diff --git "a/Data Collected/Kannada/MIT Manipal/Kannada-Scrapped-dta/\340\262\205\340\262\255\340\262\277\340\262\250\340\262\202\340\262\246\340\262\250\340\263\206.txt" "b/Data Collected/Kannada/MIT Manipal/Kannada-Scrapped-dta/\340\262\205\340\262\255\340\262\277\340\262\250\340\262\202\340\262\246\340\262\250\340\263\206.txt" new file mode 100644 index 0000000000000000000000000000000000000000..ed96bf21f6458805a28492bb85e671ab65cea4a3 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\205\340\262\255\340\262\277\340\262\250\340\262\202\340\262\246\340\262\250\340\263\206.txt" @@ -0,0 +1,4687 @@ +ಅವ್ಳೇ ಹೆಣ್ಣು?” ಎಂದಿದ್ದ ನವೀನ್‌. +ಮುಂದಿದ್ದ ಐಸ್‌ಕ್ರೀಮ್‌ ಬಿಟ್ಟು ಬಂದು ಮತ್ತಷ್ಟು ಗಟ್ಟಿಯಾಗಿದ್ದಳು. +ಅಪ್ಪ, ನಾನು ಡಾ||ನವೀನ್‌ನ ಇಷ್ಟಪಟ್ಟಿದ್ದೀನಿ. +ಮಿಕ್ಕಿದ್ದು ನಿಮ್ದು” ಎಂದು ತಾಯ್ತಂದೆ ಮುಂದೆ ಹೇಳಿದಾಗ ಅವರು ಹರ್ಷಿಸಿದ್ದರು. +"ಗುಡ್‌ಸೆಲೆಕ್ಷನ್‌, ಲಗ್ನದ ಡೇಟ್‌ ಫಿಕ್ಸ್‌ ಮಾಡಿ ಛತ್ರ ಹುಡ್ಕಿಕೋಬೇಕು" ಆ ಆನಂದ ಉಳಿಯಲಿಲ್ಲ. +ಅತ್ಯಂತ ನಮ್ರವಾಗಿಯೇ ಇರೋ ವಿಷಯ ತಿಳಿಸಿ ನಿರಾಕರಿಸಿದ್ದು ಇವರ ಪಾಲಿಗೆ ದೊಡ್ಡ ಅಪರಾಧವಾಗಿತ್ತು. +ಈ ಸೋಲನ್ನ ಅವರು ಮಾತ್ರ ಒಪ್ಪಿಕೊಳ್ಳಲಾರರು. +ಎದುರು ಕೂತಿದ್ದವನು ಬಂದು ಪಕ್ಕದಲ್ಲಿ ಕೂತ. +"ವಿಷ್ಯ ಪ್ರಸ್ರಾಪಿಸಿದ್ಯಾ?" ಕೇಳಿದ. +ಇಲ್ಲವೆಂದು ತಲೆಯಾಡಿಸಿದ ಚಾರುಲತ "ವಿಷ್ಯ ನಂಗೆ ಗೊತ್ತಿದೆ. +ಹೇಗೆ ಪ್ರಸ್ತಾಪಿಸ್ಲಿ ? +ಸಮಾಜದ ಮುದ್ರೆಯೊಂದು ಬಿದ್ದಿಲ್ಲ ಅಷ್ಟೆ, ಅವ್ಳು ನಮ್ಮ ಮನೆ ಸೊಸೆನೇ ಆಗ್ಬಿಟ್ಟಿದ್ದಾಳೆ. +ನನ್ನ ಪ್ರಯತ್ನ ಒಂದು ಹೆಣ್ಣಿನ ಹೃದಯ ಒಡ್ಕೋದು ಆಗುತ್ತೆ. +ಪ್ಲೀಸ್‌, ಸ್ವಲ್ಪ ಅರ್ಥ ಮಾಡ್ಕೊಳ್ಳಿ" ವಿಷಯನ ಅರ್ಥ ಮಾಡಿಸುವ ಪ್ರಯತ್ನ ಮಾಡಿದಳು. +"ನನ್ನ ರೇಗಿಸ್ತಾ ಇದ್ದೀಯಾ ! +ಇಲ್ಲಿ ಬೇರೆ ಹೆಣ್ಣಿನ ಪ್ರಸಕ್ತಿ ಬೇಡ. +ವಯಸ್ಸಿನಲ್ಲಿ ಆಕರ್ಷಣೆ, ಪ್ರೇಮ ಪ್ರಕರಣಗಳು ಸಹಜ. +ಅವೆಲ್ಲ ವಿವಾಹದಲ್ಲಿ ಮುಕ್ತಾಯವಾಗ್ಬೇಕೂನ್ನೋದೇನಿಲ್ಲ. +ಸುಮ್ನೇ ನವೀನ್‌, ಪೂಜಾನ ಮದ್ವೆಯಾಗ್ಲಿ. +ಇದ್ರಿಂದ ಅವ್ನ ಭವಿಷ್ಯಕ್ಕೆ ಒಳ್ಳೆದಾಗುತ್ತೆ. +ಜಯನಗರದ ಮನೆನ ನರ್ಸಿಂಗ್‌ಹೋಂ ಆಗಿ ಪರಿವರ್ತಿಸಿ ಕೊಡೋಕೆ ಅಪ್ಪ ಒಪ್ಕೊಂಡಿದ್ದಾರೆ. +ಇಂಥ ಅದೃಷ್ಟ ಎಷ್ಟುಜನಕ್ಕೆ ?" ಹೆಮ್ಮೆ ಅಭಿಮಾನದಿಂದ ಹೇಳಿ ಕೊಂಡ. +ಜಾರುಲತ ಎದ್ದು ಹೋಗಿ ಹೊರಗೆ ನಿಂತಳು. +ತಣ್ಣನೆಯ ಗಾಳಿ ಕೂಡ ಬಿಸಿಯೆನಿಸಿತು. +ನೂರು ಕನಸುಗಳನ್ನ ಹೊತ್ತು ಈ ಮನೆಯ ಹೊಸಿಲನ್ನ ತುಳಿದಾಗ, ಇಲ್ಲಿನ ಜನರೆಲ್ಲ ದೇವತೆಗಳಂತೆ ಭಾಸವಾಗಿದ್ದರು. +ಈಗ ಇಕ್ಕಟ್ಟಿಗೆ ಸಿಕ್ಕಿಸಲು ಆಯುಧಗಳನ್ನ ಹಿಡಿದು ನಿಂತಿದ್ದು ನೋಡಿ ಅವಳಿಗೆ ಹೆದರಿಕೆಯಾಗಿತ್ತು. +ಪ್ರತಿಷ್ಟೆ,ಹಟದ ಮಧ್ಯೆ ಅವಳ ದಾಂಪತ್ಯ ನಲುಗಿ ಹೋಗುತ್ತಿತ್ತು. +ಬಂದ ಮೃಣಾಲಿನಿ ಹೊರಗೆ ಸಪ್ಪಗೆ ನಿಂತ ಸೊಸೇನಾ ನೋಡಿ "ಯಾರು. . .ಬಂದಿಲ್ವಾ ?"ಕೇಳಿದರು. +ಬೆಚ್ಚಿ ಬಿದ್ದು ನಗುವನ್ನು ಮುಖದ ಮೇಲೆ ತಂದುಕೊಂಡು “ಪೂಜಾ, ಅವ್ರು. . . . ಬಂದಿದ್ದಾರೆ" ಒಳಗೆ ಬಂದಳು. +ಅಡಿಗೆಯ ಮನೆಯ ಛಾರ್ಜ್‌ನ ತಾನು ವಹಿಸಿಕೊಂಡು ಮೂವರನ್ನ ಮಾತಾಡಲು ಬಿಟ್ಟಳು. +ನಿಶ್ಚಿತಾರ್ಥದ ದಿನಾಂಕದಿಂದ ಹಿಡಿದು, ಅಂದಿನ ಅಡಿಗೆ, ಕರೆಯಬೇಕಾದ ಜನರ ಬಗ್ಗೆಯೆಲ್ಲ ಮಾತುಕತೆ ನಡೆಯುತ್ತಿದ್ದಾಗ ಚಾರುಲತಳ ಎದೆಯ ಬಡಿತ ಜೋರಾಯಿತು. +ಅವಳ ಕಣ್ಣಂಚು ಒದ್ದೆಯಾಯಿತು. +ನೂರು ಕನಸುಗಳನ್ನ ಕಟ್ಟಿಕೊಂಡಿದ್ದ ಅವಳ ಭವಿಷ್ಯವನ್ನ ಚೂರು ಚೂರು ಮಾಡಲು ಸಿದ್ದರಿದ್ದರು ಸರಿಯೆನಿಸಲಿಲ್ಲ. +ತಾನು ಕೈ ಜೋಡಿಸಲು ಸಮತಿಸಲಿಲ್ಲ ಅವಳ ಮನಸ್ಸು. +ಊಟಕ್ಕೆ ಕೂತಾಗ ಅತ್ತೆಯನ್ನ ಕೂಡ ಬಲವಂತದಿಂದ ಕೂಡಿಸಿ ತಾನೇ ಬಡಿಸಲು ನಿಂತ ಸೊಸೆಗೆ ಹೇಳಿದರು ಯುಗಂಧರ್‌ "ನಿಮ್ಮಪ್ಪ ಫ್ರೆಂಡ್‌ ಜೊತೆ ಎಲ್ಲೋ ಹೋಗಿದ್ದ" ಎನ್ನುತ್ತ ಉಪ್ಪಿನಕಾಯಿ ರಸದೊಂದಿಗೆ ಅನ್ನ ಕಲೆಸತೊಡಗಿದರು. +ಅವರಿಗೆ ಉಪ್ಪಿನಕಾಯಿ, ತೊಕ್ಕಿನೊಂದಿಗೆ ಅನ್ನ ಕಲೆಸಿ ತಿನ್ನುವುದು ರೂಢಿ. +ಕಾರಣ ಗೊತ್ತಿದ್ದ ಅವಳು ಮಾತೇ ಆಡಲಿಲ್ಲ. +ಎರಡು ದಿನದಲ್ಲಿ ಗುಬ್ಬಚ್ಚಿಯಂತಾಗಿದ್ದರು. +ಅವರೇನು ಮಾಡುವ ಸ್ಥಿತಿಯಲ್ಲಿರಲಿಲ್ಲ. +"ಅತ್ತಿಗೆ ಕೈನ ಅಡಿಗೆ ಬ್ರಹ್ಮಾಂಡ"ಲೊಟ್ಟೆ ಹಾಕಿದಳು ಪೂಜಾ. +"ಬರೀ ಸುಳ್ಳು, ನಾನಿನ್ನು 'ಎಲ್‌' ಬೋರ್ಡು. +ಅಲ್ಲಿ ಅಪ್ಪ ಆರಾಮಾಗಿ ಬೇಯ್ಸಿ ಹಾಕ್ತಾ ಇದ್ರು. +ಇಲ್ಲಿ ಅತ್ತೆನೇ ಒಂದಿಷ್ಟು ಟೈನಿಂಗ್‌ ಕೊಟ್ಟಿದ್ದು"ಎಂದಳು ಗಂಡನ ಕಡೆ ನೋಡುತ್ತ. +ಅವನು ಇವಳತ್ತ ನೋಟ ಹರಿಸಲೇ ಇಲ್ಲ. +ಇವರುಗಳ ಊಟವೇನೋ ಮುಗಿಯಿತು. +ಮೃಣಾಲಿನಿ ಅವಳನ್ನ ಕೂಡಿಸಿ ಬಡಿಸಿದರೂ, ತುತ್ತು ನುಂಗಲು ಕಷ್ಟವಾಯಿತು. +ಈಗ ವಿಷಯ ಪ್ರಾರಂಭವಾಗುತ್ತದೆ. +ಹೇಗೆ, ಪ್ರತಿಕ್ರಿಯಿಸುವುದು ? +"ಬೆಳಿಗ್ಗೆ ತಿಂಡಿ ಜಾಸ್ತಿ ಆಯ್ತು. +ಅಪ್ಪನ ಕೈನ ಕಾಯಿ ಚಟ್ನಿ ಬಹಳ ರುಚಿ. +ಒಂದೆರಡು ಜಾಸ್ತಿನೇ ತಿಂದೆ" ಊಟ ಸರಿಯಾಗಿ ಮಾಡದಿದ್ದಕ್ಕೆ ಸಮಜಾಯಿಷಿಕೊಟ್ಟು ಎದ್ದು ಹೋದಳು. +ರೌಂಡ್‌ ಟೇಬಲ್ಲು ಕಾನ್ಫರೆನ್ಸ್‌ಗೆ ಕೂತರು. +ಗಂಡ, ಹೆಂಡತಿ ಕಣ್ಣಲ್ಲಿಯೇ ಸನ್ನೆ ಮಾಡಿಕೊಂಡರು, ಯಾರು ಮೊದಲು ಪ್ರಾರಂಭಿಸುವುದೆಂದು ? +ಆಮೇಲೆ ಯುಗಂಧರ್‌ ತಾವೇ ಮುಂದಾದರು. +"ಪೂಜಾ, ನವೀನ್‌ ಒಬ್ಬರನ್ನೊಬ್ರು ಇಷ್ಟಪಟ್ಟಿದ್ದಾರೆ" ಎಂದ ಕೂಡಲೇ ತಲೆಯೆತ್ತಿದಳು. +ಇದು ನಿಜವಲ್ಲ ! ತುಟಿ ತೆರೆಯಲಾಗಲಿಲ್ಲ ಅವಳಿಂದ. +"ಎದುರು ಮನೆ ಹುಡ್ಗೀ, ಅವ್ರ ಮನೆಯವು ನಿಮ್ಮ ತಾಯಿ ಸತ್ತಾಗ ಸಹಾಯ ಮಾಡಿದ್ರಂತೆ. +ಆ ಕೃತಜ್ಞತೆಯನ್ನ ಉರುಳು ಹಾಕ್ಕೊಂಡಿದ್ದಾರೆ, ಅಪ್ಪ ಮಗ. +ಅದರ ಬಿಡುಗಡೆಗೆ ನಿನ್ನ ಸಹಾಯಬೇಕು" ಚಮತ್ಕಾರದಿಂದ ಮಾತಾಡಿದರು. +ಸ್ವರವೆತ್ತುವುದೇ ಅವಳಿಗೆ ಕಷ್ಟವೆನಿಸಿತು. +"ಅದ್ಕೇ ನಿಮ್ಮಿಬ್ಬರನ್ನ ಕರೆಸಿ ಕೊಂಡಿರೋದು. +ನೀನೊಂದು ಸ್ವಲ್ಪ ಹೇಳು. +ಎರಡು ಮನೆಗಳ ಸಂಬಂಧ ಮತ್ತಷ್ಟು ಗಟ್ಟಿ ಆಗುತ್ತೆ" ದಾಳ ಉರುಳಿಸಿದರು ಸರಾಗವಾಗಿ. +ಬಗ್ಗಿಸಿದ ತಲೆಯನ್ನ ಪ್ರಯಾಸದಿಂದ ಮೇಲೆತ್ತಿ ಚಾರುಲತ "ನಂಗೆ ಪೂಜಾ,ನವೀನ್‌ ಒಬ್ಬರನ್ನೊಬ್ರು ಇಷ್ಟಪಟ್ಟಿರೋದು ಗೊತ್ತಿಲ್ಲ. +ಅವ್ನು ನೀರದಾನ ವಿವಾಹವಾಗೋ ವಿಷ್ಯ ಗೊತ್ತಿತ್ತು. +ಇದ್ಕೆ ಎರಡು ಮನೆಯವರ ಒಪ್ಪಿಗೇನು ಸಿಕ್ಕಿತ್ತು. +ಪೂಜಾಗೆ ಬೇರೆ ಸಂಬಂಧ ನೋಡಬಹುದಲ್ಲ" ಅಷ್ಟೇ ನುಡಿದಿದ್ದು. +"ಡ್ಯಾಮಿಟ್‌. . . . " ಯುಗಂಧರ್‌ ಷುರು ಮಾಡಿದರೆಂದರೆ ಅವಳಣ್ಣ ನನ್ನ ಅಪರಾಧದ ಕಟ್ಟೆಯಲ್ಲಿ ನಿಲ್ಲಿಸಿದರು. +ಅವನೊಬ್ಬ "ಅವಿವೇಕಿ, ಸ್ಕೌಂಡ್ರಲ್"ಇಂಥ ಪದಗಳೆಲ್ಲ ಬಳಕೆಯಾಗಿ ಬಿಟ್ಟವು. +ಉಸಿರೆತ್ತುವುದಾಗಲಿಲ್ಲ.. "ಇವೆಲ್ಲ ಬೇಡ !ಪೂಜಾ ನವೀನ್‌ನ ಇಷ್ಟಪಟ್ಟಿದ್ದಾಳೆ. +ನೀನು ನಿಂತು ವಿವಾಹ ಮಾಡ್ಬೇಕು. +ಅದು ಸೊಸೆಯಾಗಿ ನಿನ್ನ ಕರ್ತವ್ಯ"ಜಡ್ಜ್‌ಮೆಂಟ್‌ ತಿಳಿಸಿ ಎದ್ದರು. +ಒಬ್ಬೊಬ್ಬರು ಒಂದೊಂದು ಕಡೆ ನಡೆದಾಗ, ಸೋತವಳಂತೆ ರೂಮಿಗೆ ಬಂದ ಚಾರುಲತ, ಗಂಡನ ಮಡಿಲಲ್ಲಿ ತಲೆ ಇಟ್ಟಳು. +ಅವನ ಕೈ ನವಿರಾಗಿ ಆಡಿತು ಕೂದಲಲ್ಲಿ. +"ಅಪ್ಪ ಹೇಳಿದ್ದು, ಅರ್ಥವಾಯಿತಲ್ಲ. +ನವೀನ್‌ಗೆ ಒಂದಿಷ್ಟು ಬುದ್ಧಿ ಹೇಳು. +ನಂತರವೇ ಇಲ್ಲಿಂದ ಹೊರಡೋ ಮಾತು" ಎಂದ ಮೃದುವಾಗಿ. +ಕಠೋರವಾಗಿದೆಯೆನಿಸಿತು ಅವನ ಛಾಯ್ಸ್‌ "ಪ್ಲೀಸ್‌, ಸ್ವಲ್ಪ ಅರ್ಥ ಮಾಡ್ಕೊಳ್ಳಿ"ಎದ್ದಳು. +“ಅರ್ಥ ಮಾಡಿಕೊಳ್ಳೋಕೆ ಏನಿಲ್ಲ. +ನನ್ನ ತಂಗಿ ನೀರದಾಗಿಂತ ಯಾವುದ್ರಲ್ಲಿ ಕಮ್ಮಿ ಇದ್ದಾಳೆ ? +ಸ್ವತಃ ಅಪ್ಪ, ಅಮ್ಮ ಹೋಗಿ ಕೇಳಿದ್ದಾರೆ. +ಅವ್ಳು ಕೂಡ ನವೀನ್‌ನ ವಿವಾಹವಾಗ್ಬೇಕೂಂತ ಹಟ ಹಿಡಿದಿದ್ದಾಳೆ. +ಇದು ನಡೆಯದಿದ್ದರೇ ತುಂಬ ತೊಂದರೆಗೆ ಒಳಗಾಗ್ಬೇಕಾಗುತ್ತೆ” ಎಚ್ಚರಿಕೆ ನೀಡಿದ. +ಮಂಚ ಬಿಟ್ಟು ಎದುರಿಗೆ ಇದ್ದ ಛೇರ್‌ನ ಮೇಲೆ ಕೂತಳು. +ಎಂಥ ಸುಂದರ ಬದುಕನ್ನ ನೀಡಿದ ಮೂರ್ತಿ ಇವರೇನಾ, ಎಂದು ಯೋಚಿಸುವಂತಾಯಿತು,ಬೇರೆಯವರು ಕರುಬುವಂಥ ಪ್ರೀತಿ ತೋರಿದ್ದ. +ಅಭಿಮಾನ ಸುರಿಸಿದ್ದ. +“ಚಾರು, ಏನ್ಬೇಕಾದ್ರೂ ಹೇಳು. +ತವರು ಮನೆಗೆ ಹೋಗೋ ಸುದ್ದಿ ಮಾತ್ರ ಬೇಡ. +ನಿನ್ನ ನಿಮಿಷ ಅಗಲಿರೋದು ಕೂಡ ನನ್ನಿಂದ ಸಾಧ್ಯವಿಲ್ಲ” ಕಣ್ಣಲ್ಲಿ ಕಣ್ಣಿಟ್ಟು ಹೇಳುತ್ತಿದ್ದ ಅವನ ತೋಳಲ್ಲಿ ಸುಖಿಯಾಗಿದ್ದಳು. +ಯಾವ ಧೂಮಕೇತು ವಕ್ಕರಿಸಿತು ತಮ್ಮ ಸುಖೀ ದಾಂಪತ್ಯಕ್ಕೆ, ಎಂದು ಹೆದರಿದಳು. +ಕ್ಷಣಗಳು ನಿಮಿಷಗಳು ಗಂಟೆಗಳು ಕಳೆದರೂ ಅಲ್ಲಿಂದ ಅಲ್ಲಾಡಲಿಲ್ಲ. +ಮುಂದೇನು ? ಬಹುಶಃ ನೀರದಾಗೆ ಇಂಥ ಮಾತು ಕಿವಿಗೆ ಬಿದ್ದರೇ-ಛೆ,ಯೆನಿಸಿತು. +ಕತ್ತಲು ಮುಸುಕುವ ಮುನ್ನ ಯುಗಂಧರ್‌ "ನಾಳಿದ್ದು ದಿನ ಚೆನ್ನಾಗಿದೆ,ನಿಶ್ಚಿತಾರ್ಥ ಇಟ್ಟುಕೊಳ್ಳೋಣ" ಸೂಚನೆ ನೀಡಿದರು . +ಸೊಸೆಗೆ "ಮಾವ,ಒಂದ್ಮಾತು. . . ಬಹುಶಃ ಈಗಾಗ್ಲೇ ಅವ್ನು ನೀರದಾನ ವಿವಾಹ ಮಾಡ್ಕೋ ಬೇಕೂಂತ ತೀರ್ಮಾನ ಮಾಡಿದ್ದಾನೆ. +ನಾನು ಹೇಳಿದ್ರೂ. . . ಒಪ್ಪೋಲ್ಲ" ಎಂದಳು. +"ಒಪ್ಪಿಸೋದು ನಂಗೆ ಗೊತ್ತಿದೆ !ಸುಮ್ನೇ ಹಟ ಮಾಡೋದ್ಬೇಡ. +ಅತ್ತು ಕರ್ದು ಒಪ್ಸು. +ಇಲ್ಲ ನಿನ್ನ ಬಾಳು ಬಿರುಗಾಳಿಗೆ ಸಿಕ್ಕಿದ ತರಗೆಲೆಯಾಗಿ ಬಿಡುತ್ತೆ"ಯುಗಂಧರ್‌ ಅಂದಾಗ ಸಿಡಿಲು ಬಡಿದಂತಾಯಿತು ಚಾರುಲತಗೆ. +ತಾನು ತಿಳಿದ ವ್ಯಕ್ತಿಗಿಂತ ಭಿನ್ನವಾದ ವ್ಯಕ್ತಿತ್ವವಿದೆ, ಈ ಮನುಷ್ಯನಲ್ಲಿ ಎಂದು ಕೊಂಡಳು. +“ಏಯ್‌ ಮೂರ್ತಿ, ನಿನ್ನ ಹೆಂಡ್ತಿನ ಕರ್ಕೊಂಡ್ಹೋಗಿ ಅವ್ಳ ಅಪ್ಪನ ಮನೆಯಲ್ಲಿ ಬಿಟ್ಬಾ. +ಒಂದಿಷ್ಟು ಬುದ್ಧಿ ಹೇಳ್ಲಿ, ಬರೀ ಈ ಯುಗಂಧರ್‌ನ ಒಳ್ಳೆಯತನ ಮಾತ್ರ ನೋಡಿದ್ದಾರೆ, ಇನ್ನೊಂದು ಮುಖದ ಪರಿಚಯವಾಗ್ಲಿ! +ನಂಗೆ ನನ್ನ ಮಗಳು ಮುಖ್ಯ. +ಅವ್ರಿಗೆ ಹಾಗೇಂತ ಅನ್ನಿಸಿದ್ದರೇ. . . ಮದ್ವೆಗೆ ಒಪ್ಪಿಕೊಳ್ಳಿ"ಚಾಟೆಯೇಟುನಂತಿತ್ತು ಅವರ ಮಾತುಗಳು. +ಮಗಳ ಮೇಲಿನ ಪ್ರೇಮ ಅವರ ವಿವೇಕವನ್ನ ಕಬಳಿಸಿ ಬಿಟ್ಟಿತ್ತು. +ಮುಂದೆ ಎಂದಾದರೂ ತಾನು ಪಶ್ಚಾತ್ತಾಪ ಪಡಬಹುದೆನಿಸಲಿಲ್ಲ ಆ ಕ್ಷಣ. +ರೂಮಿಗೆ ಹೋದ ಚಾರುಲತ ಸುಮ್ಮನೆ ಕೂತಳು. +ಇವಳು ಒತ್ತಾಯವೇರಿದರೂ ನಂಬಿದ ಹೆಣ್ಣಿಗೆ ಮೋಸ ಮಾಡುವಂಥ ಹೀನ ಸಂಸತಿ ನವೀನ್‌ದು ಅಲ್ಲ. +ಅವಳು ಕೂಡ ಒತ್ತಾಯವೇರಿ ನೈತಿಕವಾಗಿ ಪಾತಾಳಕ್ಕೆ ಇಳಿಯಲು ಇಚ್ಛಿಸಳು. +“ಹೋಗೋಣಾ ?" ಕೇಳಿದ. +ಅತ್ಯಂತ ನಿಧಾನವಾಗಿ ನೋಟವೆತ್ತಿ ಅವನತ್ತ ಹರಿಸಿ ಹತ್ತಿರಕ್ಕೆ ಹೋಗಿ "ನವೀನ್‌ ಸಮೃತಿಸೋಲ್ಲ. +ಎಲ್ಲಾ ತಿಳಿದು ಕೂಡ ನಾವು ಇಂಥ ಆಫರ್‌ ಒಯ್ದರೇ, ಅವ್ನ ದೃಷ್ಟಿಯಲ್ಲಿ ತೀರಾ ಕೆಳ್ಗೇ ಇಳ್ದು ಬಿಡ್ತೀನಿ. +ಇವನೊಬ್ಬ ಆರ್ಡಿನರಿ ಡಾಕ್ಟ್ರು. +ಪೂಜಾಗೆ ಫಾರಿನ್‌ ರಿಟರ್ನ್ಸ್‌ ಡಾಕ್ಟರನ್ನ ಹುಡ್ಕಬಹುದು."ತೀರಾ ಮೆಲುವಾದ ಸ್ವರದಲ್ಲಿ ಉಸುರಿದಳು. +ಅವನ ಬಾಯಿಂದ ಮಾತುಗಳೇ ಹೊರಡಲಿಲ್ಲ. +ತಲೆ ಕೊಡವಿದ "ಅವ್ಳ ಜೊತೆ ಯಾಕೆ ಓಡಾಡ್ದ ?" +"ಬನ್ನಿ, ಅವ್ನ ಮುಂದೆನೇ ತೀರ್ಮಾನ ಮಾಡೋಣ. +ಬೇಕಾದರೆ ನಿಮ್ಮಂಗಿನ ಕೂಡ ಕರ್ದುಕೊಳ್ಳಿ" ರೂಮಿನಿಂದ ಹೊರಗೆ ಹೋದವಳು ಪೂಜಾಳ ಕೋಣೆಗೆ ಹೋಗಿ "ಪೂಜಾ, ನವೀನ್‌ ನಿನ್ನತ್ರ ಪ್ರೇಮದಿಂದ ನಡ್ಡು ಕೊಂಡ್ನಾ?"ಅತ್ತಿಗೆಯ ಕೇಳಿಕೆಗೆ ಸಿಡಿದು ಬಿದ್ದವಳಂತೆ ಎದ್ದಳು. +ತಕ್ಷಣ ಕೂತು ಮುಖ ಮುಚ್ಚಿಕೊಂಡು ಬಿಕ್ಕುವುದರ ಜೊತೆಗೆ ರಂಪಾಟ ಷುರು ಮಾಡಿದಾಗ ಉಳಿದ ಮೂವರು ರೂಮಿನೊಳಕ್ಕೆ ಬಂದರು. +"ಏನಾಯ್ತು ?"ಮಗಳ ಪಕ್ಕದಲ್ಲಿ ಕೂತ ಯುಗಂಧರ್‌ “ಯಾಕೆ, ಸುಮ್ನೇ ಅವಳ್ನ ನೋಯಿಸ್ತಿ ? +ಅವ್ಳ ಕಣ್ಣಲ್ಲಿ ನೀರು ಕಂಡರೇ ನಾನು ಬೆಂಕಿಯಾಗ್ಬಿಡ್ತೀನಿ. +ಏನಾದ್ರೂ ಬುದ್ಧಿ ಹೇಳೋದು ಇದ್ದರೆ ನಿನ್ನಣ್ಣನಿಗೆ ಹೇಳು” ಸ್ವರವೇರಿಸಿದರು. +ಮೊದಲ ಸಲ ಸೊಸೆಯ ವಿಷಯದಲ್ಲಿ ಒಂದೇ ದಿನ ಎರಡು ಬಾರಿ ಕೂಗಾಡಿದ್ದು ದಾಖಲೆಯೇ. +ಮದುವೆಯಂದಿನಿಂದ ಬಹಳ ಪ್ರೀತಿಯಿಂದ ಕಂಡಿದ್ದರು. +ಚಾರುಲತ, ಮೂರ್ತಿ ಇಬ್ಬರು ಆಟೋದಲ್ಲಿ ಬಂದು ಇಳಿದಾಗ ನಿಂಬೆ ಹಣ್ಣು ಹಚ್ಚಿ ಸೀಸೆಗೆ ಹಾಕುತ್ತಿದ್ದ ವಾಸುದೇವಯ್ಯ ಕೈಯೊರೆಸಿಕೊಂಡು ಬಾಗಿಲುತೆರೆದರು ನಗು ಮುಖದಿಂದ. +"ಬನ್ನಿ. . . . ಬನ್ನಿ. . . . ಹೇಗಿದ್ದೀರಾ ? +ನಾನೇ ಫೋನ್‌ ಮಾಡೋಣಾಂತ ಇದ್ದೆ" ಕೈಯ್ಕೊರ್ಸಿಕೊಂಡು ಅಲ್ಲೇ ಕೂತರು. +ಸರಾಗವಾಗಿ ಮಾತಾಡುತ್ತಿದ್ದ ಮೂರ್ತಿ ಕೂಡ ಮಾತಾಡಲು ಚಡಪಡಿಸಬೇಕಾಯಿತು "ನವೀನ್‌ ಎಷ್ಟೊತ್ತಿಗೆ ಬರ್ತಾನೆ?"ವಿಚಾರಿಸಿದ. +"ಇನ್ನೇನು ಬಂದ್ಬಿಡ್ತಾನೆ. +ನೀರದ ಅಮ್ಮ ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿದ್ದಾರೆ. +ಅವ್ರನ್ನ ನೋಡೋ ಸಲುವಾಗಿ ಹೋಗೋಣಾಂತ ಹೇಳಿ ಹೋಗಿದ್ದ" ಎಂದರು. +ಮೂರ್ತಿಯ ಮುಖ ಮತ್ತಷ್ಟು ಬಿಗಿದುಕೊಂಡಿತು. +ನೀರದ ವಿಷಯ ಬಂದಿದ್ದು ಅವನಿಗೆ ಇಷ್ಟವಾಗಲಿಲ್ಲ. +ತೀರಾ ಸಂಬಂಧ ಪಡದ ಅವಳನ್ನೇ ದ್ವೇಷಿಸುವಂತಾಗಿತ್ತು. +ಚಾರುಲತನೆ ಒಳಗೆ ಹೋಗಿ ಕಾಫಿ ಮಾಡಿ ತಂದಳು. +ಕುಡಿ ನೋಟದಲ್ಲಿ ಅವಳ ತುಟಿಯ ಜೇನನ್ನ ಈರುತ್ತ ಕಾಫಿ ಕುಡಿಯುವ ಮೂರ್ತಿ ಇಂದು ಅತ್ತ ನೋಟ ಕೂಡ ಹರಿಸಲಿಲ್ಲ. +"ಯಾವಾಗ ನಿಶ್ಚಿತಾರ್ಥ ಇಟ್ಟುಕೊಳ್ಳೋಣಾಂತ ಅಮ್ಮ ಕೇಳೋಕೆ ಕಳಿಸಿದ್ದು. +ಪದೇ ಪದೇ ನಂಗೆ ರಜೆ ಸಿಗೋಲ್ಲ" ಉಪಾಯದಿಂದ ವಿಷಯ ಎತ್ತಿದಾಗ,ವಾಸುದೇವಯ್ಯ ಮಗಳ ಕಡೆ ನೋಡಿದರು. +ಅವಳು ನಿರ್ಲಿಪ್ತಳಾಗಿದ್ದಳು. +ಪೂರ್ತಿ ವಿಷಯ ತಿಳಿಸಿ ಅಳಿಯನ ನೆರವು ಕೇಳುವುದು ಅವರಿಗೂ ಸರಿಯೆನಿಸಿತು. +ನೀರದ ಮನೆಯವರು ಎದುರು ಮನೆಗೆ ವಾಸಕ್ಕೆ ಬಂದಾಗಿನಿಂದ ಇಂದಿನವರೆಗಿನ ಎಲ್ಲಾ ಸಂಗತಿಯನ್ನ ತಿಳಿಸಿದರು. +"ಆ ಹುಡ್ಗೀನೇ ನಾನು ಸೊಸೆ ಅಂದ್ಕೊಂಡಿದ್ದೀನಿ. +ನವೀನ್‌ ಕೂಡ ಅವಳನ್ನೇ ವಿವಾಹವಾಗೋದೂಂತ ನಿಶ್ಚಯಿಸಿದ್ದಾನೆ. +ಇದೇನು ಹೊಸತಲ್ಲ. +ಹಳೆಯದೇ ನಿಮ್ತಂದೆ ಬಂದು ವಿಷ್ಯ ಪ್ರಸ್ತಾಪಿಸೋವರ್ಗೂ ನಮ್ಗೇ ಅಂತ ಕಲ್ಪನೆನೇ ಇದ್ದಿಲ್ಲ. +ಎಂದೂ ತಮಾಷೆಗೂ ಕೂಡ ನವೀನ್‌ ನಿಮ್ಮ ತಂಗಿಯ ಪ್ರಸ್ತಾಪವೆತ್ತಿಲ್ಲ. +ಇದಿಷ್ಟು ವಿಷ್ಯ. +ನಮ್ಮ ನವೀನ್‌ನ ಫ್ರೆಂಡ್‌ ಒಬ್ರು ಇದ್ದಾನೆ. +ಅವ್ನು ಓದಿರೋದು ಮೆಡಿಸಿನ್‌. +ತುಂಬ ಅನ್ಕೂಲವಂತ ಜನ. +ಆ ಸಂಬಂಧದ ಬಗ್ಗೆ ಮಾತಾಡೋಣಾಂತ ಇದ್ದೀನಿ." +ವಾಸುದೇವಯ್ಯನ ಮಾತುಗಳನ್ನು ಕೇಳಿದ ಕೂಡಲೇ ಅವನ ಸಿಟ್ಟು ನೆತ್ತಿಗೇರಿತು. +ವಿವೇಕ ಎಲ್ಲಿ ಸತ್ತಿತ್ತೋ, "ಅವ್ಳಿಗೆ ತುಂಬ ಜನ ಇದ್ದಾರೆ. +ನಿಮ್ಗೇ ಗಂಡು ಹುಡ್ಕೋ ರಿಸ್ಕ್‌ ಬೇಡ"ಎಂದವನೇ ಹೊರಟೇ ಬಿಟ್ಟ. +ಅಪ್ಪ, ಮಗಳು ಹಿಂದೆಯೇ ಬಂದರು. +ಅವನು ಆಟೋ ಏರಿ ಕಣ್ಮರೆಯಾಗಿ ಬಿಟ್ಟ. +ಆರಾಮಾಗಿ ತೇಲುತ್ತಿದ್ದ ಅವಳ ದಾಂಪತ್ಯದ ದೋಣಿ ಆಕಸ್ಮಿಕ ಬಿರುಗಾಳಿಗೆ ತುತ್ತಾಗಿತ್ತು. +ಅದರ ಭವಿಷ್ಯವೇನು ? +ಇದು ತೀರಾ ತಾತ್ಕಾಲಿಕ, ಆಮೇಲೆ ನಿಧಾನವಾಗಿಯಾದರೂ ನಾರ್ಮಲ್‌ ಸ್ಥಿತಿಗೆ ಬರುತ್ತದೆಯೆಂದು ಸಮಾಧಾನಪಟ್ಟುಕೊಂಡಳು, ಅದು ಅಗತ್ಯವಾಗಿತ್ತು ಅವಳು ಇರುವ ಸ್ಥಿತಿಯಲ್ಲಿ. +ಯುಗಂಧರ್‌ ನಿರೀಕ್ಷೆ ತಲೆ ಕೆಳಗಾಗಿತ್ತು. +ತೀರಾ ಮೃದುವಾಗಿರುವ ವಾಸುದೇವಯ್ಯ ಇಷ್ಟು ಗಟ್ಟಿಯಾಗಿ ನಿಲ್ಲುತ್ತಾನೆಂದು ಕೊಂಡಿರಲಿಲ್ಲ ಇದು ತೀರಾ ಅಹಂಕಾರವಾಗಿ ಕಂಡಿತು. +“ನೋಡಿದ್ಯಾ, ಹಸುವಿನಂಥ ಜನ ಅಂದೇ. +ಈಗ ಅನುಭವಿಸು” ಹೆಂಡತಿಯ ಕಡೆ ತಿರುಗಿ ಅಂದರು. +ಜೋರು ಮನುಷ್ಯನ ಮುಂದೆ ವಿಧೇಯಳೇ “ಸುಮ್ನೇ ಯಾಕೆ ಇಲ್ದ ಪಂಚಾಯಿತಿ ? +ನಮ್ಮ ಪೂಜಾಗೆ ಇದ್ಕಿಂತ ಒಳ್ಳೆ ಸಂಬಂಧ ಸಿಗುತ್ತೆ” ಆಕೆಯ ಸಲಹೆ ಮೂರ್ತಿಗೂ ಸರಿಯೆನಿಸಿತು. +“ಹಾಗೇ ಮಾಡೋಣ,ನಾವು ಮನಸ್ಸು ಮಾಡಿದ್ರೆ ಹದಿನೈದು ದಿನದೊಳ್ಗೇ ಪೂಜಾ ಮದ್ವೆ ಮಾಡ್ಬಹುದು. +ನವೀನ್‌ ಡಾಕ್ಟ್ರು ಅನ್ನೋದೊಂದ್ಬಿಟ್ಟರೇ ಮತ್ತೇನಿದೇ ಅವ್ರಿಗೆ ? +ನಾವೇ ತುಂಬರಿಸ್ಕ್‌ ತಗೋಬೇಕಾಗುತ್ತೆ." +ಅಣ್ಣನ ಮಾತುಗಳಿಗೆ ಕೂತಿದ್ದ ಪೂಜಾ ದಿಢೀರನೆ ಎದ್ದು ಹೋದಳು. +ಮೃಣಾಲಿನಿ ನಿಟ್ಟುಸಿರು ದಬ್ಬಿದರು. +"ಪಾರ್ಕ್‌, ಸಿನಿಮಾಂತ ಜೊತೆಯಲ್ಲಿ ತಿರುಗಿದ್ದಾರೆ. +ಅದೇ ಪ್ರೇಮಾಂತ ಬಡಬಡಿಕೆ. +ಅವ್ಳ ಸ್ವಭಾವ ನಿಂಗೆ ಗೊತ್ತೇ ಇದೆ. +ಮೊದ್ದಿನಿಂದ್ಲೂ ಹಟವೇ. +ಕೇಳಿದ್ದು ಕೊಡಿಸ್ಸಿಲ್ಲಾಂತ ಹತ್ತು ವರ್ಷದ ಹುಡ್ಗಿಯಾಗಿದ್ದಾಗ್ಲೇ, ಮನೆ ಬಿಟ್ಟೋಗಿ ನಮ್ಮನ್ನ ಕಂಗಾಲು ಮಾಡಿದ್ದು. +ಈಗ್ಲೂ ಅದೇ. . . . . ಭಯ" ನೆನಪಿಸಿಕೊಂಡರು ಮೃಣಾಲಿನಿ. +ಅದು ಮೂರ್ತಿಗೆ ತಿಳಿಯದ್ದೇನಲ್ಲ. +ಈಗಲೂ ಅವಳು ಹಿಡಿದಿದ್ದೇ ಹಟ. +ಅತಿಯಾದ ಮುದ್ದಿನ ಪ್ರಭಾವವೋ !ಅವನಿಗೂ ಭಯವೇ. +ಅವಳೇನಾದರೂ ಹೆಚ್ಚುಕಡಿಮೆ ಮಾಡಿಕೊಂಡರೇ ಸುಖವೆನ್ನುವುದೇ ಮರೀಚಿಕೆಯಾಗಿ ಬಿಡುತ್ತದೆ. +ಎಂದೂ ತಾಯ್ರಂದೆ ಕ್ಷಮಿಸರು. +ಅದಕ್ಕೆ ಪೂರ್ತಿ ಚಾರುಲತ ಕಾರಣಳಾಗಿ ಬಿಡುತ್ತಾಳೆ. +ಇಂಥ ಯೋಚನೆಗಳಿಂದ ಕಂಗೆಟ್ಟ. +"ಈಗೇನ್ಮಾಡೋದು ?" ತಂದೆಯನ್ನ ಕೇಳಿದವನು ಅವರ ಉತ್ತರಕ್ಕೂ ಕಾಯದೆ ತಂಗಿಯನ್ನರಸಿಕೊಂಡು ಹೋದ ರೂಮಿಗೆ. +ದಿಂಬಿನಲ್ಲಿ ಮುಖವನ್ನ ಹುದುಗಿಸಿ ಅಳುತ್ತಿದ್ದ ಪೂಜಾನ ನೋಡಿ ಅವನ ಕರುಳು ಕಿತ್ತು ಬಂತು. +"ಪೂಜಾಸಮಾಧಾನ ಮಾಡ್ಕೋ. +ನವೀನ್‌ಗಿಂತ ಒಳ್ಳೆ ಗಂಡುನ ಹುಡ್ಕೀ ತರ್ತಿನಿ. +ನಿಂಗೆ ಅವ್ನು ಜುಜುಬಿಯೇ"ಓಲೈಸಿದ. +ಅವಳ ಅಳು ಕಮ್ಮಿಯಾಗಲಿಲ್ಲ. +“ನಾನು ನವೀನ್‌ ಬಿಟ್ಟು ಬೇರೆಯವ್ರನ್ನ ಮದ್ವೆಯಾಗೋಲ್ಲ” ಘೋಷಿಸಿದಳು. +ಕೆನ್ನೆಗೆ ಬಾರಿಸಿ ಬಿಡಬೇಕೆನಿಸಿತು. +"ಬೇಡ ಬಿಡು, ಎಜುಕೇಷನ್‌ ಮುಂದುವರೆಸು ರೇಗಿದ." +ಕೆಲವು ನಿಮಿಷಗಳಲ್ಲಿ ಮೆತ್ತಗಾದ. +ಬೇಗ ಎಮೋಷಸನ್‌ಗೆ ಒಳಗಾಗುತ್ತಿದ್ದ ಅವಳ ತಲೆಯಲ್ಲಿ ಸದಾ ಆತ್ಮಹತ್ಯೆಯ ಯೋಚನೆಗಳು ಇರುತ್ತದೆಯೆಂದು ಅವನಿಗೆ ಗೊತ್ತು. +ಎದೆಗಾನಿಸಿಕೊಂಡು ಕಣ್ಣೀರು ತೊಡೆದ “ನವೀನ್‌, ನೀರದ ನನ್ನ ವಿವಾಹದಲ್ಲಿ ಜೊತೆ ಜೊತೆಯಾಗಿ ಓಡಾಡ್ತಾ ಇದ್ದಿದ್ನ ನೋಡಿದ್ದಿ. +ಅವರಿಬ್ರೂ ಇಷ್ಟ ಪಟ್ಟದ್ದಾರಂತೆ. +ಈಗ ನಾವೇನು ಮಾಡೋಕೆ ಸಾಧ್ಯ ?" ಅನುನಯಿಸಿದ. +“ಇಲ್ಲ, ಎಲ್ಲಾ ಸುಳ್ಳು ! +ನವೀನ್‌ ನನ್ನ ಪ್ರೀತಿಸೋದು. +ನೀರದ ಬಡತನ,ಅವ್ರ ಅಮ್ಮನಿಗೆ ಮಾಡ್ದ ಕೃತಜ್ಞತೆಯ ಉರುಳಲ್ಲಿ ಸಿಕ್ಕಿ ಬಿದ್ದಿದ್ದಾನೆ. +ನೀನು ಮನಸ್ಸು ಮಾಡ್ಬೇಕಣ್ಣ” ಎಲ್ಲ ಭಾರ ಅವನ ಮೇಲೆ ಹಾಕಿ ಕಣ್ಣೀರು ಸುರಿಸಿದಾಗ ನಿರ್ಧಾರಕ್ಕೆ ಬಂದ ಮೂರ್ತಿ “ಆಯ್ತು, ನೀನು ಅಳೋದು ಅಂಥದೆಲ್ಲ ಮಾಡ್ಬೇಡ"ತಲೆ ಸವರಿ ಹೊರಗೆ ಬಂದ. +ಮೃಣಾಲಿನಿ, ಯುಗಂಧರ್‌ ದಿಕ್ಕು ತೋಚದವರಂತೆ ಕೂತಿದ್ದರು. +"ನೀನು ಸ್ವಲ್ಪ ಬಿಗಿಯಾಗಿದ್ದರೇ ಅವರುಗಳು ಬಗ್ಗುತ್ತಾರೆ"ಮಗನಿಗೆ ಸಲಹೆಕೊಟ್ಟ ಯುಗಂಧರ್‌ "ನೀನೇ ಒಂದ್ಲಲ ನವೀನ್‌ ಹತ್ರ ಮಾತಾಡು. +ಅವ್ನಿಗೆ ಏನಾದ್ರೂ ಸಮಸ್ಯೆ ಇದ್ದರೇ ಬಗೆ ಹರಿಸೋಣ. +ಆ ಹುಡ್ಗೀ ವಿವಾಹಕ್ಕೂ ಒಂದಿಷ್ಟು ಹಣ, ಕಾಸಿನ ಸಹಾಯ ಮಾಡೋಣ" ಧಾರಾಳತನ ತೋರಿದರು. +ರಾತ್ರಿ ನಿದ್ದೆ ಬರದೇ ಬಹಳ ಹೊತ್ತು ಒದ್ದಾಡಿದ. +ಎರಡು ಸಲ ಚಾರುಲತಯಿಂದ ಫೋನ್‌ ಬಂದಾಗ, ಸುಮ್ಮನೆ ಇಟ್ಟ. +ಮೂರನೆ ಸಲ ಮೃಣಾಲಿನಿ "ಅವ್ನು ಮಲ್ಗಿ ಬಿಟ್ಟಿದ್ದಾನೆ" ಎಂದರು. +"ಊಟ ಆಯ್ತ, ಅತ್ತೆ” ವಿಚಾರಿಸಿದಳು. +"ಯಾರ್ಗೂ ಹಸಿವಿಲ್ಲಾಂದ್ರು"ಫೋನಿಟ್ಟೇ ಬಿಟ್ಟರು ಆಕೆ. +ಅವಳಿಗೆ ಸ್ವಲ್ಪ ಬಿಸಿ ತಾಕಲಿಯೆನ್ನುವ ಉದ್ದೇಶವೇ ಆಕೆಯದು. +ತಂಗಿಯ ಅಳು, ಮಾತಿಗೆ ಮಾತ್ರ ನವೀನ್‌ ಒಪ್ಪಬಹುದು, ಒಪ್ಪಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದರು. +ಮಗನ ರೂಮಿನಲ್ಲಿ ಬಂದು ಕೂತ ಮೃಣಾಲಿನಿ "ಚಾರುಲತದು ಫೋನ್‌. +ಅವ್ಳ ಮೇಲೇನು ನಮ್ಗೇ ಕೋಪ ಇದ್ದಿಲ್ಲ. +ಸೊಸೆನ ಮಗ್ಳೂಂತ ತಿಳಿದೆ. +ಅವ್ಳು ಅದ್ನ ತಿಳ್ಕೋಬೇಕು. +ಸ್ವಲ್ಪ ನಮ್ಮ ಪರವಹಿಸಿ ನಾಲ್ಕು ಮಾತು ಆಡಲಿ. +ನಾದಿನಿಗಾಗಿ ಅಷ್ಟು ಮಾಡಲಾರಳ ? +ಮಾಡ್ಬೇಕೂ, ನೀನು ಸ್ವಲ್ಪ ಗಟ್ಟಿಯಾಗಿ ಹೇಳು. +ಇಲ್ಲದಿದ್ದರೇ, ಈ ಹಟದ ಹುಡ್ಗಿನ ನಾವು ಕಳಕೋ ಬೇಕಾಗುತ್ತೆ" ಆಕೆ ಅಳಲು ಷುರು ಮಾಡಿದರು. +ಮಲಗಿದ್ದ ಮೂರ್ತಿ ಎದ್ದು ಕೂತ "ಯಾಕಮ್ಮ ಅಳ್ತೀಯಾ ? ಖಂಡಿತ ಒಪ್ಪಿಸ್ತಾಳೆ. +ಇಲ್ಲದಿದ್ದರೇ ಮುಂದೆ ಜೀವ್ನ ಪೂರ್ತಿ ನರಳ ಬೇಕಾಗುತ್ತೆ" ಹಲ್ಮುಡಿಯನ್ನ ಕಚ್ಚಿಡಿದು ಉಸುರಿದ. +ಹಿಂದೆಯೇ ಬಂದು ನಿಂತಿದ್ದ ಯುಗಂಧರ್‌ ತಮ್ಮದೊಂದು ಮಾತು ಸೇರಿಸಿದರು. +"ನವೀನ್‌, ಚಾರುಲತ ಅಣ್ಣ ಅನ್ನೋ ಕಾರಣಕ್ಕೇನೇ ನಾವು ಆತ್ಮೀಯತೆಯಿಂದ ನೋಡ್ತಾ ಇದ್ದಿದ್ದು. +ಆದರೆ ಎಂದೂ ಪೂಜಾನ ಅವ್ಲಿಗೆ ಕೊಡೋ ಉದ್ದೇಶವಿದ್ದಿಲ್ಲ. +ಪೂಜಾ ತಿಳಿಸಿದಾಗ ಮೊದ್ಲು ಬೇಸರವಾದರೂ ಆಮೇಲೆ ಸಂತೋಷಿಸಿದ್ದಿ. +ನಮ್ಗೇ ಇನ್ಮೇಲೆ ಇಬ್ರೂ ಗಂಡು ಮಕ್ಳು. +ವಾಸುದೇವಯ್ಯನ್ನ ಕೂಡ ನಮ್ಮಲ್ಲಿ ಒಬ್ಬಾಂತ ತಿಳ್ಹೆ." +ತಂದೆಯ ಮಾತುಗಳನ್ನ ಮೂರ್ತಿ ಸಾವಧಾನದಿಂದ ಕೇಳಿದ. +ಅವನಿಗೆ ತನ್ನ ಜವಾಬ್ದಾರಿಯ ಅರಿವಾಯಿತು. +ದಕ್ಷತೆಯಿಂದ ಪ್ರಾಮಾಣಿಕತೆಯಿಂದ ನಿರ್ವಹಿಸುವ ತೀರ್ಮಾನ ಮಾಡಿದ. +"ಸುಮ್ನೇ ವರಿ ಮಾಡಿ ಕೊಳ್ಳೋದ್ಬೇಡ. +ನಾನು ಬೆಳಿಗ್ಗೆ ನವೀನ್‌ನ ಮೀಟ್‌ ಮಾಡ್ತೀನಿ" ತುಂಬು ಭರವಸೆಯನ್ನ ನೀಡಿದ. +ಆಮೇಲೆ ಮೂರ್ತಿಗೆ ನಿದ್ದೆ ಬರಲಿಲ್ಲ. +ಬಂದಾಗಲೆಲ್ಲ ಓಡಿಯಾಡುತ್ತಿದ್ದ ನೀರದಾನ ನೋಡಿದ್ದ. +ಅಂಥ ಪ್ರಜ್ವಲ ಬೆಳಕಿನ ಹುಡುಗಿಯಲ್ಲ. +ಸುಮಾರಾದ ಬಣ್ಣ, ಕಣ್ಣು ಮೂಗು ತಿದ್ದಿದಂತಿತ್ತು. +ಆದರೆ ಪೂಜಾಳಿಗೆ ಹೊಲಿಸಲು ಸಾಧ್ಯವಿರಲಿಲ್ಲ. +ಹತ್ತು ಜನರಲ್ಲಿ ನಿಲ್ಲಿಸಿದರೂ ಅವಳು ಚೆಲುವೆಯೇ. +ಬೆಳಿಗ್ಗೆ ಇವನು ಸ್ನಾನ ಮುಗಿಸುವ ವೇಳೆಗೆ ಎರಡು ಸಲ ಚಾರುಲತಯಿಂದ ಫೋನ್‌ ಬಂದಿತ್ತು. +ಮೂರನೆ ಸಲ ಆ ಕಡೆ ಇದ್ದವನು ನವೀನ್‌ "ಮಾರಾಯಾ,ಚಾರು ರಾತ್ರಿ ಕೂಡ ಊಟ ಮಾಡ್ಲಿಲ್ಲ. +ಈಗ್ಲೂ ತಿಂಡಿ ತಿನ್ಹೇ ಉಪವಾಸ ಮಾಡ್ಬಿಡ್ತಾಳೆ. +ಆಂಟಿ, ಅಂಕಲ್‌ ಕ್ಷಮೆ ಕೇಳ್ತೀನಿ. +ಎಲ್ಲರೂ ಕೂಡಿಯೇ ಬನ್ನಿ"ಪ್ರೀತಿಯ ಆಹ್ವಾನ ನೀಡಿದ. +ನಿಷ್ಕರ್ಷೆಯ ಹಂತಕ್ಕೆ ಬರುವವರೆಗೂ ಬಿಗುವು ಸಡಿಲವಾಗದು “ನಾನು ಈಗ ಬರ್ತಾ ಇದ್ದೀನಿ. +ನವೀನ್‌, ನೀನು ಮನೆಯಲ್ಲೇ ಇರು” ಹೇಳಿ ಇಟ್ಟ ಫೋನ್‌. +ರೂಮಿಗೆ ಬಂದು ತಂಗಿಯ ಕೆನ್ನೆ ತಟ್ಟಿ "ನೀನು ಬರ್ತೀಯಾ, ನವೀನ್‌ನಿಂದ ಫೋನ್‌ ಬಂದಿತ್ತು" ಎಂದ ಕೂಡಲೇ ಅವಳ ಕಣ್ಣಲ್ಲಿ ನೀರು ತುಂಬಿಕೊಂಡಿತು "ಒಂದ್ಸಲ ಆಹ್ವಾನ ಕೊಟ್ಟರೇ, ಹಾರಿ ಹೋಗ್ಬಲ್ಲೆ. +ನಮಿಬ್ರ ನಡ್ವೇ ನೀರದ ಇದ್ದಾಳೆ. +ಅವ್ಳನ ನೀನು ಅತ್ತಗೆ ಸರಿಸ್ಟೇಕು"ಕಣ್ಣೀರಿಟ್ಟಳು. +"ಆಯ್ತು" ಹೊರಗೆ ಬಂದ ಕೂಡಲೇ ಯುಗಂಧರ್‌ "ಸರ್ಯಾಗಿ ಹೇಳು,ಮುಂದೆ ಪಶ್ಚಾತಾಪ ಪಡ್ಬೇಕಾಗುತ್ತೆ. +ಅಂತು ನಿನ್ನ ತಂಗಿ ವಿವಾಹಕ್ಕೆ ಇದೊಂದು ಸಹಾಯ ಕೇಳ್ತಾ ಇದ್ದೀನಿ, ತಂದೆಯಾಗಿ" ಅವರ ಗಂಟಲು ಒದ್ದೆಯಾದ ಕೂಡಲೇಮೂರ್ತಿ ಎಕ್ಕ್ಸಟ್‌ ಆದ. +ಎರಡು ಕೈಗಳನ್ನು ಹಿಡಿದುಕೊಂಡು "ನೀವೇನುಯೋಚ್ನೆ ಮಾಡ್ಬೇಡಿ. +ಇಷ್ಟು ಮಾಡದಿದ್ದರೇ ನಾನು ಎಂಥ ಅಣ್ಣ"ತುಂಬು ಭರವಸೆ ನೀಡಿ ಹೊರಟ. +ಇದು ತೀರಾ ಸಾಧಾರಣ ವಿಷಯವೇ. +ಅದನ್ನು ರಾಡಿ ಮಾಡುತ್ತಿರುವುದು ನವೀನ್‌. +ಅವನ ಸಪೋರ್ಟಿಗೆ ನಿಂತವರು ವಾಸುದೇವಯ್ಕ. +ಹಿರಿಯರಾದ ಅವರಿಗೂ ಬುದ್ಧಿ ಇಲ್ಲ - ಹಲ್ಲು ಕಡಿದ. +ತಂದೆಯ ಪ್ರಿಮಿಯರ್‌ ಪದ್ಮಿನಿ ಏರಿದ. +ಅವನೆಂದು ಇದನ್ನು ಉಪಯೋಗಿಸುತ್ತಿರಲಿಲ್ಲ. +ಓದುತ್ತಿದ್ದಾಗ ಕೂಡ ಸ್ಕೂಟರ್‌ ಇತ್ತು, ಅದೇ ಅವನ ವಾಹನ. +ಅದನ್ನ ಕೆಲಸ ಸಿಕ್ಕ ಮೇಲೆ ಅಲ್ಲಿಗೊಯ್ದಿದ್ದ. +ಕಾರು ನಿಂತ ಕೂಡಲೇ ನವೀನ್‌ ತಾನೇ ಬಂದು ಬರ ಮಾಡಿಕೊಂಡ. +ಆದರೆ ಮೂರ್ತಿ ಎಂದಿನಂತಿರಲಿಲ್ಲ. +ಬಾಗಿಲಲ್ಲಿ ನಿಂತೇ ಗಮನಿಸಿದಳು. +“ನಿಮ್ಮ ಶ್ರೀಮತಿಯವ್ರು ರಾತ್ರಿ ಪೂರ್ತಿ ಉಪವಾಸ ಮಹರಾಯ, ಇಷ್ಟೊಂದು ಹಚ್ಕೊಂಡ್‌ ಬಿಟ್ಟರೇ ಗತಿಯೇನು ?” ತಮಾಷೆಯಾಡಿದ. +ಆಮೇಲೆ ಸ್ವಲ್ಪ ಹಗುರವಾಗಿಯು ಮಾತಾಡಿದ. +ನಗು ನಗುತ್ತ ವಾಸುದೇವಯ್ಯ ಹಾಕಿ ಕೊಟ್ಟ ಬೆಣ್ಣೆ ಮಸಾಲೆದೋಸೆ ನಗು ನಗುತ್ತ ತಿಂದ ಕ್ಷಣಗಳು ಅಮೂಲ್ಯವೇ. +ಕಾಫಿ ಕುಡಿಯುವ ವೇಳೆಗೆ ನೀರದ ಅವಳತ್ತಿಗೆ ಮಾಡಿದ ಗುಲ್‌ ಪಾವಟೆಯನ್ನ ಮುಚ್ಚಿಕೊಂಡು ತಂದಳು "ಆಗ್ಲೇ ತಿಂಡಿ ಆಗಿ ಹೋಯ್ತಾ? +ಒಂದಿಷ್ಟು ಸ್ವೀಟ್‌ನ ರುಚಿ ನೋಡಿ"ತಟ್ಟೆಗಳಲ್ಲಿ ಹಾಕಿಕೊಂಡು ತಂದಳು. +“ಬೇಡ” ನಿರಾಕರಿಸಿದ ಮೂರ್ತಿ. +ಅವನ ಮುಖದ ಬಣ್ಣ ಪೂರ್ತಿಯಾಗಿ ಬದಲಾದದ್ದು ಅಣ್ಣ, ತಂಗಿಯ ಅರಿವಿಗೆ ಬಂತು. +ನವೀನ್‌ ನೊಂದ. +ಹೇಗೆ ಸಂತೈಯಿಸುವುದು ? "ಸ್ವಲ್ಪ. . . . ಬಾ" ರೂಮಿಗೆ ಎದ್ದು ಹೋದ ಮೂರ್ತಿ. +ಚಾರುಲತ ಹಿಂಬಾಲಿಸಿದಳು. +ಯಾಕೋ, ಏನೋ ಅಣ್ಣನ ಮೇಲೆ ಕನಿಷ್ಟ ಒತ್ತಾಯವೇರಲು ಅವಳಿಗೆ ಇಷ್ಟವಾಗಲಿಲ್ಲ. +ಮುಂದೇನು ? +“ನಂಗೂ ರಜ ಇಲ್ಲ, ನಿಶ್ಚಿತಾರ್ಥ ಮುಗ್ಗಿಕೊಂಡೇ ಹೋಗ್ಬೇಕು ವಿಚಾರಿಸಿದ್ಯಾ?" ಕೇಳಿದ. +ಅವನ ಕಿರಿದಾದ ಕಣ್ಣುಗಳನ್ನು ಎದುರಿಸಲು ಅವಳ ಅಗಲವಾದ ಕಪ್ಪು ಕಣ್ಣುಗಳು ಅಸಮರ್ಥವಾದವು. +“ಹೇಗೆ ವಿಚಾರಿಸ್ಲಿ?ಆ ಮನೆಯವು ಈ ಮನೆಯವು ಕೂಡಿ ಲಗ್ನದ ಡೇಟ್‌ ಫಿಕ್ಸ್‌ ಮಾಡೊಂಡಿದ್ದಾರೆ." +ಮಡದಿಯ ಮಾತಿಗೆ ಉರಿದು ಬಿದ್ದ ಮೂರ್ತಿ. +"ಬರೀ ಡೇಟ್‌ ತಾನೇ ಫಿಕ್ಸ್‌ ಆಗಿರೋದು, ಮದ್ವೆ ಆಗಿ ಹೋಗಿಲ್ವಲ್ಲ. +ನವೀನ್‌ನ ನಿರ್ಣಯ ಬದಲಾಯ್ಸಿಕೊಳ್ಳೋಕೆ ಹೇಳು. +ನಾನು ಅಪ್ಪನಿಗೆ, ಪೂಜಾಗೆ ಹಾಗೆಂದು ಭರವಸೆ ಕೊಟ್ಟು ಬಂದಿದ್ದೀನಿ." +ಇನ್ನಷ್ಟು ಜೋರಾಗಿ ಅಳಿಯ ಸಿಡಿಯುವುದನ್ನ ನೋಡಿ ವಾಸುದೇವಯ್ಯ ಕೋಣೆ ಬಳಿಗೆ ಬಂದರು “ದಯವಿಟ್ಟು ಕ್ಷಮ್ಸಿ ,ಗಂಡ - ಹೆಂಡತಿ ಮಧ್ಯದ ಮಾತಿನ ನಡ್ವೇ ತಲೆ ಹಾಕಾಬಾರದು. +ಆದರೆ ವಿಷ್ಯ ನಿಮ್ಮಿಬ್ಬರಿಗೆ ಮಾತ್ರ ಸಂಬಂಧಿಸಿದ್ದಲ್ಲ. +ಯಾಕೆ, ಇಷ್ಟೊಂದು ಹಟ ಮಾಡ್ತೀರಾ ? +ಬಲವಂತದ ವಿವಾಹಗಳಿಂದ ಯಾರ್ಗೂ ಸುಖವಿಲ್ಲ” ಅರ್ಥ ಗರ್ಭಿತವಾಗಿ ಹೇಳಿದರು. +ಅದನ್ನು ಅರಗಿಸಿಕೊಳ್ಳುವ ತಾಳ್ಮೆ ಮೂರ್ತಿಗೆ ಇರಲಿಲ್ಲ. +ನೇರವಾಗಿ ಅವರತ್ತ ತಿರುಗಿದ. +"ಪೂಜಾನ ನಿರಾಕರಿಸೋಕೆ ಕಾರಣವೇನು ? ನಮ್ಮಂದೆ ತಾಯಿ ನಿಮ್ಮ ಮನೆಗೆ ಬಂದು ಹೆಣ್ಣುನ ಕೊಡ್ತೀನೀಂದ್ರು" ನಿಲ್ಲಿಸಿದ. +ವಾಸುದೇವಯ್ಯ ಮತ್ತೇನೋ ಹೇಳಲು ಹೊರಟಾಗ “ದಯವಿಟ್ಟು ಮತ್ತೇನು ಹೇಳ್ಬೇಡಿ. +ಈ ಮದ್ವೆ ಪಕ್ಕಾ ಆಗ್ಲೇ ಬೇಕು. +ಪೂಜಾ, ನವೀನನ್ನ ವಿವಾಹವಾಗ್ಬೇಕೂಂತ ಹಟ ಹಿಡಿದಿದ್ದಾಳೆ. +ಅವ್ಳ ಜೊತೆ ನವೀನ್‌ ಓಡಾಡಿದ. +ಇದು ನಮ್ಮ ಮಾನ,ಮರ್ಯಾದೆಯ ಪ್ರಶ್ನೆ” ಸಹನೆ ಕಳೆದುಕೊಂಡು ಕೂಗಾಡಿದ. +ಬಿಳುಚಿ ಕೊಂಡರು ವಾಸುದೇವಯ್ಯ. +ಮೂರ್ತಿ ಎಂದೂ ಹೆಣ್ಣು ಕೊಟ್ಟ ಮಾವನ ಎದುರು ದನಿಯೇರಿಸಿರಲಿಲ್ಲ. +ಕಾಂಪೌಂಡ್‌ನಲ್ಲಿದ್ದ ನವೀನ್‌ ಒಳಕ್ಕೆ ಬಂದವನು ಮೂರ್ತಿಯ ಕೈಹಿಡಿದುಕೊಂಡು "ಬಿ ಕಾಮ್‌, ನೀನು ನನ್ನ ಸ್ಥಿತಿನ ಅರ್ಥ ಮಾಡಿಕೊಳ್ಳಬಲ್ಲೆ. +ನಂಗೆಂದು ಪೂಜಾ ಬಗ್ಗೆ ಅಂಥ ಅಭಿಪ್ರಾಯ ಇರ್ಲಿಲ್ಲ. +ಅಲ್ಲಿ ಇದ್ದಿದ್ದು ಬರೀ ಸ್ನೇಹ. +ಈಗಾಗ್ಲೇ ನನ್ನ ಪ್ರೇಮ ಗಟ್ಟಿಯಾಗಿ ಹೋಗಿದ್ರಿಂದ. . . ಅಂಥ ಯಾವ್ದೇ ಉದ್ದೇಶ ನಂಗೆ ಇದ್ದಿಲ್ಲ" ಸ್ಪಷ್ಟಪಡಿಸಿದ. +"ಇವೆಲ್ಲ ಕೇಳೋಕೆ ನಾನು ಸಿದ್ದವಿಲ್ಲ" ನುಡಿದ ಮೂರ್ತಿ. +"ಇಂಥ ಒಂದು ಸಮಸ್ಯೆ ಉದ್ಭವವಾಗುತ್ತೇಂತ ತಿಳಿದಿದ್ದರೇ, ನಾನು ಪೂಜಾ ಮುಖ ನೋಡೋದು ಇರ್ಲಿ, ನಿಮ್ಮ ಮನೆ ಕಡೆ ತಿರ್ಗಿ ಕೂಡ ನೋಡ್ತಾ ಇದ್ದಿಲ್ಲ. +ಅವ್ಳಿಗೆ ಬುದ್ಧಿ ಕಮ್ಮಿ ಇರಬಹುದು. +ನೀವಾದ್ರೂ ಬುದ್ಧಿ ಹೇಳ್ಬೇಕಿತ್ತು " ಎಂದ ಕೂಡಲೇ ಮೂರ್ತಿ ತಾಳ್ಮೆ ಕಳೆದುಕೊಂಡು ಅವನ ಕುತ್ತಿಗೆ ಪಟ್ಟಿಗೆ ಕೈ ಹಾಕಿದ. +"ನಿನ್ತಂಗಿ ಈ ಮನೆ ಸೊಸೆ. +ಅವ್ಳು ಸುಖವಾಗಿರ ಬೇಕೂಂದರೇನಿನ್ನ ನಿರ್ಧಾರ ಬದಲಾಯ್ಸಿಕೊಂಡು ಪೂಜಾನ ವಿವಾಹವಾಗೋಕೆ ಒಪ್ಗೋಬೇಕು. +ಕೀಪ್‌ ಇನ್‌ ಯುವರ್‌ ಮೈಂಡ್‌'" ಅಂದವನು ಕುತ್ತಿಗೆ ಪಟ್ಟೆ ಬಿಟ್ಟು ರಭಸವಾಗಿ ಹೋಗಿ ಕಾರಿನಲ್ಲಿ ಕೂತ. +ಎರಡೇ ನಿಮಿಷದಲ್ಲಿ ಕಣ್ಮರೆಯಾಯಿತು. +ಇಡೀ ಮನೆಯನ್ನ ನಿಶ್ಯಬ್ಧ ಆವರಿಸಿತು. +ಮೂವರ ಉಸಿರಾಟ ಬಿಟ್ಟು ಮಿಕ್ಕಿದೆಲ್ಲ ಸ್ಥಬ್ಧ, ಮುಂದೇನು ? +ಮುಂದೇನು ? ಮುಂದೇನು ? +ಮೂವರ ಮುಂದೆ ಇದ್ದಿದ್ದು ಒಂದೇ ಪ್ರಶ್ನೆ. +"ಈಗೇನ್ಮಾಡೋದು ?"ವಾಸುದೇವಯ್ಯ ಮಗನನ್ನ ಕೇಳಿದರು. +"ನಾನೇನ್ಮಾಡ್ಗಿ ?ಇದೆಂಥ ಕೆಟ್ಟ ಹಟ. +ಮನುಷ್ಯತ್ವವಿಲ್ಲದ ಜನ. +ಸ್ವಲ್ಪನಾದ್ರೂ ಕಾಮನ್‌ಸೆನ್ಸ್‌ ಬೇಡ್ವಾ ?"ತಲೆಯ ಮೇಲೆ ಕೈಯೊತ್ತಾಗ ಚಾರುಲತ ಎದ್ದುಹೋದಳು. +ಮುಂದೇನು ?ತಂದೆ, ಮಗ ಬಹಳ ಹೊತ್ತು ಮಾತಾಡಿದರು. +ಒಮ್ಮೆ ಜೊತೆಯಾಗಿ ಯುಗಂಧರ್‌ನ ಕಂಡು ಮತ್ತೊಮ್ಮೆ ಪರಿಸ್ಥಿತಿ ವಿವರಿಸಿ ಕ್ಷಮೆ ಕೇಳುವುದೆಂದು ನಿರ್ಧರಿಸಿದರು. +ಅಪ್ಪ, ಮಗ ಜೊತೆಯಾಗಿ ಹೊರಟು "ಚಾರು, ಹೋಗೋಣ ಬಾ. +ಅನಗತ್ಯವಾಗಿ ನಿಂಗೆ ಶಿಕ್ಷೆ ಬೇಡ" ಎಂದರು ವಾಸುದೇವಯ್ಯ. +"ಈಗ ಬೇಡಪ್ಪ !ಅನಗತ್ಯವಾಗಿ ಮಾತು ಬೆಳೆಯುತ್ತೆ. +ಅವುಗಳು ಖಂಡಿತ ರಾಜಿಯಾಗೋಕೆ ಸಿದ್ಧವಿಲ್ಲ. +ಬರೀ ಮಾತಿನ ಬೆಳವಣಿಗೆಯಿಂದ ಮತ್ತಷ್ಟು ಕಹಿಯಾಗುತ್ತೆ" ಅಂದು ತಡೆದಳು. +"ನನ್ನ ಕುತ್ತಿಗೆ ಪಟ್ಟಿ ಹಿಡ್ದು ಎಳಕೊಂಡ್ಹೋಗಿ ತಾಳಿ ಕಟ್ಟಿಸ್ತಾರ ?ಮತ್ತೊಮ್ಮೆ ಹುಟ್ಟಿ ಬರ್ಬೆಕು" ಎಂದು ವಿವೇಕ ಕಳೆದುಕೊಂಡು ಕೂಗಾಡಿದ ನವೀನ್‌. +ಕುತ್ತಿಗೆ ಪಟ್ಟಿ ಹಿಡಿದ ಮೂರ್ತಿನ ಕ್ಪಮಿಸುವುದು ಕಷ್ಟವೆನಿಸಿತು. +"ಷ್ಯೂರ್‌, ಆ ಬಗ್ಗೆ ಯಾಕೆ ತಲೆ ಕೆಡಿಸ್ಕೋತೀಯಾ ?" ಉಸುರಿದಳು ಚಾರುಲತ. +“ಹೌದೌದು, ನಿನ್ನ ಕುತ್ತಿಗೆ ಹಿಡಿದ್ರೆ ಇವ್ನು ಹೋಗಿ ತಾಳಿ ಕಟ್ಟಬೇಕಾಗುತ್ತೆ” ವಾಸುದೇವಯ್ಯನವರು ಸಂಕಟದಿಂದ ನುಡಿದರು. +ಅವರಿಗೆ ದಿಗಿಲು ಆಗಿತ್ತು. +ಈ ವಿಷಯದಿಂದ ಮಗಳ ಸುಖೀ ದಾಂಪತ್ಯ ಛಿದ್ರವಾಗುವುದು ಅವರಿಗೆ ಸಮ್ಮತವಿಲ್ಲ. +"ಅಷ್ಟೊಂದು ಸುಲಭವಲ್ಲ !ಮೂರ್ತಿಗೆ ಚಾರು ಅಂದರೇ ಪ್ರಾಣ. +ಇದು ಬರೀ ತಾತ್ಕಾಲಿಕ ಕೋಪ ಅಷ್ಟೆ" ಉಸುರಿ ಎದ್ದು ಹೋದ. +ಮಗಳ ಮುಂದೆ ವಾಸುದೇವಯ್ಯನಿಗೆ ತಲೆ ಎತ್ತುವುದಾಗಲಿಲ್ಲ. +ಅರ್ಥ ಮಾಡಿಕೊಂಡವಳಂತೆ ತಂದೆಯ ಬಳಿ ಬಂದು ಕೂತು. +"ಇವೆಲ್ಲ ಆವೇಶದ್ದು, ಬಿಡಪ್ಪ. +ಅವ್ರೇ ಅರ್ಥ ಮಾಡ್ಕೋತಾರೆ. +ಹೇಗೂ ಆಗೋಲ್ಲಾಂತ ತಿಳಿದ್ಮೇಲೆ. . . ಬೇರೆ ಗಂಡು ನೋಡ್ತಾರೆ. +ಸಾಕಷ್ಟು ಸಂಬಂಧಗಳು ಅವ್ರ ಲಿಸ್ಟ್‌ನಲ್ಲಿದೆ. +ಚೆಲುವೆ, ಲಕ್ಷಾಂತರ ಬಾಳುವ ಮನೆಯನ್ನ ಅಳಿಯನಿಗೆ ಉಡುಗೊರೆಯಾಗಿ ನೀಡಲು ಸಿದ್ಧವಾಗಿದ್ದಾರೆ. +ನೀನು ಸುಮ್ನೇ ತಲೆಕೆಡಿಸ್ಕೋಬೇಡ" ತಂದೆಯನ್ನು ತಾನೇ ಸಂತೈಯಿಸಿದಳು. +ಈ ವಯಸ್ಸಿನಲ್ಲಿ ಅವರ ನೆಮ್ಮದಿ ಹಾಳಾಗುವುದು ಅವಳಿಗೆ ಸುತರಾಂ ಇಷ್ಟವಿಲ್ಲ. +ಅಲ್ಲಿನ ಫೋನ್‌ ನಂಬರ್‌ಗಳನ್ನ ಒತ್ತಿದಳು. +ಫೋನೆತ್ತಿದ್ದು ಮೂರ್ತಿಯೇ "ಸಾರಿ ಚಾರು, ನವೀನ್‌ ಪೂಜಾನ ಒಪ್ಪಿಕೊಳ್ಳಲೇಬೇಕು. +ಬೇರೆ ದಾರಿನೇಇಲ್ಲ. +ಇಲ್ಲದಿದ್ದರೇ ಅವ್ಳು ಆತ್ಮಹತ್ಯೆ ಮಾಡ್ಕೋತಾಳೆ. +ಆಮೇಲೆ ನಾವು ಸುಖವಾಗಿರೋಕೆ ಸಾಧ್ಯನಾ ? +ನೀನು ರಿಸ್ಕ್‌ ತಗೋಬೇಕು" ಎಂದ. +ಅವಳ ಕಣ್ಣಾಲಿಗಳಲ್ಲಿ ನೀರು ತುಂಬಿತು. +ಬಿಕ್ಕಿ ಬಿಕ್ಕಿ ಅಳಲೇ. +ಮೂರ್ತಿಯ ಎದೆಯಾಸರೆಯಲ್ಲಿ ಕಣ್ಣೀರು ಸುರಿಸ ಬೇಕೆನಿಸಿತು. +"ಮಾತಾಡು ಚಾರು" ಎಂದ ಮೇಲೆ 'ಹಾ' ಎಂದಿದ್ದು. +“ಪ್ಲೀಸ್‌ ನಂಗೆ ನಿಮ್ಮನ್ನ ಬಿಟ್ಟಿರೋಕೆ ಆಗೋಲ್ಲ. +ನಮ್ಮಗಳ ಅವಿವೇಕದಿಂದ ಇಬ್ರೂ ಹೆಣ್ಣುಗಳ ಜೀವ್ನ ಹಾಳಾಗುತ್ತೆ. +ನೀರದ ಕೂಡ ನವೀನ್‌ ಇಲ್ದೇ ಬದ್ಕಲಾರಳು. +ಅವರಿಬ್ರ ಪ್ರೇಮ, ಪ್ರೀತಿ ಸಂಬಂಧದಲ್ಲಿ ಮಾತ್ರವಲ್ಲ ಸುತ್ತಮುತ್ತಲೆಲ್ಲ ಡಣಾ ಡಂಗೂರವಾಗಿದೆ. +ಸಮಾಜಕ್ಕೆ ತುಂಬ ಹೆದರೋ ಜನ. +ಇಡೀ ಕುಟುಂಬದ ಹಾಳಾಗುವಿಕೆಗೆ ನಾವು ಕಾರಣರಾಗ್ಬಿಡ್ತೀವಿ” ಹೇಳಿದಳು. +“ನಂಗೆ ಈ ಪುರಾಣ ಬೇಡ. +ನಿನ್ನ ಭವಿಷ್ಯನ ದೃಷ್ಟಿಯಲ್ಲಿ ಇಟ್ಕಂಡ್ ಪ್ರಯತ್ನ ಮಾಡು. +ಹೆದರಿಸು, ಬೆದರಿಸು, ನಾಳೆ ಡೈವೋರ್ಸ್‌ ಆಗುತ್ತೇಂತ ಹೇಳು. +ತಾನಾಗಿ ಮೆತ್ತಗಾಗ್ತಾನೆ" ಉಪಾಯ ಹೇಳಿಕೊಟ್ಟ. +ಚಾರುಲತ ನಡುಗಿ ಹೋದಳು. +'ಡೈವೋರ್ಸ್‌' ಮದುವೆಯಾಗಿ ವರ್ಷ ತುಂಬದ ಮುನ್ನವೇ ಈ ಪದದ ಪಯೋಗ. +"ಫೋನ್‌ ಇಡ್ಲಾ ?" ಕೇಳಿದಳು. +“ಎಷ್ಟೊಂದು ಅಹಂಕಾರ !ಎಚ್ಚರಿಕೆ ಅಲ್ಲ, ಸತ್ಯವಾಗಿ ಬಿಡುತ್ತೆ. +ಜೀವನಪೂರ್ತಿ ನೋಯ್ತೀಯಾ !ಇದೆಲ್ಲ ನಿನ್ನ ಮನಸ್ಸಿನಲ್ಲಿ ಇರ್ಲಿ. +ನಾಳೆ ಬೆಳಿಗ್ಗೆ ಪಾಸಿಟಿವ್‌ ಆನ್ಸರ್‌ ನಿರೀಕ್ಷಿಸ್ತೀನಿ. +ಆಲ್‌ ದಿ ಬೆಸ್ಟ್‌” ಫೋನಿಟ್ಟೆ ಬಿಟ್ಟ. +ಅವಳು ಹಿಡಿದೇ ಇದ್ದಳು. +ಬೆವರು ಇಡೀ ಮೈ ತುಂಬ ಹರಡಿ ಕೊಂಡಿತ್ತು. +ಸಮುದ್ರದಾಳದಿಂದ ಆರಿಸಿ ತೆಗೆದಂಥ ಮುತ್ತುಗಳು ಅವಳ ಹಣೆ, ತುಟಿಯ ಕೆಳಗೆ ಆವರಿಸಿಬಿಟ್ಟಿತ್ತು. +ಅಷ್ಟರಲ್ಲಿ ಬಂದ ನೀರದ ಬಲವಂತದಿಂದ ಅವರ ಮನೆಗೆ ಕರೆದೊಯ್ದಳು. +ಯಾವುದೇ ವಿಷಯ ಗೊತ್ತಿಲ್ಲದ ಜನ ಮಗಳ ಮದುವೆಗಾಗಿ ಮಾಡಿಸಿದ ಚೂರು,ಪಾರು ಒಡವೆಗಳನ್ನ ತೋರಿಸಿದರು. +"ನಮ್ಮ ನೀರದ ಪುಣ್ಯ ಮಾಡಿದ್ದು. +ನವೀನ್‌ನಂಥ ಗಂಡು ಯಾರ್ಗೇ ಸಿಕ್ಕಬೇಕು ? +ದೇವರಂಥ ಜನ ನಿಮ್ತಂದೆ" ಬಾಯಿ ತುಂಬ ಹೊಗಳಿದಾಗ ತುಟಿ ಎರಡು ಮಾಡಲಿಲ್ಲ. +ನಿಶ್ಚಿತಾರ್ಥದ ದಿನ ಕೂಡ ನಿಶ್ಚಯಿಸಿಕೊಂಡಿದ್ದ ಜನ "ಮಗ್ಳು, ಅಳಿಯ ಬರಲಿ. . . ಅಂದಿದ್ರು, ಹೇಗೂ ಬಂದಿದ್ದೀರಾ, ದೊಡ್ಡ ಮನಸ್ಸು ಮಾಡಿ ನೀವುಗಳೇ ಹೇಳ್ಬೇಕು. + ನಂಗೂ. . . ಹುಷಾರಿಲ್ಲ. ಇವ್ಳದೊಂದು ವಿವಾಹ ಮುಗ್ದು ಹೋಗ್ಲಿ " ಅವಳ ತಾಯಿ ಕಣ್ಣೊರೆಸಿಕೊಂಡರು. +"ಆಯ್ತು ಹೇಳ್ತೀನಿ" ಅಷ್ಟೇ ಅಂದಿದ್ದು. +ಅವರುಗಳು ಬಲವಂತ ಮಾಡಿ ಕೊಟ್ಟ ತಿಂಡಿ ತುಟಿಯವರೆಗೂ ಒಯ್ಯುವುದಾಗಲಿಲ್ಲ ಅವಳಿಂದ. +ಹೇಳಿದಕ್ಕೆಲ್ಲ ಹ್ಞೂಗುಟ್ಟಿದಳಷ್ಟೆ. +ಬಹಳ ದೂರ ಹೋದ ಈ ಸಂಬಂಧವನ್ನು ಮುರಿದು ಹಾಕುವುದು ಸಾಧ್ಯವೇ ? +ಮನೆಗೆ ಬಂದವಳೇ ಮಲಗಿಬಿಟ್ಟಳು. +ಮನಸ್ಸು ತಡೆಯದೇ ಮರುದಿನ ತಂದೆ, ಮಗ ಯುಗಂಧರ್‌ ಮನೆಗೆ ಹೋದರು. +ಸಾಕಷ್ಟು ಸಲ ಫೋನ್‌ ಮಾಡಿದ್ದರು ಡಿಸ್‌ಕನೆಕ್ಟ್‌ ಆಗಿತ್ತು ಮಾತಾಡದೇ. +ಮೊದಲು ನೋಡಿದ ಮೃಣಾಲಿನಿ ಆತ್ಮೀಯವಾಗಿ ಬರ ಮಾಡಿಕೊಂಡರು. +"ಬನ್ನಿ, ಎಲ್ಲಾ ಹೇಗಿದ್ದೀರಿ ?"ಅವರ ಕೇಳುವಿಕೆ ನಾಟಕೀಯವಾಗಿತ್ತು. +ಕತ್ತಿಡಿದಂತಾಯಿತು ವಾಸುದೇವಯ್ಯನಿಗೆ. +ಮಗನತ್ತ ನಿಸ್ಸಾಯಕತೆಯ ನೋಟ ಹರಿಸಿದರು. +ಅವನು ತುಟಿ ಕಚ್ಚಿ ತಾರಸಿಯನ್ನ ದಿಟ್ಟಿಸುತ್ತಿದ್ದ. +ಇಂಥದೊಂದು ಸಮಸ್ಯೆ ಎದುರಾಗಬಹುದೆಂಬ ಕಲ್ಪನೆ ಕೂಡ ಅವನಿಗೆ ಇರಲಿಲ್ಲ. +“ಯಾರು ಕಾಣ್ತಾ ಇಲ್ಲ” ಎಂದರು ಮೆಲ್ಲಗೆ ವಾಸುದೇವಯ್ಯ. +"ಅವ್ರು ಹೊರ್ಗಡೆ ಹೋಗಿದ್ದಾರೆ. +ಪೂಜಾ ಹುಷಾರಿಲ್ಲೇ ಮಲ್ಗಿದ್ದಾಳೆ. +ಮೂರ್ತಿ ಊರಿಗೆ ಹೋದ" ಎಂದ ಮೃಣಾಲಿನಿ ಕಿಚನ್‌ಗೆ ಹೋದರು. +"ಅಪ್ಪ, ಮಗ ಎಗರಿ ಬಿದ್ದರು. +ಮೂರ್ತಿ ಊರಿಗೆ ಹೋದ ವಿಷಯ ಚಾರುಲತಗೆ ತಿಳಿಯದು. +ಮಡದಿಯೆಂದರೆ ಪ್ರಾಣ ಬಿಡುವ ಒಂದು ದಿನ ಬಿಟ್ಟು ಹೋಗಿ ಎಂದರೇ 'ಆಗೋಲ್ಲ' ಎನ್ನುತ್ತಿದ್ದವನು ಹೇಳದೆ ಹೊರಟು ಹೋಗಿದ್ದು ಭಯವೆನಿಸಿತು ಅವರುಗಳಿಗೆ. +ಇದು ಸುಲಭವಾಗಿ ಪರಿಹಾರವಾಗೋಲ್ಲ ಎಂದರು ವಿಷಾದದಿಂದ ವಾಸುದೇವಯ್ಯ . +“ಹೋಗ್ಲಿ ನೀನು ತಂಗಿ ಬಗ್ಗೆ ಯೋಚ್ಸು. +ಸುಮ್ನೇ ಇವರುಗಳ ಅವಿವೇಕದಿಂದ ಅವ್ಳ ಸಂಸಾರ ಹಾಳಾಗಿ ಹೋಗುತ್ತೆ" ಎಂದರು ಮಗನಿಗೆ ಮಾತ್ರ ಕೇಳಿಸುವಂತೆ. +"ಹೇಗೆ ಸಾಧ್ಯ. . . ಅಪ್ಪ ? ಸುಮ್ನೇ ಹೆದರಿಸ್ತಾ ಇದ್ದಾರೆ, ನಾವು ಬಗ್ಗುತೀವೀಂತ! +ನಾವೇನಾದ್ರೂ ಬೇರೆ ತೀರ್ಮಾನ ತಗೊಂಡರೇ, ಆ ಇಡೀ ಮನೆಯವ್ರು ಆತಹತ್ಯೆ ಮಾಡ್ಕೋತಾರೆ" ಅಷ್ಟೇ ಮೆಲುವಾಗಿ ಉದ್ವೇಗ ದಿಂದ ಹೇಳಿದ. +ಅವನು ಮಾತ್ರ ನೀರದಾನ ನಿರಾಕರಿಸಿ, ಪೂಜಾನ ವಿವಾಹವಾಗಲಾರ. +ಆ ವೇಳೆಗೆ ಕಾಫಿ ಹಿಡಿದು ಬಂದರು ಮೃಣಾಲಿನಿ. +ತಗೊಳ್ಳಿ, ಮೂರ್ತಿ ತೀರಾ ಬೆಳಗಿನ ಬಸ್ಸಿಗೆ ಹೋದ. +ನಂಗೂ ಮೊದ್ಲಿನ ಹಾಗೇ ಕೆಲ್ಲ ಮಾಡೋಕ್ಕಾಗೋಲ್ಲ ಎದುರಿನಲ್ಲಿ ಕೂತರು. +ಅವರಲ್ಲು ಮೊದಲಿನ ಸ್ನೇಹ ಭಾವವಿರಲಿಲ್ಲ. +ಬಹುಶಃ ತಂದೆ, ಮಗ ದುಷ್ಮನ್‌ಗಳಾಗಿ ಕಾಣುತ್ತಿರಬಹುದು. +ಕಹಿಯನ್ನ ಗುಟುಕರಿಸಿದಂತೆ ಲೋಟಗಳನ್ನ ಖಾಲಿ ಮಾಡಿದರು. +ಬಹಳ ಕಷ್ಟದಿಂದ ಗಂಟಲಲ್ಲಿ ಇಳಿದಿದ್ದು. +"ಏನಾಗಿದೆ ಪೂಜಾಗೆ ?" ಮೇಲೆದ್ದ ಡಾ| ನವೀನ್‌. +ಆಕೆ ಮಾತೇ ಆಡಲಿಲ್ಲ. +ಎಲ್ಲರಿಗಿಂತ ಅವಳನ್ನ ಮುಖ್ಯವಾಗಿ ಮನವೊಲಿಸುವುದು ಸರಿಯಾಗಿ ಕಂಡಿತು ಅವನಿಗೆ. +ನಿಶ್ಶಬ್ದವಾಗಿ ರೂಮಿನೊಳಕ್ಕೆ ಹೋದ. +ಮುಖದ ಮೇಲೆ ಅನಾರೋಗ್ಯದ ಚಿಹ್ನೆಗಳೇನು ಇರಲಿಲ್ಲ. +ಅಸ್ತವ್ಯಸ್ತವಾದ ಕೂದಲು, ಮೇಕಪ್‌ ಇಲ್ಲದ ಮುಖ ಸ್ವಲ್ಪ ಮಂಕಾಗಿ ಕಾಣುತ್ತಿತ್ತು. + ಪೂಜಾ. . . . '' ಎಂದ ಮೃದುವಾಗಿ. +ಕಣ್ಣು ಬಿಟ್ಟು ಅವನನ್ನ ನೋಡಿದವಳೇ ಅಳಲು ಷುರು ಮಾಡಿದಾಗ ಘಟಸ್ಫೋಟವೆನಿಸಿತು. +ತಾಳ್ಮೆಯಿಂದ ಅಲ್ಲೇ ಕೂತ. +"ಹುಚ್ಚು ಹುಡ್ಗೀ !ನನ್ನಂಥ ಒಬ್ಬ ಸಾಮಾನ್ಯನ್ನ ವಿವಾಹವಾಗ ಬಯಸೋದು ತಪ್ಪು. +ನಿನ್ನಂಥ ಹುಡ್ಗಿಗೆ ಹೀರೋನೇ ಸಿಕ್ಕಬೇಕು ನೀನು, ನಾನು ಸೇರಿ ಹುಡ್ಕೋಣ. +ನನ್ನ ವಿವಾಹವಾಗೋ ಅಪರಾಧ ಮಾಡ್ಬೇಡ" ದಯಾನೀಯವಾಗಿ ಹೇಳಿದ. + “ನೋ. . . ನೋ. . . ನೋ. . . ನಾನು, ನಿನ್ನ ಮದ್ವೆಯಾಗೋದು. +ನಂಗೆ ನೀನು ಮೋಸ ಮಾಡ್ಬೇ. +ಐ ಲವ್‌ ಯು, ಐ ಅಡೋರ್‌ ಯು, ಐ ಮ್ಯಾರಿ ಯು"ಎಂದು ಚೀರಿದಳು. +ಸುಸ್ತಾದ ಡಾ|| ನವೀನ್‌. +ಇವಳಿಗೇನಾದರೂ ತಲೆ ಕೆಟ್ಟಿದೆಯಾ ? +ಬಹಳಷ್ಟು ಹೇಳಿ ಸೋತ. +ಅವಳ ನಿರ್ಧಾರ ಬದಲಾಗಲಿಲ್ಲ. +ಅನುನಯಿಸಿದ, ರಮಿಸಿ,ತನ್ನ ಮತ್ತು ನೀರದ ವಿಷಯ ತಿಳಿಸಿದ. +ಅವಳು ಒಂದಿಂಚು ಅಲುಗಾಡಲಿಲ್ಲ. +"ಇದು ಶುದ್ಧ ಮೂರ್ಖತನ. +ನೀನು ಬೇರೊಬ್ಬರನ್ನ ಪ್ರೇಮಿಸಿದ್ರೆ ಸಾಲ್ದು. +ಅವ್ಳು ಕೂಡ ನಿನ್ನ ಪ್ರೀತಿಸ್ಟೇಕು. +ಇಲ್ಲಿ, ವಿರಸ ದಾಂಪತ್ಯವಾಗುತ್ತೆ. +ಜೀವನಪೂರ್ತಿ ಕೊರಗ್ತೀಯಾ" ಬುದ್ಧಿ ಹೇಳಿದ. +ಏನಾದ್ರೂ ಪರವಾಗಿಲ್ಲ ನಿನ್ನನ್ನೇ ವಿವಾಹವಾಗೋದು. +ಅವಳ ನಿರ್ಧಾರ ತಿಳಿದ ಮೇಲೆ ಮೇಲೆದ್ದ "ಈ ಜನ್ಮದಲ್ಲಿ ಅಂಥ ಕನಸ್ಸು ಕಾಣ್ಬೇಡ ಗುಡ್‌ ಬೈ" ಹೊರಗೆ ಬಂದ. +ಅಲ್ಪ ಸ್ವಲ್ಪ ಕೇಳಿಸಿಕೊಂಡಿದ್ದ ಮೃಣಾಲಿನಿ “ನವೀನಾ, ನಿನ್ನ ನಿರ್ಧಾರ ಸರಿಯಲ್ಲ. +ನಿನ್ ತಂಗಿ ಈ ಮನೆ ಸೊಸೆ. +ಅದನ್ನ ಕೂಡ ನೆನಪಿನಲ್ಲಿ ಇಟ್ಕೋ. +ಮುಂದೆ ಇದಕ್ಕಾಗಿ ತುಂಬ ಪಶ್ಚಾತ್ತಾಪ ಪಡ್ತೀಯಾ ಎಚ್ಚರಿಸಿದರು ಉದ್ವೇಗದಿಂದ. +ಸಭ್ಯ, ಸೌಜನ್ಯ ಮೂರ್ತಿಯೆಂದು ಕೊಂಡಿದ್ದ ನವೀನಾ ಇಂದು ಮಗಳ ಬಾಳಲ್ಲಿ ಇಣಕಿದ ಪೆಡಂಭೂತವಾಗಿ ಕಂಡ. +"ಅದಕ್ಕೂ, ಇದಕ್ಕೂ ತಾಳೇ ಹಾಕ್ಬೇಡಿ. +ಚಾರುಲತಗೂ ಇದಕ್ಕೂ ಯಾವ್ದೇ ಸಂಬಂಧವಿಲ್ಲ. +ಸುಮ್ನೇ ಬ್ಲಾಕ್‌ಮೇಲ್‌ ಮಾಡೋಕೆ ಹೋಗ್ಬೇಡಿ" ಎದುರು ತಿರುಗಿದ. +ವಿಕೋಪಕ್ಕೆ ಹೋಗುವುದು ಬೇಡವೆಂದು ಮಗನನ್ನ ಬಲವಂತದಿಂದ ಹೊರಗೆ ಕಳಿಸಿ ಬಂದ ವಾಸುದೇವಯ್ಯ ತಮ್ಮ ಪರಿಸ್ಥಿತಿಯನ್ನು ತೋಡಿ ಕೊಂಡರು. +"ಇಡೀ ಮನೆ ಜನ ನಮ್ಮನ್ನೆ ನಂಬಿಕೊಂಡಿದ್ದಾರೆ. +ಈಗೇನಾದ್ರೂ ಅಪಸ್ವರ ತೆಗೆದ್ರೆ. . . ಆ ಹುಡ್ಗಿ ಆತ್ಮಹತ್ಯೆ ಮಾಡ್ಕೊಂಡ್‌ ಬಿಡ್ತಾಳೆ. +ನೀವು ಹೆಣ್ಣು ಹೆತ್ತವರು. +ದಯವಿಟ್ಟು ಯೋಚ್ಸಿ" ಕಳಕಳಿಯಿಂದ ಮನವಿ ಮಾಡಿ ಕೊಂಡರು. +ಆಕೆ ಮುಲಾಜಿಲ್ಪದೆ ತಳ್ಳಿ ಹಾಕಿದರು. +"ನಂಗೆ, ನನ್ನ ಮಗಳು ಬದುಕು ಮುಖ್ಯ. +ನಾನೇನು ಆದರ್ಶ ನಾರಿಯಲ್ಲ,ಸೋಷಿಯಲ್‌ ವರ್ಕರ್‌ ಅಲ್ಲ. +ನನ್ನ ಸಂಸಾರ, ನನ್ನ ಮಕ್ಳೇ ನಂಗೆ ಮುಖ್ಯ." +ಜೋಲು ಮುಖ ಹಾಕಿಕೊಂಡು ಎದ್ದು ಬಂದರು ವಾಸುದೇವಯ್ಯ. +ಗೇಟುನಿಂದ ಹೊರಗೆ ಹೋಗಿ ನಿಂತಿದ ಡಾ||ನವೀನ್‌. +ಅವನಿಗೆ ಈ ಮನೆಯವರೆಲ್ಲ ಮೂರ್ಖರ ಹಿಂಡಾಗಿ ಕಂಡರು. +ಮೂರ್ತಿಯನ್ನ ಮಾತ್ರ ಬೇರೆಯಾಗಿ ನೋಡಲು ಇಷ್ಟಪಟ್ಟ. +ಬಂದ ವಾಸುದೇವಯ್ಯ ತಲೆಯಾಡಿಸಿ ಬಿಟ್ಟರು “ನಂಗ್ಯಾಕೋ ಭಯ ವಾಗುತ್ತೆ. +ಅನ್ಯಾಯವಾಗಿ ಹಟ ಮಾಡಿ ಚಾರುಲತ ಬದ್ಕನ್ನ ಹಾಳು ಮಾಡಿ ಬಿಡ್ತಾರೆ. +ನೀನೇ ಮನಸ್ಸು ಒದಲಾಯಿಸ್ಕೋ" ಮಗನಿಗೆ ಬುದ್ಧಿ ಹೇಳಿದರು. +ಅವನು ಮಾತೇ ಆಡಲಿಲ್ಲ. +ಇಬ್ಬರು ಮನೆಗೆ ಬಂದಾಗ ಚಾರುಲತ ಪೇಪರ್‌ ಹಿಡಿದು ಕೂತಿದ್ದಳು. +ಅತ್ಯಂತ ಶಾಂತವಾಗಿದ್ದಳು. +ಯಾವುದೇ ರೀತಿಯ ಉದ್ವೇಗವಿರಲಿಲ್ಲ. +ಇದ್ದರೂ ಅದನ್ನ ಹತ್ತಿಕ್ಕುವಲ್ಲಿ ಸಮರ್ಥಳಾಗಿದ್ದಳೇನೋ ! +ಮತ್ತೆರಡು ಸಲ ಫೋನ್‌ ಮಾಡಿದ್ದಳು. +ಅವರುಗಳು ಯಾರು ಅವಳೊಂದಿಗೆ ಮಾತಾಡಲು ಇಚ್ಛಿಸಲಿಲ್ಲ. +ಇವರುಗಳು ಅಲ್ಲಿಗೆ ತಿಳಿಸಿ ಹೋಗದಿದ್ದರೂ ಅವಳಿಗೆ ಗೊತ್ತಿತ್ತು. +"ಯಾಕೆ, ತುಂಬ ಡಲ್‌ ಆಗಿದ್ದೀರಾ ?"ಕೇಳಿದಳು ಇಬ್ಬರನ್ನ ಉದ್ದೇಶಿಸಿ. +ನವೀನ್‌ ತಡೆಯದೆ ತಟಕ್ಕನೇ ಆಡಿ ಬಿಟ್ಟ "ತುಂಬ ವಲ್ಗರ್‌ ಜನ. +ಸ್ವಲ್ಪ ಕೂಡ ಕಾಮನ್‌ ಸೆನ್ಸ್‌ ಬೇಡ್ವಾ ? +ನಂಗಿಷ್ಟವಿಲ್ಲಾಂದ್ರೂ ನನ್ತಲೆಗೆ ಕಟ್ಟೋ ಹಣೆಬರಹ ಅವರಿಗೇಕೆ ?" +ನೇರವಾಗಿ ಅಣ್ಣನನ್ನು ನೋಡಿದಳು. +“ವಿಪರೀತ ಭಾಷೆಯ ಪ್ರಯೋಗ ಬೇಡ. +ನಿಂಗಿಷ್ಟವಿಲ್ಲಾಂದರೇ ಮುಗಿದು ಹೋಯ್ತು. +ಯಾರು ನಿನ್ನ ಕೈ ಹಿಡ್ದು ತಾಳಿ ಕಟ್ಟಿಸೋಕ್ಕಾಗೋಲ್ಲ. +ಸುಮ್ನೇ ಯಾಕೆ ತಲೆ ಕೆಡಿಸ್ಕೊತೀಯಾ ?" + ಶಾಂತವಾಗಿ ನುಡಿದು ಒಳಗೆದ್ದು ಹೋದಳು. +ಅವಳ ಕಣ್ಣಾಲಿಗಳು ತುಂಬಿದವು. +ಮೂರ್ತಿ ಅವಳನ್ನ ಅತ್ಯಂತ ಪ್ರೀತಿಯಿಂದ ನೋಡಿಕೊಂಡಿದ್ದ. +ಇತರರು ಕರುಬುವಂಥ ಅನ್ಯೋನ್ಯ ದಾಂಪತ್ಯ. +ಆದರೆ ಬಡಿದಿದ್ದು ಬಲವಾದ ಸಿಡಿಲು. +ಕಣ್ಣೊರೆಸಿಕೊಂಡು ಕಿಟಕಿಯ ಬಳಿ ಹೋಗಿ ನಿಂತಳು. +ರಪ್ಪನೆ ಬೀಸಿ ಬಂದ ಬಿಸಿ ಗಾಳಿ ತಟ್ಟಿತು "ಮೈ ಗಾಡ್‌, ನೀನಿಲ್ಲದಿದ್ದರೇ ಗಾಳಿಯಲ್ಲಿ ಬಿಸಿಯಾಗ್ಬಿಡುತ್ತೆ" ಕಿವಿಯ ಬಳಿ ಮೂರ್ತಿ ಪಿಸುಗುಟ್ಟಿದಂತಾಗಿ ಕೆಂಪು ಕೆಂಪಾದಳು. +ರೂಮಿನೊಳಗೆ ಬಂದ ಡಾ॥ನವೀನ್‌ ಅವಳ ಭುಜದ ಮೇಲೆ ಕೈಯಿಟ್ಟ "ನನ್ನಲ್ಲಿ ಏನು ನೋಡಿ ಮೆಚ್ಚಿಕೊಂಡ್ಲು, ನಿನ್ನ ನಾದಿನಿ ? +ನಂಗಿಂತ ನೂರು ಪಟ್ಟು ಒಳ್ಳೆಯ ಗಂಡುಗಳು ಅವ್ಳಿಗೆ ಸಿಕ್ತಾರೆ" ಎಂದಾಗ ಅವನತ್ತ ತಿರುಗಿ ಕಣ್ಣುಅಗಲಿಸಿ "ನಿಜ್ವಾಗ್ಲೂ ಹೆಮ್ಮೆ ಪಟ್ಕೋಬೇಕು. +ನಮ್ಮಗಳ ಕಣ್ಣಿಗೆ ಕಾಣದ ಒಂದು ಅಂಶ ನಿನ್ನ ವ್ಯಕ್ತಿತ್ವದಲ್ಲಿ ಇರ್ಬೇಕು. +ಹೇಗಿದ್ಲು ಪೂಜಾ?" ನಗುತ್ತ ಕೇಳಿದಳು. +ಎರಡು ಕೈಗಳಲ್ಲಿ ತಲೆ ಹಿಡಿದುಕೊಂಡು ಕೂತುಬಿಟ್ಟ. +“ಇನ್ನೆಂದೂ ಜೀವನದಲ್ಲಿ ಆ ಕಡೆ ತಲೆ ಹಾಕೋಲ್ಲ. +ನಾಲ್ಕು ಕೆನ್ನೆಗೊಡೆದು ಬುದ್ಧಿ ಹೇಳೋ ಬದ್ಲು ನನ್ನತ್ರ ಖಾಜಿ ನ್ಕಾಯ ಮಾಡ್ತಾರೆ. +ಇವು ಹೆದರಿಕೆಗೆ ನಾನೇನು ಬಗ್ಗೋಲ್ಲ. +ಹಟ ಸಾದಿಸಿದ್ದರೇ ಅವ್ರ ಮಗ್ನ ಸಂಸಾರ ಹಾಳಾಗುತ್ತೆ” ಬಡಬಡಿಸಿದ. +ತಣ್ಣಗೆ ಅವನ ಮುಂದೆ ಕೂತು "ಅವ್ಳು ಹೆದರಿಸೋಕೆ ಕಾರಣ ಇದೆ. +ಅವ್ರ ಮಗ್ನ ಸಂಸಾರದಲ್ಲಿ ನಿನ್ತಂಗಿ ಇದ್ದಾಳೆ, ಅದ್ನ ಎಚ್ಚರಿಕೆಯ ಗಂಟೆ ಮಾಡ್ಕೊಂಡಿದ್ದಾರಷ್ಟೆ" ಸ್ಪಷ್ಟಪಡಿಸಿದಳು. +"ಈಡಿಯಟ್ಸ್‌, ನಾನು ಕೋರ್ಟಿಗೆ ಹೋಗ್ತೀನಿ" ಜೋರು ಮಾಡಿದ. +ಈಗ ಆ ಪ್ರಮೇಯವೇನಿದೆ ? +ನೀನಂತು ವಿವಾಹವಾಗೋಕೆ ಅವ್ರು ಅಡ್ಡ ಬರೋಕೆ ಸಾಧ್ಯವಿಲ್ಲ. +ಎರಡು ಸಲ ನೀರದ ಬಂದ್ಹೋದ್ಲು" ಎಂದವಳು ಹೊರಗೆ ಹೋದಳು. +ವಾಸುದೇವಯ್ಯ ಹತ್ತು ವರ್ಷ ಹೆಚ್ಚು ವಯಸ್ಸಾದವರಂತೆ ಕುಸಿದರು. +ದಿಕ್ಕೇ ತೋಚದಂತಾಯಿತು. +ನಿಶ್ಚಿತಾರ್ಥಕ್ಕೆ ದಿನ ಗೊತ್ತು ಮಾಡಿಕೊಂಡು ಎದುರು ಮನೆಯ ದಂಪತಿಗಳು ಬಂದು ಕೂತಾಗ ಅವರಿಗೆ ಉಸಿರು ನಿಂತಂತಾಯಿತು. +"ನಾಳಿದ್ದು ಶುಕ್ರವಾರ, ದಿನ ಒಳ್ಳೇದು. +ಹೇಗೂ ಚಾರುಲತನು ಬಂದಿದ್ದಾಳೆ. +ತಾಂಬೂಲ ಬದಲಾಯ್ಸಿ ಕೊಂಡ್ಬಿಡೋಣ" ಪಟ್ಟಾಗಿ ಕೂತರು. +"ಒಂದ್ಮಾತು ನವೀನ್‌ ಕೇಳಿ ಬಿಡ್ತೀನಿ" ಅವರನ್ನು ಸಾಗಾಕಿ ಬಿಟ್ಟು ಗೋಳೋ ಎಂದು ಅಳಲು ಷುರು ಮಾಡಿದರು. +ಅರ್ಥ ಮಾಡಿಕೊಂಡವಳು ತಂದೆಯ ಮುಂದೆ ಬಂದು ಕೂತು "ಅಳೋಂಥದೇನಾಯ್ತು ?ಇಲ್ಲಿ ನಿಮ್ಮದೇನು ತಪ್ಪಿಲ್ಲಪ್ಪ. +ನಿಮ್ಮ ಅಳುಗೆ ಕರಗಿ ಯಾರು ಅವರವ್ರ ನಿರ್ಣಯಗಳ್ನ ಬದಲಾಯಿಸ್ಕೋಳ್ಳೋಲ್ಲ. +ನಾನು, ಅಣ್ಣನ ಜೊತೆ ಇಂದೆಯೇನು, ಈಗ್ಲೇ ಊರಿಗೆ ಹೋಗ್ತೀನಿ. +ಅಕಸ್ಮಾತ್‌ ಬೇರೆ ಕೆಲ್ಸವಿದ್ದರೇ,ನಾನೇ ಹೋಗ್ತೀನಿ" ತನ್ನ ಬಟ್ಟೆಗಳನ್ನ ಬ್ಯಾಗ್‌ಗೆ ಹಾಕಿ ಕೊಂಡು ಹೊರಟು ನಿಂತಳು. +“ನವೀನ್‌ ಎಲ್ಲೋ ಹೊರಗಡೆ ಹೋಗಿದ್ದಾನೆ” ಎಂದರು ವಾಸುದೇವಯ್ಯ. +"ಹೋಗ್ಲಿ ಬಿಡಿ, ನಂಗೆ ಹೋಗ್ಬಂದು ರೂಢಿ ಇದೆ." +ಆಟೋ ಹಿಡಿದು ಹೊರಟೇ ಬಿಟ್ಟಳು. +ನಾಲ್ಕು ಗಂಟೆಗಳ ಪ್ರಯಾಣ . +ಇವಳು ಸಂಜೆ ತಲುಪುವ ವೇಳೆಗೆ ಮೂರ್ತಿ ಬಂದಿದ್ದ. +ಅವನ ಕಣ್ಣಲ್ಲಿ ನೀರೇ ಇತು. +ಎತ್ತಿ ಎರಡು ಸುತ್ತು ಹಾಕಿಸಿ ಮುದ್ದಾಡಿ ಬಿಟ್ಟ . +“ಬೆಳಿಗ್ಗೆ ಅಡಿಗೆ ಮಾಡಿದ್ರಾ ?"ಕೇಳಿದಳು. +"ತುಂಬ ಸೋಮಾರಿತನ !ಹಾಲು ಕಾಯ್ದಿ ಕುಡ್ಯೋದೇ ಕಷ್ಟ. +ಆರಾಮಾಗಿ ಹೋಟಲುಗೆ ಹೋಗೋಣ. +ಆಮೇಲೆ ನಿಂಗೆ ಒಂದಿಷ್ಟು ಸಹಾಯ ಮಾಡ್ತೀನಿ"ಮಡದಿಯ ಮೃದು ಕೆನ್ನೆಯನ್ನ ಮೃದುವಾಗಿ ಕಚ್ಚಿ ನೋಯಿಸಿದ. +ಇಬ್ಬರು ಆರಾಮಾಗಿ ಹೋಟಲಿಗೆ ಹೋಗಿ ಬಂದರು. +ಇಡೀ ರಾತ್ರಿ ಅವಳ ಮೈನ ಕಣಕಣದ ಅಂದ ಸವಿದ. +ಅಪರೂಪವಾದ ರಾತ್ರಿ ಆಯಿತು ಅವರ ಪಾಲಿಗೆ. +ಬೆಳಿಗ್ಗೆ ಹಲ್ಲು ಬ್ರೆಷ್‌ ಮಾಡುತ್ತಿದ್ದಾಗ "ಮೂರ್ತಿ ಪೋನಿದೆ" ಪಕ್ಕದ ಮನೆಯವರು ಕರೆದೊಯ್ದರು. +ಹಿಂದಕ್ಕೆ ಬಂದವನು "ಅಪ್ಪನ ಫೋನ್‌, ತುಂಬ ಖುಷಿಯಾದ್ರು. +ನೀನೇ ಒಮ್ಮೆ ಗುಡ್‌ನ್ಯೂಸ್‌ ತಿಳ್ಸಿ ಬಿಡು. +ಅವ್ರಿಗೆ ಸೊಸೆಯ ಮೇಲೆ ತುಂಬ ಭರವಸೆ"ಎಂದು ಕೆನ್ನೆ ಸವರಿ ಸ್ನಾನಕ್ಕೆ ಹೋದ. +ಇಡೀ ಪೂರ್ತಿ ಕತ್ತಲು ಆವರಿಸಿದಂತಾಯಿತು. +ಸುಮ್ಮನೆ ಒಂದು ಕಡೆ ಕೂತು ಬಿಟ್ಟಳು. +ಮೂರ್ತಿಯನ್ನು ಒಲಿಸಿ ಕೊಳ್ಳಬೇಕು. +ಅವನ ತಟಸ್ಥ ಧೋರಣೆಯಿಂದ ಅಲ್ಪ ಸ್ವಲ್ಪ ಬದಲಾವಣೆ ಬರಬಹುದೆಂಬ ಆಸೆ. +ಅದು ಸಣ್ಣ ಕ್ಯಾಂಡಲ್‌ ಆಗಿ ಇಡೀ ಕತ್ತಲೆಯನ್ನೆ ದೂರ ಮಾಡುವ ಪ್ರಯತ್ನ ಮಾಡುತ್ತಿತ್ತು. +ಟವಲು ಸುತ್ತಿಕೊಂಡು ಬಂದ ಮೂರ್ತಿ ಸಣ್ಣನೆಯ ದನಿಯಲ್ಲಿ ಹಾಡುತ್ತ ಮಡದಿಯನ್ನು ಅಪ್ಪಿಕೊಂಡ "ಯಾಕೆ ಕೂತೇ, ಏನಾದ್ರೂ ವಿಶೇಷನಾ ? "ಛೇಡಿಸಿದ. +"ಏನಿಲ್ಲ. . . " ಎದ್ದು ಹೋಗಿ ಅಡಿಗೆ ಮುಗಿಸಿದಳು. +ಮೂರ್ತಿಯ ಊಟ ಮುಗಿಯುವವರೆಗೂ ಮಾತು ಬೇಡವೆನಿಸಿತು. +ಸ್ಕೂಟರ್‌ ಹೊರಗೆ ನಿಲ್ಲಿಸಿ ಬಂದವನು “ನಮ್ಮ ಫೋನ್‌ ಬರೋವರ್ಗೂ ಪ್ರಾಬ್ಲಮ್‌. +ಎಸ್‌. ಟಿ. ಡಿ. ಬೂತ್‌ನಲ್ಲಿ ಪೋನ್‌ ಮಾಡ್ಬಬಹುದು ನಡೀ” ಎಂದ. +ಮೂರ್ತಿಯ ಕೈ ಹಿಡಿದು ಕೂಡಿಸಿ “ನವೀನ್‌ಗೆ ಸುತರಾಂ ಪೂಜಾನ ವಿವಾಹವಾಗೋ ಇಷ್ಟವಿಲ್ಲ. +ಬಲವಂತದ ವಿವಾಹ ಯಾರ್ಗೂ ಸುಖ ತರೋಲ್ಲ” ಎಂದ ಕೂಡಲೇ ಅವನ ಮುಖ ಕೆಂಪಾಯಿತು. +ಕಣ್ಣುಗಳಲ್ಲಿ ಕಿಡಿಗಳು ಇಣಕಿತು. +"ನಿನ್ನ ಫಿಲಾಸಫಿ ನಂಗ್ಬೇಡ, ಯೆಸ್‌, ನೋ ಅಷ್ಟೇ ಬೇಕಾಗಿರೋದು. +ಅವ್ನ ತೆಪ್ಪಗೆ ನನ್ನಂಗಿ ಕುತ್ತಿಗೆಗೆ ತಾಳಿ ಕಟ್ಟದಿದ್ದರೇ ಪರಿಣಾಮ ನೆಟ್ಟಗಾಗೋಲ್ಲ. +ಅವ್ನ ಬಗ್ಗೆ ನಂಗೆಂದು ಸದಭಿಪ್ರಾಯವಿದ್ದಿಲ್ಲ" ದನಿಯೇರಿಸಿದ. +"ವಿರೋಧಾಭಾಸದ ಮಾತುಗಳು ಬೇಡ. +ಸದಭಿಪ್ರಾಯವಿಲ್ಲದ ವ್ಯಕ್ತಿಗೆ ನಿಮ್ಮ ತಂಗಿನ ಕೊಡೋ ಪ್ರಯತ್ನ ಯಾಕೆ ?" ಸವಾಲ್‌ ಎಸೆದಳು. +ಅವನಿಗೆ ಮತ್ತಷ್ಟು ಉರಿದು ಹೋಯಿತು. +ಅವನು ತಂದೆಗೆ ಬಹಳ ಹೆದರುತ್ತಿದ್ದ. +ತನಗೇ ಜೀವನದಲ್ಲಿ ಮೊದಲ ಸಲ ವಹಿಸಿದ ಒಂದು ಪುಟ್ಟ ಕೆಲಸ ಮಾಡಲಾಗದಕ್ಕೆ ಅವನಿಗೆ ನಾಚಿಕೆಯೆನಿಸಿತು. +ಇಲ್ಲಿ ಸೋಲು ಒಪ್ಪಿಕೊಳ್ಳಲಾರ. +"ನಂಗೆ ಪಾಠ ಮಾಡೋಕೆ ಇಷ್ಟವಿಲ್ಲ. +ಅವ್ನ ಒಪ್ಪಿಕೊಂಡ್ನಾ ಇಲ್ವಾ?"ಕೇಳಿದ. + ಇಲ್ಲವೆಂದು ತಲೆಯಾಡಿಸಿದಳು. +"ಗೋ ಟು ಹೆಲ್‌, ಇಲ್ಲಿಗೆ ಎಲ್ಲಾ ಸಂಬಂಧಗಳು ಮುಗ್ದು ಹೋಗುತ್ತೆ. +ಆರಾಮಾಗಿ ತವರಿಗೆ ಹೋಗ್ಬಿಡು" ಒಂದೇ ಮಾತಿನಲ್ಲಿ ಹೇಳಿದಾಗ ಶಿಲೆಯಾದಳು. +ಒಳಗೆ ಹೋದವನು ಬೀಗ, ಬೀಗದ ಕೈ ಹಿಡಿದು ಬಂದವನು "ಹತ್ತು ನಿಮಿಷದಲ್ಲಿ ಹೊರಟು ಬಿಡ್ಬೇಕು. +ಇಲ್ಲದಿದ್ದರೇ ನಾನೇ ಹೊರ್ಗೆ ಹಾಕಿ ಬಾಗ್ಲು ಹಾಕ್ಕೊಂಡ್‌ ಹೋಗ್ತೀನಿ. +ಅಷ್ಟಕ್ಕೆ ಅವಕಾಶ ಕೊಡ್ಬೇಡ" ರಾತ್ರಿಯೆಲ್ಲ ನೂರು ಪ್ರೇಮದ ಮಾತುಗಳನ್ನಾಡಿದ ವ್ಯಕ್ತಿ ಎಷ್ಟು ಬೇಗ ಬದಲಾಗಿದ್ದ. +ಕಣ್ತುಂಬಿ ಬಂದರೂ ತುಟಿ ಕಚ್ಚಿ ಸೂಟ್‌ಕೇಸ್‌ಗೆ ಬಟ್ಟೆ ಬರೆಗಳನ್ನ ತುಂಬಿಕೊಂಡು ಏಳು ನಿಮಿಷಗಳಲ್ಲಿಯೇ ಮನೆಯಿಂದ ಹೊರಗೆ ಅಡಿಯಿಟ್ಟಳು. +ಅವಳತ್ತ ತಿರುಗಿ ಕೂಡ ನೋಡದ ಮೂರ್ತಿ ಬೀಗ ಹಾಕಿ ಕೀ ಬಂಚ್‌ನ ಜೇಬಿನಲ್ಲಿ ಹಾಕಿಕೊಂಡು ಆರಾಮಾಗಿ ಸ್ಕೂಟರ್‌ ಹತ್ತಿದ. +ಎರಡೇ ನಿಮಿಷದಲ್ಲಿ ಕಣ್ಮರೆಯಾಯಿತು. +ಪ್ರೇಮ, ಪ್ರೀತಿಯೆಂದರೇನು ? +ಮೊದಲ ಸಲ ತನ್ನನ್ನು ಪ್ರಶ್ನಿಸಿಕೊಂಡಳು. +“ಚಿನ್ನ, ರನ್ನ ಎಂದು ಉಸುರಿದ ಗಂಡನ ಜೀವನದಲ್ಲಿ ತಾನು ಏನು ?"ಉಂಡುಯೆಸೆದ ಬಾಳೆಯ ಎಲೆ. +ಎಷ್ಟೋ ಹೆಣ್ಣುಗಳು ಬಯಕೆಯನ್ನೇ ಭ್ರಮೆಯೆಂದು ತಿಳಿದು ಬದುಕಿದ್ದಾರೇನೋ. +ಆಟೋ ಹತ್ತುವ ಬದಲು ಸಿಟಿ ಬಸ್ಸು ಹತ್ತಿದ್ದಕ್ಕೆ ಕಾರಣ ಇತ್ತು. +ಗಂಡ ಪಶ್ಚಾತ್ತಾಪ ಪಟ್ಟು ಹುಡುಕಿಕೊಂಡು ಬಸ್ಸು ಸ್ಟಾಂಡ್‌ಗೆ ಬರಬಹುದೆಂಬ ಆಸೆ. +ರೆಡಿಯಾಗಿದ್ದ ಬಸ್ಸು ಬಿಟ್ಟು ಒಂದೆರಡು ಗಂಟೆಗಳು ಕಾದು ನಂತರ ಬಸ್ ಹತ್ತಿದಾಗ ಒಂದು ಪರಿಛೇದಕ್ಕೆ ತೆರೆ ಬಿದ್ದಂತಾಯಿತು. +ಮುಂದೇನು? +ಬಹುಶಃ ಯುಗಂಧರ್‌ ಮನೆಯವರು ಪಟ್ಟು ಬದಲಾಯಿಸಲಾರರೆನಿಸಿದಾಗ ಅವಳೆದೆಯ ಮೇಲೆ ದೊಡ್ಡ ಬಂಡೆ ಬಿದ್ದಂಥ ಭಾರ. +ಬಹುಶಃ ಅದರ ಪರಿಜ್ಞಾನ ಕೃಷ್ಣಮೂರ್ತಿಗೆ ಇರಲಿಲ್ಲ ! +ಮಗಳು ಹಿಂದಿರುಗಿದ್ದು ನೋಡಿ ವಾಸುದೇವಯ್ಯ ಹೌಹಾರಿದರು. +ಮುಂದೇನು? +ಎದುರು ಮನೆಯಲ್ಲಿ ಈಗಾಗಲೇ ಮದುವೆಯ ಏರ್ಪಾಟುಗಳು ಷುರುವಾಗಿತ್ತು. +ಬೆಳಿಗ್ಗೆ ಹೋಗಿ ಛತ್ರಕ್ಕೆ ಅಡ್ಜಾನ್ಸ್‌ ಕೊಟ್ಟು ಬಂದ ಸುದ್ದಿ ನೀರದ ತಂದೆ ಬಂದು ತಿಳಿಸಿ ಹೋಗಿದ್ದರು. +"ಏನು ವಿಷ್ಯ ?" ಗಾಬರಿಯಿಂದ ಮೇಲೆದ್ದರು. +ಸೂಟುಕೇಸ್‌ ರೂಮಿನಲ್ಲಿ ಇಟ್ಟು ಬಂದ ಚಾರುಲತ ತಗ್ಗಿದ ದನಿಯಲ್ಲಿ "ಅಂಥದೇನಿಲ್ಲ ! +ಅವ್ರೆ ನಾಳೆ ನಾಳಿದ್ದರಲ್ಲಿ ಬರ್ತಾ ಇದ್ದಾರಷ್ಟೆ " ಟವಲಿಡಿದು ಬಾತ್‌ರೂಂಗೆ ಹೋದವಳು ಗೋಡೆಗೊರಗಿ ಬಿಕ್ಕಳಿಸಿದಳು. +ಒಂದಿಷ್ಟು ಸಮಾಧಾನ ಸಿಗಬಹುದೇ ವಿನಃ ಅಳು ಪರಿಹಾರ ಸೂಚಿಸದೆಂದು ಕೊಂಡಾಗ ಮುಖ ತೊಳೆದು ಹೊರಗೆ ಬಂದಳು. +ತೀರಾ ಸೋತವರಂತೆ ಕೂತಿದ್ದರು ವಾಸುದೇವಯ್ಯ. +“ನೀನು ನಿಜಾ ಹೇಳೋದು ಒಳ್ಳೇದು. +ಮಗ್ನ ಮೂಲಕ ತಮ್ಮ ಹಟ ಸಾಧಿಸ್ತಾ ಇದ್ದಾರೆ ಬೀಗರು. +ಇದು ಯಾವ ನ್ಯಾಯ ?” ಹತ್ತು ಜನಾನ ಕರ್ಕೊಂಡ್ಟೋಗಿ ಕೇಳ್ತೀನಿ. +ಆವೇಗದಿಂದ ಬಡಬಡಿಸಿದರು. +"ದಯವಿಟ್ಟು ಬೇಡಿ. +ಮತ್ತಷ್ಟು ಹದಗೆಡುತ್ತೆ" ರೂಮಿಗೆ ಹೋದಳು. +ಅವಳ ಪ್ರಕಾರ ನವೀನ್‌ ನಾದಿನಿಯನ್ನ ಮದುವೆಯಾಗುವ ಸಾಧ್ಯತೆ ಇರಲಿಲ್ಲ. +ಅವರುಗಳು ಕೂಡ ಅದೇ ಹಟದಲ್ಲಿ ನಿಂತಿದ್ದರು. +ಇಲ್ಲಿ ಬಲಿಪಶು ಅವಳು! +ಹಿಂದಿನ ರಾತ್ರಿಯವರೆಗೂ ಅವಳೊಂದು ರೀತಿಯ ಭ್ರಮೆಯಲ್ಲಿದ್ದಳು. +ಮೂರ್ತಿ ಬೆಳಿಗ್ಗೆ ಜ್ಞಾನೋದಯಕ್ಕೆ ಕಾರಣವಾಗಿದ್ದ. +ಒಂಟಿಯಾಗಿ ಹೊರಟವಳನ್ನ ಕನಿಷ್ಟ ಹಿಂದಿರುಗಿ ನೋಡುವ ಕರುಣೆಯನ್ನ ತೋರಿಸಿರಲಿಲ್ಲ. +ರಾತ್ರಿ ನವೀನ್‌ ಬರುವ ಮುನ್ನ ಅವಳಿಗೆ ಫೋನ್‌ ಬಂತು. +"ಚಾರುತಾನೇ, ಸ್ವಲ್ಪ ಕೇಳು. +ನೀನು ಹಟ ಮಾಡಿಯಾದ್ರೂ ನವೀನ್‌ನ ಒಪ್ಪು. +ಇಲ್ಲದಿದ್ದರೇ ನಿನ್ನ ಬದ್ಕು ನರ್ಕ ಸದೃಶವಾಗುತ್ತೆ. +ಎಂದೂ ನೀನು ಮೂರ್ತಿ ಜೊತೆ ಸಂಸಾರ ಮಾಡೋಕ್ಕಾಗೋಲ್ಲ. +ಬೆಳಿಗ್ಗೆ ನಿನ್ನ ಫೋನ್‌ಗಾಗಿ ಕಾಯ್ತಾ ಇರ್ತೀನಿ" ಅವಳ ಪ್ರತಿಕ್ರಿಯೆಗಾಗಿ ಕಾಯದೆ ಫೋನಿಟ್ಟ. +ಚಾರುಲತಳ ಕೈಯಲ್ಲಿದ್ದ ಫೋನ್‌ ಬಹಳ ಹೊತ್ತು ಕೆಳಗಿಳಿಯಲಿಲ್ಲ. +"ಯಾರದಮ್ಮ ಫೋನ್‌ ?" ಅಡಿಗೆ ಮನೆಯಲ್ಲಿದ್ದ ವಾಸುದೇವಯ್ಕ ಕೈಯೊರೆಸುತ್ತ ಬಂದು ಕೇಳಿದಾಗ, ಫೋನಿಟ್ಟು ಭಾರವಾದ ಉಸಿರು ದಬ್ಬಿ "ಅವರದ್ದೇ ಫೋ" ಎನ್ನುವ ವೇಳೆಗೆ ನವೀನ್‌, ನೀರದಳೊಂದಿಗೆ ಒಳಗೆ ಬಂದ. +ಮುಂದಿನ ಮಾತುಗಳು ಅವಳ ನಾಲಿಗೆಯಲ್ಲಿಯೇ ಉಳಿಯಿತು. +"ಅರೇ, ಯಾವಾಗ್ಟಂದೆ ?"ನವೀನ್‌ ಆತಂಕದಿಂದ ವಿಚಾರಿಸಿದ. +ಬಲವಂತದಿಂದ ಮುಗುಳ್ನಗೆಯನ್ನು ಎಳೆ ತಂದ ಚಾರುಲತ "ಸ್ವಲ್ಪ ಹೊತ್ತಾಯಿತಷ್ಟೆ" ಎಂದು ನೀರದ ಕಡೆ ತುಂಟ ನೋಟ ಬೀರಿದಳು . +"ಇನ್ನೇನು ತೊಂದರೆ ಇಲ್ಲ, ಅತ್ತಿಗೇಂತ ಕೂಗಬಹುದಲ್ಲ" ಅವಳು ನಾಚಿ ನೀರಾಗಿ ತಮ್ಮ ಮನೆಗೆ ಓಡಿದಳು. +ಸುಂದರ ಲೋಕದಲ್ಲಿ ವಿಹರಿಸುತ್ತಿದ್ದ ಅವಳಿಗೆ ಯಾವ ಬಿಸಿಯ ಶಾಖವು ತಟ್ಟಿರಲಿಲ್ಲ. +ತಂಗಿಯ ಬಳಿ ಕೂತ ನವೀನ್‌ ಬಲವಂತದಿಂದ ಸತ್ಯವನ್ನು ಹೊರಡಿಸಿದವನು ಭುಸುಗುಟ್ಟಿದ. +ಹಸುವಿನಂತೆ ಕಾಣುವ ಮೂರ್ತಿಯ ಬಣ್ಣ ಸ್ಪಷ್ಟವಾಗಿದ್ದು ಇಂದೇ. +"ನಾನ್ಹೋಗಿ ಮಾತಾಡ್ತೀನಿ" ಮೇಲೆದ್ದ. +"ಏನಂತ ?"ಕೇಳಿದಳು ತಣ್ಣಗೆ. +ನವೀನ್‌ ಅಯೋಮಯದಿಂದ ತಂಗಿಯನ್ನ ನೋಡಿದ. +ಅತ್ಯಂತ ಶಾಂತವಾಗಿ ಕಂಡಳು. +"ಯಾಕೆ ಕೇಳ್ಬಾರ್ಬಾ ?"ಎಂದ ಮೆಲ್ಲಗೆ. +"ಪ್ರಯೋಜನವಿಲ್ಲ. ಮತ್ತಷ್ಟು ಮಾತುಕತೆ ಜಗಳ ಅಷ್ಟೆ ಅದ್ರಿಂದ ಯಾರು ಸುಖಿಗಳಾಗೋಲ್ಲ. +ಸಧ್ಯಕ್ಕೆ ಆ ಪ್ರಯತ್ನ ಬಿಡಿ" ಅತ್ಯಂತ ಸ್ಪಷ್ಟ ವಾಗಿ ಉಸುರಿದಳು. +ತಂದೆ, ಮಗ ಮುಖ ಮುಖ ನೋಡಿಕೊಂಡರು. +ಮಗನ ವಿವಾಹದಿಂದ ಮಗಳ ದಾಂಪತ್ಯ ಛಿದ್ರ ಛಿದ್ರ. +ವಾಸುದೇವಯ್ಯನಿಗೆ ಸಹಿಸಲು ಆಸಾಧ್ಯವೆನಿಸಿತು ಕುಸಿದು ಕೂತರು. +“ನವೀನ್‌, ಸಧ್ಯಕ್ಕೆ ನಿನ್ನದ್ವೆ ಮುಂದೆ ಹಾಕು.” ಸಲಹೆ ಇತ್ತರು ದಿಕ್ಕು ತೋಚದಂತೆ. +ಅವನು ಎರಡು ಕೈಯಲ್ಲು ತಲೆ ಹಿಡಿದುಕೊಂಡ. +"ಅದ್ರಿಂದ ಸಮಸ್ಯೆಯೇನು ಪರಿಹಾರವಾಗೋಲ್ಲ. +ಹೀಗೆಯೇ ಮುಂದುವರಿಯುತ್ತೆ. +ನನ್ನ ವಿವಾಹ ಬೇಗ ಮುಗಿದ್ರೆ. . . ವಿಷ್ಯಕ್ಕೆ ಒಂದು ಮುಕ್ತಾಯ ಸಿಗುತ್ತೆ. +ಆಮೇಲೆ ಎಲ್ಲಾ ಸರಿ ಹೋಗುತ್ತೆ." +ನವೀನ್‌ ಮಾತು ಅವಳಿಗೂ ಸರಿಯೆನಿಸಿತು. +"ಹೌದಪ್ಪ, ಅಣ್ಣ ಹೇಳೋದ್ರಲ್ಲಿ ಅರ್ಥವಿದೆ. +ಯಾವ್ದೇ ಕಾರಣಕ್ಕೂ ವಿವಾಹ ಮುಂದೂಡೋದ್ಬೇಡ?" ಒಪ್ಪಿಗೆ ಸೂಚಿಸಿದಳು. +ಆದರೂ ವಾಸುದೇವಯ್ಯನವರಿಗೆ ಭಯವೇ. +ಸ್ವಲ್ಪ ದೈನ್ಯತೆಯಿಂದ ಮಗನತ್ತ ನೋಡಿದರು. +“ನಿನ್ನ ತಂಗಿಗೋಸ್ಕರ ಒಂದಿಷ್ಟು ತ್ಯಾಗ ಮಾಡಬಾದದೇನೋ”ಎಂದರು. +ಅವರಿಗೆ ಎದುರು ಮನೆ ನೀರದಾಗಿಂತ ಮಗಳ ಭವಿಷ್ಯ ಮುಖ್ಯವಾಗಿತ್ತು. +ತೀರಾ ಖಿನ್ನತೆ ಕಾಣಿಸಿಕೊಂಡಿತು ನವೀನ್‌ನ ಮುಖದ ಮೇಲೆ. +ಸರ್ವಥಾ ಒಪ್ಪಲಾರ “ಹೇಗೆ ಸಾಧ್ಯ ? +ಈ ವಿಷ್ಯ ನೀರದ ಕಿವಿಗೆ ಬಿದ್ದರೇ ಮೊದ್ಲು ಅವ್ಳು ಆತ್ಮಹತ್ಯೆ ಮಾಡ್ಕೋತಾಳೆ. +ಈಗಾಗ್ಲೇ ನಮ್ಮಿಬ್ರ ವಿಷ್ಯ ಸಮಾಜಕ್ಕೆ ಡಣಾ ಡಂಗೂರವಾಗಿದೆ. +ಮೊದ್ಲೇ ಮಾನ ಮರ್ಯಾದೆ ಅಂತ ಸಾಯೋ ಜನ,ಅವ್ಳ ಮನೆಯವ್ರು. +ಒಂದು ಕುಟುಂಬದ ಸರ್ವನಾಶಕ್ಕೆ ನಾವು ಕಾರಣರಾಗಿ ಬಿಡ್ತೀವಿ. +ಆಮೇಲೆ ನಾನು ತಾನೇ ಒಪ್ಪದ ಹಟಮಾರಿ ಹೆಣ್ಣನ್ನ ಕಟ್ಕೊಂಡ್‌ನೆಮ್ದಿಯಾಗಿ ಇರ್ತೀನಾ ? +ಆಮೇಲೆ ಇನ್ನೊಂದು ಕಾರಣ ಹೇಳ್ಕೊಂಡ್‌ ಹೆಂಡತಿ ಹೀಗೇ ಹಿಂಸಿಸ್ತಾನೆ. +ಇದು ಹೀಗೇ ಮುಂದುವರಿಯುತ್ತೆ. +ಬಗ್ಗಿದೋರ ಬೆನ್ನ ಮೇಲೆ ಗುದ್ದೋರು ಜಾಸ್ತಿ. +ಈ ಹಾರಾಟ ವಿವಾಹವಾದ ಕೂಡ್ಲೇ ನಿಂತ್ತೋಗುತ್ತೆ." +ಆಮೇಲೆ ತಗ್ಗಿಸಿಕೊಂಡು ವಿಸ್ತಾರವಾಗಿ ಹೇಳಿದ. +"ಹೌದಪ್ಪ, ಹತ್ತಿರದ ಲಗ್ನದಲ್ಲೇ ಅಣ್ಣನ ವಿವಾಹ ಮುಗ್ಸಿಬಿಡೋಣ" ಸಮ್ಮತಿ ಸೂಚಿಸಿದಳು. +ತರಾತುರಿಯಲ್ಲಿ ನಿಶ್ಚಿತಾರ್ಥದ ದಿನ ಗೊತ್ತಾದ ಮೇಲೆ ಡಾ| ನವೀನ್‌ ವಿಷಯ ಹೊತ್ತು ಮೂರ್ತಿಯ ಬಳಿಗೆ ಹೋದ. +ಆ ಸಮಯದಲ್ಲಿ ಕಾಲೇಜಿನಲ್ಲಿದ್ದ ಭಾವನಿಂದ ನಗು ಮುಖದ ಸ್ವಾಗತವೇನು ಸಿಗಲಿಲ್ಲ. +"ಏನು. . . ಬಂದಿದ್ದು ?" ಸ್ವಲ್ಪ ಅಸಹನೆಯಿಂದಲೇ ಪ್ರಶ್ನಿಸಿದ. +"ಸ್ವಲ್ಪ ಕ್ಯಾಂಟೀನ್‌ನಲ್ಲಿ ಕೂತು ಮಾತಾಡ್ಬಹುದಲ್ಲ" ಎಂದ ತಾಳ್ಮೆಯಿಂದ ನವೀನ್‌ . +"ಸಾರಿ, ನಂಗೆ ಮತ್ತೊಂದು ಪಿರಿಯಡ್‌ ಇದೆ. +ಅದೇನು ಇಲ್ಲೇ ಹೇಳ್ಬಹುದು."ಎಂದ ವಾಚ್‌ ಕಡೆ ನೋಡುತ್ತ. +ತುಂಬು ಸ್ನೇಹದಿಂದ ಆತ್ಮೀಯ ಗೆಳೆಯನಂತೆ ಕಾಣುತ್ತಿದ್ದ ವ್ಯಕ್ತಿ, ಇಂದು ಅವನ ಮಾತುಗಳನ್ನು ಕೇಳಲೇ ಇಷ್ಟವಿಲ್ಲವೆನ್ನುವಂತೆ ಮುಖ ಮಾಡಿದ್ದ. +"ನಾಳಿದ್ದು ವಿವಾಹದ ನಿಶ್ಚಿತಾರ್ಥ. +ನಿಮ್ಮನ್ನ ಕರ್ಕೊಂಡ್ನೋಗೋಕೆ ಬಂದೆ. +ನಾನು ಎಂದೂ ಪ್ರೀತಿ ಪ್ರೇಮದ ದೃಷ್ಟಿಯಿಂದ ನೋಡಿಲ್ಲ. +ಒತ್ತಡ ಮದ್ವೆಗಳು ಯಾರ್ಗೂ ಸುಖ ತರೋಲ್ಲ" ಎಂದ ಅತ್ತಿತ್ತ ನೋಡುತ್ತ ಮೆಲುವಾಗಿ. +ದೂರದಲ್ಲಿ ಬರುತ್ತಿದ್ದ ಸಹೋದ್ಯೋಗಿಯ ಕಡೆ ಕೈಯಾಡಿಸಿದ ಮೂರ್ತಿ ಇವನಿಂದ ಬೇಗ ಬೇಗ ಸರಿದು ಮಾಯವಾದ, ಯಾವ ಪ್ರತಿಕ್ರಿಯೆಯನ್ನು ತೋರದೆ. +ಅಂತು ಪೂರ್ತಿಯಾಗಿ ತೆರೆ ಎಳೆದುಬಿಟ್ಟ. +ನವೀನ್‌ ಕಾಲೇಜಿನಲ್ಲಿ ಹುಡುಕಾಡಿ ಸಂಜೆ ಮನೆಗೆ ಹೋದಾಗ ಬೀಗ ಹಾಕಿತ್ತು. +"ಅಂಕಲ್‌, ಊರಿಗೆ ಹೋದ್ರು" ಎದುರು ಮನೆಯ ಹುಡುಗ ಬಂದು ತಿಳಿಸಿ ಹೋದ. +ಸೋತವನಂತೆ ಅವನು ಮನೆಗೆ ಬಂದಾಗ ಮಧ್ಯರಾತ್ರಿ ದಾಟಿತ್ತು. +ಚಾರುಲತ ಮಲಗಿದ್ದರೂ ನಿದ್ರಿಸಿರಲಿಲ್ಲ. +ವಾಸುದೇವಯ್ಯ ಹಾಸಿಗೆಯ ಮೇಲೆ ಎದ್ದು ಕೂತು ದೇವರ ಧ್ಯಾನ ಮಾಡುತ್ತಿದ್ದರು. +ಮಗನ ಮುಖ ನೋಡಿದ ಕೂಡಲೇ ಹೌಹಾರಿದರು. +"ಮೂರ್ತಿ ಸಿಗ್ಲಿಲ್ಲ." ಎಂದವನು ಷೂ ಕಳಚಿ ರೂಮಿಗೆ ಹೋಗಿ ಬಿಟ್ಟ. +ಅವನ ತಲೆ ಬಡಿಗೆಯಲ್ಲೊಡೆದಂತೆ ಸಿಡಿಯುತ್ತಿತ್ತು. +ಒಂದಲ್ಲ ಹತ್ತು ನೋವು ನಿವಾರಕ ಗುಳಿಗೆಗಳನ್ನು ನುಂಗಿದರೂ ನೋವು ಕಡಿಮೆಯಾಗದು. +"ಚಾರು,ನಾನು ಈಗ ಏನ್ನಾಡ್ಲಿ ?"ಮುಷ್ಟಿ ಬಿಗಿ ಹಿಡಿದು ಗಾಳಿಯಲ್ಲಿ ಗುದ್ದಿದ. +ಬೆಳಿಗ್ಗೆಯ ವೇಳೆಗೆ ತೀರಾ ಬಳಲಿದ. +ಮೂರ್ತಿ ತಂಗಿಗಾಗಿ ತನ್ನ ದಾಂಪತ್ಯವನ್ನು ಬಲಿ ಕೊಡಲು ಸಿದ್ಧನಿದ್ದ. +ಅವನು ತೀರಾ ಮೂರ್ಖನಂತೆ ಕಂಡ. +ತಂದೆ,ತಾಯಿ ತಂಗಿಯನ್ನು ಬೆಂಗಾವಲಿಗೆ ಇಟ್ಟುಕೊಂಡು ಯುದ್ಧ ಸಾರಿದ್ದ. +ತಂಗಿಯನ್ನು ನೆನೆದು ಅವನ ಕಣ್ತುಂಬಿತು. +"ಚಾರು, ಖಂಡಿತ ನಿಂಗೆ ಅನ್ಯಾಯ ಮಾಡಲಾರೆ" ಕಣ್ಣೀರು ಸುರಿಸಿದ. +"ಅಣ್ಣ. . . . . " ಚಾರುಲತ ಅವನನ್ನು ಅರಸಿಕೊಂಡು ಬಂದಾಗ ಕಣ್ಮು ತೊಡೆದುಕೊಂಡು ನಗೆ ಬೀರಿದ. +ಅವಳಿಗೆ ಅರ್ಥ ಮಾಡಿಕೊಳ್ಳಲು ಸಮಯ ಬೇಕಾಗಲಿಲ್ಲ. +"ಇದು ಅನಿರೀಕ್ಷಿತವಲ್ಲ. +ಕೆಲವು ಸಲ ವಿನಾಕಾರಣವಾಗಿ ಶಿಕ್ಷೆ ಅನುಭವಿಸ್ಬೇಕಾಗುತ್ತೆ. +ನೀನೇನು ತಲೆ ಕೆಡಿಸ್ಕೋಬೇಡ. +ನೀರದ ಒಂದ್ಸಲ ಬಂದ್ಹೋದ್ಲು. +ತಿಂಡಿ ಕೂಡ ಅಲ್ಲಿಂದ್ಲೇ ಬಂದಿದೆ" ನಗೆಯಾಡಿದಳು. +ಮೂರ್ಖತನದಿಂದ ಅಣ್ಣನ ಬಗ್ಗೆ ಕೋಪಿಸಿಕೊಳ್ಳಲಾರಳು. +"ಚಾರು, ಪ್ಲೀಸ್‌ ದಿಕ್ಕು ತೋಚದಂತಾಗಿದೆ. +ಈಗೇನು ಮಾಡ್ಲಿ ? +ಮೂರ್ತಿ ನಡವಳಿಕೆ ನೋಡಿದ್ರೆ ನಂಗೆ ಭಯವಾಗುತ್ತೆ. +ನಿನ್ನ ಕರೆಸಿ ಕೊಳ್ಳದಿದ್ದರೇ ? ಭಯ ವ್ಯಕ್ತಪಡಿಸಿದ. +ಈ ಪ್ರಶ್ನೆಯನ್ನ ಸಾವಿರ ಸಲವಾದರೂ ತನಗೆ ತಾನು ಹಾಕಿಕೊಂಡಿದ್ದಳು. +ನಾಲ್ಕರ ಚಳಿ ಬಂದಂತಾಗುತ್ತಿತ್ತು. +ಸಪ್ತಪದಿ ತುಳಿದು ಜೀವನ ಪೂರ್ತಿಅವನೊಂದಿಗಿನ ಕನಸ್ಸನ್ನು ಕಂಡವಳಿಗೆ ವರ್ಷ ತುಂಬುವ ಮುನ್ನವೇ ಬೇರೆಬೇರೆಯಾಗಿ ಬದುಕುವುದೆಂದರೇನು ? +ಅದೊಂದು ದುಃಸ್ವಪ್ನವೇ. +ಮೂರ್ತಿ ಇಲ್ಲದೆ ತಾನು ಬದುಕುವುದು ಸಾಧ್ಯವೇ ? +ಸಾಧ್ಯ, ಅಸಾಧ್ಯಗಳ ನಡುವೆ ಅಂತರವೆಷ್ಟು, ಮನ ಲೆಕ್ಕ ಹಾಕಿತು ಆಳವಾಗಿ. +ತಂಗಿಯ ಮ್ಲಾನವದನ ನೋಡಿ ಇನ್ನಷ್ಟು ಬೆಚ್ಚಿದ. +"ಚಾರು, ನಿಂಗೋಸ್ಕರ ನಾನು ಮೂರ್ತಿ ತಂಗಿನ ವಿವಾಹವಾಗ್ತೀನಿ" +ಬಡಬಡಿಸಿದ ತಂಗಿಯ ಕೈ ಹಿಡಿದುಕೊಂಡು. +ಇಂಥ ನಿರ್ಧಾರದಿಂದ ಮತ್ತಷ್ಟು ಹಿಂಸೆ, ತೊಳಲಾಟವೇ ಅನಿಸಿತು. +"ಬೇಡ, ಇದ್ರಿಂದ ಏನು ಪ್ರಯೋಜನವಾಗೋಲ್ಲ. +ವಿವಾಹವೊಂದು ಮೆಟ್ಟಿಲಾಗಿ ಹಾಗೇ ಮುಂದುವರಿಯುತ್ತೆ. +ನಾಳೆ ನಿಂಗೂ ಪೂಜಾ ಮಧ್ಯೆ ಪ್ರೀತಿ ಬೆಳೆಯಲ್ಲಿಲ್ಲಾಂದರೇ ನಾನು ಪಣವಾಗ್ತೀನಿ. +ಇದೆಲ್ಲ ಯಾಕೆ ? +ದಿನಗಳು ಕಳೆಯುವುದು ಹಿಂಸೆಯಾಗ್ಟಿಡುತ್ತೆ. +ನೀನು ಆರಾಮವಾಗಿ ನಿರ್ಯೋಚನೆಯಿಂದ ನೀರದಾನ ಮದುವೆಯಾಗು. +ಸಧ್ಯಕ್ಕೆ ಅದೊಂದೇ ಉತ್ತಮ ದಾರಿ" ಮನಸ್ಸಿನಲ್ಲಿ ಇದ್ದುದ್ದನ್ನು ಅತ್ಯಂತ ಸ್ಪಷ್ಟವಾಗಿ ಉಸುರಿದಳು. +ಮತ್ತೆ ಮತ್ತೆ ಅಪ್ಪ ಮಕ್ಕಳು ಕೂತು ಎಷ್ಟು ಯೋಚಿಸಿದರೂ ಇದು ಬಿಟ್ಟು ಬೇರೆ ದಾರಿ ಇರಲಿಲ್ಲ. +"ನಾನೇ ಹೋಗಿ ಒಂದ್ಮಾತು ಹೇಳ್ಬರ್ತಿನಿ" ವಾಸುದೇವಯ್ಯ ಹೊರಟಾಗ,ಚಾರುಲತ ತಡೆದಳು . +"ಬೇಡಪ್ಪ, ನಾನು ಅಣ್ಣ ಹೋಗ್ಗರ್ತಿವಿ, ಒಂದಿಷ್ಟು ಪೂಜಾ ಕೈಯಲ್ಲಿ ಪರ್ಸನಲ್ಲಾಗಿ ಮಾತಾಡಿದಂತಾಗುತ್ತೆ."ಅದಕ್ಕೆ ಮುಖ್ಯ ಕಾರಣವಿತ್ತು. +ಯುಗಂಧರ್‌ ಅತ್ಯಂತ ಕಟುವಾಗಿ ಮಾತನಾಡಬಲ್ಲರು. +ಅದರಿಂದ ತಂದೆ ಈ ವಯಸ್ಸಿನಲ್ಲಿ ಅವಮಾನಿತರಾಗಿ ನೋಯುವುದು ಬೇಡವಾಗಿತ್ತು. +ಸಂಜೆಯ ಸುಮಾರಿಗೆ ಅಣ್ಣ, ತಂಗಿ ಅವರ ಮನೆ ತಲುಪಿದಾಗ,ಮ್ಯಾಗಜಿನ್‌ ನೋಡುತ್ತಿದ್ದ ಪೂಜಾ ತಟ್ಟನೇ ಮೇಲೆದ್ದು "ಅಮ್ಮ ಯಾರೋ ಬಂದಿದ್ದಾರೆ" ಎಂದು ಹೇಳಿ ಕಣ್ಮರೆಯಾದಳು. +ಸ್ಟಲ್ಪ ಪ್ರತಿಷ್ಟೆ ಬೆಳೆಸಿಕೊಂಡಿದ್ದ ಅವಳಿಗೆ ಡಾ|।ನವೀನ್‌ನ ನಿರಾಕರಣೆ ದೊಡ್ಡ ಪೆಟ್ಟಾಗಿತ್ತು. +ಅದಕ್ಕಾಗಿ ತನ್ನ ಪ್ರೀತಿಯ ಅತ್ತಿಗೆಯನ್ನು ದ್ವೇಷಿಸಲಾರಂಭಿಸಿದ್ದು ಮಾತ್ರ ಮೂರ್ಖತನ. +ಡಾ|| ನವೀನ್‌ ತುಟಿ ಕಚ್ಚಿ ಕೂತ ಸದ್ದಿಲ್ಲದೆ ಸೋಫಾ ತುದಿಗೆ. +ಆತ್ಮೀಯವಾಗಿ ಕಾಣುತ್ತಿದ್ದ ಜನ ಹೇಗೆ ದೂರ ಸರಿದರು. +ಇದು ಅವನ ಪಾಲಿಗೂ ಅತ್ಯಂತ ನೋವಿನ ವಿಷಯವೇ. +ತಮ್ಮ ಪ್ರೀತಿ, ಪ್ರೇಮ ಮದುವೆಗೆ ಅಡ್ಡವಾದವರು ತಂದೆಯಲ್ಲ, ತಂಗಿಯಲ್ಲ ನೀರದಳ ಮನೆಯವರಲ್ಲ, ಈ ಮೂರನೆಯ ಜನ ವೇದನೆಯಿಂದ ಮುಖ ಹಿಂಡಿದ. +ಅಡಿಗೆಯ ಮನೆಯಲ್ಲಿದ್ದ ಪೂಜಾಳ ತಾಯಿ ನಿರೀಕ್ಷಣೆಯಲ್ಲಿಯೇ ಇದ್ದುದರಿಂದ,ಅಂಥ ಭಾವ ವೇಗವೇನು ಇರಲಿಲ್ಲ. +"ಚೆನ್ನಾಗಿದ್ದೀಯಾ ?" ವ್ಯವಹಾರಿಕೆ ಪ್ರಶ್ನೆ. +ಪ್ರಶ್ನೆ ಚಾರುಲತಳ ಸ್ವರ ಉಡುಗಿದಂತಾಯಿತು. +ಅಲ್ಲಿ ಸಂಬಂಧದ ಮೇಲೆ ಚಪ್ಪಡಿಯೆಳೆದು ನಿಂತಿದ್ದರು. +ದನಿಯೆತ್ತುವುದಾಗಲಿಲ್ಲ. ಕಣ್ತುಂಬಿತು. ಸರಸರನೆ ಹೊರ ಬಂದು ರೂಮಿಗೆ ಹೋದಳು. +ಅವಳ ಮೂರ್ತಿಯ ಬೆಡ್‌ ರೂಂ ಸುಖದ ಕ್ಷಣಗಳು ನೆನಪಾದವು. +ಮಂಚದ ಮೇಲೆ ಬಿಚ್ಚಿ ಎಸೆದ ಬಟ್ಟೆಗಳನ್ನು ಹ್ಯಾಂಗರ್‌ಗೆ ಹಾಕಿ ಕುಸಿದಳು. +ಅಳು ತಡೆಯಲಾಗಲಿಲ್ಲ. +ಬಿಕ್ಕಿ ಬಿಕ್ಕಿ ಅತ್ತುಕಣ್ಣೊರೆಸಿಕೊಂಡು ಹೊರಗೆ ಬಂದಾಗ, ಮುಖದ ಮುಂದೆ ಪೇಪರ್‌ ಹಿಡಿದುಕೂತಿದ್ದ ಡಾ!। ನವೀನ್‌. "ಯಾರು ಇಲ್ವಾ ಮನೆಯಲ್ಲಿ ?"ಕೇಳಿದ ಮೆಲ್ಲಗೆ. +"ಅತ್ತೆ ಇದ್ದಾರೆ, ಪೂಜಾನು ರೂಮಿಗೆ ಹೋಗಿ ಬಾಗ್ಲು ಹಾಕೊಂಡಿದ್ದಾರೆ. +ಅವ್ರಿಗೆ ನಮ್ಮ ಮೇಲೆ ಕೋಪ ಕಡಿಮೆಯಾಗಿಲ್ಲ. +ಮಾತಿಗೆ ಮಾತು ಸೇರಿಸೋದ್ರಿಂದ ರಾದ್ಯಾಂತವಾಗುತ್ತೇ ವಿನಃ ಯಾವ್ದೇ ಪ್ರಯೋಜನವಿಲ್ಲ." ಬುದ್ಧಿಹೇಳಿದಳು. +ಅವಳಲ್ಲಿನ ಉದ್ವೇಗವೇ ತಗ್ಗಿರಲಿಲ್ಲ. +ಎದೆ ಢವಗುಟ್ಟುತ್ತಿತ್ತು "ಬರ್ತಿನಿ. . . " ಮತ್ತೆ ಅಡಿಗೆ ಮನೆಗೆ ಹೋದಾಗ ಆಕೆ ಆರಾಮಾಗಿ ತರಕಾರಿ ಹೆಚ್ಚುತಿದ್ದಳು. +"ಅತ್ತೆ, ನಾಳೆ ನಮ್ಮಣ್ಣನ ಮದ್ವೆಯ ನಿಶ್ಚಿತಾರ್ಥ. +ನೀವುಗಳೆಲ್ಲ. . . . ಬರ್ಬೇಕು "ಕುಂಕುಮದ ಬಟ್ಟಲನ್ನ ಆಕೆಯ ಮುಂದಿಡಿದಳು. +"ಹೌದೇನು, ನಾಳೆಯಂತು ಖಂಡಿತ ಬರೋಕ್ಕಾಗೋಲ್ಲ ಬಿಡು. +ಮೂರ್ತಿನು ಬಂದಿದ್ದಾನೆ, ಅವ್ನ ಸ್ನೇಹಿತನ ಮನೆಯಲ್ಲಿ ಸತ್ಯನಾರಾಯಣ ಪೂಜೆನಂತೆ."ಸ್ವಲ್ಪ ಒರಟಾಗಿಯೆ ನುಡಿದಿದ್ದು. +ತಾಯಿಯಂತೆ ತುಂಬು ಅಂತಃಕರಣ ತೋರುತ್ತಿದ್ದ ಆಕೆ ಎಷ್ಟು ಬೇಗ ಕಟುವಾಗಿ ಬಿಟ್ಟರು. +ಇಲ್ಲಿ ನನ್ನ ತಪ್ಪೇನು ? +"ಅವ್ರು ಎಲ್ಲಿಗೆ ಹೋಗಿದ್ದಾರೆ ?"ವಿಚಾರಿಸಿದಳು. +"ಅಪ್ಪ, ಮಗ ಎಲ್ಲಿಗೋ ಹೋಗಿದ್ದಾರೆ. +ನಮ್ಗೂ ಹೋಗೋದಿದೆ. ಪೂಜಾ. . . "ಎನ್ನುತ್ತ ಹೊರಗೆ ಹೋದಾಗ, ತನ್ನ ವ್ಯಕ್ತಿತ್ವದ ಅರಿವಾಯಿತು ಅವಳಿಗೆ. +ಉಕ್ಕುತ್ತಿದ್ದ ಹಾಲನ್ನ ಇಳಿಸಿಟ್ಟು ಹೊರಗೆ ಬಂದಳು "ಹೋಗೋಣ,ಅವರು ಹೊರಗೆ ಹೊರಟಿದಾರೆ, ನಮ್ಮಿಂದ ತೊಂದರೆಯಾಗೋದ್ಬೇಡ"ಎಂದಳು. +ಅವಳ ಕಣ್ಣಂಚಿನಿಂದ ಕಂಬನಿ ಹೊರ ಚಿಮ್ಮಿಯೇ ಬಿಟ್ಟಿತು. +'ಕೂತ್ಕೋ, ಚಾರು" ಅವಳನ್ನ ಕೈ ಹಿಡಿದು ಕೂಡಿಸಿದ. +ಮಗಳೊಂದಿಗೆ ಬಂದ ಆಕೆ "ಹೇಗಿದ್ದೀರಾ ? +ನಾವುಗಳು ಎಲ್ಲೋ ಹೊರಟಿದ್ದೀವಿ" ಇನ್ನ ತಾವು ಹೋಗಬಹುದೆಂದು ಪರೋಕ್ಷವಾಗಿ ಹೇಳಿದಾಗ ಒಮ್ಮೆ ಪೂಜಾ ಕಡೆ ನೋಟ ಹರಿಸಿದ ಡಾ|।ನವೀನ್‌ ಮೇಲೆದ್ದ "ಅವ್ರಿಗೆ ತೊಂದರೆಯಾಗೋದ್ದೇಡ ನಾವು ಹೋಗೋಣ. +"ನೀನ್ನೋಗು, ನಿಮ್ಮ ಭಾವ ಬಂದಿದ್ದಾರಂತೆ, ಅವ್ರ ಜೊತೆಯಲ್ಲಿ ಬರ್ತಿನಿ" ಸ್ವಾಭಿಮಾನ ಹತ್ತಿಕ್ಕಿ ಭಂಡತನ ತೋರಿದಳು. +ತಕ್ಷಣ ಪೂಜಾ "ಇಲ್ಲಿಗಿಂತ ನಿಮ್ಮ ಅಗತ್ಯ ಹೆಚ್ಚಿಗಿದೆ. +ಅಣ್ಣ ಬಂದ್ಮೇಲೆ ಫೋನ್‌ ಮಾಡೋಕೆ ಹೇಳ್ತೀನಿ"ಎಂದಳು. +ಅಲ್ಲಿ ಅವಳನ್ನ ಉಳಿಸಿಕೊಳ್ಳುವುದು ಅವರಿಗೆ ಬೇಕಿರಲಿಲ್ಲ. +"ಹೋಗೋಣ, ಚಾರು" ಡಾ।।ನವೀನ್‌ ನುಡಿದ ಕೋಪದಿಂದ. +ತಾನೇ ಹೋಗಿ ಕುಂಕುಮ ಹಚ್ಚಿಕೊಂಡು ಬಂದ ಚಾರುಲತ ಅಕ್ಷತೆಯನ್ನು ಟೇಬಲ್ಲು ಮೇಲಿಟ್ಟು "ಎಲ್ಲಾ ಬರ್ಬೇಕು ಅತ್ತೆ, ಮಾವನವಿಗೆ ಹೇಳಿ, ನಾನು ಫೋನ್‌ ಮಾಡ್ತೀನಿ"ಎಂದಿದ್ದಕ್ಕೆ ಅವರಿಬ್ಬರ ಪ್ರತಿಕ್ರಿಯೆ ಸೊನ್ನೆ. +ಚಾರುಲತ, ಡಾ|।ನವೀನ್‌ ಹೊರಗೆ ಬಂದು ಸಿಶ್ಚಿಂತೆಯಿಂದ ಉಸಿರಾಡಿದರು. +ನವೀನ್‌ ಕೋಪದಿಂದ ಕುದಿಯುತ್ತಿದ್ದರೇ, ದಿಕ್ಕು ತೋಜದಂತಾಗಿತ್ತು ಚಾರುಲತಗೆ. +ನಾಲ್ಕು ಹೆಜ್ಜೆ ಮುಂದಿಟ್ಟಿದ್ದು ಆಗಿತ್ತು. +ಈಗ ಹಿಂದೆಗೆದರೂ ಪರಿಣಾಮ ಅಷ್ಟೆ. +ನೋಯುವವರ ಸಂಖ್ಯೆಯಾದರೂ ಕಡಿಮೆಯಾಗಲಿಯೆಂದು ಗಟ್ಟಿ ನಿರ್ಧಾರಕ್ಕೆ ಬಂದಳು. +"ಬೀ ಕಾಮ್‌, ಈಗೇನು ಮಾಡೋ ಸ್ಥಿತಿಯಲ್ಲಿಲ್ಲ. +ನೋಡೋಣ, ಬೇಗಮನೆಗೆ ಹೋಗ್ಟಿಡೋದು ವಾಸಿ" ಅವಸರಿಸಿದಳು. +ಇಬ್ಬರು ಮನೆಗೆ ಬಂದಾಗ ವಾಸುದೇವಯ್ಯ ಹೊರಗಡೆಯೇ ಇದ್ದರು. +ಅವರಿಗೆ ಎಲ್ಲಕ್ಕಿಂತ ಬೀಗರು, ಅಳಿಯ ಬರುವುದು ಮುಖ್ಯವಾಗಿತ್ತು. +ಈಗ ಅವರುಗಳೇ ಬರಲಿಲ್ಲವೆಂದರೆ ಬೇರೆಯವರಿಗೆ ಹೇಗೆ ಮುಖ ತೋರಿಸುವುದು? +"ಎಲ್ಲಾ ಸಿಕ್ಕಿದ್ರಾ ?" ಆತುರದಿಂದ ಪ್ರಶ್ನಿಸಿದರು. +"ಕೆಲವರು ಸಿಕ್ಕಿದರು ಕೆಲವರು ಸಿಗ್ಲಿಲ್ಲ. +ಅವ್ರು ಬರೋ ನಿರೀಕ್ಷೆಯೇನು ಇಟ್ಟುಕೊಳ್ಳೋದ್ಬೇಡ. +ಮೂರ್ತಿ ಕೂಡ ಇಲ್ಲೇ ಇದ್ದಾರೆ. +ಈಗಾಗ್ಲೇ ಸಾಕಷ್ಟು ಅವಮಾನಿತರಾಗಿದ್ದೀವಿ. +ನೋಡಿ. . . ನೋಡಿ. . . ಇಂಥ ಜನರ ಸಂಬಂಧ ಮಾಡಿದಂಗಾಯ್ತು" ಅಸಹನೆಯನ್ನು ಕಕ್ಕಿದ. +"ಏನು ಬೇಡ" ವೆಂದ ಮೂರ್ತಿ ಅವನ ದೃಷ್ಟಿಯಲ್ಲಿ ಅಂದು ಆದರ್ಶ ಪುರುಷನಾಗಿದ್ದ. +ಇಂದು ತೀರಾ ಅವಿವೇಕಿಯಾಗಿ ಕಂಡಿದ್ದ. +ಚಾರುಲತ ತನ್ನ ಪಾಡಿಗೆ ತಾನು ರೂಮಿಗೆ ಹೋದಳು. +ಮೂರ್ತಿ ಬೇರೆಯವರ ದೃಷ್ಟಿಯಲ್ಲಿ ತೀರಾ ಚಿಕ್ಕವನಾಗುವುದು ಅವಳಿಗೆ ಕಷ್ಟವೆನಿಸಿತು. +ಅತ್ತು ಸಮಾಧಾನ ಮಾಡಿಕೊಂಡಳು. +ಮದುವೆಗೆ ಮುನ್ನ ಹಲವು ಸಲ ಮಾತುಕತೆಯಲ್ಲಿ ಮೂರ್ತಿ ತೀರಾ ಒಳ್ಳೆಯವನಾಗಿ ಕಂಡ. +ಅವಳಿಗಾಗಿಯೇ ಹುಟ್ಟಿದ್ದು, ಮುಂದೆ ಅವಳಿಗಾಗಿಯೇ ಬದುಕುವುದು ಎನ್ನುವ ಭರವಸೆ ಅವನ ದನಿಯಲ್ಲಿತ್ತು. +ಆಗ ಅವಳು ವಿಹರಿಸಿದ್ದು ಆಕಾಶದಲ್ಲಿ. +ರೂಮಿನೊಳಕ್ಕೆ ಬಂದ ವಾಸುದೇವಯ್ಯ ಮಗಳ ಬಳಿ ಕೂತರು. +"ಈಗೇನು ಮಾಡೋದು ?" ಅವರ ಸ್ವರ ಒದ್ದೆಯಾಗಿತ್ತು. +ಬಹಳ ಬೇಗ ಚೇತರಿಸಿಕೊಂಡ ಚಾರುಲತ “ಏನಿದೆ ಮಾಡೋಕೆ ? +ಬಹುಶಃ ಅವುಗಳು ನಿಶ್ಚಿತಾರ್ಥಕ್ಕೆ ಬರೋಲ್ಲ. +ಹಾಗಂತ ತೀರಾ ತಲೆ ಕೆಡ್ಸಿಕೊಳ್ಳೋದ್ಬೇಡ. +ನಾವು ಈಗ ಏನು ಮಾಡೋ ಸ್ಥಿತಿಯಲ್ಲಿಲ್ಲ” ಧೈರ್ಯ ಹೇಳಿದಳು. +ಸಧ್ಯಕ್ಕೆ ಅವರು ಕುಸಿಯದಂತೆ ಅಷ್ಟನ್ನ ಮಾಡಬೇಕಿತ್ತು. +"ಮುಂದೆ ನಿನ್ನ ಗತಿ ?"ಎಂದರು ಆತಂಕದಿಂದ. +ಚಾರುಲತಾಗೆ ಷಾಕಾಯಿತು. +ಹೃದಯದ ಬಡಿತವೇರಿ ಎರಡೇ ಕ್ಷಣದಲ್ಲಿ ಬೆವತುಬಿಟ್ಟಳು. +ಪ್ರಯಾಸದಿಂದ ತುಸು ಚೇತರಿಸಿಕೊಂಡಳು. +"ಏನು ಆಗೋಲ್ಲ ! +ಅವರದು ಹುಸಿ ಬೆದರಿಕೆ. +ವಿವಾಹ ಮುಗ್ದ ಮೇಲೆ ಸ್ವಲ್ಪ ದಿನ ಸಂಬಂಧಗಳು ಬಿಗಿಯಾಗಿರುತ್ತೆ. +ಆಮೇಲೆ ತಾನಾಗಿ ಸರ್ಯೋಗುತ್ತೆ?" +ಆಶ್ವಾಸನೆ ನೀಡಿದಳು. +ಅವರುಗಳ ವರ್ತನೆ ನೋಡಿದ ಮೇಲೆ ಆ ನಂಬಿಕೆ ಅವಳಿಗೆ ಇರಲಿಲ್ಲ. +"ಇದ್ನ ನಂಬಲಾ ?"ಕೇಳಿದರು ದೀನತೆಯಿಂದ. +"ನಂಬದೇ ಇರೋಕೆ ಏನಿದೆ ? +ತಾನಾಗಿ ಎಲ್ಲಾ ಸರಿ ಹೋಗುತ್ತೆ. +ನೀವು ಧೈರ್ಯವಾಗಿರಿ" ಭರವಸೆಯ ಮಾತುಗಳನ್ನಾಡಿದಳು. +ಇವರುಗಳ ನಿರೀಕ್ಷೆಯಂತೆ ನಿಶ್ಚಿತಾರ್ಥದ ದಿನ ಯಾರು ಬರಲಿಲ್ಲ. +ತೀರಾ ಹತ್ತಿರದಲ್ಲೇ ಇದ್ದ ಲಗ್ನದ ಫಿಕ್ಸ್‌ ಮಾಡಿದರು. +ಸರಳವಾಗಿ ಒಂದು ಆಡಿಟೋರಿಯಂನಲ್ಲಿ ನಡೆಯಬೇಕೆಂದು ಡಾ|| ನವೀನ್‌ ಗಲಾಟೆ ಮಾಡಿದ. +ಸಧ್ಯಕ್ಕೆ ಟೆನ್‌ಷನ್‌ನಿಂದ ಪಾರಾಗಲು ವಿವಾಹ ಮುಗಿಯಬೇಕಿತ್ತು. +ಹತ್ತು ಸಲವಲ್ಲ ನೂರು ಸಲವಾದರೂ ಅತ್ತೆಯ ಮನೆಗೆ ಫೋನ್‌ ಮಾಡಿದಳು ಚಾರುಲತ. +ಇವಳ ದನಿ ಕೇಳಿದ ಕೂಡಲೇ "ಹಲೋ" ಎಂದವರು ರಾಂಗ್‌ ನಂಬರ್‌ ಎಂದು ಇಡುತ್ತಿದ್ದರು. +ಅಪ್ಪ, ಮಗಳು, ಅಣ್ಣ, ತಂಗಿ ಒಂದೆರಡು ಸಲ ಹೋಗಿ ಸಾಂತ್ವನಿಸುವ ಪ್ರಯತ್ನ ಮಾಡಿದರು. +"ಯಾಕೆ, ನಮ್ಮ ಸಮಯನ ಹಾಳು ಮಾಡ್ತೀರಾ ?"ಯುಗಂಧರ್‌ ಕೇಳಿದಾಗ ವಾಸುದೇವಯ್ಯ "ದಯವಿಟ್ಟು ಕ್ಷಮಿಸು . . " ಎಂದು ಎದ್ದು ಬಂದಿದ್ದರು. +ಆ ಕ್ಷಣ ಇನ್ನ ಆ ಮನೆಯ ಕಡೆ ತಲೆ ಹಾಕಬಾರದೆಂದು ನಿರ್ಧರಿಸಿ ಕೊಂಡರಷ್ಟೆ. +ಆದರೆ ಮಗಳು ನೆನಪಾದ ಕೂಡಲೇ ಪಾತಾಳಕ್ಕೆ ಇಳಿದು ಹೋದರು. +ಅಂತು ಅವರುಗಳು ಬರದಂತೆಯೇ ಮದುವೆ ಆಯಿತು. +ಮೇಲ್ಮುಖವಾಗಿ ಉತ್ಸಾಹದಿಂದ ಚಾರುಲತ ಭಾಗವಹಿಸಿದರೂ ಅವಳ ಮನ ಮೂರ್ತಿಗಾಗಿ ತವಕಿಸುತ್ತಿತ್ತು. +ಅವನ ಮಟ್ಟಿಗೆ ಇದೊಂದು ದೊಡ್ಡ ಅಪರಾಧ ಕ್ಷಮಿಸಲಾರ! +ವರಪೂಜೆಯ ದಿನ ಮೂರ್ತಿ ತಂದೆಯ ಅಭಿಪ್ರಾಯ ಕೇಳಲು ಬಂದ "ಡಾ||ನವೀನ್‌ ಲಗ್ನಪತ್ರಿಕೆ ಹಿಡಿದುಕೊಂಡು ಬಂದು ಬಹಳ ರಿಕ್ಷೆಷ್ಟು ಮಾಡಿಕೊಂಡ. +ಈ ವಿವಾಹ ನಡೆಯದೇ ಹೋದರೆ ನೀರದ ಇಡೀ ಕುಟುಂಬ ಆತ್ಮಹತ್ಯೆ ಮಾಡ್ಕೋತ್ತಾರಂತೆ" ಉಸುರಿದ. +ಅವನ ಕೈ ಹಿಡಿದು ದರದರ ಎಳೆದೊಯ್ದರು ಪೂಜಾಳ ರೂಮಿಗೆ "ನೋಡು,ಅವ್ಳುಗಳು ಆತ್ಮಹತ್ಯೆ ಮಾಡ್ಕೋತಾರೆ. +ಇದ್ನ ನಾವು ನಂಬಿ ಬಿಡ್ಬೇಕು. +ಇಲ್ಲಿ ನೋಡು, ನಿನ್ತಂಗಿ ಸ್ಥಿತಿ, ಸಮಯಕ್ಕೆ ಡಾಕ್ಟ್ರು ಬರದಿದ್ದರೇ ಪೂಜಾನ ಮರ್ತು ಬಿಡ್ಬೇಕಿತ್ತು. +ಇದ್ನ ಯಾರ್ಲೇ ಹೇಳಿ ಕೊಳ್ಳೋಣ" ದಬ ದಬ ಹುಚ್ಚಿಡಿದವರಂತೆ ತಲೆ ಚಚ್ಚಿಕೊಂಡರು. +ನಿದ್ದೆಯ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದ ಮಗಳನ್ನ ಉಳಿಸಿಕೊಳ್ಳಲು ನಾನಾವಸ್ಥೆ ಪಟ್ಟಿದ್ದರು. +ಇಂದೇ ಡಿಸ್ಬಾರ್ಜ್‌ ಮಾಡಿಸಿ ಅವಳನ್ನ ಮನೆಗೆ ಕರೆತಂದಿದ್ದು. +ಅವಳಿಗಿನ್ನು ನಿದ್ದೆಯ ಮಂಪರು. +ತಂದೆಯ ಕೈಗಳನ್ನ ಹಿಡಿದುಕೊಂಡ ಮೂರ್ತಿ ಹೊರಗೆ ಕರೆದೊಯ್ದ. +ಅವರು ಇಷ್ಟು ದಿಕ್ಕೆಟ್ಟಿದ್ದನ್ನ ಅವನೆಂದು ನೋಡಿರಲಿಲ್ಲ. +"ಏನು ಅನಾಹುತವಾಗ್ಲಿಲ್ವಲ್ಲ, ಸಮಾಧಾನ ಮಾಡ್ಕೊಳ್ಳಿ" ಕುಸಿದು ಕೂತ. +"ನಮ್ಮ ಮನೆ ನೆಮ್ದೀ ಹಾಳು ಮಾಡಿಬಿಟ್ಟರು. +ಇವ್ಳು ಪಟ್ಟು ಹಿಡಿದಿದ್ರೆ. . . . ನವೀನ್‌ ಯಾಕೆ ನಿರಾಕರಿಸುತ್ತಿದ್ದ ? +ನಿರಾಕರಿಸೋಂಥ ಹುಡ್ಗೀನ ನಮ್ಮ ಪೂಜಾ" ಬಂದ ಅವನ ತಾಯಿ ಅತ್ತುಕೊಂಡು ಕೂತರು. +ಸಂತೈಯಿಸಲಾರದೇ, ಸಮಾಧಾನಿಸಲಾರದೆ ಹೋದ. +ಈಗ ಚಾರುಲತ ದೊಡ್ಡ ತಪ್ಪಿತಸ್ಥಳಾಗಿ ಕಂಡಳು. +ಖಂಡಿತ ಅವಳು ಪಟ್ಟು ಹಿಡಿದಿದ್ದರೇ ನವೀನ್‌, ನೀರದಾನ ಮದುವೆಯಾಗುತ್ತಿರಲಿಲ್ಲ. +ಇದು ನೂರಕ್ಕೆ ನೂರರಷ್ಟು ಸತ್ಯವಾಗಿ ಕಂಡಾಗ, ಅವನ ಮೈ ಬೆಂಕಿಯಾಯಿತು. +ಮುಂದೆ ಅವಳೊಂದಿಗಿನ ಬದುಕು ಬೇಡವೇ ಬೇಡವೆಂಬ ನಿರ್ಧಾರಕ್ಕೆ ಬಂದ. +"ಹಾಳಾಗ್ಲಿ ಬಿಡೀ, ಅವ್ನು ಯಾವ ದೊಡ್ಡ ಮನುಷ್ಯಾಂತ ಕಾಲು ಕಟ್ಟಿಕೊಂಡು ಕನ್ಯೆನ ಕೊಡೋದು. +ಪೂಜಾ ಈ ಅಪಾಯದಿಂದ ಪಾರಾದಳಲ್ಲ ಸ್ವಲ್ಪ ಸುಧಾರಿಸಿ ಕೊಳ್ಳಿ. +ಒಳ್ಳೆ ಕಡೆ ಹುಡ್ಕೀ ಮಾಡೋಣ" ಎಂದವ ಮುಖ ತೊಳೆಯಲು ಬಾತ್‌ರೂಮಿಗೆ ಹೋದ. +ಬೆಡ್‌ರೂಂನ ಫ್ರೇಮ್‌ನಲ್ಲಿದ್ದ ಚಾರುಲತ ಫೋಟೋ ಹರಿದು ಕಸದ ಬುಟ್ಟಿಗೆ ಹಾಕಿದ. +ಅವಳ ನೆನಪು ಕೂಡ ಬೇಡವೆನಿಸಿತು. +ಅವಳ ನೋಟ, ಮಾತು,ನಡತೆಯನ್ನು ತುಂಬ ಮೆಚ್ಚುತ್ತಿದ್ದ ಮೂರ್ತಿಗೆ ಈಗ ಪ್ರತಿಯೊಂದರಲ್ಲು ತಪ್ಪುಕಂಡಿತು. +ಊಟಕ್ಕೆ ಕೂತಾಗ ಕೂಡ ಅವನ ಮುಖದ ಗಂಟು ಸಡಿಲವಾಗಲಿಲ್ಲ. +ಬಡಿಸುತ್ತ ಅವನ ತಾಯಿ "ಈಗೇನ್ಮಾಡೋದು ? +ಇಲ್ಲಿಗೂ ಬಂದು ಕರೆದ್ರು. +ಈಗಾಗ್ಲೇ ವಿಷ್ಯ ಡಣಾಡಂಗೂರವಾಗ್ಟಿಟ್ಟಿದೆ. +ನಾವಾಗಿ ಹೆಣ್ಣು ಕೊಡೋಕೆ ಹೋದ್ವಿ, ಅವ್ರಿಗೆ ಇಷ್ಟವಾಗ್ಲಿಲ್ಲಾಂತ ಇನ್ವಿಟೇಷನ್‌ ಹಂಚಿದ ಕಡೆಯಲ್ಲೆಲ್ಲ ಹೇಳ್ಕೊಂಡ್‌ ಬಂದಿದ್ದಾರೆ. +ಯಾವ ಮುಖ ಇಟ್ಕಂಡ್‌ ಹೋಗೋಣ? "ಕಣ್ಣೀರಿಟ್ಟರು. +“ಪ್ಲೀಸ್‌, ನೀನು ಅಳ್ಬೇಡಮ್ಮ ಇನ್ನ ನಾವ್ಯಾಕೆ ಆ ಮದ್ದೆಗೆ ಹೋಗೋಣ? +ಇದರೊಂದಿಗೆ ಅವ್ಳ ಜೊತೆಗಿನ ಸಂಬಂಧ ತೊಡೆದು ಹೋಯ್ತು. +ನಿಶ್ಚಿಂತೆಯಾಗಿಬಡು. ನಂಗೆ ಪೂಜಾ ಚೇತರಿಸಿಕೊಂಡರೇ ಸಾಕು" ಎಂದ ಉಪ್ಪಿನಕಾಯಿಯನ್ನು ತಟ್ಟೆಯ ಅಂಚಿಗೆ ದಬ್ಬುತ್ತ. +ಆಕೆ ಸುಮ್ಮನಾದರು. +ಅಪ್ಪ, ಮಗ ಊಟ ಮಾಡಿದ್ದು ಅಷ್ಟಕಷ್ಟೆ. +ಸಾವು ಬದುಕಿನ ಹೋರಾಟದಿಂದ ಹೊರ ಬಿದ್ದ ಪೂಜಾ ಸರಿಯಾಗಿ ಚೀತರಿಸಿ ಕೊಳ್ಳಲು ಇನ್ನ ಕೆಲವು ದಿನ ಬೇಕಿತ್ತು. +ಈಗಲು ಅವಳು ತೆಗೆದು ಕೊಳ್ಳುತ್ತಿದ್ದುದು ಲಿಕ್ವಿಡ್‌ಆಹಾರವೇ. +ಖಾರ, ಎಣ್ಣೆಯ ತಿಂಡಿಗಳನ್ನ ಅರಗಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ ಅವಳ ಜಠರ. +ರೂಮಿಗೆ ಬಂದವನು ಹಾಸಿಗೆಯ ಮೇಲೆ ಬಿದ್ದುಕೊಂಡ ಮೂರ್ತಿ. +ಪೂಜಾ ಸತ್ತಿದ್ದರೇ, ಆ ಪ್ರಶ್ನೆಯೇ ಅವನನ್ನು ಎತ್ತಿ ಕುಕ್ಕಿತು. +ಆ ಅಪರಾಧದಿಂದ ಅವನಿಗೆ ವಿಮುಕ್ತಿ ಇರಲಿಲ್ಲ. +ಅಲ್ಲಿ ವರಪೂಜೆಯ ಸಂಭ್ರಮ. +ಇಲ್ಲಿ ಇವರ ಮನೆಯಲ್ಲಿ ಕತ್ತಲು ಮುಸುಕಿದಂತಾಗಿತ್ತು. +ಮನೆಯಿಂದ ಒಬ್ಬರು ಹೊರ ಬರಲಿಲ್ಲ. +ಒಬ್ಬರ ಮುಖವನ್ನ ಮತ್ತೊಬ್ಬರು ನೋಡಲು ಹಿಂಜರಿದರು. +ಪೂಜಾಳಂತು ಮೇಲಕ್ಕೇಳಲಿಲ್ಲ. +ಮುಂದೇನು ? +ಈ ಪ್ರಶ್ನೆ ಕಾಡಿದ್ದು ಕೆಲವರನ್ನು. +ಆದರೆ ಮೂರ್ತಿ ಇದ್ದ ಆವೇಶದಲ್ಲಿ ಚಾರುಲತಳೊಂದಿಗಿನ ಸಂಬಂಧ ಮುರಿದು ಕೊಳ್ಳಲು ಸಿದ್ಧವಿದ್ದ. +ಯಾರ ತಪ್ಪಿಗೆ ಯಾರಿಗೆ ಶಿಕ್ಷೆ ? +ಮರುದಿನ ಬೆಳಿಗ್ಗೆ ಎದ್ದವನೇ ಹೊರಟು ನಿಂತ. +"ಅಮೃ ಊರಿಗೆ ಹೋಗ್ತೀನಿ. +ಸುಮ್ಮೇ ಯಾಕೆ ಕಾಲೇಜ್‌ನ ಮಿಸ್‌ಮಾಡ್ಕೋಬೇಕು" ಎಂದ. +ಕಾಫಿಯ ಲೋಟ ಮಗನ ಕೈಗೆ ಕೊಟ್ಟು "ಬೇಡ ಕಣೋ, ನೂರು ಪ್ರಶ್ನೆಗೆ ಸಮಾಧಾನ ಹೇಳ್ಬೇಕಾಗುತ್ತೆ. +ನಿನ್ನ ಕೊಲೀಗ್ಸ್‌ರಲ್ಲಿ ಕೆಲವರಿಗಾದ್ರೂ ನವೀನ್‌ ವಿವಾಹದ ಇನ್ವಿಟೇಷನ್‌ ಕೊಟ್ಟಿರುತ್ತಾನೆ. +ಇಂದು ಹೋದರೇ, ಅವ್ರ ಕಣ್ಣಲ್ಲಿನ ಪ್ರಶ್ನೆ ನಿನ್ನ ಕಾಡುತ್ತೆ. +ಸತ್ಯ ಏನೇ ಇರಲೀ, ಅವುಗಳಿಗೆ ತೋಚಿದಂತೆ ಮಾತಾಡ್ಕೋತಾರೆ. +ನೀನು ಅಪರಾಧಿ ಆಗ್ಬಿಡ್ತೀಯ" ಮುಂದಿನ ಚಿತ್ರವನ್ನ ಮಗನ ಮುಂದೆ ಬಿಡಿಸಿಟ್ಟರು. +ಛೆ. . . . . ಎನಿಸಿತು. ಕೈಯಲ್ಲಿನ ಬ್ಯಾಗ್‌ನ ರೂಮಿಗೆ ತಂದು ಎಸೆದ. +ಕೂದಲಲ್ಲಿ ಕೈ ಹಾಕಿ ಕಿತ್ತ. +ಎದ್ದು ಪೂಜಾಳ ರೂಮಿಗೆ ಬಂದ. +ಹತ್ತಿಯಂತೆ ಬಿಳಿಚಿಕೊಂಡು ಹಾಸಿಗೆಗೆ ಅಂಟಿಕೊಂಡು ಮಲಗಿದ್ದ ಅವಳನ್ನು ನೋಡಿ ಅವನ ಹೃದಯ ಕಿತ್ತುಬಾಯಿಗೆ ಬಂದಂತಾಯಿತು. +"ನವೀನ್‌, ನೀನು ಇದೇ ಶಿಕ್ಷೆ ಅನುಭವಿಸಬೇಕು" ಹಲ್ಲುಗಳನ್ನ ಕಡಿದ. +ಬಂದ ಯುಗಂಧರ್‌ ಮಗನ ಪಕ್ಕ ನಿಂತರು. +ಅವರ ಕಣ್ಣಲ್ಲಿ ಕಂಬನಿ ಇತ್ತು. +ಅಕ್ಕರೆಯ ಗೊಂಬೆಯಾಗಿ ಮಗಳನ್ನು ಬೆಳೆಸಿದ್ದರು. +ಮಗನ ಭುಜದ ಮೇಲೆ ಕೈಯಿಟ್ಟರು. +ಇಬ್ಬರು ರೂಮಿನಿಂದ ಹೊರಗೆ ಬಂದಾಗ ಹನಿಗಣ್ಣಾಗಿದ್ದರು. +"ಪೂಜಾ, ಚೇತರ್ಸಿಕೊಳ್ಳೋಕೆ ಕೆಲವು ತಿಂಗಳುಗಳೇ ಆಗುತ್ತೆ" ಎಂದು ಗದ್ಗದಿತರಾದಾಗ ತಂದೆಯ ಕೈ ಹಿಡಿದುಕೊಂಡ ಮೂರ್ತಿ “ನಾನು ಅವ್ಳುನ ಅಲ್ಲಿಗೆ ಕರ್ಕೊಂಡ್ಹೋಗ್ರೀನಿ. +ಸ್ಥಳ ಬದಲಾವಣೆಯಿಂದ ಬೇಗ ಚೇತರಿಸ್ಕೋತಾಳೆ" ಅಂದ. +ಯುಗಂಧರ್‌ ಮೌನವಹಿಸಿದರು. +ಮೂರ್ತಿ ಬಂದು ರೂಮಿನಲ್ಲಿ ಕೂತ. +ಅವನ ಮುಂದೆ ಲಗ್ನಪತ್ರಿಕೆ ಇತ್ತು. +ಒಂಬತ್ತು ಗಂಟೆಗೆ ಹತ್ತು ನಿಮಿಷವಿತ್ತು. +ಅಣ್ಣನ ವಿವಾಹದ ಸಂಭ್ರಮದಲ್ಲಿ ಭಾಗವಹಿಸುವ ಚಾರುಲತಳನ್ನು ನೆನಸಿಕೊಂಡು ಅವನೆದೆಯ ರಕ್ತ ಕುದಿಯಿತು. +ಇನ್ವಿಟೇಷನ್‌ನ ಚೂರು ಚೂರು ಮಾಡಿ ಕಸದ ಬುಟ್ಟಿಗೆ ಹಾಕಿದ. +ಮಡದಿ ತೀರಾ ನಿರ್ದಯಿಯಾಗಿ ಕಂಡಳು. +ಇಲ್ಲಿನ ನೋವು, ಕಷ್ಟಕ್ಕೆ ಅವಳು ಮಿಡಿಯಬೇಕಿತ್ತು. +ಆ ಇಚ್ಛೆ ಅವಳಿಗಿಲ್ಲ. +ಪಾಷಾಣ ಹೃದಯದ ಹೆಣ್ಣು ! +ಹಲ್ಕುಡಿ ಕಚ್ಚಿಡಿದ. +ಅಲ್ಲಿ ಲಡ್ಡು, ಚಿರೋಟಿಯ ಊಟವಾದರೆ, ಇಲ್ಲಿ ಬರೀ ತಿಳಿಸಾರು, ಪಲ್ಯ,ಒಂದನ್ನ ಮಾಡಿಟ್ಟಿದ್ದರು. +ಈ ದಿನ ಇಡೀ ಕುಟುಂಬಕ್ಕೆ ಬಹಳ ದೀರ್ಥವಾಗಿ ಕಂಡಿತು. +ಆದರೆ ಸಂಜೆ ಮುಂದು ಮೂರ್ತಿಯ ಕಾಲೇಜ್‌ ಸಹಪಾಠಿ ದಿನಕರ್‌ ಬಂದಾಗ ಅವನು ಹೊರಗಿನ ವಾರಂಡದಲ್ಲಿ ಇದ್ದಿದ್ದು ದೊಡ್ಡ ತಪ್ಪಾಗಿ ಹೋಯಿತು. +"ಏನೋ ಮೂರ್ತಿ ಮದುವೆ ಮನೆಯಲ್ಲಿ ಕಾಣಲೇ ಇಲ್ಲ. +ನಾನೇ ಎರಡು ಸಲ ಚಾರುಲತನ ಕೇಳ್ದೇ. +ಸರ್ಯಾಗಿ ಏನು ಹೇಳ್ಲಿಲ್ಲ. +ಏನಾದ್ರೂ ಮನಸ್ತಾಪನೇನೋ ?'' ಫ್ರಾಂಕಾಗಿ ಕೇಳಿಯೇ ಬಿಟ್ಟ. +"ಅಂಥದ್ದೇನಿಲ್ಲ !" ಎಂದ ಚುಟುಕಾಗಿ. +ಅವನು ಸಾಮಾನ್ಯದ ಪಿಂಡವಲ್ಲ. +ಬೇರೆಯವರ ವೈಯಕ್ತಿಕ ವಿಷಯಗಳಲ್ಲಿ ಅವನದು ವಿಪರೀತ ಕುತೂಹಲ. +ಒಂದಿಷ್ಟು ವಿಷಯ ಹೊರಡಿಸಬೇಕೆಂದೇ ಅಲ್ಲಿಂದ ನೇರವಾಗಿ ತಾಂಬೂಲ ಹಿಡಿದು ಬಂದಿದ್ದ. +"ಸಾಕು ಸುಮ್ಮನಿರೋ ! ಸ್ವಂತ ಭಾವ ಮೈದುನ, ಮಡದಿಯ ಏಕೈಕ ಅಣ್ಣನ ವಿವಾಹದಲ್ಲಿ ನೀನು ಇದ್ದಿಲ್ಲಾಂದರೇ ಅರ್ಥವೇನು ? +ಇದು ಖಂಡಿತ ಸಾಮಾನ್ಯದ ವಿಷ್ಯವಲ್ಲ. +ಎಲ್ಲೋ ಯಡವಟ್ಟು ಮಾಡ್ಕೊಂಡಿದ್ದೀಯಾ !" +ಅವನು ಮಾತಿನಲ್ಲಿ ನಗೆ ಹಾರಿಸಿದಾಗ ಪಟಪಟ ನಾಲ್ಕು ಬಾರಿಸಿ ಬಿಡಬೇಕೆನಿಸಿತು. +ಹಾಗೆಂದು ಮನಸ್ಸಿಗೆ ಬಂದಿದ್ದೆಲ್ಲ ಕಾರ್ಯರೂಪಕ್ಕೆ ತರಲು ಸಾಧ್ಯವೇ ? +"ಅಂಥದೇನಿಲ್ಲ ಕಣೋ" ಸಿಡುಕಿದ ಮೂರ್ತಿ. +"ಬುರುಡೆ ಬಿಡ್ಬೇಡ ! +ನೀನು ಹೋಗ್ಲಿಲ್ಲಾಂದರೇ ಏನು ಅರ್ಥ ಏನೇಇರ್ಲಿ .. ಇಂಥ ಸಂದರ್ಭಗಳಲ್ಲಿ ಅದ್ನೆಲ್ಲ ಮರ್ತು ಹೋಗಿ ಭಾಗವಹಿಸ್ಬೇಕು. + ಜನ ಏನಂದ್ಕೋತಾರೆ. ನಾವು ಅವ್ರನ್ನ ಗಮನದಲ್ಲಿ ಇಟ್ಕೊಂಡ್‌ ಬದ್ಕಬೇಕು. +ಬರ್ತೀನಪ್ಪ, ನಂಗೇನೋ ಸರಿ ಕಾಣ್ಣಿಲ್ಲ. +ನಿಮ್ಮಪ್ಪ, ಅಮನ್ಯಾದ್ರೂ ನಿಂಗೆ ಬುದ್ಧಿ ಹೇಳ್ಬೇಕಿತ್ತು" ಅಂಥದೊಂದು ಮಾತನ್ನ ಸೇರಿಸಿಯೇ ಅವನು ಹೋಗಿದ್ದು. +ಈ ಮಾತು ಯುಗಂಧರ್‌ ಕಿವಿಯ ಮೇಲೆ ಬಿತ್ತು. +ಮೊದಲೇ ಸುಪೀರಿಯಾರಿಟಿ ಕಾಂಪ್ಲೆಕ್ಸ್‌ ಇದ್ದ ಮನುಷ್ಯ ಒಳಗೊಳಗೆ ಒದ್ದಾಡಿಬಿಟ್ಟ. +ಎರಡು ದಿನದಿಂದ ಫೋನ್‌ ಡಿಸ್‌ಕನೆಕ್ಟ್‌ ಮಾಡಿದವರು ಇಂದು ಸಂಜೆಯನಂತರ ತಾವೇ ಕನೆಕ್ಟ್‌ ಮಾಡಿದರು. +ಎಲ್ಲಾ ಮುಗಿದಿತ್ತು. +ಎರಡು ಮನೆಗಳ ನಡುವಿನ ಸಂಬಂಧದ ಕೊಂಡಿ ಕಳಚಿಬಿತ್ತು. +ಬೆಸೆಯುವುದು ಬಹಳ ಕಷ್ಟ. +ಎರಡು ಕಡೆಯವರು ದೃಢವಾಗಿ ನಿಂತ ಹಿನ್ನೆಲೆಯಲ್ಲಿ ದೊಡ್ಡ ಕಂದಕವೇರ್ಪಟ್ಟಿತ್ತು. +ಒಮ್ಮೆ ಏರ್ಪಟ್ಟ ಕಂದಕ ಮುಚ್ಚಲು ಸಾಧ್ಯವೇ ? +ಈ ಮದುವೆ ಮುಗಿದು ನಾಲ್ಕು ದಿನವಾಗಿತ್ತು. +ಎರಡು ದಿನದ ಮಟ್ಟಿಗೆ ದಂಪತಿಗಳು ಹೋಗಿ ಸುತ್ತಾಡಿ ಬಂದರು. +ಆಗಾಗ ಬಂದು ಹೋಗುತ್ತಿದ್ದ ನೀರದ ಇಲ್ಲಿ ಬಂದು ಉಳಿದಿದ್ದು ಮಾತ್ರ ಸಣ್ಣ ಬದಲಾವಣೆ ಅಷ್ಟೆ. +ತಂದೆ ದೇವರ ಮನೆಯಿಂದ ಹೊರ ಬರುವುದನ್ನೇ ಕಾಯುತ್ತಿದ್ದ ಚಾರುಲತ “ಅಪ್ಪ, ಆ ಮನೆಗೆ ಹೋಗ್ಬರ್ತಿನಿ" ಎಂದಳು ನೆರಿಗೆಗಳನ್ನ ಸರಿಪಡಿಸಿಕೊಳ್ಳುತ್ತ. +ವಾಸುದೇವಯ್ಯ ನೆಟ್ಟ ನೋಟದಿಂದ ಮಗಳನ್ನು ನೋಡಿದರು. +ಮದುವೆಯ ದಿನ ಮೂರ್ತಿ ಇಲ್ಲಿಯೇ ಇದ್ದನೆಂದು ತಿಳಿದಿತ್ತು. +ಇಡೀ ಕುಟುಂಬದಿಂದ ಇವರು ಬಹಿಷೃತರಾಗಿದ್ದರು. +"ನಂಗೆ ಏನು ಹೇಳ್ಬೇಕೋ ತೋಚ್ತಾ ಇಲ್ಲ. +ಅವ್ಳು ಅಂದು ಆಡಿಅವಮಾನಿಸ್ಟಹುದು ನಂಗ್ಯಾಕೋ ಭಯ ಕಣೇ, ಚಾರು. +ಕೈಯಾರ ನಿನ್ನ ಭವಿಷ್ಯನ ಬಲಿ ಕೊಟ್ಟು ಬಿಟ್ಟೆವೇನೋ" ಕಣ್ಣೀರಿಟ್ಟರು. +"ಅಂಥದೇನಿಲ್ಲ, ನೀವು ಮಾತ್ರ ನವೀನ್‌ ಕೈಯಲ್ಲಿ ಬಲವಂತದಿಂದ ತಾಳಿ ಕಟ್ಟಿಸೋಕೆ ಆಗ್ತಾ ಇತ್ತಾ ? +ಅಕಸ್ಮಾತ್‌ ಕಟ್ಟಿಸಿದ್ರೂ ಮುಂದೆ ಅವುಗಳು ಸುಖವಾಗಿ ಇರ್ತಾ ಇದ್ರಾ ? +ಆಗ ನಾನಾ ಸಮಸ್ಯೆಗಳು ಷುರುವಾಗ್ತಾ ಇತ್ತು. +ಈ ತರಹ ನಡೆದಿದ್ದೇ, ಸರಿ. +ಪೂಜಾಗೆ ಅನುರೂಪನಾದ ಗಂಡೇ ಸಿಕ್ತಾನೆ" ಸಮಾಧಾನದ ಮಾತುಗಳನ್ನಾಡಿದಳು. +"ಯಾಕೋ, ಏನೋ ವಾಸುದೇವಯ್ಯ ಮಗಳೊಬ್ಬಳನ್ನೆ ಕಳಿಸೋಕೆ ಇಷ್ಟಪಡದೇ ತಾವು ಹೊರಟರು. +ಲಾಡು ಜೊತೆಗೆ ಮದುವೆಯ ತಿಂಡಿಗಳು, ಉಡುಗೊರೆ ಎಲ್ಲಾ ತೆಗೆದುಕೊಂಡು ಆಟೋದಲ್ಲಿ ಹೊರಟರು. +ಅವರ ಮನೆಯ ಮುಂದೆ ಆಟೋ ನಿಂತಾಗ ಇಬ್ಬರ ಎದೆಯ ಬಡಿತಗಳು ಹತ್ತು ಪಟ್ಟು ಹೆಚ್ಚಾಯಿತು. +ಯುದ್ಧದ ಅಂಚಿನಲ್ಲಿ ನಿಂತ ಸೈನಿಕರ ಸ್ಥಿತಿ ಅವರದಾಗಿತ್ತು. +"ಅಪ್ಪ, ಅವ್ರು ಏನಾದ್ರೂ ಅಂದ್ಕೊಳ್ಳಿ, ನೀವು ಸುಮ್ನೇ ಇದ್ಬಿಡಿ. +ಇಲ್ಲ,ನೀವು ಹಾಗೆಯೇ ಹೊರಟುಬಿಡಿ" ಎಂದಳು ಆವೇಗದಿಂದ. +ಅವಳೆದೆ ಹಾರುತ್ತಿತ್ತು. ಮುಖದ ಮುಂದೆ ಬಾಗಿಲು ಹಾಕಿದರೂ ಹೆಚ್ಚಲ್ಲ. +ಮುಚ್ಚಿದ್ದ ಬಾಗಿಲನ್ನ ಕಾಲಿಂಗ್‌ ಬೆಲ್‌ ಒತ್ತಿದಾಗ ತೆರೆದಿದ್ದು ಮೃಣಾಲಿನಿಯವರೇ. +"ಯಾರು. . . "ಅಂದವರು ಮಾತು ನಿಲ್ಲಿಸಿ ಒಳಗೆ ಹೋಗಿ ಬಿಟ್ಟರು. +ಪೂಜಾಳಿಗೆ ಒಂದೇ ಸಮ ನಾಲ್ಕು ದಿನದಿಂದ ಬರುತ್ತಿದ್ದ ಜ್ವರ,ಅವರುಗಳ ಕೋಪ, ಅಸಹನೆಯ ಬೆಂಕಿಯ ಮೇಲೆ ತುಪ್ಪ ಸುರಿದು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಿತ್ತು. +ತಂದೆ, ಮಗಳು ಒಳಗೆ ಅಡಿಯಿಟ್ಟಾಗ "ಯಾರೋ. . . . ಬಂದಿದ್ದಾರೆ ನೋಡಿ?" +ಕೂಗಿ ಹೇಳಿದರು ಮೂರ್ತಿಯ ತಾಯಿ. +ತಮ್ಮ ರೂಮಿನಿಂದ ಹೊರಗೆ ಬಂದ ಯುಗಂಧರ್‌ ನೋಡ ಬಾರದವರನ್ನ ನೋಡಿದಂತೆ ಮುಖ ಮಾಡಿದರು. +ತಟ್ಟನೇ ಕೋಣೆಯೊಳಕ್ಕೆ ಹೋದವರು ಹಿಂದಕ್ಕೆ ಬಂದು ಉರಿಯುವ ಕಣ್ಣುಗಳಿಂದ ನೋಡಿದರು. +"ಸ್ವಲ್ಪ ಬನ್ನಿ. . . "ವಾಸುದೇವಯ್ಯನ ರೆಟ್ಟಿ ಹಿಡಿದು ಪೂಜಾಳ ಕೋಣೆಗೆ ಎಳೆದೊಯ್ದು ನಿಲ್ಲಿಸಿ "ನೋಡಿ, ಇನ್ನ ಸತ್ತಿಲ್ಲ. +ನಮ್ಮ ಎದೆಯಲ್ಲಿ ಬೆಂಕಿ ಉರಿತಾ ಇದೆ. +ದಯವಿಟ್ಟು ಹೊರಟ್ಟೋಗಿ " ಎರಡು ಕೈಗಳನ್ನು ಜೋಡಿಸಿದರು. +ಬಳಲಿ ಬೆಂಡಾಗಿ ಮಲಗಿದ ಪೂಜಾನ ನೋಡಿದ ಅಪ್ಪ, ಮಗಳು ಸ್ತಬ್ಬರಾದರು. +"ನೀವುಗಳು ಯಾರು ನಮ್ಮ ಮನೆ ಬಾಗ್ಲಿಗೆ ಬರ್ಬೇಡಿ. +ಇಲ್ಲಿಗೆ ನಮ್ಮ ನಿಮ್ಮ ಸಂಬಂಧ ಮುಗ್ದೋಯ್ತು"ಎಂದು ಚ್ಚರಿಕೆ ನೀಡಿದಾಗ ವಾಸುದೇವಯ್ಯ ಮಗಳೊಂದಿಗೆ ಹೊರಗೆ ಬಂದರು. +ಅದರಿಗೆ ದಿಕ್ಕು ತೋಚದಂತಾಯಿತು. +ಕೈಕಾಲುಗಳು ಕಂಪಿಸುತ್ತಿತ್ತು. +"ನಮ್ಮ ನಿಮ್ಮ ಸಂಬಂಧ ತೊಡೆದು ಹೋದ್ರೂ ಪರ್ವಾಗಿಲ್ಲ. +ಇದ್ರಲ್ಲಿ ಚಾರುಲತದು ತಪ್ಪಿಲ್ಲ. +ಅವ್ಳಿಗೆ ಶಿಕ್ಷೆ ವಿಧಿಸ್ಟೇಡಿ" ವಿನಂತಿಸಿದರು ನಡುಗುವ ದನಿಯಲ್ಲಿ. +ಯುಗಂಧರ್‌ ಕಣ್ಣುಗಳು ಕೆಂಪಗಾಯಿತು. +"ಮೊದ್ದು ಹೋಗಿ, ನಾನೆಲ್ಲಿ ತಾಳ್ಮೆ ಕಳೆದುಕೊಳ್ಳುತ್ತೀನೋ ಅಂತ ಭಾಸವಾಗ್ತಾ ಇದೆ. +ನಿಮ್ಮಮಗ್ಳು. . . ನಿಮ್ಮ ಹಣೆಬರಹ"ಎಂದವರು ಕೆಲಸದವನನ್ನ ಕೂಗಿ "ಇದನ್ನೆಲ್ಲ ಹೊರ್ಗಡೆ ಇಟ್ಟು, ಇವುಗಳ್ನ ಕಳ್ಸಿ ಬಾಗ್ಲು ಹಾಕ್ಕೊಂಡ್ಬಾ" ಜೋರು ದನಿಯಲ್ಲಿ ಹೇಳಿ ರೂಮಿನೊಳಕ್ಕೆ ಹೋಗಿ ಸದ್ದಾಗುವಂತೆ ಬಾಗಿಲೊಡೆದು ಹೋಗುವಂತೆ ಬಾಗಿಲನ್ನ ದೂಡಿದರು. +ಕೊಂಡೊಯದದ್ದನ್ನ ತಗೊಂಡು ತಂದೆ ಮಗಳು ಹೊರಗೆ ಬಂದರು. +ಒಂಬತ್ತೂವರೆ ತಿಂಗಳ ಹಿಂದೆ ಅಕ್ಕಿ ಚೆಲ್ಲಿ ಸಂಭ್ರಮ ಸಂತೋಷದಿಂದ ಒಳಗಡಿಯಿಟ್ಟ ಸೊಸೆ ಬೇಡವಾಗಿದ್ದಳು. +ಸುಸ್ತಾಗಿ ಬೀಳುವಂತಿದ್ದ ತಂದೆಯ ತೋಳನ್ನ ಹಿಡಿದುಕೊಂಡು "ನೀವು ಇಲ್ಲೇ ಇರೀ, ನಾನ್ಹೋಗಿ ಆಟೋ ತರ್ತಿನಿ"ಅವರತ್ತ ನೋಡಿದಳು. +ತೀರಾ ಗಟ್ಟಿ ಮುಟ್ಟಾಗಿದ್ದ ವ್ಯಕ್ತಿ ತೀರಾ ವೃದ್ಧಾಪ್ಯದ ಅಂಚನ್ನ ತಲುಪಿದಂತೆ ಕಂಗೆಟ್ಟಿದ್ದರು. +"ಬೇಡಮೃ ನಾನು ಬಂದ್ಬಿಡ್ತೀನಿ" ಎಂದರು ಕ್ಷೀಣವಾಗಿ. +ಅವರನ್ನ ನಡೆಸಿಕೊಂಡು ಗೇಟಿನಿಂದ ಹೊರ ಬಂದು ಗೇಟು ಹಾಕಿ ಅಲ್ಲಿಯೇ ನಿಂತಳು. +ಅವಳದೇ ಮನೆ !ಈಗ ದೂಡಲ್ಪಟ್ಟಿದ್ದಳು. +ಅಷ್ಟು ದೂರ ಬಂದವರೇ ವಾಸುದೇವಯ್ಯ ಕುಸಿದಾಗ ಪಕ್ಕಕ್ಕೆ ಕರೆದೊಯ್ತು ಒಂದು ಕಡೆ ಕೂಡಿಸಿ "ಒಂದ್ಮಿಷ. . . . ಬರ್ತೀನಪ್ಪ" ಓಡಿ ಹೋಗಿ ಡಾ||ನವೀನ್‌ ಕೆಲಸ ಮಾಡುತ್ತಿದ್ದ ನರ್ಸಿಂಗ್‌ಹೋಂಗೆ ಫೋನ್‌ ಮಾಡಿ ಎಳೆ ನೀರಿನೊಂದಿಗೆ ಆಟೋದಲ್ಲಿ ಬಂದಳು. +ಸ್ವಲ್ಪ ಎಳೆನೀರು ಕುಡಿದ ಮೇಲೆ ವಾಸುದೇವಯ್ಕ ತುಸು ಮಟ್ಟಿಗೆ ಚೇತರಿಸಿಕೊಂಡರು. +ಆಟೋದಲ್ಲಿ ಕೂಡಿಸಿಕೊಂಡು ಮನೆ ತಲುಪುವ ವೇಳೆಗೆ ಸ್ಕೂಟರ್‌ ಹೊರಗೆ ನಿಲ್ಲಿಸಿಕೊಂಡು ಡಾ||ನವೀನ್‌ ನಿಂತಿದ್ದ ಆತಂಕದಿಂದ. +"ಏನಾಯ್ತು ?'ಆಟೋ ಬಳಿಗೆ ಧಾವಿಸಿದ. +"ಏನಿಲ್ಲ ಒಂದಿಷ್ಟು ಸುಸ್ತಾದ್ರು. +ಸುಮ್ನೇ ಗಾಬ್ರಿಯಿಂದ ಫೋನ್‌ ಮಾಡ್ದೆ"ತಂದೆಯನ್ನ ನಿಧಾನವಾಗಿ ಇಳಿಸಿಕೊಂಡು ಒಳಗೆ ಕರೆದೊಯ್ದಳು. +ಮಲಗಿಸಿದ ಮೇಲೆ ಡಾ|।ನವೀನ್‌ ಪರೀಕ್ಷಿಸಿದ. +ಬರೀ ಷಾಕಾಗಿತ್ತು. +ಏನು ಅನಾಹುತವಾಗದಿದ್ದರೂ ಅನಾಹುತದ ಮುನ್ಸೂಚನೆಯೆನಿಸಿತು. +"ರೆಸ್ಟ್‌ ತಗೊಳ್ಳಿ, ಸಾಕು" ಹೊರಗೆ ಹೋದ ನವೀನ್‌ ಸಪ್ಪಗೆ ಒಂದು ಕಡೆಕೂತುಬಿಟ್ಟ. +ತಂಗಿಯನ್ನ ಪ್ರಶ್ನಿಸಬೇಕೆನಿಸಲಿಲ್ಲ. +ಎಲ್ಲ ತೆರೆದ ಚಿತ್ರದಂತಿತ್ತು. +ಒಂದು ರೀತಿಯಲ್ಲಿ ಮೂರ್ತಿ ಸಂಗಾತಿಗೆ ಬಿಡುಗಡೆ ಘೋಷಿಸಿದ್ದ. +ಮುಂದೇನು? +ಚಾರುಲತಳ ವೈವಾಹಿಕ ಜೀವನಕ್ಕೆ ಬೆಂಕಿ ಇಟ್ಟ ಮೊದಲ ಅಣ್ಣ ತಾನೇ ! +ನೊಂದ, ಮುಷ್ಟಿ ಬಿಗಿ ಹಿಡಿದು ಗಾಳಿಯಲ್ಲಿ ಗುದ್ದಿದ. +ತನಗೇ ಸ್ವತಃ ತಂಗಿಗಿಂತ ನೀರದ ಹೆಚ್ಚಾದಳೇ ?ಹುಚ್ಚು ಹಿಡಿದಂತಾಯಿತು. +"ಏನಾಯ್ತು, ಮಾವನವ್ರಿಗೆ ?" ಬಂದ ನೀರದ ಕೇಳಿದಳು. +"ಏನಾದ್ರೂ ಕೆಲ್ಸವಿದ್ದರೇ ನೋಡ್ನೋಗು" ಎದ್ದು ಹೋದ ಮುಖ ತಿರುಗಿಸಿಕೊಂಡು. +"ಇವಳ್ಳಾಕೆ ತನ್ನ ಬಾಳಿನಲ್ಲಿ ಬಂದಳು ?"ನಾಲ್ಕು ದಿನದ ಹಿಂದೆ ವಿವಾಹವಾದ ಸಂಗಾತಿಯನ್ನು ದೂಷಿಸಿದ. +ಎರಡು ದಿನದಲ್ಲಿ ವಾಸುದೇವಯ್ಯ ಒಂದಿಷ್ಟು ಚೇತರಿಸಿಕೊಂಡಾಗ, ಮಗನನ್ನ ಕರೆಸಿಕೊಂಡರು ರೂಮಿಗೆ. +"ಈಗ ಚಾರುಲತ ವಿಷ್ಯ ಏನ್ಮಾಡೋದು ?" ಪಿಸು ದನಿಯಲ್ಲಿ ಕೇಳಿದಾಗ ನಿಟ್ಟುಸಿರು ದಬ್ಬಿದ "ಒಂದು ಗೊತ್ತಾಗ್ತಾ ಇಲ್ಲ. +ಒಂದು ಹತ್ತು ಸಲ ಅವ್ನ ಕಾಲೇಜಿಗೆ ಫೋನ್‌ ಮಾಡಿರಬೇಕು. +ಮೂರ್ತಿಗೆ ಮಾತಾಡೋಕೆ ಇಷ್ಟವಿಲ್ಲ. +ಬಹುಶಃ ಆವನಾಗಿ ಬಂದು ಚಾರುಲತನ ಸಧ್ಯಕ್ಕೆ ಕರ್ಕೊಂಡ್ಹೋಗೋಲ್ಲ. +ಅವ್ನು ಇರೋ ಸ್ಥಿತಿಯಲ್ಲಿ ನಾವಾಗಿ ಕರ್ಕೊಂಡ್‌ ಹೋದ್ರೂ. . . ಗೆಟ್‌ ಔಟ್‌ ಅನ್ನಬಲ್ಲ. +ಈ ವಿಷ್ಯದಲ್ಲಿ ಕಾನೂನಿನ ಮೊರೆ ಹೋಗ್ಬೇಕು."ತನ್ನ ನಿಸ್ಸಹಾಯಕತೆ ವ್ಯಕ್ತಪಡಿಸಿದ. +"ಸಾಕು ಸುಮ್ಮನಿರು ! +ಕೋರ್ಟು ಮೆಟ್ಟಿಲು ಹತ್ತಿದ್ದೇಲೆ ಮಿಕ್ಕೆಲ್ಲ ಬಾಗಿಲು ಮುಚ್ಚಿದಂಗೆ. +ಎಂಥ ಮಾತು ಆಡ್ತೀಯಾ ? +ಎನು ನಿನ್ನ ಉದ್ದೇಶ ? +ಎಷ್ಟೊಂದು ಚೆನ್ನಾಗಿದ್ದರು, ಗಂಡ ಹೆಂಡ್ತಿ" ವಾಸುದೇವಯ್ಯ ಅತ್ತೇ ಬಿಟ್ಟರು. +ಅವೆಲ್ಲ ಬರೀ ನೆನಪುಗಳೇ ಆಗಿ ಬಿಡುತ್ತವೆಯೇನೋ ಎನ್ನುವ ಭಯ. +ಮೊದಲೇ ನೊಂದ ಅವನಿಗೆ ಮುಖದ ಮೇಲೊಡೆದಂತಾಯಿತು. +"ನೀವೇನು ಹೇಳ್ತಾ ಇದ್ದೀರಾ ?"ಎಂದ ಗಾಬರಿಯಿಂದ. +"ಏನಿದೆ ಹೇಳೋಕೆ ? +ನಿನ್ನಿಂದ್ಲೇ ತಾನೇ, ಇಂಥ ಪರಿಸ್ಥಿತಿ ಉದ್ಭವವಾಗಿದ್ದು"ಆಂದೇ ಬಿಟ್ಟರು. +ಅವರ ವಿವೇಕ ಆ ಕ್ಷಣ ಸತ್ತಿತ್ತು. +ಡಾ|।ನವೀನ್‌ ಕೂತಲ್ಲಿಯೇ ವಿಗ್ರಹವಾದ. +ಇದು ಸತ್ಯವೇ ಅದನ್ನ ಅರಗಿಸಿಕೊಳ್ಳಬೇಕಾದರೇ ಕಷ್ಟವೇ. +ಅವರದು ಮೂರ್ಖತನವಿರಬಹುದು. +ಅಪರಾಧಿಗಳು ಆಗಿರಬಹುದು. +ಆದರೆ ಅದರಲ್ಲಿ ತನ್ನ ಪಾಲು ಕೂಡ ಇದೆಯೆನಿಸಿದಾಗ, ಭೂಮಿಗೆ ಕುಸಿದಂತಾಯಿತು. +ತಾನು ಆತುರಪಟ್ಟು ವಿವಾಹವಾದೆ. +ಪೂಜಾಳ ವಿವಾಹವಾಗುವವರೆಗೆ ಕಾಯಬೇಕಿತ್ತು. +ಅದಕ್ಕೆ ನೀರದ ಆಗಲೀ, ಅವರ ಮನೆಯವವರಾಗಲೀ ಸಿದ್ದರಾಗಿರಲಿಲ್ಲವೆಂದು ಅವನಿಗೆ ಗೊತ್ತು. +ತೆಪ್ಪಗೆದ್ದು ಹೊರಗೆ ಬಂದ. +ಮುಂದಿನ ವರಾಂಡದಲ್ಲಿ ಕೂತು ಪೇಪರ್‌ತಿರುವುತ್ತಿದ್ದ ಚಾರುಲತ ತಲೆಯೆತ್ತಿದಳು. +"ಚಾರು, ನನ್ನಿಂದ ನಿಂಗೆ ಅನ್ಯಾಯವಾಯ್ತು" ಅವಳ ಎರಡು ಕೈಗಳನ್ನ ಹಿಡಿದುಕೊಂಡ. +"ಹಾಗಂತ ಯಾರು ಹೇಳಿದ್ದು ? +ಪರಿಸ್ಥಿತಿ ಹಾಗೇ ನಿರ್ಮಾಣವಾಯ್ತು. +ಪೂಜಾ ನಿನ್ನ ಸ್ನೇಹ, ಆತ್ಮೀಯತೆಯ ನಡತೆಯನ್ನ ತಪ್ಪಾಗಿ ತಿಳ್ದುಕೊಂಡಳಷ್ಟೆ. +ಅದ್ಕೆ ನೀನೇನು ಮಾಡ್ತೀಯಾ ?"ಉದ್ವೇಗ ಗೊಳ್ಳದೇ ಮಾತಾಡಿದಳು. +ಖಂಡಿತ ಅಣ್ಣನನ್ನ ಅಪರಾಧಿಯನ್ನಾಗಿ ಮಾಡಲು ಅವಳ ಮನಸ್ಸು ಒಪ್ಪದು. +"ಮುಂದೇನು ?" ಕೇಳಿದ. +"ನೋಡೋಣ"ಅಂದಳಷ್ಟೆ. +ಆ ಪ್ರಶ್ನೆಯೇ ಅವಳನ್ನ ಹೆದರಿಸುತ್ತಿತ್ತು. +"ನಾಳೆ ಲಾಯರ್‌ನ ಕಂಡು ಬರೋಣ?"ಸೂಚಿಸಿದ. +ಚಾರುಲತ ಬೆಚ್ಚಿಬಿದ್ದಳು. +ಇಷ್ಟು ಸುಲಭವಾಗಿ ಕಾನೂನಿನ ಮೂಲಕ ಪರಿಹಾರಗೊಳ್ಳುವಂತಾಗಿದ್ದರೇ, ವಿಧಿ, ವಿಧಾನ, ಸಮಾರಂಭ, ಹಿರಿಯರು,ನೆಂಟರಿಷ್ಟರು - ಅವರೆಲ್ಲ ಯಾಕೆ ಬೇಕಿದ್ದರು ? +"ಏನಣ್ಣ, ಹೀಗೇ ಮಾತಾಡ್ತೀಯಾ ? +ನಮ್ಮಿಬ್ರ ಮಧ್ಯೆ ಅಂಥ ಜಗಳವೇನಿದೆ? +ಡೈವೋರ್ಸ್‌ಗೆ ಕೆಲವು ಕಾರಣಗಳಾದ್ರೂ ಬೇಕಾಗುತ್ತೆ. +ದಯವಿಟ್ಟು ಕ್ಷಮಿಸು"ಎದ್ದು ಹೋದಳು. +ಯಾಕೋ, ಏನೋ ಪರಕೀಯತೆ ಬಾಧಿಸಿತು ಅವಳನ್ನ. +ಹುಟ್ಟಿ ಇಲ್ಲೇ ಬೆಳೆದಿದ್ದರೂ ವಿವಾಹದ ನಂತರ ಇಲ್ಲಿ ಉಳಿಯುವುದು ಸಮಂಜಸವಾಗಿ ಕಾಣಲಿಲ್ಲ. +ಮದುವೆಯಲ್ಲಿ ಕೇಳಿದವರಿಗೆಲ್ಲ ಉತ್ತರಿಸಿ ಸಾಕಾಗಿತ್ತು. +ಕೆಲವರಿಗಂತು ಏನೋ ಗುಮಾನಿ. +"ಇದ್ದ ಊರು, ನಿನ್ನ ಅತ್ತೆ ಮಾವ ಬರಲಿಲ್ಲಾಂದರೇ ಏನು ಅರ್ಥ? +ನಿನ್ನ ಗಂಡನು ಕಾಣ್ಣಿಲ್ಲ" ಕೆಲವರಂತು. +ನೇರವಾಗಿಯೇ ಕೇಳಿದ್ದರು. +ಜೊತೆಗೆ ಹಲವಾರು ಕತೆಗಳು ಹರಡಿ ಬಿಟ್ಟವು. +ಪ್ರತಿಯೊಬ್ಬರು ತಮ್ಮ ಕಲ್ಪನೆಗಳಿಗೆ ಅನುಸಾರವಾಗಿ ಚಿತ್ರ ಬಿಡಿಸಿದರು. +ಅವಕ್ಕೇನು ತಲೆ, ಬುಡವಿರಲಿಲ್ಲ. +ಎಲ್ಲಾ ಬಿಟ್ಟು ನೀರದ ಮಂಚವಿಡಿದ ತಾಯಿಯೇ ಕೇಳಿದರು “ಯಾಕೆ,ಯಾರು. . . . ಬರಲಿಲ್ಲ ? +ಅವುರ ಅಂತಸ್ತಿಗೆ ಏನೇನು ಸಾಲದ ಜನ ನಾವು. +ಇಂಥ ಆರೋಗ್ಯದಲ್ಲು ನಾನು, ಅವ್ಳು ಲಗ್ನಪತ್ರಿಕೆ ಹಿಡಿದು ಹೋದಾಗ ಒಬ್ರೂ ಮಾತಾಡ್ಲಿಲ್ಲ. +ಕನಿಷ್ಟ ಹೊರಟಾಗ ಕುಂಕುಮ ಕೊಡೋ ಸೌಜನ್ಯ ಕೂಡ ತೋರಿಲ್ಲ ಆಕೆಯ ನೊಂದ ಮಾತುಗಳಿಗೆ ಪ್ರತಿಕ್ರಿಯಿಸಿರಲಿಲ್ಲ. +ಬಹಳ ಹೊತ್ತು ಹೊರಗಡೆಯೇ ನಿಂತಳು. +ಅಣ್ಣನ ಬಾಯಿ ಮುಚ್ಚಿಸಿದ್ದಳು. +ಆದರೆ ಮೂರ್ತಿ ಕಡೆಯಿಂದಲೇ ಡೈವೋರ್ಸ್‌ ಪೇಪರ್ಸ್‌ ಬಂದರೇ,ಕಷ್ಟವೆನಿಸಿದರೂ ಬೇಡದ ವ್ಯಕ್ತಿಯಾಗಿ ಅವನ ಜೀವನದಲ್ಲಿ ಇರಲು ಇಷ್ಟಪಡಳು. +"ಚಾರು, ಏನ್ಮಾಡ್ತಾ ಇದ್ದೀಯಾ ?" ನೀರದ ಬಂದು ಅವಳ ಭುಜದಮೇಲೆ ಕೈಯಿಟ್ಟಾಗ ಪ್ರಯತ್ನ ಪೂರ್ವಕವಾಗಿ ನಗುವನ್ನ ಎಳೆ ತಂದಳು ಮುಖದ ಮೇಲೆ "ಸುಮ್ನೇ ನಿಂತೇ ?"ಒಳಗಿನ ಸೆಕೆಯ ಧಗೆಗಿಂತ ಇಲ್ಲಿ ಆರಾಮಾಗಿದೆ. +ಏನ್ಮಾಡ್ಮಾ ಇದ್ದಾರೆ, ನಿಮ್ಮ ರಾಜಕುಮಾರ ? +ಹಾಸ್ಯ ಮಾಡಿದಳು ಕೆನ್ನೆ ತಟ್ಟಿ. +ಅವಳ ಮುಖ ಮಂಕಾಯಿತು. +ವಿವಾಹವಾದ ವಾರದಲ್ಲಿಯೇ ಕರಗಿಹೋಯಿತೇ ಪ್ರೀತಿಯ ಉದ್ವೇಗ, ಪ್ರಣಯದ ಆವೇಗ ? +ನವೀನ್‌ ಗದರಿದ್ದ ಮುಲಾಜಿಲ್ಲದೆ. +"ಯಾಕೋ, ನವೀನ್‌ ಒಂದು ತರಹ ಇದ್ದಾರೆ ?" ಎಂದಳು ಸಪ್ಪಗೆ. +"ಅಪ್ಪ, ಸ್ವಲ್ಪ ಹುಷಾರು ತಪ್ಪಿದರಲ್ಲ ಅದಕ್ಕೋಸ್ಕರ ಅಷ್ಟೆ. +ಒಂದಿಷ್ಟು ಓಡಾಡಿದ ಆಯಾಸ ಅವ್ರಿಗೂ ಕೂಡ" ಎಂದು ನುಡಿದಳು. +ನೀರದ ಅವಳ ಕೈಯನ್ನ ತನ್ನ ಕೈಯೊಳಗೆ ತಗೊಂಡು "ನೀವುಗಳು ತಗೊಂಡ್ಹೋಗಿದ್ದು ವಾಪಸ್ಸು ತಂದಿದ್ದೀರಾ. +ಅವುಗಳ ಕೋಪ ಕಮ್ಮಿ ಆಗಿಲ್ವಾ?" ಅಷ್ಟಿಷ್ಟು ಸಂಗ್ರಹಿಸಿದನ್ನ ಅಂದಾಜಿಗಿಟ್ಟುಕೊಂಡು ಕೇಳಿದ್ದು. +ಚಾರುಲತ ಸಣ್ಣಗೆ ನಗೆ ಬೀರಿದಳು. +ಆದರಲ್ಲಿ ಇದ್ದಿದ್ದು ಬರೀ ನೋವೆ. +ನೀರದನ ದೂರುವಷ್ಟು ಅವಿವೇಕಿಯೇನಲ್ಲ. +"ಸಮಯ ಬೇಕಾಗುತ್ತೆ. +ಅದಕ್ಕಾಗಿ ನೀವು ತಲೆ ಕೆಡ್ಸಿಕೊಳ್ಳೋದ್ಬೇಡ. +ಅಣ್ಣನ ಹತ್ರನು ಈ ಪ್ರಸ್ತಾಪವೆತ್ತಿ ನಿಮ್ಮಗಳ ಮಧುರ ಕ್ಷಣಗಳನ್ನ ಹಾಳುಮಾಡ್ಕೋಬೇಡಿ. +ಒಂದಿಷ್ಟು ಬೇಜಾರಿದೆ. +ದಿನ ಕಳೆದಂತೆ ಕಡಿಮೆ ಆಗುತ್ತೆ." +ಚಾರುಲತಳ ಮಾತುಗಳಿಗೆ ಮೌನವಾದಳು ನೀರದ. +ತಾಳಿ ಕುತ್ತಿಗೆಗೆ ಬೀಳುವವರೆಗೂ ಚಡಪಡಿಸಿತ್ತು ಅವಳ ಇಡೀ ಕುಟುಂಬ. +ಅವರುಗಳ ಸ್ಥಿತಿಯಲ್ಲಿ ಡಾಕ್ಟರನ್ನ ಅಳಿಯನಾಗಿ ಪಡೆದಿದ್ದು ಅದೃಷ್ಟವೇ, ಕೆಲವು ವಿಷಯಗಳು ಗೊತ್ತಿದ್ದರೂ ಗೊತ್ತಿಲ್ಲದಂತೆ ವರ್ತಿಸಿದ್ದಳು. +ಒಳಕ್ಕೆ ಹೋದ ನೀರದ ಹೊರಗೆ ಬಂದು "ಮುಂದೇನು ?ಮುಂದೇನು?"ಎನ್ನುವಂತೆ ನೋಡಿದಳು. +“ಪ್ಲೀಸ್‌, ನೀರದ ಸಧ್ಯಕ್ಕೇನು ಕೇಳ್ಬೇಡಿ" ಎಂದಳು. +ಹಿಂದಿನ ರಾತ್ರಿ ಹತ್ತಿರ ಬಂದ ಮಡದಿಯನ್ನ ನವೀನ್‌ ದೂರ ಸರಿಸಿ "ಸುಮ್ನೇ ಮಲಕ್ಕೋ, ನಂಗೆ ಓದೋದಿದೆ"ಎಂದಿದ್ದ. +ಬೆಳಗಿನಿಂದ ಎಷ್ಟೋ ಅಷ್ಟು ಮಾತು. +ಈಗಾಗಲೇ ಹತ್ತಾರು ವರ್ಷ ದಾಂಪತ್ಯ ಜೀವನ ನಡೆಸಿ ಸಾಕಾದವನಂತೆ ಕಂಡಿದ್ದ. +"ಮುಂದೇನು ?"ಈ ಪ್ರಶ್ನೆ ಇನ್ನ ಹೆಚ್ಚಾಗಿ ಅವಳನ್ನ ಕಾಡಿತು. +ಮಾರನೆ ದಿನ ಬೆಳಿಗ್ಗೆ ಎದ್ದವನೇ ಯಾರಿಗೂ ಹೇಳದೇ ನವೀನ್‌ ಬಸ್ಸು ಹತ್ತಿದ. +ಇನ್ನ ನಸುಕಿನ ಚಳಿ ಇತ್ತು. +ಹೇಗಾದರೂ ಮೂರ್ತಿಯ ಕಾಲು ಹಿಡಿದಾದರೂ ತಂಗಿಯ ಜೀವನ ಸರಿಪಡಿಸಬೇಕಿತ್ತು. +ಇವನು ಹೋದಾಗ ಮೂರ್ತಿ ಸ್ನಾನ ಮುಗಿಸಿ ಬ್ರೇಕ್‌ಫಾಸ್ಟ್‌ಗೆ ಕೂತಿದ್ದ. +ಅಡಿಗೆ ಮಾಡುವುದರಲ್ಲಿ ಅವನಿಗೆ ಸೋಮಾರಿತನವಿರಲಿಲ್ಲ. +ಅವನೇ ಬೇಕೆನಿಸಿದನ್ನ ಮಾಡಿಕೊಳ್ಳುತ್ತಿದ್ದ. +ಮುಖ ನೋಡಿದ ಕೂಡಲೇ "ಹಲೋ. . . . "ಎಂದಿದ್ದು ನವೀನ್‌. +ಕೆಟ್ಟ ಮುಖ ಮಾಡಿಕೊಂಡೇ ಬೇಕೋ, ಬೇಡವೋ ಎನ್ನುವಂತೆ ಮೂರ್ತಿ "ಹಲೋ. . . "ಎಂದ ಮೆಲ್ಲಗೆ. +ಡಾ||ನವೀನ್‌ ಅವನ ಪ್ರಕಾರ ದೊಡ್ಡ ಅಪರಾಧಿ ಅವನಲ್ಲಿ ಇವನಿಗಾಗಿ ಕ್ಷಮೆ ಇಲ್ಲ. +"ಆಗ್ಲೇ, ರಾಯರು ಬ್ರೇಕ್‌ಫಾಸ್ಟ್‌ ಮುಗಿಸುವಂತಿದೆ" ಎಂದ ತಮಾಷೆಯಾಗಿ ಅತ್ಯಂತ ತಾಳ್ಮೆಯಿಂದ ಡಾ|। ನವೀನ್‌. +ಅವನು ಅದಕ್ಕೆ "ಉಭ-ಶುಭ'ಎನ್ನಲಿಲ್ಲ. +ಸುಮನೆ ಕೂತ. +ಅತ್ಮಂತ ಸಹನೆಯಿಂದ ಡಾ।।ನವೀನ್‌ ಅವನ ಎದುರು ಕೂತ. +ಮಾತು ಹೇಗೆ ಪ್ರಾರಂಭಿಸುವುದೆಂದು ಯೋಚಿಸಿದ. +"ಏನು ಬಂದಿದ್ದು ? ನಂಗೆ ಕಾಲೇಜಿಗೆ ಹೊತ್ತಾಗುತ್ತೆ." +"ಪ್ಲೀಸ್‌, ನಿಂಗೆ ತಪ್ಪು ಅನ್ನಿಸಿದರೇ. . . ನನ್ಮೇಲೆ ಕೋಪ ಮಾಡ್ಕೋ. +ಇದ್ರಲ್ಲಿ ಚಾರು ತಪ್ಪೇನು ಇಲ್ಲ. +ಸುಮ್ನೇ ಅನಗತ್ಯ ಮನಸ್ತಾಪದಿಂದ ನಿನ್ನ ಸಂಸಾರಹಾಳು ಮಾಡ್ಕೋಬೇಡ" ಬುದ್ಧಿ ಹೇಳಿದ. +ಮೇಲೆದ್ದ ಮೂರ್ತಿ "ನಿನ್ನ ಬುದ್ಧಿವಾದ ನಂಗೆ ಅಗತ್ಯವಿಲ್ಲ. +ಅನಗತ್ಯ ಮಾತುಗಳಿಂದ ಮತ್ತಷ್ಟು ವಿರಸ, ಗೆಟ್‌ ಔಟ್‌ ಅನ್ನೋಕೆ ಮೊದ್ಲೇ ಹೋಗ್ಟಿಡೋದು ಒಳ್ಳೇದು. +ಕೋಪದ ಸಮಯದಲ್ಲಿ ಓದು, ಸಂಸ್ಕಾರ ಸತ್ತುಹೋಗುತ್ತೆ" ರೂಮಿಗೆ ಹೋಗಿ ಎರಡೇ ನಿಮಿಷದಲ್ಲಿ ಬಟ್ಟೆ ಬದಲಾಯಿಸಿಕೊಂಡು ಬಂದವನೇ ಷೂ ಕಟ್ಟಿಕೊಂಡು "ಇನ್ಮೇಲೆ ಎಂದೂ ರಾಯಭಾರಕ್ಕೆ ಬರೋದ್ಬೇಡ. +ನನ್ನ ಒಳಿತು ಕೆಡಕು ನಂಗೆ ಗೊತ್ತು" ತೀಕ್ಷ್ಣವಾಗಿ ಹೇಳಿ ಕೀ ಬಂಚನ್ನ ಎತ್ತಿಕೊಂಡ. +"ಜಾರು, ನಾಳೆ ಇಲ್ಲಿಗೆ ಬರ್ತಾಳೆ" ಹೇಳಿದ. +“ಬರೋದ್ಬೇಡ. . . ” ಎಂದು ಸ್ಕೂಟರ್‌ ತಳ್ಳಿಕೊಂಡು ಹೊರಗೆ ಹೋದ ಮೂರ್ತಿ ಪಕ್ಕದ ಮನೆಯ ಹುಡುಗನನ್ನ ಕರೆದು "ಒಳಗಿದ್ದವುನು ಹೋದಕೂಡ್ಲೇ.. . ಬೀಗ ಹಾಕಿಕೋ"ಅಷ್ಟು ಹೇಳಿ ಸ್ಕೂಟರ್‌ ಏರಿದ. +ಗಾಜಿನ ಹೂಜಿಯಲ್ಲಿದ್ದ ನೀರನ್ನ ಗ್ಲಾಸ್‌ಗೆ ಬಗ್ಗಿಸಿಕೊಂಡು ಕುಡಿದ ಡಾ|।ನವೀನ್‌ ಹೊರಗೆ ಬಂದ. +ಪಕ್ಕದ ಮನೆ ಹುಡುಗ ಬೀಗ ಹಾಕಿ ಕೊಂಡುಹೋದ. +ಆದರೆ ಅವನ ತಾಯಿ ಕುತೂಹಲಕ್ಕೆ ಹೊರಗೆ ಬಂದವರು "ಚಾರುಲತ ಎಂದು ಬರ್ತಾರೆ ?"ವಿಚಾರಿಸಿದ . +ನಂತರ ಪೂಜಾಳ ಬಗ್ಗೆ ಒಂದು ವಿಷಯ ತಿಳಿಸಿದರು "ಆ ಹುಡ್ಗೀ ನಿದ್ದೆ ಮಾತ್ರೆಗಳ್ನ ನುಂಗಿ ಬಿಟ್ಟಿದ್ದಂತೆ. +ಬದುಕಿದ್ದೆ ಹೆಚ್ಚೂಂದ್ರು. +ಈಗ ಹೇಗಿದ್ದಾಳೆ ?"ಅವನನ್ನ ಕೇಳಿದರು. +"ಈಗ ಪರವಾಗಿಲ್ಲ" ಎಂದು ಮುಖದ ಬೆವರನ್ನೊರೆಸಿಕೊಂಡ. +ನಿಧಾನವಾಗಿ ಬಸ್‌ಸ್ಟಾಂಡ್‌ನ ಕಡೆ ಹೆಜ್ಜೆ ಹಾಕಿದ. +ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಅವಳ ಪ್ರೀತಿ ಪ್ರಬಲವಾಗಿದೆಯೆಂದು ಕೊಂಡಿರಲಿಲ್ಲ +ತನ್ನನ್ನ ಅಷ್ಟೊಂದು ಪ್ರೇಮಿಸುವ, ಬಯಸುವ ಹೆಣ್ಣನ್ನ ನಿರಾಕರಿಸಬಾರದೆಂದುಕೊಂಡ. +ಪೂಜಾಳಿಗಾಗಿ ಅವನ ಮನ ಮರುಗಿತು. +ಬಸ್‌ಸ್ಟಾಂಡ್‌ ಹೋಟಲ್‌ನಲ್ಲಿ ತಿಂಡಿ ಮುಗಿಸಿದ. +ಎಲ್ಲಾ ವಿಚಿತ್ರವೆನಿಸಿತು. +ಅವಳ ನಗೆ ಚಾಟಿಕೆಗಳಲ್ಲಿ ಪ್ರೇಮವಿದೆಯೆಂದು ಅವನು ಗುರ್ತಿಸಿರಲಿಲ್ಲ. +"ಸೋ ಸಾರಿ, ಎಕ್ಸ್‌ಕ್ಯೂಜ್‌ ಮಿ ಪೂಜಾ" ಎಂದು ಮನದಲ್ಲಿಯೇ ಹೇಳಿಕೊಂಡು ಬಸ್ಸಿಗಾಗಿ ಕಾದು ನಿಂತ. +ಆದರೆ ವಾಸುದೇವಯ್ಯ ಮತ್ತೊಂದು ಬಸ್ಸಿನಿಂದ ಇಳಿದಾಗ ದಿಗ್ಮೂಢನಾದ. + “ಅಪ್ಪ. . . ” ಧಾವಿಸಿದ ಅವರ ಬಳಿಗೆ. +ಮೊದಲೇ ಸುಸ್ತಾಗಿದ್ದವರು ಮಗನ ಮುಖ ನೋಡಿ ಯಾವುದೇ ಭಾವನೆಗಳನ್ನ ವ್ಯಕ್ತಪಡಿಸಲಾರದೆ ಹೋದರು. +"ಮೂರ್ತಿನ ನೋಡೋಕೆ ಬಂದ್ರಾ ? +ಅವ್ರು ಊರಿನಲ್ಲಿ ಇಲ್ಲ. +ಟೂರ್‌ಗೆ ಹೋಗಿದ್ದಾರೆಂದು ಅವ್ರ ಪಕ್ಕದ ಮನೆಯವು ಹೇಳಿದ್ರು. +ಈ ಸ್ಥಿತಿಯಲ್ಲಿ ನೀನ್ಯಾಕೆ. . . ಬಂದೆ ?" ತಂದೆಯ ಮೇಲೆ ನಸುಗೋಪ ಬೀರಿದ. +ಕರೆದುಕೊಂಡು ಹೋಗಿ ಆಸನದ ಮೇಲೆ ಕೂಡಿಸಿ ಬಿಸಿ ಹಾಲು ತಂದುಕೊಟ್ಟ. +ತಂದೆಯ ಬಗ್ಗೆ ಅಯ್ಯೋ ಅನಿಸಿತು. +ಮಗಳ ಜೀವನದ ಬಗ್ಗೆ ಸಂತೃಪ್ತಿಯಿಂದ ಇದ್ದವರಿಗೆ ವಕ್ಕರಿಸಿದ್ದು ಪೆಡಂಭೂತ. +"ಚಾರುಲತನ ನೋಡಿದ್ರೆ ಹೊಟ್ಟೆಯಲ್ಲಿ ಬೆಂಕಿ ಬಿದ್ದಂಗಾಗುತ್ತೆ. +ನಿನದ್ವೆ ಆಗಿ ಸೊಸೆ ಮನೆಗೆ ಬಂದಳಲ್ಲ ಅನ್ನೋ ಸಂತೋಷ, ಸಮಾಧಾನ ಒಂದು ಇಲ್ಲದಂಗಾಗಿದೆ" ಕೊರಗಿದರು. +ಭಾರವಾದ ಉಸಿರನ್ನೆಳೆದುಕೊಂಡು ದಬ್ಬಿದ ಡಾ||ನವೀನ್‌ ಸದ್ಯಕ್ಕಂತೂ ರಾಜಿಯಾಗೋಲ್ಲ. +ಕೋರ್ಟಿಗೆ ಹೋಗುವುದು ಯಾರಿಗೂ ಇಷ್ಟವಿಲ್ಲ. +ಸ್ವಾಭಿಮಾನಿ ಚಾರುಲತ ಇಷ್ಟವಿಲ್ಲದ ಗಂಡನ ಜೊತೆ ಬಾಳಲು ಸಿದ್ಧವಿಲ್ಲ. +"ಎಲ್ಲಾ ಸರಿಹೋಗುತ್ತೆ ಬಸ್ಸುನ ನೋಡ್ಕೊಂಡ್ಬರ್ತಿನಿ" ತಂದೆಯನ್ನ ಅಲ್ಲಿಯೇ ಬಿಟ್ಟು ಹೋದ. +ತಂದೆ ಬೇಟಿಯಾದರೂ ಭಿನ್ನವಾಗೇನೂ ಮೂರ್ತಿ ಪ್ರತಿಕ್ರಿಯಿಸಲಾರ. +ನಿದ್ದೆ ಮಾತ್ರೆ ನುಂಗಿ ಸಾವು- ಬದುಕುಗಳ ತೂಗುಯ್ಯಾಲೆಯಲ್ಲಿ ನರಳಿದ ಪೂಜಳ ಚಿತ್ರ ಇನ್ನಷ್ಟು ಅವನನ್ನು ರೊಚ್ಚಿಗಬ್ಬಿಸಬಹುದು. +ಕಾಲವೇ ಕೆಲವಕ್ಕೆ ಪರಿಹಾರವೆಂದುಕೊಂಡ. +ಬಸ್ಸುನಲ್ಲಿ ಕೂತ ನಂತರ ವಾಸುದೇವಯ್ಯ ಮಗನನ್ನು ಕೇಳಿದರು. +"ಮೂರ್ತಿನಿಜ್ಜಾರ್ಗ್ಗೂ ಟೂರ್‌ ಹೋಗಿದ್ದಾರ ?" +ಅವರ ಸ್ಟರದಲ್ಲಿದ್ದ ದಟ್ಟವಾದ ಅನುಮಾನ ಗುರ್ತಿಸಿ "ನಾನ್ಶಾಕೆ ಸುಳ್ಳು ಹೇಳ್ಲಿ ? +ನಾನು ಕೂಡ ಅವ್ನ ಭೇಟಿ ಮಾಡೋ ಉದ್ದೇಶದಿಂದ್ಲೇ ಬಂದಿದ್ದು. +ನಂಗೂ ಚಾರು ಭವಿಷ್ಯದ ಬಗ್ಗೆ ಚಿಂತೆ ಇದೆ. +ಆದರೂ ಅಷ್ಟೊಂದು ಪರದಾಟ ಬೇಕಿಲ್ಲ. +ಜೀವನದಲ್ಲಿ ಒಮ್ಮೆ ಕಳೆದುಕೊಂಡರೇ ಚಾರು ಅಂಥ ಹುಡ್ಗೀನ ಮತ್ತೆ ಪಡೆಯಲು ಕೆಲವು ಜನ್ಮಗಳಾದ್ರೂ ಬೇಕಾಗುತ್ತೆ?" +ತುಸು ಗುಡುಗಿದ. +ವಾಸುದೇವಯ್ಯ ಮಾತಾಡಲಿಲ್ಲ. +ಸಾಂಪ್ರದಾಯಿಕ ಮನಸ್ಸು, ಹೆಣ್ಣು ಹೆತ್ತ ತಂದೆ-ಅವರ ಭಯವೇ ಬೇರೆ,ನೀರದ, ಚಾರುಲತ-ಬಿಡಿ ಬಿಡಿಯಾಗಿ ಹೋದ ತಂದೆ, ಮಗ ಒಟ್ಟಿಗೆ ಬಂದಿದ್ದನ್ನು ನೋಡಿ ಆಶ್ಚರ್ಯಗೊಂಡರು. +"ನೀವೆಲ್ಲಿ ಹೋಗಿದ್ರಿ, ಅಪ್ಪ ?ನಿಮ್ಗೇ ರೆಸ್ಟ್‌ ಬೇಕಿತ್ತು" ಚಾರುಲತ ಮುಖ ಸಣ್ಣಗೆ ಮಾಡಿದರೂ, ಅವರಿಬ್ಬರು ಬಿಡಿ ಬಿಡಿಯಾಗಿಯಾದರೂ ಮೂರ್ತಿಯನ್ನು ನೋಡಲು ಹೋಗಿರಬೇಕು, ಅಥವಾ ಯುಗಂಧರ್‌ ಬಳಿ ತಪ್ಪೊಪ್ಪಿಗೆ ನೀಡಲು ಹೋಗಿರಬೇಕೆಂದುಕೊಂಡಳು. +"ಫ್ರೆಂಡ್ಸ್‌ನ ನೋಡೋಕೆ ಹೋಗಿ, ನನಗೆ ಸಿಕ್ಕಿ ಹಾಕ್ಕೊಂಡ್ರು" ಎಂದ ಡಾ|| ನವೀನ್‌ ತಂದೆಯನ್ನ ರೂಮಿಗೆ ಕರೆದೊಯ್ದು ತಾನೇ ಮಲಗಿಸಿ "ಅಪ್ಪ,ವಿಷ್ಯ ಚಾರುಲತಗೆ ಗೊತ್ತಗೋದ್ಬೇಡ." +"ಗೊತ್ತಾಗೋದ್ರಿಂದ ಏನು ಪ್ರಮಾದವಿಲ್ಲ" ಹಿಂದಿನಿಂದ ಚಾರುಲತಳ ದನಿ ಹರಿದು ಬಂತು. +"ಈ ರಿಸ್ಕ್‌ ಬೇಕಿದ್ಲಿಲ್ಲ." +ಅಪ್ಪ, ಮಗ ಮುಖ ಮುಖ ನೋಡಿಕೊಂಡರು. +ತಂದೆಯ ಪಕ್ಕ ಬಂದು ಕೂತ ಚಾರುಲತ "ಯಾವ್ದೇ ಪ್ರಯತ್ನ ಬೇಡ. +ಸಧ್ಯಕ್ಕಂತು ಅವ್ರ ಕೋಪ ಕಮ್ಮಿ ಆಗೋಲ್ಲ. +ನೋಡ್ತಾ ನೋಡ್ತಾ ನನ್ಮುಖ ನೋಡೋಕೂ ಅವ್ರಿಗೆ ಇಷ್ಟವಾಗ್ಹು. +ಹತ್ತಿರವಿದ್ದು ನರಕ ಅನುಭವಿಸುವ ಬದಲು ದೂರ ವಿರೋದೇ ವಾಸಿ. +ಅವ್ರ ತೀರ್ಮಾನಕ್ಕೆನಂದು ಎರಡು ಮಾತಿಲ್ಲ, ಸಧ್ಯಕ್ಕೆ ಯಾವುದಾದ್ರೂ ಕೆಲ್ಸಕ್ಕೆ ಪ್ರಯತ್ನ ಮಾಡ್ಬೇಕು. +ಅದ್ಕೇ ಒಂದಿಷ್ಟು ಸಹಾಯ ಮಾಡಣ್ಣ?" +ನಿಖರವಾಗಿ ನುಡಿದಳು. +ವಾಸುದೇವಯ್ಯ ಬಿಚ್ಚಿ ಬಿದ್ದರು. +ಅವರ ಮಟ್ಟಿಗೆ ಇದು ಸಹಿಸಲು ಸಾಧ್ಯವಿಲ್ಲ. +ಡಾ|।ನವೀನ್‌ ಹೌಹಾರಿದರೂ ತಂಗಿಯ ಮನಸ್ಮೆರ್ಯವನ್ನು ಮೆಚ್ಚಿಕೊಂಡ. +"ಐಯಾಮ್‌ ಪ್ರೌಡಾಫ್‌ ಯು. ಅವ್ರೇ ಪಶ್ಚಾತಾಪ ಪಡ್ತಾರೆ. +ನೀನು ಮಾನಸಿಕವಾಗಿ ಇಷ್ಟು ಬೆಂಬಲ ಸೂಚಿಸಿದರೇ ನಾವೆಲ್ಲ ಬೇಗ ಚೇತರಿಸಿಕೊಳ್ತೀವಿ" ಹೊರಗೆ ಹೋದ. +ಮಗಳ ಕೈ ಹಿಡಿದುಕೊಂಡ ವಾಸುದೇವಯ್ಯ ಕಣ್ಣೀರು ಸುರಿಸಿದರು "ಸುಮ್ನೇ ನಿನ್ನ ಬಾಳನ್ನ ನಾವು ಬಲಿಕೊಟ್ಟಿ. +ಒಬ್ಬ ತಂದೆಗೆ ಸ್ವಂತ ಮಗಳ ಭವಿಷ್ಯ ಮುಖವಾಗ್ಬೇಕಿತ್ತು. +ಇಲ್ಲಿ ನಾನೊಬ್ಬ ಮೂರ್ಖ" ತಲೆ ಚಚ್ಚಿಕೊಂಡರು. +ಅವರನ್ನ ಸಂತೈಯಿಸುವ ವೇಳೆಗೆ ಅವಳಿಗೆ ಸಾಕು ಸಾಕಾಯಿತು. +ನಾಲ್ಕು ದಿನಗಳ ನಂತರ ಅನಿರೀಕ್ಷಿತವಾಗಿ ಅವಳ ಗೆಳತಿಯ ಮದುವೆಯಲ್ಲಿ ಯುಗಂಧರ್‌, ಮೃಣಾಲಿನಿಯನ್ನು ಭೇಟಿಯಾದಳು ಆಕಸ್ಮಿಕವಾಗಿ. +ಅವರುಗಳು ಮುಖ ತಿರುಗಿಸಿದರೂ ತಾನೇ ಹೋಗಿ ಮಾತಾಡಿಸಿದಳು. +"ಹೇಗಿದ್ದೀರಾ ?"ಮೃದುವಾಗಿ ವಿಚಾರಿಸಿದಳು. +ಯುಗಂಧರ್‌ ಮುಖ ತಿರುಗಿಸಿದರೂ ಮೃಣಾಲಿನಿ ಮಾತ್ರ "ಚೆನ್ನಾಗಿದ್ದೀವಿ"ಎಂದರಷ್ಟೆ. +ಅವರುಗಳಿಗೆ ಮಾತಾಡುವುದು ಇಷ್ಟವಿಲ್ಲವೆಂದು ಅರಿವಾದ ಕೂಡಲೇ ಜನರ ನಡುವೆ ಸೇರಿ ಹೋದಳು. +ಮಧ್ಯೆ ಬಂದವರಿಗೆ ಪಾನೀಯ ಸಪ್ಲೇ ಆಗುತ್ತಿತ್ತು. +ಅದರ ಜವಾಬ್ದಾರಿಯನ್ನು ಅವಳೇ ವಹಿಸಿಕೊಂಡಿದಳು. +ಒಂದು ಸಣ್ಣ ಹುಡುಗಿ ಎರಡು ಗ್ಲಾಸ್‌ ಪಾನೀಯವನ್ನು ತಂದು ದಂಪತಿಗಳ ಮುಂದಿಡಿದಳು "ಇದ್ನ ತಗೋಬಹುದಂತೆ. +ಅಕ್ಕ ಹೇಳಿದ್ರು" ತಿಳಿಸಿದಳು. +ಅವರಿಗೆ ಕುಡಿಯಲು ಏನಾದರೂ ಬೇಕಿದ್ದರಿಂದ ಎತಿಕೊಂಡರು. +"ಬಲಗಡೆದು ಹಿರಿ ಅಂಕಲ್‌ಗೆ, ಎಡಗಡೆದು ಹಿರಿ ಆಂಟಿಗೆ" ಎಂದವಳು ಅವರಿಗೆ ವಿಭಾಗಿಸಿಯೇ ಕೊಟ್ಟಿದ್ದು. +ಯುಗಂಧರ್‌ಗೆ ಡಯಾಬಿಟಿಸ್‌ ಇದ್ದುದ್ದರಿಂದ ಕಳಿಸಿದ್ದು ಮಜ್ಜಿಗೆ. +ಆಕೆಗೆ ಮಾತ್ರ ಕಿತ್ತಲೆ ಹಣ್ಣಿನ ರಸ. +"ನನ್ನ ಸೊಸೆ ಜಾಣೆ" ಅಂದೇ ಬಿಟ್ಟರು ಯುಗಂಧರ್‌. +ನಂತರವೇ ಅವರು ಮಾಮೂಲಿಯಾಗಿದ್ದು. +ಶುಂಠಿ, ಕೊತ್ತಂಬರಿ ಸೊಪ್ಪಿನ ಜೊತೆ ಹದವಾಗಿ ಹಿಂಗಿನ ಒಗ್ಗರಣೆ ಹಾಕಿದ ಮಜ್ಜಿಗೆ ಎಷ್ಟೋ ತಂಪೆನಿಸಿತು. +ತುಂಬ. . . ತುಂಬ ಮೆಚ್ಚಿಕೊಂಡಿದ್ದರು ಸೊಸೆಯ ಗುಣ, ನಡತೆಯನ್ನು. + ಈಗ ಮೆಚ್ಚಲಾರರು. + ಗಂಡ, ಹೆಂಡತಿ ಊಟ ಮುಗಿಸಿಕೊಂಡು ತಾಂಬೂಲದೊಂದಿಗೆ ಮನೆಗೆ ಬಂದಾಗ ಮ್ಹಾನವದನರಾಗಿದ್ದರು. +ಆಮೇಲೆ ಚಾರುಲತ ಅವರ ಕಣ್ಣಿಗೆ ಬಿದ್ದಿರಲಿಲ್ಲ. +"ನೋಡಿದ್ರಾ, ಎಷ್ಟೊಂದು ಗೆಲುವಾಗಿದ್ದು. +ಅಣ್ಣ, ಅಪ್ಪನೇ ಅವ್ಳಿಗೆ ಸರ್ವಸ್ವವಾಗ್ಟಿಟ್ಟಿದೆ." ಮೌನವಾಗಿದ್ದ ಮನೆಯನ್ನು ನೋಡಿ ಅಂದೇ ಬಿಟ್ಟರು. +ಸದಾ ನಗುತ್ತಾ ಹಾಸ್ಯ ಮಾಡುತ್ತ ಬಡಬಡ ಓಡಾಡುತ್ತಿದ್ದ ಪೂಜಾಳ ಮುಖದಲ್ಲಿ ನಗು ಕಂಡು ಎಷ್ಟೋ ದಿನವಾಗಿತ್ತು. +ಇದನ್ನ ಯಾವುದೇ ತಾಯ್ತಂದೆ ಸಹಿಸರು. +"ಹೌದು, ವಿವಾಹವಾದ್ಯೇಲೆ ಹೆಣ್ಣು ಗಂಡನ ಮನೆ ಸೊತ್ತು ಆಗ್ತಾಳೆ. +ಅಲ್ಲಿನ ಲಾಭ-ನಷ್ಟ, ನೋವು-ನಲಿವುಗಳ ಬಗ್ಗೆ ಚಿಂತಿಸ್ತಾಳೆ ಅದ್ಕೊಂಡೆ. +ಆದರೆ ನಿನ್ನ ಸೊಸೆ ಪೂರ್ತಿ ಡಿಫರೆಂಟ್‌. +ಇಲ್ಲಿನ ಬಗ್ಗೆ ಅಲ್ಪ ಸ್ವಲ್ಪ ಕಾಳಜಿ ಇದಿದ್ದರೇ ಆ ಮದ್ವೆ ಆಗೋಕೆ ಬಿಡ್ತಾ ಇದ್ದಳಾ ? +ಸ್ವಲ್ಪ ಪಟ್ಟಾಗಿ ಕೂತಿದ್ದರೇ, ಅವ್ನು ಎದುರು ಮನೆ ಹುಡ್ಗಿಯ ಕುತ್ತಿಗೆಯಲ್ಲಿ ತಾಳಿ ಕಟ್ತಾ ಇದ್ದನಾ ? +ಅವ್ಳಿಗೆ ಬೇಕಿದ್ಲಿಲ್ಲ. +ಆ ಬೇವರ್ಸಿ ಸಂಬಂಧನೇ ಇಷ್ಟವಾಯ್ತು. +ಮುಂದೆ ಅನುಭವಿಸ್ಸಿ " ಕಿಡಿಕಿಡಿಯಾದರು ಯುಗಂಧರ್‌. +ಆದರೆ ಅಷ್ಟು ಜನ ಓಡಾಡುವ ಹೆಂಗಳೆಯರಲ್ಲಿ ತನ್ನ ಸೊಸೆ ಎದ್ದು ಕಾಣುತ್ತಿದ್ದಳೆಂಬ ಹೆಮ್ಮೆ ಕೂಡ ಜೊತೆಗೆ, ಆ ಚೆಲುವನ್ನು ನೋಡಿಯೇ ಒಪ್ಪಿಗೆ ಸೂಚಿಸಿದ್ದು. +"ವಾಸುದೇವಯ್ಯ ನವ್ರೆ ಏನು ತಾಪತ್ರಯ ಮಾಡ್ಕೋಬೇಡಿ. +ಕೊಡೋದು ಬಿಡೋದು ಅಂಥದೇನ್ಬೇಡ. +ಲಕ್ಷಣವಾಗಿ ನಿಮ್ಮ ಮಗ್ಳುನ ನನ್ನ ಮಗನಿಗೆ ಧಾರೆಯೆರೆದು ಕೊಡಿ" ಎಂದಿದ್ದರು ನೋಡಿದ ದಿನವೇ. +ಅದೆಲ್ಲ ನೆನಪಾದಾಗ ಅವರೆದೆ ಭಾರವಾಯಿತು. +ನೇರವಾಗಿ ಮಗಳ ರೂಮಿಗೆ ಬಂದರು. +ಎತ್ತಲೋ ನೋಡುತ್ತ ಮಲಗಿದ್ದ ಪೂಜಾಳ ಕಣ್ಣುಗಳಲ್ಲಿ ಬೆಳಕು ಇರಲಿಲ್ಲ. +“ಮಮ್ಮಿ. . . . ನೀರು'' ಎಂದಳು ಕ್ಷೀಣವಾಗಿ. +ಗಾಜಿನ ಹೂಜಿಯಲ್ಲಿದ್ದ ನೀರನ್ನ ಬಗ್ಗಿಸಿ ಅವಳ ಮುಂದಿಡಿದವರು "ಪೂಜಾ,ನೀನು ಮನಸ್ಸು ಮಾಡದೇ ನಿನ್ನ ದೇಹದಲ್ಲಿ ಶಕ್ತಿ ತುಂಬೋಲ್ಲ. +ನವೀನ್ ವಿವಾಹವಾದ. +ಇನ್ನ ಅವ್ನ ಬಗ್ಗೆ ಯೋಚ್ಸೆ ಪ್ರಯೋಜನವೇನು? +ಮುಗ್ದುಹೋದ ಕತೆ" ತಲೆ ಸವರಿದರು. +ಸದಾ ಅಳುತ್ತಿದ್ದ ಪೂಜಾಳ ಕಣ್ಣುಗಳಿಂದ ಕಂಬನಿ ಹರಿಯಲಿಲ್ಲ. +ಅದೊಂದು-ಸಣ್ಣ ಬದಲಾವಣೆ. +ಹಾಗೆಯೇ ಕಣ್ಣುಚ್ಚಿಕೊಂಡಳು. +ಡಾಕ್ಟರ್‌ ಪ್ರಕಾರ ಅವಳಾಗಿ ಪೇಷಂಟ್‌ ಆಗಿದ್ದಳು. +"ಮದ್ವೆ ಚೆನ್ನಾಗಿ ಆಯ್ತ ?"ವಿಚಾರಿಸಿದಳು. +"ಎಲ್ಲಾ ನಿನ್ನನ್ನು. . . ಕೇಳಿದ್ರು"ಎಂದರು ಆಕೆ. +ನಿಧಾನವಾಗಿ ಕಣ್ಣು ತೆರೆದು ಪೂಜಾ "ಅಮ್ಮ ನಾನು ಚೆನ್ನಾಗಿಲ್ವಾ?" +ಅವಳ ಪ್ರಶ್ನೆಗೆ ಬೆಚ್ಚಿ "ಯಾರು ಹಾಗೇ ಹೇಳಿದ್ದು ?ದಂತದ ಗೊಂಬೆ. +ನಿನ್ನ ಶುಭ್ರ ಬಣ್ಣ ಸಾವಿರದಲ್ಲಿ ಒಬ್ಬರಿಗೆ ಇರೋಲ್ಲ, ಹಾಗೆಲ್ಲ ಮಾತಾಡ್ಬೇಡ" ನೊಂದರು. +"ನನ್ನ ಓದು ಕಡಿಮೇನಾ ?"ಮತ್ತೊಂದು ಪ್ರಶ್ನೆ. +"ಏನಿದೆಲ್ಲ, ಎಂ.ಎಸ್ಸಿ ಎಷ್ಟು ಜನ ಮಾಡೋಕೆ ಸಾಧ್ಯ ? +ಅವ್ನು ಕಟ್ಟಿಕೊಂಡಿದ್ದು ಪಿ.ಯು.ಸಿ. ಮಾಡ್ದ ನೀರದಾನ. +ನಿಮ್ಮಪ್ಪ ಮನೆ ಕೊಡೋಕೆ ತಯಾರಿದ್ರು. +ನರ್ಸಿಂಗ್‌ ಹೋಂ ಮಾಡಲು ಬಂಡವಾಳ ಕೊಡ್ತಾ ಇದ್ದರು. +ಆ ಪುಣ್ಯ ಅವ್ನಿಗೆ ಇರ್ಬೇಕಲ್ಲ. +ಇನ್ನ ಅವ್ನ ಸುದ್ಧಿ ಮನೆಯಲ್ಲಿ ಬೇಡ" ಸಿಡಿದರು. +ಡಾ||ನವೀನ್‌ ಮೇಲೆ ಅವರಿಗೆಷ್ಟು ಕೋಪವಿತ್ತೋ ಅದರ ಹತ್ತರಷ್ಟು ಸಿಟ್ಟು ಚಾರುಲತ ಮೇಲಿತ್ತು. +"ನನ್ಗೆ ಮೋಸ ಮಾಡ್ಬಿಟ್ರು. +ನನ್ನ ಫೆಂಡ್ಸ್‌ಗೆಲ್ಲ ಡಾ|| ನವೀನ್‌ ನನ್ನ ವುಡ್‌ಬೀ ಅಂತ ತೋರಿಸಿದೆ" ಮತ್ತೆ ಕಣ್ಣೀರು ಮಗಳ ಕಣ್ಣಲ್ಲಿ ಕಂಡು ರೋಸಿ "ಬೇಡ ಕಣೇ, ಇನ್ನ ಕಣ್ಣೀರು ಸುರಿಸ್ಟೇಡ. +ನಮಗೆ ನೋಡಿ ನೋಡಿ ಸಾಕಾಗಿದೆ. +ಕಳೆದು ಹೋದ್ದ ನೆನಪಿನಿಂದ ತೆಗ್ದು ಹಾಕ್ಟಿಡು" ಸಮಾಧಾನ ಹೇಳಿದರು. +ಹೊರಗೆ ಗಂಡ ನನ್ನ ಅರಸಿಕೊಂಡು ರೂಮಿಗೆ ಹೋಗಿ "ಪೂಜಾಗೆ ಬದಲಾವಣೆ ಬೇಕು. +ಮೂರ್ತಿ ಕರ್ಕೊಂಡ್ಡೋಗ್ತೀನಿ ಅಂದ. +ನಾಲ್ಕು ದಿನ ಕಳಿಸೋಣ್ವಾ?" ಕೇಳಿದರು. +ಯುಗಂಧರ್‌ ತಲೆ ಅಡ್ಡಡ್ಡ ಆಡಿಸಿದರು. +ಅಲ್ಲಿನ ವಾತಾವರಣ ಚಾರುಲತನ ನೆನಪಿಸುತ್ತೆ. +ಅದು ಬಹಳ ಅಪಾಯವೆಂದು ಅವರಿಗೆ ಗೊತ್ತು. +"ಬೇಡ, ಹೇಗೂ ನಿನ್ನ ಚಿಕ್ಕಪ್ಪ ಮುಂಬಯಿನಲ್ಲಿ ಇದ್ದಾರಲ್ಲ. +ಆಗಾಗ ಆಹ್ವಾನ ಕೊಡ್ತಾನೆ ಇದ್ದರಲ್ಲ, ನೀನು ಮೂರ್ತಿ ಅವ್ಳು ಹೋಗಿ, ಅವ್ನಿಗೆ ರಜ ಇಲ್ಲದಿದ್ದರೇ ನಾವೇ ಹೋಗೋಣ. +ನಮಗೂ ಈ ವಾತಾವರಣದಿಂದ ಒಂದಿಷ್ಟು ಬದಲಾವಣೆ ಬೇಕು." +ಗಂಡ, ಹೆಂಡತಿ ಕೂಡಿ ಹತ್ತು ನಿಮಿಷ ಮಾತಾಡಿದರು. +ಈಗ ಮೂರ್ತಿ ಮನೆಗೆ ಫೋನ್‌ ಬಂದಿದ್ದರಿಂದ ನೇರವಾಗಿ ಸಂಪರ್ಕಿಸಿದರು. +"ನಿಂಗೇನಾದ್ರೂ ರಜಾ ಸಿಗುತ್ತಾ ?"ವಿಚಾರಿಸಿದರು. +"ಸಧ್ಯಕ್ಕೆ ಇಲ್ಲ.ನನ್ನ ಪೊಷನ್‌ ಕೂಡ ಮುಗ್ದಿಲ್ಲ. +ಇಲ್ಲಿ ಬೇರೆ ಬೇರೆ ಕೆಲ್ಸಗಳು ವಹಿಸಿಕೊಂಡಿದ್ದೀನಿ" ಅವನು ಅಪಸ್ವರ ಹಾಡಿದ. +"ನಿಮ್ಮಮ್ಮ ಮಾತಾಡ್ರಾಳೆ, ನೋಡು" ಹೆಂಡತಿಗೆ ಫೋನ್‌ ಕೊಟ್ಟರು. +ಆಕೆ ಅಳುತ್ತಲೇ ಒಂದಿಷ್ಟು ತಿಳಿಸಿ "ಕೆಲವು ದಿನ ಪೂಜಾನ ಹೊರಗಡೆ ಕರ್ಕೊಂಡ್ಹೋಗ್ಬೇಕು." +ಮೂರ್ತಿಗೂ ಕೂಡ ಅದು ಸರಿಯೆನಿಸಿತು. +ಪೂಜಾಳ ಪರಿಸ್ಥಿತಿಗೆ ತಾನು ಬಹಳ ಮಟ್ಟಿಗೆ ಕಾರಣವೆಂದು ವಿಷಾದ ವ್ಯಕ್ತಪಡಿಸಿದ. +ಆದಷ್ಟು ಬೇಗ ಅವಳ ಮದುವೆ ಮಾಡುವುದು ಉತ್ತಮವೆಂದು ಸೂಚಿಸಿದ. +ಅಂತು ಪೂಜಾಳೊಂದಿಗೆ ಯುಗಂಧರ್‌ ಮತ್ತು ಮೃಣಾಲಿನಿ ಮುಂಬಯಿಗೆ ಹೋಗುವುದೆಂದು ನಿಶ್ಚಯವಾಯಿತು. +ಅಂದು ಡಾ|| ನವೀನ್‌ ನರ್ಸಿಂಗ್‌ ಹೋಂಗೆ ಹೊರಟಾಗ ಬಂದ ಚಾರುಲತ "ಅಣ್ಣ, ನೀನು ತಪ್ಪು ತಿಳ್ಕೋಬಾರ್ದು. +ಸುಮ್ನೇ ಮನೆಯಲ್ಲಿ ಕೂಡೋದುಂದರೇ ಮಾನಸಿಕವಾಗಿ ಮತ್ತು ಭವಿಷ್ಯದ ದೃಷ್ಟಿಯಿಂದ ಏನೇನು ಒಳ್ಳೇದಲ್ಲ. +ವಳ್ಳಿಯಮ್ಮ ಬರೀ ಹೆಣ್ಣು ಮಕ್ಳುನ ಇಟ್ಕೊಂಡ್‌ ನಡುಸ್ತಾ ಇರೋ ಲೇಡೀಸ್‌ ಡ್ರೆಸ್‌ ಷೋರೂಂನಲ್ಲಿ ಅಕೌಂಟ್‌ ಸೆಕ್ಸನ್‌ನಲ್ಲಿ ಕೆಲ್ಸ ಮಾಡೋಕೆ ನಿಶ್ಚಯಿಸಿದ್ದೀನಿ. +ಸುಮ್ನೇ ಅಪ್ಪನ ಮುಂದೆ ಕೂತರೇ, ಅವ್ರ ತಲೆನೋವು ಜಾಸ್ತಿ ಆಗುತ್ತೆ" ಹೇಳಿದಳು ನಿಧಾನವಾಗಿ. +ಡಾ|। ನವೀನ್‌ ಷಾಕಾದ. +ಇಷ್ಟು ಬೇಗ ನಿರ್ಧಾರಕ್ಕೆ ಬರುತ್ತಾಳೆಂದು ತಿಳಿದಿರಲಿಲ್ಲ. +ಅವನ ಬಾಯಿಂದ ಮಾತು ಹೊರಡುವುದೇ ಕಷ್ಟವಾಯಿತು.. ಚಡಪಡಿಸಿದ. + "ಡೋಂಟ್‌ಬಿ ಎಕ್ಸೆಟೆಡ್‌, ಆಕೆ ಷೋ ರೂಂ ಇರೋದು ಊರಿನಿಂದ ಇಪ್ಪತ್ತು ಮೈಲಿಗಳ ಆಚೆ ಇರುವ ಮೈಲಾಪುರದ ಬಳಿ. +ಸಿಟಿಯಲ್ಲಿ ಒಂದು ಬ್ರಾಂಚ್‌ ಇರೋದ್ರಿಂದ, ಅಲ್ಲಿಗೆ ಬರೋ ಜನ ಕಡ್ಮೇನೇ, ಅದು ಎಕ್ಸ್‌ಕ್ಲೂಸಿವ್‌ಲೇಡಿಸ್‌ ವೇರ್‌ ಷೋ ರೂಂ. +ಅದ್ರಿಂದ ಏನು ತೊಂದರೆ ಇಲ್ಲ" ಎಂದು ಅರ್ಥಗರ್ಭಿತವಾಗಿ ನುಡಿದಳು. +ಯಾರಿಗೂ ಹರ್ಟ್‌ ಮಾಡುವುದು ಅವಳ ಉದ್ದೇಶವಾಗಿರಲಿಲ್ಲ. +"ಅಪ್ಪನ ಹತ್ರ ಹೇಳ್ದ ?"ಕೇಳಿದ. +"ಹೇಳ್ಬೇಕು, ಸಧ್ಯಕ್ಕೆ ಸಮಯ ನೋಡಿ ಹೇಳ್ಬೇಕು. +ಸಾಧ್ಯವಾದರೇ ನೀನೇ ಹೇಳು" ಎಂದ ಕೂಡಲೇ ಮೆಟ್ಟಿಬಿದ್ದ . +"ನಾನು ಈಗಾಗ್ಲೇ ಅಪರಾಧಿ ಸ್ಥಾನದಲ್ಲಿದ್ದೀನಿ. +ಅಂಥ ಧೈರ್ಯ ನಂಗಿಲ್ಲ"ಅಪರಾಧ ಪ್ರಜ್ಞೆಯಿಂದ ನರಳಿದ. +"ಪ್ಲೀಸ್‌, ಹಾಗೆಲ್ಲ ಮಾತಾಡ್ಬೇಡ. +ನಿನ್ನದೇನು ಅಪರಾಧ ?ಮಹರಾಯ +ನೀರದ ಮುಂದೆ ಹಾಗೆಲ್ಲ ಮಾತಾಡ್ಬೇಡ. +ಈಗ ಹೋಗಿ ಬರೋಕೆ ಪರ್ಮೀಷ ಕೊಡು. +ನಾನೇ ಅಪ್ಪನಿಗೆ ಹೇಳ್ಕೋತೀನಿ" ಎಂದಳು. +ತಂದೆಯ ರೂಮಿಗೆ ಹೋದವಳು ಹತ್ತು ನಿಮಿಷದ ನಂತರ ಹೊರಗೆ ಬಂದು ಚಪ್ಪಲಿ ಮೆಟ್ಟಿ "ಬರ್ತಿನಿ, ಅಣ್ಣ. . . ಸಂಜೆ ಮೀಟ್‌ ಆಗೋಣ?"ಹೊರಟೇ ಬಿಟ್ಟಳು. +"ಚಾರು, ಎಲ್ಲಿಗೆ ಹೋಗಿದ್ದು ?"ನೀರದ ಕೇಳಿದಾಗ ಮುಖ ತಿರುಗಿಸಿಕೊಂಡು ಸ್ಕೂಟರ್‌ ಹತ್ತಿದ. +ಬಸ್‌ಸ್ಟಾಪ್‌ ಬಳಿ ಹೋಗಿ ನಿಂತಿದ್ದ ತಂಗಿಯ ಪಕ್ಕ ಸ್ಕೂಟರ್‌ ನಿಲ್ಲಿಸಿ "ಪ್ಲೀಸ್‌, ಇನ್ನಷ್ಟು ಯೋಚ್ಸು. +ಮುಂದೆ ಇದೊಂದು ದೊಡ್ಡ ತಪ್ಪಾಗಬಹುದು." +ಒಂದ್ಸಲ ಮೂರ್ತಿಯ ಹತ್ರ ಮಾತಾಡ್ಬೇಕಿತ್ತು" ಹೇಳಿದ. +ಅಣ್ಣನ ಕಡೆ ನೇರವಾಗಿ ನೋಡಿ. +"ಆಯ್ತು, ನಿನ್ನಿಷ್ಟ ಎಂದಿದ್ದಾರೆ. +ಅನಗತ್ಯವಾಗಿ ಬೇರೆಯವ್ರಿಗೆ ನಾವು ತಲೆ ನೋವಾಗಬಹುದು. +ಅದೆಲ್ಲ ಬೇಡ" ಸ್ಪಷ್ಟಪಡಿಸಿದಳು. +“ನಾನು ಡ್ರಾಪ್‌ ಮಾಡ್ತೀನಿ” ಎಂದ ಮೆಲ್ಲಗೆ. +“ಬೇಡ, ಬಸ್ಸಿದೆ. +ಸುಮ್ನೇ ಯಾಕೆ ನಿನ್ನ ವೇಳೆ ಹಾಳು ಮಾಡ್ಕೋತೀಯಾ? +ಮಿಸ್ಟರ್‌ ನವೀನ್‌ಕುಮಾರ್‌, ಡೋಂಟ್‌ ವರಿ. +ತಾವು ಹೋಗಿ ಬರಬಹುದು " ನಾಟಕೀಯ ನಗುತ್ತ ನುಡಿದಳು. +ಅರೆ ಮನಸ್ಸಿನಿಂದಲೇ ಹಿಂದಿರುಗಿದ ಡಾ।। ನವೀನ್‌. +ಅವನಿಗೆ ಎದೆಭಾರವಾಗಿ ದುಃಖ ಒತ್ತರಿಸಿಕೊಂಡು ಬರುತ್ತಿತ್ತು. +ತನಗೇಕೆ ಬೇಕಿತ್ತು, ಈ ಅಮರ ಪ್ರೇಮಿಯ ಪಟ್ಟ ? +ಒಡಹುಟ್ಟಿದ ತಂಗಿಯ ಬಾಳಿಗಿಂತ ನೀರದ ಮುಖ್ಯವಾದಳೇ ? +ರೂಮಿಗೆ ಹೋದವನೇ ಬಾಗಿಲು ಹಾಕಿಕೊಂಡು ಕೂತ. +ಮನಃಪೂರ್ವಕವಾಗಿ ಬಿಕ್ಕಿ ಬಿಕ್ಕಿ ಅತ್ತ ಎದೆಯ ಭಾರ ಕಮ್ಮಿ ಆಗುವವರೆಗೆ. +ಹೊರಗೆ ನಿಂತ ನೀರದ ವಿಗ್ರಹವಾದಳು. +ಪ್ರಾರಂಭದಲ್ಲಿಯೇ ಅಪಸ್ವರ. +ಅವಳಿಗೆ ದಿಕ್ಕು ತೋಚದಂತಾಯಿತು. +ಪೂಜಾ ಅವಳಿಗಿಂತ ಚೆನ್ನಾಗಿದ್ದಳು. +ಹೆಚ್ಚು ಓದಿದವಳು. +ಚೆನ್ನಾಗಿದ್ದ ಕುಟುಂಬದ ಮಗಳು. . ವರದಕ್ಷಿಣೆ,ವರೋಪಚಾರ ಕೊಡಬಲ್ಲವರಾಗಿದ್ದರು. +ಜೊತೆ ತಂಗಿಯ ನಾದಿನಿ ಇದೆಲ್ಲ ಬಿಟ್ಟು ಡಾ।।ನವೀನ್‌ ಅವಳನ್ನ ಮದುವೆಯಾಗಿದ್ದ. +ಡಾ|।ನವೀನ್‌ ತಾನೇ ಸಮಾಧಾನವಾಗಿ ಹೊರಗೆ ಬಂದಾಗ ನೀರದ ಗೊಂಬೆಯಂತೆ ನಿಂತಿದ್ದಳು . +"ಒಂದು ಕಪ್‌ ಕಾಫಿ ಮಾಡ್ಕೊಂಡ್ಬಾ. +ಅಡಿಗೆ ಬಿಸಿ ಇರುವಾಗ್ಲೇ ಅಪ್ಪನಿಗೆ ಬಡಿಸು" ಎಂದು ಬಾತ್‌ರೂಮಿಗೆ ಹೋಗಿ ಮುಖ ತೊಳೆದು ಬಂದ. +ಕಾಫಿ ಹಿಡಿದು ಬಂದ ನೀರದ “ತಟ್ಟೆ ಹಾಕಿದೆ” ಅಂದಾಗ ದುರುಗುಟ್ಟಿಕೊಂಡು ಅವಳತ್ತ ನೋಡಿ "ಬೇಡ, ಬರೀ ಕಾಫಿ ಸಾಕು. +ಎದುರು ಮನೆ ಅಮ್ಮನ ಮನೇಂತ ಹೋಗಿ ಕೂತ್ಕೋಬೇಡ. +ಅಪ್ಪನಿಗೆ ಹುಷಾರಿಲ್ಲ. +ಇಲ್ಲೇ ಇದ್ದು ನೋಡ್ಕೋ" ಬಿರುಗಾಳಿಯಂತೆ ನುಡಿದು ಷೂ ತೊಟ್ಟು ಹೊರಟೇ ಹೋದ. +ಕನಿಷ್ಟ ಕಾಫಿ ಕುಡಿಯುವ ಮನಸ್ಸು ಕೂಡ ಮಾಡಲಿಲ್ಲ. +ಚಾರುಲತ ಐದರ ಸುಮಾರಿಗೆ ಹಿಂದಿರುಗಿದಾಗ ನೀರದ ಮಂಕಾಗಿ ಕೂತಿದ್ದಳು. +ಮುಖ ತೊಳೆದು ಬರುವವರೆಗೂ ಚಾರುಲತ ಏನು ಕೇಳಲಿಲ್ಲ. +"ಏನು ತಗೋತೀರಾ ?"ನೀರದ ಕೇಳಿದಳು. +"ಅಪ್ಪ, ಹೇಗಿದ್ದಾರೆ ? ನಾನೇ ಕಾಫಿ ಮಾಡ್ಕೊಂಡ್ಬರ್ತಿನಿ" ಅಡಿಗೆ ಮನೆಗೆ ಹೋದಳು. +ಅಲ್ಲಿ ಪುಟ್ಟ ಕ್ಕಾಂಟಿನ್‌ ವ್ಯವಸ್ಥೆ ಇದ್ದುದ್ದರಿಂದ ಮಧ್ಯಾಹ್ನದ ಉಪಹಾರವಾಗಿತ್ತು. +ದೊಡ್ಡ ಅಧಿಕಾರಿಯಿಂದ ಹಿಡಿದು ಪಾತ್ರೆ ತೊಳೆಯುವವವರೆಗೂ ಎಲ್ಲಾ ಮಹಿಳೆಯರೇ. +ಪ್ರತಿಯೊಂದು ಸೆಕ್ಟನ್‌ನಲ್ಲಿಯು ಅವರೇ ಕೆಲಸ ಮಾಡುತ್ತಿದ್ದರು. +ಒಂದು ರೀತಿಯ ರಿಲ್ಯಾಕ್ಸ್‌. +ಮೂರು ಕಪ್‌ ಕಾಫಿ ಮಾಡಿಕೊಂಡು ಬಂದು ನೀರದಾಗೆ ಒಂದು ಕಪ್‌ಕೊಟ್ಟು ತಂದೆಯ ರೂಮಿಗೆ ಹೋದಳು. +ಅವರು ಯಾವುದೋ ಹಳೆಯ ಕಡತಗಳನ್ನು ಮುಂದೆ ಹಾಕಿಕೊಂಡು ಕೂತಿದ್ದವರು ತಲೆಯೆತ್ತಿ. +"ಈಗ ಬಂದ್ಯಾ ?ತೀರಾ ಬೇಸರವಾಯ್ತು. +ಇದ್ದೆಲ್ಲ ತೆಗೆದಿಟ್ಕೊಂಡ್‌ಕೂತೆ. +ಇವನ್ನೆಲ್ಲ ಜೋಪಾನ ಮಾಡಿಟ್ಕೊಂಡಿದ್ದು. +ಎಲ್ಲಾ ಅವ್ಳ ಆಸ್ತೀನೇ. +ಅವ್ಳು ಎತ್ತಿಟ್ಟ ಸಣ್ಣ, ಪುಟ್ಟ ಸಾಮಾನುಗಳೆಲ್ಲ ಇದೆ. +ಆದರೆ ಅವಳೇ. . . ಇಲ್ಲ. ಇದೆಂಥ ವಿಪರ್ಯಾಸ ನೋಡು" ವಿಷಾದದ ನುಡಿಗಳನ್ನಾಡಿದರು. +ಅವರ ಎದುರಿನಲ್ಲಿಯೇ ಕೂತು ಕಾಫಿ ಕಪ್‌ ಕೊಟ್ಟು ಕುತೂಹಲದಿಂದ ಅವನ್ನೆಲ್ಲ ಕೆದಕಿದಳು. +ಮದುವೆಯಾದ ಹೊಸದರಲ್ಲಿ ಆಮೇಲೆ ಅವಳಮ್ಮ ಅವರಿಗೆ ಬರೆದ ಹಳೆಯ ಇನ್‌ಲ್ಯಾಂಡ್‌ ಲೆಟರ್ಸ್‌ಗಳು, ಕವರ್‌ಗಳು ಮತ್ತು ವಾಸುದೇವಯ್ಯ ಬರೆದ ಪತ್ರಗಳು ಕೂಡ ಇತ್ತು. +ಬ್ಲಾಕ್‌ ಅಂಟ್‌ ವೈಟ್‌ ಜಾಮಾನಾದ ಕೆಲವು ಫೋಟೋಗಳಿತ್ತು ಕವರ್‌ನಲ್ಲಿ. +ಹಳೆಯ ನೆನಪುಗಳನ್ನ ಮರುಕಳಿಸುವಂಥದ್ದೇ. +ಕಾಫಿ ಕುಡಿದಿಟ್ಟ ಚಾರುಲತ ಅವನ್ನೆಲ್ಲ ಎತ್ತಿಟ್ಟು "ಸ್ವಲ್ಪ ರೂಮಿನಿಂದ ಹೊರ್ಗೆ ಬನ್ನಿ, ಅಪ್ಪ. +ಆರಾಮಾಗಿ ನೀರದ ಜೊತೆ ಕೇರಂ ಆಡಬಹುದಲ್ಲ. +ಹೇಗೂ ಸಂಜೆ, ಮಾವ ಸೊಸೆ ಸುತ್ತಾಡಿಕೊಂಡು ಒಂದಿಷ್ಟು ತರಕ್ಕಾರಿ ತನ್ನಿ" ಬಲವಂತದಿಂದ ಹೊರಗೆ ಎಬ್ಬಿಸಿಕೊಂಡು ಬಂದಳು. +ಅಂತು ಪ್ರಯಾಸದಿಂದ ಅವರಿಬ್ಬರನ್ನ ಹೊರಡಿಸಿ ಕೂತಳು ಒಂದೆಡೆ. +ಹತ್ತು ಸಲ ಮಾಡಿದ ನಂತರ ಮೂರ್ತಿಯನ್ನ ಸಂಪರ್ಕಿಸಲು ಸಾಧ್ಯವಾಗಿದ್ದು "ಫೋನಿಡ್ಬೇಡಿ. +ಒಂದಿಷ್ಟು ಮಾತಾಡೋದಿದೆ" ಎಂದಾಗ ಸಿಡುಕಿದ "ನನ್ನಟೈಮ್‌ ಹಾಳು ಮಾಡ್ಬೇಡ, ನಿನ್ನ ಜೀವನ ನಿಂದು. +ನನ್ನ ಸಲಹೆ, ಸೂಚನೆ ನಿಂಗೆ ಬೇಕಿಲ್ಲ" ಮುಖದ ಮೇಲೊಡೆದಂತೆ ಫೋನಿಟ್ಟಿದ್ದ. +ಬೆಳಕಿದೆಯೆಂದು ಕೊಂಡವಳನ್ನ ಅವನ ಮಾತುಗಳು ಕತ್ತಲೆಯ ನಡುವೆ ನಿಲ್ಲಿಸಿತು. +ಸುಂದರ ದಾಂಪತ್ಯದಲ್ಲಿ ಎಷ್ಟೊಂದು ದೊಡ್ಡ ಬಿರುಕು. +ಹಟದಿಂದ ಅವನೊಂದಿಗೆ ವಾಸಿಸಿ ನರಕ ಸದೃಶವಾಗಿ ಬದುಕುವುದಕ್ಕಿಂತ, ದೂರವಿದ್ದು ಬಿಡುವುದೇ ಶ್ರೇಯಸ್ಕರವಾಗಿ ಕಂಡಿತು. +ಅಷ್ಟರಲ್ಲಿ ನೀರದಳ ಅಮ್ಮ ಬಂದು ಕೂತರು ಅವಳ ಮುಂದೆ. +"ಬೆಳಗ್ನಿಂದ ಕಾಣಲೇ ಇಲ್ಲ" ಎಂದರು ಅತ್ತಿತ್ತ ನೋಡಿ. + "ಇಲ್ಲಿ ಇರಲಿಲ್ಲ . . "ಅಷ್ಟೇ ನುಡಿದಿದ್ದು. +ಈಗ ಅವಳಿಗೆ ಮಾತು ಬೇಕಿರಲಿಲ್ಲ. +ಅವರಿಗೆ ಅರ್ಥವಾಗಬೇಕಲ್ಲ. +ಆಕೆ ಮಾತನಾಡಲೆಂದೇ ಬಂದಿದ್ದರು. +“ಅಪ್ಪ, ಮನೆಯಲ್ಲಿದ್ದಾರೆ” ಎಂದಳು ಚಾರುಲತ. +ಆಕೆ ಹೆಚ್ಚು ಕಡಿಮೆ ಮಾತಾಡುವುದು ಬೇಕಿರಲಿಲ್ಲ. +"ನಿನ್ನ ಕರ್ಕೊಂಡ್ಹೋಗೋಣಾಂತ ಬಂದೆ" ಅಂದರು ಆಕೆ. +"ಅಯ್ಯೋ, ಅದೇನು ದೊಡ್ಡ ವಿಷ್ಯ? +ನಾನು ನಮ್ಮ ಮನೆಗೆ ಬರೋಕೆ,ಕರೀಬೇಕಾ ? +ದಿನಕ್ಕೆ ಒಂದೆರಡು ಸಲ ಬರ್ತಾ ಇದ್ದೆ. +ಇರೀ, ನೀರದಾನ ಕರೀತೀನಿ" ಬಿಡಿಸಿಕೊಂಡು ಎದ್ದು ಹೋದಳು. +ಅಡಿಗೆ ಮನೆಯಲ್ಲಿದ್ದ ನೀರದಾನ ಹೊರಗೆ ಕಳಿಸಿ ತಾನು ಅಲ್ಲೆ ಉಳಿದಳು. +ಅವರು ಕೇಳೋ ಕೆಲವು ಪ್ರಶ್ನೆಗಳಿಗೆ ಉತ್ತರಿಸಲಾರಳು. +ಮದುವೆಯಾದ ಕೆಲವು ದಿನಗಳವರೆಗಾದರೂ ಸಂಭ್ರಮ ಉಳಿಯಬೇಕಿತ್ತು. +ಈಗಾಗಲೇ ಕತ್ತಲೆ- ಬೆಳಕಿನಾಟ. +ಒಂದು ಲೋಟ ಹಾರ್ಲಿಕ್ಸ್‌ ಬೆರೆಸಿ ಆಕೆಯ ಮುಂದಿಟ್ಟು ಕೈಯೊರೆಸಿ ಕೊಳ್ಳುತ್ತ ರೂಮಿಗೆ ಹೋದಳು. +ಸಧ್ಯಕ್ಕೆ ತಾತ್ಕಾಲಿಕವಾಗಿ ಒಂದು ಕೆಲಸ ಸಿಕ್ಕಿತ್ತು. +ಸಮಯ ಕಳೆಯಲು ಮಾತ್ರವಲ್ಲ ತಿಂಗಳಿಗೊಮ್ಮೆ ಅವಳದೇ ಆದ ಸಂಪಾದನೆ ಕೈ ಸೇರುತ್ತಿತ್ತು. +ವಿವಾಹವಾದ ಹೆಣ್ಣು ತವರು ಮನೆಗೆ ಪರಕೀಯಳಾಗಿ ಬಿಡುತ್ತಾಳೆ. +ಇದು ಅವಳಿಗೆ ಗೊತ್ತು. +ಈಗ ಮೊದಲಿನ ಹಕ್ಕು, ಸ್ವತಂತ್ರ ಎರಡು ಇಲ್ಲ. +ಕಣ್ಣಿಂದ ಹರಿದ ಕಂಬನಿಯ ಬಿಂದುಗಳು ಅತ್ತಿತ್ತ ಸರಿದುಹೋದವು. +"ಚಾರು, ನಿನ್ನ ಫ್ರೆಂಡ್ಸ್‌ ಬಂದಿದ್ದಾರೆ" ನೀರದ ಬಂದು ವಿಷಯ ಮುಟ್ಟಿಸಿದಾಗ ಹೊರಗೆ ಬಂದಳು. +ಕಮಲ ಇವಳ ಸಹಪಾಠಿ ಮಾತ್ರವಲ್ಲ, ಮೂರ್ತಿಯ ತಾಯಿಯ ಕಡೆಯ ದೂರದ ಸಂಬಂಧಿ. +ಆಗಾಗ ಆ ಮನೆಗೆ ಬಂದು ಹೋಗುವಷ್ಟು ನೆಂಟಸ್ತಿಕೆ ಇತ್ತು. +"ಕಮಲ. . . ಬಾ. . . . ಬಾ. . . "ಎಂದು ರೂಮಿಗೆ ಕರೆದೊಯ್ದು ಕೂಡಿಸಿ "ಅಪರೂಪಕ್ಕೆ ಬಂದಿದ್ದೀಯ. +ಮದ್ವೇಂತ ಬಂದೋಳು ಕಣ್ಣಿಗೆ ಕಾಣ್ದೇ ಪರಾರಿಯಾಗ್ಟಿಟ್ಟೆ." +ಕಮಲ ಮಾತಾಡದೇ ಅವಳ ಮುಖ ನೋಡಿ, ಮೊದಲಿನ ಕಳೆ ಇಲ್ಲವೆಂಬ ನಿರ್ಧಾರಕ್ಕೆ ಬಂದಳು. +"ಇನ್ನ ಅವ್ರ ಸಂಸಾರ ನೆಟ್ಟಗಾಗೋಲ್ಲ ಬಿಡು. +ಇವಳಾದ್ರು ಬುದ್ಧಿವಂತಿಕೆಯಿಂದ ತನ್ನ ಸಂಸಾರನ ಉಳ್ಸಿಕೊಳ್ಳ ಬೇಕಿತ್ತು. +ಅಣ್ಣ,ಅನ್ನಿಸಿಕೊಂಡೋನಿಗೆ ಬುದ್ಧಿ ಬೇಡ್ವಾ ? +"ಅವಳಮ್ಮ ಪೂಜಾಳನ್ನು ನೋಡಲು ಹೋಗಿ ಬಂದಾಗಿನಿಂದ ಸಾಕಷ್ಟು ಸಲ ಅಂದಿದ್ದರು. +"ಅದೇನು, ಹಾಗೇ ಕೂತೇ ?"ಎಚ್ಚರಿಸಿದಳು ಚಾರುಲತ. +ಏನಿಲ್ಲ, ಯಾಕೋ ಬೇಜಾರಾಯ್ತು. +ನಾನು ಕೇಳಿದ್ದು ಸುಳ್ಳಾಗ್ಲೀಂತ ದೇವರಲ್ಲಿ ನನ್ನ ಬೇಡಿಕೆ. +ಪೂಜಾನ ಈಚೆಗೆ ನೋಡಿದ್ಯಾ ? ಹೇಗಿದ್ದೋಳು ಹೇಗಾಗ್ಟಿಟ್ಟಿದ್ದಾಳೆ. +ಅವ್ಳ ಮುಖದ ಕಾಂತಿ, ಬಣ್ಣ ಎಲ್ಹೋಯ್ತೋ ಅವ್ಳು ಉಳ್ಳುಕೊಂಡಿದ್ದೇ ಹೆಚ್ಚು." +ಅದರೆ ಕಮಲಳ ಮಾತಿಗೆ ಪ್ರತಿಕ್ರಿಯಿಸಲು ಅವಳ ಸ್ವರವೇಳಲಿಲ್ಲ. +ಸ್ವಲ್ಪ ತುಂಟತನ,ಹಟವಾದಿಯಾದರೂ ಪೂಜಾ ಅವಳ ಪ್ರೀತಿಯ ನಾದಿನಿಯೇ. +ಛೇಡಿಸಿ, ಛೇಡಿಸಿಗೋಳೊಯ್ಬುಕೊಳ್ಳುತ್ತಿದ್ದ ಅವಳ ನೆನಪಿನಿಂದ ಹನಿಗಣ್ಣಾದಳು. +"ಈಗ ಪೂಜಾ ಹೇಗಿದಾಳೆ ?" ವಿಚಾರಿಸಿದಳು. +"ಏನೇನು ಚೇತರಿಸಿಕೊಳ್ಳಿಲ್ಲ. +ಮುಂಬಯಿಗೆ ಕರ್ಕೊಂಡ್ಟೋಗಿದಾರೆ. +ಅಲ್ವೇ,ನಿಮ್ಮಣ್ಣನಿಗೆ ಏನಾಗಿತ್ತು. +ಪೂಜಾ ಅಷ್ಟು ನಿನ್ನತ್ತಿಗೆ ಚೆನ್ನಾಗಿದ್ದಾರಾ? +ಮದ್ವೆನ ಹಬ್ಬದಂಗೆ ಮಾಡ್ಬಿಟ್ಟಿರಲ್ಲ. +ಸ್ವಲ್ಪನಾದ್ರೂ ದೂರದೃಷ್ಟಿ ಬೇಡ್ವಾ? +ಯುಗಂಧರ್‌ ಮಾವ ಬಾಡಿಗೆಗೆ ಕೊಟ್ಟಿದ್ದ ಮನೆನ ನರ್ಸಿಂಗ್‌ ಹೋಂ ಮಾಡೋಕೆ ಬಿಡ್ಸಿಕೊಡ್ತೀನಿ ಅಂದರಂತಲ್ಲ, ಇನ್ನು ಸಾಕಷ್ಟು ಕೊಟ್ಟಿರೋರು. +ಅದು ಅಲ್ದೇ, ನಿನ್ನ ಭವಿಷ್ಯದ ದೃಷ್ಟಿಯಿಂದಲಾದ್ರೂ ಪೂಜಾನ ಈ ಮನೆಗೆ ತಂದ್ಕೋಬೇಕಿತ್ತು." +ಅವಳು ಸ್ವಲ್ಪ ನಾಲಿಗೆ ಉದ್ದಕ್ಕೆ ಚಾಚಿದಳು. +ಮನಸ್ಸಿನಲ್ಲಿ ದ್ದುದ್ದನ್ನು ಅಡಿ ಬಿಡುವಂಥವಳು. +ಚಾರುಲತ ತಾಳ್ಮೆ ಕಳೆದುಕೊಳ್ಳಲಿಲ್ಲ. +"ನವೀನ್‌, ನೀರದ ಮಧ್ಯೆ ಲವ್‌ ಅಫೇರ್ಸ್‌ ಇತ್ತು. +ಅದ್ರೆ ಮನೆಯವ್ಳು ನಮ್ಮ ತಾಯಿ ಸತ್ತಾಗ ಸಾಕಷ್ಟು ಮಾಡಿದ್ರು. +ಅದೊಂದು ಕೃತಜ್ಞತೆ ಕೂಡ ನಮ್ಮ ಮೇಲಿತ್ತು” ಸ್ಪಷ್ಟಪಡಿಸಿದಳು. +ವ್ಯವಹಾರಿಕವಾಗಿ ಈ ಜನ ಸ್ವಲ್ಪ ಡಲ್‌ ಎನಿಸಿತು ಕಮಲಾಗೆ, ಅಂಥ ಉತ್ತಮ ಸಂಬಂಧ ಸಿಗೋವಾಗ, ಎದುರು ಮನೆ ಹುಡುಗಿಗಾಗಿ ನೇತು ಬೀಳಬೇಕಿತ್ತೆ." +ಚಾರು, ನೀನು ಹೇಳೋದು ವ್ಯವಹಾರಿಕವಾಗಿ ಏನೇನು ಸರಿಯಿಲ್ಲ. +ನಿಮ್ಮಣ್ಣ ಮಾಡಿರೋದು ಬರೀ ಎಂ.ಬಿ.ಬಿ.ಎಸ್‌. ಇಷ್ಟಕ್ಕೆ ಮುಗಿದ್ರೆ ಎನೇನು ಭವಿಷ್ಯವಿಲ್ಲ. +ಇದ್ದೆಲ್ಲ ಯೋಚ್ಸಿಬೇಕಿತ್ತು. +ನಿಮ್ಮಣ್ಣ ಮಜ್ನು ಬಿಡಮ್ಮ ಈಗ ನಿನ್ನ ಭವಿಷ್ಯದ ಬಗ್ಗೆ ಏನು ಹೇಳ್ತಾನೆ. +ಆರಾಮಾಗಿ ಡೈವೋರ್ಸ್‌ ತಗೋತಾರೆ. +ಇನ್ನೊಂದು ಹೆಣ್ಣನ್ನ ತಂದ್ಕೋತಾರೆ. +ನಿನ್ತಲೆ ಮೇಲೆ ನೀನು ಕಲ್ಲು ಎತ್ತಿ ಹಾಕ್ಕೊಂಡೆ" ಸ್ವಲ್ಪ ಉದ್ವೇಗದಿಂದ ಕಮಲ ನುಡಿದಾಗ ಆರಾಮಾಗಿ ನಕ್ಕುಬಿಟ್ಟಳು ಚಾರುಲತ. +"ಅವರಾಗಿ ಕಲ್ಲು ಎತ್ಕೊಂಡ್‌ ಅವ್ರ ತಲೆ ಮೇಲೆ ಹಾಕಿಕೊಳ್ಳೋದು ಕಷ್ಟ. +ಬೇಕಾದ್ರೆ ಕಾಲು ಮೇಲೆ ಹಾಕ್ಕೋಬಹುದು +ನೀನು ಚಿಂತಿಸೋ ರೀತಿಯಲ್ಲಿ ನಾನು ಚಿಂತಿಸ್ಸಿಲ್ಲ. +ಅದಕ್ಕಾಗಿ ಖಂಡಿತ ಪಶ್ಚಾತ್ತಾಪವಿಲ್ಲ. +ಒಂದಿಷ್ಟು ಸಮಸ್ಯೆಗಳು ಕಮ್ಮಿ ಆಯ್ತು, ಅಷ್ಟೆ. +ಏನಾದ್ರೂ ತರ್ತಿನಿ. . . . ಕೂತ್ಕೊಂಡಿರು"ಮೇಲೆದ್ದು ಹೋದಳು. +ನೀರದ, ಅವಳ ತಾಯಿ ಇನ್ನ ದನಿ ತಗ್ಗಿಸಿ ಮಾತಾಡುತ್ತಿದ್ದರು. +ಅವಳ ಕೆನ್ನೆಗಳ ಮೇಲೆ ಅತ್ತ ಗುರುತಿತ್ತು. +ನೀರದಾಳ ಕೈ ಹಿಡಿದು ಒಳಗೆ ಕರೆದೊಯ್ದು. +"ಸಣ್ಣ, ಪುಟ್ಟ ವಿಷ್ಯಗಳ್ನ ದೊಡ್ಡ ಸಮಸ್ಯೆಯನ್ನಾಗಿ ಮಾಡ್ಕೊಂಡ್‌ ಆಂಟೀಗೆ ಹೇಳ್ತೀರಾ ? +ಕೌಂಟಿಂಗ್‌ ಡೇಸ್‌ ಅಂತ ಡಾಕ್ಟ್ರು ಹೇಳಿದ್ದಾರೆ. +ಒಂದಿಷ್ಟುನೆಮ್ಮಿಯಾಗಿರೋಕೆ ಬಿಡಿ. +ಅದೂ ಅಲ್ದೇ, ನಿಮ್ಗೇ ಅಂಥದೇನಾಗಿದೆ ? +ಕನಸುಕಂಡ ರಾಜಕುಮಾರ ನಿಮ್ಮ ಕೈ ಹಿಡಿದಿದ್ದಾನೆ. +ಅತ್ತೆ ಮನೆ ಅಪರಿಚಿತ ಸ್ಥಳವಲ್ಲ. +ಇಲ್ಲಿನವ್ರು ಕೂಡ ಕಾಣದ ಜನವಲ್ಲ. +ನೀವು ಸುಖೀ. ಇಲ್ಲದೆಲ್ಲ ಕಲ್ಪಿಸಿಕೊಳ್ಳಬೇಡಿ. " ಬುದ್ಧಿ ಹೇಳಿದಳು. +ನೀರದ ಇನ್ನಷ್ಟು ಕಣ್ಣೀರು ಸುರಿಸಿ ತೊಡೆದುಕೊಂಡು ಹೋದಳು. +ಡಬ್ಬಿಯಲ್ಲಿದ್ದ ಚಕ್ಕುಲಿಯನ್ನ ತಟ್ಟೆಗೆ ಹಾಕಿಕೊಂಡು ನೀರಿಡಿದು ಹೋದಳು. +ಅವಳಲ್ಲಿನ ಅಳುಕು ಒಂದಿಷ್ಟು ಕಮ್ಮಿ ಆಗಿತ್ತು. +ಸಮಸ್ಯೆಗಳು ಹೇಗೆ ಬಂದರೂ ಎದುರಿಸುವ ಆತ್ಮವಿಶ್ವಾಸ ಅವಳದು. +"ತಗೋ, ಇಷ್ಟೊತ್ತು ನನ್ನ ವಿಷ್ಯ ಮಾತಾಡ್ದೆ, ಸಾಕು ಬಿಡು. +ಈಗ ಬೇರೆನಾದ್ರೂ ಮಾತಾಡು. +ನೀನೇನ್ಮಾಡ್ತೀಯಾ ?"ಕೇಳಿದಳು. +ಸ್ವಂತ ವಿಷಯ ಬೇರೆಯವರು ಹಿಗ್ಗು ಮುಗ್ಗಾ ಎಳೆದಾಡುವುದು ಬೇಕಿರಲಿಲ್ಲ. +ಒಂದು ಚಕ್ಕುಲಿ ಖಾಲಿಯಾದ ನಂತರವೇ ಕಮಲ ಷುರು ಮಾಡಿದ್ದು "ಮನೆಯಲ್ಲಿ ನೂರೆಂಟು ಸಮಸ್ಯೆ. +ಅಮ್ಮ ಅಪ್ಪ ಸದಾ ಕಿತ್ತಾಡುತ್ತಾರೆ. +ಅವ್ರಿಗೆ ಚೆನ್ನಾಗಿ ಸಂಪಾದನೆ ಇದ್ದಾಗ ಸ್ವಂತಕ್ಕೆ ಒಂದು ಮನೆ ಕೂಡ ಮಾಡ್ಲಿಲ್ಲ. +ಸ್ವಪ್ರತಿಷ್ಟೆಗಾಗಿ ಸಿಕ್ಕಿದವ್ರಿಗೆಲ್ಲ ಮಾಡಿದ್ರು. +ಈಗ ಎರಡು ಹೆಣ್ಣು ಮಕ್ಳಿಗೆ ವಿವಾಹವಾಗ್ಬೇಕು. +ನಮ್ಮಣ್ಣನದು ಟೆಂಪರರಿ ನೌಕರಿ. +ನನ್ನ ಮದ್ವೆಗೆ ಯಾರು ಕೈ ಹಾಕ್ಬೇಡಿ. +ನೆಮ್ಮಿಯಿಂದ ಬಿಟ್ಟಿಡಿ. +ನನ್ನ ಸಂಬಳದಲ್ಲಿ ಎಪ್ಪತ್ತೈದು ಪರ್ಸೆಂಟ್‌ ಮನೆಗೆ ಕೊಡ್ತೀನಿ. +ಒಪ್ಪತ್ತು ಊಟ, ಮಲಗೋಕೆ ಒಂದಿಷ್ಟು ಜಾಗ ಕೊಡೀಂತಾನೇ. +ಇಷ್ಟೇ ನೋಡು ನಮ್ಮ ಮನೆ ವಿಷ್ಯ"ಬೇಸರ ವ್ಯಕ್ತಪಡಿಸಿದಳು. +"ಮಹರಾಯ್ತಿ, ಇದು ನೂರಕ್ಕೆ ತೊಂಬತ್ತು ಮನೆಗಳಲ್ಲಿನ ಸಾಧಾರಣ,ಸಾಮಾನ್ಯ ವಿಷ್ಯ. +ಇದ್ರಲ್ಲಿ ಅತಿಶಯವೇನಿಲ್ಲ. +ಸುಮ್ನೇ ಪರಿಹಾರ ಹುಡುಕಿದರೇ ತಲೆ ಕೆಡುತ್ತೆ ವಿನಃ ಸಾಲ್ವ್ ಆಗೋಲ್ಲ. +ಹೀಗೆಯೇ ಉರುಳಿ ಕೊಂಡು ಹೋಗುತ್ತೆ. +ಸಧ್ಯಕ್ಕೆ ಅಪ್ಪನ ಪ್ರತಿಷ್ಟೆಗೆ ಜೋತು ಬೀಳದೇ ನೀನು, ನಿನ್ನಕ್ಕ ಒದ್ಕೆಲ್ಸ ಹುಡ್ಕಿಕೊಂಡರೇ ಮನೆಗೆ ಸಹಾಯವಾಗದಿದ್ರೂ ನಿಮ್ಮ ಸ್ಥಂತ ಖರ್ಚು ವೆಚ್ಚಗಳ್ನ ನೀವು ನೋಡ್ಕೋಬಹುದು." +ಚಾರುಲತಳ ಮಾತುಗಳು ಸರಿಯೆನಿಸಿದರೂ ಅವಳ ಜನದಾತರ ಒಪ್ಪಿಗೆ ಸಿಗುವುದಿಲ್ಲವೆಂದು ಅವಳಿಗೆ ಗೊತ್ತು. +"ಒಪ್ಪೋಲ್ಲ ಕಣೇ, ಅಪ್ಪನ ಮುಂದೆ ಅಷ್ಟಿ ತಪ್ಪಿ ಇಂಥ ಸುದ್ಧಿ ಎತ್ತಿದರೇ,ಅವರು ತಮ್ಮ ಕಳೆದು ಹೋದ ಮೂರು ಜನರೇಷನ್‌ನ ವೈಭವ ನೆನಪಸ್ಕೊಂಡು ಹಲುಬೋಕೆ ಷುರು ಮಾಡ್ತಾರೆ. +ಏನ್ಮಾಡೋದು ಒಂದು ತೋಚೋಲ್ಲ" ಚಕ್ಕುಲಿ ತಟ್ಟೆ ಕೆಳಗಿಟ್ಟಳು. +ತಲೆ ಕೆಟ್ಟಂತಾಯಿತು ಕಮಲಗೆ. +ಕಾಫಿಯ ನಂತರ ಕಮಲನ ಬಸು ಹತ್ತಿಸಲು ಚಾರುಲತ ಅವಳೊಂದಿಗೆ ಹೊರಟಾಗ ಮಧ್ಯೆ ದಾರಿಯಲ್ಲಿ ನಿಂತು ಕಮಲ "ಮುಂದೇನು ಮಾಡ್ತೀಯಾ? +ಬಹುಶಃ ಇಷ್ಟೆಲ್ಲ ಆದ್ಮೇಲೆ ಮೂರ್ತಿ ಅಣ್ಣ ನಿನ್ಜೊತೆ ಸಂಸಾರ ಮಾಡೋಕೆ ಇಷ್ಟಪಡೋಲ್ಲ" ಅವಳ ದನಿಯಲ್ಲಿ ವಿಷಾದ ಇಣಕಿತು. +ಆಯ್ತು, ಆಗ್ಲಿ ! +ಅದ್ಯೇನು ಮಾಡೋಕ್ಕಾಗುತ್ತೆ. +ಕಾಲ ಅದ್ಕೆಲ್ಲ ಪರಿಹಾರ ಸೂಚಿಸುತ್ತೆ. +ಈಗ ಪೂಜಾ ಹುಷಾರಾಗಿದ್ದಾಳಂಥ ? +ಆ ಉದ್ದೇಶ ಇಟ್ಕೊಂಡ್‌ ನವೀನಣ್ಣನ ಜೊತೆಯಲ್ಲಿ ಓಡಾಡ್ತಾ ಇದ್ದಾಳೆಂದು ಗೊತ್ತಾಗಿದ್ದರೇ, ಮೊದಲೇ ಎಚ್ಚರಿಸ್ತಾ ಇದ್ದೆ. +ಅವೆಲ್ಲ ಕಳೆದು ಹೋದದ್ದಲ್ವಾ !"ಎಂದವಳು “ಬಸ್ಸು ರೆಡಿಯಾಗಿದೆ, ನೋಡು. +ಮುಂದಿನ ಬಸ್ಸು ಅಂದರೇ ಇನ್ನರ್ಧ ಗಂಟೆ ಕಾಯ್ದೇಕು. +ಯಾವಾಗ್ಲಾದ್ರೂ. . . ಬಾ'' ಬೀಳ್ಸೊಟ್ಬಳು. +ಎದುರಿನಿಂದ ಬಂದ ಡಾ||ನವೀನ್‌ ಅವಳ ಪಕ್ಕ ಸ್ಕೂಟರ್‌ ನಿಧಾನಿಸಿ "ಇವ್ಳು ಯಾವಾಗ್ಬಂದ್ಲು ?"ಎಂದವನು "ಬೇಗ ಹತ್ಕೋ" ಹೇಳಿದ. +ಸ್ಕೂಟರ್‌ ಮುಂದಕ್ಕೆ ಹೋಗುವ ಬದಲು ಹಿಂದಕ್ಕೆ ತಿರುಗಿಸಿಕೊಂಡಾಗ ಅವಳಿಗೆ ಆಶ್ಚರ್ಯವಾದರೂ ಕೇಳಲಿಲ್ಲ. +ಒಂದು ರೆಸ್ಟೋರೆಂಟ್‌ನ ಮುಂದೆ ನಿಂತಿತು. +ಹೊಟ್ಟೆ ಹಸೀತಾ ಇದೆ. +ಒಂದಿಷ್ಟು ಏನಾದ್ರೂ ಹಾಕ್ಕೊಂಡು ಹೋಗೋಣ? +ನಗುತ್ತ ಅಂದು ಒಳ ನಡೆದಾಗ ಹಿಂಬಾಲಿಸಿದಳು ಮೌನವಾಗಿ. +ಮದುವೆಯಾಗಿ ಕನಿಷ್ಟ ತಿಂಗಳು ಕಳೆಯುವ ಮುನ್ನವೇ ಮನೆಯ ಬಗ್ಗೆ ಇಷ್ಟೊಂದು ಉದಾಸ ಭಾವ ಒಳ್ಳೆಯದಲ್ಲವೆನಿಸಿತು. +ಬಾಂಬೆ ಬಜ್ಜಿ, ಮಸಾಲೆ ದೋಸೆಗೆ ಆರ್ಡರ್‌ ಮಾಡಿ ಕೈ ತೊಳೆದುಬಂದು ಕೂತ. +ನೇರವಾಗಿ ಅವನನ್ನ ನೋಡಿದಳು. +"ಅದೇನು, ಹಾಗೇ ನೋಡ್ತೀಯಾ ?" ಕೇಳಿದ ಹುಬ್ಬೆ ತ್ತಿ. +"ವಿವಾಹ ನಿನ್ನ ವ್ಯಕ್ತಿತ್ವ, ನಿನ್ಮುಖದ ಮೇಲೆ ಎಂಥ ಪರಿಣಾಮ ಬೀರಿದೇಂತ ಟೆಸ್ಟ್‌ ಮಾಡ್ತಾ ಇದ್ದೀನಿ. +ಕ್ರಾಪ್‌ನ ಒರಟಾಗಿ ಎಡಗೈಯಿಂದ ಹಿಂದಕ್ಕೆ ತಳ್ಳಿಕೊಂಡ "ಮಣ್ಗಾಗಟ್ಟಿ ಬೀರಿದೆ. +ನಿಟ್ಟುಸಿರು ದಬ್ಬಿದ "ಎಷ್ಟೊತ್ತಿಗೆ ಬಂದೆ ?" +"ನಾನೇನೋ ಬೇಗ್ನೆ ಬಂದೆ.ನೀನೇ ಲೇಟು." +ನಮ್ಗೇನು ಟೈಮಿಂಗ್ಸ್‌ ಇಲ್ಲ. +ಟೆನ್‌ ಟು ಫೈವ್‌ ಸರ್ಕಾರಿ ಜಾಬ್‌ ಅಲ್ಲ. +ಮಾಡಿದಷ್ಟೇ ಕೆಲ್ಸ, ಕೊಟ್ಟಷ್ಟೇ ಸಂಬಳ ಇವತ್ತು ನೈಟ್‌ ಕೂಡ ಮಾಡ್ಬೇಕು. +ನನ್ನ ಕೊಲಿಗ್‌ ಡಾ|।ಹರೀಶ್‌ ಮುಂಬಯಿಗೆ ಹೋಗಿದ್ದಾರೆ. +ಇಲ್ಲಿ ಹೊಟ್ಟೆತುಂಬ ತಿಂಡಿ ತಿಂದರೇ, ನರ್ಸಿಂಗ್‌ ಹೋಂಗೆ ಹೋಗೋ ಮೊದ್ಲು ಊಟ ಮಾಡ್ಕೊಂಡ್‌ ಹೋಗಬಹುದು. ಎಂದ ಕರ್ಚಿಪ್‌ನಿಂದ ಮುಖವನ್ನೊರೆಸಿಕೊಳ್ಳುತ್ತ. +ಡಾ|| ನವೀನ್‌ಗೂ ನೈಟ್‌ ಡ್ಯೂಟಿ ಇರುತ್ತಿತ್ತು. +"ನೀನೇ ಏನಾದ್ರೂ ನೈಟ್‌ ಡ್ಯೂಟಿ ಹಾಕ್ಸಿಕೊಂಡ್ಕಾ ?"ಪ್ರಶ್ನಿಸಿದಳು. +“ಅದೆಲ್ಲ ಬಿಡು, ಹೇಗಿತ್ತು ಕೆಲ್ಸ ?” ವಿಚಾರಿಸಿದ. +ಇದು ಮೇಲುುಖಕ್ಕೆ ಬಂದ ಪ್ರಶ್ನೆಯೇ. +ಅವನಿಂದು ನರ್ಸಿಂಗ್‌ ಹೋಂಗೆ ಹೋಗಿಯೇ ಇಲ್ಲ. +ನಿವೇದಿತಾ ಲೇಡಿಸ್‌ ವೇರ್‌ ಷೋರೂಂ ಬಗ್ಗೆ ಸಾಕಷ್ಟು ವಿಚಾರಿಸಿಕೊಂಡಿದ್ದ ತೃಪ್ತಿಯಾಗಿತ್ತು. +"ಎಲ್ಲಾ ಚೆನ್ನಾಗಿದೆ.ಕ್ಯಾಂಟೀನ್‌ ಸೌಲಭ್ಯವಿದೆ. +ಅಲ್ಲಿ ಎಂ.ಡಿ.ಯಿಂದ ಅಟೆಂಡರ್‌ವರ್ಗೂ ಲೇಡಿಸೇ. +ಒಂದು ಆದರ್ಶ ಇಟ್ಕೊಂಡ್‌ ಪ್ರಾರಂಭಿಸಿದ ಉದ್ಯಮ. +ಎಷ್ಟೋ ಜನ ಮಹಿಳೆಯರ ಜೀವನಕ್ಕೆ ಒಂದು ದಾರಿಯಾಗಿದೆ" ಇದ್ದುದ್ದನ್ನ ಸ್ಪಷ್ಟವಾಗಿ ಉಸುರಿದಳು. +ಬಾಂಬೆ ಬಜ್ಜಿ, ದೋಸೆ ಮುಗಿದ ಮೇಲೆ ವೆಯಿಟರ್‌ನ ಕಾಫಿ ನಿಧಾನವಾಗಿ ತರಲು ಹೇಳಿ "ಮೂರ್ತಿಗೆ ಫೋನ್‌ ಮಾಡಿದ್ಯಾ ? +ಅವ್ನು ನಿಜವಾಗ್ಲೂ ಫೋನ್‌ನಲ್ಲಿ ಸಿಕ್ಕರಾ ?"ಕೇಳಿದ. +ಹೌದೆಂದು ತಲೆದೂಗಿದಳು. +ಮುಚ್ಚಿಡುವುದರಿಂದ ಮತ್ತಷ್ಟು ಸಮಸ್ಯೆಗಳೆಂದು ಅವಳಿಗೆ ಗೊತ್ತು. +“ಹೌದು, ನನ್ನ ಮಾತು ಕೇಳೋ ಆಸಕ್ತಿ ಅವ್ರಿಗೆ ಇಲ್ಲ. +ನಿನ್ನ ಬದ್ಕುನ ಹೇಗೆ ಬೇಕಾದ್ರೂ ರೂಪಿಸ್ಕೋ, ಅದ್ಕೇ ನನ್ನ ಸಲಹೆ ಸೂಚನೆಯೇನ್ಬೇಡ ಅನ್ನೋತರಹ ಮಾತಾಡಿದ್ರು.” +ಹಲ್ಕುಡಿ ಕಚ್ಚಿ ಮುಷ್ಟಿ ಬಿಗಿ ಹಿಡಿದು ಟೇಬಲ್ಲು ಮೇಲೆ ಒತ್ತಿಡಿದ "ಅವ್ನಿಗೆ ಒಂದು ಕೈ ತೋರಿಸ್ತೀನಿ"ಕನಲಿದ. +"ಏನು ತೋರಿಸ್ತೀಯಾ ?"ಶಾಂತವಾಗಿ ಕೇಳಿದಳು. +"ಆಮೇಲೆ ಗೊತ್ತಾಗುತ್ತೆ?"ಸಿಡಿದ. +"ಸುಮ್ನೇ ವಿವೇಕ ಕಳ್ಕೋಬೇಡ. +ಯಾರಾದ್ರೂ ಮುಖ ತಿರುಗಿಸ್ಕೊಂಡ್ರೆ ಹತ್ತು ನಿಮಿಷ ಅಲ್ಲಿ ಕೂಡೋಕ್ಕಾಗೋಲ್ಲ. +ಅಂಥದ್ಧರಲ್ಲಿ ಇಷ್ಟವಿಲ್ಲದವ ರೊಂದಿಗೆ ಸಂಸಾರ ಮಾಡೋಕ್ಕಾಗುತ್ತ, ಹೆಣ್ಣಿಗೂ ಸ್ವಾಭಿಮಾನ ಇರುತ್ತೆ. +ದಯವಿಟ್ಟು ಇನ್ನ ಯಾವ ಪ್ರಯತ್ನಗಳು ಬೇಡ. +ವೆಯಿಟರ್‌ಗೆ ಕಾಫಿಗೆ ಹೇಳು. +ಪಾಪ,ನೀರದ ಕಾಯ್ತ ಇರ್ತಾಳೆ" ಅವಸರಿಸಿದಳು ಪ್ರಸನ್ನವಾಗಿಯೇ. +ತಂಗಿಯ ಕಣ್ಣುಗಳನ್ನು ನೋಡಿದ ಪ್ರಶಾಂತವಾಗಿತ್ತು. +ಅಸಹನೆ ಆಕ್ರೋಶ ಅಂಥದೇನಿರಲಿಲ್ಲ. +ಈಗ ಅವನಿಗೆ ತನ್ನ ತಪ್ಪಿನ ಪ್ರಮಾಣ ಇನ್ನು ಹೆಚ್ಚೆನಿಸಿತು,ನೋಟ ನೆಲ ನೋಡಿತು. +"ನಾನು ದೊಡ್ಡ ತಪ್ಪು ಮಾಡ್ಬೇ" ಮುಖ ಹಿಂಡಿದ. +ಚಾರುಲತ ಬೆಚ್ಚಿಬಿದ್ದಳು. +"ಅದೊಂದು ಅನಿಸಿಕೆಯೇ ಸಾಕಷ್ಟು ನಿನ್ನ ಚಿತ್ರವಧೆ ಮಾಡೋಕೆ. +ಇದೊಂದು ರೀತಿಯ ಅಗ್ನಿಪರೀಕ್ಷೆ. +ಸೋಲು, ಗೆಲುವು ಫಿಫ್ಟಿ ಫಿಫ್ಟಿ +ಇಲ್ಲಿ ಲಾಭ, ನಷ್ಟಗಳು ನಮ್ಗೂ ಅವ್ರಿಗೂ ಸಮಸಮ ವಾಗಿಯೇಇರುತ್ತೆ. +ಯಾವುದನ್ನು ಛಾಲೆಂಜಾಗಿ ಸ್ವೀಕರಿಸಿದಾಗ್ಲೇ ಜೀವನ ಕ್ಕೊಂದು ಅರ್ಥ" ಮಾತು ಸಾಕು ಸಾಕೆನಿಸಿತು. +ಮನೆಗೆ ಹಿಂದಿರುಗಿದಾಗ ನೀರದ ಮಂಕಾಗಿ ನಿಂತಿದ್ದಳು. +ಅವಳು ಪದೇಪದೇ ತಾಯಿ ಮನೆಗೆ ಹೋಗಿ ಬರುವುದಿತ್ತು. +ಅವರಿಗೆ ಆತಂಕ. +ನೂರೆಂಟು ಪ್ರಶ್ನೆಗಳನ್ನು ಸುತ್ತಿಕೊಂಡು ಕಂಗೆಡಿಸುತ್ತಿತ್ತು. +"ಒಪ್ಪಿಕೊಳ್ಳಿ" ಎಂದವಳು ಒಳಗೋದಳು. +ಚಾರುಲತಗೆ ಒಂದು ರೀತಿಯ ಹಿಂಸೆಯೆನಿಸಿತು. +ಅವರಿಬ್ಬರ ಮಧ್ಯೆ ಮೌನವಾಗಿ ಹೊಗೆಯಾಡುವ ಬೇಸರಕ್ಕೆ ತಾನು ಸ್ವಲ್ಪ ಮಟ್ಟಿಗೆ ಕಾರಣವೆನಿಸಿತು. +"ನಿವೇದಿತಾ ನ್ಯೂ ಲೇಡಿಸ್‌ ವೇರ್" ಸಂಸ್ಥೆಯ ಒಂದು ವರ್ಕಿಂಗ್‌ ವುಮೆನ್ಸ್‌ ಹಾಸ್ಟಲ್‌ ಇತ್ತು. +ಅಲ್ಲಿ ಯಾಕೆ ತಾನು ಜಾಯಿನ್‌ ಆಗಿಬಿಡಬಾರದು ಎಲ್ಲಾ ಕಗ್ಗಂಟಾಗಿಯೇ ಕಂಡಿತು. +ತಂದೆ,-ತಾಯಿ ತಂಗಿಯ ಜೊತೆ ಮುಂಬಯಿಗೆ ಹೋದ ಮೇಲೆ ಮೊದಲ ಸಲ ಊರಿಗೆ ಬಂದಿದ್ದ ಮೂರ್ತಿ. +ಅವನ ಕೊಲೀಗ್ಸ್‌ ಒಂದಲ್ಲ ಒಂದು ಕಾರಣ ಮುಂದು ಮಾಡಿಕೊಂಡು "ಏನು ಕಾರಣ ?" +ಕೆಲವರು ಹುಬ್ಬು ಹಾರಿಸಿ ಕಾರಣ ಕೇಳಿದರೇ, ಮತ್ತೆ ಕೆಲವರು ರೀಸನ್‌ಗಾಗಿ ಹುಡುಕಾಡುತ್ತಿದ್ದರು. +ಅಕ್ಕಪಕ್ಕದ ಮನೆಯವರು, ಎದುರು ಮನೆಯಲ್ಲೇ ವಾಸವಾಗಿದ್ದ ಓನರ್‌ "ಯಾಕೆ, ಶ್ರೀಮತಿಯವ್ರುನ್ನ ಕರ್ಕಂಡ್‌ ಬರ್ಲಿಲ್ಲ? +ಒಂದ್ದಿಂಗ್ಳು ಆಯಿತಲ್ಲ ಹೋಗಿ,ಎಷ್ಟು ದಿನ ಮಾರಾಯರೇ ಅಣ್ಣನ ವಿವಾಹದ ಸಂಭ್ರಮ ? +ಮದ್ವೆಯಾದ್ಯೇಲೆ ಒಂಟಿತನ ಕಷ್ಟ. +ಈ ರೀತಿಯಲ್ಲಿ ಮಾತುಕತೆ ಷುರು ಮಾಡುತ್ತಿದ್ದರು. +ಆಗ ಹಿಂಸೆಯೆನಿಸುತ್ತಿತ್ತು. ಹುಚ್ಚಿಡಿದಂತಾಗುತ್ತಿತ್ತು. ಬದುಕಿನ ಬೆಳದಿಂಗಳು ಇಷ್ಟುಬೇಗ ಕತ್ತಲಾಯಿತಲ್ಲ." +ಎದುರು ಮನೆ ಹುಡುಗ ಬಂದು ಮಲಗುತ್ತಿದ್ದ. +ಪ್ರತಿದಿನ ಕೆಲಸದವಳು ಗುಡಿಸಿ, ಸಾರಿಸಿ ಚೊಕ್ಕಟ ಮಾಡುತ್ತಿದ್ದರಿಂದ ಮನೆ ಕ್ಲೀನಾಗಿಯೇ ಇತ್ತು. +ಬಂದವನು ಸ್ನಾನ ಮುಗಿಸಿ ಸಂಜೆಯವರೆಗೂ ಮಲಗಿದ. +ಅವರದುಅರೆಂಜ್ಡ್‌ ಮ್ಯಾರೇಜಾದರೂ ಚಾರುಲತ, ಅವನಲ್ಲಿ ಬಹಳ ಅನ್ಯೋನ್ಯತೆ ಇತ್ತು. +ಅವಳೆಂದು ಕಾಡುವ ಹೆಣ್ಣಾಗಿರಲಿಲ್ಲ. +ಹಾಲು-ಜೇನು ಬೆರತಂಥ ಸಂಸಾರ. +ಮಲಗಿದ್ದವನು ಎದ್ದು ಕೂತ. +ಅಂಥ ಭ್ರಮೆಯಲ್ಲಿ ತಾನಿದ್ದೇ ಅಷ್ಟೆ. +ಎಷ್ಟು ಆರಾಮಾಗಿ ತನ್ನ ಮಾತನ್ನ ಉತ್ಪ್ರೇಕ್ಷಿಸಿಬಿಟ್ಟಳು ? +ಬಾತ್‌ರೂಂಗೆ ಹೋಗಿ ಮುಖ ತೊಳೆದು ಬಂದ. +ಎದುರು ಮನೆಯ ಹುಡುಗ ಬಂದು "ಸರ್‌, ಅಲ್ಲೇ ಟೀಗೆ ಬರ್ಬೆಕಂತೆ" ಕರೆದ. +"ಅದೆಲ್ಲ ಬೇಡ ! ನಾನು ಹೊರಡೆ ಹೊರಟಿದ್ದೀನಿ"ನಿರಾಕರಿಸಿದ. +"ಖಂಡಿತ ಬರ್ಬೇಕಂತೆ" ಎಂದು ಹೇಳಿ ಓಡಿ ಹೋದ. +ಅವನ ತಾಯಿ ಮತ್ತು ಎದುರು ಮನೆಯ ಒಡತಿಯೊಂದಿಗೆ ಹೆಚ್ಚಿನ ದೋಸ್ತಿ ಇತ್ತು. +ಎರಡು ಮನೆಗಳ ಮಧ್ಯೆ ಹೆಚ್ಚಿನ ಓಡಾಟ ಕೂಡ ಇದ್ದುದ್ದರಿಂದ ನಿರಾಕರಿಸಲಾಗಲಿಲ್ಲ. +"ಯಾವಾಗ್ಬಂದಿದ್ದು ?" ವಿಚಾರಿಸಿದರು. +ಕೂತು ಟೀಪಾಯಿ ಮೇಲಿದ್ದ ಪತ್ರಿಕೆಯನ್ನು ತೆಗೆದುಕೊಂಡ ನಂತರವೇ ಉತ್ತರಿಸಿದ್ದು "ಮಧ್ಯಾಹ್ನ ಬಂದೆ." +ಬಿಸಿ ಅವಲಕ್ಕಿಯ ಜೊತೆ ಅಕ್ಕಿಯ ಕಡುಬನ್ನು ತಂದಿಟ್ಟು ಉಪಚರಿಸಿದರು. +ಅವನು ತಿಂದು ಕಾಫಿ ಕುಡಿಯುವವರೆಗೂ ತಮ್ಮ ಸಂಸಾರದ ಮಾತುಗಳನ್ನು ಆಡಿದವರು ನಂತರ ಷುರು ಮಾಡಿದರು. +ಅವರಿಗೂ ಕೂಡ ಚಾರುಲತ ಮೇಲೆ ಬೇಸರವಿತ್ತು. +"ನಮ್ಗೂ ಪೂಜಾ ಉಳಿಯೋ ನಂಬಿಕೆ ಇಲ್ಲಿಲ್ಲ. +ಏನು ಕಡೇ ಆಗಿತ್ತು ಬೇಡ ಅನ್ನೋಕೆ ? +ಚಾರುಲತ ಸ್ವಲ್ಪ ಗಟ್ಟಿಯಾಗಿ ಕೇಳಿದ್ರೆ ತಂದೆ, ಮಗ ಮೆತ್ತಗಾಗಿ ಹೇಳ್ದಂಗೆ ಕೇಳೋರು. +ಅರ್ಧ ಈ ಹುಡ್ಗೀದೇ ಸಪೋರ್ಟ್‌"ಎಂದರು ಜಿಗುಪ್ಸೆಯಿಂದ. +ಬಹುಶಃ ಪೂಜಾಳ ಅಂದಿನ ಸ್ಥಿತಿ ನೋಡಿದವರು ಯಾರೇ ಆದರೂ ಈ ತರಹ ಮಾತಾಡುವುದು ಸಹಜ. +ಆಕೆಗೇನು ಚಾರುಲತ ಮೇಲೆ ವೈಯಕ್ತಿಕ ದ್ವೇಷವಿರಲಿಲ್ಲ. +ಮೂರ್ತಿಯ ಬಾಯಿಂದ ಮಾತೇ ಬರಲಿಲ್ಲ. +ತಿಂದಿದ್ದೆಲ್ಲ ಕಕ್ಕುವಂತಾಯಿತು. +ಯಾಕಾದರೂ ಬಂದೆನೋ, ಎಂದು ಯೋಚಿಸಿದ. +"ಮೂರ್ತಿ ಈ ತರಹ ಹೇಳ್ತೀನೀಂತ ಏನು ತಿಳ್ಕೋಬೇಡ. +ಆ ಪ್ರಕರಣನ ಎಷ್ಟೇ ಮುಚ್ಚಿಟ್ಟರೂ ಜನಕ್ಕೆ ತಿಳಿದಿದೆ. +ಏನೇನೋ ಮಾತಾಡ್ಕೋತಾ ಇದ್ದಾರೆ. +ಡಾ|| ನವೀನ್‌ ನಿರಾಕರಿಸೋಕೆ ಒಂದು ಕಾರಣನೇ ಹುಟ್ಟು ಹಾಕಿದ್ದಾರೆ. +ಆ ಮಾತುಗಳ್ನ ಕೇಳಿದ್ರೆ ಯಾಕಪ್ಪ ಹೆಣ್ಣು ಮಕ್ಳುನ ಹೆತ್ತಿವಿ ಅನ್ನೊಂಗೆ ಆಗಿದೆ. +ಸ್ವಲ್ಪ ದೂರದಲ್ಲೇ ವರಾನ್ಹೇಷಣೆ ಪ್ರಾರಂಭಿಸಿ ಬೇಗ ಪೂಜಾಗೆ ವಿವಾಹ ಮಾಡ್ಬಿಡಿ. +ಇಲ್ಲದಿದ್ದರೇ, ಬಗೆಯರಿಲಾರ್ದ ಸಮಸ್ಯೆಯಾಗ್ಟಿಡುತ್ತೆ. +ನೀನು ಸರ್ಯಾಗಿ ಅರ್ಥಮಾಡಿಕೊಳ್ಳಬಲ್ಲೇಂತ ನಿಂಗೆ ಹೇಳ್ತಾ ಇದ್ದೀನಿ. +ದಯವಿಟ್ಟು ಏನುತಿಳ್ಕೋಬೇಡ. +ನಂಗೆ ಎರ್ದು ಹೆಣ್ಣು ಮಕ್ಳು. +ಅವ್ರ ಜೊತೆ ಆಡಿ ಬೆಳೆದೋಳು ಪೂಜಾ. +ನಂಗೆ ಅವ್ಳು ಎಂದೂ ಬೇರೆ ಅನ್ನಿಸಿದ್ದೇ ಇಲ್ಲ" ಹಿತೈಷಿಯಾಗಿ ಕೆಲವು ಮಾತುಗಳನ್ನ ಹೇಳಿದರು. +ಉದ್ವೇಗಗೊಳ್ಳದಂತೆ ಅವನಲ್ಲಿನ ವಿವೇಕ ಎಚ್ಚರಿಸಿತು. +ಆಯ್ತು, ನನ್ನ ಮಿದುಳು ನಿಷ್ಕ್ರಿಯವಾಗಿದೆ. +ನೀವು ಇಷ್ಟು ಹೇಳಿದ್ದು ಒಳ್ಳೆದಾಯು?ಎಂದು ಕೃತಜ್ಞತೆ ಸೂಚಿಸಿದ. +ತನ್ನ ಮನೆಗೆ ಬಂದವನೇ ತಲೆಯ ಮೇಲೆ ಕೈಯೊತ್ತು ಕೂತ. +ಅವನಿಗೆ ಪೂಜಾ ಮೇಲೆ ಸ್ವಲ್ಪ ಹೆಚ್ಚೆನಿಸುವಷ್ಟು ಪ್ರೀತಿ. +ತಂದೆ, ತಾಯಿ ಬೇಡವೆಂದರೂ ಕೆಲವೊಂದು ಸಾಮಾನು, ಡ್ರೆಸ್‌ಗಳನ್ನ ಕೊಡಿಸಿದ್ದ. +ಆದರೆ ಅವನ ಕೈಯಿಂದ ಆಗದೇ ಹೋಗಿದ್ದು, ಬಯಸಿದ ಡಾ|| ನವೀನ್‌ ಜೊತೆ ಅವಳ ವಿವಾಹ ಮಾಡದೇ ಹೋಗಿದ್ದು. +“ಪೂಜಾ, ಕ್ಷಮ್ಸಿ ಬಿಡಮ್ಮ” ಎಂದ ಗದ್ಗದಿತ ಸ್ವರದಲ್ಲಿ. +ಪೂರ್ತಿ ಕತ್ತಲಾಗುವವರೆಗೂ ಮನೆಯಿಂದ ಹೊರ ಬೀಳಲಿಲ್ಲ. +ರಾತ್ರಿಯ ಊಟಕ್ಕೆ ಎದುರು ಮನೆಯವರ ಆಹ್ಹಾನವಿದ್ದರೂ, ಸಧ್ಯಕ್ಕೆ ಅವರೊಂದಿಗಿನ ಮಾತು ಬೇಡವೆನಿಸಿ ಬೀಗ ಹಾಕಿಕೊಂಡು ಹೊರ ನಡೆದ. +ಹೆಚ್ಚು ಪರಿಚಯವಿಲ್ಲದ ಹೋಟಲ್‌ಗೆ ಹೋಗಿ ಊಟ ಮಾಡಿದ. +ಈಗ ಅವನ ತಲೆಯಲ್ಲಿದ್ದಿದ್ದು ಒಂದೇ ವಿಚಾರ. +ಆದಷ್ಟು ಬೇಗ ಪೂಜಾಳಿಗೆ ವಿವಾಹಮಾಡಬೇಕು. +ಅದಕ್ಕೆ ಸರಿಯಾದ ವ್ಯಕ್ತಿಯ ತಲಾಶೆ ಮಾಡಬೇಕು. +ಮುಂಬಯಿನಲ್ಲಿನ ಚಿಕ್ಕಪ್ಪನ ಮನೆಗೆ ಎಸ್‌.ಟಿ.ಡಿ. ಮಾಡಿದ. +"ಹೇಗಿದ್ದಾಳೆ, ಪೂಜಾ ?"ವಿಚಾರಿಸಿದ. +"ಈಗ ಸ್ವಲ್ಪ ಪರವಾಗಿಲ್ಲ, ಎಲ್ಲಾ ಹೊರ್ಗಡೆ ಹೋಗಿದ್ದಾರೆ. +ನಾನೊಬ್ಬ ಮನೆ ಕಾಯ್ಕೊಂಡ್‌ ಇದ್ದೀನಿ" ಅವನ ಚಿಕ್ಕಪ್ಪ ಉತ್ತರಿಸುವುದರೊಂದಿಗೆ "ಎಲ್ಲಿಂದ ಫೋನ್‌ ಮಾಡ್ತಾ ಇರೋದು ? +ಏನಾಗಿತ್ತು ನಮ್ಮ ಹುಡ್ಗೀನ ವಿವಾಹವಾಗೋಕೆ ಅಯೋಗ್ಯನಿಗೆ ? +ನಿನ್ನ ಹೆಂಡ್ತಿಗಾದ್ರೂ ಬುದ್ಧಿ ಬೇಡ್ದಾ?"ಜೋರು ದನಿಯಲ್ಲಿಯೇ ಕೇಳಿದರು. +"ಅದೆಲ್ಲ, ಮುಗ್ಧ ವಿಷ್ಯ ಚಿಕ್ಕಪ್ಪ. +ಈಗ ಪೂಜಾಗೆ ಒಂದು ಒಳ್ಳೆ ಸಂಬಂಧ ನೋಡಿ ಅವ್ಳ ವಿವಾಹವಾಗ್ದ ಹೊರ್ತು ಯಾರ್ಗೂ ನೆಮ್ದೀ ಇರೋಲ್ಲ . +ಅದ್ಕೇ ನೀವೇನು ಹೇಳ್ತೀರಾ ?"ಅವರನ್ನ ಕೇಳಿದ. +"ನೀನು ಹೇಳೋದು ಹಂಡ್ರೆಡ್‌ ಪರ್ಸೆಂಟ್‌ ಸರಿ. +ಹೇಗೂ ಎಲ್ಲಾ ಬಂದಿದ್ದಾರೆ. +ಪೂಜಾ ಇಲ್ಲೇ ಇದ್ದೀ. +ಯಾವುದಾದ್ರೂ ಒಳ್ಳೆ ಸಂಬಂಧ ನೋಡೋಣ. +ಚಿನ್ನದಂಥ ಹುಡ್ಗಿ. +ಅವ್ಳಿಗೆ ಗಂಡಿನ ಕೊರತೇನಾ ? +ಆದರೆ ಅವ್ಳು ವಿವಾಹಕ್ಕೆ ಒಪ್ಪಬೇಕು. +ಅಂತು ನಮ್ಮ ಪ್ರಯತ್ನ ನಾವು ಮಾಡೋಣ" ಉಸುರಿದರು. +ಕಡೆಯಲ್ಲಿ "ಚಾರುಲತನ ಕರ್ಕಂಡ್‌ ಬಂದಿಲ್ವಾ ?"ವಿಚಾರಿಸಿದಾಗ "ಗುಡ್‌ನೈಟ್‌ ಆಂಕಲ್‌. +ಫೋನ್‌ ಇಡ್ತಾ ಇದ್ದೀನಿ" ಫೋನ್‌ ಇಟ್ಟೇ ಬಿಟ್ಟ. +ಸಧ್ಯಕ್ಕೆ ಈಗ ಅವನಿಗೆ ಯಾರ ಸುದ್ದಿಯು ಬೇಕಿರಲಿಲ್ಲ. +ಒಂದು ವಾರ ರಜ ಹಾಕಿ ಬಂದಿದ್ದರಿಂದ ಇಲ್ಲೇ ಉಳಿಯಬೇಕಿತ್ತು. +ಆರಾಮಾಗಿ ಕಳೆದ. +ಚಾರುಲತಳೊಂದಿಗೆ ಕಳೆದ ರಾತ್ರಿಗಳ ನೆನಪಾದಾಗ ಅವನೆದೆಯ ರಕ್ತ ಕುದಿಯಿತು. +ನೆನಪುಗಳು ಮಧುರವಾಗಲಿಲ್ಲ. +"ಛಿ. . . . "ಅವಳ ನೆನಪೇ ಬೇಡ. +ಎದ್ದು ಹಳೆಯ ಪತ್ರಿಕೆಗಳಲ್ಲಿ ವಿಶೇಷ ಲೇಖನಗಳನ್ನ ಆರಿಸಿಕೊಂಡು ಬಂದು ಕೂತ. +ತಿರುವಿದ ಓದಬೇಕೆನಿಸಲಿಲ್ಲ. +ಮುಂದಿನ ಹೆಜ್ಜೆ ಯಾವುದು ? +ಅವನ ಪ್ರಕಾರ ತಂಗಿಯ ವಿವಾಹ. +ಚಾರುಲತ ಏನು ಮಾಡಬಹುದು ? +ಆರಾಮಾಗಿ ಅಪ್ಪನ ಮನೆಯಲ್ಲಿ ಉಳೀತಾಳೆ. +ಅಕ್ಕರೆಯ ಅತ್ತಿಗೆ, ಅಣ್ಣ ಇರೋವಾಗ ಮಿಕ್ಕವರು ಯಾಕೆ ಬೇಕು ?ಬಂದು ಮಲಗಿದ. +ನೆನಪುಗಳು ಬಹಳಷ್ಟು ಘಾಸಿಗೊಳಿಸಿತು. +ಬೆಳಿಗ್ಗೆ ಎದ್ದವನೇ ತಾನೇ ಹಾಲಿನ ಬೂತ್‌ಗೆ ಹೋಗಿ ಹಾಲಿಡಿದು ಬಂದ. +ಕಾಫಿ ಮಾಡಿ ಕುಡಿದ. +ಸ್ನಾನಕ್ಕೆ ಹೋಗುವ ಮುನ್ನ ಫೋನ್‌ ಬಂತು. "ಹಲೋ. . . . . "ಎತ್ತಿದ. +ತಂದೆಯ ಹಳೆಯ ಸ್ನೇಹಿತರು "ಯುಗಂಧರ್‌ ಬಂದ್ಲಿಲ್ವಾ ? +ಯಾಕೆ ಹೋಗಿ ಮುಂಬಯಿನಲ್ಲಿ ಕೂತ. +ನಿನ್ತಂಗಿ ಬಗ್ಗೆ ಏನೇನೋ ಹೇಳೋಕೆ ಷುರುಮಾಡಿದ್ದಾರಲ್ಲ ! ಏನು. . . . . ಕಾಯಿಲೆ ?"ಕಟಕಟೆಯಲ್ಲಿ ನಿಲ್ಲಿಸಿ ಕೇಳಿದರು. +ಉತ್ತರಿಸಲು ಚಡಪಡಿಸಿದ “ಸಾರಿ, ಅಂಕಲ್‌. . . ಅಂಥದ್ದೇನಿಲ್ಲ! + ಗಂಡಿನ ತಲಾಶೆಯಲ್ಲಿದ್ದಾರೆ. + ಅವ್ಳಿಗೆ ವಿದೇಶದಲ್ಲಿರೋ ಗಂಡಿನ ಕೈ ಹಿಡ್ಕೋ ಆಸೆ,ಇದೊಂದು ಸಣ್ಣ ಪ್ರಾಬ್ಲಮ್‌ ಅಷ್ಟೆ. +ನಿಮ್ಗೇ ಕಾಯಿಲೇಂತ ಯಾರು ಹೇಳಿದ್ದು?" +ಅವನ ಹುಬ್ಬುಗಳು ಗಂಟಾಯಿತು. +"ಯಾರೋ ಹೊಗ್ಲಿ ಬಿಡು, ನಂಗೆ ಗಾಬ್ರಿ ಆಯ್ತು. +ನಿಮ್ಮಪ್ಪ ಫೋನ್‌ಮಾಡಿದ್ರೆ ನಾನು ಕೇಳ್ದೇಂತ ಹೇಳು" ಫೋನಿಟ್ಟರು. +ಮೂರ್ತಿಯ ಉಸಿರು ಬಿಸಿಯಾಯಿತು. +"ಛಿ, ಅವ್ರ ಜೊತೆ ಸಂಬಂಧ ಬೆಳೆಸಿದ್ದೇ ತಪ್ಪಾಯ್ತು. +ಎದುರು ಮನೆ ಹುಡ್ಗೀಗಾಗಿ ನನ್ತಂಗಿ ಭವಿಷ್ಯ ಬಲಿ ಕೊಟ್ರು"ಜೋರಾಗಿಯೇ ಕೂಗಾಡಿದ. +ಗೋಡೆಗಳು ಆಲಿಸಬೇಕು ಅವನ ಮಾತುಗಳನ್ನ. +ಬಹಳ ಹೊತ್ತಿನ ಮೇಲೆ ನಿದ್ದೆ ಬಂತು. +ತಂದೆಯ ಕಾರನ್ನು ತೆಗೆದು ಹೊರಗೆ ನಿಲ್ಲಿಸಿದ. +ಆರಾಮಾಗಿ ಪೈಪ್‌ನಲ್ಲಿ ನೀರು ಬಿಟ್ಟುಕೊಂಡು ತೊಳೆದ. +ಆಮೇಲೆ ಅರ್ಧಗಂಟೆಯೊರೆಸಿದ. +ಎದುರುಗಡೆ ಮನೆ ಹುಡುಗ ಪಾತ್ರೆಯಲ್ಲಿ ತಿಂಡಿಯನ್ನು ಮುಚ್ಚಿ ತಂದು ಒಳಗಿಟ್ಟುಹೋದನಂತರ ಹಸಿವೆಯೆನಿಸಿತು. + ಆರಾಮಾಗಿ ಹೋಗಿ ಸ್ನಾನ ಮಾಡಿ ಬಂದು ತಿಂಡಿ ತಿಂದು ಮಾರ್ಕೆಟ್‌ಗೆ ಹೊರಟ ಹತ್ತು ತಿಂಗಳ ಹಿಂದೆ ಚಾರುಲತ ತನ್ನ ಬದುಕಿನಲ್ಲಿ ಇರಲಿಲ್ಲ. +ಹಿಂದೆ ತಾನು ಎಷ್ಟೊಂದು ಚಟುವಟಿಕೆಯಿಂದ ಇದ್ದೆ. +ಈಗಲೂ ಅಷ್ಟೆ ಉತ್ಸಾಹದಿಂದ ಬದುಕಬೇಕು. +ಅನಗತ್ಯವಾಗಿ ಅವಳಿಗಾಗಿ ಕೊರಗಬಾರದು ಒಂದು ಗಟ್ಟಿ ನಿರ್ಧಾರಕ್ಕೆ ಬಂದ. +ಹಳೇ ಜಾಮಾನ್‌ದ "ಆವಾರ" ಹಾಡನ್ನ ಹಾಡುತ್ತ ಕಾರನ್ನು ಓಡಿಸಿದ. +ಇಲ್ಲದ ಸಾಮಾನುಗಳ ಪಟ್ಟಿ ಹಿಡಿದು ಜನರಲ್‌ ಸ್ಟೋರ್‌ಗೆ ಹೋದ. +ಬಿಲ್‌ಕೌಂಟರ್‌ನಲ್ಲಿ ಬರೀ ಟೂತ್‌ಪೇಸ್ಟ್‌, ಸೋಪು ಮಾತ್ರ ಹಿಡಿದ ಡಾ|| ನವೀನ್‌ನ ನೋಡಿ ಮುಖ ತಿರುಗಿಸಿದ ಪರಿಚಯ ಇಲ್ಲದವನಂತೆ. +"ಹಲೋ, ಮೂರ್ತಿ" ತಾನಾಗಿಯೇ ಹತ್ತಿರಕ್ಕೆ ಬಂದು ಮಾತಾಡಿಸಿದ. +"ಹಲೋ. . . . " ಎಂದವನು ಕೌಂಟರ್‌ನಲ್ಲಿ ತನ್ನ ಸಾಮಾನುಗಳ ಬಿಲ್‌ರೆಡಿ ಮಾಡಿಸಿ ಅವನನ್ನ ಸವರಿಕೊಂಡೇ ತನ್ನ ಪಾಡಿಗೆ ತಾನು ಹೋದ. +ಅವನಿಗೆ ಡಾ|।ನವೀನ್‌ನಲ್ಲಿ ಮಾತು ಬೇಕಿರಲಿಲ್ಲ. +ಈಗಿನ ಎಲ್ಲಾ ಸಂಕಷ್ಟ ಗಳಿಗೂ ನೇರವಾಗಿ ಅವನೇ ಕಾರಣ ! +ಡ್ರೈವ್‌ ಮಾಡಿಕೊಂಡು ಮಾರ್ಕೆಟ್‌ಗೆ ಹೋದ. +ತರಕಾರಿ ಖರೀದಿಸಿ ತಂದು ಕಾರಿನಲ್ಲಿ ಇಡುವಾಗ ಅವನ ಕಣ್ಣುಗಳು ಡಾ|।ನವೀನ್‌ನ ಹುಡುಕಿಯಾಡಿದವು. +ಅದು ಅವನ ಮೇಲಿನ ಪ್ರೀತಿಯಿಂದ ಅಲ್ಲ, ದ್ವೇಷದಿಂದ. +ಮನೆಗೆ ಬಂದವನೇ ತರಕಾರಿ ಬಿಡಿಸಿ ಬೇಳೆ, ತರಕಾರಿ ಹಾಕಿ ಕುಕ್ಕರಿನಲ್ಲಿಟ್ಟ. +ಫ್ರಿಜ್‌ ಎಲ್ಲಾ ಖಾಲಿ ಮಾಡಿ ಕ್ಲೀನ್‌ ಮಾಡಿದ. +ಎಷ್ಟೋ ಸಣ್ಣ ಪುಟ್ಟ ಕೆಲಸಗಳನ್ನ ಮಾಡಿದ. +ಅದನ್ನೆಲ್ಲ ಅವನು ಮೊದಲು ತಾನೇ ಮಾಡುತ್ತಿದ್ದ. +ಚಾರುಲತ ಅವನ ಬದುಕಿನಲ್ಲಿ ಅಡಿಯಿಟ್ಟ ಮೇಲೆ ಒಂದಿಷ್ಟು ಸೋಮಾರಿತನ ಕಲಿಸಿದ್ದಳು. +ಅವಳನ್ನು ಜಾಡಿಸಿ ಒದ್ದಂತೆ, ಈ ಸೋಮಾರಿ ತನವನ್ನು ತನ್ನ ದಿನಚರಿಯಿಂದ ಹೊರದೊಡಿಸಿ ಬಿಡಬೇಕೆನಿಸಿತು. +ಮಧ್ಯಾಹ್ನ ಊಟ ಮಾಡಿ ಮಲಗಿದ್ದಾಗ ಕಾಲಿಂಗ್‌ ಬೆಲ್‌ ಸದ್ದಾಯಿತು. +ಬೇಸರದಿಂದಲೇ ಮೈ ಮುರಿಯುತ್ತ ಬಂದು ಬಾಗಿಲು ತೆಗೆದಾಗ ಎದುರಿಗೆ ನಿಂತಿದ್ದವರು ವಾಸುದೇವಯ್ಯ. +ಮಾತಾಡಲು ಅವನಿಗೆ ಇಷ್ಟವಿಲ್ಲ. +ಹಾಗೆಂದು ಮುಖದ ಮುಂದೆ ಹೇಳಲು ಅವರ ವಯಸ್ಸು ಅಡ್ಡಿ ಬಂತು. +"ಬನ್ನಿ. . . ಎಂದ ಮುಖ ಗಂಟಾಕಿಯೇ. +ಅತ್ಯಂತ ತಾಳ್ಮೆಯಿಂದ ವಾಸುದೇವಯ್ಯ ಒಳ ಬಂದು ಸೋಫಾ ಅಂಚಿಗೆ ಕೂತರು. +ಅವರಿಗೆ ಮಗಳ ಬದುಕು ಮುರಾಬಟ್ಟೆಯಾಗುವುದು ಬೇಕಿರಲಿಲ್ಲ. +"ಯಾವಾಗ್ಬಂದಿದ್ದು ?"ಮೃದುವಾಗಿ ವಿಚಾರಿಸಿದರು. +"ನೆನ್ನೆ ಬಂದಿದ್ದು. ಬೇಜಾರು ಮಾಡ್ಕೋಬೇಡಿ. +ಸ್ಪಷ್ಟವಾಗಿ ಹೇಳ್ಬೇಕೂಂದರೇನಿಮ್ಮೊಂದಿಗಿನ ಸಂಬಂಧ ನನ್ನ ಪಾಲಿಗೆ ಮರೆತಂತೆ. +ಸುಮ್ನೇ ಆ ವಿಷ್ಯನ ಎತ್ತಿಕಹಿ ಮಾಡಿಕೊಳ್ಳೋದ್ಬೇಡ" ಸ್ಪಷ್ಟವಾಗಿಯೇ ಅಂದ. +ಮಾತಾಡದೇ ಸುಮನೇ ಕೂತರು ವಾಸುದೇವಯ್ಯ. +ಬದುಕನ್ನ ಬಲ್ಲವರು. +ಎಷ್ಟೋ ಬದಲಾವಣೆ ಬಂದಿದ್ದರೂ ಹೆಚ್ಚಿನ ನೋವು, ಸಮಸ್ಯೆ, ಅವಮಾನ ಹೆಣ್ಣಿಗೆಂದು ಗೊತ್ತು. +"ಇದ್ರಲ್ಲಿ ಚಾರುಲತ ತಪ್ಪಿಲ್ಲ !"ಎಂದರು. +"ನಿಮ್ಮೆ ತಪ್ಪು ?ನನ್ತಂಗಿ ಯಾವುದ್ರಲ್ಲಿ ಕಡಿಮೆ ಇದ್ದು ? +ನನ್ನ ಕುಟುಂಬನ ಅವಮಾನಿಸಿ ಬಿಟ್ರಿ !"ಉದ್ವೇಗದಿಂದ ಭುಸುಗುಟ್ಟಿದ. +ವಾಸುದೇವಯ್ಯನ ಗಂಟಲು ಹಿಡಿದಂತಾಯಿತು. +"ದಯವಿಟ್ಟು ತಪ್ಪ ತಿಳ್ಕೋಬೇಡ, ಮೂರ್ತಿ. +ಎದುರು ಬದುರು ಮನೆಗಳು. +ನೀರದ, ನವೀನ್‌ ಒಬ್ಬರನ್ನೊಬ್ರು ಮೆಚ್ಚಿಕೊಂಡಿದ್ರು. +ನಂಗೂ ಇಷ್ಟವಾಯ್ತು. +ನಿನ್ತಂಗಿ ಯಾವುದ್ರಲ್ಲೂ ಕಡ್ಮೇ ಇಲ್ಲ. +ನಿಮ್ಮ ಕುಟುಂಬನ ಅವಮಾನಿಸೋ ಇರಾದೆ ನಮ್ಗೇ ಇದ್ದಿಲ್ಲ. +ಅದು ನಿಶ್ಚಯವಾದ ಸಂಬಂಧ ಬಿಡೋ ಹಂಗಿದ್ದಿಲ್ಲ"ನಮ್ರತೆಯಿಂದ ತಿಳಿ ಹೇಳಿದರು. +ಮಗಳು ಗಂಡ ಬಿಟ್ಟ ಹೆಣ್ಣಾಗಿ ಬದುಕುವುದು ಅವರಿಗೆ ಸುತರಾಂ ಬೇಕಿರಲಿಲ್ಲ. +ತೀಕ್ಷ್ಣವಾಗಿ ಅವರತ್ತ ನೋಡಿದ, ಹಿಂದೆ ಗೌರವಿಸುತ್ತಿದ್ದ ಮನುಷ್ಯ. +ಈಗ ಅಂಥ ಭಾವವಿಲ್ಲದಿದ್ದರೂ ಅಗೌರವ ತೋರಲಾರ. +ನಿಮ್ಗೆ ಇಷ್ಟವಾಯ್ತು. +ನಿಮ್ಮ ಮಗ್ಳಿಗೆ ಮತ್ತಷ್ಟು ಇಷ್ಟವಾಯ್ತು. +ಅವ್ಳಿಗೆ ಅವ್ಳ ತವರು ಮನೆ ಸುಖ, ಸಂತೋಷ, ನೆಮ್ದಿ ಮುಖ್ಯವಾಗಿತ್ತು. +ನಂಗೂಅಷ್ಟೆ, ನನ್ನಪ್ಪ, ಅಮ್ಮ ತಂಗಿಯ ನಂತರವೇ ಮಿಕ್ಕೆಲ್ಲ ಸಂಬಂಧಗಳು. +ಈ ತಿಳಿವಳಿಕೆ ನಿಮ್ಗೆ ಮಾತ್ರವಲ್ಲ, ನಿಮ್ಮ ಮಗ್ಳಿಗೆ ಹೆಚ್ಚಿಗೆ ಇರ್ಬೇಕಿತ್ತು. +ಸ್ವಂತ ನಾದಿನಿನ ಸಾವಿನ ದವಡೆಗೆ ನೊಕಿಬಿಟ್ಟು. .ನಂಗೆ ಹೆಚ್ಚಿಗೆ ಮಾತಾಡೋಕೆ ಇಷ್ಟವಿಲ್ಲ" ಹಲ್ಮುಡಿಯನ್ನ ಕಚ್ಚಿಡಿದು ಹೇಳಿದ. +ಅವನು ಪೂರ್ತಿ ತಾಳ್ಮೆ ಕಳೆದುಕೊಳ್ಳುವ ಮುನ್ನ ಅಲ್ಲಿಂದ ಹೋಗುವ ಅಗತ್ಯವಿತ್ತು. +ವಾಸುದೇವಯ್ಯ ಅಳುವುದೊಂದು ಬಾಕಿ ಇತ್ತು. +"ಖಂಡಿತ ಇಲ್ಲ, ಇದ್ರಲ್ಲಿ ಅವ್ಳ ತಪ್ಪೇನಿಲ್ಲ" ಎಂದರು. +"ನನ್ನ ಒಂದು ಮಾತಿಗೆ ಉತ್ತರ ಹೇಳಿ. +ಚಾರುಲತ ಬೇಡವೆಂದು ಹಟಮಾಡಿದ್ದರೇ, ನೀವು ಮಗನ ವಿವಾಹ ಮಾಡೋ ಸಾಧ್ಯತೆ ಇತ್ತಾ. +ಆಗ ನಿಮ್ಗೆ ಮಗ್ಳು, ಅಳಿಯ ಅವ್ರ ಭವಿಷ್ಯ ಮುಖ್ಯವಾಗ್ತಾ ಇತ್ತು. ಈಗ್ಟೇಳಿ. . . " ಕೇಳಿದ. +ಆ ಮನುಷ್ಯನ ತಲೆ ತಗ್ಗಿತು. +ಹೌದು, ಚಾರುಲತ ಹಟ ಹಿಡಿದಿದ್ದರೇ ಖಂಡಿತ ನಿಲ್ಲುತ್ತಿದ್ದುದ್ದು ಮಗಳ ಪರವೇ. +ಮುಂದಿನ ದಿನಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಡಾ|| ನವೀನ್‌ ಕೂಡ ತೆಪ್ಪಗೆ ಪೂಜಾ ಕುತ್ತಿಗೆಗೆ ತಾಳಿ ಕಟ್ಟುತ್ತಿದ್ದ. +ಇದು ಸತ್ಯವೇ ? +ಅಳಿಯನ ಕೋಪಕ್ಕೆ ಅರ್ಥವಿತ್ತು. +ಹಾರ್ಲಿಕ್ಸ್‌ ಮಾಡಿಕೊಂಡು ಅವರ ಮುಂದಿಟ್ಟ ಮೂರ್ತಿ "ಕುಡೀರಿ,ಇನ್ನ ಯಾವ್ದೇ ಮಾತುಗಳು ಬೇಡ. +ನಂಗೆ ಬೇರೆ ಕೆಲ್ಲವಿದೆ" ಹೊರಗೆ ಹೋದವನು ನಲ್ಲಿ ಆನ್‌ ಮಾಡಿ ಪೈಪ್‌ನಿಂದ ನೀರು ಹಾಕತೊಡಗಿದ. +ಅವನ ಮಿದುಳು, ಮನಸ್ಸು, ಮೈ ಕೋಪದಿಂದ ಭುಸುಗುಟ್ಟುತ್ತಿತ್ತು. +ಹಾರ್ಲಿಕ್ಸ್‌ ಕಪ್‌ ಎತ್ತಲಾಗಲಿಲ್ಲ ವಾಸುದೇವಯ್ಯನಿಂದ. +ಸೋತವರಂತೆ ನಿಧಾನವಾಗಿ ಹೊರಗೆ ಬಂದಾಗ, ಆರಾಮಾಗಿ ತನ್ನ ಪಾಡಿಗೆ ತಾನು ನೀರು ಹಾಕುತ್ತಿದ್ದ ಮೂರ್ತಿ ಪೈಪ್‌ನ ಕೆಳಗೆ ಹಾಕಿ ಹೋಗಿ ಗೇಟು ತೆರೆದ. +ಅವರು ಹೊರಗೆ ಹೋದ ಮೇಲೆ ಗೇಟು ಹಾಕಿ ಅವರತ್ತ ಕೂಡ ನೋಡದೇ ಬಂದು ತನ್ನ ಕೆಲಸದಲ್ಲಿ ಮಗ್ನನಾದ. +ಮನಸ್ಸುಗಳು ಸಂಬಂಧಗಳು ಹೇಗೆ ಮುರಿದು ಹೋಗುತ್ತೆ. +ನಲ್ಲಿ ನಿಲ್ಲಿಸಿ ಒಳಗೆ ಬಂದ. +ಚಾರುಲತನ ಬಾಯಿಗೆ ಬಂದಂತೆ ಬೈಯ್ಯಬೇಕೆನಿಸಿತು. +ತಂಗಿಯ ಬಗೆಗಿನ ಪೂರ್ಣ ಪ್ರಮಾಣದ ಸಹಾನುಭೂತಿ ಅವಳ ಹಟವನ್ನ ಮರೆಸಿತ್ತು. +ಸಂಜೆ ನಡದೇ ವಾಕ್‌ ಹೊರಟಾಗ ತಿರುವಿನಲ್ಲಿ ಸಿಕ್ಕ ಕಮಲ ಒಂದು ಹೊಸ ವಿಷಯ ತಿಳಿಸಿದಳು "ಚಾರುಲತ ಆಪಾಯಿಂಟ್‌ಗೆ ಸೇರ್ಕೊಂಡಿದ್ದಾಳೆ"ಉದ್ದೇಗಗೊಳ್ಳದೇ ಬಲವಂತದ ಮುಗುಳ್ನಗೆಯನ್ನ ಮುಖದ ಮೇಲೆ ಎಳೆತಂದ. +"ಗೊತ್ತು, ಇದೇನು ಇಲ್ಲಿ ?" ಎಂದ. +"ನಿಮ್ಮ ಮನೆಗೆ ಬರೋ ಪ್ರೋಗ್ರಾಂ ಇತ್ತು. +ಅಂಕಲ್‌, ಆಂಟೀ ಇಲ್ವಲ್ಲ. +ಬಂದು ಪ್ರಯೋಜನವಿಲ್ಲ. +ಚಾರುಲತಗೆ ಡೈವೋರ್ಸ್‌ ಕೊಡ್ತೀಯಾ? +ಬೀದಿಯೆಂಬುದು ಮರೆತು ವಿಚಾರಿಸಿದಾಗ ಕೆನ್ನೆಗೊಂದು ಬಾರಿಸಬೇಕೆನಿಸಿತು. +ನೀನಿನ್ನ ಚಿಕ್ಕೋಳು. +ಅವೆಲ್ಲ ದೊಡ್ಡ ವಿಷ್ಯಗಳು. +ಇನ್ನು ವಿವಾಹವಾಗದ ನಿನ್ನಂಥವ್ರು ಡೈವೋರ್ಸ್‌ ಬಗೆಯಲ್ಲಿ ಮಾತಾಡೋದು ಒಳ್ಳೇದಲ್ಲ. +ಕಾಫಿ ಕುಡೀತೀಯಾ ?"ವಿಚಾರಿಸಿದ ನೆಂಟಸ್ಥಿಕೆಯ ಸಲಿಗೆಯಿಂದ. +“ಖಂಡಿತ !ನೀನು ಸಿಕ್ಕಿಯೇ ಬಹಳ ದಿನವಾಯ್ತು. +ಮದ್ವೆಯಾದ್ಮೇಲೆ ಸಿಕ್ಕಿಯೇ ಇಲ್ಲ. +ಇವತ್ತು ಎಲ್ಲಾ ಕಕ್ಕಿಸ್ತೀನಿ” ಉತ್ಸಾಹ ತೋರಿದಳು. +ಹತ್ತಿರದ ಹೋಟಲ್‌ಗೆ ಹೋದರು. +ಮೆನು ಕಾರ್ಡ್‌ ತಗೊಂಡ ಕಮಲ ಬೇಕೆನಿಸಿದಕ್ಕೆ ಆರ್ಡರ್‌ ಮಾಡಿದಳು. +ಅವಳ ಸ್ವಭಾವ ಹೊಸದಲ್ಲ. +ಹತ್ತಿರದ ನೆಂಟಸ್ಥಿಕೆಯೇ. + "ಹೇಗಿದ್ದಾಳೆ ಪೂಜಾ ?" ಕೇಳಿದಳು. +"ಅವ್ಳಿಗೇನು, ಚೆನ್ನಾಗಿದ್ದಾಳೆ. +ನಿನ್ನ ವಿಷ್ಯವೇನು ?" ಪ್ರಶ್ನೆ ಹಾಕಿದ ಟೇಬಲ್‌ಮೇಲೆ ತಾಳ ಹಾಕುತ್ತ. +"ಅಂಥದೇನಿಲ್ಲ ! ಇದೇನು. . . ಇಲ್ಲಿ ?" ಎಂದಳು. +ಮೂರ್ತಿ ಸುತ್ತಮುತ್ತಲು ನೋಡಿಕೊಂಡು ಆಶ್ಚರ್ಯದಿಂದ "ಇದೇನಾದ್ರೂ,ಚಂದ್ರಮಂಡಲನಾ ? +ಹೊಸ ಗ್ರಹದ ಅನ್ವೇಷಣೆಯಲ್ಲಿ ಇಲ್ಲಿಗೆ ಬಂದಿದ್ದೀವಾ? +ನಂಗೇನು, ಹಾಗೇ ಕಾಣೋಲ್ಲ" ಅಂದ ತಮಾಷೆ ಯಾಗಿ. +ಪಕಪಕನೆ ನಕ್ಕಳು ಕಮಲ. +ಅವಳ ಪ್ರಕಾರ ಮೂರ್ತಿ ಬಹಳ ಒಳ್ಳೆಯವ. +ಅವಳಿಗೆ ಈಗ ಕೋಪ ಬಂದಿದ್ದು ಚಾರುಲತ ಮೇಲೆ, "ಅನ್ಯಾಯವಾಗಿ ಮೂರ್ಖತನದಿಂದ ತನ್ನ ವೈವಾಹಿಕ ಜೀವನ ಬಲಿಕೊಟ್ಟಳು" ಅದುಅಹಂಕಾರವಾಗಿ ಕಂಡಿತು. +"ಬರೀ ತಮಾಷೆ ಮಾಡ್ತೀಯಾ ! +ನೀನು ಏನೇನು ಬದಲಾಗಿಲ್ಲ. +ರಜಹಾಕಿ ಬಂದಿದ್ದೀಯಾ ? +ಇಲ್ಲ ಚಾರುಲತಳೊಂದಿಗೆ ಸಂಧಾನ ಆರಂಭಿಸಲು ಸೂಕ್ತ ಸಮಯಕ್ಕಾಗಿ ಅವ್ರನ್ನೆಲ್ಲ ಮುಂಬಯಿಗೆ ಕಳಿಸಿದ್ಯಾ?"ಕೇಳಿದ ಕೂಡಲೇ,ಮೂರ್ತಿಯ ಕೋಪ ನೆತ್ತಿಗೇರಿತು. +"ನಿಂಗೆ ತಿಂಡಿ ತಿಂದು ಶಾಂತವಾಗಿ ಹೊರ್ಗೇ ಹೋಗೋ ಆಸೆ ಇದ್ದರೆ ತೆಪ್ಪಗಿರು. +ಹುಚ್ಚುಚ್ಚಾಗಿ ಏನೇನೋ ಮಾತಾಡ್ಬೇಡ" ಮುಖ ಗಂಟಿಕ್ಕಿ ಗದರಿದ. +ತೀರಾ ಸಪ್ಪಗಾಗಿ ಬಿಟ್ಟಳು ಕಮಲ. +ಚಾರುಲತ ಮೇಲೆ ಕೋಪ ತಗ್ಗಿಲ್ಲವೆನಿಸಿತು. +ಇದು ಎಲ್ಲಿಗೆ ತಲುಪುತ್ತೋ - ಕ್ಷಣ ನೊಂದಳು ಕೂಡ. +"ಎಕ್ಸ್‌ಕ್ಯೂಜ್‌ ಮಿ, ಇನ್ನೊಂದ್ಯಾತು ಆಡೋಲ್ಲ. +ನಿನ್ನ ಮನಸ್ಸು ಇಷ್ಟೊಂದು ಕೆಟ್ಟಿದೇಂತ ಅಂದುಕೊಳಿಲ್ಲ" ಕ್ಷಮೆ ಯಾಚಿಸಿದಳು. +ಅವನು ತಿಂದಿದ್ದು ಬರೀ ಒಂದು ವಡೆ ಮಾತ್ರ. +ಹಲ್ವಾ, ಮೈಸೂರ್‌ಪಾಕ್‌ನ ನಂತರ ಪರೋಟ ತರಿಸಿಕೊಂಡು ತಿಂದ ನಂತರವೇ ಬಿಲ್‌ ಬಂದಿದ್ದು. +ಕಮಲ ಮತ್ತು ಚಾರುಲತ ನಡವಳಿಕೆಯನ್ನು ತಕ್ಷಣ ಮೂರ್ತಿಯ ಮನಸ್ಸು ತೂಗಿ ನೋಡಿತು. +ನಗು, ಮಾತು ಎಲ್ಲಾ ಮೃದುವೇ. +ನೋವಿನಿಂದ ಅವನ ಮನ ಒದ್ದಾಡಿತು. +'ಚಾರು. . . ಚಾರುಲತ' ಅವನ ಹೃದಯ ಪಿಸುಗುಟ್ಟಿ ದಾಗ ಗಟ್ಟಿಯಾದ. +"ಮನೆಗೆ ಬರ್ತೀಯಾ ?" +ಬಿಲ್‌ ಕೊಟ್ಟ ನಂತರ ಕೇಳಿದರೂ ಹೊರಗೆ ಬಂದನಂತರ ಎಚ್ಚರಿಸಿದ "ಅಪ್ಪಿ ತಪ್ಪಿ ಕೂಡ ನೀನು ಚಾರುಲತ ಸುದ್ದಿ ಎತ್ತಬಾರ್ದು. +ಅದು ತೊಡೆದು ಹೋದ ಸಂಬಂಧ. +ಕಟುಕ ಹೃದಯದವು" ಕಿಡಿ ಕಾರಿದ. +ಕಮಲ ಮುಖ ತೀರಾ ಸಪ್ಪಗಾಯಿತು "ಏನು ತಿಳ್ಕೋಬೇಡ. ಇನ್ನೊಂದ್ಲಲ ಬರ್ತಿನಿ. +ಅಂಕಲ್‌, ಆಂಟೇ ಬಂದ್ಮೇಲೆ ಫೋನ್‌ ಮಾಡೋಕ್ಹೇಳು. +ಅಮ್ಮ ಒಂದ್ಯಾತು ಹೇಳ್ಬಾಂದ್ರು. +ಗಂಡು ಪೈಲೆಟ್‌; ನೋಡೋಕೂ ಹ್ಯಾಂಡ್‌ಸಮ್‌ ಆಗಿದ್ದಾರಂತೆ. +ಐದು ಜನ ತಂಗೀರು. +ಐದರಿಂದ. . . ಹತ್ತು ಲಕ್ಷ ಆಫರ್‌ಮಾಡ್ತಾ ಇದ್ದಾರೆ. +ನಮ್ಮಂಥವ್ರಿಗೆ ನಿಲುಕೋದಲ್ಲ. +ಬೇಕಾದ್ರೆ ಪೂಜಾಗೆ ನೋಡ್ಲೀಂತ ಹೇಳಿ ಕಳ್ಸಿದ್ರು" ಎಂದು ತನ್ನ ಪರ್ಸ್‌ನಿಂದ ಜಾತಕ, ಫೋಟೋ ತೆಗೆದುಕೊಟ್ಟಳು. +ನೋಡಿ ಜೇಬಿಗೆ ಸೇರಿಸಿದ ಮೂರ್ತಿ "ಆಯ್ತು, ಅಮ್ಮ ಅಪ್ಪ ಬರಲಿ ಅವ್ಳು ಸ್ವಲ್ಪ ಚೇತರಿಸ್ಕೋಬೇಕು. +ಆಮೇಲೆ ವಿವಾಹದ ಪ್ರಸ್ತಾಪ ಮಾಡಬಹುದೇನೋ,ನೋಡೋಣ" ಎಂದ ದೂರಕ್ಕೆ ನೋಟ ಹರಿಸುತ್ತ. +ವಾತಾವರಣದಲ್ಲಿ ಕತ್ತಲು ಸೇರ್ಪಡೆಯಾಗಿ ಮಂಕು ಕವಿದಾಗ ಸ್ಟ್ರೀಟ್‌ನ ದೀಪಗಳು ಹತ್ತಿಕೊಂಡವು. +ನೀರದ, ಚಾರುಲತ ಫುಟ್‌ಪಾತ್‌ನ ಅಂಗಡಿಯಲ್ಲಿ ಏನೋ ವ್ಯಾಪಾರ ಮಾಡುತ್ತಿದ್ದುದ್ದು ಅವನ ಕಣ್ಣಿಗೆ ಬಿತ್ತು. +ಆರಾಮಾಗಿ ಸಂತೋಷವಾಗಿದ್ದಂತೆ ಕಂಡಳು "ನೀವು ಇಲ್ದೇ ಕ್ಷಣ ಕೂಡ ಇರೋಕ್ಕಾಗೋಲ್ಲ"ಅವನೆದೆಯಲ್ಲಿ ಮುಖವಿಟ್ಟು ಉಸುರಿದ ಕ್ಷಣ ಉಬ್ಬಿ ಹೋಗಿದ್ದ. +"ತಾನು ಇಲ್ಲದೇ ಚಾರುಲತ ಬದುಕಲಾರಳು" ಎನ್ನುವ ಮಾತೇ ಅವನನ್ನ ಆಕಾಶದಲ್ಲಿ ವಿಹರಿಸುವಂತೆ ಮಾಡಿತ್ತು. +ಅದೆಲ್ಲ ಬರೀ ಭ್ರಮೆಯೆನಿಸಿ ದಾಗ ಹುಚ್ಚಿಡಿದಂತಾಯಿತು. +"ಬರ್ತೀನಿ ಕಮಲ, ಬೇರೆ ಯಾರನ್ನೋ ನೋಡೋದಿದೆ" ಅದೃಶ್ಯನಾದ. +ಎದುರಿನ ಮೆಡಿಕಲ್‌ ಸ್ಟೋರ್‌ನಲ್ಲಿ ನಿಂತು ಮೂರು ನಾಲ್ಕು ಸಲ ಹಿಂದಿರುಗಿ ನೋಡಿದ. +ಎದೆ ಹಿಂಡಿದಂತಾಯಿತು. +"ಚಾರು" ಸಿಡಿಲೊಂದು ಭೋರ್ಗರೆದು ಅಪ್ಪಳಿಸಿದಂತಾಯಿತು. +ಏನೇನೋ ಖರೀದಿಸಿ ಹೊರಗೆ ಬಂದಾಗ ಅವರುಗಳು ಇರಲಿಲ್ಲ. +ಮೂರ್ತಿ ಕಾಲೆಳೆಯುತ್ತ ಮನೆಯ ಕಡೆ ಹೊರಟ. +ರಾತ್ರಿಯ ಬೀದಿ ದೀಪಗಳು ಝಗರಝಗಿಸುತ್ತಿದ್ದರೂ ಲೋಕವೇ ಕತ್ತಲಲ್ಲಿ ಮುಳುಗಿದೆಯೆನಿಸಿತು. +ಅದು ಇಷ್ಟವೆನಿಸಿತು ಕೂಡ. +ಸದಾ ಈ ಕತ್ತಲೆ ಇದ್ದರೇ ? +"ತಮಸೋಮಾಜ್ಯೋತಿರ್ಗಮಯ ?"ಕತ್ತಲಿನಿಂದಲೇ ಬೆಳಕು ಹುಟ್ಟುವುದು. +ಬಾಗಿಲು ತೆರೆದ ಕೂಡಲೇ ತಂದೆಯ ಫೋನ್‌ ಅವನನ್ನ ಕಾಯುತ್ತಿತ್ತು "ಹೇಗಿದ್ದಿ.? +ಮಧು ಹೇಳ್ದ ನೀನು ಫೋನ್‌ ಮಾಡ್ದ ವಿಷ್ಯ +ಆಗ್ನಿಂದ ಟ್ರೈಮಾಡ್ತಾ ಇದ್ದೀನಿ, ಬರೀ ಎಂಗೇ" ಗುರುಗುಟ್ಟಿದರು. +"ಚೆನ್ನಾಗಿದ್ದೀನಿ. ನಿಮ್ಮ ಫ್ರೆಂಡ್‌ ಕೃಷ್ಣಮೂರ್ತಿ ಫೋನ್‌ ಬಿಟ್ಟರೇ ಅಂಥ ಫೋನ್‌ ಕಾಲ್ಸ್‌ ಏನಿಲ್ಲ. +ನಾನು ಬಂದ್ಯೇಲೆ. +ಹೋಗ್ಲಿ ಅಲ್ಲಿ ಎಲ್ಲಾ ಹೇಗಿದ್ದೀರಿ? +ಪೂಜಾ ಹೇಗಿದ್ದಾಳೆ?ಎಂದ ಕೂಡಲೇ ಅವರಿಂದ ಮೂಡ್‌ನಲ್ಲಿ ಹೆಚ್ಚು ಕಡಿಮೆ ಮಾತಾಡಬಹುದೆಂದು "ನಿಮ್ಮಮ್ಮ ಮಾತಾಡ್ತಾಳೆ ನೋಡು"ಹೆಂಡತಿ ಕೈಗೆ ಫೋನ್‌ ಕೊಟ್ಟು ಪ್ಲ್ಯಾಟ್‌ ಬಾಲ್ಕಾನಿಯಲ್ಲಿ ಹೋಗಿ ನಿಂತರು. +"ಹೇಗಿದ್ದೀಯಾ ? +ಊಟಕ್ಕೇನು ಮಾಡ್ದೇ ?" ಆ ಕುತೂಹಲಕ್ಕೆ ಕಾರಣವಿತ್ತು. +"ಚೆನ್ನಾಗಿದ್ದೀನಿ. ನಾಲ್ಕು ದಿನ ಇಲ್ಲೇ ಇರ್ತಿನಿ. +ನಾನೇ ಅಡ್ಗೆ ಮಾಡ್ಕೊಂಡೆ. +ಯಾವಾಗ ಬರ್ತಿರಾ ? +ಪೂಜಾ ಆರೋಗ್ಯ ಸುಧಾರಿಸಿದ್ಯಾ?"ಎಲ್ಲಾ ಕೇಳಿ ಮುಗಿಸಿದ ಒಂದೇ ಸಮ. +"ನೀನೇ ಅಡ್ಗೆ ಮಾಡ್ಕೊಂಡ್ಯಾ? +ಹೋಟೆಲ್‌ ಊಟಕ್ಕಿಂತ ಅದೇ ಒಳ್ಳೇದು. +ನಿನ್ನ ಅಂಕಲ್‌ ಪೂಜಾಗೆ ಟ್ರೀಟ್‌ಮೆಂಟ್‌ ಕೊಡಿಸ್ತಾ ಇದ್ದಾರೆ. +ಕನಿಷ್ಟ ಇನ್ನ ಮೂರು ತಿಂಗ್ಳಾದ್ರೂ ಟ್ರೀಟ್‌ಮೆಂಟ್‌ ಬೇಕೂಂತಾರೆ. +ಏನು ತಿಂದರೂ ವಾಂತಿ ಮಾಡ್ಕೋತಾಳೆ. +ಹೊಟ್ಟೆ ಉರೀ ಅಂತಾಳೆ. +ನಾನೇನು ಪಾಪ. . . . ಮಾಡಿದ್ನೋ ?" +ಆಕೆಯ ಕಣ್ಣೀರು ಅಲ್ಲಿಂದ ಹರಿದು ಬಂದು ಅವನನ್ನು ತೋಯಿಸಿದಂತಾಯಿತು. +"ಅಮೃ ಸಮಾಧಾನ ಮಾಡ್ಕೋ. +ಸ್ವಲ್ಪ ಜಾಗ್ರತೆಯಿಂದ ನೋಡ್ಕೊಳ್ಳಿ ಪೂಜಾನಾ. +ಇಲ್ಲಿನ ಯೋಚ್ನೇ ಬೇಡ. +ಬೇರೆ ಕಡೆ ಗಂಡು ನೋಡಿ, ಬೇಗ ವಿವಾಹ ಮಾಡೋಣ. +ಚಿಕ್ಕಪ್ಪನಿಗೂ ಹೇಳಿದ್ದೀನಿ. ಪೂಜಾಗೆ ಕೊಡು. . . . ಫೋನ್" ಎಂದ. +ಯಾಕೋ, ಏನೋ ಅವನ ಮೈಯೆಲ್ಲ ಬೆವರತೊಡಗಿತು. +"ಅವ್ಳು ಪಕ್ಕದ ಫ್ಲ್ಯಾಟ್‌ಗೆ ಹೋಗಿದ್ದಾಳೆ. +ಕರೀಲಾ. ಗುಜರಾತಿ ಜನ ಬಹಳ ಒಳ್ಳೆಯವು" ಎಂದಾಗ "ಬೇಡಮ್ಮ ನಾನೇ ನಾಳೆ ಬೆಳಿಗ್ಗೆ ಫೋನ್‌ ಮಾಡ್ತೀನಿ. +ಸುಮ್ನೇ ಏನೇನೋ ಯೋಚ್ಸೆಬೇಡಿ. +ಡಾ| ನವೀನ್‌, ಪೂಜಾಗೆ ಸರ್ಯಾದ ಗಂಡೇನಲ್ಲ. +ಅವ್ನು ತಪ್ಪಿ ಹೋಗಿದ್ದಕ್ಕೆ ದುಃಖಪಡ್ಬೇಕಾದುದ್ದೇನಿಲ್ಲ" ಸಾಂತ್ವನಿಸಿದ ಫೋನ್‌ನಲ್ಲಿಯೇ. +"ಫೋನ್‌ ಇಡ್ತೀನಿ" ಆಕೆ ಅತ್ತಿದ್ದು ಇಲ್ಲಿವರೆಗೂ ಬೆನ್ನಟ್ಟಿಕೊಂಡು ಬಂದಂತಾಯಿತು. +ಅವನ ಮುಷ್ಟಿ ಬಿಗಿಯಿತು "ಸ್ಕೌಂಡ್ರಲ್‌, ಶಾಂತವಾಗಿದ್ದ ನಮ್ಮಸಂಸಾರನ ಕದಡಿ ಬಿಟ್ರು" ಹಲ್ಮುಡಿ ಕಚ್ಚಿ ಕೂಗಿದ ಕೋಪ ತಾಳಲಾರದೆ. +ಅವಳ ನೆನಪುಗಳಿಂದ ಕಳಚಿಕೊಳ್ಳಲು ಬಹಳ ಒದ್ದಾಡಿದ. +ಆರಾಮಾಗಿ ನೀರದ ಜೊತೆ ಏನನ್ನೋ ಖರೀದಿಸುತ್ತಿದ್ದ ಚಾರುಲತ ಚಿತ್ರ ಮೂಡಿ ಮೂಡಿ ಮರೆಯಾಗುತ್ತಿತ್ತು. +ಚಾರುಲತ ಅಪಾಯಿಂಟ್‌ಮೆಂಟ್‌ಗೆ ಸೇರ್ಕೊಂಡಿದ್ದಾಳೆ ಕಮಲ ತಿಳಿಸಿದ್ದು. +ಅದಕ್ಕೆ ಮುನ್ನವೇ ಫೋನ್‌ನಲ್ಲಿ ಸಲಹೆ ಕೇಳಿದ್ದು ನೆನಪಾಯಿತು. +ಇದಾದ ಮೂರನೆಯ ದಿನ ಚಾರುಲತ ಜನರಲ್‌ ಸ್ಟೋರ್‌ನಲ್ಲಿ ಸಿಕ್ಕಳು. +ಮಾತು ನಗು ಬೇಡವೆನಿಸಿತು. +ಆದರೆ ಗಾಬರಿಯಿಂದಲೋ ಉದ್ದೇಗದಿಂದಲೋ ಕ್ಯಾಷ್‌ ಕೌಂಟರ್‌ನಲ್ಲಿ ಹಣ ತೆಗೆದವಳು ಅಲ್ಲಿಯೇ ಬಿಟ್ಟು ಹೋಗಿದ್ದಳು. +ಸರ್‌, ಒಂದ್ಸಲ ನೀವಿಬ್ರೂ ಜೊತೆಯಾಗಿ ಬಂದಿದ್ದು ನೋಡಿದ್ದೆ. +ನಿಮ್ಮ ಸಂಬಂಧಿಕರೋ, ಪರಿಚಯದವರೋ ಇರ್ಬೆಕು. . . . ಆಕೆ. +ದಯವಿಟ್ಟು ತಲುಪಿಸೋಕೆ ಸಾಧ್ಯನಾ ?" +ರಿಸೆಸ್ಟನಿಸ್ಟ್‌ ಕೇಳಿದಾಗ ಸರಿಯೆನ್ನುವಂತೆ ಕೈಗೆತ್ತಿಕೊಂಡ. +ಆ ಪರ್ಸ್‌ ಅವನೇ ಕೊಡಿಸಿದ್ದ ಭಾದೆಯೆನಿಸಿತು. ಆದರೂ ಧಾವಿಸಿ ಬಂದ. +ಬ್ಯಾಗ್‌ ಹಿಡಿದು ಪುಟ್‌ಪಾತ್‌ನಲ್ಲಿ ನಡೆದುಹೋಗುತ್ತಿದ್ದ ಚಾರುಲತಳ ಹಿಂದೆ ಧಾವಿಸಿ ಹಿಡಿದಾಗ ಏದುಸಿರು ಬಿಡುತ್ತಿದ್ದ. +"ತಗೋ, ನಿನ್ನ ಪರ್ಸ್‌'" ಅವಳತ್ತ ನೀಡಿದ. +"ಥ್ಯಾಂಕ್ಸ್‌, ಮೆನಿ ಮೆನಿ ಥ್ಯಾಂಕ್ಸ್‌. . . . . ಹೇಗಿದ್ದೀರಾ ? +ಯಾವಾಗ್ಬಂದ್ರಿ? "ಕೇಳಿದಳು. +ಅವನು ಉತ್ತರಿಸುವ ಕಷ್ಟ ತೆಗೆದುಕೊಳ್ಳಲಿಲ್ಲ. +ಚಾರುಲತ ಹಿಂದಕ್ಕೆ ತಿರುಗಿದಳು. +ನೋಟ ಸಾಗಿದಷ್ಟು ದೂರ ಮಂಜು ಹರಡಿದಂತಾಯಿತು. +ಜೀವನ ಪೂರ್ತಿ ಬೆರೆತು ಹೆಜ್ಜೆ ಹಾಕುವ ನಿರ್ಧಾರ ತೆಗೆದುಕೊಂಡ ದಂಪತಿಗಳು ವರ್ಷಕ್ಕೆ ಮುನ್ನವೇ ಬೇರೆಯಾದುದ್ದರ ಹಿಂದೆ,ದೈವದ ಕೈವಾಡವಿದೆಯೇ ? +ಅವಳ ಕಾಲುಗಳಲ್ಲಿನ ಶಕ್ತಿಯೇ ಕುಂದಿದಂತಾಯಿತು. +ತನ್ನ ಮೂರ್ತಿ ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸಿದ್ದರೇ, ಇಂದಿನ ತನ್ನ ಮನಸ್ಥಿತಿಯೇ ಬೇರೆಯಾಗುತ್ತಿತ್ತು. +ಪ್ರೀತಿಯ ಹೊಳೆಯಲ್ಲಿಯೇ ತೇಲಿಸಿದ್ದ. +ತುಂಬು ದಾಂಪತ್ಯ ಸುಖ ನೀಡಿದ ಉತ್ತಮ ವ್ಯಕ್ತಿ. +ವರದಕ್ಷಿಣೆ, ವರೋಪಚಾರ ಏನನ್ನೂ ಬೇಡವೆಂದ ಅಪರೂಪದ ಗಂಡು. +ಸಿಟಿ ಬಸ್ಸಿನಲ್ಲಿಯೇ ಮನೆಗೆ ಬಂದಿದ್ದು. +ಹೆಚ್ಚು ಓದು ಅಂಥ ಅಭ್ಯಾಸವಿಲ್ಲದ ನೀರದ ಮನೆಗೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ಹೋಗಿ ತಾಯಿಯ ಮನೆಯಲ್ಲಿ ಕೂಡುತ್ತಿದ್ದಳು. +ಬರೀ ಮಾತು. . . ಮಾತು. +ಅವಳು ಮಾತಿನ ಹುಡುಗಿಯೇ. +ಮನದಲ್ಲಿ ಏನನ್ನ ಉಳಿಸಿಟ್ಟುಕೊಳ್ಳುತ್ತಿರಲಿಲ್ಲ ಮನೆಯ ಬಳಿಗೆ ಬರುವ ವೇಳೆಗೆ ಮುಂಬಾಗಿಲು ಮುಚ್ಚಿತಷ್ಟೆ. +ಯಾರು ಇರಲಿಲ್ಲ. +ಸಾಮಾನನ್ನ ಒಂದು ಕಡೆ ಇರಿಸಿ ಅಡಿಗೆ ಮನೆಗೆ ಹೋದಳು. +ತಿಂಡಿ ರೆಡಿಯಾಗಿತ್ತು. ಕಾಫಿ ಫ್ಲಾಸ್ಕ್‌ನಲ್ಲಿತ್ತು. +ಆ ವೇಳೆಗೆ ಕಾಲಿಂಗ್‌ ಬೆಲ್‌ ಸದ್ದಾಯಿತು. +ಸ್ವಲ್ಪ ಕಸಿವಿಸಿಯಿಂದಲೇ ನಿಂತಿದ್ದ ಡಾ।|ನವೀನ್‌ "ಸಧ್ಯ ನೀನು ಬಂದಿದ್ದು ಒಳ್ಳೆದಾಯ್ತು. +ಇಲ್ಲದಿದ್ದರೇ ಯಾರಾದ್ರೂ ಮನೆ ಪೂರ್ತಿ ದೋಚಿಕೊಂಡು ಹೋಗ್ತಾ ಇದ್ದರು" ಸಿಡಿಮಿಡಿಗುಟ್ಟಿದ. +ಅವಳಿಗೇನು ಅರ್ಥವಾಗಲಿಲ್ಲ. +"ನಾನೊಬ್ಬ ಫೂಲ್‌ ಗೊಣಗುಟ್ಟಿಕೊಂಡು ಹೋಗಿ ಟೈ ಬಿಚ್ಚಿ ಎಸೆದು ಒಂದು ಕಡೆ ಕೂತ. +ಚಾರುಲತಗೆ ಒಂದಿಷ್ಟು ಗಾಬರಿ. +"ಏನಾಯ್ತು! ನಮ್ಮಮನೆಯಲ್ಲಿ ಏನಿದೆ, ಅಮೂಲ್ಯವಾದದ್ದು ದೋಚಿಕೊಳ್ಳೋಕೆ" ಎದುರು ಕೂತಳು. +ವಾಚ್‌ ಕಡೆ ನೋಡಿ "ನಾನ್ಬಂದು ಒಂದ್ಗಂಟೆ ಇಪ್ಪತ್ತು ನಿಮಿಷ ಆಗಿತ್ತು. +ನೀನು ಬಂದಾಗ ಮನೆ, ಮನೆ ಬಾಗ್ಲು ಯಾವ ಸ್ಥಿತಿಯಲ್ಲಿತ್ತೋ, ಅದೇ ಸ್ಥಿತಿಯಲ್ಲಿತ್ತು. +ನಾನ್ಬಂದಾಗ ಕೂಡ ಎನು. . . ಗತಿ ? +ಒಂದಿಷ್ಟು ಯೋಜ್ನೇ ಬೇಡ್ವಾ, ಅವ್ಳಿಗೆ ? ಹೋಗಿ. . . ಹೋಗಿ. . . ಅಮ್ಮನ ಎದುರು ಕೂತ್ಕೋತಾಳೆ. +ಕೆಲ್ಸಕ್ಕೆ ಬಾರದ ಮಾತುಗಳನ್ನಾಡುತ್ತ ಗೋಳಾಡ್ತಾರೆ ತಾಯಿ ಮಗ್ಳು" ಕೂಗಾಡಿದ. +ಚಾರುಲತ ತುಟಿ ಕಚ್ಚಿಡಿದಳು. +ಇದು ಅವಳಿಗೂ ಗೊತ್ತಿದ್ದುದೇ. +ಹಾಗೆ "ಬೇಡ" ಎಂದುಹೇಳಲು ಸಾಧ್ಯ. +"ಅದು ಯಾವ ದೊಡ್ಡ ವಿಷ್ಯ? +ದೂರವಿದ್ದಿದ್ದರೇ ಹೋಗೋಕೆ ಸಾಧ್ಯವಿತ್ತಾ? +ತಿಂಡಿ ಮಾಡಿಟ್ಟೇ ಹೋಗಿದ್ದಾರೆ. +ಬಂದ ಕೂಡ್ಲೇ ಇಲ್ಲ ಮಡದಿ ಮೇಲೆ ಕೋಪ ಸಹಜ. +ನಾನ್ಹೋಗಿ ಕೂಗ್ಬರ್ತೀನಿ" ಹೊರಟಾಗ ತಡೆದ "ಬೇಡ,ಅವಳಿದ್ದರೇನೇ ನನ್ನ ತಲೆ ಬಿಸಿ, ಮಹಾನ್‌ ಆದರ್ಶ ಪ್ರೇಮಿ ತರಹ ಇವ್ಳು ನ ವಿವಾಹವಾಗಿ ತಪ್ಪು ಮಾಡ್ದೆ"ಎಂದ ಕೂಡಲೇ ಕೈಯಿಂದ ಅವನ ಬಾಯಿಮುಚ್ಚಿದಳು "ಏನಾಗಿದೆ, ನವೀನಣ್ಣ ನಿಂಗೆ ?" +ಇದೇನಾದ್ರೂ ನೀರದ ಕಿವಿಗೆ ಬಿದ್ದರೇ, ಏಳು ವರ್ಷದ ಪ್ರೀತಿ, ಪ್ರೇಮ ಕಡೆ ಪಕ್ಷ ಏಳು ತಿಂಗ್ಳು ಕೂಡ ಉಳಿಯಲಿಲ್ಲಾಂದರೇ ಏನರ್ಥ ? +ನೀರದ ನಿನ್ಮಾತುಗಳ್ನ ಕೇಳಿದರೆ ನೊಂದ್ಕೊತಾಳೆ. +ಪ್ಲೀಸ್‌ ಹೀಗೆಲ್ಲ ಮಾತಾಡ್ಬೇಡ. +ಸ್ವಲ್ಪ ಪ್ರೀತಿಯಿಂದ ಮೃದುವಾಗಿ ಹೇಳು,ಅರ್ಥ ಮಾಡ್ಕೊತಾಳೆ ಹೇಳಿದಾಗ ಮುಖ ತಿರುಗಿಸಿಕೊಂಡು ಎದ್ದು ಹೋದ. +ಹಿಂದೆ ಕಾಣದ ಲೋಪ ದೋಷಗಳು ತಾಳಿ ಕಟ್ಟಿದ ಕೂಡಲೆ ಹೇಗೆ ಪ್ರಕಟವಾದವು ? +ಎದುರು ಮನೆಯಾದುದ್ದರಿಂದ ನೀರದ ಹೆಚ್ಚು ಕಡಿಮೆ ಈ ಮನೆಯಲ್ಲೇ ಇರುತ್ತಿದ್ದಳು. +ಅವಳು ತಂದೆಗೆ ಅಡಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಳು. +ಬ್ಯಾಂಕ್‌, ಜನರಲ್‌ ಸ್ಟೋರ್‌ಗೆ ಹೋಗಿ ಬರುತ್ತಿದ್ದವಳು ಅವಳೇ. +ಆಗಾಗ ಡಾ।|ನವೀನ್‌, ಅವಳು ಕೂಡಿ ಹೊರಗೆ ಹೋಗಿ ಬರುವುದಕ್ಕೆ ಎರಡು ಕಡೆಯವರ ಆಕ್ಷೇಪಣೆ ಇರಲಿಲ್ಲ. +ನೀರದಾನ ಅರಸಿಕೊಂಡು ಅವಳ ಮನೆಗೆ ಬಂದಾಗ ಖಾಲಿ ಬಿಂದಿಗೆ ಹಿಡಿದುಕೊಂಡು ಬರುತ್ತಿದ್ದ ಅವಳ ಅತ್ತಿಗೆ ಹೊರಗಡೆಯೇ ಎದುರಾದಳು. +"ನೀರದಾನ ಕರ್ಯೋಕೆ ಬಂದ್ಯಾ ? +ಹಿಂದೆ ನಿಮ್ಮ ಮನೆಯಲ್ಲಿ ಬಂದು ಕೂಡುತ್ತಿದ್ದಳು. +ಈ ಕೆಲ್ಸ ನಾನು ಆಗ ಮಾಡ್ತಾ ಇದ್ದೆ. +ಈಗ ನೀನು ಮಾಡ್ಬೇಕಾಗಿದೆ. +ಒಂದೇ ಮಾತು ತಾಯಿ, ಮಗಳದು. +ಆಕೆಯಂತು ಹಾಸಿಗೆ ಹಿಡಿದ ಪೇಷಂಟ್‌. +ಇವ್ಳಿಗಾದ್ರೂ ಬುದ್ಧಿ ಬೇಡ್ವಾ ?"ನಾದಿನಿಯ ಮೇಲೆ ಅಸಹನೆ ತೋರಿದಳು. +ಅದಕ್ಕೆ ಕಾರಣವಿತ್ತು. +ಹಿಂದೆ ಈ ಮನೆಯ ಮಗಳಾಗಿದ್ದಾಗ ಕೆಲಸ ಮಾಡೋಳು,ಈಗ ಬರೀ ಬಂದು ಕೂಡುತ್ತಿದ್ದುದು ಸೈರಣೆಯ ವಿಷಯವಾಗಿರಲಿಲ್ಲ. +ಮುಖದಲ್ಲಿ ನಗು ತೇಲಿಸಿ ಚಾರುಲತ ಒಳಗೆ ಹೋದಳಷ್ಟೆ. +ಈ ಮನೆಯ ಕಿರಿಯ ಸೊಸೆ ಬ್ಯಾಂಕ್‌ ಉದ್ಯೋಗಿಯಾದುದ್ದರಿಂದ ಹಿರಿಯ ಸೊಸೆ ಸುಕನ್ಶ ಮೇಲೆ ಕೆಲಸದ ಒತ್ತಡ ಬೀಳುತ್ತಿತ್ತು. +ಸುಮ್ಮನೆ ತಾಯಿಯ ಬಳಿ ಬಂದು ಕೂಡುವ ನೀರದ ಮೇಲೆ ಕೋಪ ಸಹಜವೆಂದುಕೊಂಡಳು. +"ಅತ್ತಿಗೆ ನೀರದ ಅವ್ರೆ, ನಿಮ್ಮ ಶ್ರೀಯವ್ರು ದಯಮಾಡಿದ್ದಾರೆ" + ಸುದ್ದಿಮುಟ್ಟಿಸಿದಾಗ ಗಾಬರಿಯಿಂದ ಎದ್ದ ಅವಳು “ಬಾಗ್ಲು ತೆಗೆದೇ ಇತ್ತಾ ? +ಮಾತಿನಲ್ಲಿ ಮರ್ತೇ ಬಿಟ್ಟೆ.” ಓಡಿದಾಗ ಅವಳ ತಾಯಿ ಬಳಿ ಕೂತಳು. +ಆಕೆಯ ಸ್ಥಿತಿ ಕರುಣಾಜನಕವೇ. +ತೀವ್ರವಾದ ಹೊಟ್ಟೆಯ ಅಲ್ಸರ್‌ನಿಂದ ನರಳುತ್ತಿರುವ ಆಕೆ ಸದಾ ಮಲಗಿರುವುದೆ ಹೆಚ್ಚು. +“ಕೆಲ್ಸದಿಂದ ಬಂದ್ಯಾ? +ನಿನ್ನ ಈ ಪರಿಸ್ಥಿತಿಗೆ ನಾನೇ ಕಾರಣಾಂತ ಭೂಮಿಗಿಳಿದು ಹೋಗಿದ್ದೀವಿ” ಆಕೆಯ ಮಾತಿನ ಧಾಟಿ ಅಲ್ಲಿಯೇ ಸಾಗಿತು. +ಅವಳು ಸಿಕ್ಕಾಗಲೆಲ್ಲ ಇದೇ ಮಾತುಗಳು. +ಚಾರುಲತಗೆ ಸಾಕು ಸಾಕಾಗಿತ್ತು. +“ದಯವಿಟ್ಟು ಪದೇ ಪದೇ ಈ ಮಾತುಗಳ್ನ ಆಡ್ಬೇಡಿ. +ನೀವು ಕಾರಣವಲ್ಲ. +ಅದು ನಿಮ್ಗೇ ಸಂಬಂಧಪಡದ ವಿಷ್ಯ. +ನವೀನಣ್ಣನಿಗೆ ಪೂಜಾನ ವಿವಾಹವಾಗೋಕೆ ಇಷ್ಟವಿಲ್ಲಿಲ್ಲ. +ಅದ್ಕೇ ನೀವು ಹೇಗೆ ಕಾರಣವಾಗ್ರೀರಾ? +ಸುಮ್ನೇ ಯೋಚ್ಸಿ ಮತ್ತಷ್ಟು ಆರೋಗ್ಯ ಕೆಡಿಸ್ಕೋಬೇಡಿ" ಎಂದಳು ಆಕೆಯ ಕೈಹಿಡಿದು ಮೃದುವಾಗಿ ಸವರುತ್ತ. +ಆ ಜೀವ ನೋಯುವುದು ಅವಳಿಗೆ ಬೇಡ. +"ಸುಕನ್ಯ, ಏನಾದ್ರೂ ತಗೊಂಡ್ಬಾ" ಸೊಸೆನ ಕೂಗಿದರು. +“ಬೇಡ ಎಲ್ಲಾ ಆಗಿದೆ. +ಅಲ್ಲಿಗೂ ಇಲ್ಲಿಗೂ ಓಡಾಟ ಇದ್ದೇ ಇರುತ್ತಲ್ಲ. +ಅಪ್ಪ, ಎಲ್ಲೋ ಹೋದವರು ಬಂದಿಲ್ಲ ನೋಡ್ತೀನಿ” ಎದ್ದಳು. +ಕೆಲವು ಮಾತುಗಳನ್ನ ಹೇಳಬೇಕೆಂದು ಕೊಂಡವಳು ಸುಮ್ಮನಾದಳು. +ಆಕೆ ಕೈ ಹಿಡಿದರು“ಕ್ಷಣ ಕೂತ್ಕೋ, ನನ್ನ ಸಮಾಧಾನಕ್ಕೆ."ಬೇಸರದಿಂದಲೇ ಕೂತರು. +ಆಕೆಗೆ ಮಗಳ ಭವಿಷ್ಯದ ಚಿಂತೆ. +ಇಂಥ ದೊಡ್ಡ ಗಂಡಾಂತರ ಬಂದು ಒದಗುತ್ತದೆಯೆಂದು ಗೊತ್ತಿರಲಿಲ್ಲ. +"ಏನು ಕೆಲ್ಲ ?ಅಲ್ಲಿ ಎಲ್ಲಾ ಹೆಂಗಸರೇ ಇರೋದೂಂತ ಕೇಳ್ದೆ. +ನಿನ್ಗಂಡ,ಅತ್ತೆ ಮಾವನ ಒಂದ್ಮಾತು ಕೇಳ್ಬೇಕಿತ್ತು" ಎಂದರು. +ಆಕೆಯ ಚಿಂತೆ ಆ ದಿಕ್ಕಿನಲ್ಲಿ ಹರಿದಿತ್ತು. +ಕಟುವಾಗಬಹುದಾದ ಉತ್ತರವನ್ನು ಮೆತ್ತಗಾಗಿಸಿ "ಎಲ್ಲಾ ಕೇಳಿದ್ದೀನಿ"ಅಂದದ್ದು ಇರುಸು ಮುರುಸಿನಿಂದಲೇ. +"ನೀನು ಗಂಡನ ಮನೆಗೆ ಹೋಗೋ ತನಕ ನೀರದ, ಅವ್ಳ ಗಂಡ ಸುಖವಾಗಿರೋಲ್ಲ. +ನವೀನ ಅದ್ನೇ ಮನಸ್ಸಿಗೆ ಹಚ್ಕೊಂಡ್‌ ಮೂರು ರಾತ್ರಿಯಿಂದ ಅವ್ಳಿಂದ ದೂರ ಮಲ್ಗಿದ್ದಾನೆ. +ವಿವಾಹವಾದ ಹೊಸದ್ರಲ್ಲಿ ಏನುಚೆನ್ನ ?"ತೋಡಿಕೊಂಡರು. +ಮಗಳು ಅತ್ತುಕೊಂಡಿದ್ದು ಅವರ ವಿವೇಕವನ್ನು ಮಂಕಾಗಿಸಿತ್ತು. +ತಕ್ಷಣವೇ “ತಪ್ಪಾಗಿ ಮಾತಾಡಿದ್ದೆ ಅವ್ಳು ಅತ್ತುಕೊಂಡಾಗ ನನ್ನ ಕರುಳು ಕಿತ್ತು ಬಂತು."ನಿಶ್ಶಬ್ದವಾಗಿ ಎದ್ದು ಹೊರಗೆ ಬಂದಳು. +ಬೆಡ್‌ ರೂಮಿಗೆ ಸಂಬಂಧಿಸಿದ ಮಾತುಗಳು ಎದುರು ಮನೆಯವರೆಗೂ ಬಂದಿದ್ದು ಸರಿ ಕಾಣಲಿಲ್ಲ. +ಬಹುಶಃ ತನ್ನ ತಾಯಿ ಕೂಡ ಬದುಕಿದ್ದರೆ ಮೊದಲು ಯೋಚಿಸುತ್ತಿದ್ದುದು ಮಗಳ ಬಗ್ಗೆಯೇಎನಿಸಿತು. +ಆಗ ತಾನೇ ಬಂದಿದ್ದ ವಾಸುದೇವಯ್ಯ ಕೈಕಾಲು ತೊಳೆದು ಹಾಲ್‌ನಲ್ಲಿ ಬಂದು ಕೂತವರು "ಎದುರು ಮನೆಗೆ ಹೋಗಿದ್ಯಾ ?ಹೇಗಿದ್ದಾರೆ ಶ್ಯಾಮಲಕ್ಕ?"ವಿಚಾರಿಸಿದರು. +ಆಗಾಗ ಮೊದಲು ಹೋಗುತ್ತಿದ್ದವರು ಈಗ ಪೂರ್ತಿ ಬಂದ್‌ಮಾಡಿದ್ದರು. + ಇಷ್ಟವೆನಿಸುತ್ತಿರಲಿಲ್ಲ. "ಪರವಾಗಿಲ್ಲ, ತಿಂಡಿ ತರ್ತಿನಿ" ಅಡಿಗೆ ಮನೆಗೆ ಹೋದಳು. +ಮುಚ್ಚಿಟ್ಟ ತಿಂಡಿ ಹಾಗೆಯೇ ಇತ್ತು. +ನೀರದ ನವೀನ್‌ಗೂ ತಿಂಡಿ ಕೊಟ್ಟಿರಲಿಲ್ಲ ಸರಿಯೆನಿಸಲಿಲ್ಲ. +ಯಾರಿಗೆ ಬುದ್ಧಿ ಹೇಳುವುದು ? +ನೀರದ ಎದುರು ಮನೆಯಿಂದ ತರುವ ತಿಂಡಿಗಾಗಿ ಬಾಗಿಲ ಕಡೆಯೇ ನೋಡುತ್ತ ಕಾಯುತ್ತಿದ್ದ ನವೀನ್‌ಗೆ ಇಷ್ಟು ಬೇಗ ಏನಾಯಿತು ? +ನಾಲ್ಕು ತಟ್ಟೆಗಳಿಗೆ ಉಪ್ಪಿಟ್ಟು ಹಾಕಿ, ಎರಡು ತಂದು ಒಂದು ತಂದೆಗೆ ಕೊಟ್ಟು ತನಗಾಗಿ ಒಂದು ತಟ್ಟೆ ಇಟ್ಟು, ಉಳಿದ ಎರಡು ತಟ್ಟೆಗಳನ್ನ ರೂಮಿನ ಬಾಗಿಲ ಬಳಿಗೆ ಒಯ್ದು ನಿಡುಸೊಯ್ದಳು. +“ನೀರದ, ಅಣ್ಣನಿಗೆ ತಿಂಡಿ ಕೊಡು” ಎಂದಳು. +ನೇರವಾಗಿ ಹೊರಗೆ ಬಂದ ನವೀನ್‌ ಒಂದು ತಟ್ಟೆಯನ್ನು ಇಸಿಕೊಂಡು ಹೋಗಿ ತಂದೆಯ ಎದುರು ಕೂತ. +“ನೀನು ಇಲ್ಲಿಗೆ ಬಂದ್ಬಿಡತ್ತಿಗೆ ” ಎಂದು ಇನ್ನೊಂದು ತಟ್ಟೆಯನ್ನು ಟೀಪಾಯಿ ಮೇಲಿಟ್ಟು “ನಿಂಗೆ ಹಸಿವು ಕಡೇ ಆಗಿದ್ಯಾ?"ವಿಚಾರಿಸಿದಳು. +ಅವಳಿಗೆ ಹೋಟಲಲ್ಲಿ ತಿಂಡಿ ತಿಂದಿದ್ದು ಮರತೇ ಹೋಗಿತ್ತು. +ಮಾತಾಡದೆ ನವೀನ್‌ ಗಬಗಬನೆ ತಿಂದು ತಟ್ಟೆ ಖಾಲಿ ಮಾಡಿಟ್ಟು ಎದ್ದುಹೋಗಿ ಕೈ ತೊಳೆದವನು ಪಂಚೆಯಲ್ಲಿಯೇ “ಹಯಗ್ರೀವನ್ನ. . . . ನೋಡ್ಬರ್ತಿನಿ”ಹೊರಟ. +ಅಪ್ಪ, ಮಗಳು ಮುಖ ಮುಖ ನೋಡಿಕೊಂಡರು. +“ಸಂಭ್ರಮ, ಸಂತೋಷ ಇರ್ಬೇಕಾದ ಮನೆಯಲ್ಲಿ ಏನು ಇಲ್ಲವಾಗಿದೆ. +ಕುಣಿದು ಕೊಂಡು ಓಡಾಡುತ್ತ ಇದ್ದ. +ಹುಡ್ಗಿ ಸಪ್ಪಗೆ ಕೂತಿರ್ತಾಳೆ. +ಏನೋಪ್ಪ ಒಂದು ಅರ್ಥವಾಗೋಲ್ಲ?" +ಸೊಸೆಯನ್ನ ಉದ್ದೇಶಿಸಿ ಆಡಿದ ಮಾತುಗಳು ಅವು. +ಹಣೆಗೆ ಕೈಯೊತ್ತಿಕೊಂಡು "ಅಪ್ಪ, ಹೊಸದಲ್ವೆ ! +ಅದೂ ಅಲ್ಲೆ ನೀರದಾಗೆ ಅವಳಮ್ಮನ ಆರೋಗ್ಯದ ಚಿಂತೆ. +ನಿಮ್ಮ ಮಗನದೇ ಸಿಟ್ಟು, ಸೆಡವು" ಎಂದಳು. +ಅವಳಿಗೆ ಎಲ್ಲಾ ವಿಚಿತ್ರವಾಗಿ ತೋರುತ್ತಿತ್ತು. +ಪ್ರೇಮ, ಪ್ರೀತಿ ಸಂಬಂಧಗಳಿ ಏನಾದರೂ ಅರ್ಥವಿದೆಯೇ ? +ಸಣ್ಣ ಸಣ್ಣ ತಪ್ಪುಗಳನ್ನ ಕೂಡ ಕ್ಷಮಿಸಲಾರದಂಥ ವ್ಯಕ್ತಿಗಳ ನಡುವೆ ಬದುಕೆಷ್ಟು ಸುಭದ್ರ ? +ಅವೆಲ್ಲ ಬರೀ ಬರವಣಿಗೆಯಲ್ಲಿ ಉಳಿದು ಮುಂದಿನ ಜನಾಂಗಕ್ಕೆ ಇತಿಹಾಸವಾಗ ಬಲ್ಲದೇನೋ ! +ಯುಗಂಧರ್‌ ನಿರೀಕ್ಷಿತ ಮಟ್ಟದಷ್ಟು ಮಾನಸಿಕವಾಗಿ ಪೂಜಾ ಚೇತರಿಸಿಕೊಂಡಿದ್ದರೂ ಅವಳ ಆರೋಗ್ಯ ಸಾಕಷ್ಟು ಸುಧಾರಿಸಿರಲಿಲ್ಲ. +ಅವಳಿಗೆ ಸರಿಯಾಗಿ ಊಟ ಮಾಡಲು ಸಾಧ್ಯವಿರಲಿಲ್ಲ. +ಮರುದಿನವೇ ಬಂದ ಮೂರ್ತಿ ತಂದೆಗೆ ಮಧು ಜಾತಕ, ಫೋಟೋ ಕೊಟ್ಟು "ನೀವು ಜಾತ್ಕ ಬೇಕಾದರೆ ತೋರ್ಲಿಕೊಳ್ಳಿ. +ಚೆನೈಗೆ ಹೋಗ್ಬಂದೆ. +ಗಂಡು ಮಾತ್ರ ಎಕ್ಸಲೆಂಟ್‌. +ಅವ್ನಿಗೆ ತಂಗಿಯರು ವಿವಾಹಕ್ಕೆ ಇರೋದ್ರಿಂದ ಒಂದಿಷ್ಟು ಡೌರಿ ಅಪೇಕ್ಷೇಸಿಸಬಹುದು. +ಅವ್ಳು ಕೂಡ ತಕ್ಷಣವೇ ಮ್ಯಾರೇಜ್‌ಮಾಡ್ಬೇಕೆಂಬ ಹಾತೋರಿಕೆಯಲ್ಲಿಲ್ಲ. +ಟ್ರೈನಿಂಗ್‌ಗೆ ಹೋದ ಮಧು ಆರು ತಿಂಗ್ಳ ನಂತರವೇ ಬರೋದು. +ಆ ವೇಳೆಗೆ ಪೂಜಾ ಮತ್ತಷ್ಟು ಚೇತರಿಸ್ಕೋತಾಳೆ. +ಎಲ್ಲಾ ರೀತಿಯಿಂದಲೂ ಈ ಸಂಬಂಧ ಒಳ್ಳೆಯದೆನಿಸುತ್ತೆ" ತಂದೆಯ ಮುಂದೆ ವಿಷಯವನ್ನಿಟ್ಟ. +ಫೋಟೋವನ್ನ ಮುಖದ ಮುಂದಿಡಿದು ನೋಡಿದರು. +ಕನ್ನಡಕ ತೆಗೆದೊರೆಸಿ ಹಾಕಿಕೊಂಡು ದಿಟ್ಟಿಸಿದರು. +ಲಕ್ಷಣವಾಗಿ ಕಂಡ ,ಡಾ||ನವೀನ್‌ ಜೊತೆ ಅವನನ್ನ ತುಲನೆ ಮಾಡಿದ. +ಅವನು ಸ್ವಲ್ಪ ಪೀಚು, ಇವನು ದಪ್ಪಪುಷ್ಟವಾಗಿ ಕಂಡ. +"ಚೆನ್ನಾಗಿದ್ದಾರೆ. ಹೇಗೂ ಆರು ತಿಂಗ್ಳು ಅವಕಾಶ ಸಿಕ್ಕಿದೆಯಲ್ಲ. +ಆ ವೇಳೆಗೆ ಪೂಜಾನು ಚೇತರಿಸ್ಕೋಬಹುದು. +ಹೇಗೂ ನಾನು ಮನೆ, ನರ್ಸಿಂಗ್‌ಹೋಂಗೆ ಹಣನು ನವೀನ್‌ಗೆ ಕೋಡೋಕೆ ಸಿದ್ಧವಾಗಿದ್ದೆ. +ಅದ್ನೇ ಅವ್ನಿಗೆ ಕೊಡ್ತೀನಿ. +ಇನ್ನಷ್ಟು ಕೊಡೋಣ ಬಿಡು. +ಅವ್ಳು ಚೇತರಿಸಿಕೊಂಡರೆ ಸಾಕು" ಕನ್ನಡಕ ತೆಗೆದು ಕಂಬನಿಯೊರೆಸಿ ಕೊಂಡಾಗ ಮೂರ್ತಿಯ ಹೃದಯ ಕಿತ್ತು ಬಾಯಿಗೆ ಬಂದಂತಾಯಿತು. +ತಂದೆಯನ್ನ ಬಲ್ಲ, ಸಿಂಹದಂಥ ವ್ಯಕ್ತಿಯೇ. +ಆದರೆ ಈಚಿಗೆ ಎಷ್ಟೊಂದು ಕಂಗೆಟ್ಟು ಹೋಗಿದ್ದಾರೆಂದರೆ, ಯಾವುದೋ ಹೆದರಿಕೆ ಸದಾ ಭುಜ ತಟ್ಟುತ್ತಿತ್ತು. +"ಅಪ್ಪ, ನೀವು ಅಳೋದೂಂದರೇನು ?ಎಲ್ಲಾ ಸರಿ ಹೋಗುತ್ತೆ. +ಈಗ ಪೂಜಾ ಎಷ್ಟೋ ಚೇತರಿಸಿಕೊಂಡಿದ್ದಾಳೆ. +ಅವ್ರನ್ನ ಒಮ್ಮೆ ಬಾ ಅಂದಿದ್ದೀನಿ. +ಅದ್ಕೇ ಮುನ್ನ ನಾನು, ನೀನು, ಅಮ್ಮ ಒಮ್ಮೆ ಹೋಗ್ಬರೋಣ. +ಅವ್ರು ಪೂರ್ತಿ ತಮಿಳುನಾಡಿನವರೇ. +ಅವ್ರ ನೆಂಟರಿಷ್ಟರೆಲ್ಲ ಆ ಕಡೆಯವ್ರೆ. +ಬರೀ ಕರ್ನಾಟಕದ ಪ್ರವಾಸ ಮಾಡಿದ್ದಾರಷ್ಟೆ. +ಕನ್ನಡ ಪೂರ್ತಿ ಗೊತ್ತಿಲ್ಲ" ಇನ್ನಷ್ಟು ವಿವರಿಸಿದ. +ಮಾತು ಮುಗಿಸಿದ ಮೂರ್ತಿ ತಂಗಿಯ ರೂಮಿಗೆ ಬಂದ. +ಸೋಫಾಗೆಒ ರಗಿ ಕೂತಿದ್ದವಳು ಎದುರು ಒಂದು ಪತ್ರಿಕೆ ಇತ್ತು. +ಅವಳಿಗೆ ಹೊಟ್ಟೆಯಲ್ಲಿ ನಿರಂತರ ಉರಿ, ಸಂಕಟ. +ಸಾಕಷ್ಟು ಟ್ರೀಟ್‌ಮೆಂಟ್‌ ಕೂಡ ಇದನ್ನ ಕಡಿಮೆ ಮಾಡಿರಲಿಲ್ಲ. +"ಹಾಯ್‌, ಪೂಜಾ" ಅವಳ ಬಳಿ ಬಂದು ಕೂತ. +ಪತ್ರಿಕೆಯನ್ನು ಟೀಪಾಯಿ,ಮೈಲಿಟ್ಟ ಅವಳು ಮುಗುಳ್ನಗೆ ಹರಿಸಿ "ಹೊಟ್ಟೆಯಲ್ಲಿ ತುಂಬ ಸಂಕಟ, ಉರಿ ಕಣೋ. +ಕಾರ ತಿಂದೇ ಎಷ್ಟೋ ದಿನವಾಯ್ತು" ಕ್ಷೀಣವಾಗಿ ಹೇಳಿದಾಗ ಡಾ।| ನವೀನ್‌ನ ಅನಾಮತ್ತಾಗಿ ಎತ್ತಿ ಬೆಟ್ಟದಿಂದ ಕೆಳಗೆ ಹಾಕಿಬಿಡಬೇಕೆನಿಸಿತು. +ಕೋಪದಿಂದ ಹಲ್ಮುಡಿಯನ್ನು ಕಚ್ಚಿಡಿದ. +"ಪೂರ್ತಿ ಸರಿ ಹೋಗೋಕೆ ಕೆಲವು ದಿನ ಬೇಕೂಂದರಲ್ಲ ಡಾಕ್ಟ್ರು. +ಸಂಜೆ ಎಲ್ಲಾದ್ರೂ ಹೊರ್ಗಡೆ ಹೋಗ್ಬರೋಣ್ಮ್ವಾ ?"ಉತ್ಸಾಹ ತುಂಬಿದ ಅವಳಲ್ಲಿ. +"ಷ್ಕೂರ್‌, ನಾನು ಪಾನಿಪುರಿ, ಬೇಲ್‌ಪುರಿ, ಐಸ್‌ ಕ್ರೀಮ್‌ ಎಲ್ಲಾ ತಿಂದು ಎಷ್ಟೋ ದಿನವಾಯ್ತು. +ನಾನಂತು ರೆಡಿ" ಎದ್ದು ಕುಣಿಯುವ ಆಸೆ. +ಆದರೆ ಈಗ ಅವಳ ಶರೀರದಲ್ಲಿ ಅಂಥ ತ್ರಾಣವೇ ಇರಲಿಲ್ಲ. +ಪಕ್ಕದಲ್ಲಿದ್ದ ದಿಂಬನ್ನ ತೊಡೆಯ ಮೇಲೆ ಹಾಕಿಕೊಂಡು "ನಂಗ್ಯಾಕೋ,ಭಯ ಆಗುತ್ತೆ. +ನಾನು ಮೊದ್ಲಿನಂತೆ ಆಗ್ತೀನಾ ?" +ಕಣ್ಣೀರು ಸುರಿಸೋಕೆ ಷುರು ಮಾಡಿದಾಗ, ಸುಂದರವಾದ ಹೂವೊಂದು ಬೇರೆಯವರ ಕಾಲು ತುಳಿತಕ್ಕೆ ಸಿಕ್ಕಿ ನರಳಿದಂತಾಯಿತು. +"ಖಂಡಿತ ಆಗ್ತೀಯಾ ! ಅಷ್ಟೊಂದು ನಿದ್ದೆ ಮಾತ್ರೆ ತಗೊಳ್ಳೋಂತ ಮೂರ್ಖತನ ಮಾಡ್ಬಾರ್ದಿತ್ತು. +ಈಗ ನೀನೇ ಸವೆಯೋಳು. +ಅದ್ನ ನೋಡಿ ನಾವೇ ಸಂಕಟಪಡೋರು. +ಬೇರೆಯವ್ರಿಗೇನು ?" +ಇದನ್ನು ಚಾರುಲತ ಅವಳ ಮನೆಯವರನ್ನ ಉದ್ದೇಶಿ? ಹೇಳಿದ ಮಾತು. +"ನನ್ನ ಖಂಡಿತ ನವೀನ್‌ ಮದ್ವೆ ಮಾಡ್ಕೋತಾನೇಂತ ತಿಳಿದಿದ್ದೆ. +ಮೋಸ. . . . ಮಾಡ್ದ" ಕಣ್ಣಿಗೆ ಕರ್ಚೇಫ್‌ ಹಚ್ಚಿದಾಗ ಮೂರ್ತಿಗೆ ರೇಗಿತು. +"ಸಾಕು ನಿನ್ನ ಪುರಾಣ. +ಅವನೇನು ಇಂದ್ರಲೋಕದಿಂದ ಇಳಿದಿದ್ದಾ ? +ಮಾಡಿರೋದು ಆರ್ಡಿನರಿ ಎಂ.ಬಿ.ಬಿ.ಎಸ್‌. ಏನಾದ್ರೂ ಸ್ಪೆಷಲೈಜ್‌ ಮಾಡಿದ್ರೆ ತಾನೇ,ಅದಕ್ಕೂ ಬೆಲೆ. +ಅಪ್ಲಿ ತಪ್ಪಿ ಕೂಡ ಅವ್ನ ಸುದ್ದಿ ಬೇಡ. +ಅದೆಲ್ಲ ಒಂದು ಕೆಟ್ಟ ಕನಸ್ಸೂಂತ ತಿಳ್ಕೋ. +ಹೇಗೂ, ಮೂರು ಆಯ್ದು. +ಐದಕ್ಕೆ ಮನೆ ಬಿಡೋಣ"ಎದ್ದುಹೋದ. +ಯುಗಂಧರ್‌ ಮತ್ತು ಆಕೆ ಫೋಟೋ ಜಾತಕ ಹಿಡಿದು ಕೂತು ಮಾತಾಡುತ್ತಿದರು. +ಆವರಿಗೆ ಸಂಬಂಧ ಕುದುರಿಸವುದಕ್ಕಿಂತ ಮಗಳು ಮುಂದಿನ ಬದುಕಿಗೆ ಒಗ್ಗಿಕೊಳ್ಳುತ್ತಾಳೆನ್ನುವುದೇ ಚಿಂತೆಯಾಗಿತ್ತು. +"ನಂಗೇನೋ ಭಯ !"ಎಂದರು. +ಕೂತ ಮೂರ್ತಿ ಭಾರವಾದ ಉಸಿರು ದಬ್ಬಿದ. +ತಂಗಿಯ ಮಾನಸಿಕ ಚೇತರಿಕೆ ಅವನ ಗಮನಕ್ಕೆ ಬಂದಿತ್ತು. +ಅದರೆ ಅವನಿಗೆ ಅವಳ ಆರೋಗ್ಯದ್ದೆ ಚಿಂತೆ. +ಮುಖಕ್ಕೆ ಮೊದಲಿನ ಬಣ್ಣ ಒಂದಿರಲಿಲ್ಲ. +ಕಾಯಿಲೆ ಬಿದ್ದು ಬಿಳುಚಿಕೊಂಡಂಗೆ ಕಾಣುತ್ತಿದಳು. +ಭಯಪಡೋಕೇನಿದೆ ? ಬರೀ ಲವ್‌ ಸಿನಿಮಾಗಳ್ನ ನೋಡಿ ಈಗಿನಯುವಕರು, ಯುವತಿಯರು ಎಕ್ಸ್‌ಪರಿಮೆಂಟ್‌ ಮಾಡೋಕೆ ಹೋಗ್ತಾರೆ. +ಅಂಕ ದೀಕ್ಷೆಯೆನು ಇರೋಲ್ಲ ಇವ್ಳು ಅಷ್ಟೆ. +ಮಾತು, ನಗು, ಓಡಾಟ ಐಸ್‌ಕ್ರೀಮ್‌ ತಿನ್ನೋದೇ ಲವ್‌ ಆಗ್ದಿಡುತ್ತೆ. +ಯೂಸ್‌ಲೆಸ್‌ ಫೆಲೋ"ಕೆಂಡ ಕಾರಿದ. +ಅವನು ಕಾಲೇಜಿನಲ್ಲಿ ಅಧ್ಯಾಪಕ. +ಈಗಿನ ವಿದ್ಯಾರ್ಥಿಗಳ ಗುಣ ಸ್ವಭಾವಗಳು ಚೆನ್ನಾಗಿ ಗೊತ್ತು. +ಜೊತೆ ಜೊತೆಯಾಗಿ ಒಡಾಡುವುದು ಅವನ ಪ್ರಕಾರ ತಪ್ಪಲ್ಲ. +ಆದರೆ ಮಿತಿ ಮೀರಿದ ಓಡಾಟವನ್ನು ವಿರೋಧಿಸುತ್ತಿದ್ದ. +"ನವೀನ್‌ ತುಂಬ ಒಳ್ಳೆ ಹುಡ್ಗ ಅಂದ್ಕೊಂಡಿದ್ದು ನಮ್ಮ ತಪ್ಪು" ಮೂರ್ತಿ ತಾಯಿ ಅಂದರು. +"ನಂಗಂತು ಅವ್ನಿಗೆ ಕೊಟ್ಟು ವಿವಾಹ ಮಾಡೋ ಇಚ್ಛೆಯೇನು ಇದ್ದಿಲ್ಲ. +ಇವ್ಳ ಮೊಂಡಾಟದಿಂದ್ಲೇ ಆ ವಿಷ್ಯ ಅಲ್ಲಿವರ್ಗೂ ಹೋಯ್ತು. + ಸುಮ್ನೇ ಅವಮಾನವಾಯಿತಷ್ಟೆ. + ಇದರಿಂದ ಒಂದು ಸಾಬೀತಾಯಿತಷ್ಟೆ. +ಚಾರುಲತಗೆ ನಾವು ಕಂಡ ಮುಖಕ್ಕಿಂತ ವಿಭಿನ್ನವಾದ ಮುಖವಿದೆ. +ಅವ್ಳಿಗೆ ಇನ್ನ ನಾವೆಲ್ಲ ಅವ್ಳ ಕಡೆಯವ್ರು ಅನ್ನಿಸಿಯೇ ಇಲ್ಲ" ಯುಗಂಧರ್‌ ಜಿಗುಪ್ಸೆಯಿಂದ ಪ್ರತಿಕ್ರಿಯಿಸಿದರು. +"ಸುಮ್ನೇ ಅವ್ಳ ವಿಷ್ಯ ಬೇಡ. +ತಿಪ್ಪೆನ ಕೆದಕೋದ್ರಿಂದ ಬರೀ ಕಸ, ಕಡ್ಡಿನೇಸಿಗೋದು. +ಅವ್ಳ ವಿಷ್ಯ ಇನ್ಮೇಲೆ ನಮ್ಮ ಮನೆಯಲ್ಲಿ ಬೇಡ. +ತವರು ಮನೆಯಲ್ಲೇ ಸುಖವಾಗಿ ಇದ್ಕೊಳ್ಳಿ" ಎಂದ ಮೂರ್ತಿ ಎದ್ದು ಹೋದ. +ಅವನಿಂದ ಅವಳು ದೂರವಾಗಿದ್ದರೂ, ಅವಳ ನೆರಳು ಅವನನ್ನು ಹಿಂಬಾಲಿಸುತ್ತಿತ್ತು. +ಪರಿಚಯದವರು, ಕೊಲಿಗ್ಸ್‌ ಒಂದಲ್ಲ ಒಂದು ಕಾರಣ ಮುಂದು ಮಾಡಿ ಚಾರುಲತ ಸುದ್ದಿ ಎತ್ತುತ್ತಿದ್ದರು. +"ಅಂಕಲ್‌, ಯಾವಾಗ್ಬರ್ತಾರೆ ಆಂಟಿ' ಬೀದಿಯಲ್ಲಿ ಆಟವಾಡುವ ಹುಡುಗರೆಲ್ಲ ಪ್ರಶ್ನಿಸುತ್ತಿದ್ದರು . +"ಬರೋಕೆ ಕೆಲವು ದಿನಗಳು ಆಗುತ್ತೆ" ಹೇಳುತ್ತಿದ್ದ. +ಒಮ್ಮೆ ಪ್ರಿನ್ಸಿಪಾಲರು ಅವನನ್ನು ಕರೆಸಿಕೊಂಡು "ಒಂದು ನ್ಯೂಸ್‌ ಕೇಳ್ದೆ. +ಅದು ಸುಳ್ಳಾಗ್ಲೀಂತ್ಲೇ ನನ್ನ ಹಾರೈಕೆ. +ನಿಮ್ಮ ಮತ್ತು ನಿಮ್ಮ ಮಡದಿಯ ನಡ್ವೇ ಏನೋ ಡಿಫರೆನ್ಸಸ್‌ ಬಂದಿದೆಯನ್ನೋ ಸುದ್ಧಿ ಸಣ್ಣ ಪುಟ್ಟ ಡಿಫರೆನ್ಸ್‌ ಎಲ್ಲಾಕಡೆ ಇದ್ದಿದ್ದೇ. +ಅದು ದೊಡ್ಡದಾಗೋಕೆ ಅವಕಾಶ ಕೊಡ್ಬಾರ್ದು. +ನೀವೇ ಸೋಲಿ. ಇಲ್ಲಿ ಸೋಲು ಗೆಲುವು ಅನ್ನೋ ಪಟ್ಟು ಇರಬಾರದು." +ಬುದ್ಧಿ ಹೇಳಿದಾಗ ಅವನಿಗೆ ತಲೆ ತಗ್ಗಿಸುವಂತಾಯಿತು. +ಪ್ರತಿಯೊಬ್ಬರಿಗೂ ಕಾರಣ ವಿವರಿಸಲು ಸಾಧ್ಯವೇ ? + ಡಿ.ಟಿ.ಪಿ. ಮಾಡಿಸಿ ಆಫ್‌ಸೆಟ್‌ನಲ್ಲಿ ಮುದ್ರಿಸಿ ಎಲ್ಲರಿಗೂ ಒಂದೊಂದು ಪ್ರತಿ ಹಂಚಿಬಿಟ್ಟರೇ ಹೇಗೆ? +ಸಮಾಜದ ಸಿಂಪತಿ ಯಾವಾಗಲೂ ಹೆಣ್ಣಿನ ಕಡೆ. +ಈಗ ಸಿಂಪತಿ ಯಾರ ಕಡೆಹರಿಯಬಹುದು ? +ಪೂಜಾ ಹೆಚ್ಚು ಅರ್ಹಳೋ, ಚಾರುಲತ ಹೆಚ್ಚು ಅರ್ಹಳೋ ಪಬ್ಲಿಕ್‌ ಸಿಂಪತಿಗೆ ? +ಛೆ, ಈ ಸಿಂಪತಿಯಿಂದ ಏನಾಗಬೇಕು? +ಮನೆಯ ಮಾನ,ಮರ್ಯಾದೆ ಬಟ್ಟ ಬಯಲು. +ಇಬ್ಬರೂ ಸರ್ವನಾಶವಾಗುತ್ತರೆ ಅಷ್ಟೆ ಸಿಡಿಮಿಡಿಗುಟ್ಟಿದ. +ಬಹುಶಃ ಕಾಲವೆ ಇದನ್ನೆಲ್ಲ ಮರೆಸುತ್ತೆ. +ವಿಷಯ ಹಳೆಯದಾದರೆ, ಎಲ್ಲಾ ಸರಿ ಹೋಗುತ್ತೆ ಅನ್ನೋ ತೀರ್ಮಾನಕ್ಕೆ ಬಂದ. +ರಾತ್ರಿಯ ಊಟದ ಸಮಯದಲ್ಲಿ ವಾಸುದೇವಯ್ಯ ಮತ್ತೆ ಫೋನ್‌ ಮಾಡಿದ ಸಮಾಚಾರ ಯುಗಂಧರ್‌ ಮಗನಿಗೆ ತಿಳಿಸಿದರು. +"ವಾಸುದೇವಯ್ಕ ಫೋನ್‌ ಮಾಡಿದ್ರು. +ಅವ್ರ ಮಗಳದೇನು ತಪ್ಪಿಲ್ವಂತೆ. +ಬಂದು ಕರ್ಕೊಂಡ್ವೋಗೀಂತ ಕೇಳಿದ್ರು." +ಮೂರ್ತಿ ಮುಖ ಬಿಗಿದುಕೊಂಡು ತಂದೆಯ ಕಡೆ ನೋಡಿದ. +"ಈಗ ಊಟ ಮಾಡ್ತಾ ಇದ್ದೀವಿ. +ಬೇಡದ ವಿಷ್ಯಗಳು ಯಾಕೆ ? +ಅವ್ರ ಮಗಳ ಬಗ್ಗೆ ಅವುಗಳು ಯೋಚ್ಸಿಕೊಳ್ಳಿ, +ಇನ್ನೊಮ್ಮೆ ಫೋನ್‌ ಮಾಡಿದರೇ ಅಷ್ಟೇ ಹೇಳಿ" ಎಂದವ ಅನ್ನದ ಮೇಲೆ ಮೂರು ಸೌಟು ಹುಳಿ ಸುರಿದುಕೊಂಡ. +ಇಂದು ಕೋಪವಿದ್ದರೂ ತೃಪ್ತಿಯಿಂದ ಊಟ ಮಾಡಿದ. +"ಈ ಗಂಜಿ ತಗೊಂಡ್ಹೋಗಿ ಕೊಡು. +ಆಗ್ಲೇ ತಗೊಂಡ್ಟೋಗಿದ್ದೆ ಬೇಡಾಂದ್ಲು. +ಆ ಹುಡ್ಗೀ ನೋಡಿದ್ರೆ ಕರುಳು ಕಿತ್ತು ಬರುತ್ತೆ. +ನಮ್ಮ ಮನೆಯಲ್ಲಿ ಖಾರ, ಹುಳಿ ಹೆಚ್ಚಿಗೆ ತಿಂತಾ ಇದ್ದೋಳು ಅವಳೊಬ್ಬಳೇ" ಮೂರ್ತಿಯ ತಾಯಿ ನೋವಿನಿಂದ ನುಡಿದರು. +"ಎಲ್ಲಾ ಸರಿ ಹೋಗುತ್ತೆ " ಗಂಜಿಯ ಬಟ್ಟಲನ್ನ ರೂಮಿಗೆ ಒಯ್ದವನು ಅವಳ ಮುಂದಿಟ್ಟ "ಪೂಜಾ, ನೀನು ಬೇಗ ಚೇತರಿಸಿಕೊಳ್ಳಬೇಕು. +ಮೈಯಲ್ಲಿ ಶಕ್ತಿ ಬರಬೇಕಾದರೆ. . . . ಹೊಟ್ಟೆಗೆ ಸರಿಯಾದ ಆಹಾರ ಬೇಕು. +ಸ್ವಲ್ಪ ಕಷ್ಟಪಟ್ಟಾದ್ರೂ. . . ಕುಡೀ" ಹೇಳಿದ. +ಕರುಣೆಯಿಂದ ಅವನ ಕಣ್ಣುಗಳು ನಿರುಕಿಸಿದವು. +ಬಾರುದ್ದ ಕೂದಲು ಈಗ ತುಂಡಾಗಿತ್ತು. +ಮಿರಿ ಮಿರಿ ಮಿರುಗುತ್ತಿದ್ದ ಕೂದಲು ಈಗ ಜೀವಂತಿಕೆಯೇ ಇದ್ಬಂಗೆ ಕಾಣುತ್ತಿರಲಿಲ್ಲ. +ಮೇಕಪ್‌, ಹಣೆಗೆ ಬಟ್ಟು ಅಂಥ ಅಲಂಕಾರವೇನು ಇಲ್ಲದ ಮುಖ "ಬಿಕೋ" ಎನ್ನುತ್ತಿತ್ತು. +ಕುತ್ತಿಗೆಯ ಬಳಿ ಮೂಳೆಗಳು ಎದ್ದು ಕಾಣುತ್ತಿತ್ತು. +ಗಿಡದಲ್ಲಿ ನಳನಳಿಸುತ್ತಿದ್ದ ಹೂವನ್ನ ಕಿತ್ತು ಮಧ್ಯಾಹ್ನದ ಉರಿ ಬಿಸಿಲಿಗೆ ಇಟ್ಟಂತಾಗಿತ್ತು. +"ಅಣ್ಣ, ನಂಗೆ ವಾಂತಿ ಬಂದಂಗಾಗುತ್ತೆ. +ಏನು ರುಚಿ ಇಲ್ಲ ಬರೀ ಸಪ್ಪೆ. +ವಾಂಗೀಬಾತ್‌, ಬಿಸಬೇಳೆ ಬಾತ್‌, ಚುರುಮುರಿ, ಚಕ್ಕುಲಿ, ಕೋಡುಬಳೆಯೆಲ್ಲ ಎಂಥ ರುಚಿ ಇರುತ್ತೆ. +ನಂಗೆ ಅದೆಲ್ಲ ಮರೆತಂಗಾಗಿದೆ. +ಅದೆಲ್ಲ ತಿನ್ನೋ ಆಸೆ? +ಕಣ್ಣೀರಿಟ್ಟವಳು ಬಿಕ್ಕಿ ಬಿಕ್ಕಿ ಅಳಲು ಷುರು ಮಾಡಿದಾಗ, ಅವಳ ಪಕ್ಕ ಹೋಗಿ ಕೂತು ಎದೆಗೊರಗಿಸಿಕೊಂಡು ಕೂದಲಲ್ಲಿ ಕೈಯಾಡಿಸಿದ. +ಅವನದು ಸೌಮ್ಯ ಸ್ವಭಾವ. +ಈಗ. . . . ಈ ಕ್ಷಣ ಡಾ|।ನವೀನ್‌ ಎದುರು ಸಿಕ್ಕರೇ ಕೊಚ್ಚಿ ಹಾಕಿ ಜೈಲಿಗೆ ಹೋಗಲು ಸಿದ್ಧವಿದ್ದ. +ಅಂಥ ಉದ್ವೇಗವಿತ್ತು ಅವನಲ್ಲಿ ಈಗ. +"ಬೇಗ ಸರ್ಯೋಗ್ತೀಯಾ ! ಆಮೇಲೆ ಅದ್ನೆಲ್ಲ ತಿನ್ನಬಹುದು. + ನೀನು ಮಾನಸಿಕವಾಗಿ ಬೆಂಬಲ ನೀಡದ ಪಕ್ಷದಲ್ಲಿ ದೇಹ ಚೇತರ್ಲಿಕೊಳ್ಳಲಾರದು?" ಧೈರ್ಯ ಹೇಳಿದ. +ತಾನೇ ಸ್ಪೂನ್‌ನಿಂದ ಇಡೀ ಬಟ್ಟಲು ಗಂಜಿ ಕುಡಿಸಿದ. +“ಅನ್ಯಾಯವಾಗಿ ಸಾಯಂಕಾಲದ ಪ್ರೋಗ್ರಾಂ ಕ್ಯಾನ್ಸಲ್‌ ಆಯ್ತು” ಮುಖ ಮಾಡಿದಾಗ ತಲೆಯ ಮೇಲೊಂದು ಮೊಟಕಿದ “ಅದ್ಕೇ ನೀನೇ ಕಾರಣ. +ಒಳ್ಳೆ ನಿದ್ದೆಯಲ್ಲಿದ್ದೆ. +ಅಪ್ಪ ಎಬ್ಬಿಸೋದ್ಬೇಡಾಂದ್ರು. +ನಾಳೆ ಆ ಪ್ರೋಗ್ರಾಂ ಇಟ್ಕೋಬಹುದು. +ಈವೊತ್ತಿನ ಪೇಪರ್‌ನಲ್ಲಿ ಒಂದು ವಿಶೇಷ ಸುದ್ದಿ ಬಂದಿದೆ,ಗೊತ್ತಾ?ಎದ್ದು ಹೋಗಿ ಪೇಪರ್‌ ಹಿಡಿದು ಬಂದ. +ನವಂಬರ್‌ 4ರ ಕನ್ನಡಪ್ರಭದಲ್ಲಿ "ಬುದ್ಧಿ ಜೀವಿಗಳು ಯಾರು ? +ಅವರ ಕಸಿನ್ಸ್‌ ಯಾರು ? +ಒಂದು ಹೆಡ್ಡಿಂಗ್‌ "ಯಾರು ಹೇಳಿದ್ದು ಅರ್ಥವಾಗುವುದೋ ಅವರು ಬುದ್ಧಿಜೀವಿಗಳು" ಒಬ್ಬ ಕಾಂಗ್ರೆಸ್‌ ಮುಖಂಡರ ವಾದ. +“ಪೂಜಾ, ನಿನ್ನ ಪ್ರಕಾರ ಬುದ್ಧಿ ಜೀವಿಗಳು ಅಂದರೆ ಯಾರು ?" ಕೇಳಿದ ಪೇಪರ್‌ ಅವಳ ಮುಂದಿಟ್ಟು. +ಗಲ್ಲಕ್ಕೆ ಕೈಯೊತ್ತಿಕೊಂಡು ಕೂತ ಪೂಜಾ "ಹೇಗೆ ಒಂದು ತೀರ್ಮಾನಕ್ಕೆ ಬರೋದು? +ಇಬ್ಬರು ಬುದ್ಧಿ ಜೀವಿಗಳೆಂದು ಹೇಳಿಕೊಳ್ಳುವವನ್ನ ಪ್ರತ್ಯೇಕ. . . ಪ್ರತ್ಯೇಕವಾಗಿ ಭೇಟಿ ಮಾಡಿ ಒಬ್ಬರ ಬಗ್ಗೆ ಇನ್ನೊಬ್ಬರನ್ನ ಕೇಳಿದ್ರೆ, ಅವರಿಬ್ಬರೂ ಒಪ್ಪೋಲ್ಲ. +ಅವ್ರಿಗೆ ತಾವು ಬುದ್ಧಿ ಜೀವಿ ಅನ್ನೋ ಅಹಂ ಇರುತ್ತದೆಯೇ ಹೊರತು ಇಬ್ಬರನ್ನ "ಬುದ್ಧಿಜೀವಿ" ಎಂದುಒಪ್ಪಲಾರರು. +ನಂಗೂ ಕನ್‌ಪ್ಯೂಷನ್‌' ಚಿಂತಿತಳಾದಳು. +"ಓಕೇ. . . . ಓಕೇ. . . . ಅದ್ಯೇ ನಮ್ಮ ರಾಜಕೀಯ ವ್ಯಕ್ತಿಗಳು ಏನ್ಹೇಳಿದ್ದಾರೋ ಕೇಳು. +ಕಾಂಗ್ರೆಸ್‌ ಪಕ್ಷದ ಒಬ್ಬ ಮುಖಂಡರು "ಯಾರು ಹೇಳಿದ್ದು ಅರ್ಥವಾಗುವುದಿಲ್ಲವೋ ಅವರೇ ಬುದ್ಧಿ ಜೀವಿಗಳು" ಎಂದಿದಕ್ಕೆ ಅದೇ ಪಕ್ಷದ ಇನ್ನೊಬ್ಬರ ಪ್ರತಿಕ್ರಿಯೆ "ಸಮಾಜಕ್ಕೆ ಏನು ಮಾಡದವರು ಬುದ್ಧಿ ಜೀವಿಗಳು". +ಅದಕ್ಕೆ ಇನ್ನೊಬ್ಬರು ರೈತ ಸಂಘದವರು ಹೇಳಿದ ಕತೆ ನೋಡು" ಅದರ ಸಾರಾಂಶ ಓದಿದ. +"ಒಬ್ಬ ಸುಶಿಕ್ಷಿತ ವ್ಯಕ್ತಿ ತನ್ನ ಹೆಂಡತಿ ತರಕಾರಿ ಖರೀದಿಸಲು ಕರೆದೊಯ್ದ. +ತರಕಾರಿ ಮಾರುವವನು ಆಕೆಯನ್ನೆ ನೋಡುತ್ತಿದ್ದನ್ನ ನೋಡಿ ಸಿಟ್ಟಾದ ಯಾಕೆ ನನ್ನ ಹೆಂಡತಿಯನ್ನು ದುರುಗುಟ್ಟಿಕೊಂಡು ನೋಡುತ್ತೀಯಾ ?"ಎಂದು ಪ್ರಶ್ನಿಸಿದ. +ತಕ್ಷಣ ತರಕಾರಿ ಮಾರುವ ವ್ಯಕ್ತಿ “ನಿಮ್ಮಹೆಂಡತಿ ತುಂಬ ಓದಿರಬೇಕಲ್ಪ”ಎಂದು ಕೇಳಿದ. +“ಹೌದು, ನನ್ನ ಹೆಂಡತಿ ಪದವಿಧರೆ. +ನಿನಗೆ ಹೇಗೆ ಗೊತ್ತಾಯಿತು ? "ಕೇಳಿದ. +"ಮುಖ ನೋಡಿದ ಕೂಡಲೇ ಗೊತ್ತಾಯಿತು. +ಅವರು ಮೊದಲು ಚೀಲದಲ್ಲಿ ಟೊಮೋಟೋ ಹಾಕಿಸಿಕೊಂಡು ನಂತರ ಕೋಸು, ಈರುಳ್ಳಿ ಮುಂತಾದುವನ್ನು ಹಾಕ್ಸಿಕೊಂಡರು." +ಅದಕ್ಕೆ ಇನ್ನೊಬ್ಬ ರಾಜಕೀಯ ವ್ಯಕ್ತಿಯ ವ್ಯಾಖ್ಯಾನ "ಅಪಘಾತ ನಡೆದಾಗ ಪೆಟ್ಟು ತಿಂದವನನ್ನ ಆಸ್ಪತ್ರೆಗೆ ಸೇರಿಸಿ ಪ್ರಚಾರ ಪಡೆಯುವವನು ರಾಜಕಾರಣಿ,ಅಪಘಾತದ ಬಗ್ಗೆ ಮೌನವಾಗಿ ಕವನ ಬರೆಯುವವನು ಬುದ್ಧಿ ಜೀವಿ." +“ಬುದ್ಧಿ ಮಾರಿ ಬದುಕುವವರು ಬುದ್ಧಿ ಜೀವಿ" ಇನ್ನೊಬ್ಬರ ವಿವರಣೆ. +ಪೂಜಾ ಘೊಳ್ಳನೆ ನಕ್ಕಳು. +ಆ ನಗೆ ಬೆಳದಿಂಗಳಿನಂತೆ ಮಿಂಚಿತು. +ಅಂಥ ನಗೆ ಅವಳ ಮುಖದ ಮೇಲೆ ಕಂಡು ಎಷ್ಟೋ ದಿನಗಳು ಆಗಿತ್ತು. +“ಬುದ್ಧಿ ಜೀವಿಗಳ ಕಸಿನ್ಸ್‌ ಪತ್ರಕರ್ತರಂತೆ” ಹೀಗೆಂದವರು ಸಭಾಧ್ಯಕ್ಷರು. +ಇದು ಸದನದಲ್ಲಿ ಚಕಮುಕಿ ಎಂದ ಮೂರ್ತಿ. +ಮಗಳ ನಗೆ ಕೇಳಿ ಯುಗಂಧರ್‌ ಹೆಂಡತಿಯೊಂದಿಗೆ ಬಂದರು. +ಆಗ ಹುಟ್ಟಿದ ಪುಟ್ಟ ಮಗು ತನ್ನ ಹಲ್ಲಿಲ್ಲದ ಬಾಯಲ್ಲಿ ನಗೆ ತುಂಬಿಕೊಂಡಾಗ ಆನಂದಿಸುವ ತಾಯಿ ತಂದೆಯ ಸ್ಥಿತಿ ಅವರದಾಗಿತ್ತು. +ಪೇಪರ್‌ ತೆಗೆದು ತನ್ನ ಕೈಯಲ್ಲಿಟ್ಟ "ಒಂದಿಷ್ಟು ಓದಿ. +ಪೂಜಾ ಈ ರೂಮಿನ ಸಹವಾಸ ಸಾಕು. +ಒಂದಿಷ್ಟೊತ್ತು ಹೊರ್ಗಡೆ ಕೂರೋಣ ನಡೀ" +ತಂಗಿಯನ್ನು ಎಬ್ಬಿಸಿಕೊಂಡು ಹೊರಗೆ ಹೋದ. +“ಕೆಲವು ದಿನ ಮೂರ್ತಿಯಾದ್ರೂ ಇಲ್ಲಿರಬೇಕು. +ಇಲ್ಲ ಪೂಜಾನಾದ್ರೂ ಅವ್ನ ಜೊತೆ ಕಳಿಸ್ಬೇಕು” ಎಂದರು ಆಕೆ. +ಮಗಳು ಬೇಗ ಗೆಲುವಾಗುವುದು ಮುಖ್ಯವಾಗಿತ್ತು. +ಯುಗಂಧರ್‌ ಹ್ಞೂ ಗುಟ್ಟಿದರು. +ಕೆಲವು ದಿನಗಳಾದ ಮೇಲಾದರೂ ಪೂಜಾ ಚೇತರಿಸಿಕೊಳ್ಳಬಹುದು. +ಆಮೇಲೆ ವಿವಾಹ ಅವಳದೇ ಒಂದು ಮನೆ. . . . ಅವೆಲ್ಲ ಸರಿ. +ಆದರೆ ಮೂರ್ತಿ ಬದುಕೇನು ? +ವರ್ಷಕ್ಕೆ ಮುನ್ನವೇ ವಿಯೋಗ ಅನುಭವಿಸಬೇಕಾ ? +ಸ್ವಲ್ಪ ತಲೆ ಬಿಸಿಯಾಯಿತು. +ಅವರ ಮಸ್ತಿಷ್ಕದಿಂದ ಪೂಜಾ ಸರಿದು ಮೂರ್ತಿ ಕೂತ. +"ಮುಂದೆ ಇವ್ನ ಗತಿಯೇನು ? +ಇಷ್ಟಕ್ಕೆ ಮುಗ್ದು ಹೋಗ್ಬೇಕಾ, ಅವ್ನ ದಾಂಪತ್ಯಜೀವನ ? ನಿನ್ನ ಸೊಸೆ ಕೆಲ್ಸಕ್ಕೆ ಹೋಗ್ತಾ ಇದ್ದಾಳಂತೆ. +ಧೈರ್ಯಸ್ಥೆ, ಇವ್ನು ಡೈವೋರ್ಸ್‌ ಕೊಟ್ಟರೆ ಮತ್ತೊಂದು ವಿವಾಹವಾಗಬಹುದು. +ಅದ್ಕೇ ಅಪ್ಪ, ಅಣ್ಣನ ಕೋಪರೇಷನ್‌ ಸಿಕ್ಕುತ್ತೆ" ಒಂದು ಚಿತ್ರವನ್ನು ಹೆಂಡತಿಯ ಮುಂದೆ ಬಿಡಿಸಿಟ್ಟರು. +ಯಾಕೋ, ಸೊಸೆಯ ಬಗ್ಗೆ ಅಷ್ಟೆಲ್ಲ ಯೋಚಿಸಲು ಇಷ್ಟವಾಗಲಿಲ್ಲ. +"ಚಾರು, ನಮ್ಮನ್ನು ಅದೆಷ್ಟು ಹೊಂದಿಕೊಂಡಿದ್ದು. +ಎಷ್ಟು ವರ್ಷದಿಂದ ನಮ್ಮೊಂದಿಗೆ ಇದ್ಲು ಅನ್ನೋ ತರಹ ನಡಕೊಂಡ್ಲು. +ಪೂಜಾನೂ ಅವ್ಳು ಎಷ್ಟೊಂದು ಇಷ್ಟವಾಗಿದ್ದು." +ಸೊಸೆಯ ಬಗ್ಗೆ ಸ್ವಲ್ಪ ಮೃದುವಾದರು. +"ಎಲ್ಲಾ ಸರಿನೇ !ನಾವು ಏನು ಅಲ್ಲ ಅನ್ನೋ ತರಹ ನಡ್ಕೊಂಡ್ಲು. +ಎದುರು ಮನೆ ಹುಡ್ಗೀಗಾಗಿ ಪೂಜಾನ ಸಾವಿನಂಚಿಗೆ ತಳ್ಳಿದಳು. +ಸಕಲ ಕಲ್ಯಾಣ ಗುಣಗಳು ಅದರಡಿಯಲ್ಲಿ ಸಮಾಧಿಯಾಯ್ತು. +ಈಗ್ಲೂ ಪರಿಚಿತರಿಗೆ ಮುಖ ತೋರಿಸ್ಟಂಗಾಗಿದೆ" ಕಹಿಯಾಗಿ ನುಡಿದರು. +ಅದು ಯಾವುದು ಸುಳ್ಳಲ್ಲ. +ಆಕೆ ತೆಪ್ಪಗಾದರು. +ಮಾರನೆ ಸಂಜೆ ಚೆನೈನಿಂದ ಫೋನ್‌ ಬಂತು. +ಯುಗಂಧರ್‌ಗೆ “ನಿಮ್ಮ ಮಗ್ಳು ಫೋಟೋ ನಮ್ಮ ಮಗಿಗೆ ಕಳಿಸಿದ್ದಿ. +ತುಂಬ ಮೆಚ್ಚಿಕೊಂಡಿದ್ದಾನೆ. +ಮುಂದಿನ ತಿಂಗ್ಳು ಒಮ್ಮೆ ಬರ್ತೀವಿ” ಈ ಸಂತೋಷದ ಸುದ್ದಿಯಿಂದ ಹಿರಿಯರೆಲ್ಲ ತಬ್ಬಿಬ್ಬಾದರು. +ಪೂಜಾ ಮಾತ್ರ ಮೌನವಹಿಸಿದಳು. +"ಗಂಡು ತುಂಬ ತುಂಬ ಹ್ಯಾಂಡ್‌ಸಮ್‌, ಅವ್ರ ಮನೆಗೆ ಹೋಗಿದ್ದಾಗ ಆಲ್ಬಂ ತೋರಿಸಿದರು. +ಎಷ್ಟು ಸಾರ್ಟ್ಮಾಗಿದ್ದಾನೆಂದರೆ ನಾನ್ಶಾಕೆ ಹೆಣ್ಣು ಆಗ್ಲಿಲ್ಲಾಂತ ಯೋಚಿಸ್ಟೇ" ತಂಗಿಯ ಕೆನ್ನೆ ಸವರಿ ಹೇಳಿದ. +ಅವಳು ಬಾಯಿಗೆ ಕೈ ಅಡ್ಡ ಹಿಡಿದು ಬಿಕ್ಕಿದಳು. +ಗುರುತು ಹಿಡಿಯಲಾರದಷ್ಟು ಪೇಲವವಾಗಿದ್ದೊಂದು ಪೂಜಾಗೆ ಭಯ. +ಕನ್ನಡಿಯ ಮುಂದೆ ನಿಂತಾಗಲೆಲ್ಲ ಹೃದಯ ಒಡೆದು ಹೋಗುತ್ತಿತ್ತು. +ದುಂಡಗಿನ ನವಿರಾದ ಕೆನ್ನೆಗಳ ಬಣ್ಣ ಪೂರ್ತಿ ಮಸುಕಾಗಿತ್ತು. +"ಯಾಕೆ ಅಳ್ತಾ ಇದ್ದೀಯಾ ? +ಇಂಥ ಲವ್‌ ಅಫೇರ್ಸ್‌ನ ಸಾಕಷ್ಟು ನೋಡಿದ್ದೀನಿ. +ನೀವೇನು ವರ್ಷಾನು ಗಟ್ಟಲೆ ಪ್ರೇಮಿಸ್ಲಿಲ್ಲ. +ಈ ಮನೆಗೆ ಅವನ ಪರಿಚಯವಾಗಿ ಹದಿನೈದು ತಿಂಗಳಷ್ಟೆ. +ನೀವುಗಳು ಓಡಾಡಿದ್ದು ಅಷ್ಟರಲ್ಲೇ ಇದೆ. +ಅವ್ನು ಸ್ನೇಹ ಅಂದ್ರೇ, ನೀನು ಪ್ರೇಮ ಅಂತೀಯಾ ? ಅದೆಲ್ಲ. . . ಹಾಳಾಗ್ಲಿ! +ಮಧು ಮನೆಯವ್ರು ತುಂಬ ಒಳ್ಳೆ ಜನ. +ಹೆಣ್ಣು ಮಕ್ಳುನ ಹೆತ್ತ ಜನ. +ನಿನ್ನ ಚೆನ್ನಾಗಿ ನೋಡ್ಕೋತಾರೆ. +ಡೋಂಟ್‌ ವರೀ. +ಹಳೆ ವಿಷ್ಯಗಳನ್ನೆಲ್ಲ ನಿನ್ತಲೆಯಿಂದ ತೆಗ್ದು ಬಿಸಾಕು" ಅನುನಯಿಸಿದ ತಂಗಿಯನ್ನು. +ಅಣ್ಣನ ಕೈಗಳಿಂದ ಮುಖ ಮುಚ್ಚಿಕೊಂಡು ಬಿಕ್ಕಿದಳು. +"ನಾನು, ನನ್ಮುಖ ಹೇಗಾಗಿದೆ ನೋಡು. +ಅವ್ರು ನನ್ನ ಒಪ್ಕೋಬೇಕಲ್ಲ " ಅವಳು ಭಯವನ್ನು ಸ್ಪಷ್ಟಪಡಿಸಿದಾಗ ಸಮಾಧಾನದ ಉಸಿರು ದಬ್ಬಿದ ಮೂರ್ತಿ ಎದೆಯ ಮೇಲೆ ಕೈ ಇಟ್ಟುಕೊಂಡ. +"ಇನ್ನೊಂದು ತಿಂಗಳಲ್ಲಿ ನೀನು ಮೊದ್ಲಿನ ಪೂಜಾನೇ. +ನೀನು ಮನಸ್ಥೈರ್ಯ ತುಂಬ್ಕೋಬೇಕು. +ಆಗ ನಿನ್ನ ಮುಖದಲ್ಲಿ ಕಳೆ ಮೂಡುತ್ತೆ."ಧೈರ್ಯ ತುಂಬಿದ. +ಪೂಜಾಳಿಗೆ ಭಯವೆನಿಸಿತು. +ಫೋಟೋದಲ್ಲಿನ ಚೆಂದದ ಚೆಲುವೆ ಈಗಿಲ್ಲವೆನಿಸಿತು. +ಅವಳು ಬೇಗ ಚೇತರಿಸ್ಕೋಬೇಕು. +ಹೇಗೆ ?ಡಾಕ್ಟರ್‌ಪ್ರಕಾರ ಕಾಲಾವಕಾಶ ಬೇಕಿತ್ತು. +ಯುಗಂಧರ್‌ ರಾತ್ರಿ ಎಲ್ಲಾ ಮಲಗಿದ ಮೇಲೆ ಮಗನ ಬಳಿ ಈ ಪ್ರಸ್ತಾಪವೆತ್ತಿದರು "ಪೂಜಾ ಭಯದಲ್ಲಿ ಸತ್ಯವಿದೆ. +ಅವ್ಳ ಕಣ್ಣುಗಳು ಎಷ್ಟೊಂದು ಕಳಾಹೀನವಾಗಿದೆ. +ಸಧ್ಯಕ್ಕೆ ಅವ್ನು ಪೂಜಾನ ವಿವಾಹವಾಗದಿದ್ದರೂ ಪರವಾಗಿಲ್ಲ, +ತಕ್ಷಣ ಮದ್ವೆಯಾಗಿ ಷಾಕ್‌ ಕೊಡ್ಬಾರ್ದಿತ್ತು. +ಅವ್ಳ ಭವಿಷ್ಯನ ಹಾಳು ಮಾಡ್ದಾ !"ಕೈ ಕೈ ಹಿಸುಕಿಕೊಂಡರು. +“ಹಾಗೇನಾಗೋಲ್ಲ !ಪೂಜಾ ಬೇಗ ಚೇತರಿಸ್ಕ್ಯೋತಾಳೆ. +ಅವ್ಳು ಹೊಟ್ಟೆಗೆ ಸರ್ಯಾಗಿ ಫುಡ್‌ ತಗೊಂಡರೇ ಬೇಗ ಚೇತರಿಸ್ಕೋತಾಳೆ. +ಆ ಬಗ್ಗೆ ನಾವು ಯೋಚಿಸಬೇಕು. +ಡಾ|| ನವೀನ್‌ನ ಮರೆತಿದ್ದಾಳೆ. +ಸಧ್ಯಕ್ಕೆ ಅಷ್ಟು ಸಾಕು. +ಅಂತು ಬೇರೆಯವುನ್ನ ಕೈ ಹಿಡ್ಕೋಕೆ ಸಿದ್ಧಾಂತ ತಿಳಿದಂಗಾಯ್ತು." +ಮಗನ ಮಾತು ಅವರಿಗೂ ಸರಿಯೆನಿಸಿತು. +ತಂದೆ, ಮಗ ಎಷ್ಟೋ ಹೊತ್ತು ಕೂತು ಮಾತಾಡಿದರು ಮನ ಬಿಚ್ಚಿ. +ಮುಂದೆ ಚಾರುಲತಳೊಂದಿಗೆ ಸಂಸಾರ ನಡೆಸುವ ಆಸೆ ಇಲ್ಲವೆಂದು ಸ್ಪಷ್ಟಪಡಿಸಿದ ಮೂರ್ತಿ. +ಮರುದಿನ ಇವನು ಬಸ್‌ ಸ್ಟಾಂಡ್‌ಗೆ ಹೊರಟಾಗ ಸ್ಕೂಟರ್‌ನಲ್ಲಿ ಎದುರಾದ ಡಾ| ನವೀನ್‌ ನಿಲ್ಲಿಸಿದ. +"ನಿನ್ನನ್ನೇ ನೋಡೋಣಾಂತ ಬಂದೆ" ಎಂದ. +“ಅಗತ್ಯವಿಲ್ಲ. ಇಬ್ಬರ ಸಮಯನ ಅನಗತ್ಯವಾಗಿ ವೇಸ್ಟ್‌ ಮಾಡಿಕೊಳ್ಳೋದ್ಬೇಡ ಬರ್ತಿನಿ. . . ” ತನ್ನ ಪಾಡಿಗೆ ತಾನು ನಡೆದ. +ಅವನಲ್ಲಿ ಯಾವುದೇ ಬದಲಾವಣೆ ಇಲ್ಲ. +ಸಧ್ಯಕ್ಕೆ ಚಾರುಲತನ ಅವನು ಕರೆದೊಯ್ಯಲಾರ. +ಮುಂದೇನು `?ಕೋರ್ಟುಮೆಟ್ಟಲು ಹತ್ತಬೇಕು. +ಅದಕ್ಕೆ ಚಾರುಲತ ಸಮೃತಿ ಇಲ್ಲ. +ಒಂದೊಂದು ತೀರದಲ್ಲಿ ಒಬ್ಬೊಬ್ಬರು. +ಅರ್ಧ ದಿನ ನರ್ಸಿಂಗ್‌ ಹೊಂಗೆ ರಜ ಹಾಕಿದ್ದರಿಂದ ನೇರವಾಗಿ ಮನೆಗೆ ಬಂದ. +ಇದ್ದಿದ್ದು ವಾಸುದೇವಯ್ಯನವರೊಬ್ಬರೇ. +"ನೀರದ ಎಲ್ಲಿ ?" ಎಂದ. +“ಎದುರು ಮನೆಗೆ ಹೋಗಿದ್ದಾಳೆ” ಸಹಜವಾಗಿ ಹೇಳಿದರು. +ಅವನ ಮೈ ಬೆಂಕಿಯಾಯಿತು. +ಅವಳು ಯಾವ ದುರುದ್ದೇಶದಿಂದ ಹೋಗದಿದ್ದರೂ ಅಸಹನೀಯವೆನಿಸಿತು. +“ಮೂರ್ಹೊತ್ತು ಅಲ್ಲೇನು ಕೆಲ್ಸ ? +ಅಪ್ಪ ಇನ್ನಾದ್ರೂ ನೀವು ಮನೆ ಕೆಲ್ಸ ಮಾಡೋದು ನಿಲ್ಲಿಸ್ತೀರಾ ! +ಇಲ್ಲಿ ಕೈ ತುಂಬ ಕೆಲ್ಸವಿದ್ದರೇ ಅಲ್ಲಿಗ್ಯಾಕೆ ಹೋಗ್ತಾಳೆ? +ಇರೋವರ್ಗೂ ಚಾರು ಮಾಡ್ತಾಳೆ. +ಮಿಕ್ಕಿದ್ದು ನೀವು ಮಾಡ್ತೀರಾ. +ಯಾಕೋ ಯಾವುದು ಸರಿ ಹೋಗ್ಲಿಲ್ಲ" ಸಿಡುಕುತ್ತ ರೂಮಿಗೆ ಹೋದ. +ಅಷ್ಟರಲ್ಲಿ ಬಂದ ನೀರದ ಅತ್ತಿಗೆ “ಸಕ್ಕರೆ ತಗೊಂಡ್ಹೋಗ್ತೀನಿ”' ಎನ್ನುತ್ತ ಅಡಿಗೆಯ ಮನೆಗೆ ಹೋದವರೇ ಡಬ್ಬದಲ್ಲಿದ್ದ ಸಕ್ಕರೆಯನ್ನು ದೊಡ್ಡ ಬಾಟಲಿಗೆ ಬಗ್ಗಿಸಿಕೊಂಡು ಹೋದರು. +ಇಬ್ಬರು ಮಗಂದಿರ ದುಡಿಮೆಯ ಜೊತೆಗೆ ಗಂಡನ ಪೆನ್‌ಷನ್‌ ಕೂಡ ನೀರದ ಅಮ್ಮನ ಕೈ ಸೇರುತ್ತಿತ್ತು. +ಶ್ರೀಮಂತಿಕೆ ಇಲ್ಲದಿದ್ದರೂ ಪರದಾಟವಂತು ಇರಲಿಲ್ಲ. +ಕೆಟ್ಟ ಜನರು ಅಲ್ಲದಿದ್ದರೂ ವಿವಾಹವಾದ ಮೇಲೆ ಸದಾ ಬಂದುಕೂಡುವ ನಾದಿನಿಯ ಮೇಲೆ ಸಿಟ್ಟು. +ಅದಕ್ಕೆ ಈ ರೀತಿ ಸೇಡು ತೀರಿಸಿಕೊಳ್ಳುತ್ತಿದ್ದರು. +ಟವಲು ಹೆಗಲ ಮೇಲೆ ಹಾಕಿಕೊಂಡು ಬಂದ ನವೀನ್‌ "ಅಪ್ಪ, ನೀವಾದ್ರೂ ನಂಗೆ ಬುದ್ಧಿ ಹೇಳ್ಬೇಕಿತ್ತು. +ನಂಗೆ ಈಗಾಗ್ಲೇ ಜೀವನ ರೋಸಿ ಹೋಗಿದೆ. +ಯಾಕೆ ಮದ್ವೆ. . . ಮದ್ವೇಂತ ಸಾಯ್ವಾರೋ ? +ಏನಿದೆ ಇದ್ರಲ್ಲಿ ಮಣ್ಣಾಗಟ್ಟಿ !"ಜೊರು ದನಿಯಿಂದಲೇ ಗೊಣಗಿದ್ದು ಬಂದ ನೀರದ ಕಿವಿಗೆ ಬಿತ್ತು. +ಅವಳ ಮೈಪೂರ್ತಿ ತಣ್ಣಗಾಯಿತು. +ಅವಳು ಸದಾ ಗಂಡ ಬರುವ ವೇಳೆಗೆ ಮನೆಯಲ್ಲಿರಬೇಕೆಂದು ಅಂದುಕೊಳ್ಳುತ್ತಿದ್ದರೂ ಆಗುತ್ತಿರಲಿಲ್ಲ. +ಅದಕ್ಕೆ ಅವಳ ಮೈ ಮರೆವು ಕಾರಣವಿರಬೇಕು. +ಇಲ್ಲ, ತಾಳಿ ಬಿಗಿದಾಗಿತ್ತು ದಾಂಪತ್ಯ ಸುಖ ಉಂಡಾಗಿತ್ತು. +ಮತ್ತೇನು ಎನ್ನುವ ಉತ್ಪೇಕ್ಷೆಯೇನೋ |! +“ಅಲ್ಲೇ ಇದ್ಬಿಡು ಇಲ್ಲಿಗ್ಯಾಕೆ ಬರ್ತೀಯಾ ? +ಇದನ್ನೇನು ಗೆಸ್ಟ್‌ಹೌಸ್‌ ಅಂತ ತಿಳ್ಕೊಂಡಿದ್ದೀಯಾ” ರೇಗಿದ ದುರ ದುರ ನೋಡುತ್ತ. +"ಅಮ್ಮ. . . " ಎಂದಳು. +“ಹೌದು, ನಿಮ್ಮಮನಿಗೆ ಕಾಯಿಲೆ. +ಇನ್ನಷ್ಟು ಮಾತಾಡಿ ಅವ್ರ ನೆಮ್ದಿ ಕೆಡಿಸ್ತಾ ಇರೋಳು ನೀನೇ. +ಅಲ್ಲೇನು ಕೆಲ್ಸ ? +ಅಲ್ಲಿನ ಭ್ರಮೆಯಲ್ಲೇ ಇರಬೇಕಾದರೆ ನಿಂಗೆ ವಿವಾಹ ಯಾಕೆ ಬೇಕಿತ್ತು ?" ಯದ್ವಾ ತದ್ವಾ ಕೂಗಾಡಿದ. +ತಂದೆಯ ಎದುರು ದನಿ ಇಷ್ಟು ಎತ್ತರಕ್ಕೆ ಏರಿಸಿದ್ದು ಇಂದೇ. +ಅವನ ಸಹನೆ ಸತ್ತುಹೋಗಿತ್ತು. +ಬಂದ ವಾಸುದೇವಯ್ಯ ಸೊಸೆಗೆ ಒಳಗೆ ಹೋಗುವಂತೆ ಸನ್ನೆ ಮಾಡಿ ಮಗನತ್ತ ತಿರುಗಿ “ಏನೋ. . . . ಇದು ? +ಇಷ್ಟರ ಮಟ್ಟಿಗೆ ಕೂಗಾಡುವಷ್ಟು ಹಳೆದಾಗಿಬಿಟ್ಟಿದ್ಯಾ, ನಿಮ್ಮ ದಾಂಪತ್ಯ ? +ಎದುರು ಬದರು ಮನೆ ಒಂದು ಕಾರಣವಾದರೇ,ಅವಳಮ್ಮನಿಗೆ ಕಾಯಿಲೆ. +ಇದು. ಮತ್ತೊಂದು ಕಾರಣ. +ಸರ್ಯಾದ ಸಮಯ ನೋಡಿ ಮೆಲ್ಲಗೆ ಹೇಳು. +ತಾನೇ ತಿದ್ದಿಕೋತಾಳೆ" ಹೇಳಿದರು ನಿಧಾನವಾಗಿ. +ಈಗ ಮಗಳು ಒಂಟಿ ಪಕ್ಷಿ. +ಒಂದೇ ರೆಕ್ಕೆಯಿಂದ ಹಾರಾಡುವ ಹಕ್ಕಿ - ಈಸ್ಥಿತಿಯಲ್ಲಿ ಇವರಿಬ್ಬರ ನಡುವಿನ ಅನ್ಯೋನ್ಯತೆ ಹಾಳಾಗುವುದು ಬೇಕಿರಲಿಲ್ಲ. +ಇನ್ನಷ್ಟು ಮುಖ ದಪ್ಪಗೆ ಮಾಡಿಕೊಂಡು ಎದ್ದು ಹೋದ ನವೀನ್‌. +ನರ್ಸಿಂಗ್‌ಹೋಂನಲ್ಲಿ ಏನೇನು ಸರಿಯಾಗಿರಲಿಲ್ಲ. +ಅದು ಒಂದು ಜಾತಿಯ ವರ್ಗದ ನರ್ಸಿಂಗ್‌ಹೋಂ ಆಗಿತ್ತು. +ಒಬ್ಬ ಮಠದ ಸ್ವಾಮಿಗಳು ಅದರ ದಾಯತ್ವಹೊಂದಿದ್ದರಿಂದ ಆ ಮನುಷ್ಯನ ಮಾತೇ ಪ್ರಧಾನ. +ಅವರ ಹೇಳಿಕೆಯಂತೇ ನಡೆಯಬೇಕು ನರ್ಸಿಂಗ್‌ ಹೋಂ. +ಕೆಲವೊಮ್ಮೆ ಪೇಷಂಟ್‌ಗಳ ಬಿಲ್‌ಗಳು ಕೂಡ ಅವರ ಅಣತಿಯಂತೆ ಸಿದ್ಧವಾಗುವುದು ಕೂಡ ಒಂದು ಅದ್ಭುತ. +ಇವನೆ ಕೊಲೀಗ್ಸ್‌ ಮಠದ ಭಕ್ತರಾದುದರಿಂದ ಅವರ ಸಂಬಳವು ಕೂಡಹೆಚ್ಚು. +ಅವರಿಗೆ ಸಿಗುವ ಕೆಲವು ರಿಯಾಯಿತಿಗಳು ಇವನಿಗೆ ಸಿಕ್ಕಿರಲಿಲ್ಲ. + ಎಂ.ಎಸ್‌. ಮಾಡುವುದು ಅವನ ಗುರಿಯಾದರೂ ಸೀಟು ಸಿಕ್ಕಿರಲಿಲ್ಲ. +ಧನಬಲ-ಅಂಥದ್ದು ಇಲ್ಲದಿದ್ದರಿಂದ ಅವೆಲ್ಲ ಗಗನ ಕುಸುಮ. +ಅವನಿಗೂ ಕೂಡ ಭವಿಷ್ಯದ ಬಗ್ಗೆ ಭಯ ಉಂಟಾಗಿತ್ತು. +ಚಾರುಲತ ಬಂದ ಕೂಡಲೇ ಮನೆಯ ಗಾಂಭೀರ್ಯ ಗಮನಿಸಿ ಒಂದಿಷ್ಟುಅಳುಕಿದ್ದು ಸಹಜವೇ. +ನೀರದ, ನವೀನ್‌ನ ಮಧ್ಯೆ ಸರಿ ಇಲ್ಲವೆನಿಸಿತ್ತು. +ತಂದೆಯ ರೂಮಿನಲ್ಲಿ ಇಣಕಿದಳು ನಿಶ್ಶಬ್ಧವಾಗಿತ್ತು. +ಅವರು ಹಣೆಯನ್ನು ಅಮುಕಿಕೊಳ್ಳುತ್ತಿದ್ದರು. +ನವೀನ ಅವನ ರೂಮಿನಲ್ಲಿ ಮುಖ ಗಂಟಿಕ್ಕಿ ಕೂತಿದ್ದರೇ ನೀರದ ಅಡಿಗೆ ಮನೆಯ ನೆಲದ ಮೇಲೆ ಕೂತು ಕಣ್ಣೀರು ಹಾಕುತ್ತಿದ್ದಳು. +ಸೆಂಟಿಮೆಂಟ್‌ನ ಒಂದು ಚಲನ ಚಿತ್ರದ ದೃಶ್ಯದಂತೆ. +ಇವಳು ಬಂದು ಹಾಲ್‌ನಲ್ಲಿ ಕೂತಳು. +ಅಲ್ಲಿಗೆ ಕೆಲಸಕ್ಕೆ ಬರುವ ಹೆಚ್ಚು ವಿದ್ಯಾವಂತ ಹೆಣ್ಣುಗಳು ಕೂಡ ಗಂಡ, ಅತ್ತೆ-ಮಾವ ಕಡೆಗೆ ಅಪ್ಪ, ಅಮ್ಮ ಅಣ್ಣ, ತಮ್ಮಂದಿರಿಂದ ಶೋಷಿತಗೊಂಡವರೇ. +ಒಬ್ಬೊಬ್ಬರದು ಒಂದೊಂದು ಕತೆ. +ಇಲ್ಲ ಅಂಥ ಹೆಣ್ಣುಗಳನ್ನ ಆಯ್ಕೆ ಮಾಡಿ ಕೆಲಸ ಕೊಟ್ಟರಾ ? +ಒಂದೊಂದು ಕಾದಂಬರಿಯಲ್ಲು ಪ್ರಧಾನ ಪಾತ್ರಧಾರಿ ಹೆಣ್ಣೇ ದಟ್ಟವಾಗಿ ಅವಳ ಪಾತ್ರವೆ ಓದುಗರ ಮನಸ್ಸಿನಲ್ಲಿ ನಿಲ್ಲುವುದು. +ಎಷ್ಟೋ ಹೊತ್ತು ಚಿಂತಿಸುತ್ತ ಒಳಗೆ ಬಂದರೂ ಒಳಗಿನ ಮೌನ ಕರಗಿರಲಿಲ್ಲ. +ಮೊದಲಿಗಿಂತ ಹೆಚ್ಚಾಗಿ ನರ್ಸಿಂಗ್‌ಹೋಂನಲ್ಲಿ ನವೀನ್‌ಗೆ ನೈಟ್‌ ಡ್ಯೂಟಿ ಇರುತ್ತಿತ್ತು. +ಮುಖ ಮೇಲೆತ್ತಿ ಗಹಗಹಿಸುವ ಅವನ ನಗೆಯೇ ಕಡಿಮೆಯಾಗಿತ್ತು. +ಮರು ದಿನ ಸಿಟಿ ಬಸ್ಸಿನಿಂದ ಇಳಿದು ಬರುತ್ತಿರುವಾಗ ಕಮಲ ಸಿಕ್ಕಿದ್ದು ಆಕಸ್ಮಿಕವೇ. +ಏದುಸಿರು ಬಿಡುತ್ತ ಬಂದು ಮಾತಾಡಿಸಿದಳು. +“ನಿನ್ನ ಮೀಟ್‌ಮಾಡ್ಬೇಕೂಂತ ಒಂದ್ವಾರದಿಂದ ಪ್ಲಾನ್‌ ಮಾಡ್ತಾ ಇದ್ದೀನಿ. +ಆಗ್ಲೇ ಇಲ್ಲ ! ಏನಾದ್ರೂ ಒಂದು ತಾಪತ್ರಯ. +ಹೇಗಿದ್ದೀ ?"ಸ್ನೇಹದಿಂದ ಕೇಳಿದಳು. +“ನಾನು ಓಕೇ. +ಆದರೆ ನಾನು ಮಾಡೋಂಥ ಸಹಾಯವೇನು ? +ಮನೆಗೆ ಬರ್ತೀಯಾ ?” ಅತ್ತಿತ್ತ ನೋಡಿದ ಚಾರುಲತ “ರೆಸ್ಟೋರೆಂಟ್‌ ನಲ್ಲಿ ಕೂತು ಮಾತಾಡೋಣ. +ನೀನು ಮಹಾನ್‌ ಸುಸ್ತಾದಂಗೆ ಕಾಣ್ತೀಯಾ?" +ಸೂಚಿಸಿದ್ದು ಸ್ವಲ್ಪ ನಿಧಾನವಾಗಿ ಮನೆಗೆ ಹೋಗುವ ಸಲುವಾಗಿಯೇ. +ನೀರದ, ಅಣ್ಣನಿಗೆ ಸಾಕಷ್ಟು ಏಕಾಂತ ಸಿಕ್ಕಿ ಪರಸ್ಪರ ಚರ್ಚಿಸಿ ಅವರಲ್ಲಿನ ಡಿಫರೆನ್ಸ್‌ ಹೋಗಲಾಡಿಸಿಕೊಳ್ಳಲಿ ಎನ್ನುವುದು ಅವಳ ಉದ್ದೇಶ. +ಅದೊಂದು ಗಾರ್ಡನ್‌ ರೆಸ್ಟೋರೆಂಟ್‌. +ಇಬ್ಬರು ಹೋಗಿ ಮೂಲೆಯಲ್ಲಿನ ಖಾಲಿಯಾದ ಟೇಬಲ್ಲು ಹಿಡಿದರು. +ಐದು ನಿಮಿಷದ ನಂತರ ಬೇರರ್‌ಬಂದ. +"ಮೆನು ಬೇಡ, ಏನಿದೇಂತ ಹೇಳಿದ್ರೆ ಸಾಕು" ಎಂದಳು ಕರ್ಚಿಫ್‌ನಿಂದ ಕೈಯೊರೆಸುತ್ತ. +ಅವನು ಸಿಕ್ಕಾಪಟ್ಟೆ ಹೇಳಿದಾಗ "ಅದೇನು ಬೇಕೋ, ಹೇಳು ಈಗ ಬರ್ತಿನಿ" ಲೇಡಿಸ್‌ ಟಾಯ್‌ಲೆಟ್‌ನತ್ತ ನಡೆದಳು. +ಈಗ ಅವಳ ಸಂಬಳ ಬ್ಯಾಗ್‌ನಲ್ಲಿತ್ತು. +ಒಂದು ರೀತಿಯ ಖುಷಿ. +ಅಪ್ಪನಿಂದ, ಅಣ್ಣನಿಂದ ಗಂಡನಿಂದ ಹಣ ಪಡೆದು ಗೊತ್ತಿತ್ತೇ ವಿನಃ ಅವಳು ದುಡಿದು ಗಳಿಸಿರಲಿಲ್ಲ. +ಈಗ ಸಂಬಳ ಕೈಸೇರಿದಾಗ ಬೇಕೆನಿಸಿದ್ದನ್ನೆಲ್ಲ ತಂದೆ, ಅಣ್ಣ, ನೀರದಾಗಾಗಿ ಸಣ್ಣ ಪುಟ್ಟದ್ದನ್ನು ಖರೀದಿಸಿದಾಗ ಆಕಾಶದಲ್ಲಿ ಹಾರಾಡಿದಂತಾಗಿತ್ತು. +ಕೈ ತೊಳೆದು ಬಂದಾಗ ಕಮಲ ಆರ್ಡರ್‌ ಮಾಡಿ ಕೂತಿದ್ದಳು. +"ನಾನಂತೂ ವೆಜಿಟೆಬಲ್‌ ಕಟ್‌ಲೆಟ್‌, ಬಾಸುಂದಿಗೆ ಹೇಳ್ದೇ. +ನಿಂಗೇನು ಬೇಕಾಗಿತ್ತೋ" ಎಂದಾಗ ಛೇರ್‌ ಹಿಂದಕ್ಕೆ ಸರಿಸಿ ಕೂತ ಚಾರುಲತ "ನಂಗೇನು ರೆಸ್ಟೋರೆಂಟ್‌ಗೆ ಬಂದು ತಿಂಡಿ ತಿನ್ನೋ ಉದ್ದೇಶವೇನು ಇದ್ದಿಲ್ಲ. +ನಿನ್ನ ಕಂಪನಿಗೋಸ್ಕರ ತಿನ್ನೋದು. +ನನ್ನ ಅತ್ತಿಗೆ ನೀರದ ತಂದ್ಕೊಟ್ಟ ಪ್ಲೇಟ್‌ನ ತಿಂಡಿ ಖಾಲಿ ಮಾಡದಿದ್ದರೇ ಬೇಜಾರು ಮಾಡ್ಯೋತಾರೆ" ಅಂದಳಷ್ಟೆ. +ಎರಡು ನಿಮಿಷ ಮೌನವಾಗಿ ತಲೆ ತಗ್ಗಿಸಿ ಕೂತ ಕಮಲ "ನಂಗೊಂದು ಕೆಲಸ ಕೊಡಿಸ್ತೀಯಾ ? +ಮನೆಯಲ್ಲಿ ಬೋರಿಡಿದು ಹೋಗಿದೆ. +ಹಾಳು ಸಂಪ್ರದಾಯಗಳು ಸಾಯ್ಲಿ. +ನಿನ್ನ ಜೀವ್ನ ನೋಡಿದ್ಮೇಲೆ ನಂಗೆ ವಿವಾಹದ ಬಗ್ಗೆ ಆಸಕ್ತಿನೇ ಹೋಗಿದೆ. +ನೀನೂಂದರೇ ಪ್ರಾಣ ಬಿಡ್ತಾ ಇದ್ದ ಮೂರ್ತಿ, ಈಗ ಯಾವ ತರಹ ನಡ್ಕೋತಾರೆ ನೋಡು. +ಸ್ವಲ್ಪ ಕೂಡ ಅನುಸರಣೆ ಬೇಡ್ವಾ?"ಬೇಸರ ವ್ಯಕ್ತಪಡಿಸಿದಳು. +ಚಾರುಲತ ತುಟಿಗಳು ಕಚ್ಚಿ ಕೂತವು. +ಅವಳೆದೆಯಲ್ಲಿ ದೊಡ್ಡ ಅಗ್ನಿಕುಂಡವಿದ್ದರೂ ಹೊರ ಮುಖಕ್ಕೆ ಶಾಂತವಾಗಿದ್ದು ಹೆಚ್ಚು ಪ್ರಯಾಸದಿಂದಲೇ. +"ಯಾರದೋ ಒಬ್ಬರ ಜೀವನ ನೋಡಿ ಇಡೀ ವ್ಯವಸ್ಥೆಯ ಬಗ್ಗೆಯೇ ಒಂದುನಿರ್ಧಾರಕ್ಕೆ ಬಂದು ಬಿಡೋದು ತಪ್ಪು. +ನೀನು ಕೆಲ್ಸದ ಬಗ್ಗೆ ಆಸಕ್ತಿ ವಹಿಸೋದೇನುತಪ್ಪಲ್ಲ. +ಒಮ್ಮೆ ನನ್ಜೊತೆ ಬಾ. +ಅಪ್ಲಿಕೇಷನ್‌ ಅಂಥದ್ದೇನ್ಬೇಡ. +ನಮ್ಮ ಎಂ.ಡಿ.ದು ನೇರ ಇಂಟರ್‌ವ್ಯೂ. +ಸ್ವಲ್ಪ ಹೆಚ್ಚು ಶಿಸ್ತಿನ ಮಹಿಳೆ. +ಅಂತು ಒಂದು ಪ್ರಯತ್ನ ಮಾಡ್ಬಹುದು" ಸಲಹೆ ಕೊಟ್ಟಳು. +ಕಮಲ ಹೂಗುಟ್ಟಿದ್ದು ಮೌನವಾಗಿಯೇ. +ವೆಯಿಟರ್‌ ತಂದಿಟ್ಟ ವೆಜಿಟೇಬಲ್‌ ಕಟ್‌ಲೆಟ್‌ ಮತ್ತು ಬಾಸುಂದಿ ತಿಂದನಂತರ ಇಬ್ಬರು ತರಿಸಿಕೊಂಡು ಕುಡಿದಿದ್ದು ಕಾಫಿ +“ನನ್ನ ಹುಡ್ಗಿ ಐಸ್‌ಕ್ರೀಮ್‌ ಹುಡ್ಗಿಯಲ್ಲ” ಮೂರ್ತಿ ಕಣ್ಣಲ್ಲಿ ಕಣ್ಣಿಟ್ಟು ಹೇಳುತ್ತಿದ್ದ ಮಾತು ನೆನಪಾಯಿತು. +ಅವಳ ಹೃದಯ ದ್ರವಿಸಿತು. +ಹತ್ತಿಕ್ಕಲಾರದ ನೋವು, ಸಂಕಟ. +ತಟ್ಟನೆ ಎದ್ದು ಹೋಗಿ ಕೈ ತೊಳೆಯುವ ನೆಪದಲ್ಲಿ ಕಣ್ಣೀರು ತೊಡೆದುಕೊಂಡು ಬಂದಳು. +ಬಂದ ವೆಯಿಟರ್‌ಗೆ "ಎರ್ಡು ಐಸ್‌ಕ್ರೀಮ್‌'"ಎಂದಿದ್ದು ಕಮಲಾನೇ. +ಅವಳಿಗೆ ಇನ್ನಷ್ಟು ಮಾತಾಡುವುದಿತ್ತು. +“ಮುಂದೇನು ಮಾಡ್ಬೇಕೂಂತ ಇದ್ದೀಯಾ ?”ಕೇಳಿದಳು ಗಂಭೀರವಾಗಿ. +“ಐಸ್‌ಕ್ರೀಮ್‌ ತಿಂದು ಮುಗ್ಸಿ ಮನೆಗೆ ಹೋಗೋ ಪ್ರೋಗ್ರಾಂ ಅಷ್ಟೆ”ಅಂದಳು ಮುಗುಳ್ನಗೆ ಚೆಲ್ಲುತ್ತ. +"ಅದಲ್ಲ, ಪೂಜಾನ ಕರ್ಕಂಡ್‌ ಆಂಟೀ,ಅಂಕಲ್‌ ಬಂದಿದ್ದಾರೆ. +ಬೇರೆ ನೆಪದಲ್ಲಾದ್ರೂ ಹೋಗಿ ನೋಡ್ಬೇಕಿತ್ತು. +ನಿನ್ನ ನಿಸ್ಸಾಹಾಯಕತೆಯನ್ನು ಅವ್ರ ಮನಸ್ಸಿಗೆ ಮುಟ್ಟೋ ಹಾಗೆ ಹೇಳ್ಕೋ ಬೇಕಿತ್ತು" ಇಂಥ ಒಂದು ಸಲಹೆಯನ್ನು ಅಂಜುತ್ತ ಕೊಟ್ಟಿದ್ದು ಕಮಲ. +"ಅಂತು ಅಲ್ಲೊಂದು ಫಿಲಂ ಸೀನ್‌ ಕ್ರಿಯೇಟ್‌ ಮಾಡ್ಬೇಕು. +ಸುಮ್ಮೆ ಏನೇನೋ ಮಾತಾಡ್ಬೇಡ. +ಬೇಗ ಐಸ್‌ಕ್ರೀಮ್‌ ಖಾಲಿ ಮಾಡು" ಎಂದಳು ಅನಾಸಕ್ತಿಯಿಂದ. +ಕಮಲ ತಡೆಯಲಾರದೆ ಅವಳು ಮೂರ್ತಿಯನ್ನು ಭೇಟಿ ಮಾಡಿದ್ದು, ಅಲ್ಲಿ ನಡೆದ ಮಾತುಕತೆಯನ್ನು ಚಾಚು ತಪ್ಪದೇ ಹೇಳಿದಳು. +“ನೀನು ಗಂಡನ ಕಡೆ ನಿಲ್ಲಬೇಕಿತ್ತು” ಎಂದಳು ಕಮಲ. +“ಆ ಮಾತುಗಳು ತುಂಬ ಹಳೆಯದಾದವು. +ಈಗ ಅವೆಲ್ಲ ಬೇಡ ಹೆತ್ತವರು-ತವರಿನ ಬಗ್ಗೆ ಹೆಣ್ಣು ಮಕ್ಳು ಅಷ್ಟು ನಿರ್ದಯಿಗಳಾಗ್ಬಾರ್ದು. +ಈಗ ಪೂಜಾ ಹೇಗಿದ್ದಾಳೆ ?ವಿಚಾರಿಸಿದಳು. +“ಪರವಾಗಿಲ್ಲ ಅನ್ನಿಸುತ್ತೆ. +ಎಂಥಾ ಬಣ್ಣ, ಮುದ್ದಾದ ಮುಖ ಅವಳದು ಈಗ ವಿವಾಹದ ಮಾತುಕತೆಗಳ್ನ ಷುರು ಮಾಡಿದ್ದಾರೆ. +ಮೂರ್ತಿ ಚೆನೈಗೆ ಹೋಗ್ಬಂದ್ರಂತೆ. +ಇವ್ಳೇ ಚೇತರ್ಲಿಕೊಂಡಿಲ್ಲ. +ಅದೇ ಒಂದು ಸಮಸ್ಯೆಯಾಗಿದೆ” ಅಲ್ಲಿನ ವಿಷಯಗಳನ್ನ ಚಾಚು ತಪ್ಪದೇ ತಿಳಿಸಿದಳು. +ಪೂಜಾದು ಸ್ವಲ್ಪ ಹಟವೆಂದುಕೊಂಡರೂ ಇವಳನ್ನ ಕಂಡರೇ ಪ್ರಾಣ. +ಹೊಸದರಲ್ಲಿ ಇವಳ ಹಿಂಬಾಲಕಳಾಗಿದ್ದಳು. +ಎಷ್ಟೊಂದು ಆತ್ಮೀಯತೆ - ಚಾರುಲತಳ ಹೃದಯ ಭಾರವಾಯಿತು. +ಐಸ್‌ಕ್ರೀಮ್‌ ಕೂಡ ತಿನ್ನಬೇಕೆನಿಸಲಿಲ್ಲ. +"ಕಮಲ ಡೋಂಟ್‌ ಮೈಂಡ್‌, ಈ ಐಸ್‌ಕ್ರೀಮ್‌ ಕೂಡ ತಗೊಂಡ್ಬಿಡು. +ನಂಗ್ಯಾಕೋ ತಿನ್ನಬೇಕೂಂತ ಅನ್ನಿಸ್ತ ಇಲ್ಲ" ಐಸ್‌ಕ್ರೀಮ್‌ ಬಟ್ಟಲನ್ನ ಅವಳ ಮುಂದಕ್ಕೆ ತಳ್ಳಿದಳು. +ಕಮಲ ನೊಂದರೂ ತಿಂದು ಮುಗಿಸಿದ್ದು ಅವಳ ಸಹಜ ಸ್ವಭಾವ. +ಬಿಲ್‌ ತೆತ್ತು ಇಬ್ಬರು ಹೊರಗೆ ಬಂದರು. +“ಹೇಗೂ ಬಂದಿದ್ದೀಯಾ ! +ಮನೆವರ್ಗೂ ಯಾಕೆ ಬರ್ಬಾರ್ದು” ಕೇಳಿದಳು ಚಾರುಲತ. +ಮೊದಲು ತಲೆಯಾಡಿಸಿದರು “ಆಯ್ತು, ಮನೆಗೆ ಹೋಗಿ ಮಾಡೋದೇನಿದೆ ? +ಅಮ್ಮನಿಗೂ ಹೇಳೇ ಬಂದಿದ್ದೀನಿ. +ಒಂದ್ಗಂಟೆ ಕಳೆದೇ ಹೋಗ್ತೀನಿ. +ನಿನ್ನ ಅತ್ತಿಗೇನಾ ಸರ್ಯಾಗಿ ನೋಡೇ ಇಲ್ಲಾಂತ ಅನ್ನಿಸುತ್ತೆ. +ನೋಡಿದಂಗಾಗುತ್ತೆ” ಅವಳ ಜೊತೆ ಹೊರಟಳು. +ಚಾರುಲತ ಮನಸ್ಸಿಗೆ ಬರಲಿಲ್ಲ. +ಹಾಗೆಂದು ಬರಬೇಡವೆಂದು ಹೇಳಲು ಸಾಧ್ಯವಿರಲಿಲ್ಲ. +ಆದರೂ ಒಂದು ಮಾತು ಹೇಳಬೇಕೆನಿಸಿತು. +“ಪ್ಲೀಸ್‌, ಆ ಮನೆಯವುರ ಸುದ್ದಿ ಇಲ್ಲೇನು ಎತ್ತಬೇಡ. +ಅನಗತ್ಯ ಕಹೀಅಷ್ಟೆ.” ಗೆಳತಿಯ ಮಾತಿಗೆ ಕಮಲ ಸರಿಯೆಂದಳು. +ಆದರೂ ಅವಳಿಗೆ ಕಿರಿಕಿರಿಯೆನಿಸಿತು. +ಅಲ್ಲೇ ನಿಂತು “ಬೇಡ ಬಿಡು, ನಾನು ಬಲವಂತವಾಗಿ ನಿಮ್ಮ ಮನೆಗೆ ಬಂದಂಗಾಗುತ್ತೆ. +ನಾನು ಯಾವ್ದೇ ದುರುದ್ದೇಶ . +ಇಟ್ಕೊಂಡ್‌ಬಂ ದಿದ್ದೀನೀಂತ ನೀನು ತಿಳ್ದುಕೊಳ್ಳೋದ್ಬೇಡ." +ಅವಳ ಮಾತಿಗೆ ಚಾರುಲತ ಒಂದು ತರಹ ಮುಖ ಮಾಡಿ “ಪ್ಲೀಸ್‌ತಪ್ಪು ತಿಳ್ಕೋಬೇಡ. +ನಂಗೆ ಅಂಥ ಭಾವನೆಯೇನಿಲ್ಲ. +ನೀನು ಬರೀಸ್ನೇಹಿತಳಾಗಿದ್ದರೇ ಒಂದು ತರಹ, ನನ್ನ ಅತ್ತೆಯ ಮನೆಯ ಕಡೆಯ ಹತ್ತಿರದ ಬಂಧು. +ಅಪ್ಪ, ನೀರದ, ಅಣ್ಣ ಏನಾದ್ರೂ ಕೇಳಿದ್ರೆ ಅದು ಸಹಜ ತಾನೇ? +ನೀನು ಸತ್ಯ ಹೇಳಿದ್ರೂ ತೀರಾ ನೊಂದಿರೋ ಅವುಗಳು ಮತ್ತಷ್ಟು ನೋಯ್ತಾರೆ. +ಅದೆಲ್ಲ ಬೇಡಾಂತ ಅಷ್ಟೆ, ಸುಮ್ನೆ ಬಾ” ಬಲವಂತದಿಂದ ಕರೆದೊಯ್ದಳು. +ಅವಳಪ್ಪ, ಅಣ್ಣ ಯಾರು ಇರಲಿಲ್ಲ. +ನೀರದ ಮಾತ್ರ ಬಾಗಿಲಲ್ಲಿ ನಿಂತಿದ್ದಳು. +ಎದುರು ಮನೆಗೆ ಹೋಗಲೇಬಾರದೆಂಬ ಕಟ್ಟಪ್ಪಣೆ ಮಾಡಿದ್ದರಿಂದ ಅವಳು ಪಾಲಿಸಲೇ ಬೇಕಿತ್ತು ಇದರಿಂದ ಅವಳಮ್ಮನಿಗೆ ಮಾತ್ರ ಕೋಪ. +ನೀರದಾಗೆ "ಇವ್ಳು ಕಮಲಾಂತ ನನ್ನ ಫ್ರೆಂಡ್‌'" ಪರಿಚಯಿಸಿದಳು. +"ಓಹೋ, ತುಂಬಾನೇ ಗೊತ್ತು. +ನಿನ್ನ ಮದ್ವೆಯಲ್ಲಿ ಗಂಡಿನ ಕಡೆಯವರಾಗಿ ಹೆಚ್ಚು ಓಡಾಡಿದ್ದು ಇವ್ರೆ" ನೀರದ ಕಣ್ಣರಳಿಸಿದಳು. +ವಿಷಯ ಬಂದೇ ಬಿಟ್ಟಿತು. +ಕಮಲ ನಿಸ್ಸಹಾಯಕತೆಯ ನೋಟ ಬೀರಿದಳು “ಕೂತ್ಕೋ. . . ಬರ್ತಿನಿ”ಕೂಡಿಸಿ ರೂಮಿಗೆ ಹೋದಳು. +ನೀರದ ಸ್ವಲ್ಪ ಮಾತಿನ ಪ್ರಿಯಳು. +ಕಮಲ ಎದುರು ಕೂತಳು. +“ಮೂರ್ತಿ ಮನೆಗೆ ಹೋಗಿದ್ರಾ ?” ಷುರು ಹಚ್ಚಿದಳು. +“ಇಲ್ಲ, ಈಚೆಗೆ ಹೋಗಿಲ್ಲ. +ಎಲ್ಲಾ ಮುಂಬಯಿಗೆ ಹೋಗಿದ್ರು. +ಬಂದರೋ. . . ಇಲ್ವೋ ಗೊತ್ತಿಲ್ಲ"ಅಷ್ಟು ಹೇಳಿದ್ದು ಕಮಲಾಗೆ ಸಾಕಿತ್ತು. +ಇಂಚು ಇಂಚು ಅವಳ ಬಾಯಿಂದ ಬಿಡಿಸಿದಳು. +ಚಾರುಲತ ಮುಖ ತೊಳೆದು ಹೊರಬರುವಷ್ಟರಲ್ಲಿ. +"ಪೂಜಾ ವಿಷ ಕುಡಿದಿದ್ದರಂತಲ್ಲ !"ಇವಳತ್ತ ತಿರುಗಿದಳು. +ಚಾರುಲತಗೆ ಗಾಬರಿಯೋ. . . . ಗಾಬರಿ. + ಇದು ಯಾವುದಪ್ಪ ಹೊಸ ಸುದ್ಧಿ? +ಟವಲನ್ನು ಹೆಗಲ ಮೇಲೆ ಹಾಕಿಕೊಂಡು ಬಂದು ಅವರ ನಡುವೆ ಕೂತಿದ್ದು ಲಗುಬಗೆಯಿಂದ. +“ಯಾರು. . . . . ಹೇಳಿದ್ದು ? +ವಿಷ ಕುಡಿಯೋಂಥ ಹಣೆಬರಹ ಅವಳಿಗ್ಯಾಕೆ?" +ಚಾರುಲತ ಧಾವಿಸಿದ್ದು ಲಗುಬಗೆಯಿಂದ "ಅಲ್ಲ, ವಿಷವೇನು ಕುಡಿದಿರಲಿಲ್ಲ,ನಿದ್ದೆ ಮಾತ್ರೆ ತಗೊಂಡಿದ್ದು" ತಕ್ಷಣ ಕಮಲ ಉಸುರಿದ್ದು ಷಾಕಾಯಿತು ಅವಳಿಗೆ. +ಇವಳನ್ನ ಕರೆತಂದು ತಪ್ಪು ಮಾಡಿದೆ ಎಂದು ಕೈ ಕೈ ಇಸುಕಿಕೊಂಡಳು. +"ಅವೆಲ್ಲ ಯಾಕೆ ? +ನೀರದ ನೀವ್ಹೋಗಿ ಏನಾದ್ರೂ ತಿನ್ನೋಕೆ ತನ್ನಿ" ಎಬ್ಬಿಸಿ ಬಲವಂತದಿಂದ ಅಡಿಗೆ ಮನೆಗೆ ತಳ್ಳಿ ನಿಟ್ಟುಸಿರು ಬಿಡುತ್ತ ಬಂದು ಕೂತ ಚಾರುಲತ ದಯಾನೀಯವಾಗಿ ನೋಡಿದಳು ಗೆಳತಿಯನ್ನ “ಮಹಾರಾಯ್ತಿ,ಅದ್ನೆಲ್ಲ ಯಾಕೆ ಹೇಳ್ದೆ ? +ನೀರದ ತುಂಬ ಸೆನ್ಸಿಟೀವ್‌, ಏನಾದ್ರೂ ಕಲ್ಪಿಸಿಕೊಂಡು ನೊಂದ್ಕೋಬಹುದು"ಪರಿಸ್ಥಿತಿ ವಿವರಿಸಿದಳು. +“ನಾನಾಗಿ ಏನು ಹೇಳಿಲ್ಲ. +ನೀರದನೇ ಕೇಳಿದ್ದು ನೊಂದ್ಳೊಳ್ಳಿ ಬಿಡು. +ತೀರಾ ಸಾಧಾರಣ ರೂಪಿನ ಈ ಹುಡ್ಗಿಗಾಗಿ ನಿಮ್ಮಣ್ಣ ಮಾಡಿರೋದು ದೊಡ್ಡ ತ್ಯಾಗವೇ. +ಪೂಜಾಗೂ, ಇವ್ಳಿಗೂ ಎಲ್ಲಿಗೆಲ್ಲಿಗೆ ?" +ಕಮಲ ಷುರು ಹಚ್ಚಿದಾಗ ಕೈಯಿಂದ ಬಾಯಿ ಮುಚ್ಚಿ "ಮಹಾರಾಯ್ತಿ, ರೂಪವೊಂದೇ ಬದ್ಕಿಗೆ ಮುಖ್ಯವಲ್ಲ. +ಪೂಜಾ, ನೀರದಾಗಿಂತ ರೂಪವತಿ. +ಹಾಗಂತ ಹೋಲಿಕೆ ಮಾಡೋಕೆ ಹೋಗ್ಬೇಡ. +ನಮ್ಮಣ್ಣನ ಕಣ್ಣಿಗೆ ಇವ್ಳೇ ಚೆಲುವೆ. +ದಯವಿಟ್ಟು ಇನ್ನೇನು ಮಾತಾಡ್ಬೇಡ" ಎದ್ದು ಹೋದಳು ರೂಮಿಗೆ. +ಚಟ್ನಿ ಮಾಡಿಟ್ಟು ಕಡಲೇ ಹಿಟ್ಟು ಕಲಿಸಿರಬೇಕು. +ಐದು ನಿಮಿಷದಲ್ಲಿ ಹೀರೇಕಾಯಿ ಬೊಂಡ ತಂದಳು ಚಟ್ನಿಯೊಂದಿಗೆ. +“ನೀವಿಬ್ರೂ ತಗೋತಾ ಇರಿ. +ಸ್ಟೌವ್‌ ಮೇಲೆ ಎಣ್ಣೆ ಇದೆ” ನೀರದ ಒಳಗೆ ಹೋದಾಗ "ನೀರದ ತುಂಬ ಒಳ್ಳೆಯವುಳು"ಅಂದಳು ಮೈಮರೆತು ಚಾರುಲತ. +“ನಿನ್ನಂಥ ನಾದಿನಿ ಸಿಕ್ಕರೇ, ಎಲ್ಲಾ ಅತ್ತಿಗೆಯವ್ರು ಒಳ್ಳೆಯವ್ರೆ. +ಅಂತು ತೀರಾ ಸಾಧಾರಣ ರೂಪು. +ಏನೇ ಹೇಳ್ಕೋ ನಿಮ್ಮಣ್ಣ ದುಡುಕಿ ಬಿಟ್ಟ. +ತನ್ನ ಭವಿಷ್ಯ ಹಾಳು ಮಾಡಿಕೊಳ್ಳುವುದರ ಜೊತೆಗೆ ನಿನ್ನ ಬಲಿ ಪಶುವನ್ನಾಗಿಮಾಡಿಬಿಟ್ಟ” ಮನಸ್ಸು ತಡೆಯದೆ ಕಮಲ ಮಿಡುಕಿದಾಗ, ಇವಳು ಹೆಚ್ಚುಹೊತ್ತು ಇರುವುದು ಅಪಾಯವೆನಿಸಿತು. +ತಾನೇ ಹೋಗಿ ಎರಡು ಕಪ್‌ ಬೂಸ್ಟ್‌ ಬೆರೆಸಿಕೊಂಡು ಬಂದು ಕೊಟ್ಟಳು. +ಆದಷ್ಟು ಬೇಗ ಇವಳನ್ನು ಕಳುಹಿಸುವುದು ಕ್ಷೇಮವೆನಿಸಿತು. +ಕೆಲವು ತಮ್ಮ ಕೈ ಮೀರಿದ್ದೆನಿಸಿತು. +ಅಡಿಗೆ ಮನೆಗೆ ಹೇಳಿ ಬರಲು ಹೋದಾಗ, ನೀರದ ಅವಳ ಕೈಹಿಡಿದುಕೊಂಡು “ಪ್ಲೀಸ್‌, ನನ್ನಿಂದ ಎಲ್ಲಾ ಮುಚ್ಚಿಡೋಕೆ ಹೋಗ್ಬೇಡಿ. +ಪೂಜಾ ಯಾಕೆ ನಿದ್ದೆ ಮಾತ್ರೆ ನುಂಗಿದ್ದು ?” ಕೇಳಿದಳು. +ಅವಳ ಕಣ್ಣಲ್ಲಿ ಕಂಬನಿ ಇತ್ತು. +"ನೀರದ, ದಯವಿಟ್ಟು ಸುಮ್ನೆ ಇರೋದು ಒಳ್ಳೇದು. +ನಂಗೆ ಅಲ್ಲಿನ ವಿಷ್ಯ ಹೇಗೆ ಗೊತ್ತಾಗ್ಬೇಕು ? +ಸುಮ್ನೇ ಕೆಲ್ಸ ಮುಂದುವರೆಸಿ" ಕೈ ಬಿಡಿಸಿ ಕೊಂಡು ಹೊರಗೆ ಬಂದಳು. +ಕಮಲನ ಸಿಟಿ ಬಸ್ಸು ಹತ್ತಿಸಲು ತಾನೇ ಹೋದ ಚಾರುಲತ ದಾರಿಯಲ್ಲಿ "ಯಾವಾಗ್ಬೇಕಾದ್ರೂ ನಮ್ಮ ಮನೆಗೆ ಬಾ +ಅಲ್ಲಿನ ಸುದ್ಧಿ ಮಾತ್ರ ಪ್ರಸ್ತಾಪಿಸೋದ್ಬೇಡ" ಎಂದಿದ್ದು ಅತ್ಯಂತ ಸ್ಪಷ್ಟವಾಗಿಯೇ. +“ಎಲ್ಲಾ ವಿಚಿತ್ರವಾಗಿ ಕಾಣಿಸುತ್ತೆ. +ನನ್ನಲ್ಲಿ ಯಾವ್ದೇ ದುರುದ್ದೇಶವಿಲ್ಲ. +ನೀನು, ನಿಮ್ಮ ಮನೆಯವುರು ತಪ್ಪು ಮಾಡಿದ್ದೀರಾ. +ಮೂರ್ತಿ ಪೂರ್ತಿ ನಿನ್ನ ಮರೆಯೋಕೆ ಮುನ್ನ ನೀನ್ಹೋಗಿ ಸೇರ್ಕೋ" ಕಮಲ ಬಡಬಡಿಸಿದಳು. +ಚಾರುಲತ ಮಾತಾಡಲಿಲ್ಲ. +ಅವಳನ್ನ ಬಸ್ಸು ಹತ್ತಿಸಿ ಹಿಂದಿರುಗಿದಾಗ ತೀರಾ ಮಂಕಾಗಿದ್ದಳು. +ಪರಿಸ್ಥಿತಿಗೆ ಹೊಂದಿಕೊಳ್ಳುವ ಪ್ರಯಾಸದಲ್ಲಿ ಇದ್ದಾಗಲೇ ಕಮಲ ಬಂದು ಅವಳ ಮನಸ್ಥಿತಿಯನ್ನು ಕದಡಿದ್ದಳು. +ಇವಳು ಬರೋದನ್ನ ಕಾದ ನೀರದ "ನೀವು ಅಣ್ಣ ತಂಗಿ ನನ್ನಿಂದ ತುಂಬಮುಚ್ಚಿಟ್ಟು ಬಿಟ್ಟಿರಿ. +ಎಲ್ಲಾದಕ್ಕೂ ನಾನೇ ಕಾರಣವಾದಂತಾಯಿತು" ಮುಖಕಿವಿಚಿದಳು. +ನೇರವಾಗಿ ನೀರದಾನ ನೋಡಿದಳು. +ಅವರಿಗೆ ಅಷ್ಟಿಷ್ಟೇನು ಎಲ್ಲಾ ಹೆಚ್ಚು ಗೊತ್ತಿತ್ತೆಂದು ಅವಳ ಭಾವನೆ. +ದಿಢೀರೆಂದು ಅವರು ಹತ್ತಿರದ ಮಹೂರ್ತ ಇಡಲು ಅದು ಒಂದು ಕಾರಣವೇ. +"ದಯವಿಟ್ಟು ಏನೇನೋ ಊಹಿಸ್ಕೋಬೇಡಿ. +ಎಲ್ಲಾ ಮುಗ್ದ ಕತೆ. +ಮತ್ತೆ ಮತ್ತೆ ಪ್ರಸ್ತಾಪಿಸಿ ರಾಡಿ ಮಾಡಿಕೊಳ್ಳೋದ್ಬೇಡಿ" ತಿಳಿ ಹೇಳಿದಾಗ ನೀರದ ಅಳಲು ಷುರು ಮಾಡಿದರು “ವಿವಾಹ ಮಾಡಿಕೊಳ್ಳೋದು ಯಾಕೆ ಹೇಳಿ? +ಅವ್ರಿಗೆ ನನ್ನ ಸಮೀಪವೇ ಬೇಕಾಗಿಲ್ಲ. +ಅದಕ್ಕೋಸ್ಕರನೇ ನೈಟ್‌ ಡ್ಯೂಟಿ ಹಾಕಿಕೊಳ್ಳೋದು. +ನಂಗೆ ಅವ್ರು ತುಂಬ. . . . ತುಂಬ ಬೇಕಾದಾಗ್ಲೇ ದೂರ ಉಳಿದರೇ ಹೇಗೆ ?"ಅವಳ ಮಾತುಗಳನ್ನು ಕೇಳಿದ ಚಾರುಲತ ಕುಸಿದಳು. +ಇದು ಮುಗ್ದೆಯೋ? +ಮನಸ್ಸಿನಾಳದ ನೋವೋ ? ರೂಮಿನ ಒಳಗೆ ಇರಬೇಕಾದ ವಿಷಯ ಬಹಿರಂಗವಾಗುವುದು ಸರಿ ಕಾಣಲಿಲ್ಲ. +ನೀರದ, ಇದ್ದೆಲ್ಲ ನೀವು ಯಾರಹತ್ರ ಹೇಳ್ಕ್ಯೋಬಾರುದು. +ನಿಮ್ಮ ತಾಯಿ ಹತ್ರ ಇಂಥ ವಿಷ್ಯಗಳ್ನ ವರದಿ ಒಪ್ಪಿಸೋದು ತೀರಾ ಅಪಾಯ ! +ಇದೆಲ್ಲ ನಿಮ್ಗೆ ಯಾಕೆ ಅರ್ಥವಾಗೋಲ್ಲ. +ನವೀನಣ್ಣ ಕಿವಿಯ ಮೇಲೆ ಬಿದ್ದರೆ ತೀರಾ ಮನಸ್ಸು ಕೆಡಿಸ್ಕೋತಾನೆ. +ಮನಸ್ಸು ಸರಿ ಇಲ್ಲದಾಗ ಇವೆಲ್ಲ ಸಹಜ. +ಮನಸ್ಸು,ಇಂದ್ರಿಯಗಳು ಹತೋಟಿಯಲ್ಲಿದ್ದರೇ ಚೆನ್ನ ಬುದ್ಧಿ ಹೇಳಿದಳು. +ನಿಶ್ಯಬ್ಧವಾಗಿ ಕೇಳಿಸಿಕೊಂಡ ನೀರದ ಅಡಿಗೆ ಮನೆಗೆ ಹೋದಳು. +ಅವಳ ಈ ಸ್ವಭಾವ ಇಂದಿನವರೆಗೂ ತನ್ನ ಅರಿವಿಗೆ ಬಾರದಿದ್ದಕ್ಕೆ ಪರಿತಪಿಸಿದಳು ಚಾರುಲತ. +ಆ ವಾರದ ಕೊನೆಯ ದಿನದಲ್ಲಿ ಡಾ।। ನವೀನ್‌ ಮನೆ ಬದಲಾಯಿಸುವ ಮಾತಾಡಿದಾಗ ಅವಾಕ್ಕಾದಳು. +“ಇದು ನಮ್ಮ ಸ್ವಂತ ಮನೆ ಕಣೋ.” +“ಹೌದು, ಇರ್ಬಹುದು +ಇದ್ನ ಬಾಡಿಗೆಗೆ ಕೊಡೋಣ. +ಇಲ್ಲಿಂದ ನರ್ಸಿಂಗ್‌ಹೋಂಗೆ ಓಡಾಡಿ ಸಾಕಾಗಿದೆ. +ಅಲ್ಲೇ ಹತ್ತಿರವಿದ್ದರೇ ಎಷ್ಟೋ ಅನ್ಕೂಲ" ಎಂದ ಅಣ್ಣನನ್ನೆ ನೋಡಿದಳು. +ಮನೆ ಬದಲಾವಣೆಗೆ ಕಾರಣ ಅಷ್ಟಿಷ್ಟೇನು ಎಲ್ಲಾ ಮನದಟ್ಟಾಯಿತು. +ಈಗಲೂ ಇವರುಗಳು ಯಾರು ಇಲ್ಲದಾಗ ನೀರದ ಹೋಗಿ ಮಂಚವಿಡಿದ ಅಮ್ಮನ ಮುಂದೆ ಕೂಡುತ್ತಿದ್ದಳು. +ಒಂದೇ ವಿಷಯ, ಸದಾ ಅದೇ ಮಾತುಗಳು. +ಇದು ಅವರ ಅತ್ತಿಗೆಯವರಿಂದ ಅಣ್ಣಂದಿರ ಕಿವಿ ಮುಟ್ಟಿತ್ತು. +ಗಟ್ಟಿಯಾಗಿ ಅವಳಿಗೆ ಬುದ್ಧಿ ಹೇಳಲು ಹೋದರೆ ಕಾಯಿಲೆ ಅಮ್ಮನ ಕಣ್ಣೀರು ನೋಡಬೇಕಿತ್ತು. +ಅದಕ್ಕಾಗಿಯೇ ಒಂದು ವಿನಂತಿಯನ್ನು ಡಾ||ನವೀನ್‌ನ ಮುಂದಿಟ್ಟಿದ್ದರು. +"ನಮ್ಮ ನೀರದ ಬದಲಾಗ್ಬೇಕಾದರೇ, ನೀವಾದ್ರೂ ಮನೆ ಬದಲಾಯಿಸ್ಪೇಕು, ಇಲ್ಲ ನಾವಾದ್ರೂ ದೂರ ಹೋಗ್ಬೇಕು. +ಇಲ್ಲ ನಿಮ್ಮ ಸಂಸಾರದಲ್ಲಿ ತಾನಾಗಿ ಸಮಸ್ಯೆಗಳು ಹುಟ್ಟಿಕೊಳ್ಳುತ್ತೆ." +"ನೀವೇನು ಮನೆ ಬದಲಾಯಿಸೋದ್ಬೇಡ. +ನಾವೇ ದೂರ ಹೋಗ್ತೀವಿ. +ಈ ಯೋಚ್ನೆ ನನ್ನ ಮನಸ್ಸಿನಲ್ಲಿ ಕೂಡ ಬಂದಿದೆ" ಇವನೇ ದಾರಿ ತೋರಿಸಿದ್ದ. +ಮರುದಿನವೇ ತಂದೆ ವಾಕ್‌ ಹೊರಟಾಗ ತಾನು ಜೊತೆಯಲ್ಲಿ ಹೋದ “ಅಪ್ಪ, ನಿಮ್ಮ ಮನಸ್ಸಿಗೆ ಬೇಸರವಾಗೋಂಥ ತೀರ್ಮಾನ ಕೈಗೊಳ್ಳ ಬೇಕಾಗಿದೆ. +ಸಧ್ಯಕ್ಕೆ ಮನೆ ಬದಲಾಯಿಸ್ಬೇಕು."ಆತ ಬೆಚ್ಚಿ ಬಿದ್ದ. +ಇದು ಅವರು ಕಟ್ಟಿಸಿದ ಸ್ವಂತ ಮನೆ. +ಸಾಕಷ್ಟು ಕಷ್ಟಪಟ್ಟಿದ್ದರು ಆ ದಿನಗಳಲ್ಲಿ ಹೆಂಡತಿಯೊಂದಿಗೆ. +ಕಳೆದು ಹೋದ ಒಂದೊಂದು ನೆನಪು ಇಲ್ಲಿ ಹುದುಗಿ ಹೋಗಿತ್ತು. +"ನಂಗೆ ಅರ್ಥವಾಗ್ಲಿಲ್ಲ" ಎಂದರು ಕ್ಷೀಣ ದ್ವನಿಯಲ್ಲಿ. +ಸಂಕ್ಷಿಪ್ತವಾಗಿ ವಿವರಿಸಿದ. +ಈಗ ಅನುಭವಿಸುತ್ತಿರುವ ಸ್ಥಿತಿ, ಮುಂದೆ ಬರುವ ಸಮಸ್ಯೆಗಳನ್ನ ಕೂಡ ಅವರ ಮುಂದಿಟ್ಟ. +"ಸಂಬಂಧಗಳು ಬೆಳೆದ ನಂತರವೇ ವ್ಯಕ್ತಿಗಳ ನಡವಳಿಕೆಯ ಪರಿಚಯವಾಗುವುದು. +ಒಂದಲ್ಲ ನಾಲ್ಕು ಸಲ ನೀರದ ತಾಯಿ ನಂಗೆ ಕರೆಸಿ ಬುದ್ಧಿ ಹೇಳಿದ್ದಾರೆ. +ಅವ್ರಿಗೆ ಈಗ್ಲೂ ನಾನು ಎದುರು ಮನೆಯ ವಾಸುದೇವಯ್ಯನ ಮಗ ಮಾತ್ರ ಅನ್ನೋಷ್ಟು ಸಲಿಗೆ ತಗೋತಾರೆ. +ಇವ್ಳಿಗೆ ಹೇಳಿ ಆಯ್ತು. +ಏನು ಪ್ರಯೋಜನವಾಗ್ಲಿಲ್ಲ. +ಒಂದಿಷ್ಟು ಅಂದರೆ ಒಂದೆರಡು ವರ್ಷ ಗಳಾದ್ರೂ ಈಮನೆ ಲೀಜ್‌, ಬಾಡ್ಗೆಗೆ ಕೊಟ್ಟು ನರ್ಸಿಂಗ್‌ ಹೋಂ ಹತ್ತಿರದಲ್ಲಿ ಮನೆ ಹಿಡಿಯೋಣ. +ಇದ್ರಿಂದ ನಿಮ್ಮ ಮನಸ್ಸಿಗೆ ನೋವೂಂತ ಗೊತ್ತು. +ಆದರೆ ಬೇರೆ ದಾರಿ ಇಲ್ಲ." +ಸಂಪೂರ್ಣ ಚಿತ್ರ ಅವರ ಮುಂದೆ ತೇಲಿದಾಗ ಅರ್ಥವಾಯಿತು ಅವರಿಗೆ. +ಮದುವೆಗೆ ಮುನ್ನ ಇದ್ದ ಮನೆಯಲ್ಲಿನ ಗೆಲುವು ಈಚೆಗೆ ಇರಲಿಲ್ಲ. +ಸೊಸೆ ಕೂಡ ಮಂಕಾಗಿ ಮುಖ ಊದಿಸಿಕೊಂಡು ಇರುವುದು ಅವರ ಗಮನಕ್ಕೆ ಬಂದಿತ್ತು. +ಸಧ್ಯಕ್ಕೆ ಇದೊಂದು ತಾತ್ಕಾಲಿಕ ಪರಿಹಾರವೆನಿಸಿತು. +ನೀರದ ತಪ್ಪು ತಿಳ್ಕೋತಾಳೇನೋ !ಎಂದರು ಅನುಮಾನದ ಸ್ವರದಲ್ಲಿ. +ಡಾ|।ನವೀನ್‌ನ ಮುಖ ಬಿಗಿದುಕೊಂಡಿತು. +"ಆ ಮನಸ್ಥಿತಿನೇ ಇವೊತ್ತಿನ ಹಲವು ಸಮಸ್ಯೆಗಳಿಗೆ ಕಾರಣವಾಯ್ತು. +ಚಾರುಲತ, ಮೂರ್ತಿ ಎಷ್ಟೊಂದು ಅನ್ಯೋನ್ಯವಾಗಿದ್ದರು. +ಅವ್ಳ ಅಣ್ಣನಾಗಿ ಅವಳ ದಾಂಪತ್ಯ ಜೀವನಕ್ಕೆ ಬೆಂಕಿ ಇಟ್ಟು ಉಪಕಾರ ಮಾಡ್ದೇ" ಉದ್ವೇಗದಿಂದ ನುಡಿದ. +ಅವನ ಕಣ್ಣಂಚು ಒದ್ದೆಯಾಗಿತ್ತು. +"ಏನೇನೋ ಮಾತಾಡ್ಬೇಡ ! +ಅವ್ರು ಅನಗತ್ಯವಾಗಿ ಪಟ್ಟು ಹಿಡಿದ್ರು. +ಇಷ್ಟವಿಲ್ಲದ ವಿವಾಹ ಯಾರ ಜೀವನಕ್ಕೂ ಒಳ್ಳೇದಲ್ಲ. +ನಾನು ಕೋಪ ಬಂದಾಗ ಒಂದ್ದತು ಆಡಿರ್ಬಹ್ಹು. +ಅದ್ನ ಮನಸ್ಸಿನಲ್ಲಿ ಇಟ್ಕೋಬೇಡ" ಸಂತೈಯಿಸಿ “ಹಾಗೇಮಾಡು. +ಮನೇನಾ ಯಾರಾದ್ರೂ ಒಳ್ಳೆಯವ್ರಿಗೆ ಕೊಡು. +ತಂದೆ ಇಷ್ಟು ಸರಳವಾಗಿ ಒಪ್ಪಿಗೆ ಸೂಚಿಸಿದ್ದು ನೋಡಿ ಅವನಿಗೆ ಆಶ್ಮರ್ಯದ ಜೊತೆ ಆನಂದವು ಕೂಡ. +ಇದು ಸುಲಭ ಸಾಧ್ಯವಲ್ಲವೆಂದು ತಿಳಿದಿದ್ದ. +“ತುಂಬ ಥ್ಯಾಂಕ್ಸ್‌ ! +ಇದ್ರಿಂದ ನಿಮ್ಮ ಮನಸ್ಸಿಗೆಷ್ಟು ನೋವೂಂತ ನಂಗೆ ಗೊತ್ತು. +ಆದರೆ ಬೇರೆ ದಾರಿ ಇಲ್ಲ. +ನರ್ಸಿಂಗ್‌ ಹೋಂ ಹಿಂದಿನ ರೋಡಿನಲ್ಲಿಯೇ ಒಂದನ್ನೆ ನೋಡಿದ್ದೀನಿ. +ಬಾಡಿಗೆ ಹೆಚ್ಚೆ 1 ಇಲ್ಲಿನ ಬಾಡ್ಗೆ ಅಲ್ಲಿ ಕೊಟ್ಟರಾಗುತ್ತೆ. +ಚಾರುಲತನ ಏನು ಮಾಡೋದು ?” ಕೇಳಿದ. +“ಅದ್ನ ಕಾಲ ಹೇಳ್ಬೇಕಷ್ಟೆ. +ಯುಗಂಧರ್‌ ಎದುರಿಗೆ ಸಿಕ್ಕರೂ ಮಾತಾಡಿಸೋಲ್ಲ. +ನಾನು ಮಾತನಾಡಿಸೋ ಪ್ರಯತ್ನ ಮಾಡಿದ್ರೂ. . . ಅವು ಮುಖ ತಿರುವಿ ಕೊಳ್ತಾರೆ. +ಬಹುಶಃ ಪೂಜಾ ವಿವಾಹವಾದ್ಮೇಲೆ ಅವ್ರ ಕೋಪತಗ್ಗುತ್ತೇನೋ”ಎಂದರು. +ಡಾ|| ನವೀನ್‌ ತಲೆ ತಗ್ಗಿಸಿದ. +ಕಾಲಕ್ಕೆ ಶರಣಾಗುವುದು ಬಿಟ್ಟು ಅವನಿಗೂ ಬೇರೆ ದಾರಿ ಕಾಣಲಿಲ್ಲ. +ಆದರೆ ಚಾರುಲತನ ನೋಡಿದಾಗಲೆಲ್ಲ ಬಲವಾದ ಸಲಾಕೆಯಿಂದ ಪೆಟ್ಟು ತಿಂದಂತೆ ನೋವು ಅನುಭವಿಸುತ್ತಿದ್ದ. +ಮರುದಿನದಿಂದಲೇ ಸ್ವಂತ ಮನೆಯನ್ನ ಬಾಡಿಗೆಗೋ, ಲೀಜ್‌ಗೋ ಕೊಡಲು ಅವರಿವರಿಗೆ ತಂದೆ ಮಗ ಹೇಳತೊಡಗಿದರು. +ನೀರದ ಮುಖಾಂತರವೇ ಚಾರುಲತಗೆ ಈ ಸುದ್ದಿ ಮುಟ್ಟಿದ್ದು. +ಅವಳಿಗೆ ವಿಚಿತ್ರವೆನಿಸಿತು. +ಕಾರಣವನ್ನು ಅಂದಾಜು ಮಾಡಿದರೂ, ಈ ಕಾರಣದಿಂದ ಮನೆ ಬಿಡುವುದು ತೀರಾ ಒಳ್ಳೆಯದಲ್ಲವೆನಿಸಿತು. +"ಯಾಕಂತೆ ?" ಅವಳನ್ನೇ ಕೇಳಿದಳು. +"ಗೊತ್ತಿಲ್ಲ, ಅವ್ರು ನೇರವಾಗಿ ನನ್ನೊಂದಿಗೆ ಏನು ಹೇಳ್ಲಿಲ್ಲ. +ಅವುರು ಮಾವ ಮಾತಾಡ್ತಾ ಇದ್ರು. +ನಂಗೆ ಇದೆಲ್ಲ ಸರಿಯೆನಿಸೋಲ್ಲ?" ತನ್ನ ಅಭಿಪ್ರಾಯ ತಿಳಿಸಿದಳು. +ನಸುನಗು ತೇಲಿತು ಚಾರುಲತ ತುಟಿಗಳ ಮೇಲೆ. +ತಾಳಿ ಕಟ್ಟಿಸಿಕೊಳ್ಳದ ಮುನ್ನ ಎಷ್ಟೊಂದು ವಿನಯದಿಂದ ಮೃದುವಾಗಿ ಇದ್ದಳು “ನಾನು ಅವ್ರಿಗಾಗಿ ಏನು ಬೇಕಾದ್ರೂ ಮಾಡಬಲ್ಲೆ. +ಆದರೆ ನವೀನ್‌ನ ಕಳ್ಳುಕೊಂಡು ಬದುಕಿರಲಾರೆ” ಇಂಥ ಮಾತುಗಳನ್ನ ಎಷ್ಟೋ ಸಲ ಹೇಳಿದ್ದ ಹೆಣ್ಣು ಇವಳೇನಾ ಎಂದು ಚಿಂತಿಸುವಂತಾಯಿತು. +“ಏನೋ ನಂಗು ಗೊತ್ತಿಲ್ಲ. +ನೀನು ವಿಚಾರಿಸು" ತನ್ನ ಪಾಡಿಗೆ ತಾನು ಹೋದಳು. +ಆಗ ನೆನಪಾದದ್ದು ಪೂಜಾ "ಅತ್ತಿಗೆ, ನಿಮ್ಮ ಉಗುರುಗಳಿಗೆ ಬಣ್ಣ ಹಾಕ್ತೀನಿ. +ನಿಮ್ಮ ಕಲರ್‌ಗೆ ಮ್ಯಾಚ್‌ ಆಗೋಂಥ ಬಣ್ಣ ತಂದಿದ್ದೀನಿ" +ಬಲವಂತವಾಗಿ ಕೈ ಹಿಡಿದು ಕೊಡುತ್ತಿದ್ದಳು. +ಪ್ರೀತಿಯ ಹೊಳೆಯನ್ನೇ ಹರಿಸಿದ್ದಳು ಚಾರುಲತ ಮೇಲೆ, ಮೃದುವಾಗಿ ಬಿಟ್ಟಳು ಪೂರ್ತಿಯಾಗಿ. +ಯಾಕೆ ಒಮ್ಮೆ ಹೋಗಿ ಅವಳನ್ನ ನೋಡಬಾರದು? +ಅವಳ ಈ ಸ್ಥಿತಿಗೆ ನೇರವಾಗಿ ತನ್ನನ್ನು ಕಾರಣ ಮಾಡಿರೋ ಅತ್ತೆ, ಮಾವ ಇದಕ್ಕೆ ಅವಕಾಶ ಮಾಡಿಕೊಟ್ಟರಾ? +ಖಂಡಿತ ಇಲ್ಲ. +ಆ ಆಸೆಯನ್ನ ದೂರಕ್ಕೆ ತಳ್ಳಿದ್ದು ಕೆಲವು ಕ್ಷಣಗಳು ಮಾತ್ರ. +ಫೋನ್‌ನ ಬಟನ್‌ಗಳನ್ನೊತ್ತಿ ಕಿವಿಗಿಟ್ಟುಕೊಂಡಳು. +ಮೊದಲ ಸಲ ಎತ್ತಿದ್ದು ಯುಗಂಧರ್‌ "ಹಲೋ. . . . '' ಎಂದರಷ್ಟೆ. +ಅವಳ ನಾಲಿಗೆಯಲ್ಲಿನ ಪಸೆಯಾರಿತು. +ಧ್ವನಿ ಹೊರಡಲಿಲ್ಲ. “ಈಡಿಯಟ್‌. . . . . " ಅವರಿಟ್ಟರು. +ಎರಡನೆ ಸಲ ಮತ್ತೆ ಬಟನ್‌ಗಳನ್ನೊತ್ತಿದಳು "ಹಲೋ. . . ಕಮಲಾನಾ ?"ಅವಳತ್ತೆ ವಾಯ್ಸ್‌. +ಮೂರನೆ ಸಲ ಮಾತ್ರ ತಂತಿಯ ಕೊನೆಯಲ್ಲಿ ಇದ್ದಿದ್ದು ಮೂರ್ತಿ “ಹಲೋ. . . ಹಲೋ. . . ಹಲೋ. . . ಅವಳ ಕಣ್ಣಂಚು ಒದ್ದೆಯಾಯಿತು. + ನವಿಲು ನರ್ತಿಸಿದಂತಾಯಿತು. + ಸೂರ್ಯನ ಕಿರಣಗಳಿಗೆ ಅರಳುವಂತೆ ತಾವರೆಯಂತೆ. +ಅವಳ ಮನ ಬಿರಿಯಿತು. +ತನ್ಮಯತೆಯಿಂದ ಸಂಗೀತವನ್ನು ಆಲಿಸುವಂತೆ ಗಂಡನ ದನಿಯನ್ನ ಆಸ್ಪಾದಿಸಿದಳು. +ಅವನ ಉಸಿರು ಚಾರುಲತಳ ಅಧರಗಳನ್ನು ಸ್ಪರ್ಶಿಸಿದಂತಾಯಿತು. +"ಯಾರೋ ಮಾತಾಡ್ತಾ ಇಲ್ಲ"ಫೋನಿಟ್ಟಿದ್ದು ಕೇಳಿಸಿತು. +ನಿಧಾನವಾಗಿ ಫೋನ್‌ನ ಕ್ರೆಡಲ್‌ ಮೇಲಿಟ್ಟಳು. +ಮನಕ್ಕೆ, ಹೃದಯಕ್ಕೆ ಹತ್ತಿರವಾದವರ ದನಿಗಳನ್ನ ಆಲಿಸಿದ್ದು ಸಂತೋಷವೆನಿಸಿತು. +ರಾತ್ರಿ ಅಪ್ಪ, ಮಗಳು ತರಕಾರಿ ತರಲು ಹೊರಟಾಗ ಅವರೇ ಪ್ರಸ್ತಾಪಿಸಿದರು "ನವೀನಾ ಬೇರೆ ಮನೆ ಹುಡುಕ್ತಾ ಇದ್ದಾನೆ" ಸಾವಿರ ಕ್ಯಾಂಡಲ್‌ನ ಹೊಳಪು ಅವಳ ಮಿದುಳಲ್ಲಿ ಹತ್ತಿ ಆರಿ ಹೋಯಿತು. +ಅಂದರೆ ನೀರದ ಕೇಳಿಸಿಕೊಂಡಿದ್ದು ಸರಿಯೆನಿಸಿತು. +"ಇದು ನಮ್ಮ ಸ್ವಂತ ಮನೆಯಲ್ವಾ ! +ಬೇರೆ ಮನೆ ಹುಡ್ಕೋ ಅಂತ ತಾಪತ್ರಯವೇಕೆ ? +ನೀರದ ಹೇಳಿದಾಗ ನಿಜವೆನಿಸ್ಲಿಲ್ಲ. +ಈಗ ನಮ್ಮಮನೆಯಲ್ಲಿ ಏನು ಅನಾನ್ಕೂಲವಾಗಿದೆ ?"ಕೇಳಿದಳು. +ಕಾರಣಗಳನ್ನು ವಿವರಿಸಿದರು ಮಗಳಿಗೆ. +ಅವೆಲ್ಲ ಅವಳಿಗೆ ಗೊತ್ತಿದ್ದುದ್ದೇ. +ಅವಳು ಕೂಡ ಸೂಕ್ಷವಾಗಿ ಬೇರೆ ರೀತಿಯಲ್ಲಿ ಹೇಳಿ ಸೋತಿದ್ದಳು. +ನೀರದ ಕಿವಿಗೆ ಆ ಮಾತುಗಳು ಹೋಗಿರಲಿಲ್ಲ. +ವಾಸುದೇವಯ್ಯನವರು ಕೂಡ ಒಮ್ಮೆ ತಿಳಿ ಹೇಳಿದ್ದರು ನಗುತ್ತಾ. +"ಮದ್ವೆಗೆ ಮುಂಚೆನೇ ಇಲ್ಲಿ ಬಹಳ ಹೊತ್ತು ಇರ್ತಾ ಇದ್ದೆ, ಇಲ್ಲಿ. +ಈಗಿನ ದಿನಗಳಲ್ಲಿ ಅಲ್ಲಿರೋದೇ ಜಾಸ್ತಿ. +ಹೀಗಾದರೇ. . . ಹೇಗೆ ?" + ಅವಳು ಅದನ್ನ ತಮಾಷೆಯಾಗಿ ತಗೊಂಡಿದ್ದಳೇ ವಿನಃ ಸೀರಿಯಸ್ಸಾಗಿ ಸ್ವೀಕರಿಸಿರಲಿಲ್ಲ. +ಹಾಗೆಯೇ ಮುಂದುವರಿದಾಗ ಅವರು ತಟಸ್ಥ ಧೋರಣೆ ವಹಿಸಿದರು. +"ಇದೆಲ್ಲ ನಿಜವೇ !ಆದ್ರೂ ಸರಿಯೆನಿಸೋಲ್ಲ. +ಇಷ್ಟೊಂದು ಸಣ್ಣ ಕಾರಣ ಮುಂದು ಮಾಡ್ಕೊಂಡ್‌ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆಗೆ ಹೋಗೋದಾ? +ಬೇಕಾದರೇ, ಅವರಿಬ್ರೂ ಒಂದು ಬಾಡ್ಗೇ ಮನೆ ಹಿಡ್ದುಕೊಳ್ಳಿ. +ನಾವಿಬ್ರೂಇಲ್ಲೇ ಇರೋಣ?" ಸೂಚಿಸಿದಳು. +ಮಗಳನ್ನ ಬೆರಗಿನಿಂದ ನೋಡಿದರು. +ಅದ್ಭುತವಾದ ವಿಚಾರವೆನಿಸಿತು. +ತನಗೆ ಯಾಕೆ, ಹೊಳೆಯಲಿಲ್ಲ ? +ತಲೆಯ ಮೇಲಿದ್ದ ದೊಡ್ಡ ಭಾರ ಇಳಿಸಿದಂತಾಯಿತ್ತು. +“ಒಳ್ಳೆ ಸಲಹೆ ತಾಯಿ ! +ನಿನ್ನ ತಾಯಿಯೊಂದಿಗೆ ಕಾಲ ಕಳೆದ ಈ ಮನೆ ನನ್ನ ಪಾಲಿಗೆ ದೇವಸ್ಥಾನ. +ಇಲ್ಲೇ ಪ್ರಾಣ ಬಿಡೋ ಆಸೆ ಕೂಡ. +ಆದರೂ ಅವ್ನ ಅಭಿಪ್ರಾಯಕ್ಕೆ ವಿರೋಧ ಸೂಚಿಸೋಕ್ಕಾಗೋಲ್ಲ. +ಸಧ್ಯ ನನ್ನ ಉಳಿಸ್ದೇ. +ಇಷ್ಟನ್ನ ನಿಮ್ಮಣ್ಣನಿಗೆ ಹೇಳೋ ಭಾರ ನಿಂದೆ. +ಒಂದು ರೀತಿಯ ಬಿಡುಗಡೆ ನಂಗೆ"ಹರ್ಷಿಸಿದರು. +ಮಗ ಈ ಪ್ರಸ್ತಾಪವೆತ್ತಿದ ಮೇಲೆ ಅವರು ಮೇಲುಖಕ್ಕೆ ಉತ್ಸಾಹವಾಗಿದ್ದರೂ ಅಂತರಂಗವಾಗಿ ಬಹಳ ಬಳಲಿ ಹೋಗಿದ್ದರು. +ಮನೆಗೆ ಹಿಂದಿರುಗಿದಾಗ ನವೀನ್‌ ಹೊರಗೆ ನಿಂತಿದ್ದ. +ಮನತೆ ಇತ್ತು ಮುಖದ ಮೇಲೆ. +ಚೂಟಿ, ಹೆಚ್ಚು ಮಾತಿನ ಇವನಿಗೆ ಏನಾಗಿದೆ ? +"ಇವ್ನು ಸುಖವಾಗಿಲ್ಲ" ಎಂದರು ನೋವಿನಿಂದ. +"ಬಹುಶಃ ಅದಕ್ಕೆ ಕಾರಣ ನಾನೇ ! +ಅವನೊಬ್ಬ ಪ್ರಾಮಾಣಿಕ ಅಣ್ಣ. +ನನ್ನ ಬಗ್ಗೆ ಚಿಂತೆ. +ಈಗಿನ ಅವನ ಬೇಡಿಕೆ ಕನಿಷ್ಟ ಪರಿಹಾರವಾದೀತು. +ನೀವು ಕೂಡ ಅದೇ ಹೇಳಿ" ನಿಟ್ಟುಸಿರು ಚೆಲ್ಲುತ್ತ ಹೇಳಿದಳು. +ವಾಸುದೇವಯ್ಯ ಒಳಗೆ ಹೋದರು. +ತರಕಾರಿ ಬ್ಯಾಸ್ಕೆಟ್‌ ಇಟ್ಟು ಹೊರಬಂದು ನವೀನ್‌ "ಯಾಕೆ, ಇಲ್ಲಿ ನಿಂತೆ ?"ಕೇಳಿದಳು. +"ಸುಮ್ನೆ, ನಮ್ಮಂಥ ತೀರಾ ಸಾಮಾನ್ಯ ಜನಕ್ಕೆ ಮಗ, ಹೆಂಡ್ತಿ ಇಷ್ಟರದೇ ಸಮಸ್ಯೆ. +ಯಾವುದಾದ್ರೂ ದೊಡ್ಡ ಆ್ಯಂಬಿಷನ್‌ ಬೆಳೆಸ್ಕೋಬೇಕು. +ಈಗಾಗ್ಲೇ ಬದುಕು ಬೋರ್‌ ಅನ್ನಿಸೋಕೆ ಹುರುವಾಗಿದೆ" ಎಂದ ಕ್ರಾಪನ್ನ ಹಿಂದಕ್ಕೆ ತಳ್ಳುತ್ತ. +ಅವನ ಒತ್ತು ಕೂದಲು ಕೂಡ ಈಗ ಹಿಂಸೆಯೆನಿಸುತ್ತಿತ್ತು. +"ದೇವರೇ ಕಾಪಾಡ್ಬೇಕು ! +ಸ್ವಲ್ಪ ದಿನ ನೀವಿಬ್ರೂ ಹೊರ್ಗಡೆ ತಿರ್ಗಾಡಿ ಬನ್ನೀಂತ ಹೇಳಿದರೆ ಕೇಳ್ಲಿಲ್ಲ. +ಹೋಗ್ಲಿ, ನೀನು ಮನೆ ಬದಲಾಯಿಸ್ಬೇಕೂಂತ ಇರೋ ಸುದ್ಧಿ ನಿಜನಾ ? +ಯಾಕೆ ಈ ತರಹ ಯೋಚಿಸ್ತಿ ತಂಗಿಯತ್ತ ಒಮ್ಮೆ ನೋಟ ಹರಿಸಿ "ಸಧ್ಯಕ್ಕೆ ಅದ್ಬಿಟ್ಟು ಬೇರೆ ದಾರಿ ಇಲ್ಲ. +ಗಿಣ್ಣು ಮಾಡಿದೇಂತ ನೀರದ ಅಮ್ಮ ಹೇಳಿ ಕಳಿಸಿದ್ದು. +ಇವ್ಳು ಕುಣಿಯುತ್ತ ಹೋದ್ಲು. +ನಾನು ಹೋಗ್ಲಿಲ್ಲ ಅನ್ನೋ ಕೋಪ ಬೇರೆ. +ಮೂರ್ಹೊತ್ತು ಅವ್ಳಿಗೆ ಇದೇ ಆಗಿ ಹೋಯ್ತು. +ಆಗ ಅಲ್ಲಿಂದ ಇಲ್ಲಿಗೆ ಹೋಗಿ ಬರ್ತಾ ಇದ್ದು. +ಈಗ ಇಲ್ಲಿಂದ ಅಲ್ಲಿಗೆ ಓಡ್ತಾಳೆ. +ನಂಗೆ ಹೇಳಿ ಸಾಕಾಯ್ತು" ವಿವರಿಸಿದ. +"ನೀನು ಹೇಳೋದು ಸರಿ. +ಮನೆ ಬದಲಾಯಿಸೋದ್ರಿಂದ ಎಷ್ಟು ಹಿಂಸೆ ಆಗುತ್ತೆ ಅಪ್ಪನಿಗೆ ಗೊತ್ತಾ ? +ಈ ವಯಸ್ಸಿನಲ್ಲಿ ನಾವು ಸುಖ ಕೊಡದಿದ್ರೂ ದುಃಖ ಕೊಡ್ಬಾರ್ದು. +ಹೇಗೂ ಒಂದು ನಿರ್ಧಾರಕ್ಕೆ ಬಂದಿದ್ದೀಯ. +ಇಲ್ಲಿ,ನಾನು ಅಪ್ಪ ಇದ್ಯೋತೀವಿ. +ನೀನು ನೀರದ ಬಾಡ್ಗೆ ಮನೆಯಲ್ಲಿರಿ. ಅತ್ಯುತ್ತಮ ಸಲಹೆಯನ್ನ ನೀಡಿದಳು. +ಅವನ ಮುಖ ವಿವರ್ಣವಾಯಿತು "ವಾಟ್‌,ಬರೀ ನಾವಿಬ್ರೂ ಬೇರೆ ಹೋಗೋದಾ ? ಇಂಪಾಜಿಬಲ್‌. . . ಅಂಥ ಯೋಚ್ನೆ ಎಂದೂ ಮಾಡೋಲ್ಲ" ಸಿಡಿದ. +ಅವನ ಮನಸ್ಥಿತಿ ಅರ್ಥವಾದರೂ ಅವಳೇನು ಮಾಡುವಂತಿರಲಿಲ್ಲ. +ಈಗ ಅವಳಿಗೆ ನೀರದ ತೀರಾ ಮೂರ್ಖಳಾಗಿ ಕಂಡಳು. +ಮರುದಿನ ಇವಳು ಬಸ್‌ ಸ್ಟಾಪ್‌ನಲ್ಲಿ ನಿಂತಿದ್ದಾಗ ರಸ್ತೆಯಲ್ಲಿ ಓಡಾಡಿದ ಕಾರು ಒಂದು ಪಕ್ಕಕ್ಕೆ ಹೊರಳಿ ಪುಟ್‌ಪಾತ್‌ನ ಕಲ್ಲಿಗೆ ತಗುಲಿ ನಿಂತಾಗ ಕ್ಯೂನಲ್ಲಿದ್ದ ಕೆಲವರು ಓಡಿದರು ಅತ್ತ. +ಚಾರುಲತ್ತ ಅತ್ತ ಧಾವಿಸಿದಳು. +ಅದಕ್ಕೆ ಕಾರಣವಿತ್ತು. +ಅದು ಯುಗಂಧರ್‌ ಕಾರು. +ಮುಖವೆಲ್ಲ ಬೆವರಿನಿಂದ ತೊಯ್ದ ಯುಗಂಧರ್‌ ಬಾಧೆ ಪಡುತ್ತ ಸೀಟಿಗೆ ಪೂರ್ತಿ ಒರಗಿದ್ದನ್ನ ನೋಡಿ ಗಾಬರಿಗೆ ಅವಳೆದೆ ನಿಂತಂತಾಯಿತು. +ಬೇರೆಯವರ ಸಹಾಯದಿಂದ ಅವರನ್ನು ನರ್ಸಿಂಗ್‌ಹೋಂಂಗೆ ಸಾಗಿಸಿದ್ದು ಪ್ರಯಾಸಪಡುತ್ತ. +ಇನ್‌ಟೆನ್ಸಿವ್‌ ಕೇರ್‌ಗೆ ಒಯ್ದರು ಪೇಷಂಟ್‌ನ. +ಬಲವಾದ ಹೃದಯಾಘಾತಕ್ಕೆ ತುತ್ತಾಗಿದ್ದರು. +ಕೆಲವು ನಿಮಿಷಗಳು ತಡವಾಗಿದ್ದರು ಅವರು ಪರಲೋಕವಾಸಿಯಾಗಿ ಬಿಡುತ್ತಿದ್ದರು. +ಏನು ಪರ್ದಾಗಿಲ್ಲ !ನೀವೇನಾಗ್ಬೇಕು ?" +ಡಾಕ್ಟರ್‌ ಪ್ರಶ್ನಿಸಿದಾಗ "ನಾನು ಅವ್ರ ಸೊಸೆ" ಎಂದಳು. +"ದಟ್ಸ್‌ ಗುಡ್‌, ಅವುರು ಇನ್ನು ಪೂರ್ತಿ ಅಪಾಯದಿಂದ ಪಾರಾಗಿಲ್ಲ. +ಅವ್ರ ಹೆಂಡ್ತಿ, ಮಗನಿಗೆ ಇನ್‌ಫರ್ಯೇಷನ್‌ ಕೊಟ್ಟು ಕಳ್ಸಿ" ತಿಳಿಸಿದರು. +ನಿರಂತರವಾಗಿ ಹತ್ತಾರು ಸಲ ಫೋನ್‌ ಮಾಡಿದರೂ ಮನೆಯಲ್ಲಿ ಯಾರೂ ಎತ್ತುತ್ತಿರಲಿಲ್ಲ. +ಅವರೆಲ್ಲ ಎಲ್ಲಿ ಹೋದರು. +ಮೂರ್ತಿಗೂ ಮಾಡಿದಳು. +ಅಲ್ಲು ಅದೇ ರೆಸ್ಪಾನ್ಸ್‌. +ದಿಕ್ಕು ತೋಚದೇ ಅಲ್ಲೇ ಉಳಿದು ಕಡೆಗೆ ಅಣ್ಣನನ್ನ ಸಂಪರ್ಕಿಸಿದಳು. +“ಮಾವನೋರಿಗೆ ಹಾರ್ಟ್‌ ಅಟ್ಯಾಕ್‌ ಆಗಿದೆ. +ಮುರುಗನ್‌ ನರ್ಸಿಂಗ್‌ಹೊಂಂಗೆ ಸೇರಿಸಿದ್ದೀನಿ. +ಕಾರ್ಡಿಯಾಲಜಿ ವಿಭಾಗದ ಇನ್‌ಟೆನ್ಸಿವ್‌ ಕೇರ್‌ನಲ್ಲಿಟ್ಟಿದ್ದಾರೆ. +ಏನು ಗೊತ್ತಾಗ್ತಾ ಇಲ್ಲ "ಯಾವ ಮಾವ ?" ಅವನಿಗೇನು ಅರ್ಥವಾಗಲಿಲ್ಲ. +ಉಂಡಾಡಿಯಾಗಿ ತಿರುಗುವ ಅವನ ಸೋದರ ಮಾವ ಎಂದೋ ಒಮ್ಮೆ ಬಂದು ಹೋಗುವುದಿತ್ತು. +ಯುಗಂಧರ್‌ ಅವನ ಕಲ್ಪನೆಯಲ್ಲಿ ಕೂಡ ಮೂಡಲಿಲ್ಲ. +"ಯುಗಂಧರ್‌ ಮಾರಾಯ ! +ಅವ್ರು ಕಾರಿನಲ್ಲಿ ಕುಸಿದಾಗ ನಾನು ಬಸ್‌ಸ್ಟಾಪ್‌ನಲ್ಲಿದ್ದೆ. +ನೀನು ಕೂಡಲೇ ಬಾ" ಫೋನಿಟ್ಟು ಮುಖದ ಬೆವರನ್ನುತೊಡೆದುಕೊಂಡಳು. +ಡಾ|।ನವೀನ್‌ ಬರುವ ವೇಳೆಗೆ ಮಧ್ಯಾಹ್ನವೇ ಆಯಿತು. +ಅವನ ಸ್ಥಿತಿ ನರ್ಸಿಂಗ್‌ ಹೋಂನಲ್ಲಿ ತುಂಬ ಸೂಕ್ಷ ವಾಗಿತ್ತು. +ಮತ್ತೆ ಮತ್ತೆ ಯುಗಂಧರ್‌ ಮನೆಗೆ ಮತ್ತು ಮೂರ್ತಿಗೆ ಫೋನ್‌ ಮಾಡಿಸೋತು ಹೋದಳು. +ರಿಂಗ್‌ ಆದರೂ ಯಾರು ಫೋನ್‌ ಎತ್ತುತ್ತಿರಲಿಲ್ಲ. +ಡಾ|।ನವೀನ್‌ ಕಾರ್ಡಿಯಾಲಜಿಸ್ಟ್‌ ಡಾ||ಶರ್ಮ ಅವರನ್ನು ಭೇಟಿಮಾಡಿ ಪೇಷಂಟ್‌ನ ಸ್ಥಿತಿಯನ್ನು ಅರಿತು ಬಂದ ನಂತರವೇ ಕೇಳಿದ್ದು. +"ಅವ್ರ ಮನೆಯವರಾರು ಇಲ್ವ ?"ಫೋನ್‌ ಮಾಡಿ ಮಾಡಿ ಸಾಕಾಯ್ತು. +ಫೋನ್‌ನ ಪ್ರಾಬ್ಲಮ್ಮೋ, ಅಥವಾ ಮನೆಯಲ್ಲಿ ಯಾರು ಇಲ್ವೋ ? +ಅವ್ರಿಗೂ ಫೋನ್‌ ಮಾಡ್ದೆ. +ಏನು ಪ್ರಯೋಜನವಾಗ್ದಿಲ್ಲ" ಎಂದು ಹಣೆಗೆ ಕೈಯೊತ್ತಿದಳು. +"ಇನ್ನ ಅವರು ಅನ್‌ಕಾನ್‌ಷಿಯಸ್‌ನಲ್ಲೇ ಇದ್ದಾರೆ. +ನಾನೇ ಮನೆಗೆ ಹೋಗಿ ವಿಷ್ಯ ತಿಳ್ಸಿ ಬರ್ತೀನಿ. +ಸಧ್ಯಕ್ಕೆ ಇಲ್ಲೇ ಇರು. +ಫೋನ್‌ ಮಾಡಿ ಅಪ್ಪನ್ನೋ,ನೀರದನೋ ಕರೆಸ್ಕೋ" ಸ್ಕೂಟರ್‌ ಹತ್ತಿದ. +ನವೀನ್‌ ಯುಗಂಧರ್‌ ಮನೆಯ ಮುಂದೆ ಇಳಿದಾಗ ಗೇಟುಗೆ ಬೀಗ ಹಾಕಿತ್ತು. +ಅಂದರೆ ಅವರುಗಳು ಇಲ್ಲ. +ಎದುರು ಮನೆಯವರು ಕೂಡ ಇರಲಿಲ್ಲ. +ಪಕ್ಕದ ಮನೆಯ ಕಾಲಿಂಗ್‌ ಬೆಲ್‌ ಒತ್ತಿದ. +"ಓ, ನೀವು ಚಾರುಲತ ಅವ್ರ ಅಣ್ಣ ಅಲ್ವಾ ? +ನೀವು ವಿವಾಹವಾಗೋ ಮುನ್ನ ಒಂದಿಷ್ಟು ಯೋಚಿಸಬೇಕಿತ್ತು. +ನಿಮ್ಗೆ ತಂಗಿಯ ಭವಿಷ್ಯಕ್ಕಿಂತ ಪ್ರೇಮನೇ ದೊಡ್ಡದಾಗಿ ಹೋಯ್ತು" ಈ ಪ್ರವರದೊಂದಿಗೆ ಆ ಮನೆಯೊಡತಿ ಇವನನ್ನು ಎದುರುಗೊಂಡಿದ್ದು. +ಮುಷ್ಟಿ ಬಿಗಿ ಹಿಡಿದು ಮುಖದ ಮೇಲೆ ಗುದ್ದಿದಂತಾಯಿತು ಅವನಿಗೆ. +ಚೇತರಿಸಿಕೊಳ್ಳಲು ಕ್ಷಣಗಳು ಬೇಕಾಯಿತು. +"ಸಾರಿ ಫಾರ್‌ ದಿ ಡಿಸ್ಟರ್ಬ್‌. +ಯುಗಂಧರ್‌ ಮನೆಯವರಾರು ಕಾಣ್ತಾ ಇಲ್ವಲ್ಲ !"ವಿಚಾರಿಸಿದ ಬಿಳುಪೇರಿ. +“ನೆನ್ನೆ ಸತ್ಯನಾರಾಯಣ ಪೂಜೆಗೆ ಹೋಗೋದಿದೇಂತ ಅಂದ್ರು ಬಹುಶಃ ಅಲ್ಲಿಗೆ ಹೋಗಿರ್ತಾರೆ. +ಈಚೆಗೆ ಅವ್ರಿಗೆ ದೇವರು, ಪೂಜೆಯೆಂದರೆ ತುಂಬಅಕ್ಕರೆ” ಉತ್ತರದ ಜೊತೆ ಒಂದಿಷ್ಟು ಬೇಡದ ವಿಷಯವನ್ನ ಕೂಡ ಹೇಳಿದರು +"ಎಲ್ಲಿಗೇಂತ ಗೊತ್ತಾ ?" ಕೇಳಿದ. +"ಗೊತ್ತಿಲ್ಲ, ಹೇಳಿದಷ್ಟು ಮಾತ್ರ ಕೇಳೋದು ನನ್ನ ಸ್ವಭಾವ. +ನೀವು ಬಂದಿದ್ದೇನು ?" ಕುತೂಹಲ ತೋರಿದರು. +ಏನು ಹೇಳುವುದು ಬೇಡವೆನಿಸಿತು ಡಾ ನವೀನ್‌ಗೆ. +ಸುಮ್ನೆ ನೋಡಿ ಹೋಗೋಣಾಂತ ಬಂದೆ. +ನಾಳೆ ಬಂದು ನೋಡ್ತೀನಿ ಸ್ಕೂಟರ್‌ನತ್ತ ಹೊರಟ. +ಅವನಿಗೆ ಈಗ ಏನು ಮಾಡುವುದೋ ದಿಕ್ಕು ತೋಚಲಿಲ್ಲ. +ಅವನ ಸ್ಕೂಟರ್‌ ನರ್ಸಿಂಗ್‌ ಹೋಂನತ್ತ ಧಾವಿಸಿತು. +ತೀರಾ ಹತ್ತಿರದವರು ಇರಬೇಕೆನಿಸಿತು. +ಮಾರ್ಗ ಮಧ್ಯದಲ್ಲಿ ಇಳಿದು ಮೂರ್ತಿಯ ಮನೆಗೆ ಫೋನ್‌ಹಚ್ಚಿದ. +ನಂತರ ಕಾಲೇಜಿನಲ್ಲಿ ಸಿಕ್ಕ ಸುದ್ದಿಯ ಪ್ರಕಾರ ಅವನು ಸ್ಟೂಡೆಂಟ್ಸ್‌ ಕರೆದುಕೊಂಡು ಟೂರ್‌ಗೆ ಹೋಗಿದ್ದ. +ವಿಷಯನ ತಂಗಿಗೆ ಮುಟ್ಟಿಸಿ ಸುತ್ತಲೂ ನೋಟ ಹರಿಸಿದ. +"ಮನೆಯಲ್ಲಿ ಯಾರು ಫೋನ್‌ ತಗೋತಾ ಇಲ್ಲ. +ಅಪ್ಪ ಇದ್ದರೋ,ಇಲ್ವೋ ?"ಎಂದಳು ಸಪ್ಪಗೆ. +ಹಣೆ ಗಟ್ಟಿಸಿಕೊಳ್ಳಬೇಕೆನಿಸಿತು ಡಾ|| ನವೀನ್‌ಗೆ. +ನೀರದಾಗೆ ಮೃದುವಾಗಿ,ಖಾರವಾಗಿ ಹೇಳಿ ಸಾಕಾಗಿದ್ದ. +ಅವಳ ಸ್ವಭಾವದಲ್ಲಿ ಕಿಂಚಿತ್‌ ಬದಲಾವಣೆ ಇಲ್ಲ. +ಯಾರು ಇಲ್ಲದಿದ್ದರೇ ಅವಳಂತು ಮನೆಯಲ್ಲಿ ಇರುತ್ತಿರಲಿಲ್ಲ. +“ಅವ್ಳಿಗೆ ಹೇಳಿ ಸಾಕಾಗಿದೆ. +ಅನ್ನೋದು ನೂರಕ್ಕೆ ನೂರರಷ್ಟು ನಿಜ. +ಆಗ ಎಷ್ಟು ಇಷ್ಟವಾಗಿದ್ದು ಅಂದರೇ, ಹೇಗೆ ಹೇಳ್ಲಿ ? +ಈಗಾಗ್ಲೇ ಅವ್ಳ ಸ್ವಭಾವ ಬೇಸರ ಬಂದ್ಹೋಗಿದೆ. +ಸುಮ್ನೆ ಮದ್ವೆ ಆಗೋ ಬದಲು ಪ್ರೇಮಿಗಳಾಗಿಯೇ ಇದ್ಬಿಟ್ಟಿದ್ದರೇ ಚೆನಾಗಿತ್ತು. +ಅದೆಲ್ಲ ಸವಿ ಸವಿಯಾಗಿ ಇರ್ತಾಇತ್ತು” ಜಿಗುಪ್ಸೆಗೊಂಡು ನುಡಿದ. +ಆದರೆ ಈ ವಿಷಯವಾಗಿಯೇ ತಲೆ ಕೆಡಿಸಿಕೊಳ್ಳುವಂತಿರಲಿಲ್ಲ. +ಡಾಕ್ಟರ್‌ಗಳ ಒಂದು ಹಿಂಡು ಯುಗಂಧರ್‌ ಸುತ್ತಮುತ್ತ ಇತ್ತು. +ಅವರ ಮನೆಯವರಾರು ಇಲ್ಲದಿದ್ದೊಂದು ಚಿಂತೆ. +“ಅಣ್ಣ, ಕಾರು ಅಲ್ಲೇ ಇತ್ತು” ಎಂದಳು ನೆನಪಿಸಿಕೊಂಡು. +“ಅದ್ನ ಆಮೇಲೆ ನೋಡ್ಕೋಬಹ್ಹು. +ಅವ್ರೆಲ್ಲ ಎಲ್ಹೋದ್ರು” ಹಣೆಗೆ ಕೈಹಚ್ಚಿದ. +"ಸತ್ಯನಾರಾಯಣ ಪೂಜೆಗೆ ಹೋದೋರು, ಸಂಜೆಗಾದ್ರೂ ಬರ್ತಾರೆ. +ಡೋಂಟ್‌ ವರಿ. +ನೀನು ಇಲ್ಲೇ ಇರು" ಎಂದವನು ಮತ್ತೆ ಡಾಕ್ಟರೊಂದಿಗೆ ಡಿಸ್ಕಸ್‌ ಮಾಡಿ ಬಂದ "ಪ್ರಜ್ಞೆ ಬರೋವರ್ಗೂ ಏನು ಹೇಳೋಕ್ಕಾಗೋಲ್ಲ ಅಂತಾ ಇದ್ದಾರೆ. +ಈ ತರಹದ ಕೇಸ್‌ಗಳೆಲ್ಲ ಹಾಗೇ. +ಒಂದಿಷ್ಟು ಕಾರು ನೋಡ್ಕೊಂಡ್‌ ಬಂದ್ಬಿಡ್ತೀನಿ. +ಅಲ್ಲೇ ಇದ್ದರೇ ಅದ್ನ ಅವ್ರ ಮನೆ ಮುಂದೆ ನಿಲ್ಲಿಸೋ ಏರ್ಪಾಟು ಮಾಡ್ಬರ್ತಿನಿ. +ನಿಮ್ಮ ಆಫೀಸ್‌ಗೆ ಫೋನ್‌ ಮಾಡಿದ್ಕಾ?"ನಾಲ್ಕು ಹೆಜ್ಜೆ ಮುಂದೆ ಹೋದವನು ಬಂದು ಪ್ರಶ್ನಿಸಿದ. +"ಮಾಡ್ತೀನಿ, ಆದಷ್ಟು ಬೇಗ್ಬಂದ್ಬಿಡು" ಎಂದಳು. +ಅವಳ ಕಣ್ಣುಗಳಲ್ಲಿ ನೀರಿತ್ತು "ಏಯ್‌ ಅಳೋಂಥದ್ದು ಏನಾಗಿದೆ ? +ಇದಿನ್ನ ಮೊದಲ ಅಟ್ಕಾಕ್‌ ತಾನೇ ? +ಅಂಥ ಡೇಂಜರ್‌ ಏನಲ್ಲ" ಸಂತೈಯಿಸಿ ಹೋದವನು ಐದು ನಿಮಿಷದಲ್ಲಿ ಹಿಂದಿರುಗಿ "ಅದು ಎಲ್ಲಾದ್ರೂ ಹಾಳಾಗ್ಲಿ. +ಅವ್ರುಗಳು ಯಾರಾದ್ರೂ ಬರೋವರ್ಗೂ ನಾನು ಇಲ್ಲಿ ಇರ್ತೀನಿ. +ಈಗ್ಭಂದೆ. . . ” ಮತ್ತೆ ಹೋದ. +ಪೂಜಾ ವಿಷಯ ಬಂದ ಮೇಲೆ ಅವರು ಬದಲಾಗಿದ್ದರೂ, ಅದರ ಹಿಂದಿನ ದಿನಗಳಲ್ಲಿ ಯುಗಂಧರ್‌ ಸೊಸೆಯನ್ನು ಮಗಳಿಗಿಂತ ಹೆಚ್ಚಾಗಿ ನೋಡಿಕೊಂಡರು. +“ಇಲ್ಲಿ ಅತ್ತೆ, ಮಾವ ಇದ್ದಾರೆ ಅಂತ ಸಂಕೋಚವೇನು ಇಟ್ಕೋಬೇಡ. +ಅಲ್ಲಿ ನಿನ್ತಂದೆ ಮನೆಯಲ್ಲಿ ಹೇಗೆ ಇರ್ತೀಯೋ ಹಾಗೆ ಇರು. +ನಂಗೆ ಪೂಜಾ,ನೀನು ಒಂದೇ” ಮನಃದುಂಬಿ ಇವಳು ಹೋದ ಹೊಸದರಲ್ಲಿ ಹೇಳಿದ ಮಾತುಗಳು. +"ಚಾರು. . . . . ಬಾ ಇಲ್ಲಿ" ಬಾಯಿ ತುಂಬ ಕರೆಯುತ್ತಿದ್ದ ಯುಗಂಧರ್‌ ಅವಳಿಗೆ ತುಂಬ ಇಷ್ಟವಾಗಿದ್ದರು. +ಚಾರುಲತ ಅತ್ತು ಕಣ್ಣೀರು ತೊಡೆದುಕೊಂಡಳು. +ನೆನಪಾದ ದೇವರುಗಳನ್ನೆಲ್ಲ ಪ್ರಾರ್ಥಿಸಿದಳು, ಅವರನ್ನ ಉಳಿಸಿಕೊಡಲು. +ಪೂಜಾಗೆ ಇದರಿಂದ ಎಂಥ ಷಾಕ್‌ ಆಗಬಹುದು ? +ತಲೆ ಕೆಟ್ಟಂತಾಯಿತು ಅವಳಿಗೆ. +ಸಂಜೆಯ ವೇಳೆಗೆ ಯುಗಂಧರ್‌ ದೇಹ ಸ್ಥಿತಿಯಲ್ಲಿ ಅಂಥ ಸುಧಾರಣೆಯೇನುಕಾಣದಿದ್ದರೂ, ಮೂರ್ತಿಯ ತಾಯಿ ಫೋನ್‌ನಲ್ಲಿ ಸಿಕ್ಕರು. +“ಅತ್ತೆ, ದಯವಿಟ್ಟು ಫೋನ್‌ ಇಡ್ಬೇಡಿ. +ಮಾವ ಒಂದಿಷ್ಟು ಎಡವಿ ಪೆಟ್ಟು ಮಾಡೊಂಡಿದ್ದಾರೆ. +ನೀವು ಮುರುಗನ್‌ ನರ್ಸಿಂಗ್‌ಹೋಂಗೆ ಬನ್ನಿ. +ಗಾಬ್ರಿ ಯಾಗೋ ಅಗತ್ಯವೇನಿಲ್ಲ” ಹೇಳಿ ಅವರ ಪ್ರತಿಕ್ರಿಯೆಗಾಗಿ ಕಾದಳು. +"ಯಾರು ಮಾತಾಡ್ತಾ ಇರೋಡು ?" ಆಕೆಯ ದನಿ ನಡುಗಿತು. +ಚಾರುಲತ ಮಾತಾಡ್ತಾ ಇರೋದು. +ಅದೇ ಮುರುಗನ್‌ ನರ್ಸಿಂಗ್‌ಹೊಂಗೆ ಬನ್ನಿ. +ಆತಂಕ ಪಡೋಂಥದೇನಿಲ್ಲ. +ಕಾರಿನಿಂದ ಇಳಿಯೋವಾಗ ಆದ ಪೆಟ್ಟಷ್ಟೆ" ಎಂದಳು. +“ನಿಂಗೆ ಅವ್ರೆಲ್ಲಿ ಸಿಕ್ಕರು ?” ಆಕೆಯ ಸ್ವರವೇ ಉಡುಗಿತು. +“ಅದೆಲ್ಲ ಆಮೇಲೆ ಹೇಳ್ತೀನಿ. +ಪೂಜಾ ಬೇಕಾದರೇ ಮನೆಯಲ್ಲೇ ಇರ್ಲಿ. +ನೀವೊಬ್ರು. . . ಬನ್ನಿ” ಫೋನಿಟ್ಟಳು. +ಅವಳಿಗೆ ಮೈ ಮೇಲೆ ಬಿಸಿ ನೀರು ಸುರಿದುಕೊಂಡ ಅನುಭವವಾಯಿತು. +ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬದುಕಿದ ಜೀವಗಳು. +ಮೃಣಾಲಿನಿ ಫೋನಿಟ್ಟು ಮಗಳನ್ನು ತಬ್ಬಿಕೊಂಡು ಬಿಕ್ಕಳಿಸಿದರು "ಅವುರು ಪೂಜೆಯ ವೇಳೆಗೆ ಬರದಿದ್ದಾಗಲೇ ಗಾಬ್ರಿ. +ಏನಾಗಿದೆಯೋ, ಏನೋ" ಎಂದು ತಾಯಿ ಮಗಳು ಒಬ್ಬರನ್ನೊಬ್ಬರು ಸಮಾಧಾನ ಪಡಿಸಿಕೊಂಡು ಬೀಗ ಹಾಕುವ ವೇಳೆಗೆ ಪಕ್ಕದ ಮನೆಯಾಕೆ ಕಾಂಪೌಂಡ್‌ ಬದಿಗೆ ಬಂದು "ಎಲ್ಹೋಗಿದ್ರಿ ? +ನಿಮ್ಮ ಸೊಸೆ ಅಣ್ಣ ಹುಡ್ಕಿಕೊಂಡ್ಬಂದಿದ್ದ" ಅಂತು ವಿಷಯ ಮುಟ್ಟಿಸಿದ ತೃಪ್ತಿ ಅವರಿಗೆ. +ಸರ್ರೆಂದು ಕಾಂಪೌಂಡ್‌ ಗೋಡೆಯ ಬಳಿ ಬಂದ ಮೃಣಾಲಿನಿ, ಹಾರುವ ಎದೆಯ ಮೇಲೆ ಕೈಯಿಟ್ಟುಕೊಂಡು "ಏನಾದ್ರೂ ಹೇಳಿದ್ದಾ ?"ಕೇಳಿದರು. +"ಏನು ಹೇಳಿಲ್ಲ ! +ನಾನು ಛೀಮಾರಿ ಹಾಕ್ದೇ ಬಿಡಿ. +ಯಾವ ಮುಖ ಇಟ್ಕೊಂಡ್‌ ನಿಮ್ಮ ಮನೆಗೆ ಬಂದ್ನೋ" ಎಂದರು ಆಕೆ. +ಮೃಣಾಲಿನಿ ಮುಖ ಮತ್ತಷ್ಟು ಬಿಳುಚಿಕೊಂಡಿತು. +ಯುಗಂಧರ್‌ಗೆ ಬರೀ ಪೆಟ್ಟಾಗಿರಲಾರದು. +ಕೆಟ್ಟ ಕೆಟ್ಟ ಯೋಜನೆಗಳಿಂದ ಕುಸಿದಾಗ ಪೂಜಾ ಪ್ರಯಾಸದಿಂದ ಎಬ್ಬಿಸಿಕೊಂಡು ಗೇಟಿನ ಬಳಿಗೆ ಬರುವ ವೇಳೆಗೆ ಆಟೋ ನಿಂತಿತ್ತು. +ಅದರ ಪಕ್ಕದಲ್ಲಿ ಸ್ಕೂಟರ್‌ ಮೇಲಿದ್ದ ಡಾ॥। ನವೀನ್‌ ಮೆಲ್ಲಗೆ ಇಳಿದು ಇವರತ್ತ ಬಂದ. +"ಆಟೋ ಹತ್ಕೊಳ್ಳಿ. +ಏನು ಗಾಬ್ರಿ ಪಡೋಂಥದ್ದಲ್ಲ " ಎಂದ ಮೆಲ್ಲಗೆ. +ಪೂಜಾನ ನೋಡಿ ಅವನ ಜಂಘಾಬಲವೇ ಉಡುಗಿ ಹೋಗಿತ್ತು. +ಗುರುತು ಸಿಗದಷ್ಟು ಬಡವಾಗಿದ್ದಳು. +ಗುಲಾಬಿ ಹೂವಿನಂತೆ ನಳನಳಿಸುತ್ತಿದ್ದ ಹೆಣ್ಣು ಬಿಸಿಲಿಗೆ ಕಮರಿ ಹೋದಂತೆ ಕಂಡಳು. +ಸ್ಕೂಟರ್‌ ಹತ್ತಿದವನೆ ಹೊರಟುಬಿಟ್ಟ. +ನರ್ಸಿಂಗ್‌ ಹೋಂ ತಲುಪೋವರೆಗೂ ಹಿಂದಿರುಗಿ ಕೂಡ ನೋಡಲಿಲ್ಲ. +ಒಂದು ಹೆಣ್ಣಿನ ಸ್ಥಿತಿ ಇಷ್ಟೊಂದು ದಾರುಣ - ಅದಕ್ಕೆ ತಾನು ಕಾರಣ. +ಡಾ|| ನವೀನ್‌ ಮೈಯೆಲ್ಲ ಕಂಪಿಸುತ್ತಿತ್ತು. +ದಢಬಢ ಬಂದವನೆ “ನಿನ್ನತ್ತೆ ಪೂಜಾ ಬರ್ತಾ ಇದ್ದಾರೆ. +ಹೇಗೆ ಹ್ಯಾಂಡಲ್‌ಮಾಡ್ತೀಯೋ ನೋಡು. +ಸಧ್ಯಕ್ಕೆ ನಾನು ಇಲ್ಲಿದ್ರೂ ನಿನ್ನ ಕೈ ಗೆ ಸಿಗೋಲ್ಲ” ಹೊರಟೇ ಬಿಟ್ಟ ಹಿಂದಿರುಗಿ ಕೂಡ ನೋಡದೇ. +ಹತ್ತು ನಿಮಿಷದಲ್ಲಿ ಮೃಣಾಲಿನಿ, ಪೂಜಾ ಬಂದಾಗ ತಾನೇ ಎದುರು ಗೊಂಡುಪಕ್ಕಕ್ಕೆ ಕರೆದೊಯ್ದು ಕೂಡಿಸಿ ವಿಷಯ ತಿಳಿಸಿದಳು. +"ಅಂಥ ಪ್ರಮಾದಕರವಾದ ಅಟ್ಯಾಕ್‌ ಅಲ್ಲಾಂತ ಡಾಕ್ಟ್ರ ಹೇಳ್ತಾ ಇದ್ದಾರೆ " ಎಂದಳು ಉಗುಳು ನುಂಗಿ. +ಆಕೆ ಪ್ರಜ್ಞೆ ತಪ್ಪಿದರೂ ತಕ್ಷಣ “ಅಮ್ಮನ ಹಿಡ್ಕೋ,ಹೋಗಿ ಡಾಕ್ಟುನ ಕರ್ಕಂಡ್‌ ಬರ್ತಿನಿ” ಓಡಿದಳು. +ಬಂದ ಸಿಸ್ಟರ್‌ ಆಕೆಯನ್ನು ಬೆಡ್‌ಗೆ ಸಾಗಿಸಿದರು. +"ಬಿ. ಪಿ. ಜಾಸ್ತಿಯಾಗಿದೆ. +ಡೋಂಟ್‌ ವರೀ, ಷಾಕ್‌ ನ್ಯೂಸ್‌, ಎಲ್ಲರ ಸ್ಥಿತಿನು ಇಷ್ಟೆ" ಇಂಜಕ್ಟನ್‌ ಚುಚ್ಚಿದ ಸಿಸ್ಟರ್‌ ಉಸುರಿ ಹೋದಾಗ ಅವಳಿಗೆ ದಿಕ್ಕೇ ತೋಚದಂತಾಯಿತು. +ನಿಂತ ಪೂಜಾ ಜೀವವಿಲ್ಲದ ಗೊಂಬೆಯಂತೆ ಕಂಡಳು. +ಚಾರುಲತಳ ಕರುಳು ಕಿತ್ತು ಬಾಯಿಗೆ ಬಂದಂತಾಯಿತು. +ಹಿಡಿದು ಬೆಡ್‌ ಮೇಲೆ ಕೂಡಿಸಿ "ಬರೀ ಷಾಕ್‌ ಅಷ್ಟೆ, ಪೂಜಾ. +ಗಾಬ್ರಿಯಾಗೋಂಥದೇನಿಲ್ಲ " ಹೇಳಿದಳು. +ಮೊದಲು ಮೌನವಹಿಸಿದ್ದ ಪೂಜಾ ಭೋರೆಂದು ಅಳತೊಡಗಿದಾಗ ದಿಕ್ಕು ತೋಚದಂತಾಯಿತು ಚಾರುಲತಗೆ. +ಇವಳು ಇಲ್ಲಿ ಇರುವುದು ಎರಡು ಕಡೆಯ ಅಪಾಯವಾಗಿ ಕಂಡಿತು. +"ಪ್ಲೀಸ್‌ ಪೂಜಾ, ಅಮ್ಮನಿಗೆ ಏನು ಆಗಿಲ್ಲ. +ನೀನು ಧೈರ್ಯಗೆಟ್ಟರೆ ಕಷ್ಟವಾಗುತ್ತೆ" ತಲೆ ಸವರಿ ಹೊರಗೆ ಬಂದವಳೇ ಡಾ॥। ನವೀನ್‌ನ ಹುಡುಕಿಕೊಂಡು ಹೋಗಿ "ಅಣ್ಣ, ಪೂಜಾ ತುಂಬ ವೀಕಾಗಿ ಕಾಣ್ತಾಳೆ. +ಒಂದು ಪೆಥೆಡಿನ್‌ ಕೊಡ್ಸಿದರೇ ಹೇಗೆ ?"ಸಲಹೆ ಕೇಳಿದಳು. +ಡಾ|| ನವೀನ್‌ ಅವಳ ಜೊತೆಯಲ್ಲಿ ಬಂದವನು ಪೂಜಾನ ಎಬ್ಬಿಸಿ "ಸ್ಪೆಷಲ್‌ವಾರ್ಡ್‌ ಖಾಲಿ ಇದೆ. +ಡಾಕ್ಟುನ ಕನ್‌ಸಲ್ಟ್‌ ಮಾಡ್ತೀನಿ. +ನೀನು ಇವ್ರುನ ನೋಡ್ಕೋ" ಹೇಳಿ ಕರೆದೊಯ್ದ. +ಮೃಣಾಲಿನಿಗೆ ಎಚ್ಚರವಾದ ಮೇಲೆ ಒಂದೇ ಸಮ ವಾಂತಿ. +ಮೊದ ಮೊದಲು ಬೊಗಸೆಯಲ್ಲಿಡಿದು ಚಾರುಲತ ಹೊರ ಚೆಲ್ಲಬೇಕಾಯಿತು. +ಇವಳ ಸೀರೆ, ಮೈ ಮೇಲೆಲ್ಲ ವಾಂತಿ. +ಅಂತು ಯುಗಂಧರ್‌ಗಿಂತ ಈಕೆಯ ಸೇವೆ ಮಾಡಿದ್ದೇ ಹೆಚ್ಚಾಯಿತು. +ಮರುದಿನ ಸಂಜೆ ಯುಗಂಧರ್‌ಗೆ ಪ್ರಜ್ಞೆ ಬಂದಾಗ ಮೃಣಾಲಿನಿ ಸ್ವಲ್ಪ ಚೇತರಿಸಿಕೊಂಡಿದ್ದರು. +ಸೊಸೆಯನ್ನು ತಬ್ಬಿಕೊಂಡು ಕಣ್ಣೀರು ಸುರಿಸುತ್ತ “ಅವ್ರಿಗೆ ಏನು ಆಗೋಲ್ಲ ತಾನೇ ?” ಕೇಳಿದ್ದೇ ಕೇಳಿದ್ದು. +“ಇಲ್ಲ, ಖಂಡಿತ ಮಾವನವ್ರಿಗೆ ಏನು ಆಗೋಲ್ಲ. +ಈಗ ತಾನೇ ಜ್ಞಾನ ಬಂದಿದೆ. +ಅವ್ರ ಮುಂದೆ ಅಳ್ಬಾರ್ದು” ಮಂಚದಿಂದ ಎಬ್ಬಿಸಿ ಕರೆದೊಯ್ದರು. +ಹೊರಗಡೆಯ ಕಿಟಕಿಯ ಗ್ಲಾಸ್‌ನಿಂದ ಯುಗಂಧರ್‌ನ ನೋಡಬಹುದಿತ್ತು. +ಕೃತಕ ಉಸಿರಾಟದ ನಳಿಕೆಯ ಸಲೈನ್‌ ತಾಗಾಡುತ್ತಿದ್ದರಿಂದ ಮೃಣಾಲಿನಿಗೆ' ತಡೆಯಲಾಗಲಿಲ್ಲ. +"ಚಾರು, ನಂಗೆ ಭಯ ಆಗ್ತಾ ಇದೆ" ಅತ್ತರು ಅವಳ ಆಸರೆಯಲ್ಲಿ. +"ಯಾಕೆ ಭಯ ಪಡುತ್ತೀರಾ ? +ಮಾವನವುರು ಫಿಪ್ಟಿ ಪರ್ಸೆಂಟ್‌' ಚೇತರಿಸಿಕೊಂಡಿದ್ದಾರೆ. +ಒಂದೆರಡು ದಿನದಲ್ಲಿ ಕರ್ಕಂಡ್‌ ಹೋಗ್ಟಹ್ಹು ಅಂದರಲ್ಲ? +ಧೈರ್ಯ ಹೇಳಿದಳು. +ಅವಳ ಮನದಲ್ಲಿ ಯಾವ ಕಹಿ ಭಾವನೆಯು ಇರಲಿಲ್ಲ,ಕಾರಿಡಾರ್‌ನಲ್ಲಿ ಹಾಕಿದ್ದ ಛೇರ್‌ ಮೇಲೆ ಕುಸಿದ ಮೃಣಾಲಿನಿ “ಮೂರ್ತಿಗೆ ಗೊತ್ತಾಯ್ತ ? +ಮನಸ್ಕತೆಯನ್ನ ಬಲವಾಗಿ ಹೊಡೆದಟ್ಟಿ "ಗೊತ್ತಾಯ್ತು ಬಂದ ಕೂಡ್ಲೇ ಕಳ್ಲಿಕೊಡೀಂತ ಹೇಳ್ದೆ. +ಸುಮ್ನೆ ವಿಷ್ಯ ತಿಳಿದ್ರೆ ಗಾಬ್ರಿಯಾಗ್ಬಾರದಲ್ಲ. +ಹೇಗೂ,ನಾಳಿದ್ದು ಸಾಯಂಕಾಲ ಬರ್ತಾರೇಂತ ತಿಳಿಸಿದ್ರು" ಉದ್ವಿಗ್ಗಳಾಗದೇ ಅತ್ಯಂತ ಸಮಾಧಾನವಾಗಿ ನುಡಿದಿದ್ದು ಪ್ರಯಾಸದಿಂದಲೇ. +ಡಾಕ್ಟರನ್ನು ಭೇಟಿಯಾದಾಗ "ಇನ್ನೇನು ಪ್ರಾಬ್ಲಮ್‌ ಇಲ್ಲ. +ಇಲ್ಲೇ ಉಳಿದ್ರೆ ಪೇಷಂಟ್‌ಗಳಾಗಿ ಬಿಡ್ತಾರೆ ಇವರುಗಳು. +ಮನೆಗೆ ಕರ್ಕೊಂಡ್ಹೋಗಿ. +ನೀವೊಬ್ರು ಇದ್ದರೆ ಸಾಕು'' ಎಂದರು. +ಡಾ|।ನವೀನ್‌ ಕೂಡ ಅದೇ ಸಲಹೆ ಕೊಟ್ಟ “ಹೇಗೂ, ನಾನು ಇಲ್ಲೇ ಇರ್ತೀನಿ. +ಆದರೆ ಯುಗಂಧರ್‌ ಮುಖತಃ ನನ್ನ ನೋಡೋದ್ಬೇಡ. +ಮತ್ತೆ ಎಕ್ಸೈಟ್‌ ಆಗಬಹುದು. +ಪೂಜಾನ ನೋಡಿ ನಂಗೆ ತುಂಬ ಸಂಕಟವಾಯ್ತು. +ಈ ಹಟದ ಹುಡ್ಗಿ ಇಷ್ಟೊಂದು ಅಪಾಯ ತಂದುಕೋತಾಳೇಂತ ತಿಳ್ದು ಕೊಂಡಿರಲಿಲ್ಲ. +ಪಾಸ್ಟ್‌ ಈಸ್‌ ಪಾಸ್ಟ್‌ ಈಗ ನೆನೆದು ಪ್ರಯೋಜನವೇನು ?"ವಿಷಾದ ಇಣಕಿತು ಅವನ ದನಿಯಲ್ಲಿ. +ತಾಯಿ, ಮಗಳನ್ನ ಒಪ್ಪಿಸುವ ವೇಳೆಗೆ ಅವಳಿಗೆ ಸಾಕು ಬೇಕಾಯಿತು. +ಈಗಲೂ ಪೂಜಾ ನೇರವಾಗಿ ಅವಳೊಂದಿಗೆ ಮಾತಾಡುತ್ತಿರಲಿಲ್ಲ. +ಹೋಗುವ ಮುನ್ನ ಪ್ರಜ್ಞೆ ಬಂದ ಯುಗಂಧರ್‌ ಸೊಸೆ, ಹೆಂಡತಿ, ಮಗಳನ್ನ ಒಟ್ಟಿಗೆ ನೋಡಿ ಆಶ್ಚರ್ಯ ಚಕಿತರಾದರು. +ಒಂದೆರಡು ಕ್ಷಣ ಅವರ ಮುಖದ ಭಾವನೆಗಳಲ್ಲಿ ಏರುಪೇರಾಯಿತು. +ಅಷ್ಟರಲ್ಲಿ ಬಂದ ಡಾಕ್ಟರ್‌ ಅವರನ್ನ ಹೊರಗೆ ಕಳಿಸಿದರು. +ಕಾಂಪೌಂಡ್‌ನೊಳಕ್ಕೆ ಇಳಿದ ಮೇಲೆ "ಕಾರೆಲ್ಲಿ ?" ಕೇಳಿದರು.\ + ಸುತ್ತಲೂನೋಟ ಹರಿಸುತ್ತ ಮೃಣಾಲಿನಿ “ಡ್ರೈವರ್‌ ಇಲ್ಲ. +ಇಲ್ಲೇ ಗ್ಯಾರೇಜ್‌ನಲ್ಲಿ ಬಿಟ್ಟಿದೆ. +ಹೇಗೂ ಮಾವನವರನ್ನ ಕರೆದೊಯ್ಯಲು ಕಾರು ಬೇಕಲ್ಲ. +ಈಗ ಆಟೋದಲ್ಲಿ ಹೋಗೋಣ." +ಆಕೆ ತೀರಾ ಸುಸ್ತಾಗಿದ್ದರು. +ನಿಂದಿಸಲಾಗಲೀ, ಕೋಪ ತೋರಿಸಲಾಗಲಿ ಅವರಿಂದ ಸಾಧ್ಯವಿರಲಿಲ್ಲ. +ಸಧ್ಯಕ್ಕೆ ಮಾನಸಿಕವಾಗಿ ಸಪೋರ್ಟು ನೀಡಲು ಅವರವರಾಗಿ ಯಾರಾದರೂ ಬೇಕಿತ್ತು. +ಜೊತೆಗೆ ಎರಡು ದಿನದಿಂದ ಚಾರುಲತ ಉಪಚರಿಸಿದ ರೀತಿಗೆ ಮೃದುವಾಗಿ ಹೋಗಿದ್ದರು. +ಮನೆಯ ಬಳಿ ಆಟೋದಿಂದ ಇಳಿದಾಗ ಬಿಕೋ ಎನ್ನುತ್ತಿತ್ತು. +ರಾತ್ರಿ ಮನೆಯ ಕಾವಲಿಗೆ ಡಾ।। ನವೀನ್‌ ಯಾರನ್ನೋ ಕರೆತಂದು ಮಲಗಿಸಿದ್ದ. +ಗೇಟಿನ ಬೀಗ ನೋಡಿ ಆಕೆ ಸಮಾಧಾನಗೊಂಡರು. +ಸುತ್ತಲು ಕಳ್ಳತನಗಳು ನಮ್ಮ ಪುಣ್ಯ ಏನು ಆಗಿಲ್ಲ ಎಂದಾಗ ಅವಳಿಗೆ ನಗು ಬಂತು. +ಮನುಷ್ಯ ಎಂಥ ಭ್ರಮೆಯಲ್ಲಿರುತ್ತಾನೆ. +ಹಿಂದಿನ ದಿನ ಆಕೆ “ಚಾರು, ನಂಗೆ ಒಂದಿಷ್ಟು ವಿಷ ಕೊಡೊಕೇಳು. +ಅವ್ರು ಇಲ್ದೇ ನಾನು ಬದ್ಕಲಾರೆ”ಗೋಳಿಟ್ಟಿದ್ದರು. +ಇಂದು ಮನೆ ಸಂಪತ್ತಿನ ಬಗ್ಗೆ ವ್ಯಾಮೋಹ. +"ಒಂದು ರೀತಿಯ ವಿಚಿತ್ರವಾದ ಸುಳಿಯಲ್ಲಿ ಮಾನವರನ್ನ ಬಂಧಿಸಿಡುತ್ತಾನೆ, ಸೃಷ್ಟಿಕರ್ತ" ಅವಳ ತಂದೆ ಆಗಾಗ ಹೇಳುತ್ತಿದ್ದರು. +ಇಬ್ಬರನ್ನ ಒಳಗೆ ಕರೆದೊಯ್ದು ಮಲಗಿಸಿ ಗೀಸರ್‌ ಸ್ವಿಚ್‌ ಆನ್‌ ಮಾಡಿ ಸೊಂಟಕ್ಕೆ ಸೆರಗನ್ನ ಸಿಕ್ಕಿಸಿ ಇಡೀ ಮನೆಯನ್ನು ಸ್ವಚ್ಛ ಮಾಡತೊಡಗಿದಳು. +ಸ್ನಾನ ಮುಗಿಸಿ ಬಂದು ಪಕ್ಕದ ಮನೆಯ ಹುಡುಗನಿಂದ ಹಾಲು ತರಿಸಿ ಇಬ್ಬರಿಗೂ ಕಾಫಿ ಒಯ್ದು ಕೊಟ್ಟಳು. +“ನಂಗೆ ಬೇಡ” ಪೂಜಾ ಗುರ್‌ಗುಟ್ಟಿದಳು. +“ತುಂಬ ಸುಸ್ತಾಗ್ತೀಯಾ ! +ನೀನೇನು ನನ್ನ ಅತ್ತಿಗೇಂತ ಟ್ರೀಟ್‌ ಮಾಡ್ಬೇಡ. +ಸಧ್ಯಕ್ಕೆ ಮಾವನವುರು ಒಂದಿಷ್ಟು ಚೇತರಿಸ್ಕೋಬೇಕು. +ಅದ್ಕೇ ನಿನ್ನ ಕೋಪರೇಷನ್‌ ಮುಖ್ಯವಾಗುತ್ತೆ. +ಫ್ಲೀಸ್‌ ಕುಡಿ” ಓಲೈಸಿ ಹೊರ ಬಂದ ಮೇಲೆ ಕಾಫಿಯ ಕಪ್‌ಖಾಲಿಯಾಗಿದ್ದು. +ಮೃಣಾಲಿನಿಯವರ ಬಳಿಗೆ ಬಂದು "ಅತ್ತೆ, ನಾನು ನರ್ಸಿಂಗ್‌ ಹೋಂಗೆ ಹೋಗ್ತಾ ಇದ್ದೀನಿ. +ಅಲ್ಲಿಂದಲೇ ಫೋನ್‌ ಮಾಡ್ತೀನಿ. +ಅಡಿಗೆ ಮಾಡಿಟ್ಟಿದ್ದೀನಿ. +ಊಟ ಮಾಡಿ" ಎಂದು ಹೇಳಿ ಹೊರಬಂದಳು. +ಈ ಮನೆಯ ಸೊಸೆ ಅವಳು. +ಅಲ್ಲಿನ ಇಂಚು ಇಂಚಿನ ಪರಿಚಯ ಅವಳಿಗೆ ಇತ್ತು. + ಯೋಗಾ. . . ಯೋಗವೇನೋ ಮತ್ತೆ ತಾತ್ಕಾಲಿಕವಾಗಿಯಾದರೂ ಈ ಮನೆಯೊಳಕ್ಕೆ ಬಂದಿದ್ದಳು. +ಡಾ|| ನವೀನ್‌ ಅವಳಿಗಾಗಿ ಕಾದಿದ್ದ. +“ಹೇಗಿದ್ದಾರೆ, ತಾಯಿ ಮಗ್ಳು ? +ಈ ಸ್ಥಿತಿಯಲ್ಲಿ ನನ್ನ ಪೂಜಾ ಹುಲಿಯನ್ನ ನೋಡಿದಂತೆ ನೋಡ್ತಾಳೆ. +ಯುಗಂಧರ್‌ ಅಪಾಯದಿಂದ ಹೊರಗೆ. +ಏನು ತೊಂದರೆ ಇಲ್ಲ. +ನೀನು ಅವುನ್ನು ಕರ್ಕಂಡ್‌ ಬಂದು ನರ್ಸಿಂಗ್‌ ಹೋಂಗೆ ಸೇರಿಸಿರೋದು, ಅದು ಸ್ವಲ್ಪ ಹೆಚ್ಚು ಕಡೆಯಾದರೇ ಎಲ್ಲಿಂದ ಎಲ್ಲಿಗೋಎಂದು ಹೆದರಿದ್ದೆ" ಸ್ವಲ್ಪ ಗೆಲುವಿನಿಂದ ನಗಾಡಿದ. +“ಪರ್ವಾಗಿಲ್ಲ, ಪೂಜಾಗಂತು ಕೋಪ ತಗ್ಗಿಲ್ಲ. +ಅವ್ಳ ಸ್ಥಿತಿ ನೋಡಿ ನಂಗೆ ಕರುಳು ಕಿತ್ತು ಬಂತು. +ಸ್ಲೀಪಿಂಗ್‌ ಟ್ಯಾಬ್ಲೆಟ್ಸ್‌ ತಗೊಂಡಿದ್ದಳಂತೆ ಸಾಯೋಕೆ. +ಪಕ್ಕದ ಮನೆಯಾಕೆ ಹೇಳಿದ್ರು" ತಂಗಿ ಹೇಳಿದ ಕೂಡಲೇ "ಬೊ ಖೊ ಖೊ ಎಂದು ಜೋರಾಗಿ ನಕ್ಕು "ಸಾಯ್ಲಿಲ್ಲ, ನಮ್ಮನ್ನ ಉಳಿಸಿದ್ದು. +ಇಲ್ಲದಿದ್ದರೇಅಮ್ಮ ಮಕ್ಳು ಪೂಜಾ ಸಾವಿಗೆ ನಾವೇ ಕಾರಣಾಂತ ಕೋರ್ಟಿಗೆ ಹೋಗಿ ಬಿಡ್ತಾ ಇದ್ದರೇನೋ ! +ಅದೊಂದು ತಪ್ಪಿತು" ನಿಟ್ಟುಸಿರು ದಬ್ಬಿದ. +ಚಾರುಲತ ತುಟಿಗಳ ಮೇಲೆ ನಗೆ ಅರಳಿತು. +ಏನಿ ವೇ ಹ್ಯಾಪಿ ಎಂಡಿಂಗ್ ಎಂದಳು ಮೈ ಮರೆತು. +“ಚಾರು. . . '' ಉದ್ಗರಿಸಿದ. +ಅವನ ನೋಟದಲ್ಲಿ ನೋಟ ನೆಟ್ಟು ಮೆಲು ನಗೆ ಬೀರಿದಳು. +“ನನ್ನ ಅವಕಾಶವಾದಿ ಅಂತ ಅವ್ರೇನು ತಿಳಿಯೋದ್ಬೇಡ. +ಸಮಯ ಆಗಿತ್ತು. +ಮಾವನವುರು ಹುಷಾರಾದರೇ ಸಾಕು. +ಅಣ್ಣ, ತಂಗಿ ನಗುತ್ತ ಒಳ ಬಂದರು. +ಅಪಾಯದಿಂದ ಹೊರ ಬಂದಿದ್ದರೂಇನ್ನ ಇನ್‌ಟೆನ್‌ಸ್ಲ್ಸೀವ್‌ ಕೇರ್‌ನಲ್ಲಿಯೇ ಇಟ್ಟಿದ್ದರು ಯುಗಂಧರ್‌ನ; + ಡಾ|| ನವೀನ್‌ ಮಾತ್ರ ಅತ್ತ ಸುಳಿಯುತ್ತಿರಲಿಲ್ಲ. +ಅವರು ಹುಷಾರಾಗ್ತಾರೆ. +ನೀನು ಆಗಿರೋದು, ನೋಡು. +ನೆನ್ನೆ ಇಡೀ ರಾತ್ರಿ ನಿದ್ದೆ ಇಲ್ಲ. +ಈಗ ಮನೆಗೆ ಹೋಗ್ಬರೋಣ ನಡೀ ಎಂದ ಹಣೆಯುಜ್ಜುತ್ತ "ಬೇಡ, ಸಧ್ಯಕ್ಕೆ ಇಲ್ಲಿ ಯಾರಾದ್ರೂ ಇರಲೇ ಬೇಕು. +ನಾಳೆ ವೇಳೆಗೆ ಅತ್ತೆ,ಪೂಜಾ ಚೇತರಿಸ್ಕೋತಾರೆ. +ನಾಳಿದ್ದು ವಿಷ್ಯ ಮುಟ್ಟಿದ ಕೂಡ್ಲೇ ಅವರು ಬರ್ತಾರೆ. +ಆಮೇಲೆ ಇಲ್ಲೇನು ಕೆಲ್ಸ ಇರೋಲ್ಲ? +ಅತ್ಯಂತ ಸರಳವಾಗಿ ಹೇಳಿದಳು. +ಅಣ್ಣ, ತಂಗಿ ಇಡೀ ಕಾರಿಡಾರ್‌ನಲ್ಲಿ ಒಂದು ರೌಂಡ್‌ ಹಾಕಿಕೊಂಡು ಬಂದರು. +"ನೀನಿನ್ನ ಹೋಗು. +ನಾಳೆ ಬೆಳಿಗ್ಗೆ ಫೋನ್‌ ಮಾಡು. +ನಿನ್ನ ಅಗತ್ಯವಿದ್ದರೇ ಬಾ ಅಂತೀನಿ. +ಇಲ್ಲದಿದ್ದರೇ ನರ್ಸಿಂಗ್‌ಹೋಂಗೆ ಹೋಗು. +ಅಪ್ಪ ಏನು ಬರೋದ್ಬೇಡ. +ನನಗೋಸ್ಕರ ಅವರು ಅವಮಾನ ಸಹಿಸೋದು ನಂಗಿಷ್ಟವಿಲ್ಲ" ಸ್ಪಷ್ಟವಿತ್ತು ಅವಳ ಮಾತಿನಲ್ಲಿ. +“ರಾತ್ರಿ ನೀನು ಇಲ್ಲಿರ್ಬೇಕಾದ ಅಗತ್ಯವೇನಿಲ್ಲ. +ಬೆಳಿಗ್ಗೆ ಬರ್ಬಹುದು” ಎಂದ ಹೋಗುವ ಮುನ್ನ “ಬೇಡ, ಎಷ್ಟೇ ಡಾಕ್ಟ್ರು ಸಿಸ್ಟರ್ಸ್‌ ಇದ್ದರೂ ಮನೆಯವ್ರ ಅಗತ್ಯವಿದೆ. +ನೀನು ಹೋಗ್ಬಾ. . . ಅನಗತ್ಯವಾಗಿ ನೀರದ ಮೇಲೆ ರೋಪ್‌ಹಾಕೋದ್ಬೇಡ" ಎಚ್ಡರಿಸಿಯೇ ಕಳಿಸಿದ್ದು. +ಆಮೇಲೆ ಮೃಣಾಲಿನಿಗೆ ಫೋನ್‌ ಮಾಡಿದಳು. +"ಮುತ್ತಷ್ಟುಸುಧಾರಿಸಿದ್ದಾರೇಂತ ಅಂದರು ಡಾಕ್ಟು. +ನಾನು ಇಲ್ಲೇ ಇರ್ತಿನಿ. +ನಿಮ್ದು ಊಟ ಆಯ್ತ ? +ಪೂಜಾಗೆ ಊಟ ಮಾಡ್ಸಿ. +ಇಲ್ಲಿನ ಯೋಚ್ನೇಬೇಡ. +ಸ್ಲೀಪಿಂಗ್‌ಟ್ಯಾಬ್ಲೆಟ್‌ ಹಾಕಿಕೊಳ್ಳೋದು ಮರೀಬೇಡಿ" ಎಂದಳು. +ಅವರು ಪ್ರತಿಯೊಂದಕ್ಕೂ ಹ್ಲೂಗುಟ್ಟಿದರು. +"ಜೋಪಾನ, ಮನಸ್ಗೇ ನಿಲ್ಲದು. +ಮತ್ತೊಮ್ಮೆ ಫೋನ್‌ಮಾಡು" ಅವರ ಕಣ್ಣೀರು ಚಾರುಲತವರೆಗೂ ಹರಿದು ಬಂದಂತಾಯಿತು. +ಇಡೀ ರಾತ್ರಿ ನಿದ್ದೆ ಗೆಟ್ಟು ಅವರ ಬಳಿ ಇದ್ದುದ್ದರಿಂದ ಚಾರುಲತ ಕಣ್ಣುಗಳು ಬೆಳಗಿನ ವೇಳೆಗೆ ಭಗಭಗ ಎನ್ನತೊಡಗಿತು. +ರೂಮಿನಿಂದ ಹೊರ ಬಂದಾಗ ಎದುರಾದುದ್ದು ತಾಯಿ ಮಗ. +"ಹೇಗಿದ್ದಾರೆ ?" ಮೃಣಾಲಿನಿಯ ಗಾಬರಿ. +ಏನು ಪರ್ವಾಗಿಲ್ಲ. +ಎಚ್ಚರವಾಗಿಯೇ ಇದ್ದಾರೆ . +ಸರಿದು ಹೋದಾಗ ಮೂರ್ತಿಯ ನೋಟ ಹಿಂಬಾಲಿಸಿತು "ಚಾರುನ ನೀನೇ ಕರೆಸಿಕೊಂಡ್ಕಾ?" +ಅರಿವಾಗದಂತೆ ಅವನ ಹುಬ್ಬುಗಳು ಬಿಗಿದುಕೊಂಡವು. +ಕೇಳಿದ ಅಷ್ಟೆ,ಉತ್ತರವೇನು ನಿರೀಕ್ಷಿಸಲಿಲ್ಲ. +ಅವನಿಗೆ ತಂದೆಯ ಆರೋಗ್ಯದ ಬಗ್ಗೆ ಗಾಬರಿ ಇತ್ತು. +ಒಂದು ದಿನ ಮೊದಲೇ ಬಂದಿದ್ದರಿಂದ ಸುದ್ದಿ ಸಿಕ್ಕ ಕೂಡಲೇ ರಾತ್ರಿನೇ ಟ್ಯಾಕ್ಸಿ ಮಾಡಿಕೊಂಡು ಬಂದಿದ್ದ. +ಆರಾಮಾಗಿ ಚಾರುಲತ ಆಟೋ ಹತ್ತಿ ಮನೆಗೆ ಬಂದಳು. +ಇನ್ನು ಇವಳ ಅಗತ್ಯ ಅಲ್ಲಿರಲಿಲ್ಲ. +ಈಗಾಗಲೇ ವಿಷಯ ಮುಟ್ಟಿ ಯುಗಂಧರ್‌ ತಮ್ಮ ತಂಗಿಯೆಲ್ಲ ಬಂದ ಸುದ್ಧಿ ತಿಳಿದಾಗ ಹಾಯೆನಿಸಿತು. +ಸ್ಕೂಟರ್‌ ಹತ್ತುತ್ತಿದ್ದ ಡಾ|| ನವೀನ್‌ ಅಚ್ಚರಿಯಿಂದ ಇಳಿದ. +“ಏನು ವಿಷ್ಯ ?” ಗಾಬರಿಯಿಂದ ಪ್ರಶ್ನಿಸಿದ. +“ಮೊದ್ಲು ಆಟೋಗೆ ಹಣ ಕೊಡು” ಎಂದು ಮನೆಯೊಳಕ್ಕೆ ಹೋದಳು. +ವರಾಂಡದಲ್ಲಿ ಪೇಪರ್‌ ಹಿಡಿದು ಕೂತ ವಾಸುದೇವಯ್ಯ “ಹೇಗಿದ್ದಾರೆ? ” ಮೇಲೆದ್ದರು. +"ಈಗ ಹುಷಾರಾಗಿದ್ದಾರೆ" ಎಂದು ಅವರ ಎದುರಿನಲ್ಲಿ ಕೂತಳು. +“ನಾನು ಬರೋಣಾಂತ ಇದ್ದೆ. +ನವೀನ ಬೇಡಾಂದ. +ಬಹಳ ಒಳ್ಳೆ ಮನುಷ್ಯ. +ಏನೋ ಭಿನ್ನಾಭಿಪ್ರಾಯ ಬಂತು. +ಹಾಗೆಂದು ಸಂಬಂಧನ ಕಡಿದುಕೊಳ್ಳೋಕೆ ಸಾಧ್ಯನಾ ?"ಅವರ ದನಿಯಲ್ಲಿ ನೋವಿತ್ತು. + “ಚೇತರಿಸಿಕೊಂಡಿದ್ದಾರೆ. ನಮ್ಗೆ ಅಷ್ಟು ಸಾಕು. +ಸ್ನಾನ ಮಾಡ್ಕೊಂಡ್‌ಬೇಗ್ಫರ್ತೀನಿ" ಎದ್ದು ಹೋದಳು. +ಮೈಯಲ್ಲಿ ನೀರಸವಿದ್ದರೂ ಅವಳು ಆಫೀಸಿಗೆ ಹೋಗುವ ನಿರ್ಧಾರ ಮಾಡಿದಳು. +ಬಾತ್‌ರೂಂನ ಬಳಿ ಎದುರಾದ ನೀರದ "ಯಾವಾಗ್ಬಂದ್ರಿ ? +ನೀವು ಅಲ್ಲೇ ಉಳ್ಳೋತೀರೀಂತ ಅದ್ಕೊಂಡೆ. +ಅಮ್ಮ ಕೂಡ ಅದನ್ನೇ ಹೇಳಿದ್ರು"ಅವಳ ಮಾತುಗಳಿಗೆ ಪ್ರತಿಕ್ರಿಯಿಸದೇ "ಹೊತ್ತಾಯ್ತು ಬೇಗ ಸ್ನಾನ ಮಾಡ್ಕೊಂಡ್‌ಬರ್ತಿನಿ"ಸರಸಿಕೊಂಡು ಬಾತ್‌ರೂಮು ನೊಳಕ್ಕೆ ಹೋಗಿ ಬಾಗಿಲು ಹಾಕಿಕೊಂಡಳು ಮೌನವಾಗಿ ಕಣ್ಣಿರು ಸುರಿಸಿದಳು. +ತುಂಬು ಅಕ್ಕರೆ ಸುರಿಸುತ್ತಿದ್ದ ನೀರದ ಅತ್ತಿಗೆಯಾದ ಮೇಲೆ ಬದಲಾಗಿದ್ದಾಳೆಯೆನಿಸಿತು. +ಅವರ ವೈಯಕ್ತಿಕ ಸುಖ ಸಂತೋಷಗಳಿಗೆ ತಾನು ಅಡ್ಡಿಯೆನ್ನುವಂತೆ ಅವಳ ನೋಟ. +ಇದೇನು ಬಿಡಿಸಲಾರದ ಒಗಟಲ್ಲ. +ಕನ್ಯೆಯಾಗಿದ್ದಾಗ ತವರು ಮನೆಯಲ್ಲಿರುವುದೇ ಬೇರೆ. +ಇನ್ನೊಬ್ಬರ ಕೈ ಹಿಡಿದ ಕೂಡಲೇ ತಾಯಿ ಮನೆಯಲ್ಲಿ ಹೆಣ್ಣು ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಬಿಡುತ್ತಾಳೆ. +ಸರಿಯೋ, ತಪ್ಪೋ ಅಂತು ಇದೊಂದು ಪದ್ಧತಿ. +ಮಾನಸಿಕವಾಗಿ ಎಲ್ಲರೂ ಇದಕ್ಕೆ ಹೊಂದಿಕೊಂಡಿದ್ದರು. +ಸ್ನಾನ ಮುಗಿಸಿಕೊಂಡು ಹೊರ ಬಂದಾಗ ಡಾ॥ನವೀನ್‌ ಅವಳಿಗಾಗಿ ಕಾದಿದ್ದ "ನಿನ್ನ ಡ್ರಾಪ್‌ ಮಾಡಿ ನಾನ್ಹೋಗ್ತೀನಿ. +ಒಂದ್ಗಂಟೆ ಲೇಟಾಗಿ ಬರ್ತೀನೀಂತ ಪರ್ಮೀಷನ್‌ ತಗೊಂಡಿದ್ದೀನಿ" ಎಂದ. +ಐದೇ ನಿಮಿಷದಲ್ಲಿ ರೆಡಿಯಾದಾಗ ನೀರದ ತಂದು ಉಪ್ಪಿಟ್ಟಿನ ತಟ್ಟೆ ಅವಳ ಮುಂದಿಟ್ಟು “ಸ್ವಲ್ಪ ಉಪ್ಪು ಜಾಸ್ತಿಯಾಗಿದೆ. +ಮೊಸರು ತರ್ಲ” ಎಂದಾಗ,ಚಾರುಲತಗೆ ತಿಂಡಿ ತಿನ್ನುವ ಉದ್ದೇಶವೇನು ಇರಲಿಲ್ಲ. +“ಬೇಡ, ಈಗ್ಲೇ ಲೇಟಾಗಿದೆ. +ಎರ್ದು ದಿನ ರಜ ತಗೊಂಡಾಗಿದೆ. +ಅದೊಂದು ಪ್ರೈವೇಟ್‌ಫರ್ಮ್‌. +ಜೊತೆಗೆ ತುಂಬ ಸ್ಟಿಕ್ಟ್‌. +ಒಳ್ಳೆ ಧ್ಯೇಯೋದ್ದೇಶಗಳನ್ನ ಇಟ್ಕಂಡ್ ಬೇಳೀತಾ ಇರೋ ಕಂಪನಿ. +ತೆಗೆದಿಡಿ. ಸಂಜೆ ಬಂದು ತಿಂತೀನಿ” ಚಪ್ಪಲಿ ಮೆಟ್ಟಿ ವರಾಂಡದಲ್ಲಿದ್ದ ತಂದೆಗೆ ಹೇಳಿ ಹೋಗುವ ವೇಳೆಗೆ ನವೀನ್‌ ಸ್ಕೂಟರ್‌ ಏರಿದ್ದ. +ಸ್ಕೂಟರ್‌ ನಿಂತಿದ್ದು ಹೋಟಲ್‌ ಮುಂದೆ. +ಇದೇನಿದು ? ಎಂದಳು. +"ನಂಗಂತು ಹಸಿವು. +ಉಪ್ಪಿಟ್ಟು ಬಾಯಿಗೆ ಇಡೋಕೆ ಆಗದಷ್ಟು ಉಪ್ಪು ಹಾಕಿದ್ದಾಳೆ. +ಹೊಟ್ಟೆಗೆ ಏನಾದ್ರೂ ಬಿದ್ದರೇನೇ ಮೈಗೆ ಶಕ್ತಿ" ಹೋಟೆಲ್‌ನೊಳಕ್ಕೆ ನಡೆದಾಗ ಹಿಂಬಾಲಿಸಿದಳು. +ನೀರದ ಬಹಳ ರುಚಿಕಟ್ಟಾಗಿ ಅಡಿಗೆ ತಿಂಡಿ ಮಾಡುತ್ತಿದ್ದಳು. +ಅದನ್ನೆ ಹೆಚ್ಚು ಮೆಚ್ಚಿಕೊಂಡಿದ್ದು ಡಾ|| ನವೀನ್‌. +ಅವನಿಗೆ ಸದಾ ಅಡಿಗೆ ರುಚಿ ರುಚಿಗಟ್ಟಾಗಿರಬೇಕು. +ಆದರೆ ಮಡದಿಯಾಗಿ ಈ ಮನೆಗೆ ಕಾಲಿಟ್ಟ ಮೇಲೆ ಅಡಿಗೆ ತಿಂಡಿಯ ಹದವೇ ಕೆಟ್ಟು ಹೋಗಿತ್ತು. +ಯಾಕೆ ಹೀಗೆ ? +ಇದಕ್ಕೆ ಕಾರಣಯಾರು ಹೇಳಬೇಕು. +ಕೂತ ನಂತರ ಅಣ್ಣನತ್ತ ನೋಡಿ ಮುಗುಳ್ನಗೆ ಬೀರಿ "ಏನಾದ್ರೂ ಸಣ್ಣ ಫೈಟಿಂಗಾ ? +ಅದ್ಕೇ ಉಪ್ಪಿಟ್ಟಿನ ಹದ ಕೆಟ್ಟಿದೆ" ಎಂದಳು. +ಫ್ಯಾನ್‌ನ ಬಟನ್ನೊತ್ತಿ ಷರಟಿನ ಮೇಲಿನ ಗುಂಟಿ ಬಿಚ್ಚಿ "ಅವ್ಳ ಹದ ಕೆಟ್ಟಿದೆ. +ಇನ್ನ ಉಪ್ಪಿಟ್ಟಿನ ಹದ ಕೆಡೋದೇನು ? +ಎಷ್ಟೊಂದು ಓಲೈಸೋಳು. +ಅವ್ಳು ಹುಟ್ಟಿರೋದೇ ನಂಗಾಗಿ, ಬದ್ಕಿರೋದೇ ನಂಗಾಗಿ ಅನ್ನೋ ತರಹ ನಡ್ಕೋತಾ ಇದ್ದೋಳು ಈಗ ಪೂರ್ತಿ ತದ್ವಿರುದ್ಧ ನನ್ನಿಂದ್ಲೇ ಅವ್ಳಿಗೆ ಅನ್ಯಾಯವಾಗಿದೆ ಅನ್ನೋ ತರಹ ನಡ್ಕೋತಾಳೆ. +ಎಲ್ಲಾ ವಿಪರೀತ, ವಿಚಿತ್ರ." +ಹೆಣ್ಣನ್ನ, ಮನೆಯನ್ನ ತೀರಾ ಹಚ್ಕೊಂಡೋನು ಬುದ್ಧಿನಲ್ಲಿ ಮೇಲೇರೋಲ್ಲ. +ಇದು ನನ್ನ ಫಿಲಾಸಪಿ. +ಅವೆಲ್ಲ ಬಿಡು, ಈಗೇನು ತಗೋತೀಯಾ ? +ತಿಂಡಿ ಆಗೋವರ್ಗೂ ಯಾವೇ ವಿಷ್ಯದಲ್ಲಿ ಕಾಮೆಂಟ್ಸ್‌ ಬೇಡ" ತುಟಿಗಳ ಮೇಲೆ ಬೆರಳಿಟ್ಟು ಎಚ್ಚರಿಸಿದ. +"ಸಾರಿ, ಒಂದೇ ಒಂದ್ಭಾತು. +ನಿನ್ನ ಅನುಭವಗಳ್ನ ಬರ್ದು ಪುಸ್ತಕ ರೂಪದಲ್ಲಿ ಪ್ರಕಟಿಸ್ಟಾರ್ದು. +ಅದರಿಂದ ಪ್ರೇರಿತರಾಗಿ ಕೆಲವರಾದ್ರೂ ತಮ್ಮ ವಿವಾಹದ ಡೇಟ್ಸ್‌ನ ಮುಂದೆ ಹಾಕ್ತಾರೆ. +ಮತ್ತೆ ಕೆಲವರು ಪ್ರೇಮಿಗಳಾಗಿಯೇ ಉಳಿತಾರೆ. +ಇನ್ನ ಕೆಲವರು ಪ್ರೇಮಿಗಳ್ನ ಬಿಟ್ಟು ಹಿರಿಯರು ತೋರಿಸೋವನ್ನ ಲಗ್ನವಾಗ್ತಾರೆ"ನಕ್ಕಳು. +"ಇದು ಒಂದೇ. . . ಒಂದ್ಮಾತಾ ? +ಆ ಬಗ್ಗೆ ಯೋಚಿಸ್ತೀನಿ. +ಸಧ್ಯಕ್ಕೆ ಮಾತ್ಬೇಡ"ಅಲ್ಲಿಗೆ ನಿಲ್ಲಿಸಿದ. +ಇಬ್ಬರು ಇಡ್ಲಿ, ವಡೆ ಸಾಂಬಾರ್‌ ಜೊತೆ ಒಂದೊಂದು ಪ್ಲೇಟ್‌ ಪೂರಿ ಕೂಡ ತಿಂದು ಎದ್ದರು. +"ಸಧ್ಯಕ್ಕೆ ತೃಪ್ತಿ ಆಯ್ತು. +ಅದೇನು ಅಪ್ಪ ಒಂದೆರಡು ಸಲ ಕೇಳಿದ್ರು. +ನಿನೇನೋ ಹೇಳೋದಿದೆ ಅಂದರು. +ಅದೇನಮ್ಮ ಅಂಥ ವಿಷ್ಯ ಡಾ|| ನವೀನ್‌ ಕೇಳಿದ ನಂತರವೇ ಅವಳಿಗೆ ಮನೆಯ ವಿಷಯ ನೆನಪಾದದ್ದು. +ಆದರೆ ಈಗ ಅದರ ಪ್ರಸ್ತಾಪ ಬೇಡವೆನಿಸಿತು. +"ಅದೇನು ಮುಖ್ಯವಾದುದ್ದಲ್ಲ. +ನಂಗೆ ಹೊತ್ತಾಯ್ತು." +ತಂಗಿಯನ್ನ ನಿವೇದಿತಾ ನ್ಯೂ ವುಮನ್ಸ್‌ ವೇರ್‌ ಬಳಿ ಇಳಿಸಿಯೇ ಅವನು ನರ್ಸಿಂಗ್‌ ಹೋಂಗೆ ಹೋಗಿದ್ದು. +ಮಧ್ಯೆ ನರ್ಸಿಂಗ್‌ ಹೋಂಗೆ ಫೋನ್‌ಮಾಡಿ ಯುಗಂಧರ್‌ ದೇಹ ಸ್ಥಿತಿ ವಿಚಾರಿಸಿಕೊಂಡು ಸಮಾಧಾನದ ಉಸಿರುದಬ್ಬಿದ "ಗಾಡ್‌ ಈಸ್‌ ಗ್ರೇಟ್‌'" ಎಂದುಕೊಂಡ. +ಹಿಂದೆಯೇ ಪೂಜಾಳ ನೆನಪಾಯಿತು. +ಅವಳ ಕಣ್ಣುಗಳಲ್ಲಿನ ಮಿಂಚು ಏನಾಯಿತು ? +ಆ ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದರೇ ತನ್ನನ್ನು ಎಷ್ಟು ತೀವ್ರವಾಗಿ ಪ್ರೇಮಿಸಿರಬೇಕು. +ಅವಳ ನಗು, ಸ್ನೇಹಮಯವಾದ ಮಾತುಗಳಲ್ಲಿನ ಪ್ರೇಮವನ್ನ ತಾನು ಗುರುತಿಸಲೇಇಲ್ಲ. +ಇದಕ್ಕೆ ನೀರದ ಅಡ್ಡ ನಿಂತಿರಬೇಕು. +"ಛೆ. . . ಆ ಬಗ್ಗೆ ಚಿಂತಿಸುವುದು ಬೇಡ" ಎನ್ನುವ ತೀರ್ಮಾನಕ್ಕೆ ಬಂದು ತನ್ನ ಕೆಲಸದಲ್ಲಿ ಮಗ್ನನಾದ. +ಅಂದು ಚಾರುಲತ ಬಸ್ಸಿಗಾಗಿ ಹೊರಟಾಗ ಅವಳ ತಂದೆ ಜೊತೆಯಾದರು. +ನವೀನ್‌ ಹತ್ತಿರ ಮನೆ ವಿಷ್ಯ ಮಾತಾಡಿದ್ಯಾ? +ಅವ್ಳು ಯಾರೋ ನೆನ್ನೆ ದಿನ ಬಂದು ಮನೆ ನೋಡ್ಕೊಂಡ್ಹೋದ್ರು. +ಎದೆಯಲ್ಲಿ ಛಳಕ್‌ ಅಂತು. +ಆಮೇಲೆ ನೀರದ ದೊಡ್ಡ ಪಂಚಾಯಿತಿನೇ ಮಾಡಿದ್ಲು. +ಅವ್ಳಿಗಂತು ಮನೆ ಬದಲಾವಣೆ ಸುತರಾಂ ಇಷ್ಟವಿಲ್ಲ." +ಅವಳ ಮುಖ ತೀರಾ ಗಂಭೀರವಾಯಿತು. +ಸದಾ ಮಲಗಿಯೇ ಇರೋ ನೀರದ ಅಮ್ಮ ಸದಾ ಕದಡುತ್ತಲೇ ಇದ್ದರು. +ಈ ಕದಡುವಿಕೆಯ ಪರಿಣಾಮ ಅವಳ ವೈಯಕ್ತಿಕ ಜೀವನದ ಮೇಲೆ ಕರಿ ನೆರಳಿನ ಛಾಯೆ ಬೀಳುತ್ತದೆಯೆನ್ನುವುದು ಆಕೆಗೆ ತಿಳಿಯದೋ |! +ಇಲ್ಲ ಭಯ, ಆವೇಗದಿಂದ ವಿವೇಕಕಳೆದುಕೊಂಡಿದ್ದಾರೇನೋ ? ಈ ವಿಷ್ಯದಲ್ಲಿ ನಮ್ಮ ಪ್ರವೇಶ ಬೇಡವೇ ಬೇಡ. +ಅವರಿಬ್ಬರೇ ಚರ್ಚಿಸಿ ನಿರ್ಧಾರಕ್ಕೆ ಬರ್ಲಿ. +ನಂಗೆ ಅಣ್ಣನ ಮುಂದೆ ಈ ಪ್ರಸ್ತಾಪ ಎತ್ತೋಕೆ ತುಂಬ ಭಯ. +ಈಗ್ಲೇ ಸುಮಾರು ತಲೆ ಕೆಡ್ಲಿಕೊಂಡಿದ್ದಾನೆ. . ನಿಮ್ಮನ್ನು ದೂರ ಮಾಡ್ಕೊಂಡರೆ ಮತ್ತಷ್ಟು ಹದಗೆಡಬಹುದು. +ಅದೇ ನಂಗೆ ಭಯ. +ನಾನು ಇಲ್ಲದಿದ್ದರೇ ಅವರಿಬ್ರೂ ಸರಿ ಹೋಗ್ತಾರೆ. +ಅಲ್ಲೇ ವುಮೆನ್ಸ್‌ ಹಾಸ್ಟಲ್‌ ಇದೆ. +ದೂರ ಅನ್ನೋ ಕಾರಣ ನೀಡಿ ನಾನು ಅಲ್ಲೇ ಉಳ್ಳೋತೀನಿ ಎಂದಳು ಮೆಲುವಾಗಿ. +ಇದರಿಂದ ಅವರಿಗೆ ನೋವೆಂದು ಗೊತ್ತು. +ಹಾಗೆಂದು ಮತ್ತಷ್ಟು ಸಮಸ್ಯೆಗಳನ್ನುಗುಡ್ಡೆ ಹಾಕಿಕೊಳ್ಳುವುದು ಬೇಡವಾಗಿತ್ತು. +ವಾಸುದೇವಯ್ಯನ ಕಣ್ಣಲ್ಲಿ ನೀರಾಡಿತು. +ಉದ್ವಿಗ್ನತೆ ಕಂಪಿಸುತ್ತಿದ್ದರಿಂದ ತಡೆಯಲು ಸಾಧ್ಯವಿಲ್ಲವೆನಿಸಿತು. +"ಸಂಜೆ ಮಾತಾಡೋಣ, ನೀನ್ಹೋಗು. . . . "ಎಂದವರು ಅಲ್ಲೇ ಇದ್ದ ಮೆಡಿಕಲ್‌ ಸ್ಟೋರ್‌ಗೆ ಹೋದರು. +ಅವರು ಆಗಾಗ ಹೋಗಿ ಬರುತ್ತಿದ್ದರಿಂದ ರೂಢಿಯಾಗಿದ್ದರು. +ಅಲ್ಲಿ ಹೋಗಿ ಕೂತು ಸುಧಾರಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. + “ಬನ್ನಿ. . . . . ಬನ್ನಿ” ಸ್ವಾಗತಿಸಿದರು ಹಿರಿಯರು. +ಅವರೊಬ್ಬ ಸರ್ಕಾರಿ ನೌಕರರು. +ನಿವೃತ್ತಿಯ ನಂತರ ಮಗನ ಮೆಡಿಕಲ್‌ ಸ್ಟೋರ್‌ನಲ್ಲಿ ಬಂದು ಕೂಡುತ್ತಿದ್ದರು ಆಗಾಗ. +ಸ್ವಲ್ಪ ಮಾತಿನ ಮನುಷ್ಯ. +“ಕೂತ್ಕೊಳ್ಳಿ” ಕೈಯಲ್ಲಿನ ಪೇಪರ್‌ನ ಪಕ್ಕಕ್ಕಿಟ್ಟರು. +ಈಗಿನ ಪ್ರಸಕ್ತ ರಾಜಕೀಯದ ಮಾತುಕತೆ ಷುರುವಾಗಿ ಹಿಂದಿನ ದಿನ ನಡೆದ ಶಿರಾ ಗಲಭೆ, ಪೊಲೀಸರಿಂದ ಲಾಠಿ ಛಾರ್ಜ್‌, ಆರು ಜನ ರೈತರು ಸೇರಿ ಒಬ್ಬ ಸರ್ಕಲ್‌ ಇನ್ಸ್‌ಪೆಕ್ಟರ್‌ನ ಮರಣ. +ಲಾಜಿಕ್ಕಾಗಿ ಚರ್ಚೆ ಮಾಡಿದರು ಎಲ್ಲಾ ಕೋನಗಳಿಂದಲೂ. +"ತೀರಾ ಕುಲಗೆಟ್ಟು ಹೋಗಿದೆ, ರಾಜಕೀಯ ಪರಿಸ್ಥಿತಿ. +ಬರೀ ತಮ್ಮ ಛೇರ್‌ಗಾಗಿ ಬಡಿದಾಡುತ್ತಾರೆಯೇ ವಿನಃ ಯಾರಿಗೂ ಸಾಮಾನ್ಯ ಜನರ ಬಗ್ಗೆ ಕಾಳಜಿ ಇಲ್ಲ" ನೋವಿನಿಂದ ನುಡಿದರು. +ಅಂಗಡಿಯಲ್ಲಿದ್ದ ಹುಡುಗನನ್ನ ಕಳಿಸಿ ಕಾಫಿ ತರಿಸಿದವರೇ ಮತ್ತೆ ಮಾತು ಷುರು ಹಚ್ಚಿದರು “ನಿಮ್ಮ ಮಗ್ಳಿಗೆ ವಿವಾಹವಾಗಿದೆ ಅಲ್ವಾ ? +ನಾನು ಬಂದಿದ್ದೆ ಮದುವೆಗೆ. +ಆದರೆ ಈ ಕಡೆ ಓಡಾಡ್ತಾ ಇರೋದು, ಇನ್ನೊಬ್ಬ ಮಗಳಾ ?” ಕೇಳಿದರು ನೇರವಾಗಿ. +“ಇಲ್ಲ, ಇರೋದು ಒಬ್ಬ ಮಗ್ಳು. +ಇನ್ನೊಂದು ಗಂಡು ಸಂತಾನ. +ಅವ್ನಿಗೂ ಈಚೆಗೆ ವಿವಾಹವಾಯ್ತು. +ನಾನೇ ಸ್ವತಃ ಬಂದು ಆಹ್ವಾನ ಪತ್ರಿಕೆ ಕೊಟ್ಟುಹೋಗಿದ್ದೆ” ಎಂದರು ವಾಸುದೇವಯ್ಯ. +ಅವರ ಮುಖನೇ ಒಂದು ತರಹ ಆಯಿತು. +"ನೀವು ಕೊಟ್ಟಿರುತ್ತೀರಿ ! +ಅವುರು ನನಗೆ ತಲುಪಿಸಬೇಕಲ್ಲ. +ಹಿರಿಯರು ಅಂದರೇನು ಉತ್ಪೇಕ್ಷೆ +ಮೊದಲಿನ ಹಾಗೆ ಈಗಿನವ್ರಿಗೆ ಬದ್ಧಿನ ಬಗ್ಗೆ ಪ್ರೀತಿಕಡ್ಮೇ. +ಬೇರೆ ಜನರೊಂದಿಗೆ ಸ್ನೇಹ, ವಿಶ್ವಾಸ ಅನ್ನೋದಿಲ್ಲ. +ಬರೀ ವ್ಯವಹಾರಿಕ ಸ್ವಪ್ಪತಿಷ್ಟೆ. +ನಂಗೆ ಇದೆಲ್ಲ ಹಿಡಿಯೋಲ್ಲ. +ಅದ್ನ ಯಾಕ್ಗೇ ಹೇಳ್ಬೇಕು ? +ಕೇಳೋರು ಯಾರಿದ್ದಾರೆ ? +ನಮ್ಗೆ ಬಾಯಿ ನೋವು. +ಆದ್ರೂ ಮನಸ್ಸು ತಡ್ಕೋಲ್ಲ" ಮಗನನ್ನ ಬೈಯ್ದುಕೊಂಡರು. +ಅವರು ಸ್ವಲ್ಪ ತಮ್ಮ ಯೌವನದ ದಿನಗಳನ್ನ ನೆನಪಿಸಿಕೊಂಡಿದ್ದರೇ, ಸ್ವಲ್ಪವಾದರೂ ರಾಜಿ ಯಾಗುತ್ತಿದ್ದರು. +ಅವರ ಮನಸ್ಥಿತಿ, ಸಮಸ್ಯೆಗಳನ್ನ ಅರ್ಥ ಮಾಡಿಕೊಳ್ಳುತ್ತಿ ದ್ದರು. +ಅದು ಬಹಳಷ್ಟು ಜನಕ್ಕೆ ಸಾಧ್ಯವಾಗದು. +ಸ್ವಲ್ಪ ಬಳಲಿಕೆ ಇದ್ದುದ್ದರಿಂದ ವಾಸುದೇವಯ್ಯ ಮಾತಾಡಲಿಲ್ಲ. +ಆದರೆ ಮತ್ತೆ ಅವರು ಹಿಂದಕ್ಕೆ ಹೋದರು. +"ನಿಮ್ಮ ಮಗ್ಳು ಒಬ್ಳೇ ಅಂದರಲ್ಲ?" +ಕನ್ನಡಕ ಸರಿಪಡಿಸಿಕೊಂಡು ಕಣ್ಣು ಕಿರಿದು ಮಾಡಿದರು. +"ಹೌದು" ಎಂದರು. +“ಇಲ್ಲೇ ಓಡಾಡುತ್ತಾಳಲ್ಲ ! +ದಿನ ಇದೇ ಸಮಯಕ್ಕೆ ಹೋಗ್ತಾಳೆ. +ಇದು ಆಫೀಸ್‌ಗಳಿಗೆ ಹೋಗೋ ಸಮಯ. +ಎಲ್ಲಾದ್ರೂ ಕೆಲ್ಸದಲ್ಲಿ ಇದ್ದಾಳ?" +ಅವರ ಮನಕ್ಕೆ ನೇರವಾಗಿ ಪಾತಾಳ ಗರಡಿ ಹಾಕಿದರು. +ಯಾಕಾದರೂ ಇಲ್ಲಿಗೆ ಬಂದೆನೋ, ಎಂದು ಮರುಗಿದರು ವಾಸುದೇವಯ್ಯ. +ಅಷ್ಟರಲ್ಲಿ ಗಿರಾಕಿಗಳು ಬಂದಿದ್ದರಿಂದ ಮೇಲೆದ್ದರು. +ಸುಮ್ನೆ ತೊಂದರೆ. +ಆ ಮನುಷ್ಯ ಬಿಡಬೇಕಲ್ಲ. +ಕೈ ಹಿಡಿದು "ಕೂತ್ಕೊಳ್ಳಿ, ಅದ್ರಿಂದ ನಮ್ಗೇನು ತೊಂದರೆ ? +ಹುಡ್ಗ ನೋಡ್ಕೋತಾನೆ. +ನಾನು ನಾಮಕಾವಸ್ಥೆ ಮಗ ಇಲ್ಲದಾಗ ಬಂದು ಕೂತ್ಯೋತೀನಿ" ಕೂಡಿಸಿಕೊಂಡ ಮಹಾಶಯ. +"ಮಗ್ಳು ಕೆಲ್ಸದಲ್ಲಿ ಇದ್ದಾಳ ?" ಮತ್ತೆ ಅದೇ ಪ್ರಶ್ನೆ. +"ಹೌದು, ನ್ಯೂ ವುಮೆನ್ಸ್‌ ವೇರ್‌ ಹೌಸ್‌ನ ಅಕೌಂಟ್‌ ಸೆಕ್ಟನ್‌ನಲ್ಲಿದ್ದಾಳೆ. +ಈಗ ಹೆಣ್ಣು ಮಕ್ಳು ಓದೋದು, ಕೆಲ್ಸಕ್ಕೆ ಹೋಗೋದು ಸರ್ವೆ ಸಾಮಾನ್ಯ"ಎಂದರು. +ಇದೊಂದು ತಪ್ಪಿಸಿಕೊಳ್ಳುವ ಪ್ರಯತ್ನ ಅವರದು. +"ನಿಮ್ಮ ಮಾತು ನೂರಕ್ಕೆ ನೂರರಷ್ಟು ನಿಜ. +ನಿಮ್ಮ ಮಗ್ಳು ಕೂಡ ಕೆಲ್ಸಕ್ಕೆ ಹೋಗ್ಲಿ. +ಹಣ ಬರುತ್ತೆ. +ದುಡ್ಡು ಯಾರ್ಗೆ ಬೇಕಿಲ್ಲ? +ಆದರೆ ಗಂಡ-ಹೆಂಡ್ತಿ ಒಂದೇ ಊರಿನಲ್ಲಿ ಇರ್ಬೇಕು. +ಇಲ್ಲದಿದ್ದರೇ ನೂರೆಂಟು ಸಮಸ್ಯೆ. +ಅವ್ರ ಮಧ್ಯೆ ಪ್ರೀತಿ-ಪ್ರೇಮ ಬೆಳೀಬೇಡ್ವಾ ? +ಅತಿಥಿಗಳಂತೆ ವಾರಕ್ಕೋ, ತಿಂಗ್ಳಿಗೋ,ವರ್ಷಕ್ಕೋ ಭೇಟಿಯಾಗೋದು ಏನು ಚೆನ್ನ ? +ನಂಗೆ ಮಾತ್ರ ಅದು ಹಿಡಿಸೋಲ್ಲ. +ಇದ್ರಿಂದ ತೀರಾ ಅಪಾಯ ಕೂಡ. +ನಿಮ್ಗೂ ಇದೆಲ್ಲ ಗೊತ್ತಿಲ್ಲದ ಸಂಗ್ತಿಯಲ್ಲಬಿಡಿ" ಇಡೀ ಪುರಾಣವೇ ಒದರಿದರು. +ಅದರಲ್ಲಿ ಪೀಠಿಕೆ ಕೂಡ ಇತ್ತು. +ಅರ್ಧಂಬರ್ಧ ವಿಷಯ ಇವರಿಗೆ ಗೊತ್ತಿರ ಬಹುದೆಂದುಕೊಂಡರು ವಾಸುದೇವಯ್ಯ. +“ನಿಮ್ಮ ಮಾತು ನಿಜ” ಒಪ್ಪಿಗೆ ಸೂಚಿಸಿದರು. +ವಯಸ್ಸಾದ ವ್ಯಕ್ತಿ ಸ್ವಲ್ಪ ಬಗ್ಗಿ ಗುಟ್ಟು ಹೇಳುವಂತೆ "ನಿಮ್ಮ ಅಳಿಯ ಬೇರೆ ಊರಿನಲ್ಲಿ ಲೆಕ್ಟರರ್‌. +ಒಳ್ಳೆ ಕೆಲ್ಸ. +ಕೈ ತುಂಬ ಸಂಬಳನು ಕೂಡ. +ಅಂದರೇ ನಿಮ್ಮಮಗ್ಳು ಕೆಲ್ಸಕ್ಕೆ ಹೋಗ್ಬಾರ್ದು ಅನ್ನೋ ಉದ್ದೇಶ ನನ್ನದಲ್ಲ. +ಇದು ನಮ್ಮ ಕಾಲ ಅಲ್ಲ. +ಹೆಣ್ಣು ಮಕ್ಕಳಿಗೆ ನೂರೆಂಟು ಖರ್ಚುಗಳು ಇರುತ್ತೆ. +ಎಲ್ಲಾ ಗಂಡ ಪೂರೈಸೋಕೆ ಆಗುತ್ತಾ ? +ಸ್ವಂತ ದುಡಿಮೆ ಇರ್ಲಿ. +ಹಾಗಂತ ಗಂಡನಿಂದ ದೂರ ಇರೋದು ಮಾತ್ರ ಸರಿಯಲ್ಲ" ಹಿತೈಷಿಯಂತೆ ಹೇಳಿದಾಗ ಹ್ಲೂಗುಟ್ಟುವುದರ ವಿನಃ ಮತ್ತೇನು ಮಾಡುವಂತಿರಲಿಲ್ಲ ವಾಸುದೇವಯ್ಯ. +ಮತ್ತಷ್ಟು ವಿಶ್ವಾಸ ತೋರುವಂತೆ ಅವರ ಕೈ ಹಿಡಿದುಕೊಂಡು "ಯುಗಂಧರ್‌ಗೊತ್ತು, ಒಳ್ಳೆ ಮನುಷ್ಯ. +ಹಣದ ಮುಖ ನೋಡಿದೋನೇ ಅಲ್ಲ. +ಇದು ನಂಗೆ ಹೇಗೇ ಗೊತ್ತಾಯಿತೂಂದರೇ, ಅದೇ ಅವ್ರ ಮಗನಿಗೆ ನಮ್ಮ ಸಂಬಂಧದ ಹುಡ್ಗೀನ ಕೊಡಿಸಲಿಕ್ಕೆ ನಾನೇ ಮಧ್ಯಸ್ಥಿಕೆ ವಹಿಸಿದ್ದೆ. +ಬೆಂಕಿಯಂಥ ಜನ. +ನಮ್ಗೇ ಅಂಥದೆಲ್ಲ ಬೇಡ. +ನಮ್ಗೆ ಹುಡ್ಗಿ ಇಷ್ಟವಾದರೇ ಸಾಕೂಂದ. +ಆಮೇಲೆ ಆ ಸಂಬಂಧ ಆಗಲಿಲ್ಲ ಅಂದ್ಕೊಳ್ಳಿ. +ಅವ್ರ ಮಗ್ಳು ನಿಮ್ಮ ಮಗ್ಳೇ ಅತ್ತಿಗೆ ಆಗ್ಬೇಕೂಂತ ಹಟ ಹಿಡಿದಳಂತೆ. +ಇವೆಲ್ಲ ಸ್ವಲ್ಪ ಹಳೆಯದಾಯ್ತು. +ನೀವು ಸ್ವಲ್ಪ ದೊಡ್ಡ ಮನಸ್ಸು ಮಾಡ್ಕೊಂಡ್‌ ಆ ಹುಡ್ಗೀನ ತಂದ್ಯೋಬೇಕಿತ್ತು” ಎನ್ನುವ ವೇಳೆಗೆ ಅವರ ಮಗ ಬಂದು ವ್ಯಾಪಾರಕ್ಕೆ ನಿಂತ. +“ಏನೋ ಋಣಾನುಬಂಧ ಇದ್ದಿಲ್ಲ. +ಮೊದ್ಲೇ ಹುಡ್ಗಿ ನಿಶ್ಚಯವಾಗಿದ್ದು. +ಮಾತು ಕೊಟ್ಟು ಬದಲಾಯಿಸೋಕೆ ಸಾಧ್ಯನಾ ? +ಅದೆಲ್ಲ ನಮ್ಮ ಕೈಯಲ್ಲಿ ಇದ್ಯಾ ? +ದೈವ ಚಿತ್ತದಂತೆ ನಾವು ನಡೀಬೇಕು” ವಾಸುದೇವಯ್ಯ ನೊಂದ ದನಿಯಲ್ಲಿ ಹೇಳಿದರು. +ಅವರೆದೆಯಲ್ಲಿ ದೊಡ್ಡ ವೇದನೆಯ ಅಗ್ನಿಕುಂಡವೇ ಇತ್ತು. +ಬೊಗಸೆ ಬೊಗಸೆ ಚೆಲ್ಲಿದಷ್ಟು ತುಂಬಿಕೊಳ್ಳುತ್ತಿತ್ತು. +"ಇದೆಲ್ಲ ತಪ್ಪಿಸಿಕೊಳ್ಳೋ ಮಾತುಗಳು. +ನಿಮ್ಗೆ ದೇವ್ರು ಬುದ್ಧಿಕೊಟ್ಟಿರಲಿಲ್ವಾ?? +ಒಂದಿಷ್ಟು ವ್ಯವಹಾರಿಕವಾಗಿ ಯೋಚಿಸಬೇಕಿತ್ತು. +ತಂದೆಯಾಗಿ ಸ್ವಂತ ಮಗಳ ಬಾಳಿಗೆ ಬೆಂಕಿ ಇಟ್ಟಿರಿ. +ನಿಮ್ಮ ಮಗ್ಳು ಗಂಡ ನೊಂದಿಗೆ ನಗುನಗುತ್ತಾ ಹೋಗ್ತಾ ಇದ್ದಿದ್ದಾ ನೋಡಿ ಸಂತೋಷಪಟ್ಟೋನು ನಾನು. +ಈಗ ಆ ಹುಡ್ಗಿ ಒಂಟಿಯಾಗಿ ಹೋಗ್ತಾ ಇದ್ದರೇ ಎದೆಗೆ ಭರ್ಜಿ ಹಾಕಿ ತಿವಿದಂತಾಗುತ್ತೆ. +ಸ್ವಂತ ತಂದೆಯಾಗಿ ನೀವು ಹೇಗಿದ್ದೀರಿ? +ನಂಗೆ ಮಾತ್ರ ಇದು ಚೆನ್ನಾಗಿ ಕಾಣ್ಣಿಲ್ಲ” ಎದೆಗೆ ಒದ್ದಂತೆ ಹೇಳಿದಾಗ ಎದ್ದ ವಾಸುದೇವಯ್ಯಎರಡು ಕೈಗಳನ್ನು ಜೋಡಿಸಿದರು. +"ಹಿಂದೆ ನಿಮ್ಮನ್ನ ಭೇಟಿ ಮಾಡ್ಬೇಕಿತ್ತು. +ಇದೇ ಮಾತುಗಳ್ನ ಯಾರಾದ್ರೂ ಆಗ ಹೇಳಿದ್ದರೇ, ಇಂಥ ದೊಡ್ಡ ತಪ್ಪು ಆಗ್ತಾ ಇಲ್ಲಿಲ್ಲ. +ಬರ್ತಿನಿ" ನಡೆದೇ ಬಿಟ್ಟರು. +ಹಿಂಬಾಲಿಸಿಕೊಂಡು ಬಂದ ಅವರ ಮಗ “ನಮ್ತಂದೆ ಮಾತಿಗೆ ನೀವೇನು ಬೇಜಾರು ಮಾಡ್ಕೋಬೇಡಿ. +ಅವ್ರ ತಪ್ಪುಗಳ್ನ ಬೇಕಾದರೆ ಪಟ್ಟಿ ಮಾಡ್ಬಹುದು +ನಮಕ್ಕನ ಚಿಕ್ಕ ವಯಸ್ಸಿನಲ್ಲಿ ಇಷ್ಟವಿಲ್ಲದವ್ನಿಗೆ ಕಟ್ಟಿದ್ರು. +ಮೂರು ಮಕ್ಳು ಜೊತೆ ಬಂದು ತವರು ಮನೆ ಸೇರ್ಕೊಂಡ್‌ ಹತ್ತು ವರ್ಷ ಆಯ್ತು. +ಅವ್ನು ಈ ಕಡೆ ತಿರುಗಿ ನೋಡ್ಲಿಲ್ಲ. +ಬರೀ ಕೋರ್ಟು, ಲಾಯರ್‌ ಅಂತ ಹಣ ಖರ್ಚುಮಾಡೋದೇ ಆಯ್ತು. +ಇದೊಂದು ಎಗ್ಗಾಮ್‌ಪಲ್‌. +ಇಂಥದ್ದು ಬೇಕಾದಷ್ಟಿದೆ. +ಚಾರುಲತ ನಾವು ನೋಡ್ದ ಹುಡ್ಗೀನೇ. +ಎಲ್ಲಾ ಗೊತ್ತಾಯ್ತು. +ನಮಕ್ಕನ ಹಾಗೇ ತವರು ಮನೆಗೆ ಭಾರವಾಗಿ ಅಳ್ತಾ ಕೂಡಲಿಲ್ಲ. +ಒಂದ್ಕೆಲ್ಸ ಹಿಡಿದಿದ್ದಾಳೆ. +ಅದೇ ಸಂತೋಷಪಡಿ. +ಮನೆ ಮನೆಯಲ್ಲು ಇಂಥದ್ದು ಇದೆ. +ನಂಗೂ ವಿವಾಹವಾಗಿ ಹತ್ತು ವರ್ಷ ಆಯ್ತು. +ಅವ್ಳಿಗೆ ಸದಾ ಗಂಡ ನನ್ನ ಸೆರಗು ಇಡ್ಕೊಂಡ್‌ ಓಡಾಡ್ಬೇಕು ಅನ್ನೋ ಆಸೆ. +ನಂಗೆ ನನ್ನ ವ್ಯಾಪಾರನೇ ಮುಖ್ಯ. +ಮುನಿಸ್ಕೊಂಡ್‌ ಮೂರು ತಿಂಗ್ಳು ಹಿಂದೆ ತವರಿಗೆ ಹೋದ್ಲು. + ನಂಗೇನು ಬೇಜಾರಿಲ್ಲ. +ಹತ್ತು ಗಂಟೆವರ್ಗೂ ವ್ಯಾಪಾರ. +ಆಮೇಲೆ ಲೆಕ್ಕ ನೋಡೋದು ಇರುತ್ತೆ. +ಆಮೇಲೆ ಆರಾಮಾಗಿ ನಿದ್ದೆ ಬರುತ್ತೆ. +ಯಾವಾಗ್ಲಾದ್ರೂ ಬರಲೀ. +ನಾನು ಆ ಕಡೆ ತಲೆ ಹಾಕಿಲ್ಲ” ಅವರ ಮನೆಯ ಪೂರ್ತಿ ಕತೆಯನ್ನ ಬಿಡಿಸಿಟ್ಟ. +ಅವರು ತಲೆ ದೂಗಿದರಷ್ಟೆ. +ಮಾತು ಬೇಕೂಂತ ಅನ್ನಿಸಲಿಲ್ಲ. +“ಇಷ್ಟೆಲ್ಲ ಯಾಕೆ ಹೇಳ್ಬೇಂತ ಅಂದರೇ, ನಮ್ಮ ಅಪ್ಪ ರಾಡಿ ಮಾಡಿರೋ ನಿಮ್ಮ ಮನಸ್ಸು ಒಂದಿಷ್ಟು ತಿಳಿಯಾಗ್ಲಿ” ಎಂದು ಹಿಂದಕ್ಕೆ ಹೋದ. +ಆ ಹಿರಿಯ ಮನುಷ್ಯನ ಬಗ್ಗೆ ಅವರಿಗೆ ಬೇಜಾರು ಇರಲಿಲ್ಲ. +ಅವರು ಹೇಳಿದ ಮಾತಿನ ಅರ್ಥ ಮನದಟ್ಟಾಗಿತ್ತು. +ಅಂದು ತಾನು ಮಗಳ ಬಗ್ಗೆ ಯೋಚಿಸಿದರೇ ಚೆನ್ನಿತ್ತು. +ಈಗ ಚಿಂತಿಸಿ ಪ್ರಯೋಜನವೇನು ? +ಮನೆಯ ಕಡೆ ಹೆಜ್ಜೆ ಹಾಕಿದರು. +ಬಾಗಿಲಲ್ಲಿ ನಿಂತಿದ್ದ ನೀರದ ತಟ್ಟನೇ ಒಳಗೆ ಹೋದಳು. +ಅವಳಿಗೆ ಈಗ ತಂದೆ, ಮಗನ ಬಗ್ಗೆ ವಿಪರೀತ ಕೋಪ. +ಅವಳಮ್ಮ ಇನ್ನೊಂದು ವಿಷಯ ಊದಿದ್ದರು. +"ನಂಗೇನೋ ಅನುಮಾನ ಕಣೇ ! +ಚಾರುಲತ ಮದ್ವೆಯಲ್ಲಿ ಅವ್ಳು ವರದಕ್ಷಿಣೆ, ವರೋಪಚಾರ ಬೇಡ ಅಂದಿರಬಹುದು. +ಈಗ ಅವುರ ಮಗ್ಳಿಗೆ ಕೊಡಲು ಹಣ ಬೇಕು. +ಅದ್ಕೇ ಇವು ಮನೆ ಮಾರಿ ಹಣ ಕೊಡಬಹುದು. +ಇರೋಒಂದ್ಮನೆ ಮಾರ್ಕೊಂಡರೇ ಏನು ಉಳಿಯುತ್ತೆ. +ಹಾದಿಗೆ ನಾಲ್ಕು ಜನ ಡಾಕ್ಟರ್‌ಗಳು ಆಗ್ಬಿಟ್ಟಿದ್ದಾರೆ. +ಸರ್ಕಾರಿ ನೌಕರಿ ಸಿಕ್ಕೋಲ್ಲ. +ನವೀನ್‌ ನಿನ್ನ ಕೈ ಹಿಡೀತಾನೇಂತ ತಿಳಿದಾಗ ನಾನು ಎಷ್ಟೊಂದು ಆಸೆ ಇಟ್ಕೊಂಡಿದ್ದೆ, ಗೊತ್ತಿದ್ಯಾ ! +ಕಡೆವರ್ಗೂ ಈ ಹಳೆ ಸ್ಕೂಟರ್‌ ಗತಿಯಾಗುತ್ತೇನೋ" ಆಕೆಯ ಕಣ್ಣೀರು ಅವಳನ್ನ ತಟ್ಟಿತ್ತು. +ವಾಸುದೇವಯ್ಕ ಸೊಸೆಯ ಕಡೆ ನೋಡಿ “ಯಾಕಮ್ಮ ಒಂದು ತರಹ ಇದ್ದೀಯಾ ? +ಅಕಸ್ಮಾತ್‌ ಕೋಪದಿಂದ ಅವನೇನಾದ್ರೂ ಎಗರಾಡಿದರೇ ಸಮಾಧಾನವಾಗಿ ಹೋಗ್ಬೇಕು. +ಹೊರ್ಗಡೆ ಅವ್ನಿಗೆ ಹಲವು ಸಮಸ್ಯೆಗಳು ಇರುತ್ತೆ? "ಬಿಡಿಸಿಟ್ಟರು. +ಮನೆಗೆ ಬಂದ ಹೆಣ್ಣು ಮುಖ ಮುದುಡಿ ಕೂಡುವುದು ಬೇಕಿರಲಿಲ್ಲ. +"ನೀವು ಕೋಪ ಮಾಡ್ಕೋಬಾರ್ದು. +ಈಗ ಮನೆ ಬದಲಾಯಿಸೋದು ಯಾಕೆ ?" +ಸೊಸೆಯ ಪ್ರಶ್ನೆಗೆ ನಿರುತ್ತರರಾದರು. +ಖಂಡಿತ ಉತ್ತರಿಸಲಾರರು “ಅದ್ನ ನವೀನ್‌ನಲ್ಲಿ ಕೇಳು” ಅಂದವರು ಅಲ್ಲೇ ಇದ್ದ ಆರಾಮ ಛೇರ್‌ನ ಮೇಲೆ ಕೂತು ಕಣ್ಣುಚ್ಚಿ “ಒಂದ್ಲೋಟ ನೀರು ಕೊಡು ತಾಯಿ” ಹೇಳಿದರು. +ಒಂದಷ್ಟು ಪಾತ್ರೆಗಳು ಸದ್ದಾದ ನಂತರವೇ ನೀರದ ನೀರು ಹಿಡಿದು ಬಂದಿದ್ದು. +ಮುಗುಳ್ನಗು ತೇಲಿತು ಅವರ ತುಟಿಗಳ ಮೇಲೆ. +ಇದೇ ಈ ನೀರದ ಸದಾ ಅವರ ಹಿಂದೂ ಮುಂದು ಸುತ್ತುತ್ತಿದ್ದಳು. +ಇಲ್ಲಿ ಕೆಮ್ಮಿದ್ದು ಕೇಳಿಸಿದರೇ ಎದುರು ಮನೆಯಿಂದ ನೀರಿಡಿದು ಹಾರಿ ಬರುತ್ತಿದ್ದಳು. +ಎಷ್ಟೊಂದು ಅಕ್ಕರೆ, ಇವರ ಪ್ರತಿಯೊಂದು ಕೆಲಸದಲ್ಲು ಅವಳು ಸಹಾಯ ಮಾಡುವುದು. +"ಮಾವ, ಮಾವ"ಒಂದು ನೂರು ಸಲವಾದರೂ ಕರೆಯುತ್ತಿದ್ದಳು ಆತ್ಮೀಯವಾಗಿ. +ಅವಳ ನಡತೆ ಅವರನ್ನ ಬಹಳವಾಗಿ ತಟ್ಟಿತ್ತು. +"ತಾನು ಸ್ವಾರ್ಥದಿಂದ ಯೋಚಿಸಿರಬೇಕು"ಎಂದುಕೊಂಡರು ಇಂದು. +ನೀರು ಕುಡಿದು ಲೋಟ ಹಿಂದಿರುಗಿಸಿದರು ನೀರದ ನಿಂತ ಜಾಗ ಬಿಟ್ಟು ಅಲ್ಲಾಡಲಿಲ್ಲ. +ಅವಳು ಮತ್ತೇನೋ ಹೇಳುವುದಿದೆಯೆಂಬು ತಿಳಿದು ಮೌನವಾದರು. +"ಒಂದ್ಮಾತು ಕೇಳಿದ್ರೆ ನೀವು ಬೇಜಾರು ಮಾಡ್ಕೋಬಾರ್ದು. +ನವೀನ್‌ ನಿಮ್ಮ ಮಾತು ಇಲ್ದೇ ಇಂಥ ಪ್ರಯತ್ನ ಮಾಡ್ತಾರಾ ? +ನಂಗೆ ನಂಬಿಕೆ ಇಲ್ಲ " ಎಂದಳು. +ಅವಳಲ್ಲಿನ ದಿಟ್ಟತನದ ಅರಿವಾಯಿತು ವಾಸುದೇವಯ್ಯನವರಿಗೆ. +ಉಗುಳು ಕಹಿಯೆನಿಸಿದರೂ ಬಲವಂತದಿಂದ ನುಂಗಿದರು. +"ನನ್ನ ಮುಂದು ಕೂಡ ಪ್ರಸ್ತಾಪಿಸಿದ್ದಾನೆ. +ಅವನೊಂದಿಗೆ ಮಾತಾಡು. +ಕೂತು ಚರ್ಚಿಸಿ. +ನಿಮ್ಮ ನಿಮ್ಮಲ್ಲಿನ ಲೋಪ ದೋಷಗಳ್ನ ಒಮತ್ವದಿಂದ ತಿದ್ದಿಕೊಳ್ಳಿ. +ಆಗ ಒಬ್ಬರ ಬಗ್ಗೆ ಇನ್ನೊಬ್ಬರ ನಂಬಿಕೆ ಅನುಮಾನ ಬಲವಾಗುತ್ತೆ. +ಅದ್ಬಿಟ್ಟು ನೀನು ಮುಖ ಮುದುರಿ ಕೂಡೋದು, ಅವ್ನು ಸಿಡುಕೋದು ಏನು ಚೆನ್ನ ?"ಅಕ್ಕರೆಯಿಂದ ಬುದ್ಧಿ ಹೇಳಿದರು. +ಇವಳು ಸಹನೆ ಕೆಟ್ಟರೆ ಡಾ||ನವೀನ್‌ ಮನೆಗೆ ಬರುವುದನ್ನ ಕಮ್ಮಿ ಮಾಡುತ್ತಾನೆಂದು ಅವರ ಅನುಭವಕ್ಕೆ ಬಂದಿತ್ತು. +ಈಗಾಗಲೇ ಆ ಹಾದಿಯನ್ನ ಹಿಡಿದಿದ್ದ. +"ನನ್ನ ತಪ್ಪೇನಿಲ್ಲ. +ಅವ್ರೇ ಬದಲಾಗಿದ್ದಾರೆ" ಮುಖ ದಪ್ಪಗೆ ಮಾಡಿದ್ದು ವಾಸುದೇವಯ್ಯನಿಗೆ ಸರಿ ಕಾಣಿಸಲಿಲ್ಲ “ಆಯ್ತು, ಅದ್ಕೇ ಕಾರಣ ಹುಡ್ಕು. +ನನ್ನಿಂದ ನನ್ನ ತಂಗಿ ಬಾಳು ಹಾಳಾಯಿತಲ್ಲ ಅನ್ನೋ ನೋವು ಇರೋದು ಸಹಜ. +ಅದ್ನ ನೀನು ಹಂಚ್ಯೋ. +ಧೈರ್ಯ ಹೇಳು. +ಆಗ ಎಲ್ಲಾ ಸರಿಹೋಗುತ್ತೆ"ತಿಳುವಳಿಕೆಯ ಮಾತುಗಳನ್ನ ಹೇಳಿದರು. +“ಅವ್ಳು ಕಾರಣವಾಗಬಹುದು. +ನಾನಂತೂ ಕಾರಣವಲ್ಲ. +ಆ ಹುಡ್ಗೀ ಜೊತೆ ಪ್ರೇಮ - ಪ್ರೀತಿ ಅಂತ ಸುತ್ತಾಡಿದ್ದಕ್ಕೆ ತಾನೇ ಇಷ್ಟೊಂದು ರಾಮಾಯಣವಾಗಿದ್ದು. +ಎಲ್ಲಾ ಮುಚ್ಚಿಟ್ಟರು." +ಮಗನ ಮೇಲೆ ಸೊಸೆಯೊರೆಸಿದ ದೋಷಾರೋಪಣೆಗೆ ಅವಾಕ್ಕಾದರು. +ಭಯವೆನಿಸಿತು ಇದು ತೀರಾ ಅಡ್ಡ ದಾರಿ. +ಹೀಗಾದರೆ ಇಬ್ಬರು ಬೇರೆ ಬೇರೆ ತೀರಗಳನ್ನ ಸೇರಿ ಬಿಡುತ್ತಾರೆ. +"ನಿನ್ನ ಯೋಚ್ನೇ ಅಡ್ಡ ದಾರಿ ಹಿಡಿದಿದೆ. +ಅವ್ಳ ಮೇಲೆ ಪ್ರೀತಿ ಪ್ರೇಮವಿದ್ದರೇ ನಿನ್ನನ್ಯಾಕೆ ವಿವಾಹವಾಗ್ತಾ ಇದ್ದ ? +ಇಷ್ಟು ಸರಳವಾದ ವಿಷಯನ ತಿಳಿಯಲಾರದಷ್ಟು ಹೆಡ್ಡಿನಾ ? +ಈ ಮಾತುಗಳ್ನ ಅವ್ನ ಮುಂದೆ ಆಡಿ ಅವ್ನ ಮನಸ್ಸಿನಿಂದ ದೂರ ಸರಿಬೇಡ. +ಹೋಗಿ, ಕೆಲ್ಸ ನೋಡ್ಕೋ. +ಸಧ್ಯಕ್ಕೆ ನಿಮ್ಮಮ್ಮನ ಮುಂದೆ ಹೋಗಿ ಕೂತು ಉಪದೇಶ ಕೇಳೋದನ್ನ ಕಡ್ಮೆ ಮಾಡ್ಕೋ"ಮೊದಲ ಸಲ ಸೊಸೆಯ ಮೇಲೆ ಗುಡುಗಿದರು. +ಅಡಿಗೆ ಮನೆಗೆ ಹೋದ ನೀರದ ಇಡೀ ದಿನ ಗರಬಡಿದಂತೆ ಅಲ್ಲೇ ಕೂತಳೇ ವಿನಃ ಒಂದು ಕೆಲಸ ಮಾಡಲಿಲ್ಲ. +ಹೇಳಿ ಸಾಕಾದ ವಾಸುದೇವಯ್ಯ ತಾವೇ ಅಡಿಗೆ ಮಾಡಿದರು. +“ಊಟ ಮಾಡು ಬಾ” ಕರೆದರು. +ನೀರದ ಅಲ್ಲಾಡಲಿಲ್ಲ. +ಕಾದು ಕಾದು ಸೋತುಡೆಗೆ ತಾವೇ ತಟ್ಟೆಗೆ ಬಡಿಸಿಕೊಳ್ಳುವ ವೇಳೆಗೆ ಅವಳ ಅತ್ತಿಗೆ ಬಂದಳು "ನೀರದ ಎಲ್ಲಿ ?" +ಅಡಿಗೆ ಮನೆಯತ್ತ ಸನ್ನೆಯಿಂದ ತೋರಿದರಷ್ಟೆ. +ಅಸಹನೆ, ಕೋಪ,ಜಿಗುಪ್ಸೆಯಿಂದ ಅವರ ತಲೆ ಸಿಡಿಯುತ್ತಿತ್ತು. +ಸೊಸೆ ಮನೆಗೆ ಬಂದರೇ ಸಕಲ ಸೌಭಾಗ್ಯಗಳು ಲಭಿಸಿ ತಾವು ಸುಖಿಯಾಗಿ ಬಿಡುತ್ತೇನೆಂದು ತಿಳಿದಿದ್ದು ತಪ್ಪೆನಿಸಿತು. +ಹಿಂದೆ ನಗುವಿತ್ತು, ಶಾಂತಿ ಇತ್ತು, ಸಂತೋಷವಿತ್ತು-ಈಗ ಅವೆಲ್ಲ ಅದೃಶ್ಯವಾಗಿತ್ತು. +ಅವರಿಗೆ ಊಟ ಮಾಡಲಾಗಲಿಲ್ಲ. +ತಟ್ಟೆಗೆ ನಮಸ್ಕರಿಸಿ ಅನ್ನವನ್ನ ಹಿತ್ತಲಲ್ಲಿ ಚೆಲ್ಲಿ ಬಂದು ಕೂತರು. +"ನೀರದಾಗೆ ಏನಾಗಿದೆ ?" + ಅವಳ ಅತ್ತಿಗೆ ಕೇಳಿದಾಗ ಗೊತ್ತಿಲ್ಲವೆಂದು ತಲೆಯಾಡಿಸಿ "ಅವ್ಳು ಊಟ ಮಾಡಿಲ್ಲ. +ಕರ್ಕೊಂಡ್ಹೋಗಿ ಊಟಕ್ಕೆ ಹಾಕು. +ಉಪವಾಸದಿಂದ ಏನು ಸಾಧಿಸೋಕ್ಕಾಗೋಲ್ಲ" ಎಂದರು. +ಅತ್ತಿಗೆ ಕರೆದಿದ್ದೇ ಸಾಕು, ಎದ್ದು ಆರಾಮಾಗಿ ಹೊರಟು ಬಿಟ್ಟಳು. +ಇದಕ್ಕೆ ಪ್ರತ್ಯಕ್ಚದರ್ಶಿಯಾಗಿದ್ದ ಕೆಲಸದ ಮೋನಮ್ಮ ಬಂದ ಕೂಡಲೇ ಡಾ॥ನವೀನ್‌ಗೆ ಹೊರಗಡೆ ವಿಷಯ ಮುಟ್ಟಿಸಿ ತಾನು ಹಗುರಾದಳು. +"ನೀನ್ಹೋಗು. . . . " ಎಂದ ಮುಖ ಗಂಟಿಕ್ಕಿ. +ಅಯ್ನೋರು ಒಂದು ತುತ್ತು ಅನ್ನ ತಿನ್ನಲಿಲ್ಲ ಅಂದಾಗ ಮಾತ್ರ ನೀರದಾನ ಕತ್ತರಿಸಿ ಹಾಕಬೇಕೆನಿಸಿತು. +ಒಳಗೆ ಬಂದವನು ತಂದೆಯನ್ನ ಆತುರಾತುರವಾಗಿ ಹೊರಡಿಸಿಕೊಂಡು "ಬೇಗ ಬರ್ಬೆಕು" ಎಳೆದೊಯ್ದ ಎಂದು ಹೇಳಬಹುದು. +ಹತ್ತಿರದ ಹೋಟೆಲ್‌ಗೆ ಕರೆದೊಯ್ದು ತಿಂಡಿಗೆ ಆರ್ಡರ್‌ ಮಾಡಿದ. +"ಏನೋ ಇದು ? +ಅಡಿಗೆನೇ ಖರ್ಚಾಗಿಲ್ಲಿಲ್ಲ. +ಅದ್ಕೆ ತಿಂಡಿಯೇನು ಮಾಡ್ಲಿಲ್ಲ. +ನಂಗೇನು ಹಸಿವು ಇಲ್ಲಿಲ್ಲ. +ಯಾಕೋ ತುಂಬ ಬದಲಾಗಿದ್ದೀಯ" ತಂದೆಯ ಮಾತಿಗೆ ಜೋರಾಗಿ ನಕ್ಕು ದನಿ ತಗ್ಗಿಸಿ ಅವರತ್ತ ನೋಡಿ "ಹೊಸ ಪೋಸ್ಟ್‌ ನಿಭಾಯಿಸಬೇಕಲ್ಲ ! +ಏನೇನೋ ಅರ್ಥ ಮಾಡ್ಕೋಬೇಡಿ. +ನಿಮ್ಗೆ ಮನೆ ತೋರಿಸೋದು ಇತ್ತಲ್ಲ. +ಅದ್ಕೇ ಆತುರಾತುರವಾಗಿ ಎಳ್ಳಂಡ್‌ ಬಂದೆ" ಎಂದ ಅಂಗೈಗಳನ್ನ ಹೊಸಕಿಕೊಳ್ಳುತ್ತ. +ಮೊದಲು ಕಸಿವಿಸಿಗೊಂಡರು ವಾಸುದೇವಯ್ಯ, ತೃಪ್ತಿಯಾಗಿಯೇ ಬೆಣ್ಣೆ ಮಸಾಲೆ ತಿಂದರು. +ಕಾಫಿ ಕುಡಿದಾದ ಮೇಲೆ ಸ್ಕೂಟರ್‌ ತಂದು ಚಾರುಲತ ಇಳಿಯುವ ಬಸ್‌ಸ್ಟಾಪ್‌ನಲ್ಲಿ ನಿಲ್ಲಿಸಿದ. +"ಇದೇನು, ಇಲ್ಲಿ ?"ಕೇಳಿದರು. +"ಚಾರುನು ಬರ್ತಳಲ್ಲ. +ಮತ್ತೆ ಇನ್ನೊಂದ್ಸಲ ಕರ್ಕಂಡ್‌ ಹೋಗೋದೇನು? +ಅದ್ಕೇ ಓಟ್ಟಿಗೆ ಹೋಗೋಣಾಂತ" ಎಂದ ಬಸ್ಸಿನ ಹಾದಿ ನೋಡುತ್ತ. +ಸೊಸೆಯ ಮನದ ಮಾತನ್ನ ಮಗನಿಗೆ ತಿಳಿಸುವುದು ಕರ್ತವ್ಯವಾಗಿ ಕಂಡಿತು. +“ಮಧ್ಯಾಹ್ನ ಮನೆ ಬದಲಾವಣೆಯ ವಿಷ್ಯ ನೀರದ ಪ್ರಸ್ತಾಪಿಸಿದ್ದು. +ನೀನು ಮೊದ್ಲೇ ಅವ್ಳ ಕಿವಿಯ ಮೇಲೆ ಈ ಮಾತು ಹಾಕ್ಬೇಕಿತ್ತು. +ತುಂಬ ನೊಂದುಕೊಂಡ್ಲು. +ಅವ್ಳಿಗೆ ಇಷ್ಟವಾಗೋಲ್ಲ." +ತಂದೆಯ ಮಾತುಗಳಿಗೆ ಕಿರುನಗೆ ಬೀರಿದ. +"ಹೇಗೆ, ಹೇಳೋಕ್ಕಾಗುತ್ತೆ ? ಬೇಡಾಂತಾಳೆ. +ಇವ್ಳ ಇಲ್ಲಿಂದ ಹೊರಟುಹೋದರೆ ಅವಳಮ್ಮನ ಉಪದೇಶ ಕೇಳೋರು ಯಾರು ? +ನಮ್ಮ ಡಾ॥ರೆಡ್ಡಿ ಆಗಾಗ ಒಂದ್ಮಾತು ಹೇಳ್ತಾರೆ. +ಕೋಳಿನ ಕೇಳಿ ಮಸಾಲೆ ಅರೆಯೋಲ್ಲ ಅಂತ. +ಈ ವಿಷ್ಯದಲ್ಲಿ ಅವ್ಳ ಅಭಿಪ್ರಾಯ ಬೇಕಿಲ್ಲ" ಸ್ಪಷ್ಟವಾಗಿ ಹೇಳಿದ. +ಅವನ ಮುಖ ಕೋಪದಿಂದ ಉರಿಯುತ್ತಿತ್ತು. +"ನಂಗೇನು ಅರ್ಥವಾಗೋಲ್ಲ !"ಎಂದರು ನೋವಿನಿಂದ. +ತಂದೆಯತ್ತ ನೋಡಿದ. +"ಅರೆ, ಇಷ್ಟೊಂದು ಸುಕ್ಕುಗಳು ಇವರ ಮುಖದ ಮೇಲೆ ಮೂಡಿದ್ದು ಎಂದು ?" +ಚಾರುಲತ ಭವಿಷ್ಯದ ಬಗ್ಗೆ ಆತಂಕದಿಂದ ತೀರಾ ಹಣ್ಣಾಗಿದ್ದಾರೆನಿಸಿದಾಗ, ಅವನ ಕರುಳು ಕಿತ್ತು ಬಂದಂತಾಯಿತು. +ಝಳುಝಳು ಹರಿದು ಹೋಗುತ್ತಿದ್ದ ಜೀವನ ಸಮಸ್ಯೆಗಳೆಂಬ ಕಸ ಕಡ್ಡಿಯ ನಡುವೆ ಸಿಕ್ಕಿಕೊಂಡು ಒದ್ದಾಡುತ್ತಿತ್ತು. +ಹದಿನೈದು ನಿಮಿಷ ಕಾದ ನಂತರವೆ ಬಸ್ಸು ಬಂದಿದ್ದು. +ಇಳಿದ ಚಾರುಲತ ಆಶ್ಚರ್ಯಗೊಂಡಳು. +ಹಿಂದೆಯೇ ಆತಂಕ. +ಇಂದು ಮಧ್ಯಾಹ್ನ ಯುಗಂಧರ್‌ ಆರೋಗ್ಯ ವಿಚಾರಿಸಲು ಫೋನ್‌ ಮಾಡಿದಾಗ ಮೃಣಾಲಿನಿ ಬಹಳ ದಿನಗಳ ನಂತರ "ಹೇಗಿದ್ದಿ ?" +ಎಂದು ವಿಚಾರಿಸುವುದರ ಜೊತೆಗೆ "ತುಂಬ ಥ್ಯಾಂಕ್ಸ್‌,ನಿನ್ನಿಂದ ದೊಡ್ಡ ಉಪಕಾರವೇ ಆಗಿದೆ" ಅಂದಾಗ ಸದ್ದಿಲ್ಲದೇ ಫೋನಿಟ್ಟಿದ್ದಳು. +"ಇದೇನು, ನೀವಿಬ್ರೂ ಇಲ್ಲಿ ?" ಕೇಳಿದಳು ಗಾಬರಿಯಿಂದ. +"ಅಂಥದೇನಿಲ್ಲ !"ಎಂದವ ಸ್ಕೂಟರ್‌ನ ವೆಹಿಕಲ್‌ ಸ್ಟಾಂಡ್‌ನಲ್ಲಿ ನಿಲ್ಲಿಸಿ ಆಟೋನ ತಂದ "ಹತ್ಯೊಳ್ಳಿ" ಸೂಚಿಸಿದ. +ತಂದೆ, ಮಗಳು ಮುಖ ಮುಖ ನೋಡಿಕೊಂಡರು. +ಆಗ ತಾನೇ ಕಟ್ಟಿ ಮುಗಿಸಿದ ಇತ್ತೀಚೆಗೆ ಗೃಹಪ್ರವೇಶ ಮಾಡಿದ ಒಂದು ಹೊಸ ಮನೆಯ ಮುಂದೆ ಆಟೋ ನಿಲ್ಲಿಸಿ ಹಣ ಕೊಟ್ಟಾಗಲೇ ದೂರದ ಲೆಕ್ಕ ಹಾಕಿದ್ದು ಚಾರುಲತ. +ಮುವತ್ತಾರು ರೂಪಾಯಿ ಆಟೋದವನಿಗೆ ತೆತ್ತಿದ್ದ. +ಹೊಸ ಏರಿಯಾ. +ಹೆಚ್ಚು ಕಡಿಮೆ ಇತ್ತೀಚೆಗೆ ಕಟ್ಟಲ್ಪಟ್ಟ ಬಿಲ್ಡಿಂಗ್‌ಗಳು. +ಅವನೇ ಜೇಬಿನಿಂದ ಕೀ ತೆಗೆದು ಗೇಟಿಗೆ ಹಾಕಿದ್ದ ಬೀಗ ತೆಗೆದ. +ವಿಶಾಲವಾದ ಕಾಂಪೌಂಡ್‌ ಬಟ್ಟ ಬಯಲಿನಂತಿತ್ತು. +ಅಲ್ಲಲ್ಲಿ ಪೈಂಟ್‌ನ ಕಲೆಗಳು, ಸಿಮೆಂಟುನ ಧೂಳು ಇತ್ತು. +ಅಂತು ಚೆಂದವಾದ ಮನೆಯೇ. +“ಅಂತು ಒಳ್ಳೆ ಕಡೆನೇ ಮನೆ ಹಿಡಿದಿದ್ದೀಯಾ ! +ನೀರದ ಅವ್ಳ ಅಮ್ಮನನ್ನ ಒಮ್ಮೆ ನೋಡಿ ಬರಬೇಕಾದರೆ, ನೂರು ರೂಪಾಯಿ ಖರ್ಚು. +ಇದು ತುಂಬ ಅನ್ಯಾಯ. +ಆ ಹಣ ನೀನೇ ಕೊಡಬೇಕಲ್ಲ ಬಿಡು” ಅಂದು ಅಣಕಿಸಿದಳು ಚಾರುಲತ. +ಬೀಗ ತೆಗೆಯುತ್ತಿದ್ದವನು ತಂಗಿಯತ್ತ ನೋಟ ಹರಿಸಿ "ಯಾಕೆ ಕೊಡೋಲ್ಲ? +ಖಂಡಿತ ಕೊಡ್ತೀನಿ. +ನನ್ನ ಸಂಬಳ ಈ ಮನೆ ಬಾಡಿಗೆ, ಎಲೆಕ್ಟ್ರಿಕ್‌ ಬಿಲ್‌ಗೆ ಸರ್ಯೋಗುತ್ತೆ. +ಉಳಿದಿದ್ದು ಪೆಟ್ರೋಲ್‌ಗೆ. +ನಾನು ಇಂಥ ಸ್ಥಿತಿಯಲ್ಲಿರೋವಾಗ,ಅವಳಿಗೆ ನೂರು ನೂರು ಕೊಟ್ಟು ಅವಳಮ್ಮನನ್ನು ನೋಡಲು ಕಳಿಸ್ತೀನಿ "ವ್ಯಂಗ್ಯವಾಗಿ ಅಂದ. +ಸ್ವಲ್ಪ ಜಿದ್ದಿಯಾಗಿ ಕಂಡ ನವೀನ್‌ ಮೊದಲ ಸಲ ಚಾರುಲತಗೆ. +ಮೂವರು ಒಳಗೆ ಪ್ರವೇಶಿಸಿದರು. +ಒಳಗೆ ಬರೀ ಪೈಂಟ್‌ ಮತ್ತು ಪಾಲಿಷ್‌ನ ವಾಸನೆ. +ನೆಲಕ್ಕೆ ಪೂರ್ತಿಯಾಗಿ ಮಾರ್ಬಲ್‌ ಹಾಕಿಸಿದ್ದರು. +ಎರಡು ದೊಡ್ಡ ರೂಮು. +ಹಾಲ್‌, ಡೈನಿಂಗ್‌ ಹಾಲ್‌ನ ಕೂಡಿಸಿ ನವೀನ ಮಾದರಿಯಲ್ಲಿ ವಿಸ್ತರಿಸಿದ್ದರು. +ಅಡಿಗೆ ಮನೆಗೂ ಪೂರ್ತಿಯಾಗಿ ಮಾರ್ಬಲ್ಸ್‌. +ಗೋಡೆಗಳಿಗೆ ಸೆರಾಮಿಕ್ಸ್‌ ಟೈಲ್ಸ್‌, ಸಿಂಕ್‌-ನಲ್ಲಿ ಎಲ್ಲಾ ಲೇಟೆಸ್ಟ್‌ ಆಗಿಯೇ ಇತ್ತು. +ಅಂತು ಚೆಂದದ ಮನೆಯೇ. +ತಂದೆ, ಮಗಳು ಡಾ|। ನವೀನ್‌ನತ್ತ ನೋಡಿದರು. +ಅರ್ಥಮಾಡಿಕೊಂಡ "ಬಾಡ್ಗೇ ಬಗ್ಗೆ ಅಂಥ ಯೋಚೇನೇ ಬೇಡ. +ಹೆಚ್ಚಿಗೇನು ಕೊಡೊದ್ಬೇಡ ಅಂದಿದ್ದಾನೆ. +ಡಾ|ರೆಡ್ಡಿ ಒಂದೈದು ವರ್ಷ ದುಬೈಗೆ ಹೋಗ್ತಾ ಇದ್ದಾನೆ. +ಅವನದೇ ಮನೆ. +ಅವ್ನೇ ನನಗೊಂದು ಆಫರ್‌ ಕೊಟ್ಟ. +ಇಂಥ ಮನೆ ಕಟ್ಟಿಸೋದಂತು ದೂರದ ಮಾತು. +ಆದರೂ ಇಂಥ ಮನೆಯಲ್ಲಿ ಬಾಡಿಗೆ ಕೊಟ್ಟುದ್ರೂ ವಾಸ ಮಾಡಬಹುದಲ್ಲ" ಎಂದ ಸುತ್ತಲೂ ನೋಟ ಹರಿಸುತ್ತ. +ಹಾಲ್‌ನಿಂದ ನಾಲ್ಕು ಮೆಟ್ಟಲು ಎತ್ತರಿಸಿ ಡೈನಿಂಗ್‌ ಟೇಬಲ್‌ಹಾಕಲು ಮಾಡಿದ್ದರು. +ಆ ಮೆಟ್ಟಲು ಮೇಲೆ ಕೂತಳು ಚಾರುಲತ. +ಸಧ್ಯಕ್ಕೆ ನವೀನ್‌ನೊಂದಿಗೆ ಮಾತಾಡಲು ಇದು ಸುಸಮಯವೆನಿಸಿತು. +"ಕೂತ್ಯೋಪ್ಪ" ಎಂದಳು ತನ್ನ ಹ್ಯಾಂಡ್‌ ಬ್ಯಾಗ್‌ನ ಪಕ್ಕದಲ್ಲಿರಿಸಿ ಕೊಳ್ಳುತ್ತ. +ಅವರಿಗೂ ಕೂಡ ಮುಂದೆ ಮಗ ಹೆಜ್ಜೆ ಇಡುವ ಮುನ್ನ ಒಂದಿಷ್ಟು ಮಾತನಾಡುವುದು ಸರಿಯೆನಿಸಿತು. +"ನವೀನಾ, ನಂಗೆ ಸರಿಯೆನಿಸಿದ ನಾಲ್ಕು ಮಾತು ಹೇಳ್ತೀನಿ. +ಒಮ್ಮೆ ಮಾಡಿದ ತಪ್ಪ, ಮತ್ತೆ ಮಾಡ್ಬಾರ್ದು. +ನೀನು ಈಗ ಮನೆ ಬದಲಾಯಿಸೋದ್ರಿಂದ ದೊಡ್ಡ ತೊಡಕು ಇದೆ. +ನೀರದಾಗೆ ಇಷ್ಟವಾಗೋಲ್ಲ. +ಅವ್ಳು ನಿನ್ನ ನಡ್ಡೇ ನೇರವಾಗಿ ಘರ್ಷಣೆ ಷುರುವಾಗುತ್ತೆ" ಎಚ್ಚರಿಸಿದರು. +ಆರಾಮಾಗಿ ನಕ್ಕು ಬಿಟ್ಟ. +ಅವನಿಗೆ ತಾನು ಮಾಡಿದ ತಪ್ಪು ಬ್ರಹ್ಮಾಂಡವಾಗಿ ಕಾಣುತ್ತಿತ್ತು. +ಈಗ ಸ್ವಲ್ಪ ಬಿಗಿ ಧೋರಣೆ ಅನುಸರಿಸದಿದ್ದರೆ ಜೀವನಪೂರ್ತಿ ನರಳಬೇಕೆಂದು ಅವನಿಗೆ ಗೊತ್ತು. +ಅಲ್ಲೇ ತಂದೆಯ ಪಕ್ಕ ಕೂತು "ಅಪ್ಪ, ಒಂದ್ಮಾತು ಕೇಳ್ಲಾ ? +ವರ್ಷ ಗಟ್ಟಲೇ ಜಡಿಮಳೆ ಹಿಡಿದರೇ ಹೇಗೆ ? +ಭೂಮಿನ ತೋಯಿಸೋಕೆ ವರ್ಷ ಅನಿವಾರ್ಯ. +ಅದಿಲ್ಲದೇ ಬದುಕಿಲ್ಲ. +ಆದರೆ,ವರ್ಷಾನುಗಟ್ಟಲೆ ದಿನದ ನಲವತ್ತೆಂಟು ಗಂಟೆಗಳು ಜಡಿಮಳೆ ಸುರಿಯುತ್ತಿದ್ದರೆ ಹೇಗೆ ? +ಇಲ್ಲ ಪ್ರಕೃತಿದತ್ತವಾದ ಒಂದು ಕಾಲದಲ್ಲಿ ಮಳೆ ಇತಿ ಮಿತವಾಗಿ ಸುರಿದು, ನಂತರ ಶುಭ್ರವಾದ ಆಕಾಶದ ದರ್ಶನವಾದರೇ ಹೇಗೆ ? +ಇಡೀ ರಾತ್ರಿ ಮಳೆ ಸುರಿದರೂ ಮನುಷ್ಯ ಬೆಳಿಗ್ಗೆ ಸೂರ್ಯನನ್ನ ನೋಡಲು ಹಂಬಲಿಸುತ್ತಾನೆ. +ಈಗ ಮೊದಲಿದರ ಬಗ್ಗೆ ನಿಮ್ಮ ಅಭಿಪ್ರಾಯವೇನು ?"ಅರ್ಥಗರ್ಭಿತವಾಗಿ ಕೇಳಿದ. +ಅವರು ಚಿಂತಿತರಾದರು. +ಮಗನ ಒಳ ಪೂರ್ತಿ ಅರ್ಥವಾಗದಿದ್ದರೂ ಅಪ್ಪಿಷ್ಟು ಅರ್ಥಮಾಡಿಕೊಂಡರು. +ಆದರೆ ವಿಶ್ಲೇಷಿಸಿದ್ದು ಮಾತ್ರ ಚಾರುಲತ. +"ಯಾರ್ಗೂ ಇಪ್ಪತ್ನಾಲ್ಕು ಗಂಟೆ ಸುರಿಯೋ ಮಳೆ ಬೇಕಿರೋಲ್ಲ. +ನಾವು ಈಗಿನ ಇಲ್ಲಿನ ಪ್ರಕೃತಿಯ ವೈಪರೀತ್ಯಕ್ಕೆ ಒಗ್ಗಿಕೊಂಡಿದ್ದೀವಿ. +ಅಂಥ ಏರುಪೇರುಗಳಾದರೇ. . . . ಸಾಧ್ಯವಿಲ್ಲ" ತಲೆ ಅಡ್ಡಡ್ಡ ಆಡಿಸಿದಳು. +ತಂಗಿಯ ತಲೆ ಕೆದರಿ "ಚಾರು, ಅಪ್ಪ ಎದುರಿಗೆ ಇದ್ದರೂ ಪರ್ಹಾಗಿಲ್ಲ! +ಲವ್‌ ಅಂದರೇನು ? +ನನ್ನ ನೀರದ ಭಯಂಕರವಾಗಿ ಪ್ರೀತಿಸ್ತಾ ಇದ್ದಾಳೆ. +ನನ್ನ ನಿಲುವು ಸ್ವಲ್ಪ ಬದಲಾದ್ರೂ ಆತ್ಮಹತ್ಯೆ ಮಾಡ್ಕೋತಾಳೇಂತ ತಿಳಿದಿದ್ದೆ. +ಅದೆಲ್ಲ ಸುಳ್ಳು. ಒಬ್ಬ ಡಾಕ್ಟ್ರು ಗಂಡ ಪುಗಸಟ್ಟೆಯಾಗಿ ಸಿಕ್ತಾನೇ ಅಂತಲೇ ಮನೆಯವ್ರೆಲ್ಲ ಓಲೈಸಿದ್ದು. +ಮದ್ವೆ ಆದ್ಮೇಲೆ ಹೇಗೆ ಬದಲಾಗ್ಬಿಟ್ಟು ನೋಡು. +ನೀವು ಮನೆ ಬದಲಾಯಿಸದಿದ್ರೆ ತೊಡಕಿಗೆ ಸಿಕ್ಕಿ ಕೋತೀರೀಂತ ಅವ್ಳ ಅಣ್ಣನ ಸಲಹೆ. +ಸಧ್ಯಕ್ಕೆ ಆ ಮಹಾತಾಯಿ ಸಾವಿನ ಡೇಟ್‌ ಮುಂದಕ್ಕೆ ಹಾಕ್ತಾ ಹೋಗ್ತಾ ಇದ್ದಾಳೆ"ಗೊಣಗಿದ. +ತಂದೆಯ ಮುಖ ನೋಡಿದಳು. +ಸಪ್ಪಗೆ ಕೂತಿದ್ದರು. +"ಒಂದ್ಕೆಲ್ಸ ಯಾಕೆ ಮಾಡ್ಬಾರ್ದು ? +ನಾನು, ಅಪ್ಪ ಅಲ್ಲೇ ಇದ್ಯೋತೀವಿ. +ನೀನು ನೀರದ ಇಲ್ಲಿರಬಹುದು" ಮೆಲ್ಲಗೆ ಪ್ರಸ್ತಾಪಿಸಿದಳು. +ಚಪ್ಪಾಳೆ ತಟ್ಟಿದ ಡಾ||ನವೀನ್‌. + "ಹೇಗೂ, ನನ್ನ ಸಂಪಾದ್ನೇನ ಬಾಡ್ಗೆಯಾಗಿ ಕೊಟ್ಟು ಊಟ, ತಿಂಡಿಗೆ ದಿನವು ಅಲ್ಲಿಗೆ ಬರ್ತೀವಿ. +ಅದು ಇದ್ದಿದ್ದು ಆರಾಮು. +ನೀರದ ಹೇಗೂ ದೊಡ್ಡ ಮನೆ ಬೇಜಾರೂಂತ ಅವಳಮ್ಮನನ್ನು ಶಾಶ್ವತವಾಗಿ ತಂದಿಟ್ಕೋತಾಳೆ. +ಅವ್ರ ಮಕ್ಳಿಗೆ ಇದು ಸಂತೋಷದ ಸುದ್ಧಿ ನಿಮ್ಮಣ್ಣನಿಗೆ ನರಕ ! +ಇದೊಂದು ಉಪಕಾರ ಮಾಡ್ಬಿಡು. +ಇಲ್ಲಿ ನನ್ನ ತ್ಯಾಗ ರಿವರ್ಸ್‌ ಆಯ್ತು" ತಂಗಿಯ ಎರಡು ಕೈಗಳನ್ನ ಹಿಡಿದುಕೊಂಡು ಗದ್ಗದಿತನಾದ. +ಚಾರುಲತ ಹತ್ತಿಕ್ಕಲಾರದೆ ಪಕ್ಕಕ್ಕೆ ತಿರುಗಿ ಕಣ್ಣೊರೆಸಿಕೊಂಡಳು. +ನಿಜವಾಗಲೂ ಇದೊಂದು ಷಾಕಿಂಗ್‌ ನ್ಯೂಸ್‌. +ಪ್ರೇಮಿಸಿ ಮದುವೆಯಾದ ಜೋಡಿಯ ನಡುವೆ ಇಷ್ಟು ಬೇಗ ಅಭಿಪ್ರಾಯ ಭೇದ, ಬೇಸರ, ಜಿಗುಪ್ಸೆ. +ತಕ್ಷಣ ಚೇತರಿಸಿಕೊಂಡ ಅವನು "ಡೋಂಟ್‌ ವರಿ, ನಾನು ನೀರದಾನ ಇಷ್ಟಪಟ್ಟಿದ್ದು ನಿಜ. +ಇವೆಲ್ಲ ಅವರವ್ರ ಯೋಗ್ಯತೆಗಳಿಗೆ ಸಂಬಂಧಿಸಿದ ವಿಷಯ. +ಆ ಬಗ್ಗೆಯೇನು ನೀನು ತಲೆ ಕೆಡಿಸ್ಕೋಬೇಡ. +ಆ ಮನೆನಾ ನನ್ನ ಪ್ರೆಂಡ್‌ಗೆ ನಾಲ್ಕು ಲಕ್ಷ ಲೀಜ್‌ ಮೇಲೆ ಕೊಡೋದು. +ಆ ಹಣನ ಅಪ್ಪನ ಹೆಸರಿನಲ್ಲಿ ಫಿಕ್ಸೆಡ್‌ಗೆ ಹಾಕೋದು. +ಸಧ್ಯಕ್ಕೆ ನೀರದ ಅವ್ಳ ಅಮ್ಮನ ಉಪ ದೇಶದಿಂದ ಮುಕ್ತಾಳಾಗ್ಬೇಕು. +ಇಲ್ಲದಿದ್ದರೇ ಮನೆ ಸುಡುಗಾಡು ಆಗ್ಬಿಡುತ್ತೆ. +ದಯವಿಟ್ಟು ಇದ್ಕೇ ನೀವಿಬ್ರೂ ಒಪ್ಪಿಗೆ ಕೊಡ್ಬೇಕು" ಎಂದ. +ಅವನು ಹೆಣಗಿ ಒಂದು ಬಲವಾದ ನಿರ್ಧಾರಕ್ಕೆ ಬಂದಿದ್ದ. +ಐದು ನಿಮಿಷ ಮೌನವಾಗಿ ಕೂತ ವಾಸುದೇವಯ್ಯ "ದುಡುಕಬೇಡ. +ನೀರದಾಗೆ ಇನ್ನೊಂದು ಅನುಮಾನ. +ನಾವು ನಮ್ಮ ಮನೆನ ಮಾರಿ ಆ ಹಣನ ಪೂಜಾ ಮದುವೆ ಸಲುವಾಗಿ ಮೂರ್ತಿಗೆ ವರದಕ್ಷಿಣೆ ರೂಪದಲ್ಲಿ ಕೊಡ್ತಾ ಇದ್ದೀವಿ ಅನ್ನೋ ಅವ್ಳ ಅಭಿಪ್ರಾಯ. +ಹಾಗೇ ತಿಳ್ಕೋತಾಳೆ ಕೂಡ" ಬಹಳ ನಿಧಾನವಾಗಿ ಹೇಳಿದರು ಅರ್ಥವಾಗುವಂತೆ. +ಭೇಷ್‌, ನಂಗೆ ಅಂಥ ಒಂದು ಅವಕಾಶ ಸಿಕ್ಕರೇ, ನೀರದಾನ ಎತ್ಕೊಂಡ್‌ಓಡಾಡಿ ಬಿಡ್ತೀನಿ. +ಆ ಹಣದಲ್ಲಿ ನನ್ತಂಗಿ ಸಂಸಾರ ಸರಿಪಡಿಸೋಕೆ ಸಾಧ್ಯನಾ? +ಅವ್ರು ಅಂಥ ಜುಜುಬಿ ಜನ ಅಲ್ಲ ಬಿಡು. +ಇವ್ರಿಗೇನು ಗೊತ್ತು ಅವ್ರ ಯೋಗ್ಯತೆ. +ಮೂರ್ತಿ ಈಗ್ಲೂ ಸಾವಿರದಲ್ಲಿ ಒಬ್ಬ. +ಅದ್ಕೇ ಅವ್ನಿಗೆ ಲಕ್ಷದಲ್ಲಿ ಒಬ್ಳು ಅನ್ನೋಂತ ಸಂಗಾತಿ ಸಿಕ್ಳು. +ಅಪ್ಪ, ನೀರದಾ ವಿಷ್ಯ ಬಿಡಿ. +ದಯವಿಟ್ಟು ನಿಮ್ಮನ್ನ ನೋಯಿಸ್ತಾ ಇದ್ದೀನಿ. +ಬೇರೆ ದಾರಿ ನಂಗಿಲ್ಲ. +ನೀವು ಮಾತ್ರ ಕೊರಗ್ಬಾರ್ದು" ಅವರ ಎರಡು ಕೈಗಳನ್ನ ಹಿಡಿದು ಕಣ್ಣಿಗೊತ್ತಿಕೊಂಡ. +ವಾಸುದೇವಯ್ಯ ಮಗನನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದರು. +ಚಲನಚಿತ್ರದಲ್ಲಿ ಈ ದೃಶ್ಯ ಮೂಡಿ ಬರಬೇಕಾದರೇ ಎಷ್ಟು ರಿಟೇಕ್‌ಗಳು ಆಗುತ್ತಿದ್ದವೋ. +ಅದಕ್ಕಾಗಿ ಡೈರೆಕ್ಟರ್‌ ಎಷ್ಟು ಕಷ್ಟಪಡಬೇಕಿತ್ತೋ ! +ಹೃದಯವಿದ್ಧ ಪ್ರೇಕ್ಷಕರೆಲ್ಲ ಕಣ್ಣೀರು ಮಿಡಿದರೆ, ಬರೀ ಮಿದುಳಿದ್ದ ಜನ ಮುಖ ತಿರುವಿ ಕರ್ಚಿಫ್‌ ಆಡಿಸುತ್ತಿದ್ದರೇನೋ ಫುಲ್‌ ಸೆಂಟಿಮೆಂಟಲ್‌ ಸೀನ್‌,-ಬಹಳ ಹೊತ್ತು ಮೂವರು ಕೂತು ಮಾತಾಡಿ ಮನೆಗೆ ಹೊರಟಾಗ ರಾತ್ರಿಯೇ ಆಗಿತ್ತು. +ಬಲವಂತದಿಂದ ಡಾ| ನವೀನ್ ತನ್ನ ಸ್ನೇಹಿತನ ಮನೆಗೆ ಕರೆದೊಯ್ದ. +ಅಲ್ಲೇ ಊಟ, ಉಪಚಾರ ಆಯಿತು. +"ಮನೆಗೆ ಫೋನಾದ್ರೂ ಮಾಡು. +ನೀರದ ಏನು ತಿಳ್ಕೋ ಬೇಕು?" ತಂಗಿಯ ಮಾತಿಗೆ ಒಂದಲ್ಲ ನಾಲ್ಕು ಸಲ ಪ್ರಯತ್ನಿಸಿದ. +"ಯಾರು ಫೋನ್‌ ಎತ್ತುತ್ತ ಇಲ್ಲ. +ನೀನು. . . . ನೋಡು" ತಂಗಿಯ ಕೈಗೆ ಕೊಟ್ಟು ಮುಗಿಸಿದ ಕರ್ತವ್ಯವೆನ್ನುವಂತೆ. +ಅವಳು ಕೂಡ ಪ್ರಯತ್ನಿಸಿದಳು. +ಫೋನ್‌ ರಿಂಗಾಗುತ್ತಿತ್ತು “ಇಲ್ಲಪ್ಪ. . . ” ಎಂದು ಕೂತಳು. +ಆಟೋದಲ್ಲಿ ಬಂದು ಇಳಿದಾಗ ಹನ್ನೊಂದು ದಾಟಿ ಹೋಗಿತ್ತು. +ಕನಿಷ್ಟ ಮನೆಯ ಮುಂದೆ ಲೈಟು ಕೂಡ ಇರಲಿಲ್ಲ. +ಮುಂಬಾಗಿಲಿನ ಬೀಗದ ಒಂದು ಗೊಂಚಲು ಸದಾ ನೀರದ ಸೊಂಟದಲ್ಲಿಯೇ ಇರುತ್ತಿತ್ತು. +ಅದು ಎಲ್ಲರಿಗೂ ಗೊತ್ತಿತ್ತು. +"ಈ ಹುಡ್ಗಿ ಮನೆಗೆ ಬಂದಿಲ್ಲ" ಎಂದರು ವಾಸುದೇವಯ್ಯ. +ಮುಖ ಬಿಗಿದುಕೊಂಡೇ ಹೋಗಿ ಬಾಗಿಲು ತೆಗೆದ ಡಾ| ನವೀನ್‌ "ಲೈಟು ಹಾಕಿದ. +ನೀರದಾನ ಕರೀತೀನಿ" ಹೊರಟ ತಂಗಿಯ ರೆಟ್ಟೆ ಹಿಡಿದು ನಿಲ್ಲಿಸಿದ. +"ಬೇಡ, ಸುಮ್ನೆ ನಿದ್ದೆ ಮಾಡಿರೋರ್ನ ಎಬ್ಬಿ ಸಿ ಡಿಸ್ಟರ್ಬ್‌ ಮಾಡೋದ್ಬೇಡ" ತಡೆದ. +ಬಾಗಿಲು ತೆಗೆದವನು ಹೊರಗಡೆ ಲೈಟು ಹಾಕಲೇ ಇಲ್ಲ. +ಟಿ.ವಿ. ನೋಡುತ್ತಿದ್ದ ನೀರದಾಗೆ ಆಟೋ ನಿಂತ ಸದ್ದೇ ಕೇಳಲಿಲ್ಲ. +ಚಲನಚಿತ್ರದ ಒಂದು ಮಹತ್ತರ ಘಟ್ಟದಲ್ಲಿ ಎಚ್ಚರವಿಲ್ಲದೇ ಮುಳುಗಿ ಹೋದಳು. +ಯಾವ ಧ್ಯೇಯೋದ್ದೇಶಗಳು ಇಲ್ಲದ ಹೆಣ್ಣುಗಳು ಕಾಣುವ ಕನಸುಗಳೆಲ್ಲ ಒಂದೇ. +ಇದು ಸರಿಯೆನಿಸಲಿಲ್ಲ ಚಾರುಲತಗೆ. +"ಏಯ್‌ ನವೀನಣ್ಣ ಒಂದು ಕೂಗು ಹಾಕು. +ಇಷ್ಟೊಂದು ಕಟುವಾದರೆ ಹೇಗೆ ?"ಎಂದಳು ಬೇಸರದಿಂದ. +ಅವಳ ಬಳಿಯಲ್ಲಿ ಬಗ್ಗಿ "ಖಂಡಿತ ನಿನ್ನ ಗಂಡನಷ್ಟು ಕಟುವಲ್ಲ. +ನಿನ್ನಂಥ ನಿರಪರಾಧಿ ಹೆಣ್ಣಿಗೆ ವಿಧಿಸಿದ ಶಿಕ್ಷೆ ಎಷ್ಟೊಂದು ಘೋರ !" ಕನಲಿದ. +ಅವನ ದನಿಯಲ್ಲಿ ಕೂಡ ಕೋಪ ಇಣಕಿತು. +ನಗಲು ಪ್ರಯತ್ನಿಸಿದಳು. ನಗಲಾಗಲಿಲ್ಲ. +ಆದರೂ ಸೋಲೊಪ್ಪಿಕೊಳ್ಳಲು ಇಚ್ಛಿಸದೇ ಪ್ರಯತ್ನಪೂರ್ವಕವಾಗಿ ಮುಗುಳ್ನಗು ಬೀರಿದಳು. +ಸಾರಿ ಕೇಳಲಾ ? ನಂಗೆ ಗೊತ್ತು ನಿನ್ನ ಮೃದು ಸ್ವಭಾವ. +ಅವಳದು ತಪ್ಪೇ ಇರ್ಬಹುದು. +ರಾತ್ರಿಯೆಲ್ಲ ಕಣ್ಣೀರಿಡಬಾರದಲ್ಲ. +ಸಂಜೆಯೆ ಕಾರ್ಯ ಕ್ರಮ ಬೆಳಿಗ್ಗೆನೇ ನೀನು ಬಿತ್ತರಿಸ್ಬೇಕಿತ್ತು. +"ಇಗೋ ಬೇಡ, ನಾನ್ಹೋಗಿ ಕೂಗ್ಲಾ ? " ಕೇಳಿದಳು. + ಕಿವಿ ಹಿಡಿದು ರೂಮಿನವರೆಗೂ ಕರೆದೊಯ್ದು ಬಿಟ್ಟು "ಗುಡ್‌ನೈಟ್‌,ಬೇರೆಯವುರ ನಿದ್ದೆ ಹಾಳು ಮಾಡ್ಬಾರ್ದು" ಹೇಳಿ ಬಾಗಿಲು ಎಳೆದುಕೊಂಡು ಆರಾಮಾಗಿ ಹೋಗಿ ಮಲಗಿದ. +ಇಂದು ಹಾಯೆನಿಸಿತು. +ಜೊತೆಗಾತಿಗಾಗಿ ಚಡಪಡಿಸಿದ ರಾತ್ರಿಗಳೆಷ್ಟೋ,ಕಂಡ ಕನಸುಗಳೆಷ್ಟೋ. +ಈಗ ಎಲ್ಲಾ ಮುಗಿದಂತಾಗಿತ್ತು. +ಮುಂದೇನು ? ಇಷ್ಟೇನಾ. . . . ಬದುಕು ? +ಇದಕ್ಕಾಗಿ ಇಷ್ಟೊಂದು ಹಾರಾಟ, ಹೊಯ್ದಾಟ. +ಎಲ್ಲಾ ವಿಚಿತ್ರವೆನಿಸಿತು. +ಬೇಗ ನಿದ್ದೆ ಬಂತು ಕೂಡ. +ಸಿನಿಮಾ ಮುಗಿದಾಗ ಒಂದರ ಸುಮಾರು. +ಹುಡುಗರ ಜೊತೆ ತಾಯಿ,ಮಗಳು ನೋಡಿದ್ದರು. +ರುಗ್ಗನೇ ಎದ್ದ ನೀರದ ಗಡಿಯಾರದ ಕಡೆ ನೋಟ ಹರಿಸಿ ಬೆಚ್ಚಿಬಿದ್ದು. +"ಆಗ್ಲೇ, ಒಂದ್ಗಂಟೆ ಇನ್ನೇನು ಗತಿ ? +ಇವುಗಳೆಲ್ಲ ಎಲ್ಲಿ ಹೋದ್ರೋ"ಗಾಬರಿಯಿಂದ ಕಣ್ಣೀರು ಸುರಿಸಲು ಷುರು ಮಾಡಿದಾಗ, ಅವಳಮ್ಮ ಮಗನನ್ನ ಕೂಗಿಕೊಂಡರು "ಒಂದಿಷ್ಟು ನೋಡೋ. +ಎಲ್ಲಾ ಹೇಳ್ದೇ ಕೇಳ್ದೆ. . . ಎಲ್ಹೋದ್ರೋ. ?" +ಹೊರ ಬಂದ ಹಿರಿಯ ಮಗ ಗೊಣಗಿಕೊಂಡೇ ಹೋದವನು ಹಿಂದಕ್ಕೆ ಬಂದು "ಅವರು ಬಂದು ಮಲ್ಗಿಯಾಗಿದೆ. +ಇವ್ಳಿಗೆ ಮೈಮೇಲೆ ಜ್ಞಾನ ಬೇಡ್ವಾ? +ಎದುರು ಮನೆ ಅಮ್ಮನ ಮನೇಂತ ಮೂರ್ಹೊತ್ತು ಬಂದು ಕೂಡೋದಾ ? +ನಾಳೆಯಿಂದ ಇಲ್ಲಿಗೆ ಬಂದರೆ ಒದ್ದು ಹೊರಗೆ ಹಾಕ್ಟಿಡ್ತೀನಿ" ರೇಗಿದ. +“ನಾನ್ಹೋಗ್ತೀನಿ !” ಎಂದಳು. +"ಬಾಯಿ ಮುಚ್ಕೊಂಡ್‌ ಮಲ್ಗು +ಇಷ್ಟೊತ್ತಿನಲ್ಲಿ ಹೋಗಿ ಬಾಗ್ಲು ಬಡಿದರೆ ಅಕ್ಕಪಕ್ಕದ ಜನ ಏಳ್ತಾರೆ. +ಸುಮ್ನೇ ನಗೆ ಪಾಟಲು. +ಬೀಟ್‌ ಪೊಲೀಸ್ ಸ್ಟೇಷನ್‌ಗೆ ಎಳೆದೊಯ್ದರು ಹೆಚ್ಚಲ್ಲ" ಅಂದು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ. +ಈ ಪ್ರಕರಣದಿಂದ ತಾಯಿ, ಮಗಳು ಎಷ್ಟು ಹೆದರಿದರೆಂದರೇ ಒಂದು ಹಂತದವರೆಗೂ ನಾನಾ ಯೋಚನೆಗಳು. +ಆಮೇಲೆ ಭಂಡ ಧೈರ್ಯ. +“ಸುಮ್ನೆ ಮಲಕ್ಕೋ ! +ನಿನ್ನದೇನು ತಪ್ಪು ? +ಬಂದ ಕೂಡಲೇ ಕರೀಬೇಕಿತ್ತು. +ಇಲ್ಲ ಬೆಳಿಗ್ಗೆ ಮೂವರಲ್ಲಿ ಒಬ್ಬರಾದ್ರು ಹೇಳಿ ಹೋಗ್ಬೇಕಿತ್ತು. +ಎಂಥ ಧೈರ್ಯ" ಅಳಿಯ, ಅವನ ತಂಗಿ ಅಪ್ಪನನ್ನೇ ಬೈಯ್ದರು ಆಕೆ. +ಅದು ಅವಳಿಗೆ ಸರಿಯೆನಿಸಿತು. +ಒಂದಿಷ್ಟು ಧೈರ್ಯ ಕೂಡ ಬಂತು. +ಅಪರಾಧವೆಲ್ಲ ಅವರದೇ ಆಗಿ ಕಂಡಾಗ, ಅಳು ಕೋಪವಾಗಿ ಪರಿವರ್ತನೆಗೊಂಡಿತು. +ತಾಯಿಯ ಬಳಿಯಲ್ಲಿ ಹಾಸಿಕೊಂಡು ಮಲಗಿದಳು. +ಆದರೆ ಬೆಳಿಗ್ಗೆವರೆಗೂ ನಿದ್ದೆ ಹತ್ತಲಿಲ್ಲ. +ಪದೇ ಪದೇ ಮಗ್ಗುಲು ಬದಲಾಯಿಸಿ ಎದ್ದುಕೂಡುತ್ತಿದ್ದಳು. +“ಸುಮ್ನೆ ಮಲಕ್ಕೋ. +ಈಗ ಚಾರುಲತ ನೋಡು ಎಷ್ಟೊಂದು ಆರಾಮಾಗಿದ್ದಾಳೆ. +ಹೆಣ್ಣು ಅಂದರೇ ಅಷ್ಟಾದ್ರೂ ಧೈರ್ಯ ಬೇಕು ” ಆಕೆ ಗೊಣಗಿದರು. +ಚಾರುಲತಳ ದಿನಚರಿಯನ್ನೇ ಮೆಲಕು ಹಾಕುತ್ತ ಉಳಿದ ಸಮಯ ಕಳೆದಳು. +ಎರಡು ದಿನದಿಂದ ಹಿಡಿದ ಮಳೆ ಬಿಟ್ಟಿರಲಿಲ್ಲ. +ಧೋ ಎಂದು ಸುರಿಯುವ ಮಳೆ ಆಗಾಗ ಕಡಿಮೆಯಾದರೂ ಮತ್ತೆ ವೇಗ ಹೆಚ್ಚಿಸಿ ಅಲಿ ಕಲ್ಲುಗಳಂತೆ ದಪ್ಪದಪ್ಪ ಹನಿಗಳು ಉದುರುತ್ತಿದ್ದವು. +ಇದು ಯಾವ ವೈಖರಿ ?ಕೆಲವರ ಗೊಣಗಾಟ. +ಅಂತು ಮಳೆಯ ಚೆಲ್ಲಾಟ ನಡೆದೆ ಇತ್ತು. +ಬೆಳಿಗ್ಗೆಯೇನೋ ಆಫೀಸ್‌ಗೆ ಹೋದಳು ಅಷ್ಟಿಷ್ಟು ನೆನೆದರು ಸಿಟಿ ಬಸ್ಸುಹಿಡಿದು. +ಸಂಜೆ ಬಸ್ಸಿಗಾಗಿ ಕಾದು ಸೋತಳು. +ತಾನೊಂದು "ಮೊಪೆಡ್‌,ಸ್ಕೂಟರ್ " ಅಂಥದ್ದು ಕೊಳ್ಳುವುದು ಅಗತ್ಯವೆನಿಸಿತು. +ಅದನ್ನು ವ್ಯಕ್ತಪಡಿಸಿದ್ದಳು ಕೂಡ ಅಣ್ಣನ ಮುಂದೆ. +"ನಂಗೆ ಈ ಸಿಟಿ ಬಸ್ಸಿನ ಓಡಾಟ ಸಾಕಾಗಿದೆ. +ನಾನ್ಯಾಕೆ ಒಂದು ಸ್ಕೂಟಿ ಕೊಳ್ಳಬಾರ್ದು. +ಪ್ರಯತ್ನಪಟ್ಟರೇ ಬೇಗನೆ ಡ್ರೈವಿಂಗ್‌ ಕಲೀತೀನಿ." +ಡಾ|| ನವೀನ್‌ ಬೆಪ್ಪಾಗಿ ನಿಂತ, ತಂಗಿಯ ಬದುಕು ಈ ಮಿತಿಯಲ್ಲಿ ಶಾಶ್ವತವಾಗಿ ನಿಂತು ಹೋಗಬೇಕಾ ? +ಅವನಿಗೆ ಎಚ್ಚರ ತಪ್ಪುವಂತಾಯಿತು. +"ನೋಡೋಣ, ಸಧ್ಯಕ್ಕೆ ಬೇಡ" ಎಂದಿದ್ದ. +ಕೆಲವರು ವೆಹಿಕಲ್‌ನಲ್ಲಿ ಬಂದವರು ಕೂಡ ಅವನ್ನ ಅಲ್ಲಿಯೇ ಬಿಟ್ಟು ಬಸ್ಸಿಗಾಗಿ ಬಂದು ಕಾದು ಕೂತರು. +ಅಂತು ಗಂಟೆ ಕಳೆದರೂ ಬಸ್ಸು ಬರಲಿಲ್ಲ. +ಮೈನ್‌ ಬಸ್‌ಸ್ಟಾಂಡ್‌ಗೆ ಹೋಗೋ ಬಸ್ಸು ಬಂದಾಗ ಎಲ್ಲರೊಂದಿಗೆ ಹತ್ತಿಕೊಂಡು ಕಂಬಿಗೆ ತೂಗು ಬಿದ್ದಳು. +"ಅಲ್ಲಿಗೆ ಹೋದರೆ ಯಾವುದಾದ್ರೂ ಬಸ್ಸುಗಳು ಸಿಗುತ್ತೆ. +ಕಡೆಗೆ ಆಟೋ ಟ್ಯಾಕ್ಸಿನಾದ್ರೂ ಹಿಡಿಯಬಹುದು" ಕೆಲವರುಸೂಚಿಸಿದರು. +ಬಸ್‌ಸ್ಟಾಪ್‌ನ ತಲುಪುವ ವೇಳೆಗೆ ಪೂರ್ತಿ ಕತ್ತಲಾಗಿತ್ತು. +ಮಳೆಯ ಬಿರುಸು ಕೂಡ ಹೆಚ್ಚಾಯಿತು. +ಜನ ಗಿಜಿಗಿಜಿಯೆನ್ನುತ್ತಿದ್ದರು. +ನಿಲ್ಲುವುದೇ ಕಷ್ಟ ಮನೆಗೆ ಫೋನಾಯಿಸಿದಳು. +"ಎಲ್ಲಾ ಒಟ್ಟಿಗೆ ಇದ್ದೇವೆ. +ಬೇಗ ಬರ್ತಿವಿ ಗಾಬ್ರಿ ಬೇಡ." +ಆ ಕಡೆಯಿಂದ ಬರೋವಾಗ ಎದುರಾದದ್ದು ಮೂರ್ತಿ. +ನೋಡಿ ನೋಡದಂತೆ ಸರಿದು ಹೋದರೂ ಅಷ್ಟು ದೂರ ಹೋದ ಮೇಲೆ ಹಿಂದಿರುಗಿದ. +ಹೃದಯ ಹೊರಳಿ ಹೊರಳಿ ನರಳಿ ಅತ್ತಿತ್ತು. +ಸುರಿಯೋ ಮಳೆಯಲ್ಲಿ ಇವಳು ಮನೆಗೆ ಹೋಗುವುದು ಹೇಗೆ ? +ಎಂದು ಯೋಚಿಸಿ ಹೆದರಿದ. +ಮತ್ತೆ ಜನಗಳ ನಡುವೆ ಅರಸಿಕೊಂಡು ಅಲೆದಾಡಿದ. +ಹೊರಗಿನ ಕತ್ತಲು, ಮಳೆ ಜನರನ್ನ ಹೆದರಿಸುತ್ತಿತ್ತು. +ಬಸ್ಸು ಬಂದ ಕೂಡಲೇ ಜನರು ಗೂಳಿಗಳಂತೆ ಓಡುತ್ತಿದ್ದುದೊಂದು ಚಿತ್ರ. +ಬಂದ ಪೊಲೀಸ್‌ ಜನರನ್ನ ಕ್ಯೂನಲ್ಲಿ ನಿಲ್ಲಿಸಿ ಆಯಾ ರೂಟ್‌ನ ಬಸ್ಸುಗಳು ಬಂದ ಕೂಡಲೇ ಕಳಿಸತೊಡಗಿದಾಗ, ನಿಶ್ಚಿಂತೆಯಿಂದ ಅಲ್ಲಿ ಹೋಗಿ ನಿಂತಳು,“ಚಾರುಲತ. . . . ಚಾರು'' ಕೂಗು ಕೇಳಿಸಿದ ಕಡೆ ಕತ್ತು ತಿರುಗಿಸಿದಳು. +ಬ್ರೀಫ್‌ಕೇಸ್‌ ಹಿಡಿದಿದ್ದ ಮೂರ್ತಿ ಬರುವಂತೆ ಸನ್ನೆ ಮಾಡಿದಾಗ ಹಿಂದೆ,ಮುಂದೆ ನೋಡಿ ತನ್ನನ್ನೇ ಎಂದು ಮನದಟ್ಟಾದಾಗ ಕ್ಯೂ ನಿಂದ ಅರೆ ಮನಸ್ಸಿನಿಂದಲೇ ಹೊರ ಬಂದಿದ್ದು. +"ಬ್ರೀಫ್‌ಕೇಸ್‌ ಇಟ್ಕೊಂಡಿರು. +ಹೋಗಿ ಟ್ಯಾಕ್ಸಿ ತರ್ತೀನಿ"ಅವಳ ಮುಂದಿಟ್ಟು ಹೋದಾಗ ಅವಳಿಗೇನು ಹೇಳಲು ಸಮಯವೇ ಇರಲಿಲ್ಲ. +ನಿಧಾನವಾಗಿ ಬ್ರೀಪ್‌ಕೇಸ್‌ ಎತ್ತಿಕೊಂಡಳು. +ಹಿಡಿಯಲ್ಲಿ ಅವನ ಕೈನ ಬಿಸಿಯೆನಿಸಿತು. +ಕಳೆದ ಮಧುರ ದಿನಗಳು ನೆನಪಾಗಿ ಬಿಕ್ಕುವಂತಾದರೂ ಸಮರ್ಥಿಸಿಕೊಂಡಳು. +ಹತ್ತು ನಿಮಿಷದಲ್ಲಿ ಬಂದವ ಅವಳ ಕೈಯಲ್ಲಿನ ಬ್ರೀಫ್‌ಕೇಸ್‌ ತಗೊಂಡು "ಬಾ ಬೇಗ, ಈ ಮಳೆ ಧಾಟಿ ನೋಡಿದ್ರೆ ಜಗತ್ತನ್ನೇ ಮುಳುಗಿಸೋ ಹಾಗಿದೆ"ಎಂದು ಬಿರ ಬಿರ ನಡೆದಾಗ ಜನ ಜಗುಲಿ ಮಳೆಯಲ್ಲಿ ಹಿಂಬಾಲಿಸದೇ ಬೇರೆ ದಾರಿ ಇರಲಿಲ್ಲ. +ಟ್ಯಾಕ್ಸಿಯಲ್ಲಿ ಕೂತ ನಂತರ ತನ್ನ ಹ್ಯಾಂಡ್‌ ಬ್ಯಾಗ್‌ನಲ್ಲಿದ್ದ ಪುಟ್ಟ ಟವಲನ್ನು ತೆಗೆದು ಅವನ ತೊಡೆಯ ಮೇಲೆ ಹಾಕಿ ಕರ್ಚೀಫ್‌ನಿಂದ ಮುಖ ಕೈಗಳನ್ನೊರೆಸಿಕೊಂಡಳು. +ಕೋಪದಿಂದ ಕುದಿಯುತ್ತಿದ್ದವ ತಕ್ಷಣ ತಣ್ಣಗಾದ. +ಈ ಕತ್ತಲು ಮಳೆಯಲ್ಲಿ ಮನೆಯಿಂದ ಹೊರಗೆ ಬರುವ ಅಗತ್ಯವಿತ್ತೆ ? +ಆ ಪ್ರಜ್ಞೆಗೆ ಅವನಲ್ಲಿಯೇ ಉತ್ತರವಿತ್ತು. +"ನಿವೇದಿತಾ ನ್ಯೂ ವುಮೆನ್ಸ್‌ ವೇರ್‌ ಅಕೌಂಟ್‌ ಸೆಕ್ಟನ್‌ನಲ್ಲಿ ಚಾರುಲತ ಕೆಲ್ಸ ಮಾಡ್ತಾ ಇದ್ದಾಳೆ" ಕಮಲ ಸಿಕ್ಕಾಗ ಹೇಳಿದ್ದಳು. +"ಹಕ್ಕು ಅಧಿಕಾರ" ಎರಡು ಒಂದೇ ನಾಣ್ಯದ ಎರಡು ಮುಖಗಳು. +ಒಂದರ ಬಿಟ್ಟು ಮತ್ತೊಂದಿಲ್ಲ ಅಂದುಕೊಂಡು ತೆಪ್ಪಗೆ ಕೂತ. +ಇವರ ಮನೆಯ ಅಡ್ರಸ್‌ ಟ್ಯಾಕ್ಸಿಯವನಿಗೆ ಹೇಳಿದಾಗ ತಕ್ಷಣ "ಮನೆ ಬದಲಾಯಿಸಿದ್ದೀವಿ. +ಹೊಸ ಮನೆ ವಿದ್ಯಾನಗರದ ಬಡಾವಣೆಯ ಏಳನೇ ಕ್ರಾಸ್‌ನಲ್ಲಿರೋದು?ಎಂದಳು ಮೆಲ್ಲಗೆ. +ಮೂರ್ತಿ ಮಾತಾಡಲಿಲ್ಲ. +ಏಳನೇ ಕ್ರಾಸ್‌ನಲ್ಲಿ ಎರಡನೇ ಮನೆಯೆಂದ್ದುದ್ದರಿಂದ ಟ್ಯಾಕ್ಸಿಯವನಿಗೆ ಅಂಥ ತೊಂದರೆಯೇನು ಆಗಲಿಲ್ಲ. +ನಿಂತಾಗ ಡೋರ್‌ ತೆಗೆದು ಇಳಿಯುವ ಮುನ್ನ "ತುಂಬ ಥ್ಯಾಂಕ್ಸ್‌, ಸಾಧ್ಯವಾದರೇ ಒಳಗೆ ಬಂದು ಹೋಗಬಹುದು" ಅಂದಿದ್ದಕ್ಕೆ ಅವನು ಮಾತಾಡಲಿಲ್ಲ. +ಚಾರುಲತ ಇಳಿದ ಕೂಡಲೇ ಟ್ಯಾಕ್ಸಿ ಮುಂದಕ್ಕೆ ಹೋಯಿತು. +ಸಣ್ಣಗೆ ಹನಿಯುತ್ತಿದ್ದ ಮಳೆಯಲ್ಲಿ ಸೀರೆಯ ನೆರಿಗೆಗಳನ್ನು ಮೇಲಕ್ಕೆ ಎತ್ತಿಡಿದು ಗೇಟು ತೆರೆದಾಗ ಹೊರಗಿನ ವಿದ್ಯುತ್‌ದೀಪಗಳೆಲ್ಲ ತಕ್ಷಣ ಹತ್ತಿ ಕೊಂಡವು. +ವಾಸುದೇವಯ್ಯ ಬಾಗಿಲು ತೆರೆದುಕೊಂಡು ಹೊರಗೆ ಬಂದು "ಸದ್ಯ ಬಂದ್ಯಾ ನನ್ನ ಜೀವನೇ ಹಾರಿ ಹೋಗಿತ್ತು. +ಅವ್ನು ನರ್ಸಿಂಗ್‌ಹೋಂನಲ್ಲಿ ಸಿಕ್ಕಿ ಹಾಕ್ಕೊಂಡಿದ್ದಾನೆ. +ಮೂರು ಸಲ ಫೋನ್‌ ಮಾಡಿ ವಿಚಾರಿಸ್ದ. +ನೀನುಫೋನ್‌ ಮಾಡದಿದ್ದರೇ, ಅಲ್ಲಿಗೆ ಹುಡ್ಕಿಕೊಂಡು ಹೋಗ್ತಾ ಇದ್ದನೇನೋ. +ಅಲ್ಲಿಗೂ ಫೋನ್‌ ಮಾಡ್ದೆ. +ನೀನು ಹೊರಟ ವಿಷ್ಯ ತಿಳಸಿದ್ರು" ಉದ್ವೇಗದಿಂದ ನುಡಿದಾಗ ಮುಖದ ಮೇಲಿನ ಮಳೆಯ ನೀರನ್ನ ಕೈಯಿಂದ ತೊಡೆದುಕೊಳ್ಳುತ್ತ "ನಾನು ಇನ್ನ ಮಗುನಾ, ಅಪ್ಪ ? +ಪುಟ್ಟ ಮಗು ಶಾಲೆಯಿಂದ ಸ್ವಲ್ಪ ಬರೋದು ಲೇಟಾದ್ರೆ ಚಡಪಡಿಸುತ್ತಾರಲ್ಲ, ಹಾಗೇ ಆತಂಕಗೊಳ್ಳುತ್ತೀರಲ್ಲ ಬನ್ನಿ. . . ಒಳ್ಗಡೆ" ಒಳ ನಡೆದಳು. +ಟವಲು ಹಿಡಿದು ಬಂದ ನೀರದ "ಅದೆಂಥ ಭಯಂಕರ ಮಳೆ. +ಅವುರು ಕೂಡ ಇನ್ನ ಬಂದಿಲ್ಲ. +ಮಾವನೋರಂತು ರಾಮ ನಾಮ ಜಪಿಸ್ಕೊಂಡ್‌ಕೂತುಬಿಟ್ಟರು" ಪಟ್ಟ ಆತಂಕದ ಸ್ಥಿತಿಯನ್ನು ವಿವರಿಸಿದಾಗ "ಮಳೆಯೇನೋ ಜೋರಿದೆ. +ಬಸ್ಸು ಬರಲೇ ಇಲ್ಲ. +ಅದ್ಕೆ ಇಷ್ಟೆಲ್ಲ ತೊಂದರೆ" ರೂಮಿಗೆ ಹೋದಳು. + ಬಟ್ಟೆ ಬದಲಾಯಿಸಿ ಹೊರ ಬರುವ ವೇಳೆಗೆ ಲೈಟು ಹೋಗಿ ಇಡೀ ಮನೆ ಕತ್ತಲಲ್ಲಿ ಮುಳುಗಿ ಹೋಯಿತು. +“ಬಾ ಕೂತ್ಕೋ” ಎಂದು ಕ್ಕಾಂಡಲ್‌ ಹಚ್ಚಿದ ವಾಸುದೇವಯ್ಕ "ಮೊದ್ಲು ನರ್ಸಿಂಗ್‌ಹೋಂಗೆ ಫೋನ್‌ ಮಾಡಿ ನೀನು ಮನೆಗೆ ಬಂದಿರೋದು ನಿಮ್ಮಣ್ಣನಿಗೆ ತಿಳ್ಸು. +ಅವನೆಷ್ಟು ಗಾಬ್ರಿಯಾಗಿದ್ದಾನೋ" ಉಸುರಿದರು. +ಅಲ್ಲಿಗೆ ವಿಷಯ ಮುಟ್ಟಿಸೋ ವೇಳೆಗೆ ಕಾಫಿ ತಂದಿಟ್ಟ ನೀರದ “ಅವ್ರು ಮನೆಗೆ ಬರುತ್ತಾರಂತ ?” ಕೇಳಿದಳು. +ಅವನು ಇತ್ತೀಚೆಗೆ ಡೇ ಡ್ಯೂಟಿ ಮಾಡಿದರೂ "ನೈಟ್‌ ಡ್ಕೂಟಿ" ಇದೆ ಎಂದು ಆಗಾಗ ಅಲ್ಲೇ ಉಳಿಯುವುದು ರೂಢಿಯಾಗಿತ್ತು. +"ಬರದೇ ಎಲ್ಲಿ ಹೋಗ್ತಾನೆ ! ಅಣ್ಣ ಸಿಗ್ಲಿಲ್ಲ, ರಿಸೆಪ್ಪನಿಸ್ಟ್‌ ಕೌಂಟರ್‌ನಲ್ಲಿ ತಿಳ್ಸಿದ್ದೀನಿ. +ಅಲ್ಲಿ ಎಲ್ಲ ಸರಿಯಿಲ್ಲ. +ಅದೇ ಅವ್ನಿಗೆ ಪ್ರಾಬ್ಲಮ್‌ ಆಗಿರೋದು. +ಅಲ್ಲಿ ತಕ್ಷಣಕ್ಕೆ ಕೆಲ್ಸ ಬಿಡೋ ಇಚ್ಛೆ ಇದ್ದರೂ, ಬೇರೆ ಕಡೆ ಕೆಲ್ಸ ಸಿಗ್ಬೇಕಲ್ಲ. +ನೀವು ದಯವಿಟ್ಟು ಬೇರೇನೋ ತಿಳ್ಕೋಬೇಡಿ" ಎಂದು ಕಾಫಿಯ ಲೋಟ ಎತ್ತಿಕೊಂಡ ಚಾರುಲತ ಮೇಣದ ಬತ್ತಿ ಉರಿಯುವ ಬೆಳಕಲ್ಲಿ ನೀರದ ಮುಖ ದಿಟ್ಟಿಸಿದಳು. +ಒಂದು ರೀತಿಯ ವ್ಯಾಕುಲತೆ ಸ್ಪಷ್ಟವಾಗಿತ್ತು. +ಆದರೂ ಮತ್ತೇನು ಹೇಳಲಿಲ್ಲ. +ಒಂದರ್ಧ ಗಂಟೆ ಕಾದು ನಂತರ ಮೂವರು ಊಟ ಮುಗಿಸಿದರು. +ಅಷ್ಟರಲ್ಲಿಫೋನ್‌ ಬಂತು. +"ಡಾ||ನವೀನ್‌ ಇಲ್ಲೇ ಉಳ್ಳೋತಾರೆ" ನರ್ಸಿಂಗ್‌ಹೋಂನಿಂದ ಫೋನ್‌ ಬಂತು. +"ಅವ್ರು ಬೇಕಾಗಿಯೇ ಈ ರೀತಿ ಮಾಡ್ತಾ ಇದ್ದಾರೆ" ತನ್ನ ಅಸಮಾಧಾನ ನೀರದ ಪ್ರಕಟಿಸಿಯೇ ಬಿಟ್ಟಳು. +ರೂಮಿನಿಂದ ಹೊರಟ ಚಾರುಲತ ನಿಂತು "ಹಾಗೆಲ್ಲ ಯಾಕೆ ತಿಳ್ಕೋತೀಯಾ, ನೀರದ ? +ನಿಮ್ಮದೇನು ಹಿರಿಯರು ಅರೇಂಜ್‌ಮಾಡಿದ ಮ್ಯಾರೇಜ್‌ ಅಲ್ಲ. +ಅಮ್ಮ ಸತ್ತ ಮೇಲೆ ನಿಮ್ಗೆ ನವೀನಣ್ಣ ಹೆಚ್ಚು ಪರಿಚಯವಾದದ್ದು. +ಅವ್ನ ಗುಣ, ಸ್ವಭಾವಗಳೆಲ್ಲ ಗೊತ್ತು. +ಅವನದು ಸರ್ಕಾರಿ ಜಾಬ್‌ ಅಲ್ಲ. +ಅದ್ರಲ್ಲು ಅವ್ನು ಡಾಕ್ಟ್ರು. +ಆ ಪ್ರೊಫೆಷನ್‌ಗೆ ಅದರದೇ ಆದ ನೀತಿ ನಿಯಮಗಳು ಇವೆ. +ಸುಮ್ಮೆ ಏನೇನೋ ಯೋಚ್ನೇ ಮಾಡ್ಕೋಬೇಡಿ. +ಬೆಳಿಗ್ಗೆ ಬಂದ್ಮೇಲೆ ಅವ್ನೆ ಹೇಳ್ತಾನೆ" ಎಂದು ಹೇಳಿಯೇ ರೂಮಿಗೆ ಹೋಗಿ ಹಾಸಿಗೆಯ ಮೇಲೆ ಕುಸಿದಿದ್ದು. +ಬಿಚ್ಚಿದ ಒದ್ದೆಯ ಕೂದಲು ದಿಂಬಿನ ಮೇಲೆ ಹರಡಿಕೊಂಡಿತು. +ಎರಡು ತಿಂಗಳು ಇಪ್ಪತ್ತು ದಿನಗಳ ನಂತರ ಮೊದಲ ಸಲ ಮೂರ್ತಿಯಿಂದ “ಚಾರುಲತ. . . . ' ಎಂದು ಕರೆಸಿಕೊಂಡಿದ್ದಳು. +ಅವಳಿಗೆ ವಾಸ್ತವ ಪ್ರಜ್ಞೆ ಇದ್ದುದ್ದರಿಂದ ಮೈ ಮರೆಯಲಿಲ್ಲ. +ಅವನ ನಡತೆಯಲ್ಲಿ ಅವಳು ಕಂಡಿದ್ದು ಪ್ರೀತಿಗಿಂತ ಆತಂಕವೆ ಹೆಚ್ಚು. +ಗುರುತು ಪರಿಚಯ ಇರುವ ಯಾವ ಹೆಣ್ಣಾದರೂ ಅವಳ ಸ್ಥಿತಿಯಲ್ಲಿದ್ದರೇ ಖಂಡಿತ ಸಹಾಯ ಮಾಡುವಂಥ ಮನಸ್ಸು ಮೂರ್ತಿಯದು ಎಂದು ಅವಳಿಗೆ ಗೊತ್ತು. +ಇಲ್ಲಿ ನಡೆದಿರೋದು ಕೂಡ ಅಷ್ಟೆ ಅಂದುಕೊಂಡಳೇ ವಿನಃ ವಿಪರೀತವಾದುದ್ದನ್ನ ಕಲ್ಪಿಸಿಕೊಂಡು ಅದಕ್ಕೆ ರೆಕ್ಕೆ ಪುಕ್ಕ ಹಚ್ಚಿ ಆಕಾಶದಲ್ಲಿ ಹಾರಲಿಲ್ಲ. +ಆಯಾಸವೆನಿಸಿದ್ದರಿಂದ ಕಣ್ಣು ಮುಚ್ಚಿದ ಕೂಡಲೇ ಅವಳಿಗೆ ನಿದ್ದೆ ಬಂತು. +ಮೂರ್ತಿ ಆತುರಾತುರವಾಗಿ ಬಂದಿದ್ದಕ್ಕೆ ಕಾರಣವಿತ್ತು. +ಚೆನ್ಶೆನಿಂದ ಪೈಲೆಟ್‌ನ ತಾಯ್ತಂದೆಯರು ಪೂಜಾನ ನೋಡಲು ಮರುದಿನ ಬರುವವರಿದ್ದರು. . " +"ನೀನು ತಕ್ಷಣ ಬಾ. +ನಮ್ಗೇನು ತೋಚ್ತಾ ಇಲ್ಲ"ಅವನಪ್ಪ ಫೋನ್‌ ನಲ್ಲಿ ಕಂಪಿಸುವ ದನಿಯಲ್ಲಿ ಹೇಳಿದಾಗ "ಈಗ ಹೊರಟೆ ? +ಯಾಕೆ ಅಷ್ಟೊಂದುಎಕ್ಸೈಟ್‌ ಆಗ್ತೀರಾ ? +ಅವ್ರು ಕೂಡ ನಮ್ಮಂಗೆ ಮನುಷ್ಯರೇ ತಾನೇ ?" ಬೇಸರಿಸಿದ. +ಹಾಗಲ್ಲ, ಪೂಜಾ ಬಗ್ಗೆನೇ ಚಿಂತೆ ಎಂದರು ನಿಟ್ಟುಸಿರಿನೊಂದಿಗೆ . +"ಅವಳದೇನು ತಕರಾರಿಲ್ಲ ಬಿಡಿ. +ಪೈಲೆಟ್‌ ಗಂಡನ್ನ ಒಪ್ಕೊಂಡಿದ್ದಾಳೆ. +ಇದು ಸಿನಿಮಾ ಅಲ್ಲ, ಜೀವನ. +ಸುಮ್ನೆ ತಲೆ ಕೆಡಿಸ್ಕೊಳ್ಳೋದ್ಬೇಡ, ಬರ್ತಿನಿ"ಎಂದವನು ತಕ್ಷಣ ಹೊರಟಿದ್ದ. +ಅವಳ ಮದುವೆ, ಭವಿಷ್ಯ ಆದ್ಯ ಕರ್ತವ್ಯವಾಗಿತ್ತು. +ಅದು ಮುಗಿಯುವವರೆಗೂ ನೆಮ್ಮದಿ ಇರಲಿಲ್ಲ. +ಮನೆಯ ಬಳಿ ಟ್ಯಾಕ್ಸಿಯಿಂದ ಇಳಿದಾಗ ಹೊರಗಿನ ಲೈಟುಗಳು ಉರಿಯುತ್ತಿತ್ತು. +ಮಗನ ಬರುವನ್ನೇ ಎದುರು ನೋಡುತ್ತಿದ್ದರು ಯುಗಂಧರ್‌, ಮೃಣಾಲಿನಿ. +ಪೂಜಾ ಎಷ್ಟೇ ಜೇತರಿಸಿಕೊಂಡಿದ್ದರೂ ಮೊದಲಿನ ಚೆಂದುಳ್ಳಿ ಚೆಲುವೆಯಾಗಿರಲಿಲ್ಲ. +“ಸಧ್ಯ ಬಂದೆಯಲ್ಲ ! ಈ ಸುರಿಯೋ ಮಳೆ ಬೇರೆ. +ನಂಗಂತು ನಿನ್ಮುಖ ನೋಡೋವರ್ಗೂ ಜೀವದಲ್ಲಿ ಜೀವ ಇದ್ದಿಲ್ಲ” ಆಕೆಯ ದನಿ ಒದ್ದೆಯಾಯಿತು. +ನಿಧಾನವಾಗಿ ಏರಿದ ಮೂರ್ತಿ ಹುಬ್ಬು ಮಾಮೂಲಿ ಸ್ಟೇಜ್‌ಗೆ ಬಂದವು “ಏನಮ್ಮ ಇದು ! +ಒಬ್ಬ ಗಂಡಿನೋರು ಬರ್ತಿನಿ ಅಂದ ಮಾತ್ರಕ್ಕೆ ಇಷ್ಟೊಂದು ಧಾವಂತನಾ? +ಅವ್ರು ನಮ್ಮ ಹಾಗೆ ಸಾಧಾರಣ ಮನುಷ್ಯರೆ!, ಅವ್ರು ಬರ್ತಾ ಇರೋದು ರಷ್ಯ, ಅಮೇರಿಕಾದಿಂದಲ್ಲ. +ಇಲ್ಲಿರೋ ಚೆನೈನಿಂದಲೇ” ಎಂದು ಬಲಗೈಯಲ್ಲಿದ್ದ ಪುಟ್ಟ ಟವಲಿನಿಂದ ಮುಖವನ್ನೊರೆಸಿಕೊಂಡ. +ಟ್ಯಾಕ್ಸಿಯಲ್ಲಿ ಇಳಿದು ಗೇಟು ದಾಟಿ ಬಾಗಿಲಿಗೆ ಬರುವ ವೇಳೆಗೆ ಪನ್ನೀರಿನಂತೆ ಎರಚಾಡಿತ್ತು ಮಳೆಯ ಹನಿಗಳು. +"ನಿನ್ನಷ್ಟು ಧೈರ್ಯ ನಂಗಿಲ್ಲ ಬಿಡು. +ಹೇಗೂ ನೀನು ಬಂದಿದ್ದೀಯಾ. +ಎಲ್ಲಾ ನೀನೇ ಸಮಾಳಿಸ್ಕೋ" ಒಳಗೆ ನಡೆದರು. +ಶಾಲು ಹೊದ್ದು ಕೂತಿದ್ದ ಯುಗಂಧರ್‌ ಮಗನತ್ತ ಅಭಿಮಾನದ ನೋಟ ಬೀರಿದರು. +"ಹೇಗಿದ್ದೀರಿ ?"ಹತ್ತಿರಕ್ಕೆ ಹೋಗಿ ವಿಚಾರಿಸಿದ. +"ಪರ್ವಾಗಿಲ್ಲ, ಆದ್ರೂ ಮೊದಲಿನ ಯುಗಂಧರ್‌ ಆಗಿಲ್ಲ. +ಇನ್ನ ವಾಕ್‌,ಡ್ರೈವಿಂಗ್‌ ಎಲ್ಲಾ ಬಂದ್" ಎಂದರು. +ಹಾರ್ಟ್‌ ಅಟ್ಯಾಕ್‌ ಆದ ಮೇಲೆ ಮೊದಲಿನ ಗಡಸುತನ ಮಾಯವಾಗಿ ಮೆತ್ತಗಾಗಿದ್ದರು. +“ಪೂಜಾ ಎಲ್ಲಿ ? +ಬಟ್ಟೆ ಬದಲಾಯ್ಲಿಕೊಂಡ್ಬರ್ತಿನಿ ” ರೂಮಿನತ್ತ ನಡೆದ. +ಷರಟು ಬಿಚ್ಚಿ ಹ್ಯಾಂಗರ್‌ಗೆ ಹಾಕುವಾಗ ಪುಟ್ಟ ಟವಲು ಅಣಕಿಸಿತು. + ಅದು ಚಾರುಲತದು ನೆಟ್ಟ ನೋಟದಿಂದ ಅದನ್ನ ನೋಡಿದ. +ತೀವ್ರವಾದ ಭಾವ ಸಂಘರ್ಷ ಅವನಲ್ಲಿ. +ಚಾರುಲತ ಮಧುರವಾಗಿ ಮಿಡಿದಿದ್ದಳು ಅವನಲ್ಲಿ. +ಸಪ್ತ ಸ್ವರಗಳಂತೆ ಬೆರೆತಿದ್ದರು. +ಧೊಪ್ಪನೆ ಕುಸಿದ. +ಏನಾಗಿ ಹೋಯಿತು ನಮಗೆ ? +ಯಾವ ತಪ್ಪಿಗೆ ಈ ಪ್ರಾಯಶ್ಚಿತ. +ಕಲ್ಲಾಗಿ ವರ್ತಿಸಿ ನನ್ನ ಹೃದಯವನ್ನೋಡೆದು ಬಿಟ್ಟಳು. +ಎರಡು ಕೈಯಲ್ಲು ತಲೆಗೂದಲನ್ನು ಕಿತ್ತ. +ಎಷ್ಟೋ ಹೊತ್ತು ಅಲ್ಲಿಂದ ಕದಲಲಾಗಲಿಲ್ಲ ಅವನಿಗೆ. +"ಮೂರ್ತಿ" ಅವನಮ್ಮನ ದನಿ ಕೇಳಿ ಮೇಲೆದ್ದಿದ್ದು. +ಒಳಗೆ ಬಂದ ಮೃಣಾಲಿನಿ "ಇನ್ನ ಸರ್ಯಾಗಿ ತಲೆಯೊರ್ಲಿಕೊಂಡಿಲ್ಲ. +ಗೀಜರ್‌ ಹಾಕಿದ್ದೀನಿ. +ಬಿಸಿಯಾಗಿ ಸ್ನಾನ ಮಾಡ್ಕೊಂಡ್ಬಾ. +ತಟ್ಟೆ ಹಾಕ್ತೀನಿ" ಹೇಳಿ ಹೋದರು. +ತಾಯಿ ಹೃದಯ ಮಗನ ಸಂಕಟ ಅರಿಯದೇನಲ್ಲ. +"ಹೀಗಾಗಬಾರದಿತ್ತು" ಎಂದುಕೊಂಡರು. +ಸ್ನಾನ ಮುಗಿಸಿಕೊಂಡು ನೇರವಾಗಿ ತಂಗಿಯ ರೂಮಿಗೆ ಹೋದ. +ನೆಪಕ್ಕೊಂದು ಕಾದಂಬರಿ ಇತ್ತು ಕೈಯಲ್ಲಿ. +ಅವಳ ಎದುರು ಕೂತು "ಹೇಗಿದ್ದಿ ?,ನೀನು ಹೀಗೇ ಷೇಕ್ಸ್‌ಪಿಯರ್‌ನ ನಾಟಕದ ದುರಂತ ಪ್ರೇಮಿಯಂಗೆ ಕೂತರೇ ದೇವರೇ ಕಾಪಾಡ್ಬೇಕು. +ಅಪ್ಪನಿಗೆ ಹಾರ್ಟ್‌ ಅಟ್ಯಾಕ್‌ ಆಯ್ತು. +ಹೇಗೋ ಚೇತರಿಸಿಕೊಂಡರು ದೇವರ ದಯೆಯಿಂದ. +ಅಮನಿಗೇನಾದ್ರೂ ಹಾರ್ಟ್‌ ಅಟ್ಯಾಕ್‌ ಆದರೇ ಆರಾಮಾಗಿ ರೈಟ್‌ ಹೇಳ್ಬಿಡ್ತಾರೆ. +ನಾನು ಒಂದ್ಹೊತ್ತೆ ಕಾವಿ ಖರೀದಿಸಿ ಇಟ್ಕೊಂಡ್‌ ಇದ್ದೀನಿ. +ನಿಶ್ಚಿಂತೆಯಾಗಿ ಹಿಮಾಲಯಕ್ಕೆ ಹೊರಟು ಬಿಡ್ತೀನಿ. +ಆ ಮೇಲೆ ಆ ಮೂರ್ಜನ ನೆನೆಯುತ್ತ ಪ್ಯಾಥೆರ್‌ ಸಾಂಗ್‌ ಹಾಡ್ಕೋಬಹುದು" ಮುಖ ಗಂಟಿಕ್ಕಿ ಹೇಳಿದ. +ಅವನ ಮಾತುಗಳು ಪೂಜಾಳನ್ನ ಅಲ್ಲೋಲ ಕಲ್ಲೋಲ ಮಾಡಿತು. +ತಂದೆಗೆ ಹಾರ್ಟ್‌ಅಟ್ಯಾಕ್‌ ಆದಾಗ ಅವರ ನಂತರ ಏನು ಎನ್ನುವ ಚಿತ್ರವನ್ನ ಕಲ್ಪಿಸಿಕೊಳ್ಳಲಾರದೆ ಭಯಪಟ್ಟಿದ್ದಳು. +"ಬೇಡ ಕಣೋ, ಬಿಡ್ತು. . . ಬಿಡ್ತು. . . ಅನ್ನೋ. +ಫ್ಲೀಸ್‌. . . ಸಾರಿ. . . ನಾನು ಅಪ್ಪ, ಅಮ್ಮನ ಕಳುಕೊಳ್ಳೋಕೆ ಇಷ್ಟಪಡೋಲ್ಲ?" +ಕಣ್ಣೀರು ಸುರಿಸಿದಾಗ ಕಂಬನಿ ತೊಡೆದು ಕೆನ್ನೆ ತಟ್ಟಿ “ಈಗ ಸ್ವಲ್ಪ ಗೆಲುವಾಗಿ ಡೈನಿಂಗ್‌ ಹಾಲ್‌ಗೆ ನಡೀ. +ನಿನ್ನ ಪಾಲಿಗೆ ಇನ್ನ ಕೆಲವು ಗಂಟೆಗಳು ಇವೆ. +ಮಾನಸಿಕವಾಗಿ ಚೇತರಿಸ್ಕೋ. +ಮೊದ್ಲಿನ ಪೂಜಾನೆ ಆಗ್ತೀಯಾ” ಉತ್ಸಾಹ ತುಂಬಿದ. +ಅಣ್ಣ, ತಂಗಿ ಒಟ್ಟಿಗೆ ಬಂದರು ಡೈನಿಂಗ್‌ ಹಾಲ್‌ಗೆ. +ಇಂದು ಸ್ವಲ್ಪ ನಗು ನಗುತ್ತಾ ಪೂಜಾ ಊಟ ಮಾಡಿದಾಗ ಮನೆಯಲ್ಲಿ ಜೀವ ಸಂಚಾರವಾಯಿತು. +ಬಂದ ಚೆನೈ ದಂಪತಿಗಳು ಮಗಳನ್ನ ಒಪ್ಪದಿದ್ದರೂ ಪರವಾಗಿಲ್ಲ, ಒಂದಿಷ್ಟು ಗೆಲುವಾದಳಲ್ಲ ಎಂದು ಸಂತಸಗೊಂಡರು. +ಬಹಳ ಹೊತ್ತು ಮಾತಾಡುತ್ತ ಕೂತರು ಎಲ್ಲರು. +ಇಷ್ಟು ದಿನಗಳ ತರುವಾಯ ಪೂಜಾ ಕೂಡ ಆಗಾಗ ಒಂದು ಮಾತಾಡಿದಳು. +ಎಲ್ಲರೂ ಚಾರುಲತ ಮತ್ತು ಅವರ ಮನೆಯವರ ವಿಚಾರ ಬರದಂತೆ ಎಚ್ಚರದಿಂದಿದ್ದರು. +ಹನ್ನೆರಡರ ನಂತರ ಮೂರ್ತಿ ಹಾಸಿಗೆಗೆ ಹೋಗಿದ್ದು, ಅಲ್ಲೇ ಸ್ಟೂಲ್‌ಮೇಲಿದ್ದ ಟವಲು ಮತ್ತೆ ಅಣಕಿಸಿತು. +ಕೈ ಅದನ್ನೊತ್ತಿಕೊಂಡು ಅಮೂಲ್ಯವೆನ್ನುವಂತೆ ಎದೆಗವಚಿಕೊಂಡಿತು. +ಹೃದಯ “ಚಾರು. . . . . ಚಾರುಲತ" ಎಂದು ಪಿಸುಗುಟ್ಟಿತು. +ಕೋಪವಿರಬಹುದು ಮೂರ್ತಿಗೆ, ಆದರೆ ಮಡದಿಯ ಪ್ರೇಮದ ಬಂಧನದಿಂದ ವಿಮುಕ್ತನಾಗಿರಲಿಲ್ಲ. +ಅವನು ನಿದ್ದೆಗೆ ಜಾರಿದ ನಂತರವು ಪುಟ್ಟ ಟವಲು ಅವನೆದೆಗೆ ಒತ್ತಿಕೊಂಡು ಹೆಮ್ಮೆಯಿಂದ ಬೀಗುತ್ತಿತ್ತು. +ಬೆಳಿಗ್ಗೆ ಎಚ್ಚರವಾದಾಗಲೇ ಅವನ ಅರಿವಿಗೆ ಬಂದಿದ್ದು. +ಅಷ್ಟು ದೂರಕ್ಕೆ ಎಸೆದು ಬಾತ್‌ರೂಮಿಗೆ ಹೋದ. +ಬ್ರೇಕ್‌ಫಾಸ್ಟ್‌ ನಂತರ ತಾಯಿ ಮಗ ಹಣ್ಣು ಖರೀದಿಸಲು ಹೊರಟಾಗ ಒಂದು ವಿಷಯ ತಿಳಿಸಿದರು. +"ನಿಮಪ್ಪ ಆಸ್ಪತ್ರೆಯಲ್ಲಿದ್ದಾಗ ಬಂದಿದ್ದ ಚಾರುಲತ ಎರಡೆಳೆಯ ಸರ, ಒಂದು ಜೊತೆ ಬಳೆ ದೇವರ ಮನೆಯಲ್ಲಿ ಬಿಚ್ಚಿಟ್ಟು ಹೋಗಿದ್ದಾಳೆ. +ಮರ್ತು ಇಟ್ಟು ಹೋಗಿದ್ದಾಳೇನೋ ಮತ್ತೆ ಬರಬಹುದು ಅಂದ್ಕೊಂಡೆ. +ಅವ್ಳು ಒಂದೆರಡು ಸಲ ಫೋನ್‌ ಮಾಡಿ ಅವ್ರ ಆರೋಗ್ಯದ ಬಗ್ಗೆ ವಿಚಾರಿಸಿದ್ದು. +ಆಗ್ಲೂ ಈ ಸುದ್ಧಿ ಎತ್ತಲಿಲ್ಲ. +ಅವ್ಳ ಉದ್ದೇಶವೇನೋ !? ಮೂರ್ತಿ ಮಾತೇ ಆಡಲಿಲ್ಲ. +ಇವರು ಹಾಕಿದ್ದ ತೂಕದ ಎರಡೆಳೆ ಸರದಲ್ಲಿದ್ದ ಮಾಂಗಲ್ಯವನ್ನ ತೆಗೆದು ಅವಳಪ್ಪ ಕಡಿಮೆ ಚಿನ್ನದಲ್ಲಿ ಎಣಿಸಿಕೊಟ್ಟ ಕರೀಮಣಿಯ ಸರಕ್ಕೆ ಹಾಕಿಕೊಂಡಿದ್ದಳು. +ಅದಕ್ಕೆ ಅವಳತ್ತೆಯ ಪರ್ಮಿಷನ್‌ ಸಿಕ್ಕಿತ್ತು. +ಈಗಲೂ ಆ ಕರೀಮಣಿ ಸರದಲ್ಲಿಯೇ ಇದ್ದಿದ್ದು ಮಾಂಗಲ್ಯ. +ಈಗ ನಿರ್ದಾಕ್ಷಿಣ್ಯವಾಗಿ ಇವರು ಕೊಟ್ಟ ಚಿನ್ನ ನಿರಾಕರಿಸಲು ಸುಲಭವಾಯಿತು. +"ಕಮಲ ಬಂದರೇ ಅವ್ಳ ಕೈಯಲ್ಲಿ ಕೊಟ್ಟು ಕಳಿಸೋಣಾಂತ" ಎಂದರು ಮತ್ತೆ ಮೃಣಾಲಿನಿ. +ಮೂರ್ತಿ ತನಗೇ ಕೇಳಲೇ ಇಲ್ಲವೆನ್ನುವಂತೆ ವರ್ತಿಸಿದ. +ಹಣ್ಣು ಖರೀದಿಸಿ ಹಿಂದಿರುಗಿ ಬರೋವಾಗ “ಈ ವಿಷ್ಯ ಅಪ್ಪನಿಗೆ ಗೊತ್ತಾ?” ಕೇಳಿದ. +ಸಧ್ಯಕ್ಕೆ ಯಾವುದೇ ಆಘಾತವಾಗುವಂಥ ವಿಷಯಗಳು ಅವರವರೆಗೂ ಹೋಗುವುದು ಬೇಕಿರಲಿಲ್ಲ. +ಕೈಯಲ್ಲಿನ ಹೂವಿನ ಬ್ಯಾಸ್ಕೆಟ್‌ನ ಹಿಂದಿನ ಸೀಟು ಮೇಲಿಟ್ಟು "ಹೇಳ್ಲಿಲ್ಲ,ಆದ್ರೂ ಎಷ್ಟೋ ಸಲ ಹೇಳ್ಬೇಕು ಅಂದ್ಕೊಂಡೆ. +ಒಮ್ಮೆ ಹೇಳಿ ಸಲಹೆ ಕೇಳೋದು ಅನ್ನಿಸಿದರು ಹಿಂಜರಿದೆ. +ನಾನೇ ಒಮ್ಮೆ ಫೋನ್‌ ಮಾಡಿ ಅವಳನ್ನ ಬಂದುತಗೊಂಡ್ಹೋಗೂಂತ ಹೇಳೋಣಾಂತ ಅಂದ್ಕೊಂಡೆ. +ನಿಮ್ಮಪ್ಪ ನರ್ಸಿಂಗ್‌ಹೋಂನಿಂದ ಬಂದ್ಮೇಲೆ ಹೊರ್ಗಡೆ ಹೋಗಿಲ್ಲ. +ಚಾರುಲತ ಬಂದರೇ ಅವುರು ತಪ್ಪು ತಿಳಿ ಬಾರ್ದಲ್ಲ. +ಅದ್ಕೆ ನಿಂಗೆ ಹೇಳ್ದೆ" ಪೂರ್ತಿ ಹೇಳಿ ಆಕೆ ಮನಸ್ಸಿನ ಭಾರ ಕಳೆದುಕೊಂಡರು. +ಈಗ ಸೊಸೆಯ ಬಗ್ಗೆ ಮೆತ್ತಗಾಗಿದ್ದರು. +ಹಿಂದಿನ ವೈರತ್ವ ಇರಲಿಲ್ಲ. +"ಈಗೇನ್ಮಾಡೋದು ?"ಅವನನ್ನ ಕೇಳಿದರು. +"ಅದೇನು ಅಂಥ ಅರ್ಜೆಂಟ್‌ನ ವಿಷ್ಯವಲ್ಲ. +ನಿಧಾನವಾಗಿ ಯೋಚ್ಸೋಣ"ಸ್ಟೇರಿಂಗ್‌ ವ್ಹೀಲ್‌ನ ಮುಂದೆ ಕೂತ. +ಅವನು ಕಾರಿನ ತಂಟೆಗೆ ಹೋಗುತ್ತಿದ್ದುದೇ ಕಡಿಮೆ. +ಓರಿಜಿನಲ್‌ ಡ್ರೈವರ್‌, ಮಾಲೀಕರು ಅವನ ತಂದೆನೇ. +ಬರುವ ಅತಿಥಿಗಳಿಗಾಗಿ ಮನೆಯನ್ನ ಸಿಂಗರಿಸಿದರು. +ಪೂಜಾ ಉಡಬೇಕಾದ ಸೀರೆಯನ್ನ ಮೂರ್ತಿನೇ ಆಯ್ಕುಕೊಟ್ಟ. +ಈ ಸಮಯದಲ್ಲಿ ಚಾರುಲತ ಇರಬೇಕಾಗಿತ್ತೆಂದು ಒಂದಲ್ಲ, ನೊರು ಸಲವಾದರೂ ಅಂದು ಕೊಂಡ. +ಮೃಣಾಲಿನಿಯ ಸಹಾಯಕ್ಕೆ ಒಂದಿಬ್ಬರು ನೆಂಟರ ಹೆಂಗಸರು ಬಂದಿದ್ದರು. +ಹೇಳಿ ಮಾಡಿಸುವುದಷ್ಟೇ ಅವರ ಕೆಲಸ. +ಮೂರರ ಸುಮಾರಿಗೆ ಲಗ್ಸುರಿ ಟ್ಯಾಕ್ಸಿ ಬಂದು ಮನೆಯ ಮುಂದೆ ನಿಂತಾಗ,ಮೂರ್ತಿ ಹೊರಗೆ ಓಡಿದ. +ಅವರುಗಳನ್ನ ನೇರವಾಗಿ ನೋಡಿ ಮಾತಾಡಿದ್ದವನು ಇವನೊಬ್ಬನೇ. +ತೀರ ತಮಿಳು ಬೆರೆತ ಕನ್ನಡವಾಗಿದ್ದರು ಸೊಗಸಾಗಿತ್ತು. +ಸರಳವಾದ ಜನ ಆತ್ಮೀಯವಾಗಿ ವ್ಯವಹರಿಸಿದಾಗ ಎಲ್ಲಾ ಸುಲಭವೆನಿಸಿತು. +ಬಹಳ ಕಾಳಜಿಯಿಂದ ಮೂರ್ತಿಯೇ ತಂಗಿಗೆ ಮೇಕಪ್‌ ಮಾಡಿದ್ದರಿಂದ ಮೊದಲಿನ ಕೆಂಪು ಇನ್ನ ಕೆನ್ನೆಗಳ ಮೇಲೆ ಮೂಡದಿದ್ದರೂ ಚೆಲುವಾಗಿಯೇ ಕಂಡಳು. +ತಮ್ಮ ಮಗನ ದಿನಚರಿಯ ವೀಡಿಯೋ ಕ್ಯಾಸೆಟ್‌ ಕೊಟ್ಟರು. +"ನಿಮ್ಮ ಮಗ್ಳ ದಿನಚರಿಯ ಒಂದು ವೀಡಿಯೋ ಕ್ಯಾಸೆಟ್‌ ಮಾಡಿ ಕೊಡಿ. +ಅವ್ನು ಬರೋಕೆ ಮೊದ್ಲು ಇದ್ದ ಕಳ್ಸಿ ಕೊಡ್ತೀವಿ" ಎಂದರು. +ಅವರುಗಳು ಕೂಡ ತಮ್ಮ ಹೆಣ್ಣು ಮಕ್ಕಳ ವಿವಾಹ ಮಾಡಬೇಕಾದುದ್ದರಿಂದ ಅರ್ಥ ಮಾಡಿಕೊಂಡು ಹಣ ಕೊಡುವ ಜನ ಬೇಕಿದ್ದರೇ ವಿನಃ ತೀರಾ ವ್ಯವಹಾರ ಮಾಡಿಯೋ, ಅವರನ್ನ ಹಿಂಡಿ ಹಿಪ್ಪೆ ಮಾಡಿ ಹಣ ವಸೂಲು ಮಾಡುವುದು ಅವರ ಉದ್ದೇಶವಾಗಿರಲಿಲ್ಲ. +ಅದನ್ನ ಸ್ಪಷ್ಟವಾಗಿ ಹೇಳಿಕೊಂಡರು. +ಈ ಕಡೆಯವರ ಪೂರ್ಣ ಸಮ್ಮತಿ ಇದ್ದುದ್ದರಿಂದ ಅವರುಗಳು ಕೂಡ ಹೆಚ್ಚು ಘಾಸಿಗೊಳ್ಳಬೇಕಿರಲಿಲ್ಲ. +ರಾತ್ರಿಯ ಫ್ಲೈಟ್‌ಗೆ ರಿಟರ್ನ್‌ ಟಿಕೆಟ್ಸ್‌ನ ಪಡೆದಿದ್ದರಿಂದ ಮೂರ್ತಿಯೇ ಹೋಗಿ ಬೀಳ್ಕೊಟ್ಟು ಕೈ ಬೀಸಿ ಬಂದಿದ್ದ. +"ನಿಮ್ಮ ಹುಡ್ಗಿ ನಮ್ಗೆ ಪೂರ್ತಿಯಾಗಿ ಇಷ್ಟವಾಗಿದ್ದಾಳೆ" ದಂಪತಿಗಳು ಒಮ್ಮತದಿಂದ ಹೇಳಿದ್ದರಿಂದ ಅವನಿಗೆ ಆಕಾಶಕ್ಕೆ ಏಣಿ ಹಾಕುವಂತಾಗಿತ್ತು. +ಹಿಂದಿರುಗಿ ಬಂದವನೇ ಕ್ಯಾಸೆಟ್‌ನ ವಿ.ಸಿ.ಆರ್‌. ನೊಳಕ್ಕೆ ತುರುಕಿ ತಂಗಿಯ ಪಕ್ಕ ಕೂತ. +ಅರ್ಧ ಗಂಟೆಯ ಕ್ಯಾಸೆಟ್‌. +ಮನೆಯ ದಿನಚರಿಯಿಂದ ಹಿಡಿದು ಅವನು ವಿಮಾನ ಹತ್ತಿ ಪೈಲಟ್‌ ಸೀಟುನಲ್ಲಿ ಕೂಡುವವರಿಗೂ ಇತ್ತು. +ಅವನ ಕಂಠದಲ್ಲಿನ ಒಂದು ಹಾಡು ಕೂಡ ಇತ್ತು. +ಇಂಪಾದ ರಫಿ ಹಾಡಿದ ಚಲನಚಿತ್ರಗೀತೆ. +ತಂದೆ, ತಾಯಿ, ತಂಗಿಯರೊಂದಿಗಿನ ಒಡನಾಟ, ಎಲ್ಲ ಇಷ್ಟವೆನಿಸಿತು ಎಲ್ಲರಿಗೂ. +"ಮಧು ತುಂಬ ಚೆನ್ನಾಗಿದ್ದಾನೆ" ಎಂದರು ಮೃಣಾಲಿನಿ. +ತಂಗಿಯ ಹೆಗಲ ಮೇಲೆ ಕೈ ಹಾಕಿದ ಮೂರ್ತಿ "ಬರೀ ಚೆನ್ನಾಗಿ ಏನು,ಸೂಪರ್ಬ್‌. +ಎಂಥ ಹೊಳೆಯೋ ಕಣ್ಣುಗಳು. +ಎಷ್ಟು ಮಟ್ಟಸವಾಗಿದ್ದಾನೆ. +ಮಾಡೆಲಿಂಗ್‌ ಮಾಡಿದ್ರೆ ಲಕ್ಷಾಂತರ ಸಂಪಾದಿಸಬಹುದಿತ್ತು. +ಆದರೆ ಅದೆಲ್ಲಿ ಆಗದ ಮಾತು. +ಬೆಳಿಗ್ಗೆ ತಿರುಪತಿ ವೆಂಕಟೇಶ್ವರ ಸುಪ್ರಭಾತ ಸುಬ್ಬಲಕ್ಷ್ಮಿಯವರ ಕಂಠದಲ್ಲಿ ಕೇಳದ ದಿನ ಅವ್ರಿಗೆ ಊಟ ಸೇರೋಲ್ವೇನೋ ! +ಅಂಥ ಸಂಪ್ರದಾಯಸ್ಥ ಜನ" ಹೇಳಿದ ಮುಖ ಉಬ್ಬಿಸಿ. +ಈ ಗಂಡು, ಸಂಬಂಧ,ಎಲ್ಲರಿಗೂ ಇಷ್ಟವಾಗಿತ್ತು. +ಇಷ್ಟು ಬೇಗ ಇಂಥ ಒಳ್ಳೆಯ ಸಂಬಂಧ ಕಾಲಿಗೆ ತೊಡರಿದ ಬಳ್ಳಿಯಂತೆ ತಮಗೆ ಸಿಕ್ಕಿದ್ದು ತೀರಾ ಅದೃಷ್ಟವೆಂದು ಕೊಂಡರು ಯುಗಂಧರ್‌. +ಕರಿ ನೆರಳಿನ ಛಾಯೆಯ ಮನಸ್ಥಿತಿಯಲ್ಲಿದ್ದವರನ್ನ ಬೆಳದಿಂಗಳಿಗೆ ದೂಡಿದಂತಾಗಿತ್ತು. +ಪೂಜಾ ಮಾತ್ರ ಸುಮ್ಯನೆ ಕೂತಿದ್ದಳು. +"ಇದೆಲ್ಲ ನಿಮ್ಮಗಳ ಅಭಿಪ್ರಾಯ ಆಯ್ತು. +ಇನ್ನ ಪೂಜಾ ಒಪ್ಕೊಂಡರೆ ಅರ್ಧ ಮದ್ವೆ ಮುಗಿದಂತಾಗುತ್ತೆ" ಎಂದರು ಮೃಣಾಲಿನಿ ನಿಶ್ಚಿಂತೆಯಿಂದ ಅವಳು ತಟ್ಟನೆ ಎದ್ದು ಹೋದಳು. +ಯುಗಂಧರ್‌ ಗಾಬರಿಯಾದರು. +ಮೂರ್ತಿ ಪಕ ಪಕ ನಕ್ಕುಬಿಟ್ಟ "ಅಪ್ಪ, ನೀವೇನು ಆತಂಕ ಪಡೋದ್ಬೇಡ ನಿಮ್ಮ ಮಗ ಬಗ್ಗೆ ಅವ್ಳಿಗೆ ಹಂಡ್ರೆಡ್‌ ಪರ್ಸೆಂಟ್‌ ಒಪ್ಪಿಗೇಂತ ಅವ್ಳ ಕಣ್ಣುಗಳೇ ಹೇಳ್ತಾ ಇದ್ದು. +ಹಿರಿಯರು ಒಪ್ಕೊಂಡ್ರು. +ಒಪ್ಪಬೇಕಾದ ಗಂಡಿನ ಬಗ್ಗೆ ಮಾತ್ರ ನಾವು ಯೋಚಿಸೋಣ?” ಎಂದ. +ಯುಗಂಧರ್‌ಗೆ ಅದು ಸರಿಯೆನಿಸಿತು. +“ಒಡವೆ ವಸ್ತು ಸಾಕಷ್ಟು ಇದೆ. +ಆ ಬಗ್ಗೆ ನಾವೇನು ತಲೆ ಕೆಡ್ಸಿ ಕೊಳ್ಳೋದ್ಬೇಡ. +ಅವ್ರೇನು ಕೇಳದಿದ್ರು. . . . ಎಷ್ಟು ಕೊಡೋಕೆ ಸಾಧ್ಯ ನಮ್ಮಿಂದ? +ಮಧು ಇರೋ ಚೆಂದಕ್ಕೆ ವಿದ್ಯೆಗೆ ಯಾರಾದ್ರೂ ಕೋಟಿಗಟ್ಟಲೆ ಸುರಿದಾರು! +ನಾವು ಅಷ್ಟೆಲ್ಲ ಎಲ್ಲಿಂದ ತರೋಣ" ಅನುಮಾನಿಸಿದರು ಮೃಣಾಲಿನಿ. + ಹಾಗೇನು ಅನ್ನಿಸಲಿಲ್ಲ ಮೂರ್ತಿಗೆ. +ಅವರು ಅಂದೇ ತಮ್ಮ ಪರಿಸ್ಥಿತಿ ವಿವರಿಸಿದ್ದರು. +ಯಾರು ಅವರನ್ನು ಗಂಡಿನ ಕಡೆಯವರು ವರದಕ್ಷಿಣೆ ಕೇಳದಿದ್ದರೇ, ಅವರುಗಳು ಕೂಡ ಕೈಯೊಡ್ಡುವಂಥ ಜನವಲ್ಲ. +ಪರಿಸ್ಥಿತಿ ಅವರನ್ನ ಇಕ್ಕಟ್ಟಿಗೆ ಸಿಕ್ಕಿಸಿತ್ತು. +"ಹೇಗೂ, ಆ ಮನೆನ ಇನ್ನಷ್ಟು ವಿಸ್ತರಿಸಿ ಡಾ।| ನವೀನ್‌ಗೆ ಒಂದು ನರ್ಸಿಂಗ್‌ಹೋಂ ಮಾಡಿ ಕೊಡೋ ಉದ್ದೇಶವಿತ್ತು. +ಅದ್ನ ಬಾಯ್ಬಿಟ್ಟು ಕೂಡ ಹೇಳಿದ್ದೆ. +ಈಗ ಅದೇ ಮನೇನ ಮಾರಿ ಹಣದ ರೂಪದಲ್ಲಿ ಕೊಟ್ಟುಬಿಡೋಣ. +ನಿನ್ನ ಅಭಿಪ್ರಾಯವೇನು ಮೂರ್ತಿ ?"ಮಗನನ್ನ ಕೇಳಿದರು ಯುಗಂಧರ್‌. +ತಲೆದೂಗಿದ ತಂಗಿಯ ವಿವಾಹಕ್ಕಾಗಿ ಅವನು ಯಾವ ರಿಸ್ಕ್‌ ಬೇಕಾದರೂ ತೆಗೆದುಕೊಳ್ಳಲು ಸಿದ್ಧವಿದ್ದ. +ಪೂಜಾ ಬದುಕು ಸರಿ ಹೋಗಬೇಕು. +ಇಲ್ಲದಿದ್ದರೇ ಬೇರೆಯವರ ಬೆರಳು ಅವನತ್ತಲೇ. +"ಖಂಡಿತ, ಅದ್ನೆಲ್ಲ ನಾನು ನೋಡ್ಕೋತೀನಿ. +ಇನ್ನಷ್ಟು ಸಾಲ ಕೇಳಿದ್ರೂ ಈ ಮನೆಯ ಮೇಲೆ ಸಾಲ ತೆಗ್ದು ಕೊಡೋಣ. +ನಿಧಾನವಾಗಿ ತೀರಿಸಿಕೊಂಡರಾಯ್ತು. +ಅವಳೊಬ್ಬಳ ಬದುಕು ಸೇಫಾದರೇ ಸಾಕು" ಉದ್ವಿಗ್ನನಾಗಿ ನುಡಿದ. +ಯುಗಂಧರ್‌ ಎದೆ ತುಂಬಿತು. +ಮಗ ಈಗ ಇಷ್ಟು ಬೆಂಬಲವಾಗಿ ತಮ್ಮೊಂದಿಗೆ ನಿಂತಿದ್ದಕ್ಕೆ ಅವನಿಗೆ ಹೇಗೆ ಕೃತಜ್ಞತೆ ತಿಳಿಸಬೇಕೋ ಅವರಿಗೆ ಅರ್ಥವಾಗಲಿಲ್ಲ. +ಕಣ್ತುಂಬಿತು ಮಾತಾಡದೇ ರೂಮಿಗೆ ಹೋಗಿ ಮಲಗಿಬಿಟ್ಟರು. +ತಾಯಿಯ ಕಡೆ ತಿರುಗಿದ ಮೂರ್ತಿ "ಅಪ್ಪನ್ನ ಯಾವ್ದೂ ಮನಸ್ಸಿಗೆ ಹಚ್ಕೋಬೇಡಾಂತ ಹೇಳು. +ಎಲ್ಲಾ ನಾನು ನೋಡ್ಕೋತೀನಿ. +ಪೂಜಾ ನಗುನಗುತ್ತ ಗಂಡನ ಜೊತೆ ಹೋಗ್ತಾಳೆ"ಮೇಲುಸಿರಿನೊಂದಿಗೆ ಹೇಳಿದ. +ಆಕೆಯ ಕಣ್ಣಾಲಿಗಳು ಒದ್ದೆಯಾಯಿತು. +ಆದರೆ ಮುಂದಿನ ಮೂರ್ತಿಯ ಬದುಕು ಯೋಚಿಸುವಂತಾಗುತ್ತಿತ್ತು. +ಆ ಬಗ್ಗೆ ತಲೆ ಕೆಡಿಸಿಕೊಂಡಂಗೆ ಕಾಣಲಿಲ್ಲ. +"ಚಾರುಲತ ಬಿಟ್ಟೋದ ಒಡವೆಗಳ ಬಗ್ಗೆ ನಿಮ್ಮ ತಂದೆಗೆ ತಿಳಿಸ್ಲಾ ?" ಪಿಸುದನಿಯಲ್ಲಿ ಕೇಳಿದರು. +ಅವನ ಮುಖ ಒಂದು ತರಹ ಆಯಿತು. +“ಸಧ್ಯಕ್ಕೆ ಬೇಡ ಇದು ಯಾವ ದೊಡ್ಡ ವಿಷ್ಯಾಂತ ಅವ್ರ ವರ್ಗೂ ತಗೊಂಡ್‌ ಹೋಗೋದು? +ಮರ್ತು ಬಿಟ್ಟೋಗಿರ್ಬೇಕು. +ಅಣ್ಣನ ಮದ್ವೆ ವಿಷ್ಶ ಬಂದಾಗ ನಮ್ಮನ್ನೆ ನಿರ್ಲಕ್ಷಿಸಿಬಿಟ್ಲು. +ಈ ಚಿನ್ನ ಯಾವ ಮಹಾ” ಎಂದ ಗಡುಸಾಗಿ. +ಮಗನ ಕೋಪ ಕಮ್ಮಿಯಾಗಿಲ್ಲವೆಂದು ಕೊಂಡರು. +"ನೀನು ಮಲಕ್ಕೋ ಹೋಗು. +ಅವ್ಳಿಗೆ ಬಿಸಾಕೋ ಅಷ್ಟು ಒಡ್ವೆ ಇರ್ಬಹುದು. +ಪೂಜಾಗೆ ಕೊಟ್ಟರಾಯ್ತು" ಅಂದು ಎದ್ದು ಹೋದ. +ಅದು ಮನಸ್ಸಿನಾಳದಿಂದ ಬಂದ ಮಾತಲ್ಲ. +ಮದುವೆಯ ಸಂದರ್ಭದಲ್ಲಿ ಅತ್ತೆ ಮನೆಯವರು ಹಾಕಿದ್ದು ಕೂಡ ಅವಳ ಸ್ವಂತಕ್ಕೆ ಸೇರಿದ್ದೇ. +ಅದರ ಮೇಲೆ ಯಾರ ಹಕ್ಕು ಇಲ್ಲ. +ಇದು ಅವನ ಮನಸ್ಸಿನ ಸ್ಪಷ್ಟವಾದ ಅಭಿಪ್ರಾಯ. +ದಿಂಬಿನ ಮೇಲೆ ತಲೆ ಇಟ್ಟನಂತರ ತಲೆ ತಿರುಗಿಸಿ ನೋಡಿದ. +ಪುಟ್ಟ ಟವಲು ಸ್ಟೂಲ್‌ನ ಅಡಿಯಲ್ಲಿ ಬಿದ್ದಿತ್ತು. +ಬಿದ್ದಿದ್ಲಿ ಮುಖ ತಿರುಗಿಸಿ ಮಲಗಿಕೊಂಡರೂ ಹತ್ತು ನಿಮಿಷಗಳನಂತರ ಅದನ್ನ ಎತ್ತಿ ಸ್ಟೂಲ್‌ ಮೇಲೆ ಹಾಕಿದ "ಅಯ್ಕೋ, ಇನ್ನ ಇಡೀ ರಾತ್ರಿ ಜಾಗರಣೆ" ಸದಾ ಕಾಡುವುದು ಹೆಣ್ಣಿನ ಕೆಲಸವೇ. +ಅಮ್ಮ ತಂಗಿ, ಮಡದಿ, ಮಗಳು ಒಬ್ಬರಲ್ಲಿ ಒಬ್ಬರು ಗಂಡನ್ನ ಕಾಡುತ್ತಿರುತ್ತಾರೆ. +ಇದು ಅವನ ವಿಶ್ಲೇಷಣೆ. +ಈ ಬಗ್ಗೆ ಯಾಕೆ ಒಂದು ಲೇಖನ ಸಿದ್ದ ಮಾಡಬಾರದು? +ತಕ್ಷಣ ಎದ್ದು ಕೂತ. +ಚೆನ್ನೈನ ಜನ ಮನೆಯಲ್ಲಿ ಮಾತ್ರವಲ್ಲ ವಿಮಾನ ನಿಲ್ದಾಣದಲ್ಲಿ ಕೂಡ ಅವನ ಮಡದಿಯ ಬಗ್ಗೆ ಪ್ರಶ್ನಿಸುತ್ತಿದ್ದರು. +"ನೋಡಿದ್ರೆ ಚೆನ್ನಿತ್ತು. ನಿಮ್ತಂದೆ ಕೊಟ್ಟ ಮ್ಯಾರೇಜ್‌ ಆಲ್ಬಮ್‌ ನೋಡಿದ್ವಿ. +ಬ್ಯೂಟಿ ಫುಲ್‌ಲೇಡಿ. +ನಮ್ಗೆ ಅಷ್ಟೊಂದು ಸರಳವಾಗಿ, ಸಂಪ್ರದಾಯವಾಗಿ ಇರೋ ಹುಡ್ಡಿರೇ ಇಷ್ಟವಾಗೋಲ್ಲ. +ನಮ್ಮ ಮಧುಗೆ ಕೂಡ ಸೀರೆಗಳು ಅಂದರೇನೇ ಇಷ್ಟ." ಆಕೆ ಒತ್ತಿ ಹೇಳಿ ಹೋಗಿದ್ದರು. +ನಡೆದು ಹೋದ ರಾದ್ದಾಂತ ಅವರಲ್ಲಿ ವಿವರಿಸಲು ಹೋದರೆ ಇಡೀ ಕತೆಯೇ ಹೊರಗೆ ಬರುತ್ತೆ. +ಒಬ್ಬ ಗಂಡಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಹೆಣ್ಣನ್ನ ಇನ್ನೊಬ್ಬ ಗಂಡು ಹೇಗೆ ಒಪ್ಪಿಯಾನು ? +ಮಧುಗಾದರೂ ಅಂಥ ಹಣೆಬರಹವೇನು ? +ತೀರಾ ಗೋಜಲು ಗೋಜಲಾಗಿ ಹೋಯಿತು ಅವನ ಮನಸ್ಸು. +ತಲೆಯ ಮೇಲೆ ಕೈಯೊತ್ತು ಕೂತ. +ಅವನಪ್ಪ, ಡಾ|।ನವೀನ್‌ನ ಪ್ರತಿಯೊಬ್ಬರನ್ನ ಅವಮಾನಿಸಿದ್ದ. +ಬಂದ ಚಾರುಲತನ ಕತ್ತಿಡಿದು ದಬ್ಬುವಂತೆ ಕಳಿಸಿದ್ದ. +ಬಿಸಿಲಲ್ಲಿ ನಡೆದು ಹೋಗುತ್ತಿದ್ದವಳ ಕಡೆ -ನೋಟ ಕೂಡ ಹರಿಸಿರಲಿಲ್ಲ. +ಮಿದುಳು ಸಿಡಿಯತೊಡಗಿತು. +ಒಂದು ಸಾರಿಡಾನ್‌ ನುಂಗಿದ. +ಅಮೃತಾಂಜನ ಹಚ್ಚಿದ. +ಯಾವುದರಿಂದಲೂ ನೋವು ಕಡಿಮೆಯಾಗದಿದ್ದಾಗ ಹೊರಗೆದ್ದು ಬಂದು ಕೂತ. +ಮೃಣಾಲಿನಿ ಕೂಡ ಭಾಗವತ ಹಿಡಿದು ಕೂತಿದ್ದರು. +"ಅಮ್ಮ ನಿದ್ದೆ ಬದ್ದಿಲ್ವಾ ?" ಎದುರಿಗೆ ಬಂದು ಕೂತವನು ಭಾರವಾದನಿಟ್ಟುಸಿರು ದಬ್ಬಿದ “ಮಧ್ಯಾಹ್ನ ಮಲಗಿದ್ದೆ” ತಡವರಿಸಿದರು. +ಅವನಿಗೆ ನಗುಬಂತು. +"ಹೋಗ್ಲಿ ಬಿಡು. +ಬಹುಶಃ ನಿನ್ತಲೆಯಲ್ಲಿ ಕೊರೆಯುತ್ತ ಇರೋ ಸಮಸ್ಯೆನೇ ನನ್ನ ತಲೆ ತುಂಬಿಕೊಂಡಿರೋದು. +ಅವ್ರಿಗೆ ಆಲ್ಬಮ್‌ ತೋರಿಸಬಾರದಿತ್ತು. +ನನ್ನ ವಿಮಾನ ನಿಲ್ದಾಣದಲ್ಲಿ ಚಾರುಲತ ಬಗ್ಗೆ ಕೇಳಿದ್ರು" ಎಂದ ಅತ್ತಿತ್ತ ನೋಡಿ. +ಯುಗಂಧರ್‌ ಮಲಗಿದ್ದ ಬೆಡ್‌ರೂಂ ಬಾಗಿಲು ಹಾಕಿತ್ತು. +“ಹೇಗೆ ತೋರಿಸ್ತೇ ಇರೋಕೆ ಸಾಧ್ಯ ? +ನೀನು ಮದ್ವೆ ಆಗಿದೇಂತ ಹೇಳಿದ್ದೀಯ. +ಚಾರುಲತ ಓಡಾಡಿಕೊಂಡಿದ್ದರೇ, ಅದರ ಅಗತ್ಯ ಕಾಣ್ತಾ ಇರಲಿಲ್ಲ. +ಬದುಕೆ ಸಮಸ್ಯೆಗಳ ಗೊಂಡಾರಣ್ಯ ಅನ್ನಿಸುತ್ತೆ. +ಒಳ್ಳೆ ಸಂಬಂಧ ಬಂದಿದೆ. +ಪೂಜಾ ಕೂಡ ಒಪ್ಕೋತಾಳೇಂತ ಅನ್ನಿಸಿದೆ. +ಇದ್ರ ಮಧ್ಯೆ ಈ ಸಮಸ್ಯೆ. +ಈಗ ಹೇಗೋ, ಏನೋ ಹೇಳಿ ಸಮಾಳಿಸ್ಕೋಬಹುದು. +ಮದುವೆಯ ಮನೆಯಲ್ಲಿ ಈ ಮನೆ ಸೊಸೆ ಓಡಾಡದಿದ್ದರೇ ಹೇಗೆ ? +ವಿಷ್ಯಕ್ಕೆ ರೆಕ್ಕೆ ಪುಕ್ಕ ಹುಟ್ಟಿಕೊಂಡುಮುಂದಿನ ಪೂಜಾಳ ಭವಿಷ್ಯಕ್ಕೆ ತೊಂದರೆ ಆಗುತ್ತೆ. +ಈಗೇನು ಮಾಡೋದು? +ಪೂರ್ತಿ ಚಿತ್ರವನ್ನ ಮಗನ ಮುಂದಿಟ್ಟರು. +ಅವನಿಗೇನು ತೋಚಲಿಲ್ಲ. +ತಾಯಿಯತ್ತ ನೋಡಿದ. +ಬರೀ ಆತಂಕವೇ ಆಕೆಯ ಕಣ್ಣುಗಳಲ್ಲಿ. +ಗಂಟಲು ಹಿಡಿದಂತಾಯಿತು."ಇನ್ನ ಸಮಯವಿದೆಯಲ್ಲ. +ನೀನು ನಂಬಿರೋ ಕೃಷ್ಣನೇ ಮಾರ್ಗತೋರಿಸ್ತಾನೆ. +ನಾಳೆ ಓದಬಹುದು ಹೋಗಿ ಮಲಕ್ಕೊಳ್ಳಿ. +ಅಪ್ಪನಿಗೆ ನಿದ್ದೆ ಬಂದಿರಬಹುದೆಂದು ನಾವು ಅಂದ್ಕೋಬಹುದು. +ವಿಷಯ ಮನಸ್ಸಿಗೆ ಇಳಿಯದಿದ್ದರೂ, ನೀವು ಹಾಸಿಗೆಯಿಂದ ಎದ್ದು ಬಂದಿರೋದು ನೋಡಿ ಮೌನವಾಗಿಯೇತಲೆ ಕೆಡಿಸ್ಕೋತಾರೆ. +ಪ್ಲೀಸ್‌ ಹೋಗಿ ಮಲ್ಲಿಕೊಳ್ಳಿ. +ಅಪ್ಪಿ ತಪ್ಪಿ ಪೂಜಾ ಮುಂದೆ ಈ ಪ್ರಸ್ತಾಪ ಖಂಡಿತವಾಗಿಯು ಬೇಡ? +ಬಗ್ಗಿ ಪಿಸು ದನಿಯಲ್ಲಿ ನುಡಿದ. +ಆಕೆ ತಲೆದೂಗಿ ಎದ್ದು ಹೋದರು. +ಟಿ. ವಿ. ಆನ್‌ ಮಾಡಿದ. +ಯಾವುದೋ ಇಂಗ್ಲೀಷ್‌ ಚಿತ್ರ ಸ್ಟಾರ್‌ ಪ್ಲೇಸ್‌ನಲ್ಲಿ. +ಬರೀ ಚಾನಲ್‌ಗಳನ್ನ ಬದಲಾಯಿಸುತ್ತ ಗಂಟೆ ಕೂತವನು ಬೇಸರದಿಂದ ಎದ್ದುಹೋಗಿ ಮಲಗಿದ. +ಪೂಜಾ, ಡಾ।ನವೀನ್‌ನ ವಿಷಯ ಪ್ರಸ್ತಾಪವಾಗಿ ಬಹಳ ದೂರ ಹೋದ ನಂತರ ಹೆದರಿಸಲು ಒಂದು ಮಾತು ಹೇಳಿದ್ದ. +"ನಿನ್ನ ಭವಿಷ್ಯ ಹಾಳು ಮಾಡ್ಕೋತಾ ಇದ್ದೀಯಾ ! +ಜೀವನ ಪೂರ್ತಿಒಂಟಿಯಾಗಿರ ಬೇಕಾಗುತ್ತೆ." +ಅವಳು ಒಂದಿಂಚು ಕೂಡ ಅಲಿಸಿರಲಿಲ್ಲ "ನೀವು ಹೇಳಿದ್ದು ಇಬ್ರಿಗೂ ಅನ್ವಯವಾಗುತ್ತೆ. +ಒಂದಿಷ್ಟು ಹೆಚ್ಚು ಕಡ್ಮೆಯಾಗಬಹುದು. +ಬದುಕಿನಲ್ಲಿ ಸಮಸ್ಯೆ ಸಹಜ. +ಭಾರ ಹೊತ್ತೇನು ವಿಪರೀತ ಕಲ್ಪನೆ ಮಾಡ್ಕೊಂಡರೆ ಭಾರದ ಪ್ರಮಾಣ ನೂರರಷ್ಟು ಹೆಚ್ಚುತ್ತೆ. +"ಅದೇನು ಮಹಾ !ಎಂದುಕೊಂಡರೇ ಬೆಟ್ಟ ಕೂಡ ಹಗುರವಾಗಿರುತ್ತೆ " ಸವಾಲೆಸೆದಂತೆ ಆಡಿದ ಮಾತುಗಳು ನೆನಪಾಯಿತು. +ಅಂದು ಅವಳ ಮುಖದಲ್ಲಿ ಮಿನುಗುತ್ತಿದ್ದ ಸ್ವಾಭಿಮಾನ ರೊಚ್ಚಿಗೆಬ್ಬಿಸಿತ್ತು. +ಇಂದು ವಿವೇಕದಿಂದ ಚಿಂತಿಸಿದಾಗ ಹೆಮ್ಮೆಯೆನಿಸಿತು. +ಆದರೆ ಅವನ "ಈಗೋ" ಒಪ್ಪಲು ಬಿಡಲಿಲ್ಲ. +ಆದರೆ ಮೂರ್ತಿಯ ಮಸ್ತಿಷ್ಯದಲ್ಲಿ ಇನ್ನೊಂದು ವಿಷಯ ಸುಳಿಯಿತು. +"ಸ್ವಂತಮನೆ ಇದ್ದು ಬದಲಾಯಿಸಿದ್ದು ಯಾಕೆ ? + ಬಹುಶಃ ಮನೆ ಮಾರಿರ ಬಹುದು. +ಅಂಥ ಸ್ಥಿತಿ ಅವರಿಗೇನಿತ್ತು. +ತಲೆ ಬುಡ ಗೊತ್ತಾಗಲಿಲ್ಲ. +ಬೆಳಿಗ್ಗೆ ಕಮಲ ಮನೆಗೆ ಹೋಗಿ ಬರಬೇಕೆಂದುಕೊಂಡ. +ನೆಂಟರಾದುದ್ದರಿಂದ ಹೋಗಿ ಬರಲು ಕಾರಣ ಬೇಕಿರಲಿಲ್ಲ. +ಮತ್ತೆ ಚೆನ್ನೈಗೆ ಸಂಬಂಧ ಸೂಚಿಸಿದವರು ಕೂಡ ಅವಳ ಮನೆಯವರೇ. +ಎರಡು ನಿದ್ದೆ ಮಾತ್ರೆ ನುಂಗಿ ಮಲಗಿದ. +ತಾಯಿಗೂ ಇದೇ ಸಲಹೆಕೊಡ ಬೇಕೆನಿಸಿತು. +ಈಗ ಪೂಜಾಗೂ ಮಾತ್ರೆ ನುಂಗಿಯೇ ನಿದ್ರಿಸುವ ಅಭ್ಯಾಸ. +ಅದನ್ನ ಆದಷ್ಟು ಕಡಿಮೆ ಮಾಡಬೇಕೆಂದು ಕೊಂಡ. +ಚಾರುಲತ ಕರ್ಚಿಫ್‌ ಅಣಕಿಸಿದಂತಾಯಿತು. +ಮನಸ್ಸಿರೋ ಮನುಷ್ಯನಿಗೆ ಮಾತ್ರ ಈ ನೋವುಗಳೆಲ್ಲ ಅನಿಸಿತು. +ಎದ್ದ ಕೂಡಲೇ ಮೂರ್ತಿ ಸ್ನಾನ ಮುಗಿಸಿ ಬ್ರೇಕ್‌ಫಾಸ್ಟ್‌ ಕೂಡ ಬೇಡವೆಂದು ಹೊರಟ. +ಅವನಿಗೆ ಈಗ ಕಮಲನ ಕಂಡು ಮಾತಾಡುವುದು ಅಷ್ಟು ಅಗತ್ಯವಾಗಿ ಕಂಡಿತು. +ಬಾಗಿಲಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಕಮಲ ತಾಯಿ ನಗುಮುಖದಿಂದಲೇ ಸ್ವಾಗತಿಸಿದರು "ಒಳಗೆ ಹೋಗಿ ಕೂತ್ಕೋ. +ಈ ತರಕಾರಿಯೊಳ್ನ ಕಳ್ಸಿ ಬರ್ತೀನಿ" ಎಂದಾಗ ಒಳಗೆ ನಡೆದು ಆಸೀನನಾದ. +ಮನೆಯಲ್ಲಿ ಯಾರು ಇಲ್ಲದ್ದು ಅವನ ಗಮನಕ್ಕೆ ಬಂತು. +ಒಳಗೆ ಬಂದ ಕೂಡಲೇ "ಒಂದ್ದಿಮ್ದು ಕೂತ್ಕೋ" ಎಂದು ಒಳಗೆ ಬಂದವರು ತಟ್ಟೆಯ ತುಂಬ ಉಪ್ಪಿಟ್ಟು ತಂದಿಟ್ಟು "ಮೊದ್ಲು ತಿನ್ನು. +ಆಮೇಲೆ ಮಾತು, ಅವ್ರ ಸ್ನೇಹಿತರ ಮನೆ ಸತ್ಯನಾರಾಯಣ ಪೂಜೇಂತ ಮಕ್ಕಳನ್ನೆಲ್ಲ ಕಟ್ಟಿಕೊಂಡ್ಹೋಗಿದ್ದಾರೆ. +ನಂಗೂ ಸ್ಪಲ್ಪ ನಿಶ್ಚಿಂತೆ. +ನಂಗೂ ತಿಂಡಿ ತರ್ತಿನಿ. +ತಿನ್ನುತ್ತ ಮಾತಾಡೋಣ"ಒಳಗೆ ಹೋದರು. +ಈಕೆ ಸ್ವಲ್ಪ ಡಿಫರೆಂಟ್‌. +ಸಂದರ್ಭಕ್ಕೆ ಸರಿಯಾಗಿ ಹೊಂದಿಕೊಳ್ಳುವ ಮನಸತ್ವ ಉಳ್ಳವರು. +"ಈಗ್ವೇಳು ಪೂಜಾ ವಿವಾಹದ ವಿಷ್ಯ ಏನಾಯ್ತು ?"ವಿಷಯಕ್ಕೆ ಬಂದರು. +ಬಾಯಲ್ಲಿದ್ದ ಉಪ್ಪಿಟ್ಟು ನುಂಗಿ ನೀರು ಕುಡಿದು "ಈ ಹಂತಕ್ಕೆ ಬಂದಿದೆ. +ನಿಮ್ಮಿಂದ ಉಪಕಾರವಾಯ್ತು. ನೆನ್ನೆ ದಿನ ಚೆನೈನಿಂದ ಅವ್ರುಗಳು ಬಂದಿದ್ರು. +ಪೂಜಾನ ಒಪ್ಕೊಂಡಿದ್ದಾರೆ" ತಿಳಿಸಿದ. +“ಒಳ್ಳೆದಾಯ್ತು !ಆ ಹುಡ್ಗಿದೊಂದು ಮದ್ವೆ ಆಗ್ಲಿ” ತಮ್ಮ ಮನೆಯ ಚಿಂತೆಯನ್ನು ಆ ಸಮಯದಲ್ಲಿ ಮರೆತರು . +ಪೂಜಾನ ನೋಡೋಕೆ ಎಷ್ಟೋ ಸಲ ಬರಬೇಕು ಅಂದ್ಯೋತೀನಿ. +ಈ ಕೊನೆಯಿಂದ ಆ ಮೂಲೆಗೆ ಬರೋದೂಂದರೆ ಒಂದು ಊರಿಗೆ ಹೋಗ್ಬಂದಂಗೆ ಆಗುತ್ತೆ. +ಇನ್ನೇಲೆ ಅವ್ಳೇ ಬಂದ್ಹೋಗ್ರಾಳೆ. +ನೀವು ಪೂರ್ತಿಯಾಗಿ ಸಂಸಾರನ ಗಂಟು ಹಾಕ್ಕೊಂಡ್‌ ಬಿಟ್ಟಿದ್ದೀರಾ ! +ಯಾರು ಇಲ್ವಲ್ಲ, ನಂಜೊತೆ ಹೊರಡಿ”ಆಹ್ವಾನ ಕೊಟ್ಟ ರುಚಿಯಾದ ಉಪ್ಪಿಟ್ಟನ್ನು ಚಪ್ಪರಿಸುತ್ತ. +ಈಕೆಯ ಕೈನ ಅಡಿಗೆ,ತಿಂಡಿ ಎಂದೂ ಹದಗೆಡದೆಂದು ಅವನಿಗೆ ಗೊತ್ತು. +ತಟ್ಟೆ ಎತ್ತಿಟ್ಟು ಕೈ ತೊಳೆದು ಸೆರಗಿನಿಂದ ಮೂಗೊರೆಸಿಕೊಂಡು ಬಂದ ಕಮಲ ತಾಯಿ “ಹೇಗಾಗುತ್ತೆ ! +ಹೋಗಿರೋದು ಸತ್ಯನಾರಾಯಣ ಪೂಜೆ. +ಅಲ್ಲಿ ಊಟಾನು ಮಾಡ್ತಾರೆ. +ಬಂದ ಕೂಡಲೇ ಹಸಿವೂಂತ ಷುರು ಮಾಡ್ತಾರೆ ಬಕಾಸುರನ ವಂಶಸ್ಥರು. +ಅದ್ಕೆ ಅಚ್ಚುಕಟ್ಟಾಗಿ ಅಡ್ಗೆ ಮಾಡಿ ಇಟ್ಟಿದ್ಲೀಂತ ನನ್ನ ಬಿಟ್ಟೋಗಿದ್ದಾರೆ. +ಒಂದಿಷ್ಟು ಉಪ್ಪಿಟ್ಟು ತರ್ಲಾ” ಹೊರಟ ವರನ್ನು ನಿಲ್ಲಿಸಿದ “ಬೇಡ ಅತ್ತೆ !ನನ್ನ ಏನಂದ್ಕೊಂಡ್ರಿ. +ನಿಮ್ಮ ಮನೆಯವ್ರು ಬಕಾಸುರನ ವಂಶಸ್ಥರಾದರೇ ನಾನು ಮಾತ್ರ ಭೀಮನ ನಕ್ಷತ್ರದಲ್ಲಿ ಹುಟ್ಟಿದ್ದೀನಿಂತ ತಿಳಿದಿರಾ” ನಗಾಡಿದ. +ಒಂದು ರೀತಿಯ ರಿಲ್ಯಾಕ್ಸ್‌ ಆದರೂ ಕಮಲ ಇಲ್ಲದ್ದರಿಂದ ಬಂದು ಪ್ರಯೋಜನವಾಗಲಿಲ್ಲಾಂತ ಅಂದುಕೊಂಡ. +ಒಂದು ದೊಡ್ಡ ಸ್ಟೀಲ್‌ ಲೋಟದ ತುಂಬ ಕಾಫಿ ಬಂತು. +ಆಕೆನೇ ವಿಷಯಕ್ಕೆ ಬಂದರು. +“ಚಾರುಲತ ವಿಷ್ಯ ಏನ್ಮಾಡ್ದೆ ? +ಮತ್ತೆ ವಿವಾಹವಾಗೋ ಮನಸ್ಸು ಇದ್ಯಾ?”ಕೂತಿದ್ದವನು ಧಡಕ್ಕನೇ ಎದ್ದ. +ಎಂದೂ ಅವನ ತಲೆಯಲ್ಲಿ ವಿವಾಹ,ಬೇರೆ ಹೆಣ್ಣು ಅಂಥದ್ದು ಸುಳಿದೇ ಇಲ್ಲ. +ಪ್ರಶಾಂತವಾಗಿದ್ದ ಅವನ ಮನಸ್ಸು ಅಲ್ಲೋಲ ಕಲ್ಲೋಲವಾಯಿತು. +ಹೆಣ್ಣು ಹೆತ್ತ ತಾಯಿ, ಇಂಥ ಪ್ರಶ್ನೆನ ತನ್ನ ಮುಂದಿಡೋದು ? +"ಸಧ್ಯಕ್ಕೆ ಈಗ ಪೂಜಾ ಮದ್ವೆ ಆಗಬೇಕಷ್ಟೆ. +ಅಲ್ಲ ಅತ್ತೆ, ಒಂದೊಂದು ಮದ್ವೆ ಆಗೋಕೆ ಇಷ್ಟೊಂದು ತಂಟೆ, ತಕರಾರು, ತಾಪತ್ರಯ. +ಅಂಥದ್ದರಲ್ಲಿ ಎರಡನೇ ವಿವಾಹ ! ಭಯವಾಗುತ್ತೆ. +ನಮ್ಮದೆಲ್ಲ ಮುಗೀತಲ್ಲ ನಿಮ್ಮದು ಹೇಳಿ" ಕಾಫಿ ಲೋಟ ಕೈಗೆತ್ತಿಕೊಂಡ. +ಬರೀ ಪುರಾಣವೆ ಹೇಳಿದರು ಒಂದು ಗಂಟೆ ನಿರಂತರವಾಗಿ ಹರಿಕಥೆಯಂತೆ ಹೇಳಿದರೂ ಮುಗಿಯಲಿಲ್ಲ. +ಒಂದಾ, ಎರಡಾ, ವಿವಾಹ ವಾಗದ ಹೆಣ್ಣುಗಳಲ್ಲಿ ಮನೆಯಲ್ಲಿಟ್ಟುಕೊಂಡು ಪಡುತ್ತಿದ್ದ ಕಷ್ಟಗಳೆಲ್ಲ ಒಂದು ಬೃಹತ್‌ ಕಾದಂಬರಿಗೆ ಆಗುವಷ್ಟು ಮ್ಯಾಟರ್‌ ಇತ್ತು. +ಅವನಿಗೆ ಅಯ್ಯೋ ಎನಿಸಿತು. +ಆದರೂ ಇನ್ನೊಂದು ವಿವಾಹದ ಸುದ್ದಿ ಎತ್ತಿದ ಆಕೆಯ ಬಗ್ಗೆ ಬೇಸರ. +ಹೊರಟು ಬಾಗಿಲಿಗೆ ಬರೋ ವೇಳೆಗೆ ಕಮಲ ಬಂದಳು. +"ಅಮ್ಮ ಕಲಶದ ಬೆಳ್ಳಿ ಚೊಂಬು ಕೊಡ್ಬೇಕಂತೆ. +ಅದು ಅವ್ರ ಹಿರಿಯ ಮಗನ ಭಾಗಕ್ಕೆ ಹೋಯಿತಂತೆ. +ಕಾದು ಸಾಕಾದಾಗ ಅಣ್ಣ ನನ್ನ ಕಳ್ಗಿದ್ರು. +ಎಲ್ಹೋದ್ರು ತಲೆನೋವೇ ! +ನಂಗೆ ಒಂದ್ಲೋಟ ಕಾಫಿ ಕೊಟ್ಟರೇನೇ ಹೋಗುದು"ಎಂದು ಕೂತು ಬಿಟ್ಟವಳು ಮೂರ್ತಿಯ ಕಡೆ ನೋಡಿ "ಯಾರು ಇಲ್ಲ ಸಮಯದಲ್ಲಿ ಬಂದಿದ್ದೀರಿ." +ಅಮ್ಮ ತುಂಬ ಮಾತಾಡಿ ಬೋರ್‌ ಮಾಡಿರ ಬೇಕು ಎಂದು ತಾಯಿಯ ಕಡೆ ನೋಡಿ ಅಣಕಿಸಿದಾಗ ಆಕೆ ತಲೆಯ ಮೇಲೊಂದು ಮೊಟಕಿ ಒಳಗೆ ಹೋದರು. +ಬೆಳ್ಳಿಯ ಕಲಶದ ಚೊಂಬು ತರಲು. +“ನನ್ನ ಪ್ರಕಾರ ನಿನ್ನಷ್ಟು ಮಾತಾಡ್ಲಿಲ್ಲ. +ಉಪ್ಪಿಟ್ಟು ಮಾತ್ರ ಚೆನ್ನಾಗಿತ್ತು. +ತಟ್ಟೆ ಸ್ಕಾಂಪಲ್‌ನಲ್ಲಿ ಕೊಟ್ಟಿದ್ದು, ಒಂದು ತಟ್ಟೆ ತುಂಬ. +ಸಂಜೆವರ್ಗೂ ಹೊಟ್ಟೆ ಮತ್ತೇನನ್ನು ಕೇಳದು. +ನೀನು ಬೇಗ ಬಂದರೇ ಬಸ್‌ ಸ್ಟಾಪ್‌ವರ್ಗೂ ಕಂಪನಿ ಕೊಡ್ತೀನಿ. +ಸಾಧ್ಯವಾದ್ರೆ ನಿನ್ನ ಅಲ್ಪಿಟ್ಟು ಹೋಗ್ತೀನಿ. +ನೀನು ಕಾಫಿ ಜೊತೆ ಉಪ್ಪಿಟ್ಟು ತಿಂತಾ ಕೂಡ್ಬಾರ್ದು" ಎಂದ ಸ್ನೇಹದಿಂದ. +ತಾಯಿ ತಂದು ಕೊಟ್ಟ ಅರೆ ಬಿಸಿಯಾದ ಕಾಫಿಯನ್ನೇ ಕುಡಿದು ಹೊರಟಾಗ ಕಮಲ ತಾನಾಗಿ ಬಾಯಿ ಬಿಟ್ಟಳು. +"ಚಾರು ಕೆಲ್ಸ ಮಾಡ್ತಾ ಇರೋ ಕಡೆ ನಂಗೂ ಒಂದ್ಕೆಲ್ಸ ಸಿಕ್ತು. +ಅವ್ಳು ಅಕೌಂಟ್‌ ಸೆಕ್ಷನ್‌ನಲ್ಲಿ. +ನಾನು ಸೇಲ್ಸ್‌ನಲ್ಲಿ. +ಸೋಮವಾರದಿಂದ ಹೋಗ್ಬೇಕು. +ಮನೆಯಲ್ಲಿ ಇನ್ನ ಯಾರ್ಗೂ ಗೊತ್ತಿಲ್ಲ. +ಇರೋರೆಲ್ಲ ಪಲ್ಟಿ ಹಾಕಿದ್ರು ನನ್ನ ನಿರ್ಧಾರ ಬದಲಾಗೋಲ್ಲ. +ಬೆಳಗಿನಿಂದ ಮಳೆ ಮತ್ತೆ ಹನಿಯೋಕೆ ಷುರುವಾಯಿತು. +"ಅಂತು ಗಟ್ಟಿ ನಿರ್ಧಾರ !"ಮೆಚ್ಚಿಗೆಯಾಡಿದ. +ಬರೀ ಚಾರುಲತಳ ಚುರುಕಿನ ಬಗ್ಗೆ ಕೊರೆದಳು ದಾರಿಯುದ್ದಕ್ಕೂ. +"ನಿಜವಾಗ್ಲೂ ಚಾರುಲತ ಹಂಗೇ ಇರ್ಬೇಕು. +ನಾವುಗಳು ಆಗಿದ್ರೆ ಅಳ್ತ ಇದ್ದೆವೇನೋ, ಇಲ್ಲ ತಾಯಿ ಮುಂದೆ ಉಪವಾಸ ಸತ್ಯಾಗ್ರಹ ಮಾಡ್ತಾ ಇದ್ದೆವೇನೋ ! +ಅವಳಂತು ಎಷ್ಟು ಗೆಲುವಾಗಿ ಓಡಾಡಿಕೊಂಡಿದ್ದಾಳೆ. +ಇಂಥದೊಂದು ನನ್ನ ಜೀವ್ನದಲ್ಲಿ ನಡೆದಿದೆಯನ್ನೋ ವ್ಯಥೆ ಕೂಡ ಇದ್ಬಂಗಿಲ್ಲ. +ಕೆಲವರಿಗಂತು ತೀರಾ ಇಷ್ಟವಾಗಿದ್ದಾಳೆ" ಅದೇ ಮಾತುಗಳು. +“ಅವ್ರು ಮನೆ ಬದಲಾಯಿಸಿದ್ದಾರಾ ?” ಕೇಳಿದ ಸ್ವಲ್ಪ ಸಂಕೋಚ ದಿಂದಲೇ. +ಅದಕ್ಕೆ ಕಾರಣ ತಿಳಿಯಬೇಕಿತ್ತು ಅವನು. +ತಟ್ಟನೇ ಕಮಲ "ಹೌದು, ಅದು ಸ್ವಲ್ಪ ದೊಡ್ಡ ಮನೆ. +ನರ್ಸಿಂಗ್‌ಹೋಂಗೂ ಹತ್ತಿರ. +ಆ ಮನೆ ಹತ್ತಿರಾನೇ ಚಾರುಗೂ ಬಸ್‌ ಸ್ಟಾಪ್‌. +ಅದಕ್ಕೋಸ್ಕರ ಅಲ್ಲಿಗೆ ಹೋದ್ರಂತೆ. +ಈ ಮನೆನಾಯಾರ್ಲೋ ಲೀಜ್‌ಗೆ ಕೊಟ್ಟಿದ್ದಾರಂತೆ. +ನಾನು ಒಂದೆರಡು ಸಲ ಹೋಗಿದ್ದೆ. +ನೀವು ಹೋಗೋದು ಇದ್ಯಾ ?" ಕೇಳಿಯೇ ಬಿಟ್ಟಳು. +"ಷಟ್‌ ಅಪ್‌'" ಅಂದಾಗ ಬೆಪ್ಪಾದಳು. +"ಸಾರಿ ಕಮಲ, ನಾನು ಕೇಳಿದ ಉದ್ದೇಶವೇ ಬೇರೆ. +ಏನಿ ವೇ ಥ್ಯಾಂಕ್ಕೂ ವೆರಿಮಚ್" ಆಟೋ ನಿಲ್ಲಿಸಿ ಹತ್ತಿಕೊಂಡೇ ಬಿಟ್ಟ. +ಕಮಲ ಹಣೆ ಚಚ್ಚಿಕೊಂಡಳು. +ಅಂದು ಚಾರುಲತ, ಮೂರ್ತಿಯ ವಿವಾಹವಾದ ದಿನ. +ಮೂನ್ನೂರಾ ಅರವತೈದು ದಿನಗಳು ಕಳೆಯದ ಎಷ್ಟೋ ದಿನಗಳ ಮೊದಲೇ ಬೇರೆಬೇರೆಯಾಗಿದ್ದರು. +ತಲೆಗೆ ನೀರು ಹಾಕಿಕೊಂಡು ಟವಲಿನಿಂದೊರೆಸುತ್ತ ಬಂದ ತಂಗಿಯನ್ನ ನೋಡಿ ನಿಂತ. +"ಹ್ಯಾಪಿ ಮ್ಯಾರೇಜ್‌ ಆನಿವರ್ಸರಿ" ಅನ್ನಬೇಕಿತ್ತು. +ಗ್ರಾಂಡಾಗಿ ಆಚರಿಸಬೇಕಿತ್ತು. + ದೊಡ್ಡ ಪ್ರಸೆಂಟೇಷನ್‌ ಕೊಟ್ಟು ರೇಗಿಸಬೇಕು. +ಆದರೆ ಇಂದು ಯಾವುದು ಇಲ್ಲ. +ಒಳಗೊಳಗೆ ಕುದಿಯುತ್ತಿದ್ದ. +"ಚಾರು. . . "ಎಂದು ನಿಲ್ಲಿಸಿದ. +ಎಣ್ಣೆಯ ಅಭ್ಯಂಜನದಿಂದ ಕೆಂಪಗಾದ ಮುಖ ಮೇಲೆತ್ತಿ "ಏನು ಸರ್‌,ಸಮಾಚಾರ ?" ತಮಾಷೆಯಾಗಿ ಪ್ರಶ್ನಿಸಿದಳು. +ಬಲವಂತದಿಂದ ಉಗುಳು ನುಂಗಿದ. +"ಇವತ್ತು ನರ್ಸಿಂಗ್‌ ಹೋಂಗೆ ಹೋಗ್ಬೇಕೂಂತ ಅನ್ನಿಸೋಲ್ಲ. +ವಿಷಯ ಗೊತ್ತಿದ್ದರಿಂದ ಪ್ರಶ್ನಿಸಿ ರಾಡಿ ಮಾಡುವುದು ಇಷ್ಟವಾಗಲಿಲ್ಲ "ಹೋಗ್ಲಿ, ನನ್ನನ್ನಾದ್ರೂ ಡ್ರಾಪ್‌ ಮಾಡು. +ಇದೊಂದು ದಿನನಾದ್ರೂ ಬಸ್‌ಗೆ ಕಾಯೋದು ತಪ್ಪುತ್ತೆ ಅನ್ನುವ ವೇಳೆಗೆ ಅಡಿಗೆ ಮನೆಯಿಂದ ಹೊರ ಬಂದ ನೀರದ "ಇವತ್ತು ನಮ್ಮ ತಾಯಿ ಮನೆಗೆ ಹೋಗ್ತೀವಿ." +"ಕರೆಕ್ಟ್‌, ಅದೇ ಸರಿ "ಮುಂದಿದ್ದ ಕೂದಲನ್ನ ಚಾರುಲತ ಹಿಂದಕ್ಕೆ ಎತ್ತಿಹಾಕಿಕೊಂಡು ನಂಗಂತೂ ಹೊತ್ತಾಯ್ತು. +ಹ್ಯಾವ್‌ ಎ ನೈಸ್‌ ಟೈಮ್ ಎಂದು ತನ್ನ ಪಾಡಿಗೆ ತಾನು ಹೋದಳು. +ಡಾ|।ನವೀನ್‌ ಆಕಳಿಸುತ್ತ ಸೋಮಾರಿಯಂತೆ "ಬೇಗ, ರೆಡಿಯಾಗ್ಬಿಡು. +ನಂಗೂ ಆ ಕಡೆ ಹೋಗೋದಿದೆ" ಎಂದು ಅವಸರಿಸಿದ. +ತಿಂಡಿಯಾಗಿದ್ದರೂ ತಿನ್ನೋಕೆ ಕೂಡ ಬಿಡಲಿಲ್ಲ. +ಒಂದು ಹಳೆ ಷರಟು, ಪ್ಯಾಂಟು ಹಾಕಿಕೊಂಡವನು ಅವಳನ್ನ ಕೂಡಿಸಿಕೊಂಡು ಸರ್ಕಲ್‌ಗೆ ಬರುವ ವೇಳೆಗೆ ಸ್ಕೂಟರ್‌ನಿಂತಿತು. +ಬಹಳ ಸಾಹಸ ಮಾಡಿದ. +ಜಪ್ಪಯ್ಯ ಅಂದರೂ ಅಲ್ಲಾಡಲಿಲ್ಲ. +“ಅಲ್ಲಿ ಮೆಕ್ಕಾನಿಕ್‌ ಷಾಪ್‌ ಇದೆ, ನಡೀ?” ಹೇಳಿದ. +ಮೆಕ್ಕಾನಿಕ್‌ಗೆ ಸ್ಕೂಟರ್‌ ಒಪ್ಪಿಸಿ ಹಿಂದಕ್ಕೆ ಬಂದ. +“ಪೂರ್ತಿ ಬಿಚ್ಚಬೇಕಂತೆ. +ಸಂಜೆವರ್ಗೂ ಆಗುತ್ತೇನೋ, ಆರಾಮಾಗಿ ಬಾಗ್ಲು ಹಾಕಿರೋ ಅಂಗಿ ಮುಂದಿನ ಜಗುಲಿ ಮೇಲೆ ಕೂತ್ಕೋ. +ಸರಿಯಾದ್ಯ್ಮೇಲೆ ಹೋಗೋಣ” ಆರಾಮಾಗಿ ನುಡಿದಾಗ ಬೆಚ್ಚಿದಳು. +ಬೆಳಗಿನ ತಿಂಡಿ ಇಲ್ಲ. +ಒಂದು ಪರ್ಲಾಂಗ್‌ನಷ್ಟು ದೂರ ನಡೆಸಿದ್ದ. +ಇನ್ನ ಸಂಜೆ ವರೆಗೂ ಇಲ್ಲಿ ಕಾದುಕೂಡುವುದೆಂದರೆ ಅವಳಿಂದಾಗದ ಕೆಲಸ. +'ನನ್ಕೆಯಲ್ಲಾಗೋಲ್ಲ !"ಎಂದಳು ಅತ್ತಿತ್ತ ನೋಡಿ. +"ನಾನೇನ್ಮಾಡ್ಗಿ ? ಸ್ಕೂಟರ್‌ ಮೆಕ್ಕಾನಿಕ್‌ಗೆ ಕೊಟ್ಟು ಹೋಗೋಕ್ಕಾ ಗೋಲ್ಲ. +ಹಿಂದಕ್ಕೆ ಹೋಗ್ತಿಯೋ, ಮುಂದಕ್ಕೆ ಹೋಗ್ತೀಯೋ ಯೋಚ್ಸು? +ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ನುಡಿದ. +ದೊಡ್ಡ ಮನೆ, ಚಾಕರಿಯು ಜಾಸ್ತಿ. +ಕೆಲಸದವರು ಸಿಗುತ್ತಿರಲಿಲ್ಲ. +ಮೂರು ದಿನಕ್ಕೊಮ್ಮೆ ಬೋರ್‌ ಕೆಡುತ್ತಿತ್ತು. +ನಾಲ್ಕನೆ ಮನೆಯಲ್ಲಿರುವ ಬಾವಿಯಿಂದ ನೀರು ಸೇದಿ ತರಬೇಕಿತ್ತು. +ಚಾರುಲತ ಮನೆಯಲ್ಲಿದ್ದರೇ ಎಲ್ಲಾ ಅವಳೇ ಮಾಡುತ್ತಿದ್ದಳು. +ಈಗ ಅವಳು ಕಂಪ್ಯೂಟರ್‌ ಕ್ಲಾಸ್‌ಗೆ ಸೇರಿಕೊಂಡಿದ್ದರಿಂದ ಮನೆ ಬೇಗ ಬಿಡಬೇಕಿತ್ತು. +ಆದ್ದರಿಂದ ಮುಕ್ಕಾಲು ಕೆಲಸ ಅವಳ ಮೇಲೆ ಬೀಳುತ್ತಿತ್ತು. +ಇಲ್ಲಿಗೆ ಬಂದ ಮೇಲೆ ವಾಸುದೇವಯ್ಯ ನವರ ಗೆಳೆಯರ ಸಂಖ್ಯೆ ಜಾಸ್ತಿಯಾಗಿತ್ತು. +ಒಬ್ಬರಲ್ಲ ಒಬ್ಬರು ಬರುತ್ತಿ ದ್ದರಿಂದ ಮೊದಲಿನ ಹಾಗೆ ಅಡಿಗೆ ಕೆಲಸ ಮಾಡುತ್ತಿರಲಿಲ್ಲ. +ಅದರಿಂದ ಒಂದೆರಡು ದಿನಗಳಾದರೂ ಅಮ್ಮನ ಮನೆಯಲ್ಲಿರಬೇಕೆನಿಸಿತ್ತು. +"ಅಮ್ಮನ ಮನೆಗೆ ಹೋಗ್ತೀನಿ" ಎಂದ ಕೂಡಲೇ ಸಂತೋಷದಿಂದ ಬಿ.ಟಿ.ಎಸ್‌. ಬಸ್ಸಿನಲ್ಲಿ ಕೂಡಿಸಿ ತನ್ನ ಪಾಡಿಗೆ ತಾನು ಬಂದು ಸ್ಕೂಟರ್‌ಸ್ಟಾರ್ಟ್‌ ಮಾಡಿಕೊಂಡು ಮನೆಯ ಕಡೆಗೆ ನಡೆದ. +ತನ್ನ ಎದೆಯಲ್ಲಿನ ಕೋಪವನ್ನ ಎಲ್ಲಿ ನೀರದ ಮೇಲೆ ಚೆಲ್ಲುತ್ತೇನೋ ಎಂದು ಕಳಿಸಿ ಕೈ ತೊಳೆದುಕೊಂಡಿದ್ದ. +ಪ್ರತಿಯೊಬ್ಬರು ವಿವಾಹವಾಗುವ ಮುನ್ನ ಒಮ್ಮೆಯಲ್ಲ ಹತ್ತು ಸಲವಾದರೂ ಯೋಚಿಸಬೇಕೆಂದುಕೊಂಡ. +ಗೇಟಿನ ಬಳಿ ಸ್ಕೂಟರ್‌ ನಿಲ್ಲಿಸುವ ವೇಳೆಗೆ ಚಾರುಲತ ಬಂದಳು. +ಕಣ್ಣಲ್ಲಿ ಅಚ್ಚರಿ "ಎಲ್ಲಿ ನೀರದ ಅತ್ತಿಗೆ ? +ಅರ್ಧ ದಾರಿಯಲ್ಲಿ ಇಳ್ಸಿ ಬದ್ಲಿಲ್ಲ ತಾನೇ ? +ಮಹರಾಯ ನೀನು ತುಂಬ. . . ತುಂಬನೇ ಬದಲಾದೆ?"ರೇಗಿಸಿದಳು. +ಸ್ಕೂಟರ್‌ ಸೀಟು ಮೇಲೆ ಒಂದು ಏಟು ಹಾಕಿ “ಖಂಡಿತ, ಷ್ಯೂರ್‌! +ನೀನು ಏನೇನು ಮಾತಾಡೋಕೆ ಷುರು ಮಾಡ್ದೆ. +ಸ್ಕೂಟರ್‌ ಕೈ ಕೊಟ್ಟು ಮೆಕ್ಕಾನಿಕ್‌ ಷಾಪ್‌ವರ್ಗೂ ತಳ್ಳಿಕೊಂಡು ಹೋದೆ. +ಅವ್ಳಿಗೆ ಹಿಂದಕ್ಕೆ ಬರೋಕೆ ಇಷ್ಟವಿಲ್ಲಿಲ್ಲ. +ಅದ್ಕೇ ಸಿಟಿ ಬಸ್ಸು ಹತ್ತಿಸ್ದೆ. +ಏನು ತೊಂದರೆ ಇಲ್ಲ.ತುಂಬ ಸುಸ್ತಾಗಿದ್ದಾಳೆ. +ಅಲ್ವೋಗಿ ಉಪದೇಶ ತಗೊಳ್ಳಿ. +ಚಾರು ನೀನು ಆಫೀಸ್‌ಗೆ ಹೋಗೋದ್ಬೇಡ. +ತುಂಬ ಲೋನ್ಲಿನೆಸ್‌ ಕಾಡ್ತಾ ಇದೆಎಂದು ಸ್ಕೂಟರ್‌ನ ಗೇಟಿನೊಳಕ್ಕೆ ತಳ್ಳಿದ. +ಅವನತ್ತ ತಿರುಗಿದ ಚಾರುಲತ "ನವೀನಣ್ಣ ನೀನು ನರ್ಸಿಂಗ್‌ ಹೋಂಗೆ ಹೋಗ್ಟಿಡು. +ನಂಗೆ ಗೊತ್ತು ನಿನ್ನ ನೋವು. +ಏನು ಮಾಡೋ ಪರಿಸ್ಥಿತಿಯಲ್ಲಿ ಇಲ್ಲದಾಗ. . . ಎಲ್ಲಾ ನುಂಗಿಕೋಬೇಕು." ಸಾಂತ್ವನದ ದನಿಯಲ್ಲಿ ಹೇಳಿದಳು. +ಡಾ||ನವೀನ್‌ ಅವಳ ಮಾತುಗಳನ್ನ ಕೇಳಿಸಿಕೊಳ್ಳದವನಂತೆ ಮನೆಯೊಳಕ್ಕೆ ನಡೆದ. +ಇದೇ ದಿನ ತಂಗಿಯ ಕೈ ಮೂರ್ತಿಯ ಕೈಯೊಳಗಿಟ್ಟು ಹರ್ಷಿಸಿದ್ದ. +ನೂರು ಸಲ ಸಂತೋಷವಾಗಿರಲಿಯೆಂದು ಹಾರೈಸಿದ್ದ. +ಅದು ಸುಳ್ಳಾಯಿತು. +ಅದಕ್ಕೆ ತಾನೇ ಕಾರಣ. +ಸೋಫಾ ಮೇಲೆ ಕುಸಿದವನು ಜೋರಾಗಿ ಬಿಕ್ಕುತ್ತ ಹಣೆ ಚಚ್ಚಿಕೊಳ್ಳ ತೊಡಗಿದ ಹುಚ್ಚನಂತೆ. +ಅವನ ತಾಳ್ಮೆ ವಿವೇಕ ಎಲ್ಲಾ ಸತ್ತು ಹೋಗಿತ್ತು. +ಮನೆಯಲ್ಲಿದ್ದ ಸಾಮಾನುಗಳನ್ನೆಲ್ಲ ಎತ್ತಿ ಕುಕ್ಕಿದ. +ಎರಜಾಡಿದ ಸ್ಟೀಲ್‌ ಪ್ರೇಮ್‌ನಲ್ಲಿದ್ದ ಅವನ ಮದುವೆಯ ಫೋಟೋನ ಗೋಡೆಗೆ ಅಪ್ಪಳಿಸಿದ. +ಗಾಜಿನ ಚೂರುಗಳು ಎಲ್ಲೆಡೆ ಎರಚಾಡಿದವು. +"ಏನೋ ಇದು, ನವೀನ್" ರೂಮಿನಲ್ಲಿದ್ದ ಅವನ ತಂದೆ ಓಡಿ ಬಂದರು. +ರೋಷದಿಂದ ಅವರತ್ತ ನೋಡಿದ "ಅಂದು ನೀನೇನು ಮಾಡ್ತಾ ಇದ್ದೇಯಪ್ಪ. +ಎದುರು ಮನೆ ಹುಡ್ಗಿ ವಿವಾಹವಾಗದಿದ್ದರೇ ನಿನ್ನ ಮಗನೇನು ಆತ್ಮಹತ್ಯೆ ಮಾಡ್ಕೋತಾ ಇದ್ದಾ ? +ಇಲ್ಲ, ನೀರದ ಉರುಳು ಹಾಕ್ಕೋತಾ ಇದ್ಲಾ ? +ಅಮ್ಮ ಬದ್ಕಿದ್ದರೇ ಚಾರು ಬದ್ಕು ಈ ರೀತಿ ಆಗೋಕೆ ಅವಕಾಶ ಮಾಡಿ ಕೊಡ್ತಾ ಇದ್ಲಾ? +ಹಾಳು ಮಾಡ್ಬಿಟ್ಟೆ ಅವ್ಳ ಬಾಳು" ಜೀವನದಲ್ಲಿ ತಂದೆಗೆ ಎದುರು ನಿಂತು ಚಾರುಲತ ಹೋಗಿ ಅವನ ಬಾಯಿ ಮುಚ್ಚಿದಳು. +“ಪ್ಲೀಸ್‌ ನವೀನಣ್ಣ, ಅಪ್ಪನ್ನ ಏನು ಅನ್ನಬೇಡ ಮಾರಾಯ. +ಇದ್ರಲ್ಲಿ ಯಾರ್ದೂ ತಪ್ಪಿಲ್ಲ” ಅಂದ ಕೂಡಲೇ ಮುಂದಿದ್ದ ಟೀಪಾಯಿನ ಬಲವಾಗಿ ಒದ್ದ. +ಅದುಹೋಗಿ ಗೋಡೆಗೆ ಅಪ್ಪಳಿಸಿತು ಸದ್ದಿನೊಂದಿಗೆ. +“ಏಯ್‌ ಚಾರು, ಎಷ್ಟೊಂದು ಮೂರ್ಖಳೇ ನೀನು. +ಅನ್ಯಾಯವಾಗಿ ಈ ಜುಜುಬಿ ಅಣ್ಣನಿಗಾಗಿ ನಿನ್ನ ಸಂಸಾರ ಬಲಿ ಕೊಟ್ಟೆ. +ಅವ್ನಿಗೆ ತಂಗಿ ಹೆಚ್ಚಾದ್ಲು,ನಿನ್ಮೇಲೆ ಸೇಡು ತೀರಿಸಿಕೊಂಡ. +ಇವ್ನು ಮಹಾ ದೊಡ್ಡ ಪ್ರೇಮಿ. +ಆ ಮಹಾತಾಯಿಗಾಗಿ ನಿನ್ನ ಜೀವನನ ಬಲಿ ಕೊಟ್ಟುಬಿಟ್ಟ. +ನಂಗೆ ಶಿಕ್ಷೆ ವಿಧಿಸೋರು ಯಾರು ?” ರಪರಪನೆ ತಲೆ ಚಚ್ಚಿಕೊಂಡಾಗ, ಅಪ್ಪ ಮಗಳಿಗೆ ಅವನನ್ನ ಹಿಡಿದಿಡಲು ಸಾಧ್ಯವಾಗಲಿಲ್ಲ. +ಅವನ ಅಳು, ಮಾತು ನಿಲ್ಲಲು ಗಂಟೆಯೇ ಬೇಕಾಯಿತು. +ಬಲವಂತದಿಂದ ಅವನನ್ನ ರೂಮಿಗೆ ಎಳೆದೊಯ್ದು ಎರಡು ನಿದ್ದೆ ಗುಳಿಗೆಗಳನ್ನು ನುಂಗಿಸಿ ಅಲ್ಲೇ ಕೂತಳು ಚಾರುಲತ. +ಅವನ ಕೈಯಲ್ಲಿ ತಂಗಿಯ ಕೈ ಇತ್ತು. +ಬಲವಾಗಿ ನವೀನ್‌ ಕಣ್ಣು ಮುಚ್ಚಿಕೊಂಡಿದ್ದರೂ ಎರಡು ಕಡೆಯು ಸುರಿಯುತ್ತಿದ್ದ ಕಂಬನಿ ಧಾರೆ ಕೂದಲನ್ನು ತೋಯಿಸಿ ದಿಂಬಿನೊಳಗೆ ಮಾಯವಾಗುತ್ತಿತ್ತು. +ಅವನ ಉದ್ರಿಕ್ತಗೊಂಡ ಮನಸ್ಸು ಸಮಾಧಾನಕ್ಕೆ ಬರಲು ಸಾಕಷ್ಟು ವೇಳೆ ಹಿಡಿಸಿತು. +ನಿದ್ದೆ ಬಂದ ಮೇಲೆ ಹೊರ ಬಂದ ಚಾರುಲತ ಸಪ್ಪಗೆ ಕೂತಳು. +“ಅವ್ನು ನನ್ನ ಕೆನ್ನೆಗೊಡೆಯ ಬೇಕಿತ್ತು” ವಾಸುದೇವಯ್ಯ ಹಣೆ ಗಟ್ಟಿಸಿಕೊಂಡರು. +ಇದು ತೀರಾ ಅತಿಯೆನಿಸಿತು. +ತಂದೆಯ ಸನ್ನಿಹ ಬಂದು ಕೂತು “ಇದೇನಪ್ಪ, ಅವನಂತು ತಾಳ್ಮೆ ಕಳೆದುಕೊಂಡ ಅಂದರೇ, ನೀವು ತಲೆಕೆಡ್ಲಿಕೊಳ್ಳೋದೇ. +ಮಗ, ಮಗಳು ಅನ್ನೋ ವ್ಯತ್ಯಾಸ ಯಾರಿಗೆ ಇರುತ್ತೋ ಏನೋ, ನಿಮ್ಗಂತು ಇರೋಲ್ಲ. +ಅದ್ಕೆ ನೀವು ಹೊಣೆ. +ಮಗ ಮೆಚ್ಚಿಕೊಂಡ ಹೆಣ್ಣಿನೊಂದಿಗೆ ಲಗ್ನ ಮಾಡೋದು ನಿಮ್ಮ ಕರ್ತವ್ಯವಾಗಿತ್ತು. +ಅಮ್ಮ ಕಾಯಿಲೆ ಬಿದ್ದಾಗ, ಸತ್ತಾಗ ನೀರದ ಕುಟುಂಬ ನಮ್ಗೆ ಸಾಕಷ್ಟು ಮಾಡಿತ್ತು. +ಅದರ ಕೃತಜ್ಞತೆಯ ಹೊಣೆ ನಮ್ಮ ಮೇಲಿತ್ತು. +ಚೆನ್ನಾಗಿ ನಮನ್ನ ಬಲ್ಲ ಹೆಣ್ಣು ಸೊಸೆಯಾಗಿ ಬರೋದು ನಿಮ್ಗೆ ಸಂತೋಷದ ವಿಷ್ಯವಾಗಿತ್ತು. +ಇದೆಲ್ಲ ಸಹಜವೆ. +ನನ್ನ ಒಂಟಿತನಕ್ಕೆ ನೀವು ಹೊಣೆಯಲ್ಲ. +ಆ ಮಾತುಗಳನ್ನೆತ್ತಿಕೊಂಡು ಮನೆಯ ನೆಮ್ದಿ ಹಾಳು ಮಾಡಿಕೊಳ್ಳೋದ್ಬೇಡ. +ನಾನು ಬರ್ತಿನಿ ಅರ್ಧ ದಿನವಾದ್ರೂ ಕೆಲ್ಸಮಾಡ್ಬಹುದು ಎಂದು ಉಸುರಿ ಎದ್ದು ಅವರ ಎರಡು ಕೈಗಳನ್ನ ಹಿಡಿದುಕೊಂಡು "ಅಪ್ಪ, ನೀವು ಖಂಡಿತ ತಾಳ್ಮೆ ಕಳ್ಕೋಬಾರ್ದು. +ಅಣ್ಣನ ವಿವಾಹದ ಜೀವ್ನಕೂಡ ನಾಶವಾಗಿ ಬಿಡುತ್ತೆ. +ಹಾಗೇ ಆಗೋಕೆ ಅವಕಾಶ" ಕೊಡ್ಬೇಡಿ. +ಮನೆಯಿಂದ ಚಾರುಲತ ಹೊರಟಾಗ ತೀರಾ ಗೊಂದಲದಲ್ಲಿದ್ದಳು. +ಅರ್ಥವಾಗದ ನೋವು, ಸಂಕಟ, ಮೂರ್ತಿ ಎದೆಗೊರಗಿ ಕಣ್ಣೀರು ಸುರಿಸಬೇಕೆನಿಸಿತು. +ಹೃದಯ, ಮಿದುಳು ಬುದ್ಧಿ ಹೇಳಿತು. +ಹೆಣ್ಣು ಅಂದ ಮಾತ್ರಕ್ಕೆ ಆ ಮಟ್ಟಕ್ಕೆ ಇಳಿಯಬಾರದು. +ಮನಸ್ಸು ಇವೆರಡರ ನಡುವಿನ ಘರ್ಷಣೆಗೆ ಮೌನವಾಗಿತ್ತು. +ನಿವೇದಿತಾ ನರ್ಸಿಂಗ್‌ ಹೋಂ ಎರಡನೇ ಬಸ್‌ಸ್ಟಾಪ್‌ನ ಮುಂಭಾಗದಲ್ಲಿಯೇ ಯುಗಂಧರ್‌ ಕಾರು ನಿಂತಿದ್ದು ನೋಡಿ ಅವಳೆದೆ ಧಸ್ಸಕ್ಕೆಂದಿತು. +ಮುಂದಿನ ಸ್ಟಾಪ್‌ನಲ್ಲಿ ಇಳಿದು ಆಟೋ ಮಾಡಿಕೊಂಡು ಹಿಂದಕ್ಕೆ ಬಂದಳು ಹಾರುವ ಎದೆಯನ್ನು ಹಿಡಿದುಕೊಂಡು. +ಮುಂಭಾಗದಲ್ಲಿಯೇ ಮೂರ್ತಿ ಎದುರಾದಾಗ ಸ್ವಲ್ಪ ಸಂಕೋಚಿಸಿದರೂ ಭಾರವಾದ ಉಸಿರನ್ನ ದಬ್ಬಿ ನಿಂತಳು. +"ಮಾವನೋರು, ಹುಷಾರಾಗಿದ್ದಾರೆ ತಾನೇ ?" ವಿಚಾರಿಸಿದಳು. +"ತುಂಬ ಸುಸ್ತಾಗಿದ್ರು. +ಚೆಕ್‌ಅಪ್‌ಗೆ ಕರ್ಕೊಂಡ್‌ ಬಂದಿದ್ದೆ. +ಅಮ್ಮ ಅಲ್ಲಿದ್ದಾರೆ" ಎಂದು ತನ್ನ ಪಾಡಿಗೆ ತಾನು ಹೋದ. +ತಾಯಿ ಸೊಸೆಯ ಬಗ್ಗೆ ತೀರಾ ಮೃದು ಮಾತುಗಳನ್ನ ಆಡುವುದರ ಜೊತೆಗೆ ಇಂದು ಬೆಳಿಗ್ಗೆ ಕಣ್ಣೀರು ಹಾಕಿದ್ದರು "ಅವ್ಳ ಸ್ಥಿತಿ ಹೇಗಿತ್ತೋ, ಏನೋ ! +ಇವ್ಳು ತಾನೇ ಬೇಡಾಂದ ಗಂಡಿನ ಮದ್ವೆಯಾಗ್ಬೇಕೂಂತ ಹಟ ಹಿಡಿದಿದ್ದು ತಪ್ಪು? +ಇಂದು ಮಗಳನ್ನ ಕೂಡ ಒಂದು ಮಾತು ಅಂದಿದ್ದರು ಧೈರ್ಯದಿಂದ. +ಅದು ಇಂದು ಅವನು ವಿವಾಹವಾದ ದಿನ. +ಮೊದಲ ಮ್ಯಾರೇಜ್‌ಅ ನಿವರ್ಸರಿ. +ಗ್ರಾಂಡಾಗಿ ಆಚರಿಸಬಹುದಿತ್ತು - ಸುಮ್ಮನೆ ತಲೆ ಕೆಡಿಸಿ ಕೊಂಡಿದ್ದ. +ಯಾರೊಂದಿಗೋ ಮಾತಾಡುತ್ತಿದ್ದ ಮೃಣಾಲಿನಿ ಹಿಂದಕ್ಕೆ ತಿರುಗಿದವರು ಸೊಸೆಯನ್ನ ನೋಡಿ ಮುಖ ದಪ್ಪಗೆ ಮಾಡಲಿಲ್ಲ ಹಸನ್ಮುಖರಾದರು. +"ಬಸ್ಸಿನಲ್ಲಿ ಹೋಗ್ತಾ ಇದ್ದೆ. +ಕಾರು ನೋಡಿ ಹಿಂದಕ್ಕೆ ಬಂದೆ ಹೇಗಿದ್ದಾರೆ" ಕೇಳಿದಳು. +ಕಷ್ಟ ಸುಖ ಹೇಳಿಕೊಳ್ಳಲು ಒಂದು ಹೆಣ್ಣಿನ ಜೀವದ ಅಗತ್ಯವಿತ್ತೇನೋ ಕರ್ಚಿಫ್‌ನಿಂದ ಕಣ್ಣೊರೆಸಿಕೊಂಡು "ನೆನ್ನೆ ರಾತ್ರಿಯಿಂದ ತೀರಾ ಸುಸ್ತಾಗಿದ್ರು. +ರಾತ್ರಿ ಮೂರ್ತಿನು ಬಂದ. +ಚೆಕ್‌ಅಫ್‌ಗೆ ಕರ್ಕಂಡ್‌ ಬಂದ್ವಿ. +ಅವ್ರು ಮೊದ್ದಿನಂತಾಗಲೇ ಇಲ್ಲ?” ಆಕೆ ಸ್ವರ ಪೂರ್ತಿ ಒದ್ದೆಯಾಯಿತು. +“ಇಲ್ಲ ಅತ್ತೆ !ಮಾವನೋರು ಎಷ್ಟೋ ಬೇಗ ಚೇತರಿಸಿಕೊಂಡಿದ್ದಾರೆ. +ಅವ್ರಿಗೆ ಬಂದಿದ್ದು ಬಲವಾದ ಹಾರ್ಟ್‌ ಅಟ್ಯಾಕ್‌. +ಇನ್ನು ಸ್ವಲ್ಪ ದಿನ ಬೇಕಾಗುತ್ತೆ. +ನೀವು ಕೂತ್ಕೊಳ್ಳಿ” ಎಂದು ರೆಟ್ಟೆ ಹಿಡಿದು ಕರೆದೊಯ್ದು, ಅಲ್ಲೇ ಸ್ಟಾಲ್‌ನಲ್ಲಿರುವ ಬಿಸ್ಲೇರಿ ಬಾಟಲು ತಂದು ನೀರು ಕುಡಿಸಿ "ಪೂಜಾ ಕಾಣೋಲ್ಲ?" +ಅತ್ತಿತ್ತ ನೋಟ ಹರಿಸಿದಾಗ "ಅವ್ಳು ಮುಂಬಯಿಗೆ ಹೋದ್ಲು. +ಇನ್ನು ಸರ್ಯಾಗಿ ಅವ್ಳ ಆರೋಗ್ಯ ಸುಧಾರಿಸಿಲ್ಲ" ಮನಸ್ಸು ಬಿಚ್ಚಿ ಹೇಳಿಕೊಂಡರು. +ಕಾರ್ಡಿಯಾಲಜಿ ವಿಭಾಗಕ್ಕೆ ಹೋದವಳು ಹದಿನೈದು ನಿಮಿಷಗಳ ನಂತರ ಬಂದು "ಏನು ಪರ್ಹಾಗಿಲ್ಲಾಂದ್ರು. +ಬಹುಶಃ ಇಂದು ನಾಳೆ ಇಲ್ಲಿಯೇ ಇರ್ಲಿಕೊಂಡು ರೆಸ್ಟ್‌ಗಾಗಿ ನಾಳಿದ್ದು ಮನೆಗೆ ಕಳಿಸ್ತಾರಂತೆ" ಎನ್ನುವ ವೇಳೆಗೆ ಕೈಯಲ್ಲಿ ಏನೋ ಹಿಡಿದು ಮೂರ್ತಿ ಬರುತ್ತಿದ್ದ "ಬರ್ತಿನಿ. . . " ಇನ್ನೊಂದು ಅಂದರೆ ಔಟ್‌ಪೇಷಂಟ್‌ನ ಕಡೆಯ ಬಾಗಿಲಿನಿಂದ ಅದೃಶ್ಯಳಾದಳು. +"ಚಾರುಲತ ಕಣೋ, ಮುಂದಿದ್ದ ಕಾರು ನೋಡಿ ಬಂದಳಂತೆ." +ಅವನು ಅದಕ್ಕೆ ಪ್ರತಿಕ್ರಿಯಿಸಲಿಲ್ಲ “ಡಾಕ್ಟುನ ನೋಡೋದಿದೆ. ಈಗ್ಫರ್ತಿನಿ”ಹೋದ. +ಅವನ ಮನಸ್ಸು ನೀರಿನಿಂದ ಹೊರ ಬಿದ್ದ ಮೀನಿನಂತೆ ಒದ್ದಾಡುತ್ತಿತ್ತು ವಿಲವಿಲ. +ಇದೇ ದಿನ ಅವಳ ಕೈ ಹಿಡಿದು ಸಪ್ತ ಪದಿ ತುಳಿದಿದ್ದ. +ಮೂರ್ತಿ ಹಿಂದಕ್ಕೆ ಬರುವ ವೇಳೆಗೆ ಅರ್ಧಗಂಟೆಯೇ ಆಯಿತು. +ಗೆಲುವಿಲ್ಲದ ಮುಖ ನೋಡಿ ಆಕೆಯ ಕರುಳು ಕಿತ್ತು ಬಂದಂತಾಯಿತು. +“ಚೆಕ್‌ಅಪ್‌ ಮುಗೀತಾ ?” ಧಾವಂತದಿಂದ ಕೇಳಿದರು. +"ಆಯ್ತು, ಎವ್ವೆರಿಥಿಂಗ್‌ ಈಜ್‌ ನಾರ್ಮಲ್‌. +ವೀಕ್‌ನೆಸ್‌ಗೆ ಆಯಾಸ ಕಾಣಿಸಿಕೊಂಡಿದೆ ಅಂದ್ರು. +ಏನು ಗಾಬ್ರಿ ಬೇಡ. +ಎರಡು ದಿನ ಇಲ್ಲಿರಲೀಂತ ಅಂದಿದ್ದಾರೆ. +ನಾನು ಹ್ಲೂ ಅಂದೆ. +ಇಲ್ಲಿ ಅಪ್ಪನ ಜೊತೆ ನಾನು ಇರ್ತಿನಿ" ಅಂದ. +ಅದರ ಅಗತ್ಯವೇನಿಲ್ಲವೆಂದಿದ್ದರು ಡಾಕ್ಟರ್‌. +ಆದರೂ ಅವನ ಸಮಾಧಾನಕ್ಕೆ ಇರುವ ನಿರ್ಧಾರ ತಗೊಂಡಿದ್ದ. +ತಾಯಿ, ಮಗ ಮಧ್ಯಾಹ್ನ ಹತ್ತಿರದ ಹೋಟಲ್‌ನಲ್ಲಿ ಊಟ ಮಾಡಿ ಬಂದರು. +ಯುಗಂಧರ್‌ ಗೆ ಪಥ್ಯದ ಊಟ. +ನರ್ಸಿಂಗ್‌ ಹೋಂ ಕ್ಯಾಂಟಿನ್‌ ನಿಂದ ಬಂತು. +ಅಂಥ ವ್ಯವಸ್ಥೆ ನಿವೇದಿತಾ ನರ್ಸಿಂಗ್‌ಹೋಂನಲ್ಲಿತ್ತು. +ಸಂಜೆ ಐದೂವರೆಗೆ ತಾಯಿ, ಮಗ ಮನೆಗೆ ಹೊರಡುವಾಗ ಆಟೋದಿಂದ ಇಳಿಯುತ್ತಿದ್ದ ಚಾರುಲತ ಕಂಡಳು. +"ನಿಮ್ಮಪ್ಪನ್ನ ನೋಡೋಕೆ ಬಂದಿದ್ದಾಳೇಂತ ಕಾಣುತ್ತೆ. +ಇಷ್ಟು ನಡೆದರೂ ನಮ್ಮ ಮೇಲಿನ ಪ್ರೀತಿ, ವಿಶ್ವಾಸ ಕಡಿಮೆಯಾಗಿಲ್ಲ" ನೊಂದ ದನಿಯಲ್ಲಿ ಮೃಣಾಲಿನಿ ನುಡಿದರು. +ತಾಯಿಯ ಅರ್ಧದಷ್ಟು ಕೋಪ ಕರಗಿದೆ ಯೆನಿಸಿತು ಅವನಿಗೆ. +“ಪ್ರೀತಿ, ವಿಶ್ವಾಸ ಕಡೆಯಾಗೋಕೆ ನಾವೇನು ಮಾಡಿದ್ದೀವಿ” ಎತ್ತಲೋ ನೋಡುತ್ತ ವಿಮನಸ್ಕನಾಗಿ ನುಡಿದ. +ಅದು ಪೂರ್ತಿ ಸರಿಯೆನಿಸದಿದ್ದರೂ ಆಕೆಯೇನು ಮಾತಾಡಲಿಲ್ಲ. +ಬಹುಶಃ ಇವರನ್ನ ಗಮನಿಸಿದಳೇನೋ, ಅವಳು ಇನ್ನೊಂದು ಗೇಟುನ ಮೂಲಕ ಒಳಕ್ಕೆ ಹೋದಳು. +ಅವಳಿಗೆ ಯಾರ ಸರ್ಟಿಫಿಕೇಟ್ಸ್‌ ಬೇಡವಾಗಿತ್ತು. +ಅವಳೆದೆಯಾಳದ ಸ್ಪಂದನಕ್ಕೆ ಅನುಗುಣವಾಗಿತ್ತು ಚಾರುಲತಳ ನಡವಳಿಕೆ. +ರಿಸೆಪ್ಪನಿಸ್ಟ್‌ ಕೌಂಟರ್‌ನಲ್ಲಿ ವಿಚಾರಿಸಿಕೊಂಡು ಮೇಲೆ ಸ್ಪೆಷಲ್‌ ವಾರ್ಡ್‌ನ ರೂಮು ನಂಬರ್‌ ನಾಲ್ಕಕ್ಕೆ ಬಂದಾಗ ನಿಶ್ಶಬ್ದವಾಗಿತ್ತು. +ಬಾಗಿಲು ಸರಿಸಿ ಒಳಕ್ಕೆ ಅಡಿಯಿಟ್ಟಳು. +ಯುಗಂಧರ್‌ ಕಣ್ಣು ತೆರೆದರು. +ಇಂದೇನು ಮುಖ ಗಂಟಿಕ್ಕಲಿಲ್ಲ. +ಅನಾರೋಗ್ಯ ಸ್ವಲ್ಪ ಮೆತ್ತಗೆ ಮಾಡಿತ್ತೇನೋ ! +ಅದೂ ಅಲ್ಲದೆ ಪೂಜಾಳ ಮದುವೆಗೆ ಸೊಸೆಯ ಅಗತ್ಯವಿತ್ತು. +ಬಹುಶಃ ಅವಳು ಬರದಿದ್ದರೇ ನೂರುಕತೆಗಳು ಹುಟ್ಟಿಕೊಳ್ಳುತ್ತದೆಯೆಂದು ಅವರಿಗೆ ಗೊತ್ತು. +ತಂದ ಮೋಸಂಬಿಗಳನ್ನ ಅಲ್ಲೇ ತೆಗೆದಿಟ್ಟು "ಹೇಗಿದ್ದೀರಿ ?"ಕೇಳಿದಳು. +ಹಿಂಜರಿಕೆಯನ್ನ ಮೆಟ್ಟಿ. +"ಅಂಥದೇನಿಲ್ಲ ! ಮನೆಯಲ್ಲಿ ಅವ್ಳ ಬಡಬಡಿಕೆ ಕೇಳಲಾರ್ದೇ ನರ್ಸಿಂಗ್‌ಹೋಂಗೆ ಬಂದ್‌ ಸೇರ್ಕೊಂಡೆ" ಎಂದರು. +ಇದು ಸುಳ್ಳೆಂದು ಅವಳಿಗೆ ಗೊತ್ತು. +ಮೃಣಾಲಿನಿ ಮೌನಿಯಲ್ಲದಿದ್ದರೂ ಹೆಚ್ಚು ಮಾತಾಡಿ ಬೇರೆಯವರ ತಲೆ ಮಾತ್ರವಲ್ಲ, ಮನೆಯವರ ತಲೆಯನ್ನು ಕೂಡ ಬಿಸಿ ಮಾಡಲಾರರು. +ಮಾತು ಇಲ್ಲವೆನಿಸಿತು ಅವಳಿಗೆ. +“ಮೋಸಂಬಿ ರಸ ತೆಗ್ಗುಕೊಡ್ಲಾ ?” ಕೇಳಿದಳು. +“ಏನು ಬೇಡಾಂತ ಅನ್ನಿಸ್ತಾ ಇದೆ?” ಅಂದರು ಮೆಲ್ಲಗೆ. +"ಬರ್ತಿನಿ. . . . " ಅವರ ಅನುಮತಿಗಾಗಿ ಕಾಯದೇ ಹೊರಗೆ ಬಂದಳು. +ಇಂದು ಮನೆಗೆ ಹೋಗುವ ಧಾವಂತ ಅವಳದು. +“ಸಾರಿ ಅಮ್ಮ. . . ” ಅಂದಿದ್ದ ಡಾ||ನವೀನ್‌ ಫೋನ್‌ ಮಾಡಿ. +ಜೊತೆಯಲ್ಲಿಯೇ "ಸ್ವಲ್ಪಬೇಗ್ಬಾ. . . . ನಿಂಗೋಸ್ಕರ ಕಾಯ್ತ ಇದ್ದೀನಿ" ಎಂದ ಸೋದರ ವಾತ್ಸಲ್ಯ ಹರಿಸುತ್ತ. +"ಬಹುಶಃ. . . " ಅಂದವಳು "ಬೇಡ ಬಿಡು, ಆದಷ್ಟು ಬೇಗ್ಬರ್ತಿನಿ" ಹೇಳಿ ಫೋನ್‌ ಇಟ್ಟಿದ್ದಳು. +ಆಫೀಸ್‌ಗೆ ಬಂದ ಕೂಡಲೇ ಸೆಕ್ಷನ್‌ ಆಫೀಸರ್‌ನ ಭೇಟಿ ಮಾಡಿ ಈ ದಿನ ರಜ ನೀಡಬೇಕೆಂದು ಲೀವ್‌ಲೆಟರ್‌ ಇಟ್ಟಾಗ ಅವರು ನಕ್ಕಿದ್ದರು. +ಅರ್ಧ ದಿನ ಮುಗಿದಿತ್ತು. +ಉಳಿದ ಅರ್ಧ ದಿನವನ್ನು ಪನಿಷ್‌ಮೆಂಟಾಗಿ ಸ್ವೀಕರಿಸಿ ಕೆಲಸ ಮಾಡುವುದಾಗಿ ತಿಳಿಸಿದಾಗ ಆಕೆಯ ಕಣ್ಣಲ್ಲಿ ಅರಳಿದ್ದು ಮೆಚ್ಚಿಗೆಯೇ. +ಆಫೀಸ್‌ ಅವರ್ಸ್‌ ಮುಗಿದ ನಂತರವೆ ಹೊರಟಿದ್ದು. +ಮನೆಗೆ ಬರುವ ವೇಳೆಗೆ ಆರೂವರೆಯಾಗಿ ಹೋಗಿತ್ತು. +ಬಸ್ಸಿಗೆ ಕಾಯದೆ ಆಟೋ ಹಿಡಿದು ಬಂದಿದ್ದಳು. +"ಸಾರಿ, ಮಹರಾಯ ! +ಎಲ್ಲೋ ಹೊರಟಂಗಿದೆ ಅತ್ತೆ ಮನೆಗಾ ?" ಹಾಸ್ಯಮಾಡಿದಳು. +ಎದೆಯಾಳದಲ್ಲಿ ನೋವಿದ್ದರೂ ತೋರಿಸದೇ ತಮಾಷೆಮಾಡುವುದು, ಉತ್ಸಾಹ ತೋರುವುದು ಚಾರುಲತಳಿಂದ ಮಾತ್ರ ಸಾಧ್ಯವೇನೋ! +"ಸದ್ಯ, ನೀನ್ಹೋಗಿ ಬೇಗ ರೆಡಿಯಾಗು, ಹತ್ತು ನಿಮಿಷದ ಮೇಲೆ ಹೆಚ್ಚಿಗೆ ತಗೋಬಾರ್ದು" ಎಚ್ಚರಿಸಿದ ನಗುತ್ತ. +ಅವಳಿಗೆ ಆರಾಮೆನಿಸಿತು. +ಬೆಳಗಿನ ಡಾ||ನವೀನ್‌ ರುದ್ರ ರೂಪ ನೋಡಿ ನಡುಗಿ ಹೋಗಿದ್ದಳು. +ಒಳಗೆ ಬಂದಾಗ ಟೀಪಾಯಿ ಮೇಲೆ ಸ್ಟೀಲ್‌ ಬುಟ್ಟಿ ಇತ್ತು. +ಅದರಲ್ಲಿ ಹಣ್ಣು, ಕಾಯಿ, ಹೂ ಜೋಡಿಸಿದ್ದು ನೋಡಿ ಅವಳ ಹುಬ್ಬೇರಿತು. +"ದೇವಸ್ಥಾನಕ್ಕೆ ಕರ್ಕಂಡ್‌ ಹೋಗ್ಬೇಕೂಂತ ಹಣ್ಣು, ಕಾಯಿ ತೆಗೆದಿಟ್ಟಿದ್ದಾನೆ. +ಓಂದ್ಗಂಟೆಯಿಂದ ಹೊರಗಡೆ ನಿಂಗಾಗಿ ಕಾಯ್ತ ಇದ್ದಾನೆ ಎಂದರು ವಾಸುದೇವಯ್ಯ. +ಅವರತ್ತ ನೋಡಿದಳು. +ಬೆಳಗಿನ ಘಟನೆಯಿಂದ ಅವರಿನ್ನ ಚೇತರಿಸಿಕೊಂಡಂಗೆ ಕಾಣಲಿಲ್ಲ. +ತೀರಾ ವಯಸ್ಸಾದವರಂತೆ ಚಿಂತೆ ಮುಪ್ಪನ್ನ ಎಷ್ಟು ಬೇಗ ಸ್ವಾಗತಿಸುತ್ತದೆಯೆಂದು ಹೆದರಿದಳು. +"ಅಪ್ಪ. . . . . " ಅವರ ಬಳಿ ಹೋದಳು. +"ಬೇಗ ರೆಡಿಯಾಗಿ ಹೋಗು. +ಬೆಳಿಗ್ಗೆ ನವೀನ್‌ ಅಂದಿದ್ದರಲ್ಲಿ ಏನು ತಪ್ಪಿಲ್ಲ. +ಕಿರಿಯರ ತಪ್ಪಿಗೆ ಕ್ಷಮೆ ಇರುತ್ತೆ. +ಹಿರಿಯರಾಗಿ ಪೂರ್ವಾಪರ ಯೋಚ್ಸಬೇಕು. +ನೀರದ ನಡವಳಿಕೆ ನೋಡಿದ ಮೇಲೆ ಈ ಮನೆಗೆ ಸೊಸೆಯಾಗದಿದ್ದರೂ ಏನು ಆತ್ಮಹತ್ಯೆ ಮಾಡ್ಕೋತಾ ಇದ್ದಿಲ್ಲಾಂತ ಈಗ ಅನ್ನಿಸ್ತಾ ಇದೆ. +ಅವ್ಳು ಪೂಜಾಳಷ್ಟು ದುರ್ಬಲ ಮನಸ್ಸಿನ ಹುಡ್ಗಿಯಲ್ಲ" ಒಂದು ಸತ್ಯ ಕಂಡು ಕೊಂಡವರಂತೆ ನುಡಿದರು. +ಈ ತೀರ್ಮಾನ ಅವಳಿಗೆ ತಪ್ಪೆನಿಸಿತು. +“ಅಪ್ಪ, ನಿಮ್ಗೆ ನೀರದ ಸ್ವಭಾವದ ಬಗ್ಗೆ ಬೇಸರವಿರ್ಬಹುದು. +ಒಂದಿಷ್ಟು ಅವಿವೇಕಿ ಅಂದ್ಕೋಬಹುದು. +ಆದರೆ, ಅವ್ಳು ನಿಜ್ವಾಗ್ಲೂ ನವೀನಣ್ಣನ್ನ ಪ್ರೀತಿಸ್ತಾ ಇದ್ಲು. +ಈಚೆಗೆ ಅಣ್ಣ ಪ್ರೀತಿಯ ಬಗ್ಗೆ ಏನೇನೋ ಮಾತಾಡೋಕೆ ಷುರುಮಾಡಿದ್ದಾನೆ. +ನೀವು ಈ ರೀತಿ ಮಾತಾಡಿದ್ರೆ ಮಡದಿನ ತುಂಬ ನಿರ್ಲಕ್ಷಮಾಡ್ಬಿಡ್ತಾನೆ. +ಹಾಗಾಗ್ಬಾರ್ದು" ಅವರ ಕೈ ಹಿಡಿದು ಕೇಳಿಕೊಂಡಳು. +ಮಗಳನ್ನು ಮೆಚ್ಚಿಗೆ, ಅಭಿಮಾನದಿಂದ ಕಣ್ಣುಗಳಲ್ಲಿ ತುಂಬಿ ಕೊಳ್ಳುವಂತೆ ನೋಡಿದರು. + “ಹೋಗು. . . . ಹೋಗು ಬೇಗ ರೆಡಿಯಾಗು” ಎಂದರಷ್ಟೆ. +ಒಳಗೆ ಬಂದ ನವೀನ್‌ ತಾನೇ ತಂಗಿಗೆ ಮೆರೂನ್‌ ಕಲರ್‌ನ ಮೈಸೂರು ಸಿಲ್ಕ್‌ ಸೀರೆ ಆರಿಸಿಕೊಟ್ಟ. +ಹಿಂದೆ ಮುಂದೆ ಉತ್ಸಾಹದಿಂದ ಓಡಿಯಾಡಿದ. +ಅವರಿಬ್ಬರನ್ನ ಹೊತ್ತು ಸ್ಕೂಟರ್‌ ದೇವಸ್ಥಾನದ ಮುಂದೆ ನಿಂತಿತು. +ಅವನೆದೆ ಭಾರವಾಯಿತು. +ಈಗ ಮೂರ್ತಿಯು ಜೊತೆಯಲ್ಲಿ ಇದ್ದಿದ್ದರೇ ಅದೊಂದು ಅದ್ಭುತವಾದ ಕನಸ್ಸಾಗಿ ಬಿಡುತ್ತಿತ್ತೆಂದುಕೊಂಡ. +ತಾನೇ ಚಾರುಲತ, ಮೂರ್ತಿಯ ಹೆಸರಲ್ಲಿ ಅರ್ಚನೆ ಮಾಡಿಸಿದ. +ತಂಗಿಯ ಮುಖ ನೋಡಲು ಹೆದರುತ್ತಿದ್ದ. +ಅವನಲ್ಲಿನ ಅಪರಾಧ ಭಾವ ಚುಚ್ಚಿ ಚುಚ್ಚಿ ನೋಯಿಸುತ್ತಿತ್ತು. +ಮನದಲ್ಲಿ ಘರ್ಷಣೆ ಇದ್ದರೂ ಕಿಂಚಿತ್‌ ಕೂಡ ಮುಖದಲ್ಲಿ ಪ್ರಕಟಿಸಲಿಲ್ಲ. +ಚಾರುಲತ ಗಟ್ಟಿ ನಿರ್ಧಾರದ ಮೇಲೆ ನಿಂತಿದ್ದಳು. +"ದೇವರನ್ನ ಏನಾದ್ರೂ ಕೇಳಿಕೊಂಡ್ಯಾ?" +ಹೊರಗೆ ಬರುವಾಗ ಪ್ರಶ್ನಿಸಿದ ನವೀನ್‌ ತಂಗಿಯನ್ನ. +ಅವಳು ಪಕಪಕ ನಕ್ಕುಬಿಟ್ಟಳು. +“ಖಂಡಿತ ಇಲ್ಲ ಅನ್ನೋದನ್ನ ನೀನು ನಂಬಬೇಕು. +ದೇವರ ಮುಂದೆ ಭಕ್ತಿಯ ತನ್ಮಯತೆ ನನ್ನನ್ನು ಆವರಿಸುತ್ತೆ. +ಕೇಳೋದಂಥದೇನಿಲ್ಲ ಪ್ರತಿಯೊಂದನ್ನ ಅಪ್ಪ ಅಮ್ಮನ ಬಳಿಗೆ ದೂರಿನ ರೂಪದಲ್ಲಿ ಒಯ್ಯೋಕ್ಕಾಗುತ್ತ ? +ಕೆಲವನ್ನ ನಾನೇ ಬಗೆಹರಿಸ್ಕೋಬೇಕು” ಎಂದಳು ಗಂಭೀರವಾಗಿ. +ಈಗ ಮೂರ್ತಿ ಏನು ಮಾಡುತ್ತಿರಬಹುದು ? +ಬಹುಶಃ ನರ್ಸಿಂಗ್‌ ಹೋಂನಲ್ಲಿರಬೇಕೆಂದು ಕೊಂಡಳಷ್ಟೆ. +ತಂಗಿಯ ಮಾತಿಗೆ ಮರು ನುಡಿಯಲಿಲ್ಲ. +ಅವನೊಂದು ರೀತಿಯಲ್ಲಿ ಭ್ರಮೆ ನಿರಸನದಲ್ಲಿದ್ದ. +ವಿವಾಹದ ನಂತರವೆ ನೀರದಳ ಬುದ್ದಿಮತ್ತೆಯ ಅರಿವಾಗಿದ್ದು. +ಅವಳ ಆಸೆ, ಆಕಾಂಕ್ಷೆ, ನಡವಳಿಕೆಯಲ್ಲಿ ಪೂರ್ಣ ಸ್ವರೂಪದಜ್ರರಿವಾಗಿತ್ತು. +ಸ್ವಲ್ಪ ಜೋರಾಗಿ ಡಾ|| ನವೀನ್‌ ನಕ್ಕಾಗ ಗಾಬರಿಯಿಂದ ಅತ್ತ ತಿರುಗಿದಳು. +"ಏನಾಯ್ತು ?"ಮೂಲೆಯಲ್ಲಿದ್ದ ಕಲ್ಲಿನ ಹಜಾರದ ಕಡೆ ಹೊರಟ ಅವನು "ಬಾ ಕೂತ್ಕೊಂಡ್‌ ಮಾತಾಡೋಣ" ಕರೆದೊಯ್ದ. +ಇಬ್ಬರು ಕೂತರು. +ಬಾಳೆಹಣ್ಣಿನ ಜೊತೆ ತೆಂಗಿನ ಹೋಳನ್ನ ಚೂರುಚೂರು ಮಾಡಿ ತಿಂದರು. +ಒಂದೆರಡು ಸಲ ಮೂರ್ತಿಯೊಂದಿಗೆ ಕೂಡ ಈ ದೇವಸ್ಥಾನಕ್ಕೆ ಬಂದಿದ್ದುಂಟು. +ಆಗ ನವೀನ್‌ ಕೂಡ ಜೊತೆಯಲ್ಲಿದ್ದ. +ಎಂಥ ಸಂತೋಷದ ಕ್ಷಣಗಳು ಅವು. +ಅವೆಲ್ಲ ಬರೀ ನೆನಪುಗಳಾಗಿ ಮಾತ್ರ ಉಳಿಯಬಲ್ಲವೆನಿಸಿತು ಚಾರುಲತಗೆ. +"ಯಾಕೆ, ನಕ್ಕಿದ್ದು ?" ಮತ್ತೆ ಕೇಳಿದಳು. +ತೆಂಗಿನ ಚಿಪ್ಪುನ ಚೂರುಗಳನ್ನು ದೂರಕ್ಕೆಸೆದು ಬಂದು ಕೂತ "ಪ್ಲೀಸ್‌,ಈ ಮಾತುಗಳು ಯಾವುದೇ ಪೂರ್ವಾಗ್ರಹದಿಂದ ಕೂಡಿದ್ದಲ್ಲ. +ನೀರದನ ನಾನು ಮದ್ವೆ ಮಾಡ್ಕೋಬೇಕೂಂತ ಅಂದ್ಕೊಂಡಿದ್ದು ಎಂ.ಬಿ.ಬಿ.ಎಸ್‌. ನ ಕೊನೆಯ ವರ್ಷ. +ಇದಕ್ಕೆ ವಯಸ್ಸು ಕಾರಣವಿರಬಹುದು ಅಥವಾ ಯಾವುದಾದ್ರೂ ಲವ್‌ ಫಿಲಂನ ಇನ್ಸ್‌ಪಿರೇಷನ್‌ ಇರಬಹುದು. +ಹೇಗೋ, ಎಂತೋ ಇದಕ್ಕೆ ಒಂದು ಪ್ರೇಮ ಅಂತ ಹೆಸರು ಇಟ್ಕೊಂಡಿದ್ದು ಆಯ್ತು. +ಎಂಥ ಸ್ಥಿತಿಯಲ್ಲಿ ನಾನು ಅವ್ಳನ್ನ ವಿವಾಹವಾದೇಂತ ಗೊತ್ತು. +ಇಷ್ಟು ಕಡಿಮೆ ಸಮಯದಲ್ಲಿಯೇ ನಂಗೆ ಸಂಗಾತಿಯ ಬಗ್ಗೆ ಬೇಸರ ಬಂದಿದೆ. +ಅದ್ಕೆ ನೀನು ತಿಳ್ಕೊಂಡ ಕಾರಣ ಅಲ್ಲ. +ಹಿಂದೆ ನೀರದ ನಿಂತ ಕಡೆಯೆಲ್ಲ ಪ್ರೀತಿ, ಪ್ರೇಮ ಕಾಣಿಸ್ತಾ ಇತ್ತು. +ಈಗ ಬರೀ ಸ್ವಾರ್ಥನೇ ! +ಅವ್ಳಿಗೆ ತನ್ನ ಸುಖ ಭದ್ರತೆ ಮಾತ್ರ ಮುಖ್ಯ. +ನನ್ನ ಮೃದುವಾದ ಭಾವನೆಗಳಿಗೆ ಮರು ಸ್ಪಂದನವೇ ಇಲ್ಲ. + ನೀರಸವೆನಿಸುತ್ತೆ ದೇಹದ ಬಯಕೆ ಎಷ್ಟು ದಿನದ್ದು ? +ಇದು ಅಳಿದರೆ ಉಳಿಯುವುದೇನು ? +ದಂಪತಿಗಳ ನಡುವೆ ಮಧುರವಾದ ಭಾವನೆಗಳು ಇರಬೇಕು. "ತನ್ನದೆ ರೀತಿಯಲ್ಲಿ ಹೇಳಿಕೊಂಡ. +ಗದಕ್ಕೆ ಕೈ ಹಚ್ಚಿ ಕೂತ ಚಾರುಲತ ನಿಬ್ಬೆರಗಾದಳು. +ಇಷ್ಟುಅಲ್ಪ ಸಮಯದಲ್ಲಿ ಇಂಥ ನಿರ್ಧಾರಕ್ಕೆ ಬರುವುದು ಅಪಾಯವೆನಿಸಿತು. +"ಅಣ್ಣ. . . "ಎಂದಳು ಮೆಲ್ಲಗೆ. +ನವೀನ್‌ ತಲೆಯೆತ್ತಿ ಅವಳ ಕಣ್ಣಲ್ಲಿ ಕಣ್ಣಿಟ್ಟು "ಇಷ್ಟೆಲ್ಲ ಹೇಳ್ತಾ ಇದ್ದಾನಲ್ಲ,ಎಂದು ಭಯಪಡುವ ಅಗತ್ಯವಿಲ್ಲ. +ಪತ್ನಿಯಾಗಿ ಸ್ವೀಕರಿಸಿರುವ ನೀರದನ ಬಿಡೋ ಪ್ರಮೇಯವೇನಿಲ್ಲ. +ಈಗ ಏರ್ಪಟ್ಟಿರುವ ಅಂತರ ಕಡಿಮೆಯಾಗಬಹುದು, ಹೆಚ್ಚಿಗಾಗ್ಬಹುದು. +ಆದ್ರೂ ಒಂದೇ ಛಾವಣಿಯಲ್ಲಿ ಬದುಕಲು ಬದ್ಧರು. +ಎಲ್ಲಾ ನಿನ್ಮುಂದೆ ಹೇಳ್ಕೋಬೇಕೂಂತ ಅನ್ನಿಸ್ತು. +ನಿಮ್ಮದೇನು ನಮ್ಮ ವರ್ಷಾನುಗಟ್ಟಲೆ ಪ್ರೇಮಿಸಿ ಆದ ಮದ್ವೆಯೇನಲ್ಲ. +ಆದರೆ ನಿನ್ನ ಮೂರ್ತಿಯ ನಡ್ವೇ ಎಷ್ಟೊಂದು ಅನ್ಯೋನ್ಯತೆ ಇತ್ತು. +ಅಲ್ಲಿವರ್ಗೂ ಸಾಕು ಬಿಡು. +ಮುಂದುವರಿಕೆಯಿಂದ ಬರೀ ನೋವೇ? +ಎದ್ದು ಮೈ ಮುರಿದ. +ಸೂರ್ಯ ಮರಗಳ ಮರೆಯಲ್ಲಿ ಅಸ್ತಮಿಸುತ್ತಿದ್ದ. +ಕತ್ತಲೆಯಲ್ಲಿ ಮುಳುಗಲು ಒಂದಿಷ್ಟು ಸಮಯವಿತ್ತು. +ವಿದ್ಯುತ್‌ ದೀಪಗಳು ದಗ್ಗನೆ ಪ್ರಜ್ವಲಿಸಿದವು. +ಮಾನವ ಎಷ್ಟೊಂದು ಚಮತ್ಕಾರಿ. +ಈ ಬುದ್ಧಿವಂತಿಕೆ ಸೃಷ್ಟಿಕರ್ತನಿಗೂ ಮೆಚ್ಚಿಗೆಯೇ. +"ಹೋಗೋಣ ಚಾರು" ಹೇಳಿದ ದೂರದಲ್ಲಿ ನೋಟ ನೆಟ್ಟು. +ಮೆಟ್ಟಲು ಇಳಿದು ಕೆಳಗೆ ಬಂದ ನಂತರ "ನೀರದ ಮನೆಗೆ ಹೋಗೋಣ್ಣಾ?" +ಕೇಳಿದ ಕೂಡಲೇ ಎರಡು ಕೈಗಳು ಜೋಡಿಸಿದ "ಮೊದ್ಲು ಅವ್ಳಿಗೆ ನನ್ನ ಪ್ರೇಮಿಸೋದರಲ್ಲಿ, ಮದ್ವೆ ಆಗೋದ್ರಲ್ಲಿ ಸುಖವೆನಿಸಿತ್ತು. +ಈಗ ಅವ್ಳಿಗೆ ತವರುನಲ್ಲಿರೋದು, ಅಮ್ಮನ ಮುಂದೆ ಕೂಡೋದೇ ಹಿತವೆನಿಸಿತು. +ಮನೆ ಬದಲಾಯಿಸಿ ಕೂಡ ಪ್ರಯೋಜನವಿಲ್ಲವೆಂದು ನಿಂಗೆ ಗೊತ್ತಿದೆ. + ಖುಷಿಯಿಂದ ಹೋಗಿದ್ದಾಳೆ ಬೇಕೆನಿಸಿದಾಗ ಬರ್ಲಿ. +ನಂಗೆ ಸದಾ ಅವ್ಳ ಸೆರ್ಗು ಹಿಡ್ದು ಓಡಾಡೋ ಆಸೆಯೇನಿಲ್ಲ. +ಇನ್ನಷ್ಟು ನನ್ನ ಪ್ರೊಫೆಷನ್‌ ಕಡೆ ಗಮನ ಕೊಡಲು ಸಹಕಾರಿ ಆಯ್ತು" ಎಂದು ತನ್ನ ರಾಜಿ ಸೂತ್ರ ಪ್ರಕಟಿಸಿದಾಗ ಚಕಿತಳಾದಳು. +"ಆ ಬಗ್ಗೆ ಕಾಮೆಂಟ್ಸ್‌ ಬೇಡ" ಎಂದು ಸ್ಕೂಟರ್‌ ಏರಿದ. +ಒಂದು ದೊಡ್ಡ ಸ್ವೀಟ್‌ ಸ್ಟಾಲ್‌ ಮುಂದೆ ನಿಂತಿತು ಸ್ಕೂಟರ್‌. +ಸಾಕಷ್ಟು ಸಿಹಿ ತಿಂಡಿಗಳನ್ನ ಕಟ್ಟಿಸಿಕೊಳ್ಳುವುದರೊಂದಿಗೆ ತಂಗಿಗೆ ಬಾದಾಮಿ ಹಾಲು ಕುಡಿಸಿದ. +ಹಿಂದಿರುಗಿದವನು ಬೆಪ್ಪಾದ, ಮೂರ್ತಿ ಬರುತ್ತಿದ್ದ. +ಮೊದಲು ನಾಲ್ಕು ಒದೆಯ ಬೇಕೆನಿಸಿತು. +ನಂತರ ಕಾಲು ಹಿಡಿಯಬೇಕೆನಿಸಿತು. +ಅವೆರಡು ಒಪ್ಪಿಗೆಯಾಗದೇ ಸ್ಕೂಟರ್‌ನಿಂದ ಇಳಿದು ಅತ್ತ ಹೋದ. +“ಹಲೋ, ಮೂರ್ತಿ. . . . . ಈಗ ಸಂಬಂಧಿಗಳು ಅಲ್ಲವಾದ್ರೂ ಫ್ರೆಂಡ್ಸ್‌ ಆಗಿ ಕೆಲವು ನಿಮಿಷ ಮಾತಾಡಬಹುದಲ್ಲ” ಎಂದ ಡಾ||ನವೀನ್‌. +ಈಗಿನ ಪರಿಸ್ಥಿತಿ ತಂದೆಯ ಅನಾರೋಗ್ಯ, ತಾಯಿ ಹೇಳಿದ ಮಾತುಗಳು ಒಂದಿಷ್ಟು ಮೆತ್ತಗಾಗಿಸಿತ್ತು. +ಪೂಜಾ ಮುಂಬಯಿನಲ್ಲಿದ್ದಳು. +ಅವಳ ವಿವಾಹದ ಮಾತುಕತೆ ಒಂದು ಹಂತಕ್ಕೆ ಬಂದಿತ್ತು. +ತಿರಸ್ಕಾರ ತೋರಲಾಗಲಿಲ್ಲ. + "ವೈ ನಾಟ್‌. . . . ?" ಎಂದ ಮೆತ್ತಗೆ. +ಜೊತೆಯಲ್ಲಿ ಕರೆದೊಯ್ದು ಕೂಡಿಸಿ ಬಂದ. +ಅವಳು ಎತ್ತಲೋ ನೋಡುತ್ತ ನಿಂತಿದ್ದವಳ ಮುಖದಲ್ಲಿ ಶೂನ್ಯವಿತ್ತು. +"ಚಾರು, ನನ್ನ ಫ್ರೆಂಡ್‌ ಒಬ್ರು ಸಿಕ್ಕಿದ್ದಾರೆ ಸ್ವಲ್ಪ ಬಾ" ಕರೆದ. +ಅವಳು ಮೂರ್ತಿನ ಗಮನಿಸದಿದ್ದುದ್ದರಿಂದ "ಬೇಡ, ಸಿಕ್ಕಿದ್ದರೇ ಬೇಗ ಮಾತಾಡಿಕೊಂಡು ಬಾ ಹೋಗು. +ನಂಗಂತು ಯಾರ ಹತ್ರನು ಮಾತಾಡೋ ಇಷ್ಟವಿಲ್ಲ" ನಿರಾಕರಿಸಿದಳು ಸಪ್ಪಗೆ. +"ಪ್ಲೀಸ್‌ ಬಾಮ್ಮ" ಬಲವಂತ ಮಾಡಿ ಕರೆದೊಯ್ದ. +ಅಲ್ಲಿ ಸ್ವೀಟ್ಸ್‌ ಮಾರುಕಟ್ಟೆ, ರೆಸ್ಟೋರೆಂಟ್‌ನ ಬೇರ್ಪಡಿಸಿದ್ದರಷ್ಟೆ. +ಒಂದಾರು ಟೇಬಲ್ಸ್‌ ಮಾತ್ರವಿತ್ತು. +ಅಲ್ಲಿ ಸ್ಟೀಟ್ಸ್‌ ತಿನ್ನಲೆಂದೇ ಜನ ಬರುತ್ತಿದ್ದುದ್ದು. +ಟೇಬಲ್ಲುನ ಬಳಿ ಹೋದಾಗಲೇ ಮೂರ್ತಿನ ಗಮನಸಿದಿದ್ದು. +ಚೇತರಿಸಿಕೊಳ್ಳಲು ನಿಮಿಷಗಳು ಬೇಕಾದರೂ ಅಷ್ಟೊಂದೇನು ನರ್ವಸ್‌ ಆಗಲಿಲ್ಲ. +ಇದೇ ವರ್ಷದ ಹಿಂದಿನ ದಿನ ಭೂಮಕ್ಕೆ ಕೂಡಿಸಿದಾಗ ಎಲ್ಲರೆದುರು ಲಾಡು ತುರುಕಿ ಅವಳ ಕೆನ್ನೆಯನ್ನು ರಂಗೇರಿಸಿದ್ದ. +"ನನ್ನ ಸಿಸ್ಟರ್‌ ಚಾರುಲತ. +ಇವುರು ಮೂರ್ತಿ ಅಂತ ಲೆಕ್ಚರರ್‌ ಆಗಿದ್ದಾರೆ" ಇಬ್ಬರನ್ನು ಪರಿಚಯಿಸಿದ. +ಮೂರ್ತಿಯ ಮುಖ ವಿವರ್ಣವಾದರ ಡಾ|| ನವೀನ್‌ ತನ್ನನ್ನು ಅವಮಾನಿಸುತ್ತಿದ್ದಾನೆಂದು ಕೊಳ್ಳ ಲಾಗಲಿಲ್ಲ. +ಆದರೂ ಪರಿಸ್ಥಿತಿ ನುಂಗಲಾರದ ತುತ್ತಾಗಿತ್ತು. +ಡಾ|| ನವೀನ್‌ ಸ್ವೀಟ್ಸ್‌ಗೆ ಆರ್ಡರ್‌ ಮಾಡಿದ. +ವಾತಾವರಣ ಬಿಗುವೆ. +ಒಂದು ನಾಲ್ಕು ಮಾತು ಆಡಿದ್ದು ಅವನೊಬ್ಬನೇ. +ಮೂರ್ತಿ ಹ್ಞೂಗುಟ್ಟಿದರೇ,ಚಾರುಲತ ತೆಪ್ಪಗೆ ಕೂತಿದ್ದಳು. +ಬಿಲ್ಲು ತೆತ್ತು ಬಂದ ನವೀನ್‌ ಮೂರ್ತಿಯ ಕೈ ಕುಲುಕಿ "ಥ್ಯಾಂಕ್ಯೂ. . . ಥ್ಯಾಂಕ್ಕೂ ವೆರಿ ಮಚ್‌ ಸರ್‌. +ಐ ಯಾಮ್‌ ಎವರ್‌ ಗ್ರೇಟ್‌ಫುಲ್‌ ಟುಯೂ." ಮತ್ತೆ ಕೈ ಜೋಡಿಸಿದ. +ಕಣ್ಣಲ್ಲಿ ತುಂತರಿದ್ದರು ಮರೆಸಿದ. +ಮೂರ್ತಿಯ ಬಾಯಿಂದ ಕೂಡ ಮಾತು ಹೊರಡಲಿಲ್ಲ. +"ಹ್ಯಾಪಿ ಮ್ಯಾರೀಡ್‌ ಅನಿವರ್ಸರಿ" ಎಂದು ನವೀನ್‌ ಹೇಳದಿದ್ದರೂ ಅವನ ಮನಸ್ಸು ಹಾರೈಸುತ್ತಿತ್ತು. +ಅವರಿಬ್ಬರ ಬಿಡುಗಡೆ - ಆವೇಶದಲ್ಲಿ ಸರಿಯೆನಿಸಿದರೂ ನಂತರ ನೋವೆನಿಸುತ್ತಿತ್ತು. +ಬೀಳ್ಗೊಟ್ಟ ಅಣ್ಣ, ತಂಗಿ ಮನೆಗೆ ಬರುವವರೆಗೂ ಮಾತಾಡಲಿಲ್ಲ. +ಅವಳೇನು ಕನಸ್ಸಿನ ಲೋಕಕ್ಕೆ ಜಾರಲಿಲ್ಲ. +ವಾಸ್ತವವನ್ನ ಎದುರಿಸಲು ಮಾನಸಿಕವಾಗಿ ಸಿದ್ಧವಾಗಿದ್ದಳು. +ಸ್ವೀಟ್ಸ್‌ ಒಂದು ಪ್ಲೇಟ್‌ಗೆ ಹಾಕಿ ತಂದೆಯ ಮುಂದಿಟ್ಟ "ತುಂಬ ಫ್ರೆಷಾಗಿತ್ತು. +ನಾವಿಬ್ರೂ ಅಲ್ಲೇ ತಗೊಂಡ್ವಿ. +ನೀರದ ನಾಳೆ ನಾಳಿದ್ದು ಬಿಟ್ಟು ಬರಬಹುದು" ಎಂದು ಅಲ್ಲೇ ಕೂತ. +ಅವರಿಗೆ ಇಷ್ಟವೆನಿಸಲಿಲ್ಲ “ಬೇಡ ಕಣೋ, ಈಗ ನಂಗೆ ತಿಂಡಿಯ ಆಸೆ,ಅಕರಾಸ್ತೆ ಕಡ್ಮೆಯಾಗಿದೆ. +ಆರೋಗ್ಯಕ್ಕೆ ಹಿತವಲ್ಲ” ನಿರಾಕರಿಸಿದರು. +ಆದರೂ ನವೀನ್‌ ಬಲವಂತದಿಂದ ತಂದೆಗೆ ಅಷ್ಟಿಷ್ಟು ತಿನ್ನಿಸಿದ . +ಬೆಳಗಿನ ಪ್ರಕರಣದಿಂದ ಅವರಿನ್ನ ಚೇತರಿಸಿಕೊಂಡಿರಲಿಲ್ಲ. +ಅದರಿಂದ ಹೊರ ತರಬೇಕಿತ್ತು. +ಊಟದ ನಂತರ ಒಂದಿಷ್ಟು ವಾಕ್‌ ಮಾಡಿ ಬರುತ್ತಿದ್ದರು ವಾಸುದೇವಯ್ಯ. +ಈ ದಿನ ಹೊರಟಾಗ ತಂಗಿಯನ್ನ ಕರೆದುಕೊಂಡು ಬಂದು ಹೊರಗಡೆ ಕೂತ. +"ಚಾರು, ಒಂದ್ಮಾತು ಕೇಳ್ಲಾ ?"ಎಂದ ಮೆಲ್ಲಗೆ. +“ಏನಪ್ಪ ಅಂಥದ್ದು ? +ನನ್ನ ವಿಷ್ಯ ಮಾತಾಡೋಕೆ ಪೀಠಿಕೆ ಯಾಕೆ ? +ಹಾಗಂತ ಏನೇನೋ ಪ್ರಶ್ನೆಗಳು ಬೇಡ. +ಕೆಲವನ್ನ ಕಾಲದ ನಿರ್ಧಾರಕ್ಕೆ ಬಿಡ್ಬೇಕು. +ಸುಮ್ನೆ ತಲೆ ಕೆಡ್ಸಿಕೊಂಡು ನಮ್ಮ ಆರೋಗ್ಯ ಸಮಯ ಎರಡು ಹಾಳು ಮಾಡ್ಕೋಬಾರ್ದು” ದೀರ್ಫವಾಗಿ ನೋಡುತ್ತ ಉಸುರಿದಳು. +“ಮುಂದೇನು ? +ಕಾಲ ನಿರ್ಧರಿಸುತ್ತೇಂತ ಸುಮ್ನೆ ಕೂಡೋಕ್ಕಾಗೋಲ್ಲ” ಕೆದಕಿದ. +ಅವಳ ಮನಸ್ಥಿತಿಯನ್ನ ಅರಿಯಬೇಕಿತ್ತು. +ಮೂರ್ತಿಯ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲಾರ. +ಇಂದಿನ ಅವನ ನಡತೆ ಆಸೆ ಹುಟ್ಟಿಸಿದರೂ ಹ್ಯಾಂಗೋವರ್‌ನಿಂದ ಹೊರ ಬಂದಿಲ್ಲವೆನಿಸಿತು. +"ನನ್ನ ಬಗ್ಗೆ ಕೇಳ್ತಾ ಇದ್ದೀಯಾ ? +ನಾನೇನು ಸುಮ್ನೆ ಅಳ್ತಾ ಕೂತಿಲ್ಲ. +ಒಂದ್ಕೆಲ್ಸ ಸಿಕ್ಕಿದೆ. +ಎಷ್ಟು ಸಿಕ್ಕು ಸಿಕ್ಕಾಗಿದೆ ಸಮಸ್ಯೆಗಳು ಇವೇಂತ ಈಗ ಅರ್ಥವಾಗ್ತಾ ಇದೆ. +ಬರೀ ವೈಯಕ್ತಿಕವಾಗಿ ಯೋಚ್ಸಿ ಸವೆದು ಹೋಗೋದು ಬೇಡಾಂತ ಅನ್ನಿಸಿದೆ. +ಖಂಡಿತ ನನ್ನ ಬಗ್ಗೆ ನಿಂಗೆ ಚಿಂತೆ ಬೇಡ" ಎಂದಳು. +ಉದ್ವೇಗವನ್ನ ಹಿಡಿತಕ್ಕೆ ತಂದುಕೊಳ್ಳಲು ಎಷ್ಟೋ ಕಷ್ಟ ಪಟ್ಟಿದ್ದಳು. +“ಬಹುಶಃ ಮೂರ್ತಿ ನಿಂಗೆ ಡೈವೋರ್ಸ್‌ ಕೊಡೋಕೆ ಮುಂದಾದರೆ?” ನೇರವಾಗಿತ್ತು ಅವನ ಪ್ರಶ್ನೆ. +ಅದನ್ನ ಅರಗಿಸಿಕೊಳ್ಳಲು ಪ್ರಯಾಸಪಟ್ಟಳು. +ನಗಲು ಪ್ರಯತ್ನಿಸಿ "ನಿಂಗೆಲ್ಲೋ ಕ್ಲೂ ಸಿಕ್ಕಿರಬಹುದು +ಅದ್ಕೇ ನನ್ನ ಒಪ್ಗೇ ಇದೆ. +ಹೇಗೂ ಬೇರೆ ಬೇರೆ ವಾಸಿಸ್ತಾ ಇದ್ದೀವಿ. +ಈಗ ಅವ್ರ ಅನ್ಯೂಲಕ್ಕಾಗಿ ಡೈವೋರ್ಸ್‌ ಕೇಳಿದ್ರೆ "ಒಲ್ಲೆ" ಅನ್ನೋಲ್ಲ. +ಒಂದು ಅಧ್ಯಾಯ ಮುಗಿದಂತಾದರೂ ಮುಂದಿನ ಅಧ್ಯಾಯ ಇದ್ದೇ ಇದೆ. +ಅವ್ರ ಮನೆಯವರೆಲ್ಲ ಪ್ರೀತಿಯಿಂದ ಕಂಡಿದ್ದಾರೆ. +ಮೂರ್ತಿ ಕೂಡ ಎಂದೂ ನೋಯಿಸಿಲ್ಲ. +ನನ್ನ ಭಾವನೆಗಳ್ನ ಅರ್ಥ ಮಾಡಿಕೊಂಡ ಒಳ್ಳೆಯ ಪತಿ. +ಪೂಜಾ ತೋರಿದ ಸ್ನೇಹ ಕೂಡ ಮರೀಲಾರೆ. +"ಈಗೋ" ಬಿಟ್ಟು ಯೋಚಿಸ್ತಾ ಇದ್ದೀನಿ. +ನನ್ನಿಂದ ಅವ್ರಿಗೆ ನೋವಾಗ್ಲಿ, ಸಮಸ್ಯೆಯಾಗ್ಲಿ ಬೇಡ"ಮನದಲ್ಲಿದ್ದುದ್ದನ್ನ ಮುಂದಿಟ್ಟ ತಂಗಿಯನ್ನ ಅಭಿಮಾನ ದಿಂದ ನೋಡಿದ. +“ಬಡ್ಡಿ ಮಗ ಮೂರ್ತಿ ತುಂಬ ಲಕ್ಕಿ ಕಣೇ. +ಎಲ್ಲರಿಗೂ ಇಂಥ ಹೆಂಡ್ತಿ ಜೀವನ ಸಂಗಾತಿಯಾಗಿ ಸಿಗ್ಬೇಕು. +ಆದರೆ ಪೂಜಾ ರೂಪದಲ್ಲಿ ಬಂದ ಹಕ್ಕಿ ಅವ್ನ ಅದೃಷ್ಟನ ಹಾರ್ಸಿಕೊಂಡು ಹೋಯ್ತು. +ಹೆಚ್ಚು ಕಳಕೊಂಡೋನು ಅವ್ನೇ”ಎಂದು ವಿಷಾದದಿಂದ ನುಡಿದ. +ಚಾರುಲತ ಮಾತಾಡಲಿಲ್ಲ. +ಹತ್ತಿರಕ್ಕೆ ಬಂದು ಅವಳ ಕೈ ಹಿಡಿದುಕೊಂಡು "ನೀನು ಒಪ್ಪಿದ್ರೆ ನಾನೇ ಡೈವೋರ್ಸ್‌ಗೆ ಪ್ರಯತ್ನಿಸ್ತೀನಿ. +ನೀನು ಜೀವ್ನ ಪೂರ್ತಿ ಒಂಟಿಯಾಗಿರೋದು ನಂಗಿಷ್ಟವಿಲ್ಲ" ಅವನ ಉದ್ದೇಶ ಕೇಳಿ ಮೆಟ್ಟಿ ಬಿದ್ದಳು. +"ನಂಗೆ ಒಂಟಿತನ ಅನ್ನಿಸೋಲ್ಲ. +ನೆನಪುಗಳು ಇದೆ. +ಅಪ್ಪನಿಗೆ ಈಗ ನಮ್ಮ ಪ್ರೀತಿ, ಆರೈಕೆ ಅಗತ್ಯ. +ಅದ್ರಿಂದ ಬೇರೇನು ಯೋಚ್ಸಬೇಡ" ಎದ್ದು ಹೋದಳು. +ಡಾ|| ನವೀನ್‌ ರಾತ್ರಿಯೆಲ್ಲ ಯೋಚಿಸಿದ. +ದುಬೈನಲ್ಲಿದ್ದ ಇವನ ಫ್ರೆಂಡ್‌ ಒಂದು ಆಫರ್‌ ಕೊಟ್ಟಿದ್ದ “ಇಲ್ಬಂದ್‌ ನೀನು ಕೆಲ್ಸ ಮಾಡಬಹುದು. +ಒಳ್ಳೆ ಸಂಬಳ. +ಫ್ಯೂಚರ್‌ನಲ್ಲಿ ಭರವಸೆ ಇಟ್ಕೋಬಹುದು” ಅವನಿಗೆ ಇಷ್ಟವೆನಿಸಲಿಲ್ಲ. +ಸ್ವಂತ ಆಕಾಂಕ್ಷೆಗಳಿಗಿಂತ ಅವನಿಗೆ ತಂದೆ ಮುಖ್ಯವಾಗಿದ್ದರು. +ಆಳಕ್ಕೆ ಇಳಿದು ಚಿಂತಿಸಿದಂತೆ ನೀರದ ಬಗ್ಗೆ ಅನಾಸಕ್ತಿಯ ಜೊತೆ ಸಹಾನುಭೂತಿಯು ಕೂಡ. +ಅವಳ ಚಿಂತನೆಯ ಪರಿಧಿ ತೀರಾ ಚಿಕ್ಕದೆನಿಸಿತು. +ಇಲ್ಲಿ ಆದ ನಷ್ಟವನ್ನ ತನ್ನ ಪ್ರೊಫೆಷನ್‌ನಲ್ಲಿ ತುಂಬಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದ. +ಮಾನಸಿಕವಾಗಿ ಅವನನ್ನು ಆವರಿಸದಿದ್ದರೂ ಮನೆಗೊಬ್ಬ ಗೃಹಿಣಿ, ತಂದೆಗೊಬ್ಬ ಸೊಸೆ - ಆ ಲಿಮಿಟ್‌ನಲ್ಲಿ ಬಿಟ್ಟರೇ ಅವಳು ಸುಖಿಯೆಂದುಕೊಂಡ. +ಯುಗಂಧರ್‌ ಮತ್ತು ಮೃಣಾಲಿನಿ ಅವರುಗಳ ಆಹ್ವಾನವನ್ನು ಮನ್ನಿಸಿ ಚೆನ್ಶೈಗೆ ಹೋಗಿ ಬಂದ ಮೇಲೆ ಎಷ್ಟೋ ಉತ್ಸಾಹಿತರಾದರು. +ಆ ಜನ ಅವರ ಕಲ್ಚರ್‌ಎಲ್ಲಾ ಇಷ್ಟವಾಗಿತ್ತು. +ಮಧು ಅವರಿಗೆ ಪೂರ್ತಿಯಾಗಿ ಒಪ್ಪಿಗೆ. +ಮಧು ಇಲ್ಲಿಗೆ ಬರುವ ದಿನವೇ ನಿಶ್ಚಿತಾರ್ಥವೆಂದು ನಿಶ್ಚಯವಾಯಿತು. +ಮುಂಬಯಿನಿಂದ ಬಂದ ಪೂಜಾ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದಳು. +ಅವಳಿಗೂ ಮಧು ಇಷ್ಟವಾಗಿದ್ದ. +ಒಂದೆರಡು ಸಲ ಫೋನ್‌ನಲ್ಲಿ ಇಬ್ಬರು ಸಂಭಾಷಿಸಿ ಒಪ್ಪಿಗೆ ಸೂಚಿಸಿದ್ದರು. +ಇದೆಲ್ಲವು ಸಂತೋಷವೇ. +ಆದರೆ ಅವರುಗಳು ಈ ಮನೆಯ ಸೊಸೆಯ ವಿಷಯಕ್ಕೆ ಬಂದರೆ ಏನು ಮಾಡುವುದು? +ಯುಗಂಧರ್‌ ಹೆಂಡತಿಯನ್ನ ಕೇಳಿದರು "ಈಚೆಗೆ ಚಾರುಲತ ಏನಾದ್ರೂ ಫೋನ್‌ ಮಾಡಿದ್ದಾ ?"ಆಕೆ ಅಡ್ಡಡ್ಡ ತಲೆಯಾಡಿಸಿದರು. +"ನೀವು ನರ್ಸಿಂಗ್‌ಹೋಂನಿಂದ ಡಿಸ್ಚಾರ್ಜ್‌ ಆದ ದಿನ ಅಲ್ಲಿ ಅವಳನ್ನ ನೋಡಿದ್ದಷ್ಟೆ ಮತ್ತೆಂದು ಫೋನ್‌ ಮಾಡಿದ್ದು ಕೂಡ ಇಲ್ಲ. +ಬಳೆ, ಸರ. . . " ಎಂದವರು ಸುಮ್ಮನಾದಾಗ ಯುಗಂಧರ್‌ ಹಣೆಯಲ್ಲಿ ಗೆರೆಗಳು ಮೂಡಿದವು. +"ನಂಗೆ ಅರ್ಥವಾಗ್ಲಿಲ್ಲ,ಸ್ವಲ್ಪ ಬಿಡ್ಸಿ ಹೇಳು." +"ಒಂದ್ವಿಷ್ಯ ನಿಮ್ಮಿಂದ ಮುಚ್ಚಿಟ್ಟೆ. +ನಿಮ್ಗೆ ಹಾರ್ಟ್‌ ಅಟ್ಯಾಕ್‌ ಆದಾಗ ನಾನು, ಪೂಜಾ ಕೂಡ ಪೇಷಂಟ್‌ಗಳಾಗಿದ್ವಿ. +ಮರುದಿನ ನಮ್ಮನ್ನ ಮನೆಗೆ ಬಿಡೋಕೆ ಚಾರು ಬಂದಿದ್ದು. +ಆಗ ಸರ, ಬಳೆ ದೇವರ ಮನೆಯಲ್ಲಿ ಬಿಚ್ಚಿಟ್ಟು ಹೋಗಿದ್ದು. +ನಾವು ಅವ್ಳಿಗೆ ಮದ್ವೆಯಲ್ಲಿ ಕೊಟ್ಟಿದ್ದು. +ಅಕಸ್ಮಾತ್‌ ಒಡ್ವೆಗೋಸ್ಕರ ಬರಬಹುದು, ಇಲ್ಲ ಫೋನ್‌ನಲ್ಲಾದ್ರೂ ವಿಚಾರಿಸಬಹುದು ಅಂದೊಂಡಿದ್ದೆ. +ಎರ್ಡುಮಾಡ್ಲಿಲ್ಲ ಪುನಃ ನರ್ಸಿಂಗ್‌ಹೋಂನಲ್ಲಿ ಸಿಕ್ಕಾಗ್ಲೂ ಪ್ರಸ್ತಾಪಿಸ್ಲಿಲ್ಲ. +ಅವ್ಳು ಬೇಕೂಂತಲೇ ಬಿಟ್ಟೋಗಿರ್ಬಹುದು ವಿವರಿಸಿದರು ಮೃಣಾಲಿನಿ. +“ಕೆಲವನ್ನ ಮುಚ್ಚಿಡೋದ್ರಿಂದ ತಪ್ಪೇನಿಲ್ಲ. +ಆ ಬಗ್ಗೆ ಏನ್ಮಾಡ್ಬೇಕೂಂತ ನಿನ್ನ ತೀರ್ಮಾನ ? +ಹೆಣ್ಣು ಗಂಡಿಗಿಂತ ಸ್ವಲ್ಪ ಬೇರೆಯಾಗಿ ಯೋಚಿಸ್ತಾಳೆ. +ಇದ್ನ ಮೂರ್ತಿಗೆ ಹೇಳಿದ್ಯಾ?” ಕೇಳಿದರು ಯುಗಂಧರ್‌. +ಆಕೆಯ ಅಭಿಪಾಯ ಸ್ಪಷ್ಟವಾಗಿ ತಿಳಿಯುವುದು ಅವರ ಅಭಿಮತವಾಗಿತ್ತು. +ಆಕೆ ಸಪ್ಪಗಾದರು. +ಬರೀ ಚಡಪಡಿಸಿದರಷ್ಟೆ. +ಏನು ಹೇಳಬೇಕೆಂದು ತಿಳಿಯಲಿಲ್ಲ. +"ಹೇಳ್ಲಿಲ್ಲಾಂತ ಇಟ್ಕೋ ! +ಅದ್ರಿಂದ ಕೂಡ ಏನು ಅನಾಹುತವಿಲ್ಲ. +ಆ ಹುಡ್ಗಿಗೆ ಕೊಟ್ಟ ಚಿನ್ನ ನಮ್ಗೇನು ಬೇಡ. +ವೈಮನಸ್ಸು ಬಂತೂಂತ ಚಾರುಲತಗೆ ಹಾಕಿದ ಚಿನ್ನನ ಹಿಂದಕ್ಕೆ ಪಡ್ಕೋಂಥ ಕೆಟ್ಟ ಸಂಸತಿಯ ಜನನಾ, ನಾವು ? +ಫೋನ್‌ ಮಾಡಿ ಅವ್ಳ ಒಡ್ಡೆಗಳ್ನ ಅವ್ಳಿಗೆ ಕೊಡ್ಬಿಡು" ಎಂದರು ಯುಗಂಧರ್‌. +ಆಕೆಯ ಮುಖದಲ್ಲಿ ಕೂಡ ಗೆಲುವು ಮೂಡಿತು. +“ಇದ್ದ ಒಂದು ನೆಪ ಮಾಡಿಕೊಳ್ಳೋಣ. +ಮೂರ್ತಿನ ಕೇಳ್ಬೇಕಾ ?”ಹೆಂಡತಿಯ ಪ್ರಶ್ನೆಗೆ ಯೋಚಿಸುವಂತಾದರು. +ಅವರಿಬ್ಬರ ಮದ್ಯೆ ಯಾವ ವಿರಸವು ಇಲ್ಲ. +ವೈಯಕ್ತಿಕವಾಗಿ "ಏನು ಬೇಡ, ಹೇಗೂ ಶನಿವಾರ ಬರ್ತಿನಿ ಅಂದಿದ್ದಾನಲ್ಲ ತಿಳಿಸಿದರಾಯ್ತು" ಯುಗಂಧರ್‌ ವಿವೇಕಿಯೇ. +ಪೂಜಾಳ ಸ್ಥಿತಿ ಅವರನ್ನ ಪೂರ್ತಿಯಾಗಿ ಅವಿವೇಕಿಯನ್ನಾಗಿಸಿತ್ತು. +ಅಂತು ಸೊಸೆಗೆ ಫೋನ್‌ ಮಾಡುವ ನಿರ್ಧಾರಕ್ಕೆ ಬಂದರು. +ಮನೆಗೆ ಬೇಡವೆಂದು "ನಿವೇದಿತಾ ನ್ಯೂ ವುಮೆನ್ಸ್‌ ವೇ" ಕಂಪನಿಯ ಫೋನ್‌ ನಂಬರ್‌ನ ತಾವೇ ಹುಡುಕಿ ಹೆಂಡತಿಗೆ ಕೊಟ್ಟರು. +“ಯಾವ ಸೆಕ್ಷನ್‌ನಲ್ಲಂತೆ ಕೆಲ್ಸ ಮಾಡೋದು ?ಕೇಳಿದರು ಸುಸ್ತಾಗಿ" +"ಕಮಲ ಕೂಡ ಅಲ್ಲೇ ಕೆಲ್ಸಕ್ಕೆ ಹೋಗ್ತಾ ಇದ್ದಾಳಲ್ಲ. +ಅಕೌಂಟ್‌ ಸೆಕ್ಷನ್‌ ನಲ್ಲಿ ಅಂತ ಹೇಳ್ಬಂಗೆ ಜ್ಲಾಘ್ಯ. +ಆದ್ರೂ ಸ್ವಾಭಿಮಾನದ ಹುಡ್ಗಿ" ಮೆಚ್ಚಿಗೆ ಯಾಡಿದರು. +"ಅಂತು ನೀನು ಸೊಸೆನ ಪೂರ್ತಿಯಾಗಿ ಕರಿಸಿ ಬಿಟ್ಟಂಗೆ ಕಾಣುತ್ತೆ" ಎಂದು ನಕ್ಕರು ಯುಗಂಧರ್‌ . +“ಇನ್ನೊಂದ್ಸಲ ಹಾರ್ಟ್‌ ಅಟ್ಯಾಕ್‌ ಆದರೆ ಪ್ರಾಣಕ್ಕೆ ಆಪತ್ತು. +ಬಿ ಕೇರ್‌ ಫುಲ್‌” ಡಾಕ್ಟರರ ಎಚ್ಚರಿಕೆ ಮತ್ತಷ್ಟು ವಿವೇಕಿಯನ್ನಾಗಿ ಮಾಡಿತ್ತು. +"ಪೂಜಾ ಸ್ಥಿತಿ ಹಾಗಾಯಿತಲ್ಲ ಅನ್ನೋ ನೋವು" ಎಂದರು ವಿಷಾದದಿಂದ ಆಕೆ. +ಯುಗಂಧರ್‌ ನಕ್ಕರು "ಅವ್ಳೇನು ಅವರಿಬ್ರ ಪ್ರೇಮಕ್ಕೆ ಪುರೋಹಿತ್ಯವಹಿಸಿದ್ದಾ ? +ಎಲ್ಲಾ ಮೂರ್ಖರಾಗಿ ನ್ಯಾಯ, ಅನ್ಯಾಯದ ಬಗ್ಗೆ ಯೋಚ್ಸಿಲ್ಲ. +ಎಲ್ಲಕ್ಕು ಅವ್ಳ ತಲೆಯ ಮೇಲೆ ಗೂಬೆ ಕೂರಿಸ್ಟಿಟ್ಟಿ' ಪಶ್ಚಾತ್ತಾಪವಿತ್ತು ಅವರ ಮಾತುಗಳಲ್ಲಿ. +ಮೃಣಾಲಿನಿ ಅವಾಕ್ಕಾದರು. +ಇವರ ಹಟವೇನಾಯಿತು ? +ಹೆಚ್ಚು ಹಾರಾಡಿದವರು ಇವರೇ ಎನ್ನುವ ಆಪಾದನೆ ಗಂಡನ ಮೇಲೆ ! +ಆದರೆ ಈಗ ಅವರು ಇರೋ ಸ್ಥಿತಿಯಲ್ಲಿ ಅದನ್ನ ಮುಖದ ಮೇಲೆ ಹೇಳುವುದು ಸರಿಯೆನಿಸಲಿಲ್ಲ. +"ಈ ರಾಜಿಯ ಹಿಂದೆ ಸ್ವಾರ್ಥವಿದೆಯೆಂದುಕೊಂಡರೇ ಚಾರುಲತ?" +ಮೃಣಾಲಿನಿಯ ಮಾತಿಗೆ ತಲೆದೂಗಿದರು “ಕೊಂಡರೇ, ಏನು ? ಹಾಗೇ ಅಂದುಕೊಳ್ಳೋದು. + ಮೆದುವಿನ ಮನುಷ್ಯ ವಾಸುದೇವಯ್ಯ. +ಇಲ್ಲಿ ನೀರದ ಮಾತ್ರ ಬುದ್ಧಿವಂತಳು. +ಡಾ|| ನವೀನ್‌ ಪ್ರಾಮಾಣಿಕ. +ಆ ದಿನ ಆದರ್ಶಕ್ಕೆ ಬಲಿಯಾದ. +ಈಗ ಯೋಚ್ಸಿದರೇ ಹಾಗೇ ಅನ್ನಿಸುತ್ತೆ. +ಇದು ಬೆಳಕಿನಲ್ಲಿ ನೋಡೋ ವಿಧಾನ. +ಆಗ ನೋಡಿದ್ದು ಕತ್ತಲಲ್ಲಿಯೇನೋ ?” ತೀರಾ ವಿಷಾದದಿಂದ ನುಡಿದರು. +ಲಂಚ್‌ ಟೈಂನಲ್ಲಿ ಮೃಣಾಲಿನಿ ತಾವೇ ಬಟನ್ನೊತ್ತಿ ಫೋನಾಯಿಸಿದರು ನಿವೇದಿತಾ ವುಮನ್ಸ್‌ ವೇರ್‌ಗೆ "ಲೈನ್‌ನಲ್ಲಿರಿ ಕನೆಕ್ಟ್‌ ಮಾಡ್ತೀವಿ" ಎಂದರು ಆ ಕಡೆ. +ಆವೇಗದಿಂದ ಅವರ ಹೃದಯದ ಬಡಿತ ಏರಿತ್ತು. +ಯಾಕೆ ?ಟವಲಿನಿಂದೊರೆಸಿಕೊಂಡರು ಫೋನಿಡಿದಂತೆಯೇ. + “ಹಲೋ. . . . ಎಂದಿದ್ದು ಚಾರುಲತ. +ಅವಳಿಗೆ ಆಗಾಗ ತಂದೆ ಅಥವಾ ಅಣ್ಣ ಫೋನ್‌ ಮಾಡುವುದಿತ್ತು. +ಬೇಗ ಸ್ವರ ಕೇಳದ್ದು ಗಾಬರಿ "ಅಪ್ಪ, ಕೆಮ್ಮು ಹೇಗಿದೆ ? +ಸಂಜೆ ನವೀನಣ್ಣ ಬೇಗ್ಬಾರ್ತಾನೆ" ಗಡಿಬಿಡಿಯಿಂದ ಹೇಳಿದಾಗ ಮೃಣಾಲಿನಿಯ ದನಿಗೆ ಜೀವ ಬಂತು “ನಾನು. . . ”ಎಂದರು. +"ಹೇಗಿದ್ದೀರಾ ಅತ್ತೆ ? +ಮಾವನವ್ರು ಹುಷಾರಾಗಿದ್ದಾರೇ ತಾನೇ," ಆತ್ಮೀಯವಾಗಿ ಕೇಳಿಸಿತು ಚಾರುಲತ ದನಿ. +ಮೃಣಾಲಿನಿಯ ಕಣ್ಣಲ್ಲಿ ನೀರಾಡಿತು. +"ಚೆನ್ನಾಗಿದ್ದೀನಿ ಅವ್ರು ಕೂಡ ಚೆನ್ನಾಗಿದ್ದಾರೆ. +ಒಂದ್ಸಲ ನೀನು ಬರೋಕೆ ಸಾಧ್ಯನಾ ? +ನಿನ್ನ ಸರ, ಬಳೆ ಇಲ್ಲೇ ಬಿಟ್ಟೋಗಿದ್ದೀಯಾ" ಅಂದರು. +"ಮರೆತೇನು ಬಿಟ್ಟು ಬಂದಿಲ್ಲ" ಹೇಳಿದಳು ನವಿರಾಗಿ. +"ಒಂದ್ಸಲ ಬಂದೋಗು. +ಯಾವಾಗ್ಬರ್ತೀಯಾ ?" +"ನಾಳೆ ಬೆಳಿಗ್ಗೆ ಆಫೀಸ್‌ಗೆ ಹೋಗೋವಾಗ ಬರ್ತಿನಿ ? ಇಡ್ಲಾ. . . ಫೋನ್‌?"ಇಟ್ಟೇ ಬಿಟ್ಟಳು. +ಒಂದು ಕ್ಷಣ ಕೋಪಗೊಂಡರು "ಚಾರುಗೆ ತುಂಬ ಅಹಂಕಾರ ಕಂಡ್ರಿ. +ಕಾಲ ಈಗ ಹಿಂದಿನಂಗಿಲ್ಲ. +ತುಂಬ ಬದಲಾಗಿದೆ."ಯುಗಂಧರ್‌ ಮುಗುಳ್ನಕ್ಕರು. +ದೈಹಿಕವಾಗಿ ಸೊಸೆಗೆ ಯಾವ ಹಿಂಸೆ ನೀಡದಿದ್ದರೂ ಮಾನಸಿಕವಾಗಿ ತುಂಬ ಕಂಗೆಡಿಸಿದ್ದೇವೆಂದು ಅವರಿಗೆ ಗೊತ್ತು. +ಆರಾಮಾಗಿ ಸಂಸಾರ ಮಾಡಿಕೊಂಡಿದ್ದವರು ಬೇರ್ಪಟ್ಟರು. +ಇದೇನು ಕಡಿಮೆ ಶಿಕ್ಷೆಯೆ ? +“ಬದಲಾಗ್ಬೇಕು. ನಿನ್ನಷ್ಟು ನಿನ್ನ ಸೊಸೆ ಮೂಡರ್ನ್‌ ಅಲ್ಲ. +ಚಾರುಗಿಂತ ಪೂಜಾ ಒಂದೆರಡು ತಿಂಗ್ಳು ಚಿಕ್ಕವಳು ಇರಬಹುದು. +ಈಗ್ಲೂ ಅದೇನು ಹಟ!" +ಬಾಯಿ ಮೇಲೆ ಕೈಯಿಟ್ಟುಕೊಂಡರು “ಅವ್ಳ ಪಟ್ಟಿಗೆ ಇಡೀ ಮನೆಯೇ ತಲ್ಲಣಿಸಿಹೋಯ್ತು. +ಇತ್ತ ಪುಲಿ. +ಅತ್ತ ದರಿಯೆನ್ನುವ ಸ್ಥಿತಿ ಅವಳದು. +ಆದ್ರೂ ಎಷ್ಟು ಶಾಂತವಾಗಿ ನಡೆದುಕೊಂಡಳು. +ಆಗ ಇದೆಲ್ಲ ನಾವು ಗಮನಿಸೋ ಸ್ಥಿತಿಯಲ್ಲಿಲ್ಲ ಮೂರ್ತಿಗೆ ತಂಗಿ ಮುಖ್ಯವಾಗಿದ್ದು. +ಡಾ॥ ನವೀನ್‌ಗೆ ಪ್ರೇಮಿಸಿದವ್ಳು ಹೆಚ್ಚೆನಿಸಿದಳು. +ಮಧ್ಯದಲ್ಲಿ ನೊಂದವಳು ಚಾರುನೆ. +ನೆನಸ್ಕೊಂಡರೇ ತುಂಬ ನೋವಾಗುತ್ತೆ” ಎಂದು ದೀರ್ಥವಾಗಿ ಉಸಿರೆಳೆದು ದಬ್ಬಿದರು. +ಹುಲಿಯಂಗೆ ಹಾರಾಡುತ್ತಿದ್ದ ಗಂಡ ಇಷ್ಟು ಮೆತ್ತಗಾಗಿದ್ದು ಪವಾಡವೆನಿಸಿದರೂ, ತಾವು ಮಾಡಿದ ವಾಂತಿಯನ್ನ ಒಂದಿಷ್ಟು ಅಸಹ್ಕಿಸಿಕೊಳ್ಳದೆ ಬೊಗಸೆಯಲ್ಲಿ ತುಂಬಿಕೊಂಡ ಸೊಸೆ ದೇವತೆಯಂತೆ ಕಂಡಿದ್ದಳು. +ಹೆಂಡತಿ ಹೊರಗೆ ಹೋದ ಮೇಲೆ ಮಲಗಿ ತಾರಸಿಯನ್ನು ನೋಡತೊಡಗಿದರು. +“ನಿಮ್ಮ ಸೊಸೆ ಕರ್ಕಂಡ್‌ ಬಂದು ನಿಮ್ಗೆ ಚಿಕಿತ್ಸೆ ಒದಗಿಸದಿದ್ದರೇ, ನಿಮ್ಮನ್ನ ಮರ್ತು ಬಿಡಬಹುದಿತ್ತು”ಇವರು ಚೇತರಿಸಿಕೊಂಡ ನಂತರ ಡಾಕ್ಟರ್‌ ಹೇಳಿದ ಮಾತುಗಳು. +ಇಡೀ ರಾತ್ರಿ ತಮ್ಮ ಬಳಿ ಕೂಡುತ್ತಿದ್ದ ಚಾರುಲತ ಮನಸ್ಸಿಗೆ ಪ್ರಿಯವೆನಿಸಿದ್ದಳು. +ಈಗ ಚೆಂಡು ಅವಳ ಮೈದಾನದಲ್ಲಿತ್ತು. +ಆಟವು ಅವಳದೇ. +ಸ್ವಾಭಿಮಾನಿಯಾದ ಅವಳು ಯಾವ ನಿರ್ಧಾರ ತೆಗೆದು ಕೊಳ್ಳುತ್ತಾಳೋ ! +ಮರುದಿನ ಅವಳ ನಡವಳಿಕೆಯನ್ನು ನೋಡಿ ನಿರ್ಧರಿಸಬಹುದೆಂದು ಮನಸ್ಸಿನಿಂದ ಆ ಸಂಗತಿಯನ್ನು ದಬ್ಬಿದಷ್ಟು ಬಂದು ಕೂಡುತ್ತಿತ್ತು ದೊಡ್ಡ ಬಂಡೆಯಂತೆ. +ಹೇಳಿದಂತೆ ಸ್ವಲ್ಪ ಬೇಗ ಮನೆ ಬಿಟ್ಟು ಆಫೀಸ್‌ಗೆ ಹೊರಟಾಗ "ಚಾರು,ನಂಗೂ ಆ ಕಡೆ ಹೋಗೋದಿದೆ. +ಡ್ರಾಪ್‌ ಮಾಡ್ತೀನಿ" ಎಂದು ಕ್ರಾಪ್‌ನಲ್ಲಿ ಕೂಮ್‌ ಆಡಿಸುತ್ತಿದ್ದ ಡಾ।। ನವೀನ್‌ ಹೇಳಿದಾಗ ಅವಳು ಸಮೃತ್ರಿಸಲಿಲ್ಲ. +"ಬೇಡ, ಇವತ್ತು ಬೇಗ ಹೊರಟಿದ್ದೀನಿ. +ದಾರಿಯಲ್ಲಿ ಒಬ್ಬನ್ನ ನೋಡ್ಬೇಕಿದೆ. +ಅದ್ರಿಂದ ನೀನು ಹೋಗ್ಬಿಡು."ತಂಗಿಯ ಮಾತಿಗೆ ಕಣ್ಣರಳಿಸಿದ. +ಅವಳು ತಾನಾಗಿ ಎಲ್ಲಿಗೂ ಹೋಗುತ್ತಿರಲಿಲ್ಲ. +ಮನೆ ಬದಲಾಯಿಸಿದ ಮೇಲೆ ಸ್ವಲ್ಪ ನೆಮ್ಮದಿಯಾಗಿದ್ದಂಗೆ ಕಂಡಿದ್ದು ಬಹಶಃ ಅವನ ಭ್ರಮೆ ಇರಬಹುದೇನೋ ? +“ಯಾರಮ್ಮ ಅಂಥ ಪುಣ್ಯಾತರು ?” ಎಂದು ಬಂದು ಅವಳ ಮುಂದೆ ನಿಂತ . +"ಅತ್ತೆ ಫೋನ್‌ ಮಾಡಿದ್ರು ಒಮ್ಮೆ ಬಂದ್ದೋಗೂಂತ" ತಂಗಿಯ ಮಾತು. +ಕೇಳಿದ ಕೂಡಲೇ ಕೋಪದಿಂದ ಹಲ್ಕುಡಿ ಕಚ್ಚಿದ. +"ಈಗೇನಂತೆ? ಆಗ ಅವಮಾನ ಮಾಡಿದ್ದು ಸಾಲಲಿಲ್ವ ? +ನೀನು ಹೋಗ್ಲೇಬೇಡ" ಎಂದು ರೇಗಾಡಿದರು. + ತಕ್ಷಣ ತನ್ನನ್ನ ತಿದ್ದಿಕೊಂಡ "ಸಾರಿ ಅಮ್ಮ ಸುಮ್ನೆ ಲಾಭ ನಷ್ಟ,ಮಾನ - ಅವಮಾನಗಳ್ನ ಕೆಲವೊಮ್ಮೆ ಪಕ್ಕಕ್ಕೆ ಸರಿಸ್ಪೇಕಾಗುತ್ತೆ. +ಹೋಗ್ಬಾ,ಸುಮ್ನೆ ಅವರೊಂದಿಗೆ ಬಿದ್ದು ಯಾಕೆ ?" +ಸಮಾಧಾನಕ್ಕೆ ಬಂದ. +ಇವಳು ಹೊರಟಾಗ ನೀರದ ಡಬ್ಬಿ ಹಿಡಿದು ಬಂದಳು. +ಸ್ವಲ್ಪ ಅವಳೊಂದಿಗೆ ಮಾತು ಕಮ್ಮಿ ಮಾಡಿದ್ದ ಡಾ|| ನವೀನ್‌. +ಬೇಡ ಅತ್ತಿಗೆ !ಅಲ್ಲೇ ಏನಾದ್ರೂ ತಿಂದ್ಯೋತೀನಿ ಎಂದಳು. +ಉಪ್ಪಿಟ್ಟು ರುಚಿಸಿರಲಿಲ್ಲ ತಂದೆಗಾಗಿ ತಾನೇ ಅಡಿಗೆ ಮಾಡಿದ್ದಳು "ಅಪ್ಪ ಏನು ತಿನ್ಸಿಲ್ಲ. +ಬಂದ ಕೂಡ್ಲೇ ಬಲವಂತ ಮಾಡಿ ಬಡ್ಸಿ." ಒಂದು ಮಾತು ಹೇಳಲು ಮರೆಯಲಿಲ್ಲ. +ಆ ವೇಳೆಗೆ ಸ್ಕೂಟರ್‌ನ ಹೊರಗೆ ನಿಲ್ಲಿಸಿದ ಡಾ|| ನವೀನ್‌ "ಬೇಗ್ಬಾ,ನಂಗೂ ಬೇಗ ಹೋಗೋದಿದೆ" ಅವಸರಿಸಿದ. +ನೀರದಳ ಜೊತೆ ಮಾತುಗಳೇ ಇಲ್ಲವೆನಿಸಿ ಬಿಟ್ಟಿತ್ತು ಅವನಿಗೆ. +ಸ್ಕೂಟರ್‌ ಯುಗಂಧರ್‌ ಮನೆಯ ತಿರುವಿನಲ್ಲಿ ನಿಂತಿತ್ತು "ನಾನ್ಬರ್ತಿನಿ" ಸ್ಕೂಟರ್‌ ಸ್ಟಾರ್ಟ್‌ ಆಗಿ ಮರುಕ್ಷಣವೇ ಕಾಣೆಯಾಗಿ ಹೋಯಿತು. +ಗೇಟು ತೆರೆದುಕೊಂಡು ಹೋಗಿ ಕಾಲಿಂಗ್‌ ಬೆಲ್‌ ಒತ್ತಿದಳು. +ಇದು ಅವಳದೇ ಮನೆ. +ಇಲ್ಲಿನವರು ಅವಳವರೇ. +ಆದರೂ ಇಂದು ಈ ಬಾಗಿಲ ಮುಂದೆ ಒಬ್ಬ ಅಪರಿಚಿತಳಂತೆ ನಿಂತಿದ್ದಳು. +ಬಾಗಿಲು ತೆರೆದ ಕೆಲಸದವಳು ಅಚ್ಚರಿ, ಸಂತೋಷದಿಂದ ಕಣ್ಣರಳಿಸಿ "ಅಮ್ಮ ಚಿಕ್ಕಮ್ಮ ಅವ್ರು ಬಂದಿದ್ದಾರೆ" ದೊಡ್ಡ ಕೂಗು ಹಾಕಿಕೊಂಡು ಒಳಗೆ ಓಡಿದಾಗ,ವರಾಂಡದಲ್ಲಿ ಚಪ್ಪಲಿ ಬಿಟ್ಟು ಹಾಲ್‌ಗೆ ಹೋದಳು. +ಕೈಯೊರೆಸುತ್ತ ಬಂದ ಮೃಣಾಲಿನಿ “ಓ ಚಾರುನ. . . . ಕೂತ್ಕೋ” ಎಂದು ರೂಮಿಗೆ ಹೋದವರು "ಚಾರು ಬಂದಿದ್ದಾಳೆ. +ನೀವೇ ಹೊರ್ಗಡೆ ಬಂದು ಮಾತಾಡಿಸ್ತೀರಾ ಅಥ್ವಾ ನಾನೇ ಇಲ್ಲಿಗೆ ಕಳಿಸ್ಲಾ ?"ಉದ್ವಿಗ್ನರಾಗಿ ವಿಚಾರಿಸಿದರು. +ಯುಗಂಧರ್‌ಗೆ ತಕ್ಷಣ ಏನು ಹೇಳಬೇಕೋ ತಿಳಿಯಲಿಲ್ಲ. +ಕನ್ನಡಕ ಹಾಕಿಕೊಂಡು "ಕೆಲ್ಸದವ್ಳು ಬಂದು ನಿಲ್ಲುತ್ತಾಳೆ. +ಇಲ್ಲಿಗೆ ನೀನೇ ಕರ್ಕೊಂಡ್ಬಾ. +ನಂಗೆ ಏನು ಮಾತಾಡ್ಬೇಕೋ ಗೊತ್ತಾಗೋಲ್ಲ" ಎಂದರು ಸ್ವಲ್ಪ ಕಸಿವಿಸಿ ಅನುಭವಿಸುತ್ತ. +ಅದನ್ನ ಚಾರುಲತೆಗೆ ಮುಟ್ಟಿಸಿ ಹೊರಗೆ ಹೋದರು ಲಗುಬಗೆಯಿಂದ. +ಕುಕ್ಕರ್‌ನಲ್ಲಿಯೇ ಇದ್ದ ಇಡ್ಲಿಗಳನ್ನು ತಟ್ಟೆಗೆ ಹಾಕಿಕೊಂಡು, ಅದರೊಂದಿಗೆ ಎರಡು ಉದ್ದಿನವಡೆ ಸಾಂಬಾರ್‌, ಚಟ್ನಿ ತಂದು ಅವಳ ಮುಂದಿನ ಟೀಪಾಯಿ ಮೇಲಿಟ್ಟರು. +"ತಗೋ. . . . " ಅಂದರು ಅವಳ ಎದುರು ಗಂಡನ ಪಕ್ಕ ಕೂಡುತ್ತ ತಟ್ಟೆ ಮತ್ತು ಅವರ ಮುಖವನ್ನ ಬದಲಿಸಿ ಬದಲಿಸಿ ನೋಡುತ್ತ "ಎಲ್ಲಾ ಮುಗ್ಸಿಕೊಂಡ್ಬಂದೆ. +ಮತ್ತೆ ತಿನ್ನೋಕ್ಕಾಗೋಲ್ಲ. +ಒಂದೇ ಒಂದು ತಗೋತೀನಿ”ಎಂದು ತಟ್ಟೆಯನ್ನ ಅಡಿಗೆ ಮನೆಗೆ ಒಯ್ದು ಮಿಕ್ಕವನ್ನು ತೆಗೆದಿಟ್ಟು ಒಂದು ವಡೆ,ಒಂದು ಇಡ್ಲಿಯನ್ನ ಹಾಕಿಕೊಂಡು ಬಂದು ಅವರ ಮುಂದೆ ಕೂತಳು. +"ಹೇಗಿದ್ದೀರಾ ?" ಯುಗಂಧರ್‌ನ ವಿಚಾರಿಸಿದಳು. +“ಪರ್ವಾಗಿಲ್ಲ, ಹೃದಯ ಬಡಿತ ನಿಲ್ಲೋವರ್ಗೂ” ಅಂದರು. +“ಎಲ್ಲರ ಸ್ಥಿತಿಯು ಅದೇ ! ಹಾಗೆಂದು ಅತ್ತೆ ಮನಸ್ಸು ಯಾಕೆ ನೋಯಿಸ್ತೀರಾ! +ಈಗ ತುಂಬ ಆರೋಗ್ಯವಾಗಿ ಕಾಣ್ತೀರಾ" ಅವಳೇ ಒಂದು ಮಾತು ಹೇಳಿ,ತಿಂದು ಮುಗಿಸಿದ ತಟ್ಟೆಯನ್ನು ತೊಳೆಯಲು ಹಾಕಿ ಬಂದು ಕೈಯೊರೆಸುತ್ತ "ಕುಡ್ಯೋಕೆ ಏನು ಬೇಡ" ಎಂದಳು. +ಕರೆಸಿದ್ದಕ್ಕೆ ಕಾರಣ ಹೇಳಬೇಕಿತ್ತು. +ದೇವರ ಮನೆಯಲ್ಲಿದ್ದ ಸರ, ಬಳೆಗಳನ್ನ ತಂದು ಅವಳ ಮುಂದಿನ ಟೀಪಾಯಿ ಮೇಲಿಟ್ಟು "ಇದ್ನ ಇಲ್ಲೇ ಬಿಟ್ಟೋಗಿದ್ದೆ" ಹೇಳಿದರು. +ತನ್ನ ಹ್ಯಾಂಡ್‌ ಬ್ಯಾಗ್‌ನಲ್ಲಿದ್ದ ಜ್ಯೂಯಲ್‌ ಬಾಕ್ಸ್‌ನ ಹೊರ ತೆಗೆದು ಮುಚ್ಚುಳ ತೆರೆದು ಇವುಗಳನ್ನ ಅದರಲ್ಲಿಯೇ ಹಾಕಿ ಅಲ್ಲೇ ಇಟ್ಟಳು. +"ದಯವಿಟ್ಟು ತಪ್ಪು ತಿಳ್ಕೋಬೇಡಿ. +ನಾನು ಪೂಜಾಗೆ ಗಿಫ್ಟ್‌ ಆಗಿ ಕೊಟ್ಟರೇ ನೀವು ಅಹಂಕಾರ ಅಂತ ತಿಳ್ಕೋಬಹುದು. +ಅವು ನೀವು ಹಾಕಿದ ಒಡ್ವೆಗಳು. +ಹೇಗೆ ತಿಳಿದುಕೊಂಡ್ರು. . . . ಅವು ಇಲ್ಲೀಯೇ ಉಳಿಯಬೇಕು. +ಬರ್ತಿನಿ" ಎಂದವಳು ಪೂಜಾಳ ರೂಮಿಗೆ ನುಗ್ಗಿ ಮ್ಯಾಗಜೀನ್‌ ತಿರುವತ್ತಿದ್ದವಳ ಕೈ ಹಿಡಿದುಕೊಂಡು "ಕಂಗ್ರಾಜುಲೇಷನ್‌. +ನಿನ್ನ ಬಗ್ಗೆ ನಂಗೆ ಯಾವ್ದೇ ದುರುದ್ದೇಶವಿದ್ದಿಲ್ಲ. +ಆಫೀಸ್‌ಗೆ ಹೊತ್ತಾಗುತ್ತೆ ಬರ್ತೀನಿ” ಅಂದವಳು ದೇವರ ಮನೆಗೆ ಹೋಗಿ ಕುಂಕುಮ ಹಚ್ಚಿಕೊಂಡು ಇಲ್ಲಿಗೆ ಬಂದ ಕೆಲಸ ಮುಗಿಯಿತೆಂದುಕೊಂಡು ತನ್ನ ಪಾಡಿಗೆ ತಾನು ಹೋದಳು. +ಕೂತವರು ಅಲ್ಲಲ್ಲಿಯೇ ಗೊಂಬೆಗಳಾಗಿದ್ದರು. +ಅವರಲ್ಲಿ ಚಲನೆ ಮೂಡಲು ಸಾಕಷ್ಟು ಸಮಯವೇ ಬೇಕಿತ್ತು. +ಯುಗಂಧರ್‌ ತಾವು ವಿದ್ಯಾರ್ಥಿ ಜೀವನದಲ್ಲಿದ್ದಾಗ ನೋಡಿದ ಹಳೆಯ ಹಿಂದಿ, ತೆಲುಗು, ಕನ್ನಡ ಚಿತ್ರಗಳನ್ನು ಜ್ಞಾಪಿಸಿಕೊಂಡರು. +ಒಡವೆಗಳಿಗಾಗಿ ಆಸೆ ಪಡುವ ಹೆಂಡತಿ, ಸೊಸೆಯರು,ಅತ್ತೆಯ ಮನೆಯಿಂದ ಹೊರ ದೂಡಿದಾಗ ಬಾಗಿಲಲ್ಲೇ ಮುದುರಿ ಅವರ ಪಾದದಡಿಯಲ್ಲಿ ಹೊರಳಾಡುವ ಯುವತಿಯರು ಪತಿಯೇ ಪರದೈವವೆಂದುಭಾವಿಸಿ ಎಲ್ಲಾ ಕಷ್ಟ ಕೋಟಲೆಗಳನ್ನ ಸಹಿಸಿ, ಕ್ಷಮಿಸಿ ತೆಪ್ಪಗೆ ಕಣ್ಣೀರು ಸುರಿಸುತ್ತಿದ್ದ ಹೆಣ್ಣುಗಳ ದುರಂತ ಚಿತ್ರಣ. +ತೀರಾ ಗಯ್ಯಾಳಿ, ತೀರಾ ದುರ್ಬಲೆಯ ಪಾತ್ರಕ್ಕಿಂತ ಹೆಣ್ಣು ಹೀಗಿದ್ದರೇನೇ ಚೆನ್ನೆನಿಸಿತು. +"ಶಭಾಷ್‌'" ಎಂದುಕೊಂಡರು. +ಮಗನ ಪಾಲಿಗೆ ಬಂದ ಚಾರುಲತ ಸೌಭಾಗ್ಯವೆಂದುಕೊಂಡರು. +"ನಾವು ಪುಣ್ಯ ಮಾಡಿದ್ದಿ " ಅಂದರು ತನ್ಮಯತೆಯಿಂದ. +"ಹೌದು, ಈಗ ಗೊತ್ತಾಗುತ್ತೆ. +ಚಾರುವಿಂದ ನಮ್ಮ ಕುಟುಂಬಕ್ಕೆ ಯಾವ್ದೇ ಅಪಾಯವಿಲ್ಲ. +ಚೆನ್ನೈ ಸಂಪ್ರದಾಯಸ್ಥ ಜನ, ನಿಶ್ಚಿತ್ಯಾರ್ಥದ ದಿನ ಸೊಸೆ ಇಲ್ಲದಿದ್ದರೇ. . . . ಗೋವಿಂದ. +ತಿರುಪತಿ ಶ್ರೀನಿವಾಸ ನಮನ್ನ ಕಾಪಾಡ್ಬೇಕು" ಆತಂಕ ವ್ಯಕ್ತಪಡಿಸಿದರು ಮೃಣಾಲಿನಿ. +"ಹಾಗೇನಾಗೋಲ್ಲ !ಸುಮ್ಮನಿರು" ಧೈರ್ಯ ನೀಡಿದರು. +ಹೆಂಡತಿಗೇನೋ ಆರಾಮಾಗಿ ಧೈರ್ಯದ ಮಾತಾಡಿದರು. +ಆದರೆ ಅವರ ಮನದಲ್ಲಿ ದಿಗಿಲಿತ್ತು. +"ನಂಗಂತು ಧೈರ್ಯವಿಲ್ಲ. +ಅಪ್ಪ, ಮಗ, ಮಗ್ಳುಗೆ ಸಾಕಷ್ಟು ಅವಮಾನ ಮಾಡಿದ್ದೀವಿ. +ಈಗ ಅವ್ರಿಗೆ ಸಮಯ. +ಅವರೇನಾದ್ರೂ ಪಟ್ಟು ಹಿಡ್ದು ಕೂತರೇ ಗತಿಯೇನು ?" +ಹೆಂಡತಿಯ ಮಾತಿನಲ್ಲಿ ಸತ್ಯವಿತ್ತು. +ಆದ್ದರಿಂದ ಮೌನವಹಿಸಿದರು. +ನಿಶ್ಚಿತಾರ್ಥಕ್ಕೆ ಎರಡು ದಿನ ಇದೇ ಅನ್ನೋವಾಗಲೇ ಬಂದಿಳಿದ ಮೂರ್ತಿ. +ಅವನಿಗಂತು ಸಂಭ್ರಮ, ಸಡಗರ. +ಈಗ ಮತ್ತಷ್ಟು ಪೂಜಾ ಚೇತರಿಸಿಕೊಂಡಿದ್ದು ಸಂತಸದ ವಿಷಯವಾಗಿತ್ತು. +ಮಧ್ಯಾಹ್ನದ ಊಟ ಮುಗಿಸಿ ಕೈ ತೊಳೆದು ಬಂದು ಮೂರ್ತಿ ತಂಗಿಯ ಕೈಯಲ್ಲಿನ ಪೇಪರ್‌ ಕಿತ್ಕೊಂಡು "ಒಂದಿಷ್ಟು ಹೋಗಿ ಮಲ್ಗು ಸಂಜೆ ಒಂದಿಷ್ಟು ಷಾಪಿಂಗ್‌ ಇದೆ. +ನಿಂಗೆ ಏನೇನು ಬೇಕೋ, ಎಲ್ಲಾ ಲಿಸ್ಟ್‌ ಮಾಡಿಡು. +ಅಪ್ಪ,ಮಧುಗೆ ಉಂಗುರ ಮಾಡ್ಲಿ ಹಾಕ್ತೀನೀಂದ್ರು. +ನಾನೇ ಬೇಡಾಂದೆ. +ಇಬ್ರೂ ಹೋಗಿ ಸೆಲೆಕ್ಟ್‌ ಮಾಡ್ಕೊಂಡ್‌ ಬರೋಣ" ಅದೇ ಪೇಪರ್‌ನಲ್ಲಿಯೇ ತಂಗಿಯ ತಲೆಯ ಮೇಲೊಂದು ಏಟು ಹಾಕಿದ. +ಪೂಜಾ ಪೂರ್ತಿ ಸಪ್ಪಗಾಗಿ ಬಿಟ್ಟಳು. +ಫೋನ್‌ನಲ್ಲಿ ಕೂಡ ಮಧು ಇವಳ ಅತ್ತಿಗೆಯನ್ನ ವಿಚಾರಿಸಿದ್ದ. +ಅಂಥದ್ದರಲ್ಲಿ ಚಾರುಲತ ಇಲ್ಲದ್ದು ದೊಡ್ಡ ವಿಷಯವಾಗಬಹುದು. +“ಅಪ್ಪ, ಚಾರುಲತ ಬರದಿದ್ದರೇ” ಅವಳು ಅನುಮಾನದ ಸ್ವರದಲ್ಲಿ ಕೇಳಿದಾಗ "ನಿನಗೇಕೆ ಅದೆಲ್ಲ ? +ಇಲ್ಲದ್ದು ತಲೆಗೆ ಹಚ್ಕೋಬೇಡ" ಮೃಣಾಲಿನಿ ಮಗಳನ್ನ ಗದರಿಕೊಂಡರು. +ಈಗ ಅವಳ ಮೇಲೆ ಕೋಪ ಬಂತು ಕೂಡ. +"ಇಷ್ಟಕ್ಕೆಲ್ಲ ನೀನೇ ಕಾರಣ" ಎಂದು ಹಂಗಿಸಿ ಬಿಡಬೇಕೆನ್ನುವುದನ್ನ ತಡೆದರು. +ಎದ್ದ ಮೂರ್ತಿ ತಾಯಿಯನ್ನ ರೂಮಿನಿಂದ ಹೊರಗೆ ಕರೆದೊಯ್ದು "ಅವ್ಳ ಮೇಲೇಕೆ ಕೋಪ ಮಾಡ್ಕೋತೀರಿ. +ಅವ್ಳ ಇಷ್ಟು ಚೇತದ್ಲಿ ಕೊಳ್ಳೋಕೆ ಎಷ್ಟೊಂದು ಕಷ್ಟಪಟ್ಟಿದ್ದೀವಿ" ಸಾಂತ್ವನಿಸಿದ ನಯವಾಗಿ. +“ಮತ್ತೇನು ಮಾಡೂಂತೀಯಾ ? +ಎಲ್ಲಾ ರಾಮಾಯಣಕ್ಕೂ ಇವ್ಳೇ ಕಾರಣ.” +ಸ್ಪಷ್ಟವಾದ ಬೇಸರವಿತ್ತು ಆಕೆಯ ದನಿಯಲ್ಲಿ. +ತಾಯಿಯ ಕೈ ಹಿಡಿದುಕೊಂಡು "ಒಂದು ತಪ್ಪು ನಮ್ಮಿಂದ ಆಗಿದೆ. +ಈಗ್ಲೂ ನಂಗೆ ತಪ್ಪು ಅನ್ನಿಸ್ತಾ ಇಲ್ಲ. +ಚಾರುಲತ ಸ್ವಲ್ಪ ಗಟ್ಟಿ ಮನಸ್ಸು ಮಾಡಿದ್ದರೇ ಡಾ||ನವೀನ್‌ ನಮ್ಮಿಂದ ತಪ್ಪಿಹೋಗ್ತಾ ಇದ್ಲಿಲ್ಲ" ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯಲಾರೆನು ಎನ್ನುವಂತೆ ಮಾತಾಡಿದ್ದು ಆಕೆಗೆ ಹಿಡಿಸಲಿಲ್ಲ. +ಆಕೆ ಕೂಡ ಒಬ್ಬ ಹೆಣ್ಣು. +"ಹೌದು,ಸುಮ್ಮನಿರಪ್ಪ ನಿಂಗೆ ನಿನ್ತಂಗಿ ಅಪ್ಪ, ಅಮ್ಮ ಮುಖ್ಯವಾಗಿ ಅವ್ಳುನ ಹೊರಗಟ್ಟಿ ಬಿಟ್ಟೆ. +ಅವ್ಳಿಗೂ ಅವಳಪ್ಪ, ಅಣ್ಣ ಮುಖ್ಯ ವಾಗೋಲ್ಟಾ? +ಗಂಡಿಗಿಂತ ಹೆಣ್ಣಿನ ಅಂತಃಕರಣ ತೀರಾ ಮೃದು. +ಇದ್ನ ಗಂಡಸರು ಯಾಕೆ ಅರ್ಥಮಾಡಿಕೊಳ್ಳೋಲ್ಲ. +ಹೊಕ್ಕ ಮನೆಗಾಗಿ ಹುಟ್ಟಿದ ಮನೆನಾ ಸರ್ವನಾಶ ಮಾಡ್ಬಿಡ್ಬೇಕಾ ? +ಸಾಕು ಸುಮನಿರೋ ! +ಪೂಜಾ ದೊಂಬರಾಟ, ನಿಮ್ಮಪ್ಪನ ಹಾರಾಟದಲ್ಲಿ ಚಾರು ದೊಡ್ಡ ಅಪರಾಧಿಯಾಗಿ ಕಂಡ್ಲು. +ಜೀವಾವಧಿಯೇನು ಮರಣದಂಡನೆಗೆ ಗುರಿಯಾದ ಖೈದಿಯಂತೆ ನೋಡ್ದೆ. +ಈಗ ನೋಡಿದ್ರೆ ಅವಳದೇನು ತಪ್ಪಿಲ್ಲ. +ಬೇಡಾಂದ ಗಂಡಿಗೋಸ್ಕರ ಅಷ್ಟೆಲ್ಲ ಹಾರಾಟ ಯಾಕೆ ಬೇಕಿತ್ತು ? +ಬರೀ ತಾನು ಹೇಳಿದ್ದು ನಡೀ ಬೇಕನ್ನೋ ಕೆಟ್ಟ ಹಟ ಪೂಜಾದು"ಗೊಣಗಿಕೊಂಡು ಹೋದರು. +ಮೂರ್ತಿ ನಿಬ್ಬೆರಗಾಗಿ ನಿಂತ. +ತಾಯಿ ಪೂರ್ತಿಯಾಗಿ ಸೊಸೆಯ ಪಕ್ಕ ನಿಂತಂತೆ ಕಂಡರೂ ಆದ ರಂಪ, ರಾಮಾಯಣ ನೆನಪಿಸಿಕೊಂಡ. +ಬಂದವಳನ್ನ ನಾಯಿಯಂತೆ ಅಟ್ಟಿದ್ದ ಬಿಸಿಲಲ್ಲಿ. +ಅಂದು ಕೂಡ ತಳಮಳವಿತ್ತು. +ಕಾಲೇಜಿಗೆ ಹೋದವನು ಪಾಠ ಮಾಡಲಾರದೆ ಬಸ್ಸು ಸ್ಟಾಂಡ್‌ಗೆ ಹೋಗಿದ್ದ. +ಬಸ್ಸು ಹೊರಟು ಹೋಗಿತ್ತು. +ಕೋಪ ಬೇಸರವಿತ್ತು ಮಡದಿಯ ಮೇಲೆ. +ಆದರೆ ಅವನೆದೆಯ ಪ್ರೇಮದ ಕಾರಂಜಿಯೇನು ಬತ್ತಿ ಹೋಗಿರಲಿಲ್ಲ. +ಕೂಡಿ ಬದುಕಲೀ,ಬಿಡಲೀ ಅವಳೊಬ್ಬಳೆ ಅವನ ಪಾಲಿಗೆ ಹೆಣ್ಣು. +ವರಾಂಡದಲ್ಲಿ ಕೂತು ಬಿಟ್ಟ ಮೌನವಾಗಿ. +ರೂಮಿನೊಳಕ್ಕೆ ಬಂದ ನೀರದ "ಒಂದು ರಿಜಿಸ್ಟರ್‌ ಪಾರ್ಸಲ್‌ ಬಂದಿದೆ ನಿಮ್ಮ ಹೆಸರಿಗೆ. +ಚಾರು, ನಿಮ್ಮಿಂದ ನಂಗೊಂದು ಸಹಾಯ ಆಗ್ಬೇಕು" ಮುಂದಕ್ಕೆ ಕೂದಲನ್ನ ಹಾಕಿಕೊಂಡು ಜಡೆ ಹಣೆಯುತ್ತಿದ್ದವಳು ಕತ್ತನ್ನ ತಿರುಗಿಸಿ ಸ್ವಲ್ಪ ಸರ್ಯಾಗಿ ವಿಚಾರಿಸ್ಬೇಕಿತ್ತು. +"ನಂಗೆ ರಿಜಿಸ್ಟರ್‌ ಪಾರ್ಸಲ್‌ ಯಾರಿಂದ ಬರ್ಬೇಕು" ಎನ್ನುತ್ತಲೇ ಹೊರಗೆ ಬಂದಳು. +ಕೊರಿಯರ್‌ ಹುಡುಗ ನಿಂತಿದ್ದ. +ಅವನ ಕೈಯಲ್ಲಿನ ಪಾರ್ಸಲ್‌ ಪಡೆದು ತಿರುಗಿಸಿ ತಿರುಗಿಸಿ ನೋಡಿದಳು. +ಮಿಂಚೊಡೆದಂತಾಯಿತು ಹೃದಯದಲ್ಲಿ ಒತ್ತಿದ ಸುಂದರ ಅಕ್ಷರಗಳೇ. +ನಡುಗುವ ಕೈಯಿಂದ ಸಹಿ ಹಾಕಿ ಪಡೆದುಕೊಂಡಳು. +ಮಿದುಳು, ಮನಸ್ಸು ಏಕವಾದರೂ ಹೃದಯಕ್ಕೆ ಸೋಲಲೇ ಬೇಕಾಯಿತು. +"ಹಲೋ, ಏನದು ?" ಸ್ಕೂಟರ್‌ ಹೊರಗೆ ನಿಲ್ಲಿಸುತ್ತಿದ್ದ ಡಾ।।ನವೀನ್‌ಬಂದ. +"ಯಾರ್ದೂ ಪಾರ್ಸಲ್‌ ? +ಹಾಗೆಲ್ಲ ತಗೋಬೇಡ, ಬಾಂಬ್‌ ಏನಾದ್ರೂ ಇಟ್ಟಿದ್ದಾರು. +ನಾಳಿನ ಪೇಪರ್‌ನ ಮುಖ್ಯ ಸುದ್ಧಿಯಾಗೋದ್ಬೇಡ" ಅವಳ ಕೈಯಲ್ಲಿನ ಪಾರ್ಸಲ್‌ ತೆಗೆದುಕೊಂಡ. +ಕೆಳಗೆ ಮೂರ್ತಿಯ ವಿಳಾಸ. +ಅವನೆದೆ ಬಡಿತದ ವೇಗ ಎಷ್ಟು ಹೆಚ್ಚಿತೆಂದರೆ ಒಂದು ಅಂದಾಜುಗೆ ಬರದಾದ. +ಸಂತೋಷವೋ, ಆವೇಗವೋ ಈ ಎರಡು ಅಲ್ಲದ ಅವಮಾನದ ಬೇಗೆಯೋ ? ಅವಳತ್ತ ತಿರುಗುವ ವೇಳೆಗೆ ಚಾರುಲತ ಇರಲೇ ಇಲ್ಲ, +ಪ್ಯಾಕೆಟ್‌ ಹಿಡಿದು ಒಳ ಬಂದ. +ಹಾಲ್‌ನಲ್ಲಿರಲಿಲ್ಲ ತಂಗಿ. +ರೂಮಿನತ್ತ ಹೊರಟಾಗ ಬಂದ ನೀರದ "ಯಾರ್ದೂ ಪಾರ್ಸಲ್‌ ?" ಕೇಳಿದಳು. +"ನಿನ್ನದಂತು ಖಂಡಿತ ಅಲ್ಲ" ಒಳ ನಡೆದ. +ಹಿಂದಿನ ದಿನ ತನ್ನ ಸಂಬಳದಲ್ಲಿ ನೀರದ ಅತ್ತಿಗೆಗಾಗಿ ಎರಡು ಸೀರೆ ಖರೀದಿಸಿ ತಂದಿದ್ದರಿಂದ ತುಂಬ ಖುಷಿಯಾಗಿದ್ದಳು ನವೀನ್‌ನ ಹೆಂಡತಿ. +ಅವಳಿಗೆ ಸೀರೆ, ಒಡವೆ ಎಲ್ಲಾ ಇಷ್ಟವೇ. +ತಾಯಿಯ ಮನೆಯಲ್ಲಿ ಅಂಥದ್ದೆಲ್ಲ ಏನು ಇರಲಿಲ್ಲ. +ಡಾ|| ನವೀನ್‌ನ ಮದುವೆಯಾಗುವ ಕನಸ್ಸಿನಲ್ಲಿ ಮುಖ್ಯ ವಾದುದ್ದು ಸೀರೆ, ಒಡವೆಗಳೇ. +ಇಲ್ಲೂ ಯಥೇಚ್ಛವಾಗಿಯೇನು ಸಿಕ್ಕಿರಲಿಲ್ಲ. +ಅದೊಂದು ಗೊಣಗು ಅವಳದು. +ತಲೆ ಬಗ್ಗಿಸಿ ಮಂಚದ ಮೇಲೆ ಕೂತಿದ್ದ ಚಾರುಲತ ಮುಂದೆ ಪ್ಯಾಕೆಟ್‌ ಇಟ್ಟ "ನಿನ್ನ ಹುಟ್ಟಿದ ಹಬ್ಬಕ್ಕೆ ಮೂರ್ತಿ ಉಡುಗೊರೆ ಕಳ್ಸಿದ್ದಾನೆ. +ನಿನ್ನಂಥ ಮಡದಿಯನ್ನ ಮರೆಯೋಂಥ ಮೂರ್ಖ ಅವನೇನು ಅಲ್ಲ? +ಎಂದವನು ಅವಳನ್ನ ಒಂಟಿಯಾಗಿ ಬಿಟ್ಟು ಹೊರಗೆ ಹೋದ." +ಶಕುನದ ಹಕ್ಕಿ ಶುಭ ಹಾಡಿದಂತಾಯಿತು. +ನೇರವಾಗಿ ಅಡಿಗೆ ಮನೆಗೆ ಬಂದ. +ಕಾಯಿ ಹೋಳಿಗೆಗೆ ಕಣಕ ರೆಡಿ ಮಾಡುತ್ತಿದ್ದ ವಾಸುದೇವಯ್ಯ "ಇವತ್ತೊಂದು ದಿನ ರಜ ಹಾಕೋಕೆ ಹೇಳು. +ಎಲ್ಲರೂ ಒಟ್ಟಿಗೆ ಕೂತು ಊಟ ಮಾಡೋಣ. +ಅವ್ಳಿಗೆ ಹೋಳಿಗೆ ಇಷ್ಟ. +ಅದ್ಕೆ ಮಾಡ್ತಾ ಇದ್ದೀನಿ" ತಲೆಯೆತ್ತಿ ಹೇಳಿದರು. +ಅಲ್ಲೇ ಇದ್ದ ಸ್ಟೂಲನ್ನ ತಂದೆಯ ಮುಂದಕ್ಕೆ ಎಳೆದುಕೊಂಡು ಕೂತ "ಒಂದು ಒಳ್ಳೆ ಸುದ್ಧಿ ಮೂರ್ತಿ ಚಾರುಗೆ ಹುಟ್ಟಿದ ಹಬ್ಬದ ಪ್ರಸೆಂಟೇಷನ್‌ ಕಳ್ಸಿದ್ದಾನೆ. +ಅವ್ರ ಮನೆಯವರು ಮಾಡಿದ ಅವಮಾನಕ್ಕೆ ಡೈವೋರ್ಸ್‌ ಕೊಡ್ಲಿ ಚಾರುಲತಗೆ ಇನ್ನೊಂದು ಮ್ಯಾರೇಜ್‌ ಮಾಡ್ಬಿಡೋಣಾಂತ ಅನ್ನಿಸುತ್ತೆ. +ಅದು ಸಾಧ್ಯವಾಗ್ದು. +ಅವ್ಳಿಗೆ ಇನ್ನೊಂದು ವಿವಾಹದ ಬಗ್ಗೆ ಆಸಕ್ತಿ ಇಲ್ಲ" ಎಂದು ಉಸುರಿದ ಅವನಲ್ಲಿ ರಾಜಿ ಧೋರಣೆ ಇತ್ತು. +ಅವಳ ದಾಂಪತ್ಯ ಸರಿ ಹೋಗದ ಹೊರತು, ಡಾ||ನವೀನ್‌ ಸುಖಿಯಲ್ಲ. +ವಾಸುದೇವಯ್ಯ ಕಣ್ಣುಗಳಲ್ಲಿ ಆನಂದ ಬಾಷ್ಪ ಇಣಕಿತು. +ಅವಮಾನದ ಬಗ್ಗೆ ತಲೆ ಕೆಡಿಸಿಕೊಳ್ಳಲಾರರು. +"ಅಹಂ" ಪ್ರತಿಷ್ಠೆಗಿಂತ ಅವರಿಗೆ ಮಗಳ ಭವಿಷ್ಯ ಮುಖ್ಯ. +ಎಲ್ಲಾ ಒಳ್ಳೆದಾಗ್ಗಿ !ಮೂರ್ತಿ ಬಂದು ಕರೆದೊಯ್ದರೇ ನಂಗಿಂತ ಸುಖಿಯಾರಿಲ್ಲ. +ಅಂಥ ದಿನ ಬರಲಿ ಹೆಗಲ ಮೇಲಿನ ಚೌಕದಿಂದ ಕಣ್ಣೀರು ತೊಡೆದುಕೊಂಡರು. +ಮತ್ತೆ ಡಾ।। ನವೀನ್‌ ರೂಮಿಗೆ ಬಂದಾಗ ಚಾರುಲತ ಅದೇ ಸ್ಥಿತಿಯಲ್ಲಿ ಕೂತಿದ್ದಳು. +ಇನ್ನ ಪ್ಯಾಕೆಟ್‌ ಓಪನ್‌ ಆಗಿರಲಿಲ್ಲ. +ತಾನೇ ಮೇಲಿನ ಬಣ್ಣದ ಕಾಗದ ಬಿಡಿಸಿ ರಟ್ಟಿನ ಕವರ್‌ ತೆಗೆದ. +ಮೆರೂನ್‌ ಬಣ್ಣದ ಚೆಂದದ ರೇಶಿಮೆ ಸೀರೆ ಉಡುಗೊರೆಯಾಗಿ ಬಂದಿತ್ತು. +ಹಿಂದಿನ ಸಂಜೆ ತಾನೇ ತಂಗಿಗಾಗಿ ಒಂದು ಸೀರೆ, ನೀರದಗಾಗಿ ಒಂದು ಸೀರೆ ಖರೀದಿಸಿ ತಂದಿದ್ದ. +ಆದರೆ ಇಷ್ಟು ದುಭಾರಿಯಾದುದ್ದಲ್ಲ. +“ಫೆಂಟಾಸ್ಟಿಕ್‌, ಮೂರ್ತಿ ಒಳ್ಳೆ ರಸಿಕ. +ಈ ಸೀರೆಯುಟ್ಟರೇ ನೀನು ಚೆಂದದ ಗೊಂಬೆಯೇ.” ಸೀರೆಯನ್ನ ಹೊರತೆಗೆದ. +ಅದರಡಿಯಲ್ಲಿ ಒಂದು ಚೀಟಿ ಇತ್ತು. +ಹರ್ಷಿತನಾದ. “ತಗೋ ಇದ್ನ ನಾನೇ ಓದಿ ಹೇಳ್ಲಾ ? +ನೀನೇ ಓದ್ಕೋತೀಯಾ” ಹಾಸ್ಯ ಮಾಡಿದ. +ಅತಿಯಾಗುವುದು ಬೇಡವೆಂದು ಚೀಟಿಯನ್ನ ಅವಳ ತೊಡೆಯ ಮೇಲಿಟ್ಟು ಹೊರಗೆ ಬಂದ. +ಕಣ್ಣೀರು ಸುರಿಸಿ ಸಮಾಧಾನವಾದ ನಂತರವೆ ಚೀಟಿ ಬಿಡಿಸಿದ್ದು. +"ನಿನ್ನ ಹುಟ್ಟು ಹಬ್ಬಕ್ಕೆ ನೂರು ಸಿಹಿ ಮುತ್ತುಗಳು." + ಪುಟ್ಟ ಒಂದು ಸಾಲಿನ ಒಕ್ಕಣೆಯ ಕೆಳಗೆ ಸಹಿ ಇತ್ತು. +ಹಿಂದಿನ ದಿನ ಕಮಲ "ನಿಂಗೆ, ಈಗ ಡಿಮ್ಯಾಂಡ್‌ ಬರೋ ಹಾಗಿದೆ. +ಚೆನ್ಶೈ ಜನ ತೀರಾ ಸಂಪ್ರದಾಯಸ್ಥರು. +ಈಗಾಗ್ಲೇ ಒಂದೆರಡು ಸಲ ನಿನ್ನ ಬಗ್ಗೆ ಪ್ರಶ್ನಿಸಿದ್ದಾರಂತೆ. +ನೀನು ಬರದ್ದು ನೂರು ಪ್ರಶ್ನೆಗಳಿಗೆ ದಾರಿಯಾಗುತ್ತೆ. +ಅದ್ಕೇ ನಿನ್ನ ಬಂದು ಕರ್ಕೊಂಡ್ಹೋಗ್ತಾರಂತೆ ಮೃಣಾಲಿನಿ ಅತ್ತೆ" ಹೇಳಿದ್ದು ನೆನಪಾಯಿತು. +ಅದಕ್ಕೆ ಇದೊಂದು ಪೀಠಿಕೆಯಾ ? +ಚೀಟಿಯನ್ನ ಸೀರೆಯ ಬಾಕ್ಸ್‌ನಲ್ಲಿ ಹಾಕಿ ತೆಗೆದಿಟ್ಟಳು. +ಪ್ರೀತಿ, ಪ್ರೇಮ,ಸಂಬಂಧಗಳು ತೀರಾ ವ್ಯವಹಾರವಾದರೇ, ಅಲ್ಲೇನು ಉಳಿಯದೆನಿಸಿತು. +ಎಷ್ಟು ಕಠಿಣವಾಗಿ ವರ್ತಿಸಿದ್ದ ಮೂರ್ತಿ. +ಎಷ್ಟು ಕೆಟ್ಟದಾಗಿ ನಡೆದುಕೊಂಡಿದ್ದ. +ಕಣ್ಣಿಂದ ಹರಿದ ಕಂಬನಿಯನ್ನೊರೆಸಿಕೊಂಡು ಹೊರ ಬಂದಾಗ ಡಾ।| ನವೀನ್‌ ಅಚ್ಚರಿಯಿಂದ ಕಣ್ಣರಳಿಸಿದ. +ತಂಗಿ ಗಂಡ ಕಳಿಸಿದ ಸೀರೆಯುಟ್ಟು ಖುಷಿಯಿಂದ ಹೊರ ಬರುತ್ತಾಳೆಂದು ತಿಳಿದಿದ್ದು ತಪ್ಪಾಗಿತ್ತು. +"ಹಾಯ್‌, ಚಾರು ಇಬ್ರೂ ರಜ ಹಾಕಿ ಮನೆಯಲ್ಲಿ ಉಳಿದ್ರೆ ಅಪ್ಪನ ಕೈಯ ಬಿಸಿ ಬಿಸಿ ಒಬ್ಬಟ್ಟು ತಿನ್ನಬಹುದು." ಉತ್ಸಾಹದಿಂದ ನಕ್ಕಾಗ ಕಿರು ನಗೆ ಬೀರಿದಳು +"ನಿಂದು ಫೈವೇಟ್‌ ನರ್ಸಿಂಗ್‌ ಹೋಂ. +ನಂದು ಕೂಡ ಪೈವೇಟ್‌ ಕಂಪನಿ,ಟೆಂಪರರೀ ಜಾಬ್‌. +ರಜ ಹಾಕ್ಕೊಂಡ್‌ ಆಗಾಗ ಮನೆಯಲ್ಲಿ ಕೂತರೇ, ಅವ್ರು ಬೇರೆ ಡಿಸಿಷನ್‌ ತಗೋತಾರೆ. +ಅದೆಲ್ಲ ಬೇಡ. +ನಾನಂತೂ ಹೊರಟಿದ್ದೀನಿ." +ಅಣ್ಣ, ತಂಗಿ ಬಾಗಿಲಿಗೆ ಬರುವ ವೇಳೆಗೆ ಯುಗಂಧರ್‌ ಕಾರುನಿಂದ ಕೆಳಗಿಳಿಯುತ್ತಿದ್ದರು. +ಕ್ಷಣ ಅವನ ಅವುಡುಗಳು ಬಿಗಿಯಾಯಿತು. +ಮರುಕ್ಷಣವೇ ಅದು ಸೌಜನ್ಯವಲ್ಲವೆನಿಸಿತು. +"ಬನ್ನಿ. . . . . . " ಎಂದರು ಇಬ್ಬರು ಒಟ್ಟಿಗೆ. +ಹೆಂಡತಿಯೊಂದಿಗೆ ಯುಗಂಧರ್‌ ಬಂದರು. +ಹಾರ್ಟ್‌ ಅಟ್ಯಾಕ್‌ ನಂತರ ಇಂದೇ ಅವರು ಸ್ಟೀರಿಂಗ್‌ ವ್ಹೀಲ್‌ ಮುಂದೆ ಕೂತಿದ್ದು "ವಾಸುದೇವಯ್ಯ ಇದ್ದಾರ ?"ಕೇಳಿದರು. +ಅವರ ದನಿಯಲ್ಲಿ ಸಹಜತೆ ಮೂಡಲಿಲ್ಲ. +“ಇದ್ದಾರೆ” ತಂದೆಯನ್ನ ಕರೆಯಲು ಒಳಗೆ ಹೋದಳು ಚಾರುಲತ. +ಅವಳ ನಿರ್ಧಾರ ಸ್ಪಷ್ಟವಾಗಿದ್ದರಿಂದ ಅವಳೇನು ವಿಚಲಿತಳಾಗಲಿಲ್ಲ. +“ಯುಗಂಧರ್ ಪತ್ನಿಯೊಂದಿಗೆ ಬಂದಿದ್ದಾರೆ. +ನೀವೇನು ಎಕ್ಸೈಟ್‌ ಆಗೋದ್ಬೇಡ. +ಸಹಜವಾಗಿ ಮಾತಾಡಿಸಿದರೇ ಸಾಕು?” ಅವರ ಕೈ ಹಿಡಿದು ಹೇಳಿದಳು. +ಬಹಳ ಅವಮಾನ ಅನುಭವಿಸಿದ್ದರು. +ಅವರನ್ನ ಹೊರಗೆ ಕಳಿಸಿ ತಾನೇ ಕಾಫಿ ಹಿಡಿದು ಬಂದಳು. +ಮೃಣಾಲಿನಿ ಎದ್ದು ಸೊಸೆಯ ಹಣೆಗೆ ಕುಂಕಮ ಹಚ್ಚಿ "ಹ್ಯಾಪಿ ಬರ್ಟ್‌ ಡೇ, ನಿಂಗೆ ಗಿಫ್ಟ್‌ ಕಳ್ಸಿದ್ದಾಳೆ" ಒಂದು ಸ್ಯಾರಿ ಪ್ಯಾಕೆಟ್‌ ಅವಳ ಕೈಯಲ್ಲಿಟ್ಟರು. +ಅದೇನು ಹಿತವಾದ ಸ್ಪರ್ಶವೆನಿಸಲಿಲ್ಲ ಅವಳಿಗೆ, ತಣ್ಣಗಿದ್ದಳು. +"ಪೂಜಾ ಮದ್ವೆಯ ನಿಶ್ಚಿತಾರ್ಥ. +ಎಲ್ಲಾ ನಾಳೆ ಅಲ್ಲಿಗೆ ಬಂದ್ಬಿಡ್ಬೇಕು" ಅಂದರು ಮತ್ತೊಮ್ಮೆ . +ಡಾ|।ನವೀನ್‌ ಹ್ಞೂಗುಟ್ಟಿ ನಾಲ್ಕು ಹೆಜ್ಜೆ ಹಿಂದಕ್ಕೆ ಸರಿದ. +ವಾಸುದೇವಯ್ಯ "ಆಯ್ತು. . . . " ಎಂದರು. +ಮನಗಳಲ್ಲಿನ ವಿಷಾದ ಕರಗಿ ಹೋಗಲು ಅದೇನು ಮಂಜಾ ? +ಅದಕ್ಕೂ ಸೂರ್ಯನ ಬಿಸಿಲು ಸೋಕಬೇಕು. +ಬಹಳ ಪ್ರಯತ್ನಪಟ್ಟರೂ ಯುಗಂಧರ್‌ನಿಂದ ಮಾತಾಡಲಾಗಲಿಲ್ಲ. +"ಬೆಳಿಗ್ಗೆನೇ ಬಂದ್ಬಿಡ್ಬೇಕು" ಎಂದವರು ಮೇಲೆದ್ದರು. +ಎಲ್ಲಾ ಕಲ್ಲಾಗಿದ್ದರು. +ಏನೇ ಪ್ರಯತ್ನಿಸಿದರೂ ಪ್ರತಿಕ್ರಿಯಿಸಲಾಗಲಿಲ್ಲ. +"ಚಾರುಲತನ ಕರ್ಕೊಂಡ್ಹೋಗ್ತೀವಿ" ಎಂದರು ಮೃಣಾಲಿನಿ. +ಅಪ್ಪ, ಮಗ ಏನು ಮಾತಾಡಲಿಲ್ಲ. +ಅವರಿಗೆ ಸಂತೋಷವೋ, ದುಃಖವೋ,ಸಂಭ್ರಮವೋ, ಇಲ್ಲ ಸ್ವಾಭಿಮಾನದ ಸತ್ವ ಪರೀಕ್ಷೆಯೋ ? +"ನಿನ್ನ ಸೂಟುಕೇಸ್‌ ತಂದ್ಬಿಡಮ್ಮ ಎಂದು ಯುಗಂಧರ್‌ ಆಚೆ ಹೋದರು. +"ಈಗ್ಪಂದೆ. . . . "ಎಂದು ಒಳಗೆ ಹೋದ ಚಾರುಲತ ಮೂರ್ತಿಯಿಂದ ಬಂದ ಸೀರೆಯ ಪ್ಯಾಕೆಟ್‌ನ ಜೊತೆ ಹರಿಶಿನ, ಕುಂಕುಮ ತಾಂಬೂಲ ತಂದು ಕೊಟ್ಟಾಗ ಆಕೆ ಹುಬ್ಬೇರಿತು "ಇದೆಲ್ಲ ಈಗ ಯಾಕೆ" ಎಂದರು. +"ನನ್ನ ಹುಟ್ಟಿದ ಹಬ್ಬ ಅಲ್ವಾ ? +ನಿಮ್ಗೇ ಕೊಟ್ಟು ಆಶೀರ್ವಾದ ಪಡ್ಕೊಣಾಂತ" ಎಂದು ಅದನ್ನೆಲ್ಲ ಒಂದು ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗೆ ಹಾಕಿಕೊಟ್ಟು ಬಗ್ಗಿ ನಮಸ್ಕರಿಸಿ" ನಾಳೆ ನಿಶ್ಚಿತಾರ್ಥ ಒಂದೆರಡು ಗಂಟೆಗಳು ಇರೋವಾಗ್ಗೇ ಬರ್ತಿನಿ. +ನೀವೇನು ಅದಕ್ಕೋಸ್ಕರ ತಲೆ ಕೆಡ್ಸಿ ಕೊಳ್ಳೋದ್ಬೇಡ. +ನೀವು ಸಾಕಷ್ಟು ಸಲ ರಾಮಾಯಣ ಓದಿರಬೇಕು. +ಸೀತೆ ಯಾರ ಸಹಾನುಭೂತಿನು ಅಪೇಕ್ಷಿಸೋಲ್ಲ. +ಹೆಣ್ಣು ಕುಲಕ್ಕೆ ಮಾರ್ಗದರ್ಶಿ. +ತುಂಬು ಬಸುರಿಯನ್ನ ರಾಮ ಯಾವುದೇ ಕಾರಣಕ್ಕೆ ಕಾಡಿಗೆ ಕಳುಹಿಸಿರಲೀ, ಪತಿಯ ಬಗ್ಗೆ ಗೌರವ ಇರಲೀ ಆದರೆ ಮತ್ತೆ ಪತಿಯೊಂದಿಗೆ ಸಂಸಾರ ಮಾಡಲು ಇಚ್ಛಿಸದೇ ಭೂಗರ್ಭ ಸೇರಿ ಹೋದಳು. +ನಿಮ್ಗೆ ಅರ್ಥವಾಗಿರುತ್ತೆ ಅಂದ್ಕೊಂಡಿದ್ದೀನಿ. +ನನ್ನಿಂದ ಪೂಜಾಗೆ ತೊಂದರೆಯಾಗೋಲ್ಲ. +ನಾಳೆ ನಿಶ್ಚಿತಾರ್ಥಕ್ಕೂ ಬರ್ತಿನಿ. +ಮದ್ವೆಯ ಮನೆಯಲ್ಲು ಓಡಾಡ್ತೀನಿ. +ಇಷ್ಟುಸಾಕು ಹೋಗ್ಬನ್ನಿ" ತಟ್ಟೆಯನ್ನ ಒಳಗೆ ಒಯ್ದಳು. +ಅವಳ ನಿರ್ಧಾರ ಅಚಲವಾಗಿತ್ತು. +ಕಾರು ಹೊರಟ ನಂತರವೇ ಹೊರಗೆ ಬಂದಿದ್ದು ಚಾರುಲತ. +"ನಾನು, ಈ ವಿಷ್ಯದಲ್ಲಿ ನಿಮ್ಮಗಳ ಸಲಹೆ ಪಡೀಲಿಲ್ಲ. +ದಾಂಪತ್ಯಕ್ಕೆ ಬೇಕಾಗಿರೋದು ಪ್ರೀತಿ, ಸಾಮರಸ್ಯ. +ಒತ್ತಡಕ್ಕಾಗಿ, ವ್ಯವಸ್ಥೆಗಾಗಿ ಬೇರೆಯವರನ್ನ ಮೆಚ್ಚಿಸಲು ಸಾಧ್ಯವಿಲ್ಲ. +ನನ್ನ ಕ್ಷಮಿಸಿಬಿಡಿ" ಎಂದು ಹೊರಗೆ ಹೋದಳು. +ಅಪ್ಪ, ಮಗನ ಕಣ್ಣುಗಳಲ್ಲಿ ಮೂಡಿದ್ದು ಮೆಚ್ಚುಗೆಯಾದರೇ, ನೀರದ ಕಣ್ಣಲ್ಲಿ ಕಂಬನಿ. +ಚಾರುಲತ ಅವಳ ಮುಂದೆ ಬಹಳ ಎತ್ತರಕ್ಕೆ ಬೆಳೆದಿದ್ದಳು.