diff --git "a/Data Collected/Kannada/MIT Manipal/\340\262\227\340\263\213\340\262\225\340\262\276\340\262\225_\340\262\206\340\262\257\340\263\213\340\262\227_\340\262\260\340\262\232\340\262\250\340\263\206\340\262\257_\340\262\271\340\262\277\340\262\250\340\263\215\340\262\250\340\262\262\340\263\206.txt" "b/Data Collected/Kannada/MIT Manipal/\340\262\227\340\263\213\340\262\225\340\262\276\340\262\225_\340\262\206\340\262\257\340\263\213\340\262\227_\340\262\260\340\262\232\340\262\250\340\263\206\340\262\257_\340\262\271\340\262\277\340\262\250\340\263\215\340\262\250\340\262\262\340\263\206.txt" new file mode 100644 index 0000000000000000000000000000000000000000..8875eb6e94c127583b3aaedb8b5532f9ad160fe9 --- /dev/null +++ "b/Data Collected/Kannada/MIT Manipal/\340\262\227\340\263\213\340\262\225\340\262\276\340\262\225_\340\262\206\340\262\257\340\263\213\340\262\227_\340\262\260\340\262\232\340\262\250\340\263\206\340\262\257_\340\262\271\340\262\277\340\262\250\340\263\215\340\262\250\340\262\262\340\263\206.txt" @@ -0,0 +1,53 @@ +ಗೋಕಾಕ ಆಯೋಗವು ರಚನೆಯಾಗುವ ಹಿಂದೆ ಕರ್ನಾಟಕದ ಪ್ರೌಢಶಾಲೆಗಳಲ್ಲಿ ಕಲಿಸುತ್ತಿದ್ದ ವಿವಿಧ ಭಾಷೆಗಳ ವಿಷಯದಲ್ಲಿ ಒಂದು ವಿವಾದವೆದ್ದಿತ್ತು . +ವಿವಿಧ ಮಾಧ್ಯಮದ ಪ್ರೌಢಶಾಲೆಗಳಲ್ಲಿ ಕನ್ನಡ , ಇಂಗ್ಲಿಷು , ತಮಿಳು , ತೆಲುಗು , ಮರಾಠಿ ಮುಂತಾದ ಆಡುಮಾತುಗಳ ಜೊತೆಗೆ ಸಂಸ್ಕೃತವೂ ಪ್ರಥಮ ಭಾಷೆಯಾಗಿತ್ತು . +ಪ್ರಾಥಮಿಕ ಶಾಲೆಗಳಲ್ಲಿ ಸಂಸ್ಕೃತ ಕಲಿಯುವ ವ್ಯವಸ್ಥೆ ಇರದಿದ್ದರೂ , ಪ್ರೌಢಶಾಲೆಗಳಲ್ಲಿ ಆ ಭಾಷೆಯನ್ನು ಮೊದಲ ಭಾಷೆಯಾಗಿ ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸದಿಂದ ಶಿಕ್ಷಣ ಪ್ರಾರಂಭವಾಗುತ್ತಿತ್ತು . +ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಯು ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಆರಿಸಿಕೊಂಡಿದ್ದರೆ ತುಂಬ ಸುಲಭವಾದ ಪಾಠಗಳನ್ನು ಕಲಿತು , ಸಾಕಷ್ಟು ಹೆಚ್ಚು ಕಲಿತ ಇತರ ಭಾಷೆಗಳ ವಿದ್ಯಾರ್ಥಿಗಳಿಗಿಂತ ತುಂಬ ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದ . +ಅಲ್ಲದೆ , ವಿದ್ಯಾರ್ಥಿಗಳನ್ನು ಆಕರ್ಷಿಸುವ ದೃಷ್ಟಿಯಿಂದ ಸಂಸ್ಕೃತ ಅಧ್ಯಾಪಕರು ತುಂಬ ಧಾರಾಳವಾಗಿ ಅಂಕಗಳನ್ನು ಕೊಡುವ ರೀತಿಯಿತ್ತು . +ಈಗಲೂ ಇದೆ . +ಸಂಸ್ಕೃತವನ್ನು ಎಸ್.ಎಸ್.ಎಲ್.ಸಿ .ವಿದ್ಯಾರ್ಥಿಯು ಕಲಿಯುವುದು ಮೂರು ವರ್ಷಗಳ ಕಾಲ ಮಾತ್ರ ; ಕನ್ನಡ ವಿದ್ಯಾರ್ಥಿ ಪ್ರಾಥಮಿಕ ಮೊದಲ ತರಗತಿಯಿಂದಲೇ , ಅಂದರೆ ಹತ್ತು ವರ್ಷಗಳ ಕಾಲ ಕಲಿಯುತ್ತಾನೆ . +ಮೂರು ವರ್ಷ ಮಾತ್ರ ಕಲಿತ ಭಾಷೆಯ ಮಟ್ಟದೊಂದಿಗೆ ಅದನ್ನು ಹೋಲಿಸುವುದು ಸರಿಯಲ್ಲ . +ಆಲ್ಲದೆ, ಸಂಸ್ಕೃತ ಪತ್ರಿಕೆಯನ್ನು ವಿದ್ಯಾರ್ಥಿಗಳು ಉತ್ತರಿಸುವುದು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ . +ಹೀಗಾಗಿ, ಸಂಸ್ಕೃತವನ್ನು ಮೊದಲ ಭಾಷೆಯಾಗಿ ಆರಿಸಿಕೊಂಡರೆ ಹೆಚ್ಚು ಅಂಕಗಳನ್ನು ಪಡೆಯಬಹುದು ಎಂಬ ಕಾರಣಕ್ಕಾಗಿಯೇ ಭಾಷೆಯನ್ನು ಆರಿಸಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಬರಬರುತ್ತ ಹೆಚ್ಚಾಗುತ್ತ ಸಾಗಿತು . +ಇತರ ಮಾತೃಭಾಷೆಯ ಜನರಿಗಿಂತ ನಿರಭಿಮಾನಿಗಳಾದ ಕನ್ನಡಿಗರು ತಮ್ಮ ಮಕ್ಕಳನ್ನು ಸಂಸ್ಕೃತ ತೆಗೆದುಕೊಳ್ಳಲು ಪ್ರೋತ್ಸಾಹಿಸುತ್ತಿದ್ದರು. +ಅದರ ಪರಿಣಾಮವಾಗಿ ಪ್ರೌಢಶಾಲೆಗಳಲ್ಲಿ ಕನ್ನಡವನ್ನು ಮೊದಲ ಭಾಷೆಯಾಗಿ ಓದುವ ವಿದ್ಯಾರ್ಥಿಗಳ ಸಂಖ್ಯೆಯು ಗಣನೀಯವಾಗಿ ಇಳಿಯತೊಡಗಿತು . +ಘನತೆಯ ಪ್ರತೀಕಗಳಾದ ಕೆಲವು ಶಾಲೆಗಳಲ್ಲಿಯಂತೂ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಅತ್ಯಲ್ಪವಾಗಿತ್ತು . +ಇದರಿಂದ ಕಾಲೇಜುಗಳಲ್ಲಿ ಕನ್ನಡವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಯಿತು . +ಇದರೊಡನೆ ಕನ್ನಡದಂತಹ ಆಡು ನುಡಿಗಳನ್ನು ಮಕ್ಕಳು ಹುಟ್ಟಿದ ಕ್ಷಣದಿಂದಲೇ ಕಿವಿಗೆ ಹಾಕಿಕೊಳ್ಳುತ್ತ ಪ್ರಯತ್ನವಿಲ್ಲದೆ ಆ ಭಾಷೆಯಲ್ಲಿ ವ್ಯವಹರಿಸುವ ಶಕ್ತಿಯನ್ನು ಗಳಿಸಿಕೊಳ್ಳುತ್ತವೆ . +ಇದನ್ನೇ ಪ್ರಥಮ ಭಾಷೆಯೆನ್ನುವುದು . +ಇಂತಹ ಭಾಷೆಗಳ ಜೊತೆಯಲ್ಲಿ ಪ್ರಪಂಚದಲ್ಲಿ ಯಾರೂ ಮಾತನ್ನೇ ಆಡದ ಸಂಸ್ಕೃತವನ್ನು ಸೇರಿಸುವುದು ಅತ್ಯಂತ ಅವೈಜ್ಞಾನಿಕವಾದ ಪರಿಪಾಠ . +ಈ ಮೇಲಿನ ಕಾರಣಗಳಿಂದ ಕರ್ನಾಟಕದ ಕೆಲವು ಹಿರಿಯ ವಿಚಾರವಂತರು ಸರ್ಕಾರಕ್ಕೆ ಮನವಿ ಸಲ್ಲಿಸಿ ಸಂಸ್ಕೃತವನ್ನು ಮೊದಲ ಭಾಷೆಯ ಸ್ಥಾನದಿಂದ ತೆಗೆಯಬೇಕೆಂದು ಒತ್ತಾಯಿಸಿದರು . +ದೀರ್ಘಕಾಲ ಸಂಸ್ಕೃತ ಪರವಾದಿಗಳು ಸಂಸ್ಕೃತಕ್ಕೆ ಮೊದಲಸ್ಥಾನ ನೀಡುವುದರ ಪರವಾಗಿ ಚರ್ಚೆಗಳಲ್ಲಿ ತೊಡಗಿದರು . +ಕೊನೆಗೆ ಸಂಸ್ಕೃತ ಆಡುಭಾಷೆಗಳೊಡನೆ ಪ್ರಥಮ ಭಾಷೆಗಳ ಸಾಲಿನಲ್ಲಿ ಕೂರುವುದು ಅವೈಜ್ಞಾನಿಕವೆಂಬುದನ್ನರಿತ ಕರ್ನಾಟಕ ಸರ್ಕಾರವು ೧೯೭೯ರ ಅಕ್ಟೋಬರ್‌ನಲ್ಲಿ ಒಂದು ಆಜ್ಞೆಯನ್ನು ಹೊರಡಿಸಿತು . +ಅದರಂತೆ ಸಂಸ್ಕೃತವನ್ನು ತೃತೀಯ ಭಾಷೆಯಾಗಿ ಮಾತ್ರ ಓದಲು ಅವಕಾಶವಿತ್ತು . +ಆದರೆ ಇದರಿಂದ ಮತ್ತಷ್ಟು ಜೋರಾಗಿ ವಿವಾದವು ಮುಂದುವರೆಯಿತು . +ಈ ವಿವಾದವನ್ನು ಉಚ್ಚ ನ್ಯಾಯಾಲಯಕ್ಕೂ ಒಯ್ಯಲಾಯಿತು . +ವಿಧಾನಮಂಡಲದ ಎರಡೂ ಸಭೆಗಳಲ್ಲಿ ಇದರ ಬಗ್ಗೆ ಚರ್ಚೆಯಾಯಿತು . +ಆದರೆ ಅಲ್ಲಿಯೇ ವಿವಾದವನ್ನು ತೀರ್ಮಾನಿಸುವುದಕ್ಕಿಂತ ,ಆ ವಿಷಯವನ್ನು ತಜ್ಞರ ಸಮಿತಿಯೊಂದಕ್ಕೆ ಒಪ್ಪಿಸಿ , ಅದರ ನಿರ್ಣಯವನ್ನನುಸರಿಸಿ ತೀರ್ಮಾನ ಕೈಗೊಳ್ಳುವುದು ಸೂಕ್ತವೆಂಬ ಸರ್ಕಾರದ ಅಭಿಪ್ರಾಯವನ್ನು ಸದಸ್ಯರು ಅನುಮೋದಿಸಿದರು . +ಇದಕ್ಕೆ ಅನುಗುಣವಾಗಿ ಸರ್ಕಾರವು ಕ್ರಮಾಂಕ ಇಡಿ - ೧೧೩ / ಎಸ್ ಒ ಎಚ್ / ೭೯ , ದಿನಾಂಕ ೫ನ ೇ ಜುಲೈ , ೧೯೮೦ರ ಂದು ಆಜ್ಞೆಯೊಂದನ್ನು ಹೊರಡಿಸಿ ಒಂದು ಸಮಿತಿಯನ್ನು ನೇಮಿಸಿತು . +ಡಾ |ವಿ .ಕೃ .ಗೋಕಾಕ ಇದರ ಅಧ್ಯಕ್ಷರು .ಶ್ರೀಯುತರಾದ ಜಿ.ನಾರಾಯಣ , ಎಸ್ .ಕೆ .ರಾಮಚಂದ್ರರಾವ್ , ತ .ಸು .ಶಾಮರಾವ್ , ಕೆ .ಕೃಷ್ಣಮೂರ್ತಿ , ಎಚ್ .ಪಿ .ಮಲ್ಲೇದೇವರು ಈ ಸಮಿತಿಯ ಇತರ ಸದಸ್ಯರುಗಳಾದರು . +ಆಗ ಶಿಕ್ಷಣ ಇಲಾಖೆಯ ಅಡಿಷನಲ್ ಕಾರ್ಯದರ್ಶಿಗಳಾಗಿದ್ದ ಶ್ರೀ ಎಸ್.ಮಂಚಯ್ಯ ಈ ಸಮಿತಿಯ ಪದವಿಮಿತ್ತ ಕಾರ್ಯದರ್ಶಿಗಳಾಗಿ ನೇಮಕಗೊಂಡರು . +ಸಮಿತಿಯು ಪರಿಶೀಲನೆ ನಡೆಸಿ ತನ್ನ ಶಿಫಾರಸುಗಳನ್ನು ಮಾಡಲು ಸರ್ಕಾರವು ಅದರ ಮುಂದೆ ಮೂರು ಪ್ರಶ್ನೆಗಳನ್ನು ಇಟ್ಟಿತು . +೧ ) ಸಂಸ್ಕೃತವು ಶಾಲಾ ಪಠ್ಯವಿಷಯಗಳಲ್ಲಿ ಅಭ್ಯಾಸದ ಒಂದು ವಿಷಯವಾಗಿ ಉಳಿಯಬೇಕೆ ? +೨ ) ಹಾಗೆ ಉಳಿಯಬೇಕಾದರೆ ಕನ್ನಡಕ್ಕೆ ಪರ್ಯಾಯವಾಗದೇ ಅದನ್ನು ಉಳಿಸಿಕೊಳ್ಳುವುದು ಹೇಗೆ ? +೩ ) ತ್ರಿಭಾಷಾ ಸೂತ್ರದಂತೆ ಕನ್ನಡವನ್ನು ಕಡ್ಡಾಯಮಾಡಿ ಮಿಕ್ಕ ಭಾಷೆಗಳಲ್ಲಿ ಯಾವುದಾದರೂ ಎರಡನ್ನು ಆರಿಸಿಕೊಳ್ಳುವ ಸ್ವಾತಂತ್ರ ವನ್ನು ವಿದ್ಯಾರ್ಥಿಗಳಿಗೇ ಬಿಡುವುದು ಸೂಕ್ತವೇ ? +ಈ ವಿಷಯಗಳ ಬಗ್ಗೆ ತನ್ನ ಶಿಫಾರಸುಗಳನ್ನು ಮೂರು ತಿಂಗಳೊಳಗಾಗಿ ನೀಡಬೇಕೆಂದು ಸರ್ಕಾರವು ಸಮಿತಿಗೆ ಆದೇಶಿಸಿತು . +ಗೋಕಾಕ್ ಸಮಿತಿಯು ರಾಜ್ಯಾದ್ಯಂತ ಸಂಚಾರಮಾಡಿ ( ಕೆಲವೇಳೆ ಪ್ರತಿರೋಧ ಎದುರಿಸಿ ) ಅಂತಿಮವಾಗಿ ಒಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು . +ಅದಕ್ಕನುಗುಣವಾಗಿ ಪ್ರೌಢಶಾಲೆಗಳಲ್ಲಿ ೧೫೦ ಅಂಕಗಳಿಗೆ ಕನ್ನಡವನ್ನು ಏಕೈಕ ಪ್ರಥಮಭಾಷೆಯಾಗಿಯೂ , ೧೦೦ ಅಂಕಗಳಿಗೆ ಮತ್ತೊಂದು ಭಾಷೆಯನ್ನು ದ್ವಿತೀಯ ಭಾಷೆಯಗಿಯೂ ಹಾಗೂ ೫೦ ಅಂಕಗಳಿಗೆ ಮಗುದೊಂದು ಭಾಷೆಯನ್ನು ತೃತೀಯ ಭಾಷೆಯಾಗಿಯೂ ಆರಿಸಿಕೊಳ್ಳುವ ಅವಕಾಶವಿರಬೇಕೆಂಬ ಶಿಫಾರಸು ಮೂಡಿ ಬಂದಿತು . +ಆವರೆಗೆ ತೃತೀಯ ಭಾಷೆ ಪರೀಕ್ಷೆಗೆ ಕಡ್ಡಾಯವಾಗಿರಲಿಲ್ಲ . +ಆದರೆ ಗೋಕಾಕ್ ಸಮಿತಿಯು ಎಲ್ಲ ಮೂರು ಭಾಷೆಗಳೂ ಪರೀಕ್ಷೆಗೆ ಕಡ್ಡಾಯವಾಗಿರಬೇಕೆಂದು ಅಭಿಪ್ರಾಯ ಪಟ್ಟಿತು . +ಎಂಟನೆಯ ತರಗತಿಯಿಂದ ಏಕೈಕ ಪ್ರಥಮ ಭಾಷೆಯಾಗಿ ಕನ್ನಡವನ್ನು ಕಲಿಯಲು ತಕ್ಕಸಿದ್ಧತೆಯಾಗಿ ಪ್ರಾಥಮಿಕ ಮೂರನೆಯ ತರಗತಿಯಿಂದ ಕನ್ನಡವನ್ನು ಒಂದು ಕಡ್ಡಾಯ ಭಾಷೆಯಾಗಿ ಕಲಿಸಬೇಕೆಂದೂ ಸಮಿತಿ ಸೂಚಿಸಿತ್ತು . +ಆಗಿನ ಮುಖ್ಯಮಂತ್ರಿ ಶ್ರೀ ಗುಂಡೂರಾವ್ ಒಂದು ಸಭೆಯಲ್ಲಿ ಮಾತನಾಡುತ್ತ ವರದಿಯ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಲಾಗುವುದೆಂದು ಘೋಷಿಸಿದರು . +ಆದರೆ ಸ್ವಲ್ಪ ಕಾಲದಲ್ಲಿಯೇ ವರದಿಯ ವಿರುದ್ಧವಾಗಿ ಅಲ್ಪಸಂಖ್ಯಾತರ ನಾಯಕರೆಂದುಕೊಂಡಿದ್ದ ಹಲವರು ವಿಧಾನಸೌಧಕ್ಕೆ ಲಾರಿಗಳಲ್ಲಿ ಜನರನ್ನು ಕರೆದೊಯ್ದು ಪ್ರದರ್ಶನ ನಡೆಸಿದರು . +ಓಟಿಗಾಗಿ ಏನು ಮಾಡಲೂ ಹೇಸದ ಸರ್ಕಾರವು ಅಲ್ಪಸಂಖ್ಯಾತರು ವಿರೋಧಿಸಿಯಾರೆಂದು ಹೆದರಿ ವರದಿಯು ಜಾರಿಯ ಬಗ್ಗೆ ಮತ್ತೆ ಮೌನವಹಿಸಿತು . +ಸರ್ಕಾರದ ಮೌನ ಕನ್ನಡಿಗರಲ್ಲಿ ಅನುಮಾನದ ಹಿರಿಯ ಅಲೆಗಳನ್ನೇ ಏಳಿಸಿತು . +ತಡಮಾಡಿದರೆ ಮತ್ತೆ ಒಂದು ವರ್ಷ ಕಾಯಬೇಕು . +ಆದ್ದರಿಂದ ಕನ್ನಡದ ವ್ಯಕ್ತಿಗಳು ದೊಡ್ಡ ದನಿಯಲ್ಲಿ ಸರ್ಕಾರದ ಮೇಲೆ ಒತ್ತಾಯತರಲು ಪ್ರಯತ್ನಿಸಿದರು . +ವರದಿಯ ಅನುಷ್ಠಾನದಿಂದ ಆಗಬಹುದಾದ ಪರಿಣಾಮಗಳ ಕುರಿತು ಚರ್ಚೆ - ವಿಚಾರಸಂಕಿರಣಗಳಾದವು . +ಇಷ್ಟಾದರೂ ಸರ್ಕಾರ ಕ್ರಿಯಾಶೀಲವಾಗಲಿಲ್ಲ . +ಜನತೆ ಬೇಸತ್ತು ಹೋರಾಟಕ್ಕೆ ಸಿದ್ಧವಾಯಿತು . +೧೯೮೨ನೇ ಇಸವಿ ಏಪ್ರಿಲ್ ತಿಂಗಳು ಚಳುವಳಿ ಪ್ರಾರಂಭವಾಯಿತು . +ಮುಂದೆ ಹಿರಿದಾಗಿ ಬೆಳೆದ ಚಳುವಳಿಯ ಬೀಜಗಳು ಆಗ ಬಿತ್ತಲ್ಪಟ್ಟವು . +ಅದುವರೆಗೆ ಕೇವಲ ಚರ್ಚೆ - ವಿಚಾರ ವಿನಿಮಯಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದ ಸಾಹಿತಿಗಳು , ಕಲಾವಿದರರು ಹಾಗೂ ಬುದ್ಧಿಜೀವಿಗಳು ನೇರ ಹೋರಾಟಕ್ಕೆ ಕೈ ಹಾಕಿದರು . +ಶ್ರೀ ಶಂಬಾ ಜೋಷಿಯವರ ನೇತೃತ್ವದಲ್ಲಿ ಧಾರವಾಡದಲ್ಲಿ ಕನ್ನಡ ಕ್ರಿಯಾಸಮಿತಿಯಿಂದ ಮೊದಲು ನೇರ ಹೋರಾಟ ಪ್ರಾರಂಭವಾಯಿತು . +ಕುವೆಂಪು ಅವರ ಹಿರಿತನದಲ್ಲಿ ಮೈಸೂರು ಆ ದಾರಿಯನ್ನು ಅನುಸರಿಸಿತು . +ಇದರಿಂದ ಸ್ಫೂರ್ತಿಗೊಂಡ ಬೆಂಗಳೂರಿನ ಬುದ್ಧಿಜೀವಿಗಳು ಸಾಹಿತಿಗಳ ಕಲಾವಿದರ ಬಳಗದ ನೇತೃತ್ವದಲ್ಲಿ ಸರ್ಕಾರದ ಮೆಟ್ಟಲುಗಳ ಮುಂಭಾಗದಲ್ಲಿಯೇ ಬೀದಿ ಚಳುವಳಿಯನ್ನು ಪ್ರಾರಂಭಿಸಿದರು .