುಗಳ ಸಲಕು ಕೆತ್ತುವುದು, ಪುಂಡಿನಾರಿನ ಹಗ್ಗ ಹೊಸೆಯುವುದು, ಎತ್ತು ದನ ಕಟ್ಟುವ ದಾವಣಿ ತಿರುಪುವುದು ಇತ್ಯಾದಿ. +ಆದರೆ ನಾಗಣ್ಣನ ಹೊಟ್ಟೆ ಹುಣ್ಣು ಯಾವ ಗಿಡಮೂಲಿಕೆಗಳಿಗೂ ಬಗ್ಗಲಿಲ್ಲ. +ನಾಗಕ್ಕ ತನ್ನ ಗಂಡನನ್ನು ಬದುಕಿಸಿಕೊಳ್ಳುವ ಸಲುವಾಗಿ ಯಾವ ಪತಿವ್ರತೆಗೂ ಕಡಿಮೆಯಿಲ್ಲದಂತೆ ಶುಶ್ರೂಷೆ ಮಾಡಿದಳು; +ಭೂತ ಜಕ್ಕಿಣಿ ಪಂಜ್ರೊಳ್ಳಿಗಳಿಗೆ ಹರಕೆ ಕೊಟ್ಟಳು; +ತನ್ನ ಹತ್ತಿರ ಇದ್ದಬದ್ದ ಚೂರುಪಾರು ಬಂಗಾರವನ್ನೂ ತಿರುಪತಿ ಧರ್ಮಸ್ಥಳ ಮೊದಲಾದ ದೇವತೆಗಳಿಗೆ ಸುಳಿದಿಟ್ಟಳು. +ಯಾರಿಗೂ ಕಾಣದಂತೆ ಏಕಾಂತದಲ್ಲಿ ಬಲ್ಲಂತೆ ಪ್ರಾರ್ಥಿಸಿ ಕಣ್ಣೀರಿಟ್ಟಳು. +ಅಲಂಕಾರ ಬಿಟ್ಟಳು. +ಊಟ ಬಿಟ್ಟಳು. +ಆದರೆ ನಾಗಣ್ಣ ಹುಣ್ಣಿನ ಯಾತನೆಯಲ್ಲಿ ಒದ್ದಾಡಿಕೊಂಡು ಸಿಂಬಾವಿಗೆ  ಬಂದ ಎರಡು ವರ್ಷಗಳಲ್ಲಿಯೆ ತೀರಿಕೊಂಡನು. +ಗಂಡ ತೀರಿಕೊಂಡಂದಿನಿಂದಲೆ ಷುರುವಾಯ್ತು ನಾಗಕ್ಕಗೆ ನಾಗತ್ತೆಯ ಪೀಡೆ! +ಪ್ರಾಯದ ಹುಡುಗಿ ನಾಗಕ್ಕಗೆ ತಕ್ಕಮಟ್ಟಿನ ರೂಪವೂ ಇತ್ತು. +ಕಳ್ಳು ಕುಡಿದು ಕಳ್ಳಿನಲ್ಲಿಯೆ ಕೈ ತೊಳೆಯುತ್ತಿದ್ದ ಸಿಂಬಾವಿ ಭರಮೈ ಹೆಗ್ಗಡೆಯವರು ಯಾವುದೋ ಗುಟ್ಟಾದ ಕಾಯಿಲೆಯಿಂದ ನರಳುತ್ತಿದ್ದರೂ ಗಂಡನಿಲ್ಲದ ಹರೆಯದ ಹೆಣ್ಣಿನ ರೂಪವನ್ನು ತಿರಸ್ಕರಿಸುವಂತಿರಲಿಲ್ಲ. +ಅಲ್ಲದೆ ತಮಗೆ ಮಕ್ಕಳಾಗಿರಲಿಲ್ಲ ಎಂಬ ನೆವದಿಂದ ಮತ್ತೊಂದು ಮದುವೆಗೆ ಬೇರೆ ಹವಣಿಸುತ್ತಿದ್ದರು. +ಇದನ್ನೆಲ್ಲ ಅರಿತಿದ್ದ ನಾಗತ್ತೆ ತನ್ನ ಸೊಸೆಗೆ ಒದಗಿರುವ ಸದವಕಾಶವನ್ನು ಉಪಯೋಗಿಸಿಕೊಳ್ಳದೆ ಬಿಡಬಾರದೆಂದು ಸೂಚನೆ ಕೊಡತೊಡಗಿದಳು. +ಆ ಸೂಚನೆ ಕೆಲವೊಮ್ಮೆ ಒರಟಾಗಿಯೂ ಇರುತ್ತಿತ್ತು. +ಹೇಗಾದರೂ ಸಿಂಬಾವಿ ಹೆಗ್ಗಡೇರಿಗೆ ತನ್ನ ಸೊಸೆಯನ್ನು ಕೂಡಿಕೆ ಮಾಡಿಸಿದರೆ ತನ್ನ ಸಾಲಸೂಲಗಳೆಲ್ಲ ತೀರಿಹೋಗುತ್ತವೆ ಎಂಬುದು ‘ನಾಗತ್ತೆ’ಯ ಹುನಾರು. +ಒಂದು ವೇಳೆ, ಶ್ರೀಮಂತರೂ ದೊಡ್ಡ ಮನೆತನದವರೂ ಆದ ಹೆಗ್ಗಡೆಯವರಿಗೆ ಹೆಣ್ಣು ಕೊಡುವ ಸರಿಸಮಾನರು ಅನೇಕರಿದ್ದು, ತನ್ನ ಸೊಸೆಯೊಡನೆ ಸೀರುಡಿಕೆಯಂತಹ ಕೀಳು ಸಂಬಂಧಕ್ಕೆ ಅವನು ಒಪ್ಪದಿದ್ದರೂ ತನ್ನ ಸೊಸೆ ಅವರ ದೇಹಾಸಕ್ತಿಗೆ ಒಳಗಾದರೂ ಸಾಕು ತಾನು ತನ್ನ ಇಷ್ಟಾರ್ಥಗಳನ್ನೆಲ್ಲ ನೆರವೇರಿಸಿಕೊಳ್ಳುತ್ತೇನೆ ಎಂಬುದೂ ಅವಳ ಧೈರ್ಯ. +ತನ್ನ ಗತಿಸಿದ ಗಂಡನನ್ನು ನೆನೆನೆನೆದು ಕೊರಗುತ್ತಿದ್ದ ನಾಗಕ್ಕಗೆ ಯಾರೊಡನೆಯೂ ಯಾವ ವಿಧವಾದ ಸಂಬಂಧದ ಆಸಕ್ತಿಯೂ ಲೇಶವೂ ಇರಲಿಲ್ಲ. +ನಾಗತ್ತೆ ಅವಳ ಆ ಪತಿವ್ರತಾ ನಿಷ್ಠೆಯನ್ನು ಅಸಹ್ಯವಾದ ಮಾತುಗಳಿಂದ ಪರಿಹಾಸ್ಯಮಾಡಿ ಪ್ರಚೋದಿಸತೊಡಗಿದಳು. +ಅದು ಎಷ್ಟರಮಟ್ಟಿಗೆ ಮುಂದುವರಿದು ಬಹಿರಂಗವಾಯಿತೆಂದರೆ, ನಾಗಕ್ಕನ ನಡತೆ ಸ್ವಭಾವ ವಿಧೇಯತೆ ವಿನಯ ಸಂಕೋಚ ಇವುಗಳನ್ನೆಲ್ಲ ಕಂಡು ಅವಳನ್ನು ತುಂಬ ಮೆಚ್ಚಿಕೊಂಡಿದ್ದ ಭರಮೈ ಹೆಗ್ಗಡೆಯವರ ಹೆಂಡತಿ ಜಟ್ಟಮ್ಮ ನಾಗತ್ತೆಯೊಡನೆ ನಾಗಕ್ಕನನ್ನೂ ಮನೆಬಿಟ್ಟು ಹೊರಡುವಂತೆ ಮಾಡಬೇಕಾಯಿತು. +ಸಿಂಬಾವಿ ಮನೆ ತಪ್ಪಿ ಹೊರಹೊರಟ ನಾಗತ್ತೆಯ ಕೈಯಲ್ಲಿ ನಾಗಕ್ಕ ‘ಪಂಜ್ರೊಳ್ಳಿ ಕೈಲಿ ಸಿಕ್ಕ ಜಕಣಿ’ಯಂತಾದಳು. +ನಾಗಕ್ಕ ತನ್ನ ತವರನ್ನೂ ಸೇರದಂತೆ ತರತರದ ಅಶ್ಲೀಲ ದೂರುಗಳನ್ನೂ ಹಬ್ಬಿಸಿ, ನಾಗತ್ತೆ ಅವಳನ್ನು ವಿಕ್ರಯಿಸುವ ದನವನ್ನು ಗಿರಾಕಿಗಾಗಿ ಊರಿಂದೂರಿಗೆ ಸಾಗಿಸುವಂತೆ ಮನೆಯಿಂದ ಮನೆಗೆ ಕೊಂಡೊಯ್ದಳು. +ನಾಗಕ್ಕನ ತವರು ಬಡ ಜಕ್ಕಲಾದುದರಿಂದಲೂ, ನಾಗಕ್ಕನ ತಂದೆ ತೀರಿಕೊಂಡು ಅಣ್ಣ ಅತ್ತಿಗೆಯರು ತಮ್ಮ ಹೊಟ್ಟಬಟ್ಟೆಗೇ ಸಾಲದೆ ಸಾಲಗಾರರಾಗಿ ಕಷ್ಟಪಡುತ್ತಲಿದ್ದುದರಿಂದಲೂ ಅವರು ಯಾರೂ ನಾಗತ್ತೆಗೆ ಎದುರಾಗಿ ನಾಗಕ್ಕನನ್ನು ರಕ್ಷಿಸುವ ಅಪಾಯವನ್ನು ಎದುರು ಹಾಕಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. +ಕೆಲವು ಕಡೆಗಳಲ್ಲಿ ನಾಗಕ್ಕನ್ನು ಸೀರುಡಿಕೆ ಮಾಡಿಕೊಳ್ಳಲು ಹೆಂಡಿರನ್ನು ಹೆರಿಗೆಗೆ ಬಲಿಕೊಟ್ಟಿದ್ದ ಗಂಡುಗಳು ಸಂತೋಷದಿಂದ ಮುಂದೆ ಬಂದಿದ್ದರು. +ಆದರೆ ನಾಗಕ್ಕ ಮನೆ ಬಿಟ್ಟು ಕಾಡಿಗೆ ಓಡಿ ಅವಿತುಕೊಳ್ಳುವುದರಿಂದ ಹಿಡಿದು ಕೆರೆ ಬಾವಿ ನೇಣುಗಳವರೆಗೂ ಹೋಗಿ ಪ್ರತಿಭಟಿಸಿ ಬಲಾತ್ಕಾರದ ಮರುಮದುವೆಯಿಂದ ಪಾರಾಗಿದ್ದಳು. +ಆದರೆ ನಾಗತ್ತೆ ‘ಇನ್ನೆಷ್ಟು ದಿನ ಹಾರಾಡ್ತಾಳೆ ಪರಾಯಕ್ಕೆ ಬಂದ ಹುಡುಗಿ? +ನಾ ನೋಡ್ತೀನಿ’ ಎಂದು ಪ್ರಶಾಂತತೆಯಿಂದ ತನ್ನ ದೃಢಪ್ರಯತ್ನವನ್ನು ಮುಂದುವರಿಸುತ್ತಲೆ ಇದ್ದಳು. +ಈ ಕಥೆಯೆಲ್ಲ ಕಿವಿಯಿಂದ ಕಿವಿಗೆ ಬಾಯಿಂದ ಬಾಯಿಗೆ ಬಿದ್ದು, ಒಂದಕ್ಕೆ ಎರಡಾಗಿ ಎರಡಕ್ಕೆ ಮೂರಾಗಿ ಉಪ್ಪುಕಾರ ಹಚ್ಚಿದಂತಾಗಿ ಒಗ್ಗರಣೆ ಹಾಕಿದಂತಾಗಿ ರುಚಿ ರುಚಿಯಾಗಿ ಸ್ವಾರಸ್ಯವಾಗಿ ಹಬ್ಬಿದುದರಿಂದಲೆ ಗುತ್ತಿ, ತಿರುಗಿನಿಂತ ನಾಗಕ್ಕನನ್ನು ಗುರುತಿಸಿದಾಗ, ಅವಳ ವಿಚಾರದಲ್ಲಿ ಅವನಿಗೆ ಒಂದು ತರಹದ ಕರುಣೆಗೂಡಿದ ಗೌರವಭಾವನೆಯೇ ಇದ್ದಿತಾದರೂ, ಮುಂದೆ ಹೋಗುತ್ತಿದ್ದ ನಾಗತ್ತೆಯನ್ನು ಒಳಕೊಂಡ ಅವನ ಮನಸ್ಸು ಲಘುತ್ವವನ್ನನುಭವಿಸಿ ಕೊಂಕುನಗೆ ನಕ್ಕದ್ದು! +ತುಸುದೂರ ಮುಂದೆ ಹೋಗಿದ್ದ ನಾಗತ್ತೆ ತನ್ನ ಹಿಂದೆ ನಾಗಕ್ಕನ ಹೆಜ್ಜೆ ಸಪ್ಪಳ ಕೇಳದಿದ್ದುದನ್ನು ಗಮನಿಸಿ ತಿರುಗಿನೋಡಿ “ಯಾಕೇ? +ನಿಂತು ಬಿಟ್ಟೇ? +ನಿಂಬಳ ಹತ್‌ತ್ತವೆ, ಬಿರಬಿರನೆ ಬಾರೆ. +ಹೆಂಗಾದ್ರೂ ಬ್ಯಾಗ ಗುಡ್ಡ ಹತ್ತಿ ಕಾಡು ದಾಟಿದರೆ ಸಾಕಾಗದೆ” ಎಂದು ಸೊಂಟಗೈಯಾಗಿ ನಿಂತಳು. +“ನಾಯಿ ಬೊಗಳ್ತು. +ಅದಕ್ಕೆ ನೋಡ್ತಾ ನಿಂತೆ” ಎನ್ನುತ್ತಾ ನಾಗಕ್ಕ ಬಳಿಸಾರಿ “ಆ ನಾಯಿಗುತ್ತಿ ಅಂತಾ ಕಾಣ್ತದೆ, ಬರ್ತಾ ಇದಾನೆ” ಎಂದಳು. +ಅಷ್ಟರಲ್ಲಿ ಗುತ್ತಿಯೂ ಹತ್ತಿರ ಬಂದು “ದೂರ ಹೊರಟ್ಹಂಗೆ ಕಾಣ್ತದೆ ಹೆಗ್ಗಡ್ತಮ್ಮೋರು?” ಎಂದನು. +ಹುಲಿಯ ಅಪರಿಚಿತರನ್ನು ಕಂಡು ಬೊಗಳುವಂತೆ ವರ್ತಿಸದೆ ಬಾಲವಲ್ಲಾಡಿಸಿ ಸಂತೋಷ ಪ್ರದರ್ಶನ ಮಾಡುತ್ತಿತ್ತು. +“ಹುಲಿಯಗೆ ಗುರುತು ಮರೆತಿಲ್ಲ!” ಎಂದಳು ನಾಗಕ್ಕ. +“ನಾಯಿ ಆದ್ರೇನಂತೆ ಅದ್ಕೂ ಬಿದ್ದಿ ಇಲ್ಲೇನು?” ಎಂದನು ಗುತ್ತಿ. +“ಹುಲಿಕಲ್‌ನೆತ್ತಿಕಾಡು ದಾಟೋದು ಹ್ಯಾಂಗಪ್ಪಾ ಅಂತಿದ್ದೆ. +ನಮ್ಮನ್ನೊಂದಿಷ್ಟು ಕೋಣೂರುವರೆಗೆ ಮುಟ್ಟಿಸಿ ಹೋಗ್ತಿಯೇನೋ, ಗುತ್ತಿ?” ನಾಗತ್ತೆ ಕೇಳಿದಳು. +“ನಾನೂ ಹಳೆಮನೀಗೆ ಹೊರಟೀನಿ, ನಿಮ್ಮ ಜತೆ ಅಲ್ಲೀವರೆಗೆ ಬಂದೇ ಹೋಗ್ತೀನಿ” ಎಂದು ತೊಯ್ದ  ನೆಲದ ಕಡೆ ನೋಡಿ ಗುತ್ತಿ “ಅಯ್ಯಯ್ಯೋ! +ಇಂಬಳ ಹತ್‌ತಾವೆ ಕಣೊ. +ಬ್ಯಾಗ ಬ್ಯಾಗ ನಡೀರಿ. +ಈ ನುಸಿ ಕಾಟ ಬ್ಯಾರೆ” ಎಂದ. +ಹೊಲೆಯನಾದವನಿಗೆ ಹಿಂದೆ ಸ್ವಲ್ಪ ದೂರದಲ್ಲಿಯೇ ಇದ್ದುಕೊಂಡು ಅನುಸರಿಸುವುದು ಮೇಲಿಜಾತಿಯವರಿಗೆ ಅವನು ತೋರಿಸಬೇಕಾದ ಮರ್ಯಾದೆಯಲ್ಲವೆ? +“ನೀನೆ ಮುಂದೆ ಹೋಗಪ್ಪ! +ಹುಲಿ ಕೂತಿರ್ತದಂತೆ ಆ ಹುಲಿಕಲ್‌ ಅರೇಲಿ!” ಎಂದಳು ನಾಗತ್ತೆ. +ಗುತ್ತಿ ನಾಯಿ ಸಹಿತವಾಗಿ ದಾರಿಯಿಂದ ಅಡ್ಡಕ್ಕೆ ಹಳುವಿನಲ್ಲಿ ನುಗ್ಗಿ ಹೋಗಿ ಸ್ವಲ್ಪ ದೂರ ಮುಂದೆ ಮತ್ತೆ ಕಾಲುದಾರಿಗೆ ಸೇರಿಕೊಂಡು ನಡೆಯತೊಡಗಿದನು. +ಮಡಿಲು ತುಂಬ ಏನೇನನ್ನೊ ತುಂಬಿದ್ದುದರಿಂದ ಹೊಟ್ಟೆ ಉಬ್ಬಿದಂತೆ ಕಾಣುತ್ತಿದ್ದ ನಾಗತ್ತೆ ಮೆಲ್ಲಮೆಲ್ಲಗೆ ಹೆಜ್ಜೆ ಹಾಕತೊಡಗಿ “ಸ್ವಲ್ಪ ಮೆಲ್ಲಗೆ ಕಾಲು ಹಾಕೋ” ಎಂದು ಕೂಗಿ ಹೇಳಿದಳು ಗುತ್ತಿಗೆ. +ಹುಲಿಕಲ್ಲರೆ ಹತ್ತಿರವಾದಂತೆಲ್ಲ ಮಲೆ ಕಡಿದಾಗುತ್ತಾ ಬಂದಿತು. +ಹೆಮ್ಮರಗಳ ಸಾಂದ್ರತೆ ಗಾತ್ರ ಔನ್ನತ್ಯಗಳು ಹೆಚ್ಚಾಗುತ್ತಿದ್ದುವಾದರೂ ಬುಡದ ಹಳುವಿನ ಕಿಕ್ಕಿರಿಕೆ ಕಡಿಮೆಯಾಗುತ್ತಿತ್ತು. +ತುರಿಚೆ ಹಳುವಿನಿಂದಲಾಗಲಿ ಎತ್ತು ಬೀಳಿನಿಂದಲಾಗಲಿ ಬಾಡು ಬೆಕ್ಕಿನ ಮುಳ್ಳುಪೊದೆಯಿಂದಾಗಲಿ ತಪ್ಪಿಸಿಕೊಳ್ಳಲು ಹೆಚ್ಚೇನೂ ಪ್ರಯತ್ನಪಡಬೇಕಾಗಿರಲಿಲ್ಲ. +ಅಪರ ವಯಸ್ಸಿನ ನಾಗತ್ತೆ ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆಹಾಕುತ್ತಾ ಮಧ್ಯೆ ಮಧ್ಯೆ ನಿಂತು ಉಸ್ಸೆಂದು ನಿಡುಸುಯ್ದು ದಣಿವಾರಿಸಿಕೊಳ್ಳುತ್ತಾ ಹತ್ತುತ್ತಿದ್ದಳು. +ಮೈ ಬಂದು, ಕಾಲುಗಳೂ ತೋಳುಗಳೂ ಅಸ್ವಾಭಾವಿಕವೆಂಬಷ್ಟು ದಪ್ಪದಪ್ಪವಾಗಿ ಬೆಳೆದಿದ್ದ ಆ ಹೆಂಗಸು ಒಂದೆರಡು ಕಡೆ ಜಾರಿ ಬೀಳುತ್ತಿದ್ದವಳನ್ನು ನಾಗಕ್ಕನೆ ಆತು ಹಿಡಿದಿದ್ದಳು. +ಕಟ್ಟಿದ ವಲ್ಲಿಯಿಂದ ಕೊರಳ ಬೆವರನ್ನು ಒರೆಸಿಕೊಳ್ಳುತ್ತಾ “ನಾಗೂ, ಆ ಕಲ್ಲರೆವರೆಗೆ ಸೊಲ್ಪ ಕೈ ಹಿಡಿದುಕೊಳ್ತಿಯೇನೇ?” ಎಂದು ಅಂಗಲಾಚುವಂತೆ ಕೇಳಿಕೊಂಡ ಅತ್ತೆಯ ಕೈಯನ್ನು ತನ್ನ ಜುಗುಪ್ಸೆ ತೋರಗೊಡದ ರೀತಿಯಲ್ಲಿ ಆತುಕೊಂಡ ನಾಗಕ್ಕ ಮೆಲ್ಲಮೆಲ್ಲನೆ ಹತ್ತಿ ಏರಿ ಮುಂಬರಿದಳು. +“ಉಸ್‌ಸ್ಸಪ್ಪಾ!ಅಂತು ಕಲ್ಲರೆ ಬಂತಲ್ಲಾ. +ಸೊಲ್ಪ ದಣಿವಾರಿಸಿಕೊಂಡು ಹೋಗಾನೇ! +ಕರೆದು ಹೇಳೆ ಗುತ್ತೀಗೆ. +ಮುಂದೆ ಹೋಗಿಬಿಟ್ಟಾನು!” ಎಂದು ನಾಗತ್ತೆ ವಿಸ್ತಾರವಾಗಿ ಹಾಸಿದಂತಿದ್ದ ಅರಯಮೇಲೆ ಕೂತುಬಿಟ್ಟಳು. +ನಾಗಕ್ಕ ಗುತ್ತಿಯನ್ನು ಕರೆದು ಹೇಳಬೇಕಾಗಲಿಲ್ಲ. +ಅವನು ತಾನಾಗಿಯೆ, ನಾಗತ್ತೆ ಕುಳಿತುದನ್ನು ನೋಡಿ, ಹಿಂತಿರುಗಿ ಬಂದು, ಅವರಿಗೆ ಸ್ವಲ್ಪ ದೂರದಲ್ಲಿ, ತನ್ನ ಕಂಬಳಿ ಕೊಪ್ಪೆಯನ್ನು ಮಡಿಸಿ ಹಾಕಿಕೊಂಡು, ಬಗನಿ ದೊಣ್ಣೆಯನ್ನು ಟಣಕ್ಕನೆ ಅರೆಕಲ್ಲಿನ ಮೇಲೆ ಹಾಕಿ, ತನ್ನ ಕಾಲಿಗೆ ಹತ್ತಿದ್ದ ಇಂಬಳಗಳನ್ನು ಕೈಯಿಂದೆಳೆದು ಬಿಸಾಡುತ್ತಾ ಕುಳಿತನು. +ನಾಗತ್ತೆ ತನ್ನ ಮಡಿಲಿನಿಂದ ಒಂದು ಚೂರು ಹೊಗೆ ಸೊಪ್ಪನ್ನು ತೆಗೆದು ಅದರಿಂದ ತನ್ನ ಕಾಲಿಗೆ ಮೊಳಕಾಲಿನವರೆಗೂ ಹತ್ತಿದ್ದ ಇಂಬಳಗಳನ್ನು ಸುಲಭವಾಗಿ ಒರಸಿ ಒರಸಿ ಹಾಕಿದಳು. +ಆಮೇಲೆ ಆ ಹೊಗೆಸೊಪ್ಪಿನ ತುಂಡನ್ನು, ತನ್ನ ಕಾಲಿಗೆ ಹತ್ತಿದ್ದ ಇಂಬಳಗಳನ್ನು ಒಂದು ಕಡ್ಡಿಯಿಂದ ತೆಗೆಯುವ ವಿಫಲ ಪ್ರಯತ್ನದಲ್ಲಿದ್ದ, ನಾಗಕ್ಕನಿಗೂ ಕೊಟ್ಟಳು. +ಅವಳೂ ಬೆನ್ನು ತಿರುಗಿಸಿ ಕೂತು, ಕಚ್ಚಿದ್ದ ಇಂಬಳಗಳನ್ನೆಲ್ಲ ಸರಸರನೆ ಒರಸಿ ಹಾಕಿದಳು. +ಆಮೇಲೆ ದೂರದಲ್ಲಿ ಕೂತು ಬಹುವಾಗಿ ಪ್ರಯತ್ನಿಸುತ್ತಿದ್ದ ಗುತ್ತಿಯ ಕಡೆಗೂ ನಾಗತ್ತೆಯ ಅಪ್ಪಣೆಯಂತೆ ಅದನ್ನು ಎಸೆದಳು. +ಗುತ್ತಿ ಅದನ್ನು ಹೆರಕಿಕೊಂಡು “ಹೌದು ಕಣ್ರೋ, ಇದೊಂದು ಒಳ್ಳೆ ಉಪಾಯ” ಎಂದು ಕೆಲಸಕ್ಕೆ ತೊಡಗಿದನು. +ಆದರೆ ಗುತ್ತಿ ಇಂಬಳಗಳನ್ನೆಲ್ಲ ತೆಗೆದು ಹಾಕಿದ ಮೇಲೆ ಆ ಹೊಗೆ ಸೊಪ್ಪಿನ ತುಂಡನ್ನು ಬಿಸಾಡಲಿಲ್ಲ. +ಅತ್ತ ಇತ್ತ ಕಳ್ಳಕಣ್ಣು ಹಾಯಿಸಿ ಮೆಲ್ಲಗೆ ಸೊಂಟಕ್ಕೆ ಸಿಕ್ಕಿಸಿಕೊಂಡನು! +ಮುಂದೆ ಇಂಬಳ ಹತ್ತಿದಾಗ ಉಪಯೋಗಕ್ಕೆ ಬರಲಿ ಎಂದೊ? +ಇಲ್ಲವೆ ಅವಶ್ಯಬಿದ್ದಾಗ ಎಲಡಕೆಗೇ ಬೇಕಾಗಬಹುದೆಂದೊ! +ನಾಗಕ್ಕ ಅದನ್ನು ಗಮನಿಸಿ ಮುಖ ತಿರುಗಿಸಿಕೊಂಡು ನಕ್ಕದ್ದು ಅವನಿಗೆ ಗೊತ್ತಾಗಲಿಲ್ಲ. +ಅವರು ಕುಳಿತಿದ್ದ ಆ ಎತ್ತರದ ಸ್ಥಾನ ಹೆಸರುವಾಸಿಯಾಗಿತ್ತು. +ಹುಲಿಕಲ್ಲು, ಹುಲಿಕಲ್ಲರೆ, ಹುಲಿಕಲ್ ನೆತ್ತಿ ಎಂದು ಮೊದಲಾಗಿ ಆ ಸ್ಥಳವನ್ನು ನಿರ್ದೇಶಿಸುತ್ತಿದ್ದರೂ ಹುಲಿಕಲ್ಲು ಗುಡ್ಡದ ನೆತ್ತಿ ಆ ಹುಲಿಕಲ್ಲರೆಗಿಂತಲೂ ಮೇಲೇರಿ ಇನ್ನ ಬಹಳ ಎತ್ತರದಲ್ಲಿ ಕೊನೆಗೊಂಡಿತ್ತು. +ಇವರು ಕುಳಿತಿದ್ದ ಹುಲಿಕಲ್ಲರೆ ಆ ಮಲೆಯ ಓರೆಯ ಹೆಗಲಿನಂತಿತ್ತು. +ಅಗಲವಾಗಿದ್ದ ಆ ಹಾಸುಬಂಡೆ ಸುತ್ತಲೂ ದಟ್ಟವಾದ ಅರಣ್ಯದಿಂದ ಪರಿವೃತವಾಗಿದ್ದೂ ಅದರ ಮೇಲೆ ಕುಳಿತವರಿಗೆ ಬಹುದೂರ ಕೆಳಗೆ ಕಣಿವೆಯಲ್ಲಿ ಕೋಣೂರು ಹೂವಳ್ಳಿಗಳ ಗದ್ದೆ ತೋಟಗಳೂ ಅಡವಿಯ ಅಂಚಿಗೆ ಸೇರಿಕೊಂಡಂತಿದ್ದ ಅಡಿಕೆ ಬಾಳೆ ತೋಟಗಳೂ ಸಣ್ಣಗೆ ಚಿತ್ರದಲ್ಲಿ ಬರೆದಂತೆ ಕಾಣುತ್ತಿದ್ದವು. +ಹುಲಿ ಅಲ್ಲಿ ಯಾವಾಗಲೂ ಕುಳಿತು ಕಣಿವೆಯಲ್ಲಿ ದನಕರು ಮೇಯುವುದನ್ನು ಗೊತ್ತುಹಚ್ಚುತ್ತಿತ್ತೆಂದೂ, ಇಲ್ಲವೆ ಕಾಡಿನಲ್ಲಿ ತಿರುಗುವ ಮಿಗ, ಹಂದಿ, ಕಡ, ಕಾಡುಕುರಿ ಮೊದಲಾದ ಪ್ರಾಣಿಗಳಿಗಾಗಿ ಕಂಡಿ ಕಾಯುತ್ತಿತ್ತೆಂದೂ ಪ್ರತೀತಿ. +ಅಲ್ಲಿ ತಿರುಗಾಡುವವರಿಗೆ ಎಷ್ಟೋಸಾರಿ ಹುಲಿ ಕಾಣಿಸಿದ್ದೂ ಉಂಟು. +ಆದರೆ ಮನುಷ್ಯರ ತಂಟೆ ಬರುತ್ತಿರಲಿಲ್ಲ. +ದೂರದಿಂದಲೆ ಸ್ವಲ್ಪ ಗಟ್ಟಿಯಾಗಿ ಕೆಮ್ಮುತ್ತಲೋ ಮಾತಾಡುತ್ತಲೋ ಹೋದರೆ ಹುಲಿ ಅಲ್ಲಿಂದ ಕಣ್ಮರೆಯಾಗಿಬಿಡುತ್ತದೆ ಎಂದು ಬಲ್ಲವರು ಹೇಳುತ್ತಿದ್ದರು. +ಅದಕ್ಕಾಗಿಯೆ ಆ ಹುಲಿಕಲ್ಲನ್ನು ದಾಟುವಾಗ ಒಬ್ಬನೆ ಹೋಗುತ್ತಿದ್ದರೂ ಅನೇಕರಿದ್ದಾರೆ ಎಂಬ ಭ್ರಾಂತಿಯನ್ನು ಹುಲಿಗೆ ತಂದು ಕೊಡಲೋಸುಗ ಎಂಬಂತೆ ಗಟ್ಟಿಯಾಗಿ ಮಾತಾಡುತ್ತಲೋ ಬಾಯಿ ಮಾಡುತ್ತಲೋ ದೂರದಲ್ಲಿರುವವರನ್ನು ಕರೆಯುವಂತೆ ಕಾಕು ಹಾಕುತ್ತಲೋ ಇಲ್ಲವೆ ಗಟ್ಟಿಯಾಗಿ ಪದ ಹೇಳುತ್ತಲೋ ಹೋಗುತ್ತಿದ್ದುದು ವಾಡಿಕೆ. +ಮಳೆಗಾಲದ ಮೊದಲ ಪಾದದ ಪೂರ್ವಾಹ್ನದ ಆಕಾಶದಲ್ಲಿ ಮೋಡ ವಿರಳವಾಗಿದ್ದು ಬಟ್ಟ ಬಯಲಾಗಿದ್ದ ಕಲ್ಲರೆಯ ಮೇಲೆ ಬಿಸಿಲು ಚೆನ್ನಾಗಿಯೆ ಬೀಳುತ್ತಿತ್ತು. +ಆದರೆ ಕಾಡಿನ ಕಟ್ಟನೆರಳಿನ ಶೀತದಲ್ಲಿ ಅದುವರೆಗೂ ನಡೆದು ಬಂದಿದ್ದ ಅವರಿಗೆ ಅದು ಮೊದಮೊದಲು ಹಿತಕರವಾಗಿಯೆ ಇತ್ತು. +ಗುತ್ತಿ ತನಗೊಂಡು ‘ಬಾಯಿಗೆ’ ಸಿಗುತ್ತದೇನೋ ಎಂದು ನಾಗತ್ತೆಯ ಮಡಿಲಿನ ಕಡೆಗೆ ನೋಡುವುದರ ಮೂಲಕ ಸೂಚನೆ ಕೊಟ್ಟರೂ ಸಫಲವಾಗದೆ ನಾಗತ್ತೆ ಸ್ವಲ್ಪಹೊತ್ತಿನಲ್ಲಿಯೆ “ಬಿಸಿಲೇರ್ತಾ ಅದೆ, ಹೋಗಾನ” ಎಂದು ಎದ್ದು ನಿಂತಳು. +ಎದ್ದುನಿಂತ ಗುತ್ತಿಗೆ ಹುಲಿಯ ಕಣ್ಮರೆಯಾದದ್ದು ಗಮನಕ್ಕೆ ಬಂದು ಸಿಳ್ಳು ಹಾಕಿ ಕರೆದನು. +ಆದರೆ ಎಲ್ಲಿಯೂ ನಾಯಿಯ ಸದ್ದಾಗಲಿ ಸುಳಿವಾಗಲಿ ಕಾಣಿಸಲಿಲ್ಲ. +ಗುತ್ತಿ ಹುಲಿಕಲ್ಲನ್ನು ಸಮೀಪಿಸುತ್ತಿದ್ದಾಗಲೆ ನಾಯಿಯ ಕೊರಳ ಬಳ್ಳಿಹಗ್ಗವನ್ನು ಬಿಚ್ಚಿಬಿಟ್ಟಿದ್ದನು: + ಒಂದು ವೇಳೆ ಹುಲಿ ಏನಾದರೂ ಅರೆಯ ಮೇಲೆ ಕುಳಿತಿದ್ದರೆ ಮುಂದೆ ಹೋಗುವ ನಾಯಿಯನ್ನು ಕಂಡೇ ಮನುಷ್ಯರ ಆಗಮನವನ್ನು ಊಹಿಸಿ ಓಡಿಹೋಗಿ ಬಿಡಲಿ ಎಂದು! +ಗುತ್ತಿಯ ಧೈರ್ಯದ ಅಂತರಾಳದಲ್ಲಿ ಎಚ್ಚರಿಕೆಯ ಪುಕ್ಕಲು ಯಾವಾಗಲೂ ಮನೆಮಾಡಿಯೆ ಇರುತ್ತಿತ್ತು! +ಕ್ರೂ ಕ್ರೂ ಕ್ರೂ ಎಂದು ಕಾಡು ಮರುದನಿ ಕೊಡುವಂತೆ ಕರೆದನು. +“ಹಡ್ಬೇಗೆ ಹುಟ್ಟಿದ್ದು ಯತ್ತಮಕ ಸತ್ತದೊ?ಎಂದು  ತನ್ನ ಸಿಟ್ಟನ್ನು ಶಪಿಸುತ್ತಾ ಕಂಬಳಿಕೊಪ್ಪೆಯನ್ನೊ ಬಗನಿದೊಣ್ಣೆನ್ನೊ ಎತ್ತಿಕೊಂಡು ಹೊರಟನು. +“ಮೂಗಾಳಿ ಹಿಡುಕೊಂಡು ಬರ್ತದೆ, ಎಲ್ಲಿಗೆ ಹೋತದೆ?” ಎಂದ ನಾಗತ್ತೆಗೆ. +ಗುತ್ತಿ ಕಾಲು ಹಾಕುತ್ತಲೆ ಹೇಳಿದ: “ಬರ್ಕನ್ನೊ ಕಣ್ಹಂದೀನೊ ಗುದ್ದಿಗೆ ಕೂಡಿಕೊಂಡು ಕಾಯ್ತಾ ಕೂತು ಬಿಡ್ತದೆ ಕಣ್ರೋ. +ಅವತ್ತೊಂದು ಸಲ ಎಲ್ಡುದಿನ ಮನೆಗೆ ಬರದೆ ಹೋಯ್ತು. +ನನಗೆ ಅನ್ನಾನೆ ಸೇರದೆ ಹೋಯ್ತು. +ಆಮ್ಯಾಲೆ ನಾನೂ ಸಣ್ಣತಿಮ್ಮ ಹುಡುಕ್ಕೊಂಡು ಹೋಗಿ ನೋಡ್ತೀವಿ, ಒಂದು ಮರದ ಬುಡದಾಗೆ ಮೇಲೆ ನೋಡ್ತಾ ಕೂತುಬಿಟ್ಟಾದೆ. +ಏಟು ಕರೆದ್ರೂ ಬರ ಒಬ್ಬದು. +ಕಡೆಗೆ ನೋಡಿದ್ರೆ, ಬರ್ಕನ್ನ ಬೆರಸಿಕೊಂಡು ಹೋಗಿ ಆ ಮರದ ಒಟ್ಟೆಗೆ ಹತ್ತಿಸಿಬಿಟ್ಟದೆ! +ಬಳಿಕೋಲು ಹಾಕಿ ನೋಡಿದಾಗ ಒಣೇಲಿ ಗೊತ್ತಾತು! +ಹೊಗೆಹಾಲಿ, ದಸಿಗೇಲಿ ಇರ್ದು, ತೆಗೆದ್ವು. +ದಿಂಡೆ ಬರ್ಕ! +ಸಣ್ಣ ಸಿಮ್ಮನ ಕೈಮೇಲೆ ಇಳಿದುಬಿಟ್ಟಿತ್ತು ಅದರ ಹೊಟ್ಟೆಕಳ್ಳಿನ ರಸ ರಕ್ತ ಎಲ್ಲ! +ಹಿಹ್ಹಿಹ್ಹಿ!”ದಾರಿ ಗುಡ್ಡವಿಳಿದು ಹೋಗುತ್ತಿದ್ದುದರಿಂದ ನಾಗತ್ತೆಗೂ ಅಷ್ಟೇನು ಆಯಾಸಕರವಾಗಿರಲಿಲ್ಲ. +ಕಗ್ಗಾಡಿನ ದಟ್ಟಹಳುವಿನಲ್ಲಿ ಹೋಗುತ್ತಿದ್ದಾಗ ಒಂದೆಡೆ ತುಸುದೂರದಲ್ಲಿ ಹಳುವಿನೊಳಗೆ ಏನೋ ಸದ್ದಾಯಿತು. +ಮೂವರೂ ಬೆಚ್ಚಿ ನಿಂತರು. +ತಗ್ಗಿದ ದನಿಯಲ್ಲಿ ಗುತ್ತಿ “ಆ ಹೆಬ್ಬಲಸಿನ ಬುಡದಾಗೆ ಅರುಗಾಗಿ!” ಎಂದು ತಾನೂ ಒಂದು ಹೆಮ್ಮರದ ಹಿಂದೆ ಮರೆಯಾಗಿ ನಿಂತ. +ದೊಡ್ಡೋ?ಕಡವೊ?ಹಂದಿಯೊ?ಮಿಗವೊ? +ಹುಲಿ ಅಟ್ಟುತ್ತಿದೆಯೋ ಅಥವಾ ಸಿಳ್ಳುನಾಯಿಗಳೋ? +ಏನೇನನ್ನೊ ಊಹಿಸುತ್ತಾ ಗುತ್ತಿ ಬಿಡುಗಣ್ಣಾಗಿ ನೋಡುತ್ತಿದ್ದಂತೆಯೆ ಒಂದು ಹೋರಿ ಮಿಗ ಮರಗಳ ಸಂದಿ ಹಳುವಿನಲ್ಲಿ ಕವಣೆ ಕಲ್ಲೆಸೆದಂತೆ ಹಾದಿಬಂದು, ಇಪ್ಪತ್ತು ಮೂವತ್ತು ಮಾರುಗಳಿಗೊಂದು ನೆಗೆತ ಚಿಮ್ಮಿ, ಗುಡ್ಡದ ಉಬ್ಬಿನ ಕಡೆಗೆ ಮಿಂಚಿ ಏರಿ ಕಣ್ಮರೆಯಾಯಿತು. +ಆ ಸದ್ದು ಅಡಗುವಷ್ಟರಲ್ಲಿಯೇ ನೋಡುತ್ತಾನೆ: ತನ್ನ ನಾಯಿ, ಹುಲಿಯ, ಅದನ್ನು ಬೆಂಬತ್ತಿ ಸಮವೇಗದಲ್ಲಿ ಎಂಬಂತೆ ಧಾವಿಸುತ್ತಿದೆ! +ಗುತ್ತಿ ಅದನ್ನು ಕೂಗಿ ಕರೆಯಬೇಕು ಎನ್ನುವಷ್ಟರಲ್ಲಿಯೇ ನಾಯಿ ಓಡುವ ಸದ್ದು ಅಡಗಿ, ಕಾಡು ನಿಃಶಬ್ದವಾಗಿತ್ತು! +“ಆ ದೊಡ್ಡ ಜಾತಿ ನಾಯೀ ಹಣೇಬರಾನೆ ಹೀಂಗೆ. +ಓಡೋ ಪರಾಣಿ ಕಂಡರೆ ಕೂಗೋದಿಲ್ಲ ಏನಿಲ್ಲ, ಅಟ್ಟಿಕೊಂಡು ಹೋಗೋದೊಂದೆ!” ಎಂದು ಗುತ್ತಿ ತನ್ನ ಮೃಗಯಾ ವಿಜ್ಞಾನದ ವಿಷಯಕವಾದ ಚಿಂತನೆಯನ್ನು ತನಗೇ ಗಟ್ಟಿಯಾಗಿ ಕೇಳಿಕೊಳ್ಳುತ್ತಾ ಮುನ್ನಡೆಯತೊಡಗಿದನು. +ಕೋಣೂರು ಸಮೀಪಿಸಿದಂತೆ ಕಾಡು ವಿರಳವಾಗತೊಡಗಿತು. +ಗಿಳಿ ಹಿಂಡು, ಕಾಮಳ್ಳಿ ಹಿಂಡು, ಬಾಣವೇಗದಿಂದ ಇಂಚರದ ತನಿಮಳೆಯನ್ನೆ ಚಿಮುಕಿಸುತ್ತಾ ಹಾರಿಹೋಗಲಾರಂಭವಾಯಿತು. +ಬರಬರುತ್ತಾ ಕಾಡಿನಂಚು ಹಕ್ಕಲಾಯಿತು. +ಅಲ್ಲಲ್ಲಿ ಪೊದೆಗಳಲ್ಲಿ ವಿರಳ ವೃಕ್ಷಗಳಲ್ಲಿ ಪಿಕಳಾರ ಹೊರಸಲಕ್ಕಿ ಮೊದಲಾದ ದಟ್ಟ ಕಾಡಿನವಲ್ಲದ ಹಕ್ಕಿಗಳ ಸದ್ದು ಕೇಳಿಸತೊಡಗಿತು. +ತುಸು ದೂರದಲ್ಲಿ ಕೋಣೂರಿನ ಅಡಕೆತೋಟ ಗದ್ದೆಬಯಲುಗಳೂ ಇಣುಕಿ ತೋರಿದುವು. +ಕಾಲು ದಾರಿ ಕವಲಿದೆಡೆ ಗುತ್ತಿ ನಿಂತನು: “ನಾನಿಲ್ಲೆ ಅಗಚ್ತೀನ್ರೋ ಹಳೆಮನೆಗೆ.”ನಾಗತ್ತೆ ತನ್ನ ಮಡಿಲಿಗೆ ಕೈಹಾಕಿ ಒಂದು ಎಲೆ, ಒಂದು ಅಡಕೆ, ಒಂದು ತುಂಡು ಹೊಗೆಸೊಪ್ಪು ಹೊರತೆಗೆದು ‘ಕೊಳ್ಳೊ’ ಎಂದು ಒಂದು ‘ಬಾಯಿಗೆ’ ಕೊಟ್ಟಳು. +ಗುತ್ತಿ ಅಂಜಲಿಯೊಟ್ಟಿ, ಮೇಲಿಂದ ಬೀಳುವ ಆ ಇಷ್ಟವಸ್ತುವನ್ನು ಆತು ಹಿಡಿದು, ‘ಬತ್ತೀನ್ರೋ’ ಎಂದು ಬೀಳ್ಕೊಂಡು, ಹಿಂದಿರುಗಿ, ಅದುವರೆಗೆ ಹೆಂಗಸರಿಗಾಗಿ ಮೆಲ್ಲನೆ ನಡೆದ ಹೊತ್ತನ್ನು ಮತ್ತೆ ಗೆದ್ದು ಸಂಪಾದಿಸುವ ಉದ್ದೇಶದಿಂದಲೋ ಎಂಬಂತೆ, ಸರಸರನೆ ಕಾಲು ಹಾಕಿದನು. +ನಾಗತ್ತೆ ಗುತ್ತಿಯ ಹತ್ತಿರ ತಾನು ಹೋಗುತ್ತಿರುವುದು ಕೋಣೂರಿಗೆ ಎಂಬಂತೆ ಮಾತಾಡಿದ್ದರೂ ಅವಳ ಪಯಣಕ್ಕೆ ನಿಜವಾದ ಗುರಿ ಹೂವಳ್ಳಿಯೆ ಆಗಿತ್ತು. +ಕೋಣೂರಿನಲ್ಲಿ ಹಗಲೂಟ ಮುಗಿಸಿ, ಇಳಿಹಗಲಿನಲ್ಲಿ ಹೊರಟರೆ ಬೈಗಾಗುವ ಮುನ್ನ ಹೂವಳ್ಳಿಗೆ ಸೇರಬಹುದೆಂಬುದು ಅವಳ ಹರವು. +ಅಲ್ಲಿ ಮುಂದೆ ನಡೆಯುವ ಕಾರ್ಯಕ್ರಮ ಅವಳಿಗೂ ಹೂವಳ್ಳಿ ವೆಂಕಟಣ್ಣನಿಗೂ ಮಾತ್ರವೆ ತಿಳಿದ ಒಳಸಂಚಾಗಿತ್ತು. +ತನ್ನ ಸೊಸೆಯ ಬರಿಯ ಕಡಗದ ಕೈಗೆ ಬಳೆಯನ್ನೂ, ತೊಡಿಸಿ ಅವಳನ್ನು ಸುಮಂಗಲಿ ಮಾಡಿ ನೆಲೆಗೊಳಿಸುವ ಸಲುವಾಗಿ ನಾಗತ್ತೆ ಒಂದು ಭಯಂಕರ ವ್ಯೂಹವನ್ನೆ ಹೂಡಿದ್ದಳು. +ಅಂತಹ ವ್ಯೂಹದ ವಿಚಾರವಾಗಿ ವೆಂಕಟಣ್ಣನಿಗೆ ಸ್ಪಷ್ಟ ಕಲ್ಪನೆ ಕೊಟ್ಟಿರಲಿಲ್ಲ. +ವೆಂಕಟಣ್ಣನಂತಹ ‘ಪಶು’ ವಿನಂತಹ ಮನುಷ್ಯ ತಾನು ಒಡ್ಡಿದ ವ್ಯೂಹಕ್ಕೆ ಅದರ ಅರಿವಿದ್ದೂ ಕಾಲುಹಾಕಲು ಹಿಂಜರಿಯುತ್ತಾನೆಯೊ ಏನೊ ಎಂಬ ಶಂಕೆ ನಾಗತ್ತೆಯನ್ನು ಬಾಧಿಸುತ್ತಿತ್ತು. +ತನ್ನ ಹುನ್ನಾರು ಗೆದ್ದರೆ ವೆಂಕ್ಟಣ್ಣನ ಬಹುದಿನದ ಇಷ್ಟಾರ್ಥ ಕೈಗೂಡಿ ಅವನಿಗೆ ಸಂತೋಷವಾಗುತ್ತದೆ. +ಎನ್ನುವುದರಲ್ಲಿ ನಾಗತ್ತೆಗೆ ಸಂದೇಹವಿರಲಿಲ್ಲ. +ಆದರೆ ವೆಂಕಟಣ್ಣನಂತಹ ಸಾಧಾರಣ ಮರ್ಯಾದಸ್ಥ ಗೃಹಸ್ಥ, ತನ್ನ ಸುಖಕ್ಕಾದರೂ, ನಾಗತ್ತೆಯಂತಹ ಪ್ರಚ್ಛನ್ನ ಧೂರ್ತೆ ಕೈಕೊಳ್ಳಲು ಹಿಂಜರಿಯದ ಅಪಖ್ಯಾತಿಯ ಉಪಾಯವನ್ನು ಒಪ್ಪದಿದ್ದರೆ? +ಪ್ರಾಯದ ತನ್ನ ಸೊಸೆಯ ‘ಗಂಡ ಸತ್ತ ಮುಂಡೆಯತನ’ವನ್ನು ಪರಿಹರಿಸಿ, ಅವಳನ್ನು ಉದ್ದಾರಮಾಡಲು ನಾಲ್ಕಾರು ಕಡೆಗಳಲ್ಲಿ ತಾನು ಕೈಕೊಂಡ ಪ್ರಯತ್ನಗಳೆಲ್ಲ ನಾಗಕ್ಕನ ಹಠಮಾರಿತನದಿಂದ ವ್ಯರ್ಥವಾದುದನ್ನು ಕಂಡು ನಾಗತ್ತೆ ಎಂತಹ ಮನಃಶಾಸ್ತ್ರಜ್ಞನ ಮನೋವಿಶ್ಲೇಷಣೆಯೂ ಬೆರಗಾಗುವಂತಹ ಉಪಾಯಗಳನ್ನು ಆಲೋಚಿಸಿದ್ದಳು. +ಹೇಳಲಾಗಲಿ ಬರೆಯಲಾಗಲಿ ಮುದ್ರಿಸಲಾಗಲಿ ಸಾಧ್ಯವಾಗದಂತಹ ಅಶ್ಲೀಲ ಅಸಹ್ಯೋಪಾಯಗಳನ್ನು ಪ್ರಯೋಗಿಸಿದ್ದಳು. +ಸೊಸೆ ಅವುಗಳೊಂದನ್ನೂ ಅರಿಯದಿದ್ದರೂ ಅತ್ತೆಗೆ ಅವು ಮೆಲ್ಲಮೆಲ್ಲನೆ ಯಶಸ್ವಿಯಾಗುವಂತೆ ತೋರಿತ್ತು. +ಹೋದವರುಷ ಸಸಿನೆಡುವ ಸಮಯದಲ್ಲಿ ಹಿಡಿದು ಗದ್ದೆಕೊಯ್ಲು ಪೂರೈಸುವವರೆಗೂ ಅತ್ತೆ ಸೊಸೆಯರಿಬ್ಬರೂ ಹೂವಳ್ಳಿ ವೆಂಕಟಣ್ಣನ ಮನೆಯಲ್ಲಿ ಅವನ ಆರಂಭದ ಕೆಲಸಕ್ಕೆ ನೆರವಾಗಿ ಬೀಡುಬಿಟ್ಟಿದ್ದರು. +ಅಲ್ಲಿಯೆ ನಾಗತ್ತೆ ತನ್ನ ರಹಸ್ಯ ಪ್ರಯೋಗಗಳನ್ನು ಪ್ರಾರಂಭ ಮಾಡಿದ್ದು. +ಕೋಣೂರಿನ ಕಾಗಿನಹಳ್ಳಿ ಅಮ್ಮ ಅತ್ತೆ ಸೊಸೆಯರಿಬ್ಬರನ್ನೂ ತಮ್ಮ ಮನೆಯಲ್ಲಿಯೆ ಇದ್ದುಕೊಂಡು ಸಸಿ ನೆಡುವ ಕೆಲಸ ಮಾಡುವಂತೆ ಆಹ್ವಾನಿಸಿದ್ದರೂ ನಾಗತ್ತೆ ಏನೇನೊ ಸಬೂಬು ಹೇಳಿ ಹೂವಳ್ಳಿಗೇ ಸೊಸೆಯನ್ನು ಸಾಗಿಸಿಕೊಂಡು ಹೋಗಿದ್ದಳು. +ಅದಕ್ಕೆ ನಿಜವಾದ ಕಾರಣ ಬೇರೆಯಾಗಿತ್ತು. +ಹೊಟ್ಟೆಬಟ್ಟೆಯ ಸುಖದ ದೃಷ್ಟಿಯಿಂದಾಗಲಿ ಕೆಲಸ ಹಗುರವಾಗಿರುವ ದೃಷ್ಟಿಯಿಂದಾಗಲಿ ಜಾಗವನ್ನು ಗೊತ್ತು ಮಾಡುವ ಪಕ್ಷದಲ್ಲಿ ನಾಗತ್ತೆ ಖಂಡಿತ ಕೋಣೂರನ್ನೆ ಆರಿಸುತ್ತಿದ್ದಳು. +ಕೋಣೂರು ರಂಗಪ್ಪಗೌಡರ ಮನೆ ಹೂವಳ್ಳಿ ವೆಂಕಟ್ಟನ ಮನೆಗಿಂತ ಎಲ್ಲದರಲ್ಲಿಯೂ ದೊಡ್ಡತನದ್ದಾಗಿತ್ತು. +ವೆಂಕಟಣ್ಣನಿಗೆ ತನ್ನದೇ ಆದ ಸ್ವಂತ ಜಮೀನು ಇದ್ದುದೂ ಅಷ್ಟಕ್ಕಷ್ಟೆ. +ಹಳೆಮನೆ ದೊಡ್ಡ ಹೆಗ್ಗಡೆಯವರ ಗದ್ದೆಯನ್ನೂ ಬೆಟ್ಟಳ್ಳಿ ಕಲ್ಲಯ್ಯಗೌಡರ ಅಡಕೆಯ ತೋಟವನ್ನೂ ಗುತ್ತಿಗೆಗೆ ತೆಗೆದುಕೊಂಡು ಸ್ವಲ್ಪ ಹೆಚ್ಚು  ಕಡಿಮೆ ಅವರ ಒಕ್ಕಲಾಗಿಯೇ ಇದ್ದನು. +ಆದರೆ ಸಜಾತಿಯವನಾಗಿ ಹೆಣ್ಣು ಕೊಟ್ಟುತಂದ ನೆಂಟಸ್ತಿಕೆಯ ಹಳೆಯ ಸಂಬಂಧದಿಂದ ಸಮಾನಸ್ಕಂಧನೆಂಬಂತೆ ನಡೆದುಕೊಳ್ಳುತ್ತಿದ್ದನು. +ಆದರೆ ನಾಗತ್ತೆಗೆ ಬೇಕಾಗಿದ್ದ ಒಂದು ಸಲ್ಲಕ್ಷಣ ಕೋಣೀರು ರಂಗಪ್ಪಗೌಡರಿಗೆ ಇರಲಿಲ್ಲ. +ಹೂವಳ್ಳಿ ವೆಂಕಟಣ್ಣನಿಗೆ ಹೆಂಡತಿ ತೀರಿಹೋಗಿ ಅನೇಕ ವರ್ಷಗಳಾಗಿದ್ದರೂ, ಮತ್ತೊಂದು ಮದುವೆಯಾಗಲು ಅವನು ಬಹಳ ಪ್ರಯತ್ನಪಟ್ಟಿದ್ದರೂ, ಅವನಿನ್ನೂ ಒಂಟಿಯಾಗಿಯೆ ಉಳಿದಿದ್ದ; + ಅದಕ್ಕಾಗಿ ತುಂಬ ಪರಿತಪಿಸುತ್ತಲೂ ಇದ್ದ. +ತನ್ನ ಮದುವೆಯ ಅನಿವಾರ್ಯ ಅವಶ್ಯಕತೆಯನ್ನು ಮನಗಾಣಿಸಲು ಅವನು ಎತ್ತುತ್ತಿದ್ದ ಸಖೇದ ಕಾರಣೋದ್ಗಾರ: ‘ಒಂದು ಗಂಜಿ ನೀರು ಮಾಡಿ ಹಾಕುವುದಕ್ಕಾದರೂ ಒಬ್ಬಳು ಇಲ್ಲದೆ ಇದ್ದರೆ ಹ್ಯಾಂಗೆ?’ +‘ಗಂಜಿನೀರು’ ಮಾಡಿಹಾಕುವುದಕ್ಕೇನೂ ಜನ ಇದ್ದರು. +ಚಿನ್ನಮ್ಮನ ಅಜ್ಜಿ, ವೆಂಕಟಣ್ಣನ ಅತ್ತೆ ಎಂದರೆ ಹೆಂಡತಿಯ ತಾಯಿ, ಮೊಮ್ಮಗಳ ನೆರವಿನಿಂದ ಅನ್ನ ಕಾಣಿಸುವ ಒಗತನವನ್ನು ಯಾವ ದೂರಿಗೂ ಅವಕಾಶವೊದಗದಿರುವಷ್ಟರ ಮಟ್ಟಿಗೆ ನೆರವೇರಿಸುತ್ತಿದ್ದಳು. +ಮುದುಕಿ ಕೃಶಶರೀರಿಯಾಗಿದ್ದರೂ ಮೊಮ್ಮಗಳ ಮಮತೆ ಅವಳನ್ನು ಕಷ್ಟಸಹಿಷ್ಣುವನ್ನಾಗಿ ಮಾಡಿತ್ತು. +ವೆಂಕಟಣ್ಣನಿಗೆ ತನ್ನ ಮಗಳನ್ನು ಕೊಡುವಾಗಲೆ ಆಕೆ ತುಂಬ ಮೀನಮೇಷ ಮಾಡಿದ್ದಳು. +ತೆಳ್ಳಗೆ ಬೆಳ್ಳಗೆ ಚೆಲುವೆಯಾಗಿದ್ದ ತನ್ನ ಮಗಳಿಗೆ ವೆಂಕಟಣ್ಣನಂತಹ ರೂಕ್ಷ ವ್ಯಕ್ತಿ ತಕ್ಕ ವರನಲ್ಲವೆಂಧು ಅವಳು ಮೊದಮೊದಲು ಆ ಮದುವೆಗೆ ಒಪ್ಪಿರಲಿಲ್ಲ. +ಅಲ್ಲದೆ ವೆಂಕಣ್ಣನ ಬಡತನಕ್ಕೆ ಚಿನ್ನಮ್ಮನ ತಾಯಿಯಂತಹ ಸೂಕ್ಷ್ಮ ಕಾಯದ ಸ್ಫುರದ್ರೂಪಿಣಿಯನ್ನು ಸಾಂಸಾರಿಕ ಕ್ಲೇಶ ಕಷ್ಟಗಳಿಂದ ದೂರವಿಟ್ಟು ರಕ್ಷಿಸಕೊಂಡು ಬರುವ ಶಕ್ತಿ ಇಲ್ಲವೆಂಬುದೂ ಚಿನ್ನಮ್ಮನ ಅಜ್ಜಿಗೆ ಚೆನ್ನಾಗಿ ಗೊತ್ತಿತ್ತು. +ನೀರು, ಕಟ್ಟಿಗೆ, ದರಗು, ಗೊಬ್ಬರ ಹೊರುವುದರಿಂದ ಹಿಡಿದು ಸಸಿನೆಟ್ಟಿ, ಗದ್ದೆಕೊಯ್ಲು, ಕಳೆಕೀಳುವುದು ಮೊದಲಾದ ಎಲ್ಲ ಕೆಲಸಗಳನ್ನೂ, ಮನೆಗೆಲಸದ ಜೊತೆಗೆ, ಹೂವಳ್ಳಿಗೆ ಹೋದ ಹೆಣ್ಣು ಮಾಡಬೇಕಾದುದು ಅನಿವಾರ್ಯವಾಗಿತ್ತು. +ವೆಂಕಟಣ್ಣನಿಗೆ ಇಲ್ಲದಿದ್ದುದು ಆ ಆರ್ಥಿಕ ಶಕ್ತಿ ಮಾತ್ರವಲ್ಲ; + ಅದಕ್ಕೆ ಬೇಕಾದ ನಯ ನಾಜೋಕಿನ ಸಂಸ್ಕೃತಿಗೂ ಅವನು ಬಹು ದೂರವಾಗಿಯೆ ಇದ್ದನು. +ಚಿನ್ನಮ್ಮನ ಅಜ್ಜಿಯ ಮನೆ ಬಡ ಒಕ್ಕಲದ್ದಾಗಿದ್ದರೂ ಚಿನ್ನಮ್ಮನ ತಾಯಿಯ ರೂಪ ಶ್ರೀಮಂತರ ಆಸೆಯನ್ನೂ ಸೆಳೆದಿತ್ತು. +ಹೊಸಕೇರಿ ಬಸಪ್ಪ ನಾಯಕರು  ತನ್ನ ಮಗನಿಗೆ ಅವಳನ್ನು  ತಂದುಕೊಳ್ಳುವ ಮನಸ್ಸು ಮಾಡಿ, ಬಾಯಿಬಿಟ್ಟು ಕೇಳಿಯೂ ಇದ್ದರು. +ಆದರೆ ಹಳೆಮನೆಯ ಸುಬ್ಬಣ್ಣ ಹೆಗ್ಗಡೆಯವರ ಹೆಂಡತಿಯ ಮಾತ್ಸರ್ಯ ಆ ಸಂಬಂಧಕ್ಕೆ ಅಡ್ಡ ಬಂದಿತ್ತು. +ಆ ಹೆಗ್ಗಡತಿ ತಮ್ಮ ಒಕ್ಕಲೊಬ್ಬಳ ಮಗಳು ಬಸಪ್ಪನಾಯಕರಂತಹ ಶ್ರೀಮಂತರ ಸೊಸೆಯಾಗುವುದನ್ನು ಸಹಿಸದೆ ಹೊಟ್ಟೆಯುರಿಯಿಂದ ಅವಳನ್ನು ವೆಂಕಟಣ್ಣನಿಗೆ ಕೊಡುವಂತೆ ಸಂಚು ಮಾಡಿದ್ದಳು. +ವೆಂಕಟಣ್ಣನಿಗೆ ಮದುವೆಯಾದ ಸ್ವಲ್ಪ ಕಾಲದಲ್ಲಿಯೆ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರ ಹೆಂಡತಿ ಇದ್ದಕ್ಕಿದ್ದಹಾಗೆ ತೀರಿಕೊಂಡಾಗ ವೆಂಕಟಣ್ಣನ ಅತ್ತೆ ‘ನನ್ನ ಮಗಳನ್ನು ದೊಡ್ಡೊರ ಮನೆ ಸೇರದ ಹಾಂಗೆ ಮಾಡಿದ ಆ ಹೊಟ್ಟಿಕಿಚ್ಚಿನ ಪಾಪಕ್ಕೇ ಆ ಹೆಗ್ಗಡ್ತೀಗೆ ರಣ ಹೂಡೀತು!’ ಎಂದಿದ್ದಳಂತೆ. +ವೆಂಕಟಣ್ಣನನ್ನು  ಮದುವೆಯಾದ ಚಿನ್ನಮ್ಮನ ತಾಯಿ ವರುಷಕ್ಕೊಂದರಂತೆ ಮಕ್ಕಳನ್ನು ಹೆತ್ತು ಐದನೆಯ ಹೆರಿಗೆಯಲ್ಲಿ ತೀರಿಕೊಂಡಿದ್ದಳು. +ಮೊದಲನೆಯ ಮಗು ಚಿನ್ನಮ್ಮ ವಿನಾ ಉಳಿದೆಲ್ಲಾ ಮಕ್ಕಳೂ ಸತ್ತುಹೋಗಿದ್ದುವು. +ವೆಂಕಟಣ್ಣನಿಗೆ ಸಂಸ್ಕೃತಿಯ ಅಭಾವ ಯಾವ ಪರಿಮಾಣದಲ್ಲಿತ್ತೊ ಅದಕ್ಕೆ ಸಮಸ್ಪರ್ಧಿಯಾಗಿ ಪಶುಬಲಿಷ್ಠತೆಯಿದ್ದುದೂ ಚಿನ್ನಮ್ಮ ಬಹುಬೇಗ ತಬ್ಬಲಿಯಾಗಲು ಒಂದು ಮುಖ್ಯ ಕಾರಣವಾಗಿತ್ತು. +ಚಿನ್ನಮ್ಮ ತನ್ನ ತಾಯಿಯ ಚೆಲುವನ್ನೆಲ್ಲ ಪಡೆದು ಹುಟ್ಟಿದ್ದಳು. +ಆದರೆ ಸುತ್ತಲೆಲ್ಲಿಯೂ ಅದನ್ನು ಗಮನಿಸುವ ಪ್ರಜ್ಞೆ ಇರಲಿಲ್ಲವಾದ್ದರಿಂದಲೂ, ಸುತ್ತಲೂ ದಟ್ಟಯಿಸಿದ್ದ ಸಂಸ್ಕೃತಿದಾರಿದ್ರ್ಯದ ದೆಸೆಯಿಂದಲೂ, ಅವಳು ಕಾಡುಕಾಡಾಗಿ ಕೊಳಕುಕೊಳಕಾಗಿ ಮಣ್ಣುಹಿಡಿದು ಕಾಂತಿ ಕುಂದಿದ ಚಿನ್ನದ ಸಲಾಕೆಯಂತಿದ್ದಳು. +ಅವಳ ಅಜ್ಜಿ ಅವಳನ್ನು ಸ್ವಲ್ಪಕಾಲ ತನ್ನ ಮನೆಗೆ ಕರೆದೊಯ್ದು ಲಾಲನೆ ಪಾಲನೆ ಮಾಡಿದ್ದಳು. +ಬಡ್ಡು ಹಿಡಿದು ಕೆದರಿದ್ದ ಕೂದಲನ್ನು ಮೀಯಿಸಿ ಎಣ್ಣೆ ಕಾಣಿಸಿ ಬಾಚಿ ಸರಿ ಮಾಡಿದ್ದಳು. +ಮೂರು ಹೊತ್ತೂ ಇಳಿಯುತ್ತಿದ್ದ ಸಿಂಬಳ ಸುರುಕುತನಕ್ಕೆ ಮದ್ದು ಕೊಡಿಸಿ ಆರೈಕೆ ಮಾಡಿದ್ದಳು. +ಚಳಿಜ್ವರದಿಂದ ಗಡ್ಡೆ ಬೆಳೆದು ಡೊಳ್ಳುಗೊಂಡು ಮಿರುಗುತ್ತಿದ್ದ ಹೊಟ್ಟೆ ಜಕ್ಕುವಂತೆ ಮಾಡಿ, ಬತ್ತಲೆಯನ್ನು ಪರಿಕಾರದಿಂದ ಮುಚ್ಚಿದ್ದಳು. +ಕುಡಿವ ಹಾಲಿನಿಂದ ಹಿಡಿದು ಹೊರಳಾಡುತ್ತಿದ್ದ ಮಣ್ಣಿನವರೆಗೆ ಜೊಲ್ಲು ಅಂಟಾಗಿ ನಾರುತ್ತಿದ್ದ ‘ದಿಷ್ಟಿಮಣಿ’ಸರವನ್ನು ಶುಚಿಗೊಳಿಸಿ ಹಾಕಿದ್ದಳು. +ಕೈಗೆ ಕಾಲಿಗೆ ಕಿವಿಗೆ ಆಗಿನ ಕಾಲದ ಅಭಿರುಚಿಗೆ ಅನುರೂಪವಾದ ಬಡತನದ ಒಡವೆಗಳನ್ನೂ ತೊಡಿಸಿದ್ದಳು. +ಕಡೆಗೆ, ಮತ್ತೊಂದು ಮದುವೆ ಮಾಡಿಕೊಳ್ಳಲು ಪ್ರಯತ್ನಿಸಿ ವಿಫಲನಾಗಿದ್ದ ವೆಂಕಟಣ್ಣನು ಗಟ್ಟದತಗ್ಗಿನವರ ಬಿಡಾರಗಳಲ್ಲಿ ಇರುಳುಬೇಟೆಗೆ ಷುರುಮಾಡಿದ್ದಾನೆಂಬ ಸುದ್ದಿ ಕೇಳಿ, ಮೊಮ್ಮಗಳ ಸಲುವಗಿಯಾದರೂ ಅವನ ಮನೆಯನ್ನು ನೆಟ್ಟಗೆ ಮಾಡಬೇಕೆಂಬ ಉದ್ದೇಶದಿಂದ ಚಿನ್ನಮ್ಮನನ್ನೂ ಕರೆದುಕೊಂಡು ಬಂದು ಹೂವಳ್ಳಿಯಲ್ಲಿಯೆ ನೆಲಸಿದ್ದಳು. +ಅಜ್ಜಿಯ ಆರೈಕೆಯಲ್ಲಿ ಚಿನ್ನಮ್ಮ ಹುಲುಸಾಗಿ ಹುಲುಸಾಗಿ ಬೆಳದಿದ್ದಳು. +ಆದರೆ ತನ್ನ ಸುತ್ತಮುತ್ತಲಿದ್ದ ಇತರ ಹಳ್ಳಿಯ ಹುಡುಗಿಯರಂತೆಯೆ ನಯ ನಾಜೋಕುಗಳಿಂದ ದೂರವಾಗಿ ಒರಟುಒರಟಾಗಿಯೆ ದೊಡ್ಡವಳಾಗಿದ್ದಳು. +ಅಜ್ಜಿಗೆ ಮನೆಗೆಲಸದಲ್ಲಿ ನೆರವಾಗುವುದರಿಂದ ಹಿಡಿದು ಕೊಟ್ಟಿಗೆಯಿಂದ ದನ ಬಿಟ್ಟುಕೊಂಡು ಹೋಗಿ ಹಕ್ಕಲು ಬಯಲಿನಲ್ಲಿ ಗುಡ್ಡಗಾಡಿನ ಓರೆಯಲ್ಲಿ ಮೇಯಿಸುವವರೆಗೂ ಅವಳ ಕಾರ್ಯಭಾರ ವ್ಯಾಪಿಸಿತ್ತು. +ಹೂವಳ್ಳಿಗೆ ಒಂದೆರಡು ಮೈಲಿಗಳೊಳಗೇ ಇರುವ ಕೋಣೂರಿನ ಮನೆಯಲ್ಲಿಯೆ ಒಂದು ಐಗಳ ಮಠ ಇದ್ದು, ಹಳೆಮನೆ ಬೆಟ್ಟಳ್ಳಿ ಕಡೆಯ ಸಮೀಪದ ಊರು ಮನೆಯ ಕೆಲವೇ ಮಕ್ಕಳು ‘ಬರಾವು’ ಕಲಿಯುತ್ತಿದ್ದರಾದರೂ, ಗಂಡು ಮಕ್ಕಳಿಗೆ ಅಪೂರ್ವವೂ ಅಸಾಧ್ಯವೂ ಅತಿ ವಿರಳವೂ ಆಗಿದ್ದ ಓದುಬರಹವನ್ನು ‘ಹೆಣ್ಣು ಹೆಂಗಸರಿಗೆ’ ಕಲಿಸಲು ಯಾರೂ ಒಪ್ಪುತ್ತಿರಲಿಲ್ಲ. +ಹೆಂಗಸರು ಓದುವುದನ್ನು ಕಂಡೂ ಇರಲಿಲ್ಲ, ಕೇಳಿಯೂ ಇರಲಿಲ್ಲ. +ಹೆಂಗಸರು ಓದು ಕಲಿಯುವುದು ಗಂಡಸರು ಸೀರೆಯುಡುವುದಕ್ಕಿಂತಲೂ ಹಾಸ್ಯಾಸ್ಪದವಾಗಿತ್ತು. +ಒಮ್ಮೆ ಕೋಣೂರಿನ ಹುಡುಗ ಮುಕುಂದಯ್ಯ ‘ವೆಂಕ್ಟಮಾವ’ನಿಗೆ ‘ಚಿನ್ನೀನ ನಮ್ಮ ಮನೆಗೆ ಬರೆಯೋಕೆ ಕಳ್ಸಿ’ ಎಂದು ಯಾವುದೋ ಮಾತಿನ ಸಂದರ್ಭದಲ್ಲಿ ಹೇಳಿದಾಗ, ಹೂವಳ್ಳಿ ವೆಂಕಟಣ್ಣ ನಕ್ಕು ‘ಹೌದು ಕಣ್ರೋ ಅವಳಿನ್ನು ಬರಾವು ಕಲ್ತು ಮಣೆಗಾರಿಕೆ ಮಾಡೋದೊಂದು ಬಾಕಿ!’ ಎಂದು ಲೇವಡಿ ಮಾಡಿದ್ದನು. +ಮೊಮ್ಮಗಳನ್ನು ಕರೆದುಕೊಂಡು ಚಿನ್ನಮ್ಮನ ಅಜ್ಜಿ ತನ್ನ ಮನೆ ಬಿಟ್ಟು ಹೂವಳ್ಳಿಯಲ್ಲಿ ನೆಲೆಸುವುದಕ್ಕಾಗಿ ಅಲ್ಲಿಗೆ ಬಂದ ಹೊಸತರಲ್ಲಿ, ಬಾಂಧವ್ಯದ ಸಂಪ್ರದಾಯದಂತೆ ಅವರನ್ನು ಮಾತಾಡಿಸುವುದಕ್ಕಾಗಿ ಕೋಣೂರಿನ ಕಾಗಿನಹಳ್ಳಿ ಅಮ್ಮ-ದಾನಮ್ಮ ಹೆಗ್ಗಡತಿ-ತನ್ನ ಕಿರಿಮಗ (ಹತ್ತು ವರ್ಷದ ಹುಡುಗ) ಮುಕುಂದಯ್ಯನಯೊಡನೆ ಹೂವಳ್ಳಿಗೆ ಹೋಗಿದ್ದಳು. +ಆರು ವರ್ಷದ ಹುಡುಗಿ ಚಿನ್ನಮ್ಮನನ್ನು ಹತ್ತಿರಕ್ಕೆ ಕರೆದು ಕೂರಿಸಿಕೊಂಡು, ತಾನು ತಂದಿದ್ದ ಕೊಬರಿ ಬೆಲ್ಲಗಳನ್ನು ಮಡಿಲಿನಿಂದ ತೆಗೆದುಕೊಡುತ್ತಾ, ಪಕ್ಕದಲ್ಲಿದ್ದ ತನ್ನ ಮಗನನ್ನು ತೋರಿಸಿ “ಇಂವ ಯಾರು?ಹೇಳು ನೋಡಾನ?” ಎಂದಾಗ, ಹುಡುಗಿ ಮುಗ್ಧ ನಯನಗಳನ್ನು ಅರಳಿಸಿ ಮೊದಮೊದಲು ಬೆಪ್ಪಾಗಿ ನೋಡುತ್ತಿದ್ದವಳು. +ಕ್ರಮೇಣ ಗುರುತು ಹಿಡಿದವಳಂತೆ ಬಾಯಿ ತೆರೆದು ಮುಗುಳುನಗೆ ಬೀರಿ, ಕೊನೆಗೆ ನಾಚಿ ತಲೆಬಾಗಿ, ಕೇಳಿಸಿತೋ ಕೇಳಿಸಲಿಲ್ಲವೊ ಎನ್ನುವಂತೆ ಮೆಲ್ಲಗೆ “ಅವರು”! ಎಂದಿದ್ದಳು. +“ಅವರು ಅಂದರೆ? +ಅವರು ಯಾರು ಅಂತಲೇ ನಾನು ಕೇಳಿದ್ದು.” ಎಂದು ಕಾಗನಹಳ್ಳಿ ಅಮ್ಮ ವಿನೋದವಾಡಿ ಮುದ್ದುಮಾಡಲು ಚಿನ್ನಮ್ಮ ಮತ್ತೆ ಮೊದಲು ಹೇಳಿದ್ದಂತೆಯೇ “ಅವರು!” ಎಂದಳು. +ಆಗ ನಡುವೆ ಬಾಯಿ ಹಾಕಿದ ಚಿನ್ನಮ್ಮನ ಅಜ್ಜಿ ನಗುತ್ತಾ “ಅಯ್ಯೊ, ಮಗುವೇ, ಬಿರುಗಾಗದೆ ಮಾಡ್ತೀಯಲ್ಲೇ!‘ಅವರು ‘ಅವರು’ ಅಂದರೆ? +ಅಂವ ನಿನ್ನ ಬಾವ ಕಣೇ” ಎಂದಿದ್ದಳು. +ಅಜ್ಜಿ ಹಾಗೆಂದೊಡನೆಯೆ ಹುಡುಗಿ ಮತ್ತೆ ತಲೆ ಎತ್ತಿ, ತುಸು ನಾಚಿದಂತೆ ನಗುತ್ತಾ, ತನ್ನನ್ನೆ ನೋಡುತ್ತಿದ್ದ ಮುಕುಂದನನ್ನು ಕಣ್ಣಿಗೆ ಕಣ್ಣಿಟ್ಟು ನೋಡಿ, ಆಗತಾನೆ ‘ಕಂಡು’ ಮತ್ತೆ ಈಗ ತಾನೆ ತಟಕ್ಕನೆ ಸಂಪೂರ್ಣವಾಗಿ ಅಳಿಸಿ ಹೋಗಿದ್ದುದ್ದನ್ನು ಮತ್ತೊಮ್ಮೆ ನೆನೆಯಲು ಪ್ರಯತ್ನಿಸಿ ಸೋತಂತೆ, ಮುಗ್ಧಳಾಗಿ ನಗುತ್ತಾ ತನ್ನ ಅಜ್ಜಿ ಹೇಳಿಕೊಟ್ಟದ್ದನ್ನು ಕೋಣೂರು ಅತ್ತೆಮ್ಮನಿಗೆ ಒಪ್ಪಿಸುವಂತೆ “ಬಾಆಆವ!” ಎಂದಿದ್ದಳು, ಕೀಚಲು ಧ್ವನಿಯಲ್ಲಿ, ದೀರ್ಘವಾಗಿ! ಅಲ್ಲಿಗೆ ಪೂರೈಸಿತ್ತು, ಅಂದು ಹೂವಳ್ಳಿಯ ಆ ಮಾಣಿಗೆ ಒಳಗೆ ನಡೆದಿದ್ದ ಮುಗ್ಧ ಘಟನೆ. +ಚಿನ್ನಮ್ಮನ ಅಜ್ಜಿಯಾಗಲಿ ಕೋಣೂರಿನ ಕಾಗಿನಹಳ್ಳಿ ಅಮ್ಮನಾಗಲಿ ಹುಡುಗಿ ‘ಅವರು!’ ‘ಅವರು!’ ಎಂದು ಹೇಳಿದ್ದ ಆ ಉತ್ತರ ರೂಪದ ಮಾತಿನಲ್ಲಿ ಯಾವ ವಿಶೇಷವನ್ನೂ ಕಂಡಿರಲಿಲ್ಲ. +ಅವನು ಆ ಉತ್ತರದಲ್ಲಿ ಚಿಕ್ಕಮಕ್ಕಳ ತೊದಲುನುಡಿಯ ಪರಿಹಾಸ್ಯವನ್ನಲ್ಲದೆ ಬೇರೆ ಏನನ್ನೂ ಗಮನಿಸಿರಲಿಲ್ಲ. +ಗಮನಿಸುವುದಕ್ಕೆ ತಾನೆ ಅಲ್ಲಿ ಏನಿತ್ತು? +ಚಿನ್ನಮ್ಮ ತನ್ನ ಅಜ್ಜಿಯ ಸಲಹೆಯನ್ನು ಸಂಪೂರ್ಣವಾಗಿ ಅನುಮೋದಿಸಿದವಳಂತೆ ‘ಬಾಆಆವ’!ಎಂದವಳೆ, ಅತ್ತೆಮ್ಮ ಕೊಟ್ಟಿದ್ದ ಕೊಬರಿ ಬೆಲ್ಲಗಳ ಯೋಗಕ್ಷೇಮ ವಿಚಾರಣೆಗೆ ತೊಡಗಿದ್ದಳು! +ಮುಕುಂದ ಸ್ವಲ್ಪ ಹೊತ್ತು ಕುಳಿತಿದ್ದು, ದೊಡ್ಡವರು ಆಡಿಕೊಳ್ಳುತ್ತಿದ್ದ ಸಂವಾದಕ್ಕೆ ಬೇಸರಗೊಂಡು ಆಕಳಿಸಿ ಮೇಲೆದ್ದು, ಕಣ್ಣು ಸನ್ನೆಯಿಂದಲೆ ತನ್ನ ಹೊಸ ಪರಿಚಯದ ‘ಚಿನ್ನಿಗೆ’ ತನ್ನನ್ನು ಹಿಂಬಾಲಿಸುವಂತೆ ಸೂಚನೆ ಕೊಟ್ಟು, ಹೊರ ಅಂಗಳಕ್ಕೆ ಹೋಗಿದ್ದನು. +ಕೊಬರಿ ಬೆಲ್ಲದ ಲಾಲಾಜಲ ಮಿಶ್ರವಾದ ಅಂಟುರುಚಿಯನ್ನು ನಾಲಗೆಗೆಂತೋ ಅಂತೆ ತುಟಿ ಕೆನ್ನೆ ಗಲ್ಲಗಳಿಗೂ ಹಂಚುತ್ತಾ, ಚಿನ್ನಮ್ಮನೂ ಎದ್ದು ಮುಕುಂದ ಬಾವನನ್ನು ಅನುಸರಿಸಿದ್ದಳು. + ಸದೆಯ ನಡುವೆ ಸೆಗಣಿಗುಪ್ಪೆಯನ್ನು ಕೆದರಿ ಕೆದರಿ ತನ್ನ ಹೂಮರಿಗಳಿಗೆ ಹುಳುವುಣಿಸಿ ಆಡುತ್ತಿದ್ದ ಹೇಟೆಯನ್ನು ಮಾತನಾಡಿಸುವುದಕ್ಕಾಗಿ! +ಆದರೆ ಆ ಘಟನೆ ವಾಸ್ತವವಾಗಿ ಮುಗ್ಧವಾದದ್ದಾಗಿರಲಿಲ್ಲ. +ಅಲ್ಲಿದ್ದವರ ಪ್ರಜ್ಞೆಗೆ ಅದು ಸಂಪೂರ್ಣವಾಗಿ ಅಗೋಚರವಾಗಿದ್ದರೂ ಅದ್ಭುತದ ಭೂಮಿಕೆಗೆ ಸೇರಿದುದಾಗಿತ್ತು. +ಕಾಗಿನಹಳ್ಳಿ ಅಮ್ಮ ‘ಇಂವ ಯಾರು?ಹೇಳು, ನೋಡಾನ?’ ಎಂದು ಮುದ್ದಿಗಾಗಿ ಪ್ರಶ್ನಿಸಿದಾಗ ಚಿನ್ನಮ್ಮ ಮುಕುಂದಯ್ಯನನ್ನು ನೋಡತೊಡಗಿದ್ದಳು. +ಮಕ್ಕಳಿಬ್ಬರ ಕಣ್ಣುಗಳೂ ಸಂಧಿಸಿದೊಡನೆಯೆ ಆ ಒಂದು ಕ್ಷಣದಲ್ಲಿ ಒಂದು ಅತೀಂದ್ರಿಯ ವ್ಯಾಪಾರ ನಡೆದಿತ್ತು: + ಚಿಕ್ಕ ಮಗು ಚಿನ್ನಮ್ಮ ಹುಡುಗ ಮುಕುಂದಯ್ಯನಲ್ಲಿ ತನ್ನ ಹಿಂದಿನ ಜನ್ಮದ ಗಂಡನನ್ನು ಕಂಡಿದ್ದಳು! +ಆ ಅನುಭವ ನೆನಪಿನ ರೂಪದ್ದಾಗಿಯೂ ಇರಲಿಲ್ಲ, ಅದೊಂದು ಕಾಣುವಿಕೆಯಾಗಿತ್ತು. +ಆ ಒಂದು ಕ್ಷಣದರ್ಶನದಲ್ಲಿ ಚಿನ್ನಮ್ಮ ತಾನೂ ಮುಕುಂದಯ್ಯನೂ ತಮ್ಮ ಹಿಂದಣ ಜನ್ಮದಲ್ಲಿ ದಂಪತಿಗಳಾಗಿದ್ದುದನ್ನು ‘ಆಗಿ’ ‘ಅನುಭವಿಸಿ’ ‘ಕಂಡಿದ್ದಳು!’ + ಅವಳು ಆಲೋಚಿಸಿ ಹೇಳಿರಲಿಲ್ಲ; + ನೆನೆದೂ ಹೇಳಿರಲಿಲ್ಲ; + ಅಪರೋಕ್ಷವಾಗಿ ಆಗಿ ಕಾಣುತ್ತಿದ್ದುದನ್ನೆ ‘ಅವರು!’ ಎಂದು ಉತ್ತರವಾಗಿ ಹೇಳಿದ್ದಳು. +ಅಲ್ಲಿ ‘ಅವರು!ಅವರು!ಅಂದರೆ?ಅಂವ ನಿನ್ನ ಬಾವ ಕಣೇ!’ ಎಂದ ಮೇಲೆ, ಹುಡುಗಿ ಮತ್ತೆ ತಲೆಯೆತ್ತಿ ನೋಡಿದಾಗ ಅಲ್ಲಿ ಬೇರೆ ಏನೂ ಇರಲಿಲ್ಲ, ಯಾರೂ ಇರಲಿಲ್ಲ. +ಕೋಣೂರಿನ ಅತ್ತೆಮ್ಮನ ಮಗ ಪುಟ್ಟ ಹುಡುಗ ಮುಕುಂದಯ್ಯ ಮಾತ್ರ ಇದ್ದ. +ತುಸು ನಾಚಿದಂತೆ ತನ್ನನ್ನೆ ನೋಡುತ್ತಾ ಮುಗುಳು ನಗುತ್ತಿದ್ದ: +ಒಂದು ಕ್ಷಣಕ್ಕೆ ಮುಂಚೆ ಸ್ಪಷ್ಟವಾಗಿ ಕಂಡದ್ದು, ಆಗ ‘ಕಂಡಿದ್ದೆ’ ಎಂಬ ಅರಿವಾಗಲಿ ನೆನಪಾಗಲಿ ಲವಲೇಶವೂ ಉಳಿಯದಂತೆ ಅಳಿಸಿ ಹೋಗಿತ್ತು. +ಅದು ಎಂದೆಂದೂ ನಡೆಯದೆಯೆ ಇದ್ದಿದ್ದರೆ ಹೇಗೆ ಇರುತ್ತಿತ್ತೊ ಹಾಗೆ ಇತ್ತು. +ಒಂದು ಕ್ಷಣಮಾತ್ರಕ್ಕೆ ಈ ಜನ್ಮದ ಮಾಯೆಯ ತೆರೆ ಎದ್ದು ಬಿದ್ದಂತಾಗಿತ್ತು. +ಒಂದರೆ ಕ್ಷಣದಲ್ಲಿ ಹಿಂದಿನ ಜನ್ಮದ  ಯಾವ ಚಿತ್ರವೊ ಸಂದರ್ಭವೊ ಸನ್ನಿವೇಶವೊ ಘಟನೆಯೊ ಸ್ಮೃತಿಯೊ ಮಿಂಚಿಣುಕಿ ವಿಸ್ಮೃತಿಯ ಕಗ್ಗತ್ತಲೆಯ ಪಾತಾಳ ಪ್ರವೇಶ ಮಾಡಿದಂತಾಗಿತ್ತು. +ತನ್ನ ಓರಗೆಯ ಸಂಗಾತಿಗಳಿಲ್ಲದೆ ದೊಡ್ಡವರೊಡನೆಯ ಒಂಟಿಯೆಂಬಂತೆ ಬೆಳೆಯುತ್ತಿದ್ದ ಚಿನ್ನಿಗೆ ಮುಂಕುಂದ ಒಂದು ಅಲಭ್ಯವೂ ಅಪೂರ್ವವೂ ಆಗ ಅನರ್ಘ್ಯ ವಸ್ತುವಾಗಿ ಕಂಡನು. +ಆದರೆ ನಿತ್ಯವೂ ನಾಲ್ಕಾರು ಒಡನಾಡಿಗಳೊಡನೆ ಐಗಳ ಮಠದಲ್ಲಿಯೊ ದನ ಮೇಯಿಸುವ ಹಕ್ಕಲಲ್ಲಿಯೊ ಗದ್ದೆಯಲ್ಲಿಯೊ ತೋಟದಲ್ಲಿಯೊ ಕೆಲಸದ ಆಳುಗಳೊಡನೆಯೊ ಇರುತ್ತಿದ್ದ ಮುಕುಂದನಿಗೆ ಚಿನ್ನಮ್ಮನಲ್ಲಿ ಯಾವ ರೀತಿಯ ಕುತೂಹಲವಾಗಲಿ ಆಸಕ್ತಿಯಾಗಲಿ ಹುಟ್ಟಲಿಲ್ಲ. +ನೆಂಟರ ಮನೆಗೆ ಬಂದಾಗ ನೆಂಟರ ಮಕ್ಕಳೊಡನೆ ದಾಕ್ಷಿಣ್ಯದಿಂದ ವರ್ತಿಸುವಂತೆ ಮಾತ್ರ ನಡೆದುಕೊಂಡಿದ್ದನು. +ಸ್ವಲ್ಪ ಪ್ರಯತ್ನದಿಂದಲೆ ನಡೆದುಕೊಂಡಿದ್ದನು: +ಹೊರ ಅಂಗಳಕ್ಕೆ ತನ್ನನ್ನು ಹಿಂಬಾಲಿಸಿ ಬಂದ ಚಿನ್ನಿ ತನ್ನ ಬಾಯಲ್ಲಿದ್ದ ಕೊಬ್ಬರಿ ಬೆಲ್ಲವನ್ನು ತಿಂದು ಪೂರೈಸಿ, ತುಟಿ ಮೂಗು ಗಲ್ಲಗಳಿಗೆ ಹಿಡಿದ್ದುದನ್ನು ಒರೆಸಿಕೊಳ್ಳಲು ಪರಿಕಾರದ ಮುಂಭಾಗದ ತುದಿಯನ್ನು, ಸ್ವಲ್ಪ ಹೆಚ್ಚಾಗಿಯೆ, ಅಶ್ಲೀಲದ ಮಟ್ಟದವರೆಗೂ, ಎತ್ತಿದಾಗ ತುಸು ಡೊಳ್ಳೇರಿದ್ದ ಹೊಟ್ಟೆಯನ್ನೂ ತೊಡೆಗಳನ್ನೂ ಕಂಡು ಮುಕುಂದನು ಜಿಗುಪ್ಸೆಪಟ್ಟು ಮುಖ ತಿರುಗಿಸಿ ‘ಇಸ್ಸಿ ಎಂಥ ಹುಡುಗಿಯಪ್ಪಾ!’ ಎಂದುಕೊಂಡಿದ್ದನು ಮನಸ್ಸಿನಲ್ಲಿಯೆ. +ತಾನು ತಮ್ಮ ಮನೆಯಲ್ಲಿರುವಾಗ ಸೊಂಟದ ಉಡಿದಾರಕ್ಕೆ ನೇತು ಹಾಕಿ ಕಟ್ಟಿದ್ದ ಲಂಗೋಟಿಯೊಂದು ವಿನಾ ಬೆತ್ತಲೆಯಾಗಿಯೆ ಇರುತ್ತಿದ್ದುದನ್ನು ಅವನು ಅಶ್ಲೀಲವೆಂದು ಭಾವಿಸಿರಲಿಲ್ಲ. +‘ಗಂಡು ಹುಡುಗರು’ ಸಾಮಾನ್ಯವಾಗಿ ಇರುತ್ತಿದ್ದುದೇ ಹಾಗೆ. +ಆದರೆ ‘ಹೆಣ್ಣು ಹುಡುಗರು’? +ಅಲ್ಲಿ ಮೇಯುತ್ತಿದ್ದ ಹೇಟೆ ಮತ್ತು ಹೂಮರಿಗಳ ವಿಚಾರವಾಗಿ ಮುಕುಂದ ಬಾವನಿಗೆ ತಿಳಿಸಲು ಕಾತರೆಯಾಗಿ ಚಿನ್ನಿ ಅಕ್ಕರೆಯ ತೊದಲು ನುಡಿಯಲ್ಲಿ ‘ಮತ್ತೆ…ಮತ್ತೆ… ಬಾವ… ಈ ಹ್ಯಾಂಟೆ ಸುಬ್ಬಿ ಸರಿಪಾಲಿಗೆ ಸಾಕಿದ್ದು…. + ನೋಡು…. ನೋಡು…. ನೋಡೀ ಮರಿ…. +ಆ ಅರಿಸಿನ ಬಣ್ಣದ್ದು ಇದೆಯಲ್ಲಾ ಅದು…. +ಆ ಕೊಕ್ಕಿನ ಹತ್ತಿರ ಕೆಂಪಗಿದೆಯಲ್ಲಾ  ಅದು… ಅದು…. +ನನಗಂತೆ!ಹೌದು, ಬಾವ, ನನಗಂತೆ!’ ಎನ್ನುತ್ತಾ ಬಾವನ ಗಮನವನ್ನು ಸಂಪೂರ್ಣವಾಗಿ ಸೆಳೆಯುವ ಉದ್ದೇಶದಿಂದ ಅವನ ಅಂಗಿಯ ತೋಳನ್ನು ಹಿಡಿದು ಎಳೆಯುತ್ತಿದ್ದಾಗ ಮುಕುಂದನಿಗೆ ದಾಕ್ಷಿಣ್ಯದ ಸಂಯಮವೂ ತಪ್ಪಿಹೋಗಿ ‘ಅಂಗೀ ಎಳೀ ಬೇಡೇ!’ ಎಂದು ಬಿಡಿಸಿಕೊಂಡಿದ್ದನು. +ಅವನ ಅಂಗಿ ಅಷ್ಟು ಅಮೂಲ್ಯವಾದುದಾಗಿತ್ತು! +ಆದರೆ ವಾಸ್ತವವಾಗಿ ಅವನ ಅಂಗಿ ಹೊಸತೂ ಆಗಿರಲಿಲ್ಲ. +ಸೊಗಸಿನದೂ ಆಗಿರಲಿಲ್ಲ. +ಕಸೆಕಟ್ಟುವುದಕ್ಕೆ ಬದಲಾಗಿ ಗುಂಡಿ ಹಾಕಿತ್ತು ಅಷ್ಟೆ. +ಅದರಲ್ಲಿಯೂ ಇರಬೇಕಾದ ಎಲ್ಲಾ ಗುಂಡಿಗಳೂ ಇರಲೂ ಇಲ್ಲ. +ಆದ್ದರಿಂದ ಅವನು ಬಾಗಿದಾಗ ಮತ್ತು ಅತ್ತಿತ್ತ ಚಲಿಸಿದಾಗ, ಅಂಗಿಗೂ ಮೈಗೂ ನಡುವೆ ಯಾವ ಉಡುಪೂ ಇಲ್ಲ ಎಂಬುದನ್ನು ನೇರವಾಗಿ ಘೋಷಿಸುವಂತೆ, ಹೊಟ್ಟೆಯ ಸಾಕ್ಷಾತ್ತಾಗಿ ಪ್ರತ್ಯಕ್ಷವಾಗುತ್ತಿತ್ತು…. +ಚಿನ್ನಿ ಮುಟ್ಟಿದ ಮಾತ್ರದಿಂದಲೆ ಮೈಲಿಗೆಯಾಗುವಷ್ಟು ಮಡಿಯೂ ಅದಕ್ಕಿರಲಿಲ್ಲ. +ಅವನು ಉಟ್ಟಿದ್ದೂ ಒಂದು ಮುಂಡು ಪಂಚೆ; + ಅವನ ಮೊಣಕಾಲಿಗಿಂತ ಒಂದು ಅಂಗುಲ ಕೆಳಗಿತ್ತೊ ಏನೊ? +ಅದನ್ನು ಅಡ್ಡಪಂಚೆಯನ್ನಾಗಿ ಸುತ್ತಿದ್ದರಿಂದ ಅದು ಆಗಾಗ ಆಯ ತಪ್ಪಿ, ಆಕಳಿಸಿ ಬಾಯಿತೆರೆದಂತಾಗಿ, ಅವನು ಒಳಗೆ ಕಟ್ಟಿದ್ದ ಕೌಪೀನವನ್ನು, ಅದರ ಅಂತಸ್ಥ ಸಮೇತ, ಸಂದೇಹಕ್ಕೆ ಆಸ್ಪದವಿಲ್ಲದಂತೆ ಪ್ರದರ್ಶಿಸುತ್ತಿದ್ದು. +ಚಿನ್ನಿ ಪರಿಕಾರ ಎತ್ತಿದ್ದರಿಂದ ಏನೇನು ಅನಾಹುತವಾಯಿತೆಂದು ಭಾವಿಸಿ ಮುಖ ತಿರುಗಿಸಿದ್ದನೊ ಅಂತಹ ಅನಾಹುತ ಇವನ ಪ್ರಯತ್ನವಿಲ್ಲದೆಯೇ ಆಗಾಗ ನಡೆದು ಹೋಗುತ್ತಿದ್ದುದನ್ನು ಗಮನಿಸುವ ಪ್ರಜ್ಞೆ ಚಿನ್ನಿಗೆ ಇರಲಿಲ್ಲವಾದ್ದರಿಂದ ಮುಕುಂದಯ್ಯ ತಾನು ಮರ್ಯಾದಸ್ತ ಎಂದು ಭಾವಿಸಲು ಅನುಕೂಲವಾಗಿತ್ತು. +ಮುಕುಂದ ಅನಾಸಕ್ತಿ ತೋಡಿದಷ್ಟೂ ಚಿನ್ನಿಗೆ ಅವನಲ್ಲಿ ಆಸಕ್ತಿ ಹೆಚ್ಚುತ್ತಿತ್ತು. +ಅವನು ಉದಾಸೀನನಾಗುತ್ತಿದ್ದುದನ್ನು ಇವಳು ಗಮನಕ್ಕೆ ಸ್ಪಲ್ಪವೂ ತೆಗೆದುಕೊಳ್ಳಲಾರದವಳಾಗಿದ್ದಳು. +ಅವನ ತಿರಸ್ಕಾರದ ಮಾತುಗಳನ್ನೂ ಅಂಗ ಭಂಗಿಯನ್ನೂ ಇವಳು ಅವನ ಆದರದ ಚರ್ಯೆಗಳೆಂದೇ ತಿಳಿದು ನಡೆಯತೊಡಗಿದಳು. +ಅವನು ಹೋದಲ್ಲಿ ಹೋದಳು; +ನಿಂತಲ್ಲಿ ನಿಂತಳು; +ಕುಳಿತಲ್ಲಿ ಅವನ ಪಕ್ಕದಲ್ಲಿಯೆ ಮೈ ಮುಟ್ಟುವಂತೆ ಕುಳಿತಳು. +ಅವನು ತುಸುದೂರ ಸರಿದರೂ ಇವಳೂ ಸರಿದಳು ಹತ್ತಿರಕ್ಕೆ! +ಕಡೆಗೆ, ಮುಕುಂದ ‘ಬೆಪ್ಪು ಹುಡುಗಿ’ ಎಂದುಕೊಂಡು ಅವಳನ್ನು ಸಹಿಸಿಯೆ ಸೋಲಬೇಕಾಯಿತು. +ಆ ದಿನ ರಾತ್ರಿ ಚಿನ್ನಮ್ಮ ಹಟತೊಟ್ಟು ತನ್ನ ಅಜ್ಜಿಗೂ ಕಾಗಿನಹಳ್ಳಿ ಅಮ್ಮಗೂ ನಡುವೆ ಮುಕುಂದನ ಒತ್ತಿನಲ್ಲಿಯೆ ಮಲಗಿದಳು. +ಬೆಳಗಾದೊಡನೆಯೆ ತನಗಿಂತಲೂ ಮೊದಲೆ ಎದ್ದು ಹೋಗಿದ್ದ ಮುಕುಂದನನ್ನು ಅರಸಿ ಅಳತೊಡಗಿದ್ದಳು. +ಮುಕುಂದ ತನ್ನ ಅಮ್ಮನೊಡನೆ ಕೋಣೂರಿಗೆ ಹೊರಟು ನಿಂತಾಗಲಂತೂ ‘ನಾನೂ ಬತ್ತೀನಿ’ ಎಂದು ಬಿಕ್ಕಿ ಬಿಕ್ಕಿ ಅತ್ತು ರಂಪಮಾಡಿದ್ದಳು. +ಅವಳನ್ನು ಸಮಾಧಾನ ಮಾಡಬೇಕಾದರೆ ಅಜ್ಜಿಗೆ ಹರ್ಮಾಗಾಲವಾಗಿತ್ತು. +‘ನಾಳೆ ನಿನ್ನ ಅಪ್ಪಯ್ಯನ್ನ ಕೇಳಿ, ನಾನೂ ನೀನೂ ಮುಕುಂದ ಬಾವನ ಮನೆಗೆ ಹೋಗಾನ…. +ನಿನ್ನ ಅಪ್ಪಯ್ಯನ ಕೇಳದ ನೀ ಹೋದ್ರೆ, ನಿನ್ನ ಚಮಡ ಸುಲದು ಬಿಡ್ತಾನೆ’ ಎಂದೆಲ್ಲಾ ಹೇಳ, ಹೆದರಿಸಿ, ಆಸೆ ತೋರಿಸಿ ಮೊಮ್ಮಗಳನ್ನು ಸುಮ್ಮನಿರಿಸಿದ್ದಳು. +ಮುಕುಂದ ಬಂದು ಹೋದಮೇಲೆ ಚಿನ್ನಮ್ಮ ದಿನವೂ ಅಜ್ಜಿಯನ್ನು ಕೇಳತೊಡಗಿದಳು, ‘ಯಾವತ್ತು ಹೋಗಾದು?’ ‘ಯಾವತ್ತು ಹೋಗಾದು?’ ಎಂದು. +ಮೊದಮೊದಲು ಅಜ್ಜಿ ‘ನಾಳೆ ಹೋಗಾನ’ ‘ಇನ್ನೊಂದೆರಡು ದಿನದಲ್ಲಿ ಹೋಗಾನ’ ಎಂದೆಲ್ಲ ನೆವ ಹೇಳಿ ದಿನ ತಳ್ಳಿದಳು. +ಕಡೆಗೊಂದು ದಿನ ತಾಳ್ಮೆ ತಪ್ಪಿ ‘ಏ ಸುಮ್ಮನಿರೆ! +ಬಾಳ ದಿನ ಬಿಟ್ಟಿದ್ದೋರು ಗಂಡನ ಮನೆಗೆ ಹೋಗಾಕೆ ಗ್ವಾಗರೆಯೋ ಹಾಂಗೆ ಮಾಡ್ತೀಯಲ್ಲ! +ನಿನ್ನೇನು ಅವಂಗೆ ಮದೇ ಮಾಡಿ ಕೊಟ್ಟಾರಾ?’ ಎಂದು ಸಿಡುಕಿದಳು. +ಹುಡುಗಿಗೆ ಅಜ್ಜಿಯ ಮಾತಿನ ಅರ್ಥವಾಗದಿದ್ದರೂ ಏನೋ ಭಾಸವಾದ ಹಾಗಾಗಿ, ಅಜ್ಜಿಗೆ ಸಿಟ್ಟು ಬಂದಿದೆ ಎಂದು ಸುಮ್ಮನಾಗಿದ್ದಳು. +ಒಂದೆರಡು ದಿನದ ಮೇಲೆ ಅಜ್ಜಿ ಊಟಮಾಡಿ, ಜಗಲಿಯ ಕೆಸರ್ಹಲಗೆಯ ಮೇಲೆ ಎಲೆಯಡಿಕೆ ಬುಟ್ಟಿ ಇಟ್ಟುಕೊಂಡು, ಅಡಕ್ಕತ್ತರಿಯಿಂದ ಅಡಕೆ ಚೂರು ಮಾಡುತ್ತಿದ್ದಾಗ, ಚಿನ್ನಿ ಪಕ್ಕದಲ್ಲಿ ಕೂತು ಬುಟ್ಟಿಯಿಂದ ಸುಣ್ಣದ ಡಬ್ಬಿಯನ್ನು ತೆಗೆದು ಎಲೆಗೆ ಸುಣ್ಣ  ಹಚ್ಚಲು ಶುರುಮಾಡುತ್ತಿದ್ದಳು. +‘ಅಯ್ಯಯ್ಯೋ ಸುಣ್ಣ ಸುಡ್ತದೆ ಕಣೇ! +ಸುಮ್ಮನಿರಬಾರ್ದೇನೆ?’ ಎಂದು ಅದನ್ನು ಕಸಿದಿಟ್ಟು ‘ನಿನ್ನ ಉಪಟಳ ಹೆಚ್ಚಾಯ್ತು’ ಎಂದಳು. +ಚಿನ್ನಮ್ಮ ಸ್ವಲ್ಪ ಹೊತ್ತು ಸುಮ್ಮನೆ ಕೂತಳು. +ಏನನ್ನೊ ದೀರ್ಘವಾಗಿ ಆಲೋಚಿಸುವವರಂತೆ ಮತ್ತೆ ಕರೆದಳು. + “ಅಜ್ಜೀ. ” + “ಏಣೇ” ಎಲೆಅಡಿಕೆ ಜಗಿಯುತ್ತಿದ್ದ ಅಜ್ಜಿ ಕೇಳಿದಳು. + “ಮತ್ತೇ…ಮತ್ತೇ…. ಮತ್ತೇ…. ” + “ಎಂಥದೇ ಮತ್ತೇ ಮತ್ತೇ ಮತ್ತೇ? +“ಯಾವಾಗ ಮದೇ ಮಾಡಿ ಕೊಡ್ತೀಯ, ಅಜ್ಜಿ?” +“ಯಾರಿಗೇ ಮದೇ ಮಾಡಾದು?” +“ಮತ್ತೆ ಮನ್ನೆ ನೀನೆ ಹೇಳ್ದೇ!” +“ಏನು ಹೇಳಿದ್ನೇ? ” +“ಮತ್ತೆ…. ನನ್ನ…. ನನ್ನ ಮದೇ ಮಾಡಿ ಕೊಡ್ತೀನಿ ಅಂದೇ, ಅವರ ಮನೀಗೆ ಹೋಗಾಕೆ?” +“ಥೂ ನಿನ್ನ! +ಹಾಂಗೆಲ್ಲಾ ಹೇಳಬ್ಯಾಡೇ! +ಅಯ್ಯೋ ನಿನ್ನ ಬಿರುಗು ಮಗಳೇ….! +ಅವರ ಮನೀಗೆ ಹೋಗಾಕೆ ನಿನ್ನ ಮದೇ ಬೇರೆ ಆಗಬೇಕಾ?”ಮುದುಕಿ ಕಿಸಕ್ಕನೆ ನಕ್ಕ ಹೊಡೆತಕ್ಕೆ ಎಲೆಯಡಿಕೆಯ ಕೆಂಪು ಉಗುಳು ಹಾಕಿ ಚಿನ್ನಮ್ಮನ ಮುಖಕ್ಕೂ ಸಿಡಿಯಿತು. +ಅಜ್ಜಿ ಒಡನೆಯ ಅಮಂಗಳ ಪರಿಹಾರಾರ್ಥವಾಗಿ ‘ಒಳ್ತು!ಒಳ್ತು! +ಎಂದು ತನ್ನ ಸೀರೆ ಸೆರಗಿನಿಂದ ಮೊಮ್ಮಗಳ ಮೋರೆಯನ್ನು ಒರಸಿ ಮುದ್ದಿಸಿದ್ದಳು. +ಅಂತೂ ಕೊನೆಗೆ ಒಂದು ದಿನ ಅಪರಾಹ್ನ ಅಜ್ಜಿ ಮೊಮ್ಮಗಳ ನೆತ್ತಿಗೆ ಹರಳೆಣ್ಣೆ ಹಾಕಿ, ತಲೆಬಾಚಿ, ಮೋಟು ಜಡೆ ಹಾಕಿ, ಗೊರಟೆ ಹೂ ಕಟ್ಟಿ ಮುಡಿಸಿ, ಇದ್ದುದರಲ್ಲಿ ಒಂದು ಅಚ್ಚುಕಟ್ಟಿನ ಪರಿಕಾರ ಹಾಕಿ, ನೆಂಟರ ಮನೆಗೆ ಅವಳನ್ನು ಕರೆದುಕೊಂಡು ಹೋಗಲು ಸಿದ್ಧಮಾಡಿದಳು. +ಚಿನ್ನಮ್ಮನ ಹೃದಯ ಹಿಗ್ಗನ್ನು ಅಳೆಯುವವರಾರು? +ಅಜ್ಜಿ ಬಿಸಿಲಿಳಿದ ಮೇಳೆ ಹೊರಡೋಣ ಎಂದಿದ್ದಳು. +ಚಿನ್ನಮ್ಮ ಗಳಿಗೆಗಳಿಗೆಗೂ ಅಜ್ಜಿಯ ಬಳಿಗೋಡಿ ‘ಬಿಸಿಲಿಳಿದಾಯ್ತಅಜ್ಜೀ!’ ಎನ್ನುತ್ತಿದ್ದಳು. +ಮುದುಕಿ ಹೊರಗೆ ನೋಡಿ “ಏ, ಇನ್ನೂ ಇಳಿಲಿಲ್ಲ ಕಣೇ? +ಮಾಡಿನ ನೆಳ್ಳು  ತುಳಸೀಕಟ್ಟೆ ದಾಟಿ, ತೆಣೇ ಹತ್ರ ಬಂದ ಮ್ಯಾಲೆ ಹೊರಡಾನೆ” ಎಂದಿದ್ದಳು. +ಚಿನ್ನಮ್ಮ ತೆಣೆಯ ಮೇಲೆ ಕೂತುಕೊಂಡು ಮಾಡಿನ ನೆರಳು ತುಳಸಿಯ ಕಟ್ಟೆಯನ್ನು ದಾಟಿ ತೆಣೆಯ ಹತ್ತಿರಕ್ಕೆ ಬರುವುದನ್ನೇ ಕಾಯುತ್ತಾ ಕುಳಿತಳು” ಏನು ನಿಧಾನ ಈ ನೆರಳಿನ ಚಲನೆ! +ಸ್ವಲ್ಪ ಬೇಗ ಬೇಗ ಬರಬಾರದೇ? +ನೆರಳನ್ನು ಸ್ವಲ್ಪ ಎಳೆದು ತೆಣೆ ಹತ್ತಿರಕ್ಕೆ ಸರಿಸೋಣವೇ ಎನ್ನಿಸಿತು ಅವಳಿಗೆ. +ಆದರೆ ಅದನ್ನು ಎಲ್ಲಿಂದ ಹಿಡಿದು ಎಳೆಯಬೇಕೋ ಗೊತ್ತಾಗಲಿಲ್ಲ ಅವಳಿಗೆ. +ಕಡೆಗೆ ಕಾದು ಕಾದು ಸಾಕಾಗಿ, ಓಡಿ ಬಂದು “ಅಜ್ಜೀ, ಅಜ್ಜೀ, ನೆಳ್ಳು ತೆಣೇನೆಲ್ಲಾ ದಾಟಿ ಬಂದು ಬಿಡ್ತು!” ಎಂದು ಕೂಗಿಕೊಂಡಳು. +ಅಜ್ಜಿ ನಗುತ್ತಾ “ಹಂಗಾರೆ ಬಂದುಬಿಟ್ಟೆ. +ಹೊಗಾನ ನಡಿ” ಎಂದಳು. +ನರಳು ತುಳಸೀಕಟ್ಟೆಯನ್ನೇನೋ ದಾಟಿತ್ತು. +ಆದರೆ ತೆಣೆಯ ಹತ್ತಿರಕ್ಕೆ ಬರಬೇಕಾದರೆ ಇನ್ನೂ ಅರ್ಧಗಂಟೆಯಾದರೂ ಬೇಕಾಗಿತ್ತು. +ಅದನ್ನು ನೋಡಿ ಹೊರಡಲನುವಾಗಿ ಬಂದ ಅಜ್ಜಿ “ಎಲ್ಲೇ? +ಸುಳ್ಳೇ ಹೇಳ್ತೀಯಲ್ಲಾ! +ತೆಣೆಹತ್ರಾನೆ ಬಂದಿಲ್ಲ ಇನ್ನೂ!” ಎಂದಳು. +“ಆವಾಗ ಬಂದಿತ್ತು, ಅಜ್ಜೀ! +ಇವಾಗ ಮತ್ತೆ ಹಿಂದೆ ಬಂದದೆ ಕಳ್ಳ ನೆಳ್ಳು!” ಎಂದಳು ಮೊಮ್ಮಗಳು. +ಅಂತೂ, ಕೊನೆಗೂ, ನೆರಳು ತೆಣೆಯ ಹತ್ತಿರಕ್ಕೆ ಬರುವ ಖಗೋಲ ಭೂಗೋಲದ ಮಹದ್ ಘಟನೆಗೆ ಕಾಯದೆ, ಅಜ್ಜಿ ಮೊಮ್ಮಗಳಿಬ್ಬರೂ ಹೂವಳ್ಳಿಯಿಂದ ಕೋಣೂರಿಗೆ ಹೋಗುವ ಕಾಲುಹಾದಿ ಹಿಡಿದಿದ್ದರು. +“ಅಜ್ಜೀ, ನೀನೇನು ಮೆಲ್ಲಗೆ ನಡೀತೀಯಾ? …. ಬಿರಬಿರನೆ ಬಾ!” +“ಯಾಕೇ ಹಂಗ ಓಡ್ತೀಯೇ? +ಏನು ಅವಸರಾನೆ ನಿಂಗೆ?” +“ಕತ್ತಲಾಗಿಬಿಟ್ಟರೆ?” +“ಕತ್ತಲೂ ಆಗಾದಿಲ್ಲ ಗುತ್ತಲೂ ಆಗಾದಿಲ್ಲ! +ಮೆಲ್ಲಗೆ ನಡಿ! +ಎಡವಿ ಗಿಡವಿ ಬಿದ್ದೀಯ. +ಹಾದಿ ನೋಡ್ಕಂಡ ನಡಿ. +ಮುಳ್‌ಗಿಳ್ ಮುಟ್ಟೀಯ?” +“ನಾ ಮುಂದೆ ಹೋಗ್ತಾ ಇರ್ತೀನಿ, ನೀ ಮೆಲ್ಲಗೆ ಬಾ!” +“ಬ್ಯಾಡಾ ಕಣೇ, ದಾರೀ ತಪ್ಪಿ ಕಾಡುಹಾದಿ ಹಿಡ್ದೀಯಾ?” +“ಏನಿಲ್ಲ: ನಂಗೊತ್ತು ಹಾದಿ!” +“ನಿಂಗೆ ಹೆಂಗೆ ಗೊತ್ತೇ ಆ ಹಾದಿ? +ನಿಲ್ತೀಯೊ ಇಲ್ಲೊ?” +“ನಾನು ಅವ್ವನ ಜೊತೇಲಿ ಹೋಗಿದ್ದೆ.” +“ಸುಳ್ಳು ಬುರುಕಿ! +ನಿನ್ನ ಅವ್ವಗೆ ಹಾಂಗೆಲ್ಲ ನೆಂಟರ ಮನೆಗೆ ಹೋಗೋ ಪುಣ್ಯ ಎಲ್ಲಿತ್ತೇ?” ಎಂದಳು ಮುದುಕಿ ನಿಟ್ಟುಸಿರು ಬಿಟ್ಟು “ತವರು ಮನೆಗೆ ಹೋಗಾಕೇ ನಿನ್ನ ಅಪ್ಪ ಬಿಡ್ತಿರಲಿಲ್ಲ. +ಇನ್ನು ನೆಂಟರ ಮನೆಗೆ ಹೋಗಿದ್ಲಂತೆ, ಇವಳು, ಅವ್ವನ ಜೊತೇಲಿ?”ಅಜ್ಜಿಯ ಅಳುದನಿಗೇಳಿ ಮೊಮ್ಮಗಳು ನಿಂತು ಹಿಂತಿರುಗಿ ನೋಡುತ್ತಾಳೆ. + ಅಜ್ಜಿಯ ಕಣ್ಣೀರು ಅವಳ ಸುಕ್ಕುಗೆನ್ನೆಗಳ ಮೇಲೆ ಹರಿಯುತ್ತಿದೆ! +ಚಿನ್ನಮ್ಮ ಓಡಿಹೋಗಿ ಅಜ್ಜಿಯ ಸೊಂಟ ತಬ್ಬಿಕೊಂಡು  “ನಾನು ಮುಂದೆ ಹೋಗಾದಿಲ್ಲ, ಅಜ್ಜಿ, ಅಳಬ್ಯಾಡ” ಎಂದು ತಾನೂ ಬಿಕ್ಕತೊಡಗಿದಳು. +“ಅಳಬ್ಯಾಡ, ನನ್ನ ಕಂದ. +ನೀನ್ಯಾಕೆ ಅಳ್ತೀಯ? +ಬಾಳದೆ ಹೋದ ನಿನ್ನ ಅವ್ವನ ನೆನಪಾಯ್ತು. +ಅದ್ಕೇ ಕಣ್ಣೀರು ಬಂತು.”ಮೊಮ್ಮಗಳು ಅಜ್ಜಿಯ ಪಕ್ಕದಲ್ಲಿಯೆ ಮೆಲ್ಲಗೆ ನಡೆದಳು. +ಸ್ವಲ್ಪ ದೂರ ಕಾಡಿನ ನಡುವೆ ಕುರುಚಲು ಹಳುವಿನ ಕಾಲುದಾರಿಯಲ್ಲಿ  ಹೋಗಿದ್ದರು. +ಒಂಡೆದೆ ಕವಲಾಗಿದ್ದಲ್ಲಿ ಮುದುಕಿ ಬಲಗಡೆಯ ಸೀಳಿನಲ್ಲಿ ನಡೆಯತೊಡಗಿದ್ದಳು. +ಚಿನ್ನಿ “ಅದಲ್ಲಾ, ಅಜ್ಜಿ, ಇಲ್ಲಿ ಬಾ” ಎಂದು ಎಡಗಡೆ ಸೀಳನ್ನು ತೋರಿಸಿದಳು. +ಮುದುಕಿ ಎಚ್ಚತ್ತವಳಂತೆ ನಿಂತು, ನೋಡಿ, ಮೊಮ್ಮಗಳನ್ನು ಮೆಚ್ಚುತ್ತಾ “ಹೌದೆ ಸೈ, ಏನೋ ಯೋಚ್ನೆ ಮಾಡ್ತಿದ್ದೆ ಕಣೇ. +ಮರವು ಬಂದುಬಿಡ್ತು. +ಅದೂ-ಹಾಡ್ಯಕ್ಕೆ ಹೋಗೋ ದಾರಿ. +ದನ ಕಾಯೋರು, ಸೌದೆ ತರೋರು, ದರಗು ಹೊರೋರು ಹೋಗೀ ಬಂದು ಆಗ್ಯದೆ” ಎಂದು ತಿರುಗಿ ಬಂದು ಮೊಮ್ಮಗಳನ್ನು ಕೂಡಿಕೊಂಡಳು. +ಎಂದೂ ಅಲ್ಲಿ ತಿರುಗಾಡದಿದ್ದ ಆ ಚಿಕ್ಕ ಹುಡುಗಿಗೆ ದಾರಿಯ ಸರಿ ತಪ್ಪು ಹೇಗೆ ಗೊತ್ತಾಯಿತು ಎಂಬ ಆಲೋಚನೆಯಾಗಲಿ ಪ್ರಶ್ನೆಯಾಗಲಿ ಮುದುಕಿಯ ತಲೆಗೆ ಹೊಳೆಯಲೆ ಇಲ್ಲ. +ಹೊತ್ತು ಆಗಲೆ ಪಡುವಣದ ಕಾಡುಮಲೆಗಳ ನೆತ್ತಿಯಾಚೆ ಇಳಿದಿತ್ತು. +ಬೈಗುಗೆಂಪು ಮುಂಗಷ್ಟಿಗೆ ತಿರುಗುತ್ತಿತ್ತು. +ಗೂಡಿಗೆ ಗೊತ್ತಿಗೆ ಹಾರಿ ಹೋಗುವ ಹಕ್ಕಿಗಳ ಹಾರಿಂಚರ ಅಡಗತೊಡಗಿತ್ತು. +ಗುರಗಿ ಹಳುವಿನಲ್ಲಿ ಜೀರುಂಡೆಗಳ ಜೀರು ಜೀರು ಜೀರೆಂಬ ಕರ್ಕಶ ಧ್ವನಿಗೆ ಪೀಠಿಕೆಯಾಗಿತ್ತು. +ಪಶ್ಚಿಮದ ಆಕಾಶದಲ್ಲಿ ಬೆಳ್ಳಿಗೆ ಅಗಲೆ ಹೊಳಪು ಬಂದಿತ್ತು. +ಕೋಣೂರಿನ ಮನೆಗೆ ಸಮೀಪದಲ್ಲಿರುವ ಮಕ್ಕಿಗದ್ದೆಯ ಅಂಚಿನದಾರಿಗೆ ಇವರು ಇಳಿಯುತ್ತಿದ್ದಾಗ ಒಡ್ಡಿಯ ಕೋಳಿಗಳ ಕೂಗೂ ನಾಯಿಗಳ ಬೊಗಳೂ ಮಲೆಯ ಹಳ್ಳಿಯ ಒಂಟೆ ಮನೆಗೆ ಸಹಜವಾದ ಇತರ ಮಾನವ ಮತ್ತು ಪ್ರಾಣಿಗಳು ಸದ್ದೂ ಕೇಳಿಸಿತು. +ಆನಂತ ಕುತೂಹಲಗಳಿಂದ ಹಿಗ್ಗಿದ ಚಿನ್ನಮ್ಮ ತನಗೆ ತಾನೆ ಎಂಬಂತೆ ಗಟ್ಟಿಯಾಗಿಯೆ “ಹೋ, ಬಂತಲ್ಲಾ ನಮ್ಮನೆ”! ಎಂದಳು. +“ನಿನ್ನ ಮನೆಯೇನೇ? +ನಿನ್ನ ಮುಕುಂದ ಬಾವನ ಮನೆ ಕಣೇ!” ಎಂದು ತಿದ್ದಿದಳು ಅಜ್ಜಿ. +ತಪ್ಪೊಪ್ಪಿಕೊಂಡು ತಿದ್ದಿಕೊಳ್ಳುವಂತೆ ಚಿನ್ನಮ್ಮ “ಹೌದು, ಇದೇ ಮುಕುಂದ ಬಾವನ ಮನೆ!” ಎಂದಳು. + ಹಿಂದೆ ಎಂದೋ ನೋಡಿದ್ದನ್ನು ಬಹುಕಾಲದ ಮೇಲೆ ಮತ್ತೆ ಗುರುತಿಸುವವಳಂತೆ! ”. +ಅಂದಿನಿಂದ ತಿಂಗಳು ಎರಡು ತಿಂಗಳಿಗಾದರೂ ಒಮ್ಮೆ ಚಿನ್ನಮ್ಮ ಅಜ್ಜಿಯನ್ನು ಕಾಡಿಸಿ ಕೋಣೂರಿಗೆ ಹೋಗಿಬರತೊಡಗಿದಳು. +ಮುಕುಂದಯ್ಯನೂ ತನ್ನ ತಾಯೊಯೊಡನಾಗಲಿ, ಅತ್ತಿಗೆಯೊಡನಾಗಲಿ, ಅಪೂರ್ವವಾಗಿ ಅಣ್ಣನೊಡಲಾಗಲಿ, ಆಗಾಗ ಹೂವಳ್ಳಿ ಹೋಗಿ ಒಂದೆರಡು ದಿನ ಇದ್ದು ಬರುತ್ತಿದ್ದನು. +ಚಿನ್ನಮ್ಮ ಒಂದೊಂದು ಸಲವೂ ಕೋಣೂರಿಗೆ ಬಂದಾಗಲೆಲ್ಲಾ  ಮುಕುಂದ ಬಾವನೊಡನೆ ಏನಾದರೂ ಹೊಸ ಅನುಭವದಲ್ಲಿ ಅಥವಾ ಹೊಸ ಸಾಹಸದಲ್ಲಿ ಬಾಗಿಯಾಗುತ್ತಿದ್ದಳು. +ಅವಳು ಆ ಮನೆಗೂ ಅದರ ಸುತ್ತಣ ಸ್ಥಾನಗಳಿಗೂ, ಮೊದಲನೆಯ ಸಾರಿ ಬಂದಾಗಲೆ, ಪರಿಚಿತಳೆಂಬಂತೆ ಹೊಂದಿಕೊಂಡು ಸಲೀಸಾಗಿ ತಿರುಗಾಡುತ್ತಿದ್ದುದನ್ನು ಕಂಡು ಹಿರಿಯರೂ ಆಶ್ಚರ್ಯಪಟ್ಟಿದ್ದರು. +‘ಚುರುಕು ಹುಡುಗಿ’ ‘ಚಾಲೂಕಿನ ಹುಡುಗಿ’ ‘ಧೈರ್ಯಗಾರ್ತಿ’ ಎಂದೆಲ್ಲ ಪ್ರಶಂಸಿಸಿದ್ದರು. +ಮೊದಮೊದಲು ಮುಕುಂದಯ್ಯ ಐಗಳ ಮಠದಲ್ಲಿ ತನ್ನೊಡನೆ ಕಲಿಯುತ್ತಿದ್ದ ಇತರ ಗಂಡು ಮಕ್ಕಳ ಮುಂದೆ ಚಿನ್ನಿಯನ್ನು ಆಟಕ್ಕೆ ಸೇರಿಸಿ ಕೊಳ್ಳಲು ಹಿಂಜರಿಯುತ್ತಿದ್ದನು. +ಆದರೆ ಚಿನ್ನಿಯೆ ಮುಂದುವರಿದು ಅವನ ಲಜ್ಜಾ ದಾಕ್ಷಿಣ್ಯಗಳನ್ನೆಲ್ಲ ತೊಡೆದುಹಾಕಿದ್ದಳು. +ಬರಬರುತ್ತಾ ಅವಳು ಹುಡುಗಿ ಎಂಬ ಭೇದಭಾವವನ್ನೆ ಮರೆತು ಹೋದಂತೆ ವರ್ತಿಸಿ ದೊಡ್ಡವರಿಂದ ಬಯ್ಯಿಸಿಕೊಂಡಿದ್ದನು. +ಒಮ್ಮೆ ಮನೆಗೆ ಸಮೀಪದಲ್ಲಿ ಹರಿಯುತ್ತಿದ್ದ ಕೋಡ್ಲು ಹಳ್ಳದ ಗುಂಡಿಯಲ್ಲಿ, ಒಂದು ಹಲಗೆ ತೆಪ್ಪ ಮಾಡಿ, ಚಿನ್ನಿಯನ್ನೂ ಹತ್ತುವಂತೆ ಧೈರ್ಯ ಹೇಳಿ ಪ್ರೇರೇಪಿಸಿದ್ದನು. +ಆದರೆ ಗಳುವಿನ ಹುಟ್ಟಿನಿಂದ ಹಲಗೆಯನ್ನು ದಡದಿಂದ ತಳ್ಳಿ ತುಸು ದೂರ ಹೋಗುವುದರೊಳಗಾಗಿ ಹಲಗೆ ತಲೆಕೆಳಗಾಗಿತ್ತು. +ಅಲ್ಲಿಯೆ ದನ ಬಿಟ್ಟುಕೊಂಡಿದ್ದ ಬೈರ ಓಡಿಬಂದು ನೀರಿಗಿಳಿದು ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದನು. +ಆದರೆ ಚಿನ್ನಮ್ಮನ ಪರಿಕಾರವೆಲ್ಲ ಒದ್ದೆಯ ಮುದ್ದೆಯಾಗಿ, ಮೂಗಿಗೂ ನೀರು ನುಗ್ಗಿತ್ತು. +ಈಜಲು ಬರುತ್ತಿದ್ದ ಮುಕುಂದ ಮತ್ತು ಅವನ ಜೊತೆಗಾರರು ತಮ್ಮ ಬಟ್ಟೆಗಳನ್ನೆಲ್ಲ ದಡದಮೇಲಿಟ್ಟು ಕೌಪೀನ ಮಾತ್ರ ಧಾರಿಗಳಾಗಿದ್ದುದರಿಂದ ಬಿಸಿಲಿನಲ್ಲಿ  ಮೈ ಆರಿಸಿಕೊಂಡು ಬಟ್ಟೆ ಹಾಕಿಕೊಂಡಿದ್ದರು. +ಅವರು ಅಂತಹ ಅನಾಹುತದಲ್ಲಿ ಭಾಗಿಯಾಗಿದ್ದರು ಎಂದು ಯಾರಿಗೂ ಗೊತ್ತಾಗುವಂತಿರಲಿಲ್ಲ. +ಆದರೆ ಚಿನ್ನಮ್ಮನ ಅವಸ್ಥೆ ದಾರುಣವಾಗಿತ್ತು. +ಪರಿಕಾರ ಬಿಚ್ಚಿ ಬಿಸಿಲಿಗೆ ಹರಡಿದರೆ ಬತ್ತಲೆ ಇರುವುದು ಹೇಗೆ? +ಅವರೆಲ್ಲರೂ ಇರುವಾಗ? +ಬಿಚ್ಚಿ ಹರಡಿದ್ದರೆ, ಚಳಿಗೆ ನಡ ನಡ ನಡುಗಬೇಕಿತ್ತು. +ಇನ್ನು ಶೀತ ಜ್ವರ ಬೇರೆ ಬಂದು ದೊಡ್ಡ ಪುಕಾರಾಗುತ್ತಿತ್ತು. +ಮನೆಗೆ ಓಡಿ ಹೋಗಿ ಬೇರೆ ಪರಿಕಾರ ತರಬಹುದಿತ್ತು. +ಆದರೆ ಅವಿವೇಕ ಎಲ್ಲರಿಗೂ ಗೊತ್ತಾಗಿ ತಕ್ಕ ಶಾಸ್ತಿಯಾಗದೆ ಇರುತ್ತಿರಲಿಲ್ಲ. +ಕಡೆಗೆ ಮುಕುಂದನೇ ಉಪಾಯ ಕಂಡುಹಿಡಿದಿದ್ದನು. +ಎಲ್ಲಾ ಹುಡುಗರನ್ನೂ ಬೇರೆ ಕಡೆಗೆ ಕಳಿಸಿ, ಬೈರನಿಗೂ ದೂರ ಹಕ್ಕಲಿಗೆ ದನ ಹೊಡೆದುಕೊಂಡು ಹೋಗಲಿ ಹೇಳಿ, ಬಿಸಿಲು ಚೆನ್ನಾಗಿ ಕಾಯುತ್ತಿದ್ದ ಒಂದು ದೊಡ್ಡ ಪೊದೆಯ ಹಿಂದಣ ಬಯಲು ಸ್ಥಳಕ್ಕೆ ಅವಳನ್ನು ಕರೆದೊಯ್ದು, ತಾನು ಅಲ್ಲಿಯೆ ಆಚೆ, ಚಿನ್ನಮ್ಮನ ಮಾನಕ್ಕೆ ಅಪಚಾರವಾಗದಷ್ಟು ದೂರದಲ್ಲಿ, ಮರೆಯಲ್ಲಿ ಇರುವುದಾಗಿಯೂ, ಚಿನ್ನಮ್ಮ ಏಕಾಂತದಲ್ಲಿ ಪರಿಕಾರ ಬಿಚ್ಚಿ ಹಿಂಡಿ ಹರಡಿ, ಚಳಿಯಾಗದಂತೆಬ ಸಿಲು ಕಾಯಿಸುತ್ತಿದ್ದು, ಒಣಗಿದ ಮೇಲೆ ಅದನ್ನು ಹಾಕಿಕೊಂಡು ತನ್ನನ್ನು ಕರೆಯುವಂತೆಯೂ ಸಲಹೆಕೊಟ್ಟು ಸ್ವಲ್ಪ ದೂರ ಹೋಗಿ, ಒಂದು ಅರಮರಲು ಮಟ್ಟಿನ ಹಿಂದೆ ಕುಳಿತುಕೊಂಡನು. +ಚಿನ್ನಮ್ಮ ಬಾವ ಹೇಳಿದಂತೆ ಮಾಡ, ಬಿಸಿಲು ಕಾಯಿಸುತ್ತಾ ಕುಳಿತಿದ್ದಳು. +ಮಧ್ಯಾಹ್ನದ ಬಿಸಿಲಲ್ಲಿ ಕಾಡೆಲ್ಲ ನಿಃಶಬ್ದವಾಗಿತ್ತು. +ಒಂದೆರಡು ಪಿಕಳಾರಗಳು ಇಲಾತಿ ಸೀಗೆಯ ಪೊದೆಯಲ್ಲಿ ಆಗಾಗ ಉಲಿಯುತ್ತಿದ್ದುದೂ ನಿಃಶಬ್ದತೆಯನ್ನು ಹೆಚ್ಚಿಸುವಂತಿತ್ತು. +ಗಾಳಿಯ ಸುಳಿವೂ ಅಡಗಿದಂತಿತ್ತು. +ಅದು ಬರಿಯ ನಿಃಶಬ್ದತೆ ಆಗಿರದೆ ಅರಣ್ಯದ ಉದ್ದೇಶಪೂರ್ವಕವಾದ ಮೌನವೊ ಎಂಬಂತಿತ್ತು. +ತಾನು ಬತ್ತಲೆ ಕುಳಿತಿದ್ದುದನ್ನು ಕಂಡು ಯಾರೊ ಕಿಸಕ್ಕನೆ ಉಕ್ಕಿಬಂದ ನಗುವನ್ನು ತಡೆ ಹಿಡಿದು ಕೊಂಡಿದ್ದಂತೆ ತೋರಿತು ಚಿನ್ನಮ್ಮಗೆ. +ಆ ಮೌನಕ್ಕೆ ಕಿವಿಕೊಟ್ಟಳು. +ಕಾಡೆಲ್ಲ ಬಿಮ್ಮ್‌ ಎನ್ನುತ್ತಿತ್ತು. +ಏನೋ ಹೆದರಿಕೆಯಾಗತೊಡಗಿತು. +ಮುಕುಂದಬಾವ ಎಲ್ಲಿಯಾದರೂ ಹೋಗಿಬಿಟ್ಟರೆ! +ಹೋಗಿಯೇ ಬಿಟ್ಟಿದ್ದಾನೆಯೊ ಏನೋ? +ಹೋಗಿಯೇ ಬಿಟ್ಟಿರಬೇಕು! +ಚಿನ್ನಮ್ಮ ಕೂಗಿಕೊಳ್ಳಬೇಕು ಅನ್ನಿಸಿತು. +ಚಿಃ ಅಲ್ಲಿಯೆ ಇದ್ದರೆ? +ಏನೆಂದುಕೊಂಡಾನು? +ಹಾಗೆಯೆ ಎದೆ ಗಟ್ಟಿ ಮಾಡಿಕೊಂಡು ತುಸು ಹೊತ್ತು ಕಳೆದಳು. +ಆದರೆ ತಡೆಯಲಾಗಲಿಲ್ಲ. +ಹೆದರಿಕೆ! +ನೋಡೋಣ ಎಂದು ಮೆಲ್ಲಕೆ ಕರೆದಳು. +“ಬಾವಾ!” +“ಇಲ್ಲೇ ಇದ್ದೀನೇ! +ಬಟ್ಟೆ ಆರ್ತೇನು? +ಹಾಕಿಕೊಂಡೆಯಾ? ” +“ಇಲ್ಲ. ಇದ್ದೀಯೋ ಇಲ್ಲೋ ಅಂತ ಕರೆದೆ.”ಮತ್ತೆ ತುಸು ಹೊತ್ತು ನಿಃಶಬ್ದ, ಮೌನ. +ಪೊದೆಯಲ್ಲಿ ಏನೊ ಸರ ಸರ ತರಗೆಲೆಗಳ ಮೇಲೆ ಹರಿದಂತೆ ಸದ್ದಾಯಿತು. +ಚಿನ್ನಮ್ಮಗೆ ಗಾಬರಿಯಾಯಿತು. +ಎದ್ದು ಓಡಿಬಿಡುವಷ್ಟು ಮನಸ್ಸಾಯಿತು. +ಕುಳಿತಲ್ಲಿಂದಲೆ ಬಗ್ಗಿ ನೋಡಿದಳು. +ಪೊದೆಗಳ ತಳದಲ್ಲಿ ಏನೂ ಕಾಣಿಸಲಿಲ್ಲ. +ಹಾವೇ ಇರಬೇಕು; +ಅಲ್ಲವೇ? ಅಥವಾ ಹುಲಿಗಿಲಿಯೋ? +ಹೊಂಚು ಹಾಕಿ ದನ ಹಿಡಿಯುವುದಂತೆ! +ಆ ಯೋಚನೆ ಬಂದಿತೊ ಇಲ್ಲವೊ ಚಿನ್ನಮ್ಮ ಎದ್ದು ನಿಂತಳು. +ಸುತ್ತಲೂ ಪೊದೆಗಳ ಹಸುರಲ್ಲದೆ ಬೇರೆ ಯಾರೂ ಕಾಣಿಸಲಿಲ್ಲ. +ಅಷ್ಟರಲ್ಲಿ ಓತಿಯೊ ಹಾವುರಾಣಿಯೊ ಗುಡ್ಡದ ಕಪ್ಪೆಯೊ ಅಥವಾ ಯಾವುದಾದರೂ ನೆಲದ ಮೇಲೆ ಓಡಾಡುವ ಹಕ್ಕಿಯೊ ಸರಸರನೆ ಪೊದೆಯಲ್ಲಿ ಓಡಿದಂತಾಯಿತು. +ಚಿನ್ನಮ್ಮ ಸ್ವಲ್ಪ ಗಟ್ಟಿಯಾಗಿಯೆ ‘ಬಾವ!ಬಾವ!’ ಎಂದು ಕೂಗಿ ಕರೆದೇ ಬಿಟ್ಟಳು. +ಮುಕುಂದ ಪರಿಕಾರ ಒಣಗಿ ಅದನ್ನು ಹಾಕಿಕೊಂಡೇ ಕರೆಯುತ್ತಿರಬೇಕೆಂದು ಭಾವಿಸಿ, ತುಸು ದಿಗ್ಗನೆ ಎದ್ದು ಓಡಿಯೆ ಬಂದನು. +ನೋಡುತ್ತಾನೆ, ಚಿನ್ನಿ ಬತ್ತಲೆ ನಿಂತಿದ್ದಾಳೆ! +ಕಡೆಗೆ ಕುಳಿತೂ ಇಲ್ಲ! +ತುಂಬ ಅವಮಾನವಾದಂತಾಗಿ ಮುಖ ತಿರುಗಿಸಿ ನಿಂತು “ಯಾಕೇ ಕರೆದಿದ್ದು, ಪರಿಕಾರ ಒಣಗಾಕೆ ಮುಂಚೆ?” ಎಂದು ಸಿಡುಕಿದನು. +ಚಿನ್ನಿ ಬಿಡಿಬಿಡಿ ಅಕ್ಷರದಲ್ಲಿ ನಿಡುಸ್ವರದಿಂದ ನಾಚುವ ಭಂಗಿಯಲ್ಲಿ ಹೇಳಿದಳು: “ಎಂತದೋ ಸರಸರ ಅನ್ತು, ಮಟ್ಟಿನಲ್ಲಿ. +ನಂಗೆ ಹೆದರಿಕೆ ಆಗ್ತದೆ. +ಅದ್ಕೇ ಕರೆದೆ…. +ನಿಮ್ಮನ್ನ ಬನ್ನಿ ಅಂತಾ ಯಾರು ಹೇಳ್ದೋರು?” ಬಹುವಚನ ಬೇರೆ, ಸಾಲದ್ದಕ್ಕೆ! +ಕೊನೆಯ ಪ್ರಶ್ನೆಗೆ ಮುಕುಂದಯ್ಯ ಸ್ವಲ್ಪ ಕಕ್ಕಾಬಿಕ್ಕಿಯಾಗಿ, ಮತ್ತೆ ತಪ್ಪನ್ನು ತಿದ್ದಿಕೊಳ್ಳುವಂತೆ, ಮೊದಲಿದ್ದ ಜಾಗಕ್ಕೆ ಹೋಗಲು ತಿರುಗಿದನು. +“ಹೋಗಬ್ಯಾಡ, ಇಲ್ಲೇ ಇರು. +ನಾನು ಕೂತುಕೊಂಡೇ ಇರ್ತೀನಿ” ಎಂದು ಚಿನ್ನಮ್ಮ, ತಪ್ಪಿ ನಡೆದು ಹೋದುದನ್ನು ಸರಿಪಡಿಸುವಂತೆ, ಮೊಕಾಲುಗಳನ್ನು ಎದೆಗೆ ಅವುಚಿಕೊಂಡು ಮುದುರಿ ಕೂತಳು. +ಇನ್ನೇನು ಮಾಡಲೂ ದಿಕ್ಕು ತೋಚದೆ ಮುಕುಂದಯ್ಯ ಮುಖ ಅತ್ತಕಡೆ ತಿರುಗಿಸಿಕೊಂಡು ಅಲ್ಲಿಯೆ ಕುಳಿತುಬಿಟ್ಟನು. +ಆದರೆ ಇವರು ಮಾಡಿದ್ದೊಂದೂ ಪ್ರಯೋಜನಕ್ಕೆ ಬರಲಿಲ್ಲ. +ಬೈಗಿನ ಹೊತ್ತು ಕರೆಯುವ ಹಟ್ಟಿಗೆ ದನಕಟ್ಟಲು ಹೋಗಿದ್ದ ಬೈರ ಇವರ ಗುಟ್ಟೆಲ್ಲವನ್ನೂ ಬಹಿರಂಗಪಡಿಸಿಬಿಟ್ಟಿದ್ದ; + ಇನ್ನೂ ಸ್ವಲ್ಪ ಉಪ್ಪುಕಾರ ಹಚ್ಚಿ, ಸಾಹಸದಲ್ಲಿ ತಾನು ವಹಿಸಿದ್ದ ಪಾತ್ರಕ್ಕೆ ಹೆಚ್ಚು ಪ್ರಾಶಸ್ತ್ಯ ದೊರೆಯುವಂತೆ: ತತ್ಫಲವಾಗಿ ಆವೊತ್ತಿನ ಬತ್ತಡ ಪಡಿಯಲ್ಲಿ ಮತ್ತು ಎಲೆಅಡಿಕೆ ಹೊಗೆಸೊಪ್ಪಿನ ಪರಿಮಾಣದಲ್ಲಿ ತಕ್ಕಮಟ್ಟಿನ ವೃದ್ಧಿ ತಲೆದೋರಿತ್ತು. +ಅವನ ಪಾಲೇನೊ ಅವನಿಗೆ  ದಕ್ಕಿತ್ತು: +ಇವರಿಗೆ ಮಾತ್ರ ತಮ್ಮ ಪಾಲಿಂದ ತಪ್ಪಿಸಿಕೊಳ್ಳಲಾಗಿರಲಿಲ್ಲ! +ಮುಕುಂದಯ್ಯ ದೊಡ್ಡವನಾದಂತೆಲ್ಲಾ ಇವರ ಸಾಹಸದ ಸ್ವರೂಪಗಳೂ ಬದಲಾಯಿಸಿದ್ದವು. +ಹಕ್ಕಿಗೂಡು ಕಂಡುಹಿಡಿಯುವುದು, ಜೇನು ಕೀಳುವುದು, ಗಾಳ ಹಾಕಿ ಮೀನು ಹಿಡಿಯುವುದು, ಹೊಂಡ ತೊಣಕುವುದು, ಸೆಬೆ ಒಡ್ಡಿ ಕಾಡುಕೋಳಿ, ಚಿಟ್ಟುಕೋಳ ಹಿಡಿಯುವುದು ಇತ್ಯಾದಿ ಇತ್ಯಾದಿ. +ಒಮ್ಮೆ ಕೆಲವು ವರುಷಗಳ ಅನಂತರ ಇದ್ದಕ್ಕಿದ್ದಂತೆ ಒಂದು ದಿನ ಅಜ್ಜಿ ಚಿನ್ನಮ್ಮನಿಗೆ ಪರಿಕಾರ ಬಿಡಿಸಿ ಕಿರಿಗೆ ಉಡಿಸಿದ್ದಳು. +ಚಿನ್ನಮ್ಮಗೆ ಏನೊ ಒಂದು ತರಹದ ಕಿನಸಿಗೆಯಾಗಿ ಒಂದೆರಡು ಸಾರಿ ಕಿರಿಗೆಯಿಂದ ಪರಿಕಾರಕ್ಕೆ ಪುನಃ ದಾಟಿದ್ದಳು. +ಆದರೆ ಅಜ್ಜಿ ನಾನಿನ್ನು ಚಿಕ್ಕಹುಡುಗಿಯಲ್ಲ, ಸಣ್ಣ ಹೆಂಗಸು ಎಂಬ ವಿಚಾರವನ್ನು ಸೂಕ್ಷ್ಮವಾಗಿ ತಿಳಿಸಿದ್ದಳು; +ತನ್ನ ಅಂಗೋಪಾಂಗಗಳ ರಚನೆಯಲ್ಲಿಯೂ ಮನೋಭಾವಗಳಲ್ಲಿಯೂ ವ್ಯತ್ಯಾಸಗಳಾಗುತ್ತಿದ್ದುದನ್ನು ಚಿನ್ನಮ್ಮ ಗಮನಿಸಿ, ಹರ್ಷಿಸಿಯೂ ಇದ್ದಳು. +ಅಲ್ಲದೆ ಮುಕುಂದಬಾವನಲ್ಲಿಯೂ ಬದಲಾವಣೆಗಳನ್ನು ಗಮನಿಸಿದ್ದಳು, ದೇಹದ ಮೇಲೆ ಕಾಣುವ ವ್ಯತ್ಯಾಸಗಳಿಂದ ಮಾತ್ರವಲ್ಲದೆ ತನ್ನ ಪರವಾದ ಭಾವಭಂಗಿಗಳಲ್ಲಿಯೂ! +ಇವಳ ಕೈ ಅನಿಚ್ಛೆಯಾಗಿಯೆ ಗೊಬ್ಬೆಯ ಸೆರಗನ್ನು, ಅದು ಸರಿಯಾಗಿದ್ದರೂ, ಪದೇ ಪದೇ  ಸರಿಮಾಡಿಕೊಳ್ಳಲು ಕಲಿತಿತ್ತು. +ಅವನ ಮೋರೆಯ ಮೇಲೆ, ಅದರಲ್ಲಿಯೂ ತುಟಿಯ ಮೆಲು ಭಾಗದಲ್ಲಿ ತುಪ್ಪುಳುಗೂದಲು ಕರಿಯ ಗೆರೆಗಳು ಮೊಳೆಯತೊಡಗಿ ಮುಖಕ್ಕೊಂದು ಮುಗ್ಧ ಮನೋಹರತೆಯನ್ನುಂಟು ಮಾಡಿದ್ದುವು. +ಅವರೀಗ ಮೊದಲಿನಂತೆ ಒಬ್ಬರನ್ನೊಬ್ಬರು ಮುಟ್ಟಲು ಸಂಕೋಚಪಡುತ್ತಿದ್ದರು. +ಹೆಚ್ಚು ಹೊತ್ತು ಸಮೀಪಸ್ಥರಾಗಿರಲೂ ಏನೋ ಅಳುಕಿನಿಂದ ಹಿಂಜರಿಯುತ್ತಿದ್ದರು. +ತಾವಿಬ್ಬರೇ ಇದ್ದಾಗ ಯಾರಾದರೂ ನೋಡಿಯಾರೆಂಬ ಗೋಪನಬುದ್ದಿ ಪ್ರಬುದ್ಧವಾಗಿತ್ತು. +ಇಬ್ಬರೇ ಇದ್ದಾಗ ಒಬ್ಬರನ್ನೊಬ್ಬರು ಕಣ್ಣಿಗೆ ಕಣ್ಣಿಟ್ಟು ದೃಷ್ಟಿಸಲೂ ಅಂಜಿಕೆಯಾಗತೊಡಗಿತ್ತು. +ಮೈಯಲ್ಲಿ ಒಬ್ಬರಿಂದೊಬ್ಬರು ದಿನದಿನಕ್ಕೂ ದೂರ ದೂರ ಹೋಗುತ್ತಿದ್ದರೂ ಮನಸ್ಸಿನಲ್ಲಿ ಹತ್ತಿರ ಹತ್ತಿರವಾಗುತ್ತಿದ್ದಂತೆ ಇಬ್ಬರಿಗೂ ಅನಿಸಿತ್ತು. +ಆಗೊಮ್ಮೆ ಈಗೊಮ್ಮೆ ಯಾವಾಗಲಾದರೂ ಇಬ್ಬರ ಕಣ್ಣುಗಳೂ ಸಂಧಿಸಿದಾಗ ಬಾಯಿಂದಾಡಿ ಏಳಲಾರದ ಮತ್ತು ಅವರಿದ್ದ ಸಮಾಜದ ಪರಿಸ್ಥಿತಿಯಲ್ಲಿ ಎಂದೂ ಹೇಳಬಾರದ ಪ್ರಣಯ ಸಂವಾದ ನಡೆದು ಹೋಗುತ್ತಿತ್ತು. +ಒಂದೆರಡು ಸಾರಿ ಮುಕುಂದಯ್ಯ ಏನನ್ನೊ ಹೇಳಬೇಕೆಂದು ಬಾಯೆತ್ತಿ, ತುಟಿ ನಡುಗಿ, ಇದ್ದಕ್ಕಿದ್ದಂತೆ ಮಾತು ತೊದಲಿದಂತಾಗಿ, ಇನ್ನೇನನ್ನೊ ಅಪ್ರಕೃತವನ್ನು ಆಡಿ ಮಾತು ಮುಗಿಸುತ್ತಿದ್ದನು. +ಆದರೆ ಇಂಗಿತಜ್ಞೆಯಾಗಿದ್ದ ಚಿನ್ನಮ್ಮ ಅವನ ಅತ್ಯಂತ ಅಪ್ರಕೃತ ತೊದಲಿನಲ್ಲಿಯೂ ಅಂತಃಕರಣದ ಸುಪ್ರಕೃತವನ್ನು ಚೆನ್ನಾಗಿ ಗ್ರಹಿಸಿದ್ದಳು. +ಅಂತೂ ಅವರಿಬ್ಬರಿಗೂ ತಮ್ಮಿಬ್ಬರ ಋಣಾನುಬಂಧದ ವಿಷಯದಲ್ಲಿ ಅವಾಗ್ರೂಪದ ಒಂದು ಅಲ್ತ್ರಿಣತ ಒಪ್ಪಂತವಾಗಿತ್ತು. +ಅದು ಅತ್ಯಂತ ರಹಸ್ಯವಾದುದೆಂದು ಅವರಿಬ್ಬರೂ ಭಾವಿಸಿದ್ದರೂ ಸ್ವಲ್ಪ ಹೆಚ್ಚು ಕಡಿಮೆ ಎಲ್ಲರಿಗೂ, ರಹಸ್ಯವಾಗಿಯೆ, ತಿಳಿದಿದ್ದ ಅಂಶವಾಗಿತ್ತು! +ಚಿನ್ನಮ್ಮನ ಅಜ್ಜಿ ಮೊದಲುಗೊಂಡು ಮುಕುಂದಯ್ಯನ ಅವ್ವ ಅತ್ತಿಗೆಯರೂ ಅವರನ್ನು ಆ “ಯಾರಿಗೂ ತಿಳಿಯದ ರಹಸ್ಯ”ದ ವಿಚಾರವಾಗಿ ವಿನೋದಕ್ಕಾಗಿ ಪರಿಹಾಸ್ಯಮಾಡಿಯೂ ಇದ್ದರು. +ಈಗ ಚಿನ್ನಮ್ಮ ತರುಣಿ: ಮದುವೆಗೆ ಬರುತ್ತಿರುವ ಹೂವಳ್ಳಿಯ ಹೆಣ್ಣು. +ಮುಕುಂದಯ್ಯ ಯಾವುದಾದರೂ ಹೆಣ್ಣಿಗೆ ತಾಳಿಕಟ್ಟಲು ಸಿದ್ಧನಾಗುತ್ತಿರುವ ತರುಣ: ಕೋಣೂರಿನ ಗಂಡು. +ಹೋದ ವರುಷ ನಾಗಕ್ಕ ಮತ್ತು ಅವಳ ಅತ್ತೆ ಹೂವಳ್ಳಿಯಲ್ಲಿ ಸಸಿನೆಟ್ಟಿಯಿಂದ ಹಿಡಿದು ಗದ್ದೆಕೊಯ್ಲು ಮುಗಿಯುವವರೆಗೂ ಇದ್ದುದಕ್ಕೆ ನಾಗತ್ತೆಯ ಮೂಲೋದ್ದೇಶ ತನ್ನ ಸೊಸೆ ನಾಗಕ್ಕನ ಮನಸ್ಸನ್ನು ವೆಂಕಟಣ್ಣನ ಪರವಾಗಿ ಹಣ್ಣು ಮಾಡುವುದೇ ಆಗಿತ್ತು. +ಅದಕ್ಕಾಗಿ ಅವಳು ಯಾರೊಬ್ಬರಿಗೂ ಸುಳುವು ಸಿಗದಂತೆ ಅನೇಕ ವಾಮಾಚಾರದ ಉಪಾಯಗಳನ್ನು ಕೈಗೊಂಡು ನೆರವೇರಿಸಿದ್ದಳು: +ಒಬ್ಬರ ಎಂಜಲನ್ನು ಇನ್ನೊಬ್ಬರಿಗೆ ತಿನ್ನಿಸುವಂತಹ ಸಾಧಾರಣ ಹೀನವಾದ ಉಪಾಯದಿಂದ ಹಿಡಿದು ಮಲಮೂತ್ರ ಲಿಂಗಯೋನಿ ಸಂಬಂಧಿಗಳಾದ ಅತ್ಯಂತ ಅಶ್ಲೀಲ ಅವಾಚ್ಯ ಹೀನೋಪಾಯಗಳವರೆಗೂ! +ತನ್ನ ಸೊಸೆ ಬೇರೆ ಯಾರ ಮನೆಯಲ್ಲಿಯೂ ಹೊಂದಿಕೊಳ್ಳದಿದ್ದ ಪ್ರಮಾಣದಲ್ಲಿ ಹೂವಳ್ಳಿ ಮನೆಗೆ ಹೊಂದಿಕೊಂಡಿದ್ದನ್ನು ಗಮನಿಸಿ ತನ್ನ ವಾಮಾಚಾರೋಪಾಯವೇ ಆ ಯಶಸ್ಸಿಗೆ ಮುಖ್ಯ ಕಾರಣವೆಂದು ನಿರ್ಣಯಿಸಿದ್ದಳು. +ನಾಗಕ್ಕ ಇತರರ ಮನೆಗಳಲ್ಲಿ ಸಿಡುಕಿದಂತೆ ಸಿಡುಕಿರಲಿಲ್ಲ. +ಒಳಗಿನ ಕೆಲಸವನ್ನಾಗಲಿ ಹೊರಗಿನ ಕೆಲಸವನ್ನಾಗಲಿ ಚಿನ್ನಮ್ಮನನೊಡಗೂಡಿ ತಾನೂ ಆ ಮನೆಯವಳೇ ಎಂಬ ಶ್ರದ್ಧೆಯಿಂದ ಮಾಡಿದುದನ್ನು ನೋಡಿ, ನಾಗತ್ತೆಗೆ ಆಶ್ಚರ್ಯಕ್ಕಿಂತಲೂ ಹೆಚ್ಚಾಗಿ ದಿಗ್ವಿಜಯ ಪಡೆದಷ್ಟು ಆನಂದವಾಗಿತ್ತು. +ಸೊಸೆ ಹಿಂದೆಂದೂ ಗಂಡ ತೀರಿಕೊಂಡ ಮೇಲೆ ಅಷ್ಟು ಪ್ರಸನ್ನತೆಯಿಂದ ಮಧುರಭಾಷಿಣಿಯಾಗಿದ್ದುದನ್ನು ನಾಗತ್ತೆ ಕಂಡಿರಲಿಲ್ಲ. +ವೆಂಕಟಣ್ಣನೊಡನೆಯೂ, ಚಿನ್ನಮ್ಮನ ತಂದೆ ಎಂಬ ಕಾರಣದಿಂದ, ಮರ್ಯಾದೆಯಿಂದಲೇ ಆತ್ಮಗೌರವಕ್ಕೆ ಚ್ಯುತಿ ಬಾರದಷ್ಟು ಸಲುಗೆಯಿಂದ ನಡೆದುಕೊಂಡಿದ್ದಳು. +ಆದರೆ ಸೊಸೆಯ ಪರಿವರ್ತನೆಗೆ ಏಕಮಾತ್ರ ಪ್ರಧಾನ ಕಾರಣ, ನಾಗತ್ತೆ ಊಹಿಸಿದಂತೆ, ವಾಮಾಚಾರವೂ ಆಗಿರಲಿಲ್ಲ, ವೆಂಕಟಣ್ಣನೂ ಆಗಿರಲಿಲ್ಲ. +ವೆಂಕಟಣ್ಣನ ಮಗಳು ಚಿನ್ನಮ್ಮನ ಸೌಜನ್ಯ,ಸ ನೇಹ, ವಿಶ್ವಾಸ, ಅನುಂಕಪೆ, ಸೋದರೀ ಸದೃಶ ವಾತ್ಸಲ್ಯ ಇತ್ಯಾದಿಗಳೆಲ್ಲ ಒಂದು ಗೂಡಿ ನಾಗಕ್ಕನ ಹೃದಯವನ್ನು ಸೂರೆಗೊಂಡಿದ್ದವು. +ಅವಳಿಗೆ ಗದ್ದೆಕೊಯ್ಲು ಮುಗಿದ ಮೇಲೆಯೂ ಅಲ್ಲಿಂದ ಹೊರಡುವುದಕ್ಕೆ ಮನಸ್ಸಿರಲಿಲ್ಲ. +ಚಿನ್ನಮ್ಮನೂ “ನಾಗಕ್ಕಯ್ಯ, ಇನ್ನೊಂದೆರಡು ದಿನ ಇದ್ದು ಹೋಗು” ಎಂದು ಮುದ್ದಿನಿಂದಲೆ ಆಹ್ವಾನಿಸಿದ್ದಳು. +ಅದೇ ಕಾರಣವಾಗಿತ್ತು, ಈಗಲೂ, ನಾಗಕ್ಕ ನಾಗತ್ತೆಯೊಡನೆ ಹೂವಳ್ಳಿಗೆ ಸಂತೋಷದಿಂದ ಹೊರಟಿದ್ದುದಕ್ಕೆ. +ಆದರೆ ಸೊಸೆಯ ಆ ಸರಳ ಸಂತೋಷಕ್ಕೆ ನಾಗತ್ತೆಯ ವ್ಯಾಖ್ಯಾನ ಸ್ವರೂಪವೆ ಬೇರೆಯ ತರಹದ್ದಾಗಿತ್ತು. +ಮಿಂದು ಮಡಿಯುಟ್ಟು ತುಳಸಿಕಟ್ಟೆಗೆ ಸುತ್ತು ಬರುತ್ತಿದ್ದ ಶಂಕರಪ್ಪ ಹೆಗ್ಗಡೆಯವರು ಹೂವಳ್ಳಿ ವೆಂಕಟಣ್ಣನು ಸುಬ್ಬಣ್ಣ ಹೆಗ್ಗಡೆಯವರೊಡನೆ ಮಾತಾಡಿ ಬೀಳ್ಕೊಂಡು ತಾನಿದ್ದ ಕಡೆಗೆ ದೊಣ್ಣೆಯೂರಿ ಕುಂಟುತ್ತಾ ಬರುತ್ತಿದ್ದುದನ್ನು ಗಮನಿಸಿ, ಬಾಯಿ ಏನೊ ದೇವರ ಹೆಸರನ್ನೊ ಮಂತ್ರವನ್ನೊ ಗೊಣಗುಟ್ಟುತ್ತಿದ್ದರೂ, ಮನಸ್ಸಿನಲ್ಲಿಯೆ ಅಂದುಕೊಂಡರು: “ಏನು ಸೈಂಧವನ ಸವಾರಿ ಇತ್ತಲಾಗಿ ಬರುತ್ತಿದೆಯಲ್ಲಾ?!”ಸೈಂಧವ ಎಂಬುದು ಹೂವಳ್ಳಿ ವೆಂಕಟಣ್ಣನಿಗೆ ಜನ ಇಟ್ಟಿದ್ದ ಅಡ್ಡ ಹೆಸರಾಗಿತ್ತು. +ಅದಕ್ಕೆ ಮುಖ್ಯ ಕಾರಣ ಅವನ ದೈತ್ಯ ಗಾತ್ರ; +ಅವನ ಎತ್ತರವೂ ಆರು ಅಡಿಗಳಿಗೆ ಮೀರಿಯೆ ಇತ್ತು. +ಕೈಕಾಲು ತೊಡೆಗಳೆಲ್ಲವೂ ಇದ್ದ ದಪ್ಪಗಳಲ್ಲಿ ಒಂದರೊಡನೊಂದು ಸ್ಪರ್ಧಿಸುವಂತಿದ್ದುವು. +ಮುಖ ಸ್ವಲ್ಪ ಉದ್ದವಾಗಿದ್ದು ಕೆನ್ನೆ ದವಡೆಯ ಎಲುಬುಗಳು ಎದ್ದು ಕಾಣುತ್ತಿದ್ದವು. +ಕರಿಯ ಮೀಸೆಗಳು ನೀಳಾಗಿ ಬೆಳೆದು ಕಿವಿಯ ಕಡೆಗೆ ಪಯಣ ಹೊರಟು ಮೇಲಕ್ಕೆ ಬಾಗಿದ್ದುವು. +ಹುಬ್ಬುಗಳೆರಡೂ ಪೊದೆಗಳಾಗಿ ಮೀಸೆಗಳನ್ನು ತಲುಪಲೆಂಬಂತೆ ಕೊಂಕಿದ್ದುವು. +ಭಯಂಕರತೆಯ್ನನೂ ಧೀರ ಗಾಂಭೀರ್ಯವನ್ನೂ ವದನಕ್ಕೆ ತಂಡುಕೊಡಬಹುದಾಗಿದ್ದ ಈ ಎಲ್ಲಾ ಪರಿಕರಗಳಿದ್ದರೂ ಅವನ ಚಪ್ಪಟೆ ಮೂಗೂ ನಿಸ್ತೇಜದ ಕಣ್ಣುಗಳೂ ಅವನ ವ್ಯಕ್ತಿತ್ವವನ್ನು ಸಾಧಾರಣತ್ವಕ್ಕೆ ಇಳಿಸಿಬಿಟ್ಟಿದ್ದುವು. +ಅವನಲ್ಲಿದ್ದ ಪಶುಬಲಕ್ಕೆ ಎಂಥವರೂ ಅಳುಕುತ್ತಿದ್ದರು; + ಆದರೆ ಅವನಿಗೆ ಸಿಟ್ಟು ಬಂದಾಗ ಜನ ಹೆದರಿಕೊಳ್ಳುತ್ತಿದ್ದುದಕ್ಕಿಂತಲೂ ಹೆಚ್ಚಾಗಿ ವಿನೋದಪಟ್ಟುಕೊಂಡು ನಗುತ್ತಿದ್ದರು! +ಅವನ ಹೊರ ಆಕಾರದ ಉಗ್ರತೆ ಅವನನ್ನು ತಿಳಿಯದವರಿಗೆ ಹುಲಿಯಂತೆ ಕಾಣಿಸುತ್ತಿದ್ದರೂ, ಅವನನ್ನು ತಿಳಿದಿದವರಿಗೆ ಅವನು ಒಂದು ಬೃಹತ್ಕಾಯದ ಸಾಧುಪ್ರಾಣಿಯಂತಿದ್ದನು. +ಹಸುವಿನಂತಹ ಸಾಧುಪ್ರಾಣಿಯೂ ಒಮ್ಮೊಮ್ಮೆ ತನಗೆ ನೋವಾದಾಗಲೊ ಸಿಟ್ಟು ಬಂದಾಗಲೊ ತಿವಿದುಬಿಡುವಂತೆ ವೆಂಕಟಣ್ಣನೂ ತಿವಿದುಬಿಡುತ್ತಿದ್ದುದು ಉಂಟು. +ಪ್ರಾಣಿ ಸಾಧುವಾಗಿದ್ದರೂ ಅದು ಬೃಹತ್ ಪರಿಣಾಮದ್ದಾಗಿದ್ದರೆ ಅದರ ಸಾಧಾರಣ ತಿವಿತವೂ ಭಯಂಕರ ಪರಿಣಾಮಕಾರಿಯಾಗುವಂತೆ ವೆಂಕಟಣ್ಣನ ಮೊಂಡಸಿಟ್ಟೂ ಅನೈಚ್ಛಿಕವಾಗಿಯೆ ಹಲವು ಅನಾಹುತಗಳಿಗೆ ಕಾರಣವಾಗಿತ್ತು. +ಸ್ಪುರದ್ರೂಪಿಣಿಯೂ ಸೂಕ್ಷ್ಮಪ್ರಕೃತಿಯವಳೂ ಆಗಿದ್ದ ಅವನ ಹೆಂಡತಿ, ಹೂವಳ್ಳಿ ಚಿನ್ನಮ್ಮನ ತಾಯಿ, ಅಷ್ಟು ಎಳೆವಯಸ್ಸಿನಲ್ಲಿಯೆ ಸಾಯುವುದಕ್ಕೂ ವೆಂಕಟಣ್ಣನ ಈ ಗುಣವೇ ಕಾರಣವಾಗಿತ್ತೆಂದು ಜನ ಆಡಿಕೊಳ್ಳುತ್ತಿದ್ದರು. +ಆ ಕಾರಣದಿಂದಲೆ ಅವನು ಮತ್ತೊಂದ ಮದುವೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರೂ ಹೆಣ್ಣು ಕೊಡಲು ಯಾರೂ ಮುಂದೆ ಬಂದಿರಲಿಲ್ಲ. +ವೆಂಕಟಣ್ಣನ ಈ ಲಕ್ಷಣಗಳೆಲ್ಲ ಅನುವಂಶಿಕವಾಗಿದ್ದುವು. +ಅವನ ಅಜ್ಜನೋ ಮುತ್ತಜ್ಜನೋ ದುರ್ಗದ ಪಾಳೆಯಗಾರಿಕೆಯ ಕಾಲದಲ್ಲಿ ದಂಡನಾಯಕನಾಗಿದ್ದನಂತೆ. +ಅದಕ್ಕೆ ಸಾಕ್ಷಿಯಾಗಿ ಈಗಲೂ ಹೂವಳ್ಳಿ ಮನೆಯ ಅಟ್ಟದ ಮೂಲೆಯಲ್ಲಿ ಕರಿಹಿಡಿದು ಕರ್ರಗಾದ ಖಡ್ಗಗಳೂ ಈಟಿ ಭರ್ಜಿಗಳೂ ಗುರಾಣಿಗಳೂ ಇವೆ ಎಂಬ ವದಂತಿ ಇತ್ತು. +ಅವನದು ನಾಯಕರ ಮನೆತನವಾದರೂ ಸರಿಸಮಾನರು ಯಾರೂ ಈಗ ಅವನನ್ನು  ವೆಂಕಟಪ್ಪನಾಯಕರು ಎಂದು ಕರೆಯುತ್ತಿರಲಿಲ್ಲ. +ತೀರ ಕೆಳವರ್ಗದವರೇನೊ ಹೂವಳ್ಳಿ ನಾಯಕರು ಎಂದು ಸಂಬೋಧಿಸುತ್ತಿದ್ದುದುಂಟು. +ಆದರೆ ಆ ‘ನಾಯಕ’ ಶಬ್ದಕ್ಕೆ ಪೂರ್ವದ ಗೌರವವಾಗಲಿ ಅರ್ಥವಾಗಲಿ ಇರಲಿಲ್ಲ. +ಹುಲಿ ಮುಪ್ಪಾಗಿ ಕಪ್ಪೆ ಹೆರಕುವ ಸ್ಥಿತಿಯಂತಿತ್ತು. +ಅದರ ಸರ್ದ್ಯಸ್ಥಿತಿ! +ಅವನು ದುಗ್ಗದ ಪಾಳೆಯಗಾರರ ನಾಯಕ ಮನೆತನಕ್ಕೆ ಸೇರಿದವನು ಎಂಬುದಕ್ಕೆ ಅವನ ಮಹಾಕಾಯದ ಬೃಹತ್ತೊಂದೇ ಅವಶಿಷ್ಟವಾದ ಬಹಿಃಪ್ರಮಾಣವಾಗಿತ್ತು. +ಭಾಗವತರಾಟದಲ್ಲಿ ಸೈಂಧವನ ಪಾತ್ರಧಾರಿಗೆ ಇರುತ್ತಿದ್ದ ಆ ಸಮಾನ ಲಕ್ಷಣವನ್ನು ಆಧರಿಸಿ ಜನ ಅವನನ್ನು ಸೈಂಧವ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. +ಅವನಿಗೂ ಅದು ಗೊತ್ತಿತ್ತು! +ವೆಂಕಟಣ್ಣ ಹೆಂಚಿನ ಮನೆಯ, ಇನ್ನೂ ಚೌಕಿ ಕಟ್ಟದೆ ಇದ್ದುದರಿಂದ  ತೆರೆದೇ ಇದ್ದ, ಹೊರ ಅಂಗಳವನ್ನು ಪ್ರವೇಶಿಸುತ್ತಿದ್ದಾಗಲೆ ಅವನ ಮೂಗಿಗೆ ಹೂವಿನ, ಗಂಧದ ಮತ್ತು ಲೋಬಾನದ ಮಿಶ್ರ ಪರಿಮಳ ಬಂದಿತ್ತು. +ಅದರಲ್ಲಿಯೂ ಆಗತಾನೆ ಸೋಗೆಮನೆಯ ಹೊರ ಅಂಗಳದಲ್ಲಿದ್ದ ಕೋಳಿ ಒಡ್ಡಿ, ಹಂದಿಒಡ್ಡಿ ದನಕೊಟ್ಟಿಗೆ ಇವುಗಳ ಸಂಮಿಶ್ರ ವಾಸನೆಯ ವಲಯದಿಂದ ಹೊರಬರುತ್ತಿದ್ದ ಅವನಿಗೆ ಆ ಪರಿಮಳ ದೇವಸ್ಥಾನ ಪ್ರವೇಶ ಮಾಡಿದ ಭಾವನೆಯನ್ನುಂಟು ಮಾಡಿತ್ತು. +ಅವನ ಕೈ ಅವನಿಗೆ ತಿಳಿಯದಂತೆಯೆ ಮುಗಿಯ ತೊಡಗಿತ್ತು. +ತನ್ನ ಜಿಡ್ಡು ಹಿಡಿದು ತೇಪೆಹಾಕಿದ ದಗಲೆ, ಮೊಳಕಾಲಿನ ವರೆಗಿನ ಕೊಳಕು ಪಂಚೆ, ತಲೆಗೆ ಸುತ್ತಿದ್ದ ಬಡ್ಡು ಕೆಂಬರು ವಸ್ತ್ರ ಇವುಗಳ ಮೈಲಿಗೆಯ ಅರಿವಾಗಿಯೊ ಎಂಬಂತೆ ವೆಂಕಟಣ್ಣ ಸ್ವಲ್ಪ ದೂರದಲ್ಲಿಯೆ ನಿಂತು ನೋಡತೊಡಗಿದನು. +ಅಂಗಳದ ನಡುವೆ ಹೊಸದಾಗಿ ಹಾಕಿದ್ದ ಮಣ್ಣಿನ ತುಳಸಿಕಟ್ಟೆ ಕೆಮ್ಮಣ್ಣು ಬಳಿದಿದ್ದರಿಂದ ಕೆಂಪಗೆ ಕಾಣುತ್ತಿತ್ತು. +ಅದರ ತಲೆಯ ಮೇಲೆ ಎಲ್ಲಿಯೊ ಕೆಲದಿನಗಳ ಹಿಂದೆ ನೆಟ್ಟಿದ್ದ ತುಳಸಿಯ ಪುಟ್ಟ ಸಸಿ ಹಸುರುತನದಿಂದ ಗಮನಸೆಳೆಯುವಷ್ಟೂ ಬೆಳೆದಿರಲಿಲ್ಲ. +ಕೆಂಪು ನಾಮಗಳ ನಡುವೆ ಬಿಳಿಯ ನಾಮಗಳು ತುಳಸಿಯ ನಾಲ್ಕೂ ಮೈಗಳ್ಲಲಿ ಎದ್ದು ಕಾಣುವಂತಿದ್ದವು. +ಮುಡಿಸಿದ್ದ ಗೊರಟೆ ಹೂಗಳ ಹಳದಿಯ ನಡುವೆ ಕೆಂಪು ಪರ್ವತ ಬಾಳೆಯ ಹೂಗಳೂ ಭೂತಾಳಿಯ ರಕ್ತವಣ್ಣದ ಎಲೆಯ ರೂಪದ ಹೂಗಳೂ ರಂಜಿಸಿದ್ದುವು. +ಕೈಮುಗಿದುಕೊಂಡು ಬಾಯಲ್ಲಿ ಏನನ್ನೊ ಹೇಳಿಕೊಳ್ಳುತ್ತಾ ದೇವರಿಗೆ ಸುತ್ತು ಬರುತ್ತಿದ್ದ ಶಂಕರಪ್ಪ ಹೆಗ್ಗಡೆಯವರು ಸೊಂಟಕ್ಕೆ ಸುತ್ತಿದ್ದ ಒಂದು ಅರೆ ಒದ್ದೆಯಾಗಿದ್ದ ಪಾಣಿಪಂಚೆ ವಿನಾ ಸಂಪೂರ್ಣವಾಗಿ ನಗ್ನರಾಗಿದ್ದರು. +ಆ ಪಾಣಿ ಪಂಚೆ ಎಷ್ಟು ಜಾಳಾಗಿತ್ತೆಂದರೆ ಒಳಗೆ ಕಟ್ಟಿದ್ದ ಲಂಗೋಟಿಯ ರೂಪು ರೇಖೆ ಸ್ಪಷ್ಟವಾಗಿ ಕಾಣುತ್ತಿತ್ತು. +ಅವರ ಹೊಕ್ಕುಳದ ಮೇಲ್ಭಾಗದಲ್ಲಿಯೂ ಎದೆಯ ಇಕ್ಕೆಲಗಳಲ್ಲಿಯೂ ತೋಳುಗಳ ಭುಜ ಪ್ರದೇಶದಲ್ಲಿಯೂ ತುಳಸಿಕಟ್ಟೆಗೆ ಬಳಿದಂತಹ ಬಿಳಿಯ ನಾಮಗಳ ನಡುವಣ ಕೆಂಪು ನಾಮಗಳ ತ್ರಿಪುಂಡ್ರಗಳು ಮೆರೆಯುತ್ತಿದ್ದುವು. +ಹಣೆಯ ಮೇಲೆ ಮಾತ್ರ ಕೆಂಪು ನಾಮವೊಂದೇ ವಿರಾಜಮಾನವಾಗಿತ್ತು. +ಲಾಳಾಕಾರವಾಗಿ ನುಣ್ಣಗೆ ಚೌರಮಾಡಿದ್ದ ಅವರ ಮುಂದಲೆಯ ಮೇಲೆಯೂ ನಾಮದ ಗುರುತು ಕಾಣುತ್ತಿತ್ತು. +ಚಿನ್ನದ ಒಂಟಿಗಳಿದ್ದ ಕಿವಿಯ ಸಂಧಿಯಲ್ಲಿ ಸಿಕ್ಕಿಸಿಕೊಂಡಿದ್ದ ತುಳಸಿಯ ಕುಡಿಯ ಗೊಂಚಲೂ ಚೆನ್ನಾಗಿ ಕಾಣುವ ಪ್ರಮಾಣದಲ್ಲಿಯೆ ಇತ್ತು. +ಸುಪುಷ್ಟವಾಗಿ ಕಾಣುತ್ತಿದ್ದ ಮೈಕಟ್ಟೂ ಸ್ವಲ್ಪ ಮಟ್ಟಿಗೆ ಬೊಜ್ಜಾಗಿದ್ದ ಹೊಟ್ಟೆಯೂ ಅವರು ಸುಖಜೀವಿ ಎಂಬುದನ್ನು ಸೂಚಿಸುತ್ತಿದ್ದುವು. +ಚೆನ್ನಾಗಿ ಬೆಳಗಿ ಥಳಥಳಿಸುತ್ತಿದ್ದ ತಾಮ್ರದ ಹೂವಿನ ತಂಬಿಗೆಯಲ್ಲಿದ್ದ ನೀರನ್ನು ತುಳಸಿಯ ಗಿಡದ ಬುಡಕ್ಕೆ ಹೊಯ್ದು, ಬೆರಳ ತುದಿಯಿಂದ ಆ ತೀರ್ಥವನ್ನೆತ್ತಿ ಬಾಯಿಗೆ ಚಿಮುಕಿಸಕೊಂಡು, ದೂರದಲ್ಲಿಯೆ ನಿಂತಿದ್ದ ವೆಂಕಟಣ್ಣನ ಬೃಹನ್ಮೂರ್ತಿಯನ್ನು ನೋಡುತ್ತಾ ನಗೆಗೂಡಿ ಶಂಕರಪ್ಪ ಹೆಗ್ಗಡೆಯವರು “ಏನು ನಾಯಕರ ಸವಾರಿ ಬಹಳ ಅಪರೂಪ ಬಂದುಬಿಟ್ಟಿತಲ್ಲಾ!” ಎಂದು ವ್ಯಂಗ್ಯವಾಗಿ ಪ್ರಶ್ನಿಸಿ, ಉತ್ತರಕ್ಕೆ ಕಾಯದೆ “ಅಲ್ಲೇ ನಿಂತುಬಿಟ್ಟೆಯಲ್ಲೋ? +ಬಾರೋ ಮೇಲೆ” ಎಂದು ಸಹಜವಾದ ಸಲುಗೆಯ ಏಕವಚನದಲ್ಲಿ ಕರೆಯುತ್ತಾ ತಾವೂ ಮೆಟ್ಟಲು ಏರಿ ಜಗಲಿಗೆ ಹೋದರು. +ವೆಂಕಟಣ್ಣನೂ ಹೊರಗಿನಿಂದ ಕಾಲು ಕೆಸರಾಗಿ ಬರುವ ನೆಂಟರಿಗಾಗಿಯೆ ಎಂದು ಮುಂದಿಗೆಯ ಬದಿ ಇಟ್ಟಿದ್ದ ಹಿತ್ತಾಳೆ ಚೊಂಬಿನಲ್ಲಿದ್ದ ನೀರಿನಿಂದ ಕಾಲು ತೊಳೆದುಕೊಂಡು, ಕಿರುಜಗಲಿಗೆ ಏರಿ, ಜಗಲಿಯ ತುದಿಯ ಕೆಸರ್ಹಲಗೆಯ ಮೇಲೆ ಹಾಸಿದ್ದ ಕೊಳಕು ಕೊಳಕಾದ ಜಾಡಿಯ ಮೇಲೆ ಕೂತನು. +ಪದ್ಧತಿಯಂತೆ ಎಲೆ ಅಡಿಕೆಯ ಹರಿವಾಣ ತಂದು ಅವನ ಮುಂದಿಡ್ಡು ಶಂಕರಪ್ಪ ಹೆಗ್ಗಡೆಯವರೂ ತುಸು ದೂರದಲ್ಲಿಯೆ ಕೂತುಕೊಂಡರು. +ಜಗಲಿಯ ಮೂಲೆಯಲ್ಲಿ ಒಂದು ಐದಾರು ತಿಂಗಳ ಕೂಸನ್ನು ಅರುವೆಯ ಮೇಲೆ ಉರುಡುಹಾಕಿಕೊಂಡು ಆಡಿಸುತ್ತಿದ್ದಳು ಬಾಲೆಯಾಡಿಸುವ ಹುಡುಗಿ. +ಅವಳ ಪಕ್ಕದ್ಲಲಿ ಸುಮಾರು ಎರಡೂವರೆ ಮೂರು ವರ್ಷದ ವಯಸ್ಸಿನ ಒಂದು ಬಡಕಲು ಹುಡುಗ ಬತ್ತಲೆ ಕುಳಿತು ತಾನೂ ಬಾಲೆಯಾಡಿಸುವ ಆಟದಲ್ಲಿ ತೊಡಗಿತ್ತು. +ವೆಂಕಟಣ್ಣನ ಆಕೃತಿ ಅಂಗಳದಿಂದ ಮೆಟ್ಟಲು ಹತ್ತಿ ಕಿರುಜಗಲಿಗೆ ಬಂದುದನ್ನು ಕಂಡು, ಹೊಸಬರನ್ನು ಕಂಡೋ, ಗಾತ್ರಕ್ಕೆ ದಿಗಿಲುಗೊಂಡೋ ಹೆಮ್ಮೀಸೆಗೆ ಹೆದರಿಯೋ ಬಾಲೆಯಾಡಿಸುವ ಹುಡುಗಿಯನ್ನು ಅಪ್ಪಿಕೊಂಡು ಅದು ಅಳತೊಡಗಿತ್ತು. +ವೆಂಕಟಣ್ಣ ಆ ಹುಡುಗನನ್ನು ಸಮಾಧಾನ ಮಾಡುವ ಸಲುವಾಗಿ “ಯಾಕೆ ಅಳ್ತೀಯೋ, ರಾಮು?” ಎಂದು ಮೈತಡವಲು ಕೈ ನೀಡಿದ ಕೂಡಲೆ ರಾಮು ಕಿಟಾರನೆ ಕೀರಿಕೊಂಡು ಮಾಣಿಗೆ ಒಳಗಿನಿಂದ ನುಗ್ಗಿ ಅಡುಗೆ ಮನೆಗೆ ಅಮ್ಮನನ್ನು ಕೂಗುತ್ತಾ ಓಡಿಹೋದನು. +ಆ ಕೂಗಿಗೆ ಬೆಚ್ಚಿ ಕೂಸೂ ಒರಲತೊಡಗಿತು. +ಶಂಕರಪ್ಪ ಹೆಗ್ಗಡೆ ತುಸು ರೇಗಿದ್ದ ಧ್ವನಿಯಲ್ಲಿ ಗಟ್ಟಿಯಾಗಿ ಕೂಗಿ ಹೇಳಿದರು; “ಏ ಕೆಂಪೀ, ಬಾಲೇನ ಅದರ ಹತ್ರಕ್ಕೆ ಕರೆದುಕೊಂಡು ಹೋಗೆ ಅತ್ತಲಾಗಿ!”ಅದರ ಹತ್ತಿರಕ್ಕೆ ಎಂದರೆ ತಮ್ಮ ಹೆಂಡತಿಯ ಬಳಿಗೆ ಎಂದರ್ಥ. +ಸಾಮಾನ್ಯವಾಗಿ ಗಂಡಸು ತನ್ನ ಹೆಂಡತಿಯನ್ನು ಹೆಸರು ಹಿಡಿದು ಕರೆಯುತ್ತಿದ್ದಿಲ್ಲ. +ಕೆಲವು ಗಂಡಂದಿರು ‘ಅವಳು’ ಎಂಬುದಾಗಿಯೂ ಮತ್ತೆ ಕೆಲವರು ‘ಅದು’ ಎಂಬುದಾಗಿಯೂ ಕರೆಯುತ್ತಿದ್ದುದೆ ಹೆಚ್ಚು ವಾಡಿಕೆ. +ಅಂತೆಯೆ ಹಳೆಮನೆಯ ಶಂಕರಪ್ಪ ಹೆಗ್ಗಡೆಯವರ ಅರ್ಧಾಂಗಿ ಸೀತಮ್ಮನವರು ಗಂಡನ ಭಾಗಕ್ಕೆ ‘ಅದು’ ಆಗಿದ್ದರು. +ಹಾಗೆ ಕರೆಯುತ್ತಿದ್ದುದರಲ್ಲಿ ಯಾವ ಬುದ್ದಿಪೂರ್ವಕವಾದ ಇಲ್ಲವೆ ವೈಯಕ್ತಿಕವಾದ ತಿರಸ್ಕಾರ ಭಾವವೂ ಇರುತ್ತಿರಲಿಲ್ಲ ನಿಜ. +ಆದರೆ ಅದು ಸಾಮಾಜಿಕವಾದ ಸಮಷ್ಟಿರೂಪದ ಒಂದು ಕೀಳುಭಾವನೆಯನ್ನು ಪ್ರತಿಬಿಂಬಿಸುತ್ತಿತ್ತು. +ಹುಡುಗಿ ಕೂಸನ್ನು ಎತ್ತಿಕೊಂಡು ಹೋದಮೇಲೆ ವೆಂಕಟಣ್ಣ “ರಾಮು ಯಾಕೆ ಪೂರಾ ಲಾಚಾರಾಗಿ ಸೋತು ಹೋದ್ಹಾಂಗೆ ಕಾಣ್ತದಲ್ಲಾ?” ಎನ್ನುತ್ತಾ ಹರಿವಾಣದಲ್ಲಿದ್ದ ಒಂದು ವೀಳೆಯದೆಲೆಗೆ ಕೈ ಹಾಕಿದನು. +“ಹುಟ್ಟಿದಾರಭ್ಯ ಅದರ ಹಣೇಬರಾನೆ ಹಾಂಗೆ. +ಯಾವಾಗ್ಲೂ ರ್ವೋತೆ ತಪ್ಪದು.” +“ದೋಯಿಸರ ಹತ್ರ ಉಂದು ಚೀಟಿಬೂತಿನಾದ್ರೂ ತರಿಸಿ ಕಟ್ಟಿನೋಡು.” +“ಅಯ್ಯೋ ನೀನೊಬ್ಬ! +ಜೋಯಿಸರ ಕೈಲಿ ಚೀಟಿಬೂತಿ ತರಿಸಿ ಆಯ್ದು; +ನಿಮಿತ್ತ ನೋಡಿಸಿ ಆಯ್ತು; +ಕಡೆಗೆ ಕಲ್ಲೂರು ದೇವಸ್ಥಾನದಲ್ಲಿ ಅವರು ಹೇಳಿದ ಹಾಂಗೆ ಸತ್ಯನಾರಾಯಣ ವ್ರತಾನೂ ಮಾಡಿಸಿ ಆಯ್ತು.” +“ಸಿದ್ದರ ಮಠಕ್ಕೆ?” +“ಅದೂ ಆಯ್ತು…. +ಅದರ ಸೊಂಟದಾಗ್ ನೇತಾಡ್ತದಲ್ಲಾ, ಸಿದ್ದರ ಮಠದ ತಾಯಿತ!” +“ಹಾಂಗ್ಯಾರೆ ಆಮೂಗೂರು ಗಣಮಗನ್ನಾದ್ರೂ ಕರ್ಸಿ, ಮನೇಲಿ ಗಣ ಬರ್ಸಿ, ಕೇಳಿ ನೋಡಬೈದಲ್ಲಾ?” +“ಹ್ಞೂ ಅದೊಂದು ಬಾಕಿ! …. ಆದರೆ ನಮ್ಮ ಜೋಯಿಸರು ಏನೋ ಇನ್ನೊಂದು ಅನುಮಾನ ಪಡ್ತಾರೆ… ಯಾರೋ ನಮಗೆ ಆಗದವರು…” +“ನಿನ್ನ ಮ್ಯಾಲೆ ಮಾಟ ಮಾಡ್ಸೋರು ಯಾರಂತಪ್ಪಾ…?” +“ಯಾರಂದ್ರೆ? +ಹೊಟ್ಟೆಕಿಚ್ಚಿನವರಿಗೆ ಏನು ಬರಗಾಲವೆ?” +“ಬಸವನಂಥಾ ಮನುಷ್ಯ; +ದೇವರು ದಿಂಡರು ಪೂಜೆಗೀಜೆ ಮಾಡ್ತೀಯ; +ನಿನ್ನ ಮಾಲೇಜು ಹೊಟ್ಟೆ ಕಿಚ್ಚು?” +“ಊರ ಯಾಕೆ ಹೋಗ್ಬೇಕೋ, ಎಂಕಟಣ್ಣ? +ನೆರೆಮನೇನೆ ಸಾಲದೇ?” +“ಸುಳ್ಳೋ ಬದ್ದೋ?” ವೆಂಕಟಣ್ಣನ ಪ್ರಶ್ನೆ ವಿಷಾದ, ಆಶ್ಚರ್ಯ, ಸಂದೇಹ, ಆಶಂಕೆ ಎಲ್ಲಕ್ಕೂ ಪ್ರತಿಮೆಯಾಗಿತ್ತು. +“ಪಾಲಾದ ಮೇಲಾದರೂ ಸರಿಹೋಗ್ತದೆ ಅಂತಾ ಮಾಡಿದ್ದೆ. ಆದರೆ…. ?” +“ಯಾಕಂತೆ ನಿನ್ನ ಮ್ಯಾಲೆ ಹಟಾ?” +“ಯಾಕೆ ಅಂದರೆ? +ಅವರ ಮನೆಗೆ ಸೋಗೆ ಹೊದಿಸಿರುವಾಗ ನನ್ನ ಮನೆಗೆ ಹೆಂಚು ಹಾಕ್ಸೋದೆ? +ಅವರ ಮನೇಲಿ ಗಂಡಸ್ರು, ಹೆಂಗಸ್ರು ಎಲ್ಲಾ ವಾರಕ್ಕೆ ಒಂದು ಸಾರಿ, ಶನಿ ಶನಿವಾರ, ಸಾನ ಮಾಡಿದ್ರೆ, ನನ್ನ ಮನೇಲಿ ನಾನು ದಿನಾ ಸಾನ ಮಾಡೋದಲ್ಲದೆ ಅದಕ್ಕೂ ಮೀಯೋಕೆ ಹೇಳೋದೆ…?” +“ಅವರಿಗೇನು ಕಡಮೆ ಆಗ್ಯದೆ! +ನೀ ಊರ ಹೆಂಚು ಹಾಕ್ಸಿದ್ರೆ ಅವರು ಮಂಗಳೂರು ಹೆಂಚೇ ಹಾಕ್ಲಿ. +ಅವರ ದುಡ್ಡಿನಲ್ಲಿ ಏನಾದ್ರೂ ನೀ ಹಾಕಿಸ್ದೇನು…? ” +“ಅಯ್ಯೋ…. ನನಗೆ ಕೊಡಾ ದುಡ್ಡನ್ನೇ ಇನ್ನೂ ಕೊಟ್ಟಿಲ್ಲ; +ಇನ್ನು ನಾ ಹೆಂಚು ಹಾಕ್ಸೋದಕ್ಕೆ ಬ್ಯಾರೆ ದುಡ್ಡು ಕೊಡ್ತಾರ್ಯೇ? +ಮನೆ ಪಾಲಾಗುವಾಗ್ಲೆ ನನಗೆ ಬರಬೇಕಾದ ಹಿಸ್ಸೇನ ‘ನಂಗೆ ಆ ಗದ್ದೆ ಬೇಕು, ನಂಗೆ ಈ ತೋಟದ ತುಂಡು ಬೇಕು, ನಂಗೆ ಅದು ಸಾಲದು, ನಂಗೆ ಇದು ಸಾಲದು’ ಅಂತಾ ನೂರೊಂದು ತಂಟೆ ತಕರಾರು ಮಾಡಿ, ತಮ್ಮ ಪಾಲಿಗೆ ಮಾಡಿಕೊಂಡರು. +ತಾಳತಂತ್ರದ ಲೆಕ್ಕ ಮಾಡಿ ನನಗೆ ಇಂತಿಷ್ಟು ಕೊಡೋದು ಅಂತ ಒಪ್ಪಂದ ಆಯ್ತು. +ಇಲ್ಲೀ ತನಕ ಒಂದು ಚಿಕ್ಕಾಸು ಕೊಟ್ಟಿಲ್ಲ. +ಕೇಳಿದ್ರೆ ‘ನಿನ್ನ ಗಂಟೇನು ತಿಂದುಕೊಂಡು ಹೋದವನ್ನ ಹುಡುಕಿಕೊಂಡು ಬರಾಕೆ ಅಂತಾ ಆ ಕಣ್ಣಾಪಂಡಿತರಿಗೆ, ಆ ಪುಡಿ ಸಾಬ್ರಿಗೆ, ಆ ಕಿಲಸ್ತರ ಪಾದ್ರಿ ಜೀವರತ್ನಯ್ಯಗೆ, ಇನ್ನೂ ಯಾರು ಯಾರೊ ಹೆಸರನ್ನೆಲ್ಲ ಹೆಳ್ತಾರಪ್ಪಾ- ದುಡ್ಡು ಕೊಟ್ಟೂ ಕೊಟ್ಟೂ ಸಾಲ ಆಗಿದೆ ಅಂತಾರೆ!”ವೆಂಕಟಣ್ಣಗೆ ನಗೆ ತಡೆಯುವುದಕ್ಕೆ ಆಗಲಿಲ್ಲ. +ಬಾಯಲ್ಲಿದ್ದ ಎಲೆಯಡಿಕೆಯ ಉಗುಳು ಎಲ್ಲಿ ಶಂಕರಪ್ಪನ ಮುಖಕ್ಕೆ ಹಾರುತ್ತದೆಯೊ ಎಂದು ಹೆದರಿ ಬೇಗಬೇಗ ಎದ್ದುಹೋಗಿ ತೆಣೆಯ ಕೆಳಗಡೆ ಅಂಗಳದಲ್ಲಿಟ್ಟಿದ್ದ ಉಮ್ಮಿಡಬ್ಬಿಗೆ ಎಲ್ಲವನ್ನೂ ಉಗುಳಿ ಬಂದು, ದೊಡ್ಡದಾಗಿ ಅಟ್ಟಹಾಸ ಮಾಡುವಂತೆ ನಗುತ್ತಾ “ಅಂವ ಹೋಗಿ ಎಂಟ್ಹತ್ತು ವರ್ಷಾನೆ ಆಯ್ತೋ ಏನೋ? +ಇನ್ನೂ ದುಡ್ಡು ಕೊಡ್ತಾನೆ ಇದ್ದಾರಂತೋ, ಅವನ್ನ ಹುಡಕ್ಕೊಂಡು ಬರಾಕೆ? +ಅಂವ ದಾರಿಮೇಲೆ ವಾಂತಿಭೇದಿ ಹತ್ತಿಕೊಂಡು ಸತ್ತುಹೋದ ಅಂತಾ ಅವನ ಜೊತೆ ಹೋದೋರು, ಕಂಡೋರೆ ಹೇಳಿದ್ರೂ, ಇವರ ಆ ತೀರ್ಥಳ್ಳಿ ದಾಸಯ್ಯನ, ಅಂವ ಪಕ್ಕಾ ಕಳ್ಳ- ಅವನ ಮಾತು ಕಟ್ಟಿಕೊಂಡು ಅಂವ ಬದುಕಿದ್ದಾನೆ, ಇವತ್ತು ಬರ್ತಾನೆ, ನಾಳೆ ಬರ್ತಾನೆ, ಜೋಗೇರ ಗುಂಪಿನಲ್ಲಿ ಇದಾನಂತೆ, ಅವರು ಅಲ್ಲಿ ಕಂಡರಂತೆ, ಇವರು ಇಲ್ಲಿ ಮಾತಾಡಿಸಿದರಂತೆ. +ಅಂತಾ ಏನೇನೋ ಸುಳ್ಳು ಹುಟ್ಟಿಸಿ, ಅವನ ಹೆಂಡ್ತಿ ತಲೇನೂ ಕೆಡ್ಸಿ,…. ಹಹ್ಹಹ್ಹಹ್ಹ…. ಒಟ್ಟು ನಿನ್ನ ದುಡ್ಡಿಗೆ ದುಡ್ಡಿಗೆ ಚಕ್ರ ಹಾಕಾಕೆ ಹುನಾರು ಮಾಡ್ತಿದ್ದಾರೆ!” +“ದಿನ ಬೆಳಗಾದರೆ ಆ ಪುಣ್ಯಾತಗಿತ್ತೀದೂ ಒಂದು ರಂಪ ಇದ್ದೇ ಇರ್ತದೆ. +ಅದ್ಕಕೀಗ ತಲೆ ಪೂರಾ ಕೆಟ್ಟದೆ ಅಂತ ಕಾಣ್ತದೆ. +ನಾವು ಒಟ್ಟಾಗಿದ್ದಾಗಲೆ ಷುರುವಾಗಿತ್ತು. +ಪಾಲಾದ ಮೇಲೆ ಮತ್ತೂ ಹೆಚ್ಚಿದೆ. +ನಾನು ಅದೂ ಸೇರಿ ತನ್ನ ಗಂಡಗೆ ಏನೋ ಮಂಕು ಬೂದಿ ಹಾಕಿಸಿ, ತಿರುಪತಿ ಯಾತ್ರೆಗೆ ಹೋದವ ಹಿಂದಕ್ಕೆ ಬರದೇ ಇದ್ದಹಾಂಗೆ ಮಾಡೀವಿ ಅಂತಾ! +ಅಂವ ಎಲ್ಲೊ ತಲೆಕೆಟ್ಟು, ಎಲ್ಲಾ ಮರೆತು, ಸನ್ನೇಸಿಗಳ ಹೊತೇಲಿ ತಿರುಗ್ತಾ ಅದಾನಂತೆ! +ಅದಕ್ಕೀಗ ಧರ್ಮಸ್ಥಳಕ್ಕೆ ಹೋಗ, ದೇವರ ಕೇಳಿಸಿ, ಶಾಂತಿ ಮಾಡಿಸಬೇಕಂತೆ ಮರೆತು ಹೋದದ್ದೆಲ್ಲ ನೆನಪಾಗಿ ಮತ್ತೆ ಅಂವ ಮನೆಗೆ ಬರುವಂತೆ! +ಅಲ್ಲೇ ನಮ್ಮ ಮನೆ ಎಲ್ಲಾ ಹಾಳಾಗಾಕೆ ಹುಯ್ಲು ಕೊಡಿಸ್ತಾರಂತೆ!” +“ಅದೊಂದು ಹುಚ್ಚು ಹೆಗ್ಗಡ್ತಿ! +ತಿರುಪತೀಗೆ ಹೋದೋರು ಹಿಂದಕ್ಕೆ ಬರಾದೂ ಉಂದೆ, ನೆರೇ ಹೊಳೀಗೆ ಬಿದ್ದೋರು ದಡ ಹತ್ತಾದೂ ಉಂದೆ! +ಅದೇನು ತೀರ್ಥಳ್ಳಿ ಎಳ್ಳಾಮಾಸೆಗೆ ಹೋಗಿ ಬಂದ ಹಾಂಗೇನು? +ಎಷ್ಟು ದೂರ ಏನು ಕತೆ! +ಕಳ್ಳರು ಕಾಕರು ಕಾಡು ಕಾಯಿಲೆ ಎಲ್ಲ ದಾಟಿಕೊಂಡು ಹೋದರೂ ಹಿಂದಕ್ಕೆ ಬರಾದುಂಟೇ? +ತಿಮ್ಮಪ್ಪನ ಪಾದವೇ ಗತಿ!” +“ಅದೇನು, ಮಾರಾಯ, ಅಲ್ಲಿ? +ಆ ಗಲಾಟೆ? +ಆ ಹಂದಿ ಒಡ್ಡಿಹತ್ರ!” ಎನ್ನುತ್ತಾ ಶಂಕರಪ್ಪ ಹೆಗ್ಗಡೆ ಸೋಗೆಮನೆ ಅಂಗಳದ ಕಡೆ ನೋಡಿದರು. +“ನಂಗುಂದು ಹಂದಿಮರಿ ಬೇಕಾಗಿತ್ತೊ ಹೇಳಿದ್ದೆ. +ಅದ್ಕೇ ಹೆಗ್ಗಡೇರು ಹೊಲೇರ ಕೈಲಿ ಹಿಡಿಸಿ ಅಡ್ಡೆ ಕಟ್ಟಿಸ್ತಿದಾರೆ ಅಂತಾ ಕಾಣುತ್ತೆ.” +“ಯಾಕೆ?ನೀನೂ ಹಂದಿ ಸಾಕ್ತೀಯಾ?” +“ಅಯ್ಯಯ್ಯಯ್ಯೋ ಆ ಹೇಸಿಗೆ, ಆ ಫಚೀತಿ ನಂಗೆ ಬ್ಯಾಡಪ್ಪಾ! +ಏನೋ ದೆಯ್ಯದ ಹರಕೆಗೆ ಬೇಕಾದಾಗ ಯಾರ ಹತ್ರನಾದರೂ ಹೋಗಿ ತಂದರಾಯ್ತು.” +ವೆಂಕಟಣ್ಣ ತಾನು ಹಂದಿಮರಿ ತೆಗೆದುಕೊಂಡು ಹೋಗುತ್ತೇನೆ ಎಂದದ್ದು ಬರಿಯ ರೂಢಿಯ ಮಾತಾಗಿತ್ತು. +ಅವನಿಗೆ ಬೇಕಾಗಿದ್ದುದು ನಿಜವಾಗಿಯೂಮರಿಯಾಗಿರಲಿಲ್ಲ. +ತಕ್ಕಮಟ್ಟಿಗೆ ದೊಡ್ಡ ಸಲಗವನ್ನೆ ಕೇಳಿದ್ದನು. +ಅದರಂತೆ ಸುಬ್ಬಣ್ಣ ಹೆಗ್ಗಡೆಯವರು ಬೆಳಿಗ್ಗೆಯೆ ತನ್ನ ಪ್ರಾಯದ ಮದದಿಂದ ಸಣ್ಣ ಮರಿಗಳೆನ್ನದೆ ಆಗತಾನೆ ಮರಿಹಾಕಿದ್ದವೆನ್ನದೆ ಗಬ್ಬದ ದಡ್ಡೆಗಳೆನ್ನದೆ ಎಲ್ಲವುಗಳ ಮೇಲೆಯೂ ಹತ್ತಿ ಹತ್ತಿ, ಕಚ್ಚಿ ತಿವಿದು, ಗಾಯಗೊಳಿಸಿ ದೊಂಬಿ ಎಬ್ಬಿಸುತ್ತಿದ್ದ ಒಂದು ಸಲಗವನ್ನು ವೆಂಕಟಣ್ಣಗೆ ಮಾರಿಬಿಡಬೇಕೆಂದು ನಿರ್ಣಯ ಮಾಡಿಬಿಟ್ಟಿದ್ದರು. +ಅಪರಾಧಿಯಾದ ಹಂದಿಗೆ ಮರಣದಂಟನೆ, ಅದನ್ನು ಮಾರುವ ತಮಗೆ ಧನಲಾಭ; +ಕೊಳ್ಳುವವನಿಗೆ ಕೊಳಗ್ಗಟ್ಟಲೆ ಮಾಂಸ, ಒಡ್ಡಿಯ ಇತರ ಚತುಷ್ಪಾದಿ ಪ್ರಜೆಗಳಿಗೆ ಕ್ಷೇಮ- ಎಲ್ಲವೂ ಒಟ್ಟಿಗೆ ಸಂಘಟಿಸುವಂತೆ! +“ಈಗ  ಎಂಥ ದೆಯ್ಯದ ಹರಕೇನೊ ನಿನಗೆ?” ಶಂಕರಪ್ಪ ಒಳಗೊಳಗೇ ನಗುತ್ತಾ ಕೇಳಿದರು. +ಗುಸುಗುಸು ಸುದ್ದಿ ಅವರ ಕಿವಿಗೂ ಬಿದ್ದಿತ್ತು, ನಾಗತ್ತೆ ತನ್ನ ಸೊಸೆಯನ್ನು ವೆಂಕಟಣ್ಣಗೆ ಸೀರುಡಿಕೆ ಮಾಡಿಸಲು ಒಂದು ವರ್ಷದಿಂದಲೂ ಬಹಳ ಉಪಾಯ ಮಾಡುತ್ತಿದ್ದಾಳೆ ಎಂದು. +ಆ ವಿಚಾರದಲ್ಲಿ ನಾಗಕ್ಕ ಇತರ ಗಂಡುಗಳೊಡನೆ ಬೇರೆ ಬೇರೆಯ ಕಡೆಗಳಲ್ಲಿ ಹೇಗೆ ನಡೆದುಕೊಂಡಿದ್ದಳು ಎಂಬುದಂತೂ ಎಲ್ಲರಿಗೂ ಗೊತ್ತಿದ್ದಂತೆ ಅವರಿಗೂ ತಿಳಿದ ವಿಷಯವಾಗಿತ್ತು. +ಆದ್ದರಿಂದಲೆ ಹಿತವಲ್ಲದ ಆ ಪರಸಂಗವನ್ನು ಕುರಿತು ತಾವು ಬಾಯಿಬಿಟ್ಟು ಕೇಳಲು ಹಿಂದೆಗೆದಿದ್ದರು. +“ನಮ್ಮ ಮನೆ ಹಿಂದೆ, ಅದೇ ಆ ಹಾಡ್ಯದ ಬಲಗಡೆಗೆ, ಉಂಡು ಮಾರಿಗುಡಿ ಇದೆಯಲ್ಲಾ? …. ನೀನು ನೋಡೀಯಲ್ಲಾ?” ವೆಂಕಟಣ್ಣ ಮಾರಿ ಹರಕೆಯ ವಿಶೇಷಕ್ಕಾಗಿ ಹಂದಿ ತೆಗೆದುಕೊಂಡು ಹೋಗುತ್ತಿರುವುದೆಂದು ನಿಜವನ್ನು ಮರೆಸಿದ್ದ. +“ಹ್ಞೂ ನೋಡೀನಿ ಅಂತ ಕಾಣ್ತದೆ. +ಯಾವತ್ತೊ ಒಂದು ಸಾರಿ ದೊಡ್ಡ ಬೇಟೆಗೆ ಹೋದಾಗ, ಆ ಗುಡಿ ಬದೀಲೆ ಅಲ್ಲೇನು ಮಿಣಿಬಲೆಗೆ ಒಂದು ಒಂಟಿಗ ಬಿದ್ದು, ನೀನು ಭರ್ಜಿಲಿ ತಿವಿದು, ಒಂದುರುಳು ಉರುಳು ಹಂದಿ ಹತ್ರಾನೆ ಬಿದ್ದದ್ದು!…” + ವೆಂಕಟಣ್ಣ ಆ ಘಟನೆಯನ್ನು ನೆನೆದು ಹೊಹ್ಹೊಹ್ಹೊಹ್ಹೊ ಎಂದು ಗಟ್ಟಿಯಾಗಿ ನಗುತ್ತಿರಲು ಶಂಕರಪ್ಪ ಮುಂದುವರಿಸಿ “ನಮ್ಮ ತಿರುಪತಿಗೆ ಹೋದ ದೊಡ್ಡಣ್ಣ ಅದಕ್ಕೊಂದು ಈಡು ಹೊಡೀದಿದ್ದರೆ ನಿನ್ನ ಗತಿ ಮುಗೀತಿತ್ತು….” + “ಹೌದಲ್ಲಾ? …. ಆ ಮಾರಾಯನಿಂದ ನನ್ನ ಪರಾಣ ಉಳೀತು! +ಪುಣ್ಯಾತ್ಮ!ತಿಮ್ಮಪ್ಪ ಅವನಿಗೆ ಒಳ್ಳೇದು ಮಾಡ್ಲಿ!” +“ಬದುಕಿದ್ದರೆ ತಾನೆ ಒಳ್ಳೇದು ಮಾಡಾದು? +ನೀನೇ ಹೇಳ್ದೆ, ವಾಂತಿಭೇದಿ ಆಗಿ ಅಂವ ಸತ್ತಿದ್ನ ಕಂಡೋರೆ ಹೇಳಿದ್ರು ಅಂತಾ.” +“ಯಾರಿಗೂ ಗೊತ್ತು ಯಾವುದು ನಿಜಾ ಅಂತ? +ಕಡೀಗೆ ಆ ತೀರ್ಥಳ್ಳಿ ದಾಸಯ್ಯನ ಮಾತೇ ಸತ್ಯವಾದ್ರೂ ಆಗಬೈದು? …. + “ಅದೇನು ಗುಲ್ಲು, ಮಾರಾಯ? +ಇತ್ತ ಮಖಾನೆ ಬರಾಹಾಂಗೆ ಕಾಣ್ತದೆ!”ಅತ್ತಕಡೆಗೆ ಬೆನ್ನುಹಾಕಿ ಕುಳಿತಿದ್ದ ವೆಂಕಟಣ್ಣ ಶಂಕರಪ್ಪ ಹೆಗ್ಗಡೆಯವರು ಹೇಳಿದ್ದು ಕೇಳಿ ಆ ಕಡೆ ಮುಖ ತಿರುಗಿಸಿ ನೋಡುತ್ತಾನೆ: +ಹಂದಿ, ನಾಯಿ, ಮನುಷ್ಯರು, ಬೊಬ್ಬೆ, ಕರೆ, ಕೂಗು, ಬೂಗುಳ, ಗಲಾಟೆ ‘ಹಿಡಿಯೋ”’’, ‘ಹೊಡೆಯೋ’, ‘ಅವರ ಮನೆ ಅಂಗಳಕ್ಕೆ ನುಗ್ತದಲ್ಲೋ’, ‘ಮುಂದೆ ಹೋಗಿ ಅಡ್ಡ ಹಾಕೋ’, ‘ತಡೆಯೋ!’ ‘ಓಡೋ, ಬೇಗೋಡೋ, ನಿನ್ನ ಗುಡ್ಲೀಗೆ ಬೆಂಕಿ ಬೀಳ!’ ಎಂಬೆಲ್ಲ ಸದ್ದಿನ ತುಮುಲವು ಶರವೇಗದಿಂದ ನುಗ್ಗಿ ತಾವಿದ್ದ ಕಡೆಗೇ ಮೇಲ್ವಾಯುತ್ತಿದೆ! +ಶಂಕರಪ್ಪ ಹೆಗ್ಗಡೆಯವರು ಸ್ನಾನಮಾಡಿ ಕೆದರಿ ಬೆನ್ನಮೇಲೆ ಇಳಿಬಿಟ್ಟಿದ್ದ ತಮ್ಮ ಉದ್ದನೆಯ ಕೂದಲನ್ನು ಬೇಗಬೇಗನೆ ಒಟ್ಟು ಮಾಡಿ ಜುಟ್ಟು ಕಟ್ಟಿಕೊಳ್ಳುತ್ತಾ “ಅಯ್ಯಯ್ಯೋ! +ಹೊಲೆಮಾದಿಗೆ ಸಾವಾಸ! +ತುಳಸೀ ಮೇಲೆ ನುಗ್ಗಿಸ್ತಾರಲ್ಲೋ ಹೇಲ್ ತಿನ್ನ ಹಂದೀನ!ಥೂ!” ಎಂದು ಕೂಗುತ್ತಲೆ ಮೆಟ್ಟಲು ಹಾರಿ ಅಂಗಳಕ್ಕೆ ದುಮುಕಿದರು. +ವೆಂಕಟಣ್ಣ ಆ ಉದ್ವೇಗ ಉತ್ಸಾಹ ಅವಸರಗಳಲ್ಲಿ ತನ್ನ ಕಾಲಿನ ಹುಣ್ಣನ್ನು ಮರೆತು, ಹಂದಿಗೆ ಹೇರಲೆಂದೊ, ಇಲ್ಲವೆ ಅಂಗಳಕ್ಕೆ ಧಾವಿಸುತ್ತಿದ್ದ ದಾಳಿಯನ್ನು ತಡೆಯಲೆಂದೊ, ತಟಕ್ಕನೆ ಎದ್ದು ಬಳಿಯಿದ್ದ ದೊಣ್ಣೆಯನ್ನು ತುಡುಕಿ ಶಂಕರಪ್ಪನ ಹಿಂದೆಯೆ ನುಗ್ಗಿದನು. +ಆದರೆ ಮೆಟ್ಟಲಿಗೆ ಹಾರಿದವನೆ ದೊಸಕ್ಕನೆ ಕೂತು ‘ಅಯ್ಯಪ್ಪಾ’ ಎಂದು ಒರಲಿಬಿಟ್ಟನು! +ಕಣ್ಣಾಪಂಡಿತರು ಮದ್ದು  ಹಾಕಿ ಕಟ್ಟಿದ ಬಟ್ಟೆಯೆಲ್ಲ ಕಂಪಾಗಿ, ನೆತ್ತರು ಇಳಿಯ ತೊಡಗಿತು. +ಆದರೆ ಯಾರೊಬ್ಬರೂ ಅವನಿಗೆ ಒದಗಿದ್ದ ಆ ದುರವಸ್ಥೆಯನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ. +ಗಲಾಟೆಯನ್ನು ಕೇಳಿ ಕೂಸನ್ನೆತ್ತಿಕೊಂಡು ಬಂದು ಜಗಲಿಯ ಮೇಲೆ ಮಗ ರಾಮು ಮತ್ತು ಬಾಲೆ ಆಡಿಸುವ ಹುಡುಗಿ ಕೆಂಪಿ ಇವರೊಡನೆ ನಿಂತಿದ್ದ ಸೀತಮ್ಮನವರೂ ನಾಯಿಗಳೂ ಮನುಷ್ಯರೂ ತುರುಬಿಕೊಂಡು ಬರುತ್ತಿದ್ದ ಹಂದಿಯನ್ನೆ ನೋಡುತ್ತಿದ್ದರು. +ತಂದೆಯ ಕೈಯಲ್ಲಿ ಬಯ್ಯಿಸಿಕೊಂಡ ಸಿಟ್ಟಿನ ಭರದಲ್ಲಿ ತಿಮ್ಮಪ್ಪ ಹೆಗ್ಗಡೆ ಮುಖ ತೊಳೆಯದೆ, ಹಲ್ಲು ತಿಕ್ಕುತ್ತಿದ್ದ ಮಸಿಯಿಂದ ತುಟಿ ಬಾಯಿ ಎಲ್ಲ ಕರ್ರಗಾಗಿ ಜೊಲ್ಲಿಳಿಯುತ್ತಿದ್ದುದನ್ನೂ ಲೆಕ್ಕಿಸದೆ ಹೊಲಗೇರಿ ಕಡೆ ಹೊರಟಿದ್ದನು. +ಆದರೆ ದಾರಿಯಲ್ಲಿ ಒಂದು ಹುಳಿಚೊಪ್ಪಿನ ಮಟ್ಟಿನ ಬುಡದ ಸಣ್ಣ ಹೊಂಡದಲ್ಲಿ ನಿನ್ನೆ ಬಿದ್ದ ಭಾರಿ ಮಳೆಯ ದೆಸೆಯಿಂದ ಸ್ವಲ್ಪ ನೀರು ನಿಂತಿದ್ದುದನ್ನು ಕಂಡ ಕೂಡಲೆ ಅದರ ಬುಡಕ್ಕೆ ಹೋಗಿ ಬಗ್ಗಿ ನೋಡಿದನು. +ತುಂಬಿದ್ದ ಹೊಂಡದ ಕೊಳಕು ನೀರಿನ ಕನ್ನಡಿಯಲ್ಲಿ ತನ್ನ ಮುಖದ ಪಡಿನೆಳಲು ಕಣ್ಣಿಗೆ ಬೀಳಲು ಅವನಿಗೆ ನಾಚಿಕೆಯಾದಂತಾಯಿತು. +ಸಹಜವಾಗಿಯೆ ತಾನು ಎಲ್ಲರಿಗೂ ಚೆನ್ನಾಗಿ ಕಾಣಿಸಬೇಕು ಎಂಬ ಪ್ರಾಯದ ವಯಸ್ಸಿನ ಅವನಿಗೆ ತನ್ನ ಆ ವಿಕಾರ ವೇಷ ಜಿಗುಪ್ಸೆ ಹುಟ್ಟಿಸಿತು. +ತಾನು ಹೋಗುತ್ತಿದ್ದುದು ಹೊಲೆಯರ ಕೇರಿಗಾಗಿದ್ದರೂ, ಅಲ್ಲಿ ತನ್ನ ರೂಪ ಸೌಂದರ್ಯಗಳನ್ನು ಯಾರಾದರೂ ಗಮನಿಸುವುದಾಗಲಿ ಗಮನಿಸದಿರುವುದಾಗಲಿ ಎರಡೂ ಅಪ್ರಕೃತವಾಗಿದ್ದರೂ, ತಿಮ್ಮಪ್ಪ ಹೆಗ್ಗಡೆ ಆ ಹೊಂಡದ ನೀರಿನಲ್ಲಿ ಮುಖ ತೊಳೆಯಲು ಮನಸ್ಸು ಮಾಡಿದನು. +ಆದರೆ ಮತ್ತೂ ಒಂದು ಯೋಚನೆ ತಲೆದೋರಿ ಅವನು ಹಿಂಜರಿದನು. +‘ಯಾರಾದರೂ ಆ ನೀರಿನಲ್ಲಿ ಅಂಡು ತೊಳೆದುಬಿಟ್ಟಿದ್ದರೆ?’ + ‘ನಿನ್ನೆ ರಾತ್ರಿ ಬಿದ್ದ ಮಳೆಯಲ್ಲಿ ನೀರು ನಿಂತದ್ದು. +ಇಷ್ಟು ಬೆಳಿಗ್ಗೆ ಯಾರು ಬರ್ತಾರೆ ಇಲ್ಲಿಗೆ?’ + ‘ಅಯ್ಯೋ ನಾನೆ ಎಷ್ಷು ಸಾರಿ ಹೀಗೆ ನಿಂತ ನೀರಿನಲ್ಲಿ ಹೊರಕಡೆಗೆ ಹೋಗಿ ತೊಳಕೊಂಡಿಲ್? +ಅದರಲ್ಲೇನು ಅಂಥಾ ದೋಷ?’ + ‘ಉರಿಯುವ ಬೆಂಕಿಗೂ ಹರಿಯುವ ನೀರಿಗೂ ಶಾಸ್ತ್ರ ಇಲ್ಲ ಅಂತಾರೆ. +ಹರಿಯುವ ನೀರಾದರೇನು? +ನಿಂತ ನೀರಾದರೇನು?’ ತಿಮ್ಮಪ್ಪ ತನ್ನ ಮನಸ್ಸಿನಲ್ಲಿಯೆ ಇನ್ನೊಂದು ಅತ್ಯಂತ ಅಶ್ಲೀಲದ ಗಾದೆಯನ್ನೂ ಹೇಳಿಕೊಂಡು, ಮುಖ ತೊಳೆಯುವುದಕ್ಕೆ ಬದಲಾಗಿ ಮಸಿ ಹಿಡಿದಿದ್ದ ತುಟಿ ಬಾಯಿಗಳನ್ನು ಮಾತ್ರವೆ ತೊಳೆದುಕೊಂಡನು. +ಮತ್ತೆ ನೀರಿನಲ್ಲಿ ಮುಖ ನೋಡಿಕೊಂಡು ತನ್ನ ತಿಪ್ಪುಳುಮೀಸೆಗಳನ್ನು ಗಮನಿಸಿ ತೃಪ್ತಿಪಟ್ಟುಕೊಂಡನು. +ಕೇರಿ ಹೊಲೆಯರದ್ದೆ ಆಗಿದ್ದರೂ ಅಲ್ಲಿದ್ದವರೆಲ್ಲರೂ ತಾನು ಮುಟ್ಟದವರಾದ ತಮ್ಮ ಜೀತದಾಳುಗಳೆ ಆಗಿದ್ದರೂ, ಅಲ್ಲಿಯೂ ತಾನು ಕಣ್ಣಿಡಲು ಯೋಗ್ಯವಾದ ಹೆಣ್ಣಗಳಿರಬಹುದು ಎಂಬುದನ್ನು ಯುವ ಹೆಗ್ಗಡೆಯ ಅಂತಶ್ಚಿತ್ತ ಅಲಕ್ಷಿಸಿರಲಿಲ್ಲ. +ಹೊಲಗೇರಿ ಹತ್ತಿರಕ್ಕೆ ಬಂದಹಾಗೆಲ್ಲ ಅದರ ಸಮ್ಮಿಶ್ರ ಶಬ್ದ ಪ್ರಪಂಚವೂ ವಾಸನಾ ಪ್ರಪಂಚವೂ ಸ್ವಲ್ಪ ಹೆಚ್ಚು ಕಡಿಮೆ ಅಂತಹ ಪ್ರಪಂಚದಲ್ಲಿಯೆ ವಾಸಿಸುತ್ತಿದ್ದ ತಿಮ್ಮಪ್ಪ ಹೆಗ್ಗಡೆಗೂ ಮೂಗೂ ಮುಚ್ಚಿಕೊಳ್ಳುವಷ್ಟು ತೀವ್ರತರವಾಗಿ ಇಂದ್ರಿಗೋಚರವಾಗತೊಡಗಿತ್ತು. +ಕೋಳಿ, ಕುರಿ, ನಾಯಿ, ಹಂದಿ, ಮನುಷ್ಯರು, ದನಕರು ಇವೆಲ್ಲ ಪ್ರಾಣಿಗಳ ದುರ್ಗಂಧದ ಅವಿಭಕ್ತ ಕುಟುಂಬದ ವಾಯುವಲಯಕ್ಕೆ ಪ್ರವೇಶಿಸಿ, ಕೇರಿ ಪ್ರಾರಂಭವಾಗುವ ಸ್ಥಳಕ್ಕೆ ಸಮೀಪದಲ್ಲಿಯೆ ಅದರ ದ್ವಾರ ರಕ್ಷಣಾ ಪ್ರದೇಶವೆಂಬಂತೆ ಎತ್ತರವಾಗಿದ್ದ ‘ಒಡೇರ ದಿಬ್ಬ’ದ ಮೇಲೆ ನಿಂತು, ತಿಮ್ಮಪ್ಪ ಹೆಗ್ಗಡೆ ವೀಕ್ಷಿಸತೊಡಗಿದನು. +ಅವನು ನಿಂತಿದ್ದ ದಿಬ್ಬವನ್ನು ‘ಒಡೆಯರ ದಿಬ್ಬ’ ಎಂದೂ ‘ಹೆಗ್ಗಡೇರ ದಿಬ್ಬ’ ಎಂದೂ ಸಮಯಾನುಸಾರವಾಗಿ ಕರೆಯುತ್ತಿದ್ದರು ಆ ಕೇರಿಯವರು. +ಏಕೆಂದರೆ ನೂರಾರು ವರ್ಷಗಳಿಂದ, ವಂಶಪಾರಂಪರ್ಯವಾಗಿ ಹೆಗ್ಗಡೆಯವರ ಮನೆತನಕ್ಕೆ ಗೆಯ್ಯುತ್ತಿದ್ದ ಜೀತದಾಳುಗಳು, ತಾವು ಮಕ್ಕಳಾದಂದಿನಿಂದಲೂ, ದಿನವೂ ಪ್ರಾತಃಕಾಲದಲ್ಲಿ ತಮ್ಮನ್ನು ಕೆಲಸಕ್ಕೆ ಕರೆಯಲು ಬರುತ್ತಿದ್ದ ಒಡೆಯರನ್ನು ಆ ದಿಬ್ಬದ ನೆತ್ತಿಯ ಮೇಲೆಯೆ ನೋಡುತ್ತಿದ್ದುದು ವಾಡಿಕೆಯಾಗಿತ್ತು, ನಿಸರ್ಗ ವ್ಯಾಪಾರವೊ ಎನ್ನುವಷ್ಟರ ಮಟ್ಟಿಗೆ. +ಆ ‘ಒಡೇರ ದಿಬ್ಬ’ದ ಮೇಲೆ ನಿಂತು ನೋಡಿದರೆ, ಮೂವತ್ತು ನಾಲ್ವತ್ತು ಬಿಡಾರಗಳ ಆ ಹೊಲಗೇರಿಯೆಲ್ಲವೂ ಎದುರಿಗೆ ಬಿಚ್ಚಿಟ್ಟಂತೆ ಕಾಣಿಸುತ್ತಿತ್ತು. +ಅಲ್ಲಿದ್ದ ಆ ಮೂವತ್ತು ನಾಲ್ವತ್ತು ಬಿಡಾರಗಳೂ ಯಾವ ಕ್ರಮವನ್ನೂ ಅನುಸರಿಸಿ ಮೂಡಿರಲಿಲ್ಲ. +ಕಟ್ಟುವವನ ಅನುಕೂಲ, ಇಚ್ಛೆ, ಅವಶ್ಯಕತೆಗನುಸಾರವಾಗಿ ಒಂದೊಂದು ಬಿಡಾರವೂ ಇತರ ಯಾವ ಬಿಡಾರದ ದಯೆ ದಾಕ್ಷಿಣ್ಯಗಳಿಗೂ ಒಳಗಾಗದೆ ಹುಟ್ಟಿಕೊಂಡಿತ್ತು. +ಕೆಲವು ಬಿಡಾರಗಳ ಎದುರಿನಲ್ಲಿ ಮುಂದೆ ಎತ್ತರದಲ್ಲಿದ್ದ ಬಿಡಾರಗಳ ಕೊಳಕು ನೀಡು ಮಡುಗಟ್ಟಿ, ಹಂದಿಗಳಿಗೆ ಮಗ್ಗಲು ಬೀಳುವ ಕೆಸರು ಮಡುಗಳಾಗಿ, ಕೋಳಿಗಳಿಗೆ ಕೆದರಲು ಆಹಾರದ ಗಣಿಗಳಾಗಿದ್ದುವು. +ಆ ಕಡೆ ಈ ಕಡೆ ಅಕ್ರಮವಾಗಿಯೆ ಹಂಚಿಹೋಗಿದ್ದ ಗುಡುಸಲುಗಳ ಮಧ್ಯೆ ಅಂಗಳವೂ ಅಲ್ಲದ, ರಸ್ತೆಯೂ ಅಲ್ಲದ, ಅಥವಾ ಎರಡೂ ಆಗಿರುವ ಒಂದು ಹತ್ತಾರು ಮಾರು ಬಯಲು ಜಾಗವಿತ್ತು. +ಅಲ್ಲಿ ಕೇರಿಯ ಬಡ್ಡು ಮೆಯ್ಯ ಬತ್ತಲೆ ಮಕ್ಕಳು ಆಟವಾಡುತ್ತಿದ್ದರೆ ಆ ಪಕ್ಕದ ಈ ಪಕ್ಕಡ ಬಿಡಾರಗಳ ಜಗಲಿಯಲ್ಲಿಯೊ ತೆಣಿಯ ಮೇಲೆಯೊ ಕೆಲಸದಿಂದ ಹಿಂದಿರುಗಿ ಬಂದು ದಣಿದ ದೊಡ್ಡವರು ಕುಳಿತು ಬಾಯಿಗೆ ಹಾಕಿಕೊಳ್ಳುತ್ತಲೊ ಹರಟೆ ಹೊಡೆಯುತ್ತಲೊ ಸಂಸಾರ ಸಾರ ಸುಖವನ್ನು ಅನುಭವಿಸಬಹುದಾಗಿತ್ತು. +‘ಹೆಗ್ಗಡೇರ ದಿಬ್ಬ’ದ ಮೇಲೆ ನಿಂತಿದ್ದ ಒಡೆಯರ ಆಗಮನವನ್ನು ಮೊತ್ತ ಮೊದಲು ಗಮನಿಸಿ, ಕೇರಿಗೆ ವತರತಮಾನ ಕೊಟ್ಟದ್ದು ಮರಿಹಾಕಿದ್ದ ಒಂದು ಕರಿನಾಯಿ. +ಅದರ ಸುತ್ತಲೂ ಮುಲುಮುಲು ಓಡಾಡುತ್ತಾ ತಮ್ಮ ಬಡಕಲು ತಾಯಿಯ ಸೊರಗಿದ ಜೋಲು ಮೊಲೆಗಳನ್ನು ಚೀಪಿ ಜಗ್ಗಿಸುತ್ತಿದ್ದ ಕರಿಯ ಬಿಳಿಯ ಹಂಡಹುಂಡ ಮರಿಗಳು, ತಮ್ಮ ತಾಯಿಗೆ ಮತ್ತು ತಂದೆಯವರಿಗೆ ಅನ್ನಾನೀರು ಹಾಕಿ ಸಾಕಿ ಸಲಹುತ್ತಿದ್ದ ಮುಷ್ಯ ಯಜಮಾನರ ಬದುಕು ಬಾಳು ಆಗುಹೋಗು ಜನನ ಮರಣ ಮದುವೆ ಹಬ್ಬ ಸಾಲ ಸೂಲ ಎಲ್ಲಕ್ಕೂ ಬ್ರಹ್ಮ ವಿಷ್ಣು ಮಹೇಶ್ವರರಾಗಿದ್ದ ಹೆಗ್ಗಡೆಯವರಿಗೆ ಸಲ್ಲಬೇಕಾಗಿದ್ದ ಲಕ್ಷವನ್ನಾಗಲಿ ಭಯ ಭಕ್ತಿ ಗೌರವಗಳನ್ನಾಗಲಿ ಒಂದಿನಿತೂ ಸಲ್ಲಿಸದೆ, ಜೋಲು ಮೊಲೆಗಳನ್ನು ಜಗ್ಗಿ ಸೆಳೆದು ಚೀಪುತ್ತಿದ್ದುವು, ತಾಯಿ ಬೊಗಳುತ್ತಾ ನಿಂತದ್ದು ತಮಗೆ ಅನುಕೂಲವೆ ಆಯಿತೆಂದು, ಹಿಂಗಾಲಿನ ಮೇಲೆ ನಿಂತು ಮುಂಗಾಲನ್ನು ತಾಯಿಯ ಹೊಟ್ಟೆಗೆ ಆನಿಸಿ ಮೋಟುಬಾಲಗಳನ್ನು ಲಿವಿಲಿವಿಲಿವಿ ಅಳ್ಳಾಡಿಸುತ್ತಾ. +ಆ ಕರಿನಾಯಿಯ ಬೊಗಳಿಕೆ ಕಿವಿಗೆ ಬಿದ್ದುದೆ ತಡ ಒಂದೊಂದು ಬಿಡಾರದ ಮುಂದೆಯೂ ಅಲ್ಲಿ ಇಲ್ಲಿ ನಾನಾ ಕ್ರೀಡೆಗಳಲ್ಲಿ ನಾನಾ ಭಂಗಿಗಳಲ್ಲಿ ಮಲಗಿದ್ದ ಕುಳಿತಿದ್ದ ನಿಂತಿದ್ದ ನಾಯಿಗಳೆಲ್ಲ ತಮ್ಮ ಹತ್ತಿಪ್ಪತ್ತು ಗಂಟಲುಗಳನ್ನು ಒಕ್ಕೊರಲಾಗಿಸಿ ಬೊಗಳತೊಡಗಿದುವು. +ನಾಯಿಗಳ ಕೂಗಾಟಕ್ಕೆ ಗಾರಾಗಿ ಕೋಳಿಗಳೂ ದಿಗಿಲುಗೊಂಡಂತೆ ಕೂಗತೊಡಗಿದುವು. +ಒಡೆಯರ ದಿಬ್ಬಕ್ಕೆ ಉಳಿದೆಲ್ಲ ಬಿಡಾರಗಳಿಗೂ ಮೊದಲನೆಯದಾಗಿ ಸಮೀಪವಾಗಿದ್ದ ಮಂಜನ ಬಿಡಾರದ ಒಳಗೆ, ಹಾಳೆ ಕೊಟ್ಟೆಯಲ್ಲಿ ಗಂಜಿ ಉಣ್ಣುತ್ತಿದ್ದ ಮಂಜ, ತಟಕ್ಕನೆ ಗಾಬರಿಗೊಂಡು ತನ್ನ ಹೆಂಡತಿ ಸಿದ್ದಿಗೆ ಪಿಸುದನಿಯಲ್ಲಿ “ಏ, ನಾಯಿ ಕೂಗ್ತವೆಯೇ! +‘ಮನೆ’ಯಿಂದ ಯಾರಾದ್ರೂ ಬಂದರುಗಿಂದರೊ? +ನೋಡೆ!” ಎಂದು ಆಜ್ಞಾಪಿಸಿ, ಗುಡಿಸಲಿನ ತಟ್ಟಿ ಬಾಗಿಲೆಡೆಗೆ ಹೋಗುತ್ತಿದ್ದವಳಿಗೆ ಎಚ್ಚರಿಕೆ ಕೊಟ್ಟನು. + ಒಳಗಿನಿಂದಲೆ ನೋಡೇ. +ಹೊರಗೆ ತಲೆ ಹಾಕಬ್ಯಾಡೇ, ಕಂಡವರ್ನೇ ಹಿಡುಕೊಂಡು ಬಿಡ್ತಾರೇ!”ಸಿದ್ದಿ ಬಾಗಿಲಿಗೆ ತುಸು ದೂರದಲ್ಲಿಯೆ ನಸುಗತ್ತಲೆಯಲ್ಲಿ ನಿಂತು, ಬಗ್ಗಿ ನೋಡಿ, ಪಿಸುದನಿಯಲ್ಲಿಯೆ ಹೇಳಿದಳು: + “ಒಡೇರ ದಿಬ್ಬದ ಮ್ಯಾಲೇ ಹೆಗ್ಗಡೇರು ನಂತಾರೆ ಕಣ್ರೋ!” + “ಬಾಗಿಲು ವಾರೆ ಮಾಡೇ, ಬ್ಯಾಗ!” ದಿಗಿಲುಗೊಂಡಂತಿತ್ತು ಮಂಜನ ಪಿಸುದನಿ. +ಸಿದ್ದಿ ಗಂಡನ ಸಲಹೆಯ ಮೇರೆಗೆ ತಟ್ಟಿ ಬಾಗಿಲನ್ನು, ಇನ್ನೇನು ಪೂರ್ತಿ ಮುಚ್ಚಿಯೆ ಬಿಟ್ಟಿತು ಎನ್ನುವಷ್ಟರ ಮಟ್ಟಿಗೆ, ಬೇಗ ಬೇಗನೆ ಓರೆಮಾಡಿದಳು. +“ನಾನು ಇವತ್ತು ಬೆಟ್ಟಳ್ಳಿಗೆ ಹೋಗಬೇಕಾಗದೆ. +ಕೆಲಸಕ್ಕೆ ಬಾ ಅಂತ ಕೂತರೆ ಏನು ಮಾಡಾದು?” ಎನ್ನುತ್ತಾ ಮಂಜ ಗಂಜಿ ಉಣ್ಣತೊಡಗಿದನು. +ನಾಯಿ ಕೋಳಿಗಳ ಬೊಬ್ಬೆ ಇಳಿಮುಖವಾಗುತ್ತಿರಲು, ಹೆಸರು ಹಿಡಿದು ಕರೆಯಲು ಯಾರೂ ಕಣ್ಣಿಗೆ ಬೀಳದಿದ್ದುದಕ್ಕಾಗಿ ರೇಗಿ, ತಿಮ್ಮಪ್ಪ ಹೆಗ್ಗಡೆ “ಎಲ್ಲಿ ಸತ್ರೋ ಎಲ್ಲಾ? +ನಿಮ್ಮ ಬಿಡಾರಕ್ಕೆ ಬೆಂಕಿ ಬೀಳ! +ಊರಿಗೆಲ್ಲಾ ಹಗಲಾದ್ರೂ ನಿಮಗಿನ್ನೂ ಬೆಳಗಾಗಿಲ್ಲೇನ್ರೋ?” ಎಂದು ಗಟ್ಟಿಯಾಗಿ ಅಬ್ಬರಿಸಿ ಕಾಕು ಕೂಗಿದ ಹೊಡೆತಕ್ಕೆ ನಾಯಿ ಕೋಳಿಗಳೆಲ್ಲ ಮತ್ತೊಮ್ಮೆ ಬೊಬ್ಬೆ ಹಾಕತೊಡಗಿದುವು. +ಒಂದೊಂದು ಬಿಡಾರದಲ್ಲಿಯೂ ಪ್ರತ್ಯೇಕ ಪ್ರತ್ಯೇಕವಾಗಿ ಜರುಗುತ್ತಿದ್ದ ವಿಶಿಷ್ಟ ವ್ಯಾಪಾರಗಳೆಲ್ಲವೂ ಕ್ಷಣಮಾತ್ರದಲ್ಲಿ ಸ್ತಂಭೀಭೂತವಾದವು. +ತನ್ನ ಬಿಡಾರದ ಬಾಗಿಲೆಡೆಯೆ ಪ್ರಾತಃ ಸೂರ್ಯಕಾಂತಿಗೆ ಬೆಂದಿರುಹಿ ಕುಳಿತು, ಸೊಂಟದ ಪಂಚೆಯನ್ನು ಅರ್ಧಅರ್ಧವಾಗಿಯೆ ಬಿಚ್ಚಿ, ಮಡಿಕೆ ಮಡಿಕೆಗಳನ್ನೂ ಒಂದೊಂದನ್ನಾಗಿ ಹುಡುಕಿನೋಡಿ, ಕೂರೆ ಹೆರಕಿ ಕುಕ್ಕುತ್ತಿದ್ದ ತಿಮ್ಮ, ಹೆರಕಿದ್ದ ಕೂರೆಯೊಂದನ್ನು ಹಾಗೆಯೆ ಹಿಡಿದುಕೊಂಡು, ನೀಳವಾಗಿ ಬೆಳೆದಿದ್ದ ತನ್ನ ಕೊಳಕಲು ತಲೆಗೂದಲಿನಲ್ಲಿ ಹೇನು ಹೆಕ್ಕುತ್ತಿದ್ದ ಹೆಂಡತಿ ಗಿಡ್ಡಿಗೆ “ಅದೇನು ಗಲಾಟೆ? +ಕೆಲಸಗಿಲಸಕ್ಕೆ ಕರೆಯಾಕೆ ಬಂದಾರೇನು ನೋಡೇ?” ಎಂದನು. +ತನ್ನ ತಲೆಕೂದಲಿಗಿಂತಲೂ ಉದ್ದವಾಗಿದ್ದ ತನ್ನ ಗಂಡನ ತಲೆಕೂದಲಿನ ಕ್ಷೇಮದಲ್ಲಿ ಆಸಕ್ತಳಾಗಿದ್ದ ಗಿಡ್ಡಿ ತಿರುಗಿ ನೋಡಿ “ಒಡೇರ ದಿಬ್ಬದ ಮ್ಯಾಲೆ ಹೆಗ್ಗಡೇರು ನಿಂತಾರೆ. +ಯಾರನ್ನೊ ಕೂಗ್ತಿದಾರೆ” ಎಂದಳು. +“ಯಾವ ಹೆಗ್ಗಡೇರೆ?” +“ಸಣ್ಣ ಹೆಗ್ಗಡೇರು.” +“ಅಂದರೆ?ಹೆಂಚಿನ ಮನೇರೋ? +ಸೋಂಗೆ ಮನೇರೋ?” +“ನಾನು ಹೆಸರು ಹೇಳಬಾರದ ಹೆಗ್ಗಡೇರು ಅಂತೀನೀ!” ಎಂದು ತುಸು ಮುನಿದಂತೆ ನಟಿಸಿದಳು ಗಿಡ್ಡಿ. +ತಿಮ್ಮನಿಗೆ ಅರ್ಥವಾಗಿ, ತನ್ನ ಹೆಂಡತಿಗೆ ತನ್ನ ಮೇಲಿರುವ ಗೌರವಕ್ಕಾಗಿ ಅವಳಲ್ಲಿ ಅಭಿಮಾನ ಉಕ್ಕಿದಂತಾಯಿತು. +ಆದರೆ ಕೆಲಸಕ್ಕೆ ಕರೆಯಲು  ಬಂದವರು ತಿಮ್ಮಪ್ಪ ಹೆಗ್ಗಡೆ ಎಂದು ಗೊತ್ತಾದೊಡನೆ, ತನ್ನ ಔದಾಸೀನ್ಯವನ್ನು ತಟಕ್ಕನೆ ತ್ಯಜಿಸಿ, ಸೊಂಟದ ಪಂಚೆಯನ್ನು ಸುತ್ತಿಕೊಳ್ಳುತ್ತಾ, ಹೆಂಡತಿಯ ಕೈಯಿಂದ ತಲೆಗೂದಲನ್ನು ಬಿಡಿಸಿಕೊಂಡು, ಬೇಗಬೇಗನೆ ಜುಟ್ಟು ಗಂಟುಹಾಕಿಕೊಂಡು “ಆ ಬಾಳೆಗೊನೆ ಅಲ್ಲಿಡಬ್ಯಾಡೆ, ಕಾಣದ ಹಾಗೆ ಮುಚ್ಚಿಟ್ಟುಬಿಡು!” ಎಂದು ಕೆಲಸಕ್ಕೆ ಹೋಗುವಾಗ ತಲೆಗೆ ಸುತ್ತಿಕೊಳ್ಳುವ ಒಂದು ಕೊಳಕಿನ ಮುದ್ದೆಯಾಗಿದ್ದ ಎಲೆವಸ್ತ್ರವನ್ನು ಗೂಟದಿಂದ ತೆಗೆದು ಸರಿಮಾಡತೊಡಗಿದನು. +ಒಡೆಯರ ತೋಟದಿಂದ ಅವರಿಗೆ ಹೇಳದೆ ಕೇಳದೇ ತಂದಿದ್ದ ಆ ದೊಡ್ಡ ಕರಿಬಾಳೆಯ ಗೊನೆಯನ್ನು ಗಿಡ್ಡಿ ಎತ್ತಲಾರದೆ ಎತ್ತಿ ಕೊಂಡು ಹೋಗಿ ಮರೆಯಲ್ಲಿಟ್ಟನು. +ಅದೇನು ಕದ್ದುದಾಗಿರಲಿಲ್ಲ! +ಹೋದ ಬೈಗಿನ ಭಾರಿ ಮಳೆಗಾಳಿಯಲ್ಲಿ ಬಿದ್ದುದಾಗಿತ್ತು! +ಬಿದ್ದು ಹಾಳಾಗಿ ಹೋಗುತ್ತಿದ್ದುದನ್ನು ಎತ್ತಿತಂದು ರಕ್ಷಸಿದ್ದನಷ್ಟೇ! +ಹಾಗೆಂದು ತಿಮ್ಮ ಸಮಾಧಾನಪಟ್ಟುಕೊಂಡಿದ್ದರೂ, ತಿಮ್ಮಪ್ಪ ಹೆಗ್ಗಡೆ ಬಂದಿದಾನೆ ಎಂದೊಡನೆ, ಏನೊ ಅಳುಕು ಮೂಡಿ, ಅದನ್ನು ಮರೆಮಾಡಲು ಹೇಳಿದ್ದನು. +ಅಸ್ಪೃಶ್ಯರಾಗಿದ್ದ ಹೊಲೆಯರ ಕೇರಿಯೊಳಗೆ ಒಡೆಯರ ಮನೆಯವರಾರೂ ಕಾಲಿಡುವುದಿಲ್ಲ ಎಂಬುದು ಹೊಲೆಯರೆಲ್ಲರ ದೃಢನಂಬುಗೆಯಾಗಿದ್ದರೂ ತಿಮ್ಮಪ್ಪ ಹೆಗ್ಗಡೆಯವ ಚಾರದಲ್ಲಿ ಯಾವ ಜಾತಿ, ಮತ, ಸಂಪ್ರದಾಯದ ಕಟ್ಟೂ ನಡೆಯುವುದಿಲ್ಲ ಎಂಬುದೂ ಎಲ್ಲರಿಗೂ ಗೊತ್ತಿದ್ದ ವಿಷಯವಾಗಿತ್ತು. +ಅವನಿಗೆ ಸಿಟ್ಟು ಬಂದರೆ ಕೇರಿಯೊಳಗಲ್ಲ ಬಿಡಾರದ ಒಳಗೂ ನುಗ್ಗಲು ಹೇಸುತ್ತಿದ್ದಿಲ್ಲ. +ಹಿಂದೆ ಒಂದೆರಡು ಸಾರಿ ಹಾಗೆ ನುಗ್ಗಿಯೂ ನುಗ್ಗಿದ್ದುದನ್ನು ತಿಮ್ಮ ನೆನಪಿಗೆ ತಂದುಕೊಂಡೇ ಬಾಳೆಯ ಗೊನೆಯನ್ನು ಮುಚ್ಚಿಡಲು ಹೇಳಿದುದಲ್ಲದೆ, ಒಡೆಯರು ನುಗ್ಗಿ ಬಿಡುವ ಮುನ್ನವೆ, ತಾನೆ ಹೊರಗೆ ಹೋಗಿಬಿಡುವುದು ಮೇಲೆ ಎಂದು ಸೊಂಟದ ಪಂಚೆ ಸುತ್ತಿಕೊಂಡು ತಲೆವಸ್ತ್ರ ತುಡುಕಿದ್ದನು. +ಅವನ ಆ ಚಟುವಟಿಕೆಗೆ ಕಾರಣ ಮುನ್ನೆಚ್ಚರಿಕೆಯಾಗಿತ್ತೆ ಹೊರತು ಕರ್ತವ್ಯನಿಷ್ಠೆಯಾಗಿರಲಿಲ್ಲ. +ಕುಳುವಾಡಿ ಸಣ್ಣನ ಬಿಡಾರದಲ್ಲಿ ಅವನ ಮಗಳು, ಪುಟ್ಟಿ, ಗುಡಿಸಲು ಮೂಲೆಯಲ್ಲಿದ್ದ ಎಲೆಯ ಮೇಲೆ ಗಡಿಗೆಯಲ್ಲಿ ಗಂಜಿ ಬೇಯಿಸುತ್ತಿದ್ದಳು. +ಕೈಯಲ್ಲಿ ಒಂದು ಬಿದಿರು ಹಿಡಿಯ ಕರಟದ ಸೌಟನ್ನು ಹಿಡಿದು, ಅರೆ ಬೆಳಕಿನಲ್ಲಿ, ಗಂಜಿ ಬೆಂದಿತೆ ಇಲ್ಲವೆ ಎಂದು ಅಗುಳನ್ನು ಹಿಸುಕಿ ನೋಡುತ್ತಿದ್ದಳು. +ಒಂದು ಗೀಕಿನ ಚಾಪೆಯ ಮೇಲೆ ಕಂಬಳಿ ಹೊದೆದು ಮಲಗಿ ನರಳುತ್ತಿದ್ದ ಅವನ ಕೊನೆಯ ಮಗ, ನಾಲ್ಕೈದು ವರ್ಷದ ಹುಡುಗ, ಗಂಗನ ಬಳಿ ಕುಳಿತು ಕುಳುವಾಡಿ ಸಣ್ಣ, ತಾನೆ ಕೆಮ್ಮುತ್ತಾ ಸಿಂಬಳ ಸುರಿಯುತ್ತಾ ಮಗನಿಗೆ ಸಮಾಧಾನ ಹೇಳುತ್ತಿದ್ದ: “ಆಯ್ತು ಮಗಾ, ಆಯ್ತು… ಗಂಜಿ ಕುಡಿದು ಸುಮ್ಮನೆ ಮಲಗಬೈದಂತೆ. +ಅಳಬ್ಯಾಡ ಸುಮ್ಕಿರು… ಆಯ್ತು, ಇಲ್ಲೇನು ಆಯ್ತು. +ಅಲ್ಲೇನೆ, ಪುಟ್ಟೀ?” ಎಂದು ಮಗನ ಸಂತೈಕೆಗಾಗಿ ಮಗಳನ್ನು ಹತ್ತನೆಯ ಸಲವೊ ಹನ್ನೊಂದನೆಯ ಸಲವೊ ಯಾವ ನಿಷ್ಕೃಷ್ಟ ಉತ್ತರದ ಅಭಿಲಾಷೆಯೂ ಇಲ್ಲದ ಪ್ರಶ್ನೆ ಕೇಳಿದ್ದನು. +“ಆಯ್ತಪ್ಪಯ್ಯಾ, ಆಗೇ ಬಿಡ್ತು. +ಈಗ ಇಳಿಸಿಬಿಡ್ತೀನಿ. +ಇನ್ನೇನು ಇಳಿಸೇ ಬಿಟ್ಟೆ!” ಎಂದು ಹತ್ತನೆಯ ಸಲವೊ ಹನ್ನೊಂದನೆಯ ಸಲವೊ ಅದೇ ಉತ್ತರ ಹೇಳಿದ್ದಳು ಪುಟ್ಟಿ. +ಕುಳವಾಡಿ ಸಣ್ಣ ಆ ಕೇರಿಗೆಲ್ಲ ವಯಸ್ಸಾಗಿದ್ದ ವ್ಯಕ್ತಿ. +ಮಲೆನಾಡಿನಲ್ಲಿ, ಅದರಲ್ಲಿಯೂ ಬಡತನವೆ ಬಾಳಾಗಿದ್ದ ಕೀಳುಜಾತಿಯ ಜನರಲ್ಲಿ, ಐವತ್ತನ್ನು ಕಂಡವನೇ ಅತ್ಯಂತ ದೀರ್ಘಾಯುವಾಗಿದ್ದ ಆ ಕಾಲದಲ್ಲಿ, ಕುಳವಾಡಿ ಸಣ್ಣನಿಗೆ ಅವನ ಕೇರಿಯಲ್ಲಿ ಮಾತ್ರವಲ್ಲದೆ ಸಿಂಬಾವಿ, ಕೋಣೂರು, ಬೆಟ್ಟಳ್ಳಿ ಮೊದಲಾದ ಕಡೆಯ ಕೇರಿಗಳಲ್ಲಿಯೂ ವೃದ್ಧ ಪಿತಾಮಹನಿಗೆ ಸಲ್ಲುವ ಗೌರವ ಸಲ್ಲುತ್ತಿತ್ತು. +ಆ ವಯೋಧರ್ಮದಿಂದಲೆ ಅವನಿಗೆ ಕುಳವಾಡಿ ಪಟ್ಟವೂ ದೊರಕಿತ್ತು. +ಜಾತಿ ಸಂಬಂಧವಾದ ವ್ಯಾಜ್ಯಗಳಲ್ಲಿ ಆಗಲಿ, ನೀತಿ ಸಂಬಂಧವಾದ ಬಹಿಷ್ಕಾರಾದಿ ವಿಷಯಗಳಲ್ಲಿ ಆಗಲಿ, ಹೆಣ್ಣು ಗಂಡು ಕೊಟ್ಟು ತರುವ ಸಂಬಂಧದಲ್ಲಿ ಉದ್ಭವಿಸುವ ಭಿನ್ನಾಭಿಪ್ರಾಯದ ಕಲಹಗಳಲ್ಲಿ ಆಗಲಿ ಕುಳವಾಡಿ ಸಣ್ಣ ತೀರ್ಪಿಗೆ ಜಾತಿಯವರು ಯಾರೂ ಸಾಮಾನ್ಯವಾಗಿ ಎದುರುಬೀಳುತ್ತಿರಲಿಲ್ಲ. +ಅವನಿಗೆ ಹೆಂಡತಿ ತೀರಿ ಹೋಗಿ ನಾಲ್ಕೈದು ವರ್ಷಗಳಾಗಿದ್ದರೂ ಅವನು ಮತ್ತೆ ಮದುವೆಯಾಗಿರಲಿಲ್ಲ. +ಮದುವೆಯಾಗುವ ಯೋಚನೆಯನ್ನೂ ಇಟ್ಟುಕೊಂಡಿರಲಿಲ್ಲ. +ಅವನೊಡನೆ ಸೀರುಡಿಕೆಯಾಗಲು ಆಸೆಪಟ್ಟ ಗಂಡಸತ್ತವರಿದ್ದರೂ ಅವನು ಕೂಡಿಕೆಗೂ ಒಪ್ಪಿರಲಿಲ್ಲ. +ಕಡೆಗೆ ಗಂಜಿ ಬೇಯಿಸುವುದಕ್ಕಾದರೂ ಎಂದು ಹೆಣ್ಣು ಕೈ ಇರಲಿ ಎಂದು ಸಲಹೆಕೊಟ್ಟ ಹಿತೈಷಿಗಳ ಮಾತನ್ನೂ ಅವನು ಮುಗುಳುನಕ್ಕು ತಟ್ಟಿಹಾರಿಸಿದ್ದನು. +ಅವನ ಹಿರಿಯ ಮಗಳು ಪುಟ್ಟಿಯೆ, ತನ್ನ ತಾಯಿ ಗಂಗನನ್ನು ಹೆತ್ತು ತೀರಿಕೊಂಡ ಮೇಲೆ, ಅಪ್ಪನ ಆರೈಕೆಯನ್ನೂ, ತಂಗಿ ತಮ್ಮಂದಿರ ಲಾಲನೆ ಪಾಲನೆಯನ್ನೂ ನೋಡಿಕೊಂಡು ಬರುತ್ತಿದ್ದಳು. +ಅವಳಿಗೂ ಮದುವೆಯಾಗುವ ವಯಸ್ಸು; +ಬೇಗ ಮಾಡಿಬಿಡು ಎಂದು ನಂಟರಿಷ್ಟರು ಸಣ್ಣನಿಗೆ ಸಲಹೆ ಹೇಳುತ್ತಿದ್ದರೂ ಅವನು ‘ಅವಳಿನ್ನೂ ನೆರೆದು ಎರಡು ವರ್ಷವೂ ಆಗಿಲ್ಲ. +ಅವಳಿಗಿಂತಲೂ ದೊಡ್ಡವರು ಕೇರಿಯಲ್ಲಿ ಮದುವೆಯಾಗದೆ ಇರುವವರು ಇಲ್ಲವೆ? +ಇಷ್ಟು ಅ ವಸರ ಏಕೆ ಅವಳ ಮದುವೆಗೆ?’ ಎಂದು ಸಮಧಾನ ಹೇಳುತ್ತಿದ್ದನು. +ಅಲ್ಲದೆ ಮಗಳು ಮದುವೆಯಾಗಿ ಹೋದರೆ ತನ್ನ ಸಂಸಾರ ಸಾಗುವುದೂ ಕಷ್ಟವಾಗುತ್ತದೆ; +ಆದ್ದರಿಂದ ಏನಾದರೂ ಮಾಡಿ ಮದುವೆಯಾದ ಮೇಲೆಯೂ ಮಗಳು ಮನೆಯಲ್ಲಿಯೆ ಉಳಿಯುವಂತೆ ಒಬ್ಬ ಮನೆ ಅಳಿಯನನ್ನು ಮಾಡಿಕೊಂಡರೆ ತನ್ನ ಇಳಿ ವಯಸ್ಸಿನಲ್ಲಿ ತನಗೂ ಒಂದು ದಿಕ್ಕಾಗುತ್ತದೆ ಎಂಬುದೂ ಅವನ ಒಳಮನಸ್ಸಾಗಿತ್ತು. +ತಿಮ್ಮಪ್ಪ ಹೆಗ್ಗಡೆಯ ಅಬ್ಬರವನ್ನಾಲಿಸಿದ ಸಣ್ಣ ತನ್ನ ಮಗಳಿಗೆ “ಏ ಪುಟ್ಟೀ, ಸಣ್ಣ ಹೆಗ್ಗಡೇರ ಸವಾರಿ ಬಂದ ಹಾಂಗೆ ಕಾಣ್ತದೇ, ಕೆಲಸಕ್ಕೆ ಕರೆಯೋಕೆ. +ಎಲ್ಲರೂ ಬಿಡಾರದ ಒಳಗೇ ಇದಾರೆ. +ಒಬ್ಬರೂ ಹೊರಗೆ ತಲೆ ಹಾಕಿದ್ಹಾಂಗೆ ಕಾಣಲಿಲ್ಲ. +ಇನ್ನು ಅವರೇ ಕೇರಿ ಒಳಗೆ ನುಗ್ಗಿದ್ರೆ, ಇಡೀ ಕೇರಿಗೇ ಅಪಸಕುನ! +ನಮ್ಮ ದೆಯ್ಯ ದ್ಯಾವರಿಗೆ ಮುಟ್ಟುಚಿಟ್ಟಾದ್ರೆ ಕೇರಿಗೆ ಕೇರಿನೇ ತೆಗೆದುಬಿಡ್ತವೆ! +ಹೋಗಿ ಆ ಬೈರಗಾದ್ರೂ ಹೇಳೆ” ಎಂದು ಕೆಮ್ಮತೊಡಗಿದನು. +“ಇಲ್ಲಿಂದ್ಲೆ ಕಂಡೀಲಿ ಕೂಗಿ ಹೇಳ್ತೀನಿ, ಅಪ್ಪಯ್ಯ. +ಅವನ ಬಿಡಾರದ ಒಳಗೆ ನಾ ಕಾಲಿಡಾದಿಲ್ಲ?” ಎಂದು ದಬ್ಬೆ ಹೆಣೆದು ಕೆಮ್ಮಣ್ಣು ಮೆತ್ತಿದ್ದ ಗೋಡೆಯ ಬೆಳಕಂಡಿಯಲ್ಲಿ ಮುಖವಿಟ್ಟು ಕೂಗಿದಳು ಪುಟ್ಟಿ, ತಮ್ಮ ಬಿಡಾರಕ್ಕೆ ಮುಟ್ಟಿಕೊಂಡಂತೆಯೆ ಇದ್ದ ಬೈರನ ಬಿಡಾರವನ್ನು ನಿರ್ದೇಶಿಸಿ “ಓ ಬೈರಬಾವ, ಸಣ್ಣ ಒಡೇರು ಕರೀತಾರಂತೋ ಕೆಲಸಕ್ಕೆ!” +ಬಿಡಾರದ ಒಂದು ಮೂಲೆಯಲ್ಲಿದ್ದ ಕಲ್ಲುಗುಂಡಿನ ಒಲೆಯ ಬಳಿ ಹಿಂದಿನ ದಿನ ದನ ಕಾಯಲು ಹೋಗಿದ್ದಾಗ ಬಿಟ್ಟುಬಿಲ್ಲಿನಿಂದ ಹೊಡೆದು ಷಿಕಾರಿಮಾಡಿದ್ದ ಒಂದು ಷಿಟ್ಟಳಿಲನ್ನೂ, ಕುಣಿಗೆ ನೀರುಹಾಯಿಸಿ, ಹೊರ ಹೊರಡಿಸಿ, ಅಟ್ಟಿ ಬೇಟೆಯಾಡಿದ್ದ ಮೂರು ಬೆಳ್ಳಿಲಿಗಳನ್ನೂ ಸುಟ್ಟಿ ಹಸಿಗೆ ಮಾಡುವ ಕಾರ್ಯದಲ್ಲಿ ತೊಡಗಿದ್ದ ಬೈರನು ಪುಟ್ಟಿಯ ದನಿ ಕೇಳಿ ಉತ್ತೇಜಿತನಾದರೂ, ಕೆಲಸಕ್ಕೆ ಕರೆಯಲು ಬಂದಿದ್ದಾರೆ ಎಂಬುದನ್ನು ಕೇಳಿ ತೀರ ನಿರುತ್ತೇಜಿತನಾಗಿ, ತನ್ನಷ್ಟಕ್ಕೆ ತಾನೇ ಹೇಳಿಕೊಂಡನೆಂಬಂತೆ “ಕೂಗಿದ್ರೆ ಕೂಗ್ಲಿ!ಕೇಳಿಸ್ತದೆ ಗಲಾಟೆ! +ಇರಾಂವ ನಾನೊಬ್ಬ, ಒಂದೀಟು ಗಂಜಿಗಿಂಜಿ ಮಾಡಿ ಕುಡಿಯಕಾದ್ರೂ ಸಮಯ ಬ್ಯಾಡೇನು? +ಹೊತ್ತು ಮೂಡಾಕೆ ಮುಂಚೇನೆ ಬರ್ತಾರೆ ಕೆಲಸಕ್ಕೆ ಕರಿಯಾಕೆ!” ಎಂದು ಗಟ್ಟಿಯಾಗಿಯೆ ಗೊಣಗದನು. +ಬೈರನ ಬಿಡಾರದಲ್ಲಿ ಸದ್ಯಕ್ಕೆ ಬೇರೆ ಯಾರೂ ಇರಲಿಲ್ಲ. +ಅವನೆ ತನ್ನ ಅಡುಗೆ ಗಿಡುಗೆ ಎಲ್ಲ ಮಾಡಿಕೊಂಡು ದನ ಕಾಯುವ ಕೆಲಸಕ್ಕೆ ಹೋಗುತ್ತಿದ್ದನು. +ದನ ಕಾಯುವ ಕೆಲಸಕ್ಕಲ್ಲದೆ ಬೇರೆ ಕೆಲಸಕ್ಕೆ ಅವನನ್ನು ಕರೆದರು ಅವನು ಏನಾದರೂ ನೆಪಹೇಳಿ ತಪ್ಪಿಸಿಕೊಳ್ಳುತ್ತಿದ್ದನು; +ಇಲ್ಲವೆ, ಕೆಲಸಕ್ಕೆ ಹೋದರೂ, ಎಲೆ ಅಡಿಕೆ ಹಾಕುವುದು, ಹರಟೆ ಹೊಡೆಯುವುದು, ಹೊಟ್ಟೆ ಸರಿಯಿಲ್ಲ ಎಂದು ಬೈಲು ಕಡೆಗೆ ಹೋಗುವುದು, ಹೀಗೆ ಒಂದಲ್ಲ ಒಂದು ರೀತಿಯಿಂದ ತಾನೂ ಕೆಲಸ ಮಾಡದೆ ಇತರರನ್ನೂ ಕೆಲಸಮಾಡಗೊಡದೆ ಇರುತ್ತಿದ್ದುದರಿಂದ ಹೆಗ್ಗಡೆಯವರು ಅವನನ್ನು ಖಾಯಂ ಆಗಿ ದನ ಕಾಯುವ ಕೆಲಸಕ್ಕೇ ಹಾಕಿಬಿಟ್ಟಿದ್ದರು. +ಬೇರೆ ಬೇರೆ ಹಳ್ಳಿಯವರೂ ದನ ಮೇಯಿಸಲು ಬಂದು, ಎಲ್ಲರೂ ಒಟ್ಟಾಗಿ ಸೇರಿ ಕಾಡು ಹಕ್ಕಲು ಬಯಲುಗಳಲ್ಲಿ ಖುಷಿಯಾಗಿರುತ್ತಿದ್ದುದೂ ಬೈರನು ಆ ವೃತ್ತಿಯನ್ನೆ ಹೆಚ್ಚಾಗಿ ಒಲಿಯಲು ಒಂದು ಕಾರಣವಾಯಿತ್ತು. +ಅದರಲ್ಲಿಯೂ ಕೆಲವು ಮನೆಯವರು ಹೆಂಗಸರನ್ನೂ ಬೆಳೆದ ಹುಡುಗಿಯರನ್ನೂ ಆ ಕೆಲಸಕ್ಕೆ ಕಳುಹಿಸುತ್ತಿದ್ದುದೂ ಬೈರನಿಗೆ ಒಂದು ತಪ್ಪಿಸಿಕೊಳ್ಳಲಾಗದ ಆಕರ್ಷಣೆಯಾಗಿತ್ತು. +ಬೈರ ಮದುವೆಯಾಗುವ ಮೊದಲೇ ಹಡಬೆ ಬಿದ್ದಿದ್ದನೆಂಬ ಪ್ರತೀತಿ ಇತ್ತು. +ಮದುವೆಯಾದ ಮೇಲೆಯೂ ಆ ಕಾರಣಕ್ಕಾಗಿಯೆ ಅವನಿಗೂ ಅವನ ಹೆಂಡತಿಗೂ ಆಗಾಗ ಜಗಳವಾಗಿ ಹೊಡೆತ ಬಡಿತಗಳಲ್ಲಿ ಪರ್ಯವಸಾನವಾಗುತ್ತಿತ್ತು. +ಅವನ ಹೆಂಡತಿ ಗರ್ಭಿಣಿಯಾಗಿದ್ದಾಗಲೆ ಅವನು ಅವಳೊಡನೆ ಜಗಳವಾಡಿ, ಕುಡಿದ ಮತ್ತಿನಲ್ಲಿ ಅವಳ ಹೊಟ್ಟೆಯ ಮೇಲೆ ಒದ್ದುದರಿಂದಲೆ ಅವಳು ತಿಂಗಳು ತುಂಬುವ ಮೊದಲೆ ಹೆಚ್ಚು ಸತ್ತುಹೋದಳೆಂದೂ ಜನ ಆಡಿಕೊಳ್ಳುತ್ತಿದ್ದರು. +ಈಗ ಒಬ್ಬೊಂಟಿಗನಾಗಿ ‘ಒಂಟಿಗ ಒಂಟಿಗೇಡಿ’ ಎಂಬೆಲ್ಲ ಬೈಗುಳದ ಬಿರುದು ಹೊತ್ತು ಬಾಳುತ್ತಿದ್ದನು. +ಇಲಿ ಅಳಿಲು ಸುಟ್ಟ ಕೌರುವಾಸನೆಯ ಹೊಗೆಯ ನಡುವೆ ಇದ್ದ ಬೈರನ ಕಿವಿಗೂ ಕೇಳಿಸಿತು, ತಾಳ್ಮೆಗೆಟ್ಟು ಸಿಟ್ಟೇರಿದ ತಿಮ್ಮಪ್ಪ ಹೆಗ್ಗಡೆಯ ಅಬ್ಬರದ ಕೂಗು: “ಯಾರೂ ಇಲ್ಲೇನ್ರೋ ಕೇರೀಲಿ? +ಎಲ್ಲ ಸುಟ್ಟು ನಾಶನೆ ಆದ್ರೇನೋ? +ಏ ಮಂಜಾ!ಏ ತಿಮ್ಮಾ!ಏ ಸಿದ್ದಾ!ಏ ಸಣ್ಣಾ! +ನಿಮ್ಮ ಗಂಟ್ಲೆಲ್ಲಾ ಕಟ್ಟಿಹೋಗಾ! +ಓಕೊಳ್ಳಾಕೆ ಏನಗಿದ್ರೋ! +ಹೊಲೆಸೂಳೆಮಕ್ಳಾ!” +ಗುಡಿಸಿಲೊಳಗಡೆ ದಿಗಲುಬಿದ್ದು ಅತ್ಯಂತ ಚಟುವಟಿಕೆಯಿಂದ ತೆಗೆದೆದ್ದು, ಹೆಂಡತಿಗೆ ಬಾಳೆಗೊನೆಯನ್ನು ಮುಚ್ಚಿಡ ಹೇಳಿ, ತಲೆ ವಸ್ತ್ರ ಸುತ್ತಿಗೊಂಡಿದ್ದ ತಿಮ್ಮನು ಬಿಡಾರದ ತಟ್ಟಿಬಾಗಿಲನ್ನು ಮೆಲ್ಲನೆ ಬಹುಮೆಲ್ಲನೆ ಓಸರಿಸಿ, ಉದ್ವೇಗಕ್ಕಾಗಲಿ ಅವಸರಕ್ಕಾಗಲಿ ಏನೊಂದೂ ವಿಶೇಷ ಕಾರಣ ನಡೆದಿಲ್ಲವೆಂಬಂತೆ ನಿರುದ್ವಿಗ್ನ ಮುಗ್ಧಭಾವವನ್ನಾರೋಪಿಸಿಕೊಂಡು, ಸಾವಧಾನವಾಗಿ ಅಂಗಳಕ್ಕಿಳಿದು ಮುಂಬರಿದನು. +ಅವನು ಕಣ್ಣಿಗೆ ಬಿದ್ದೊಡನೆಯೆ ತಿಮ್ಮಪ್ಪ ಹೆಗ್ಗಡೆ ಸಿಟ್ಟು ನೆತ್ತಿಗೇರಿತು. +ಅದರಲ್ಲಿಯೂ ಅವನು ಉದಾಸೀನ ಭಾವದಿಂದ ತಣ್ಣಗೆ ನಡೆದು ಬರುತ್ತಿದ್ದುದನ್ನೂ, ಅವನ ಮೀಸೆಯ ಕೆಳಗಡೆ ಕೆಣಕುವಂತಹ ಒಂದು ರೀತಿಯ ನರಿಬುದ್ದಿಯ ಹುಸಿನಗೆ ಹಲ್ಲು ಬಿಡುತ್ತಿದ್ದುದನ್ನು ಕಂಡು ಪಿತ್ತ ಕೆರಳಿದಂತಾಯ್ತು. +ತನ್ನ ಕೂಗಾಟ, ಅಬ್ಬರ, ಸಿಟ್ಟು, ಬೈಗುಳ, ಶಾಪ, ಒಡೆತನದ ರೋಷಾಟೋಪ ಒಂದೂ ಕೆಲಸಕ್ಕೆ ಬಾರದವು ಎಂದೆನಿಸುವಂತೆ ಎಲ್ಲವನ್ನೂ ವ್ಯರ್ಥಗೊಳಿಸುತ್ತಿದ್ದ ಹೊಲೆಯದ ಧೂರ್ತ ಪ್ರಶಾಂತ ಭಂಗಿಯಂತೂ ಬೆಂಕಿಗೆ ತುಪ್ಪ ಹೊಯ್ದಂತಾಯ್ತು ಅವನ ಕೋಪಕ್ಕೆ:“ಸೋಮಾರಿ ಸೂಳೆ ಮಕ್ಳಾ, ಎಷ್ಟು ಅಂತಾ ಕೂಗಬೇಕೋ ನಿಮ್ಮನ್ನ? +ನಿಮ್ಮ ಕಿವಿ ಎಲ್ಲ ಹೊಟ್ಟಿಹಾರಿ ಹೋಗಿದೆಯೇನೋ? +ಬಿಸಿಲು ನೆತ್ತಿಗೆ ಬಂದ್ರೂನೂ ನಿಮಗೆ ಮಾತ್ರ ಬೆಳಗಾಗೋದಿಲ್ಲ!”ತಿಮ್ಮನ ನಗೆಯ ಮುಗುಳು ಮೀಸೆಯ ಕೆಳಗಡೆ ಮತ್ತಷ್ಟು ಅಗಲವಾದಂತಾಯಿತು. +ಎಲೆಯಡಿಕೆ ಜಗಿದೂ, ಜಗಿದೂ, ಕೆಂಪು ಕೊಳೆ ಕೂತು, ಕಪ್ಪಿಗೆ ತಿರುಗಿದ್ದ ಹುಳುಕು ಹಲ್ಲಿನ ಸಾಲು ಅರಳಿದಂತಾಯ್ತು. +ಅಭ್ಯಾಸ ಬಲದ ಮೇಲೆ ಸೊಂಟದತ್ತ ನೋಡದೆಯೆ ಕೆಲಸದ ಕತ್ತಿಯನ್ನು ಒಡ್ಯಾಣದ ಕೊಂಡಿಗೆ ಸಿಕ್ಕಿಸಿಕೊಳ್ಳುತ್ತಾ ನಿಧಾನವಾಗಿ “ಎಲ್ರೋ? +ನಿಮ್ಮ ಗಂಟ್ಲು ಕೇಳಿಸ್ದ ಕೂಡ್ಲೆ ಹೊಲ್ಟು ಬಂದೀನಿ!” ಎಂದು ತುಸು ರಾಗವಾಗಿ ಎಳೆದು ಹೇಳುತ್ತಾ ಒಡೆಯರ ಮುಂದೆ ದಿಬ್ಬದ ಕೆಳಗೆ ಬಂದು ನಿಂತನು. +ಅಷ್ಟರಲ್ಲಿ ಓಡೋಡಿ ಬರುತ್ತಿದ್ದ ಹಳೆಪೈಕದ ಹೂವಿ ಮರಗಳ ಕೆಳಗೆ ಪೊದೆಗಿಡಗಳ ನಡುವೆ ಕಾಣಿಸಿದಳು. +ತಿಮ್ಮ ಆ ಕಡೆ ನೋಡಿ ಅರೆ ನಗುತ್ತಾ “ಯಾಕ್ರೋ ಹೂವಮ್ಮ ಓಡಿ ಬರ್ತಾರೆ?” ಎಂದು ಒಡೆಯರ ಗಮನವನ್ನು ಅತ್ತಕಡೆ ಸೆಳೆದನು. +ಹೂವಿಯನ್ನು ನೋಡಿದ ಹೆಗ್ಗಡೆಗೆ ಇದ್ದಕ್ಕಿದ್ದ ಹಾಗೆ ಸಿಟ್ಟು ಶಮನವಾದಂತಾಗಿ, ನಸುನಗೆಗೂಡಿ ಆ ಕಡೆ ತಿರುಗಿದನು. +ಅವಳೂ ತುಸು ನಾಚಿದಂತೆ  ದೂರದಲ್ಲಿ ನಿಂತು “ದೊಡ್ಡ ಅಯ್ಯೋರು ಹೇಳಿದ್ರು, ಹಂದೀ ಹಸಿಗೆಗೆ ಯಾರಾದ್ರೂ ಇಬ್ಬರ್ನ ಕಳಿಸಬೇಕಂತೆ” ಎಂದವಳೆ ದೃಷ್ಟಿ ತಿರುಗಿಸಿ ಕೇರಿಯ ಕಡೆ ನೋಡತೊಡಗಿದಳು. +ತಿಮ್ಮಪ್ಪ ಹೆಗ್ಗಡೆಗೆ ಆಶ್ಚರ್ಯವಾಯಿತು, ಹಂದಿ ಷಿಕಾರಿ ಯಾರು ಮಾಡಿದರು ಎಂದು! +“ಯಾರೇ ಹಂದಿ ಹೊಡೆದಿದ್ದು? ” +“ನಂಗೊತ್ತಿಲ್ಲ ಹೇಳಿ ಬರಾಕೆ ಹೇಳಿದ್ರು” ಎಂದವಳು ಅಲ್ಲಿ ನಿಲ್ಲದೆ ಹಿಂದಿರುಗಿ ಅವಸರವಾಗಿಯೆ ನಡೆದು ಪೊದೆಗಳಲ್ಲಿ ಮರೆಯಾದಳು. +ಸಾಕಿದ್ದ ಊರು ಹಂದಿಯನ್ನು ಅಡ್ಡೆಕಟ್ಟಿ ಹೊರುವುದಕ್ಕಾಗಿ ಇಬ್ಬರು ಹೊಲೆಯರನ್ನು ಬರಹೇಳಿದ್ದರು ಸುಬ್ಬಣ್ಣ ಹೆಗ್ಗಡೆ. +ಆದರೆ ಹೂವಿ ಹೇಳಿದ ರೀತಿಯಲ್ಲಿ, ಯಾರೋ ಕಾಡುಹಂದಿ ಷಿಕಾರಿ ಮಾಡಿದ್ದಾರೆ, ಅದರ ಹಸಿಗೆಗೆ ಬರಬೇಕಂತೆ ಎಂಬರ್ಥ ಸ್ಫುರಿಸಿತ್ತು. +ಆದರೆ ಆ ಸುಳ್ಳು ಅರ್ಥದಲ್ಲಿ ಎಂತಹ ಮಂತ್ರಶಕ್ತಿ ಮೈದೋರಿತ್ತು ಎಂದರೆ, ಹಂಚಿ ಮತ್ತು ಹಸಿಗೆ ಎಂಬ ಮಾತು ಬಿಡಾರದಿಂದ ಬಿಡಾರಕ್ಕೆ ಮಿಂಚಿನ ವೇಗದಿಂದ ಮುಟ್ಟಿದ್ದೇ ತಡ, ಮುಚ್ಚಿದ್ದ ತಟ್ಟಿಬಾಗಿಲುಗಳು ಸರಸರನೆ ಒಂದಾದಮೇಲೊಂದರಂತೆ ತೆರೆದುಕೊಂಡುವು. +ಬೆಟ್ಟಳ್ಳಿಗೆ ಹೋಗಬೇಕೆಂದಿದ್ದ ಮಂಜ ಪುಸಕ್ಕನೆ ಕೆಲಸದ ಕತ್ತಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾ ಹಾರಿಬಂದತು. +ಇಲಿ ಅಳಿಲುಗಳನ್ನು ಅರ್ಧಂಬಂರ್ಧ ಸುಟ್ಟಂತೆಯೆ ಬಿಟ್ಟಿಯ ಅಡಿ ಮುಚ್ಚಿಟ್ಟು, ಬೈರ ಹೊರಕ್ಕೆ ನೆಗೆದನು. +ಸಿದ್ದ, ಕರಿಸಿದ್ದ, ಬಚ್ಚ, ಸಣತಿಮ್ಮ, ಪುಟ್ಟ- ಅಂಗಳವೆಲ್ಲಾ ಆಳುಗಳಿಂದ ತುಂಬಿಹೋದಂತಾಯಿತು! +“ಯಾರಾದರೂ ಇಬ್ಬರನ್ನ ಕಳಿಸಬೇಕಂತ್ರೋ. +ಉಳಿದೋರೆಲ್ಲ ಗದ್ದೆ ಕೆಲಸಕ್ಕೆ ಹೊರಡಿ” ಎಂದ ಹೆಗ್ಗಡೆಗೆ. +ಮಂಜ “ಇಬ್ಬರು ಎಲ್ಲಿ ಸಾಕಾಗ್ತದ್ರೋ ಹಂದಿ ಹಸಿಗೆಗೆ? +ಬ್ಯಾಗ ಬ್ಯಾಗ ಎಲ್ಲ ಮಾಡಿಕೊಟ್ಟ, ಗದ್ದೆ ಕೆಲಸಕ್ಕಾದ್ರೆ ಗದ್ದೆ ಕೆಲಸಕ್ಕೆ, ಹೋಗ್ತೀವಿ” ಎಂದನು. +“ಏನಾದ್ರೂ ಸಾಯಿರಿ! +ಅಲ್ಲಿ ಅಪ್ಪಯ್ಯನ ಹತ್ರ ಬೈಸಿಕೊಳ್ತೀರಿ! +ನಂಗೇನು?ಬನ್ನಿ!” ಎಂದು ತಿಮ್ಮಪ್ಪ ಹೆಗ್ಗಡೆ ಅಂಗಳದಲ್ಲಿ ನೆರೆದಿದ್ದ ಹೆಂಗಸರು ಗಂಡಸರು ಮಕ್ಕಳು ಇವರ ನಡುವೆ ನಿಂತಿದ್ದ ಕುಳುವಾಡಿ ಸಣ್ಣನ ಮಗಳ ಕಡೆ ಕಣ್ಣು ಹಾಯಿಸುತ್ತಾ ಮನೆ ಕಡೆಗೆ ತಿರುಗಿ ನಡೆದನು. +ಹಂದಿ ಹಸಿಗೆಯಾದ ಮೇಲೆ ತಮಗೆ ದೊರೆಯುವ ಪಾಲಿನ ವಿಚಾರವಾಗಿ ಮಾತಾಡುತ್ತ ಆಳುಗಳೆಲ್ಲ ಒಡೆಯನ್ನು ಹಿಂಬಾಲಿಸಿದರು. +“ಎಷ್ಟು ಆಳಿಗೆ ಇದೆಯಂತೋ?” +“ಯಾರಿಗೆ ಗೊತ್ತೋ? +ಆ ಹೂವಮ್ಮ ಏನೊ ಹೇಳಿ ಹೋದ್ರು.” +“ಇಬ್ಬರನ್ನೆ ಬರಾಕೆ ಹೇಳಿದ್ದು ನೋಡ್ರಿದ್ರೆ ಅಷ್ಟೇನೊ ದೊಡ್ಡದಲ್ಲಾ ಅಂತ ಕಾನ್ತದೆ.” +“ಸೈ ಬಿಡು ನೀನೊಬ್ಬ! +ಆ ದೊಡ್ಡ ಹೆಗ್ಗಡೇರ ಇಚಾರ ಯಾರಿಗೆ ಗೊತ್ತಿಲ್ಲ? +ಇಬ್ಬರ ಕೈಲೇ ಹಸಿಗೆ ಮಾಡಿಸಿದ್ರೆ ಏಳೆಂಟು ಪಾಲು ಕೊಡಾದು ತಮಗೇ ಉಳೀತದೆ! +ಹ್ಹಹ್ಹಹ್ಹ!ಅಲ್ಲೇನು ಹೇಳು?”ಹಳುಬೆಳೆದ ಕಾಡುದಾರಿಯಲ್ಲಿ ಬೇಗಬೇಗನೆ ನಡೆಯುತ್ತಿದ್ದ ಏಳೆಂಟು ಆಳುಗಳ ಮಾತಿಗೆ ಅವರ ಸೊಂಟದ ಕತ್ತಿಗಳ ತಲೆದೊಗಾಟದ ಕಣಕಣ ಸದ್ದು ಹ್ಞೂಂಗುಡುವಂತೆ ತೋರುತ್ತಿತ್ತು. +‘ಬುಚ್ಚಿ’ ಕೊಟ್ಟ ಕಣ್ಣಾ ಪಂಡಿತರ ಕಷಾಯ ಕುಡಿಯುತ್ತಾ ಸುಬ್ಬಣ್ಣ ಹೆಗ್ಗಡೆಯವರು ಮಗಳ ಮುಖವನ್ನು ನೋಡಿ ಕಣ್ಣು ಸನ್ನೆ ಕೈಸನ್ನೆಗಳಿಂದಲೆ ಕೇಳಿದರು: + ‘ಅತ್ತಿಗೆ ಹೇಗಿದ್ದಾಳೆ?’ಮಂಜಮ್ಮನ ಮುಖ ಇದ್ದಕ್ಕಿದ್ದಹಾಗೆ ಖಿನ್ನವಾಯಿತು. +ಕನಿಕರದ ಭಾವವನ್ನು ಕಣ್ಣ ಭಂಗಿಯಿಂದಲೆ ಸೂಚಿಸುತ್ತಾ ತುಸು ಪಿಸುದನಿಯಿಂದ ಹೇಳಿದಳು: +“ಮೊನ್ನೆ ಮುಟ್ಟಾದ ಮೇಲೆ ಆ ಹಿತ್ತಲು ಕಡೆ ಮೂಲೆಯಲ್ಲಿ ಚಾಪೆ ಕಂಬಳಿ ಹಾಕಿಕೊಂಡು ಅಳ್ತಾ ಕೂತುಬಟ್ಟಾರೆ. +ಊಟಾನೂ ಮಾಡ್ತಾ ಇಲ್ಲ. +ಒಂದು ಹೊತ್ತು ಮಾಡಿದ್ರೆ, ಒಂದು ಹೊತ್ತು ಮಾಡಾದಿಲ್ಲ. +“ಮೀಯಾಕೆ ಮೊದಲೆ ಒಳಗ್ಗಿಳಗೆ ಬಂದು ಬಿಟ್ಟಾಳು! +ದೇವರ ಕಾಣಿಕೆ ಡಬ್ಬಿ ಇಟ್ಟೀವಿ ಮ್ಯಾಲೆ. +ತಿರುಪತಿ ತಿಮ್ಮಪ್ಪ ಈಗ ಕೊಟ್ಟ ಶಿಕ್ಷೇನೆ ಸಾಕಾಗದೆ. +ಮತ್ತೆ ಇನ್ನೂ ಏನಾದ್ರೂ ಆದಾತು!” ಎಂದು ಮಗಳಿಗೆ ತಮ್ಮ ಹಿರಿಯ ಮಗನ ಹೆಂಡತಿ ‘ಹುಚ್ಚು ಹೆಗ್ಗಡ್ತಿಯ’ಯ ವಿಚಾರವಾಗಿ ಎಚ್ಚರಿಕೆಯಿಂದಿರುವಂತೆ ತಿಳಿಸಿ, ಮೇಲೆದ್ದು ಸುಬ್ಬಣ್ಣ ಹೆಗ್ಗಡೆಯ ಜಗಲಿಗೆ ಹೋದರು. +ಕತ್ತಲೆ ಯಾವಾಗಲೂ ಬೀಡು ಬಿಟ್ಟಿರುತ್ತಿದ್ದ ಮಾಣಿಗೆಯ ಗಿಡ್ಡ ಬಾಗಿಲನ್ನು ತಲೆ ತಾಗದಂತೆ ಬಗ್ಗಿ ಎಚ್ಚರಿಕೆಯಿಂದ ಜಗಲಿಗೆ ದಾಟಿ ನೋಡುತ್ತಾರೆ: +ಹೊರ ಅಂಗಳದಲ್ಲಿ ಹೊಲೆಯರ ಹಿಂಡೆ ಜಮಾಯಿಸಿದಂತಿದೆ! +ಸುಬ್ಬಣ್ಣ ಹೆಗ್ಗಡೆಯವರು ಸಿಟ್ಟು ಜುಟ್ಟಿಗೂ ಏರಿತು. +‘ಹಂದಿ ಹೊರುವುದಕ್ಕೆ ಇಬ್ಬರು ಹೊಲೆಯರನ್ನು ಕಳಿಸು ಎಂದರೆ, ಹೊಲಗೇರಿಯನ್ನೆ ಮನೆಗೆ ತಂದಿದ್ದಾನಲ್ಲ, ಮುಟ್ಟಾಳ ಮಗ, ಮನೆಹಾಳ! +ಎಂದುಕೊಂಡು ಸುತ್ತಲೂ ಅವನಿಗಾಗಿ ಹುಡುಕಿನೋಡಿದರು. +ಅವನು ಎಲ್ಲಿಯೂ ಗೋಚರವಾಗಲಿಲ್ಲ. +ಜಗಲಿಯಿಂದ ಕಿರುಜಗಲಿಗೆ ಇಳಿದು, ಸಿಟ್ಟೇರಿದ್ದರೂ ವಯೋಧೀನರಾಗಿ ನಿಧಾನವಾಗಿಯೆ ಅಂಗಳಕ್ಕಿಳಿದರು. +ಹೊಲೆಯರೆಲ್ಲ ಒಡೆಯರ ಮೆಚ್ಚುಗೆಗಾಗಿಯೂ, ಸಂತೋಷ ಪ್ರದರ್ಶನಕ್ಕಾಗಿಯೂ, ಇಷ್ಟು ಬೆಳಿಗ್ಗೆ ಮುಂಚೆಯೆ ಅವರು ಹೇಳಿ ಕಳುಹಿಸುವುದೆ ತಡ ಇಷ್ಟೊಂದು ಆಳುಗಳು ಕೆಲಸಕ್ಕೆ ಆತುರರಾಗಿ ಬಂದುಬಿಟ್ಟಿದ್ದಾರಲ್ಲಾ ಎಂದು ಹಿಗ್ಗಿ ತಮ್ಮೊಡನೆ ವಿನೋದವಾಗಿ ಸಂವಾದ ತೊಡಗುತ್ತಾರೆಂಬ ನಿರೀಕ್ಷೆಯಿಂದಲೂ ನಗುಮೊಗರಾಗಿ ನೋಡುತ್ತಾ ಹಲ್ಲುಹಲ್ಲು ಬಿಡುತ್ತಿದ್ದರು. +ಅವರ ಮಾತೆಲ್ಲ ತಟಕ್ಕನೆ ನಿಂತು, ಅರೆಕ್ಷಣ ಅರ್ಥಗರ್ಭಿತ ನಿಃಶಬ್ದತೆ ವ್ಯಾಪಿಸಿತ್ತು. +“ಯಾರ ಹೆಣಾ ಹೊರಾಕಂತಾ ಎಲ್ಲಾ ಬಂದಿದ್ದೀರೋ ಇಲ್ಲಿಗೆ? +ಗದ್ದೆ ಕೆಲಸಕ್ಕೆ ಹೋಗಾದು ಬಿಟ್ಟು ಯಾರೋ ಹಲ್ಲು ಹಲ್ಲು ಬಿಡ್ತಾ ನಿಂತೀರಿ? +ಈಗ ಬೆಣಕು ಬಿಡ್ತೇನ್ರೋ ನಿಮಗೆ?” ಒಮ್ಮೆಗೇ ಮೈಮೇಲೆ ಬಂದವರಂತೆ ಕಾಕು ಹಾಕಿ ಕೂಗಿಬಿಟ್ಟರು ಸುಬ್ಬಣ್ಣ ಹೆಗ್ಗಡೆ. +ಹೊಲೆಯರಾರೂ ದಿಗಿಲು ಬೀಳಲೂ ಇಲ್ಲ; + ಒಡೆಯರ ಬೈಗುಳವನ್ನು ಮನಸ್ಸಿಗೆ ಹಚ್ಚಿಕೊಳ್ಳಲೂ ಇಲ್ಲ. +ಒಬ್ಬರ ಮುಖವನ್ನು ಒಬ್ಬರು ಇಂಗಿತವಾಗಿ ನೋಡಿಕೊಂಡರು. +ಏನೋ ಅಚಾತುರ್ಯ ಸಂಭವಿಸಿರಬೇಕು ಎನ್ನಿಸಿತು ಕೆಲವರಿಗೆ. +ತಿಮ್ಮ ಧೈರ್ಯ ಮಾಡಿ “ನೀವೇ ಹೇಳಿಕಳಿಸಿದಿರಂತೆ….” +“ಯಾರೋ ಹೇಳಿ ಕಳಿಸಿದ್ದು?” +“ಹೂವಮ್ಮ ಬಂದು ಹೇಳಿದ್ರು ಸಣ್ಣಯ್ಯಗೆ….” +“ಹಂದೀ ಹಸಿಗೇಗಂತೆ…. +ಎಂದು ಕೆಮ್ಮೀಸೆಯ ಮಂಜ ನಡುವೆ ಬಾಯಿ ಹಾಕಿದ್ದೆ ಹೆಗ್ಗಡೆ ಹಣೆ ಹಣೆ ಬಡಕೊಂಡು “ಮನೇಹಾಳ ಮಕ್ಕಳು!ಮನೆಹಾಳ ಮಕ್ಕಳು! +ಹೂವಳ್ಳಿ ಎಂಕಟಣ್ಣಗೆ ಒಂದು ಸಲಗಾನ ಹಿಡಿದು ಹೊರಿಸಿ ಕಳಿಸಾಕೆ ಇಬ್ಬರನ್ನ ಕಳಿಸ್ಲಿ ಅಂತಾ ಹೇಳಿಕಳ್ಸಿದ್ರೆ, ಒಂದು ಹಿಂಡಿಗೆ ಹಿಂಡೇ ಬಂದು ನಿಂತಿದ್ದೀರಲ್ಲೋ! …. ಇಂದೇನು ಇಷ್ಟು ಜನ ಒಟ್ಟಿಗೇ ಕೆಲಸಕ್ಕೆ ಬಂದಾರಲ್ಲಾ ಅಂತಿದ್ದೆ? +ಈಗ ಗೊತ್ತಾತು! +ಬಾಡು ಸಿಗ್ತದೆ ಪಾಲಿಗೆ ಅಂತಾ ಬಿಡಾರನೆಲ್ಲಾ ಖಾಲಿ ಮಾಡಿ ಬಂದೀರಿ ಅಲ್ಲೇನ್ರೋ, ಕಣ್ಣ ಸೂಳೆ ಮಕ್ಕಳ್ರಾ?” ಎಂದು ಬಯ್ದು ಮತ್ತೆ ಗಂಭೀರವಾಗಿ ಆಜ್ಞೆ ಮಾಡಿದರು: +“ಯಾರಾದ್ರೂ ಇಬ್ಬರು ಇರಿ; +ಬಾಕಿಯೋರೆಲ್ಲಾ ಗದ್ದೆಗೆ ಹೊರಡಿ. +ಆಳುಗಳೆಲ್ಲ ಸ್ವಲ್ಪ ಪೆಚ್ಚಾದರು. +ಹಂದಿ ಹಸಿಗೆ ಮಾಡಿ, ಪಾಲು ತೆಗೆದುಕೊಂಡು ಹೋಗುವ ಹೇರಾಸೆ ಕಟ್ಟಿಕೊಂಡು ಬಂದಿದ್ದರು. +ಈಗ ಎಲ್ಲ ವ್ಯರ್ಥವಾದದ್ದು ಮಾತ್ರವೆ ಅಲ್ಲದೆ, ಕೆಲಸಕ್ಕೂ ಹೋಗಬೇಕಾಗಿಯೆ ಬಂದಿತಲ್ಲಾ ಎಂದು ತಪ್ಪಿಸಿಕೊಳ್ಳುವ ಉಪಾಯ ಆಲೋಚಿಸತೊಡಗಿದರು. +ಬೈರ “ಯಾರಾದರೂ ಇರಿ. +ನನಗೆ ದನಾಬಿಡಾಕೆ ಹೊತ್ತಾಯ್ತು” ಎಂದವನು ಮನೆಗೆ ಬಳಿಯ ಕರೆಯುವ ಕೊಟ್ಟಿಗೆಯ ಕಡೆಗೆ ಹೊರಟನು. +ಬೆಟ್ಟಳ್ಳಿಗೆ ಹೋಗಬೇಕೆಂದು ಮೊದಲೇ ಕೆಲಸಕ್ಕೆ ಉಳಿಕೊಡಲು ನಿಶ್ಚಯಿಸಿದ್ದ ಮಂಜ “ನಾನೊಂದು ಚೂರು ಬಿಡಾರಕ್ಕೆ ಹೋಗಿ, ಹಾಂಗೇನೆ ಗದ್ದೆಗೆ ಬಂದು ಬಡ್ತೀನಿ” ಎಂದು ಕೇರಿಯ ಕಡೆಗೆ ಹೊರಟನು. +ಹಂದಿ ಒಡ್ಡಿನ ಹತ್ತಿರಕ್ಕೆ ಹೋಗಿ ಸುಬ್ಬಣ್ಣ ಹೆಗ್ಗಡೆಯವರು ಹಿಂದಿರುಗಿ ನೋಡುತ್ತಾರೆ, ಹೊಲೆಯರೆಲ್ಲ ಅಂಗಳದಿಂದ ಹೊರಡುತ್ತಿದ್ದಾರೆ! +ಅಬ್ಬರಿಸಿ ಗರ್ಜಿಸಿದರು: “ಲೌಡಿಮಕ್ಕಳ್ರಾ, ಎಲ್ಲಿಗೆ ಹೊರಟೀರೋ ಎಲ್ಲಾ? +ಬನ್ರೋ ಇಲ್ಲಿ ಎಲ್ಲರೂ! +ಹಂದಿ ಹಿಡಿದು, ಅಡ್ಡೆ ಕಟ್ಟಿಕೊಟ್ಟು ಹೊರಡಿ ಕೆಲಸಕ್ಕೆ” ಎಂದವರು, ಮತ್ತೆ ದೂರದಲ್ಲಿ ಹೋಗುತ್ತಿದ್ದ ಬೈರನನ್ನು ಕಂಡು “ಕರೆಯೋ ಅವನ್ನ, ಆ ಬೈರನ್ನ. +ಹೊರಟನಲ್ಲ, ದುಣ್ಣ ಮುಂಡೆಗಂಡ, ಎಲ್ಲಿಗೋ ಹಡಬೆ ತಿರಗಾಕೆ!” ಎಂದು ಗದರಿದರು. +ಮನಸ್ಸಿಲ್ಲದ ಮನಸ್ಸಿನಿಂದ ಎಲ್ಲರೂ ಹಿಂದಿರುಗಿ ಬಂದು ಒಡ್ಡಿಯ ಹತ್ತಿರ ನೆರೆದರು. +ಮನೆ ಹಿಸ್ಸೆಯಾದಾಗ ಹೊಲಗೇರಿ ಆಳುಗಳನ್ನೂ ಬಿಡಾರವಾರಾಗಿ ಪಾಲುಮಾಡಿಕೊಂಡಿದ್ದರಿಂದ ಶಂಕರ ಹೆಗ್ಗಡೆಯವರ ಪಾಲಿಗೆ ಹೋಗಿದ್ದ ಬುಚ್ಚ ಮತ್ತು ಪುಟ್ಟ ಇಬ್ಬರೂ ತಮ್ಮ ಪಾಲಿಗೆ ಬಂದಿದ್ದ ಹೊಲೆಯರೊಡನೆ ನಿಂತಿದ್ದುದನ್ನು ನೋಡಿ ಸುಬ್ಬಣ್ಣ ಹೆಗ್ಗಡೆಯವರು: + “ನೀವು ಯಾಕ್ರೋ ಬಂದಿದ್ದು? +ಮೊದಲೇ ನಿಮ್ಮ ಒಡೇರು ‘ನಮ್ಮ ಆಳ್ಗಳನ್ನೆಲ್ಲ ನಮ್ಮ ಕೆಲಸಕ್ಕೆ ಬರದ ಹಾಂಗೆ ಮಾಡಿ, ದುರ್ಬೋಧನೆ ಆಡ್ತಾನೆ’ ಅಂತ ನನ್ನ ಮೇಲೆ ಅವರಿವರ ಹತ್ರ ದೂರು ಪುಕಾರು ಹೇಳ್ತಾನಂತೆ!” ಎಂದು ಒಡ್ಡಿ ಬಾಗಿಲು ತೆಗೆಯಲು ಸುರು ಮಾಡಿದ್ದ ತಿಮ್ಮಗೆ “ನೋಡೂ ಗುರುತಿಟ್ಟಗಾ ಆ ಹೂಬಾಲದ ಸಲಗಾನ…. +ಏ ಮಂಜಾ, ನೀನೂ ಒಂದು ಕೈ ಕೂಡಿಸೋ. +ಬಲವಾಗಿದೆಯೋ ಅದು!” ಎಂದರು. +“ಯಾವುದು? +ಕಿವಿಚಟ್ಟೆ ಹತ್ರ ಬೆಳ್ಳಗಿದೆಯಲ್ಲಾ ಅದಾ?” ಎಂದು ಕೇಳಿದ ಮಂಜಗೆ“ನಿನ್ನ ಅಜ್ಜಿ ತಲೆ! +ಬಾಲದ ಹತ್ರ ಬೆಳ್ಳಗಿದೆಯಲ್ಲೋ ಅದು!” ಎಂದು ಹೆಗ್ಗಡೆಯವರು, ಹಂದಿಯ ಹೇಲುಗೆಸರನ್ನೂ ಲೆಕ್ಕಿಸದೆ ಮೆಟ್ಟುತ್ತಾ, ಇತರ ಅಸ್ಪೃಶ್ಯರಿಂದ ತುಸು ದೂರಸರಿದು ನಿಂತರು. +ಆಗಲೇ ಹೊತ್ತೇರಿದ್ದರಿಂದ ಎಂದಿನಂತೆ ಹೊರಗೆ ಹೋಗಲು ತವಕಿಸುತ್ತಾ ಹಂದಿಗಳೆಲ್ಲಾ ನಾ ಮುಂದೆ ತಾ ಮುಂದೆ ಎಂದು ಬಾಗಿಲ ಬಳಿಗೆ ನುಗ್ಗಲು ತೊಡಗಿದ್ದುವು. +ಒಡ್ಡಿಯ ಒಳಗೆ ಜರುಗುತ್ತಿದ್ದ ಕಾಮಕ್ರೋಧಾದಿ ಅರಿಷಡ್ವರ್ಗದ ಚತುಷ್ಪಾದಿ ಪ್ರಣಿಚೇಷ್ಟೆಗಳನ್ನು ಕಂಡು ಹೊರಗೆ ನಿಂತಿದ್ದ ದ್ವಿಪಾದಿ ಪ್ರಾಣಿಗಳು ಗಟ್ಟಯಾಗಿ ನಗುತ್ತಾ ‘‘ಚಾಷ್ಟೆಮಾತು’ ಪ್ರಾರಂಭಿಸಿದರು:“ಹಿಹ್ಹಿಹ್ಹಿಹ್ಹಿ!ಹಹ್ಹಹ್ಹಹ್ಹ! +ಮರಿ ಹಾಕಿದ ದಡ್ಡೆ ಮ್ಯಾಲೇ ಸವಾರಿಗೆ ಸುರುಮಾಡ್ತಲ್ಲೋ….” +“ಹಿಹ್ಹಿಹ್ಹಿಹ್ಹೀ ಬಿತ್ತು ಕೆಳಗೆ! …. ಹಾಂಗೆ ಆಗ್ಬೇಕು ಸೊಕ್ಕಿದ ಮುಂಡೇದಕೆ….” +“ಅಯ್ಯಯ್ಯಯ್ಯೋ ಆ ಮರೀನ ಕೊಂದೇ ಹಾಕ್ತಲ್ಲೋ ತುಳಿದು….” +“ಏ ಬೈರಣ್ಣಾ, ಕಂಡೀಲಿ ಕೋಲು ಹೆಟ್ಟಿ, ಮುಸುಡಿಗೆ ಒಂದು ತಿವಿಯೋ….” +“ಥೂ ಥೂ ಥೂ! +ಹೊಟ್ಟೆ ಮೆಟ್ಟಿದ ಹೊಡತಕ್ಕೆ ಒಂದು ಮಣ್ಣು ತಟ್ಟೇನೆ ಸುರಿದು ಬಿಡ್ತಲ್ಲೋ….!”ತಿಮ್ಮ ತುಂಬ ಎಚ್ಚರಿಕೆಯಿಂದ ಮೆಲ್ಲಗೆ ಬಾಗಿಲು ತೆರೆಯ ತೊಡಗಿದ. +ಒಂದರ ಮೇಲೆ ಒಂದು ನುಗ್ಗಿ ಕೆಲವು ಮರಿಗಳೂ, ನಡುಪ್ರಾಯದವೂ ಹೊರಗೆ ನೆಗೆದು ಗುರು ಗುರು ಗುಟ್ಟುತ್ತಾ, ದಿನವೂ ಬೆಳಗ್ಗೆ ಮನುಷ್ಯರು ಹೊರಕಡಗೆ ಹೋಗುವ ತೋಟದ ಮೂಲೆಯ ಕಡೆಗೆ ಧಾವಿಸಿದುವು, ಹಸಿದ ತವಕವೋ ತವಕದಿಂದ! +“ತಿಮ್ಮಣ್ಣಾ, ತಿಮ್ಮಣ್ಣಾ, ಬಂತಲ್ಲೋ ಹೂಬಾಲದ ಸಲಗ!” ಬಚ್ಚ ಕೂಗಿದ ರಭಸಕ್ಕೆ ತಿಮ್ಮ ದಢಾರನೆ ಬಾಗಿಲು ಮುಚ್ಚಿಬಿಟ್ಟ! +ನಿಜಕ್ಕೂ ಆ ಸಲಗ ದಡ್ಡೆಗಳನ್ನೆಲ್ಲ ತಿವಿದು ದಾರಿ ಬಿಡಿಸಿಕೊಂಡು ಬಾಗಿಲಿಗೆ ನುಗ್ಗಿತ್ತು, ಸಕಾಲದಲ್ಲಿ ಬಾಗಿಲು ಹಾಕದಿದ್ದರೆ ಹೊರಕ್ಕೆ ಹಾರಿಯೆ ಬಿಡುತ್ತಿತ್ತು. +ಆದರೆ ಬಾಗಿಲು ಹಾಕಿದ್ದನ್ನು ನೋಡಿ ಆ ಸಲಗ ಪುನಃ ಒಡ್ಡಿಯ ಹಿಂಭಾಗಕ್ಕೆ ದಢಾರನೆ ನುಗ್ಗಿ ಕಂಡಿಗಳಿಗೆಲ್ಲಾ ಮೂತಿ ಹಾಕಿ ಪರಿದಾಡತೊಡಗಿತು. +ಬೈರ, ಒಂದು ಬಿದಿರುದೊಣ್ಣೆಯಿಂದ ಒಡ್ಡಿಯೊಳಗಡೆ ದಡ ಬಡಿಸುತ್ತಿದ್ದ ಸಲಗವನ್ನು ಅದರ ಗಮನ ಬಾಗಿಲ ಕಡೆ ಹೋಗದಂತೆ ಮಾಡುವುದಕ್ಕಾಗಿ ಸತಾಯಿಸತೊಡಗಿ, ತಿಮ್ಮಗೆ ಕೂಗಿ ಹೇಳಿದನು: “ತಮ್ಮಣ್ಣಾ, ತಿಮ್ಮಣ್ಣಾ, ಈಗ ಬಾಗಿಲು ತೆಗಿ! +ಬ್ಯಾಗ, ಬ್ಯಾಗ!”ತಿಮ್ಮ ಬೇಗಬೇಗನೆ ಬಾಗಿಲು ತೆರೆದನು. +ದಡ್ಡೆಗಳೂ ಕೆಲವು ಮರಿಗಳೂ ಹೊರಗೆ ನೆಗೆದೋಡಿದುವು. +ಇನ್ನೂ ಕೆಲವು ಬಾಗಿಲಿಗೆ ಧಾವಿಸಿದುವು. +ಅಷ್ಟರಲ್ಲಿ ಬಾಗಿಲು ತೆರೆದದ್ದನ್ನು ಅರಿತ ಸಲಗ ಕಣ್ಣು ಮುಚ್ಚಿ ಬಿಡುವುದರಲ್ಲಿಯೆ ಉಳಿದೆಲ್ಲ ಹಂದಿಗಳನ್ನೂ ಅತ್ತ ಇತ್ತ ತಳ್ಳಿ ಉರುಳಿಸಿ ಬಾಗಿಲಿಗೆ ನುಗ್ಗಿಬಿಟ್ಟಿತು! +‘ಹೋ ಹೋ ಹೋ!’ + ‘ಬಂತೂ ಬಂತೂ ಬಂತೂ!’ + ‘ಅಯ್ಯಯ್ಯೊ ಅಯ್ಯಯ್ಯೊ!ತಪ್ಪಿಸಿಕೊಳ್ತಲ್ಲೋ!’ + ‘ಹಿಡಿರೋ!ಹಿಡೀರೋ!ಹಿಡೀರೋ! +ಥೂ ಹೊಲೆಸೂಳೆಮಕ್ಕಳ್ರಾ, ನೀವೇನು ಅನ್ನಾತಿಂತೀರೋ….?’ ನಾನಾ ಕೂಗುಗಳೂ ಬೈಗುಳಗಳೂ ಅಂಗಳವನ್ನೆಲ್ಲ ಸಶಬ್ದವನ್ನಾಗಿ ಮಾಡಿದುವು. +ಸುಬ್ಬಣ್ಣ ಹೆಗ್ಗಡೆಯವರು “ತ್ವಾಟದ ಕಡೆ ಹೋಗದ ಹಾಂಗೆ ತಡೀರೋ!” ಎಂದು ಕೂಗುತ್ತಾ, ತಾವೇ ಅತ್ತ ಕಡೆ ನುಗ್ಗಿ ಓಡಿದರು. +ಹಿಂದಿನ  ದಿನದ ಬಿರುಮಳೆಯಿಂದಾದ ಅಂಗಳದ ಕೆಲಸರು ಹೆಜ್ಜೆಹೆಜ್ಜಾಯಾಗ ಬೂದಿಗುಡ್ಡೆಯಿಂದಲೂ ಓಡಿಬಂದ ಕಂತ್ರಿನಾಯಿಗಳೂ ಸಲಗನ ಬೇಟೆಯಲ್ಲಿ ಭಾಗವಹಿಸಿದುವು. +ಯಾವ ಕಡೆ ಹೋದರೂ ದಾರಿ ಕಟ್ಟಿಹೋದ ಆ ಹಂದಿಗೆ ತಲೆ ಕೆಟ್ಟಂತಾಗಿ ಸಿಕ್ಕಬಟ್ಟೆ ನುಗ್ಗಿ ಓಡಲಾರಂಭಿಸಿತು. +ಸೌದೆಕೊಟ್ಟಿಗೆಯ ಕಡೆ ನುಗ್ಗಿ ಅಲ್ಲಿ ತನಗೆ ಎದುರಾಗಿ ಕಡಿದಾಗಿ ಎದ್ದಿದ್ದ ದರೆಯನ್ನು ಕಂಡು, ಹತ್ತಲು ಎರಡು ಮೂರು ಸಾರಿ ನೆಗೆದು ಜಾರಿಬಿದ್ದು ಸೋತು, ಹಿಂದಕ್ಕೆ ಹಾರಲು ಪ್ರಯತ್ನಿಸುತ್ತಿದ್ದಾಗ ಮಂಜ ಅಲ್ಲಿಯೆ ಬಿದ್ದಿದ್ದ ಒಂದು ದೊಡ್ಡ ಬಡಿಕೆಯನ್ನೆತ್ತಿ ಹಂದಿಯ ಸೊಂಟಕ್ಕೆ ಇಕ್ಕಡಿಸಿಬಿಟ್ಟನು. +ಅದು ಆ ಪೆಟ್ಟಿಗೆ ಕಿರ್ರೋ ಎಂದು ಕೂಗಿಕೊಳ್ಳಲು, ಹೆಗ್ಗಡೆಯವರು “ಅಯ್ಯೋ ಮುಂದೇಮಗನೇ, ಹೊಡೆದು ಕೊಂದೇನೊ? +ಸೊಂಟಮುರಿದು ತೆವಳ್ತಿದೆಯಲ್ಲೋ! +ಹಸಿಗೆ ಮಾಡಿಕೊಂಡು ತಿನ್ನಾವ ಅಂತಾ ಮಾಡೀರೇನೋ?” ಎಂದು ಮೊದಲಾಗಿ ಬೊಬ್ಬೆ ಹಾಕಿದರು. +ಹಂದಿಯನ್ನು ಮಾರುವುದರಿಂದ ಬರುವ ಹಣಕ್ಕೆ ಎಲ್ಲಿ ಸಂಚಕಾರ ಆಗುತ್ತದೆಯೋ ಎಂಬುದು  ಅವರ ಹೆದರಿಕೆಯಾಗಿತ್ತು. +ಆದರೆ ಸಲಗ ಸ್ವಲ್ಪವೂ ಜಗ್ಗಲಿಲ್ಲ. +ಪಣತದ ಕೊಟ್ಟಿಗೆಯ ಕಡೆ ನುಗ್ಗಿತು. +ಅಲ್ಲಿ ತೊಳಸಿ ಘನಮಾಡಲೆಂದು ರಾಸಿಹಾಕಿದ್ದ ಅಕ್ಕಿಯಿದ್ದುದನ್ನು ಕಂಡು ಹೆಗ್ಗಡೆಯವರು ಹುಚ್ಚೆದ್ದು ಕುಣಿದಾಡಿದರು: + “ಹೋಯ್ತಲ್ಲೋ!ಹೋಯ್ತಲ್ಲೋ! +ನಿಮ್ಮ ಮನೆ ಹಾಳಾಗ, ಅಕ್ಕಿನೆಲ್ಲಾ ತೆಗಿದ್ರಲ್ಲೋ…” ಎಂದು ಕೋಪ ಮಿಶ್ರವಾದ ರೋದನ ಧ್ವನಿಮಾಡತೊಡಗಿದರು. +ಹೊಲೆಯರೆಲ್ಲಾ ಸೇರಿ ಹಂದಿ ಅತ್ತಕಡೆ ಹೋಗದಂತೆ ತಡೆಯಲು ಹೆಣಗಿದರು. +ಆದರೆ ಸಲಗವು ಅಕ್ಕಿಯ ರಾಶಿಯ ಮೇಲೆಯೆ ನುಗ್ಗಿ, ತುಳಿದು, ಚೆನ್ನಾಪಿಲ್ಲಿ ಮಾಡಿ, ಬೊಬ್ಬೆಯ ಹೊನಲಿನಲ್ಲಿ ತೇಲಿ ನುಗ್ಗುವ ಕರಿಬಂಡೆಯಂತೆ, ಶಂಕರಪ್ಪ ಹೆಗ್ಗಡೆಯವರ ಹೆಂಚಿನ ಮನೆಯ ಅಂಗಳದತ್ತ ಧಾವಿಸಿತು. +ಜಗಲಿಯ ಮೇಲೆ ಮಾತಾಡುತ್ತಾ ಕುಳತಿದ್ದ ಶಂಕರಪ್ಪ ಹೆಗ್ಗಡೆ ಮತ್ತು ವೆಂಕಟಣ್ಣ ಇಬ್ಬರೂ ಅಂಗಳದ ಕಡೆ ನುಗ್ಗಿ ಬರುತ್ತಿದ್ದ ಹಂದಿ ನಾಯಿ ಮನುಷ್ಯರ ಬೊಬ್ಬೆಗುಂಪನ್ನು ನೋಡ, ತುಳಸೀಕಟ್ಟೆಯಿರುವ ಸ್ಥಳವನ್ನು ಅಪವಿತ್ರಗೊಳಿಸದಂತೆ ಹಂದಿಯನ್ನು ಅಡ್ಡಗಟ್ಟಿ ಹಿಂದಕ್ಕೇ ಓಡಿಸಬೇಕೆಂದು ಕೆಳಕ್ಕಿಳಿಯುವಷ್ಟರಲ್ಲಿಯೆ ಗುಂಪು ಅಂಗಳಕ್ಕೆ ನುಗ್ಗಿ ಬಿಟ್ಟಿತ್ತು. +ಶಂಕರಪ್ಪ ಹೆಗ್ಗಡೆ  ತುಳಸಿಕಟ್ಟೆಯ ಬಲಗಡೆಗೆ ಧಾವಿಸಿ, ಅಬ್ಬರಿಸಿ ಕೂಗಿ ಹಂದಿಯನ್ನು ಎಬ್ಬಿದೊಡನೆ ಅದು ಬಲಕ್ಕೆ ತಿರುಗಿ ನುಗ್ಗಿತು. +ಕಾಲಿನ ಹುಣ್ಣು ರಕ್ತ ಸೋರುತ್ತಾ ನೆಲದ ಮೇಲೆ ನೋಯುತ್ತ ಕುಳಿತಿದ್ದ ವೆಂಕಟಣ್ಣ ಅಭ್ಯಾಸ ಬಲದಿಂದೆಂಬಂತೆ ತನ್ನ ದೊಣ್ಣೆಯನ್ನೆತ್ತಿ, ಬೀಸಲು ಹಂದಿ ತುಳಸಿಕಟ್ಟೆಯ ಮೇಲೇಯೆ ಹತ್ತಿ ಹಾರಿತು. +ಅದರ ಹಿಂದೆ ನಾಯಿಗಳೂ ನುಗ್ಗಿದುವು. +ದೇವರ ಮುಂದೆ ಹೋತ್ತಿಸಿಟ್ಟಿದ್ದ ನೀಲಾಂಜನಗಳೂ ದೇವರಿಗೆ ಮುಡಿಸಿದ್ದ ಹೂವುಗಳೂ ಉರುಳಿ ಚೆಲ್ಲಾಪಿಲ್ಲಿಯಾಯಿತು. +ದೀಪಗಳೂ ಆರಿಹೋದುವು. +ಹಂದಿಯ ಹಿಂದೆ ಓಡಿ ಬರುತ್ತಿದ್ದ ಹೊಲೆಯರೆಲ್ಲ ಹಂದಿ ದೇವರ ಕಡೆಗೆ ನುಗ್ಗಿದೊಡನೆ, ಹದರಿ ಗಾಬರಿಯಾಗಿ ಮರವಟ್ಟಂತೆ ದೂರದಲ್ಲಿಯೆ ನಿಂತುಬಿಟ್ಟರು. +ತಾವು ಹೋಗಬಾರದ ಜಾಗಕ್ಕೆ ಹಂದಿ ಹೋಯಿತಲ್ಲಾ ಎಂದು ವಿಷಾದದಿಂದಲೂ, ಅದಕ್ಕಿಂತಲೂ ಹೆಚ್ಚಾಗಿ ತಮಗೆ ಕೇಡು ತಪ್ಪದು ಎಂಬ ಪಾಪಭೀತಿಯಿಂದಲೂ ಅವರು ಕಂಗಾಲಾಗಿದ್ದರು. +ಅಷ್ಟರಲ್ಲಿ ಹಂದಿ ಅಂಗಳದ ಒಂದು ಭಾಗಕ್ಕೆ ಹಾಕಿದ್ದ ಹಳೆಯ ಬೇಲಿಯನ್ನು ಮುರಿದುಕೊಂಡು ಅವರ ಮನೆಯ ಹಿತ್ತಲು ಕಡೆಗೆ ನುಗ್ಗಿದುದನ್ನು ಕಂಡ ಹೊಲೆಯರು ಬಳಸುದಾರಿಯಿಂದ ಅತ್ತ ಓಡಿದರು. +ಅಲ್ಲಿಯೂ ಹಂದಿ ಹರುವೆ ಮಾಡಿ, ಕೊತ್ತಂಬರಿ ಮಡಿ, ಕೆಸುವಿನ ಚೀಪಿನ ಮಡಿ, ತಿಂಗಳವರೆ ಮಡಿಗಳನ್ನೆಲ್ಲ ತುಳಿದು ರಂಪ ಮಾಡಿ ಮನೆಯ ಮೇಲಣ ಹಕ್ಕಲುಹಾಡಿನ ಕಡೆಗೆ ನುಗ್ಗಿಬಿಟ್ಟಿತ್ತು. +ಸ್ವಲ್ಪ ಹೊತ್ತಿಗೆ ಮುಂಚೆ ತಾನು ಪೂಜಿಸಿ ಪ್ರದಕ್ಷಿಣೆ ಮಾಡಿದ್ದ ತನ್ನ ಮನೆದೇವರಿಗೆ ತನ್ನ ಕಣ್ಣಮುಂದೆಯೆ ಒದಗಿದ ಮೈಲಿಗೆಯ ದುಃಸ್ಥಿತಿಯನ್ನು ಎವೆಯಿಕ್ಕದೆ ನಿಟ್ಟಿಸುತ್ತಾ, ದಿಗ್‌ಭ್ರಾಂತನಂತೆ ನಿಂತಿದ್ದ ಶಂಕರ ಹೆಗ್ಗಡೆಯವರ ಕಣ್ಣುಗಳಲ್ಲಿ ನೀರು ಬಳಬಳನೆ ಇಳಿಯತೊಡಗಿತು. +ನಿಟ್ಟುಸಿರುಗಳಿಂದ ಅಳ್ಳೆ ಎದತೊಡಗಿತು. +ಮರ್ಮಭೇದಿಯಾದ ಅಂತರ್ದುಃಖವೊಂದು ಅವರ ಹೃದಯವನ್ನೆಲ್ಲಾ ಹಿಂಡಿದಂತಾಯಿತು. +ತನಗೇನೊ ಒಂದು ಭಯಂಕರ ಅಮಂಗಳ ಕಾದಿದೆ ಎನ್ನುವುದಕ್ಕೆ ಮುನ್ಸೂಚನೆಯಾದಂತಾಗಿ ಅರೂಪ ಭೀತಿಯೊಂದು ಅವರ ಅಂತಃಕರಣದ ಅಂತರಾಳವನ್ನೆಲ್ಲ ಕಲಕತೊಡಗಿತು. +ಜಗಲಿಯ ಮೇಲೆ ಕೈ ಕೂಸನ್ನೆತ್ತಿಕೊಂಡು, ಮಕ್ಕಳೊಡನೆ ನಿಂತು, ನಿಸ್ಸಹಾಯಕಳಾಗಿ, ದಿಗಿಲುಗೊಂಡು ನಡೆದುದನ್ನೆಲ್ಲ ನೋಡಿ ಸಂಕಟಪಡುತ್ತಾ ನಿಂತಿದ್ದ ಬಡಕಲೊಡಲ ತನ್ನ ಹೆಂಡತಿಯನ್ನು ನೋಡಿ, ಹಿಂದೆಂದೂ ಇತರರೆದುರು ಹೆಂಡತಿಯ ಹೆಸರು ಹಿಡಿದು ಕೂಗದಿದ್ದ ಅವರು, ತಡೆಯಲಾರದ ದುಃಖ ಭಯ ಅಮಂಗಳಾಶಂಕೆಯಿಂದ ಕಂಗೆಟ್ಟಂತೆ “ಅಯ್ಯೋ, ಸೀತೂ, ನಮ್ಮ ಮನೆಯೆ ಹಾಳಾಯಿತಲ್ಲೇ! +ದೇವರಿಗೆ ಹಚ್ಚಿಟ್ಟಿದ್ದ ದೀಪಾನೆ ಆರಿಸಿದನಲ್ಲೇ ನಮ್ಮ ದಾಯಾದಿ!” ಎಂದು ಗಟ್ಟಿಯಾಗಿ ರೋದನ ಧ್ವನಿಯಲ್ಲಿ ಕೂಗಿಕೊಂಡರು. +ಅತ್ತ ಕಾಡು ಹತ್ತಿದ ಊರು ಹಂದಿ ಒಂದು ಸೀಗೆಯ ಉಡಿಯಲ್ಲಿ ಆಶ್ರಯ ಪಡೆದುದನ್ನು ಪತ್ತೆ ಹಚ್ಚಿ ಹೊಲೆಯರೆಲ್ಲ ಸುತ್ತುವರಿದು ಅದನ್ನು ಹೊರಡಿಸುವ ಯತ್ನದಲ್ಲಿದ್ದರು. +ಇದ್ದಕ್ಕಿದ್ದ ಹಾಗೆ ಯಾವುದೊ ಒಂದು ದೊಡ್ಡ ನಾಯಿಯ ದೊಡ್ಡ ಗಂಟಲು ಕೇಳಿಸಿತು. +ಹಂದಿ ಉಡಿಯಿಂದ ಹೊಡಗೆ ದುಮಿಕಿ ತನ್ನೆಲ್ಲ ಶಕ್ತಿಯನ್ನೂ ವಿನಿಯೋಗಿಸಿ ಓಡತೊಡಗಿತು. +ನೋಡುತ್ತಾರೆ: ಅದನ್ನು ಬೆನ್ನಟ್ಟುತ್ತಿದೆ, ಹುಲಿಯ! +“ಅಯ್ಯಯ್ಯೋ ಅದ್ಯಾವುದ್ರೋ ಆ ನಾಯಿ?” ಎಂದೊರಲುತ್ತಾ ತಿಮ್ಮ ದೌಡಾಯಿಸಿದ. +ಕೆಮ್ಮೀಸೆ ಮಂಜ ಹಿಂಬಾಲಿಸುತ್ತಲೇ ಕೂಗಿದ: + “ಸಿಂಬಾವಿ ಗುತ್ತೀದು ಕಣ್ರೋ! +ಎಲ್ಲಿಂದ ಬಂತ್ರೋ ಇಲ್ಲಿಗೆ ಆ ಸನಿ? +ಕೊಂದೇ ಹಾಕ್ತದೆ ಹಂದೀನ!”ಅಷ್ಟರಲ್ಲಿಯೆ ಒಂದು ಪೊದೆಯ ಹಿಂದೆ ಹಂದಿ ಕಿರ್ರೋ ಎಂದು ಕೂಗುತ್ತಿದ್ದ ಬೊಬ್ಬೆ ಕೇಳಿಸಿತು: + ಹುಲಿಯ ಹಂದಿಯ ಕಿವಿಚಟ್ಟೆಯನ್ನು ಕಟ್ಟಿ ಹಿಡದು ಅದರ ಓಟವನ್ನು ನಿಲ್ಲಿಸಿತ್ತು. +ಹೊಲೆಯರು ಸಮೀಪಿಸುವುದರೊಳಗೆ ಹಂದಿ ಕೆಳಗೆ ಬಿದ್ದಿತ್ತು. +ನಾಯಿ ಅದರ ಗಂಟಲಿಗೆ ಬಾಯಿ ಹಾಕುವ ಪ್ರಯತ್ನದಲ್ಲಿತ್ತು. +“ಬಿಡಿಸ್ರೋ!ಬಿಡಿಸ್ರೋ!ಹಂದೀನಾ ಕೊಂದುಹಾಕ್ತದೆ!” ಎಂದು ಎಲ್ಲರೂ ಒಬ್ಬರಿಗೊಬ್ಬರಿಗೆ ಕೂಗಿ ಹೇಳಿದರೇ ಹೊರತು ಯಾರೂ ನಾಯಿಯ ಹತ್ತಿರಕ್ಕೆ ಹೋಗಲು ಧೈರ್ಯ ಮಾಡಲಿಲ್ಲ. +ಅಷ್ಟರಲ್ಲಿ ಕೋಣೂರಿನ ಹತ್ತಿರ ನಾಗತ್ತೆ ನಾಗಕ್ಕರನ್ನು ಅಗಚಿ, ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರಿಗೆ ಸಿಂಬಾವಿ ಭರಮೈ ಹೆಗ್ಗಡೆಯವರಿಂದ ಕಾಗದ ತರುತ್ತಿದ್ದ ಹೊಲೆಯರ ಗುತ್ತಿ, ತಾನು ಬರುತ್ತಿದ್ದ ಕಾಲುದಾರಿಯಿಂದ ತುಸು ಮೇಲುಭಾಗದ ಕಾಡಿನ ಅಂಚಿನಲ್ಲಿ ಆಗುತ್ತಿದ್ದ ಗಲಾಟೆಯನ್ನು ಕೇಳಿ, ಕುತೂಹಲವಶ ನಾಯಿ ಆ ಕಡೆ ಓಡುತ್ತಲೇ ಹೋಗಿ ಕಾಣಿಸಿಕೊಳ್ಳುವುದೆ ತಡ ನಾಲ್ಕಾರು ಕೊರಳುಗಳು ಒಟ್ಟಿಗೆ “ನಿನ್ನ ನಾಯಿ ನಮ್ಮ ಹಂದೀನ ಕೊಲ್ತಲ್ಲೋ, ಗುತ್ತಿ!” ಎಂದು ಕೂಗಿಕೊಂಡವು. +ಸನ್ನಿವೇಶದ ಅರ್ಥವನ್ನೆಲ್ಲ ತಟಕ್ಕನೆ ಗ್ರಹಿಸಿದ ಗುತ್ತಿ ಓಡಿಹೋಗಿ, ಕೂಗಿ ಕರೆಯುತ್ತಾ, ಹುಲಿಯನ ಬೆನ್ನ ಮೇಲೆ ಮುಷ್ಟಿಯಿಂದಲೆ ಎರಡು ಗುದ್ದು ಗುದ್ದಿ, ಅದರ ಕುತ್ತಿಗೆಯನ್ನು ಬಲವಾಗಿ ತಬ್ಬಿ ಎಳೆದು ಹಿಡಿದುಕೊಂಡನು. +ತತ್ತರಿಸಿದ್ದ ಸಲಗ ಮತ್ತೆ ಬಡರಿಬಿದ್ದು ಎದ್ದು ಓಡಲು ಪ್ರಯತ್ನಿಸುತ್ತಿದ್ದಂತೆಯೇ ಮಂಜ, ಬೈರ, ತಿಮ್ಮ, ಬಚ್ಚ, ಪುಟ್ಟ ಎಲ್ಲರೂ ಒಂದೇ ನೆಗೆತಕ್ಕೆ ನುಗ್ಗಿ ಅದನ್ನು ಅದುಮಿ ಹಿಡಿದು, ಬಳ್ಳಿಗಳಿಂದ ಮುಂದಿನ ಎರಡೂ ಕಾಲುಗಳನ್ನೂ ಹಿಂದಿನವುಗಳನ್ನೂ ಬೇರೆ ಬೇರೆಯಾಗಿ ಒಟ್ಟಿಗೆ ಬಿಗಿದು ಕಟ್ಟಿ, ಒಂದು ನೇರವಾದ ಗಿಡವನ್ನು ಕಡಿದು ಬಲವಾದ ಅಡ್ಡೆಯನ್ನಾಗಿ ಮಾಡಿ ಹಂದಿಯ ಕಾಲುಗಳ ನಡುವೆ ತೂರಿಸಿ, ಎತ್ತಿ ತಲೆಕೆಳಗಾಗಿ ಕಿರ್ರೊ ಎಂದು ಕಾಡೆಲ್ಲ ಮೊರೆಯುವಂತೆ ಚೀರಿಡುತ್ತಿದ್ದ ಅದನ್ನು ಹೊತ್ತುಕೊಂಡು ಮನೆಯ ಕಡೆಗೆ ಇಳಿದರು. +ಗುತ್ತಿ ತನ್ನ ನಾಯಿಯ ಕೊರಳಿಗೆ ಮತ್ತೆ ಒಂದು ಬಳ್ಳಿ ಕುಣಿಕೆ ಬಿಗಿದು, ಅದನ್ನು ಭದ್ರವಾಗಿ ಹಿಡಿದುಕೊಂಡು ಮನೆಯ ಕಡೆಗೆ ಹೊರಟು ಎರಡು ಹೆಜ್ಜೆ ಹಾಕಿದ್ದನೊ ಇಲ್ಲವೊ ಎದುರಿಗೆ ತಿಮ್ಮಪ್ಪ ಹೆಗ್ಗಡೆ ಬರುತ್ತಿರುವುದನ್ನು ನೋಡಿ, ಪಿಚ್ಚನೆ ಹಲ್ಲುಬಿಟ್ಟು, ಅಭ್ಯಾಸಬಲದಿಂದಲೆಂಬಂತೆ ದಾರಿಯಿಲ್ಲದಿದ್ದರೂ ದಾರಿಬಿಟ್ಟು ನಿಲ್ಲುವಂತೆ ಸರಿದು ನಿಂತನು. +ಹಂದಿ ನೆರಮನೆಯ ದಾಯಾದಿಗಳ ಅಂಗಳದ ಕಡೆಗೆ ನುಗ್ಗಿದುದನ್ನು ಕಂಡ ಸುಬ್ಬಣ್ಣ ಹೆಗ್ಗಡೆಯವರು, ಕಾಲುಗೆಟ್ಟಂತಾಗಿ, ತಮಗೆ ಸೇರಿದ ಅಂಗಳದ ಭಾಗದಲ್ಲಿಯೆ ನಿಂತು, ಮಗನನ್ನು ಕೂಗಿ ಕರೆಯತೊಡಗಿದರು. +ತಿಮ್ಮಪ್ಪ ಹೆಗ್ಗಡೆ ತನಗೂ ಅದಕ್ಕೂ ಏನೂ ಸಂಬಂಧವಿಲ್ಲದವನಂತೆ ಬಚ್ಚಲ ಕಡೆಯಿಂದ ಬರಲು “ನಿನ್ನ ಕಾಲಿಗೆ ಒರಲೆಹಿಡಿಯಾ! +ಕಿವಿ ಕೆಪ್ಪಾಗಿದೆಯೇನೊ? +ಅಲ್ಲಿ ಓಡೋ!ಓಡೋ ಬ್ಯಾಗ!” ಎಂದು ಗಂಟಲು ಕಟ್ಟಿ ಹೋಗುವಂತೆ ಕೂಗಿಕೊಂಡರು. +ತಿಮ್ಮಪ್ಪ ತುಸು ಚುರುಕಾಗಿಯೆ ಗಲಾಟೆಯ ಜಾಡನ್ನು ಹಿಂಬಾಲಿಸಿ ಗುಡ್ಡವೇರಿ ಬರುತ್ತಿದ್ದನು. +ಗುತ್ತಿಯಿಂದ ಹೊಲೆಯರು ಹಂದಿಯನ್ನು ಅಡ್ಡೆ ಕಟ್ಟಿ ಹೊತ್ತುಕೊಂಡು ಹೋದ ವಿಷಯ ತಿಳಿದವನು “ಅಂತೂ ನೀನು, ನಿನ್ನ ನಾಯಿ, ಹೋದಲ್ಲೆಲ್ಲಾ ಕೊಂಡು ಹುಯ್ಲು!” ಎಂದವನು, ತಟಕ್ಕನೆ ದನಿ ಬದಲಾಯಿಸಿ “ಎಲ್ಲಿಂದ ಬಂದ್ಯೊ?” ಎಂದನು. +ಗುತ್ತಿ ಇದ್ದಕ್ಕಿದ್ದಂತೆ ಪ್ರಸನ್ನನಾದವನಂತೆ ಮಂದಹಸಿತನಾದನು. +ತಾನು ಎಲ್ಲಿಂದ ಬಂದದ್ದು ಎಂಬುದನ್ನು ಹೇಳಿದರೆ ಆ ಹೆಸರು ಕೇಳಿ ತಿಮ್ಮಪ್ಪ ಹೆಗ್ಗಡೆ ಒಳಗೊಳಗೆ ಹಿಗ್ಗುತ್ತಾನೆ ಎಂಬುದನ್ನು ನಿಸ್ಸಂದಿಗ್ಧವಾಗಿ ಅರಿತವನಂತೆ ಹೇಳಿದನು: +“ಮನೆಯಿಂದ.” +‘ಮನೆಯಿಂದ’ ಎಂದರೆ ‘ಸಿಂಬಾವಿಯಿಂ’ ಎಂದು ಎಲ್ಲರೂ ತಿಳಿದೇ ತಿಳಿದುಕೊಳ್ಳುತ್ತಾರೆ ಎಂಬುದರಲ್ಲಿ ಅವನಿಗೆ ಸುನಿಶ್ಚಯ ಬುದ್ದಿ. +ಆ ಕಡೆ ಯಾರೂ “ನಮ್ಮ ಊರಿಂದ ಬಂದೆ” ಎಂದಾಗಲಿ, ನಮ್ಮ ‘ಹಳ್ಳಿ’ಯಿಂದ ಬಂದೆ ಎಂದಾಗಲಿ ಹೇಲುವುದಿಲ್ಲ. +ಅಲ್ಲಿ ಊರು ಹಳ್ಳಿ ಎಲ್ಲ ಒಂದೇ: ‘ಮನೆ’ಗೆ ಸೇರಿದಂತೆ ತುಸು ದೂರದಲ್ಲಿ ಹೊಲೆಯರ ಕೇರಿ, ಗಟ್ಟದವರ ಬಿಡಾ, ಇತ್ಯಾದಿ ಏನಿದ್ದರೂ ಅವೆಲ್ಲ ‘ಮನೆ’ಯಲ್ಲಿ ಐಕ್ಯ. +ನಮ್ಮ ಊರು, ನಮ್ಮ ಹಳ್ಳಿ- ಎಂಬ ಮಾತುಗಳು ಗಟ್ಟದ ತಗ್ಗಿನವರಿಂದ ಬರಬಹುದು ಅಥವಾ ಬಯಲು ಸೀಮೆಯವರಿಂದ ಬರಬಹುದು. +ಮಲೆನಾಡಿನವರಿಗೆ ಇರುವುದು ‘ನಮ್ಮನೆ’ ‘ನಿಮ್ಮನೆ’. +“ಏನಾರೂ ಹೇಳಿ ಕಳಿಸಿದಾರೋ ನಿಮ್ಮ ಅಯ್ಯೋರು?” ತಿಮ್ಮಪ್ಪ ಹೆಗ್ಗಡೆ ಸುಪ್ರೀತನಾಗಿಯೆ ಪ್ರಶ್ನಿಸಿದನು. +“ಏನೂ ಇಲ್ಲಾ…” ಎಂದು ಗುತ್ತಿ ನೀಳ್ದನಿ ತೆಗೆದರೂ ಆ ದನಿ ಧ್ವನಿಪೂರ್ಣವಾಗಿದ್ದಂತೆ ತೋರಿತು ತಿಮ್ಮಪ್ಪ ಹೆಗ್ಗಡೆಗೆ. +ಗುತ್ತಿ ಹಲ್ಲು ಬಿಡುತ್ತಿದ್ದುದನ್ನು ಗಮನಿಸಿ ತಾನೂ ಹಲ್ಲು ಬಿಡುತ್ತಾ “ಥೂ ಲೌಡೀ ಮಗನೇ, ನನ್ನ ಹತ್ತಿರ ದಗಲಬಾಜಿ ಮಾಡ್ತೀಯಾ?” ಎಂದನು. +“ಇಲ್ಲ ನನ್ನೊಡೆಯ, ನಾನ್ಯಾಕೆ ದಗಲಬಾಜಿ ಮಾಡಿ? +ನನ್ನ ಹತ್ರ ಏನೂ ಹೇಳಿ ಕಳ್ಸಿಲ್ಲ.” +“ಮತ್ತೆ?ಕಾಗದ ಗೀಗದ ಕೊಟ್ಟಾರೇನು?”ಗುತ್ತಿಗೆ ಫಜೀತಿಗಿಟ್ಟುಕೊಂಡಿತು. +ಕೊಟ್ಟ ಕಾಗದವನ್ನು ಗುಟ್ಟಾಗಿ ಸುಬ್ಬಣ್ಣ ಹೆಗ್ಗಡೆಯವರಿಗೇ ಕೊಡಬೇಕೆಂದು ಸಿಂಬಾವಿ ಭರಮಯ್ಯ ಹೆಗ್ಗಡೆಯವರು ತಮ್ಮ ನೆಚ್ಚಿನ ಆಳಿಗೆ ಆಜ್ಞಾಪಿಸಿದ್ದರು. +ಬೇರೆ ಯಾರಾದರೂ ಕೈಯಲ್ಲಿ ಕೊಟ್ಟುಗಿಟ್ಟೀಯಾ? +ಎಂದು ಹೆದರಿಸಿಯೂ ಇದ್ದರು. +ಈಗ ಕಾಗದ ಕೊಟ್ಟಿದ್ದಾರೆ ಎಂಬ ವಿಚಾರ ತಿಮ್ಮಪ್ಪಗೆ ತಿಳಿಸಿದರೆ ‘ಎಲ್ಲಿ? +ಕೊಡು, ನೋಡಿ ಕೊಡುತ್ತೇನೆ’ ಎಂದು ಕೇಳಿದರೆ ಏನು ಮಾಡುವುದು? +ಏನನ್ನಾದರೂ ಹೇಳಿ ಕಳಿಸಿದ್ದಾರೆ ಎಂದು ತೋಟ, ಗದ್ದೆ, ಹಂದಿ, ದನ, ಕರು, ಜಮೀನು ಇಂತಹ ಯಾವುದಾದರೂ ಒಂದನ್ನು ಕುರಿತು ಏನಾದರೊಂದು ಸುಳ್ಳಂಬಳ್ಳಿ ಹೇಳಬಹುದಾಗಿತ್ತು. +ಆ ಅವಕಾಶವನ್ನೂ ಮೊದಲೇ ಕಳೆದುಕೊಂಡು ಬಿಟ್ಟಿದ್ದಾನೆ, ಏನನ್ನೂ ಹೇಳಿ ಕಳಿಸಿಲ್ಲ ಎಂದು ಹೇಳಿ. +ಮುಂದೇನು ಮಾಡಬೇಕು ಎಂದು ಗುತ್ತಿ ಮನದಲ್ಲಿಯೆ ತಡಕಾಡುತ್ತಿದ್ದುದನ್ನು ಗುರುತಿಸಿದ ತರುಣ ಹೆಗ್ಗಡೆ: +“ಏನೋ?ಮತ್ತೇನೋ ಠಕ್ಕು ಮಾಡಾಕೆ ಹುನಾರು ಮಾಡ್ತಿದ್ದೀಯಾ?” ಎಂದು ಮೂದಲಿಸುವಂತೆ ಪ್ರಶ್ನಿಸಿ, ಎರಡು ಹೆಜ್ಜೆ ಮುಂಬರಿದನು. +ತಿಮ್ಮಪ್ಪ ಹೆಗ್ಗಡೆಯ ಕಠೋರ ಧೂರ್ತ ಸ್ವಭಾವದ ಪರಿಚಯವಿದ್ದ ಗುತ್ತಿ “ತಡೀರಪ್ಪಾ, ಕಾಗ್ದ ಕೊಟ್ಟಿದ್ರೂ” ಎಂದು ದಗಲೆಯೊಳಗೆ, ಸೊಂಟದ ಸುತ್ತಿನಲ್ಲಿ ಅಲ್ಲಿ ಇಲ್ಲಿ ಹುಡುಕುತ್ತಾ “ಹಾಳು ಆ ಲಕ್ಕುಂದದ ಹಳ್ಳ ನಿನ್ನೆ ಆ ಮಳೇಲಿ ಏರಿ ಬಿಟ್ಟಿತ್ತು! +ಹಾದು ಬರುವಾಗ ಸೊಂಟದ ಮ್ಯಾಲಕ್ಕೂ ನೀರು ಬಂದಿತ್ತು. +ಎಲ್ಲಿ ತೇಲಿಹೋತೋ ಏನೋ?”  ಎಂದು ಹುಡುಕುವುದನ್ನು ಬಿಟ್ಟು ನಿರಾಶನಾದವನಂತೆ ನಿಂತು “ಇನ್ನೇನು ಮಾಡ್ಲಪ್ಪಾ ನಾನು? +ಮಗ್ಗಲು ಮುರಿಯೋ ಹಾಂಗೆ ಹೋಡೋತಾರಲ್ಲಾ  ನನ್ನ!” ಎಂದು ಅಳುದನಿ ತೆಗೆದುದನ್ನು ಕಂಡ ತಿಮ್ಮಪ್ಪ ಹೆಗ್ಗಡೆ, ತುಟಿಗಚ್ಚಿ, ಕೊಂಕುನಗೆ ಬೀರಿ: +“ನೋಡೋ, ಗುತ್ತಿ, ಈ ಆಟಾನೆಲ್ಲಾ ತೆಗೀಬ್ಯಾಡ ನನ್ಹತ್ರ” ಎಂದು ಗುತ್ತಿಯ ಕಣ್ಣನ್ನೆ ನೇರವಾಗಿ ನೋಡುತ್ತಾ ಹೇಳಿದನು. + “ನಿನ್ನ ಗುತ್ತೆಲ್ಲಾ ನಂಗೆ ಗೊತ್ತಿಲ್ಲಾ ಅಂತಾ ಮಾಡೀಯೇನು?”ಗುತ್ತಿ ತಾನು ಬೆಟ್ಟಳ್ಳಿಗೆ ಹೋಗಿ ದೊಡ್ಡ ಬೀರನ ಮಗಳು ತಿಮ್ಮಿಯನ್ನು ಹಾರಿಸಿಕೊಂಡು ಹೋಗುವ ಗುಟ್ಟನ್ನೇ ಕುರಿತು ತಿಮ್ಮಪ್ಪ ಹೆಗ್ಗಡೆ ಸೂಚಿಸುತ್ತಿದ್ದಾನೆ ಎಂದು ಹೆದರಿ, ಹೇಗಾದರೂ ಮಾಡಿ ಅವನ ಕೈಯಿಂದ ನುಣುಚಿಕೊಂಡು ಹೊಗಿ ಸುಬ್ಬಣ್ಣ ಹೆಗ್ಗಡೆಯವರಿಗೆ ಕಾಗದ ತಲುಪುವಂತೆ ಮಾಡಿದರೆ ಸಾಕು ಎಂದು, ಹಿಂದುಮುಂದು ನೋಡದೆ “ಇಲ್ಲ, ನನ್ನೊಡ್ಯಾ, ಸತ್ಯವಾಗಿ, ದೇವರಾಣೆ!” ಎಂದುಬಿಟ್ಟನು. +“ದನಾ ತಿನ್ನುವನಿಗೆ ಗೊಬ್ಬರದ ಆಣೆ! …. ನೋಡೂ, ನನು ಅಪ್ಪಯ್ಯಗೆ ಕಾಗದ ಕೊಟ್ಟರೂ ಅವರು ಅದನ್ನ ನನ್ನ ಹತ್ರಾನೆ ಓದಾಕೆ ಹೇಳ್ತಾರೆ. +ಅವರಿಗೆ ಕಣ್ಣೂ ಸರಿಯಾಗಿ ಕಾಣಾದಿಲ್ಲ. +ಅಕ್ಷರ ಓದಾಕೆ. +ಸುಮ್ಮಸುಮ್ಮನೆ ಮುಚ್ಚುಮರೆ ಮಾಡ್ತೀಯಲ್ಲಾ ಇಲ್ಲಿ ಸತ್ತಾ!” ಎಂದು ಸಾಫಲ್ಯ ದೃಢತಾಭಂಗಿಯಿಂದ ಕೈನೀಡಿದ ತಿಮ್ಮಪ್ಪ ಹೆಗ್ಗಡೆಗೆ,ಗುತ್ತಿ ಪೆಚ್ಚಾದವನಂತೆ ಮುಗುಳುನಗುತ್ತಾ “ಅಯ್ಯೋ ದೇವರಾಣೇನೂ ಹಾಕಿಬಿಟ್ಟೆನಲ್ರೊ! +ಇನ್ನು  ಹ್ಯಾಂಗೆ ಕಾಗದ ಕೊಡಲಿ ಅಂತಾ ವೇಚ್ನೆ ಮಾಡ್ತಿದ್ದೀನಿ!” ಎಂದು ದಗಲೆಯ ಯಾವುದೋ ಒಂದು ಅಜ್ಞಾತ ಒಳಮೂಲೆಗೆ ಕೈಹಾಕಿದನು. +“ಅಯ್ಯೊ!ನಿನ್ನ ದೇವರಿಗೆ ಇಂಥಾ  ಆಣೆ ಕೇಳಿ ಕೇಳಿ ಕಿವಿ ಕೆಪ್ಪಾಗಿ ಹೋಗಿ ಅದೆ! +ಇನ್ನು ನೀನೆಷ್ಟು ಸಾರಿ ಬೇಕಾದ್ರೂ ಆಣೆ ಹಾಕು; +ಅವನಿಗೇನೂ ಕೇಳ್ಸೋದಿಲ್ಲ! +ಯಾಕೆ ಹೆದರ್ತೀಯಾ?” +“ಹಂಗೇನ್ರೋ? …. ಸೈ ಹಾಂಗಾರೆ ತಗೊಳ್ಳಿ; ಇಲ್ಲದೆ!” ಎಂದು ಒದ್ದೆಯಾಗಿ ಮುದುಡಿ ಹೋಗಿದ್ದ ಒಂದು ಕಾಗದದ ತುಂಡನ್ನು ಈಚೆಗೆಳದು, ಅಂಜಲಿಬದ್ಧನಾಗಿ ನೀಡಿದನು. +ತಿಮ್ಮಪ್ಪ ಹೆಗ್ಗಡೆ ತುಂಬ ಗೆಲುಮೊಗದಿಂದ ಅದನ್ನು ತೆಗೆದುಕೊಂಡು ಬಿಚ್ಚ ತೊಡಗಿದನು. +ಅದು ಗುತ್ತಿ ಹೇಳಿದಂತೆ, ತೇಲಿಹೋದದ್ದು ಸುಳ್ಳಾಗಿದ್ದರೂ ಮುಳುಗಿದ್ದುದಕ್ಕೇನೊ ನಿಜವಾಗಿಯೂ ಪ್ರತ್ಯಕ್ಷ ಪ್ರಮಾಣವಿತ್ತು, ಒದ್ದೆ ಮುದ್ದೆಯಾಗಿ, ಮತ್ತೆ ಗುತ್ತಿಯ ಶರೀರದ ಬಿಸುಪಿನಿಂದಲೆ ಅರ್ಧಂಬರ್ಧ ಒಣಗಿದ್ದ ಆ ಕಾಗದವನ್ನು ಹರಿದುಹೋಗದಂತೆ ತುಂಬ ಎಚ್ಚರಿಕೆಯಿಂದಲೆ ಬಿಚ್ಚಿ ಓದತೊಡಗಿದ್ದ ತಿಮ್ಮಪ್ಪನ ಮುಖದಲ್ಲಿ ಪ್ರಾರಂಭದಲ್ಲಿದ್ದ ನಗುವಿನ ಕಳೆ ಬಾಡತೊಡಗಿತು. +ನಿರಾಶೆಯೊ?ದುಃಖವೊ?ಸಿಟ್ಟೊ?ಮುಖ ಸಿಂಡರಿಸಿತು. +ಕಾಗದವನ್ನು ಹಿಸುಕಿ ಮುದ್ದೆ ಮಾಡಿ ತಟಕ್ಕನೆ ಗುತ್ತಿಯ ಮೋರೆಯ ಕಡೆ ಎಸೆದು “ನಿನ್ನ ಹೆಣಕ್ಕೆ ಹಾಕಿಕೊ!” ಎಂದು ಸಿಡುಕಿ, ತಟಕ್ಕನೆ ತಿರುಗಿ, ಗದ್ದೆಯ ಕಡೆಗೆ ಇಳಿಜಾರಾದ ಗುಡ್ಡದಲ್ಲಿ ನಡೆದು ಪೊದೆಗಳ ನಡುವೆ ಕಣ್ಮರೆಯಾದನು. +ಗುತ್ತಿಗೆ ಒಂದೂ ಅರ್ಥವಾಗದೆ, ಬೆಪ್ಪಾಗಿ ನಿಂತು ಅವನು ಕಣ್ಮರೆಯಾಗುವುದನ್ನೆ ನೋಡುತ್ತಾ “ಒಳ್ಳೆ ಮಲಾಮತ್ತಾಯ್ತಲ್ಲಪ್ಪಾ! +ಇದೇನು ಬಂತು ಗಿರಾಚಾರ ನನಗೆ?” ಎಂದುಕೊಂಡು, ಬಗ್ಗಿ, ಕಾಲ್ದೆಸೆಯಲ್ಲಿ ಮುದ್ದೆಯಾಗಿ ಬಿದ್ದಿದ್ದ ಕಾಗದವನ್ನು ಎತ್ತಿ, ಮೆಲ್ಲಗೆ ಬಿಚ್ಚಿ ನೀವಿ ಸರಿಮಾಡಿ ದಗಲೆಯೊಳಗೆ ಸೇರಿಸಿ, ಏತಕ್ಕೊ ಏನೊ ಪಕ್ಕದಲ್ಲಿದ್ದ ಹುಲಿಯನ ತಲೆಗೊಂದು ರಪ್ಪನೆ ಕೊಟ್ಟು, ಅದು ಕಂಯ್ ಎನ್ನಲು “ಹಾಳು ಮುಂಡೇದು! +ಹೋದಲ್ಲಿ ಶಂಕ ಬತ್ತದೆ! +ಸನಿ ಬಂದ ಹಾಂಗೆ!” ಎನ್ನುತ್ತಾ ತನ್ನ ಸಿಟ್ಟನ್ನು ಅದರ ಮೇಲೆ ಶಪಿಸುತ್ತಾ ಕೊರಳಿಗೆ ಬಳ್ಳಿ ಕುಣಿಕೆ ಬಿಗಿದಿದ್ದ ಅದನ್ನು ದರದರನೆ ಎಳೆದುಕೊಂಡು ಮನೆಯ ಕಡೆಗೆ ಗುಡ್ಡವಿಳಿದನು. +ಸೋಗೆ ಮನೆಯ ದೊಡ್ಡ ಅಂಗಳ ಪ್ರವೇಶ ಮಾಡುತ್ತಿದ್ದಂತೆಯೆ, ಅಡ್ಡೆ ಕಟ್ಟಿ ತಲೆಕೆಳಕಾಗಿ ಹೊಲೆಯರ ಹೆಗಲಮೇಲೆ ಹೂವಳ್ಳಿ ಸಗುತ್ತಿದ್ದ ಹಂದಿಯ ಕಿರ್ರೋ ಕೂಗು ಗದ್ದೆ ಬಯಲಿನಿಂದ ಕೇಳಿಸಿತು. +ಗುತ್ತಿ ಆ ಕಡೆ ನೋಡಿದನು. +ಗದ್ದೆ ಬಯಲಿನ ನಡುವೆ ಅಂಕುಡೊಂಕಾಗಿ ಹಂದಿಯನ್ನು ಹೊತ್ತು ಸಾಗುತ್ತಿದ್ದ ದೂರದೃಶ್ಯ ಕಾಣಿಸಿತು. +ಯಾವುದೊ ದೂರದಾಶೆ ಅವನ ನಾಲಗೆಗೆ ನೀರು ತಂದಿತು. +ಹಂದಿಯ ಕೀರುಲಿಯನ್ನು ಆಲಿಸಿ ಕಿವಿನಿಮಿರಿ ಉದ್ವೇಗಗೊಂಡು ತನ್ನ ಕೈಲಿ ಹಿಡಿದಿದ್ದ ಬಳ್ಳಿಯನ್ನು ಜಗ್ಗುತ್ತಿದ್ದ ಹುಲಿಯನನ್ನು ಹೆದರಿಸುತ್ತಿದ್ದಂತೆ ಜಗಲಿಯಿಂದ ಸುಬ್ಬಣ್ಣ ಹೆಗ್ಗಡೆಯವರ ಅಬ್ಬರದ ಕರೆ ಕೇಳಿಸಿತು: “ಏ ಗುತ್ತೀ, ಬಾರೊ ಇಲ್ಲಿ!”ಕೆಸರ್ಹಲಗೆಯ ಮೇಲೆ ಕೂತಿದ್ದ ವೆಂಕಟಣ್ಣ “ಸೈ, ಅವನೆ ಬಂದನಲ್ಲಪ್ಪ? +ಕೇಳಿ ಬೇಕಾದರೆ ಅವನ್ನೇ” ಎಂದು ಗುತ್ತಿಯ ಕಡೆ ತಿರುಗಿ “ನಿನ್ನ ನಾಯೀನೇ ಅಲ್ವೇನೋ ಸಲಗನ್ನ ಹಿಡಿದಿದ್ದು?” ಎಂದನು. +“ಮತ್ತೆ?ನನ್ನ ನಾಯಿ ಬರದೆ ಇದ್ದರೆ ಇಷ್ಟು ಹೊತ್ತಿಗೆ ಸಲಗ ಕಾಡಿನಾಗೆ ಇರ್ತಿತ್ತು” ಎಂದು ಹಲ್ಲು ಬಿಡುತ್ತಾ, ಶಿಫಾರಸು ಕೊಡುತ್ತಾರೆ ಎಂದು ಹಾರೈಸಿದವನಂತೆ, ಗುತ್ತಿ ನಿಂತಿದ್ದನು. +ಶಿಫಾರಸು ಕೊಟ್ಟರು ಹೆಗ್ಗಡೆಯವರು: “ನಿನ್ನ ಮನೆ ಮಂಟೇನಾಗ! +ಯಾಕೋ?ಹೋದಲ್ಲಿ ತನಕ ಆ ನಾಯಿ ಕರಕೊಂಡು ಹೋಗ್ತೀಯಾ? +ಬಾಲಂಗಚ್ಚೇನ?” ಎಂದು ಬೈದು “ಹಂದೀ ಗಂಟಲಾಗೆ ರಕ್ತ ಸುರಿತಿತ್ತೇನೋ?” ಎಂದು ಗದರಿಸಿದಂತೆ ಕೇಳಿದರು. +ಅವರ ಪ್ರಶ್ನೆಯ ಧ್ವನಿಯಿಂದಲೆ ಏನು ಉತ್ತರ ಹೇಳಬೇಕೆಂಬುದೂ ಗೊತ್ತಾಯಿತು ಗುತ್ತಿಗೆ: “ಇಲ್ಲ, ಬರೀ ಕಿವಿಚಟ್ಟೆ ಹಿಡುಕೊಂಡಿತ್ತು, ನಾನಾ ಬಿಡಿಸ್ದೆ.” +ವೆಂಕಟಣ್ಣ ನಡುವೆ ಬಾಯಿಹಾಕಿ “ಗಂಟಲಿಗೇ ಬಾಯಿಹಾಕಿರಲಿಲ್ಲೇನೋ?” ಸುಳ್ಳು ಹೇಳಬ್ಯಾಡ. +ನೆತ್ತರು ಸುರೀತಿತ್ತು ಅಂತಾ ತಿಮ್ಮನೇ ಹೇಳ್ದ” ಎಂದನು. +“ನನ್ನ ಕಣ್ಣಿಗೇನೂ ಕಾಣಲಿಲ್ಲಪ್ಪಾ!” ಎಂದು ಗುತ್ತಿ, ಆ ವಿಚಾರವಾಗಿ ಹೂವಳ್ಳಿ ವೆಂಕಟಣ್ಣನಿಗೂ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರಿಗೂ ಏನೋ ವಾಗ್ವಾದ ನಡೆದಿರಬೇಕೆಂದು ಊಹಿಸಿ, ತಾನು ಮಾತನಾಡುವುದರಲ್ಲಿ ಎಚ್ಚರಿಕೆ ವಹಿಸಬೇಕೆಂದು ನಿರ್ಧರಿಸಿದನು. +ನಾಯಿ ಹಂದಿಯ ಕುತ್ತಿಗೆಗೆ ಬಾಯಿಹಾಕಿ ಗಾಯಮಾಡಿ ರಕ್ತ ಸೋರಿಸಿರುವುದರಿಂದ ಅದು ದೈವಕ್ಕೆ ಆಯಾರ ಕೊಡಲು ಯೋಗ್ಯವಲ್ಲ ಎಂಬ ವಾದ ಹೂಡಿ, ಅದರ ಬೆಲೆ ಕಡೆಯಪಕ್ಷ ಒಂದು ರೂಪಾಯಿಯಿಂದಲಾದರೂ ಕಡಮೆ ಮಾಡಿಸಿಕೊಳ್ಳಬೇಕು ಎಂದು ವೆಂಕಟಣ್ಣ ಹವಣಿಸಿದ್ದನು. +ಆದರೆ ಹೆಗ್ಗಡೆಯವರು “ನಾನು ಮೊದಲೆ ಐದು ರೂಪಾಯಿ ಹೇಳಿದ್ದೆ. +ನೀನು ಕೇಳಿಕೊಂಡಿದ್ದರಿಂದ ಒಂದು ರೂಪಾಯಿ ಬಿಟ್ಟೀನಿ. +ಇನ್ನೂ ಒಂದು ರೂಪಾಯಿ ಬಿಡು ಅಂದರೆ, ಯಾರ ಮನೆ ಹಾಳಮಾಡಬೇಕು ಅಂತಾ ಮಾಡೀಯಾ?” ಎಂದು ನಾಲ್ಕು ರೂಪಾಯಿಗೆ ಕಾಸ ಕಡಮೆ ಸಾಧ್ಯವಿಲ್ಲ ಎಂದು ಬಿಟ್ಟಿದ್ದರು. +ಈಗ ಯಾವಾಗ ಗುತ್ತಿಯ ಸಾಕ್ಷಿ ತಮ್ಮ ಪರವಾಗಿದ್ದುದನ್ನು ಅರಿತರೊ ತಾವು ಹಿಡಿದ ಪಟ್ಟನ್ನು ಬಿಡದೆ ಕುಳಿತುಬಿಟ್ಟರು. +ವೆಂಕಟಣ್ಣ ಉಪಾಯವಿಲ್ಲದೆ ದೊಣ್ಣೆಯೂರಿಕೊಂಡು ಎದ್ದು ಕುಂಟುತ್ತಾ ಎರಡು ಹೆಜ್ಜೆಯಿಟ್ಟು ನಿಂತನು. +ಆಗಲೇ ಬಿಸಿಲೇರಿದ್ದರಿಂದ “ಊಟ ಮಾಡಿಕೊಂಡು ಹೋಗು” ಎಂದು ಹೇಳುತ್ತಾರೇನೋ ಎಂದು ದೂರದ ಆಸೆ ಅವನಿಗೆ. +ಆದರೆ ಹೆಗ್ಗಡೆಯವರು ಅಂತಹ ದಾಕ್ಷಿಣ್ಯಕ್ಕೆ ಒಳಗಾಗದೆ “ಹಾಂಗಾದರೆ ಬೇಗ ಹೊರಡೋ, ಎಂಕ್ಟಣ್ಣಾ, ಬಿಸಿಲೇರ್ತಾ ಇದೆ” ಎಂದು ಹೇಳಿ ಕುಂಟುತ್ತಾ, ಗದ್ದೆ ಕೋಗಿನ ಕಡೆಗೆ ಇಳಿದನು. +ಅವನು ಕಣ್ಮರೆಯಾದುದನ್ನು ಅರಿತು ಸುಬ್ಬಣ್ಣ ಹೆಗ್ಗಡೆ ತಲೆಯೆತ್ತಿ ಗುತ್ತಿಯ ಕಡೆ ನೋಡಿ ನಗುತ್ತಾ ಕೆಮ್ಮಿದರು. +ತಾನು ಹೇಳಿದ ಸಾಕ್ಷಿಯಿಂದ ಒಡೆಯರು ಪ್ರೀತರಾಗಿದ್ದಾರೆಂದು ತಿಳಿದ ಗುತ್ತಿ ದಗಲೆಯೊಳಗಿಂದ ಕಾಗದ ತೆಗೆದು ಎರಡೂ ಕೈಗಳನ್ನೂ ಒಟ್ಟು ಮಾಡಿ ಸೊಂಟಬಗ್ಗಿಸಿ ನೀಡಿದನು. +ಹೆಗ್ಗಡೆಯವರು ಅದನ್ನು ತೆಗೆದುಕೊಂಡರು. +ಆದರೆ ಬಿಚ್ಚಿ ನೋಡಲಿಲ್ಲ. +ಎದುರುಗಡೆ ಕೆಸರ್ಹಲಿಗೆಯ ಮೇಲೆ ಹಾಕಿ, ಅದರ ಕಡೆ ನೋಡುತ್ತಾ “ಯಾಕೋ? +ಮುದುರಿ ಮುದ್ದೆ ಆಗಿದೆಯಲ್ಲಾ?” ಎಂದರು. +ಗುತ್ತಿ ಅವರಿಗೂ ತಿಮ್ಮಪ್ಪ ಹೆಗ್ಗಡೆಗೆ ತಾನು ಹೇಳಿದ್ದ ಲಕ್ಕುಂದದ ಹಳ್ಳ ಏರಿದ್ದ ಕಥೆಯನ್ನೆ ಮತ್ತೆ ಹೇಳಿದನು. +ಅಷ್ಟರಲ್ಲಿ ಕುಟ್ಟೊರಳಿನಲ್ಲಿ ಎಲೆಅಡಿಕೆ ಕುಟ್ಟುತ್ತಿದ್ದುದನ್ನು ನಿಲ್ಲಿಸಿ ಸುಬ್ಬಣ್ಣ ಹೆಗ್ಗಡೆಯವರು ತಲೆಯೆತ್ತಿ ಗುತ್ತಿಯ ಕಡೆ ನೋಡಿ “ಹಾಂಗಾದ್ರೆ ಒಂದು ಕೆಲಸ ಮಾಡ್ತೀಯಾ, ಗುತ್ತಿ? +ನೀನು ಹಾಂಗೇ ಹೋಗಾಂವ, ಕೋಣೂರಿನ ಐಗಳು ಅನಂತಯ್ಯನ್ನ, ನಾ ಬರಾಕೆ ಹೇಳ್ದೆ ಅಂತ ಹೇಳ್ತೀಯಾ?” ಎಂದರು. +ಸಿಂಬಾವಿಯಿಂದ ಬರುವ ಕಾಗದಗಳನ್ನು ಇತ್ತೀಚೆಗೆ ಮಗನ ಕೈಲಿ ಓದಿಸುತ್ತಿರಲಿಲ್ಲ. +ಮನೆಯ ವಿಚಾರ ನಂಟರಿಷ್ಟರಿಗೆ ತಿಳಿಯಬಾರದೆಂದು ಐಗಳು ಅನಂತಯ್ಯನವರಿಂದ ಓದಿಸುತ್ತಿದ್ದರು. +ಗುತ್ತಿ ಕ್ಷಮೆ ಕೇಳುವ ಧ್ವನಿಯಲ್ಲಿ “ನಾ ಬೆಟ್ಟಳ್ಳಿಗೆ ಹೋಗ್ತೀನಿ, ಹೂವಳ್ಳಿ ಮೇಲಾಸಿ” ಎಂದು ಅಂಗಲಾಚುತ್ತಾ ನಿಂತನು. +“ಹೂವಳ್ಳಿ ಮೇಲಾಸಿ ಹೋದರೇನು? +ಕೋಣೂರಿನ ಮೇಲಾಸಿ ಹೋದರೇನು? +ಒಂದೇ ದೂರ ಅಲ್ಲೇನೋ?” ಎಂದವರು ಮತ್ತೆ ಇನ್ನೇನನ್ನೋ ನೆನಪಿಗೆ ತಂದುಕೊಂಡವರಂತೆ ಹುಸಿ ನಗೆ ನಗುತ್ತಾ “ಯಾಕೋ ಬೆಟ್ಟಳ್ಳಿಗೆ? +ಕಾಗ್ದಗೀಗ್ದ ಕೊಟ್ಟಾರೇನೋ?” ಎಂದುದಕ್ಕೆಗುತ್ತಿ ದೀರ್ಘವಾಗಿ “ಇಲ್ಲಾ!ನಂದೇ ಒಂದು ಚೂರು ಕೆಲಸ ಇತ್ತು” ಎಂದನು. +“ಬಾಳಾ ಗುತ್ತಿನ ಕೆಲಸನೇನೊ?” +“ಅಂತದೇನೂ ಇಲ್ಲಾ” ಎಂದ ಗುತ್ತಿ, ಒಡೆಯರಿಗೆ ತನ್ನ ಗುಟ್ಟು (ಇತರ ಹಲವರಿಗೆ ಗೊತ್ತಾಗಿದ್ದುದನ್ನು ವಿಸ್ಮಯದಿಂದ ಅರಿತಂದೆ!) ಗೊತ್ತಾಗಿರಬೇಕೆಂದೇ ಊಹಿಸಿದನಾದರೂ, ಆ ವಿಚಾರ ಅವರು ಪ್ರಸ್ತಾಪಿಸದಂತೆ ಮಾಡಲು ದಿಕ್ಕು ತಪ್ಪಿಸುವುದಕ್ಕಾಗಿ ತಟಕ್ಕನೆ ತಲೆ ಹೊಳೆದ ಮತ್ತೊಂದು ಅಷ್ಟೇನು ಮುಖ್ಯವಲ್ಲದ ವಿಚಾರ ಎತ್ತಿದನು. +“ಬೆಟ್ಟಳ್ಳಿ ಹಕ್ಕಲಾಗೆ ಇವತ್ತು ಬೈಗಿನ ಹೊತ್ತು ತೀರ್ಥಳ್ಳಿ ಕಿಲಸ್ತರ ಪಾದ್ರಿ ಅದೇನೋ ಬೀಸೆಕಲ್ಲು ಸವಾರಿ ಮಾಡ್ತಾರಂತೆ. +ನಮ್ಮ ಬೆಟ್ಟಳ್ಳಿ ಸಣ್ಣಗೌಡ್ರಿಗೂ ಸವಾರಿ ಕಲಿಸ್ತಾರಂತೆ! +ಎಲ್ಲರೂ  ಹೋಗ್ತೀದ್ದಾರೆ ಅದನ್ನೋಡಾಕೆ.” +“ಬೀಸೆಕಲ್ಲು ಸವಾರಿ! +ನಿನಗೇನು ತಲೆ ಕೆಟ್ಟಿದೆಯೊ?” +“ಹೌದೊಡೆಯಾ! +ನಿಮ್ಮ ಕೇರೇರೂ ಹೊಲ್ಟಾರಂತೆ!” +“ಹ್ಞಾಃ!ನಿನಗೇನು ಕಲಿಯೋ? +ಕೆಲಸಕ್ಕೆ ಹೋಗಿ ಅಂತಾ ಕೇಳಿಕಳ್ಸೀನಿ!” +“ಹೂವಳ್ಳಿಗೆ ಹಂದಿ ಹೊತ್ತುಕೊಂಡು ಹೋದೋರೂ, ಹಾಂಗೆ ಮಜ್ಜಾನದ ಮ್ಯಾಲೆ ಬೆಟ್ಟಳ್ಳಿಗೆ ಹೋಗ್ತಾರಂತೆ…. +ನಾನೂ ಸಂಗಡ ಬತ್ತೀನಿ ಅಂತಾ ಹೇಳೀನಿ.” +“ಅಂತೂ ಆ ಪಾದ್ರಿಯಿಂದ ಸುಖಾ ಇಲ್ಲಾ ಅಂತಾ ಕಾಣ್ತದೆ. +ಬೀಸೆಕಲ್ಲು ಸವಾರಿ, ಹೊಗೇಬತ್ತಿ ಸೇದೋದು, ಮುಂಜುಟ್ಟು ಬಿಡೋದು, ಇನ್ನೂ ಏನೇನೋ ಯಕ್ಷಿಣಿಮಾಡಿ, ಜಾತಿಕೆಡಿಸಿ, ಕಿಲಸ್ತರ ಮತಕ್ಕೆ ಸೇರಿಸಕ್ಕೆ ಹುನಾರು ಮಾಡ್ತಿದಾನೆ. +ನಿನ್ನ ಬೆಟ್ಟಳ್ಳಿ ಸಣ್ಣ ಗೌಡರೂ ಅವನ ಬಲೆಗೆ ಬೀಳಾಹಂಗೆ ಕಾಣ್ತದೆ!” +“ನಾವೇನು ಅವರ ಹತ್ರ ಹೋಗ್ತಿವೇನು? +ದೂರದಾಗೆ ನಿಂತುಕೊಂಡು ನೋಡಿ, ಇತ್ತಮುಖಾ ಬಂದುಬಿಡ್ತೀವಿ” ಎಂದು ಗುತ್ತಿ ತಾನೂ ತನ್ನ ಜಾತಿಯವರೂ ಕಿಲಸ್ತರ ಪಾದ್ರಿಯ ಪ್ರಭಾವದಿಂದ ತಪ್ಪಿಸಿಕೊಳ್ಳುವ ರೀತಿಯನ್ನು ವಿವರಿಸಿದನು. +“ಏನಾದ್ರೂ ಸಾಯ್ಲಿ! +ಹಾಳಾಗೇ ಹೋಗ್ತೀವಿ ಅನ್ನೋರ್ನ ಯರು ಉದ್ದಾರ ಮಾಡಾಕೆ ಆಗ್ತದೆ? +ಅವನು ಒಬ್ಬೊಂಟಿಗ ಆಗಿದ್ರೆ, ಎತ್ಲಾಗಾದರೂ ಸಾಯಿ, ಯಾವ ಜಾತಿಗಾದರೂ ಸೇರು ಅನ್ನಬೈದಾಗಿತ್ತು. +ಹೆಂಡ್ತಿ ಮಕ್ಕಳು ಬ್ಯಾರೆ ಇವೆಯಲ್ಲ. +ಅವ್ರ ಗತಿ ಏನು? +ಅವರಿನ್ನು ಕೆರೇನೋ ಬಾವೀನೊ ಹುಡುಕಬೇಕಲ್ಲಾ!”ಹೆಗ್ಗಡೆಯವರು ದೀರ್ಘಚಿಂತಾಮಗ್ನರಾದಂತೆ ಅನ್ಯಮನಸ್ಕರಾಗಿ ಕುಟ್ಟೊರಳಿನ ಕಡೆಗೆ ತಮ್ಮ ಗಮನವನ್ನೆಲ್ಲ ಹರಿಸಿ, ತನ್ನನ್ನು ಮರೆತೇ ಬಿಟ್ಟಂತಾಗಲು, ಗುತ್ತಿ ಹುಲಿಯನನ್ನು ಹಿಡಿದುಕೊಂಡೇ ಅಲ್ಲಿಂದ ಸರಿದು ಹೂವಳ್ಳಿಯ ಹಾದಿ ಹಿಡಿದನು. +ಕೋಣೂರಿನ ಅಡಕೆ ತೋಟದ ಒಂದು ಮೂಲೆಯಲ್ಲಿ ರಂಗಪ್ಪ ಗೌಡರ ಗಟ್ಟದಾಳುಗಳು-ಚೀಂಕ್ರ, ಪಿಜಿಣ, ಐತ, ಮೊಡಂಕಿಲ-ಹಿಂದಿನ ದಿನದ ಬಿರುಗಾಳಿ ಮಳೆಯಲ್ಲಿ ಉರುಳಿ, ಅಡಕೆ ಮರಗಳ ಮೇಲೆ ಬಿದ್ದಿದ್ದ ಒಂದು ದೊಡ್ಡ ಮುದಿ ಅತ್ತಿಯ ಮರವನ್ನು ಸವರಿ ಕುಡಿಯುವ ಕೆಲಸದಲ್ಲಿ ತೊಡಗಿದ್ದರು. +ಅವರ ಹೆಣ್ಣಾಳುಗಳು-ದೇಯಿ, ಅಕ್ಕಣಿ, ಪೀಂಚಲು, ಬಾಗಿ- ತಮ್ಮ ಗಂಡಸರಿಗೆ ನೆರವಾಗಿ, ಸವರಿದ ಸೊಪ್ಪನ್ನು ಅಡಕೆ ಮರಗಳ ಬುಡದ ಮೇಲುಸೊಪ್ಪಿನ ಜಿಗ್ಗು ಮುಚ್ಚುವಂತೆ ಹೊತ್ತು ಹಾಕುವುದರಲ್ಲಿ ನಿರತವಾಗಿದ್ದರು. +ಪೂರ್ವಾಹ್ನದ ಏರುಂಬಿಸಿಲಿನಲ್ಲಿ, ಎತ್ತರವಾಗಿ ಬೆಳೆದಿದ್ದ ಅಡಕೆ ಮರಗಳ ಬುಡದಲ್ಲಿ, ಕೆಲಸ ಮಾಡುತ್ತಿದ್ದ ಅವರೆಲ್ಲರೂ ತಾರತಮ್ಯದಿಂದ ಬಹು ಸಣ್ಣ ಗಾತ್ರದ ಪ್ರಾಣಿಗಳಂತೆ ಭಾಸವಾಗಿದ್ದರು. +ಸೊಂಟಕ್ಕೆ ಬಿಗಿದಿದ್ದ ಲಂಗೋಟಿ ಮಾತ್ರವೆ ಉಡುಪಾಗಿದ್ದ ಗಂಡಾಳುಗಳಲ್ಲಿ ಚೀಂಕ್ರ ಪಿಜಿಣರು ಕೊಡಲಿ ಹಿಡಿದು ಕಡಿಯುತ್ತಿದ್ದರು. +ಮೊಡಂಕಿಲ ಐತರು ಕತ್ತಿಗಳಿಂದ ಸಣ್ಣ ಸಣ್ಣ ಹರೆಗಳನ್ನು ಸವರಿಹಾಕುತ್ತಿದ್ದರು. +ಗಟ್ಟದ ತಗ್ಗಿನವರ ರೀತಿ ಬಡ್ಡು ಸೀರೆಗಳನ್ನು ಮೈಗೆ ಸುತ್ತಿ, ತಲೆಗೆ ಹಾಳೆ ತೋಪಿ ಹಾಕಿಕೊಂಡಿದ್ದ ಹೆಣ್ಣಾಳುಗಳು ತುಳು ಭಾಷೆಯಲ್ಲಿ ಸಣ್ಣಗೆ ಗೊಣಗೊಣ ಮಾತಾಡಿಕೊಳ್ಳುತ್ತಾ ಯಾವ ಉತ್ಸಾಹವನ್ನೂ ಪ್ರದರ್ಶಿಸದ ನಡಿಗೆಯಿಂದ ಹಿಂದಕ್ಕೂ ಮುಂದಕ್ಕೂ ಅಡಕೆ ಮರದ ಬುಡದಿಂದ ಅತ್ತಿಮರ ಬಿದ್ದಿದ್ದ ಜಾಗಕ್ಕೆ ಚಲಿಸುತ್ತಿದ್ದರು. +ಎಚ್ಚತ್ತಿರಲಿಲ್ಲ ಅಡಕೆ ಮರದ ಪೊಟರೆಗಳಿಂದ ಹಾರುವ ಗಿಣಿಗಳ ಉಲಿಹ ಅವರ ದೈಹಿಕವಾದ ಕಿವಿಗಳಿಗೆ ಅನಿವಾರ್ಯವಾಗಿ ಕೇಳಿಸುತ್ತಿದ್ದರೂ ಅವರ ಮನಸ್ಸು ಅದನ್ನು ಆಲಿಸುವ ಗೋಜಿಗೂ ಹೋಗುತ್ತಿರಲಿಲ್ಲ; +ಇನ್ನು ಗ್ರಹಿಸಿ ಸವಿಯುವ ಮಾತೆಲ್ಲಿ? +ಹಿಂದಿನ ದಿನ ಸಂಜೆಯ ಮಳೆಯಲ್ಲಿ ತೊಯ್ದು ತೊಳೆದಿದ್ದ ಲಕ್ಷ ಲಕ್ಷ ವಿವಿಧ ವರ್ಣಚ್ಛಾಯೆಯ ಕಾಡಿನ ತೋಟದ ಅಡಕೆಯ ಬಾಳೆಯ ಎಲೆಹಸುರನ್ನು ಅವರ ಕಣ್ಣು ಅನಿವಾರ್ಯವಾಗಿ ನೋಡುತ್ತಿದ್ದರೂ, ಅದನ್ನು ಕಾಣುವ ಮಟ್ಟಕ್ಕೆ ಅವರ ಗಮನ ಒಂದಿನಿತೂ ಬೆಳೆದಿರಲಿಲ್ಲ, ಸೊಪ್ಪು ಮೇಯುವ ಪ್ರಾಣಿಯ ಪ್ರಜ್ಞೆಯಂತೆ! +ಇದ್ದಕ್ಕಿದ್ದ ಹಾಗೆ ಮರಕಡಿಯುವ ಕೊಡಲಿಯ ಸದ್ದು ನಿಂತಿತು. +ಚೀಂಕ್ರ ಪಿಜಿಣ ಇಬ್ಬರೂ ತಮ್ಮ ತಮ್ಮ ಕೊಡಲಿಯ ಕಾವಿನ ತುದಿಗೆ ಮೈ ಆನಿಸಿದಂತೆ ನಸು ಒರಗಿ ನಿಂತು ವಿಶ್ರಾಂತಿ ತೆಗೆದುಕೊಳ್ಳತೊಡಗಿದರು. +ಕುತ್ತಿಗೆಯಿಂದ ಇಳಿಯುತ್ತಿದ್ದ ಬೆವರನ್ನು ಒರೆಸಿಕೊಂಡರು. +ಪೂರ್ವದ ಕಡೆಗೆ ಮುಖಮಾಡಿ, ತನ್ನ ಎಡಗಾಲನ್ನು ತುಸು ಎತ್ತಿ ಮರದ ದಿಂಡಿನ ಮೇಲಿಟ್ಟು ನಿಂತಿದ್ದ ಚೀಂಕ್ರನಿಗೆ ಎದುರಾಗಿ ಅಡಕೆ ತೋಟ, ಅದಕ್ಕೆ ಮೇಲೆ ಗುಡ್ಡವೇರಿದ್ದ ಕಾಡು, ಅದಕ್ಕೂ ಮೇಲೆ ದೂರ ಎತ್ತರದಲ್ಲಿ ಹುಲಿಕಲ್ಲು ನೆತ್ತಿಯ ದೃಶ್ಯವಿತ್ತು. +ಅವನಿಗೆ ಇದಿರಾಗಿ ಪಶ್ಚಿಮದ ಕಡೆಗೆ ಮುಖವಾಗಿ ನಿಂತಿದ್ದ ಪಿಜಿಣನಿಗೆ ಕೋಣೂರಿನ ಗದ್ದೆಯ ಕೋಗು, ಅದರ ಒತ್ತಿಗೆ ಬ್ಯಾಣದ ಹಕ್ಕಲು, ಅದರಾಚೆಗೆ ಸೊಪ್ಪಿನ ಹಾಡ್ಯ ಕಣ್ಬೊಲವಾಗಿತ್ತು. +ತುಸುಹೊತ್ತು ಇಬ್ಬರೂ ದಣಿವಾರಿಸಿಕೊಳ್ಳುತ್ತಾ ಮಾತಾಡದೆ ನಿಂತಿದ್ದರು. +ಏದುಸಿರು ಬರಬರುತ್ತಾ ಸಾಮಾನ್ಯಸ್ಥಿತಿಗಿಳಿದು, ಪಿಜಿಣ ಕೆಮ್ಮಿ ಕ್ಯಾಕರಿಸಿ ಪಕ್ಕಕ್ಕೆ ಉಗುಳಿದನು. +ಹಾಗೆ ಉಗುಳಿದುದೆ ಮಾತು ಶುರುಮಾಡಲು ಒಂದು ಸಂಕೇತವಾಯಿತೆಂಬಂತೆ ಚೀಂಕ್ರ “ಹೌದಾ, ಹಸಲೋರ ಬಿಡಾರದಲ್ಲಿ ಒಂದು ಸುದ್ದಿ ಹಬ್ಬಿತ್ತು, ಕೇಳ್ದ್ಯಾ?” ಎಂದನು. +ಜ್ವರಗಡ್ಡೆಯ ಪ್ರಭಾವ ಹೊಟ್ಟೆಯ ಡೊಳ್ಳಿನಲ್ಲಿ ಪ್ರಸ್ಫುಟವಾಗಿದ್ದ ಪಿಜಿಣ ದಣಿದ ದನಿಯಲ್ಲಿ “ಅವನು ಹೊತ್ತಾರೆ ಒಲೆ ಹಚ್ಚಲು ಕೆಂಡ ತರಲು ಕುದುಕನ ಬಿಡಾರಕ್ಕೆ ಹೋಗಿದ್ದನಂತೆ. +ಅದನ್ನೆ ದೊಡ್ಡದು ಮಾಡಿ ಕುದುಕನ ಹೆಂಡತಿ ಮ್ಯಾಲೆ ಪುಕಾರು ಹುಟ್ಟಿಸಿದ್ದಾರಂತೆ. +ಕುದುಕನ ಹೆಂಡತಿ ಅಂಥವಳೇನಲ್ಲ” ಎಂದವನು ದೂರ ಪಕ್ಕಕ್ಕೆ ಏನನ್ನೋ ಗಮನಿಸುವಂತೆ ನೋಡಿ “ಸಣ್ಣ ಅಯ್ಯ ಬರ್ತಿದ್ದಾರೊ!” ಎನ್ನುತ್ತಾ ಕೊಡಲಿಯನ್ನೆತ್ತಿ ಮರಕಡಿಯಲು ಪ್ರಾರಂಭಿಸಿದನು. +ತಟಕ್ಕನೆ ಹಿಂದಿರುಗಿ ನೋಡಿದ ಚೀಂಕ್ರನೂ ಪಿಜಿಣನನ್ನೆ ಅನುಸರಿಸಿದನು. +ಒಂದು ತೆಳು ಅಂಗಿ ತೊಟ್ಟು, ಮೊಣಕಾಲಿನಿಂದ ಇನಿತೆ ಕೆಳಗಿನವರೆಗೆ ಕೋಚು ಇಳಿಬಿದ್ದಿದ್ದ ಒಂದು ಅರೆಕೊಳಕು ಅಡ್ಡಪಂಚೆಯುಟ್ಟು, ಕೈಯಲ್ಲಿ ಬಿದಿರಿನಿಂದ ಮಾಡಿದ್ದ ಒಂದು ಚಿಟ್ಟುಬಿಲ್ಲು ಹಿಡಿದು ಕೋಣೂರು ರಂಗಪ್ಪಗೌಡರ ತಮ್ಮ, ಪ್ರಾಯಪೂರ್ವದ ತರುಣವಯಸ್ಸಿನ ಮುಕುಂದಯ್ಯ, ಆಳುಗಳು ಮರ ಸವರುತ್ತಿದ್ದಲ್ಲಿಗೆ ಬರುತ್ತಾ, ದೂರದಿಂದಲೆ, ಮಾತಾಡುತ್ತಾ ನಿಂತಿದ್ದ ಚೀಂಕ್ರ ಪಿಜಿಣರು ತಟಕ್ಕನೆ ತಾನು ಬರುತ್ತಿದ್ದುದನ್ನು ಗಮನಿಸಿ ಮರಕಡಿಯಲು ಶುರುಮಾಡಿದ್ದನ್ನು ನೋಡಿ “ಏನ್ರೋ ಮರ ಕಡಿಯಾಕೆ ಬಂದೀರೋ? +ಪಂಚಾಯ್ತಿ ಹೊಡಿಯಾಕೆ ಬಂದೀರೋ?” ಎಂದು ಭರ್ತ್ಸನೆ ಮಾಡಿದನು. +ಅವರಿಬ್ಬರೂ ತುಸು ಹಲ್ಲುಬಿಟ್ಟರೇ ಹೊರತು ಯಾವ ಉತ್ತರವನ್ನೂ ಕೊಡದೆ ಕಡಿಯುವ ಕೆಲಸವನ್ನೆ ಮುಂದುವರಿಸಿದರು. +ಮುಕುಂದಯ್ಯ ಹತ್ತಿರ ಬಂದುನಿಂತು “ಮಧ್ಯಾಹ್ನದೊಳಗೇ ಪೂರೈಸಿಬಿಡಬೇಕು, ಅಣ್ಣಯ್ಯ ಈಗ ಬರ್ತೀನಿ ಅಂತ ಹೇಳಿದಾನೆ. +ನಿಮ್ಮ ಚಮಡ ಸುಲೀತಾನೆ, ನೀವು ಮಾತಾಡ್ತಾ ಇರೋದನ್ನ ಕಂಡರೆ!” ಎಂದವನು ಸೊಪ್ಪಿನ ಹರೆ ಕಡಿಯುತ್ತಿದ್ದ ಐತನಿಗೆ “ಏ ಐತ, ನನ್ನ ಸಂಗಡ ಬಾರೋ; + ಸ್ವಲ್ಪ ಕೆಲಸ ಇದೆ” ಎಂದನು. +ಮುಕುಂದಯ್ಯನ ಹಾಗೆಯೆ ಅಣುಗನಾಗಿದ್ದ ಐತ, ಹರೆ ಕಡಿಯುತ್ತಲೇ, ತುಸು ದೂರದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಅಣುಗಿ ಹೆಂಡತಿ ಪೀಂಚಲು ಕಡೆಗೆ ನೋಡಿದ. +ಅವನು ಆ ಅಣುಗಿಯನ್ನು ಮದುವೆಯಾಗಿ ಇನ್ನೂ ಒಂದು ವರ್ಷವೂ ಆಗಿರಲಿಲ್ಲ. +ಅವಳನ್ನು ಒಂದು ಅರೆಕ್ಷಣವೂ ಬಿಟ್ಟಿರಲು ಅವನ ಮನಸ್ಸು ಒಪ್ಪುತ್ತಿರಲಿಲ್ಲ. +ಅವನು ಯಾವ ಕೆಲಸಕ್ಕೆ ಹೋದರೂ ಅದೇ ಕೆಲಸಕ್ಕೆ ಅವಳನ್ನು ಹೇಗಾದರೂ ಮಾಡಿ ಕರೆದೊಯ್ಯುತ್ತಿದ್ದ. +ಅವಳನ್ನು ಯಾವಾಗಲೂ ತನ್ನ ಕಣ್ಣಹೊಲದಲ್ಲಿಯೆ ಇರಿಸಿಕೊಳ್ಳುತ್ತಿದ್ದ. +ಕೆಲಸದ ದೆಸೆಯಿಂದ ಎಲ್ಲಿಯಾದರೂ ಸ್ವಲ್ಪ ಹೊತ್ತು ಅವಳು ಕಣ್ಣು ತಪ್ಪಿಸಿದರೂ ಅವನು ವಿಹ್ವಲನಾಗಿಬಿಡುತ್ತಿದ್ದ. +ಇದನ್ನು ಕಂಡು ಎಲ್ಲರೂ ನಗೆಯಾಡುತ್ತಿದ್ದರು. +ಆದರೆ ಐತ-ಪೀಂಚಲು ಮಾತ್ರ ಜೋಡಿ ತಪ್ಪಿರುತ್ತಿರಲಿಲ್ಲ. +ಇದನ್ನರಿತ ಕೆಲವು ಗಂಡಾಳುಗಳು ಐತನನ್ನು ಪೀಡಿಸುವ ಸಲುವಾಗಿ ಪೀಂಚಲು ಒಡನೆ ಮಾತಾಡುವ, ಅಥವಾ ಎಲೆಯಡಿಕೆ ಕೊಡುವ ಇಲ್ಲವೆ ಕೊಳ್ಳುವ ಸೋಗಿನಿಂದ ರಸಿಕನಗೆ ನಗುತ್ತಲೋ ಕಣ್ಣು ಮಿಟುಕಿಸುತ್ತಲೋ ವ್ಯವಹರಿಸಿದರೆ ಐತನ ಜೀವವೇ ಹೊತ್ತಿ ಉರಿಯುತ್ತಿದ್ದು. +ಅವನು ಅವರ ವರ್ತನೆಯನ್ನು ಅಷ್ಟು ಲಘುವಾಗಿ ಭಾವಿಸುತ್ತಿರಲಿಲ್ಲ. +ಒಮ್ಮೊಮ್ಮೆ ಅವರ ಆ ನಾಟಕದ ಹಿಂದೆ ದುರುದ್ದೇಶವೂ ಇದ್ದುದನ್ನು ಅವನು ಮನಗಂಡಿದ್ದನು. +ಆ ವಿಚಾರವಾಗಿ ಪೀಂಚಲುವಿಗೂ ಗುಟ್ಟಾಗಿ ಬುದ್ದಿ ಹೇಳಿದ್ದನು. +ಅವಳು ಏನನ್ನೂ ಹೇಳದೆ ಬೆಪ್ಪುನಗೆ ನಕ್ಕಿದ್ದಳು ಅಷ್ಟೆ! “ಬತ್ತೆ ಹೋಪ” ಎಂದು ತನ್ನ ಸಮ್ಮತಿಯನ್ನು ಸೂಚಿಸಿದನೇ ಹೊರತು ಐತ ಸೊಪ್ಪು ಕಡಿಯುವುದನ್ನು ನಿಲ್ಲಿಸಲಿಲ್ಲ. +ಮೊಡಂಕಿಲ ಸ್ವಲ್ಪ ವಯಸ್ಸಾದವನು; +ಅವನ ಕೂದಲೂ ಹಣ್ಣಾಗುತ್ತಿದೆ; + ಅಲ್ಲದೆ ಅವನಿಗೆ ಗಟ್ಟಿಮುಟ್ಟಾದ ಹೆಂಡತಿ ಬಾಗಿ ಇದ್ದಾಳೆ. +ಪಿಜಿಣ ಚಳಿಜ್ವರದಿಂದ ಆಗಾಗ್ಗೆ ನರಳುತ್ತಾ, ಜ್ವರಗಡ್ಡೆ ಬೆಳೆದ ಹೊಟ್ಟೆ ಡುಬ್ಬಣ್ಣನಾಗಿ ತನ್ನ ಹೆಂಡತಿ ಅಕ್ಕಣಿಯನ್ನೆ ನಿಬಾಯಿಸಿಕೊಂಡು ಹೋಗುವ ಸ್ಥಿತಿಯಲ್ಲಿಲ್ಲ. +ಇನ್ನು ಏನು ಅನುಮಾನವಿದ್ದರೂ ಅದೆಲ್ಲ ಚೀಂಕ್ರನ ಮೇಲೆ. +ಅವನು ಇದ್ದುದರಲ್ಲಿ ಕಟ್ಟುಮಸ್ತಾದ ಆಳು. + ಅವರೆಲ್ಲೆಲ್ಲಾ ಮರ ಕಡಿಯುವ ಕೆಲಸಕ್ಕೆ ಬಂದಾಗಲೂ! +ಅವನಿಗೂ ಹೆಂಡತಿ ಇದ್ದಾಳೆ, ದೇಯಿ. +ಆದರೆ ಅವಳು ಬಸಿರಿ; +ಯಾವಾಗಲೂ ಏನಾದರೂ ರೋಗದಿಂದ ನರಳುತ್ತಿರುತ್ತಾಳೆ. +ನೋಡುವುದಕ್ಕೂ ಇಸ್ಸಿ ಎನ್ನಿಸುವಂತಿದೆ ಅವಳ ಬಚ್ಚುಮೋರೆ. +ಆದ್ದರಿಂದಲೆ ಐತನಿಗೆ ಅವನ ಮೇಲೆ ಏನೋ ಆಶಂಕೆ. +ಅವನು ತನ್ನನ್ನು ಮಾತನಾಡಿಸುವಾಗಲೆಲ್ಲ ಏನೋ ಕುಹಕ ತೋರುತ್ತದೆ; +ಪೀಂಚಲುವನ್ನು ಮಾತಾಡಿಸುವಾಗ ಚೀಂಕ್ರನ ಧ್ವನಿ ಮುಖ ಭಂಗಿ ಎಲ್ಲ ಅಕ್ಕರೆಮಿದುವಾದಂತೆ ಅನ್ನಿಸುತ್ತದೆ ಐತನಿಗೆ. +ಚೀಂಕ್ರನ ಸನಿಹದಲ್ಲಿ ಪೀಂಚಲುವನ್ನು ಬಿಟ್ಟುಹೋಗುವುದರಲ್ಲಿ ಏನೋ ಅನಾಹುತವನ್ನು ಅನುಭವಿಸುತ್ತಿದ್ದಾನೆ ಐತ. +ಅವನ ಕೈ ಸೊಪ್ಪು ಹರೆ ಸವರುತ್ತಿದ್ದರೂ ಅವನ ಮನಸ್ಸು ಇದೆಲ್ಲವನ್ನೂ ಕ್ಷಣಮಾತ್ರದಲ್ಲಿ ಆರೋಪಿಸಿ ಬಿಟ್ಟಿದೆ. +ಐತನನ್ನು ಕರೆದು ನಾಲ್ಕುಮಾರು ಮುಂಬರಿದ ಮುಕುಂದಯ್ಯ ತಿರುಗಿ ನೋಡಿದರೆ ಐತ ಸೊಪ್ಪು ಕಡಿಯುತ್ತಲೆ ಇದ್ದಾನೆ. +“ಏ, ಬೇಗ ಬಾರೋ; ಹೊತ್ತಾಗ್ತದೆ. +ಆ ಹಳ್ಳದಾಗೆ ಒಂದೆರಡು ಕಾರೇಡಿ ಹಿಡುಕೊಂಡು ಬರಾನ, ಕಪ್ಪೆಗೋಲು ಹಾಕಿ. +ಅತ್ತಿಗಮ್ಮಗೆ ಮೈ ಹುಷಾರಿಲ್ಲ; + ನಾಲಿಗೆ ಜಡ್ಡುಗಟ್ಟಿದೆಯಂತೆ….” ಎಂದ ಮುಕುಂದಯ್ಯನ ಮಾತಿನಲ್ಲಿ ಒಡೆಯನಾದವನ ಆಜ್ಞಾವಾಣಿಗಿಂತಲೂ ಹೆಚ್ಚಾಗಿ ಆಪ್ತನಾದ ಸಂಗಾತಿಯ ಸಲುಗೆ ಎದ್ದು ಕಾಣುತ್ತಿತ್ತು. +ಕಾರಣ, ಚಿಕ್ಕಂದಿನಿಂದಲೂ ಐತ ಮುಕುಂದಯ್ಯನಿಗೆ ಒಡನಾಡಿಯಾಗಿ ಹಕ್ಕಿಬೇಟೆ, ಮೀನುಬೇಟೆ, ಉರುಳುಬೇಟೆ ಮೊದಲಾದುವುಗಳಲ್ಲಿ ಸಹಾಯಕನಾಗಿದ್ದದ್ದೆ. +ಅವರಿಬ್ಬರ ಒಡೆಯ ಆಳಿನ ಸಂಬಂಧ ಇತ್ತೀಚೆಗೆ ಕಣ್ಣುಬಿಡುತ್ತಿತ್ತು. +ಐತ ಈಗ ಇಕ್ಕಟ್ಟಿನಲ್ಲಿ ಸಿಕ್ಕಿದ್ದ. +ಮುಕುಂದಯ್ಯ ಮೊದಲು ತನ್ನನ್ನು ಕರೆದಾಗ ‘ಏನೋ ಕೆಲಸ ಇದೆ’ ಎಂದು ಮಾತ್ರ ಹೇಳಿದ್ದ. +ಕೆಲಸ ಏನು? +ಅದರ ಸ್ವರೂಪ ಎಂಥಾದ್ದು? +ಅದನ್ನು ಹೇಳಿರಲಿಲ್ಲ. +ಆದ್ದರಿಂದ ಅದಾವುದೊ ಯಾರು ಬೇಕಾದರೂ ಮಾಡಬಹುದಾದ ಕೆಲಸಕ್ಕೆ ಮೊಡಂಕಿಲನನ್ನೆ ಕರೆದುಕೊಂಡು ಹೋಗಿ ಎಂದೂ, ತನ್ನ ಅಂಗಾಲಿಗೆ ಮುಳ್ಳು ಹೊಕ್ಕು ಕೀತು ನೋವಾಗುತ್ತಿರುವುದರಿಂದ ತನಗೆ ಕಾಡುಕೊರಕಲಿನಲ್ಲಿ ಹೆಚ್ಚಾಗಿ ತಿರುಗಾಡಲು ಆಗುವುದಿಲ್ಲ ಎಂದು ನೆಪ ಹೇಳಿ ತಪ್ಪಿಸಿಕೊಳ್ಳುವ ಯೋಜನೆ ಮಾಡಿದ್ದ. +ಆದರೆ ಯಾವಾಗ ಮುಕುಂದಯ್ಯನ ಬಾಯಿಂದ ‘ಕಾರೇಡಿ’ ‘ಕಪ್ಪೆಗೋಲು’ ಎಂಬೆಲ್ಲ ರೋಮಾಂಚನಕಾರಿಗಳಾದ ಮಾತುಗಳು ಕೇಳಿ ಬಂದುವೋ ಐತನ ಮನಸ್ಸು ತೂಗಾಡತೊಡಗಿತು. +ಮೊದಲನೆಯದಾಗಿ, ಬೇಟೆಗಳಲ್ಲಿ ಅದರಲ್ಲಿಯೂ ಕಪ್ಪೆಗೋಲು ಹಾಕಿ ಕಾರೇಡಿ ಹಿಡಿಯುವುದರಲ್ಲಿ ಐತ ಆ ಕಡೆ ಹಳ್ಳಿಗಳಲ್ಲೆಲ್ಲ ಸುವಿಖ್ಯಾತನಾಗಿದ್ದನು. +ಚಿಕ್ಕಂದಿನಿಂದಲೂ ಮುಕುಂದಯ್ಯನ ಆಪ್ತ ಕಾರ್ಯದರ್ಶಿಯಾಗಿ ಅಂತಹ ಕಿರಾತಕಾರ್ಯಗಳಲ್ಲೆಲ್ಲ ಅವನಿಗೆ ತಪ್ಪದೆ ನೆರವಾಗುತ್ತಿದ್ದನು. +ಪೀಂಚಲುವನ್ನು ಮದುವೆಯಾಗುವುದಕ್ಕೆ ಮುಂಚೆ ಐತನಿಗಿದ್ದ ಕೆಳೆಜೋಡಿ ಎಂದರೆ ವಿಶೇಷವಾಗಿ ಮುಕುದಯ್ಯನೆ! +ಆದ್ದರಿಂದ ತಾನು ಯಾವ ಕಾಯ್ಯದಲ್ಲಿ ಪ್ರವೀಣನೆಂದು ಊರಿಗೆ ಊರೇ ಹೊಗಳುತ್ತಿದ್ದಿತೋ ಅಂತಹ ಕಾರ್ಯಕ್ಕಾಗಿಯೆ ತನ್ನನ್ನು ಮುಕುಂದಯ್ಯನು ಕರೆಯುತ್ತಿದ್ದಾನೆ ಎಂದ ಮೇಲೆ ಮೊಡಂಕಿಲ್ಲನ ಹೆಸರನ್ನು ಎತ್ತುವುದಕ್ಕೂ ಅವನಿಗೆ ಸಾಧ್ಯವಾಗಲಿಲ್ಲ. +ಎರಡನೆಯದಾಗಿ, ಅಂತಹ ಬೇಟೆಯ ಕೆಲಸಗಳೆಂದರೆ ಐತನಿಗೆ ಜೀವವೆಲ್ಲ ಉತ್ಸಾಹ ಉಜ್ವಲವಾಗುತ್ತಿತ್ತು. +ಪೀಂಚಲುವಿನ ಸಂಗರುಚಿ ಒಂದು ವರ್ಷದ್ದಾಗಿದ್ದರೆ ಕಪ್ಪೆಗೋಲು ಬೇಟೆಯ ಕಾಡುರುಚಿ ಬಾಲ್ಯದಿಂದ ಮೊದಲುಗೊಂಡು ಅನೇಕ ವರ್ಷಗಳದ್ದಾಗಿತ್ತು! +ತಟಕ್ಕನೆ ಹರೆ ಕಡಿಯುವುದನ್ನು ನಿಲ್ಲಿಸಿ “ಅಯ್ಯಾ, ಪೀಂಚಲು ನಮ್ಮ ಒಡನೆ ಬರಲಿ. +ಏಡಿ ಹಿಡಿದುಕೊಳ್ಳುವುದಕ್ಕೆ ಆಳು ಬೇಕಲ್ಲ? +ಒಂದು ಹಾಳೆಕೊಟ್ಟೆ ಮಾಡಿಕೊಟ್ಟರಾಯಿತು” ಎಂದು ಐತನ ಕಡೆಗೆ ಚೀಂಕ್ರನೂ ಪಿಜಿಣನೂ, ಮರಕಡಿಯುತ್ತಿದ್ದುದನ್ನು ತುಸುನಿಲ್ಲಿಸಿ, ನಗೆಮೊಗರಾಗಿ ನೋಡತೊಡಗಿದರು. +ಹೆಣ್ಣಾಳುಗಳೂ ತಮ್ಮತಮ್ಮೊಳಗೆ ಏನೊ ಹೇಳಿಕೊಂಡು ಕಿಲಕಿಲನೆ ಒಳನಗೆ ನಕ್ಕರು. +ಪೀಂಚಲು ನಾಚಿ ಎಲ್ಲರ ಕಡೆಗೂ ಬೆನ್ನು ಮಾಡಿಯೆ ನಿಂತು ಬಿಟ್ಟಳು! +ಮನೆಯಿಂದ ಹೊರಡುವಾಗಲೆ ತಾನು ಆಲೋಚಿಸಿದ್ದಂತೆಯೆ ತನ್ನ ವ್ಯೂಹ ಸಫಲವಾಗುತ್ತಿದ್ದುದನ್ನು ಕಂಡು, ವಿನೋದ ವಿಷಯವನ್ನೆಲ್ಲ ಕ್ಷಣಾರ್ಧದಲ್ಲಿ ಗ್ರಹಿಸಿದ ಮುಕುಂದಯ್ಯ “ಹೌದೋ, ಅವಳೂ ಬರಲಿ ಮತ್ತೆ, ಏಡಿ ಕೊಟ್ಟೆ ಹೊತ್ತುಕೊಳ್ಳೋರು ಯಾರು? + ಈಗ…ಒಂದಡಕೆ ಅಗಿಯೋದ್ರೊಳಗೆ ಬಂದು ಬಿಡಾನ…. +ಬೇಗ ಬನ್ನಿ ಮತ್ತೆ” ಎಂದು ನಟನೆಯ ಗಂಭೀರವಾಣಿಯಿಂದ ಆಜ್ಞೆಮಾಡಿದಂತೆ ಹೇಳಿ, ಅಡಕೆ ಬಾಳೆಯ ಮರಗಳೆಡೆ ತೂರಿ ಗುಡ್ಡದತ್ತ ಮರೆಯಾದನು. +ಐತ ಬಾಳೆಮರದ ಹೆಡಲಿನ ಸಂಧಿಯಲ್ಲಿಟ್ಟಿದ್ದ ತನ್ನ ಸೊಂಟದ ಪಂಚೆಯನ್ನು ಸುತ್ತಿಕೊಂಡು, ಪೀಂಚಲು ನಿಂತಿದ್ದೆಡೆಗೆ ಹೋಗಿ ಏನನ್ನೊ ಹೇಳಿದನು. +ಗಂಡ ಮುಂದೆ ಹೆಂಡತಿ ಹಿಂದೆ ಇಬ್ಬರೂ ಬಿರುಬಿರನೆ ನಡೆದು, ಮುಕುಂದಯ್ಯ ಹೋದ ದಾರಿಯಲ್ಲಿ ಮುಂಬರಿದು, ಮರೆಯಾದರು, ಉಳಿದವರು ಒಬ್ಬರ ಮುಖವನ್ನೊಬ್ಬರು ಇಂಗಿತಪೂರ್ಣವಾದ ದೃಷ್ಟಿಯಿಂದ ನೋಡಿ ಮತ್ತೆ ಕೆಲಸಕ್ಕೆ ಕೈ ಹಾಕಿದರು. +ಮೊಡಂಕಿಲ ತನ್ನ ವಿನೋದಭಾವದ ಹರ್ಷವನ್ನು ಅದುಮಿಡಲಾರದೆ “ನಮ್ಮ ಸಣ್ಣ ಅಯ್ಯಗೆ ಐತ ಅಂದರೆ ಬಹಳ ಪಿರೀತಿ” ಎಂದನು. +ಚೀಂಕ್ರನ ವ್ಯಂಗ್ಯಧ್ವನಿ ಕೇಳಿಸಿತು: “ಅಲ್ಲದೆ ಮತ್ತೆ? +ಆ ಹೆಣ್ಣೂ ಸಂಗಡ ಇದ್ದರೆ, ಮತ್ತೂ ಪಿರೀತಿ!”ಉಳಿದವರು ತನ್ನ ಮಾತಿಗೆ  ಮೆಚ್ಚುಗೆ ಈಯುತ್ತಾರೆಂದು ಭಾವಿಸಿದ್ದ ಚೀಂಕ್ರನಿಗೆ ನಿರಾಶೆಯಾಯಿತು: + ಯಾರೂ ನಗಲಿಲ್ಲ. +ಬೇಸಗೆಯಲ್ಲಿ ಮೊದಲ ಬಿರುಮಳೆ ಬಿದ್ದ ಮೇಲೆ ಮರುದಿನ ಕಂಡು ಬರುವ ತೀಕ್ಷ್ಣತರವಾದ ಬಿಸಿಲು ಏರುತ್ತಿತ್ತು. +ಚೀಂಕ್ರ ಪಿಜಿಣರು ಅತ್ತಿಯ ಮರವನ್ನು ಎರಡು ಮೂರು ದೊಡ್ಡ ದೊಡ್ಡ ತುಂಡುಗಳನ್ನಾಗಿ ಮಾಡಿ, ಆ ದಿಮ್ಮಿಗಳ ಮೇಲೆಯೆ ಕುಳಿತು ದಣಿವಾರಿಸಿಕೊಳ್ಳುತ್ತಿದ್ದರು. +ಮೊಡಂಕಿಲನೂ ಹೆಣ್ಣಾಳುಗಳೂ ಬಾಳೆ ಮರದ ಎಲೆನೆರಳಿನಲ್ಲಿ ಕುಳಿತು ಎಲೆ ಹಾಕಿಕೊಳ್ಳುವ ನೆವದಲ್ಲಿ ವಿರಾಮ ತೆಗೆದುಕೊಳ್ಳಲು ಪ್ರಾರಂಭಿಸಿದ್ದರು. +ದೂರ ತೋಟದ ಕಾಲುದಾರಿಯಲ್ಲಿ ರಂಗಪ್ಪಗೌಡರು ಯಾರೊಡನೆಯೊ ಅವರ ವಾಡಿಕೆಯಂತೆ ಒಂದು ಮೈಲಿ ಆಚೆಗೂ ಕೇಳಿಸಬಹುದೋ ಏನೋ ಎಂಬಂತಹ ಗಟ್ಟಿದನಿಯಲ್ಲಿ ಸಂಭಾಷಿಸುತ್ತಾ ಬರುತ್ತಿದ್ದುದು ಕೇಳಿಸಿತು. +“ಈಗಲೇ ಎಲ್ಲಿ ಆಗುತ್ತದೇರಿ, ನೀವು ಊರಿಗೆ ಹೋಗಿ ಬರಾಕೆ? +ಜೈಮುನಿ ಬರೆದು ಕೊಡ್ತೀನಿ ಅಂದಿರಿ, ಅದೂ ಪೂರೈಸಿಲ್ಲ. +ನಮ್ಮ ಆಳುಲೆಕ್ಕ ಬ್ಯಾರೆ ಇದೆ…. +ಸರಕಾರ ಬೇರೆ ಏನೇನೊ ಹೊಸ ರೂಲೀಸು ಮಾಡಿ, ಹೊಸ ಅಮಲ್ದಾರರು ಲೋಟೀಸಿನ ಮೇಲೆ ಲೋಟೀಸು ಜಾರಿ ಮಾಡ್ತಿದ್ದಾರೆ….” +“ಮಳೆ ಹಿಡಿಯುವ ಮುನ್ನ ಬಂದುಬಿಟ್ಟರಾಯ್ತಲ್ಲಾ, ಗೌಡರೆ? +ಗಟ್ಟದ ಮೇಲಕ್ಕೆ ಬಂದವ ಕೆಳಗಿಳಿಯದೆ ಎರಡು ವರ್ಷಕ್ಕೆ ಬಂದಿತ್ತಲ್ದಾ? +ನನ್ನ ತಾಯಿ ಮುದುಕಿ ಸಾಯುವ ಮುನ್ನ ಒಮ್ಮೆ ಮೋರೆ ಕಂಡು ಬಂದು ಬಿಡುತ್ತೇನೆ.” +“ನಿಮಗೆ ಕೊಡಬೇಕಾದ್ದನ್ನೆಲ್ಲಾ ಕೊಡೋಕೆ ಈಗ ನನ್ನ ಹತ್ರ ಹಣ ಇಲ್ಲವಲ್ಲ. +ಇನ್ನೊಂದು ನಾಲ್ಕುದಿನ ತಡೆದರೆ….” +“ಹೆಚ್ಚೇನು ಬೇಡ ನನಗೆ. +ಹೋಗಿ ಬರುವ ದಾರಿಯ ಖರ್ಚು, ಆ ಮುದುಕಿಗೆ ಒಂದು ಸ್ವಲ್ಪ ಕೊಡುವುದಕ್ಕೆ ಆದರೆ ಸಾಕು….” +“ಯಾವುದನ್ನೂ ನೋಡಿ ಹೇಳ್ತೀನಿ, ಐಗಳೆ. +ಒಂದೆರಡು ದಿನದಲ್ಲಿ ಕಲ್ಲೂರು ಸಾಹುಕಾರ್ರು ಮಂಜಭಟ್ಟರ ಹತ್ತಿರ ಹೋಗಿ ಬರ್ತೀನಿ; +ಏನಿದ್ದರೂ ಆಮೇಲೆ ಗೊತ್ತಾಗೋದು.” +ಚೀಂಕ್ರ ಪಿಜಿಣರು ನೋಡುತ್ತಿದ್ದಂತೆಯೆ ಕೋಣೂರು ರಂಗಪ್ಪಗೌಡರೂ ಅವರ ಹಿಂದೆ ಐಗಳು ಅನಂತಯ್ಯನವರೂ ಕಾಣಿಸಿಕೊಂಡರು, ಅಡಕೆ ಬಾಳೆಯ ಮರಗಳ ಸಂಧಿಯಲ್ಲ: + ನಡುಹರೆಯದ ಗೌಡರು ತಕ್ಕಮಟ್ಟಿಗೆ ಸುಪುಷ್ಟ ದೇಹದ ಬಲಿಷ್ಠ ವ್ಯಕ್ತಿಯಾಗಿದ್ದರು. +ಗೌರವರ್ಣದ ಅವರ ಮುಖದ ಮೇಲಣ ಕರ್ರನೆಯ ಕೊಂಕುಮೀಸೆ ಅವರನ್ನು ಮೊದಲನೆಯ ಸಾರಿ ನೋಡಿದವರಿಗೆ  ಹೆದರಿಕೆ ಹುಟ್ಟಿಸುವಂತೆ ಕ್ಷಾತ್ರದ್ಯೋತಕವಾಗಿತ್ತು. +ಅವರು ತಾವು ಹೊದೆದಿದ್ದ ಕೆಂಪು ಶಾಲನ್ನು, ಸೆಕೆಯಿಂದ ಪರಿಹಾರ ಪಡೆಯಲೆಂಬಂತೆ, ಹೆಗಲಮೇಲೆ  ಹಾಕಿಕೊಂಡಿದ್ದರಿಂದ ಅವರ ವಿಶಾಲವಾದ ಉಬ್ಬಿದೆದೆಯ ಮೇಲೆ ಬೆಳೆದಿದ್ದ ರಾಶಿ ರಾಶಿ ಕರಿಯ ರೋಮ ಬಿಳಿಮೈಯಲ್ಲಿ ಎದ್ದು ಕಾಣುತ್ತಿತ್ತು. +ಎರಡು ಕಿವಿಗಳಲ್ಲಿಯೂ ಮೇಲೆ ಕೆಳಗೆ ಇದ್ದ ಎರಡೆರಡು ಚಿನ್ನದ ಒಂಟಿಗಳು ಬಿಸಿಲಿಗೆ ಆಗಾಗ ತಳಿಸುತ್ತಿದ್ದುವು. +ಆ ಕಾಲದ ನಾಡಿನ ಪದ್ಧತಿಯಂತೆ ಲಾಳಾಕಾರವಾಗಿ ಕ್ಷೌರಮಾಡಿಸಿಕೊಂಡಿದ್ದ ತಲೆಯ ಮುಂಭಾಗ ಅವರ ಹಣೆಗೆ ಒಂದು ವಿಸ್ತರಣೆಯೋಪಾದಿ ಇತ್ತು. +ಸೊಂಟದ ಕಚ್ಚೆಪಂಚೆ ಮೊಣಕಾಲನ್ನು ಮುಚ್ಚಿತ್ತು ಮಾತ್ರ. +ಒಂದು ಚಿನ್ನದ ನೇವಳ ಉಡಿದಾರದಂತೆ, ಸುತ್ತಿದ್ದ ಪಂಚೆಯ ಮೇಲೆ, ಸೊಂಟದಲ್ಲಿ ಹಳದಿಯಾಗಿ ಹೊಳೆಯುತ್ತಿತ್ತು. +ಅವರು ಕಾಲಿಗೆ ಹಾಕಿಕೊಂಡಿದ್ದ ಕೆಂಪು ಹೂ ಕೂರಿಸಿದ ಕನ್ನಡ ಜಿಲ್ಲೆಯ ಗಿರ್ಕಿಮೆಟ್ಟು ಗಿರಕು ಬರಕು ಸದ್ದು ಮಾಡುತ್ತಾ ಅವರ ಆಗಮನಕ್ಕೆ ಒಂದು ರೀತಿಯ ಪರಾಕು ಹೇಳುವಂತಿತ್ತು. +ಅವರ ಹಿಂದೆ ಬರುತ್ತಿದ್ದ ಐಗಳು ಅನಂತಯ್ಯನವರು ಗೌಡರ ಹಾಗೆ ಎತ್ತರದ ವ್ಯಕ್ತಿಯಾಗಿರಲಿಲ್ಲ. +ಆದರೆ ಕುಳ್ಳು ಎಂದೂ ಯಾರೂ ಹೇಳುವಂತೆಯೂ ಇರಲಿಲ್ಲ. +ಅವರು ದಪ್ಪನೆಯವರಾಗಿದ್ದರೆ ಕುಳ್ಳಾಗಿ ತೋರುತ್ತಿದ್ದರೆಂದೆ ಹೇಳಬೇಕು. +ಆದರೆ ತೆಳ್ಳಗೆ ಸಣಕಲಾಗಿದ್ದುದರಿಂದ ಉದ್ದವಾಗಿರುವಂತೆ ಕಾಣಿಸುತ್ತಿದ್ದರು ಅಷ್ಟೆ. +ಅವರು ಹೆಂಗಸರಂತೆ ಪೂರ್ತಿ ಕೂದಲು ಬಿಟ್ಟಿದ್ದರು. +ಬೈತಲೆ ತೆಗೆಯದೆ ಬಾಚಿ ಹಿಂದಕ್ಕೆ ಜುಟ್ಟು ಗಂಟು ಹಾಕಿದ್ದರು. +ಅವರ ಕಿವಿಯಲ್ಲಿಯೂ ಒಂಟಿ ಹೊಳೆಯುತ್ತಿದ್ದವು. +ಒಂದು ಕಾಲಿನಲ್ಲಿ ಬೆಳ್ಳಿಯ ಸರಿಗೆಯೂ ಇತ್ತು. +ಒಂದು ಜಾಳು ಪಂಚೆಯ ಕಚ್ಚೆ ಹಾಕಿ, ಬನೀನು ತೊಟ್ಟಿದ್ದರು. +ಅವರ ಕಚ್ಚೆ ಮೊಣಕಾಲಿನವರೆಗೆ ಮಾತ್ರ ಇಳಿಬಿದ್ದು ರಾಮ ಲವಲೇಶವಿಲ್ಲದ ನುಣ್ಣನೆಯ ಜಂಘೆಗಳನ್ನು ಪ್ರದರ್ಶಿಸುತ್ತಿತ್ತು. +ಅವರೂ ಮೆಟ್ಟು ಹಾಕಿಕೊಂಡಿದ್ದರು; ಆದರೆ ಅವು ನಿಃಶಬ್ದವಾಗಿದ್ದುವು; ಅಲ್ಲದೆ ಗೌಡರ ಮೆಟ್ಟುಗಳಂತೆ ಹೂವಿನ ಕುಚ್ಚಿನ ಅಲಂಕಾರ ಕಣ್ಣು ಸೆಳೆಯುತ್ತಲೂ ಇರಲಿಲ್ಲ. +ಅವರಿಗೆ ಮೀಸೆಯೇನೊ ಇತ್ತು. +ಆದರೆ ಗೌಡರ ಮೀಸೆಗಳಂತೆ ‘ನಾವು ಇದ್ದೇವೆ’ ಎಂಬ ಠೀವಿಯಿಂದಿರದೆ, ಇದ್ದರೂ ಇಲ್ಲದಂತೆ, ಯಾರ ಕಣ್ಣಿಗೂ ಬೀಳದಿದ್ದರೆ ಸಾಕಪ್ಪಾ ಎಂಬಂತೆ ಮೈಗರೆದುಕೊಂಡಿತ್ತು. +ಅವರ ಮುಖದಲ್ಲಿ ಒಂದು ಸಂಸ್ಕೃತಿಯ ಕಳೆ ಬೆಳಗುತ್ತಿದ್ದುರಿಂದ, ಉಳಿದೆಲ್ಲ ದೃಷ್ಟಿಯಿಂದ ನಿರ್ಲಕ್ಷಿಸಬಹುದಾಗಿದ್ದ ಅವರ ವ್ಯಕ್ತಿತ್ವಕ್ಕೆ ಒಂದು ಆಕರ್ಷಣೆಯೊದಗಿಸಿ, ಅವರನ್ನು ಸಾಧಾರಣತೆಯಿಂದ ಬಹುಮಟ್ಟಿಗೆ ಪಾರುಮಾಡಿತ್ತು. +ಅವರ ನಡಿಗೆಯನ್ನು ನೋಡಿದರೆ, ಒಂದು ಕಾಲು ಮತ್ತೊಂದಕ್ಕಿಂತ ತುಸು ಉದ್ದವಾಗಿರುವಂತೆ ಭಾಸವಾಗುತ್ತಿತ್ತು. +ಆದರೆ ನಿಜಸ್ಥಿತಿ ಹಾಗಿರಲಿಲ್ಲ. +ಅವರು ಹುಡುಗರಾಗಿದ್ದಾಗ ಕಾಲಿಗೆ ಪೆಟ್ಟು ಬಿದ್ದುದರಿಂದ ನರಹಿಡಿದು ಹಾಗೆ ಕುಂಟುತ್ತಿದ್ದು, ಅದು ಅಭ್ಯಾಸವಾಗಿ ಉಳಿದುಬಿಟ್ಟಿತ್ತು. +“ಐಗಳೆ, ಮರೆತಿದ್ದೆ ಒಂದು ಕೆಲಸಾನ…. +ಆ ಬಚ್ಚಲಮನೆ ಎದುರು ಕೆಳಗರಡೀಲಿ ಒಂದು ಹೆರಿಗೆ ಅಂಕಣ ಇದೆಯಲ್ಲ ಅಲ್ಲಿಗೆ ತಟ್ಟಿಮರೆ ಕಟ್ಟಿಸಬೇಕು…. +ಅವ್ವನ್ನ ಕೇಳಿ, ಜೊತಕ ಗಿತಕ ಕಟ್ಟಬೇಕು ಅಂದರೆ, ಅದನ್ನೂ ಕಟ್ಟಿಬಿಡಿ…. +ಹೆರಿಗೆ ಮಾಡಿಸ್ತಾಳಲ್ಲಾ ಆ ಹಳೇಪೈಕದ ಮುದುಕಿ ಅದಕ್ಕೆ ಬರಾಕೆ ಹೇಳಿಕಳ್ಸಿದ್ದೆ. +ಬಂತೊ ಇಲ್ಲೊ ನೋಡಿ, ಬೇಗ ಹೇಳಿ ಕಳ್ಸಿ, ಅದನ್ನ ಕರ್ಸೆಬಿಡಿ…. +ಅದಕ್ಕೆ ಹೆರೋ ಸಮಯ. +ಅವ್ವ ಹೇಳ್ತು, ಬೇನೆ ಸಂಕಟ ಸುರು ಆದ್ಹಾಂಗೆ ಕಾಣ್ತದೆ ಅಂತ. +ನಾನೀಗ್ಲೆ ಗಟ್ಟದೋರ ಕೆಲಸ ನೋಡಿ, ಹೇಳೋದನ್ನೆಲ್ಲ ಹೇಳಿ, ಬ್ಯಾಗ ಬಂದುಬಿಡ್ತನಿ.” +ಐಗಳೆ ಅನೇಕಾನೇಕ ಕರ್ತವ್ಯಗಳಲ್ಲಿ-ಹುಡುಗರಿಗೆ ಕೂಲಿಮಠದಲ್ಲಿ ಅಕ್ಷರಾಭ್ಯಾಸ ಮಾಡಿಸುವುದು, ಅಭ್ಯಂಜನಾದಿಗಳನ್ನು ಮಾಡಿಸಿ ಅವರ ಯೋಗಕ್ಷೇಮ ನೋಡಿಕೊಳ್ಳುವುದು, ಸಮಯ ಬಿದ್ದರೆ ಅವರ ಬಟ್ಟೆಗಳನ್ನು ಒಗೆಯುವುದು, ಆಳುಲೆಕ್ಕ ಇಡುವುದು, ಗದುಗಿನ ಭಾರತ, ತೊರವೆ ರಾಮಾಯಣ, ಜೈಮಿನಿ ಭಾರತ ಇತ್ಯಾದಿಗಳನ್ನು ಓಲೆಗರಿಯಲ್ಲಿ ನಕಲು ಮಾಡುವುದು ಇತ್ಯಾದಿ ಇತ್ಯಾದಿ- ತಟ್ಟಿಗಿಟ್ಟಿ ಕಟ್ಟಿಸಿ ಗೌಡರ ಹೆಂಡತಿಯ ಹೆರಿಗೆಗೆ ಅನುಕೂಲ ಮಾಡಿಕೊಡುವುದೇನು ಒಂದು ವಿಶೇಷವಾಗಿರಲಿಲ್ಲ. +ಯಾವ ಕೆಲಸವನ್ನೆ ಹೇಳಿದರೂ ಅವರು ಮೇಲು ಕೀಳು ಎನ್ನದೆ ಸಂತೋಷವಾಗಿಯೆ ಮಾಡುತ್ತಿದ್ದರು. +ಆದ್ದರಿಂದಲೆ ಅವರು ಸದಾ ನಗುನಗುತ್ತಲೆ ಇರುವಂತೆ ತೋರುತ್ತಿತ್ತು. +ಐಗಳನ್ನು ಹಿಂದಕ್ಕೆ ಕಳುಹಿಸಿ, ರಂಗಪ್ಪಗೌಡರು ಕಡಿದಿದ್ದ ದಿಮ್ಮಿಗಳ ಮೇಲೂ ಅಡಕೆ ಬಾಳೆಯ ಮರದ ಬುಡಗಳಲ್ಲಿಯೂ ಕುಳಿತು ಎಲೆಯಡಿಕೆ ಹಾಕಿಕೊಳ್ಳುತ್ತಿದ್ದ ಗಟ್ಟದ ತಗ್ಗಿನವರಿಗೆ ಗಟ್ಟಿಯಾದ ದನಿಯಲ್ಲಿಯೆ ಬಿರುಸಾಗಿ ಹೇಳಿದಳು: +“ಅಯ್ಯೋ ಮನೆಹಾಳ್ ಮುಂಡೇಮಕ್ಕಳ್ರಾ, ಯಾಕ್ರೋ ಕೂತೀರಿ? +ಹಾಸಿಕೊಂಡು ಮನಿಕ್ಕೊಳ್ರೋ….!”ಗೌಡರ ಆರ್ಭಟದ ನಿತ್ಯ ಪರಿಚಯವಿದ್ದ ಆ ಆಳುಗಳು ಅಷ್ಟೇನು ಗಡಿಬಿಡಿ ಮಾಡಿಕೊಳ್ಳದೆ ನಿಧಾನವಾಗಿಯೆ, ಆದರೂ ಗೌಡರಿಗೆ ಭಯಪಟ್ಟು ಅವರ ವಾಣಿಗೆ ಗೌರವ ತೋರಿಸುತ್ತೇವೆ ಎಂಬುದನ್ನು ಅವರಿಗೆ ತೋರಿಸಲು ಕಾತರರಾದವರಂತೆ, ಕೂತಲ್ಲಿಂದ ಎದ್ದು ತಮ್ಮ ತಮ್ಮ ಕೆಲಸದ ಉಪಕರಣಗಳನ್ನು ಕೈಗೆ ತೆಗೆದುಕೊಂಡರು. +ಚೀಂಕ್ರ ಸ್ವಲ್ಪ ಧೈರ್ಯ ತಂದುಕೊಂಡು ಹಲ್ಲುಬಿಟ್ಟು ಸುಳ್ಳೇ ನಗುತ್ತಾ, ಆಳುಗಳೆಲ್ಲರೂ ಅದುವರೆಗೂ ಸ್ವಲ್ಪವೂ ವಿರಾಮವಿಲ್ಲದೆ ಕೆಲಸ ಮಾಡುತ್ತಲೆ ಇದ್ದರೆಂದೂ ಆಗತಾನೆ ಕೂತಿದ್ದರೆಂದೂ ಸಮಾಧಾನ ಹೇಳಿದನು. +ಗೌಡರು ಅವನಿಗೆ “ನೀನೊಬ್ಬ ದೊಡ್ಡ ಸೇರೆಗಾರ ಆಗಿಬಿಟ್ಟಿದೀಯ”…ಎಂದು ಗದರಿಸಿ, ಸುತ್ತಲೂ ಏನನ್ನೊ ಹುಡುಕುವರಂತೆ ಕಣ್ಣು ಸುಳಿಸಿ “ನೀವು ಇಷ್ಟೇ ಜನ ಏನೋ ಕೆಲಸಕ್ಕೆ ಬಂದೋರು? +ಅಂವ ಎಲ್ಲೋ ಆ ಸಿಟ್ಲುಮಿಂಚ? +ಮದೇ ಆಯ್ತು ಅಂತಾ ಹೆಂಡ್ತೀನ ಹಿಡಿಕೊಂಡೇ ಕಾಡ್ನೆಲ್ಲಾ ಅಲೀತಿರ್ತಾನೊ? …. + ಅಂವ ಕೆಲಸಕ್ಕೆ ಬರ್ಲಿಲ್ಲೇನೊ, ಏ…. ಏ…. ” ಎಂದು ಪಿಜಿಣನನ್ನು ನೋಡುತ್ತಾ, ಅವನ ಹೆಸರು ನೆನಪಿಗೆ ಬರದೆ “ಸುಡಗಾಡು ಹೆಸರು…. +ಎಂಥದೋ ನಿನ್ನ ಹೆಸರು?” ಎಂದರು. +“ಅವನ ಹೆಸರೇ?ಪಿಜಿಣ” ಎಂದು ಸೂಚಿಸಿ ಮೊಡಂಕಿಲ ಹರೆ ಕಡಿಯಲು ಪ್ರಾರಂಭಿಸಿದ. +“ಅವನು ಎಲ್ಲೋ, ಪಿಜಿಣಾ? +ನಿನ್ನ ಬಿಡಾರದ ಬದೀಲೇ ಅಲ್ಲೇನೋ ಅವನ ಬಿಡಾರ?” ಗೌಡರ ಪ್ರಶ್ನೆಗೆಪಿಜಿಣ “ಯಾರು?ಐತನಾ? +ಕೆಲಸಕ್ಕೆ ಬಂದಿತ್ತು ಹುಡುಗ-” +“ಮತ್ತೆಲ್ಲಿ ಹೋದನೋ?” +“ಸಣ್ಣ ಒಡೇರು ಕರಕೊಂಡು ಹೋದರು, ಏಡಿ ಹಿಡಿಯುದಕ್ಕೆ.” +“ಯಾರೋ?ಮುಕುಂದನೇನೋ? …. ಅವನ ದೆಸೆಯಿಂದ ಆಗೋದಿಲ್ಲ! +ಕೆಲಸ ಮಾಡ್ತಾರೆಯೊ ಇಲ್ಲವೊ ನೋಡ್ತಾ ಇರು ಅಂತ ಕಳಿಸಿದ್ರೆ, ಕೆಲಸ ಮಾಡವನ್ನೆ ಕರಕೊಂಡು ಷಿಕಾರಿಗೆ ಎದ್ದುಬಿಡ್ತಾನಲ್ಲಾ! +ಐತನ ಹೆಂಡ್ತಿ ಬರಲಿಲ್ಲೇನೊ, ಕೆಲ್ಸಕ್ಕೆ?” +“ಅದು ಅವನ್ನ ಬಿಟ್ಟು ಇರುತ್ತದಾ? +ಹಿ ಹಿ ಹಿ! +ಅದನ್ನೂ ಕರಕೊಂಡು ಹೋದ್ರು, ಏಡಿ ಹೊರುವುದಕ್ಕಂತೆ!” +“ಏಡಿ ಹೊರುವುದಕ್ಕೆ?! +ಸೈ ಬಿಡು! +ಏನು ಒಂದು ಪಾಟಿ ಚೀಲವೋ? +ಮಣಗಟ್ಲೆ ಏಡಿ ಹಿಡೀತಾರೇನೋ?” +“ಅಮ್ಮಾವರಿಗೆ ಏನೋ ಹುಸಾರಿಲ್ಲವಂತೆ. +ಅದಕ್ಕೆ ಜಡದ ಬಾಯಿಗೆ….” ಚೀಂಕ್ರ ಒಡೆಯರ ಮನಸ್ಸು ಪ್ರಸನ್ನವಾಗುವಂತೆ ಮಾಡಲು ಅವರ ಹೆಂಡತಿಯನ್ನೆ ಕಾರಣವನ್ನಾಗಿ ಒಡ್ಡಲು ಮಾತೆತ್ತಿದುದನ್ನು ತಡೆದು ಗೌಡರು “ಸಾಕು ಸುಮ್ಮನಿರೊ, ಸೇರೆಗಾರ! …. + ಕಡಿ, ಕಡಿ, ನೀ ಮರ ಕಡಿ” ಎಂದು ಒಂದು ದಿಮ್ಮಿಯ ಮೇಲೆ ಹೆಗಲ ಮೇಲಿದ್ದ ಕೆಂಪು ಶಾಲನ್ನು ಹಾಕಿಕೊಂಡು ಅದರ ಮೇಲೆ ಕುಳಿತರು. +ಸೊಂಟದಲ್ಲಿದ್ದ ಮಡ್ಡಿ ನಶ್ಯದ ಕೋಡಿನ ಡಬ್ಬಿಯನ್ನು ತೆಗೆದು ಅದರ ಮುಚ್ಚಳವನ್ನು ಹಿಡಿದುಕೊಂಡು, ಡಬ್ಬಿ ಮುಚ್ಚಳವನ್ನು ಯಥಾಪ್ರಕಾರ ಹಾಕಿ, ಅದನ್ನು ಸೊಂಟಕ್ಕೆ ಮೊದಲಿನಂತೆ ಸಿಕಕಿಸಿ, ಸಾವಧಾನವಾಗಿ ನಶ್ಯವನ್ನು ಮೂಗಿಗೆ ಏರಿಸಿ ಸವಿಯುತ್ತಾ ಕುಳಿತು ಕೊಂಡರು. +ಕೊಡಲಿಯ ಪೆಟ್ಟಿನ ಸದ್ದು ತೋಟದಿಂದ ಮರುದನಿಯಾಗುವಂತೆ ತೋರುತ್ತಿತ್ತು: +ಠಾಪ್!ಠಾಪ್!ಠಾಪ್!ಠಾಪ್!ಠಾಪ್! …. +ಸಾವಧಾನವಾಗಿ ನಶ್ಯ ಸೇಯುವ ಬಹಿಃಕ್ರಿಯೆಯಲ್ಲಿ ತೊಡಗಿದ್ದಂತೆ ತೋರುತ್ತಿದ್ದರೂ ಗೌಡರ ಮನಸ್ಸು ತನ್ನ ಅಂತರ್ಮುಖ ಪ್ರಪಂಚದಲ್ಲಿ ಅಲೆಯತೊಡಗಿತ್ತು. +ಆ ಆಲೋಚನೆಗಳಿಗೆ ಒಂದು ತರ್ಕವಾಗಲಿ ಕ್ರಮವಾಗಲಿ ಸ್ಪಷ್ಟವಾಗಿರಲಿಲ್ಲ. +ತಮ್ಮದೇ ಆದ ಯಾವುದೋ ಕ್ರಮದಲ್ಲಿ, ನೀರಿನ ತಳದಿಂದ ಮೇಲು ಮೈಗೆ ಗುಳ್ಳೆಗಳೇಳುವಂತೆ, ಅವು ಎದ್ದೆದ್ದು ಒಡೆಯುತ್ತಿದ್ದುವು: +ಅವರು ಅರ್ಧ ವಿಶ್ವಾಸಕ್ಕಾಗಿಯೂ ಅರ್ಧ ವಿನೋದಕ್ಕಾಗಿಯೂ “ಸಿಟ್ಲುಮಿಂಚ” ಎಂದು ಕರೆಯುತ್ತಿದ್ದ ಐತನಿಂದ ಪ್ರಾರಂಭವಾದ ಆಲೋಚನೆ, ತಮ್ಮ ಮುಕುಂದಯ್ಯನ ಕಡೆ ತಿರುಗಿ, ಐತನ ಹುಡುಗಿ ಹೆಂಡತಿ ಪೀಂಚಲು ಕಡೆ ಹೊರಳಿ, ಗರ್ಭಿಣಿಯಾಗಿ ಹೆರಿಗೆಯ ಬೇನೆಯಲ್ಲಿದ್ದ ತಮ್ಮ ಹೆಂಡತಿಯ ಕಡೆಗೂ, ಅಲ್ಲಿಂದ ಕನ್ನಡ ಜಿಲ್ಲೆಗೆ ಹೋಗಿ ಬರುತ್ತೇನೆಂದು ಹಣ ಕೇಳಿದ ಐಗಳು ಅನಂತಯ್ಯನವರತ್ತ ಹೋಗಿ, ಸಾಹುಕಾರ ಮಂಜಭಟ್ಟರಲ್ಲಿಗೆ ಸಾಗಿತ್ತು. +ಅಷ್ಟರಲ್ಲಿ, ತುಸುದೂರದಲ್ಲಿ ಗದ್ದೆಕೋಗಿನ ಅಂಚಿನಲ್ಲಿ, ಹಾಡ್ಯದ ಪಕ್ಕದ ಹಕ್ಕಲನ್ನು ಹಾದು, ಅಗಳಿನ ಸಂಕವನ್ನು ದಾಟಲು ಪ್ರಯತ್ನಿಸುತ್ತಿದ್ದ ಇಬ್ಬರು ಸ್ತ್ರೀವ್ಯಕ್ತಿಗಳು ಅವರ ದೃಷ್ಟಿಗೆ ಬಿದ್ದು, ಅವರನ್ನು ಗುರುತಿಸಲೆಂದು ಹುಬ್ಬು ಸುಕ್ಕಿಸಿ ಕಿರಿಹಿಡಿದು ನೋಡತೊಡಗಿದರು. +ಯಾರು ಎಂಬುದು ಸ್ಪಷ್ಟವಾಗದಿರಲು ತಮಗೆ ತಾವೆ ಎಂಬಂತೆ ಆಳುಗಳಿಗೂ ಕೇಳಿಸುವ ರೀತಿಯಲ್ಲಿ “ಯಾರೋ ಅದು? +ಅಲ್ಲಿ ಆ ತಡಬೆ ಹತ್ತಿರ ಸಂಕ ದಾಟುತ್ತಿರೋರು?” ಎಂದರು, ಸ್ವಲ್ಪ ರಾಗವಾಗಿ, ಉದಾಸೀನ ಧ್ವನಿಯಿಂದಲೆ. +ಅವರು ಯಾರನ್ನೂ ನಿರ್ದೇಶಿಸಿ ಪ್ರಶ್ನಿಸಿರಲಿಲ್ಲ. +ಆದರೂ ಆಳುಗಳೆಲ್ಲ, ಗಂಡಸರೂ ಹೆಂಗಸರೂ, ಕೆಲಸ ನಿಲ್ಲಿಸಿ, ನಿಂತು, ಆ ಕಡೆ ನೋಡತೊಡಗಿದರು. +ಪಿಜಿಣ ಗೊಬ್ಬೆಸೆರಗು ಕಟ್ಟಿ ಉಟ್ಟಿದ್ದ ಸೀರೆಯನ್ನೂ ಕುತ್ತಿಗೆಗೆ ಕಟ್ಟಿ ಬೆನ್ನಿನ ಮೇಲೆ ಇಳಿಬಿದ್ದಿದ್ದ ವಲ್ಲಿಯನ್ನೂ ಗಮನಿಸಿ “ಯಾರೋ ಹೆಗ್ಗಡಿತಮ್ಮೋರು ಕಂಡ ಹಂಗೆ ಕಾಣ್ತದೆ” ಎಂದನು. +“ಯಾರೇನು?ನೋಡಿದರೆ ಕಾಂಬುದಿಲ್ಲೇನು? +ಅತ್ತೆ ಸೊಸೆ ಜೋಡಿ!” ಎಂದು ಚೀಂಕ್ರ ಹಲ್ಲುಬಿಟ್ಟು ನಗುತ್ತಾ ನಿಂತನು. +“ಓಹೋ! +ನಾಗಕ್ಕ ನಾಗತ್ತೆಯರ ಸವಾರಿ ಅಂತಾ ಕಾಣ್ತದೆ! +ಹೂವಳ್ಳಿಗೆ ಹೋಗೋರೇನೋ!” ಎಂದು ಗೌಡರು ಇಂಗಿತವಾಗಿ ಚೀಂಕ್ರನ ಕಡೆ ನೋಡಿದರು. +ಗೌಡರಿಗೆ ಹೇಗೋ ಹಾಗೆ ಚೀಂಕ್ರೆನಂತಹರಿಗೂ ಗಾಳಿಸುದ್ದಿ ಕಿವಿಗೆ ಬಿದ್ದಿತ್ತು. +ನಾಗತ್ತೆ ಹೇಗಾದರೂ ಮಾಡಿ ತನ್ನ ಸೊಸೆ ನಾಗಕ್ಕನನ್ನು ಹೂವಳ್ಳಿ ವೆಂಕಟಪ್ಪ ನಾಯಕರಿಗೆ ಸೀರುಡಿಕೆ ಮಾಡಲು ಒಂದು ವರುಷದಿಂದಲೂ ಹವಣಿಸುತ್ತಿದ್ದಾಳೆ ಎಂಬ ಸಂಗತಿ. +ಆದರೆ ಚೀಂಕ್ರನ ನೋಟದಲ್ಲಿದ್ದ ನಿಃಸ್ಪೃಹತಾಭಾವ ಗೌಡರ ನೋಡದಲ್ಲಿರಲಿಲ್ಲ. +ಏಕೆಂದರೆ ರಂಗಪ್ಪಗೌಡರು ಹೃದಯಭ್ರಮರವೂ ನಾಗಕ್ಕನ ಪುಷ್ಪಪಾತ್ರೆಯ ಮೇಲೆ ಆಗೊಮ್ಮೆ ಈಗೊಮ್ಮೆ ಹಾರಾಡಿ, ಜೇನೀಂಟುವ ಆಶೆಯನ್ನು ತೋರಿತ್ತು; +ತೋರಿಸುತ್ತಲೂ ಇತ್ತು. +ಆದರೆ, ಒಂದು ವೇಳೆ ಅದು ಸಾಧ್ಯವಾದರೆ, ತಮಗೂ ನಾಗಕ್ಕಗೂ ಇರಬಹುದಾದ ಸಂಬಂಧದ ಸ್ವರೂಪವನ್ನು ನಿರ್ಣಯಿಸಲು ಅವರಿನ್ನೂ ಸಮರ್ಥರಾಗಿರಲಿಲ್ಲ. +ಒಮ್ಮೆ ಯೋಚನೆ: + ಅವಳನ್ನು ಸುಮ್ಮನೆ ಇಟ್ಟುಕೊಳ್ಳಬಹುದಲ್ಲಾ ಎಂದು, ಮತ್ತೊಮ್ಮೆ: ಸೀರುಡಿಕೆ ಮಾಡಿಕೊಂಡರೇನಾಗುತ್ತದೆ ಎಂದು. +ಛೆ ಛೆ!ಅದು ತಮ್ಮಂತಹ ಮನೆತನಸ್ಥರ ಅಂತಸ್ತಿಗೆ ಕೀಳು ಎಂಬ ಭಾವನೆ ಅವರನ್ನು ನಾಚಿಸುತ್ತಿದ್ದುದೂ ಉಂಟು. +ಗಟ್ಟಿಮುಟ್ಟಾದ ತನ್ನ ಹೆಂಡತಿ ಲಕ್ಷಣವಾಗಿಯೇ ಇರುವಾಗ ಅದರಲ್ಲಿಯೂ ಐಗಳು ಅನಂತಯ್ಯನವರು ಭಾರತ ರಾಮಾಯಣ ಜೈಮಿನಿ ಇವುಗಳನ್ನು ಓದಿ, ಧರ್ಮವಿಚಾರ ಸೂಕ್ಷ್ಮವನ್ನು ಹೃದಯಸ್ಪರ್ಶಿಯಾಗಿ ಬಿತ್ತರಿಸುತ್ತಿದ್ದಾಗ, ಅದ್ನನು ಗ್ರಹಿಸಿದ ತ್ಕಾಲದಲ್ಲಿ ರಂಗಪ್ಪಗೌಡರ ರಸವಶವಾದ ಮನಸ್ಸು ಎಷ್ಟೋಸಾರಿ ಧರ್ಮಾಧರ್ಮ ಪ್ರಸಂಗದ ಕುರುಕ್ಷೇತ್ರವೆ ಆಗಿಬಿಟ್ಟಿದ್ದಿತು. +ಆದರೆ, ‘ಮನ್ಮಥವಿಜಯವು ನೀಲಕಂಠನಿಗೂ ಸುಲಭವಾಗಲಿಲ್ಲ ಎಂದಮೇಲೆ ಬರಿಯ ಧರ್ಮಶ್ರವಣದಿಂದಲೆ ಮನುಷ್ಯ ಮಾತ್ರನಾದವನು ಉತ್ತೀರ್ಣನಾಗುತ್ತಾನೆಯೆ?’ ಎಂದು ಐಗಳು ತಾಳಮದ್ದಳೆಯ ಪ್ರಸಂಗ ಸಮಯದಲ್ಲಿ ವ್ಯಾಖ್ಯಾನ ಮಾಡಿದ್ದರಲ್ಲವೆ? +ಗೌಡರು ನೋಡುತ್ತಿದ್ದಂತೆಯೆ ಆ ಇಬ್ಬರೂ ಹೂವಳ್ಳಿಗೆ ಅಗಚುವ ಗದ್ದೆಯಂಚಿನ ಕಾಲುದಾರಿಯನ್ನು ಉತ್ತರಿಸಿ ಕೋಣೂರು ಮನೆಯ ದಾರಿಯನ್ನೆ ಹಿಡಿದಿದ್ದರು. +ಅದನ್ನು ಕಂಡು ಗೌಡರಿಗೆ ಸಂತೋಷವಾಯಿತು. +ಆ ಸಂತೋಷಕ್ಕೆ ಬೇರೆ ಬೇರೆ ಕಾರಣಗಳಿದ್ದಿರಬಹುದು. +ಆದರೆ ಅವರ ಮನಸ್ಸು ತನಗೆ ತಾನೆ ಧೈರ್ಯವಾಗಿ ಸ್ಪಷ್ಟಪಡಿಸಿಕೊಂಡ ಕಾರಣವೆಂದರೆ ತಮ್ಮ ಹೆಂಡತಿಯ ಹೆರಿಗೆ ಮತ್ತು ತರುವಾಯದ ಉಪಚಾರದ ಸಂದರ್ಭದಲ್ಲಿ ಅನುಭವಶಾಲಿಯಾದ ನಾಗತ್ತೆ ಮತ್ತು ಉತ್ಸಾಹಿಯಾದ ನಾಗಕ್ಕ ಇವರಿಂದ ತಮ್ಮ ತಾಯಿಗೆ ದೊರೆಯಬಹುದಾದ ಸಹಾಯ. +ಹೆಂಗಸರಿಬ್ಬರೂ ಗದ್ದೆ ತೋಟಗಳನ್ನು ಬೇರ್ಪಡಿಸುವ ಬೇಲಿಯ ಬಳಿಗೆ ಸೇರಿ, ತಡಬೆಯನ್ನು ನಿಸ್ಸಂಕೋಚವಾಗಿ ಹತ್ತಿ ದಾಟಿ, ತಮ್ಮ ತಮ್ಮೊಳಗೆ ತುಸು ಗಟ್ಟಿಯಾಗಿಯೆ ಮಾತನಾಡಿಕೊಳ್ಳುತ್ತಾ ಅಡಕೆಯ ಮತ್ತು ಬಾಳೆಯ ಮರಗಳ ಸಂದಿಯಲ್ಲಿ ಮನೆಗೆ ಹೋಗುವ ಕಾಲುದಾರಿಯಲ್ಲಿ ಮುಂದುವರಿದರು. +ಮುಂದೆ ಹೋಗುತ್ತಿದ್ದ ನಾಗಕ್ಕ ಇದ್ದಕ್ಕಿದ್ದಹಾಗೆ ನಿಂತು, ತನ್ನನ್ನು ದಾಟಿ ಮುಂದುವರಿದ ಅತ್ತೆಯ ಹಿಂದೆ ಮರೆಯಾಗಲೆಳೆಸಿದಾಗ ನಾಗತ್ತೆ ನೋಡಿದಳು, ತೋಟದಲ್ಲಿ ತುಸು ದೂರದಲ್ಲಿ ಕಡಿದ ಮರದ ದಿಮ್ಮಿಯ ಮೇಲೆ ಕುಳಿತು ನಶ್ಯ ಸೇಯುತ್ತಾ ಆಳುಗಳಿಂದ ಕೆಲಸ ಮಾಡಿಸುತ್ತಿದ್ದ ರಂಗಪ್ಪಗೌಡರನ್ನು ಹೆಂಗಸರಿಬ್ಬರೂ ಅದುವರೆಗೆ ಗಂಡಸರ ಕಣ್ಣಿಗೆ ಬೀಳದೆ, ಗಂಡಸರ ಸುಳಿವೂ ಇಲ್ಲದೆ, ತಾವು ತಾವಾಗಿಯೆ ಇದ್ದಾಗ ಇದ್ದ ರೀತಿಯನ್ನು ಸಂಪೂರ್ಣವಾಗಿ ತ್ಯಜಿಸಿ, ನಾಚಿ ಹದುಗುವಂತಹ ಭಂಗಿಯನ್ನಾರೋಪಿಸಿಕೊಂಡು, ಬೇಗಬೇಗನೆ ಮನೆಯ ಕಡೆಗೆ ನಡೆದು ಕಣ್ಮರೆಯಾದರು. +ಸ್ವಲ್ಪ ಹೊತ್ತಿನಲ್ಲಿಯೆ ಗೌಡರು ಎದ್ದುನಿಂತು, ತಾವು ಕೂತಿದ್ದ ಶಾಲನ್ನು ಎತ್ತಿ ಹೆಗಲಮೇಲೆ ಹಾಕಿಕೊಂಡು “ಏ ಸೇರೆಗಾರ” ಎಂದು ಚೀಂಕ್ರನನ್ನು ನಿರ್ದೇಶಿಸಿ “ಹಗಲು ಉಣ್ಣಕ್ಕೆ ಹೋಗಾಕೆ ಮೊದಲು ಈ ಮರ ಕಡಿಯಾ ಕೆಲಸಾನೆಲ್ಲ ಪೂರೈಸಿ ಹೋಗ್ಬೇಕು. +ಗೊತ್ತಾಯ್ತಾ?” ಎಂದು ಆಜ್ಞಾಪಿಸಿ ಹೊರಾಡುವುದರಲ್ಲಿದ್ದರು. +ಅಷ್ಟರಲ್ಲಿ ತೋಟದ ಮೇಲುಭಾಗದ ಹಳುವಿನಲ್ಲಿ ಏನೋ ಪ್ರಾಣಿ ಓಡುತ್ತಿರುವ ಸದ್ದಾಯಿತು. +ಎಲ್ಲರೂ ಚಕಿತರಾಗಿ ಆ ಕಡೆ ನೋಡುತ್ತಾ ಆಲಿಸುತ್ತಾ ನಿಂತರು. +ಏಡಿ ಹಿಡಿಯಲು ಹೋದವರು ಯಾವುದೋ ಪ್ರಾಣಿಯನ್ನು ಹೆದರೆಬ್ಬಿಸಿದ್ದಾರೆಂದು ಗೌಡರು ಊಹಿಸಿದರು. +ಆ ಸದ್ದು ಕಾಡಿನ ಕಡೆಯಿಂದ ತೋಟದ ಕಡೆಗೇ ಬರುವಂತೆ ತೋರತೊಡಗಿತು. +ಹೆಣ್ಣಾಳುಗಳು ಗಾಬರಿಯಾಗಿ ಅಡಕೆ ಬಾಳೆಯಮರಗಳ ಸಂದಿಯಲ್ಲಿ ಒಟ್ಟಾದರು. +ಮಿಗವೊ ಕಾಡುಕುರಿಯೊ ಒಂಟಿಗ ಹಂದಿಯೊ ಎಂಬ ಸಂದೇಹ ವಿಸ್ಮಯಗಳಿಂದ ಉಳಿದವರು ಅತ್ತಕಡೆ ಕಣ್ಣಾಗಿ ನಿಂತಿದ್ದರು. +“ಹಾಳು ಹುಡುಗ, ಆ ‘ಸಿಟ್ಲುಮಿಂಚ’ ಕಣೋ!” ಎಂದು ಗೌಡರು ಕೂಗಿಕೊಂಡರು. +ಅಡಕೆ ಬಾಳೆ ಮರಗಳ ನಡುವೆ ಮೇಲುಸೊಪ್ಪಿನ ಜಿಗ್ಗನ್ನು ಲರಿಲರಿ ತುಳಿಯುತ್ತಾ ಕಪ್ಪಿಂದ ಕಪ್ಪಿಗೆ ನೆಗೆಯುತ್ತಾ ದೌಡಾಯಿಸಿ ಬರುತ್ತಿದ್ದ ಐತ ಗೌರದನ್ನು ಕಂಡವನೆ ಏದುತ್ತಾ ನಿಂತನು. +ಯಾರಿಗೋ ಏನೋ ಅಪಾಯವಾಗಿರಬೇಕೆಂಬ ಭಯ ಎಲ್ಲರನ್ನೂ ಆವರಿಸಿತು. +ಐತನ ಮೈಯ್ಯೆಲ್ಲ ಕೆಸರು ಸಿಡಿದಿತ್ತು. +ಓಡಿಬರುವ ಅವಸರದಲ್ಲಿ ಕಾಲಿಗೂ ಮೈಗೂ ಮುಳ್ಳುಗೀರಿದ ಕಲೆಗಳು ಕಾಣುತ್ತಿದ್ದುವು. +ಏನು ವಿಷಯ ಎಂದು ಗೌಡರು ಕೇಳಿದ ಪ್ರಶ್ನೆಗೂ ಅವನು ತಕ್ಷಣ ಉತ್ತರಕೊಡಲು ಸಮರ್ಥನಾಗಲಿಲ್ಲ; +ಉಸಿರು ಮೇಲೆ ಕೆಳಗೆ ಆಗುತ್ತಿತ್ತು. +ಅಂತೂ ಏದುತ್ತಲೇ ಹೇಳತೊಡಗಿದ"“ಸಣ್ಣ ಅಯ್ಯ…. +ಓಡು ಅಂದರು…. +ಓಡಿ ಬಂದೆ. +ಐಗಳಿಗೆ ಹೇಳು ಅಂದರು: ಕೋವಿ ತಕ್ಕೊಂಡು ನಾಯಿ ಕರಕೊಂಡು ಬರಬೇಕಂತೆ. +ಒಂದು ಹಂದಿ…. +ದೊಡ್ಡ ಹಂದಿಯಂತೆ! +ಇಲಾತಿ ಸೀಂಗೆಯಲ್ಲಿ ಸೇರಿಕೊಂಡಿದೆ ಅಂಬರು. +ಒಂಟಿಗ ಅಂಬರು! +”ಚೀಂಕ್ರ ಪಿಜಿಣ ಮೊಡಂಕಿಲರು ‘ಹಾಂಗಾರೆ ಒಂದು ಕೈ ಕಾಂಬ ಷಿಕಾರಿಗೆ!” ಎಂದು ಹರ್ಷಿಸತೊಡಗಿದ್ದರು. +ಗೌಡರು ಏನು ಹೇಳುತ್ತಾರೆಯೊ ಎಂದು ಕಾತರರಾಗಿ ವರ ಮುಖ ಕಣ್ಣು ಬಾಯಿಗಳನ್ನೆ ದಿಟ್ಟಿಸುತ್ತಿದ್ದರು. +ಗೌಡರು ಸ್ವಲ್ಪವೂ ಕಾತರರಾಗಲಿಲ್ಲ. +ಅವರ ಮುಖದ ಮೇಲೆ ಒಂದು ಮಂದಸ್ಮಿತ ಆಡತೊಡಗಿತು. +ಅವರಿಗೆ ತಟಕ್ಕನೆ ತಮ್ಮ ಪ್ರಾಯಾಂಕುರಕಾಲದ ಪ್ರಣಯದ ಆಟಗಳ ನೆನಪಾಯಿತು. +ಪೀಂಚಲು ಹತ್ತಿರದಿಂದ ಐತನನ್ನು ದೂರ ಕಳುಹಿಸುವ ಸಲುವಾಗಿಯೆ ಮುಕುಂದಯ್ಯ ಈ ಹೂಟ ಹೂಡಿರಬೇಕೆಂದು ಊಹಿಸಿ ಗದರಿಸಿದರು. +“ಥೂ, ಹುಚ್ಚು ಮುಂಡೆಗಂಡ? +ನಿನಗೆ ಬುದ್ಧಿಯಿಲ್ಲ. +ಬೇಗ ಓಡಿ ಹೋಗಿ ಹೇಳು, ಐಗಳಿಗೆ ಪುರಸತ್ತಿಲ್ಲವಂತೆ, ಈಗ ಬರಾಕೆ ಆಗಾದಿಲ್ಲ ಅಂದ್ರು ಅಂತಾ. +ಏಡಿ ಹಿಡುಕೊಂಡು ಬೇಗ ಬರಾಕೆ ಹೇಳಿದ್ರು ಅನ್ನು. +ಹೂಂ ನಡಿ! +ಓಡು!!”ಐತ ನಿರಾಶನಾಗಿ ಹಿಂದಿರುಗಿ ಓಡುತ್ತಲೆ ಹೋಗಿ ಕಣ್ಮರೆಯಾದನು. +ಬರುವಾಗ ಅವನಲ್ಲಿ ಇದ್ದ ಆತುರದ ವೇಗ ಹೋಗುವಾಗ ಇರಲಿಲ್ಲ. +ಆ ದಿನವೆ ಬೆಳಿಗ್ಗೆ, ಹೊತ್ತು ಚೆನ್ನಾಗಿ ಮೂಡಿದ ಮೇಲೆ, ಸಿಂಬಾವಿ ಹೊಲೆಯರ ಗುತ್ತಿ ನಾಗತ್ತೆ ನಾಗಕ್ಕರನ್ನು ಹಾದಿಯಲ್ಲಿ ಸಂಧಿಸಿ ಹುಲಿಕಲ್ಲು ನೆತ್ತಿಗೆ ಏರುತ್ತಿದ್ದ ಸಮಯವಿರಬಹುದು, ಕೋಣೂರು ಮುಕುಂದಯ್ಯ ಕೈಯಲ್ಲಿ ಎಂದಿನಂತೆ ಚಿಟ್ಟುಬಿಲ್ಲು ಹಿಡಿದು ಮನೆಯಿಂದ ಗುಡ್ಡದ ಕಡೆಗೆ ಅವಸರವಸರವಾಗಿ ಹೊರಡುತ್ತಿದ್ದನು. +ಅವನ ಅಣ್ಣ ರಂಗಪ್ಪಗೌಡರ ಮಗ ತಿಮ್ಮು, ಓದುಬರಹ ಕಲಿಯಲೆಂದು ಕೋಣೂರಿನಲ್ಲಿರುತ್ತಿದ್ದ, ತಿರುಪತಿಗೆ ಹೋಗಿ ಕಣ್ಮರೆಯಾಗಿದ್ದ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರ ಹಿರಿಯ ಮಗ ದೊಡ್ಡಣ್ಣ ಹೆಗ್ಗಡೆಯವರ ಮಗ ಧರ್ಮು ಮತ್ತು ಬೆಟ್ಟಳ್ಳಿ ಕಲ್ಲಯ್ಯಗೌಡರ ಕಿರಿಯ ಮಗ ಕಾಡು, ಇನ್ನೂ ಮೂರು ನಾಲ್ಕು ಹತ್ತಿರದ ಹಳ್ಳಿಯ ಹುಡುಗರೂ ಒಟ್ಟಾಗಿ ಕೋಣೂರು ಮನೆಯ ಕೆಳಗರಡಿಯಲ್ಲಿದ್ದ ಐಗಳು ಅನಂತಯ್ಯನವರ ಕೂಲಿ ಮಠದಲ್ಲಿ ಕುಳಿತಿದ್ದರು, ತಮ್ಮ ಮುಂದೆ ಅಕ್ಷರ ತಿದ್ದಲು ಗೋಡೆಗೆ ಒತ್ತಿ ನೆಲದ ಮೇಲೆ ಹರಡಿದ್ದ ಮಳಲಿನ ಮುಂದೆ! +ಚಿಕ್ಕಯ್ಯ ಕಾಡಿಗೆ ಹೊರಡುತ್ತಿದ್ದುದನ್ನು ನೋಡಿ ತಿಮ್ಮು ತಿದ್ದುವುದನ್ನು ನಿಲ್ಲಿಸಿ ಎದ್ದು ಓಡಿಬಂದನು. +ಒಡನೆಯೆ ಧರ್ಮು ಕಾಡು ಇಬ್ಬರೂ ಅವನನ್ನು ಹಿಂಬಾಲಿಸಿದರು. +ದೂರದ ಸಂಬಂಧಿಗಳಾಗಿ ಮುಕುಂದಯ್ಯನೊಡನೆ ಅಷ್ಟು ಸಲುಗೆ ಇರದಿದ್ದ ಇತರ ಬಾಲಕರು ಹತ್ತಿರಕ್ಕೆ ಓಡಿಬರದಿದ್ದರೂ ಮಾಡುತ್ತಿದ್ದ ಕೆಲಸವನ್ನೆಲ್ಲ ನಿಲ್ಲಿಸಿ, ಓಡಿಹೋದ ಮಿತ್ರರ ಕಡೆ ನೋಡಹತ್ತಿದ್ದರು. +ಅಷ್ಟರಲ್ಲಿ ಮುಕುಂದಯ್ಯ ಗಟ್ಟಿಯಾಗಿ “ಐಗಳೇ” ಎಂದು ಕರೆದನು. +ಒಡನೆಯೆ ಹುಡುಗರೆಲ್ಲ ಹಿಂದಕ್ಕೆ ಓಡಿಹೋಗಿ ಮೊದಲಿನಂತೆ ಕುಳಿತು ಕಾರ್ಯಮಗ್ನರಾದಂತೆ ತೋರಿಸಿಕೊಂಡರು. +“ಹೋಯ್‌, ಯಾರು? +ಮುಕುಂದ ಕರೆದದ್ದಾ?” ಎನ್ನುತ್ತಾ ಅನಂತಯ್ಯ ಮನೆಯೊಳಗಿನಿಂದ ಬಂದರು. +ಮುಕುಂದಯ್ಯ ನಗುತ್ತಾ “ಏನಿಲ್ಲ ಐಗಳೇ, ಅವರೆಲ್ಲ ನನ್ನ ಜೊತೆ ಬರೋದಕ್ಕೆ ಎದ್ದು ಬಿಟ್ಟಿದ್ದರು! +ಅದಕ್ಕೆ ಕೂಗಿದೆ” ಎಂದನು. +“ಎಲ್ಲಿಗೆ ಹೊರಟೆ, ಚಿಟ್ಟುಬಿಲ್ಲು ಹಿಡುಕೊಂಡು?” ಎಂದ ಅನಂತಯ್ಯನವರ ಪ್ರಶ್ನೆಗೆ ಉತ್ತರವನ್ನೂ ಕೊಡದೆ ಮುಕುಂದಯ್ಯ ಗುಡ್ಡವೇರಿ ಹಳುವಿನಲ್ಲಿ ಅಡಗಿ ಹೋಗಿದ್ದನು. +ಚಿಕ್ಕಂದಿನಿಂದ ಮುಕುಂದಯ್ಯನಿಗೂ ಅಕ್ಷರಾಭ್ಯಾಸ ಮಾಡಿಸಿ, ಭಾರತ ರಾಮಾಯಣ ಜೈಮಿಗಳನ್ನು ಓದಿ ಅರ್ಥ ಹೇಳುವಷ್ಟರ ಮಟ್ಟಿನ ವಿದ್ವತ್ತನ್ನೂ ಅವನಿಗೆ ದಯಪಾಲಿಸಿದ್ದ ಅನಂತಯ್ಯಗಳಿಗೆ ತಮ್ಮ ಶಿಷ್ಯನ ವಿಚಾರದಲ್ಲಿ ಅಪಾರ ಮಮತೆಯಿತ್ತು. +ಹೆಮ್ಮೆಯೂ ಇತ್ತು. +ಪ್ರಶಂಸೆಯಿಂದ ಅವನು ಹೋದ ದಿಕ್ಕಿನ ಕಡೆಗೆ ನೋಡುತ್ತಾ ನಿಂತಿದ್ದು, ಸ್ಮೃತಿತರಂಗಮಯವಾದ ಅನೇಕ ಆಲೋಚನಾಪ್ರವಾಹವನ್ನು ಮನಸ್ಸು ದಾಟಿದ ಅನಂತರವೆ ಅವರು ಶಾಲೆಯ ಹುಡುಗರ ಕಡೆಗೆ ತಿರುಗಿದರು. +ಕೋಣೂರಿನಿಂದ ಹಳೆಮನೆಗೆ ಹೋಗುವ ದಾರಿಯಲ್ಲಿ ಅಡ್ಡಲಾಗಿದ್ದ ಕಾಡಿನ ಒಂದು ಸರಲಿನಲ್ಲಿ ತಾನು ಒಡ್ಡಿದ್ದ ಉರುಳನ್ನು ನೋಡಿಕೊಂಡು ಬರುವ ಸಲುವಾಗಿಯೆ ಮುಕುಂದಯ್ಯ ಗುಡ್ಡ ಹತ್ತಿದ್ದನು. +ನ್ಯಾಯವಾಗಿ ಹಿಂದಿನ ದಿನವೇ ಅದನ್ನು ನೋಡಿಕೊಂಡು ಬರಬೇಕಾಗಿತ್ತು. +ಆದರೆ ಗರ್ಭಿಣಿಯಾಗಿ ಈಗಲೊ ಆಗಲೊ ಹೆರಿಗೆಯಾಗುವಂತಿದ್ದ ಅತ್ತಿಗೆಯ ಅಸ್ವಸ್ಥತೆಯ ದೆಸೆಯಿಂದ ಅವನಿಗೆ ಪುರುಸೊತ್ತೆ ದೊರಕಲಿಲ್ಲ. +ಮುಕುಂದಯ್ಯನ ಶೈಶವಪ್ರಜ್ಞೆ ಬಹಿರ್ವಸ್ತುಗಳನ್ನು ಗ್ರಹಿಸಲೂ ಗುರುತಿಸಲೂ ಕಲಿತಂದಿನಿಂದಲೂ ಅವನ ಚಿತ್ತವನ್ನೆಲ್ಲ ಆಕ್ರಮಿಸಿ ತುಂಬಿಬಿಟ್ಟಿದ್ದ ಮಹದ್ ವಸ್ತುವೆಂದರೆ ಮಲೆ, ಕಾಡು! +ಅರಣ್ಯಾಚ್ಛಾದಿತವಾಗಿ ಮೇಘಚುಂಬಿಗಳಾಗಿ ನಿಂತಿರುವ ಗಿರಿ ಶಿಖರ ಶ್ರೇಣಿಗಳ ಮಲೆನಾಡಿನಲ್ಲಿ ಎಲ್ಲಿಯೋ ಕೆಳಗೆ ಒಂದು ಕಣಿವೆಯ ಮೂಲೆಯಲ್ಲಿ ಹೆದರಿ ಹದುಗಿದಂತೆ ಮರಗಳ ನಡುವೆ ಹುದುಗಿರುವ ಮನೆಗಳಲ್ಲಿ ಹುಟ್ಟಿ ಕಣ್ಣು ಬಿಡುವ ಮಕ್ಕಳ ಪಾಲಿಗೆ ಆಕಾಶ ಕೂಡ ಕಾಡಿನಷ್ಟು ವಿಸ್ತಾರಭೂಮವಾಗಿ ಕಾಣಿಸುವುದಿಲ್ಲ. +ಆಕಾಶಕ್ಕಿಂತಲೂ ಕಾಡೆ ಸರ್ವವ್ಯಾಪಿಯಾಗಿ ತನ್ನ ಅಧಿಕಾರವನ್ನು ಸ್ಥಾಪಿಸಿ ಭೂಮಂಡಲವನ್ನೆಲ್ಲ ವಶಪಡಿಸಿಕೊಂಡಂತಿರುತ್ತದೆ. +ಪೃಥ್ವಿಯನ್ನೆಲ್ಲ ಹಬ್ಬಿ ತಬ್ಬಿ ಆಳುವ ಕಾಡಿನ ದುರ್ದಮ್ಯ ವಿಸ್ತೀರ್ಣದಲ್ಲಿ ಎಲ್ಲಿಯೊ ಒಂದಿನಿತಿನಿತೆ ಅಂಗೈಯಗಲದ ಪ್ರದೇಶವನ್ನು ಮನುಷ್ಯ ಗೆದ್ದುಕೊಂಡು ತನ್ನ ಗದ್ದೆ  ತೋಟ ಮನೆಗಳನ್ನು ರಚಿಸಿಕೊಂಡಿದ್ದಾನೆ, ಅಷ್ಟೆ. +ಅದೂ ಕೂಡ ಅವನು ನಿಚ್ಚವೂ ಜಾಗರೂಕನಾಗಿ ತಾನು ಗೆದ್ದುಕೊಂಡಿದ್ದನ್ನು ನಿರಂತರವೂ ರಕ್ಷಿಸಿಕೊಳ್ಳುತ್ತಾ ಹೋಗುವುದನ್ನು ಮರೆತನೆಂದರೆ, ಬಹುಬೇಗನೆ ಹಳು ಬೆಳೆದು ಮತ್ತೆ ಅದು ಕಾಡಿನ ವಶವಾಗಿ ಬಿಡುತ್ತದೆ. +ಮುಕುಂದಯ್ಯನಿಗಂತೂ ಕಾಡು ಎಂದರೆ ದೇವರಿಗೆ ಸರಿಸಮಾನವಾಗಿತ್ತು. +ಅಷ್ಟೊಂದು ಭಯಮಿಶ್ರಿತ ಭಕ್ತಿ ಅದರಲ್ಲಿ. +ಅವನಿಗೆ ಅದರ ಮುಳ್ಳು, ಕಲ್ಲು, ಕೊರಕಲು, ಏರು, ಇಳಿತ, ಹುಲಿ, ಹಂದಿ, ಹಾವು, ಚೇಳು, ನುಸಿ, ಇಂಬಳ ಇವೆಲ್ಲದರಿಂದ ಒದಗುವ ತೊಂದರೆಯ ಅನುಭವವಿತ್ತು. +ಹಾಗೆಯೆ ಹಕ್ಕಿ, ಹೂವು, ಹಣ್ಣು, ಚಿಟ್ಟೆ, ಜೇನು, ಬೇಟೆ ಇತ್ಯಾದಿಗಳಿಂದ ಒದಗುವ ಆನಂದದ ಅರಿವೂ ಇತ್ತು. +ಮಲೆಕಾಡಿನ ಭವ್ಯತೆಯ ಅವನ ಅನುಭವವನ್ನು ಹೆದರಿಕೆ ಎಂದು ವರ್ಣಿಸಲಾಗುತ್ತಿರಲಿಲ್ಲ. +ಅವನು ಚಿಕ್ಕಂದಿನಲ್ಲಿ ಐತ ಮೊದಲಾದವರೊಡನೆ ಚಿಟ್ಟುಬಿಲ್ಲು ಹಿಡಿದು ಕಾಡಿನಲ್ಲಿ ತಿರುತ್ತಿದ್ದಂತೆ ತರುಣನಾದ ಮೇಲೆಯೂ ಕೋವಿ ಹಿಡಿದು ಒಬ್ಬನೆ ದಟ್ಟ ನಡುಗಾಡಿನಲ್ಲಿಯೂ ಧೈರ್ಯದಿಂದಲೆ ಅಲೆದಾಡಿದ್ದನು ಮತ್ತು ಅಲೆದಾಡುತ್ತಲೂ ಇದ್ದನು. +ಕೋಣೂರು ಹಳೆಮನೆಗಳ ನಡುವೆ ಇದ್ದ ಕಾಡಿನ ಸರಲನ್ನು, ತಾನು ಕಾಡಿನಲ್ಲಿ ಹೋಗುತ್ತಿದ್ದೇನೆ ಎಂಬ ವಿಶೇಷ ಪ್ರಜ್ಞೆ ಏನೂ ಇಲ್ಲದೆ, ಸೇರಿದ ಅವನಿಗೆ ತಾನು ಒಡ್ಡಿದ್ದ ಉರುಳಿನ ಜಾಗ ಫಕ್ಕನೆ ಗೊತ್ತು ಸಿಕ್ಕಲಿಲ್ಲ. +ಅಲ್ಲಿಯೆ ಎಲ್ಲಿಯೊ ಹಳುವಿನ ನಿಬಿಡತೆಯಲ್ಲಿ ಕಣ್ಣು ತಪ್ಪಿರಬೇಕೆಂದು ಭಾವಿಸಿ ಹುಡುಕಿದನು. +ಒಂದು ಕಡೆ ತಿಪ್ಪುಳು ಉದುರಿದ್ದು ಕಾಣಿಸಿತು. +ಮತ್ತೊಂದು ಕಡೆ ದೊಡ್ಡ ಗರಿಗಳೆ ಬಿದ್ದಿವೆ! +ಇನ್ನೂ ಮುಂದೆ ಹೋಗು ನೋಡುತ್ತಾನೆ. + ತಾನು ಒಡ್ಡಿದ್ದ ಉರುಳೆ ಸ್ಥಳಾಂತರ ಹೊಂದಿ ಬಿದ್ದಿದೆ! +ಉರುಳಿಗೆ ಸಿಕ್ಕಿದ್ದ ಒಂದು ಚಿಟ್ಟುಗೋಳಿಯ ತಲೆ, ಕಾಲು, ರೆಕ್ಕೆಯ ತುದಿ ಭಾಗಗಳು ಮಾತ್ರ ಬಿದ್ದಿವೆ! +“ಅಯ್ಯೋ ನಿನ್ನೆಯೆ ಬಂದಿದ್ದರೆ! +ಹಾಳು ನರಿಯೊ, ಮುಂಗುಸಿಯೊ, ಕಬ್ಬೆಕ್ಕೊ ರಾತ್ರಿ ತಿಂದುಹಾಕಿಬಿಟ್ಟಿದೆ! +ಕುಲನಾಶನಾಗಾಕೆ, ನನ್ನ ಉರುಳನ್ನೂ ಕಡಿದು ತುಂಡು ಮಾಡಿದೆಯಲ್ಲಾ” ಎಂದು ಶಪಿಸಿದನು, ಸಿಟ್ಟಿನಲ್ಲಿ. +ಇದ್ದಕ್ಕಿದ್ದಂತೆ ನಾಯಿ ಬೊಗಳಿದಂತಾಗಿ ಮುಕುಂದಯ್ಯ ತಟಕ್ಕನೆ ಎಚ್ಚೆತ್ತವನಂತೆ ನಿಮಿರಿನಿಂತನು. +ಕಾಡಿನ ನಡುವೆ ನಾಯಿಯ ಬೊಗಳಿಕೆ ಎಂದರೆ ಸಾಹಸಕ್ಕೆ ನಾಂದಿ ಹಾಡಿದ ಅನುಭವ, ಬೇಟೆಗಾರರಿಗೆ. +ಅವನ ಮೈಯೆಲ್ಲ ಬಿಸಿಯಾಯಿತು. + ಅಭ್ಯಾಸಬಲದಿಂದ ಚಿಟ್ಟುಬಿಲ್ಲಿಗೆ ಕಲ್ಲುಹರಳು ಹೂಡಿ ನಿಮಿರಿ ನಿಂತು, ಕಣ್ಣರಳಿಸಿ ನೋಡತೊಡಗಿದನು. +ಬೊಗಳುತ್ತಿದ್ದ ನಾಯಿ ಹಳು ಅಲ್ಲಾಡಿಸುತ್ತಾ ತಾನಿದ್ದ ಕಡೆಗೆ ಇಳಿದು ಬರುತ್ತಿದ್ದುದು ಗೊತ್ತಾಯಿತು. +ಆದರೆ ಯಾವ ನಾಯಿ? +ಯಾರ ನಾಯಿ? +ತಾನು ಬರುವಾಗ ತಮ್ಮ ಮನೆಯ ಯಾವ ನಾಯಿಯೂ ತನ್ನನ್ನು ಹಿಂಬಾಲಿಸದಂತೆ ತನಗಿಂತಲೂ ಎಚ್ಚರಿಕೆಯಿಂದ ಬಂದಿದ್ದನು. +ಏಕೆಂದರೆ ಜೊತೆ ಬಂದ ನಾಯಿಗಳು ತನಗಿಂತಲೂ ಮುಂದಾಗಿ ಹಳು ನುಗ್ಗಿ ಹೋಗಿ ಉರುಳಿಗೆ ಸಿಕ್ಕಿದ್ದ ಕೋಳಿಗಳನ್ನು ಕಚ್ಚಿಕೊಂಡು ಓಡಿಹೋಗಿದ್ದ ಪೂರ್ವಾನುಭವ ಅವನಿಗೆ ಸಾಕಷ್ಟಿತ್ತು. +ನಾಯಿ ಹಳುವಿನಲ್ಲಿ ಸಾಕಷ್ಟು ಸಮೀಪಕ್ಕೆ ಮುಂದುವರಿದು ತುಸು ಬಯಲಾಗಿದ್ದ ಜಾಗದಲ್ಲಿ ಕಾಣಿಸಿಕೊಂಡಾಗ ನೋಡುತ್ತಾನೆ. + ಸಿಂಬಾವಿ ಗುತ್ತಿಯ ನಾಯಿ-ಹುಲಿಯ! +ಅದರ ಗುರುತು ಎಲ್ಲಿದ್ದರೂ ಸಿಕ್ಕುತ್ತಿತ್ತು ಮುಕುಂದಯ್ಯನಿಗೆ. +ಮುಕುಂದಯ್ಯನ ಗುರುತೂ ಅದಕ್ಕೆ ಎಲ್ಲಿದ್ದರೂ ಸಿಕ್ಕುತ್ತಿದ್ದುದರಲ್ಲಿ ಸಂಶಯವಿಲ್ಲ. +ಆದ್ದರಿಂದಲೆ ಅವನು ಅದರ ಹೆಸರು ಹಿಡಿದು ಕರೆದೊಡನೆಯೆ ತನ್ನ ರೋಷವನ್ನೆಲ್ಲ ತೆಕ್ಕನೆ ತ್ಯಜಿಸಿ, ತಟಕ್ಕನೆ ಸಂತೋಷಕ್ಕೆ ಮುಗ್ಗರಿಸಿದಂತೆ ಮುನ್ನುಗ್ಗಿ ಹಳು ಮುರಿಯುವಂತೆ ನೆಸೆನೆಸೆದು ಬಂದು, ‘ಹಚೀ ಹಚೀ ಏ ಹುಲಿಯಾ!’ ಎಂದು ಗದರಿಸುತ್ತಿದ್ದರೂ ಲೆಕ್ಕಿಸದೆ ಮುಕುಂದಯ್ಯನ ಎದೆಯವರೆಗೂ ತನ್ನ ಮುಂಗಾಲು ಹಾಕಿ ಹಿಂಗಾಲ ಮೇಲೆ ನಿಂತು ಕುಂಯಿಗುಡುತ್ತಾ ತನ್ನ ಮೂತಿಯಿಂದ ಅವನ ಮುಖದವರೆಗೂ ಬಾಗಿ ಅವನ ಬಾಯನ್ನೆ ನೆಕ್ಕಿಬಿಟ್ಟಿದ್ದು! +ಮುಕುಂದಯ್ಯ ಆ ದೈತ್ಯಗಾತ್ರದ ಬಲಿಷ್ಠ ಪ್ರಾಣಿಯ ಸ್ನೇಹಾಘಾತಕ್ಕೆ ಸ್ವಲ್ಪ ತತ್ತರಿಸಿಯೆ ನಿಲ್ಲಬೇಕಾಯಿತು. +“ಥೂ!ನಿನ್ನ ಹಾಳಾಗ!” ಎಂದು ಎರಡು ಕೈಯಿಂದಲೂ ಅದರ ಕುತ್ತಿಗೆ ಹಿಡಿದು ದಬ್ಬಿ ತಳ್ಳಿದಾಗ ಅದು ಹಿಂದಕ್ಕೆ ಬೀಳುವಂತಾಗಿ ನಿಂತು ಅವನ ಮೋರೆಯನ್ನೇ ನೋಡುತ್ತಾ ರಭಸದಿಂದ ಬಾಲವಳ್ಳಾಡಿಸತೊಡಗಿತು. +ಮುಕುಂದಯ್ಯನ ಎದೆಯ ಮೇಲೆ ಬಟ್ಟೆ ತುಂಬಾ ನಾಯಿಯ ಹೆಜ್ಜೆಯ ಕೆಸರುಮುದ್ರೆ ಒತ್ತಿತ್ತು. +ನಾಯಿ ನೆಕ್ಕಿದ್ದ ಬಾಯನ್ನು ಒರಸಿಕೊಂಡು, ಎದೆಯ ಮೇಲಿದ್ದ ಹೆಜ್ಜೆಯ ಕೆಸರನ್ನು ತಿಕ್ಕಿದನು. +ಅದು ಮತ್ತಷ್ಟು ಹಸರಿಸಿತಷ್ಟೆ! +ಫಕ್ಕನೆ ನೋಡಿಕೊಳ್ಳುತ್ತಾನೆ. +ತನ್ನ ಕೈಯಲ್ಲಿ ರಕ್ತದ ಕಲೆ! +ಮತ್ತೆ ನೋಡಿದರೆ, ನಾಯಿಯ ಮೂತಿಯಲ್ಲೂ ರಕ್ತ ಹಿಡಿದಿದೆ. +ಕತ್ತಲೆ ಹೆಪ್ಪುಗಟ್ಟಿ ಕಗ್ಗಲ್ಲಾದ ಇರುಳನ್ನೆ ಕಡೆದು ಮಾಡಿದಂತೆ ಕರ್ರಗೆ ನಿಂತಿದ್ದ ನಾಯಿಯ ಬಾಯಿಯ ನಸು ಬಿಳುಪಾದ ಜಾಗದಲ್ಲಿ ಪ್ರಾರಂಭವಾದ ನೆತ್ತರಿನ ಕಲೆಗಳು, ಕಣ್ಣಿಟ್ಟು ನೋಡಿದಾಗ, ಅದರ ಕಿವಿಯ ಹತ್ತಿರವೂ ಕುತ್ತಿಗೆಯ ಮೇಲೆಯೂ ಕಾಣಿಸಿಕೊಂಡುವು. +ಹುಲಿಯ ಬರ್ಕವನ್ನೊ ಮೊಲವನ್ನೊ ಕಬ್ಬೆಕ್ಕನ್ನೊ ಮುಂಗಿಸಿಯನ್ನೊ ಬೇಟೆಯಾಡಿ ಹಿಡಿದು ತಿಂದಿರಬೇಕೆಂದು ಮುಕುಂದಯ್ಯ ಊಹಿಸಿ, ಮೆಚ್ಚಿಗೆಯಿಂದ ಅದರ ತಲೆ ಸವರಿದನು. +ಪಾಪ!ಅವನಿಗೆ ಹೇಗೆ ಗೊತ್ತಾಗಬೇಕು, ಕೋಣೂರು ಕಾಡಿನಲ್ಲಿ ತಾನು ಒಡ್ಡಿದ್ದ ಉರುಳಿಗೆ ಸಿಕ್ಕಿಬಿದ್ದ ಚಿಟ್ಟುಗೋಳಿಯನ್ನು ದೂರದೂರಿನ ಸಿಂಬಾವಿಯ ನಾಯಿ ಅಷ್ಟು ಹೊತ್ತಾರೆಮುಂಚೆ ಬಂದು ತಿನ್ನುತ್ತದೆ ಎಂದು? +ಮುಕುಂದಯ್ಯನಿಗೂ ಹುಲಿಯನಿಗೂ ಇದ್ದ ಪರಸ್ಪರ ಪರಿಚಯ ಇಂದು ನಿನ್ನೆಯದಾಗಿರಲಿಲ್ಲ. +ಹುಲಿಯ ತನ್ನ ಮರಿಯತನವನ್ನು ದಾಟಿ ಬೇಟೆಗಾರರೊಡನೆ ಕಾಡಿಗೆ ಹೋಗಲು ಪ್ರಾರಂಭ ಮಾಡಿದಾಗಲೆ ಅದರ ಶಕ್ತಿ, ಯುಕ್ತಿ, ಧೈರ್ಯ, ವೇಗ, ಬುದ್ದಿವಂತಿಕೆ ಇವುಗಳ ವಿಚಾರವಾಗಿ ಕಥೆ ಕಥೆಗಳೆ ಹಳ್ಳಿಯಿಂದ ಹಳ್ಳಿಗೆ ಹಬ್ಬಿಬಿಟ್ಟಿತ್ತು. +ಸಿಂಬಾವಿ ಗುತ್ತಿ ಸ್ವತಃ ಹಳು ನುಗ್ಗಿ ಭಾಗವಹಿಸಿದ್ದ ದೊಡ್ಡ ಬೇಟೆಗಳಲ್ಲಿ ಬಿಲ್ಲಿಗೆ ನಿಂತಿದ್ದ ಮುಕುಂದಯ್ಯನಿಗೆ ಹುಲಿಯನ ಹೆಚ್ಚುಗಾರಿಕೆಯ ಅನುಭವ ಪ್ರತ್ಯಕ್ಷವಾಗಿಯೆ ದೊರಕಿತ್ತು. +ಒಮ್ಮೆ ಒಂದು ಒಂಟಿಗ ಹಂದಿಯನ್ನು ಕಾಡಿನಲ್ಲಿ ಅತ್ತ ಇತ್ತ ಹೋಗದಂತೆ ತಡೆದೂ ತಡೆದೂ ಅಟ್ಟಿಅಟ್ಟಿ ತಾನು ನಿಂತಿದ್ದ ಬಿಲ್ಲಿಗೆ ಸರಿಯಾಗಿ ಸೋವಿ ಎಬ್ಬಿದುದರಿಂದಲೆ ತಾನು ಅದಕ್ಕೊಂದು ಗುಂಡು ಹೊಡೆಯಲು ಸಾಧ್ಯವಾಗಿತ್ತು. +ಆ ಒಂಟಿಗನ ಹಿಂಗಾಲ ತೊಡೆಗೆ ಗುಂಡು ಬಿದ್ದು ಗಾಯಗೊಂಡರೂ ಅದು ಮುನ್ನುಗ್ಗಿ ಮುಂದಿನ ಕಾಡಿಗೆ ತಪ್ಪಿಸಿಕೊಂಡು ಹೋಗುತ್ತಿದ್ದುದನ್ನು ಅಡ್ಡಗಟ್ಟಿ ಹಸಲವರು ಮಿಣಿಬಲೆ ಒಡ್ಡಿದ್ದ ಕಂಡಿಗೇ ಅದನ್ನು ಎಬ್ಬಿತ್ತು. +ಆ ದಡಿಗಬಲೆಗೆ ಸಿಕ್ಕಿದ್ದ ಒಂಟಿಗನನ್ನು ಭರ್ಜಿಯವರು ಓಡಿಬಂದು ತಿವಿಯುವ ಮುನ್ನವೆ ಹುಲಿಯ ಅದರ ಮೇಲೆ ಬಿದ್ದು ಕೋರೆಯಿಂದ ತಿವಿಸಿಕೊಂಡು ಹಲವು ದಿನಗಳವರೆಗೆ, ಸಿಂಬಾವಿಗೆ ಹಿಂತಿರುಗಲು ಸಾಧ್ಯವಾಗದೆ, ಕೋಣೂರಿನಲ್ಲಿಯೆ ಮುಕುಂದಯ್ಯನ ಶುಶ್ರೂಷೆಗೆ ಋಣಿಯಾಗಿತ್ತು. +ಗಾಯವೆಲ್ಲ ಮಾಯ್ದಮೇಲೆ ಗುತ್ತಿ ಅದನ್ನು ಕರೆದುಕೊಂಡು ಹೋಗಲು ಬಂದಾಗ ಅದು ಅವನ ಮೇಲೆ ತೋರಿದ ಅಕ್ಕರೆ ವಿಶ್ವಾಸ ಸ್ವಾಮಿಭಕ್ತಿಯನ್ನು ಕಂಡು ಎಲ್ಲರೂ ಬೆರಗಾಗಿದ್ದರು. +ಆದರೆ ಮುಕುಂದಯ್ಯನಿಗೆ ಹುಲಿಯನ ಮೇಲೆ ಭಾರಿ ಮಮತೆ ಹುಟ್ಟಿಬಿಟ್ಟಿದ್ದರಿಂದ ಅದನ್ನು ತನಗೇ ಕೊಟ್ಟು, ಕೋಣೂರಿನಲ್ಲಿಯೆ ಬಿಟ್ಟ ಹೋಗಬೇಕೆಂದು ಗುತ್ತಿಯನ್ನು ಪರಿಪರಿಯಾಗಿ ಪೀಡಿಸಿದನು. +ಹೊಲೆಯ ತುಂಬ ಇಕ್ಕಟ್ಟಿಗೆ ಸಿಕ್ಕಿಕೊಂಡನು. +ಮೇಲುಜಾತಿಯವರೂ ಒಡೆಯರೂ ದೊಡ್ಡ ಮನುಷ್ಯರೂ ಆದ ಕೋಣೂರು ರಂಗಪ್ಪಗೌಡರ ತಮ್ಮ ಹುಡುಗನಾಗಿದ್ದರೇನಂತೆ? +ಅವನ ಮಾತಿಗೆ ಯಃಕಶ್ಚಿತ ಹೊಲೆಯ ಬೆಲೆ ಕೊಡದಿರುವುದಕ್ಕಾಗುತ್ತದೆಯೆ? +ಗೌರವದಿಂದ ನಡೆದುಕೊಳ್ಳದಿರಲು ಸಾಧ್ಯವೆ? +ಅದರಲ್ಲಿಯೂ ಮುಕುಂದಯ್ಯನಂತಹ ಸರಳನ್ನೂ ಸ್ನೇಹಪರನೂ ಆದ ವ್ಯಕ್ತಿಯ ವಿಚಾರದಲ್ಲಿ? +ಆತನೇನು ಆಜ್ಞೆ ಮಾಡುತ್ತಿಲ್ಲ; +ಬೇಡುತ್ತಿದ್ದಾನೆ ಹೊಲೆಯನ ಮುಂದೆ ಅಂಗಲಾಚುತ್ತಿದ್ದಾನೆ! +ಒಂದು ಕರಿಯ ನಾಯಿಗಾಗಿ! +ಗುತ್ತಿ ಕಣ್ಣೀರು ತುಂಬಿ ಗದ್ಗದಸ್ವರದಿಂದ ಒಪ್ಪಿಕೊಳ್ಳಬೇಕಾಯಿತು. +ಅದು ನಾಯಿಗೆ ಹೇಗೆ ಗೊತ್ತಾಗಬೇಕು? +ಕಂಬಕ್ಕೆ ಕಟ್ಟಿದ್ದ ಹುಲಿಯನನ್ನು ತಲೆ ಸವರಿ ಮುದ್ದಾಡಿ ಗುತ್ತಿ ಸಿಂಬಾವಿಯ ಕಡೆಗೆ ಹೊರಟನು. +ಮುಕುಂದಯ್ಯ ಅವನು ಬೇಡವೆಂದರೂ ಕೊಟ್ಟಿದ್ದ ಒಂದು ಹೊಸ ಹೆಗ್ಗಂಬಳಿ, ಒಂದು ಹಳೆಯದಾದರೂ ಚೆನ್ನಾಗಿದ್ದ ಕಸೆ ಅಂಗಿ, ಒಂದಷ್ಟು ಎಲೆ ಅಡಿಕೆ ಹೊಗೆಸೊಪ್ಪು, ಒಂದು ರೂಪಾಯಿ-ಇವುಗಳನ್ನು ಹೊತ್ತು ಒಂದು ಮೈಲಿ ಹೋಗುವುದರೊಳಗೆ ಗುತ್ತಿಗೆ ಮುಂದಕ್ಕೆ ಅಡಿಯಿಡಲಾಗಲಿಲ್ಲ. +ಏನೋ ಸುಸ್ತು!ಏನೋ ಸಂಕಟ! +ಯಾರನ್ನೋ ಅತ್ಯಂತ ಪ್ರಿಯತಮರನ್ನು ಅಗಲಿದಂತೆ ಎದೆ ಬೇಗೆ! +ಹಾದಿಯ ಪಕ್ಕದಲ್ಲಿ ಉಸ್ಸೆಂದು ಕುಳಿತು, ಕಾಡಿನ ನಡುವೆ ಯಾರೂ ನೋಡುವುದಿಲ್ಲವೆಂದು ಧೈರ್ಯ ಮಾಡಿಕೊಂಡು, ಬಿಕ್ಕಿ ಬಿಕ್ಕಿ ಅತ್ತುಬಿಟ್ಟನು. +ಮುಕುಂದಯ್ಯನಿಗೆ ಯಾರೋ ಹೇಳಿದ್ದರು, ನೆಲ ಸುಟ್ಟು, ಆ ಸುಟ್ಟ ಸ್ಥಳದಲ್ಲಿಯೆ ಬೆಲ್ಲ ಬೆರಸಿದ ಅನ್ನ ಹಾಕಿ ತಿನ್ನುವಂತೆ ಮಾಡಿದರೆ, ಎಂತಹ ನಾಯಿಯಾದರೂ ತನ್ನ ಹಳೆಯ ಒಲವನ್ನೆಲ್ಲಾ ಮರೆತುಬಿಡುತ್ತದೆ, ಮನೆ ಬಿಟ್ಟು ಹೋಗುವುದಿಲ್ಲ ಎಂದು. +ಗುತ್ತಿ ಒಪ್ಪಿ, ಹುಲಿಯನನ್ನು ತನಗೊಪ್ಪಿಸಿ ಹೋದ ಮೇಲೆ, ಕಟ್ಟಿದ್ದ ಸರಪಳಿಯನ್ನು ತುಯ್ದು ಜಗ್ಗಿಸಿ ಎಳೆದು, ಗುತ್ತಿ ಹೋದಕಡೆ ಮುಖಮಾಡಿ ರೋದಿಸುವಂತೆ ಊಳಿಡುತ್ತಿದ್ದ ಹುಲಿಯನನ್ನು ನಾನಾ ರೀತಿಯಿಂದ  ಸಮಾಧಾನಪಡಿಸಿ, ಕೊನೆಗೆ ನೆಲ ಸುಟ್ಟು ಬೆಲ್ಲದನ್ನ ಹಾಕುವ ಉಪಾಯವನ್ನು ಯೋಚಿಸಿದನು. +ಅಷ್ಟರಲ್ಲಿ ನೋಡುತ್ತಾನೆ: ಗುತ್ತಿ!ಮತ್ತೆ ಹಿಂತಿರುಗಿ ಬಂದಿದ್ದಾನೆ! +‘ಯಾಕೆ?’ ಎಂದು ಕೇಳಿದರೆ ಮಾತಾಡದೆ, ಉತ್ತರರುಪವಾಗಿ, ಮುಕುಂದಯ್ಯ ಕೊಟ್ಟಿದ್ದ ಸಾಮಾನುಗಳನ್ನೆಲ್ಲ, ರೂಪಾಯಿಯೂ ಸೇರಿ, ಹುಲಿಯನ ಮುಂದೆ ಇಟ್ಟು ಕೈಮುಗಿದು ನಿಂತುಬಿಟ್ಟನು. +ರಂಗಪ್ಪಗೌಡರಾದಿಯಾಗಿ ಐಗಳೂ ಮನೆಯವರೂ ಎಲ್ಲರೂ ಮನಕರಗಿ ನಾಯಿಯನ್ನು ಗುತ್ತಿಗೆ ಕೊಟ್ಟು ಬಿಡುವಂತೆ ಮುಕುಂದಯ್ಯನಿಗೆ ಹೇಳಿದರು. +ಆದರೆ ಮುಕುಂದಯ್ಯನಿಗೆ ಮನಸ್ಸಿಲ್ಲ. +ಅವನ ಕಣ್ಣು ತೇವವಾಗತೊಡಗಿತ್ತು. +ಅದನ್ನು ಗಮನಿಸಿದ ಗುತ್ತಿ ಒಡೆಯರ ದೈನ್ಯಕ್ಕೆ ಮನಸೋತು, ‘ನನಗೆ ನಾಯಿಯನ್ನು ಕೊಡದಿದ್ದರೂ ಚಿಂತೆಯಿಲ್ಲ, ಅದನ್ನು ಮಾರಿಬಿಟ್ಟೆ ಎಂದು ನನ್ನ ಮನಸ್ಸಿಗೆ ಇಸ್ಸಿ ಆಗಬಾರದು; + ಆದ್ದರಿಂದ ನಿಮ್ಮ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತೇನೆ; + ಈ ಸಾಮಾನನ್ನೆಲ್ಲ ಹಿಂದಕ್ಕೆ ತೆಗೆದುಕೊಳ್ಳಿ!’ ಎಂದು ತಟಕ್ಕನೆ ಹಿಂದಿರುಗಿ ಅಲ್ಲಿ ನಿಲ್ಲದೆ ಹುಲಿಯನ ಊಳನ್ನೂ ಗೋಳನ್ನೂ ಇನಿತೂ ಗಮನಿಸದವನಂತೆ ನಡೆದೇ ಬಿಟ್ಟನು. +ಗುತ್ತಿ ಹೋದ ಮೇಲೆ ಮುಕುಂದಯ್ಯನ ಮನಸ್ಸಿಗೆ ಸಮಾಧಾನವಾಯಿತು. +ನಾಯಿ ಇನ್ನು ಶಾಶ್ವತವಾಗಿ ತನ್ನದಾಯಿತು ಎಂದು. +ಆದರೆ ತುಸು ಹೊತ್ತಿನಲ್ಲಿಯೆ ನಾಯಿ ಮೌನವಾಗಿ ಚಿಂತಾಕ್ರಾಂತವಾಗಿ ದುಃಖಿಸುವಂತೆ, ಗುತ್ತಿ ಹೋದಕಡೆಯೆ ಕಣ್ಣಾಗಿ ಕುಳಿತಿದ್ದುದನ್ನು ಕಂಡಾಗ, ಹೊಲೆಯನ ವರ್ತನೆ ತನ್ನ ವರ್ತನೆಗಿಂತಲೂ ಉದಾತ್ತವಾಗಿ ತೋಡತೊಡಗಿ, ಮನಸ್ಸು ಚುಚ್ಚಿದಂತಾಯಿತು. +ಒಲಿದ ಹೃದಯಗಳನ್ನು ಬಲಾತ್ಕಾರವಾಗಿ ಬೇರ್ಪಡಿಸುವಷ್ಟು ವ್ಯಥೆಯಾಯಿತು. +ಸರಪಳಿ ಬಿಚ್ಚಿ ಬಿಟ್ಟುಬಿಡಲು ಮನಸ್ಸಾಯಿತು. +ಗುತ್ತಿಯ ಹಿಂದೆ ಹೋದರೆ ಹೋಗಲಿ ಎಂದುಕೊಂಡನು. +ಆದರೆ ಅವನ ಮೋಹ ಇನ್ನೂ ಪೂರ್ತಿಯಾಗಿ ವಿವೇಕವಶವಾಗಿರಲಿಲ್ಲ. +ನೆಲ ಸುಟ್ಟು ಬೆಲ್ಲ ಹಾಕಿದರೆ ಎಲ್ಲ ಮರೆತುಹೋಗಿ ಸೇರಿದ ಮನೆಯನ್ನು ಬಿಡುವುದಿಲ್ಲವಂತೆ; + ಅದನ್ನೂ ಮಾಡಿ ನೋಡುತ್ತೇನೆ. +ಆಮೇಲೆ ತಾನಾಗಿ ನಿಂತರೆ ನಿಲ್ಲಲಿ, ಹೋದರೆ ಹೋಗಲಿ ಎಂದು ನಿಶ್ಚಯಿಸಿ, ಒಂದು ಕಡೆ ಬಿಳಿಹುಲ್ಲು ಹಾಕಿ, ಬೆಂಕಿ ಹೊತ್ತಿಸಿ, ಆ ಬಿಸಿಜಾಗದಲ್ಲಿ ಬೆಲ್ಲದ ಜೋನಿಯನ್ನು ಇಟ್ಟು, ನಾಯಿಯನ್ನು ಕಂಬದಿಂದ ಬಿಚ್ಚಿ ಅದರ ಬಳಿಗೆ ಕಟ್ಟಿದನು. +ಆದರೆ ನಾಯಿ ಅದನ್ನು  ಮೂಸಿನೋಡಿತೇ ಹೊರತು ನೆಕ್ಕಲಿಲ್ಲ. +ಏನಾಶ್ಚರ್ಯ!ಅಂತಹ ಸೊಗಸಾದ ಬೆಲ್ಲ! +ಏನು ಸುವಾಸನೆ ಬರುತ್ತಿದೆ, ತನ್ನ ಮೂಗಿಗೇ? +ತನಗೇ ತಿಂದು ಬಿಡೋಣ ಎನ್ನಿಸುತ್ತಿದೆ! +ಆದರೆ ನಾಯಿ ಮುಟ್ಟಲಿಲ್ಲ! +ಮುಕುಂದಯ್ಯನಿಗೆ ಮತ್ತೆ ಆಶಾಭಂಗವಾಯಿತು. +ಸ್ವಲ್ಪ ಹೊತ್ತಾದ ಮೇಲೆ, ಹಸಿವೆಯಾಗಿ ತಿಂದರೂ ತಿನ್ನಬಹುದು ಎಂದು ಕೊಂಚ ಅನ್ನವನ್ನೂ ತಂದು ಆ ಬೆಲ್ಲಕ್ಕೆ ಕಲಸಿದನು. +ಆಗಲೂ ನಾಯಿ ಸುಮ್ಮನೆ ಕೂತಿತ್ತು. +ನೊಣಗಳು ಮಾತ್ರ ಬೆಲ್ಲದನ್ನಕ್ಕೆ ಗೊಂಯ್ಯೆಂದು ಮುತ್ತಿದ್ದುವು! +ಇನ್ನೂ ಸ್ವಲ್ಪ ಹೊತ್ತು ಬಿಟ್ಟು ಬಂದು ನೋಡಿದಾಗ ಬೆಲ್ಲ ಅಲ್ಲಿರಲಿಲ್ಲ. +ಹುಲಿಯನೇ ತಿಂದಿತೋ ಅಥವಾ ಇನ್ನಾವುದಾದರೂ ತಮ್ಮ ನಾಯಿಗಳಲ್ಲಿ ಒಂದು ಅದನ್ನು ಕಬಳಿಸಿತೋ ಎಂದು ಸಂದೇಯವಾಯಿತು, ಮುಕುಂದಯ್ಯನಿಗೆ. +‘ಇನ್ನಾವ ನಾಯಿಗೆ ಹುಲಿಯನ ಹತ್ತಿರ ಹೋಗಲು ಎದೆ ಬಂದೀತು? +ಹುಲಿಯನ್ನೇ ತಿಂದಿರಬೇಕು’ ಎಂದು ನಿಶ್ಚಯಿಸಿ, ಅವನಿಗೆ ಹರ್ಷವಾಗಿ ಹುಲಿಯನ ತಲೆ ನೇವರಿಸಿ ಮುದ್ದು ಮಾಡಿದನು. +ಅದೂ ಅವನ ಕಡೆ ನೋಡಿ ಕೃತಜ್ಞತೆಗೆ ಎಂಬಂತೆ ಬಾಲವಲ್ಲಾಡಿಸಿತು. +“ಗೆದ್ದೆ!” ಎಂದುಕೊಂಡನು ಮುಕುಂದಯ್ಯ. +ತನ್ನ ಧೈರ್ಯವನ್ನು ಒರೆಗೆ ಹಚ್ಚಲು ಸಿದ್ಧನಾಗಿ, ಹುಲಿಯನ ಕೊರಳು ಬಿಚ್ಚಿದನು. +ನಾಯಿ ಸಂತೋಷಕ್ಕೆ ಅವನ ಮೈಮೇಲೆ ನೆಗೆದಾಡಿತು. +ಅಲ್ಲಿಯೆ ಸುತ್ತಮುತ್ತ ಓಡಾಡಿತು. +ಒಂದು ಸಾರಿ ಮನೆಯ ಒಳಜಗಲಿಗೂ ಹೋಗಿಬಂತು. +ಮುಕುಂದಯ್ಯನಿಗೆ ಖುಷಿಯೋ ಖುಷಿ! +ಅಂತೂ ನೆಲ ಸುಟ್ಟ ಬೆಲ್ಲದನ್ನ ಹಾಕಿ ಮಾಡಿದ ‘ಮುಷ್ಟ’ ಸುಳ್ಳಾಗಲಿಲ್ಲ! …. ಅರೆ! +ಇದೇನು ನಾಯಿ ಓಡುತ್ತಿದೆ! +“ಹುಲಿಯಾ!ಏ ಹುಲಿಯಾ! +ಬಾ ಬಾ ಹುಲಿಯಾ! +ಹುಲಿಯಾ!ಹುಲಿಯಾ! …. ಥೂ ಹೊಲೆಯ!” ಎಂದುಬಿಟ್ಟನು ತಡೆಯಲಾರದೆ. +ಮುಕುಂದಯ್ಯ ನೋಡುತ್ತಿದ್ದಂತೆಯೆ, ಕಣ್ಣುಬಿಟ್ಟು ಮುಚ್ಚುವುದರಲ್ಲಿ ಅವನ ಕರೆಯನ್ನು ಇನಿತೂ ಲೆಕ್ಕಿಸದೆ ನಾಯಿ ಗುತ್ತಿ ಹೋದ ಕಡೆ ಧಾವಿಸಿ ಕಣ್ಮರೆಯಾಗಿದ್ದಿತು:…. +ಗುತ್ತಿ ಖಿನ್ನಮನನಾಗಿ, ಲಕ್ಕುಂದದ ಹತ್ತಿರ ಹಳ್ಳ ದಾಟುತ್ತಿದ್ದಾಗ, ಹಿಂದಕ್ಕೆ ಸದ್ದಾಗಿ, ತಿರುಗಿ ನೋಡುವುದರಲ್ಲಿಯೆ ಹುಲಿಯ ಅವನ ಮೈಮೇಲೆ ನೆಗೆದಾಡುತ್ತಿತ್ತಂತೆ!! +ಇಂತಹ ಹಲವಾರು ನೆನಪುಗಳಿಂದ ಭಾವಕೋಶ ತುಂಬಿದ್ದ ಮುಕುಂದಯ್ಯ ಕಾಡಿನಿಂದ ತಮ್ಮ ಮನೆಯ ಕಡೆಗೆ ಹೊರಟು, ಹಳೆಮನೆಯ ಕಡೆಗೆ ಹೋಗುತ್ತಿದ್ದ ಕಾಲುದಾರಿಯನ್ನು ಸೇರಿ, ಅಕ್ಕಪಕ್ಕದ ಮರಗಳಲ್ಲಿ ಕಂಡು ಬಂದ ಕಾಜಾಣ, ಮರಕುಟಿಗ, ಮಂಗಟ್ಟೆ ಮೊದಲಾದ ಕಾಡಿನಲ್ಲಿಯೆ ವಿಶೇಷವಾಗಿ ವಾಸ ಮಾಡುವ, ತಾವು ತಿನ್ನದ ಹಕ್ಕಿಗಳಿಗೆ ವಿನೋದಕ್ಕೆಂಬಂತೆ ಚಿಟ್ಟುಬಿಲ್ಲಿನಿಂದ ಕಲ್ಲು ಹೊಡೆಯುತ್ತಾ ನಡೆಯುತ್ತಿರಲು, ಹಳುವಿನಲ್ಲಿ ಕಣ್ಮರೆಯಾಗಿ ಎತ್ತೆತ್ತಲೋ ಹೋಗುತ್ತಿದ್ದ ನಾಯಿ ಮತ್ತೆ ತನಗೆ ಅಭಿಮುಖವಾಗಿ ಓಡಿಬರುತ್ತಿದ್ದುದು ಕಾಣಿಸಿತು. +ಹೊಗೆಯಿದ್ದಲ್ಲಿ ಬೆಂಕಿಯಿರುವಂತೆ ಹುಲಿಯ ಕಂಡಲ್ಲಿ ಗುತ್ತಿಯೂ ಇರಬೇಕೆಂದು ಮುಕುಂದಯ್ಯ ಮೊದಲೇ ಊಹಿಸಿದ್ದನು. +ಹಾಗೆಯೇ ನಿರೀಕ್ಷಿಸಿ ನೋಡುತ್ತಾನೆ. +ನಾಯಿಗೆ ಸ್ವಲ್ಪದೂರದಲ್ಲಿ ಹಿಂದೆ ಗುತ್ತಿಯ ಸವಾರಿ ತನಗೆ ಅಭಿಮುಖವಾಗಿ ಬರುತ್ತಿದ್ದುದು ಕಾಣಿಸಿತು! +ಮುಕುಂದಯ್ಯನಿಗೆ ಗುತ್ತಿಯನ್ನು ಕಂಡು, ಮೊದಲು ಹುಲಿಯನನ್ನು ಕಂಡಷ್ಟೆ ಸಂತೋಷವಾಯಿತು; + ಅಂತಹ ಅಭೇದ ಸಂಬಂಧವಿತ್ತು, ಅವನ ಮನಸ್ಸಿನಲ್ಲಿ, ನಾಯಿಗೂ ಹೊಲೆಯನಿಗೂ! +“ಏನ್ರಯ್ಯಾ ಚಿಟ್ಟಿಲ್ಲು ಹಿಡ್ಕುಂಡು ಷಿಕಾರಿಗೆ ಹೊಲ್ಟ್‌ ಬಿಟ್ಟೀರಲ್ಲಾ? +ಕೋವಿನಾದ್ರೂ ತರಬೈದಿತ್ತಲ್ಲಾ!” ಎಂದು ತನ್ನ ಕೆಂಬರು ಬಣ್ಣದ ಹಲ್ಲೆಲ್ಲ ಕಾಣುವಂತೆ ವಿಶಾಲವಾಗಿ ನಗುತ್ತಾ ಕೇಳಿದನು. +ಅಂತಹ ಖಚಿತ ಉತ್ತರಾಪೇಕ್ಷೆಯಿಲ್ಲದ ಗುತ್ತಿಯ ಲೋಕಾಭಿರಾಮ ಪ್ರಶ್ನೆಗೆ ಉತ್ತರಕೊಡುವ ಗೋಜಿಗೆ ಹೋಗದೆ ಮುಕುಂದಯ್ಯನೂ ಸ್ವಲ್ಪ ಲೋಕಾಭಿರಾಮವಾಗಿಯೆ “ಏನು? +ಎತ್ತಮಖ ಹೊರಡ್ತು ಗುತ್ತಿ ಸವಾರಿ?” ಎಂದು ಪ್ರತಿಪ್ರಶ್ನೆ ಹಾಕಿದನು, ಸ್ವಲ್ಪ ಪರಿಹಾಸ್ಯಧ್ವನಿಯಿಂದಲೆ. +“ಈಲ್ಲೇ ಹಳೇಮನೀಗೆ ಹೋಗ್ತೀನಿ….” +“ಸಿಂಬಾವಿಯಿಂದ ಬಂದೆಯೇನೋ?”ಗುತ್ತಿ ತಲೆಯಾಡಿಸಲು ಮುಕುಂದಯ್ಯ “ಏನೋ? +ನಿಮ್ಮ ಹೆಗ್ಡೇರ ಎರಡನೆ ಮದುವೆ ಏನಾಯ್ತೋ? +ಹಳೇಮನೆ ಹೆಣ್ಣನ್ನ ಕೇಳ್ತಿದ್ರಂತೆ?” +“ಮೊದ್ಲು ಮದೇ ಆದ ಹಳೇಮನೆ ಹೆಣ್ಣು ಬಿಟ್ಟರಷ್ಟೆ?” +“ಹಾಂಗಾದ್ರೆ ಮದುವೆ ನಿಂತಂತೇ ಅನ್ನು” +“ಅಯ್ಯೋ ನಮ್ಮ ಹೆಗ್ಡೇರು ಬಿಟ್ಟಾರಾ?” +“ಬಿಡದೆ ಮತ್ತೇನು ಮಾಡ್ತಾರೋ? +ಏನು ಹಿಡಿದು ಎಳಕೊಂಡು ಹೋಗಿ ಮದುವೆ ಆಗ್ತಾರೇನೋ?” +“ಆಗ್ಲೆ ಬ್ಯಾರೆಕಡೆ ಇಚಾರ್ಸಿ ಆಗಿದೆಯಂತೆ!” +“ಅವರಿಗೆ ಯಾರೋ ಹೆಣ್ಣು ಕೊಡೋರು? +ಕುಡ್ದೂ ಕುಡ್ದೂ ಕಾಯಿಲೆ ಬೇರೆ ಹಿಡಿದಿದೆಯಂತೆ!” +“ಏನ್ರಯ್ಯಾ ಹೆಣ್ಣು ಕೊಡೋರಿಗೇನು ಬರಗಾಲ? +ದುಡ್ಡೊಂದಿದ್ರೆ? +ಕೈತುಂಬಾ ತೆರಾ ಕೊಟ್ರೆ ದಮ್ಮಯ್ಯ ಅಂತ ಕೊಡ್ತಾರೆ? …. !! +ಅವರೂ ಇವರೂ ಅಂತ ದೂರ ಯಾಕೆ ಹೋಗ್ಬೇಕು? +ಹೂವಳ್ಳಿ ಹೆಣ್ಣನ್ನೇ ಇಚಾರಿಸ್ತಾರಂತೆ-ಅಂತಾ ವರ್ತ್ಮಾನ”…. +ಮನ್ನೆ ನನ್ನವ್ವ ಹಿಟ್ಟು ಬೀಸಾಕೆ ಹೋಗಿದ್ಲಂತೆ ಮನೆಗೆ. +ಹಳೆಮನೆ ಅಮ್ಮನೂ ನಮ್ಮ ಹೆಗ್ಡೇರ ತಂಗೀನೂ ಜಗಳ ಆಡ್ತಾ ಆಡ್ತಾ ಏನೇನೋ ಅಂದುಕೊಂಡರಂತೆ ಒಬ್ಬರಿಗೊಬ್ಬರು. +ನಮ್ಮ ಕೇರೀಲೂ ಹಂಗೆ ಬೈಕೊಳ್ಳೋದಿಲ್ಲಂತೆ! +ಹಿತ್ತಲುಕಡೆ ಚೌಕೀಲಿ ಹಿಟ್ಟು ಬೀಸ್ತಾ ಕೂತಿತ್ತಂತೆ ನನ್ನವ್ವ. +ಅಡಿಗೆ ಮನೇಲಿ ಸುರುವಾಯಿತಂತೆ…. +ಹಳೇಮನೆ ಜಟ್ಟಮ್ಮ ಲಕ್ಕಮ್ಮಗೆ “ನಿನ್ನ ಕೊಡ್ತಾರಲ್ಲಾ ಹಂದಿ ಒಡ್ಡಿಗೆ!” ಅಂದರಂತೆ. +ಅದಕ್ಕೆ ಲಕ್ಕಮ್ಮ ‘ಬರ್ತಾಳಲ್ಲಾ ನಿನ್ನ ಸವ್ತಿ ಹಂದಿ ಒಡ್ಡಿಯಿಂದ್ಲೆ!’ ಅಂದರಂತೆ. +ಅದಕ್ಕಿವ್ರು ‘ನನ್ನ ಹೆಣ ಬೀಳ್ಬೇಕು ಆ ತಾಟಗಿತ್ತಿ ಈ ಮನೆಗೆ ಕಾಲಿಡಬೇಕಾದ್ರೆ. +ನಾನು ಮಾಡಾದ್ನೆಲ್ಲಾ ಮಾಡೀನಲ್ಲ: ಇನ್ನೆಲ್ಲಿ ಬರ್ತಾಳೆ ಅವ್ಳು?’ ಅಂದರಂತೆ. + ‘ಬರದಿದ್ರೇ…. ಈ ಬಂಜೆಮುಂಡೇನ ಕಟ್ಟಿಕೊಂಡೂ…. +ಗುಂಡಿಹಾರ್ತಾನೇನು ಅಣ್ಣಯ್ಯ?’ ಅಂದೇಬಿಟ್ರಂತೆ ನಮ್ಮ ಹೆಗ್ಡೇರ ತಂಗಿ ಲಕ್ಕಮ್ಮೋರು! +‘ನಿನ್ನ ಮಿಂಡನ ತಂಗಿ ಅಲ್ಲದಿದ್ರೆ ಇನ್ಯಾರೂ ಇಲ್ಲೇನು-ಹೆಣ್ಣು? +ನಿನ್ನ ಮಂಜಿ ಏನು ರತಿ ಅಂತಾ ಮಾಡೀಯಾ? +ನಿನ್ನ ಗಂಡ ಅಗಾಂವ್ನ ಕರೀಹಂದಿ ಮುಸುಡಿಗೂ ಅವನ ತಂಗಿ ಅವಳ ಮುಸುಡಿಗೂ ಏನೂ ಇಲ್ಲ ಯತ್ಯಾಸ? +ಆ ಹೂವಳ್ಳಿ ಹೆಣ್ಣು, ಚಿನ್ನದಂಥಾ ಹೆಣ್ಣು, ಚಿನ್ನಮ್ಮನೇ ತರ್ತೀನಿ?” ಅಂದರಂತೆ ಹಳೇಮನೆ ಅಮ್ಮ. +ಅದಕ್ಕೆ ಲಕ್ಕಮ್ಮ ‘ತಂದ್ಯಾ ಆ ದದ್ದುಹಿಡುಕ ಕುನ್ನೀನೆ! +ಯಾರು ಬ್ಯಾಡ ಅಂತಾರೆ?’ ಅಂದ್ರಂತೆ. +‘ಥೂ ನಿನ್ನ ಬಾಯಲ್ಲಿ ಹುಳು ಬಿದ್ದುಹೋಗ! +ಅವಳು ಹೇತು ಬಂದಲ್ಲಿ ನಿಂಗೆ ಕೂತು ಬರಾ ಯೋಗ್ತೇ ಇದ್ಯೇನೆ?’ ಅಂತ ಏನೇನೋ ಬಯ್ದು, ಉಗ್ದು ಬಿಟ್ರಂತೆ ಜಟ್ಟಮ್ಮ. +ಜಟಾಪಟೀನೆ ಸುರುವಾಯ್ತಂತೆ. +ಕಡೀಗೆ, ಅಡಿಗೆ ಮಾಡಾಕೆ ಇದಾರಲ್ಲ ಆ ಮರಾಟೆ ಮಂಜಯ್ಯ? +-ಅವರು ಕೈಕೈ ಮುಗ್ದು, ನಡೂ ಬಂದು, ಜಗಳ ಬಿಡಿಸಿದ್ರಂತೆ….”ಗುತ್ತಿ ಇನ್ನೂ ಹೇಳಬೇಕಾದ ಸ್ವಾರಸ್ಯವಿವರ ಇದೆ ಎನ್ನುವಂತೆ ಮಾತು ನಿಲ್ಲಿಸಿ ಮತ್ತೆ ಮುಂದುವರಿಯುವ ಮುನ್ನ ಮುಕುಂದಯ್ಯನ ಮುಖದ ಕಡೆ ನೋಡಿ ಬೆಚ್ಚಿ ಬೆರಗಾಗಿ “ಯಾಕ್ರಯ್ಯಾ?ಹಿಂಗೆ ನೋಡ್ತಾ ಇದೀರಿ? +ಮಾತೇ ಆಡ್ದೆ?” ಎಂದನು. +ಮುಕುಂದಯ್ಯ ಸಂಪೂರ್ಣ ಅನ್ಯಮನಸ್ಕನಾಗಿದ್ದನು. +ಗುತ್ತಿ ಹೇಳಿದ್ದರಲ್ಲಿ ಎಷ್ಟು ಅವನ ಕಿವಿಗೆ ಬಿತ್ತೋ? +ಎಷ್ಟು ಬೀಳಲಿಲ್ಲವೋ? +ಆದರೆ ಗುತ್ತಿಯ ಪ್ರಶ್ನೆಗೆ ಎಚ್ಚತ್ತಂತೆ ದೀರ್ಘವಾಗಿ ಉಸಿರೆಳೆದುಕೊಂಡು “ನನಗೆ ಕೆಲಸ ಇದೆಯೋ: ಹೊತ್ತಾಯ್ತು. +ನೀ ಹೋಗೊ!” ಎಂದು ಕ್ಷಣವೂ ಅಲ್ಲಿ ನಿಲ್ಲದೆ, ಏನನ್ನೊ ಮರೆತದ್ದನ್ನು ಜ್ಞಾಪಿಸಿಕೊಂಡವನಂತೆ ವೇಗವಾಗಿ ಕಣ್ಮರೆಯಾದನು. +“ಇದ್ಯಾಕೆ ಹಿಂಗೆ ಮಾಡ್ತಾರೆ ಇವತ್ತು ನಮ್ಮ ಮುಕುಂದಯ್ಯ?” ಆಶ್ಚರ್ಯಚಕಿತನಾಗಿ ನಿಂತು ನೋಡುತ್ತಿದ್ದ ಗುತ್ತಿ, ಮುಕುಂದಯ್ಯ ಕಾಡಿನ ತಿರುಗಣೆಯಲ್ಲಿ ಕಣ್ಮರೆಯಾದ ಮೇಲೆ, ಹಳೆಮನೆಯ ಹಾದಿ ಹಿಡಿದನು, ಇಬ್ಬರ ಸಂವಾದವನ್ನೂ ಅರಿತು ಆಲಿಸುವಂತೆ ನಿಂತು ಬಾಲವಾಡಿಸುತ್ತಿದ್ದ ಹುಲಿಯ ನೊಡಗೂಡಿ. +ತಾನು ಒಡ್ಡಿದ್ದ ಉರುಳಿಗೆ ಸಿಕ್ಕ ಕಾಡುಕೋಳಿಯನ್ನು ನೋಡಲು ಹೋದ ಮುಕುಂದಯ್ಯ, ತಾನೆಯೆ ಮತ್ತೊಂದು ರೀತಿಯ ಉರುಳಿಗೆ ಸಿಕ್ಕಿ, ಮನದಲ್ಲಿಯೆ ವಿಲಿವಿಲಿ ಒದ್ದಾಡಿಕೊಳ್ಳುತ್ತಾ, ಗುತ್ತಿಯನ್ನು ನಿರ್ದಾಕ್ಷಿಣ್ಯವಾಗಿ ಬೀಳುಕೊಂಡು, ಕಾಡಿನಿಂದ ಮನೆಗೆ ಧಾವಿಸಿದ್ದನು. +ತನ್ನ ಹೃದಯಭೂಮಿಯಲ್ಲಿ ಮೊಳೆಯತೊಡಗಿದ್ದ ಬಿರುಗಾಳಿಯ ಸುಳಿಯನ್ನು ಯಾರಿಗೂ ತೋರಗೊಡಲಿಲ್ಲ. +ಗುತ್ತಿ ಹೇಳಿದ್ದುದನ್ನು ನಂಬುವುದಕ್ಕೂ ಸಾಧ್ಯವಾಗಲಿಲ್ಲ; +ಅಷ್ಟು ಅನಿರೀಕ್ಷಿತವಾಗಿತ್ತು, ವಿಲಕ್ಷಣವಾಗಿತ್ತು, ಅವನಿಗೆ ವಿಕಾರವಾಗಿತ್ತು ಆ ವಾರ್ತೆ. +ಸಿಂಬಾವಿ ಹೆಗ್ಗಡೆಯೇನೊ ಎರಡನೆಯ ಮದುವೆಯ ಹಟ ತೊಟ್ಟಿದ್ದ ವಿಚಾರ ಅವನಿಗೆ ಗೊತ್ತಿತ್ತು. +ಆ ಚಟ ಹಳೆಮನೆಯ ದಿಕ್ಕಿಗೆ ಸೊಂಡಿಲು ಚಾಚುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯವೆ ಆಗಿತ್ತು. +ಆದರೆ ಯಾವ ಖಚಿತ ಉದ್ದೇಶವೂ ಇಲ್ಲದೆ, ಏನೊ ಮಾತಿನ ನಡುವೆ, ಗುತ್ತಿ ಅಕಸ್ಮಾತ್ತಾಗಿ ಬಿಟ್ಟುಕೊಟ್ಟಿದ್ದ ಸುದ್ದಿ ಮುಕುಂದಯ್ಯನ ಮೇಲೆ ಸಿಡಿಲಿನಂತೆ ಎರಗಿತ್ತು. +ಅದು ಎಂದಾದರೂ ನಿಜವಿರಬಹುದೆ? +ಆ ವಯಸ್ಸಾದವನಿಗೆ, ಕುಡುಕನೂ ರೋಗಿಷ್ಟನೂ ವೃದ್ಧಪ್ರಯಾನೂ ಆಗಿ ಜುಗುಪ್ಸಾರ್ಹನಾದವನಿಗೆ ಹೂವಿನಂತಹ ಹುಡುಗಿ ಹೂವಳ್ಳಿ ಚಿನ್ನಮ್ಮನನ್ನು, ತನ್ನ ಚಿನ್ನಿಯನ್ನು, ಮದುವೆ ಮಾಡಿಕೊಳ್ಳಲು ಒಪ್ಪುತ್ತಾರೆಯೆ? +ಹೆಗ್ಗಡೆಯ ಶ್ರೀಮಂತಿಕೆಯ ಹಾಳುಬಾವಿಗೆ ತೆರದ ಆಸೆಗಾಗಿ ಆ ಹೆಣ್ಣನ್ನು ತಳ್ಳುತ್ತಾರೆಯೆ? ಸುಳ್ಳಿರಬೇಕು. +ಜಟ್ಟಮ್ಮ ಲಕ್ಕಮ್ಮ ಜಗಳ ಆಡಿಕೊಳ್ಳುವಾಗ ಒಬ್ಬರನ್ನೊಬ್ಬರು ಮೂದಲಿಸುವ ಸಿಟ್ಟಿನಲ್ಲಿ, ‘ಚಿನ್ನದಂಥ ಹುಡುಗಿ ಚಿನ್ನಮ್ಮನ್ನೇ ತರ್ತೀನಿ’ ಎಂದು ಜಟ್ಟಮ್ಮ ಹೇಳಿರಬಹುದಾದ ಮಾತಿಗೆ ನಿಜದ ಬೆಲೆಯನ್ನೇಕೆ ಕೊಡಬೇಕು? +ಇದುವರೆಗೆ ಯಾರ ಬಾಯಲ್ಲಾಗಲಿ ಇಂಗಿತವಾಗಿಯೂ ಸುಳಿಯದಿದ್ದ ಆ ಸುದ್ದಿ ಎಷ್ಟು ಅಸಹ್ಯವಾಗಿತ್ತೊ ಅಷ್ಟೇ ಹುಸಿಯೂ ಆಗಿ ತೋರಿತು ಮುಕುಂದಯ್ಯನಿಗೆ. +ಆದರೂ ಆ ವಿಚಾರದಲ್ಲಿ ಮುನ್ನೆಚ್ಚರಿಕೆಯ ರೂಪವಾಗಿಯೆ ಕ್ರಮ ಕೈಕೊಳ್ಳುವ ನಿರ್ಧಾರ ಮಾಡಿದನು. +ಅವನ ಅಂತಃಕರಣದಲ್ಲಿ ಈ ನಿರ್ಧಾರದ ವ್ಯಾಪಾರ ನಡೆಯುತ್ತಿದ್ದಾಗ ಅವನ ಬಹಿಃಕರಣಗಳೆಲ್ಲ ಚಿಟ್ಟುಬಿಲ್ಲಿನ ಹಗ್ಗವನ್ನು ಸರಿಮಾಡುವ ಚೇಷ್ಟಿತದಲ್ಲಿ ತೊಡಗಿದ್ದುವು. +ಅಷ್ಟರಲ್ಲಿ ಅಲ್ಲಿಗೆ ಬಂದ ಅವನ ಅಣ್ಣ ರಂಗಪ್ಪಗೌಡರು ತೋಟದಲ್ಲಿ ಹಿಂದಿನ ದಿನದ ಬಿರುಗಾಳಿ ಮಳೆಗೆ ಉರುಳಿದ್ದ ಅತ್ತಿಯ ಮರವನ್ನು ಕಡಿಯುವ ಆಳುಗಳಿದ್ದಲ್ಲಿಗೆ ಹೋಗಲು ಹೇಳಿದ್ದರು. +ತನ್ನ ಉದ್ದೇಶ ಸಾಧನೆಗೆ ಕರ್ತವ್ಯದ ಅನುಕೂಲತೆಯೂ ಒದಗಿದಂತಾಗಿ ಮುಕುಂದಯ್ಯ ತೋಟದ ಆ ಮೂಲೆಗೆ ಹೋಗಿದ್ದನು. +ಅಲ್ಲಿ ಏಡಿ ಹಿಡಿಯುವ ನೆಪಹೇಳಿ ಐತನನ್ನು ಕರೆದಿದ್ದರೂ ಅವನ ಉದ್ದೇಶ ಐತನ ಹೆಂಡತಿ ಪೀಂಚಲು ಒಡನೆ ವ್ಯವಹರಿಸುವುದೆ ಆಗಿತ್ತು. +ಅವನಿಗೆ ಗೊತ್ತಿತ್ತು ಐತನನ್ನು ಎಳೆದೆಡೆಗೆ ಪೀಂದಲು ಬರುತ್ತಾಳೆ ಎಂದು. +ಐತ ಪೀಂಚಲು ಇಬ್ಬರೂ ತಾವು ಮಾಡುತ್ತಿದ್ದ ಕೆಲಸ ಬಿಟ್ಟು ಮುಕುಂದಯ್ಯನ ಅಣತಿಯಂತೆ ಅವನ ಹಿಂದೆ ಹೊರಡುವ ಮುನ್ನವೆ, ಅವನು ಮುನ್ನಡೆದು ತೋಟದ ಅಡಕೆ ಬಾಳೆಯ ಮರಗಳ ಮಧ್ಯೆ ಮರೆಯಾಗಿದ್ದನು. +ತೋಟದ ಎಲ್ಲೆಯನ್ನು ದಾಟಿ ‘ಭೂತದ ಬನ’ದ ಮಾರ್ಗವಾಗಿ ನಡೆದು, ಕಾಡಿನಿಂದ ತೋಟದ ಅಂಚಿಗೆ ಇಳಿದು ಬರುತ್ತಿದ್ದ ಸರಲಿಗೆ ತಲುಪಿದ್ದನು. +ದೊಡ್ಡ ಸಣ್ಣ ಉಂಡೆಗಲ್ಲು ಮತ್ತು ಬಂಡೆಗಳ ನಡುವೆ ಅಲ್ಲಲ್ಲಿ ನಿಂತೂ ನಿಂತೂ ಹಿಂದಿನ ದಿನದ ಸಂಜೆಯ ಮಳೆಯ ದೆಸೆಯಿಂದ ಮೆಲ್ಲಗೆ ಜುಳು ಜುಳು ಮರ್ಮರದಿಂದ ಹರಿಯುತ್ತಿದ್ದ ಬೇಸಗೆಯ ಹಳ್ಳದ ನೀರು, ಇಕ್ಕೆಲದಲ್ಲಿಯೂ ಬೆಳೆದಿದ್ದ ದೈತ್ಯಾಕಾರದ ನಿಬಿಡಪರ್ಣದ ಮರಗಳ ನೆರಳಲ್ಲಿ, ಬಿಸಿಲನ್ನೆ ಕಾಣದೆ, ಕಾಲಿಟ್ಟರೆ ಚಳಿಯಾಗುವಂತೆ, ತಣ್ಣಗೆ ಹರಿಯುತ್ತಿತ್ತು. +ಅಲ್ಲಿಂದಲೆ ಪ್ರಾರಂಭವಾಗುತ್ತಿತ್ತು ಅವರ ಏಡಿ ಹಿಡಿಯುವ ತಾಣ. +ಐತ ಮುಕುಂದಯ್ಯರಿಗಂತೂ ಆ ತಾಣ ಅತ್ಯಂತ ಸುಪರಿಚಿತವಾದುದಾಗಿತ್ತು. +ಚಿಕ್ಕಂದಿನಿಂದಲೂ ಅವರಿಬ್ಬರೂ ಜೊತೆಗೂಡಿ ಅದೆಷ್ಟೊ ಸಾರಿ ಅಲ್ಲಿ ಕಪ್ಪೆಗೋಲು ಹಾಕಿ ಏಡಿ ಹಿಡಿದಿದ್ದರು. +ಪೀಂಚಲುವಿಗೆ ಮಾತ್ರ ಅದು ಸ್ವಲ್ಪ ಹೊಸ ಸ್ಥಾನವೆ ಆಗಿತ್ತು. +ಐತನನ್ನು ಮದುವೆಯದ ಮೊದಲಲ್ಲಿ ಅವನೊಡನೆ, ತಾವಿಬ್ಬರೆ, ತನ್ನ ಬಿಡಾರದ ಅಡುಗೆಯ ಪ್ರಯೋಜನಾರ್ಥವಾಗಿ, ಒಂದೆರಡು ಸಾರಿ ಅಲ್ಲಿಗೆ ಏಡಿ ಹಿಡಿಯಲು ಬಂದಿದ್ದರು. +ಆದರೆ ಆ ಜಾಗ ಎಷ್ಟು ಏಕಾಂತವಾಗಿತ್ತು ಎಂದರೆ, ಹೊಚ್ಚ ಹೊಸ ಗಂಡಹೆಂಡಿರ ಶೃಂಗಾರ ಜೀವನವನ್ನೂ ಅದರ ಪ್ರಣಯ ಚೇಷ್ಟಿತನಗಳನ್ನೂ ಉದ್ದೀಪಿಸಿದಷ್ಟು ಉದಾರವಾಗಿ ಅದು ಅವರಿಗೆ ಏಡಿ ಹಿಡಯುವುದಕ್ಕೆ ನೆರವಾಗಿರಲಿಲ್ಲ. +ಆದರೂ ಅವರು ತಮಗೆ ದೊರೆತಿದ್ದ ಒಂದೆರಡು ಏಡಿಗಳಿಂದಲೆ ಸಂಪೂರ್ಣ ತೃಪ್ತರಾಗಿ ಹಿಂದಿರುಗಿದ್ದರು, ತಮ್ಮ ಪ್ರಣಯ ಚೇಷ್ಟೆಗಳಿಂದಲೆ ಅಲ್ಲಿ ತಮಗೆ ಒದಗಿದ್ದ ಸುಖಕ್ಕೆ ಆ ಸ್ಥಾನಮಹಿಮೆಯೆ ಕಾರಣವೊ ಎಂಬಂತೆ. +ಮೊದಲೆ ಅಲ್ಲಿಗೆ ಸೇರಿದ್ದ ಮುಕುಂದಯ್ಯನಿಗೆ, ಅನೇಕ ಮಧುರ ಸುಂದರ ಸಾಹಸಮಯ ಪೂರ್ವಾನುಭವಗಳಿಗೆ ಕಾರಣವಾಗಿದ್ದ ಆ ತಾಣದ ಮಹಾತ್ಮ್ಯೆಯಿಂದಲೊ ಏನೊ, ಭಾವಕೋಶ ತುಂಬಿ ಅರಳಿದಂತಾಗಿ, ಸಂಸ್ಕಾರ ರೂಪದಲ್ಲಿದ್ದ ಅವನ ಬಾಲಕತ್ವ ಹೊರಕ್ಕೆ ಹಾರಿತು. +ಏನೊ ಒಂದು ವಿನೋದವನ್ನು ನೆನೆದು ಹಳ್ಳದ ದಂಡೆಯಲ್ಲಿದ್ದ ಒಂದು ಮಟ್ಟಿನ ಹಿಂದೆ ಅವಿತು ಕುಳಿತನು. +ಕೀಳುಜಾತಿಯವರಾಗಿ ಮುಟ್ಟಾಳು ಎಂದರೆ ಅಸ್ಪೃಶ್ಯರಾಗಿದ್ದ ಐತ ಪೀಂಚಲು ತಾನು ಬಂದ ‘ಭೂತದ ಬನ’ದ ದಾರಿಯಲ್ಲಿ ಬರುವುದಿಲ್ಲವೆಂಬುದು ಅವನಿಗೆ ಗೊತ್ತಿತ್ತು. +ಏಕೆಂದರೆ ಭೂತದ ಬನದೊಳಕ್ಕೆ ಮುಟ್ಟಾಳುಗಳು ಕಾಲಿಟ್ಟರೆ ಅವರಿಗೆ ಏನಾದರು ಕೇಡು ತಪ್ಪದು ಎಂಬ ನಂಬುಗೆ ಬಲವಾಗಿತ್ತು; +ಅದರಲ್ಲಿಯೂ ಕನ್ನಡಜಿಲ್ಲೆಯಿಂದ ಬಂದವರಿಗೆ ಗಟ್ಟದ ಮೇಲಣ ದೆಯ್ಯಗಳೆಂದರೆ ಮಹಾಭಯ. +ಆ ಭಯದ ಬೇಲಿಕಟ್ಟಿ ಮಲೆನಾಡಿನ ಜಮೀನುದಾರರು ತಮ್ಮ ತೋಟ, ಗದ್ದೆ, ಹಿತ್ತಲುಗಳ ಫಸಲು ರಕ್ಷಣೆ ಮಾಡಿಕೊಳ್ಳುತ್ತಿದ್ದರು, ಎಂತಹ ಕಾವಲೂ ಪೋಲೀಸೂ ಕಾನೂನೂ ಮಾಡಲಾರದಷ್ಟು ಸಮರ್ಪಕವಾಗಿ. +ಗಟ್ಟದ ತಗ್ಗಿನ ಹೆಣ್ಣಾಳುಗಳಂತೂ ಅಡಕೆ ತೋಟಕ್ಕೆ ಕೆಲಸಕ್ಕೆ ಬರುವುದಕ್ಕೆ ಹೆದರಿ ಸಾಯುತ್ತಿದ್ದರು. +ಏಕೆಂದರೆ, ತೋಟವೇ ಭೂತರಾಯನ ವಿಶೇಷ ಅಧಿಪತ್ಯಕ್ಕೆ ಸೇರಿ, ಅವನ ಮಡಿಪ್ರದೇಶವಾಗಿದೆ ಎಂಬುದು ಪ್ರತೀತಿ. +ಮುಟ್ಟಾದ ಹೆಂಗಸರು, ಮರೆತಾದರೂ ಸರ, ಆ ಮಡಿನೆಲಕ್ಕೆ ಪ್ರವೇಶಿಸಿದರೆ ಅವರು ರಕ್ತಕಾರಿ ಸಾಯುತ್ತಾರೆ ಎಂಬ ಶಾಸ್ತ್ರವಾರ್ತೆ ಅನೇಕ ನಿದರ್ಶನಸಹಿತವಾಗಿ ಪ್ರಚಲಿತವಾಗಿತ್ತು. +ಆದ್ದರಿಂದ ಹೆಂಗಸು ತಾನು ಹೊರಗಾಗಿದ್ದಾಗ ತೋಟಕ್ಕೆ ಹೋಗದೆಯೆ ಇರುವುದು ಪ್ರಜ್ಞಾಪೂರ್ವಕವಾಗಿಯೆ ಸಾಧ್ಯವಾಗಿತ್ತು; +ಆದರೆ ತೋಟದಲ್ಲಿ ಕೆಲಸಕ್ಕೆ ಹೋಗಿ, ಕೆಲಸ ಮಾಡುತ್ತಿದ್ದಾಗಲೆ ಅಕಸ್ಮಾತ್ತಾಗಿ ಎಲ್ಲಿಯಾದರೂ ಮುಟ್ಟಾಗಿಬಿಟ್ಟರೆ ಏನು ಗತಿ? +ಆದ್ದರಿಂದಲೆ ಮುಂಜಾಗ್ರತೆಯ ಕ್ರಮವಾಗಿ ಅವರು ಮಿಂದ ಮೊದಲು ದಿನಗಳಲ್ಲಿ ಮಾತ್ರವೆ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದುದು ರೂಢಿ. +ಆ ದಿನ ಬೆಳಿಗ್ಗೆ ಕೆಲಸಕ್ಕೆ ಹೊರಡುವ ಮುನ್ನ, ತೋಟದಲ್ಲಿ ಮರ ಕಡಿಯುವುದೆ ಕೆಲಸ ಎಂದು ಗೊತ್ತಾದಾಗ, ಗಂಡಾಳುಗಳೆಲ್ಲ ಆ ವಿಚಾರದಲ್ಲಿ ತಮ್ಮ ತಮ್ಮ ಹೆಣ್ಣುಗಳನ್ನು ಪ್ರಶ್ನಿಸಿ, ತನಿಖೆ ನಡೆಸಿ, ಸಮಾಧಾನ ಮಾಡಿಕೊಂಡೆ ಕೆಲಸಕ್ಕೆ ಬಂದಿದ್ದರು. +ತನಿಖೆಯಲ್ಲಿ ಸಂಶಯಾಸ್ಪದವಾಗಿ ಕಂಡ ಮೂರು ನಾಲ್ಕು ಹೆಣ್ಣುಗಳನ್ನು ಕೆಲಸಕ್ಕೆ ಬೇರೆಯ ಕಡೆ ಕಳುಹಿಸಲಾಗಿತ್ತು. +ಆ ಅನಿವಾರ್ಯದಿಂದಲೆ, ಮೈ ಸರಿಯಾಗಿಲ್ಲದಿದ್ದರೂ, ಕೆಲಸಕ್ಕೆ ಆಳು ಬೇಕಾಗಿದ್ದುದರಿಂದ, ಸೇರೆಗಾರ ಚೀಂಕ್ರನು ತನ್ನ ಬಸುರಿ ಹೆಂಡತಿ ದೇಯಿಯನ್ನು ಕೆಲಸಕ್ಕೆ ಬಾ ಎಂದು ಬಲಾತ್ಕಾರದಿಂದ ಕರೆತಂದಿದ್ದನು. +ಅವಳೂ ಕಣ್ಣೀರೊರಸುತ್ತಾ ಬಂದಿದ್ದಳು. +ಅಕ್ಕಣಿ ಪೀಂಚಲು ಇಬ್ಬರೂ ಅವಳಿಗೆ ಸಂತೈಕೆ ಹೇಳಿ, ಅವಳ ಕೆಲಸವನ್ನೆಲ್ಲ ತಾವೇ ನಿರ್ವಹಿಸಿ, ಅವಳಿಗೆ ಸಾಕಷ್ಟು ವಿರಾಮ ಕೊಟ್ಟು, ದಣಿವು ಆಗದ ಹಾಗೆ ನೋಡಿಕೊಳ್ಳುವುದಾಗಿ ಭರವಸೆ ಇತ್ತಿದ್ದರು…. +ಮಟ್ಟಿನ ಹಿಂದೆ ಅಡಗಿ ಕುಳಿತಿದ್ದ ಮುಕುಂದಯ್ಯನಿಗೆ ಸ್ವಲ್ಪ ಹೊತ್ತು ಕಾಯುವುದರೊಳಗೆ ಬೇಜಾರಾಯಿತು. +ತಾನು ನಿರೀಕ್ಷಿಸಿದ್ದಕ್ಕಿಂತಲೂ ಅವರು ಬಹಳ ತಡವಾಗಿ ಬರುವಂತೆ ತೋರಿತು. +ಹೊಸದಾಗಿ ಮದುವೆಯಾಗಿ, ಇನ್ನೂ ರಸಿಕತೆ ದಣಿದು, ಸೋತು, ಸಾಮಾನ್ಯತೆಯ ಧೂಳಿಗೆ ಬೀಳದಿದ್ದ ಐತನೇನಾದರೂ ಶೃಂಗಾರ ಚೇಷ್ಟೆಗೆ ತೊಡಗಿದನೊ ಏನೊ ಎಂಬ ಶಂಕೆಯೂ ಮೂಡಿ, ಮುಕುಂದಯ್ಯಸ ಸ್ನೇಹಸರಸವಾಗಿಯೆ ‘ಬರಲಿ, ಮಾಡ್ತೀನಿ ಆ ಮುಂಡೆಕುರುದೆಗೆ!’ ಎಂದು ಬೈದನು. +ತುಸು ಹೊತ್ತಿನಲ್ಲಿಯೆ ಗೊಣಗೊಣ ಮಾತಾಡುವ ಸದ್ದು ಕಿವಿಗೆ ಬಿದ್ದು  ಮುಕುಂದಯ್ಯ ತಾನು ಆಲೋಚಿಸಿದ್ದ ವಿನೋದವನ್ನು ಗುರುತಪ್ಪದಂತೆ ಎಸಗಲು ನಿಶ್ಚಯಿಸಿ, ಜಾಗ್ರತನಾಗಿ, ಆ ದಿಕ್ಕನ್ನೆ ಅವಲೋಕಿಸುತ್ತಾ ಕುಳಿತನು. +ನೋಡುತ್ತಿದ್ದಂತೆ ಹಳ್ಳದ ದಂಡೆಯ ಹಳು ಅಲುಗಾಡಿತು. +ಐತ ಪೀಂಚಲು ಒಬ್ಬರ ಹಿಂದೆ ಒಬ್ಬರು ಹಳ್ಳದ ಪಾತ್ರದಲ್ಲಿದ್ದ ಹಾಸುಗಲ್ಲಿಗೆ ನೆಗೆದು ನಿಂತು ಸುತ್ತಲೂ ನೋಡಿದರು. +ತನಗಾಗಿಯೆ ಹುಡುಕುತ್ತಿದ್ದಾರೆ ಎಂಬದೂ ಮುಕುಂದಯ್ಯನಿಗೆ ಗೊತ್ತಾಯಿತು. +ಅಲ್ಲದೆ ಅವರು ಬರುವುದು ಏಕೆ ತಡವಾಯಿತು ಎಂಬುದಕ್ಕೂ ಕಾರಣ ತಿಳಿಯಿತು. +ಪೀಂಚಲು ಕೈಲೊಂದು ಹಾಳೆಕೊಟ್ಟೆ ಇತ್ತು; + ಐತನ ಕೈಯ್ಯಲ್ಲಿ ಒಂದು ಸೊಗಸಾದ ಹೊಂಬಾಳೆ ಮುಕುಂದಯ್ಯನ ಆಶೆಯನ್ನು ಕೆರಳಿಸುವಂತೆ ಕಂಗೊಳಿಸುತ್ತಿತ್ತು. +ತೋಟದಲ್ಲಿ ಉದುರಿ ಬಿದ್ದಿದ್ದ ಅಡಕೆಯ ಹಾಳೆಯನ್ನು ಕೊಯ್ದು, ಕೊಟ್ಟೆ ಮಾಡಿ, ಬಿದಿರ ಕಣೆಯಿಂದ ಕೊಟ್ಟೆ ಕಡ್ಡಿ ತಯಾರಿಸಿ, ಅದನ್ನು ಸೆಟ್ಟು, ತರುವುದಕ್ಕೆ ಸ್ವಲ್ಪ ಸಮಯ ಹಿಡಿಯದಿರುತ್ತದೆಯೆ? +ಇನ್ನು ಹೊಂಬಾಳೆ? +ಬಿದ್ದಿದ್ದಾದರೂ ಇರಬಹುದು; +ಅಥವಾ ಮರವನ್ನು ಒರಕಿ ಕಿತ್ತದ್ದಾದರೂ ಇರಬಹುದು. +“ಎಲ್ಲಿ ಹ್ವಾಯಿತು ಈ ಅಯ್ಯ? +ಚಿಟ್ಟುಬಿಲ್ಲು ಹಿಡುಕೊಂಡು ಹಕ್ಕಿ ಹೊಡೆಯಲು ಹೊರಟಿತೋ?” ಎಂದು ಮುಕುಂದಯ್ಯ ಕಾಣದಿದ್ದುದಕ್ಕೆ ತನ್ನ ಅಸಮಾಧಾನವನ್ನು ಸೂಚಿಸುತ್ತಾ ಐತ ಮುಂದೆ, ಪೀಂಚಲು ಅವನ ಹಿಂದೆ, ಹಳ್ಳದ ಪಾತ್ರದಲ್ಲಿ ಕಲ್ಲಿಂದ ಕಲ್ಲಿಗೆ ನೆಸೆಯುತ್ತಾ ಮುಂಬರಿದರು. +ಮುಟ್ಟಿನ ಹಿಂದೆ ಅವಿತು ಅವರನ್ನೇ ಗಮನಿಸಿ ನೋಡುತ್ತಿದ್ದ ಮುಕುಂದಯ್ಯ ಬೆರಗಾದನು. + ಆ ಕಾಡಿನ ಹಿನ್ನೆಲೆಯಲ್ಲಿ, ಆ ಏಕಾಂತದಲ್ಲಿ, ಆ ವಿರಳ ವನ್ಯ ಪಕ್ಷಿಕೂಜನದ ಸನ್ಮೋಹಕತೆಯಲ್ಲಿ ಅವರಿಬ್ಬರೂ ಗಟ್ಟದ ತಗ್ಗಿನಿಂದ ಹೊಟ್ಟಪಾಡಿಗಾಗಿ ದುಡಿಯಲು ಬಂದಿದ್ದ ಬಿಲ್ಲವರ ಜಾತಿಯ ತಮ್ಮ ಬಡ ಕೂಲಿಯಾಳುಗಳಂತೆ ಕಾಣಿಸುತ್ತಿರಲಿಲ್ಲ. +ಆ ತರುಣ ದಂಪತಿ ಪ್ರಾಚೀನ ಕಾಲದಲ್ಲಿ ಪೌರಾಣಿಕ ಯುಗದಲ್ಲಿ ದಂಡಕಾರಣ್ಯಕ್ಕೊ ನೈಮಿಶಾರಣ್ಯಕ್ಕೊ ಕಾರ್ಯಾರ್ಥವಾಗಿ ಅವತರಿಸಿ ಅಲೆಯುತ್ತಿದ್ದಿರ ಬಹುದಾದ ಭಿಲ್ಲವೇಷದ ಶಿವ ಶಿವಾಣಿಯರಂತೆ ತೋರಿದರು! +ಐಗಳು ಅನಂತಯ್ಯನವರ ಆಶೀರ್ವಾದದಿಂದ ಮುಕುಂದಯ್ಯ ಸಂಪಾದಿಸಿದ್ದ ಪೌರಾಣಿಕ ಕಲ್ಪನಾಶಕ್ತಿಯ ಪ್ರಭಾವವೋ? +ಅಥವಾ ಮೇಲು ಕೀಳು ಬಡವ ಬಲ್ಲಿದ ಅರಸ ತಿರುಕ ಎಂಬ ತಾರತಮ್ಯವಿಲ್ಲದೆ ಅಡವಿ ನಗರ ಮಂಚ ನೆಲ ಚಾಪೆ ಸುಪ್ಪತ್ತಿಗೆ ಎಂಬ ಭೇದವಿಲ್ಲದೆ ಸರ್ವರಲ್ಲಿಯೂ ಸಮಾನವಾಗಿ ಸಮಪ್ರಮಾಣದಲ್ಲಿ ಆವಿರ್ಭೂತವಾಗುವ ರತಿಮನ್ಮಥ ಪ್ರೇಮಾನುಗ್ರಹದ ಪ್ರಣಯ ಪರಿವೇಷದ ಮಹಿಮೆಯೋ? +ಅಥವಾ ತನ್ನಲ್ಲಿಯೂ ಸಾವಿರ ಹೆಡೆಯೆತ್ತಿ ರತಿಮನ್ಮಥರನ್ನೂ ಹೆತ್ತಯ್ಯ ಅಮ್ಮರನ್ನು ಹೊತ್ತು ಮರೆಯಲು ಅಣಿಯಾಗುತ್ತಿದ್ದ ಶೃಂಗಾರ ಶೇಷನೊಂದು ಪ್ರಸ್ಥಾನಪೂರ್ವ ವೈಭವದ ನಿಗೂಢ ಪರಿಣಾಮವೋ? +ಮುಕುಂದಯ್ಯ ತನಗೆ ತಾನೆ ಗೊಣಗಿಕೊಂಡನು. +“ಅಃ ಏನು ಚೆನ್ನಾಗಿದ್ದಾರೆ  ಅವರಿಬ್ಬರೂ!”ಅದರಲ್ಲಿಯೂ ಮಿಗದ ಪಡ್ಡೆಕರುವಂತೆ, ತೆಳ್ಳಗಿದ್ದರೂ ಬಲಿಷ್ಠವಾದ ಅಂಗೋಪಾಂಗದಿಂದ ಕೂಡಿ, ಕಲ್ಲಿಂದ ಕಲ್ಲಿಗೆ ನೆಸೆದು ಬರುತ್ತಿದ್ದ ಐತನಿಗಿಂತಲೂ ಅವನ ಹೆಂಡತಿ ಮುಕುಂದಯ್ಯನ ಮನವನ್ನೆಲ್ಲ ಸೂರೆಗೊಳ್ಳುವಷ್ಟು ಚೆಲುವೆಯಾಗಿ ಕಂಡಳು. + ಮಲೆನಾಡಿನವರಂತೆ ಸೊಂಟಕ್ಕೆ ಸೀರೆ ಸುತ್ತಿ, ಗೊಬ್ಬೆಸೆರಗು ಹಾಕಿ ಕಟ್ಟಿ, ವಲ್ಲಿ ಹೊದ್ದು, ಹಣೆಗೆ ಕುಂಕುಮವಿಟ್ಟು, ಕಿವಿಗೆ ಬುಗುಡಿ, ಕೊರಳಿಗೆ ಅಡ್ಡಿಕೆ, ಕೈಗೆ ಬಳೆ ಕಡಗ, ಕಾಲುಬೆರಳಿಗೆ ಸುತ್ತುಗಾಲುಂಗುರ ಹಾಕಿ ಸಿಂಗರಿಸಿದರೆ-ಪೀಂಚಲು ಯಾವ ಮಲೆಯ ಹೆಣ್ಣಿಗೂ ಬಿಟ್ಟುಕೊಡುವುದಿಲ್ಲ ಎಂದುಕೊಂಡನು! +ಬಣ್ಣ ತುಸು ಬೆಳ್ಳಗಿದ್ದರೆ ತಾನು ಒಲಿದಿರುವ ಹೂವಳ್ಳಿ ಚಿನ್ನಮ್ಮಗೆ ಸಮಸ್ಪರ್ಧಿಯಾಗಿ ಬಿಡುತ್ತಿದ್ದಳಲ್ಲವೆ? …. ಇನ್ನೂ ಏನೇನೊ ಆಲೋಚನೆಗಳು ನುಗ್ಗಿ ಬರುತ್ತಿದ್ದುವೊ? +ಅಷ್ಟರಲ್ಲಿ ಐತ ಅವನು ಅಡಗಿ ಕುಳಿತಿದ್ದ ಪೊದೆಯನ್ನು ದಾಟಿ, ತನ್ನ ಹಿಂದುಗಡೆ ಆ ಪೊದೆಗೆ ಸಮೀಪಿಸುತ್ತಿದ್ದ ಪೀಂಚಲು ಕಡೆಗೆ ತಿರುಗಿದನು. +ಸುಸಮಯವೆಂದು ಭಾವಿಸಿ ಮುಕುಂದಯ್ಯ ಕಾಡು ಮರುದನಿ ಕೊಡುವಂತೆ ಗಟ್ಟಿಯಾಗಿ, ಹುಲಿ ಅಬ್ಬರಿಸುವಂತೆ, ‘ಆಆಮ್‌!’ ಎಂದು ಕೂಗಿ ಇಬ್ಬರ ಮಧ್ಯೆ ಹಾರಿದನು. +“ಅಯ್ಯಪೋ!” ಎಂದು ಚೀರಿಬಿಟ್ಟಳು ಪೀಂಚಲು! +“ಎಂಥ ಭರ ಹೆದರಿಬಿಟ್ಟೆ ನಾನು! +ಹಹ್ಹಹ” ಎಂದು ಐತ ನಗತೊಡಗಿದನು. +ಪೀಂಚಲುಗೆ ಸಿಟ್ಟುಬಂದು ತುಳುಮಾತಾಡುವ ಗಟ್ಟದವರ ಕನ್ನಡದ ವಿರಳಾಕ್ಷರ ರೀತಿಯಲ್ಲಿ “ಮದುವೆಯಾಗಿದ್ದರೆ ಎರಡು ಮಕ್ಕಳ ಅಪ್ಪಯ್ಯ ಆಗುತ್ತಿದ್ದಿರಿ ನೀವು! +ಇನ್ನೂ ಮಕ್ಕಳಾಟಿಕೆ ಬಿಟ್ಟಿಲ್ಲ!” ಎಂದು ಮುಕುಂದಯ್ಯನನ್ನು ನೇರವಾಗಿ ನೋಡುತ್ತಾ, ತನಗೂ ನಗೆ ತಡೆಯಲಾರದ ನಕ್ಕುಬಿಟ್ಟಳು. +“ನನ್ನ ಮದುವೆ, ಮಕ್ಕಳು ಹಾಗಿರಲಿ. +ನಿನಗೀಗ ಮದುವೆಯಾಗಿ ಒಂದು ವರ್ಷದ ಹತ್ತಿರಕ್ಕೆ ಬಂತಲ್ಲ? +ಎಲ್ಲಿ ನಿನ್ನ ಮಕ್ಕಳು? +ಎಲ್ಲೂ ಕಾಣೋದಿಲ್ಲ!” ಎಂದು ನಗು ನಗುತ್ತಲೆ ವಿನೋದವಾಡಿ ಕುಡುಕುವಂತೆ ಸುತ್ತ ಕಣ್ಣಾಡಿಸಿದನು. +ಕರಿ ಮೊಗವೂ ನಸು ಕೆಂಪಾಗುವಂತೆ ನಾಚಿ ಪೀಂಚಲು “ಇಸ್ಸಿ!ಏನ್ರಯ್ಯಾ? +ಏನೆಲ್ಲ ಹೇಳ್ತೀರಿ!” ಎನ್ನುತ್ತಾ ದೂರ ಸರಿದು ಐತನ ಮರೆಗೆ ಹೋದಳು. +“ಎಲ್ಲಿತ್ತೊ ಈ ಹೊಂಬಾಳೆ?ಬಿದ್ದಿತ್ತೊ? +ಹತ್ತಿ ಉದುರಿಸಿದಿರೊ?” ಐತನ ಕೈಲಿದ್ದ ಹೊಂಬಾಳೆಯನ್ನು ಕರುಬಿನ ಕಣ್ಣಿನಿಂದ ನೋಡುತ್ತಾ ಕೇಳಿದನು ಮುಕುಂದಯ್ಯ. +“ಬಿದ್ದಿತ್ತು. ” ಉತ್ತರಿಸಿದ ಐತನ ಮುಖದ ನಗೆಯ ಭಂಗಿಯನ್ನು ನೋಡಿ, ಮುಕುಂದಯ್ಯ “ಸುಳ್ಳೋ ಬದ್ದೊ? +ನಿಜ ಹೇಳು” ಎಂದನು. +ಐತನ ಹಿಂದುಗಡೆಯಿಂದ ಪೀಂಚಲು ನಗುತ್ತಾ “ಇಲ್ಲಯ್ಯ, ಹತ್ತಿ ತೆಗೆದದ್ದು!” +“ಯಾರು ಹತ್ತಿದ್ದು? +ನೀನೋ ಅವನೋ?” +“ಇಸ್ಸಿ, ಅಯ್ಯ, ಏನು ಹೀಂಗೆ ಎಲ್ಲಾ ಹೇಳುತ್ತೀರಿ? +ನಾನು ಯಾಕೆ ಹತ್ತಲಿ ಅವನೆ ಹತ್ತಿ ಕುಯ್ದದ್ದು.”ಪೀಂಚಲು ಐತನೊಡನೆ ಬಾಲ್ಯದಿಂದಲೂ ಆಡಿದ್ದ ಏಕವಚನವನ್ನೆ ಸ್ವಾಭಾವಿಕವಾಗಿ ಉಪಯೋಗಿಸುತ್ತಿದ್ದಳು. +ಅವರ ಸಂಬಂಧ ಇನ್ನೂ ಬಹುವಚನಕ್ಕೇರುವಷ್ಟು ಕೃತಕವೂ ದೂರವೂ ಆಗಿರಲಿಲ್ಲ. +“ಓಹೋ, ಮದುವೆಯಾದ ಮೇಲೆ ನೀನೀಗ ದೊಡ್ಡ ಹೆಗ್ಗಡ್ತಿ ಆಗಿಬಿಟ್ಟಿದ್ದೀಯ! +ಆಗೆಲ್ಲ ನೀನೇ ಮರ ಹತ್ತಿ ಹೊಂಬಾಳೆ ಕಿತ್ತುಕೊಟ್ಟಿದ್ದೆ ನಮಗೆ?”ಪೀಂಚಲು ತನ್ನ ವಿವಾಹಪೂರ್ವದ ಬಾಲ್ಯಸಾಹಸಗಳ ವಿಚಾರವಾಗಿ ಮುಕುಂದಯ್ಯ ಆಡಿದ ಮಾತಿಗೆ ಸ್ವಲ್ಪ ಮಟ್ಟಿಗೆ ಪ್ರಹರ್ಷಿತಳಾಗಿ, ಆದರೂ ಭರ್ತ್ಸನೆಯ ಧ್ವನಿಯಿಂದ ಹೇಳಿದಳು, ಮುಕುಂದಯ್ಯನ ಪ್ರಶಂಸನೀಯ ನೇತ್ರಗಳನ್ನು ತನ್ನ ನೇತ್ರಗಳು ನೇರವಾಗಿ ಸಂಧಿಸುವಂತೆ ದೀರ್ಘಾಪಾಂಗದಿಂದ ನೋಡುತ್ತಾ “ಈ ಅಯ್ಯ ಏನೆಲ್ಲ ನೆನಪು ಇಟ್ಟುಕೊಂಡಿದ್ದಾರೆ!” +“ಒಳ್ಳೆ ಚೆನ್ನಾಗಿದೆ ಹೊಂಬಾಳೆ. +ಇತ್ತಕೊಡು ನನಗೆ. +ಇವತ್ತು ಅವ್ವನ ಹತ್ರ ನಂಗೆ ಬಳ್ಳೆ ಹಾಕಬ್ಯಾಡ ಅಂತಾ ಹೇಳ್ತೀನಿ. +ಇದರಲ್ಲೇ ಉಣ್ತೀನಿ” ಎಂದು ಮುಕುಂದಯ್ಯ ಕೈ ನೀಡಿದನು. +ಐತ ಅದನ್ನು ಅವನು ಮುಟ್ಟದಂತೆ ಸ್ವಲ್ಪ ಹಿಂದಕ್ಕೆ ಎಳೆದುಕೊಂಡು “ಬ್ಯಾಡ ಅಯ್ಯ, ಇವಳು ಮುಟ್ಟಿಬಿಟ್ಟಿದ್ದಾಳೆ” ಎಂದನು. +“ಮುಟ್ಟಿದರೆ ಏನಾಯ್ತೊ? ಕೊಡೊ. ” +ತಾನು ಹೇಳಿದುದು ಅರ್ಥವಾಗದಿದ್ದ ತನ್ನ ಹುಡುಗ ಒಡೆಯನ ದಾಂಪಾತ್ಯಾನುಭವವಿಲ್ಲದ ಅಜ್ಞಾನಕ್ಕೆ ನಸು ಕಿನಿಸಿದಂತೆ “ನಿಮಗೆ ಅದೆಲ್ಲಾ ಗೊತ್ತಾಗದಿಲ್ಲ, ಅಯ್ಯಾ” ಎಂದ ಐತ ಹೊಂಬಾಳೆಯನ್ನು ಪೀಂಚಲು ಕೈಗೆ ಕೊಟ್ಟು, ಹೆಗಲ ಕಂಬಳಿಯನ್ನು ಹಳ್ಳದ ದಂಡೆಗೆ ಎಸೆದು, ಕಪ್ಪೆ ಹಿಡಿಯಲು ಹಳ್ಳದ ಬಂಡೆಸಂದಿಯ ನಡುವೆ ನಿಂತಿದ್ದ ನೀರಿಗೆ ಬಾಗಿದನು. +ತುಸು ತೇಜೋಭಂಗವಾದಂತೆ ಮುಖಮ್ಲಾನನಾಗಿ ನಿಂತಿದ್ದ ಮುಕುಂದಯ್ಯನನ್ನು ಕಿರಿನಗೆವೆರಸಿ ನಸುನಿಟ್ಟಿಸಿ, ತನ್ನ ಗಂಡನ ಮಾತನ್ನು ಸಂಪೂರ್ಣವಾಗಿ ಸಮರ್ಥಿಸುವ ಠೀವಿಯಿಂದ ಪೀಂಚಲು ಹೊಂಬಾಳೆಯನ್ನೂ ಹಾಳೆಕೊಟ್ಟೆಯನ್ನೂ ಐತನ ಕಂಬಳಿಯ ಪಕ್ಕದಲ್ಲಿ ದಡದ ಮೇಲಿಟ್ಟು, ಕಪ್ಪೆ ಹಿಡಿಯಲು ಪ್ರಯತ್ನಿಸುತ್ತಿದ್ದ ತನ್ನ ಗಂಡನೆಡೆಗೆ ಹೋದಳು. +ಮುಕುಂದಯ್ಯ ನಿಂತಲ್ಲಿಯೆ ನಿಂತು, ಕಪ್ಪೆ ಹಿಡಿಯುವುದರಲ್ಲಿ ಮಗ್ನರಾಗಿದ್ದ ಅವರಿಬ್ಬರನ್ನೂ ನೋಡುತ್ತಿದ್ದನು, ಯಾವುದರಲ್ಲಿಯೊ ಏನೊ, ತನಗೆ ಅಗೋಚರವಾಗಿದ್ದ ಒಂದು ವಿಷಯದಲ್ಲಿ ಅವರಿಬ್ಬರಿಂದಲೂ ಪರಾಜಿತನಾದವನಂತೆ. +ತಾನು ಓದು ಬರಹ ಬಲ್ಲವನು. +ಐಗಳ ಕೃಪೆಯಿಂದ ಇತರ ತನ್ನಂತಹರಿಗಿಂತಲೂ ಹೆಚ್ಚು ಕಾವ್ಯ ಸಾಹಿತ್ಯ ಸಂಸ್ಕಾರ ಪಡೆದಿದ್ದಾನೆ. +ಐಗಳೂ ತನ್ನನ್ನು ಎಲ್ಲರಿಗಿಂತ ಬುದ್ದಿವಂತನೆಂದು ಮೆಚ್ಚಿಕೊಂಡಿದ್ದಾರೆ. +ತಾನು ಮನೆತನಸ್ಥರಾದ ಗೌಡರ ಕುಲದವನು. +ತಮ್ಮ ಮನೆಯವರು ಕಲ್ಲೂರು ಮಂಜಭಟ್ಟರಂತೆ ಅಜ್ಞರನ್ನೂ ಬಡಬಗ್ಗರನ್ನೂ ನಾನಾ ರೀತಿಯಿಂದ ಸುಲಿದು ಸಾಹುಕಾರರು ಎನ್ನಿಸಿಕೊಳ್ಳದಿದ್ದರೂ, ಯಾರೂ ತಮ್ಮನ್ನ ಬಡವರೆಂದು ಹೇಳುವ ಸ್ಥಿತಿಯಲ್ಲಿರಲಿಲ್ಲ. +ಅಲ್ಲದೆ ತಾನು ಅನೇಕ ಗಟ್ಟಡ ತಗ್ಗಿನವರನ್ನೂ ಕೂಲಿಯಾಳುಗಳನ್ನಾಗಿ ಇಟ್ಟುಕೊಂಡಿರುವ ಒಡೆಯರ ವರ್ಗಕ್ಕೆ ಸೇರಿದವನು. +ತನ್ನನ್ನು ಕಂಡರೆ ಇತರರಿಗೆಂತೊ ಅಂತೆ ಐತ ಪೀಂಚಲುಗಳಿಗೂ ಗೌರವ. +ತಾನು ಐತ ಪೀಂಚಲು ಮೂವರೂ ಸ್ವಲ್ಪ ಹೆಚ್ಚು ಕಡಿಮೆ ಸಮವಯಸ್ಸಿನವರು. +ಅನೇಕ ವರ್ಷಗಳಿಂದಲೂ ಒಡನಾಡಿದವರು. +ತನ್ನನ್ನು ಕಂಡರೆ ಹತ್ತಿರದ ಗೆಳೆಯನನ್ನು ಕಂಡಂತೆ ಅಕ್ಕರೆ ಪೀಂಚಲು ಐತರಿಗೆ. +ಅವರು ಮದುವೆಯಾಗುವ ಮೊದಲು ತಾನು ಹೇಳಿದುದಕ್ಕೆ ಎದುರು ಹೇಳಿದವರಲ್ಲ. +ತನ್ನನ್ನು, ಅವರಿಗೆ ತಿಳಿಯದೆಯೆ, ಒಂದು ರೀತಿಯ ಗುರುಭಾವದಿಂದ ಕಂಡು, ತನ್ನ ನಿರ್ಣಯಗಳಿಗೆ ಶಿಷ್ಯರಂತೆ ಶರಣಾಗಿ ಆಜ್ಞಾನುವರ್ತಿಗಳಾಗಿದ್ದರು. +ಈಗಲೂ ಅವರಿಗೆ ತನ್ನ ಮೇಲೆ ವಿಶ್ವಾಸ, ಗೌರವ, ಸ್ನೇಹಭಾವ ಎಲ್ಲ ಅಚ್ಚಳಿಯದಿವೆ. +ಆದರೂ ಮದುವೆಯಾದ ಮೇಲೆ ಅವರು ಅನೇಕ ವಿಚಾರಗಳಲ್ಲಿ ತಾನು ಅರಿಯದವನೆಂಬಂತೆ ಮಾತಾಡುತ್ತಾರೆ, ವರ್ತಿಸುತ್ತಾರೆ, ಎದುರುತ್ತರ ಕೊಡುತ್ತಾರೆ. +‘ನಿಮಗೆ ಅದೆಲ್ಲ ಗೊತ್ತಾಗದಿಲ್ಲ, ಅಯ್ಯಾ!’ ಎಂದು ಒಬ್ಬರ ಕಣ್ಣನ್ನು ಒಬ್ಬರು ನೋಡಿ, ಏನೊ ಇಂಗಿತಸಂವಾದ ಮಾಡಿಕೊಳ್ಳುತ್ತಾರೆ. +ಏನೊ ತಮಗೆ ಮಾತ್ರ ಲಭಿಸಿರುವ ಗುಪ್ರಾನುಭವದಿಂದ ತಾವಿಬ್ಬರೂ ನನಗಿಂತಲೂ ಹೆಚ್ಚು ತಿಳಿದವರು ಎಂಬಂತೆ ನಡೆದುಕೊಳ್ಳುತ್ತಾರೆ. +ಕೆಲವು ವಿಷಯಗಳಲ್ಲಂತೂ ಅನುಭವಶಾಲಿಗಳಾದ ವೃದ್ಧರು ಅನುಭವವಿಲ್ಲದ ಮಕ್ಕಳೊಡನೆ ದಾಕ್ಷಿಣ್ಯದಿಂದಲೊ ಕನಿಕರದಿಂದಲೊ ವ್ಯವಹರಿಸುವಂತೆ ಅರೆಪಾಲು ಮೂದಲಿಕೆಯಂತೆಯ ತೋರುವ ವ್ಯಂಗ್ಯವ್ಯಾಪಾರದಲ್ಲಿ ತೊಡಗುತ್ತಾರೆ. +ಅವಿಧೇಯತೆಯೂ ಅಲ್ಲ, ಅವಜ್ಞೆಯೂ ಅಲ್ಲ ಎಂಬ ಅಸ್ಪಷ್ಟ ನಿಲುವಿನಿಂದ ಮನಸ್ಸಿಗೆ ಕೀಟಲೆ ಕೊಡುತ್ತಾರೆ. +ತನಗಿಲ್ಲದ ಅದಾವ ವಿಶೇಷಾನುಭವ ಒದಗಿಬಿಟ್ಟಿದೆ ಇವರಿಗೆ, ಮದುವೆಯಾದ ಮೇಲೆ? +ಇದ್ದಕ್ಕಿದ್ದಂತೆ ಹಾಗೆ ಕೋಡುಮೂಡಿದವರ ಹಾಗೆ ವರ್ತಿಸುತ್ತಾರಲ್ಲಾ? +“ಅಯ್ಯಾ, ಬನ್ನಿ ಕಪ್ಪೆಗೋಲು ಆಗಿದೆ. +ನಿಮಗೊಂದು ನನಗೊಂದು” ಐತನ ಕರೆ ಕೇಳಿ ಮುಕುಂದಯ್ಯ ತನ್ನ ಚಿಂತನಧಾರೆ ತುಂಡಾದವನಂತೆ ತೆಕ್ಕನೆ ಹಗಲುಗನಸಿನಿಂದ ಎಚ್ಚತ್ತು ಕೆಲಸಕ್ಕೆ ಮುಂದುವರಿದನು. +ಮೂವರೂ ಕಪ್ಪೆಗೋಲು ಹಾಕುತ್ತಾ ಸರಲಿನಲ್ಲಿ ಮೇಲೆ ಮೇಲೆ ಹೋದರು. +ನಾಲ್ಕಾರು ಕಾರೇಡಿಗಳೂ ಕೊಂಬುಕಾಲು ಮುರಿಸಿಕೊಂಡು ಪೀಂಚಲು ಹಿಡಿದಿದ್ದ ಹಾಳೆಕೊಟ್ಟೆಗೆ ಬಿದ್ದವು. +ಏಡಿ ಹಿಡಿಯುವುದೆ ಮುಖ್ಯ ಉದ್ದೇಶವಾಗಿ ಬರದಿದ್ದ ಮುಕುಂದಯ್ಯನ ಕಪ್ಪೆಗೋಲಿಗೆ ಒಂದೂ ಕಚ್ಚದಿರಲು ಬಿಲ್ಲವನಾದ ಐತ ಅದಕ್ಕೆ ಕಾರಣ ಹೇಳಿದನು, ಸಮಾಧಾನ ಮಾಡುವಂತೆ: “ಆ ಹಸಲವರ ಬಿಡಾರದವರು ಇದಾರಲ್ಲಾ ಅವರು, ಕೆಲಸಕ್ಕೆ ಬರದೆ ಉಳಿ ಕೂತಾಗಲೆಲ್ಲ, ಈ ಹಳ್ಳಕ್ಕೇ ಬಂದು ಕಲ್ಲು ಮುಗುಚುತ್ತಾರಲ್ದಾ? +ಏಡಿ ಎಲ್ಲಾ ಅವರ ಪಾಲಿಗೆ ಆಗಿಹೋಯಿತ್ತು. +ಮೊದಲು ಸಿಕ್ಕಿದ ಹಾಂಗೆ ಎಲ್ಲಿ ಸಿಕ್ಕುತ್ತವೆ ಈಗ?”ತನ್ನ ಕಪ್ಪೆಗೋಲಿಗೆ ಏಡಿ ಕಚ್ಚದೆ ಬೇಸತ್ತವನ ಹಾಗೆ ಮುಕುಂದಯ್ಯ “ಏಡಿ ಹಿಡೀತಾ ಇರೋ ನೀನು. +ನಾನು ಇಲ್ಲೆ ಕೆಳಗೆ, ಆ ಹಕ್ಕಲಿನಲ್ಲಿ, ಬಿದಿರುಹಿಂಡಿಲು ಮೇಲೆ ಹೊರಸಲ್ಹಕ್ಕಿ ಇವೆಯೇನೊ ನೋಡಿ ಬರ್ತೇನೆ, ಚಿಟ್ಟುಬಿಲ್ಲು ತಗೊಂಡು ಹೋಗಿ” ಎಂದು ತುಸು ಕಾದನು. +ಐತ ಕಪ್ಪೆಗೋಲು ಹಾಕುವುದನ್ನೆ ಆಸಕ್ತಿಯಿಂದ ಮುಂದುವರಿಸುತ್ತಿದ್ದನು. +ಮುಕುಂದಯ್ಯ ನಿರೀಕ್ಷಿಸಿದ್ದಂತೆ, ತಾನೆ ಚಿಟ್ಟುಬಿಲ್ಲು ತೆಗೆದುಕೊಂಡು ಹೋಗುತ್ತೇನೆ, ಎಂದು ಅವನು ಮುಂದೆ ಬರಲಿಲ್ಲ. +ಚಿಟ್ಟುಬಿಲ್ಲಿನಿಂದ ಹಕ್ಕಿ ಹೊಡೆಯುವುದರಲ್ಲಿ ಮುಕುಂದಯ್ಯ ಎಷ್ಟು ಪ್ರವೀಣನೋ ಅಷ್ಟೇ ಪ್ರವೀಣನಾಗಿದ್ದನು ಐತನೂ. +ಅಲ್ಲದೆ ಹಕ್ಕಿಬೇಟೆಯ ಆಸಕ್ತಿಯಲ್ಲಿ ಮುಕುಂದಯ್ಯನಿಗಿಂತಲೂ ಒಂದು ಕೈ ಮೇಲಾಗಿತ್ತು ಐತನದು. +ಆದ್ದರಿಂದ ಐತ ತಾನೇ ಚಿಟ್ಟುಬಿಲ್ಲು ಬೇಟೆಗೆ ಹೋಗಲು ಮುಂದೆ ಬರುತ್ತಾನೆ; ಹಾಗೆ ಮುಂದೆ ಬಂದರೆ ಅವನನ್ನು ಹಕ್ಕಿ ಬೇಟೆಗೆ ಹೋಗಲು ಹಕ್ಕಲಿಗೆ ಕಳಿಸಿ, ತಾನು ಏಕಾಂತದಲ್ಲಿ ಪೀಂಚಲುವೊಡನೆ ತನ್ನ ಉದ್ದೇಶ ಸಾಧನೆ ಮಾಡಿಕೊಳ್ಳಬಹುದು ಎಂದು ಹವಣಿಸಿದ್ದನು. +“ಹೊತ್ತು ಮಾಡಬೇಡಿ, ಬೇಗ ಬನ್ನಿ” ಐತನ ಸಲಹೆಯಂತೆ ಮುಕುಂದಯ್ಯ ಪೀಂಚಲುವನ್ನೆ ನೋಡುತ್ತಾ ಹಳುವಿನಲ್ಲಿ ಮರೆಯಾದನು. +ಪೀಂಚಲು ಅವನು ಹೋದತ್ತ ಕಡೆಯೆ ಎವೆಯಿಕ್ಕದೆ ನೋಡುತ್ತಾ “ಇವತ್ತು ಯಾಕೆ ಅಯ್ಯ ನನ್ನ ಕಡೆ ಮತ್ತೆ ಮತ್ತೆ ನೋಡುತ್ತಾರಲ್ಲಾ?” ಎಂದುಕೊಂಡು ಮುಗುಳುನಕ್ಕಳು. +ಮುಕುಂದಯ್ಯನಿಗೂ ಹಾಗೆಯೆ ಅನ್ನಿಸಿತ್ತು. +ಮೂವರೂ ಕಪ್ಪೆಗೋಲು ಹಾಕುತ್ತಾ ಮುಂದುವರಿಯುತ್ತಿದ್ದಾಗ ಮುಕುಂದಯ್ಯ ಪೀಂಚಲು ಕಡೆ ನೋಡಿದಾಗಲೆಲ್ಲ ಅವಳೂ ತನ್ನನ್ನೆ ನೋಡುತ್ತಿರುವಂತೆ ಭಾಸವಾಗಿ “ಇವಳು ಯಾಕೆ ಇವತ್ತು ನನ್ನ ಕಡೇನೆ ನೋಡ್ತಾಳಲ್ಲಾ?” ಎಂದು ಸೋಜಿಗಪಟ್ಟಿದ್ದನು. +ಅಕ್ಷಿಪ್ರಸರಣದ ಅನೇಕಾರ್ಥವು ಅನುಭವಿಯಾಗಿದ್ದ ಪೀಂಚಲುಗೆ ಸ್ಫುರಿಸಿದಂತೆ ಮುಕುಂದಯ್ಯಗೆ ಆಗಲುಸಾಧ್ಯವೆ? +ಅವನು ಮುಗುಳು ನಕ್ಕರೆ, ಇವನು ಸೋಜಿಗ ಪಡಬಲ್ಲ ಅಷ್ಟೆ! +ನಾಲ್ಕೈದುನಿಮಿಷಗಳೂ ಕಳೆದಿರಲಿಲ್ಲ. +ಮುಕುಂದಯ್ಯ ಏದುತ್ತಾ ಓಡಿ ಬಂದ. +ಐತ ಪೀಂಚಲು ಗಾಬರಿಯಿಂದ ಎದ್ದುನಿಂತು ಅವನ ಕಡೆ ನೋಡಿದರು. +ಏದುತ್ತಲೆ ಕೂಗಿದನು ಮುಕುಂದಯ್ಯ: ‘ಐತ, ಓಡು!ಬೇಗೋಡು! +ಒಂಟಿಗ ಹಂದಿ ಒಂದು ಆ ಇಲಾತ್‌ಸೀಂಗೇಲಿ ಮಲಗಿಕೊಂಡದೆ. +ಕೋವಿ ತಗೊಂಡು, ನಾಯಿ ಕರಕೊಂಡು ಬರಾಕೆ ನಾ ಹೇಳ್ದೆ ಅಂತಾ ಹೇಳು ಐಗಳಿಗೆ. +ಓಡ್ಹೋಗಿ ಹೇಳು! +ಬೇಗ ಓಡು! +ಸುಲಭದಲ್ಲಿ ಹೊಡೀಬೈದು!”ಕಪ್ಪೆಗೋಲನ್ನು ಕೆಳಕ್ಕೆಸೆದು, ಕಲ್ಲಿಂದ ಕಲ್ಲಿಗೆ ಹಾರಿ ನೆಗೆದು, ಒಂದೇ ಸಮನೆ ನಿಟ್ಟೋಟದಿಂದ ಓಡುತ್ತಾ ತೋಡದ ಕಡೆಗೆ ನುಗ್ಗಿ ಐತ ಕಣ್ಮರೆಯಾದನು. +ಫಕ್ಕನೆ ಸುತ್ತಲೂ ನಿಃಶಬ್ದವಾದಂತಾಯಿತು. +ಕಾಗೆಗಳಂತೆ ಕೋಗಿಲೆಗಳೂ ವಿರಳವಾಗಿದ್ದ ಆ ಕೋಣೂರಿನ ಹಾಡ್ಯದಲ್ಲಿ ಅಪರೂಪಕ್ಕೆಂಬಂತೆ ಕೂಗುತ್ತಿದ್ದ ಒಂದು ಕೋಗಿಲೆಯ ಇಂಚರ ಅಲೆಅಲೆಯಾಗಿ ತೇಲಿಬರುತ್ತಿತ್ತು. +ಒಂದು ಕಾಮಳ್ಳಿಯ ಹಿಂಡು ಉಲಿಯುತ್ತಾ ರೆಕ್ಕೆಸದ್ದೂ ಕಿವಿಗೆ ಬರುವಷ್ಟು ಸಮೀಪದಲ್ಲಿ ಹಾರಿಹೋಯಿತು. +ದೂರ ತೋಟದ ಮೂಲೆಯಲ್ಲಿ ಮರ ಕಡಿಯುತ್ತಿದ್ದ ಸದ್ದು ಮಂದವಾಗಿ ಬರುತ್ತಿದ್ದು. +ಪೀಂಚಲು ಏನೋ ಒಂದು ರೀತಿಯ ಸಂಕೋಚಭಾವವನ್ನು ಮರೆಮಾಡುವ ಪ್ರಯತ್ನದಲ್ಲಿ ತಾನು ಹಿಡಿದಿದ್ದ ಹಾಳೆಕೊಟ್ಟೆಯಲ್ಲಿದ್ದ ಏಡಿಗಳನ್ನು ಪರಿಶೀಲಿಸುವ ನೆವ ಹೂಡಿದ್ದಳು. +ಆ ಮೌನ ಮತ್ತು ಸಂಕೋಚಭಾವದ ಎರಡು ಮೂರು ನಿಮಿಷಗಳ ಕಾಲ ಗಂಟೆಗಳಷ್ಟು ದೀರ್ಘವಾಗಿ ತೋರಿ, ಮುಕುಂದಯ್ಯನಿಗೆ ಮನಸ್ಸಿಗೆ ಹೊರಲಾರದಷ್ಟು ಭಾರವಾಯಿತು. +ವ್ಯರ್ಥವಾಗಿ ಕಳೆಯಲು ಸಮಯವಿರಲಿಲ್ಲ. +ಐತ ಹಿಂದಿರುಗುವುದರೊಳಗೆ ಎಲ್ಲವನ್ನೂ ಪೂರೈಸಿಬಿಡಬೇಕಿತ್ತು! +ಏನನ್ನೊ ಮಾತು ಪ್ರಾರಂಭಿಸಲು ತವಕಿಸುತ್ತಾ ನಿಂತ ಪೀಂಚಲು ಹಾಳೆಕೊಟ್ಟೆಯಿಂದ ತಲೆ ಎತ್ತುವುದನ್ನೆ ಕಾಯುತ್ತಿದ್ದನು. +ಆದರೆ ಅವಳು ತಲೆ ಎತ್ತುವಂತೆಯೇ ತೋರಲಿಲ್ಲ. +“ಇವಳು ಯಾಕೆ ಇವತ್ತು ಹೀಗೆ?” ಮುಕುಂದಯ್ಯ ಮನಸ್ಸಿನಲ್ಲಿಯೆ ಅಂದುಕೊಂಡನು. +ಮದುವೆಯಾದ ಮೇಲೆ ಬೇರೆಯೆ ಆಗಿಬಿಟ್ಟಿದ್ದಾಳೆ! +ಹಿಂದೆಲ್ಲ ಎಷ್ಟು ಸರಸದಿಂದ, ಸಲಿಗೆಯಿಂದ, ಮುಗ್ಧಳಾಗಿ ಸಂಕೋಚವಿಲ್ಲದೆ ವರ್ತಿಸುತ್ತಿದ್ದಳು?” +ಪೀಂಚಲು ಮತ್ತು ಐತ ಇಬ್ಬರೂ ದಂಪತಿಗಳಾಗುವ ಮೊದಲು ಆರೇಳು ವರ್ಷಗಳಿಂದಲೂ ಮುಕುಂದಯ್ಯನ ಸಹಪಾಂಶುಗಳಾಗಿ ಒಡನಾಡಿಗಳಾಗಿದ್ದರು. +ಪೀಂಚಲು ಹೆಣ್ಣುಜಾತಿಗೆ ಸೇರಿದವಳೆಂಬುದು ಅವನಿಗೆ ಜ್ಞಾನವಿಷಯವಾಗಿದ್ದಿತೆ ಹೊರತು ಭಾವವಿಷಯವಾಗಿಯೆ ಇರಲಿಲ್ಲ. +ಬಾಲ್ಯಾನಂತರ ಅವನಲ್ಲಿ ಹೂವಳ್ಳಿ ಚಿನ್ನಮ್ಮನ ಪರವಾಗಿ ಯಾವ ಭಾವಪರಿವರ್ತನೆಯನ್ನು ಅನುಭವಿಸಿದ್ದನೊ ಅಂತಹ ಯಾವ ಭಾವವನ್ನೂ ಪೀಂಚಲು ಪರವಾಗಿ ಅನುಭವಿಸಿರಲಿಲ್ಲ. +ತನ್ನೊಡನೆ ಬೇಟೆಗೆ ಬರುವ ತಮ್ಮ ಮನೆಯ ಒಂದು ಒಳ್ಳೆಯ ಜಾತಿಯ ಮತ್ತು ರೂಪದ ಹೆಣ್ಣು ನಾಯಿಯ ವಿಚಾರವಾಗಿ ಯಾವ ಮೋಹ ಮಮತೆ ಪ್ರೀತಿ ಪ್ರಶಂಸೆಗಳಿರಬಹುದಾಗಿತ್ತೋ ಹಾಗೆಯೆ ಮುಟ್ಟದವಳೂ ಕೀಳು ಜಾತಿಯವಳೂ ತಮ್ಮ ಕೂಲಿಯಾಳುಗಳ ಕುರುದೆಯೂ ಆಗಿದ್ದ ಪೀಂಚಲು ವಿಚಾರದಲ್ಲಿಯೂ ಒಂದು ವಿಶ್ವಾಸಪೂರ್ವಕವಾಗಿದ್ದ ಆಸಕ್ತಿ ಇರುತ್ತಿತ್ತು. +ಕೆಲವು ವಿಷಯಗಳಲ್ಲಿ ಪೀಂಚಲು ಗಂಡುಹುಡುಗರಂತೆಯೆ ನಡೆಯುತ್ತಿದ್ದಳು. +ತನ್ನವರಾದ ಒಕ್ಕಲಿಗ ಮನತನಸ್ಥರ ಹೆಣ್ಣುಮಕ್ಕಳಿಗೆ ಅಸಾಧ್ಯವಾದ ಸಾಹಸಗಳನ್ನೆಲ್ಲ ಮಾಡಿ ಮುಕುಂದಯ್ಯನ ಬೆರಗಿಗೂ ಮೆಚ್ಚುಗೆಗೂ ಪಾತ್ರಳಾಗಿದ್ದಳು. +ಅಡಕೆ ಮರಕ್ಕೆ ಹತ್ತಿ, ಕೆಳಗೆ ಬೀಳಲಾರದೆ ಹಿಂಗಾರಕ್ಕೆ ಸಿಕ್ಕಿಕೊಂಡು ಹೊಂಬಾಳೆಗಳನ್ನು ಅದೆಷ್ಟೋ ಸಾರಿ ಲೀಲಾಜಾಲವಾಗಿ ಕಿತ್ತುಕೊಟ್ಟಿದ್ದಳು. +ತಾನೂ ಐತನೂ ಹುಳುಗಳಿಗೆ ಹೆದರಿ ಓಡಿಹೋದಾಗ ಅವಳು ಕಚ್ಚಿಸಿಕೊಂಡೂ ಹೆದರದೆ ಹುತ್ತದಲ್ಲಿದ್ದ ತುಡುವೆ ಜೇನನ್ನು ಕಿತ್ತುಕೊಟ್ಟಿದ್ದಳು. +ಮರುದಿ ಮುಖ ಊದಿಕೊಂಡು ವಿಕಾರವಾಗಿ ತನ್ನವರಿಂದ ಬಯ್ಯಿಸಿಕೊಳ್ಳುತ್ತಿದ್ದುದನ್ನೂ ಲೆಕ್ಕಿಸದೆ. +ಅಷ್ಟೆ ಅಲ್ಲದೆ, ಇತ್ತೀಚೆಗೆ ತನಗೂ ಹೂವಳ್ಳಿ ಚಿನ್ನಮ್ಮಗೂ ನಡುವಣ ಬಾಯಿಪತ್ರ ವ್ಯವಹಾರವನ್ನೂ ನಡೆಸಿ, ಗೋಪ್ಯವನ್ನು ಯಾರಿಗೂ ಬಿಟ್ಟುಕೊಡದೆ, ಯಾರಿಗೂ ತಿಳಿಯದಂತೆ ನೋಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಳು. +ಆ ವಿಚಾರದಲ್ಲಿ ಅವಳು ತನ್ನ ಗಂಡ ಐತನಿಗಿಂತಲೂ ಸಾವಿರ ಪಾಲು ನಂಬಿಕೆಗೆ ಅರ್ಹಳಾಗಿದ್ದಳು. +ಐತ ಸರಳ, ಶಕ್ತ, ಜಾಣ, ಶ್ರಮಸಹಿಷ್ಣು; +ಆದರೆ ಬಾಯಾಳಿ. +ಅವನ ಹತ್ತಿರ ಯಾವ ಗುಟ್ಟೂ ಒಂದು ದಿನವಾದರೂ ಸುರಕ್ಷಿತವಾಗಿರುವುದು ಅಸಾಧ್ಯವಾಗಿತ್ತು. +ಒಮ್ಮೆ ಹುಡುಗರೆಲ ಸೇರಿ ಕದ್ದು, ಬಾಳೆಮರದ ಬುಡದಲ್ಲಿ ಹೂಳಿಟ್ಟ ಐಗಳ ಮಂಗಳೂರು ನಶ್ಯದ ಬೆಳ್ಳಿಯ ಪುಡಿ ಡಬ್ಬಿಯನ್ನು, ಅವರು ತುಸು ಪುಸಲಾಯಿಸಿದ್ದೆ ತಡ, ಅದನ್ನು ಕದಿಯುವಾಗ ಅವರ ಅವಸರ ಆಸಕ್ತಿಗಳನ್ನು ತೋರಿದ್ದನೋ ಅದೇ ಅವಸರ ಆಸಕ್ತಿಗಳಿಂದಲೆ, ಕದ್ದಿಟ್ಟ ಜಾಗವನ್ನೂ ಹೇಳಿಕೊಟ್ಟುದಲ್ಲದೆ ಡಬ್ಬಿಯನ್ನೂ ಅಗೆದು ತೆಗೆದುಕೊಟ್ಟು, ರಂಗಪ್ಪಗೌಡರಿಂದ ಎಲ್ಲರೂ ಚಡಿಏಟು ತಿನ್ನುವಂತೆ ಮಾಡಿದ್ದನು. +ಗಟ್ಟದ ತಗ್ಗಿನವರ ಹರಕಲು ತಟ್ಟಿ ಗೋಡೆಯ ಬಿಡಾರಗಳಲ್ಲಿ ಗಂಡು ಹೆಣ್ಣುಗಳೊ ಗಂಡ ಹೆಂಡಿರೊ ಗೋಪ್ಯಕಾರ್ಯಗಳಲ್ಲಿ ಸಾಕಷ್ಟು ಮುಚ್ಚುಮರೆಯಿಲ್ಲದೆ ತೊಡಗಿದ್ದುದನ್ನು ಇವನು ಬೇಕೆಂದು ಹಣಿಕಿಯೊ, ಅಕಸ್ಮಾತ್ತಾಗಿ ಇಳಿಕಿಯೋ ಕಂಡಾಗ ಅದನ್ನೆಲ್ಲೆ ಹಾಗೆ ಹಾಗೆಯೆ, ಹಸಿಹಸಿಯಾಗಿಯೇ ಮುಕುಂದಯ್ಯನಿಗೆ ವಿನೋದ ವಿಷಯವನ್ನು ಹೇಳುವಂತೆ ಹೇಳಿ, ಹೊಟ್ಟೆ ಹಿಡಿದುಕೊಂಡು ಕುಮ್‌ಚೆಟ್‌ ಹೊಡೆದು ನಕ್ಕಿದ್ದನು! +ಆ ವಿಚಾರದಲ್ಲಿ ಅವನಿಗೆ ತನ್ನದು ಪರರದು ಎಂದು ಎಗ್ಗೂ ಇರಲಿಲ್ಲ. +ತಾನೆ, ಮದುವೆಯಾದ ಹೊಸದರಲ್ಲಿ, ಹೆಂಡತಿಯ ಮಗ್ಗುಲಲ್ಲಿ ಮೊತ್ತಮೊದಲು ಮಲಗಿದಾಗ ನಡೆದ ಗೋಪನೀಯವೂ ಅವಾಚ್ಯವೂ ಆದ ಸಂಗತಿಗಳನ್ನು ತನಗೆ ಲಭಿಸಿದ ಮೊದಲನೆಯ ಅವಕಾಶದಲ್ಲಿಯೆ, ಆಲಿಸಿದ ಮುಕುಂದಯ್ಯ ನಾಚಿ ಥೂಗೊಳ್ಳುವವರೆಗೂ ಬಹಿರಂಗಪಡಿಸಿ ಗಳಪಿದ್ದನು! +ಆದ್ದರಿಂದಲೆ ಮುಕುಂದಯ್ಯ ತಾನು ಕೈಗೊಳ್ಳಲಿರುವ ರಹಸ್ಯ ಕಾರ್ಯಸಾಧನೆಗೆ ಐತನನ್ನು ಆರಿಸದೆ ಅವನ ಹೆಂಡತಿಯನ್ನು ಆರಿಸಿ, ಉಪಾಯದಿಂದ ಅವಳನ್ನು ತನ್ನ ಏಕಾಂತಕ್ಕೆ ಪ್ರತ್ಯೇಕಿಸಿದ್ದನು. +ಆದರೆ ಪೀಂಚಲು ಅನುಭವಿಸುತ್ತಿದ್ದ ಭಾವದ ಸ್ವರೂಪ ಬೇರೆಯದಾಗಿತ್ತು. +ಐತನನ್ನು ಮದುವೆಯಾಗುವುದಕ್ಕೆ ಮೊದಲು, ಅವಳು ಹುಡುಗಿಯಾಗಿ ಹೊರೆ ಹೊಣೆಹೆಚ್ಚೇನೂ ಇಲ್ಲದೆ, ಗದ್ದೆ ತೋಟ ಹಕ್ಕಲು ಹಾಡ್ಯ ಕಾಡುಗಳಲ್ಲಿ, ಹುಡುಗರ ಗುಂಪಿನೊಡನೆ ಅಥವಾ ಅವರ ಹಿಂದೆ, ಇತರ ತನ್ನಂತಹ ಗಟ್ಟದ ತಗ್ಗಿನ ಕುರುದೆಗಳೊಡನೆ ಅಲೆಯುತ್ತಿದ್ದಾಗ ಬಾಲಕರಲ್ಲೆಲ್ಲ ಮುಕುಂದಯ್ಯನನ್ನೆ ಬಹಳವಾಗಿ ಮೆಚ್ಚಿಕೊಂಡಿದ್ದಳು. +ಜಾತಿ ಮತ್ತು ಸಾಮಾಜಿಕ ನೀತಿನಿಷ್ಠೆಗಳಿಗೆ ಅನುಗುಣವಾಗಿ ತನಗಿಂತಲೂ ತುಂಬ ಎತ್ತರದಲ್ಲಿ, ತಾನೆಂದೂ ಮುಟ್ಟಲಾರದಷ್ಟು ಮತ್ತು ಮುಟ್ಟಬಾರದಷ್ಟು ದೂರದಲ್ಲಿಯೆ ಇರುತ್ತಿದ್ದ ಮುಕುಂದಯ್ಯನನ್ನು ಆರಾಧ್ಯ ಭಾವದಿಂದಲೆ ಪೂಜಿಸುತ್ತಿದ್ದಳೆಂದರೆ ಅವನ ಪರವಾಗಿ ಅವಳಲ್ಲಿದ್ದ ಪ್ರಶಂಸೆಯ ಭಾವವನ್ನೇನು ತಪ್ಪಾಗಿ ವರ್ಣಿಸಿದಂತಾಗುವುದಿಲ್ಲ. +ಇತರ ಎಲ್ಲ ಗೌಡರು ಹಳೆಪೈಕದವರು ಸೆಟ್ಟರು ಹಸಲವರು ಬಿಲ್ಲವರು ಕರಾದಿಗರು ಬೇಲರು ಹೊಲೆಯರು ಇವರ ಮಕ್ಕಳಿಗಿಂತ ಮುಕುಂದಯ್ಯ ರೂಪದಲ್ಲಾಗಲಿ ಬಣ್ಣದಲ್ಲಾಗಲಿ ಬುದ್ಧಿಯಲ್ಲಾಗಲಿ ಚಟುವಟಿಕೆಯಲ್ಲಾಗಲಿ ಸಾಹಸದಲ್ಲಾಗಲಿ ಮೇಲಾಗಿ ಮುಂದಾಗಿ ಕಾಣಿಸಿದ್ದನು, ಪೀಂಚಲು ಕಣ್ಣಿಗೆ. +ಸ್ವಲ್ಪ ಬೆಳೆದ ಮೇಲೆ, ಬಾಲೆ ತರಳೆಯಾದ ಮೇಲೆ, ಅವಳು ಮುಕುಂದಯ್ಯನನ್ನು ಯಾವ ಹೆಣ್ಣಾದರೂ ಲಕ್ಷಣವಾದ ಯಾವ ಗಂಡನ್ನಾದರೂ ಮೆಚ್ಚಿ ಬಯಸಿಕಾಣುವಂತೆ ಕಾಣುತ್ತಿದ್ದಳು. +ಅವಳ ಆ ಭಾವಸಮೂಹದ ಎಳೆಗಳಲ್ಲಿ ಶೃಂಗಾರದ ಅಪೇಕ್ಷೆಯೂ ಒಂದು ಎಳೆಯಾಗಿತ್ತು ಎಂದರೆ ಅದು ಅವಳ ಮುಗ್ಧತೆಯನ್ನೇನೂ ಕಲುಷಿತಗೊಳಿಸುವಂತಿರಲಿಲ್ಲ. +ಮುಕುಂದಯ್ಯನನ್ನು ತಾನು ಸುಮ್ಮನೆ ಮುಟ್ಟುವಷ್ಟಾದರೂ ಆಗಿದ್ದರೆ ಅವಳಿಗೆ ಸ್ವರ್ಗವೆ ಪ್ರಾಪ್ತವಾದಷ್ಟು ಆನಂದವಾಗುತ್ತಿತ್ತು. +ಅದಕ್ಕೆ ಅವಳಿಗೆ ತಡೆಯಾಗಿದ್ದುದೆಂದರೆ ಜಾತಿ, ಸಮಾಜ, ವರ್ಗತಾರತಮ್ಯ. +ಐತನನ್ನು ಮದುವೆಯಾದ ಮೇಲೆ, ಪೀಂಚಲುಗೆ ಗಂಡು ಹೆಣ್ಣುಗಳ ಸಂಬಂಧದ ಸ್ವರೂಪದಲ್ಲಿ ಅತ್ಯಂತ ವಿಸ್ಮಯದ ಮತ್ತು ಸುಖದ ಹೊಸ ಅನುಭವವುಂಟಾಗಿ, ಮುಕುಂದಯ್ಯನ ಪರವಾಗಿ ಅವಳ ನಡತೆ ಸಾಮಾಜಿಕ ಮತ್ತು ಜಾತಿಯ ನೀರಿಯ ಚೌಕಟ್ಟಿನ ಕಟ್ಟಿಗೊಳಗಾಯಿತು. +ಹೊಸದಾಗಿ ಪಡೆದ ಶಾರೀರಿಕ ಸಂಬಂಧದಿಂದ ತನ್ನ ಗಂಡನ ಮೇಲೆ ಹಿಂದೆ ಅವಳಿಗಿದ್ದ ಪ್ರೀತಿ ಮೆಚ್ಚುಗೆಗಳು ನೂರರಷ್ಟಾಗಿ ಹೊಸ ಮೋಹಪಾಶದಿಂದ ಕಟ್ಟುಗೊಂಡು ಸುಭದ್ರವಾಗಿದ್ದುವು. +ಆದರೆ ಆ ಪ್ರೇಮ ವ್ರತಸ್ವರೂಪದ್ದಾಗಿರಲಿಲ್ಲ. +ದೃಢಕಾಯದ ಅರೋಗಿಯಾದ ಪ್ರಾಯದ ಪ್ರಾಣಿಯಲ್ಲಿರಬಹುದಾದ ಪ್ರಣಯದಂತೆ ರತಸ್ವರೂಪದ್ದಾಗಿತ್ತು ಎಂದರೆ ಅವರ ಸಂಬಂಧವನ್ನು ಅವಹೇಳನ ಮಾಡಿದಂತೆಯೂ ಆಗುವುದಿಲ್ಲ, ಕೀಳುಗೈದಂತೆಯೂ ಆಗುವುದಿಲ್ಲ. +ಅದು ಸಹಜವಾಗಿತ್ತು, ಅಕೃತಕವಾಗಿತ್ತು ಎಂದಂತೆ ಮಾತ್ರ ಆಗುತ್ತದೆ. +ತನ್ನ ಗಂಡನ ಸಂಬಂಧವಾದ ಅವಳ ನಡೆಯನ್ನು ‘ಪಾತಿವ್ರತ್ಯ’ ಎಂದು ಕರೆಯುವಂತಿರಲಿಲ್ಲ. +ಏಕೆಂದರೆ ಅದಕ್ಕೆ ಸಮಾಜದ ನೀತಿಯ ಭೀತಿಯಾಗಲಿ, ಪಾಪ ನರಕಾದಿ ಧರ್ಮ ಭಯದ ಭಿತ್ತಿಯಾಗಲಿ, ಆದರ್ಶಸಾಧನೆಯ ಸಾಣಿಯಾಗಲಿ, ಆಕರ್ಷಣೆಯಾಗಲಿ ಇರಲಿಲ್ಲ. +ಅದು ತೀರ ನೈಸರ್ಗಿಕವಾಗಿತ್ತು. +ಐತನಲ್ಲದ ಮತ್ತಾವ ಗಂಡನ್ನಾಗಲಿ, ಮುಕುಂದಯ್ಯ ವಿನಾ, ಅದು ತಿರಸ್ಕರಿಸುವುದಿರಲಿ ಆಲೋಚಿಸುವ ಗೋಜಿಗೂ ಹೋಗಿರಲಿಲ್ಲ; +ವ್ರತಪಾಲನೆಗಾಗಿ ಅಲ್ಲ, ನೈಸರ್ಗಿಕವಾಗಿ ಅವಳ ಪ್ರಣಯಕ್ಕೆ ಅಂಗರಕ್ಷಕರಾರೂ ಇರಲಿಲ್ಲ; +ಸಮಾಜ ನೀತಿಯ ಇಲಾಖೆಯಿಂದ ನೇಮಕವಾದವರಾಗಲಿ, ಧಾರ್ಮಿಕ ಭೀತಿಯ ಇಲಾಖೆಯಿಂದ ನೇಮಕವಾದವರಾಗಲಿ! +ಆದ್ದರಿಂದಲೆ ಮದುವೆಗೆ ಮೊದಲು ಅವಳಿಗೆ ಮುಕುಂದಯ್ಯನ ಮೇಲಿದ್ದ ಅಭಿಮಾನ ಇಂದಿಗೂ ಅಕ್ಷತವಾಗಿಯೆ ಉಳಿದಿತ್ತು. +ಐತ ಅಪೇಕ್ಷಿಸಿದ್ದನ್ನು ಮುಕುಂದಯ್ಯ ಅಪೇಕ್ಷಿಸಿದ್ದರೆ ಅವಳು ‘ಇಲ್ಲ’ ಎನ್ನುವ ಸ್ಥಿತಿಯಲ್ಲಿರಲಿಲ್ಲ; + ಒಲ್ಲೆ ಎನ್ನುತ್ತಿರಲಿಲ್ಲ. +ತನಗಿಂದಲೂ ಮಹತ್ತಾದುದಕ್ಕೆ ತನ್ನನ್ನು ಅರ್ಪಿಸಿಕೊಳ್ಳಲು ಅವಳು ಹಿಂಜರಿಯುತ್ತಿರಲಿಲ್ಲ. +ತಾನು ಬಹುಪೂರ್ವದಿಂದಲೂ ಮೆಚ್ಚಿಕೊಂಡೇ ಬಂದಿರುವ ತನ್ನ ಒಡೆಯನಿಗೆ ತೋರುವ ಗೌರವವೆಂದೂ, ವಿಧೇಯತೆಯ ಅಂಗವೆಂದೂ, ಅವಳು ತನ್ನನ್ನು ಸಮರ್ಪಣ ಭಾವದಿಂದಲೇ, ಸಂತೋಷವಾಗಿಯೆ, ಪಾಪಭಯ ಲೇಶವಿಲ್ಲದ ಆತ್ಮನೈವೇದ್ಯ ರೂಪದಿಂದಲೇ ಒಪ್ಪಿಸಿಕೊಂಡು ಬಿಡುತ್ತಿದ್ದಳು. +ಹಾಗೆ ಒಪ್ಪಿಸಿಕೊಂಡೂ, ಐತನಿಗೆ, ತನ್ನ ಕೈ ಹಿಡಿದ ಗಂಡನಿಗೆ, ವಂಚನೆ ಮಾಡುತ್ತಿದ್ದೇನೆ ಎಂಬ ಭಾವನೆ ಅವಳಲ್ಲಿ ಇನಿತೂ ಇರಲಿಲ್ಲ. +ಆ ಭಾವನೆ ಇದ್ದೂ ಒಂದು ವೇಳೆ ಅವಳು ಒಪ್ಪಿಸಿಕೊಂಡಿದ್ದರೆ, ಅವಳು ಮೋಸಗಾರ್ತಿಯಾಗುತ್ತಿದ್ದಳು; +ಜಾರೆಯಾಗುತ್ತಿದ್ದಳು; ಕುಟಿಲೆಯಾಗುತ್ತಿದ್ದಳು. +ಏಡಿಕೊಟ್ಟೆಯ ಕಡೆಗೆ ಕಣ್ಣಾಗಿ, ಕೊಟ್ಟೆಯೊಳಕ್ಕೆ ಕೈಹಾಕಿಕೊಂಡು, ಮಿಟಿಮಿಟಿಗುಡುತ್ತಿದ್ದ ಏಡಿಗಳೊಡನೆ ಏನನ್ನೊ ಮಾಡುವವಳಂತೆ ತಲೆ ಬಾಗಿಸಿದ್ದ ಪೀಂಚಲುಗೆ ಅವಳು ತಲೆ ಎತ್ತುವುದನ್ನೆ ಕಾದು ಕಾದು ಸಾಕಾದ ಮುಕುಂದಯ್ಯ “ಏನೇ ಇದು? +ಏಡಿ ಸಂಗಡ ಮಾತಾಡ್ತಿದ್ದೀಯಾ?” ಎಂದು ತುಸು ಹತ್ತಿರಕ್ಕೆ ಸರಿದನು. +ಹಿಂದಿನ ದಿನ ಬಿದ್ದ ಮಳೆಯ ದೆಸೆಯಿಂದಾಗಿ ಸ್ವಲ್ಪ ಹೆಚ್ಚಾಗಿಯೆ ನೀರು ಸುತ್ತಿದ್ದ ಒಂದು ಸಣ್ಣ ಬಂಡೆಗುಂಡಿನ ಮೇಲೆ ಕುಕ್ಕುರುಗಾಲಿನಲ್ಲಿ ಕೂತು ಮುಖ ಬಾಗಿದ್ದ ಬಿಲ್ಲವರ ಹುಡುಗಿ, ಪೀಂಚಲು, ಮೇಲು ಜಾತಿಯ ಸಣ್ಣ ಅಯ್ಯನನ್ನು ಮುಟ್ಟುಚಿಟ್ಟು ಮಾಡಿಬಿಡುತ್ತೇನಲ್ಲಾ ಎಂಬು ಹುಟ್ಟಿದಂದಿನಿಂದ ಬಂದ ಅಭ್ಯಾಸಬಲದಿಂದ, ದಾಡಿಬಿಡುವ ಅವಸರದ ಔತ್ಸುಕ್ಯದಲ್ಲಿ ತಟಕ್ಕನೆ ಎದ್ದು ಹಿಂದಕ್ಕೆ ಸರಿದು, ಒಂದು ಕಾಲು ಬಂಡೆಯಿಂದ ಜಾರಿ, ಹೊಂಗಿ ನೀರಿಗೆ ಬೀಳುವಂತಾಗಿ ತತ್ತರಿಸುತ್ತಿರುವಷ್ಟರಲ್ಲಿ ಮುಕುಂದಯ್ಯ ಅವಳನ್ನು ರಟ್ಟೆ ಹಿಡಿದು, ಬೀಳದಂತೆ ನಿಲ್ಲಿಸಿಬಿಟ್ಟನು! +ಅವನು ಅವಳ ಬತ್ತಲೆಯ ತೋಳನ್ನು ಹಿಡಿಯುವ ಗಡಿಬಿಡಿಯಲ್ಲಿ, ಕುಪ್ಪಸವಾಗಲಿ ರವಕೆಯಾಗಲಿ ಇಲ್ಲದೆ ಬರಿಯ ಸೀರೆಯ ಸೆರಗಿನಿಂದ ಮಾತ್ರ ಮರೆಯಾಗಿದ್ದ ಅವಳ ಎದೆಗೂ ಅವನ ಕೈ ನಸು ತಾಗಿತ್ತು. +ನೀರಿಗೆ ಬೀಳದಂತೆ ಅವಳನ್ನು ಹಿಡಿದು ನಿಲ್ಲಿಸುವ ಏಕಮಾತ್ರ ಉದ್ದೇಶದಿಂದ ಅವಳ ಮೈಯನ್ನು, ಮುಟ್ಟಬಹುದಾದವಳು ಮುಟ್ಟಬಾರದವಳು ಎಂಬ ಯಾವ ತಾರತಮ್ಯಕ್ಕೂ ಆಲೋಚನೆಗೂ ಅವಕಾಶವಿಲ್ಲದೆ, ಮುಟ್ಟಿದ್ದನು. +ಅವಳನ್ನು ನೀರಿಗೆ ಬೀಳದಂತೆ ರಕ್ಷಿಸುವ ಆತುರದಲ್ಲಿ ಅವಳ ಮೈಯ ಆ ಭಾಗ ಈ ಭಾಗ ಎಂದು ಮೀನ ಮೇಷ ಮಾಡುವ ಅನುಚಿತಕ್ಕೆ ಅಲ್ಲಿ ಅವಕಾಶವಿರಲಿಲ್ಲ. +ಆದ್ದರಿಂದ ಅವನ ಮನಸ್ಸಿನಲ್ಲಿ ಯಾವ ಭಾವ ಸಂಚಾರವೂ ಆಗಿರಲಿಲ್ಲ. +ಆದರೆ ಪೀಂಚಲು ಅವನ ಕ್ರಿಯಿಗೆ ಶ್ಲೇಷಾರ್ಥ ಆರೋಪಿಸಲು ಇಷ್ಟವುಳ್ಳವಳಾಗಿದ್ದಂತೆ ತೋರಿತು. +ಅವನ ಹಿಡಿತ ಮತ್ತು ಸ್ಪರ್ಶ ಎರಡೂ, ಎರಡು ದೃಷ್ಟಿಯಿಂದಲೂ, ತನ್ನನ್ನು ನೀರಿಗೆ ಬೀಳದಂತೆ ರಕ್ಷಿಸುವ ದೃಷ್ಟಿ ಮತ್ತು ಅನ್ಯೋದ್ದೇಶದಿಂದ ತನ್ನನ್ನು ಸ್ಪರ್ಶಿಸಿದ ದೃಷ್ಟಿ, ಮನಸ್ಸಿಗೆ ಹಿತವಾಗಿತ್ತು, ಆಪ್ಯಾಯಮಾನವಾಗಿತ್ತು. +ಆಪ್ಯಾಯಮಾನವಾಗಿದ್ದ ಒಂದು ದೃಷ್ಟಿಯಿಂದ ಮುಕುಂದಯ್ಯನ ಕ್ರಿಯೆ ಮುಂದುವರಿಯಬಹುದೆಂದೆ ಅವನ ಕಡೆಗೆ ಕಣ್ಣರಳಿಸಿ ನಿಡುನೋಡುತ್ತಾ “ನನ್ನ ಮುಟ್ಟಿಬಿಟ್ರಲ್ಲಾ, ಅಯ್ಯಾ!” ಎಂದಳು, ಮುಗುಳುನಗೆ ಬೀರಿ. +“ಮುಟ್ಟಿದರೇನು ನಿನ್ನ ಜಾತಿ ಹೋಗ್ಲಿಲ್ಲ” ಅವಳ ತೋಳಿನ ಹಿಡಿತವನ್ನು ಸಡಿಲಿಸಿ, ಬಿಟ್ಟು, ಹಿಂದಕ್ಕೆ ಸರಿದು ನಿಂತು, ಮುಕುಂದಯ್ಯ ಕೈದೋರಿದನು “ನೋಡಲ್ಲಿ, ನಿನ್ನ ತಳಾಲೆ ತೇಲಿ ಹೋಗ್ತಾ ಇದೆ.” +ತೇಲಿಹೋಗುತ್ತಿದ್ದ ತನ್ನ ಹಾಳೆ ಟೋಪಿಯನ್ನು ಹಿಡಿದೆತ್ತಿಕೊಳ್ಳಲೆಂದು ಪೀಂಚಲು ಒಂದು ಹಾಸುಬಂಡೆಗೆ ಹಾರಿ, ಮೊಳಕಾಲೆತ್ತರದ ನೀರಿಗೂ ಇಳಿದು, ಸೀರೆಯ ಬಹುಭಾಗ ಒದ್ದೆಯಾದುದನ್ನೂ ಗಮನಿಸದೆ ತಳಾಲೆಯನ್ನು ತಂದಳು. +“ಅದ್ಯಾಕೇ, ಅಷ್ಟು ಗಡಿಬಿಡಿ ಗಾಬರಿ ನಿನಗೆ?” ಮುಕುಂದಯ್ಯ ಕೇಳಿದನು. +ನಿರ್ಭಾವವಾಗಿ, ಅವಳು ಭಾವೋದ್ವೇಗದ ಮತ್ತು ಅಸ್ಥಿರತೆಯ ಉಸಿರಾಟವನ್ನು ಗಮನಿಸಿ ಪೀಂಚಲು ಅವನ ಧ್ವನಿಯ ಧೈರ್ಯಕ್ಕೂ ಸ್ಥೈರ್ಯಕ್ಕೂ ಎಚ್ಚತ್ತುಕೊಂಡು ಮುಕುಂದಯ್ಯನ ಮುಖದ ಕಡೆ ನೇರವಾಗಿ ನೋಡಿದಳು, ಅವನ ಕಣ್ಣಿಗೆ ಕಣ್ಣಿಟ್ಟು ಅವನ ಕಣ್ಣಿನಲ್ಲಿ ಒಂದಿನಿತೂ ಅಸ್ಥಿರತೆ ತೋರಲಿಲ್ಲ. +ನೂರು ಮಾತು ತಿಳಿಸಲಾರದ ಏನನ್ನೊ ಅವನ ಒಂದು ನೋಟ ತಿಳಿಸಿದಂತಾಗಿ, ತರುಣಿಯ ಚಂಚಲ ಮನಸ್ಸು ಮಂತ್ರದಿಂದೆಂಬಂತೆ ತಿಳಿಯಾಯಿತು! +ಇದ್ದಕ್ಕಿದ್ದಹಾಗೆ ಮುಕುಂದಯ್ಯ ಕೇಳಿದನು “ಪೀಂಚ್ಲು, ನನಗೊಂದು ಉಪಕಾರ ಆಗಬೇಕಾಗಿದೆಯಲ್ಲಾ! +ಮಾಡ್ತೀಯಾ?” +“ಕೇಳ್ತೀರಲ್ಲ ನನ್ನ? …. ಏನು? +ಹೇಳಿರಿ, ಅಯ್ಯಾ” ತುಂಬ ಕೃತಜ್ಞತೆಗೆಂಬಂತೆ ಉತ್ತರಿಸಿದಳು ಪೀಂಚಲು. +“ಮಾಡ್ತೀನಿ ಅಂತ ಭಾಷೆ ಕೊಟ್ಟರೆ….” ಮುಕುಂದಯ್ಯನ ದನಿಯಲ್ಲಿ ದೈನ್ಯವಿತ್ತು. +“ನಿಮ್ಮ ಪಾದದಾಣೆ, ಆಳಾಗಿ ಮಾಡ್ತೀನಿ, ಹೇಳಿ!” ಹುಡುಗಿಯ ಮಾತು ಅವಳ ಮನಸ್ಸು ಏರಿದ್ದ ಮಟ್ಟವನ್ನು ಸೂಚಿಸುವಂತಿತ್ತು. +“ಯಾರಿಗೂ ಗೊತ್ತಾಗಬಾರದು.” +“ಇಲ್ಲ, ಯಾರಿಗೂ ಹೇಳುವುದಿಲ್ಲ.” +“ಐತಗೂ ಗೊತ್ತಾಗಬಾರದು.” +ಹುಡುಗಿ ‘ಹ್ಞೂ’ ಎನ್ನದೆ ಸ್ವಲ್ಪ ಹಿಂದು ಮುಂದು ನೋಡುತ್ತಿದ್ದುದನ್ನು ಗಮನಿಸಿ ಮುಕುಂದಯ್ಯ ವಿವರಿಸಿದನು. + “ನಿನ್ನ ಗಂಡಗೆ ಹೇಳಬಾರದ್ದೇನಲ್ಲ. +ಆದರೆ ಅಂವ ಪೂರಾ ಬಾಯಾಳಿ. +ನಿನಗೇ ಗೊತ್ತಿದೆ, ಅವನ ಹತ್ತಿರ ಯಾವ ಗುಟ್ಟೂ ಇಟ್ಟುಕೊಳ್ಳಾಕೆ ಸಾಧ್ಯ ಇಲ್ಲ….” +“ಆಗಲಿ, ಒಡೆಯ!” + ಅತ್ಯಂತ ಹೃದಯಪೂರ್ವಕವಾದ ಸಹಾನುಭೂತಿಯ ವಾಣಿಯಿಂದ ಭರವಸೆ ಇತ್ತಳು ಪೀಂಚಲು, ಒಡೆಯನ ದನಿ ತುಸು ನಡುಗತೊಡಗಿದ್ದುದನ್ನೂ ಕಣ್ಣು ತೇವಗೊಳ್ಳುತ್ತಿದ್ದುದನ್ನೂ ಅರಿತು, ಅನುಭವಿಸಿ ಮುಕುಂದಯ್ಯ ತಾನು ಆವೊತ್ತು ಹೊತ್ತಾರೆ ಗುತ್ತಿಯಿಂದ ಕೇಳಿದ್ದ ದುರ್ವಾರ್ತೆಯನ್ನು ಸಂಕ್ಷೇಪವಾಗಿ, ಶೀಘ್ರವಾಗಿ ತಿಳಿಸಿ, ಹೂವಳ್ಳಿ ಚಿನ್ನಮ್ಮನ ಬಳಿಗೆ ತಾನು ಹೇಳಿ ಕಳಿಸುವುದನ್ನು ಹೋಗಿ ಹೇಳಬೇಕೆಂದೂ, ಏನಾದರೂ ಮಾಡಬೇಕಾಗಿ ಬಂದರೆ ಮಾಡಬೇಕೆಂದೂ ಹೃದಯಸ್ಪರ್ಶಿಯಾಗುವಂತೆ ತಿಳಿಸಿದನು. +‘ಹೂವಳ್ಳಿ ಅಮ್ಮ’ ‘ಚಿನ್ನಕ್ಕ’ ಎಂದೆಲ್ಲ ಪೀಂಚಲು ಕರೆಯುತ್ತಿದ್ದ ಚಿನ್ನಮ್ಮನ ಪರಿಚಯ ಅವಳಿಗೆ ಮುಕುಂದಯ್ಯನ ಪರಿಚಯದಷ್ಟೆ ಹಳೆಯದಾಗಿತ್ತು. +ಅಲ್ಲದೆ ಇತ್ತೀಚೆಗೆ ಮುಕುಂದಯ್ಯನ ‘ಹಂಸದೂತಿ’ಯಾಗಿಯೂ ಚಿನ್ನಮ್ಮನ ಬಳಿಗೆ ಹೋಗಿ ಬಂದಿದ್ದಳು. +ತಾನು ಹೂವಳ್ಳಿಗೆ ಹೋದಾಗಲೆಲ್ಲ ತನ್ನನ್ನು ಕಾಣುತ್ತಿದ್ದ ಅಕ್ಕರೆಯ ರೀತಿಯಿಂದಲೂ ಪೀಂಚಲು ಚಿನ್ನಮ್ಮನ ಪ್ರೀತಿಗೆ ಮಾರುಹೋಗಿದ್ದಳು. +ಈಗ ಮುಕುಂದಯ್ಯನಿಗೆಂತೊ ಅಂತೆ ಚಿನ್ನಮ್ಮನಿಗೂ ಬಂದೊದಗಬಹುದಾದ ಅನಿಷ್ಟವನ್ನು ತಪ್ಪಿಸುವ ಮಹತ್ಕಾರ್ಯದಲ್ಲಿ ಭಾಗಿಯಾಗುವ ತನ್ನ ಕರ್ತವ್ಯ ಮಾತ್ರವಲ್ಲದೆ ಪುಣ್ಯವೆಂದು ಭಾವಿಸಿ, ಅವಳ ಚೇತನ ತನ್ನ ಸಾಹಸದ ರೆಕ್ಕೆ ಕೆದರಲು ಉತ್ಸಾಹದಿಂದಲೆ ಅನುವಾಯಿತು. +“ಇವತ್ತು ಬೈಗಿನ ಹೊತ್ತು ಆ ವಾಟೆ ಹಿಂಡಲಿನ ಹತ್ತಿರ ಬಾ. ಮರೀಬ್ಯಾಡ. ” +“ಹ್ಞೂ ಬರ್ತೀನಿ.” +“ಯಾರಾದರೂ ಕಂಡರೆ?” +“ಇಲಿಕಿವಿ ಸೊಪ್ಪು ಕುಯ್ಯಾಕ್ಕೆ ಹೋಗ್ತೀನಿ ಅಂತೀನಿ.” +“ಐತ ಬಂದಾ ಅಂತ ಕಾಣ್ತದೆ!” + ಹಳ್ಳದ ಪಾತ್ರದ ದಾರಿಯಲ್ಲಿ, ಕೆಳಗೆ, ದೂರದಲ್ಲಿ, ಹಳು ಅಲುಗುತ್ತಿದ್ದುದನ್ನೂ ಕಲ್ಲುಹರಳು ಸದ್ದಾಗುತ್ತಿದ್ದುದನ್ನೂ ಗಮನಿಸಿ ಹೇಳಿದನು ಮುಕುಂದಯ್ಯ. +ಪೀಂಚಲು ತಳಾಲೆಯನ್ನು, ನೀರು ಸಿಡಿಯುವಂತೆ ಕೊಡಹಿ, ತಲೆಗೆ ಹಾಕಿಕೊಂಡು, ಏಡಿಯಿದ್ದ ಹಾಳೆಕೊಟ್ಟೆಯ ಬಳಿಗೆ ಹೋಗಿ ತುದಿಗಾಲ ಮೇಲೆ ಕೂತಳು. +ಮುಕುಂದಯ್ಯ, ಐತ ಕೆಳಗೆ ಹಾಕಿದ್ದ ಕಪ್ಪೆಗೋಲನ್ನು ಕೈಗೆ ತೆಗೆದುಕೊಂಡು, ಒಂದು ಕಲ್ಲಿನ ಸಂಧಿಯ ಪೊಟರೆಗೆ ಇಳಿಬಿಟ್ಟು ಕೂತನು. +ಐತ ನಡೆದ ಸಂಗತಿಯನ್ನು ರಂಗಪ್ಪಗೌಡರು ಹೇಳಿದುದನ್ನೂ ಹೇಳಿದನು, ಹೀಗಾಗಿ ಹೋಯಿತಲ್ಲಾ ಎಂಬ ನಿರಾಶೆಯ ಭಂಗಿಯಲ್ಲಿ. +ಆದರೆ ಮುಕುಂದಯ್ಯ ತಾನು ಏತಕ್ಕಾಗಿ ಐತನನ್ನು ಅಟ್ಟಿದ್ದೆ ಎಂಬುದನ್ನೆ ಮರೆತಂತೆ ಅಲಕ್ಷ್ಯಭಾವದಿಂದ ಉದಾಸೀನನಾಗಿದ್ದುದನ್ನು ಕಂಡು ಐತನಿಗೆ ಬೆರಗಾಯಿತು. +ಪೀಂಚಲು ಕಡೆಗೆ ನೋಡಿದನು. +ಅವಳೂ ನಿರ್ಲಕ್ಷವಾಗಿ, ಪ್ರಯತ್ನಪೂರ್ವಕವಾಗಿ ಮೌನವಾಗಿರುವಂತೆ ತೋರಿತು. +ಅವಳ ತಳಾಲೆ ಹಿಂದುಮುಂದಾಗಿ ವಕ್ರವಕ್ರವಾಗಿದ್ದುದನ್ನೂ ಕೂದಲು ಕೆದರಿ ಹೊರಗೆ ಹೊರಟಿರುವುದನ್ನೂ ಗ್ರಹಿಸಿದನು. +ಅವಳ ಸೀರೆ ಸೊಂಟದವರೆಗೂ ಒದ್ದೆಯಾಗಿದ್ದುದು ಕಣ್ಣಿಗೆ ಹೊಡೆಯುವಂತೆ ಕಾಣುತ್ತಿತ್ತು. +ಹಳ್ಳಕ್ಕೆ ಏತಕ್ಕೊ ಇಳಿಯಬೇಕಾಯಿತೆಂದು ತೋರುತ್ತದೆ; +ಅದಕ್ಕೇ ಸೀರೆ ಒದ್ದೆಯಾಗಿರಬೇಕು ಎಂದು ಊಹಿಸಿ ಬೇರೆಯ ವಿಚಾರವಾಗಿ ಮಾತೆತ್ತಿದನು. +ತನ್ನ ಪುಟ್ಟ ಹೆಂಡತಿಯನ್ನು ಒಂದು ಕ್ಷಣವೂ ಬಿಟ್ಟಿರಲು ಒಪ್ಪುತ್ತಿರಲಿಲ್ಲ ಅವನ ಮನಸ್ಸು. +ಅದರಲ್ಲಿಯೂ ಇತರ ಗಂಡಸರು ಇದ್ದಾಗಲಂತೂ ಅವನು ಅವಳನ್ನು ಬಿಟ್ಟು ಹೋಗುತ್ತಲೇ ಇರಲಿಲ್ಲ. +ಹೋಗಲೇಬೇಕಾಗಿ ಬಂದರೆ ಅವಳನ್ನೂ ಏನಾದರೂ ಉಪಾಯ ಮಾಡಿ ನೆವಹೇಳಿ ಕರೆದುಕೊಂಡೆ ಹೋಗುತ್ತಿದ್ದುದು ರೂಢಿ. +ಆದರೆ ಮುಕುಂದಯ್ಯನೊಡನೆ ಅವಳನ್ನು ಬಿಟ್ಟುಹೋಗುವುದಕ್ಕೆ ಅವನು ಸ್ವಲ್ಪವೂ ಹಿಂದು ಮುಂದು ನೋಡಿರಲಿಲ್ಲ. +ಮುಕುಂದಯ್ಯನನ್ನು ಚೆನ್ನಾಗಿ ಅರಿತಿದ್ದ ಅವನಿಗೆ, ಅವನಲ್ಲಿ ಅಚಲವಾದ ನಂಬುಗೆ ಇತ್ತು. +ಅದಕ್ಕೆ ಬೆಂಬಲವಾಗಿ ಕೀಳು ಜಾತಿಯವರಾಗಿದ್ದ ತಾವು, ಪ್ರತ್ಯೇಕವಾದ ಪ್ರಾಣಿವರ್ಗಕ್ಕೆ ಸೇರಿದವರೋ ಎಂಬಂತೆ, ಮೇಲು ಜಾತಿಯ ಮನುಷ್ಯ ವರ್ಗಕ್ಕೆ ಸೇರಿದ ಮುಕುಂದಯ್ಯನ ಮೋಹಕ್ಕೆ ಪಕ್ಕಾಗುವುದೂ ಸಾಧ್ಯವಿರಲಿಲ್ಲ ಎಂಬುದೂ ಅವನ ರಕ್ತಗತ ಬುದ್ಧಿಯಾಗಿತ್ತು. +ಜಿಂಕೆ ನಾಯಿಯ ಮೇಲೆ ಮೋಹಗೊಳ್ಳುವುದು ಹೇಗೆ ಅಸಂಭವವೋ ಹಾಗೆ. +ಎಲ್ಲರೂ ಮನೆಗೆ ಹಿಂದಕ್ಕೆ ಹೊರಟಾಗ ಮುಕುಂದಯ್ಯ ಭೂತದ ಬನದ ಹತ್ತಿರದ ಹಾದಿಯ ಮೇಲಾಗಿ ಹೋಗುವುದಕ್ಕೆ ಬದಲು ಐತ ಪೀಂಚಲು ಅವರ ಸಂಗಡವೇ ತೋಟದ ಬಳಸುದಾರಿಯಲ್ಲಿ ಹೊರಟಿದ್ದುದನ್ನು ನೋಡಿ ಐತನಿಗೆ ತುಸು ಸೋಜಿಗವೆ ಆಯಿತು. +ಐತನು ಕೇಳಿದ ಪ್ರಶ್ನೆಗೆ ಮುಕುಂದಯ್ಯ ಕೊಟ್ಟ ಉತ್ತರ ‘ಈ ರಣ ಬಿಸಿಲಿನಲ್ಲಿ ಒಬ್ಬನೆ ಹೋಗುವುದಕ್ಕೆ ಬೇಜಾರಾಗಿ’ ಎಂದು. +ಅದನ್ನು ಕೇಳಿದ ಪೀಂಚಲು ಸಣ್ಣಗೆ ನಕ್ಕಿದ್ದನ್ನೂ ಐತನು ಗಮನಿಸದೆ ಇರಲಿಲ್ಲ. +ತನಗರಿಯದುದು ಏನೊ ತನ್ನ ಹೆಂಡತಿಗೆ ಗೊತ್ತಾಗಿದೆ ಎಂಬ ಭಾವನೆ ಮೂಡತೊಡಗಿತ್ತು ಐತನ ಮನಸ್ಸಿನಲ್ಲಿ. +ಪೀಂಚಲುವನ್ನು ಮುಟ್ಟಿದ್ದರಿಂದ ಮುಟ್ಟುಚಿಟ್ಟಾಗಿದ್ದ ಮುಕುಂದಯ್ಯ ಭೂತನ ಬನದ ಒಳಗಣಿಂದ ಹೇಗೆ ತಾನೆ ಹೋದಾನು ಎಂಬುದು ಐತನಿಗೆ ತಾನೆ ಹೇಗೆ ಗೊತ್ತಾಗಬೇಕು? +ಪೀಂಚಲುಗೆ ಗೊತ್ತಾಗಿದ್ದಂತೆ! +ಇನ್ನೂ ಬೈಗಾಗಿರಲಿಲ್ಲ. + ಮಲೆನೆತ್ತಗೆ ಮೂರು ನಾಲ್ಕು ಮಾರು ಮೇಲೆಯ ಎತ್ತರದಲ್ಲಿತ್ತು ಹೊತ್ತು, ಹಿಂದಿನ ದಿನದ ಮಳೆಯಲ್ಲಿ ತೊಯ್ದು ತೊಳೆದು ಕಾಡಿನ ಹಸುರಿನ ಪ್ರಭಾವದಿಂದ ಎಂದಿಗಿಂತಲೂ ತಂಪಾಗಿ ಬೀಸತೊಡಗಿತ್ತು ಮೆಲುಗಾಳಿ. +ಸುದೀರ್ಘವಾದ ಗದ್ದೆಕೋಗಿನ ಒಡ್ಡಿನ ಪಕ್ಕದಲ್ಲಿ, ಕಾಡಿನ ಅಂಚಿನಲ್ಲಿ, ಬೆಟ್ಟಳ್ಳಿಯ ಕಡೆಗೆ ಹೋಗುತ್ತಿದ್ದ ಕಾಲುದಾರಿಯಲ್ಲಿ, ಅಲ್ಲಿ ಇಲ್ಲಿ ಮೂಸುತ್ತಾ, ಒಮ್ಮೊಮ್ಮೆ ಹಿಂಗಾಲೊಂದನ್ನು ತುಸು ಎತ್ತಿ ಕುಕ್ಕೋಟ ಓಡುತ್ತಾ, ಏತಕ್ಕೊ ಏನೊ ತಾನು ಮೂಸಿ  ಆರಿಸಿದ ಅಲ್ಲೊಂದು ಇಲ್ಲೊಂದು ಪೊದೆಗೋ ಮರದ ತುಂಡಿಗೋ ಕಲ್ಲಿಗೋ ಕಾಲೆತ್ತಿ ಅಭಿಷೇಕಮಾಡುತ್ತಾ ಹೋಗುತ್ತಿದ್ದ ಹುಲಿಯ, ಆಗಾಗ ನಿಂತು ಹಿಂದಕ್ಕೆ ನೋಡಿ, ತನ್ನ ಯಜಮಾನ ತನ್ನನ್ನು ಹಿಂಬಾಲಿಸುತ್ತಿದ್ದಾನೆ ಎಂಬುದನ್ನು ಪ್ರತ್ಯಕ್ಷ ಪ್ರಮಾಣದಿಂದ ಗೊತ್ತುಮಾಡಿಕೊಂಡು, ಬೆಟ್ಟಳ್ಳಿಯ ಕಡೆಗೆ ಸಾಗುತ್ತಿತ್ತು. +ಹುಲಿಯನ ದೃಷ್ಟಿಯಿಂದಲೆ ಹೇಳುವುದಾದರೆ, ಅದು ಸಾಗುತ್ತಿದ್ದುದು ಬೆಟ್ಟಳ್ಳಿ ಜಮಿನುದಾರರು ಕಲ್ಲಯ್ಯಗೌಡರ ಮನೆಗಲ್ಲ, ಅಲ್ಲಿಂದ ತುಸು ದೂರದಲ್ಲಿಯೇ ಇದ್ದ ಬೆಟ್ಟಳ್ಳಿಯ ಹೊಲೆಗೇರಿಗೆ. +ಹುಲಿಯನಿಗೆ ಬೆಟ್ಟಳ್ಳಿಯ ದಾರಿ ಮತ್ತು ಹೊಲೆಗೇರಿಗಳು ಮಾತ್ರವಲ್ಲ ಅಲ್ಲಿಯ ಸುತ್ತಮುತ್ತಣ ಪ್ರದೇಶವೆಲ್ಲ ಪರಿಚಯದ್ದೆ ಆಗಿತ್ತು. +ಗುತ್ತಿಯ ಸವಾರಿ ಬೆಟ್ಟಳ್ಳಿ ಹೊಲೆಗೇರಿಗೆ ಸಿಂಬಾವಿಯಿಂದ ದಯಮಾಡಿಸಿದಾಗಲೆಲ್ಲ, ನಾಲ್ಕೈದು ವರ್ಷಗಳಿಂದಲೂ, ಅದು ಅವನನ್ನು ಬಿಡದೆ ಹಿಂಬಾಲಿಸುತ್ತಿತ್ತು, ಸ್ವಾಮಿಭಕ್ತನಾದ ಅಂಗರಕ್ಷಕನಂತೆ. +ಬೇರೆ ಕಡೆಗಳಿಗೆ ತಾನು ಹೋದಾಗ ಅಲ್ಲಿಯ ನಾಯಿಗಳ ದೆಸೆಯಿಂದ ಗುಲ್ಲೋಗುಲ್ಲು ಏಳುವಂತೆ ಬೆಟ್ಟಳ್ಳಿ ಹೊಲಗೇರಿಯಲ್ಲಿ ಆಗುತ್ತಿರಲಿಲ್ಲ. +ಬೆಟ್ಟಳ್ಳಿ ಹೊಲೆಗೇರಿಯ ನಾಯಿಗಳೆಲ್ಲ, ಹಿಂದೆ ವೈಸ್ ರಾಯನ್ನು ಕಂಡ ದೇಶೀಯ ರಾಜುರುಗಳಂತೆ, ಹುಲಿಯನ್ನು ಕಂಡೊಡನೆ ಬಾಲ ಮುದುರಿ, ತಮ್ಮ ವಿನಯ ವಿಧೇಯತೆಗಳನ್ನು ಪ್ರದರ್ಶಿಸಿ, ಒಳಗೊಳಗೆ ಹೆದರಿದರೂ ಹರ್ಷಾತಿರೇಕಕ್ಕೆಂಬಂತೆ ಬಿರುಸಿನಿಂದಲೆ ಬಾಲವಳ್ಳಾಡಿಸಿ, ಲಿಂಗ ಭೇದಾನುಗುಣವಾಗಿ ನೆಕ್ಕುವ ಅಥವಾ ನೆಕ್ಕಿಸಿಕೊಳ್ಳುವ ಕ್ರಿಯಾರೂಪದ ಕಪ್ಪಕಾಣಿಕೆಗಳನ್ನೂ ತಪ್ಪದೆ ಸಲ್ಲಿಸುತ್ತಿದ್ದುವು. +ಆದ್ದರಿಂದ ಹುಲಿಯನಿಗೆ ಬೆಟ್ಟಳ್ಳಿ ಹೊಲೆಗೇರಿಗೆ ಹೋಗುವುದೆಂದರೆ ಖುಷಿ, ಸಂಭ್ರಮ, ಗುತ್ತಿಗೆಂತೊ ಅಂತೆ! +ಆದರೆ ಇಂದೇಕೆ ಯಜಮಾನ ಬೇಗ ಬೇಗ ಬರುತ್ತಿಲ್ಲ? +ಏನಾದರೂ ದೀರ್ಘಾಲೋಚನೆ ಇರಬಹುದೆ? +ಇರಬಹುದು!ಆದರೆ ಇನ್ನೂ ಒಂದು ವಿಶೇಷ ಸಂಗತಿ, ಹುಲಿಯ ಗಮನಿಸಿದ್ದು. + ಹಿಂದಿನಂತಲ್ಲದೆ ಇಂದು ದಾರಿ ನಿರ್ಜನವಾಗಿದೆ ಅನೇಕರು ಬೆಟ್ಟಳ್ಳಿಗೆ ಅಭಿಮುಖವಾಗಿ ಹೋಗುತ್ತಿದ್ದಾರೆ. +ಗುತ್ತಿ ಅವರನ್ನು ಸಂಧಿಸಿದಂತೆಲ್ಲ ಮಾತಿನಲ್ಲಿ ಸಿಕ್ಕಿಕೊಂಡು ನಿಧಾನವಾಗಿ ನಡೆಯಬೇಕಾಗಿದೆ, ಅನಿವಾರ್ಯವಾಗಿ. +ಹುಲಿಯನಿಗೆ ಮನುಷ್ಯರ ಮಾತು ಗೊತ್ತಿದ್ದರೆ ಅದರ ಕಿವಿಗೆ ಬೀಳುತ್ತಿದ್ದುದು ಈ ಶಬ್ದ ಸಮೂಹ: ಬೀಸೆಕಲ್ಲು ಸವಾರಿ, ತೀರ್ಥಳ್ಳಿ, ಪಾದ್ರಿ, ಕಿಲಸ್ತರ ಜಾತಿ, ದ್ಯಾವೇಗೌಡ್ರು ಇತ್ಯಾದಿ. +ಹುಲಿಯ ನೋಡುತ್ತದೆ ಆ ಸುಪರಿಚಿತ ಅರೆಕಲ್ಲು ಬಳಿಸಾರುತ್ತಿದೆ. +ಆ ಅರೆಕಲ್ಲಿನ ಹತ್ತಿರವೆ ಹೊಲೆಗೇರಿಗೆ ಅಗಚುವ ದಾರಿ. +ತಾನು ಆ ದಾರಿಯಲ್ಲಿ ಹೋಗುವಾಗಲೂ ಬರುವಾಗಲೂ ಯಾವಾಗಲೂ ತಪ್ಪದೆ ಒದ್ದೆ ಮಾಡುತ್ತಿದ್ದ ಅರೆಕಲ್ಲಿನ ಮೇಲೆ ಎದ್ದಂತೆ ಕಾಣಿಸುತ್ತಿರುವ ಕಲ್ಲುಗುಂಡೂ ತೋರುತ್ತಿದೆ. +ಅದರ ಪಕ್ಕದಲ್ಲಿಯೆ ಕಲ್ಲುಸಂಧಿಯಲ್ಲಿ ಬೆಳೆಯಲಾರದ ಬೆಳೆದು ಗುಜ್ಜಾಗಿರುವ ಕಾರೆಯ ಮಟ್ಟೂ ಇದೆ. +ಹುಲಿಯ ಕಾರೆಮಟ್ಟಿನ ಅರೆಕಲ್ಲುಗುಂಡಿಗೆ ಕಾಲೆತ್ತಿ ಅಭಿಷೇಕ ಮಾಡುವ ತನ್ನ ಸಂಪ್ರದಾಯದ ಕರ್ತವ್ಯವನ್ನು ಪೂರೈಸಿ, ಹೊಲೆಗೇರಿಗೆ ಹೋಗುವ ದಾಯಿಲ್ಲಿಯ ಸ್ವಲ್ಪ ದೂರ ಮುಂದುವರಿದು, ನಿಂತು, ಹಿಂದಿರುಗಿ ನೋಡಿತು: ಇದೇನು? +ಯಜಮಾನ ತಾನು ಬಂದ ದಾರಿಯಲ್ಲಿ ಬರದೆ ಬೆಟ್ಟಳ್ಳಿ ಗೌಡರ ಮನೆಯ ಕಡೆಗೆ ಹೋಗುವ ದಾರಿಯಲ್ಲಿ ಇತರರೊಡನೆ ಹರಟುತ್ತಾ ಮುಂಬರಿಯುತ್ತಿದ್ದಾನೆ. +ಯಜಮಾನನಿಗೆ ಅವನ ತಪ್ಪನ್ನು ತಿಳಿಸಿಕೊಡುವ ಉದ್ದೇಶದಿಂದಲೊ ಏನೊ ಅವನತ್ತ ಮುಖ ಮಾಡಿ, ಒಂದೆರಡು ಸಾರಿ, ತಾನು ಕಾಡಿನಲ್ಲಿ ಹಂದಿಗಿಂದಿ ತಡೆದಾಗ ಬೇಟೆಗಾರರನ್ನು ಎಚ್ಚರಿಸಿ ಅವರಿಗೆ ತಿಳುವಳಿಕೆ ಕೊಡವ ಸಲುವಾಗಿಯೆ ಕೂಗುವ ರೀತಿಯಲ್ಲಿ ಕೂಗಿತು. +ಆದರೆ ಗುತ್ತಿ ತಿರುಗಿಯೂ ನೋಡಲಿಲ್ಲ. +ಹುಲಿಯನ ಮನಸ್ಸು ಒಂದು ಕ್ಷಣ ಇಬ್ಬಗೆಯಾಯಿತು. +ಯಜಮಾನನನ್ನು ಅನುಸರಿಸುವುದೆ?ಹೊಲೆಗೇರಿಗೆ ಹೋಗುವುದೆ? +ಕಡೆಗೆ ಹೊಲಗೇರಿಯ ಆಕರ್ಷಣೆಯ ಸುಮನೋಹರವಾಗಿ, ಅತ್ತಕಡೆಯ ಓಡಿತು. +ಕಿಲಸ್ತರ ಪಾದ್ರಿ ಜೀವರತ್ನಯ್ಯನ ‘ಬೀಸೆಕಲ್ಲಿನ ಸವಾರಿ’ ಮತ್ತು ಆತ ಬೆಟ್ಟಳ್ಳಿ ಕಲ್ಲಯ್ಯಗೌಡರ ಹಿರಿಯ ಮಗ ದೇವಯ್ಯಗೌಡರಿಗೂ ಅದನ್ನು ಕಲಿಸುವ ಅದ್ಭುತದ ವೈಖರಿ-ಎರಡೂ ಗುತ್ತಿಯ ಮನಸ್ಸನ್ನು ಆಕರ್ಷಿಸಿದ್ದರೂ, ಅವನು ಮೂದಲು ಹೊಲೆಗೇರಿಗೆ ಹೋಗಿ, ಅನಂತರವೆ ಬೆಟ್ಟಳ್ಳಿ ಹಕ್ಕಲಿಗೆ ಹೋಗುವುದು ಎಂದು ನಿಶ್ಚಯಿಸಿದ್ದನು. +ಆದರೆ ದಾರಿಯಲ್ಲಿ ಹಳೆಮನೆ ಹೊಲೆಯರ ಕೆಲವರೂ ಕೋಣೂರಿನ ಗಟ್ಟದವರಲ್ಲಿ ಕೆಲವರೂ ಸಿಕ್ಕಿದ್ದರಿಂದ ಮಾತು ಮಾತಾಡುತ್ತಾ, ಸಂಗದ ಹೊನಲಿಗೆ ಸಿಕ್ಕಿದವನಂತೆ, ಹೊಲೆಗೇರಿಗೆ ಅಗಚುವೆಡೆ ಮರೆತು ಬೆಟ್ಟಳ್ಳಿ ಮನೆಗೆ ಹೋಗುವ ದಾರಿಯಲ್ಲಿ ಸಂಗಾತಿಗಳ ಜೊತೆ ಮುಂಬರಿದಿದ್ದನು, ಹುಲಿಯ ಬೊಗಳಿದ್ದನ್ನೂ ಆಲಿಸಿಯೂ ಆಲಿಸದವನಂತೆ, ಸಂವಾದಾಸಕ್ತನಾಗಿ:“ಬೀಸೆಕಲ್ಲಿನ ಮೇಲೆ ಹ್ಯಾಂಗೋ ಸವಾರಿ ಮಾಡಾದೂ?” +“ಆ ಪಾದ್ರಿಗೆ ಏನೋ ಹಸುರು ಗೊತ್ತಿರಬೈದೊ!” +“ಮತ್ತೆ?ಹಸರು ಗೊತ್ತಿರೋಕೆ, ಸಣ್ಣಗೌಡರ ಮ್ಯಾಲೆ ಮಂಕುಬೂದಿ ಎರಚಿ, ಕಿಲಸ್ತರ ಜಾತಿಗೆ ಸೇರಿಸೋಕೆ ಮಾಡ್ಯಾನಂತೆ!” +“ಬೀಸೆಕಲ್ಲು ಮ್ಯಾಲೆ ಹತ್ತಿ ಕೂತ್ಗೂತಾನಂತೆ. +ಗೂಟ ಹಿಡಿದು ನಾವೆಲ್ಲ ಬೀಸೋ ಹಾಂಗೆ ಗಿರ್ರನೆ ‘ತಿರುಗಿಸ್ತಾನಂತೆ. +ಬೀಸೆಕಲ್ಲು ಅನಾಮತ್ತು ಮೇಲೆದ್ದು ಎಲ್ಲಿಗಂದ್ರೆ ಅಲ್ಲಿಗೆ ಕಣ್ಣುಮುಚ್ಚಿ ಬಿಡೋದರ ಒಳಗೆ ಹೋಗ್ತದಂತೆ”. +“ಅಂತೂ ನಮ್ಮ ಬೆಟ್ಟಳ್ಳಿ ಒಡೇರು ಏನಾರೂ ಒಂದು ಹೊಸ ಹೊಸದು ಮಾಡ್ತಾನೆ ಇರತಾರೆ! +ಈ ಪಾಸಲೆಗೆಲ್ಲ ಅವರೇ ಮೊದೂಲು ಗಾಡಿ ತರಿಸ್ದೋರು. +ಒಂದು ಕುದುರೆ ಬ್ಯಾರೆ ತರ್ಸಿದ್ರು…. +ಅದು ಅಲ್ಲೆಲ್ಲೂ ತ್ವಾಟದ ಅಗಳಿಗೆ ಬಿದ್ದು ಸೊಂಟ ಮುರುಕೊಂಡು ಸತ್ತುಹೋತಂತೆ….!” +“ಆ ಗಾಡಿ ಬರೀ ಬಂಡಿ ಚಕ್ಕಡಿ ಅಲ್ಲ ಕಣೋ; +ಕಮಾನು ಗಾಡಿ!ಎಂಥ ಮಳೆ ಇರಲಿ, ಬಿಸ್ಲು ಇರಲಿ, ಒಳಗೆ ಕೂತ್ರೆ ಮನೇಲಿ ದಿಂಬು ಒರಗಿಕೊಂಡು ಕೂತ್ಹಾಂಗೆ ಇರ್ತದೆ…” +“ನೀನೇನು ಗಾಡೀಲಿ ಕೂತ್ಹಾಂಗೆ ಮಾತಾಡ್ತೀಯಲ್ಲಾ?” +“ಅವತ್ತೊಂದು ತೀರ್ಥಳ್ಳಿಗೆ ಹೋಗ್ತಿದ್ರು. +ಮೇಗ್ರಳ್ಳಿ ಹತ್ತಿರ, ಹಳೇ ಹೆದ್ದಾರಿ ಇನ್ನೂ ದುರಸ್ತಾಗಿರಲಿಲ್ಲ, ಗಾಡಿ ಚಕ್ರ ಕಣಿಗೆ ಬಿದ್ದು, ನಾವೆಲ್ಲ ದಾರೀಲಿ ಹೋಗೋರು ಚಕ್ರಕ್ಕೆ ಕೈಕೊಟ್ಟು ಎತ್ತಿ, ನೂಕಿ, ದಾರೀಗ ತರಬೇಕಾಯ್ತು ಆವಾಗ್ಲೆ ನಾನು ಒಳಗೆಲ್ಲ ಹಣಕಿ ನೋಡ್ದೆ! +ಹ್ಹಿಹ್ಹಿಹ್ಹಿ! +ಕೈಹಾಕಿ ಮುಟ್ಟಿಯೂ ನೋಡಿಬಿಟ್ಟೆ! +ದಿಂಬುಹಾಕಿದ್ಹಾಂಗೆ ಮೆತ್ತೆ ಹಾಕಿದ್ರೋ ಒರಗಿಕೊಳ್ಳಾಕ್ಕೆ….!” +“ಎತ್ತಿನ ಕೊಳ್ಳೀಗೆ ಗಂಟೆಸರ ಹಾಕಿರ್ತಾರೊ; +ಗಾಡಿ ಬರ್ತಿದ್ರೆ ಏಸು ಪಸಂದಾಗಿರ್ತದೆ? +ಗೈಲ್, ಗೈಲ್, ಗೈಲ್, ಗೈಲ್ ಅಂತಾ!” +“ಕೋಡಿಗೂ ಫಳಾ ಫಳಾ ಹೊಳೆಯೇ ಹಿತ್ತಾಳೆ ಕುಂಚ ಹಾಕಿ, ಬಣ್ಣದ ಕುಚ್ಚು ನೇತು ಬಿಟ್ಟಿರುತ್ತಾರೊ! …. ” +“ಅಲ್ಲಾ… ಅದೆಲ್ಲಾ ಸರಿ. +ಆದರೆ ಗಾಡಿ ಹೊಡೆಯೋಕೆ ಆ ಬಚ್ಚನ್ನ ಇಟ್ಕೊಂಡಿದಾರಂತಲ್ಲೋ? +ಗೌಡರ ಮನೇಲಿ ಹೊಲೇರನ್ನ ಒಳಂಗಳಕ್ಕೆ ಕಾಲಿಡೋಕೆ ಬಿಡಾದಿಲ್ಲ. +ಅಂತಲ್ಲಿ ಇವರು ಅವನ್ನ ಗಾಡಿ ಹೊಡಿಯೋಕೆ ಇಟ್ಟುಕೊಂಡೂ, ಅವನ ಕೈಲಿ ಮುಟ್ಟಿಸ್ಕೊಂಡೂ…. +ಥೂ ಥೂ ಥೂ ಕಿಲಸ್ತರು ಮಾಡಿದ್ಹಾಂಗೆ ಮಾಡ್ತೀದಾರಲ್ಲೋ….” +“ಅದೆಲ್ಲ ಆ ಪಾದ್ರಿ ಹಾಕಿರೋ ಮಂಕುಬೂದಿ ದೆಸೆ ಕಾಣೋ! +ಅವರನ್ನ ತೀರ್ಥಳ್ಳಿ ಪ್ಯಾಟೆಗೆ, ಶಿಮೂಗ್ಗಾ ಷಹರಿಗೆ ಕರಕೊಂಡು ಹೋಗಿ, ಕುಣಿಸಿ, ಆ ಯೂರೋಫೇನ್ ಬಿಳಿದೊರೆ ಪಾದ್ರಿ ಇದಾನಂತಲ್ಲಾ ಅವನ ಹತ್ರಾನು ಬೋದ್ನೆ ಮಾಡ್ಸಿ, ಕುಡಿಸಿ, ಕುಣಿಸಿ, ಅವರ ಬುದ್ಧೀನೆ ಕೆಡಿಸಿಬಿಟ್ಟಿದಾನಂತೆ….” +“ಸೈ ಬಿಡು, ಅದಕ್ಕೇ ಮತ್ತೆ? +ಅವರ ಮನೆ ದೇವರ ತುಳಿಸಿಕಟ್ಟೇನೆ ಕಿತ್ತುಹಾಕಾದಕ್ಕೆ ಹಾರೆ ಸಮೆಗೋಲು ತಗೊಂಡು ಹೋಗಿದ್ರಂತೆ! +ದೊಡ್ಡಗೌಡ್ರು `ನಿನ್ನ ಗುಂಡಿನಾಗೆ ಹೊಡೆದುಬಿಡ್ತೀನಿ’ ಅಂತ ಹೆದರಿಸಿ ತಡೆದರಂತೆ…!” +“ಪಾಪ, ಅವರ ಹೆಂಡ್ತೀನೂ ಅಳ್ತಳ್ತಾ ಬಂದು ಗಂಡನ್ನ ಕಾಲು ಹಿಡ್ಕೊಂಡರಂತೆ, ತುಳಸಿಕಲ್ಲು ಒಡೆದು ಹಾಕಬ್ಯಾಡಿ ಅಂತಾ!” +“ಯಾರು ಅಂತೀಯಾ ಅವರ ಹೆಂಡತಿ? +ನಮ್ಮ ಕೋಣೂರು ಸಣ್ಣಗೌಡ್ರು ಮುಕುಂದಯ್ಯ ಇದ್ದಾರಲ್ಲ ಅವರ ಅಕ್ಕ, ಖಾಸಾ ಅಕ್ಕ!” +“ಗಂಡ ಜಾತಿಗೆ ಸೇರಿದ ಮೇಲೆ ಹೆಂಡ್ತೀನೂ ಕಿಲಸ್ತರೆ ಆದ್ಹಾಂಗೆ ಆಯ್ತಲ್ಲಾ!” +“ಅದ್ಯಾಕೆ ಹಾಂಗೆ? +ಇವರೇನು ಹೋಗಿ ಆ ಪಾದ್ರಿಹತ್ರ ತೀರ್ಥ ತಗೊಂಡು ಜಾತಿ ಕೆಡಸಿಕೊಳ್ತಾರೇನು….?” +“ಹೆಂಡ್ತೀನೂ ತಮ್ಮ ಜೊತೇಲಿ ಕಿಲಸ್ತರ ಜಾತಿಗೆ ಸೇರಿದ ಇದ್ರೆ, ಅವರು ಕಿಲಸ್ತರವಳನ್ನೆ ಒಬ್ಬಳನ್ನ ಮದುವೆ ಆಗ್ತಾರಂತೆ!…” +“ಅದೇ ಅಂತೆ ಕಣೊ, ಕುಶಾಮತ್ತು! +ಆ ಪಾದ್ರಿಗೆ ಎಂಟೋ ಹತ್ತೊ ಜನ, ಒಂದು ಹಿಂಡೇ, ಹೆಣ್ಣು ಮಕ್ಕಳು ಅವೆಯಂತೊ! +ಅದೂ ದಿಂಡೇ ದಿಂಡೇಹೆಣ್ಗಳಂತೆ! +ಈ ಗೌಡ್ರನ್ನ ಕರಕೊಂಡು ಹೋಗಿ, ಅವರ ಕೈಲಿ ಊಟಗೀಟ ಹಾಕ್ಸಿ, ಮೆಹನತ್ತ ಮಾಡಿದಾನಂತೆ. +ಅದೂ ಒಂದು ಕತೇನೆ ಆಗಿಬಿಟ್ಟದಂತೆ! …. ” +“ಅಂತೂ ಒಳ್ಳೆ ಕಿಸಾಗೊಳ್ಳೀನೆ ಆಗ್ಯದೆ ಅನ್ನು! +ಪಾಪ, ಆ ಕೋಣೂರು ಅಮ್ಮಗೆ ಒಂದೊ ಎಲ್ಡೋ ವರ್ಷದ ಒಂದು ಮಗು ಬ್ಯಾರೆ ಅದೆ ಕಣೋ!” +“ಗಂಡೋ?ಹೆಣ್ಣೊ?” +“ಗಂಡೋ!” +“ಮೊಮ್ಮಗನ್ನ ಎಲ್ಲಿ ಬಿಟ್ಟಾರು ನಮ್ಮ ದೊಡ್ಡಗೌಡ್ರ? +ಆ ಪಾದ್ರೀನ ಸೀಳಿಸೀಳಿ ಹಾಕ್ಬಿಟ್ಟಾರು! +“ಓಹೋಹೋ!ಏನು ಗಲಾಟೆ ಕೇಳಿಸ್ತಾ ಇದೆಯೋ ಹಕ್ಕಲಾಗೆ? +ಆಗ್ಲೆ ಬೀಸೆಕಲ್ಲು ಸವಾರಿ ನೋಡಾಕೆ ಜನ ಗೇರೈಸಿಬಿಟ್ಟದೆ ಅಂತಾ ಕಾಣ್ತದೆ. +“ಗುತ್ತಿ ಸಂಗಾತಿಗಳೊಡನೆ ಬೆಟ್ಟಳ್ಳಿ ಹಕ್ಕಲನ್ನು ತಲುಪಿದಾಗ ಇನ್ನೂ `ಬೀಸೆಕಲ್ಲು ಸವಾರಿ’  ಪ್ರಾರಂಭವಾಗಿರಲಿಲ್ಲ. +ಆದರೆ ಸಮೀಪದ ಹಳ್ಳಿ ಮನೆಗಳ ಆಳುಕಾಳು, ಮಕ್ಕಳೂ ಮರಿಗಳೆಲ್ಲ ಸೋಜಿಗೆ ನೋಡುವ ಕಾತರದಿಂದ ಪ್ರೇರಿತರಾಗಿ, ಹೊತ್ತಿಗೆ ಮೊದಲೆ ನೆರೆದಿದ್ದುದರಿಂದ  ಸಂತೆ ಜಾತ್ರೆಗಳಲ್ಲಾಗುವಂತೆ ಸದ್ದು ಮೊಳಗತೊಡಗಿತ್ತು. +ತೀರ್ಥಹಳ್ಳಿಯ ಪಾದ್ರಿ ಜೀವರತ್ನಯ್ಯ ಉತ್ಸಾಹೀ ಯುವಕನಾಗಿದ್ದ ಬೆಟ್ಟಳ್ಳಿ ದೇವಯ್ಯನಿಗೆ ಬೈಸಿಕಲ್ಲು ಕಲಿಸಲು ಮಾತುಕೊಟ್ಟಿದ್ದು ವಾರತ್ತೆ ವಿವಿಧ ರೂಪ ಧರಿಸಿ, ಸುತ್ತಮುತ್ತಣ ಹಳ್ಳಿಗಳಲ್ಲಿ ಹಬ್ಬಿ, ಬೆಟ್ಟಳ್ಳಿಯ ಹಕ್ಕಲಿಗೆ ಜನರನ್ನು ಆಕರ್ಷಿತ್ತು. +ಎತ್ತಿನಗಾಡಿಯೇ ಅಪೂರ್ವವೂ ಆಶ್ಚರ್ಯಕರವೂ ಆಗಿದ್ದ ಈ ಕಾಲದ ಹಳ್ಳಿಗರಿಗೆ ಬೈಸಿಕಲ್ ಎಂಬ ವಿದೇಶೀಯ ಪದವೂ ಆ ಹೆಸರಿನ ವಸ್ತುವೂ ಅದರ ಸವಾರಿಯೂ ಒಂದು ಅದ್ಭುತವಾದ ಅತೀಂದ್ರಿಯ ವ್ಯಾಪಾರಸದೃಶವಾಗಿದ್ದುದರಲ್ಲಿ ಆಶ್ವರ್ಯ ವೇನಿಲ್ಲ. +ಬೈಸಿಕಲ್ ಎಂಬ ಪದ ಸರಿಯಾಗಿ ಉಚ್ಛಾರಣ ಮಾಡಲಾರದ ಹಳ್ಳಿಗರ ಬಾಯಲ್ಲಿ ತಮಗೆ ಚೆನ್ನಾಗಿ ಪರಿಚಯವಿದ್ದು ದಿನಬಳಕೆಯಲ್ಲಿದ್ದ `ಬೀಸೆಕಲ್ಲು’ ಎಂಬ ಪದಕ್ಕೆ ಮತಾಂತರವಾಗಿತ್ತು. +ಬೈಸಿಕಲ್ ಎಂಬ ವಸ್ತುವನ್ನು ಕಂಡರಿಯಲಿಲ್ಲವಾದ್ದರಿಂದಲೂ ಬೀಸೆಕಲ್ಲನ್ನು ಹುಟ್ಟಿದಂದಿನಿಂದಲೂ ಕಂಡಿದ್ದರಾದ್ದರಿಂದಲೂ ಬೈಸಿಕಲ್ ಸವಾರಿಯನ್ನು ಬೀಸೆಕಲ್ಲಿನ ಸವಾರಿ ಎಂದು ಕರೆದು, ಪಾದ್ರಿ ಬೀಸೆಕಲ್ಲಿನ ಮೇಲೆ ಸವಾರಿ ಮಾಡುತ್ತಾನೆಂದೂ ದೇವಯ್ಯಗೌಡರಿಗೂ ಅದನ್ನು ಹೇಳಿ ಕೊಡುತ್ತಾನೆಂದೂ ವದಂತಿ ಹಬ್ಬಿತ್ತು. +ಜನರ ಕಲ್ಪನೆಯಲ್ಲಿ ಕುದುರೆಯ ಮೇಲೆಯೋ ಜಮಖಾನೆಯ ಮೇಲೆಯೋ ಕುಳಿತು ಆಕಾಶದಲ್ಲಿ ಸಂಚಾರ ಮಾಡುವಂತೆ, ಪಾದ್ರಿ ಬೀಸೆಕಲ್ಲಿನ ಮೇಲೆ ಕುಳಿತು ಮಂತ್ರಶಕ್ತಿಯಿಂದ ಸಂಚರಿಸುತ್ತಾನೆ ಎಂಬು ಚಿತ್ರಿಸಿಕೊಂಡಿದ್ದರು. +ಇದ್ದಕ್ಕಿದ್ದಂತೆ ಜನರ ಗುಜುಗುಜು ಇಳಿದ ಹಾಗಾಯಿತು. +ಅಲ್ಲಿ ಇಲ್ಲಿ ಗುಸುಗುಸು ಮಾತು ಮೂದಲಾಯಿತು. +ನೋಡುತ್ತಿದ್ದಂತೆ ಪೊದೆಗಳ ನಡುವಣಿಂದ ಪಾದ್ರಿ ಜೀವರತ್ನಯ್ಯನೂ ಬೆಟ್ಟಳ್ಳಿ ದೇವಯ್ಯನೂ ಕಾಣಿಸಿಕೊಂಡು ಹಕ್ಕಲ ಕಡೆಗೆ ಬಂದರು. +ಇದ್ದಲಿನಷ್ಟು ಕರ್ರ‍ಗಿದ್ದು ಪಾದ್ರಿ ಮಲ್ಲಿಗೆ ಹೂವಿನಂತಹ ಬಿಳಿಯ ಬಟ್ಟೆಗಳನ್ನು ಧರಿಸಿದ್ದನು. +ಒಂದು ಅಂಚಿಲ್ಲದ ಬಿಳಿಯ ರುಮಾಲು ತಲೆಯನ್ನಲಂಕರಿಸಿತ್ತು. +ಗುಂಡಿ ಹಾಕದೆ ತೆರೆದಿದ್ದ ಬಿಳಿಯ ಕೋಟಿನ ಒಳಗೆ ಧರಿಸಿದ್ದ ಶರಟಿನ ಗುಂಡಿಗಳನ್ನು ಬಿಸಿಲಿಗೆ ಹೊಳೆಯುತ್ತಿದ್ದುವು. +ಉತ್ತರೀಯವೊಂದು, ಅದೂ ಬಿಳಿಯದೆ, ಕೊರಳನ್ನು ಸುತ್ತಿ, ಬೆನ್ನ ಮೇಲೊಂದು ತುದಿಯಾಗಿಯೂ ಎದೆಯ ಮೇಲೊಂದು ತದಿಯಾಗಿಯೂ ಮೆರೆಯುತ್ತಿತ್ತು. +ಹಳ್ಳಿಗರ ಬೆರಗಿಗೆ ಕಾರಣವಾಗಿದ್ದು ಗಡಿಯಾರದ ಸರಪಣಿ ಕೋಟಿನ ಗಡಿಯಾರದ ಜೇಬಿನಿಂದ ಇಳಿಬಿದ್ದಿತ್ತು. +ಒಂದು ತೆಳ್ಳನೆಯ ಬಿಳಿಯ ಪಂಚೆಯನ್ನು ಕಚ್ಚೆ ಹಾಕಿ ಉಟ್ಟಿದ್ದನು. +ಮೆಟ್ಟುಗಳನ್ನೇ, ಅಪರೂಪವಾಗಿ, ಯಜಮಾನ ಗೌಡರುಗಳ ಕಾಲಿನಲ್ಲಿ ಮಾತ್ರ ನೋಡುತ್ತಿದ್ದ ಹಳ್ಳಿಗರ ಕುತೂಹಲ ಗೌರವಕ್ಕೆ ತಿರುಗುವಂತೆ ಕಾಳಿಗೆ ಬೂಟೀಸು ಹಾಕಿದ್ದನ್ನು. +ತೆಳ್ಳಗೆ ಎತ್ತರವಾಗಿದ್ದ ಆ ವ್ಯಕ್ತಿಯನ್ನು ನೋಡಿ ಅವರ ಜಾತಿ ನೀತಿ ಮತ್ತು ಅವನು ಮಾಡುತ್ತಿದ್ದನೆಂದು  ಹೇಳಲಾಗುತ್ತಿದ್ದ ಮತಾಂತರದ ಹಾವಳಿ ಇವುಗಳಿಂದ ಅವನ ವಿಚಾರದಲ್ಲಿ ಅತ್ಯಂತ ತಿರಸ್ಕಾರದ ಭಾವನೆ ಇದ್ದವರೂ ಕೂಡ ತುಸು ಹೆಡೆ ಮುಚ್ಚುವಂತಾದರು. +ಪಾದ್ರಿಯ ಪಕ್ಕದಲ್ಲಿದ್ದ ದೇವಯ್ಯ ಮೈಕಟ್ಟಿನಲ್ಲಿ ಪಾದ್ರಿಗಿಂತಲೂ ಒಂದು ಕೈ ಮೇಲಾಗಿದ್ದನು. +ಬಣ್ಣದಲ್ಲಿಯೂ ಪಾದ್ರಿ ಯಾವ ಪ್ರಮಾಣದಲ್ಲಿ ಕಪ್ಪಾಗಿದ್ದನೋ ಅದೇ ಪ್ರಮಾಣದಲ್ಲಿ ಅವನು ಕೆಂಪಗಿದ್ದನು. +ಆ ಬಣ್ಣ ಮತ್ತು ಮೈಕಟ್ಟು ಅವರ ಮನೆತನದ ಲಕ್ಷಣಗಳಾಗಿದ್ದುವು. +ಉಡುಪು ಅಲಂಕಾರಗಳಲ್ಲಿ ಅವನ ಗೌಡತನ ತುಸುತುಸುವೆ ಕಿಲಸ್ತರತನಕ್ಕೆ ತಿರುಗಲು ಶುರುವಾಗಿತ್ತು. +ಅವನು ತಲೆಗೆ ಯಾವ ಉಡುಪನ್ನೂ ಹಾಕಿರಲಿಲ್ಲ. +ಕ್ರಾಪು ಬಿಟ್ಟಿದ್ದನು. +ಗೀರಿನ ಶರಟು, ಕರಿಯ ಕೋಟು ಹಾಕಿ, ಕೆಂಪಂಚಿನ ಕಚ್ಚೆಪಂಚೆ ಉಟ್ಟು ಸಾಧಾರಣವಾಗಿ ಅತ್ತಕಡೆ ಬಳಕೆಯಲ್ಲಿ ಕನ್ನಡ ಜಿಲ್ಲೆಯವಲ್ಲದ, ಶಿವಮೂಗ್ಗಾದ ಕಡೆಯಿಂದ ಆಮದಾದ, ಬಯಲು ಸೀಮೆಯ ಮೆಟ್ಟುಗಳನ್ನು ಹಾಕಿದ್ದನು. +ಆದರೆ ಕಿವಿಗಳಲ್ಲಿ ಇನ್ನೂ ಒಂಟಿಗಳು ಮಾಯವಾಗಿರಲಿಲ್ಲ. + ಹುಟ್ಟಿನಲ್ಲಿ ಆತನು ಗೌಡರ ಕುಲಕ್ಕೆ ಸೇರಿದವನು ಎಂಬುದಕ್ಕೆ ಅವು ಮಾತ್ರವೆ ಸಾಕ್ಷಿಯಾಗಿದ್ದುವು! +`ಹಕ್ಕಲು’ ಕಾಡು ವಿರಳವಾಗುತ್ತಾ ಬಂದಿದ್ದ ಅದರಂಚಿನ ಭಾಗವಾಗಿತ್ತೆ ಹೊರತು `ಬಯಲು’ ಆಗಿರಲಿಲ್ಲ. +ಅದರ ನಡುನಡುವೆ ದೂರ ದೂರದಲ್ಲಿ ಹುಳಿಚೊಪ್ಪಿನ ಪೊದೆಗಳೂ ಬೆಮ್ಮಾರಲ ಮಟ್ಟುಗಳೂ ಅರಮರಲ ಗಿಜರುಗಳೂ ಇದ್ದುವು. +ಅದು ಧನಗಳು ಮೇಯುವ ಕಾವಲಾಗಿಯೂ ಕರುಗಳ `ಒಳಕಡೆ’ ಯಾಗಿಯೂ ಉಪಯೋಗದಲ್ಲಿತ್ತು. +ಬಯಲು ಸೀಮೆಯಲ್ಲಿ `ಬಯಲು’ ಎಂದು ಕರೆಸಿಕೊಳ್ಳುವಂತಹ ಜಾಗ ಮಲೆನಾಡಿನಲ್ಲಿ ಪ್ರಾಯಶಃ ಇಲ್ಲವೆ ಇಲ್ಲ. +ಏಕೆಂದರೆ ಅಂತಹ ಸಮತಟ್ಟಿನ ಪ್ರದೇಶವೆ ಅಲ್ಲಿ ದುರ್ಲಭ. +ಆದ್ದರಿಂದಲೆ ಪಾದ್ರಿ ಬೈಸಿಕಲ್ಲನ್ನು ತಾನೆ ನೂಕಿಕೊಂಡೊ ಹತ್ತಿಕೊಂಡೊ ಬರುವುದಕ್ಕೆ ಬದಲಾಗಿ, ಅದನ್ನು ಹೊತ್ತು ತರುವಂತೆ ಗಾಡಿ ಹೊಡೆಯುವ ಬಚ್ಚನಿಗೆ ಆಜ್ಞೆಮಾಡಿ ಬಂದಿದ್ದನು. +ಪಾದ್ರಿಯಿಂದಲೂ ಪಾದ್ರಿಯ ಪ್ರಭಾವಕ್ಕೊಳಗಾಗಿದ್ದ ಸಣ್ಣಗೌಡರಿಂದಲೂ ಆಗ ತಾನೆ ನವನಾಗರಿಕತೆಗೆ ಪ್ರವೇಶದೀಕ್ಷೆ  ಪಡೆಯುತ್ತಿದ್ದೇನೆಂದು ಭಾವಿಸಿಕೊಂಡು, ತನ್ನ ಕೇರಿಯವರನ್ನೂ ಇತರ ಆಳುಕಾಳುಗಳನ್ನೂ ತಿರಸ್ಕಾರಭಾವದಿಂದ ನೋಡತ್ತಾ ಅವರ ದ್ವೇಷಾಸೂಯೆಗಳಿಗೂ ಪಕ್ಕಾಗಿದ್ದ ಬಚ್ಚ ತುಂಬ ಸಂತೋಷ ಹೆಮ್ಮೆಗಳಿಂದ ಬೈಸಿಕಲ್ಲನ್ನು ಹೊರುವ ಕೆಲಸಕ್ಕೆ ಒಪ್ಪಿದ್ದನು: +ಅಂತಹ ಪಳಪಳ ಹೊಳೆಯುವ, ಕೈ ತೊಳೆದುಕೊಂಡೆ ಮುಟ್ಟಬೇಕು ಎಂಬಷ್ಟು ರಮ್ಯವಾಗಿರುವ, ಅದುವರೆಗೂ ಅಲ್ಲಿ ಯಾರೂ ಕಾಣದಿರುವ ಹೊಸ ವಾಹನವನ್ನು ಹೊರುವ ಅರ್ಹತೆ ತನ್ನಂತಹ ಮುಂದುವರಿದವರಿಗಲ್ಲದೆ ಇನ್ನಾರಿಗೆ ಸಲ್ಲುತ್ತದೆ? +ಆದರೂ ಅದನ್ನು ಎತ್ತಿಕೊಳಲು ಕೈ ಹಾಕುವ ಮುನ್ನ ಅವನಲ್ಲಿ ಭಯ ಸಂಚಾರವಾಯಿತು! +ಅದನ್ನು ಯಾವ ಭಾಗದಲ್ಲಿ ಹೇಗೆ ಎತ್ತಬೇಕು ಎನ್ನುವುದು ಅವನಿಗೆ ಸಮಸ್ಯೆಯೆ ಆಗಿಬಿಟ್ಟಿತು. +ಒಮ್ಮೆ ಹಿಡಿದೆತ್ತಲು ಪ್ರಯತ್ನಿಸಿದಾಗ ಹಠತ್ತಾನೆ ಟ್ರಿಣ್ ಟ್ರಿಣ್ ಸದ್ದಾಗಿ, ಹೆದರಿ, ಅದನ್ನು ಬಿಟ್ಟು ದೂರ ಸರಿದು ನಿಂತನು! +ಇನ್ನೊಮ್ಮೆ ಚಕ್ರ ತಿರುಗಿ ಕೈ ಬೆರಳು ಸಿಕ್ಕಿತು! +ಮತ್ತೊಮ್ಮೆ ಅದರ ಕಾಲುಸರಪಣಿಯ ಮುಳ್ಳಿಗೆ ಬಟ್ಟೆ ಸಿಕ್ಕಿ ಹರಿದೆಹೋಯಿತು! +ಅಯ್ಯೋ ಗ್ರಹಚಾರವೆ! +ಹೆಬ್ಬುಬ್ಬೆಗೆ ಎತ್ತಿಕೊಂಡು ಬರುತ್ತೇನೆ ಎಂದು ಒಪ್ಪಿಕೊಂಡದ್ದೇನೊ ಅಯಿತು! +ಈಗೇನು ಮಾಡುವುದು? +ಎಷ್ಟು ಹೊತ್ತಾದರೂ ಬೈಸಿಕಲ್ ಹೊತ್ತ ಬಚ್ಚ ಕಾಣದಿರಲು, ದೇವಯ್ಯನೆ ಒಬ್ಬ ಆಳಿನೊಡನೆ ಮನೆಗೆ ಓಡಿ ಬಂದನು. +ನೋಡುತ್ತಾನೆ: ಬಚ್ಚ ಇನ್ನೂ, ದೇವತೆಯ ಬಳಿ ಆರಾಧಕನಂತೆ, ದೂರನಿಂತು ಯಂತ್ರಾವಲೋಕನದಲ್ಲಿಯೆ ಮಗ್ನನಾಗಿದ್ದಾನೆ! +“ಏನು ನೋಡ್ತಾ ನಿಂತೀಯ, ಬೆಪ್ಪುಮುಂಡೇದೆ?” ಎಂದು ಬೈದು, ತಾನು ಕರೆತಂದ ಆಳನ್ನೂ ಬಚ್ಚನಿಗೆ ನೆರವಾಗಲು ಹೇಳಿ, ಅದನ್ನು ಹೇಗೆ ಎಲ್ಲಿ ಹಿಡಿದೆತ್ತಬೇಕೆಂಬುದನ್ನೂ ಹೇಳಿಕೊಟ್ಟು, ದೇವಯ್ಯ ಗೌಡರು ಅದನ್ನು ಹಕ್ಕಲಿಗೆ ಹೊರಸಿಕೊಂಡು ಬಂದರು! +ದೇವಯ್ಯಗೌಡರ ಹಿಂದೆ ಬೈಸಿಕಲ್ಲನ್ನು ಹೊತ್ತ ಇಬ್ಬರು ಆಳುಗಳು ಬರುತ್ತಿದ್ದುದನ್ನು ಕಂಡು ಹಕ್ಕಲಿಗೆ ಹಕ್ಕಲೆ ಏದುಸಿರಾಗಿ ನೋಡಿತು. +ಪ್ರಶಂಸಾರೂಪದ ನಿರಾಶಾರೂಪದ ಆಶ್ಚರ್ಯರೂಪದ ತಾತ್ಸಾರರೂಪದ ನಾನಾ ವ್ಯಾಖ್ಯಾನಗಳೂ ಗುಜಿಗುಜಿಸತೊಡಗಿದುವು:“ಬಂತೋ! +ಬಂತೋ!ಬೀಸೆಕಲ್ಲು!” +“ಅದೆಂಥಾ ಬೀಸೆಕಲ್ಲೊ? +ಪಳಪಳ  ಹೊಳೀತಿದೆಯಲ್ಲೊ?” +“ಅಯ್ಯೋ, ಬೀಸೆಕಲ್ಲಿಗೆ ಎರಡು ಹೋಳಿರ್ತವೆ. +ಇದಕ್ಕೆ ಎರಡು ಚಕ್ರ ಇದ್ದ್ಹಾಂಗಿದೆಯಲ್ಲೋ!” +“ಏ ಬೀಸೆಕಲ್ಲಲ್ಲೋ!ಬೈಸಿಕಲ್ಲಂತೋ!” +“ನೋಡ್ನೋಡು, ಕೆಳಗೆ ಇಳಿಸ್ತಾರೆ…. +ನೋಡಿದ್ಯಾ?ಈಗ ಹ್ಯಾಂಗೆ ಹಿಡುಕೊಂಡಾನೆ! ….” +“ಅಲ್ಲೋ, ಗಾಡೀಲಿ ಇದ್ದ್ಹಾಂಗೆ ಒಂದರ ಒತ್ತಿನಲ್ಲಿ ಒಂದು ಚಕ್ರ ಇರಾದುಬಿಟ್ಟು ಒಂದರ ಹಿಂದೆ ಒಂದು ಚಕ್ರ  ಇರಾದುಬಿಟ್ಟು ಒಂದರ ಹಿಂದೆ ಒಂದು ಚಕ್ರ ಇದ್ರೆ, ಹೆಂಗೆ ನಡೀತದ್ಯೋ ಹತ್ತಿದ್ರೆ ನಿಲ್ಲೋದು ಹ್ಯಾಂಗೋ? +ಮಗ್ಲೀಗೆ ಮಗುಚಿಕೊಳ್ತದೆ, ನೋಡ್ತಿರು!” +“ಹ್ಹಿಹ್ಹಿಹ್ಹಿ! +ಅದೇನ ಟ್ರಿಣ್ ಟ್ರಿಣ್ ಟ್ರಿಣ್ ಟ್ರಿಣ್ ಅಂತದೆ?” +“ದಾರಿ ಬಿಡ್ಸಾಕೆ ಗಂಟೆ ಬಾರಿಸೋದು ಕಣೋ!” +“ಹಂಗಾರೆ, ಟ್ರಿಣ್ ಟ್ರಿಣ್ ಮಾಡ್ತಾ ಇದ್ರೆ, ಅದರಷ್ಟಕ್ಕದೇ ದಾರಿ ಆಗ್ತಾ ಹೋಗ್ತದಾ?” +“ಅಲೇಲೇಲೇಲೇ! +ಅವನ್ನೋಡೋ ಆ ಬಚ್ಚನ್ನ! +ಹೊಲೇರ ಕುರುದೆಗೆ ಏನು ದೌಲತ್ತು ಬಂದುಬಿಟ್ಟಾದೆ? …. ತಲೀಗ ಕೆಂಪುವಸ್ತ್ರೇನು? +ಅಂಗಿ ಏನು? +ಹ್ಹಹ್ಹಹ್ಹ!ಪಂಚೆ ಮೂಣಕಾಲು ದಾಟೇ ಬಿಟ್ಟದಲ್ಲೋ!” +“ಮತ್ತೇನಂತಾ ಮಾಡೀಯಾ? +ನಾಡ್ದೋ ಆಚೆನಾಡ್ದೋ ಮದುವಣಿಗ ಆಗೋನು? +ದೊಡ್ಡಬೀರನ ಮಗಳು ತಿಮ್ಮಮ್ಮನ ಮಗ್ಗಲಾಗೆ….” +“ಅಗೊಳ್ಳೊ!ಅಗೊಳ್ಳೊ! +ಹತ್ತೇಬಿಟ್ಟ ಪಾದ್ರಿ!”ಆಶ್ಚರ್ಯ ಆನಂದ ಉತ್ಸಾಹ ಉಕ್ಕಿದಂತಾಗಿ ಸುತ್ತಣ ಕಾಡು ಮರುದನಿಕೊಡುವಂತೆ ಗೆಲ್ಲುಲಿ ಎದ್ದಿತು. +ರುಮಾಲು ಕೋಟುಗಳನ್ನು ತೆಗೆದಿಟ್ಟು, ಬೈಸಿಕಲ್ ಕಚ್ಚೆ ಬಿಗಿದು, ಬೂಟೀಸನ್ನು ತೆಗೆಯದೆಯೆ ಜೀವರತ್ನಯ್ಯ, ಹಕ್ಕಲಿನ ಒರಟೊರಟು ನೆಲದಲ್ಲಿಯೆ ಒಂದೆರಡು ಸುತ್ತು ತಿರುಗಿ ಬೈಸಿಕಲ್ಲಿನಿಂದ ಇಳಿದನು. +ಹಕ್ಕಲಿನ ಅಂಚಿನಲ್ಲಿ ಸುತ್ತಿದ್ದ ಅಡವಿಗೆ ಒತ್ತಿ ನಿಂತಿದ್ದ ಜನಸಮೂಹ, ಸುತ್ತನಾಲ್ಕು ದಿಕ್ಕಿನಿಂದಲೂ, ಪಾದ್ರಿ ಹಿಡಿದಿದ್ದ ಬೈಸಿಕಲ್ಲಿನ ಬಳಿಗೆ ನುಗ್ಗಿತು. +ಆ ನೂಕುನುಗ್ಗಲಿನಲ್ಲಿ ಮುಟ್ಟಬಹುದಾದವರು ಮುಟ್ಟಬಾರದವರು ಎಂಬ ಭೇದಭಾವಕ್ಕೆ ರಿಯಾಯಿತಿ ಒದಗಿದಂತಾಗಿ, ಪಾದ್ರಿಯ ವೃತ್ತಿಬುದ್ದಿ ತನಗೆ ತಾನೆ ಹೇಳಿಕೊಂಡಿತು: ಮತಪ್ರಚಾರಕ್ಕೆ ಬೈಬಲ್ಲು ಏಸುಕ್ತಿಸ್ತನಿಗಿಂತಲೂ ಬೈಸಿಕಲ್ಲೆ ಹೆಚ್ಚು ಪ್ರಭಾವ ಶಾಲಿ! +ಗುತ್ತಿ ಬೈಸಿಕಲ್ಲಿನ ಚಕ್ರದ ಟಯರನ್ನು ಹೆದರಿಹೆದರಿ ಮುಟ್ಟಿನೋಡಿ, ಗಾಡಿ ಚಕ್ರಕ್ಕಿರುವಂತೆ ಅದಕ್ಕೆ ಕಬ್ಭಿಣದ ಹಳಿ ಇಲ್ಲದೆ ಏನೊ ಮೆತ್ತಗಿರುವಂತಿರುವ ಕರಿವಸ್ತು ಸುತ್ತಿರುವುದನ್ನು ನೋಡಿ, ಸೋಜಿಗೆ ಪಡುತ್ತಿದ್ದನು. +ಕಾಳಿಂಗನ ಹಾಂವು ಸುತ್ತಿದ ಹಾಂಗಿದೆಯಲ್ಲಾ! +ಎಂದುಕೊಳ್ಳುತ್ತಿರುವಷ್ಟರಲ್ಲಿಯೆ, ಯಾರೊ ಹಿಂದಿನಿಂದ ನುಗ್ಗಿದವರು ಅವನ ಹಿಮ್ಮಡಿಯನ್ನು ಬಲವಾಗಿ ಮೆಟ್ಟಿಬಿಟ್ಟರು. +“ಯಾವನೊ ಅದು? +ನಿಂಗೇನು ಮುಖದ ಮೇಲೆ ಕಣ್ಣದೆಯೋ ಇಲ್ಲೋ?” ಎಂದು ರೇಗಿ, ತಿರುಗಿ ನೋಡಿದ ಗುತ್ತಿಯ ಮೋರೆ, ಕೋಪ ಮುದ್ರೆಯನ್ನು ತಟಕ್ಕನೆ ತ್ಯಜಿಸಿ, ಪರಿಚಿತವಾದ ಸ್ನೇಹಮುಖವನ್ನು ಗುರುತಿಸಿದಂತೆ ಮುಗುಳುನಗುತ್ತಾ “ ಅಯ್ಯೋ!ನೀನೇನು? +ನಾನು ಯಾರೋ ಅಂತಾ ಮಾಡಿದ್ದೆ!” ಎಂದನು. +ಅದಕ್ಕೆ ಉತ್ತರವಾಗಿ ಐತ ಪಿಚ್ಚನೆ ಹಲ್ಲು ಬಿಡುತ್ತಾ “ ನಾನೂ ಒಂದು ಚೂರು ಮುಟ್ಟಿ ನೋಡ್ತೀನೋ!” ಎಂದು ಅಂಗಲಾಚಲು, ಗುತ್ತಿ, ಅವನಿಗೂ ಸ್ಪಲ್ಪ ಜಾಗ ಬಿಟ್ಟುಕೊಟ್ಟನು. +ಐತ ಆ ಬೈಸಿಕಲ್ಲಿನ ನಾನಾ ಭಾಗಗಳನ್ನು, ತಾನು ಮದುವೆಯಾದ ಮೊದಲಲ್ಲಿ ಪೀಂಚಲುವಿನ ಕೋಮಲವಾದ ಅಂಗೋಪಾಂಗಗಳನ್ನು ಏಕಾಂತದಲ್ಲಿ ಸ್ಪರ್ಶಿಸಿ ಸುಖಿಸಿದಂತೆ, ಮುಟ್ಟಿ ಮುಟ್ಟಿ ನೋಡಿ, ತೃಪ್ತಿಯ ಅತಿಶಯಕ್ಕೆಂಬಂತೆ, ನಿಡಿದಾಗಿ ಉಸಿರೆಳೆದುಕೊಂಡು ಸುಯ್ದನು. +ಗುತ್ತಿ ನೋಡುತ್ತಾನೆ, ತನ್ನ ಹೆಗಲ ಮೇಲುಗಡೆಯಿಂದ ಇನ್ನೂ ಒಂದು ಕೈ, ಚಾಚಿ, ಬೈಸಿಕಲ್ಲನ್ನು ಮುಟ್ಟಲು ಪ್ರಯತ್ನಿಸುತ್ತಿದೆ: + ತಿರುಗಿ ನೋಡಿದರೆ, ಸೇರೆಗಾರ ಚೀಂಕ್ರ! +ತಲೆಬಾಚಿ, ಮಂಡೆಕಟ್ಟಿ, ಹೂ ಸಿಕ್ಕಿಸಿ ಕೊಂಡಿದ್ದಾನೆ! +ಎಲೆಯಡಿಕೆ ಹಾಕಿ ತುಟಿ ರಂಗಾಗಿದೆ! +ಅಷ್ಟರಲ್ಲಿ ಪಾದ್ರಿ ದೇವಯ್ಯಗೆ ಬೈಸಿಕಲ್ಲು ಸವಾರಿ ಕಲಿಸಲಿಕ್ಕಾಗಿ ಜನರನ್ನೆಲ್ಲ ದೂರ ಹೋಗ ಹೇಳಿದನು. +ಆದರೆ ಅವರಿನ್ನೂ ಬೈಸಿಕಲ್ಲನನ್ನು ಮುಟ್ಟಿನೋಡಿ ತಣಿದಂತೆ ತೋರದಿರಲು, ಹಠಾತ್ತನೆ ಎರಡು ಮೂರು ನಿಮಿಷ ಬಿಡದೆ ಬೆಲ್ ಬಾರಿಸಿಬಿಟ್ಟನು! +ಜನ ಹೆದರಿ, ಬೆದರೆ, ಹಿಗ್ಗಿ, ನುಗ್ಗಿ, ಒಂದೇ ಏಟಿಗೆ ಹಿಮ್ಮೆಟ್ಟಿ ಓಡಿಬಿಟ್ಟರು ಹಕ್ಕಲಿನ ಅಂಚಿಗೆ! +ಸರಿ, ಶುರುವಾಯ್ತು ಅಭ್ಯಾಸ! +ಬಚ್ಚ ಒಂದು ಕಡೆ, ಪಾದ್ರಿ ಒಂದು ಕಡೆ, ಹ್ಯಾಂಡ್ಲ್ ಹಿಡಿದುಕೊಂಡರು. +ದೇವಯ್ಯ ಬೈಸಿಕಲ್ ಕಚ್ಚೆ ಹಾಕಿ, ಕೋಟು ಬಿಚ್ಚಿಟ್ಟು, ಮೆಟ್ಟುಗಳನ್ನು ಕಳಚಿಟ್ಟು. +ಪಾದ್ರಿಯ ನಿರ್ದೇಶನದಂತೆ ಪೆಡ್ಲಿನ ಬುಡಕ್ಕೆ ಕಾಲಿಟ್ಟು, ತನ್ನ ಭಾರವನ್ನೆಲ್ಲ ಎತ್ತಿ ಸೀಟಿನ ಮೇಲೆ ಕೂತನು. +ಅವನ ಭಾರ ತುಯ್ದ  ಹೊಡೆತಕ್ಕೆ ಬಚ್ಚನ ಕೈ ಹೊಂಗಿ, ಬೈಸಿಕಲ್ ಅವನತ್ತ ಬಾಗಿ, ಬೀಳುವುದರಲ್ಲಿತ್ತು. +ಪಾದ್ರಿ ಬಲವಾಗಿ ಎಳೆದು ನಿಲ್ಲಿಸಿ, ಬಚ್ಚನಿಗೆ ಎಚ್ಚರಿಕೆ ಹೇಳಿದನು. +ಆದರೆ ಸೀಟಿನ ಮೇಲೆ, ಶೂಲದ ಮೇಲೆಯೊ ಎಂಬಂತೆ, ಕೂತಿದ್ದ ದೇವಯ್ಯಗೌಡರ ಬೃಹತ್ಕಾಯ ಅತ್ತಿತ್ತ ಹೊಂಗಿದುದನ್ನು ಕಂಡ ಜನ `ಹಿಹ್ಹಿಹ್ಹಿ’ `ಹ್ಹೊಹ್ಹೊಹ್ಹೊ’  `ಅಹ್ಹಹ್ಹ’ ಎಂದು ಅಟ್ಟಹಾಸಮಾಡಿ, ನಕ್ಕು, ಕೈಚಪ್ಪಾಳೆ ತಟ್ಟಿತು! +ಮೂದಲೆ ತುಸು ದಿಗಿಲುಗೊಂಡು ವಿಲಕ್ಷಣಭಾವವನ್ನು ಅನುಭವಿಸುತ್ತಿದ್ದ ದೇವಯ್ಯನಿಗೆ ಅವಮಾನವಾದಂತಾಗಿ ಸಿಟ್ಟುಬಂದಿತು. +ಬರಿಯ ಉದ್ವೇಗದಿಂದಲೆ ಆಯಾಸಗೊಂಡಂತೆ ಅವನ ಮುಖದ ಮೇಲೆ ಬೆವರಿಳಿಯತೊಡಗತ್ತು. +ಅವನ ಇಚ್ಛೆಯಂತೆ ಅಂಚಿನಲ್ಲಿ ನೆರೆದಿದ್ದ ಜನರಿಗೆ ಪಾದ್ರಿ ಸಂದೇಶ ಕಳಿಸಿದನು: +ಗೌಡರು ಗಾಬರಿಯಾಗ್ತಾರೆ; +ಯಾರೂ ಕೂಗಬಾರದು, ನಗಬಾರದು, ನಿಃಶಬ್ದವಾಗಿರಬೇಕು ಎಂದು ಒಡನೆಯೆ ಎಲ್ಲ ಮನುಷ್ಯ ಸದ್ದೂ ಅಡಗಿತು. +ಪೊದೆಗಳಲ್ಲಿ ಪಿಕಳಾರಗಳು ಕೂಗುತ್ತಿದ್ದುದೂ, ಹಾರಿ ಹೋಗುತ್ತಿದ್ದ ಗಿಳಿ ಕಾಮಳ್ಳಿಗಳ ಹಿಂಡು ಉಲಿಯುತ್ತಿದ್ದುದೂ, ಮಿಂಚುಳ್ಳಿಯೊಂದು ಮೀಮೀಮೀ ಎಂದು ಕರೆಯುತ್ತಿದ್ದುದೂ ಕೇಳಿಸಿತು. +ಹಕ್ಕಲಿನ ಅಸಮ ನೆಲದಲ್ಲಿ ಬಚ್ಚನೂ ಪಾದ್ರಿಯೂ ಬೈಸಿಕಲ್ಲನ್ನು ತಳ್ಳುತ್ತಿದ್ದರು, ಕಷ್ಟಪಟ್ಟು, ಎಚ್ಚರಿಕೆಯಿಂದ. +ಪೆಡ್ಲುಗಳ ಮೇಲೆ ಕಾಲಿಟ್ಟು, ಅವು ಚಲಿಸಿದಂತೆಲ್ಲಾ ಅನೈಚ್ಛಿಕವಾಗಿಯೆ ದೇವಯ್ಯನ ಕಾಲು, ಮೇಲೆ ಕೆಳಗಿ ಹೋಗಿಬರುತ್ತಿದ್ದುವು. +ಆದರೆ ತುಸು ಇಳಿಜಾರು ಇದ್ದ ಒಂದೆಡೆ, ಪಾದ್ರಿಯ ನಿರ್ದೇಶನದಂತೆ, ಬಚ್ಚ ಕೈಬಿಟ್ಟೊಡನೆ, ಪಾದ್ರಿಯ ಆತುಕೊಳ್ಳುವ ಪ್ರಯತ್ನವೂ ವಿಫಲವಾಗಿ, ದೇವಯ್ಯನ ಭಾರಕ್ಕೆ ಬೈಸಿಕಲ್ಲು ಮುಂದಕ್ಕೆ ತುಸುದೂರ ವೇಗವಾಗಿ ಉರುಳಿ, ನೆರೆದವರೆಲ್ಲ ಹೋ ಹೋ ಹೋ ಎಂದು ಬೊಬ್ಬೆಯಿಡುತ್ತಿದ್ದಂತೆಯೆ ಒಂದು ಅರಮರಲ ಮಟ್ಟಿನೊಳಕ್ಕೆ ನುಗ್ಗಿಬಿಟ್ಟಿತು! +ದೇವಯ್ಯ ಮುಳ್ಳಿನ ಮೇಲೆ ಮುಖ ಅಡಿಯಾಗಿ ಮುಂದಕ್ಕೆ ಬಿದ್ದು, ಮುಳ್ಳುಗೀರಿದ ಗಾಯಗಳು ಕೆನ್ನೆ, ಗಲ್ಲ, ಮೂಗಿನ ಮೇಲೆ ಕೆಂಪಗೆ ಕಾಣಿಸಿಕೊಂಡುವು. +ನುಗ್ಗಿ ಬಂದ ಜನರನ್ನೆಲ್ಲ ಹಿಂದಕ್ಕೆ ಅಟ್ಟಿ, ಪಾದ್ರಿ ಬಚ್ಚನೊಬ್ಬನ ನೆರವಿನಿಂದಲೆ ಬೈಸಿಕಲ್ಲನ್ನೂ ದೇವಯ್ಯನನ್ನೂ ಮುಳ್ಳಿನ ಮಟ್ಟಿನಿಂದ ಹಿಂದಕ್ಕೆಳೆದು ಎತ್ತಿ ನಿಲ್ಲಿಸಿದನು. +“ಏ ಬಚ್ಚ, ಒಂದು ಬಿದಿರುಗಳು ತಗೊಂಡು ಬಾರ”. +ದೇವಯ್ಯನ ಆಜ್ಞೆಯಂತೆ ಏಳೆಂಟು ಮಾರು ಉದ್ದದ ಒಂದು ಗಳುವನ್ನು ತಂದು ಬೈಸಿಕಲ್ಲಿನ ಹ್ಯಾಂಡ್ಲಿಗೆ ಜೋಡಿಸಿ, ಬಳ್ಳಿಗಳಿಂದ ಬಿಗಿದು ಸುತ್ತಿದರು. +ದೂರನಿಂತು ನೋಡುತ್ತಿದ್ದವರಲ್ಲಿ ಐದಾರು ಆಳುಗಳನ್ನೂ ಬಳಿಗೆ ಕರೆದರು. +ತಿಮ್ಮಿಯ ಅಪ್ಪ ದೊಡ್ಡಬೀರನಾದಿಯಾಗಿ ನಾ ಮುಂದೆ ತಾ ಮುಂದೆ ಎಂದು ತವಕಿಸಿ ಬಂದವರನ್ನು, ಗಾಡಿಯ ನೊಗಕ್ಕೆ ಎತ್ತು ಕಟ್ಟುವಂತೆ, ಆ ಕಡೆ ಮೂವರನ್ನೂ ಈ ಕಡೆ ಮೂವರನ್ನೂ ಗಳುವಿಗೆ ಕೈಗೂಡುವಂತೆ ಮಾಡಿದರು. +ಅತ್ತಿತ್ತ ಅಳ್ಳಾಡದೆ ನೆಟ್ಟಗೆ ನಿಂತ ಬೈಸಿಕಲ್ಲಿನ ಸೀಟಿಗೆ ದೇವಯ್ಯ ಧೈರ್ಯವಾಗಿ ಹತ್ತಿ ಕೂತನು. + ಹಿಡಿದವರು ಬೈಸಿಕಲ್ಲನ್ನು ಎಳೆದುಕೊಂಡು ಹೊರಟರು. +ಗಳುವಿಗೆ ಭದ್ರವಾಗಿ ಕಟ್ಟಿದ್ದ ಹ್ಯಾಂಡ್ಲ್ ತಿರುಗುವ ಸಂಭವವೇ ಇರಲಿಲ್ಲ. +ಅದು ಗಳು ಹಿಡಿದವರ ವಶವಾಗಿ ಅವರು ಎಳೆದಷ್ಟೆ ವೇಗದಲ್ಲಿ, ಅವರು ಎಳೆದತ್ತ ಹೋಗುತ್ತಿತ್ತೇ ವಿನಾ ದೇವಯ್ಯನ ವಶದಲ್ಲಿರಲಿಲ್ಲ. +ಆದರೆ ಬೈಸಿಕಲ್ಲು ಹೊಂಗುವ ಅಥವಾ ಬೀಳುವ ಭಯ ಒಂದಿನಿತೂ ಇರದ ಅವನು ದಂಡಿಗೆಯ ಮೇಲೆ ಕುಳಿತಂತೆ ಖುಷಿಯಾಗಿ ಸವಾರಿ ಮಾಡುತ್ತಿದ್ದನು. +ಆದರೆ ಪಾದ್ರಿಗೆ ಗೊತ್ತಿತ್ತು: +ಅದರ ಪ್ರಯೋಜನ ಬರಿಯ ನಲಿಯುವಿಕೆಯಾಗಿತ್ತೆ ಹೊರತು ಕಲಿಯುವಿಕೆ ಆಗಿರಲಿಲ್ಲ! +ಗುತ್ತಿ ನೋಡಿದ, ಬೆಟ್ಟಳ್ಳಿ ಹೊಲಗೇರಿಯ ಜನರಲ್ಲಿ ಮುಕ್ಕಾಲು ಪಾಲು ಹಕ್ಕಲಿನಲ್ಲಿ ನೆರೆದಿತ್ತು, ಹೆಂಗಸರೂ ಮಕ್ಕಳೂ ಸೇರಿ. +ತಿಮ್ಮಿಯನ್ನು ಮದುವೆಯಾಗಲಿರುವ ಬಚ್ಚನಂತೂ ಕಾರ್ಯಕಲಾಪದ ಕೇಂದ್ರದಲ್ಲಿಯೆ ಇದ್ದನು. +ತಿಮ್ಮಿಯ ಅಪ್ಪ ದೊಡ್ಡಬೀರನೂ ಬೈಸಿಕಲ್ ನೊಗಕ್ಕೆ ಹೆಗಲು ಕೊಟ್ಟಿದ್ದನು. +ಹೆಂಗಸರ ಗುಂಪಿನಲ್ಲಿ ತಿಮ್ಮಿಯಾಗಲಿ, ತಿಮ್ಮಿಯ ತಾಯಿ ಸೇಸಿಯಾಗಲಿ ಕಾಣಿಸಲಿಲ್ಲ. +ತಾನು ಬಂದ ಕೆಲಸಕ್ಕೆ ಆ ಬೈಸಿಕಲ್ ಸವಾರಿಯು ಅಭ್ಯಾಸವು ದೇವರೇ ಒದಗಿಸಿಕೊಟ್ಟು ಸದವಕಾಶದಂತೆ ಭಾಸವಾಯಿತು ಗುತ್ತಿಗೆ. +ತನ್ನ ಸಮೀಪದಲ್ಲಿಯೆ ನಿಂತು ತದೇಕಚಿತ್ತದಿಂದ ಬೈಸಿಕಲ್ ಮೆರವಣಿಗೆಯನ್ನು ಈಕ್ಷಿಸುತ್ತಿದ್ದ ಐತನ ಹೆಗಲಮೇಲೆ ಕೈಯಿಟ್ಟು, ಕಣ್ಣು ಮಿಟಿಕಿನಿಂದಲೆ ಅವನನ್ನು ಪಕ್ಕಕ್ಕೆ ಕರೆದು, ಪಿಸುಮಾತಿನಲ್ಲಿ ಹೇಳಿದನು: +“ನಂಗೆ ಸ್ವಲ್ಪ ಕೆಲಸ ಇದೆಯೊ. +ನಾ ಹೋಗ್ತೀನಿ, ಹಳೆಮನೆ ದೊಡ್ಡ ಹೆಗ್ದೇರು `ಹೋಗ್ತಾ ಕೋಣೂರಿ ಮೇಲಾಸಿ ಹೋಗಿ, ಐಗಳನ್ನು ನಾ ಬರಾಕೆ ಹೇಳ್ದೆ ಅಂತ ಹೇಳು’ ಅಂದಿದ್ರು. +ನನಗೆ ಕೋಣೂರಿನ ಹೋಗಾಕೇ ಆಗ್ಲಿಲ್ಲ. +ಹೂವಳ್ಳಿ ಮೇಲಾಸಿ ಬಂದ್ಬಿಟ್ಟೆ. +ನೀನು ಹೋದವನೆ ಐಗಳಿಗೆ ಹೇಳ್ತೀಯಾ?’ಐತ `ಆಗಲಿ’ ಎಂದು ತಲೆಯಲ್ಲಾಡಿಸಿ ಬೈಸಿಕಲ್ ಸರ್ಕಸ್ಸಿಗೆ ಅವಸರದಿಂದ ಹಿಂದಿರುಗುವುದರೊಳಗೆ ಗುತ್ತಿ ಮತ್ತೆ ವ್ಯಂಗ್ಯವಾಗಿ ನಕ್ಕು “ನಿನ್ನ ಹೆಂಡತಿ ಬರಲಿಲ್ಲೇನೊ? +ನೀ ಒಬ್ಬನೇ ಬಂದುಬಿಟ್ಟೀಯಲ್ಲಾ!” ಎಂದನು. +ಐತನು ನಗೆಯಾಡುತ್ತಲೇ “ಬಾ ಅಂತ ಕರೆದ. +ಇಲಿಕಿವಿಸೊಪ್ಪು ಕುಯ್ತೀನಿ ಅಂತ ಹೋದ್ಲು ಅವಳಿಗೆ ದಿನಾ ಹೊತಾರೆ, ವಾಕರಿಕೆ ಆದ್ಹಂಗಾಗಿ, ವಾಂತಿ ಆಗ್ತದಂತೆ! +ಅದಕ್ಕೇ ಕಣ್ಣಾಪಂಡಿತರು ಹೇಳಿದ್ರು, ಇಲಿಕಿವಿ ಸೊಪ್ಪಿನ ಹಸಾಳೆ ಮಾಡಿಕೊಂಢು ಕುಡಿಯಾಕೆ!!” ಎನ್ನುತ್ತಾ ಓಡಿದನು, ಇದ್ದಕ್ಕಿದಂತೆ ಸದ್ದು ಹೊನಲುಕ್ಕಿದ್ದ ಹಕ್ಕಲೆಡೆಗೆ. +ಕೋಲಾಹಲಕ್ಕೆ ಕಾರಣವಾಗಿದ್ದು, ದೊಡ್ಡಬೀರನು ಮುಗ್ಗರಿಸಿ ಬಿದ್ದದ್ದ! +ಬೈಸಿಕಲ್ ನೊಗಕ್ಕೆ ತೋಳುಕೊಟ್ಟಿದ್ದ ಆರು ಜನರನ್ನೂ ಓಡಲು ಹೇಳಿದನು ಪಾದ್ರಿ. +ಏಕೆಂದರೆ ಬೈಸಿಕಲ್ ಸ್ವಲ್ಪವಾದರೂ ವೇಗವಾಗಿ ಚಲಿಸಿದಿದ್ದರೆ ದೇವಯ್ಯ ಪೆಡ್ಲು ಹೊಡೆಯುವುದನ್ನಾದರೂ ಕಲಿಯುವುದು ಹೇಗೆ? +ಆರು ಜನರೂ ಓಡತೊಗಿದ್ದರು. +ಜನರು ಚಪ್ಪಾಳೆ ಹೊಡೆದು ಶ್ಲಾಘಿಸಿ ಪ್ರೋತ್ಸಾಹಿಸಿದ್ದರು. +ಅಷ್ಟರಲ್ಲಿ ಕೊರಕಲೊಂದನ್ನು ಎಡವಿದ ಮುದುಕ ದೊಡ್ಡಬೀರ ಮುಗ್ಗರಿಸಿ ಬಿದ್ದ, ಬಿದ್ದವನು ಬಿದಿರು ಗಳುವನ್ನೂ ಬಿಡಲಿಲ್ಲ. +ಜೋತಾಡುತ್ತಲೆ ಒಂದು ಮಾರು ಮುಂದಕ್ಕೆ ಸರಿದು ದೊಪ್ಪನೆ ಉರುಳಿದ್ದನು. +ಉತ್ಸಾಹದಿಂದ ಕೂಗುತ್ತಿದ್ದ ಜನಕ್ಕೆ ಪರಿಹಾಸ್ಯ ಕಾರಣವೂ ದೊರೆತಂತಾಗಿ ಕೋಲಾಹಲವೆದ್ದಿತ್ತು. +ಐತನು ಓಡಿ ಜನಜಂಗುಳಿಗೆ ಸೇರುವಷ್ಟರಲ್ಲಿ ದೇವಯ್ಯನೂ ಬೈಸಿಕಲ್ಲಿಂದ ಇಳಿದು, ದೊಡ್ಡಬೀರನ ಶುಶ್ರೂಷೆಗೆ ಪ್ರಾರಂಭವಾಗಿತ್ತು. +ಹೊತ್ತು ಆಗಲೆ ಇಳಿಯತೊಡಗಿ ಕುಂದದ ಹೆಗ್ಗುಡ್ಡದ ನೆತ್ತಿಯ ನೆರಳು ಕಣಿವೆಯ ಕಾಡುಗಳು ಮೇಲೆ ಬಿದ್ದಿತ್ತು. +ಹಿಂದಿನ ದಿನದ ಹೆಮ್ಮಳೆಯಲ್ಲಿ ತೊಯ್ದ ಕಾಡಿನ ಹಸುರು ಅಲ್ಲಲ್ಲಿ ಕೆಂಬಿಸಿಲಿನ ರಂಗಿನಲ್ಲಿ ಸುಮನೋಹರವಾಗಿ ಮನಮೋಹಿಸುವಂತಿತ್ತು. +ಹಗಲಿಗೂ ಇರುಳಿಗೂ ನಡುವಣ ಸಂಧಿಸಮಯದ ಸೌಂದರ್ಯಶಾಂತಿ ಮಲೆನಾಡನ್ನು ಅಪ್ಪಿಕೊಂಡಂತಿತ್ತು. +ಕತ್ತಲೆ ದಟ್ಟಯಿಸುವುದರೊಳಗೆ ತಮ್ಮ ತಮ್ಮ ಮನೆಗಳನ್ನು ಸೇರಿಕೊಳ್ಳುವ ಸಲುವಾಗಿ ದೂರದ ಹಳ್ಳಿಗಳಿಂದ ಬಂದಿದ್ದವರೆಲ್ಲ ಹೊರತೊಡಗಿದರು. +ಸಮಯ ಸಂದರ್ಭ ದೊರೆತಾಗಲೆಲ್ಲ ತನ್ನ ಮತದ ಧಾರ್ಮಿಕತೆಯನ್ನು ಅನ್ಯಮತಸ್ಥರ ಮನಸ್ಸಿನ ಮೇಲೆ ಮುದ್ರಿಸುವ ಕುಶಲತೆಯನ್ನು ಚೆನ್ನಾಗಿ ಪ್ರಯೋಗಿಸಲು ಕಲಿತಿದ್ದ ಪಾದ್ರಿ ಜನರನ್ನು ಉದ್ದೇಶಿ, ಮುಖ್ಯವಾಗಿ ದೇವಯ್ಯನನ್ನು ಕುರಿತೆ ಹೇಳುತ್ತಿರುವಂತೆ, ಭಾವಪೂರ್ಣಧ್ವನಿಯಿಂದ, ಸೃಷ್ಟಿಸೌಂದರ್ಯವನ್ನು ವೀಕ್ಷಿಸುತ್ತಾ “ ಗೌಡರೆ, ದೇವರ ಸೃಷ್ಟಿ ಎಷ್ಟು ಸುಂದರ! +ಈ ಸ್ಥಳ ಮತ್ತು ಸಮಯ ಎರಡೂ ಪ್ರಶಸ್ತವಾಗಿವೆ, ಪ್ರಾರ್ಥನೆಗೆ! +ದಯಾಮಯನಾದ ಭಗವಂತನಿಗೆ ಪ್ರಾರ್ಥನೆ ಸಲ್ಲಿಸೋಣ!” ಎಂದು ಮೊಳಕಾಲೂರಿ ಕೈಮುಗಿದುಕೊಂಡು ಅರೆಗಣ್ಣಾಗಿ ಕುಳಿತೇಬಿಟ್ಟನು. +“ಮತ್ತೆ ಎಂಥದನ್ನೋ ಸುರುಮಾಡಿದ್ನಲ್ಲೋ ಈ ಪಾದ್ರಿ!” ಎಂದು ತನ್ನ ಟೀಕೆ ತಿರಸ್ಕಾರಗಳನ್ನು ಪ್ರಕಟಿಸುತ್ತಾ ಹಳೆಮನೆಯ ಹೊಲೆಯರ ಮಂಜ ತನ್ನ ಕೇರಿಯವರನ್ನು ಕರೆದುಕೊಂಡು ಹೊರಟನು. +“ಅಯ್ಯೋ ನಮ್ಮ ಬೆಟ್ಟಳ್ಳಿ ಸಣ್ಣಗೌಡರೂ ಮಂಡೀ ಊರೇಬಿಟ್ರಲ್ಲೋ!” ಎಂದು ಚೀಂಕ್ರ ಐತನನ್ನೂ ಕರೆದುಕೊಂಡು ಹೊರಡುತ್ತಿರಲು, ಪಾದ್ರಿ ರಾಗಧ್ವನಿ ಕೇಳಿಸಿತು: +“ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವಾಗಲಿ! +ನಿನ್ನ ರಾಜ್ಯವು ಬರಲಿ! …. ” +“ಇದು ಎಂಥಾದ್ದೋ ಇವರು ಹೇಳುವುದು? +ಕಾಡಿಗೆ ಕೈಮುಗಿದು! +ಒಂದು ದೇವರಿಲ್ಲ! +ಒಂದು ಗುಡಿಯಿಲ್ಲ! +ನಮ್ಮ ಪೆರಡೂರು ಮೇಳದವರು ಇದಕ್ಕಿಂತಲೂ  ಚೆನ್ನಾಗಿ ಹೇಳುತ್ತಾರಲ್ಹಾ ಭಾಗವತರಾಟದಲ್ಲಿ? +ಈ ಗೌಡರಿಗೆ ಯಾಕೆ ಈ ಹುಚ್ಚು, ಆ ಪಾದ್ರೀನ ಕಟ್ಟಿಕೊಂಡು?” ಕನ್ನಡ ಜಿಲ್ಲೆಯ ಸೆಟ್ಟರಾಳೊಬ್ಬನು ನಕ್ಕು ನುಡಿದುದನ್ನು ಕೇಳಿ,ಐತ, ಹೊಟ್ಟೆಹಿಡಿದುಕೊಂಡು ನಗುತ್ತಾ, ಚೀಂಕ್ರನಿಗೆ ತೊರಿಸಿದನು: + “ ಅಲ್ಲಿ ನೊಡೋ!ನೋಡೋ! +ಆ ಹೊಲೆಯ ಬಚ್ಚನೂ ಮಂಡಿಊರಿ ಕೂತುಬಿಟ್ಟಿದ್ದಾನಲ್ಲೋ! +ಹಿಹ್ಹಿಹ್ಹಿಹ್ಹಿ!” +“ಮಂಡಿನಾರೂ ಊರಿಲಿ, ಕುಂಡಿನಾರೂ ಊರಿಲಿ! +ನೀ ಬಾ, ಹೋಗುವ ನಾವು! +ಕಪ್ಪಾಗ್ತಾ ಇದೆ; +ಆರ್ಲೂ ಮೂಡಿ ಆಯಿತ್ತು!”ಐತ ನೋಡುತ್ತಾನೆ: +ಹೌದು!ಕುಂದದ ಗುಡ್ಡದ ಮೇಲೆ ಹೊಂಬಣ್ಣದ ಪಶ್ಷಿಮ ಆಕಾಶದಲ್ಲಿ ಬೆಳ್ಳಿ ಆಗಲೆ ಮೂಡಿಬಿಟ್ಟಿತ್ತು! +ಐತನಿಗೆ ಅವನ ಹೆಂಡತಿಯನ್ನು ಬಿಟ್ಟು ಅವನೊಬ್ಬನೆ ಬಂದಿದ್ದ ಅಪೂರ್ವಘಟನೆಯ ವಿಚಾರದಲ್ಲಿ ವ್ಯಂಗ್ಯಪ್ರಶ್ನೆ ಹಾಕಿ, ಹಕ್ಕಲಿನಿಂದ ಹೊಲಗೇರಿಯ ಕಡೆಗೆ ಬೇಗಬೇಗನೆ ಕಾಲು ಹಾಕಲು ತೊಡಗಿದ್ದ ಗುತ್ತಿಯ ಮನದಲ್ಲಿ ನಾನಾ ಭಾವತರಂಗಗಳು ಏಳತೊಡಗಿದುವು: +“ಎಲಾ ಇವನ್ನ!ಗಟ್ಟದ ತಗ್ಗಿನಿಂದ ಬಂದ ಈ ಬಿಲ್ಲೋರ ಕುರುದೆ, ನನಗಿಂತಲೂ ಸಣ್ಣವನಾಗಿ ಕಾಣ್ತಾನೆ, ಇನ್ನೂ ಮೀಸೆ ಹುಟ್ಟದ ಬೋಳ, ಆಗಲೆ ಆ ಹುಡುಗೀನ ಕಟ್ಟಿಕೊಂಡು ಏನು ದಿಂಗಾಗಿದಾನೆ! +ಅವಳನ್ನ ಒಂದು ನಿಮಿಸಾನೂ ಬಿಟ್ಟಿರ ಒಲ್ಲನಂತೆ! …. ”ಗುತ್ತಿಗೆ ಒಳಗಣ್ಣಿಗೆ ತಿಮ್ಮಿಯ ಚಿತ್ರ ಮೋಹಕವಾಗಿ ಕಟ್ಟಿ ನಿಂತಿತು. +ಅವಳ ಆಕಾರ ರತಿಯ ಮುಂದೆ ಅವನ ಆಶಾಮನ್ಮಥ ಸೋತುಹೋದನು. +ಆ ಕಣ್ಣು, ಆ ಹುಬ್ಬು, ಆ ಮೂಗು, ಆ ಕೆನ್ನೆ, ಆ ತುಟಿ, ಆ ಹಣೆ, ಅವಳ ನಿಲುವಿನ ಭಂಗಿ, ಅವಳ ಮಾತಿನ ಇಂಪು,…. +ಇದುವರೆಗೆ ಉಗುರುಬೆಚ್ಚಗಿದ್ದ ಅವನ ಸಾಹಸೋತ್ಸಾಹ ಅವಳನ್ನು ಭಾವಿಸುತ್ತಾ ಭಾವಿಸುತ್ತಾ ಕುದಿನೀರಿನ ಮಟ್ಟಕ್ಕೇರಿತು. +ಆ ದಿನವೆ ಯಾವುದಾದರೊಂದು ರೀತಿಯಲ್ಲಿ ನಿರ್ಣಾಯಕವಾಗಿ ವಿಸ್ತರಿಸಿಯೇ ಬಿಡುವ ದೃಢಹಠ ರಾಗೋದ್ರೇಕದಿಂದ ವೇಗ ವೇಗವಾಗಿ ಕಾಲುಹಾಕಿದನು: + “ ಎಲಾ ನಾನೇನು ಈ ಐತ ಹುಡುಗನಿಗಿಂತ ಕಳಪೆಯಾಗಿ ಹೋದೆನೆ?”ಗುತ್ತಿ ಹೊಲೆಗೇರಿಯ ವಲಯದೊಳೆಗೆ ಪ್ರವೇಶಿಸುತ್ತಿದ್ದಂತೆಯೆ, ತನ್ನ ಹೆಣ್ಣು ಗಂಡು ಶುನಕ ಪರಿವಾರ ಸಮೇತನಾಗಿ ಹುಲಿಯ ಅವನನ್ನು ಎದುರುಗೊಂಡಿತು. +ಆದರೆ ಎಷ್ಟು ಬಾಲ ಅಳ್ಳಾಡಿಸಿದರೂ ಮಲಗಿಸಿದರೂ ಯಜಮಾನನಿಂದ ಯಾವ ವಿಶ್ವಾಸದ ಅಥವಾ ಮುದ್ದಿನ ಸೂಚನೆಯೂ ಹೊರಹೊಮ್ಮಲಿಲ್ಲ. +ಅವನ ಮುಖದ ಕಡೆ ನೋಡಿ, ಅದರ ಉಗ್ರಗಭೀರ ಮುದ್ರೆಯಿಂದ ಏನನ್ನೊ ಅರ್ಥಮಾಡಿಕೊಂಡಂತೆ ತನ್ನ ಉಲ್ಲಾಸಭಂಗಿಯನ್ನೆಲ್ಲ ತ್ಯಜಿಸಿ, ಪಕ್ಕಕ್ಕೆ ಸರಿದು, ಹಿಂಬಾಲಿಸತೊಡಗಿತ್ತು ಆ ಸ್ವಾಮಿನಿಷ್ಠ ಪ್ರಾಣಿ? +ಹೊಲೆಗೇರಿಯ ಅಗ್ರಸ್ಥಾನದಲ್ಲಿದ್ದು, ಎದ್ದುಕಾಣುವಂತಿದ್ದ, ತಳವಾರ ದೊಡ್ಡಬೀರನ ಗುಡಿಸಲು ಸಾಲಕೃತವಾಗಿದ್ದುದನ್ನು ತಟಕ್ಕನೆ ಗ್ರಹಿಸಿತು ಗುತ್ತಿಯ ದೃಷ್ಟಿ. +ಎಂದಿನಂತೆ ಬಿಡಾರದ ಸುತ್ತ ಕಸೆ ಕೊಳಕು ಇರದೆ, ಸೆಗಣಿಹಾಕಿ ಸಾರಿಸಿ ಗುಡಿಸಿ ಚೊಕ್ಕಟವಾಗಿತ್ತು. +ಅದಕ್ಕಿಂತಲೂ ಅತಿಶಯವಾಗಿ ಕಣ್ಣಿಗೆ ಹೊಡೆಯುವಂತೆ ಕಂಡಿದ್ದೆಂದರೆ ಬಿಡಾರದ ಗೋಡೆಗಳಿಗೆ ಬಳಿದಿದ್ದ ಜೇಡಿ, ಮತ್ತು ತೆಣೆಗೂ ತೆಣೆಯ ಕಂಬಗಳಿಗೂ ಬಳಿದಿದ್ದ ಕೆಮ್ಮಣ್ಣಿನ ಮತ್ತು ಜೇಡಿಯ ಪಟ್ಟೆಗಳು! +ತಿಮ್ಮಿಯ ಲಗ್ನದ ನಿಶ್ಚಯದ ವಿಚಾರವಾಗಿ ಗುತ್ತಿಯ ತಲೆಯಲ್ಲಿದ್ದಿರಬಹುದಾದ ಕೊಟ್ಟ ಕೊನೆಯ ಸಂದೇಹದ ಛಾಯೆಯೂ ಅಳಿಸಿಹೋಯಿತು. +ನೆಟ್ಟಗೆ ಗುಡಿಸಿಲಿಗೆ ನಡೆದು, ತೆಣೆಗೆ ಹತ್ತಿ, ಕೈಯಲ್ಲಿದ್ದ ಬಗನಿಯ ದೊಣ್ಣೆಯನ್ನು ಸೊಂಟದ ಒಡ್ಯಾಣದಲ್ಲಿದ್ದ ಕೆಲಸದ ಕತ್ತಿಯನ್ನೂ ಹೆಗಲ ಮೇಲಿದ್ದ ಕಂಬಳಿಯನ್ನೂ ಜಗಲಿಯ ಹೆಸರು ಪಡೆದಿದ್ದು ಆ ಗುಡಿಸಿಲಿನ ತೆರೆದ ಮುಂಭಾಗದಲ್ಲಿ ಎಂದಿನಂತೆಯೆ ಇಡುವಲ್ಲಿ ಇಟ್ಟು, ಆಯಾಸಗೊಂಡವನಂತೆ ಉಸ್ಸೆಂದು ಕುಳಿತನು. +ಜನ ಖಾಲಿಯಾಗಿ, ಕೇರಿಯೇ ನಿಃಶಬ್ದವಾಗಿತ್ತು. +ಆದರೆ ಗುತ್ತಿಯ ಅತ್ತೆಯ ಬಿಡಾರದಲ್ಲಿ ಸದ್ದಿಲ್ಲದಿರುವಿಕೆ ಶಕುನಪೂರ್ಣವಾಗಿತ್ತು. +“ ಅತ್ತೇ, ಮನೇಲಿ ಇದ್ದೀಯಾ?” ಕರೆದನು ಗುತ್ತಿ. +ಸೇಸಿ ಒಳಗಣಿಂದಲೆ “ಯಾರೂ?” ಎಂದು ಕೇಳಿ, ತನ್ನ ಮಗಳಿಗೆ “ಯಾರು? +ಹೋಗಿ ನೋಡೆ” ಎಂದದ್ದೂ ಗುತ್ತಿಗೆ ಕೇಳಿಸಿ, ಆ ಕಡೆಯೆ ಕಣ್ಣಾಗಿದ್ದನು. +ತಿಮ್ಮಿ ಯಾವ ವಿಶೇಷ ವ್ಯಕ್ತಿಯನ್ನೂ ನಿರೀಕ್ಷಿಸದೆ, ಯಾರಾದರೂ ಕೇರಿಯವರನ್ನೇ ಕಾಣುತ್ತೇನೆ ಎಂಬ ದೈನಂದಿನ ಸಾಧಾರಣ ಪ್ರಜ್ಞೆಯಿಂದ ಜಗಲಿಗೆ ದಾಟಿ, ಎರಡು ಹೆಜ್ಜೆ ಮುಂಬರಿದವಳು. + ತನ್ನನ್ನೆ ನಟ್ಟದಿಟ್ಟಿಯಿಂದ ನೋಡುತ್ತಿದ್ದ ಗುತ್ತಿಯ ಕಣ್ಣಿಗೆ ತನ್ನ ಕಣ್ಣು ತಗುಲಿ, ಕಲ್ಲಾದಂತೆ ಬೆರಗುಹೊಡೆದು ನಿಂತುಬಿಟ್ಟಳು! +ಅವಳಿಗೆ ಒಂದು ಕ್ಷಣ ಉಸಿರೇ ಕಟ್ಟಿದಂತಾಯ್ತು. +ಅಲ್ಲಿ ಕುಳಿತಿದ್ದವನು ತನ್ನ ತಾಯಿಯ ಅಣ್ಣನ ಮಗ ಸಿಂಬಾವಿ ಬಾವ, ಗುತ್ತಿ ಎಂಬುದನ್ನು ಅವಳ ಪ್ರಜ್ಞೆ ಗ್ರಹಿಸಿ, ಬುದ್ಧಿ ಒಳಕೊಂಡು, ಭಾವ ಸ್ಥಿಮಿತಕ್ಕೆ ಬರಬೇಕಾದರೆ ಒಂದೆರಡು ನಿಮಿಷಗಳ ಬೇಕಾಯಿತು. +ಖೇದ, ಪಶ್ಷಾತ್ತಾಪ, ಮರುಕೊಳಿಸಿದ ಆಶೆ, ಬಹುಶಃ ಪಾರಾರಬಹುದು ಎಂಬ ಧೈರ್ರ‍, ಅಯ್ಯೋ ಅದೆಲ್ಲ ಎಲ್ಲಿ ಸಾಧ್ಯ ಎಂಬ ಸರ್ವನಾಶಭಾವದ ನಿರಾಶೆ-ಇವೆಲ್ಲವೂ ಮಿಂಚುಗಳು ಸಂಚರಿಸುವಂತೆ ಅವಳ ಹೃದಯ ಮನಸ್ಸುಗಳಲ್ಲಿ ಹಾಸುಹೊಕ್ಕಾಗಿ ಚಲಿಸಿ, ಒಂದು ವಿಸ್ಮರತಿ ಸದೃಶ ಜಾಲವಸ್ತುವನ್ನೆ ನೆಯ್ದು, ಅವಳ `ಗ್ಯಾನ’ವನ್ನೆಲ್ಲ ಮುಸುಗಿ ಮಬ್ಬುಗೊಳಿಸಿದುವು. +ಮಗಳು ಏನನ್ನೂ ಕೂಗಿ ಹೇಳದಿದ್ದುದನ್ನೂ ಹಿಂತಿರುಗಿಯೂ ಬಾರದಿದ್ದುದನ್ನೂ ನೋಡಿ, ಸೇಸಿ “ಯಾರೇ ಅದೂ? +ಎಲ್ಲಿ ಹೋದೆಯೆ, ತಿಮ್ಮೂ?” ಎಂದು ತನ್ನ ಅವ್ವ ಕೂಗಿದ ಮೇಲೆಯೆ ಅವಳಿಗೆ ಎಚ್ಚರವಾದಂತಾಗಿ, ಹಿಂತಿರುಗಿ ಒಳಗೆ ಓಡಿ, ಏದುತ್ತಾ ಬಾಯಾರಿದವಳಂತೆ ಎಂಜಲು ನುಂಗುತ್ತಾ, ತುಟಿಯನ್ನು ನಾಲಗೆಯಿಂದ ಸವರಿಕೊಳ್ಳುತ್ತಾ ತೊದಲಿದಳು “ಅವನೆ!ಅವನೆ ಬಂದಾನೆ!ಸಿಂಬಾವಿ ಬಾವ!” +“ಯಾರೇ?ಗುತ್ತಿ ಏನೇ?”ಮಗಳು ತಲೆದೂಗಿ ಹೌದೆಂದು ಸೂಚಿಸಲು, ಸೇಸಿ ತಟಕ್ಕನೆ ತನ್ನ ಕೈಲಿದ್ದ ಕೆಲಸ ನಿಲ್ಲಿಸಿ, ಒಂದು ಕ್ಷಣ ಆಲೋಚನಾಮಗ್ನಳಾದಂತೆ ಕುಳಿತು, ಸುಯ್ಯುತ್ತಾ ಮೇಲೆದ್ದಳು, ಸೊಂಟಗೈಯಾಗಿ ಬಾಗಿ ಮೆಲ್ಲಗೆ ಜಗಲಿಗೆ ಹೋದಳು, ಮಗಳಿಗೆ ಕಣ್ಣಿನಲ್ಲಿಯೇ ಸನ್ನೆಮಾಡಿ. +“ಮನೇಕಡೆ ಎಲ್ಲ ಹ್ಯಾಂಗಿದ್ದಾರೋ?” ಅತ್ತೆಯ ದನಿಯಲ್ಲಿ ಏನೊ ಅಂಜಿಕೆ,“ಇದಾರೆ….ಹಾಂಗೆ!” ಗುತ್ತಿ ಉದಾಸೀನದಿಂದ ಉತ್ತರಿಸಿ, ಮತ್ತೆ ಉಪಚಾರದ ವ್ಯಂಗ್ಯಭಂಗಿಯಲ್ಲಿ “ ಹ್ಯಾಂಗಿದೀರಿ…ನೀವೆಲ್ಲ?” ಎಂದನು. +“ಕಾಣ್ತದಲ್ಲ; ಇರೋದಪ್ಪಾ ಹೀಂಗೆ”. +“ಹ್ಞೂ ಕಾಣ್ತಾ ಇದೆಯಲ್ಲಾ!” ಗುತ್ತಿ ಮನೆಯ ಗೋಡೆ ತೆಣೆಗಳಿಗಾಗಿದ್ದ ಜೇಡಿ ಮಣ್ಣಿನ ಅಲಂಕಾರವನ್ನೂ ಅಂಗಳಕ್ಕೆ ಸಾರಿಸಿದ್ದ ಸೆಗಣೆಯ ಚೊಕ್ಕತನವನ್ನೂ ಗುಡಿಸಿಲಿಗೆ ಹೊದೆಸಿ, ಅಂಚನ್ನು ಬಟ್ಟಿಗೆ ಕತ್ತರಿಸಿದ್ದ ಹೊಸ ಹುಲ್ಲನ್ನೂ ಕಣ್ಣಿಂದಲೆ ನಿರ್ದೇಶಿಸಿದನು. +ತನ್ನ ಮಗಳ ಮದುವೆಯ ಪೂರ್ವಸಿದ್ಧತೆಯನ್ನು ಕುರಿತು ವ್ಯಂಗ್ಯವಾಡಿದ ಸೋದರಳಿಯನಿಗೆ ಅತ್ತೆ ಕ್ಷಮೆ ಕೇಳುವಂತೆ “ಧಣೇರು ಹಿರೇರು ಸೇರಿ ನಿಶ್ಚಯ್ಸಿಬಿಟ್ಟಾರೆ! +ನಾವು ಹೆಣ್ಣು ಹೆಂಗಸರು ಏನು ಮಾಡಾಕಾಗ್ತದಪ್ಪಾ? +ನಮ್ಮನ್ನೇನು ಕೇಳ್ತಾರಾ? +ಕೋಳಿ ಕೇಳಿ ಕಾರಾ ಕಡೀತಾರಾ?” ಎಂದು ಹೇಳುತ್ತಲೆ ಗೊಬ್ಬೆಸೆರಗಿನಿಂದ ಕಣ್ಣೊತ್ತಿಕೊಂಡಳು. +ಗುತ್ತಿಗೆ ಗೊತ್ತಿತ್ತು, ಅತ್ತೆಗೆ ತನ್ನ ಮಗಳನ್ನು ಬಚ್ಚನಿಗೆ ಕೊಡುವುದಕ್ಕೆ ಸ್ವಲವೂ ಮನಸ್ಸಿರಲಿಲ್ಲ ಎಂದು, ಅಲ್ಲದೆ ತಿಮ್ಮಿಯನ್ನು ತನಗೇ ಕೊಡುವುದಕ್ಕೆ ಮನಸ್ಸಿದ್ದುದನ್ನೂ ನಾನಾ ರೀತಿಗಳಿಂದ ವ್ಯಕ್ತಪಡಿಸಿಯೂ ಇದ್ದಳು. +ತಾನು ತಿಮ್ಮಿಗಾಗಿ ತಂದುಕೊಟ್ಟು ಸಣ್ಣಪುಟ್ಟ ಕಾಣಿಕೆಗಳನ್ನೂ ಹೆಮ್ಮೆಯಿಂದ ಸ್ವೀಕರಿಸಿದ್ದಳು. +ಆದರೆ ಗೌಡರ ಜೀತದಾಳಾಗಿ, ಅವರಲ್ಲಿ ಸಾಲಮಾಡಿ, ಅವರಿಗೆ ತನ್ನನ್ನು ಸಂಪೂರ್ಣವಾಗಿ ಮಾರಿಕೊಂಡಿದ್ದ ದೊಡ್ಡಬೀರ ಆ ವಿಚಾರದಲ್ಲಿ ನಿರುಪಾಯನಾಗಿ ಒಡೆಯರ ಆಜ್ಞೆಗೆ ತಲೆಬಾಗಿದ್ದನು. +ಒಡೆಯರಿಗೆ ಬೇಕಾಗಿದ್ದುದು ಜೀತಮಾಡಲು ಒಂದು ಆಳು. +ತಮ್ಮ ಹೊಲೆಗೇರಿಯ ಒಂದು ಹೆಣ್ಣನ್ನು ಹೊರಗೆ ಕೊಟ್ಟರೆ ತಮ್ಮ ಕೆಲಸಕ್ಕೆ ಒಂದಾಳು ಖೋತ ಬೀಳುತ್ತದೆ. +ಆದ್ದರಿಂದ ಕೇರಿಯ ಹೆಣ್ಣನ್ನು ಕೇರಿಯ ಗಂಡೇ ಮದುವೆಯಾಗಬೇಕು ಎಂಬುದು ಅವರ ಕಟ್ಟಪ್ಪಣೆ. +ಬೇರೆ ರೀತಿಯಿಂದ ವರ್ತಿಸಿದರೆ, ಆ ಹೆಣ್ಣು ಇನ್ನೊಬ್ಬ ಬೇರೆ ಹಳ್ಳಿಯ ಕೇರಿಯವನಿಂದ ತಾಳಿಕಟ್ಟಿಸಿಕೊಂಡಿದ್ದರೂ ಸರಿ, ಅವಳನ್ನು ಎಳೆದು, ತರಿಸಿ, ತಾಳಿ ಕೀಳಿಸಿ, ತಮ್ಮ ಕೇರಿಯವನಿಗೇ ಮದುವೆ ಮಾಡಿಸುತ್ತಿದ್ದರೆಂಬುದರಲ್ಲಿ ಸಂದೇಹವಿರಲಿಲ್ಲ. +ಅಪ್ಪಿ ತಪ್ಪಿ ಒಡೆಯರ ಇಚ್ಛೆಗೆ ವಿರೋಧವಾಗಿ ನಡೆದವರಿಗೆ ಹಿಂದೆ ಅಂತಹ ಗತಿಯೇ ಒದಗಿತ್ತು. +ಕೀಳುಜಾತಿಯವರಿಗೆ ಅವರ ಇಚ್ಛಾನುಸಾರ ಒಲವು ಅಕ್ಕರೆ ಇರುವುದೆಂದರೇನು? +ಒಲವು ಅಕ್ಕರೆ ಏನಿದ್ದರೂ ಎಲ್ಲ ಒಡೆಯರ ಲಾಭದ ವಲಯದೊಳಗಿದ್ದು, ಅವರ ಇಚ್ಛಾಧೀನವಾಗಿರಬೇಕು. +ಅವರ ಆಜ್ಞೆಯ ಗೆರೆ ದಾಟುವಂತಿರಲಿಲ್ಲ. +“ಕಡೀಗೆ ನೆಂಟರಿಷ್ಟರಿಗೆ ಒಂದು ಮಾತು ತಿಳಿಸಬಾರದಾಗಿತ್ತೆ?” ವ್ಯಂಗ್ಯವನ್ನು ಬಿಟ್ಟು ಅನುಕಂಪೆಗೆ ತಿರುಗಿತ್ತು ಗುತ್ತಿಯ ಸ್ವರ. +“ಎಲ್ಲ ಏನೊ ಗುಟ್ಟುಗುಟ್ಟಾಗಿ ಅವಸರವಸರವಾಗಿ ಮಾಡ್ತಿದಾರಪ್ಪಾ! +ನಂಗೊಂದು ತಿಳೀದು. +ತಿಮ್ಮಿ ಕಣ್ಣೀರು ಹಾಕ್ತಾ ಕೂತದೆ! +ಅಂವ ಬ್ಯಾರೆ, ಸಣ್ಣಗೌಡ್ರು ಸಂಗಡಾನೆ, ಆ ಪಾದ್ರಿ ಜಾತಿಗೆ ಸೇರತಾನೆ ಅಂತಾ ಕೇರೀಲೆಲ್ಲ ಗುಸುಗುಸು! +ಜಾತಿಕೆಟ್ಟೋವನಿಗೆ ಕೊಡಾಕೆ ಬದಲಾಗಿ ಬಾವಿಗೆ ಹಾಕಾದು ಲೇಸು. +ನೀನು ಬರಲಿ ಇಲ್ಲಾ ಅಂತಾ ತಿಮ್ಮು ಏನು ಮಾಡಾಕೂ ತಿಳೀದೆ…” ಸುಯ್ದು ಹೇಳಿದಳು ಸೇಸಿ “ಏನೇನೋ ಕೆಟ್ಟ ವೇಚ್ನೆ ಮಾಡ್ತಿದ್ಲು…. +ಅಂತೂ ಸ್ವಾಮಿ ನಿನ್ನೂ ಕಳಿಸಿದ್ಹಾಂಗಾತು! +ಇನ್ನು ನೀವುನೀವೆ ಏನು ಮಾಡ್ತೀರೋ ಮಾಡಿ.”ಸೇಸಿ ಗುತ್ತಿಯನ್ನು ಒಳಗೆ ಕರೆದಳು. +ಅವನು, ಹೊಸತನದ ಬಟ್ಟೆ ವಾಸನೆ ಇನ್ನೂ ಹೊಮ್ಮುತ್ತಿದ್ದು, ಗೊಬ್ಬೆಸೆರಗು ಕಟ್ಟಿ ಉಟ್ಟಿದ್ದ ಹೊಸಸೀರೆಯ ಬರ್ ಬರ್ ಬರ್ ಸದ್ದಿನೊಡನೆ ಕೈ ಬಳೆಗಳ ನಾದವೂ ಸೇರುವಂತೆ, ತುಸು ಸಡಗರದಿಂದಲೆ ತಿಮ್ಮಿ ತಂದಿಟ್ಟ ಚೊಂಬಿನ ನೀರಿನಿಂದ ಅಂಗಳಕ್ಕೆ ಹಾಕಿದ್ದ ಮೆಟ್ಟಲು ಕಲ್ಲಮೇಲೆ ಕಾಲು ತೊಳೆದುಕೊಂಡು ಒಳಗೆ ಹೋದನು. +ತಿಮ್ಮಿ ಒಂದು ಕರಟಕ್ಕೆ ಮಡಕೆಯಲ್ಲಿ ತುಂಬಿಟ್ಟಿದ್ದ ಹೆಂಡ ಬೊಗ್ಗಿಸಿದಳು. +ಒಂದು ಬಾಳೆಯ ಕೀತಿನಲ್ಲಿ ಜೀರಿಗೆ ಮೆಣಸಿನಕಾಯಿಯ ಖಾರ ಹಾಕಿ ಹುರಿದಿದ್ದ ಉಪ್ಪು ತುಂಡನ್ನು ನೆಂಚಿಕೊಳ್ಳಲು ತಂದಿಟ್ಟಳು. +ಆ ಉಪ್ಪುತುಂಟು ದನದ ಮಾಂಸದ್ದು. +ಗೌಡರ ಮನೆಯ ಒಂದು ದನವನ್ನು ಹುಲಿ ಹಿಡಿದು, ಅದರ ಗಂಟಲನ್ನು ಮುರಿದು ರಕ್ತ ಕುಡಿದು, ಬಡುವನ್ನು ಕಾಡಿಗೆ ಎಳೆದುಕೊಂಡು, ಹೋಗಿ, ಗುರಗಿ ಹುಳುವಿನಲ್ಲಿ ಮುಚ್ಚಿಟ್ಟಿತ್ತು. +ತರುವಾಯ ಸಾವಕಾಶವಾಗಿ ಬಂದು ಮಾಂಸಭಕ್ಷಣೆ ಮಾಡುವ ಉದ್ದೇಶದಿಂದ, ಅದನ್ನು ಪತ್ತೆಹಚ್ಚಿದ ಬೆಟ್ಟಳ್ಳಿ ಹೊಲಗೇರಿಯವರು ಆ ಬಡುವಿನ ಬಾಡನ್ನೆಲ್ಲ ಕೊಯ್ದು ತಮ್ಮ ತಮ್ಮ ಕಂಬಳಿಗಳಲ್ಲಿಯೇ ತುಂಬಿ ಹೊತ್ತು ತಂದು, ಹುಲಿಗೆ ತಾವು ಕಡಿದು ತರಲಾದಿದ್ದ ದೊಡ್ಡದೊಡ್ಡ ಎಲುಬುಗಳನ್ನು ಮಾತ್ರ ಬಿಟ್ಟಿದ್ದರು! +ಗೋಮಾತೆಯ ಚರ್ಮವನ್ನಂತೂ ವಾಡಿಕೆಯಂತೆ ಕುದರೆ ತಟ್ಟಿನ ಮೇಲೆ ಸವಾರಿ ಮಾಡಿಕೊಂಡು ಬಂದ ಮೇಗರವಳ್ಳಿ `ಕರ್ಮಿನು ಸಾಬರ’ ಕಡೆಯ `ಅಜ್ಜೀ ಸಾಬರಿಗೆ’ ಮಾರಿದ್ದರು! +ಅದರ ಪೂರ್ವೇತಿಹಾಸದ ಅರಿವಾಗಲಿ ಪ್ರಜ್ಞೆಯಾಗಲಿ ಒಂದಿನಿತೂ ಗಮನಕ್ಕೆ ಬಾರದ ಗುತ್ತಿ ನಾಲಗೆಗೆ ಚುರುಗುಟ್ಟುತ್ತಿದ್ದ ಹುಳಿಹೆಂಡವನ್ನು ಹೀರಿ, ಉಪ್ಪು ತುಂಡುಗಳನ್ನು ಜಗಿದು ಚಪ್ಪರಿಸತೊಡಗಿದನು. +ಅತ್ತೆ ಅಳಿಯರ ಮಾತು ಮಾತ್ರ ಗುಸುಗುಸು ಸಾಗಿತ್ತು. +ತಿಮ್ಮಿ ಗುತ್ತಿಗೆ ತುಸು ದೂರದಲ್ಲಿ ಹಿಂದುಗಡೆ, ತನ್ನ ಮುಖ ಅವನಿಗೆ ಕಾಣದಂತೆ, ತಾನು ಮಾತ್ರ ಅವನ ಮುಖವನ್ನು ಗಮನಿಸುವಂತೆ, ತನ್ನ ತಾಯಿಯ ಮುಖಕ್ಕೆ ನೇರ ಎದುರಾಗಿರುವಂತೆ ನಿಂತಿದ್ದಳು. +ಮಾತಿನ ನಡು ನಡುವೆ ಕಣ್ಣುಮಿಟುಕಿಸಿಯೊ, ತುಟಿ ಊದಿಸಿಯೊ ಕೈ ಅಳ್ಳಾಡಿಸಿ ಬಳೆ ಸದ್ದು ಮಾಡಿಯೊ, ತನ್ನ ತಾಯಿಗೆ ಸನ್ನೆ ಸಲಹೆ ನೀಡುತ್ತಿದ್ದಳು. +ಸಂವಾದ ಮುಂದುವರಿದಂತೆಲ್ಲ ಮೂವರ ರಕ್ತಪರಿಚಲನೆಯಲ್ಲಿ ವೇಗೋತ್ಕರ್ಷವಾಗತೊಡಗಿತ್ತು. +ಅದರ ಪರಿಣಾಮ ಒಮ್ಮೊಮ್ಮೆ ದೃಗ್ಗೋಚರವಾಗುವ ಬಹಿಃಕ್ರಿಯೆ ಮತ್ತು ಅಂಗವ್ಯಾಪಾರಾದಿಗಳಲ್ಲಿಯೂ ಹೊರದೋರುತ್ತಿತ್ತು. +ತಿಮ್ಮಿ ಒಮ್ಮೆ ತನ್ನ ಮೂಕಸಂದೇಶದ ಸಾಮರ್ಥ್ಯ ಸೋತು ಬಿಕ್ಕಿಬಿಟ್ಟಿದ್ದಳು; +ಒಮ್ಮೆ ಒಲ್ಲೆ ಎಂದು ತನ್ನವ್ವನಿಗೆ ತನ್ನ ನಿರ್ಧಾರವನ್ನು ಸೂಚಿಸಲು ತಲೆ ಕೊಡಹಿ, ಅವಳು ಮದುಮಗಳಾಗುವ ಪೂರ್ವಚಿನ್ಹೆಯಾಗಿ ತೊಟ್ಟಕೊಂಡಿದ್ದ, ಬಹುಪಾಲು ಕಡ ತಂದಿದ್ದ, ಸರಗಳೆಲ್ಲ ಸದ್ದಾಗಿದ್ದುವು; + ಒಂದು ಸಾರಿಯಂತೂ, ತಾನು ಗುತ್ತಿಯೊಡನೆ ಓಡಿಹೋಗಿಯೆ ಹೋಗುತ್ತೇನೆ ಎಂಬ ದೃಢ ಹಠವನ್ನು ತನ್ನ ಬಾಯಲ್ಲಿಯೆ ಮೆಲ್ಲಗೆ ಹೇಳಿಕೊಳ್ಳುತ್ತಿರಲು ಆ ವಾಕ್ಯದ ಕೊನೆಯ ಭಾಗಕ್ಕೆ ಬರುವ ಹೊತ್ತಿಗೆ ತಾಳ್ಮೆ ತಪ್ಪಿ ಮೈಮರೆತು ‘….ಗ್ತೀನಿ!’ ಎಂಬುದನ್ನು ಗಟ್ಟಿಯಾಗಿ ಉಚ್ಚರಿಸಿ, ಗುತ್ತಿ ತಿರುಗಿನೋಡುವಂತೆ ಮಾಡಿದ್ದಳು. +ಸೇಸಿಯ ಬಹಿರ್ವ್ಯಾಪಾರ ಅಷ್ಟು ರಭಸವಾಗಿ ಪ್ರಕಟಿತವಾಗಿರಲಿಲ್ಲ. +ಆದರೆ ಸುಯ್ಲು, ಕಣ್ಣೊರಸಿಕೆ, ಎದೆಯ ಏರಿಳಿತ, ಸಿಂಬಳ ಸುರಿಯುವಿಕೆ, ಹಣೆ ಚಚ್ಚಿಕೊಳ್ಳುವಿಕೆ, ಕಿವಿಯ ಅಲೆಯನ್ನು ಅನಾವಶ್ಯಕವಾಗಿ ಉಜ್ಜಿಕೊಳ್ಳುವಿಕೆ, ಬೆವರೊರಸಿಕೊಳ್ಳುವಿಕೆ ಇವು ಅವಳ ಹೃದಯದ ಸಂಕಟಕ್ಕೂ ಮನಸ್ಸಿನ ತುಯ್ದಾಟಕ್ಕೂ ಕನ್ನಡಿ ಹಿಡಿದಿದ್ದುವು. +ಬಾಡು ತಿನ್ನುವ ಮತ್ತು ಹೆಂಡ ಕುಡಿಯುವ ಒಂದು ಬಹಿಃಕ್ರಿಯೆಯಲ್ಲಿ ಆಗಲೆ ತೊಡಗಿದ್ದ ಗುತ್ತಿ, ಹೊಸದಾಗಿ ಬೇರೆಯ ತರಹದ ಕ್ರಿಯೆಯಿಂದ ತನ್ನ ಆಂತರ್ರ‍ದ ಆಂದೋಲಗಳನ್ನು ಪ್ರಕಟಪಡಿಸಲಾರದೆಯೊ ಮತ್ತು ಹಾಗೆ ಪ್ರಕಟಪಡಿಸುವ ಗೋಜಿಗೆ ಹೆಚ್ಚಾಗಿ ಹೋಗದೆಯೂ, ತಾನು ಕೈಕೊಂಡಿದ್ದ ಕ್ರಿಯೆಯ ತೀವ್ರ ಮಂದಾದಿ ಗತಿಯ ರಭಸತಾರತಮ್ಯದಿಂದಲೆ ತನ್ನ ಭಾವಗಳಿಗೆ ಅಭಿವ್ಯಕ್ತಿ ನೀಡಿದ್ದನು. +ತಿಂದೂ ಕುಡಿದೂ ಪೂರೈಸಿದೊಡನೆ ಕರಟವನ್ನಲ್ಲಿಯೆ ಪಕ್ಕಕ್ಕೆ ಸರಿಸಿಟ್ಟು, ಸೇಸಿ ಬೇಡಬೇಡವೆಂದರೂ ಬಾಳೆಯ ಕೀತನ್ನು ಎತ್ತಿಕೊಂಡು ತನಗೆ ಸುಪರಿಚಿತವಾಗಿದ್ದ ಕೈಬಾಯಿ ತೊಳೆದುಕೊಂಡು ಉಟ್ಟಬಟ್ಟೆಗೇ ಒರೆಸಿಕೊಂಡನು. +ತಿಮ್ಮಿಗೆ ಹೇಳುವುದನ್ನೆ ಸೇಸಿಯ ಕಡೆಗೆ ತಿರುಗಿ ಹೇಳಿದನು: “ಹಾಂಗಾರೆ ನಾ ಬರತಿನಿ. +ಆ ಅರೆಕಲ್ಲಿನ ಹತ್ರ ಕಾರೇಮಟ್ಟಿನ ಬದೀಲಿ, ಹೊಂಡ ಇದೆಯಲ್ಲಾ? +ಅಲ್ಲಿರಾ ಕ್ಯಾದಿಗೆ ಹಿಂಡ್ಲ ಹತ್ರ ಮರೇಲಿ ಕೂತಿರತಿನಿ.” ಎಂದವನು ‘ಆಗಬಹುದೇ?’ ಎಂದು ಪ್ರಶ್ನಿಸುವ ರೀತಿಯಲ್ಲಿ ತಿಮ್ಮಿಯನ್ನು ಕಣ್ಣಿಗೆ ಕಣ್ಣಿಟ್ಟು ನೋಡಿದನು. +ಅವಳೂ ಹಾಗೆಯೆ ನೋಡುತ್ತಿದ್ದಳು, ಗುತ್ತಿಯ ಕಣ್ಣನ್ನಲ್ಲ, ಹೃದಯಾಂತರಾಳವನ್ನೆ, ಜೀವವನ್ನೆ! +ಎಂಥ ನೋಟಗಳೂ ಅವು? +ಗಂಡು ಹೆಣ್ಣು ಘಟಸರ್ಪಗಳು ಎಣೆಯಾಡುವಾಗ ಒಂದನ್ನೊಂದು ಸರಪಣಿ ಸುತ್ತುವಂತೆ ಸುತ್ತಿ ಬಿಗಿಯುವ ಪ್ರಣಯಫಣಿಬಂಧನವೂ ಸಪ್ಪೆಯಾಗುವಂತೆ ಒಂದನ್ನೊಂದು ಆಲಿಂಗಿಸಿದ್ದುವು. +ಕೆಂಪಗೆ ಕರಗಿ ದ್ರವವಾದ ಜೀವಗಳೆರಡರ ಚೈತನ್ಯವೆ ಅತ್ತಿಂದಿತ್ತ ಇತ್ತಿಂದತ್ತ ಹೃದಯದಿಂದ ಹೃದಯಕ್ಕೆ ಹರಿಯುವ ಬೇಟದ ಒದಗೆಗಳಾಗಿದ್ದುವು ಆ ನೋಟಗಳು! +ಸಮರ್ಪಣೆ, ಆಶ್ವಾಸನೆ, ವಿನ್ಯಾಸ ಧೈರ್ರ‍, ಪ್ರತಿಜ್ಞಾಸೈರ್ಥ್ಯ, ಆಮರಣಪರ್ರ‍ಂತ ತ್ಯಾಗಭಾವ, ದುರ್ದಮ್ಯ ಸಾಹಸೋಲ್ಲಾಸ-ಇವೆಲ್ಲವನ್ನೂ ಒಬ್ಬರಿಂದೊಬ್ಬರಿಗೆ ಸಾಗಿಸುವ ಜೀವಂತ ವಿದ್ಯುನ್ಮಯ ತ್ಯಾಗಪ್ರಣಾಳಗಳಾಗಿದ್ದುವು ಆ ದೃಷ್ಟಿದ್ವಯ! +ತನ್ನ ದೊಣ್ಣಿ ಕತ್ತಿ ಕಂಬಳಿಗಳನ್ನು ಎತ್ತಿಕೊಂಡು ಹೊರಡುತ್ತಿದ್ದ ಗುತ್ತಿಗೆ ತಿಮ್ಮಿ ನಾಚಿಕೆಯಿಂದ ಮೃದುವಾಗಿ ಎಚ್ಚರಿಕೆ ಹೇಳಿದಳು: “ ಆ ಕ್ಯಾದಿಗೆ ಹಿಂಡ್ಲ ಹತ್ರಾನೆ ಕೂತುಕೊಬ್ಯಾಡಿ, ನಾ ದನಾಕಾಯಕ್ಕೆ ಹೋದಾಗ ನೋಡೀನಿ, ಸರ್ಪನ ಹಾಂವು ಇರ್ತವೆ! +ಸ್ವಲ್ಪ ದೂರಾನೆ ಕೂತ್ಕೊಳ್ಳಿ!”ಎಷ್ಟಾದರೂ ಆ ಪ್ರದೇಶದ ನಿಕಟ ಪರಿಚಯ ಗುತ್ತಿಗಿಂತಲೂ ಹೆಚ್ಚಾಗಿರುವುದು ಆ ಜಾಗದ ಹುಟ್ಟುಮಗುವಾದ ತಿಮ್ಮಿಗೆ ತಾನೆ? +ಆದರೆ ಒಂದನ್ನು ಮಾತ್ರ ಗುತ್ತಿ ಗಮನಿಸುವ ಸ್ಥಿತಿಯಲ್ಲಿರಲಿಲ್ಲ. +ಕೊನೆಯ ಸಾರಿ ತನ್ನನ್ನೆ ನೇರವಾಗಿ ನಿರ್ದೇಶಿಸಿ ಮಾತನಾಡಿದಾಗ ತಿಮ್ಮಿಯ ರೂಢಿಯ ಏಕವಚನ ಬಹುವಚನಕ್ಕೆ ತಿರುಗಿತ್ತು! +ಸೇಸಿ ಮಾತ್ರ ಅದನ್ನು ಗಮನಿಸಿ ಆ ಉತ್ಕಟಸ್ಥಿಯಲ್ಲಿಯೂ ಮುಗುಳುನಗದೆ ಇರಲು ಸಾಧ್ಯವಾಗದೆ ನೆಲಕ್ಕೆ ಮೋರೆ ತಿರುಗಿಸಿದ್ದಳು. +ಇಬ್ಬರೂ ಒಟ್ಟಿಗೆ ಹೊರಡುವುದು ಚೆನ್ನಾಗಿ  ಕಾಣಿಸುವುದಿಲ್ಲವೆಂದೂ, ಯಾರಾದರೂ ಕಂಡರೆ ಅನುಮಾನಕ್ಕೆ ಆಸ್ಪದವಾಗಿ ತೊಂದರೆಗೀಡಾಗಬಹುದೆಂದೂ, ಗುತ್ತಿ ಹೊರಟ ತುಸು ಹೊತ್ತಿನ ಮೇಲೆ ತಿಮ್ಮಿ ಬಯಲು ಕಡೆಗೆ ಹೋಗುವ ರೀತಿಯಲ್ಲಿ ಹಾಡ್ಯಕ್ಕೆ ಹೋಗಿ, ಅಲ್ಲಿಂದ ಗುತ್ತಿ ಹೇಳಿದ್ದ ಗೊತ್ತಿಗೆ ಹೋಗುವುದೆಂದೂ ಸಂಚುಹೂಡಿದ್ದರು. +ಗುತ್ತಿ ಕಣ್ಮರೆಯಾದೊಡನೆ ತಿಮ್ಮಿ ಬೇಗಬೇಗನೆ ಹೋಗಿ, ತನ್ನ ಮದುವಣ ಗಿತ್ತಿಯ ಲಕ್ಷಣದ ಒಡವೆಗಳೆಲ್ಲವನ್ನೂ ತೆಗೆದು, ಗಂಟು ಕಟ್ಟಿ, ಅವ್ವ ಹೇಳಿದ ಮಡಕೆಯೊಳಗಿಟ್ಟಳು. +ದಾರಿಗೆ ಬೇಕಾಗಬಹುದೆಂದು ಅವ್ವ ಕಟ್ಟಿಕೊಟ್ಟ ಸಣ್ಣದೊಂದು ಬುತ್ತಿಯನ್ನು ನೀರು ತೆಗೆದುಕೊಂಡು ಹೋಗುವ ನೆವದ ಮಡಕೆಯಲ್ಲಿಟ್ಟುಕೊಂಡಳು. +ಅವರು ಮನೆದೇವರೆಂದು ಮೊಲೆಯಲ್ಲಿಟ್ಟು ಪೂಜೆಮಾಡುತ್ತಿದ್ದ  ಒಂದು ಕುಂಕುಮ ಹಚ್ಚಿ ಕಾಣಿಕೆ ಕಟ್ಟಿದ್ದ ಒನಕೆ ತುಂಡಿನಂತಹ ಪ್ರತಿಮೆಯ ಮುಂದೆ ಅಡ್ಡಬಿದ್ದು, ಅವ್ವನ ನಿಷ್ಕ್ರಿಯಾ ಮೌನದ ಮತ್ತು ಆರ್ದ್ರನಯನದ ಆಶೀರ್ವಾದ ಪಡೆದು ಬೀಳ್ಕೊಂಡಳು. +ಮಗಳು ಕಣ್ಮರೆಯಾದ ಮೇಲೆಯೊ ಆ ದಿಕ್ಕಿಗೇ ಕಣ್ಣಾಗಿ ಸ್ವಲ್ಪ ಹೊತ್ತು ನಿಂತಿದ್ದ ಸೇಸಿ ಸುಯ್ದು ಸೆರಗಿನಿಂದ ಕಣ್ಣೊರಸಿಕೊಂಡಳು. +ಅವಳ ಎದೆ ಏನೋ ತನಗರಿಯದೊಂದು ಪುಕ್ಕಲನ್ನನುಭವಿಸಿ ಡವಡವಿಸತೊಡಗಿತು. +ಮಗಳ ಸಂತೋಷಾರ್ಥವಾಗಿ, ಅಳಿಯನ ಇದಿರಿನ ಧೈರ್ರ‍ದಲ್ಲಿ, ಈ ಸಾಹಸಕ್ಕೆ ಒಪ್ಪಿಗೆ ಕೊಟ್ಟಿದ್ದಳು. +ಆದರೆ ಈಗ ತಾನೊಬ್ಬಳೆ ಬಿಡಾರದ ಜಗಲಿಯಲ್ಲಿ ಒಂಟಿಯಾಗಿ ನಿಂತಾಗ ಜೀವ ತಲ್ಲಣಿಸತೊಡಗಿತ್ತು. +ತಾನೇನು ಮಾಡಿಬಿಟ್ಟೆ? +ನಡೆದ ನಿಜಾಂಶ ಗೊತ್ತಾದರೆ, ತನ್ನ ಗತಿ ಏನಾಗುತ್ತದೆ? +ಗೌಡರ ಕೋಪ, ಗಂಡನ ರೌದ್ರತೆ, ಅಳಿಯನಾಗಲಿದ್ದವನ ಕ್ರೋಧ ಮಾತ್ಸರ್ರ‍, ಕೇರಿಯವರ ನಿಂದೆ, ಸರ್ವರ ತಿರಸ್ಕಾರ-ನೆನೆದಂತೆಲ್ಲ ಘೋರವಾಗತೊಡಗಿತು ಸೇಸಿಯ ಮನಸ್ಸಿನಲ್ಲಿ,  ತನಗೆ ಒದಗುವ ಗತಿ ಇರಲಿ, ಮಗಳಿಗೂ ಸೋದರಳಿಯನಿಗೂ ಏನಾದೀತು, ಏನಾಗಿದಿದ್ದೀತು, ಸಿಕ್ಕಿಬಿದ್ದರೆ? +ದಿಕ್ಕು ತೋಚದೆ “ಸ್ವಾಮಿ, ಕಾಪಾಡಪ್ಪಾ!” ಎಂದು ಕೈ ಮುಗಿದಳು, ಆಕಾಶಕ್ಕೊ, ಭೂಮಿಗೊ, ಕಾಡಿಗೊ, ಸಹ್ಯಾದ್ರಿಶ್ರೇಣಿಗಳಿಗೊ? +ಬೇಗಬೇಗ ಓಡಿಹೋಗಿ ಮಗಳನ್ನು ಹಿಂದಕ್ಕೆ ಕರೆಯುವ ಮನಸ್ಸೂ ಆಯಿತು. +ಆದರೆ ಅವಳು ಹೋಗಿಬಿಟ್ಟಿದ್ದಳು. +ತಾನು ಕರೆದರೂ ಅವಳು ಹಿಂದಿರುಗುತ್ತಾಳೆಯೆ? +ಮಗಳು ಈ ಮದುವೆ ಗೊತ್ತಾದಂದಿನಿಂದಲೂ ಹೊಟ್ಟೆಯಲ್ಲಿಯೆ ಅನುಭವಿಸುತ್ತಿದ್ದ ಬೆಂಕಿಯ ಕಾವು ತಾಯಿಗೂ ಚೆನ್ನಾಗಿ ಮುಟ್ಟಿತ್ತು. +ಅಲ್ಲದಿದ್ದರೆ ಗುತ್ತಿ ಅಷ್ಟು ಬೇಗನೆ ಅಷ್ಟು ಸುಲಭದಲ್ಲಿ ಜಯಶೀಲನಾಗುತ್ತಿದ್ದನೇ ತನ್ನ ಸಂಚಿನಲ್ಲಿ? +ಸೇಸಿ ಒಳಗೆ ನಡೆದು, ಒಂದು ಬಿಲ್ಲೆಯನ್ನು ತೊಳೆದು, ಕಲ್ಲೂರು ಗಣಪನಿಗೆ ಹಣ್ಣುಕಾಯಿ ಮಾಡಿಸುವುದಾಗಿ ಹೇಳಿಕೊಂಡು, ಅದನ್ನು ಮೂಲೆಯ ಒನಕೆ ದೇವರಿಗೆ ಸುತ್ತು ಬರಿಸಿ, ಒಂದು ಬಟ್ಟೆಯಲ್ಲಿ ಸುತ್ತಿ, ಆಗಲೆ ಕಟ್ಟುಗೊಂಡು ನೇತಾಡುತ್ತಿದ್ದ ಇತರ ಕಾಣಿಕೆಗಳ ಸಾಲಿಗೆ ಇದನ್ನೂ ಜೋತುಹಾಕಿದಳು. +ಕೇರಿಯ ಕೋಳಿಗಳೆಲ್ಲ ಆಯಾ ಬಿಡಾರಗಳಲ್ಲಿರುವ ತಮ್ಮ ತಮ್ಮ ಬುಟ್ಟಿಯಡಿಯನ್ನೊ ಒಡ್ಡಿಯನ್ನೊ ಸೂರಿನ ಬಿದಿರಟ್ಟಣೆಯನ್ನೊ ಸೇರಿ, ಕಪ್ಪು ಕವಿಯತೊಡಗಿತ್ತು, ಬಿಡಾರದ ಎದುರಿಗಿದ್ದ ಹಾಡ್ಯದ ಮರಗಳ ಪ್ರತ್ಯೇಕತೆಯೂ ವಿವರವೂ ಅಡಗಿ ಎಲ್ಲ ಮುದ್ದೆಯಾಗತೊಡಗಿದ್ದುವು. +ಅಷ್ಟು ಹೊತ್ತಿಗೆ, ಬೀಸೆಕಲ್ಲು ಸವಾರಿ ನೋಡಲು ಹಕ್ಕಲಿಗೆ ಹೋಗಿದ್ದ ಜನ ಒಬ್ಬೊಬ್ಬರಾಗಿ ಇಬ್ಬಿಬ್ಬರಾಗಿ ಹಿಂದಿರುಗತೊಡಗದಿದ್ದರು. +ದೊಡ್ಡಬೀರನ ಎರಡನೆ ಮಗ ಪುಟ್ಟಬೀರನ ಹೆಂಡತಿ ಚಿಕ್ಕಪುಟ್ಟಿಯೆ ಸೇಸಿಗೆ ಮೊದಲು ಸುದ್ದಿ ತಿಳಿಸಿದ್ದು, ತನ್ನ ಮಾವಗೆ ಬೈಸಿಕಲ್ಲು ಎಳೆಯುತ್ತಿದ್ದಾಗ ಎಡವಿಬಿದ್ದು ಪೆಟ್ಟಾಗಿದೆ ಎಂದು. +ಸೇಸಿ ತನ್ನ ಗಂಡನಿಗಾದ ಪೆಟ್ಟಿನ ಗಾತ ತಿಳಿಯದೆ ತಳಮಳಿಸುತ್ತಿರಲು, ತನ್ನ ಗಂಡುಮಕ್ಕಳಿಬ್ಬರೂ ಸೇರಿ ದೊಡ್ಡಬೀರನನ್ನು ಮೆಲ್ಲಗೆ ನಡೆಸಿಕೊಂಡು ಬರುತ್ತಿದ್ದುದನ್ನು ಕಂಡಳು. +ಹಿರಿಯ ಮಗ ಸಣ್ಣಬೀರ ತನ್ನ ತಂದೆಯಾಗಿರುವ ಪೆಟ್ಟು ಅಷ್ಟೇನೂ ದೊಡ್ಡದಲ್ಲ ಎಂದು ಹೇಳಿ ತಾಯಿಯನ್ನು ಸಮಾಧಾನಗೊಳಿಸಿದನು. +ಎರಡನೆ ಮಗ ಪುಟ್ಟಬೀರ ಜಗಲಿಯ ಮೇಲೆ ಒಂದು ಗೀಕಿನ ಚಾಪೆಹಾಕಿ ಅಪ್ಪನನ್ನು ಮಲಗಿಸಿದನು. +ದೊಡ್ಡಬೀರನ ಗಾಯಗಳಿಗೆ ಪಾದ್ರಿಯೂ ದೇವಯ್ಯಗೌಡರೂ ಸೇರಿ ಇಲಾಜುಮಾಡಿ ಬಟ್ಟೆಕಟ್ಟಿದ್ದರು. +ತಮ್ಮ ತಮ್ಮ ಬಿಡಾರಗಳಿಗೆ ಹೋಗುವ ಮೊದಲು ಸಣ್ಣಬೀರನೂ ಪುಟ್ಟಬೀರನೂಅಪ್ಪ ಮಲಗಿದ್ದ  ಚಾಪೆಯ ಪಕ್ಕದಲ್ಲಿಯೆ ಕುಳಿತು ಅವ್ವ ಕೊಟ್ಟ ಹೆಂಡ ಕುಡಿಯುತ್ತಿದ್ದರು, ಅದು ಇದು ಮಾತಾಡುತ್ತಾ. +“ತಂಗಿ ಎಲ್ಲವ್ವಾ? +ಕಾಣಾದಿಲ್ಲಾ?” ಎಂದನು ಸಣ್ಣಬೀರ. +ಬಚ್ಚನನ್ನು ಮದುವೆಯಾಗುವ ಇಷ್ಟವಿಲ್ಲದೆ ತಿಮ್ಮಿ ಕುದಿಯುತ್ತಿದ್ದುದು ಅವನಿಗೆ ಗೂತ್ತಿದ್ದುದರಿಂದ ಆ ಪ್ರಶ್ನೆಯ ಧ್ವನಿಯಲ್ಲಿ ಅಸಹಾಯಕತೆಯ ಅನುಕಂಪೆ ತೋರುತ್ತಿತ್ತು. +“ಎಲ್ಲೋ ಮೂಲೇಲಿ ಅಳ್ತಾ ಕೂತಿರ್ಬೈದು” ಎಂದನು ಪುಟ್ಟಬೀರ, ಬಚ್ಚನ ವಿಚಾರದಲ್ಲಿ ತನಗಿದ್ದ ವಿರುದ್ಧಾಭಿಪ್ರಾಯವನ್ನು ರೂಪಿಸುವ ರೀತಿಯಲ್ಲಿ. +ಮಲಗಿದ್ದ ಮುದುಕ ದೊಡ್ಡಬೀರ ತುಸು ಗಡಸುದನಿಯಲ್ಲಿ “ಅದಕ್ಕೇನಾಗದೆ, ಅಳ್ತಾ ಕೂರಕ್ಕೆ?” ಎಂದು ತಾನು ಕೈಗೊಂಡ ನಿರ್ಣಯವನ್ನು ಸಮರ್ಥಿಸಿ ತೋರುವಂತೆ “ತಿಮ್ಮೂ, ಇಲ್ಲಿ ಬಾರೆ. +ನಿನ್ನ ಅಣ್ಣಾರು ನೋಡಬೇಕಂತೆ!” ಎಂದು ಗಟ್ಟಿಯಾಗಿ ಕರೆದನು. +ಸೇಸಿ ಏನೂ ಹೇಳದೆ ದೂರ ಗೋಡೆಗೆ  ಒರಗಿ ಚಿಂತಾಕ್ರಾಂತಳಾಗಿ ಕೂತಿದ್ದಳು. +ಒಂದು ಹರಳೆಣ್ಣೆ ಹಾಕಿದ್ದ ದೊಡ್ಡಹಣತೆಯ ದೀಪ ಅದಕ್ಕಾಗಿ ಮಾಡಿದ್ದ ಗೂಡಿನಲ್ಲಿ ಉರಿಯುತ್ತಿತ್ತು. +ಸುತ್ತಲೆಲ್ಲ ಆಗಲೆ ಕತ್ತಲೆ ದಟ್ಟಯಿಸಿತ್ತು. +ಸ್ವಲ್ಪಹೊತ್ತಾದರೂ ತಿಮ್ಮಿ ಬಾರದಿರಲು ಮುದುಕ ತನ್ನ ಹೆಂಡತಿಗೆ ಮಗಳನ್ನು ಕರೆತರಲು ಹೇಳಿದನು. +ಅದರಲ್ಲಿ ಅವಳನ್ನು ಸಂತೈಸುವ ಒಳ ಉದ್ದೇಶವೂ ಇತ್ತು ಅವನಿಗೆ. +ಸೇಸಿ ಒಳಗೆ ಹೋಗಿ ಬಂದು “ಹೊರಕಡೆಗೆ ಹೋಗ್ಯದೆ ಅಂತಾ ಕಾಣ್ತದೆ, ಹಾಡ್ಯಕ್ಕೆ” ಎಂದಳು. +ಹೊಲೆಯರ ಹುಡುಗಿ, ಹುಟ್ಟಿದಂದಿನಿಂದಲೂ ಮೂರುಹೊತ್ತೂ ಕಾಡುಗಡ್ಡೆಗಳಲ್ಲಿ  ಹೆದರಿಕೆಯನ್ನೆ ಕಾಣದೆ ತಿರುಗಿ ರೂಢಿಯಾಗಿರುವ ತಿಮ್ಮಿ, ಕತ್ತಲೆಯಲ್ಲಿ ಬಿಡಾರದ  ಮುಂದಣ ಹಾಡ್ಯಕ್ಕೆ ಹೊರಕಡೆಗೆ ಹೋಗಿರುವುದು ಯಾರಿಗೂ  ಆತಂಕದ ವಿಷಯವಾಗಲಿಲ್ಲ. +ತುಸು ಹೊತ್ತಾದ ಮೇಲೆ  ಸಣ್ಣಬೀರ ಪುಟ್ಟಬೀರರು ಅಲ್ಲಿಯೆ ಬಳಿಯಿದ್ದ ತಮ್ಮ ತಮ್ಮ ಬಿಡಾರಗಳಿಗೆ ಹೋದರು. +ಅವರು ಹೋಗಿ  ಸ್ವಲ್ಪ ಹೊತ್ತಾದ ಮೇಲೆ ದೊಡ್ಡ ಬೀರ ವ್ಯಗ್ರನಾಗಿ “ನಿಂಗೇನು ತಲೆ ನೆಟ್ಟಗದೆಯೇನೆ? +ಮದುವೆಗೆ ತಂದ ಒಡವೆನೆಲ್ಲ ಹಾಕಿ, ಈ ಕತ್ತಲೇಲಿ ಹುಡುಗಿ ಒಬ್ಬಳನ್ನೆ ಹಾಡ್ಯಕ್ಕೆ ಕಳ್ಸಾಕೆ, ಹೊರಕಡೆಗೆ? +ಹೋಗಿ ಕೃತಿಯೊ ಇಲ್ಲೊ?” ಎಂದು ಮಲಗಿದ್ದವನು ಅಸ್ಥಿರನಾದಂತೆ ಎದ್ದು ಕೂತನು. +ಸೇಸಿ ಕತ್ತಲೆಯಲ್ಲಿಯೆ ಹಾಡ್ಯದ ಕಡೆಗೆ ಹೋಗಿ ಬಂದು “ಅಲ್ಲೆಲ್ಲೊ ಕಾಣ್ಲಿಲ್ಲ; ಕರೆದ್ರೂ ಓಕೊಳ್ಲಿಲ್ಲ! +ಇಲ್ಲೆ ಎಲ್ಲೊ ನೆರೆಮನೆ  ಕಡೆ ಹೊಗ್ಯದೆಯೋ ಏನೊ? +ನೋಡಿ ಬರ್ಲೇನು?” ಎನ್ನುತ್ತಾ ಹೊರಟುಹೋದಳು. +ಮುದುಕನಿಗೆ ಏಕೋ ಏನೊ ದಿಗಿಲಾಗತೊಡಗಿತು. +ಕಾಲು ಪೆಟ್ಟಾಗಿ ಉಳುಕಿರದಿದ್ದರೆ ಅವನು ಕೂತಿರುತ್ತಿರಲಿಲ್ಲ. +ತಂದೆಯಾಗಿದ್ದ ಅವನಿಗೆ ಮಗಳ ಮನಸ್ಸಿನಂತೆ  ನಡೆಯಲು ಅನೇಕ ಕಾರಣಗಳಿಂದ ಸಾದ್ಯವಾಗದೆ, ಅನಿವಾರ್ಯಕ್ಕೆ ಸಿಕ್ಕಿ, ಬಚ್ಚನಿಗೆ  ಅವಳನ್ನು ಲಗ್ನ ಮಾಡಿಕೊಡಲು ಒಪ್ಪಿದ್ದಳು. +ಆದರೆ ತನ್ನ ತಳವಾರತನದ  ಪ್ರತಿಷ್ಠೆಗೆ ಕೊಂದು ಬರಬಾರದೆಂದು, ತಾನೆ ತನ್ನ ಸ್ವಂತ ಇಚ್ಛೆಯಿಂದ ಒಪ್ಪಿಗೆ ಕೊಟ್ಟಿದ್ದೇನೆ ಎಂಬಂತೆ ವರ್ತಿಸುತ್ತಿದ್ದನು. +ಈಗ ಇದ್ದಕ್ಕಿದ್ದಂತೆ  ಮಗಳು ಎಲ್ಲಿ (ಅವಳು ಹಾಗೆ ಹೇಳಿದ್ದಳು  ಎಂಬುದೂ ಅವನಿಗೆ ಗೊತ್ತಿತ್ತು.) + ‘ಪಾರಾಣ ತೆಗೆದುಕೊಂಡು ಬಿಡ್ತಾಳೋ!’ ಎಂದು ಹೆದರಿಕೆ ಹುಟ್ಟಿಬಿಟ್ಟಿತ್ತು. +ಹೆಂಡತಿ ಹಿಂದಿರುಗಿ ಬರುವವರೆಗೂ ಕಾಯುವ ತಾಳ್ಮೆಯಿಲ್ಲದೆ ಗಟ್ಟಿಯಾಗಿ ಕೂಗಿ ಕರೆಯತೊಡಗಿದನುಃ “ಏ ಸಣ್ಣಾ, ಏ ಪುಟ್ಟಾ, ಬನ್ನ್ರೋ ಬೇಗ ಬನ್ನ್ರೋ”ದೊಡ್ಡಬೀರನ ಗಂಟಲು ಕೇಳಿಸಿ  ಸೇಸಿಯೊಡಗೂಡಿಯೆ ಓಡಿ ಬಂದರು, ಸಣ್ಣಬೀರ  ಪುಟ್ಟಬೀರನು. +ಕೇರಿಗೆ ತಳವಾರನ ಬಿಡಾರದ ಮುಂದೆ ನೆರೆಯಿತು. +ಹತ್ತಾರು ಊಹಾಪೋಹಗಳಾಗಿ  ತಮತಮಗೆ ಹೊಳೆದಂತೆ  ಹೇಳಿದರು: ಕೆರೆಗೆ ಬಿದ್ದಳೊ? +ನೇಣುಹಾಕಿಕೊಂಡಳೊ? +ಹಾವು ಕಚ್ಚಿ ಸತ್ತಳೊ ಹುಲಿ ಹಿಡಿಯಿತೊ? +ಕೊನೆಯದಾಗಿ  ಕಲ್ಲೂರು ಸಾಹುಕಾರ ಮಂಜಭಟ್ಟರು ಪ್ರಮುಖವಾಗಿಯೂ  ಮತ್ತು ಇತರ ರೀತಿಯ  ಬಲಾತ್ಕಾರದಿಂದ  ದವಸ ಧಾನ್ಯ ಜಮೀನು ಇವುಗಳ  ಸಂಪಾದನೆಗಾಗಿಯೂ, ಹೊನ್ನಾಳಿಯಿಂದ  ಕರೆಯಿಸಿ ಮೇಗರವಳ್ಳಿಯಲ್ಲಿ  ಜಮಾಯಿಸಿಕೊಂಡಿರುವ ಪುಂಡ ಸಾಬರ  ತಂಡದವರಿಂದ, ಆಭರಣಕಾರಣಕ್ಕಾಗಿಯೋ ಅಥವಾ  ಅತ್ಯಾಚಾರಕ್ಕಾಗಿಯೋ, ಅಪಹರಿಸಲ್ಪಟ್ಟಳೊ……? +ಅಡಕೆ ದಬ್ಬೆ ಸೀಳಿ, ಕಟ್ಟಿ, ಹತ್ತಿಪ್ಪತ್ತು ದೊಂದಿ  ಮಾಡಿ, ಒಬ್ಬೊಬ್ಬರು ಒಂದೊಂದನ್ನು ಹೊತ್ತಿಸಿಕೊಂಡು, ಅದರ ಬೆಳಕಿನಲ್ಲಿ ತಿಮ್ಮಿಯನ್ನು ಹುಡುಕಲು ಹಾಡ್ಯದ ಕಾಡಿಗೆ ಹೊರಟರು. +ಬೀಸಿ ಬೀಸಿ ಹೊತ್ತಿಸಿಕೊಳ್ಳುತ್ತಿದ್ದ  ಆ ಕೆಂಡಬೆಳಕುಗಳು ದೂರ ದೂರ ಹೋಗಿ ಹಳುವಿನಲ್ಲಿ ಮರೆಯಾಗುವುದನ್ನೆ ನೋಡುತ್ತಾ ಜಗಲಿಯ ಮೇಲೆ ಕುಳಿತಿದ್ದ ದೊಡ್ಡಬೀರ “ಅಯ್ಯೋ ದೇವರೆ! +ನನಗೀ ವಯಸ್ಸಿನಲ್ಲಿ ಹೀಂಗಾಗ ಬೇಕೇ? …. ” ಎಂದೆಲ್ಲ ನಾನಾ  ವಿಧವಾಗಿ ನರಳುತ್ತಿದ್ದನು. +ಸೇಸಿ ಕೇರಿಯ ಇತರ ಹೆಂಗಸರ ಸಮಾಧಾನದ ಮತ್ತು ಧೈರ್ಯದ ಮಾತುಗಳನ್ನು ಕೇಳಿಯೂ ಕೇಳದಂತೆ  ತಲೆಬಾಗಿ ನೆಲನೋಡುತ್ತಾ ಅವರ ನಡುವೆ ಅಂಗಳದಲ್ಲಿ ಕುಳಿತಿದ್ದಳು. +ಹೊತ್ತು ಮೆಲ್ಲಗೆ, ಬಹುಮೆಲ್ಲಗೆ, ಸುದೀರ್ಘವಾಗಿ, ತುದಿಮೊದಲಿಲ್ಲದ ಕರಿಯ ಹೆಬ್ಬಾವಿನಂತೆ ಹರಿಯುತ್ತಿತ್ತು. +ಜಗಲಿಯ ಮೇಲೆ ಗೂಡಿನಲ್ಲಿ ಉರಿಯುತ್ತಿದ್ದ ಹಣತೆ ಎಣ್ಣೆತೀರಯೋ ಗಾಳಿಬೀಸಿಯೋ ಇದ್ದಕ್ಕಿದ್ದಂತೆ ಆರಿಹೋಯಿತು. +ಅದನ್ನು ಮತ್ತೆ ಹೊತ್ತಿಸಬೇಕೆಂದು ಯಾರಿಗೂ ಅನ್ನಿಸಲೂ ಇಲ್ಲ. +ಹುಡುಕುವವರು ಹೋಗಿ ಅರ್ಧಗಂಟೆ ಆಗಿತ್ತು ಏನೊ, ಹಾಡ್ಯದ ಕಡೆಯಿಂದ ಒಂದು ದೊಂದಿ  ಬೆಳಕು ತಮ್ಮ ಬಿಡಾರದ ಕಡೆಗೆ ವೇಗದಿಂದ ಚಲಿಸುತ್ತದ್ದುದು ಜಗಲಿಯ ಮೇಲೆ ಕಗ್ಗತ್ತಲೆಯಲ್ಲಿ ಕುಳಿತಿದ್ದ ದೊಡ್ಡಬೀರನ ಕಣ್ಣಿಗೆ ಬಿತ್ತು. +ಅವವನ ಜೀವವೆ ಬಾಯ್ಗೆ ಬಂದಂತಾಯಿತು, ತನ್ನ ಮಗಳಿಗೆ ನಡೆದಿರುವ ಏನೊ ಒಂದು ಅನಾಹುತವನ್ನು ತಿಳಿಸಲು ಯಾರೊ  ಓಡಿಬರುತ್ತಿದ್ದಾರೆ ಎಂದು. +ಬಂದವನು ದೊಂದಿ ಬೀಸಿ ಬೆಳಕು ಮಾಡಿ, ಒಂದು ಮಡಕೆ ಯನ್ನು ತೋರಿ “ಅವ್ವಾ, ಇದೇ ಏನು, ತಂಗಿ ಹೊರಕಡೆಗೆ ತಗೊಂಡು ಹೋದ ಮಡಕೆ?” ಎಂದನು. +ಸೆಸಿ ನೋಡಿ ಸಂಕಟದ ಸ್ವರದಿಂದ “ಹೌದಪ್ಪಾ” ಎಂದಳು. +“ಎಲ್ಲಿ ಬಿದ್ದಿತ್ತೊ ಅದು, ಪುಟ್ಟಬೀರ?” ಜಗಲಿಯಿಂದ  ಬಂತು ದೊಡ್ಡಬೀರನ ಆರ್ತಧ್ವನಿ. +ಆ ಮಡಕೆ ತಿಮ್ಮಿ ತೆಗೆದುಕೊಂಡು ಹೋದದ್ದು ಎಂಬುದನ್ನು ಖಾತ್ರಿ ಮಾಡಿಕೊಂಡ ಪುಟ್ಟಬೀರ, ಕೊಲೆಪಾತಕನನ್ನು ಹಿಡಿಯಲು ತನಗೆ ಬೇಕಾಗಿದ್ದ ಮುಖ್ಯ ವಸ್ತುವೆ ದೊರಕಿದೆ ಪತ್ತೇದಾರನ ಠೀವಿಯಿಂದ, ದೊಂದಿ ಬೀಸುತ್ತಾ ಬಂದ ಹಾದಿಯಲ್ಲಿಯೆ ಹಿಂದಿರುಗಿ ಓಡಿ ಕಣ್ಮರೆಯಾದನು. +ಆ ಮಡಕೆ ಕಗ್ಗತ್ತಲೆಯಲ್ಲಿ ಯಾರ ಕಣ್ಣಿಗೂ ಬೀಳದೆ ಅಂಗಳದಲ್ಲಿ ಬಿದ್ದಿತ್ತು, ಕುರುಡು ಸಾಕ್ಷಿಯಾಗಿ! +ಪುಟ್ಟಬೀರ ಹೋಗಿ ಇನ್ನೂ ಐದು ನಿಮಿಷವೂ  ಕಳೆದಿರಲಿಲ್ಲ. +ಹಠಾತ್ತನೆ ಅಂಗಳದಲ್ಲಿ ನೆರೆದಿದ್ದ  ಹೆಂಗಸರ ನಡುವಣಿಯಿಂದ  ಒಂದು ವಿಕಾರವಾದ ಹುಹೂಂಕಾರದ ಸದ್ದು ಎದ್ದಿತು. +ಎಲ್ಲರೂ ವಕಿತಗೊಂಡರಾದರೂ ಯಾರೂ ಹೆದರಲಿಲ್ಲ. +ಆ ಹೂಂಕಾರ ಅಭ್ಯಾಸವಾಗಿದ್ದ  ಅವರೆಲ್ಲರಿಗೂ ಅದರ ಅರ್ಥ ಗೊತ್ತಾಯಿತು. +ಸೇಸಿಯ ಮೈಮೇಲೆ ಜಕಣಿ ಬಂದಿತ್ತು! +ಇನ್ನೇನು ತಿಮ್ಮಿಯ ಅಂತರ್ಧಾನ ರಹಸ್ಯದ ಮೇಲೆ ಸತ್ಯದ ಬೆಳಕು ಬಿದ್ದೇ ಬೀಳುತ್ತದೆಂದು ಸರ್ವರೂ ಆಲಿಸಿದರು. +ಆ ಅತೀಂದ್ರಿಯ ಭಾಷೆಯನ್ನೆಲ್ಲ ಅಳೆದು ತೂಗಿ  ಕೇರಿ  ತೂರಿ ನೆರೆದಿದ್ದರು ಹೀಗೆಂದು  ಅದರ ಸಾರ ಸಂಗ್ರಹ ಮಾಡಿಕೊಂಡರುಃ“ಹ್ಞೂಂ ಹ್ಞ್ರೀಂ ಹೂಂ…. +ಜಾತಿಕೆಟ್ಟು ನೀತಿಕೆಟ್ಟು ಕೇರಿಗೆಲ್ಲ ಮುಟ್ಟುಚಿಟ್ಟು! +ಹಲಸಿನ ಮರದ ಮೇಲೆ ನನ್ನ ಜುಟ್ಟು! +ನಾನೆ  ಅಡಗಿಸಿದ್ದೇನೆ! +ಹೆದರಬೇಡಿ, ನನಗೆ ಆಯಾರ ಕೊಟ್ಟು ಪೂಜೆಮಾಡಿ! +ಹೋದ ಹೆಣ್ಣು ಕೋದಲು ಕೊಂಕದೆ ಬರುತ್ತದೆ ಹ್ಞೂ ಹ್ಞೂ ಹ್ಞೂ… “ಕತ್ತಲೆಯಲ್ಲಿ ಒಂದು ಪಿಸುಮಾತು ಕೇಳಿಸಿತುಃ “ಹೌದು ಮತ್ತೆ? +ಕಿಲಸ್ತರ ಜಾತಿಗೆ  ಹೆಣ್ಣು ಕೊಟ್ರೆ ಆಗ್ದೆ ಬಿಡ್ತದೆಯೆ…. ಮುಟ್ಟುಚಿಟ್ಟು…. . ಕೇರಿಗೆ?” +ಗುತ್ತಿ ಆ ಅರೆಕಲ್ಲನ್ನು ಸೇರಿ, ಅದರ ಮೇಲೆಯೆ ಕಲ್ಲುಸಂಧಿಯಲ್ಲಿ ಬೆಳೆದಿದ್ದ ಕಾರೆಮಟ್ಟಿನ ಕೆಳಗಡೆಗೆ  ಹೊಂಡದಲ್ಲಿದ್ದ ದಟ್ಟ ಕೇದೆಗೆ ಹಿಂಡಲಿನ ಸಮೀಪದಲ್ಲಿ, ತಿಮ್ಮಿ ತಾನು ಹೊರುಡುವಾಗ ಕೊಟ್ಟಿದ್ದ ಎವ್ವರಿಕೆಯನ್ನು ನೆನೆದು ತೀರ ಹತ್ತಿರಕ್ಕೆ  ಹೋಗದೆ, ಕೇರಿಗೆ ಹೋಗುತ್ತಿದ್ದ  ಕಾಲುದಾರಿಗೂ ಒಡೆಯರಮನೆಗೆ ಅಗಚಿ ಹೋಗುತ್ತಿದ್ದ ಕಾಲುದಾರಿಗೂ ನಡುವೆ ಒಂದು ಸಣ್ಣ ಹಾಸುಬಂಡೆಯ ಮೇಲೆ ಕಾದು ಕುಳಿತನು. +ಬೆಟ್ಟಳ್ಳಿ ಕಡೆಗೆ ಹೋಗುವವರಿಗಾಗಲಿ ಅಥವಾ ಅತ್ತಿಂದ ಬರುವವರಿಗಾಗಲಿ ಯಾರಿಗೂ ಗುತ್ತಿ ಅಲ್ಲಿರುವುದು ಗೊತ್ತಾಗುವಂತಿರಲಿಲ್ಲ. +ಆದರೆ ಗುತ್ತಿಗೆ ಅವರಾಡುವ ಮಾತು ಚೆನ್ನಾಗಿ ಕೇಳಿಸುವಂತಿತ್ತು. +ಬೈಸಿಕಲ್ಲಿನ ಪ್ರಸಂಗವನ್ನು ಮುಗಿಸಿಕೊಂಡು  ಹೂವಳ್ಳಿ, ಕೋಣೂರು, ಹಳೆಮನೆಗಳಿಗೆ ಬೆಟ್ಟಳ್ಳಿಯ ಹಕ್ಕಲಿನಿಂದ ಹಿಂದಿರುಗುತ್ತಿದ್ದ ಜನರು ಸಣ್ಣಸಣ್ಣ ದೊಡ್ಡದೊಡ್ಡ ಗುಂಪುಗಳಾಗಿ ನಾನಾ ವಿಧವಾಗಿ ಹರಟುತ್ತಾ ಹೋದರು. +ನಸುಗಪ್ಪು ಕವಿಯುತ್ತಿದ್ದಾಗ ಗುತ್ತಿಯ ಕಿವಿಗೆ ಯಾರದೋ ಪರಿಚಿತಧ್ವನಿ  ಬಿದ್ದ ಹಾಗಾಯಿತು, ಮಾತನಾಡುತ್ತಿದ್ದವರು ಐತ ಚೀಂಕ್ರ ಹೇಳಿದ “ನಿಂತೂ ನಿಂತೂ  ಸಾಕಾಯ್ತೆ…. +ಒಂದು ಬಾಯಿಗೆ ಹಾಕ್ಕೊಂಡು ಹೋಪ.” +ಗುತ್ತಿ ನೋಡುತ್ತಿದ್ದಂತೆಯೆ ಅವರಿಬ್ಬರೂ ಕಾರೇಮಟ್ಟಿನ ಆವೆ  ಅರೆಕಲ್ಲಿನ ಮೇಲೆ ಕುಳಿತಕೊಂಡರು. +ಅವರು ಕೂತ್ತಿದ್ದ ಜಾಗ ಎತ್ತರದಲ್ಲಿತ್ತಾದ್ದರಿಂದ ಗುತ್ತಿಗೆ ಆ ಬೈಗುಗುಪ್ಪಿನಲ್ಲಿ ಅವರು ಸ್ಪಷ್ಟವಾಗಿ  ಕಾಣಿಸದಿದ್ದರೂ ಅವರ ಸುಸ್ಪಷ್ಟವಾಗಿ ಕೇಳಿಸುತ್ತಿತ್ತು. +ಆದರೆ ಗುತ್ತಿಗೆ ತಾನಿದ್ದ ಮನಃಸ್ಥಿತಿಯಲ್ಲಿ ಅವರ ಸಂವಾದ ಆಲಿಸುವುದು ಬೇಕಿರಲಿಲ್ಲ… +ಅದಕ್ಕೆ ಬದಲಾಗಿ, ಅವರಿಬ್ಬರೂ ಅಲ್ಲಿ ಕೊತದ್ದು ಅವನ ಮನಸ್ಸಿಗೆ ತುಂಬ ಆತಂಕವಾಗಿತ್ತು. +ತನ್ನನ್ನು ಹುಡುಕಿಕೊಂಡು ತಿಮ್ಮಿ ಗುಟ್ಟಾಗಿ  ಬಂದಾಗ, ಇವರು ಇಲ್ಲಿಯೆ ಕುಳಿತಿದ್ದರೆ, ಏನುಗತಿ? +ಆ ಕತ್ತಲೆಯಲ್ಲಿ ಅವರನ್ನೆ ನಾನು ಎಂದು ತಿಳಿದು ಏನು ಆಚಾತುರ್ಯಕ್ಕೆ ಎಡೆಯಾಗುವುದೊ? +ದೇವರ ದಯದಿಂದ ಅವಳು ಬರುವುದಕ್ಕೆ ಮುನ್ನವೆ ಇವರಿಬ್ಬರೂ ಎಲೆಅಡಿಕೆ ಪೂರೈಸಿ ಇಲ್ಲಿಂದ ತೊಲಗಿದ್ದರೆ! …. +ಇದ್ದಕ್ಕಿದ್ದಹಾಗೆ ಗುತ್ತಿಯ ಕಿವಿ ನೆಟ್ಟಗಾಯಿತು. +ಅವರಿಬ್ಬರ ಸಂವಾದ ಏನೊ ಸ್ವಾರಸ್ಯಕ್ಕೆ ತಿರುಗಿದಂತಿತ್ತು. +“ನೋಡೂ, ಐತಾ, ನೀನು ಹುಡುಗ. +ನಿನಗೆ ಏನೂ ತಿಳಿಯೂದಿಲ್ಲ. +ಆದರೆ ಹಮಾ ತಿಳಿದವನ ಹಾಂಗೆ ಎಲ್ಲದರ ಮೇಲೂ ದೊಡ್ಡ ದೊಡ್ಡ ಮಾತಾಡ್ತೀಯಾ!” ಚೀಂಕ್ರನ ಗಡಸುಧ್ವನಿ ಎಂದಿತು. +ಐತನ ಎಳಸುಗಂಟಲು ಉತ್ತರಿಸಿತು “ನಾನೇನು ಹೆಳಿದ್ದೋ ನಿಂಗೆ? +ಸಣ್ಣಯ್ಯ ಹೇಳದ್ದನ್ನೆ ಹೇಳ್ದೆ: ‘ಈ ಸಾರಿ ಚೀಂಕ್ರ ಅವನ ಹೆಂಡ್ತೀನ ಕೊಲ್ತಾನೆ. +ಈಗಾಗ್ಲೆ ಆರು ಮಕ್ಕಳಾಗಿ, ನಾಕು  ಸತ್ತು  ಬದುಕಿದ್ದು; +ಎಲ್ದು ಬದುಕ್ಯೂ ಸಾಯ್ತಾ  ಅವೆ. +ಈಗ  ಏಳನೇದೊಂದು ಹುಟ್ಟಾಕೆ ಹತ್ರ ಬಂದದೆ. +ಅಂವ ಮಾತ್ರಾ ಕುಡ್ಕೊಂಡು ಬಂದು ಹೆಂಡ್ತಿಗೆ  ಒದೆಯಾದು, ಮಕ್ಕಳಿಗೆ ಬಡಿಯಾದು ಬಿಡ್ಲಿಲ್ಲ!’ ಅಂದ್ರು. +ಅದನೆ ನಾ ನಿಂಗೆ ಹೇಳಿದ್ದು. +ಗೊತ್ತಾತೆ?” +“ಯಾರು? +ಆ ಮುಕುಂದಯ್ಯನಾ?” ಚೀಂಕ್ರನ ಧ್ವನಿಯಲ್ಲಿ ಸಿಟ್ಟುಕ್ಕು ವಂತಿತ್ತು. +“ಹೌದೊ, ಅವರ ಹೇಳಿದ್ದು, ನಿನ್ನ ಒಳ್ಳೇದಕ್ಕೆ!” ಐತನ ವಾಣಿಯಲ್ಲಿ ಸಮರ್ಥನೆ ಇತ್ತು. +ಮೂದಲಿಸುವ ದನಿಯಲ್ಲಿ ಚೀಂಕ್ರ ಬೈದ “ಓಹೋಹೊ! +ನಿನ್ನ ಕೂಳು ಹೊತ್ತಿ ಹೋಯ್ತು! +ಗೌಡರ ಮಕ್ಕಳ ನಂಬಿ, ನಿನ್ನ ಬಾಯಿಗೆ  ಮಣ್ಣು!ಏಳೇಳ್! +ಎಲ್ರಿಗೂ ಬುದ್ಧಿ ಹೇಳೋರು ಆ ಮುಕುಂದಯ್ಯನೋರ ಗುಟ್ಟು, ಬೆಪ್ಪಾ, ನಿಂಗೆ ಗೊತ್ತಿಲ್ಲ ಅಂದ್ರೆ, ಮತ್ತೆ ಯಾರಿಗೂ ಗೊತ್ತಿಲ್ಲ ಅಂತಾ ಮಾಡೀಯಾ?” +“ಸುಮ್ಮಸುಮ್ನೆ ಒಬ್ಬರ ಮ್ಯಾಲೆ ಹೇಳಬಾರ್ದು, ನಾಲಗೇಲಿ ಹುಳಾ ಬಿದ್ದಾತು!”ಐತನ ಕಟುಧ್ವನಿ. +“ಹಾಂಗಾರೆ ಹೇಳ್ಲಾ?” ಚೀಂಕ್ರನ ಸವಾಲು. +“ಹೇಳು”“ಖಂಡಿತಾ?”“ಖಂಡಿತ!” +“ಇವತ್ತು ಬೆಳ್ಳಿಗ್ಗೆ ತೋಟದಾಗೆ…. +ಹೇಳ್ಲಾ?ಹೇಳೇಬಿಡ್ಲಾ?” +“ಹೇಳೋ!ಯಾರು ಬ್ಯಾಡ ಅಂತಾರೆ?” +“ಏಡಿ ಹಿಡಿಯಾಕೆ ಅಂತ ನಿನ್ನೂ ಹೆಂಡ್ತೀನೂ ಕರಕೊಂಡು ಹೋಗಿ, ನಿನ್ನ ಒಬ್ಬನ್ನೆ ಉಪಾಯ ಮಾಡಿ ಹಿಂದಕ್ಕೆ ಕಳ್ಸಿದ್ರಲ್ಲಾ? … +ದೊಡ್ಡಗೌಡ್ರು ‘ಹುಚ್ಚು ಮುಂಡೇಗಂಡ, ಓಡು ಬೇಗ” ಅಣತ ನಿನ್ನ ವಾಪು ಕಳಿಸಿದ್ರಲ್ಲಾ? +ಯಾಕೆ ಅಂತ ಮಾಡೀಯಾ? …. “ಐತ ಉತ್ತರ ಕೊಡಲಿಲ್ಲ. +ಅವನ ಮನಸ್ಸು ರಂಗಪ್ಪಗೌಡರಿಂದ ಬೈಸಿಕೊಂಡು ತಾನು ಮುಕುಂದಯ್ಯ ಪೀಂಚಲು ಇದ್ದಲ್ಲಿಗೆ ಹೋದಾಗ, ತಾನು ಕಂಡದ್ದನ್ನೂ ಅನುಭವಸಿದ್ದನ್ನೂ ಮೆಲುಕು ಹಾಕುವಂತಿತ್ತು. +ಆಗ ತನ್ನಿಂದ ತೆರೆಯಲಾಗದಿದ್ದರ ಬೀಗ, ಈಗ ಚೀಂಕ್ರ ಒದಗಿಸಿದ್ದ ವ್ಯಾಖ್ಯಾನ ಧ್ವನಿಯ ಬೀಗದ ಕೈಯಿಂದ ತೆರೆಯುವಂತೆ ತೋರತೊಡಗಿತ್ತು. +ಅವನ ಹೃದಯದ ತಿಳಿಗೊಳಕ್ಕೆ ಚೀಂಕ್ರ ಕಲ್ಲೆಸೆದಿದ್ದ! +ಆ ತೀವ್ರಮೌನದ ತರುವಾಯ ಏನು ಸಂವಾದ ಯಾವ ಕಡೆಗೆ ತಿರುಗುತಿತ್ತೊ? +ಅಷ್ಟರಲ್ಲಿ ಒಂದು ನಾಯಿ ಬೊಗುಳಿದ ಸದ್ದಾಯಿತು. +ಆ ಕತ್ತಲೆಯಲ್ಲಿಯೂ ಐತ ಅದನ್ನು ಧ್ವನಿಯಿಂದಲೆ “ಹಛೀ ಇದೆಲ್ಲಿ ಬಂತೋ ಇಲ್ಲಿ ಆ ಗುತ್ತಿ ನಾಯಿ?” ಎಂದೊಡನೆ ಹುಲಿಯ ಪರಿಚಿತಧ್ವನಿ ಕೇಳಿ ಬಾಲವಾಡಿಸುತ್ತಾ ಅವರ ಬಳಿಗೆ ಬಂದಿತು. +ಗುತ್ತಿ  ಕುಳಿತಲ್ಲೆ ಹಲ್ಲುಕಡಿದುಕೊಂಡನುಃ “ ಹಾಳು ಮುಂಡೇದು! +ಹೋದಲ್ಲಿತನಕಾ ಕೊಂಬುಹುಯ್ಲು! +ಎಲ್ಲಿ ಹೋದ್ರೂ ಸಾಯ್ತದೆ, ನನ್ನ ಹಿಂದೆ, ಬಾಲಂಗಚ್ಚೆ!”ಆದರೇನು ಪ್ರಯೋಜನ? +ಘ್ರಾಣಕ್ಕೆ ಅಷ್ಟೇನೂ ಸೂಕ್ಷ್ಮವಾಗಿರದಿದ್ದ ಗುತ್ತಿಯ ಸ್ಥೂಲ ವಾಸನೆ, ಮನುಷ್ಯರ ಮೂಗಿಗೂ ಗ್ರಾಹ್ಯವಾಗುವಷ್ಟರಮಟ್ಟಿಗೆ ಇರುವಾಗ, ಅವನ ಸ್ವಂತ ನಾಯಿಗೆ ದುರ್‌ಗ್ರಾಹ್ಯವಾಗುತ್ತದೆಯೆ? +ತನ್ನ ನೆಚ್ಚಿನ ಒಡೆಯನ ಕಂಪು ಮೂಗಿಗಾದೊಡನೆಯೆ, ಯಾವ ದಿಕ್ಕಿನಿಂದ  ಬರುತ್ತದೆ ಎಂಬುದನ್ನು ಅರಿಯುವುದಕ್ಕಾಗಿ ಮೊಗವತ್ತಿ ಆಕಾಶವನ್ನು ಅತ್ತ ಇತ್ತ ಮೂಸಿ, ಹುಲಿಯ ನೇರವಾಗಿ ಗುತ್ತಿ ಅವಿತು ಕುಳಿತಡೆಗೆ ನುಗ್ಗಿ, ತಾನು ಅವನನ್ನೂ ಕಂಡುಹಿಡಿದುದಕ್ಕೆ ಸಂತೋಷವುಕ್ಕಿ, ‘ಗುಲ್ಟೋರಿಯಾ!’ ಮಾಡುತ್ತದೆಯೊ ಎಂಬಂತೆ, ಅವನ ಮೈಮೇಲೆ ಹಾರಿಬಿಟ್ಟಿತು! +ತಾನು ತುತ್ತರಾಟಿನ ಮೇಲೆ ಕೂತ್ತಿದ್ದ ಬಂಡೆಯಿಂದ ಉರುಳುವುದನ್ನು ಹೇಗೊ ತಡೆದುಕೊಂಡು, ಅದನ್ನು ತಳ್ಳಿ ‘ಹಛೀ!ನಿನ್ನ ಹಾಳಾಗ’ ಎಂದೇಬಿಟ್ಟನು. +ಗುತ್ತಿ ಬಹು ಮೆಲ್ಲಗೆ ಶಪಿಸಿದನೆಂದು ತಿಳಿದಿದ್ದರೂ ಚೀಂಕ್ರನ ಧ್ವನಿ ಕೇಳಿಸಿತು “ಯಾರೋ ಅದು ಹೊಂಡದಾಗೆ?”ಗುತ್ತಿ ಅಡಗಿದ್ದಲ್ಲಿಂದ ಎದ್ದು ಮೇಲಕ್ಕೆ ಬರುತ್ತಾ “ನಾನೋ! +ಇಲ್ಲೇ ನೀರ ಕಡೆ ಹೋಗಿದ್ದೆ! +ಹಾಳು ನಾಯಿ ಮೈಮೇಲೆ ಬಿದ್ದುಬಿಡ್ತು!” ಎಂದು ಹತ್ತಿರ  ಬಂದು “ಇಲ್ಲಿ ಯಾಕ್ರೋ ಕೂತ್ರೀ? +ರಣಾ ತಿರುಗೋ ಜಾಗದಲ್ಲಿ?” ಎಂದನು. +“ಹ್ಞಾ!ಹೌದಾ?ಅಯ್ಯೊ ಮಾರಾಯ ನಮಗೆ ಗೊತ್ತಿಲ್ಲ!” ಎನ್ನುತ್ತಾ ಇಬ್ಬರೂ ಎದ್ದು ಹೊರಡಲನುವಾದರು. +ಗುತ್ತಿ ಸುತ್ತ ನೋಡಿ ಏನನ್ನೊ ನಿರ್ಣಯಿಸಿಃ “ ಬನ್ನಿ, ಬನ್ನಿ, ಬ್ಯಾಗ ಹೋಗಾನ!” ಎಂದು ಬಿರುಬಿರನೆ ಹೊರಟನು. +ಮೂವರೂ ಯಾವುದೊ ಸನ್ನಿಹಿತವಾಗಿದ್ದ ಅಪಾಯದಿಂದ ದೂರ ಹೋಗುವವರಂತೆ ಸ್ವಲ್ಪ ದೌಡಾಯಿಸಿಯೆ ತುಸುದೂರ ನಡೆದಿದ್ದರು. +ಯಾರೂ ಮಾತಾಡಿಲಿಲ್ಲ. +ಇದ್ದಕ್ಕಿದ್ದ ಹಾಗೆ ಗುತ್ತಿ ನಿಂತು “ಅಯ್ಯೊ ಮಾರಾಯ, ಎಂಥಾ ಕೆಲಸ ಆಯ್ತು? +ಹೊರಕಡೆಗೆ ಕೊತಲ್ಲೆ ಬಿಟ್ಟು ಬಂದುಬಿಟ್ಟೆನಲ್ಲ! +ನೀವು ಹೋಗ್ತಾ ಇರಿ; + ನಾ ಬಿರಬಿರನೆಬಂದುಬಿಡ್ತೀನಿ!” ಎಂದು ಏನನ್ನೊ ಮರೆತು ಬಿಟ್ಟು  ಬಂದುದನ್ನು ತರುವವನಂತೆ ಹಿಂದಕ್ಕೆ ಓಡಿದನು. +ನಾಯಿಯೂ ಜೊತೆಯಾಗಿ. +ಐತ ಚೀಂಕ್ರರು ವೇಗವಾಗಿಯೆ ಮುಂದೆ ಸಾಗಿದ್ದರು. +ಒಂದೆರಡು ಸಲ ಹಿಂದಕ್ಕೆನೋಡಿದರು, ಗುತ್ತಿಗಾಗಿ. +ಆದರೆ ಅವನ ಸುಳಿವೇ ಇರಲಿಲ್ಲ. +ಚೀಂಕ್ರ ಹೇಳಿದ “ಆ ಕಮ್ಮಾರಸಾಲೆ ಹತ್ರ ಕಳ್ಳಂಗಡೀಲಿ ಏನಾದ್ರೂ ಕುಡುಕೊಂಡು ಹೋಗಾನೊ. +ಬಾಳ ಆಕರ ಆಗ್ತದೆ.” +ಕೋಣೂರಿಗೂ ಬೆಟ್ಟಳ್ಳಿಗೂ ಮಧ್ಯೇ, ಮೇಗರವಳ್ಳಿ ಹೂವಳ್ಳಿ ಹಳೆಮನೆಗಳಿಗೂ ಸಮದೂರವಾಗಿದ್ದ ಒಂದು ಜಾಗದಲ್ಲಿ, ಕಾಡಿನ ನಡುವೆ, ಒಂದು ಕಮ್ಮಾರ ಸಾಲೆ, ಒಂದು ಕಳ್ಳಂಗಡಿ, ಮೂರು ನಾಲ್ಕು ಜೋಪಡಿಗಳಿದ್ದು ಅನೇಕ ರೀತಿಗಳಲ್ಲಿ ಕುಪ್ರಸಿದ್ದವಾಗಿತ್ತು, ಕುಡಿತ, ಕೋಳಿಅಂಕ, ಜೂಜು, ಜುಗಾರಿ, ಇಸ್ಟೀಟು, ಹಾದರ, ಅತ್ಯಾಚಾರ ಇತ್ಯಾದಿಗಳಿಗೆಲ್ಲ. +ಆದರೆ ಅದನ್ನು ಎಲ್ಲರೂ ‘ಕಮ್ಮಾರಸಾಲೆ’ ಎಂದೇ ಕರೆಯುತ್ತಿದ್ದರು. +ಆ ಹೆಸರಿನ ಮರೆಯಲ್ಲಿ ಉಳಿದೆಲ್ಲ ಸಂಸ್ಥೆಗಳೂ ತಮ್ಮ ಕಾರುಬಾರನ್ನು ನಿರಾಂತಕವಾಗಿ ಸಾಗಿಸುತ್ತಿದ್ದುವು, ಎಲ್ಲರಿಗೂ ಗೊತ್ತಿದ್ದರೂ ಗುಟ್ಟಾಗಿ! +ಎಲ್ಲಾ ಆಟಗಳಲ್ಲಿಯೂ ಚೆನ್ನಾಗಿ ನುರಿತಿದ್ದ ಚೀಂಕ್ರನ ಜೊತೆ ಸಿಕ್ಕ ಐತ ಸ್ವಲ್ಪ ಕಂಗಾಲಾಗಿ ಹೇಳಿದ: “ನಾ ಹೋಗ್ತಾ ಇ…. +ನೀ ಕುಡುಕೊಂಡು ಬಾ ಬಿಡಾರದಲ್ಲಿ ಅದು ಒಂದೇ…. ಹೆದರಿಕೊಳ್ತದೆ. ” +“ಹೆಡ್ತಿ ಬಿಟ್ಟು ಬಂದಾವ, ನೀನು ಒಬ್ಬನೇ ಕಣೋ, ಬಿಡಾರದಲ್ಲಿ? +ನಾ ಕಂಡೀನೊ! +ಬಾ ಬಾ ಸುಮ್ನೆ! +ಒಂದು ದರಾಮು ಕೊಡಸ್ತೀನಿ ನಿಂಗೂ. +ಒಂದೀಟು ಮೈ ಬಿಸಿ ಮಾಡ್ಕೊಂಡು ಹೋಗಾನ “ಮುಖ ಕಾಣದ ಆ ಕತ್ತಲಲ್ಲಿ ಐತನ ಪಕ್ಕೆಯನ್ನು ಇಂಗಿತವಾಗಿ ತಿವಿದು ನಕ್ಕು ಮುಂದುವರಿಸಿದನು ಚೀಂಕ್ರ ಮಹಾಶಯ, ತನ್ನ ವಾತ್ಸಾಯನ ಕಾಮಸೂತ್ರೋಪದೇಶವನ್ನು:” + ಹೊಟ್ಟೆಗೆ ಒಂದು ದರಾಮ್ ಬಿತ್ತು  ಅಂದ್ರೆ, ಒಳ್ಳೆ ಸಕ್ತಿ ಬರ್ತದೊ! +ಆ ಮ್ಯಾಲೆ ಬಿಡಾರಕ್ಕೆ ಹೋಗಿ ಮಜಾ ಮಾಡಿದ್ರೆ ಹ್ಯಾಂಗಿರ್ತದೆ!” ಎಂದು ಐತನ ಕಿವಿಯ ಹತ್ತಿರಕ್ಕೆ  ಬಾಗಿ, ಅತ್ಯಂತ ಅಸಹ್ಯವೂ ಅಶ್ಲೀಲವೂ ಅದುದನ್ನೆ  ಹೇಳಿಬಿಟ್ಟನು, ಸವಿದು ಚಪ್ಪರಿಸುವಂತೆ. +ಐತ ದೂರ ಸರಿದು “ ಇಸ್ಸಿ! +ನೀನು ಎಂಥ ಪೋಲಿ ಆಡ್ತೀಯೊ?” ಎಂದನು. +“ಪೋಲಿ ಅಂತೆ ಪೋಲಿ? +ಮಾಡುವುದಕ್ಕೆ ಪೋಲಿಯಲ್ಲ; + ಆಡುವುದಕ್ಕೆ ಮಾತ್ರ ಪೋಲಿ? +ಹುಡುಗಮುಂಡೇದು, ನಿನಗೇನು    ಗೊತ್ತು? ”…. ಕಮ್ಮಾರ ಸಾಲೆಯಲ್ಲಿ ಉರಿಯುತ್ತಿದ್ದ ಬೆಂಕಿ ಕಾಣಿಸಿತು. +ಅಡಿಗಲ್ಲಿನ ಮೇಲೆ ಕೆಂಪಗೆ ಕಾದ ಕುಳವನ್ನಿಟ್ಟು ಬಡಿಯುತ್ತಿದ್ದ ಪುಟ್ಟಾಚಾರಿಯ ಆಕಾರವೂ, ಚರ್ಮದ ತಿದಿಯನ್ನು ಒತ್ತುತ್ತಿದ್ದವನ ಬೆನ್ನೂ ಸೇರಿ! +ಚೀಂಕ್ರನಿಂದ ಪಾರಾಗಲು ಉಪಾಯ ಹುಡುಕುತ್ತಿದ್ದ ಐತನಿಗೆ  ಏಕೋ ಧ್ಯೆರ್ಯವಾದಂತಾಯಿತು. +ತಾನೊಬ್ಬನೆ ಮುಂದೆ ಹೋಗುತ್ತೇನೆ ಎಂದು ಹೇಳಿದ್ದರೂ ಆಗತಾನೆ ಗುತ್ತಿಯಿಂದ ರಣ ತಿರುಗುವ ವಾರ್ತೆಯನ್ನು ಕೇಳಿದ್ದ ಅವನಿಗೆ ದೆವ್ವದ ಹೆದರಿಕೆ. +ಆದ್ದರಿಂದ  ಚೀಂಕ್ರ ತನ್ನ  ಕೆಲಸ ಮುಗಿಸಿ ಅರುವ ತನಕ ಕಮ್ಮಾರ ಸಾಲೆಯಲ್ಲಿ ರಕ್ಷೆಪಡೆಯಲು ನಿಶ್ಛಯಿಸಿ, ನೆರವಾಗಿ ಅಲ್ಲಿಗೇ  ನಡೆದುಬಿಟ್ಟನು, ಚೀಂಕ್ರನಿಗ “ನಾ ಅಲ್ಲಿ ಕಾಯ್ತಾ ಇರ್ತೆ. +ನೀ ಕೆಲಸ ಪೋರೈಸಿ ಬರಲಕ್ಕು!” ಎಂದು ಹೇಳಿ. +ಕುಳ ಬಡಿಯುತ್ತಿದ್ದ  ಪುಟ್ಟಾಚಾರಿ, ಕತ್ತಲೆಯಿಂದದ  ಬೆಳಕಿಗೆ  ಪ್ರವೇಶಿಸಿದವನ ಕಡೆಗೆ ತಿರುಗಿ, ಗುರುತಿಸಿ, ಸ್ವಾಗತಿಸುವಂತೆ ನಗೆಯಾಡಿದನು” ಏನೋ, ಐತಣ್ಣಾ, ನಿನ್ನ ಹೆಂಡ್ತಿ ಎಲ್ಲಿ ಬಿಟ್ಟು ಬಂದೆಯೋ? +ತಾಯಿಯಿಂದ  ಬೀಳ್ಕೊಂಡು ಹಾಡ್ಯವನ್ನು ಹೊಕ್ಕ ತಿಮ್ಮಿ ಸ್ವಲ್ಪ ದೂರ ಹೋದ ಮೇಲೆ, ಬುತ್ತಿಯನ್ನು ಅಡಗಿಸಿಟ್ಟುಕೊಂಡು ಬಂದಿದ್ದ ಮಡಕೆಯನ್ನು ಒಂದು ಮರದ ಬುಡದಲ್ಲಿದ್ದಟ್ಟು, ಬತ್ತಿಯೊಡನೆ ಗುತ್ತಿ ನಿರ್ದೇಶಿಸಿದ್ದ ಜಾಗಕ್ಕೆ ಬಂದು ನೋಡುತ್ತಾಳೆ, ಗುತ್ತಿಯ  ಸುಳಿವೇ ಇಲ್ಲ. +ಗಟ್ಟಿಯಾಗಿ ಕರೆಯುವ ಹಾಗೂ ಇಲ್ಲ. +ಗಂಟಲೂ ಕಟ್ಟಿಬಂದ  ಹಾಗಾಯಿತು. +ಕಣ್ಣೀರು ಬರತೊಡಗಿದವು. +ಭಯ ನಿರಾಸೆ ಹೃದಯವನ್ನಾಕ್ರಮಿಸಿ ಕಂಗೆಟ್ಟಂತೆ ನಿಂತಳು: + ‘ಏನಾದರಾಗಲಿ? +ಹಿಂದಕ್ಕಂತೂ ಹೋಗುವುದಿಲ್ಲ. +ಗುತ್ತಿ ಕೈ ಬಿಟ್ಟರೆ ಕೆರೆಯೇ ಗತಿ!”ಅಷ್ಟರಲ್ಲಿ ಯಾರೊ ಓಡಿಬರುತ್ತಿದ್ದ ಸದ್ದು! +ತನ್ನ ಕಡೆಗೇ? +ತಾನು ನಿಂತಿದ್ದ  ಕಡೆಗೇ ಬರುವಂತಿದೆ! +ತಿಮ್ಮಿ ಬೇಗಬೇಗನೆ ಒಂದು ಪೊದೆಯ ಹಿಂದೆ  ಅವಿತುಕೊಂಡಳು. +ಐತ ಚೀಂಕ್ರರನ್ನು ಉಪಾಯವಾಗಿ ಅರೆಕಲ್ಲಿನಿಂದ ಹೊರಡಿಸಿ, ಸ್ವಲ್ಪದೂರ ಹೋದ ಮೇಲೆ, ತಾನು ಮರೆತುಬಿಟ್ಟದ್ದನ್ನು ಹಿಂತೆಗೆದುಕೊಂಡು ಬರುತ್ತೇನೆಂದು ಅವರನ್ನು ಮುಂದುವರಿಯುತ್ತಿರುವಂತೆ ಹೇಳಿ ಹಿಂದಕ್ಕೆ ಓಡುತ್ತಲೆ ಬಂದು ನೋಡುತ್ತಾನೆ, ಎಲ್ಲಿಯೂ ತಿಮ್ಮಿಯ ಸುಳಿವಿಲ್ಲ. +ಬಂದು ಹೋಗಿಬಿಟ್ಟಳೊ? +ಅಥವಾ ಇನ್ನೂ ಬರಲೆ  ಇಲ್ಲವೊ? +ಎಂದು  ಚಿಂತಿಸುತ್ತಾ ನಿಂತಿರಲು, ಹುಲಿಯ ಒಂದು ಪೊದೆಯ ಹತ್ತಿರ ಪರಿಚಿತರನ್ನು ಕಂಡಂತೆ ಕುಂಯಿ ಕುಂಯಿಗುಡುತ್ತಿರುವುದನ್ನೂ ಪೊದೆ  ಸದ್ದಾಗುತ್ತಿರುವುದನ್ನೂ  ಕಂಡು ಮುಂಬರಿಯುವಷ್ಟರಲ್ಲಿ, ಹುಲಿಯನನ್ನು ಗುರುತಿಸಿದ ತಿಮ್ಮಿ, ಓಡಿಬಂದುವನು ಸಿಂಬಾವಿ ಭಾವನೆ ಇರಬಬೇಕೆಂದು ಧೈರ್ಯಮಾಡಿ, ತನ್ನ ಕಡೆಗೆ ಬರುತ್ತಿರುವುದನ್ನು ಕಂಡನು. +ಇಬ್ಬರೂ ಏನನ್ನೂ ಮಾತಾಡದೆ ಸರಸರ ಹೊರಟರು. +ಅವರಿಬ್ಬರ ತಲೆಯಲ್ಲಿಯೂ ಈಗ ಇದ್ದುದು ಒಂದೇ ಯೋಚನೆ  ಸಿಕ್ಕಿಬೀಳದೆ ಹೆಗೆ ಯಾವ ದಾರಿಯಿಂದ ತಪ್ಪಿಸಿಕೊಂಡು ಹೋಗುವುದು? +ಗುತ್ತಿ ಬೆಟ್ಟಳ್ಳಿ ಹಕ್ಕಲಿಗೂ ಅಲ್ಲಿಂದ ಕೇರಿಗೂ ಬಂದಿದ್ದ ಸಮಾಚಾರ ಗೊತ್ತಾದೊಡನೆ, ಬೇಟೆಯಲ್ಲಿ ನಾಯಿ ಮೂಗಾಳಿ ಹಿಡಿದು ಮಿಗವನ್ನಟ್ಟುವಂತೆ ತಮ್ಮನ್ನು ಹುಡುಕಿ ಹಿಡಿಯಲು ಪ್ರಯತ್ನಿಸದ ಬಿಡುವುದಿಲ್ಲ. +ಸಮೆದ ಕಾಲು ಹಾದಿಯನ್ನೆ ತ್ಯಜಿಸಿ, ಕಾಡು ನುಗ್ಗಿ, ಸಿಂಬಾವಿಯ ದಿಕ್ಕು ಹಿಡಿದು ಹೋಗಬಹುದಲ್ಲ ಎನ್ನಿಸಿತು ಒಮ್ಮೆ ಗುತ್ತಿಗೆ. +ಆದರೆ ಆ ಮುಳ್ಳು ಗಿಜರು ಕೊರಕಲುಗಳಲ್ಲಿ, ಕತ್ತಲಲ್ಲಿ, ತಿಮ್ಮಿ ನಡೆಯುವುದು ಸಾಧ್ಯವೆ? +ಆಗಲೆ, ಸಮೆದ ಕಾಲುಹಾದಿಯಲ್ಲಿ ನಡೆಯುವಾಗಲೆ, ಒಂದೆರಡು ಸಾರಿ ಮುಳ್ಳು  ಚುಚ್ಚಿಸಿಕೊಂಡು ಎಡವಿದ್ದಾಳೆ. +ನಿಜ, ಇಬ್ಬರ ಕಾಲುಗಳೂ ಮೆಟ್ಟನ್ನು ಕನಸಿನಲ್ಲಿಯೂ ಕಂಡರಿಯವು. +ಆದರೆ ಗುತ್ತಿಯ ಅಂಗಾಲು ನಡೆದೂ ನಡೆದೂ ಒರಟಾಗಿ, ಕಷ್ಟಸಹಿಷ್ಣುವಾಗಿ, ಖರ್ಪರವಾಗಿಬಿಟ್ಟಿದೆ; + ತಿಮ್ಮಿ ದುಡಿವ ಆಳಾಗಿ  ಹೊಲತಿಯಾಗಿದ್ದರೂ ಎಷ್ಟಂದರೂ ಹೆಣ್ಣು. +ಕಡೆಗೆ, ದೇವರರು ಮಾಡಿದ್ದಾಗಲಿ ಎಂದು ಸಮೆದ ಕಾಲುದಾರಿಯಲ್ಲಿಯೆ ಮುಂದುವರಿಯಲು ಮನಸ್ಸು ಮಾಡಿದರು. +ಏನಾದರೂ ಅಪಾಯ ಸೂಚನೆ ತೋರಿದರೆ ಕಾಡಿನೊಳಕ್ಕೆ ಓಡಿಯೋ ಹೇಗೊ ತತ್ಸಾಮಯಿಕ ಪ್ರತಿಭೆ ಹೊಳೆದಂತೆ ಮಾಡುವುದು ಎಂದು. +ಈಗ ಅವರಿಗೆ  ಹುಲಿ, ಹಂದಿ, ಹಾವು, ಚೇಳು, ದೆಯ್ಯಗಿಯ್ಯ ಯಾವುದರ ಭಯವೂ ನಿವಾರಣೆಯಾಗುತ್ತಿದ್ದಿತೊ ಅದರ ಸಂಗವೆ ಈಗ ಭಯಾನಕವಾಗಿದ್ದಿತು. +ಈಗ ಅವರಿಗಿದ್ದುದು ಒಂದೆ ಒಂದರ ಭಯಃ ಮನುಷ್ಯರ ಭಯ! +ಕಮ್ಮಾರಸಾಲೆ  ಹತ್ತಿರಕ್ಕೆ ಬಂದಾಗ, ಬೆಂಕಿಯನ್ನು ಕಂಡ ಗುತ್ತಿಗೆ, ಒಂದುದೊಂದಿಮಾಡಿ, ಹೊತ್ತಿಸಿಟ್ಟುಕೊಂಡರೆ ಒಳ್ಳೆಯದು ಎಂದು ತೋರಿತು. +ಕತ್ತಲಲ್ಲಿದೊಂದಿಯ ಕಾಂತಿ ತಮ್ಮನ್ನು ಅಡಗಿಸುವುದಕ್ಕೂ ತಮ್ಮ ಮೇಲೆ  ಗುಮಾನಿ ಬರದಿರುವಂತೆ ಮಾಡುವುದಕ್ಕೂ ನೆರವಾಗುತ್ತದೆ. +ಅಲ್ಲದೆ ರಾತ್ರಿ ಎಲ್ಲಿಯಾದರೂ ಜನದೂರವಾದ ಸ್ಥಳದಲ್ಲಿ ತಂಗಬೇಕಾಗಿ ಬಂದರೆ, ತಮ್ಮ ಬಳಿ ಬೆಂಕಿ ಇದ್ದರೆಲೇಸಲ್ಲವೆ? +ತಿಮ್ಮಿಗೆ ಕತ್ತಲಲ್ಲಿಯೆ ದೂರ ಸರಿದಿರುವಂತೆ ಹೇಳಿ, ಗುತ್ತಿ ಕಮ್ಮಾರ ಸಾಲೆಗೆ ಹೋದನು. +ತಿದಿಯೊತ್ತುತ್ತಿದ್ದವನನ್ನು ಬೇಡಿ, ಅವನಿಂದ ಆ ಕೆಲಸವನ್ನು ವಹಿಸಿಕೊಂಡು, ಆನಂದದಿಂದ ತಿದಿ ಒತ್ತುತ್ತಾ ಕುಳಿತ್ತಿದ್ದ ಐತ ಗುತ್ತಿಯನ್ನು ನೋಡಿ, “ಏನು ಮಾಡುತ್ತಾ ಇದ್ದೆಯೋ. +ಇಷ್ಟು ಹೊತ್ತು?” ಎಂದು ಪ್ರಶ್ನಿಸಿ, ತಾನು ಎಂತಹ ಮೆಹನತ್ತಿನ ಉದ್ಯೋಗದಲ್ಲಿ ತೊಡಗಿದ್ದೇನೆ ನೋಡು, ನಿನಗೆಲ್ಲಿ ಆ ಪುಣ್ಯ? +ಎನ್ನುವಂತೆ ಮುಖ ಅರಳಿಸಿ ಹಲ್ಲುಬಿಟ್ಟನು. +ಅನೈಚ್ವಿಕವೊ ಎಂಬಂತೆ ತನ್ನ ಕೆಲಸಗಳಲ್ಲಿ ನಿರತಾಗಿಯೆ ಇದ್ದ ಪುಟ್ಟಾಚಾರಿ ಐತರನಿಗೆ “ಏ ಹುಡುಗ, ನೀ ಸರಿಯಾಗಿ ಒತ್ತಾದಾದ್ರೆ ಒತ್ತು. +ಇಲ್ದಿದ್ರೆ ಕೊಡು ಅವನಿಗೆ. +ನಿನಗೆ ಒಳ್ಳೆ ಆಟಾ ಆಯಿತಲ್ಲಾ!” ಎಂದವನು ಗುತ್ತಿಯ ಕಡೆ ನೋಡಿ “ಏನೊ, ಗುತ್ತಿ, ಇಷ್ಟುಹೊತ್ತಿನ್ಲಿ? +ಸಿಂಬಾವಿಗೆ ಹೋಗ್ತಾ ಇದ್ದೀಯೊ? +ಅಲ್ಲಿಂದ ಬರ್ತಾ ಇದ್ದೀಯೊ? …. +ನಿನ್ನ ಒಡೇರದೊಂದು ಕೋವಿ ಕೆಲಸ ಅದೆಯಂತೆ…. +ನನಗೆ ಬರಾಕೆ ಪುರಸತ್ತೇ ಆಗ್ಲಿಲ್ಲ.” +“ಹೋಗ್ತಾ ಇದ್ದೀನೀ…. +ಅದಕ್ಕೇ ಒಂದು ದೊಂದಿ ಮಾಡ್ಕೊಳ್ಳಾನ ಅಂತಾ ಬಂದೆ.” +“ಅಲ್ಲೊಂದು ಅಡಕೆ ದಬೆಬ ಇರಬೇಕು ತಗೋ”.ಎಂದನು ಪುಟ್ಟಾಚಾರಿ. +ಗುತ್ತಿ ಬೇಗಬೇಗನೆ ತನ್ನ ಸೊಂಟದ ಕತ್ತಿಯಿಂದ ದಬ್ಬೆ ಸೀಳೆ, ಕಟ್ಟಿ, ದೊಂದಿ ಹೊತ್ತಿಸಿಕೊಂಡು ಬೀಸುತ್ತಾ ಹೊರಟು ಹೋದನು. +ಅವನು ಹೋದ ತುಸುಹೊತ್ತಿನಲ್ಲಿಯೆ ಕಮ್ಮಾರಸಲೆ ಹೊರಗಡೆ ಕತ್ತಲಲ್ಲಿ ಏನೊ ಗಲಾಟೆ ಕೇಳಿಸಿತು. +ಚೀಂಕ್ರ ಹೊಟ್ಟೆಗೆ ದರಾಮ್ ಹೊಯ್ದುಕೊಂಡು ಅತ್ಯುತ್ಸಾಹಿಯಾಗಿ “ಹೆಹ್ಹೆಹ್ಹೆಹ್ಹೆ!ನಂಗೆ ಕೊಟ್ಟಿದ್ರೆ? +ಬೈಸೆಕಲ್ಲನ್ನ ಹೆಂಗೆ ಬಿಡ್ತಿದ್ದೆ? +ಬುರ್ನಾಸು, ಬರೀ ಬುರ್ನಾಸು, ಆ ಪಾದ್ರಿ. +ಅವನಿಗೇನು ಗೊತ್ತು ಬಿಡಾಕೆ? …. +ಏ ಐತಾ ಬಾರೋ, ಬಿಡಾರಕ್ಕೆ ಹೋಗಾನೊ! +ಮಜಾ ಮಾಡಾಕೆ! +ಥೂ ನಿನ್ನ ಹೆಂಡ್ತೀನಾ….”ಐತ ತಿದಿಯನ್ನು ಮೊದಲೇ ಒತ್ತುತ್ತಿದ್ದವನಿಗೆ ಕೊಟ್ಟು, ಬೇಗಬೇಗನೆ ಎದ್ದು “ನಾ ಬತ್ತೆ, ಆಚಾರಣ್ಣಾ” ಎಂದು ಹೊರಕ್ಕೆ ಧಾವಿಸಿದನು. +ಬೆಂಕಿಯ ಬೆಳಕಿನಲ್ಲಿದ್ದು ಅದನ್ನೆ ನೋಡುತ್ತಿದ್ದ ಅವನಿಗೆ ಹೊರಗಡೆ ಕತ್ತಲೆ ಕಗ್ಗಲ್ಲಾದಂತೆ ಕಮಡಿತು. +ದಾರಿಗೆ ಅಡ್ಡಲಾಗಿ ನಿಂತಿದ್ದ ಚೀಂಕ್ರನಿಗೆ ಡಿಕ್ಕಿ ಹೊಡೆದುಬಿಟ್ಟನು! +ಅವನೂ ದೊಸಕ್ಕನೆ ನೆಲಕ್ಕೆ ಅಮಡೂರಿ ಕ್ಯಾಕರಿಸಿ ಉಗಿಯುತ್ತಾ” ಹ್ಹಿಹ್ಹಿಹ್ಹಿ! ನಿನ್ನ…. ” ಎಂದು ಅವಾಚ್ಯಾವಾಗಿ ಬೈಯ್ಯುತ್ತಾ “ಕುಡ್ದಿದ್ದು ನಾ…. ನು…. ಏರಿದ್ದು ನಿಂಗೆ! +ಹ್ಹಿಹ್ಹಿಹ್ಹಿ” ಎಂದು ತತ್ತರಿಸುತ್ತಾ ಮತ್ತೆ ಕೈಯೂರಿ ಎದ್ದು ನಿಂತನು. +ತನ್ನನ್ನು ಬೀಳದಂತೆ ಆತುಕೊಳ್ಳಲು ಬಂದ ಐತನಿಗೆ  “ಏಯ್, ನಂಗೇನಾಗ್ಯದೆ ಅಂತಾ ಹಿಡುಕೊಳ್ತೀಯೋ?” ಎಂದು ತೂದಲು ತೊದಲುತ್ತಾ ತೂರಾಡುತ್ತಲೆ ನಡೆಯತೊಡಗಿದನು. +ಐತ, ಹುಲಿ ಕಂಡಾಗ ಹೆದರಿಕೆಯ ಪ್ರಭಾವದಿಂದ, ಜೀವ ಉಳಿಸಿಕೊಂಡರೆ ಸಾಕು ಎಂದು ಹತ್ತತಿರವೆ ಇದ್ದ ಕೆಂಜಿಗೆ ಉಡಿಗೊ ಹೇಗೋ ಹತ್ತಿದಾತನು, ಹುಲಿ ಹೋದಮೆಲೆ ಇಳುಯುವ ಗೋಳನ್ನು ಅನುಭವಿಸುವಂತೆ, ‘ನಾನು ಯಾಕೆ ಇವನ ಜೊತೆ ಹಾಳು ಬೇಸೆಕಲ್ಲು ಸವಾರಿ ನೋಡಾಕೆ ಹೋದ್ನೆಪ್ಪಾ’ಎಂದು ಶಪಿಸಿಕೊಳ್ಳುತ್ತಾ, ಬಹು ಕಷ್ಡದಿಂದ ಚೀಂಕ್ರನನ್ನು ಬಿಡಾರದವರೆಗೆ ಕರೆತಂದನು. +ಕತ್ತಲೆಯ ಕಾಡುದಾರಿಯಲ್ಲಿ ಚೀಂಕ್ರನ ಕಾಮಚೇಷ್ಟೆಗಳನ್ನೂ ಅಶ್ಲೀಲ ಬೈಗುಳಗಳನ್ನೂ ಅವನ ಬಾಯಿಂದ ಉಗುತ್ತಿದ್ದ ಸಾರಾಯಿಯ ವಾಸನೆ ಬೆರತೆ ಉಸಿರ ಗಬ್ಬು ಹರಡಿಕೆಯನ್ನೂ ತುಟಿಪಿಟಕ್ಕೆನ್ನದೆ ಸಹಿಸಿಕೊಂಡಿದ್ದನು. +ಚೀಂಕ್ರನ ಬಿಡಾರದ ಹತ್ತಿರ ಅವನನ್ನು ಬಿಟ್ಟು “ಅಕ್ಕಾ, ಸೇರೆಗಾರನ್ನ ಒಳಗೆ ಕರಕೊ” ಎಂದು ದೇಯಿಗೆ ಕೇಳುವಂತೆ ಕೂಗಿಹೇಳಿ, ತನ್ನ ಬಿಡಾರಕ್ಕೆ ಓಡಿದನು, ಯಾವುದಾದರೂ ಒಂದು ಅನಿಷ್ಟದಿಂದಲೋ ಅಪಾಯದಿಂದಲೋ ದೂರ ಸರಿಯುವಂತೆ. +ಅವನ ಬಿಡಾರ ನಿಃಶಬ್ದವಾಗಿತ್ತು. +ಒಳಗೆ ಹಣತೆಯ ಸೊಡರಾಗಲಿ ಒಲೆಯ ಬೆಂಕಿಯಾಗಲಿ ಇದ್ದಂತೆ ತೋರಲಿಲ್ಲ. +ಜೋಪಡಿಯ ಬಾಗಿಲಿಗೆ ಹೋಗಿ ನೋಡುತ್ತಾನೆ, ತಟ್ಟಿ ಬಾಗಿಲು ಮುಚ್ಚಿದೆ! +ನೂಂಕಿದರೆ ತೆರೆಯಲೂ ಇಲ್ಲ. +ಕೈಯಿಂದ ತಡವಿನೋಡಿದರೆ, ತಟ್ಟಿಬಾಗಿಲಿಗೆ ಹಗ್ಗ ಬಿಗಿದು ಕಟ್ಟಿದೆ. +‘ಇದೇನಿದು?ಪೀಂಚಲು ಎಲ್ಲಿ? +ನನಗಾಗಿ ಕಾದು, ಇರುಳು ಹೊತ್ತಾದ ಮೇಲೆ ಒಬ್ಬಳೆ ಇರಲು ಹೆದರಿಕೆಯಾಗಿ, ಪಕ್ಕದಲ್ಲಿರುವ ಪಿಜಿಣನ ಮನೆಗೇನಾದರೂ ಹೋದಳೆ? +ಹೋಗಿ ಅಕ್ಕಣಿಯನ್ನು ಕರೆದು ಕೇಳಲೆ? ಅಥವಾ…. ’ಏನೇನೊ ಅಮಂಗಳದ ಯೋಚನೆಗಳು ಚೀಂಕ್ರ ತೆರೆದಿದ್ದ ಸಂಶಯದ ಬಾಗಿಲಿಂದ ಅವನ ತಲೆಗೆ ನುಗ್ಗತೊಡಗಿದುವು. +ತಾನು ಬಿಡಾರದ ಬಾಗಿಲಿಗೆ ಬಂದೊಎನೆ ಪೀಂಚಲು ತನ್ನ ಸವಿದನಿಯಿಂದ ವಿನೋದವಾಗಿ ಏನನ್ನಾದರೂ ಹೇಳುತ್ತಾ ತನ್ನನ್ನು ಇದಿರುಗೊಂಡು ಒಳಗೆ ಕರೆದುಕೊಂಡು ಹೋಗಿ  ಮೋಹಮಾಡಿ, ಮುದ್ದಾಡಿ, ತಿನ್ನಲಿಕ್ಕೆ ಏನನ್ನಾದರೂ ಕೊಟ್ಟು-ಇತ್ಯಾದಿಯಾಗಿ ಕಲ್ಪಿಸಿಕೊಳ್ಳುತ್ತಾ ಬಂದವನಿಗೆ  ನಿಃಶಬ್ದತೆ, ಕತ್ತಲೆ, ಮುಚ್ಚಿ ಕಟ್ಟಿದ್ದ ಬಾಗಿಲು ಇದಿರಾಗಿ ಮೂದಲಿಸಿದ್ದುವು. +ಆ ನಿರೀಕ್ಷಣಾ ಭಂಗದಿಂದ ಅವನ ಬುದ್ದಿ ಸೋತಂತಾಗಿತ್ತು. +ದುರಾದೃಷ್ಟಕೆಕ ಸರಿಯಾಗಿ ಚೀಂಕ್ರ ಬೆಟ್ಟಳ್ಳಿ ಅರೆಕಲ್ಲಿನಲ್ಲಿ ಆಡಿದ್ದ ಮಾತು, ಆದಿನ ಬೆಳಗದಗೆ ತೋಟದಲ್ಲಿ ನಡೆದಿದ್ದ, -ಅನ್ಯ ಸಮಯದಲ್ಲಾಗಿದ್ದರೆ ಮುಗ್ಧವಾಗಿಯೆ ಇರುತ್ತಿದ್ದ, -ಘಟನೆಗಳಿಗೆ  ಆಪಾರ್ಥ ವ್ಯಾಖ್ಯಾನವನ್ನೂ ವಿಕಟಧ್ವನಿಯನ್ನೂ ನೀಡಿ, ಯತನ ಬಾಳಿನ ಹಾಲಿಗೆ ಹುಳಿ ಹಿಂಡಿದ್ದುವು. +ಪಿಜಿಣನ ಬಿಡಾರಕ್ಕೆ ಹೋಗಿ, ಅದರ ಮುಚ್ಚಿದ್ದ ಬಾಗಿಲೆಡೆ ನಿಂತು, ಅಕ್ಕಣಿಯನ್ನೆ ಕರೆದು ವಿಚಾರಿಸಿದ, ಯಾವಾಗಲೂ ಏನಾದರೂ ಕಾಯಿಲೆಯಿಂದ ನರುಳುತ್ತಿದ್ದ, ಕೆಲಸ ಮಾಡಿ ದಣಿದು ಮಲಗಿ, ಒಂದು ತರಹ ಕೆಟ್ಟನಿದ್ದೆ ಮಾಡುತ್ತಿದ್ದ  ಪಿಜಿಣನ ಪಕ್ಕದಲ್ಲಿ ಕಣ್ಣು ಬಿಟ್ಟುಕೊಂಡೆ ಮಲಗಿದ್ದ, ಮಕ್ಕಳನ್ನೆ ಹಡೆದುಕಾಣದ ಅಕ್ಕಣಿ ಮಲಗಿದ್ದಲ್ಲಿಂದಲೆ ಹೇಳಿದಳು: ‘ಒಡೆಯರ ಮನೆಯಕಡೆ ಹೋದವಳು ಇನ್ನೂ ಬಂದಿಲ್ಲ.' +ಐತ ಹತಾಶನಾದಂತ ಮೆಲ್ಲಗೆ ತನ್ನ ಗುಡಿಸಲಿಗೆ ಬಂದನು. +ಕೈ ಅಂದಾಜಿನಿಂದ ಬಾಗಿಲಿಗೆ ಬಿಗಿದಿದ್ದ ಹಗ್ಗವನ್ನು ಬಿಚ್ಚಿ ಒಳಗೆ ಹೋದನು. +ಹೊರಗಡೆ ನಸುಗಪ್ಪಾಗಿದ್ದ ಕತ್ತಲೆ ಬಿಡಾರದ ಒಳಗಡೆ ಕಾಡಿಗೆಗಪ್ಪಾಗಿತ್ತು. +ಕಾಲೂಹೆ ಕೈ ಯೀಹೆಯ ಮೇಲೆಯೆ ಮೂಲೆಯಲ್ಲಿದ್ದ ಒಲೆಯ ಬಳಿಗೆ ಹೋಗಿ, ಮೆಲ್ಲಗೆ ಊದಿದನು. +ಬೂದಿ ಹಾರಿ ಕೆಂಡ ಕಂಡು ಬೆಂಕಿಗೆ ತುಸುವೆ ಜೀವವಿರುವಂತೆ ತೋರಿತು. +ಮೆಲ್ಲನೆ ಪಕ್ಕದಲ್ಲಿದ್ದ ಜಿಗ್ಗು ಒಟ್ಟಿ ಜ್ವಾಲೆ ಹೊಮ್ಮುವಂತೆ ಮಾಡಿ, ತೊರಂಗಲ ಎಣ್ಣೆ ಹಾಕಿದ್ದ ಹಣತೆಯ ಬತ್ತಿಯನ್ನು ಹೊತ್ತಿಸಿ  ದೀಪ ಮಾಡಿದನು. +ಗಾಢಾಂಧಾಕಾರ ಸಮುದ್ರದ ನಡುವೆ ಮಿನಿಮಿನಿಮಿನಿ ಎಂದು  ಉರಿಯತೊಡಗಿತು, ಹಣತೆಯ ದೀಪದ ಬೆಳಕಿನ ಹನಿ. +ಮುಂದೆ ಮನಸ್ಸೆಲ್ಲ ಶೂನ್ಯವಾದಂತಾಗಿ, ಮುಂದೇನು ಮಾಡುವುದಕ್ಕೂ ತೋಚದೆ, ಮಂಕು ಹಿಡಿದಂತೆ ಕುಳಿತುಬಿಟ್ಟನು ಐತ, ನಿರೀಕ್ಷಣೆಯ ತಪಸ್ಯೆಯಾಗಿ! +ಹಠಾತ್ತನೆ ಎಷ್ಟು ನಿಷ್ಠುರವಾಯಿತು ಜಗತ್ತು! +ಆ ಗುಡಿಸಿಲನ್ನು ತುಂಬಿದ್ದ ಅಂಧಕಾರಕ್ಕೆ ಅಂತವಿದೆಯೆ? +ಆ ಶೂನ್ಯದ ಪಾತಾಳಕ್ಕೆ ತಳವಿದೆಯೆ? +ಜೇನು ಸವಿದಂತೆ ಇತ್ತಲ್ಲಾ ಬದುಕು, ಈ  ವರೆಗೆ? +ಉಸಿರು ಕಟ್ಟಿ ಏದುತ್ತಿತ್ತು ಐತನ ಜೀವ! +ತೆರೆದಿದ್ದ ತಟ್ಟಿಯ ಬಾಗಿಲಾಚೆ ಏನೊ ಸದ್ದಾಯಿತು ಅಯ್ಯೊ ಬಾಗಿಲು ಮುಚ್ಚಲು ಮರೆತುಬಿಟ್ಟಿದ್ದನಲ್ಲಾ ಎಂದು ಮೇಲೆದ್ದು ಮೂಂಬರಿಯುವಷ್ಟರಲ್ಲಿ ಒಳಕ್ಕೆ ಬಂದಳು ಪೀಂಚಲು! +ಬಿಳಿಯ  ಹಲ್ಲಿನ ಸಾಲೆಲ್ಲ ಕಾಣುವಂತೆ ನಗುತ್ತಿದ್ದಾಳೆ! +ಒಂದು ಹೊಸ ಸೀರೆ ಉಟ್ಟಿದ್ದಾಳೆ! +ಕೈಯಲ್ಲಿ ಏನೋ  ಗಂಟು, ಪಾತ್ರೆ, ಹಿಡಿದಿದ್ದಾಳೆ! +ಅವಳು ತನ್ನ ಮೊಳ ಕೈಯಿಂದಲೆ ತಟ್ಟಿ ಬಾಗಿಲನ್ನು ಮುಚ್ಚಲೆಂದು ತಳ್ಳುತ್ತಾ ತನ್ನ ಕಡೆಗೆ ಬೆನ್ನುಹಾಕಿದಾಗ ನೋಡುತ್ತಾನೆ, ಬಿಳಿಯ ಮಲ್ಲಿಗೆಹೂವಿನ ಕುಚ್ಚು ಮುಡಿದಿದ್ದಾಳೆ! +ಮೋಹಿನಿಗೆ ಮರುಳಾದಂತೆ ಬೆರಗುಹೊಡೆದನು ಹೋಗಿದ್ದಾನೆ ಐತ! +ಅವಳು ಬಂದಾಗ ಅವಳೊಡನೆ ಎಷ್ಟು ಬಿಗಿಯಾಗಿ ವರ್ತಿಸಬೇಕೆಂದು ಮನಸ್ಸು ಮಾಡಿಕೊಂಡಿದ್ದ? +ಅದೆಲ್ಲ ಎಲ್ಲಿಯೊ ಪರಾರಿ! +ಬಾಳು ಹಿಗ್ಗಿತು; +ಜೋಪಡಿ ಬೆಳಗಿತು; +ಹೊರಗಣ ಮತ್ತು ಒಳಗಣ ಕತ್ತಲೆ ಎಲ್ಲಿಯೊ ಓಡಿತು. +ಕತ್ತಲೆ ಇದೆ ಎಂಬುದೇ ಮನಸ್ಸಿಗೆ ಬರಲೊಲ್ಲದು. +ಮಧುಮಯವಾಯಿತು ಲೋಕ; +ತುಂಬಿ ತುಳುಕಿತು ಬದುಕು; +ಮುಖ ಹಿಗ್ಗಿ, ಕಣ್ಣು ಅರಳಿ ಉಸಿರು ತುಂಬಿ “ಎಲ್ಲಿ ಹೋಗಿದ್ದಿ, ಮಾರಾಯ್ತಿ? +ಕಾದು ಕಾದು ಸಾಕಾಯ್ತು!” ಎಂಬ ಪ್ರಶ್ನೆ ಹೊಮ್ಮಿತು, ಛದ್ಮವೇಷವಾಂತ ಸ್ವಾಗತ ಗೀತೆಯಂತೆ. +ಅವಳ ನಡೆ, ಉಡುಗೆ, ಭಂಗಿ, ಚಲನವಲನ, ಹಾವಭಾವ, ಋಜುತೆ, ಮುಗ್ಧತೆ-ಒಂದೊಂದೂ ಚೀಂಕ್ರ ಒಡ್ಡಿದ್ದ ಸಂಶಯ ಪಿಶಾಚಕ್ಕೆ ಬೆಂಬಡಿಗೆಯಾಗಿ, ಐತನ ಮನಸ್ಸು ಪ್ರಫುಲ್ಲವಾಯಿತ. +ತಾನು ತಂದ ಪಾತ್ರೆ ಮತ್ತು ಬಟ್ಟೆಯ ಗಂಟನ್ನು ಒಂದೆಡೆ ಇಡುತ್ತಾ ಅವಳು “ಅದೆಲ್ಲ ಆಮ್ಯಾಲೆ ಹೇಳ್ತೀನಿ. +ಈಗ ಹೊತ್ತಾಯ್ತು, ಬಾ ಉಣ್ಣಾಕೆ” ಎಂದು ಬೇಗಬೇಗನೆ ಬೆಳಿಗ್ಗೆ ತೋಟದಿಂದ ತಂದಿದ್ದ  ಹೊಂಬಾಳೆಯನ್ನೂ ಒಂದು ತೋಳೆದ ಹಾಳೆಯನ್ನೂ ಹಾಕಿದಳು. +“ಎಲ್ಲಿತ್ತೇ ಈ ಹೊಂಬಾಳೆ?” +“ಹೊತ್ತಾರೆ ತ್ವಾಟದಾಗೆ ಸಿಕ್ಕಿತ್ತಲ್ಲಾ ಅದೇ.” +“ಮಜ್ಜಾನ ಉಂಡಿರಲಿಲ್ಲೇನೇ ಅದರಲ್ಲಿ?” +“ಅವನ್ನೇ ತೊಳೆದು ಇಟ್ಟಿದ್ದೆ, ಎಷ್ಟು ಚಂದ ಅದೆ ಅಲ್ಲಾ?”ಉಣ್ಣುವುದಕ್ಕೆ ಅಣಿಮಾಡುತ್ತಿದ್ದ ಅವಳನ್ನೆ ನೋಡುತ್ತಿದ್ದ ಐತಗೆ ಮನಸ್ಸಿನಲ್ಲಿ ಮತ್ತೆ ಎನೊ ಕಲಕಿದ ಹಾಗಾಯಿತು. +ಜೋಪಡಿಯ ಸೂನ್ಯದಲ್ಲಿ, ಜನವಿಹೀನ ರಾತ್ರಿಯ ನೀರವತೆಯಲ್ಲಿ, ತಾನು ಒಲಿದಿದ್ದವಳು ಇಲ್ಲದೆ ಸಂದಿಗ್ಧತೆಯಲ್ಲಿ, ಎಲ್ಲಿ ಹೋದಾಳೊ ಏನಾದಳೊ ಎಂಬ ಕಾತರದಲ್ಲಿ, ಕಾದು  ಕಾದು ಬೇಸುತ್ತಿದ್ದ ಅವನಿಗೆ ತನ್ನ ಹುಡುಗಿ ಹೆಂಡತಿ ಪ್ರವೇಶಿಸಿದ್ದನ್ನು ಕಂಡೊಡನೆ ತಟಕ್ಕನೆ ಅವಿಚಾರವಾಗಿ ಹೊಮ್ಮಿದ ಹರ್ಷದ ಉಬ್ಬರ ಇಳದಮೇಲೆ, ಮತ್ತೆ ಪೂರ್ವವಿಚಾರವೃತ್ತಿ ತಲೆಹಾಕತೊಡಗಿತ್ತು. +“ಹೊಸ ಸೀರೆ ಎಲ್ಲಿತ್ತೇ? +ಯಾರು ಕೊಟ್ಟಿದ್ದೇ?” +“ಎಲ್ಲಿಯೊ ಇತ್ತು. +ಯಾರೊ ಕೊಟ್ಟರು” ಕೆಲಸದಲ್ಲಿ ತೊಡಗಿದ್ದ ಪೀಂಚಲು ಐತನ ಕಡೆ ನೋಡದೆಯೆ ಉತ್ತರವೀಯುತ್ತಿದ್ದಳು. +“ಇದೆಲ್ಲಾ ತಿನ್ನಾಕೆ ತಂದೀಯಲ್ಲಾ ಯಾರು ಕೊಟ್ಟಿದ್ದು?” +“ಯಾರೋ ಕೊಟ್ಟರು. +ಅದೆಲ್ಲ ಈಗ ಯಾಕೆ?” +“ಹೂ ಮುಡಿದಿದ್ದೀಯಾ?” +“ಮುಡಿಬಾರದಾ?” +“ನಾ ಊಟಾ ಮಾಡಾದಿಲ್ಲ!” ಐತನ ಧ್ವನಿಯಲ್ಲಿ ಸಿಟ್ಟು ಇಣುಕುತ್ತಿತ್ತು. +“ಅಯ್ಯೊ!ಯಾಕೆ?” ಇದ್ದಕ್ಕಿದ್ದಹಾಗೆ ತಾನು ಮಾಡುತ್ತಿದ್ದ ಕೆಲಸ ನಿಲ್ಲಿಸಿ, ಪೀಂಚಲು ಬೆಕ್ಕಸದಿಂದ ಐತನ ಕಡೆ ತಿರುಗಿ ಕೇಳಿದಳು. +‘ನಂಗೆ ಹೊಟ್ಟೆ ಹಸಿದಿಲ್ಲ’ ಐತ ಮೂಲೆಯಲ್ಲಿ ಹಾಕಿದ್ದ ಚಾಪೆಯ ಮೇಲೆ ಪೀಂಚಲು ಕಡೆಗೆ ಬೆನ್ನು ಹಾಕಿ ಮಲಗಿಯೆಬಿಟ್ಟನು. +ಹೆಣ್ಣಿಗೆ ಮೊದಲು ತುಸು ದಿಗಿಲೆ ಆಯಿತು. +ಓಡಿಹೋಗಿ ಅವನ ಪಕ್ಕದಲ್ಲಿ ಕುಳಿತು “ಸಿಟ್ಟು ಮಾಡಿಕೊಂಡಿರಾ?” ಎಂದಳು, ಐತ ಮಾತಾಡಲಿಲ್ಲ; + ತಿರುಗಲೂ ಇಲ್ಲ. +ಅವನು ಯಾವುದೊ ದುಃಖದಿಂದ ಬಿಕ್ಕುವಂತೆ ತೋರಿತು. +ಪೀಂಚಲು ಅವನ ಮುಖದ ಮೇಲೆ ಕೈಯಾಡಿಸಿದಾಗ ಅದು ಒದ್ದೆಯಾಯಿತು! +ಐತ ಅಳುತ್ತಿ‌ದ್ದಾನೆ. +ಯಾಕೆ?ತಾನೇನು ಮಾಡಿದೆ? +ಹೆಣ್ಣಿನಲ್ಲಿದ್ದ ಹೆಂಡತಿಯ ಕರುಳು ಮರುಗಿ ತಾಯ್ತತನಕ್ಕೇರಿತು. +ಐತನೊಂದು ರಚ್ಚೆ ಹಿಡಿದ ಅರಿಯದ ಮಗುವೊ ಎಂಬಂತೆ ಅವನನ್ನು ಮುದ್ದುಮಾಡಿ ಲಲ್ಲಯ್ಸಿದಳು. +ಎಂತಹ ವಿಚಾರಪೂರ್ವಕವಾದ ವಾದದಿಂದಲೂ ನಿವಾರಣೆಯಾಗದ ಸಂಕಟವನ್ನೂ ಪರಿಹರಿಸುವ ಕೈ ಮೈ ಸೋಂಕಿನಿಂದ ಅವನ ಚೇತನವನ್ನೆಲ್ಲ ಸಾಂತ್ವನಕ್ಕೆ ನೀವಿದಳು. + ಉಣಲೊಲ್ಲೆ ಎಂದಿದ್ದವನು, ಎದ್ದು ಕಡುಬು ತುಂದು ಬಡಿಸಿಟ್ಟಿದ್ದ ಹೊಂಬಾಳೆಯ ಮುಂದೆ ಕೂತನು! +ಅವಳೂ ಅವನಿಗೆ ಎದುರೆ ಹಾಳೆಯ ಮುಂದೆ ಕೂತಳು. +ಪಕ್ಕದಲ್ಲಿ ಬಾಳೆಯ ಕೀತಿನ ಮೇಲೆ ಬಡಿಸಿದ್ದ ಹೋಳಿಗೆಯನ್ನು ಕಂಡು ಐತ ಐಶ್ವರ್ಯವನ್ನು ಎಡವಿದ ದಟ್ಟದರಿದ್ರನಂತೆ ಹಿಗ್ಗಿ “ಇದು ಎಲ್ಲಿತ್ತೆ? +ಯಾರು ಕೊಟ್ಟರೆ? +ಹೋಳಿಗೆ!” ಆ ಕೊನೆಯ ಪದವನ್ನು ಸವಿದು ಉಚ್ಚರಿಸಿದನು. +ಪೀಂಚಲುಗೆ ನಗೆ ತಡೆಯಲಾಗಲಿಲ್ಲ: + ಈಗ ತಾನೆ ಊಟ ಮಾಡುವುದಿಲ್ಲ ಎಂದು ಹಟತೊಟ್ಟು ಮಲಗಿದ್ದ. +ಕಣ್ಣಿನ ತುದಿಗಳಲ್ಲಿ ಅತ್ತಿದ್ದ ಒದ್ದೆ ಇನ್ನೂ ಪೂರ್ತಿ ಆರಿಲ್ಲ. +ಈಗ ಅದನ್ನೆಲ್ಲ ಮರೆತು, ಅದೊಂದೂ ನಡದೇ ಇಲ್ಲ ಎನ್ನುವ ಹಾಗೆ, ಬಾಲಕನಂತೆ ಮಾತಿಗೆ ತೊಡಗಿದ್ದಾನೆ. +ಪೀಂಚಲುಗೆ ಅವನನ್ನು ಚೆನ್ನಾಗಿ  ಹಿಸುಕಿ ಮುದ್ದು ಮಾಡಿಬಿಡಬೇಕು ಎನ್ನಿಸಿತು…. +ಚೆನ್ನಾಗಿ ನಕ್ಕುಬಿಟ್ಟಳು. +“ಯಾಕೆ?ನಗುತ್ತೀಯಾ?” +“ಆ ಹೋಳಿಗೆ ಯಾರು ಕೊಟ್ಟಿದ್ದು ಗೊತ್ತಾ?” ತನ್ನನ್ನೇ ಪ್ರಶ್ನಾರ್ಥಕವಾಗಿ ನೋಡುತ್ತಿದ್ದ ಗಂಡನಿಗೆ ಪೀಂಚಲು ಹೇಳಿದಳು. + “ಹೂವಳ್ಳಿ ಚಿನ್ನಕ್ಕ!” + “ಹೂವಳ್ಳಿಗೆ ಹೋಗಿದ್ಯಾ?”ಪೀಂಚಲು ಹ್ಞೂ ಎಂದು ತಲೆದೂಗಿದಳು, ಮುಗುಳು ನಗುತ್ತಾ. +“ಯಾಕೆ?ಯಾರ ಸಂಗಡ ಹೋಗಿದ್ದೆ? +ಒಬ್ಬಳೆ ಹೋಗಿದ್ಯಾ?ಕಾಡಿನಲ್ಲಿ? +ಈ ಕತ್ತಲೇಲಿ?” +“ಅಮ್ಮ ಈವತ್ತು ಹಡೆದರಲ್ದಾ? +ನಿಂಗೆ ಗೊತ್ತಿಲ್ಲಾ?” +“ಹೌದೇನು? +ಹೆಣ್ಣೋ ಗಂಡೋ?” +“ಗಂಡು!… ನಾ ಯಾಕ ಹೂವಳ್ಳಿಗೆ ಹೋಗಿದ್ದೆ ಗೊತ್ತಾ? +ಆ ಬಾವಿಕೊಪ್ಪದ ನಾಗ ಹೆಗ್ಗಡ್ತಮ್ಮ ಅವರ ಸೊಸೆ ನಾಗಕ್ಕ ಇವತ್ತು ಮನೆಗೆ ಬಂದಿದ್ರಲ್ಲಾ…. +ಅವರಿಬ್ಬರೂ ಹೋಗಬೇಕಾಗಿತ್ತಂತೆ ಹೂವಳ್ಳಿಗೆ… ಅಮ್ಮನ ಬಾಣಂತನ ನೋಡಿಕೊಳ್ಳೋಕೆ, ದೊಡ್ಡಮ್ಮ ನಾಗಹೆಗ್ಗಡ್ತಮ್ಮನ್ನ ಇರಿ ಅಂದ್ರಂತೆ…. +ಆದರೆ ನಾಗಕ್ಕ ಹೂವಳ್ಳಿಗೆ ಹೋಗ್ತೀನಿ ಅಂದ್ರಂತೆ….” +“ಅದ್ಯಾಕೆ?ಹಾಂಗೆ ಕಣ್ಣು ಮಿಟತಕಿಸಿ ನೋಡ್ತೀಯಾ?” +ಐತನ ಪ್ರಶ್ನೆಗೆ ಉತ್ತರ ಹೇಳದೆ ಮುಂದುವರಿದಿದ್ದಳು ಪೀಂಚಲು. +“ನಾಗಕ್ಕನ್ನ ಹೂವಳ್ಳಿ ತನಕ ಕಳಿಸಿ ಬಾ ಅಂದ್ರು ನನಗೆ. +ಹೋಗಿದ್ದೆ… ಇವತ್ತೇನೋ ಹರಕೆ ಅಂತ ಹೂವಳ್ಳೀಲಿ. +ಹಂದಿ ಕಡಿದಿದ್ರು…. +ಹೂವಳ್ಳಿ ಚಿನ್ನಕ್ಕ ನನ್ನ ಕಂಡು ಎಷ್ಟು ಸಂತೋಷಪಟ್ರು ಅಂತೀಯಾ! +ಅವರೇ ಕೊಟ್ಟಿದ್ದು ಈ ಸೀರೆ, ಕಡಬು ತುಂಡು ಎಲ್ಲ…. +ಬೆಳಕು ಬೆಳಕು ಇದ್ದಾಗಲೆ ಬಂದಿದ್ದೆ ಮನೀಗೆ. +ದೊಡ್ಡಮ್ಮ ಎನೇನೊ ಕೆಲಸ ಹೇಳಿದ್ರು. +ಮಾಡಿಕೊಟ್ಟು ಬಂದೆ. +ಅದಕ್ಕೇ ಹೊತ್ತಾಗಿದ್ದು…. +ಆ ಅನ್ನ ಈ ಉಪ್ಪಿನಕಾಯಿ ಖಾರ ಜೀರಿಗೆ ಮೆಣಸಿನಕಾಯಿ ಹಾಕಿದ್ದು. +ಆಮ್ಯಾಲೆ ಲಬಲಬ ಅಂತ ಬಾಯಿ ಹುಯಿಕೊಂಡೀಯಾ? …. ಹೇಳೀನಿ…. ” ಎನ್ನಿತ್ತಿದ್ದವಳು ತಟ್ಟಕ್ಕನೆ ಆಲಿಸಿ “ಹೋ! +ಸೇರಿಗಾರ್ರ ಬಿಡಾರದಲ್ಲಿ ಏನೋ ಬೊಬ್ಬೆ ಆಗ್ತಾ ಅದೆ!” ಎಂದಳು. +ಐತನೂ ಆಲಿಸಿ “ಆ ಚೀಂಕ್ರ ಮಾರಾಯ ಇವತ್ತು ಚೆನ್ನಾಗಿ ಶರಾಬು ಕುಡಿದು ಬಂದಿದ್ದಾನಲ್ಲಾ? +ದೇಯಿಅಕ್ಕನ ಗತಿ ಮುಟ್ಟಿಸುತ್ತಾನೆ ಅಂತ ಕಾಣ್ತದೆ” ಎಂದನು, ಸಂಕ್ಷೇಪವಾಗಿ ನಡೆದದ್ದನ್ನೆಲ್ಲ ಹೇಳಿ. +ಪೀಂಚಲುಗೆ ಅಲ್ಲಿಗೆ ಹೋಗಿ ಬರುವ ಮನಸ್ಸು. +ಆದರೆ ಐತ ಕುಡಿದು ಮತ್ತೇರಿದ್ದ ಚೀಂಕ್ರನನ್ನು ನೆನೆದು, ಅವಳನ್ನು ತಡೆದನು. +ಚೀಂಕ್ರನ ಬಿಡಾರದಲ್ಲಿ ಆ ಬೊಬ್ಬೆ ಆಸಾಧಾರಣವಾದದ್ದೇನಾಗಿರಲಿಲ್ಲ. +ಎಷ್ಟೋ ಸಾರಿ ಅಕ್ಕಪಕ್ಕದ ಬಿಡಾರದವರು ಹೋಗಿ ದೇಯಿನ್ನು  ರಕ್ಷಿಸಿದ್ದೂ ಉಂಟು. +ಆಗಾಗ ನಡೆಯುತ್ತಲೆ ಇರುವಂತೆ ಇವತ್ತೂ ಏನೋ ಗಲಾಟೆ ಎಂದು ಇಬ್ಬರೂ ಊಟಮಾಡತೊಡಗಿದರು. +ಉಂಡು ಪೂರೈಸುವಷ್ಟರಲ್ಲಿ ಐತನ ಮನಸ್ಸಿನಲ್ಲಿ ಕವಿಯತೊಡಗಿದ್ದ ಎಲ್ಲ ಮುಗಿಲುಗಳು ದಿಕ್ಕಾಪಾಲಾಗಿ ಚೆದರಿಹೋಗಿ, ಅವನ ಹೃದಯ ತಿಳಿಬಾನಾಗಿತ್ತು. +ಪೀಂಚಲು ಪರವಾಗಿ ಅವನ ಪ್ರೀತಿ ಉಕ್ಕುವಂತಿತ್ತು. +ಅವಳನ್ನೆ ನೋಡಿದನು ಎವೆಯಿಕ್ಕದೆ, ಪ್ರಶಂಸನೀಯ ದೃಷ್ಟಿಯಿಂದ. +ಇಂಥ ಚೆಲುವೆಯರೂ ಇನ್ನಿದ್ದಾರೆಯೆ? +ನಾನೆಂಥ ಪುಣ್ಯವಂತ ಎಂದುಕೊಂಡಿತು ತಣಿದ ಅವನ ಜೀವ. +ಬಿಚ್ಚಿ ಹಾಕಿದ್ದ ಓಲೆಚಾಪೆಯ ಮೇಲೆ ಮಲಗಲು ಹವಣಿಸುತ್ತಿದ್ದವನು “ತಲೆದಿಂಬಿನ ಕಲ್ಲು ಎಲ್ಲಿ ಹೋಯಿತಪ್ಪಾ?” ಎಂದುಕೊಂಡನು. +ಪೀಂಚಲು ಗೋಡೆ ಬದಿ ಬಿದ್ದಿದ್ದ ಒಂದು ಎರಡಡಿ ಉದ್ದದ ಹಾಸುಗಲ್ಲನ್ನು ಕಷ್ಟಪಟ್ಟು ಎತ್ತಿ ತಂದುಕೊಟ್ಟಳು. +ಅದನ್ನು ಚಾಪೆಯ ಅಡಿಹಾಕಿ, ಚಾಪೆಯ ಮೇಲೆ ತನ್ನ ಕಂಬಳಿ ಹಾಕಿದನು. +ಮುಚ್ಚಿದ್ದ ತಟ್ಟಿ ಬಾಗಿಲಿನ ಬಿರುಕಗಳೆ ಕಿಟಕಿಯ ಕೆಲಸವನ್ನೂ ಬಹಿಸಿಕೊಳ್ಳಬೇಕಾಗಿದ್ದ ಆ ಜೋಪಡಿಯ ಒಳಭಾಗವನ್ನೆಲ್ಲ ನೋಡುತ್ತಾ “ನಿನ್ನೆ ಅಂಥಾ ಭಾರಿಮಳೆ ಬಂದರೂ ಇವತ್ತು ಏನು ಸೆಕೆ? +ಈ ನುಸಿ ಕಾಟ ಬೇರೆ! +ಆ ತೆಂಗಿನೆಣ್ಣೆ ಕುಡಿಕೆ ಎಲ್ಲಿ?ಕೊಡ್ತೀಯಾ?” ಎಂದು ಮೈಮೇಲೆ ಸದ್ದಾಗುವಂತೆ ಅಂಗೈಯಿಂದ ಹೊಡೆದುಕೊಂಡನು, ನುಸಿ ಕುಳಿಸತಿದ್ದೆಡೆಗೆ. +ಪೀಂಚಲು ಕುಡಿಕೆ ತಂದುಕೊಟ್ಟಳು. +ಐತ ಕೌಪೀನ ವಿನಾ ಸಂಪೂರ್ಣ ನಗ್ನನಾಗಿ ಕುಳಿತು ಮೈಗೆ ತೆಂಗಿನೆಣ್ಣೆ ಸವರಿಕೊಂಡನು. +ಬಡತನದ್ದಾದರೂ, ಅಷ್ಟೇನು ಸುಪುಷ್ಟವಾಗಿರದಿದ್ದರೂ, ನಗ್ನತೆಯಲ್ಲಿಯೆ ಹೆಚ್ಚು ಸುಲಕ್ಷಣವಾಗಿ, ನಿತ್ಯ ಪರಿಚಿತವಾಗಿದ್ದ ತೆಂಗಿನೆಣ್ಣೆಯ ಕಂಪನ್ನು ಸೂಸುತ್ತಿದ್ದ ಅವನ ಶರೀರದ ರೂಪು ಹುಡುಗಿಯ ಕಣ್ಣಿಗೆ ಆಪ್ಯಾಯಮಾನವಾಗಿತ್ತು. +“ಅಭ್ಯಂಗಕ್ಕೆ ಎಣ್ಣೆ ಹಚ್ಚಿಕೊಂಡ್ಹಾಂಗೆ ಬಡುಕೊಳ್ತಿದ್ದೀ ಯಲ್ಲಾ! +ನುಸಿ ಕಚ್ಚದಿದ್ಹಾಂಗೆ ಒಂದು ಚೂರು ಸವರಿಕೊಂಡರೆ ಸಾಲದೆ?” ಎಂದು ಭರ್ತ್ಸನೆ ಮಾಡುವವಳಂತೆ ಹತ್ತಿರಕ್ಕೆ ಓಡಿಬಂದು, ಎಣ್ಣೆ ಕುಡಿಕೆಯನ್ನು ದೂರ ಸರಿಸಿ, ಅವನ ಪಕ್ಕದ್ದಲ್ಲಿ ಕುಳಿತು, ಅವನ  ಮೈಯೆನ್ನೆಲ್ಲ ನೀವಿ ಸವರತೊಡಗಿದಳು. +“ಅಯ್ಯೊ ಅಯ್ಯೊ ಅಯ್ಯೊ ಎಣ್ಣೆ ಮುಳುಕ ಆಗಿಬಿಟ್ಟೀಯಲ್ಲಾ!” ಎಂದು ಅಲ್ಲಲ್ಲಿಯೆ ಹೆಚ್ಚಾಗಿ ಸವರಿದ ಮೈ ಭಾಗದ ಎಣ್ಣೆಯನ್ನೆಲ್ಲ ಕೀಸಿ ಬಳೀದು ತೆಗೆದು, ಇನ್ನೂ ಎಣ್ಣೆ ಹಚ್ಚದಿದ್ದ ಭಾಗಗಳಿಗೆ ತಿಕ್ಕಿದಳು. +ಗಂಡನ ಬರಿ  ಮೈ ಕಂಡು ಅವಳಲ್ಲಿ ಉಕ್ಕಿ ಬಂದಿದ್ದ ಮೋಹಪ್ರೇಮಗಳಿಗೆ ಅಭಿವ್ಯಕ್ತಿ ಕೊಡುವುದೇ ಮುಖ್ಯ ಆಶೆಯಾಗಿತ್ತು ಆ ಎಣ್ಣೆ ತಿಕ್ಕುವ ನೆವಕ್ಕೆ ಅವನು ‘ಸಾಕೆ!’ ‘ಬೇಡವೆ!’ ‘ಜಿಬ್ಬಳಿಕೆ ಆಗ್ತದೆಯೆ!’ ಎಂದೆಷ್ಟು ಹೇಳಿದರೂ ಬಿಡದೆ ತೋಳು, ಎದೆ, ಬೆನ್ನು, ಕೊರಳು, ಕೆನ್ನೆ, ಗಲ್ಲ, ತೊಡೆ, ಕಾಲು ಎಲ್ಲವನ್ನೂ ನೀವಿ ನೀವಿ ಸವಿದೇಬಿಟ್ಟಳು! +ಐತನಿಗೂ ಆ ತೈಲಸಂಮರ್ದನ ಕಣ್ಣುಮುಚ್ಚಿಕೊಳ್ಳುವಷ್ಟರ ಮಟ್ಟಿಗೆ ಸುಖಕರವಾಗಿಯೆ ಇತ್ತು! +ನಡುನಡುವೆ ಅವನೂ, ತನ್ನ ಎಣ್ಣೆಯನ್ನೆ ಬಳಿದು ತೆಗೆದು ಅವಳ  ಮೈಗೂ ಹಚ್ಚುವ ನೆವದಿಂದ ಅವಳ ಮೃದುತ್ವವನ್ನೂ ಮುಟ್ಟಿಸವಿವ ಶೃಂಗಾರ ಚೇಷ್ಟೆಗೆ ಕೈಹಾಕಿದ್ದನು! +“ಅಲೇಸಾಲೇಸು!” ಇದ್ದಕ್ಕಿದ್ದ ಹಾಗೆ ಎಣ್ಣೆ ಉಜ್ಜುವುದನ್ನು ನಿಲ್ಲಿಸಿ ಪೀಂಚಲು ಕಿವಿಗೊಟ್ಟಳು. +“ಹುಲಿ ಕೂಗ್ತದೆ! …. ಹುಲಿಕಲ್ ನೆತ್ತೀಲಿರಬೇಕು!” ಐತನೆಂದನು ಪಿಸುದನಿಯಲ್ಲಿ, ತಾನು ಗಟ್ಟಿಯಾಗಿ ಮಾತಾಡಿದರೆ ಎಲ್ಲಿ ಹುಲಿಗೆ ಕೇಳಿಸಿ ಬಿಡುತ್ತದೆಯೊ ಎಂಬಂತೆ. +ಕಾಡೆನ್ನೆಲ್ಲ ನಡುಗಿಸುವಂತೆ ಹೆಬ್ಬುಲಿಯ ಗರ್ಜನೆಯ ಭಯಂಕರವಾಗಿ ಅಲೆ ಅಲೆ ಅಲೆ ಅಲೆಯುತಿತ್ತು. +ಮತ್ತೆ ಉನ್ಮತ್ತ ರಭಸದಿಂದ ಅನೇಕ ದೊಡ್ಡ ಜಂತುಗಳು ಹಳುವಿನಲ್ಲಿ ನುಗ್ಗಿ ಓಡಿದ ಸದ್ದಾಯಿತು. +“ದೊಡ್ಡಿನ ಹಿಂಡು ಅಂತಾ ಕಾಣ್ತದೆ! +ಹುಲಿ ಕೂಗಿದ್ದಕ್ಕೆ ಹೆದರಿ ಓಡ್ತಾ ಇವೆಯೊ ಎನೊ?” ಎಂದ ಐತ, ಫಕ್ಕನೆ ಮತ್ತೇನನ್ನೊ ನೆನಪಿಗೆ ತಂದುಕೊಂಡಂತೆ, “ಅಲ್ಲಾ? +ಆ ಗುತ್ತಿ ನಾವು ಕಮ್ಮಾರಸಾಲೇಲಿ ದೊಂದಿ ಮಾಡಿಕೊಂಡು ಹೋದ, ಈ ಕತ್ತಲೇಲಿ ಈ ಕಾಡಿನಾಗೆ, ಸಿಂಬಾವಿಗೆ ಹೋಗ್ತೀನಿ ಅಂತಾ ಹೋದನಲ್ಲಾ? +ಏನಿರಬೇಕು ಅವನ ಎದೆ!… ಆ ‘ಹುಲಿಕಲ್ ನೆತ್ತಿ ‘, ‘ಬೆತ್ತದ ಸರ’ ಎಲ್ಲ ದಾಟಿಕೊಂಡು ಹೋಗಬೇಕಲ್ಲಾ?” +“ಅವನ ನಾಯಿ ಇರ್ತದಲ್ಲಾ ಯಾವಾಗ್ಲೂ ಅವನ ಜೊತೇಲಿ! +ಮತ್ತೇನು ಹೆದರಿಕೆ ಅವನಿಗೆ?” ಎಂದಳು ಪೀಂಚಲು. +ತನ್ನಂತಹ ಒಂದು ಹೆಣ್ಣೂ ಅವನ ಸಂಗಡ ಹೋಗುತ್ತಿದೆ ಎಂಬ ಸಂಗತಿ ತಿಳಿದಿದ್ದರೆ ಅವಳು ಏನು  ಹೇಳುತ್ತಿದ್ದಳೊ! +ಹಣತೆ ಆರಿತು. +ಬತ್ತಿಯ ತುದಿಯ ಕನರುವಾಸನೆ ತುಂಬಿತು. +ಸೆಕೆಯ ದೆಸೆಯಿಂದ ಹೊದ್ದುಕೊಳ್ಳದೆ ಮಲಗಿದ್ದ ಐತನ ಒತ್ತಿನಲ್ಲಿಯೆ ಮಲಗಿದ್ದಳು ಪೀಂಚಲು. +ಐತನ ಬೆತ್ತಲೆಯ ಮೈಗೆ, ಸೆಕೆಯನ್ನೆಲ್ಲ ಪರಿಹರಿಸುವಂತೆ, ಮತ್ತೊಂದು ಬೆತ್ತೆಲೆಯ ಮೈಯೆ ಸೋಂಕಿದಂತಾಯಿತು! +ಎರಡು ಬಿಸಿಯ ಮೈಸೇರಿ ಎಂತಹ ತಂಪು ಹುಟ್ಟತ್ತದೆ? +ಅಚ್ಚರಿ, ಆನಂದ, ಐತನಿಗೆ! +ಇದೇನು?ಸೀರೆ ಉಟ್ಟಿದ್ದಳಲ್ಲಾ ಪೀಂಚಲು? +ಹೊಸ ಸೀರೆ! ಇಧೇನು ಇಬ್ಬರಿಗೂ ಒಟ್ಟಿಗೆ ಹೊದಿಸುತ್ತಾಳೊ? …. ಅಲ್ಲ; ಕಂಬಳಿಯಲ್ಲ! +ತೆಳ್ಳಗಿದೆ, ನುಣ್ಣಗಿದೆ, ತಣ್ಣಗಿದೆ, ಆ ಹೊಸ ಸೀರೆ! +ಅವಳು ಉಟ್ಟಿದ್ದ ಸೀರೆಯು ಈಗ ಇಬ್ಬರಿಗೂ ಒಟ್ಟಿಗೆ ಹೊದೆಯುವ ಶಾಲಾಗಿದೆ! +ಸೀರೆಯೆ ಶಾಲಾಗಿ, ಹೊದಿಕೆಯೆ ಲಕ್ಷಣ ದ್ವಿಗುಣಿತವಾಗಿದೆ! +ಅದಕ್ಕೇ ಮತ್ತೆ? +ತನ್ನ ಬತ್ತಲೆಗೆ ಅಪ್ಪಿದ್ದು ಅವಳ ಬತ್ತಲೆ! +ಆದರೇನು?ಕವಿದಿಲ್ಲವೆ ಕಗ್ಗತ್ತಲೆ? +ಕುರುಡುಗತ್ತಲೆ? +ತಾನು ಬಿಡಾರಕ್ಕೆ ಅಷ್ಟು ಹೊತ್ತಾಗಿ ಬಂದದ್ದು ಏಕೆ ಎಂದು ಪೀಂಚಲು ತನ್ನ ಗಂಡ ಐತನಿಗೆ ಒಪ್ಪಿಸಿದ್ದ ವರದಿಯಲ್ಲಿ ನಿಜ ಸುಳ್ಳು ಎರಡೂ ಹೆಣೆದುಕೊಂಡಿದ್ದುವು. +ನಿಜಾಂಶವೆ ಅರೆಗಿಂತಲೂ ಮಿಗಿಲಾಗಿತ್ತು ಎನ್ನಬಹುದಾಗಿದ್ದರೂ ಗೋಪ್ಯರಕ್ಷಣೆಯಲ್ಲಿ ಸುಳ್ಳಿನ ಅಂಶದ ಕೈಯೆ ಮೇಲಾಗಿತ್ತು ಮುಕೊಂದಯ್ಯನಿಗೆ ಮಾತುಕೊಟ್ಟಿದ್ದಂತೆ ಪೀಂಚಲು ತನ್ನ ಗಂಡನ ಬಾಲಕ ಸಹಜವಾದ ಬಾಯಾಳಿತನಕ್ಕೆ ಅಂಜಿ ಕೆಲವು ಸಂಗತಿಗಳನ್ನು ಮರೆಮಾಚಿದ್ದಳು. +ಅವಳು ತಿಳಿಸಿದ್ದಂತೆ, ಮುಕುಂದಯ್ಯನ ಅತ್ತಿಗೆ ಹೆತ್ತ ಕಾರಣಕ್ಕಾಗಿ ನಾಗತ್ತೆ ಕೋಣೂರಿನಲ್ಲಿಯೆ ಉಳಿದಿರಲಿಲ್ಲ. +ನಾಗತ್ತೆ ನಾಗಕ್ಕ ಇಬ್ಬರೂ ಸಾಯಂಕಾಲ ಹೂವಳ್ಳಿಗೆ  ಹೋಗುತ್ತಿದ್ದ  ಪೀಂಚಲು ಅವರಿಬ್ಬರನ್ನೂ ದಾರಿಯಲ್ಲಿ ಸಂಧಿಸಿದ್ದಳಷ್ಟೆ. +ಕಾಗಿನಹಳ್ಳಿ ಅಮ್ಮ ಅವರ ಹೆಸರು ದಾನಮ್ಮ ಎಂದಿದ್ದರೂ ಎಲ್ಲರೂ ಅವರನ್ನು ಅವರ ತವರೂರಿನ ಹೆಸರಿನಿಂದಲೆ ಕರೆಯುತ್ತಿದ್ದದು ಆನಾಡಿನ ರೂಢಿ-ನಾಗತ್ತೆಯನ್ನು ಒಂದೆರಡು ದಿನ ಇದ್ದು ಹೋಗಿ ಎಂದು ಕೇಳಿಕೊಂಡಿದ್ದೇನೊ ನಿಜವೆ. +ಆದರೆ ನಾಗತ್ತೆಗೆ ಆ ಸಾಯಾಂಕಾಲವೆ ತಾನೂ ತನ್ನ ಸೊಸೆಯೂ ಹೂವಳ್ಳಿಯಲ್ಲಿ ಇರಲೇಬೇಕಾಗಿತ್ತು. +ಅಲ್ಲಿ ನಡೆಯುತ್ತಿದ್ದ ದೆಯ್ಯದ ಹರಕೆಯಲ್ಲಿ ಅತ್ತೆ ಸೊಸೆಯರಿಬ್ಬರೂ ವಹಿಸಬೇಕಾಗಿದ್ದ ಪಾತ್ರ  ಗುರುತರವಾದುದಾಗಿತ್ತು. +ವಾಸ್ತವಾಂಶವೆಂದರೆ ಆ ಅತ್ತೆ ಸೊಸೆಯರ ಸಲುವಾಗಿಯೆ ಹೂವಳ್ಳಿಯ ವೆಂಕಟಪ್ಪನಾಯಕರು ದೆಯ್ಯದ ಹರಕೆಯ ಸೀಗಿನಿಂದ ಔತಣದ ಏರ್ಪಾಡು ಮಾಡಿದ್ದರು. +ಆದರೆ ಆ ದೆಯ್ಯದ  ಹರಕೆಗೆ ಹತ್ತಿರದ ಸಂಬಂಧಿಗಳ ಮನೆಗಳನ್ನೆ ‘ಕರೆ’ದಿರಲಿಲ್ಲ. +ಹರಕೆಗೆಂದು ಕಡಿಯಲು, ಹಳೆಮನೆಗೆ ಖುದ್ದು ವೆಂಕಟಪ್ಪನಾಯಕರೆ ಹೋಗಿ, ಹಂದಿಯನ್ನು ಹೊರಿಸಿಕೊಂಡು ಬಂದಿದ್ದರೂ ಸೋಗೆಯ ಮನೆವರಿಗಾಗಲಿ ಹೆಂಚಿನಮನೆಯವರಿಗಾಗಲಿ ಆ ವಿಷಯವನ್ನೆ ತಿಳಿಸಿರಲಿಲ್ಲ. +ಇನ್ನು ಕರೆಯುವುದು ಎಲ್ಲಿಂದ ಬಂತು? +ಕೋಣೂರು, ಬೆಟ್ಟಳ್ಳಿ, ಸಿಂಬಾವಿ, ಕಾಗಿನಹಳ್ಳಿ, ಬಾವಿಕೊಪ್ಪದ ಮನೆಗಳಿಗೂ ‘ಕರೆ’ ಕಳಿಸಿರಲಿಲ್ಲ. +ಆದರೆ ಹೂವಳ್ಳಿಯ ಹತ್ತಿರವೆ ಸುತ್ತಮುತ್ತ ಇದ್ದ ನಾಲ್ಕಾರು ಗೇಣಿಗುತ್ತಿಗೆ  ಮಾಡುವ ಸಣ್ಣ ಪುಟ್ಟ ಒಕ್ಕಲುಗಳಿಗೆ ಮಾತ್ರ ಹರಕೆಗೆ ಬರಲು ಹೇಳಿದ್ದರು. +ಹಂದಿಯ ಹಸಿಗೆ ಮಾಡಿದ ಹಳೆಪೈಕದವರಂತೂ ಅನಿವಾರ್ಯ ಅತಿಥಿಗಳಷ್ಷೆ! +ಇನ್ನು, ಬಡು ಬಿದ್ದಲ್ಲಿ ಹದ್ದು ಕಾಗೆ ಹಾರಾಡಿಯೆ ಹಾರಾಡುವಂತೆ, ಹಳೆಮನೆಯ ಹೊಲೆಯರು, ಬೆಟ್ಟಳ್ಳಿ ಬೇಲರು, ಕೋಣೂರಿನ ಗಟ್ಟದವರು ಎಡಗೈಯವರು ಬಲಗೈಯವರು ಅವರೂ ಅಂತಾ ಹತ್ತಾರು ಜನ ಸೇರಿ ದೆಯ್ಯದ ಹರಕೆಯ ಗಲಾಟೆಗೆ ನೆರೆ ಬಂದ ಹಾಗಿತ್ತು. +ಯಾರ ಅಪ್ರಯತ್ನ ಗಮನಕ್ಕಾದರೂ ಬರುವಂತಿದ್ದ ಇನ್ನೊಂದು ವಿಷಯವೆಂದರೆ, ವೆಂಕಟಣ್ಣ ಧರಿಸಿದ್ದ ಬಟ್ಟೆಬರೆ. +ಆ ದಿನ ಬೆಳಗ್ಗೆ ಹಳೆಮನೆಯಲ್ಲಿ ‘ಕುಂಟನ ಹುಣ್ಣಿನ ಹೂವಳ್ಳಿ ವೆಂಕಣ್ಣ’ ನಾಗಿದ್ದವನು ಅಂದೆ ಸಾಯಂಕಾಲ ಹೂವಳ್ಳಿಯಲ್ಲಿ ವೇಷಭೂಷಣ ಧರಿಸಿ ‘ಯಜಮಾನರು ವೆಂಕಪ್ಪನಾಯಕರು’ ಆಗಿಬಿಟ್ಟಿದ್ದನು! +ಹೆಮ್ಮೀಸೆಯ, ಬೃಹದ್ಗಾತ್ರದ, ದೀರ್ಘೋನ್ನತ ‘ಸೈಂಧವ’ ವ್ಯಕ್ತಿ ಶರಟಿನಂತಹ  ಒಂದು ಹೊಸ ಒಳಂಗಿ ಹಾಕಿಕೊಂಡು, ಮೊಣಕಾಲಿನ ಕೆಳಗೆ ತುಸುವೆ ನೇತಾಡುವಂತೆ ಕೆಂಪಂಚಿನ ಒಂದು ಹೊಸ ಪಂಚೆಯನ್ನು ಕತ್ತರಿಹಾಕಿ ಕಚ್ಚೆ ಉಟ್ಟಿದ್ದನು. +ಕೈಗೆ ಚಿನ್ನದ ಕಡಗ, ಬೆರಳಿಗೆ ಹರಳುಂಗುರ, ಕಿವಿಗೆ ಹರಳೊಂಟಿ ಅಲಂಕಾರವಾಗಿದ್ದುವು. +ಹಣೆಗೆ ಅತ್ತಿತ್ತ ಬಿಳಿಯ ನಾಮಗಳೂ, ನಡುವೆ ಕೆಂಪು ನಾಮವೂ ಏರಿ, ನಾಯಕರ ವೀರ ವೈಷ್ಣವತ್ವನ್ನು ಸಾರುತ್ತಿದ್ದವು. +ಹಂದಿ ತಿನ್ನುವುದಕ್ಕಾಗಲಿ, ಕಳ್ಳು ಹೆಂಡ ಸಾರಾಯಿ ಕುಡಿಯುವುದಕ್ಕಾಗಲಿ, ಆ ವೈಷ್ಣವತ್ವದಿಂದ ಯಾವ ಅಡಚಣೆಯೂ ಇರಲಿಲ್ಲ. +ಆ ದೃಷ್ಟಿಯಿಂದ ವೆಂಕಪ್ಪನಾಯಕರನ್ನು ವಾಮಾಚಾರ ತಾಂತ್ರಿಕ ಶಾಕ್ತರೂ ಮಿರಿಸುತ್ತಿರಲಿಲ್ಲ ಎನ್ನಬಹುದು! +ಹಂದಿಯ ಹಸಿಗೆಗಾಗಿ ಬಂದು, ಔತಣಕ್ಕಾಗಿ ಕಾಯುತ್ತಾ ಕುಳಿತು, ಎಲೆಯಡಿಕೆ ಹಾಕಿ ಕಾಲ ನೂಂಕುತ್ತಿದ್ದ ಹಳೆಪೈಕದವರಲ್ಲಿ ಒಬ್ಬ ವೆಂಕಟಣ್ಣನ  ಆ ‘ದರೋಬಸ್ತ’ನ್ನು ನಿರ್ದೇಶಿಸಿ ಪಕ್ಕದವನನ್ನು ಕೇಳಿದನು “ಏನೋ ಇವತ್ತು ನಾಯಕರು ಒಳ್ಳೇ ಮದೋಳಿಗನ ಹಾಂಗೆ ಬಟ್ಟೆಗಿಟ್ಟೆ ಹಾಕಿಕೊಂಡಿದ್ದಾರಲ್ಲಾ?”ಪಕ್ಕದವನು ಹುಳ್ಳಗೆ ಮುಸುಗುನಗೆ ನಕ್ಕು, ಕಣ್ಣುಮಿಟುಕಿಸಿದ. + “ ಮತ್ತೆ?ಒಂದು ತರದಾಗೆ ಮದೋಳಿಗನೆ!” +“ಹಾಂಗಂದ್ರೆ?” +ಇನ್ನೊಬ್ಬ ಅವನ ಕಿವಿಯ ಹತ್ತಿರ ಪಿಸುಗುಟ್ಟಿದ್ದನು: “ಏನೇನೋ ಹೇಳ್ತಾರಪ್ಪಾ! +ಆ ಬಾವಿಕೊಪ್ಪದ ನಾಗಹೆಗ್ಗಡ್ತಮ್ಮನ ಸೊಸೆ ನಾಗಕ್ಕನ್ನ ಇವರು ಕೂಡಿಕೆ ಮಾಡಿಕೊಳ್ತಾರೆ ಅಂತಾ.” +“ಹೌದ್ಹೌದು; ಬೈಗು ಬೈಗು ಆಗ್ತಿದ್ಹಾಂಗೆ ಸೊಸೇನ ಕರಕೊಂಡು ಬಂದಿದ್ದನ್ನ ನೋಡ್ದೆ ಅತ್ತೆ.” +“ಯಾರೋ?ಆ ಬಿಲ್ಲೋರ ಹುಡುಗಿ ಐತನ ಹೆಂಡ್ತಿ ಸಂಗಡ ಮಾತಾಡ್ತಾ ಬಂದ್ರಲ್ಲಾ ಅವರೇನೊ?” +“ಅವರೇ ಕಣೋ, ಆ ನಾಯಕರ ಮಗಳು ಚಿನ್ನಕ್ಕೋರ್ನ ಗಲ್ಲಮುಟ್ಟಿ ನಟಿಗೆ ತೆಗೆದ್ರಲ್ಲಾ ಅವರೇ!” +“ಆಗ್ಲೆ ಏನು ಅಕ್ಕರೆ, ಮಗಳಮೇಲೆ? +ಇನ್ನೂ ಚಿಕ್ಕಮ್ಮ ಆಗಾಕೆ ಮೊದ್ಲೆ?”ನಾಗತ್ತೆ ಮತ್ತು ವೆಂಕಟಣ್ಣ ಇಬ್ಬರೂ ಸೇರಿ ತಮಗಿಬ್ಬರಿಗಲ್ಲದೆ ಜಗತ್ತಿನಲ್ಲಿ ಇನ್ನಾರಿಗೂ ಗೊತ್ತಾಗಬಾರದು ಎಂದು ಮಾಡಿದ್ದ ಮಸಲತ್ತು, ಅದು ಹೇಗೊ ಎಂತೊ, ಗುಸುಗುಸು ಕಿವಿಮಾತಾಗಿ ಅನೇಕರ ಗೋಪ್ಯ ಸಂವಾದ ವಿಷಯವಾಗಿಬಿಟ್ಟಿತ್ತು. +ಆದರೆ ಯಾರೊಬ್ಬರೂ ಬಾಯಿಬಿಟ್ಟು ಆಡುತ್ತಿರಲಿಲ್ಲ. +ಎಲ್ಲರ ಕಣ್ಣನೊಳಗೂ ಏನೊ ಒಂದು ಸಂಚಿನಂತೆ ಮಿಂಚುತಿತ್ತೆ ಹೊರತೂ ಯಾರಲ್ಲಿಯೂ ಅದು ಸುಸ್ಪಷ್ಟತೆ ಪಡೆದಿರಲಿಲ್ಲ. +ಅದದರ ಸುಳಿವನ್ನು ಒಂದಿನಿಂತೂ ಅರಿಯದೆ ಸಂಪೂರ್ಣ ಮುಗ್ಧರಾಗಿದ್ದವರೆಂದದರೆ ಇಬ್ಬರೆ: ಚಿನ್ನಮ್ಮ ಮತ್ತು ನಾಗಕ್ಕ. + ಕೂಡಿಕೆಯಾಗುವವನ ಮಗಳು ಮತ್ತು ಕೂಡಿಕೆಯಾಗಲಿರುವ ಹೆಣ್ಣು! +ಹೋದ ವರುಷ ಗದ್ದೆಕುಯ್ಲು ಅಡಕೆಸುಲಿತಗಳ ಸಮಯದಲ್ಲಿ ವೆಂಕಟಣ್ಣನಿಗೆ ನೆರವಾಗುವ ನೆವದಲ್ಲಿ ನಾಗುತ್ತೆ ತನ್ನ ಸೊಸೆಯನ್ನು ವೆಂಕಟಣ್ಣನ ಪರಿಚಯಕ್ಕೆ  ತಕ್ಕಮಟ್ಟಿಗೆ ಪಳಗಿಸಿದ್ದೇನೆ ಎಂದು ಭಾವಿಸಿದ್ದಳು. +ನಾಗಕ್ಕನೂ ಸಂತೋಷ ಚಿತ್ತೆಯಾಗಿ  ಎಲ್ಲರೊಡನೊ ವ್ಯವಹರಿಸಿದ್ದಳು. +ಅದಕ್ಕೆ  ಮುಖ್ಯಕಾರಣ ವೆಂಕಟಣ್ಣನಾಗಿರಲಿಲ್ಲ, ಅವನ ಮಗಳು ಚಿನ್ನಮ್ಮನಾಗಿದ್ದಳು. +ನಾಗಕ್ಕ ಚಿನ್ನಮ್ಮರಲ್ಲಿ, ಜನ್ಮಾಂತರದ ಪ್ರೀತಿ ಸಂಬಂಧವೊ ಎಂಬಂತೆ, ಇನ್ನಿಲ್ಲದ ಅಕ್ಕರೆ ಬೆಳೆದಿತ್ತು. +ಒಟ್ಟಿಗೆ ಮಲಗಿ, ಒಟ್ಟಿಗೆ ಎದ್ದು, ಒಟ್ಟಿಗೆ ಉಂಡು, ಒಟ್ಟಿಗೆ ತಿರುಗಿ, ಒಟ್ಟಿಗೆ ಮಾತಾಡಿ, ಒಟ್ಟಿಗೆಕೆಲಸಮಾಡಿ, ಒಡಹುಟ್ಟುಗಳಿಗೂ ಅಸಾಧ್ಯವೆಂವಂತೆ ಒಬ್ಬರನ್ನೊಬ್ಬರು ಸೆಟ್ಟುಹಾಕಿಕೊಂಡಿದ್ದರು. +ಒಂದು ಕಾರಣಕ್ಕಾಗಿ ಚಿನ್ನಮ್ಮನ ಅಜ್ಜಿಗೂ ಮತ್ತೊಂದು  ಕಾರಣಕ್ಕಾಗಿ  ಚಿನ್ನಮ್ಮನ ತಂದೆಗೂ ಅವರಿಬ್ಬರ ಪರಸ್ಪರ ಮೈತ್ರಿ  ಅಚ್ಚುಮೆಚ್ಚಾಗಿತ್ತು. + ಆದ್ದರಿಂದ ಅಜ್ಜಿ ಅಪ್ಪಯ್ಯ ಸಂವರ್ಧನೆಯಲ್ಲಿ ವೆಂಕಟಣ್ಣ ತನ್ನ ಸಾಲವನ್ನೂ ಲೆಕ್ಕಿಸದೆ, ಒಡವೆ ವಸ್ತುಗಳನ್ನು ತಂದುಕೊಡುವಾಗಲೆಲ್ಲ ಮಗಳಿಗೆ ಕೊಟ್ಟಂತೆಯೆ ನಾಗಕ್ಕಗೂ ಕೊಟ್ಟಿದ್ದನು, ಒಮ್ಮೊಮ್ಮೆ ನಾಗಕ್ಕಗೂ ತುಂಬ ಸಂಕೋಚವಾಗುಷ್ಟರ ಮಟ್ಟಿಗೆ! +ಬೇಡ  ಎಂದರೆ ಯಾರ  ಮನಸ್ಸಿಗೆ ನೋವಾಗುವುದೋ ಎಂದು ಅಳುಕಿ, ಆ ಒಡವೆ  ವಸ್ತುಗಳಲ್ಲಿ ಕೆಲವನ್ನು, ತನ್ನ ಬಳಿ ಅದನ್ನೆಲ್ಲ ಭದ್ರವಾಗಿ ಇಡಲು ಪಿಟಾರಿ ಇಲ್ಲ ಎಂಬ ನೆವ ಹೇಳಿ, ಚಿನ್ನಮ್ಮನ ಸಂದುಕದ ಅರೆ ಪಾಲು ಜಾಗ ನಾಗಕ್ಕನದೇ ಆಗಿಬಿಟ್ಟಿತ್ತು. +ವೆಂಕಟಣ್ಣ ಯಾವ ಯಾವ ಕಡೆಗಳಿಂದ ತನಗೆ ಸಾಲ ದೊರೆಯಬಹುದೊ ಆ ಎಲ್ಲ ಕಡೆಗಳಿಂದಲೂ ಸಾಲ ತಂದೂ ಅವನಿಗೆ ಸಾಲ ಎಷ್ಟಿದೆ ಎಂಬುದೂ ಗೊತ್ತಿರಲಿಲ್ಲ. +ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರಲ್ಲಿ, ಬೆಟ್ಟಳ್ಳಿ ಕಲ್ಲಯ್ಯಗೌಡರಲ್ಲಿ, ಕಲ್ಲೂರು ಮಂಜಭಟ್ಟರಲ್ಲಿ, ಸಿಂಬಾವಿ ಭರಮೈಯ ಹೆಗ್ಗಡೆಯವರಲ್ಲಿ, ಅಲ್ಲದೆ ಸ್ವಲ್ಪ ಸ್ವಲ್ಪ ಎಂದು ಸಣ್ಣಪುಟ್ಟ ಗೇಣಿದಾರರಲ್ಲಿಯೂ ಸಾಲ ತೆಗೆದಿದ್ದನು. +ಪಿತ್ರಾರ್ಜಿತವಾಗಿ ಬಂದಿದ್ದ ಚಿರ ಸ್ವತ್ತುಗಳೆಲ್ಲ ದೀಡಾಗಿದ್ದವು. +ಕೆಲವು ಸಾರಿ ಒಂದೇ ತೋಟವನ್ನೊ ಗದ್ದೆಯನ್ನೊ ಇಬ್ಬರಿಗೂ ಬರೆದುಕೊಡುವುದಕ್ಕೂ ಹೇಸಿರಲಿಲ್ಲ ಅದನ್ನೇನು ಮನಃಪೂರ್ವಕವಾಗಿ ವ್ಯೂಹಪ್ರಕಾರ ವಂಚನೆಮಾಡಬೇಕೆಂದು ಮಾಡಿರಲಿಲ್ಲ. +ಅವನಿಗೆ ಗೊತ್ತಿದ್ದರೆ ತಾನೆ ಯಾರುಯಾರಿಗೆ ಯಾವಯಾವ ಜಮೀನು ದೀಡುಮಾಡಿದ್ದೇನೆ ಎಂಬುದು? +ದುರ್ಗದ ಪಾಳೆಯಗಾರರಲ್ಲಿ ದಂಡನಾಯಕರಾಗಿದ್ದರೆ  ವಂಶದವನು ಎಂಬ ಆ ಹಳೆಯ ನೆನಪಿಗೆ  ಗೌರವಕ್ಕಾಗಿ ಅನೇಕರು ಸಾಲಕೊಟ್ಟಿದ್ದರು, ಇವತ್ತಲ್ಲಾ ನಾಳೆ ಅದನ್ನು ಬಡ್ಡಿಯೊಡನೆ ತೀರಿಸುತ್ತಾನೆ ಎಂಬ ಧೈರ್ಯದಿಂದ, ಆದರೆ ಕಲ್ಲೂರು ಸಾಹುಕಾರ ಮಂಜಭಟ್ಟರಂತಹ ಬುದ್ಧಿವಂತ ಬ್ರಾಹ್ಮಣರು  ಜಮೀನನ್ನು  ಲಪಟಾಯಿಸಿಕೊಳ್ಳುವುದಕ್ಕೆ ಒಂದು  ನೆವವಾದರೂ ಇರಲಿ ಎಂದೇ ಮಂದಬುದ್ಧಿಯ ಗಡರು ನಾಯಕರು ಹೆಗ್ಗಡೆಗಳಿಗೆ  ಸಾಲಕೊಡುತ್ತಿದ್ದರು. +ಹಾಗಲ್ಲದಿದ್ದಲ್ಲಿ, ಕಲ್ಲೂರು ದೇವಸ್ಥಾನಕ್ಕೆ ದೊಡ್ಡ ಜಮೀನುದಾರನೂ ಶ್ರೀಮಂತನೂ ಎಂದು ಹೆಸರು  ಪಡೆಯಲು ಹೇಗೆ ಸಾದ್ಯವಾಗುತ್ತಿತ್ತು? +ತೊಟ್ಟು ಜನಿವಾರ, ಉಟ್ಟ ಪಾಣಿಪಂಚೆ, ಬಹುಶಃ ಕೈಲೊಂದು ಪಂಚಪಾತ್ರೆ-ಇಷ್ಟೆ ಆಸ್ತಿಯಾಗಿ ಬಂದಿದ್ದ  ಬಡ ಹಾರುವನು ಈಗ ದೊಡ್ಡಚೌಕಿಮನೆಯ ಯಜಮಾನನಾಗಿ ದರ್ಬಾರು ನಡೆಸಲು ಹೇಗೆ ಸಾಧ್ಯವಾಗುತಿತ್ತು? +ಗೌಡ ಹೆಗ್ಗಡೆ ನಾಯಕರುಗಳನ್ನೆಲ್ಲ ತನ್ನ ಮನೆಯ ಅಂಗಳದ  ಕೆಳಜಗಲಿಯಲ್ಲಿ ನಿಲ್ಲಿಸಿಯೊ ನೆಲದಮೇಲೆ ಜೂರಿಸಿಯೊ ಅಥವಾ ಹೆಚ್ಚು ಎಂದರೆ ಚಾಪೆಯ ದಾಕ್ಷಿಣ್ಯಕ್ಕೆ ಏರಿಸಿಯೊ ಆಜ್ಙೆಮಾಡಿ, ತಪ್ಪಿದರೆ ಶಿಕ್ಷೆ ವಿಧಿಸುತ್ತೇನೆ ಎಂದು ಗರ್ಜಿಸಲು ಹೇಗೆ ಸಾಧ್ಯವಾಗುತಿತ್ತು? +ಮೊದಮೊದಲು ‘ಏನು ವೆಂಕಟಪ್ಪನಾಯಕರೆ?’ ಎಂದು ಸಂಬೋಧಿಸುತ್ತಿದ್ದವನು ಬರಬರುತ್ತಾ ‘ಏನು ವೆಂಕಟಣ್ಣ?’ ಎಂದು ಸಲಿಗೆಯಿಂದ ಕರೆಯುವಂತಾಗಿ ಈಗ ‘ಏನು ಬಂದೆಯೊ, ಎಂಕ್ಟ?’ ಎಂದು ಪ್ರಶ್ನಿಸಲು ಹೇಗೆ ಸಾಧ್ಯವಾಗುತಿತ್ತು? +ಅಷ್ಟಾದರೂ ಆ ಬೃಹದ್‌ ಗಾತ್ರದ ದಂಡನಾಯಕರೂ ವಂಶಸ್ಥನಿಗೆ ಅದೊಂದೂ ಅರ್ಥವಾಗುತ್ತಿರಲಿಲ್ಲವೋ? +ಅಥವಾ ಅರ್ಥವಾದರೂ ಅವರ ಸಾಲಗಾರನಾಗಿ ಇನ್ನೂ ಸಾಲ ಬೇಡುವ ದೈನ್ಯಕ್ಕೆವಶನಾಗಿ, ತನ್ನ ಚೈತನ್ಯದ ಪೌರುಷತ್ವವನ್ನೆ ಕಳೆದು ಕೊಂಡಿದ್ದನೋ? +ಹಲ್ಲು ಕಿರಿದು, ಬೆಪ್ಪುನಗೆ ನಕ್ಕು, ಸೊಂಟ ಬಗ್ಗಿಸಿ, ಕೈಮುಗಿದು, “ಏನೂ ಇಲ್ಲ, ಭಟ್ಟರೆ; +ಸುಮ್ಮನೆ ಹಾಂಗೆ ತಿರುಗಾಡ್ತಾ ಬಂದೆ?” ಎಂದು ರಾಗವಾಗಿ, ಬೇಸರ ತರುವಷ್ಟರಮಟ್ಟಿಗೆ ನಿಧಾನವಾಗಿ, ಮೂರ್ಖ ಉತ್ತರ ಕೊಡುವುದು ರೂಢಿಯಾಗಿ ಹೋಗಿತ್ತು ಹೂವಳ್ಳಿ ವೆಂಕಟಣ್ಣಗೆ. +ಈ ಸಾರಿಯೂ ಅಂತರಂಗದಲ್ಲಿ ಕೂಡಿಕೆಯಾಗಿ ಬಹಿರಂಗದಲ್ಲಿ ದೆಯ್ಯದ ಹರಕೆಯ ರೂಪುವೆತ್ತಿದ್ದ ಆ ‘ವಿಶೇಷ’ಕ್ಕೆ ಕಲ್ಲೂರು ಮಂಜಭಟ್ಟರಿಂದಲೆ ಸಾಲ ತಂದಿದ್ದನು. +ಆದರೆ ಈ ಸಾರಿ ನಾಗಕ್ಕನನ್ನು ಸೀರುಡಿಕೆ ಮಾಡಿಕೊಳ್ಳುವ ಮೋಹವೇಗದ ಪ್ರವಾಹಕ್ಕೆ ಸಿಕ್ಕಿ ಪಿತ್ರಾಜಿತ ಆಸ್ತಿಯನ್ನೆಲ್ಲ ತೇಲಿಬಿಟ್ಟಿದ್ದನು. +ಅದುವರೆಗೆ ಸ್ವಂತ ಗದ್ದೆ ತೋಟಗಳನ್ನು ಸಾಗುವಳೆ ಹೆಸರಿಗಾದರೂ ಜಮೀನುದಾರನಾಗಿದ್ದವನು ಈಗ ಕಲ್ಲೂರು ಸಾಹುಕಾರ ಮಂಜಭಟ್ಟರ ಒಕ್ಕಲ ಸ್ಥಾನಕ್ಕೆ ಇಳಿದಿದ್ದನು. +ಆದರೆ ಈ ವಿಷಯವನ್ನು ಭಟ್ಟರೂ ನಾಯಕರೂ ಒಟ್ಟಾಗಿಯೆ ಗುಟ್ಟಾಗಿಟ್ಟಿದ್ದರು, ವೆಂಕಟಣ್ಣನಿಗೆ ಸಾಲಕ್ಕೊಟ್ಟಿದ್ದ ಇತರರಿಗೆ ಯಾರಿಗೂ ತಿಳಿಯದಿರಲಿ ಎಂದು. +ಹೆಂಡತಿ ಸತ್ತು ಇಷ್ಟು ವರ್ಷಗಳಾದಮೇಲೆ, ಅನೇಕ ಕಡೆಗಳಲ್ಲಿ ತನ್ನನ್ನು ಕೂಡಿಕೆ ಮಾಡಿಕೊಡಲು ತನ್ನ ಅತ್ತೆ ಮಾಡಿದ್ದ ಪ್ರಯತ್ನಗಳನ್ನೆಲ್ಲ ವಿಫಲಗೊಳಿಸಿದ್ದ ಹೆಣ್ಣನ್ನು, ಆಸ್ತಿಯನ್ನೆಲ್ಲ ಬೆಲೆತೆತ್ತು, ಸೀರುಡಿಕೆಯಾಗಲು ಕಾತರನಾದದ್ದು ಏಕೆ? + ಯಾರಾದರೂ ಕೇಳಿದ್ದರೆ, ಬಹುಶಃ ವೆಂಕಟಣ್ಣ ಹೇಳುತ್ತಿದ್ದ ‘ಗಂಡು ಸಂತಾನಕ್ಕಾಗಿ!’ + ‘ಮದುವೆಯ ವಯಸ್ಸಿಗೆ ಬಂದ ಹೆಣ್ಣುಮಗಳು ಚಿನ್ನಮ್ಮ ಇದ್ದಾಳೆ. +ಯಾರಾದರೂ ಒಬ್ಬ ಯೋಗ್ಯ ಹುಡುಗನನ್ನು ಮನೆ ಅಳಿಯತನಕ್ಕೆ ತಂದು, ಮಗಳನ್ನು ಅವನಿಗೆ ಮದುವೆಮಾಡಿದರೆ  ಆಗದೇ?’ ಎಂದೇನೂ ಕೆಲವರು ಸಲಹೆ  ಮಾಡಿದ್ದರು. +ಆದರೆ ಅದು ತನ್ನ ಸ್ವಂತ ಸುಖಕ್ಕೆ ಸಾಧನವಾದೀತೆ? +ಸೀರುಡಿಕೆಯಾಗಿ ಗಂಡು ಮಗುವನ್ನು ಪಡೆದರೆ ಎರಡೂ ಕೈಗೂಡುವುದಿಲ್ಲವೆ: +ಸ್ವಂತ ಸುಖ ಮತ್ತು ವಂಶೋದ್ಧಾರ? +ಅದೂ ಅಲ್ಲದೆ, ‘ಮನೇ ಅಳಿಯ ಮನೇ ತೊಳಿಯ!’ ಗಾದೆ ಬೇರೆ ಇದೆಯಲ್ಲ? +ಆದರೆ ಈಗ ಆದದ್ದು-ಮೂಗು ತೆತ್ತು ಕನ್ನಡಿ ಕೊಂಡಂತೆ. +ವೆಂಕಟಣ್ಣ ಪಡೆಯಬಹುದಾದ ಪುತ್ರಸಂತಾನಕ್ಕೆ ಲಭಿಸಲಿರುವ ಆಸ್ತಿ ಎರಡೆ: +ದಾರಿದ್ಯ್ರ ಮತ್ತು ಸಾಲ! +ಬೈಗಾದ ಹಾಗೆಲ್ಲ  ಆ ದಿನ ವೆಂಟಕಣ್ಣನಿಗೆ ಏನೋ ಆನಂದದ ನಿರೀಕ್ಷೆ. +ನಾಗತ್ತೆ ಮತ್ತು ನಾಗಕ್ಕ, ದೆಯ್ಯದ ಹರಕೆಗೆ ಬರುವ ಇತರ ನೆಂಟರಂತೆ, ಬರುವುದನ್ನೆ ಕಾಯುತ್ತಿದ್ದ. +ಆದರೆ ಬೈಗು ಕಪ್ಪಾಗತೊಡಗಿದ್ದರೂ ಅವರು ಇನ್ನೂ ಬರದಿದ್ದುದನ್ನು ಕಂಡು ಅವನಿಗೆ ದಿಗಿಲುಬಡಿದಂತಾಯಿತು. +ಇತರ ನೆಂಟರೂಡನೆ ಮಾತುಕತೆ ಆಡುತ್ತಿದ್ದರೂ ಯಾವುದಾದರೂ ನೆವದಿಂದ ಮತ್ತೆ ಮತ್ತೆ ಹೆಬ್ಬಾಗಿಲಿಗೆ ಹೋಗಿ ನೋಡಿ, ಮನೆಗೆ ಬಂದ ನೆಂಟತಿಯರಿಗೆ ಉಡುಗೂರೆಯಾಗಿ ಕೂಡಲು ತಂದಿದ್ದ ಸೀರೆಗಳ ವಿಚಾರ ಸಲಹೆ ಕೂಡುವ ನೆವದಿಂದ ನಾಗತ್ತೆ ನಾಗಕ್ಕರು  ಬಂದರೇ ಇಲ್ಲವೇ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದನು. +ಕಡೆಗೊಮ್ಮೆ ಅವನೇ ಕಂಡನು, ಕವಿಯುತ್ತಿದ್ದ ಕಪ್ಪಿನಲ್ಲಿ ಮಸುಗು ಮಸುಗಾಗಿ ಬರುತ್ತಿದ್ದ  ಮೂವರು ಸ್ತ್ರೀ ಆಕೃತಿಗಳನ್ನು. + ಅವರು ಹತ್ತಿರಕ್ಕೆ ಬಂದಾಗ ನಾಗತ್ತೆ ನಾಗಕ್ಕರನ್ನು ಗುರುತಿಸಿ, ಸಂಪ್ರದಾಯದಂತೆ “ಬಂದ್ರೇ?ಒಳಗೆ ಹೋಗಿ! …. + ಕೈಕಾಲು ತೊಳಕೊಳ್ಳಾಕೆ ನೀರು ಕೊಡೊ, ಏ ರಾಮ!” ಎಂದು ಅದಕ್ಕಾಗಿ ನಿಂತಿದ್ದ ಆಳಿಗೆ ಕೂಗಿ ಹೇಳಿದನು ಸಂಭ್ರಮ ಸ್ವರದಲ್ಲಿ. +ಗಟ್ಟದ ತಗ್ಗಿನವರಂತೆ ಸೀರೆಯುಟ್ಟು, ನಾಗತ್ತೆ ನಾಗಕ್ಕರೊಡನೆ ಒಳಗೆಹೋಗದೆ ಅಲ್ಲಿಯೆ ನಿಂತಿದ್ದ ಮೂರನೆಯ ಸ್ತ್ರೀ ಆಕೃತಿಗೆ “ಯಾರೆ ನೀನು? +ಮುಟ್ಟಾಳೇನೆ? …. ಹಳೆಪಕದವಳೊ ಸೆಟ್ಟರವಳೊ? +… ಸೆಟ್ಟರವಳಾದರೆ ಹೋಗು ಒಳಗೆ” ಎಂದು  ಹರ್ಷ ಚಿತ್ತನಾಗಿದ್ದ ವೆಂಕಟಣ್ಣ ಆದರಪೂರ್ವಕವಾಗಿಯೆ ಹೇಳಿದನು. +ಆ   ಆಕೃತಿ “ನಾನು….ನಾನು ….” ಎಂದು ತಡೆತಡೆದು, ಏನು ಹೇಳಬೇಕೆಂಬುದನ್ನು ಯೋಚಿಸಿದರೂ ಅದು ಸರಿಯಾಗಿ ಹೊಳೆಯದೆ “ಪೀಂಚಲು!” ಎಂದಿತು. +ವೆಂಕಟಣ್ಣ ಅದನ್ನು ಕೇಳಿ ನಕ್ಕು “ಪೀಂಚಲು! +ಎಂಥದೇ ಅದು ಪೀಂಚಲು?” ಎಂದು ಕೇಳಿದನು. +“ನನ್ನ ಹೆಸರು, ಅಯ್ಯಾ!” ಪೀಂಚಲು ತಲೆಬಾಗಿ ನೆಲ ನೋಡುತ್ತಿದ್ದಳು. +“ಸೈ ಬಿಡು!ಪೀಂಚಲು? +ಒಳ್ಳೆ ಹೆಸರೇ!” ಎಂದು ಹಾಸ್ಯವಾಡಿ “ಎಲ್ಲಿಯವಳೇ ನೀನು? +ಯಾತರವಳೆ? +… ಅವರ ಸಂಗಡ ಬಂದವಳೇನೇ?” +“ನಾನು ಬಿಲ್ಲವರೋಳು…. +ಕೋಣೂರಿನಿಂದ ಬಂದೀನಿ…. ಸಣ್ಣಗೌಡ್ರು…. ” ಎಂದುವಳು, ತಟಕ್ಕನೆ ನಾಲಗೆ ಕಚ್ಚಿಕೊಂಡು, ಮಾತು ನಿಲ್ಲಿಸಿದಳು. +ಬೆಳಕಿನಲ್ಲಾಗಿದ್ದರೆ ಅವಳ ಮುಖಭಂಗಿ ಅವಳಿಗೆ ದ್ರೋಹವೆಸಗುತ್ತಿತ್ತೋ ಏನೊ? +ಆದರೆ ರಾತ್ರಿಯ ರಕ್ಷೆ ಕವಿದಿತ್ತು. +“ಯಾರೇ ಮುಕುಂದನೇನೆ? +ಎನಾದ್ರೂ ಹೇಳಿ ಕಳ್ಸಿದಾನೊ? +ಕೊಟ್ಟು ಕಳ್ಸಿದಾನೊ?” +“ಅಲ್ಲಾ ಆ…ದೊಡ್ಡಮ್ಮ ಚಿನ್ನಕ್ಕಗೇನೋ” ಎಂದವಳು ಮಾತು ನಿಲ್ಲಿಸಿಯೆಬಿಟ್ಟಳು. +ವೆಂಕಟಣ್ಣ ಏನು ಕೇಳಿದರೂ ತುಟಿಪಿಟಕ್ಕೆನ್ನದೆ ಹೋದಳು. +“ಅಯ್ಯೋ ಹಾಳು ಹುಡುಗೀ! +… ಹಿತ್ತಲು ಕಡೆಗೆ ಹೋಗಿ ಕೇಳು, ನಿನ್ನ ಚಿನ್ನಕ್ಕ ಸಿಕ್ತಾರೆ” ಎಂದು ಹೇಳಿ, ವೆಂಕಟಣ್ಣ ಒಳಜಗಲಿಗೆ   ಹೋದನು. +ಪೀಂಚಲು ಕಣ, ಕರೆಹಟ್ಟಿ, ಸದೆಕೊಟ್ಟಿಗೆಗಳನ್ನು ಬಳಸಿ ಹಿತ್ತಲು ಕಡೆಯ ಬಾಗಿಲಿಗೆ ಹೋದಳು. +ಒಳಗೆ ಹಿಲಾಲು ದೀಪಬೆಳಕಿನಲ್ಲಿ ಹಿಟ್ಟು ಕುಟ್ಟುವವರು, ಕಡಬು ಮಾಡುವವರು, ಮಾಂಸ ಬೇಯಿಸುವವರು, ಬಳ್ಳೆ ಬಾಡಿಸುವವರು, ಹೆಂಡ ಗಾಳಿಸುವವರು, ಕಳ್ಳು ಕಾಯಿಸುವವರು, ಕರೆಯುವ, ಮಾತನಾಡುವ ಕೂಗುವ, ಬೈಯುವ, ಗದ್ದಲವೋ ಗದ್ದಲದ ನಡುವೆ ಕೆಲಸಗಳಲ್ಲಿ ತೊಡಗಿದ್ದುದು ಕಂಡುಬಂದಿತು. +ಹುರಿದ ಮತ್ತು ಬೇಯಿಸಿದ ಮಾಂಸದ ವಾಸನೆ ಕೆಳ್ಳುಹೆಂಡದ ಕಂಪಿನೊಡನೆ ಬೆರೆತು ಅವಳ ಮೂಗಿಗೆ ಹಿತಕರವಾಗಿತ್ತು. +ಸ್ವಲ್ಪಹೊತ್ತು ಕಾದು, ಸಮಯನೋಡಿ, ತನ್ನ ಸಮೀಪಕ್ಕೆ ಬಂದ ಸುಬ್ಬಿಯನ್ನು ಕೂಗಿ ಕರೆದು, ಚಿನ್ನಮ್ಮಗೆ ತಾನು ಬಂದಿರುವುದನ್ನು ಹೇಳಿ ಕಳಿಸಿದಳು. +ಒಳಗೆ ಚಿನ್ನಮ್ಮ ತನ್ನ ಕೋಣೆಯಲ್ಲಿ ತಾನೂ ಸೀರೆ ಉಟ್ಟು, ನಾಗಕ್ಕಗೂ ಹೊಸ ಸೀರೆ ಉಡಿಸುವ ಪ್ರಯತ್ನದಲ್ಲಿದ್ದಳು. +ತೆರೆದಿದ್ದ ಸಂದುಕದ ಪಕ್ಕದಲ್ಲಿಯೆ ಇಬ್ಬರ ನಿಂತಿದ್ದರು. +ಚಿನ್ನಮ್ಮ ಹಣತೆಯನ್ನು ಸಂದುಕದ ಒಳಗೆ  ಬೆಳಕುಬೀಳುವಂತೆ ಮತ್ತೆ ಮತ್ತೆ ಎತ್ತಿ ಹಿಡಿಯುತ್ತಾ ಒಂದೊಂದೆ ಸೀರೆಯನ್ನು ಎತ್ತಿ ಎತ್ತಿ ತೋರಿಸುತ್ತಿದ್ದಳು. +ನಾಗಕ್ಕ ‘ನಾಳೆ ಉಟ್ಟುಕೊಳ್ತೀನಕ್ಕಾ, ಇವತ್ತು ಬ್ಯಾಡ” ಎನ್ನುತ್ತಿದ್ದಳು. +ಅರಲ್ಲಿ ಸುಬ್ಬಿ ಬಂದು ಪೀಂಚಲು ಬಂದಿದ್ದುದನ್ನು ತಿಳಿಸಿದಳು. +ನಾಗಕ್ಕ “ಹೌದು ಕಣೇ, ನಂಗೆ  ಮರಹೋಯ್ತು ನಿಂಗೆ ಹೇಳಕ್ಕೆ. +ನಮ್ಮ ಸಂಗಾಡನೆ ಬಂದ್ಲು, ದಾರೀಲಿ ಸಿಕ್ಕಿ” ಎಂದುಳು. +“ಹಾಂಗಾರೆ ಈಗ ಬಂದುಬಿಡ್ತೀನಿ. +ನೀ ಉಟ್ಟುಕೊಳ್ತಿರು ಸೀರೇನ.” ಎಂದು ಹೇಳಿ ಚಿನ್ನಮ್ಮ ಓಡಿದಳು, ಹಿತ್ತಲು ಕಡೆಯ ಬಾಗಿಲಿಗೆ. +ಕೆಲಸಮಾಡುತ್ತಿದ್ದರೂ ಅವಳನ್ನು ಕಂಡು ಬೇಗಬೇಗನೆ ಸರಿದು ದಾರಿ ಬಿಡುತ್ತಿದ್ದು ಜನಗಳ ನಡುನಡುವೆ ನುಸಿದು ಅವಸರ ಅವಸರವಾಗಿ ತನ್ನ ಕಡೆಗೆ ಬರುತ್ತಿದ್ದ ಚಿನ್ನಮ್ಮನನ್ನು ದೊರದಿಂದಲೂ ನೋಡುತ್ತಾ ಪೀಂಚಲು ಹಿಗ್ಗಿ ಹಲ್ಲುಬಿಡುತ್ತಾ ನಿಂತಿದ್ದಳು. +ಬಾಲ್ಯದಿಂದಲೂ ಪರಿಚಿತೆಯಾಗಿ, ಕೋಣೂರಿಗೆ ಬಂದಾಗಲೆಲ್ಲಾ ಮುಕುಂದಯ್ಯನೊಡನೆ ತಾನೂ ಐತನೂ ಗದ್ದೆ ತೋಟ ಕಾಡುಗಳಲ್ಲಿ ತಿರುಗುತ್ತಿದ್ದಾಗಲೆಲ್ಲ  ತಮ್ಮೊಡನೆ ಸರಿಸಮನಾಗಿ ಸಾಹಸಗಳಲ್ಲಿ ಭಾಗಿಯಾಗುತ್ತಿದ್ದ ‘ಚಿನ್ನಕ್ಕ’ನನ್ನು ಕಂಡು, ಏನು ಹೇಳುವುದಕ್ಕೂ ತೋರದ ಸಂತಸದಿಂದ ಪೀಂಚಲು ಕಣ್ಣರಳಿಸಿ ಹಲ್ಲುಬಿಟ್ಟು, ನಗುತ್ತಾ ನಿಂತಿದ್ದಳು. +ಆ ಸಂತೋಷದಲ್ಲಿ ನೂರಾರು ನೆನಪುಗಳು ಹಾಸುಹೊಕ್ಕಾಗಿದ್ದುವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. +ಚಿನ್ನಮ್ಮನೂ ಅವಳನ್ನು ಸ್ವಾಗತಿಸುವಂತೆ ಹಸನ್ಮುಖಿಯಾಗಿ, ತಾನೇ ಮೊದಲು ಮಾತನಾಡಿಸಿದಳು. +“ಏನೇ ಪೀಂಚಿಲಿ, ಎಷ್ಟು ಹೊತ್ತಾಯ್ತೆ ಬಂದು? …. ಐತ ಎಲ್ಲೇ…. +ಮುಂಚೆ ಕಡೆ ಅಂಗಳದಾಗೆ ಇದಾನಾ? +ಕರೆಯೆ ಅಂವನ್ನೊ!”ತನ್ನನ್ನು ಬಿಟ್ಟು ತನ್ನ ಗಂಡ ಒಂದು ಕ್ಷಣವೊ ಇರುವುದಿಲ್ಲ ಎಂಬ ಪ್ರತೀತಯನ್ನು ನೆನಪಿಗೆ ತಂದುಕೊಡುವ ಆ ಪ್ರಶ್ನೆಮಾಲಿಕೆಗೆ ನಾಚಿಕೆ ಪಟ್ಟುಕೊಂಡು ತುಟಿ ಹಿಳಯಿಸಿ ನಗುತ್ತಾ ಪೀಂಚಲು ಹೇಳಿದಳು. +“ಇಲ್ಲ, ಚನ್ನಕ್ಕ, ಅವರು ಬರಲಿಲ್ಲ. +ನಾನೊಬ್ಬಳ ಬಂದೆ…. +ಅವರು ಬೆಟ್ಟಳ್ಳಿಗೆ ಪಾದ್ರೀ ಬೀಸೆಕಲ್ಲು ಸವಾರಿ ನೋಡಾಕೆ ಹೋದ್ರು.” +ಅವಳು ತನ್ನ ಗಂಡನನ್ನು ಕುರಿತು ಪ್ರಯೋಗಿಸಿದೆ ಆ ಬಹು  ವಚನವನ್ನು ಗ್ರಹಿಸಿ, ಇಂಗಿತವಾಗಿ ನಗೆಬೀರಿ ಚಿನ್ನಮ್ಮ ವಿನೋದವಾಡಿದಳು. +“ನೀ ಎಷ್ಟು ಬದಲಾಯಿಸಿ ಬಿಟ್ಟಿದ್ದೀಯೆ, ಪೀಂಚಲಿ? +ಗುಂಡುಗುಂಡಗೆ ಆಗಿಬಿಟ್ಟಿದ್ದೀಯಾ! ”…. +“ನೀವೂ ಎಷ್ಟು ಚಂದಾಗಿ ಕಾಣ್ತೀರಿ? +ಎಷ್ಟು ದೊಡ್ಡಕ್ಕೆ ಆಗಿಬಿಟ್ಟೀರಿ!”ತಾಯಿಯ ಬಣ್ಣ ಚೆಲುವುಗಳನ್ನೂ ತಂದೆಯ ದೇಹದಾರ್ಢ್ಯವನ್ನೂ ತಾರುಣ್ಯೋಚಿತ ಪ್ರಮಾಣದಲ್ಲಿ ಪಡೆದು ಶೋಭಿಸುತ್ತಿದ್ದಳು ಚಿನ್ನಮ್ಮ-ಎಂಬುದನ್ನು ತನ್ನ ರೊಕ್ಷ ರೀತಿಯಲ್ಲಿ ಹೇಳಿದ್ದಳು ಪೀಂಚಲು. +ಅವಳು ಗಟ್ಟದ ಕೆಳಗಿನವರು ಕಟ್ಟುವ ರೀತಿಯಲ್ಲಿ ಕಟ್ಟಿದ್ದ ತನ್ನ ಸೊಂಟದ ಮಡಿಲಿನಿಂದ ಏನೋ ಒಂದು  ಹಸುರೆಲೆಯ ಪೊಟ್ಟಣವನ್ನು ತೆಗೆದು ನೀಡಿದಳು. +“ಏನೇ ಅದು?” ಚಿನ್ನಮ್ಮನ ದನಿಯಲ್ಲಿ ರಹಸ್ಯದೊಡನೆ ಕುತೂಹಲ ಸ್ಪರ್ಧಿಸುವಂತಿತ್ತು. +“ಕಲ್ಲು ಸಂಪಗೆ ಹಣ್ಣು!” +“ಯಾರು ಕೊಟ್ಟಿದ್ದೆ?” ತನಗೆ ಬೇಕಾಗಿದ್ದವರ ಹೆಸರರು ಹೇಳಿಯೆ ಹೇಳುತ್ತಾಳೆ ಪೀಂಚಲು ಎಂದು ಹಾರೈಸಿ ನಿರೀಕ್ಷಿಸಿದ್ದಳು ಚಿನ್ನಮ್ಮ. +ಅದನ್ನರಿತ ಪೀಂಚಲು ಹುಳ್ಳುಗೆ  ನಗುತ್ತಾ “ ನಾನೆ ತಂದಿದ್ದು” ಎಂದಳು. +“ಗಾಳಿಗೆ ಬಿದ್ದಿದ್ದನ್ನ ಹೆರಕಿಕೊಂಡು ಬಂದ್ಯಾ?” +“ಇಲ್ಲ, ಕುಯ್ದಿದ್ದು.” +“ಮರಾ ಹತ್ತಿ?” +“ಹ್ಞೂ!” ಪೀಂಚಲು ಸ್ವರದಲ್ಲಿ ಸವಾಲಿತ್ತು. +“ಈಗಲೂ ನೀ ಮರ ಹತ್ತುತ್ತೀಯೇನೆ?” +“ಹತ್ತಬಾರದೇನು?” +“ಥೂ!ಮದುವೆ ಆದಮೇಲೂ ಹತ್ತಿದರೆ, ದಿಂಡೆಬಸವಿ ಅನ್ನುತ್ತಾರಲ್ಲೇ!” +“ನಾ ಯಾಕೆ ಹತ್ತಲಿ? +ಹತ್ತೋರು ಹತ್ತಿ ಕುಯ್ದಿದ್ದು!” +“ಹಾಂಗನ್ನು ಮತ್ತೆ…. +ಐತ ಕುಯ್ದಿದ್ದು?” +“ಅಲ್ಲ; ನನ್ನನ್ನ ನಿಮ್ಮ  ಹತ್ರಕ್ಕೆ ಯಾರು ಕಳಿಸಿದಾರೋ ಅವರೇ ಕುಯ್ದಿದ್ದು!” ರಾಗಪೂರ್ಣವಾಗಿತ್ತು ಪೀಂಚಲು ವಾಣಿ. +“ನೀನು ಬಹಳ ಕಿಲಾಡಿ ಕಣೇ!” +“ಯಾಕೆ?ನೀವು ಅವರ  ಹೆಸರು ಹೇಳಿ, ಕೇಳಬಾರದಾ!”ಹೆಸರು ಹೇಳಿದರೆ ಏನು ಮಹಾ ಎಂದು ಪೀಂಚಲುಗೆ ತನ್ನ ನಿರ್ಲಕ್ಷತೆಯನ್ನು ಪ್ರದರ್ಶಿಸಿ ಅವಳನ್ನು ಪರಾಭವಗೊಳಿಸುವ ಠೀವಿಯಿಂದ ಚಿನ್ನಮ್ಮ ಕೇಳಿಯೆಬಿಟ್ಟಳು “ಮುಕುಂದಬಾವನೇನೆ? +“ಹ್ಕಿಕ್ಹಿಕ್ಹಿಕ್ಹಿ!”  ಪೀಂಚಲು ನಕ್ಕಳಲ್ಲದೆ ಬೇರೆ ಏನನ್ನೂ ಹೇಳದೆ, ಪೊಟ್ಟಣವನ್ನ  ಚಿನ್ನಮ್ಮನ  ಒತ್ತಿಕೊಟ್ಟಳು. +ಚಿನ್ನಮ್ಮ ಆ ಅಲ್ಪವನ್ನೂ ಅತ್ಯಂತ ಮಮತೆಯಿಂದ ಅಂಜಲಿಬದ್ದಳಾಗಿ ತೆಗೆದುಕೊಂಡು ತನ್ನ ಮಡಿಲಲ್ಲಿ ಅವಿಸಿಟ್ಟುಕೊಂಡಳು. +“ನಿಂಗೊಂದು ಸೀರೆ ತಂದುಕೊಂಡ್ತೀನೆ. +ಇಲ್ಲೇ ಕತ್ತಲೆ ಮರೇಲಿ ಉಟ್ಟಕೊ. +ಆಮ್ಯಾಲೆ ಅವುಂತ್ಲ ಉಂಡುಕೊಂಡು ಹೋಗಬದೌಂತೆ….” +“ಇಲ್ಲ, ಚಿನ್ನಕ್ಕಾ” ಗಂಭೀರವಾಣಿಯಿಂದ ಹೇಳುತ್ತಿದ್ದಳು ಪೀಂಚಲು “ನಾ ಈಗಲೆ ಹೋಗಬೇಕು; + ಅವರು-ಅವರು ಬೆಟ್ಟಳ್ಳಿಯಿಂದ ಬರಾದರೊಳಗೇ ನಾ ಬಿಡಾರದಾಗಿರಬೇಕು… ” + “ಯಾಕೆ?ಏನವಸರಾನೆ ನಿನಗೆ? +ಗಂಡನಂತೆ ಹೆಂಡತಿ ಆಗಿಬಿಟ್ಟಿದ್ದೀಯಲ್ಲಾ!…” +“ನಾ ಅವರಿಗೆ ಹೇಳಿಬಂದಿಲ್ಲ.” +“ಕದ್ದು ಬಂದೀಯೇನೆ?…” +“ಹ್ಞೂ!ಕದ್ದೇಬಂದೀನಿ!…”ಪೀಂಚಲು ಧ್ವನಿ ರಹಸ್ಯಮಯವಾಗಿದ್ದುದನ್ನೂ ಅವಳ ಕಣ್ಣಿನ ಇಂಗಿತ ಭಂಗಿಯನ್ನೂ ಗಮನಿಸಿ, ಕಾತರೆಯಾಗಿ “ಏನೆ ಅದು?” ಎಂದಳು ಚಿನ್ನಮ್ಮ. +ಅಲ್ಲಿ ನಡೆಯುತ್ತಿದ್ದ ಗಲಾಟೆಯಲ್ಲಿ ಇವರ ಸಂವಾದ ಯಾರಿಗೂ ಕೇಳಿಸುತ್ತಿರಲಿಲ್ಲ; +ಯಾರೂ ಇವರನ್ನು ಗಮನಿಸುತ್ತಲೂ ಇರಲಿಲ್ಲ. +ಆದರೂ ಪೀಂಚಲು ಸುತ್ತಮುತ್ತ ಕಳ್ಳಕಣ್ಣು ಹಾಯಿಸಿದಳು. +ಚಿನ್ನಮ್ಮನನ್ನು ತಾನು ಮುಟ್ಟಬಾರದು ಎಂಬುದನ್ನು ಮರೆತುಬಿಟ್ಟು ಅವಳ ಕೈಹಿಡಿದು ಪಕ್ಕಕ್ಕೆ ಬೆಳಕಿನಿಂದ ಕತ್ತಲೆಗೆ ಎಳೆದಳು. +ಕತ್ತಲೆಯಲ್ಲಿ ಇಬ್ಬರೂ ಮರೆಯಾದ ಮೇಲೆ ಕಿವಿಯಲ್ಲಿ ಪಿಸುಗುಟ್ಟಿದಳು. +ಹಠಾತ್ತನೆ ಮೈಮೇಲೆ ಬಿಸಿನೀರು ಚೆಲ್ಲಿದಂತಾಯ್ತು ಚಿನ್ನಮ್ಮಗೆ. +ಏನು ಉತ್ತರ ಹೇಳಬೇಕೊ ತಿಳಿಯದೆ ಪ್ರಜ್ಞೆ ತುಸು ತತ್ತರಿಸಿದಂತಾಯಿತು. +ಮತ್ತೆ ನಿತ್ತರಿಸಿ “ನಾಳೆ ಬೇಡ ಅಂತಾ ಹೇಳು. +ಎಂತಿದ್ದರೂ ಅಕ್ಕಯ್ಯನ ಬಾಲೆ ತೊಟ್ಟಿಲಿಗೆ ಹಾಕೋ ಮನೆಗೆ ನಾನು ಬಂದೇ ಬರ್ತಿನಲ್ಲಾ?” ಗದ್ಗದವಾಗತೊಡಗಿದ್ದ ದನಿಯಿಂದ ಮತ್ತೆ ಮುಂದುವರೆಸಿದಳು “ಹಾಂಗಾದ್ರೆ ಈಗ್ಲೇ ತಂದುಕೊಡ್ತೀನಿ, ಇಲ್ಲೇ ನಿಂತಿರು.” ಮತ್ತೆ ನಿಡಿದಾಗಿ ಸುಯ್ದಳು, ಪೀಂಚಲು ಕೈಯ್ಯನ್ನು ಬಲವಾಗಿ ಒತ್ತಿ ಹಿಡಿದು, “ಪೀಂಚಲಿ, ಏನು ಮಾಡಾನೇ”ಮುಳುಗುವವನು ತನ್ನನ್ನು ರಕ್ಷಿಸು ಎಂದು ಹುಲ್ಲು ಕಡ್ಡಿಯನ್ನೂ ಅಪ್ಪಿಕೊಳ್ಳುವಂತೆ. +ತನ್ನಂತಹ ಅಲ್ಪೆಯ ಸಲಹೆಯನ್ನೂ ಕೇಳುವ ಸ್ಥಿತಿಗಿಳಿದಿದ್ದ ಹೂವಳ್ಳಿ ವೆಂಕಪ್ಪನಾಯಕರ ಹಿರಿಯ ಮಗಳಿಗೆ, – ಸಮಯಸ್ಪೂರ್ತಿಯ ಮಹಿಮೆಯೋ ಏನೋ? +ಪೀಂಚಲು ದೃಢವಾಣಿಯಿಂದ ಧೈರ್ಯ ಹೇಳಿಯೆಬಿಟ್ಟಳು: “ನೋಡಾನ ಬಿಡಿ, ಚಿನ್ನಕ್ಕಾ; +ಹೆದರಬ್ಯಾಡಿ, ದೇವರಿದ್ದಾನೆ! +ಅಲ್ಲಿಗೂ ಬಂದರೆ, ನಾವೆಲ್ಲ ಇಲ್ಲೇನು?”ಚಿನ್ನಮ್ಮ ತನ್ನ ಉದ್ವೇಗವನ್ನು ಯಾರಿಗೂ ಅನುಮಾನ ಬರದ ರೀತಿಯಲ್ಲಿ ಮರೆಮಾಚಿಕೊಂಡು ಒಳಗೆ ಹೋದಳು. +ತುಸು ಹೊತ್ತಿನೊಳಗೆ ಒಂದು ಹೊಸ ಸೀರೆಯನ್ನೂ, ಕಡುಬು ತುಂಡು ಹಾಕಿದ್ದ ಒಂದು ಗುಂಡಾಲವನ್ನೂ, ಹೋಳಿಗೆ ಸುತ್ತಿದ್ದ ಒಂದು ಬಳ್ಳೆಕೀತಿನ ಪೊಟ್ಟಣವನ್ನೂ ತಂದಿತ್ತಳು. +ಅದನ್ನೆಲ್ಲ ತೆಗೆದುಕೊಂಡು ಪೀಂಚಲು ಬೇಗ ಬೇಗನೆ ಸರಿದು ಕತ್ತಲೆಯಲ್ಲಿ ಕರಗಿಹೋದಳು. +ಚಿನ್ನಮ್ಮ ತನ್ನ ಕೋಣೆಗೆ ಹಿಂದಕ್ಕೆ ಹೋಗಿ ನೋಡುತ್ತಾಳೆ, ನಾಗಕ್ಕ ಹೊಸಸೀರೆ ಉಟ್ಟುಕೊಂಡಿಲ್ಲ; +ಸಂದೂಕವನ್ನೂ ಮುಚ್ಚಿ ಅದರ ಮೇಲೆ ಕೂತಿದ್ದಾಳೆ, ಕಾಲು ಇಳಿಬಿಟ್ಟುಕೊಂಡು. +ಚಿನ್ನಮ್ಮನನ್ನು ನೋಡಿದೊಡನೆ ನಾಗಕ್ಕಗೆ ಏನೊ ಅನುಮಾನವಾದಂತಾಗಿ “ಯಾಕೆ, ಚಿನ್ನಮ್ಮ, ಏನೋ ಒಂದು ತರಾ ಮಾಡಿಕೊಂಡೀಯಲ್ಲಾ ಮಖವಾನ?” ಎಂದು ಕೇಳಿ, ತಟಕ್ಕನೆ ಎದ್ದುನಿಂತು ಹತ್ತಿರಕ್ಕೆ ಬಂದಳು. +“ಮತ್ತೆ?ನೀನು ಸೀರೆ ಉಟ್ಟುಕೋ ಅಂದರೆ ಬ್ಯಾಡ ಅಂತಿದ್ದೀಯಲ್ಲಾ?” ಎಂದಾಡಿ ಚಿನ್ನಮ್ಮ ದಿಕ್ಕುತಪ್ಪಿಸಿಯೆಬಿಟ್ಟಳು ನಾಗಕ್ಕಗೆ. +“ಅಯ್ಯೋ, ಪುಣ್ಯಾತಗಿತ್ತಿ, ಅದಕ್ಕೆ ಯಾಕೆ ಅಳುಮಾರೆ ಮಾಡಿಕೊಂಡೀಯಾ?” ಎಂದವಳೆ ಸಂದುಕಿದ ಬಾಗಿಲು ತೆರೆದು, ಚಿನ್ನಮ್ಮ ತನಗಾಗಿ ಅರಿಸಿದ್ದ ಹೊಸ ಸೀರೆಯನ್ನು, ಅಲ್ಲಿಯೆ ಮೂಲೆಯಲ್ಲಿ, ಅವಳೆದುರಿಗೇ ಉಡತೊಡದಿದಳು, ಬಾಗಿಲ ತಾಳ ಭದ್ರವಾಗಿ ಹಾಕಿದೆಯೆ ಎಂಬುದನ್ನು ನೀಡಿಕೊಂಡು…ನಡು ರಾತ್ರಿಯ ಹೊತ್ತಿಗೆ ದೆಯ್ಯದ ಹರಕೆಯ ಅಡಾವುಡಿಯೆಲ್ಲ ಪೂರೈಸಿ, ಹೊರಗಿನಿಂದ ಬಂದಿದ್ದ ಆಳುಕಾಳುಗಳೆಲ್ಲ ತಿಂದು, ಕುಡಿದು, ತಣಿದು ತೇಗುತ್ತಾ ಹೊರಟು ಹೋದರು, “ನಮ್ಮ ನಾಯಕರನ್ನು ಬಿಟ್ಟರೆ ಇಲ್ಲ” ಎಂದು ತಮ್ಮ ತಮ್ಮೊಳಗೆ ಮೆಚ್ಚುಗೆಯ ಮಾತಾಡಿಕೊಳ್ಳುತ್ತಾ. +ಎಂತಹ ಉಸುಬಿನ ಹುಸಿ ತಳಹದಿಯ ಮೇಲೆ ನಾಯಕರ ಔದಾರ್ಯಗೋಪುರ ತತ್ತರಿಸುತ್ತ ನಿಂತಿತ್ತು ಎಂಬುದು ಅವರಿಗೇನು ಗೊತ್ತು? +ಹರಕೆಗೆಂದು ಬಂದಿದ್ದ ಕೆಳವರ್ಗದ ನೆಂಟರೆಲ್ಲರೂ ಒಬ್ಬಿಬ್ಬರು ‘ಗಿರಾಸ್ತರು’ ವಿನಾ ಎಲ್ಲರೂ ಹೋರಟುಹೋಗಿದ್ದರೂ; ‘ಗರ್ತೇರು’ ಮಾತ್ರ, ನಾಲ್ಕಾರು ದೂರುದೂರುಗಳ ಹತ್ತಿರದ ಸಂಬಂಧಿಗಳು, ನಾಳೆ ಬೆಳಿಗ್ಗೆ ಹೊರಡುವ ನಿರ್ಣಯ ಮಾಡಿ ಉಳಿದುಕೊಂಡಿದ್ದರು. +ಅವರಲ್ಲಿ ಕೆಲವರಿಗೆ ಆಗಲೆ ಔತಣದ ಪರಿಣಾಮ ತೋರತೊಡಗಿದ್ದರಿಂದ ರಾತ್ರಿ ಹೊರಕಡೆಗೆ ಹೋಗಲು ಅನುಕೂಲವಾಗುವಂತೆಯೂ ತೋರತೊಡಗಿದ್ದರಿಂದ ರಾತ್ರಿ ಹೊರಕಡೆಗೆ ಹೋಗಲು ಅನುಕೂಲವಾಗುವಂತೆಯೂ ಮತ್ತೆ ಮತ್ತೆ ಎದ್ದು ವಾಂತಿ ಮಾಡಲು ಹೆಚ್ಚು ಶ್ರಮವಾಗದಂತೆಯೂ ಹಿತ್ತಲು ಕಡೆಗೆ ಹತ್ತಿರದ ಗೃಹಭಾಗದಲ್ಲಿಯೆ ಮಲಗಲು ಸ್ಥಳಾವಕಾಶ ಕಲ್ಪಿಸಿದ್ದರು. +ಪೀಂಚಲು ಸಂಗಡ ಮಾತಾಡಿ ಬಂದ ಮೇಲೆ ಚಿನ್ನಮ್ಮನ ರೀತಿಯಲ್ಲಿ ಏನೊ ಬದಲಾವಣೆಯಾಗಿದ್ದುದನ್ನು ನಾಗಕ್ಕ ಗಮನಿಸಿದ್ದಳು. +ಚಿನ್ನಮ್ಮ ಹೇಳಿದಂತೆಲ್ಲ ಮಾಡಿ, ಅವಳ ಮನಸ್ಸನ್ನು ಮೊದಲಿನ ಸ್ಥಿತಿಗೆ ತರಲು ಪ್ರಯತ್ನಿಸುತ್ತಿದ್ದಳು. +ಆದರೂ ಅವಲು ಆಗಾಗ ದೀರ್ಘ ಮೌನಿಯಾಗುತ್ತಲೊ, ಬಹಿರ್ವ್ಯಾಪಾರಗಳಲ್ಲಿ ತೊಡಗಿರುವಾಗಲೂ ತಪ್ಪಿ, ತಡವಿ, ತೊದಲಿ, ತನ್ನ ಅಂತರ್ಮುಖಿತ್ವದ ಗುಟ್ಟು ಬಿಟ್ಟುಕೊಡುತ್ತಲೊ ಇರುತ್ತಿದ್ದದನ್ನು ನೋಡಿದ್ದಳು. +ಮಲಗಿಕೊಳ್ಳಲು ಹೋಗುವ ಸಮಯ ಬಂದಾಗ, ಚಿನ್ನಮ್ಮ ಎಂದಿನಂತೆ ತನ್ನ ಅಜ್ಜಿಯ ಸಂಗಡ ಮಲಗಲು ಅವಳ ಕೋಣೆಗೆ ಹೊರಟಳು. +ನಾಗಕ್ಕ ತಾನೂ ಚಿಕ್ಕಮ್ಮನೂ ಒಟ್ಟಿಗೆ ಚಿನ್ನಮ್ಮನ ಕೋಣೆಯಲ್ಲಿಯೆ ಮಲಗುವ ಸೂಚನೆಯನ್ನೂ ಮುಂದಿಟ್ಟಾಗ ಅವಳು ಎಂದಿನಂತೆ ಯಾವ ಉತ್ಸಾಹವನ್ನೂ ತೋರಿಸದೆ ಉದಾಸಭಾವದಿಂದ “ಅಲ್ಲಿ ಬ್ಯಾರೆ ಯಾರಿಗೊ ನೆಂಟರಮ್ಮೋರಿಗೆ ಹಾಸಗೆ ಹಾಸಿಕೊಟ್ಟಾರೆ ಕಣೇ. +ನಾನು ಇವತ್ತು ಅಜ್ಜಿ ಹತ್ರಾನೆ ಮನಗ್ತೀನಿ. +ನಿಂಗೂ ನಾಗತ್ತೆಗೂ ಓ ಅಲ್ಲಿ ಕೆಳಗಿನ ದೊಡ್ಡ ಕೋಣೇಲಿ ಹಾಸಿದ್ದಾರೆ” ಎಂದು ಹೇಳಿದಳು. +ಚಿನ್ನಮ್ಮ ಮಲಗಲು ಹೋದ ಮೇಲೆ ನಾಗಕ್ಕ ತನ್ನ ಅತ್ತೆಯನ್ನು ನಿರೀಕ್ಷಿಸುತ್ತಾ ಕಾಯತೊಡಗಿದಳು. +ಮನೆ ಒಟ್ಟಿನಲ್ಲಿ ನಿಃಶಬ್ದವಾಗಿತ್ತು. +ಅಲ್ಲೊಬ್ಬರು ಇಲ್ಲೊಬ್ಬರು ಗೊರಕೆ ಹೊಡೆಯುವ ಸದ್ದೂ ಕೇಳಿಸತೊಡಗಿತ್ತು. +ಹಿತ್ತಲು ಕಡೆ ಬಾಗಿಲಾಚೆ ಯಾರೋ ವಾಂತಿ ಮಾಡಿದ ಸದ್ದು ಒಮ್ಮೆ ಕೇಳಿಸಿತ್ತು. +ಮನೆಯ ಹಿಂದಣ ಗುಡ್ಡದ ಕಾಡಿನಲ್ಲಿ ಒಂದು ಕಡವೋ ಕಾಡುಕುರಿಯೋ, ನಾಯಿ ಬೊಗಳಿದಂತೆ, ಆದರೆ ಕೋವಿಯ ಈಡು ಹೊಡೆದಂತೆ ಗಟ್ಟಿಯಾಗಿ, ಅರಚಿದ್ದೂ ಕೇಳಿಸಿತ್ತು. +ಸಮಾರಾಧನೆಯ ಎಂಜಲೆಲೆಗಳಿಗೆ ನೆರೆದಿದ್ದ ಮೂಳು ಕುನ್ನಿಗಳ ಕಚ್ಚಾಟವೊ ಆಗಾಗ್ಗೆ ಕಿವಿಗೆ ಬರುತ್ತಿತ್ತು. +ರಾತ್ರಿ ಎಷ್ಟು ಹೊತ್ತಾದರೂ ನಿದ್ರೆ ಮಾಡದೆ ಇರುವುದು ಬಹಳ ಕಾಲದಿಂದ ಅಭ್ಯಾಸವಾಗಿದ್ದ ನಾಗಕ್ಕನಿಗೆ ಇವತ್ತು ಏಕೋ ಬಹಳ ತೂಕಡಿಕೆ; + ಕಣ್ಣು ಪ್ರಯತ್ನಪೂರ್ವಕವಾಗಿ ತೆರೆದಷ್ಟೂ ಮುಚ್ಚಿಕೊಳ್ಳುತ್ತಿತ್ತು. +ಕಡೆ ಕಡೆಗೆ ಅಲ್ಲಿಯೆ ಮಲಗಿಕೊಂಡುಬಿಡಲೇ ಎನ್ನಿಸತೊಡಗಿತ್ತು. +ಅತ್ತೆ ಎಲ್ಲಿಗೆ ಹೋದಳು? +ಯಾರ ಹತ್ತಿರ ಏನು ಹರಟೆ ಪಂಚಾಯಿತಿ ಮಾಡುತ್ತಿದ್ದಾಳೆ? +ಅದೇಕೆ ಇಷ್ಟು ತೂಕಡಿಕೆ? +ಯಾವತ್ತು ಇಲ್ಲದ್ದು? +ಬಹುಶಃ ಆ ದಿನ ಬೆಳಿಗ್ಗೆ ಮುಂಚೆಯಿಂದಲೂ ನಡೆದೂ ನಡೆದೂ, ಗುಡ್ಡವೇರಿ ಕಣಿವೆಯಿಳಿದು ಕಾಡುದಾಟಿ ಬಂದಿದ್ದ ಬಳಲಿಕೆಯ ಕಾರಣವಾಗಿರ ಬಹುದಲ್ಲವೆ? +ಅವಳು ಕಳ್ಳು ಹೆಂಡಗಳನ್ನೂ ಕಡುಬು ತುಂಡಿನ ಜೊತೆ ಚೆನ್ನಾಗಿಯೆ ಕುಡಿದಿದ್ದಳು. +ತನ್ನ ಅತ್ತೆ ಬೇರೆ ತನ್ನ ಪಕ್ಕದಲ್ಲಿ ಕುಳಿತುಕೊಂಡು ನಂಟರಿಗೆ ಉಪಚಾರ ಮಾಡುವಂತೆ ತನಗೆ ಬೇಡವೆಂದರೂ ಕಳ್ಳು ಹೆಂಡಗಳನ್ನು ದೊನ್ನೆಗೆ ಬೊಗಿಸಿದ್ದಳು. +ಅವಳೂ, ಅಳತೆ ಮೀರಿಯೆ ಎಂದು ತೋರುತ್ತದೆ, ಕುಡಿದಿದ್ದಳು. +ಇಲ್ಲದಿದ್ದರೆ ಇಂತಹ ತೂಕಡಿಕೆ,  ಇಂತಹ ನಿದ್ದೆ ಎಲ್ಲಿಂದ ಬರಬೇಕು? +“ನಾಗೂ, ಮನಗಾಕ್ಕೆ ಬರಾದಿಲ್ಲೇನೆ?” ಎಂದು ತನ್ನ ಬಳಿಯೆ ನಿಂತು ನಾಗತ್ತೆ ಕರೆದಾಗಲೆ ಬೆಚ್ಚಿಬಿದ್ದು ಎಚ್ಚೆತ್ತುಕೊಂಡು ಎದ್ದು ನಿಂತಳು. +“ಎಚ್ಚರ ಮಾಡಿಕೊಳ್ಳೆ. +ಹೊಂಗಿಬಿದ್ದೀಯಾ?ಬಾ!”ನಾಗತ್ತೆಯ ಹಿಂದೆ ಹೋಗಿ ಒಂದು ದೊಡ್ಡ ಕೋಣೆಯಲ್ಲಿ ಹಾಸಿದ್ದ ಹಾಸಗೆಯ ಮೇಲೆ ಮಗ್ಗುಲಾಗಿದ್ದಳೊ ಇಲ್ಲವೊ ಗಾಢ ನಿದ್ರೆಗೆ ಅದ್ದಿಹೋಗಿದ್ದಳು ನಾಗಕ್ಕ. +ಬಾಗಿಲು ಮುಚ್ಚಿ, ತಾಳ ಹಾಕಿಕೊಂಡು ಬಂದು, ದೀಪ ಆರಿಸಿ ನಾಗಕ್ಕನ ಒತ್ತಿನಲ್ಲಯೆ ಮಲಗಿದಳು ನಾಗತ್ತೆ. +ಮಲಗುವ ಮುನ್ನ ನಾಗಕ್ಕನ ಪ್ರಜ್ಞೆ ಎಂದಿನಂತೆ ಎಚ್ಚತ್ತಿದ್ದರೆ, ಅವಳಿಗೆ ಅಚ್ಚರಿಯಾಗುತಿತ್ತು, ತನಗಾಗಿ ಹಾಸಿದ್ದ ಹಾಸಗೆಯನ್ನು ನೋಡಿ! +ಒಂದು ಚಾಪೆ, ಒಂದು ಕಂಬಳಿ, ಹೆಚ್ಚು ಎಂದರೆ ಒಂದು ಸಣ್ಣ ಜಮಖಾನ, ಇಷ್ಟರ ಮಿತಿಗೆ ಹಿಂದೆಂದೂ ಮೀರಿರಲಿಲ್ಲ ತನಗೆ ಮಲಗಲು ಒದಗುತ್ತಿದ್ದ ಹಾಸಗೆಯ ವೈಭವ. +ಇವತ್ತು ದಪ್ಪನೆಯ ಹತ್ತಿಯ ತಡಿಯಮೇಲೆ ಬಿಳಿಯ ಮಗ್ಗುಲು ಹಾಸಗೆ ಹಾಸಿತ್ತು. +ಕಂಬಳಿಗೆ ಬದಲಾಗಿ ಒಂದು  ಶಾಲು ಇತ್ತು. +ಮೃದುವಾಗಿ ಶುಚಿಯಾಗಿದ್ದ ತಲೆದಿಂಬು ಬೇರೆ! +ನಾಗತ್ತೆಗೆ ಇನ್ನೂ ನಿದ್ದೆ ಬಂದಿರಲಿಲ್ಲ. +ಬೇಗ ನಿದ್ದೆ  ಬರುವಂತಹ ಮನಃಸ್ಥಿತಿಯಲ್ಲಿಯೂ ಅವಳು ಇರಲಿಲ್ಲ. +ತಾನು ಹೂಡಿದ್ದ ಸಂಚಿನ ಸಫಲತೆಗಾಗಿ ಅವಳ ಜೀವ ಕಾತರಿಸಿತ್ತು. +ಅಷ್ಟರಲ್ಲಿ, ಮುಚ್ಚಿ ತಾಳಹಾಕಿ ಭದ್ರಮಾಡಿದ್ದ  ಬಾಗಿಲಮೇಲೆ ಆಚೆಕಡೆಯಿಂದ ಯಾರೋ ಕೈ ಆಡಿಸಿದ ಸದ್ದಾಯಿತು. +ಅವಳೂ ಅದನ್ನೆ  ನಿರೀಕ್ಷಿಸುತ್ತಿದ್ದಳು; +ಆದರೆ ಅಷ್ಟು ಬೇಗನೆ ಅಲ್ಲ! +ವೆಂಕಪ್ಪನಾಯಕರ ಕಾಮಾತುರತೆ ಪ್ರಕಟವಾಗಿದ್ದ ಆ ಅಶ್ಲೀಲ ತರಾತುರಿಗೆ ನಾಗತ್ತೆಯೂ ಸಿಡುಕಿದಳು “ಈ ಎಂಕಟಣ್ಣಗೆ ಏನು ಅವಸರಾನೊ? +ಒಂದು ಗಂಟೆನಾದ್ರೂ ಬಿಟ್ಟು ಬಾ ಅಂದೀನಿ! +ಅಷ್ಟರಲ್ಲಿಯೆ ಓಡಿ ಬಂದಾನೆ?” +“ನಾಗೂ, ನಾಗೂ, ನಿದ್ದೆ ಬಂತೇನೆ?” ಮೆಲ್ಲಗೆ ಕರೆದಳು. +ಸೊಸೆಯ ಉಸಿರಾಟದಿಂದಲೆ ಅವಳಿಗೆ ಗೊತ್ತಾಯಿತು, ತಾನು ಕಳ್ಳಿನಲ್ಲಿ ಹಾಕಿಕೊಟ್ಟಿದ್ದ ಮದ್ದು ಚೆನ್ನಾಗಿ ಕೆಲಸಮಾಡುತ್ತಿದೆ ಎಂದು. +ಮೈಯ ಮುಟ್ಟಿ ಅಲುಗಾಡಿಸಿಯೂ ನೋಡಿ ಖಾತ್ರಿ ಮಾಡಿಕೊಂಡಳು. +ಒಂದು ಗಂಟೆಯಾದರೂ ತಾನೂ ಆ ಮೆತ್ತನೆಯ ಹಾಸಗೆಯಲ್ಲಿ ಪವಡಿಸುತ್ತೇನೆ ಎಂದು ಹಾರೈಸಿದ್ದಳು. +ಅದಕ್ಕೂ ಭಂಗಬಂದಿತ್ತು! +“ ಎಷ್ಟು ಬೇಗ ಬಂದು ಬಿಟ್ಟಿದಾನೆ ಈ ಎಂಕಟಣ್ಣ?”ಕತ್ತಲೆ, ಕಗ್ಗತ್ತಲೆ, ಕವಿದಿತ್ತು ಕೋಣೆಯಲ್ಲಿ ನಾಗತ್ತೆ ಎದ್ದಳು. +ಕೈ ಅಂದಾಜಿನಿಂದಲೆ ತೆಡುವುತ್ತಾ ಬಾಗಿಲೆಡೆಗೆ ಬಂದು, ಸದ್ದಾಗದಂತೆ ತಾಳ ತೆಗೆದಳು. +ಬಾಗಿಲು ಮೆಲ್ಲನೆ ಅರೆ ತೆರೆಯಿತು. +ಏನೋ ಪಿಸುಮಾತು! +ನಾಗತ್ತೆ ಹೊರಕ್ಕೆ ಹೋದಳು! +ವೆಂಕಟಣ್ಣ ಒಳಗೆ ಹೋಗಿ ಸದ್ದಾಗದಂತೆ ಬಾಗಿಲು ಮುಚ್ಚಿ, ತಾಳ ಹಾಕಿಕೊಂಡನು! +ಆ ಇರುಳು ಎಂತಹ ಮಧುರಾನುಭವದ ಎಂತಹ ಸವಿಗನಸು ಬಿತ್ತೊ ನಾಗಕ್ಕಗೆ! +೨೨೧೮೯೩ ನೆಯ ಇಸವಿ ಸೆಪ್ಟೆಂಬರು ೧೧ನೆಯ ತೇದಿ ಸೋಮವಾರ ತೀರ್ಥಹಳ್ಳಿಯ ಪಾದ್ರಿ ಅಥವಾ ಉಪದೇಶಿ ಜೀವರತ್ನಯ್ಯ ಕಾಡುದಾಟಿ, ಆಗತಾನೆ ಕಳೆಕಿತ್ತು ತೆವರು ಕುಯ್ಲಾಗಿದ್ದ ಗದ್ದೆಕೋಗಿನ ಅಂಚುಗಳನ್ನು ಹತ್ತಿ ಹಾರಿ, ತೋಟದ ಬೇಲಿಯ ತಡಬೆಯನ್ನು ಎಚ್ಚರಿಕೆಯಿಂದ ಏರಿ ಇಳಿದು, ಅಡಕೆ ಮರದ ಸಾರದ ಮೇಲೆ ಅಡೆಹಳ್ಳವನ್ನು ಉತ್ತರಿಸಿ, ಮನೆಯೆಡೆಯ ಕಣದ ಬೇಲಿಯೊಡ್ಡಿಗೆ ಹಾಕಿದ್ದ ಉಣುಗೋಲನ್ನು ಸರಿಸಿ, ಸಿಂಧುವಳ್ಳಿ ಮನೆಗೆ ಪ್ರವೇಶಿಸಿದಂದು ತಾನು ಎಂತಹ ಲೋಕಪ್ರಸಿದ್ಧವಾಗಲಿರುವ ಜಗದ್ ಭವ್ಯ ಮಹದ್‌ಘಟನೆಯೊಂದರೊಡನೆ ಪ್ರತಿಸ್ಪರ್ಧಿಯಾಗಿದ್ದೇನೆ ಎಂಬುದನ್ನು ಅರಿತಿರಲಿಲ್ಲ: +ಆ ದಿನವೆ ಕ್ರೈಸ್ತಮತ ಶ್ರದ್ಧೆಯ ಮತ್ತು ಮಿಶನರಿ ಮತಾಂಧತೆಯ ಶಕ್ತಿ ಕೇಂದ್ರವಾಗಿದ್ದ ಅಮೆರಿಕಾ ದೇಶದ ಚಿಕಾಗೊ ನಗರದಲ್ಲಿ ನೆರೆದಿದ್ದ ಸರ್ವಧರ್ಮಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಹಿಂದೂಧರ್ಮದ ಮತ್ತು ವೇದಾಂತ ದರ್ಶನದ ಮಹೋನ್ನತಿಯನ್ನೂ ವಿಶ್ವ ವೈಶಾಲ್ಯವನ್ನೂ ತಮ್ಮ ಸಿಂಹಕಂಠದಿಂದ ಘೋಷಿಸಿದ್ದರು! +ಅದನ್ನು ಆಲಿಸಿದ್ದ ಅನ್ಯಧರ್ಮೀಯ ವಿದ್ವಜ್ಜನಸಮೂಹವು ಆನಂದೋನ್ಮತ್ತವಾಗಿ ಜಯಘೋಷ ಮಾಡಿತ್ತು! +ಹಿಂದೂಧರ್ಮ ಮತ್ತು ವೇದಾಂತ ದರ್ಶನದ ದಿಗ್ವಿಜಯಧ್ವಜ ಗಗನಚುಂಬಿಯಾಗಿ ಏರಿ ಹಾರಿ ಲೋಕಲೋಚನಗಳನ್ನೆ ಬೆರಗುಗೊಳಿಸಿತ್ತು! +ವಿಂಧ್ಯ ಹಿಮಾಚಲ ಸಹ್ಯಾದ್ರಿಗಳಲ್ಲಿಯೂ ಆ ದಿವ್ಯಧ್ವನಿ ಅನುಕರಣಿತವಾಗಿತ್ತು! +ಆಗಿತ್ತೆ?ಎಲ್ಲಿ ಆಗಿತ್ತು? +ಹಾಗಿದ್ದರೆ ಉಪದೇಶಿ ಜೀವರತ್ನಯ್ಯ ಸಿಂಧುವಳ್ಳಿ ಚಿನ್ನಪ್ಪಗೌಡರನ್ನು ಕಿಲಸ್ತರ ಜಾತಿಗೆ ಸೇರಿಸಲು ಎಂದಿಗಾದರೂ ಸಾಧ್ಯವಾಗುತ್ತಿತ್ತೇ? +ನಿಜ, ಅವರಿನ್ನೂ ಸೇರಿರಲಿಲ್ಲ: +ಆದರೆ, ದೀವದಾನೆ ಕಾಡಾನೆಯನ್ನು ಆಕರ್ಷಿಸಿ ಖೆಡ್ಡಾಕ್ಕೆ ಕೆಡಹಲು ಪ್ರಯತ್ನಿಸುವಂತೆ, ಪಾದ್ರಿ ಜೀವರತ್ನಯ್ಯ ಚಿನ್ನಪ್ಪನ ಕಾಲಡಿಯ ಕುರುಡು ಆಚಾರ ಮತ್ತು ಮೂಢ ನಂಬಿಕೆಗಳ ಭೂಮಿಯನ್ನು ಸಡಿಲಗೊಳಿಸಿ, ಅಗೆದು ತೆಗೆದು, ಕ್ರೈಸ್ತ ಮತದ ಖೆಡ್ಡಾಕಂದಕವನ್ನು ಮೆಲ್ಲಗೆ ನಿರ್ಮಿಸುತ್ತಿದ್ದನು. +ಅತ್ತ ಉತ್ತರಾರ್ಧಗೋಲದ ಬಹುದೂರ ಸಾಗರದಾಚೆಯ ಒಂದು ಆಧುನಿಕ ನಾಗರಿಕತೆಯ ಮತ್ತು ವೈಜ್ಞಾನಿಕ ಪ್ರಗತಿಯ ಶ್ರೀಮಂತ ದೇಶದಲ್ಲಿ ಪ್ರಪ್ರಾಚೀನ ಭಾರತ ಸಂಸ್ಕೃತಿಯ ಸರ್ವೋತ್ತಮ ಪ್ರತಿನಿಧಿಯೊಬ್ಬನು ವೇದಾಂತ ದರ್ಶನದ ಮೇಲೆ ನಿಂತಿರುವ ಸನಾತನ ಹಿಂದೂಧರ್ಮದ ಸರ್ವೋತ್ಕ್ರಷ್ಟತೆಯನ್ನು  ಅಧಿಕಾರವಾಣಿಯಿಂದ ಪ್ರಸಾರ ಮಾಡುತ್ತಿದ್ದಾಗಲೆ, ಅದನ್ನೆಲ್ಲ ಸದ್ದುಗದ್ದಲವಿಲ್ಲದೆ ಮೂದಲಿಸುವಂತೆ, ಯಃಕಶ್ಚಿತ ಪಾದ್ರಿಯೊಬ್ಬನು – ಅದರಲ್ಲಿಯೂ ನೇಟಿವ್ ಪಾದ್ರಿ – ಘೋರಾರಣ್ಯ ಮಯವಾದ ಸಹ್ಯಾದ್ರಿ ಶ್ರೇಣಿಯ ಮಲೆನಾಡಿನ ಕೊಂಪೆಯ ಅಜ್ಜ ಬೇಸಾಯಗಾರನೊಬ್ಬನಿಗೆ ಹಿಂದೂಧರ್ಮದ ಅನಾಚಾರ, ಅವಿವೇಕ, ಸಂಕುಚಿತ ಮನೋಭಾವ, ಜಾತಿ ಮತ ಪಕ್ಷಪಾತ, ಬ್ರಾಹ್ಮಣರ ತಿರಸ್ಕಾರ, ಶೂದ್ರರ ದೈನ್ಯ, ಅಧೋಗತಿ, ಕಲ್ಲು ಮಣ್ಣು ಪರೋಪಕಾರ, ಪರಾನುಕಂಪನ ನೀತಿ, ತ್ಯಾಗ, ಭಕ್ತಿ, ಉದ್ದಾರಕ ಸಾಮರ್ಥ್ಯ ಇತ್ಯಾದಿಗಳನ್ನೂ – ಕುರಿತು ಮನಮುಟ್ಟುವಂತೆ ಉಪದೇಶ ಮಾಡುತ್ತಿದ್ದನು. + ಗೌಡನ ಮನೆಯ ಚಾವಡಿಯಲ್ಲಿಯೆ ಕುಳಿತು, ಅವನ ಗದ್ದೆ, ತೋಟ, ಅಂಗಳದ ತೊಳಸಿಕಟ್ಟೆಯ ದೇವರು ಮತ್ತು ಎದುರಿಗೇ ಕಾಣುತ್ತಿದ್ದ ಭೂತದ ಬನ – ಇವುಗಳ ಇದಿರಿನಲ್ಲಿಯೆ! +ಅಮೆರಿಕಾದ ಚಿಕಾಗೊ ಬಹುದೂರದಲ್ಲಿದ್ದಿರಬಹುದು? +ವಿವೇಕಾನಂದರ ಉತ್ತಾಲ ಧ್ವನಿ ಮಲೆನಾಡಿನ ಕೊಂಪೆಗೆ ಮುಟ್ಟದಿದ್ದಿರಬಹುದು? +ಆದರೆ ಸಮೀಪದಲ್ಲಿಯೆ ಇದ್ದುವಲ್ಲ – ಶೃಂಗೇರಿ, ಧರ್ಮಸ್ಥಳ, ಉಡುಪಿ ಇತ್ಯಾದಿ ಪವಿತ್ರಕ್ಷೇತ್ರಗಳ ಗುರುಪೀಠಗಳು? +ಅವೇನು ಮಾಡುತ್ತಿದ್ದವು? +ಅದ್ವೈತ ತತ್ವದಿಂದ ಬೌದ್ಧಧರ್ಮವನ್ನೆ ಭರತವರ್ಷದಿಂದ ಅಟ್ಟಿ ವೈದಿಕ ಧರ್ಮಸ್ಥಾಪನೆ ಮಾಡಿದನೆಂದು ಹೇಳಲಾಗುತ್ತಿರುವ ಆಚಾರ್ಯ ಶಂಕರನ ಮೂಲ ಪೀಠದಲ್ಲಿ ವಿರಾಜಮಾನರಾಗಿದ್ದ ಸನ್ಯಾಸಿವರೇಣ್ಯರು ಏನು ಮಾಡುತ್ತಿದ್ದರು? +ಅಜ್ಞರೂ ಮೌಢ್ಯಾಂಧರೂ ಆಗಿದ್ದ ಶೂದ್ರವರ್ಗದ ಸಾಮಾನ್ಯ ಜನರಿಂದ ಪಾದ ಪೂಜೆ ಮಾಡಿಸಿಕೊಳ್ಳುತ್ತಿದ್ದರು; + ಅಡ್ಡಪಲ್ಲಕ್ಕಿ ಸೇವೆ ಸಲ್ಲಿಸಿಕೊಳ್ಳುತ್ತಿದ್ದರು; + ದಾನ, ದಕ್ಷಿಣೆ, ಸಾಷ್ಟಾಂಗ ನಮಸ್ಕಾರಗಳನ್ನೂ ಸ್ವೀಕರಿಸುತ್ತಿದ್ದರು. +ಆಶೀರ್ವಾದ ಮಾಡುತ್ತಿದ್ದರು! +ತಮ್ಮ ತಮ್ಮ ಪಂಗಡಕ್ಕೆ ಸೇರಿದ ಬ್ರಾಹ್ಮಣೋತ್ತಮರಿಗೆ, ಭೂಸುರರಿಗೆ, ಸಮಾರಾಧನೆ ಮಾಡಿಸಿ ಹೊಟ್ಟೆ ತುಂಬಿಸುತ್ತಿದ್ದರು. +ಬಹುಶಃ ಶಾಸ್ತ್ರಕ್ಕಾಗಿ, ತಮ್ಮ ವರ್ಗಕ್ಕೆ ಸೇರಿದ ವಿದ್ವಾಂಸರನ್ನು ನೆರಪಿ ವಾಕ್ಯಾರ್ಥ ಏರ್ಪಡಿಸುತ್ತಿದ್ದರೂ ಇರಬಹುದು. +ಶೂದ್ರರು ವೇದೋಪನಿಷತ್ತುಗಳನ್ನು ಓದುವುದಿರಲಿ, ಕೇಳಿದರೂ ಅವರ ಕಿವಿಗೆ ಸೀಸ ಕರಗಿಸಿ ಹೊಯ್ಯುವ ನರಕ ಶಿಕ್ಷೆಯನ್ನು ವಿಧಿಸಿ, ಅದಕ್ಕೆ ಮನುಧರ್ಮಶಾಸ್ತ್ರವೆಂದು ಹೆಸರಿಟ್ಟವರು ಶೂದ್ರರಿಗೆ ವೇದಾಂತಬೋಧನೆ ಮಾಡುವ ಪಾಪಕ್ಕೆ ಏಕೆ ಪಕ್ಕಾಗುತ್ತಾರೆ? +ಕಾವಲಿಲ್ಲದ ಕೋಟೆಗೆ ನುಗ್ಗಲು ಶತ್ರುವಿಗೆ ಸೈನ್ಯ ಬೇಕೆ? +ರಕ್ಷಕರಿಲ್ಲದ ದುರ್ಗವನ್ನು ಗೆಲ್ಲಲು ನಿಪುಣ ಸೈನಿಕನೊಬ್ಬನಾದರೂ ಸಾಕು! +ತಮ್ಮ ಧರ್ಮದ ವಿಚಾರವಾದ ಯಾವ ಬುದ್ಧಿಪೂರ್ವಕ ಜ್ಞಾನವೂ ಇಲ್ಲದೆ, ಪರಂಪರಾಗತವಾದ ಅಂಧ ವಿಚಾರ ಸಮೂಹಗಳನ್ನೆ ತತ್ವಗಳೆಂದು ನಂಬಿ, ಆಲೋಚನಾಶಕ್ತಿ ಲವಲೇಶವೂ ಇಲ್ಲದಿದ್ದವರನ್ನು, ಜಡಬುದ್ಧಿಗಳನ್ನು, ಮತಾಂತರಗೊಳಿಸುವುದು ಸುಲಭವಲ್ಲ; +ಆದರೆ ಜಡಬುದ್ಧಿಗಳಾಗದೆ ತುಸು ಮಟ್ಟಿಗೆ ಜಾಗ್ರತಮತಿಗಳಾಗಿಯೂ ತಮ್ಮ ಮತ ಧರ್ಮದ ಸನಾತನ ಮೂಲ ತತ್ವಗಳನ್ನರಿಯದವರ ನಂಬಿಕೆಗಳನ್ನು ಅಲ್ಲಾಡಿಸುವುದು ಅಷ್ಟೇನು ಕಷ್ಟವಲ್ಲ. +ಪಾದ್ರಿ ಜೀವರತ್ನಯ್ಯ ಮಲೆನಾಡಿನ ಗೌಡರುಗಳಲ್ಲಿ ಅಂಥವರನ್ನೆ ಪತ್ತೆಹಚ್ಚಿ ತನ್ನ ಕೆಲಸಕ್ಕೆ ಕೈ ಹಾಕಿದ್ದನು. +ಸಿಂಧುವಳ್ಳಿ ಚಿನ್ನಪ್ಪನೆ ಪಾದ್ರಿಯ ಮೊತ್ತಮೊದಲನೆಯ ಬೇಟೆಯಾಗಿದ್ದನು. +ಈ ಕಥೆ ನಡೆಯುತ್ತಿದ್ದ ಕಾಲಕ್ಕೆ ಸುಮಾರು ಎರಡು ಮೂರು ವರ್ಷಗಳ ಹಿಂದೆ, ಅಂದರೆ ಸ್ವಾಮಿ ವಿವೇಕಾನಂದರು ಭರತಖಂಡಕ್ಕೆ ಹಿಂದಿರುಗಿ ಕೊಲಂಬೊ ಇಂದ ಅಲ್ಮೋರದವರೆಗೂ ಭಾಷಣಯಾತ್ರೆ ಮಾಡಿ, ರಾಷ್ಟ್ರದ ಕುಂಡಲಿನೀ ಶಕ್ತಿಯನ್ನ ಉದ್ಬೋಧನಗೊಳಿಸಿದ ಕಾಲಕ್ಕೂ ನಾಲ್ಕಾರು ವರ್ಷಗಳ ಪೂರ್ವದಲ್ಲಿ ಇರಬಹುದು ಒಂದು ದಿನ ಬೈಗಿನ ಹೊತ್ತಿನಲ್ಲಿ ಬೆಟ್ಟಳ್ಳಿ ದೇವಯ್ಯ ಗದ್ದೆ ಕೆಲಸದ ಮೇಲ್ವಿಚಾರಣೆ ಮುಗಿಸಿ, ಆಳುಗಳಿಗೆ ಬತ್ತ, ಉಂಡಿಗೆ, ಎಲಡಿಕೆ, ಹೊಗೆಸೊಪ್ಪು, ಉಪ್ಪು, ಮೆಣಸಿನಕಾಯಿಗಳನ್ನು ಪಡಿಕೊಡಲು ಅವರೊಡನೆ ಮನೆಗೆ ಹಿಂದಿರುಗುತ್ತಿದ್ದಾಗ, ಯಾರೊ ಇಬ್ಬರು, ಹಕ್ಕಲ ಕಡೆಯಿಂದ ಇಳಿಯುವ ಕಾಲುದಾರಿಯಲ್ಲಿ, ಮನೆಯ ಕಡೆಗೆ ಬರುತ್ತಿದ್ದನ್ನು ಕಂಡು, ನಿಂತು, ನೋಡತೊಡಗಿದನು. +ಅವರು ಸ್ವಲ್ಪ ಸಮೀಪಿಸಿದಾಗ ಮುಂದೆ ಬರುತ್ತಿದ್ದವನು ಸಿಂಧುವಳ್ಳಿ ಚಿನ್ನಪ್ಪನೆಂದು ಗುರುತುಹಿಡಿದನು. +ಹತ್ತಿರದ ನಂಟನಾಗಿ ಬಾಲ್ಯದಿಂದಲೂ ಸುಪರಿಚಿತನಾಗಿದ್ದ ಅವನು ಫಕ್ಕನೆ ಗುರುತುಸಿಗದಷ್ಟು ಮಟ್ಟಿಗೆ ವೇಷ ಭೂಷಣಗಳಲ್ಲಿ ಬದಲಾವಣೆ ಹೊಂದಿದ್ದನು. +ಬೆಳ್ಳಗೆ ಮಡಿಯಾಗಿದ್ದ ಪಂಚೆ ಕಚ್ಚೆ ಹಾಕಿದ್ದನು. +ಆಗತಾನೆ ಪೇಟೆಗಳಲ್ಲಿ ರೂಢಿಗೆ ಬರುತ್ತಿದ್ದ ಬನೀನು ತೊಟ್ಟು, ‘ಅಂಗಿಕೋಟು’ ಹಾಕಿದ್ದನು. +ಕಾಲಿಗೆ ಶಿವಮೊಗ್ಗದ ಕಡೆಯ ಮೆಟ್ಟು ಹಾಕಿದ್ದನು. +ಆದರೆ ಎಲ್ಲಕಿಂತಲೂ ಹೆಚ್ಚಾಗಿ ಕ್ರಾಂತಿಕಾರಕವಾಗಿ ಕಂಡಿದ್ದೆಂದರೆ, ಲಾಳಾಕಾರವಾಗಿ ಮುಂದಲೆ ಚೌರ ಮಾಡಿಸಿ ಕಟ್ಟಿರುತ್ತಿದ್ದ ಜುಟ್ಟಿಗೆ ಬದಲಾಗಿ ಬಿಟ್ಟಿದ್ದ ‘ಕಿರಾಪು’! +ಹಣೆಯಂತೂ ಸಾಬರ ಹಣೆಯ ಹಾಗೆ ಬೋಳಾಗಿ, ಹಿಂದೆ, ಅನಿವಾರ್ಯವಾಗಿ, ಊಟ ಪೂರೈಸಿದ್ದಕ್ಕೆ ಚಿಹ್ನೆಯಾಗಿರುತ್ತಿದ್ದ ಕೆಂಪುನಾಮವೂ ಇರಲಿಲ್ಲ! +ಕಿವಿಗಳಲ್ಲಿರುತ್ತಿದ್ದ ಒಂಟಿಗಳೂ ಗೈರುಹಾಜರಾಗಿದ್ದವು! +ಚಿನ್ನಪ್ಪ ತನ್ನೊಡನೆ ಬರುತ್ತಿದ್ದವರನ್ನು ಪರಿಚಯ ಮಾಡಿಕೊಟ್ಟನು: “ಇವರು ಜೀವರತ್ನಯ್ಯ, ತೀರ್ಥಹಳ್ಳಿಯ ಪಾದ್ರಿಗಳು!‘ಉಪದೇಶಿ’ ಅನ್ನುತ್ತಾರೆ!” +ಸಿಂಧುವಳ್ಳಿ ಚಿನ್ನಪ್ಪನನ್ನು ದೀವದಾನೆಯನ್ನಾಗಿ ಪಳಗಿಸಿಕೊಂಡ ಮೇಲೆ ಅವನ ಮುಖಾಂತರವಾಗಿ ಪಾದ್ರಿ ಇತರ ದೊಡ್ಡ ದೊಡ್ಡ ಗೌಡರ ಮನೆಗಳಿಗೆ ಹೋಗಿ ಅವರ ಪರಿಚಯ ಸ್ನೇಹಗಳನ್ನು ಸಂಪಾದಿಸತೊಡಗಿದ್ದನು. +ಆ ಸ್ನೇಹಕ್ಕೆ ಪ್ರತಿರೂಪವಾಗಿಯೆ ಪಾದ್ರಿಯಿಂದ ಅನಕ್ಷರರಾದ ಗೌಡರುಗಳಿಗೆ ಒದಗುತ್ತಿದ್ದ ಸಹಾಯವೆಂದರೆ, ಹಳೆಯ ರಾಜ್ಯಗಳಳಿದು ಬ್ರಿಟಿಷ್ ಚಕ್ರಾಧಿಪತ್ಯ ಸುಭದ್ರವಾಗಿ ಕಾಲೂರುತ್ತಿದ್ದ ಆ ಕಾಲದಲ್ಲಿ ಹೊಸ ಕಾನೂನುಗಳು ಹೊಸ ಹೆಸರಿನ ಅಧಿಕಾರಿಗಳು ಹೊಸ ಹೊಸ ರೂಲೀಸುಗಳು ಜಾರಿಗೆ ಬರುತ್ತಿದ್ದುದರಿಂದ ತಕ್ಕಮಟ್ಟಿಗೆ ಇಂಗ್ಲೀಷ್ ತಿಳಿದಿದ್ದ ಆ ಪಾದ್ರಿ ಸರಕಾರದ ವ್ಯವಹಾರಗಳಲ್ಲಿ ಅವರಿಗೆ ನೀಡುತ್ತಿದ್ದ ನೆರವು. +ಹಳ್ಳಿಯವರು ತೀರ್ಥಹಳ್ಳಿಗೆ ಹೋದಾಗ ಆಸ್ಪತ್ರೆ, ಡಾಕ್ಟರು, ಅಮಲ್ದಾರರು, ಪೋಲಿಸಿನವರು, ಪೋಸ್ಟಾಫೀಸು, ಕಾಫಿ, ಹೋಟೆಲ್, ಇಸ್ಕೂಲು ಮುಂತಾದ ತಾವು ಹಿಂದೆಂದೂ ಕೇಳದಿದ್ದ ಭಾಷೆಯ ಹೆಸರುಗಳಿಗೇ ದಿಗಿಲುಪಟ್ಟುಕೊಳ್ಳುತ್ತಿದ್ದಾಗ, ಪಾದ್ರಿಯಿಂದ ಅವರಿಗೆ ತುಂಬಾ ಉಪಕಾರವಾಗುತ್ತಿತ್ತು. +ಆ ಅನೂಕೂಲಕ್ಕಾಗಿ ಅವರು ಪಾದ್ರಿಯ  ನಿಂದನಾತ್ಮಕವೂ ಆಗಿದ್ದ ಉಪದೇಶವನ್ನೆಲ್ಲ ನಗೆಮೊಗದಿಂದ ಲಘುವಾಗೆಣಿಸಿ ಸಹಿಸಿಕೊಂಡು ಹೋಗುತ್ತಿದ್ದರು. +ಪಾದ್ರಿಯೂ ವಯಸ್ಸಾದ ದೊಡ್ಡವರ ಆ ರೀತಿಯ ಅಲಕ್ಷವನ್ನೂ ಮನಸ್ಸಿಗೆ ಹಾಕಿಕೊಳ್ಳುತ್ತಿರಲಿಲ್ಲ, ಏಕೆಂದರೆ, ಅವನಿಗೆ ಗೊತ್ತಿತ್ತು, ತರುಣರು ತನ್ನ ಪ್ರಭಾವಕ್ಕೆ ಕ್ರಮೇಣ ಒಳಗಾಗುತ್ತಾರೆ ಎಂಬ ಸತ್ಯ ಸಂಗತಿ. +ಆ ದಿನ ರಾತ್ರಿ ಊಟದ ಸಮಯ ಬಂದಾಗಲಂತೂ ಬೆಟ್ಟಳ್ಳಿಯ ಮನೆಯಲ್ಲಿ ಒಂದು ಕ್ರಾಂತಿಯ ವಾತಾವರಣವೆ ಏರ್ಪಟ್ಟಿತ್ತು. +ಮುಂಡಿಗೆಯ ಮರೆಯಲ್ಲಿ, ಬಾಗಿಲುಸಂದಿಯಲ್ಲಿ, ಅಡಿಗೆಮನೆಯಲ್ಲಿ, ಕೋಣೆಗಳಲ್ಲಿ ಎಲ್ಲೆಲ್ಲಿಯೂ ಗುಸುಗುಸು, ಏನೊ ಅನಿಶ್ಚಯ, ಗಡಿಬಿಡಿ. + ರಾಜಕೀಯ ಮಹಾ ಕ್ರಾಂತಿಯ ದಿನದಂದು ಆ ರಾಜ್ಯದ ರಾಜಧಾನಿಯಲ್ಲಿ ನಡೆಯಬಹುದಾದ ಉದ್ವಿಗ್ನ ಪರಿಸ್ಥಿತಿಯಂತೆ! +ಪಾದ್ರಿಯ ಜೊತೆ ಜಗಲಿಯಲ್ಲಿ ಯಜಮಾನರು ಕಲ್ಲಯ್ಯಗೌಡರ ಸಂಗಡ ಅದೂ ಇದು ಮಾತನಾಡುತ್ತಾ ಕುಳಿತಿದ್ದ ಚಿನ್ನಪ್ಪನನ್ನು ಎಕ್ಕಟಿ ಕರೆದು ದೇವಯ್ಯ “ಈಗ ಏನು ಮಾಡೋದೋ?” ಎಂದು ಕೇಳಿದನು. +“ಯಾಕೆ?ಏನು ಸಮಾಚಾರ?” ಪಾದ್ರಿಯನ್ನು ಎಲ್ಲಿ ಕೂರಿಸಿ ಊಟಕ್ಕೆ ಹಾಕುವುದು ಎಂಬ ವಿಚಾರವಾಗಿಯೆ ದೇವಯ್ಯನ ಪ್ರಶ್ನೆ ಎಂದು ಗೊತ್ತಾಗಿದ್ದರೂ ಕೇಳಿದ್ದನು ಚಿನ್ನಪ್ಪ. +“ಅವರಿಗೆ ಎಲ್ಲಿ ಬಳ್ಳೆ ಹಾಕಾದು ಅಂತ ಕೇಳ್ತಾರೆ ಒಳಗೆ.” +“ಯಾಕೆ?ನಮ್ಮ ಜೊತೇಲಿ ಕೂರ್ಲಿ!” +“ಥೂ ಥೂ ಥೂ ಥೂ! +ಹೊಲೇರಿಗಿಂತಲೂ ಅತ್ತತ್ತ, ಆ ಕಿಲಸ್ತರನ್ನ ಒಳಗೆ ಕೂರಿಸೋದೆ ಸೈ? +ಏನೋ ಬಟ್ಟೆಬರಿ ಹಾಕ್ಕೊಂಡು ಬಂದನಲ್ಲಾ ಅಂತ ಜಗಲಿ ಹತ್ತಿಸಿದ್ದು!” +“ಮತ್ತೆಲ್ಲಿ ಕೂರಿಸ್ತಾರಂತೆ?” +“ಹಿತ್ತಲು ಕಡೇಲಿ ಕೂರಿಸಾನ ಅಂತಾ ಹೇಳ್ತಾರೆ ಒಳಗೆ.” +“ಹಳೇಪೈಕದವರನ್ನು ಕೂರಿಸೋ ಜಾಗದಲ್ಲಿ?” +“ಹ್ಞೂ!” +“ಏನೋ, ದೇವಯ್ಯ, ನಿನಗೆ ಸ್ವಲ್ಪಾನೂ ದಾಕ್ಷಿಣ್ಯ ಇಲ್ಲ? +ಅಮಲ್ದಾರರು ಇನಿಸ್ಪೆಕ್ಟರು ಡಾಕ್ಟರು ಎಲ್ಲ ಅವರನ್ನ ತಮ್ಮ ಪಂಕ್ತೀಲೆ ಕೂರಿಸಿಕೊಂಡು ಊಟ ಮಾಡ್ತಾರೆ; +ನಿಮ್ಮ ಮನೇಲಿ ಆ ಗೊಚ್ಚೆವಾಸನೆ ಹಿತ್ತಲು ಕಡೇಲಿ ಬಳ್ಳೆ ಹಾಕಾನ ಅಂತೀಯಲ್ಲಾ!” +“ಕೆಳಜಗಲೀಲಾದ್ರೂ ಹಾಕೋಕೆ ಒಪ್ತಾರಾ? +ಕೇಳಿಕೊಂಡು ಬರ್ತೀನಿ” ಎಂದು ದೇವಯ್ಯ ಒಳಗೆ ಹೋಗಿ ಬಂದು “ಏನೇನೊ ಮಾಡಿ ಒಪ್ಪಸ್ದೆ, ಮಾರಾಯ, ಅದಕ್ಕೂ ಬಹಳ ಕಷ್ಟಾನೆ ಆಯ್ತು. +ನಮ್ಮ ಅವ್ವ ‘ಮೇಲುಪ್ಪರಿಗೇಲಿ ತಿರಪತಿ ಕಾಣ್ಕೆ ಅದೆ. +ಜಗಲೀಲಿ ಧರ್ಮಸ್ಥಳದ್ದು ಪ್ರಸಾದ ಕಟ್ಟಿದೆ. +ಮನೇಗೆ ಮುಟ್ಟುಚಿಟ್ಟಾದ್ರೆ ಅಣ್ಣಪ್ಪ ದೇವರು ನಮ್ಮ ಮನೆತನಾನೆ ಅಳಿಸಿಬಿಡ್ತಾನೆ’ ಅಂತಾ ಏನೇನೂ ಹೇಳ್ತು” ಎಂದವನು ಕಿಸಕ್ಕನೆ ನಕ್ಕು, ನಿಧಾನವಾಗಿ ವ್ಯಂಗ್ಯಧ್ವನಿಯಿಂದ “ಅಷ್ಟೇ ಅಲ್ಲ; ನಿನಗೂ ಆಯ್ತು, ಸಮಾ!” ಎಂದನು. +“ಏನು ಮಾರಾಯಾ?” +“ಆಮೇಲೆ ಹೇಳ್ತೀನಿ, ಬಾ, ಬಳ್ಳೆಹಾಕಿ ಕಾಯ್ತಿದಾರೆ.”ಸಮಸ್ಯೆ ಅಲ್ಲಿಗೇ ಮುಗಿಯಲಿಲ್ಲ. +ದೇವಯ್ಯನ ತಾಯಿಗೂ ಅವನ ಹೆಂಡತಿಗೂ ಕೆಲವು ವಿವರಗಳ ವಿಚಾರದಲ್ಲಿ ಬಹಳ ಜಿಜ್ಞಾಸೆ ನಡೆಯಿತು. +ಊಟಹಾಕುವ ಜಾಗ ನಿರ್ಣಯವಾದ ಮೇಲೆ ಅಡಿಗೆಯ ಆಳೊಬ್ಬನ ಕೈಲಿ ಒಂದು ಮಣೆ ಕೊಟ್ಟು ಕೆಳಜಗಲಿಯ ಮೂಲೆಯಲ್ಲಿ ಅದನ್ನು ಹಾಕಿಸಿದರು. +ಆದರ ಸಮೀಪದಲ್ಲಿ ಕವುಚಿಹಾಕಿದ ಒಂದು ಸಿದ್ದೆಯ ಮೇಲೆ ಚಿಮಣಿದೀಪ ಇಡಿಸಿದರು. +ಬಾಳೆಎಲೆ ಆರಿಸುವಾಗ ಒಂದು ಸಣ್ಣ ವಿಚಾರಗೋಷ್ಠಿಯೆ ನಡೆಯಿತು. +ಕೀತು ಹಾಕುವುದೋ?ಕುಡಿ ಹಾಕುವುದೊ?ಕಂಡು ಹಾಕುವುದೋ? +ಕೀತು ಸಣ್ಣದಾಗುತ್ತದೆ; +ಕುಡಿಯನ್ನೆ ಹಾಕಿದರಾಯಿತು ಎಂದಳು ದೇವಯ್ಯನ ತಾಯಿ. +ಆದರೆ ದೇವಯ್ಯನ ಹೆಂಡತಿ “ಬ್ಯಾಡ, ಅತ್ತೆಮ್ಮ, ಒಂದು ಕಂಡು ಹಾಕಿದರೆ ಆಯಿತು” ಎಂದಳು. +ಪಾದ್ರಿಯ ಯೋಗ್ಯತೆಗೆ ಕುಡಿಬಾಳೆಲೆಯ ಸ್ಥಾನಮಾನಗಳು ಮೀರಿದ್ದು ಎಂಬುದು ಅವಳ ಒಳ ಇಂಗಿತವಾಗಿತ್ತು. +ಪಾಪ!ಇನ್ನು ಎರಡು ವರ್ಷಗಳ ಒಳಗಾಗಿ, ತನ್ನಿಂದ ತನ್ನ ಗಂಡನನ್ನೆ ಅಪಹರಿಸುವ ಪ್ರಯತ್ನದಲ್ಲಿ, ಪಾದ್ರಿ ತನಗೆ ಎಂತಹ ಸಂಕಟ ತಂದೊಡ್ಡುತ್ತಾನೆ ಎಂಬ ಭವಿಷ್ಯತ್ತು ಅವಳಿಗೆ ಆಗ ಗೊತ್ತಾಗಿದ್ದರೆ, ಆ ವಿಪತ್ತನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಳೇನೊ, ಕುಡಿಬಳ್ಳಿಯ ಗೌರವವನ್ನೆ ತೋರಿ? +ಬಡಿಸುವ ಸಮಯದಲ್ಲಂತೂ ಒಂದು ವಿಷಯ ಪರಿಸ್ಥಿತಿಯೆ ಒದಗಿತ್ತು. +ಮನೆಯ ಹೆಂಗಸರು, ಪಾದ್ರಿಯಿರಲಿ ಚಕ್ರವರ್ತಿಯೆ ಊಟಕ್ಕೆ ಬಂದಿದ್ದರೂ, ಕೀಳು ಜಾತಿಯವರಿಗೆ ಕೈಯಾರೆ  ಅನ್ನ ಇಕ್ಕುವ ಸಂಭವವೆ ಇರಲಿಲ್ಲವಷ್ಟೆ! +ಆದರೆ ಆಳುಗಳೂ ಕಿಲಸ್ತರವನಿಗೆ ಕೈಯಾರ ಅನ್ನ ಇಕ್ಕುವ ಸಂಭವವೆ ಇರಲಿಲ್ಲವಷ್ಟೆ! +ಆದರೆ ಆಳುಗಳೂ ಕಿಲಸ್ತರವನಿಗೆ ಕೈಯಾರೆ ಬಡಿಸಲು ಒಪ್ಪಲಿಲ್ಲ. +‘ದನಾ ತಿನ್ನುವ ಕೀಳುಜಾತಿಗೆ ಕೈಯಿಂದಲೆ ಅನ್ನ ಇಕ್ಕಿ ಅವರ ಎಂಜಲಿನಿಂದ ಮೈಲಿಗೆಯಾಯಿತೆಂದರೆ ಜಾತಿಯವರಾರೂ ತಮ್ಮನ್ನು ಒಳಕ್ಕೆ ಸೇರಿಸುವುದಿಲ್ಲ’ ಎಂದು ಬಿಟ್ಟರು. +ಕಡೆಗೆ, ಹೊಲೆಯರು ಹಟ್ಟರಿಗೆ ಎಲೆಗೆ ಬಡಿಸುವುದನೆಲ್ಲ ಬಡಿಸಿ ಆ ಎಲೆಯನ್ನೆ ಒಂದು ಮೊರದದಲ್ಲಿಟ್ಟು ಕೊಡುವಂತೆ, ಪಾದ್ರಿಗೂ ಮಾಡಿದರು. +ನೀರು ಕುಡಿಯಲು ಕಂಚು ತಾಮ್ರದ ಲೋಟಗಳನ್ನೆ ಎಚ್ಚರಿಕೆಯಿಂದ ಆರಿಸಿಬಿಟ್ಟರು. +ಏಕೆಂದರೆ ಅವನ್ನು ಬೆಂಕಿಯಲ್ಲಿ ಸುಟ್ಟು, ಸಗಣಿ ನೀರಿನಲ್ಲಿ  ಅದ್ದಿಟ್ಟು, ಮಡಿಮಾಡಿಕೊಳ್ಳಬಹುದು ಎಂದು. +ಊಟಮಾಡಿದ ಮೇಲೆ ಪಾದ್ರಿಯ ಎಲೆಯನ್ನು ತೆಗೆದು ಗೋಮಯ ಹಾಕುವಂತೆಯೂ ಮಾಡಿದ್ದರು. +ಹೀಗೆ ಪ್ರಾರಂಭವಾಗಿತ್ತು, ಎರಡು ವರ್ಷಗಳ ಹಿಂದೆ, ಪಾದ್ರಿ ಜೀವರತ್ನಯ್ಯನ ಮೊದಲನೆಯ ಭೇಟಿ, ಬೆಟ್ಟಳ್ಳಿ ಮನೆಗೆ. +ಇದಾದ ಮೇಲೆ ಕೆಲವು ದಿನಗಳಲ್ಲಿ ಯಜಮಾನರು ಕಲ್ಲಯ್ಯಗೌಡರು ತಮ್ಮ ಹಿರಿಯ ಮಗ ದೇವಯ್ಯನೊಡನೆ ತೀರ್ಥಹಳ್ಳಿಗೆ ಕಛೇರಿಯ ಕೆಲಸಕ್ಕಾಗಿ ಹೋಗಿದ್ದರು. +ಆಗ ಜೀವರತ್ನಯ್ಯ ಅಧಿಕಾರಿಗಳನ್ನೂ ಕರಣಿಕ ವರ್ಗದವರನ್ನೂ ತಾನೆ ಕಂಡು ಗೌಡರ ಕೆಲಸ ಬೇಗ ಮುಗಿಯುವಂತೆ ಮಾಡಿದ್ದನು. +ಅಲ್ಲದೆ ತಂದೆ ಮಕ್ಕಳಿಬ್ಬರನ್ನೂ ಆಸ್ಪತ್ರೆಯ ಹೆಸರು ಹೊತ್ತಿದ್ದ ಒಂದು ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅವರ ಮನೆಯ ಹೆಂಗಸರಿಗೆಂದು ಔಷಧಗಳನ್ನೂ ಕೊಡಿಸಿದ್ದನು. +ಬೆಟ್ಟಳ್ಳಿಗೆ ಬರುತ್ತಾ ಹೋಗುತ್ತಾ ಪರಿಚಯ ಸ್ನೇಹಕ್ಕೂ ವಿಶ್ವಾಸಕ್ಕೂ ತಿರುಗಿತು. +ದೇವಯ್ಯನ ಮುಖಾಂತರ ಪಾದ್ರಿ ಕೋಣೂರು ಹಳೆಮನೆಗಳಿಗೂ ಭೇಟಿಯಿತ್ತನು. +ಹಳೆಮನೆಗೆ ಹೋಗಿದ್ದಾಗಲೆ ಅವನಿಗೆ ಗೊತ್ತಾಗಿದ್ದು, ಸುಬ್ಬಣ್ಣ ಹೆಗ್ಗಡೆಯವರ ದೊಡ್ಡ ಮಗ, ದೊಡ್ಡಣ್ಣ ಹೆಗ್ಗಡೆ, ತಿರುಪತಿಗೆ ಹೋಗಿದ್ದವನು ಹಿಂತಿರುಗಿ ಬಂದಿರಲಿಲ್ಲ ಎಂದು. +ದಾರಿಯಲ್ಲಿಯೆ ವಾಂತಿ ಭೇದಿ ರೋಗವಾಗಿ ಸತ್ತುಹೋದನೆಂದು ಕೆಲವರೂ; +ಸತ್ತಿರಲಿಲ್ಲ, ಪ್ರಜ್ಞೆ ತಪ್ಪಿದ್ದವನನ್ನು ಸತ್ತನೆಂದು ಭಾವಿಸಿ ರೋಗಕ್ಕೆ ಹೆದರಿ ಬಿಟ್ಟು ಬಂದರೆಂದು ಕೆಲವರೂ;  +ಪ್ರಜ್ಞೆಯಿಲ್ಲದೆ ಬಿದ್ದಿದ್ದವನನ್ನು ಕಂಡು ಯಾರೊ ಸನ್ನೇಸಿಗಳೊ ಬೈರಾಗಿಗಳೊ ಮದ್ದುಕೊಟ್ಟು ಬದುಕಿಸಿ ತಮ್ಮೊಡನೆ ಕರೆದೊಯ್ದರೆಂದು ಕೆಲವರೂ; +ಯಾವುದೊ ಜಾತ್ರೆಯಲ್ಲಿ ಗಡ್ಡಬಿಟ್ಟು ಬೈರಾಗಿಗಳೊಡನೆ ಇದ್ದ ಅವನನ್ನು ಕಂಡೆವೆಂದೂ ಮತ್ತೆ ಕೆಲವರೂ; +ನಿಜವೊ?ಸುಳ್ಳೊ?ಊಹಿಸಿಯೊ?ಕತೆಕಟ್ಟಿಯೊ? +ನಾನಾ ರೀತಿಯಾಗಿ ವದಂತಿ ಹಬ್ಬಿಸಿದ್ದರು. +ಅದನ್ನು ಕೇಳಿ ಪಾದ್ರಿಗೆ ನಿಜವಾಗಿಯೂ ಹೃದಯ  ಮರುಗಿತ್ತು. +ಅದರಲ್ಲಿಯೂ ಅವನು ದೊಡ್ಡಣ್ಣ ಹೆಗ್ಗಡೆಯ ಹೆಂಡತಿ ‘ಹುಚ್ಚು ಹೆಗ್ಗಡಿತಿ’ ಯನ್ನು ಕಂಡು ಮಾತನಾಡಿಸಿದ ಮೇಲಂತೂ ದೊಡ್ಡಣ್ಣ ಹೆಗ್ಗಡೆ ಬದುಕಿದ್ದರೆ ಅವನನ್ನು ಹೇಗಾದರೂ ಮಾಡಿ ಪತ್ತೆ ಹಚ್ಚಿ ಕರತರಲೆಬೇಕೆಂದು ತನ್ನ ಕ್ರೈಸ್ತ ಸೌಜನ್ಯಯವನ್ನು ಮಿಶನರಿ ಉತ್ಸಾಹದಿಂದ ಮರೆದಿದ್ದನು. +ಆ ಒಂದು ಘಟನೆಯಿಂದಲೆ ಪಾದ್ರಿಯ ವಿಚಾರವಾಗಿದ್ದ ಅನೇಕರ ಸಂಶಯ ಮತ್ತು ದುರಭಿಪ್ರಾಯ ಬದಲಾವಣೆ ಹೊಂದಿತ್ತು. +ದೇವಯ್ಯ ತೀರ್ಥಹಳ್ಳಿಗೆ ಹೋಗಿ ಬಂದಾಗಲೆಲ್ಲ ಏನಾದರೊಂದು ರೀತಿ ಸುಧಾರಿಸಿಯೆ ಬರುತ್ತಿದ್ದನು. +ಬಟ್ಟೆಬರೆಗಳಿಗೆ ಅದು ಸೀಮಿತವಾಗಿದ್ದಾಗ ಅವನ ತಾಯಿ ಮತ್ತು ಅವನ ಹೆಂಡತಿ ನಗೆಬೀರಿ ಮೆಚ್ಚಿಗೆ ತೋರಿದ್ದರು. +ಹೊಸಹೊಸ ಸಾಮಾನು ತಂದಾಗಲೂ ಯಜಮಾನರು ಹಣದ ದುಂದುಗಾರಿಕೆಯ ವಿಚಾರವಾಗಿ ಭರ್ತ್ಸನೆ ಮಾಡಿದ್ದುಂಟು. +ಆದರೆ ಅವನು ಜಗಲಿಯಲ್ಲಿ ತೂಗುಹಾಕಲು ಒಂದು ದೊಡ್ಡ ಗಡಿಯಾರ ತಂದಾಗ, ಆ ನವನಾಗರಿಕತೆಯ ವಸ್ತುವಿಗೆ ಎಲ್ಲರೂ ಅಚ್ಚರಿವೋಗಿ ಬೆರಗಾಗಿದ್ದರು. +ಅಂಗಳದ ನೆಳಲನ್ನು ನೋಡಿ ಕಾಲನಿರ್ಣಯಮಾಡಿ ಆಳುಗಳನ್ನು ಬೆಳಿಗ್ಗೆ ಮಧ್ಯಾಹ್ನ ಕೆಲಸಕ್ಕೆ ಕರೆಯುವ ಸಂದಿಗ್ಧತೆ ತಪ್ಪಿತಲ್ಲಾ ಎಂದು ಸಂತೋಷಪಟ್ಟಿದ್ದರು ಕಲ್ಲಯ್ಯಗೌಡರು. +ತಾಯಿಗೂ ಮತ್ತು ಹೆಂಡತಿಗೂ ತನ್ನ ಮಗ ಮತ್ತು ಗಂಡ ಎಷ್ಟು ಚೆನ್ನಾಗಿ ಕಾಣಿಸುತ್ತಾನೆ ಹೊಸ ರೀತಿಯ ಹೊಸ ಬಟ್ಟೆ ಹಾಕಿಕೊಂಡು ಎಂದು ಆನಂದವಾಗಿತ್ತು. +ಆದರೆ ದೇವಯ್ಯನಲ್ಲಿ ಹೊರನೋಟಕ್ಕೆ ಆಗುತ್ತಿದ್ದ ಬದಲಾವಣೆಗಳಿಗಿಂತಲೂ ಗುರುತರವಾದ ಆಂತರಿಕ ಪರಿವರ್ತನೆಗಳು ನಡೆಯುತ್ತಿದ್ದುವು ಎಂಬುದನ್ನು ಅವರು ಯಾರು ಅರಿಯಲಿಲ್ಲ. +ಒಂದು ದಿನ ಅವನು ತೀರ್ಥಹಳ್ಳಿಯಿಂದ ಹಿಂತಿರುಗಿದಾಗ ಜುಟ್ಟು ಬೋಳಿಸಿ ಕಿರಾಪು ಬಿಟ್ಟಿದ್ದನ್ನು ಕಂಡಾಗಲೆ ಅವರಿಗೆ ಹೊರಗಣ ಪರಿವರ್ತನೆಯೂ ಭಯಂಕರವಾಗಿ ಕಾಣಿಸಿದ್ದು! +“ಅಪ್ಪ ಅವ್ವ ಸಾಯೋತನಕ ಕಾಯೋಕಾಗಲಿಲ್ಲವೇನೋ, ಮಗನೆ?” ಎಂದು ತಾಯಿ ಅತ್ತುಕರೆದು ಅನ್ನ ನೀರು ಬಿಟ್ಟಿದ್ದಳು. +ಅಪ್ಪ ಅವ್ವ ಸತ್ತಾಗ ಮಾತ್ರ ತಲೆಬೋಳಿಸುತ್ತಿದ್ದುದು ಆಚಾರವಾಗಿತ್ತು. +ಈಗ ಕಾರ್ಯವೆ ನಡೆದುಹೋಗಿದ್ದುದರಿಂದ ಇನ್ನೇನು ಕಾರಣವೂ ನಡೆಯುವುದಕ್ಕೆಂದೇ ಮುನ್‌ಸೂಚಕವಾಗಿ ವಿಧಿ ದೇವಯ್ಯನ ಕೈಲಿ ಆ ಅಧರ್ಮಕಾರ್ಯ ಮಾಡಿಸದೆ ಎಂದು ಭೀತರಾಗಿದ್ದರು. +ದೇವಯ್ಯನ ಹೆಂಡತಿಯೂ ಗಂಡನಿಂದ ಆಗಬಾರದ ಅಮಂಗಳ ಕಾರ್ಯ ಆಗಿಹೋಯಿತಲ್ಲಾ ಎಂದು ಕೋಣೆಬಾಗಿಲು ಹಾಕಿಕೊಂಡು ರೋದಿಸಿ, ದೇವರಿಗೆ ತಪ್ಪುಗಾಣಿಕೆ ಕಟ್ಟಿದ್ದಳು. +ಆದರೆ ದಿನಕಳೆದಂತೆಲ್ಲಾ ಅವಳಿಗೆ ಜುಟ್ಟಿಗಿಂತಲೂ ಕ್ರಾಪೇ ತನ್ನ ಗಂಡನಿಗೆ ಲಕ್ಷಣವಾಗಿ ಕಾಣುವಂತೆ ತೋರಿತ್ತು! +ಕ್ರಮೇಣ ದೇವಯ್ಯ ಮಿಂದು, ಉಣ್ಣುವುದಕ್ಕೆ ಹೋಗುವ ಮೊದಲು, ಹಣೆಗೆ ನಾಮ ಇಟ್ಟುಕೊಳ್ಳುವುದನ್ನು ಬಿಟ್ಟಿದ್ದನ್ನೂ, ತುಳಸಿ ಕಟ್ಟೆಗೆ ಸುತ್ತುಬರುವುದೆ ಮೊದಲಾದ ಧಾರ್ಮಿಕಾಚಾರಗಳನ್ನು ತ್ಯಜಿಸಿದ್ದನ್ನೂ, ದೇವಯ್ಯ ದ್ಯಾವರು ಸತ್ಯನಾರಾಯಣವ್ರತ ಇವುಗಳನ್ನೆಲ್ಲ ಹೀಯಾಳಿಸತೊಡಗಿದ್ದನ್ನೂ ತಂದೆ ತಾಯಿ ಹೆಂಡತಿಯರಲ್ಲದೆ ನೆಂಟರೂ ಆಳುಕಾಳುಗಳೂ ಗಮನಿಸಿ, ಪಾದ್ರಿ ಮಂಕುಬೂದಿ ಹಾಕಿರಬೇಕೆಂದೂ ಭಾವಿಸಿದ್ದರು. +ಕಡೆಕಡೆಗೆ ದೇವಯ್ಯ ಎಲ್ಲ ಆಚಾರವಿಚಾರಗಳಲ್ಲಿಯೂ ವೇಷಭೂಷಣಗಳಲ್ಲಿಯೂ ಸಿಂಧುವಳ್ಳಿ ಚಿನ್ನಪ್ಪನ ಪ್ರತಿಬಿಂಬವೆ ಆಗಿಬಿಟ್ಟಿದ್ದನು. +ಒಂದು ದಿನ ಅವನು ತನ್ನ ಮತಸುಧಾರಣಾ ಕಾರ್ಯದಲ್ಲಿ ಬಹಳ ಮುಂದುವರೆದು ತನ್ನ ಹೆಂಡತಿಯೊಡನೆ ತಮ್ಮ ಕೋಣೆಯಲ್ಲಿ ತುಂಬ ಒರಟಾಗಿ ವರ್ತಿಸಿದ್ದನು: +ದೇವಮ್ಮ (ದೇವಯ್ಯನ ಹೆಂಡತಿಯ ಹುಟ್ಟು ಹೆಸರು )ಅವಳ ತವರುಮನೆ ಕೋಣೂರಿನಲ್ಲಿ ಆಕೆಯ ತಂದೆ, ತಾಯಿ, ಅಣ್ಣ ಮೊದಲಾದ ದೊಡ್ಡವರೆಲ್ಲ ಅವಳನ್ನು ಮುದ್ದಿದಾಗಿ ‘ಪುಟ್ಟಕ್ಕ’ ಎಂದೇ ಕರೆಯುತ್ತಿದ್ದರು. +ಅವಳ ತಮ್ಮ ಮುಕುಂದಮ್ಮ ‘ಅಕ್ಕಯ್ಯ’ ಎಂದು ಕರೆಯುವುದನ್ನು ಅನುಕರಿಸಿ ಚಿಕ್ಕವರೆಲ್ಲರೂ ‘ಅಕ್ಕಯ್ಯ’ ಎಂದೆ ಹೆಸರಿಸುವುದು ವಾಡಿಕೆಯಾಗಿತ್ತು. +ಆದರೆ ಗಂಡನಮನೆಯ ಬೆಟ್ಟಳ್ಳಿಯಲ್ಲಿ ಆಳುಕಾಳುಗಳೆಲ್ಲರೂ ಅವಳನ್ನು ಗೌರವದಿಂದ ‘ಕೋಣೂರಮ್ಮ’ ಎಂದು ಕರೆಯುತ್ತಿದ್ದರು. + ನಾಗಂದಿಗೆಯಿಂದ ನಾಗಂದಿಗೆಗೆ ಅಡ್ಡಲಾಗಿ ಹಾಕಿದ್ದ ಬಿದಿರ ಗಳುವಿಗೆ ತೂಗುಹಾಕಿದ್ದ ನೇಣುಗಳ ಮೇಲೆ  ನೇತಾಡುತ್ತಿದ್ದ ತೊಟ್ಟಿಲಲ್ಲಿ ಮಲಗಿದ್ದ ತನ್ನ ಐದು ತಿಂಗಳ ‘ಬಾಲೆ’ಯನ್ನು ಮಲಗಿಸುತ್ತಿದ್ದಳು. +ಬಾಯಿ ಯಾಂತ್ರಿಕವಾಗಿ ಎಂಬಂತೆ ಏನೋ ಹಾಡನ್ನು ಬಹು ಮೆಲ್ಲಗೆ ಗುನುಗುತ್ತಿತ್ತು. +ತೊಟ್ಟಿಲನ್ನು ತೂಗುವ ‘ಗಿರಕ್ ಗಿರಕ್ ಗಿರಕ್’ ಸದ್ದು ಕೋಣೆಯ ನಿಃಶಬ್ದತೆಗೆ ಪೋಷಕವಾಗಿತ್ತು. +ಆ ಕೋಣೆಗಿದ್ದ ಎರಡು ಚಿಕ್ಕ ಬೆಳಕಂಡಿಯಲ್ಲಿ ಮೂರು ರೆಕ್ಕೆಗಳನ್ನು ಸಂಪೂರ್ಣವಾಗಿ ಮುಚ್ಚಿದ್ದು ಮತ್ತೂ ಒಂದನ್ನೂ ಮುಕ್ಕಾಲು ಮುಚ್ಚಿದ್ದುದರಿಂದ ಪದಾರ್ಥಗಳ ಹೊರ ಆಕಾರ ಕಾಣುವಷ್ಟರ ಮಟ್ಟಿಗೆ ಹೌದೊ ಅಲ್ಲವೊ ಎನ್ನುವಷ್ಟು ಬೆಳಕು ಪ್ರವೇಶಿಸುತ್ತಿತ್ತು. +ಕಣ್ಣಿಗೆ ತಂಪಾಗಿತ್ತು, ಒಳಗಿದ್ದ ಕತ್ತಲೆ. +ಹೊರಗಿದ್ದ ನಡುಹಗಲಿನ ಸುಡು ಬಿಸಿಲಿನ ಮುಂದೆ ಆ ಕೋಣೆ ಸುಖ ಶೀತಲ ಶಾಂತಿಧಾಮದಂತಿತ್ತು. +ದೇವಮ್ಮ ಹೆರಿಗೆಯಾದ ಮೇಲೆ ತವರುಮನೆಯಿಂದ ಬಂದು ಒಂದು ತಿಂಗಳಾಗಿತ್ತು. +ಅದು ಚೊಚ್ಚಲ ಹೆರಿಗೆಯಾಗಿದ್ದರೂ ಅವಳು ಶಿಶುಜನನ ಕಾಲದಲ್ಲಿ ತುಂಬ ಕಷ್ಟಪಡಬೇಕಾಗಿಬಂದುದರಿಂದ ಇನ್ನೂ ನಿಃಶಕ್ತಳಾಗಿಯೆ ಇದ್ದಳು. +ಸಹಜವಾಗಿದ್ದ ಅವಳ ಚೆಲುವು ಸುಕ್ಕಿಹೋಗಿತ್ತು. +ಆದರೆ ಅವಳ ಪ್ರಾಣದೊಂದನ್ನೂ ಮನಸ್ಸಿಗೆ ಹಾಕಿಕೊಂಡಿರಲಿಲ್ಲ. +ತೊಟ್ಟಿಲಲ್ಲಿ ಮಲಗಿದ್ದ ‘ಚೆಲುವಯ್ಯ’ – ಜೋಯಿಸರು ಜಾತಕ ಬರೆದು, ಹೆಸರು ಚಕಾರದಿಂದ ಪ್ರಾರಂಭವಾಗತಕ್ಕದ್ದು ಎಂದು ‘ಚಿನ್ನಪ್ಪ’ ಎಂಬುದನ್ನು ಸೂಚಿಸಿದ್ದರೂ ಸಿಂಧುವಳ್ಳಿ ಚಿನ್ನಪ್ಪನನ್ನು ನೆನಪಿಗೆ ತರುವ ಅದು ಅಮಂಗಳಕರವೆಂದು ನಿರ್ಣಯಿಸಿ ದೇವಮ್ಮ ಮತ್ತು ಅವಳ ಅತ್ತೆ, ದೇವಯ್ಯನ ಮಾತನ್ನು ತಿರಸ್ಕರಿಸಿ, ‘ಚೆಲುವಯ್ಯ’ ಎಂಬ ಹೆಸರಿನಿಂದಲೆ ಕರೆಯತೊಡಗಿದ್ದರು – ಅವಳ ಕಷ್ಟಸಂಕಟಗಳನ್ನೆಲ್ಲ ನುಂಗಿನೊಣೆವ ಪರಮಾನಂದ ಮೂರ್ತಿಯಾಗಿದ್ದನು. +ತೂಗುವುದನ್ನು ನಿಲ್ಲಿಸಿ ನೋಡಿದಳು. + ‘ಬಾಲೆ’ ನಿದ್ದೆಯ ಮುದ್ದೆಯಾಗಿತ್ತು! +ಇನ್ನೇನು ಮಧ್ಯಾಹ್ನ ವಿಶ್ರಾಂತಿಗಾಗಿ ಅವಳೂ ತೊಟ್ಟಿಲ ಪಕ್ಕದಲ್ಲಿಯೆ ನೆಲದಮೇಲೆ ಹಾಸಿದ್ದ ಹಾಸಗೆಯ ಮೇಲೆ ಮಗ್ಗುಲಾಗಲು ಹವಣಿಸುತ್ತಿದ್ದಳು. +ಗಿರಕ್ಕನೆ ಸದ್ದಾಗಿ ಬಾಗಿಲು ತೆರೆಯಿತು. +ದೇವಯ್ಯ ಮೆಲ್ಲನೆ ಒಳಗೆ ಬಂದನು. +ಬಂದವನು, ಕೋಣೆಯ ಒಳಗೆ ಇದ್ದ ನಿಃಬ್ದತೆಯನ್ನೂ ಹಗಲುಗತ್ತಲೆಯನ್ನೂ ಧೂಪದ ಪರಿಮಳವನ್ನೂ ನಿಷ್ಕ್ರಿಯಾ ಪ್ರಶಾಂತಿಯನ್ನು ಆಸ್ವಾಧಿಸುವಂತೆ ಬಾಗಿಲ ಬಳಿ ನಿಂತು ಮೆಲ್ಲನೆ ಬಾಗಿಲು ಹಾಕಿದನು. +ಬೆಳಕಿನಿಂದ ಬಂದಿದ್ದ ಅವನಿಗೆ ಸ್ವಲ್ಪ ಹೊತ್ತು ಒಳಗೆ ಏನೂ ಕಾಣಿಸಿರಲಿಲ್ಲ. +ಕಣ್ಣು ಒಳಗಿನ ಬೆಳಕಿಗೆ ಹೊಂದಿಕೊಂಡಮೇಲೆ ತೊಟ್ಟಿಲು, ಅದರ ಪಕ್ಕದಲ್ಲಿ ಹಾಸಗೆಯಲ್ಲಿ ಕುಳಿತಿದ್ದ ಅವನ ಕೃಶಾಂಗಿ, ಅದಕ್ಕೆ ತುಸುದೂರದಲ್ಲಿಯೆ ಮೂಲೆಯಲ್ಲಿದ್ದ ದೊಡ್ಡ ಮಂಚ – ಎಲ್ಲ ಕ್ರಮೇಣ ದೃಷ್ಟಿಗೆ ಸ್ವಪ್ನವತ್ತಾಗಿ ಮೂಡಿದ್ದುವು. +“ಯಾಕೆ?ಬೆಳಕಂಡಿ ಬಾಗಿಲನ್ನೆಲ್ಲ ಹಾಕಿಬಿಟ್ಟೀಯಾ? +ಒಂದು ಚೂರು ಗಾಳಿ ಬೆಳಕು ಓಡ್ಯಾಡಬಾರದೇನೇ?” ಎಂದು ಕಿಟಕಿ ಬಾಗಿಲುಗಳನ್ನು ತೆರೆಯತೊಡಗಿದನು. +“ಬಾಲೆಗೆ ಗಾಳಿ ಸೋಂಕು ಆಗ್ತದಂತೆ, ತೆಗೀಬ್ಯಾಡಿ. +ರಣಬಿಸಿಲು ಬೇರೆ; + ಕೆಟ್ಟ ಕೆಟ್ಟ ದೆಯ್ಯಗಿಯ್ಯ ಓಡಾಡ್ತವಂತೆ… ಥ್ಚು! +ಹೇಳಿದ್ದೊಂದೂ ಗೊತ್ತಾಗಾದಿಲ್ಲ ನಿಮಗೆ. +ಮಲಗಿದ್ದ ಬಾಲೇನೂ ಎಬ್ಬಿಸ್ತೀರಿ ಈಗ… ನಿಮಗೆ ಹಿಡಿದಿದ್ದೇ ಹಟ!” ಎಂದು ತೊಟ್ಟಿಲ ಹಗ್ಗಕ್ಕೆ ಒಂದು ಅರಿವೆಯ ತುಂಡನ್ನು ಅಡ್ಡಕಟ್ಟಿದ್ದಳು, ಮಗುವಿಗೆ ಬೆಳಕಿನ ಝಳ ಬೀಳದ ಹಾಗೆ. +ಬೆಳಕಂಡಿಯ ಬಾಗಿಲುಗಳನ್ನೆಲ್ಲ ತೆರೆದು ತಿರುಗಿದವನು ತೊಟ್ಟಿಲ ಹಗ್ಗ ಕಟ್ಟಿದ್ದ ಗಳುವಿಗೆ ಬಟ್ಟೆಸುತ್ತಿ ನೇತುಹಾಕಿದ್ದ ಕುಂಕುಮಾಂಕಿತವಾದ ತೆಂಗಿನಕಾಯನ್ನು ನೋಡಿ “ಇದೇನು ಇದು?” ಎಂದು ತಿರಸ್ಕಾರಪೂರ್ವಕವಾಗಿ ಕೇಳಿದನು. +ಅದೇನು ಎಂಬುದು ಅವನಿಗೂ ಗೊತ್ತಿದ್ದ ವಿಚಾರವೆ ಆಗಿತ್ತು. +ಆದರೆ ಅವನು ನಿನ್ನೆ ತಾನೆ ತೀರ್ಥಹಳ್ಳಿಯಿಂದ ಹಿಂದಿರುಗಿದ್ದನು. +ಪಾದ್ರಿಯ ಉಪದೇಶದ ಆವೇಶ ಇನ್ನೂ ಬಿಸಿಬಿಸಿಯಾಗಿಯೆ ಇತ್ತು. +ಜೀವರತ್ನಯ್ಯ ಗೌಡ ಜನಾಂಗದಲ್ಲಿದ್ದ ಮೂಢಾಚಾರ ಮತ್ತು ಮೂಢನಂಬಿಕೆಗಳನ್ನು ಅಪಹಾಸ್ಯಮಾಡಿ ಖಂಡಿಸಿದ್ದ ಗಾಯದ ನೆತ್ತರು ಇನ್ನೂ ಹಸಿವಾಗಿಯೆ ಇತ್ತು. +ಅದಕ್ಕಾಗಿ ತನ್ನ ಮತ್ತು ತನ್ನ ಜಾತಿಯವರ ವಿಚಾರವಾಗಿ ದೇವಯ್ಯನಿಗೆ ಜುಗುಪ್ಸೆ ಹುಟ್ಟಿತ್ತು; +ತುಂಬ ಅವಮಾನಕ್ಕೆ ಗುರಿಯಾಗಿತ್ತು ಅವನ ಮನಸ್ಸು. +ಅದರ ಪ್ರಭಾವವೆ ಆ ಪ್ರಶ್ನೆಯ ಧ್ವನಿಗೂ ಅದರ ಕರ್ಕಶಕ್ಕೂ ಕಾರಣವಾಗಿತ್ತು. +“ಕಲ್ಲೂರು ದೋಯಿಸರು ಹೆಸರು ಇಟ್ಟುಕೊಡಾಕೆ ಬಂದಿದ್ದಾಗ, ಬಾಲೆಗೆ ಜಕಣಿ ಪಂಜ್ರೋಳ್ಳಿ ಕಾಟ ಕೊಟ್ಟಾವು ಅಂತಾ, ಮಂತ್ರಿಸಿಕೊಟ್ಟಿದ್ರು…” ದೇವಮ್ಮ ಪೂರೈಸಿರಲಿಲ್ಲ. +“ಇದು?” ತೊಟ್ಟಿಲ ಹಗ್ಗಕ್ಕೆ ನೇತುಬಿದ್ದಿದ್ದ ಮತ್ತೆರಡು ವಸ್ತುವಿನೆಡೆಗೆ ಕೈತೋರಿ ಕೇಳಿದನು. +“ಕಣ್ಣಾಪಂಡಿತರ ಅಂತ್ರ.” +“ಇವೆಲ್ಲ ಏನು?” ಇನ್ನೂ ಕೆಲವು ಚಿಕ್ಕಚಿಕ್ಕ ಗಂಟುಗಳ ಕಡೆ ಕೈಮಾಡಿ ಪ್ರಶ್ನಿಸಿದನು. +“ದೇವರು ದಿಂಡರಿಗೆ ಹೇಳಿಕೊಂಡು ಕಾಣಿಕೆ ಕಟ್ಟಿದ್ದು.” +“ನಿನಗೇನು ಬೇರೆ ಕಸುಬಿಲ್ಲೇನು?…” +“ಅವೆಲ್ಲ ನಿಮಗ್ಯಾಕೆ?ಗಂಡಸ್ರಿಗೆ?…”ದೇವಯ್ಯನ ರೀತಿಯಿಂದಲೂ ಧ್ವನಿಯಿಂದಲೂ ತನ್ನ ಗಂಡನ ಉದ್ದೇಶ ಒಳ್ಳೆಯದಲ್ಲ ಎಂಬುದೇನೂ ದೇವಮ್ಮಗೆ ಗೊತ್ತಾಗಿತ್ತು. +ಆದರೆ ಮುಂದೆ ನಡೆದದ್ದಕ್ಕೆ ಅವಳ ಚೇತನ ಸಿದ್ಧವಾಗಿರಲಿಲ್ಲ. +ಹಿಂದೆಲ್ಲ ಮೂದಲಿಸುತ್ತಿದ್ದಂತೆಯೊ ಬೈಯುತ್ತಿದ್ದಂತೆಯೊ ಇವತ್ತೂ ಮಾಡಬಹುದೆಂದು ಬಗೆದಿದ್ದಳು. +ಆದರೆ ದೇವಯ್ಯ ಮೈಮೇಲೆ ಬಂದವನಂತೆ ಸರಸರಸರನೆ ತೆಂಗಿನಕಾಯಿ ಅಂತ್ರ ಕಾಣಿಕೆಗಳನ್ನೆಲ್ಲ ಕಿತ್ತು ಕಸದ ಮೂಲೆಗೆ ಎಸೆದುಬಿಟ್ಟನು: +“ಅಯ್ಯೋ!” ಎಂದು ತತ್ತರಿಸುತ್ತ ತಡೆಯಲು ಎದ್ದಿದ್ದ ಬಾಣಂತಿ ಅವನ ಕೈಯ ನೂಕಿಗೆ ಸಿಕ್ಕಿ ಹಾಸಗೆಯ ಮೇಲೆ ಕುಸಿದು ಬಿಕ್ಕಿಬಿಕ್ಕಿ ಗೊಣಗಿಕೊಳ್ಳುತ್ತಾ  ಹೋಗಿ ಮಂಚದ ಮೇಲೆ ಮಲಗಿಕೊಂಡನು. +ಅದೃಷ್ಟವಶಾತ್ ಮಗುವಿನ ನಿದ್ದೆಗೆ ಭಂಗ ಬಂದಿರಲಿಲ್ಲ. +ಮಂಚದ ಮೇಲೆ ಮಲಗಿಕೊಂಡ ದೇವಯ್ಯನ ಕಿವಿಗೆ, – ಆ ಕೋಣೆ ಅಷ್ಟು ನಿಃಶಬ್ದವಾಗಿತ್ತು, –  ತನ್ನ ಹೆಂಡತಿ ಬಿಕ್ಕಿಬಿಕ್ಕಿ ಸುಯ್ದು ಅಳುವ ಸದ್ದು, ತನ್ನ ಅಂತಃಪ್ರಜ್ಞೆಯ  ಭರ್ತ್ಸನೆಯೊ ಎನ್ನುವಂತೆ, ಕೇಳಿಸತೊಡಗಿ ಅವನ ಮನಸ್ಸನ್ನು ಕಲಕಿತು. +ಶುದ್ಧ ವಿಚಾರ ದೃಷ್ಟಿಯಿಂದ ತಾನು ಮಾಡಿದುದು ತಪ್ಪಿಲ್ಲ ಎಂದು ಬುದ್ದಿ ವಾದಿಸುತ್ತಿದ್ದರೂ ಅವನ ಹೃದಯದಲ್ಲಿ ಏನೊ ಮರುಕ ತಲೆಹಾಕಿತ್ತು. +ಚೆಲುವೆಯಾಗಿದ್ದ ತನ್ನ ಹೆಂಡತಿಯನ್ನು ಅವನು ಮದುವೆಯಾ ದಂದಿನಿಂದಲೂ ತುಂಬ ಮೋಹದಿಂದ ಪ್ರೀತಿಸಿದ್ದನು. +ಅವಳೂ ತನ್ನ ಗಂಡನನ್ನು ಇನ್ನಿಲ್ಲವೆಂಬಂತೆ ಮುದ್ದಿಸಿದ್ದಳು;  +ದೇವರೆಂಬಂತೆ ಗೌರವಿಸಿದ್ದಳು. +ಪಾದ್ರಿಯ ಪ್ರಭಾವಕ್ಕೆ ತಾನು ಒಳಗಾಗುವವರೆಗೂ ಅವರಿಬ್ಬರಲ್ಲಿ ಎಷ್ಟು ಹೊಂದಾಣಿಕೆಯಿತ್ತೆಂದರೆ ಅದನ್ನು ಕಂಡು ಅತ್ತೆಗೂ ಒಮ್ಮೊಮ್ಮೆ ಕರುಬು ಮೂಡಿತ್ತು. +ಈಗ ಈ ಸ್ಥಿತಿಗೆ ಬಂದಿದೆಯಲ್ಲಾ? +ತನ್ನಗಾದರೂ ಏನು ತಪ್ಪು? +ಮಗುವಿನ ಜ್ವರಕ್ಕೆ ಔಷಧಿ ಕೊಟ್ಟು ಗುಣಪಡಿಸುವುದಕ್ಕೆ ಬದಲು ತಾಯಿತಿ ಕಟ್ಟಿದ್ದನ್ನು ಕಿತ್ತುಹಾಕಿದ್ದು ತಪ್ಪೇ? +ದಿಷ್ಟಿಮಣಿಯ ಹೆಸರಿನಲ್ಲಿ ಕೂಸಿನ ಕೊರಳಿಗೆ ನಾಣ್ಯ ರೂಪಾಯಿಗಳ ಭಾರವಾದ ಸರವನ್ನು ಹಾಕಿ, ಅದಕ್ಕೆ ಜೊಲ್ಲಿನವಾಸನೆ, ಕಕ್ಕು, ಹೇಲು, ಉಚ್ಚಿ, ಮಣ್ಣು, ಕೊಳೆ ಎಲ್ಲಾ ಹಿಡಿದು ಅಸಹ್ಯವಾಗಿದ್ದುದನ್ನು ತೆಗೆದೆಸೆದದ್ದು ತಪ್ಪೇ? +ಧರ್ಮದ ಹೆಸರಿನಲ್ಲಿ ಆರೋಗ್ಯ ಮತ್ತು ನೈರ್ಮಲ್ಯಗಳನ್ನು ನಿರ್ಲಕ್ಷಿಸಿದ್ದನ್ನು ಖಂಡಿಸಿದ್ದು ತಪ್ಪೇ? +ಕಲ್ಲು ಮಣ್ಣನ್ನು ದೇವರೆಂದು ನಂಬಿ, ಪೂಜಿಸಿ, ಹಾಳಾಗಿ ಹೋಗುತ್ತಿದ್ದಾರಲ್ಲಾ ಎಂದು ತುಳಸಿಯ ಕಲ್ಲನ್ನು ಕಿತ್ತುಹಾಕಲು ಹೋಗಿದ್ದು? +ಸ್ವಲ್ಪ ತಪ್ಪರಿಬಹುದು! +ಆದರೆ ಆ ಜೋಯಿಸ ಇವರಿಂದ ಸತ್ಯನಾರಾಯಣ ವ್ರತ ಮಾಡಿಸಿ, ಸುಳ್ಳುಸುಳ್ಳು ಕಟ್ಟು ಕಥೆಗಳನ್ನು ಪುರಾಣ ಎಂದು ಹೇಳಿ, ತನ್ನವರಿಗೆ ಸಂತರ್ಪಣೆಮಾಡಿಸಿ, ಇವರಿಗೆ ದಾರಿ ತಪ್ಪಿಸುವುದಲ್ಲದೆ ದಿಕ್ಕನ್ನೂ ತಪ್ಪಿಸುತ್ತಿದ್ದನಲ್ಲಾ ಅದನ್ನು ತಡೆದಿದ್ದು ತಪ್ಪೇ? +ಆ ಹಳೆಮನೆ ಶಂಕರ ಹೆಗ್ಗಡೆಯ ಕುಟುಂಬವೆ ಹಾಳಾಗುವಂತಾಗಿದೆಯಲ್ಲಾ! +ಪಾದ್ರಿ ಹೇಳುತ್ತಾರೆ: ಅವನ ಹೆಂಡತಿಗೆ ಕ್ಷಯ ಇರಬೇಕು. +ಮಕ್ಕಳಿಗೂ ತಗುಲಿದೆಯೊ ಏನೊ? +ಹೀಗೇ ಸುಮ್ಮನೆ ಬಿಟ್ಟರೆ ಮನೆಯವರೆಲ್ಲರೂ ಆ ಸಾಂಕ್ರಾಮಿಕ ರೋಗದಿಂದ ನರಳಿ ಸಾಯುತ್ತಾರಂತೆ. +ಅಷ್ಟೆ ಅಲ್ಲಂತೆ ಕಡೆಗೆ ಅವರ ಮನೇಲಿ ಊಟಮಾಡಿದವರಿಗೂ ಆ ಪಾತ್ರೆ ಪರಟಿ ಎಂಜಲಿನ ಮುಖಾಂತರ ಕ್ಷಯ ತಗುಲಲಿ ಅದು ಹರಡುತ್ತದಂತೆ. +ಆದರೆ ಆ ಬೆಪ್ಪು, ಶಂಕರ ಹೆಗ್ಗಡೆ, ಮೂರುಹೊತ್ತೂ ಪೂಜೆಯಂತೆ, ದೆಯ್ಯದ್ಯಾವರುಗಳಿಗೆ ಹರಕೆಯಂತೆ, ಧರ್ಮಸ್ಥಳದಲ್ಲಿ  ಅವನ ಮೇಲೆ ಹುಯ್ಯಲು ಕೊಟ್ಟಿದ್ದಾರಂತೆ, – ಅಂತಾ, ಏನೇನೋ ನಂಬಿಕೊಂಡು, ಆ ಜೋಯಿಸರು, ಈ ಬಟ್ಟರು, ಆ ಗಣಮಗ, ಈ ಸುಡುಗಾಡು ಹಟ್ಟವರು – ಅವರನ್ನೆಲ್ಲ ಕರೆಸಿ, ಏನೇನೋ ಮಾಡಿಸಿ, ತಾನೂ ದಾರಿ ತಪ್ಪಿ, ಇತರರನ್ನೂ ದಿಕ್ಕುತಪ್ಪಿಸುತ್ತಿದ್ದಾನಲ್ಲಾ – ಇದನ್ನೆಲ್ಲಾ ತಿದ್ದಬಾರದೆ? + ಇವಳಿಗೆ ಹೇಳಿದರೆ ಸ್ವಲ್ಪವೂ ಗೊತ್ತಾಗುವುದಿಲ್ಲ. +ಸುಮ್ಮನೆ ಅಳುವುದು, ಕಾಲು ಹಿಡಿದುಕೊಳ್ಳುವುದು, ಎರಡೇ ಗೊತ್ತು! +ಆಲೋಚನೆಗಳ ಪೀಡನೆಗೆ ಸಿಕ್ಕಿದ್ದ ದೇವಯ್ಯ ಮೆಲ್ಲಗೆ ಹೆಂಡತಿಯ ಕಡೆಗೆ ನೋಡಿದನು. +ಅವಳು ಮಲಗಿರಲಿಲ್ಲ. +ಆದರೆ ಅಳುವುದನ್ನು ನಿಲ್ಲಿಸಿದಂತೆ ತೋರಿತು. +ತೊಟ್ಟಿಲಲ್ಲಿ ಮಲಗಿದ್ದ ‘ಚೆಲುವಯ್ಯ’ ನನ್ನೆ  ನೋಡುತ್ತಿದ್ದಳು, ಆ ಸಂತೋಷದಲ್ಲಿ ಈ ದುಃಖವೆಲ್ಲ ಕೊಚ್ಚಿಹೋಯಿತೊ ಎನ್ನುವಂತೆ! +ಹಾಗೆಯೆ ಮೆಲ್ಲನೆ ಎದ್ದು, ಬಾಗಿಲು ಸಂದಿಯ ಕಸದ ಮೂಲೆಗೆ ನಡೆದು, ಬಾಗಿ, ತನ್ನ ಗಂಡ ಎಸೆದಿದ್ದ ತೆಂಗಿನಕಾಯಿ ಅಂತ್ರ, ಕಾಣಿಕೆಗಳನ್ನೆಲ್ಲ ಎತ್ತಿ ಹಣೆಗೆ ಮುಟ್ಟಿಸಿಕೊಂಡು, ಅವನ್ನೆಲ್ಲ ಗೋಡೆಯ ಗೂಡಿನಲ್ಲಿಟ್ಟು ಬಾಗಿಲು ಮುಚ್ಚಿ, ಮತ್ತೆ ಬಂದು ಹಾಸಗೆಯ ಮೇಲೆ ಕುಳಿತಳು. +“ಮಲಕ್ಕೊಳ್ಳೊದಿಲ್ಲೇನೆ?” ದೇವಯ್ಯನ ಧ್ವನಿ ಮೃದುವಾಗಿತ್ತು. +ದೇವಮ್ಮ ಮಗುವಿನ ಕಡೆ ನೋಡುತ್ತಿದ್ದಳು ತುಸು ತಿರುಗಿ ತಲೆಬಾಗಿದಳು ಆದರೆ ಮಲಗಲಿಲ್ಲ. +ಅವಳೂ ಅಷ್ಟು ಪ್ರೀತಿ ತೋರುತ್ತಿದ್ದ ತನ್ನ ಗಂಡ ಹೀಗಾಗಿ ಬಿಟ್ಟಿದ್ದರಲ್ಲಾ ಆ ಪಾದ್ರಿಯ ದೆಸೆಯಿಂದ ಎಂದು ಚಿಂತಿಸುತ್ತಾ, ಏನು ಮಾಡಿದರೆ ಇವರ ಮನಸ್ಸನ್ನು ಮತ್ತೆ ತಾನು ಗೆಲ್ಲಬಹುದು ಎಂದು ಹರುವು ನೆನೆಯುತ್ತಿದ್ದಳು. +ಕೋಣೂರು ಮುಕುಂದಯ್ಯ ಗೌಡರ ಅಕ್ಕನಲ್ಲಿ ತಮ್ಮನ ಕೆಲವು ಧೀರ ಲಕ್ಷಣಗಳಿದ್ದು ಸಮಯ ಬಂದಾಗ ಅವಳನ್ನು ಕೈ ಬಿಡುತ್ತಿರಲಿಲ್ಲ. +“ಏನು?ಬಿಸಿಲು ಝಳ ಹೆಚ್ಚಾಯಿತೆ?” ಮತ್ತೆ ಉಪಚರಿಸುವ ಕೆಳದನಿಯಲ್ಲಿ ಪ್ರಶ್ನೆ ಹಾಕಿದ ದೇವಯ್ಯ ಮಂಚದಿಂದೆದ್ದು ಬೆಳಕಂಡಿಗಳ ಬಳಿಗೆ ಹೋಗಿ, ತಾನೆ ಸ್ವಲ್ಪ ಹೊತ್ತಿಗೆ ಮೊದಲು ತೆರೆದಿದ್ದ ಗವಾಕ್ಷದ ರೆಕ್ಕೆಗಳನ್ನು ಮುಚ್ಚಿದನು. +ಕೋಣೆಯಲ್ಲಿ ಮೊದಲು ಇದ್ದಂತಹ ತಂಪಾದ ಕರ್ವೆಳಗು ಕವಿದು ಕಣ್ಣಿಗೆ ಹಿತವಾಯಿತು. +ದೇವಯ್ಯ ಹಿಂತಿರುಗಿ ಬಂದು ಮಂಚದ ಮೇಲೆ ಮತ್ತೆ ಕಾಲುಚಾಚಿದನು. +“ಇನ್ನೆಷ್ಟು ದಿವಸ ನೆಲದ ಮೇಲೆ ಹಾಸಿಗೆ?” ಮತ್ತೆ ದೇವಯ್ಯ ಅಕ್ಕರೆಯ ದನಿಯಲ್ಲಿ ಕೇಳಿದನು. +ಕೋಣೆಯಲ್ಲಿ ಮೊದಲಿನ ಬೆಳಕು ಇದ್ದಿದ್ದರೆ, ದೇವಯ್ಯನಿಗೆ ಕಾಣಿಸುತ್ತಿತ್ತು, ಬಿಳಿಚಿದ್ದ ಹೆಂಡತಿಯ ಮುಖಕ್ಕೆ ನಸುಗೆಂಪೇರಿ ತುಟಿಯ ತುದಿಗಳಲ್ಲಿ ಕಿರುನಗೆಯ  ಮೊಗ್ಗೆ ಮಲರುತ್ತಿದ್ದುದು! +ಆದರೂ ಅದನ್ನು ಗಂಡನಿಗೆ ತೋರಗೊಡಲು ನಾಚಿ ‘ಚೆಲುವಯ್ಯ’ನ ತಾಯಿ ಮೊಗದಿರುಹಿದ್ದಳು. +ಅವಳಿಗೆ ಆ ಪ್ರಶ್ನೆಯ ಅರ್ಥ, ಧ್ವನಿ, ಉದ್ದೇಶ ಎಲ್ಲ ಚೆನ್ನಾಗಿ ಗೊತ್ತಾಗಿತ್ತು. +ಮಂಚದ ಮೇಲೆ ತನ್ನ ಮಗ್ಗುಲಲ್ಲಿಯೆ ಮಲಗಬೇಕೆಂದು ಅನೇಕ ರೀತಿಗಳಲ್ಲಿ ದೇವಯ್ಯ ಹೆಂಡತಿಗೆ ಸೂಚನೆಯೀಯುತ್ತಲೆ ಇದ್ದನು. +“ಏನು?ಮಾತೇ ಆಡಾದಿಲ್ಲಾ?ನನ್ನ ಮೇಲೆ ಸಿಟ್ಟೇ?” ಈ ಸಾರಿ ದೇವಯ್ಯನ ಧ್ವನಿಯಲ್ಲಿ ದೈನ್ಯದ ಮತ್ತು ಶರಣಾಗತಿಯ ಭಂಗಿ ಎದ್ದು ಕಾಣುವಂತಿತ್ತು. +“ಅಮ್ಮ ಹೇಳಿದಾರೆ, ಮುಂದಿನ ಅಮಾಸೆ ಕಳೆದ ಮೇಲೆ, ಕಲ್ಲೂರು ಗಣಪನಿಗೆ ಹೇಳಿಕೊಂಡಿದಾರಂತೆ, ಅಲ್ಲಿಗೆ ಹೋಗಿ ಪೂಜೆಮಾಡಿಸಿಕೊಂಡು ಬರಬೇಕಂತೆ,…ಆಮೇಲೆ”… ಎಂದು ಅರ್ಧಕ್ಕೇ ಇಂಗಿತವಾಗಿ ಮಾತು ನಿಲ್ಲಿಸಿದ್ದಳು ದೇವಮ್ಮ. +ದೇವಯ್ಯನಿಗೆ, ಮತ್ತೆ, ಕಡಲೆ ತಿನ್ನುವಾಗ ಕಲ್ಲು ಅಗಿದ ಹಾಗೆ ಆಗಿತ್ತು! +‘ಅಂತೂ ಸುಖ ಇಲ್ಲ, ಈ ದೇವರು ದಿಂಡಿರುಗಳಿಂದ!’ ಎಂದುಕೊಂಡಿತು ಅವನ ಮನಸ್ಸು. +ಅವನ ಆತುರತೆಯ ತೇರಿನ ಗಾಲಿಗೆ ಬಲವಾದ ಪೆಟ್ಟೆಮಣೆ ಹಾಕಿದಂತಾಗಿತ್ತು ಹೆಂಡತಿಯ ಹೇಳಿಕೆ. +ಅವನ ಹುಡುಗುಬುದ್ದಿಗೆ ಹೇಗೆ ಗೊತ್ತಾಗಬೇಕು, ತನ್ನ ಬಾಣಂತಿ ಹೆಂಡತಿಯ ಆರೋಗ್ಯ ರಕ್ಷಣೆಯ ಸಲುವಾಗಿಯೆ ಅವನ ಅಮ್ಮ ಈ ಪೂಜೆ ಆ ವ್ರತ ಇತ್ಯಾದಿ ಧಾರ್ಮಿಕ ಪ್ರತಿಮೆಗಳ ರೂಪದಿಂದ ಅವನ ವಿವೇಕದೂರವಾದ ಆತುರತೆಗೆ ಮೂಗುದಾರ ಹಾಕುತ್ತಿದ್ದಾರೆ ಎಂದು? +ಯಾವುದನ್ನು ನೇರವಾಗಿ ಹೇಳಬಾರದೊ, ಹೇಳಿದರೆ ಪರಿಣಾಮಕಾರಿಯಾಗುವುದಿಲ್ಲವೊ ಅದನ್ನು ಅನ್ಯ ವಿಧಾನಗಳಿಮದ ಸಾಧಿಸುತ್ತದೆ ಸಮಾಜದ ಸೌಜನ್ಯ, ದಾಕ್ಷಿಣ್ಯ ಮತ್ತು ಸಭ್ಯತೆ. +“ಮೇಲಕ್ಕೆ ಬರ್ತಿಯಾ?” ಗಂಡನ ಧ್ವನಿಯಲ್ಲಿ ಯಾಚನೆ ಇತ್ತು. +ಅದನ್ನು ಗುರುತಿಸಿ ದೇವಮ್ಮಗೆ ಎದ್ದು ಹೋಗಬೇಕೆಂದು ಮನಸ್ಸಾಯಿತು. +ಆದರೆ ತಡೆದಳು. +ಕೂಸಿನ ಲಾಲನೆಪಾಲನೆಯಲ್ಲಿ ಮಗ್ನಳಾಗಿ ತನ್ನ ಸ್ವಂತ ಸೀರೆ ಬಟ್ಟೆಯ ಶೌಚ ಸೌಂದರ್ಯಗಳ ವಿಚಾರವನ್ನೆ ಅವಳು ಎಷ್ಟೋ ಕಾಲದಿಂದ ಮರೆತುಬಿಟ್ಟಳು. +ಈಗಲೂ ಒಂದು ಬಡ್ಡು ಸೀರೆಯನ್ನೆ ಉಟ್ಟಿದ್ದಳು. +ಅದರಲ್ಲಿ ಚೆಲುವಯ್ಯನ ಜೊಲ್ಲುಗಿಲ್ಲು ಎಲ್ಲದರ ವಾಸನೆಯೂ ಇತ್ತು. +ತನ್ನ ಗಂಡನಿರುವ ಸದ್ಯದ ಮನಃಸ್ಥಿತಿಯಲ್ಲಿ ಅವರಿಗೆ ಜುಗುಪ್ಸೆ ಬರುವಂತಾದರೆ? +ತುಸು ತಲೆ ಎತ್ತಿ ಮಂಚದಕಡೆ ನೋಡುತ್ತಾ ಹೇಳಿದಳು: “ನನ್ನ ಬಟ್ಟೆ ಕೊಳಕಾಗದೆ….” +“ಆದರೆ ಆಗಲಿ, ಬಾ.”ದೇವಮ್ಮ ಎದ್ದು ತೊಟ್ಟಲನ್ನು ಬಳಸಿ ಹೋಗಿ ಮಂಚದ ಪಕ್ಕದಲ್ಲಿ ತುಂಬ ಸಂಕೋಚದಿಂದ ನಿಂತಳು. +ಮಲಗಿದ್ದ ದೇವಯ್ಯ ಅವಳ ಕೈ ಹಿಡಿದು ಪಕ್ಕದಲ್ಲಿ ಕೂರುವಂತೆ ಮಾಡಿದನು. +ಸ್ವಲ್ಪ ಹೊತ್ತು ಯಾರೂ ಮಾತಾಡಲಿಲ್ಲ ಗಂಡ ಮಾತನಾಡಿದ ಮೇಲೆಯೆ ತಾನು ಮಾತನಾಡುವುದೆಂದು ದೇವಮ್ಮ ನಿರ್ಧರಿಸಿದ್ದಳು. +ದೇವಯ್ಯ ಹೆಂಡತಿಯ ಕಡೆ ನೋಡುತ್ತಾ ಸ್ವಲ್ಪ ಕಾದನು. +ಅವನಿಗೆ ಅನುಭವದಿಂದ ಗೊತ್ತಿತ್ತು, ತನ್ನ ಹೆಂಡತಿ ಮಾತು ಪ್ರಾರಂಭಿಸುವುದು ಹರ್ಮಾಗಾಲ ಎಂದು. +ಅವನೇ ಪ್ರಾರಂಭಿಸಿದನು:“ಬಹಳ ಬಡಕಲಾಗಿಬಿಟ್ಟಿದ್ದೀಯ! +ಮುಖ ಎಲ್ಲ ಬಿಳಚಿಕೊಂಡು ಹೋಗಿದೆ!” ಆ ನಸುಗತ್ತುಲಲ್ಲಿ ಅದು ಕಾಣಿಸುತ್ತಿರಲಿಲ್ಲ, ಬೆಳಕಿನಲ್ಲಿ ಕಂಡದ್ದನ್ನೆ ಕುರಿತು ಹೇಳಿದನು ದೇವಯ್ಯ. +ಅವಳು ಏನನ್ನೂ ಹೇಳಲಿಲ್ಲ; +ತನ್ನ ಕೈ ಹಿಡಿದಿದ್ದ ಗಂಡನ ಕೈಯನ್ನೆ ನೋಡುತ್ತಿದ್ದಳು. +“ನಿನ್ನ ಮುಂಗೈಗೆ ಹಚ್ಚಿಕುಚ್ಚಿಸಿಕೊಳ್ಳದಿದ್ದರೆ ಎಷ್ಟು ಚೆನ್ನಾಗಿ ಕಾಣ್ತಿತ್ತು?” +“ಅದು ಶಿವನ ಜಡೆ! +ಮುತ್ತೈದೆಗೆ ಮಂಗಳವಂತೆ…” ನಾಚಿನಾಚಿ ಹೇಳಿದ್ದಳು ದೇವಮ್ಮ. +“ಅದೆಲ್ಲ ಬರೀ ಕಂದಾಚಾರ! +ಆ ಪಾದ್ರೀ ಹೆಂಡತಿ ಮಕ್ಕಳು ಯಾರೂ ಕುಚ್ಚಿಸಿಕೊಂಡಿಲ್ಲ. +ಎಲ್ಲ ಚೆಂದಾಗಿದಾರಲ್ಲ! …. ”ಅದಕ್ಕೇನೂ ಉತ್ತರ ಹೇಳದೆ ನೀಡಿದಾಗಿ ಸುಯ್ದಳು ದೇವಮ್ಮ. +ಆ ಪಾದ್ರಿ, ಅವನ ಹೆಂಡತಿ ಮಕ್ಕಳು, ಅವನ ವಿಷಯ ಬಂದರೆ ಸಾಕು, ದೇವಮ್ಮನಿಗೆ ಹಾವುಮೆಟ್ಟಿದ ಹಾಗೆ ಆಗುತ್ತಿತ್ತು. +“ನಮ್ಮ ತರಾ ಗೊಬ್ಬೆ ಕಟ್ಟಿ, ಸೀರೆ ಉಡಾಕಿಂತ ಆ ಪಾದ್ರೀ ಮನೇರು ಉಡಾಹಂಗೆ ಉಟ್ಟರೆ ಚೆಂದಾಗಿರ್ತದೆ” ಒತ್ತಿ ಹೇಳಿದನು ಮತ್ತೆ ದೇವಯ್ಯ. +“ಅದೇ ಬಿರಾಂಬ್ರ ಉಡಿಗೆ? ” +“ನೋಡು. ಆ ಪಾದ್ರೀ ಹೆಂಡತಿ ಮಕ್ಕಳು ಬ್ರಾಂಬ್ರ ಹಾಂಗೇನೂ ಅಲ್ಲ. +ಗಂಡಸರ ಸಂಗಡ ಸಲೀಸು ಮಾತು ಕತೆ ಆಡ್ತಾರೆ; + ಕೂತ್ಗೂತಾರೆ!ನಗ್ತಾರೆ; + ಹಾಸ್ಯಮಾಡ್ತಾರೆ!ನಿಮ್ಮ ಹಾಮಗೆ ತಿಂಗಳಿಗೆ ಮೂರುದಿನ ‘ಹೊರಗೆ’ ಅಂತಾ, ಹಿತ್ತಲು ಕಡೇಲೋ ಮುರಿನ ಒಲೆ ಹತ್ರಾನೋ ರಾತ್ರಿಯೆಲ್ಲ ಬಿದ್ದುಕೊಳ್ಳೂದು ಇಲ್ಲ…” + “ಕಿಲಸ್ತರಾದ ಮಾತ್ರಕ್ಕೆ ಅವರೇನು ಮುಟ್ಟಾಗೋದಿಲ್ಲೇನು?” ಸವಾಲು ಹಾಕಿದಂತೆ ಪ್ರಶ್ನಿಸಿದ್ದಳು, ತುಸು ಚಕಿತೆಯಾಗಿಯೆ, ದೇವಮ್ಮ. +“ಹೆಂಗಸರು ಅಂದಮೇಲೆ ಮುಟ್ಟಾಗ್ದೆ ಇರ್ತಾರೇನು? +ನಿಮ್ಮ ಹಾಂಗೆ ಶಾಸ್ತ್ರಗೀಸ್ತ್ರ ಅಂತಾ ಹೊರಗೆ ಕೂರೋದಿಲ್ಲ. +ನಮ್ಮ ಹೆಂಗಸ್ರು ಹಿತ್ತಲು ಕಡೇಲಿ, ಅಲ್ಲಿ ಇಲ್ಲಿ ಎಲ್ಲಾದರಲ್ಲಿ, ಕಂಬಳಿಚಾಪೆ ಹಾಕಿಕೊಂಡು ಬಿದ್ದುಕೊಳ್ತಾರೆ ಅಂತ ಕೇಳಿ, ಅವರು ದಿಗಿಲು ಬಿದ್ದ್ರು! +ಮುಚ್ಚು ಮರೆ ಬಾಗಿಲು ಗೀಗಿಲು ಏನೂ ಇಲ್ಲದೆ ರಾತ್ರಿ ಕಾಲದಲ್ಲೂ ಹಾಂಗೆ ಮಲಗಿಕೊಳ್ಳೋದು ಉಂಟೇ ಎಂದು! +…“ಇಸ್ಸಿ!ಥೂ!ಹೊಲೇರಿಗಿಂತಾ ಅತ್ತತ್ತ ಆ ಕಿಲಸ್ತರು! +ನಮ್ಮ ಮುಕುಂದ ಹೇಳ್ತಿದ್ದ, ‘ಬೆಟ್ಟಳ್ಳಿ ಬಾವ ಆ ಪಾದ್ರೀನೆ ದೊಡ್ಡ ಪಮಡಿತ ಅಂತ ತಿಳುಕೊಂಡಾನೆ. +ಕಲ್ಲೂರು ಗಣಪತಿ ದೇವಸ್ಥಾನದ ಹತ್ರ ಹೊಳೇದಂಡೆ ಮಂಟ ಪದಾಗೆ ಒಬ್ಬ ಗಡ್ಡದಯ್ಯ ಬಂದಿದಾನಂತೆ, ಈ ಪರ್ಪಂಚದಾಗೆ ಇರೋದೆಲ್ಲ ಅವನಿಗೆ ಗೊತ್ತಂತೆ. +ಅವನ ಮುಂದೆ ಈ ಪಾದ್ರಿ ಸಿಂಹದ ಮುಂದೆ ಸಿಂಗಳೀಕ! +ನಮ್ಮ ಬಾವ ಒಂದು ಸಾರಿ ಹೋಗಿ ಅವನ ಹತ್ರ ಮಾತಾಡಿ ಬರ್ಲಿ. +ಗೊತ್ತಾಗ್ತದೆ,’ ಅಂತಾ.” +“ಯಾರು?ನಿನ್ನ ತಮ್ಮನಾ? +ಅಂವ ಬಿಡು, ಆ ಐಗಳ ಸಂಗಡ ಏನೇನೋ ಪುರಾಣ ಓದ್ತಾ ಬಾಯಿಗೆ ಬಂದಹಾಂಗೆ ಮಾತಾಡ್ತಾನೆ.” +“ಅಂದ್ರೆ?ನಿಮ್ಮ ಪಾದ್ರಿ ಹೇಳೋದು ಮಾತ್ರ ಸತ್ಯ; +ಬಾಕಿದ್ದೋರು ಹೇಳೋದೆಲ್ಲ ಸುಳ್ಳೋ…? +ಅದಕ್ಕೇ ಅಂತಾ ಕಾಣ್ತದೆ. +ಯಾರ್ಯಾರೊ ಏನೇನೋ ಆಡಿಕೊಳ್ಳೋದು, ನಿಮ್ಮ ಸುದ್ದಿ!” +“ಏನು ಆಡಿಕೊಳ್ಳೋದು?” +“ಪಾದ್ರಿ ನಿಮ್ಮನ್ನೂ ಜಾತಿಗೆ ಸೇರಿಸ್ತಾನೆ ಅಂತಾ.” +“ಈ ಮೂಢ ಜಾತೀಲಿ ಇರೋಕಿಂತ ಅವರ ಜಾತಿಗೆ ಸೇರೋದೆ ವಾಸಿ ಅಂತ ಕಾಣ್ತದೆ….” +“ನಮ್ಮನ್ನ ಬಾವಿಗೋ ಕೆರೆಗೋ ತಳ್ಳಿ ಆಮ್ಯಾಲೆ ಏನು ಬೇಕಾದ್ರೂ ಮಾಡಿ! …. ”ದೇವಮ್ಮನ ಕಂಠ ಗದ್ಗದವಾಗಿ, ಮಾತು ಬಿಕ್ಕಳಿಸುತ್ತಿತ್ತು. +ಸೆರಗಿನಿಂದ ಬಲಗೈಯಲ್ಲಿ ಕಣ್ಣೊರಸಿಕೊಂಡಳು. +ಅವಳ ಎಡಗೈಯನ್ನು ಹಿಡಿದುಕೊಂಡಿದ್ದ ದೇವಯ್ಯ ಅದನ್ನು ಸವರುತ್ತಾ “ಹುಚ್ಚಿಕಣೇ ನೀನು, ಬರೀ ಹುಚ್ಚಿ, ಅವರಿವ್ರು ಹೇಳ್ತಾರೆ ಅಂತಾ ನೀನ್ಯಾಕೆ ಅಳೋದು? …. ಆಗಲಿ, ನಿನ್ನ ತಮ್ಮ ಹೇಳಿದ್ನೂ ಮಾಡೇಬಿಡ್ತೀನಿ…. +ಯಾವತ್ತಾದರೂ ಒಂದು ದಿವಸ ನೋಡ್ತೀನಿ ಆ ಗಡ್ಡದಯ್ಯನ್ನ. +ಅಳಬೇಡ, ಮಾರಾಯ್ತಿ…” +“ಗಣಪನ ಪೂಜೆಗೆ ಹೋಗ್ತೀವಲ್ಲಾ? +ಕಲ್ಲೂರು ದೇವಸ್ಥಾನಕ್ಕೆ? +ಆವಾಗ್ಲೆ ಬನ್ನಿ, ನಮ್ಮ ಸಂಗಾಡಾನೆ ಮುಕುಂದನೂ ಬರ್ತಾನಂತೆ!” +ನಡುರಾತ್ರಿಯವರೆಗೂ ಕೆರೆ, ಬಾವಿ, ಹಳ್ಳದಗುಂಡಿ, ಕಾಡುಗಳಲ್ಲಿ ಹುಡುಕಿ ತಿಮ್ಮಿಯನ್ನೆಲ್ಲಿಯೂ ಕಾಣದೆ, ನಾನಾ ಊಹೆಗಳನ್ನು ತಲೆಯಲ್ಲಿ ಹೊತ್ತು ಹಿಂದಿರುಗುತ್ತಿದ್ದರು, ಬೆಟ್ಟಳ್ಳಿಯ ಹೊಲಗೇರಿಯವರು. +ತಿಮ್ಮಿ ಒಯ್ದದ್ದು ಎಂದು ಅವಳ ಅವ್ವ ಸೇಸಿ ಗುರುತಿಸಿದ್ದ ಮಡಕೆಯೊಂದೇ ಅವರಿಗೆ ಸಿಕ್ಕಿದ್ದ ಕರಿಯ ಸಾಕ್ಷಿ. +ಆದರೆ ಸೇಸಿಯ ಮೈಮೇಲೆ ಬಂದಿದ್ದ ಜಕ್ಕಿಣಿ ಕೊಟ್ಟಿದ್ದ ಭರವಸೆಯನ್ನು ಕೇಳಿ ಅನೇಕರಿಗೆ ಸಮಾಧಾನವಾಗಿತ್ತು. +ಆ ದೈವವಾಣಿಯಲ್ಲಿ ಅಚಲಶ್ರದ್ಧೆಯಿಟ್ಟಿದ್ದ ತಿಮ್ಮಿಯ ತಂದೆ ದೊಡ್ಡಬೀರನಿಗಂತೂ ಧೈರ್ಯವೇ ಧೈರ್ಯ! +ತನ್ನ ಮಗಳನ್ನು ಜಕಿಣಿ ಅಡಗಿಸಿಟ್ಟಿದೆ; +ನಾಳೆ ಬಂದೇಬರುತ್ತಾಳೆ. +ಜಕಿಣಿಗೆ ಸರಿಯಾಗಿ ಹರಕೆ ಹೊತ್ತರಾಯಿತು. +ಜೊತೆಗೆ ಇನ್ನೊಂದು ಸಂಕಲ್ಪವೂ ಅವನ ತಲೆಗೆ ಹೊಕ್ಕಿತ್ತು: +ತಲೆ ಮೇಲೆ ತಲೆಬಿದ್ದು ಹೋದರೂ ಹೋಗಲಿ, ಕಿಲಸ್ತರ ಜಾತಿಗೆ ಸೇರುವ ಆ ಬಚ್ಚನಿಗೆ ಖಂಡಿತ ಹೆಣ್ಣು ಕೊಡುವುದಿಲ್ಲ ಎಂದು. +ಆದರೆ ಆ ಧೈರ್ಯಕ್ಕೆ ಸಮಸ್ಪರ್ಧಿಯಾಗಿದ್ದ ಒಂದು ಮಹಾಸಂಕಟ ಮಾತ್ರ ಅವನನ್ನು ಬಿಟ್ಟಿರಲಿಲ್ಲ: +ತನ್ನ ಮಗಳ ಮೈಮೇಲೆ ಹಾಕಿದ್ದ ‘ನಗ’ ಮಗಳ ಜೊತೆ ಹಿಂದಿರುಗುತ್ತದೆಯೋ ಇಲ್ಲವೋ ಎಂದು. +ಅದೂ ಅವರಿವರನ್ನೂ ಬೆಟ್ಟಳ್ಳಿ ಒಡೆಯರನ್ನೂ ಕಾಡಿ ಬೇಡಿ ಕಡ ತಂದದ್ದು! +ಅದನ್ನು ಮತ್ತೆ ಮತ್ತೆ ಹೆಂಡತಿಯೊಡನೆ ಹೇಳಿಕೊಂಡು, ಅವಳನ್ನು ರಂಡೆ ಮುಂಡೆ ಎಂದು ಬೈಯತೊಡಗಿದ್ದನು. +ಸೇಸಿ ಅಲ್ಲಿ ಇಲ್ಲಿ ಹುಡುಕಿದಂತೆ ಮಾಡಿ, ಮಡಕೆಯಲ್ಲಿ ಗಂಟುಕಟ್ಟಿಹಾಕಿದ್ದ ಆ ‘ನಗ’ ವನ್ನು ತಂದು ‘ಜಕಿಣಿ ಅದನ್ನು ಇಲ್ಲೆ ಹಾಕಿ ಹೋಗ್ಯದೆ’ ಎಂದು ಹೇಳಿದಾಗ ಅವನ ಆನಂದಕ್ಕೆ ಪಾರವೆ ಇರಲಿಲ್ಲ. +ಬೈಸಿಕಲ್ಲಿನ ಪ್ರಸಂಗದಿಂದಾಗಿದ್ದ ಪೆಟ್ಟುಗಾಯಗಳ ನೋವೂ ಅವನಿಗೆ ಮರೆತುಹೋದಂತಿತ್ತು. +“ಇನ್ನು ಆ ಹಾಳುಮುಂಡೆ ಬಂದರೇನು ಬಿಟ್ಟರೇನು?” ಎಂದು ಮಗಳಿಗೆ ಶಾಪ ಹಾಕಿಯೂ ಬಿಟ್ಟಿದ್ದನು: +ಅವಳ ರುಣಾ ಕಡೀಲಿ!” +ಇತ್ತ ಕೇರಿಯ ಸುತ್ತಮುತ್ತ ಅವಳ ಅನ್ವೇಷಣೆ ನಡೆಯುತ್ತಿದ್ದಾಗ ತಿಮ್ಮಿ ತನ್ನ ಮುಂದೆ ಅತ್ತಿತ್ತ ಬೀಸುತ್ತಾ ಉರಿಯುತ್ತಾ ಮತ್ತೆ ಉರಿ ಆರಿ ಕೆಂಡವಾಗುತ್ತಾ ಮತ್ತೆ ಬೀಸಿದಂತೆಲ್ಲ ಹೊತ್ತಿ ಉರಿಯುತ್ತಾ ಕಗ್ಗತ್ತಲೆಯಲ್ಲಿ ಬೇಗಬೇಗನೆ ಚಲಿಸಿ ಮುಂಬರಿಯುತ್ತಿದ್ದ ದೊಂದಿಯ ಹಿಂದೆ ಅದನ್ನನುಸರಿಸಿ ಬಿರಬಿರನೆ ನಡೆಯುತ್ತಿದ್ದಳು. +ತಾನು ಹೋಗುತ್ತಿದ್ದುದು ಯಾವ ದಾರಿ? +ಯಾವ ಊರು? +ಎಲ್ಲಿಗೆ ಹೋಗುತ್ತಿದ್ದೇನೆ? +ಎಂಬುದಾವುದೂ ಅವಳಿಗೆ ಗೊತ್ತಿರಲೂ ಇಲ್ಲ, ಗೊತ್ತು ಮಾಡಿಕೊಳ್ಳುವ ಗೋಜಿಗೆ ಹೋಗಲೂ ಇಲ್ಲ. +ಕಣ್ಣಿಗೂ ಏನೆಂದೂ ಕಾಣಿಸುತ್ತಲೂ ಇರಲಿಲ್ಲ, ದೊಂದಿಯ ತುದಿಯ ಬೆಂಕಿ ವಿನಾ. +ಅಂದರೆ ಹಳು ದಟ್ಟವಾಗುತ್ತಿದ್ದುದು ಮೈಗೆ ಕೀಸುವ ಪೊದೆಗಳಿಂದ ಗೊತ್ತಾಗುತ್ತಿತ್ತು. +ದೊಂದಿ ಒಮ್ಮೊಮ್ಮೆ ಭಗ್ಗನೆ ಉರಿದಾಗ ತಾವು ಹೋಗುತ್ತಿದ್ದ ಕಾಡು ಎತ್ತರವಾಗಿದ್ದ ಮರಗಳಿಂದ ಕಿಕ್ಕಿರಿದದ್ದೂ ಗೊತ್ತಾಗುತ್ತಿತ್ತು. +ಒಮ್ಮೊಮ್ಮೆ  ನೀರು ಇರುವ ತಾಣದ ಸಮೀಪದಲ್ಲಿ ಹೋಗುವಾಗ ದೊಂದಿಯ ಪ್ರತಿಬಿಂಬ ಅದರಲ್ಲಿ ಪ್ರಜ್ವಲಿಸುತ್ತಿತ್ತು; +ಸರಲಿನ ಜೌಗಿನಲ್ಲಿ ದಾಟುವಾಗ ಕೆಸರು ಸಿಡಿದು ದೊಂದಿಯ ಬೆಂಕಿ ಚುಂಯ್‌ಗುಡುತ್ತಿತ್ತು; +ಕಪ್ಪೆಗಳು ಹೆದರಿ ಹಾರಿ ದೊಂದಿಯ ಬೆಳಕು ನೀರಿನ ಅಲೆಗಳಲ್ಲಿ ಕುಣಿಯುತ್ತಿತ್ತು; +ಕೆಲವೆಡೆ ಹುಳು ಹಪ್ಪಟೆಗಳು ದೊಂದಿಗೆ ಮುತ್ತಿ ಸುಟ್ಟು ಸೀದು ಚಟಪಟ ಸಿಡಿಯುತ್ತಿದ್ದವು. +ಆ ಕತ್ತಲೆಗೆ ಸರಿಸಮವಾಗಿ ಅಥವಾ ಒಂದು ಕೈ ಮೇಲಾಗಿಯೇ ಕರಗಿದ್ದ ಹುಲಿಯ ಒಮ್ಮೆ ಇವಳ ಹಿಂದೆಯೂ ಒಮ್ಮೆ ದೊಂದಿ ಹಿಡಿದು ಬೀಸುತ್ತಾ ಹೋಗುತ್ತಿದ್ದ ಗುತ್ತಿಯ ಮುಂದೆಯೂ, ಒಮ್ಮೆ ಆಕಡೆ ಈಕಡೆ ಪಕ್ಕದಲ್ಲಿಯೂ ಹಳುವಿನಲ್ಲಿ ಓಡಾಡುತ್ತಿದ್ದು ತಿಮ್ಮಿಗೆ ಧೈರ್ಯವಾಗಿತ್ತು. +ಅದರ ಮೈ ಆ ಕತ್ತಲೆಯಲ್ಲಿ ಏನೇನೂ ಕಾಣಿಸದೆ ಇದ್ದಿತಾದರೂ ಒಮ್ಮೊಮ್ಮೆ ದೊಂದಿಯ ಬೆಳಕಿನ ಕಡೆಗೆ ಅದು ಮೋರೆ ತಿರುಗಿಸಿದಾಗ ಅದರ ಕಣ್ಣುಗಳು ಗೋಲಿಯ ಗಾತ್ರದ ಮಿಣುಕು ಹುಳುಗಳಂತೆ ಪಳಪಳ ಹೊಳೆಯುತ್ತಿದ್ದವು. +ಹುಲಿಯನ ಓಡಾಟದ ದೆಸೆಯಿಂದ ಒಮ್ಮೊಮ್ಮೆ ಯಾವುದೊ ದೊಡ್ಡ ಪ್ರಾಣಿಯೊ ಪ್ರಾಣಿಗಳೊ ಹಳು ಸದ್ದಾಗುವಂತೆ ಧಾವಿಸುತ್ತಿದ್ದುದು ತಿಮ್ಮಿಗೆ ಉಸಿರುಕಟ್ಟಿ ಉಸಿರುಬಿಡುವಂತಾಗುತ್ತಿತ್ತು. +ಹೋಗುತ್ತಾ ಹೋಗುತ್ತಾ ದಾರಿ ಕಡಿದಾಗಿ ಏರತೊಡಗಿತ್ತು. +ಮುಂದಿನ ದೊಂದಿಯ ಬೆಳಕು ತನ್ನ ಮುಖಕ್ಕೆ ಕೆಳಗೆ ಅಥವಾ ಸಮನಾಗಿ ನೇರವಾಗಿರದೆ ತುಂಬಾ ಎತ್ತರದಲ್ಲಿ ಹೋಗುತ್ತಿದ್ದಂತೆ ಕಾಣತೊಡಗಿತ್ತು. +ಕಾಲೂ ದಣಿದು ಜಾರುವಂತಾಗುತ್ತಿತ್ತು. +ಉಸಿರೆಳೆದುಕೊಳ್ಳುವ ವೇಗ ಹೆಚ್ಚಿತ್ತು. +ಈಗ ಅವರು ಹೋಗುತ್ತಿದ್ದುದು ಸಮೆದ ಕಾಲು ಹಾದಿಯಲ್ಲ ಎಂಬುದು ಅವಳ ಮನಸ್ಸಿಗೆ ಬಂದಿತ್ತು. +ಸಣ್ಣಪುಟ್ಟ ಮುಳ್ಳು ಚುಚ್ಚಿದಾಗಲೆಲ್ಲ ಅವಳೇ ತುಸುಬಾಗಿ ಸಾಧ್ಯವಾದವುಗಳನ್ನು ತೆಗೆದು ಬಿಸಾಡಿದ್ದಳು. +ಆದರೆ ಒಂದು ಉದ್ದವಾದ ಅಂಕೋಲೆ ಮುಳ್ಳು  ಚುಚ್ಚಿದಾಗ ಮಾತ್ರ ನಡೆಯಲಾರದೆ ಕುಳಿತು “ಬಾವ!” ಎಂದು ಮೆಲ್ಲಗೆ ಅಳುದನಿಯಿಂದ ಕರೆದಿದ್ದಳು. +ಗುತ್ತಿ ಹಿಂದಕ್ಕೆ ಬಂದು, ದೊಂದಿಯನ್ನು ಒಂದು ಹಸಿಗಿಡಕ್ಕೆ ಆನಿಸಿಟ್ಟು, ಅದರ ಬೆಳಕಿನಲ್ಲಿ ಅವಳ ಅಂಗಾಲಿಗೆ ಆಳವಾಗಿ ಚುಚ್ಚಿದ್ದ ಮುಳ್ಳನ್ನು ಸ್ವಲ್ಪ ಬಲಪ್ರಯೋಗಮಾಡಿಯೆ ಕಿತ್ತಿದ್ದನು. +ರಕ್ತವೂ ಹರಿದಿತ್ತು. +ನೋವು ಚೆನ್ನಾಗಿಯೆ ಆಗಿತ್ತು. +ಆಮೇಲೆ ಅಂಗಾಲಿನ ಆ ಭಾಗವನ್ನು ಆದಷ್ಟು ಪ್ರಯತ್ನಪೂರ್ವಕವಾಗಿ ನೆಲಕ್ಕೆ ಊರದಂತೆ ನಡೆದಿದ್ದಳು. +ಹಾಗೆ ಕುಂಟಿ ಕುಂಟಿ ಗುತ್ತಿಯ ಹಿಂದೆ ಗುಡ್ಡ ಹತ್ತುತ್ತಿದ್ದಾಗಲೆ ನೆತ್ತರು ಹೆಪ್ಪುಗಟ್ಟುವಂತಹ ಆ ರುದ್ರ ಘಟನೆ ನಡೆದದ್ದು: +ಅದೇ ಸಮಯದಲ್ಲಿ, ಐತ ಪೀಂಚಲು ಇಬ್ಬರೂ ಅವರ ಬಿಡಾರದಲ್ಲಿ ಊಟ ಮುಗಿಸಿ ಈತನ ಬತ್ತಲೆ ಮೈಗೆ ಪೀಂಚಲು ತೆಂಗೆನೆಣ್ಣೆ ನೀವುತ್ತಿದ್ದದ್ದು: +ಇದ್ದಕ್ಕಿದ್ದಹಾಗೆ ಹೆಬ್ಬುಲಿಯ ಆರ್ಭಟೆ ಕಂದರಾದ್ರಿವಿಲಿನಗಳನ್ನೆಲ್ಲ ಆಲೋಡಿಸಿತ್ತು; +ದೊಡ್ಡಿನ ಹಿಂಡು ಭೂಮಿಯನ್ನೆಲ್ಲ ಗುಡುಗಿಸುವಂತೆ ಓಡಿದ ಸದ್ದಾಗಿತ್ತು! +ಐತ ಕಮ್ಮಾರಸಾಲೆಯಲ್ಲಿ ದೊಂದಿ ಹೊತ್ತಿಸಿಕೊಂಡು ಸಿಂಬಾವಿಗೆ ಹೋಗುತ್ತೇನೆಂದು ಹೇಳಿ ಹೋಗಿದ್ದ ಗುತ್ತಿಯನ್ನು ನೆನೆದು, ಅವನ ಸುರಕ್ಷತೆಗೆ ಕಾತರನಾಗಿ ಪೀಂಚಲುವಿಗೆ ಹೇಳಿದ್ದನು: “ಏನಿರಬೇಕು ಅವನ ಎದೆ? +ಆ ಹುಲಿಕಲ್‌ನೆತ್ತಿ, ಬೆತ್ತದಸರ, ಎಲ್ಲಾ ದಾಟಿಕೊಂಡು ಹೋಗಬೇಕಲ್ಲಾ!” ಎಂದು. +ತಟಕ್ಕನೆ ನಿಂತನು ಗುತ್ತಿ. +ಕಿವಿಗೊಟ್ಟನು ಹುಬ್ಬು ನಿಮಿರಿತು. +ಹಣೆ ಬಿತ್ತರಿಸಿತು. +ಉಸಿರು ಒಮ್ಮೆಗೆ ನುಗ್ಗಿ ಶ್ವಾಸಕೋಶ ಹಿಗ್ಗಿ ತುಂಬಿತು ಕ್ಷಣಾರ್ಧದಲ್ಲಿ ಗ್ರಹಿಸಿತ್ತು ಅವನ ಬೇಟೆಗಾರ ಮನಸ್ಸು, ನಡೆಯುತ್ತಿದ್ದುದು ಏನು ಎಂದು. +ತೆಕ್ಕನೆ ತಿರುಗಿ, ಜೀವ ಹಾರಿಹೋಯಿತೋ ಎಂಬಂತೆ ಹೆದರಿ ಹೌವ್ವನೆ ಹಾರಿ ತನ್ನನ್ನು ಒತ್ತಿ ನಿಂತಿದ್ದ ತಿಮ್ಮಿಯನ್ನು ಬಳಿಯಿದ್ದ ಒಂದು ಹೆಮ್ಮರದ ಬುಡಕ್ಕೆ ಎಳೆದು ನಿಲ್ಲಿಸಿ, ಅವಳಿಗೆ ಅಡ್ಡಲಾಗಿ ನಿಂತು, ಕೈಯಲ್ಲಿದ್ದ ದೊಂದಿಯನ್ನು ಬೀಸುತ್ತಲೆ, ಉಜ್ವಲಗೊಳಿಸಿದನು. +ದೊಂದಿಯ ತುದಿಯ ಅಗ್ನಿಜ್ವಾಲೆ ಆ ಕತ್ತಲೆಯಲ್ಲಿ ಅಲಾತಚಕ್ರದಂತೆ ಹಿಂದಕ್ಕೂ ಮುಂದಕ್ಕೂ ಬೆಂಕಿಗೆರೆ ಎಳೆಯುತ್ತಿತ್ತು. +ಅವರಿಬ್ಬರೂ ಹಿಂಬದಿಯ ರಕ್ಷೆಯಾಗಿತ್ತು ಆ ಪ್ರಕಾಂಡ ವೃಕ್ಷದ ದಿಂಡು. +ಮುಂದುಗಡೆ ರಕ್ಷೆಯಾಗಿತ್ತು, ಬೀಸುತ್ತಿದ್ದ ದೊಂದಿಯ ಹಿಲಾಲು. +ಹುಲಿಯಾಗಲಿ ಹಂದಿಯಾಗಲಿ ಕರಡಿಯಾಗಲಿ ದೊಡ್ಡೆ ಆಗಲಿ ಉರಿಯುವ ಬೆಳಕಿಗೆ ಅಂಜಿ ಅದರ ಬಳಿಸಾರುವುದಿಲ್ಲ – ಎಂಬುದು ಗುತ್ತಿಗೆ ಚೆನ್ನಾಗಿ ಗೊತ್ತಿತ್ತು. + ಆ ಧೈರ್ಯದಿಂದಲೆ ಅವನು ತಿಮ್ಮಿಗೆ ‘ಹೆದರಬೇಡ, ಹಂದದೆ ಸುಮ್ಮನೆ ನಿಂತುಕೊ’ ಎಂದು ಎಚ್ಚರಿಕೆ ಹೇಳಿದ್ದನು. +ಕಾಡಿನಲ್ಲಿ ಹೆಬ್ಬುಲಿಯ ಅಬ್ಬರವನ್ನು ಹತ್ತಿರದಿಂದ ಕೇಳಿದವರಿಗೆ ಮಾತ್ರ ಗೊತ್ತು, ಗಿಡ ಮರ ಕಾಡು ಬೆಟ್ಟ ನೆಲ ಎಲ್ಲ ನಡುಗುತ್ತವೆ ಎಂಬುದರ ಅರ್ಥ! +ತಿಮ್ಮಿಯೇನೊ ಹೆದರಿಯೆ ಸತ್ತು, ತೊಳ್ಳೆ ನಡುಗುತ್ತಾ, ನಿಲ್ಲಲೂ ಆರದೆ, ಮರದಬುಡಕ್ಕೆ ಒತ್ತಿ  ಕುಸಿದು ಕೂತಿದ್ದಳು. +ಆದರೆ ಗುತ್ತಿಗೆ ಎದೆನಡುಕವೇನೂ ಇರಲಿಲ್ಲ. +ಆ ಅಪಾಯ ಒಂದೆರಡು ನಿಮಿಷಗಳಲ್ಲಿಯೆ ಬಂದ ದಾರಿ ಹಿಡಿದು ಹೋಗುತ್ತದೆ ಎಂಬುದರಲ್ಲಿ ಅವನಿಗೆ ಸಂದೇಹವೂ ಇರಲಿಲ್ಲ; +ಆದ್ದರಿಂದ ಅವನೇನೂ ನಡುಗುತ್ತಿಲಿಲ್ಲ. +ಕಾಡು ಭೂಮಿ ಬೆಟ್ಟ ಬಂಡೆಗಳೆಲ್ಲ ನಡುಗುತ್ತಿದ್ದುದಕ್ಕೆ ಅವನ ನಡುಕದ ಕಾರಣ ಇನಿತೂ ಇರಲಿಲ್ಲ, ಅವೇ ನಿಜವಾಗಿಯೂ ನಡುಗುತ್ತಿದ್ದುವು. +ಅಲ್ಲಿ ಹೆದರಿಕೊಳ್ಳುವುದಕ್ಕೆ ಯಾವ ಸಚೇತನ ಜೀವಿಯೂ ಇರದೆ ಇದ್ದಿದ್ದರೂ ಆ ಪ್ರಕಂಪನ ವ್ಯಾಪಾರ ಭೌತಮಾತ್ರವಾಗಿಯೂ ನಡೆಯುತ್ತಿತ್ತು. +ಹಾಗಿತ್ತು ಆ ಹೆಬ್ಬುಲಿಯ ಆರ್ಭಟ! +ಅದಕ್ಕೆ ಸಮಸ್ಪರ್ಧಿಯಾಗಿ, ನಿಮಿಷಾರ್ಧದಲ್ಲಿಯೆ ಮೊಳಗಿಬಂದಿತ್ತು, ದೊಡ್ಡಿನ ಹಿಂಡು ನುಗ್ಗಿ ಧಾವಿಸಿಬರುತ್ತಿದ್ದ ಮಹಾಸದ್ದು, ಸಣ್ಣ ಪುಟ್ಟ ಮರ ಗಿಡ ಹಳುಗಳೆಲ್ಲ ನುಚ್ಚುನುರಿಯಾಗಿ ನೆಲಸಮವಾಗುವಂತೆ. +ಹತ್ತಿರದಲ್ಲಿಯೇ ಸಿಡಿಲು ಬಡಿದಿದ್ದರೆ ಆಗಬಹುದಾದ ಅನುಭವವಾಗಿತ್ತು ಗುತ್ತಿಗೂ! +ಹತ್ತೋ ಇಪ್ಪತ್ತೋ ಎಷ್ಟೋ ಕಾಡುಕೋಣ ಕಾಡೆಮ್ಮೆಗಳು ದಿಡು ದಿಡು ಎಂದು ಇವರು ಆಶ್ರಯಿಸಿ ನಿಂತಿದ್ದ ಹೆಮ್ಮರದ ದಿಕ್ಕಿಗೆ ಮಲೆಯ ನೆತ್ತಿಯಿಂದ ಕೆಳಕ್ಕೆ ಧಾವಿಸಿ ಬರುತ್ತಿದ್ದಂತೆ ತೋರಿತು. +ಗುತ್ತಿಯ ನಾಯಿ, ಹುಲಿಯ, ಪ್ರಾರಂಭದಲ್ಲಿ ಒಂದೆರಡು ಸೊಲ್ಲು ಬೊಗುಳಿ ಕಾಡಿನೊಳಕ್ಕೆ ನುಗ್ಗಿ ಹೋದದ್ದು, ಮತ್ತೆ ಹಿಂದಕ್ಕೆ ಓಡಿ ಬಂದು ಗುತ್ತಿಯ ಮುಂದೆಯೆ ನಿಂತು ಸದ್ದು ಬರುತ್ತಿದ್ದ ದಿಕ್ಕಿನಕಡೆಗೆ ಮೊಗಮಾಡಿ ಬೊಗುಳತೊಡಗಿತ್ತು. +ಆದರೆ ಆ ಹೆಬ್ಬುಲಿಯ ಕೂಗಿನ ಮತ್ತು ದೊಡ್ಡುಗಳ ನುಗ್ಗಿನ ಭಯಂಕರ ರಾವದ ಇದಿರು ನಾಯಿಯ ಬೊಗಳು ನಗಣ್ಯವಾಗಿಬಿಟ್ಟಿತು. +ಬಂತು!ಬಂತು!ಅದೊ ಹತ್ತಿರಕ್ಕೆ ಬರುತ್ತಿವೆ! +ಕಣ್ಣಿಗೇನೂ ಕಾಣಿಸದು. +ಬೀಸುತ್ತಿದ್ದ ದೊಂದಿಯ ಕೆಂಬಳಕಿನಲ್ಲಿ ಅದೊಂದೇ ನಯನೇಂದ್ರಿಯ ವಿಷಯವಾಗಿತ್ತು. +ಇನ್ನು ಕರ್ಣೇಂದ್ರಿಯ? +ಅದೂ ತನ್ನ ಅಳವಿಗೆ ಮೀರಿದ್ದ ಸಿಡಿಲು ಸದ್ದಿನ ಮಹಾ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು, ಮುರ್ಛೆಹೋದಂತಿತ್ತು. +ದೊಡ್ಡಿನ ಹಿಂಡು ನುಗ್ಗುವ ರಭಸಕ್ಕೆ ಸಿಡಿಲು ಕಲ್ಲು ಮಣ್ಣು ಇವರು ನಿಂತಿದ್ದೆಡೆಗೆ ಹಾರಿಬರತೊಡಗಿತು. +ಅವುಗಳ ವೇಗದಿಂದ ಉದ್ಭವವಾದ ಗಾಳಿಯೂ ಬಳಿ ಸಾರಿದಂತೆ ಅನುಭವ! +ಗುತ್ತಿ, ನರ ಬಿಗಿದು, ಕಾಲಗಲಿಸಿ ದೃಢವಾಗಿ ನಿಂತು, ಒಂದೇ ಸಮನೆ ದೊಂದಿಯನ್ನು ಬೀಸತೊಡಗಿದ್ದನು! +ನುಗ್ಗಿ ಬರುತ್ತಿದ್ದ ಪ್ರಾಣಿಗಳಿಗೆ ಅದು ಹೇಗೆ ಕಾನಿಸಿತೋ ಆ ಕತ್ತಲಲ್ಲಿ? +ಇದ್ದಕ್ಕಿದ್ದಹಾಗೆ, ಗುತ್ತಿಯ ದೊಂದಿಯ ಜ್ವಾಲೆ ಪ್ರತಿಫಲಿಸಿತೆಂದು ತೋರುತ್ತದೆ, ಹಳುವಿನ ನಡುನಡುವೆ ಹಲವಾರು ಹೆಗ್ಗಣ್ಣು ಫಳಫಳಫಳನೆ ಹೊಳೆದಂತಾಗಿ, ಒಡನೆಯೆ, ಬೆಂಕಿ ಬೆದರಿ ಅವು ದಿಕ್ಕು ಬದಲಾಯಿಸಿದ್ದರಿಂದ, ಮಾಯವಾಗಿದ್ದುವು. +ಸದ್ದುಹೊಳೆ ಬೇರೆ ದಿಕ್ಕಿಗೆ  ಹರಿಯತೊಡಗಿ, ಬರಬರುತ್ತಾ ಕ್ಷೀಣವಾಗಿ, ಮೂರು ನಾಲ್ಕು ನಿಮಿಷಗಳಲ್ಲಿ ಕಾಡು, ಅತ್ಯಂತ ಅಸ್ವಾಭಾವಿಕವೊ ಎಂಬಂತೆ, ಗಾಢವಾಗಿ ನಿಃಶಬ್ದವಾಗಿಬಿಟ್ಟಿತ್ತು. +ಹುಲಿಯನ ನಾಲಗೆಯೂ ಅದರ ಗಂಟಲಿನಲ್ಲಿ ಹುದುಗಿ ಮೌನವಾಗಿತ್ತು. +ನಡೆದ ಘಟನೆಯ ಭೀಷಣ ಭವ್ಯಾನುಭವಕ್ಕೆ ಸ್ತಂಭೀಭೂತವಾದಂತೆ! +ಹೆದೆಯೇರಿದ ಬಿಲ್ಲಿನಂತೆ ಬಿಗಿದುನಿಂತಿದ್ದ ಮೈಯನ್ನು ಸಡಿಲಿಸಿ, ಶ್ವಾಸಕೋಶ ತುಂಬುವಂತೆ ದೀರ್ಘವಾಗಿ ಉಸಿರೆಳೆದು ಬಿಡುತ್ತಾ, ಗುತ್ತಿ ತಿಮ್ಮಿಯ ಯೋಗಕ್ಷೇಮ ಪರಿಶೀಲನೆಗೆ ತಿರುಗಿದನು. +ಅವಳು ಮರದ ಬುಡದಲ್ಲಿ ಮುದ್ದೆಯಾಗಿ ಕೂತಿದ್ದಳು. +ಕರೆದರೆ ಮಾತಾಡಲಿಲ್ಲ. +ಪಿಳಪಿಳನೆ ಕಣ್ಣುಬಿಟ್ಟು ಅವನ ಕಡೆಗೆ ನೋಡುತ್ತಿದ್ದಳು. +ಭೀತಿಮೂಕೆಯಾಗಿದ್ದ ಅವಳಿಗೆ ಮಾತು ನಿಂತುಹೋಗಿತ್ತು. +“ಹೆದರಬ್ಯಾಡೆ, ಏಳು, ಬೇಗ ಹೋಗಾನ” ಎಂದು ಮೆಲ್ಲನೆ ಎತ್ತಿ ನಿಲ್ಲಿಸಿದನು. +ಅವಳ ಕಾಲುನಡುಕ ಇನ್ನೂ ನಿಂತಿರಲಿಲ್ಲ; +ತಾನು ಹಿಡಿದಿದ್ದ ಬುತ್ತಿ ಇರುವ ಗಂಟನ್ನು ಮಾತ್ರ ಭದ್ರವಾಗಿ ಎದೆಗೆ ಅವುಚಿಕೊಂಡಿದ್ದಳು. +ಅವಳನ್ನು ನಡೆಸಿಕೊಂಡು ನಿಧಾನವಾಗಿ ಗುಡ್ಡವೇರಿದನು. +ಸ್ವಲ್ಪದೂರ ಹೋದಮೇಲೆ ಗುಡ್ಡದ ಕಡಿಪು ಕಡಿಮಾಯಾಗ ತೊಡಗಿ, ಕಡೆಗೆ ಸಮತಟ್ಟಾಗುತ್ತಾ ಬಂದಿತು. +ಇನ್ನೂ ಸ್ವಲ್ಪ ಮುಂದೆ ಹೋದಮೇಲೆ ಮರಗಳೂ ವಿರಳವಾಗಿ, ಹಳು ಹಕ್ಕಲಾದಂತೆ ತೋರಿ, ಕಡೆಗೆ ಬಂಡೆಯ ಹಾಸುಗಲ್ಲಿನ ಮೇಲೆ ನಿಂತಾಗ ನೆತ್ತಿಯ ಮೇಲೆ ಆಕಾಶವು ಕಾಣಿಸತೊಡಗಿತು. +ಚುಕ್ಕಿ ಕಿಕ್ಕಿರಿದು, ಕಾಡಿನ ಒಳಗಿದ್ದ ಕಗ್ಗತ್ತಲೆಗೆ ಬದಲಾಗಿ ನಕ್ಷತ್ರ ಕಾಂತಿಯ ಮಬ್ಬುಗತ್ತಲೆ ಹಬ್ಬ, ವಸ್ತುಗಳ ಬಹಿರಾಕಾರಗಳೂ ಮಂಜು ಮಂಜಾಗಿ ಕಾಣಿಸುತ್ತಿದ್ದುವು. +ಅವರು ನಿಂತಿದ್ದ ಎತ್ತರಕ್ಕೆ ದಿಗಂತವು ಸುತ್ತಲೂ ವಿಸ್ತಾರವಾಗಿ ಹಿಂದಕ್ಕೆ ಸರಿದು, ದೂರದೂರದ ಪರ್ವತಶ್ರೇಣಿಗಳ ಮಷೀಮಯ ರೂಪಗಳಲ್ಲಿ ಕೊನೆಗೊಂಡಿತ್ತು. +“ಇದೇ ಹುಲಿಕಲ್ಲು ನೆತ್ತಿ ಕಣೇ!” ಎಂದನು ಗುತ್ತಿ. +ತಿಮ್ಮಿ ಮಾತಾಡಲಿಲ್ಲ. +ಅವಳು ಒಂದು ಬಂಡೆಯ ಮೇಲೆ ವಿಶ್ರಮಿಸಿಕೊಳ್ಳುವಂತೆ ಕುಳಿತಿದ್ದಳು. +ಕೇರಿಯಿಂದ ಹೊರಡುವಾಗ ಅವಳಿಗಿದ್ದ ಪ್ರಣಯೋತ್ಸಾಹದ ಸಾಹಸವೆಲ್ಲ ಉಡುಗಿಹೋಗಿತ್ತು. +ಇಷ್ಟು ಹೊತ್ತಿಗೆ ಬಿಡಾರದಲ್ಲಿ ಅವ್ವನ ಮಗ್ಗುಲಲ್ಲಿ ಸುಖವಾಗಿ ನಿದ್ದೆ ಮಾಡುತ್ತಾ ಮಲಗಿರುತ್ತಿದ್ದೆನಲ್ಲಾ ಎನ್ನಿಸಿ ಅವಳ ಮನಸ್ಸಿನಲ್ಲಿ ಪಶ್ಚಾತಾಪ ಮೂಡತೊಡಗಿತ್ತು. +ಅವಳು ಹೊರಟಾಗ ಈ ಕಾಡು, ಹಳು, ಬೆಟ್ಟ, ಪಯಣದ ದಣಿವು, ಹುಲಿ, ದೊಡ್ಡು, ಪ್ರಾಣಕ್ಕೆ ಒದಗಲಿದ್ದ ಭಯ ಇವುಗಳನ್ನೆಲ್ಲ ನಿರೀಕ್ಷಿಸಿರಲಿಲ್ಲ. +ನೆಟ್ಟಗೆ ಸಿಂಬಾವಿಗೆ ಹೋಗಿ, ಅಲ್ಲಿಯ ಕೇರಿಯಲ್ಲಿ ಅತ್ತೆ ಮಾವಂದಿರೊಡನೆ ಇದ್ದುಬಿಡುತ್ತೇನೆ ಎಂದು ಊಹಿಸಿದ್ದಳು. +“ಏನೆ ಪೂರಾ ಸಾಕಾಗಿ ಹೋಯ್ತೇನೆ?” ಗುತ್ತಿ ಅವಳ ಸ್ಥಿತಿಯನ್ನು ಕಂಡು ಸ್ವಲ್ಪ ಚಿಂತೆಯಿಂದಲೆ ಕೇಳಿದನು. +“ಇನ್ನೆಷ್ಟು ದೂರ ಅದೆ ಸಿಂಬಾವಿ?” ದಣಿದ ದನಿಯಿಂದ ತಿಮ್ಮಿ ಕೇಳಿದಳು. +“ಸುಮಾರು ದೂರ ಅದೆ.” +“ನಮ್ಮ ಮನೀಗೇ ಹೋಗಾನ.”ಗುತ್ತಿಗೆ ದಿಗ್‌ಭ್ರಾಂತಿ. +ಅವಳು ಹೇಳಿದ್ದನ್ನು ನಂಬಲಾರದೆ ಹೋದನು. +ಅವಳು ಹೇಳಿದುದರ ಅರ್ಥ ಹಾಗಾರಲಿಕ್ಕಿಲ್ಲ ಎಂದು ಆಶಿಸಿ “ಏನು?” ಎಂದು ಪ್ರಶ್ನಿಸಿ ಉತ್ತರಕ್ಕೆ ಕಾತರನಾಗಿ ಕಿವಿಗೊಟ್ಟಿದ್ದನು. +“ನಮ್ಮ ಮನೀಗೇ ಹೋಗಾನ!” ಪುನರುಚ್ಚರಿಸಿದ್ದಳು ತಿಮ್ಮಿ, ಈ ಸಾರಿ ತುಸು ಅಳುದನಿಯಿಂದ. +“ಮನೀಗೆ ಅಂದ್ರೆ?ನಿಮ್ಮ ಕೇರಿಗಾ?” +“ಹ್ಞೂ!” +“ಹೋದ್ರೆ ನಿನ್ನ ಅಪ್ಪ ಕೊಚ್ಚಿಹಾಕ್ತಾನೆ.” +“ಕೇರಿಹತ್ರ ಬಿಟ್ಟುಹೋಗಿಬಿಡು ನೀನು. +ನಾ ಬಿಡಾರಕ್ಕೆ ಹೋಗಿ ಅವ್ವನ್ನ ಕರೆದೆಬ್ಬಿಸ್ತೀನಿ….” +“ಎಲ್ಲಿಗೆ ಹೋಗಿದ್ದೆ ಅಂತ ಕೇಳೀದ್ರೆ ನಿನ್ನಪ್ಪ?” +“ದೆಯ್ಯ ಅಡಗಿಸಿತ್ತು ಅಂತಾ ಹೇಳ್ತೀನಿ.” +“ನಂಬತಾರೇನೆ?” +“ಅವತ್ತೊಂದು ಸಲ ಹಾಂಗೆ ಹೇಳಿದ್ದೆ; ನೆಂಬಿದ್ರು.” +“ಓಡಿಹೋಗಿದ್ದೇನೆ? +ಯಾರ ಜೋತೇಲೆ?ಯಾಕೇ?ಯಾವಾಗ್ಲೆ?” ಗುತ್ತಿಯ ಪ್ರಶ್ನೆಗಳಲ್ಲಿ ಸಂಶಯ, ಮಾತ್ಸರ್ಯ, ಕೋಪಚ್ಛಾಯೆ ಎಲ್ಲ ಇದ್ದುವು. +ಆದರೆ ತಿಮ್ಮಿ ಮಾತಾಡಲೆ ಇಲ್ಲ. +ಗುತ್ತಿ ಸ್ವಲ್ಪಹೊತ್ತು ಉತ್ತರಕ್ಕಾಗಿ ಕಾದು, ಮತ್ತೆ ನಿರ್ಣಾಯಕವಾಗಿ ಹೇಳಿದನು: “ಈಗ ಹಿಂದಕ್ಕೆ ಹೋಗಾದು ಬಂದಿದ್ದಕ್ಕಿಂತಲೂ ಕಷ್ಟ. +ಮುಂದಕ್ಕೆ ಹೋಗಾದು ಬ್ಯಾಡ. +ಈಗ್ಲೆ ನಿಂಗೆ ಸಾಕಾಗದೆ. +ನಾಳೆ ಹೊತಾರೆ ಯಾವುದೋ ಯೇಚ್ನೆ ಮಾಡಾನ. +ಈಗ ಏಳು, ಬಾ, ಹೇಳ್ತೀನಿ.”ತಿಮ್ಮಿ ಎದ್ದು ಹಿಂಬಾಲಿಸಿದಳು. +ಗುತ್ತಿ ಸ್ವಲ್ಪ ಹೊತ್ತಿನಲ್ಲಿಯೆ, ದೊಡ್ಡಬೇಟೆಯಲ್ಲಿ ಹಳು ನುಗ್ಗಿದಾಗಲೆಲ್ಲ ಅವನು ಕಾಣುತ್ತಿದ್ದ ಒಂದು ಪಾಳು ಗುಡಿಯ ಮಂಟಪಕ್ಕೆ ಬಂದನು. +ಅದು ಹುಲಿಕಲ್ಲು ನೆತ್ತಿಯ ದಕ್ಷಿಣಭುಜದಲ್ಲಿದ್ದ ಒಂದು ಕಲ್ಲು ಕಟ್ಟಡವಾಗಿತ್ತು. +ನಗರ ಸಂಸ್ಥಾನದ ಶಿವಪ್ಪನಾಯಕನ ಕಾಲದಲ್ಲಿಯೊ ದುರ್ಗದ ಪಾಳೆಯಗಾರರ ಕಾಲದಲ್ಲಿಯೊ ಅದು ಕಾವಲು ಮಂಟಪವಾಗಿತ್ತು ಎಂದು ಹೇಳುತ್ತಿದ್ದರು. +ಈಗ ಅದರ ಸುತ್ತ ಹಳು ಬೆಳೆದು ಹುಲಿಕಲ್ಲು ನೆತ್ತಿಯ ಕಾಲುದಾರಿಯಲ್ಲಿ ತಿರುಗಾಡುವವರ ಊಹೆಗೂ ಅತೀತವಾಗುವಷ್ಟರ ಮಟ್ಟಿಗೆ ಅಗೋಚರವಾಗಿತ್ತು. +ಬೇಟೆಯಲ್ಲಿ ಹಳುನುಗ್ಗುವವರಿಗೆ ಮಾತ್ರವೆ ಅದರ ಇರವು ಗೊತ್ತಾಗಲು ಸಾಧ್ಯವಾಗಿತ್ತು. +ಬಿಲ್ಲಿನವರೂ ಕೂಡ ಅದರ ವಿಚಾರ ಕೇಳಿದ್ದರೆ ಹೊರತೂ ಕಂಡಿರಲಿಲ್ಲ. +ಮಂಟಪದ ಹತ್ತಿರ ಬಿದ್ದಿದ್ದ ಮರದ ಒಣಗು ಹರೆಗಳನ್ನು ಒಟ್ಟುಹಾಕಿ ದೊಂದಿಯಿಂದ ಬೆಂಕಿ ಹೊತ್ತಿಸಿದನು. +ಆ ಬೆಂಕಿಯ ಬೆಳಕು ಮಂಟಪದ ಒಳಗಡೆಯನ್ನೂ ಮುಟ್ಟುತ್ತಿತ್ತು. +ತರಗು, ಹುಲ್ಲು, ಕಸಕಡ್ಡಿ, ಕಾಡುಪ್ರಾಣಿಗಳ ಹಿಕ್ಕೆ, ಸೆಗಣಿ, ಒಂದೆರಡು ಕಡೆ ಕಲ್ಲುಬಿರುಕಿನಲ್ಲಿ ಹುಟ್ಟಿಕೊಂಡಿದ್ದ ಯಾವುದೊ ಜಾತಿಯ ಕಾಡುಗಿಗ ಎಲ್ಲ ಆ ಬೆಳಕಿನಲ್ಲಿ ಕಾಣಿಸಿಕೊಂಡುವು. +ಆದರೆ ಗುತ್ತಿಗೆ ಗೊತ್ತಿದ್ದ ಪ್ರತೀತಿಯಂತೆ ಅಲ್ಲಿ ಹುಲಿ ಮಲಗಿರಲಿಲ್ಲ ಹಾವು ಗೀವು ಇದ್ದಾವು ಎಂದು ದೊಣ್ಣೆ ಆಡಿಸಿ ನೋಡಿದನು. +ಒಂದು ಇಲಿ ಮಾತ್ರ ಎದ್ದು ಹೊರಗೆ ಓಡಿತು. +ತಮಗೆ ಮಲಗುವುದಕ್ಕೆ ಎಂದು ಸ್ವಲ್ಪ ಸ್ಥಳವನ್ನು ಇಬ್ಬರೂ ಸೇರಿ ಗುಡುಸಿಕೊಂಡರು. +ಆಗಲೆ ಅರ್ಧ ರಾತ್ರಿಯ ಮೇಲೆ ಹೊತ್ತಾಗಿತ್ತು. +ತಿಮ್ಮಿಗೆ ಕಣ್ಣು ಕುಗುರುಹತ್ತಿತ್ತು. +ಹಸಿವು ಬೇರೆ. +ಆದರೆ ಹಸಿವಿಗಿಂತಲೂ ಹೆಚ್ಚಾಗಿ ಬಾಯಾರಿಕೆ. +ಊಟಕ್ಕೇನೊ ಬುತ್ತಿಯಿತ್ತು. +ಆದರೆ ಈ ಗಿರಿನೆತ್ತಿಯಲ್ಲಿ ನೀರು? +ಎಲ್ಲಿ ಸಿಕ್ಕುತ್ತದೆ? +ನೀರನ್ನು ತರುವುದಕ್ಕಾದರೂ ಪಾತ್ರೆ? +ತುಟಿಯನ್ನು ನಾಲಗೆಯಿಂದ ಸವರಿಕೊಳ್ಳುತ್ತಾ ಕುಗ್ಗಿದ ದನಿಯಲ್ಲಿ ತಿಮ್ಮಿ “ನಂಗೆ ಬಾಳ ಆಕರ ಆಗ್ಯದೆ” ಎಂದಳು. +ಗುತ್ತಿ ಸ್ವಲ್ಪ ಹೊತ್ತು ಆಲೋಚಿಸುವಂತೆ ನಿಂತು “ಇಲ್ಲಿ ಎಲ್ಲೋ ಒಂದು ದೊಣೆ ಇದ್ಹಾಂಗಿತ್ತಪ್ಪಾ? +ಆವೊತ್ತು ಹಳು ನುಗ್ಗಿ ಆಕರ ಬಂದಾಗ ನೀರು ಕುಡಿದಿದ್ದು. +ನೋಡ್ಕೊಂಡು ಬತ್ತೀನಿ. +ನೀ ಏನು ಹೆದರಿಕೊ ಬ್ಯಾಡ. +ಬೆಂಕಿ ಉರಿತಿದ್ರೆ ಅದರ ಹತ್ರ ಜೀಂವಾದಿ ಯಾವುದೂ ಬರಾದಿಲ್ಲ. +ಹುಲಿಯನ್ನ ಇಲ್ಲೆ ಕೂರಿಸಿಕೊ” ಎಂದು ದೊಂದಿ ಬೀಸುತ್ತಾ ಕೆಳಗೆ ಹೋದನು. +ತಿಮ್ಮಿ ಹುಲಿಯನ್ನು ಹತ್ತಿರಕ್ಕೆ ಕರೆದು ತಲೆ ಸವರತೊಡಗಿದಳು, ಅದರ ಕೊರಳನ್ನು ತಬ್ಬಿಹಿಡಿದು, ಪ್ರೀತಿಯಿಂದೇನಲ್ಲ, ಗುತ್ತಿಯ ಹಿಂದೆ ಓಡಿಹೋಗದೆ ತನ್ನೆಡೆಯೇ ಇರಲಿ ಎಂದು. +ಅಲ್ಲಿಯೆ ತುಸು ಕೆಳಗೆ ಹಾಸುಬಂಡೆಯ ಮಧ್ಯೆ, ನಿಸರ್ಗವೆ ತೋಡಿದ್ದ ಬಾವಿಯಂತೆ ಇದ್ದ ಕಲ್ಲು ಹೊಂಡದಲ್ಲಿ ತಿಳಿಯಾಗಿದ್ದ ನೀರನ್ನು ಗುತ್ತಿ ಬೆಟ್ಟಬಾಳೆಯ ಎಲೆಯಲ್ಲಿ ಮಾಡಿದ ದೊನ್ನೆಯಲ್ಲಿ ಎತ್ತಿ ತಂದನು. +ತಿಮ್ಮಿ ಅದನ್ನೆಲ್ಲ ಒಂದೆ ಏಟಿಗೆ ಕುಡಿದುಬಿಟ್ಟಳು. +ನೀರು ಕುಡಿದ ಮೇಲೆ ಅವಳಿಗೆ ಜೀವ ಬಂದಂತಾಗಿ ಸ್ವಲ್ಪ ಚಟುವಟಿಕೆಯಾದಳು. +ತಿಮ್ಮಿಯೆ ಬುತ್ತಿ ಬಿಚ್ಚಿದಳು. +ಇಬ್ಬರೂ ಉಂಡು, ತಮ್ಮ ಬಾಯಿಕಡೆಗೆ ನೋಡುತ್ತಲೆ ಕುಳಿತಿದ್ದ ಹುಲಿಯನಿಗೂ ಒಂದಷ್ಟು ಹಾಕಿದರು. +ಊಟಮಾಡಿದ ಮೇಲೆ ಇಬ್ಬರೂ ದೊಣೆಯ ಬಳಿಗೆ ಇಳಿದುಹೋಗಿ, ಕೈ ಬಾಯಿ ತೊಳೆದುಕೊಂಡು ನೀರನ್ನು ಚೆನ್ನಾಗಿ ಕುಡಿದರು. +ಹುಲಿಯನೂ ಲೊಚಗುಟ್ಟುತ್ತಾ ಸುಮಾರು ಹೊತ್ತು ನೀರು ನೆಕ್ಕಿತ್ತು! +ತಿಮ್ಮಿ ಅಂತಹ ಊಟವನ್ನು ಅವಳ ಜೀವಮಾನದಲ್ಲಿಯೆ ಮಾಡಿರಲಿಲ್ಲ: +ಅಷ್ಟು ಹಿತವಾಗಿತ್ತು, ರುಚಿಯಾಗಿತ್ತು, ಅವಳ ಅವ್ವ ಕಟ್ಟಿ ಕೊಟ್ಟಿದ್ದ ಆ ಬುತ್ತಿ, ಆ ಗಿರಿನೆತ್ತಿಯಲ್ಲಿ! +ಇಬ್ಬರೂ ನಾಯಿಯೊಡನೆ ಮಂಟಪಕ್ಕೆ ಹಿಂದಿರುಗಿ ಹತ್ತಿ ಬಂದರು. +ಗುತ್ತಿ ಉರಿಯುತ್ತಿದ್ದ ಬೆಂಕಿಗೆ ಮತ್ತಷ್ಟು ಕುಂಟೆ ಕಟ್ಟಿಗೆ ಹಾಕಿದನು, ಬೆಳಗಿನ ಜಾವದವರೆಗೂ ಅದು ಉರಿಯಲಿ ಎಂದು. +ಏಕೆಂದರೆ ಆ ಬೆಂಕಿಯೆ ಅವರಿಗೆ ಧೈರ್ಯವೂ ರಕ್ಷೆಯೂ ಆಗಿತ್ತು, ಆ ಭಯಂಕರ ಅಡವಿಯಲ್ಲಿ. +ತಿಮ್ಮಿ ಮಂಟಪದಲ್ಲಿ ಗುಡಿಸಿದ್ದ ಜಾಗದಲ್ಲಿ ಮಲಗಲು ಹವಣಿಸುತ್ತಿದ್ದಳು. +ಅವಳ ಹೃದಯದಲ್ಲಿ ತಟಕ್ಕನೆ ತನ್ನ ಹೆಣ್ಣುತನದ ನಾಣು ಎಚ್ಚರಗೊಂಡು ಅತ್ತ ಇತ್ತ ನೋಡತೊಡಗಿದಳು. +ಬೆಂಕಿಗೆ ಕಟ್ಟಿಗೆ ಹಾಕುತಿದ್ದ ಗುತ್ತಿ “ಅಲ್ಲೇ ನನ್ನ ಕಂಬಳಿ ಹಾಸಿಕೊಂಡು ಮನಿಕ್ಕೊಳ್ಳೆ” ಎಂದನು. +ಅವಳು ಬರುವಾಗ ಬುತ್ತಿ ತಂದಿದ್ದಳೆ ಹೊರತು ಕಂಬಳಿ ತಂದಿರಲಿಲ್ಲ. +ಅವನ ಕಂಬಳಿಯನ್ನು ತಾನು ಹಾಸಿಕೊಂಡರೆ ಅವನು ಕಲ್ಲಿನಮೇಲೆ ಮಲಗಬೇಕಾಗುತ್ತದೆ. +ಇಲ್ಲದಿದ್ದರೆ?ಅವನೆಲ್ಲಿಯಾದರೂ ತನ್ನ ಮಗ್ಗುಲಲ್ಲಿಯೆ ಮಲಗಿಬಿಟ್ಟರೆ, ಕಂಬಳಿ ತನ್ನದೆಂದು? +ತಿಮ್ಮಿಯ ತಲೆಯಲ್ಲಿ ಏನೇನೋ ಸುಳಿಯಿತು. +ಅವಳೆಂದಳು ದಾಕ್ಷಿಣ್ಯದ ಮೆಲುದನಿಯಲ್ಲಿ “ಕಂಬಳಿ ಬ್ಯಾಡ. +ಅವ್ವ ಕೊಟ್ಟ ಗಂಟಿನಲ್ಲಿ ಒಂದು ಸೀರೆ ಅದೆ. +ಅದೇ ಸಾಕು” ಎಂದಳು. + “ನೋಡೂ…. ಬೆಳಗಿನ ಜಾವ ಪೂರಾ ಚಳಿ ಆಗ್ತದೆ. +ಕಾರಣ ಬಿದ್ದರೂ ಬೀಳಬೈದು. +ಶೀತಾಗೀತಾ ಆಗಿ, ಜರಾಗಿರಾ ಬಂದ್ರೆ ನನ್ನ ಮಾತಿಲ್ಲ. +ಆಮ್ಯಾಲೆ ನಿನ್ನವ್ವ ನನ್ನ ಬೈತದೆ….” ಗುತ್ತಿ ಒಳಗೊಳಗೆ ಮುಗುಳುನಗುತ್ತಿದ್ದನು. +“ನಿಂಗೆ ಬ್ಯಾಡೇನು ಕಂಬಳಿ? ” +“ಬೇಕು ” +“ಮತ್ತೆ?ಇಬ್ಬರೂ ಒಂದೇ ಕಂಬಳೀಲಿ ಹ್ಯಾಂಗೆ ಮನಗಾದು?” +“ಇಬ್ರೆ ಸೈಯಾ? +ಮೂರು ಜನ ಬೇಕಾದರೂ ಮನಗಬೈದು. +ಅದೇನು ಚಿಟ್ಟಗಂಬಳಿ ಅಂತಾ ಮಾಡೀಯಾ? +ಹೆಗ್ಗಂಬಳಿ!ಬೇಕಾದರೆ ಬಿಚ್ಚಿ ಹಾಸಿ ನೋಡು.” +“ನಾ ಒಲ್ಲೆ ನಿನ್ನ ಜತೆ ಮನಗಾಕೆ!” +“ಅಲ್ಲೇ, ತಿಮ್ಮೀ, ನೀ ನನ್ನ ಮದೇ ಆದ ಮ್ಯಾಲೆ ಮಗ್ಲಾಗೆ ಮನಗ್ತೀಯೋ ಇಲ್ಲೋ….” +“ಏ ನಿಂಗೇನು ನಾಚಿಗೇನೆ ಇಲ್ಲಾ? +ಭಂಡ ಮಾತು ಆಡ್ತೀಯಲ್ಲಾ! +ನಾಳೆ ಅತ್ತೆಮ್ಮನ ಹತ್ರ ಹೇಳ್ದೇ ಇದ್ದರೆ ಕೇಳು!” +“ಗಂಡನ ಮಾತು ಹೆಂಡ್ತೀಗೆ ಭಂಡ ಮಾತೇನೇ? …. ಮನೀಗೆ ಹೋಗಾನ ಅಂತಿದ್ದೀ? +ಆಗ್ಲೆ ಅತ್ತೆಮ್ಮಗೆ ಹೇಳ್ತೀನಿ ಅಂತಿಯಲ್ಲಾ? +ನೀ ಮಾ ಹುನಾರಿನ ಹುಡುಗಿ ಕಣೇ!”ತಿಮ್ಮಿ ಮುನಿಸಿಕೊಂಡವಳಂತೆ ಮುಖ ತಿರುಗಿಸಿ, ಕಲ್ಲು ನೆಲದ ಮೇಲೆಯೆ ಮುದುರಿಕೊಂಡು ಮಲಗಿಬಿಟ್ಟಳು, ಗುತ್ತಿಯ ಕಂಬಳಿಯನ್ನೂ ಅದು ಇದ್ದಲ್ಲಿಂದ ತುಸುದೂರಕ್ಕೆ ತಳ್ಳಿ. +ಗುತ್ತಿ ಬೆಂಕಿಮಾಡಿ, ತಿಮ್ಮಿಯ ಬಳಿಗೆ ಬಂದು ನೋಡುತ್ತಾನೆ: ಅವಳಿಗೆ ಆಗಲೆ ಗಾಢ ನಿದ್ರೆ ಬಂದಿದೆ! +ಗುತ್ತಿ ತನ್ನ ಹೆಗ್ಗಂಬಳಿಯನ್ನು ಅವಳಿಗೆ ಮುಟ್ಟ ಮುಟ್ಟ ಹರಡಿ ಹಾಸಿದನು. +ಈ ಕಡೆಯ ತುದಿಯಲ್ಲಿ, ಬೆಳಿಗ್ಗೆ ಚಳಿಯಾದರೆ ಹೊದ್ದುಕೊಳ್ಳುವಷ್ಟು ಕಂಬಳಿಯನ್ನು ಬಿಟ್ಟುಕೊಂಡು, ಅವಳಿಗೆ ದೂರವಾಗಿಯೆ ಮಲಗಿದನು, ಆದರೆ ಅವಳಿಗೆ ಚಳಿಯಾದರೆ ಅವಳೂ ಕಂಬಳಿಯ ಮೇಲೆ ಮಲಗಿ ಹೊದ್ದುಕೊಳ್ಳಲು ಸಾಲುವಷ್ಟು ಭಾಗ ಬಿಡುವಾಗಿಯೆ ಇತ್ತು. +ಹುಲಿಯನೂ ಅಲ್ಲಿಯೆ ಅವರ ಕಾಲುದಿಸಿ ಮಲಗಿಕೊಂಡಿತ್ತು. +ಬೆಳಗಿನ ಜಾವ ತಿಮ್ಮಿಗೆ ಎಚ್ಚರವಾದಾಗ ನೋಡುತ್ತಾಳೆ, ತಾನು ಗುತ್ತಿಯ ಮೈಗೆ ಮೈಯೊತ್ತಿ ಮಲಗಿದ್ದಾಳೆ! +ಕಂಬಳಿ ಅವರಿಬ್ಬರನ್ನೂ ಬಲವಾಗಿ ಸುತ್ತುಹಾಕಿದೆ! +ತನ್ನ ಬೆನ್ನಿಗೆ ಗುತ್ತಿಯ ಎದೆಯ ಬಿಸುಪು ಮುಟ್ಟಿ, ಆ ಗುಡ್ಡದ ನೆತ್ತಿಯ ಕುಳಿರ್ಗಾಳಿಯ ಚಳಿಯಲ್ಲಿ ಅತ್ಯಂತ ಸುಖಕರವಾಗಿದೆ! +ಆದರೂ ಗುತ್ತಿಗೆ ಎಚ್ಚರವಾಗುವುದಕ್ಕೆ ಮೊದಲೆ, ಆ ನಾಣ್‌ಪಟ್ಟಿನಿಂದ ಪಾರಾಗಿ, ದೂರ  ಮಲಗುತ್ತೇನೆ ಎಂದು ಅವಳು ಪ್ರಯತ್ನಿಸುವುದಕ್ಕೂ ಸಾಧ್ಯವಾಗದಂತೆ ಅವನ ತೋಳು ಅವಳ ಎದೆಯ ಮೇಲಿಂದ ಇಳಿದು ಬಲವಾಗಿ ಬಗಿದಂತಿದೆ! +ಅವನು ಉಸಿರಾಡುವುದನ್ನೂ ನಿಶ್ಚಲವಾಗಿರುವುದನ್ನೂ ನೋಡಿದರೆ ಅವನಿಗೆ ನಿದ್ದೆ ಬಂದ ಹಾಗಿದೆ. +ಆದರೆ ತನ್ನನ್ನು ಅಪ್ಪಿದ್ದ ಆ ತೋಳಿನ ಬಿಗಿಕಟ್ಟು ನಿದ್ದೆಗೆ ಸಾಧ್ಯವೆ?ಎಂದು ಶಂಕೆಗೆ ಎಡೆಕೊಡುವಂತಿದೆ! +ಅವಳಿಗೆ ಎಚ್ಚರವಾದ ಮೊದಲಲ್ಲಿ ಆ ಬಿಗಿಯಪ್ಪುಗೆಯಿಂದ ತಪ್ಪಿಸಿಕೊಳ್ಳಬೇಕೆಂದಿದ್ದ ಮನಸ್ಸು, ಆ ತೋಳಿನ ಬಂಧನದಿಂದ ಪಾರಾಗುವ ಪ್ರಯತ್ನವೇ ಅವನನ್ನು ಎಚ್ಚರಗೊಳಿಸಿ ತಾನಿದ್ದ ಲಜ್ಜಾಕರ ಸ್ಥಿತಿಯನ್ನು ಬಹಿರಂಗಪಡಿಸಬಹುದೆಂಬ ತರುವಾಯದ ಭೀತಿಗೆ ಸಿಕ್ಕಿ, ತಟಸ್ಥವಾಯಿತು. +ಕಣ್ಣು ಬಿಟ್ಟು ನೋಡಿದಳು: ಕತ್ತಲೆ, ಕಾಡು; +ಏನೇನೊ ಅಪರಿಚಿತ ಶಬ್ದಗಳು; + ಬೆಂಕಿಯ ಉರಿ ಆರಿ, ಕೆಂಡವೆ ಕೆಂಪಾಗಿ ಕಾಣುತ್ತಿದೆ. +ಹುಲಿಯ ಅಲ್ಲಯೆ ಕುಳಿತು ತನ್ನ ಹಿಂಗಾಲಿನಿಂದ ಕುತ್ತಿಗೆ ತುರಿಸಿಕೊಳ್ಳುತ್ತಿರುವುದು ಬೆಂಕಿಗೆ ಎದುರಾಗಿ ಮಷೀಚಿತ್ರದಂತೆ ಕಾಣುತ್ತಿದೆ. +ತಿಮ್ಮಿ ಮತ್ತಷ್ಟು ಬಲವಾಗಿ ಗುತ್ತಿಯ ಮೈಗೆ ತನ್ನ ಬೆನ್ನೊತ್ತಿ ಹೊಕ್ಕು ಮಲಗಿಬಿಟ್ಟಳು. +ಆದರೆ ಅವಳಿಗೆ ನಿದ್ದೆ ಬರಲಿಲ್ಲ; +ರಾತ್ರಿ ಮಲಗುವಾಗ ಅವನ ಕಂಬಳಿಯನ್ನು ದೂರಕ್ಕೆ ತಳ್ಳಿ ಮಲಗಿದ್ದೆನಲ್ಲಾ? +ಅದು ಹೇಗೆ ಹೀಗೆ ಮಲಗುವಂತಾಯಿತು? +ನಿದ್ದೆಗಣ್ಣಿನಲ್ಲಿ ನಾನೇ ಹೊರಳಿ ಹೀಗೆ ಮಲಗಿಬಿಟ್ಟೆನೋ ಅಥವಾ ಭಾವನೆ ನನ್ನನ್ನು ಎಳೆದು ಹೀಗೆ ಮಲಗಿಸಿಕೊಂಡನೊ? +ಚಳಿಗೆ ಶೀತವಾಗದಿರಲಿ ಎಂದು! +ಇಂತೆಲ್ಲ ಆಲೋಚಿಸುತ್ತಿದ್ದಾಗಲೆ ಅವಳ ಮೈಗೆ ಏನೋ ಸವಿ ಏರತೊಡಗಿತ್ತು! +ತಿಮ್ಮಿ ಶಂಕಿಸದಂತೆ ಗುತ್ತಿ ಅವಳನ್ನು ಎಳೆದು ಮಲಗಿಸಿಕೊಂಡಿರಲಿಲ್ಲ. +ರಾತ್ರಿ ಒಂದು ಸಾರಿ ಅವನಿಗೆ ಹುಲಿಯನ ಬೊಗುಳುವಿಕೆಯಿಂದ ಎಚ್ಚರವಾಗಿದ್ದಾಗ ಎದ್ದು ಬೆಂಕಿಗಷ್ಟು ಕಟ್ಟಿಗೆ ಹಾಕಿ ಮಲಗುತ್ತಿದ್ದನು. +ಆಗ ತಿಮ್ಮಿ ನಿದ್ದೆಯಲ್ಲಿಯೆ ‘ಅವ್ವಾ!ಅವ್ವಾ!’ ಎಂದು ಕರೆದದ್ದು ಕೇಳಿಸಿತು. +ಆಗತಾನೆ ಬೆಳಗಿನ ಜಾವದ ಕಾಡಿನ ಚಳಿಗಾಳಿ ಬೀಸತೊಡಗಿತ್ತು. +ಆ ಚಳಿಗೆ ತಿಮ್ಮಿ ಮೈಯನ್ನೆಲ್ಲ ಮುದುರಿಸಿ ಮುದ್ದೆಮಾಡಿಕೊಂಡು ಮಲಗಿಕೊಳ್ಳುತ್ತಿದ್ದಳು, ಉಟ್ಟಿದ್ದ ಸೀರೆಯನ್ನೆ ಹೊದೆಯಲೆಂಬಂತೆ ಎಳೆದುಕೊಳ್ಳುತ್ತಾ. +ಗುತ್ತಿ ‘ಇತ್ತಿತ್ತಾ ಬಾರೆ, ಕಂಬಳಿ ಹೊದ್ದುಕೊಂಡು ಮನಗಿಕೊಳ್ಳೆ!’ ಎಂದು ಹೇಳಲು, ಅವಳು ನಿದ್ದೆಗಣ್ಣಿನಲ್ಲಿಯೆ, ಅನೈಚ್ಚಿಕವಾಗಿ ಎಂಬಂತೆ, ಗುತ್ತಿಯ ಹತ್ತಿರಕ್ಕೆ ಸರಿದಿದ್ದಳು. +ಗುತ್ತಿ ಅವಳಿಗೂ ತನಗೂ ಒಟ್ಟಿಗೆ ಕಂಬಳಿಯನ್ನು ಸುತ್ತಿ ಹೊದಿಸಿಕೊಂಡಿದ್ದನು. +ಅವನಿಗೂ ಮೈಗೆ ಬೆಚ್ಚಗಾದದ್ದಕ್ಕಿಂತಲೂ ಮನಸ್ಸಿಗೆ ನೊಚ್ಚಗಾಗಿ, ಇಬ್ಬರೂ ಸವಿನಿದ್ದೆ ಮಾಡಿದ್ದರು. +ಆದರೆ ಬೆಳಗಿನ ಜಾವ ತಿಮ್ಮಿಗೆ ಎಚ್ಚರವಾಗಿ ಅವಳು ತಾನಿದ್ದ ಸ್ಥಿತಿಗೆ ಮೊದಲು ಅಚ್ಚರಿಪಟ್ಟು, ಆಮೇಲೆ ಸೊಗಂಬಟ್ಟು, ಕಡೆಗೆ ಗುತ್ತಿಯ ಮೈಗೆ ಮತ್ತಷ್ಟು ಒತ್ತಿ ಹೊಕ್ಕು ಮಲಗಿದಾಗ, ಅವನಿಗೆ ಎಚ್ಚರವಾಗಿ, ಅವಳನ್ನು ಮತ್ತಷ್ಟು ಬಿಗಿದಪ್ಪಿ, ನಿದ್ರಿಸುತ್ತಿದ್ದಂತೆ ನಟಿಸಿದ್ದನು! +ಸ್ವಲ್ಪ ಹೊತ್ತಿನಲ್ಲಿಯೆ, ತನ್ನ ಮೈಸೋಂಕಿನಿಂದ ಅವಳ ಮೈಗೆ ಹೇಗೆ ಸವಿ ಏರತೊಡಗಿತ್ತೋ ಹಾಗೆಯೆ ಆಗತೊಡಗಿತ್ತು ಗುತ್ತಿಗೂ! +ಇಬ್ಬರಿಗೂ ಅದೇನು ಮೊತ್ತಮೊದಲನೆಯದೂ ಆಗಿರಲಿಲ್ಲ, ಹೊಚ್ಚಹೊಸದೂ ಆಗಿರಲಿಲ್ಲ, ಅಂತಹ ರಹಸ್ಯಾನುಭವ! +ಪರಸ್ಪರವಾಗಿ ಮಾತ್ರ ಹಾಗಿತ್ತು, ಅಷ್ಟೆ. +ತಿಮ್ಮಿ ತನ್ನ ಸಿಂಬಾವಿ ಬಾವನೂ ಹಿಂದೊಮ್ಮೆ, – ತಮ್ಮ ಕೇರಿಯವನೆ ಆಗಿ ಈಗ ತನ್ನನ್ನು ಮದುವೆಯಾಗಲಿದ್ದ, – ಆ ಬಚ್ಚಬಾವ ತನಗೆ ಮಾಡಿದ್ದಂತೆಯೆ ಮಾಡಬಹುದು ಎಂದು ನಿರೀಕ್ಷಿಸುತ್ತಿದ್ದಳು. +ಹಾಗೆಯೆ ಗುತ್ತಿ ಒಮ್ಮೆ ತಾನು ಹಳೆಮನೆಯ ತಮ್ಮವರ ಕೇರಿಗೆ ನಂಟನೊಬ್ಬನ ಮದುವೆಗಾಗಿ ಹೋಗಿ ನಾಲ್ಕುದಿನ ತಳವಾರ ಸುಣ್ಣನ ಬಿಡಾರದಲ್ಲಿದ್ದಾಗ ಅವನ ಹಿರಿಯ ಮಗಳು, ಈಗಲೂ ಅವಿವಾಹಿತೆಯೆ ಆಗಿ ಉಳಿದಿರುವ ಪುಟ್ಟಿ, ತನ್ನನ್ನು ಒಂದು ದಿನ ಬೈಗುಗಪ್ಪಿನಲ್ಲಿ ಒಡೆಯರ ಕಣದ ಹುಲ್ಲು ಬನಬೆಯ ಹಿಂದೆ ಮರೆಗೆ ಕರೆದುಕೊಂಡು ಹೋಗಿ ಮಾಡಿದ್ದಂತೆಯೆ ತಿಮ್ಮಿಯೂ ಮಾಡಬಹುದು ಎಂದು ಹಾರೈಸುತ್ತಿದ್ದನು. +ಆದರೆ ಅವರಿಬ್ಬರಲ್ಲಿ ಯಾರೊಬ್ಬರಿಗೂ ತಾನೆ ಮೊದಲು ಮುಂದುವರಿಯಲಾಗದ ಸಂಕೋಚವೊಂದು ಅವರನ್ನು ಪ್ರಣಯದ ಶಿಖರಕ್ಕೇರಿದಂತೆ ತಡೆದಿತ್ತು. +ಅವಳು ಒತ್ತುತ್ತಿದ್ದ ರೀತಿ, ಅವನು ಅಪ್ಪುತ್ತಿದ್ದ ಬಿಗಿತ, ಎರಡೂ ಅವರನ್ನು ಪ್ರಣಯಗಿರಿಯ ಪ್ರತ್ಯಂತ ಭೂಮಿಯವರೆಗೂ  ಕೊಂಡೊಯ್ದಿದ್ದುವು. +ಹುಲಿಯ ಅಲ್ಲಿರದಿದ್ದರೆ ಇನ್ನು ಕೆಲವೇ ನಿಮಿಷಗಳಲ್ಲಿ ರತಿಮನ್ಮಥರು ಅವರನ್ನು ನಿಧುವನದ ಶಿಖರಾನುಭವಕ್ಕೂ ಒಯ್ಯುತ್ತಿದ್ದರೊ ಏನೊ? +ಇದ್ದಕಿದ್ದ ಹಾಗೆ ಯಾವುದೋ ಘಾತುಕ ಪ್ರಾಣಿ ತನ್ನ ಮೇಲೆ ನೆಗೆದ ರಭಸಕ್ಕೆಂಬಂತೆ ಹುಲಿಯ ಕಂಯ್ಕ್ ಎಂದು ಕೂಗಿದ್ದು ಕೇಳಿಸಿತು. +ನಾಯಿಗೂ ಆ ಪ್ರಾಣಿಗೂ ಬಲವಾದ ಹೋರಾಟ ನಡೆಯುವಂತೆ ಸದ್ದಾಯಿತು. +ಒಂದರ ಮೇಲೆ ಒಂದು ಬಿದ್ದು, ಒಂದನ್ನೊಂದು ಕೊಲ್ಲುವ ಪ್ರಯತ್ನದಲ್ಲಿ ಎರಡೂ ಗುಡ್ಡದ ಇಳಿಜಾರಿನಲ್ಲಿ ಕೆಳಗೆ ಕೆಳಗೆ ಉರುಳುತ್ತಾ ಹೋದಂತಾಯಿತು. +ಗುತ್ತಿಗೆ ಕ್ಷಣಾರ್ಧದಲ್ಲಿ ಗೊತ್ತಾಯಿತು, ಕುರ್ಕ ನಾಯಿಯ ಮೇಲೆ ಬಿದ್ದಿದೆ ಎಂದು ತಟಕ್ಕನೆ ಎದ್ದು “ಹಿಡಿ, ಹುಲಿಯ! +ಹಿಡಿ!” ಎಂದು ಗಟ್ಟಿಯಾಗಿ ಕೂಗುತ್ತಾ, ಒಂದು ಹೆಗ್ಗೊಳ್ಳಿಯನ್ನೆತ್ತಿ ಬೀಸುತ್ತಾ, ಸದ್ದಾಗುತ್ತಿದ್ದ ಕಡೆಗೆ ಧಾವಿಸಿದನು. +ಇವನ ಕೂಗು ಕೇಳಿಸಿಯೋ ನಾಯಿಯ ಬಲಕ್ಕೆ ಸೋತು ಹೆದರಿಯೋ ಕುರ್ಕ ಓಡುತ್ತಿರುವುದನ್ನೂ ನಾಯಿ ಅಟ್ಟುತ್ತಿರುವುದನ್ನೂ ಕಂಡು, ಗುತ್ತಿ ನಾಯಿಯನ್ನು ಅದರ ಹೆಸರು ಹಿಡಿದು ಕೂಗಿ ಗದರಿಸಿ ಬಳಿಗೆ ಕರೆದನು. +ನಾಯಿಯನ್ನು ಹಿಡಿಯುವ ಆ ಜಾತಿಯ ಚಿರತೆ, ನಾಯಿ ತನ್ನನ್ನು ಅಟ್ಟುವಂತೆ ಮಾಡಿ, ಅದನ್ನು ಇತರ ನಾಯಿಗಳಿಂದಲೂ ಮನುಷ್ಯರಿಂದಲೂ ದೂರಕ್ಕೆ ಸೆಳೆದು ಪ್ರತ್ಯೇಕಿಸಿ, ಅದು ಒಂಟಿಯಾದಾಗ ಅದರ ಮೇಲೆ ಬಿದ್ದು ಕೊಲ್ಲುವ ಉಪಾಯ ಹೂಡುತ್ತದೆ ಎಂಬುದು ಗುತ್ತಿಗೆ ಗೊತ್ತಿದ್ದುದರಿಂದಲೆ ಹುಲಿಯ ಕುರ್ಕವನ್ನು ಬೆಂಬತ್ತಿ ಅಟ್ಟೆ ಹಳುವಿಗೆ ಹೋಗದಂತೆ ತಡೆದಿದ್ದನು. +ನಾಯಿ ನಾಲಗೆ ಇಳಿಬಿಟ್ಟುಕೊಂಡು ಏದುತ್ತಾ ಉಸಿರೆಳೆಯುತ್ತಾ ಬಳಿಗೆ ಬಂತು. +ಗುತ್ತಿ ಅಭೀಮಾನಕ್ಕೂ ವಿಶ್ವಾಸಕ್ಕೂ ಅದರ ತಲೆಯನ್ನು ಸವರಿದನು. +ಅವನ ಕೈ ಅದರ ಕುತ್ತಿಗೆಯ ಮೇಲೆ ಹೋದಾಗ ಏನೋ ವದ್ದ ಮುಟ್ಟಿದಂತಾಯಿತು. +ಗುಡ್ಡ ಹತ್ತಿ ಅವರಿಬ್ಬರೂ ಬೆಂಕಿಯ ಬಳಿಗೆ ಬಂದಾಗ, ಬೆಂಕಿಗೆ ಒಣಗಿದ್ದ ಹರೆಗಳನ್ನು ಹಾಕುತ್ತಾ ನಿಂತಿದ್ದ ತಿಮ್ಮಿ “ಅಯ್ಯೋ ಬಾವ, ಇದೇನು ನೆತ್ತರ!” ಎಂದು ಹೌಹಾರಿದಳು. +ಬೆಂಕಿಯ ಬೆಳಕಿನಲ್ಲಿ ಗುತ್ತಿಯ ಕೈಯೂ ನಾಯಿಯ ಮೈಯೂ ರಕ್ತಮಯವಾಗಿದ್ದ ಭಯಂಕರ ದೃಶ್ಯ ಕಾಣಿಸಿತ್ತು. +“ಹಾಳು ಕುರ್ಕ!ಹಡಬೇಗೆ ಹುಟ್ಟಿದ್ದು! +ನಾಯಿ ಮೈನೆಲ್ಲ ಗಿಬರಿ ಗಾಯಮಾಡಿ ಬಿಟ್ಟಿದೆ! …. ಅದಕ್ಕೂ ಸಮಾ ಮಾಡ್ತು ಅಂತ ಕಾಣ್ತದೆ ಹುಲಿಯ? +ಸತ್ನೋ ಕೆಟ್ನೋ ಅಂತಾ ಹೇತ್ಕೊಂಡು ಓಡ್ತಿತ್ತು, ಹಹ್ಹಹ್ಹ!” ಎಂದು ಜಯಾಟ್ಟಹಾಸಗೈದು ಗುತ್ತಿ ಹುಲಿಯನನ್ನು ಹೊಗಳಿ, ಅದರ ಗಾಯಗಳಿಗೆ ಬಿಸಿಬಿಸಿ ಬೂದಿ ಹಾಕಿ ಮದ್ದು ಮಾಡತೊಡಗಿದನು. +ಎಂತಹ ರತಿಭಾವದ ಕಿಬ್ಬಿಯಂಚಿನ ರಸಸ್ಥಲದಿಂದ ಅದೆಂತಹ ಭಯಂಕರ ಕರುಣ ಬೀಭತ್ಸಗಳ ಕಣಿವೆಗೆ ಹುಲಿಯನ ಅದ್ಭುತ ಸಾಹಸ ತಮ್ಮಿಬ್ಬರನ್ನೂ ತಂದಿತ್ತು ಎಂಬುದನ್ನು ಅವರಿಬ್ಬರೂ, – ಮದ್ದು ಮಾಡಿ ಶುಶ್ರೂಷೆ ಮಾಡುತ್ತಿದ್ದ ಗುತ್ತಿಯಾಗಲಿ, ಆ ಕಾರ್ಯದಲ್ಲಿ ಅವನಿಗೆ ಅನುಕಂಪನೆಯಿಂದ ನೆರವಾಗುತ್ತಿದ್ದ ತಿಮ್ಮಿಯಾಗಲಿ, – ಪರ್ಯಾಲೋಚಿಸುವ ಸ್ಥಿತಿಯಲ್ಲಿರಲಿಲ್ಲ, ತರುವಾಯವಾದರೂ ಅವರಿಬ್ಬರೂ, ಪರಸ್ಪರ ಒಳಸಂಚಿನಿಂದಲೊ ಎಂಬಂತೆ, ಅದನ್ನು ಪ್ರಸ್ತಾಪಿಸಲೂ ಇಲ್ಲ. +ಆದರೆ ಆಗಾಗ್ಗೆ ಒಂದು ಕಣ್ಣಿನ ಮಿಂಚೊ, ಒಂದು ಮುಗುಳು ನಗೆಯ ತುಟಿಗೊಂಕಿನ ಹೊಂಚೊ, ಅವರಿಬ್ಬರ ಸಂಚಿನ ಅಂಚಿನಿಂದ ಇಣಿಕಿ ಇಬ್ಬರಿಗೂ ಅದರ ಸವಿಸೊಗದ ನೆನಪು ಮರುಕಳಿಸುವಂತೆ ಆಗುತ್ತಿತ್ತು. +“ಓ ಹೊತಾರೆ ಆಗ್ತಾ ಇದೆ!” ನಸುಗೆಂಪು ಏರುತ್ತಿದ್ದ ಮೂಡುಬಾನೆಡೆಗೆ ಕಣ್ಣಾಗಿ ಸಂತೋಷಕ್ಕೆ ಕೂಗಿಕೊಂಡಳು ತಿಮ್ಮಿ. +ಗುತ್ತಿ ತಿರುಗಿನೋಡಿ, ತುಸುವೊತ್ತಿನ ಹಿಂದೆ ಮೂಡಿ ಸ್ವಲ್ಪ ಮಾತ್ರವೆ ಮೇಲೆ ಏರಿದ್ದ ಅಮಾವಾಸ್ಯೆಗೆ ಮುನ್ನಿನ ಕಮಾನಿನಾಕಾರದ ಹೊಗೆಗೆಂಪಿನ ಕ್ಷೀಣಚಂದ್ರನನ್ನು ಗಮನಿಸಿ “ಏ ಅದು ತಿಂಗಳು ಕಣೇ!” ಎಂದನು. +“ಅದನ್ನಲ್ಲ ನಾ ಹೇಳಿದ್ದು. +ಅಲ್ಲಿ ನೋಡು, ಓ ಅಲ್ಲಿ, ಆ ಗುಡ್ಡದ ಹಿಂದಿನ ಗುಡ್ಡದ ನೆತ್ತಿಸಾಲಿನ ಮ್ಯಾಲೆ, ಆಕಾಸ ಹೆಂಗೆ ಕೆಂಪಾಗ್ತಾ ಅದೆ!” ಅವರಿದ್ದ ಶಿಖರದೆತ್ತರದಿಂದ ಕಾಣುತ್ತಿದ್ದು, ಶ್ರೇಣಿಶ್ರೇಣಿಯಾಗಿ ಪೂರ್ವ ದಿಗಂತದವರೆಗೂ ಹಬ್ಬಿದ್ದ ಅರಣ್ಯಾವೃತ ಪರ್ವತ ಪಂಕ್ತಿಗಳ ಕಡೆ ಕೈ ತೋರಿಸಿದ್ದಳು ತಿಮ್ಮಿ. +“ಹೌದೇ ಸೈ! …. ಅಲ್ಲಿ ಕೇಳಿದ್ಯಾ? +ಕಾಜಾಣಾನೂ ಸಿಳ್ಳಿಹಾಕಾಕಿ ಸುರು ಮಾಡಿದುವಲ್ಲಾ!” ಕತ್ತಲೆಯಿಂದ ಮೆಲ್ಲಮೆಲ್ಲನೆ ಬೆಳಕಿಗೆ ಹೊಮ್ಮುತ್ತಿದ್ದ ಕಾಡುಗಳಿಂದ ಅಲ್ಲೊಂದು ಇಲ್ಲೊಂದು ಸಿಳ್ಳುಲಿ ನೀರವತಾ ತಂತಿಯನ್ನು ಮೀಟಿದಂತೆ ಕೇಳಿ ಬರುತ್ತಿತ್ತು. +“ಬೆಳಕು ಬಿಡ್ತಲ್ಲಾ? +ಹಂಗಾರೆ ಇನ್ನು ಹೊಲ್ಡಾನಾ?” ಎಂದು ತಿಮ್ಮಿ ಆಗಲೆ ತುಸು ಬಣ್ಣಗೆಡುತ್ತಿದ್ದ ಬೆಂಕಿಯ ಕಡೆ ನೋಡುತ್ತಾ ಕೇಳಿದಳು. +“ಎಲ್ಲಿಗೇ?” ಗುತ್ತಿಯ ಪ್ರಶ್ನೆ. +“ಮಾವನ ಮನೀಗೆ” ತಿಮ್ಮಿಯ ಉತ್ತರ. +“ಯಾರ ಮಾವನ ಮನೀಗೆ?” +“ನನ್ನ ಮಾವನ ಮನೀಗೆ!” +“ನನ್ನ ಮಾವನ ಮನಿಗೇನೋ ಅಂತಾ ಮಾಡಿದ್ದೆ….” +“ನಿನ್ನ ಮಾವನ ಮನೀಗೆ ಹೋದ್ರೆ ಆಗ್ತದೆ ನಿಂಗೆ, ಚೆನ್ನಾಗಿ, ಮದ್ವೆ!” +“ಅಲೆಲೆಲೆಲೇ ಹುಡುಗೀ! +ಒಂದು ರಾತ್ರೀಲೆ ಏಟು ಬದಲಾಯಿಸಿಬಿಟ್ಟೇ? +ನಿನ್ನೆ ನೀನೇ ಅಲ್ಲೇನೆ ಹೇಳಿದ್ದೂ, ಮನೀಗೆ ಹೋಗಾನ ಅಂತಾ? ” +“ಹೇಳಿದ್ದೆ…. ನಿನ್ನೆ!”ಇವರಿಬ್ಬರೂ ರಾತ್ರಿಯ ಮಧುರಾನುಭವ ನೆನಪು ಹೊಮ್ಮಿ ನಕ್ಕುಬಿಟ್ಟರು. +ಅಷ್ಟರಲ್ಲಿ ವಸ್ತುಗಳೆಲ್ಲ ಸ್ಪಷ್ಟವಾಗಿ ಕಾಣುವಷ್ಟು ಬೆಳಗಾಗಿತ್ತು. +ತಿಮ್ಮಿ ಮಲೆಯ ಕಣಿವೆಗಳ ಕಡೆ ಕಣ್ಣು ಹಾಯಿಸಿ, ಕಣ್ಣರಳಿಸಿ, ಹಿಗ್ಗಿ, ವಿಸ್ಮಯದಿಂದ ಕೂಗಿಕೊಂಡಳು “ಅಯ್ಯೋ ಅಯ್ಯೋ ಅಯ್ಯೋ! +ಅದೇನು ಬಾವ, ಅದೂ? +ನೊರೆ, ನೊರೆ, ನೊರೆ, ಹಾಲು! +ಕಡ್ಳು ನಿಂತ್ಹಾಂಗೆ ಅದೆಯಲ್ಲಾ?” +“ಕಾವಣ ಕಣೇ, ಕಣಿವೆ ಕಾಡನೆಲ್ಲ ಮುಚ್ಚಿಬಿಟ್ಟಿದೆ.” +“ಏನು ಚೆಂದಾಗಿ ಕಾಣ್ತದೆ, ಬಾವ! +ನಾನು ನೋಡೇ ಇರ್ಲಿಲ್ಲ.” +“ಕೆಳೂಗೆ ಬಿಡಾರದಾಗೇ ಕೂತುಕೊಂಡಿದ್ರೆ ಹೆಂಗೆ ಕಾಣ್ತದೆ ಇದೆಲ್ಲ? +ನೋಡಿದ್ಯಾ?ನನ್ನ ಜೊತೆ ಬಂದಿದ್ದಕ್ಕೆ ಏನೇನೆಲ್ಲ ಕಂಡ್ತು ನಿಂಗೆ?” ಹಂಗಿಸಿದ್ದನು ಗುತ್ತಿ. +“ಹ್ಞೂ ಕಂಡ್ತು? +ನಿನ್ನೆ ಕೊಂದೇ ಹಾಕಿದ್ದಿ, ದೊಡ್ಡಿನ ಕಾಲಿಗೆ ಸಿಕ್ಸಿ!” ತುಟಿ ಊದಿಸಿ ಮೂದಲಿಸಿದಳು ತಿಮ್ಮಿ. +“ಮತ್ತೇನು ಕುದ್ರೆ ಮ್ಯಾಲೆ ಕೂರಸಿ ಕರ್ಕೊಂಡು ಹೋಗ್ತಾರೆ ಅಂತ ಮಾಡಿದ್ಯೇನೋ – ಮದುವಳಿಗೀನ?” +“ಕುದ್ರೆ ಮ್ಯಾಲೆ ಕೂತ್ರೆ, ಕುದ್ರೆ ಕಾಲ್‌ ಜತೇಲೆ ನಿನ್ನ ಕಾಲ್ನೂ ಮುರಿದು ಹಾಕ್ತಾರೆ, ನಮ್ಮ ವಡೇರ ಕಡೇರು…. +ಹಳೆಪೈಕದೋರಿಗೇ ದಂಡಿಗೆ ಕುದ್ರೆ ಹತ್ತಬಾರದು ಅಂತ ಮಾಡ್ಯಾರಂತೆ.” +“ಹತ್ತಿಸ್ತಾರಂತಲ್ಲಾ ಕುದ್ರೆ ಮ್ಯಾಲೆ, ಅವರ ಮಗನ ಮದುವೇಲಿ, ಲಕ್ಕುಂದದ ಸೇಸನಾಯ್ಕರು!”ಇಬ್ಬರೂ ಪರಿಚಿತರಾರಿಗೂ ಕಾಣಿಸದಂತೆ ಕಾಡಿನ ಒಳದಾರಿಯಲ್ಲಿ ಹೊರಡಲು ಸಿದ್ಧರಾಗಿ ಇಳಿಯತೊಡಗಿದ್ದರು. +ಹತ್ತಿಪ್ಪತ್ತು ಮಾರು ಹೋಗುವುದರಲ್ಲಿಯೆ ತಿಮ್ಮಿ ಮತ್ತೆ ಅದ್ಭುತ ದರ್ಶನವಾದಂತೆ ಕೂಗಿಕೊಂಡಳು, ಗುತ್ತಿಗೆ ದಿಗಿಲಾಗುವಂತೆ. +“ಅಯ್ಯೊ ಅಯ್ಯೊ ಅಯ್ಯೊ! +ಬಾವ, ಬಾವ, ಬಾವ! +ಅಲ್ನೋಡು, ಅಲ್ನೋಡು, ಅಲ್ನೋಡು!…” ಮುಂದೆ ಮಾತು ನಿಂತು, ಕೈಮುಗಿದುಕೊಂಡು ಭಾವಪರವಶಳಾಗಿ ನಿಂತುಬಿಟ್ಟಳು. +ಪೂರ್ವ ದಿಗಂತದಿಂದ ಕೆಂಡದುಂಡೆಯಾಗಿ ಕಿರಣವಿಲ್ಲದ ಸೂರ್ಯ ಮೇಲೇಳುತ್ತಿದ್ದನು. +ಕಣಿವೆಗಳನ್ನು ತುಂಬಿದ್ದ ಆ ಮಂಜಿನ ನೊರೆನೊರೆಯ ಸಮುದ್ರ, ಹಸುರು ದ್ವೀಪಗಳಂತೆ ನಡುನಡುವೆ ತಲೆಯೆತ್ತಿದ್ದ ಮಲೆನೆತ್ತಿಗಳು. +ಮುಡು ಬಾನಿನಲ್ಲಿ ಸಾಗುತ್ತಿದ್ದ ಆ ಮೋಡಗಳ ವರ್ಣಲೀಲೆ, ಇವುಗಳ ಸುವಿಸ್ತೃತ ಭಿತ್ತಿವೇದಿಕೆಯಲ್ಲಿ ಆವಿರ್ಭವಿಸುತ್ತಿದ್ದ ಆ ಚೈತ್ರರವಿಯ ಸೌಂದರ್ಯವು ತಿಮ್ಮಿಯಂತಹಗಳಿಗೂ ಹೃದಯದಲ್ಲಿ ಭೂಮಾನುಭೂತಿ ಸಂಚಾರವಾಗುವಂತೆ ಮಾಡಿತ್ತು. +“ಅಃ, ಬಾವ, ನಮ್ಮ ಬಿಡಾರ ಇಲ್ಲೇ ಇದ್ದಿದ್ರೆ?” ಎಂದು ಮಾತ್ರ ಹೇಳಲು ಶಕ್ತವಾಗಿತ್ತು ಅವಳಿಗೆ ತಿಳಿದಿದ್ದ ಭಾಷೆ, ಅವಳ ಚೇತನದ ಅನುಭವದ ಅಭಿವ್ಯಕ್ತಿಗೆ ಪ್ರತೀಕವಾಗಿ. +ಮೂಡುತ್ತಿದ್ದ ದಿನಸ್ವಾಮಿಗೆ ಕೈ ಮುಗಿಯುತ್ತಾ ನಕ್ಕು ಹೇಳಿದನು ಗುತ್ತಿ. + ನಿಮ್ಮ ಬಿಡಾರ ಇಲ್ಲೇ ಇದ್ದಿದ್ರಾ? +ನಿನ್ನ ಮಗ್ಗಲಾಗೆ ಮನಗ್ತಿತ್ತು… ಹುಲಿ!” +“ಹುಲಿ ಏನು ನಿನ್ನ ಹಾಂಗಲ್ಲ! +ಅದ್ಕೂ ಮಾನಮರ್ವಾದೆ ಅದೆ!” ಗುತ್ತಿ ತತ್ತರಿಸುವಂತೆ ಉತ್ತರ ಬಿಗಿದಿದ್ದಳು ತಿಮ್ಮಿ. +ರಾತ್ರಿ ನಡೆದದ್ದನ್ನು ಜ್ಞಾಪಿಸಿಕೊಂಡು ಇಬ್ಬರೂ ಗಟ್ಟಿಯಾಗಿ ನಗಾಡಿದರು. +“ನೋಡಾಕೆ ಬೆಪ್ಪಿ ಇದ್ದಾಂಗೆ ಇದ್ದೀಯ! +ಏನು ಜಾಣ ಮಾತು ಕಲ್ತುಬಿಟ್ಟೀಯೆ ನೀನು?” ಎನ್ನುತ್ತಾ ಗುತ್ತಿ ಸರಸರನೆ ಕಾಲು ಹಾಕತೊಡಗಿದನು. +ಗಾಯಗೊಂಡಿದ್ದ ಹುಲಿಯ ಅವರಿಂದ ದೂರ ಹೋಗದೆ, ಅವರೊಡನೆಯೆ ಮೆಲ್ಲಗೆ ಕುಂಟಿ ನಡೆಯುತ್ತಿತ್ತು. +“ಹಾಳು ಕುರ್ಕನ ಉಗುರು! +ನಂಜಾಗಿಬಿಡ್ತದೆಯೋ ಏನೊ ನಾಯಿಗೆ? +ಬಿಡಾರಕ್ಕೆ ಹೋದಮ್ಯಾಲೆ ಕಾಡುಜೀರಿಗೆ ಅರಸಿನ ಅರೆದು ಹಚ್ಚಬೇಕು?” ಎಂದು ಕೊಂಡನು ಗುತ್ತಿ ಮನಸ್ಸಿನಲ್ಲಿಯೆ, ನಾಯಿಯ ಸೋತ ನಡೆಯನ್ನು ನೋಡಿ. +ಇಬ್ಬರೂ ಕಾಡಿನ ದಾರಿಯಲ್ಲಿ ತುಸುದೂರ ನಡೆದಿದ್ದರು. +ಗುತ್ತಿ ತಿಮ್ಮಿಯ ಜಾಣ್ಮಾತನ್ನು ಮೆಲುಕು ಹಾಕಿ ಕಿಸಕ್ಕನೆ ನಕ್ಕನು. +ಅದೇ ಸಮಯಕ್ಕೆ ಸರಿಯಾಗಿ ತಿಮ್ಮಿ ಎಡವಿದ್ದಳು: “ನಾ ಎಡಗಿದ್ರೆ ನಿಂಗೆ ತಮಾಸೆ! +ನಾ ನಿನ್ನ ಜತೆ ಬಂದದ್ದೆ ತಪ್ಪು!” ಎಂದಳು. +ಬಂದದ್ದು ಬರಿಯ ಅವಳಿಚ್ಛೆಯಿಂದಲ್ಲ ಎಂಬುದನ್ನು ಅವಳಿಗೆ ತೋರಿಸಿ ಅವಳನ್ನು ಕೆಣಕಿ ಪೀಡಿಸುವ ಉದ್ದೇಶದಿಂದ ಗುತ್ತಿ: +“ಇಲ್ಲಿ ನೋಡ್ದೇನು, ಇಲ್ಲಿ, ಏನದೆ ಅಂತಾ?” ಎಂದು ತನ್ನ ಎಡದ ತೋಳನ್ನು ಚಾಚಿ ಅದಕ್ಕೆ ಕಟ್ಟಿದ್ದ ತಾಯಿತಿ ತೋರಿಸುತ್ತಾ ಹಂಗಿಸಿದನು “ಕಣ್ಣಾಪಂಡಿತರು ಕೊಟ್ಟಿದ್ದು ಕಣೇ, ಅಂತ್ರ! +ಎಂಥಾ ಒಲ್ಲೆ ಅನ್ನೋ ಹೆಣ್ಣನ್ನಾದ್ರೂ ಒಲಿಯೋ ಹಾಂಗೆ ಮಾಡ್ತದಂತೆ. +ಅಲ್ಲದಿದ್ರೆ ನನ್ನ ಸಂಗಡ ನೀ ಇಷ್ಟು ಸುಲಭಕ್ಕೆ ಓಡಿ ಬರ್ತಿದ್ಯಾ? +ಚುಟಿಗಿ ಹಾಕಿ ಕರದ್ರೆ ನಾಯಿ ಬರಾಹಂಗೆ?” +“ನಿಂಗೊಬ್ಬನಿಗೇ ಅಂತಾ ಮಾಡಿಯೇನೊ? +ಅವನಿಗೂ ಕೊಟ್ಟಾರೆ  ಅವರು!” ಎಂದಳು ತಿಮ್ಮಿ. +ತಿರಸ್ಕಾರದ ಧ್ವನಿಯಿಂದ, ತುಸು ರಾಗವಾಗಿ. +“ಯಾರಿಗೇ?” ಬೆಚ್ಚಿ ಕೇಳಿದನು ಗುತ್ತಿ, ಸ್ವಲ್ಪ ಅಪ್ರತಿಭನಾದಂತೆ. +“ಯಾರಿಗೆ?ಅವನಿಗೇ!ಆ ಬಚ್ಚಗೆ!” ಗೆದ್ದ ದನಿಯಿಂದ ಹೇಳಿದಳು, ಸೋತವನಿಗೆಂಬಂತೆ. +“ಅವನಿಗೂ ಹೀಂಗೇ ಅಂತ್ರಾ ಕೊಟ್ಟಾರಾ? +ಕಣ್ಣಾಪಂಡಿತ್ರು?” ಬೆಪ್ಪಾಗಿತ್ತು ಗುತ್ತಿಯ ದನಿ. +“ಹ್ಞೂ ಮತ್ತೆ!ನಿನ್ನ್ಹಾಂಗೇ ಅವನೂ ತೋರಿಸಿದ್ದ ನಂಗೆ!”ತಿಮ್ಮಿಯೊಡನೆ ಗುತ್ತಿ, ಆಗತಾನೆ ಮೈದೋರುತ್ತಿದ್ದ ಸೂರ್ಯನಾರಾಯಣನಿಗೆ ಕೈ ಮುಗಿದು, ಹುಲಿಕಲ್ಲುನೆತ್ತಿಯ ಕಾವಲು ಮಂಟಪದ ಅಡಗುದಾಣದಿಂದ, ಯಾರಿಗೂ ಗೊತ್ತಾಗದಂತೆ ಕಾಡುದಾರಿಯಲ್ಲಿಯೇ ನಡೆದು ಸಿಂಬಾವಿಯ ಹೊಲೆಗೇರಿಗೆ ಸೇರುವ ಸಲುವಾಗಿ, ಗುಡ್ಡವಿಳಿಯುತ್ತಿದ್ದ ಸಮಯದಲ್ಲಿಯೇ ಕೋಣೂರಿನ ಅದೇಗುಡ್ಡದ ಬುಡದಲ್ಲಿದ್ದ ಗಟ್ಟದವರ ಬಿಡಾರದಲ್ಲಿ ಪ್ರಣಯದ ಮತ್ತೊಂದು ವಿಕೃತಮುಖದ ದುರಂತ ಜರುಗುತ್ತಿತ್ತು. +ಹುಲಿಕಲ್ಲು ನೆತ್ತಿಗೆ ಸೂರ್ಯೋದಯವಾಗಿದ್ದರೂ ಕೋಣೂರಿನ ಗಟ್ಟದವರ ಬಿಡಾರಕ್ಕೆ ಇನ್ನೂ ಕಾಡುಗತ್ತಲೆ ಕವಿದೆ ಇತ್ತು. +ಅಲ್ಲದೆ ತಿಮ್ಮಿಯ ಅಚ್ಚರಿಗೆ ಕಾರಣವಾಗಿದ್ದು ಕಣಿವೆಗಳನ್ನೆಲ್ಲ ತುಂಬಿದ್ದ ನೊರೆಯ ಕಾವಣದ ಕಡಲಿನಲ್ಲಿಯೆ ಮುಳುಗಿ ನಿಂತಿದ್ದ ಗಟ್ಟದ ತಗ್ಗಿನವರ ಜೋಪಡಿಗಳ ಸಾಲು ಮಂಜಿನ ಮಬ್ಬಿನಲ್ಲಿ ಮುಸುಗಿ ಹೋಗಿತ್ತು. +ಕಲ್ಲು, ತಗಡು, ಬಿದಿರಗಣೆ, ಮಡಕೆಯ ಚೂರು ಮೊದಲಾದ ಪದಾರ್ಥಗಳ ಮೇಲೆ ಇಬ್ಬನಿ ದಟ್ಟವಾಗಿ ಕೂತು, ಮುಟ್ಟಿದರೆ ನೀರಾಗುವಂತಿತ್ತು. +ಸುತ್ತಮುತ್ತಲಿದ್ದ ಎತ್ತರದ ಮರಗಳಿಂದಲೂ ಎಲೆಯ ಹನಿ ತೊಟ್ಟಿಕ್ಕುತ್ತಿತ್ತು. +ಇರುಳು ಕವುಚಿಹಾಕಿದ ಬುಟ್ಟಿಗಳನ್ನು  ಎತ್ತಿದ್ದರೂ ಕೋಳಿಗಳು ಹೊರಗೆ ಹಾರಲು ತುಸು ಹಿಂದೆಮುಂದೆ ನೋಡುವಂತಿತ್ತು. +ಬಿಡಾರದ ಹೊರಗೆ ಬೂದಿ ಗುಡ್ಡೆಯಲ್ಲಿಯೊ ಕಸದ ರಾಶಿಯಲ್ಲಯೊ ಮುದುರಿ ಮಲಗಿದ್ದ ಮೂಳುನಾಯಿಗಳು ಕಣ್ಣುಬಿಡಲೂ ಮನಸ್ಸಿಲ್ಲದೆ ಮಲಗಿದ್ದುವು. +ಚೀಂಕ್ರನ ಬಿಡಾರದ ಮಗ್ಗುಲಲ್ಲಿಯೆ ಇದ್ದ ಪಿಜಿಣನ ಬಿಡಾರದಲ್ಲಿ ಅವನ ಹೆಂಡತಿ ಎಚ್ಚರವಾಗಿದ್ದರೂ ಪಕ್ಕದಲ್ಲಿ ಮಲಗಿದ್ದ ಗಂಡನ ರೋತೆಯನ್ನು ನೆನೆದು ಚಿಂತಿಸುತ್ತಾ ಮಲಗಿದ್ದಳು. +ಅವನಿಗಿಂತ ಒಳ್ಳೆಯ ಗಂಡ ತನಗೆ ಸಿಕ್ಕುತ್ತಿರಲಿಲ್ಲ. + ಅದೇನೆಂದರೆ – ಗಂಡನ ರೋಗಿಷ್ಠತೆ. +ಒಂದು ದಿನ ಕೆಲಸಕ್ಕೆ ನಾಲ್ಕು ದಿನ ಉಳಿ. +ಅದಕ್ಕಿಂತಲೂ ಹೆಚ್ಚಾಗಿದ್ದ ಮೂಕವೇದನೆ ಎಂದರೆ, ಅವನಿಂದ ತನಗೆ ಗಂಡಿನಿಂದ ಹೆಣ್ಣಿಗೆ ದೊರೆಯಬೇಕಾದ ಸುಖ ಸರಿಯಾಗಿ ದೊರೆಯುತ್ತಿರಲಿಲ್ಲ ಎಂಬುದು! +ಅವನು ಕೆಲಸಕ್ಕೆ ಹೋಗದೆ ಉಳಿದರೂ ಚಿಂತೆಯಿಲ್ಲ, ತಾನೆ ದುಡಿದು ತರುತ್ತಿದ್ದಳು. +ಆದರೆ ಯಾರೋಡನೆಯೂ ಹೇಳಬಾರದಿದ್ದ, ಹೇಳಲಾರದಿದ್ದ, ಹೇಳಹೋದರೆ ಅವಮಾನ ನಿಂದೆ ತಿರಸ್ಕಾರಗಳಿಗೆ ತಾನೆ ಒಳಗಾಗುತ್ತಿದ್ದುದನ್ನು ನಿವಾರಿಸುವುದು ಹೇಗೆ? +ಪಕ್ಕದ ಬಿಡಾರದವನು ತನ್ನ ವಿಚಾರದಲ್ಲಿ ತುಂಬಾ ಆಸಕ್ತಿ ವಹಿಸುತ್ತಾನೆ; +ಆಗಾಗ್ಗೆ ಕಷ್ಟಸುಖಗಳನ್ನು ಸಹಾನುಭೂತಿಯಿಮದ ವಿಚಾರಿಸುತ್ತಾನೆ. +ಅವನ ನೋಟದಲ್ಲಿ ಅಕ್ಕಣಿಗೆ ಒಮ್ಮೊಮ್ಮೆ ಏನೇನೊ ಅರ್ಥದ ಸುಳಿವು ಮಿಂಚುವಂತೆ ತೋರುತ್ತದೆ. +ಆದರೆ ತಾನು ಗರತಿ: +ಗಟ್ಟದೋಳಾದರೇನು?ಕೈ ಹಿಡಿದ ಗಂಡನಿಗೆ, ಅದರಲ್ಲಿಯೂ ಅವನು ತನ್ನೆಲ್ಲ ಕನಿಕರಕ್ಕೂ ಸೇವೆಗೂ ಪಾತ್ರನಾಗಬೇಕಾಗಿರುವ ಕಷ್ಟ ಪರಿಸ್ಥಿತಿಯಲ್ಲಿರುವಾಗ, ಮೋಸಮಾಡುವುದೇ? +ದ್ರೋಹ ಮಾಡುವುದೇ? +ಪಕ್ಕದಲ್ಲಿ ಕಣ್ಣುಮುಚ್ಚಿ ಮಲಗಿದ್ದ ಗಂಡನನ್ನು ದಿಟ್ಟಿಸಿ ನೋಡಿ ‘ಇಲ್ಲ, ಇಲ್ಲ, ಈ ಅಕ್ಕಣಿ ಎಂದಿಗೂ ನಿನಗೆ ದ್ರೋಹಮಾಡುವುದಿಲ್ಲ’ ಎಂದು ತನ್ನ ಪ್ರಜ್ಞೆಗೆ ಪ್ರತಿಜ್ಞೆಯ ಎಚ್ಚರಿಕೆ ಕೊಟ್ಟುಕೊಂಡಳು. +ಯಾರೋ ಬಿಡಾರದ ತಟ್ಟಿಬಾಗಿಲೆಡೆಗೆ ಅವಸರವಾಗಿ ಓಡಿ ಬಂದಂತಾಯಿತು. +ಅಕ್ಕಣಿ ತನ್ನ ಚಾಪೆಯ ಮೇಲೆ ಎದ್ದು ಕೂತು, ಬಾಗಿಲಕಡೆ ಕಣ್ಣಾಗಿ, ಆಲಿಸಿದಳು. +“ಅಕ್ಕಣೀ!ಅಕ್ಕಣೀ!” ತನ್ನನ್ನೇ ಕರೆಯುತ್ತಿದ್ದಾರೆ! +ಯಾರು?ದೇಯಿಯ ದನಿಯಂತೆ ಕೇಳಿಸಿತು. +ಇಷ್ಟು ಹೊತ್ತಾರೆ ಅವಳೇಕೆ ಎದ್ದಿದ್ದಾಳೆ? +ಇವತ್ತೊ ನಾಳೆಯೊ ಹೆರಲಿರುವ ತುಂಬು ಬಸಿರಿ? +ನಿನ್ನೆ ಬೆಳಿಗ್ಗೆ ಅವಳು ತನಗೆ ಕೂಡುವುದಿಲ್ಲ ಎಂದಿದ್ದರೂ ಚೀಂಕ್ರ ಬಲಾತ್ಕಾರವಾಗಿ ಅವಳನ್ನು ಕೆಲಸಕ್ಕೆ ಎಬ್ಬಿಸಿದ್ದ. +ಮಧ್ಯಾಹ್ನ ತೋಟದಿಂದ ಹಿಂದಕ್ಕೆ ಬರುವಾಗ ಅವಳಿಗೆ ನೆಟ್ಟಗೆ ನಡೆಯಲಾಗದೆ ತಾನೂ ಬಾಗಿಯೂ ರಟ್ಟೆಹಿಡಿದು ಮೆಲ್ಲಗೆ ನಡೆಸಿಕೊಂಡು ಬಂದಿದ್ದವು. +ರಾತ್ರಿ ಬೇರೆ ಹೊತ್ತಾಗಿ ಕುಡಿದು ಮತ್ತೇರಿ ಬಂದಿದ್ದ ಚೀಂಕ್ರನ ಕ್ರೌರ್ಯಕ್ಕೆ ತುತ್ತಾಗಿದ್ದಳು. +ನನಗೆ ಮಕ್ಕಳಾಗದ ವ್ಯಥೆ. +ಅವಳಿಗೋ ಈ ವಯಸ್ಸಿಗಾಗಲೆ ಆರು ಮಕ್ಕಳಾಗಿ, ಮೂರು ಸತ್ತು, ಏಳನೆಯದನ್ನು ಹೊತ್ತಿದ್ದಾಳೆ! +ಮೈಯಲ್ಲಿ ರಕ್ತವಿಲ್ಲ. +ಹೊಟ್ಟೆಯೊಂದೆ ಎದ್ದುಕಾಣುತ್ತಿರುವ ಭಾಗ; +ಮತ್ತೆಲ್ಲ ಎಲುಬು, ಚರ್ಮ, ಅವಳೇಕೆ ಇಷ್ಟು ಹೊತ್ತಾರೆ ಬಂದು ಕರೆಯುತ್ತಿದ್ದಾಳೆ? +ಪಾಪ, ಏನು ಕಷ್ಟವೊ?ಸಂಕಟವೋ? +ಎದ್ದು ಹೋಗಿ ಬಾಗಿಲು ತೆರೆದು ನೋಡುತ್ತೇನೆ. +ಅಕ್ಕಣಿ ಎದ್ದು, ಬಾಗಿಲ ಬಳಿಗೆ ಹೋಗುತ್ತಿದ್ದಾಗಲೆ ಮತ್ತೆ ಅದೇ ಧ್ವನಿ ‘ಅಕ್ಕಣೀ ಅಕ್ಕಣೀ!’ +‘ಹೌದು ದೇಸಾಯದೇ ಆ ಸ್ವರ!’ ಎಂದುಕೊಂಡು ಅಕ್ಕಣಿ ಬೇಗ ಬೇಗನೆ ಬಿಗಿದಿದ್ದ ಹಗ್ಗ ಬಿಚ್ಚಿ ತಟ್ಟಿಬಾಗಿಲನ್ನು ನೂಕಿ ತೆರೆದಳು. +ಹೊರಗೆ ಯಾರೂ ಇರಲಿಲ್ಲ. +ದಟ್ಟವಾಗಿ ಕವಿದಿದ್ದ ಮಂಜಿನಲ್ಲಿ ಎಲ್ಲ ಮುಚ್ಚಿ ಹೋಗಿತ್ತು. +ಬಹಳ ಹತ್ತಿರ ಇದ್ದ ವಸ್ತುಗಳು ಮಾತ್ರ ಹೊಗೆ ಸುತ್ತಿದ್ದ ಹಾಗೆ ಮಸುಗು ಮಸುಗಾಗಿ ಕಾಣಿಸುತ್ತಿದ್ದುವು. +ಬಹುಶಃ ಕರೆದಳು ತಾನು ಬಾಗಿಲು ತೆರೆಯುತ್ತಿದ್ದಾಗ ಬೇನೆ ತಾಳಲಾರದೆ ಮತ್ತೆ ತನ್ನ ಬಿಡಾರಕ್ಕೆ ಹೋಗಿರಬೇಕು ಎಂದು ಊಹಿಸಿ, ಅಕ್ಕಣಿ ಕವಿದಿದ್ದ ಮಂಜಿನಲ್ಲಿ ಪಕ್ಕದ ಬಿಡಾರದ ಬಾಗಿಲಿಗೆ ಹೋದಳು. +ಅದರ ಬಾಗಿಲೂ ಮುಚ್ಚಿತ್ತು! +ಒಳಗಡೆ ಯಾರೋ ಅಳುವ ಸದ್ದಾಗುತ್ತಿತ್ತು. +ಮಕ್ಕಳಳುವ ಸದ್ದು: +ಇದೇನಿದು? +ಕೂಸನ್ನ ಹೆತ್ತ ದೇಯಿ ಎದ್ದುಬಂದು ಕರೆದುಹೋದಳೇ? +ಅಥವಾ  ಕರೆದು ಹೋಗಿ ಕೂಸನ್ನು ಹೆತ್ತಳೆ? +ಛೆ!ಉಂಟೇ?ಬಾಗಿಲನ್ನು ನೂಕಿದಳು, ಅದೂ ತೆರೆಯಲಿಲ್ಲ. +ಭದ್ರವಾಗಿ ಬಿಗಿದು ಕಟ್ಟಿತ್ತು. +ಅಕ್ಕಣಿಗೆ ಏನೋ ಹೆದರಿಕೆಯಾದಂತಾಯಿತು. +ಜ್ವರ ಬಂದು ಮಲಗಿದ್ದ ತನ್ನ ಗಂಡನನ್ನು ಎಬ್ಬಿಸುವುದರಿಂದ ಪ್ರಯೋಜನವಿಲ್ಲ ಎಂದು ನಿಶ್ಚಯಿಸಿ, ಐತನ ಬಿಡಾರಕ್ಕೆ ಓಡಿದಳು. +“ಪೀಂಚಲೂ!ಪೀಂಚಲೂ!ಪೀಂಚಲೂ!” ಎಂದು ಒಂದೇ ಸಮನೆ ಗಾಬರಿಪಡಿಸುವ ದನಿಯಲ್ಲಿ ಕೂಗಿದಳು. +ಗಂಡನನ್ನಪ್ಪಿ ಅವನ ಅಪ್ಪುಗೆಯಲ್ಲಿ ನಿದ್ರಿಸುತ್ತಿದ್ದ ಪೀಂಚಲು ಏನೋ ದುಃಸ್ವಪ್ನದಿಂದ ಎಚ್ಚರುವಂತೆ ಬಡರುಬಿದ್ದೆದ್ದಳು. +ಬೇಗಬೇಗನೆ ಐತನ ಕಾಲಿನ ಬದಿ ಬಿದ್ದಿದ್ದ ತನ್ನ ಹೊಸ ಸೀರೆಯನ್ನೆತ್ತಿ ಬತ್ತಲೆಯ ಮೈಗೆ ಸುತ್ತಿಕೊಂಡಳು, ಗಂಡನೆಲ್ಲಿ ಕಂಡುಬಿಡುತ್ತಾನೊ ಎಂಬಂತೆ ಮತ್ತೆ ಮತ್ತೆ ಕಣ್ಣು ಮುಚ್ಚಿ ಮಲಗಿದ್ದ ಅವನ ಕಡೆ ನೋಡುತ್ತಾ. +ಓಡಿಬಂದು ಹಗ್ಗಬಿಚ್ಚಿ ತಟ್ಟಿಬಾಗಿಲು ನೂಕಿ “ಏನಕ್ಕಾ?” ಎಂದಳು, ಅಕ್ಕಣಿಯನ್ನು ಗುರುತಿಸಿ. +ಕವಿದಿದ್ದ ಮಂಜು ಸಾಧಾರಣೆತೆಗೆ ರಹಸ್ಯಮಯ ಅಸ್ಪಷ್ಟತೆಯನ್ನುಂಟುಮಾಡಿ ಗಾಬರಿಗೊಳಿಸುವಂತಿತ್ತು. +ಅಕ್ಕಣಿ ಮಾತಾಡಲಿಲ್ಲ; ಸನ್ನೆಮಾಡಿದಳು. +ಇಬ್ಬರೂ ಚೀಂಕ್ರನ ಬಿಡಾರಕ್ಕೆ ಓಡಿದರು. +ಒಳಗಡೆ ಮಕ್ಕಳು. +ಅಳುವ ಸದ್ದು ಜೋರಾಗಿತ್ತು. +“ದೇಯೀ!ದೇಯೀ!ದೇಯೀ!” ಇಬ್ಬರೂ ಕರೆದರು. +ಯಾರೊ ಓ ಕೊಳ್ಳಲೂ ಇಲ್ಲ; + ಬಾಗಿಲು ಬಿಚ್ಚಿ ತೆರೆಯಲೂ ಇಲ್ಲ. +ಇವರು ಕರೆಯುವ ಕೂಗನ್ನು ಕೇಳಿ ಚೀಂಕ್ರನ ಬಿಡಾರದ ಎಡಪಕ್ಕದಲ್ಲಿ ನಾಲ್ಕೇ ಮಾರು ದೂರದಲ್ಲಿದ್ದ ಮೊಡಂಕಿಲನ ಬಿಡಾರದಿಂದ ಅವನೂ ಹೆಂಡತಿ ಬಾಗಿಯೂ ಎದ್ದುಬಂದರು. +ಹಸಲವರ ಬಿಡಾರದ ಕಡೆಯಿಂದಲೂ ಕುದುಕನೊಡನೆ ಇನ್ನಿಬ್ಬರು ಓಡಿಬಂದರು. +ಐತನು ಸೊಂಟದ ಪಂಚೆಯನ್ನು ಸುತ್ತಿಕೊಳ್ಳುತ್ತಲೆ ಓಡಿಬಂದು ಗುಂಪು ಸೇರಿಕೊಂಡನು. +ತಟ್ಟಿ ಬಾಗಿಲಿಗೆ ಕಟ್ಟಿದ್ದ ಹಗ್ಗವನ್ನು ಕೊಯ್ದು, ತೆರೆದು, ಒಳಗೆ ದಾಟಿದ ಅಕ್ಕಣಿ ಪೀಂಚಲು ಇಬ್ಬರೂ ಚಿಟ್ಟನೆ ಚೀರಿಕೊಂಡು ಹಿಂದಕ್ಕೆ ನುಗ್ಗಿ ಓಡಿಬಂದರು! +ಗುಡಿಸಿಲಿನ ಒಳಗೆ ಅರೆಗತ್ತಲೆಯಲ್ಲಿ ಅವರು ಕಂಡಿದ್ದ ದೃಶ್ಯ ಘೋರವಾಗಿತ್ತು: + ಅಳುತ್ತಿದ್ದ ಮಕ್ಕಳ ನಡುವೆ ನಿದ್ದೆಮಾಡುವಂತೆ ಮಲಗಿದ್ದ ದೇಯಿಯ ಕಾಲಕಡೆ ರಕ್ತದಂತಹ ಕೆಂಪು ನೀರು ಕಪ್ಪಗಾಗಿ ನಿಂತಿತ್ತು! +ದೇಯಿಯ ಬಾಯಿ ವಿಕಾರವಾಗಿ ತೆರೆದಿತ್ತು! +ಸ್ವಲ್ಪ ದೂರದಲ್ಲಿ ಚೀಂಕ್ರ ನಿದ್ದೆಮಾಡುತ್ತಿರುವವನಂತೆ ಮಗ್ಗುಲಾಗಿ ಮಲಗಿದ್ದನು. +ಬಿಡಾರದಿಂದ ಓಡುತ್ತಲೆ ಬಂದಿದ್ದ ಐತ ಕೋಣೂರು ಮನೆಯ ಹೆಬ್ಬಾಗಿಲ ಮೆಟ್ಟಲಿನ ಬಳಿ ಸುಯ್ಯುಸಿರು ಬಿಟ್ಟು ಏದುತ್ತಾ ನಿಂತಾಗ ಮನೆಗೆ ಇನ್ನೂ ಅದರ ಎಲ್ಲ ಭಾಗಗಳಲ್ಲಿಯೂ ಎಚ್ಚರವಾಗಿರಲಿಲ್ಲ…. +ಬೊಗುಳುತ್ತಾ ಬಳಿ ಸಾರಿದ್ದ ನಾಯಿಗಳು ಐತನನ್ನು ಗುರುತಿಸಿ ಬಾಲವಳ್ಳಾಡಿಸಿದ್ದುವು. +ಹಲಗಣೆ ಹಾಕಿದ್ದ ಕೆಳಗರುಡಿಯಲ್ಲಿ ಒಂದು ಹಣತೆಯ ಬೆಳಕಿನಲ್ಲಿ ಐಗಳು ಅನಂತಯ್ಯ ಏನನ್ನೊ ರಾಗವಾಗಿ ಓದುತ್ತಿದ್ದುದು ಕೇಳಿಸಿ, ಐತ ಆ ಕಡೆ ಹೋಗಿ “ಅಯ್ಯಾ ಅಯ್ಯಾ, ಹೆಬ್ಬಾಕಲು ತೆಗೀರಿ!” ಎಂದನು. +ಅಷ್ಟು ಹೊತ್ತಿನಲ್ಲಿ ಅವನು ಹಾಗೆ ಕರೆದುದಕ್ಕೆ, ಅವಲ್ಪ ಗಾಬರಿಗೊಂಡೆ ಎದ್ದು ಐಗಳು ಹೆಬ್ಬಾಗಿಲೆಡೆಗೆ ಬಂದು ಅದನ್ನು ತೆಗೆಯತೊಡಗಿದರು. +ದಪ್ಪ ದಪ್ಪ ಕಬ್ಬಣದ ಪಟ್ಟಿಗಳನ್ನು ಜೋಡಿಸಿ ಹೊಡೆದಿದ್ದ ದಿಮ್ಮಿಯ ಹೆಬ್ಬಾಗಿಲು ಅವರು ತಮ್ಮೆಲ್ಲ ಬಲವನ್ನೂ ಪ್ರಯೋಗಿಸಿದರೂ ತುಸು ಕಂಡಿಬಿಟ್ಟಿತೆ ಹೊರತು ತೆರೆಯಲಿಲ್ಲ. +ಅಷ್ಟರಲ್ಲಿ ಜಗಲಿಯಲ್ಲಿ ಓದುವ ಹುಡುರೊಡನೆ ಮಲಗಿದ್ದ ಮುಕುಂದಯ್ಯನಿಗೆ ಎಚ್ಚರವಾಗಿ ಅವನೂ ಎದ್ದು ಬಂದು ಐಗಳಿಗೆ ನೆರವಾಗಲು, ಹೆಬ್ಬಾಗಿಲು ತೆರೆಯಿತು, ಕಿರ್ ರ್ ರ್ ದಡ್‌ಬಡ್‌ದಡಾರ್‌ ಎಂದು. +ಐತ ತಾನು ಕಂಡದ್ದು ಕೇಳಿದ್ದು ಊಹಿಸಿದ್ದು ಎಲ್ಲವನ್ನೂ ಒಂದೆ ಉಸಿರಿನಲ್ಲಿ ಒದರಿಬಿಟ್ಟನು. +ಅಷ್ಟು ಭಯಂಕರವಾಗಿತ್ತು ಅವನಿಗೆ ಚೀಂಕ್ರನ ಬಿಡಾರದಲ್ಲಿ ರಾತ್ರಿ ನಡೆದಿದ್ದ ರುದ್ರಘಟನೆ; + ಅಷ್ಟು ಮುಖ್ಯವಾದದ್ದೂ ಆಗಿತ್ತು. +ತನ್ನಂತೆ ಎಲ್ಲರೂ ಆಃ ಆಃ ಆಃ ಆಶ್ಚರ್ಯದಿಂದ ಹೌಹಾರಿಬಿಡುತ್ತಾರೆ ಎಂದು ಭಾವಿಸಿದ್ದನು. +ಮತ್ತೇನು?ಅದು ಅಲ್ಪ ವಿಷಯವೆ, ತಾನು ಚಿಕ್ಕಂದಿನಿಂದಲೂ ತಿಳಿದಿದ್ದ ದೇಯಿಯ ಸಾವು? +ಆದರೆ ಆ ಸುದ್ದಿಯನ್ನು ಕೇಳಿ ಐಗಳೂ ಮುಕುಂದಯ್ಯನೂ ಸ್ವಲ್ಪವೂ ಹೌಹಾರಲಿಲ್ಲ. +ಅಂತಹ ಸಂದರ್ಭಗಳಲ್ಲಿ ಎಲ್ಲರೂ ಆಡಬಹುದಾದ ಅನುಕಂಪೆಯ ಮತ್ತು ಸಹಾನುಭೂತಿಯ ಎರಡು ಮಾತು ಆಡಿದರಷ್ಟೆ. +ಏನೋ ಮಹತ್ಸಂಕಟದ ಜಗತ್‌ಪ್ರಲಯಕರವಾದ ವಿಷಯವನ್ನು ಹೊತ್ತುತಂದು ಹೇಳುತ್ತಿದ್ದೇನೆ ಎಂದು ಭಾವಿಸಿದ್ದ ಐತನಿಗೆ ತನ್ನ ಅತಿ ಉದ್ವೇಗಕ್ಕೆ ನಾಚಿಕೆ ಆಗುವಷ್ಟರಮಟ್ಟಿಗಿತ್ತು ಒಡೆಯರಾಗಿದ್ದವರ ಪ್ರತಿಕ್ರಿಯೆ. +ತಮ್ಮ ಕೋಣೆಯಲ್ಲಿ ಒಬ್ಬರೆ ಮಲಗಿದ್ದ ರಂಗಪ್ಪಗೌಡರು ತಮ್ಮನಿಂದ ಸುದ್ದಿ ಕೇಳಿ ಎದ್ದುಬಂದು “ಆ ಕುಡುಕ ಮುಂಡೇಗಂಡ, ಚೀಂಕ್ರ, ಬಸಿರಿಗೆ ಏನು ಮಾಡಿದನೊ ಏನೋ? +ಎತ್ತು ಹಾರಿದ ಹಾಂಗೆ ಹಾರಿಯೆ ಕೊಂದುಹಾಕಿದ ಅಂತ ಕಾಣ್ತದೆ” ಎಂದು ಚೀಂಕ್ರನನ್ನು ಬೈದು, ಐತನನ್ನು ಪ್ರಶ್ನಿಸಿದರು: “ಅವನು ನಿನ್ನೆ ಕುಡಿದು ಬಂದಿದ್ದನೇನೋ?” +ಐತ ಅಪರಾಧವನ್ನು ಮುಚ್ಚಲು ಎಳಸುವ ಅಪರಾಧಿಯ ಸ್ವರದಿಂದ “ನಂ…. ಗೊ…. ತ್ತಿಲ್ಲ…. ಯ್ಯಾ!” ಎಂದು ಕೆಳದನಿಯಲ್ಲಿ ಸುಳ್ಳನ್ನೆ ಹೇಳಿಬಿಟ್ಟನು. +ಗೌಡರು “ಐಗಳೆ, ಅದನ್ನು ಮಣ್ಣುಮಾಡಾಕೆ ಏನೇನು ಬೇಕೊ ಕೊಡಿ…. +ಆಮ್ಯಾಲೆ ನೀವೂ ಹೋಗಿ ಒಂದು ಸೊಲ್ಪ ಕಂಡು ಬನ್ನಿ…. +ಅವನಿಗೆ ಕೊಟ್ಟ ಮುಂಗಡವೆ ಸುಮಾರು ಆಗ್ತದೆ” ಎಂದು ಹೇಳಿ, ಆಕಳಿಸುತ್ತಾ, ಸೊಂಟದ ನಶ್ಯಡಬ್ಬಿಯಿಂದ ಒಂದು ಗುಳಿಗೆ ಮಡ್ಡಿನಶ್ಯ ತೆಗೆದು ಸೇಯತೊಡಗಿದರು. +ಹೊರಡುವಾಗ ಐತ ಐಗಳೊಬ್ಬರಿಗೆ ಕೇಳಿಸುವಂತೆ, ಕಳೆದ ಬೈಗಿನಲ್ಲಿ ಬೆಟ್ಟಳ್ಳಿ ಹಕ್ಕಲಿನ ಹತ್ತಿರ ತನ್ನನ್ನು ಬೋಳ್ಕೊಳ್ಳುತ್ತಿದ್ದಾಗ ಗುತ್ತಿ ಹೇಳಿದುದನ್ನು ಹೇಳಿದನು, ಹಳೆಮನೆಯ ದೊಡ್ಡ ಹೆಗ್ಗಡೆಯವರು ಅವರನ್ನು ಬರಲು ಹೇಳಿದ್ದಾರಂತೆ ಎಂದು. +ಐತ ಹಿಂದಕ್ಕೆ ಹೋಗುವಷ್ಟರಲ್ಲಿಯೆ ಚೀಂಕ್ರನ ಮೂರು ಚಿಕ್ಕ ಮಕ್ಕಳನ್ನೂ ಪೀಂಚಲು ತನ್ನ ಬಿಡಾರಕ್ಕೆ ಕರೆತಂದಿದ್ದಳು. +ಚೀಂಕ್ರ ದೇಯಿಯ ಹೆಣದ ಹತ್ತಿರ “ಅಯ್ಯೋ ನನ್ನ ಬಿಟ್ಟು ಹೋದೆಯಾ? +ನನಗಿನ್ಯಾರು ಗತಿ? +ಮಕ್ಕಳಿಗೆ ಗಂಜಿ ಮಾಡಿ ಹಾಕೋರ್ಯಾರು?” ಎಂದು ಮಹಾ ಸಂಕಟದಿಂದೆಂಬಂತೆ ಬಾಯಿ ಬಡುಕೊಂಡು ರೋದಿಸುತ್ತಿದ್ದನು. +ಉಳಿದವರು ಹೆಣವನ್ನು ಮಣ್ಣು ಮಾಡಲಿಕ್ಕೆ ಏರ್ಪಾಡು ಮಾಡುವುದರಲ್ಲಿದ್ದರು. +ಐತನನ್ನು ನೋಡಿದೊಡನೆ ಚೀಂಕ್ರ “ಅಯ್ಯೋ ಐತಾ, ಚಿನ್ನದಂಥಾ ಹೆಂಡ್ತಿ ಹೋಯ್ತಲ್ಲೋ? +ಕಳಕೊಂಡೆನಲ್ಲೋ?” ಎಂದೆಲ್ಲಾ ಎದೆ ಎದೆ ಬಡಿದುಕೊಂಡು ಮತ್ತಷ್ಟು ಗಟ್ಟಿಯಾಗಿ ರೋದಿಸತೊಡಗಿದನು. +ಅದನ್ನೆಲ್ಲ ಕೇಳಿ ಐತನಿಗೆ ಮೈಯೆಲ್ಲ ಉರಿಯುವಂತಾಯ್ತು! +ಒಡೆಯರ ಪ್ರತಿಕ್ರಿಯೆಗೆ ನೂರುಮಡಿ ವಿಡಂಬನವಾಗಿ ತೋರಿತು ಚೀಂಕ್ರನ ರೋದನ, “ಬಿಡಾರಕ್ಕೆ ಹೋಗಿ ಮಜಾಮಾಡಾನ ಬಾರೋ!” ಎಂದು ಕುಡಿದು ಮತ್ತಿನಲ್ಲಿ ಕಮ್ಮಾರಸಾಲೆಯ ಬಳಿ ಕೇಕೆ ಹಾಕುತ್ತಿದ್ದ ಅವನ ಚಿತ್ರ ನೆನಪಿಗೆ ಬಂದು! +ಮುಂದೆ ಮಾಡಬೇಕಾದುದೆಲ್ಲವೂ ಲೆಕ್ಕಾಚಾರದಂತೆ ನಡೆಯಿತು. +ಕೆಲವರಿಗೆ ಅಳುವುದೂ ಆ ಲೆಕ್ಕಾಚಾರದಂತೆ ನಡೆಯುವುದರ ಒಂದು ಭಾಗವೆ ಆಗಿತ್ತು. +ನಿಜವಾಗಿ ಅತ್ತವರೆಂದರೆ ದೇಯಿಯ ಮೂರು ಮಕ್ಕಳು! +ತಮ್ಮ ಅಬ್ಬೆಯನ್ನು ಚಟ್ಟಕಟ್ಟಿ ಹೊತ್ತುಕೊಂಡು ಹೋಗುತ್ತಿದ್ದಾರೆ ಎಂದು ತಿಳಿದೊಡನೆ ಆ ಮೂರು ಮಕ್ಕಳೂ ಬೊಬ್ಬೆಯಿಡತೊಡಗಿದ್ದರು. +ಅಬ್ಬೇ ಅಬ್ಬೇ ಎಂದು ಒರಲುತ್ತಾ ಹೆಣ ಹೊತ್ತವರನ್ನು ಹಿಡಿದು ನಿಲ್ಲಿಸಲೆಂಬಂತೆ ಓಡಲೆಳೆಸಿದ್ದ ಅವರನ್ನು ಅಕ್ಕಣಿ ಬಾಗಿ ಪೀಂಚಲು ಒಬ್ಬೊಬ್ಬರನ್ನು ತಬ್ಬಿ ತಡೆದು ಸಮಾಧಾನ ಮಾಡಲು ಪ್ರಯತ್ನಿಸಿದ್ದರು, ತಾವೂ, ಮರಣದ ದುಃಖಕ್ಕೂ ಮಿಗಿಲಾಗಿ, ಮಕ್ಕಳ ದುಃಖಕ್ಕೆ, ದುಃಖಿಸುತ್ತಾ…. +ಹೂವಳ್ಳಿ ಮನೆಯ ಹಿತ್ತಲುಕಡೆಯ ಚೌಕಿಯಲ್ಲಿ, ಹೊಲಸಿನ ಒಲೆಯ ಬಳಿ ಕುಳಿತು ನಾಗತ್ತೆ, ಹಿಂದಿನ ದಿನ ದೆಯ್ಯದ ಹರಕೆಗೆ ಕುಯ್ದಿದ್ದ ಹಂದಿಯ ಮಾಂಸದ ದೊಡ್ಡ ದೊಡ್ಡ ತುಂಡುಗಳನ್ನು ಹಗ್ಗಕ್ಕೆ ಕೊದು, ಒಣಗಿಸಿ ಸಂಡಿಗೆ ಮಾಡುವ ಸಲುವಾಗಿ, ಒಲೆಯ ಮೇಲೆ ಕಟ್ಟಿದ್ದ ಬಿದಿರುಗಳುವಿಗೆ ನೇತುಹಾಕುವ ಕೆಲಸದಲ್ಲಿ ತೊಡಗಿದ್ದಳು. +ಅಲ್ಲಿಯೆ ಸ್ವಲ್ಪ ದೂರದಲ್ಲಿದ್ದ ನೀರಿನ ಹಂಡೆಯ ಹತ್ತಿರ ಚಿನ್ನಮ್ಮನ ಅಜ್ಜಿ ತೊಂಡೆಕಾಯಿ ಹರೆಯುತ್ತಾ ಕುಳಿತಿದ್ದರು. +ಬೆಳಗಿನ ಬಿಸಿಲು ಕೋಲು ಕೋಲಾಗಿ ಬಿದ್ದಿದ್ದು, ಮನೆಯ ನೊಣಗಳು ಹಾರಿ ಕೂರುವ ಲೀಲೆಗೆ ರಂಗವಾಗಿದ್ದ ಒಂದು ಮೂಲೆಯಲ್ಲಿ ಚಿನ್ನಮ್ಮ ಹೂವು ಕಟ್ಟುವ ಕಾಯ್ದಲ್ಲಿ ನಿರತಳಾಗಿದ್ದಳು. +ಪಕ್ಕದಲ್ಲಿಯೆ ಆವುದೊ ಚಿಂತೆಯಿಂದ ಅನ್ಯಮನಸ್ಕಳಾಗಿದ್ದಂತೆ ಕುಳಿತಿದ್ದ ನಾಗಕ್ಕ ತಲೆ ಬಾಚಿಕೊಳ್ಳುತ್ತಿದ್ದಳು. +ಕೆಲಸದ ಆಳು ಸುಬ್ಬಿ ಎಲ್ಲಕ್ಕೂ ದೂರವಾಗಿ ಬಾಗಿಲು ಸಂದಿಯಲ್ಲಿ ನಾಗಂದಿಗೆಯಿಂದ ನೇಲುತ್ತಿದ್ದ ಸಿಕ್ಕದಲ್ಲಿದ್ದ ಬುಟ್ಟಿಯಲ್ಲಿ ಕಾವು ಕೂತಿದ್ದ ಹೇಟೆಯನ್ನೆತ್ತಿ ಅದನ್ನು ಕೊರ್‌ರ್‌ರೆನ್ನಿಸುತ್ತಿದ್ದಳು, ಮೊಟ್ಟೆಗಳೆಲ್ಲ ಮರಿಯಾಗಿವೆಯೊ ಎಂದು ನೋಡುವುದಕ್ಕಾಗಿ. +ಅಜ್ಜಿ ಆ ದಿನ ತೋಟದಾಚೆಯ ಗುಡ್ಡದಲ್ಲಿ ಸೀಗೆಕಾಯಿ ಉದುರಿಸಿ ಹೆರಕುವ ಸಂಕಲ್ಪವನ್ನು ನೆನಪಿಗೆ ತಂದುಕೊಂಡು “ಹೊತಾರೆ ಅಷ್ಟು ಹೊತ್ತಿಗೆ ಬತ್ತೀನಿ ಅಂದಿದ್ದ, ಹೊತ್ತು ಮೇಲೇರಿ ಇಷ್ಟೊತ್ತಾದ್ರೂ ಕಾಣಿನಲ್ಲಾ!” ಎಂದಳು, ತನಗೆ ತಾನೆಂಬಂತೆ. +ನಾಗತ್ತೆ ಕೇಳಿದಳು “ಯಾರು?… ಹಳೇಮನೆ ಹೋಲೇರ ಮಂಜನಾ? ” +“ಅಲ್ಲ. ಕೋಣೂರಿನ ಗಟ್ಟದ ತಗ್ಗಿನವನು. +ಅವನ ಹೆಸರು – ಅದು ಎಂಥದ್ದೋ ಸುಡುಗಾಡು? +ಅದೇ ಆ ಬಾಗಿ ಗಂಡ” ಎಂದಳು ಅಜ್ಜಿ. +ಚಿನ್ನಮ್ಮ ದೂರದಿಂದಲೆ ಗಟ್ಟಿಯಾಗಿ ಕೇಳಿದಳು “ಯಾರಜ್ಜೀ?ಆ ಮೊಡಂಕಿಲನಾ?” +“ಹೂ ಕಣೇ!ಅವನೇ! +ನಿನ್ನೆ ದೆಯ್ಯದ ಹರಕೆ ಕಡುಬು ತುಂಡು ತಿನ್ನಾಕೆ ಬಂದಿದ್ದನಲ್ಲಾ? +ಸೀಗೆ ಉಡಿ ಹತ್ತಿ, ಕಾಯಿ ಉದುರಿಸಿಕೊಡ್ತಿಯೇನೋ ಅಂತಾ ಕೇಳ್ದೆ, ‘ಹ್ಞೂ’ ಅಂದ; +ಅವನ ಹೆಂಡ್ತಿ ಬಾಗೀನೂ ಕರಕೊಂಡು ಬತ್ತೀನಿ, ಕಾಯಿ ಹೆರಕಾಕೆ ಅಂತಾನೂ ಹೇಳಿದ್ದ.” +“ಆ ಪೀಂಚಲುಗಾದ್ರೂ ಹೇಳಿದ್ರೆ ಅವಳ ಗಂಡ ಐತನನ್ನು ಕರಕೊಂಡು ಬರ್ತಿದ್ಲಲ್ಲಾ” ಎಂದಳು ಚಿನ್ನಮ್ಮ. +“ಅವಳೆಲ್ಲ ಬಂದಿದ್ಲೆ?” + ಅಜ್ಜಿಯ ಪ್ರಶ್ನೆ. “ಬಂದಿದ್ಲು…. ಉಣ್ಣಾಕೆ ನಿಲ್ಲಲಿಲ್ಲ…” ಮೊಮ್ಮಗಳ ಉತ್ತರ. +“ಯಾವ ಮಾಯಕದಾಗೆ ಬಂದಿದ್ಲೋ? +ಯಾವ ಮಾಯಕದಾಗೆ ಹೋದ್ಲೊ? ನಂಗೊತ್ತಿಲ್ಲಾ…. ” ಎಂದಳು ಅಜ್ಜಿ. +ಅಷ್ಟರಲ್ಲಿ ಕಾವುಕೂತಿದ್ದ ಕೋಳಿ ಹೇಟೆಯ ಸಹಿತವಾಗಿ ಸಿಕ್ಕಿದ ಮೇಲಿದ್ದ ಬುಟ್ಟಿಯನ್ನು ನೆಲಕ್ಕಿಳಿಸಿ ಸುಬ್ಬಿ ಕೂಗಿದಳು “ಚಿನ್ನಕ್ಕಾ, ಚಿನ್ನಕ್ಕಾ, ಎಲ್ಲಾ ಮಟ್ಟೇನೂ ಮರಿ ಆಗ್ಯವೆ! +ಹೂಮರಿ!ಅಯ್ಯಯ್ಯಯ್ಯೊ ಏನು ಹೇನು ಮುಲುಗುಡ್ತವೆ? +ದೂರಾನೆ ಇರಿ….ಹತ್ರ ಬರಬ್ಯಾಡಿ! …. ಹೇನು ಹತ್‌ತಾವೆ!”ಹೂಕಟ್ಟುವುದನ್ನು ನಿಲ್ಲಿಸಿ, ಹೂಮರಿಗಳನ್ನು ನೋಡಲು ಓಡಿಹೋಗಿದ್ದ ಚಿನ್ನಮ್ಮಗೆ ಅವಳ ಅಜ್ಜಿ “ಹೌದು ಕಣೇ, ಹತ್ರ ಹೋಗಬ್ಯಾಡೇ! +ಮೈಗೆಲ್ಲ ಹೇನು ಹತ್‌ತಾವೇ!” ಎಂದು ಸುಬ್ಬಿಯ ಎಚ್ಚರಿಕೆಯನ್ನು ಪುಷ್ಟೀಕರಿಸಿ, ಮತ್ತೆ ಸುಬ್ಬಿಗೆ ಆಜ್ಞೆ ಮಾಡಿದಳು: +“ಏ ಸುಬ್ಬೀ, ಆ ಹ್ಯಾಟೇನೂ ಮರೀನೂ ಒಂದು ಕುಕ್ಕೇಲಿ ಕವುಂಚ್ಹಾಕಿ, ಕಾವು ಕೂತಿದ್ದ ಬುಟ್ಟಿ ಹುಲ್ಲೂ ಎಲ್ಲಾನೂ ಗೊಬ್ಬರ ಗುಂಡಿಗೆ ತಗೊಂಡು ಹೋಗಿ ಸುಟ್ಟು ಹಾಕಿಬಿಡೇ; + ಬ್ಯಾಗ! …. ಮನೇ ತುಂಬ ಹೇನು ಮಾಡಬ್ಯಾಡ!”ಅಜ್ಜಿಯ ಅಪ್ಪಣೆಯಂತೆ ಸುಬ್ಬಿ ಹೇಟೆಮರಿಗಳನ್ನು ಒಂದು ಕುಕ್ಕೆಯಲ್ಲಿ ಕವುಚಿ ಹಾಕಿ, ಕಾವು ಕೂತಿದ್ದ ಬುಟ್ಟಿಯನ್ನು ಅದಕ್ಕೆ ಹಾಕಿದ್ದ ಹುಲ್ಲಿನ ಸಮೇತವಾಗಿ ಹೊರಕ್ಕೆ ಎತ್ತಿಕೊಂಡು ಹೋದಳು ದಹನ ಸಂಸ್ಕಾರಕ್ಕೆ. +ಚಿನ್ನಮ್ಮ ಒಳಗೆ ಓಡಿಹೋಗಿ ಒಂದು ಬೊಗಸೆ ಸಣ್ಣ ನುಚ್ಚನ್ನು ತಂದು ಹೇಟೆ ಮರಿಗಳನ್ನು ಕವುಚಿ ಹಾಕಿದ್ದ ಕುಕ್ಕೆಯೊಳಗೆ ಹಾಕಿದಳು. +“ಸುರು ಆಯ್ತಪ್ಪಾ ಇನ್ನು. +ಸುಮ್ಮನೆ ಅಕ್ಕಿ ತಂದು ಸುರಿಯಾಕೆ!” ಎಂದು ಗೊಣಗಿದಳು ಅಜ್ಜಿ. +ಚಿನ್ನಮ್ಮ ಹೂವು ಕಟ್ಟಲು ಮತ್ತೆ ಹಿಂದಕ್ಕೆ ಹೋಗುತ್ತಾ ಬಾಗಿಲ ಕಡೆ ನೋಡಿ “ಓ ಬಂತಲ್ಲಾ ಮೊಡಂಕಿಲನ ಸವಾರಿ!” ಎಂದಳು. +ಅಜ್ಜಿ ಬಾಗಿಲಲ್ಲಿ ಕಾನಿಸಿಕೊಂಡ ಅವನಿಗೆ “ಎಷ್ಟೊತ್ತಿಗೆ ಬರಾದೋ? +ಬಿಸಿಲೇರಿ ಹೋಯ್ತಲ್ಲೊ! …. ಬಾಗಿ ಎಲ್ಲೋ? …. ”ಮೊಡಂಕಿಲ ತಾನು ತಡವಾಗಿ ಬಂದುದಕ್ಕೂ ತನ್ನ ಹೆಂಡತಿ ಬಾಗಿ ಬರೆದಿದ್ದುದಕ್ಕೂ ಕಾರಣವಾಗಿ ಕೋಣೂರಿನ ಗಟ್ಟದವರ ಬಿಡಾರದಲ್ಲಿ ನಡೆದ ದುರಂತವನ್ನೆಲ್ಲ ಹೇಳಿ “ಅದನ್ನು ಮಣ್ಣುಮಾಡಿ ಬರುವುದೆ ಹೊತ್ತಾಯಿತಮ್ಮಾ” ಎಂದನು. +“ಅವಳು ಬಸಿರುಯಾಗಿದ್ಲಂತಲ್ಲೋ?” +“ಹೌದಮ್ಮಾ, ಇವತ್ತೊ ನಾಳೆಯೊ ಹೆರುತ್ತಿದ್ದಳಂತೆ!” +“ಕೂಸನ್ನ ಹೊರಗೆ ತೆಗೆದು ಹುಗಿದರೋ?ಇಲ್ಲಾ…?” +“ಚೀಂಕ್ರಿನ ಕೈಲಿ ಕತ್ತಿಕೊಟ್ಟು ಏನೇನೋ ಮಾಡುವುದಕ್ಕೆ ಹೇಳುತ್ತಾ ಇದ್ದರು… ಅಮ್ಮಾ, ನಿಜಕ್ಕೂ ಹೇಳುತ್ತೇನೆ. +ನನಗೆ ಅಲ್ಲಿ ನಿಲ್ಲಲಾಗಲಿಲ್ಲ. +ಹೆದರಿ ಹಿಂದಕ್ಕೆ ಬಂದು ಬಿಟ್ಟೆ!” +“ಏನೋ ಕೂದಲು ಹಣ್ಣಾಗಕ್ಕೆ ಬಂದದೆ ನಿನಗೆ? +ಹುಡುಗರು ಹೇಳಿದ್ಹಾಂಗೆ ‘ಹೆದರ್ದೆ’ ಅಂತೀಯಲ್ಲೋ?”ಮೊಡಂಕಿಲ ತುಟಿಮುಚ್ಚಿ ನಗುತ್ತಾ ನಾಚಿ ತಲೆಬಾಗಿದನಷ್ಟೆ. +ಮೊಡಂಕಿಲ ಒಂದು ಉದ್ದನೆಯ ದೋಟಿ ತೆಗೆದುಕೊಂಡು ಹೋಗಿ, ಸೀಗೆಯ ಉಡಿ ಅಡರಿದ್ದ ಹೆಮ್ಮಾವಿನ ಮರ ಹತ್ತಿ, ಒಣಗಿ ನಿಂತಿದ್ದ ಕಾಯನ್ನು ಬಡಿದು ಬಡಿದು ಉದುರಿಸುತ್ತಿದ್ದನು. +ಅಡಿಗೆ ಊಟ ಎಲ್ಲ ಮುಗಿಸಿ, ಹಗಲು ನಿದ್ದೆಯನ್ನೂ ಸ್ವಲ್ಪ ಮಾಡಿ, ಚಿನ್ನಮ್ಮ ನಾಗಕ್ಕ ಇಬ್ಬರೂ ಸುಬ್ಬಿಯನ್ನು ಕೂಡಿಕೊಂಡು ಮೊಡಂಕಿಲ ಉದುರಿಸಿದ್ದ ಸೀಗೇಕಾಯಿ ಹೆರಕಲು ಹೋದರು. +ಅಜ್ಜಿ ‘ಇಳಿಹೊತ್ತು ತಂಪಾದ ಮೇಲೆ ಬರುತ್ತೇನೆ’ ಎಂದಿದ್ದಳು. +ನಾಗತ್ತೆ ತನಗೆ ಸೊಂಟನೊವು ಎಂದು ಬೆಳಕಂಡಿಯನ್ನೆಲ್ಲ ಮುಚ್ಚಿ ಕತ್ತಲು ಮಾಡಿಕೊಂಡು ಮಲಗಿದ್ದಳು. +ಪೊದೆಗಳ ನಡುನಡುವೆ ತರಗಿನ ಮೇಲೆ ಬಿದ್ದಿದ್ದ ಸೀಗೆಯಕಾಯಿಗಳನ್ನು ಹೆರಕುತ್ತಿದ್ದ ನಾಗಕ್ಕನನ್ನು ಮತ್ತೆ ಮತ್ತೆ ತಲೆಯೆತ್ತಿ ಎತ್ತಿ ನೋಡುತ್ತಿದ್ದ ಚಿನ್ನಮ್ಮ ಕೇಳಿದಳು: “ನಾಗಕ್ಕ, ಯಾಕೆ ಇವತ್ತು ಹೊತಾರೆಯಿಂದ ಏನೋ ಒಂದು ತರಾ ಆಗಿದ್ದಿಯಲ್ಲಾ? +ಮೈ ಹುಷಾರಿಲ್ಲೇನು?” +ಹೊರಕ್ಕೆ ನೆಗೆಯಲು ಪ್ರಶ್ನೆಯ ನೆವವನ್ನೆ ಕಾಯುತ್ತಿತ್ತೊ ಎಂಬಂತೆ ಭಾವವುಕ್ಕಿ, ಕಣ್ಣು ತೇವವೇರಿ, ಉಸಿರಾಡುತ್ತಾ ನಿಂತು ನಾಗಕ್ಕ: “ಮೈಗೇನಾಗಿದೆ? +ಮೈಗೆ ಏನೂ ಆಗಿಲ್ಲ. +ಹುಸಾರಾಗಿದ್ದೀನಿ!” ಎಂದಳು. +ಅವಳ ರೀತಿ ಅಳುವಂತೆಯೂ ಎರಡೂ ಗೊತ್ತಾಗುವಂತಿರಲಿಲ್ಲ. +“ಮತ್ತೆ?ಯಾಕೆ ಹಿಂಗೆ ಉಸಿರು ಬಿಡ್ತೀಯಲ್ಲಾ?” ಆಶ್ಚರ್ಯಚಕಿತೆಯಾಗಿ ಕೇಳಿದಳು ಚಿನ್ನಮ್ಮ. +“ಅಕ್ಕಾ, ನಾನೊಂದು ಕೇಳ್ತೀನಿ, ಹೇಳ್ತೀಯಾ?” +“ಏನೇ?” +“ಹೇಳ್ತೀನಿ ಅಂತ ಹೇಳಿದ್ರೆ, ಹೇಳ್ತೀನಿ…” +“ಗೊತ್ತಾಗಾದಂತಾದ್ರೆ ಹೇಳೇ ಹೇಳ್ತೀನಿ…” +“ಬುದ್ದಿವಂತೆ. +ನಿಂಗೆ ಗೊತ್ತಾಗೇ ಆಗ್ತದೆ….” +“ಯಾರು ಹೇಳಿದ್ರೆ ನಿಂಗೆ? +ನಾ ಒಂದು ಹಳ್ಳಿಮಡ್ಡಿ. +ಓದಾಕೆ ಬರಿಯಾಕೆ ಒಂದೂ ಗೊತ್ತಿಲ್ಲ…” +“ಓದಾಕೆ ಬರಿಯಾಕೆ ಬರದಿದ್ರೆ ಏನಾಯ್ತೂ? +ಐಗಳ ಹತ್ರ, ಮುಕುಂದಣ್ಣನ ಹತ್ರ, ಕೇಳೀಮಾಡೀ ಎಲ್ಲ ತಿಳಿಕೊಂಡೀಯಂತೆ! +ಕೋಣೂರಿನಾಗೆ ಕಾಗಿನಹಳ್ಳಿ ಅಮ್ಮನೂ ಹೇಳ್ತಿದ್ರು. +ಇಲ್ಲಿ ಅಜ್ಜಮ್ಮನೂ ಹೇಳ್ತಾರೆ….” +“ಏನು ತಿಳಿಕೊಂಡ್ರೆ ಏನು ಬಂತು? +ಅದೃಷ್ಟ ಸರಿಯಾಗಿ ಇಲ್ಲದಿದ್ರೆ?…” +“ನಿಂಗೇನು ಅದೃಷ್ಟ ನನ್ನ ಹಂಗಲ್ಲ…” +“ಅವರವರ ಕಷ್ಟ ಅವರವರಿಗೇ ಗೊತ್ತು.” ಚಿನ್ನಮ್ಮ ಹೇಳಿದಳು, ಹೋದ ಇರುಳು ಪೀಂಚಲು ಹೇಳಿದ್ದುದನ್ನು ನೆನೆದು: + “ಹೋಗಲಿ ಬಿಡು. +ನೀ ಏನೋ ಕೇಳ್ತಿದ್ದೆಲ್ಲ?ಏನದು?”ಮಾತಾಡುತ್ತಾ ಇಬ್ಬರೂ ಒಂದು ದಟ್ಟ ಪೊದೆಯ ಹಿಂದೆ ಬಂದಿದ್ದವರು ಅಲ್ಲಿಯೆ ನೆರಳಲ್ಲಿ ಮರೆಯಾಗಿ ಕುಳಿತರು. +“ಅಕ್ಕಾ, ಸತ್ತುಹೋದವರು ಮತ್ತೆ ಬರ್ತಾರೇನೆ?”ಅತ್ಯಂತ ಅನಿರೀಕ್ಷಿತವಾಗಿ ನಾಗಕ್ಕನ ಪ್ರಶ್ನೆಗೆ ಬೆಪ್ಪಾಗಿ ಹೋದಳು ಚಿನ್ನಮ್ಮ ಕಿಸಕ್ಕನೆ ನಕ್ಕುಬಿಟ್ಟಳು! +“ಅಯ್ಯೋ ಮಾರಾಯ್ತಿ, ಎಂತಾ ಪ್ರಶ್ನೆ ಹಾಕಿಬಿಟ್ಟೆ?” ಎಂದಳು. +“ನಗಾಡಬ್ಯಾಡ, ಹೇಳಕ್ಕ” ನಾಗಕ್ಕ ತನ್ನ ಪ್ರಶ್ನೆಯನ್ನು ಗಂಭೀರವಾಗಿ ಪುನರುಚ್ಚರಿಸಿದಳು. +“ಕನಸಿಗಾ?” ಕೇಳಿದಳು ಚಿನ್ನಮ್ಮ. +“ಅಲ್ಲ, ನಿಜವಾಗಿಯೂ!” +“ಎಲ್ಲಾರೂ ಉಂಟೇನೆ?” +“ಮತ್ತೆ?ನಿನ್ನೆ ರಾತ್ರೆ ನನ್ನ….”ಎಂದು ಅರ್ಧದಲ್ಲಿಯೆ ನಿಲ್ಲಿಸಿದಳು ನಾಗಕ್ಕ. +ಚಿನ್ನಮ್ಮ ಮುನ್ನಿನ ಲಘುತ್ವವನ್ನೆಲ್ಲ ಬಿಟ್ಟು ಕಿವಿಗೊಟ್ಟು ಕೇಳತೊಡಗಿದಳು. +ತಿಳಿವಳಿಕೆಯುಳ್ಳ ಜಾಣ ಹುಡುಗಿಯಾಗಿದ್ದರೂ ಕನ್ಯಾನುಭವಕ್ಕೆ ಅವೇದ್ಯವಾದ ಕೆಲವು ಗೋಪ್ಯ ವಿಷಯಗಳಲ್ಲಿ ಸಂಪೂರ್ಣ ಮುಗ್ಧೆಯಾಗಿದ್ದ ಚಿನ್ನಮ್ಮಗೆ ನಾಗಕ್ಕ ನಡೆದುದೆಲ್ಲವನ್ನೂ ಬಿಡಿಸಿ ಹೇಳಲು ಸಮರ್ಥೆಯಾಗಿರಲಿಲ್ಲ. +ಸ್ಥೂಲವಾಗಿ ಸೂಚ್ಯವಾಗಿ ಮಾನಕ್ಕೆ ಮೀರದಿರುವಷ್ಟನ್ನು ಮಾತ್ರ ಹೇಳಿದಳು. +ನಾಗತ್ತೆ ಕೋಣೆಯ ಬಾಗಿಲನ್ನು ತೆರೆದು ವೆಂಕಣ್ಣನನ್ನು ಒಳಕ್ಕೆ ಬಿಟ್ಟುಹೋದ ಮೇಲೆ ಅವನು ತಾಳ ಹಾಕಿಕೊಂಡು ಹೋಗಿ ನಾಗತ್ತೆ ಮಲಗಿದ್ದಲ್ಲಿ ನಾಗಕ್ಕನ ಪಕ್ಕದಲ್ಲಿ ಮಲಗಿದ್ದನು. +ಆದರೆ ನಾಗಕ್ಕಗೆ ಇತ್ತಣ ಪ್ರಜ್ಞೆ ಇರಲಿಲ್ಲ: +ಅವಳಿಗೆ ಬಂದಿದ್ದದು ನಿದ್ದೆ ಮಾತ್ರವಾಗಿರಲಿಲ್ಲ, ಕಳ್ಳುಹೆಂಡಗಳೊಡನೆ ನಾಗತ್ತೆ ಸೇರಿಸಿಕೊಟ್ಟಿದ್ದ ಮದ್ದಿನ ಮತ್ತೂ ಸೇರಿತ್ತು. +ವೆಂಕಟಪ್ಪನಾಯಕನಿಂದ ತನ್ನ ಮೇಲೆ ನಡೆದಿದ್ದ ಅತ್ಯಾಚಾರವೆಲ್ಲ ಅವಳಿಗೆ ಒಂದು ಸವಿಗನಸಿನಂತೆ ಅನುಭವಕ್ಕೆ ಬಂದಿತ್ತು. +ಆ ಸ್ವಪ್ನದಲ್ಲಿ ಅವಳು ತನ್ನ ದಿವಂಗತ ಪತಿ ನಾಗಣ್ಣನೊಡನೆ ಮತ್ತೆ ಕೂಡಿದ್ದಳು! +ಬಹುಕಾಲದ ಮೇಲೆ ತನ್ನಲ್ಲಿಗೆ ಬಂದಿದ್ದ ಅವನನ್ನು ನೋಡಿ ಮೋಹಿಸಿ ಮುದ್ದಿಸಿದ್ದಳು. +ತಾನು ಇಷ್ಟು ಕಾಲವೂ ಅತ್ತೆಯ ಕುಹಕಕ್ಕೆ ಬಲಿಬೀಳದೆ ಯಾರೊಡನೆಯೂ ಸೀರುಡಿಕೆಯಾಗದೆ ಇದ್ದುದಕ್ಕೆ ಸಾರ್ಥಕ ಪ್ರತಿಫಲವೊದಗಿದಂತೆ ಭಾವಿಸಿ ಕೃತಜ್ಞೆಯಾಗಿದ್ದಳು. +ಅವನು ತನ್ನ ಲಜ್ಜಾವಲಯವನ್ನು ಅನಾವರನ ಮಾಡಿದಾಗ ಸ್ವಲ್ಪ ದಿಗಿಲಾದಂತೆ ಅನುಭವವಾಗಿದ್ದರೂ, ತನ್ನ ಗಂಡನೊಡನೆ ನಾನು ರಮಿಸುವುದರಲ್ಲಿ ತಪ್ಪೇನು ಎಂದು ಅವಳು ತನ್ನ ಅಂತಃಸಾಕ್ಷಿಗೆ ತಾನೆ ಸಮಾಧಾನ ಹೇಳಿಕೊಂಡು, ಅವನನ್ನು ಆಲಿಂಗಿಸಿ, ಚುಂಬಿಸಿ, ಒತ್ತಿಕೊಂಡು ಪುಲಕಿತೆಯಾಗಿ ಆನಂದಮಗ್ನೆಯಾಗಿದ್ದಳು. +ಅವಳ ಆ ಚರ್ಯೆಯನ್ನೆಲ್ಲ ವೆಂಕಟಣ್ಣ ತನ್ನ ಪರವಾಗಿ ಅವಳಿಗಿರುವ ಬೇಟದ ಚಿಹ್ನೆಯಿಂದೆ ಭಾವಿಸಿ, ಸುಖರಸಪ್ಲಾವಿತ ಚಿತ್ತನಾಗಿ, ನಾಗತ್ತೆಗೆ ಮನದಲ್ಲಿಯೆ ವಂದಿಸಿದ್ದನು. +ತನ್ನ ಪೂರೈಸಿಕೊಂಡು ಅವನು ಹಿಂದಕ್ಕೆ ತನ್ನ ಕೋಣೆಗೆ ಹೋಗಿ ಮಲಗಿಬಿಡಬೇಕು ಎಂಬುದು ಅವರಿಬ್ಬರೂ – ನಾಗತ್ತೆ ಮತ್ತು ವೆಂಕಟಣ್ಣ – ಒಟ್ಟಿ ಒಪ್ಪಿದ್ದ ವ್ಯೂಹವಾಗಿತ್ತು. +ಏಕೆಂದರೆ ನಾಗಕ್ಕನನ್ನು ಇನ್ನೂ ಅವನು ಶಾಸ್ತ್ರೀಯವಾಗಿ ಸೀರುಡಿಕೆ ಮಾಡಿಕೊಂಡಂತೆ ಆಗಿರಲಿಲ್ಲ. +ಆ ಸಾರ್ವಜನಿಕವಾದ ಬಹಿರಂಗ ‘ಕೂಡಿಕೆ’ಯನ್ನು ತರುವಾಯ – ಈ ರೀತಿಯಲ್ಲಿ ಸೋತ ನಾಗಕ್ಕ ಅನಿವಾರ್ಯಕ್ಕೆ ಸಿಕ್ಕಿ ಒಪ್ಪಿಗಿಕೊಡಬೇಕಾಗಿಯೆ ಬಂದಮೇಲೆ – ಮಾಡಿಕೊಳ್ಳುವುದು ಅವರ ಹರುವಾಗಿತ್ತು. +ಆದರೆ ವೆಂಕಟಪ್ಪನಾಯಕರಿಗೆ ನಾಗಕ್ಕನ ಮಗ್ಗುಲಿಂದ ಕೆಲಸ ಪೂರೈಸಿದ ಮೇಲೆಯೂ ಏಳುವ ಮನಸ್ಸಾಗಲಿಲ್ಲ. +ನಾಗತ್ತೆ ಬಂದು ಸ್ವಲ್ಪ ಬಲವಾಗಿಯೆ ಬಾಗಿಲು ತಟ್ಟಲು ತೊಡಗಿದ ಮೇಲೆಯೆ ವೆಂಕಟಣ್ಣ ಮನಸ್ಸಿಲ್ಲದ ಮನಸ್ಸಿನಿಂದ ಎದ್ದು ಬಾಗಿಲು ತೆರೆದು ತನ್ನ ಕೋಣೆಗೆ ಹೋಗಿದ್ದನು. +ನಾಗತ್ತೆ ಮೊದಲಿನಂತೆ ಬಾಗಿಲು ಮುಚ್ಚಿ ತಾಳ ಹಾಕಿಕೊಂಡು ಹೋಗಿ ನಾಗಕ್ಕನ ಬಳಿ ಮಲಗಿದ್ದಳು. +ಬೆಳಿಗ್ಗೆ ನಿದ್ದೆಯೂ ಅಮಲೂ ಇಳಿದಮೇಲೆ ನಾಗಕ್ಕ ತನಗೆ ಬಿದ್ದಿದ್ದ ಕನಸನ್ನು ನೆನೆದು ಆನಂದಾನುಭವ ಮಾಡಿದ್ದಳು. +ಆದರೆ ತನ್ನ ಅಂಗಉಪಾಂಗಗಳಿಗೂ ಉಟ್ಟ ಸೀರೆಗೂ ಒದಗಿದ್ದ ಸ್ಥೂಲಭೌತಿಕ ಪರಿಣಾಮವನ್ನು ಕಂಡು ಅವಳಿಗೆ ಅರ್ಥವಾಗದೆ ಹೆದರಿಕೆಯಾಗಿತ್ತು. +ಆಲೋಚಿಸಿದಂತೆಲ್ಲ ಅವಳಿಗೆ ಏನೇನೋ ಅನುಮಾನಗಳೂ ತಲೆಹೊಕ್ಕಿದ್ದುವು. +ಆದರೆ ಒಂದು ಮಾತ್ರ ಅವಳ ಧೈರ್ಯಕ್ಕೂ ಸಂತೋಷಕ್ಕೂ ಬೆಂಬಲವಾಗಿತ್ತು: +ಅತ್ತೆ ಪಕ್ಕದಲ್ಲಿಯೆ ಮಲಗಿದ್ದಳಲ್ಲಾ! +ಅವಳೇ ಬಾಗಿಲು ಮುಚ್ಚಿ ತಾಳ ಹಾಕಿಕೊಂಡಳಷ್ಟೆ? +ಮನುಷ್ಯರು ಯಾರೂ ಒಳಗೆ ಬರಲು ಸಾಧ್ಯವೇ ಇಲ್ಲ! +ಆದ್ದರಿಂದ ಬಂದಿದ್ದಾತನು, ತನಗೆ ಸ್ಪಷ್ಟವಾಗಿ ಆಗಿದ್ದ ಅನುಭವದಂತೆ, ತನ್ನ ತೀರಿಕೊಂಡ ಗಂಡ ನಾಗಣ್ಣನೇ ಆಗಿರಬೇಕು! +“ಹಂಗಾರೆ ನಾಗಜ್ಜಿ ನಿನ್ನ ಮಗ್ಗುಲಾಗೇ ಮನಗಿತ್ತು?” ಎಲ್ಲವನ್ನೂ ಆಲಿಸಿದ ಚಿನ್ನಮ್ಮ ಇತ್ಯರ್ಥ ಹೇಳುವ ಮುನ್ನ ಕೇಳಿದ್ದಳು. +“ಹೌದಕ್ಕಾ!” ಸಮರ್ಥಿಸಿದಳು ನಾಗಕ್ಕ. +“ನಿಜ ಅಲ್ಲ ಕಣೇ. +ಸಪ್ನಾನೆ ಇರಬೇಕು. +ನಂಗೂ ಸಪ್ಪನದಲ್ಲಿ ನನ್ನವ್ವ ಬರ್ತಿತ್ತು…. +ನಿಜ ಆಗಿದ್ದರೆ ನಾಗಜ್ಜಿಗೆ ಎಚ್ಚರ ಆಗ್ದೆ ಇರ್ತಿತ್ತೆ? …. +“ನಿಜ ಎಂದು ಸಾಧಿಸುವುದಕ್ಕೆ ಕೊಡಬಹುದಾಗಿದ್ದ ಸಾಕ್ಷಿಗಳೆಲ್ಲ ಅವಾಚ್ಯವಾಗಿದ್ದು, ಚಿನ್ನಮ್ಮಗೆ ಅಗ್ರಾಹ್ಯವೂ ಆಗಿದುದ್ದರಿಂದ ನಾಗಕ್ಕ ಸುಮ್ಮನಾದಳು. +“ಎಲ್ಲಿ ಹೋದ್ರೇ ಅವರಿಬ್ಬರೂ? +ಇಷ್ಟೇ ಏನೇ ಹೆರಕಿದ್ದು, ಏ ಸುಬ್ಬೀ?” ಮನೆಯಿಂದ ಗುಡ್ಡ ಹತ್ತಿ ಬಂದಿದ್ದ ಚಿನ್ನಮ್ಮನ ಅಜ್ಜಿ ಸೊಂಟಗೈಯಾಗಿ ನಿಂತು ಬುಟ್ಟಿಯ ಕಡೆ ನೋಡುತ್ತಾ ಕೇಳಿದಳು. +“ಅಲ್ಲೆಲ್ಲೊ ಮಟ್ಟಿನ ಹಿಂದೆ ಮಾತಾಡ್ತಾ ಕೂತಾರೆ…. +ನಾನೊಬ್ಬಳೆ ಎಷ್ಟು ಅಂತಾ ಹೆರಕ್ಲಿ?” ಸುಬ್ಬಿ ಸ್ವಲ್ಪ ಅಸಮಾಧಾನ ಧ್ವನಿಯಿಂದಲೆ ಹೇಳಿದಳು! +ಅಜ್ಜಿಯ ಪ್ರಶ್ನೆ ಮತ್ತು ಸುಬ್ಬಿಯ ಉತ್ತರ ಎರಡನ್ನೂ ಆಲಿಸಿ ಮರೆಯಿಂದ ನಾಗಕ್ಕನೊಡನೆ ಹೊರಗೆ ಬಂದ ಚಿನ್ನಮ್ಮ “ಇಷ್ಟೊತ್ತಿನ ತನಕಾ ಹೆರಕ್ತಾನೇ ಇದ್ದೆವು, ಅಜ್ಜಿ, ಈಗ ತಾನೆ ಇಲ್ಲಿ ಕೂತಿದ್ದು, ನೆಳ್ಳಲ್ಲಿ ಸ್ವಲ್ಪ ದಣಿವಾರಿಸಿಕೊಳ್ಳಾಕೆ.” ಎಂದು ಸುಬ್ಬಿಯ ಕಡೆ ತಿರುಗಿ ಸಿಡುಕಿದಳು “ಮಾತಾಡ್ತಾ ಕೂತಿದ್ದಂತೆ? +ನೀನು ಕೂತೂ ಕೂತೂ ಏಳ್ತಿದ್ಯೆಲ್ಲಾ? +ನಾನೇನು ನೋಡ್ಲಿಲ್ಲಾ ಅಂತ ಮಾಡೀಯೇನು?”ನಾಗಕ್ಕ ಪಿಸುಮಾತಿನ ಕೆಳದನಿಯಲ್ಲಿ ಚಿನ್ನಮ್ಮಗೆ ಹೇಳಿದಳು “ಕಣ್ಣು ಮೂಗು ಒರಸಿಕೊಳ್ಳೆ; +ಅಜ್ಜಮ್ಮ ನೋಡ್ತಾರೆ.”ಇಬ್ಬರೂ ತಮಗರಿವಿಲ್ಲದೆಯೆ ಸಂವಾದ ಕಾಲದಲ್ಲಿ ಅತ್ತಿದ್ದರು. +ಅದರ ಗುರುತು ಸಿಗಬಾರದೆಂದು ಇಬ್ಬರೂ ಬೆವರು ಒರೆಸಿಕೊಳ್ಳುವ ರೀತಿಯಲ್ಲಿ ಕಣ್ಣು ಮೂಗು ಮುಖ ಎಲ್ಲವನ್ನೂ ಗೊಬ್ಬೆ ಸೆರಗಿನಿಂದ ಒರಸಿಕೊಂಡರು. +ಆದರೂ ಚಿನ್ನಮ್ಮ ಹತ್ತಿರಕ್ಕೆ ಬಂದಾಗ ವಯಸ್ಸಿನ ದೆಸೆಯಿಂದ ದೃಷ್ಟಿ ಮಂದವಾಗಿದ್ದ ಅಜ್ಜಿ ಮೊಮ್ಮಗಳ ಮೋರೆಯ ಕಡೆ ಬಿಡದೆ ನೋಡುತ್ತಾ “ಯಾಕೆ? +ಕಣ್ಣು ಕೆಂಪಗೆ ಆಗ್ಯದೆಲ್ಲಾ?” ಎಂದವಳು, ತನ್ನ ಪ್ರಶ್ನೆಗೆ ತಾನೇ ಉತ್ತರ ಹೇಳುವಂತೆ ಮುಂದುವರೆಸಿದಳು “ನಮ್ಮ ತ್ವಾಟದ ಮ್ಯಾಲಿನ ಈ ಸೀಂಗೆಉಡಿ ಕಾಯಿ ಬಾಳ ಘಾಟು ಕಣೇ? +ಕುಟ್ತಾ ಇದ್ರೆ, ಮನೇಲಿ ಎಲ್ಲಿದ್ರೂ ಸೀನೀ ಸೀನೀ ಸಾಕಾಗಿ ಹೋಗ್ತದೆ! …. ನಮಗೇನು ಒಂದು ವರ್ಷಕ್ಕೆಲ್ಲಾ ನಾಕು ಕೊಟ್ಟೆ ಸೀಂಗೆಬುತ್ತಿ ಆದ್ರೆ ಸಾಕಾಗಿ ಹೋಗ್ತದೆ…. +ಎಲ್ಲಿ ಹೋದ್ನೆ ಅಂವ, ಆ ಬಾಗೀ ಗಂಡ? …. ” +“ಇಲ್ಲೇ ಕೂತೀನ್ರಮ್ಮಾ!” ಪೊದೆಯ ಮರೆಯಿಂದ ಮೊಡಂಕಿಲ ಕೂಗಿದನು. +“ಏನೋ?ಹೊತ್ತಿನ್ನೂ ಸುಮಾರು ಮ್ಯಾಲೆ ಅದೆ; +ಆಗ್ಲೆ ಇಳಿದುಬಿಟ್ಯೇನೋ?… ಹೋಗ್ಲಿ ಬಾ. +ಒಂದೀಟು ಬ್ಯಾಗ ಬ್ಯಾಗ ಒಟ್ಟುಮಾಡಿ ಮನೇತನಕಾ ತಂದು ಕೊಟ್ಟಿಡು…. +ನಿನ್ನ ಹೆಂಡ್ತೀಗೆ ಹೇಳೋ, ಒಂದು ದಿನಾ ಬಂದು ಕುಟ್ಟಿ ಕೊಡಾಕೆ….”ಇನ್ನೂ ಕಪ್ಪಾಗಲು ಸುಮಾರು ಹೊತ್ತಿದರೂ ಪಡುವಣ ಬಾನಿನಲ್ಲಿ ಬೈಗುಗೆಂಪಿನ ಛಾಯೆ ಆಗಲೆ ಮೈದೋರಿತ್ತು. +ಅವರಿದ್ದ ಸ್ಥಾನಕ್ಕೆ ಗುಡ್ಡದ ನೆತ್ತಿಗಾಡಿನ ದಟ್ಟ ನೆಳಲು ಇರುಳಿನ ಮಂಚೂಣಿಯಂತೆ ಕವಿಯತೊಡಗಿತ್ತು. +ಚಿನ್ನಮ್ಮ ಅದುವರೆಗೂ ಗಮನಿಸಿಯೆ ಇರಲಿಲ್ಲ: +ಗೊತ್ತು ಕೂರಲು ನೆರೆಯುತ್ತಿವೆ ಹಕ್ಕಿಹಿಂಡು! +ಎಷ್ಟು ಹಕ್ಕಿಗಳಿವೆ ಈ ಕಾಡಿನ ಸೆರಗಿನಲ್ಲಿ? +ಯಾವ ಯಾವ ತರದ ಹಕ್ಕಿ? +ಛೆ ಛೆ ಛೆ ಎಷ್ಟು ಬಣ್ಣ? +ಒಂದೊಂದರ ಕೂಗೂ ಒಂದೊಂದು ತರ! +ಆ ಸಿಳ್ಳು ಹಾಕುವ ನೇಲುಪುಕ್ಕದ ಕರಿಹಕ್ಕಿ? +ಅವಳಿಗೆ ಗೊತ್ತು:  ಮುಕುಂದಯ್ಯ ತೋರಿಸಿದ್ದ; + ಅದು ಕಾಜಾಣ! +ಅದೆಂಥ ಹಕ್ಕಿಯೊ ಅದು, ಪಳಪಳ ಹೊಳೆಯುತ್ತಿದೆ, ಬಿಸಿಲುಬಿದ್ದ ಬಳೆಯ ಕಣ್ಣು ಹೊಳೆದ ಹಾಗೆ? +ಈಗ ಹಾರಿಹೋಗಿದ್ದು: ಗಿಣಿ ಹಿಂಡು! +ಅಕ್ಕೋ ಅದೇ ಕಾಮಳ್ಳಿ ಹಿಂಡು! +ಇದು ಪಿಕಳಾರ: ಆವಿತ್ತು ಕೋಣೂರಿನಲ್ಲಿ ಕಣದ ಹತ್ತಿರ ಮಟ್ಟಿನಲ್ಲಿ ಗೂಡುಕಟ್ಟಿ ಮರಿ ಮಾಡಿತ್ತಲ್ಲಾ ಅದೇ! +ಛೆ ಛೆ ಛೆ ಛೆ ಎಷ್ಟು ಹಕ್ಕಿ! +ಅವೆಲ್ಲವೂ ಒಟ್ಟುಲಿದು ಕಾಡೆಲ್ಲಾ ಗಿಲಿಗಿಚ್ಚಿ ಆಡಿಸಿದ ಹಾಂಗಿದೆಯಲ್ಲಾ! +‘ಹೊಡ್ತಾ ಅಂದ್ರೆ ಎಂಥಾ ಹೊಡ್ತಾ ಅಂತೀಯ? +ಹೊನ್ನಳ್ಳಿ ಹೊಡ್ತಾ!’ + ‘ಹಾಕ್ಬೇಕು ಅವನಿಗೆ ಹೊನ್ನಳ್ಳಿ ಹೊಡ್ತಾ!’ ಮಲೆನಾಡಿಗರ ಮಾತುಕತೆಗಳಲ್ಲಿ ಈ ‘ಹೊನ್ನಳ್ಳಿಹೊಡ್ತ’ದ ಪದಪ್ರಯೋಗವನ್ನು ಮತ್ತೆ ಮತ್ತೆ ಕೇಳಬಹುದಿತ್ತು ಈ ಶತಮಾನದ ಆದಿಭಾಗದಲ್ಲಿ. +ಈಗಲೂ ಹಳಬರ ಬಾಯಲ್ಲಿ ಆಗಾಗ ‘ಹೊನ್ನಳ್ಳಿ ಹೊಡೆತ’ ಬರುವುದುಂಟು. +ಆದರೆ ಈಗ ಆ ಪದವನ್ನು ಉಪಯೋಗಿಸುವವರಿಗೆ ಅದರ ಮೂಲ ಏನು ಎಂದಾಗಲಿ, ಹೊಡೆತಕ್ಕೆ ಏಕೆ ‘ಹೊನ್ನಳ್ಳಿ’ ವಿಶೇಷಣವಾಗಿದೆ ಎಂದಾಗಲಿ ಗೊತ್ತಿರಲಾರದು. +ಅಂತೂ ಏನೊ ಒಮದು ಬಲವಾದ ಪೆಟ್ಟು, ಹೊಡೆತ, ರಕ್ತಕಾರಿಕೊಳ್ಳುವಂತಹ ಹೊಡೆತ, ಕೈಕಾಲು ಮುರಿದುಬೀಳುವಂತಹ ಹೊಡೆತ ಎಂಬರ್ಥದಲ್ಲಿ ಅದನ್ನು ಸುಮ್ಮನೆ ಉಪಯೋಗಿಸುತ್ತಾರೆ. +“ರುಸ್ತುಂ ಹೊಡೆತ” ಎನ್ನುವುದಿಲ್ಲವೆ ಹಾಗೆ! +ಆದರೆ ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಆಗುಂಬೆ, ಮೇಗರವಳ್ಳಿ, ತೀರ್ಥಹಳ್ಳಿ, ಮುತ್ತೂರು, ಮುಂಡಾಕಾರು, ಮಂಡಗದ್ದೆ ಮುಂತಾದ ಕಡೆಯ ಮಲೆನಾಡಿನ ಹಳ್ಳಿಗರಿಗೆ ಎಲ್ಲರಿಗೂ “ಹೊನ್ನಳ್ಳಿ ಹೊಡ್ತ” ದ ಅರ್ಥ ಚೆನ್ನಾಗಿಯೆ ಗೊತ್ತಿತ್ತು. +ಹಲವರಿಗೆ – ಅದರಲ್ಲೂ ಬಡ ಬಗ್ಗರಿಗೆ – ಅರ್ಥ ಮಾತ್ರವಲ್ಲ ಅದರ ರುಚಿಯೂ ಗೊತ್ತಾಗಿತ್ತು; +ಕೆಲವರು ಅದರ ಸಾಕ್ಷಾತ್ಕಾರದ ಸ್ವಾನುಭವಕ್ಕೆ ತುತ್ತಾಗಿ ಸಮಾಧಿಸ್ಥರಾಗಿಯೂ ಇದ್ದರು. +ಹೊನ್ನಳ್ಳಿ ಹೊಡೆತದ ಮೂಲ ಪ್ರಪಿತಾಮಹರೆಂದರೆ ಕಲ್ಲೂರು ಸಾಹುಕಾರ ಮಂಜಭಟ್ಟರು. +ಗಟ್ಟದ ಕೆಳಗಣಿಂದ ಪಂಚಪಾತ್ರೆ ಪಾಣಿಪಂಚೆಯೊಡನೆ ಪೂಜಾರಿಯಾಗಿ ಮೇಲೆ ಬಂದವರು ಸ್ವಸಾಮರ್ಥ್ಯದಿಂದಲೂ, ನೈಪುಣ್ಯದಿಂದಲೂ, “ಪುಣ್ಯ”ದಿಂದಲೂ, ಶ್ರೀಮಂತರೂ ಜಮೀನುದಾರರೂ ಆದರು. +ಸಾಲ ಕೊಟ್ಟೋ, ಸಾಲ ಕೊಟ್ಟಂತೆ ಬರೆಯಿಸಿಕೊಂಡೋ, ಅಕ್ಷರ ಬಂದವರಿಂದ ರುಜು ಹಾಕಿಸಿಕೊಂಡೋ, ಅಕ್ಷರ ಬಾರದವರಿಂದ ಹೆಬ್ಬೆಟ್ಟೊತ್ತಿಸಿಕೊಂಡೋ ಎಲ್ಲರ ಭಯ ಗೌರವಗಳಿಗೆ ಪಾತ್ರರಾಗಿ ಸುಪ್ರಸಿದ್ಧರಾದರು. +ಆದರೆ ದಂಡಶಕ್ತಿ ಇಲ್ಲದಿದ್ದರೆ ಲಕ್ಷ್ಮಿಯನ್ನುಳಿಸಿಕೊಳ್ಳುವುದು ಕಷ್ಟ ಎಂಬುದು ಅವರಿಗೆ ಬೇಗನೆ ಅನುಭವಕ್ಕೆ ಬಂತು. +ಲಕ್ಷ್ಮಿಯ ಸ್ವರೂಪವೆ ಹಾಗೆ: +ಸ್ವಲ್ಪ ಕಷ್ಟಸಾಧ್ಯವಾದರೂ ಗಳಿಸಿಕೊಳ್ಳಬಹುದು: +ಆದರೆ ಉಳಿಸಿಕೊಳ್ಳುವುದು ಮಾತ್ರ ದುಷ್ಟಸಾಧ್ಯವೆ! +ವ್ಯಕ್ತಿಯಾಗಿ ಮಂಜಬಟ್ಟರಿಗೆ ದೈಹಿಕವಾಗಿ ಆ ಶಕ್ತಿಯಿರಲಿಲ್ಲ. +ಆದ್ದರಿಂದ ಅವರು ಆಗ ಹೊನ್ನಳ್ಳಿ ಎಂದೇ ಹೆಸರು ಪಡೆದಿದ್ದ ಹೊನ್ನಾಳಿಯಿಂದ ಕೆಲವು ಉಂಡಾಡಿಗಳಾದ ಪುಂಡ ಸಾಬರನ್ನು, ಮೇಗರವಳ್ಳಿಯ ಕರಿಮೀನು ಸಾಬು ಮತ್ತು ಅವನ  ತಮ್ಮ ಪುಡೀ ಸಾಬು ಇವರ ಮುಖಾಂತರವಾಗಿ ಕರೆಸಿ ಅವರನ್ನು ‘ವಸೂಲಿ ಸಾಬರು’ ಆಗಿ ನಿಯಮಿಸಿಕೊಂಡರು. +ಊರು ಮನೆಯವರನ್ನು ಆ ಕೆಲಸಕ್ಕೆ ಗೊತ್ತು ಮಾಡಿಕೊಂಡರೆ ಅವರು ನಿರ್ದಾಕ್ಷಿಣ್ಯವಾಗಿ ವರ್ತಿಸುವುದು ಸಾಧ್ಯವಿಲ್ಲ. +ತಲತಲಾಂತರದಿಂದ ಗುರುತು ಪರಿಚಯ ಇರುವವರನ್ನೂ, ದೂರವೊ ಹತ್ತಿರವೊ ಆದ ಸಂಬಂಧಿಗಳನ್ನೂ, ಹಿಂದೆ ಪ್ರತಿಷ್ಟಿತರಾಗಿ ತಮಗೆ ನೆರವಾಗಿದ್ದು ತಮ್ಮ ಗೌರವಕ್ಕೂ ಪಾತ್ರರಾಗಿದ್ದು ಈಗ ಅವನತಿಗಿಳಿದಿದ್ದವರನ್ನೂ ದಯೆ ದಾಕ್ಷಿಣ್ಯಗಳಿಲ್ಲದೆ, ಮುಖ ಮೋರೆ ನೋಡದೆ, ಸ್ಥಾನಮಾನಗಳೊಂದನ್ನು ಗಣನೆಗೆ ತಾರದೆ ‘ವಸೂಲಿ’ ಕೆಲಸ ಮಾಡಬೇಕಾದರೆ ಸ್ಥಳದಿಂದಲೂ ಜಾತಿಮತಗಳಿಂದಲೂ ದೂರವಾಗಿರುವ ಸಾಬರೆ ಅದಕ್ಕೆ ತಕ್ಕವರೆಂದು ನಿರ್ಣಯಿಸಿತ್ತು ಭಟ್ಟರ ರಾಜಕೀಯ ಅರ್ಥಶಾಸ್ತ್ರಪ್ರತಿಭೆ! +ಹೀಗೆ ಹೊನ್ನಾಳಿಯಿಂದ ಬಂದು ಮೇಗರವಳ್ಳಿಯಲ್ಲಿ ಶಿಬಿರ ಸ್ಥಾಪನೆ ಮಾಡಿದ ಸಾಬರ ತಂಡವು ತನಗೆ ಅನುಕೂಲವಾದ ನಿಷ್ಪಕ್ಷಪಾತ ಮಾರ್ಗವನ್ನೆ ಅನುಸರಿಸಿತ್ತು. +ದುಡ್ಡು ಕೊಟ್ಟವರಿಗೆಲ್ಲ ಅವರು ವಸೂಲಿ ಸಾಬರಾಗಿ ಸೇವೆ ಸಲ್ಲಿಸತೊಡಗಿದರು. +ಶ್ರೀಮಂತರಾಗಿದ್ದು ಒಕ್ಕಲುಗಳಿಗೂ ಇತರರಿಗೂ ಸಾಲ ಕೊಟ್ಟಿದ್ದವರೆಲ್ಲ – ಬೆಟ್ಟಳ್ಳಿ ಕಲ್ಲಯ್ಯಗೌಡರು, ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರು, ಸಿಂಬಾವಿ ಭರಮೈ ಹೆಗ್ಗಡೆಯವರು, ಲಕ್ಕುಂದದ ಹಳೆಪೈಕದ ಸೇಸನಾಯಕರು ಮೊದಲಾದವರೆಲ್ಲ – ತಮ್ಮ ತಮ್ಮ ದಡೂತಿಗೆ ತಕ್ಕಂತೆ ದುಡ್ಡಿಗೋ ಬತ್ತಕ್ಕೋ ಅಡಕೆಗೋ ವಸೂಲಿ ಸಾಬರ ಸೇವೆಯನ್ನು ಪಡೆಯತೊಡಗಿದರು. +ಆ ಸೇವೆಯ ಪರಿಣಾಮವಾಗಿಯೆ ಹುಟ್ಟಿಕೊಂಡಿತು ಆ ನಾಣ್ಣುಡಿ: + “ ಹೊನ್ನಳ್ಳಿಯ ಹೊಡ್ತ.” +ಹೊನ್ನಾಳಿಯಿಂದ ಬಂದಿದ್ದ ಸಾಬರ ಹೊಡೆತ = ಅಂದರೆ ಹೊನ್ನಾಳಿಯ ಹೊಡೆತ – ಅಂದರೆ ಅದರ ಗ್ರಾಮದಯ ರೂಪ “ಹೊನ್ನಾಳ್ಳಿಹೊಡ್ತಾ!” +ಆ ‘ಹೊನ್ನಳ್ಳಿ ಹೊಡ್ತ’ದಿಂದ, ಹಿಂದೆ ಪ್ರತಿಷ್ಠಿತವಾಗಿದ್ದು ಈಗ ಅವನತ ಸ್ಥಿತಿಗಿಳಿದಿದ್ದ ಮನೆತನದ ಹೂವಳ್ಳಿ ವೆಂಕಪ್ಪನಾಯಕರಂತಹರಿಗೂ ತಪ್ಪಿಸಿಕೊಳ್ಳಲಾಗಿರಲಿಲ್ಲ. +ಆ ಸಾಬರ ತಂಡದಲ್ಲಿ ಐದು ಹೆಸರುಗಳು ಎಲ್ಲ ಹಳ್ಳಿಗರಿಗೂ ತಿಳಿದಿತ್ತು: +ಕರಿಮೀನುಸಾಬು, ಪುಡೀಸಾಬು, ಅಜ್ಜೀಸಾಬು, ಲುಂಗೀಸಾಬು, ಇಜಾರಸಾಬು. +ಕರೀಂ ತದ್ಭವವಾಗಿ ಕರಿಮೀನು ಆಗಿದ್ದ ಹೆಸರಿನವರು ಮೇಗರವಳ್ಳಿಯಲ್ಲಿ ಒಂದು ಅಂಗಡಿ ಇಟ್ಟು ನೆಲೆಸಿದ್ದ ಮಾಪಿಳ್ಳೆ. +ಅವನ ತಮ್ಮ ಮಂಗಳೂರು ನಶ್ಯ ತಯಾರಿಸಿ ಮಾರುತ್ತಿದ್ದವನಾದ್ದರಿಂದ ಅವನನ್ನು ಪುಡೀಸಾಬು ಎಂದೇ ಕರೆಯುತ್ತಿದ್ದರು. +ಆಗುಂಬೆಯ ಘಾಟಿಯ ಕಾಡುದಾರಿಯಲ್ಲಿ ಆಗುತ್ತಿದ್ದ ಕೊಲೆ ದರೋಡೆಗಳಲ್ಲಿ ಅವನ ಪಾಲೂ ಇದ್ದಿತೆಂದು ಕೆಲವರು ಆಡಿಕೊಳ್ಳುತ್ತಿದ್ದರು. +ಎತ್ತರವಾಗಿ ದಾಂಡಿಗನಾಗಿ ಕ್ರೂರಿಯಾಗಿ ಕಾಣುತ್ತಿದ್ದ ಇಜಾರದ ಸಾಬುವಿಗೆ ಅವನು ಹಾಕಿಕೊಳ್ಳುತ್ತಿದ್ದ ದೊಗಳೆ ಷರಾಯಿಯಿಂದಲೆ ಆ ಹೆಸರು ಬಂದಿತ್ತು. +ಇನ್ನು ಕುಳ್ಳಾಗಿ ಗುಜ್ಜಾಗಿದ್ದ ಸಿಂಡಮೂಗಿನ ಸಾಬು ಯಾವಾಗಲೂ ಸಣ್ಣ ಸಣ್ಣ ಚೌಕದ ಕಣ್ಣಿನ ಕೆಂಗಪ್ಪಿನ ಪಂಚೆಯನ್ನು ಸೊಂಟಕ್ಕೆ ಸುತ್ತಿರುತ್ತಿದ್ದರಿಂದ ಅವನಿಗೆ ‘ಲುಂಗೀಸಾಬು’ ಎಂದು ಹೆಸರು ಬಂದಿತ್ತು. +ತೆಳ್ಳಗೆ ಕರಗಿದ್ದು ಹೋತದ ಗಡ್ಡ ಬಿಟ್ಟಿದ್ದವನ ನಿಜವಾದ ಹೆಸರು ‘ಅಜೀಜ್’ ಎಂದು. +ಆದರೆ ಅದರ ಉಚ್ಚಾರಣೆ ಹಳ್ಳಿಗರ ಬಾಯಲ್ಲಿ ‘ಅಜ್ಜೀಸಾಬು’ ಎಂದೇ ಆಗಿಹೋಗಿತ್ತು. +ಕೊನೆಯ ಮೂವರು ಕನ್ನಡಿಗರು. +ಹೂವಳ್ಳಿಯಲ್ಲಿ ದೆಯ್ಯದ ಹರಕೆಯಾದ ಮರುದಿವಸವಲ್ಲ ಅದರ ಮರುದಿವಸ ವೆಂಕಟಣ್ಣ ಮನೆಯ ಅಂಗಳದಲ್ಲಿ, ತುಳಸಿಕಟ್ಟೆ ದೇವರಿಗೆ ತುಸು ಹತ್ತಿರದಲ್ಲಿಯೆ, ಕಂಬಳಿ ಹಾಕಿಕೊಂಡು ಅದರ ಮೇಲೆ ಕೂತು, ಕೊಟ್ಟೆಕಡ್ಡಿ ಹೆರೆಯುತ್ತಿದ್ದನು. +ಹೊತ್ತು ಸುಮಾರು ಬೆಳಿಗ್ಗೆ ಎಂಟು ಎಂಟೂವರೆ ಗಂಟೆಯಾಗಿರಬಹುದು. +ಅವನ ಗಮನವೆಲ್ಲ ಸಂಪೂರ್ಣವಾಗಿ ತಾನು ಮಾಡುತ್ತಿದ್ದ ಕೆಲಸದ ಮೇಲೆ ಕೇಂದ್ರೀಕೃತವಾಗಿದ್ದಂತೆ ತೋರುತ್ತಿತ್ತು. +ಆದರೆ ನಿಜಾಂಶ, ಅವನ ಮನಸ್ಸು ಸಂಪೂರ್ಣವಾಗಿ ಅನ್ಯವಿಷಯಾಕ್ರಾಂತವಾಗಿತ್ತು. +ಎಷ್ಟೋ ವರ್ಷಗಳಿಂದ ಪ್ರತಿವರ್ಷವೂ ಮಾಡುತ್ತಿದ್ದ ಆ ಕೆಲಸವನ್ನು ಅವನ ಕೈಯೂ ಕಣ್ಣೂ ಸ್ವಯಂಚಾಲಿತ ಯಂತ್ರದಂತೆ ನಿರ್ಮನಸ್ಕವಾಗಿಯೆ ಮಾಡುತ್ತಿದ್ದವು. +ಸಾಮಾನ್ಯವಾಗಿ ವೆಂಕಟಣ್ಣ ಅಂತರ್ಮುಖಿಯೆ ಅಲ್ಲ; +ವಿಶೇಷವಾಗಿಯೂ ಅಲ್ಲ ಎಂದು ಹೇಳಿಬಿಡಬಹುದಾದಷ್ಟು ಬಹಿರ್ಮುಖ ಸ್ಥೂಲವ್ಯಾಪಾರಗಳಲ್ಲಿಯೆ ಅವನ ಮನಸ್ಸು ಓಡಾಡುತ್ತಿದ್ದುದು ರೂಢಿ. +ಅಷ್ಟೆ ಅಲ್ಲ;  ಅವನ ದೇಹದಂತೆಯೆ ಅವನ ಮನಸ್ಸೂ, ತತ್ವಶಾಸ್ತ್ರ ರೀತಿಯಲ್ಲಿ ನಿಸರ್ಗ ಸಹಜವಾಗಿ ಸೂಕ್ಷ್ಮ ಎಂಬ ವಿಶೇಷಣಕ್ಕೆ ಪಾತ್ರವಾಗಿದ್ದಿತೇ ಹೊರತು, ಅದಕ್ಕೆ ವ್ಯವಹಾರಸಾಧ್ಯವಾದ ಕ್ಷೇತ್ರದೃಷ್ಟಿಯಿಂದ ಅದರ ಲಕ್ಷಣನಿರ್ಣಯ ಮಾಡುವುದಾದರೆ, ಅದೂ ಸ್ಥೂಲವೆ ಆಗಿತ್ತು. +ಆದರೆ ಹಿಂದಿನ ರಾತ್ರಿ, ಅಂದರೆ, ದೆಯ್ಯದ ಹರಕೆಯಾದ ಮಧುರರಾತ್ರಿಯ ಮರುದಿನದ ರಾತ್ರಿ, ನಡೆದ ಒಂದು ಘಟನೆಯಿಂದಾಗಿ ಅವನ ಮನಸ್ಸು ಒಂದು ಅಸಹ್ಯ ವೇದನೆಯ ಉಸುಬಿನಲ್ಲಿ ಸಿಕ್ಕಿಬಿಟ್ಟಿತ್ತು. +ಆ ವೇದನೆ ಎಷ್ಟು ಅಸಹ್ಯವಾಗಿತ್ತೆಂದರೆ, ಇಂದ್ರಿಯಸುಖದ ಎಂತಹ ಅಸಹ್ಯದಲ್ಲಿಯೂ ಅಲಕ್ಷವಾಗಿ ವಿಹರಿಸಿ ಆಸ್ವಾದಿಸಿ ಆನಂದಪಡುವುದನ್ನೂ ಬಹುಕಾಲದಿಂದ ಅಭ್ಯಾಸ ಮಾಡಿಕೊಂಡಿದ್ದ ಅವನ ರೂಕ್ಷಸ್ಥೂಲ ಮನಸ್ಸನ್ನೂ ಸೂಕ್ಷ್ಮವಾಗಿ ಮಾಡಿ, ಅವನು ಚಿಂತಕ್ರಾಂತನಾಗುವಂತೆ ಮಾಡಿಬಿಟ್ಟಿತ್ತು ಅದು….! +ದೆಯ್ಯದ ಹರಕೆ ನಡೆದ ರಾತ್ರಿ ನಾಗತ್ತೆಯ ವಾಮೋಪಾಯದಿಂದ ವೆಂಕಟಣ್ಣ ನಾಗಕ್ಕನ ಮಗ್ಗುಲಲ್ಲಿ ಮಲಗಿ, ಸುಖಾನುಭವ ಮಾಡಿ, ನಾಗತ್ತೆಯ ಬಲಾತ್ಕಾರದಿಂದಲೆಂಬಂತೆ ನಾಗಕ್ಕನ ಇನ್ನೂ ಮೈತಿಳಿಯುವ ಮುನ್ನವೇ ಎದ್ದು ಕೋಣೆಯಿಂದ ಹೊರಗೆ ಬಂದಿದ್ದನು. +ಮರುರಾತ್ರಿಯೂ ಅದೇ ನಾಟಕ ಪುನರಭಿನಯವಾಗುವಂತೆ ಏರ್ಪಾಡಾಗಿತ್ತು. +ಆದರೆ ಮುಖ್ಯ ಪಾತ್ರವೇ ಕಥಾ ಸಂವಿಧಾನಕ್ಕೆ ತಕ್ಕಂತೆ ಸಹಕರಿಸಿರಲಿಲ್ಲ. +ನಾಗಕ್ಕ ಆ ದಿನ ಕಳ್ಳನ್ನಾಗಲಿ ಹೆಂಡವನ್ನಾಗಲಿ ಕುಡಿಯುತ್ತಿದ್ದಂತೆ ನಟಿಸಿದ್ದಳೆ ವಿನಾ ಕುಡಿದಿರಲಿಲ್ಲ. +ಅವಳೂ ಚಿನ್ನಮ್ಮನೂ ಸೀಗೆಕಾಯಿ ಹರಕಲು ಹೋದಾಗ ಅವರಿಬ್ಬರಲ್ಲಿ ನಡೆದಿದ್ದ ಸಂವಾದದ ಪರಿಣಾಮವಾಗಿ ಅವಳು ಎಚ್ಚರ ವಹಿಸಿದ್ದಳು. +ಚಿನ್ನಮ್ಮ ನಾಗಕ್ಕನಿಗಾದ ಅನುಭವ ‘ಕನಸು’ ಎಂದು ತೀರ್ಪು ಕೊಟ್ಟಿದ್ದಳು. +ಆದರೆ ನಾಗಕ್ಕನಿಗೆ ಅದು ಯಾವುದೋ ರೀತಿಯಲ್ಲಿ ಹೇಗೋ ನಿಜವಾಗಿ ನಡೆದದ್ದು ಎಂಬುದರಲ್ಲಿ ಆಲೋಚಿಸಿದಷ್ಟೂ ಹೆಚ್ಚು ಹೆಚ್ಚಾಗಿ ವಿಶ್ವಾಸ ಹುಟ್ಟತೊಡಗಿ ಅದನ್ನು ಮರುರಾತ್ರೆ ಪರೀಕ್ಷಿಸಲು ಗಟ್ಟಿ ಮನಸ್ಸು ಮಾಡಿದ್ದಳು. +ಕಳೆದ ರಾತ್ರಿಯಂತೆ ನಾಗಕ್ಕ ನಾಗತ್ತೆಯೊಡನೆ ಹೋಗಿ ಅದೇ ಕೋಣೆಯಲ್ಲಿ ಅದೇ ಹಾಸಗೆಯ ಮೇಲೆ ಅದೇ ಕ್ರಮದಲ್ಲಿ ಮಲಗಿದ್ದಳು. +ಈ ಸಾರಿ ನಾಗಕ್ಕನೆ ಬಾಗಿಲನ್ನು ಭದ್ರಪಡಿಸಿದ್ದಳು, ತಾಳಹಾಕಿ. +ನಾಗತ್ತೆ ಹಣತೆ ಆರಿಸಿ ಮಲಗಿದಳು. +ಬತ್ತಿ ಕುಡಿಯ ಕನರುವಾಸನೆಯೂ ನಾಗಕ್ಕನ ಮೂಗಿಗೆ ಬಂದು ತುಸುಹೊತ್ತಿನಲ್ಲಿಯೆ ಇಲ್ಲವಾಗಿ ಹೋಯಿತು. +ಕಣ್ಣುಬಿಟ್ಟುಕೊಂಡೆ ಮಲಗಿದ್ದ ಅವಳಿಗೆ ಆ ಕಗ್ಗತ್ತಲೆ ಸ್ಥೂಲತೆಯನ್ನು ಬಿಟ್ಟುಕೊಟ್ಟಿದ್ದ ಕಗ್ಗಲ್ಲಾಗಿತ್ತು. +ಸ್ವಲ್ಪ ಹೊತ್ತಾದ ಮೇಲೆ ನಾಗತ್ತೆ ‘ನಾಗೂ!ನಾಗೂ!’ ಎಂದು ಮೆಲ್ಲಗೆ ಕರೆದಳು. +ಮೆಲ್ಲಗೆ ಮೈಮುಟ್ಟಿ ಮತ್ತೆ ಕರೆದಳು. +ನಾಗಕ್ಕನಿಂದ ಉತ್ತರವಾಗಲಿ ಏನೊಂದು ಪ್ರತಿಕ್ರಿಯೆಯಾಗಲಿ ತೀರಿಬರಲಿಲ್ಲ. +ಹೋದ ಇರುಳು ತನ್ನ ಉದ್ದೇಶ ಸಾಧನೆಯಲ್ಲಿ ಸದ್ದುಗದ್ದಲವಿಲ್ಲದೆ ಜಯಶೀಲಳಾಗಿದ್ದ ನಾಗತ್ತೆ ಈ ಇರುಳೂ ತನ್ನ ವಿಶೇಷ ಪ್ರಯತ್ನವೇನೂ ಬೇಕಾಗದೆಯೆ ಎಲ್ಲ ಸುಸೂತ್ರವಾಗಿ ನಡೆದು ಹೋಗುತ್ತದೆ ಎಂಬ ಧೈರ್ಯದಲ್ಲಿ ತಾನು ಕುಡಿದು ತಿನ್ನುವ ವಿಚಾರದಲ್ಲಿ ನಿನ್ನೆಗಿಂತಲೂ ಸ್ವಲ್ಪ ಧಾರಾಳವಾಗಿಯೆ ವರ್ತಿಸಿದ್ದಳು. +ಅಲ್ಲದೆ ವೆಂಕಟಣ್ಣನೊಡನೆ ಲೈಂಗಿಕ ಸಂಬಂಧಾನುಭವ ಪಡೆದಿದ್ದ ನಾಗಕ್ಕ ಯಾವ ವಿಶೇಷವರ್ತನೆಯನ್ನೂ ಪ್ರದರ್ಶಿಸದೆ ಮೌನವಾಗಿ ಗೆಲುವಾಗಿಯೆ ಇದ್ದುದನ್ನು ಕಂಡು ಅವಳು ತನ್ನ ಸೊಸೆಗೂ ಅದು ಇಷ್ಟಸುಖದ ವಿಷಯವೆ ಆಗಿರಬೇಕು ಎಂದು ನಿರ್ಣಯಿಸಿದ್ದಳು. +ಇಲ್ಲದಿದ್ದರೆ, ಹಿಂದೆ, ಕೆಲವು ಸಲ, ಇದಕ್ಕಿಂತಲೂ ಎಷ್ಟೇ ಪಾಲು ಕಡಿಮೆಯ ಲೈಂಗಿಕ ಲಘುಪ್ರಸಂಗಗಳಲ್ಲಿ ಕೂಡ, ಅವಳು ಕಟುವಾಗಿ ಗುಲ್ಲೆಬ್ಬಿಸಿದ್ದಂತೆ ಹುಯ್ಯಲಿಸದೆ ಇರುತ್ತಿದ್ದಳೇ? +ಮೌನವೇ ಸಮ್ಮತಿಯ ಲಕ್ಷಣವೆಂದು ಅವಳು ಭಾವಿಸಿ,  ತನ್ನ ಸೊಸೆ ವೆಂಕಟಣ್ಣನೊಡನೆ ಕೂಡಿಕೆಯಾಗುವ ಒಪ್ಪಂದಕ್ಕೆ ಪರಾಕಾಷ್ಠತೆಯ ಸ್ವರೂಪದ ಮುದ್ರೆಯನ್ನೊತ್ತಿಸಿಕೊಂಡು ಬಿಟ್ಟಿದ್ದಾಳೆಂದು ನಿಶ್ಚಿಂತೆಯಾಗಿದ್ದಳು. +ವೆಂಕಟಣ್ಣನೂ ಹೊರಗೆ ಕೆಲಸದಮೇಲೆ ಹೋಗಿದ್ದು, ಕತ್ತಲೆಯಾಗಿ ಬಹಳ ಹೊತ್ತಾದಮೇಲೆ ಕಳ್ಳುಗೊತ್ತಿನಿಂದ ಹಿಂತಿರುಗಿದ್ದನಾದ್ದರಿಂದ, ಅವನೂ ಇಂದು ನಿನ್ನೆಯ ಹಾಗೆ ಅವಸರವಾಗಿ ಬೇಗ ಬರುವುದಿಲ್ಲವೆಂದೂ ನಂಬಿದ್ದಳು. +ಆದ್ದರಿಂದಲೆ ಸೊಸೆ ನಿದ್ರಿಸುತ್ತಿದ್ದಾಳೆಂದು ತಿಳಿದ ಮೇಲೆ ಅವಳೂ ಅನುದ್ವಿಗ್ನಚಿತ್ತೆಯಾಗಿ ಚೆನ್ನಾಗಿಯೆ ನಿದ್ದೆ ಮಾಡಿದಳು. +ಆದರೆ ನಾಗಕ್ಕ ಕಣ್ಣು ಮುಚ್ಚಿಯೂ ಇರಲಿಲ್ಲ. +ಕಗ್ಗತ್ತಲೆಯನ್ನೆ ನೋಡುತ್ತಾ ಮಲಗಿದ್ದಳು. +ಉದ್ವೇಗದಿಂದ ಅವಳ ಮೈ ಬೆವರುತ್ತಿತ್ತು. +ಆದಷ್ಟು ಪ್ರಯತ್ನದಿಂದ ಉಸಿರಾಟ ಜೋರಾಗಿ ಕೇಳಿಸದಂತೆ ತಡೆದು ತಡೆದು ಮೆಲ್ಲಗೆ ಉಸಿರಾಡುತ್ತಿದ್ದಳು. +ಅವಳಿಗೆ ಏನು ನಡೆಯಬಹುದೊ ಏನು ನಡೆಯುತ್ತದೆಯೊ ಎಂಬ ವಿಚಾರದಲ್ಲಿ ಅನಿಶ್ಚಯತೆ. +ಹಿಂದಿನ ರಾತ್ರಿ ಬಂದಂತೆ ಕನಸಿನಲ್ಲಿಯೆ ಗಂಡ ಬರುತ್ತಾನೆಯೋ? +ಅಥವಾ ನಿಜವಾಗಿಯೆ ಬಂದುಬಿಡುತ್ತಾನೆಯೋ? +ಅಥವಾ ನಿಜವಾಗಿಯೆ ಬಂದು ಬಿಟ್ಟರೆ? +ಹಿಂದಿನ ರಾತ್ರಿಯಾದರೂ ತನಗೆ ನಿದ್ದೆ ಬಂದಿತ್ತು. +ಆದ್ದರಿಂದ ಗಾಬರಿಯಾಗಿರಲಿಲ್ಲ. +ಈಗ ಎಚ್ಚತ್ತಿದ್ದೇನೆ! +ಸತ್ತುಹೋದವನು ಹೇಗೆ ಬರುತ್ತಾನೋ? +ದೆವ್ವವಾಗಿ ಬಂದರೆ ಏನು ಗತಿ? +ನಾಗಕ್ಕನಿಗೆ ದೆವ್ವದ ರೂಪ ಆಕಾರಗಳ ವಿಚಾರವಾಗಿ ಏನೂ ಗೊತ್ತಿಲ್ಲದಿದ್ದರೂ ಅವಳು ತುಂಬಾ ಹೆದರಿಕೊಂಡಳು. +ನೆನೆದಂತೆಲ್ಲ ಉದ್ವೇಗ, ಭಯ, ನಿರೀಕ್ಷೆ, ಸಂತೋಷವೆನ್ನಲು ಬಾರದ ಏನೋ ಒಂದು ತರಹದ ಹಿಗ್ಗು ಹೆಚ್ಚಾಗಿ ಮೈ ಮತ್ತೂ ಬೆವರಿತು; +ಉಸಿರಾಟ ಹೆಚ್ಚಾಯಿತು. +ದೇಹಬಾಧೆ ತೀರಿಸಿಕೊಳ್ಳಲು ಹೊರಗೆ ಹೋಗಬೇಕು ಎನ್ನಿಸಿತು. +ಆದರೆ ಏಳುವುದು ಹೇಗೆ? +ಏಳುವುದಕ್ಕೂ ಏನೋ ಅಂಜಿಕೆ. +ಮೆಲ್ಲಗೆ ಅತ್ತೇ ಅತ್ತೇ ಎಂದು ಕರೆದಳು. +ಆದರೆ ಅವಳೂ ಗಾಢ ನಿದ್ರೆಯಲ್ಲಿದ್ದಂತೆ ತೋರಿತು. +ಉದ್ವೇಗದ ಸಮಯದಲ್ಲಿ ಆಗುವ ಶಾರೀರಿಕ ವ್ಯಾಪಾರಗಳ ಫಲವಾಗಿ ಅವಳಿಗೆ ಹೊರಗೆ ಹೋಗಬೇಕಾಗಿಯೆ ಬಂತು. +ಅವಶ್ಯಕತೆ ಮಿತಿಮೀರಲು, ಕತ್ತಲೆಯ ಭಯವನ್ನು ಉತ್ತರಿಸಿ, ಬರಿಯ ಒಡಲಿನ ಕೆಚ್ಚೆ ಅವಳನ್ನು ಏಳುವಂತೆ ಮಾಡಿತು. +ಎದ್ದು ಕುಳಿತಳು; ನಿಂತಳು; +ಕೈಚಾಚಿ ತಡವುತ್ತಾ ಬಾಗಿಲೆಡೆಗೆ ಸಾರಿ, ತಾಳ ತೆಗೆದು ತೆರೆದಳು. +ಹೊರಗೆ ಜಗಲಿಯಲ್ಲಿ ಮತ್ತು ಅದಕ್ಕೂ ಕೆಳಗೆ ಅಂಗಳದಲ್ಲಿ ಕತ್ತಲೆ ಬರಬರುತ್ತಾ ಕಡಿಮೆಯಾಗಿ ಕಣ್ಣಿಗೆ ವಸ್ತುಗಳ ನೇಸಲು ಗೊತ್ತಾಗುವಂತಿತ್ತು. +ಮೆಲ್ಲಗೆ ಹೊಸಲು ದಾಟಿ, ಸದ್ದಾಗದಂತೆ ಬಾಗಿಲು ಮುಚ್ಚಿಕೊಂಡು ಜಗಲಿಯಿಂದ ಇಳಿದು ಅಂಗಳಕ್ಕೆ ಹೋಗಿ ಮರೆಯಾದಳು. +ಸ್ವಲ್ಪ ಹೊತ್ತಿನಮೇಲೆ ಹಿಂತಿರುಗಿದಳು. +ಹೊರಗಡೆಯ ಗಾಳಿಯ ತಂಪಿಗೆ ಅವಳ ಮೈ ಶಾಂತವಾಗಿತ್ತು. +ಸ್ವೇದ ಉದ್ವೇಗ ಎಲ್ಲ ಅಡಗಿತ್ತು. +ಅದ್ಯಕ್ಕೆ ಲೋಕದಲ್ಲಿ ಯಾವ ವಿಶೇಷತೆಯೂ ನಡೆಯುವಂತೆ ತೋರುತ್ತಿರಲಿಲ್ಲ. +ಅತೀಂದ್ರಿಯ ವ್ಯಾಪಾರದ  ಭಯಮಿಶ್ರಿತ ಪ್ರತೀಕ್ಷೆಯನ್ನು ಸಾಧಾರಣತೆಯ ಅನುದ್ವೇಗಪರಿಸ್ಥಿತಿ ಶಮನಗೊಳಿಸಿತ್ತು. +ಅಂಗಳ ದಾಟಿ ಜಗಲಿಗೆ ಹತ್ತಿ, ತಾನು ಮುಚ್ಚಿ ಬಂದಿದ್ದ ಕದವನ್ನು ಮೆಲ್ಲಗೆ ತಳ್ಳಿದಳು, ತೆರೆದೆ ತೆರೆಯುತ್ತದೆ ಎಂಬ ಸುನಿಶ್ಚಿತ ಶ್ರದ್ಧೆಯಿಂದ. +ಆದರೆ ಅದು ತೆರೆದುಕೊಳ್ಳಲಿಲ್ಲ! +ತುಸು ಬಲವಾಗಿ ತಳ್ಳಿದಳು. +ಇಲ್ಲ! ನೂಕಿದಳು. +ಆದರೂ ಮುಚ್ಚಿಯೆ ಇತ್ತು! +ಇದ್ದಕ್ಕಿದ್ದಂತೆ ಅವಳ ಚಿತ್ತ ಸಾಧಾರಣತೆಯ ಅನುದ್ವೇಗದ ಪರಿಸ್ಥಿತಿಯಿಂದ ಅದ್ಭುತಾನುಭವದ ಸ್ಥಿತಿಗೆ ನೆಗೆದುಬಿಟ್ಟಿತು! +ತನ್ನ ಗಂಡನ ಪ್ರೇತ ತಾನು ಹೊರಗೆ ಹೋಗಿದ್ದ ಸಮಯದಲ್ಲಿ ಒಳಹೊಕ್ಕು ತಾಳ ಹಾಕಿಕೊಂಡಿತೇ? +ಹಾಗಾದರೆ ನಿನ್ನೆ ತನಗಾದಂತೆ…. +ಅವಳ ಆಲೋಚನೆ ಕೀಲುತಪ್ಪತೊಡಗಿತು…. +ಅತ್ತೆ ಮಲಗಿದ್ದಾಳೆ? +ಅಯ್ಯೊ, ಏನು ಅಚಾತುರ್ಯ! +ಏನು ಅವಿವೇಕವಾಯಿತು ತನ್ನಿಂದ! +ಎಂತಾ ಅಪರಾಧ? +ಅತ್ತೆಗಾದರೂ ಎಚ್ಚರವಾಗುವುದಿಲ್ಲವೆ? +ನಾಗಕ್ಕನಿಗೆ ಕಾಲು ನಡುತೊಡಗಿತು. +ಮುಂದೇನು ಮಾಡಬೇಕೋ ಹೊಳೆಯಲಿಲ್ಲ. +ಕುಸಿದು ಕುಳಿತಳು. ಕೂಗಿಕೊಳ್ಳೋಣವೆನ್ನಿಸಿತ್ತು. + ಅದೂ ಸಾಧ್ಯವಾಗಲಿಲ್ಲ. +ಇದೇನು ನಿಜವೋ?ಕನಸೋ? +ಕಡೆಗೆ ಇದೂ ನಿನ್ನೆಯಂತಹ ಒಂದು ಸ್ವಪ್ನವೋ ಏನೊ? +ನಿನ್ನೆ ಸ್ವಪ್ನದಲ್ಲಿ ನಿಜದಂತೆ ಕಂಡು, ಇಂದು ನಿಜದಲ್ಲಿಯೆ ಸ್ವಪ್ನದಂತೆ ಕಾಣುತ್ತಿದೆಯೊ? +ನಾಗಕ್ಕ ಕುಳಿತಲ್ಲಿಯೆ ನಿಜವನ್ನು ಮುಟ್ಟಿ ಗೊತ್ತು ಹಚ್ಚಲು ಕೈನೀಡಿ ತಡವಿ ನೆಲ ಹೊಸ್ತಿಲು ಗೋಡೆಗಳನ್ನು ಮುಟ್ಟಿದಳು. +ಛೆ!ಇದು ನಿಜವೆ!ಮನೆಯೆಲ್ಲ ಕಾಣಿಸುತ್ತಿದೆ! +ಜಗಲಿ, ಅಂಗಳ, ಜಗಲಿಯ ಮುಂಡಿಗೆಗೆ ಕೀಲಿಸಿದ್ದ ದೊಡ್ಡಿನ ಕೋಡೂ ಸಹ ಕಾಣುತ್ತಿದೆ! +– ಚಿನ್ನಮ್ಮ ಮಲಗಿದ್ದಲ್ಲಿಗೆ ಹೋಗಲೆ? ಇವತ್ತು. + ನಿನ್ನೆ ಅವರಿಬ್ಬರೂ ಒಪ್ಪಂದ ಮಾಡಿಕೊಂಡಿದ್ದಂತೆ. +ನಾಗಕ್ಕ ಚಿನ್ನಮ್ಮನ ಕೋಣೆಯಲ್ಲಿ ಅವಳ ಜೊತೆ ಮಲಗಿರುತ್ತಿದ್ದಳು. +ಆದರೆ ಚಿನ್ನಮ್ಮಗೆ ಇದ್ದಕ್ಕಿದ್ದ ಹಾಗೆ ಮೈ ಬಿಸಿಯಾಗಿ ಜ್ವರ ಬಂದಿದ್ದರಿಂದ ಅವಳು ಅಜ್ಜಿಯೊಡನೆಯೆ ಮಲಗಬೇಕಾಗಿ ಬಂತು. +ಈ ನಡುರಾತ್ರಿ ಅಲ್ಲಿಗೆ ಹೋಗುವುದಾದರೂ ಹೇಗೆ? +ಹೋದರೂ ಅಜ್ಜಿಯನ್ನೆಬ್ಬಿಸಿಲೆ ಬೇಕಾಗುತ್ತದೆ. +ಅವಳು ಕೇಳಿದರೆ ಏನೆಂದು ಹೇಳುವುದು? +ನಾಗಕ್ಕ ತನಗರಿವಿಲ್ಲದೆಯೆ ಅಳತೊಡಗಿದ್ದಳು. +ತಾನೆಂತಹ ದೌರ್ಭಾಗ್ಯೆ? +ನನ್ನಷ್ಟಕ್ಕೆ ನಾನು ಸುಮ್ಮನಿರುವುದಕ್ಕೂ ಬಿಡುವುದಿಲ್ಲವಲ್ಲಾ ವಿಧಿ? +ಅದೆಂತಹ ವಿಷಯ ಸಂಕಟದಲ್ಲಿ ಸಿಕ್ಕಿಸಿಬಿಟ್ಟಿದೆ, ನನ್ನನ್ನು? +ಕೆರೆ ಬಾವಿ ಅಲ್ಲದೆ ಬೇರೆ ಗತಿಯೆ ಇಲ್ಲವೆ ನನಗೆ? …. +ಎಷ್ಟು ಹೊತ್ತು ಕೂತಿದ್ದಳೊ ಆ ಬಾಗಿಲೆಡೆ? +ನಾಗಕ್ಕಗೆ ಗೊತ್ತಾಗಲಿಲ್ಲ. +ತಟಕ್ಕನೆ ಬಾಗಿಲು ತಾಳ ತೆಗೆದ ಸದ್ದಾಯಿತು. +ಕದವೋ ತೆರೆಯಿತು. +ಅತ್ತೆಯೆ ಬಂದಳೆಂದು ನಾಗಕ್ಕ ನೋಡುತ್ತಾಳೆ: +ಆ ಮಸಗುಗತ್ತಲೆಯಲ್ಲಿಯೂ ಸ್ಪಷ್ಟವಾಗಿ ಗೊತ್ತಾಯಿತು, ಉಟ್ಟಿದ್ದು ಸೀರೆಯಲ್ಲ ಪಂಚೆ ಎಂದು! +ಸೊಂಟಕ್ಕೆ ಸುತ್ತಿದ್ದ ಪಂಚೆಯಲ್ಲದೆ ಮತ್ತೇನೂ ಮೈಮೇಲಿಲ್ಲದ ಆ ವ್ಯಕ್ತಿ ಮುದುರಿ ಕುಳಿತಿದ್ದ ನಾಗಕ್ಕನ ಬಳಿ ನಿಂತು “ಯಾರದು?” ಎಂದಿತು. +ಚಿನ್ನಮ್ಮನ ಅಪ್ಪಯ್ಯನ ಧ್ವನಿ! +ಪ್ರಜ್ಞೆ ತಪ್ಪಿ ಕುಳಿತಲ್ಲಿಯೆ ನೆಲದ ಮೇಲೆ ಬಿದ್ದುಬಿಟ್ಟಳು ನಾಗಕ್ಕ! …. +ರಾತ್ರಿ ನಡೆದದ್ದನ್ನೆಲ್ಲಾ ನೆನೆಯುತ್ತಾ ಯಾಂತ್ರಿಕವಾಗಿ ಕೊಟ್ಟೆಕಡ್ಡಿ ಹೆರೆಯುತ್ತಾ ಕುಳಿತಿದ್ದ ವೆಂಕಟಣ್ಣನಿಗೆ ಲುಂಗೀ ಸಾಬು ಬಂದದ್ದು ಗೊತ್ತಾಗಲಿಲ್ಲ. +ನಾಯಿಗಳು ಗಟ್ಟಿಯಾಗಿ ಬೊಬ್ಬೆಹಾಕಿದ ಮೇಲೆಯೆ ತಲೆಯೆತ್ತಿದ್ದನು. +“ಸಲಾಂ ಬರ್ತದೆ ನಾಯಕರಿಗೆ!” ಕುಳ್ಳಾಗಿದ್ದರೂ ಸುಪುಷ್ಟನಾಗಿದ್ದುದರಿಂದ ಗುಜ್ಜಾಗಿ ತೋರುತ್ತಿದ್ದ ಆ ಚಪ್ಪಟೆ ಮೂಗಿನ ಸಾಬಿ, ನಸು ಸೊಂಟ ಬಗ್ಗಿಸಿದಂತೆ ಮುಂಬಾಗಿ, ಒಕ್ಕಯ್ ನಮಸ್ಕಾರ ಮಾಡಿದನು. +ಬನೀನು ಹಾಕಿ, ಕೆಂಗಪ್ಪಿನ ಬಣ್ಣದ ಕಣ್ಣುಕಣ್ಣಿನ ಲುಂಗಿ ಉಟ್ಟಿದ್ದ ಅವನು ನುಣ್ಣಗೆ ಬೋಳಿಸಿದ್ದ ತಲೆಯ ಬೋಡಿಗೆ ಒಂದು ಕೆಂಗಪ್ಪಿನ ಎಲೆವಸ್ತ್ರ ಸುತ್ತಿದ್ದನು. +ಆದರೂ ಆ ವಸ್ತ್ರ ನೆತ್ತಿಯನ್ನು ಸುತ್ತು ಹಾಕಿತ್ತೆ ಹೊರತು ಮುಚ್ಚಿರಲಿಲ್ಲವಾದ್ದರಿಂದ ಎಣ್ಣೆ ಹಾಕಿದಂತೆ ಮಿರುಗುತ್ತಿದ್ದ ಮಂಡೆಯ ಬೋಡು ಕಾಣಿಸುತ್ತಲೆ ಇತ್ತುವೆಂಕಟಣ್ಣ ಮುಖ ನಿರ್ಭಾವವಾಗಿಯೆ ಇದ್ದಿತಾದರೂ, ಸಂಪ್ರದಾಯಬದ್ದವಾಗಿ ಎಂಬಂತೆ, ಪೊದೆಮೀಸೆಯ ಕೆಳಗೆ, ತುಟಿ ನಗೆಯ ಕವಾತು ಮಾಡಿತಷ್ಟೆ! +ಅವನ ಮೈಯ ಇತರ ಭಾಗಗಳು ಯಾವುವೂ ಅಲುಗಾಡಲಿಲ್ಲ. +ಕೈಯೂ ಕಟ್ಟಿ ಹೆರೆಯುವ ಕೆಲಸ ನಿಲ್ಲಿಸಲಿಲ್ಲ. +ಸಾಬಿಯ ಸಲಾಂಇಗೆ ಯಾವ ಪ್ರತಿನಮಸ್ಕಾರದ ಮರ್ಯಾದೆಯ ಸೂಚನೆಯನ್ನೂ ತೋರಲಿಲ್ಲ. +ಬಂದವನಿಗೆ ‘ಕೂತುಕೊ’ ಎಂದು ಹೇಳಲಿಲ್ಲ. +ಲುಂಗೀಸಾಬು ಸ್ವಲ್ಪ ಹೊತ್ತು ನಿಂತಿದ್ದು ತಾನಾಗಿಯೆ ಮೆಲ್ಲಗೆ ನೆಲಕ್ಕೆ ಅಂಡೂರಿದನು, ತಾನು ಕೂರಲಿದ್ದ ಜಾಗದಲ್ಲಿ ಬಿದ್ದಿದ್ದ ಬಿದಿರಿನ ಕೀಸುಗಳನ್ನು ಕರಲಕ್ಕೆ ಸರಿಸಿಕೊಂಡು. +ವೆಂಕಟಣ್ಣ ಮತ್ತೆ ಮೊದಲಿನಂತೆ ಕಡ್ಡಿ ಕೆತ್ತತೊಡಗಿದನು. +ಅವನ ಮನಸ್ಸಿನಲ್ಲಿದ್ದ ಚಿಂತೆಯೂ ಮುಂದುವರೆಯಿತು ಮತ್ತೆ: +ನಡೆದಿದ್ದ ನಿಜಸ್ಥಿತಿ, ಅದರಲ್ಲಿ ಪಾತ್ರಧಾರಿಗಳಾಗಿದ್ದ ಆ ಮೂವರಿಗಿಲ್ಲದೆ, ಬೇರೆ ಯಾರಿಗೂ ಗೊತ್ತಾಗದಂತೆ ಕಥೆ ಹುಟ್ಟಿಸಿದ್ದರು: + ರಾತ್ರಿ ನಾಗಕ್ಕ ಬಯಲಕಡೆಗೆ ಹೋಗಬೇಕಾಗಿ ಬಂದು, ತಾನೊಬ್ಬಳೆ ಹೊಂತಿರುಗುತ್ತಿದ್ದಾಗ ಏನೋ ಬೆಳ್ಳಿಗೆ ನಿಂತಹಾಗೆ ಕಾಣಿಸಿದ್ದರಿಂದ ಹೆದರಿ ಪ್ರಜ್ಞೆತಪ್ಪಿ ಬಿದ್ದು ಬಿಟ್ಟಳು ಎಂದೂ; + ಸದ್ದು ಕೇಳಿ ಎದ್ದು ಬಂದಿದ್ದ ವೆಂಕಟಣ್ಣ ನಾಗತ್ತೆಯರು ಮುಖಕ್ಕೆ ತಣ್ಣೀರು ಎರಚಿ, ಗಾಳಿ ಬೀಸಿ, ದೆಯ್ಯಕ್ಕೆ ಒಂದು ಕೋಳಿ ಸುಳಿದುಬಿಟ್ಟು, ಮತ್ತೆ ಹಾಸಿಗೆಗೊಯ್ದು ಉಪಚರಿಸಿದರೆಂದೂ! +ಆದರೆ  ನಿಜವಾದ ನಿಜ ಏನು ಎಂದು ವೆಂಕಟಣ್ಣನಿಗೂ ಅರ್ಥವಾಗಿರಲಿಲ್ಲ! +ನಡೆದದ್ದು  ಅಚಾತುರ್ಯವೋ ಅಥವಾ ಚಾತುರ್ಯವೊ? +ಎಂಬುದರಲ್ಲಿಯೂ ಅವನಿಗೆ ಸಂಶಯ ಉಂಟಾಗಿತ್ತು. +ನಾಗತ್ತೆಯ ಮರೆಬಾಳಿನ ವಿಚಾರವಾಗಿ ಏನೇನೋ ಕೇಳಿದ್ದನು. +ಆದರೆ ಕಳೆದ ರಾತ್ರಿ ನಡೆದಮಟ್ಟದ ಅಸಹ್ಯಕ್ಕೂ ಅದು ಏರಿತ್ತೆಂಬುದು ಅವನಿಗೆ ಅದುವರೆಗೂ ಊಹಾತೀತವಾಗಿತ್ತು. +ಇದೇ ರೀತಿಯ ಅಚಾತುರ್ಯಪ್ರಯೋಗದ ಚಾತುರ್ಯವನ್ನು ಅವಳು ಯಾರ ಯಾರ ಮೇಲೆ ನಡೆಸಿ ಏನೇನು ಮಾಡಿರಲಿಕ್ಕಿಲ್ಲ? +ಸೊಸೆಯ ಕ್ಷೇಮವನ್ನು ನೆವವಾಗಿಟ್ಟುಕೊಂಡು ತನ್ನ ಕೀಳುಗೀಳಿನ ಕೂಣಿ ಹಾಕಿಕೊಂಡು ಕುಳಿತಿದ್ದಾಳಲ್ಲವೆ ಅವಳು? + ನೆನೆದಂತೆಲ್ಲ ನಡೆದದ್ದು ತುಂಬ ಅಸಹ್ಯವಾಗಿ ತೋರಿ, ತನ್ನ ಭಾವಬೀಭತ್ಸದ ಗದ್ಗದವನ್ನು ಮುಚ್ಚಿಕೊಳ್ಳಲು ವೆಂಕಟಣ್ಣ ಕೆಮ್ಮಿ ಕ್ಯಾಕರಿಸಿ ಪಕ್ಕಕ್ಕೆ ತುಪ್ಪಿದನು. +ತಲೆಯೆತ್ತಿ ಸಾಬಿಯನ್ನು ನೇರವಾಗಿ ನೋಡುತ್ತಾ “ಏನು ಬಂತು ಇಷ್ಟು ದೂರ, ಸಾಬರ ಸವಾರಿ?” – ತುಸು ವ್ಯಂಗ್ಯವಾಗಿಯೆ ಇತ್ತು ಆ ಪ್ರಶ್ನೆಯ ಧ್ವನಿ. +ವೆಂಕಟಪ್ಪನಾಯಕರ ಬಹಿರ್ವಿನಯದ ಹಿಂದೆ ಅಡಗಿದ್ದ ಧೂರ್ತಲಕ್ಷಣದ ವರಾಹ ಬಲಿಷ್ಠತೆಯನ್ನು ತಕ್ಕಮಟ್ಟಿಗೆ ಸವಿದೆ ಅರಿತಿದ್ದ ಲುಂಗೀ ಸಾಬು ದೇಶಾವರದ ನಗೆ ನಕ್ಕು “ಸಾಹುಕಾರರು ತಮ್ಮನ್ನು ಕರಕೊಂಡೆ ಬರಬೇಕು ಎಂದು ಹೇಳಿಕಳಿಸಿದ್ದಾರೆ” ಎಂದನು. +“ಯಾಕಂತೆ?” ವೆಂಕಟಣ್ಣನ ನಿಡುಸರದಲ್ಲಿ ಪ್ರತಿಭಟನೆ ಇಣುಕುತ್ತಿತ್ತು. +“ಯಾಕೋ? +ನನಗೆ ಗೊತ್ತಿಲ್ಲ. +ನಮಗೆಲ್ಲ ಹೇಳುತಾರೇನು?” +“ಹಾಗಾಂದರೆ, ಯಾಕೆ ಅಂತಾ ಕೇಳಿಕೊಂಡು ಬಾ, ಹೋಗು.” +ನಾಲ್ಕಾರು ಮೈಲಿ ಗುಡ್ಡಕಾಡು ಹತ್ತಿ ಇಳಿದು ಬಂದಿದ್ದವನಿಗೆ ವೆಂಕಟಣ್ಣ ಹಾಗೆ ತಣ್ಣಗೆ ಹೇಳಿದುದನ್ನು ಕೇಳಿ ಒಳಗೊಳಗೆ ಮೈ ಉರಿದುಹೋಯಿತು. +ಆದರೆ ಏನು ಮಾಡುತ್ತಾನೆ? +ಅವನು ಒಬ್ಬನೆ ಬಂದಿದ್ದಾನೆ! +ಎದುರು ಕುಳಿತಿರುವ ವ್ಯಕ್ತಿಯ ಮುಖ ಮೀಸೆ ಮೈಕಟ್ಟುಗಳೂ ಎಚ್ಚರಿಕೆ ಹೇಳುವಂಥವುಗಳೆ! +ಬಟ್ಟೆ ಬರೆಯಲ್ಲೇನೊ ಲುಂಗೀಸಾಬುವೆ ವೆಂಕಟಣ್ಣನಿಗಿಂತಲೂ ಜೋರಾಗಿ ಕಾಣುತ್ತಿದ್ದರೂ ಸೊಂಟದಪಂಚೆ ವಿನಾ ಬತ್ತಲೆಯಾಗಿಯೆ ಕುಳಿತಿದ್ದ ವೆಂಕಟಣ್ಣ ಗ್ರಾಮೀಣನಂತೆ ತೋರುತ್ತಿದ್ದರೂ, ವೆಂಕಟಣ್ಣ ಯಜಮಾನನಾಗಿದ್ದ ಆ ಹೂವಳ್ಳಿಯ ಹಳೆಯ ಮನೆ ಅಲ್ಲಲ್ಲಿ ಶಿಥಿಲವಾಗಿದ್ದರೂ ತನ್ನ ಬೃಹದಾಕಾರದಿಂದಲೂ ಭಾರಿ ಮುಂಡಿಗೆಗಳಿಂದಲೂ ಮಜಭೂತಾದ ತೊಲೆ ನಾಗಂದಿಗೆ ಹೆಬ್ಬಾಗಿಲುಗಳಿಂದಲೂ ಲುಂಗೀಸಾಬುಗೆ ತನ್ನ ಎದುರಿಗಿರುವ ವ್ಯಕ್ತಿ ದೊಡ್ಡ ದಂಡನಾಯಕನ ವಂಶಕ್ಕೆ ಸೇರಿ, ಆ ಲಕ್ಷಣಗಳಿಗೆ  ಬಹಿರಂಗವಾಗಿಯೂ ಆ ಗುಣಗಳಿಗೆ ಅಂತರಂಗವಾಗಿಯೂ ನಿಧಿಯೂ ಪ್ರತಿನಿಧಿಯೂ ಆಗಿದ್ದಾನೆ ಎಂಬುದನ್ನು ಮರೆಯದಂತೆ ಮಾಡಿತ್ತು. + ಅಲ್ಲದೆ…. ಸಾಬುಗೆ ನಾಯಕರ ಇನ್ನೊಂದು ಅನುಭವವೂ ಆಗಿತ್ತು. +ಆವೊತ್ತು, ಸುಮಾರು ಐದಾರು ತಿಂಗಳ ಹಿಂದೆ, ಒಂದು ವರುಷಕ್ಕೆ ಹತ್ತಿರಹತ್ತಿರವೆ ಆಗೊ ಇದ್ದರೂ ಇರಬಹುದು, ಕಮ್ಮಾರ ಸಾಲೆಯಲ್ಲಿ ಒಂದು ಸಂಗತಿ ನಡೆದಿತ್ತು. +ಆಗಿನ್ನೂ ವೆಂಕಟಣ್ಣನ ಕಾಲಿಗೆ ಕುಂಟನ ಹುಣ್ಣು ಆಗಿರಲಿಲ್ಲ. +ಕಲ್ಲೂರು ಸಾಹುಕಾರ ಮಂಜಭಟ್ಟರಲ್ಲಿ ಕರಣಿಕರಾಗಿದ್ದ (ಗುಮಾಸ್ತರು ಎಂದೂ ಕರೆಯುತ್ತಿದ್ದರು) ಕಿಟ್ಟೈತಾಳರ ಕಟ್ಟಾಣತಿಯಂತೆ ಇಜಾರದಸಾಬು, ಲುಂಗೀಸಾಬು ಮತ್ತು ಅಜ್ಜೀಸಾಬು ಮೂವರೂ ವಸೂಲಿಗೆ ಹೊರಟಿದ್ದರಂತೆ. +ಏಕೆಂದರೆ ಎಷ್ಟೋ ಸಾರಿ ಅವರು ಯಾರ ಆಣತಿಯೂ ಇಲ್ಲದೆ ತಮ್ಮ ಸ್ವಂತ ಇಚ್ಚೆಯ ಪ್ರಕಾರ ತಮ್ಮ ಸ್ವಂತ ಪ್ರಯೋಜನಕ್ಕಾಗಿಯೂ ವಸೂಲಿಬೇಟೆಗೆ ಹೊರಡುತ್ತಿದ್ದುದುಂಟು. +ಹಾಗೆ ಅವರು ಅನಧಿಕೃತವಾಗಿ ಲೂಟಿಗೆ ಹೊರಟಾಗಲೂ ಅಧಿಕೃತವಾಗಿಯೆ ವಸೂಲಿಗೆ ಬಂದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದರು. +ಕೆಲವು ಸಾಲದ ಕುಳಗಳು ಆ ಸಾಬರ ಪುಂಡಾಟಿಕೆಗೆಗೆ ಹೆದರಿ ಲಂಚದ ರೂಪದಲ್ಲಿ ಅವರಿಗೆ ಅಡಕೆ ಬಾಳೇಕಾಯಿ ಅಕ್ಕಿ ಮೆಣಸಿನಕಾಯಿ ಮುಂತಾದವುಗಳನ್ನು ತೆತ್ತು, ಬೀಸುವ ದೊಣ್ಣೆ ತಪ್ಪಿದರೆ ಸಾಕು ಎಂದು, ಅವರನ್ನು ಸಮಾಧಾನಪಡಿಸಿ ಕಳಿಸುತ್ತಿದ್ದರು. +ಆ ರುಚಿ ತಲೆಗೆ ಹತ್ತಿ ಇವರು ಮೂವರು ಪದೇ ಪದೇ ಅದೇ ಕಸುಬಿಗೆ ಕೈಹಾಕುತ್ತಿದ್ದರು. +ಅವೊತ್ತು ಇವರು ಮೂವರೂ ಸಂಜೆ ಹೊತ್ತಿಗೆ ಕಮ್ಮಾರಸಾಲೆಯ ಕಳ್ಳಂಗಡಿಯ ಬಳಿಗೆ ಬಂದಾಗ ಕೊಳ್ಳೆ ಹೊಡೆದದ್ದನ್ನೆಲ್ಲ ತುಂಬಿಕೊಂಡೆ ಬಂದಿದ್ದರು. +ಅಜ್ಜೀಸಾಬಿಯ ಕುದುರೆತಟ್ಟಿನ ಬೆನ್ನಮೇಲೆ ದುರ್ನಾತದ ಚರ್ಮಗಳಿಂದ ತುಂಬಿದ್ದ ಚೀಲವಿತ್ತು. +ಹೊಲೆಯರಿಂದ ಸುಲಿದಿದ್ದ ದನದ ಚರ್ಮಗಳು ಮತ್ತು ದೆಯ್ಯದ ಹರಕೆಗಳಲ್ಲಿ ಹಬ್ಬಗಳಲ್ಲಿ ಇತರ ಮೇಲುಜಾತಿಯವರು ಕಡಿದಿದ್ದ ಕುರಿಯ ಚರ್ಮಗಳು! +ಲುಂಗೀಸಾಬಿಯ ಹಸಿಬೆ ಚೀಲದಲ್ಲಿ ಹಿತ್ತಿಲಕಡೆಯ ಬಾಗಿಲಲ್ಲಿ ಸ್ವಾರ್ಲಮೀನು ಮಾರುವ ನೆವದಿಂದ ಅದರ ಬೆಲೆಗೆ ನಾಲ್ಕೈದು ಮಡಿಯ ಬೆಲೆಯ ಕದರಡಕೆ ಮೆಣಸಿನ ಕಾಳುಗಳನ್ನು ಮನೆಯ ಹೆಗ್ಗಡಿತಮ್ಮನವರುಗಳಿಂದ ಸುಲಿದದ್ದೆಲ್ಲ ಭರ್ತಿಯಾಗಿತ್ತು! +ಇಜಾರದ ಸಾಬಿಯ ಪಾಟೀಚೀಲದಲ್ಲಿ ಸಾಲದ ಕುಳಗಳಿಂದ ಲಂಚದ ರೂಪದಲ್ಲಿ ಪಡೆದಿದ್ದ ಸ್ವಂತಸ್ವತ್ತು ತುಂಬಿತ್ತು! +ಮೂವರು ಕಳ್ಳನ್ನೊ ಹೆಂಡವನ್ನೊ ಸಾರಾಯಿಯನ್ನೊ ಕುಡಿದು ಸುಮ್ಮನೆ ತಮ್ಮ ಮನೆಯ ಕಡೆಗೆ ಹೋಗಬಹುದಿತ್ತು. +ಆದರೆ ಸಾಬರು ತಮ್ಮ ದೌಲತ್ತು ತೋರಿಸಲು ಹೋಗಿ ಏಟು ತಿಂದಿದ್ದರು, ಮುಖ್ಯವಾಗಿ ವೆಂಕಟಪ್ಪನಾಯಕರ ಕೈಯಲ್ಲಿ! . +ಇಜಾರದ ಸಾಬು ಪುಟ್ಟಾಚಾರಿಯ ಕೈಲಿ ಕೆಲವು ಚಾಕು ಚೂರಿಗಳನ್ನು, ಅಳತೆ ಆಕಾರಗಳನ್ನು ಕೊಟ್ಟು, ತನಗೆ ಬೇಕಾದ ರೀತಿಯಲ್ಲಿ ತಯಾರು ಮಾಡಿಸಿಕೊಂಡಿದ್ದನು. +ಅವುಗಳ ಉಪಯೋಗದ ವಿಚಾರದಲ್ಲಿ ನಾನಾ ವದಂತಿಗಳು ಹುಟ್ಟಿದ್ದುವು. +ಆಗುಂಬೆ ಘಾಟಿನಲ್ಲಿ ಆಗುತ್ತಿದ್ದ ಸುಲಿಗೆ ಕೊಲೆಗಳಲ್ಲಿ ಪುಟ್ಟಾಚಾರಿ ಮಾಡಿಕೊಟ್ಟಿದ್ದ ಆಯುಧಗಳೂ ಪ್ರಯೋಗವಾಗುತ್ತಿದ್ದುವು ಎಂದು ಗಾಳಿಸುದ್ದಿ ಹಬ್ಬತ್ತು. +ಆಚಾರಿಯೆ ಅದಕ್ಕೆ ಕಾರಣ ಎಂದು ಆರೋಪಿಸಿದ ಸಾಬೂಗೂ ಅವನಿಗೂ ಅದರ ವಿಚಾರದಲ್ಲಿ ಮಾತಿಗೆ ಮಾತು ಮಸೆದು ಅವರಿಬ್ಬರಲ್ಲಿಯೂ ಮನಸ್ತಾಪ ಉಂಟಾಗಿತ್ತು. +ಅಲ್ಲದೆ ಅವುಗಳ ತಯಾರಿಕೆಗಾಗಿ ಕೊಡಬೇಕಾಗಿದ್ದ ರುಸುಮನ್ನೂ ಇಜಾರದಸಾಬು ಕೊಟ್ಟಿರಲಿಲ್ಲ. +ಕೇಳಿದರೆ ‘ಪುಡೀಸಾಬುಗಾಗಿಯೆ ಅವುಗಳನ್ನು ಮಡಿಸಿದ್ದು; +ಅವನನ್ನೆ ಕೇಳು’ ಎನ್ನುತ್ತಿದ್ದನು. +ಪುಡೀಸಾಬುವನ್ನು ಕೇಲಿದಾಗ ಅವನು ‘ನನಗೂ ಅದಕ್ಕೂ ಏನೂ ಸಂಬಂಧವಿಲ್ಲ’ ಎನ್ನುತ್ತಿದ್ದನು. +ಅದರ ಮೇಲಿನ ರಚ್ಚಿಗಾಗಿ ಇಜಾರದಸಾಬು ‘ಸಾಹುಕಾರ ಮಂಜಭಟ್ಟರಿಗೆ ಮಾಡಿಕೊಡಬೇಕಾಗಿದ್ದ ಕತ್ತಿ, ಕುಳ, ಅಡಕೆ ಸುಲಿಯುವ ಮೆಟ್ಟುಗತ್ತಿ, ಕುಡುಗೋಲು ಇವುಗಳನ್ನು ಪುಟ್ಟಾಚಾರಿ ಏಕೆ ಇನ್ನೂ ಕೊಟ್ಟಿಲ್ಲ? +ವಿಚಾರಿಸಲು ಕಿಟ್ಟ ಊತಾಳರು ಹೇಳಿಕಳಿಸಿದ್ದಾರೆ’ ಎಮದು ಜೋರು ಮಾಡಿದನು. +“ನೀನು ಯಾವನೋ ಕೇಳೋಕೆ? +ಹೋಗಿ ಹೇಳು ನಿನ್ನ ಐತಾಳರಿಗೆ, ನಾನು ಮಾಡಿ ಕೊಡಾದಿಲ್ಲ ಅಂತಾ!” ಪುಟ್ಟಾಚಾರಿ ಬೇಕೆಂತೆಲೆ ಮೂಗು ಮುರಿಯುವಂತೆ ಮಾತಾಡಿದ್ದನು. +“ನಾನು ಯಾವನು ಅಂದರೆ, ನಿನ್ನ ಜುಟ್ಟು  ಹಿಡಿದು ಎಳೆದುಕೊಂಡು ಹೋಗುವ ವಸೂಲಿ ಸಾಹೇಬ!” +“ಸಾಹೇಬನಂತೆ ಸಾಹೇಬ! +ದನಾ ತಿನ್ನಾ ಮುಂಡೆಗಂಡ ನಿನಗೆಷ್ಟೊ ದೌಲತ್ತು?” +“ಏನು ಗಂಡ ಗಿಂಡ ಅಂತೀಯ, ಬಾನ್‌ಚಿತ್‌ ಬೋಳೀಮಗನೆ? +ಹಲ್ಲು ಉದುರಿಸಿ ಬಿಟ್ಟೇನು ಹುಷಾರ್‌!” +“ಚೆಲ್ಲಣದಾಗಿ ಹೇತುಕೊಳ್ಳಾಹಾಂಗೆ ಮಾಡ್ತೀನಿ ನೋಡು ನಿನಗೆ, ಸೂಪರ್‌ ಸೂಳೆ ಮಗನೆ!” ಪುಟ್ಟಾಚಾರಿ ಕೈಯಲ್ಲಿ ಹಿಡಿದಿದ್ದ ಕಬ್ಬಿಣದ ಸುತ್ತಿಗೆಯೊಡನೆ ಮೇಲೆದ್ದನು. +“ಸೂವರ್ ಗೀವರ್‌ ಅಂತೀಯೇನೋ, ಮಾದರ್‌ಚತ್‌? +ನಿನ್ನ ಜಾತೀನೆಲ್ಲ ಕೆಡಿಸಿ ಬಿಡ್ತೀನಿ ನೋಡು ಮೊಖಕ್ಕೆ ಉಗಿದು! …. ಹ್ಯಾಕ್ ಥೂ!” ಇಜಾರದ ಸಾಬಿ ಪುಟ್ಟಾಚಾರಿಯ ಕಡೆಗೆ ಉಗಿದುಬಿಟ್ಟನು. +ಪುಟ್ಟಾಚಾರಿ ತನ್ನ ಕೈಲಿದ್ದ ಸುತ್ತಿಗೆಯಿಂದ ಸಾಬಿಯ ಮುಖ ಮೈ ನೋಡದೆ ಬೀಸಿದನು. +ದಾಂಡಿಗ ಸಾಬಿ ಹಿಂದಕ್ಕೆ ಸರಿದುದರಿಂದ ಅವನು ರಕ್ಷಣೆಗಾಗಿ ಚಾಚಿದ್ದ ಕೈಗೆ ಮಾತ್ರ ಪೆಟ್ಟು ತಗುಲಿತು. +ಕೆಚ್ಚಿನಲ್ಲಿ ಗಟ್ಟಿಗನಾಗಿದ್ದರು ಆಳುತನದಲ್ಲಿ ಸಣಕಲಾಗಿದ್ದ ಪುಟ್ಟಾಚಾರಿಯ ಮೇಲೆ ಸಾಬಿ ನುಗ್ಗಿದ ರಭಸಕ್ಕೆ ಆಚಾರಿ ಕಬ್ಬಿಣದ ಸಾಮಾನುಗಳ ರಾಶಿಯ ಮೇಲೆ ಬಿದ್ದು ‘ದುಣ್ಣ ಮುಂಡೆಗಂಡ, ನಿನ್ನ ಎದೆಗೆ ರಣಹೊಡಿಯ’ ಎಂದು ಬೈಯುತ್ತಾ ಏಳಲು ಪ್ರಯತ್ನಿಸುತ್ತಿದ್ದನು. +ಅಷ್ಟರಲ್ಲಿ ಕಳ್ಳಂಗಡಿಯ ಕಡೆಯಿಂದ ಕೂಗಾಟವನ್ನು ಕೇಳಿ ಓಡಿ ಬಂದಿದ್ದ ಹೂವಳ್ಳಿ ವೆಂಕಟಣ್ಣ ಇಜಾರದ ಸಾಬಿಯ ರಟ್ಟೆಯನ್ನು ಬಲವಾಗಿ ಹಿಡಿದುಬಿಟ್ಟನು. +ಅವನು ಆಚಾರಿಯ ಕಡೆಗೆ ಮುಂಬರಿಯದಂತೆ. +ಇಜಾರದ ಸಾಬಿಯ ಸಹಾಯಕ್ಕೆ ನುಗ್ಗಿ ಬಂದ ಲುಂಗೀಸಾಬಿ ಅಲ್ಲಿಯೇ ಬಿದ್ದಿದ್ದ ಒಂದು ಕಬ್ಬಿಣದ ತುಂಡಿನಿಂದ ವೆಂಕಟಣ್ಣನ ತೋಳಿಗೆ ಹೊಡೆಯಲು ಹವಣಿಸುವಷ್ಟರಲ್ಲಿ ವೆಂಕಟಣ್ಣ ಅವನನ್ನು ಝಾಡಿಸಿ ಒದೆದ ಹೊಡೆತಕ್ಕೆ ಲುಂಗೀಸಾಬಿ ಒಂದು ಉರುಳು ಉರುಳಿ, ಅಲ್ಲಿ ಹಳಿಕಟ್ಟಲು ತಂದಿಟ್ಟಿದ್ದ ಒಂದು ಗಾಡಿಚಕ್ರಕ್ಕೆ ಡಿಕ್ಕಿ ಹೊಡೆದು, ಅದನ್ನು ಮೈಮೇಲೆ ಬೀಳಿಸಿಕೊಂಡನು. +ಅಷ್ಟರಲ್ಲಿ ಬಲಿಷ್ಠನೂ ಭೀಮಕಾಯನೂ ಆಗಿದ್ದ ಇಜಾರದ ಸಾಬಿ ವೆಂಕಟಣ್ಣನ ಕಡೆಗೆ ತಿರುಗಿ, ತನ್ನ ರಟ್ಟೆಯನ್ನು ಅವನ ಹಿಡಿತದಿಂದ ಬಿಡಿಸಿಕೊಳ್ಳಲು ಪ್ರಯತ್ನಪಟ್ಟನು. +ಆದರೆ ತಾರುಣ್ಯದಲ್ಲಿ ಗರಡಿಸಾಧನೆ ಮಾಡಿ, ಕತ್ತಿವರಸೆ, ದೊಣ್ಣೆಕಾಳಗ, ಮಲ್ಲಯುದ್ಧ ಮೊದಲಾದವುಗಳಲ್ಲಿ ಹೆಸರು ಪಡೆದಿದ್ದ ವೆಂಕಪ್ಪನಾಯಕನ ಬಲಿಷ್ಠತೆ ಮತ್ತು ಭೀಮಕಾಯತ್ವದ ಮುಂದೆ ಅವನ ಆಟ ನಡೆಯಲಿಲ್ಲ. +ಅಷ್ಟೇ ಅಲ್ಲ, ಒಂದೇ ನಿಮಿಷದಲ್ಲಿ ಇಜಾರದ ಸಾಬುವನ್ನು ನೆಲಕ್ಕೆ ಬೀಳಿಸಿ, ಅವನ ಹಿಂಗೈಮುರಿಕಟ್ಟಿಯೂ ಆಗಿತ್ತು! +ಅಜ್ಜೀಸಾಬಿ ಗಡ್ಡ ಕಿತ್ತುಕೊಳ್ಳುತ್ತಾ ಬಂದು ದಮ್ಮಯ್ಯ ಗುಡ್ಡೆಹಾಕಿ ಬಿಡಿಸಿಕೊಳ್ಳದಿದ್ದರೆ ಏನೇನಾಗುತ್ತಿತ್ತೊ? …. +ಅದೆಲ್ಲ ಇನ್ನೂ ಮನಸ್ಸಿನಲ್ಲಿ ಹಸಿಯಾಗಿಯೆ ಇರುವಂತೆ ತೋರುತ್ತಿದ್ದ ಆ ಘಟನೆಯ ಬಿಸಿನೆನಪು ಲುಂಗಿಸಾಬುವನ್ನು ಮಾತಿನಲ್ಲಿಯೂ ನಡತೆಯಲ್ಲಿಯೂ ಎಚ್ಚರಿಕೆಯಿಂದಿರುವಿಕೆ ಮಾಡಿತ್ತು. +ಇತರರ ಮುಂದೆ ವರ್ತಿಸುವಂತೆ ಈ ಅಲಘುವ್ಯಕ್ತಿಯೊಡನೆ ವ್ಯವಹರಿಸುವುದು ತರವಲ್ಲ ಎಂದು ನಿಶ್ಚಯಿಸಿ, ಅಷ್ಟು ದೂರದಿಂದ ನಡೆದುಬಂದಿದ್ದ ತನ್ನ ದಣಿವಿಗೆ ಏನಾದರೂ ಸ್ವಂತಕ್ಕಾಗಿ ಪಡಿ ಪಡೆಯುವ ಉದ್ದೇಶದಿಂದ ಸುಳ್ಳುದೈನ್ಯವನ್ನು ಪ್ರದರ್ಶಿಸುತ್ತಾ ಹುಸಿವಿನಯದಿಂದ ಬೇಡಿದನು ಲುಂಗಿಸಾಬು: +“ಒಂದು ಬಾಳೆಯ ಗೊನೆ ಆದರೂ ಕೊಡ್ತೀರಾ, ನಾಯಕರೆ?” +ಆ ಪುಂಡರ ಲಂಚಲೂಟಿಯ ವಿಚಾರವನ್ನೆಲ್ಲ ಚೆನ್ನಾಗಿ ತಿಳಿದಿದ್ದ ವೆಂಕಟಣ್ಣ ಕತ್ತೆತ್ತಿ ನೋಡದೆ ಹುಸಿನಗುತ್ತಾ “ಯಾಕೆ? +ಬಾಳೆಗೊನೆ ತರಾಕೆ ಹೇಳಿದರೇನು ನಿನ್ನ ಸಾಹುಕಾರರು?” ಎಂದು ಸಿಂಬಳ ಸುರಿದು ಎಸೆದು, ತಾನು ಕುಳಿತಿದ್ದ ಕಂಬಳಿಯ ಸೆರಗಿನಿಂದಲೆ ಬಗ್ಗಿ ಮೂಗು ಒರೆಸಿಕೊಂಡನು. +“ಇವನ ಮೈ ನೋಡಿದರೆ ಇಷ್ಟು ದೊಡ್ಡು; +ಮೀಸೆಯೋ ಮಹಾ ಮೀಸೆ; +ಮನೆಯೂ ದೊಡ್ದದೆ; +ಆದರೆ ಮನಸ್ಸು ಮಾತ್ರ ಬಹಳ ಸಣ್ಣ: ಕೂತಲ್ಲೆ ಕ್ಯಾಕರಿಸಿ ತುಪ್ಪುತ್ತಾನೆ; +ಸಿಂಬಳ ಸುರಿದು ಕಂಬಳಿಗೇ ಒರಸುತ್ತಾನೆ!” ಎಂದೆಲ್ಲ ಒಳಗೊಳಗೆ ಅಂದುಕೊಂಡ ಲುಂಗಿಸಾಬು “ಸಾಹುಕಾರರು ಯಾಕೆ ಹೇಳುತ್ತಾರೆ? +ಅವರಿಗೇನು ಬಾಳೆಕೊನೆಗೆ ಬರಗಾಲವೆ? +ನಿಮ್ಮವರ ತೋಟಗಳೆಲ್ಲ ಅವರವೇ ಅಲ್ಲವೆ? +ನೀವು ಕೊಡುವ ಬಾಳೆಕೊನೆಯೂ ಅವರದ್ದೇ ಆಗುತ್ತದೆ!” ಎಂದು ವೆಂಕಟಪ್ಪನಾಯಕರ ಗದ್ದೆ ತೋಟಗಳೆಲ್ಲ ಮಂಜಭಟ್ಟರ ಸಾಲಕ್ಕೆ ಈಡಾಗಿರುವುದನ್ನು ವ್ಯಂಗ್ಯವಾಗಿ ಮೂದಲಿಸುವಂತೆ ಮಾತಾಡಿದ್ದನು. +“ಮತ್ತೆ?ನಿನ್ನ ಅಪ್ಪ ನಟ್ಟು ಬೆಳೆಸಿದ್ದು ಅಂತಾ ಮಾಡಿದೀಯಾ? +ಬಿಟ್ಟಿ ಕೊಡುವುದಕ್ಕೆ ನಿನಗೆ? +ಬಾಳೆಕೊನೆ?” ವೆಂಕಟಣ್ಣ ರೇಗಿ ನುಡಿದನು. +“ನನ್ನ ಅಪ್ಪ ಯಾಕೆ ನಿಮ್ಮ ಮನೆಯಲ್ಲಿ ಮಲಗುವುದಕ್ಕೆ ಬರುತ್ತಾನೆ?” ಸಾಬಿಯ ಮಾತಿನ ಅಶ್ಲೀಲದ ಧ್ವನಿ ಮುಂದುವರೆಯಿತು +“ನಿಮ್ಮ ಅಪ್ಪನೆ ನೆಟ್ಟು ಬೆಳೆಸಿದ್ದು ಇರಬೇಕು ಅಲ್ಲವೆ?”ಕೊಟ್ಟೆಕಡ್ಡಿ ಹೆರೆಯುತ್ತಿದ್ದ ವೆಂಕಟಣ್ಣ ಕತ್ತಿಯೊಂದಿಗೆ ಸರಕ್ಕನೆ ಎದ್ದನು. +ಕೂತಿದ್ದ ಸಾಬು ಚಂಗನೆ ನೆಗೆದದ್ದು ಹೆಬ್ಬಾಗಿಲ ಕಡೆಗೆ ನುಗ್ಗುವ ಅವಸರದಲ್ಲಿ ಒಂದು ಕಂಬಕ್ಕೆ ಢಿಕ್ಕಿ ಹೊಡೆದು ಧಾತುಹಾರಿ ಕೆಳಗೆ ಬಿದ್ದನು! +ಹಣೆ ಒಡೆದು ನೆತ್ತರು ಸುರಿಯತೊಡಗಿತ್ತು! +“ನಾ ಗಟ್ಟಿಯಾಗಿ ಕೆಮ್ಮಿದ್ರೇ ಇವನಿಗೆ ಲುಂಗಿ ಒದ್ದೆ ಆಗ್ತದೆ! +ಮತ್ತೆ ಪಟ್ಟಂಗ ಹೊಡೀತಾನೆ, ಪಟಿಂಗ, ಬಾಯಿಗೆ ಬಂದ್ಹಾಂಗೆ, ಲಂಗು ಲಗಾಮು ಇಲ್ದೆ! +ನೀಚ ಲೌಡೀಮಗಾ!” ವೆಂಕಟಣ್ಣ ತನಗೆ ತಾನೆ ಹೇಳಿಕೊಂಡನು ನಕ್ಕು. +ತಣ್ಣೀರೆರಚಿ ಗಾಳಿ ಬೀಸಲು ಲುಂಗಿಸಾಬು ಮೈ ತಿಳಿದೆದ್ದನು. +ಒಣ ಸೆಗಣಿಪುಡಿ ಹಾಕಿ ಗಾಯದ ರಕ್ತ ನಿಲ್ಲಿಸಿದ ಮೇಲೆ ಹಣೆಗೊಂದು ಕೊಟ್ಟ ಬಟ್ಟೆ ಕಟ್ಟಿಕೊಂಡು, ಹೆಬ್ಬಾಗಿಲು ದಾಟಿ ಮೆಟ್ಟಿಳಿದು ಹೋದನು. +ಆದರೆ ತನಗಾಗಿದ್ದ ಹಣೆಗಾಯದ ಸಾಕ್ಷಿಯಿಂದ ತನಗೊದಗಿದ್ದ ಅವಮಾನಕ್ಕೆ ತಕ್ಕ ಪ್ರತೀಕಾರ ಮಾಡುವ ಸಲುವಾಗಿ, ಅವನು ತನ್ನ ಮೇಲೆ ಅದೆಂತಹ ದೂರು ಹೇಳಿ, ತನ್ನನ್ನು ಎಂತೆಂತಹ ಕಷ್ಟಪರಂಪರೆಗಳಿಗೆ ಸಿಕ್ಕಿಸಲಿದ್ದಾನೆ ಎಂಬುದನ್ನು ವೆಂಕಟಣ್ಣ ಆಗ ಹೇಗೆ ತಾನೆ ಅರಿತಾನು? +ಕೋಣೂರಿನಲ್ಲಿದ್ದುಕೊಂಡು ಐಗಳ ಕೂಲಿಮಠದಲ್ಲಿ ಓದುತ್ತಿದ್ದ ಹುಡುಗರೆಲ್ಲ ಬೆಳಿಗ್ಗೆ ಗಂಜಿಯುಂಡಾದ ಮೇಲೆ ಎಂದಿನಂತೆ ಕೆಳಗರಡಿಗೆ ಬಂದರು. +ಹಲಗಣೆಯ ಕಂಡಿಯಲ್ಲಿ ನೋಡಿದಾಗಲೆ ಅವರಿಗೆ ನೆನಪಾದದ್ದು. +“ಓಹೋ, ಇವತ್ತು ಆಡಿಕೆ ಕಣ್ರೋ, ಐಗಳು ಇಲ್ಲ.” +“ಮುಂದಿನ ಬೇಸ್ತುವಾರದತನಕ ಅಲ್ಲೇನೋ ಆಡಿಕೆ?” +“ಬೇಸ್ತುವಾರದ ತನಕ ಅಂತಾನೆ! +ಆಯಿತುವಾರದ ತನಕ ಕಣೋ!” +“ಬನ್ರೋ, ಲಗ್ಗೆಮಣೆ ಆಡಾನ.” +“ನೀವೆಲ್ಲಾ ಕಣಕ್ಕೆ ಹೋಗ್ರೋ, ನಾ ಲಗ್ಗೆ ಚಂಡು ಮಣೆ ಹುಡುಕಿ ತರತೀನಿ…. +ನಿನ್ನೆ ಆಡಿದಮೇಲೆ ಎಲ್ಲಿಟ್ಟೆಯೊ ಅವನ್ನ, ಏ ತಿಮ್ಮೂ?” +“ನಾನಲ್ಲ ಕಣೋ ಇಟ್ಟಿದ್ದು; + ಧರ್ಮು ಅಂತಾ ಕಾಣ್ತದೆ.” + “ಎಲ್ಲಿಟ್ಟೀಯೋ, ಧರ್ಮು?” + “ಅಂವ ಇಲ್ಲಿ ಇಲ್ಲಲ್ಲೋ! +ಎಲ್ಲಿ ಹೋದನೋ? …. ” +“ಮತ್ತೆಲ್ಲಿ ಹೋಗ್ತಾನೆ? +ಗಂಜಿ ಉಂಡಾಂವ ಹಳ್ಳದ ಕಡೆಗೆ ಹೊರಟಾ ಅಂತಾ ಕಾಣ್ತದೆ!”ಹುಡುಗರೆಲ್ಲ ನಕ್ಕರು. +ಲಗ್ಗೆಮಣೆ ಚಂಡು ತರಲು ಹೊರಟಿದ್ದವನು ಅವನ್ನು ಹುಡುಕಿ ತರಲು ಮನೆಯೊಳಗೆ ಓಡಿದನು. +ಉಳಿದವರು ಕೇಕೆ ಹಾಕುತ್ತಾ ಕಣದ ಅಂಗಳಕ್ಕೆ ಓಡಿದರು. +ಮಣೆ ಚೆಂಡು ಎರಡನ್ನೂ ಹುಡುಕಿ ತಂದಮೇಲೆ, ಎಳಬಿಸಿಲು ಮನೋಹರವಾದ ಮರದಳಿರಿನಿಂದ ಸೋಸಿ ಬಂದು ನೆಳಲು ಬೆಳಕಿನ ರಂಗೋಲಿ ಎರಚಿದಂತಿದ್ದ ಕಣದ ವಿಶಾಲವಾಗಿದ್ದ ಅಂಗಳದಲ್ಲಿ ಮಣೆಯನ್ನು ಕಟ್ಟಿಯ ಆಪುಕೊಟ್ಟು ಹೂಡಿ, ಲಗ್ಗೆಯಾಟ ಪ್ರಾರಂಭಿಸುವ ಮೊದಲು ಎರಡು ಪಕ್ಷಗಳನ್ನು ವಿಂಗಡಿಸತೊಡಗಿದರು. +ತಿಮ್ಮು ಒಂದು ಕಡೆಯ ಮುಖಂಡನೆಂದೂ ಕಾಡು ಮತ್ತೊಂದು ಕಡೆಯ ಮುಖಂಡನೆಂದೂ ಗೊತ್ತಾಗಿ, ತಮಗೆ ಬೇಕಾದವರನ್ನು ಹೆಸರು ಹಿಡಿದು ಕೂಗಿದರು. +ಲಗ್ಗೆಯಾಟದಲ್ಲಿ ಮಣೆಗಾಗಲಿ ಹಗೆಗಾಗಲಿ ಚೆಂಡನ್ನು ಗುರಿಯಿಟ್ಟು ಹೊಡೆಯುವುದರಲ್ಲಿ ಎತ್ತಿದಕ್ಕೆ ಆಗಿದ್ದ ಧರ್ಮುವ ಹೆಸರನ್ನು ತಿಮ್ಮು ಮೊದಲು ಕೂಗಿದಾಗ, ಕಾಡು ಅದಕ್ಕೆ ತಕರಾರು ಮಾಡಿದರು. +ಧರ್ಮುವ ಹೆಸರನ್ನು ಕೂಗುವುದಾದರೆ ತನಗೇ ಆ ಮೊದಲ ಸರದಿ ಬೇಕೆಂದು, ಹುಡುಗರೆಲ್ಲ ಅತ್ತ ಇತ್ತ ಕಣ್ಣು ತಿರುಗಿಸಿ ಹುಡುಕಿನೋಡಿದಾಗಿ ತಮ್ಮ ಗುಂಪಿನಲ್ಲಿ ಧರ್ಮು ಇಲ್ಲದಿರುವುದು ಮತ್ತೆ ಅವರೆಲ್ಲರ ಗಮನಕ್ಕೆ ಬಂತು. +“ಅಯ್ಯೋ ಧರ್ಮು ಎಲ್ಲಿ ಹೋದನೊ?ಕರೆಯೊ!” +“ಹೊರಕಡೆಗೆ ಹೋಗಿರಬೇಕೊ, ಬರ್ತಾನೊ. +ನಿನ್ನೆ ಹೊಟ್ಟೆನೋವು ಅಂತಾ ಅಳ್ತಿದ್ದ ಕಣೋ.” +“ಹೊಟ್ಟೆನೋವು ಗಿಟ್ಟೆನೋವು ಎಲ್ಲ ಬರೀ ನೆವ ಕಣೋ….” +“ಮತ್ತೆ?” +“ಅವನ ಅಪ್ಪಯ್ಯನ್ನ ನೆನಸಿಕೊಂಡಾ ಅಂತಾ ಕಾಣ್ತದೆ. +ಆಗಾಗ ಕದ್ದುಕೂತು ಅಳ್ತಿರ್ತಾನೆ. +ಫಕ್ಕನೆ ಯಾರಾದ್ರೂ ಕಂಡ್ರೆ ಕೇಳಿದ್ರೆ, ಹೊಟ್ಟೆನೋವು ತಲೆನೋವು ಅಂತಾ ಸುಳ್ಳುಸುಳ್ಳೆ ಹೇಳ್ತಾನೆ….”ಇದ್ದಕ್ಕಿದ್ದ ಹಾಗೆ ಮಕ್ಕಳ ಗುಂಪು ನಿಃಶಬ್ದವಾಯಿತು. +ಎಲ್ಲರ ಮುಖದಲ್ಲಿಯೂ ಏನೊ ಸಂಕಟದ ಸಹಾನುಭೂತಿಯ ಛಾಯೆ ಸುಳಿಯಿತು. +ಅವರಲ್ಲಿ ಒಬ್ಬೊಬ್ಬರಿಗೂ ಆ ಗುಟ್ಟು ಗೊತ್ತಿತ್ತು ಎಂಬುದು ಸ್ಪಷ್ಟವಾಗಿತ್ತು. +ಅಲ್ಲದೆ ಮೇಲೆಮೇಲೆ ಏನೂ ಗೊತ್ತಿಲ್ಲದವರಂತೆ ನಿಶ್ಚಿಂತರಾಗಿ ಕ್ರೀಡಾಮಗ್ನರಾಗಿ ತೋರುತ್ತಿದ್ದರೂ ಒಬ್ಬೊಬ್ಬರೂ ಅದರ ವಿಚಾರವಾಗಿ ಗುಟ್ಟಾಗಿ ಆಲೋಚಿಸಿದ್ದರು, ವ್ಯಸನಪಟ್ಟಿದ್ದರು, ಆಗೊಮ್ಮೆ ಈಗೊಮ್ಮೆ ಪರಸ್ಪರ ವಿಚಾರ ವಿನಿಮಯವನ್ನೂ ಮಾಡಿಕೊಂಡಿದ್ದರು. +ಧರ್ಮುವಿನ ಗುಣ ಸಾಮರ್ಥ್ಯಗಳಿಗೆ ಮಾತ್ರವಲ್ಲದೆ ಈ ಕಾರಣಕ್ಕಾಗಿಯೂ ಎಲ್ಲರೂ ಅವನನ್ನು ವಿಶೇಷವಾದ ಅಕ್ಕರೆಯಿಂದ ಕಾಣುತ್ತಿದ್ದರು; +ಅವನ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಲು ಪ್ರಯತ್ನಿಸುತ್ತಿದ್ದರು. +ಆದ್ದರಿಂದಲೆ ತಿಮ್ಮು ಕೈಯಲಿದ್ದ ಲಗ್ಗೆಯ ಚೆಂಡನ್ನು ಯಾಂತ್ರಿಕವಾಗಿ ತಿರುಗಿಸುತ್ತಾ ಹೇಳಿದನು, ಅತ್ತ ಇತ್ತ ನೋಡುತ್ತಾ, ಗೆಳೆಯರಿಗೆ ಮಾತ್ರ ಯಾವುದೋ ರಹಸ್ಯವನ್ನು ಬಯಲುಮಾಡುವಂತೆ: “ಹೌದು ಕಣ್ರೋ! +ಅವತ್ತೊಂದು ದಿವ್ಯ, ರಾತ್ರಿ, ನಾವೆಲ್ಲ ಮಲಗಿಕೊಳ್ತೀವಲ್ಲ ಒಟ್ಟಿಗೆ ಜಗಲೇಲಿ ಅಲ್ಲಿ. +ನೀವೆಲ್ಲ ನಿದ್ದೆ ಮಾಡ್ತಿದ್ರಿ; +ನಂಗೆ ಎಚ್ಚರಿತ್ತು…. +ಚಿಕ್ಕಯ್ಯ, – ಮುಕುಂದಚಿಕ್ಕಯ್ಯ, – ಧರ್ಮುನ ಪಕ್ಕದಾಗೆ ಮಲಗಿಸಿಕೊಳ್ತಾರಲ್ಲಾ? +ಯಾಕೆ ಅಂತೀರಿ?ಅದಕ್ಕೇ! +ಧರ್ಮು ನಿದ್ದೆ ಮಾಡ್ತಾನೇ ಎದ್ದು ಬಿಡ್ತಾನೆ ಒಂದೊಂದು ಸಾರಿ. +‘ಅವ್ವಾ ಅವ್ವಾ, ಅಪ್ಪಯ್ಯ ಬಂದ್ರು, ನೋಡಿಲ್ಲಿ!’ ಅಂತಾ ದಡ ದಡ ಹೋಗ್ತಾ ಹೇಳ್ತಾನೆ: +‘ಬಾಗಿಲು ತೆಗಿ, ಅವ್ವಾ, ಅಪ್ಪಯ್ಯ ಕರೀತಾನೆ!’ ಅಂತಾ! +ನಾನು ‘ಚಿಕ್ಕಯ್ಯಾ ಚಿಕ್ಕಯ್ಯಾ’ ಅಂತಾ ಕರೀಬೇಕು ಅಂತಾ ಮಾಡಿದ್ದೆ. +ಅಷ್ಟರಲ್ಲಿ ಅವರಿಗೇ ಫಕ್ಕನೆ ಎಚ್ಚರಾಯ್ತು. +ಎದ್ದು ಓಡಿಹೋಗಿ ಅವನ್ನ ಹಿಡುಕೊಂಡು ಬಂದು ಕೂರಿಸಿ ಎಚ್ಚರಮಾಡಿದ್ರು: ‘ಧರ್ಮು! +ಧರ್ಮು!ಕಣ್ಣು ಬಿಡೋ! +ನಾನು ಕಣೋ ನಿನ್ನ ಸಣ್ಣಮಾವ! +ಎಚ್ಚರ ಮಾಡಿಕೊಳ್ಳೋ!’ ಅಂತಾ ಹೇಳಿ, ಅವನ್ನ ಅಳ್ಸಾಡ್ಸಿ ಎಚ್ಚರಮಾಡಿದ್ರು! +”ತಿಮ್ಮು ಮುಗಿಸುವುದನ್ನೆ ಕಾಯುತ್ತಿದ್ದ ಕಾಡು ಅಳುಮೊಗ ಮಾಡಿಕೊಂಡು ಹೇಳಿದನು: “ಮತ್ತೇ! +ಮತ್ತೇ!ನಾ ಹೇಳ್ತೇನಿ ಕೇಳ್ರೋ! +ಮತ್ತೇ!ಮತ್ತೇ!” ಉಗುಳು ನುಂಗಿಕೊಂಡು ಮುಂದುವರೆಸಿದನು: + “ಅವತ್ತೊಂದು ದಿವ್ಸ ಕಣೋ! +ನಾ ಬಾಯಿತಪ್ಪಿ ಹಳೆಮನೆ ಅತ್ತೆಮ್ಮನ್ನ, ಎಲ್ಲರೂ ಕರೀತಾರೆ ಅಂತಾ ನಾನೂ, – ಬಾಯಿತಪ್ಪಿ ಅಂದೆ ಅಂತಾ ಇಟ್ಟುಗೊ, – ‘ಹುಚ್ಚು ಹೆಗ್ಗಡ್ತಿ’ ಅಂತಾ ಅಂದ್ಬಿಟ್ಟೆ! +ಧರ್ಮು ಹಿಂದುಗಡೆ ಇದ್ದದ್ದು ಮರೆತೇಹೋಗಿತ್ತು ಕಣೋ! +ಎಂಥಾ ಕೆಲ್ಸಾ ಆಯ್ತು ಅಂತೀಯ? +ಧರ್ಮು ಬಿಕ್ಕಿಬಿಕ್ಕಿ ಅಳಾಕೆ ಸುರುಮಾಡಿಬಿಟ್ಟ! +ನಾನು ‘ದಮ್ಮಯ್ಯ!ತಪ್ಪಾಯ್ತೊ! +ಇನ್ನೆಂದಿಗೂ ಹೇಳಾದಿಲ್ಲ ಹಾಂಗೆ.’ ಅಂತಾ ತಬ್ಬಿಕೊಂಡು ದಮ್ಮಯ್ಯಗುಡ್ಡೆ ಹಾಕಿದ ಮ್ಯಾಲೇ ಸೊಲ್ಪ ಸಮಾಧಾನಕ್ಕೆ ಬಂದ! …. ” +ಇನ್ನೊಂದು ಕೀಚಲುಗಂಟಲು ನಡುವೆ ಬಾಯಿಹಾಕಿ ಕೆಳದನಿಯಲ್ಲಿ ಹೇಳತೊಡಗಿತು: ಹಿಂದಿನ ಹಿರಿಯರಿಬ್ಬರು ಪ್ರಾರಂಭಮಾಡಿದ ರೀತಿ ಆವಾಗಲೆ ಆರ್ಷೇಯ ಸಂಪ್ರದಾಯವಾಗಿಬಿಟ್ಟಿತ್ತು: + “ಆವತ್ತೊಂದು ದಿವ್ಸ, ‘ಭಗವಂತ ಪ್ರಾರ್ಥಿಸಿದರೆ ಭಕ್ತ ಕೊಡ್ತಾನೆ’ ಅಂತಾ ಐಗಳು ಹೇಳಿದ್ರಲ್ಲಾ?” ಅಲ್ಲಲ್ಲಿ ನಗೆಯೆದ್ದು ಕೀಚಲುಗಂಟಲು ತಬ್ಬಿಬ್ಬಾಯಿತು! +“ಭಕ್ತ ಪ್ರಾರ್ಥಿಸಿದರೆ ಭಗವಂತ ಕೊಟ್ಟೇಕೊಡುತ್ತಾನೆ!” ಅಂತಾ ಹೇಳಿದ್ದಲ್ಲೇನೋ ಐಗಳು?” +“ಹ್ಞೂ ಹ್ಞೂ ಹ್ಞೂ! +ಹಾಂಗೆ ಹಾಂಗೆ ಹಾಂಗೆ! …. ಅವತ್ತೂ, ಅಲ್ಲ, ಅಲ್ಲ, ಅವತ್ತಲ್ಲ, ಅದರ ಮರುದಿವ್ಸ, ಮುಕುಂದಣ್ಣ ಹೋಗಿದ್ರಲ್ಲಾ ಗೋಸಾಯಿಗಳು ಬೀಡುಬಿಟ್ಟಲ್ಲಿಗೆ?”ನಡುವೆ ಬಾಯಿಹಾಕಿತು ಮತ್ತೊಂದು ದನಿ. +ಮೇಲಿನ ಮತ್ತು ಕೆಳಗಿನ ಎರಡೂ ಸಾಲಿನಲ್ಲಿ ಮುಂಬಲ್ಲು ಮುರಿದು ಬಿದ್ದು ಇನ್ನೂ ಹೊಸ ಹಲ್ಲು ಹುಟ್ಟಿರಲಿಲ್ಲ ಅದಕ್ಕೆ. +ಮಾತಾಡಿದರೆ ಪದಗಳೆಲ್ಲ ಮಧ್ಯೆ ಮಧ್ಯೆ ಪುಸ್‌ ಪುಸ್‌ ಎನ್ನುವಂತೆ ತೋರುತ್ತಿತ್ತು: “ಹೌದೌದು, ಆ ಗೋಸಾಯಿಗಳ ಸಂಗದ ಧರ್ಮಣ್ಣಯ್ಯನ ಅಪ್ಪಯ್ಯ ಗದ್ದ ಬಿತ್ತೊಕೊಂದು ಬಂದಾರೆ ಅಂತಾ ಯಾರೋ ಬಂದು ಹೇಳಿದರಂತೆ….” +“ಕಣ್ಣಾಪಂಡಿತರಂತೆ ಕಣೋ, ಹೇಳ್ದೋರು.” +“ಅದನ್ನೇ, ನೋಡಿಕೊಂಡು ಬರಾಕೆ ಹೋಗಿದ್ರಲ್ಲಾ ಮುಕುಂದಣ್ಣ” ಕೀಚಲು ಗಂಟಲು ಮತ್ತೆ ಮುಂಬರಿಯಿತು: + “ಆವತ್ತು ಧರ್ಮಣ್ಣಯ್ಯ ಅಂಗಳದ ತುಳಸಿಕಲ್ಲ ದೇವರ ಹತ್ರ ಅಳ್ತಾ ಪ್ರಾರ್ಥನೆ ಮಾಡ್ತಿದ್ದ ಕಣೋ.” + “ಯಾರನ್ನೋ ಏನೋ? +ಧರ್ಮು ಅಪ್ಪಯ್ಯ ಅಂತಾ ಹೇಳಿಬಿಟ್ಟದ್ರಂತೆ ಆ ಕಣ್ಣಾಪಂಡಿತ್ರು.”ಲಗ್ಗೆ ಆಟ ಪ್ರಾರಂಭಿಸುವ ಮೊದಲು ಧರ್ಮುವನ್ನು ಹುಡುಕಿ ಕರೆತರಲು ಹೊರಟರು ಹುಡುಗರೆಲ್ಲ. +ಒಬ್ಬೊಬ್ಬರು ಒಂದೊಂದು ಕಡೆಗೆ. +ಧರ್ಮು ಸ್ವಲ್ಪ ಹೊತ್ತು ಕಣ್ಣು ತಪ್ಪಿದ್ದರೆ ಅವರಿಗೆಲ್ಲಾ ಏನೋ ಅನುಮಾನ, ಯಾವುದೋ ಹೆದರಿಕೆ, ಅವನ ಕ್ಷೇಮದ ಹೊರೆ ಹೊಣೆಗೆ ತಾವೆಲ್ಲರೂ ಅನಧಿಕೃತವಾಗಿ ಜವಾಬುದಾರರೊ ಎಂಬಂತೆ. +ಅವರು ‘ಕದ್ದಡಗೋ ಆಟ’ ಆಡುವ ಮುಚ್ಚುಮರೆಯ ಸಂದಿಗೊಂದಿಗಳಲ್ಲೆಲ್ಲ ಧರ್ಮುಗಾಗಿ ಹುಡುಕಾಡಿದರು. +‘ಧರ್ಮೂ!ಓ ಧರ್ಮೂ!ಓ ಧರ್ಮಣ್ಣಯ್ಯ!’ ಎಂಬ ಕರೆಕೂಗುಗಳು ಸೌದೆಕೊಟ್ಟಿಗೆ, ದನದ ಕೊಟ್ಟಿಗೆ, ಪಣ್ತದ ಕೊಟ್ಟಿಗೆ, ಬಚ್ಚಲು ಕೊಟ್ಟಿಗೆ, ಕೋಳಿಒಡ್ಡಿ, ಕುರಿಒಡ್ಡಿಗಳಿಂದಲೂ ಹೊಮ್ಮಿದುವು. +ಕಡೆಗೆ ರಂಗಪ್ಪಗೌಡರ ಹೆಂಡತಿಯ ಹೆರಿಗೆ ಸಂದರ್ಭದಲ್ಲಿ ಸೂಲಗಿತ್ತಿಯಾಗಿ ಬಂದಿದ್ದ ಹಳೇಪೈಕದ ಯೆಂಕಿಯನ್ನು ಬಚ್ಚಲು ಕೊಟ್ಟಿಗೆಯ ಹತ್ತಿರ ಇದಿರುಗೊಂಡ ತಿಮ್ಮು ‘ಧರ್ಮು ಎಲ್ಲಿ ಹೋದನೆ? +ಎಲ್ಲಾದರೂ ನೋಡಿದ್ಯೇನೆ? +ನಮ್ಮ ಸಂಗಡ ಗಂಜಿ ಉಂಡು ಹೊರಗೆ ಬಂದಂವ ಪತ್ತೇನೆ ಇಲ್ಲ! +ಹುಡುಕೀ ಕರೆದೂ ಸಾಕಾಯ್ತು ನಮಗೆಲ್ಲ.’ ಎಂದು ಗಾಬರಿಗೊಂಡ ದನಿಯಿಂದಲೆ ಕೇಳಿದನು. +ಅವಳು ಸ್ವಲ್ಪವೂ ಕುತೂಹಲವನ್ನಾಗಲಿ ಆಸಕ್ತಿಯನ್ನಾಗಲಿ ತೋರಿಸಲಿಲ್ಲ. +ಇವರ ಅನ್ವೇಷಣೆಯನ್ನೂ ಅವನ ಕಾಣೆಯಾಗಿರುವಿಕೆಯನ್ನೂ ಸಮತೋಲನವಾಗಿ, ಮಕ್ಕಳ ಆಟವನ್ನು ಕಾಣಬೇಕಾದಂತೆ ಕಂಡು, ಉದಾಸೀನ ಧ್ವನಿಯಿಂದ “ಯಾರ್ರೋ? +ಹಳೆಮನೆ ತಿರುಪತಿ ದೊಡ್ಡಯ್ಯನ ಮಗನಾ? +ನಿಮ್ಮ ಅವ್ವನ ಹತ್ರ ಹೆರಿಗೆ ತಟ್ಟಿಕೋಣೇಲಿ ಮಾತಾಡ್ತಾ ಕೂತಾರಲ್ಲಾ?” ಎನ್ನುತ್ತಾ ಕೆಲಸಕ್ಕೆ ಅವಸರವಾಗಿ ಹೊರಟೇ ಹೋದಳು. +ತಿಮ್ಮುಗೆ ತನಗೆ ತಂಗಿ ಹುಟ್ಟಿರುವುದನ್ನು ಫಕ್ಕನೆ ನೆನಪು ಕೊಟ್ಟಂತಾಗಿ ತಟ್ಟಿಕೋಣೆಗೆ ಓಡಿದನು. +ಹೆರಿಗೆಮನೆಯಾಗಿದ್ದ ಕೆಳಗರಡಿಯ ತಟ್ಟಿಕೋಣೆಗೆ ಹೋದ ತಿಮ್ಮು ಅದರ ಬಾಗಿಲಲ್ಲಿಯೆ ನಿಂತುಬಿಟ್ಟನು. +ಒಳಗಿದ್ದ ಕತ್ತಲೆಯಲ್ಲಿ ಅವನಿಗೆ, ಅಗ್ಗಿಷ್ಟಿಕೆಯ ರೂಪದಲ್ಲಿ ಒಂದು ಮೂಲೆಯಲ್ಲಿ ಸಣ್ಣಗೆ ಉರಿಯುತ್ತಿದ್ದ ಬೆಂಕಿ ಹೊರತು, ಇನ್ನೇನೂ ಸ್ಪಷ್ಟಾಗಿ ಕಾಣಿಸಲಿಲ್ಲ. +ಅಲ್ಲದೆ ಆ ಕೋಣೆಯ ವಾಸನೆಯೂ ವಿಚಿತ್ರತರಹದ್ದಾಗಿತ್ತು: +ಬೆಳ್ಳುಳ್ಳಿ, ಮೆಂತೆ, ಬ್ರಾಂದಿ, ಮೆಣಸು ಇತ್ಯಾದಿ ಕಟುತ್ವದೊಂದಿಗೆ ಧೂಪದ ಪರಿಮಳವೂ ಮಿಳಿತವಾಗಿತ್ತು. +ಕೂಸು ಅಳುತ್ತಿದ್ದುದೂ ಬಹು ಮೃದುಸ್ವರವಾಗಿತ್ತು. +ಯಾರೂ ಅಸ್ಪಷ್ಟವಾಗಿ ಕಾಣಿಸದಿದ್ದರೂ ಯೆಂಕಿ ಹೇಳಿದುದರ ಆಧಾರದ ಮೇಲೆ ಧರ್ಮುವನ್ನು ಹೆಸರುಹಿಡಿದು ಕೂಗಿದನು. +“ಯಾರು?ತಮ್ಮನೇನೋ?” ಬಾಣಂತಿಯಾಗಿದ್ದ ತಾಯಿ ಮಗನನ್ನು ಮುದ್ದಾಗಿ ಮಾತನಾಡಿಸಿದಳು, ತುಂಬ ದಣಿದಿದ್ದ ಕೆಳದನಿಯಿಂದ. +“ಧರ್ಮು ಇದಾನೇನವ್ವಾ?” ನಿಂತಲ್ಲಿಂದಲೆ ಕೇಳಿದನು ತಿಮ್ಮು. +“ಇಲ್ಲಿದಾನೋ; ಬಾರೋ!” +“ಮೊನ್ನೆ ಕಾಲು ತೊಳಕೊಳ್ಳದೆ ಬರಬ್ಯಾಡ ಅಂದಿದ್ದೀ, ತಂಗೀಗೆ ಮುಟ್ಚಿಟ್ಟಾಗ್ತದೆ ಅಂತಾ? +ನಾನೀಗ ಕಣದಾಗೆ ಆಡ್ತಾ ಇದ್ದಾಂವ ಹಿಂಗೇ ಬಂದೀನಿ, ಧರ್ಮೂನ ಕರಕೊಂಡು ಹೋಗಾಕೆ….” ಎನ್ನುತ್ತಾ ಜೊತೆಗಾರನನ್ನು ಕೂಗಿದನು: + “ಬಾರೋ, ಧರ್ಮೂ, ಲಗ್ಗೆ ಆಟಕ್ಕೆ” ಇಷ್ಟರಲ್ಲಿ ಕೋಣೆಯೊಳಗಣ ಮಬ್ಬಿಗೆ ಹೊಂದಿಕೊಂಡಿದ್ದ ತಿಮ್ಮುವಿನ ಕಣ್ಣಿಗೆ ಅಲ್ಲಿ ಕೂತಿದ್ದ ಧರ್ಮು, ಅವನ ಪಕ್ಕದಲ್ಲಿ ಮಲಗಿದ್ದ ತನ್ನ ತಾಯಿ, ಬಳಿಯೆ ಮೊರದಲ್ಲಿದ್ದ ಶಿಶು ಎಲ್ಲ ಮಾಸಲುಮಾಸಲಾಗಿ ಕಾಣಿಸತೊಡಗಿದ್ದರು. +“ಹೋಗಪ್ಪಾ, ಧರ್ಮೂ, ಆಟಕ್ಕೆ ಕರೀತಾನೆ, ಅಳಬ್ಯಾಡ; ಮಜ್ಜಾನದ ಮ್ಯಾಲೆ ಊಟಮಾಡಿಕೊಂಡು ಹೋಗಬಹುದಂತೆ. +ನಾ ಹೇಳ್ತೀನಿ, ನಿನ್ನ ಸಂಗಡ ಐತನ್ನ ಕಳಿಸಾಕೆ; +ಹಳೆಮನೆ ತಂಕಾ ಹೋಗಿ ಬಿಟ್ಟುಬರ್ತಾನೆ: +ಅಳಬ್ಯಾಡಪ್ಪಾ, ಹೋಗು.” +ಅತ್ತೆಮ್ಮ ಭರವಸೆ ಕೊಟ್ಟಮೇಲೆ ಧರ್ಮು ಎದ್ದು ಕಣ್ಣೊರೆಸಿಕೊಳ್ಳುತ್ತಾ ತಿಮ್ಮುವನ್ನು ಹಿಂಬಾಲಿಸಿದನು. +ಬೆಳಿಗ್ಗೆ ಗಂಜಿ ಉಂಡಮೇಲೆ ಧರ್ಮು ಇತರ ಹುಡುಗರೊಡನೆ ಹೋಗದೆ ನೆಟ್ಟಗೆ ತಟ್ಟಿ ಕೋಣೆಗೆ ಹೋಗಿದ್ದುದಕ್ಕೆ ಕಾರಣ, ಅತ್ತೆಮ್ಮನ್ನು ಹೇಗಾದರೂ ಒಪ್ಪಿಸಿ, ತನ್ನ ತಾಯಿಯನ್ನು ನೋಡಲು ಹಳೆಮನೆಗೆ ಹೋಗಬೇಕು ಎಂಬುದೆ. +ರಾತ್ರಿ ಅವನು ಇತರ ಬಾಲಕರೊಡನೆ ‘ಸಣ್ಣಮಾವ’ ಮುಕುಂದಯ್ಯನ ಹತ್ತಿರವೆ ಎಂದಿನಂತೆ ಮಲಗಿದ್ದನು. +ಬಹಳ ಹೊತ್ತಾದರೂ ಅವನಿಗೆ ನಿದ್ದೆ ಬಂದಿರಲಿಲ್ಲ. +ತಿರುಪತಿಗೆ ಹೋಗಿ ಹಿಂದುರುಗದೆ ಇದ್ದ ತಂದೆಗಾಗಿ ಪರಿತಪಿಸುತ್ತಿದ್ದ ತಾಯಿಯ ಯೋಚನೆ ಬಲವಾಗಿ ಗುಟ್ಟಾಗಿ ಕಣ್ಣೀರು ಸುರಿಸುತ್ತಲೆ ಮಲಗಿದ್ದನು. +ಮುಕುಂದಯ್ಯ ತನಗೆ ಸನಿಹದಲ್ಲಿಯೆ ಬೇರೆಯ ಹಾಸಿಗೆಯಲ್ಲಿ ಮಲಗಿದ್ದ ಐಗಳೊಡನೆ ಏನೇನೋ ಮಾತಾಡುತ್ತಿದ್ದನು. +ಆದರತೆ ಅದೆಲ್ಲ ಧರ್ಮುವಿಗೆ ಮೀರಿತ್ತು ಮಾತ್ರವಲ್ಲದೆ ಅವನ ಕುತೂಹಲದ ಕ್ಷೇತ್ರದಿಂದಾಚೆಗಿತ್ತು. +ನಡುವೆ ಒಂದೆರಡು ಸಾರಿ ಮುಕುಂದಯ್ಯ ಧರ್ಮುವಿಗೆ ನಿದ್ದೆ ಬಂದಿದೆಯೊ ಇಲ್ಲವೊ ಎಂದು ಗೊತ್ತುಮಾಡಿಕೊಳ್ಳುವುದಕ್ಕಾಗಿ ಅವನನ್ನು ಕರೆದಿದ್ದನು. +ಧರ್ಮು ಮಾತಾಡಿರಲಿಲ್ಲ. +ಬಹುಶಃ ಹುಡುಗನಿಗೆ ನಿದ್ದೆ ಬಂತು ಎಂದು ನಿಶ್ಚಯಿಸಿಕೊಂಡನೆಂದು ತೋರುತ್ತದೆ, ಮುಕುಂದಯ್ಯ ಮೆಲ್ಲನೆ ಗುಸುಗುಸು ದನಿಯಲ್ಲಿ ಐಗಳು ಅನಂತಯ್ಯನವರೊಡನೆ ಬೇರೆಯ ವಿಷಯ ಪ್ರಸ್ತಾಪಿಸತೊಗಿದನು. +ಅದನ್ನಾಲಿಸಿ ಧರ್ಮುಗೆ ಚೇತನ ಸಮಸ್ತವೂ ಮುಳ್ಳಮೇಲೆ ನಿಂತಂತಾಯಿತು: +ಅದು ತನ್ನ ತಂದೆಯನ್ನೆ ಕುರಿತದ್ದಾಗಿತ್ತು! +“ಹಾಗಾಂದ್ರೆ ನಾಳೆ ಹೊತಾರೆ ಮುಂಚೇನೆ ಹೊರಟುಬಿಡಿ. +ತೀರ್ಥಹಳ್ಳಿಗೆ ಹೋದಮೇಲೆ ಜೀವರತ್ನಯ್ಯನ್ನೂ ವಿಚಾರಿಸಿ, ದಾಸಯ್ಯನ ಜತೇಲಿ ಮಂಡಗದ್ದೆಗೂ ತೂದೂರಿಗೂ ಹೋಗಿ ನೋಡಿಕೊಂಡು ಬನ್ನಿ, ಇದೊಂದು ಸಲ ನೋಡಿಬಿಡಾನ…. +ನಮ್ಮ ದೊಡ್ಡಕ್ಕಯ್ಯನ ಗೋಳು ನೋಡಾಹಾಂಗಿಲ್ಲ. +ಅನ್ನ ನೀರು ಬಿಟ್ಟು ಇವತ್ತೊ ನಾಳೆಯೊ ಸಾಯ್ತದೆ ಅಂತಾ ಕಾಣ್ತದೆ…. +ನಿಮಗೆ ಗುರ್ತು ಸಿಗ್ತದಲ್ಲಾ? +ಹಳೆಮನೆ ದೊಡ್ಡಬಾವನ ಗುರ್ತು ನಿಮಗೆ ಚೆನ್ನಾಗೇ ಇರಬೇಕು ಅಲ್ಲೇನು?” +“ಇದೇನು ಹೀಂಗನ್ತೀಯಾ? …. ” ಐಗಳು ಅನಂತಯ್ಯ ಮುಕುಂದಯ್ಯನ ಪ್ರಶ್ನೆಯನ್ನೆ ಮೂದಲಿಸಿ ನಕ್ಕು ಪ್ರಶ್ನಿಸಿದರು. + “ಅದಕ್ಕೆಲ್ಲಾ…. ?ಅಂವ ತಿರುಪತಿಯಾತ್ರೆಗೆ ಹೋಗಿ ಏಳೆಂಟು ವರ್ಷಾನೆ ಆಯ್ತು, ನಿಮಗೆ ಫಕ್ಕನೆ ಗುರ್ತು ಸಿಕ್ತದೆಯೋ ಇಲ್ಲೋ ಅಂತಾ ಹೇಳಿದೆ, ಅಷ್ಟೆ…. +ಅದೂ ಅಲ್ವೆ ಅಂವ ಸನ್ನೇಸಿಗಳೋ ಬೈರಾಗಿಗಳೋ ಗೋಸಾಯಿಗಳೋ ಯಾರ ಜೊತೇಲೋ ಅವರಹಾಂಗೆ ಗಡ್ಡಗಿಡ್ಡ ಬಿಟ್ಕೊಂಡು ಇದಾನೆ ಅಂತಾ ಹೇಳ್ತಾರೆ….” +“ಅವರು ಗಡ್ಡ ಬಿಟ್ಟಿರ್ಲಿ, ವೇಷ ಕಟ್ಟಿರ್ಲಿ, ನನ್ನ ಕಣ್ಣಿಗೆ ಮಣ್ಣೆರಚಾಕೆ ಆಗೋದಿಲ್ಲ ಬಿಡು…. +ನನಗೆ ಅವರನ್ನ ಮುಖ ನೋಡುವುದೂ ಬೇಡ; ಅವರು ನಡೆಯುವುದು ನೋಡಿದರೇ ಸಾಕು. +ಕಂಡುಹಿಡಿದು ಬಿಡ್ತೀನಿ…. +ಅವರು ಯಾತ್ರೆ ಹೋದಾಗ ನೀನಿನ್ನೂ ಹುಡುಗ; +ಒಂಬತ್ತೋ ಹತ್ತೋ ವರ್ಷ ನಿನಗೆ ಆಗ…. +ಎಷ್ಟು ಸಾರಿ ನಾವು ಒಟ್ಟಿಗೆ ಬೇಟೆಗೆ ಹೋಗಿದ್ದೆವು? +ಹಳೆಮನೇಲಿ ಒಂದು ಹಬ್ಬ, ಹರಿದಿನ, ಮಾಲಾಯಾ ಆದರೆ ನಾವೆಲ್ಲ ಅಲ್ಲಿ ತಯಾರು! +ಒಂದೊಂದು ಬಾರಿ ಇರುಳುಬೆಳಗೂ ಇಸ್ಪೀಟು ಆಡಿದ್ದೂ ಉಂಟು…. +ದೊಡ್ಡಣ್ಣ ಹೆಗ್ಗಡೇರು ಭಾರಿ ಧೈರ್ಯದ ಮನುಷ್ಯ ಕಾಣಯ್ಯ. +ಆವೊತ್ತು ಅವರಿಲ್ಲದಿದ್ರೆ ಹೂವಳ್ಳಿ ವೆಂಕಟಣ್ಣ ಬದುಕ್ತಿದ್ನಾ? +ಮಿಣಿಬಲೆಗೆ ಬಿದ್ದ ಒಂಟಿಗ ಹಂದೀನ ಭರ್ಜೀಲಿ ತಿವಿಯಾಕೆ ಹೋಗಿ, ಕಾಲುಜಾರಿ ಬಿದ್ದನಲ್ಲಾ! + ದೊಡ್ಡಣ್ಣ ಹೆಗ್ಗಡೇರು ಎಲ್ಲಿದ್ರೋ ಏನೋ ನುಗ್ಗಿಬಂದು, ಗುಂಡು ಹೊಡೆದು, ಅದನ್ನ ಉರುಳಿಸದೆ ಇದ್ದಿದ್ರೆ, ವೆಂಕಟಣ್ಣ ಸೀಳಿ ಸಿಗಿದುಹಾಕಿಬಿಡ್ತಿತ್ತು….” + “ಅವನಿಗೆ ಸಿಕ್ಕಬೇಕಲ್ಲಾ ನಿಮ್ಮ ಗುರುತು?” + “ನಾನೇನು ಗಡ್ಡ ಬಿಟ್ಟಿದ್ದೇನೆಯೆ? +ವೇಷಕಟ್ಟಿದ್ದೇನೆಯೆ? +ಅವರಿಗೆ ಸಿಕ್ಕದೆ ಏನು ನನ್ನ ಗುರುತು?” +“ಗೋಸಾಯಿಗಳು ಮದ್ದು ಕೊಟ್ಟು ಹಿಂದಿನದೆಲ್ಲ ಮರೆತೇಹೋಗೋಹಾಂಗೆ ಮಾಡ್ತಾರಂತೆ – ಹಾಂಗಾದೋರಿಗೆ ಅವರ ಹೆಂಡ್ತಿ ಮಕ್ಕಳೇ ಹೋದ್ರೂ ಗುರ್ತೇ ಸಿಕ್ಕದಿಲ್ಲಾ ಅಂತಾ ಹೇಳ್ತಾರೆ? …. ” ಮುಕುಂದಯ್ಯ ತನ್ನ ಸಂದೇಹವನ್ನು ಸಂಕಟದಿಂದ ಹೇಳಿಕೊಂಡನು. +ಅದಕ್ಕೆ ಐಗಳು ಶ್ರದ್ಧಾವಾಣಿಯಿಂದ ಹೇಳಿದ್ದರು: ನೋಡುವ, ದೇವರಿದ್ದಾನೆ…. +ಅವರ ಹೆಂಡತಿ ಮಕ್ಕಳಿಗೆ ಪುಣ್ಯ ಇದ್ದರೆ ಕಣ್ಣುಬಿಟ್ಟು ನೋಡಿಯೆ ನೋಡುತ್ತಾನೆ…. +ಮದ್ದು ಹೆಚ್ಚೊ, ದೇವರು ಹೆಚ್ಚೋ? +ಮದ್ದು ಮರೆಯಿಸಿದ್ದನ್ನ ದೇವರು ನೆನೆಯಿಸಲಾರನೇ?”ಸಣ್ಣಮಾವ ಮುಕುಂದಯ್ಯ ಮತ್ತು ಐಗಳು ಅನಂತಯ್ಯನವರ ಆ ರಹಸ್ಯ ಸಂವಾದವನ್ನು ಹೃತ್ಪೂರ್ವಕವಾದ ಶ್ರದ್ಧೆಯಿಂದ ಆಲಿಸಿದ್ದ ಧರ್ಮು ದೇವರನ್ನು ನೆನೆಯುತ್ತಾ ಪ್ರಾರ್ಥಿಸುತ್ತಾ ನಿದ್ದೆಹೋದನು. +ಆದರೆ ಅಲ್ಲಿಯೂ ಕನಸು ಅವನನ್ನು ಬಿಡಲಿಲ್ಲ. +ಕನಸ್ಸಿನಲ್ಲಿಯೇ ಅವನ ಅವ್ವ ಅಳುತ್ತಾ ಬಂದು ರೋದಿಸಿದ್ದರು, ಅವನ ತಲೆಯನ್ನು ಸವರುತ್ತಾ ‘ತಮ್ಮಾ, ನಿನ್ನ ಅಪ್ಪಯ್ಯನ್ನ ಕರಕೊಂಡು ಬರಾದಿಲ್ಲೇನೋ? +ಅವರು ಊಟಾಮಾಡದೆ ಎಷ್ಟೋ ದಿವಸ ಆಯಿತಲ್ಲಪ್ಪಾ? +ಹಸುಕೊಂಡು ಕೊರಗ್ತಿದ್ದಾರಲ್ಲೋ! +ನಿನ್ನ ದಮ್ಮಯ್ಯ ಅಂತೀನಿ: ಹೋಗಿ ಏನಾದರೂ ಮಾಡಿ ಕರಕೊಂಡು ಬಾರಪ್ಪಾ!’ ಎಂದು. +ಅದೆಲ್ಲದರ ಪರಿಣಾಮವಾಗಿಯೆ ಧರ್ಮು ಬೆಳಿಗ್ಗೆ ಎದ್ದು ಗಂಜಿ ಉಂಡವನೆ ಅತ್ತೆಮ್ಮನ ಬಳಿಗೆ ಹೋಗಿ ಅತ್ತು ಕರೆದು ತನ್ನ ಅವ್ವನ ಹತ್ತಿರಕ್ಕೆ ಹೋಗಲು ದೊಡ್ಡ ಮಾವನನ್ನು ಒಪ್ಪಿಸುವಂತೆ ಮಾಡಿದ್ದನು. +ಗೆಳೆಯರಿಗೆ ಮನಸ್ಸು ನೋಯಿಸಬಾರದೆಂದು ಧರ್ಮು ಲಗ್ಗೆಯಾಟಕ್ಕೆ ಸೇರಿದ್ದನು. +ಆದರೆ ಅವನ ಮನಸ್ಸೆಲ್ಲ ಅವ್ವನನ್ನೆ ನೆನೆಯುತ್ತಿತ್ತು. +ಲಗ್ಗೆಮಣೆಗೆ ಗುರಿಯಿಡುವಾಗಲೂ ‘ಈ ಸಾರಿ ಈ ಚೆಂಡು ಲಗ್ಗೆಮಣೆಗೆ ಸರಿಯಾಗಿ ಗುರಿಬಿದ್ದು ಅದನ್ನು ಉರುಳಿಸಿದರೆ, ಅಪ್ಪಯ್ಯ ಬಂದೆ ಬರುತ್ತಾನೆ.’ ಎಂದು ಸಂಕಲ್ಪಸಿ ಗುರಿಯಿಟ್ಟಿದ್ದನು. +ಲಗ್ಗೆಮಣೆ ಉರುಳಿಬಿದ್ದು ತನ್ನ ಪಕ್ಕದವರೆಲ್ಲ ಘೇ ಎಂದು ಜಯಘೋಷ ಮಾಡಿದಾಗ ಧರ್ಮುವು ಸಂತೋಷದಿಂದ ಕುಣಿದಾಡಿದನು. +ಆದರೆ ಅವನ ಹಿಗ್ಗಿಗೆ ಕಾರಣವೆ ಬೇರೆಯಾಗಿತ್ತು! +ಧರ್ಮು ಹಳೆಮನೆಗೆ ಹೋಗುತ್ತಾನೆ ಎಂದು ತಿಳಿದಾಗ ಹುಡುಗರೆಲ್ಲರೂ ಸೇರಿ ಅವನನ್ನು ಕೋಣೂರಿನಲ್ಲಿಯೆ ಇರುವಂತೆ ಮಾಡಲು ಪ್ರಯತ್ನಿಸಿದರು. +ಎಂತಿದ್ದರೂ ಮಗಳು ಏಳೆಂಟು ದಿನಗಳಾದರೂ ಹೊರಗೆಲ್ಲಿಗೋ ಹೋದವರು ಬರುವುದಿಲ್ಲವಂತೆ. +ಆಡಿಕೆಯ ದಿನಗಳಲ್ಲಿ ಮಾಡಲು ಬೇಕಾದಷ್ಟು ಸಾಹಸಗಳಿವೆ; +ಆಡಲು ಆಟಗಳಿವೆ; +ಹಗಲೆಲ್ಲ ಗದ್ದೆ ತೋಟ ಕಾಡುಗುಡ್ಡಗಳಲ್ಲಿ ಅಲೆದಾಡಬಹುದು: + ಹಕ್ಕಿ ಹಿಡಿಯಬಹುದು; + ಹಣ್ಣು ಕುಯ್ಯಬಹುದು; + ಪಂಜರ ಕಟ್ಟಿ ಸಾಕಬಹುದು; + ಹೊಂಡ ತೊಣಕಬಹುದು; + ಜೇನು ಕೀಳಬಹುದು; ಗಾಣ ಹಾಕಬಹುದು; + ಮುಕುಂದಣ್ಣನ ಜೊತೆ ಷಿಕಾರಿಗೆ ಹೋಗಬಹುದು – ಇತ್ಯಾದಿ ಇತ್ಯಾದಿ ಎಲ್ಲವನ್ನೂ ಸೊಗಸುವಂತೆ ಹೇಳಿದರು. +ಕಡೆಗೆ ಬೆಟ್ಟಳ್ಳಿಯಿಂದ ಜೋಡೆತ್ತಿನ ಕಮಾನು ಗಾಡಿ ಬರುತ್ತದೆಂದೂ ಅದರಲ್ಲಿ ಕುಳಿತು ಎಲ್ಲರೂ ಕಲ್ಲೂರು ದೇವಸ್ಥಾನಕ್ಕೆ ಪೂಜೆಯ ಉತ್ಸವಕ್ಕೆ ಹೋಗಬಹುದೆಂದೂ ಹೇಳಿದರು. +ಆದರೆ ಯಾವುದೂ ಪ್ರಯೋಜನಕಾರಿಯಾಗಲಿಲ್ಲ. +ಮಧ್ಯಾಹ್ನ ಊಟವಾದೊಡನೆ ಐತ ಬರುವುದನ್ನೆ ಇದಿರು ನೋಡುತ್ತ ಕುಳಿತಿದ್ದ ಧರ್ಮುಗೆ ಜಗತ್ತಿನ ಅತ್ಯಂತ ಮುಖ್ಯ ವ್ಯಕ್ತಿ ಆಗಿದ್ದನು ಐತ; +ಲೋಕದಲ್ಲಿ ನಡೆಯುತ್ತಿದ್ದ ವ್ಯಾಪಾರಗಳಲೆಲ್ಲ ಅತ್ಯಂತ ಸಜೀವಘಟನೆಯಾಗಿತ್ತು ಐತನ ಆಗಮನ! +ಅಜ್ಜಮ್ಮ ಅತ್ತೆಮ್ಮ ದೊಡ್ಡಮಾವ ಸಣ್ಣಮಾವರಿಗೆ ‘ಹೋಗಿಬರುತ್ತೀನಿ!’ ಹೇಳಿ ಬೀಳ್ಕೊಂಡು ಐತನೊಡನೆ ಹೊರಟಾಗ, ಧರ್ಮುವನ್ನು ಸ್ವಲ್ಪದೂರ ಹಳ್ಳದವರೆಗೆ ಕಳಿಸಿ ಬರುತ್ತೇನೆ ಎಂದು ತಿಮ್ಮು ಕಾಡು ಇತರ ಹುಡುಗರೂ ಜೊತೆ ಹೊರಟರು. +ಎದುರಿಗೆ ಬಿಡಾರದಿಂದ ಮನೆಯ ಕಡೆಗೆ ಬರುತ್ತಿದ್ದ ಪೀಂಚಲುವನ್ನು ಕಂಡು ತಿಮ್ಮು “ನೀನೂ ಹೋಗ್ತೀಯೇನೆ, ಐತನ ಸಂಗಡ, ಧರ್ಮುನ ಕಳಿಸಾಕೆ?” ಎಂದು ನಗುತ್ತಾ ಕೇಳಲು, ಅವಳು ನಾಚುತ್ತಾ ಬಳುಕಿ, ಪಕ್ಕಕ್ಕೆ ದಾರಿಬಿಡುವ ನೆವದಿಂದ ಸರಿದು ನಿಂತು “ಈ ತಿಮ್ಮಯ್ಯಗೆ ಯಾವಾಗ್ಲೂ ಚಾಷ್ಟೇನೆ!” ಎಂದು ಐತನಕಡೆ ತಿರುಗಿ “ದೊಡ್ಡಮ್ಮ ಅಕ್ಕಿ ಬೀಸಾಕೆ ಬರಾಕೆ ಹೇಳಿದ್ರು” ಎಂದಳು. +ಅವರೆಲ್ಲರೂ ತಿರುಗಣೆಯಲ್ಲಿ ಕಣ್ಮರೆಯಾಗುವವರೆಗೂ ನೋಡುತ್ತಾ ನಿಂತಿದ್ದು. +“ಏ ಐತಾ ಈ ಸಾರಿ ಎಷ್ಟು ಜೇನು ನೋಡಿಟ್ಟೀಯೊ?” +“ಸುಮಾರು ನೋಡಿಟ್ಟೀನಿ….” +“ಮತ್ತೆ ಯಾವಾಗ್ಲೋ ಕಿತ್ತುಕೊಡಾದು?” +“ನನ್ನಿಂದ ಆಗೋದಿಲ್ಲಾಪ್ಪ ಕೀಳಾಕೆ. +ಪೀಂಚಲು ಕೀಳ್ತಾಳೆ; +ಅವಳಿಗೆ ಎಲೆಮದ್ದು ಗೊತ್ತು.” +“ಥೂ ನಿನ್ನ! +ನಿಂಗೆ ನಾಚಿಕೆ ಆಗಾದಿಲ್ಲೇನೋ? +ನಿನ್ನ ಹೆಂಡ್ತಿ ಮಾಡಿದ್ದನ್ನ ಮಾಡಾಕೆ ನಿನ್ನ ಕೈಲಾಗದಿಲ್ಲೇನೋ? …. ” +“ಜೇನು ಹುಡುಕಿ ಕಂಡುಹಿಡಿಯೋದೇನು ಬಿಟ್ಟಿ ಆಯ್ತಾ? +ಪೀಂಚಲು ಕೈಲಿ ಆಗ್ತದೇನು ಅದು? …. ”ಅಷ್ಟರಲ್ಲಿ ಅವರೆಲ್ಲ ಹಳ್ಳದ ಹತ್ತಿರಕ್ಕೆ ಬಂದಿದ್ದರು. +“ಏ ಐತಾ, ಈ ಹೊಂಡ ತೊಣಕಬೇಕು ಅಂತಾ ಮಾಡಿದ್ದುವಲ್ಲೊ. +ಅವತ್ತಿನ ಮಾರಿಮಳೇಲಿ ನೀರು ಆಗಿಹೋಗಿಬಿಟ್ಟಿದೆ, ಏನು ಮಾಡೋದೋ? …. “ಮತ್ತೊಂದು ಮಳೆ ಬೀಳಾದ್ರೊಳಗೆ ನೀರು ಬತ್ತಬೈದು. +ಆವಾಗ ನೋಡಾನ…. +ಹಳ್ಳ ಬಂತಲ್ಲ, ತಿಮ್ಮಯ್ಯ!” ಐತ ಅವರೆಲ್ಲರೂ ಹಿಂತಿರುಗುವುದಕ್ಕೆ  ಸೂಚಾನೆ ಕೊಟ್ಟಿದ್ದ. +ಆದರೆ ಕಾಡು “ಆ ಅರೆಕಲ್ಲಿನವರೀಗೆ ಬರ್ತೀಂವೊ” ಎಂದನು. +ಸ್ವಲ್ಪ ಹೊತ್ತಿಗೆ ಅರೆಕಲ್ಲೂ ಸಮೀಪಿಸಿತ್ತು. +ಆಗ ತಿಮ್ಮು “ಇನ್ನೊಂದು ಸೊಲ್ಪದೂರ ಬರ್ತೀಂವೋ.” ಎಂದು ತನ್ನ ಯಜಮಾನತ್ವದ ಗಾಂಭೀರ್ಯವನ್ನು ಮರೆತೋ ತೊರೆದೋ ಅಂಗಲಾಚುವ  ದನಿಯಲ್ಲಿ ಐತನನ್ನೂ ಕೇಳಿಕೊಂಡನು. +ಆದರೆ ಐತ ಮುಂದುವರೆಯದೆ ನಿಂತುಬಿಟ್ಟನು. +ಹೇಳಿದನು: “ಆಮ್ಯಾಲೆ ನನ್ನ ಬರ್ತಾರೆ ಕಣ್ರೋ ಅಮ್ಮ, ಹುಡುಗೂರ್ನ ಅಷ್ಟುದೂರ ಯಾಕೆ ಕರಕೊಂಡು ಹೋದೆ ಅಂತಾ. +ನಿಮ್ಮ ದಮ್ಮಯ್ಯ ಅಂತೀನ್ರೋ: ಮನೀಗೆ ಹೋಗಿ. +ಈಗ ಬೈಗಾಗಿಬಿಡ್ತದೆ.”ಮನಸ್ಸಿಲ್ಲದ ಮನಸ್ಸಿನಿಂದ ಐತನ ನಿರೋಧಕ್ಕೆ “ಧರ್ಮೂ. +ಹೋಗಿ ಬತ್ತೀಯಾ?” ಎಂದು ನಾಲ್ಕಾರು ಬಾಲವಾಣಿಗಳು ಕೀರಲು ದನಿಯಲ್ಲಿ ಕೂಗಿ ಬೀಳ್ಕೊಂಡು ಮನೆಯ ಕಡೆಗೆ ಹಿಂತಿರುಗಿದುವು. +ಗುಡ್ಡನಾಡಿನ ಕಾಲುದಾರಿಯಲ್ಲಿ ಧರ್ಮು ಮುಂದೆ ಐತ ಹಿಂದೆ ಆಗಿ ಸ್ವಲ್ಪದೂರ ಇಬ್ಬರೂ ಮಾತಿಲ್ಲದೆ ನಡೆದರು. +ಇಳಿಬಿಸಲು; ಕಗ್ಗಾಡಿನ ನಿಃಶಬ್ದ; +ಅಲ್ಲೊಮ್ಮೆ ಇಲ್ಲೊಮ್ಮೆ ಹಕ್ಕಿದನಿ: ಎಲ್ಲಿಯೋ ಮೇಯುತ್ತಿದ್ದ ದನಗಳ ಕೊರಳ ದೊಂಟೆಯ ಸದ್ದು. +ಇದ್ದಕ್ಕಿದ್ದಂತೆ ಧರ್ಮು “ಐತಾ, ನಿಂಗೆ ನಮಪ್ಪಯ್ನ ಗುರ್ತು ಚೆನ್ನಾಗಿತ್ತೇನೋ?” +“ಚೆನ್ನಾಗಿತ್ತಯ್ಯಾ… “ ಐತ ಇನ್ನೂ ಏನನ್ನೊ ಹೇಳಬೇಕು ಎಂದಿದ್ದನು. +ಅಷ್ಟರಲ್ಲಿ ಧರ್ಮು“ಅವರನ್ನ ನೋಡಿದ್ರೆ ಈಗ್ಲೂ ನಿಂಗೆ ಗುರ್ತು ಸಿಗ್ತದಾ?” ಎಂದು  ಕೇಳಿದನು. +“ಸಿಗ್ತದೆ ಏನ್ರಯ್ಯಾ? +ನಂಗೆ ಚೆನ್ನಾಗಿ ಬುದ್ದಿ ಬಂದಮ್ಯಾಲೆ ಅಲ್ಲೇನು ಅವರು ತಿರುಪತಿಗೆ ಹೋಗಿದ್ದು? +ಅವರು ಹೋಗಾಕೆ ಮುಂಚೆ ನಂಟರು ಇಷ್ಟರು ಎಲ್ಲರ್ನೂ  ಕರೆದು ಔಂತ್ಲ ಮಾಡಿಸಿದ್ರು ನಿಮ್ಮ ಮನೇಲಿ. +ನಾನೂ ಗಡದ್ದಾಗಿ ಉಂಡಿದ್ದೆ. +ನೀವು ಆಗ ಬಾಳ ಸಣ್ಣೋರು…”“ +ನಂಗೂ ಸೊಸೊಲ್ಪ ನೆನಪು ಅದೆಯೊ ಅವರದ್ದು. +ಮೀಸೆ ಬಿಟ್ಟಿದ್ರಲ್ಲೇನೋ? +ಬೆಳ್ಳಗಿದ್ರು!ಕುತ್ತಿಗೀಗೆ ಒಂದು ನೆಪ್ಪು ಇರಾದೆ ಆಚ್ಚರ್ಯ! …. +“ಹಾಂಗಾರೆ ಈಗ್ಲೂ ಅವರನ್ನ ಕಂಡ್ರೆ ಗುರ್ತು ಹಿಡೀತೀಯಾ ನೀನು?” +“ಖಂಡಿತಾ ಹಿಡೀತೀನಿ…. +ಅವರ ಹೆಗಲ ಹತ್ರ ಬೆನ್ನಮ್ಯಾಲೆ, ಷಿಕಾರೀಲಿ ಹುಲಿ ಗಿಬ್ರಿದ್ದು ಅಂತಿದ್ರಪ್ಪ. +ಒಂದು ಇಷ್ಟುದ್ದ ಇಷ್ಟಗಲ ಗಾಂಯದ ಕಲೆ ಇತ್ತು. +ನಂಗೆ ಚನ್ನಾಗಿ ಗೊತ್ತು…. +ಅಯ್ಯೊ ಅದೊಂದು ಕತೆ!” ಎಂದವನೆ ಐತ ತಡೆಯಲಾರದೆ ನಗತೊಡಗಿದನು. +ಕಡೆಕಡೆಗೆ ಬಿದ್ದುಬಿದ್ದು ನಗತೊಡಗಿದನು. +ನಕ್ಕೂ ನಕ್ಕೂ ಕಣ್ಣಲ್ಲಿ ನೀರೂ ಬಂದಿತು. +ಧರ್ಮು ಮೊದಲು ತುಸು ಕಕ್ಕಾವಿಕ್ಕಿಯಾದನು. +ಗಂಭೀರ ಸನ್ನಿವೇಶದಲ್ಲಿ ದುಃಖದ ವಿಷಯ ಕುರಿತು ಮಾತನಾಡುತ್ತಿದ್ದಾಗ ತಟಕ್ಕನೆ ಐತ ನಗತೊಡಗಿದ್ದು ಅನನ್ವಯದಿಂದ ವಿಕಾರದ ಛಾಯೆಗೂ ತಿರುಗಿತ್ತು. +ಆದರೆ ಐತನ ನಿರ್ವಿಕಾರವಾದ ತಿಳಿಯಾದ ಮುಗ್ಧ ಹಾಸ್ಯಾನುಭವ ಸೆಳವಿಗೆ ಸಿಕ್ಕ ಧರ್ಮುವೂ ತನ್ನ ಸಂಕಟವನ್ನೆಲ್ಲ ಮರೆತು ನಗತೊಡಗಿದ್ದನು. +ಅಷ್ಟು ಸಾಂಕ್ರಾಮಿಕವಾಗಿತ್ತು ಅವನ ನಗೆ! +ನಕ್ಕು ನಕ್ಕು ದಣಿದು ಸಾಕಾಗಿ ಐತ ಸ್ಥಿಮಿತಕ್ಕೆ ಬಂದಮೇಲೆ ತನ್ನ ಕಡೆ ಬೆರಗಾಗಿ ನೋಡುತ್ತಿದ್ದ ಧರ್ಮುಗೆ “ಮತ್ತೆ ನೀವು ಯಾರ ಹತ್ರಾನಾದ್ರೂ ಹೇಳಗೀಳೀರಿ! +ನಿಮ್ಮ ಅಪ್ಪಯ್ಯನೂ, ಹುಡುಗನ ಮಾನಹೋಗ್ತದೆ ಅಂತಾ, ಯಾರ ಹತ್ರಾನು ಹೇಳಬ್ಯಾಡಿ, ಅಂತಾ, ಯಾರ ಹತ್ರಾನೂ ಹೇಳಿರಲಿಲ್ಲ. +ನೀವೂ ಯಾರ ಹತ್ರಾನು ಹೇಳಬ್ಯಾಡಿ, ಆಯ್ತಾ?” ಎಂದು ನಡೆದ ಸಂಗತಿಯನ್ನು ಹೇಳಲು ಪ್ರಾರಂಭಿಸಿದ್ದನೊ ಇಲ್ಲವೊ ಮತ್ತೆ ಬಟ್ಟೆ ಹರಿದಂತೆ ನಗತೊಡಗಿದನು. +ಬಾಯಲ್ಲಿ ಎಂಜಲೂ ಜೊಲ್ಲೂ ಸುರಿಯತೊಡಗಿತು. +ಕಡೆಗೆ ಗುಡ್ಡದ ಕಲ್ಲುಮಣ್ಣಿನಲ್ಲಿ ಇಣಗಿದ್ದ ಕರಡದಮೇಲೆ ಬಿದ್ದು ಹೊರಳಾಡಿಯೂ ಬಿಟ್ಟನು. +ಆ ನಗೆಯ ಹೊನಲಿನಲ್ಲಿ ಧರ್ಮುವ ಮನಸ್ಸಿನ ದುಗುಡವೆಲ್ಲ ಕೊಚ್ಚಿಹೋಗಿತ್ತು. +ಅವನ ಅಪ್ಪಯ್ಯ ಹಿಂತಿರುಗಿ ಬಂದಂತೆಯೆ ಆಗಿತ್ತು! +“ಹೇಳ್ತಾನೆ ಹೋಗ್ತೀನಿ ಬನ್ರೋ, ಹೊತ್ತಾಗ್ತದೆ.” ಐತ ಎದ್ದುನಿಂತು ಬಟ್ಟೆಗೆ ಹಿಡಿದಿದ್ದ ಮಣ್ಣು ಹುಲ್ಲುಚೂರುಗಳನ್ನೆಲ್ಲ ಕೊಡಹಿ ಮುಂದಕ್ಕೆ ಹೊರಟನು. +“ಅವರು ಯಾರ ಹತ್ರಾನೂ  ಹೇಳಲಿಲ್ಲ. +ಆದರೆ ನನ್ನ ಕಂಡಾಗಲೆಲ್ಲ ಹಾಸ್ಯ ಮಾಡ್ತಿದ್ರು “ಮರಸಿಗೆ ಬರ್ತಿಯೇನೋ, ಹುಡುಗಾ?” ಅಂತಾ. +ಅವರು ಹಾಂಗೆ ಕೇಳ್ದಾಗಲೆಲ್ಲ ನಾನು ನಾಚ್ಕೊಂಡು ನೆಲಾ ಹಿಡಿದುಹೋಗ್ತಿದ್ದೆ! +ಕಂಡೋರಿಗೆಲ್ಲ ಆಚರ್ಯ ‘ಇದೇನು ಹೀಂಗೆ ಮಾಡ್ತದೆ ಈ ಹುಡುಗ, – ಮರಸಿಗೆ ಬರ್ತಿಯೇನೋ – ಅಂತಾ ಅವರು ಕೇಳಿದ್ರೆ?’ ಅಂತಾ! +ಗುಟ್ಟು ನಮ್ಮಿಬ್ಬರಿಗೇ ಗೊತ್ತಿದ್ದು!”ಐತ ದೊಡ್ಡಣ್ಣ ಹೆಗ್ಗಡೆಯವರೊಡನೆ ಮರದ ಮೇಲೆ ಕಟ್ಟಿದ್ದ ಅಟ್ಟಣೆಯ ಮೇಲೆ, ಒಂದು ಹೂಡುವ ಎತ್ತನ್ನು ಹಿಡಿದಿದ್ದ ಹುಲಿಯ ಬೇಟೆಗಾಗಿ, ರಾತ್ರಿ ಮರಸಿಗೆ ಕೂತಿದ್ದ ಸ್ವಾರಸ್ಯ ಕಥೆ ಹೇಳತೊಡಗಿದನು. +“ನಾನು ನಿಮ್ಮ ಹಾಂಗಿದ್ದೆ ಆವಾಗ. +ಷಿಕಾರಿಗೆ ಹೋಗಾದು ಅಂದರೆ ಬಾಳ ಹುಚ್ಚು… ಒಂದಿನ ಒಂದು ಹೂಡಕ್ಕೆ ಕಟ್ಟಾ ಎತ್ತನ್ನೆ ಹಿಡ್ದುಬಿಡ್ತು, ಹುಲಿ! +ದೊಡ್ಡ ಎತ್ತು ಕಣ್ರೋ! +ನಿಮ್ಮ ದೊಡ್ಡ ಮಾವನ ಮದುವೇಲಿ ಹಳೆಮನೆಯಿಂದ ನಿಮ್ಮ  ಅತ್ತೆಮ್ಮಗೆ ಬಳ್ಳೊಳ್ಳಿ ಕೊಟ್ಟಿದಂತೆ…. +ಹೇಳಿಕಳಿಸಿದ್ರು ನಿಮ್ಮ ದೊಡ್ಡಮಾವ, ನಿಮ್ಮ ಅಪ್ಪಯ್ಯಗೆ. +ಹುಲಿ ಹೊಡಿಯಾದು ಅಂದ್ರೆ ನಿಮ್ಮ ಅಪ್ಪಯ್ಯಗೆ ನೀರು ಕುಡಿದ್ಹಾಂಗೆ! +ಈ ಪರಾಂತಕ್ಕೆಲ್ಲ ಭಾರಿ ಈಡುಗಾರರು; ಇಟ್ಟಗುರಿ ತಪ್ಪಿರ್ತಿಲ್ಲಂತೆ. +ಹೇಳಿಕಳ್ಸಿದ್ದೆ ಸೈ, ಬಂದೇ ಬಂದ್ರು, ಜೋಡುನಳಿಗೆ ಕೇಪಿನಕೋವೀನ ಹೆಗಲಮೇಲೆ ಹೇರಿಕೊಂಡು, ಕೋಣೂರಿಗೆ. +ಎಂಥಾ ಆಳು ಅಂತೀರಿ? +ಬರ್ದ್ದಂಡಾಳು! +ಅವರನ್ನ ಕಂಡ್ರೇ ಹುಲಿ ನಡುಗಬೇಕು, ಹಾಂಗಿದ್ರು… ಅವತ್ತು ಬೈಗಿನ ಹೊತ್ತು ನಾ ಸುಮ್ನೆ ನಿಮ್ಮ ಸಣ್ಣಮಾವನ ಜೊತೆ ಚಿಟ್ಟುಬಿಲ್ಲು ಹಿಡುಕೊಂಡು ಹಕ್ಕಿ ಹೊಡಿಯಾಕೆ ಹೋಗಾಕೆ ಮುಕುಂದಯ್ಯನೆ ಹೊರಟಿದ್ರು. +ಆದರೆ ದೊಡ್ಡಮ್ಮ – ‘ಅವನಿಗೆ ಎರಡು ಜರ ಬಂದು ಇವತ್ತೆ ಬಿಟ್ಟದೆ; ಹೋಗಾದು ಬ್ಯಾಡ.’ ಅಂದು ಬಿಟ್ರಂತೆ…. +ನಾ ಮುಕುಂದಯ್ಯನ ಹತ್ರಾನೆ ತೆಣೆ ಕೆಳಗೆ ಅಂಗಳದಾಚೆ ನಿಂತಿದ್ದೆ. +ನನ್ನಾರೂ ಕರೆದಿದ್ರೆ ಹೋಗ್ತಿದ್ನೆಲ್ಲಾ ಅಂತಾ ಮನಸ್ಸಿನಾಗೆ ಹಾರೈಸ್ತಾ. +ನಿಮ್ಮ ಅಪ್ಪಯ್ಯ ಜಗಲಿಮೇಲೆ ಕೂತಿದ್ದವರು. +ಹಾಂಗೆ ನನ್ನ ಕಡೆ ನೋಡಿದ್ರು. +ನಾ ನೆಗ್ತಾ ನಿಂತಿದ್ದೆ. +‘ಬತ್ತಿಯೇನೋ ಮರಸೀಗೆ?’ ಅಂತಾ ಕರೆದೇಬಿಟ್ರು! +ನಂಗೇನು?ಸಂತೋಷವೇ ಸಂತೋಷ! +‘ಹ್ಞೂ ಬತ್ತೀನ್ರಯ್ಯಾ!’ ಅಂದೇಬಿಟ್ಟೆ. +‘ಹುಲಿಗಿಲಿ ಬಂದ್ರೆ ಹೆದರಿಕೋಬಾರ್ದು. +ಪಟ್‌ಪಿಟ್‌ ಅನ್ನದೆ ಸುಮ್ನೆ ಕೂತುಗೋತಿಯಾ?’ ಅಂದ್ರು. +‘ಹ್ಞೂ, ನಾನೇನು ಹೆದರೋದಿಲ್ಲ!’ ಅಂದೆ. +“ನಂಗೂ ಇಷ್ಟು ಊಟ ಹಾಕ್ಸಿದ್ರು; ಅವರೂ ಒಳಗೆ ಹೋಗಿ ಉಂಡ್ರು. +ಕತ್ತಲಾಗಾಕೆ ಮುಂಚೇನ ಕೆಂಬೈಗು ಭಯಗುಗಪ್ಪಗೆ ತಿರುಗಿತ್ತು. +ಇರುಳ ರಕ್ಷೆಗೋಸ್ಕರವೂ ಆಶ್ರಯ ಸಂಪಾದನೆಗೂ ಅವಸರವಾಗಿ ಗೊತ್ತು ಸೇರಿಕೊಳ್ಳಲು ಕಾತರವಾಗಿದ್ದ ಪ್ರಾಣಿ ಪಕ್ಷಿ ಸಮೂಹದಿಂದ ಶಬ್ದಮಯವಾಗಿದ್ದ ಕೋಳಿಒಡ್ಡಿ, ಕುರಿಒಡ್ಡಿ, ಹಂದಿಒಡ್ಡಿ, ದನದಕೊಟ್ಟಿಗೆ ಇವುಗಳ ದುರ್ಗಂಧಮಯ ಮಾಯುಮಂಡಲವನ್ನು ಹಾದು ಐತನೊಡನೆ ಧರ್ಮು ಸೋಗೆವಿಭಾಗದ ತಮ್ಮ ಮನೆಯ ಮೆಟ್ಟಲನ್ನೇರಿ ನಿಂತಾಗ, ಅವನನ್ನು ಸ್ವಾಗತಿಸಲು ಯಾರು ಇರಲಿಲ್ಲ; ಯಾರೂ ಬರಲಿಲ್ಲ. +ಮಲಗಿದ್ದ ನಾಯಿಗಳು ಮಾತ್ರ ಬೊಗಳಿ, ಗುರುತು ಸಿಗಲು ಬಾಲವನ್ನಾಡಿಸಿ, ಮೈಮೇಲೆ ನೆಗೆದಾಡಿದ್ದುವು. +ಯಾರೂ ಅವನನ್ನು ನಿರೀಕ್ಷಿಸಿಯೂ ಇರಲಿಲ್ಲ. +ಅಷ್ಟೇ ಅಲ್ಲ; ಮನೆಯಲ್ಲಿ ಅವನ ತಾಯಿಯ ನೆವದಿಂದ ಆಗುತ್ತಿದ್ದ ರಂಪಾಟದ ದೃಷ್ಟಿಯಿಂದ ಅವನು ತನ್ನ ಮಾವನಮನೆ ಕೋಣೂರಿನಿಂದ ತಮ್ಮ ಮನೆ ಹಳೆಮನೆಗೆ ಬರುವುದೆ ಒಂದು ಸಂಕಟವಾಗಿ ಪರಿಣಮಿಸುತ್ತಿತ್ತು ಮನೆಯವರಿಗೆ. +‘ಬಂದೆಯಾ!’ ಎನ್ನುವವರು ಒಬ್ಬರೂ ಇಲ್ಲದೆ ಬೆಕೋ ಬಿಮ್ ಎನ್ನುತ್ತಿದ್ದ ಮನೆಯ ಅಂಗಳಕ್ಕೆ ಪ್ರವೇಶಿಸುವುದೇ ಅವನಿಗೊಂದು ಸುಯ್ಯುವ ಸಂಗತಿಯಾಗಿತ್ತು. +ಮನಸ್ಸು ಅಳಬೇಕು ಎನ್ನುವಷ್ಟರ ಮಟ್ಟಿಗೆ ಖಿನ್ನವಾಯಿತು. +ಆ ಖಿನ್ನತೆಗೆ ಒಂದೇ ಒಂದು ಸಂತೋಷದ ಕಿರಣ ಪ್ರವೇಶಿಸದೆ ಇದ್ದಿದ್ದರೆ ಧರ್ಮು ಕಣ್ಣೊರಸಿಕೊಳ್ಳಬೇಕಾಗಿತ್ತು. +ನೆರೆಯ ಹೆಂಚಿನ ಮನೆಯ ನಿರಾವರಣ ಅಂಗಳದಲ್ಲಿ, ಸೊಂಟ್ ತಾಯಿತಿ ಕಟ್ಟಿದ್ದ ಉಡಿದಾರ ವಿನಾ ಸಂಪೂರ್ಣ ನಿರ್ವಾಣವಾಗಿ ಮಣ್ಣಿನಲ್ಲಿ ಆಟವಾಡುತ್ತಿದ್ದ ರಾಮು, ಶಂಕರ ಹೆಗ್ಗಡೆಯ ಮಗ, ‘ಧರ್ಮಣ್ಣಯ್ಯ’ನನ್ನು ನೋಡಿದವನು, ‘ನೀನು ಎಲ್ಲಾದ್ರೂ ಆಚೆಮನೀಗೆ ಹೋದ್ರೆ ನಿನ್ನ ಬೆನ್‌ಚಮ್ಡ ಸಿಲಿಯಾ ಹಾಂಗೆ ಹೊಡೆದುಬಡ್ತೀನಿ!’ ಎಂದಿದ್ದ ಅವನ ಅಪ್ಪಯ್ಯನ ಬೆದರಿಕೆಯನ್ನೂ ಸಂಪೂರ್ಣವಾಗಿ ಮರೆತು, ‘ಧರ್ಮಣೈ ಬಂದಾ! +ಧರ್ಮಣೈ ಬಂದಾ!’ ಎಂದು ಕೇಕೆ ಹಾಕುತ್ತಾ ಓಡಿಬಂದು ಅವನನ್ನು ತಬ್ಬಿಹಿಡಿದನು. +ಪುಟ್ಟ ರಾಮುವ ಆ ಸುಸ್ವಾಗತವನ್ನು ಆಸ್ವಾದಿಸಿದ ಧರ್ಮುವ ಚೇತನ ತನ್ನ ಮುನ್ನಿನ ಕುಗ್ಗನ್ನು ವಿಸರ್ಜಿಸಿ ಹಿಗ್ಗಿತು. +ದಾರಿಯಲ್ಲಿ ಬರುವಾಗ ಕುಯ್ದು ಅಂಗಿಜೇಬಿಗೆ ಹಾಕಿಕೊಂಡಿದ್ದ ಕಾಕಿಯ ಹಣ್ಣುಗಳನ್ನು ತೆಗೆದು ರಾಮುವಿಗೆ ಕೊಟ್ಟನು. +ಆಟಕ್ಕೆ ಜೊತೆಯಿಲ್ಲದೆ ಬೇಸರದ ಒಂಟಿಬಾಳು ಸಾಗಿಸುತ್ತಿದ್ದ ಆ ಬಾಲಕನಿಗೆ  ಧರ್ಮುವ ಆಗಮನ ಒಂದು ಮಹತ್ವಪೂರ್ಣ ಆನಂದದ ಸಂಗತಿಯಾಗಿತ್ತು. +ಈಗ ಧರ್ಮು ಕೊಟ್ಟ ಆ ಎಂಟೊ ಹತ್ತೊ ಕರಿಯ ಕಾಕಿ ಹಣ್ಣುಗಳೆ ಅವನಿಗೆ ಪರಮೈಶ್ವರ್ಯವಾಗಿ ಪರಿಣಮಿಸಿತ್ತು. +ಆ ಆನಂದದ ಸನ್ನವೇಶದಲ್ಲಿಯೂ ಧರ್ಮುಗೆ ಫಕ್ಕನೆ ಎಚ್ಚರಿಕೆಯುಂಟಾಗಿ “ಈಗ ಮನೀಗೆ ಹೋಗಪ್ಪಾ, ರಾಮು. +ಆಮ್ಯಾಲೆ ನಾನೇ ಬತ್ತೀನಿ, ನಿನ್ನ ಹತ್ರ ಆಡಾಕೆ. +ದೊಡ್ಡಚಿಗಪ್ಪಯ್ಯ – ನಿನ್ನ ಅಪ್ಪಯ್ಯ – ಕಂಡರೆ….” ಎಂದು ಅರ್ಧದಲ್ಲಿಯೇ ನಿಲ್ಲಿಸಿದನು. +ರಾಮೂಗೂ ಧರ್ಮಣ್ಣಯ್ಯನ ಎಚ್ಚರಿಕೆ ಅರ್ಥವಾಯಿತು. +ಆದರೂ ಅವನು ವಿಚಲಿತನಾಗದೆ “ಅಪ್ಪಯ್ಯ ಮನೇಲಿ ಇಲ್ಲ ಕಣೋ. +ಸಿದ್ದರಮಠಕ್ಕೆ ಹೋಗ್ಯಾನೆ, ಚೀಟಿ ಈಬೂತಿ ತರಾಕಂತೆ!” ಎಂದನು. +“ಆಗಲಿ ನೀ ಹೋಗಪ್ಪಾ, ಯಾರಾದರೂ ನೋಡಿ ಹೇಳಿದ್ರೆ?” ಎಂದು ಅವನನ್ನು ಕಳಿಸಿ, ಧರ್ಮು ತಮ್ಮ ಮನೆಯ ಅಂಗಳಕ್ಕೆ ಕಾಲಿಟ್ಟನು. +ಜಗಲಿಯ ಕೆಳತೆಣೆಯಲ್ಲಿ ಕುಳಿತು ‘ಸಣ್ಣಚಿಗಪ್ಪಯ್ಯ’ – ತಿಮ್ಮಪ್ಪ ಹೆಗ್ಗಡೆ – ಹೊಲೆಯರಿಗೂ ಗಟ್ಟದಾಳುಗಳಿಗೂ ‘ಬಾಯಿಗೆ’ ಕೊಡುತ್ತಿದ್ದನು. +ಅವನ ಪಕ್ಕದಲ್ಲಿ ಒಮದು ಬುಟ್ಟಿ ತುಂಬ ಅಡಕೆ ಮತ್ತು ಹೊಗೆಸೊಪ್ಪಿನ ಸಣ್ಣ ಪಿಂಡಿ ಇದ್ದುವು. +ಹೊಗೆಸೊಪ್ಪಿನ ವಾಸನೆಯೂ ಅಲ್ಲೆಲ್ಲ ಹಬ್ಬಿತ್ತು. +ಅಜ್ಜಯ್ಯ – ಸುಬ್ಬಣ್ಣ ಹೆಗ್ಗಡೆಯವರೂ – ಎಲ್ಲಯೂ ಕಾಣಲಿಲ್ಲ…. +‘ಓ ಬೈಗಿನ ಕಳ್ಳುಗೊತ್ತಿಗೆ ಹೋಗಿರಬೇಕು!’ ಎಂದುಕೊಂಡನು ಧರ್ಮು, ಅಜ್ಜಯ್ಯನ ಚಾಳಿಯನ್ನು ನೆನೆಪಿಗೆ ಚಾಳಿಯನ್ನು ನೆನಪಿಗೆ ತಮದುಕೊಂಡು. +ತಿಮ್ಮಪ್ಪ ಹೆಗ್ಗಡೆ ಕಣ್ಣೆತ್ತಿ ನೋಡಿ “ಓಹೋಹೋಹೋ ಸಣ್ಣ ಹೆಗ್ಗಡೆ ಸವಾರಿ ಬಂದುಬಿಡ್ತಲ್ಲಾ!” ಎಂದು ವ್ಯಂಗ್ಯವಾಗಿ ನಕ್ಕು “ಆಡಿಕೇನೋ? +ಕಳ್ಳತಪ್ಪಿಸಿಕೊಂಡು ಬಂದ್ಯೋ?” ಎಂದು ಪ್ರಶ್ನಿಸಿ, ಹಿಂದೆ ಇದ್ದ ಐತನನ್ನು ಕಂಡು “ಓಹೋಹೋಹೋ ಈ ಪೀಂಚಲು ಗಂಡನೂ ಬಂದುಬಿಟ್ಟಾನೆ! +ನಿನ್ನ ಹೆಂಡ್ತಿ ಬರಲಿಲ್ಲೇನೋ?” ಎಂದು ತನ್ನ ಕರಿಮುಖದ, ಎಲೆಯಡಿಕೆ ಜಗಿದು ಕೆಂಪಾಗಿದ್ದ, ಹಲ್ಲಿನ ಸಾಲುಗಳನ್ನು ಪ್ರದರ್ಶಿಸಿ, ಆಳುಗಳಿಗೆ ಎಲೆ ಅಡಿಕೆ ಹೊಗೆಸೊಪ್ಪುಗಳನ್ನು ವಿನಿಯೋಗ ಮಾಡುತ್ತಲೆ “ ಏ ಐತಾ, ನೀನೇನೋ ಜೇನು ಕಂಡು ಹಿಡಿಯೋದರಲ್ಲಿ ಬಾಳ ಗಟ್ಟಿಗನಂತೆ? …. ಎಲ್ಲಾ ಹೇಳ್ತಾರೆ…. +ನಮ್ಮ ಕಾಡಾಗೆ ಒಂದಷ್ಟು ಹುಡುಕಿ ಕೊಡ್ತೀಯೇನೋ? …. ನಿನ್ನ ಹೆಂಡ್ತೀನೂ ಗಟ್ಟಿಗೆಯಂತೆ ಜೇನು ಕೀಳೋದರಲ್ಲಿ. +ಹೌದೇನೊ?ಅವಳನ್ನೂ ಕರಕೊಂಡು ಬಾ, ನಿನ್ನ ಜೊತೆಗೆ. +ಬ್ಯಾಡ ಅನ್ನಾದಿಲ್ಲ” ಎಂದು ಉತ್ತರ ನಿರೀಕ್ಷಿಸದೆ ಮಾತಾಡಿದನು. +ಐತನ ಹೆಂಡತಿಯನ್ನು ಕರಕೊಂಡು ಬರುವ ವಿಚಾರದಲ್ಲಿ ತಿಮ್ಮಪ್ಪಹೆಗ್ಗಡೆ ಮಾತಾಡಿದ ಧ್ವನಿಗೆ. +ಎಳೆ ಹೆಣ್ಣುಗಳ ಸಂಬಂಧದಲ್ಲಿ ಅವನ ಸ್ವಭಾವವನ್ನು ಅರಿತಿದ್ದ ಆಳುಗಳೆಲ್ಲಾ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ನಗೆಯಾಡಿದರು. +ಜಗಲಿಗೆ ಹತ್ತಿ ಒಳಗೆ ಹೋಗುತ್ತಿದ್ದ ಧರ್ಮುಗೆ ತಿಮ್ಮಪ್ಪಹೆಗಡೆ:“ಏನೋ? +ಹೊರಗಿನಿಂದ ಬಂದವ ಕೈಕಾಲು ತೊಳೆದುಕೊಳ್ಳದೆ ಒಳಗೆ ಹೋಗ್ತೀಯಲ್ಲಾ?” ಎಂದನು. +ತಿಮ್ಮಪ್ಪಹೆಗ್ಗಡೆಗೆ ಶುಚಿಯ ನಿಷ್ಠೆಯಾಗಲಿ ಶಿಷ್ಟಾಚಾರದಲ್ಲಿ ಗೌರವವಾಗಲಿ ಇಷ್ಟೂ ಇರದಿದ್ದರೂ ತನ್ನ ಹಿರಿತನದ ಅಧಿಕಾರಿವಾಣಿಯನ್ನು ಮೆರೆಯಲು ಆಳುಗಳ ಮುಂದೆ ಹಾಗೆ ಹೇಳಿದ್ದನಷ್ಟೆ! +ಆದರೂ ಧರ್ಮು ಮರೆತುದನ್ನು ನೆನಪಿಗೆ ತಂದುಕೊಂಡತೆ, ಜಗಲಿಯಿಂದಿಳಿದು ಬಚ್ಚಲಿಗೆ ಹೋಗಿ ಕೈಕಾಲು ಮುಖ ತೊಳೆದುಕೊಂಡು ಅಡುಗೆ ಮನೆಗೆ ಹೋದನು. +ಅಲ್ಲಿ ಅವನು ನಿರೀಕ್ಷಿಸಿದಂತೆ ಒಲೆಯ ಅವನ ಅವ್ವ ಕಾಣಿಸಲಿಲ್ಲ. +ಮಂಜತ್ತೆ ಸೀರೆಯ ಸೆರಗನ್ನು ಬಿಗಿದು ಕಟ್ಟಿಕೊಂಡು, ಒಲೆಯ ಮೇಲೆ ತಕಪಕಿಸುತ್ತಿದ್ದ ಅನ್ನದ ಹಿತ್ತಾಳೆ ಚರಿಗೆಯನ್ನು ಒಲೆಯ ಪಕ್ಕದಲ್ಲಿಟ್ಟಿದ್ದ ತಾಮ್ರದ ಬಾಗುಮರಿಗೆಗೆ ಎತ್ತಿ ಇಳಿಸಿ, ಸಿಬ್ಬಲ ಮರಚಟ್ಟಿಗಳನ್ನು ಚರಿಗೆಯ ಬಾಯಿಗೆ ಆನಿಸಿ ಒತ್ತಿ, ಅನ್ನ ಬಸಿಯಲು ಅಣಿಯಾಗುತ್ತಿದ್ದಳು. +ಧರ್ಮುವನ್ನು ಕಂಡವಳೆ ಸಂತೋಷಾಶ್ಚರ್ಯ ಭಾವದಿಂದ ಹರ್ಷಿತಳಾಗಿ “ಈಗ ಬಂದ್ಯೇನೋ? +ಕೋಣೂರಿನಿಂದ ಬಂದ್ಯೇನೋ? +ನಿನ್ನ ಅತ್ತೆಮ್ಮ – ಬಾಲೆಬಾಣ್ತಿ ಹ್ಯಾಂಗಿದ್ದಾರೋ?” ಎಂದು ಕೇಳಿದಳು. +“ಎಲ್ಲ ಚಂದಾಗಿದಾರೆ, ಮಂಜತ್ತೆ…. +ನನ್ನ ಜೊತೆ ಬಂದ ಐತಗೆ ಬಂದ ಐತಗೆ ಸೊಲ್ಪ ಬೆಲ್ಲ ನೀರು ಕೊಡತ್ತೆ. +ಹಿತ್ತಲು ಕಡೆಗೆ ಬರಾಕೆ ಹೇಳ್ತೀನಿ ಅವನಿಗೆ. +ಅಂವ ಈಗ್ಲೆ ಹಿಂದಕ್ಕೆ ಹೊರಡ್ತಾನೆ. +ಕತ್ತಲಾಗಬೇಕಾದ್ರೆ ಬಿಡಾರ ಸೇರಿಸಿಕೊಳ್ಳಬೇಕಂತೆ” ಎಂದವನೆ ಜಗಲಿಗೆ ಓಡಿ ಹೋಗಿ ಐತನನ್ನು ಕರೆದುಬಂದನು. +ಅನ್ನ ಬಯಸುವ ಕೆಲಸವನ್ನು ಮುಂದುವರೆಸಿದ್ದ ಮಂಜಮ್ಮ “ನೀನೇ ಕೊಡಣ್ಣಾ. +ನಾ ಅನ್ನ ಬಸೀತ ಇದ್ದೀನಿ. +ನೋಡಲ್ಲೆ ನಾಗಂದಿಗೆ ಮ್ಯಾಲದೆ ಬೆಲ್ಲದ ಚರಿಗೆ…. +ಕೈ ನಿಣುಕದಿದ್ರೆ ಒಂದೆರಡು ಮಣೆ ಹಾಕಿಕೊಳ್ಳಣ್ಣಾ…. +ಆಮೇಲೆ ಬಸಿಯಾದು ತಡ ಆಗಿ, ಅನ್ನ ಗಂಜಿಗಲಾದ್ರೆ, ನಿನ್ನ ಸಣ್ಣಚಿಕ್ಕಪ್ಪಯ್ಯ ನಿನ್ನೆ ನಿನ್ನ ಅವ್ವಗೆ ಗುದ್ದಿದ್ಹಾಂಗೆ ನನಗೂ ಗುದ್ದುತಾನೆ ಇವತ್ತು!” ಕೊನೆಯ ವಾಕ್ಯವನ್ನು ತನಗೆ ತಾನೆ ಹೇಳಿಕೊಳ್ಳುವಂತೆ ಮಂಜಮ್ಮ ಹೇಳಿದ್ದರೂ ಅದರ ಒಂದೆರಡು ಮಾತು ಧರ್ಮುಗೆ ಕೇಳಿಸಿತ್ತು! +ಸಣ್ಣಗಪ್ಪಯ್ಯನ ಉದ್ದಂಡತನದ ಒರಟು ನಡತೆ ಧರ್ಮುಗೆ ಪೂರ್ವಪರಿಚಿತವಾದದ್ದೆ. +ಹಾಗೆಯೆ ಏನಾದರೂ ನಡೆದಿರಬೇಕೆಂದು ಊಹಿಸಿದ್ದನು. +ಆದರೆ ನಿಜವಾಗಿ ನಡೆದದ್ದು ಅವನ ಊಹೆಗೂ ಮೀರಿದುದಾಗಿತ್ತು. +ಬೆಲ್ಲ ನೀರು ಕುಡಿದ ಮೇಲೆ ಐತ ಕೋಣೂರಿಗೆ ಹಿಂದಿರುಗಲು ಹೊರಟು ನಿಂತಾಗ ಧರ್ಮು “ಐತಾ, ನಿನಗೆ ನನ್ನ ಅಪ್ಪಯ್ಯನ ಗುರುತು ಚೆನ್ನಾಗದೆ ಹೇಳಿದೆ. +ನಾನೆಲ್ಲಾದರೂ ಅವರನ್ನ ಹುಡುಕಾಕೆ ಹೊರಟರೆ, ನೀನೂ ಬರಬೇಕು ನನ್ನ ಸಂಗಡ” ಎಂದುದಕ್ಕೆ ಐತ ನಗೆಯೊಪ್ಪಿಗೆ ಸೂಚಿಸಿದ್ದನು. +ಐತನ್ನನು ಬೀಳ್ಕೊಂಡು ಅಡುಗೆಮನೆಗೆ ಹಿಂದಿರುಗಿದ ಧರ್ಮು “ಮಂಜತ್ತೆ, ಅವ್ವ ಎಲ್ಲಿ?” ಎಂದು ಕೇಳಿದನು. +ಮಂಜಮ್ಮ ಉತ್ತರ ಕೊಡಲೂ ಇಲ್ಲ; ಮುಖ ಎತ್ತಿ ಧರ್ಮುವನ್ನು ನೋಡಲೂ ಇಲ್ಲ. +ತಾನು ಮಾಡುತ್ತಿದ್ದ ಕೆಲಸವನ್ನು ಮುಂದುವರಿಸಿದಳು, ಧರ್ಮು ಹೇಳಿದ್ದು ಕೇಳಿಸಲಿಲ್ಲ ಎಂಬಂತೆ. +ಆದರೆ ಅದು ಕೇಳಿಸಿಯೇ ಅವಳು ಹಾಗೆ ಮಾಡಿದ್ದಳು. +ಏನೆಂದು ಉತ್ತರ ಕೊಡುವುದು? +ಹೇಗೆ ಉತ್ತರ ಪ್ರಾರಂಭಿಸುವುದು? +ಧರ್ಮುವ ಮುಗ್ಧಹೃದಯಕ್ಕೆ ಅಪಘಾತವಾಗದಂತೆ ಸತ್ಯವನ್ನು, ಕಠೋರವಾಗಿದ್ದ ಸತ್ಯವನ್ನು, ಹೇಗೆ ತಿಳಿಸುವುದು? +ಎಂದೆಲ್ಲ ಯೋಚಿಸುತ್ತಿದ್ದಳೆಂದು ತೋರುತ್ತದೆ. +ಧರ್ಮುವ ಪ್ರಶ್ನೆಗೆ ದುಃಖವಿಕ್ಕಿ ಬರುತ್ತಿದ್ದ ತನ್ನ ಮುಖಭಾವವನ್ನು ಮರೆಮಾಚಲೆಂದೆ ಅವಳು ಅವನ ಕಡೆ ನೋಡುವ ಸಾಹಸ ಮಾಡಿರಲಿಲ್ಲ. +ತನ್ನ ಕಡೆಗೂ ತಿರುಗಿ ನೋಡದಿದ್ದ ಮಂಜತ್ತೆಯ ಭಂಗಿಯನ್ನೂ ನಿಷ್ಠುರ ಎನ್ನುವಂತಿದ್ದ ಅವಳ ಮೌನವನ್ನೂ ಗ್ರಹಿಸಿ ಧರ್ಮು ತುಸು ಅಳುದನಿಯಿಂದಲೆ ಕೇಳಿದನು: “ಯಾಕೆ, ಮಂಜತ್ತೆ, ಮಾತಾಡಾದಿಲ್ಲ?”ಮುಗ್ಧಬಾಲಕನ ಮುಗ್ಧಹೃದಯದ ಆ ಮುಗ್ಧಪ್ರಶ್ನೆ ಮಂಜಮ್ಮನ ಶೋಕಭಾವದ ಕಟ್ಟೆಯ ಬಾಗಿಲನ್ನೆ ಎತ್ತಿತ್ತೊ ಎಂಬಂತೆ ಆಯಿತು. +ಮಾಡುತ್ತಿದ್ದ ಕೆಲಸ ನಿಲ್ಲಿಸಿ, ಎದ್ದುನಿಂತು, ಧರ್ಮುವ ಕಡೆ ನೋಡುತ್ತಾ ಕಣ್ಣೀರು ಸುರಿಸತೊಡಗಿದಳು. +ಉಸಿರ ಎಳೆದಾಟ ಹೆಚ್ಚಿತು. +ಬಿಕ್ಕಿಬಿಕ್ಕಿ ಅಳುವುದನ್ನು ತುಂಬ ಪ್ರಯತ್ನದಿಂದ ತಡೆಯುತ್ತಿದ್ದಂತೆ ತೋರಿತು. +ಬೇರೆ ಯಾರಾದರೂ ಅಡಿಗೆಮನೆಗೆ ಬಂದುಬಿಟ್ಟಾರೊ ಎಂದು ಅಂಜುವಂತೆ ಬಾಗಿಲಿದ್ದ ಕಡೆಗೆ ಕಣ್ಣು ಒಮ್ಮೆ ಇಮ್ಮೆ ಕಳ್ಳನೋಟ ಹಾಯಿಸಿತು: “ಯಾರು? +ಅತ್ತಿಗಮ್ಮನಾ?ನಿಮ್ಮ ಕೋಣೇಲಿದಾರೆ!” ಎಂದಳು, ತುಟಿ ಅದುರುತ್ತಾ. +ಹಲವು ವರ್ಷಗಳಿಂದಲೂ ತನ್ನ ಅವ್ವಗೆ ಬಂದೊದಗಿದ್ದ ಮಹಾ ವಿಪತ್ತಿನ ದುಃಖವನ್ನು ಅನುಭವಿಸಿ ಅರಿತಿದ್ದ ಆ ಮಾಲಕನಿಗೆ ತನ್ನ ತಾಯಿಯ ಕ್ಷೇಮವಿಚಾರದಲ್ಲಿ ಯಾವಾಗಲೂ ಅವನ ಅರಿತಿದ್ದ ಆ ಬಾಲಕನಿಗೆ ತನ್ನ ತಾಯಿಯ ಕ್ಷೇಮವಿಚಾರದಲ್ಲಿ ಯಾವಾಗಲೂ ಅವನ ಕಲ್ಪನೆ ಭಯಂಕರವಾದ ಚಿತ್ರಗಳನ್ನೆ ತಂದೊಡ್ಡಿ ಕಣ್ಣೀರಿನ ಕೋಡಿ ಹರಿಯುವಂತೆ ಮಾಡುತ್ತಿತ್ತು. +ಅದು ಕೆಟ್ಟಕೆಟ್ಟ ಕನಸುಗಳಲ್ಲಿಯೂ ಪ್ರತಿಫಲಿತವಾಗಿ ಅವನ ನಿದ್ದೆನ್ನೆಲ್ಲ ಕಡಹುತ್ತಿತ್ತು. +ಒಮ್ಮೊಮ್ಮೆ ನಿದ್ದೆಗಣ್ಣಿಲ್ಲಿಯೆ ತಾಯಿಯ ಸಹಾಯಕ್ಕೊ ಸೇವೆಗೊ ಅಥವಾ ಅವಳಿಗೊದಗಲಿದ್ದ ಯಾವುದೋ ಭಯಂಕರ ಅನಿಷ್ಟವನ್ನು ತಪ್ಪಿಸುವ ಸಲುವಾಗಿಯೊ ಎದ್ದು ಓಡುತ್ತಲೊ ಇದ್ದನು. +ಅದಕ್ಕಾಗಿಯೆ ಅವನು ಎಲ್ಲಿಯೆ ಮಲಗಲಿ ಯಾರಾದರೂ ದೊಡ್ಡವರು ಅವನ ಪಕ್ಕದಲ್ಲಿ ಮಲಗುತ್ತಿದ್ದುದು ಅಭ್ಯಾಸವಾಗಿ ಹೋಗಿತ್ತು. +ಈಗಲೂ ತನ್ನ ಪ್ರಶ್ನೆಗೆ ನೇರವಾಗಿ ಉತ್ತರ ಕೊಡದೆ, ತಡೆಗೂ ತಡೆದೂ, ಕಡೆಗೆ ಏನೋ ಒಂದನ್ನು ಹೇಳಬೇಕಲ್ಲಾ ಎಂದು ಹೇಳಿದಂತೆ ಮಾಡಿ, ಅಳತೊಡಗಿದ್ದ ಮಂಜತ್ತೆಯನ್ನು ಕಂಡು ಧರ್ಮುವಿನ ಕಲ್ಪನೆ ಹುಚ್ಚು ಹುಚ್ಚಾಗಿ ಕೆರಳಿತು. +ತನ್ನ ತಾಯಿ ಏನೊ ಆಗಿದ್ದಾಳೆ; + ಏನೊ ಆಗಿಹೋಗಿದೆ: ಬೆಂಕಿ ಹೊತ್ತಿಸಿಕೊಂಡು ಸತ್ತಳೊ? +ಬಾವಿಗೆ ಬಿದ್ದಳೊ?ನೇಣು ಹಾಕಿಕೊಂಡಳೊ?ವಿಷ ತಿಂದಳೊ? +ಅಥವಾ ಅಪ್ಪಯ್ಯನನ್ನು ಹುಡುಕಿ ತರುತ್ತೇನೆಂದು ತಾನೊಬ್ಬಳೆ ಹೋಗಿಬಿಟ್ಟಳೊ? + ಅವನೂ ಅಳತೊಡಗಿ, ಬಿಕ್ಕಿಬಿಕ್ಕಿ ತೊದಲುತ್ತಾ “ಯಾ – ಯಾಕೆ ಮಂಜ – ತ್ತೆ, ಅಳ್ತೀಯಾ?” ಎಂದು ಅವಳ ಹತ್ತಿರಕ್ಕೆ ಸರಿದನು. +ಅವಳು ತಡೆಯಲಾರದೆ ಮುನ್ನುಗ್ಗಿ ತನ್ನ ಕೆಲಸದ ಕೈ ಒದ್ದೆಯಾಗಿರುವುದನ್ನೂ ಸೀರೆ ಕೊಳೆಯಾಗಿರುವುದನ್ನೂ ಲೆಕ್ಕಿಸಿದೆ ಅವನನ್ನು ತಬ್ಬಕೊಂಡು, ತನ್ನ ಹೃದಯದಲ್ಲಿ ಸುಪ್ತವಾಗಿದ್ದ ತಾಯ್ತನವನ್ನೆಲ್ಲ ಸೂರೆಗೊಡುವ ರೀತಿಯಲ್ಲಿ ಅವನ ಮುಖದ ಮೇಲೆ ಕೈಯಾಡಿಸಿ, ಸೆರಗಿನಿಂದ ಕಣ್ಣೊರಸುತ್ತಾ “ಅಳಬ್ಯಾಡ, ತಮ್ಮಯ್ಯಾ” ಎಂದು, ಅವನ ತಾಯಿ ಅವನನ್ನು ಸಂಭೋದಿಸುತ್ತಿದ್ದ ರೀತಿಯನ್ನು ಅನುಕರಿಸಿ, “ನಿಮ್ಮ ಕೋಣೇಲಿ ಇದ್ದಾರೆ ತೋಳಿನಿಂದ ತಬ್ಬಿಕೊಂಡೆ ಕರೆದೊಯ್ದಳು. +ಕೋಣೆಯ ಬಾಗಿಲು ಬಳಿಸಾರಿದಂತೆಲ್ಲ ಮಂಜಮ್ಮನ ಉದ್ವೇಗ ಹಚ್ಚತೊಡಗಿತು: ‘ಅಣ್ಣಯ್ಯ ಹಾಕಿದ್ದ ಬೀಗ ತೆಗೆದಿದ್ದಾನೆಯೊ ಇಲ್ಲವೊ?’ ಎಂದು. +“ಯಾಕತ್ತೆ ನಮ್ಮ ಕೋಣೆ ಬಾಗಿಲಿಗೆ ಬೀಗ ಹಾಕ್ಯದೆ? +ಅವ್ವ ಒಳಗಿಲ್ಲೇನು?” ಧರ್ಮು ಕೇಳಿದ ಪ್ರಶ್ನೆಗೆ ಅವಳು ತಲೆಗೆ ಕಲ್ಲೇಟು ಬಿದ್ದಂತೆ ಕತ್ತರಿಸಿದಳು. +ಒಡನೆಯ ಉತ್ತರ ಹೇಳುವ ಸಂಕಟದಿಂದ ತಪ್ಪಿಸಿಕೊಳ್ಳಲೊ ಎಂಬಂತೆ ಮಂಜಮ್ಮ “ನಿನ್ನ ಸಣ್ಣಚಿಗಪ್ಪಯ್ಯನ ಹತ್ತಿರ ಬೀಗದ ಕೈ ಅದೆ. +ತರ್ತಿನಿ, ತಡಿ” ಎಂದು ಧರ್ಮುವನ್ನು ಸರಪಳಿಯ ಚಿಲಕಕ್ಕೆ ಬೀಗ ಹಾಕಿ ಭದ್ರಪಡಿಸಿದ್ದ ಅವರ ಕೇಣೆಯ ಬಾಗಿಲೆಡೆಗೆ ನಿಲ್ಲಿಸಿ ಜಗಲಿಗೆ ಓಡಿದಳು. +ನಗೆಯಾಡುತ್ತಾ ತಣ್ಣಗೆ ಕುಳಿತು ಆಳುಗಳಿಗೆ ಬಾಯಿಗೆ ಕೊಡುವ ಮಹಾಕಾರ್ಯದಲ್ಲಿ ಮಗ್ನನಾದಂತಿದ್ದ ತಿಮ್ಮಪ್ಪಹೆಗ್ಗಡೆ ಬೀಗದಕ್ಕೆ ಕೇಳಿದ ತನ್ನ ತಂಗಿಗೆ “ನೋಡು, ಬುಚ್ಚೀ, ಮತ್ತೆ ಅವರೇನಾದ್ರು ಕೆರೆ ಬಾವಿ ಬೀಳ್ತೀನಿ ಅಂತಾ ಹೋದರೋ? +ನನ್ನಿಂದ ಮಾತಿಲ್ಲ! +ನೀನೆ ಜವಾಬುಗಿತ್ತಿ! +ಆ ಮುಂಡಿಗೇಲಿ ಕಡಿನ ಕೋಡಿಗೆ ಸಿಕ್ಕಹಾಕಿದ್ದೆ ಬೀಗದ ಕೈನ!” ಎಂದು ಆ ಜಾಗವನ್ನು ಕಣ್ಣಿಂದಲೆ ನಿರ್ದೇಶಿಸಿ, ಮತ್ತೆ ನಿರುದ್ವಿಗ್ನವಾಗಿ ತನ್ನ ಕೆಲಸದತ್ತ ತಿರುಗಿದನು. +ಬೀಗದ ಕೈ ತೆಗೆದುಕೊಂಡು  ಓಡಿಬಂದು ಅಂಜಮ್ಮ ಬಾಗಿಲು ಬೀಗ ತೆಗೆದಳು. +ಧರ್ಮು ಬಾಗಿಲು ದಬ್ಬಿದನು. +ಬಾಗಿಲು ತೆರೆಯಲಿಲ್ಲ. +ಬಲವಾಗಿ ತಳ್ಳಿದನು, ತೆರೆಯಲಿಲ್ಲ. +ಮಂಜಮ್ಮನೂ ತನ್ನೊಂದು ಕೈಯಿಂದಲೆ ಧರ್ಮುಗೆ ನೆರವಾಗಿ ನೂಕಿದಳು. +ಆದರೂ ಬಾಗಿಲು ತೆರೆಯಲಿಲ್ಲ. +ಕೋಣೂರು ರಂಗಪ್ಪಗೌಡರ ತಂಗಿ, ಮುಕುಂದಯ್ಯನ ದೊಡ್ಡಕ್ಕ, (ಹಳೆಮನೆಗೆ ಕೊಟ್ಟಿದ್ದ ಹಿರಿಯ ಅಕ್ಕನನ್ನು ದೊಟ್ಟಕ್ಕ ಎಂದೂ ಬೆಟ್ಟಳ್ಳಿಗೆ ಕೊಟ್ಟಿದ್ದ ಕಿರಿಯ, (ಹಳೆಮನೆಗೆ ಕೊಟ್ಟಿದ್ದ ಹಿರಿಯ ಅಕ್ಕನನ್ನು ದೊಡ್ಡಕ್ಕ ಎಂದೂ ಬೆಟ್ಟಳ್ಳಿಗೆ ಕೊಟ್ಟಿದ್ದ ಕಿರಿಯ ಅಕ್ಕನನ್ನು ಪುಟ್ಟಕ್ಕ ಎಂದೂ ಕರೆಯುತ್ತಿದ್ದುದು ವಾಡಿಕೆ). +ರಂಗಮ್ಮ, ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರ ಹಿರಿಯ ಮಗ ದೊಡ್ಡಣ್ಣ ಹೆಗ್ಗಡೆಯವರನ್ನು ಮದುವೆಯಾದದ್ದೆ ಒಂದು ಕಥೆಯಾಗಿತ್ತು. +ದೊಡ್ಡಣ್ಣ ಹೆಗ್ಗಡೆಯವರಿಗೆ ರಂಗಮ್ಮ ವೀರಪಣವಾಗಿ ಲಭಿಸಿ, ಹೆಮ್ಮೆಯಿಂದ ಅವರ ಕೈಹಿಡಿದಿದ್ದಳು. +ಕೋಣೂರು ರಂಗಪ್ಪಗೌಡರೂ ಹಳೆಮನೆ ದೊಡ್ಡಣ್ಣ ಹೆಗ್ಗಡೆಯವರೂ (ಆಗಿನ್ನೂ ಪಾಲಾಗಿರಲಿಲ್ಲ) ಆಗತಾನೆ ಪ್ರಾಯಕ್ಕೆ ಬಂದ ಯುವಕರಾಗಿದ್ದಾಗ ಒಮ್ಮೆ ಸಾರಿಕೆ ಬೇಟೆಗೆ ಹೋಗಿದ್ದರಂತೆ. +ದಟ್ಟಕಾಡಿನ ನಡುವೆ ಒಂದು ಕುಳುಂಪೆಯ ಪಕ್ಕದ ಹೊದರಿನಲ್ಲಿ, ಆಗತಾನೆ ಹುಟ್ಟಿದುವೋ ಅಥವಾ ಹುಟ್ಟಿ ಕೆಲವೆ ಗಂಟೆಗಳಾಗಿದ್ದಿಬಹುದೋ ಗೊತ್ತಿಲ್ಲ, ಮೂರು ಪುಟ್ಟ  ಹುಲಿಮರಿಗಳಿದ್ದುವಂತೆ. +ತಾಯಿ ಹುಲಿ ಅಲ್ಲೆಲ್ಲಿಯೂ ಸಮೀಪದಲ್ಲಿದ್ದುದು ಗೋಚರಿಸಲಿಲ್ಲ. +ದೊಡ್ಡಣ್ಣ  ಹೆಗ್ಗಡೆಯವರು ಮರಿಗಳನ್ನು ಮನೆಗೆ ಎತ್ತಿಕೊಂಡು ಹೋಗೋಣ ಎಂದರಂತೆ. +ರಂಗಪ್ಪಗೌಡರು ‘ಖಂಡಿತ ಬೇಡ, ತಾಯಿಹುಲಿ ನಮ್ಮಿಬ್ಬರನ್ನೂ ಸಿಗಿದುಹಾಕಿಬಿಡ್ತದೆ’ ಎಂದರಂತೆ. +‘ನೀನು ಬರಿ ಪುಕ್ಕಲ!’ ಎಂದು ಮೂದಲಿಸಿದರಂತೆ ದೊಡ್ಡಣ್ಣ ಹೆಗಡೆ. +“ನೀನು ಭಾರಿ ಧೈರ್ಯಗಾರ?” ಎಂದು ಅಣಕಿಸಿದರಂತೆ ರಂಗಪ್ಪಗೌಡರು. +‘ನಾನು ಮನೆಗೆ ತಗೊಂಡೇ ಹೋದರೆ ಏನು ಕೊಡ್ತೀಯಾ?’ ಎಂದರಂತೆ ದೊಡ್ಡಣ್ಣ ಹೆಗಡೆ. +‘ನೀ ಕೇಳಿದ್ದು ಕೊಡ್ತೀನೊ!’ ಎಂದರು ರಂಗಪ್ಪಗೌಡರು. +‘ಕೈಮೇಲೆ ಕೈಯಿಟ್ಟು ಭಾಷೆ ಕೊಡು!’ ಎಂದು ಮುಡಿಗೆಯಿಟ್ಟು ದೊಡ್ಡಣ್ಣಹೆಗ್ಗಡೆ ಚಾಚಿದ ಬಲಅಂಗೈಯ ಮೇಲೆ ರಂಗಪ್ಪಗೌಡರು ತಮ್ಮ  ಬಲಗೈಯನ್ನು ಅಪ್ಪಳಿಸಿ ಶಪಥಮಾಡಿದರಂತೆ! +ದೊಡ್ಡಣ್ಣಹೆಗ್ಗಡೆ ಮೂರು ಹುಲಿಮರಿಗಳನ್ನೂ ಕಂಬಳಿಯೊಳಗಿಟ್ಟುಕೊಂಡು ಮನೆಯ ಕಡೆಗೆ ವೇಗವಾಗಿಯೆ ಹೊರಟರಂತೆ. +ಅವರು ತಕ್ಕಮಟ್ಟಿಗೆ ದೂರವಾಗಿಯೆ ಸಾಗಿದ್ದರಂತೆ. +ಹಿಂದೆ ದೂರದಲ್ಲಿ ಕೇಳಿಸಿತಂತೆ ತಾಯಿ ಹುಲಿಯ ಭಯಂಕರ ಘರ್ಜನೆ! +“ಕೆಟ್ಟೆವೋ, ದೊಡ್ಡಣ್ಣ! +ಬಿಟ್ಟು ಬಿಡೋ ಹುಲಿಮರೀನ! +ಓಡಿಹೋಗಾನ!” ಎಂದು ಕೂಗಿ ಹೇಳಿ ಓಡತೊಡಗಿದರಂತೆ ರಂಗಪ್ಪಗೌಡರು. +“ನೀನೇನು ಗಂಡಲ್ಲೇನೋ?ನಿಲ್ಲೋ! +ಗೌಡನ ಹಿಂದೆ ಓಡೋನಲ್ಲ ಕಣೋ ಹೆಗ್ಗಡೆ!” ಎಂದು ದೊಡ್ಡಣ್ಣಹೆಗ್ಗಡೆ ತನ್ನ ಜೋಡುನಲ್ಲಿ ಕೇಪಿನ ಕೋವಿಯನ್ನು ಅಣಿಮಾಡಿಕೊಂಡು, ಗರ್ಜನೆ ಬರುವ ಕಡೆ ತಿರುಗಿ ತಿರುಗಿ ನೋಡುತ್ತಾ, ಆದಷ್ಟು ಬೇಗನೆ ನಡೆಯತೊಡಗಿದರಂತೆ. +ಧೈರ್ಯಕ್ಕಲ್ಲದಿದ್ದರೂ ದಾಕ್ಷಿಣ್ಯಕ್ಕೆ ಸಿಕ್ಕಿದಂತಾಗಿ ಓಡುವುದನ್ನು ನಿಲ್ಲಿಸಿ ರಂಗಪ್ಪಗೌಡರೂ ತಮ್ಮ ಒಂಟಿನಲ್ಲಿ ಕೇಪಿನ ಕೋವಿಯನ್ನು ಅಣಿಮಾಡಿಕೊಂಡು, ಬಾವನ ಸಂಗಡವೆ ನಡೆಯತೊಡಗಿದರು, ದೇವರು ಮಾಡಿಸಿದ್ದಾಗಲಿ ಎಂದುಕೊಂಡು, ಬಾವನ ಸಂಗಡವೆ ನಡೆಯತೊಡಿದರು, ದೇವರು ಮಾಡಿಸಿದ್ದಾಗಲಿ ಎಂದುಕೊಂಡು. +ಸ್ವಲ್ಪ ಹೊತ್ತಿನೊಳಗಾಗಿಯೆ ಹೆಣ್ಣುಹುಲಿ ಇವರನ್ನು ಹಿಂಬಾಲಿಸಿ ಬಂದು ಮೇಲೆ ಬೀಳಲು ನುಗ್ಗಿತಂತೆ. +ಜೋಡುನಲ್ಲಿಯ ಎರಡು ಈಡುಗಳೂ ಒಂಟಿನಲ್ಲಿಯ ಒಂದು ಈಡೂ ಹಾರಿ, ಹುಲಿಗೆ ಮೂರು ಗುಂಡೂಗಳೂ ತಗುಲಿ ಪಲ್ಟಿಹೊಡೆಯಿತಂತೆ! +ಆದರೆ ಪೆಟ್ಟು ಅಂತಹ ಆಯಕ್ಕೆ ಬಿದ್ದಿರಲಿಲ್ಲವಾದ್ದರಿಂದ ಮತ್ತೆ ತೆವಳಿಬಂದೇ ಇವರ ಮೇಲೆ ಹಾರಿತಂತೆ. +ಆಗ ದೊಡ್ಡಣ್ಣಹೆಗ್ಗಡೆ ತನ್ನ ಸೊಂಟಕ್ಕೆ ತಗುಲಿಸಿದ್ದ ಉದ್ದಗತಿಯಿಂದ ಹುಲಿಯ ಮಂಡೆಗೆ ಹೊಡೆದು ಬೀಳಿಸಿದರಂತೆ. +ಆದರೂ ಹೋರಾಟದಲ್ಲಿ ಹುಲಿಯ ಒಂದು ಕೈ – ಅವರ ಹೆಗಲಿನ ಬಳಿ ಬೆನ್ನಿಗೆ, ಬಗೆದುಹಾಕಿದಂತೆ ದೊಡ್ಡ ಗಾಯವಾಗಿ. +ರಕ್ತ ಸುರಿದು ರಾಣಾರಂಪವಾಯಿತಂತೆ! +ಆ ಗಾಯದ ಕಲೆಯನ್ನೆ ಕುರಿತು ಐತ ಧರ್ಮುಗೆ ಹೇಳಿದ್ದು, ಧರ್ಮುವ ಅಪ್ಪಯ್ಯನನ್ನು ಈ ಕಲೆಯಿಂದಲೂ ತಾನು ಗುರುತಿಸಬಲ್ಲೆ ಎಂದು. +ಹುಲಿಯ ಮರಿಗಳನ್ನೇನೊ ಮನೆಗೆ ತಂದರು. +ಆದರೆ ಅವು ಬದುಕದೆ ಹೋದುವು. +ಕೆಲವು ತಿಂಗಳೆ ಬೇಕಾಯಿತು, ದೊಡ್ಡಣ್ಣಹೆಗ್ಗಡೆಯ ಗಾಯ ಮಾಯುವುದಕ್ಕೆ. +ಈ ಪ್ರಸಂಗ ಮುಗಿದ ಮೇಲೆ, ಒಂದು ದಿನ ದೊಡ್ಡಣ್ಣ ಕೋಣೂರಿನ ಮಾಲಾಯಕ್ಕೆ ನಂಟನಾಗಿ ಹೋಗಿದ್ದಾ, ಊಟದ ಸಮಯದಲ್ಲಿ, ಇಕ್ಕುವುದಕ್ಕೆ ಬಂದಿದ್ದ ಹೆಣ್ಣುಗಳ ಮಧ್ಯೆ ರಂಗಮ್ಮನನ್ನು ನೋಡಿ. +ಪಕ್ಕದಲ್ಲಿಯೆ ಊಟಕ್ಕೆ ಕುಳಿತಿದ್ದ ರಂಗಪ್ಪನಿಗೆ “ಏನೋ ಬಾವ, ನಾನೇನೂ ಹುಲೀಮರೀನ ಮನೆಗೆ ತಂದೇಬಿಟ್ಟೆ. +ನೀನು ಮಾತ್ರ ಕೈಮೇಲೆ ಕೈಹೊಡೆದು ಕೊಟ್ಟಭಾಷೇನೆ ಮರತೇಬಿಟ್ಟೆ!” ಎಂದನಂತೆ. +“ನೀ ಕೇಳಲಿಲ್ಲ ನಾ ಕೊಡಲಿಲ್ಲ!” ಎಂದು, ರಂಗಪ್ಪ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದ ನಂಟರಿಗೆಲ್ಲ ಕಥೆ ಹೇಳಿದನಂತೆ. +ನಂಟರೆಲ್ಲರೂ “ಮತ್ತೆ ಇವತ್ತೆ ಕೇಳಿಬಿಡಲಿ. +ನಾವೂ ಎಲ್ಲ ಸಾಕ್ಷಿನೆರೆದ ಹಾಂಗೆಯೂ ಆಗ್ಯದೆ” ಎಂದರಂತೆ. +ರಂಗಪ್ಪಗೌಡನಿಗೆ ‘ಏನು ಕೇಳಿಬಿಡುತ್ತಾನೊ ಬಾವ’ ಎಂದು ಗಿದಿಲು. +ಆದರೆ ದೊಡ್ಡಣ್ಣಹೆಗ್ಗಡೆ ಅವನ ಕಿವಿಯಲ್ಲಿ ತನ್ನ ವೀರಪಣವನ್ನು ಉಸುರಿದಾಗ, ಅವನ ಆನಂದಕ್ಕೆ ಪಾರವೇ ಇಲ್ಲವೆಂಬಂತೆ ಅಟ್ಟಹಾಸಮಾಡಿ ನಕ್ಕನು. + ಯಾವುದನ್ನು ಕೊಡಬೇಕಾಗಿತ್ತೋ ಅದಕ್ಕೆ ನೂರುಮಾಡಿ ತಾನೇ ಪಡೆದಂತಾಗಿತ್ತು. +ಊಟಕ್ಕೆ ಕೂತಿದ್ದ ನಂಟರೆಲ್ಲ “ಏನು?ಏನು?” ಎಂದು ಕುತೂಹಲದಿಂದ ಕೇಳಿದರು. +ರಂಗಪ್ಪನು ನಗುತ್ತಾ “ಹೆಣ್ಣುಹುಲಿ ಹೊಡೆದವನು ನನ್ನ ಬಾವ ಇನ್ನೇನು ಕೇಳ್ತಾನೆ?” ಎಂದು ಹಾಸ್ಯಮಾಡಿ, ಓಡಿಸಲು ಬಂದಿದ್ದ ತನ್ನ ತಂಗಿ ರಂಗಮ್ಮನ ಕಡೆ ಇಂಗಿತವಾಗಿ ನೋಡಿದ್ದನು. +ಎಲ್ಲರಿಗೂ ವಿಷಯ ಹೊಳೆದು, ನಗೆಯ ಘೋಷದಿಂದ ಭೋಜನಶಾಲೆ ಭೋರ್ಗರೆದಂತಾಗಿತ್ತು. +ರಂಗಮ್ಮಗೂ ಗುಟ್ಟು ಹೊಳೆದು, ನಾಚಿ, ಕೆಂಪೇರಿ, ಬೇಗ ಬೇಗನೆ ಹೊರಟು ಹೋಗಿದ್ದಳು ಮತ್ತೆ ಬಡಿಸಲು ಬಂದಿರಲಿಲ್ಲಂತೆ ಆವೊತ್ತು! +ಸ್ವಭಾವತಃ ಹಿಡಿತದ ಕೈಯವರಾದರೂ ಹಿರಿಯ ಮಗನ ಮದುವೆಯನ್ನು ವಿಜೃಂಭಣೆಯಿಂದಲೆ ನೆರವೇರಿಸಿದ್ದರು ಹಳೆಮನೆ ಸುಬ್ಬಣ್ಣಹೆಗ್ಗಡೆಯವರು. +ಆದರೆ ಅವರ ಹುಟ್ಟುಗುಣವಾದ ಉಳಿತಾಯದ ಮನೋಧರ್ಮ, ಅದೇ ಸಮಯದಲ್ಲಿಯೆ ಹೆಣ್ಣು ಕೊಟ್ಟು ಹೆಣ್ಣು ತರುವ ಉಪಾಯವನ್ನೂ ಕಂಡುಹಿಡಿದಿತ್ತು. +ತಮ್ಮ ಮಗಳು ದೊಡ್ಡಣ್ಣಹೆಗ್ಗಡೆಯ ತಂಗಿಯನ್ನು ಕೋಣೂರು ರಂಗಪ್ಪಗೌಡರಿಗೆ ಧಾರೆಯೆರೆಯುವ ಶುಭಕಾರ್ಯವನ್ನೂ ಜೊತೆಜೊತೆಗೆ ನೆರವೇರಿಸಿ. +ಆ ಮದುವೆಯ ವಿಜೃಂಭಣೆಗಾಗಿ ಅವರು ಧಾರಾಳವಾಗಿ ಖರ್ಚುಮಾಡಿದಂತೆ ತಮ್ಮ ಗತಿಸಿದ್ದ ಅಣ್ಣನ ಮಗ ಶಂಕರಹೆಗ್ಗಡೆಯ ಮತ್ತು ಅವನ ತಂಗಿ ಸಿಂಬಾವಿ ಭರಮೈಹೆಗ್ಗಡೆಗೆ ಕೊಟ್ಟಿದ್ದ ಜಟ್ಟಮ್ಮನ ಮದುವೆಗೂ ಖರ್ಚುಮಾಡಲಿಲ್ಲ ಎಂಬುದೂ ಮುಂದೆ ಮನೆ ಪಾಲಾಗುವುದಕ್ಕೆ ಕಾರಣವಾದ ಮನಸ್ತಾಪಕ್ಕೆ ಬಿತ್ತಿದ್ದ ಒಂದು ಬೀಜಪ್ರಾಯವಾಗಿತ್ತು. +ರಂಗಮ್ಮ ಮತ್ತು ದೊಡ್ಡಣ್ಣ ಹೆಗ್ಗಡೆಯವರ ದಾಂಪತ್ಯಜೀವನ ಆ ಹತ್ತೊಂಬತ್ತನೆ ಶತಮಾನದ ತುದಿಗಾಲದಲ್ಲಿ ಮಲೆನಾಡಿನ ಶ್ರೀಮಂತ ಅವಿಭಕ್ತ ಕುಟುಂಬದಲ್ಲಿ ಸಾಗುತ್ತಿದ್ದ ಇತರ ಅನೇಕರ ದಾಂಪತ್ಯ ಜೀವನದಂತೆ ಉಬ್ಬು ತಗ್ಗು ಏರು ಇಳಿತಗಳಿಂದ ಕೂಡಿ ಸಾಗಿತ್ತು, ತಕ್ಕಮಟ್ಟಿಗೆ ಸುಖಮಯವಾಗಿ, ನೆಮ್ಮದಿಯಿಂದಲೆ ಎಂದು ಹೇಳಬಹುದಾದಷ್ಟು. +ರಂಗಮ್ಮ ಧರ್ಮುವನ್ನು ಹೊಟ್ಟೆಯಲ್ಲಿ ಹೊತ್ತು ಗರ್ಭಿಣಿಯಾಗಿದ್ದಾಗ ಆಕೆಗೆ ದೀರ್ಘಕಾಲದ ಅಸ್ವಸ್ಥತೆಯಾಯಿತು. +ಪದ್ದತಿಯಂತೆ ದೇವರು ಕೇಳುವುದು, ಗಣ ಬರಿಸುವುದು, ಕಣ್ಣಾ ಪಂಡಿತರಂತಹರಿಂದ ಗಿಡಮೂಲಿಕೆ ಔಷಧ ಕೊಡಿಸುವುದು, ಹರಕೆ ಹೂರುವುದು, ದೆಯ್ಯಗಳಿಗೆ ಕೋಳಿ ಕುರಿ ಆಯಾರ ಕೊಡಿಸುವುದು ಎಲ್ಲ ತರಹದ ಚಿಕಿತ್ಸೆ ನಡೆಯಿತು. +ಆದರೆ ಏನೂ ಉತ್ತಮ ಆಗಲಿಲ್ಲ. +ಆಗ ದೊಡ್ಡಣ್ಣಹೆಗ್ಗಡೆ, ನಿಮಿತ್ತ ಹೇಳುವುದರಲ್ಲಿ ಹೆಸರುವಾಸಿಯಾಗಿದ್ದ, ಕಲ್ಲೂರು ಜೋಯಿಸರ ಹತ್ತಿರಕ್ಕೆ ಹೋದರು. +ಅವರು ಜಾತಕ ನೋಡಿ, ಹೆಗ್ಗಡೆಗೆ ಅಷ್ಟೇನೂ ಅರ್ಥವಾಗದ ‘ಕುಜರಾಹು ಸಂಧಿ’ ’ಗುರು ಅಲಂಕಾರಕರ ಕ್ರೂರ ಕೂಟ’ ಇತ್ಯಾದಿ ಜೋತಿಷ್ಯ ಹೇಳಿ, ರಂಗಮ್ಮಗೆ ಒಂದು ಕೆಟ್ಟ ಕಂಟಕವಿದೆಯೆಂದೂ ಮಗುವಿನ ತಾಯಿಯಾಗಲಿ ತಂದೆಯಾಗಲಿ ಅದಕ್ಕೆ ತುತ್ತಾಗಬಹುದೆಂದೂ, ಹೊನ್ನಿನ ಗೋದಾನ ಅಥವಾ ತೀರ್ಥಯಾತ್ರೆಯಂತಹ ದೊಡ್ಡ ಹರಕೆ ಹೊತ್ತು ನೆರವೇರಿಸುವ ಪಕ್ಷದಲ್ಲಿ ವಿಧಿಯ ಕ್ರೌರ್ಯ ಸೌಮ್ಯತರವಾಗಬಹುದೆಂದೂ ಸೂಚಿಸಿದರು. +ಅನುಭವದಿದಂದ ತನ್ನ ತಂದೆಯ ಕಾರ್ಪಣ್ಯವನ್ನರಿತಿದ್ದುದರಿಂದಲೂ, ತನಗೂ ಪ್ರವಾಸ ರೂಪದ ಸಾಹಸದಲ್ಲಿ ಆಸಕ್ತಿ ಹುಟ್ಟಿದುದರಿಂದಲೂ ಬೊನ್ನಿ ಗೋದಾನದ ಸೂಚನೆಯನ್ನು ವಿಸರ್ಜಿಸಿ, ತೀರ್ಥಯಾತ್ರೆಗೆ ಮನಸ್ಸುಮಾಡಿ, ದೊಡ್ಡಣ್ಣಹೆಗ್ಗಡೆ ತಿರುಪತಿ ಯಾತ್ರೆ ಮಾಡುವುದಾಗಿ ಹರಕೆ ಹೊತ್ತರು. +ಹೆಂಡತಿಗೂ ವಿಷಯವೆಲ್ಲವನ್ನೂ ತಿಳಿಸಿ ಆಕೆಯನ್ನೂ ಒಪ್ಪಿದರು. +ಆ ಶ್ರದ್ಧಾಭಕ್ತಿಗಳ ಮಹಿಮೆಯಿಂದಲೋ ಔಷಧೋಪಚಾರಗಳ ಪ್ರಭಾವದಿಂದಲೋ ರಂಗಮ್ಮನಿಗೆ ರೋತೆ ತಪ್ಪಿ, ಕ್ಷೇಮದಿಂದಲೆ ಗಂಡುಮಗುವನ್ನು ಹೆತ್ತಳು. +ಧರ್ಮು ನಾಲ್ಕನೆಯ ವರ್ಷದವನಾಗಿದ್ದಾಗ ಆ ಪ್ರಾಂತದ ಒಂದು ತಂಡ ತಿರುಪತಿಯಾತ್ರೆಗೆ ಹೊರಡಲು ಸಿದ್ಧತೆ ಮಾಡಿತು. +ದೊಡ್ಡಣ್ಣಹೆಗ್ಗಡೆಯೂ ದೇವರಿಗೆ ಒಪ್ಪಿಸುವ ತಮ್ಮ ಮನೆಯ ಕಾಣಿಕೆಯೊಡನೆ ಯಾತ್ರಿಕರೊಡನೆ ಹೊರಟರು. +ಹೋದವರು ಹಿಂದಕ್ಕೆ ಬರಲಿಲ್ಲ. +ಜ್ಯೋತಿಷ್ಯ ನೋಡಿಸಿ ಅದರಂತೆ ಆಚರಿಸುವವರಿಗೆ ಎಲ್ಲ ಕಾಲದಲ್ಲಿಯೂ ಎಲ್ಲೆಲ್ಲಿಯೂ ಏನು ಗತಿಯಾಗುವುದೋ ಅದೇ ಗತಿ ಆಯಿತು ದೊಡ್ಡಣ್ಣ ಹೆಗ್ಗಡೆಯವರಿಗೂ. +ಅದರಿಂದ ಉದ್ಬುದ್ದವಾಗುವ ಶ್ರದ್ಧಾಶಕ್ತಿಯ ಅಂಶದಿಂದ ಒಳ್ಳಿತಾದರೂ ಅವೈಚಾರಿಕ ಮತ್ತು ಅವೈಜ್ಞಾನಿಕವಾದ ಅದರ ಕ್ರಿಯಾಚಾರದ ಅಂಶವನ್ನು ಅಂಧಹೃದಯದಿಂದ ಅನುಸರಿಸುವುದರಿಂದ ಹಾನಿ ತಪ್ಪುವುದಿಲ್ಲ. +ಜೋಯಿಸರು ಸೂಚಿಸಿದ್ದ ಅಮಂಗಳ ಪರಿಹಾರದ ಮಾರ್ಗವೆ ಅಮಂಗಳಕಾರಣವಾಗಿ ಪರಿಣಮಿಸಿಬಿಟ್ಟಿತು. +ಅವರೇನೊ ‘ತಾಯಿಯಾಗಲಿ ತಂದೆಯಾಗಲಿ ವಿಪತ್ತು’ ಎಂದು ಹೇಳಿದ್ದ ತಮ್ಮ ‘ನಿಮಿತ್ತ’ದ ಸತ್ಯವನ್ನೆ ಸಮರ್ಥಿಸಿಕೊಂಡಿದ್ದರು, ದೊಡ್ಡಣ್ಣಗೆ ಒದಗಿದ್ದ ಆಪತ್ತಿನಲ್ಲಿ! +ಹೋದ ಯಾತ್ರಿಕರಲ್ಲಿ ಹಿಂತಿರುಗದಿದ್ದವರು ದೊಡ್ಡಣ್ಣಹೆಗಡೆ ಒಬ್ಬರೆ ಆಗಿರಲಿಲ್ಲ. +ತಿರುಪತಿ ತಿಮ್ಮಪ್ಪ ಅನೇಕ ಮನೆಗಳಿಂದ ಕಾಣಿಕೆಯನ್ನು ಮಾತ್ರವಲ್ಲದೆ ಜೀವಕಾಣಿಕೆಯನ್ನೂ ತೆಗೆದುಕೊಂಡಿದ್ದನು. +ಆದರೆ ದೊಡ್ಡಣ್ಣಹೆಗ್ಗಡೆ ತೀರಿಕೊಂಡ ವಿಚಾರದಲ್ಲಿ ಒಮ್ಮತವಿರಲಿಲ್ಲ: +ಮೊದಲು ಹಿಂದಿರುಗಿದ್ದ ತಂಡದವರು – ಅವರು ವಾಂತಿಭೇದಿಯಾಗಿ ಸಾಯುವುದರಲ್ಲಿದ್ದರೆಂದೂ ತಾವು ಶುಶ್ರೂಷೆ ಮಾಡುವುದಾಗಿ ಹೇಳಿದರೂ ಒಪ್ಪದೆ, ಸಾಂಕ್ರಾಮಿಕ ರೋಗದಿಂದ ತಮ್ಮೆಲ್ಲರನ್ನೂ ಪಾರುಮಾಡುವುದಕ್ಕೋಸ್ಕರವೆ, ತಮ್ಮನ್ನು ಬಲಾತ್ಕಾರವಾಗಿ ಊರಿಗೆ ಬೇಗ ಹಿಂದಿರುಗುವುದಕ್ಕೆ ಹೇಳಿ ಕಳುಹಿಸಿಬಿಟ್ಟರೆಂದೂ, ತಮ್ಮ ಹೆಂಡತಿ ರಂಗಮ್ಮಗೆ ತಮ್ಮ ಕೊನೆಯ ಕಾಣಿಕೆಯಾಗಿ ಕೊಡಲು ಹೇಳಿ, ಒಂದು ತಿರುಪತಿ ತಿಮ್ಮಪ್ಪನ ಪಟವನ್ನು ಕೊಟ್ಟಿದ್ದಾರೆಂದೂ ವರದಿಯನ್ನೊಪ್ಪಿಸಿ, ಆ ಪಟವನ್ನು ಸುಬ್ಬಣ್ಣಹೆಗ್ಗಡೆಯವರ ಕೈಲಿ ದೊಡ್ಡಣ್ಣಹೆಗ್ಗಡೆಯವರ ಸಹಧರ್ಮಿಣಿಗೆ ಒಪ್ಪಿಸುವಂತೆ ಹೇಳಿ, ಕೊಟ್ಟಿದ್ದರು. +ತರುವಾಯ ಬಂದ ಎರಡನೆ ತಂಡದವರು – ಅವರು ತೀರಿ ಹೋದರೆಂದೇ ಹೇಳಿದ್ದರು. +ಮೂರನೆ ತಂಡದವರು – ಗೋಸಾಯಿಗಳು ಔಷಧಿಕೊಟ್ಟು ಅವರನ್ನು ಬದುಕಿಸಿ ನೋಡಿಕೊಳ್ಳಿತ್ತಿದ್ದಾರೆಂದೂ ಸಂಪೂರ್ಣ ಗುಣವಾಗಿ ತಿರುಗಾಡಲು ಸಾಮರ್ಥ್ಯ ಬಂದಮೇಲೆ ಊರಿಗೆ ಕಳುಹಿಸುತ್ತಾರೆಂದೂ ಹೇಳಿದ್ದರು. +ಆಮೇಲೆ ಬಿಡಿಬಿಡಿಯಾಗಿ ಬಂದಿದ್ದ ಇತರ ಯಾತ್ರಿಕರು – ತೀರ್ಥಹಳ್ಳಿಯ ದಾಸಯ್ಯನೂ ಅವರೊಳಗೊಬ್ಬನಾಗಿದ್ದನು, – ದೊಡ್ಡಣ್ಣಹೆಗ್ಗಡೆಗೆ ವೈರಾಗ್ಯ ಬಂದು ಸನ್ಯಾಸಿಯಾಗಿ ಹೋಗಿಬಿಟ್ಟನೆಂದೂ, ಗೋಸಾಯಿಗಳು ಮದ್ದುಕೊಟ್ಟು ಅವನಿಗೆ ತನ್ನ ಹಿಂದಿನದೆಲ್ಲ ಮರೆಯುವಂತೆಮಾಡಿ ತಮ್ಮ ಸೇವೆಗೆ ಇಟ್ಟುಕೊಂಡಿದ್ದಾರೆಂದೂ ನಾನಾ ವಿಧವಾದ ವಾರ್ತೆ ಹಬ್ಬಿಸಿದ್ದರು. +ಅಲ್ಲದೆ ಅವರನ್ನು ಪತ್ತೆಹಚ್ಚಿ ಕರೆತರುವುದಾಗಿ ಭರವಸೆಕೊಟ್ಟು ಅನೇಕರು ಅನೇಕ ರೀತಿಯಿಂದ ಸುಬ್ಬಣ್ಣಹೆಗ್ಗಡೆಯವರಿಂದಲೂ ರಂಗಮ್ಮನಿಂದಲೂ ಇತರ ಹತ್ತಿರದ ಬಂಧು ಬಾಂಧವರಿಂದಲೂ ಹಣ ಹೊನ್ನು ಸುಲಿಗೆಮಾಡಿಯೂ ಇದ್ದರು. +ಧರ್ಮುವ ತಾಯಿ ರಂಗಮ್ಮ ತನಗಾಗಿ ಯಾತ್ರೆ ಕೈಕೊಂಡಿದ್ದ ತನ್ನ ಗಂಡಗೆ ಒದಗಿದ್ದ ವಿಪತ್ತನ್ನು ಕೇಳಿ ಹೌಹಾರಿದಳು. +ಎದೆ ಬೆಂದಳು ದೆವ್ವ ದೇವರು ಮನುಷ್ಯ ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಹೇಳಿಕೊಂಡಳು, ಬೇಡಿಕೊಂಡಳು, ಅಂಗಲಾಚಿದಳು, ಕಾಣಿಕೆ ತೆತ್ತಳು, ತನ್ನ ಗಂಡನನ್ನು ಹೇಗಾದರೂ ಮಾಡಿ ಹುಡುಕಿ ಹಿಂದಕ್ಕೆ ತನ್ನಿ ಎಂದು. +ತನ್ನ ಗಂಡನ ಕೊನೆಯ ಕಾಣಿಕೆಯೆಂದು ಕಳಸಿಕೊಟ್ಟಿದ್ದ ತಿರುಪತಿ ತಿಮ್ಮಪ್ಪನ ಪಟವನ್ನು ತಮ್ಮ ಕೋಣೆಯಲ್ಲಿಟ್ಟು ಹೂಮುಡಿಸಿ ಧೂಪಹಾಕಿ ಅಡ್ಡಬಿದ್ದು ಬಾಯಿಗೆ ಬಂದಂತೆ ವಾಚಾಮಗೋಚರವಾಗಿ ಶಪಿಸಿ ಬಯ್ಯುವ ಪೂಜೆಯೂ ಸಾಗುತ್ತಿತ್ತು! +ಒಂದು ವರುಷವಾಯ್ತು. +ಎರಡೂ ಆಯಿತು. +ಕೆಲವರು ದೊಡ್ಡಣ್ಣ ಬದುಕಿದ್ದರೆ ಬರದೆ ಇರುತ್ತಿದ್ದರೇ? +ಅವರು ಸತ್ತದ್ದೆ ನಿಜವಿರಬೇಕೆಂದು ಹೇಳಿ, ಉತ್ತರ ಕ್ರಿಯಾದಿಗಳನ್ನು ಮಾಡಲು ತಗಾದೆ ಮಾಡಲಾರಂಭಿಸಿದರು. +ಕೆಲವು ಕಂದಾಚಾರದ ಸಂಪ್ರದಾಯಬದ್ದ ಮುದಿ ವಿಧವೆಯರಂತೂ ರಂಗಮ್ಮನ ಐದೆತನದ ಚಿಹ್ನೆಗಳನ್ನು ಸಹಿರಲಾರದೆ ಅಸಹನೀಯವಾಗಿ ಮಾತಾಡಿಕೊಳ್ಳಲಾರಂಭಿಸಿದರು. +ರಂಗಮ್ಮನ ಹೃದಯಕ್ಕೆ ತನ್ನ ಗಂಡ ಸತ್ತದ್ದನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. +ಅದು ಸಾಧ್ಯವಾಗಿದ್ದರೆ ಒಡನೆಯೆ ಅವಳು ತನ್ನ ಆಯ್ದೆತನದ ಚಿಹ್ನೆಗಳನ್ನು ವಿಸರ್ಜಿಸುವುದಕ್ಕೆ ಇತರರಿಗೆ ಅವಕಾಶಕೊಡುವುದಕ್ಕೆ ಮುನ್ನವೆ ಕೆರೆಯನ್ನೊ ನೇಣನ್ನೊ ಆಶ್ರಯಿಸಿರುತ್ತಿದ್ದಳು. +ಅವಳು ಆಶೆನಿರಾಶೆಗಳ ಉರಿಯಲ್ಲಿ ಬೆಂದು ಒಮ್ಮೊಮ್ಮೆ ತಲೆ ಕೆಟ್ಟಳಂತೆ ವರ್ತಿಸಲೂ ಪ್ರಾರಂಭಮಾಡಿದಳು. +ಕೋಣೂರು ರಂಗಪ್ಪಗೌಡರು ತಮ್ಮ ತಾಯಿಯೊಡನೆ ಹಳೆಮನೆಗೆ ಬಂದು ನಾನಾ ವಿಧವಾಗಿ ಬೋಧಿಸಿ ತಂಗಿಯನ್ನು ತವರಿಗೆ ಕರೆದೊಯ್ದರು. +ಅಲ್ಲಿ ಸ್ವಲ್ಪ ಕಾಲ ಶಮನವಾದಂತಿದ್ದ ಉನ್ಮಾದ ಇದ್ದಕ್ಕಿದ್ದಹಾಗೆ ಉಲ್ಬಣಗೊಂಡಿತು. +ರಂಗಮ್ಮ ತಾನು ಗಂಡನ ಮನೆಗೆ ಹೋಗಬೇಕೆಂದೂ ತಮ್ಮ ಕೋಣೆಯಲ್ಲಿರುವ ತಿಮ್ಮಪ್ಪ ಕರೆಯುತ್ತಿದ್ದಾನೆಂದೂ ಹೇಳಿ ಹಳೆಮನೆಗೆ ಹಿಂತಿರುಗಿದಳು. +ದಿನದಿನದ ಕೆಲಸಕಾರ್ಯಗಳಲ್ಲಿ ತೊಡಗಿದರೆ ಮನಸ್ಸು ಒಂದು ಹಿಡಿತಕ್ಕೆ ಬರಬಹುದೆಂದು ಭಾವಿಸಿ, ಅದುವರೆಗೆ ಅವಳಿಗೆ ಮಾಡಗೊಡದಿದ್ದ ಅಡುಗೆ ಕೆಲಸವನ್ನೂ ಕೊಟ್ಟು ನೋಡಿದರು. +ಆಗಲೂ ಮಂಜಮ್ಮಗೆ ಹೆದರಿಕೆ, ಎಲ್ಲಿ ಸೀರೆಗೆ ಬೆಂಕಿ ಹೊತ್ತಿಸಿಕೊಂಡೊ ಮೈಮೇಲೆ ಕುದಿ ಎಸರು ಹಾಕಿಕೊಂಡೊ ಅತ್ತಿಗೆಮ್ಮ ಅನಾಹುತಕ್ಕೆ ಒಳಗಾದಾರು ಎಂದು. +ದುಃಖಾತಿಶಯದಿಂದ ಮನಸ್ಸು ಸೀಳುಸೀಳಾಗಿ ಹೋದಂತಿದ್ದ ರಂಗಮ್ಮ ಕೆಲವು ದಿನ ಬುದ್ಧಿ ಸರಿಯಾದವಳಂತೆ ನಡೆದುಕೊಳ್ಳುತ್ತಿದ್ದು ಹಠಾತ್ತನೆ ಹುಚ್ಚುಹುಚ್ಚಾಗಿ ನಡೆದುಕೊಳ್ಳುತ್ತಿದ್ದರು. +ಆದ್ದರಿಂದ ಯಾವುದರಲ್ಲಿಯೂ ಅವಳನ್ನು ನೆಚ್ಚುವ ಹಾಗಿರಲಿಲ್ಲ. +ಸದಾ ಒಂದು ಕಣ್ಣು ಇಟ್ಟಿರಲೆಬೇಕಾಗುತ್ತಿತ್ತು ಅವಳ ಮೇಲೆ ಮನೆಯವರೆಲ್ಲ ಹಾಗೆ ಮಾಡುತ್ತಿದ್ದುದನ್ನು ಕಂಡು, ಎಲ್ಲರೂ ತನ್ನನ್ನು ಸಂಶಯದಿಂದ ನೋಡುತ್ತಿದ್ದಾರೆ ಎಂದು ಹೇಳಿಕೊಂಡು ಅಳುತ್ತಿದ್ದಳು. + ಬುದ್ದಿ ಸರಿಯಾದ ಸ್ಥಿತಿಗೆ  ಬಂದ ಸಮಯಗಳಲ್ಲಿ ತನ್ನ ಅವ್ವ ಏನಾದರೂ ಅಪಘಾತ ಮಾಡಿಕೊಂಡುಬಿಟ್ಟಾಳು ಎಂದು, ತಂದೆತಾಯಿಗಳಿಬ್ಬರನ್ನೂ ಕರೆದುಕೊಂಡು ತಬ್ಬಲಿಯಾಗುವ ಹೆದರಿಕೆಯಿಂದ ಧರ್ಮುವೂ ಗುಟ್ಟಾಗಿ ತನ್ನಮ್ಮನ ಚಲನವಲನಗಳನ್ನು ಕದ್ದು ನೋಡುತ್ತಿದ್ದುದನ್ನು ಕಂಡು ರಂಗಮ್ಮ, ತನ್ನ ಮಗನೂ ಇತರರಂತೆ ತನ್ನ ಮೇಲೆ ಕಣ್ಣುಕಾವಲು ಹಾಕಿದ್ದಾನೆ ಎಂದು, ಸಂಕಟಪಟ್ಟುಕೊಳ್ಳುತ್ತಿದ್ದಳು. + ಒಮ್ಮೊಮ್ಮೆ, ಕೆಟ್ಟ ಗಳಿಗೆಯಲ್ಲಿ ಹುಟ್ಟಿ ತಂದೆಯ ವಿಪತ್ತಿಗೆ ಅವನೇ ನಿಮಿತ್ತವಾದನೆಂದೂ ಅವನನ್ನು ಶಪಿಸುತ್ತಿದ್ದಳು. +ಆದರೆ ಸಾಮಾನ್ಯವಾಗಿ ಧರ್ಮು ಮನೆಯಲ್ಲಿದ್ದದಾಗಲೆ ಅವಳ ಬುದ್ದಿ ಸ್ವಲ್ಪಮಟ್ಟಿಗಾದರೂ ಸಾಧಾರಣಸ್ಥತಿಗೆ ಬಂದು, ಮಂಜಮ್ಮಗೆ ಮನಸ್ಸಿನ ನೆಮ್ಮದಿ ಹೆಚ್ಚುತ್ತಿತ್ತು. +ಆದ್ದರಿಂದಲೆ ಧರ್ಮು ಮನೆಗೆ ಬರುವುದನ್ನು ಮಂಜಮ್ಮ ಅಷ್ಟೊಂದು ಪ್ರೀತ್ಯಾದರಗಳಿಂದ ಹಾರೈಸುತ್ತಿದ್ದದ್ದು. +ಈ ಸಾರಿ ಧರ್ಮು ಮನೆಗೆ ಬಂದ ದಿನಕ್ಕೆ ಹಿಂದಿನ ದಿನದಲ್ಲಿ ರಂಗಮ್ಮ ತಾನೇ ಅಡುಗೆ ಒಗೆತನ ಮಾಡುತ್ತೇನೆ ಎಂದು ಕೇಳಿಕೊಂಡಾಗ ಮಂಜಮ್ಮ ಅತ್ತಿಗೆಯ ಮನಸ್ಸಿಗೆ ನೋವಾಗದಿರಲಿ ಎಂದು ಒಪ್ಪಿದಳು. +ಎಷ್ಟೊಂದರೂ ರಂಗಮ್ಮನೇ ಮನೆಗೆ ನಿಜವಾದ ಯಜಮಾನಿಯಲ್ಲವೆ? +ಬಹುಕಾಲ ಮನೆಗೆ ಹೆಗ್ಗಡತಿಯಾಗಿದ್ದವಳಿಗೆ, ಎಲ್ಲರ  ವಿಧೇಯತೆಯನ್ನೂ ಸ್ವೀಕರಿಸಿ ಅಧಿಕಾರ ನಡೆಸಿದ್ದವಳಿಗೆ, ತನ್ನನ್ನು ಸಂಪೂರ್ಣವಾಗಿ ಮೂಲೆಗೊತ್ತಿಬಿಟ್ಟಿದ್ದಾರೆ ಎಂಬ ಭಾವನೆ ಮೂಡುವಂತೆ ವರ್ತಿಸಿದರೆ ಹುಚ್ಚು ಇನ್ನೂ ಹೆಚ್ಚಾಗಿ ಕೆರಳಬಹುದೆಂದು ಸುಬ್ಬಣ್ಣಹೆಗ್ಗಡೆಯವರು ತಮ್ಮ ಕಿರಿಯ ಮಗಳಿಗೆ ಹೇಳಿದ್ದರು. + “ಬುಚ್ಚೀ, ನಿನ್ನತ್ತಿಗೆಗೆ ತಲೆ ನೆಟ್ಟಗಾದಾಗ ಅವಳು ಹಿಂದೆ ಮಾಡುತ್ತಿದ್ದಂತೆ ಏನಾದರೂ ಕೆಲಸಗಿಲಸ ಮಾಡುತ್ತೇನೆಂದು ಮುಂದೆ ಬಂದರೆ ‘ಆಗದು’ ಅನ್ನಬೇಡ. +ಸ್ವಲ್ಪ ಹುಷಾರಾಗಿ ನೋಡಿಕೋ ಅಷ್ಟೆ” ಎಂದು. +ಅದರಂತೆ ಮಂಜಮ್ಮ ಅತ್ತಿಗೆಗೆ ಅಡುಗೆಯ ಕೆಲಸ ವಹಿಸಿದಳು, ತಾನು ಸಹಾಯಕಳಾಗಿ ಸೇವೆಮಾಡಲು ನಿಶ್ಚಯಿಸಿ. +ಅಡುಗೆಯ ಕೆಲಸವನ್ನೇನೊ ಹುಚ್ಚಿಲ್ಲದಿದ್ದಾಗ ಹೇಗೆ ಮಾಡುತ್ತಿದ್ದಳೋ ಹಾಗೆಯೆ ನೆರವೇರಿಸಿದ್ದಳು ರಂಗಮ್ಮ. +ಆದರೆ ಗಂಡಸರು ಊಟಕ್ಕೆ ಕೂತಾಗ ಯಾವ ಪದಾರ್ಥವನ್ನೂ ತಿನ್ನಲಾಗಲಿಲ್ಲ! +ಬಾಯಿಗೆ ಹಾಕಲಾರದಷ್ಟು ಉಪ್ಪಾಗಿಬಿಟ್ಟಿತ್ತು! +ರಂಗಮ್ಮನೆ ಕೈತಪ್ಪಿ ಎರಡು ಮೂರು ಸಾರಿ ಉಪ್ಪು ಹಾಕಿದ್ದಳೋ? +ಅಥವಾ ಮಂಜಮ್ಮನೂ ಉಪ್ಪು ಹಾಕಿ, ಆಮೇಲೆ ಅದನ್ನರಿಯದೆ ರಂಗಮ್ಮನೂ ಇನ್ನಷ್ಟು ಉಪ್ಪು ಹಾಕಿದ್ದಳೋ? +ಅಥವಾ ರಂಗಮ್ಮಗೆ ಆಗದಿದ್ದವರು ಯಾರಾದರೂ ಹಾಗೆ ಮಾಡಿದ್ದರೋ? +ಅಂತೂ ಊಟವೆಲ್ಲ ಉಪ್ಪೋ ಉಪ್ಪಾಗಿತ್ತು! +ಸುಬ್ಬಣ್ಣಹೆಗ್ಗಡೆಯವರೇನೊ ತಾಳ್ಮೆಯಿಂದ ಎದ್ದು ಹೋಗಿ, ಮತ್ತೊಮ್ಮೆ ಅಡುಗೆಯಾದ ಮೇಲೆ ಬಂದು ಊಟಮಾಡಿದ್ದರು. +ಆದರೆ ತಮ್ಮಪ್ಪಹೆಗ್ಗಡೆ, ಗದ್ದೆ ತೋಟಗಳಲ್ಲಿ ಆಳುಗಳೊಡನೆ ಇದ್ದು ಅವರಿಂದ ಕೆಲಸಮಾಡಿಸಿ ದಣಿದು ಹಸಿದು ಬಂದಿದ್ದವನು, ರೇಗಿ ಮಂಜಮ್ಮಗೆ ಬಾಯಿಗೆ ಬಂದಂತೆ ಬಯ್ದು, ತನಗೆ ಬಡಿಸಲು ಬಂದಿದ್ದ ರಂಗಮ್ಮ ಹಿಡಿದಿದ್ದ ಕೈಬಟ್ಟಲನ್ನು ನೂಕಿ ತಟ್ಟಿಹಾರಿಸಿ, ಅಡುಗೆಮನೆಯೆಲ್ಲ ಅನ್ನಪಲ್ಯವಾಗುವಂತೆ ಮಾಡಿ ಎದ್ದು ಹೋಗಿದ್ದನು. +ರಂಗಮ್ಮ ಅತ್ತು ಕರೆದು ಊಟಮಾಡದೆ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು. +ಮರುದಿನ, ಅಂದರೆ ಧರ್ಮು ಕೋಣೂರಿನಿಂದ ಹಳೆಮನೆಗೆ ಐತನೊಡನೆ ಹೋದ ದಿನ, ಬೆಳಿಗ್ಗೆ ರಂಗಮ್ಮ ಎಂದಿನಂತಲ್ಲದೆ ಬಹಳ ಮುಂಚೆಯೆ ಎದ್ದುಬಂದು ಅಡುಗೆಯ ಕೆಲಸಕ್ಕೆ ತೊಡಗಿದ್ದಳು. +ಮಂಜಮ್ಮಗೆ ಸೋಜಿಗವಾಯಿತು, ನಿನ್ನೆ ತನ್ನ ಸಣ್ಣಸಣ್ಣಯ್ಯನ ಒರಟಾದ ವರ್ತನೆಗೆ ಒಳಗಾಗಿ, ಅವಮಾನಿತಳಾಗಿ, ಊಟಮಾಡದೆ ಹೋಗಿ, ಕೋಣೆ ಬಾಗಿಲು ಹಾಕಿಕೊಂಡು ಮಲಗಿ, ಎಷ್ಟು ಕರೆದರೂ ಅಂಗಲಾಚೆ ಬೇಡಿಕೊಂಡರೂ ಬಾಗಿಲು ತೆರೆಯದಿದ್ದ ಅತ್ತಿಗೆ ಇವತ್ತು ಹೊತ್ತಾರೆಮುಂಚೆ ಎದ್ದು ಅಡುಗೆ ಕೆಲಸಕ್ಕೆ ಬಂದದ್ದು ಅತ್ಯಂತ ಅಸಾಧಾರಣ ಸಂಗತಿಯಾಗಿ ಅದ್ಭುತಕ್ಕೆಣೆಯಾಗಿತ್ತು. +ಆದರೆ ಏನು ಮಾಡುತ್ತಾಳೆ? +ಬೇಡ ಎನ್ನುವ ಹಾಗಿಲ್ಲ. +ಉಪ್ಪುಗಿಪ್ಪು ಹಾಕುವ ವಿಚಾರದಲ್ಲಿ ಎಚ್ಚರಿಕೆಯಿಂದ ಒಂದು ಕಣ್ಣಿಟ್ಟಿರಲು ನಿಶ್ಚಯಿಸಿ ಸುಮ್ಮನಾದಳು. +ರಂಗಮ್ಮ ಮರುದಿನವೂ ಅಡುಗೆ ಮಾಡಲು ಬಂದುದಕ್ಕೂ ಅಂತಹುದೇ ಕಾರಣವಾಗಿತ್ತು. +ಪದಾರ್ಥಗಳಿಗೆ ಹಾಕಿದ್ದ ಉಪ್ಪು ಆ ಪರಿಮಾಣದಲ್ಲಿ ಹೆಚ್ಚಾದದ್ದು ಹೇಗೆ? +ಎಂಬುದೆ – ಅವಳಿಗೂ ಬಿಡಿಸದ ಒಗಟಾಗಿತ್ತು! +ಅದನ್ನು ಈ ದಿನ, ಎಚ್ಚರಿಕೆಯಿಂದ ಗಮನಿಸಿ, ಕಂಡುಹಿಡಿಯಬೇಕೆಂದು ಅವಳು ಕೆಲಸಕ್ಕೆ ಬಂದಿದ್ದಳು. +ಆದರೆ ತಿಮ್ಮಪ್ಪಹೆಗಡೆ ಆಳುಗಳನ್ನು ಕೆಲಸಕ್ಕೆ ಕರೆತರಲು ಹೋಗುವ ಮುನ್ನ ಗಂಜಿಯುಂಡು ಹೆಂಡ ಕುಡಿದು ಸಿದ್ಧನಾಗಲೆಂದು ಒಳಗೆ ಬಂದವನು ಅಡುಗೆ ಮಾಡಲು ತೊಡಗಿದ್ದ ‘ಅತ್ತಿಗೆ’ ಯನ್ನು ಕಂಡು ಕ್ರುದ್ಧನಾದನು. +“ಬುಚ್ಚೀ!” ಎಂದು ತನ್ನ ತಂಗಿಯನ್ನು ಕೂಗಿ “ಏನು ನಮ್ಮನ್ನೆಲ್ಲ ಕೊಲ್ಲಿಸಬೇಕು ಅಂತಾ ಮಾಡೀಯಾ, ಅತ್ತಿಗೆ ಕೈಲಿ ಅಡಿಗೆ ಮಾಡಿಸಿ? +ಅವರು ಅಡಿಗೆ ಮಾಡೋದು ಬ್ಯಾಡವೆ ಬ್ಯಾಡ! +ಅಡಿಗೆ ಮನೆಗೆ ಕಾಲಿಡಕೂಡದು ಅವರು! +ನಿನ್ನೆ ಉಪ್ಪು ಹಾಕಿದ್ರು; +ಇವತ್ತು ವಿಷ ಹಾಕ್ತಾರೆ! +ತಲೆ ಕೆಟ್ಟೋರ ಕೈಲೆಲ್ಲಾ ಅಡಿಗೆ ಮಾಡಿಸ್ತೀಯಲ್ಲಾ? +ನಿನಗೂ ತಲೆ ಕೆಟ್ಟಿದೆಯೋ?” ಎಂದು ಕೂಗಾಡಿದನು. +ರಂಗಮ್ಮಗೂ ಸಿಟ್ಟುಬಂದು “ನಾಲಿಗೆ ಸೊಲ್ಪ ಹಿಡಿದು ಮಾತಾಡಿ! +ತಲೆ ಕೆಟ್ಟಿದ್ದು ಯಾರಿಗೆ? +ನನಗೋ ನಿಮಗೋ? +ಏನು, ನಿಮ್ಮಣ್ಣಯ್ಯ ಸತ್ತೇಹೋದ್ರು ಅಂತಾ ಮಾಡಿ ಹೀಂಗೆಲ್ಲ ಮಾಡ್ತೀರೋ? +ನನಗೂ ಹಕ್ಕಿದೆ ಈ ಮನೇಲಿ? +ನನಗೂ ಅಣ್ಣ ತಮ್ಮ ತಾಯಿ ತವರು ಇದೆ. +ನನಗೂ ಒಬ್ಬ ಮಗ ಇದಾನೆ, ಮನೆಗೆ ಹಕ್ಕುದಾರನಾಗಿ!” ಎಂದು ಮಂಜಮ್ಮನೂ ಬೆರಗಾಗುವಂತೆ ಮಾತಾಡಿಬಿಟ್ಟಳು. +ತಿಮ್ಮಪ್ಪಹೆಗ್ಗಡೆ ಎರಗಿಬಂದು ರಂಗಮ್ಮನ ರಟ್ಟೆಹಿಡಿದೆಳೆದು, ಕೂದಲು ಹಿಡಿದು ಬೆನ್ನ ಮೇಲೆ ಹೆಗಲ ಮೇಲೆ ರೋಷಾಂಧನಾಗಿ ಗುದ್ದಿ ಗುದ್ದಿ, ತಡೆಯಲು ಬಂದ ತಂಗಿಯನ್ನೂ ತಳ್ಳಿ, ಅತ್ತಿಗೆಯನ್ನು ಅಡುಗೆ ಮನೆಯಿಂದ ಹೊರಗೆ ನೂಕಿದನು. +“ಮುಂಡೆಯಾದ್ರೂ ಮುತ್ತೈದೆ ಹಾಂಗೆ ಮಾಡಿಕೊಂಡು ಮನೇಗೆಲ್ಲಾ ಅನಿಷ್ಟ ತರ್ತದೆ, ಹಾಳು ಶನಿ!” ಎಂದು ಶಾಪಹಾಕಿ, ತಾನೂ ಹೊರಹೊರಟನು. +ಮೊದಲೇ ದುಃಖದಿಂದ ಜರ್ಜರಿತಳಾಗಿದ್ದವಳು, ನಿದ್ದೆ ಊಟ ಇಲ್ಲದೆ ಕೃಶಳಾಗಿದ್ದವಳು. +ರಂಗಮ್ಮ ತತ್ತರಿಸಿಹೋಗಿ ನೆಲಕ್ಕೆ ಬಿದ್ದಳು. +ಮಂಜಮ್ಮ ಅವಳನ್ನು ಹಿಡಿದೆತ್ತಿ ಸಂತೈಸಿದಳು. +ಮೆಲ್ಲಗೆ ಅವರ ಕೋಣೆಗೆ ಕರೆದೊಯ್ದು ಹಾಸಗೆಯ ಮೇಲೆ ಮಲಗಿಸಿದಳು. +ಅಷ್ಟರಲ್ಲಿ ಹೊರಗೆ ಹೋಗಿದ್ದ ತಿಮ್ಮಪ್ಪ ಹೆಗ್ಗಡೆ ಮತ್ತೆ ಬಂದು, ಮಂಜಮ್ಮನನ್ನು ಹೊರಗೆ ಕರೆದು, ಕೋಣೆಗೆ ಚಿಲಕ ಇಕ್ಕಿ, ಕೈಲಿ ತಂದಿದ್ದ ಬೀಗಹಾಕಿ, ಹೋಗುತ್ತಾ ಹೇಳಿದನು, ತನಗೆ ತಾನೆ ಹೇಳಿಕೊಳ್ಳುವಂತೆ, ಆದರೆ ಮಂಜಮ್ಮಗೆ ಕೇಳಿಸುವಂತೆ; + “ಮತ್ತಿನ್ನೆಲ್ಲಾ ಬಾವಿ ಹಾರಿದ್ರೆ? +ನನ್ನ ಮ್ಯಾಲೇಕೆ ಪುಕಾರು?”ಸ್ವಲ್ಪ ಹೊತ್ತಾದ ಮೇಲೆ ತಿಮ್ಮಪ್ಪಹೆಗ್ಗಡೆ ಆಳುಗಳನ್ನು ಕರೆದುಕೊಂಡು ಕೆಲಸಕ್ಕೆ ಹೋದುದನ್ನು ಕಾದುನೋಡಿ, ಮಂಜಮ್ಮ ಅವನು ಗುಪ್ತ ವೆಂದು ಸಿಕ್ಕಹಾಕಿದ್ದ ಬೀಗದ ಕೈಯನ್ನು ಕಡಿನಕೋಡಿಯಲ್ಲಿ ಪತ್ತೆ ಹಚ್ಚಿ ತಂದು, ಅತ್ತಿಗೆಯ ಕೋಣೆಗೆ ಹಾಕಿದ್ದ ಬೀಗ ತೆಗೆದು ಬಾಗಿಲು ನೂಕಿದಳು. +ಆದರೆ ಬಾಗಿಲು ತೆರೆಯಲಿಲ್ಲ. +ಕರೆದಳು; ಬೇಡಿದಳು; +ಹೊಟ್ಟೆಗೇನಾದರೂ ಸ್ವಲ್ಪ ತೆಗೆದುಕೊಳ್ಳಿ ಎಂದು ಅಂಗಲಾಚಿದಳು. +ಆದರೂ ಬಾಗಿಲು ತೆಗೆಯಲಿಲ್ಲ. +ಒಳಗಣಿಂದ ಭದ್ರವಾಗಿ ತಾಳಹಾಕಿಕೊಂಡಿದ್ದಳು ರಂಗಮ್ಮ. +ಮತ್ತೆ ಮೊದಲಿನಂತೆ ಬೀಗ ಹಾಕಿ, ಬೀಗದ ಕೈಯನ್ನು ಇದ್ದಲ್ಲಿಯೇ ಇರಿಸಿದ್ದಳು ಮಂಜಮ್ಮ. +ಊಟದ ಹೊತ್ತು ಬಂದಾಗಲೂ ಹಾಗೆಯೆ ಮಾಡಿದ್ದಳು. +ಆಗಲೂ ಪ್ರಯೋಜನವಾಗಿರಲಿಲ್ಲ. +ಕೊನೆಗೆ ಅಪ್ಪಯ್ಯಗೆ ಹೇಳೋಣವೆಂದು ಜಗಲಿಗೆ ಹೋದಳು. +ಸುಬ್ಬಣ್ಣ ಹೆಗ್ಗಡೆಯವರು ಅಲ್ಲಿರಲಿಲ್ಲ. +ಅವರು ಊಟಕ್ಕೆ ಬಂದಾಗ ಹೇಳೋಣವೆಂದು ಕಾದಳು. +ಅವರು ಊಟಕ್ಕೂ ಬರಲಿಲ್ಲ. +ಎಲ್ಲಿಗಾದರೂ ಕೆಲಸಕ್ಕೊ ನೆಂಟರ ಮನೆಗೊ ಹೋಗಿದ್ದಾರೆಂಬುದೂ ಅವಳಿಗೆ ತಿಳಿಯದು. +ಮಂಜಮ್ಮನ ಕಳವಳ ಹೇಳತೀರದು! +ಅತ್ತಿಗೆಮ್ಮನಿಗೆ ಏನಾದ್ರೂ ಮಂಡೆಗೂ ಪೆಟ್ಟು ತಗುಲಿದ್ದರೆ ಏನು ಗತಿ? +ಅಥವಾ ಎಲ್ಲಿಯಾದರೂ – (ಮಂಜಮ್ಮನಿಗೆ ಆ ಯೋಚನೆ ಬಂದಕೂಡಲೆ ಮೈನಡುಗಿ ಹೋಗಿತ್ತು) – ಅತ್ತಿಗೆಮ್ಮ ಪ್ರಾಣ ತೆಗೆದುಕೊಂಡಿದ್ದರೆ? +ತಿಮ್ಮಪ್ಪಹೆಗ್ಗಡೆ ಮಧ್ಯಾಹ್ನದ ಮೇಲೆ ಊಟಕ್ಕೆ ಬಂದಾಗ ಬೀಗ ತೆಗೆದು ಬಾಗಿಲು ತೆಗೆಯುವಂತೆ ಕೇಳಿಕೊಂಡಳು. +ಅದರೆ ಅವನು “ಸತ್ತರೆ ಸಾಯಲಿ! +ಶನಿ ತೊಲಗ್ತದೆ!” ಎಂದಿದ್ದನು. +ಏನು ಮಾಡುವುದಕ್ಕೂ ತೋರದೆ ಮಂಜಮ್ಮ ತಾನೂ ಊಟಮಾಡಿರಲಿಲ್ಲ. +ಒಮ್ಮೆ ಆ ಕೋಣೆಗೆ ಹೊರಗಣಿಂದ ಇದ್ದ ಒಂದೇ ಒಂದು ಬೆಳಕಂಡಿಯಲ್ಲಿ ನೋಡಲು ಪ್ರಯತ್ನಿಸಿದ್ದಳು. +ಅದು ತುಂಬಾ ಚಿಕ್ಕದಾಗಿ, ಕಬ್ಬಿಣದ ಸಣ್ಣ ಸರಳುಗಳಿಗೆ ಬದಲಾಗಿ ದಪ್ಪವಾದ ಮರದ ರೀಪುಗಳನ್ನು ಹಾಕಿದ್ದರಿಂದ ಒಳಗಡೆಯ ಕತ್ತಲೆಯಲ್ಲಿ ಏನೂ ಸರಿಯಾಗಿ ಕಾಣಿಸುತ್ತಿರಲಿಲ್ಲ. +ಕೆಲಸದ ಹುಡುಗಿ ಹಳೆಪೈಕದ ಹೂವಿಗೂ ಹೇಳಿದ್ದಳು. +ಬೆಳಕಂಡಿಯಲ್ಲಿ ನೋಡುವುದಕ್ಕೆ. +ಅವಳು ನೋಡಿದಂತೆ ಮಾಡಿ ಉದಾಸೀನದಿಂದ “ಏನೂ ಆಗಿಲ್ಲ ಕಣ್ರೊ. +ಅವರಿಗೇನು?ಸುಮ್ಮನೆ ಮನಗಿಕೊಂಡಿದ್ದಾರೆ” ಎಂದು ಹೇಳಿದ್ದಳು. +ಅವಳಿಗೂ ತಿಮ್ಮಪ್ಪಹೆಗ್ಗಡೆಗೂ ಇದೆ ಎಂದು ಹೇಳಲಾಗುತ್ತಿದ್ದ ರಹಸ್ಯ ಸಂಬಂಧದ ನೆನಪಾಗಿ, ಮಂಜಮ್ಮ ಜಿಗುಪ್ಸೆಯಿಂದ ಮತ್ತೆ ಅಡುಗೆಮನೆ ಒಳಗೆ ಹೋಗಿದ್ದಳು. +ಆದ್ದರಿಂದಲೆ, ಧರ್ಮು ಆಕಸ್ಮಾತ್ತಾಗಿ ಕೋಣೂರಿನಿಂದ ಬಂದದ್ದು ಮಂಜಮ್ಮಗೆ ಜೀವ ಬಂದಂತಾಗಿತ್ತು. +ತಾನೊಬ್ಬಳೆ ಸಹಿಸಲಾರದೆ ಸಹಿಸಬೇಕಾಗಿದ್ದ ಮೂಕಯಾತನೆಗೆ ತನ್ನ ಪರವಾಗಿದ್ದ ಒಬ್ಬ ಪಾಲುಗಾರ ದೊರೆತ ಹಾಗಾಗಿತ್ತು. +ಚಿಕ್ಕ ಹುಡುಗನಾಗಿದ್ದರೂ ಧರ್ಮು ಗಂಡಸಲ್ಲವೆ? +ಅತ್ತಿಗೆಮ್ಮನ ಮಗನಲ್ಲವೆ? +ಸಾಮಾನ್ಯವಾಗಿ, ಅವನು ಹಳೆಮನೆಯಲ್ಲಿ ಇದ್ದಾಗಲೆಲ್ಲ ಅವನ ಅವ್ವನ ಮನಸ್ಸು ಸ್ವಲ್ಪ ಪ್ರಶಾಂತವಾದಂತಾಗಿ ಹಿಡಿತದಲ್ಲಿರುತ್ತದೆಯಲ್ಲವೆ? +ಅಲ್ಲದೆ ಧರ್ಮು ಮನೆಯಲ್ಲಿರುವಾಗಲೆಲ್ಲ ತಿಮ್ಮಪ್ಪಹೆಗ್ಗಡೆಯ ಧೂರ್ತವರ್ತನೆಯಲ್ಲಿಯೂ ತುಸು ಸಂಯಮ ಉಂಟಾಗುತ್ತಿದ್ದುದನ್ನೂ ಗಮನಿಸಿದ್ದಳಲ್ಲವೆ ಮಂಜಮ್ಮ? +ಅಪ್ಪಯ್ಯ ಎಲ್ಲಿಗೆ ಏಕೆ ಹೋಗಿದ್ದಾರೆ ಎಂಬುದು ಮಂಜಮ್ಮಗೆ ತಿಳಿಯದಿದ್ದರೂ ತಿಮ್ಮಪ್ಪಹೆಗ್ಗಡೆಗೆ ತಿಳಿದೆ ಇತ್ತು. +ಆ ತಿಳಿವಳಿಕೆಯೆ ಅಂದು ಅವನ ಧೂರ್ತತನದ ವಿಶೇಷವಾದ ಪ್ರಕಟಣೆಗೂ ಕಾರಣವಾಗಿತ್ತು. +ಮನೆಯಲ್ಲಿ ವಯಸ್ಸಾದರೂ ಯಜಮಾನರೂ ಆಗಿದ್ದ ಸುಬ್ಬಣ್ಣಹೆಗ್ಗಡೆ ಇದ್ದಿದ್ದರೆ ತಿಮ್ಮಪ್ಪ ಅತ್ತಿಗೆಯ ಮೈಮೇಲೆ ಕೈಹಾಕುವಷ್ಟು ದೂರ ಮುಂದುವರೆಯಲು ಹಿಂದೆ ಮುಂದೆ ನೋಡುತ್ತಿದ್ದನು. +ತಂದೆ ಮಗನಿಗಿಂತಲೂ ಬಲಿಷ್ಠನೂ ಶಕ್ತನೂ ಆಗಿದ್ದನೆಂಬ ಕಾರಣಕ್ಕಲ್ಲ ತಿಮ್ಮಪ್ಪಹೆಗ್ಗಡೆ ಅಂಜುತ್ತಿದ್ದುದು. +ತರುಣನೂ, ಸುಪುಷ್ಟನೂ, ತನ್ನ ಸುಖ ಸ್ವಾರ್ಥಗಳಿಗೆ ಅಡ್ಡಬಂದವರ ವಿಚಾರದಲ್ಲಿ ನ್ಯಾಯಾನ್ಯಾಯ ಲಕ್ಷವಿಲ್ಲದೆ ಕ್ರೂರಿಯೂ ಆಗಿದ್ದ ತಿಮ್ಮಪ್ಪ ಮನಸ್ಸು ಮಾಡಿದ್ದರೆ ಅವನ ತಂದೆಯನ್ನು ತಿರಸ್ಕರಿಸಿ ವರ್ತಿಸುವುದೇನೂ ಕಷ್ಟವಾಗುತ್ತಿರಲಿಲ್ಲ. +ಆದರೆ ಚಿಕ್ಕಂದಿನಿಂದಲೂ ತಂದೆಯನ್ನು ಕಂಡರೆ ಭಯದಿಂದ ನಡೆದೂ ನಡೆದೂ ಈಗ ಭಯ ಒಂದು ರೀತಿಯ ದೈಹಿಕವ್ಯಾಪಾರವಾಗಿ ಪರಿಣಮಿಸಿತ್ತು ಅವನಿಗೆ. +ತಂದೆಯಲ್ಲಿ ಅವನಿಗೆ ಗೌರವವಾಗಲಿ, ಭಕ್ತಿಯಾಗಲಿ, ಕಡೆಗೆ ದಾಕ್ಷಿಣ್ಯವಾಗಲಿ ಇತ್ತು ಎಂದಲ್ಲ. + ಅವರು ಅವನನ್ನು ಚಿಕ್ಕಂದಿನಿಂದಲೂ ಒದ್ದು, ಹೊಡೆದು, ಕಿವಿ ಹಿಂಡಿ, ಒಳಶುಂಟಿ ಹಿಡಿದು, ಕೋಳದಂಡ ಹಾಕಿ, ಸಿದ್ದೆಗುಮ್ಮಮಾಡಿ, ಕತ್ತಲೆ ಕೋಣೆಯಲ್ಲಿ ಉಪವಾಸ ಕೂಡಿಹಾಕಿ ಭಯಂಕರವಾಗಿ ಪಳಗಿಸಲು ಪ್ರಯತ್ನಪಟ್ಟಿದ್ದರು. +ಅದರ ಪರಿಣಾಮವಾಗಿ ತಿಮ್ಮಪ್ಪಹೆಗ್ಗಡೆ ಸರ್ಕಸ್ಸಿನ ಕ್ರೂರಪ್ರಾಣಿಗೆ ಯಜಮಾನನ ಚಾಟಿಯ ಶಬ್ದದಿಂದಲೆ ಒದಗುವ ನರವ್ಯಾಪಿಯಾದ ಅಂಧಭೀತಿಯಿಂತಹ ಒಂದು ಪುಕ್ಕಲು ಸುಬ್ಬಣ್ಣಹೆಗ್ಗಡೆಯವರ ಕೆಮ್ಮಿನಿಂದಲೊ ಉಚ್ಚಕಂಠದಿಂದಲೊ ಪ್ರಾಪ್ತಿವಾಗುತ್ತಿತ್ತು ಅಷ್ಟೆ! +ಆದ್ದರಿಂದಲೆ ಅವರು ಎಷ್ಟೇ ಹೀನಾಯವಾಗಿ ಬಯ್ದರೂ (ಈಗ ಮೈಮುಟ್ಟಿ ಶಿಕ್ಷಿಸುವ ಗೋಜಿಗೆ ಹೋಗುತ್ತಿರಲಿಲ್ಲ) ಒಳಗೊಳಗೆ ಗೊಣಗಿಕೊಳ್ಳುವುದರಲ್ಲಿಯೇ ಅವನ ಪ್ರತಿಭಟನೆ ಪರ್ಯವಸಾನವಾಗುತ್ತಿತ್ತು. +ಅದಕ್ಕಿಂತಲೂ ಪ್ರಬಲವಾದ ಪ್ರತಿಕ್ರಿಯೆಗೆ ಬೇಕಾಗಿದ್ದ ನೀತಿಶಕ್ತಿಯಂತೂ ವಿಷಯಲಂಪಟನಾಗಿದ್ದ ಅವನಲ್ಲಿ ಲವಲೇಶವೂ ಇರಲಿಲ್ಲ. +ಅಣ್ಣ ದೊಡ್ಡಣ್ಣ ಹೆಗ್ಗಡೆ ತಿರುಪತಿಯಲ್ಲಿ ತೀರಿಹೋದ ಎಂಬ ಸುದ್ದಿ ಬಂದಾಗ ಆಗಿನ್ನೂ ಸ್ವಲ್ಪ ಚಿಕ್ಕವನಾಗಿದ್ದ ತಿಮ್ಮಪ್ಪ ಇತರರಂತೆಯೆ ಅತ್ತಿದ್ದನು. +ಅಣ್ಣ ಸತ್ತಿಲ್ಲ ಎಂಬ ಸುದ್ದಿ ಬಣದಾಗಲೂ ತಿಮ್ಮಪ್ಪ ಇತರರಂತೆಯೆ ಅವನನ್ನು ಹುಡುಕಿ ಕರೆದು ತರುವುದರಲ್ಲಿ ಆಸಕ್ತಿ ವಹಿಸಿದ್ದನು. +ಅತ್ತಿಗೆಯ ಮತ್ತು ಅತ್ತಿಗೆಯ ಮಗನ ವಿಚಾರದಲ್ಲಿ ಹೆಚ್ಚಿನ ಸಹಾನುಭೂತಿ ತೋರಿಸಿದ್ದನು. +ಅದರೆ ಎರಡು ಮೂರು ವರ್ಷಗಳಲ್ಲಿ ಅವನು ಬದಲಾಯಿಸಿ ಹೀಗಿದ್ದನು. +ಅಣ್ಣನನ್ನು ಹುಡುಕುತ್ತೇವೆ ಎಂಬ ನೆವದಲ್ಲಿ ಅನೇಕರು ಅನೇಕ ವಿಧವಾಗಿ ಸುಬ್ಬಣ್ಣ ಹೆಗ್ಗಡೆಯವರಿಂದಲೂ ಮತ್ತು ಗುಟ್ಟಾಗಿ ರಂಗಮ್ಮನ ಕಡೆಯಿಂದಲೂ ಮನೆಯವರೆಲ್ಲರಿಗೆ ಸೇರಿದ್ದ ಐಶ್ವರ್ಯವನ್ನು ಅಪಹರಿಸುತ್ತಿದ್ದುದನ್ನು ಕಂಡು ತಿಮ್ಮಪ್ಪಹೆಗ್ಗಡೆ ಅಸಮಾಧಾನಪಟ್ಟಿದ್ದನು. + ಹಿತ್ತಲು ಕಡೆಯಲ್ಲಿ ಸ್ವಾರ್ಲುಮೀನು ವ್ಯಾಪಾರಕ್ಕೆಂದು ಬಂದು, ರಂಗಮ್ಮಗೆ ಸುಳ್ಳು ಸುಳ್ಳು ವಾರ್ತೆಗಳನ್ನೆಲ್ಲ ಹೇಳಿ, ಹುಸಿ ಭರವಸೆಕೊಟ್ಟು, ಚಿನ್ನದ ಬೆಳ್ಳಿಯ ಒಡವೆ ವಸ್ತುಗಳನ್ನು ಸಾಗಿಸುತ್ತಿದ್ದ ಮೇಗರವಳ್ಳಿ ಕರೀಂ ಸಾಬರಾದಿಯಾಗಿ ಹಾಲ್ವಳ್ಳಿ ಭಟ್ಟಂಗಿ ದಾಸಯ್ಯ ಮೊದಲಾದ ಭಿಕ್ಷಾವೃತ್ತಿಯ ಅಲೆಮಾರಿಗಳನ್ನೂ ಮನೆಯ ಹತ್ತಿರ ಕಂಡರೆ ತಿಮ್ಮಪ್ಪಹೆಗ್ಗಡೆ ಬಯ್ದು ಅಟ್ಟುತ್ತಿದ್ದನು. +ಬರಬರುತ್ತಾ, ದೊಡ್ಡಣ್ಣ ಹೆಗ್ಗಡೆ ಹಿಂದಿರುಗುವ ಆಶೆ ದೂರ ದೂರವಾದೆಂತೆಲ್ಲ, ಅವರು ಹಿಂದಿರುಗದಿರಲಿ ಎಂಬಾಸೆ ಹತ್ತಿರ ಹತ್ತಿರವಾಗಿ, ಕಡೆಗೆ ಹೃದಯಪ್ರವೇಶಮಾಡಿ ನೆಲೆಯಾಗಿಬಿಟ್ಟಿತು. +ಅದರಲ್ಲಿಯೂ ಮನೆ ಪಾಲಾಗಿ ಶಂಕರಹೆಗ್ಗಡೆ ಬೇರೆ ಹೋದಮೇಲೆ ತಿಮ್ಮಪ್ಪಹೆಗ್ಗಡೆ ತನ್ನ ಮುದಿತಂದೆಯ ತರುವಾಯ ತಾನೆ ಯಜಮಾನನಾಗುವ ಆಶೆಯೂ ಅಂಕುರಿಸಿ, ತಾನು ಸ್ವತಂತ್ರನಾಗಿ ಶಂಕರಹೆಗ್ಗಡೆಯಂತೆ ಮನೆಗೆ ಹೆಂಚು ಹೊದಿಸಿ, ಮದುವೆಯಾಗಿ ಮೆರೆಯುವ ಹೊಂಗನಸೂ ಕೈಬೀಸಿ ಕರೆಯತೊಡಗಿತ್ತು. +ಬಾಯಲ್ಲಿ ಬೇರೆ ರೀತಿ ಆಡುತ್ತಿದ್ದರೂ ಅವನ ಹೃದಯದಲ್ಲಿ ಅಣ್ಣ ಹಿಂದಿರುಗುವುದು ಬೇಡವೆ ಬೇಡದ ಅನಿಷ್ಟವಾಗಿತ್ತು! +ಆದ್ದರಿಂದ ಆವೊತ್ತು ಹೊತ್ತಾರೆ ಮುಂಚೆ ಕೋಣೂರಿನಿಂದ ಬಂದ ಐಗಳು, ಪಾದ್ರಿ ಜೀವರತ್ನಯ್ಯ ಕೊಟ್ಟಿದ್ದ ಸುದ್ದಿಯ ಪ್ರಕಾರ, ದೊಡ್ಡಣ್ಣ ಹೆಗ್ಗಡೆಯನ್ನು ಮಂಡಗದ್ದೆಯ ಹತ್ತಿರ ಬೀಡುಬಿಟ್ಟಿದ್ದ ಗೋಸಾಯಿಗಳ ಗುಂಪಿನಲ್ಲಿ ಗುರುತಿಸಿದ್ದಾರಂತೆ ಎಂದು ಸುಬ್ಬಣ್ಣ ಹೆಗ್ಗಡೆಯವರಿಗೆ ತಿಳಿಸಿ, ಅವರನ್ನು ಮೇಗರಳ್ಳಿಯ ಹತ್ತಿರ ಸಿದ್ಧವಾಗುತ್ತಿದ್ದ ಮಿಶನ್ ಇಸ್ಕೂಲಿನ ಮೇಲ್ವಿಚಾರಣೆಗೆಂದು ಅಲ್ಲಿಗೆ ಬಂದಿದ್ದ ಪಾದ್ರಿಯನ್ನೆ ಕಂಡು ಮುಖಾಮುಖಿಯಾಗಿ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಪ್ರೇರಿಸಿ ಕರೆದೊಯ್ದಾಗ, ತಿಮ್ಮಪ್ಪಹೆಗ್ಗಡೆ ಯಾರೋ ತನ್ನಿಂದ ಏನನ್ನೊ ಕಸಿದುಕೊಳ್ಳಲು ಒಳಸಂಚು ನಡೆಸಿದ್ದಾರೆ ಎಂಬಂತೆ ಕನಲಿದ್ದನು. +ಶುಭವಾದರೂ ಆಗಬಹುದಾಗಿದ್ದ ಆ ವಾರ್ತೆಯನ್ನು ಅತ್ತಿಗೆಗಿರಲಿ ತಂಗಿಗೂ ತಿಳಿಸದೆ ಬಿಮ್ಮಗಿದ್ದನು. + ಆ ಮನಃಸ್ಥಿತಿಯೂ ಒಂದು ಪ್ರಬಲ ಪ್ರಚೋದನೆಯಾಗಿತ್ತು ಆ ಧೂರ್ತನಿಗೆ ಅತ್ತಿಗೆಯ ಮೇಲೆ ಕೈ ಮಾಡುವುದಕ್ಕೆ. +ಮೇಲುನೋಟಕ್ಕೆ ಸುಬ್ಬಣ್ಣಹೆಗ್ಗಡೆಯವರು ಅಷ್ಟೇನೂ ಮನಸ್ಸಿಗೆ ಹಾಕಿಕೊಂಡವರಂತೆ ಕಾಣಿಸದಿದ್ದರೂ ಹಿರಿಯ ಮಗನಿಗೆ ಒದಗಿದ್ದ ವಿಪತ್ತು ಅವರನ್ನು ಒಳಗೊಳಗೇ ಜರ್ಜರಿತವನ್ನಾಗಿ ಮಾಡುತ್ತಿತ್ತು. +ಹುಟ್ಟಿನಿಂದಲೆ ಗಟ್ಟಿಮುಟ್ಟಾದ ಆಳಾಗಿದ್ದವರು ಈಗ ಮೂರು ನಾಲ್ಕು ವರ್ಷಗಳಲ್ಲಿ ತುಂಬಾ ಇಳಿದುಹೋಗಿದ್ದರು. +ಮೈಗೆ ಸುಕ್ಕುಬಂದಿತ್ತು. +ಹಿಂದೆ ಹತ್ತಾರು ಮೈಲಿ ಕಾಡು ಬೆಟ್ಟಗಳಲ್ಲಿ ನಿರಾಯಾಸವಾಗಿ ಸುತ್ತುತಿದ್ದವರು ಈಗ ಸ್ವಲ್ಪದರಲ್ಲಿಯ ದಣಿವನ್ನನುಭವಿಸಿದ್ದರು. +ಇತ್ತೀಚೆಗೆ ಗದ್ದೆ ತೋಟಗಳಿಗೆ ಅನಿವಾರ್ಯವಾದಾಗ ಮಾತ್ರವಲ್ಲದೆ ಮನೆಯನ್ನೆ ಬಿಟ್ಟು ಹೊರಡುತ್ತಿರಲಿಲ್ಲ. +ಹಿಂದಿನ ಬಾಯ ಅರ್ಭಟ ತುಸು ಇದ್ದಿತಾದರೂ ಅದು ಮುಪ್ಪಿನ ಹುಲಿಯ ಅಬ್ಬರದಂತೆ ನಿರ್ಬಲವಾಗಿತ್ತು. +ಸೊಸೆಯ ಗೀಳಿನ ಬಾಳೂ ಅವರ ಹೃದಯವನ್ನು ಗರಗಸದಂತೆ ದಿನವೂ ಕೊಯ್ಯುತಿತ್ತು. +ಜೊತೆಗೆ ತಿಮ್ಮಪ್ಪನ ನಡತೆ ಧೂರ್ತತೆ ಇದೂ ಅವರ ಆಯಸ್ಸನ್ನು ಚಿಂತೆಗೊಳಗುಮಾಡಿ ಕ್ಷೀಣಗೊಳಿಸುತ್ತಿತ್ತು. +ಅವರು ಇದನ್ನೆಲ್ಲ ಸ್ವಲ್ಪವಾದರೂ ಮರೆಯುವುದಕ್ಕೇನೂ ಎಂಬಂತೆ ತಮ್ಮ ಆಸಕ್ತಿಯನ್ನು ಕೋಳಿಒಡ್ಡಿ ಕುರಿಒಡ್ಡಿ ಹಂದಿಒಡ್ಡಿಗಳ ಕಡೆ ಹರಿಸಿ, ದಿನ ನೂಕುತ್ತಿದ್ದರು. +ಐಗಳಿಂದ ವಾರ್ತೆ ತಿಳಿದೊಡನೆಯೆ ಮಂದ ಜಡಸ್ಥಿತಿಯಲ್ಲಿ ಆರೂಢವಾದಂತಿದ್ದ ಸುಬ್ಬಣ್ಣಹೆಗ್ಗಡೆಯವರ ಚೇತನಕ್ಕೆ ಹಠಾತ್ತನೆ ಪೊರೆ ಕಳಚಿದಂತಾಯಿತು. + ಕೆಟ್ಟ ಕನಸು ಬಿರಿದು ಕಣ್ದೆರೆದಂತಾಯಿತು. +ಅವರ ಅಳಿದುಳಿದ ಜೀವಶಕ್ತಿಯ ಚೈತನ್ಯಸಮಸ್ತವೂ ತನ್ನ ಕೊಟ್ಟ ಕೊನೆಯ ಪ್ರಯತ್ನಕ್ಕಾಗಿ ಹಾರಲು ರೆಕ್ಕೆಗೆದರಿ ಸಿದ್ಧವಾಯಿತು. +ಹಿಂದೆ ಎರಡು ಮೂರು ಸಾರಿ ನಿರಾಶೆಗೊಳಗಾಗಿದ್ದರೂ ಈ ಸಾರಿಯೂ ಮಗನನ್ನು ಹಿಂದಕ್ಕೆ ಪಡೆಯುವ ಅವರ ಪ್ರತ್ಯಾಶೆ, ಅದೆ ಮೊದಲನೆಯ ಸಲವೋ ಎಂಬಷ್ಟು ಉತ್ಸಾಹದಿಂದ, ತನ್ನ ಕೊನೆಯ ಸಾಹಸಕ್ಕೆ ತನ್ನೆಲ್ಲವನ್ನೂ ಸಮರ್ಪಿಸಲು ಸಿದ್ಧರಾಗಿ ಕಂಕಣಬದ್ಧವಾಯಿತು, ಹಿಂದಿನ ಸಲಗಳಂತೆ ಗೆಲುವು ಅಥವಾ ಸೋಲು ಎಂಬ ಬುದ್ಧಿಯಿಂದಲ್ಲ, ಗೆಲುವು ಅಥವಾ ಸಾವು ಎಂದು ನಿಶ್ಚಯಿಸಿ!“ನೀವು ಹುಲಿಕಲ್ಲು ನೆತ್ತಿಗೆ ಹತ್ತಿ ದಾಟಲಾರಿರಿ. +ನೀವು ಬರುವುದೇನೂ ಬೇಡ. +ನಿಮ್ಮ ಒಪ್ಪಿಗೆ ಇದ್ದರೆ ಸಾಕು…. +ಆ ಗುಂಪಿನ ಯಜಮಾನ ಗೋಸಾಯಿಗೆ ಪಾದ್ರಿಯ ಕಡೆಯವರು ಸ್ವಲ್ಪ ದುಡ್ಡು ಕೊಟ್ಟು ಒಲಿಸಿಕೊಳ್ಳಬೇಕಾಯಿತಂತೆ. +ಅದನ್ನೆಲ್ಲ ನಾವು ಕೊಡಬೇಕಾಗುತ್ತದೆ. +ಅಲ್ಲದೆ ತೀರ್ಥಹಳ್ಳಿಯ ಜಮಾದಾರರು ಅಮಲ್ದಾರರು ಪೋಲೀಸಿನವರು ಡಾಕ್ಟರು ಅದಕ್ಕೆ ಬಹಳ ಮೆಹನತ್ತು ಮಾಡಿದ್ದಾರಂತೆ. +ಅವರಿಗೂ ಸ್ವಲ್ಪ ಕೊಡಬೇಕಾಗಿ ಬರಬಹುದು” ಎಂದು ಹೇಳಿದ ಐಗಳಿಗೆ ಸುಬ್ಬಣ್ಣ ಹೆಗ್ಗಡೆ: +ಐಗಳೆ ನನ್ನ ದೊಡ್ಡಣ್ಣ ಹೋದಮ್ಯಾಲೆ ಈ ಐದಾರು ವರ್ಷ ನಾನು ತಾಳಮದ್ದಲೆ ಪ್ರಸಂಗದಲ್ಲಿ ನೀವು ಹೇಳುತ್ತಿರಲಿಲ್ಲ ಆ ಭೀಷ್ಮಾಚಾರಿಯ ಹಾಂಗೆ ಶರಶಯ್ಯೆಯಲ್ಲಿ ಮಲಗಿದ್ದಾಗಿದೆ….” + ಕೊಳಸೆರೆ ಬಿದಿದಂತಾಗಿ ಮುಂದುವರಿಯಲಾರದೆ ಸುಬ್ಬಣ್ಣ ಹೆಗ್ಗಡೆ ತುಸು ತಡೆದು ಗದ್ಗದಧ್ವನಿಯಿಂದಲೆ ಹೇಳತೊಡಗಿದರು. +ಆ ಕಠೋರ ಮೈಕಟ್ಟಿನ ಗಂಭೀರ ವೃದ್ಧಮೂರ್ತಿ ಶೋಕವಶನಾಗಿ ಭಾವಾವಿಷ್ಟವಾದ ಅಭೂತಪೂರ್ವ ದೃಶ್ಯವನ್ನು ಕಂಡು ಐಗಳಿಗೆ ಅಚ್ಚರಿಬಡುದಂತಾಯಿತು. +ಮೇಲಕ್ಕೆ ನಿರ್ಭಾವನಾಗಿ ನಿಷ್ಠುರನಾಗಿ ಕೃಪಣನಾಗಿ ಕಾಣುತ್ತಿದ್ದ ಆ ಮುದುಕನ ಹೃದಯದ ರಹಸ್ಯಲೋಕದ ಕ್ಷಣಿಕ ಸಂದರ್ಶನದಿಂದ ಐಗಳಿಗೆ ಆತನಲ್ಲಿ ನೈಜವಾದ ಪೂಜ್ಯಬುದ್ಧಿ ಹುಟ್ಟಿತು. “…. ದೊಡ್ಡಣ್ಣ ಇಲ್ಲದ ಮ್ಯಾಲೆ ನಾ…. ನಾ…. ನಾ ಇದ್ದರೇನು? + ಹೋ…. ಹೋ…. ಹೋದರೇನು? +ಯಾರಿಗಾಗಿ ಈ ಮನೆ ಗದ್ದೆ ತ್ವಾಟ ಎಲ್ಲ? +ಆ ನಾಯಿಗೇನು? +ಅವರು ಯಾರನ್ನು ನಿರ್ದೇಶಿಸುತ್ತಿದ್ದರೆ ಎಂಬುದು ಅರ್ಥವಾಯಿತು ಐಗಳಿಗೆ. +ನಂಗೇನು ಕಷ್ಟ ನಂಗೇನು ಹೊಸತಲ್ಲ. +ದಿಬ್ಬ ಇಳಿದ್ದಾಂಗೆ ಸಾವಿರ ಸಲ ಹತ್ತಿ ಇಳಿದ್ದೀನಿ, ಪರಾಯದಾಗೆ….” +ಸುಬ್ಬಣ್ಣಹೆಗ್ಗಡೆ ಮೈಮೇಲೆ ಬಂದವರಂತೆ, ಅವರ ವಯಸ್ಸಿಗೆ ಸ್ವಾಭಾವಿಕವಲ್ಲವೊ ಎನ್ನುವಷ್ಟರ ಮಟ್ಟಿಗೆ ಚಟುವಟಿಕೆಯಾಗಿ, ತಮ್ಮ ಕೋಣೆಗ ಹೋಗಿ ಸ್ವಲ್ಪ ಹೊತ್ತಿನಲ್ಲಿಯೆ ಹೊರಗೆ ಬಂದರು. +ತಲೆಗೆ ಮುಂಡಾಸು ಸುತ್ತಿದ್ದನು. +ಒಂದು ಕಸೆಕಟ್ಟುವ ನಿಲುವಂಗಿಯನ್ನು ಮೊಳಕಾಲು ಮೀರುವಂತೆ ತೊಟ್ಟಿದ್ದರು. +ಕೆಂಪಂಚಿನ ಪಂಚೆ ಕಚ್ಚೆ ಹಾಕಿದ್ದರು. +ಕೈಯಲ್ಲಿ ದೊಡ್ಡದೊಂದು ಉದ್ದವಾದ ಬೆತ್ತದ ದೊಣ್ಣೆ ಹಿಡಿದಿದ್ದರು. +ಅವರನ್ನು ಕಂಡ ಐಗಳಿಗೆ ಪ್ರಾಯಕಾಲದ ಸುಬ್ಬಣ್ಣಹೆಗ್ಗಡೆಯವರ ಮಸುಗು ನೆನಹು ಮರುಕೊಳಿಸಿತ್ತು. +“ಬನ್ನಿ, ಐಗಳೆ, ನಿಮ್ಮ ಹುಲಿಕಲ್ ನೆತ್ತಿ ಎಷ್ಟು ಎತ್ತರ ಆಗ್ಯದೆ? +ನೋಡಾನ ಬನ್ನಿ” ಎಂದು ನಗುತ್ತಾ ತೆಣೆಯ ಮೂಲೆಯಲ್ಲಿದ್ದ ಒಂದು ಜೊತೆ ಪ್ರಾಚೀನವಾಗಿ ಒಣಗಿ ಮಡಿಚಿಕೊಂಡಿದ್ದ ಭಾರಿ ಮೆಟ್ಟುಗಳಿಗೆ ಕಾಲು ತೂರಿಸಿಕೊಂಡು ಹೊರಟರು: +ಕಣ್ಣಿದ್ದು ನೋಡುವವರಿದ್ದಿದ್ದರೆ ಆ ದೃಶ್ಯ ನಿಜವಾಗಿ ಭವ್ಯ ತೋರುತ್ತಿದ್ದುದರಲ್ಲಿ ಸಂದೇಹವಿಲ್ಲ! +ಮೇಗರವಳ್ಳಿಯಲ್ಲಿ, ಅಂತಕ್ಕ ಸೆಡ್ತಿಯ ಮನೆಯಿಂದ ಮೇಲೆ ಸುಮಾರು ಎರಡು ಮೂರು ಫರ್ಲಾಂಗು ದೂರದಲ್ಲಿ, ಒಂದು ಎತ್ತರವಾದ ದಿಬ್ಬದ ಮೇಲೆ ಮಿಶನ್ ಇಸ್ಕೂಲ್ ಕಟ್ಟಡ ತಯಾರಾಗುತ್ತಿತ್ತು. +ಕಟ್ಟಡ ದೊಡ್ಡದೇನೂ ಅಲ್ಲ; +ಮೂರು ಅಂಕಣದ್ದು. +ಎದುರು ಬದುರಾಗಿ ಎರಡು ಕಿಟಕಿ, ಒಂದೇ ಬಾಗಿಲು. +ಮಣ್ಣಿನ ಗೋಡೆ ಎಬ್ಬಿಸಿ, ಕೈಹೆಂಚು ಹೊದಿಸಿದ್ದರು. +ಆಗತಾನೆ ಹಳೆಯ ತರಹದ ಕೂಲಿಮಠಗಳ ಕಾಲವೂ ಹಳೆಯ ವಿದ್ಯಾಭ್ಯಾಸ ಪದ್ಧತಿಯೂ ಮುಕ್ತಾಯಗೊಂಡು, ಆಂಗ್ಲೇಯರ ಆಡಳಿತದ ರೀತಿಯೂ ಇಂಗ್ಲೀಷಿನ ಪ್ರಭಾವವೂ ಮೊಳೆದೋರುತ್ತಿದ್ದ ಸಂಧಿಸಮಯ. +ಮಲೆನಾಡಿಗೆ ಆ ಹೊಸ ಪ್ರಭಾವದ ಮುಂಬೆಳಕನ್ನು ಮೊತ್ತಮೊದಲು ತರುವುದರಲ್ಲಿ ಕ್ರೈಸ್ತಪಾದ್ರಿಗಳ ಕಾರ್ಯ ಗಣನೀಯವಾಗಿತ್ತು, ಶ್ಲಾಘನೀಯವಾಗಿತ್ತು. +ತಮ್ಮ ಮತಕ್ಕೆ ಜನರನ್ನು ಸೇರಿಸಿಕೊಳ್ಳುವ ಧಾರ್ಮಿಕ ಪ್ರಯತ್ನಕ್ಕೆ ಪೀಠಿಕೆಯಾಗಿತ್ತು ಈ ಲೌಕಿಕ ಸೇವಾ ಕರ್ಮ. +ಸಾಮಾನ್ಯ ಜನ ಬಹುಕಾಲದಿಂದಲೂ ಹಿಂದೂಧರ್ಮದ ಹೆಸರಿನಲ್ಲಿ ಬ್ರಾಹ್ಮಣರು ಒಡ್ಡಿದ ಮೂಢಮತಾಚಾರಗಳ ಕೂಣಿಗೆ ಸಿಕ್ಕಿಬಿದ್ದಿದ್ದರು. +ಅವರನ್ನು ಆ ಕೂಣಿಯಿಂದ ತಪ್ಪಿಸಿ ರಕ್ಷಿಸುವ ನೆವದಲ್ಲಿ ಕ್ರೈಸ್ತಪಾದ್ರಿಗಳು ತಮ್ಮ ಮತದ ಬಲೆಯನ್ನು ಬೀಸಿ ಅದರೊಳಕ್ಕೆ ಹಾರಿ ಬೀಳುವ ಪ್ರಾಣಿಗಳನ್ನು ಭಕ್ಷಿಸುವ ಅಥವಾ ಅವರ ರೀತಿಯಲ್ಲಿ ರಕ್ಷಿಸುವ ಅಭಿಸಂಧಿಯನ್ನಿಟ್ಟುಕೊಂಡಿದ್ದರು. +ಮಂಡಗದ್ದೆಯಲ್ಲಿ ಹೆರಿಗೆ ಆಸ್ಪತ್ರೆ ಸ್ಥಾಪಿಸಿ ಸ್ಥಾಪಿಸಿದಂತೆ ತೀರ್ಥಹಳ್ಳಿ ದೇವಂಗಿ ಮೊದಲಾದೆಡೆಗಳಲ್ಲಿ ಸ್ಕೂಲುಗಳನ್ನೂ ಸ್ಥಾಪಿಸಿದ್ದರು. +ಮಲೇರಿಯಾದಲ್ಲಿ ನರಳಿ ನೂರಕ್ಕೆ ತೊಂಬತ್ತೊಂತ್ತರಷ್ಟು ಬಸಿರಿ – ಬಾಣಂತಿ – ಸಾವನ್ನಪ್ಪುತ್ತಿದ್ದ ತರುಣ ವಯಸ್ಸಿನ ಮಾತೆಯರನ್ನು ಕಾಪಾಡಿ, ತಾವು ಕರುಣೆಯ ಅವತಾರವಾಗಿದ್ದ ಯೇಸುಕ್ರಿಸ್ತನ ಅನುಯಾಯಿಗಳೆಂಬುದನ್ನು ಪ್ರತ್ಯಕ್ಷ ನಿದರ್ಶದಿಂದ ತೀರಿಸಿಕೊಟ್ಟು, ಜನರ ಅನುರಾಗ ವಿಶ್ವಾಸಗಳನ್ನೂ ಕೃತಜ್ಞತೆಯನ್ನೂ ಸೂರೆಗೊಂಡು, ಅದನ್ನು ತಮ್ಮ ಮೂಲೋದ್ದೇಶ ಮತ್ತು ಮೂಲಕರ್ತವ್ಯವಾಗಿದ್ದ ಮತಾಂತರಗೊಳಿಸುವ ಕಾರ್ಯಕ್ಕೆ ಉಪಯೋಗಿಸಿಕೊಂಡರು. . +ಆ ದಿನ ಆ ‘ಇಸ್ಕೂಲುಮನೆ’ಯಲ್ಲಿ ಒಂದು ಸಣ್ಣ ಗುಂಪು ನೆರೆದಿತ್ತು. +ಅವರಲ್ಲಿ ಕೆಲವರು ಆ ಕಟ್ಟಡ ಕಟ್ಟುವ ಕೆಲಸದಲ್ಲಿ ಪ್ರವೃತ್ತರಾದವರು. +ಒಬ್ಬಿಬ್ಬರು ಯಾವ ಕೆಲಸವೂ ಇಲ್ಲದ ಉಂಡಾಡಿ ಪ್ರೇಕ್ಷಕರು. +ಅವರ ನಡುವೆ ಪಾದ್ರಿ ಜೀವರತ್ನಯ್ಯನೂ ಆ ಸ್ಕೂಲಿನ ಕಂತ್ರಾಟು ವಹಿಸಿಕೊಂಡಿದ್ದ ಕಣ್ಣಾಪಂಡಿತನೂ ಪರಿಶೀಲನೆ ನಡೆಸುತ್ತಾ ಅತ್ತಿಂದಿತ್ತ ಇತ್ತಿಂದಿತ್ತ ತಿರುಗಾಡುತ್ತಿದ್ದರು. +ಕಂತ್ರಾಟುದಾರ ಕಣ್ಣಾಪಂಡಿತನ ಕೈಲಿ ಒಂದು ಅಳತೆಗೋಲೂ ದಾರದುಂಡೆಯೂ ಇದ್ದುವು. +ಪಾದ್ರಿಯ ಕೈಲಿ ಒಂದು ಕೈಪುಸ್ತಕ ಸೀಸದಕಡ್ಡಿ ಇದ್ದುವು. +ಇನ್ನೂ ಪೂರ್ತಿ ಪೂರೈಸಿದ್ದ ಇಸ್ಕೂಲಿನ ಸುತ್ತಮುತ್ತ ಕಲಸಿದ್ದ ಕೆಮ್ಮಣ್ಣು ಗುಪ್ಪೆಗಳೂ, ಕತ್ತರಿಸಿದ್ದ ಬಿದಿರಿನ ಗಳುಗಳೂ, ಸೀಳಿದ್ದ ಅಡಕೆ ಮರದ ದಬ್ಬೆಗಳೂ, ಕೆತ್ತಿದ್ದ ಮರದ ಹಸಿಹಸಿ ಸಿಬುರುಗಳೂ, ಕಟ್ಟಿ ಬಿಗಿಯುವುದಕ್ಕಾಗಿ ಕಾಡಿನಿಂದ ತಂದಿದ್ದ ತರತರಹದ ಹಂಬಗಳೂ ಕತ್ತದ ಕಿರುಮಿಣಿಯ ಉಂಡೆಗಳೂ, ಉಗುಳಿದ್ದ ಎಲೆಯಡಕೆಯ ಕೆಂಬಣ್ಣ ಮೆತ್ತಿ ನೊಣವಾಡುತ್ತಿದ್ದ ಉಂಡೆಸೆದ ಹಾಳೆಕೊಟ್ಟೆಗಳೂ ಅಸ್ತವ್ಯಸ್ತವಾಗಿ ಬಿದ್ದಿದ್ದುವು. +ಹೊಸತನದ ಒಂದು ಹಸಿವಾಸನೆ ಸುತ್ತಲೂ ತುಂಬಿತ್ತು. +ಪಾದ್ರಿ ಒಂದು ಕಡೆ ನಿಂತು “ಇದು ಏನು, ಕಣ್ಣಾಪಂಡಿತರೆ? +ಏಕೆ ಹೀಗೆ ಅಗೆಯಿಸಿದ್ದೀರಲ್ಲಾ?” ಎಂದರು. +“ಅತು ಅಗೆಯಿಸಿತ್ತಲ್ಲ, ಪಾತ್ರಿಗಳೆ. +ರಾತ್ರಿಕತ್ತಲಲ್ಲಿ ಹಂತಿ ಉತ್ತಿತ್ತಲ್ದಾ?” ಎಂದರು ಪಂಡಿತರು, ಪಾದ್ರಿಯ ಅಜ್ಞಾನಕ್ಕೆ ಕನಿಕರದ ನಗೆ ಬೀರುತ್ತಾ. +“ಏನಂದಿರಿ?” ಪಾದ್ರಿಗೆ ಪಂಡಿತನ ಮಾತು ಅರ್ಥವಾಗಲಿಲ್ಲ. +“ ಹಂತಿ ಉತ್ತಿತ್ತು! +ಹಂತಿ!ಹಂತಿ!” ಎಂದು ಒತ್ತಿ ಹೇಳಿದರು ಪಂಡಿತರು. +ತುಸು ದೂರದಲ್ಲಿದ್ದು ಅವರ ಕಡೆ ನೋಡುತ್ತಿದ್ದ ಚೀಂಕ್ರ “ಹಂದಿ ಉತ್ತಿತ್ತು ಅಂಬ್ರು ಪಂಡಿತರು!” ಎಂದು ಸ್ಪಷ್ಟಪಡಿಸಿದನು. +“ಸ್ಕೂಲಿನ ಹತ್ತಿರಕ್ಕೆ ಹಂದಿಗಳನ್ನು ಏಕೆ ಬಿಟ್ಟಿರಿ?” ಪಾದ್ರಿ ತರಾಟೆಗೆ ತೆಗೆದುಕೊಳ್ಳುವ ರೀತಿಯಲ್ಲಿ ಕೇಳಿದ್ದನು. +ಪಂಡಿತನಿಗೆ ನಗೆ ತಡೆಯಲಾಗಲಿಲ್ಲ: “ಕಾಡಿನ ಹಂತಿ ಅಲ್ಲವೆ? +ನಾವು ಬಿಡುವುದೇನು ಬಂತು? +ದಿನವೂ ರಾತ್ರಿ ಬಂದು ಉತ್ತುತ್ತಿವೆ!” ಎಂದನು. +ಚೀಂಕ್ರ ತನ್ನ ವಿಶೇಷ ಜ್ಞಾನವನ್ನು ಮರೆಯಲು ನಡುವೆ ಬಾಯಿಹಾಕಿ, ಒಂದು ಜಾತಿಯ ಹೂವಿದ್ದ ಗಿಡವನ್ನು ತೋರಿಸಿ “ಈ ಹಂದಿಪುಟ್ಟಿನ ಗೆಡ್ಡೆ ಇದೆಯಲ್ಲಾ ಅದರ ರುಚಿಗೆ” ಎಂದು ಪಂಡಿತನಿಂದಲೂ ತನ್ನ ಕನ್ನಡ ಮೇಲು ಮೆಟ್ಟದ್ದು ಎಂಬ ಹೆಮ್ಮೆಯಿಂದ ಹೇಳಿದನು. +“ನಾನು ಹೇಳಲಿಲ್ಲವೆ ನಿಮಗೆ, ಈ ಕಾಡಿನಲ್ಲಿ ಇಸ್ಕೂಲು ಮಾಡಿದರೆ ಕಾಡು ಪ್ರಾಣಿಗಳೆ ಸೈ ಓದಲಿಕ್ಕೆ ಬರುವುದು ಎಂದು”ಪಂಡಿತನ ವಿನೋದವನ್ನು ನಿರ್ಲಕ್ಷಿಸಿ ಪಾದ್ರಿ “ಇದೆಲ್ಲ ಏನು? +ಹಿಕ್ಕೆ ಬಿದ್ದಿದೆಯಲ್ಲಾ?” ಎಂದನು. +“ಅತು ಮೊಲದ ಹಿಕ್ಕೆ ಅಲ್ಲವೊ?” +“ಸ್ಕೂಲಿನ ಹತ್ತಿರವೆ ಇಷ್ಟು ಕಾಡು ಇರುವುದು ಮಕ್ಕಳಿಗೆ ಕ್ಷೇಮವಲ್ಲ. +ಕಾಡು ಕಡಿದು ಇನ್ನೂ ಸುತ್ತಲಿನ ಬಯಲನ್ನು ವಿಸ್ತರಿಸಬೇಕು.” ಪಾದ್ರಿ ಆಜ್ಞೆಮಾಡಿದನು. +“ಹೋಯ್, ಚೀಂಕ್ರ ಸೇರೆಗಾರ, ಕೇಳಿತಿಯಾ?” ಎಂದು ಪಂಡಿತ ಚೀಂಕ್ರನ ಕಡೆ ಮುಖಮಾಡಿದನು. +“ಅದಕ್ಕೇನು? ಮಾಡುವಾ. +ಒಂದಿಪ್ಪತ್ತು ಮೂವತ್ತು ಆಳು ಬಿದ್ದೀತಷ್ಟೆ?” +ಪಾದ್ರಿ ದಿಗಿಲು ಬಿದ್ದವನಂತೆ ಚೀಂಕ್ರ ಕಡೆನ ನೋಡಿ  “ಅಷ್ಟು ಏಕೆ? +ಅದು ಭಾರಿ ದುಬಾರಿ.” ಎಂದು ಕಿಟಕಿಯ ಕಡೆಗೂ ಮಣ್ಣಿನ ಗೊಡೆಯ ಮೇಲೆ ಹಾಕಿದ್ದ ತೊಲೆಯ ಕಡೆಗೂ ನೋಡುತ್ತಾ “ಇದು ತೇಗದ ಮರದ್ದು ತಾನೆ?” ಎಂದು ಕೇಳಿದನು. +“ಅಲ್ಲ, ಪಾತ್ರಿಗಳೆ, ಇದು ತ್ಯಾಗ ಅಲ್ಲ. +ಅದಕ್ಕಿಂತ ಗಟ್ಟಿ. +ಈ ಕಿಟಕಿ ನೋಡಿ. +ಇತು ಹೆಬ್ಬಲಸು. +ಈ ತೊಲೆ ಇತೆಯಲ್ಲಾ ಇತು ಹೊನ್ನೆ. +ಎಂಥ ಕೆಂಚು ಇತೆ ಅನ್ನುತ್ತೀರಿ? +ಒಂದು ವರ್ಷಕ್ಕೇನೂ ಅಡ್ಡಿ ಇಲ್ಲ….” +“ಮಳೆಗಾಲದಲ್ಲಿ ಈ ಮಣ್ಣಿನ ಗೋಡೆ ಇರಿಸಲು ಹೊಡೆದು ಬಿದ್ದುಹೋಗಬಾರದು. +ಇನ್ನೇನು ಮಳೆಗಾಲ ಪ್ರಾರಂಭ ಆಗುತ್ತದೆ. +ಇರಿಸಲು ತಟ್ಟಿ ಕಟ್ಟಿಸಿಬಿಡಿ….” +“ಆತಕ್ಕೇ ಕಾಣಿ, ಈ ಕಡಿಮಾಡು ಇಷ್ಟು ನೆಲಕ್ಕೆ ಮುಟ್ಟಿ ಬಗ್ಗಿಸಿತ್ತೇನೆ. +ಎಂಥಾ ಅಡ್ಡಗಾಳಿ ಬೀಸಿತರೂ ಇತಕ್ಕೆ ತಗಲುವುತಿಲ್ಲ ಇರಿಸಲು. +ಆತರೂ ನೀವು ಹೇಳಿತ ಮೇಲೆ, ಕಟ್ಟಿಸುತ್ತೆ ಇರಿಸಲು ತಟ್ಟೆ….” +ಹೊರಭಾಗದ ಪರಿಶೀಲನೆಯನ್ನು ಮುಗಿಸಿ, ಮಾಡಬೇಕಾದ ಟೀಕೆಗಳನ್ನು ಮಾಡಿ, ಕೊಡಬೇಕಾದ ಸಲಹೆಗಳನ್ನು ಕೊಟ್ಟು; ಪಾದ್ರಿ ಬಾಗಿಲ ಬಳಿಗೆ ಬಂದನು, ಒಳಗೆ ದಾಟಲೆಂದು. +ನೋಡುತ್ತಾನೆ, ಒಳಗೆಲ್ಲ ಸೆಗಣಿ, ಕುರಿಹಿಕ್ಕೆ! +“ಇದೇನು, ಪಂಡಿತರೆ, ಸ್ಕೂಲೋ ಕೊಟ್ಟಿಗೆಯೋ?” +“ಹಾಳು ಈ ತನಾಕಾಯುವ ಮುಂಡೇ ಮಕ್ಕಳಿಂತ ಸುಕಾ ಇಲ್ಲ!” ಎಂದು ಪಂಡಿತ ಪ್ರಾರಂಭಿಸುತ್ತಿದ್ದುದನ್ನು ತಡೆದು, ಪಾದ್ರಿ ತುಂಬ ಗಂಭೀರವಾಗಿ ಉಪದೇಶ ಮಾಡಿದನು: +“ಪಂಡಿತರೆ, ಕೆಟ್ಟಮಾತು ಆಡಬಾರದು. +ನಮ್ಮ ಕ್ರೈಸ್ತ ಧರ್ಮದಲ್ಲಿ ಅದು ಬಹಳ ಪಾಪಕರ. ” +“ಒಪ್ಪಿತೆ. ಪಾತ್ರಿಗಳೆ, ತಪ್ಪಾಯಿತು! +ಆತರೆ ಏನುಮಾಡುವುತು ಹೇಳಿ? +ಹೇಳಿ ಹೇಳಿ ಸಾಕಾಯಿತು ಈ ಸೂಳೆಮಕ್ಕಳಿಗೆ! +ಮೊನ್ನೆ ಮಳೆ ಬಂದಿತಲ್ದಾ? +ತನಾ ಕುರಿ ಎಲ್ಲ ಇತರೊಳಗೆ ನುಗ್ಗಿಸಿಬಿಟ್ಟಿತ್ತಾರೆ…. +ಈ ಬಾಕಿಲಿಗೆ ಒಂದು ಸರಪಣಿ ಚಿಲಕ ಮಾಡಿಸಿ ಹಾಕುತ್ತೇನೆ. +ಒಂದು ಒಳ್ಳೆ ಬೀಕ ತಂದುಕೊಟ್ಟುಬಿಡಿ. +ತೀರ್ಥಹಳ್ಳಿಯಲ್ಲಿ ಆ ಕಬ್ಬಿಣದ ಸಾಬರ ಅಂಗಡಿಯಲ್ಲಿ ಸಿಕ್ಕುತ್ತದೆ. ಹಾಕಿಸಿಬಿತ್ತೇನೆ. ಆಮೇಲೆ ಈ ಲವಡಿ ಮಕ್ಕಳು ಹ್ಯಾಂಗೆ ಒಳಗೆ ತನಾ ಕುರಿ ಬಿಡುತ್ತಾರೆ? +ನೋಡುವಾ!”ಪಾದ್ರಿ ಸೆಗಣಿ ಹಿಡಿಯುದಂತೆ ಉಟ್ಟ ಪಂಚೆಯನ್ನು ಎಡಗೈಯಲ್ಲಿ ತುಸು ಎತ್ತಿ ಹಿಡಿದುಕೊಂಡು ನೆಸೆದು ನೆಸೆದು ಒಳಗೆ ದಾಟಿದನು. +ಪಂಡಿತನೂ ಸಗಣಿಯನ್ನಾಗಲಿ ಕುರಿಹಿಕ್ಕೆಯನ್ನಾಗಲಿ ಲೆಕ್ಕಿಸದೆ ಹಿಂಬಾಲಿಸಿದನು. +ಹೊಸದಾಗಿ ತಯಾರಿಸಿದ್ದ ಒರಟು ಒರಟಾದ ಸ್ಥೂಲಕಾಯದ ಮರದ ಕುರ್ಚಿಯೊಂದು ಎದುರು ಗೋಡೆಗೆ ಆನಿಸಿ ನಿಂತಿತ್ತು. +ಎಡಬಲ ಪಕ್ಕದ ಗೋಡೆಗಳಿಗೆ ಮುಟ್ಟಿದಂತೆ ಎರಡೆರಡು ಉದ್ದನೆಯ ಕಾಲುಮಣೆಗಳಿದ್ದವು. +ಪಾದ್ರಿ ಅವನ್ನು ಬೆಂಚು ಎಂದು ಕರೆಯುತ್ತಿದ್ದನು ಅವನನ್ನು ಅನುಕರಿಸುವವರು 'ಬೆಂಚು' ಎಂದು ಅದರ ಉಚ್ಚಾರಣೆಯನ್ನು ಸುಧಾರಿಸಿದ್ದರು! + ಮೇಜಿನ ರೂಪದ ಒಂದು ಸ್ಥೂಲಾಕೃತಿಯ ಚೌಕನೆಯ ಎತ್ತರದ ಕಾಲುಮಣೆ ಕುರ್ಚಿಯ ಮುಂದೆ ನಿಂತಿತ್ತು. +“ಕಣ್ಣುಪಂಡಿತರೆ, ಸ್ಕೂಲು ಅಂದಮೇಲೆ ಚೆನ್ನಾಗಿ ಗಾಳಿ ಬೆಳಕು ಓಡಾಡುವಂತಿರಬೇಕು. +ಓದುವ ಮಕ್ಕಳ ಆರೋಗ್ಯಕ್ಕೆ ಅದು ಬಹಳ ಆವಶ್ಯಕ. +ಇಲ್ಲಿ ಬೆಳಕೂ ಸಾಲದೂ, ಗಾಳಿಗೂ ದಾರಿಯಿಲ್ಲ. +ಇನ್ನೂ ಎರಡು ಕಿಟಕಿ ಇಟ್ಟಿದ್ದರೆ?” +“ನಿಮಗೆ ಗೊತ್ತಿಲ್ಲ, ಪಾತ್ರಿಗಳೆ. +ಇತು ಬಯಲುಸೀಮೆ ಅಲ್ಲ; ಮಲೆಸೀಮೆ. +ಮಳೆ ಗಾಳಿ ಸುರು ಆಯ್ತು ಅಂದರೆ ಇದ್ದ ಕಿಟಕೀನೂ ಮುಚ್ಚಬೇಕಾಗಿತ್ತೆ….” +ಕುರ್ಚಿ ಬೆಂಚು ಮೇಜುಗಳನ್ನು ಪರಿಶೀಲಿಸಿ, ಇನ್ನೂ ಸ್ವಲ್ಪ ನಾಜೋಕಾಗಿರಬೇಕೆಂದು ಸಲಹೆ ಕೊಟ್ಟು, ಅಲ್ಲಿ ತುಂಬಿದ್ದ ಸೆಗಣಿ ಕುರಿಹಿಕ್ಕೆಯ ಮತ್ತು ಗಂಜಲದ ದುರ್ಗಂಧವನ್ನು ಸಹಿಸಲಾರದೆ, ಮೂಗಿಗೊಂದು ಕರವಸ್ತ್ರವನ್ನು ಅಡ್ಡಹಿಡಿದುಕೊಂಡು, ಪಾದ್ರಿ ಆದಷ್ಟು ಬೇಗನೆ ಹೊರಹೊರಟನು. +“ಸ್ಕೂಲಿಗೆ ಒಂದು ಬಾವಿ ತೆಗೆಸಬೇಕು, ಪಂಡಿತರೆ…. +ಎಲ್ಲಿ ಬೆಟ್ಟಳ್ಳಿ ದೇವಯ್ಯಗೌಡರು ಇನ್ನೂ ಬರಲಿಲ್ಲವೆ? +ಅವರ ಬೈಸಿಕಲ್ಲಿನ ಗಂಟೆ ಸದ್ದು ಆಗಲೆ ಕೇಳಿಸಿದ್ದ ಹಾಗಿತ್ತು?” ಎಂದು ಜೀವರತ್ನಯ್ಯ ಅತ್ತ ಹುಡುಕಿ ನೋಡಿದರು. +ಚೀಂಕ್ರ “ಅಂತಕ್ಕಸೆಡ್ತೀರ ಮನೀಗೆ ಹ್ವಾದ್ರು ಅಂಬಹಾಂಗೆ ಕಾಣ್ತದೆ” ಎಂದು ಎಲೆಯಡಿಕೆ ಜಗಿದು ಕೆಂಪಾಗಿದ್ದ ಹುಳುಕು ಹಲ್ಲು ಬಿಟ್ಟು ನಗುತ್ತಾ, ಪಂಡಿತರ ಕಡೆಗೆ ಇಂಗಿತವಾಗಿ ದೃಷ್ಟಿ ಬೀರಿದನು. +ಅವನು ಮುಡಿದಿದ್ದ ಹೂವನ್ನು ನೋಡಿ ಪಾದ್ರಿಗೆ ನಗೆ ಬರುವ ಹಾಗಾಯಿತು. +ಹೊಸದಾಗಿ ಬೈಸಿಕಲ್ಲು ಕಲಿತು ಏರಿದ್ದ ಅಮಲು ಇನ್ನೂ ಇಳಿದಿರಲಿಲ್ಲ, ಬೆಟ್ಟಳ್ಳಿ ದೇವಯ್ಯನಿಗೆ. +ರಸ್ತೆಗಳೆ ಅಪೂರ್ವವಾಗಿದ್ದ ಆ ಕಾಲದಲ್ಲಿ, ಇದ್ದ ರಸ್ತೆಗಳೂ ಕೊರಕಲು ಬಿದ್ದುಹೋಗಿದ್ದರೂ ದೇವಯ್ಯ ಎಲ್ಲ ಕಡೆಗಳಿಗೂ, ಸಿಕ್ಕಿದೆ ಅವಕಾಶ ಎಂದಿಕೊಂಡು, ಬೈಸಿಕಲ್ಲಿನಲ್ಲಿಯೆ ಸವಾರಿ ಮಾಡುತ್ತಿದ್ದನು. +ತಮ್ಮ ಜಮೀನಿನಲ್ಲಿ ಆಳುಗಳು ಕೆಲಸ ಮಾಡುವುದನ್ನು ನೋಡಿಕೊಂಡು ಬರಲೂ ಬೈಸಿಕಲ್ಲಿನ ಮೇಲೆಯೆ ಹೋಗಿಬರುತ್ತಿದ್ದನು, ಅದು ಒಂದೇ ಫರ್ಲಾಂಗು ಆಗಿದ್ದರೂ ಚಿಂತೆಯಿಲ್ಲ. +ಆ ಹುಮ್ಮಸ್ಸಿನಲ್ಲಿ ಕೆಲುವು ಸಾರಿ ಬೈಸಿಕಲ್ಲಿನಿಂದ ಬಿದ್ದು ಮುಖ ಮೋರೆ ಒಡೆದುಕೊಂಡಿದ್ದರೂ ಅದನ್ನು ಲಕ್ಷಿಸಿರಲಿಲ್ಲ. +ಒಮ್ಮೆ ಮೋರಿಯೊಂದರಿಂದ ಅದರ ಕಲ್ಲು ಕಟ್ಟನೆಗೆ ಡಿಕ್ಕಿ ಹೊಡೆದು ಕೆಳಗೆ ಹಳ್ಳಕ್ಕೆ ಎಗರಿ ಬಿದ್ದು ಪ್ರಾಣಾಪಾಯವೂ ಆಗುವುದರಲ್ಲಿತ್ತು. +ಏನಾದರೂ ಅವನಿಗೆ ಬೈಸಿಕಲ್ಲು ಸವಾರಿಯ ಷೋಕಿ ಕುದುರೆ ಸವಾರಿಯ ಷೋಕಿಗಿಂತಲೂ ಹೆಚ್ಚಾಗಿ ಅಮರಿಬಿಟ್ಟಿತ್ತು. +ಆ ಬೈಸಿಕಲ್ಲು ಪಾದ್ರಿಯಿಂದ ತನಗೆ ಬಹುಮಾನವಾಗಿ ಬಂದಿದೆ ಎಂದು ಅವನು ತಿಳಿದುಕೊಂಡಿದ್ದರೂ ಎಲ್ಲರೊಡನೆಯೂ ತಾನು ಹಣ ಕೊಟ್ಟೆ ಕೊಂಡದ್ದು ಎಂದು ಹೇಳಿದ್ದನು. +ನಿಜಾಂಶ ಎರಡಕ್ಕೂ ಬೇರೆಯಾಗಿತ್ತು. +ಆ ಬೈಸಿಕಲ್ಲೂ, ಅವನಿಗೆ ಪಾದ್ರಿಯಿಂದ ಬಂದಿದ್ದ ಇತರ ಅನೇಕ ಬಹುಮಾನಗಳಂತೆ, (ಉದಾಹರಣೆಗೆ, ಗೋಡೆಗೆ ತಗುಲಿಸುವ ದೊಡ್ಡ ಗಡಿಯಾರ) ಅವನೂ ಕ್ರೈಸ್ತನಾಗಿ ಇತರರನ್ನೂ ಕ್ರೈಸ್ತಮತಕ್ಕೆ ಸೇರಿಸುವ ಸಲುವಾಗಿ ಕೊಟ್ಟಿದ್ದ ಮುಂಗಾಣಿಕೆಯಾಗಿತ್ತು. +ಅದರ ಪಾದ್ರಿಗೆ ತಾನು ಏನನ್ನು ಮಾಡುತ್ತಿದ್ದೇನೆ ಎಂಬುದರ ಸ್ಪಷ್ಟ ಅರಿವು ಇತ್ತು. +ತಾನು ಉಪದೇಶಿಯ ಸ್ಥಾನದಿಂದ ರೆವರೆಂಡಿನ ಪಟ್ಟಕ್ಕೆ ಏರಬೇಕಾದರೆ ಎಷ್ಟು ಜನರನ್ನು ಕಿಲಸ್ತರ ಜಾತಿಗೆ ಸೇರಿಸಬೇಕು ಎಂಬ ಪಟ್ಟಕ್ಕೆ ಅವನ ಬೊಕ್ಕಣದಲ್ಲಿ ಸದಾ ಹಸಿದು ಬಾಯ್ದೆರೆದಿತ್ತು. +ಜೀವರತ್ನಯ್ಯ ಹೇಳಿಕಳುಹಿಸಿದ್ದಂತೆ ‘ಇಸ್ಕೂಲುಮನೆ’ ನೋಡಲೆಂದು ಬೆಟ್ಟಳ್ಳಿಯಿಂದ ಬೈಸಿಕಲ್ಲು ಹತ್ತಿ ಬಂದಿದ್ದ ದೇವಯ್ಯ, ಅನಾವಶ್ಯಕವಾಗಿ ಟ್ರಿಂಟ್ರಿಂಟ್ರಿಂಟ್ರಿಂ ಗಂಟೆ ಬಾರಿಸುತ್ತ, ಅಂತಕ್ಕನ ಮನೆಯ ಉಣುಗೋಲು ತೆಗೆದು ದಾಟಿ, ಬೈಸಿಕಲ್ಲನ್ನು ಅಂಗಳಕ್ಕೆ ನೂಕಿಕೊಂಡೆ ಹೋಗಿ, ಅದನ್ನು ತೆಣೆಗೆ ವಾಲಿಸಿಟ್ಟು, ಜಗಲಿಗೆ ಹತ್ತಿ, ನೇರವಾಗಿ ಒಳಕ್ಕೆ ಹೋದನು. +ಅವನ ಚಲನವಲನಗಳೆಲ್ಲ ಅವನು ಆ ಮನೆಗೂ ಮನೆಯವರಿಗೂ ಬಹುಕಾಲದಿಂದಲೂ ತುಂಬ ಪರಿಚಿತನೆಂಬುದನ್ನು ತೋರುವಂತಿತ್ತು. +ಆಗತಾನೆ ಮಿಂದು, ತಟ್ಟಿಗೋಡೆಯ ಬಚ್ಚಲು ಮನೆಯಲ್ಲಿ ಸೀರೆ ಉಟ್ಟುಕೊಳ್ಳುತ್ತಿದ್ದ ಅಂತಕ್ಕನ ಮಗಳು ಕಾವೇರಿಗೆ ಬೈಸಿಕಲ್ಲಿನ ಗಂಟೆಸದ್ದು ಕೇಳಿಸಿದೊಡನೆಯ ಮೊಗದ ಮೇಲೆ ನಗೆಯ ಮುಗುಳು ಮೂಡಿ ಮಲರಿತು. +ಕನ್ನಡ ಜಿಲ್ಲೆಯ ಸೆಟ್ಟರ ಹೆಂಗಸರು ಉಡುವಂತೆ ಸೀರೆ ಉಟ್ಟುಕೊಳ್ಳುತ್ತಿದ್ದವಳು ಅಷ್ಟಕ್ಕೆ ನಿಲ್ಲಿಸಿ ಸೊಂಟಕ್ಕೆ ಸುತ್ತಿದ್ದನ್ನು ಕೈಯಲ್ಲಿ ಹಿಡಿದುಕೊಂಡೆ, ಯಾರಾದರೂ ಕಂಡಾರೊ ಎಂದು ಅತ್ತಿತ್ತ ಕಣ್ಣಟ್ಟಿ, ಸೊಂಟದ ಮೇಲಿನ ಮೈ ಬತ್ತಲೆಯಾಗಿಯೆ ಬಳಿಯಿದ್ದ ತನ್ನ ಕೋಣೆಗೆ ಓಡಿ ಹೋಗಿ ಬಾಗಿಲು ಓರೆಮಾಡಿಕೊಂಡಳು. +ಆ ಕೋಣೆಯ ಅರೆಗತ್ತಲೆಯಲ್ಲಿ ಸೀರೆಯನ್ನು ಕಳಚಿಯ ಹಾಕಿ, ಬತ್ತಲೆಯ ನಿಂತು, ಮತ್ತೊಂದು ಸೀರೆಗಾಗಿ ಬಿದಿರಿಗಳುವಿನ ಮೇಲೆ ಮಡಿಚಿಟ್ಟಿದ್ದ ಸೀರೆಗಳಲ್ಲಿ ತಡಕಾಡಿ, ಒಂದನ್ನು ಗುರುತಿಸಿ ಎಳೆದಳು. +ಅದನ್ನು ಬೆಳಕಂಡಿಯ ಹತ್ತಿರಕ್ಕೆ ಹಿಡಿದು, ಬೆಟ್ಟಳ್ಳಿ ದೇವಯ್ಯಗೌಡರು ಕೆಲವು ದಿನಗಳ ಹಿಂದೆ ತಂದುಕೊಟ್ಟಿದ್ದ ಹೊಸಸೀರೆ ಎಂಬುದನ್ನು ನಿಶ್ಚಯ ಮಾಡಿಕೊಂಡು, ಉಟ್ಟುಕೊಳ್ಳುತೊಡಗಿದಳು. +ಗಟ್ಟದ ತೆಗ್ಗಿನವರು ಉಟ್ಟುಕೊಳ್ಳುವಂತಲ್ಲ, ಗಟ್ಟದ ಮೇಲಿನವರು ಉಟ್ಟುಕೊಳ್ಳುವಂತೆ, ಗೊಬ್ಬೆ ಸೆರಗು ಹಾಕಿ. +ಅಷ್ಟರಲ್ಲಿ ಅವಳ ತಾಯಿ ಕರೆದದ್ದು ಕೇಳಿಸಿತು:“ಕಾವೇರೀ!” +“ಆ!” +“ಮಿಂದಾಯ್ತೇನೇ?” +“ಆಯ್ತು!ಸೀರೆ ಉಡ್ತಿದ್ದೀನಿ!” +“ನಿನ್ನ ಬೆಟ್ಟಳ್ಳಿ ಒಡೇರು ಬಂದಾರೇ! +ಒಂದು ಗಳಾಸು ಕಾಪಿ ಕೊಡು, ಬಾ!” + ‘ನಿನ್ನ’ ಅನ್ನುವುದನ್ನು ಅಕ್ಕರೆಯೊತ್ತಿ ಹೇಳಿದ್ದಳು ಅಂತಕ್ಕ. +“ಬಂದೆ ಅಬ್ಬೇ,”ಸೀರೆ ಉಟ್ಟುಕೊಂಡವಳು ಬಚ್ಚಲಿಗೆ ಓಡಿ ಹಂಡೆಯಲ್ಲಿದ್ದ ನೀರಿನಲ್ಲಿ ಮುಖ ನೋಡಿಕೊಂಡು, ಹಣೆಗೆ ಕುಂಕುಮವಿಟ್ಟು, ತಲೆಯ ಕೂದಲನ್ನು ನೀವಿ, ಬೈತಲೆ ಸರಿಮಾಡಿಕೊಂಡಳು. +ಹಿಂದಿನ ಸಂಜೆಯೆ ಮಾಲೆಕಟ್ಟಿ ತಣ್ಣಗಿರುವ ನೀರಿನ ಕರೆದಲ್ಲಿಗೆ, ನಿರುದ್ವಿಗ್ನೆಯಂಬಂತೆ, ಪ್ರಯತ್ನಪೂರ್ವಕವಾದ ಕೃತಕ ಸಾವಧಾನದಿಂದ ತೇಲುತ್ತಾ ಹೋದಳು, ಸಂಭ್ರಮವಾಗಿ. +ಮಗಳು ಆಯ್ದಿದ್ದ ಸೀರೆಯನ್ನೂ, ಉಟ್ಟಿದ್ದ ರೀತಿಯನ್ನೂ, ಬಾಚಿ ಬೈತಲೆ ತೆಗೆದಿದ್ದ ಗಟ್ಟದ ಮೇಲಣ ಶೈಲಿಯನ್ನೂ, ಮುಡಿದಿದ್ದ ಹೂವನ್ನೂ, ಬೆಳ್ಳನೆಯ ಹಣೆಯನ್ನಲಂಕರಿಸಿದ್ದ ಕುಂಕುಮಬಿಂದುವ ಸೌಂದರ್ಯ ಶೋಭೆಯನ್ನೂ ನೋಡಿ, ಮೆಚ್ಚಿ, ಅವಳ ಸಮಯೋಚಿತ ಚಾಕಚಕ್ಯತೆಯನ್ನೂ ಜಾಣ್ಮೆಯನ್ನೂ ಮನದಲ್ಲಿಯೆ ಪ್ರಶಂಸಿಸಿ, ಕಣ್ಮಿಸುಕಿನಿಂದಲೆ ಪ್ರತ್ಯೇಕವಾಗಿ ಏಕಾಂತವಾಗಿದ್ದ ಅತಿಥಿ ಸತ್ಕಾರದ ಕೂಟಡಿಯನ್ನು ನಿರ್ದೇಶಿಸಿ, ಒಂದು ಗಾಜಿನ ಲೋಟವನ್ನು ಅವಳ ಕೈಗಿತ್ತು, ಹಿಂದಿನಿಂದ ಕಾಫಿ ತರುತ್ತೆನೆ ಎಂಬುದನ್ನೂ ಸನ್ನೆಯಿಂದಲೆ ಸೂಚಿಸಿ, ಅವಳನ್ನು ಪ್ರೋತ್ಸಾಹಿಸುವ ಮುಗುಳು ನಗೆಯ ಮುಖಭಂಗಿಯನ್ನು ಪ್ರದರ್ಶಿಸುತ್ತಾ ಕಳುಹಿಸಿದಳು ತಾಯಿ. +ಹಾಸಗೆ ಸುತ್ತಿ ಇಟ್ಟಿದ್ದ ಒಂದು ಮಂಚದ ಬಳಿಯ ಕಾಲು ಮಣೆಯ ಮೇಲೆ ಕುಳಿತು ಬಾಗಿಲ ಕಡೆ ನೋಡುತ್ತಿದ್ದ ದೇವಯ್ಯ ಕಾವೇರಿಯನ್ನು ಕಂಡೊಡನೆ ತನಗಾದ ಆಶ್ಚರ್ಯವನ್ನು ಕಣ್ಣರಳಿಸಿ ಹೊರಸೂಸುತ್ತಾ “ಅಯ್ಯೋ ನಾನು ‘ಯಾರಪ್ಪಾ ಇದು ನಮ್ಮವರ ಹುಡುಗಿ?’ ಅಂದುಕೊಂಡಿದ್ದೆ! +ತುಂಬಾ ಚೆನ್ನಾಗಿ ಕಾಣ್ತದೆಯೆ ನಿನಗೆ, ಸೆಟ್ಟರುಡಿಗೆಗಿಂತ ಈ ಉಡಿಗೆ! +ಆ ಸೀರೇನೂ ವಯ್ನಾಗಿ ಒಪ್ತದೆ ನಿನಗೆ!” ಎಂದನು. +ಕ್ರಾಪು ಬಿಟ್ಟು ಹೊಸರೀತಿಯ ಬಟ್ಟೆ ಹಾಕಿಕೊಂಡು ಸುಪುಷ್ಟ ಸಬಲ ದೃಢಕಾಯನಾಗಿ ತನ್ನೆದುರು ಕುಳಿತಿದ್ದ ಯುವಕನ ಮೆಚ್ಚುಗೆಗೆ ಹೆಣ್ಣು ಸೋತು ಬಳಲಿದಂತಾದಳು. +ನಾಚಿಕೆಯಿಂದ ಸೆರಗು ಸರಿಪಡಿಸಿಕೊಳ್ಳುತ್ತಾ ‘ನೀವು ತಂದು ಕೊಟ್ಟಿದ್ದೆ ಅಲ್ಲವೊ ಸೀರೆ?’ ಎಂಬ ಕೊರಳಿಗೆ ಬಂದಿದ್ದ ಮಾತನ್ನು ತಡೆಹಿಡಿದು “ಅವ್ವ ಕಾಪಿ ತರುತ್ತಾಳೆ…. +ನನಗೆ ಗಳಾಸು ತೆಗೆದುಕೊಂಡು ಹೋಗಿ ಇಡು ಎಂದಳು.” + ಬಾಲಿಕಾ ಸಹಜವೆಂಬಂತೆ ಹೇಳಿದಳು +ಲೋಟವನ್ನಿಡಲು ಸಮೀಪಿಸಿದ್ದ ಅವಳ ಎಡದ ಕೈ ಹಿಡಿದುಕೊಂಡು, ತಾನೇ ಅವಳ ಬಲಗೈಲಿದ್ದ ಲೋಟವನ್ನು ತೆಗೆದು ಬಳಿಯಿದ್ದ ಮಂಚದ ಮೇಲಿಟ್ಟು, ದೇವಯ್ಯ ಅವಳ ಬಲಗೈಯನ್ನೂ ಹಿಡಿದುಕೊಂಡನು. +ಅವನಿಗಿಂತಲೊ ಅಂತೆ ಅವಳಿಗೂ ಆ ಸ್ಪರ್ಶ ಸುಖಕರವಾಗಿತ್ತಾದರೂ ಅವಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಳು, ಹಿಂತುರಿಗಿ ಬಾಗಿಲಕಡೆ ಕಳ್ಳನೋಟ ನೋಡುತ್ತಾ. +ಆದರೆ ದೇವಯ್ಯ ತನ್ನ ಕಿರುಬೆರಳಿನಲ್ಲಿದ್ದ ಒಂದು ಚಿನ್ನದ ಉಂಗುರವನ್ನು ತೆಗೆದು ಅವಳ ನಡುಬೆರಳಿಗೆ ತೊಡಿಸಲು ತೊಡಗಿದಾಗ ಅದನ್ನು ನಾಣ್ಬೆರಗಿನಿಂದ ನೋಡುತ್ತಾ ಸುಮ್ಮನೆ ನಿಂತುಬಿಟ್ಟಳು. +ಅದು ಅವನ ಕಿರುಬರಳಿನ  ಉಂಗುರವಾಗಿದ್ದರೂ, ಅವನು ತೊಡಿಸಿದ್ದ ಇವಳ ಬೆರಳು ನಡುಬೆರಳಾಗಿದ್ದರೂ, ತುಂಬಾ ಸಡಿಲವಾಗಿಯೆ ಇತ್ತು. +ದೇವಯ್ಯ ವಿನೋದವಾಗಿ “ಎಷ್ಟು ತೆಳ್ಳಗಿದ್ದೀಯೆ ನೀನು?ಸಣಕಲಿ!” ಎಂದನು. +ಕಾವೇರಿ ಉಂಗುರ ಕೆಳಗೆ ಬಿದ್ದುಹೋಗದಂತೆ ಬೆರಳನ್ನು ತುಸು ಮಡಚಿ ಕೈ ಎಳೆದು ತಪ್ಪಿಸಿಕೊಂಡು ದೂರ ನಿಂತು “ಮತ್ತೆ ನಿಮ್ಮ ಹಾಗೆ ಇರಬೇಕೇನು ಹೆಣ್ಣಾದ ನಾನು?” ಎಂದು ಅವನ ಭೀಮ ಬಲಿಷ್ಠ ಭದ್ರಕಾಯವನ್ನು ತಲೆಯಿಂದ ಕಾಲದವರೆಗೆ ನೋಡಿ ನಕ್ಕುಬಿಟ್ಟಳು. +ಅವಳ ಮೆಲುದನಿ. +ಅವಳ ಕುಲುಕುಲು ನಗೆ, ದೇವಯ್ಯನಿಗೆ ತಡೆಯಲಾಗಲಿಲ್ಲ. +ಅವಳನ್ನು ಹಿಡಿದು ಬಿಗಿದಪ್ಪಿ ಹಿಸುಗಿಬಿಗಬೇಕು ಎನ್ನಿಸಿತು. +ಅಲ್ಲದೆ ಪಾದ್ರಿಯ ಮಗಳಿಂದ ನಾಗರಿಕ ಪ್ರಣಯದ ಕುಶಲ ಕಲೆಯಲ್ಲಿ ದೀಕ್ಷೆ ಪಡೆದು ಸುಶಿಕ್ಷಿತನಾಗುತ್ತಿದ್ದ ಅವನಿಗೆ ಇನ್ನೂ ಏನೇನೂ ಮಾಡಿಬಿಡಬೇಕು ಎನ್ನಿಸಿತು. +ಆದರೆ ಕಾಫಿ ಪಾತ್ರೆ ಹಿಡಿದಿದ್ದ ಅಂತಕ್ಕ ಬಾಗಿಲಲ್ಲಿ ಕಾಣಿಸಿಕೊಂಡಳು. +“ಏನು ಚೆಲ್ಲಾಟಕ್ಕೆ ಸುರುಮಾಡಿಬಿಟ್ಟಳಾ ನಿಮ್ಮ ಹತ್ತಿರ?” ಎಂದು ದೇವಯ್ಯನ ಕಡೆಯಿಂದ ಮಗಳ ಕಡೆ ತಿರುಗಿ “ಏನೆ ಅದು ನಿನ್ನ ಅಟಮಟ? +ಗಳಾಸು ಇಟ್ಟು ಬಾ ಅಂತ ಕಳ್ಸಿದ್ರೆ ಆಟಕ್ಕೆ ಸುರುಮಾಡಿಬಿಟ್ಟಾ?” ಎಂದು, ಮಗಳ ಬೆರಳಲ್ಲಿದ್ದ ಉಂಗುರದ ಹೊಳಪನ್ನು ನೋಡಿ, ದೇವಯ್ಯಗೆ ಕಾಣದಂತೆ ಕಣ್ಣು ಮಿಟುಕಿಸಿದಳು. +ತನ್ನ ಪ್ರಣಯಲಘುವರ್ತನೆಯ ಮುಖಭಾವವನ್ನು ತಟಕ್ಕನೆ ಗಾಂಭೀರ್ಯದ ಚಿಪ್ಪಿನೊಳಗೆ ಎಳೆದು ಕುಳಿತಿದ್ದ ದೇವಯ್ಯ ಅತ್ಯಂತ ಭಿನ್ನ ವಿಷಯದ ತೆರೆಯೆಳೆದು, ಪ್ರಸ್ತುತ ವಿಷಯದ ದಿಕ್ಕನ್ನೆ ಬದಲಾಯಿಸಿ ಬಿಟ್ಟನು +:“ಏನು ಅಂತಕ್ಕ. +ನಿನ್ನ ಮನೆ ’ಕಾಫಿಹೋಟಲ್’ ಆಗಿಬಿಟ್ಟಿದೆಯಲ್ಲಾ! +ಬೋರ್ಡ ಬರೆಸಿ ಹಾಕ್ಸಿದ್ದೀಯಾ?” +“ಅಯ್ಯೋ ಎಲ್ಲ ಆ ಪಾದ್ರಿಗಳ ಕೆಲ್ಸ ಅಲ್ದಾ? +ಆವೊತ್ತು ಕಾಪಿಪುಡಿ ತಂದು ಕೊಟ್ಟು ಕಾಪಿಮಾಡಾದು ತೀರಿಸಿಕೊಟ್ರು. +ನಿನ್ನೆ ತೀರ್ಥಹಳ್ಳಿಯಿಂದ ಬರ್ತಾ ಕಾಗದದ ಮ್ಯಾಲೆ ಏನೋ ಬರೆದು ತಂದು ಗ್ವಾಡೆಗೆ ಆಂಟ್ಸಿದಾರೆ. +ಬಂದೋರೆಲ್ಲ ನೋಡಿ ನೋಡಿ ನೆಗ್ತಾರೆ…. ”. +ದೇವಯ್ಯ ಕಾಫಿ ಕುಡಿಯುತ್ತಾ ಮಧ್ಯೆ ಮಧ್ಯೆ ಹೇಳಿದನು: + “ಪರ್ವಾಗಿಲ್ಲ ಕಾಫಿ. +ತೀರ್ಥಹಳ್ಳಿ ಹೋಟ್ಲು ಕಾಫಿಗೇನು ಬಿಟ್ಟುಕೊಡೋದಿಲ್ಲ! …. +ಮೊನ್ನೆ ನಮ್ಮ ಮನೇಗಿಷ್ಟು ಕಾಫಿಪುಡಿ ತಗೊಂಡು ಹೋಗಿ ಕೊಟ್ಟಿದ್ದೆ…. +ಕಾಫಿ ಅಂತಾ ಮಾಡಿದ್ರೂ, ಬಾಯಿಗೆ ಹಾಕಾಗ್ಲಿಲ್ಲ! +ನಮ್ಮ ಅಪ್ಪಯ್ಯಂತೂ ಕುಡಿದವರೆ ವಾಕರಿಸಿ ವಾಂತಿ ಮಾಡಿಕೊಂಡು, ಬಾಯಿಗೆ ಬಂದಂತೆ ಬಯ್ಯುತ್ತಾ, ಕ್ಯಾಕರಿಸಿ ತುಪ್ಪಿಬಿಟ್ರು….”ಅಂತಕ್ಕೆ ಹಿಂದಿನದೇನನೊ ಸ್ಮರಿಸಿಕೊಂಡು “ಯಾರು? +ಕಲ್ಲಯ್ಯ ಒಡೇರ?ಹಿಹ್ಹಿಹ್ಹಿ!” ಎಂದು ತುಸು ನಿಂತು, ಮತ್ತೆ “ಅವರು ಈ ಕಡೆಗೇ ಬರದೆ ಎಷ್ಟೋ ವರ್ಸ ಆಯ್ತು! …. ” ಎಂದು ಸ್ವಲ್ಪ ದೀರ್ಘಕಾಲವೆ ದೂರ ನೋಡುತ್ತಿದ್ದು ಮತ್ತೆ “ನಿಮ್ಮ ಅವ್ವಗೂ ಕಾಪಿಗೀಪಿ ಮಾಡಿ ಗೊತ್ತಿಲ್ಲ. +ಕುನ್ನೇರ್ಲು ಕುಡಿ ಕಸಾಯ, ಕೊತ್ತುಂಬ್ರಿಬೀಜದ ಕಸಾಯ, ಸೊಗದೆಬೇರಿನ ಕಸಾಯ ಮಾಡಿಕೊಟ್ಟ ಅಭ್ಯಾಸ…. +ಹೌದಾಂಬ್ಹಾಂಗೆ ಮರ್ತೇ ಹೋಗಿತ್ತು! +ದೇವಮ್ಮಗೆ ಹ್ಯಾಂಗಿದೆ ಈಗ? +ಬಾಲೆ ಬಾಣ್ತಿ ಸುಕವಾಗಿದಾರಾ?” ಎಂದು ಕ್ಷೇಮಸಮಾಚಾರ ವಿಚಾರಿಸಿದಳು. +ದೇವಯ್ಯ ಅಂತಕ್ಕನ ಹಿಂದೆ ನಿಂತು ತನ್ನನ್ನೆ ನುಂಗುವಂತೆ ನೋಡುತ್ತಿದ್ದ ಕಾವೇರಿಯ ಕಣ್ಣಕ್ಕೆ ನೋಡುತ್ತಾ ಹೇಳಿದನು: + “ಇದಾರೆ, ಸುಮಾರಾಗಿ…. +ಅದಕ್ಕೋ ಒಂದಲ್ಲ ಒಂದು ರೋತೆ ಇದ್ದೇ ಇರ್ತದೆ…. +ಕಲ್ಲೂರು ದೇವಸ್ಥಾನಕ್ಕೆ ಬೇರೆ ಹೋಗಬೇಕಂತೆ ಪೂಜೆ ಮಾಡಿಸಾಕೆ….!”ದೇವಯ್ಯನ ಅಂತಸ್ಥವನ್ನು ಊಹಿಸಿದ ಅಂತಕ್ಕ “ಅವರಿಗೆ ಇನ್ನೂ ಹಸೀ ಮೈ, ಪಾಪ! …. +ನೀವು ಸುಮ್ಮನೆ ಬೇಜಾರು ಮಾಡಿಕೊಂಡರೆ? +ಇನ್ನೊಂದು ಐದಾರು ತಿಂಗಳು ಹೋದ್ರೆ ಎಲ್ಲ ಸರಿಹೋಗ್ತದೆ…. +ಪೂರಾ ಬೇಜಾರಾದ್ರೆ ಇತ್ತಲಾಗಿ ಬಂದು ಹೋಗ್ತಾ ಇರಿ…. +ಹುಡುಗೀನೂ ನೆನೀತಿರ್ತದೆ ನಿಮ್ಮನ್ನೆ!” ಎಂದಳು, ಕೊನೆಯ ವಾಕ್ಯವನ್ನು ತನಗೂ ಕೇಳಿಸಿದಷ್ಟು ಮೆಲ್ಲಗೆ ಕಿವಿಯಲ್ಲಿ ಹೇಳುವಂತೆ ಹೇಳುತ್ತಾ. +ಆದರೆ ಕಾವೇರಿಗೂ, ಅದರ ಶಬ್ದ ಕೇಳಿಸದಿದ್ದರೂ, ಅದರ ಅರ್ಥದ ಅರಿವು ಹೊಳೆದು, ಹೊರಗೆ ಓಡಿದ್ದಳು ಮತ್ತೆ ಒಳಗೆ ಬಂದು “ಚೀಂಕ್ರ ಸೇರಿಗಾರ ಬಂದಿದಾನೆ. +ಪಾದ್ರಿ ನಿಮ್ಮನ್ನ ಬರಾಕೆ ಹೇಳಿ ಕಳ್ಸಿದಾರಂತೆ” ಎಂದಳು. +“ಈ ಪಾದ್ರಿ ಕೈಯಿಂದ ಬಚಾವಾಗೋದು ಹ್ಯಾಗೋ ನಂಗಿತ್ತಿಲ್ಲ “ ಎನ್ನುತ್ತಾ ದೇವಯ್ಯ ಮೇಲೆದ್ದನು. +“ನಿಮ್ಮನ್ನೂ ಕಿಲಸ್ತರ ಜಾತಿಗೆ ಸೇರಿಸ್ತಾರಂತೆ, ಎಲ್ಲರೂ ಆಡಿಕೊಳ್ತಾರೆ.” ಅಂತಕ್ಕ ಏನೋ ಆಗಬಾರದ್ದು ಆಗುತ್ತದೆಯಲ್ಲಾ ಎಂಬ ಧ್ವನಿಯಲ್ಲಿ ಹೇಳಿದಳು. +ದೇವಯ್ಯ ಕಂತ್ರಿನಗೆ ನಕ್ಕು, ಹೇಳುತ್ತಲೆ ಬಾಗಿಲು ದಾಟಿದನು: +“ ಸಿಂಧುವಳ್ಳಿ ಚಿನ್ನಪ್ಪಗೌಡನ್ನ ಜಾತಿಗೆ ಸೇರಿಸಿಕೊಂಡು, ಅವನ ಹೆಂಡತೀನ ಬಾವಿಗೆ ಹಾರ್ಸಿದ್ದೇ ಸಾಕಾಗಿದೆ! …. +ಇನ್ನು ನಾನೂ ಕಿಲಸ್ತರ ಜಾತಿಗೆ ಸೇರಿ….? +ಯಾಕೆ ಬಿಡು, ಆಗದ ಹೋಗದ ಮಾತು! …. ” +ದೇವಯ್ಯ ಬೈಸಿಕಲ್ಲು ಹತ್ತಿ ಗಂಟೆ ಬಾರಿಸುತ್ತಾ ಹೋಗುವುದನ್ನೆ ಬೆರಗಾಗಿ ನೋಡುತ್ತಾ ನಿಂತಿದ್ದಳು ಕಾವೇರಿ, ಬಾಗಿಲ ಸಂದಿಯ ಮರೆಯಲ್ಲಿ. +ಮುಂಡಾಸು ಸುತ್ತಿ, ಕಸೆಯ ನಿಲುವಂಗಿ ತೊಟ್ಟು, ಕೆಂಪಂಚಿನ ಕಚ್ಚೆಪಂಚೆಯುಟ್ಟು, ಬೆತ್ತದ ದೊಣ್ಣೆಹಿಡಿದು, ಹಳೆಯದೊಂದು ಮೆಟ್ಟಿನ ಜೊತೆಯನ್ನು ಕಾಲಿಗೆ ಹಾಕಿಕೊಂಡು ಉತ್ಸಾಹವಿಕ್ಕಿ ಮನೆಯಿಂದ ಬೊರಬಿದ್ದ ಸುಬ್ಬಣ್ಣಹೆಗ್ಗಡೆಯವರು ಯುವಕರೋಪಾದಿಯಲ್ಲಿ ನಡೆಯತೊಡಗಿದರು. +ಅವರ ಮಾತಿನ ಧ್ವನಿಯೂ ಉತ್ತಾಲವಾಗಿಯೆ ಇತ್ತು. +ಅವರು ನಡೆಯುತ್ತಿದ್ದ ದಾರಿಯ ಅಕ್ಕಪಕ್ಕದ ಕಲ್ಲು ಗಿಡ ಮರ ಪೊದೆ ಬಂಡೆ ಒಂದೊಂದು ಅವರಿಗೆ ನೆನಪುಗಳನ್ನು ತಂದುಕೊಡುವ ಉಲ್ಲಾಸ ವಸ್ತುಗಳಾಗಿದ್ದುವು. +“ನೋಡಿ, ಐಗಳೇ; + ಅದೇ ಮಟ್ಟಿನಲ್ಲಿ ನಾನೂ ದುಗ್ಗಣ್ಣನೂ ಹುಡುಗರಾಗಿದ್ದಾಗ ದುಗ್ಗಣ್ಣ ನಿಮಗೆ ಗೊತ್ತಿಲ್ಲ? +ನನ್ನ ಅಣ್ಣ, ನಮ್ಮ ಶಂಕರನ ಅಪ್ಪ, ಅಂವ ತೀರಿಹೋಗಿ ಹದಿನೈದು ಇಪ್ಪತ್ತು ವರ್ಷದ ಮ್ಯಾಲೆ ಆಯ್ತು; +ಅದೇ ಮಟ್ಟಿನಲ್ಲಿ ಒಂದು ಕಾಡು ಕೋಳಿಹ್ಯಾಟೆ ಮೊಟ್ಟೆ ಇಕ್ಕಿತ್ತು. +ಏಳೆಮಟು ಮೊಟ್ಟೆ. +ಮರಿಮಾಡಿದ ಕೂಡ್ಲೆ ನಾನು ದುಗ್ಗಣ್ಣ, ಹುಡುಗಾಟ ನೋಡಿ, – ಮರೀನೆಲ್ಲ ಹಿಡಿದುಬಿಟ್ಟು, ಹೆಂಗ್ಹೆಂಗೊ ಮಾಡಿ. +ಆ ಹ್ಯಾಟೆ ಹೋಗಲೂ ಒಲ್ಲದು, ಬರಲೂ ಒಲ್ಲದು. +ಪಾಪ!ಎಷ್ಟಾದರೂ ಪ್ರಾಣಭಯ ಅಲ್ಲವೆ? +ಕಡೀಗೂ ಮರೀ ಹಿಡುಕೊಂಡು ಹೋಗ್ತಿದ್ದ ನಮ್ಮ ಹಿಂದೇನೆ ಬರಾಕೆ ಶುರು ಮಾಡ್ತು. +ನಮ್ಮ ದುಗ್ಗಣ್ಣ ಬಿಲ್ಲು ಹೊಡೆಯೋದರಲ್ಲಿ ಮಹಾಗಟ್ಟಿಗ! +ದೊಡ್ಡ ಬಿದಿರುಬಿಲ್ಲು. ಹೊಡೆದೇಬಿಟ್ಟ. ಎದೀಗೆ ಕಲ್ಲುಬಿದ್ದ ಹೊಡೆತಕ್ಕೆ ಕೈಕಾಲು ಹಂದದೆ ಸತ್ತುಬಿತ್ತು! …. ಅದರ ಶಾಪಾನೋ ಏನೋ? +ನಮಗೀಗ ತಟ್ಟಿ, ನನ್ನ ಮಗನ್ನೆ ಆಹುತಿ ತಗೊಂಡುಬಿಟ್ತು!… ಕರ್ಮ, ನೋಡ್ರಿ ಬೆನ್ ಬಿಡೋದಿಲ್ಲ!” ಎಂದು ಒಂದು ಹತ್ತುಮಾರು ಮಾತಾಡದೆ ನಡೆಯುತ್ತಿದ್ದು ಮತ್ತೆ ಹೇಳತೊಡಗಿದರು. +ಐಗಳು ಆಲಿಸುತ್ತಿದ್ದುದು ನಿಮಿತ್ತ ಮಾತ್ರವೊ ಎಂಬಂತೆ, ಸ್ವಗತವಾಗಿ: “ನಮ್ಮ ದೊಡ್ಡಣ್ಣಂದೂ ಹಂಗೆ ಆಯ್ತು ನೋಡಿ:…. +ಹುಲಿ ಆದ್ರೇನಂತೆ ಎಷ್ಟಂದರೂ ಮಕ್ಕಳ ಹೆತ್ತ ತಾಯಿ ಅಲ್ಲವೆ? +ಮೂರು ಹುಲಿಮರೀನೂ ಹೊತ್ತುಕೊಂಡೇ ಬಂದ್ಬಿಟ್ಟ ಮನೀಗೆ. +ತನ್ನ ಮಕ್ಕಳಕ್ಕರೆಗೆ ಅಟ್ಟಿಕೊಂಡು ಬಂದ ತಾಯಿ ಹುಲೀನೂ ಕೋವೀಲಿ ಹೊಡೆದುಹಾಕಿಬಿಟ್ಟ! +ನಾವು ನಂಬಲಿ ಬಿಡಲಿ! +ಹೆತ್ತಹೊಟ್ಟೆ ಉರಿದು ಕೊಟ್ಟ ಶಾಪ ತಟ್ಟದೆ ಬಿಡ್ತದೆಯೆ? +ಇಂದಲ್ಲ ನಾಳೆ?” ಮುದುಕನ ಧ್ವನಿ ಬರುಬರುತ್ತಾ ರೋದನ ಸ್ವರಕ್ಕೆ ತಿರುಗಿತ್ತು. +ದೀರ್ಘವಾಗಿ ಸುಯ್ದು ಬಹಳ ಹೊತ್ತು ಮಾತನಾಡದೆ ಮುಂದುವರಿದರು. +ಸ್ವಲ್ಪ ದೂರ ಹೋಗುವುದರಲ್ಲಿಯೆ ಐಗಳಿಗೆ ಅನುಮಾನವಾಯಿತು, ಹೆಗ್ಗಡೆಯವರ ಮನಃಸ್ಥಿತಿ ಎಂದಿನಂತೆ ಸಾಮಾನ್ಯವಾಗಿರದೆ ಅಸಹಜ ಭೂಮಿಕೆಗೆ ಏರಿರಬೇಕು ಎಂದು. +ಅವರ ಉತ್ಸಾಹ ಒಮ್ಮೆ ಶಿಖರಕ್ಕೇರಿದಂತೆ ತೋರಿದರೆ, ಮರುಕ್ಷಣವೆ ಶೋಕದ ಕಮರಿಗೆ ಬಿದ್ದಂತಾಗುತ್ತಿತ್ತು. +ಒಮ್ಮೊಮ್ಮೆ ಬಾಲಕ ಸಹಜವಾದ ಉಲ್ಲಾಸದಿಂದ ಯಾವುದೊ ಪರಿಹಾಸ್ಯ ಪ್ರಸಂಗವನ್ನು ನೆನೆನೆನೆದು ನಕ್ಕು ಹೇಳಿದರೆ, ಒನ್ನೊಮ್ಮೆ ಮಹಾ ನಿರಾಶೆಯ ಧ್ವನಿಯಿಂದ ಯಾವುದಾದರೂ ಒಂದು ದುರಂತದ ತತ್ವಚಿಂತನೆಗೆ ಇಳಿದುಬಿಡುತ್ತಿದ್ದರು. +ಹಿಗ್ಗು – ಕುಗ್ಗು, ಅಳು – ನಗೆ, ಕೆಚ್ಚು – ಬೆಚ್ಚು, ಭೀತಿ – ಧೈರ್ಯ – ಹೀಗೆ ಅವರ ಚೇತನ ಹರಿವ ಗರಗಸಕ್ಕೆ ಸಿಕ್ಕಿಬಿಟ್ಟಿತು. +ಐಗಳು ತಮ್ಮೊಳಗೆ ತಾವೆ ’ನಾನು ಅಚಾತುರ್ಯ ಮಾಡಿದೆ?’ ಎಂದುಕೊಂಡರು. +ಆದರೆ ಅದನ್ನು ಒಂದಿನಿತೂ ತೋರಗೊಡದೆ ಮುದುಕನೊಡನೆ ಸಮವೇದನೆಯಿಂದೆಂಬಂತೆ ವರ್ತಿಸತೊಡಗಿದರು. +ಮುದುಕನನ್ನು ಹೇಗಾದರೂ ಮಾಡಿ ಹುಲಿಕಲ್ಲು ನೆತ್ತಿ ದಾಟಿಸಿ ಮೇಗರವಳ್ಳಿ ತಲುಪಿಸಿದರೆ ಗೆದ್ದೆ ಎಂದುಕೊಂಡು ಅವರ ಹಿಂದೆ ಹಿಂದೆಯ ಹ್ಞೂಂಗುಡುತ್ತಾ ನಡೆದರು. +ಮುಂದೆ ಹೋಗುತ್ತಿದ್ದ ಸುಬ್ಬಣ್ಣಹೆಗ್ಗಡೆಯವರು ನಿಂತು, ಹಿಂದಿರುಗಿ ನೋಡಿ, ಕೈಲಿ ನಶ್ಯದ ಡಬ್ಬಿ ಹಿಡಿದುಕೊಂಡು ಮಂಗಳೂರು ಪುಡಿಯನ್ನು ಮೂಗಿಗೇರಿಸುತ್ತಲೆ ಮುಂಬರಿಯುತ್ತಿದ್ದ ಐಗಳಿಗೆ “ಏನು ಹಿಂದೆ ಬಿದ್ರಲ್ಲಾ ಐಗಳು?” ಎಂದು ಪರಿಹಾಸದಿಂದ ಪ್ರಶ್ನಿಸಿದರು. +ಐಗಳ ಗಮನವನ್ನು ಅನುಲಕ್ಷಿಸಿ “ಓಹೋ ಮರೆತಿದ್ದೆ. +ನಿಮ್ಮ ಕಾಲಿನ ಕುಂಟು – ಇನ್ನೂ ಹಾಂಗೇ ಇದೆ? …. + ಉಡಿನ ತುಪ್ಪ ಚೆನ್ನಾಗಿ ದಿನಾಲೂ ತಿಕ್ಕಿಸಿ, ಮೇಲ್ನಿಂದ ಬಿಸಿನೀರು ಹುಯ್ಸಿನೋಡಿ. +ಹಳೇನೋವು ಏನಾಗ್ತದೋ?” ಎಂದರು. +ಐಗಳೂ ನಗುತ್ತಾ “ಕುಂಟೇನಲ್ಲಾ! +ಅಭ್ಯಾಸ ನಿಂತುಬಿಟ್ಟಿದೆ, ಅಷ್ಟೆ. +ನೋವು ಕೂಡ ಏನೂ ಇಲ್ಲ “ ಎಂದರು. +ಹುಲಿಕಲ್ ನೆತ್ತಿಯ ಉಬ್ಬು ಪ್ರಾರಂಭವಾಗಲು ಹೆಗ್ಗಡೆಯವರು ಯಾವುದಾದರೂ ಒಂದು ನೆವದಿಂದ ಮತ್ತೆ ಮತ್ತೆ ನಿಂತು ಮುಂದುವರಿದರು. +ನೆವಗಳೇನೊ ಅವರಿಗೆ ಬೇಕಾಗಿದ್ದುದಕ್ಕಿಂತಲೂ ಹೆಚ್ಚಾಗಿಯೆ ಇದ್ದುವು, ಅವರ ನೆನಹಿನ ಬೊಕ್ಕಸದಲ್ಲಿ. +ಸುಮಾರು ಐವತ್ತು ವರ್ಷಗಳ ಹಿಂದೆಯೆ ಇರಬಹುದು, ಕಡಿಸಿದ್ದ ಒಂದು ದೊಡ್ಡ ತೇಗದಮರದ ಮುಂಡು ನಿಂತಿದ್ದನ್ನು ನೋಡಿ, ಅದರ ಸಂಬಂಧದ ಒಂದು ಕಥೆಯನ್ನೆ ಹೇಳಿದರು. +ಇನ್ನೊಂದು ಕಡೆ ಎದ್ದು ನಿಂತಿದ್ದ ಒಂದು ಕಾಡುಕಲ್ಲನ್ನು ತೋರಿಸಿ “ಅದನ್ನೆ, ನೋಡಿ, ಮಸೇಕಲ್ಲು ಅಂತಾರೆ. +ನೂರಾರು ವರ್ಷಗಳಿಂದ ಸಾವಿರಾರು ಜನರ ಕತ್ತಿ ಮಸೆದೂ ಮಸೆದೂ ಹ್ಯಾಂಗೆ ನುಣ್ಣಗಾಗ್ಯದೆ ನೋಡಿ! +ಸಿಕಾರಿಗೆ ಹೋಗೋರು. +ಮರಾ ಕಡಿಯಾಕೆ ಹೋಗೋರು, ಬಗನಿ ಇಳಿಸಾಕೆ ಹೋಗೋರು, ಸೊಪ್ಪು ಸೌದೆಗೆ ಹೋಗೋರು, ಎಲ್ಲಾರು, ನಮ್ಮ ಅಪ್ಪ, ಅಜ್ಜ, ಮುತ್ತಜ್ಜನ ಕಾಲದೋರು ಎಲ್ರೂ ಕತ್ತಿ ಮಸೆದಿದ್ದಾರೆ ಇಲ್ಲಿ…. +ನಾನೂ ಮಸೆದಿದ್ದೆ; +ನಮ್ಮ ದೊಡ್ಡಣ್ಣನೂ ಮಸೆದಿದ್ದ…. +ನಾವೆಲ್ಲ ಹೋಗ್ತೀವಿ. +ಈ ಕಲ್ಲು ಮಾತ್ರ ನಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಎಲ್ಲರ ಕಾಲಾನೂ ನೋಡ್ತಾ, ಇಲ್ಲೇ, ಹೀಂಗೇ ಕೂತಿರ್ತದೆ! +ಹಿಹ್ಹಿಹ್ಹಿ!” ಎಂದು ಸಿಂಬಳ ಸುರಿದು ಕಣ್ಣೊರಸಿಕೊಂಡರು. +ಹುಲಿಕಲ್ಲು ನೆತ್ತಿಯ ಕಾಡಿನಲ್ಲಿ ಅರ್ಧದೂರ ಸಾಗಿದ್ದರು. +ಹಳೇಪೈಕದವನು ಬಗನಿ ಕಟ್ಟಿದ್ದನ್ನು ಇಳಿಸಿ, ಕಳ್ಳು ಹೊತ್ತುಕೊಂಡು ಹೋಗುತ್ತಿದ್ದವನು, ‘ದೊಡ್ಡಹೆಗ್ಗಡೆರ’ನ್ನು ಕಂಡು ಕಳ್ಳಿನ ಮೊಗೆಯನ್ನು ಹಳುವಿನಲ್ಲಿ ಇಟ್ಟು, ಕೈಮುಗಿಯುತ್ತಾ ಬಳಿಗೆ ಬಂದು. +ಹಣೆ ಮಣ್ಣುಮುಟ್ಟುವಂತೆ ಹೆಗ್ಗಡೆಯವರ ಪಾದಕ್ಕೆ ಅಡ್ಡಬಿದ್ದು ಎದ್ದುನಿಂತನು. +ಹೆಗ್ಗಡೆಯವರು ಪರಿಹಾಸ್ಯೆಂಬಂತೆ “ಏನೋ ಬರೀ ಅಡ್ಡಬೀಳೋದ್ರಲ್ಲೇ ಪೂರೈಸ್ತೀಯೋ? +ಏನಾದ್ರೂ ಕೊಡ್ತೀಯೊ?” ಎಂದೊಡನೆ ಅವನು ಎಲೆದೊನ್ನೆ ಸೆಟ್ಟು, ಕಳ್ಳು ಹುಯ್ದು ತಂದು ಹೆಗ್ಗಡೆಯವರಿಗೂ ಐಗಳಿಗೂ ನೀಡಿದನು. +ಇಬ್ಬರೂ ಕುಡಿದು ಸಂತುಷ್ಟರಾಗಿ ದ್ವಿಗುಣಿತ ಬಲರಾದಂತೆ ಗಿರಿನೆತ್ತಿಗೆ ಹತ್ತತೊಡಗಿದರು. +ಹುಲಿಕಲ್ಲು ನೆತ್ತಿಯಲ್ಲಿ ಹೆಗ್ಗಡೆಯವರು ತಮಗೆ ದಣಿವಾದುದನ್ನು ಬಾಯಿಬಿಟ್ಟು ಹೇಳಿಯೆ ಒಪ್ಪಿಕೊಂಡು, ಒಂದು ಮರದ ನೆಳಲಿನಲ್ಲಿ ಕುಳಿತು, ಬಹುಕಾಲದಿಂದಲೂ ತಾವು ನೋಡದೆ ಇದ್ದ ದಿಗಂತ ವಿಶ್ರಾಂತ ಗಿರಿಶ್ರೇಣಿಯ ದೃಶ್ಯವನ್ನು ನೋಡುತ್ತಾ, ಕಳ್ಳಿನ ಪ್ರಭಾವವನ್ನು ಸಮರ್ಥಿಸುವ ರೀತಿಯಲ್ಲಿ ಅನೇಕ ವಿಚಾರ ಮಾತಾಡಿದರು. +ಬಹಳ ಗೊತ್ತಾದರೂ ಹೆಗ್ಗಡೆಯವರು ಮೇಲೇಳಲಿಲ್ಲ. +ಕಡೆಗೆ ಮಾತನ್ನು ನಿಲ್ಲಿಸಿ ಸುಮ್ಮನೆ ನೋಡುತ್ತಾ ಕುಳಿತುಬಿಟ್ಟರು. +ಐಗಳು ಹೊತ್ತೇರುತ್ತದೆ ಎಂದು ಸೂಚಿಸಿದಾಗ ಏಳಲು ಪ್ರಯತ್ನಿಸಿದಂತೆ ಮಾಡಿ ಮತ್ತೆ ಕುಳಿತರು. +ಇನ್ನೂ ಸ್ವಲ್ಪ ಹೊತ್ತು ಕಳೆದ ಮೇಲೆ ಐಗಳು ಮತ್ತೆ ಹೊರಡುವ ಸೂಚನೆಕೊಟ್ಟರು. +ಆಗ ಹೆಗ್ಗಡೆಯವರು ನಿಡಿದಾಗಿ ಸುಯ್ದು, ತಮ್ಮನ್ನು ಎತ್ತಿ ನಿಲ್ಲಿಸುವಂತೆ ಐಗಳಿಗೆ ಸನ್ನೆ ಮಾಡಿದರು. +ಐಗಳಿಗೆ ಜೀವವೆ ಹಾರಿಹೋದಂತಾಯಿತು! +ಕೆಟ್ಟೆ ನಾನು ಎಂದುಕೊಂಡು ಹೆಗ್ಗಡೆಯವರನ್ನು ಮೆಲ್ಲಗೆ ಎತ್ತಿ ನಿಲ್ಲಿಸಿದರು. +ಅವರು ದೊಣ್ಣೆಯೂರಿಕೊಂಡು ನಿಧಾನವಾಗಿ ನಡೆಯತೊಡಗಿದರು. +ಇನ್ನು ಮುಂದಿನ ಪಯಣವೆಲ್ಲ ಗುಡ್ಡ ಇಳಿಯುವ ಇಳಿಜಾರಿನದಾಗಿತ್ತು. +ಮುದುಕರು ಎಲ್ಲಿ ಮುಗ್ಗರಿಸಿ ಬಿದ್ದುಬಿಡುತ್ತಾರೊ ಎಂಬ ನಿರಂತರ ಭಯದಿಂದ ಐಗಳು ಅವರ ಪಕ್ಕದಲ್ಲಿಯೆ ಎಲ್ಲದಕ್ಕೂ ಸಿದ್ಧರಾಗಿ ನಡೆದರು. +ಇಳಿಜಾರಿನ ಕಾಡುದಾರಿಯಲ್ಲಿ ಸ್ವಲ್ಪದೂರ ಹೋಗುವುದರಲ್ಲಿಯೆ ಹೆಗ್ಗಡೆ ಒಂದು ದೊಡ್ಡ ಮರದ ಬಲಿ ದೊಣ್ಣೆಯೂರಿ ನಿಂತರು. +ಆ ಮರದ ಬುಡದಲ್ಲಿ, ಕಡಿದು ತೂತು ದೊಡ್ಡದು ಮಾಡಿದ್ದ, ಒಂದು ಪುರಾತನ ಪೊಟರೆ ಇತ್ತು. +ಅದನ್ನು ಐಗಳಿಗೆ ತೋರಿಸಿ, ತಮ್ಮ ಹಳೆಯ ನೆನಪೊಂದನ್ನು ಹೇಳತೊಡಗಿದರು. +ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇದೆ ಎಂದು ಅರಿತಿದ್ದ ಐಗಳು ಅವರನ್ನು ತೋಳು ಮೆಲ್ಲಗೆ ಕೂರಿಸಿದರು. +“ನೀವು ಹೆಚ್ಚು ಮಾತನಾಡಿದರೆ ಬಳಲಿಕೆಯಾಗುತ್ತದೆ” ಎಂದರು ಐಗಳು, ಮೆಲುದನಿಯಲ್ಲಿ, ಹೆದರಿ ಹೆದರಿ. +ಸುಬ್ಬಣ್ಣಹೆಗ್ಗಡೆಯವರಿಗೆ ಅನಂತಯ್ಯನ ಆ ಮಾತು ನಸವಾಲು ಹಾಕಿದಂತಾಗಿ “ಬಿಡಿ ಐಗಳೆ, ನಾನೇನು ಮುದುಕ ಆಗಿಬಿಟ್ಟೆ ಅಂತಾ ಹೇಳ್ತೀರೋ! +ಈ ಮುದುಕ ಹಳೆಕಾಲದ ಮುದುಕ. +ಈಗಿನ ಹುಡುಗರು ಈ ಮುದುಕನ ಒಂದು ರಟ್ಟೆ ಬಗ್ಗಿಸಲಾರರು! +ಏನು ಹೇಳಿ?ಹಹ್ಹಹ್ಹ! +ಆ ಗುಡ್ಡ ಹತ್ತುವಾಗ ಒಂದಿಷ್ಟು ದಣಿವಾಗಿತ್ತು ನಿಜ. +ಇನ್ನೇನು?ಇಳಿಜಾರಿನಲ್ಲಿ ಜಾರಿಕೊಂಡು ಹೋಗಾದಷ್ಟೆ?” ಎಂದು ಪ್ರತಿಭಟಿಸಿ ಇಳಿದನಿಯಲ್ಲಿಯೆ ತಮ್ಮ ನೆನಪನ್ನು ಹೇಳತೊಡಗಿದರು: +ಐಗಳು ಮುದುಕನಿಗೆ ಭಾವೋದ್ರೇಕವಾದೀತೆಂದು ಹೆದರಿ ಮರುಮಾತಾಡದೆ ಸುಮ್ಮನೆ ಆಲಿಸಿದರು: +“ನೋಡಿ, ಇಲ್ಲಿ ಕಾಣ್ತದಲ್ಲಾ ಈ ಒಟ್ಟೆ, ಇದು ನಮ್ಮ ದೊಡ್ಡಣ್ಣನ ಕತ್ತಿ ಕೆಲಸ. +ಅವೊತ್ತಿನ ದೊಡ್ಡ ಬ್ಯಾಟೇಲಿನ ಈ ಮರದ ಬುಡದಾಗೇ ಬಿಲ್ಲಿಗೆ ನಿಂತಿದ್ದ. +ಜೀಂವಾದಿ ಹಾರುವ ಒಳ್ಳೆ ಕಂಡಿ ಅಂತಾ ಅಂವನ್ನೆ ಇಲ್ಲಿ ನಿಲ್ಲಿಸಿತ್ತು. +ಅವನ ಈಡು ಅಂದ್ರೆ ’ಸೈ! +ಬಿತ್ತು!’ ಅಂತಾನೆ ಗೊತ್ತು ಎಲ್ರಿಗೂ, – ’ಯಾರದ್ದೋ ಈ ಈಡು?’ + “ಯಾರದ್ದಪ್ಪಾ? +ಕೂಡೆ ಕೂಡೆ ಎಲ್ಡು ಈಡು ಕೇಳಿಸ್ತು?’ -- GitLab