From 53805e76632d8fd5a3c7f192e737764dc7c9350f Mon Sep 17 00:00:00 2001 From: Narendra VG Date: Mon, 17 Apr 2023 15:47:53 +0530 Subject: [PATCH] Upload New File --- .../\340\262\207\340\262\263\340\262\276.txt" | 4294 +++++++++++++++++ 1 file changed, 4294 insertions(+) create mode 100644 "Data Collected/Kannada/MIT Manipal/Kannada-Scrapped-dta/\340\262\207\340\262\263\340\262\276.txt" diff --git "a/Data Collected/Kannada/MIT Manipal/Kannada-Scrapped-dta/\340\262\207\340\262\263\340\262\276.txt" "b/Data Collected/Kannada/MIT Manipal/Kannada-Scrapped-dta/\340\262\207\340\262\263\340\262\276.txt" new file mode 100644 index 0000000..0865ace --- /dev/null +++ "b/Data Collected/Kannada/MIT Manipal/Kannada-Scrapped-dta/\340\262\207\340\262\263\340\262\276.txt" @@ -0,0 +1,4294 @@ +ಹೊರಗೆ ಸುರಿಯುತ್ತಿದ್ದ ಮಳೆಯನ್ನೆ ದಿಟ್ಟಿಸುತ್ತಿದ್ದವನಿಗೆ ನೀಲಾ ಟೇಬಲ್ ಮೇಲೆ ತಿಂಡಿ ತಟ್ಟೆ ತಂದಿಟ್ಟಿದ್ದು ತಿಳಿಯಲೇ ಇಲ್ಲ. +ಇತ್ತ ಗಮನವೇ ಇಲ್ಲದಂತೆ ಕುಳಿತಿದ್ದವನನ್ನು ನೋಡಿ ಸಿಡಿಮಿಡಿಗುಟ್ಟಿದ್ದು ಒಂದೂ ಅವನಿಗರಿವಿಲ್ಲ. +ಪ್ರತಿಸಲ ಮಳೆ ಬಂದಾಗಲೂ ಮಳೆಯ ಮೊದಲ ಭುವಿಯ ಸ್ಪರ್ಶದ ಆ ಸುವಾಸನೆಯಿಂದ ಹನಿ ಹನಿ ಬೀಳುವ ಮಳೆಯಲ್ಲಿ ಕುಣಿದು ಕುಪ್ಪಳಿಸುವ ಸಿನಿಮಾ ನಾಯಕನ ಮನಸ್ಥಿತಿ ಇದ್ದರೂ, ಹಾಗೆ ಕುಣಿಯಲಾರದೆ ಮಳೆಯನ್ನೆ ದಿಟ್ಟಿಸುತ್ತ ಆ ಮಳೆಯಲ್ಲಿ ನೆನೆಯುತ್ತ ತೋಟ ಸುತ್ತುವ ಆನಂದ, ಬಿರುಮಳೆಯನ್ನು ಮನೆಯೊಳಗೆ ಕುಳಿತು ಬಿಸಿ ಬಿಸಿ ಕಾಫಿ ಹೀರುತ್ತ ಕಿಟಿಕಿಯಿಂದ ನೋಡುತ್ತ ಮೈಮರೆಯುವ ಪರಿ, ಗುಡುಗು-ಮಿಂಚು ಕರೆತರುವ ಆರ್ಭಟಿಸುವ ಮಳೆ, ಆ ರುದ್ರ ರಮಣೀಯ ನರ್ತನದ ಮಳೆ, ಮಳೆಯ ಪರಿ ಪರಿಯ ಅವತಾರಗಳೆಲ್ಲವನ್ನು ಆಸ್ವಾದಿಸುತ್ತಿದ್ದ ಮೋಹನನಿಗೆ ಈಗ ಈ ಮಳೆಯ ವೈಭೋಗ ಸವಿಯುವ ಮನಃ ಸ್ಥಿತಿಯಿಂದ ದೂರವೇ ಉಳಿದಿದ್ದಾನೆ. +ಎದೆ ಮೇಲಿನ ಹೆಬ್ಬಂಡೆ ಕರಗುವ ದಾರಿಯೇ ಕಾಣದಂತಾಗಿ ಕ್ಷಣಕ್ಷಣಕ್ಕೂ ಮಂಕಾಗುತ್ತಲೇ ಇದ್ದಾನೆ. +ಅದರ ಪರಿವೆ ಇಲ್ಲದೆ ನೀಲಾ, ಗಂಡನ ಈ ಮೌನಕ್ಕೆ ಅರ್ಥ ಹುಡುಕುವ ಯತ್ನ ಮಾಡದೆ ತನ್ನದೇ ಧಾಟಿಯಲ್ಲಿ ಗೊಣಗುಡುತ್ತಲೇ ಇದ್ದಾಳೆ. +ಪ್ರತಿಬಾರಿಯಂತೆ ಈ ಬಾರಿಯೂ ಮಳೆಯನ್ನು ನೋಡುತ್ತ ಮೈ ಮರೆತಿದ್ದಾನೆಂದೇ ಭಾವಿಸಿ – ಈ ಮಳೆ ಬಂದು ಬಿಟ್ರೆ ಸಾಕು ಎಂದೂ ಕಂಡಿಲ್ಲದಂತೆ ನೋಡುತ್ತ ಕುಳಿತುಬಿಟ್ರೆ ಆಯ್ತು, ಮುಂದಿನ ಕೆಲಸವೆಲ್ಲ ಬಾಕಿಯೇ, ಯಾಕಾದ್ರೂ ಹೀಗೆ ಮಳೆ ಸುರಿಯುತ್ತೋ – ಅನ್ನುವಷ್ಟು ಬೇಸರ ತರಿಸೋ ಈ ಮಳೆಯಲ್ಲಿ ಅಂಥ ಆನಂದ ಇರುವುದಾದರೂ ಏನು? +ಆಚೀಚೆ ಕಾಣಿಸಲಾರದಷ್ಟು, ಒಂದೇ ಸಮ ಸುರಿಯುವ ಮಳೆಯಲ್ಲಿ ಅದೇನು ಸೌಂದರ್ಯ ಅಡಗಿದೆಯೋ… +ಹೊರ ಹೋಗುವಂತಿಲ್ಲ, ಒಳ ಇರುವಂತಿಲ್ಲ. +ಎಲ್ಲೆಲ್ಲೂ ಮಳೆ. +ಮಳೆ ನಿಂತು ಆಕಾಶ ಶುಭ್ರವಾದರೆ ಸಾಕು ಎಂದು ನಾನು ಕಾಯುವಾಗ ಮಳೆ ಹೀಗೇ ಇರಬಾರದೆ ಎಂದು ಬೇಡುವ ಮೋಹನ, ಒಳ್ಳೆ ಜೋಡಿ ನಮ್ಮದು ಎಂದು ನಕ್ಕು ‘ಮಾರಾಯರೇ, ಎದ್ದೇಳಿ ನಿಮ್ಮ ಮಳೆ ಎಲ್ಲೂ ಹೋಗಲ್ಲ, ತಿಂಡಿ ತಿಂದು ತೋಟಕ್ಕೆ ಹೋಗಿ ಬನ್ನಿ, ಕೆಸುವಿನ ಸೊಪ್ಪು ಬೇಕು, ಮಳೇಲೇ ನೆನ್ಕೊಂಡು ಆನಂದ ಪಡ್ತ ಸೊಪ್ಪು ಕಿತ್ಕೊಂಡು ಬನ್ನಿ’ ಎಂದು ಎಚ್ಚರಿಸಿದಳು. +ಹೆಂಡತಿಯತ್ತ ಒಮ್ಮೆ ನೋಡಿ ಮತ್ತೇ ಕಿಟಿಕಿಯತ್ತಲೇ ದೃಷ್ಟಿ ನೆಟ್ಟ ಮೋಹನ ಮತ್ತೆ ಅಲ್ಲೇ ಕಳೆದುಹೋದ. +‘ಮೋಹನ ಏನಾಗಿದೆ ನಿಮ್ಗೆ? +ಯಾವ ವಾರಾನೂ ಸಂತೆ ತಪ್ಪಿಸಿದವರಲ್ಲ. +ಎಂತ ಮಳೆ ಸುರೀತಾ ಇದ್ರೂ ಕುಣಿಕ್ಕೊಂಡು ಹೋಗಿ ಸಾಮಾನು ತರ್ತಾ ಇದ್ರಿ. +ಈಗ ನೋಡಿ ಮನೆಯಲ್ಲಿ ಏನೂ ತರಕಾರಿ ಇಲ್ಲ. +ಇದ್ದ ತರಕಾರಿ ನೆನ್ನೇಗೆ ಮುಗೀತು . + ಈಗ ಏನಡಿಗೆ ಮಾಡ್ಲಿ. +ಮೋಹನ ಎದ್ದು ಹೋಗಿ ಮೊದ್ಲು’ ಸಣ್ಣಗೆ ರೇಗಿದಳು. +ಅಷ್ಟರಲ್ಲಿ ಮೊಬೈಲ್ ರಿಂಗಾಯಿತು. +ಪಟಕ್ಕನೆ ಮೊಬೈಲ್ ಎತ್ತಿಕೊಂಡ ಮೋಹನ ‘ಹಲೋ’ ಎಂದ. +ಯಾರದು ಫೋನ್ ಅಂತ ಕಿವಿಯನ್ನ ಅತ್ತಲೇ ಕೇಂದ್ರೀಕರಿಸಿದ ನೀಲಾಗೆ ಒಂದೂ ಮಾತನಾಡದೆ ಕೇಳಿಸಿಕೊಳ್ಳುತ್ತಿದ್ದ ಮೋಹನನ ರೀತಿ ಹೊಸದೆನಿಸಿತು. +ಮುಖದ ಭಾವಗಳಷ್ಟೆ ಬದಲಾಗುತ್ತಿದೆ! +ಒಂದು ಮಾತೂ ಹೊರಬಿದ್ದಿಲ್ಲ… +ಸುಮಾರು ಹತ್ತು ನಿಮಿಷ ಹಾಗೆ ಫೋನ್ ಹಿಡಿದು ನಿಂತಿದ್ದ. +ಅಲ್ಲಿಂದ ಕಟ್ ಮಾಡಿದರು ಅಂತ ಕಾಣುತ್ತೆ, ಮೊಬೈಲನ್ನು ಸೋಫದ ಮೇಲೆ ಎಸೆದು ಅಲ್ಲಿಯೇ ಕುಕ್ಕರಿಸಿ ತಲೆಯನ್ನು ಬಲವಾಗಿ ಹಿಡಿದುಕೊಂಡದ್ದನ್ನು ಕಂಡು ಗಾಬರಿಯಿಂದ ನೀಲಾ ‘ಮೋಹನ್ ಯಾರದು ಫೋನ್, ಏನಾಯ್ತು, ಯಾಕೆ ಹೀಗೆ ಕೂತ್ಕೊಂಡು ಬಿಟ್ರಿ’ ಎಂದು ಹತ್ತಿರ ಬಂದು ಕಳಕಳಿಯಿಂದ ಕೇಳಿದಳು. +ತಲೆ ಎತ್ತಿದ ಮೋಹನ್ ಒಮ್ಮೆ ದೀರ್ಘವಾಗಿ ಅವಳತ್ತ ನೋಡಿದ. +‘ನನ್ನ ಫ್ರೆಂಡ್‌ದು ಫೋನ್, ಕಾಫಿ ರೇಟ್ ಮತ್ತೆ ಇಳಿದಿದೆಯಂತೆ’ ಎಂದ ಮೆಲ್ಲಗೆ. +‘ಅಷ್ಟೇನಾ ನಾನು ಏನೋ ಅಂತ ಗಾಬರಿ ಆಗಿಬಿಟ್ಟಿದ್ದೆ. +ಹೋಗ್ಲಿ ಬಿಡಿ ಎಲ್ಲರಿಗೂ ಆಗಿದ್ದು ನಮಗೂ ಆಗುತ್ತೆ, ಮುಂದೆ ಜಾಸ್ತಿ ಆದ್ರೂ ಆಗಬಹುದು. +ಅದನ್ನೆ ದೊಡ್ಡದು ಮಾಡಿಕೊಂಡು ಆಕಾಶವೇ ಕಳಚಿ ಬಿದ್ದೋರ ತರ ಆಡಬೇಡಿ. +ನಾಳೆ ಅಗಲಟ್ಟಿ ಎಸ್ಟೇಟ್ ಮನೋಹರರ ಮಗಳ ಮದ್ವೆ, ಲಾಕರಿನಿಂದ ಒಡವೆ ತಗೊಂಡು ಬಂದುಬಿಡಿ, ನಾಲ್ಕು ಸೆಟ್ಟನ್ನೂ ತನ್ನಿ, ದೇವರಕಾರ್ಯ, ಮದ್ವೆ, ಆರತಕ್ಷತೆ, ಬೀಗರೂಟ ಅಂತ ಬೇಕಾಗುತ್ತೆ. +ಕಾರನ್ನ ಈಗ್ಲೆ ರಿಪೇರಿಗೆ ಬಿಟ್ಟಿದ್ದೀರಿ, ಮದ್ವೆಗೆ ಹೇಗೆ ಹೋಗೋದು. +ಇವತ್ತೆ ಕೊಡು ಅಂತ ಕೂತ್ಕೊಂಡು ರಿಪೇರಿ ಮಾಡಿಸಿಕೊಂಡು ಬನ್ನಿ. +ಆಯ್ತಾ ಇಲ್ಲದೆ ಇದ್ರೆ ಅವನದೆ ಯಾವುದಾದರೂ ಕಾರು ಇದ್ರೆ ಇಸ್ಕೊಂಡು ಬನ್ನಿ, ಆಯ್ತಾ, ಹೇಳಿದ್ದಲ್ಲ ನೆನಪಿದೆ ಅಲ್ವಾ, ಏಳಿ’ ಬಲವಂತಿಸಿದಳು. +ಮೋಹನ ಯಾವತ್ತು ಈ ರೀತಿ ತಲೆ ಕೆಡಿಸಿಕೊಂಡವನಲ್ಲ. +ಅವನು ಈ ರೀತಿ ಕುಳಿತಿರುವುದನ್ನು ನೋಡಲಾರದ ಬೇರೇನೂ ವಿಷಯ ತೆಗೆದು ಕಾಫಿ ರೇಟಿನ ವಿಷಯದಿಂದ ಹೊರಬರಲಿ ಎಂದಾಶಿಸಿದಳು. +ಯಾಕೋ ಈ ಬಾರಿ ಏಟಿನ ಮೇಲೆ ಏಟು. +ಶುಂಠಿ ಬೆಳೆದು ಎಲ್ಲರೂ ಲಕ್ಷ ಲಕ್ಷ ಬಾಚಿಕೊಳ್ತಾ ಇರುವಾಗ, ನಮ್ಮ ಗ್ರಹಚಾರಕ್ಕೆ ಶುಂಠಿನೂ ಕೈಕೊಡ್ತು. +ಬೇಡ ಬೇಡ ಅಂತ ಎಷ್ಟು ಹೇಳಿದ್ರೂ ಕೇಳದೆ ಶುಂಠಿ ಹಾಕಿ ನಾಲ್ಕೈದು ಲಕ್ಷ ಸುರಿದ್ರು. +ಆದ್ರೆ ಭೂಮಿಯಿಂದ ಒಂದು ಪೀಸು ಕೂಡ ಶುಂಠಿ ತೆಗೆಯಲಿಲ್ಲ. +ಅದನ್ನು ಕೀಳಿಸಿದ ಖರ್ಚು ಕೂಡ ಹುಟ್ಟಿಲ್ಲ ಅಂತ ಕೈ ಚೆಲ್ಲಿಬಿಟ್ರು. +ಮರ್ಯಾದೆಯಾಗಿ ಕಾಫಿ ಬೆಳ್ಕೊಂಡಿದ್ರೆ ಸಾಕಾಗಿತ್ತು. +ಅದ್ಯಾಕೆ ದುಡ್ಡು ಮಾಡಬೇಕು ಅಂತ ಹೊರಟರೋ, ಕೈ ಹಾಕಿದ್ದು ಮಣ್ಣಿಗೆ ಅಂತ ಗೊತ್ತಾದಲಾಗಿನಿಂದ ಸ್ವಲ್ಪ ಮಂಕಾಗಿಯೇ ಇದ್ದಾರೆ. +ಏನು ಮಾಡೋದು, ದುಡ್ಡು ಹೋದರೆ ಹೋಯ್ತು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಿದರಾಯಿತು. +ಕಾಫಿ ರೇಟು ಬೇರೆ ಬಿದ್ದುಹೋಗಿದೆ. +ಈ ವರ್ಷ ಸ್ವಲ್ಪ ಕಷ್ಟವೇ, ಮುಂದೆ ಯೋಚಿಸಲು ಆತಂಕವೆನಿಸಿ ಸುಮ್ಮನಾಗಿಬಿಟ್ಟಳು. +ಅಷ್ಟರೊಳಗೆ ಮೋಹನ ಡ್ರೆಸ್ ಬದಲಿಸಿಕೊಂಡು ಬಂದು ‘ಸಕಲೇಶಪುರಕ್ಕೆ ಹೋಗಿಬರ್ತೀನಿ, ಮಳೆ ಸ್ವಲ್ಪ ಕಡಿಮೆ ಆಗಿದೆ’ ಅಂತ ಹೇಳಿ ಹೊರಬಂದು ಬೈಕ್ ತೆಗೆದನು. +‘ನಾನು ಹೇಳಿದ್ದೆಲ್ಲ ನೆನಪಿದೆಯಾ, ಮೊದ್ಲು ಮೆಕಾನಿಕ್ ಹತ್ರ ಹೋಗಿ ಕಾರು ರೆಡಿ ಮಾಡಿಸಿ, ಆಮೇಲೆ ಬ್ಯಾಂಕಿಗೆ ಹೋಗಿ ಒಡ್ವೆ, ತಗೊಂಡು ಬನ್ನಿ. +ಜೋಪಾನ, ಬೇಗನೆ ಬನ್ನಿ. +ಕಾರು ರೆಡಿಯಾಗದೆ ಇದ್ರೆ ಸುಂದರೇಶ್ ಭಾವನಿಗೆ ಹೇಳಿ, ನಾವು ನಿಮ್ಮ ಜೊತೆಯಲ್ಲಿ ಮದ್ವೆಗೆ ಬರ್ತೀವಿ ಅಂತ. +ಹೇಗೂ ಇದೇ ದಾರೀಲಿ ಹೋಗ್ತಾರಲ್ಲ’ ಎಂದು ಹೇಳಿ ಮರೆಯದಂತೆ ಪದೇ ಪದೇ ಹೇಳಿದಳು. +ಅವಳ ಎಲ್ಲಾ ಮಾತಿಗೆ ಸರಿ ಎಂಬಂತೆ ತಲೆ ಅಲುಗಿಸುತ್ತ ಬೈಕ್ ಸ್ಟಾರ್ಟ್ ಮಾಡಿದ ಮೋಹನ. +ಅವನು ಅತ್ತ ಹೋತ್ತಿದ್ದಂತೆ, ಕೆಸುವಿನ ಸೊಪ್ಪು ಕಿತ್ತು ತರಲು ನೀಲಾ ತಾನೇ ತೋಟಕ್ಕೆ ಹೊರಟಳು. +ಮಳೆ ನಿಂತಿತ್ತು. +ಜೋರು ಮಳೆಯಲ್ಲಿ ಇಡೀ ತೋಟವೆಲ್ಲ ನೆಂದು ಮುದ್ದೆಯಾಗಿತ್ತು. +ಕಾಫಿ ಗಿಡಗಳೆಲ್ಲ ಮಳೆಯಲ್ಲಿ ಮಿಂದು ಚೊಕ್ಕಟವಾಗಿ ಹಸುರಾಗಿ ಕಂಗೊಳಿಸುತ್ತಿದ್ದವು. +ನೀಲಾಕಾಶ ಕಾಣದಂತೆ ಮೋಡ ಮುಚ್ಚಿಕೊಂಡು ತೋಟದೊಳಗೆ ಒಂದೇ ಒಂದು ಸೂರ್ಯನ ಕಿರಣವೂ ಒಳ ಪ್ರವೇಶಿಸದೆ ಸಂಜೆಯ ವಾತಾವರಣದಂತೆ ಭಾಸವಾಗುತ್ತಿತ್ತು. +ಮರದ ಮೇಲಿನ ಹನಿಗಳು ತೊಟ್ಟಿಕ್ಕುತ್ತಿದ್ದುದರಿಂದ ನೀಲಿ ಜರ್ಕಿನ್ ತೊಟ್ಟು, ಜರ್ಕಿನ್ ಟೋಪಿಯನ್ನು ತಲೆಗೆ ಸಿಕ್ಕಿಸಿಕೊಂಡಿದ್ದಳು. +ಕಾಲಿಟ್ಟಲ್ಲಿ ಜಾರುವಂತಿದ್ದ ಗಿಡಗಳ ಮಧ್ಯದ ಕಿರು ಹಾದಿಯಲ್ಲಿ ಬಹಳ ಎಚ್ಚರಿಕೆಯಿಂದ ಕಾಲಿಡುತ್ತ ಕೆಸುವಿನ ಸೊಪ್ಪು ಬೆಳೆದಿದ್ದ ಕಡೆಗೆ ಬಂದಳು. +ಮದುವೆಗೆ ಮುಂಚೆ ಈ ಸೊಪ್ಪಿನ ಗಂಧವೇ ಗೊತ್ತಿರಲಿಲ್ಲ ನೀಲಾಗೆ. +ಅತ್ತೆ ಇದ್ದಾಗ ಅದೆಷ್ಟು ರುಚಿಯಾಗಿ ಕೆಸುವಿನ ಪತ್ರೊಡೆ, ಕೆಸುವಿನ ಪಲ್ಯ, ಕೆಸುವಿನ ದಂಟು ಅಂತ ಐದಾರು ಬಗೆಯ ಅಡುಗೆ ಮಾಡಿ ಮತ್ತೆ ಮತ್ತೆ ಅದನ್ನು ತಿನ್ನಲು ಆಸೆ ಪಡುವಂತೆ ಮಾಡುತ್ತಿದ್ದರು. +ಈ ದಿನ ಕೆಸುವಿನ ಗಂಟು ಮಾಡುತ್ತೇನೆ, ಮಳೆಗೆ ಬಿಸಿ ಬಿಸಿ ರೊಟ್ಟಿ ಜೊತೆ ಚೆನ್ನಾಗಿರುತ್ತದೆ ಅಂದುಕೊಂಡು ಸರಸರನೇ ಸೊಪ್ಪನ್ನು ಕಿತ್ತುಕೊಂಡಳು. +ಇಬ್ಬರಿಗೆ ಎಷ್ಟು ಬೇಕು, ಕಿತ್ತದ್ದು ಸಾಕು ಎನಿಸಿ ಮತ್ತೇ ಕಾಲು ಹಾದಿಯಲ್ಲಿ ಎಚ್ಚರಿಕೆಯಿಂದ ನಡೆದು ಮನೆ ಸೇರಿದಳು. +ಸೊಪ್ಪಿನ ನಾರು ತೆಗೆದು ದಂಟನ್ನು ಮುರಿದು ಎಲೆಯನ್ನು ಬಟ್ಟೆಯಿಂದ ಚೆನ್ನಾಗಿ ಒರೆಸಿಕೊಂಡು ಸುರುಳಿ ಸುತ್ತಿ ನಯವಾಗಿ ಗಂಟು ಕಟ್ಟಿದಳು. +ಗಂಟು ಕಟ್ಟುವುದು ಒಂದು ಕಲೆ. +ಮೊದ ಮೊದಲು ಕಟ್ಟಿದ್ದ ಗಂಟುಗಳು ಕೆಳಗಿಡುವಷ್ಟರಲ್ಲಿ ಬಿಚ್ಚಿಕೊಂಡು ಮೊದಲಿನ ಸ್ವರೂಪ ತಾಳಿದಾಗ ಅತ್ತೆ ನಕ್ಕು ಗಂಟು ಕಟ್ಟುವ ರೀತಿಯನ್ನು ತೋರಿಸಿಕೊಡುತ್ತಿದ್ದರು. +ದಿನ ಕಳೆದಂತೆ ಅತ್ತೆಯ ಕೌಶಲ್ಯ ಕರಗತವಾಗಿತ್ತು. +ಈಗ ಅತ್ತೆಯಂತೆಯೇ ಗಂಟು ಕಟ್ಟುತ್ತಿದ್ದಳು. +ಅದೇ ರೀತಿಯ ಮಸಾಲೆ ಹಾಕಿ ರುಬ್ಬಿ ಬೆಳ್ಳುಳ್ಳಿಯ ಒಗ್ಗರಣೆ ಕೊಟ್ಟು ಆ ಮಸಾಲೆಯಲ್ಲಿ ಗಂಟುಗಳನ್ನು ಬೇಯಿಸಿದರೆ ಎರಡು ರೊಟ್ಟಿ ತಿನ್ನುವ ಮೋಹನ ನಾಲ್ಕು ರೊಟ್ಟಿ ತಿಂದು ‘ಅಮ್ಮನೇ ಮಾಡಿದಂತಿದೆ ನೀಲು’ ಅಂತ ತನ್ನ ಅಡುಗೆಯನ್ನು ಮೆಚ್ಚಿಕೊಳ್ಳುವುದನ್ನು ನೆನೆದು ಮುದಗೊಂಡಳು. +ಇವತ್ತು ಅತ್ತೇನ ನೆನಸುವಂತೆ ಮಾಡಬೇಕು ಅಂತ ಮತ್ತಷ್ಟು ಶ್ರದ್ದಯಿಂದ ಗಂಟು ಕಟ್ಟಿದಳು. +ತೆಂಗಿನಕಾಯಿ, ಹುಣಸೆಹಣ್ಣು, ಈರುಳ್ಳಿ, ಮಸಾಲೆಪುಡಿ, ಮೆಣಸಿನಪುಡಿ ಹಾಕಿ ರುಬ್ಬಿಕೊಂಡಳು. +ಪಾತ್ರೆಗೆ ಎಣ್ಣೆ ಸುರಿದು ಸಾಸುವೆ, ಕರಿಬೇವು, ಬೆಳ್ಳುಳ್ಳಿ, ಹಾಕಿ ಹುರಿದು ಮಸಾಲೆ ಹಾಕಿ ಅದರ ಜೊತೆಗೆ ಕೆಸುವಿನ ಗಂಟು ಹಾಕಿ ಪಾತ್ರೆ ಮುಚ್ಚಿದಳು. +ಅದು ಬೆಂದು ಗಂಟಿನ ಪರಿಮಳ ಇಡೀ ಮನೆಯೊಳಗೆ ಹರಡಿತು. +ರೊಟ್ಟಿ ಹಿಟ್ಟು ಕಲಿಸಿಟ್ಟರೆ ಮೋಹನ ಬಂದ ಕೂಡಲೇ ಬಿಸಿ ಬಿಸಿಯಾಗಿ ರೊಟ್ಟಿ ಬೇಯಿಸಿ ಕೊಡಬಹುದು ಅಂದುಕೊಂಡು ಬಿಸಿಯಾಗಿಯೇ ಇದ್ದ ಅನ್ನವನ್ನು ಬೇಸನ್‌ಗೆ ಹಾಕಿ ಚೆನ್ನಾಗಿ ನಾದಿ ಅಕ್ಕಿಹಿಟ್ಟು ಸೇರಿಸಿ ಮತ್ತಷ್ಟು ನಾದಿ ಉಂಡೆ ಮಾಡಿ ಮುಚ್ಚಿಟ್ಟಳು. +ಚಳಿ ಆಗ್ತಾ ಇದೆ ಎನಿಸಿ ಬೆಳಗಿನ ಕಾಫಿಗೆಂದೇ ಇಟ್ಟ ಗಟ್ಟಿ ಹಾಲನ್ನು ಫ್ರಿಡ್ಜಿನಿಂದ ಲೋಟಕ್ಕೆ ಬಗ್ಗಿಸಿಕೊಂಡು ಡಿಕಾಕ್ಷನ್ ಬೆರೆಸಿ ಬಿಸಿ ಮಾಡಿದಳು. +ಡಬ್ಬಿಯಲ್ಲಿಟ್ಟಿದ್ದ ಚಕ್ಕುಲಿಯ ತುಂಡುಗಳನ್ನು ಪ್ಲೇಟಿಗೆ ಹಾಕಿಕೊಂಡು ಕಾಫಿ ಬಗ್ಗಿಸಿಕೊಂಡು ಹೊರ ಬಂದು ಕುಳಿತಳು. +ಆಗ್ಲೆ ಎರಡು ಗಂಟೆ ಆಗ್ತಾ ಬಂತು. +ಮೋಹನ ಬರಲೇ ಇಲ್ಲವಲ್ಲ. +ಊಟದ ಹೊತ್ತು ಈಗ ಕಾಫಿ ಕುಡೀತಾ ಇದ್ದೀನಿ. +ಮಲೆನಾಡಿನಲ್ಲಿ ಕಾಫಿ ಕುಡಿಯಲು ಹೊತ್ತಿಲ್ಲ… ಗೊತ್ತಿಲ್ಲ. +ಯಾವಾಗ ಬೇಕಾದರೂ ಕುಡಿಯುತ್ತಿರುವುದೇ ಕೆಲಸ. +ಆಚೀಚೆಗೆ ಹೋಗಿ ಬಂದಾಗಲೆಲ್ಲ ಕಾಫಿ ಸಿದ್ಧ ಮಾಡಿರಲೇಬೇಕು. +ಬೆಳಿಗ್ಗೆ, ಸಂಜೆ ಮಾತ್ರ ಕುಡಿಯುವ ಅಭ್ಯಾಸವಿದ್ದ ತನಗೆ ಇಲ್ಲಿನವರೆಲ್ಲ ಕಾಫಿ ಕುಡಿಯುವುದನ್ನು ನೋಡಿ ಬೆರಗು ಆಗಿತ್ತು. +ಒಬ್ಬೊಬ್ಬರೂ ಅದೆಷ್ಟು ಲೋಟ ಕಾಫಿ ಕುಡಿಯುತ್ತಿದ್ದರೋ, ಲೆಕ್ಕವೇ ಇಡುತ್ತಿರಲಿಲ್ಲ. +ಆ ಲೋಟಗಳೋ ಪಾವಿನಷ್ಟು ಇರುತ್ತಿದ್ದವು. +ಮೊದಲ ದಿನ ಇಲ್ಲಿಗೆ ಬಂದಾಗ ಆ ಲೋಟ ನೋಡಿಯೇ ಹೆದರಿಕೆ ಆಗಿತ್ತು . +ಆದರೆ ಬೇಡ ಎನ್ನಲಾರದೆ ಸಂಕೋಚದಿಂದ ಎಲ್ಲರಂತೆ ಲೋಟ ಹಿಡಿದು ಕುಡಿಯಲು ಪ್ರಾರಂಭಿಸಿದಾಗಲೇ ಗೊತ್ತಾಗಿದ್ದು, ಇದು ನಮ್ಮೂರಿನ ಕಾಫಿಯಂತಲ್ಲ. +ಇದರ ರುಚಿಗೆ ಹೋಲಿಸುವ ವಸ್ತುವೇ ಇಲ್ಲ ಎನಿಸಿತ್ತು. +ಚೂರು ಚೂರೇ ಗುಟುಕರಿಸುತ್ತ ಆ ರುಚಿಯನ್ನು ಆಸ್ವಾದಿಸುತ್ತ ಅವಳಿಗರಿವೇ ಇಲ್ಲದಂತೆ ಲೋಟ ಖಾಲಿ ಮಾಡಿದ್ದಳು. +ಅವತ್ತಿನಿಂದಲೇ ಪಾವಿನ ಲೋಟದ ಕಾಫಿ ಅಭ್ಯಾಸವಾಗಿ ಬಿಟ್ಟಿತ್ತು. +ಕಾಫಿಗೆಂದೇ ಕರೆದ ಹಾಲನ್ನು ಒಂದಿಷ್ಟು ತೆಗೆದಿರಿಸಿ ಬಿಡುತ್ತಿದ್ದರು. +ತಣ್ಣೀರಿನ ಪಾತ್ರೆಯೊಳಗೆ ಹಾಲಿನ ಪಾತ್ರೆ ಇರಿಸಿದ್ದರೆ ಮಧ್ಯಾಹ್ನದವರೆಗೂ ಅದು ಕಾಫಿಗೆ ಬರುತ್ತಿತ್ತು. +ನೊರೆಯಾದ ದಪ್ಪ ಹಾಲಿಗೆ ಕಾದ ಡಿಕಾಕ್ಷನ್ ಹಾಕಿಕೊಂಡು ಕುಡಿಯುತ್ತಿದ್ದರೆ ಅಮೃತವೇ ಎನಿಸಿಬಿಡುತ್ತಿತ್ತು ಚಳಿಗೆ. +ಅದರ ಮುಂದೆ ಮತ್ಯಾವ ಪೇಯವೇ ಇಲ್ಲ ಎನಿಸಿದ್ದು ಸುಳ್ಳಲ್ಲ. +ಅದನ್ನೆಲ್ಲ ನೆನೆಸಿಕೊಂಡು ಕೈಯಲ್ಲಿದ್ದ ಕಾಫಿ ಮಗ್ ನೋಡಿಕೊಂಡಳು. +ಇದೂ ಪಾವಿನ ಅಳತೆಯೇ, ಮಗಳು ಇಳಾ ಬೆಂಗಳೂರಿನಿಂದ ತಂದದ್ದು. +ಟಿವಿಯಲ್ಲಿ ಬರುವ ಪಾತ್ರಗಳು ಮಗ್ಗಿನಂತದ್ದನ್ನು ಹಿಡಿದು ಕಾಫಿ ಕುಡಿಯುತ್ತಿರುವುದನ್ನು ನೋಡಿ ನನಗೂ ಬೇಕೆನ್ನಿಸಿತ್ತು. +ಹಿಡಿ ಇರುವ ಮಗ್ಗು ಹಿಡಿದು ಕಾಫಿ ಕುಡಿಯುತ್ತ ಟಿ.ವಿ.ಯಲ್ಲಿನ ಪಾತ್ರದಂತೆ ಉಬ್ಬಿದ್ದಳು. +ಅದನ್ನು ನೋಡಿ ಮೋಹನ್ ಇಳಾ ನಕ್ಕಿದ್ದೆ ನಕ್ಕಿದ್ದು. +ನೆನಸಿಕೊಂಡು ಮೊಗದಲಿ ಕಿರುನಗೆ ಮೂಡಿತು. +ಇಳಾಳ ಪರೀಕ್ಷೆ ನಾಳೆಯಿಂದ ಪ್ರಾರಂಭ. +ಇನ್ನು ಹದಿನೈದು ದಿನಗಳಲ್ಲಿ ಇಳಾ ಮನೆಗೆ ಬರುತ್ತಾಳೆ. +ಈ ಪರೀಕ್ಷೆಯೊಂದು ಮುಗಿದುಬಿಟ್ಟರೆ ಸಾಕು. +ನೂರಾಸೆ ಇಟ್ಟುಕೊಂಡು ಪರೀಕ್ಷೆಗೆ ಸಿದ್ದವಾಗಿದ್ದಾಳೆ. +ಚೆನ್ನಾಗಿ ಓದಿದ್ದೇನೆಂದು ಬೆಳಿಗ್ಗೆಯೇ ಪೋನಿನಲ್ಲಿ ತಿಳಿಸಿದ್ದಾಳೆ. +ಪಾಪ ತುಂಬಾ ಕಷ್ಟಪಡುತ್ತಿದ್ದಾಳೆ. +ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ಒಳ್ಳೆ ನಂಬರು ಬಂದರೆ ಸಾಕು. +ಅವಳ ಕನಸು ನನಸಾದಂತೆ. +ಮೆಡಿಕಲ್‌ಗೆ ಸೇರಿಸಿಬಿಟ್ಟರೆ ನನ್ನ ಕನಸು, ಅವಳ ಕನಸು ಎಲ್ಲವೂ ಈಡೇರಿದಂತೆ. +ನಮ್ಮ ಇಡೀ ಕುಟುಂಬದಲ್ಲಿಯೇ ಅವಳಷ್ಟು ಬುದ್ಧಿವಂತರಿಲ್ಲ. +ಭಾವನ ಮಕ್ಕಳು, ಅತ್ತಿಗೆಯರ ಮಕ್ಕಳು ಕಷ್ಟಪಟ್ಟು ಎಸ್‌ಎಸ್‌ಎಲ್‌ಸಿನೋ, ಪಿಯುಸಿನೋ, ಡಿಗ್ರಿನೋ ಮುಗಿಸಿದ ಶಾಸ್ತ್ರ ಮಾಡಿದ್ದರು. +ಇವಳೊಬ್ಬಳೇ ಎಲ್ಲಾ ತರಗತಿಯಲ್ಲೂ ಡಿಸ್ಟಿಂಕ್ಷನ್, ಎಸ್‌ಎಸ್‌ಎಲ್ಸಿಯಲ್ಲಿ ರ್‍ಯಾಂಕು, ಪಿಯುಸಿಯಲ್ಲಿಯೂ ರ್‍ಯಾಂಕ್ ಬರ್ತಾಳೆ ಅನ್ನಿಸುತ್ತೆ. +ಅವಳ ಶ್ರಮ ನೋಡಿದರೆ ಸಿ‌ಇಟಿಯಲ್ಲೂ ಒಳ್ಳೆ ರ್‍ಯಾಂಕಿಂಗ್ ಬರುತ್ತೆ. + ಆಮೇಲೆ ಒಳ್ಳೆ ಕಾಲೇಜಿನಲ್ಲಿ ಸೀಟು ಸಿಕ್ಕಿಬಿಟ್ರೆ ಇನ್ನೈದು ವರ್ಷದಲ್ಲಿ ಡಾಕ್ಟರಾಗಿ ಬಿಡುತ್ತಾಳೆ. +ನಮ್ಮ ವಂಶದಲ್ಲಿಯೇ ಯಾರೂ ಡಾಕ್ಟರ್ ಆಗಿಲ್ಲ. +ಚಿಕ್ಕ ವಯಸ್ಸಿನಿಂದಲೇ ಡಾಕ್ಟರಾಗಬೇಕು ಅನ್ನೋ ಕನಸಿನೊಂದಿಗೆ ಬೆಳೆದಳು. +ಆ ಕನಸನ್ನು ನನಸಾಗಿಸಿಕೊಳ್ಳೋಕೆ ಓದನ್ನು ಬಿಟ್ಟು ಮಿಕ್ಕೆಲ್ಲವನ್ನು ಕಡೆಗಣಿಸಿದಳು. +ತಿನ್ನಬೇಕಾದ ವಯಸ್ಸಿನಲ್ಲಿ ತಿನ್ನೋಕೆ ಆಸೆ ಪಡಲಿಲ್ಲ. +ಊಟ ತಿಂಡಿಗೂ ಬಲವಂತಿಸಬೇಕಿತ್ತು. +ತನ್ನ ವಯಸ್ಸಿನವರ ಜೊತೆ ಎಂಜಾಯ್ ಮಾಡಲಿಲ್ಲ. +ಸಿನಿಮಾ, ಪಿಕ್‌ನಿಕ್, ಪಾರ್ಟಿಗಳಿಂದ ದೂರವೇ ಉಳಿದುಬಿಟ್ಟಳು. +ಒಳ್ಳೆ ಬಟ್ಟೆ ಹಾಕೋ ಆಸಕ್ತಿನೂ ಇರಲಿಲ್ಲ. +ನಾನೇ ಆರಿಸಿ ಒತ್ತಾಯವಾಗಿ ಹಾಕಿಸಬೇಕಿತ್ತು. +ಬಂಧುಗಳ ಮದುವೆಗಾಗಲಿ, ಮನೆಗಳಿಗಾಗಲಿ, ಮುಂಜಿಗಳಿಗಾಗಲೀ ಅಪ್ಪಿ ತಪ್ಪಿಯೂ ಬಂದವಳಲ್ಲ. +ಇವಳನ್ನ ನೋಡಬೇಕಾದರೆ ಅವಳು ರಜೆಗೆ ಬಂದಾಗ ಮನೆಗೆ ಬರಬೇಕಿತ್ತು. +ಬಂದವರ ಜೊತೆಗೂ ಹೆಚ್ಚಾಗಿ ಬೆರೆಯದೆ ಓದುವ ನೆವ ಹೇಳಿ ಕೋಣೆ ಸೇರಿಬಿಡುತ್ತಿದ್ದಳು. +ಬಂದವರ ಮುಂದೆ ನನಗೆ ಇರಿಸು ಮುರುಸಾಗುತ್ತಿದ್ದರೂ ಬಾಯ್ತುಂಬ ಉಪಚರಿಸಿ ಅವರಿಗೆ ಅಸಮಾಧಾನವಾಗದಂತೆ ಜಾಣ್ಮೆ ವಹಿಸುತ್ತಿದ್ದುದುಂಟು. +ಎಲ್ಲದಕ್ಕಿಂತ ನನಗೆ ಅವಳ ಕನಸು, ಭವಿಷ್ಯವೇ ಮುಖ್ಯವಾಗಿತ್ತು. +ಮೋಹನನಿಗೂ ಮಗಳ ಮೇಲೆ ಅದೆಷ್ಟು ಆಸೆ, ಮಗಳ ಒಂದು ಸಣ್ಣ ಆಸೆಯನ್ನೂ ತಲೆಮೇಲೆ ಹೊತ್ತುಕೊಂಡು ಪೂರೈಸುವಷ್ಟು ಹುಮ್ಮಸ್ಸು. +ಮಗಳೆಂದರೆ ಜೀವ. +ಮಗಳಿಗಾಗಿಯೇ ಬದುಕು ಎನ್ನುವಂತಿದ್ದಾರೆ. + ಅವರ ಗುರಿ ಎಂದರೆ ಮಗಳನ್ನು ಡಾಕ್ಟರಾಗಿ ಮಾಡುವುದು. + ಒಟ್ಟಿನಲ್ಲಿ ನಮ್ಮ ಮೂವರ ಆಸೆ ಸಧ್ಯದಲ್ಲಿಯೇ ನೆರವೇರಲಿದೆ. +ಆ ಕನಸು ಆದಷ್ಟು ಬೇಗ ನನಸಾಗಲಿದೆ. +ಅವಳು ಡಾಕ್ಟರಾದ ಕೂಡಲೇ ಒಳ್ಳೆ ಹುಡುಗನ್ನ ಅಳಿಯನನ್ನಾಗಿ ಮಾಡಿಕೊಳ್ಳುವುದು. +ಆ ಮೇಲೆ ಮೊಮ್ಮಗು, ಅದನ್ನು ಸಾಕಿ ಬೆಳೆಸುವ ಜವಾಬ್ದಾರಿಯೆಲ್ಲ ನನ್ನದೇ’ ಮುಂದಿನದೆಲ್ಲ ನೆನೆಸಿಕೊಳ್ಳುತ್ತಲೇ ಹಿತವಾದ ಅನುಭವವಾಯಿತು. +ಗಂಟೆ ಢಣ್ ಢಣ್ ಅಂತ ಮೂರು ಹೊಡೆದಾಗ ಅರೆ ಮೂರು ಗಂಟೆ, ಮೋಹನ ಬರಲೇ ಇಲ್ಲವಲ್ಲ. +ಕಾರು ರಿಪೇರಿ ಮಾಡಿಸುತ್ತ ಕೂತುಬಿಟ್ಟರೇನೋ, ಒಡ್ವೆ ಬೇರೆ ತಗೊಂಡಿರ್ತಾರೆ, ಬೇಗ ಬನ್ನಿ ಅಂತ ಹೇಳಿದ್ದೇನೆ, ಜವಾಬ್ಧಾರಿನೇ ಇಲ್ಲಾ. +ರೇಗಿಕೊಳ್ಳುತ್ತ ಮೋಹನ್‌ಗೆ ಫೋನ್ ಮಾಡಿದಳು. +ಸ್ವಿಚ್ ಆಫ್ ಆಗಿತ್ತು. +ಏನಾಯ್ತು ಇವರಿಗೆ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. +ಮಳೆ ಕಡಿಮೆ ಆಗಿರುವಾಗಲೇ ಬಂದು ಮನೆ ಸೇರಿಕೊಳ್ಳಬಾರದೆ, ಬೆಳಿಗ್ಗೆ ೧೦ ಗಂಟೆಗೆ ಮನೆ ಬಿಟ್ಟೋರಿಗೆ ಮೂರು ಗಂಟೆ ಆದ್ರೂ ಬರಬಾರದೇ… + ಸಕಲೇಶಪುರದಿಂದ ಅರ್ಧ ಗಂಟೆ ಸಾಕು ಬರೋಕೆ, ಮೋಹನ್ ಮೇಲೆ ಕೋಪ ಬರೋಕೆ ಶುರುವಾಯ್ತು. +ಇವರಿಗೆ ಕಾಯ್ತಾ ಊಟಾನೂ ಮಾಡಲಿಲ್ಲ. +ಹೊಟ್ಟೆ ಚುರುಗುಡ್ತ ಇದೆ. +ಒಂಚೂರು ಅನ್ನಾನೇ ತಿಂದ್ರಾಯ್ತು ಅಂತ ಅಡುಗೆಮನೆಗೆ ಬಂದು ತಟ್ಟೆಗೆ ಅನ್ನ ಹಾಕಿ ಮೊಸರು ಹಾಕಿಕೊಂಡು ತಟ್ಟೆಯ ಬದಿಗೆ ಒಂದಿಷ್ಟು ಕೆಸುವಿನ ಗಂಟಿನ ಪಲ್ಯ ಹಾಕಿಕೊಂಡು ಹೊರಬಂದಳು. +ಅಷ್ಟರೂಳಗೆ ಮುಂದುಗಡೆ ವಾಹನ ನಿಂತ ಶಬ್ದವಾಯಿತು. +ಕಾರು ತಂದರು ಅಂತ ಕಾಣುತ್ತೆ. +ಅದಕ್ಕೆ ಲೇಟಾಗಿದೆ ಅಂತ ಹೊರ ಬಂದರೆ ಸುಂದರೇಶ ಭಾವ, ಗಾಭರಿ ಆಗಿದ್ದಾರೆ. +‘ನೀಲೂ ಮನೆಗೆ ಬೀಗ ಹಾಕು, ಬೇಗ ಸಕಲೇಶಪುರಕ್ಕೆ ಹೋಗಬೇಕು- ತಡಮಾಡುವಂತಿಲ್ಲ’ ಅಂತ ಇದ್ದಕ್ಕಿದ್ದಂತೆ ಆವಸರಿಸಿದಾಗ ಅಶುಭದ ಮುನ್ಸೂಚನೆ ಹೊಡೆದುಕೊಳ್ಳಲಾರಂಭಿಸಿತು. +ಮೋಹನ ಇನ್ನೂ ಮನೆಗೆ ಬಂದಿಲ್ಲ. +‘ಭಾವ ಯಾಕೆ, ಏನಾಯ್ತು, ಯಾಕೆ ಸಕಲೇಶಪುರಕ್ಕೆ ಹೋಗಬೇಕು…’ ನಡುಗುತ್ತಲೇ ಕೇಳಿದಳು. +‘ದಾರೀಲಿ ಹೇಳ್ತೀನಿ ಬಾ, ಹೊರಡು ಬೇಗ’ ಮುಖ ತಪ್ಪಿಸುತ್ತ ಹೇಳಿದಾಗ ‘ಭಾವ ನಿಜ ಹೇಳಿ. +ಸುಳ್ಳು ಹೇಳಬೇಡಿ’ ಹೆಚ್ಚು ಕಡಿಮೆ ನೀಲಾ ಕಿರುಚಿದಳು. +ಬೆಚ್ಚಿಬಿದ್ದ ಸುಂದರೇಶ ‘ಅದು…ಅದು. . ಮೋಹನ್‌ಗೆ ಆಕ್ಸಿಡೆಂಟ್‌ಯಾಗಿದೆ ಅಂತೆ, ಇನ್ನೇನು ಕೇಳಬೇಡ ನಡೆ’ ದ್ವನಿ ಜೋರು ಮಾಡುತ್ತ ಕಾರು ಬಾಗಿಲು ತೆರೆದರು. +‘ಅಯ್ಯೋ ಆಕ್ಕಿಡೆಂಟಾಯಿತಾ, ಯಾವಾಗ, ಈಗವರು ಹೇಗಿದ್ದಾರೆ’ ಕುಸಿದು ಜೋರಾಗಿ ಅತ್ತಳು. +‘ಈಗ ಅಳೋ ಸಮಯ ಅಲ್ಲ ನೀಲಾ, ಬೀಗ ಎಲ್ಲಿದೆ, ನಾನು ಹಾಕಿಕೊಂಡು ಬರ್ತ್ತೀನಿ. +ಮೊದ್ಲು ನೀನು ಕಾರಿನಲ್ಲಿ ಕೂರು’ ಅಂತ ಹೇಳಿದವರೇ ಕೀ ಹುಡುಕಿ ಬೀಗ ಹಾಕಿಕೊಂಡು ಕಾರು ಹತ್ತಿದರು. +ಅಷ್ಟರಲ್ಲಾಗಲೇ ನೀಲಾ ಕಾರಿನಲ್ಲಿ ಕುಳಿತಿದ್ದಳು. +ದಾರಿಯುದ್ದಕ್ಕೂ ‘ದೇವರೆ ಮೋಹನನ ಜೀವಕ್ಕೆ ಏನೂ ಆಗದೆ ಇರಲಿ. +ಏಟಾಗಿದ್ರೂ ಪರ್ವಾಗಿಲ್ಲ, ಕೈಕಾಲು ಹೋದ್ರೂ ಪರ್ವಾಗಿಲ್ಲ. +ಮಗುಥರಾ ಅವರನ್ನು ನೋಡಿಕೊಳ್ತೀನಿ. +ನನ್ನ ಕಣ್ಣು ಮುಂದೆ ಇದ್ರೆ ಸಾಕು ಅವರು’ ಅಂತ ಸಾವಿರ ದೇವರಿಗೆ ಮೊರೆ ಇಡುತ್ತಲೇ ಇದ್ದಳು. +ಕಾರು ಆಸ್ಪತ್ರೆಯತ್ತ ಹೋಗದೆ ಹೋಟೆಲೊಂದರ ಮುಂದೆ ನಿಂತಾಗ ‘ಭಾವ ಮೊದ್ಲು ಆಸ್ಪತ್ರೆಗೆ ಹೋಗೋಣ ಇಲ್ಯಾಕೆ ನಿಲ್ಲಿಸಿದ್ರಿ, ನಡೀರಿ ಬೇಗ. +ನಾನು ಮೊದ್ಲು ಮೋಹನನಾ ನೋಡಬೇಕು’ ಅಂತ ಹಲುಬಿದಳು. +ಅವಳ ಮಾತಿಗೆ ಉತ್ತರಿಸದೆ ಕಾರು ಪಾರ್ಕ್ ಮಾಡಿ ಡೋರ್ ತೆಗೆದು ಕಾರಿನಿಂದಿಳಿದರು. +‘ನೀಲಾ ಧೈರ್ಯ ತಂದ್ಕೋ ಬೇಕು ನೀನು, ಮೋಹನ ನಿಂಗೆ ಮೋಸ ಮಾಡಿಬಿಟ್ಟಾ, ಹೇಡಿಯಂತೆ ಆತ್ಮಹತ್ಯೆ ಮಾಡ್ಕೊಂಡಿದಾನೆ…. +ಈ ಲಾಡ್ಜಿಗೆ ಬಂದು, ಬೆಳಿಗ್ಗೆ ೧೧ ಗಂಟೆಗೆ ರೂಮ್ ಬಾಡಿಗೆ ಮಾಡಿಕೊಂಡು, ವಿಷ ತಗೊಂಡು ನಮ್ಮನ್ನೆಲ್ಲ ಬಿಟ್ಟುಹೋಗಿದ್ದಾನೆ. +ನೀನು ಕಲ್ಲಾಗಬೇಕು. +ನಿನ್ನ ಮಗಳಿಗಾಗಿ ನಿನ್ನ ಹೃದಯಾನ ಕಲ್ಲು ಮಾಡಿಕೊಳ್ಳಬೇಕು.’ +ಗದ್ಗದಿತವಾಗಿ ಸುಂದರೇಶ ಹೇಳುತ್ತಿದ್ದರೆ “ಇಲ್ಲಾ ನನ್ನ ಮೋಹನ ಅಂತವರಲ್ಲ, ನನ್ನ ಬಿಟ್ಟು ಅವರು ಹೋಗುವವರೇ ಅಲ್ಲಾ. +ನೀವು ಸುಳ್ಳು ಹೇಳ್ತಾ ಇದ್ದೀರಾ… +ಸಾಯೋ ಅಂತದ್ದೇನು ಆಗಿಲ್ಲ ಅವರಿಗೆ, ಮಗಳನ್ನು ಡಾಕ್ಟರ್ ಮಾಡದೆ, ನನ್ನನ್ನು ಒಂಟಿ ಮಾಡಿ ಹೋಗಿಬಿಡ್ತಾರಾ, ನೀವು ಸುಳ್ಳು ಹೇಳ್ತಾ ಇದ್ದೀರಾ ಅಂತ ಜೋರಾಗಿ ಹೇಳಲಾರಂಭಿಸಿದಳು. +ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ನೀಲಾ ಅಣ್ಣ ಗಿರೀಶ, ತಮ್ಮ ರಮೇಶ ಇಬ್ಬರೂ ಹತ್ತಿರ ಬಂದು ‘ನೀಲಾ- ಎಲ್ಲಾ ಮುಗಿದೇ ಹೋಯಿತಲ್ಲೇ, ಭಾವ ನಿನ್ನ ಕೈ ಬಿಟ್ಟುಬಿಟ್ಟರಲ್ಲ, ನೋಡು ಹೇಗೆ ತಣ್ಣಗೆ ಮಲಗಿದ್ದಾರೆ’ ಅವಳ ತಬ್ಬಿಕೊಂಡು ಬಿಕ್ಕಳಿಸಿದರು. +ಮೆಲ್ಲಗೆ ಅವಳನ್ನು ಕರೆದುಕೊಂಡು ಬಂದು ಹೋಟೆಲಿನ ಕೋಣೆಗೆ ಬಂದರು. +ಮಂಚದ ಮೇಲೆ ಅಡ್ಡಡ್ಡ ಮಲಗಿದ್ದಾನೆ ಮೋಹನ. +ಸಾಯುವಾಗ ತುಂಬ ಸಂಕಟ ಅನುಭವಿಸುತ್ತ ಒದ್ದಾಡಿರಬೇಕು, ಹಾಸಿಗೆಯೆಲ್ಲ ಅಸ್ತವ್ಯಸ್ತವಾಗಿದೆ, ತಲೆ ಮಂಚದ ಕೆಳಗೆ ಬಾಗಿದೆ, ಕಾಲು ಮಂಚದಿಂದ ಹೊರ ಚಾಚಿದೆ. +‘ಅಯ್ಯೋ ಮೋಹನ ಇದೇನು ಮಾಡಿಕೊಂಡ್ರಿ. +ನನ್ನ ಒಂದು ದಿನವೂ ಒಂಟಿಯಾಗಿ ಬಿಟ್ಟವರಲ್ಲ ನೀವು. +ಎಲ್ಲಿಹೋದ್ರೂ ಒಬ್ಳೆ ಇದ್ದಾಳೆ ಅಂತ ಓಡಿ ಬರ್ತಾ ಇದ್ರಿ, ಈಗ ಇಡೀ ಬದುಕು ಒಂಟಿಯಾಗಿ ಇರಲಿ ಅಂತ ಬಿಟ್ಟುಹೋದ್ರ… +ಸಾಯೋ ಅಂತಾದ್ದೇನಾಗಿತ್ತು. +ಅಯ್ಯೋ ನನ್ನ ಕೈಲೂ ಹೇಳೋಕೆ ಆಗದೆ ಇರೋವಂತದೇನಾಗಿತ್ತು. +ಅಯ್ಯೋ ಮೋಹನ, ನನ್ನ ಕೈಲಿ ತಡೆಯೋಕೆ ಆಗ್ತಾ ಇಲ್ಲಾ, ನಾನು ಬಂದುಬಿಡ್ತೀನಿ ನಿಮ್ಮ ಜೊತೆ, ನಿಮ್ಮನ್ನು ಬಿಟ್ಟು ಹೇಗಿರಲಿ’ ಅಂತ ಮೋಹನನ ಮೇಲೆ ಬಿದ್ದು ಅತ್ತ ನೀಲಾ ಅಲ್ಲಿಯೇ ಬಿದ್ದಿದ್ದ ಮೋಹನ ಕುಡಿದಿದ್ದ ಬಾಟಲಿಯ ಎತ್ತಿ ಉಳಿದಿದ್ದನ್ನು ಕಣ್ಣು ಮಿಟುಕಿಸುವಷ್ಟರಲ್ಲಿ ಬಾಯಿಗೆ ಸುರಿದುಕೊಂಡುಬಿಟ್ಟಳು. +ಅಲ್ಲಿದ್ದವರೆಲ್ಲ ಈ ಅಚಾನಕ ಘಟನೆಯಿಂದ ದಿಗ್ಭ್ರಾಂತರಾಗಿಬಿಟ್ಟರು. +‘ಇದೇನು ನೀಲಾ ಮಾಡಿಬಿಟ್ಟೆ. +ನೀನು ಮೋಹನ ಥರನೇ ಮೂರ್ಖಳಂತೆ ಮಾಡಿಬಿಟ್ಟೆಯಲ್ಲ. +ಬೇಗ ಬನ್ನಿ ಎತ್ಕೊಳ್ಳಿ, ಇವಳನ್ನು ಮೊದ್ಲು ಆಸ್ಪತ್ರೆಗೆ ಕರ್ಕೊಂಡು ಹೋಗೋಣ’ ಅಂತ ಕಿರುಚಾಡಿದರು. +ಗಿರೀಶ, ರಮೇಶ ಅನಾಮತ್ತಾಗಿ ಅವಳನ್ನು ಹಿಡಿದುಕೊಂಡವರೇ ಅವಳು ಪ್ರತಿಭಟಿಸುವುದನ್ನು ಲೆಕ್ಕಿಸದೆ ಗಟ್ಟಿಯಾಗಿ ಇಬ್ಬರೂ ಹಿಡಿದುಕೊಂಡು ಕಾರಿಗೆ ಹಾಕಿದರು. +ಸುಂದರೇಶನಿಗೆ ಕೈಕಾಲುಗಳು ಆಡದಂತಾಗಿತ್ತು. +ಈ ಘಟನೆಯಿಂದ, ತಮ್ಮ ಹೋದ ಸಂಕಟವನ್ನು ಅರಗಿಸಿಕೊಳ್ಳಲಾರದೆ ಕಷ್ಟಪಡುತ್ತಿರುವಾಗ ನೀಲಾ ಕೂಡ ಅವನ ಹಾದಿ ಹಿಡಿಯುವಂತೆ ಮಾಡಿದ್ದು ಆಘಾತ ಉಂಟು ಮಾಡಿತ್ತು. +ಅವರು ಆಘಾತದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಅಲ್ಲಿದ್ದ ಒಬ್ಬಾತ ಕಾರೊಳಗೆ ಕುಳಿತು ಕಾರು ಸ್ಟಾರ್ಟ್‌ ಮಾಡಿದ. +ಸೀದಾ ವೇಗವಾಗಿ ಆಸ್ಪತ್ರೆಗೆ ನುಗ್ಗಿತು ಕಾರು. +ತಕ್ಷಣವೇ ಡಾಕ್ಟರ್ ನೀಲಾ ಕಡೆ ವಿಶೇಷ ಗಮನ ನೀಡಿ, ಸೂಕ್ತ ಚಿಕಿತ್ಸೆ ನೀಡಿದರು. +ಹೊಟ್ಟೆಯಲ್ಲಿದ್ದ ವಿಷವನ್ನೆಲ್ಲ ವಾಂತಿ ಮಾಡಿಸಿ, ಅದರ ಪರಿಣಾಮ ದೇಹಕ್ಕಾಗದಂತೆ ಇಂಜಕ್ಷನ್ ಕೊಟ್ಟು, ಅವಳ ಜೀವವುಳಿಸುವ ಯತ್ನ ನಡೆಸಿದರು. +ಅರ್ಧ ಗಂಟೆಯ ನಂತರವೇ ನೀಲಾ ಅಪಾಯದಿಂದ ಪಾರಾದಳೆಂದು ಹೇಳಿ ಎಲ್ಲರ ಬಿಗಿಹಿಡಿದ ಉಸಿರನ್ನು ಸಡಿಲಗೊಳಿಸಿದರು. +ವಿಷ ಅಲ್ಪ ಪ್ರಮಾಣದಲ್ಲಿದ್ದು, ತಕ್ಷಣವೇ ಚಿಕಿತ್ಸೆ ಸಿಕ್ಕಿದ್ದರಿಂದ ನೀಲಾ ಉಳಿದುಕೊಂಡಳು. +ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ ಇಳಾಳನ್ನು ಕರೆತರಲು, ಬೆಂಗಳೂರಿನಲ್ಲಿಯೇ ಇದ್ದ ಮೋಹನನ ಅಕ್ಕನ ಮನೆಯವರಿಗೆ ವಹಿಸಿದ್ದು, ಇನ್ನೇನು ಅವರು ಸಕಲೇಶವುರ ತಲುಪಲಿದ್ದಾರೆ ಎಂಬ ಮಾಹಿತಿ ಸಿಕ್ಕಿತು. +ಕಾನೂನು ಪ್ರಕಾರ ಮಹಜರು ನಡೆದು, ಬಾಡಿಯನ್ನು ಪೋಸ್ಟ್‌ಮಾರ್ಟಂಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. +ಗಂಡಸರಲ್ಲಿ ಕೆಲವರು ಆಸ್ಪತ್ರೆಯಲ್ಲಿಯೇ ಉಳಿದರು. +ಮಿಕ್ಕವರೆಲ್ಲ ಮುಂದಿನ ಕಾರ್ಯದ ಸಿದ್ಧತೆಗಾಗಿ ಮೋಹನನ ಮನೆಯತ್ತ ನಡೆದರು. +ಗಿರೀಶ ನೀಲಾಳ ಬಳಿಯೇ ಉಳಿದರೆ, ಇಳಾಳಿಗಾಗಿ ರಮೇಶ ಮನೆಯತ್ತ ನಡೆದ. +ಅಷ್ಟರಲ್ಲಾಗಲೇ ಮನೆಯ ತುಂಬ ಜನ ಸೇರಿದ್ದರು. +ಮುಂದುಗಡೆ ಶಾಮಿಯಾನ ಹಾಕಲಾಗಿತ್ತು. +ಪಕ್ಕದಲ್ಲಿಯೇ ಅಡುಗೆಯವರು, ಬಂದವರ ಹಸಿವು ತೀರಿಸಲು ಅಡುಗೆಯ ಸಿದ್ಧತೆಯಲ್ಲಿದ್ದರು. +ಅಲ್ಲಿ ಯಾರಿಗೆ ಬೇಕಿತ್ತು ಊಟ…. +ಆದರೂ ಮಕ್ಕಳು, ವಯಸ್ಸಾದವರು ಇರುತ್ತಾರೆ, ಸುತ್ತಮುತ್ತ ಮನೆಗಳೂ ಇಲ್ಲ. +ಹೋಟೆಲ್ ಅಂತೂ ಇಲ್ಲವೇ ಇಲ್ಲ. +ಹಾಗಾಗಿ ಸಾವು, ನೋವು ಸಂಭವಿಸಿದ ಮನೆಯಲ್ಲಿಯೇ ಬಂಧುಗಳಿಗಾಗಿ ಊಟ ತಯಾರಿಸುತ್ತಾರೆ. +ಅದು ಅಲ್ಲಿ ಸಹಜವೂ ಆಗಿರುತ್ತದೆ. +ಎಷ್ಟೇ ನೋವಿದ್ದರೂ, ದುಃಖವಿದ್ದರೂ ಅಲ್ಲಿದ್ದ ಒಂದಿಬ್ಬರು ಜವಾಬ್ದಾರಿ ತೆಗೆದುಕೊಂಡು ಬಂದಿದ್ದವರೆಲ್ಲರನ್ನು ಬಲವಂತ ಮಾಡಿ ಊಟ ಮಾಡಿಸುತ್ತಾರೆ. +ಇಡೀ ರಾತ್ರಿ ಎಚ್ಚರವಿರಲು ಕೆಲವು ಗಂಡಸರು ಸಿದ್ದರಾಗಿ ಬಿಡುತ್ತಾರೆ. +ಆ ಸಮಯದಲ್ಲಿ ಕಾಲ ತಳ್ಳಲು ಇಸ್ವೀಟ್ ಸಹಾಯ ಮಾಡುತ್ತದೆ. +ಹತ್ತಿರದ ಬಂಧುಗಳು ದುಃಖದ ಭಾರ ತಡೆಯಲಾರದೆ ಪರಿತಪಿಸುತ್ತಿದ್ದಾರೆ. +ದೂರದ ಬಂಧುಗಳು ಅವರನ್ನು ಸಮಾಧಾನಿಸುತ್ತ ಮುಂದಿನ ಕಾರ್ಯದ ಸಿದ್ಧತೆ ಮಾಡುತ್ತಿರುತ್ತಾರೆ. +ಸಾಮಾನ್ಯವಾಗಿ ಸಾವಿನ ಮನೆಯಲ್ಲಿ ಊಟದ ವ್ಯವಸ್ಥೆ ಇರುವುದಿಲ್ಲ. +ಆದರೆ ಮಲೆನಾಡಿನ ಭಾಗದಲ್ಲಿ ಮೃತವಾದವರ ಮನೆಯಲ್ಲಿ ಮೃತ ಶರೀರ ಮನೆಯಲ್ಲಿ ಇದ್ದಾಗಲೇ ಶುಭಕಾರ್ಯಗಳಲ್ಲಿ ನಡೆಯುವಂತೆ ಊಟೋಪಚಾರ ನಡೆಯುತ್ತದೆ. +ಕೋಸಂಬರಿ, ಪಲ್ಯ, ಪಾಯಸ, ಅನ್ನ ಸಾರು, ಮಜ್ಜಿಗೆ ಹೀಗೆ ಸಾಂಗವಾಗಿಯೇ ರೆಸಿಪಿ ಇರುತ್ತದೆ. +ಬಂದವರಿಗಾಗಿ ಮನೆಯವರು ಅಡುಗೆಯವರನ್ನು ಕರೆಸಿ ಅಡುಗೆ ಮಾಡಿಸಿ ಎಲ್ಲರೂ ಕಡ್ಡಾಯವಾಗಿ ಪಾಯಸದೂಟವನ್ನು ಮಾಡಲು ವ್ಯವಸ್ಥೆ ಮಾಡುತ್ತಾರೆ. + ಬಂದವರು ಕೂಡ ಯಾವ ಮುಜುಗರವಿಲ್ಲದೆ ಸಂತೃಪ್ತಿಯಿಂದ ಉಣ್ಣುತ್ತಾರೆ! +ಪೋಸ್ಟ್‌ಮಾರ್ಟಂ ಮಾಡಿ ಮೋಹನನ ಬಾಡಿ ಮನೆ ತಲುಪಲು ಬೆಳಿಗ್ಗೆ ಹತ್ತು ಹನ್ನೊಂದು ಗಂಟೆಯಾದರೂ ಆದೀತು. + ಯಾರು ಯಾರಿಗೆ ಹೇಳಬೇಕು ಎಂದೆಲ್ಲ ಮೋಹನನ ಅಣ್ಣ ತಮ್ಮಂದಿರು, ನೀಲಾಳ ಸಹೋದರರು ಎಲ್ಲರೂ ತಮ್ಮ ತಮ್ಮವರಿಗೆ ಪೋನ್‌ನಲ್ಲಿಯೇ ಇಡೀ ರಾತ್ರಿ ಸುದ್ದೀ ಮುಟ್ಟಿಸುತ್ತಲೇ ಇದ್ದರು. +ರಾತ್ರಿ ಸುಮಾರು ೧೦ ಗಂಟೆಗೆ ಇಳಾ ತನ್ನ ಅತ್ತೆಯೊಂದಿಗೆ ಮನೆಗೆ ಬಂದಾಗ ಮನೆ ಒಳಗೆ, ಹೊರಗೆ ಭರ್ತಿ ಜನ. +ಬಂದವಳೇ ಇಳಾ ತನ್ನ ದೊಡ್ಡಪ್ಪನನ್ನು ತಬ್ಬಿಕೊಂಡು ‘ದೊಡ್ಡಪ್ಪ ಪಪ್ಪನಿಗೆ ಏನಾಗಿತ್ತು, ಯಾಕೆ ಹೀಗೆ ಮಾಡಿಕೊಂಡರು. +ನಮ್ಮನ್ನ ಬಿಟ್ಟು ಹೋಗೋಕೆ ಹೇಗೆ ಅವರಿಗೆ ಮನಸ್ಸು ಬಂತು’ ಅಂತ ಗಟ್ಟಿಯಾಗಿ ಅತ್ತಳು. +‘ಮೂರ್ಖ ಕಣಮ್ಮ ಅವನು ಶತಮೂರ್ಖ, ನಾವೆಲ್ಲ ಇರಲಿಲ್ಲವಾ, ಇಷ್ಟಕ್ಕೂ ಅಂತ ಕಷ್ಟ ಏನಾಗಿತ್ತು ಸಾಯೋಕೆ, ನಿಮ್ಮಮ್ಮನಿಗೂ ಸುಳಿವು ನೀಡದೆ ಹೀಗೆ ಒಂದೇ ಸಲಕ್ಕೆ ಶಾಕ್ ಕೊಟ್ಟು ಬಿಟ್ಟ. + ಸಾಯೋ ಮೊದಲು ನೀನು ನೆನಪಿಗೆ ಬರಲಿಲ್ಲವೇ, ಮಗಳನ್ನು ಡಾಕ್ಟರ್ ಮಾಡ್ತೀನಿ ಅಂತ ಕುಣೀತಿದ್ದವನಿಗೆ, ನಾಳೆ ನಿನ್ನ ಪರೀಕ್ಷೆ ಅಂತಲಾದರೂ ಗೊತ್ತಾಗಲಿಲ್ಲವೆ? + ಏನೂ ಬಂತು ಅವನಿಗೆ ಕೇಡುಗಾಲ’ ತಾವು ಇಳಾಳೊಂದಿಗೆ ಅತ್ತರು. +ತಾಯಿಯ ಬಗ್ಗೆ ಎಲ್ಲಾ ಗೊತ್ತಾಗಿದ್ದರೂ ಅವಳ ಬಗ್ಗೆ ಒಂದೂ ಮಾತನಾಡದೆ ಮಾವ ರಮೇಶನನ್ನು ತಬ್ಬಿಕೊಂಡು ‘ಮಾಮ, ನಾನ್ಯಾಕೆ ಬದುಕಿರಲಿ ನಾನು ಸತ್ತುಹೋಗ್ತೀನಿ ಮಾಮ’ ಅಳುತ್ತಲೇ ಹೇಳಿದಳು.’ +ಛೇ ಛೇ ನಿನ್ನಂಥ ಹುಡುಗಿಯಿಂದ ಈ ಮಾತು ಬರಬಾರದು. +ನೀನು ಧೈರ್ಯಸ್ಥೆ. +ಬದುಕಿ ಸಾಧಿಸಿ ತೋರಿಸಬೇಕು ಕಣೆ. + ನಿಮ್ಮಪ್ಪನ ಥರಾ ಹೇಡಿಯಾಗಬೇಡ. +ತಾನು ಸತ್ತು ನಮ್ಮನ್ನು ಕೊಂದುಬಿಟ್ರು ನಿಮ್ಮಪ್ಪ’ ನೋವಿನಿಂದ ನುಡಿದ ರಮೇಶ. +ಎಲ್ಲರೂ ಅಲ್ಲಿ ದುಃಖಿಗಳೇ, ಅಪ್ಪನನ್ನು ಕಳೆದುಕೊಂಡ ದುಃಖ ಇಳಾದ್ದಾದರೆ, ತಮ್ಮನನ್ನು ಕಳೆದುಕೊಂಡ ನೋವು ಸುಂದರೇಶ ಮತ್ತು ಅವರಕ್ಕ ವಿಶಾಲುದು. +ಭಾವನನ್ನು ಕಳೆದುಕೂಂಡು ತಂಗಿ ವಿಧವೆಯಾದಳಲ್ಲ ಅನ್ನೋ ಸಂಕಟ ರಮೇಶ ಮತ್ತು ಗಿರೀಶರದ್ದು. +ಒಟ್ಟಿನಲ್ಲಿ ಮೋಹನ ದುಡುಕಿ ನಿರ್ಧಾರ ಕೈಗೊಂಡು ಎಲ್ಲರನ್ನು ದುಃಖದ ಮಡುವಿನಲ್ಲಿ ತಳ್ಳಿದ್ದ. +ಇದ್ದುದರಲ್ಲಿ ಸಾವಿನ ನೋವಿಲ್ಲದೆ ಡಾಕ್ಟರ್ ಕೊಟ್ಟ ನಿದ್ರೆ ಇಂಜೆಕ್ಷನ್ ಪ್ರಭಾವದಿಂದ ಎಲ್ಲ ಮರೆತಿರುವವಳೆಂದರೆ ನೀಲಾ ಒಬ್ಬಳೇ. +ಮೋಹನನ ಅಂತ್ಯ ಸಂಸ್ಕಾರದ ವೇಳೆಗಾದರೂ ಅವಳು ಕೊಂಚ ಚೇತರಿಸಿಕೊಳ್ಳಲೆಂದೇ ನಿದ್ರೆ ಔಷಧಿ ಕೊಡಲು ಗಿರೀಶ ಡಾಕ್ಟರಲ್ಲಿ ಬೇಡಿದ್ದ. +ಇಡೀ ರಾತ್ರಿ ಅವಳನ್ನು ಕಾಯುತ್ತಲೇ ಕುಳಿತುಬಿಟ್ಟ. +ಗ್ಲೂಕೊಸ್ ಹಾಕಿಯೇ ಇದ್ದರು. +ಬಾಟಲಿಯಿಂದ ಹನಿ ಹನಿಯಾಗಿ ಜಾರುತ್ತಿದ್ದ ಗ್ಲೂಕೋಸನ್ನೇ ನೋಡುತ್ತ ಇಡೀ ರಾತ್ರಿ ಕಳೆದ. +ಬೆಳಿಗ್ಗೆ ಹೊತ್ತಿಗಾದರೂ ನೀಲಾ ಚೇತರಿಸಿಕೊಂಡು ತನ್ನ ದುಃಖವನ್ನು ಭರಿಸಿದರೆ ಸಾಕೆಂದು ಗಿರೀಶ್ ಹಾರೈಸಿದ್ದ. +೧೧ ಗಂಟೆಗೆ ಆಸ್ಪತ್ರೆಯ ವಾಹನದಲ್ಲಿಯೇ ಮೋಹನನ ಪಾರ್ಥಿವ ಶರೀರವನ್ನು ತಂದರು. +ವ್ಯಾನಿನೊಳಗೆ ಬಿಳಿಯ ಬಟ್ಟಿಯಿಂದ ಸುತ್ತಿ ಮುಖ ಮಾತ್ರ ಕಾಣುವಂತೆ ಮೋಹನನನ್ನು ಮಲಗಿಸಿದ್ದರು. +ಮಲಗಿ ನಿದ್ರಿಸುವಂತಿದ್ದ ಅವನನ್ನು ಕಂಡು ಅಲ್ಲಿದ್ದವರೆಲ್ಲ ಮಮ್ಮಲ ಮರುಗಿದರು. +ಬಂಧುಗಳ ರೋಧನ ತಾರಕಕ್ಕೇರಿತು. +ಯಾರು ಯಾರನ್ನು ಸಂತೈಸುವವರಿಲ್ಲದೆ ಇಡೀ ಮನೆಯ ಜನವೆಲ್ಲ ಭೋರಾಡಿ ಅಳುತ್ತಲೇ ಇದ್ದರು. +ಇಳಾಳಂತು ‘ಪಪ್ಪ, ನನ್ನ ಬಿಟ್ಟು ಹೋಗಿಬಿಟ್ಯಾ, ನಾನು ಇನ್ಯಾರನ್ನ ಪಪ್ಪ ಅನ್ನಲಿ, ಪಪ್ಪ, ಪಪ್ಪ’ ಅಂತ ಮೈ ಮೇಲೆ ಬಿದ್ದು ಗೋಳಾಡಿದಳು. +ಸಾಕಾಗುವಷ್ಟು, ಅತ್ತುಬಿಡಲಿ ಎಂದು ಯಾರೂ ಅವಳನ್ನು ತಡೆಯಲು ಹೋಗಲಿಲ್ಲ. +ಇದ್ದುದರಲ್ಲಿ ಸುಂದರೇಶ ದುಃಖವನ್ನು ಹತೋಟಿಗೆ ತಂದುಕೊಂಡು ‘ಅಗ್ಲೆ ಸಮಯ ಆಗ್ತಿದೆ. +ಬೇಗ ಬೇಗ ಮುಂದಿನ ಕೆಲಸ ಮುಗಿಸಿ’ ಅಂತ ಅಲ್ಲಿದ್ದವರನ್ನು ಅವಸರಿಸಿದರು. +ತೋಟದಲ್ಲಿ ಆಗಲೇ ಗುಂಡಿ ತೋಡಿ ಬಾಳೆಕಂಬ ನೆಟ್ಟು ಗುಂಡಿಯ ಮೇಲೆ ಚಪ್ಪರದಂತೆ ಕಟ್ಟಿ ಹೂಗಳಿಂದ ಶೃಂಗರಿಸಿದ್ದರು. +ಗುಂಡಿಯಲ್ಲಿ ಹೆಣವನ್ನು ಕೂರಿಸಲು ಅನುವಾಗುವಂತೆ ಗೋಡೆಯ ಒಂದು ಭಾಗವನ್ನು ಕೆತ್ತಿ ಜಾಗ ಮಾಡಿದ್ದರು. +ಆರು ಅಡಿ ಗುಂಡಿ ತೊಂಡಿದ್ದರೂ ಹೆಣವನ್ನು ಮಲಗಿಸದೆ ಗೋಡೆಗೆ ಒರಗಿಸಿ, ಕೂರಿಸಿ ಮಣ್ಣು ಮುಚ್ಚುವ ಪದ್ಧತಿ ಅವರದಾಗಿತ್ತು. +ಇತ್ತ ಮನೆಯ ಮುಂದೆ ಕುರ್ಚಿಯೊಂದರಲ್ಲಿ ಹೆಣವನ್ನು ಕೂರಿಸಿ ಹೊತ್ತೊಯ್ಯಲು ಎರಡು ಬಿದಿರು ಕಂಬವನ್ನು ಕಟ್ಟಿ ಸಿದ್ಧ ಮಾಡಿದ್ದರು. +ಮೋಹನನ ಬಾಡಿಯನ್ನು ನಾಲ್ಕೈದು ಜನ ಹೊತ್ತುಕೊಂಡು ಬಂದು ಕುರ್ಚಿಯಲ್ಲಿ ಕಟ್ಟಿ ಕೂರಿಸಿದರು. +ಸಂಪ್ರದಾಯದಂತೆ ಐನೋರು ಶವದ ಪೂಜೆ ಮಾಡಿದರು. +ಬಂದವರೆಲ್ಲ ಹೂ, ತೆಂಗಿನಕಾಯಿ, ಊದುಗಡ್ಡಿ ತಂದಿದ್ದರು. +ಎಲ್ಲರೂ ಪೂಜೆ ಮಾಡಿ ಕೈ ಮುಗಿದರು. +ಸತ್ತ ಮೇಲೆ ಸತ್ತವರು ದೇವರಂತೆ ಎಂಬ ಪದ್ಧತಿ ಅಲ್ಲೀದು. +ಹಾಗಾಗಿ ಎಲ್ಲರೂ ಪೂಜೆ ಮಾಡಿ ನಮಸ್ಕರಿಸಿದರು. +ಇಳಾಳಿಂದಲೂ ಬಲವಂತವಾಗಿ ಪೂಜೆ ಮಾಡಿಸಿ ಹೆಣವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿ ಗುಂಡಿಯತ್ತ ಬಂದರು. +ಮೂರು ಸುತ್ತು ಸುತ್ತುತ್ತ ಸುತ್ತ ಬಂದು ಇಬ್ಬರು ಗುಂಡಿಯೊಳಗೆ ಇಳಿದು ಹೆಣವನ್ನು ಇಳಿಸಿಕೊಂಡು ಗೋಡೆಗೆ ಒರಗಿಸಿ ಕೂರಿಸಿದರು. +ಅಲ್ಲಿ ಮತ್ತೊಮ್ಮೆ ಪೂಜೆಯಾಯಿತು. +ಬಿಲ್ಪತ್ರೆ, ವಿಭೂತಿ ಎಲ್ಲರೂ ಹಿಡಿಯಲ್ಲಿ ಹಿಡಿದು ಗುಂಡಿಗೆ ಹಾಕಿದರು. +ಅಷ್ಟರಲ್ಲಿ ಗಿರೀಶ ನೀಲಳನ್ನು ಕಾರಿನಲ್ಲಿಯೇ ಅಲ್ಲಿಗೆ ಕರೆತಂದ. +ಮೆಲ್ಲನೆ ಅವಳನ್ನು ಇಳಿಸಿಕೊಂಡು ಗುಂಡಿಯತ್ತ ಕರೆತಂದರು. +ಅಳಲೂ ಶಕ್ತಿ ಇಲ್ಲದೆ ನೀಲಾ ಮೈಮೇಲೆ ಪ್ರಜ್ಞೆ ಇಲ್ಲದಂತೆ ತೂರಾಡುತ್ತಿದ್ದಳು. +ಅವಳ ಕೈಯಿಂದ ಬಲವಂತವಾಗಿ ಬಿಲ್ಪತ್ರೆ, ವಿಭೂತಿ ಹಾಕಿಸಿದರು. +ಗುಂಡಿಯೊಳಗಿದ್ದ ಮೋಹನನನ್ನು ನೋಡಿ ‘ಮೋಹನ್’ ಅಂತ ಜೋರಾಗಿ ಚೀರಿ ಪ್ರಜ್ಞೆ ತಪ್ಪಿದಳು. +ಅವಳನ್ನು ಎತ್ತಿಕೊಂಡು ಕಾರಿನಲ್ಲಿ ಮಲಗಿಸಿದರು. +ಎಲ್ಲರೂ ಜೋರಾಗಿ ಅಳುತ್ತಲೇ ಗುಂಡಿಗೆ ಜೊತೆಯಲ್ಲಿ ಮಣ್ಣು ಹಾಕಿದರು. +ಅಪ್ಪನ ಮೇಲೆ ಮಣ್ಣು ಬೀಳುತ್ತಿದ್ದಂತೆ ಇಳಾ ‘ಪಪ್ಪ, ಪಪ್ಪ’ ಅಂತ ಅಳುತ್ತಲೇ ಕುಸಿದಳು. +ಮೋಹನನ ಕಾರ್ಯವೆಲ್ಲವೂ ಸಾಂಗವಾಗಿ ನೆರವೇರಿತು. +ಉಳಿದ ಹತ್ತಿರದ ಸಂಬಂಧಿಗಳೂ ಮನೆಯಿಂದ ಹೊರಟು ನಿಂತರು. +ಈಗ ತಾಯಿ-ಮಗಳು ಇಬ್ಬರೇ ಮನೆಯಲ್ಲಿ ನೀಲಾ ಇನ್ನು ಚೇತರಿಸಿಕೊಂಡೇ ಇಲ್ಲಾ. +ನೀಲಾಳ ದೊಡ್ಡಮ್ಮ ಅಂಬುಜಮ್ಮ ನೀಲಾಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತು ಮಗನ ಮನೆಯಿಂದ ನೀಲಾಳ ಮನೆಗೆ ಬಂದಿಳಿದರು. +ಮಗನ ಮನೆಯಲ್ಲಿ ಸಮಾಧಾನ ಇಲ್ಲದೇ ವೃದ್ಧಾಶ್ರಮ ಸೇರುವ ಬಯಕೆ ಹೊಂದಿದ್ದ ಅಂಬುಜಮ್ಮ ನೀಲಾಳ ಮನಃಸ್ಥಿತಿ ಕಂಡು ಮರುಗಿ, ಎರಡು ದುಃಖತಪ್ತ ಜೀವಿಗಳನ್ನು ನೋಡಿಕೊಳ್ಳುವ ಮನಸ್ಸಿನಿಂದ ಹಾಗೂ ನೆಲೆತಪ್ಪಿದ್ದ ತನ್ನ ಬದುಕು ಇಲ್ಲಿ ನೇರವಾದೀತೆಂದು ನೀಲಾಳ ಬೆಂಗಾವಲಾಗಿ ನಿಂತರು. +ಇದೊಂದು ದೈವವೇ ನೀಡಿದ್ದ ಕೊಡುಗೆಯಾಗಿತ್ತು ನೀಲಾ ಹಾಗೂ ಇಳಾಳಿಗೆ. +ಅಂಬುಜಮ್ಮನಿಗೂ ಒಂದು ನೆಮ್ಮದಿಯ ನೆಲೆ ಬೇಕಿತ್ತು. +ಹಿರಿಯರು ದಿಕ್ಕಿಲ್ಲದ ಮನೆಗೆ ಒಂದು ಹಿರಿಯ ಜೀವ ಬೇಕಿತ್ತು. +ಅಂತೂ ಒಬ್ಬರಿಗೊಬ್ಬರು ಆಸರೆ ಕಂಡುಕೊಂಡರು. +ಅಂಬುಜಮ್ಮನು ಗಟ್ಟಿಮುಟ್ಟಾಗಿದ್ದರು. +ಕುಳಿತು ಕಾಲ ತಳ್ಳುವ ಸೋಮಾರಿಯಲ್ಲ. +ಎಲ್ಲಿದ್ದರೂ ತಾವೇ ಹುಡುಕಿ ಕೆಲಸ ಮಾಡುತ್ತಿದ್ದರು. +ಮಗನ ಮನೆಯಲ್ಲಿ ಅಡುಗೆ ಮನೆಗೆ ಹೋಗುವುದನ್ನು ಸೊಸೆ ಸಹಿಸುತ್ತಿರಲಿಲ್ಲ. +ತನ್ನ ಎಲ್ಲಾ ಕೆಲಸಗಳಿಗೂ ಸೊಸೆಯ ಆಕ್ಷೇಪ. +ಮನೆಯಲ್ಲಿ ಸದಾ ಕುಳಿತಿರಬೇಕು. +ಹಾಕಿದ್ದು ತಿಂದು ನಾಯಿಯಂತಿರಬೇಕು ಎಂಬ ಧೋರಣೆ ಸಹಿಸದೆ ಮನೆಬಿಡುವ ಮನಸ್ಸು ಮಾಡಿದ್ದರು. +ಈ ವಯಸ್ಸಿನಲ್ಲಿ ವೃದ್ಧಾಶ್ರಮವೇ ಆಸರೆ ಎಂದುಕೊಂಡಿದ್ದವರಿಗೆ ಮೋಹನನ ಸಾವು ಅಂಬುಜಮ್ಮನ ದಿಕ್ಕನ್ನು ಇತ್ತ ತಿರುಗಿಸಿತ್ತು. +ನೋಡೋಣ ಎಲ್ಲೋ ಇರುವ ಬದಲು ನೊಂದಿರುವ ಜೀವಗಳನ್ನು ಸಂತೈಸುತ್ತ, ಒಂದಿಷ್ಟು ದಿನ ಇಲ್ಲಿ ಇದ್ದುಬಿಡೋಣ ಎಂದು ರಮೇಶ, ಗಿರೀಶರ ಮಾತಿಗೆ ಸಮ್ಮತಿಸಿದ್ದರು. +‘ದೊಡ್ಡಮ್ಮ ನಾವ್ಯಾರೂ ಇಲ್ಲಿರುವಂತಿಲ್ಲ. +ನಾವೆಲ್ಲ ಹೋದ ಮೇಲೆ ನೀಲಾ ಒಬ್ಬಳೇ ಆಗಿಬಿಡುತ್ತಾಳೆ. +ನಮ್ಮ ಜೊತೆ ಅವಳು ಬರುವಂತಿಲ್ಲ. +ರಾಜಣ್ಣನಿಗೆ, ಅತ್ತಿಗೆಗೆ ನಾವೂ ಹೇಳ್ತೀವಿ. +ನೀವು ಇಲ್ಲೇ ಇದ್ದುಬಿಡಿ ದೊಡ್ಡಮ್ಮ, ಈ ದುಃಖದ ಸಮಯದಲ್ಲಿ ನಿಮ್ಮ ಅಗತ್ಯ ಈ ಮನೆಗೆ ಇದೆ. +ದಯವಿಟ್ಟು ಇಲ್ಲಾ ಎನ್ನಬೇಡಿ’ ಎಂದು ತಂಗಿಯ ಮಕ್ಕಳಿಬ್ಬರು ಕೇಳಿಕೊಂಡಾಗ ಇಲ್ಲ ಎನ್ನಲು ಆಗಲೇ ಇಲ್ಲ. +ಅನಾಥಳಂತೆ ಎಲ್ಲೋ ಇರುವ ಬದಲು ತನ್ನ ಅಗತ್ಯ ಇರುವ ಈ ಮನೆಯಲ್ಲಿಯೇ ಇರೋಣವೆಂದು ಆ ಗಳಿಗೆಯಲ್ಲಿಯೇ ಸಮ್ಮತಿಸಿಬಿಟ್ಟರು! +ತಾವು ಗಂಡನನ್ನು ಕಳೆದುಕೊಂಡಾಗ ರಾಜ ಇನ್ನೂ ಹತ್ತು ವರುಷದವ. +ತನ್ನವರಾರೂ ತಮ್ಮೊಂದಿಗೆ ಇರಲಿಲ್ಲ. +ತಾನೊಬ್ಬಳೇ ಅದೆಷ್ಟು ಕಷ್ಟಪಟ್ಟಿದ್ದೆ. +ಆಸ್ತಿ ಉಳಿಸಿಕೊಳ್ಳಲು ಹೋರಾಟವನ್ನೇ ಮಾಡಬೇಕಿತ್ತು. +ತುಂಡು ಆಸ್ತಿಯಲ್ಲಿ ಒಬ್ಬಂಟಿಯಾಗಿ ದುಡಿದು ಮಗನನ್ನು ಸಾಕಿ ದೊಡ್ಡವನನ್ನಾಗಿ ಮಾಡಿದ್ದೆ. +ಯಾರೊಂದಿಗೂ ಕೈಚಾಚದೆ ಸ್ವಾಭಿಮಾನಿಯಾಗಿ ಬದುಕುತ್ತಿದ್ದೇನೆಂದೇ ಗಂಡನ ಸಂಬಂಧಿಗಳಿಗೆ ಕೋಪ. +ಬಿಟ್ಟಿ ಆಳಾಗಿ ಮಾಡಿಕೊಂಡು ಆಸ್ತಿಯನ್ನು ಕಬಳಿಸುವ ಹುನ್ನಾರ ತಿಳಿದೇ ದೂರಾಗಿದ್ದೆ. +ಯೌವದನದಲ್ಲೂ ಹಾದಿ ತಪ್ಪದೆ ನಿಯತ್ತಾಗಿಯೇ ಬದುಕಿದ್ದೆ. +ಮಗನಿಗಾಗಿ… ಅವನ ಒಳಿತಿಗಾಗಿ… ಎಲ್ಲರೊಂದಿಗೂ ನಿಷ್ಠೂರಿಯಾಗಬೇಕಾದರೂ ಹಿಂಜರಿಯದೆ ದಿಟ್ಟ ಹೆಜ್ಜೆ ಇಟ್ಟು ಮಗನನ್ನು ದೊಡ್ಡ ಮನುಷ್ಯನನ್ನಾಗಿ ಮಾಡಿದ್ದೆ. +ಈ ಕಷ್ಟದಲ್ಲಿ ನೀಲಾಳ ಅಮ್ಮ ಸಹಾಯ ಮಾಡಿದ್ದು ಸ್ವಲ್ಪವೇ… +ಗಂಡನಿಗೆ ಕಾಣದಂತೆ ಸ್ವಲ್ಪವಾದರೆ, ಕಂಡಂತೆ ಸ್ವಲ್ಪ-ಹೀಗೇ ಮಗನ ಫೀಸು, ಬಟ್ಟೆ ಎಲ್ಲಾ ನೋಡಿಕೊಂಡಿದ್ದಳು. +ಅವಳ ಋಣ ಈ ಜನ್ಮದಲ್ಲಿ ತೀರಿಸುವಂತಹುದ್ದೇ? +ದಾಯಾದಿಗಳ ಮಧ್ಯೆ ಒಬ್ಬಂಟಿಯಾಗಿ ಬದುಕುತ್ತಿರುವಾಗ, ಅಣ್ಣಂದಿರೆಲ್ಲ ದೂರವಾದಾಗ, ಅಕ್ಕನ ಮೇಲೆ ಕರುಣೆಯಿಂದ ಬಂದು ಹೋಗಿ ಮಾಡುತ್ತಿದ್ದಳು. +ಮಕ್ಕಳನ್ನು ಕಳುಹಿಸಿಕೊಡುತ್ತಿದ್ದಳು. +ನೀನು ಒಂಟಿಯಲ್ಲ ಅಂತ ಸದಾ ಧೈರ್ಯ ತುಂಬುತ್ತಿದ್ದಳು. +ಇಂತಹ ಕರುಣಾಮಯಿಯ ಏಕಮಾತ್ರ ಪುತ್ರಿಗೆ ಈಗ ನನ್ನದೇ ಗತಿ ಬಂತಲ್ಲ. +ಸಧ್ಯ ಅವಳು ಹೋಗಿದ್ದೇ ಒಳ್ಳೆಯದಾಯಿತು. +ಇದ್ದು ಇದನ್ನೆಲ್ಲ ನೋಡಿ ಸಹಿಸುವ ಶಕ್ತಿ ಅವಳಿಗಿರಲಿಲ್ಲ. +ಪಾಪ ನೀಲಾ ಹೂವಿನಂತಹ ಹುಡುಗಿ. +ದೊಡ್ಡಮ್ಮ, ದೊಡ್ಡಮ್ಮಾ ಅಂತ ಅದೆಷ್ಟು ಅಕ್ಕರೆ ತೋರಿಸುತ್ತಿದ್ದಳು. +ಅಮ್ಮ ಸತ್ತ ಮೇಲೆ ನೀವೇ ನನಗೆ ಅಮ್ಮ ಅಂತ ಹೇಳಿ ನೊಂದುಕೊಳ್ಳುತ್ತಿದ್ದಳು. +ಈ ಹುಡುಗಿಗೆ ಈ ವಯಸ್ಸಿನಲ್ಲಿಯೇ ವೈಧವ್ಯ ಕಾಡಬೇಕೇ? +ಒಳ್ಳೆ ಹುಡುಗ ಅಂತ ಬೇಗನೇ ಮದುವೆ ಮಾಡಿಬಿಟ್ಟಿದ್ದರು. +ಮಗಳೂ ಬೇಗ ಹುಟ್ಟಿದ್ದಳು. +ಆದರೆ ನೀಲಾ ಒಂಟಿಯಾಗಿ ಬಿಟ್ಟಳು ಪರಿತಪಿಸಿದರು ಅಂಬುಜಮ್ಮ. +ಮೋಹನನ ಅಧ್ಯಾಯ ಆಲ್ಲಿಗೆ ಮುಗಿದಂತಾಯಿತು. +ಹತ್ತಿರದವರನ್ನು ಬಿಟ್ಟರೆ ಎಲ್ಲರೂ ಹೊರಟು ನಿಂತರು. +ಮನೆಯಲ್ಲಿ ಸ್ಮಶಾನ ಮೌನ, ಒಂದು ರೂಮಿನಲ್ಲಿ ಇಳಾ ಮಲಗಿ ದುಃಖಸುತ್ತಿದ್ದಳು. +ಅವಳನ್ನು ಸಮಾಧಾನಿಸುತ್ತ ಸುಂದರೇಶ, ರಮೇಶ ಅಲ್ಲಿಯೇ ಇದ್ದರು. +ನೀಲಾ ಮತ್ತೊಂದು ರೂಮಿನಲ್ಲಿ ಅರೆ ಪ್ರಜ್ಞಾವಸ್ತೆಯಲ್ಲಿ ಮೋಹನ, ಮೋಹನ ಅಂತ ಕನವರಿಸುತ್ತಲೇ, ಇಹದ ಪರಿವೇ ಇಲ್ಲದಂತಿದ್ದರೆ, ಗಿರೀಶ ಅವನ ಹೆಂಡತಿ, ಅವಳಿಗೆ ಬಲವಂತವಾಗಿ ಎಳನೀರನ್ನು ಚಮಚದಲ್ಲಿ ಕುಡಿಸುತ್ತ, ಒಂದಿಷ್ಟು ಶಕ್ತಿ ತುಂಬಲು ಯತ್ನಿಸುತ್ತಿದ್ದರು. +ಅಮ್ಮನ ಸ್ಥಿತಿ ಹೀಗಿದ್ದರೂ ಇಳಾ ಬಂದು ತಾಯಿಯನ್ನು ನೋಡಲೇ ಇಲ್ಲ. +ಅವಳ ಹೃದಯ ಅಗ್ನಿಕುಂಡವಾಗಿತ್ತು. +ಹೀಗೆ ಧುತ್ತೆಂದು ವಿಪತ್ತು ಎಗರಿ ಅವಳ ಹೃದಯವನ್ನೇ ಛಿದ್ರವಾಗಿಸಿತ್ತು. +ತಾನಾದರೂ ಏಕೆ ಬದುಕಿರಬೇಕೆಂಬ ಜಿಗುಪ್ಸೆ ಕಾಡಿ, ಸತ್ತು ಬಿಡಬೇಕೆಂದು ಹಲವು ಬಾರಿ ಆಲೋಚಿಸಿದಳು. +ಆದರೆ ದೊಡ್ಡಪ್ಪ, ದೊಡ್ಡಮ್ಮ, ಮಾಮಾ, ಆತ್ತೆಯ ಭದ್ರ ಕಾವಲಿನಲ್ಲಿ ಅವಳು ಅಲ್ಲಿಂದ ಅಲುಗಾಡಲೂ ಆಗುತ್ತಿರಲಿಲ್ಲ. +ಅತ್ತು ಅತ್ತು ಸುಸ್ತಾದ ಇಳಾ ಮನಸ್ಸಿನಲ್ಲಿಯೇ ನೂರೆಂಟು ಆಲೋಚನೆ ಮಾಡುತ್ತಿದ್ದಳು. +ಎಲ್ಲಾ ಸರಿಯಾಗಿದ್ದಿದ್ದರೆ ಈ ಸಮಯದಲ್ಲಿ ತಾನು ಪರೀಕ್ಷೆಯ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಬರೆಯಬೇಕಿತ್ತು. +ವಿಧಿ ಇಲ್ಲಿ ಪಪ್ಪನನ್ನು ಕಳೆದುಕೊಂಡು ತಬ್ಬಲಿಯಾಗಿ ಅಳುವಂತೆ ಮಾಡಿದೆ. +ತನ್ನ ಆಸೆ, ಕನಸುಗಳೆಲ್ಲವನ್ನು ಪಪ್ಪ ಛಿದ್ರ ಮಾಡಿಬಿಟ್ಟರು. +ಪಪ್ಪ ಸಾಯಲು ಕಾರಣವೇನು? +ಪಪ್ಪ ಸಾಯುವಾಗ ಪತ್ರ ಬರೆದಿಟ್ಟಿದ್ದರೇ? +ತಕ್ಷಣವೇ ದೊಡ್ಡಪ್ಪನನ್ನು ಕೇಳಿದಳು. +ಹೌದೆಂದು ತಲೆ ಆಡಿಸಿದ ದೊಡ್ಡಪ್ಪ ಪತ್ರದ ಝೆರಾಕ್ಸ್ ಕಾಫಿಯನ್ನು ತಂದು ಅವಳ ಕೈಯೊಳಗಿರಿಸಿದರು. +‘ಪ್ರಿಯ ನೀಲಾ, ನನ್ನನ್ನು ಕ್ಷಮಿಸು, ನಿನ್ನನ್ನು ಇಳಾಳನ್ನು ನಡುಬೀದಿಯಲ್ಲಿ ಕೈಬಿಟ್ಟು ಹೋಗ್ತಾ ಇದ್ದೇನೆ. +ಸಾಲದ ಭಾದೆಯಿಂದ ತತ್ತರಿಸಿದ್ದೇನೆ. +ಕಾರು, ಒಡವೆ ಎಲ್ಲಾ ಮಾರಿದ್ದೇನೆ. +ಬ್ಯಾಂಕಿನಲ್ಲಿ ತೀರಿಸಲು ಆಗದಷ್ಟು ಸಾಲವಾಗಿದೆ. +ಇಳಾಳನ್ನು ಡಾಕ್ಟರ್‌ನಾಗಿ ಮಾಡುವ ಯೋಗ್ಯತೆ ಕಳೆದುಕೊಂಡಿದ್ದೇನೆ. +ನನ್ನ ಮೇಲೆ ನನಗೆ ಜಿಗುಪ್ಸೆ ಬಂದಿದೆ. +ನಿನ್ನ ಮಾತು ಕೇಳದೆ ಶುಂಠಿಗೆ ಹಣ ಹಾಕಿ ಎಲ್ಲವನ್ನು ಕಳೆದುಕೊಂಡು ನಿಮಗೆ ಮುಖ ತೋರಿಸದವನಾಗಿದ್ದೇನೆ. +ಈ ಪಾಪಿಯನ್ನು ಮರೆತುಬಿಡಿ.’ +ಪತ್ರದ ಸಾರಾಂಶ ಓದಿ ಇಳಾಳಿಗೆ ಪರಿಸ್ಥಿತಿಯ ಸ್ಪಷ್ಟ ಅರಿವಾಯಿತು. +ಎಲ್ಲೋ ಕೇಳುತ್ತಿದ್ದ, ಓದುತ್ತಿದ್ದ ರೈತರ ಆತ್ಮಹತ್ಯೆ ಇವತ್ತು ತನ್ನ ಮನೆಯಲ್ಲಿಯೇ ನಡೆದಿದೆ. +ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪಪ್ಪ ಸಾವಿನತ್ತ ಕೈಚಾಚಿದ್ದಾರೆ. +ಆ ಕ್ಷಣದಲ್ಲಿ ಅದೊಂದೇ ಪರಿಹಾರವಾಗಿ ಕಂಡಿದೆ. +ಸಾಲದ ಹೊರೆ, ಕಾರು, ಒಡವೆ ಮಾರಾಟದಿಂದಾಗಿ ಕಂಗೆಟ್ಟ ಪಪ್ಪ ದುಡುಕಿದ್ದಾರೆ. +ಕೂತು ಆಲೋಚಿಸಿದ್ದರೆ, ಬೇರೆ ಏನಾದರೂ ಪರಿಹಾರ ಹೊಳೆಯುತ್ತಿತ್ತೇನೋ? +ಮನಸ್ಸಿಗೆ ಹತಾಶೆ ಕವಿದು, ಈ ಬಾರಿ ತನ್ನ ಪರೀಕ್ಷೆ ಮುಗಿದೊಡನೆ ನನ್ನ ಮೆಡಿಕಲ್ ಸೀಟಿಗಾಗಿ ಖರ್ಚಾಗುವ ಹಣವನ್ನು ಊಹಿಸಿಯೇ, ಆ ಪರಿಸ್ಥಿತಿಯನ್ನು ಎದುರಿಸುವ ಧ್ಯೆರ್ಯ ಸಾಲದೆ ಮಗಳನ್ನು ಓದಿಸಲಾರದ ಆಶಕ್ತತೆಯನ್ನು ಮನಗಂಡು ಸಾವೇ ಇದಕ್ಕೆ ಪರಿಹಾರವೆಂದುಕೊಂಡ ಪಪ್ಪನ ಮನಸ್ಸನ್ನು ನೆನೆದು ದುಃಖ ಉಮ್ಮಳಿಸಿ ಪಪ್ಪ ನೀನೊಬ್ಬ ನನ್ನೊಂದಿಗಿದ್ದರೆ ಸಾಕಾಗಿತ್ತು. +ಈ ಮೆಡಿಕಲ್ ನಂಗೆ ಬೇಡವಾಗಿತ್ತು. +ನಿನ್ನೊಂದಿಗೆ ನಾನೂ ಕೈಜೋಡಿಸುತ್ತಿದ್ದೆ. +ನಿನಗಿಂತಲೂ ನನಗೆ ಬೇರೇನು ಹೆಚ್ಚಿನದಿರುತ್ತಿತ್ತು. +ಪಪ್ಪ ಎಲ್ಲವನ್ನೂ ಮುಚ್ಚಿಟ್ಟು, ನಮಗೆ ಮೋಸ ಮಾಡಿಬಿಟ್ಟೆ. +ಪಪ್ಪ ನಮ್ಮೊಂದಿಗೆ ಚರ್ಚಿಸಬಹುದಿತ್ತು. +ಬೇರೆ ಏನಾದರೂ ದಾರಿ ಕಾಣ್ತಿತ್ತು. +ಅವಸರ ಮಾಡಿಕೊಂಡುಬಿಟ್ಟೆ ಎಂದು ಮನದಲ್ಲೇ ರೋಧಿಸುತ್ತ ಬಿಕ್ಕಳಿಸಿದಳು. +ಸುಂದರೇಶ ಒಂದೂ ಮಾತನಾಡದೆ ಸುಮ್ಮನೆ ಬೆನ್ನು ಸವರಿದರು. +ಯಾರು ಎಷ್ಟು ಸಮಾಧಾನಿಸಿದರೂ ಕಳೆದು ಹೋದದನ್ನು ಮತ್ತೆ ತರಲು ಸಾಧ್ಯವಿಲ್ಲ. +ಪಪ್ಪ ಮತ್ತೆ ಎಂದಿಗೂ ಹಿಂದಿರುಗಿ ಬರಲಾರ, ನನ್ನ ಕಾಲೇಜಿನ ಕಥೆ ಮುಗಿಯಿತು. +ಇನ್ನೇನಿದ್ದರೂ ಮುಂದಿನ ಹೋರಾಟ… +ಬದುಕ ನಡೆಸುವ ಹೋರಾಟ . +ಮನದಲ್ಲಿಯೇ ನಿರ್ಧರಿಸಿಕೊಂಡು ಎದೆ ಗಟ್ಟಿ ಮಾಡಿಕೊಂಡಳು. +ಇನ್ನು ತಾನು ಅಳಬಾರದು. +ಅತ್ತು ಹೇಡಿಯಾಗಬಾರದು. +ಮೋಹನನ ಮಗಳು ಹೇಗೆ ಬದುಕುತ್ತಿದ್ದಾಳೆ ಎಂದು ಸಾಧಿಸಿ ತೋರಿಸಬೇಕು. +ಈ ಬದುಕು ಕವಲೊಡೆದಿದೆ. +ಅಲ್ಲಿಯೇ ತಾನು ದಿಟ್ಟ ಹೆಜ್ಜೆಯನಿರಿಸಬೇಕು. +ಕಳೆದುಕೊಂಡಲ್ಲಿಯೇ ಮತ್ತೆ ಪಡೆದುಕೊಳ್ಳಬೇಕು. +ಮೋಹನನ ಮಗಳು ಮೋಹನನಂತೆ ಹೇಡಿಯಲ್ಲ, ಧೈರ್ಯವಂತೆ, ಸಾಹಸಿ ಎಂದು ತೋರಿಸುವ ಸಂದರ್ಭ ಈಗ ಎದುರಾಗಿದೆ. +ಇಲ್ಲಿ ತಾನು ಗೆಲ್ಲಬೇಕು, ಗೆಲ್ಲಲೇಬೇಕು-ಎಂದು ಸಂಕಲ್ಪಿಸಿಕೊಂಡಳು. +ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಇರುವ ಅಂಬುಜಮ್ಮನಿಗೆ ಇಲ್ಲಿ ಕೆಲಸವೋ ಕೆಲಸ. +ಮಗನ ಮನೆಯಲ್ಲಿ ಬೇಗ ಎಚ್ಚರವಾದರೂ ಹಾಸಿಗೆಯಲ್ಲಿಯೇ ಹೊರಳಾಡಿ ಸಮಯ ಕಳೆಯಬೇಕಿತ್ತು. +ಎದ್ದು ಯಾವುದೇ ಕೆಲಸ ಮಾಡುವಂತಿರಲಿಲ್ಲ! +ಮಗ, ಸೊಸೆ, ಮೊಮ್ಮಕ್ಕಳ ಸ್ನಾನ ಮುಗಿಯುವ ತನಕ ಕಾದಿದ್ದು ನಂತರ ಸ್ನಾನ ಮಾಡಿ ಸೊಸೆ ಮಾಡಿಟ್ಟಿದ್ದ ತಿಂಡಿಯನ್ನು ತಿಂದು ಮತ್ತೆ ಸುಮ್ಮನೆ ಕುಳಿತಿರುವುದಷ್ಟೆ ಕೆಲಸ. +ಮತ್ತೆ ಮಧ್ಯಾಹ್ನ ಊಟಕ್ಕೆ ಕಾಯುವುದು. +ಊಟ ಮಾಡಿ ಮಲಗುವುದು. +ಯಾರೊಂದಿಗೂ ಮಾತಿಲ್ಲ, ಕಥೆಯಿಲ್ಲ. +ಸೊಸೆ ಅಂತೂ ಮಾತೇ ಆಡುವುದಿಲ್ಲ. +ಮೊಮ್ಮಕ್ಕಳಿಗೆ ಓದುವುದು, ಬರೆಯುವುದೇ ಆಗುತ್ತಿತ್ತು. +ಇನ್ನು ಆಜ್ಜಿಯನ್ನು ವಿಚಾರಿಸಲು ಸಮಯವಾದರೂ ಎಲ್ಲಿರುತ್ತಿತ್ತು. +ಮಗ ಬರುವುದು ರಾತ್ರಿಯಾಗಿರುತ್ತಿತ್ತು. +ಬಂದವನೇ ಸುಸ್ತು ಎನ್ನುತ್ತ ಊಟ ಮಾಡಿ ಮಲಗಿಬಿಡುತ್ತಿದ್ದ. +ಅಮ್ಮನ ಊಟ ಆಯ್ತಾ ಎಂದು ಕೇಳಿ ಉತ್ತರಕ್ಕೂ ಕಾಯದೆ ಮಲಗಿಬಿಡುತ್ತಿದ್ದ. +ಬೆಳಿಗ್ಗೆ ಎದುರಿಗೆ ಸಿಕ್ಕರೆ ಕಾಫಿ ಆಯ್ತಾ, ತಿಂಡಿ ಆಯ್ತಾ ಅಂತ ಕೇಳಿದ್ರೆ ಆಗೋಯ್ತು ಮಗನ ಕರ್ತವ್ಯ. +ಅಷ್ಟಕ್ಕೆ ತಾಯಿ ಮಗನ ಸಂಬಂಧ ಮುಗಿದುಹೋಗುತ್ತಿತ್ತು. +ಆಕ್ಕಪಕ್ಕದಮೊಂದಿಗೆ ಮಾತನಾಡುವುದು ಅವರ ಮನೆಗೆ ಹೋಗುವುದು, ಆಕ್ಕಪಕ್ಕದವರು ತಮ್ಮ ಮನೆಗೆ ಬರುವುದು ಸೊಸೆಗೆ ಇಷ್ಟವಾಗುತ್ತಿರಲಿಲ್ಲ. +ಹಾಗಾಗಿ ಒಬ್ಬಳೇ ಇದ್ದು ಇದ್ದು ಹುಚ್ಚು ಹಿಡಿಯುವಂತಾಗಿ, ಇಲ್ಲಿಂದ ಪಾರಾಗಲು ವೃದ್ಧಾಶ್ರಮ ಸೇರಲು ಮನಸ್ಸು ಮಾಡಿದ್ದರು. +ಅದಷ್ಟು ಸುಲಭವಾಗಿರಲಿಲ್ಲ ಅಂತ ಗೊತ್ತಿದ್ದರೂ, ಮಗನಿಗೂ ಹೇಳದೆ ಹೋಗಲು ನಿರ್ಧರಿಸಿದ್ದರು. +ವೃದ್ಧಾಶ್ರಮದ ವಿಳಾಸಗಳನ್ನೆಲ್ಲ ಬರೆದಿಟ್ಟುಕೊಂಡಿದ್ದರು. +ಮಗನಿಗೆ ಗೊತ್ತಾದರೆ ನೊಂದುಕೊಳ್ಳುತ್ತಾನೆ. +ಆದರೆ ನನ್ನ ವೇದನೆ, ನನ್ನ ಒಂಟಿತನದ ಪರಿಸ್ಥಿತಿ ಅವನಿಗೆ ಆರ್ಥವಾಗುವುದಿಲ್ಲ. +ಅಮ್ಮನನ್ನು ಸುಖವಾಗಿಟ್ಟುಕೊಂಡಿದ್ದೇನೆ ಅಂದುಕೊಂಡಿದ್ದಾನೆ. +ಪಾಪ, ಈ ವಯಸ್ಸಿನಲ್ಲಿ ಹೀಗಿರಲು ತನ್ನಿಂದ ಸಾಧ್ಯವೇ, ವೃದ್ಧಾಶ್ರಮದಲ್ಲಾದರೇ ತನ್ನ ವಯಸ್ಸಿನವರೇ ಇರುತ್ತಾರೆ. +ಅವರೊಂದಿಗೆ ಕಷ್ಟ ಸುಖ ಹಂಚಿಕೊಂಡು, ಅಲ್ಲಿನ ಕೆಲಸ ಮಾಡುತ್ತ ದಿನ ಕಳೆಯುವುದು ಕಷ್ಟವಾಗಲಾರದು. +ಟಿ.ವಿ.ಯಲ್ಲಿ ವೃದ್ದಾಶ್ರಮಗಳನ್ನು ನೋಡಿ ತನ್ನ ಒಂಟಿತನದ ನೋವಿಗೆ ಅದೇ ಮದ್ದು ಎಂಬ ಆನಿಸಿಕೆಯಿಂದಾಗಿ ದಿನಗಳ ಎಣಿಕೆ ಮಾಡುತ್ತ ಸಮಯ ಕಾಯುತ್ತಿದ್ದರು. +ಮಗ, ಸೊಸೆ ಇಲ್ಲದ ಸಮಯ ನೋಡಿ, ಪತ್ರ ಬರೆದಿಟ್ಟು ಹೊರಟುಬಿಡುವುದು ಎಂದು ಆ ದಿನಗಳ ನಿರೀಕ್ಷೆಯಲ್ಲಿರುವಾಗಲೇ ಮೋಹನನ ದುರಂತ ಇಲ್ಲಿಗೆ ಕರೆತಂದಿತ್ತು. +ತಾನು ಇಲ್ಲಿರುವುದು ಮಗನಿಗೂ ಒಂದು ಸಮಾಧಾನ. +ಚಿಕ್ಕಮ್ಮನ ಋಣ ತೀರಿಸುವ ಹಂಬಲದಿಂದ ಅಮ್ಮನನ್ನು ಬಿಡಲು ಸುಲಭವಾಗಿ ಒಪ್ಪಿಗೆ ಕೊಟ್ಟಿದ್ದ. +ಇನ್ನು ಸೊಸೆಯೋ… ಇದ್ದರೂ ಅಡ್ಡಿಯಿಲ್ಲ, ಇಲ್ಲದಿದ್ದರೂ ಬೇಸರವಿಲ್ಲ ಅನ್ನೋ ಸ್ವಭಾವದವಳು. +ಒಟ್ಟಿನಲ್ಲಿ ಅಂಬುಜಮ್ಮನ ಕೊನೆ ದಿನಗಳು ಒಂದು ರೀತಿ ಸುಖಾಂತವಾಗಿತ್ತು. +ಅದು ಈ ರೀತಿ ಈಡೇರುವಂತಾಯಿತಲ್ಲ ಅನ್ನೋ ನೋವು ಮಾತ್ರ ಅವರನ್ನು ಕಾಡುತ್ತಿತ್ತು. +ಮೋಹನನ್ನು ಕಳೆದುಕೊಂಡಿರುವ ನೀಲಾಳ ಬಗ್ಗೆ ಅತೀವ ಅನುಕಂಪ ಉಕ್ಕಿಬರುತ್ತಿತ್ತು. +ಒಬ್ಬಳೇ ಮಗಳೆಂದು ಅತಿ ಮುದ್ದಿನಿಂದ ಸಾಕಿ, ಶ್ರೀಮಂತರೆಂದು ಮೋಹನನಿಗೆ ೧೬ ವರುಷಕ್ಕೆ ಮದುವೆ ಮಾಡಿದ್ದ ತಂಗಿಯ ಬಗ್ಗೆ ಈಗ ಕೋಪ ಬರುತ್ತಿದೆ. +ವಿದ್ಯಾವಂತೆಯನ್ನಾಗಿ ಮಾಡದೆ, ಆರ್ಥಿಕ ಸ್ವಾವಲಂಬನೆಯನ್ನು ಕಲ್ಪಿಸದೆ ಅಂದು ಮದುವೆ ಮಾಡಿದ್ದಕ್ಕೆ ಇಂದು ನೀಲಾ ಈ ಸಂಸಾರದ ಭಾರ ಹೊತ್ತು ನಲುಗಬೇಕಾಗಿದೆ. +ತನ್ನ ಬದುಕನ್ನು ನೋಡಿಯಾದರೂ ತಂಗಿ ಬುದ್ಧಿಯನ್ನು ಕಲಿಯಬೇಕಿತ್ತು. +ಮೋಹನ ಒಳ್ಳೆಯವನೇ. +ನೀಲಾಳನ್ನು ಚೆನ್ನಾಗಿಯೇ ನೋಡಿಕೊಂಡಿದ್ದ. +ಆದರೆ ಈಗ ಈ ಸಂಸಾರದ ದಿಕ್ಕಾಗುವವರು ಯಾರು? +ಇಳಾ ಇನ್ನೂ ಮಗು. +ಪ್ರಪಂಚದ ಯಾವ ಕಷ್ಟಗಳ ಅರಿವೇ ಇಲ್ಲಾ. +ಇನ್ನು ನೀಲಾ ಗಂಡನ ಆಶ್ರಯದಿ ಬೆಚ್ಚಗೆ ಇದ್ದಾಕೆ. +ಈಗ ಈ ಆಸ್ತಿ ನೋಡಿಕೊಂಡು, ಗಂಡನ ಸಾಲ ತೀರಿಸಿ, ಮಗಳನ್ನು ಒಂದು ದಡ ಸೇರಿಸುವಷ್ಟು ಶಕ್ತಳೇ? +ಭಾವಂದಿರು, ಆಣ್ಣಂದಿರ ಸಹಾಯ ದೊರೆಯಬಹುದು. +ಆದರೆ ಪ್ರತಿಕ್ಷಣ ಅವರ ನೆರವು ನಿರೀಕ್ಷಿಸಲು ಸಾಧ್ಯವೇ? +ಏನಾಗಿ ಹೋಯಿತು. +ತನ್ನ ಕಣ್ಮುಂದೆ ಬೆಳೆದ ನೀಲಾಳ ಬದುಕು, ಹೇಗೆ ಚೇತರಿಸಿಕೊಳ್ಳುತ್ತಾಳೆ. +ಇಳಾಳ ಭವಿಷ್ಯವೇನು. +ತಾನಾದರೂ ಅದೆಷ್ಟು ದಿನ ಜೊತೆ ಇರಬಲ್ಲೆ. +ಮುಂದೆ ಅವರಿಬ್ಬರ ಬದುಕೇನು? +ದೇವರೇ ಅವರಿಬ್ಬರ ಬದುಕನ್ನು ನೇರಗೊಳಿಸು. +ಮೋಹನ ಸತ್ತ ದುಃಖದಿಂದ ಹೊರ ಬಂದು ಬದುಕಿನ ಹಾದಿ ಕೊಡುಕೊಳ್ಳುವ ಧೈರ್ಯ, ಶಕ್ತಿ ಅವರಲ್ಲಿ ತುಂಬು. + ಇಳಾಗೆ ಒಬ್ಬ ಒಳ್ಳೆ ಹುಡುಗ ದೊರೆತು ಅವಳ ಬಾಳು ಬಂಗಾರವಾಗಲಿ ಎಂದು ಮನಸ್ಸಿನಲ್ಲಿಯೇ ಹಾರೈಸಿದರು ಅಂಬುಜಮ್ಮ. +ಇಳಾ ಬೆಳಗ್ಗೆ ಎದ್ದವಳೇ ಅಜ್ಜಿಮಾಡಿಕೊಟ್ಟ ಕಾಫಿ ಕುಡಿದು-‘ತೋಟಕ್ಕೆ ಹೋಗಿ ಬರ್ತೀನಿ ಅಜ್ಜಿ’ ಅಂದಳು. +‘ತಿಂಡಿ ಏನು ಮಾಡ್ಲಿ ಪುಟ್ಟ’ ಅಂಬುಜಮ್ಮ ಕೇಳಿದರು. +‘ಯಾವುದೋ ಒಂದು ಮಾಡಿ ಅಜ್ಜಿ’ ಉದಾಸವಾಗಿ ನುಡಿದು ವೇಲ್ ಹೊದ್ದುಕೊಳ್ಳುತ್ತ ಹೊರನಡೆದಳು. +ಇಳಾ ಉದಾಸವಾಗಿ ನಡೆದು ಹೋಗುವುದನ್ನು ನೋಡುತ್ತ- ‘ಜಿಂಕೆ ಮರಿ ಹಂಗೆ ಇದ್ದವಳು ಹೇಗಾಗಿಬಿಟ್ಟಳು. +೧೮ ವರುಷಕ್ಕೆ ಗಾಂಭೀರ್ಯ ಬಂದುಬಿಟ್ಟಿದೆ. +ಮೋಹನ ಹೆಂಡತಿಯ ಬದುಕನ್ನು ನರಕವಾಗಿಸಿ ಬಿಟ್ಟ. +ಮಗಳ ಭವಿಷ್ಯವನ್ನು ಹಾಳು ಮಾಡಿಬಿಟ್ಟ. +ಹಕ್ಕಿ ಹಾಗೆ ಹಾರ್ಕೊಂಡು ಇರೋ ವಯಸ್ಸಿನಲ್ಲಿ ಮನೆ ಜವಾಬ್ದಾರಿ ಹೊತ್ತುಕೊಳ್ಳುವ ಹಾಗಾಯ್ತು ಮಗೂಗೆ, ಏನು ಮಾಡುತ್ತೊ ಇದು. +ನೀಲಾ ಅಂತೂ ಹಾಸಿಗೆ ಬಿಟ್ಟು ಏಳ್ತಾ ಇಲ್ಲ. +ಮಗಳ ಮುಖವಾದ್ರೂ ನೋಡಿಕೊಂಡು ದುಃಖ ಮರೆಯಬಾರದೇ’ ಅಂತ ಅಂದುಕೊಳ್ಳುತ್ತಲೇ ಉಪ್ಪಿಟ್ಟಿಗೆ ಈರುಳ್ಳಿ, ಹೆಚ್ಚತೊಡಗಿದರು. +ತೋಟಕ್ಕೆ ಬಂದ ಇಳಾ ಇಡೀ ತೋಟವನ್ನೆಲ್ಲ ಸುತ್ತಿದಳು. +ಕಾಫಿ ಗಿಡ ಹಸಿರು ಎಲೆಗಳಿಂದ ತುಂಬಿಕೋಡು ಬಸುರಿಯ ಕಳೆಯಿಂದ ಕಂಗೊಳಿಸುತ್ತಿತ್ತು. +ಇನ್ನೇನು ಹೂವಾಗಿ ಬಿಡುತ್ತವೆ. +ತೋಟದ ಯಾವ ಕೆಲಸಗಳೂ ಗೊತ್ತಿಲ್ಲ. +ಆದರೆ ಇನ್ನು ಮುಂದೆ ಎಲ್ಲವನ್ನು ತಿಳಿದುಕೊಳ್ಳಬೇಕು. +ಅಪ್ಪ ಸೋತು ಸಾವಿಗೆ ಶರಣಾಗಿ ನಮ್ಮನ್ನೆಲ್ಲ ನಡುನೀರಿನಲ್ಲಿ ಕೈಬಿಟ್ಟು ಹೋಗಿದ್ದಾರೆ. +ಆದರೆ ನಾನು ಇಲ್ಲಿ ಗೆಲ್ಲಲೇಬೇಕು. +ಗೆದ್ದು ‘ಮೋಹನನ ಮಗಳು ಹೀಗೆ…’ ಅಂತ ನಾಲ್ಕು ಜನ ಅನ್ನಬೇಕು. +ಹಾಗೆ ಬದುಕಿ ತೋರಿಸುತ್ತೇನೆ. +ಈ ನಿರ್ಧಾರ ಪದೇ ಪದೇ ಅವಳಲ್ಲಿ ಮೂಡಿ ಗಟ್ಟಿಯಾಗತೊಡಗಿತು. +ಅಪ್ಪ ಸತ್ತ ದಿನವೇ ಈ ನಿರ್ಧಾರ ಮೂಡಿತ್ತು. +ಈಗ ಮತ್ತೆ ಈ ನಿರ್ಧಾರ ಬದಲಿಸಲಾರೆ ಎಂದು ಶಪಥಗೊಂಡಳು. +ತೋಟವೆಲ್ಲ ಸುತ್ತಿ ಸುಸ್ತಾಗಿ ಮನೆಗೆ ಬರುವಷ್ಟರಲ್ಲಿ ದೊಡ್ಡಪ್ಪ ಸುಂದರೇಶ ಬಂದು ಕುಳಿತಿದ್ದುದು ಕಾಣಿಸಿ ವೇಗವಾಗಿ ಮನೆಯೊಳಗೆ ಹೆಜ್ಜೆ ಹಾಕಿದಳು. +‘ದೊಡ್ಡಪ್ಪ ಯಾವಾಗ ಬಂದ್ರಿ’ ವಿಶ್ವಾಸದಿಂದಲೇ ಪ್ರಶ್ನಿಸಿದಳು. +‘ಬಾ ಇಳಾ, ಎದ್ದಕೂಡಲೇ ತೋಟ ಸುತ್ತೋಕೆ ಹೋಗಿದ್ಯಾ, ಅಲ್ಲೇನು ನಿಂಗೆ ಗೊತ್ತಾಗುತ್ತೆ. +ಆರಾಮವಾಗಿ ಮಲಗಿರುವುದು ಬಿಟ್ಟು ಈ ಚಳೀಲಿ ಯಾಕಮ್ಮ ಹೋಗಿದ್ದೆ’ ಕಳಕಳಿಯಿಂದ ವಿಚಾರಿಸಿದರು. +‘ಇನ್ನೆಲ್ಲಿ ಆರಾಮವಾಗಿ ಮಲಗುವುದು ದೊಡ್ಡಪ್ಪ. +ಇನ್ನುಮೇಲೆ ತೋಟ ಸುತ್ತಲೇಬೇಕಲ್ಲಾ.’ +‘ಆದ್ಯಾಕೆ ಇಳಾ ಹಾಗೆನ್ನುತ್ತಿ. +ಅಪ್ಪ ಸತ್ತುಹೋದ ಅಂತ ನಾವ್ಯಾರೂ ಇಲ್ಲಾ ಅಂತ ಅಂದುಕೊಂಡ್ಯಾ. +ನೀನು ಮತ್ತೆ ಕಾಲೇಜಿಗೆ ಹೋಗಬೇಕು. + ನಿನ್ನಪ್ಪನ ಆಸೆಯಂತೆ ಡಾಕ್ಟರ್ ಆಗಬೇಕು.’ + ‘ಡಾಕ್ಟರಾ ದೊಡ್ಡಪ್ಪ, ಅದೆಲ್ಲ ಮುಗಿದು ಹೋದ ಕನಸು. +ಆ ಕನಸುಗಳಾವುವು ಇನ್ನು ಬಾಳಿನಲ್ಲಿ ಬಾರವು ದೊಡ್ಡಪ್ಪ’-ನಿರಾಶೆಯಿತ್ತು ಧ್ವನಿಯಲ್ಲಿ. +‘ಹಾಗಂದ್ರೆ ಹೇಗಮ್ಮ. +ನೀನು ಹುಟ್ಟಿದಾಗಲೇ ನಿಮ್ಮಪ್ಪ, ಅಮ್ಮ ಡಾಕ್ಟರ್ ಮಾಡ್ತೀವಿ ಅಂತಿದ್ದರು. +ನಿಮ್ಮಪ್ಪ ಒಬ್ಬ ಮೂರ್ಖ. +ನಿನ್ನಂಥ ಚಿನ್ನದ ಗಣಿ ಇರುವಾಗ ಯಕಃಶ್ಚಿಕ್ ಸಾಲಕ್ಕೆ ಹೆದರಿ ಹೇಡಿಯಾದ. +ಅವನು ಕೈಬಿಟ್ಟರು ನಾವು ಕೈಬಿಡಲ್ಲ ಇಳಾ. +ನಾನು ನಿಮ್ಮ ಮಾವಂದಿರ ಜೊತೆ ಮಾತನಾಡಿದ್ದೇನೆ.’ +‘ಈ ವರುಷ ಹೇಗೂ ಹಾಳಾಗಿ ಹೋಯ್ತು. +ಮುಂದಿನ ಸಾರಿ ಪರೀಕ್ಷೆ ಕಟ್ಟು, ಟ್ಯೂಷನ್ನಿಗೆ ಹೋಗು. +ಮನಸ್ಸಿಟ್ಟು ಓದಿ ಮೆರಿಟ್ ಸೀಟ್ ತಗೋ. +ಓದಿಸೋ ಭಾರ ನನ್ನದು. +ನಿಮ್ಮ ಮಾವಂದಿರೂ ನಿಂಗೆ ಸಹಾಯ ಮಾಡ್ತಾರೆ’- ಭರವಸೆ ತುಂಬಿದರು. +‘ಇಲ್ಲಾ ದೊಡ್ಡಪ್ಪ ನಾನು ಓದುವುದಿಲ್ಲ. +ಮನೆ ಪರಿಸ್ಥಿತಿ ನಂಗೆ ಅರ್ಥವಾಗುತ್ತೆ. +ಡಾಕ್ಟರ್ ಓದೋದು ತುಂಬಾ ಕಷ್ಟ ಅಂತ ನಂಗೆ ಗೊತ್ತು. +ನಿಮ್ಗೂ ಕಷ್ಟ ಇದೆ. +ಅಷ್ಟೊಂದು ಲಕ್ಷ ಖರ್ಚು ಮಾಡೋಕೆ ನಮ್ಮ ಮಾವಂದಿರಿಗೆ ಕಷ್ಟವಾಗುತ್ತೆ. +ನಂಗೂ ಓದೋ ಮೂಡು ಇಲ್ಲಾ.’ +‘ಮತ್ತೇನೂ ಮಾಡ್ತೀಯಾ, ಮದ್ವೆ ಆಗ್ತೀಯಾ, ವೀಣಾನ ಜೊತೆ ನಿಂಗೂ ಮಾಡಿಬಿಡ್ತೀನಿ. +ಎರಡು ಮದ್ವೆ ಒಂದೇ ಖರ್ಚಲ್ಲಿ ಆಗುತ್ತೆ. +ನಿಮ್ಮಂಗೂ ಭಾರಕಳ್ಕೊಂಡು ನೆಮ್ಮದಿಯಾಗಿರೋಕೆ ಆಗುತ್ತೆ’ ಅದಕ್ಕೂ ತಯಾರು ಎನ್ನುವಂತೆ ಹೇಳಿದರು. +‘ಮದ್ವೇನಾ ದೊಡ್ಡಪ್ಪ, ಇಷ್ಟು ಬೇಗ, ಅಪ್ಪ ಸತ್ತಮೇಲೆ ನನಗೊಂದು ಗುರಿ ಕಾಣಿಸ್ತಿದೆ. +ಆ ಗುರಿ ಮುಟ್ಟಿದ ಮೇಲೆ ನನ್ನ ಮುಂದಿನ ನಿರ್ಧಾರಗಳು ತೀರ್ಮಾನವಾಗೋದು. +ಅದೇನು ಅಂತ ನಾನು ನಿಧಾನಕ್ಕೆ ನಿಮ್ಮ ಹತ್ರ ಮಾತಾಡ್ತೀನಿ. +ಅಜ್ಜಿ ತಿಂಡಿ ಆಗಿದ್ರೆ ದೊಡ್ಡಪ್ಪಂಗೆ ಕೊಡು’ ಅಂತ ಕೂಗು ಹಾಕಿದಳು. +ಇವಳು ಹೇಳುವುದನ್ನೇ ಕಾಯುತ್ತಿದ್ದ ಅಂಬುಜಮ್ಮ ಎರಡು ತಟ್ಟಿಗೆ ಉಪ್ಪಿಟ್ಟು ಹಾಕಿಕೊಂಡು ಹೇರಳೆಕಾಯಿ ಉಪ್ಪಿನ ಕಾಯಿಯನ್ನು ಸೈಡಿಗೆ ಹಾಕಿಕೊಂಡು ಬಂದರು. +‘ನೀಲಾ ಎದ್ದಿಲ್ವಾ ಇನ್ನೂ. +ಅವಳು ಹೀಗೆ ಮಲಗಿದ್ರೆ ಹೇಗೆ? +ನೀವಾದ್ರೂ ಹೇಳಿ ಮನೆಕಡೆ, ಮಗಳ ಕಡೆ ಗಮನ ಕೊಡೋಕೆ ಹೇಳಬಾರದೆ…’ ಅಂತ ಅಂಬುಜಮ್ಮನನ್ನು ಉದ್ದೇಶಿಸಿ ಹೇಳಿದರು. +‘ನನ್ನ ಮಾತು ಎಲ್ಲಿ ಕೇಳ್ತಾಳೆ. +ಸದಾ ಕಣ್ಣೀರು ಹಾಕ್ತಾ ಇರ್ತಾಳೆ. +ಊಟ, ತಿಂಡಿ ಬಲವಂತವಾಗಿ ತಿನ್ನಿಸಬೇಕು- ದಿನ ಕಳೆದಂತೆ ಆವಳೇ ಸರಿಹೋಗ್ತಾಳೆ ಅಂತ ಸುಮ್ಮನಿದ್ದೇನೆ’ ಅಂದರು. +ತಿಂಡಿ ತಿಂದು ‘ನಾನು ಬಂದಿದ್ದೆ ಅಂತ ನೀಲಾಗೆ ಹೇಳಿಬಿಡಿ.’ +‘ಇಳಾ ಬರ್ತೀನಿ ಕಣಮ್ಮ. +ನೀನಾದ್ರೂ ಧೈರ್ಯ ತಂದುಕೊಂಡು ಓಡಾಡ್ತಿಯಲ್ಲ ಬಿಡು. +ಅಮ್ಮಂಗೂ ಮೋಹನನ ನೆನಪಿನಿಂದ ಹೊರ ಬರೋಕೆ ಏನಾದ್ರೂ ಮಾಡ್ತಾ ಇರು, ಬರ್‍ಲಾ.’ +ಕಾರು ಹತ್ತಿ ಹೊರಟವರನ್ನೇ ಕಣ್ತುಂಬಿ ನೋಡುತ್ತಿದ್ದ ಇಳಾಗೆ ಕಂಬನಿ ಉಕ್ಕಿ ಬಂತು. +ಅಪ್ಪನ ನೆನಪಾಗಿ ಅತ್ತುಬಿಡಬೇಕೆನಿಸಿದರೂ ಅಳಬಾರದು. +ಅಳಬಾರದು ಅಂತ ಮನವನ್ನು ಕಲ್ಲು ಮಾಡಿಕೊಂಡಳು. +ಸ್ನಾನ ಮಾಡಿಕೊಂಡು ‘ಅಜ್ಜಿ ನಾನು ಮೈಸೂರಿಗೆ ಹೋಗಿ ಬರ್ತೀನಿ ಬಟ್ಟೆ, ಲಗೇಜ್, ಪುಸ್ತಕ ಎಲ್ಲಾ ಹಾಸ್ಪಲಿನಲ್ಲಿಯೇ ಉಳಿದಿದೆ. +ಒಂದು ದಿನ ಇದ್ದು ಎಲ್ಲವನ್ನೆಲ್ಲ ತೆಗೆದುಕೊಂಡು ಬಂದುಬಿಡುತ್ತೇನೆ. +ಮತ್ತೆ ಅಲ್ಲಿಗೆ ಹೋಗುವುದಿಲ್ಲವಲ್ಲ’ ಅಂತ ತಿಳಿಸಿ ಹೊರಟಳು. +ಅಮ್ಮಂಗೆ ಹೇಳಿ ಹೋಗು ಅಂದಾಗ ನೀನೇ ಹೇಳಿಬಿಡು ಅಜ್ಜಿ ಎನ್ನುತ್ತ ಹೊರಟೇಬಿಟ್ಟಾಗ ಅಂಬುಜಮ್ಮನಿಗೆ ಇಳಾ ಯಾಕೋ ಅಮ್ಮನ ಜೊತೆ ಮೊದಲಿನಂತಿಲ್ಲ. +ಅವಳನ್ನು ನೇರವಾಗಿ ಮಾತನಾಡಿಸಿಲ್ಲ. +ಮುಖ ಕೊಟ್ಟು ನೋಡಿಲ್ಲ ಅನ್ನಿಸಿ ಇದು ನಿಜಾನೋ ಅಥವಾ ನಂಗೆ ಹಾಗೆ ಅನ್ನಿಸುತ್ತ ಇದೆಯೋ ಅಂತ ದ್ವಂದ್ವಕ್ಕೆ ಒಳಗಾದರು. +ನೀಲಾಗೆ ವಿಷಯ ತಿಳಿಸಿದಾಗ ತಿಂಡಿ ತಿನ್ನುತ್ತಿದ್ದವಳು ಹಾಗೇ ನಿಲ್ಲಿಸಿಬಿಟ್ಟಳು. +‘ಮೈಸೂರಿಗೆ ಹೋದ್ಲ’ ಆ ಧ್ವನಿಯಲ್ಲಿ ನಂಗೆ ಹೇಳದೆ ಹೋದಳಾ ಅನ್ನೋ ಆಶ್ಚರ್ಯ ತುಂಬಿತ್ತು. +ತಕ್ಷಣವೇ ಅಂಬುಜಮ್ಮ ‘ನೀನು ಮಲಗಿದ್ದೆಯಲ್ಲಾ ಏಳಿಸೋದು ಬೇಡಾ ಅಂದ್ಕೊಂಡು ‘ಎದ್ದಮೇಲೆ ಹೇಳಿ’ ಅಂತ ಹೇಳಿ ಹೋದಳು. +ನಾಳೆ ಬಂದು ಬಿಡ್ತಾಳಂತೆ. +ಬಟ್ಟೆ, ಪುಸ್ತಕ ಎಲ್ಲಾ ಅಲ್ಲೇ ಇದೆಯಂತಲ್ಲ ತರೋಕೆ ಹೋಗಿದ್ದಾಳಂತೆ. +ನೀನು ತಿಂಡಿ ತಿನ್ನು’ ಎಂದರು. +ಯಾಕೋ ಮನಸ್ಸಿಗೆ ಪಿಚ್ಚೆನಿಸಿತು. +ಇಳಾ ನನ್ನ ಒಂದು ಮಾತೂ ಕೇಳದೆ ಮೈಸೂರಿನಿಂದ ಎಲ್ಲವನ್ನೂ ವಾಪಸ್ಸು ತರೋಕೆ ಹೋಗಿದ್ದಾಳೆ. +ನಾಳೆ ಬಗ್ಗೆ ಏನು ನಿರ್ಧಾರ ಮಾಡಿದ್ದಾಳೆ. +ಎಲ್ಲಾ ವಾಪಸ್ಸು ತಂದು ಹಾಸ್ಟಲ್ ಬಿಡ್ತೀನಿ ಅಂದ್ರೆ ಮತ್ತೆ ಅಲ್ಲಿಗೆ ಹೋಗುವುದಿಲ್ಲ ಅಂತ ತಾನೇ. +ಅಂದ್ರೇ ಎಲ್ಲವನ್ನೂ ಅವಳೇ ತೀರ್ಮಾನಿಸುವಷ್ಟು, ದೊಡ್ಡವಳಾಗಿಬಿಟ್ಟಳೇ. +ಮುಂದೆ ಓದುವುದರ ಬಗ್ಗೆ ಯಾವ ನಿರ್ಧಾರ ತಗೊಂಡಿದ್ದಾಳೆ. +ನಾವಿರೋ ಸ್ಥಿತೀಲಿ ಡಾಕ್ಟರ್ ಓದೋಕೆ ಆಗದೆ ಇದ್ದರೂ, ಡಿಗ್ರಿನಾದ್ರೂ ಮಾಡಿಸೋ ಅಷ್ಟು ಶಕ್ತಿ ಇಲ್ವಾ ನಂಗೆ. +ಅಲ್ಲೇ ಇದ್ದು ಮತ್ತೆ ಪರೀಕ್ಷೆ ಕಟ್ಕೊಂಡು ಓದಬಹುದಿತ್ತು- ಯಾವುದಾದರೂ ಕೋರ್ಸ್ ಮಾಡಬಹುದಿತ್ತು. +ಮುಂದಿನ ವರ್ಷ ಡಿಗ್ರಿಗೆ ಸೇರಿ ಎಂ.ಎಸ್ಸಿ.,ಮಾಡಿಕೊಂಡ್ರೆ, ಲೆಕ್ಚರರ್ ಆಗಿ ತನ್ನ ಕಾಲ ಮೇಲೆ ತಾನು ನಿಂತ್ಕೋಬಹುದಿತ್ತು. +ಯಾರನ್ನೂ ಕೇಳದೆ ಯಾಕೆ ಇಳಾ ಎಲ್ಲಾ ತಗೊಂಡು ಬರ್ತಾ ಇದ್ದಾಳೆ. +ತಿಂಡಿ ಗಂಟಲಲ್ಲಿ ಇಳಿಯಲಿಲ್ಲ. +ಮೋಹನ್ ಇದ್ದಿದ್ದರೆ!ಈ ವೇಳೆಗೆ ಇಳಾ ಪರೀಕ್ಷೆ ಮುಗಿಸಿಕೊಂಡು ಬಂದಿದ್ದು, ಮುಂದಿನ ಓದಿಗಾಗಿ ಯಾವ ಮೆಡಿಕಲ್ ಕಾಲೇಜು ಚೆನ್ನಾಗಿದೆ ಅಂತ ಚರ್ಚೆ ನಡೀತಿರುತ್ತಿತ್ತು. +ಇನ್ನೈದು ವರುಷದಲ್ಲಿ ಡಾ.ಇಳಾ ಆಗಿಬಿಡುತ್ತಿದ್ದಳು. +ಅವಳ ಹಣೆಯಲ್ಲಿ ಹೀಗೆಲ್ಲ ಬರೆದಿರುವಾಗ ಡಾಕ್ಟರ್ ಆಗೋಕೆ ಸಾಧ್ಯಾನಾ? +ನನ್ನ ಮಗಳಾಗಿ ಹುಟ್ಟಿದ್ದ ಅವಳ ತಪ್ಪು. +ಎಷ್ಟೊಂದು ಬುದ್ಧಿವಂತೆ. +ಎಷ್ಟೊಂದು ಶ್ರಮಪಟ್ಟಿದ್ದಳು. +ಎಲ್ಲವನ್ನು ಮೋಹನ್ ವ್ಯರ್ಥ ಮಾಡಿಬಿಟ್ರು. +ಕೋಪ, ಅಸಹಾಯಕತೆ, ನಿರಾಶೆ, ನೋವು ಎಲ್ಲವೂ ಒಮ್ಮೆಲೇ ಕಾಡಿ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. +ಏನಾಗಿ ಹೋಯ್ತು ತನ್ನ ಬದುಕು, ಇರುವ ಒಬ್ಬಳೇ ಮಗಳು ಡಾಕ್ಟರಾಗಲೆಂದೇ ಹುಟ್ಟಿದವಳು. +ಇಂದು ಪಿಯುಸಿ.ಗೆ ವಿದ್ಯಾಭ್ಯಾಸ ನಿಲ್ಲಿಸುವಂತಹ ಪರಿಸ್ಥಿತಿ. +ಮೋಹನ್ ನಿಮ್ಗೆ ಇದು ಗೊತ್ತಿರಲಿಲ್ಲವೇ. +ಈ ಆಸ್ತಿನೆಲ್ಲ ಮಾರಿಯಾದ್ರೂ ಅವಳ್ನ ಓದಿಸಿ ನಾವು ಹೇಗೋ ಬದುಕಬಹುದಿತ್ತು. +ನಿಮ್ಮ ದುಡುಕುತನ ನಿಮ್ಮ ಮಗಳ ಬದುಕನ್ನು ಸರ್ವನಾಶ ಮಾಡಿಬಿಡ್ತಲ್ಲ. +ನಿಮ್ಮನ್ನ ನಾನು ಕ್ಷಮಿಸಲ್ಲ. +ಈ ಜನ್ಮದಲ್ಲಿ ಕ್ಷಮಿಸಲ್ಲ. +ಕಣ್ಣೀರಿನಿಂದ ದಿಂಬನ್ನು ತೋಯಿಸುತ್ತ ಬಡಬಡಿಸುತ್ತಲೇ ಇದ್ದಳು. +ಅಂಬುಜಮ್ಮ ಒಳಬಂದವರು ತಿಂಡಿಯನ್ನು ತಿನ್ನದೆ ನೀಲಾ ಅಳುತ್ತ ಮಲಗಿರುವುದನ್ನು ನೋಡಿ ರೇಗಿದರು. +‘ನೀಲಾ ಎದ್ದೇಳು ಮೇಲೆ, ಮೋಹನ ಅಂತೂ ಹೋಗಿ ಅಯ್ತು. +ಈಗ ನೀನು ಹೀಗೆ ಅತ್ತು ಊಟ, ತಿಂಡಿ ಬಿಟ್ಟು ಇಳಾನ ತಬ್ಬಲಿ ಮಾಡಬೇಕೂ ಅಂತ ಇದ್ದೀಯಾ? +ಇವತ್ತಿನಿಂದ ತೋಟಕ್ಕೆ ಜನ ಬರ್ತಾರಂತೆ. +ಬೆಳಿಗ್ಗೆ ನಿಮ್ಮ ಭಾವ ಬಂದು ಹೇಳಿ ಹೋದರು. +ಸಾಯುವವರು ಸತ್ರು. +ಇರೋರು ಬದುಕಬೇಕಲ್ಲ. +ಎದ್ದು ಸ್ನಾನ ಮಾಡಿ ಸೀರೆ ಉಟ್ಕೊಂಡು ತೋಟಾನ ಒಂದು ಸಲ ಸುತ್ತಿ ಬಾ. +ಏನು ಕೆಲ್ಸ ಮಾಡಿಸಬೇಕು ಅಂತ ಒಂದು ಸಲ ಅವರಿಗೆ ಹೇಳು. +ಮನೆ ರಥ ನಡೆಯಬೇಡವಾ, ಎದ್ದೇಳು ಈಗ ಈ ಮನೆಗೆ ನೀನು ಗಂಡಸು ಆಗಬೇಕು. +ಮೋಹನನ ಸ್ಥಾನದಲ್ಲಿ ನಿಂತು ಸಂಸಾರ ನಡೆಸಬೇಕು. +ಸಾಕು, ಕೋಣೆ ಒಳಗೆ ಕೂತಿದ್ದು ಕಟುವಾಗಿಯೇ ನುಡಿದು ಬಲವಂತವಾಗಿ ಎಬ್ಬಿಸಿ ಬಚ್ಚಲ ಮನೆಗೆ ಕರೆತಂದರು. +ಸ್ನಾನ ಮಾಡಿ ಹೊರ ಬಂದು ನೀಲಾ ಒಂದಿಷ್ಟು ಸಮಾಧಾನ ಹೊಂದಿದಂತೆ ಕಂಡರೂ ದುಃಖದ ಛಾಯೆ ಏನೂ ಕಡಿಮೆ ಆಗಿರಲಿಲ್ಲ. +ಯಾಂತ್ರಿಕವಾಗಿ ಸೀರೆ ಉಟ್ಟು ಹೊರಬಂದಳು. +ಸೂರ್ಯನ ಕಿರಣ ಕಣ್ಣಿಗೆ ಚುಚ್ಚಿದಂತಾಗಿ ಕಣ್ಣುಬಿಡಲೇ ಪ್ರಯಾಸಪಟ್ಟಳು. +ಈ ರೀತಿಯ ಬೆಳಕು ಕಂಡು ಒಂದು ತಿಂಗಳ ಮೇಲಾಗಿತ್ತಲ್ಲ! +ಬದುಕಿನಾ ಬೆಳಕೆ ಮರೆಯಾಗಿ ಹೋಯ್ತಲ್ಲ. +ಇನ್ನೆಲ್ಲ ಕತ್ತಲು… ಕಾರ್ಗತ್ತಲ ಬದುಕು… +ಕಾಲು ಯಾಂತ್ರಿಕವಾಗಿ ತೋಟಕ್ಕೆ ಕರೆದೊಯ್ದವು. +ಆಳುಗಳೆಲ್ಲಾ ಗುಂಪಾಗಿ ಕುಳಿತು ಮಾತಾಡಿಕೊಳ್ಳುತ್ತಿದ್ದವರು ನೀಲಾಳನ್ನು ಕಂಡೊಡನೆ ಗಡಬಡಿಸಿ ಎದ್ದು ನಿಂತರು. +ಈ ಸಮಯದಲ್ಲಿ ಅವಳನ್ನು ಇಲ್ಲಿ ನಿರೀಕ್ಷಿಸಿರದ ಅವರಿಗೆ ಗೊಂದಲವುಂಟಾಗಿ ಪೆಚ್ಚಾಗಿ ಅವಳನ್ನು ನೋಡುತ್ತ ನಿಂತುಬಿಟ್ಟರು. +ಅವರ ಬಳಿ ಬಂದ ನೀಲಾ ‘ಏನು ಕೆಲಸ ಮಾಡ್ತೀರಿ’, ಎಷ್ಟು ಜನ ಬಂದಿದ್ದೀರಿ. +ಇವತ್ತು ಧೂಳ ಅಗತೆ ಮಾಡ್ತೀರಾ, ಮಳೆ ಬಂದಿದೆ. +ಹೂವಾಗುತ್ತೆ… ಇನ್ನು ಧೂಳು ಅಗತೆ ಮುಗಿಸಿ, ಆಮೇಲೆ ಮರಗಸಿ ಮಾಡಿ, ನಿಮ್ಗೆ ನನಗಿಂತ ಚೆನ್ನಾಗಿ ಗೊತ್ತಿದೆ. +ನಾಳೆ ನಿಮ್ಮ ಜೊತೆ ಇನ್ನೊಂದಿಷ್ಟು ಜನಾನ ಕರ್ಕೊಂಡು ಬನ್ನಿ, ಬೇಗ ಕೆಲಸ ಮುಗಿಸಬಹುದು’ ಎಂದು ಹೇಳಿದಳು. +ಆ ದನಿಯಲ್ಲಿ ಜೀವವೇ ಇರಲಿಲ್ಲ. +ಹೇಳಬೇಕಲ್ಲ ಅಂತ ಹೇಳ್ತಾ ಇರೋದು ಸ್ಪಷ್ಟವಾಗಿ ಕಾಣಿಸಿತು. +ಅವರುಗಳು ಒಂದೂ ಮಾತಾಡದೆ ಸುಮ್ಮನೆ ತಲೆಯಾಡಿಸಿದರು. +ಸೋತ ಹೆಜ್ಜೆ ಇರಿಸುತ್ತ ಹೋಗುತ್ತಿದ್ದ ನೀಲಾಳನ್ನು ನೋಡುತ್ತಿದ್ದ ಆಳುಗಳು ‘ಪಾಪ, ಅಮ್ಮಾವರಿಗೆ ಈ ಗತಿ ಬರಬಾರದಾಗಿತ್ತು. +ನೆನ್ನೆ ಮೊನ್ನೆ ಲಗ್ನ ಆಗಿ ಬಂದಂಗೈತೆ, ಹಸೆಮಣೆ ಮೇಲೆ ಕೂರಿಸಬಹುದು ಅಂಗಿದಾರೆ. +ಮೋಹನಯ್ನೋರು ತಪ್ಪು ಮಾಡಿಬಿಟ್ರು. +ಇಂಥ ಚಂದದ ಹೆಣ್ಣು. +ಗೊಂಬೆ ಮಗಳನ್ನು ಬಿಟ್ಟೋಗೋಕೆ ಅದೆಂಗೆ ಮನಸ್ಸು ಮಾಡಿದ್ರೋ’ ಒಬ್ಬರಿಗೊಬ್ಬರು ಮಾತಾಡಿಕೊಂಡರು. +ಭೈರಪ್ಪ ‘ನೋಡ್ರಪ್ಪ ಈ ತೋಟದ ಕೆಲ್ಸ ಏನೇನು ಆಗಬೇಕೂ ಅದನ್ನು ನಾವೇ ಮುಂದೆ ನಿಂತು ಮಾಡೋಣ. +ಅಮ್ಮಾವ್ರಿಗೂ ಏನೂ ಗೊತ್ತಾಗಲ್ಲ. +ಆ ಮಗೀಗೂ ಏನೂ ಗೊತ್ತಾಗೊಲ್ಲ. +ನಮ್ಮ ತೋಟ ಇದು ಅಂತ ಕೆಲ್ಸ ಮಾಡೋಣ. +ಕೂಲಿ ಎಷ್ಟು ಕೊಡ್ತಾರೋ ಕೊಡ್ಲಿ. +ಕೊಡೋಕೆ ಆಗದೆ ಇದ್ರೆ ಬಿಡ್ಲಿ. +ನಾವು ದಿನಾ ಇಲ್ಲಿ ಅರ್ಧ ದಿನ ಕೆಲಸ ಮಾಡಿ, ಇನ್ನರ್ಧ ದಿನ ಬೇರೆ ಕಡೆ ಮಾಡೋಣ. +ಈ ವರುಷ ಸ್ವಲ್ಪ ಅವರಿಗೆ ಸಹಾಯ ಮಾಡೋಣ’ ಅಂತ ಹೇಳಿದಾಗ ಇತರರೂ ಅದಕ್ಕೆ ಒಪ್ಪಿಕೊಂಡರು. +ಅವರಿಗೆಲ್ಲಾ ಗೊತ್ತಿತ್ತು. +ಹಣಕಾಸಿನ ಸಮಸ್ಯೆಯಿಂದಾಗಿಯೇ ಮೋಹನ ಆತ್ಮಹತ್ಯೆ ಮಾಡಿಕೊಂಡಿದ್ದು. + ಈಗ ಮನೆ ಪರಿಸ್ಥಿತಿ ಸ್ವಲ್ಪವೂ ಸರಿ ಇಲ್ಲ ಅಂತ ಗೊತ್ತಾಗಿಯೇ ಅವರೆಲ್ಲ ಭೈರಪ್ಪ ಹೇಳಿದ್ದಕ್ಕೆ ಒಪ್ಪಿಕೊಂಡಿದ್ದು. +ಮೋಹನ ಬದುಕಿರುವಾಗ ಆಳುಗಳನ್ನು ಆಳುಗಳಂತೆ ಕಾಣುತ್ತಿರಲೇ ಇಲ್ಲ. +ಅವರೊಂದಿಗೆ ತಾನೂ ಕೆಲಸಕ್ಕೆ ಇಳಿದುಬಿಡುತ್ತಿದ್ದ. +ಹಾಸ್ಯ ಪ್ರವೃತ್ತಿಯವನಾದ ಮೋಹನ ಸದಾ ಏನಾದರೂ ಹೇಳುತ್ತ, ನಗಿಸುತ್ತ ಆಳುಗಳೊಂದಿಗೆ ಬೆರೆತು ಹೋಗಿ ಅವರಾರಿಗೂ ಮೋಹನ ತೋಟದ ಯಜಮಾನ ಅಂತ ಅನ್ನಿಸುತ್ತಿರಲೇ ಇಲ್ಲ. +ಕಷ್ಟಸುಖ ಅಂದರೆ ಮನೆಯವನಂತೆ ಸ್ಪಂದಿಸುತ್ತಿದ್ದ. +ಹಣಕಾಸಿನ ವಿಚಾರದಲ್ಲಿ ಧಾರಾಳವಾಗಿ ನೆರವಾಗುತ್ತಿದ್ದ. +ಮದುವೆ, ಮುಂಜಿ, ಸಾವು- ನೋವುಗಳಲ್ಲಿ ಮನೆಯವನಂತೆ ನಿಂತು ಕೆಲಸ ನಿರ್ವಹಿಸುತ್ತಿದ್ದ. +ಈ ಸರಳ ನಡೆನುಡಿಯೇ ಎಲ್ಲರಲ್ಲೂ ಮೋಹನ್ ಬಗ್ಗೆ ಅಭಿಮಾನ ಮೂಡಿಸಿ ತಮ್ಮವರಲ್ಲಿ ಒಬ್ಬ ಎಂದೇ ಭಾವಿಸಿಕೊಂಡಿದ್ದರು. +ಮೋಹನ ಸತ್ತಾಗ ಸ್ವಂತ ಅಣ್ಣನನ್ನೋ, ತಮ್ಮನನ್ನೋ ಕಳೆದುಕೊಂಡಷ್ಟು ದುಃಖ ಅವರಿಗೂ ಆಗಿತ್ತು. +ಈ ರೀತಿ ತಮ್ಮ ಕಷ್ಟಸುಖಗಳಲ್ಲಿ ನೆರವಾಗುವವರು ತಮ್ಮವರನ್ನು ತಬ್ಬಲಿ ಮಾಡಿಬಿಟ್ರಲ್ಲ ಅಂತ ಒಬ್ಬರನೊಬ್ಬರು ತಬ್ಬಿ ಅತ್ತು ಗೋಳಾಡಿದ್ದರು. +ಹಾಗೆಂದೇ ಈಗ ಮೋಹನನ ತೋಟದಲ್ಲಿ ಕೂಲಿ ಇಲ್ಲದೆ ಕೆಲಸ ಮಾಡಲು ಸಿದ್ದರಾದರು. +ಕಾಫಿ ಮಾಡ್ಕೊಂಡು ಫ್ಲಾಸ್ಕಿನಲ್ಲಿ ಹಾಕಿಕೊಂಡು ಇವರು ಕೆಲಸ ಮಾಡುತ್ತಿದ್ದ ಜಾಗಕ್ಕೆ ಬಂದ ಅಂಬುಜಮ್ಮ ‘ಬನ್ನೀಪ್ಪ ಕಾಫಿ ಕುಡೀರಿ’ ಅಂತ ಕರೆದರು. +ಮೋಹನ ಇದ್ದಾಗ ಇದೇ ಸಮಯಕ್ಕೆ ನೀಲಾ ಹೀಗೇ ಕಾಫಿ ತರುತ್ತಿದ್ದದ್ದು. +ತಾನೊಬ್ಬನೇ ಕುಡಿಯದೆ ಎಲ್ಲರಿಗೂ ಕೊಟ್ಟು ಕುಡಿಯುತ್ತಿದ್ದದ್ದು ನೆನಪಾಗಿ ದುಃಖದಿಂದ ಭಾರವಾದರು. +‘ನೀವ್ಯಾಕೆ ತರೋಕೆ ಹೋದ್ರಿ ಅಮ್ಮಾವ್ರೆ, ಯಾವ ತೋಟದಲ್ಲೂ ಹೀಗೆ ಆಳುಗಳಿಗೆ ಕಾಫಿ ಕೊಡಲ್ಲ. +ನಾಳೆಯಿಂದ ಇದ್ನೆಲ್ಲ ಹಚ್ಕೋಬೇಡಿ. +ಮೋಹ್ನಪ್ಪನೋರು ಇದ್ದಾಗ ಅವರಿಗಾಗಿ ನೀಲಮ್ಮೋರೇ ತರೋರು. +ಈಗ ನಮಗೋಸ್ಕರ ತರಬೇಡಿ ಅಮ್ಮೋರೇ. +ಈ ವಯಸ್ಸಿನಲ್ಲಿ ನೀವು ಹೀಗೆ ತರಬೇಕಾ?’ ಭೈರಪ್ಪ ಸಂಕೋಚದಿಂದ ನುಡಿದ. +‘ಅಯ್ಯೋ ಬಿಡ್ರಪ್ಪ. +ಇದೆಲ್ಲ ಕಷ್ಟಾನಾ. +ನಂಗೂ ಅಡ್ಗೆ ಮಾಡಾಗಿತ್ತು.’ ಸುಮ್ನೆ ಕೂತ್ಕೊಂಡು ಏನು ಮಾಡ್ಲಿ. +ತೋಟಾನಾದ್ರೂ ನೋಡೋಣ ಅಂತಾ ಬಂದೆ. +ಕಾಫಿಪುಡಿ ಕೊಳ್ಳೋಹಾಗಿಲ್ಲ. +ಹಾಲು ಕೊಳ್ಳೋ ಹಾಗಿಲ್ಲ ಮೊದಲಿಂದ್ಲೂ ಕಾಫಿ ಕೊಟ್ಟು ಅಭ್ಯಾಸ ಇಲ್ಲಿ. +ಮೋಹನ ಇಲ್ಲಾ ಅಂತ ಯಾಕಪ್ಪ ತಪ್ಪಿಸಬೇಕು. +ಮೇಲೆ ನೋಡ್ತಾ ಇರ್ತಾನೆ. +ನೀವು ಕುಡೀರಿ. +ನೀವು ಕುಡಿದು ತೃಪ್ತಿಪಟ್ಟರೆ ಅವನ ಆತ್ಮ ಸಂತೋಷ ಪಡುತ್ತೆ’ ಹೇಳುತ್ತ ಫ್ಲಾಸ್ಕಿನಿಂದ ಕಾಫಿ ಬಗ್ಗಿಸಿ ಕೊಡುತ್ತ ಅಲ್ಲೇ ಕುಳಿತರು. +‘ಅಜ್ಜಮ್ಮ, ನೀವು ಇರೋದ್ರಿಂದ ನೀಲಮ್ಮೋರಿಗೆ ಎಷ್ಟೋ ಆಸರೆ ಆಗೈತೆ. +ನೀವೂ ಇಲ್ಲದೆ ಇದ್ದಿದ್ರೆ ಅವರ ಗತಿ ಏನಾಗಬೇಕಿತ್ತು. +ಸಣ್ಣ ಮಗ ಅದು. +ಅದನ್ನ ಕಟ್ಕೊಂಡು ನೀಲಮ್ಮ ಹೇಗೆ ಇರ್ತ ಇದ್ರೋ ಏನೋ. +ನೀವೊಂದು ಬಲ ಇದ್ದಂಗೆ’ ಶೇಖರ ಹೇಳಿದ. +‘ನಾನು ತಾನೇ ಬೇರೆಯವಳಾ. +ನಂಗೂ ಮಗನ ಜೊತೆ, ಸೊಸೆ ಜೊತೆ ಏಗಿ ಏಗಿ ಸಾಕಾಗಿತ್ತು. +ನೀಲಾಳಿಗೆ ಒಂದು ಆಸರೆ. +ನಂಗೂ ಒಂದು ಆಸರೆ. +ಜೀವನ ಅಂದ್ರೆ ಇದೆ ಅಲ್ವಾ ಒಬ್ಬರಿಗೊಬ್ಬರು ಆಗೋದು. +ಇಲ್ಲಿ ನಂಗೆ ಯಾವ ಕೊರತೆ ಇದೆ. +ನಂದೇ ಕೈ….ನಂದೇ ಯಜಮಾನಿಕೆ ಪಟ್ಟ ಸಿಕ್ಕಿಬಿಟ್ಟಿದೆ. +ಈ ರೀತಿ ಆಗ ಬೇಕಾಗಿತ್ತಾ…’ ಮತ್ತೆ ಮೋಹನನ ಸಾವಿನತ್ತ ಹೊರಳಿದರು. +‘ಮೋನಪ್ಪರಿಗೆ ಅದೃಷ್ಟ ಇಲ್ಲಾ ಬಿಡ್ರಮ್ಮ, ಅವರ ಆಯಸ್ಸೇ ಅಷ್ಟಿತ್ತು ಅಂತ ಕಾಣುತ್ತೆ. +ಹೋದೋರು ಹೋದ್ರು ಈಗ ಇರೋರು ಬದುಕಬೇಕಲ್ಲ. +ಹೆಂಗೂ ನೀಲಮ್ಮನೋರ ಚೆನ್ನಾಗಿ ನೋಡಿಕೊಳ್ಳಿ. +ಇಲ್ಲದೆ ಇದ್ರೆ ಇಳಾಮ್ಮೋರೋ ತಬ್ಬಲಿ ಆಗಿಬಿಡ್ತಾರೆ. +ನೀವೇ ಅವರಿಗೆ ದಿಕ್ಕಾಗಬೇಕು ಈಗ’- ಸಮಾಧಾನಿಸಿದರು ಎಲ್ಲರೂ. +ಹೀಗೆ ಎಲ್ಲರೊಂದಿಗೆ ಮಾತನಾಡುತ್ತಲೇ ಅಂಬುಜಮ್ಮ ಸಮಯ ಕಳೆದರು. +ಅವರು ಕೆಲಸ ಮುಗಿಸಿ ಹೊರಟು ನಿಂತರು. +ನಾಳೆ ಬರುವುದಾಗಿ ಹೇಳಿದಾಗ ‘ಬೇಗ ಬಂದು ನಿಮ್ಮ ತೋಟ ಅಂತ ಕೆಲ್ಸ ಮಾಡ್ರಪ್ಪ, ನಮ್ಮ ನೀಲಂಗು ಏನೂ ಗೊತ್ತಾಗಲ್ಲ. +ಅವರ ಭಾವ ಪ್ರತಿದಿನ ಇಲ್ಲಿಗೆ ಬರೋಕೆ ಆಗುತ್ತ. +ನೀವೇ ಈ ತೋಟಾನ ಉಳಿಸಬೇಕು. +ನೀವು ಮನಸ್ಸು ಮಾಡಿ ದುಡಿದ್ರೆ ಸಾಲ ತೀರಿಸಿ ಅವರು ಈ ಆಸ್ತೀನಾ ಉಳಿಸಿಕೊಳ್ಳಬಹುದು ಅಂತ ನಿವೇದಿಸಿಕೊಂಡರು. +‘ನೀವು ಹೇಳಬೇಕಾ ಅಮ್ಮೋರೇ. +ಮೋಹನಪ್ಪ ನಮಗೆಲ್ಲ ಅಣ್ಣನಂಗೆ ಇದ್ರು, ಈಗ ಅವರಿಲ್ಲ ಅಂತ ಕೈ ಬಿಟ್ಟುಬಿಡ್ತೀವಾ? +ಹೆದರಬೇಡಿ ಇದು ನಮ್ಮ ತೋಟ. +ಇದನ್ನ ಚಿನ್ನ… ಚಿನ್ನ ಇಟ್ಕಂಡಂಗೆ ಇಟ್ಕೊತೀವಿ. +ನೀವೇನು ಚಿಂತೆ ಮಾಡಬೇಡಿ. +ಈ ಸಲ ಪಸಲು ಚೆನ್ನಾಗಿ ಬರೋಹಂಗೆ ಕೆಲ್ಸ ಮಾಡ್ತೀವಿ’ ಎಲ್ಲರೂ ಅಂಬುಜಮ್ಮನಿಗೆ ಧೈರ್ಯ ತುಂಬಿದರು. +ಮೋಹನನ ಒಳ್ಳೆಯತನ ಅವನ ಹೆಂಡ್ತೀನಾ ಮಗಳನ್ನ ಕಾಪಾಡುತ್ತೆ ಅಂತ ಅಂದುಕೊಳ್ಳುತ್ತ ಪಾಪ ಈ ಜನ ಎಲ್ಲಾ ಒಳ್ಳೆಯವರು. +ಮೋಹನನ ಮೇಲೆ ಅವರಿಗೆಲ್ಲ ಎಷ್ಟೊಂದು ಅಭಿಮಾನ. +ಹೇಗೋ ಕಾಲ ತಳ್ಳಿದರೆ ಆಯ್ತ. +ಆ ಮಗೂದು ಒಂದು ಮದ್ವೆ ಆಗಿ ಒಳ್ಳೆಮನೆ ಸೇರೋ ತನಕ ಈ ಆಸ್ತೀನೆಲ್ಲ ಜೋಪಾನ ಮಾಡಬೇಕು. +ಆಮೇಲೆ ನೀಲಂದು ಹೇಗೋ ಆಗುತ್ತೆ ಅಂದುಕೊಳ್ಳುತ್ತಲೇ ಫ್ಲಾಸ್ಕ್ ಹಿಡಿದುಕೊಂಡು ಮನೆಗೆ ನಡೆದರು. +ನೀಲನೊಂದಿಗೆ ಆಳುಗಳು ಆಡಿದ ಮಾತೆಲ್ಲವನ್ನ ಹೇಳಿಕೊಂಡು ಸಂತೋಷಿಸಿದರು. +‘ಇಷ್ಟೆಲ್ಲ ಇರುವಾಗ ನಂಗೆ ಏನು ಆತಂಕ ಇಲ್ಲಾ ಕಣೆ ನೀಲಾ. +ತೋಟದ ಕೆಲ್ಸದ ಜವಾಬ್ದಾರಿನೆಲ್ಲ ಅವರೇ ಹೊತ್ತುಕೊಂಡಿದ್ದಾರೆ. +ಮೋಹನನ ಕಂಡ್ರೆ ಅವರಿಗೆಲ್ಲ ತುಂಬಾ ಪ್ರೀತಿ ಕಣೆ’. +ಅಂತಾ ದಿನವೆಲ್ಲ ಹೇಳ್ತಾನೇ ಇದ್ರು. +ನೀಲಾ ಮಾತ್ರ ಮೌನ ಮುರಿಯಲೇ ಇಲ್ಲ. +ಊಟ ಮಾಡಿ ಮಲಗಿದ್ದ ನೀಲಾ ನಿದ್ರೆ ಬಾರದೆ ಹೊರಳಾಡಿ, “ದೊಡ್ಡಮ್ಮ, ಕೆಲ್ಸ ಹೇಗೆ ಮಾಡಿದ್ದಾರೋ ನೋಡಿಕೊಂಡು ಬರ್ತ್ತೀನಿ. +ತೋಟಕ್ಕೆ ಹೋಗ್ತೀನಿ ನೀನು ಮಲಗಿರು” ಎಂದು ನೀಲಾ ಎದ್ದು ಹೊರಟಾಗ ‘ನಂಗೂ ನಿದ್ದೆ ಬರ್ತಾ ಇಲ್ಲಾ ಕಣೆ, ಒಬ್ಳೆ ತೋಟಕ್ಕೆ ಹೋಗಬೇಡ, ಇರು ನಾನೂ ಬತ್ತೀನಿ’ ಅಂತಾ ಅಂಬುಜಮ್ಮನೂ ಹೊರಟು ನಿಂತರು. +ತೋಟದಲ್ಲಿ ಗಿಡಗಳ ಕೆಳಗಿದ್ದ ಒಣ ಎಲೆಗಳನ್ನೆಲ್ಲ ತೆಗೆದು ಸ್ವಚ್ಛಗೊಳಿಸಿದ್ದರು. +ಈಗ ತೋಟ ಕಳೆ ಕಳೆಯಾಗಿ ಸ್ವಚ್ಛವಾಗಿ ಕಾಣುತ್ತಿತ್ತು. +‘ಪರವಾಗಿಲ್ಲ ಮನೆಯವರೊಬ್ಬರೂ ಜೊತೆಯಲ್ಲಿ ಇಲ್ಲದೆ ಇದ್ದರೂ ನೀಟಾಗಿ ಕೆಲಸ ಮುಗಿಸಿದ್ದಾರೆ ದೊಡ್ಡಮ್ಮ, ನಾಳೆ ಇಳಾ ಬರ್ತ್ತಾಳಲ್ಲ’- ನೀಲಾ ಕೇಳಿದಳು. +‘ಹ್ಹೂ ಕಣೆ. +ನಾಳೇನೆ ಬರ್ತ್ತೀನಿ ಅಂದ್ಲು. +ಈಗ ಕಾಲೇಜು ಇಲ್ಲ…. +ಪರೀಕ್ಷೆನೂ ಇಲ್ಲ… ಅಲ್ಲೇನು ಮಾಡ್ತಾಳೆ ಇದ್ದುಕೊಂಡು…’ +‘ಅಲ್ಲಾ ದೊಡ್ಡಮ್ಮ, ನನ್ನ ಒಂದು ಮಾತು ಕೇಳಬೇಕು ಅಂತ ಅವಳಿಗೆ ಅನ್ನಿಸಲಿಲ್ಲವಾ?’ +‘ಹಾಗಲ್ಲ ಕಣೆ, ಬೆಳಿಗ್ಗೇನೆ ನಾನು ನಿಂಗೆ ಹೇಳಲಿಲ್ಲವಾ, ನೀನು ಮಲಗಿದ್ದೆ. +ಯಾಕೆ ಸುಮ್ನೆ ಏಳಿಸೋದು ಅಂತ ಅಂದುಕೊಂಡಿದ್ದಾಳೆ.’ +‘ಇಲ್ಲಾ ದೊಡ್ಡಮ್ಮ, ಮೋಹನ ಸತ್ತಾಗಲಿಂದ ಅವಳು ನನ್ನ ಜೊತೆ ಮಾತಾಡ್ತ ಇಲ್ಲ ನೋಡ್ತ ಇಲ್ಲ. +ಮುಂಚಿನಂತೆ ಅಮ್ಮ ಅಂತ ನನ್ನ ಹತ್ರ ಬರ್ತ ಇಲ್ಲಾ. +ನಾನೂ ನನ್ನದೇ ಲೋಕದಲ್ಲಿ ಇದ್ದುಬಿಟ್ಟೆ. +ನನ್ನದೆ ದುಃಖದಲ್ಲಿ ಅವಳನ್ನು ಗಮನಿಸಲೇ ಇಲ್ಲ. +ಅವಳಿಗಾಗಿರೋ ದುಃಖ ನಂಗೂ ಆಗಿದೆ. +ನಾವಿಬ್ಬರೂ ಸಮಾನ ದುಃಖಿಗಳು. +ಆದ್ರೆ ನಾನು ಅವಳ ಬಗ್ಗೆ ಆಲೋಚಿಸಲಿಲ್ಲ. +ಅವಳಾದ್ರೂ ನನ್ನ ಬಗ್ಗೆ ಆಲೋಚಿಸಬೇಕಿತ್ತು ಅಲ್ವಾ, ದೊಡ್ಡಮ್ಮ’ ದೀರ್ಘವಾಗಿ ನುಡಿದಳು. +‘ನೀನು ಏನೇನೋ ಅಂದ್ಕೊಂಡು ಮತ್ತೆ ಮತ್ತೆ ಮನಸ್ಸನ್ನು ಕೆಡಿಸಿಕೊಳ್ಳಬೇಡ. +ಅವಳು ಮುಂದೇನು ಅನ್ನೋ ಚಿಂತೆಯಲ್ಲಿ ಬೇರೆ ಕಡೆ ಗಮನ ಕೊಡ್ತಾ ಇಲ್ಲಾ ಅದನ್ನೆ ದೊಡ್ಡದು ಮಾಡಬೇಡ’ ಅಂತ ಗದರಿಸಿದರು ಅಂಬುಜಮ್ಮ. +ಹಾಸ್ಟಲಿನಲ್ಲಿದ್ದ ತನ್ನ ವಸ್ತುಗಳನ್ನೆಲ್ಲ ತುಂಬಿಕೊಂಡು ಬಂದಿದ್ದ ಇಳಾ ಸಕಲೇಶಪುರದಿಂದ ಬಾಡಿಗೆ ಟ್ಯಾಕ್ಸಿ ಮಾಡಿಕೊಂಡು ಮನೆ ತಲುಪಿದಳು. +ಬಂದವಳೇ ರೂಮು ಸೇರಿ ತನ್ನ ವಸ್ತುವನ್ನೆಲ್ಲ ಹಾಕಿ ಅಜ್ಜಿಯನ್ನು ಹುಡುಕಿಕೊಂಡು ಬಂದಳು. +ಅಜ್ಜಿ ದೇವರ ಮನೆಯಲ್ಲಿ ದೇವರ ಪೂಜೆ ಮಾಡುತ್ತಿದ್ದು ‘ಈಗ ಬಂದ್ಯೇನೆ ಪುಟ್ಟ. +ತಡೀ ಊಟ ಕೊಡ್ತೀನಿ’ ಅಂತ ಪೂಜೆ ಮುಂದುವರೆಸಿದರು. +ಸೀದಾ ಅಡುಗೆ ಮನೆಗೆ ಬಂದರೆ ಆಶ್ಚರ್ಯ ಕಾದಿತ್ತು. +ನೀಲಾ ಕೋಸಂಬರಿಗೆ ಸೌತೆಕಾಯಿ ಹೆಚ್ಚುತ್ತಿದ್ದಳು. +‘ಈಗ ಬಂದ್ಯಾ? +ಕೈಕಾಲು ತೊಳ್ಕೊಂಡು ಬಾ. +ಸೌತೆಕಾಯಿ ಕೋಸಂಬರಿ ನಿನಗಿಷ್ಟ ಅಂತ ಮಾಡಿದ್ದೀನಿ’ ಅಂದಳು. +‘ನಾನು ದಾರೀಲೆ ಊಟ ಮಾಡ್ಕೊಂಡು ಬಂದೆ. +ನಂಗೆ ಊಟ ಬೇಡ’ ನೀಲಾಳ ಮುಖ ನೋಡದೆ ಉತ್ತರಿಸಿ ರೂಮಿಗೆ ಬಂದು ಬಾಗಿಲು ಹಾಕಿಕೊಂಡು ಮಲಗಿಬಿಟ್ಟಳು. +ಇಂದವಳ ಹೃದಯ ಒಡೆದು ಹೋಗುವಂತಿತ್ತು. +ತನ್ನೆಲ್ಲ ಆಶಾಗೋಪುರವನ್ನು ಉರುಳಿಸಿ ಅದರ ಅವಶೇಷದ ಮೇಲೆ ಒಂಟಿಯಾಗಿ ದಿಗ್ಭ್ರಾಂತಿಯಿಂದ ನಿಂತಿದ್ದಾಳೆ. +ಅವಳ ಕನಸು… ಅವಳ ಆಸೆ… ಅವಳ ಸಂತೋಷ… ಅವಳ ಗುರಿ-ಎಲ್ಲಾ ಉರಿದು ಭಸ್ಮವಾಗಿವೆ. +ಇಂದವಳು ತಬ್ಬಲಿಯಂತೆ ಭಾಸವಾಗಿ ಮುಂದಿನ ದಿನಗಳೆಲ್ಲ ಕತ್ತಲು, ಬರೀ ಕತ್ತಲು ಎನಿಸತೊಡಗಿ ಅವಳೆದೆಯನ್ನು ಬಗೆದು ಹಾಕಿದಂತಾಗಿ ಬೆಚ್ಚಿ ಎದ್ದು ಕುಳಿತಳು. +ತಾನು ಬಲಹೀನವಾಗಬಾರದು. +ತಾನು ಸೋಲಬಾರದು, ತನ್ನೆದೆ ಕಲ್ಲಿನಂತೆ ಗಟ್ಟಿಯಾಗಬೇಕು. +ತಾನು ನಿಲ್ಲಬೇಕು. +ದೃಢವಾಗಿ ನಿಲ್ಲಬೇಕು. +ನಿಂತು ಗೆಲ್ಲಬೇಕು. +ಪದೇ ಪದೇ ಮನಸ್ಸಿಗೆ ಹೇಳಿಕೊಳ್ಳುತ್ತ ಒಡೆದು ಭಿದ್ರವಾಗಿದ್ದ ಕನಸುಗಳ ಅಳಿಸಿ, ಅಲ್ಲಿ ಬೇರೊಂದು ಕನಸು ಹೆಣೆಯಲು ಬಯಸಿದಳು ಪ್ರಯತ್ನಿಸಿದಳು. +ಊಹೂ ಆಗಲೇ ಇಲ್ಲ. +ಕತ್ತಲು ಕತ್ತಲಾದ ಅಲ್ಲಿ ಕನಸುಗಳು ನಿಲ್ಲಲೇ ಇಲ್ಲ. +ನಾನು ಸೋಲಲ್ಲ. +ನಾನು ಸೋಲಬಾರದು. +ಉಕ್ಕಿ ಬರುತ್ತಿದ್ದ ಕಣ್ಣೀರನು ಒತ್ತಾಯವಾಗಿ ತಡೆಯುತ್ತಿದ್ದಾಳೆ. +ದುಃಖ ಅದಿಮಿಡುವ ಪ್ರಯತ್ನದಲ್ಲಿ ಗಂಟಲ ನರಗಳೆಲ್ಲ ಉಬ್ಬಿವೆ. +ಇವತ್ತಿನಿಂದಲೇ ಈ ದುಃಖ ಗಂಟಲಲ್ಲೇ ನಿಂತುಬಿಡಲಿ, ಯಾರ ಮುಂದೂ ತಾನು ಅಳಬಾರದು, ಅತ್ತು ಬಲಹೀನಳಾಗಬಾರದು. +ಇದು ನನ್ನ ಮೊದಲ ಜಯ. +ರಾತ್ರಿ ಎಲ್ಲಾ ಮಲಗಿರುವ ಹೊತ್ತು, ಅದೇನೋ ನೆನಪಾಗಿ ದಿಗ್ಗನೆದ್ದ ಇಳಾ, ಅಪ್ಪ ಇಡುತ್ತಿದ್ದ ರೆಕಾರ್ಡುಗಳ ಬೀರು ತೆಗೆದು ಒಂದೊಂದೇ ರೆಕಾರ್ಡುಗಳನ್ನು ಪರಿಶೀಲಿಸಿದಳು. +ಬ್ಯಾಂಕುಗಳಿಂದ ಬಂದ ನೋಟೀಸುಗಳು, ತೋಟ ಅಡವಿಟ್ಟಿರುವ ದಾಖಲೆಗಳು, ಎಷ್ಟು ಎಕರೆ ತೋಟವಿದೆ, ಗದ್ದೆ ಇದೆ. +ಖಾಲಿ ಜಾಗ ಎಷ್ಟಿದೆ ಎಂದು ಬದುಕಿನಲ್ಲಿ ಮೊಟ್ಟಮೊದಲ ಬಾರಿಗೆ ನೋಡಿದಳು. +ಸುಮಾರು ೨೪ಎಕರೆ ಜಾಗ ೧೫ ಎಕರೆ ಕಂಡಿಷನ್ ಇರುವ ಕಾಫಿ ತೋಟ ೫ ಎಕರೆ ಗದ್ದೆ, ೪ ಎಕರೆ ಖಾಲಿಜಾಗ, ಎಲ್ಲದರ ಮೇಲೂ ಸಾಲವಿದೆ. +ಬೆಳೆ ಬೆಳೆದು ತೀರಿಸುತ್ತೇವೆ ಎಂದರೆ ಬದುಕಿರುವ ತನಕ ಬಡ್ಡಿ ಕಟ್ಟಲು ಮಾತ್ರ ಸಾಧ್ಯ. +ಏನಾದರೂ ಮಾರಿ ತೀರಿಸುತ್ತೇವೆ ಎಂದರೆ ಬೆಲೆಬಾಳುವಂತದ್ದೇನು ಇಲ್ಲ. +ಕಾರು ಮಾರಿಯಾಗಿದೆ. +ಚಿನ್ನವನ್ನೆಲ್ಲ ಮಾರಿಯಾಗಿದೆ. +ಜಮೀನು ಮಾರಿದರೆ ಸಾಲಕ್ಕೆ ಎಲ್ಲ ಪಾವತಿಯಾಗಿ ಉಳಿಯುವುದೆಷ್ಟು? +ಅದರಲ್ಲಿ ಮುಂದಿನ ಬದುಕು ಸಾಧ್ಯವೆ? +ಭವಿಷ್ಯ ಶೂನ್ಯವೆನಿಸಿ ಅಧೀರಳಾದಳು. +ದೊಡ್ಡಪ್ಪ ಹೇಳಿದಂತೆ ತಾನು ಡಾಕ್ಟರ್ ಓದಲು ಸಾಧ್ಯವೆ? +ಅಸಾಧ್ಯದ ಮಾತು. +ಏನೋ ಕನಿಕರದಿಂದ ದೊಡ್ಡಪ್ಪ ಓದಿಸುವೆನು ಎಂದಿರಬಹುದು. +ಆದರೆ ಆಗಿ ಹೋಗದ ಮಾತು ಅದು. +ಇನ್ನು ಮದುವೆ ಮಾಡಿಕೊಂಡುಬಿಟ್ಟರೆ, ಬದುಕು ಸೆಟ್ಲಾಗಬಹುದಲ್ಲವೆ? +ಆದರೆ ತನಗೆ ಸಿಗುವವನು ಎಂತಹವನೋ. +ನನ್ನ ಜೊತೆಗೆ ಅಮ್ಮನನ್ನೂ ನೋಡಿಕೊಳ್ಳುವಂತಹವನಾಗಬೇಕು. +ಬರಿಕೈಲಿ ಹೋಗುವ ತನ್ನನ್ನ ನೋಡಿಕೊಳ್ಳುವುದು ಕಷ್ಟಸಾಧ್ಯ. +ಇನ್ನು ಅಮ್ಮನನ್ನು ನೋಡಿಕೊಳ್ಳುವನೇ? +ಅವನ ಮುಂದೆ ತಾನು ದಾಸಿಯಂತೆ ನಿಲ್ಲಬೇಕೇ? +ತನ್ನಂಥ ಮನಸ್ಸಿನವಳು ಸ್ವಾಭಿಮಾನ ಮರೆತು ಗಂಡನ ಮುಂದಾದರೂ ತಗ್ಗಿ ನಡೆಯಲು ಅಸಾಧ್ಯದ ಮಾತು. +ಎಲ್ಲಿಯೂ ಯಾರಿಗೂ ಬಗ್ಗದ ಜೀವವಿದು. +ಸೆಟೆದು ನಿಂತೇ ಅಭ್ಯಾಸ. +ಈಗ ಅಸಹಾಯಕಳಾಗಿ ಮದುವೆಯಾಗಿ ಮಗು ಹೆತ್ತು ಸಾಮಾನ್ಯ ಹೆಣ್ಣಿನಂತಿರಲು ತನ್ನಿಂದ ಸಾಧ್ಯವೇ? +ಸಾಧ್ಯವಿಲ್ಲ ಎಂದಾದರೆ ಮುಂದಿನ ಬದುಕು ಹೇಗೆ? +ತಲೆ ಕೆಟ್ಟು ಹೋದಂತಾಗಿ ಗಟ್ಟಿಯಾಗಿ ತಲೆ ಹಿಡಿದುಕೊಂಡು ಕುಳಿತುಬಿಟ್ಟಳು. +ಅದೆಷ್ಟು ಹೊತ್ತು ಹಾಗೆ ಕುಳಿತಿದ್ದಳೋ, ಅಜ್ಜಿ ಎದ್ದು ಬರುವ ಶಬ್ಬ ಕೇಳಿಸಿ ಮೆಲ್ಲನೆ ಲೈಟು ಆರಿಸಿ ತನ್ನ ರೂಮು ಸೇರಿಕೊಂಡಳು. +ಬ್ಯಾಂಕಿಗೆ ಹೋಗಿ ಎಷ್ಟು ಸಾಲ ಕಟ್ಟಬೇಕು, ಬಡ್ಡಿ ಎಷ್ಟು ಅಂತ ಕೇಳಿ ತಿಳಿದುಕೊಂಡು ಬರಬೇಕೆಂದು ಹಾನುಬಾಳಿಗೆ ಹೊರಟಳು. +ಯಾವಾಗಲೂ ಕಾರಿನಲ್ಲಿಯೇ ಓಡಾಡುತ್ತಿದ್ದವಳು ಈಗ ನಡೆದುಕೊಂಡು ಹೋಗುವುದು ಕಷ್ಟವೆನಿಸಿತು. +ದಾರಿಯಲ್ಲಿ ಸಿಕ್ಕವರೆಲ್ಲ ಅಯ್ಯೋ ಪಾಪ ಅಂತ ತನ್ನ ಕಡೆ ನೋಡುತ್ತಿದ್ದಾರೆ ಎನಿಸಿ ಮುಜುಗರಕ್ಕೊಳಗಾದಳು. +ತಮ್ಮೂರಿನಿಂದ ಎರಡು ಕಿಲೋ ಮೀಟರ್ ಹಾನುಬಾಳಿಗೆ, ನಡೆದೇ ಹೋಗೋಣವೆಂದು ನಿರ್ಧರಿಸಿದ್ದಳು. +ಆದರೆ ಎಂದೂ ಅಷ್ಟು ದೂರ ನಡೆಯದ ಅವಳ ಸುಕೋಮಲ ಶರೀರ ಮುಂದೆ ನಡೆಯಲಾರೆ ಎಂದು ಮುಷ್ಕರ ಹೂಡಿ ಮರದ ಕೆಳಗೆ ಕುಳಿತುಬಿಟ್ಟಳು. +ಯಾವುದೋ ಬೈಕು ಸದ್ದಾದಂತಾಗಿ ಧಡಕ್ಕನೆ ಎದ್ದು ನಿಂತು ಪ್ರಯಾಸದಿಂದಲೇ ಹೆಜ್ಜೆ ಹಾಕಲಾರಂಭಿಸಿದಳು. +‘ಅರೆ, ಇಳಾ ಯಾಕೆ ನಡ್ಕೊಂಡು ಹೋಗ್ತಾ ಇದ್ದೀಯಾ? +ಬಸ್ಸಿತ್ತಲ್ಲ ಈಗ…’ ಪಕ್ಕದ ತೋಟದ ವಿನಾಯಕ ಬೈಕು ನಿಲ್ಲಿಸಿ ಕೇಳಿದ. +‘ಹೌದಾ, ನಂಗೆ ಗೊತ್ತಿರಲಿಲ್ಲ. +ಲೇಟಾಗುತ್ತೆ ಅಂತ ನಡ್ಕೊಂಡು ಹೋಗ್ತಾ ಇದ್ದೆ’ ಸುಸ್ತಾಗಿ ಹೇಳಿದಳು. +‘ನಿನ್ನ ಕೈಲಿ ನಡೆಯೋಕ್ಕೆ ಆಗುತ್ತಾ, ನಾನು ಬಿಡ್ತೀನಿ, ಎಲ್ಲಿಗೆ ಹೋಗಬೇಕು?’ ಕೇಳಿದ. +‘ಬ್ಯಾಂಕಿಗೆ ಹೋಗಬೇಕು’ ಎಂದಳು ಮೆಲ್ಲಗೆ. +‘ಸರಿ ಕೂತ್ಕೊ, ನಾನೂ ಆ ಕಡೆನೆ ಹೋಗ್ತಾ ಇದ್ದೀನಿ. +ಕೆಲ್ಸ ಮುಗಿಸಿ ಬಾ. +ಬರುವಾಗ ಕರ್ಕೊಂಡು ಬರ್ತ್ತೀನಿ’ ಎಂದ. +ವಿಧಿ ಇಲ್ಲದೆ ಇಳಾ ಬೈಕ್ ಏರಿದಳು. +ತನ್ನ ಅಸಹಾಯಕ ಸ್ಥಿತಿಗೆ ಅಳು ಬರುವಂತಾದರೂ ಅಳದೆ ನಗುವ ವ್ಯರ್ಥ ಪ್ರಯತ್ನ ನಡೆಸಿದಳು. +ಬ್ಯಾಂಕಿನ ಮುಂದೆ ನಿಲ್ಲಿಸಿದ ವಿನಾಯಕ. +‘ಇಳಾ, ನೀನು ಯಾಕೆ ಬ್ಯಾಂಕಿಗೆ ಹೋಗ್ತಾ ಇದ್ದೀಯಾ ಅಂತ ನಾನು ಊಹಿಸಬಲ್ಲೆ. +ಸಾಲದ ಜೊತೆ ಅದರ ಬಡ್ಡಿಯೂ ಸೇರಿ ತೀರಿಸೋಕೆ ಆಗದಷ್ಟು ಸಾಲ ಜಾಸ್ತಿ ಆಗಿರುತ್ತೆ. +ನಿಂಗೆ ಒಂದು ಸಲಹೆ ಕೂಡಬಲ್ಲೆ. +ನಿಮ್ಮ ಖಾಲಿ ಜಾಗ ಇದೆಯಲ್ಲ ನಾಲ್ಕು ಎಕರೆ ಅದನ್ನು ರೆಸಾರ್ಟ್ ಮಾಡೋಕೆ ಒಬ್ಬ ಪಾರ್ಟಿ ರೆಡಿ ಇದ್ದಾರೆ. +ಕೈತುಂಬಾ ಹಣ ಕೊಡ್ತಾರೆ. +ನಿಮ್ಮಪ್ಪ ಇದ್ದಾಗ ಕೊಡಲ್ಲ ಅಂತಲೇ ಬಂದ್ರು. +ಅವತ್ತೇ ಕೊಡೋಕ್ಕೆ ಒಪ್ಪಿಕೊಂಡಿದ್ರೆ ಸಾಯೋ ಪ್ರಸಂಗವೇ ಬರ್ತ ಇರಲಿಲ್ಲ. +ನಿಮ್ಮಪ್ಪಂಗೆ ಹುಚ್ಚು ಆದರ್ಶ. +ರೆಸಾರ್ಟ್ ಅಂದ್ರೆ ಕುಣಿತ, ಕುಡಿತ, ವ್ಯಭಿಚಾರ… ಅಂತ ತಿಳ್ಕೊಂಡು ಇಲ್ಲೆಲ್ಲ ಅದಕ್ಕೆ ಅವಕಾಶ ಕೊಡಲ್ಲ ಅಂತ ಹಾರಾಡಿದರು. +ಬೇರೆಯವರಿಗೂ ಕೊಡದ ಹಾಗೆ ತಲೆ ಕೆಡಿಸಿದರು. +ಆದ್ರೆ ಅವರೇ ಹೋಗಿಬಿಟ್ಟರು. +ಈಗ ನೀನೂ ಅವರಂತೆ ಆದರ್ಶ ಅಂತ ಕೂರಬೇಡ. +ನೀನು ಬದುಕುವುದನ್ನು ಕಲಿ. +ನಾನೇ ನಿಮ್ಮ ಮನೆಯ ಹತ್ರ ಬರೋಣ ಅಂತ ಇದ್ದೆ. +ಆದ್ರೆ ನಿಮ್ಮ ತಾಯಿ ಇರ್ತಾರೆ. +ಅವರು ಒಪ್ಪೊಲ್ಲ ಅಂತ ಸುಮ್ಮನಾಗಿದ್ದೆ. +ಈಗ ನೀನೇ ಸಿಕ್ಕಿದ್ದೀಯಾ… +ಯೋಚ್ನೆ ಮಾಡು, ಬರ್‍ತೀನಿ. +ಒಬ್ಳೆ ಹೋಗಬೇಡ. +ಕಾಯುತ್ತಾ ಇರು ಬರ್ತ್ತೀನಿ’ ಎಂದು ಹೇಳಿ ಬುರ್ರೆಂದು ಹೋಗಿಯೇ ಬಿಟ್ಟಾಗ ಕ್ಷಣ ಹಾಗೆಯೇ ನಿಂತುಬಿಟ್ಟಳು. +ವಿನಾಯಕನ ಬಗ್ಗೆ ಮನೆಯಲ್ಲಿ ಅಂತಹ ಒಳ್ಳೆಯ ಅಭಿಪ್ರಾಯವಿಲ್ಲ ಅಂತ ಗೊತ್ತಿತ್ತು. +ಅಪ್ಪನಿಗಂತೂ ವಿನಾಯಕನ ತಲೆ ಕಂಡ್ರೆ ಆಗ್ತಾ ಇರಲಿಲ್ಲ. +ಒಂದು ಕಾಲದಲ್ಲಿ ಅವನ ತಂದೆ-ತಾಯಿ ತಮ್ಮ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದು ಅರ್ಧ ಎಕರೆ ಕಾಫಿ ತೋಟ ಮಾತ್ರ ಅವರಿಗಿತ್ತು. +ವಿನಾಯಕ ವಯಸ್ಸಿಗೆ ಬಂದ ಮೇಲೆ ಆದ್ಹೇಗೆ ದುಡಿದನೋ? +ಇವತ್ತು ಹತ್ತು ಎಕರೆ ಕಾಫಿ ತೋಟ ಮಾಡ್ಕೊಂಡು ಶ್ರೀಮಂತನಂತೆ ಓಡಾಡುತ್ತಿರುತ್ತಾನೆ. +ಈ ಆಸ್ತಿ ಸಂಪಾದನೆಯ ಹಿಂದೆ ಯಾವುದೋ ಆಕೃತ್ಯವೇ ಇರಬೇಕು ಅಂತ ಎಲ್ಲರ ಸಂದೇಹ. +ಕಪ್ಪು ಹಣ ದಂದೆ ಮಾಡ್ತಾನೆ ಅಂತ ಕೆಲವರು ಅಂದರೆ, ಶ್ರೀಗಂಧದಂತಹ, ಬೆಲೆಯುಳ್ಳ ಮರಗಳನ್ನು ಕದ್ದು ಸಾಗಿಸುತ್ತಾನೆ ಅಂತಾರೆ ಕೆಲವರು. +ಎಸ್ಟೇಟ್‌ಗಳಲ್ಲಿ ಕೂಲಿ ಕೆಲಸಕ್ಕೆಂದು ದೂರದೂರದ ಊರುಗಳಿಂದ ಬರುವ ಹದಿಹರೆಯದ ಹೆಣ್ಣು ಮಕ್ಕಳ ತಂದೆ-ತಾಯಿಯರಿಗೆ ಹಣದ ಆಮಿಷ ಒಡ್ಡಿ ಅವರನ್ನು ಮುಂಬೈಗೊ, ಮತ್ತೆಲ್ಲಿಗೊ ಸಾಗಿಸುತ್ತಾನೆ… +ಕೆಲಸ ಕೊಡಿಸುವ ಅಥವಾ ಮದುವೆ ಮಾಡುವ ಆಸೆ ತೋರಿಸಿಯೂ ಹೆಣ್ಣುಮಕ್ಕಳ ಮಾರಾಟ ಮಾಡ್ತಾನೆ. +ಇಲ್ಲದಿದ್ದರೆ ನ್ಯಾಯವಾಗಿ ಸಂಪಾದನೆ ಮಾಡಿ ತೋಟ ಕೊಂಡು ಆಸ್ತಿ ಮಾಡೋಕೆ ಸಾಧ್ಯಾನಾ ಅಂತ ದೊಡ್ಡಪ್ಪ, ಅಪ್ಪನ ಸಂಬಂಧಿಗಳೆಲ್ಲ ಮಾತಾಡಿಕೊಳ್ಳುವುದು ಇಳಾಗೆ ಗೊತ್ತಿತ್ತು. +ವಿನಾಯಕನ ಬಗ್ಗೆ ಇಳಾಗೂ ಒಳ್ಳೆ ಅಭಿಪ್ರಾಯವಿರಲಿಲ್ಲ. +ಆದರೂ ನಡ್ಕೊಂಡು ಬರುತ್ತಿದ್ದ ಆ ಪರಿಸ್ಥಿತಿಯಲ್ಲಿ ಯಾರು ಬಂದು ಕರೆದಿದ್ರೂ ಬರೋಕೆ ಅವಳ ಮನಸ್ಸು ಸಿದ್ಧವಾಗಿತ್ತು. +ಹಾಗೆಂದೇ ವಿನಾಯಕ ಕರೆದ ಕೂಡಲೇ ಅವನ ಹಿಂದೆ ಬೈಕ್ ಹತ್ತಿ ಬಂದುಬಿಟ್ಟಿದ್ದಳು. +ಇಲ್ಲಿ ಬ್ಯಾಂಕಿನ ಬಳಿ ಇಳಿದು ಅವನ ಮಾತು ಕೇಳಿದ ಮೇಲೆ ತಾನು ತಪ್ಪು ಮಾಡಿದೆ, ಅವನ ಜೊತೆ ಬರಬಾರದಿತ್ತು. +ಮತ್ತೆ ಅದೇ ತಪ್ಪು ನನ್ನಿಂದ ಆಗಬಾರದು ಅಂದುಕೊಂಡು ಬೇಗ ಬ್ಯಾಂಕಿನಲ್ಲಿ ವಿಚಾರಿಸಿ ಬಸ್ಸಿಗೆ ಹೊರಟು ಬಿಡಬೇಕು ಅಂತ ಬ್ಯಾಂಕಿನೊಳಗೆ ಹೋದಳು. +ಬ್ಯಾಂಕ್ ಮ್ಯಾನೇಜರ್ ರಜೆಯಲ್ಲಿರುವುದಾಗಿ, ಅಲ್ಲಿದ್ದವರು ಹೇಳಿದಾಗ ಬಂದಿದ್ದು ವ್ಯರ್ಥವಾಯಿತಲ್ಲ. +ವಿನಾಯಕ ಬರುವುದರೊಳಗೆ ಹೊರಟುಬಿಡಬೇಕು ಅಂತ ಬೇಗ ಬೇಗ ಹೊರಬಂದು ಬಸ್ಸಿಗಾಗಿ ವಿಚಾರಿಸಿದಳು. +ಹಾಗೆ ವಿಚಾರಿಸುವಾಗಲೇ ಟೆಂಪೋ ಸಕಲೇಶಪುರ ಅಂತ ಕೂಗುತ್ತ ಇರೋದು ಕೇಳಿ ಟೆಂಪೋ ಬಳಿ ಓಡಿದಳು. +ಟೆಂಪೋ ಹತ್ತಿದ ಮೇಲೆಯೇ ಅವಳಿಗೆ ಸಮಾಧಾನವಾಗಿದ್ದು. +ಟೆಂಪೋ ಇಳಿದ ಮೇಲೂ ಅರ್ಧ ಕಿಲೋಮೀಟರ್ ನಡೆಯಬೇಕು. +ಬಿಸಿಲಿನಲ್ಲಿ ನಡೆದುಕೊಂಡು ಬರುವಷ್ಟರಲ್ಲಿ ಹಣ್ಣಾಗಿ ಹೋದಳು. +ಒಂದೇ ದಿನಕ್ಕೆ ಸುಸ್ತಾಗಿ ಹೋಯಿತಲ್ಲ, ಇನ್ನು ಇಲ್ಲೆಯೇ ಇದ್ದು ನಾನು ಗೆಲ್ಲಲು ಸಾಧ್ಯವೇ-ಆತಂಕಿಸಿದಳು. +ಆದರೂ ಇಂತದಕ್ಕೆಲ್ಲ ನಾನು ಹೊಂದಿಕೊಳ್ಳಲೇಬೇಕು. +ಬಸ್ಸು, ಟೆಂಪೋ ಅಂತ ಕಾಯುತ್ತ ಸಮಯ ಹಾಳು ಮಾಡುವ ಬದಲು ತಾನೂಂದು ಟೂ ವ್ಹೀಲರ್ ತಗೋಬೇಕು. +ಯಾವುದಾದರೂ ಸೆಕೆಂಡ್ ಹ್ಯಾಂಡ್ ಇದ್ರೆ ನೋಡಿ ಅಂತ ದೊಡ್ಡಪ್ಪನಿಗೆ ಹೇಳಬೇಕು ಅಂತ ನಿಶ್ಚಯಿಸಿಕೊಂಡಳು. +ಮನೆಯೊಳಗೆ ಬಂದ ಕೂಡಲೇ ಅಂಬುಜಮ್ಮ, ನೀಲಾ ಇವಳಿಗಾಗಿಯೇ ಕಾಯುತ್ತ ಕುಳಿತುಕೊಂಡಿರುವುದು ಕಾಣಿಸಿತು. +‘ಮ್ಯಾನೇಜರ್ ಸಿಕ್ಕಿದ್ರ, ಏನು ಹೇಳಿದ್ರು’ ನೀಲಾ ತಕ್ಷಣವೇ ಮಗಳನ್ನು ಕೇಳಿದಳು. +‘ಅಜ್ಜಿ ಒಂದ್ಲೋಟ ನೀರು ಕೊಡು ಸುಸ್ತಾಗಿದೆ’ ನೀಲಾಳ ಮಾತಿಗೆ ಉತ್ತರ ಕೊಡದೆ ಅಜ್ಜಿಯನ್ನು ಕೇಳಿದಳು. +‘ನೀನು ಸುಸ್ತಾಗಿ ಈ ಬಿಸಿಲಲ್ಲಿ ಬರ್ತೀಯಾ ಅಂತಾನೇ ನಿಂಬೆ ಶರಬತ್ತು ಮಾಡಿ ಫ್ರಿಜ್ಜಿನಲ್ಲಿಟ್ಟಿದ್ದೆ ತಾಳು ತರ್ತೀನಿ. +ಮೊದ್ಲು ಕುಡಿದು ಸುಧಾರಿಸಿಕೊ, ಆಮೇಲೆ ಮಾತಾಡುವಂತೆ’ ಅಂತ್ಹೇಳಿ ಫ್ರಿಜ್ಜಿನಿಂದ ಶರಬತ್ತು ತಂದುಕೊಟ್ಟರು. +ಗಬಗಬನೆ ಕುಡಿದವಳೇ ಲೋಟವನ್ನು ಕೆಳಗಿಟ್ಟು, ಸೋಫಾದ ಹಿಂದಕ್ಕೊರಗಿ ಕಣ್ಮುಚ್ಚಿದಳು. +ಮಾತನಾಡುವ ಉತ್ಸಾಹವೇ ಅವಳಲ್ಲಿ ಇಲ್ಲದ್ದು ಕಂಡು ನೀಲಾ ದೊಡ್ಡಮ್ಮನ ಮುಖ ನೋಡಿದಳು. +ಅವಳಿಗೆ ಬೇಸರ ಆಗಿದೆ ಅಂತ ಗೊತ್ತಾದ್ರೂ ‘ಸುಮ್ಮನಿರು, ಅವಳೇ ಹೇಳಲಿ’ ಅಂತ ಸನ್ನೆ ಮಾಡಿದರು. +ಸ್ವಲ್ಪ ಹೊತ್ತು ಹಾಗೆ ಇದ್ದ ಇಳಾ ನಂತರ ‘ಅಜ್ಜಿ ಬ್ಯಾಂಕಿನಲ್ಲಿ ಮ್ಯಾನೇಜರ್ ರಜೆ ಅಂತೆ, ಹಂಗಾಗಿ ಏನೂ ವಿಚಾರಿಸೋಕೆ ಆಗಲೇ ಇಲ್ಲ. +ಅಪ್ಪನ ಇನ್ಶೂರೆನ್ಸ್ ಪಾಲಿಸಿಗಳೆಲ್ಲ ಎಲ್ಲಿವೆಯೋ ಅದನ್ನೊಮ್ಮೆ ನೋಡಿ ಅಪ್ಲೈ ಮಾಡಬೇಕು. +ನಾನೊಂದು ಮೊದಲು ಗಾಡಿ ತಗೋಬೇಕು. +ಇಲ್ಲದಿದ್ದರೆ ಇಲ್ಲಿ ಓಡಾಡೋಕೆ ಆಗಲ್ಲ’ ಅಜ್ಜಿಯನ್ನು ಉದ್ದೇಶಿಸಿ ಹೇಳಿ ರೂಮಿಗೆ ಎದ್ದು ಹೊರಟುಬಿಟ್ಟಾಗ ನೀಲಾ ಪೆಚ್ಚಾಗಿಹೋದಳು. +ಕಣ್ಣಲ್ಲಿ ನೀರು ತುಂಬಿಕೊಂಡು ಕೆನ್ನೆ ಮೇಲೆ ಹರಿಯತೊಡಗಿದಾಗ, ಅಂಬುಜಮ್ಮ ‘ಏನಾಯ್ತು ಅಂತ ಅಳ್ತಾ ಇದ್ದೀಯಾ ನೀಲಾ. +ಅವಳು ಹೊರಗೆ ಹೋಗಿ ಬಂದು ಸಾಕಾಗಿದ್ದಾಳೆ. +ಅಲ್ಲೇನು ಬೇಸರ ಆಗಿದೆಯೋ, ನೀನು ಬೇರೆ ಹೀಗೆ ಅತ್ತು ಅವಳಿಗೆ ಬೇಸರ ತರಿಸಬೇಡ, ಎದ್ದೇಳು ಊಟ ಮಾಡೋಣ. +ಪಾಪ ಇಳಾ ಅದೆಷ್ಟು ಹಸಿದಿದ್ದಾಳೊ’ನೀಲಾಳ ಬಗ್ಗೆ ಯಾವ ಕನಿಕರವೂ ತೋರಿಸದೆ ನಿರ್ದಾಕ್ಷಿಣ್ಯವಾಗಿ ಎದ್ದು ಅಡುಗೆ ಮನೆಗೆ ನಡೆದಾಗ ನೀಲಾ ತಾನೇ ತಪ್ಪು ತಿಳಿಯುತ್ತಿದ್ದೇನೆಯೋ, ದೊಡ್ಡಮ್ಮನಿಗೆ ಇಳಾಳ ಬಗ್ಗೆ ಯಾವ ತಪ್ಪು ಕಾಣುತ್ತಿಲ್ಲ ಎಂದಾಗ ನನಗೇಕೆ ಇಳಾಳ ವರ್ತನೆ ತಪ್ಪು ಎನಿಸುತ್ತಿದೆ. +ತಾನೇ ಸರಿ ಇಲ್ಲವೇ… ಎಂಬ ಗೊಂದಲದಲ್ಲಿ ಮುಳುಗಿದಳು. +ಅದನ್ನೇ ಮನಸ್ಸಿನಲ್ಲಿಟ್ಟುಕೊಳ್ಳಬಾರದೆಂದು ನೀಲಾ ಮೋಹನ ಇಟ್ಟಿದ್ದ ಎಲ್‌ಐಸಿ ಪಾಲಿಸಿಗಳ ಬಾಂಡ್‌ಗಳನ್ನು ಹುಡುಕಿ ತೆಗೆದು ಟೇಬಲ್ ಮೇಲೆ ಇರಿಸಿದಳು. +‘ಇಳಾ ಎಲ್‌ಐಸಿ ಬಾಂಡ್‌ಗಳನ್ನು ಟೇಬಲ್ ಮೇಲೆ ಇರಿಸಿದ್ದೇನೆ, ನೋಡು’ ಊಟಕ್ಕೆ ಕುಳಿತಿದ್ದ ಮಗಳಿಗೆ ಹೇಳಿದಳು. +ಇಳಾ ಉಭಾ ಶುಭ ಎನ್ನದೆ ಊಟ ಮಾಡತೊಡಗಿದಳು. +ಊಟ ಮುಗಿಸಿ ಬಂದವಳೇ ಟೇಬಲ್ ಮೇಲಿದ್ದ ಬಾಂಡ್‌ಗಳನ್ನು ಪರಿಶೀಲಿಸಿದಳು. +ಬರುವ ಮೊತ್ತ ಸಾಕಷ್ಟು ಇದೆ. +ಆದ್ರೆ ಸಾಲ ತೀರಿಸುವಷ್ಟಿಲ್ಲದಿದ್ದರೂ ಮುಂದಿನ ದಾರಿಯಲ್ಲಿ ಹೆಜ್ಜೆ ಇಡಲು ಹಿಂಜರಿಯಬೇಕಿಲ್ಲ ಎಂಬ ಮನವರಿಕೆಯಿಂದ ಒಂದಿಷ್ಟು ಸಮಾಧಾನವಾಯಿತು. +ಇಳಾಗೆ ನಾಳೇನೇ ಇವನ್ನೆಲ್ಲ ತಗೊಂಡು ಎಲ್‌ಐಸಿ ಆಫೀಸಿಗೆ ಹೋಗಬೇಕು, ಬೇಗ ಕೆಲಸವಾದರೆ ಹಣ ಬೇಗ ಸಿಗುತ್ತದೆ. +ಮೊದಲು ಸಾಲ ಎಷ್ಟು ತೀರಿಸೋಕೆ ಸಾಧ್ಯವೋ ನೋಡಬೇಕು. +ಆ ಮ್ಯಾನೇಜರ್ ಯಾವಾಗ ಬರ್ತಾರೋ, ಫೋನ್ ನಂಬರಾದ್ರೂ ತೆಗೆದುಕೊಂಡು ಬರಬೇಕಿತ್ತು. +ಎಂಥ ಕೆಲಸ ಆಯ್ತು. +ಬ್ಯಾಂಕಿಗೆ ಹೋಗಿಯೂ ಫೋನ್ ನಂಬರ್ ತೆಗೆದುಕೊಳ್ಳದೆ ಬಂದೆನಲ್ಲ, ನಾಳೆ ಮತ್ತೇ ಹೋಗಬೇಕಲ್ಲಪ್ಪ-ಚಿಂತೆ ಮೂಡಿತು. +ನೀಲಾ ಮಗಳ ಮುಂದೆ ಬಂದು ಕುಳಿತಳು. +ತಕ್ಷಣವೇ ಇಳಾ ಎದ್ದು ಬಾಂಡ್‌ಗಳನ್ನೆಲ್ಲ ಒಂದು ಕವರ್‌ಗೆ ಹಾಕಿಕೊಂಡು ಬ್ಯಾಗಿನಲ್ಲಿ ಹಾಕಿಕೊಳ್ಳುತ್ತ ‘ನಾಳೆ ಎಲ್‌ಐಸಿ ಆಫೀಸಿಗೆ ಹೋಗಿಬರ್ತೀನಿ’ ಎಂದು ತಲೆ ತಗ್ಗಿಸಿಯೇ ಹೇಳಿ ತನ್ನ ರೂಮಿನತ್ತ ಹೊರಟಳು. +ಮುಖ ಕೊಟ್ಟು ಮಾತನಾಡಲಿಲ್ಲ ಮಗಳು ಅನ್ನೋದು ಮತ್ತೂ ಸ್ಪಷ್ಟವಾಗಿ ಹೋಯಿತು ನೀಲಾಳಿಗೆ. +ದುಡುಕುವುದು ಬೇಡ… ತನ್ನದೇ ತಪ್ಪು ತಿಳುವಳಿಕೆ ಇರಬಹುದು. +ಮಗಳು ಟೆನ್ಷನ್‌ನಲ್ಲಿದ್ದಾಳೆ. +ಮನೆಯ ಸಮಸ್ತ ಹೊರೆ ಅವಳ ತಲೆ ಮೇಲೆ ಬಿದ್ದಿದೆ. +ಅಪ್ಪನ ಸಾವು, ನನಸಾಗದ ತನ್ನ ಕನಸು, ಮುಂದಿನ ಭವಿಷ್ಯ. +ಇವೆಲ್ಲ ಅವಳನ್ನು ಹಣ್ಣು ಮಾಡುತ್ತಿದೆ. +ಈ ಪುಟ್ಟ ವಯಸ್ಸಿನಲ್ಲಿಯೇ ತನ್ನ ಮಗು ಏನೆಲ್ಲ ಅನುಭವಿಸಬೇಕಾಗಿ ಬಂದಿದೆ. +ಗೆಳತಿಯರೊಟ್ಟಿಗೆ ಹಾಡಿ, ಕುಣಿದು ಸಂತೋಷದಿಂದ ಇರಬೇಕಾದ ಸಮಯದಲ್ಲಿ ಮನೆಯ ಸಮಸ್ಯೆ ಹೊತ್ತು ಅದರ ಪರಿಹಾರಕ್ಕಾಗಿ ಹೋರಾಡಬೇಕಾದ ವಿಪರ್ಯಾಸ ಪರಿಸ್ಥಿತಿ. +ಏನು ಪಾಪ ಮಾಡಿ ತನ್ನ ಹೊಟ್ಟೆಯಲ್ಲಿ ಹುಟ್ಟಿದ್ದಾಳೋ-ವಿಷಾದಗೊಂಡಳು. +ಸಂಜೆ ಸುಂದರೇಶ್‌ರವರು ಎಲ್‌ಐಸಿ ಏಜೆಂಟ್‌ರನ್ನು ಕರ್ಕೊಂಡು ಮನೆಗೆ ಬಂದರು. +‘ನೋಡಮ್ಮ ನೀಲಾ, ಮೋಹನ್ ಎಲ್ಲಾ ಎಲ್‌ಐಸಿ ಪಾಲಿಸಿನೂ ಇವ್ರ ಹತ್ರವೇ ತಗೊಂಡಿದ್ದು. +ಎಲ್ಲಾ ಪ್ರೊಸಿಜರ್ ಅನ್ನೂ ಇವರು ಮಾಡಿಕೊಡ್ತಾರೆ. +ಎಲ್ಲೆಲ್ಲಿ ಸೈನ್ ಹಾಕಬೇಕೋ ಹಾಕಿಬಿಡು. +ಎಲ್ಲಾ ಪಾಲಿಸಿಗಳಿಗೂ ನೀಲಾದ್ದೇ ನಾಮಿನಿ ಇದೆ. +ಇವ್ರೂ ನಮ್ಮ ಸ್ನೇಹಿತರೇ. +ಬೇಗ ಎಲ್ಲಾ ಸೈನ್ ಮಾಡಿ ಆದಷ್ಟು ಬೇಗ ಹಣ ಬರೋ ಹಾಗೆ ಮಾಡ್ತಾರೇ’ ಅಂತ ಹೇಳಿದರು. +ಇಳಾಗೆ ಒಂದು ದೊಡ್ಡ ಹೊರೆ ತಲೆಮೇಲಿಂದ ಇಳಿದ ಹಾಗಾಯಿತು. +ಎಲ್‌ಐಸಿ ಏಜೆಂಟ್ ಆನಂದ್- ‘ಹೌದು ಮೇಡಂ, ನೀವು ಇದಕ್ಕಾಗಿ ಆಪೀಸ್‌ಗೆ ಅಲಿಬೇಕಾಗಿಲ್ಲ. +ಮೋಹನ್ ನಂಗೆ ಒಳ್ಳೆ ಫ್ರೆಂಡಾಗಿದ್ದರು. +ಅವರ ಸ್ನೇಹಿತನಾಗಿ ನಾನು ಅಷ್ಟೂ ಮಾಡದೇ ಇದ್ರೆ ಹೇಗೆ. +ಬಾಂಡ್‌ಗಳ್ನೆಲ್ಲ ಕೊಡಿ ಮೇಡಂ. +ಏನೇ ಆಗಲಿ ಮೋಹನ್ ಹೀಗೆ ಮಾಡಿಕೊಳ್ಳಬಾರದಿತ್ತು. +ಈಗ ಸ್ವಲ್ಪ ರಿಸ್ಕ್ ಇದೆ. +ಆದ್ರೂ ನಾನೆಲ್ಲ ನೋಡಿಕೊಳ್ತೀನಿ. +ನೀವೇನೂ ಯೋಚ್ನೆ ಮಾಡಬೇಡಿ. +ನಿಮ್ಗೆ ಹಣ ಕೈ ಸೇರೊವರೆಗೂ ನಾನು ನನ್ನ ಕೆಲ್ಸ ಅಂತ ಪ್ರಯತ್ನಿಸುತ್ತೇನೆ. +ಬೇಗ ಆಗುತ್ತೆ- ಅಂತ ಹೇಳಿದ. +ನೀಲಾಗೂ ನೆಮ್ಮದಿ ಎನಿಸಿತು. +ಮಗಳು ಓಡಾಡಿ ಕಷ್ಟಪಡುವುದು ತಪ್ಪಿತು. +ಆನಂದ್ ಮೋಹನನ ಸ್ನೇಹಿತರೇ ಆಗಿದ್ದು, ಹಿಂದೆ ಮೋಹನನ ಜೊತೆ ಮನೆಗೆ ಆಗಾಗ್ಗೆ ಬರ್ತಾ ಇದ್ದು, ಎಲ್‌ಐಸಿ ಏಜೆಂಟ್ ಆಗಿರುವುದರಿಂದ ಆನಂದ್ ತಮ್ಮ ಕೆಲಸ ಮಾಡಿಕೊಡುವ ಭರವಸೆ ಮೂಡಿತು. +ಹೇಗೋ ಒಂದೊಂದೇ ಸಮಸ್ಯೆಗಳು ಪರಿಹಾರವಾದರೆ ಸಾಕು ಅಂತ ಮೌನವಾಗಿಯೇ ಸಮ್ಮತಿಸಿದಳು. +ಇಳಾ ತಾನು ಇಟ್ಟುಕೊಂಡಿದ್ದ ಬಾಂಡ್‌ಗಳನ್ನೆಲ್ಲಾ ಆನಂದ್ ಕೈಗೆ ಕೊಟ್ಟಳು. +ಇನ್ನೊಂದು ತಿಂಗಳಲ್ಲಿ ಹಣ ಬರುವಂತೆ ಮಾಡುವ ಆಶ್ವಾಸನೆ ನೀಡಿ ಎಲ್ಲೆಲ್ಲಿ ಸಹಿ ಮಾಡಿಸಿಕೊಳ್ಳಬೇಕು ಅಲ್ಲೆಲ್ಲ ಸಹಿ ಮಾಡಿಸಿಕೊಂಡು ಆನಂದ್ ಹೊರಟು ನಿಂತ. +ಆನಂದನನ್ನು ಕಳುಹಿಸಿಕೊಟ್ಟು ಒಳ ಬಂದ ಸುಂದರೇಶ್ ಇಳಾಳನ್ನು ಉದ್ದೇಶಿಸಿ- ‘ಏನು ತೀರ್ಮಾನ ತಗೊಂಡಿದೀಯಾ ಇಳಾ. +ಎಂಬಿಬಿ‌ಎಸ್ ಮಾಡೋಕೆ ಆಗದೆ ಇದ್ರೆ ಡಿಗ್ರಿನಾದ್ರೂ ಮಾಡಿಕೋ. +ಎಂ.ಎಸ್ಸಿ ಮಾಡಿಕೊಂಡ್ರೆ ಕಾಲೇಜಿನಲ್ಲಿ ಕೆಲಸ ಸಿಗುತ್ತೆ. +ಇಲ್ಲಿ ಏನೋ ಒಂದು ವ್ಯವಸ್ಥೆ ಮಾಡೋಣ. +ಎಲ್‌ಐಸಿದೂ ಹಣ ಬಂದ್ರೆ ಒಂದಿಷ್ಟು ಬಡ್ಡೀಗೆ ಕಟ್ಟಿ ಉಳಿದಿದ್ದನ್ನು ನಿನ್ನ ಓದಿಗೆ ಇಡೋಣ’ ಸುಂದರೇಶ್ ಕೇಳಿದರು. +‘ಕಾಲೇಜಿಗೆ ಹೋಗಲ್ಲ ಅಂತ ತೀರ್ಮಾನ ಮಾಡಿದ್ದೀನಿ, ದೊಡ್ಡಪ್ಪ. +ಕರಸ್ಪಾಂಡನ್ಸ್‌ನಲ್ಲಿ ಡಿಗ್ರಿ ತಗೋತೀನಿ. +ನಾನು ಇಲ್ಲೇ ಇರ್ತೀನಿ’ ಮೆಲ್ಲಗೆ ಹೇಳಿದಳು. +‘ಇಲ್ಲಿ ಇದ್ದು ಏನು ಮಾಡ್ತೀಯಾ. +ಮದ್ವೆನೂ ಬೇಡ ಅಂತೀಯಾ. +ಅಮ್ಮ-ಮಗಳು ಒಬ್ಬರ ಮುಖ ಒಬ್ಬರು ನೋಡಿಕೊಂಡು ಅಳ್ತಾ ಇರ್ತೀರಾ. +ನೀನು ಇಲ್ಲಿ ಇರಬೇಡ. +ಕಾಲೇಜಿಗೆ ಹೋಗು’ ಆಜ್ಞೆ ದನಿಯಲ್ಲಿ ನುಡಿದರು. +‘ಇಲ್ಲ ದೊಡ್ಡಪ್ಪ, ಹಾಸ್ಪೆಲ್ ಖಾಲಿ ಮಾಡ್ಕೊಂಡು ಬಂದುಬಿಟ್ಟಿದ್ದೀನಿ. +ನಾನು ತೋಟ ನೋಡ್ಕೋತೀನಿ’ ಸಣ್ಣ ದನಿಯಲ್ಲಿ ಹೇಳಿದಳು. +‘ತೋಟ ನೋಡ್ಕೋತೀಯಾ ನೀನು’ ಗಟ್ಟಿಯಾಗಿ ನಕ್ಕರು. +‘ಅದು ಅಷ್ಟು ಸುಲಭ ಏನಮ್ಮಾ?’ ನಿಮ್ಮಪ್ಪನಂತ ಅಪ್ಪನೇ ಸೋತು ಮಣ್ಣಾಗಿಹೋದ. +ನಿನ್ನಂತ ಹೂವಿನಂತ ಹುಡುಗಿ ಮಣ್ಣಿನ ಜೊತೆ ಏಗೋಕೆ ಸಾಧ್ಯಾನಾ? +ಅದೆಲ್ಲ ಆಗದ ಹೋಗದ ಮಾತು. +ಕಾಲೇಜು ಅಥವಾ ಮದ್ವೆ ಎರಡರಲ್ಲಿ ಒಂದು ತೀರ್ಮಾನ ಮಾಡ್ಕೋ. +ಏನಮ್ಮಾ ನೀಲಾ ನೀನು ಏನು ಹೇಳ್ತೀಯ?’ +ನೀಲಾಗೂ ಶಾಕ್ ಆಗಿತ್ತು ಮಗಳ ಮಾತು ಕೇಳಿ. +ಭಾವನ ಅನಿಸಿಕೆಯೇ ಅವಳದ್ದು. +ಡಿಗ್ರಿನಾದ್ರೂ ಮಾಡಲಿ ಅಂತ ಅವಳೂ ಅಂದುಕೊಂಡಿದ್ದಳು. +ಇಷ್ಟು ಬೇಗ ಮದ್ವೆ ಅಂತೂ ಬೇಡ. +ಆದ್ರೆ ಇಳಾ ಇದೇನು ಹೇಳ್ತಾ ಇದ್ದಾಳೆ. +ಅವಳು ತೋಟ ನೋಡ್ಕೋತಾಳಾ? +ತೀರಿಸೋಕೆ ಆಗದೆ ಇರೋ ಅಷ್ಟು ಸಾಲ ಇದೆ. +ಪರಿಸ್ಥಿತಿ ಹೀಗಿರುವಾಗ ತೋಟದ ಬಗ್ಗೆ ಏನೂ ಗೊತ್ತಿಲ್ಲದ ಇವಳು ತೋಟ ನೋಡ್ಕೋತಾಳಾ. +ಹುಚ್ಚು ಹುಡುಗಿ. +ತೋಟ ಮಾಡಿಸೋದು ಅಂದ್ರೆ ಡ್ರೆಸ್ ಮಾಡಿಕೊಂಡು ಕಾಲೇಜಿಗೆ ಹೋದಷ್ಟು ಸುಲಭ ಅಂದುಕೊಂಡಿದ್ದಾಳೆ. +ಪಾಪ ಮಗು ಅದು. +ಅದಕ್ಕೇನು ಗೊತ್ತಾಗುತ್ತೆ. +‘ಅವಳಿಗೇನು ಗೊತ್ತಾಗುತ್ತೆ ಭಾವ. +ಓದ್ತಾ ಇದ್ದ ಮಗು ಅಪ್ಪಂಗೆ ಹೀಗಾಯ್ತಲ್ಲ ಅಂತ ಏನೇನೋ ಹೇಳ್ತಾಳೆ. +ಈ ವರ್ಷ ಅಂತು ಕಾಲೇಜಿಗೆ ಹೋಗೋಕೆ ಆಗಲ್ಲ. +ಅಲ್ಲಿವರೆಗೂ ಮನೆಯಲ್ಲೇ ಇರ್ತಾಳೆ. +ಇಲ್ಲಿಯೇ ಪರೀಕ್ಷೆಗೆ ಓದಿ ಪಿಯುಸಿ ಮಾಡಿಕೊಳ್ತಾಳೆ. +ಮುಂದಿನ ವರ್ಷ ಕಾಲೇಜಿಗೆ ಸೇರಿಸಿದರೆ, ಆಯ್ತು’ ಅಂದಳು ನೀಲಾ. +‘ಸರಿ ಹಾಗಾದ್ರೆ, ಇಲ್ಲಿಯೇ ಓದಿಕೊಳ್ಳಲಿ. +ತೋಟ ಗೀಟ ಅಂತ ತಲೆ ಕಡಿಸಿಕೊಳ್ಳಬೇಡ ಇಳಾ ನಾನು ಬರ್ತೀನಿ. +ಸಕಲೇಶಪುರಕ್ಕೆ ಹೋಗಬೇಕು’ ಎಂದು ಹೊರಟು ನಿಂತರು. +ಸರಿ ಎನ್ನುವಂತೆ ಎದ್ದು ನಿಂತು ಬೀಳ್ಕೊಟ್ಟರು. +ಭಾವ ಅತ್ತ ಹೋಗುತ್ತಿದ್ದಂತೆ ‘ಇಳಾ ನೀನು ಏನು ಮಾಡ್ತಾ ಇದ್ದೀಯಾ ಅಂತಾ ಗೊತ್ತಾ, ತೋಟ ನೋಡ್ಕೋತೀನಿ ಅಂತ ಅಷ್ಟು ಸುಲಭವಾಗಿ ಹೇಳ್ತಾ ಇದ್ದೀಯಲ್ಲ. +ಈ ತೀರ್ಮಾನ ತಗೊಳ್ಳೊಕ್ಕೆ ಯಾರು ನಿಂಗೆ ಅನುಮತಿ ಕೊಟ್ಟರು. +ನಿಮ್ಮಪ್ಪ ಮಾತ್ರ ಸತ್ತಿದ್ದಾರೆ, ನಾನಿನ್ನೂ ಬದುಕಿದ್ದೀನಿ ಕಣೆ’ ನೀಲಾ ವ್ಯಥಿತಳಾಗಿ ಹೇಳಿದರೆ ಅದೊಂದು ರೀತಿಯಾಗಿ ತಾಯಿಯನ್ನು ನೋಡಿದ ಇಳಾ ಒಂದೂ ಮಾತಾಡದೆ ಒಳಹೋಗಿಬಿಟ್ಟಳು. +‘ದೊಡ್ಡಮ್ಮಾ… ದೊಡ್ಡಮ್ಮಾ… ಬನ್ನಿ ಇಲ್ಲಿ’ ಕೂಗು ಹಾಕಿದಳು. +ಹಿತ್ತಲಲ್ಲಿದ್ದ ಅಂಬುಜಮ್ಮ ಗಾಭರಿಯಾಗಿ, ದಡದಡನೆ ಬಂದು-‘ಏನಾಯ್ತು ನೀಲಾ, ಯಾಕೆ ಹಾಗೆ ಕೂಕ್ಕೊಂಡೆ, ಇಳಾ ಎಲ್ಲಿ. +ನಿಮ್ಮ ಭಾವ ಹೋದ್ರಾ…’ ಒಂದೇ ಸಮನೆ ಪ್ರಶ್ನೆ ಹಾಕಿದರು ಅಂಬುಜಮ್ಮ. +‘ಗಾಭರಿ ಆಗುವಂತದ್ದು ಏನೂ ಇಲ್ಲ ದೊಡ್ಡಮ್ಮ- ಕೂತ್ಕೊಳ್ಳಿ ಸ್ವಲ್ಪ’ ಸಾವಧಾನವಾಗಿ ಅವರು ಕೂರೋ ತನಕ ಸುಮ್ಮನಿದ್ದ ನೀಲಾ –‘ದೊಡ್ಡಮ್ಮ, ಇಳಾ ಅವರ ದೊಡ್ಡಪ್ಪನ ಮುಂದೆ ಏನು ಹೇಳಿದ್ಳು ಗೊತ್ತಾ. +ಅವಳು ಮತ್ತೇ ಓದೋಕೆ ಕಾಲೇಜಿಗೆ ಹೋಗುವುದಿಲ್ಲವಂತೆ. +ತೋಟ ಮಾಡ್ತಾಳಂತೆ. +ಅವರಪ್ಪನಿಗೆ ಆಗದೆ ಇರೋದನ್ನ ಇವಳು ಮಾಡ್ತಾಳಂತೆ. +ನೋಡಿದ್ರಾ ದೊಡ್ಡಮ್ಮ. +ಇವಳು ಹೇಗೆ ಆಡ್ತಾ ಇದ್ದಾಳೆ ಅಂತ. +ನಾನು ಯಾಕೆ ಹೀಗೆ, ನಿಂಗೆ ಯಾರು ಪರ್ಮಿಷನ್ ಕೋಟ್ಟೋರು. +ನಾನಿನ್ನೂ ಬದುಕಿದೀನಿ. +ಅಂದ್ರೆ ಅದೆಷ್ಟು, ನಿರ್ಲಕ್ಷ್ಯವಾಗಿ ನನ್ಕಡೆ ನೋಡ್ಕೊಂಡು ಹೋದಳು ಅಂತ. +ನಿಮ್ಗೆ ಆರ್ಥವಾಗ್ತಾ ಇಲ್ಲಾ ದೊಡ್ಡಮ್ಮ. +ಅವಳಿಗೆ ನನ್ನ ಜೊತೆ ಮಾತಾಡೋಕೆ ಇಷ್ಟ ಇಲ್ಲ. +ಮೋಹನ ಸತ್ತಾಗಿನಿಂದಲೂ ನನ್ನ ಜೊತೆ ಒಂದೇ ಒಂದು ಮಾತಾಡಿಲ್ಲ ದೊಡ್ಡಮ್ಮ’ ನೀಲಾ ಅಳುವಂತೆ ಹೇಳಿದಳು. +ಈ ವಿಚಾರ ಅಂಬುಜಮ್ಮನ ಗಮನಕ್ಕೂ ಬಂದಿತ್ತು. +ಆದರೆ ತನ್ನ ತಿಳುವಳಿಕೇನೇ ಸರಿ ಇಲ್ಲವೇನೋ ಅಂತ ಅಂದುಕೊಂಡು ಆ ವಿಚಾರವನ್ನು ಮನಸ್ಸಿನಿಂದ ತೆಗೆದುಹಾಕಿದ್ದರು. +ನಮ್ಮೊಂದಿಗೆ ಅಷ್ಟೊಂದು ಪ್ರೀತಿಯಿಂದ ಮಾತಾಡುತ್ತಾಳೆ. +ದೊಡ್ಡಪ್ಪನ ಜೊತೆ ಅಷ್ಟೊಂದು ಪ್ರೀತಿಯಿಂದ ನಡ್ಕೋತಾಳೆ. +ಆದರೆ ತಾಯಿ ಜೊತೆ ಯಾಕೆ ಇಳಾ ಮಾತೇ ಆಡ್ತಾ ಇಲ್ಲ. +ಮೊದ್ಲೇ ನೀಲ ನೊಂದಿದ್ದಾಳೆ. +ಮೋಹನನ ಸಾವಿನ ದುಃಖವೇ ಆರಿಲ್ಲ. +ಇನ್ನು ಇರೋ ಒಬ್ಬ ಮಗಳು ಹೀಗೆ ನಡ್ಕೊಂಡುಬಿಟ್ಟರೆ ಅವಳು ಎಲ್ಲಿ ಹೋಗಬೇಕು? +ಬಿಸಿಯಲ್ಲಿಯೇ ಇದನ್ನು ವಿಚಾರಿಸಬೇಕು. +ಮೊಳಕೆಯಲ್ಲಿಯೇ ಈ ಅಸಮಾಧಾನಗಳನ್ನು ಚಿವುಟಿ ಹಾಕಿಬಿಡಬೇಕು. +ಅಂಥ ಅಸಮಾಧಾನ ಏನಿದೆ ತಾಯಿ ಮೇಲೆ ಮಗಳಿಗೆ. +ಇರೋರು ಇವರಿಬ್ಬರು. +ಒಬ್ಬರಿಗೊಬ್ಬರು ಅವರುಗಳೇ ಆಸರೆ ತಾನೇ. +ಈ ಇಳಾ ಅದ್ಯಾಕೆ ಹಾಗೆ ವರ್ತಿಸುತ್ತಿದ್ದಾಳೆ. +ಬುದ್ಧೀ ಹೇಳಬೇಕು ಅಂದ್ಕೊಂಡು-‘ಇಳಾ, ಇಳಾ, ಬಾ ತಾಯಿ ಇಲ್ಲಿ, ನಿನ್ಹತ್ರ ಮಾತಾಡಬೇಕು’ ಇಳಾ ರೂಮಿನ ಹತ್ತಿರ ಹೋಗಿ ಕರೆದರು. +‘ಅಜ್ಜಿ ನಾನು ಮಲ್ಕೊಂಡಿದ್ದೀನಿ, ನನ್ನ ಡಿಸ್ಟರ್ಬ್‌ ಮಾಡಬೇಡ’ ಅಲ್ಲಿಂದಲೇ ಹೇಳಿದಳು. +‘ಇಷ್ಟು ಹೊತ್ತಿನಲ್ಲಿ ಎಂತದ್ದು ಮಲಗುವುದು ಏಳು, ದೀಪ ಹಚ್ಚೋ ಸಮಯ, ಈ ಸಮಯದಲ್ಲಿ ಮಲಗಬಾರದು ಎದ್ದೇಳು’ ಬಲವಂತಿಸಿದರು. +‘ಹೋಗಜ್ಜಿ, ಸಾಕಾಗಿ ಹೋಗಿದೆ. +ಮೈಕೈಯಲ್ಲಾ ನೋವು, ಇವತ್ತೊಂದು ದಿನ ನನ್ನ ಬಿಟ್ಟುಬಿಡು ಅಜ್ಜಿ ಪ್ಲೀಸ್’ ಮುದ್ದುಗರೆದಳು. +‘ಏಳು ಚಿನ್ನಾ, ನಿನ್ನತ್ರ ಒಂದು ವಿಷಯ ಮಾತಾಡಬೇಕು. +ನಾಳೆ ಅಂತ ಮುಂದೂಡುವುದು ಬೇಡ, ಬಾ ಚಿನ್ನ’ ಅವಳ ಎರಡೂ ಕೈಗಳನ್ನು ಎತ್ತಿ ಮಗುವನ್ನು ತಬ್ಬಿಕೊಳ್ಳುವಂತೆ ತಬ್ಬಿಕೊಂಡು ಏಳಿಸಲು ಯತ್ನಿಸಿದರು. +‘ಥೂ ಈ ಅಜ್ಜಿ ಒಂದು, ನೆಮ್ಮದಿಯಾಗಿ ಮಲಗೋಕು ಬಿಡುವುದಿಲ್ಲ. + ಅದೇನು ಅಂತ ಮಹತ್ಕಾರ್ಯದ ಮಾತೋ ಆಡಬೇಕಾಗಿರುವುದು’ ಗೊಣಗುಡುತ್ತ ಅಜ್ಜಿಯಿಂದ ಕೈ ಬಿಡಿಸಿಕೊಂಡು ಎದ್ದಳು. +ಶೂನ್ಯದತ್ತ ದೃಷ್ಟಿನೆಟ್ಟು ನೀಲಾ ಸುಮ್ಮನೆ ಕುಳಿತಿದ್ದಳು. +ಅವಳ ಎದುರಿಗೆ ಇಳಾ ಬಂದು ಕುಳಿತಳು. +ಅಜ್ಜಿ ಇಳಾಳಾ ಪಕ್ಕ ಕುಳಿತು ‘ಪುಟ್ಟಾ ನಿಮ್ಮಮ್ಮ ತುಂಬಾ ಬೇಸರ ಮಾಡಿಕೊಂಡಿದ್ದಾಳೆ. +ನೀನು ಅವಳ ಜೊತೆ ನಿಮ್ಮ ಅಪ್ಪ ಸತ್ತಾಗಲಿಂದ ಮಾತಾಡ್ತಾನೇ ಇಲ್ವಂತೆ, ನೀನೇ ಏನು ಬೇಕಾದ್ರೂ ತೀರ್ಮಾನ ತಗೊತ್ತಿದ್ದಿಯಂತೆ, ಅಮ್ಮನ್ನ ಏನೂ ಕೇಳ್ತಾ ಇಲ್ವಂತೆ, ಯಾಕೆ ಪುಟ್ಟಾ, ಅಮ್ಮನ ಮೇಲೆ ನಿಂಗ್ಯಾಕೆ ಕೋಪ, ಅಮ್ಮ ಮೊದ್ಲೆ ದುಃಖದಲ್ಲಿದ್ದಾಳೆ. +ಆವಳ್ನ ಯಾಕೆ ನೋಯಿಸ್ತೀಯಾ’ ಕಳಕಳಿಯಿಂದ ಮೊಮ್ಮಗಳ ನೆತ್ತಿ ಸವರುತ್ತ ಕೇಳಿದರು. +‘ನಂಗ್ಯಾಕೆ ಅಜ್ಜಿ ಕೋಪ, ನಂಗೆ ಯಾರ ಮೇಲೂ ಕೋಪ ಇಲ್ಲಾ, ನನ್ನ ಮೇಲೆ ನಂಗೆ ಕೋಪ’ ಎತ್ತಲೋ ನೋಡುತ್ತ ಹೇಳಿದಳು. +ಆ ಧ್ವನಿಯಲ್ಲಿ ನೋವಿನ ಎಳೆ ಇತ್ತು. +ತಟ್ಟನೆ ಇತ್ತ ತಿರುಗಿದ ನೀಲಾ ಮತ್ಯಾಕೆ ನನ್ನ ಜೊತೆ ಮಾತಾಡ್ತ ಇಲ್ಲಾ. +ನನ್ನ ಮುಖ ನೋಡ್ತ ಇಲ್ಲಾ, ನನ್ನ ಏನೂ ಕೇಳ್ದೆ ಹಾಸ್ಟಲಿನಿಂದ ರೂಮು ಖಾಲಿ ಮಾಡ್ದೆ. +ನಾನು ಸತ್ತುಹೋಗಿದ್ದೀನಿ ಅಂತ ತಿಳ್ಕೊಂಡಿದ್ದೀಯಾ’ ಧ್ವನಿ ಕೊಂಚ ಬಿರುಸಾಗಿತ್ತು. +ಅದಕ್ಕೂ ಏನೂ ಉತ್ತರ ಹೇಳದೆ ಇಳಾ ಸುಮ್ಮನೇ ಕುಳಿತಿದ್ದಳು. +‘ಮಾತಾಡು ಪುಟ್ಟ, ಏನಾದ್ರೂ ಹೇಳು. +ನಾನು ಗಮನಿಸಿದ್ದೇನೆ, ನೀನು ನೀಲಾನ ಜೊತೆ ಮಾತಾಡ್ತ ಇಲ್ಲ, ಅವಳ ಕಡೆ ನೋಡ್ತಾನೂ ಇಲ್ಲ ಅಂತ ನಂಗೂ ಗೊತ್ತಾಗಿದೆ. +ಯಾಕಪ್ಪಾ ನಿಂಗೆ ಅಮ್ಮನ ಮೇಲೆ ಬೇಸರ, ಹೇಳೋ ಬಂಗಾರ’ ತಮ್ಮೆಡೆಗೆ ಎಳೆದುಕೊಂಡು ಇಳಾಳನ್ನು ಪ್ರಶ್ನಿಸಿದರು. +‘ಮುದ್ದು, ನಿಂಗೆ ಅಮ್ಮನ್ನ ಬಿಟ್ರೆ ಬೇರೆ ಯಾರಿದ್ದಾರೆ ಹೇಳು. +ಅವಳಿಗೆ ನೀನು, ನಿನಗೆ ಆವಳೇ ಆಸರೆ ತಾನೆ, ಹೀಗೆ ಮನಸ್ಸಿನಲ್ಲಿ ಏನೋ ಇಟ್ಕೊಂಡು ಅಮ್ಮನ್ನ ನೋಯಿಸಬೇಡ ಕಣೆ. +ಅದೇನು ನಿನ್ನ ಮನಸ್ಸಿನಲ್ಲಿದೆ ಅಂತ ಹೇಳಿಬಿಡು’ ಬಲವಂತಿಸಿದರು. +ಕಾತರದಿಂದ ನೀಲಾ ಕೂಡ ಮಗಳತ್ತಲೇ ದೃಷ್ಟಿ ನೆಟ್ಟಿದ್ದಳು. +‘ಅಮ್ಮಂಗೆ ನನ್ನ ನೆನಪಾದ್ರೂ ಇದೆಯಾ ಅಜ್ಜಿ, ನಂಗೆ ಬೇರೆ ಯಾರೂ ಇಲ್ಲಾ ಅಂತ ಅಮ್ಮಂಗೆ ಗೊತ್ತಿದ್ರೆ, ಅಪ್ಪನ ಜೊತೆ ಅಮ್ಮನೂ ಹೋಗೋಕೆ ಮನಸ್ಸು ಮಾಡ್ತಾ ಇದ್ಲಾ, ಅಪ್ಪ ಸತ್ತೋಗಿರೋ ವಿಚಾರ ಗೊತ್ತಾದ ಕೂಡ್ಲೇ ನಾನು ಒಂಟಿಯಾಗ್ತೀನಿ ಅಂತ ಯೋಚ್ನೆ ಕೂಡ ಮಾಡದ ಸಾಯೋಕೆ ಹೋಗಿದ್ರಲ್ಲ, ಆಗ ನನ್ನ ನೆನಪಾಗಿರಲಿಲ್ಲವಾ, ಸ್ವಲ್ಪ ಹೆಚ್ಚು ಕಡಿಮೆ ಆಗಿದ್ರೂ ಅಮ್ಮನೂ ಅಪ್ಪನ ಜೊತೆ ಹೋಗಿ ಆಗಿರುತ್ತಿತ್ತು. +ನಾನು ತಬ್ಬಲಿಯಾಗಿಯೇ ಈ ಪ್ರಪಂಚದಲ್ಲಿ ನಿಲ್ಲಬೇಕಿತ್ತಲ್ಲ, ಮಗಳು ಅನ್ನೋ ಮಮಕಾರವಿಲ್ಲದೆ ಅಮ್ಮ ಯಾವತ್ತು ಬೇಕಾದ್ರೂ ಅಪ್ಪನತ್ರ ಹೋಗಬಹುದು. + ಅದಕ್ಕೆ ನಾನು ಇವಾಗಿನಿಂದಲೇ ಅಮ್ಮ ಇಲ್ಲದೆ ಜೀವನ ಮಾಡೋಕೆ ಕಲಿತಾ ಇದ್ದೀನಿ’ ಏರುಪೇರಿಲ್ಲದೆ ಇಳಾ ಹೇಳ್ತಾ ಇದ್ರೆ ನೀಲಾಳ ಜೊತೆ ಅಂಬುಜಮ್ಮ ಕೂಡ ಗಟ್ಟಿಯಾಗಿ ಅತ್ತುಬಿಟ್ಟರು. +‘ಅಯ್ಯೋ ಚಿನ್ನ ನನ್ನ ಕ್ಷಮಿಸಿಬಿಡು. +ನಾನು ದೊಡ್ಡ ತಪ್ಪು ಮಾಡ್ತ ಇದ್ದೆ. +ದೇವರೇ ನನ್ನ ಉಳಿಸಿದ್ದಾನೆ. +ಮತ್ತೆಂದೂ ಇಂಥ ತಪ್ಪು ಮಾಡಲ್ಲ ಇಳಾ, ನಂಗೆ ಆ ಘಳಿಗೇಲಿ ಅದೇನು ಮಂಕು ಕವಿದಿತ್ತೋ, ಮೋಹನ ಇಲ್ಲದೆ ಬದುಕು ನಂಗೂಬೇಡಾ ಅನ್ನಿಸಿಬಿಟ್ಟಿತ್ತು. +ಆದ್ರೆ ನಿನ್ನ ಆ ಕ್ಷಣ ನೆನೆಸಿಕೊಳ್ಳದೆ ಎಂಥ ದೊಡ್ಡ ತಪ್ಪು ಮಾಡಿಬಿಟ್ಟೆ, ನಾನೂ ಇಲ್ಲದೆ, ಮೋಹನ ಇಲ್ಲದೆ- ಒಂಟಿಯಾಗಿ ನೀನಿರ್ತೀಯಾ ಅನ್ನೋ ಕಲ್ಪನೆ ಕೂಡ ನನ್ನಿಂದ ಕಲ್ಪಿಸೋಕೆ ಆಗ್ತಾ ಇಲ್ಲಾ. +ಈಗ ನಂಗೆ ಅರ್ಥವಾಗ್ತಾ ಇದೆ. +ನಿನ್ನ ನೋವು ನಂಗೆ ಗೊತ್ತಾಯ್ತು. +ನನ್ನ ಕ್ಷಮ್ಸಿ ಬಿಡು ಇಳಾ’ ಮಗಳ ಕಾಲಬಳಿ ಕುಳಿತು ಅವಳ ತೊಡೆ ಮೇಲೆ ತಲೆ ಇರಿಸಿ ಬಿಕ್ಕಿ ಬಿಕ್ಕಿ ಅತ್ತಳು. +ಇಳಾ ಕೂಡಾ ಕಣ್ಣೀರಿಡ್ತಾ ಇದ್ದಾಳೆ. +ಅಮ್ಮ ಮಗಳು ಇಬ್ರೂ ಸಾಕಷ್ಟು ಅತ್ತರು. +ಇಬ್ಬರ ಮನಸ್ಸಿನ ಕಲ್ಮಶಗಳೆಲ್ಲ ಕಣ್ಣೀರಿನ ಮೂಲಕ ತೊಡೆದು ಹೋಗಲಿ ಅಂತ ಅಂಬುಜಮ್ಮ ಹನಿಗಣ್ಣಾಗಿ ನೋಡುತ್ತ ಸುಮ್ಮನಿದ್ದು ಬಿಟ್ಟರು. +ಒಂದಿಷ್ಟು ಹೊತ್ತು ಅತ್ತ ತಾಯಿ-ಮಗಳು ಸಮಾಧಾನಗೊಂಡವರಂತೆ ಕಣ್ಣೀರು ಒರೆಸಿಕೊಂಡರು. +‘ಚಿನ್ನ, ಇನ್ನೂ ನನ್ನ ಕ್ಷಮಿಸಲ್ವಾ, ಯಾವುದೋ ಆವೇಶದಲ್ಲಿ ನಿನ್ನ ಕ್ಷಣ ಮರೆತದಕ್ಕೆ ಇಷ್ಟು ದೊಡ್ಡ ಶಿಕ್ಷೆ ಕೊಡಬೇಡಾ ಕಣೆ, ನನಗೆ ಉಳಿದಿರೋಳು ನೀನೊಬ್ಳೆ. +ನಿಮ್ಮಪ್ಪ ಅಂತೂ ನಮ್ಮ ಕೈ ಬಿಟ್ಟು ಹೋದ್ರು, ನೀನಾದ್ರೂ ನನ್ನ ಪಾಲಿಗೆ ಇದ್ದೀಯಾ ಅನ್ನೊ ಸಮಾಧಾನದಲ್ಲಿ ಬದುಕ್ತಾ ಇದ್ದೇನೆ, ನನ್ನ ದೂರ ಇಟ್ಟು ಕೊಲ್ಲಬೇಡ್ವೆ’ ಮಗಳನ್ನು ಬೇಡಿಕೊಂಡಳು. +‘ಅಮ್ಮಾ ಅಮ್ಮ’ ಅಂತ ಇಳಾ ನೀಲಾಳ ಕೊರಳನ್ನು ತಬ್ಬಿದಳು. +ಅಂತೂ ಮಗಳು ತಾಯಿ ಜೊತೆ ಮಾತಾಡಿಬಿಟ್ಟಳು. +ಸಧ್ಯ ಇಷ್ಟು ಬೇಗ ಅಮ್ಮ ಮಗಳ ಮುನಿಸು ಕೊನೆಗೊಂಡಿತಲ್ಲ ಅಂತ ಸಂತಸಪಟ್ಟ ಅಂಬುಜಮ್ಮ. +‘ಸಾಕು ಏಳಿ, ಇಷ್ಟು ಅತ್ತದ್ದು ಸಾಕು. +ಅಮ್ಮನೂ ತಪ್ಪು ಮಾಡಿದ್ಲು, ಅಮ್ಮನಂತೆ ಮಗಳಲ್ವಾ, ಮಗಳೂ ತಪ್ಪು ಮಾಡಿದಳು. +ಇನ್ನು ಮೇಲಾದ್ರೂ ಅದನ್ನೆಲ್ಲ ಮರೆತು ಮುಂದೇನು ಮಾಡಬೇಕೊ ಮಾತಾಡಿಕೊಳ್ಳಿ. + ಎದ್ದೇಳಿ ಅತ್ತು ಅತ್ತು ಸಾಕಾಗಿದ್ದೀರಾ, ಬಿಸಿ ಬಿಸಿ ಕಾಫಿ ತರ್ತೀನಿ’ ಎನ್ನುತ್ತ ಒಳ ಹೋಗಿ ಮೂರು ಲೋಟ ಕಾಫಿ ತಂದು ಇಬ್ಬರಿಗೂ ಒಂದೊಂದು ಲೋಟ ಕೊಟ್ಟು ತಾವು ಒಂದು ಲೋಟ ಹಿಡಿದು ಕುಳಿತರು. +ಒಂದು ಪ್ರಕರಣ ಸುಖಾಂತ್ಯ ಕಂಡಿತು. +ಎಲ್.ಐ.ಸಿ.ಹಣ ಆರು ಲಕ್ಷ ಬರಬಹುದೆಂದು ಅಂದಾಜು ಸಿಕ್ಕಿತು. +ಬ್ಯಾಂಕ್ ಮ್ಯಾನೇಜರ್ ಇನ್ನೂ ರಜೆಯಲ್ಲಿಯೇ ಇದ್ದರೂ, ಇನ್‌ಚಾರ್ಜ್ ಸಿಬ್ಬಂದಿಯಿಂದ ತೋಟದ ಮೇಲಿರುವ ಸಾಲ ೨೪ ಲಕ್ಷ, ಬಡ್ಡಿಯೇ ಕಟ್ಟಿಲ್ಲವಾದ್ದರಿಂದ ಅಸಲು ಬಡ್ಡಿ ಸೇರಿ ಅಷ್ಟು ಹಣ ಬೆಳೆದಿದೆ ಎಂದು ತಿಳಿದುಬಂತು. + ಎಲ್.ಐ.ಸಿ.ಯ ಆರು ಲಕ್ಷ ಸಾಲಕ್ಕೆ ಕಟ್ಟಿದರೂ ಇನ್ನೂ ೧೮ ಲಕ್ಷ ಉಳಿಯುತ್ತದೆ. +ವರ್ಷಾ ವರ್ಷಾ ಬಡ್ಡಿಯೇ ಸಾಕಷ್ಟು ಕಟ್ಟಬೇಕಾಗುತ್ತದೆ. +ಸಾಲ ತೀರಿಸುವ ಹಾದಿ ಯಾವುದು ಅಂತ ಅಮ್ಮ ಮಗಳು ಕುಳಿತು ಚರ್ಚೆ ನಡೆಸಿದರು. +ಆಗ ಇಳಾ ಮೆಲ್ಲಗೆ ವಿನಾಯಕ ಹೇಳಿದ್ದನ್ನು ಬಾಯಿಬಿಟ್ಟಳು. +ಒಳ್ಳೆ ರೇಟು ಬಂದ್ರೆ ರೆಸಾರ್ಟ್ಗೆ ಖಾಲಿ ಪ್ಲಾಟನ್ನು ಕೊಟ್ಟುಬಿಟ್ಟರೆ ನಮ್ಮ ಸಾಲ ತೀರುತ್ತದೆ. +ಅಲ್ಪ ಸ್ವಲ್ಪ ಉಳಿದರೂ ಮುಂದೆ ಬೆಳೆ ಮಾರಿ ತೀರಿಸಬಹುದು ಅಂತ ಸಲಹೆ ನೀಡಿದಳು. +ನೀಲಾ ಬಿಲ್ಕುಲ್ ಒಪ್ಪಲಿಲ್ಲ. +ಮೋಹನ ಇರುವಾಗಲೇ ಈ ಪ್ರಸ್ತಾಪ ಬಂದಿತ್ತು. +ಇಲ್ಲಿ ರೆಸಾರ್ಟ್ ಮಾಡಿ ಕುಲಕರ್ಮ ಏಳಿಸುವುದು ಬೇಡಾ ಅಂತ ವಿರೋಧಿಸಿದ್ದರು. +ಈಗ ಅವರಿಲ್ಲ ಅಂತ ಮಾರಿದರೆ ಅವರ ಆತ್ಮ ನೊಂದುಕೊಳ್ಳುವುದಿಲ್ಲವೆ? +ಮೋಹನ ಆದರ್ಶವಾಗಿಯೇ ಬದುಕಿದ್ದೋರು. +ಈಗ ಅವರು ಸತ್ತ ಮೇಲೆ ಮಗಳೇ ಅಪ್ಪನ ಆದರ್ಶದ ವಿರುದ್ಧ ನಡಿತಾ ಇದ್ದಾಳೆ ಅಂತ ಅಪವಾದ ಹೊರೋದು ಬೇಡಾ, ಸಾಲ ತೀರಿಸೋಕೆ ಅರ್ಧ ತೋಟಾನಾ ಮಾರಿಬಿಡೋಣ. +ನಾವು ತಾನೇ ಅಷ್ಟೆಲ್ಲ ಮಾಡೋಕೆ ಕಷ್ಟವಾಗುತ್ತದೆ. +ಮುಂದೆ ನಿನ್ನ ಮದ್ವೆ ಆಗೋನಿಗೆ ಈ ಆಸ್ತಿಲೀ ಆಸಕ್ತಿ ಇರುತ್ತೊ ಬಿಡುತ್ತೊ ಆಮೇಲಾದ್ರೂ ಮಾರಲೇಬೇಕಲ್ಲ ನೀಲಾ ಹೇಳಿದ್ದನ್ನು ಇಳಾ ಸುತಾರಂ ಒಪ್ಪಲಿಲ್ಲ. +ಫಸಲು ಕೊಡುತ್ತಿರುವ ಅಪ್ಪನ ಶ್ರಮದ ಪ್ರತಿಫಲವಾಗಿ ನಿಂತಿರೋ ತೋಟದ ಯಾವ ಭಾಗವೂ ಮಾರೋದು ಬೇಡ. +ಒಂದೊಂದು ಗಿಡದಲ್ಲಿಯೂ ಅಪ್ಪನ ಶ್ರಮ ಇದೆ. +ನೆನಪು ಇದೆ, ಕನಸು ಇದೆ, ಆ ಕನಸುಗಳನ್ನು ಮಾರುವುದು ಬೇಡವೇ ಬೇಡ ಅಂತ ಪಟ್ಟು ಹಿಡಿದಳು. +‘ಅಮ್ಮ ರೆಸಾರ್ಟ್ ಅಂದ್ರೆ ತಪ್ಪು ತಿಳಿಯೋದು ಬೇಡ ಕಣಮ್ಮ. +ಎಲ್ಲಾ ರೆಸಾರ್ಟುಗಳಲ್ಲಿ ಕೆಟ್ಟ ಕೆಲಸ ನಡೀತಾವೆ ಅಂತ ಯಾಕೆ ಅಪಾರ್ಥ ಮಾಡಿಕೊಂಡಿದ್ದೀಯಾ. +ರೆಸಾರ್ಟ್‌ಗಳು ಪ್ಯಾಮಿಲಿಗಳು ವೀಕ್ ಎಂಡ್‌ಗೆ ಬಂದು ರಿಲ್ಯಾಕ್ಸ್ ಆಗೋ ಸ್ಥಳಗಳಾಗಿವೆ. +ರೆಸಾರ್ಟ್‌ನಲ್ಲಿ ಕಾಟೇಜುಗಳಿರುತ್ತವೆ. +ಸಂಪ್ರದಾಯದ ಊಟ ತಿಂಡಿಗಳಿರುತ್ತವೆ. +ಕೃತಕ ತೊರೆ, ಜಲಪಾತ ಮಾಡಿ ಪ್ರಕೃತಿ ಸವಿಯಲು ಅನುವು ಮಾಡಿಕೊಡುತ್ತಾರೆ. +ಸಂಸಾರ, ಮಕ್ಕಳು ಸಮೇತ ಬಂದು ಮಲೆನಾಡಿನ ಪ್ರಕೃತಿಯಲ್ಲಿ ನಲಿದು ಕುಣಿದು ಹೋಗುವ ಅವಕಾಶವಿರುತ್ತದೆ. +ಎಲ್ಲಾ ವಿಚಾರಿಸಿಯೇ ಕೊಡೋಣ. +ಮೊದಲು ವಿನಾಯಕ ಫ್ರೆಂಡ್‌ನ ಕರ್ಕೊಂಡು ಬರಲಿ, ಮಾತಾಡೋಣ, ಇಷ್ಟ ಆಗದೆ ಇದ್ರೆ ಬೇಡ ಅನ್ನೋಣ. + ಒಂದು ಒಳ್ಳೆ ಅವಕಾಶಾನ ಯಾಕೆ ಸುಮ್ನೆ ಬಿಟ್ಟುಕೊಡೋದು’ ಮಗಳು ಅಮ್ಮನ ಮನ ಒಲಿಸಲು ಪ್ರಯತ್ನಿಸಿದಳು. +‘ನಾನೇನೋ ನಿನ್ನ ಬಲವಂತಕ್ಕೆ ಒಪ್ಪಬಹುದು. + ಆದ್ರೆ ನಿಮ್ಮ ದೊಡ್ಡಪ್ಪ ಸುಮ್ನೆ ಇರ್ತಾರಾ, ಅವರು ಒಪ್ಪಲ್ಲ ಬಿಡು’ ಅನುಮಾನಿಸಿದಳು. +‘ದೊಡ್ಡಪ್ಪ ಒಪ್ಪಿದ್ರೆ ಸಂತೋಷ, ಇಲ್ಲದೆ ಇದ್ರೆ ನಮ್ಮ ಬದುಕು ನಮ್ಮದು, ನಮ್ಮ ಸಾಲ ತೀರಿಸೋಕೆ ಯಾರು ಬರಲ್ಲ. +ಹಾಗೆ ಬರೋರಿದ್ರೆ ಅಪ್ಪ ಸಾಯ್ತ ಇರಲಿಲ್ಲ, ಇದನ್ನ ನೆನಪಿಟ್ಟುಕೋ’ ನಿಷ್ಟುರವಾಗಿ ಹೇಳಿದಾಗ ನೀಲಾ ಅವಕ್ಕಾದಳು. +ಇವಳು ಇಳಾನೇನಾ, ನಾನು ಬೆಳೆಸಿದ ಇಳಾನಾ, ಈ ಧೈರ್ಯ, ಈ ಮಾತು, ಈ ಜವಾಬ್ದಾರಿ ಅದೆಲ್ಲಿಂದ ಬಂತು? +ಈ ಸಣ್ಣ ವಯಸ್ಸಿನಲ್ಲಿ ನಿರ್ಧಾರ ಕೈಗೊಳ್ಳುವ ಶಕ್ತಿ ಇವಳಿಗಿದೆಯಾ? ಜಿಜ್ಞಾಸೆಗೊಳಗಾದಳು. +ಮಗಳ ಮಾತನ್ನು ಒಪ್ಪದೇ ಇರದಾದಳು. +ಆದರೆ ತಮ್ಮೆಲ್ಲ ಕಷ್ಟ-ಸುಖಗಳಲ್ಲಿ ಭಾಗಿಯಾಗುವ, ಮನೆಯ ಆಗುಹೋಗುಗಳ ಬಗ್ಗೆ ಕಾಳಜಿ ಇರುವ ಭಾವನನ್ನು ಎದುರು ಹಾಕಿಕೊಂಡು ಪ್ಲಾಟ್ ಮಾರುವ ಧೈರ್ಯ ತೋರದಾದಳು ನೀಲಾ. +ನೋಡೋಣ ಇರು ಅಂತ ಸಧ್ಯಕ್ಕೆ ಆ ಪ್ರಸ್ತಾಪವನ್ನು ಮುಂದೆ ಹಾಕಿದಳು. +ಆದರೆ ಅದು ಮುಂದೆ ಹೋಗದೆ, ಮಾರನೇ ದಿನವೇ ವಿನಾಯಕನ ರೂಪದಲ್ಲಿ ಪ್ರತ್ಯಕ್ಷವಾಗಿತ್ತು. +ತನ್ನ ಗೆಳೆಯನನ್ನು ಜೊತೆಯಲ್ಲಿಯೇ ಕರೆದುಕೊಂಡು ಇಳಾಳ ಮನೆಗೆ ಬಂದುಬಿಟ್ಟ. +ಯಾರಪ್ಪ ಇಷ್ಟು ಬೆಳ ಬೆಳಗ್ಗೆಯೇ ಕಾರಿನಲ್ಲಿ ಬಂದೋರು ಅಂತ ಇಳಾ ಹೊರ ಬಂದು ನೋಡಿದರೆ ವಿನಾಯಕ ಕಾರಿನಿಂದಿಳಿಯುತ್ತಿದ್ದ. +ಕ್ಷಣ ಮುಖ ಸಿಂಡರಿಸಿದರೂ, ನಗು ತಂದುಕೊಳ್ಳುತ್ತ ‘ಬನ್ನಿ ಒಳಗೆ’ ಅಂತ ಸ್ವಾಗತಿಸಿ ‘ಅಮ್ಮಾ ನೋಡು ಯಾರು ಬಂದಿದ್ದಾರೆ’ ಅಂತ ಕೂಗು ಹಾಕಿದಳು. +ನೀಲಾ ಹೊರ ಬರುವಷ್ಟರಲ್ಲಿ ವಿನಾಯಕ ಗೆಳಯನೊಟ್ಟಿಗೆ ಒಳಬಂದು ಸೋಫಾದ ಮೇಲೆ ಕೂತಾಗಿತ್ತು. +‘ನಮಸ್ಕಾರ ಅಕ್ಕ, ಅಣ್ಣ ಇದ್ದಾಗಲೇ ಒಂದು ಸಲ ಬಂದಿದ್ದೆ, ಆಗ ಅಣ್ಣ ಬೇಡಾ ಅಂದಿದ್ರು. +ಆದರೆ ಈಗ ಪರಿಸ್ಥಿತಿ ಬದಲಾಗಿದೆ. +ಇಳಾ ಹತ್ರ ಮಾತಾಡಿದ್ದೆ. +ಆದಕ್ಕೆ ನನ್ನ ಫ್ರೆಂಡ್ನ ಕರ್ಕೊಂಡು ಬಂದಿದೀನಿ ಇವ್ರು ನನ್ನ ಫ್ರೆಂಡ್ ವಿಸ್ಮಯ್ ಅಂತ ಬೆಂಗಳೂರಿನವರು. +ಅಲ್ಲಿ ಇವರಿಗೆ ಹೋಟೆಲ್ ಬಿಸಿನೆಸ್ ಇದೆ, ಪ್ರಕೃತಿ ಕಂಡ್ರೆ ತುಂಬಾ ಇಷ್ಟ. +ಬೆಂಗಳೂರಿನಂತ ಬಿಸಿ ಪ್ಲೇಸ್‌ನಲ್ಲಿರೋದು ಕಷ್ಟ. +ಅದಕ್ಕೆ ತಂಪಾದ ಈ ಮಲೆನಾಡಿನಲ್ಲಿರೋಣ ಅಂತ ಬಯಸ್ತ ಇದ್ದಾರೆ.’ ವಿಸ್ಮಯನ ಪರಿಚಯಿಸಿ ಬಂದ ಉದ್ದೇಶ ತಿಳಿಸಿದ ವಿನಾಯಕ. +ಅಮ್ಮ ಮಗಳಿಬ್ಬರೂ ಮುಖ ಮುಖ ನೋಡಿಕೊಂಡರು. +ನಗುವ ಪ್ರಯತ್ನ ಮಾಡುತ್ತ ‘ನಮಸ್ಕಾರ, ನಾವಿನ್ನು ಆ ಬಗ್ಗೆ ಮಾತಾಡಿಕೊಂಡಿಲ್ಲ. +ನಾವು ನಾವು ತೀರ್ಮಾನ ತಗೊಳ್ಳೋಕೆ ಆಗಲ್ಲ, ಹಿರಿಯರಿದ್ದಾರೆ ಅವರನ್ನು ಒಂದು ಮಾತು ಕೇಳಬೇಕು, ಸ್ವಲ್ಪ ದಿನ ಟೈಂ ಕೊಡಿ’ ನೀಲಾ ಉತ್ತರಿಸಿದಳು. +‘ನಿಧಾನಕ್ಕೆ ಯೋಚ್ನೆ ಮಾಡ್ತ ಇರೋಕೆ ಇವರಿಗೆ ಟೈಂ ಇಲ್ಲ ಅಕ್ಕ. +ಇಲ್ಲಿ ಸಿಗದೆ ಇದ್ರೆ ಇವರು ಬೇರೆ ಕಡೆ ಕೊಂಡುಕೊಳ್ಳುತ್ತಾರೆ. +ನಿಮ್ಮ ಜಾಗದ ಪಕ್ಕದೋರು ಮಾರೋಕೆ ರೆಡಿ ಇದ್ದಾರೆ, ನೀವು ಒಪ್ಪಿಕೊಂಡ್ರೆ ಬೇಗ ನಿರ್ಧಾರಕ್ಕೆ ಬರಬಹುದು. + ನಿಮ್ಗೂ ಕಷ್ಟ ಇದೆ, ಈ ಅವಕಾಶ ಬಿಟ್ರೆ ಮತ್ತೆ ಈ ಅವಕಾಶ ಸಿಗಲ್ಲ. +ಅಷ್ಟೊಂದು ರೇಟು ಕೊಟ್ಟು ಯಾರೂ ಈ ಕೊಂಪೆಗೆ ಬಂದು ಕೊಳ್ಳಲ್ಲ. +ಈ ಅವಕಾಶನ ನಿಧಾನ ಮಾಡಿ ಕಳ್ಕೊಬೇಡಿ’ ವಿನಾಯಕ ಮನಸ್ಸಿಗೆ ನಾಟುವಂತೆ ತಿಳಿಸಿದ. +‘ನೀವ್ಯಾಕೆ ಹಿಂದೆ ಮುಂದೆ ನೋಡ್ತಾ ಇದ್ದೀರಾ ಅಂತ ನಂಗೆ ಅರ್ಥವಾಗುತ್ತೆ ಮೇಡಂ, ನಾವು ಮಾಡೋ ರೆಸಾರ್ಟ್ನಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಸೊಲ್ಲ ಅಂತ ಬಾಂಡ್ ಪೇಪರ್ ಮೇಲೆ ಬರೆದುಕೊಡ್ತೀನಿ. +ನಾನ್ಯಾಕೆ ಇಷ್ಟೊಂದು ಒತ್ತಾಯ ಮಾಡ್ತ ಇದ್ದೀನಿ ಅಂದ್ರೆ ಇಲ್ಲಿ ಹಳ್ಳ ಹರೀತಾ ಇದೆ, ಸಿಟಿಗೂ ದೂರ ಆಗಲ್ಲ. +ಒಂದೇ ಕಡೆ ದೊಡ್ಡ ಪ್ಲಾಟ್ ಸಿಗ್ತಾ ಇದೆ, ಜೊತೆಗೆ ನನಗೆ ಎಲ್ಲಾ ಸಹಕಾರ ಕೊಡೋಕೆ ವಿನಾಯಕ ಇಲ್ಲೇ ಇರ್ತಾರೆ. +ಅದಕ್ಕೆ ಇದೇ ಜಾಗನ ನಾನು ಇಷ್ಟಪಡ್ತ ಇದ್ದೀನಿ. +ನೀವು ಒಪ್ಪಿಕೊಂಡರೆ ಅಡ್ವಾನ್ಸ್ ಕೊಟ್ಟು ಹೋಗುತ್ತೇನೆ. +ಇಲ್ಲಿ ನಡಿತಾಯಿರೋ ರೇಟ್‌ಗಿಂತ ಹೆಚ್ಚು ಕೊಡ್ತೀವಿ, ಎಕರೆಗೆ ೨ ಲಕ್ಷ ಇದೆ, ನಾನು ೩ ಲಕ್ಷ ಕೊಡ್ತೀನಿ. +೪ ಎಕರೆಗೆ ೧೨ ಲಕ್ಷ ಕೊಡ್ತೀವಿ’ ವಿಸ್ಮಯ್ ಹೇಳಿದಾಗ ತಮ್ಮ ಖಾಲಿಜಾಗ ಅಷ್ಟೊಂದು ಬೆಲೆ ಬಾಳುತ್ತದೆಯೇ ಅಂತ ಆಶ್ಚರ್ಯವಾಯ್ತು ನೀಲಾಗೆ. +ಯಾವುದಕ್ಕೂ ಇನ್ನೆರಡು ದಿನ ಬಿಟ್ಟು ನಮ್ಮ ನಿರ್ಧಾರ ತಿಳಿಸುತ್ತೇವೆ ಅಂತ ಹೇಳಿ ಅವರನ್ನು ಕಳುಹಿಸಿಕೊಟ್ಟಳು. +ಇಳಾ ಮೌನವಾಗಿಯೇ ಇದ್ದಳು. +ಮಗಳಿಗೆ ಅಸಮಾಧಾನವಾಗಿದೆ ಅಂತ ಗೊತ್ತಾದರೂ ಅದನ್ನು ಕೆದಕಲು ಹೋಗದೆ ಸುಮ್ಮನಿದ್ದುಬಿಟ್ಟಳು. +ಇಳಾಳ ತಾಯಿ ನೀಲಾ ಇಡೀ ರಾತ್ರಿ ಯೋಚಿಸಿದಳು. +ಆದರ್ಶದ ಬೆನ್ನು ಹತ್ತಿದ ಗಂಡನಿಗೆ ಸಿಕ್ಕಿದ್ದೇನು? +ಅವನನ್ನೇ ನಂಬಿದ ನಮಗೆ ಈಗ ಸಿಗುತ್ತಿರುವುದೇನು. + ಆದರ್ಶ ಹೊಟ್ಟೆ ತುಂಬಿಸಿ ಬದುಕು ನೀಡಲಾರದು. +ಅಷ್ಟಕ್ಕೂ ಅವರೇನು ಅಲ್ಲಿ ಮಾಡಬಾರದ್ದೇನು ಮಾಡಲಾರರು. +ನಾವು ಮನಸ್ಸು ಮಾಡಿ ಜಾಗ ಕೊಟ್ಟರೆ ಅಲ್ಲೊಂದು ಪ್ರೇಕ್ಷಣಿಯ ಸ್ಥಳವಾಗುತ್ತದೆ. +ಟಿ.ವಿ.ಗಳಲ್ಲಿ ನಾನು ನೋಡಿಲ್ಲವೇ… ರೆಸಾರ್ಟ್‌ಗಳು ಹೇಗಿರುತ್ತವೆ ಎಂದು. +ನಾವು ಕೊಟ್ಟ ಮೇಲೆ ಏನಾದರೂ ಮಾಡಿಕೊಳ್ಳಲಿ, ಸಧ್ಯಕ್ಕೆ ನಮ್ಮ ಸಮಸ್ಯೆ ಪರಿಹಾರವಾಗುತ್ತದೆ. +ತೋಟದ ಮೇಲಿನ ಸಾಲ ಅರ್ಧದಷ್ಟು ತೀರುತ್ತದೆ, ಮುಂದೆಯಾದರೂ ನೆಮ್ಮದಿಯಿಂದ ಬದುಕಬಹುದು. +ಮಗಳ ಇಚ್ಛೆಯೂ ಅದೇ ಆಗಿರುವಾಗ ಅವಳಿಗ್ಯಾಕೆ ಬೇಸರವುಂಟು ಮಾಡಬೇಕು. +ಜಮೀನು ಮಾರಲು ನಿರ್ಧರಿಸಿದ್ದಳು ನೀಲಾ. +ನೀಲಾ ಬೆಳಿಗ್ಗೆಯೇ ಭಾವ ಸುಂದರೇಶ್‌ಗೆ ಫೋನ್ ಮಾಡಿ ಬರಲು ಹೇಳಿದಳು. +ಮಗಳಿಗೂ ತಾನು ರಾತ್ರಿ ನಿರ್ಧಾರ ಮಾಡಿದ್ದನ್ನು ತಿಳಿಸಿದಳು. +ಇಳಾಳಿಗಂತೂ ತುಂಬಾ ಸಂತೋಷವಾಗಿತ್ತು. +ತಮ್ಮ ಸಮಸ್ಯೆಗಳನ್ನು ಬಗೆಹರಿಸಿ ತಾವೊಂದು ಬದುಕು ಕಂಡುಕೊಳ್ಳುವಂತಾಗುವ ಸಮಯ ಹತ್ತಿರವಾಗಿದೆ. +ಹೇಗೋ ಬದುಕಿನ ಬಂಡಿ ಮುಂದೆ ಉರುಳುವಂತಾಗಲಿ ಎಂದು ಆಶಿಸಿದಳು. +ಆದರೂ ಒಂದು ಸಂದೇಹ ಕಾಡುತ್ತಿತ್ತು. +ಅಮ್ಮ ಏನೋ ಕಷ್ಟದಲ್ಲಿ ಒಪ್ಪಿದ್ದಾಳೆ, ಆದರೆ ದೊಡ್ಡಪ್ಪ ಎಲ್ಲಿ ಬೇಡವೆಂದು ತಮ್ಮನ್ನು ಮತ್ತೆ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಸಿಬಿಡುತ್ತಾರೊ ಅನ್ನೋ ಆತಂಕ ಕಾಡುತ್ತಲೇ ಇತ್ತು. +ಸುಂದರೇಶ್ ಬಂದಾಗ ಈ ವಿಚಾರವನ್ನು ಹೇಗೆ ಹೇಳುವುದು ಎಂದು ನೀಲಾ ತಳಮಳಿಸಿದಳು. +ತಾವು ರೆಸಾರ್ಟ್ಗೆ ಜಮೀನು ಮಾರುವ ವಿಚಾರ ಹೇಳಲು ಬಾಯಿ ಬರದೆ ನೀಲಾ ಸುಮ್ಮನೆ ಕುಳಿತುಬಿಟ್ಟಳು. +ಅಮ್ಮನ ಕಷ್ಟ ನೋಡಲಾರದೆ ಇಳಾ ಪರಿಸ್ಥಿತಿ ನಿಭಾಯಿಸುವ ಜವಾಬ್ದಾರಿ ಕೈಗೆತ್ತಿಕೊಂಡು ದೊಡ್ಡಪ್ಪನ ಮುಂದೆ ಜಾಣ್ಮೆಯಿಂದ ವಿಷಯ ಇಟ್ಟಳು. +‘ದೊಡ್ಡಪ್ಪ ಬ್ಯಾಂಕಿನಲ್ಲಿ ಲೋನ್ ಬಗ್ಗೆ ವಿಚಾರಿಸಿದೆ, ಬಡ್ಡಿ-ಅಸಲು ಎಲ್ಲಾ ಸೇರಿ ಇಪ್ಪತ್ತನಾಲ್ಕು ಲಕ್ಷ ಇದೆಯಂತೆ, ಬಡ್ಡಿ ಕಟ್ಟದೆ ಅಷ್ಟಾಗಿದೆ ಅಂತ ಹೇಳಿದ್ರು ಬ್ಯಾಂಕಿನವರು.’ +‘ಬರೀ ಬ್ಯಾಂಕಿನದ್ದೆ ಇಪ್ಪತ್ತನಾಲ್ಕು ಲಕ್ಷ ಇದೆ, ಫೈನಾನ್ಸ್‌‌ನಲ್ಲಿ ಬೇರೆ ತಗೊಂಡಿದ್ದಾನೆ ಕಣಮ್ಮ. +ನಾನೇ ಜಾಮೀನು ಹಾಕಿದ್ದೀನಿ, ಅದೊಂದು ಐದು ಲಕ್ಷ ಆಗಿರಬೇಕು. +ಅಷ್ಟೊಂದು ಹಣವನ್ನ ಯಾಕೆ ಸಾಲ ಮಾಡಿದ್ನೋ ಗೊತ್ತಿಲ್ಲ’. +ಸುಂದರೇಶ್ ಮೊದಲ ಬಾರಿಗೆ ಹಣದ ವಿಚಾರ ಎತ್ತಿದರು. +ಫೈನಾನ್ಸ್‌ನಲ್ಲಿ ಸಾಲ ಮಾಡಿದ್ದು ನೀಲಾಗೆ ಗೊತ್ತೆ ಇರಲಿಲ್ಲ. +‘ಅಲ್ಲೂ ಮಾಡಿದ್ದರಾ ಭಾವ’ ಗಾಬರಿಯಾದಳು. +‘ಅಲ್ಲಿ ಬಡ್ಡಿ ಕಟ್ಟೋಕೆ ಅಂತಾನೇ ನಿನ್ನ ಲಾಕರ್‌ನಲ್ಲಿದ್ದ ಒಡವೆನಾ ಮಾರಿರೋದು. +ಅದು ಸಾಲದು ಅಂತ ಕಾರನ್ನು ಮಾರಿ ಕಟ್ಟಿದ್ದಾನೆ. +ಫೈನಾನ್ಸ್‍ನಲ್ಲಿ ಮನೆಹಾಳು ಬಡ್ಡೀ ವಸೂಲ್ಮಾಡ್ತಾರೆ. +ಮನೆ ಮಠ ಮುಳುಗಿ ಹೋಗುತ್ತೆ ಅಂತ ಎಷ್ಟು ಹೇಳಿದ್ರೂ ಕೇಳದೆ, ಶುಂಠೀ ದುಡ್ಡು ಬಂದುಬಿಡುತ್ತೆ ಎರಡೇ ತಿಂಗಳು ತೀರಿಸಿಬಿಡ್ತೀನಿ ಅಂತ ನನ್ನ ಜಾಮೀನು ಹಾಕಿಸಿ ಸಾಲ ತಗೊಂಡ, ಶುಂಠಿ ಯಕ್ಕುಟ್ಟೋತ್ತಲ್ಲ. +ಇವನೆಲ್ಲಿ ಸಾಲ ತೀರಿಸ್ತಾನೆ? +ಬೇಡಾ ಅಂತ ಬಡ್ಕೊಂಡರೂ ಎರಡು ಎಕರೆಗೆ ಶುಂಠಿ ಹಾಕಿಸಿ ಹಾಳಾಗಿಬಿಟ್ಟ.’ +ಅಷ್ಟರಲ್ಲಿ ಇಳಾ ಈ ಹೊಸ ಶಾಕಿನಿಂದ ಚೇತರಿಸಿಕೊಂಡು ‘ದೊಡ್ಡಪ್ಪ, ಇಷ್ಟೊಂದು ಸಾಲ ತೀರಿಸುವುದು ಹೇಗೆ? +ಬ್ಯಾಂಕಿನದಿರಲಿ, ಫೈನಾನ್ಸ್‌ನವರು ಸುಮ್ನೆ ಬಿಡ್ತರಾ…’ ಆತಂಕಿಸಿದಳು. +‘ಅದೇ ಯೋಚ್ನೆ ಮಾಡ್ತ ಇದ್ದೆ ಕಣಮ್ಮ, ಏನು ಮಾಡುವುದು ಅಂತಾ, ಇಡೀ ಆಸ್ತಿ ಮಾರಬೇಕೆನೂ ಅವನ ಸಾಲ ತೀರಿಸೋಕೆ. +ದಡ್ಡ ಕೆಲಸ ಮಾಡಿ ಹೋಗಿಬಿಟ್ಟ ಅವನು. +ಈಗ ನೋಡು ಇರೋರು ಅನುಭವಿಸಬೇಕು. +ಹಾಸಿಗೆ ಇದ್ದಷ್ಟು ಕಾಲು ಚಾಚಬೇಕಿತ್ತು. +ಸಾಲ ಸೋಲ ಮಾಡಿ ಶುಂಠಿ ಬೆಳೆಯೋಕೆ ಯಾಕೆ ಹೋಗಬೇಕಿತ್ತು. +ನೀಲಾನಾದ್ರು ತಡೀಬಹುದಿತ್ತು.’ +ನನ್ನ ಮಾತನ್ನು ಎಲ್ಲಿ ಕೇಳ್ತ ಇದ್ದರು ಭಾವ, ಅವರಿಗೆ ಹೇಗೆ ಮನಸ್ಸಿಗೆ ಬರುತ್ತೂ ಹಾಗೆ ಮಾಡ್ತ ಇದ್ದರು. +ಶುಂಠಿ ಹಾಕಿದ ಮೇಲೆ ಅವರು ಮಾಡ್ತ ಇದ್ದ ಖರ್ಚು ನೋಡಿ ನಂಗೇ ಭಯ ಆಗ್ತ ಇತ್ತು. +ಬೇರೆ ಊರುಗಳಿಂದ ಎರಡರಷ್ಟು, ಕೂಲಿ ಕೊಟ್ಟು ಆಳುಗಳನ್ನು ಕರೆಸೋದೇನು… +ಅವರಿಗೆ ಹೆಂಡ-ಮಾಂಸ ಅಂತ ಕೊಟ್ಟಿದ್ದೇನು… +ಅಂತು ದುಡ್ಡನ್ನ ನೀರಿನ ಹಾಗೆ ಹುಡಿ ಮಾಡಿಬಿಟ್ಟು, ನೀವೇನಾದತ್ತಿ ಮಾಡಿಕೊಳ್ಳಿ ಅಂತ ಹೋಗಿಬಿಟ್ಟರು.’ +ನೀಲಾ ಹೇಳುತ್ತಿದ್ದರೆ ಇಳಾಗೆ ಅಪ್ಪನ ಮೇಲೆ ಕೋಪವುಕ್ಕಿ ಬರುತ್ತಿತ್ತು. +‘ಆಗಿದ್ದು ಆಗಿ ಹೋಯಿತು. +ಈಗ ಎಷ್ಟು ಮಾತಾಡಿದ್ರೂ ಮೋಹನ ಎದ್ದು ಬರಲ್ಲ, ಸಾಲ ಇರೋದು ಹಾಗೂ ಅದನ್ನ ತೀರಿಸಬೇಕು ಅನ್ನುವುದಂತು ಸತ್ಯ, ಮುಂದೆ ಏನು ಅಂತ ಯೋಚ್ನೆ ಮಾಡಿದಿರಾ…’ ವ್ಯಥಿತರಾಗಿಯೇ ಹೇಳಿದರು ಸುಂದರೇಶ್. +‘ಹ್ಹೂ, ದೊಡ್ಡಪ್ಪ, ಸಾಲ ತೀರಿಸಬೇಕು ಅಂದ್ರೆ ಏನನ್ನಾದರೂ ಮಾರಲೇಬೇಕು. +ಅಪ್ಪ ಕಷ್ಟಪಟ್ಟು ಬೆಳೆಸಿರೋ ತೋಟ ಮಾರೋಕೆ ನಂಗೆ ಇಷ್ಟ ಇಲ್ಲ. +ಅದಕ್ಕೆ ನಮಗೆ ಬೇಡವಾಗಿರೊ, ಖಾಲಿ ಬಿದ್ದೀರೋ ಆ ಜಾಗನ ಮಾರೋಣ ಅಂತ ಅಂದ್ಕೊಂದ್ದೀವಿ. +ಯಾರೊ ಬೆಂಗಳೂರಿನವರಂತೆ ತಗೊಳ್ತಿವಿ ಅಂತ ಬಂದಿದ್ದಾರೆ. +ನಿಮ್ಮನ್ನ ಕೇಳಿ ಹೇಳ್ತಿವಿ ಅಂದಿದ್ದೀವಿ’ ನಿಧಾನವಾಗಿ ಹೇಳಿದಳು. +‘ಸರಿ ಮಾರಿಬಿಡಿ. +ಮೊದ್ಲು ಫೈನಾನ್ಸ್‌ದು ತೀರಿಸಿಬಿಡಿ, ಮೋಹನ ಇದೇ ಕೆಲ್ಸ ಅವತ್ತು ಮಾಡಿದ್ರೆ ಅವನು ಉಳ್ಕಬಹುದಿತ್ತು. +ಏನೇನು ಆಗಬೇಕು ಅದು ಆಗಿ ಹೋಗಲಿ, ತಪ್ಪಿಸೋಕೆ ನಾವು ಯಾರು’ ವೇದಾಂತಿಯಾದರು. +‘ದೊಡ್ಡಪ್ಪ ಫೋನ್ ಮಾಡಿ ಅವರಿಗೆ ಬರೋಕೆ ಹೇಳಲಾ? +ನೀವೇ ಮಾತಾಡಿ ಬಿಡಿ’ ಎಂದಳು ಇಳಾ. +ಇಷ್ಟು ಸುಲಭವಾಗಿ ದೊಡ್ಡಪ್ಪ ಒಪ್ಪಿದ್ದು ಆಶ್ಚರ್ಯವಾಗಿತ್ತು. +ಅದರಲ್ಲೊಂದು ಸತ್ಯವೂ ಅವಳ ಮನಸ್ಸಿಗೆ ಗೋಚರಿಸಿತ್ತು. +ಫೈನಾನ್ಸ್ ಹಣಕ್ಕೆ ಅಪ್ಪನಿಗೆ ದೊಡ್ಡಪ್ಪ ಜಾಮೀನು ಹಾಕಿರದಿದ್ದರೆ ಇಷ್ಟೊಂದು ಸಲೀಸಾಗಿ ಖಾಲಿ ಜಾಗವನ್ನು ರೆಸಾರ್ಟ್‌ಗೆ ಮಾರಲು ಒಪ್ಪುತ್ತಿರಲಿಲ್ಲ ಎಂಬುದು ಅವಳಿಗೆ ಅರಿವಾಗಿತ್ತು. +ಹೇಗೊ ಕೆಲಸಕ್ಕೆ ಅಡ್ಡಿ ಬರಲಿಲ್ಲವೆಂದು ಖುಷಿಪಟ್ಟಳು. +ವಿನಾಯಕನಿಗೆ ಫೊನ್ ಮಾಡಿ ತಾವು ಜಾಗ ಮಾರಲು ಒಪ್ಪಿರುವುದಾಗಿ, ಈಗಲೇ ವಿಸ್ಮಯನನ್ನು ಕರೆದುಕೊಂಡು ಬಂದರೆ ದೊಡ್ಡಪ್ಪನೊಂದಿಗೆ ಮಾತಾಡಬಹುದು ಎಂದು ಹೇಳಿದಳು. +ಹತ್ತಿರದಲ್ಲಿಯೇ ಇದ್ದರು ಅಂತ ಕಾಣಿಸುತ್ತೆ. +ಫೊನ್ ಮಾಡಿ ಕಾಲು ಗಂಟೆಯೊಳಗೆ ಮನೆಯ ಮುಂದೆ ಬಂದೇಬಿಟ್ಟರು. +ಒಳಬರುತ್ತ ವಿನಾಯಕನಮಸ್ಕಾರ ಅಣ್ಣಾ, ‘ಇವರು ನಮ್ಮ ಸ್ನೇಹಿತರು ಗೊತ್ತಿರಬೇಕಲ್ಲ’ ಎಂದ. +‘ಗೊತ್ತು ಗೊತ್ತು, ಹಿಂದೆ ಒಂದು ಸಲ ನಮ್ಮನೆಗೂ ಬಂದಿದ್ರಲ್ಲ, ಮೋಹನನ ಜೊತೆ ಮಾತಾಡೋಕೆ. +ಅವತ್ತಿನ ಪರಿಸ್ಥಿತಿಗೂ ಇವತ್ತಿನ ಪರಿಸ್ಥಿತಿಗೂ ಎಷ್ಟೊಂದು ವ್ಯತ್ಯಾಸ ನೋಡು. + ಅವತ್ತು ನೀವಾಗಿಯೇ ಬಂದಿದ್ದರೂ ಒಪ್ಪಿರಲಿಲ್ಲ. +ಈವತ್ತು ನಾವಾಗಿಯೇ ನಿಮ್ಮನ್ನ ಕರೆಸಿಕೊಳ್ಳುತ್ತ ಇದ್ದೇವೆ.’ +‘ನಮ್ಮ ಕೈಲಿ ಏನಿರುತ್ತೆ ಸಾರ್, ಎಲ್ಲಾ ಹಣೆಯಲ್ಲಿ ಬರೆದಂತೆ ನಡಿಬೇಕು. +ಅವತ್ತು ಬೇಡ ಅನ್ನಿಸಿದ್ದು ಇವತ್ತು ಬೇಕು ಅನ್ನೋ ಹಾಗೆ ಮಾಡಿಸುತ್ತೆ. +ಇದನ್ನ ಅಲ್ಲವೇ ವಿಧಿ ಅನ್ನೋದು’ ಎಂದು ವಿಸ್ಮಯ ಕೂಡ ಸುಂದರೇಶರ ಧಾಟಿಯಲ್ಲಿಯೇ ಮಾತನಾಡಿದ. +‘ನೀವು ಹೇಳೋದು ಸರಿ, ವಿಧಿ ಬರಹ ಸರಿ ಇದ್ದಿದ್ರೆ ನಾವು ಹೀಗೆ ಕೂತು ಮಾತಾಡೋ ಪ್ರಸಂಗವೇ ಬರ್ತ ಇರ್ಲಿಲ್ಲ. +ಸರಿ… ವ್ಯವಹಾರಕ್ಕೆ ಬರೋಣ, ಎಷ್ಟು ಹೇಳಿರಿ ನಿಮ್ಮ ರೇಟು?’ + ‘ಮೇಡಂ ಹತ್ರ ಎಲ್ಲಾ ಮಾತಾಡಿದ್ದೀನಿ ಸಾರ್, ಇಲ್ಲಿ ಎರಡು ಲಕ್ಷ ಎಕರೆಗೆ ನಡಿತಾ ಇದೆ, ನಾನು ಮೂರು ಲಕ್ಷ ಕೊಡ್ತೀನಿ ಅಂತ ಹೇಳಿದ್ದೀನಿ’ ವಿನಯದಿಂದ ನುಡಿದ ವಿಸ್ಮಯ. +‘ಎರಡು ಲಕ್ಷ ನಡಿತಾ ಇದೆಯಾ? +ಯಾವ ಕಾಲದಲ್ಲಿ ಇದ್ದೀರಾ ಆ ರೇಟು ಹೋಗಿ ಐದು ವರ್ಷವಾಯ್ತು. +ಈಗ ಅರು ಲಕ್ಷ ನಡೀತಾ ಇದೆ ಎಕರೆಗೆ’ ರೇಟು ಹೆಚ್ಚಿಸಿದರು. +‘ಆರು ಲಕ್ಷನೇ, ಇಲ್ಲಾ ಬಿಡಿ, ಅಷ್ಟೆಲ್ಲಿದೆ ಈ ಜಾಗದಲ್ಲಿ, ರೋಡಿನಿಂದ ಎರಡು ಕಿ.ಲೋ. ಮೀಟರ್ ದೂರವೇ ಇದೆ, ಯಾರು ಕೊಡ್ತಾರೆ ಹೇಳಿ ಆರು ಲಕ್ಷ’ ಒಮ್ಮೆಲೇ ನಿರಾಕರಿಸಿದ. +‘ಹೌದು ಅಣ್ಣಾ, ಇವರ ಪಕ್ಕದ ಜಮೀನು ಮಾತಾಗಿದೆ ಅವರಿಗೂ ಅಷ್ಟೆ ಕೊಡೋದು’ ವಿನಾಯಕ ಮಧ್ಯೆ ಬಾಯಿ ಹಾಕಿದ. +‘ಯಾರು ಎಷ್ಟಾಕ್ಕಾದರೂ ಮಾತಾಡಿಕೊಂಡಿರಲಿ, ಅದೆಲ್ಲ ನಮ್ಗೆ ಬೇಡ. +ಒಳ್ಳೆ ಜಾಗ, ಸಮತಟ್ಟಾಗಿದೆ, ಕಾಡು ಕಡಿದು ಹದ ಮಾಡಬೇಕಾಗಿಲ್ಲ. +ಒಂದೇ ಕಡೇ ನಾಲ್ಕು ಎಕರೆ ಇದೆ, ನಿನ್ನು ಇಷ್ಟ ಇದ್ರೆತಗೊಳ್ಳಿ, ಇಲ್ಲದೆ ಇದ್ರೆ ಬಿಡಿ’ ಕಡ್ಡಿ ತುಂಡಾದಂತೆ ದೊಡ್ಡಪ್ಪ ಹೇಳಿದ್ದನ್ನು ಕೇಳಿ ಎಲ್ಲಿ ಜಮೀನು ಮಾರಾಟವಾಗದೆ ಉಳಿದುಬಿಡುತ್ತೇನೋ ಅಂತ ಇಳಾ ಆತಂಕಪಟ್ಟಳು. +ವಿಸ್ಮಯ, ವಿನಾಯಕ ಒಬ್ಬರ ಮುಖ ಒಬ್ಬರು ನೋಡಿಕೊಂಡರು. +ಕ್ಷಣ ಅಲ್ಲಿ ಗಾಢ ಮೌನ, ಲಾಟೀನಿನ ಉರಿಯಂತೆ ಅತ್ತ ಇತ್ತ ಓಲಾಡಿತು. +ಗಾಜಿನೊಳಗೆ ಉರಿಯುತ್ತಿದ್ದ ಜ್ವಾಲೆಯು ಬೀಸಿದ ಜೋರು ಗಾಳಿಯಿಂದ ರಕ್ಷಿಸಿಕೊಳ್ಳಲಾಗದ ಸಂಕಟದಿಂದ ಜೀವ ಬಿಗಿಹಿಡಿದು ಅತ್ತಿತ್ತ ಧಾವಿಸುವಂತೆ ಓಲಾಡಿದ ಉರಿ, ಗಾಜಿನ ರಕ್ಷಣೆಯೊಳಗೆ ಸುರಕ್ಷಿತ ಭಾವದಿಂದ ಹೆದರದೆ ಉರಿಯುತ್ತಿರುವಂತೆ ದೊಡ್ಡಪ್ಪನ ರೀತಿ ಇಳಾಗೆ ಅನ್ನಿಸತೊಡಗಿತು. +ತಮ್ಮ ರೇಟಿಗೆ ಒಪ್ಪಲಾರರೇನೋ ಎಂಬ ಆತಂಕವಿದ್ದರೂ ತೋರಿಸಿಕೊಳ್ಳದೆ ಒಪ್ಪದೇ ಎಲ್ಲಿ ಹೋದಾರು ಎಂಬ ಭಾವದ ಸುರಕ್ಷತೆ ಅವರಲ್ಲಿ ಇದ್ದುದನ್ನು ಇಳಾ ಗಮನಿಸಿದಳು. +ಆದರೂ ಅಂತಹ ಸುರಕ್ಷತಾ ಭಾವ ತನ್ನಲ್ಲಾಗಲಿ, ತಾಯಿಯಲ್ಲಾಗಲಿ ಕಾಣದೆ ಚಡಪಡಿಸಿದಳು. +ಸಮಸ್ಯೆ ತಮ್ಮದಾಗಿರುವುದರಿಂದ ನಿಶ್ಚಿಂತೆ ತಮ್ಮಿಂದ ಅಸಾಧ್ಯ. +ದೊಡ್ಡಪ್ಪನ ಸಮಸ್ಯೆಯಲ್ಲದ್ದರಿಂದ ಈ ನಿರ್ಭಾವ ಎನಿಸಿ ದೊಡ್ಡವರ ಮುಂದೆ ಮಾತನಾಡಲಾರದೆ ಅಸಹಾಯಕತೆಯಿಂದ ಸುಮ್ಮನೆ ಇರುವ ಪರಿಸ್ಥಿತಿಗೆ ಖೇದಗೊಂಡಳು. +‘ಸಾರ್, ಅಷ್ಟೊಂದು ಕೊಡೋಕೆ ಸಾಧ್ಯ ಇಲ್ಲ, ಸ್ವಲ್ಪ ಹೆಚ್ಚು ಕಡಿಮೆ ಮಾಡಿಕೊಳ್ಳಿ, ಇಷ್ಟೊಂದು ಕಠಿಣವಾದ್ರೆ ಕಷ್ಟವಾಗುತ್ತೆ’ ವಿನಯ ತುಂಬಿದ ದನಿಯಲ್ಲಿಯೇ ವಿಸ್ಮಯ ಕೇಳಿದ. +‘ಬರೀ ಜಾಗ ಮಾತ್ರ ಮಾರ್ತ ಇಲ್ಲಪ್ಪ, ನನ್ನ ತಮ್ಮನ ಕನಸುಗಳನ್ನು ಅದರ ಜೊತೆ ಮಾರ್ತಾ ಇದ್ದೇವೆ. +ಅವನಿಗೊಂದು ಕನಸಿತ್ತು. +ಮಗಳನ್ನ ಬೋರ್ಡಿಂಗ್‌ನಲ್ಲಿ ಇಟ್ಟು ಓದಿಸಲು ಕಳಿಸಿ, ಅವಳಿಂದ ದೂರ ಇದ್ದ ಮೋಹನನಿಗೆ, ನನ್ನಂತೆ ಇತರ ತಂದೆ- ತಾಯಿಯರು ಮಕ್ಕಳಿಂದ ದೂರವಾಗಿ ನೋಯಬಾರದು. +ಇಲ್ಲೊಂದು ಅತ್ತುತ್ತಮವಾದ ಶಾಲೆ ಶುರು ಮಾಡಬೇಕು. +ವೆಹಿಕಲ್ ಕಳಿಸಿ ಮಕ್ಕಳನ್ನು ಕರ್ಕೊಂಡು ಬಂದು ವಾಪಸ್ಸು ಕಳಿಸಬೇಕು ಅಂತ ಏನೇನೋ ಕನಸು ಕಂಡಿದ್ದ. +ಆದ್ದರಿಂದಲೇ ಆ ಜಾಗ ಮಾರೋಕೆ ಅವನು ಒಪ್ಪಿರಲಿಲ್ಲ. +ಈಗ ವಿಧಿ ಇಲ್ಲದೆ ಮಾರ್ತ ಇದ್ದೀವಿ, ಒಪ್ಕೊಂಡ್ರೆ ಒಪ್ಪಿಕೊಳ್ಳಿ, ಇಲ್ಲದೆ ಇದ್ರೆ ನಿಮ್ಮಿಷ್ಟ, ನಾನು ಹೊರಡ್ತಿನಿ’ ಅಂತ ಎದ್ದೇಬಿಟ್ಟಾಗ. +‘ಕುತ್ಕೊಳ್ಳಿ ಅಣ್ಣಾ, ಏನಾದ್ರೂ ತೀರ್ಮಾನ ಮಾಡೋಣ’ ವಿನಾಯಕ ಸುಂದರೇಶರನ್ನು ಕೈ ಹಿಡಿದು ಕೂರಿಸಿದ. +ಅಪ್ಪನ ಕನಸುಗಳಿಗೆ ರೆಕ್ಕೆಯಾಗಬೇಕಿದ್ದ ಇಳಾ ಇವತ್ತು ರೆಕ್ಕೆ ಕಳೆದುಕೊಂಡು ವಿಲಿ ವಿಲಿ ಒದ್ದಾಡುವ ಸ್ಥಿತಿಯಲ್ಲಿ ಹನಿಗಣ್ಣಾಗಿ ನಿಂತಿದ್ದಾಳೆ. +ಆ ಹನಿಗಣ್ಣಿನ ನೋವು ನೇರವಾಗಿ ವಿಸ್ಮಯನ ಮನಸ್ಸನ್ನು ಕಟ್ಟಿತು. +ಛೇ ಈ ಮುದ್ದು ಹುಡುಗಿಯ ಕಣ್ಣಲ್ಲಿ ನೀರೇ, ಕಾಲೇಜಿನಲ್ಲಿ ಗೆಳತಿಯರೊಟ್ಟಿಗೆ ನಲಿದಾಡಿಕೊಂಡಿರಬೇಕಾದ ವಯಸ್ಸು ಪಾಪ, ಕನಿಕರದಿಂದ ಅವಳೆಡೆ ನೋಡಿದ. +ಆ ನೋಟ ಅವಳನ್ನು ತಟ್ಟನೆ ತಟ್ಟಿತು. +ಸ್ವಾಭಿಮಾನ ಬುಸ್ಸೆಂದು ಹಾವಿನ ಹೆಡೆಯಂತೆ ತಲೆ ಎತ್ತಿ ನಿಂತು, ಕಣ್ತುಂಬುತ್ತಿದ್ದ ಹನಿಯನ್ನು ಪಟ ಪಟನೇ ಕಣ್ಣಾಡಿಸಿ ಇಂಗಿಸಿಕೊಂಡು ಬಿಟ್ಟಳು. +ನನ್ನ ನೋವು, ಕಣ್ಣೀರು ಎಂದಿಗೂ ಮತ್ತೊಬ್ಬರ ಕನಿಕರಕ್ಕೆ ಕಾರಣವಾಗಬಾರದು ಎಂದು ಆ ಕ್ಷಣವೇ ಎಚ್ಚೆತ್ತುಕೊಂಡು-‘ಯಾರು ಹೇಳಿದ್ರೂ ಅಷ್ಟೆ, ದೊಡ್ಡಪ್ಪ ಅಂತಿಮ ತೀರ್ಮಾನ, ರೇಟಿನಲ್ಲಿ ಚೌಕಾಸಿ ಬೇಡ ವಿನಾಯಕಣ್ಣ. +ಅವರಿಗೆ ಕಷ್ಟ ಆದ್ರೆ ಈ ವಿಷಯ ಇಲ್ಲಿಗೆ ಬಿಟ್ಟುಬಿಡೋಣ’ ಎಂದಳು. +ಅರೇ ಈ ಚೋಟುದ್ದ ಹುಡುಗಿಯ ಬಾಯಲ್ಲಿ ಅದೆಷ್ಟು ನಿರ್ಧಾರಿತ ಧ್ವನಿ, ಎಲ್ಲಿದೆ ಆ ಆತ್ಮಸ್ಥೈರ್ಯ, ಬಿಗಿದುಕೊಂಡಿರುವ ಹುಬ್ಬಿನಲ್ಲಿಯೇ, ತುಟಿಕಚ್ಚಿ ತಡೆಯುತ್ತಿರುವ ಆ ಉದಾತ್ತ ಭಾವದಲ್ಲಿಯೇ, ಸೆಟೆದು ನಿಂತಿರುವ ಆ ನಿಲುವಿನಲ್ಲಿಯೇ? +ಅರ್ಥವಾಗದೆ ವಿನಾಯಕ ‘ಇಳಾ ಹಾಗೆಲ್ಲ ಒಂದೇ ಸಲಕ್ಕೆ ವ್ಯವಹಾರ ಮುಗಿಸಬಾರದು. + ನೀನಿನ್ನು ಸಣ್ಣ ಹುಡುಗಿ, ಸ್ವಲ್ಪ ಸುಮ್ಮನಿರು, ವಿಸ್ಮಯ ನಿಮ್ಮ ಕೊನೆ ರೇಟು, ನಿರ್ಧಾರ ಹೇಳಿಬಿಡಿ’ ಎಂದ ಅಸಮಾದಾನದಿಂದ. +‘ಸರಿ ಸಾರ್ ನಾನೂ ನನ್ನ ಪಟ್ಟು ಸಡಿಲಿಸುತ್ತೇನೆ. +ನೀವು ನಿಮ್ಮ ಪಟ್ಟು ಸಡಿಲಿಸಿ. +ಒಂದು ಒಪ್ಪಂದಕ್ಕೆ ಬರೋಣ’ ವಾತಾವರಣ ತಿಳಿಗೊಳಿಸಲು ಯತ್ನಿಸಿದ ವಿಸ್ಮಯ. +‘ಸರಿ ಹೇಳಿಬಿಡಪ್ಪ, ನಿನ್ನ ಮಾತನ್ನೂ ಕೇಳಿಬಿಡೋಣ’ ಎಂದು ಸಾವಧಾನವಾಗಿ ಸುಂದರೇಶ್ ಕುಳಿತುಬಿಟ್ಟರು. +‘ನಾಲ್ಕು ಲಕ್ಷಕ್ಕೆ ಒಪ್ಪಿಕೊಳ್ತಿನಿ.’ +‘ಬೇಡಾ… ಐದು ಲಕ್ಷಕ್ಕೆ ಕಡಿಮೆ ಇಲ್ಲವೇ ಇಲ್ಲಾ’ ಎಂದು ಸುಂದರೇಶ್ ಪಟ್ಟು ಹಿಡಿದರು. +‘ನಿಮ್ಮ ರೇಟೂ ಬೇಡ, ಅವರ ರೇಟೂ ಬೇಡ, ನಾಲ್ಕುವರೆ ಲಕ್ಷಕ್ಕೆ ಒಪ್ಪಿಕೊಂಡು ಬಿಡಿ’- ಅಂತ ವಿನಾಯಕ ಅಂತಿಮ ರೇಟು ನಿರ್ಧರಿಸಿ ಒಪ್ಪಿಸಿದ. +ಅಸಮಾಧಾನದಿಂದಲೇ ಸುಂದರೇಶ್ ಒಪ್ಪಿದರು. +ರಿಜಿಸ್ಟ್ರೇಷನ್‌ಗೆ ದಿನಾಂಕ ಗೊತ್ತುಪಡಿಸಿ ಅಡ್ವಾನ್ಸ್‌ಗೆಂದು ಚೆಕ್ ನೀಡಿದ ವಿನ್ಮಯ. +ಅಡ್ವಾನ್ಸ್ ನೀಡಿದ ಐದು ಲಕ್ಷವನ್ನು ದೊಡ್ಡಪ್ಪನ ಕೈಗಿಟ್ಟು ಫೈನಾನ್ಸ್‌ನ ಸಾಲ ತೀರಿಸುವಂತೆ ಕೇಳಿಕೊಂಡಳು. +ಮೊದಲು ಫೈನಾನ್ಸ್‌ನ ಸಮಸ್ಯೆ ಬಗೆಹರಿದರೆ ಮುಂದಿನ ಸಮಸ್ಯೆಗಳ ಬಗ್ಗೆ ಯೋಚಿಸಬಹುದು ಅನ್ನುವುದು ಇಳಾಳ ಅಭಿಪ್ರಾಯವಾಗಿತ್ತು. +ಹೇಗೆ ಲೆಕ್ಕ ಹಾಕಿದರೂ, ಎಲ್‌ಐಸಿ ಹಣ, ವಿಸ್ಮಯ ಕೊಡುವ ಹಣ ಎಲ್ಲಾ ಸೇರಿದರೂ ಸಾಲ ಮತ್ತೂ ಉಳಿಯುತ್ತದೆ. +ಆ ಸಾಲದ ಹಣ ಹೊಂದಿಸುವುದು ಹೇಗೆಂದು ಚಿಂತಿತಳಾದಳು. +ಎಲ್‌ಐಸಿ ಹಣ, ವಿಸ್ಮಯ ಕೊಟ್ಟ ಹಣ ಎಲ್ಲಾ ಸೇರಿಸಿ ಬ್ಯಾಂಕಿಗೆ ಕಟ್ಟಿದರು. +ಕೈಯಲ್ಲಿ ಎರಡು ಲಕ್ಷ ಖರ್ಚಿಗೆಂದು ಇಟ್ಟುಕೊಳ್ಳುವಂತೆ ದೊಡ್ಡಪ್ಪ ಹೇಳಿದ್ದರಿಂದ ಇಳಾ ತನ್ನದೊಂದು ಅಕೌಂಟ್‌ನ್ನು ಸಕಲೇಶಪುರದ ಬ್ಯಾಂಕಿನಲ್ಲಿ ತೆಗೆದು ಎರಡು ಲಕ್ಷ ಅಲ್ಲಿ ಇರಿಸಿದಳು. +ಹತ್ತೊಂಬತ್ತು ಲಕ್ಷ ಬ್ಯಾಂಕಿನ ಸಾಲ ತೀರಿ ಇನ್ನೂ ಏಳು ಲಕ್ಷ ಉಳಿಯಿತು. +ಎದೆಯ ಮೇಲೊಂದು ಭಾರ ಕಳೆದಂತಾಗಿ ನೀಲಾ ಹಾಗೂ ಇಳಾ ಸಮಾಧಾನದ ಉಸಿರುಬಿಟ್ಟರು. +‘ಅಮ್ಮಾ ನಾನೊಂದು ಗಾಡಿ ತಗೊಳ್ಳೋಣ ಅಂತ ಇದ್ದೀನಿ. +ಇಲ್ಲದೆ ಇದ್ರೆ ಓಡಾಡೋಕೆ ಕಷ್ಟವಾಗುತ್ತೆ. +ಬಸ್ಸಿಗೆ ಕಾಯುತ್ತಾ ಇದ್ರೆ ಇಡೀ ಸಮಯ ಎಲ್ಲಾ ವ್ಯರ್ಥವಾಗುತ್ತೆ’ ಇಳಾ ನೀಲಾಳ ಮುಂದೆ ತನ್ನ ಬೇಡಿಕೆ ಇಟ್ಟಳು. +ಗಾಡಿ ತಗೋಬೇಕು ಅಂದ್ರೆ ಐವತ್ತು ಸಾವಿರ ಬೇಕು. +ಇರೋ ಹಣದಲ್ಲಿ ಐವತ್ತು ಸಾವಿರನ ಗಾಡಿಗೆ ಹಾಕಿಬಿಟ್ಟರೆ ಮುಂದಿನ ಖರ್ಚು, ಮನೆ ಖರ್ಚು, ತೋಟದ ಖರ್ಚು ಕಡಿಮೆನಾ, ಕಾಫಿ ಮಾರಿದ ಹಣ ಸಿಗೋದು ಯಾವಾಗಲೋ… ಯೋಚನೆಗೆ ಒಳಗಾದಳು. +‘ಅಮ್ಮ ಯೋಚ್ನೆ ಮಾಡಬೇಡ, ನನ್ನ ಫ್ರೆಂಡ್ ಅವಳ ಗಾಡಿನಾ ಮಾರ್ತಾ ಇದ್ದಾಳಂತೆ, ನಂಗೆ ಕೊಡು ಅಂತ ಹೇಳಿದ್ದೀನಿ, ದುಡ್ಡನ್ನ ನಿಧಾನವಾಗಿ ಕೊಡು ಪರ್ವಾಗಿಲ್ಲ ಅಂದಿದ್ದಾಳೆ. +ಅರ್ಧ ರೇಟು ಕೊಟ್ರಾಯಿತು. +ಅವಳಿಗೆ ಕಳುಹಿಸಿ ಕೊಡೋಕೆ ಹೆಳ್ಲಾ’ ಎಂದಾಗ, ಅರ್ಧ ಹಣ ಉಳಿಯುತ್ತಲ್ಲ ಅಂತ ‘ಸರಿ ಹೇಳಿಬಿಡು’ ಅಂತ ನೀಲಾ ಒಪ್ಪಿಕೊಂಡಳು. +ಒಂದೇ ವಾರದಲ್ಲಿ ಆಕ್ಟಿವ್ ಹೊಂಡಾ ಬಂದಿಳಿಯಿತು. +ಗಾಡಿ ಹೊಸದಾಗಿಯೇ ಕಾಣುತ್ತಿತ್ತು. +ಫ್ರೆಂಡ್ ಹೆಚ್ಚು ಓಡಿಸದೆ ಇದ್ದುದರಿಂದ ಹೊಂಡಾ ಹಾಳಾಗಿರಲಿಲ್ಲ. +ಹೇಗೋ ಮಗಳ ಈ ಒಂದು ಸಣ್ಣ ಆಸೆಯಾದರೂ ಈಡೇರಿತಲ್ಲ ಅಂತ ಸಮಾಧಾನಗೊಂಡಳು ನೀಲಾ. +ಈಗ ಇಳಾ ಬೆಳಿಗ್ಗೆ ತಿಂಡಿ ತಿಂದವಳೇ ತಲೆಗೊಂದು ಸ್ಕಾರ್ಪ್ ಸುತ್ತಿಕೊಂಡು ತೋಟಕ್ಕೆ ಹೊರಟುಬಿಡುತ್ತಾಳೆ. +ಇಡೀ ತೋಟ ಸುತ್ತಿ ಕೆಲಸ ಮಾಡುವ ಆಳುಗಳಿಂದ ಏನೇನು ಕೆಲಸ ಹೇಗೆ ಮಾಡಬೇಕು, ಯಾವಾಗ ಮಾಡಬೇಕು ಎಂದೆಲ್ಲ ಕೇಳಿ ಕೇಳಿ ತಿಳಿದುಕೊಳ್ಳುತ್ತಾಳೆ. +ಅವರೊಂದಿಗೆ ತಾವೂ ಕೆಲಸ ಮಾಡಲು ಪ್ರಯತ್ನಿಸಿ, ಸ್ವಲ್ಪ ಮಾಡುವುದರೊಳಗಾಗಿ ಸುಸ್ತಾಗಿ ಕುಳಿತುಬಿಡುತ್ತಾಳೆ. +‘ನೀವ್ಯಾಕೆ ಮಾಡೋಕೆ ಬರ್ತೀರಿ, ಸುಮ್ನೆ ಮನೆಗೆ ಹೋಗಿ ತಣ್ಣಗೆ ಟಿ.ವಿ.ನೋಡ್ಕೊಂಡು ಕುತ್ಕೊ ಹೋಗಿ, ನಾವಿಲ್ವಾ ಎಲ್ಲಾ ಮಾಡ್ಕೊತಿವಿ. +ತಲೆ ಕೆಡಿಸಿಕೊಳ್ಳಬೇಡಿ’ ಅಂತ ಎಷ್ಟು ಹೇಳಿದ್ರು ಇಳಾ ಕೇಳ್ತ ಇರಲಿಲ್ಲ. +‘ತೋಟದ ಕೆಲಸ ನಾನು ಕಲ್ತ್‍ಕೋ ಬೇಕು. +ಮುಂದಿನ ವರ್ಷದಿಂದ ನಂಗೆ ಎಲ್ಲಾ ಕೆಲಸ ಮಾಡೋಕೆ ಬರಬೇಕು. +ಅದನ್ನ ಕಲೀದೇ ಹೋದ್ರೆ ನಾನು ತೋಟ ನೋಡಿಕೊಳ್ಳೋದು ಹೇಗೆ’ ಅವರ ಬಾಯಿ ಮುಚ್ಚಿಸಿಬಿಡುತ್ತಿದ್ದಳು. +ಧೂಳು ಆಗತೆ ಅಂದ್ರೆ ಏನು? +ಮರಗಸಿ ಅಂದ್ರೆ ಏನು? +ಅಂತ ತಾನು ಕೆಲಸ ಮಾಡುವುದರ ಮೂಲಕ ತಿಳಿದುಕೊಂಡಳು. +ಆಳುಗಳೆಲ್ಲ ಸೇರಿಕೊಂಡು ಕಾಫಿ ಗಿಡದ ಸುತ್ತ ಅಗೆದು ಕಳೆ ಹುಟ್ಟದಂತೆ ಮಾಡುವುದು, ಇದ್ದ ಕಳೆ ಒಣಗಿ ಹೋಗುವಂತೆ ಮಾಡಿ ಮಣ್ಣಿನ ಸಾರವೆಲ್ಲ ಗಿಡಗಳಿಗೆ ಹೋಗುವಂತೆ ಮೂಡುವುದನ್ನೇ ನೊಡುತ್ತಾ ಧೂಳು ಅಗತೆ ಬಗ್ಗೆ ತಿಳಿದುಕೊಂಡಳು. +ಮರದ ನೆರಳು ಹೆಚ್ಚು ಕಾಫಿ ಗಿಡದ ಮೇಲೆ ಬೀಳದಂತೆ ಮರಗಸಿ ಮಾಡೋದನ್ನ ನೋಡಿದಳು. +ನೆರಳು ಹೆಚ್ಚಾಗಿರುವ ಮರದ ಕೂಂಬೆಗಳನ್ನು ಕಡಿದು ನೆರಳು ಹದವಾಗಿ ಗಿಡದ ಮೇಲೆ ಬಿದ್ದು, ಅದರ ಜೊತೆ ಬಿಸಿಲು ಕೂಡ ಬರುವಂತೆ ಗಿಡಗಳ ರೆಂಬೆಗಳನ್ನು ಕತ್ತರಿಸುವುದು ಒಂದು ಜಾಣ್ಮೆ ಕೆಲಸ. +ಅದನ್ನು ಕೆಲಸ ಬಲ್ಲವರೇ ಮಾಡಬೇಕು. +ಅಂತು ತೋಟದಲ್ಲಿ ಆಗಬೇಕಾದ ಕೆಲಸಗಳೆಲ್ಲ ಯಾವ ಅಡೆ ತಡೆಯೂ ಇಲ್ಲದೆ ನಡೆದು ತೋಟ ನಳನಳಿಸತೊಡಗಿತು. +ಕೂಲಿ ಇಲ್ಲದೆ ಕೆಲಸ ಮಾಡುವುದಾಗಿ ಎಲ್ಲಾ ಆಳುಗಳು ಅಂದುಕೊಂಡಿದ್ದರೂ, ಇಳಾ ಆಗಲಿ, ನೀಲಾ ಆಗಲಿ ದುಡ್ಡು ಕೊಡದೆ ಕೆಲಸ ಮಾಡಿಸಿಕೊಳ್ಳಲು ಸಿದ್ಧರಿರಲಿಲ್ಲ. +ಹೇಗೂ ಎರಡು ಲಕ್ಷ ಖರ್ಚಿಗೆಂದೇ ಹಣ ಇಟ್ಟಾಗಿತ್ತು. +ಇನ್ನ ಕಾಫಿ ಹಣ ಕಡಿಮೆ ಎಂದರೂ ಎರಡು ಲಕ್ಷ ಬರಬಹುದು. +ಮೊದಲೇ ಒಂದು ಲಕ್ಷ ಇಸ್ಕೊಂಡು ಮೋಹನ ಖರ್ಚು ಮಾಡಿ ಆಗಿತ್ತು. +ಇನ್ನು ಬರೋ ಒಂದು ಲಕ್ಷವನ್ನು ಬ್ಯಾಂಕಿಗೆ ಕಟ್ಟಿದರೆ ಬಡ್ಡಿ ಕಳೆದು ಒಂದಿಷ್ಟು ಅಸಲಿಗೆ ಜಮೆ ಆಗುತ್ತಿತ್ತು. +ಹಾಗಾಗಿ ಕೂಲಿಕೊಡದೆ ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ಏನೂ ಇರಲಿಲ್ಲ. +ಹಾಗೂ ಅದರ ಅಗತ್ಯ ಕೂಡ ಇರಲಿಲ್ಲ. +ಹಾಗೆಂದೇ ಅದೆಷ್ಟೆ ಬೇಡ ಎಂದರೂ ವಾರದ ದಿನ ಅವರ ಸಂಬಳವನ್ನು ಚುಕ್ತ ಮಾಡಿಬಿಡುತಿದ್ದರು. +ಹದಿನೈದು ಎಕರೆ ತೋಟದಲ್ಲಿ ಬರೀ ಇಷ್ಟು ಕಡಿಮೆ ಫಸಲೇ? +ಚೆನ್ನಾಗಿ ಬೆಳೆದರೆ ಏಳು-ಎಂಟು ಲಕ್ಷ ಹಣ ಪಡೆಯಬಹುದು ಅಂತ ಇತ್ತೀಚೆಗೆ ತಿಳಿದುಕೊಂಡಿದ್ದಳು. +ಈಗಿನಿಂದಲೇ ತೋಟವನ್ನು ಚೆನ್ನಾಗಿ ಮಾಡಿಸಬೇಕು. +ಫಸಲು ಹೆಚ್ಚಿಸಲು ಏನೇನು ಕ್ರಮ ತಗೋಬೇಕೋ, ಅದನ್ನ ತಗೋಬೇಕು. +ನಾಳೆನೇ ಕಾಫಿ ರ್ಬೊರ್ಡಿಗೆ ಹೋಗಿ ಸುಧಾರಣೆಗೆ ಏನು ಮಾಡಬೇಕು ಅಂತ ತಜ್ಞರಿಂದ ತಿಳಿದುಕೊಂಡು ಬರಬೇಕೆಂದು ನಿಶ್ಚಯಿಸಿಕೊಂಡಳು. +ಕಾಫಿ ಜೊತೆಗೆ ಇತರೇ ಆದಾಯ ಹೆಚ್ಚಿಸಲು ಮತ್ತೇನು ಮಾಡಬಹುದು ಅಂತ ಚಿಂತಿಸಿದಳು. +ಜಾಗ ಕೊಂಡುಕೊಂಡಿದ್ದ ವಿಸ್ಮಯ ತನ್ನ ಕೆಲಸ ಶುರು ಮಾಡಿಸಿದ್ದ. +ಹೆಚ್ಚು ಕಡಿಮೆ ಇಳಾಗೆ ದಿನಾ ವಿಸ್ಮಯ ಸಿಗ್ತಾ ಇದ್ದ. +ಸಣ್ಣ ನಗೆ ಬೀರಿ ಹೊರಟುಬಿಡುತ್ತಿದ್ದ. +ಯಾವತ್ತೂ ಅನಾವಶ್ಯಕವಾಗಿ ಮಾತಿಗಿಳಿಯುತ್ತಿರಲಿಲ್ಲ. +ಸದಾ ಕೆಲಸ ನಡೆಯುವ ಜಾಗದಲ್ಲಿದ್ದುಕೊಂಡು ಪ್ರತಿಯೊಂದನ್ನು ತಾನೇ ಮುಂದೆ ನಿಂತು ನಿರ್ದೇಶಿಸುತ್ತಿದ್ದ. +ತಾವು ಕೊಟ್ಟ ಜಾಗದಲ್ಲೊಂದು ಹಳ್ಳಿಯಲ್ಲಿರುವಂತೆ ಕಂಬದ ಮನೆ ತಲೆ ಎತ್ತುತ್ತಿರುವುದನ್ನು ತನ್ನ ತೋಟದಿಂದಲೇ ನೋಡುತ್ತಿದ್ದಳು. +ಇದೇನಿದು ಇವನು ತೋಟದ ಮನೆ ತರ ಕಂಬದ ಮನೆ ಕಟ್ಟಿಸುತ್ತ ಇದ್ದಾನೆ. +ಹೀಗೆ ಕಟ್ಟಿದ್ರೆ ಇಲ್ಯಾರು ಬರ್ತಾರಪ್ಪ ಅಂತ ಅಂದುಕೊಂಡಳು. +ರಸ್ತೆಗೆ ಹೊಂದುಕೊಂಡಂತಿದ್ದ ಜಾಗ ಹಾಗೇ ಖಾಲಿ ಇತ್ತು. +ಇಲ್ಲೇನು ಮಾಡುತ್ತಾನೋ ಪುಣ್ಯಾತ್ಮ ಅಂತ ಇಳಾ ಹಾನುಬಾಳಿಗೆ ಹೋಗಿ ಬರುವಾಗಲೆಲ್ಲ ಅಂದುಕೊಳ್ಳುತ್ತ ಇದ್ದಳು. +ದಿನೇ ದಿನೇ ಅಲ್ಲಿನ ವಾತಾರಣ ಬದಲಾಗುತ್ತಿತ್ತು. +ತಗ್ಗಿದ್ದ ಜಾಗದಲ್ಲಿ ಜೆಸಿಬಿ ಅಗೆದು ಮತ್ತಷ್ಟು ಆಳ ಮಾಡುತ್ತಿದ್ದರು. +ಯಾಕಪ್ಪ ಇದು ಅಂದುಕೊಂಡಳು. +ಕುತೂಹಲ ತಡೆಯಲಾರದೆ ವಿಸ್ಮಯ ಬೆಳಿಗ್ಗೆ ಸಿಕ್ಕಾಗ ಕೇಳಿಯೇಬಿಟ್ಟಳು. +ಅಲ್ಲೊಂದು ಕೆರೆ ನಿರ್ಮಿಸಿ, ಬೋಟಿಂಗ್ ಸೌಕರ್ಯ ನಿರ್ಮಿಸುವುದಾಗಿ ಹೇಳಿದಾಗ ಹೌದಾ!ಅಂತ ಬೆರಗುಗೊಂಡಳು. +ಅದೊಂದು ದಿನ ತೋಟದಿಂದ ಬರುವಷ್ಟರಲ್ಲಿ ವಿಸ್ಮಯ ಮತ್ತು ವಿನಾಯಕ ಮನೆಯೊಳಗೆ ಅಜ್ಜಿ ಜೊತೆ ಮಾತಾಡುತ್ತಾ ಕುಳಿತಿರುವುದು ಕಂಡು ಇದೇನಪ್ಪ ಗಾಳಿ ಇತ್ತ ಬೀಸಿಬಿಟ್ಟಿದೆ. + ಗೋಡೆ ಮೇಲೆ ಹರಿದಾಡುತ್ತಿದ್ದ ಹಲ್ಲಿ ಟಪ್ಪೆಂದು ನೆಲದ ಮೇಲೆ ಬಿದ್ದಂತೆ ವಿಸ್ಮಯ ಆ ಮನೆಗೆ ಕಾಲಿರಿಸಿದ್ದ ಎಂದು ತನ್ನ ಹೋಲಿಕೆಗೆ ತಾನೇ ನಗುತ್ತಾ ಇಳಾ ಒಳಬಂದಳು. +ಇಳಾಳನ್ನು ಕಂಡಕೂಡಲೇ ವಿನಾಯಕ ‘ಏನಮ್ಮ ತೋಟಾನಾ ಅಷ್ಟೊಂದು ಚೆನ್ನಾಗಿ ನೋಡಿಕೊಳ್ತ ಇದ್ದೀಯಂತೆ. +ಯಾವಾಗಲೂ ತೋಟದಲ್ಲೇ ಇರ್ತೀಯಂತೆ. +ಸುತ್ತಮುತ್ತ ಎಲ್ಲಾ ನಿಂದೇ ಸುದ್ದೀ, ಅಂತೂ ಮಣ್ಣಿನ ಮಗಳಾಗ್ತ ಇದ್ದೀಯಾ ಅಮ್ಮ’ ಬಡಬಡನೆ ಒಂದೇ ಸಮ ಮಾತಾಡಿದ. +ಅವನ ಮಾತಿಗೆ ಸುಮ್ಮನೆ ನಕ್ಕಳು ಇಳಾ. +ವಿಸ್ಮಯ ಸುಮ್ಮನೆ ನೋಡುತ್ತ ನಸುನಗುತ್ತಿದ್ದ. +ಅಷ್ಟರೊಳಗೆ ಬಿಸ್ಕತ್ತು, ಕಾಫಿ ತೆಗೆದುಕೊಂಡು ಬಂದ ನೀಲಾ-‘ಕಾಫಿ ತಗೊಳ್ಳಿ, ಇಳಾ ನೀನೂ ತಗೋ. +ಅಪರೂಪಕ್ಕೆ ಇವತ್ತು ರೆಸಾರ್ಟ್ ಓನರ್ ನಮ್ಮ ಮನೆಗೆ ಬಂದಿದ್ದಾರೆ. +ಊಟ ಮಾಡಿಕೊಂಡೇ ಹೋಗಬೇಕು’ ಅಂತ ಆತ್ಮೀಯವಾಗಿ ಒತ್ತಾಯಿಸಿದಳು. +“ಇಲ್ಲಾ ಮೇಡಂ, ಇನ್ನೂಂದು ದಿನ ಊಟಕ್ಕೆ ಅಂತಲೇ ಬರ್ತೀನಿ. +ನಾವು ಈಗ ಯಾಕೆ ಬಂದಿದ್ದು ಅಂದ್ರೆ ನಾಳೆ ಒಂದು ಪೂಜೆ ಇಡಿಸಿದ್ದೇನೆ. +ನೀವು, ಅಜ್ಜಿ, ನಿಮ್ಮ ಮಗಳು ತಪ್ಪದೆ ಬೆಳಿಗ್ಗೆ ಎಂಟು ಗಂಟೆಗೇ ಬರಬೇಕು. +ಅಲ್ಲಿಯೇ ತಿಂಡಿ ಅರೆಂಜ್ ಮಾಡಿದ್ದೇವೆ. +ಮನೆಯವರೆಲ್ಲ ಬರಲೇಬೇಕು” ಆಹ್ವಾನ ನೀಡಿದ ವಿಸ್ಮಯ್. +ಈಗೆಂತ ಪೂಜೇನಪ್ಪಾ… ಗೃಹಪ್ರವೇಶಾನೋ? +ರೆಸಾರ್ಟ್ ಓಪನಿಂಗ್ ಅಂದ್ರೆ, ಕೆಲಸವೇ ಇನ್ನೂ ಮುಗಿದಿಲ್ಲ-ನೀಲಾ ಕೇಳಿದಳು. +‘ಬೆಳಿಗ್ಗೆ ಬನ್ನಿ ಮೆಡಂ. +ಎಲ್ಲಾ ಗೊತ್ತಾಗುತ್ತೆ’ ಎಂದು ಹೇಳಿ ಎದ್ದು ನಿಂತ. +‘ಅದೇನಪ್ಪ ಸಸ್ಪೆನ್ಸ್ ಅಂತಾದ್ದು, ನೀವಾದ್ರೂ ಹೇಳಿ ವಿನಾಯಕಣ್ಣ’ ಕೇಳಿದಳು ಇಳಾ. +‘ನಂಗೂ ಗೊತ್ತಿಲ್ಲ ಕಣಮ್ಮ ಇಳಾ. +ನಾಳೇನೇ ನಂಗೂ ಗೊತ್ತಾಗೋದು. +ಈ ಮಹಾನುಭಾವ ಅದೇನು ಮಾಡ್ತ ಇದ್ದಾರೋ ಗೊತ್ತಿಲ್ಲ’ ಅಮಾಯಕನಂತೆ ನುಡಿದು ಹೊರನಡೆದ. +ಅವನ ಹಿಂದೆಯೇ ವಿಸ್ಮಯ ಹೆಜ್ಜೆ ಹಾಕಿದ. +‘ಅಷ್ಟು ದೊಡ್ಡ ಶ್ರೀಮಂತನಾದ್ರೂ ಸ್ವಲ್ಪಾನೂ ಜಂಬ ಇಲ್ಲಾ ಅಲ್ವಾ ಇಳಾ. +ಪಾಪ ನಾವು ಜಾಗ ಕೊಟ್ಟ ಮೇಲೂ ನಮ್ಮನ್ನು ಮರೆಯದೆ ಕರೆಯೋಕೆ ಬಂದಿದ್ದಾನಲ್ಲ, ಒಳ್ಳೆ ಹುಡುಗ’ ನೀಲಾ ಹೇಳ್ತ ಇದ್ದರೆ-ಅಂಬುಜಮ್ಮ ‘ಬೆಂಗಳೂರಿನಲ್ಲಿ ಬೇಕಾದಷ್ಟು ಆಸ್ತಿ ಇದೆಯಂತೆ. +ಅಲ್ಲಿರೋಕೆ ಈ ಹುಡುಗನಿಗೆ ಇಷ್ಟಾನೇ ಇಲ್ಲವಂತೆ. +ಇಲ್ಲೆ ತನಗೊಂದು ಮನೆನೂ ಕಟ್ಟಿಸಿಕೊಳ್ತಾ ಇದ್ದಾನಂತೆ. +ಅದಕ್ಕೆ ನಮ್ಮ ಜಾಗದ ಜೊತೆ ಆ ಗಣೇಶನ ಜಾಗ, ಶೇಖರನ ಜಾಗ ಎಲ್ಲಾನೂ ಹೆಚ್ಚು ರೇಟು ಕೊಟ್ಟು ಕೊಂಡುಕೊಂಡಿದ್ದಾನಂತೆ. +ಹಾಗಂತ ಆಳುಗಳು ಮಾತಾಡಿಕೊಳ್ಳುತ್ತ ಇದ್ದರು. +ಪಟ್ಟಣದ ಹುಡುಗನಿಗೆ ಈ ಕಾಡಲ್ಲಿ ಅದೇನು ಸ್ವರ್ಗಕಾಣಿಸುತ್ತ ಇದೆಯೋ’ ಎಂದರು. +‘ಹೋಗ್ಲಿ ಬಿಡಿ ದೊಡ್ಡಮ್ಮ. +ಇಲ್ಲಿ ಹುಡುಗರಿಗೆ ಪಟ್ಟಣಕ್ಕೆ ಸೇರೋ ಆಸೆ, ಅಲ್ಲಿರೋ ಹುಡುಗರಿಗೆ ಇಲ್ಲಿ ಬರೋ ಆಸೆ, ಬದುಕೇ ಹಾಗೇ ಅಲ್ಲವೇ. +ಇರದುದೆಡೆಗೆ ತುಡಿಯುವುದೇ ಜೀವನ…’ ಅನ್ನೋ ಕವಿವಾಣಿ ನಿಜವೇ ಅಲ್ಲವೇ? +ಹೇಗೂ ನಿಂಗೆ ಬೆಳಿಗ್ಗೆ ತಿಂಡಿ ಮಾಡೋ ತೊಂದರೆ ತಪ್ಪಿತು. +ಬೇಗ ಎದ್ದು ರೆಡಿಯಾಗಿ ಹೋಗೋಣ. +ಪಕ್ಕದಲ್ಲೇ ಅಲ್ವೆ ಹೋಗದೆ ಇದ್ರೆ ಆ ಹುಡುಗ ಬೇಸರ ಪಟ್ಕೊತಾನೆ. +ಬೇರೆ ಕಡೆ ಆಗಿದ್ರೆ ನಾನಂತು ಹೋಗ್ತ ಇರಲಿಲ್ಲ. +ನಾಳೆ ಹೇಗೂ ಗುರುವಾರ ಕೆಲಸದವರೂ ಬರೋದಿಲ್ಲ. +ತೋಟದ ಕೆಲಸಾನೂ ಇಲ್ಲ. +ಆರಾಮವಾಗಿ ಹೋಗಿ ಬರೋಣ’ ಅಂತ ಹೇಳಿದಳು. +ಬೆಳಿಗ್ಗೆ ಬೇಗ ಎದ್ದು ತಲೆಗೆ ಸ್ನಾನ ಮಾಡಿ ಕೂದಲನ್ನ ಹಾಗೇ ಒಣಗಲು ಬಿಟ್ಟು ಅಪರೂಪಕ್ಕೆ ಡ್ರೆಸ್ಸಿನ ಬಗ್ಗೆ ವಿಶೇಷ ಆಸಕ್ತಿ ತಗೊಂಡು ತನ್ನ ಮೆಚ್ಚಿನ ಕಡುನೀಲಿ ಚೂಡಿದಾರ್ ಹಾಕಿಕೊಂಡಳು. +‘ನನ್ನ ದೃಷ್ಟಿನೇ ಬಡಿಯೋ ಹಾಗಿದೆಯಲ್ಲೇ ತಾಯಿ ಬಾ ಮೊದ್ಲು ಮೆಣಸಿನಕಾಯಿ ನೀವಾಳಿಸ್ತೀನಿ’ ಅಂತ ಅಜ್ಜಿ ಬಲವಂತಿಸಿದಾಗ‘ಹೋಗಜ್ಜಿ ನೀನೊಬ್ಬಳು ದೃಷ್ಟಿಗಿಷ್ಟಿ ಅಂತ ತಲೆ ಕೆಡಿಸಬೇಡ, ಬೇಗ ಹೊರಡು ಲೇಟಾಗುತ್ತೆ’ ಅಂತ ಅವಸರಿಸಿದಳು. +ಮೂರು ಜನರೂ ಅಲ್ಲಿಗೆ ಬರೋ ಅಷ್ಟರಲ್ಲಿ ತೋಟದ ಆಳುಗಳೆಲ್ಲ ಸೇರಿಬಿಟ್ಟಿದ್ದರು. +ಇವರನ್ನು ಕಂಡ ಕೂಡಲೇ ಸಡಗರದಿಂದ ಸ್ವಾಗತಿಸಿದರು. +‘ಬನ್ನಿ, ಬನ್ನಿ, ನಿಮ್ಮನ್ನೆ ಕಾಯ್ತಾ ಇದ್ವಿ. +ಪೂಜೆ ಶುರು ಮಾಡೋಣ’ ವಿಸ್ಮಯ ಬರಮಾಡಿಕೊಂಡ. +ರಸ್ತೆಗೆ ಸೇರಿದಂತೆ ಇದ್ದ ಜಾಗದಲ್ಲಿ ಅಗೆದು ಸ್ವಚ್ಛ ಮಾಡಲಾಗಿತ್ತು. +ಅಲ್ಲೊಂದು ಮೂಲೆಯಲ್ಲಿ ಕಳಸ ಜೋಡಿಸಿ ಪೂಜಾ ಸಾಮಾಗ್ರಿ ಇಡಲಾಗಿತ್ತು. +ಏನು ಅಂತ ಅರ್ಥವಾಗದೆ ತಾಯಿ ಮಗಳು ಮುಖ ನೋಡಿಕೊಂಡರು. +‘ಮೇಡಂ ನೀವು ಹೀಗೆ ಬನ್ನಿ! +ಭಟ್ಟರೇ ನೀವು ಪೂಚೆ ಶುರು ಮಾಡಿ. +ಇಳಾ ನೀವೂ ಬನ್ನಿ ಇಲ್ಲಿಗೆ’ ಕರೆದ ವಿಸ್ಮಯ. +ಭಟ್ಟರು ಮಂತ್ರ ಹೇಳುತ್ತ ಪೂಜೆ ಶುರು ಹಚ್ಚಿಕೊಂಡರು. +ಗುದ್ದಲಿಯನ್ನು ನೀಲಾಳ ಕೈಲಿ ಕೊಟ್ಟು ‘ಮೆಡಂ ನೀವು ಇಲ್ಲಿ ಗುದ್ದಲಿಯಿಂದ ಸ್ವಲ್ಪ ಅಗೆಯಿರಿ. +ನಿಮ್ಮಿಂದಲೇ ನಿಮ್ಮ ಪತಿಯ ಕನಸಿನ ಶಾಲೆಯ ಕಟ್ಟಡ ಪ್ರಾರಂಭೋತ್ಸವ ನಡೆಯಲಿ’ ಎಂದನು. +ದಂಗಾಗಿ ನಿಂತುಬಿಟ್ಟಳು ನೀಲಾ. +ತಾನು ಗುದ್ದಲಿ ಹಿಡಿದು ಅಗೆಯುವುದು, ಪತಿಯ ಕನಸು ಒಂದೂ ಅರ್ಥವಾಗದೆ ವಿಸ್ಮಯನನ್ನೆ ಅಚ್ಚರಿಯಿಂದ ನೋಡುತ್ತ ನಿಂತುಬಿಟ್ಟಳು. +ಇಳಾಗೂ ಆಶ್ಚರ್ಯವಾಗಿತ್ತು. +ಅಮ್ಮ ಯಾಕೆ ಈ ಪೂಜೆಯಲ್ಲಿ ಪಾಲ್ಗೊಳ್ಳಬೇಕು. +ವಿಸ್ಮಯ ಯಾಕೆ ಹೀಗೆ ಕರೆಯುತ್ತಿದ್ದಾನೆ ಎಂದೇ ಗೊತ್ತಾಗದೆ ತಬ್ಬಿಬ್ಬುಗೊಂಡಳು. +‘ಬನ್ನಿ ಮೇಡಂ, ನಿಮ್ಮ ಭಾವ ನಂಗೆ ಈ ಜಾಗ ಮಾರುವಾಗ ನಿಮ್ಮ ಪತಿಯ ಕನಸನ್ನು ಮಾರ್ತಾ ಇದ್ದೀವಿ ಅಂತ ಹೇಳಿದ್ದರು ನೆನಪಿದೆಯಾ… + ಮೋಹನನ ಕನಸುಗಳನ್ನು ನಾನು ಕೊಂಡಕೊಂಡ ಮೇಲೆ ಅದನ್ನು ಸಾಕಾರಗೊಳಿಸಬೇಕು ಅಲ್ಲವೆ? ಆಚರ್ಯಪಡಬೇಡಿ. + ಈ ಜಾಗದಲ್ಲಿ ಮೋಹನನ ಆಸೆಯಂತೆ ಶಾಲೆಯೊಂದನ್ನು ಕಟ್ಟೋಣವೆಂದು ತೀರ್ಮಾನಿಸಿದ್ದೇವೆ. +ಆ ಶಾಲೆಯ ಕಟ್ಟಡಕ್ಕಾಗಿಯೇ ಈ ಗುದ್ದಲಿ ಪೂಜೆ, ಈ ಪೂಜೆಯನ್ನು ನಿಮ್ಮಿಂದಲೇ ನೆರವೇರಿಸಿದರೆ ಮೋಹನನ ಅತ್ಮ ಸಂತೋಷಪಡುತ್ತೆ. +ನನ್ನ ಆಶೀರ್ವದಿಸುತ್ತಾರೆ ಅಂತ ಈ ಪೂಜೆಯನ್ನು ನಿಮ್ಮಿಂದ ಮಾಡಿಸುತ್ತ ಇದ್ದೀವಿ. +ಬನ್ನಿ ತಡವಾಗುತ್ತೆ’ ಎಂದು ದೀರ್ಘವಾಗಿ ಹೇಳಿದಾಗ ನೀಲಾಳ ಕಣ್ಣುಗಳಿಂದ ಪಳಪಳನೆ ಕಣ್ಣೀರು ಉದುರಿದವು. +ಅದು ದುಃಖದ ಕಣ್ಣೀರೋ, ಆನಂದಭಾಷ್ಪವೋ ತಿಳಿಯದೆ, ಮೌನವಾಗಿ ವಿನ್ಮಯದಿಂದ ಗುದ್ದಲಿ ಪಡೆದು ಅವರು ತೋರಿಸಿದ ಜಾಗಕ್ಕೆ ಏಟು ಹಾಕಿದಳು. +ಇಳಾಳಂತು ಬೆರಗಿನಿಂದ ನಿಂತು ಬಿಟ್ಟಿದ್ದಳು. +ದೊಡ್ಡಪ್ಪ ಅವತ್ತು ಹೇಳಿದಾಗಲೇ ಅಪ್ಪನ ಕನಸು ಗೊತ್ತಾಗಿದ್ದು. +ಸಧ್ಯಕ್ಕಂತೂ ಆ ಕನಸು ಈಡೇರಲು ಎಲ್ಲಿ ಸಾಧ್ಯ! +ಮುಂದೆ ಎಲ್ಲ ಅನುಕೂಲವಾದರೆ ಅಪ್ಪನ ಕನಸಿನ ಬಗ್ಗೆ ಆಲೋಚಿಸೋಣ ಎಂದುಕೊಂಡಿದ್ದಳು. +ಆದರೆ ವಿಸ್ಮಯ ತಮಗೆ ಯಾವುದೇ ರೀತಿಯ ಸಂಬಂಧಿಯಲ್ಲ, ಸ್ನೇಹಿತನಲ್ಲ, ಬರೀ ತಮ್ಮ ಜಾಗ ಕೊಂಡ ಒಬ್ಬ ಗಿರಾಕಿಯಷ್ಟೇ. +ಅಷ್ಟಕ್ಕೆ ತನ್ನ ತಂದೆಯ ಆಸೆಯನ್ನು ನೆರವೇರಿಸಲು ಶಾಲೆ ಕಟ್ಟುತ್ತಿದ್ದಾನೆಯೇ? +ಇಷ್ಟೊಂದು ಒಳ್ಳೆಯ ಮನಸ್ಸಿದೆಯೇ ಅವನಿಗೆ? +ತಾನು ಅಪಾರ್ಥ ಮಾಡಿಕೊಂಡಿದ್ದನೇ? +ದುಡಿಯಲು ಬಂದು ಹಣಕ್ಕಷ್ಟೇ ಪ್ರಾಮುಖ್ಯತೆ ಕೊಡುತ್ತಾನೆ ಎಂದುಕೊಂಡಿದ್ದು ತಪ್ಪೇ. +ಸೇವೆಯ ಮನಸ್ಸು ಇದೆಯಲ್ಲ ಅವನಿಗೆ. +ಹೇಗೊ… ಅಪ್ಪನ ಕನಸು ನನಸಾಗುತ್ತದೆ. +ಇಲ್ಲಿರುವ ಮಕ್ಕಳಿಗೂ ಅನುಕೂಲವಾಗುತ್ತದೆ. +ಒಂದು ಒಳ್ಳೆಯ ಕೆಲಸ ಆಗುತ್ತಿದೆಯಲ್ಲ ಅಷ್ಟೇ ಸಾಕು – ಅಂತ ಅಂದುಕೊಳ್ಳುತ್ತ ಅಭಿಮಾನದಿಂದ ವಿಸ್ಮಯನ ಕಡೆ ನೋಡಿದಳು. +ಪೂಜೆ ಸಾಂಗವಾಗಿ ನೆರವೇರಿತು. +ಇಳಾಳೇ ಮುಂದೆ ನಿಂತು ಎಲ್ಲರಿಗೂ ದೇವರ ಪ್ರಸಾದ ನೀಡಿದಳು. +ಅಷ್ಟೊತ್ತಿಗೆ ವಿನಾಯಕ ತಿಂಡಿ ಸಿದ್ದಪಡಿಸಿಕೊಂಡು ಕ್ಯಾರಿಯರ್‌ಗಳಲ್ಲಿಟ್ಟುಕೊಂಡು ತನ್ನ ಕಾರಿನಲ್ಲಿ ಬಂದಿಳಿದ. +‘ಆರೆ, ಪೂಜೆ ಆಗಿಹೋಯಿತೇ, ಸ್ವಲ್ಪ ತಡ ಆಯ್ತು. +ನಂಗೂ ಪ್ರಸಾದ ಕೊಟ್ಟುಬಿಡಮ್ಮ’ ಅಂತ ಇಳಾಳ ಬಳಿ ಬಂದು ದೇವರ ಪ್ರಸಾದ ಸ್ವೀಕರಿಸಿ ಕಣ್ಣಿಗೊತ್ತಿಕೊಂಡ. +ಅಲ್ಲಿಗೆ ಬಂದಿದ್ದವರಿಗೆಲ್ಲ ಉಪ್ಪಿಟ್ಟು, ಕೇಸರಿಬಾತನ್ನು ಹಂಚಿದರು. +ಆಳುಗಳೆಲ್ಲ ಚಪ್ಪರಿಸಿ ತಿಂದರು. +ವಿಸ್ಮಯ ನಿಂತು ಬಲವಂತವಾಗಿ ಎರಡೆರಡು ಸಲ ಹಾಕಿಸಿ ತಿನ್ನಿಸಿದನು. +ಇಳಾ, ನೀಲಾ, ಅಂಬುಜಮ್ಮನೂ ರುಚಿಯಾಗಿದೆ ಅಲ್ವಾ, ಅಂತ ಸ್ವಲ್ಪ ಹೆಚ್ಚಾಗಿಯೇ ತಿಂದರು. +ವಿನಾಯಕ, ವಿಸ್ಮಯರ ಬಲವಂತವೂ ಸೇರಿ ತಿಂಡಿ ಜಾಸ್ತಿ ಆಯಿತು ಎನಿಸುತ್ತಿತ್ತು. +‘ಇನ್ನಾರು ತಿಂಗಳಲ್ಲಿ ಕಟ್ಟಡ ಪೂರ್ಣಗೊಳ್ಳುತ್ತದೆ. +ಅಷ್ಟರೊಳಗೆ ಶಾಲೆ ಪ್ರಾರಂಭಿಸಬೇಕು. +ಈ ಕಟ್ಟಡ ಆಗೋತನಕ ಇಲ್ಲಿ ಯಾವುದಾದರೂ ಕಟ್ಟಡದಲ್ಲಿ ಸ್ಕೂಲ್ ಶುರು ಮಾಡೋಣ ಅಂದುಕೊಂಡಿದ್ದೇನೆ. +ಸರಕಾರದಿಂದ ಪರ್ಮಿಶನ್ ತಗೋಬೇಕು, ಒಳ್ಳೆ ಟೀಚರ್ ಬೇಕು. +ನೀವೇ ಸ್ವಲ್ಪ ಆಸಕ್ತಿವಹಿಸಿ ಇಲ್ಲಿ ಯಾರಾದ್ರೂ ಎಸ್‌ಎಸ್‌ಎಲ್‌ಸಿನೋ, ಪಿಯುಸಿನೋ ಆಗಿರೋರು ಇದ್ದರೆ ಹೇಳಿ, ಒಳ್ಳೆ ಸಂಬಳ ಕೊಡೋಣ’ ಅಂತ ವಿಸ್ಮಯ ನೀಲಾಳ ಸಲಹೆ ಕೇಳಿದ. +ನಮ್ಮದೇ ಹಳೇ ಮನೆ ಇದೆ, ಭಾವನನ್ನು ಕೇಳ್ತೀನಿ, ಎಂದಳು. +‘ಭೈರಪ್ಪನ ಮಗಳು ಪಿಯುಸಿ ಮಾಡ್ಕೊಂಡಿದ್ದಾಳೆ, ಮನೆಯಲ್ಲಿದ್ದಾಳೆ. +ಮದ್ವೆ ಆಗೋ ತನಕ ಕೆಲಸ ಮಾಡಬಹುದು. +ಅವಳ್ನ ಕೇಳಿ ಹೇಳ್ತೀನಿ’ ನೀಲಾ ಭರವಸೆ ನೀಡಿದಳು. +‘ದೊಡ್ಡಪ್ಪ ಖಂಡಿತಾ ಒಪ್ತಾರೆ. +ಅವರನ್ನ ಒಪ್ಪಿಸೋ ಭಾರ ನಂದು. +ಬೇಗನೇ ಸ್ಕೂಲ್ ಶುರು ಮಾಡೋಣ. +ಆ ಮಕ್ಕಳು ಮಳೆ ಬಿಸಿಲಲ್ಲಿ ನಡ್ಕೊಂಡು ಹಾನುಬಾಳಿನವರೆಗೂ ಹೋಗಬೇಕು ಪಾಪ. +ಸುತ್ತಮುತ್ತ ಸುಮಾರು ಇಪ್ಪತ್ತು ಮಕ್ಕಳು ಹೋಗ್ತವೆ ಅವರಿಗೆಲ್ಲ ಅನುಕೂಲವಾಗುತ್ತೆ-ಇಳಾ ಅತ್ಯಂತ ಉತ್ಸಾಹ ತೋರಿದಳು. +ವಿನಾಯಕ ಬೇಗ ಲೈಸನ್ಸನ್ನು ತರಿಸಿಕೊಡುವುದಾಗಿ ಆಶ್ವಾಸನೆ ನೀಡಿದ. +ಅಂತೂ ಈ ಊರಿನಲ್ಲಿ ಒಂದು ಶಾಲೆ ಪ್ರಾರಂಭವಾಗುವುದು ಎಲ್ಲರಿಗೂ ಸಂತೋಷ ತಂದಿತ್ತು. +ಶಾಲೆಗೆ ಬರುವ ಮಕ್ಕಳು ಸಿಕ್ಕಿದ ಮೇಲೆ ಇನ್ನು ಶಾಲೆಯ ಪ್ರಾರಂಭೋತ್ಸವ ಸಧ್ಯಯದಲ್ಲಿಯೇ ಅಂತ ತೀರ್ಮಾನವಾಯ್ತು. +ತಾವು ಉಪಯೋಗಿಸದೆ ಇದ್ದ ಹಳೆ ಮನೆಯನ್ನು ಶಾಲೆಗಾಗಿ ಕೊಡಲು ಸುಂದರೇಶ್ ಸಂತೋಷವಾಗಿಯೇ ಒಪ್ಪಿಕೊಂಡರು. +ಭೈರಪ್ಪನ ಮಗಳು ಗಂಗಾ ಮಕ್ಕಳಿಗೆ ಪಾಠ ಮಾಡಲು ಕುಣಿಯುತ್ತ ಬಂದಳು. +ಹಳೆ ಮನೆಯು ಯಾರೂ ವಾಸಿಸದೆ ಪಾಳು ಬಿದ್ದಿತ್ತು. +ಈವತ್ತು ರಜೆ ಇದ್ದುದರಿಂದ ತೋಟದ ಆಳುಗಳು ಮನೆಯನ್ನು ಸ್ವಚ್ಛಗೊಳಿಸಿ, ಮನೆಯ ಸುತ್ತಮುತ್ತ ಕೂಡ ಸ್ವಚ್ಛಿಗೊಳಿಸಿ ಒಂದು ಹೊಸ ರೂಪ ನೀಡಿದರು. +ಮರುದಿನ ಶುಕ್ರವಾರವಾದ್ದರಿಂದ ಶಾಲೆಯನ್ನು ಸಾಂಕೇತಿಕವಾಗಿ ಪ್ರಾರಂಭಿಸಲು ನಿರ್ಧರಿಸಿದರು. +ಶಾಲೆಗೆ ಬೇಕಾದ ಕುರ್ಚಿ ಟೇಬಲ್ಲು ನೀಲಾ ತಮ್ಮ ಮನೆಯಿಂದಲೇ ನೀಡಿದಳು. +ವಿನಾಯಕನ ಮನೆಯಲ್ಲಿ ಒಂದಿಷ್ಟು ಸುಣ್ಣ ಇದ್ದು ಅದನ್ನು ಆಳುಗಳಿಂದ ಮನೆಗೆ ಹೊಡೆಸಿದ್ದರಿಂದ ಹಳೆ ಮನೆ ಕಳೆಕಳೆಯಾಗಿ ಕಾಣುತ್ತಿತ್ತು. +ಶಾಲೆಗೆ ‘ವಿದ್ಯಾನಿಕೇತನ’ ಎಂದು ಹೆಸರಿಡಲಾಯಿತು. +ಒಂದು ಸರಳ ಸಮಾರಂಭದಲ್ಲಿ ಸುಂದರೇಶರು ಶಾಲೆಯನ್ನು ಉದ್ಘಾಟಿಸಿಯೇ ಬಿಟ್ಟರು. +ಮೊದಲ ದಿನವೇ ಎಂಟು ಮಕ್ಕಳು ನರ್ಸರಿಗೆ ಸೇರಿಕೊಂಡವು. +ಒಂದು ಬೋರ್ಡು ಸಿದ್ದಪಡಿಸುವ ತನಕ ನೇತುಹಾಕುವ ಬೋರ್ಡು, ಮಕ್ಕಳಿಗೆ ಬರೆಯಲು ಸ್ಲೇಟ್, ಬಳಪ, ಪುಸ್ತಕ ಎಲ್ಲವನ್ನು ವಿಸ್ಮಯ ಕೊಂಡು ತಂದು ಶಾಲೆಗೆ ನೀಡಿದ. +ಶಾಲೆಯ ಉಸ್ತುವಾರಿಯನ್ನು ನೀಲಾ ನೋಡಿಕೊಳ್ಳಬೇಕು ಎಂದು ಅಲ್ಲಿ ಎಲ್ಲರೂ ತೀರ್ಮಾನಿಸಿದಾಗ, ತನ್ನಿಂದ ಅದೆಲ್ಲ ಸಾಧ್ಯವೇ ಅಂತ ಹಿಂತೆಗೆದಳು. +ಆದರೆ ಇಳಾಳ ಬಲವಂತ ಹಾಗೂ ವಿಸ್ಮಯನ ಒತ್ತಾಯಕ್ಕೆ ಅಳುಕುತ್ತಲೇ ಒಪ್ಪಿಕೊಂಡಳು. +ಅಮ್ಮ ಸದಾ ಅಪ್ಪನ ನೆನಪಿನಲ್ಲಿ ಕೊರಗುತ್ತ ಇರುವ ಬದಲು ಶಾಲೆಗೆ ಬಂದರೆ ಆ ಮಕ್ಕಳ ಒಟನಾಟದಲ್ಲಿ ಶಾಲೆಯ ಜವಾಬ್ಧಾರಿಯಲ್ಲಿ ಹೊಸ ವ್ಯಕ್ತಿಯಾಗಲು ಸಾಧ್ಯ ಎಂದು ತರ್ಕಿಸಿ ಇಳಾ ನೀಲಾಳನ್ನು ಒಪ್ಪಿಸಿದಳು. +ನರ್ಸರಿ ಮಕ್ಕಳನ್ನು ನೀಲಾ ನೋಡಿಕೊಳ್ಳುವುದು, ಒಂದರಿಂದ ಮುಂದಿನ ತರಗತಿಯ ಮಕ್ಕಳನ್ನು ಗಂಗಾ ನೋಡಿಕೊಳ್ಳುವುದು ಅಂತ ಎಲ್ಲರೂ ತೀರ್ಮಾನಿಸಿದರು. +ಶಾಲಾಭಿವೃದ್ಧಿ ಕಮಿಟಿಯಲ್ಲಿ ಸುಂದರೇಶ್, ವಿನ್ಸೆಂಟ್, ವಿನಾಯಕ ಹಾಗೂ ಮಕ್ಕಳ ಕೆಲವು ಪೋಷಕರನ್ನು ಸೇರಿಸಿಕೊಂಡರು. +ಶಾಲೆ ಪ್ರಾರಂಭವಾದ ಮೇಲೆ ಅಲ್ಲಿನ ಪರಿಸ್ಥಿತಿಯೇ ಬದಲಾಗಿ ಹೋಗಿತ್ತು. +ಮಕ್ಕಳ ಕಲರವದಿಂದ ಅಲ್ಲಿ ಹೊಸ ಚೈತನ್ಯವೊಂದು ಉದಯಿಸಿದಂತೆ ಕಾಣುತ್ತಿತ್ತು. +ಬೇಗನೇ ಶಾಲೆಗೆ ಲೈಸನ್ಸ್ ಕೂಡ ಸಿಕ್ಕಿದ್ದರಿಂದ ಸುತ್ತಮುತ್ತ ಶಾಲೆಗೆ ಹೋಗುತ್ತಿದ್ದ ಮಕ್ಕಳೆಲ್ಲ ಬಂದು ಸೇರಿದರು. +ಶಾಲೆಯ ಒಟ್ಟು ಸಂಖ್ಯೆ ನಲವತ್ತಾಯಿತು. +ಇನ್ನೊಬ್ಬ ಶಿಕ್ಷಕರ ಅವಶ್ಯಕತೆ ಮನಗಂಡು ಹತ್ತಿರದಲ್ಲಿಯೇ ಇರುವ ಯಾರಿಗಾದರೂ ಆಸಕ್ತಿ ಇದ್ದು ಬರುವಂತಾದರೆ ಒಳ್ಳೆಯ ಸಂಬಳ ನೀಡುವೆನೆಂದು ವಿಸ್ಮಯ ಆಶ್ವಾಸನೆ ನೀಡಿದ. +ಆದರೆ ಸುತ್ತಮುತ್ತಲೆಲ್ಲೂ ಓದಿದವರು ಇರಲಿಲ್ಲ. +ಓದಿದವರು ಈ ಊರುಗಳಲ್ಲಿಯೇ ಇರುತ್ತಿರಲಿಲ್ಲ. +ಹೊರಗಿನಿಂದ ಇಲ್ಲಿ ಬಂದಿರಲು ಒಪ್ಪುವಂತಹವರು ಸಿಗುವುದು ಕಷ್ಟವಿತ್ತು. +ಈಗ ಹೊಸದೊಂದು ಚಿಂತೆ ಶುರುವಾಯಿತು. +ಆದರೂ ಶಾಲೆಯ ಕೆಲಸವೇನೂ ನಿಂತಿರಲಿಲ್ಲ. +ಇದೆಲ್ಲ ಆದದ್ದು ಕೇವಲ ಇಷ್ಟು ಕಡಿಮೆ ಅವಧಿಯಲ್ಲಿ! +ಆಶ್ಚರ್ಯ ಅನಿಸಿದರೂ ನಿಖರವಾಗಿತ್ತು. +ಅದೆಷ್ಟೋ ಮಕ್ಕಳ ಶಾಲೆಯ ಕನಸು ಅಲ್ಲಿ ಸಾಕಾರವಾಗಿತ್ತು. +ತೋಟದ ಆಳುಗಳ ಮಕ್ಕಳಿಗೆ ಶಿಕ್ಷಣ ನೀಡುವ ಕಾಮಧೇನುವಾಗಿತ್ತು ಈ ಶಾಲೆ. +ಮಧ್ಯಾಹ್ನ ಎಲ್ಲಾ ಶಾಲೆಗಳಲ್ಲೂ ಬಿಸಿಯೂಟದ ವ್ಯವಸ್ಥೆ ಇರುವುದರಿಂದ ನಮ್ಮ ಶಾಲೆಯಲ್ಲಿ ಆ ವ್ಯವಸ್ಥೆ ಮಾಡಬೇಕು ಎಂದು ವಿಸ್ಮಯ ಪ್ರಯತ್ನ ನಡೆಸಿದ. +ಅದು ಅಷ್ಟು ಸುಲಭವಾಗಿರಲಿಲ್ಲ. +ಸರ್ಕಾರದ ಶಾಲೆಗಳಾದರೆ ಸರ್ಕಾರವೇ ಎಲ್ಲವನ್ನೂ ಕೊಡುತ್ತಿತ್ತು. +ಆದರೆ ಈ ಶಾಲೆ ಈಗಿನ್ನು ಪ್ರಾರಂಭವಾಗಿದೆ. +ಸರ್ಕಾರದ ಅನುದಾನ ಸಿಗುವುದು ಕೆಲವು ವರ್ಷಗಳ ನಂತರವೇ. +ಅಲ್ಲಿವರೆಗೂ ಪರ್ಯಾಯ ವ್ಯವಸ್ಥೆ ಮಾಡಲು ಪಣತೊಟ್ಟ. +ತನ್ನ ರೆಸಾರ್ಟ್ ನಿರ್ಮಾಣದ ನಡುವೆಯೂ ಶಾಲೆಗಾಗಿ ತೋರುತ್ತಿರುವ ಕಾಳಜಿ ಎಲ್ಲರೂ ಅಚ್ಚರಿಪಡುವಂತಿತ್ತು. +ಮನೆ ಇರುವ ಜಾಗದಲ್ಲಿಯೇ ಶಾಲೆಯ ಎಲ್ಲಾ ವ್ಯವಸ್ಥೆಯನ್ನು ನೀಲಾ ಹಾಗೂ ಗಂಗಾ ಮಾಡಿಕೊಂಡಿದ್ದರು. +ಮೊದಲಿಗೆ ಸಿಗುವ ಕೋಣೆಯನ್ನು ಆಫೀಸ್ ರೂಂ ಮಾಡಿಕೊಂಡಿದ್ದರು. +ಹಾಲಿನಲ್ಲಿ ೧ ರಿಂದ ೭ನೇ ತರಗತಿಯ ಮಕ್ಕಳನ್ನು ಕೂರಿಸಲಾಗಿತ್ತು. +ಒಳಭಾಗದ ಅಡುಗೆ ಕೋಣೆಗೆ ಸೇರಿದ್ದ ಊಟದ ಮನೆಯನ್ನು ನರ್ಸರಿ ಮಕ್ಕಳಿಗೆ ವ್ಯವಸ್ಥೆ ಮಾಡಲಾಗಿತ್ತು. +ಶಾಲೆಯ ಕಸಗುಡಿಸಿ ಪುಟ್ಟಮಕ್ಕಳನ್ನು ನೋಡಿಕೂಳ್ಳುವ ಸಲುವಾಗಿ ಒಂಟಿಯಾಗಿ ಕೂಲಿನಾಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಕುಪ್ಪಮ್ಮನನ್ನು ಆಯಾಳಾಗಿ ನೇಮಿಸಿಕೊಳ್ಳಲಾಗಿತ್ತು. +ಕುಪ್ಪಮ್ಮ ಈ ಕಡೆಯವಳಲ್ಲ. +ತಮಿಳುನಾಡಿನವಳಾದ ಅವಳನ್ನು ಗಂಡ ಸ್ವಾಮಿ ಮದುವೆಯಾಗಿ ಕರೆತಂದಿದ್ದ. +ಕನ್ನಡವೇ ಬಾರದ ಕುಪ್ಪಮ್ಮ ಕನ್ನಡ ಕಲಿತು ಇಲ್ಲಿಯವಳೇ ಆಗಿಬಿಟ್ಟಿದ್ದಳು. +ಮಗ ಬೆಂಗಳೂರು ಸೇರಿ ಇತ್ತ ತಲೆಹಾಕಿರಲಿಲ್ಲ. +ಸ್ವಾಮಿ ಸತ್ತು ಸ್ವರ್ಗ ಸೇರಿದ್ದ. +ಇರುವ ಒಬ್ಬಳು ಈ ವಯಸ್ಸಿನಲ್ಲಿ ಕೂಲಿ ಮಾಡಿ ಕಷ್ಟಪಡುತ್ತಿದ್ದಳು. +ಈ ಕೆಲಸ ಸಿಕ್ಕಿದ್ದು ಒಳಿತೇ ಆಗಿತ್ತು. +ಬಿಸಿಲು ಮಳೆಯಲ್ಲಿ ಕಷ್ಟಪಡುವ ರಗಳೆಯೇ ಇಲ್ಲವೆಂದು ಸಂತೋಷವಾಗಿಯೇ ಆಯಾ ಕೆಲಸಕ್ಕೆ ಸೇರಿದ್ದಳು. +ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಳು. +ಶಾಲೆಗೆ ಬರೀ ಕೂಲಿಕಾರರ ಮಕ್ಕಳಷ್ಟೇ ಅಲ್ಲ, ಸಣ್ಣಪುಟ್ಟ ತೋಟದ ಮಾಲೀಕರ ಮಕ್ಕಳೂ ಕೂಡ ಸೇರಿದ್ದರು. +ಈ ಶಾಲೆ ಒಂದು ಒಳ್ಳೆಯ ಶಾಲೆ ಅಂತ ಹೆಸರಾದರೆ ಬೋರ್ಡಿಂಗ್ನಲ್ಲಿರುವ ಮಕ್ಕಳು ಕೂಡ ಬಂದು ಸೇರುವರೆಂಬ ಆಶಾಭಾವನೆ ವಿಸ್ಮಯನದ್ದು. +ಅವನ ಈ ಅಪಾರ ಆಸಕ್ತಿಯಿಂದಾಗಿಯೇ ಶಾಲೆಯು ಇಷ್ಟುಬೇಗ ನಲವತ್ತು ಮಕ್ಕಳ ಸಂಖ್ಯೆಯನ್ನು ಕಾಣುವಂತಾಗಿದ್ದು. +ಹೊಸ ಕಟ್ಟಡವಾದ ಮೇಲೆ ತರಬೇತಿ ಹೊಂದಿದ ಶಿಕ್ಷಕರನ್ನು ನೇಮಿಸಿಕೊಂಡು, ಪಟ್ಟಣದ ಶಾಲೆಗಳಲ್ಲಿ ಸಿಗುವ ಎಲ್ಲಾ ಸೌಲಭ್ಯವನ್ನು ಶಾಲೆಗೆ ನೀಡಬೇಕು. +ಶಾಲೆಯನ್ನು ಹುಡುಕಿಕೊಂಡು ಬಂದು ಮಕ್ಕಳನ್ನು ಅಡ್ಮಿಷನ್ ಮಾಡುವಂತಾಗಬೇಕು. +ಅದಕ್ಕಾಗಿ ಎಷ್ಟು ಶ್ರಮವಾದರೂ, ಎಷ್ಟು ಹಣ ಖರ್ಚಾದರೂ ಮಾಡಲು ಸಿದ್ಧನಾದ. +ಒಟ್ಟಿನಲ್ಲಿ ಮೋಹನನ ಕನಸು ಈಡೇರಲಿ ಎಂಬುದು ಒಂದು ಆಸೆಯಾದರೆ, ಬಿಸಿಲಿನಲ್ಲಿ ಮಳೆಯಲ್ಲಿ ನಡೆದು ಹೋಗುವ ಪುಟ್ಟ ಕಂದಮ್ಮಗಳನ್ನು ನೋಡಿ ಅವನ ಅಂತಃಕರಣ ಕರಗಿತು. +ಸುತ್ತಮುತ್ತಲು ಎಲ್ಲಿಯೂ ಒಳ್ಳೆ ಶಾಲೆ ಇಲ್ಲ ಎಂಬುದನ್ನು ಮನಗಂಡು ಈ ಶಾಲೆ ತೆರೆಯಲು ಮನಸ್ಸು ಮಾಡಿದ್ದ. +ಅದು ಒಳ್ಳೆ ರೀತಿಯಲ್ಲಿ ನಡೆಯುವ ಶುಭ ಸೂಚನೆ ತೋರಿಸಿತ್ತು. +ಗಿಡಗಳಿಗೆ ಗೊಬ್ಬರ ಕೊಡಬೇಕಾಗಿರುವುದರಿಂದ ಗೊಬ್ಬರದ ವ್ಯವಸ್ಥೆ ಮಾಡಬೇಕಿತ್ತು. +ಗೊಬ್ಬರ ಬೇರೆ ಸರಿಯಾಗಿ ಸಿಗದೆ ಗಲಾಟೆಯಾಗುತ್ತಿತ್ತು. +ಈ ಗೊಬ್ಬರಕ್ಕಾಗಿ ರೈತರೆಲ್ಲ ದಿನವಿಡೀ ಸರತಿ ನಿಂತು ಅಷ್ಟೋ ಇಷ್ಟೋ ಗೊಬ್ಬರಪಡೆಯಬೇಕಿತ್ತು. +ಈ ಗೊಬ್ಬರ ರಾಕ್ಷಸನ ಹೊಟ್ಟೆಗೆ ಅರೆಕಾಸು ಮಜ್ಜಿಗೆಯಂತಾಗುತ್ತಿತ್ತು. +ಆದರೂ ರೈತರು ಛಲಬಿಡದ ತ್ರಿವಿಕ್ರಮನಂತೆ ಪ್ರತಿದಿನ ಮನೆಮಂದಿಯನ್ನೆಲ್ಲ ಸರತಿ ನಿಲ್ಲಿಸಿ ಗೊಬ್ಬರ ಪಡೆಯುತ್ತಿದ್ದರು. +ಈ ಗೊಬ್ಬರಕ್ಕಾಗಿಯೆ ಹಾಹಾಕಾರ, ಮುಷ್ಕರ, ಹೊಡೆದಾಟ ಬಡಿದಾಟವೇ ನಡೆದುಹೋಗುತ್ತಿತ್ತು. +ಹಾಗೆ ಗೊಬ್ಬರಕ್ಕಾಗಿ ಹೋರಾಡಿ ಪೊಲೀಸರ ಗುಂಡಿಗೆ ರೈತರು ಬಲಿಯಾದುದನ್ನು ಪದೇ ಪದೇ ಟಿವಿಗಳಲ್ಲಿ ತೋರಿಸುತ್ತಿದ್ದಾಗ ಇಳಾಗೆ ಆ ರೈತರ ಬಗ್ಗೆ ಅನುಕಂಪ, ಪರಿಸ್ಥಿತಿಯ ಬಗ್ಗೆ ಜಿಗುಪ್ಸೆ ಬಂದುಬಿಟ್ಟಿತು. +ಈ ಗೊಬ್ಬರಕ್ಕಾಗಿ ಇಷ್ಟೆಲ್ಲ ಕಷ್ಟಪಟ್ಟು ಕೊನೆಗೆ ಪ್ರಾಣವನ್ನು ಬಲಿಕೊಡಬೇಕಾ ಎಂದು ಚಿಂತಿಸಿದಳು. +ತಮ್ಮ ತೋಟಕ್ಕೂ ಈ ಗೊಬ್ಬರದ ಅವಶ್ಯಕತೆ ಇದೆ. +ಈ ಗೊಬ್ಬರವಿಲ್ಲದೆ ಬದುಕಲಾರೆವು ಎಂಬ ಮನಃಸ್ಥಿತಿಗೆ ರೈತರು ತಲುಪಿರುವುದು ಎಂತಹ ಶೋಚನೀಯ ಎಂದುಕೊಂಡಳು. +ತಾನು ಓದು ನಿಲ್ಲಿಸಿ ತೋಟದ ಕೆಲಸ ಮಾಡಬೇಕೆಂದು ನಿರ್ಧರಿಸಿದಾಗಲೇ ಕೃಷಿಗೆ ಸಂಬಂಧಪಟ್ಟ ಹಲವಾರು ಪುಸ್ತಕಗಳನ್ನು ಮೈಸೂರಿನಿಂದ ಬರುವಾಗಲೇ ಕೊಂಡು ತಂದಿದ್ದಳು. +ಪ್ರತಿದಿನ ಅದನ್ನು ಪರೀಕ್ಷೆಗೆ ಓದುವಂತೆ ಓದುತ್ತಿದ್ದಳು. +ರೇಡಿಯೋದಲ್ಲಿ ಬರುವ ಕೃಷಿ ಕಾರ್ಯಕ್ರಮವನ್ನು ತಪ್ಪದೆ ಕೇಳುತ್ತಿದ್ದಳು. +ಪತ್ರಿಕೆಗಳಲ್ಲಿ ಬರುತ್ತಿದ್ದ ಕೃಷಿ ವಿಭಾಗದ ವಿಚಾರಗಳನ್ನು ಗಮನವಿಟ್ಟು ಓದಿ, ಒಂದಿಷ್ಟು ವಿಚಾರಗಳು ಅವರಿಗೆ ತಿಳಿಯುತ್ತಿತ್ತು. +ರಾಸಾಯನಿಕ ಗೊಬ್ಬರಗಳಿಂದ ಭೂಮಿ ದಿನೇ ದಿನೇ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದ್ದು, ಅದು ನೀಡುತ್ತಿರುವ ಫಲಗಳಲ್ಲೂ ಮೊದಲಿದ್ದ ಸತ್ವ ಇಲ್ಲವೆಂದು ಸದಾ ಪರಿಸರವಾದಿಗಳು ಹೇಳುತ್ತಿರುವುದು ಇಳಾಗೂ ಸರಿ ಎನಿಸತೊಡಗಿತು. +ಈ ಮಧ್ಯೆ ತೀರ್ಥಹಳ್ಳಿ ಸಮೀಪ ಇರುವ ಒಂದು ಕೃಷಿ ತರಬೇತಿ ಕೇಂದ್ರದ ಬಗ್ಗೆ ರೇಡಿಯೋದಿಂದ ತಿಳಿದು ಅಲ್ಲಿ ನೋಡಿಬರುವ ಕುತೂಹಲದಿಂದ ಹೋಗಿದ್ದಳು. +ತೀರ್ಥಹಳ್ಳಿ ಸಮೀಪವಿರುವ ಅದೊಂದು ಪುಟ್ಟ ಹಳ್ಳಿ. +ಅಲ್ಲಿ ದಂಪತಿಗಳಿಬ್ಬರು ಸಾವಯವ ಕೃಷಿ ಮೂಲಕ ಇಡೀ ತೋಟವನ್ನು ಸಂರಕ್ಷಿಸುತ್ತಿದ್ದರು. +ತಾವೇ ಗೊಬ್ಬರ ತಯಾರಿಸುತ್ತಿದ್ದರು. +ಎರೆಹುಳ ಗೊಬ್ಬರವನ್ನು ತಯಾರಿಸಿ ಇಡೀ ತೋಟಕ್ಕೆ ನೀಡಿ ಹಸಿರು ಕಾಡಿನಂತೆ ಕಂಗೊಳಿಸುವಂತೆ ಮಾಡಿರುವುದು ಇಳಾಗೆ ವಿಸ್ಮಯವಾಗಿತ್ತು. +ರಾಸಾಯನಿಕ ಗೊಬ್ಬರದ ಸೋಂಕು ಇಲ್ಲದೆ, ಯಾವ ರಾಸಾಯನಿಕ ಕೀಟನಾಶಕಗಳ ಬಳಕೆ ಇಲ್ಲದೆ ತೋಟ ಇಷ್ಟೊಂದು ಸಮೃದ್ಧವಾಗಿರಲು ಸಾಧ್ಯವೇ ಎಂದು ಬೆರಗುಗೊಂಡಿದ್ದಳು. +ಈ ಕುರಿತು ಅಲ್ಲಿನ ತಜ್ಞರೊಂದಿಗೆ ಚರ್ಚಿಸಿದಾಗ ಅದನ್ನು ಯಾರು ಬೇಕಾದರೂ ಸಾಧ್ಯವಾಗಿಸಿಕೊಳ್ಳಬಹುದೆಂದು, ತಪಸ್ಸಿನಂತೆ ಕೃಷಿಯನ್ನು ಧ್ಯಾನಿಸಿದರೆ ಆ ತಾಯಿ ಒಲಿಯುತ್ತಾಳೆ ಎಂದು ಹೇಳಿ ಒಂದು ಉಪನ್ಯಾಸವನ್ನೇ ನೀಡಿದರು. +ತೈತ್ತಿರೀಯ ಅರಣ್ಯಕದ ಒಂದು ಕಥೆ. +ಭೂಮಿಯನ್ನು ಬ್ರಹ್ಮ ಸೃಪ್ಪಿಸಿದ. +ಹೆಣ್ಣಾಗಿ ಆಕೆ ಬೆಳೆಯುತ್ತಾಳೆ. +ಬೆಳೆದ ನಂತರ ಸೃಷ್ಟಿಕರ್ತನನ್ನು ಕೇಳುತ್ತಾಳೆ : +ತನಗೆ ತಡೆಯಲಾರದ ಸಂಕಟ, ನೋವು ಅಂತ. +ಬ್ರಹ್ಮ ತನ್ನ ತಲೆಯೆಲ್ಲ ಖರ್ಚು ಮಾಡಿದರೂ ಪ್ರಯೋಜನಕ್ಕೆ ಬರಲಿಲ್ಲ. +ಮನುಷ್ಯರು ಕಾದಾಡಿ ಭೂಮಿ ರಕ್ತದಲ್ಲಿ ಕೆಸರಾಗುವಂತೆ ಬ್ರಹ್ಮ ಮಾಡಿದ. +ಆದರೂ ಉಪಯೋಗವಾಗಲಿಲ್ಲ. +ಆಗ ಭೂಮಿಯನ್ನು ಪ್ರೀತಿಸುವ ಕೃಷಿಕನನ್ನು ಸೃಷ್ಟಿ ಮಾಡಿದ. +ರೈತ ಕೃಷಿ ಮಾಡಿ ಬೆಳೆ ತೆಗೆದ, ಆಗ ಮತ್ತೆ ಭೂಮಿ ಬ್ರಹ್ಮನಸ್ಸು ಕಂಡು ಹೇಳುತ್ತಾಳೆ: + ‘ಈಗ ಸಂಕಟವಿಲ್ಲ… ಶಾಂತಿ ಬಂದಿದೆ’ ಎಂದು. +ಅನ್ನದಲ್ಲಿ ಆನಂದವಿದೆ, ಅನ್ನ ಬೆಳೆದು, ಅನ್ನ ಹಂಚಿ ತಿಂದು ಸುಖಸುವ ಪ್ರಜ್ಞೆಯಲ್ಲಿ ಆನಂದವಿದೆ. +ಅನ್ನವಿರದಿದ್ದರೆ ನೋವು, ಅದು ಬೇಕೆಂಬ ಅರಿವಿರದಿದ್ದರೆ ಸಂಕಟ, ಏನೋ ಕಳೆದುಕೊಂಡ ಭಾವ. +ಅನ್ನ ಆನಂದ ಎರಡೂ ಭಿನ್ನವಲ್ಲ. +ವಿರೋಧವಾದ ತತ್ತ್ವಗಳಲ್ಲ. +ಭೂಮಿತಾಯಿ ಒಡಲಿಗೆ ರಾಸಾಯನಿಕ ಗೊಬ್ಬರ ಎಂಬ ವಿಷ ಬೆರೆಸುತ್ತಿದ್ದೇವೆ. +ಕೀಟನಾಶಕಗಳಿಂದ ಅವಳನ್ನು ಸ್ವಲ್ಪ ಸ್ವಲ್ಪವೇ ಬಲಿತೆಗೆದುಕೊಂಡು, ಆಕೆಯ ಮಕ್ಕಳಾದ ಮಾನವ ಜನಾಂಗವನ್ನು ರೋಗ ರುಜಿನಗಳತ್ತ ತಳ್ಳುತ್ತಿದ್ದೇವೆ. +ಈ ಪಾಪಿ ವಿಷದ ಪ್ರಭಾವ ಮಣ್ಣಿನ ಮಕ್ಕಳಿಗೆ ಗೋಚರಿಸುತ್ತಿಲ್ಲ. +ಈ ರೀತಿಯ ಗೊಬ್ಬರ ಕೀಟನಾಶಕಗಳಿಂದ ದ್ಯೆತನು ದ್ರಗ್ಸ್ ಇಲ್ಲದೆ ಅದರ ದಾಸ ಹೇಗೆ ಬದುಕಿರಲಾರೆ ಎನ್ನುತ್ತಾನೋ, ಹಾಗೆ ರಾಸಾಯನಿಕ ಗೊಬ್ಬರವಿಲ್ಲದೆ ತನಗೆ ಬದುಕಿಲ್ಲ ಎಂದುಕೊಂಡು ತಾನು ವಿಷ ತಿಂದು ಎಲ್ಲರಿಗೂ ವಿಷ ಉಣಿಸುತ್ತಿದ್ದಾನೆ. +ನಿಧಾನವಾಗಿ ಇಲ್ಲಿ ಎಚ್ಚರಿಕೆಯ ಕ್ರಾಂತಿ ಗೀತೆ ಮೊಳಗುತ್ತಿದೆ. +ತಾನು ಉಂಡು ಇತರರಿಗೂ ಉಣಿಸುತ್ತಿರುವ ವಿಷಕ್ಕೆ ಮುಂದೊಂದು ದಿನ ತಾನು ತನ್ನವರ ಜೊತೆಗೆ ಬಲಿಯಾಗುತ್ತಿರುವ ಸತ್ಯ ಕೆಲವರಿಗಾದರೂ ಗೋಚರಿಸಿ, ರಾಸಾಯನಿಕದಿಂದ ದೂರವಾಗಿ ಬೆಳೆ ಬೆಳೆದು ತೋರಿಸುತ್ತಿದ್ದಾರೆ. +ಅಂತಹ ಭೂಮಿ ತಾಯಿಯ ಸಂಕಟವನ್ನು ಮೀರಿಸಿದವನು ರೈತ. +ಈ ತೋಟದ ಪುರುಷೋತ್ತಮರಾಯರು ರೈತರಲ್ಲಿ ರೈತರು. +ಕೃಷಿಯನ್ನು ಕಾಯಕವಾಗಿ ಮಾತ್ರವಲ್ಲ, ಪ್ರಯೋಗ ಧೀರತೆಯ ಮೂಲಕ ಕಲೆಯನ್ನಾಗಿ ಮಾಡಿದವರು. +ಕ್ಕಷಿ ವ್ಯವಸಾಯದ ನೆಲದಲ್ಲಿ ಅಪಚಾರವಾಗದಂತೆ ನಡೆದುಕೊಂಡವರು. +ಹೊಲ, ಜಲ, ದೈವಕೃಪೆ, ಪರಿಶ್ರಮ ಎಲ್ಲ ಕೃಷಿಗೂ ಬೇಕು. +ಹೊಸ ಬೆಳೆ, ಹೊಸ ರುಚಿ ಎಂದು ನಾವೇ ನಿರ್ಮಿಸಿಕೊಂಡ ಸಂಕಟದಿಂದ ನಾವು ದೂರಾಗಬೇಕು ಎಂದು ಕರೆ ನೀಡಿದಾಗ ಅದು ಇಳಾಳ ಮನದಾಳಕ್ಕೆ ಇಳಿದಿತ್ತು. +‘ಇದ್ದ ಎರಡು ದಿನಗಳೂ ಅಲ್ಲಿನ ತೋಟ ಸುತ್ತಿದ್ದಳು. +ಸುಮಾರು ೨೦ ಎಕರೆಯ ತೋಟ, ಕಾಫಿ, ಅಡಿಕೆ, ತೆಂಗು, ಮೆಣಸು, ಏಲಕ್ಕಿ, ಜಾಯಿಕಾಯಿ, ಕಿತ್ತಲೆ, ಗೋಡಂಬಿ, ಮಾವು, ನಿಂಬೆ, ಹೇರಳೆ, ಹಲಸು, ಒಂದೇ… ಎರಡೇ… ಅದೆಷ್ಟು ರೀತಿಯ ವೈವಿಧ್ಯಮಯ ಬೆಳೆಗಳ ಸಮ್ಮಿಶ್ರ ತೋಟ. +ಯಾವ ರೀತಿಯ ಬೆಳೆ ಅಲ್ಲಿ ಇಲ್ಲ ಎಂದು ಹುಡುಕಬೇಕಿತ್ತು! +ಅಲ್ಲಿಯೇ ಒಂದೆಡೆ ಎರೆಹುಳು ಗೊಬ್ಬರ ತಯಾರಿಸುವ ಘಟಕ, ತೋಟಕ್ಕೆ ಬೇಕಾದ ಸಗಣಿ ಗೊಬ್ಬರಕ್ಕಾಗಿ ಸಾಕಿರುವ ದನ ಕರುಗಳು, ಅವುಗಳಿಂದ ಹೈನುಗಾರಿಕೆಯ ಅಭಿವೃದ್ಧಿಯ ಪುಟ್ಟ ಡೈರಿಯೇ ಅಲ್ಲಿರುವಂತೆ ಅನ್ನಿಸಿತ್ತು. +ಸಾವಯುವ ಕೃಷಿಯಿಂದ ಬೆಳೆದ ಭತ್ತದ ಅಕ್ಕಿಯ ಊಟ, ಹಾಲು, ತುಪ್ಪ, ಮೊಸರು ವಾಹ್! +ಎರಡು ದಿನಗಳ ಊಟ, ತಿಂಡಿ, ಅಮೃತಕ್ಕೆ ಸಮವಾಗಿತ್ತು. +ಕಾಫಿಯ ಬದಲು ನೀಡುತ್ತಿದ್ದ ಕಷಾಯ ಎಂಬ ಪಾನೀಯ ಅತ್ಯಂತ ರುಚಿಕಟ್ಟಾಗಿದ್ದು, ಅದನ್ನು ತಯಾರಿಸುವ ವಿಧಾನವನ್ನೆಲ್ಲ ಅಲ್ಲಿ ಕೇಳಿ ತಿಳಿದುಕೊಂಡಿದ್ದಳು. +ಅಲ್ಲಿಂದ ಬರುವಾಗ ಪುರುಷೋತ್ತಮರ ಪತ್ನಿ ಎಲ್ಲಾ ಹೆಣ್ಣುಮಕ್ಕಳಿಗೂ ತೆಂಗಿನಕಾಯಿಯ ಜೊತೆಗೆ ಬೌಸ್‌ಪೀಸ್, ಮಡಿಲಕ್ಕಿ ಎಲ್ಲಾ ಇಟ್ಟು ಮನೆ ಮಗಳನ್ನು ಕಳುಹಿಸಿ ಕೊಡುವಂತೆ ನೀಡಿದಾಗ ಇಳಾ ಭಾವುಕಳಾಗಿದ್ದಳು. +ಎಂತಹ ಸಂಸ್ಕೃತಿ, ಎಂತಹ ಸಹೃದಯತೆ ಎನಿಸಿತ್ತು. +ಇಂತಹ ಕಾರ್ಯಕ್ರಮಗಳು ಇಲ್ಲಿ ಪದೇ ಪದೇ ನಡೆಯುತ್ತಿದ್ದು ಬಂದವರಿಗೆಲ್ಲ ವಸತಿ, ಊಟ ಮುಂತಾದ ಎಲ್ಲಾ ಸೌಕರ್ಯವನ್ನು ಉದಾರವಾಗಿ ನೀಡಿ ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆಸುತ್ತಿದ್ದರು. +ಆ ಎರಡೂ ದಿನಗಳು ಎಲ್ಲವನ್ನು ಮರೆತು ಅಲ್ಲಿಯೇ ಲೀನವಾಗಿದ್ದಳು ಇಳಾ. +ಈಗ ಅಂತಹುದೇ ಪ್ರಯೋಗ ತಾನೇಕೆ ಮಾಡಬಾರದು. +ಹೊಡೆದಾಡಿ, ಬಡಿದಾಡಿ, ಪ್ರಾಣ ಕಳೆದುಕೊಂಡು ಆ ರಾಸಾಯನಿಕ ಗೊಬ್ಬರವೆಂಬ ವಿಷವನ್ನೇಕೆ ತರಬೇಕು. +ತಂದು ಭೂಮಿತಾಯಿಗೇಕೆ ಸಂಕಟ ತೊಂದೊಡ್ಡಬೇಕು. +ಭೂ ತಾಯಿಗೂ ವಿಷ ಉಣಿಸಿ, ತಾವು ಕೂಡ ವಿಷ ಉಣ್ಣುವ ವಿಷಮ ಪರಿಸ್ಥಿತಿಯಿಂದೇಕೆ ಹೊರಬರಬಾರದು ಎಂದು ಆಲೋಚಿಸತೊಡಗಿ, ಅದನ್ನು ಕೃತಿಗಿಳಿಸುವ ನಿಟ್ಟಿನಲ್ಲಿ ಕಾರ್ಯೋನ್ನುಖಳಾಗುವ ನಿಲುವು ತಾಳಿದಳು. +ಮೊದಲು ನೀಲಾಳೊಂದಿಗೆ ಈ ಕುರಿತು ಚರ್ಚಿಸಿದಳು. +ನೀಲಾ ತನಗೆ ಅದೊಂದೂ ಗೊತ್ತಾಗುವುದಿಲ್ಲ. +ನಿಂಗೆ ಹ್ಯಾಗೆ ಬೇಕೊ ಹಾಗೆ ಮಾಡು ಎಂದು ಅವಳಿಗೆ ಹೆಚ್ಚಿನ ಸ್ವತಂತ್ರ ಕೊಟ್ಟುಬಿಟ್ಟಳು. +ಅವಳೀಗ ಶಾಲೆಯಲ್ಲಿ ಸಂಪೂರ್ಣ ಮಗ್ನಳಾಗಿ ಬಿಟ್ಟಿದ್ದಾಳೆ. +ಪುಟ್ಟ ಮಕ್ಕಳೊಂದಿಗಿನ ಒಡನಾಟ ತನ್ನೆಲ್ಲ ನೋವನ್ನು ಮರೆಸಿ ಹೊಸ ಲೋಕಕ್ಕೆ ಕರೆದೊಯ್ಯುತ್ತಿದೆ. +ಶಾಲೆಗಾಗಿ, ಶಾಲಾಮಕ್ಕಳ ಸಲುವಾಗಿ ತನ್ನೆಲ್ಲ ಸಮಯವನ್ನು ಮೀಸಲಾಗಿಟ್ಟು ಬಿಟ್ಟಿದ್ದಾಳೆ. +ಅಮ್ಮನಿಂದ ವಿರೋಧವಿಲ್ಲವೆಂದು ಗೊತ್ತಾದ ಕೂಡಲೇ ತನ್ನ ಕೆಲಸ ಸುಲಭವಾಯಿತೆಂದು ಕಾರ್ಯೋನ್ಮುಖಳಾದಳು. +ಮೊದಲು ಹಸುವಿನ ಗೊಬ್ಬರ ಮತ್ತು ಗಂಜಲಕ್ಕಾಗಿ, ಪಶುಸಂಗೋಪನೆ ಕೈಗೊಳ್ಳಲು ಮನೆಯಲ್ಲಿರುವ ಹಸುಗಳ ಜೊತೆಗೆ ಮತ್ತೊಂದಷ್ಟು ಹಸು, ಎಮ್ಮೆಗಳನ್ನು ಕೊಂಡುಕೊಳ್ಳಲು ಸಿದ್ದಳಾದಳು. +ತಮ್ಮೂರ ಸಮೀಪವೇ ಕೃಷ್ಟಕುಮಾರ್ ಎಂಬುವರು ಹಸುಗಳನ್ನು ಸಾಕಿ ಅದರ ಬಹೂಪಯೋಗಿ ಪದಾರ್ಥಗಳಿಂದ ಅನುಕೂಲ ಪಡೆಯುತ್ತಿದ್ದಾರೆ ಎಂದು ತಿಳಿದು ಅವರನ್ನು ಹುಡುಕಿಕೊಂಡು ಹೊರಟಳು. +ಈಗಾಗಲೇ ಸಾಕಷ್ಟು ಹಸುಗಳನ್ನು ಸಾಕಿರುವವರು ಇಳಾಳನ್ನು ಸಂಭ್ರಮದಿಂದಲೇ ಬರಮಾಡಿಕೊಂಡರು. +ಇಳಾಳ ಕಥೆ ಕೇಳಿ ವ್ಯಥಿತರಾದ ಕೃಷ್ಣಕುಮಾರ್, ತಮ್ಮ ಮೆಲು ಮಾತುಗಳಿಂದ ಸಮಾಧಾನಿಸಿದರು. +ಕೃಷಿಯಲ್ಲಿ ಆಸಕ್ತಿ ತಳೆದು, ತನ್ನ ಡಾಕ್ಷರ್ ಕನಸನ್ನ ಮರೆತು, ಈ ಪುಟ್ಟ ವಯಸ್ಸಿನಲ್ಲಿ ಕೃಷಿಯಲ್ಲಿ ಏನಾದರೂ ಹೊಸತನ್ನು ಮಾಡಲು ಹೊರಟಿರುವ ಇಳಾಳ ಮನೋಧಾರ್ಢ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. +ಹಸುಗಳಿಂದ ಹೇಗೆ ಕೃಷಿಗೆ ಅನುಕೂಲವಾಗುವಂತೆ ದುಡಿಸಿಕೊಳ್ಳಬಹುದೆಂದು ಬಿಡಿಸಿ ಬಿಡಿಸಿ ಹೇಳಿದರು. +“ಎಂತಹ ಹಸುಗಳನ್ನು ಸಾಕಬೇಕು. +ವಿದೇಶಿ ಹಸುಗಳಾದ ಸಿಂಧಿ ಹಸು, ಮಿಶ್ರತಳಿಯ ಹಸುಗಳನ್ನು ಸಾಕುವುದರಿಂದ ಹಾಲು ಉತ್ಪಾದನೆ ಹೆಚ್ಚು ಇರುತ್ತದೆ ಅಲ್ಲವೇ” ಎಂದು ಇಳಾ ತನ್ನ ಅಭಿಪ್ರಾಯವನ್ನು ತೆರೆದಿಟ್ಟಳು. +“ಜನಸಾಮಾನ್ಯರ ಸಾಮಾನ್ಯ ತಿಳುವಳಿಕೆ ಅದು. +ಒಂದು ರೀತಿಯ ತಪ್ಪು ತಿಳುವಳಿಕೆ ಕೂಡ. +ದೇಶಿ ತಳಿಯ ಹಸುಗಳನ್ನು ಸಾಕುವುದು ಸುಲಭ. +ಈ ಹಸುಗಳಿಗೆ ರೋಗ ರುಜಿನಗಳು ಕಡಿಮೆ. +ಕೃಷಿ ಉಳಿಯಬೇಕೆಂದರೆ ದೇಶಿ ತಳಿಯ ಹಸುಗಳನ್ನು ಉಳಿಸಿ ಬೆಳೆಸುವುದೇ ನನ್ನ ಧ್ಯೇಯ” ಎಂದರು. +ಕೊಟ್ಟಿಗೆಗೆ ಕರೆದುಕೊಂಡು ಹೋಗಿ ಇಳಾಳಿಗೆ ಇವಳು ಭಾರತಿ, ಅವಳು ಪಾರ್ವತಿ, ಅಲ್ಲಿದ್ದಾನಲ್ಲ ಅವನು ಅಭಿರಾಮ ಎಂದು ಪರಿಚಯಿಸಿದರು. +ಅವರು ಹೆಸರು ಹೇಳಿದಾಗ ಹಸು ಕರುಗಳು ಅವರತ್ತ ನೋಡಿ ಕಿವಿ ನಿಮಿರಿಸಿ ಪ್ರತಿಕ್ರಿಯೆ ತೋರಿದ್ದನ್ನು ನೋಡಿ ಇಳಾಳಿಗೆ ಸಂಭ್ರಮವೆನಿಸಿತು. +ಈ ಹಸುಗಳು ಹೇಗೆ ತಮ್ಮ ಯಜಮಾನನ್ನು ಗುರುತಿಸುತ್ತವೆ. +ಅವರು ಕೂಗಿದ್ದು ತನ್ನನ್ನೆ ಎಂದು ಅದು ಹೇಗೆ ಕಿವಿ ನಿಮಿರಿಸಿ ಪ್ರತಿಕ್ರಿಯೆ ತೋರುತ್ತದೆ ಎನಿಸಿ ಮುದಗೊಂಡಳು. +ಪ್ರಾಣಿಗಳಿಗೆ ಒಂದಿಷ್ಟು ಪ್ರೀತಿ ತೋರಿದರೆ ಅವು ಅದರ ಎರಡರಷ್ಟು ಪ್ರೀತಿ ಹಿಂತಿರುಗಿಸುತ್ತವೆ ಎಂಬುದು ಇಲ್ಲಿ ನೋಡಿ ಅರ್ಥವಾಯಿತು. +ಅದರ ಕೊಟ್ಟಿಗೆಯಲ್ಲಿ ಕಾಂಕ್ರೇಜ್, ದೇವಣಿ, ಮಲೆನಾಡ ಗಿಡ್ಡ ತಳಿ ಸೇರಿದಂತೆ ಹದಿನೇಳು ದೇಶಿ ತಳಿಗಳಿರುವುದಾಗಿ ತಿಳಿಸಿದರು. +ಈ ದೇಶಿ ತಳಿಗಳನ್ನು ಉಳಿಸಿ ಬೆಳೆಸಬೇಕೆಂದು ತಮ್ಮಲ್ಲಿದ್ದ ಮಿತ್ರತಳಿಯ ಹಸುಗಳನ್ನೆಲ್ಲ ಮಾರಾಟ ಮಾಡಿದ್ದರು. +ತಮ್ಮಲ್ಲಿರುವ ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡಿಸಲು ತಮಗೆ ಇಷ್ಟವಿಲ್ಲವೆಂದು ತಿಳಿಸಿ, ಆಯಾ ತಳಿಯ ಹಸುಗಳಿಗೆ ಅದೇ ತಳಿಯ ಹೋರಿಗಳಿಂದ ಸಹಜ ಗರ್ಭಧಾರಣೆ ಮಾಡಿಸುತ್ತ ತಳಿಶುದ್ದತೆ ಕಾಪಾಡಿಕೊಂಡು ಬರುತ್ತಿರುವುದಾಗಿ ಹೇಳಿದರು. +ಕೊಟ್ಟಿಗೆಯ ಸಗಣಿಯನ್ನು ಬಳಸಿಕೊಂಡು ಗೋಬರ್ಗ್ಯಾಸ್ ತಯಾರಿಸಿ ಬಳಸುವುದನ್ನು ನೋಡಿದಳು. +ದೇಶಿ ಹಸುಗಳ ಸಗಣಿಯಿಂದ ಗುಣಮಟ್ಟದ ಗ್ಯಾಸ್ ಉತ್ಪಾದನೆಯಾಗುತ್ತದೆ ಎಂಬುದು ಕೃಷ್ಣಕುಮಾರ್ ಅನಿಸಿಕೆ. +ಗೋಬರ್‌ಗ್ಯಾಸ್ ಸ್ಲಯರಿಯನ್ನು ಅವರು ತಮ್ಮ ತೋಟಕ್ಕೆ ಬಳಸುತ್ತಾರೆ. +ಇದನ್ನು ಬಿಟ್ಟರೆ ಬೇರೆ ಗೊಬ್ಬರ ಬಳಸುವುದಿಲ್ಲ ಎಂದರು. +ಕೊಟ್ಟಿಗೆ ಗೊಬ್ಬರದಿಂದ ಇಡೀ ತೋಟ ನಳನಳಿಸುತ್ತಿರುವುದನ್ನು ಇಳಾ ಕಣ್ಣಾರೆ ಕಂಡಳು. +ತರಕಾರಿ ಬೆಳೆಸಲು ಕೂಡ ಇದೇ ಸ್ಲರಿಯನ್ನು ಮತ್ತು ಗಂಜಲನ್ನು ಬಳಸುತ್ತೇವೆ ಎಂದಾಗ ನಿಜಕ್ಕೂ ಆಶ್ಚರ್ಯವಾಗಿತ್ತು. +ತರಕಾರಿಗಳಿಂದ ಗಿಡಗಳು ಜಗ್ಗುತ್ತಿದ್ದವು. +ಕೀಟನಾಶಕವಿಲ್ಲ, ರಾಸಾಯನಿಕ ಗೊಬ್ಬರವಿಲ್ಲ-ಆದರೂ ಇಳುವರಿ ತುಂಬಿತುಳುಕುತ್ತಿತ್ತು. +ಕಾಂಕ್ರೇಜ್ ತಳಿ ಹಸುಗಳಿಂದ ಒಂದೊಂದು ಹಸು ದಿನಕ್ಕೆ ಐದಾರು ಲೀಟರ್ ಹಾಲು ಕೊಡುತ್ತದೆ. +ಹಾಲು ಗಟ್ಟಿಯಾಗಿದ್ದು, ಅತ್ಯಂತ ರುಚಿ ಮತ್ತು ಪೌಷ್ಟಿಕಾಂಶಗಳಿಂದ ಕೂಡಿರುತ್ತದೆ. +ಯಾವುದೇ ಸಿಂಧು ಹಸುವಿನ ಹಾಲು ಈ ಹಾಲಿಗೆ ಸಾಟಿ ಇಲ್ಲ ಎಂದು ತಿಳಿಸಿದರು. +ಮುಂಚೆ ಮಿಶ್ರ ತಳಿ ಹಸುಗಳನ್ನು ಸಾಕುತ್ತಿದ್ದಾಗ ವಾರಕೊಮ್ಮೆ ಪಶುವೈದ್ಯರ ಅಗತ್ಯ ಬೇಕೇಬೇಕಿತ್ತು. +ಆದರೆ ಈಗ ವೈದ್ಯರ ಮುಖವನ್ನೆ ನೋಡುವಂತಿಲ್ಲ. +ಎಲ್ಲಾ ಹಸುಗಳು ಆರೋಗ್ಯದಿಂದಿವೆ. +ಈ ಹಸುಗಳ ಮೇವಿಗಾಗಿ ಹೈಬ್ರಿಡ್ ಹುಲ್ಲು ಬೆಳೆಯುತ್ತೇವೆ. +ಸಣ್ಣ ಕರುಗಳನ್ನು ಕಟ್ಟಿಹಾಕದೆ ಸುತ್ತಾಡಿ ಬರಲು ಬಿಡುತ್ತೇವೆ. +ಅವುಗಳು ತಮ್ಮ ಮಕ್ಕಳಿಗಿಂತ ಹೆಚ್ಚು ಎಂದು ಪ್ರೀತಿಯಿಂದ ಅವುಗಳ ಮೈದಡವಿ ಹೇಳಿದರು. +‘ನೋಡಮ್ಮಾ ಇಳಾ, ಕೃಷಿ ಹಾಗೂ ಹೈನುಗಾರಿಕೆ ಒಂದಕ್ಕೊಂದು ಪೂರಕ. +ಬೇಸಾಯ ಲಾಭದಾಯಕವಾಗಿರಲು ಸಾವಯವ ಗೊಬ್ಬರಬೇಕು. +ಗೊಬ್ಬರ ಬೇಕೆಂದರೆ ರೈತರ ಬಳಿ ದನ ಕರುಗಳಿರಬೇಕು. +ಇತ್ತೀಚಿನ ದಿನಗಳಲ್ಲಿ ಇಲ್ಲಿ ದನಕರುಗಳಿಲ್ಲದೆ ಬೇಸಾಯ ಮಾಡುವ ರೈತರು ಇದ್ದಾರೆ. +ಬರೀ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿ ಬೇಸಾಯ ಮಾಡಲು ಸಾಧ್ಯವಿಲ್ಲ ಎಂಬುದು ಈಗೀಗ ರೈತರ ಗಮನಕ್ಕೆ ಬರುತ್ತಿರುವುದು ಸ್ವಾಗತಾರ್ಹ’ ಎಂದರು ಕೃಷ್ಣಕುಮಾರ್. +ಕೃಷ್ಣಕುಮಾರ್ ಭೇಟಿಯ ನಂತರ ಬಹಳಷ್ಟು ವಿಚಾರಗಳು ಇಳಾಗೆ ತಿಳಿದು ಬಂದವು. +ತಾನು ಇವರನ್ನು ಭೇಟಿಯಾಗದಿದ್ದಲ್ಲಿ ಹೆಚ್ಚು ಹಾಲು ಕೊಡುತ್ತದೆ ಎಂಬ ತನ್ನ ಸಾಮಾನ್ಯ ತಿಳುವಳಿಕೆಯಿಂದ ಸಿಂಧು ಹಸುಗಳನ್ನು ಕೊಂಡುಬಿಡುತ್ತಿದ್ದೆ. +ಮೊದಲೇ ಇವರನ್ನು ಭೇಟಿಯಾದದ್ದು ಒಳ್ಳೆಯದಾಯಿತು ಎಂದುಕೊಂಡಳು ಇಳಾ. +ಮಧ್ಯಾಹ್ನ ಕೃಷ್ಣಕುಮಾರ್‌ರವರ ಪತ್ನಿ ವಿಶೇಷ ಅಡುಗೆ ಮಾಡಿ ಬಡಿಸಿದರು. +ತಮ್ಮ ಬಂಧುಗಳೇನೋ ಎಂಬಂತೆ ಪ್ರೀತಿ ಆದರದಿಂದ ನೋಡಿಕೊಂಡು ಬಲವಂತವಾಗಿ ಬಡಿಸಿ ಹಾಲು ಮೊಸರಿನ ಹೊಳೆಯೇ ಹರಿಸಿದಾಗ ಕೃತಜ್ಞತೆಯಿಂದ ಮೂಕಳಾದಳು ಇಳಾ. +ಇಂತಹ ಪ್ರೀತಿ ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಎನಿಸಿತು. +ತುಂಬು ಹೃದಯದಿಂದ ತಮ್ಮಲ್ಲಿಗೂ ಒಮ್ಮೆ ಬರಲು ತಿಳಿಸಿ ಅವರಿಂದ ಬೀಳ್ಕೊಟ್ಟಳು. +ಮನೆಗೆ ಬಂದೊಡನೆ ಅಜ್ಜಿಯೊಂದಿಗೆ, ನೀಲಾಳೊಂದಿಗೆ ಕೃಷ್ಣಕುಮಾರ್ ಬಗ್ಗೆ ಹೇಳಿದ್ದೆ ಹೇಳಿದ್ದು. +ಇಂಜಿನಿಯರ್ ಆಗಿರುವ ಕೃಷ್ಣಕುಮಾರ್ ನಗರದ ಆಮಿಷಗಳಿಗೆ ಒಳಗಾಗದೆ ಅಷ್ಟೊಂದು ಓದಿದ್ದರೂ ಹಳ್ಳಿಯಲ್ಲಿಯೇ ನೆಲಸಿ ಸಾಂಪ್ರದಾಯಿಕ ರೀತಿಗಳಿಂದ ವ್ಯವಸಾಯ ಮಾಡಿ ತೋಟವನ್ನು ಅದೆಷ್ಟು ಸೊಗಸಾಗಿ ಕಾಪಾಡಿಕೊಂಡಿದ್ದಾರೆ. +ಹಸುಕರುಗಳನ್ನಂತೂ ಮಕ್ಕಳಂತೆ ಸಾಕುತ್ತಿದ್ದಾರೆ. +ಇಂತಹವರಿಂದ ತನ್ನಂಥಹವರು ಕಲಿಯುವುದು ಸಾಕಷ್ಟಿದೆ ಎಂದು ಮನದುಂಬಿ ಹೇಳಿಕೊಂಡಳು. +ಕೃ‍ಷ್ಣಕುಮಾರ್‌ರವರು ತೋಟದಲ್ಲಿ ತನ್ನ ಮೇಲೆ ಪ್ರಭಾವಿಸಿದ್ದನ್ನು ತಮ್ಮ ತೋಟದಲ್ಲಿಯೂ ಜಾರಿಗೆ ತರಲು ಮನಸ್ಸು ಮಾಡಿದಳು. +ಈಗಿರುವ ಹಸುಗಳ ಜೊತೆಗೆ ಮತ್ತೊಂದಷ್ಟು ಹಸುಗಳನ್ನು ಖರೀದಿಸಲು ದೊಡ್ಡಪ್ಪನ ಸಹಾಯ ಪಡೆದಳು. +ಸುಂದರೇಶ್ ಅಂತೂ ಇದೆಲ್ಲ ಏನಪ್ಪ ರಗಳೆ. +ಇರುವ ಹಸುಗಳ್ನು ಸಾಕಲಾರದೆ ಎಲ್ಲರೂ ಮಾರುತ್ತಿದ್ದಾರೆ. +ನಿಂಗ್ಯಾಕೆ ಅಷ್ಟೊಂದು ಹಸುಗಳು. +ಏನೇನೋ ಮಾಡಿ ದುಡ್ಡು ಹಾಳು ಮಾಡುವ ಯೋಚನೆಯಲ್ಲಿದ್ದೀಯಾ? +ಮೊದಲೇ ಸಾಲ ಇನ್ನೂ ತೀರಿಲ್ಲ. +ಹುಡುಗು ಬುದ್ಧಿ. +ನಿನಗೇನು ಗೊತ್ತಾಗುತ್ತೆ. +ಇರುವ ದುಡ್ಡು ಹುಡಿ ಮಾಡಿಬಿಟ್ಟರೆ ನಾಳೆ ನಿನ್ನ ಓದು, ಮದುವೆಗೆ ಏನು ಮಾಡಬೇಕು. +ಹೇಗೋ ಇನ್ನೊಂದು ವರುಶ ಸುಮ್ನೆ ಕಾಲ ತಳ್ಳಿಬಿಡು. +ಮುಂದಿನ ವರ್ಷ ಕಾಲೇಜಿಗೆ ಸೇರಿ ಡಿಗ್ರಿ ಮಾಡುವಿಯಂತೆ. +ಬೇಸರ ಎನಿಸಿದರೆ ಅಲ್ಲಿವರೆಗೂ ಸ್ಕೂಲ್ಗೆ ಹೋಗಿ ಆ ಮಕ್ಕಳಿಗೇನಾದರೂ ಕಲಿಸು’- ಅಂತ ಶುರುಮಾಡಿಬಿಟ್ಟರು. +ಅವರ ಉಪದೇಶ ಕೇಳಲಾರದೆ ‘ದೊಡ್ಡಪ್ಪ ನಾನು ಕಾಲೇಜಿಗೆ ಹೋಗುವುದಿಲ್ಲ, ಶಾಲೆಗೂ ಹೋಗುವುದಿಲ್ಲ. +ನಾನು ತೋಟ ನೋಡಿಕೊಳ್ಳುತ್ತೇನೆ. +ಇದು ನನ್ನ ಧೃಡ ನಿರ್ಧಾರ. +ಯಾರು ಏನು ಹೇಳಿದರೂ ಈ ನಿರ್ಧಾರಾನ ಬದಲಿಸಲಾರೆ. +ಮೊದಲು ನಂಗೆ ನಾನು ಹೇಳಿದ ಹಸುಗಳನ್ನು ತಂದು ಕೊಡಿ’ ಕೊಂಚ ನಿಷ್ಠೂರವಾಗಿಯೇ ಇಳಾ ಹೇಳಿಬಿಟ್ಟಾಗ, ಸುಂದರೇಶ್ ದಿಗ್ಮೂಢರಾಗಿ ನಿಂತುಬಿಟ್ಟರು. +ತಮ್ಮ ಕಣ್ಮುಂದೆ ಬೆಳೆದ, ಇನ್ನೂ ಮಗುವಿನಂತೆಯೇ ತಮಗೆ ಕಾಣುತ್ತಿರುವ ಇಳಾ ಇಷ್ಟೊಂದು ನಿರ್ಧಾರಿತಳಾಗಿ ಮಾತನಾಡಬಲ್ಲಳೇ. +ತಮ್ಮ ಮಾತನ್ನು ಕೇಳುವ ಮಟ್ಟದಲ್ಲಿ ಈ ಹುಡುಗಿ ಇಲ್ಲ. +ಏನಾದರೂ ಮಾಡಿಕೊಳ್ಳಲಿ. +ಮೊದಲೇ ಅಪ್ಪನನ್ನು ಕಳೆದುಕೊಂಡು ನೊಂದಿರುವ ಮಗುವನ್ನು ನೋಯಿಸುವುದು ಬೇಡವೆಂದು ನಿರ್ಧರಿಸಿ, ‘ಸರೀನಮ್ಮ ಏನಾದ್ರೂ ಮಾಡಿಕೊ, ನನ್ನ ಮಾತು ನೀನೆಲ್ಲಿ ಕೇಳ್ತಿ ನಿಂಗಿಷ್ಟ ಬಂದ ಹಾಗೆ ನೀನಿರು, ಹಸುಗಳನ್ನು ಕೊಡಿಸೊ ಏರ್ಪಾಟು ಮಾಡುತ್ತೇನೆ’ ಎಂದು ಮುನಿಸಿನಿಂದಲೇ ಹೊರಟುಬಿಟ್ಟರು. +ಅವರ ಮುನಿಸಿನಿಂದೇನು ಇಳಾ ಧೃತಿಗೆಡಲಿಲ್ಲ. +ದೊಡ್ಡಪ್ಪ ಹಾಗೆ ಮಾತನಾಡುವುದು ಸಹಜ. +ಕಷ್ಟಪಡುವುದು ಬೇಡ ಎಂಬ ಭಾವನೆ ಪಾಪ ದೊಡ್ಡಪ್ಪನದು. +ಇದೇ ದೊಡ್ಡಪ್ಪ ಮುಂದೊಂದು ದಿನ ‘ನಾನು ಏನೋ ತಿಳಿದುಕೊಂಡಿದ್ದ ತಮ್ಮನ ಮಗಳ ಬಗ್ಗೆ. +ಎಲ್ಲರೂ ಹೆಮ್ಮೆಪಡುವ ರೀತಿಯಲ್ಲಿ ಸಾಧನೆ ಮಾಡಿ ತೋರಿದ್ದಾಳೆ’ ಎಂದು ಹೇಳಿಕೊಳ್ಳುವ ದಿನ ಬಂದೇ ಬರುತ್ತದೆ. +ಹಾಗೆ ಬಂದೇ ಬರಿಸುತ್ತೇನೆ ಎಂದು ದೊಡ್ಡಪ್ಪನ ಮುನಿಸನ್ನು ಮನ್ನಿಸಿಬಿಟ್ಟಳು. +ತೋಟಕ್ಕೆ ಹಾಕಲು ಎರೆ ಹುಳು ಗೊಬ್ಬರ ತಯಾರಿಸಲು ತೋಟದ ಮೂಲೆಯೊಂದರಲ್ಲಿ ಸಿದ್ದಪಡಿಸುವ ವ್ಯವಸ್ಥೆ ಮಾಡಿದಳು. +ತೊಟ್ಟಿಗಳನ್ನು ಕಟ್ಟಿಸಿ, ತೋಟದ ಎಲೆಗಳು ಕಸಕಡ್ಡಿಗಳೊಂದಿಗೆ ಮಣ್ಣು ತುಂಬಿ ಎರೆಹುಳುಗಳನ್ನು ಕೊಂಡು ತಂದು ಅದರಲ್ಲಿ ಬಿಟ್ಟಳು. +ಇವಳ ಎಲ್ಲಾ ಚಟುವಟಿಕೆಗಳನ್ನು ತೋಟದ ಆಳುಗಳು ಬೆರಗುಗಣ್ಣಿನಿಂದ ನೋಡುತ್ತ, ಈ ಪುಟ್ಟ ಹುಡುಗಿ ಅದೇನು ಮಾಡುತ್ತಾಳೋ ಎಂಬ ಕುತೂಹಲ ತೋರುತ್ತ ಅವಳು ಹೇಳುವ ಎಲ್ಲಾ ಕೆಲಸಗಳನ್ನು ಆಸ್ಥೆಯಿಂದಲೇ ಮಾಡುತ್ತ ಬಂದರು. +ಈಗ ಕೊಟ್ಟಿಗೆಗೆ ಹೊಸ ಹಸುಗಳು ಬಂದು ಸೇರಿದ್ದವು. +ಹಸುಗಳನ್ನು ನೋಡಿಕೂಂಡು ಹಾಲು ಕರೆದು ಅವುಗಳ ಆರೈಕೆ ಮಾಡಲೆಂದೇ ಒಂದು ಆಳನ್ನು ಗೊತ್ತುಪಡಿಸಲಾಯಿತು. +ಡೈರಿಯ ವ್ಯಾನು ಇವರ ತೋಟದ ಮುಂದೆಯೇ ಹಾದುಹೋಗುತ್ತಿದ್ದು, ಮನೆಗೆ ಉಳಿದು ಹೆಚ್ಚಾದ ಹಾಲನ್ನು ಆ ವ್ಯಾನಿಗೆ ಹಾಕಲು ಏರ್ಪಾಡು ಮಾಡಿದಳು. +ಹಾಲಿನಿಂದಲೂ ವರಮಾನ ಬರಲು ಆರಂಭಿಸಿತ್ತು. +ತೋಟಕ್ಕಾಗಿ ಹೊರಗಿನಿಂದ ಗೊಬ್ಬರ ತರುವುದನ್ನು ನಿಲ್ಲಿಸಿದಳು. +ಕೀಟನಾಶಕಗಳನ್ನು ನಿಪೇಧಿಸಿದಳು. +ಗಂಜಲದಿಂದ ಜೀವಾಮೃತವನ್ನು ತಯಾರಿಸುವುದನ್ನು ಕಲಿತು ಅದೇ ಜಲವನ್ನು ಗಿಡಗಳಿಗೆ ಸಿಂಪಡಿಸಿ ಕೀಟ, ರೋಗ ರುಜಿನಗಳಿಂದ ಹತೋಟಿಗೆ ತರಲು ಪ್ರಯತ್ನಿಸಿದಳು. +ತೋಟದಲ್ಲಿ ಕಾಫಿ ಗಿಡದ ಜೊತೆಗೆ ಮತ್ತೇನು ಮಿಶ್ರ ಬೆಳೆ ಬೆಳೆಯಬಹುದು ಎಂದು ಆಲೋಚಿಸಿ ಪ್ರಗತಿಪರ ರೈತರ ತೋಟ ಸುತ್ತಿ ಬಂದಳು. +ಅವರು ತಮ್ಮ ತೋಟದಲ್ಲಿ ಬೆಳೆದು ಲಾಭ ಗಳಿಸುತ್ತಿದ್ದ ಏಲಕ್ಕಿ, ಕಾಳುಮೆಣಸು, ಅರಿಶಿಣ, ಕೋಕಂ ಅನ್ನು ತಾನು ತಮ್ಮ ತೋಟದಲ್ಲಿ ಬೆಳೆಯಬಹುದು. +ಅದರಿಂದ ಪ್ರತ್ಯೇಕ ಆದಾಯ ಪಡೆಯಬಹುದೆಂದು ಮನಗಂಡಳು. +ಕೂಡಲೇ ಕೃಷಿ ಬೆಳೆಯಿಂದ ಏಲಕ್ಕಿ- ಕಾಳುಮೆಣಸು, ಅರಿಶಿಣ, ಕೋಕಂ ಸಸಿಗಳನ್ನು ತಂದು ತೋಟದಲ್ಲಿ ಬೆಳೆಯುವ ಏರ್ಪಾಡು ಮಾಡಿದಳು. +ಪತ್ರಿಕೆಯಲ್ಲಿ ಬೇಸಾಯದ ಜತೆಗೆ ವ್ಯಾಪಾರ ಎಂಬ ಬರಹ ಕಣ್ಸೆಳೆಯಿತು. +ಕೃಷಿಕನೊಬ್ಬ ತಾನು ಬೆಳೆದ ಪದಾರ್ಥಗಳನ್ನು ಮಾರಿ ಲಾಭ ಗಳಿಸುತ್ತಿದ್ದಾನೆ. +ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬ ನಾಣ್ನುಡಿಯನ್ನು ನಿಜ ಮಾಡಿದ್ದಾರೆ. +ದಿನಬಳಕೆಯ ಪದಾರ್ಥಗಳೇ ಉದ್ಯೋಗವನ್ನೂ ಸೃಷ್ಟಿ ಮಾಡಿಕೊಡುವ ಸಂಪನ್ಮೂಲಗಳಾಗುತ್ತಿವೆ. +ತಮ್ಮ ಹಿತ್ತಲಲ್ಲಿ ಬೆಳೆಯುತ್ತಿರುವ, ತಮ್ಮ ತೋಟದಲ್ಲಿ ಬೆಳೆದ ಏಲಕ್ಕಿ, ಕಾಳುಮೆಣಸು, ಶುಂಠಿ, ಅರಿಶಿಣ, ಕೋಕಂ ಇತ್ಯಾದಿ ದಿನಬಳಕೆಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರುತ್ತಿದ್ದಾರೆ. +ಮನೆಯ ಹಿತ್ತಿಲಿನಲ್ಲಿ ಬೆಳೆದ ಮೂಡ ಹಾಗಲ, ಕರಿಬೇವು, ಮಜ್ಜಿಗೆಹುಲ್ಲು, ಪುದೀನ, ಲೊಳೆಸರ ಮುಂತಾದ ಔಷಧಿಯ ಗಿಡಗಳನ್ನು ತಮ್ಮ ಹಿತ್ತಲಿನಲ್ಲಿ ಬೆಳೆದಿದ್ದಾರೆ. +ಮನೆಯ ಅಂಗಳದಲ್ಲಿ ಸೇವಂತಿಗೆ, ದಾಸವಾಳ, ಅಂಥೋರಿಯಂ, ಜರ್ಬರಾ, ಜಿನೇಲಿಯಂ, ಗ್ಲಾಡಿಯೋಲಸ್, ಡೇರ ಹೀಗೆ ಅನೇಕ ರೀತಿಯ ಹೂ ಬೆಳೆದು ಮಾರುತ್ತಾರೆ. +ಲಾಭವೂ ಬರುತ್ತಿದೆ. +ಈ ವ್ಯಾಪಾರದಲ್ಲಿ ಮನೆಯವರೆಲ್ಲ ಸಹಕರಿಸುತ್ತಿದ್ದಾರೆ. +ಹೀಗಾಗಿ ಕೃಷಿಯನ್ನೆ ನಂಬಿ ಜೀವಿಸುತ್ತಿದ್ದರೂ ಚೆನ್ನಾಗಿಯೇ ಬದುಕಿದ್ದೇವೆ ಎಂದು ಹೇಳಿದ ರೈತರ ಮಾತುಗಳು ಇಳಾಳ ಮನದಲ್ಲಿ ಹೆಚ್ಚಿನ ಪ್ರಭಾವ ಬೀರಿತು. +ಹೌದು ಕೆಲಸವಿಲ್ಲವೆಂದು ಅದೆಷ್ಟು ಕೃಷಿಕರ ಮಕ್ಕಳು ನಗರ ಸೇರುತ್ತಿದ್ದಾರೆ. +ತಮ್ಮ ಸ್ವಂತ ಸ್ಥಳದಲ್ಲಿ ರಾಜನ ಹಾಗೆ ಬದುಕುವ ಅವಕಾಶವಿದ್ದರೂ ಪಟ್ಟಣ ಸೇರಿ ಎಲೆಲ್ಲ ಯಾರದ್ದೊ ಕೈಕೆಳಗೆ ಕೆಲಸ ಮಾಡಿ ಗುಲಾಮರಂತಿರುವ ಪರಿಸ್ಥಿತಿ ಏಕೆ ಎನಿಸಿತು. +ಇವತ್ತು ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. +ಹಿರಿಯ ಚೈತನ್ಯಗಳನ್ನು ಬಿಟ್ಟರೆ ಎಷ್ಟೋ ಹಳ್ಳಿಗಳಲ್ಲಿ ಯುವಜನಾಂಗವೇ ಇಲ್ಲವಾಗುತ್ತಿದೆ. +ಇಡೀ ಗ್ರಾಮ ಖಾಲಿ ಹೊಡೆಯುತ್ತಿದೆ. +ಬದಲಾಗಿ ಯುವಕರು ಹಳ್ಳಿಯಲ್ಲೇ ಉಳಿದರೆ ಅದೆಷ್ಟು ಚಿನ್ನಾಗಿರುತ್ತದೆ. +ನಗರದಲ್ಲಿ ಮಾಡವ ಗುಲಾಮಗಿರಿಯೇ ಇವರಿಗೆ ಯಾಕಿಷ್ಟು ಇಷ್ಟವಾಗುತ್ತಿದೆ ಎನಿಸಿತು. +ಮಣ್ಣು ನೆಟ್ಟಿಕೊಂಡು ನೈಸರ್ಗಿಕ ಕೃಷಿ ಮಾಡಬೇಕು. +ಮಧ್ಯವರ್ತಿಯ ಹಾವಳಿ ಇಲ್ಲದೆ ತಾವು ಬೆಳೆದ ಉತ್ಪನ್ನಗಳನ್ನು ತಮ್ಮ ಮನೆಯ ಬಾಗಿಲಲ್ಲೇ ಗ್ರಾಹಕರಿಗೆ ಸಿಗುವಂತೆ ವ್ಯವಸ್ಥೆ ಮಾಡಿಕೊಂಡು, ಕಲಬೆರಕೆ ಇಲ್ಲದ ಗುಣಮಟ್ಟದ ಸರಕು ಒದಗಿಸಿದರೆ ಬೆಳೆದ ಬೆಳೆಗೆ ಒಳ್ಳೆಯ ಲಾಭವೂ ಸಿಗುತ್ತದೆ. +ತಮ್ಮ ಮನೆಯ ಅಂಗಳದಲ್ಲಿಯೋ ಅಥವಾ ಹತ್ತಿರದ ಮಾರುಕಟ್ಟೆಯಲ್ಲಿಯೋ ಮಾರಾಟ ಮಾಡುವ ಅವಕಾಶ ಸಿಕ್ಕರೆ ಬೇಸಾಯ ಖಂಡಿತಾ ಲಾಭದಾಯಕ ಎಂದು ಇಳಾ ಓದಿ ತಿಳಿದುಕೊಂಡಳು. +ಅಂತೂ ಬಾವಿಯೊಳಗಿನ ಕಪ್ಪೆಯಂತಿದ್ದ ತನಗೆ ಕೃಷಿ ಮಾಡಲು ಇಳಿದೊಡನೆ ಅದೆಷ್ಟು ವಿಚಾರಗಳು ತಿಳಿಯುತ್ತಿವೆಯಲ್ಲ… +ಮುಂದೆ ತಾನು ಈ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಂತೆ ಪ್ರಾವಿಣ್ಯತೆ ಗಳಿಸಬಹುದೆಂದು ಅಂದುಕೊಂಡಳು. +ಈ ವಿಚಾರಗಳಲ್ಲಿ ಮುಳುಗಿ ಹೋದವಳಿಗೆ ತಾನು ಡಾಕ್ಟರ್ ಆಗಬೇಕೆಂದಿದ್ದು, ಆದಾಗಲು ಸಾಧ್ಯವಾಗದ್ದಕ್ಕೆ ಅಪ್ಪನ ಸಾವು ಕಾರಣವಾದದ್ದು, ಅಪ್ಪನ ಸಾವು ಸಾಲಗಳ ಕಾರಣದಿಂದ ಆದ್ದದ್ದು- ಹೀಗೆ ಎಲ್ಲವನ್ನು ಮರೆತು ತೋಟ, ತೋಟದ ಬೆಳೆಗಳು, ಸಾವಯವ ಕೃಷಿ. +ಹೀಗೆ ಈ ಸುತ್ತಲೇ ಸುತ್ತುವಂತೆ ತನ್ನ ಮನ ಪರಿವರ್ತನೆಯಾಗಿದ್ದು ಹೇಗೆ ಎಂದು ಅಚ್ಚರಿಪಟ್ಟುಕೊಂಡಳು. +ಒಂದು ದಾರಿ ಮುಚ್ಚಿದ ಕೂಡಲೇ ಮತ್ತೊಂದು ಹಾದಿ ತಾನೇ ತೆರೆದುಕೊಂಡು ಹೋಗುವಂತೆ… +ಮುನ್ನುಗ್ಗುವಂತೆ ತನ್ನನ್ನು ಪ್ರಚೋದಿಸಿದ್ದು ಅದಾವ ಅಂಶವಿರಬಹುದೆಂದು ಆಲೋಚಿಸಿದಳು. +ಪ್ರಾಯಶಃ ಅಪ್ಪನ ದುಡುಕು, ಮೂರ್ಖತನ, ಸೋಲನ್ನು ಸಾವಿನಲ್ಲಿ ಕಾಣುವ ಹೇಡಿತನ ಇವೆಲ್ಲವನ್ನು ತಾನು ದ್ವೇಷಿಸಿದ್ದ ಕಾರಣವಿರಬಹುದೆ? +ಅಪ್ಪ ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು? +ಅಪ್ಪನಂತೆ ನಾನು ಸೋಲಬಾರದು, ಹೌದು, ನಾನು ಸೋಲಬಾರದು. . +ಅಪ್ಪ ಸೋತಲ್ಲಿ ತಾನು ಗೆಲುವು ಕಾಣಬೇಕೆಂಬ ಛಲವೇ ತನ್ನಲ್ಲಿ ಈ ರೀತಿ ಪ್ರಬೋದಿಸಿತೇ? +ಇಲ್ಲ… ತಾನು ಗೆಲ್ಲುತ್ತೇನೆಯೋ, ಗೆಲುವು ತನಗೆ ಒಲಿಯುತ್ತದೆಯೋ, ನಿಡಿದಾಗಿ ಉಸಿರು ಬಿಟ್ಟು ಸೋಲೋ ಗೆಲುವು ಹೆಜ್ಜೆ ಇಟ್ಟಾಗಿದೆ. +ಹಿಂದೆಗೆಯುವಂತೆಯೇ ಇಲ್ಲ. +ಎಲ್ಲರಂತೆ ತಾನಾಗದೆ ತಾನು ವಿಶೇಷವಾಗಿ ಸಾಧಿಸಬೇಕು. +ಆ ಸಾಧನೆಯ ಮೆಟ್ಟಿಲೇರಲೇಬೇಕು. +ಅದು ಎಷ್ಟೇ ಕಷ್ಟವಾದ ಹಾದಿಯಾದರೂ ಸರಿ ಹಿಮ್ಮೆಟ್ಟಬಾರದು. +ಯಾರೂ ಪ್ರೋತ್ಸಾಹ ಕೊಡದಿದ್ದರೂ ಪರವಾಗಿಲ್ಲ, ನಾನು ಮುಂದೆ ಇಟ್ಟ ಹೆಜ್ಜೆ ಹಿಂದಕ್ಕಿಡಬಾರದು. +ಹೆಣ್ಣು ಮದುವೆಯಾಗಿ ಸಂಸಾರ, ಗಂಡ, ಮಗು… ಇದಿಷ್ಟೇ ಬದುಕು ಎನ್ನುವಂತೆ ತಾನಿರಬಾರದು. +ಅದರ ಹೊರತಾಗಿಯೂ ಮತ್ತೇನೋ ಇದೆ. +ಅದನ್ನು ಯಾವ ಹೆಣ್ಣಾದರೂ ಪಡೆದುಕೊಳ್ಳಬಹುದು ಎಂಬ ಸತ್ಯವನ್ನು ತೋರಿಸುವ, ಇತರರಿಗೆ ಮಾದರಿಯಾಗಿ ನಿಲ್ಲುವ ಎದೆಗಾರಿಕೆ ನನ್ನಲ್ಲಿದೆ. +ಅದೊಂದು ದ್ಯೆವ ತನಗಿತ್ತ ವರವೇ ಸರಿ. +ತನ್ನನ್ನು ಎಲ್ಲರೂ ಪುಟ್ಟ ಹುಡುಗಿಯೆಂದೇ ಭಾವಿಸುತ್ತಾರೆ. +ತನ್ನ ರೀತಿನೀತಿಗಳನ್ನು, ತಾನು ಮಾಡಬೇಕೆಂದಿರುವ ಸುಧಾರಣೆಗಳನ್ನು ಆಳುಗಳು ಕೂಡ ಗಂಭೀರವಾಗಿ ಪರಿಗಣಿಸುತ್ತಿಲ್ಲ. +ಅಮ್ಮನಂತೂ ಏನಾದರೂ ಮಾಡಿಕೊಳ್ಳಲಿ ಎಂದು ತಟಸ್ಥಳಾಗಿ ಬಿಟ್ಟಿದ್ದಾಳೆ. +ಅಜ್ಜಿಯೂ ಈ ಗೋಳೆಲ್ಲ ಯಾಕೆ ಮಗು ಹಾಯಾಗಿ ತಿಂದುಂಡು ಇರಬಾರದೇ ಎಂದು ತಾನು ತೋಟದೊಳಗೆ ಹೋಗಿ ಕೆಲಸ ಮಾಡುವುದನ್ನ ವಿರೋಧಿಸುತ್ತಾಳೆ. +ಇನ್ನು ದೊಡ್ಡಪ್ಪನೊ ಹೆಣ್ಣುಮಕ್ಕಳೆಂದರೆ ಓದಲಷ್ಟೇ ಲಾಯಕ್ಕು, ಓದಿ ಮದುವೆ ಆಗಿಬಿಟ್ಟರೆ ಸಾಕು ಎನ್ನುವ ನಿಲುವು. +ತನ್ನನ್ನು ಯಾರೂ ಸೀರಿಯಸ್ಸಾಗಿ ನೋಡುತ್ತಿಲ್ಲ. +ಇಳಾ ಅಪ್ಪ ಸತ್ತ ದುಃಖದಲ್ಲಿ, ವಿದ್ಯಾಭ್ಯಾಸ ಹಾಳಾದ ಆವೇಶದಲ್ಲಿ ಏನೋ ಮಾಡಲು ಹೋಗುತ್ತಿದ್ದಾಳೆ. +ನಾಲ್ಕು ದಿನಕ್ಕೆ ಸಾಕಾಗಿ ತೋಟವೂ ಬೇಡ… ಈ ಊರು ಬೇಡ… ಅಂತ ತಾನೇ ಕೈ ಮುಗಿದು ಮೈಸೂರಿಗೆ ಹೊರಟುಬಿಡುತ್ತಾಳೆ ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. +ಯಾರ ಲೆಕ್ಕಾಚಾರ ಹೇಗಾದರೂ ಇರಲಿ, ಈ ಇಳಾ ಏನು ಎಂಬುದನ್ನು ಇಂದಲ್ಲ ನಾಳೆ ತೋರಿಸುತ್ತೇನೆ ಎಂದು ಅವಳು ಅಂದುಕೊಂಡಾಗ ಮನಸ್ಸು ಹಗುರವಾಗಿ ತನ್ನ ಹಾದಿಯಲ್ಲಿ ಮುನ್ನಡೆಯಲು ಹುಮ್ಮಸ್ಸು ಮೂಡುತ್ತಿತ್ತು. +ಪ್ರತಿನಿತ್ಯ ಪತ್ರಿಕೆಯಲ್ಲಿ ರೈತರ ಆತ್ಮಹತ್ಯೆ ಅಂತ ನೋಡಿ ನೋಡಿ ಇಳಾಳ ಮನಸ್ಸು ರೋಸಿ ಹೋಗಿತ್ತು. +ಯಾಕೆ ಈ ರೈತರು ಇಷ್ಟೊಂದು ಹತಾಶರಾಗಿ ಸಾವಿಗೆ ಮೊರೆ ಹೋಗುತ್ತಾರೆ, ಇದಕ್ಕೇನು ಕಾರಣ? +ಇದನ್ನು ತಡೆಯುವ ಮಾರ್ಗ ಯಾವುದು? +ಕೃಷಿ ನಂಬಿಕೊಂಡಿದ್ದಕ್ಕೆ ಸಾವೇ ಗತಿಯೇ… +ಈ ಬಗ್ಗೆ ಒಂದಿಷ್ಟು ಚಿಂತಿಸುವ ಮನಸ್ಸುಗಳನ್ನೆಲ್ಲ ಒಂದೆಡೆ ಸೇರಿಸಬೇಕು. +ಆ ಮೂಲಕ ಏನನ್ನಾದರೂ ಮಾಡಿ ರೈತರ ಮನಸ್ಸು ಆತ್ಮಹತ್ಯೆಯತ್ತ ಹೊರಳದಂತೆ ತಡೆಯಬೇಕು. +ತನ್ನ ಅಪ್ಪನಂತಹ ನೂರಾರು ರೈತರು ಪ್ರತಿನಿತ್ಯ ಸಾವಿಗೆ ಶರಣಾಗಿ ನಂಬಿದವರನ್ನು ನಡುನೀರಲ್ಲಿ ಕೈ ಬಿಟ್ಟು ತಾವು ಸ್ವರ್ಗ ಸೇರಿಕೊಳ್ಳುತ್ತಿದ್ದಾರೆ! +ಈ ಕುರಿತು ಇಳಾ ಸದಾ ಯೋಚಿಸತೊಡಗಿದಳು. +ಹೀಗೆ ಯೋಚಿಸುತ್ತಿರುವಾಗಲೇ ರೇಡಿಯೋದ ಕೃಷಿಲೋಕದಲ್ಲಿ ಸಂದರ್ಶನ ನಡೆಯುತ್ತಿತ್ತು. +ಮಾತನಾಡುತ್ತಿದ್ದಾತ ಇಳಾಳ ಮನಸ್ಸಿನಲ್ಲಿ ಕೊರೆಯುತ್ತಿದ್ದ ವಿಷಯವನ್ನು ಕುರಿತೇ ಮಾತನಾಡುತ್ತಿದ್ದದ್ದು ಆಸಕ್ತಿ ಕೆರಳಿಸಿ ರೇಡಿಯೋ ಮುಂದೆಯೇ ಕುಳಿತುಬಿಟ್ಟಳು. +ರೈತರ ಬಗ್ಗೆ ಕಳಕಳಿ, ಸಾವೇ ಮದ್ದು ಎಂದುಕೊಂಡು ರೈತರು ಪ್ರಾಣಹಾನಿ ಮಾಡಿಕೊಳ್ಳುತ್ತಿರುವ ಬಗ್ಗೆ ವಿಷಾದದಿಂದ ಮಾತನಾಡುತ್ತಿದ್ದವರ ಬಗ್ಗೆ ಕುತೂಹಲ ಮೂಡಿ ಆಕಾಶವಾಣಿಯವರಿಗೆ ಫೋನ್ ಮಾಡಿ ಅವರ ವಿಳಾಸ ಪಡೆದು ಫೋನ್ ಮಾಡಿದಳು. +ಖುದ್ದಾಗಿ ತಾನು ಅವರೊಂದಿಗೆ ಮಾತನಾಡಬೇಕು ಎಂಬ ಬೇಡಿಕೆ ಇತ್ತಳು. +ಇನ್ನೆರಡು ದಿನ ಬಿಟ್ಟು ಹಾಸನದಲ್ಲಿ ಒಂದು ಕಾರ್ಯಕ್ರಮಕ್ಕೆ ಬರುವುದಾಗಿ, ಅಲ್ಲಿ ಬಂದರೆ ತಾನು ಸಿಗುವುದಾಗಿ ತಿಳಿಸಿದಾಗ ಮನಸ್ಸಿಗೆ ಏನೋ ಒಂದು ರೀತಿಯ ತೃಪ್ತಿಯಾಯಿತು. +ಆ ದಿನ ಹಾಸನಕ್ಕೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೊರಟು ಸಕಲೇಶಪುರದ ಬಸ್ಸು ಹತ್ತಿದಳು. +ಅಲ್ಲಿಂದ ಹಾಸನಕ್ಕೆ ಎಕ್ಸ್‌ಪ್ರೆಸ್ ಬಸ್ಸಿನಲ್ಲಿ ಹೊರಟರೆ ಮುಕ್ಕಾಲು ಗಂಟೆ ಪ್ರಯಾಣ. +ಬಸ್‌ಸ್ಟಾಂಡಿನಲ್ಲಿ ಆತ ಕಾಯುತ್ತಿದ್ದರು. +ಮೊಬೈಲ್‌ಗೆ ಫೋನ್ ಮಾಡಿ ಆತ ಇರುವ ಸ್ಥಳಕ್ಕೆ ಬಂದು ಅವರನ್ನು ಕಂಡ ಕೂಡಲೇ ಕ್ಷಣ ಮಾತೇ ಹೊರಡದ ಮೂಕಿಯಂತಾಗಿಬಿಟ್ಟಳು. +‘ಹಲೋ ನಾನು ನಿವಾಸ್, ನನ್ನನ್ನು ತಾನೇ ನೀವು ನೋಡಬೇಕು, ಮಾತಾಡಬೇಕು ಅಂತ ಅಂದಿದ್ದು. +ಯಾಕೆ ಸುಮ್ನೆ ನಿಂತುಕೊಂಡುಬಿಟ್ಟಿರಿ’ ಅಂತ ಎಚ್ಚರಿಸುವ ತನಕ ಯಾವುದೋ ಲೋಕದಲ್ಲಿ ಇದ್ದವಳಂತೆ ವರ್ತಿಸಿದ್ದಳು. +ತಕ್ಷಣವೇ ಸಾವರಿಕೊಂಡು ‘ಹಲೋ ನಾನು ಇಳಾ, ಸಕಲೇಶಪುರದಿಂದ ಬಂದಿದೀನಿ’ ಅಂತ ಮೆಲು ಧ್ವನಿಯಲ್ಲಿ ಹೇಳಿದಳು. +ಅವಳಿನ್ನೂ ಶಾಖ್‌ನಿಂದ ಹೊರ ಬಂದಿರಲಿಲ್ಲ. +ತಾನು ಭೇಟಿ ಮಾಡಲಿರುವ ವ್ಯಕ್ತಿಗೆ ಮಧ್ಯ ವಯಸ್ಸು ಮೀರಿರಬಹುದು ರೈತನಂತಿರಬಹುದು. +ಹಳ್ಳಿಯವನಂತೆ ಪಂಚೆ ಉಟ್ಟು ಸಾಮಾನ್ಯ ವ್ಯಕ್ತಿಯಂತಿರಬಹುದು ಎಂದೆಲ್ಲ ಊಹಿಸಿಕೊಂಡಿದ್ದು ಎಲ್ಲವು ತಿರುವು ಮುರುವು ಆಗಿತ್ತು. +ನಿವಾಸ್ ಜೀನ್ಸ್ ಪ್ಯಾಂಟ್, ತೆಳುನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದು, ಆಗಷ್ಟೆ ಕಾಲೇಜಿನಿಂದ ಹೊರ ಬಿದ್ದ ವಿದ್ಯಾರ್ಥಿಯಂತೆ ಕಾಣಿಸುತ್ತಿದ್ದ. +ಸ್ಫುರದ್ರೂಪಿ ನಿವಾಸ್ ತಟ್ಟನೆ ಮನಸೆಳೆಯುವಂತಿದ್ದು, ಸಿನಿಮಾ ನಾಯಕ ನಟನಂತೆ ಆಕರ್ಷಣೀಯವಾಗಿದ್ದ. +ಈ ಯುವಕನ ಜೊತೆ ತಾನೇನು ಮಾತನಾಡಬಲ್ಲೆ ಎಂದು ಮುಜುಗರಕ್ಕೆ ಒಳಗಾದಳು. +ತಾನು ಹಿಂದೆ ಮುಂದೆ ವಿಚಾರಿಸದೆ ಬರಬಾರದಿತ್ತು. +ಈತ ಯಾವುದೋ ಸಿನಿಮಾ ಶೂಟಿಂಗ್‌ಗೆ ಹೊರಟವನಂತೆ ಕಾಣುತ್ತಿದ್ದಾನೆ. +ಈತ ನಿಜವಾಗಲೂ ರೈತರ ಬಗ್ಗೆ ಕಾಳಜಿ ಹೊಂದಿರುವನೇ? +ತಾನು ಅಂದುಕೊಂಡಿರುವುದನ್ನೆಲ್ಲ ಈತನ ಹತ್ತಿರ ಹೇಳಿಕೊಳ್ಳಬಹುದೇ… +ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಡಬಲ್ಲನೇ ಈತ… +ಹೀಗೆ ನೂರಾರು ರೀತಿ ಆಲೋಚಿಸುತ್ತಲೇ ಇದ್ದಳು. +ಅದಾವುದರ ಅರಿವಿಲ್ಲದ ನಿವಾಸ್ ‘ಮೇಡಂ, ಎಲ್ಲಿ ಮಾತಾಡೋಣ’ ಅಂತ ಕೇಳಿದಾಗ ತಬ್ಬಿಬ್ಬಾಗಿ ಅವನನ್ನೆ ನೋಡಿದಳು. +ಎಲ್ಲಿ ಅಂತ ಯೋಚಿಸಲು ಅವಳಿಂದಾಗಲಿಲ್ಲ. +ಅವಳ ಮುಜುಗರ ಅವನಿಗರ್ಥವಾಯಿತು ಅಂತ ಕಾಣಿಸುತ್ತ. +‘ಬನ್ನಿ ಕಾಫಿ ಕುಡಿಯುತ್ತ ಮಾತನಾಡೋಣ’ ಅಂತ ಹೋಟೆಲಿನತ್ತ ಹೆಜ್ಜೆಹಾಕಿದ. +ಇಳಾಳನ್ನು ಮೇಡಂ ಅಂತ ಸಂಭೋದಿಸಲು ಯಾಕೋ ನಿವಾಸ್‌ಗೆ ಇಷ್ಟವಾಗಲಿಲ್ಲ. +ಶಾಲೆ ಮುಗಿಸಿ ಕಾಲೇಜಿಗೆ ಹೋಗುವ ಹುಡುಗಿಯಂತಿದ್ದ ಇಳಾಳ ಬಗ್ಗೆ ಅವನು ಕೂಡ ಇಷ್ಟು ಪುಟ್ಟ ಹುಡುಗಿ ಇರಬಹುದು ಅಂತ ಅಂದುಕೊಂಡಿರಲಿಲ್ಲ. +‘ಇಳಾ, ಹೇಳಿ ನನ್ನತ್ರ ಏನು ಮಾತಾಡಬೇಕು, ನನ್ನಿಂದ ಏನು ಸಹಾಯವಾಗಬೇಕು, ನಿಮ್ಮನ್ನು ನೋಡಿದರೆ ಯಾವ ಕಷ್ಟವೂ ಸೋಕದೆ ಬೆಳೆದವರಂತೆ ಕಾಣುತ್ತೀರಿ, ಅಪ್ಪ ಅಮ್ಮನ ಮುದ್ದಿನ ಮಗಳು ಅಂತ ಕಾಣುತ್ತೆ, ಏನು ಓದ್ತ ಇದ್ದೀರಿ’ ಅವಳ ಸಂಕೋಚ ಕಳೆಯಲು ಆತ್ಮೀಯವಾಗಿ ಮಾತನಾಡಿದ. +ಅಪ್ಪ ಅಮ್ಮನ ಮುದ್ದಿನ ಮಗಳು ಅಂದ ಕೂಡಲೇ ಇಳಾಗೆ ತಟ್ಟನೆ ಅಳು ಉಕ್ಕಿ ಬಂದು ಅತ್ತೇಬಿಟ್ಟಳು. +ಅವಳ ಅಳು ಕಂಡು ಗಾಬರಿಯಾದ ನಿವಾಸ್ ‘ಇಳಾ, ಯಾಕೆ ಏನಾಯ್ತು, ಯಾಕೆ ಅಳ್ತಾ ಇದ್ದೀರಿ-’ಅವನ ಗಾಭರಿಕಂಡು ತನ್ನ ಅಳುವನ್ನು ಹತೋಟಿಗೆ ತಂದುಕೊಂಡಳು. +ತನ್ನ ಊರು, ತನ್ನ ವಿದ್ಯಾಭ್ಯಾಸ, ತನ್ನ ತಂದೆಯ ಆತ್ಮಹತ್ಯೆ, ಈಗ ತಾನು ಓದುವುದನ್ನು ನಿಲ್ಲಿಸಿ- ಕೃಷಿ ಮಾಡಲು ಇಳಿದಿರುವುದು, ರೈತರ ಆತ್ಮಹತ್ಯೆ ತನ್ನ ಮನಸ್ಸನ್ನು ಕಲಕುತ್ತಿರುವುದು, ಈ ಮನಸ್ಥಿತಿಯಲ್ಲಿರುವಾಗಲೇ ರೇಡಿಯೋದಲ್ಲಿ ತಮ್ಮ ಸಂದರ್ಶನ ಕೇಳಿ ಈ ವಿಚಾರವಾಗಿ ಏನಾದರೂ ಮಾಡಲು ಸಾಧ್ಯವೇ ಎಂದು ಮಾತನಾಡಲು ತಾನು ಬಂದಿರುವುದಾಗಿ ಎಲ್ಲವನ್ನು ಸಂಕ್ಷಿಪ್ತವಾಗಿ ಹೇಳಿದಳು. +ಅವಳ ಎಲ್ಲಾ ಮಾತುಗಳನ್ನು ಕೇಳುತ್ತ ಸುಮ್ಮನೆ ಕುಳಿತುಬಿಟ್ಟ ನಿವಾಸ್. +ಈ ಪುಟ್ಟ ಹುಡುಗಿಯ ಬದುಕಿನೊಳಗೆ ಏನೆಲ್ಲ ಘಟನೆಗಳು ನಡೆದುಹೋಗಿವೆ. +ಅಪ್ಪನ ಸಾವು ಎಷ್ಟು ಆಘಾತ ಒಡ್ಡಿರಬೇಕು, ಓದುವ ವಯಸ್ಸಿನಲ್ಲಿ ಬದುಕಿನ ನಿರ್ಣಯ ಕೈಗೊಳ್ಳುವ ಪರಿಸ್ಥಿತಿಗೆ ತಲುಪಿರುವುದು. + ಸ್ಕೂಲ್, ಕಾಲೇಜು ಅಂತ ಸದಾ ಮನೆಯಿಂದ ಹೊರಗೇ ಇದ್ದ ಇಳಾ ಅಪ್ಪನ ಸಾವಿನ ನಂತರ ಕೃಷಿಯನ್ನ ಆಯ್ಕೆ ಮಾಡಿಕೊಳ್ಳಬೇಕಾದ -ತೀರ್ಮಾನ ಎಲ್ಲವೂ ಅವನನ್ನು ಕಲಕಿದವು. +‘ಸಾರಿ ಇಳಾ, ನಿಮ್ಮ ಬದುಕು ಈ ರೀತಿಯ ದುರಂತ ಕಾಣಬಾರದಿತ್ತು. +ನಿಮ್ಮಂತೆ ಅದೆಷ್ಟು ಮಕ್ಕಳು ಅಪ್ಪಂದಿರ ಸಾವಿನಿಂದ ತತ್ತರಿಸಿ ಹೋಗಿದ್ದಾರೋ? +ಅದೆಷ್ಟು ಮಕ್ಕಳ ಬದುಕು ಮುರಾಬಟ್ಟೆಯಾಗಿದೆಯೋ? +ಇದೇ ಸಮಸ್ಯೆಗೆ ಕುರಿತು ನಾನು ಸದಾ ಚಿಂತಿಸುತ್ತಿದ್ದೇನೆ. +ಏಕೆಂದರೆ ನಾನು ಕೂಡ ಒಬ್ಬ ರೈತನ ಮಗ. +ಕೃಷಿಯನ್ನೇ ನಂಬಿದವರು ನನ್ನ ತಂದೆ. +ನನ್ನ ತಂದೆಯದೇ ಬೇರೆ ಸಮಸ್ಯೆ. +ಅದನ್ನು ನಿಧಾನವಾಗಿ ನಿಮ್ಮ ಹತ್ರ ಹೇಳ್ತೀನಿ. +ಅದ್ರೂ ನಿಮ್ಮ ಧೈರ್ಯ ಹಾಗೂ ನಿಮ್ಮ ನಿರ್ಧಾರದ ಬಗ್ಗೆ ನನಗೆ ತುಂಬಾ ಮೆಚ್ಚುಗೆ ಮೂಡ್ತಾ ಇದೆ. +ಈ ವಯಸ್ಸಿನಲ್ಲಿ ಈ ರೀತಿ ಆಲೋಚನೆ ಮಾಡೋದು ತುಂಬ ಅಪರೂಪ. +ಒಟ್ಟಿನಲ್ಲಿ ನನ್ನ ಥರ ಆಲೋಚನೆ ಮಾಡೋ ಒಬ್ಬ ಧೈರ್ಯವಂತ ಹುಡುಗಿ ನಂಗೆ ಫ್ರೆಂಡಾಗಿದ್ದಾಳೆ ಅನ್ನೋದೇ ನಂಗೆ ಸಂತೋಷ ತರೋ ವಿಚಾರವಾಗಿದೆ’ ಮನದಾಳದ ಭಾವವನ್ನು ಹೊರ ಹಾಕಿದ. +‘ನಿಮ್ಮ ಅಭಿಮಾನಕ್ಕೆ ಏನು ಹೇಳಬೇಕೊ ಗೊತ್ತಾಗ್ತ ಇಲ್ಲಾ ಸಾರ್. +ಯಾಕ್ಹೀಗೆ ರೈತರು ತಮ್ಮ ಬದುಕನ್ನು ಸಾವಿನತ್ತ ತಳ್ಳಿ ಅಸಹಾಯಕರಾಗ್ತ ಇದ್ದಾರೋ ಗೊತ್ತಾಗ್ತಾ ಇಲ್ಲ. +ಅದನ್ನು ಹೇಗಾದ್ರು ಮಾಡಿ ತಡೆಯಬೇಕು ಅಂತ ನನ್ನ ಮನಸ್ಸು ಚಡಪಡಿಸುತ್ತ ಇದೆ. +ಅದ್ರೆ ಇದು ಹೇಗೆ ಅಂತ ಗೊತ್ತಾಗ್ತ ಇಲ್ಲಾ ಸಾರ್’ ದುಃಖ ತುಂಬಿದ ಭಾವದಿಂದ ನುಡಿದಳು. +‘ನಮ್ಮ ಮನಸ್ಸು ಒಂದೇ ವಿಚಾರದ ಬಗ್ಗೆ ಆಲೋಚನೆ ಮಾಡ್ತ ಇದೆ. +ಎರಡು ಶಕ್ತಿಗಳು ಒಟ್ಟಿಗೆ ಸೇರಿ ಇದಕ್ಕೊಂದು ಪರಿಹಾರ ಕಂಡು ಹಿಡಿಯುವ ದಿಕ್ಕಿನತ್ತ ಆಲೋಚನೆ ಮಾಡಿದರೆ ಒಂದಿಷ್ಟು ಯಶಸ್ಸು ಕಾಣಲು ಸಾಧ್ಯ ಅನ್ನಿಸುತ್ತೆ. +ಪ್ರಯತ್ನಪಡೋಣ, ಆ ದಿಕ್ಕಿನಲ್ಲಿ ನಾನು ಒಂದಿಷ್ಟು ತಲೆ ಕೆಡಿಸಿಕೊಂಡಿದ್ದೇನೆ. +ನಮ್ಮಂಥ ಇನ್ನೊಂದಿಷ್ಟು ಮನಸ್ಸುಗಳು ಸೇರಿದರೆ ಒಂದು ಒಳ್ಳೆ ಸಂಘಟನೆ ಮಾಡೋಣ. +ಈ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸೋಣ’ ಭರವಸೆಗಳ ಮಹಾಪೂರವೇ ಹರಿಯಿತು ಅವನಿಂದ. +ಅವನ ಮಾತು, ಅವನ ಆಶ್ವಾಸನೆ, ಅವನ ಯೋಚನಾ ಧಾಟಿ ಇಳಾಳಿಗೆ ಸಾಕಷ್ಟು ಭರವಸೆ ನೀಡಿದವು. +ಕಾಫಿ ಕುಡಿಯುತ್ತಲೇ ತನ್ನ ಬಗ್ಗೆ ಹೇಳಿಕೊಂಡ. +ಎಂಬಿ‌ಎ ಮಾಡಿ ಬೆಂಗಳೂರಿನಲ್ಲಿ ಒಳ್ಳೆ ಉದ್ಯೋಗದಲ್ಲಿ ಇದ್ದ ತಾನು ಕೃಷಿಯತ್ತ ಆಸಕ್ತಿ ಹೊರಳಿ ಚನ್ನರಾಯಪಟ್ಟಣದ ಸಮೀಪ ಜಮೀನು ಕೊಂಡು ಸಾಗುವಳಿ ಮಾಡುತ್ತಿರುವುದಾಗಿ, ಪ್ರಗತಿಪರ ರೈತನೆಂದು ಈಗಾಗಲೇ ರಾಜ್ಯಾದ್ಯಂತ ಗುರುತಿಸಿದ್ದು ಹಲವಾರು ಪ್ರಶಸ್ತಿಗಳು ಬಂದಿದ್ದು, ತನ್ನ ಬಗ್ಗೆ ರೇಡಿಯೋ, ಟಿವಿಯಲ್ಲಿ -ಸಂದರ್ಶನ ನಡೆಸಿದ್ದು, ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ತನ್ನ ಅನುಭವವನ್ನು ಇತರ ರೈತರಿಗೆ ತಿಳಿಸಲು ಸಂಘ ಸಂಸ್ಥೆಗಳು ತನ್ನನ್ನು ಕರೆಸುತ್ತಿದ್ದು ಅಂತಹ ಒಂದು ಕಾರ್ಯಕ್ರಮಕ್ಕಾಗಿಯೇ ಇಂದು ಹಾಸನಕ್ಕೆ ಬಂದಿರುವುದಾಗಿ ನಿವಾಸ್ ಹೇಳಿದ. +ಇಂತಹ ಪ್ರಗತಿಪರ ರೈತ ಪರಿಚಯವಾಗಿದ್ದು, ತಾನು ಈಗಷ್ಟೆ ಕೃಷಿ ಬದುಕಿಗೆ ಹೆಜ್ಜೆ ಇರಿಸುವ ಸಂದರ್ಭದಲ್ಲಿ ಅವನಿಂದ ಸಹಾಯ ಪಡೆಯಬಹುದೆಂದು ಇಳಾ ನಿರೀಕ್ಷೆ ತಾಳಿದಳು. +ಅದನ್ನು ಬಾಯಿಬಿಟ್ಟು ಹೇಳಿಕೊಂಡಳು ಕೂಡ. +ನಿವಾಸ್ ಕೂಡ ಇದಕ್ಕೆ ಸಂತೋಷವಾಗಿ ಒಪ್ಪಿಕೊಂಡ ಮತ್ತೊಮ್ಮೆ ಸಧ್ಯದಲ್ಲಿಯೇ ಬೇಟಿಯಾಗೋಣ. +ಕಾರ್ಯಕ್ರಮಕ್ಕೆ ತಡವಾದೀತು ಎಂದು ಹೊರಟು ನಿಂತಾಗ ಅವನಿಂದ ಬೀಳ್ಕೊಟ್ಟು ಸಕಲೇಶಪುರದ ಬಸ್ಸು ಹತ್ತಿದಳು. +ಮನೆಗೆ ಬಂದ ಮೇಲೂ ನಿವಾಸ್ನ ವಿಚಾರವೇ ಮನದೊಳಗೆ ಸುತ್ತುತ್ತಿತ್ತು. +ತಾನೇನಾದರೂ ಹಾಸನಕ್ಕೆ ಹೋಗಿದ್ದ ವಿಚಾರ, ಅಲ್ಲಿ ನಿವಾಸ್ನನ್ನು ಬೇಟಿಯಾಗಿದ್ದು, ತಮ್ಮ ವಿಚಾರಧಾರೆಗಳನ್ನು ಮನೆಯಲ್ಲಿ ಹೇಳಿಬಿಟ್ಟರೆ ಅಮ್ಮ-ಅಜ್ಜಿ ಇಬ್ಬರೂ ಸೇರಿ ನನ್ನನ್ನು ಖಂಡಿತಾ ತರಾಟೆಗೆ ತೆಗೆದುಕೊಳ್ಳುತ್ತಾರೆ. +ಒಂದೇ ಸಲಕ್ಕೆ ಎಲ್ಲಾ ರೀತಿಯ ವಿಚಾರಗಳನ್ನು ಅವರ ತಲೆಗೆ ತುಂಬುವುದು ಬೇಡ. +ಈಗಾಗಲೇ ತಾನು ತೋಟ ನೋಡಿಕೊಳ್ಳುತ್ತೇನೆ ಎಂದು ಹೇಳಿರುವುದು ಅಮ್ಮನಿಗೂ, ಅಜ್ಜಿಗೂ ತೀವ್ರವಾದ ಅಸಮಾಧಾನವಾಗಿದೆ. +ತಾನು ಓದಲು ಮೈಸೂರಿನಲ್ಲಿಯೇ ಇರಬೇಕು ಎಂಬುದು ಅಮ್ಮನ ಮನಸ್ಸಿನಲ್ಲಿತ್ತು. +ತನ್ನ ತೀರ್ಮಾನದಿಂದ ನಿರಾಶೆಯಾಗಿದ್ದರೂ ಇದೊಂದು ವರ್ಷ ಹೇಗಾದರೂ ಇದ್ದುಕೊಳ್ಳಲಿ ಎಂದು ಸುಮ್ಮನಿದ್ದಾಳೆ. +ತಾನು ಒಂದು ವರ್ಷಕ್ಕೆ ಇಲ್ಲಿರಲು ಸಾಕಾಗಿ ಹೊರಟುಬಿಡುವೆನೆಂದು ಅವಳ ಭಾವನೆಯಾಗಿದೆ. +ಹಾಗಿರುವಾಗ ತಾನು ಈ ಸಂಫಟನೆ, ಹೋರಾಟ ಅಂತೆಲ್ಲ ಹೊರಡುತ್ತೇನೆ ಅಂದರೆ ಸುಮ್ಮನಿರುತ್ತಾಳೆಯೇ. +ಸದ್ಯಕ್ಕೆ ಈ ವಿಚಾರಗಳೆಲ್ಲ ತನ್ನಲ್ಲಿಯೇ ಇರಲಿ ಎಂದು ಸುಮ್ಮನಾಗಿಬಿಟ್ಟಳು. +ಯಾವ ಕೆಲಸಕ್ಕೆ ಇಳಾ ಹಾಸನಕ್ಕೆ ಹೋಗಿರಬಹುದು ಎಂಬ ವಿಚಾರದಲ್ಲಿ ನೀಲಾಳೂ ತಲೆ ಕೆಡಿಸಿಕೊಂಡಿರಲಿಲ್ಲ. +ಸಣ್ಣ ಹುಡುಗಿ ಏನೋ ಮಾಡುತ್ತಿರುತ್ತಾಳೆ. +ಹೇಗೋ ಅಪ್ಪನ ಸಾವಿನ ದುಃಖ ಮರೆತು ತೋಟ, ಗಿಡ, ಹಸು, ಕರು ಅಂತ ಆಸಕ್ತಿ ತಳೆದು ಓಡಾಡುತ್ತಿದ್ದಾಳಲ್ಲ ಅದಷ್ಟೆ ಸದ್ಯಕ್ಕೆ ಸಾಕು ಅನ್ನುವುದು ನೀಲಾಳ ನಿಲುವಾಗಿತ್ತು. +ನೀಲಾ ಶಾಲಾ ಕೆಲಸಗಳ ನಡುವೆ ಎಲ್ಲವನ್ನು ಮರೆಯುವ ಪ್ರಯತ್ನ ನಡೆಸುತ್ತಿದ್ದಾಳೆ. +ಮಕ್ಕಳನ್ನು ಅಡ್ಮಿಷನ್ ಮಾಡಿಕೊಳ್ಳುವುದು, ಆ ಮಕ್ಕಳಿಗೆ ಯೂನಿಫಾರಂ, ಶೂ, ಬೆಲ್ಟ್, ಟೈ ಸಿದ್ದಪಡಿಸಿ ಕೊಡುವುದು, ಶಾಲೆ ಚೆನ್ನಾಗಿ ನಡೆಯಲು ಏನೇನು ಮಾಡಬಹುದು ಅಂತ ವಿಸ್ಮಯನಲ್ಲಿ ಚರ್ಚಿಸುವುದು, ಶಾಲಾ ಕಟ್ಟಡ ಮೇಲೇರುತ್ತಿರುವುದನ್ನು ನೋಡುತ್ತ ಇರುವುದು… +ಹೀಗೆ ಬೇರೊಂದು ಪ್ರಪಂಚದಲ್ಲಿ ನೀಲಾ ಮಗ್ನಳಾಗಿ ಬಿಟ್ಟಿದ್ದಾಳೆ. +ಮನೆಯಲ್ಲಿದ್ದರೂ ಶಾಲೆಯದೆ ಮಾತು. +ಇನ್ಯಾವ ಮಕ್ಕಳನ್ನು ಶಾಲೆಗೆ ಕರೆತರಬಹುದು. +ಮತ್ತೊಬ್ಬ ಶಿಕ್ಷಕರು ಬೇಕಿರುವುದರಿಂದ ಪತ್ರಿಕೆಯಲ್ಲಿ ಆಡ್ ಕೊಡುವುದೇ ಸೂಕ್ತ. +ವಿವರವಾಗಿ ತಿಳಿಸಿ ಬಿಟ್ಟಿದ್ದರೆ ಇಷ್ಟವಿದ್ದವರು ಬರುತ್ತಾರೆ ಎಂದು ವಿಸ್ಮಯನಲ್ಲಿ ಚರ್ಚಿಸಿ ಜಿಲ್ಲಾ ಪತ್ರಿಕೆಗಳಲ್ಲಿ ಆಡ್ ಕೊಡಿಸಿದಳು. +ಅವಳ ನಿರೀಕ್ಷೆ ಸರಿಯಾಗಿತ್ತು. +ಹತ್ತು ಜನ ಅಪಪ್ಲಿಕೇಶನ್ ಹಾಕಿದ್ದರು. +ಅವರಲ್ಲಿ ಸೂಕ್ತ ಎನಿಸಿಕೊಂಡಿದ್ದ ಇಬ್ಬರನ್ನು ಆಯ್ಕೆ ಮಾಡಿ, ಇಲ್ಲೆ ಉಳಿಯಲು ವ್ಯವಸ್ಥೆ ಕಲ್ಪಿಸುವುದಾಗಿ ಆಶ್ವಾಸನೆ ನೀಡಿದನು ವಿಸ್ಮಯ. +ಶಾಲಾ ಕಟ್ಟಡ ಪೂರ್ತಿಯಾದ ಮೇಲೆ ಸುಂದರೇಶ್ ಮನೆ ಹೇಗೂ ಖಾಲಿಯಾಗುತ್ತದೆ. +ಅದೇ ಮನೆಯನ್ನು ಅವರಿಗೆ ಉಳಿಯಲು ಕೊಟ್ಟರಾಯಿತು. +ಬೇಕಿದ್ದರೆ ಸುಂದರೇಶ್ ಬಾಡಿಗೆ ತೆಗೆದುಕೊಳ್ಳಲಿ ಎಂಬ ವಿಸ್ಮಯನ ಸಲಹೆಯನ್ನು ಎಲ್ಲರೂ ಒಪ್ಪಿದರು. +ಸುಂದರೇಶ್ ಬಾಡಿಗೆ ಬೇಡವೆಂದೇ ನಿರಾಕರಿಸಿದರು. +ಅಲ್ಲಿಗೆ ಮತ್ತೊಂದು ಸಮಸ್ಯೆಯೂ ಬಗೆಹರಿದಿತ್ತು. +ಆಯ್ಕೆಯಾದವರು ಪುರುಷರಾದ್ದರಿಂದ ಈ ವ್ಯವಸ್ಥೆಗೆ ಒಪ್ಪಿಕೊಂಡರು. +ಬಹಳ ಬೇಗ ಕಟ್ಟಡ ಎದ್ದಿತು. +ನೋಡುನೋಡುತ್ತಲೇ ಸ್ಕೂಲ್ ಸಿದ್ಧವಾಗಿ ಬಿಟ್ಟಿತು. +ಸಧ್ಯಕ್ಕೆ ಒಂದು ಆಫೀಸ್ ರೂಂ ಸೇರಿದಂತೆ ಐದು ಕೊಠಡಿ ಸಿದ್ದವಾದವು. +ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಕಟ್ಟಡದ ಉದ್ಘಾಟನೆ ನಡೆದು ಹೊಸ ಕಟ್ಟಡದಲ್ಲಿ ಶಾಲೆ ಆರಂಭವಾಯಿತು. +ವಿಸ್ಮಯನ ತಲೆಯಲ್ಲಿ ಮತ್ತೊಂದು ಆಲೋಚನೆ ಇತ್ತು. +ಶಾಲೆಗೆ ಒಳ್ಳೆ ಹೆಸರು ಬಂದರೆ ದೂರ ದೂರದ ಊರುಗಳಿಂದ ಮಕ್ಕಳು ಸೇರಬಹುದು. +ಆ ಮಕ್ಕಳಿಗಾಗಿ ಬೋರ್ಡಿಂಗ್ ವ್ಯವಸ್ಥೆ ಕೂಡ ಮಾಡಬೇಕೆಂದು ನಿರ್ಧರಿಸಿದ. +ರೆಸಾರ್ಟ್ ಕೆಲಸದ ಜೊತೆಗೆ ಒಂದು ಕಟ್ಟಡವನ್ನು ಬೋರ್ಡಿಂಗ್‌ಗಾಗಿ ಕಟ್ಟಿಸಲು ಪ್ರಾರಂಭಿಸಿದ. +ರೆಸಾರ್ಟಿನ ಗೋಡೆಗೆ ಹೊಂದಿಕೊಂಡಿದ್ದರೂ ಅದು ಶಾಲೆಯ ಕಡೆಗಿದ್ದು ರೆಸಾರ್ಟ್‌ನಿಂದ ಬೇರ್ಪಡುವಂತೆ ಪ್ಲಾನ್ ಮಾಡಿದ್ದ. +ರೆಸಾರ್ಟ್‌ಗೆ ಹೋಗುವ ದಾರಿ ಶಾಲೆ ಇರುವ ದಿಕ್ಕಿನಿಂದ ವಿರುದ್ಧದಲ್ಲಿದ್ದು, ಶಾಲೆಗೆ ಯಾವುದೇ ರೀತಿಯೂ ತೊಂದರೆಯಾಗದಂತೆ ಶಾಲೆ, ಬೋರ್ಡಿಂಗ್, ಆಟದ ಮೈದಾನ ಇವಿಷ್ಟು ರೆಸಾರ್ಟ್‌ಗೆ ಎಷ್ಟೇ ಜನ ಬಂದರೂ ಅಲ್ಲಿನವರಿಗೂ ಶಾಲೆಯಿಂದ ಕಿರಿಕಿರಿಯಾಗದಂತೆ ಎರಡರ ಮಧ್ಯ ಎತ್ತರವಾದ ಗೋಡೆ ಎಬ್ಬಿಸಿದ್ದರಿಂದ, ಶಾಲೆಯಿಂದ ರೆಸಾರ್ಟ್‌ಗಾಗಲಿ, ರೆಸಾರ್ಟ್‌ನಿಂದ ಶಾಲೆಗಾಗಲಿ ಯಾವುದೇ ರೀತಿಯ ಅಡಚಣೆಯಾಗುವಂತಿರಲಿಲ್ಲ. +ರೆಸಾರ್ಟ್‌ಗೆ ಹೋಗಬೇಕೆಂದರೆ ಶಾಲೆಯ ರಸ್ತೆಯಿಂದ ಒಂದು ಕಿಲೋಮೀಟರ್ ಸುತ್ತಿಕೊಂಡು ಹೋಗುವಂತೆ ರೆಸಾರ್ಟ್ ಮುಂಬಾಗಿಲು ನಿರ್ಮಾಣವಾಗಿತ್ತು. +ಯಾವ ನಗರದ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಶಾಲೆ ಸುಸಜ್ಜಿತವಾಗಿತ್ತು. +ತೋಟದ ಕೆಲಸದವರ ಮಕ್ಕಳೇ ಹೆಚ್ಚಾಗಿದ್ದರೂ ಶಾಲೆಯಿಂದಲೇ ಅವರಿಗೆ ಎಲ್ಲ ಅನುಕೂಲ ಮಾಡಿಕೊಟ್ಟದ್ದರಿಂದ ಮಕ್ಕಳೆಲ್ಲ ಶಿಸ್ತಾಗಿ ಬರುತ್ತಿದ್ದು ಕಾನ್ವೆಂಟ್ ಮಕ್ಕಳಂತೆಯೇ ಕಾಣುತ್ತಿದ್ದರು. +ಶಾಲೆಯ ಬಗ್ಗೆ ಸುತ್ತಮುತ್ತ ಸುದ್ದೀ ಹರಡಿ ದೂರದೂರುಗಳಲ್ಲಿ ನೆಂಟರಿಷ್ಟರ ಮನೆಗಳಲ್ಲಿ ಮಕ್ಕಳನ್ನು ಬಿಟ್ಟಿದ್ದವರು ತಾವೇ ಸ್ವ‌ಇಚ್ಛೆಯಿಂದ ಮಕ್ಕಳನ್ನು ಕರೆತಂದು ಶಾಲೆಗೆ ಸೇರಿಸಲಾರಂಭಿಸಿದರು. +ಶಾಲೆ ಪ್ರಾರಂಭವಾದ ಕೆಲವೇ ದಿನಗಳಲ್ಲಿ ೪೦ ಇದ್ದ ಮಕ್ಕಳ ಸಂಖ್ಯೆ ಎಂಭತ್ತಕ್ಕೆ ಏರಿತು. +ಹೊಸದಾಗಿ ಬಂದಿದ್ದ ಶಿಕ್ಷಕರಾದ ಹರೀಶ, ಜೋಸೆಫ್ ಸೇವೆ ಮಾಡುವ ಮನಸ್ಥಿತಿಯವರೇ ಆದ್ದರಿಂದ ತಮ್ಮ ಸಮರ್ಪಣಾ ಮನೋಭಾವದಿಂದ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡರು. +ಅವರನ್ನು ಕಂಡು ಗಂಗಾಗೂ ಶಾಲೆ ಬಗ್ಗೆ ಪಾಠಪ್ರವಚನ ಬಗ್ಗೆ ಹೆಚ್ಚು ಆಸ್ಥೆ ಮೂಡಿ ಮಕ್ಕಳ ಕಲಿಕೆ ಪ್ರಗತಿ ಸಾಧಿಸತೊಡಗಿತು. +ಎಲ್ಲ ಮಕ್ಕಳು ಚೆನ್ನಾಗಿ ಕಲಿಯುತ್ತಿದ್ದರಿಂದ ಪೋಷಕರಿಗೂ ಸಂತೋಷವಾಯಿತು. +ಒಂದು ಒಳ್ಳೆ ಶಾಲೆ ಮಾದರಿ ಶಾಲೆ ಆ ಕುಗ್ರಾಮದಲ್ಲಿ ನಿರ್ಮಾಣವಾಗಿ ಅದೆಷ್ಟೋ ಮಕ್ಕಳು ಬಿಸಿಲು ಮಳೆ ಎನ್ನದೆ ದೂರ ದೂರ ನಡೆಯುವುದು ತಪ್ಪಿತೆಂದು ಈ ಶಾಲೆಗೆ ಖುಷಿಯಿಂದ ಓಡೋಡಿ ಬರುತ್ತಿದ್ದರು. +ಶಾಲೆಯ ರೀತಿನೀತಿಗಳು ಅತ್ಯಂತ ಶಿಸ್ತುಬದ್ಧವಾಗಿರಬೇಕು. +ಯಾವುದೇ ಕಾರಣಕ್ಕೂ ಶಿಸ್ತು ಉಲ್ಲಂಘಿಸಬಾರದು ಎಂದು ವಿಸ್ಮಯ ಶಿಕ್ಷಕರಿಗೆ ಕಟ್ಟಿನಿಟ್ಟಾಗಿ ಶರತ್ತು ವಿಧಿಸಿಬಿಟ್ಟಿದ್ದ. +ಶಾಲೆ ಎಂದರೆ ಪವಿತ್ರ ಮಂದಿರ ಎಂಬ ಭಾವನೆ ಎಲ್ಲರಲ್ಲಿರಬೇಕು. +ಯಾವುದೇ ಮಗು ಶಿಸ್ತು ಮೀರದಂತೆ ಶಿಕ್ಷಕರು ನೋಡಿಕೊಳ್ಳಬೇಕು. +ಅಂತಹ ಶಿಸ್ತಿನಿಂದಲೇ ಮುಂದೆ ಆ ಮಕ್ಕಳ ಭವ್ಯ ಭವಿಷ್ಯ ನಿರ್ಮಾಣವಾಗುತ್ತದೆ ಎಂದು ಸದಾ ಹೇಳುತ್ತಿದ್ದ. +ಶಿಕ್ಷಕರಿಗೂ ಅದು ಸರಿ ಎನಿಸಿತ್ತು. +ಇಲ್ಲಿ ಕೆಲಸ ಮಾಡಲು ಎಲ್ಲರಿಗೂ ಉತ್ಸಾಹವಿತ್ತು. +ಹೊಸತನ್ನು ಮಾಡುವ ಮನಸ್ಸು ಸದಾ ತುಡಿಯುತ್ತಿತ್ತು. +ಶಾಲೆಗೆ ಉತ್ತಮ ಶಿಕ್ಷಕರು ಸಿಕ್ಕಿದರು. +ಸ್ವ‌ಇಚ್ಛೆಯಿಂದಲೇ ಪರಿಶ್ರಮ ಹಾಕಿ ಶಕ್ತಿ ಮೀರಿ ಕಲಿಸುತ್ತಿದ್ದರು. +ಅವರನ್ನೇನು ಯಾರು ಕಾಯಬೇಕಾಗಿರಲಿಲ್ಲ. +ಶಾಲೆಯಲ್ಲಿ ಈ ರೀತಿಯ ಶಿಕ್ಷಣವಿದೆ ಎಂದು ಗೊತ್ತಾದ ಎಷ್ಟೋ ಜನ ಪೋಷಕರು ಮುಂದಿನ ಶೈಕ್ಷಣಿಕ ವರ್ಷದಿಂದ ತಮ್ಮ ಮಕ್ಕಳನ್ನು ದಾಖಲು ಮಾಡುವುದಾಗಿ ತಮಗೆ ಸೀಟು ಕೊಡಬೇಕೆಂದು ಕೇಳಿಕೊಂಡು ಮಕ್ಕಳ ಹೆಸರನ್ನು ನೋಂದಾಯಿಸಿಕೊಂಡರು. +ಹಾಗೆ ಬೇರೆ ಬೇರೆ ಊರುಗಳ ಶಾಲೆಗಳಿಂದ ಬರುವ ಮಕ್ಕಳ ಸಂಖ್ಯೆ ಮುಂದಿನ ವರ್ಷ ಹೆಚ್ಚಾಗಬಹುದು. +ಅಂತ ಗೊತ್ತಾದ ಮೇಲೆ ಕಟ್ಟಡವನ್ನು ವಿಸ್ತರಿಸಲೇಬೇಕಂದು ವಿಸ್ಮಯ ಮತ್ತೆ ಕಟ್ಟಡ ಕಟ್ಟುವ ಕಾರ್ಯ ಆರಂಭಿಸಿದನು. +ಆ ಕುಗ್ರಾಮದಲ್ಲಿ ಶಾಲೆ ಇಷ್ಟೊಂದು ಅಭಿವೃದ್ಧಿ ಹೊಂದಬಹುದು ಅನ್ನೊ ಕಲ್ಪನೆಯೇ ಅಲ್ಲಿ ಯಾರಿಗೂ ಇರಲಿಲ್ಲ. +ಒಂದು ಶಾಲೆ ಕಟ್ಟಿ ಬೆಳೆಸುವುದು ಅದೆಷ್ಟು ಕಷ್ಟ ಅಂತ ಗೊತ್ತಿತ್ತು. +ಆದರೆ ಶಾಲೆ ಪ್ರಾರಂಭವಾದ ವರ್ಷದಲ್ಲಿಯೇ ಈ ರೀತಿಯ ಪ್ರೋತ್ಪಾಹ ಸಿಗುವುದು ಆಶ್ಚರ್ಯವೇ ಆಗಿತ್ತು. +ಸುತ್ತಮುತ್ತ ಒಳ್ಳೆ ಶಾಲೆ ಇಲ್ಲದಿರುವುದು, ಶಾಲೆಯಲ್ಲಿ ಕಲಿಸುವ ರೀತಿ, ಹೊಸ ರೀತಿಯ ಶಿಕ್ಷಣ- ಇದೆಲ್ಲ ಪೊಷಕರನ್ನು ಆಕರ್ಷಿಸಿ ತಮ್ಮ ಮಕ್ಕಳನ್ನೂ ಈ ಶಾಲೆಗೆ ಸೇರಿಸಲು ಕಾರಣವಾಗಿರಬಹುದು. +ಪಾಲಕರು ಏನೆಲ್ಲ ನಿರೀಕ್ಷೆ ಇಟ್ಟುಕೊಂಡು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸುತ್ತಿರುವಾಗ ಅದಕ್ಕೆ ತಕ್ಕಂತೆ ಶಾಲೆ ನಿರ್ಮಿಸಬೇಕು. +ಪ್ರಾಢಶಾಲೆಯನ್ನು ಕೂಡ ಪ್ರಾರಂಭಿಸಬೇಕು. +ನಂತರ ಸಾಧ್ಯವಾದರೆ ಕಾಲೇಜು ಕೂಡ, ಶಾಲೆ ಮುಗಿಸಿ ಹೊರಬೀಳುವ ವಿದ್ಯಾರ್ಥಿ ತನ್ನ ಸ್ವಂತ ಕಾಲ ಮೇಲೆ ತಾನು ನಿಲ್ಲುವಂತಹ, ಸ್ವತಃ ಸಂಪಾದಿಸುವ ಸಾಮರ್ಥ್ಯ ಬೆಳೆಸಿಕೊಂಡಿರಬೇಕು. +ಇದು ಈ ಶಾಲೆಯ ವೈಶಿಷ್ಟ್ಯವಾಗಬೇಕು. +ಆ ನಿಟ್ಟಿನಲ್ಲಿ ಈ ಶಾಲೆಗಾಗಿ ಏನೇನು ಮಾಡಬೇಕೋ ಅದನ್ನೆಲ್ಲ ನಿರ್ವಂಚನೆಯಿಂದ ಮಾಡಲು ವಿಸ್ಮಯ ಪಣ ತೊಟ್ಟನು. +ರೆಸಾರ್ಟ್ ಕಡೆ ಗಮನಕ್ಕಿಂತ ಈಗ ಶಾಲೆಯ ಬಗ್ಗೆಯೇ ಹೆಚ್ಚು ಆಸ್ಥೆ ವಹಿಸಿದನು. +ಮುಂದೆ ಒಂದು ಒಳ್ಳೆ ಸಂಸ್ಥೆಯಾಗಿ ಈ ಶಾಲೆ ಬೆಳೆಯಬೇಕು, ಇಲ್ಲಿನ ಎಲ್ಲಾ ಮಕ್ಕಳಿಗೂ ಶಾಲೆ ಒಂದು ಒಳ್ಳೆಯ ಭವಿಷ್ಯವನ್ನು ಕಲ್ಪಿಸಿ ಕೊಡುವಂತಿರಬೇಕು. +ಅಂತಹ ಬದುಕನ್ನು ಕಟ್ಟಿಕೊಡಲು ಒಂದು ಒಳ್ಳೆ ಪಡೆಯೇ ಸಿದ್ದವಾಗಿದೆ. +ಜೋಸೆಫ್‌ರಂತಹ ವಿಭಿನ್ನ ಆಲೋಚನೆ ಉಳ್ಳ, ಸಮರ್ಪಣಾ ಭಾವದಿಂದ ದುಡಿಯುವ, ಅವರಿಗೆ ಜೊತೆಗೂಡಿ ದುಡಿಯುವ ಹರೀಶ್, ಗಂಗಾ ಎಲ್ಲದಕ್ಕಿಂತ ಹೆಚ್ಚಾಗಿ ತನ್ನ ನೋವನ್ನು ಮರೆತು ಶಾಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಶಾಲೆಯ ಏಳಿಗೆಗಾಗಿ ದುಡಿಯಲು ಪಣ ತೊಟ್ಟಿರುವ ನೀಲಾ-ಇವರೆಲ್ಲರ ಟೀಮು ನಿಜಕ್ಕೂ ಶಾಲೆಯನ್ನು ಮುನ್ನಡೆಸುತ್ತದೆ. +ಅಭಿವೃದ್ಧಿಪಡಿಸಿ ಆ ಮೂಲಕ ಸಮಾಜಕ್ಕೊಂದು ಒಳ್ಳೆಯ ಕೊಡುಗೆ ನೀಡುತ್ತದೆ ಎಂಬ ಆತ್ಮವಿಶ್ವಾಸ ಹಾಗೂ ನಂಬಿಕೆಯಿಂದ ವಿಸ್ಮಯ ಧನ್ಯತೆ ಅನುಭವಿಸಿದ. +ತನ್ನ ವೈಯಕ್ತಿಕ ಹಾಗೂ ಯಾರಲ್ಲಿಯು ಹೇಳಲಾರದ ಅವ್ಯಕ್ತ ನೋವು, ಬೆಂಗಳೂರಿನಿಂದ ಹೆತ್ತವರಿಂದ ದೂರವಾಗಿ ಇಷ್ಟು ದೂರ ರೆಸಾರ್ಟ್ ನೆವ ಹೇಳಿ ಬಂದಾಗಿದೆ. +ಇಲ್ಲಿನ ಬದುಕು ಹೇಗೋ ಏನೋ ಅಂದುಕೊಂಡಿದ್ದವನಿಗೆ ಇಂತಹ ಅಭೂತಪೂರ್ವ ಸ್ವಾಗತ, ಸಮಾಜದಲ್ಲಿ ಮನ್ನಣೆ, ಗಣ್ಯವ್ಯಕ್ತಿ ಎನಿಸಿಕೊಳ್ಳುವ ಅವಕಾಶ ಸಿಕ್ಕಿದ್ದು ಅವನ ಬದುಕಿನಲ್ಲಿ ಹೊಸ ಬಾಗಿಲು ತರೆದಂತಾಗಿತ್ತು. +ಇದನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದ. +ಒಟ್ಟಿನಲ್ಲಿ ಯಾರದೊ ಬಾಳಿನ ಅಪಶೃತಿ ಒಂದು ಒಳ್ಳೆಯ ಕಾರ್ಯಕ್ಕೆ ಸ್ಫೂರ್ತಿನೀಡಿತ್ತು. +ಅಲ್ಲಿ ಸಿಗದ ಮನಶ್ಶಾಂತಿ ವಿಸ್ಮಯನಿಗೆ ಇಲ್ಲಿ ಸಿಕ್ಕಿತು. +ರೆಸಾರ್ಟ್ ಕೆಲಸ ನಿಧಾನವಾಗಿ ಸಾಗುತ್ತಿತ್ತು. +ಆದರೆ ಶಾಲೆಯ ಕೆಲಸ ಭರದಿಂದ ಸಾಗಿತ್ತು. +ಇಲ್ಲಿಗೆ ಬರುವಾಗ ರೆಸಾರ್ಟ್ ಮಾಡಬೇಕು ಎಂಬ ಉದ್ದೇಶ ಮಾತ್ರ ಹೊತ್ತು ಬಂದಿದ್ದ ವಿಸ್ಮಯ ಬೆಂಗಳೂರಿನಿಂದ. +ತನ್ನವರಿಂದ ದೂರ ಇರಬೇಕು, ಯಾವುದಾದರೊಂದು ಬಿಸಿನೆಸ್ನಲ್ಲಿ ಮಗ್ನನಾಗಬೇಕು ಎಂದು ಆಲೋಚಿಸಿದಾಗ ಮನೆತನದ ಹೊಟೇಲ್ ಉದ್ಯಮ ಬಿಟ್ಟರೆ ಮತ್ತೊಂದು ಬಿಸಿನೆಸ್ ಅರಿವಿರಲಿಲ್ಲ. +ಪ್ರಕೃತಿಯ ಮಡಲಿನಲ್ಲಿ, ಪ್ರಶಾಂತವಾಗಿ ಇದ್ದು ಯಾವುದಾದರೂ ಜೀವನೋಪಾಯಕ್ಕೆ ಮಾಡಲೇಬೇಕೆಂದಾಗ ರೆಸಾರ್ಟ್ ಮಾಡುವ ಆಲೋಚನೆ ಹೊಳೆದದ್ದು. +ತಂದೆಯೂ ಈ ಯೋಜನೆಗೆ ಸುಲಭವಾಗಿ ಒಪ್ಪಿದ್ದರಿಂದ ವಿನಾಯಕನ ಸಹಕಾರದಿಂದ, ಇಲ್ಲಿ ಜಾಗ ಕೊಳ್ಳುವಂತಾಗಿತ್ತು. +ಜಾಗ ಕೊಳ್ಳುವಾಗ ಸುಂದರೇಶರು ಮೋಹನನ ಕನಸುಗಳ ಬಗ್ಗೆ ಹೇಳಿ, ವಿಷಾದದಿಂದಲೇ ಜಾಗದ ಜೊತೆಗೆ ಮೋಹನನ ಕನಸುಗಳನ್ನು ಮಾರುತ್ತಿದ್ದೇವೆ ಎಂದಾಗಲೇ ಶಾಲೆಯನ್ನು ತಗೆಯುವ ಆಲೋಚನೆ ಹುಟ್ಟಿದ್ದು. +ಸಣ್ಣದಾಗಿ ಪ್ರಾರಂಭ ಮಾಡಬೇಕು ಎಂದುಕೊಂಡಿದ್ದು- ಆದರೆ ಅದು ರೆಸಾರ್ಟ್ ಆಸೆಯನ್ನು ಮೀರಿಸಿ ಶಾಲೆಗೆ ತನ್ನ ಹೆಚ್ಚು ಆಸಕ್ತಿ ಬೆಳೆಯುತ್ತದೆ ಎಂದು ಭಾವಿಸಿರಲೇ ಇಲ್ಲ. +ಈಗ ಶಾಲೆಯೇ, ಶಾಲೆಯ ಬಗ್ಗೆಯೇ ಹೆಚ್ಚು ಹೆಚ್ಚು ಆಸೆ ಹುಟ್ಟುತ್ತಿದೆ. +ಇಲ್ಲಿ ರೆಸಾರ್ಟ್‌ಗಿಂತ ಶಾಲೆಯ ಅಗತ್ಯವೇ ಹೆಚ್ಚಾಗಿದೆ. +ರೆಸಾರ್ಟ್‌ನಿಂದ ಎಲ್ಲೋ ಕೆಲ ಜನ ಬಂದು ಎಂಜಾಯ್ ಮಾಡಿ ಹೋಗಬಹುದು. +ಆದರೆ ಶಾಲೆಯಿಂದ ನೂರಾರು ಮಕ್ಕಳ ಭವಿಷ್ಯ ನಿರ್ಧಾರವಾಗುತ್ತದೆ. +ಭಾವಿ ಪ್ರಜೆಗಳ ಭವ್ಯ ಭವಿಷ್ಯ ನಿರ್ಮಿಸುವ ಅವಕಾಶ ನನ್ನದಾಗುತ್ತಿದೆ. +ಇಲ್ಲಿ ಹೆಚ್ಚು ಸುಖ ಎನಿಸುತ್ತಿದೆ. +ಎಲೆಲ್ಲ ಕಳೆದುಕೊಂಡಿದ್ದ ನೆಮ್ಮದಿ ನನಗೆ ಇಲ್ಲಿ ಸಿಗುವಂತಾಯಿತೇ ಎಂದುಕೊಂಡ ವಿಸ್ಮಯ. +ಜೋಸೆಫ್ ಡಿಗ್ರಿ ಮಾಡಿದ್ದು ಶೈಕ್ಷಣಿಕ ರಂಗದ ಪ್ರಗತಿಗಾಗಿ ನೂರಾರು ಕನಸುಗಳನ್ನು ಕಾಣುತ್ತಿದ್ದನು. +ಮಕ್ಕಳಿಗೆ ಬರೀ ಪುಸ್ತಕದ ಪಾಠ ಮುಂದಿನ ಬದುಕಿಗೆ ನೆರವಾಗಲಾರವು. +ಅವರ ಬದುಕನ್ನು ಕಟ್ಟಿಕೊಡುವಂತಹ ಕೆಲಸ ಈ ಹಂತದಿಂದಲೇ ಆಗಬೇಕೆಂದು ಬಯಸುತ್ತಿದ್ದ ಜೋಸೆಫ್ ವಿಸ್ಮಯನೊಂದಿಗೆ ಮಾತನಾಡಿ ಓದುವ ಜೊತೆ ಜೊತೆಗೆ ತಮ್ಮ ಕಾಲ ಮೇಲೆ ತಾವು ನಿಲ್ಲುವಂತಹ ಸ್ವಾವಲಂಬನೆಯ ಬದುಕನ್ನು ವಿದ್ಯಾರ್ಥಿ ಜೀವನದಲ್ಲಿಯೇ ಹಣಗಳಿಸುವ ವ್ಯವಸ್ಥೆಯನ್ನು ಶಾಲೆಯಲ್ಲಿ ಅಳವಡಿಸೋಣ. +ಇಡೀ ದಿನ ಮಕ್ಕಳು ಪಾಠ ಕಲಿಯಬೇಕಿಲ್ಲ. +ಪಾಠ ಕಲಿತು ಉಳಿದ ಸಮಯವನ್ನು ಇಂತಹ ಕೆಲಸದಲ್ಲಿ ಮಕ್ಕಳನ್ನು ತೊಡಗಿಸೋಣ ಎಂದು ಒಪ್ಪಿಸಿದರು. +ಆಟ ಪಾಠದ ಜೊತೆಗೆ ದುಡಿಮೆಗೆ ಹಚ್ಚುವ ವಿಧಾನಗಳನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳಲು ಸಕಲ ಸಿದ್ದತೆ ಮಾಡಿಕೊಂಡರು. +ಯಾವ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅಂತಹ ಕೆಲಸವನ್ನು ಆರಿಸಿಕೊಳ್ಳಲು ಸ್ವತಂತ್ರ ಕೊಡಲಾಯಿತು. +ವ್ಯವಸಾಯ ಮಾಡುವ ಆಸಕ್ತಿ ಇರುವ ಮಕ್ಕಳಿಗಾಗಿಯೇ ಒಂದು ಎಕರೆ ಜಾಗ ಬಿಟ್ಟು ಕೊಡಲಾಯಿತು. +ಅವರ ಸಹಾಯಕ್ಕಾಗಿ ತೋಟಗಾರಿಕೆ ಬಲ್ಲ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಲಾಯಿತು. +ಮರಗೆಲಸ, ಕರಕುಶಲತೆ, ಟೈಲರಿಂಗ್, ಸಂಗೀತ, ನೃತ್ಯ ಹೀಗೆ ಎಲ್ಲಾ ರೀತಿಯ ಕಲಿಕೆಯನ್ನು ಹಂತ ಹಂತವಾಗಿ ಶಾಲೆಯಲ್ಲಿ ಅಳವಡಿಸಿಕೊಳ್ಳಲು ಸಿದ್ದತೆ ನಡೆಸಿದರು. +ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಕಲಿಯುತ್ತಲೇ ಯಾವುದಾದರೊಂದು ವಿಚಾರದಲ್ಲಿ ಪರಿಣತಿ ಪಡೆಯಲು ಮಕ್ಕಳಿಗೆ ಕಡ್ಡಾಯ ಹೇರಲು, ಆ ಮೂಲಕ ಮಕ್ಕಳಲ್ಲಿ ದುಡಿಯುವ ಪ್ರವೃತ್ತಿ ಬೆಳೆಸಲು ಯೋಜನೆ ಹಾಕಿಕೊಳ್ಳಲಾಯಿತು. +ಅಲ್ಲಿ ಕಲಿತು ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಿ ಗಳಿಸುವ ದಾರಿಯನ್ನು ಕೂಡ ಕಂಡುಕೊಳ್ಳಲು ಈ ಯೋಜನೆ ನೆರವು ನೀಡುವುದು ಈ ಶಾಲೆಯ ವಿಶಿಷ್ಟತೆಯಾಯಿತು. +ಜೋಸೆಫರ ಜೊತೆ ಜೊತೆಗೆ ನೀಲಾ, ಹರೀಶ್, ಗಂಗಾ ತಮ್ಮ ಸಹಕಾರ ನೀಡಿ, ಜೋಸೇಫನ ಕನಸುಗಳಿಗೆ ನೀರೇರೆದರು. +ಪತ್ರಿಕೆಯನ್ನು ಓದುತ್ತಿದ್ದ ಇಳಾ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಹಿಂದಿನ ಶೈಕ್ಷಣಿಕ ಅರ್ಹತೆಯಿಲ್ಲದೆ ಪದವಿಯನ್ನು ಓದಬಹುದು. +ಮನೆಯಲ್ಲಿಯೇ ಕುಳಿತು ಓದಿ ಪರೀಕ್ಷೆಗೆ ಹಾಜರಾಗಬಹುದು ಎಂದು ತಿಳಿದುಕೊಂಡಳು. +ಡಿಗ್ರಿಗೆ ಕಟ್ಟಿಬಿಡೋಣವೆಂದು ಆಲೋಚನೆ ಮಾಡಿದಳು. +ಯಾವುದೋ ಒಂದು ಡಿಗ್ರಿ, ಮನೆಯಲ್ಲಿಯೋ, ಕಾಲೇಜಿಗೆ ಹೋಗಿಯೋ ಒಂದು ಡಿಗ್ರಿ ಅಂತ ಆದರೆ ಸಾಕು ಎಂದುಕೊಂಡು ಬಿಕಾಂಗೆ ಸೇರೋಣ ಅಂತ ತೀರ್ಮಾನ ಮಾಡಿದಳು. +ಹಾಗೆ ಮತ್ತೊಂದು ಆಲೋಚನೆ ಹೊಳೆಯಿತು. +ಅಮ್ಮನೂ ಯಾಕೆ ನನ್ನ ಜೊತೆ ಪರೀಕ್ಷೆ ತೆಗೆದುಕೊಳ್ಳಬಾರದು. +ಹೇಗೂ ಶಾಲೆಯ ಕೆಲಸ ಸಿಕ್ಕಿದೆ, ಶಾಲೆಯ ಮುಖ್ಯಸ್ಥೆ ಎಂದು ಹುದ್ದೆ ನೀಡಿರುವಾಗ ಅದಕ್ಕೆ ತಕ್ಕಂತೆ ಅರ್ಹತೆಯೂ ಇರಬೇಕಲ್ಲವೆ? +ಮೂರು ವರ್ಷದಲ್ಲಿ ಡಿಗ್ರಿ ಮಾಡಿಬಿಡಬಹುದು-ಆ ಆಲೋಚನೆ ಬಂದಿದ್ದೆ ತಡ. +ಶಾಲೆಯತ್ತ ಬಂದಳು. +ಆಫೀಸು ರೂಂನಲ್ಲಿ ಕುಳಿತ ನೀಲಾ ಏನೋ ಬರೆಯುತ್ತ ಕುಳಿತಿದ್ದಳು. +ಹಾಗೆ ಕುಳಿತ ತಾಯಿಯನ್ನು ನೋಡಿ ಒಂಥರ ಖುಷಿಯಾಯಿತು. +ಮನೆಯೊಳಗೆ ಅಡುಗೆ ಮಾಡಿಕೊಂಡು ಮನೆಯೇ ಸರ್ವಸ್ವ ಎಂದು ಕುಳಿತಿದ್ದ ಅಮ್ಮ ಇಂದು ಒಂದು ಶಾಲೆಯ ಮುಖ್ಯಸ್ಥೆ ಎನಿಸಿಕೊಂಡಿರುವುದು ಹೆಮ್ಮೆ ಎನಿಸಿ ಪ್ರೀತಿಯಿಂದ ತಾಯಿಯನ್ನೇ ದಿಟ್ಟಿಸಿದಳು. + ಅಪ್ಪ ಸತ್ತ ದಿನಗಳಲ್ಲಿ, ಅಳುತ್ತ ಊಟ-ತಿಂಡಿ ಬಿಟ್ಟು ಸದಾ ಅದೇ ಯೋಚನೆಯಲ್ಲಿ ಮುಳುಗಿ ಬದುಕೇ ಮುಗಿದುಹೋಯಿತೆಂದು ದುಃಖಿಸುತ್ತ ಹಾಸಿಗೆ ಹಿಡಿದಿದ್ದ ಅಮ್ಮನೆಲ್ಲಿ? +ಆತ್ಮವಿಶ್ವಾಸದಿಂದ ಬೀಗುತ್ತ ತದೇಕ ಚಿತ್ತದಿಂದ ಫೈಲ್ ಒಳಗೆ ಮುಳುಗಿ ಹೋದ ಈಗಿನ ಅಮ್ಮನೆಲ್ಲಿ? +ನಿಜಕ್ಕೂ ಇಂತಹ ಅವಕಾಶ ಮಾಡಿಕೊಟ್ಟ ವಿಸ್ಮಯಗೆ ನಾವು ಋಣಿಯಾಗಿರಬೇಕು. +ಆ ಪುಣ್ಯಾತ್ಮ ಇಂತಹದೊಂದು ಯೋಜನೆ ಕೈಗೊಂಡು ಅಮ್ಮನ ಬದುಕನ್ನು ಹೊಸ ದಿಕ್ಕಿನತ್ತ ಕರೆದೊಯ್ದಿದ್ದಾನೆ, ಅಂಥ ಆಲೋಚನೆ ವಿಸ್ಮಯಗೆ ಕೊಟ್ಟ ದೇವರಿಗೆ ದೊಡ್ಡ ಥ್ಯಾಂಕ್ಸ್. +ಏಕೋ ಕತ್ತೆತ್ತಿದ ನೀಲಾ ಮಗಳು ತದೇಕ ಚಿತ್ತದಿಂದ ತನ್ನನ್ನೆ ನೋಡುತ್ತಿರುವುದನ್ನು ಕಂಡು…‘ಇಳಾ, ಇದೇನು ಸ್ಕೂಲಿನತನಕ ಬಂದುಬಿಟ್ಟದ್ದೀಯಾ? +ಬಂದು ಎಷ್ಟು ಹೊತ್ತಾಯಿತು? +ಸುಮ್ನೆ ನಿಂತಿದ್ದೀಯಲ್ಲ… ಬಾ ಕೂತ್ಕೋ’ ಎಂದು ಅವಳನ್ನು ಎಚ್ಚರಿಸಿದಳು. +‘ಆಗ್ಲೆ ಬಂದೆ ಅಮ್ಮ, ನೀನು ಏನೋ ಬರೀತಾ ಇದ್ಯಲ್ಲ, ಡಿಸ್ಟರ್ಬ್ ಮಾಡುವುದು ಬೇಡವೆಂದು ಸುಮ್ಮನಿದ್ದೆ. +ಕ್ಲಾಸಿಲ್ವಾ ನಿಂಗೆ’ ಎಂದಳು. +‘ಕ್ಲಾಸ್ ಕಡೆ ಗಮನ ಕೊಡೋಕೆ ಆಗ್ತಾ ಇಲ್ಲಾ, ಆಫೀಸ್ ಕೆಲಸನೇ ತುಂಬಾ ಆಗ್ತ ಇದೆ, ಅದಕ್ಕೆ ಒಬ್ಬ ಕ್ಲರ್ಕ್ ಹುದ್ದೆಗೆ, ಒಬ್ರು ನರ್ಸರಿ ನೋಡ್ಕೋಳ್ಳೋಕೆ ಅಂತ ಇಬ್ಬರನ್ನು ಕೆಲಸಕ್ಕೆ ತಗೋಬೇಕಾಗಿದೆ, ಅದಕ್ಕೆ ಅಪ್ಲಿಕೇಶನ್ ಬಂದಿದೆ. +ಅದನ್ನ ನೋಡ್ತ ಇದ್ದೆ, ಯಾರನ್ನ ತಗೋಬಹುದು ಅಂತ, ವಿಸ್ಮಯ ನಿಮಗೆ ಯಾರು ಸರಿ ಅನ್ನಿಸುತ್ತಾರೋ ಅವರ್‍ನ ತಗೊಳ್ಳಿ ಅಂದಿದ್ದಾರೆ’ ಎಂದಳು. +‘ಹೌದಾ ಅಮ್ಮ… ಮತ್ತಿಬ್ಬರನ್ನ ತಗೋತಾ ಇದ್ದೀರಾ, ಒಳ್ಳೆಯದಾಯ್ತು ಬಿಡು, ನಿಂಗೂ ಹೊರೆ ಕಡಿಮೆ ಆಗುತ್ತೆ, ನಾನು ಈವಾಗ ಯಾಕೆ ಬಂದೆ ಗೊತ್ತಾ, ಈ ಪೇಪರ್ ಓದು’ ಅಂತ ಪತ್ರಿಕೆಕೊಟ್ಟಳು. +‘ಏನಿದೆ, ಪೇಪರ್ನಲ್ಲಿ?’ ಕುತೂಹಲದಿಂದ ನೋಡಿದಳು. +ಅರ್ಥವಾಗದೆ ಏನಿದೆಯೊ ಅಂತ ವಿಶೇಷ ಎಂದು ಮಗಳನ್ನ ನೀಲಾ ಕೇಳಿದಳು. +‘ಓಪನ್ ಯುನಿವರ್ಸಿಟಿಲಿ ಡಿಗ್ರಿ ಮಾಡಬಹುದು ಅಂತ ಬಂದಿದೆ ನೋಡು’ ಎಂದು ತೋರಿಸಿದಳು ಇಳಾ. +ಕೂಡಲೇ ನೀಲಾ ಮ್ಲಾನವದನಳಾದಳು. +ಈ ವೇಳೆಗೆ ಮಗಳು ಎಂ.ಬಿ.ಬಿ.ಎಸ್.ಸೇರಬೇಕಿತ್ತು. +ಅದೆಷ್ಟು ವರ್ಷಗಳ ಕನಸು, ಮಗಳನ್ನು ಡಾಕ್ಟರನ್ನಾಗಿ ಮಾಡಬೇಕೆಂಬುದು, ಈ ಕನಸು ಹಾಗೆ ಮರುಟಿ ಹೋಯಿತಲ್ಲ. +ಪಳ ಪಳನೇ ಕಣ್ಣೀರು ಉದುರಿದವು. +‘ಅಮ್ಮ, ಅಳ್ತಾ ಇದ್ದೀಯಾ, ಈ ರೀತಿ ಅಳುವುದ್ರಿಂದ ಏನಾದರೂ ಪ್ರಯೋಜನ ಇದೆಯಾ? +ಬದುಕು ಹೇಗೆ ಬರುತ್ತೋ ಹಾಗೆ ಸ್ವೀಕರಿಸಬೇಕು ಅಲ್ವೆನಮ್ಮ. +ನಾವು ಅಂದುಕೊಂಡಿದ್ದೆಲ್ಲ ಆಗಲೇಬೇಕು ಅಂದ್ರೆ ಹೇಗೆ, ಒಂದು ದಾರಿ ಮುಚ್ಚಿಕೊಂಡರೆ, ಇನ್ನೊಂದು ದಾರಿ ಕಂಡೇ ಕಾಣುತ್ತೆ. +ಸೂರ್ಯ ಮುಳುಗಿ ಹೋದ ಅಂತ ಚಿಂತಿಸುತ್ತ ಕುಳಿತುಬಿಟ್ಟರೆ, ನಕ್ಷತ್ರಗಳನ್ನೇ ನೋಡೋ ಅವಕಾಶನೂ ತಪ್ಪಿ ಹೋಗುತ್ತೆ. +ಎಲ್ರೂ ಡಾಕ್ಟ್ರೇ ಆಗಬೇಕಾ? +ವಾಸ್ತವನ್ನ ಅರಗಿಸಿಕೊಳ್ಳೋದು ಕಷ್ಟವಾದ್ರೂ ಅರಗಿಸಿಕೊಳ್ಳಲೇಬೇಕು ಅಲ್ವೇನಮ್ಮ . +ನೀನು ಮತ್ತೇ ಅದೇ ವಿಚಾರದ ಬಗ್ಗೆ ಯೋಚನೆ ಮಾಡಬೇಡ, ಹೊಸ ಬದುಕು, ಹೊಸ ಕನಸು, ಹೊಸ ವಿಚಾರಗಳಿಂದ ನಾನು ಎಲ್ಲವನ್ನು ಮರೆಯೋ ಪ್ರಯತ್ನ ಮಾಡ್ತ ಇದ್ದೇನೆ. +ನಂಗೆ ನೀನು ಹೆಲ್ಪ್ ಮಾಡಬೇಕು ಅಮ್ಮ’ ಗಂಭೀರವಾಗಿ ಹೇಳ್ತಾ ಇದ್ದರೆ ನೀಲಾ ಮಗಳನ್ನು ನೋಡಿಯೇ ನೋಡಿದಳು. +ಇವಳು ನನ್ನ ಮಗಳು ಇಳಾನಾ… ? +ಇಷ್ಟೊಂದು ಪ್ರಬುದ್ಧವಾಗಿ ವಿವೇಚನೆ ಮಾಡೋವಷ್ಟು ದೊಡ್ಡವಳಾಗಿಬಿಟ್ಟಿದ್ದಾಳಾ… ? +ಅವಳ ಬದುಕನ್ನು ಅವಳೇ ನಿರ್ಧರಿಸುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದಾಳಾ? +ಮಗಳ ಬಗ್ಗೆ ಹೆಮ್ಮೆ ಎನಿಸಿತು. +ತನ್ನ ಮಗಳು ಚೊಕ್ಕ ಚಿನ್ನ ಎನಿಸಿ ಅಭಿಮಾನದಿಂದ ನೋಡಿದಳು. +ಆದರೆ ಅವಳು ಖಾಸಗಿಯಾಗಿ ಕುಳಿತು ಮನೆಯಲ್ಲಿಯೇ ಓದಿ ಡಿಗ್ರಿ ಮಾಡುವ ಬಗ್ಗೆ ಮನಸ್ಸು ಒಪ್ಪದಾಯಿತು. +‘ಇಳಾ, ನಿನ್ನ ಬಗ್ಗೆ ನಂಗೆ ಹೆಮ್ಮೆ ಅನ್ನಿಸುತ್ತಾ ಇದೆ. +ಆದರೆ ನೀನು ಈಗ ತಗೋತಾ ಇರೋ ನಿರ್ಧಾರ ನಂಗೆ ಒಪ್ಗೆ ಆಗ್ತ ಇಲ್ಲ. +ನಿಂಗಿನ್ನೂ ಚಿಕ್ಕ ವಯಸ್ಸು. +ಕಾಲೇಜಿನಲ್ಲಿ ಓದೋ ವಯಸ್ಸು. +ಮನೆಯಲ್ಲಿ ಕೂತ್ಕೊಂಡು ಓದೋ ಅಂತ ಗತಿ ನಿಂಗೇನು ಬಂದಿಲ್ಲ. +ಪಾಸು ಮಾಡಿ ಬಿ.ಎಸ್ಸಿ.ಗೆ ಸೇರಿಕೊ, ಡಿಗ್ರಿ ಆದ ಮೇಲೆ ಎಂ.ಎಸ್.ಸಿ ಮಾಡು, ನಿನ್ನ ಓದಿಸೋ ಜವಾಬ್ಧಾರಿ ನಂದು. +ಈ ಹುಚ್ಚು ಆಲೋಚನೆ ಬಿಟ್ಟು ಪಿ.ಯು.ಸಿ ಪರೀಕ್ಷೆ ಕಟ್ಟು’ ನಿರ್ಧಾರಿತ ದ್ವನಿಯಲ್ಲಿ ಹೇಳಿದಳು. +ಅಮ್ಮ ಈ ವಿಚಾರದಲ್ಲಿ ತುಂಬಾ ಕಟುವಾಗಿದ್ದಾಳೆ ಎನಿಸಿ ಮತ್ತೆ ಈಗ ಮಾತು ಮುಂದುವರಿಸುವುದು ಬೇಡ ಎಂದುಕೊಂಡು, ನೀಲಾಳಿಂದ ಪೇಪರ್ ತೆಗೆದುಕೊಂಡು ಒಂದೂ ಮಾತಾಡದೆ ಎದ್ದುಬಂದಳು. +ಮಗಳು ಮೌನವಾಗಿ ಎದ್ದು ಹೊರಟದ್ದನ್ನು ಕಂಡು ಮಗಳಿಗೆ ಬೇಸರವಾಗಿದೆ, ಆದ್ರೂ ಪರವಾಗಿಲ್ಲ, ಚಿಕ್ಕ ಹುಡುಗಿ ಅವಳಿಗೇನು ಗೊತ್ತಾಗುತ್ತೆ. + ಹಿರಿಯರಾಗಿ ನಾವು ಹೇಳಿದ ಹಾಗೆ ಅವಳು ಕೇಳಬೇಕು. + ಅವಳ ಭವಿಷ್ಯ ರೂಪಿಸುವ ಹಕ್ಕು ನನ್ನದು ಎಂದುಕೊಂಡು ತನ್ನ ಕೆಲಸ ಮುಂದುವರಿಸಿದಳು. +ಮನೆಗೆ ಬಂದ ಇಳಾ ತಾನು ಹಾಸನಕ್ಕೆ ಹೋಗಿ ಪ್ರಾಸ್ಪೆಕ್ಟ್ ತಂದುಬಿಡಬೇಕು. + ಅಮ್ಮನ ಮಾತು ಕೇಳುತ್ತ ಕೂತರೆ ಕೆಲಸ ಆಗುವುದಿಲ್ಲ. +ಹಾಸನದ ಸರ್ಕಾರಿ ಕಾಲೇಜಿನಲ್ಲಿ ಪ್ರಾಸ್ಪೆಕ್ಟ್ ಸಿಗುತ್ತದೆ. +ಮತ್ತೆ ಹಾಸನಕ್ಕೆ ಹೋಗಬೇಕು. +ನಾಳೆ ನಾಡಿದ್ದರಲ್ಲಿ ಬಿಡುವು ಮಾಡಿಕೊಂಡು ಹೋಗಿ ಬರಬೇಕು- ಅಂದುಕೊಂಡು ತೋಟದೊಳಗೆ ನಡೆದಳು. +ತೋಟದಲ್ಲಿ ಕೆಲಸ ನಡೆಯುತ್ತಿತ್ತು. +ಸುಂದರೇಶ್ ಅಲ್ಲಿ ಆಳುಗಳೊಂದಿಗೆ ಏನೋ ಮಾತಾಡ್ತ ನಿಂತಿದ್ದನ್ನು ನೋಡಿ ‘ಅರೆ ದೊಡ್ಡಪ್ಪ ಯಾವಾಗ ಬಂದ್ರಿ, ನಾನು ಶಾಲೆ ಹತ್ತಿರ ಹೋಗಿದ್ದೆ’ ದೊಡ್ಡಪ್ಪ ಇದ್ದ ಕಡೆ ಬರುತ್ತ ಹೇಳಿದಳು. +‘ನಿನ್ನ ತೋಟದ ಕೆಲಸ ಹೇಗೆ ಸಾಗ್ತ ಇದೆ ನೋಡೋಣ ಅಂತ ಬಂದೆ, ಪರ್ವಾಗಿಲ್ಲ ತೋಟದ ಮಗಳು ಅಂತ ನಿರೂಪಿಸುತ್ತ ಇದ್ದೀಯಾ, ಕೊಟ್ಟಿಗೆನೂ ನೋಡ್ಕೊಂಡು ಬಂದೆ. +ಹಸುಗಳು ಚೆನ್ನಾಗಿ ಹಾಲು ಕೊಡ್ತ ಇದ್ದಾವಾ? +ಡೈರಿ ವ್ಯಾನ್ ಇಲ್ಲಿಗೆ ಬರುತ್ತಂತೆ, ಒಳ್ಳೆಯದಾಯ್ತು ಬಿಡು, ಸುತ್ತಮುತ್ತ ಜನರಿಗೂ ಅನುಕೂಲವಾಯ್ತು. + ಅಂತೂ ಅಪ್ಪನ ಹೆಸರನ್ನು ಉಳಿಸೋಕೆ ಹೊರಡ್ತ ಇದ್ದೀಯಾ’ ಪ್ರೀತಿಯಿಂದ ಇಳಾಳ ತಲೆ ಸವರಿದರು. +ದೊಡ್ಡಪ್ಪನ ಪ್ರೀತಿ ತುಂಬಿದ ಮಾತಿನಿಂದ ಇಳಾ ಉತ್ಸಾಹಿತಳಾದಳು. +‘ದೊಡ್ಡಪ್ಪ, ನಾನೇ ನಿಮ್ಮನ್ನ ಹುಡುಕಿಕೊಂಡು ಬರ್ತಿದ್ದೆ. +ನೀವೇ ಬಂದ್ರಿ ಒಳ್ಳೆಯದಾಯ್ತು, ನಾನು ಈ ಕಾಫಿ ಗಿಡಗಳ ಬಗ್ಗೆ ಒಂದಿಷ್ಟು ವಿಚಾರ ತಿಳ್ಕೋಬೇಕಿತ್ತು. +ಕಾಫಿ ಗಿಡ ಹೇಗೆ ಬೆಳೆಸಬೇಕು, ಅವಕ್ಕೆ ಕಾಲ ಕಾಲಕ್ಕೆ ಏನೇನು ಕೊಡಬೇಕು ಅಂತ ಹೇಳಿ ದೊಡ್ಡಪ್ಪ.’ +‘ಬಾ ಇಲ್ಲೇ ಕುತ್ಕೊಂಡು ಮಾತಾಡೋಣ, ಈ ರೀತಿ ನಿನ್ನ ವಯಸ್ಸಿನ ಮಕ್ಕಳು ಕೇಳೋದೆ ಅಪರೂಪ. +ತೋಟದ ಕೆಲ್ಸ’ ಯಾರು ಮಾಡ್ತಾರೆ ಅಂತ ನಿನ್ನಣ್ಣ ಯಶವಂತ ಹೇಳ್ತಾನೆ. +ನಾನು ಬೆಂಗಳೂರಿಗೆ ಹೋಗ್ತೀನಿ, ಅಲ್ಲೇ ಯಾವುದಾದರೂ ಕೆಲ್ಸ ಮಾಡ್ತೀನಿ ಅಂತ ಕುಣಿತಾ ಇದ್ದಾನೆ. + ಈ ಹಳ್ಳಿ, ಈ ತೋಟ ಎಲ್ಲಾ ಬೋರಂತೆ ಅವನಿಗೆ.’ + ‘ಒಂದು ನಾಲ್ಕು ವರ್ಷ ಹೋಗಿ ಬರಲಿ ಸುಮ್ನೆ ಇರಿ ದೊಡ್ಡಪ್ಪ, ಆ ಮೇಲೆ ಅವನಿಗೆ ಗೊತ್ತಾಗುತ್ತೆ. +ರಾಜನಂತೆ ಇರೋ ಅವಕಾಶ ಇದ್ದರೂ ಆಳಿನಂತೆ ಬದುಕ್ತ ಇದ್ಧಿನಿ ಅಂತ. +ಆಗ ಅವನೇ ಇಲ್ಲಿಗೆ ಓಡಿಬರ್ತಾನೆ’ ಸಮಾಧಾನಿಸುವ ಯತ್ನ ಮಾಡಿದಳು. +‘ಇಲ್ಲಾ ಕಣಮ್ಮ, ಹಾಗೆ ಬರೋ ವಿಚಾರವೇ ಅವನಿಗೆ ಇಲ್ಲ. +ಈ ತೋಟ, ಆಸ್ತಿ ಪಾಸ್ತಿ ಎಲ್ಲಾ ನನ್ನ ಕಾಲಕ್ಕೆ ಕೊನೆ ಏನೋ ಅಂತ ಅನ್ನಿಸುತ್ತೆ. +ಸರಿ, ಆ ವಿಚಾರ ಬಿಡು, ಈಗ ನಿಂಗೆ ಕಾಫಿಗಿಡಗಳ ಬಗ್ಗೆ ಹೇಳ್ತೀನಿ ಕೇಳು. +ಕಾಫಿ ಗಿಡಗಳಿಗೆ ಒಳ್ಳೆ ಮಳೆ ಬಂದರೆ ಒಳ್ಳೆ ಫಸಲು ಬರುತ್ತೆ. +ಫೆಬ್ರವರಿ-ಮಾರ್ಚಿ ಕೊನೆ ವೇಳೆಗೆ ಒಂದು ಇಂಚಿನಿಂದ ಎರಡು ಇಂಚು ಮಳೆ ಬರಬೇಕು. +ಅನಂತರ ಹದಿನೈದರಿಂದ ಇಪ್ಪತ್ತು ದಿನಗಳೊಳಗೆ ಮಳೆ ಬಿದ್ದುಬಿಟ್ಟರೆ ನಮಗೆ ತುಂಬಾ ಅನುಕೂಲವಾಗುತ್ತೆ.’ +’ಈ ವರ್ಷ ಮಳೆ ಚೆನ್ನಾಗಿ ಬಂದಿದೆ ಅಲ್ವಾ, ದೊಡ್ಡಪ್ಪ’ +‘ಹೌದು ಈ ಬಾರಿ ಒಳ್ಳೆ ಫಸಲು ಬರಬಹುದು ಅಂತ ಅಂದುಕೊಂಡಿದ್ದೇವೆ. +ಅಲ್ಲಿ ನೋಡು ಕಾಫಿಗಿಡ ಅಕಡೆ ಮರದಂತೆ ಬೆಳೆದಿದೆ. +ಅದನ್ನ ರೊಬಾಸ್ಪ ಅಂತಾರೆ, ಅದೇ ರೀತಿ ಮರ ಕಾಫಿ ಅಂತನೂ ಇದೆ. +ಈ ಗಿಡಗಳಿಗೆ ಹೆಚ್ಚು ಖರ್ಚು ಬರುವುದಿಲ್ಲ. +ಆದರೆ ಈ ಕಾಫಿಗೆ ಬೆಲೆ ಕಡಿಮೆ. +ಗಿಡಗಳು ಮಾತ್ರ ಹೆಚ್ಚು ವರ್ಷ ಬಾಳುತ್ತವೆ. +ಆದರೆ ಕಡಿಮೆ ಕೆಲಸ. +ಈ ಗಿಡಗಳು ಬೆಳೆದು ಫಸಲು ಬಿಡಲು ಆರರಿಂದ ಎಂಟು ವರ್ಷ ತೆಗೆದುಕೊಳ್ಳುತ್ತವೆ, ಅರೆಬಿಕಾ ಗಿಡಕ್ಕಿಂತ ಎತ್ತರವಾಗಿ ಬೆಳೆಯುತ್ತವೆ.’ +‘ಅಪ್ಪ ಸ್ಕೂಲಿಗೆ ಹೋಗೋಕೆ ಹಟ ಮಾಡ್ಕೊಂಡು ರೊಬಾಸ್ಟ ಗಿಡದೊಳಗೆ ಅವಿತು ಕುಳಿತುಕೊಳ್ತ ಇದ್ರಂತೆ, ಅಪ್ಪ ಕಾಫಿಗಿಡದೊಳಗೆ ಅವಿತುಕೊಂಡಿರುತ್ತಾನೆ ಅಂತ ಅಜ್ಜಿಯೇ ಹುಡುಕಿ ಬಲವಂತವಾಗಿ ಶಾಲೆಗೆ ಕಳಿಸ್ತ ಇದ್ರಂತೆ, ಹಾಗಂತ ಅಪ್ಪ ಈ ಗಿಡ ತೋರಿಸ್ತ ಹೇಳ್ತಾ ಇದ್ರು.’ +‘ಹೌದು, ಮಹಾತುಂಟ ಅವನು, ಕಾಫಿತೋಟ ಬಿಟ್ಟು ಶಾಲೆಗೆ ಹೋಗೋದು ಅಂದ್ರೆ ಅವನಿಗೆ ಹಿಂಸೆ ಆಗ್ತಾಯಿತ್ತು. +ನಮ್ಮೆಲ್ಲರಿಗಿಂತ ಬುದ್ದಿವಂತ, ಓದೋ ಕಡೆ ಗಮನ ಕೊಟ್ಟಿದ್ರೆ ಆಫೀಸರ್ ಆಗಬಹುದಿತ್ತು. +ನೀನು ಅವನ ತರವೇ ಬುದ್ಧಿವಂತೆ. +ಆದ್ರೆ ಹೀಗಾಗಿ ಬಿಡ್ತಲ್ಲಾ’ ವ್ಯಥೆ ಒತ್ತಿಕೊಂಡು ಬಂದು ಇಳಾಳ ಕಡೆ ನೋಡಿದರು. +ವಿಷಯ ಎಲ್ಲಿದ್ದರೂ ಅಪ್ಪನ ಸಾವಿನ ಹತ್ತಿರಕ್ಕೆ ಬಂದು ನಿಂತು ಅದನ್ನು ನೆನಪಿಸುವ ಸಂದರ್ಭ ತಾನಾಗಿ ಬಂದುಬಿಡುತ್ತಿತ್ತು. +ಇದು ವಿಪಾದವೆನಿಸಿದರೂ ಬೇರೆಡೆ ಗಮನ ಹರಿಸುವ ಪ್ರಯತ್ನದಲ್ಲಿ ಇಳಾ. +‘ದೊಡ್ಡಪ್ಪ, ರೊಬಾಸ್ಟದ ಗಿಡಗಳ ಕಾಂಡ ಎಷ್ಟು ದಪ್ಪ ಅಲ್ಲವಾ? +ಮರದ ಥರಾ ಬಲವಾಗಿದೆ.’ +‘ಹೌದು, ಈ ಗಿಡಗಳಿಗೆ ನೀರಿನ ಆಸರೆ ಇದ್ದುಬಿಟ್ಟರೆ ಹೆಚ್ಚು ಕೆಲಸನೇ ಇರೊಲ್ಲ, ಕಳೇ ಹೆಚ್ಚು ತೆಗೆಯೊ ಹಾಗಿಲ್ಲ. +ರಾಸಾಯನಿಕ ಗೊಬ್ಬರ ಬೇಕಿಲ್ಲ, ಕೊಟ್ಟಿಗೆ ಗೊಬ್ಬರ ಕೊಟ್ಟರೆ ಸಾಕು. +ಕಸಿ ಮಾಡಿ, ಚಿಗುರು ತೆಗೆದು, ನೀರು ಕೊಟ್ಟರೆ ಸಾಕು ಜಾಸ್ತಿ ಬೆಳೆ ತೆಗೆಯಬಹುದು.’ +‘ಚಿಗುರು ಯಾಕೆ ತೆಗಿಬೇಕು ದೊಡ್ಡಪ್ಪ?’ +‘ಚಿಗುರು ತೆಗಿಯದಿದ್ದರೆ ಗಿಡ ಹೇಗೆ ಬೇಕೋ ಹಾಗೆ ಬೆಳ್ಕೊಂಡು ಬಿಡುತ್ತದೆ. +ಹಾಗೆ ಬೆಳೆದರೆ ಫಸಲು ಕಡಿಮೆ ಆಗುತ್ತೆ. +ಅದಕ್ಕೆ ಅನಾವಶ್ಶಕವಾಗಿ ಬೆಳೆಯದಂತೆ ಬಂದ ಚಿಗುರುಗಳನ್ನು ತೆಗೆದುಬಿಡಬೇಕು. +ಇದಕ್ಕೆ ಸ್ಪ್ರೇ ಮಾಡುವ ಅವಶ್ಶಕತೆ ಬರುವುದಿಲ್ಲ. +ಒಂದು ಸಾರಿ ಈ ಗಿಡ ಬೆಳೆದರೆ ಐವತ್ತರಿಂದ ನೂರು ವರ್ಷದವರೆಗೆ ಬದುಕಿರುತ್ತವೆ. +ಒಟ್ಟಿನಲ್ಲಿ ರೊಬಾಸ್ಪ ಕಾಫಿ ಸುಲಭದ ಬೆಳೆ.’ +‘ಈ ಗಿಡಗಳೆಲ್ಲ ತಾತಾ ಹಾಕಿದ್ವಲ್ಪ ದೊಡ್ಡಪ್ಪ’ +‘ಹೌದು ರೊಬಾಸ್ಟ ಖರ್ಚು ಕಡಿಮೆ ಅಂತ ಅಪ್ಪ ಇದನೆ ಹಾಕಿದ್ದರು. +ಆದರೆ ನಾವೆಲ್ಲ ತೋಟ ಹಂಚಿಕೊಂಡ ಮೇಲೆ ಅರೇಬಿಕ್ ತಳಿಗಳನ್ನು ಹಾಕಿದ್ವಿ. +ಈ ಅರೇಬಿಕ್ ಸಸಿಗಳಲ್ಲಿ ನಂ.೯, ನಂ.೬, ಕಾಟಿಮಾರ, ರೊಹಿರ ಮುಂತಾದ ಹಲವಾರು ತಳಿಗಳಿವೆ. +ಇವೆಲ್ಲ ಇತ್ತೀಚಿನ ವೈಜ್ಞಾನಿಕ ಕ್ಷೇತ್ರದಿಂದ ಬಂದಿದ್ದು. +ಈ ತರದ ಸಸಿಗಳಿಗೆ ಹೆಚ್ಚಿನ ಖರ್ಚು ಮಾಡಬೇಕು. +ಈ ಗಿಡಗಳಿಗೆ ವರ್ಷದಲ್ಲಿ ಎರಡರಿಂದ ಮೂರು ಬಾರಿ ಚಿಗುರು ತೆಗಿಬೇಕು, ಕಸಿ ಮಾಡಬೇಕು, ರಾಸಾಯನಿಕ ಗೊಬ್ಬರ ಎರಡು ಅಥವಾ ಮೂರು ಸಾರಿ ಕೊಡಬೇಕು. +ಈ ಕಾಫಿಗೆ ಒಳ್ಳೆ ಬೆಲೆ ಇದೆ ಮಾರುಕಟ್ಟಿಯಲ್ಲಿ’ ಎಂದರು. +‘ದೊಡ್ಡಪ್ಪ ಅರೇಬಿಕ್ ಗಿಡಗಳಿಗೆ ಜಾಸ್ತಿ ರೋಗನೂ ಬರುತ್ತ ಅಂತಾರೆ’ ಕುತೂಹಲದಿಂದ ಕೇಳಿದಳು. +‘ಹೌದು. ಈ ಗಿಡಗಳಿಗೆ ಬೋರರ್ ಎಂಬ ರೋಗ ಬರುತ್ತದೆ. +ಈ ರೋಗದಲ್ಲಿ ಹುಳು ಕಾಂಡ ಕೊರೆದು ಗಿಡವನ್ನು ನಾಶ ಮಾಡುತ್ತದೆ. +ಅಲ್ಲಿ ಹೊಸ ಗಿಡ ಬೆಳೆಸಬೇಕಾಗುತ್ತದೆ. +ಈ ರೋಗ ತಡೆಯಲು ಮುಂಚೆ ಜಮಾಕ್ಸ್‌ವನ್ನು ಕಾಂಡಗಳಿಗೆ ವರ್ಷಕ್ಕೆ ಎರಡು ಬಾರಿ ಲೇಪನ ಮಾಡುತ್ತಿದ್ದರು. +ಈಗ ಅದು ಲಿಂಡಸ್ ಎಂಬ ಔಷಧಿಗೆ ಬದಲಾಗಿದೆ’ ಎಂದರು. +‘ಮತ್ತೇನು ರೋಗ ಬರಬಹುದು ದೊಡ್ಡಪ್ಪ’ +‘ಈಗ ಅಂದರೆ ಇತ್ತೀಚೆಗೆ ಬೆರ್ರಿ ಬೋರರ್ ಕಾಟ ಜಾಸ್ತಿಯಾಗಿ ಬಿಟ್ಟಿದೆ. +ಇದು ಕಾಫಿ ಬೆಳೆಯನ್ನೇ ತಿಂದು ಹಾಕಿ ಕಾಫಿ ಬೆಳೆಯನ್ನು ಹಾಳು ಮಾಡುತ್ತಿದೆ.’ +‘ಈ ಕೀಟ ಹೇಗಿರುತ್ತದೆ.’ +‘ಕಾಫಿ ಕಾಯಿಕೊರಕ ತೆಂಗಿನ ಗರಿ ತಿನ್ನುವ ಕೀಟವನ್ನೆ ಹೋಲುತ್ತಾದರೂ, ಸಾಸುವೆಯಷ್ಟು ಚಿಕ್ಕ ಗಾತ್ರದ್ದಾಗಿದೆ. +ಕಾಫಿಕಾಯಿ ಎಳೆಯದಾಗಿರುವ ಅಂದರೆ ಸಾಮಾನ್ಯವಾಗಿ ಆಗಸ್ಟ್ ಸೆಪ್ಟಂಬರ್‌ನಲ್ಲಿ ಹೆಣ್ಣು ಕೀಟ ಕಾಯಿಯನ್ನು ಪ್ರವೇಶಿಸಿ, ಅಲ್ಲೇ ಮೊಟ್ಟೆಯಿಟ್ಟು ಮರಿಗಳನ್ನು ಅಭಿವೃದ್ಧಿಪಡಿಸುತ್ತದೆ. +ಆ ಮರಿಗಳು ಬೆಳೆದು ಒಂದು ತಿಂಗಳಲ್ಲಿ ಮತ್ತೆ ಮರಿ ಇಡಲು ಪ್ರಾರಂಭಿಸುತ್ತವೆ. +ಹೀಗೆ ಒಂದೆರಡು ತಿಂಗಳಲ್ಲೇ ಸಾವಿರಾರು ಪಟ್ಟು ಅಭಿವೃದ್ಧಿ ಹೊಂದಿ ಕಾಫಿ ಕಾಯಿಯಲ್ಲಿಯೇ ಆಶ್ರಯ ಪಡೆದು ಹೆಣ್ಣು ಕೀಟಗಳೆಲ್ಲ ಕಾಫಿಕಾಯಿಯ ಒಂದು ಬೀಜವನ್ನು ಕೊರೆದು ತಿನ್ನತ್ತವೆ.’ +‘ಕಾಫಿ ಒಣಗಿಸುವಾಗ ಇವು ಸತ್ತು ಹೋಕ್ತವಾ?’ +‘ಅಯ್ಯೋ ಅವೆಲ್ಲಿ ಸಾಯುತ್ತವೆ. +ಗಟ್ಟಿಪಿಂಡ ಅವು. +ಬೇಸಿಗೆಯಲ್ಲಿ ಬೀಜ ಒಣಗಿದರೂ ಅದರೊಳಗೆ ಭದ್ರವಾಗಿ ಮೂರು ತಿಂಗಳ ಕಾಲ ಬದುಕಿರುತ್ತವೆ. +ಅಲ್ಲಿಂದ ಮತ್ತೊಂದು ಪ್ರದೇಶಕ್ಕೂ ವರ್ಗವಾಗಿ ರೋಗ ಹರಡುತ್ತವೆ.’ +‘ಮತ್ತೆ ಅವುಗಳನ್ನು ಹೇಗೆ ದೊಡ್ಡಪ್ಪ ಹತೋಟಿ ಮಾಡೋದು’ ಆಗಲೇ ಚಿಂತೆ ಆವರಿಸಿಬಿಟ್ಟಿತು ಇಳಾಗೆ. +‘ಅಯ್ಯೋ ಅದಕ್ಯಾಕೆ ಪುಟ್ಟ ಅಷ್ಟೊಂದು ಚಿಂತೆ, ಸೆಪ್ಪಂಬರ್‌ನಲ್ಲಿಯೇ ಗಿಡಗಳಿಗೆ ಕ್ಲೋರೋಪೆರಿಫಾಸ್ ಔಷಧಿ ಸಿಂಪಡಿಸುವ ಮೂಲಕ ಕಾಯಿಕೊರಕ ಕೀಟಗಳ ಹಾವಳಿ ತಡೆಯಬಹುದು’ ಎಂದಾಗ ಇಳಾಗೆ ಸಮಾಧಾನವೆನಿಸಿತು. +‘ಇವತ್ತಿಗೆ ಇಷ್ಟು ಸಾಕು ಒಂದೇ ದಿನ ಎಲ್ಲವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. +ನಾ ಸಿಕ್ಕಾಗಲೆಲ್ಲ ನಿಂಗೆ ಬೇಕಾದ ವಿಚಾರ ಹೇಳ್ತಾ ಇರ್ತಿನಿ, ನಾ ಹೊರಡಲ’ ಎಂದರು. +‘ಇರಿ ದೊಡ್ಡಷ್ಟ, ಊಟ ಮಾಡ್ಕೊಂಡು ಹೋಗವಿರಂತೆ, ದೊಡ್ಡಮ್ಮರನ್ನು, ಅಕ್ಕನ್ನು ಕರ್ಕೊಂಡು ಬನ್ನಿ ದೊಡ್ಡಪ್ಪ.’ +‘ನೀನು ಬರಲೇ ಇಲ್ಲ ಮನೆಗೆ, ಒಂದು ಸಲನೂ ಈ ಸಲ ಬಂದಿಲ್ಲ. +ನಿಮ್ಮ ದೊಡ್ಡಮ್ಮನೂ ಹಾಗೆ ಹೇಳ್ತಾ ಇದ್ದಳು. +ನೀನು ನೀಲಾನೂ ನಿಮ್ಮ ಅಜ್ಜಿಯೂ ಒಂದು ಸಲ ಬಂದು ಬಿಡಿ. +ಬೆಳಗ್ಗೆ ಬಂದು ಸಂಜೆವರೆಗೂ ಇದ್ದು ಬರುವಿರಂತೆ. +ಊಟಕ್ಕೆ ನಿಮ್ಮ ದೊಡ್ಡಮ್ಮ ಕಾಯ್ತ ಇರ್ತಾಳೆ. +ಅಲ್ಲಿಗೇ ಹೋಗ್ತೀನಿ ಕಣಮ್ಮ’ ಎಂದು ಹೇಳಿ ಬೈಕ್ ಹತ್ತಿ ಹೊರಟೇಬಿಟ್ಟರು. +ಹೌದು ದೊಡ್ಡಪ್ಪ ಹೇಳಿದ್ದು ನಿಜ. +ದೊಡ್ಡಪ್ಪನ ಮನೆಗೆ ಹೋಗಿಯೇ ಇಲ್ಲ. +ಹೋದ ವರ್ಷ ರಜೆಯಲ್ಲಿ ಹೋಗಿದ್ದು. +ಅವ್ರನ್ನ ಅಪ್ಪ ಸತ್ತಾಗ ತಿಥಿಗೆ ಬಂದಾಗ ನೋಡಿದ್ದು, ಯಾವತ್ತಾದ್ರೂ ಹೋಗಿ ಬರಬೇಕು ಅಂದುಕೊಂಡಳು. +ಹಾಸನಕ್ಕೆ ಹೋಗಿ ಪ್ರಾಸ್ಪೆಕ್ಟ್ ತರಬೇಕು, ನಾಳೆನೇ ಹೋಗಿಬರಬೇಕು. +ಮೊದಲು ಎರಡು ಪ್ರಾಸ್ಪೆಕ್ಟ್ ತಂದು ಆಮೇಲೆ ಅಮ್ಮನಿಗೆ ಹೇಳಿ ಅಮ್ಮನೂ ಪರೀಕ್ಷೆ ಕಟ್ಟುವಂತೆ ಒಪ್ಪಿಸಬೇಕು. +ಹಾಗೆಂದುಕೊಂಡು ಮನೆಗೆ ಬರುವಷ್ಟರಲ್ಲಿ ಶಾಲೆಯ ಬೆಲ್ಲಾಗಿದ್ದು ಕೇಳಿಸಿತು. +ಅಮ್ಮ ಊಟಕ್ಕೆ ಬರ್ತ್ತಾಳೆ, ನಾಳೆ ಹಾಸನಕ್ಕೆ ಹೋಗುವ ವಿಚಾರ ತಿಳಿಸಬೇಕು ಎಂದುಕೊಂಡಳು. +ನೀಲಾ ಬರುವಷ್ಟರಲ್ಲಿ ಟೇಬಲ್ ಮೇಲೆ ಅಜ್ಜಿ ಮಾಡಿಟ್ಟಿದ್ದ ಅನ್ನ ಸಾರು ತಂದಿಟ್ಟು ತಟ್ಟೆ ತೊಳೆದು ಇಟ್ಟಳು. +ಕೈಕಾಲು ತೊಳೆದು ಒಳಬಂದಳು. +ನೀಲಾ, ತಟ್ಟೆಗೆ ಅನ್ನ ಬಡಿಸಿಕೊಂಡು ‘ದೊಡ್ಡಮ್ಮ ನೀನು ಬಂದುಬಿಡು. +ಆ ಮೇಲೆ ನೀನೊಬ್ಬಳೆ ಊಟ ಮಾಡಬೇಕಾಗುತ್ತೆ’ ಕೂಗು ಹಾಕಿದಳು. +‘ತಾಳು ಬರ್ತೀನಿ, ಇಳಾಗೆ ಇಷ್ಟ ಅಂತ ಮಜ್ಜಿಗೆ ಮೆಣಸಿನಕಾಯಿ ಕರೀತಿದ್ದೆ’ ಕರೆದ ಮೆಣಸಿನಕಾಯಿ ತರುತ್ತ ಹೇಳಿದರು ಅಂಬುಜಮ್ಮ. +‘ಅಜ್ಜಿ ನಂಗಿಷ್ಟ ಅಂತ ಯಾಕೆ ಹೇಳ್ತಿ ಅದು ನಿಂಗಿಷ್ಟ ಅಂತನೂ ಹೇಳು, ನನ್ನೆಸರು ಹೇಳಿ ತಾನು ತಿನ್ನೋದು…’ ಅಜ್ಜಿಯನ್ನು ರೇಗಿಸಿದಳು. +‘ನೋಡು ನಂಗೇನು ಬೇಕಾಗಿರಲಿಲ್ಲ. +ನಿಂಗೆ ಅಂತನೇ ಮಾಡಿದ್ದು. +ಇರು ನಾಳೆಯಿಂದ ನೀನು ಏನು ಕೇಳಿದ್ರೂ ಮಾಡಲ್ಲ’ ಇಳಾಳ ಮೇಲೆ ಮುನಿಸಿಕೊಂಡವರಂತೆ ಹೇಳಿದರು. +‘ದೊಡ್ಡಮ್ಮ, ಬಾಯಲ್ಲಿ ನೀನು ಹಾಗಂತೀಯ… +ಅದ್ರೆ ಬೆಳಗಾದ ಕೂಡಲೇ, ಇಳಾಗೆ ಅದು ಇಷ್ಟ, ಇಳಾಗೆ ಇದು ಇಷ್ಟ ಅಂತ ಅವಳಿಗಿಷ್ಟವಾದದನ್ನೆ ಮಾಡ್ತೀಯಾ. +ಅದೇನು ಅಕ್ಕರೆಯೋ ಅವಳ ಮೇಲೆ, ನಾನಂತು ಅವಳ ಬಗ್ಗೆ ಗಮನಿಸೋಕೆ ಆಗ್ತ ಇಲ್ಲ. + ಎಲ್ಲಾ, ಪ್ರೀತಿನೂ ಅವಳಿಗೆ ತುಂಬಿಕೊಡ್ತ ಇದ್ದೀಯಾ ದೊಡ್ಡಮ್ಮ’ ಭಾವುಕಳಾಗಿ ನೀಲಾ ಹೇಳಿದಳು. +‘ನಾನು ತಾನೇ ಯಾರಿಗಾಗಿ ಮಾಡಬೇಕು ನೀಲಾ, ಮನೆಯಲ್ಲಿ ಇರೋದು ಇದೊಂದು ಮಗು, ಅವಳಿಗಾಗಿ ತಾನೇ ನಾವು ಮಾಡಬೇಕಾಗಿರುವುದು, ನಿಂಗಂತು ಏನೂ ಬೇಕಾಗಿಲ್ಲ. +ತಿನ್ನೊ ಉಣ್ಣೋ ವಯಸ್ಸು ಅವಳ್ದು. +ಅವಳ ಹೆಸರು ಹೇಳಿ ನಾವು ತಿನ್ನೋದು, ಅವಳೊಬ್ಬಳೇ ತಿನ್ನತ್ತಾಳಾ, ಸಂಜೆ ಬರೋ ಅಷ್ಟರಲ್ಲಿ ಪತ್ರೊಡೆ ಮಾಡೋಣ ಅಂತ ಅಕ್ಕಿ ನೆನೆಸಿದ್ದೇನೆ. + ಕೆಸುವಿನ ಎಲೆನಾ ಬೆಳಗ್ಗೆನೇ ತೋಟಕ್ಕೆ ಹೋಗಿ ಆಳುಗಳ ಕೈಯಲ್ಲಿ ಕುಯಿಸಿಕೊಂಡು ಬಂದಿದ್ದೇನೆ. +ನನಗೆ ತಾನೇ ಹೊತ್ತು ಹೋಗೋದು ಹೇಗೆ? +ಅಡುಗೆಮನೆ ಬಿಟ್ರೆ, ತೋಟಕ್ಕೆ ಹೋಗಿ ಸುತ್ತಾಡಿಕೊಂಡು ಬರೋದು… +ಅಷ್ಟೆ ನನ್ನ ಪ್ರಪಂಚ, ಇಲ್ಲಾಗಿದ್ದಕ್ಕೆ ಸಂತೋಷವಾಗಿದ್ದೇನೆ. +ನಂದೆ ಕೈ, ನಂದೇ ಬಾಯಿ, ಏನು ಮಾಡಿದ್ರು ಕೇಳೋರಿಲ್ಲ. +ನಿಮ್ಗೆ ಅಡುಗೆ ಮಾಡಿ ಹಾಕೋದ್ರಲ್ಲಿ ನಂಗೂ ಸುಖ ಅನ್ನಿಸುತ್ತೆ. +ಮಾತಾಡುತ್ತಲೇ ಊಟ ಬಡಿಸಿ ತಾನು ಬಡಿಸಿಕೊಂಡು ಕುಳಿತುಕೊಂಡರು. +‘ಅಮ್ಮ, ನಾಳೆ ನಾನು ಹಾಸನಕ್ಕೆ ಹೋಗಿ ಬರ್ತ್ತಿನಿ, ಪ್ರಾಸ್ಪೆಕ್ಟ್ ತರ್ತ್ತಿನಿ’ ಗಂಭೀರವಾಗಿ ಹೇಳಿದಳು. +‘ನಾನು ಬೇಡಾ ಅಂತ ಬೆಳಗ್ಗೆನೇ ಹೇಳಿದ್ನಲ್ಲ ಇಳಾ. +ನಾನು ಹೇಳೋದನ್ನ ಸ್ವಲ್ಪ ಕೇಳು, ವಿದ್ಯೆ ಇವತ್ತು ಎಷ್ಟು ಆಗತ್ಯ ಅಂತ ನಿಂಗೆ ಗೊತ್ತಿಲ್ವಾ.’ +‘ಅಮ್ಮ, ನೀನೇನು ಹೇಳಿದ್ರು ಆಷ್ಟೆ, ನಾನು ಮತ್ತೆ ಕಾಲೇಜಿಗೆ ಹೋಗುವುದಿಲ್ಲ, ಮನೆಯಲ್ಲಿಯೇ ಕುತ್ಕೊಂಡು ಓದಿ ಡಿಗ್ರಿ ತಗೋತಿನಿ, ನಾನು ನಡೆವ ಹಾದಿಯ ಬಗ್ಗೆ ನಿರ್ಧಾರ ತಗೊಂಡು ಆಗಿದೆ. +ಪದೇ ಪದೇ ಆದೇ ಚರ್ಚೆ ಮಾಡಿ ಬೇಜಾರು ಮಾಡಬೇಡ’ ಎಂದಾಗ. +ಅಂಬುಜಮ್ಮ ಇಳಾಗೆ ಬೇಸರ ಆಗ್ತ ಇದೆ ಅಂತ ಗೊತ್ತಾಗಿ ‘ನೀಲಾ ಆವಳು ಏನು ಬೇಕಾದ್ರು ಮಾಡಿಕೊಳ್ಳಲಿ, ಸುಮ್ಮನಿದ್ದು ಬಿಡು. +ಮೊದಲೇ ನೊಂದಿದೆ ಮಗು. +ನೀನು ಬೇರೆ ಆದು ಬೇಡ ಇದು ಬೇಡ ಅಂತ ಮಗು ಮನಸ್ಸಿಗೆ ಬೇಸರಪಡಿಸಬೇಡ. +ಅವಳು ಎಲ್ಲರ ಹಾಗೆ ಆಲ್ಲ, ಜಾಣೆ. +ತೀರ್ಮಾನ ತಗೋಳ್ಳೊ ಶಕ್ತಿ ಅವಳಿಗೆ ಇದೆ. + ನೀನು ಅವಳ ಶಕ್ತಿ ಬಗ್ಗೆ ತಿಳ್ಕೊ’ ನೀಲಾಗೆ ಬುದ್ಧಿ ಹೇಳಿದರು. +ದೊಡ್ಡಮ್ಮ ಹಾಗೆ ಹೇಳಿದ ಮೇಲೆ ಅವರ ಮಾತನ್ನು ಮೀರದಾದಳು. +ತನಗೆ ಇಷ್ಟವಿಲ್ಲದಿದ್ದರೂ ಏನಾದ್ರೂ ಮಾಡಿಕೊ ಅಂತ ಹೇಳಿ ಗಂಭೀರವಾಗಿ ಎದ್ದು- ಹೊರಟುಬಿಟ್ಟಳು. +ಅಮ್ಮನಿಗೆ ಬೇಸರವಾಗ್ತ ಇದೆ ಅಂತ ಗೊತ್ತಾದ್ರೂ ಪರ್ವಾಗಿಲ್ಲ, ನಾನು ಆಂದುಕೊಂಡ ಹಾಗೆ ನಡ್ಕೊತಿನಿ. +ನನಗೂ ಒಳ್ಳೆಯದು ಕೆಟ್ಟದ್ದು ನಿರ್ಧರಿಸೊ ಶಕ್ತಿ ಇದೆ. +ಅದನ್ನು ತೋರಿಸಿ ಕೊಡ್ತೀನಿ- ಮನದಲ್ಲಿಯೇ ಇಳಾ ಹೇಳಿಕೊಂಡಳು. +ಅಷ್ಟರಲ್ಲಿ ನಿವಾಸ್ನ ಫೋನ್ ಬಂದಿತು. +‘ಇಳಾ, ನಾನು ನಿವಾಸ್ ಮಾತಾಡ್ತ ಇರೋದು. +ನಾಳೆ ಹಾಸನದ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಒಂದು ಮೀಟಿಂಗ್ ಇಟ್ಟುಕೊಂಡಿದ್ದೇವೆ. +ಬರೋಕೆ ಆಗುತ್ತಾ’ ಅಂತ ಕೇಳಿದ. +‘ನಾಳೆ ನಾನು ಹಾಸನಕ್ಕೆ ಹೊರಟಿದ್ದೆ ಸಾರ್, ನಾನು ಬರ್ತ್ತಿನಿ ಸಾರ್’ ಖುಷಿಯಿಂದಲೇ ಒಪ್ಪಿದಳು. +‘ಅಜ್ಜಿ, ನಾನು ಬೇಗ ಬೆಳಗ್ಗೆ ಹೊರಡ್ತೀನಿ. +ಅಲ್ಲೊಂದು ಪ್ರೋಗ್ರಾಂ ಇದೆ, ಅಮ್ಮಂಗೆ ನೀನು ಹೇಳದೆ ಇದ್ರೆ, ನಾನು ಹಾಸನಕ್ಕೆ ಹೋಗೋಕೆ ಒಪ್ತನೇ ಇರ್ತಿಲ್ಲ. +ಕಾಲೇಜಿಗೆ ಹೋಗು ಅಂತಾಳೆ. +ನನ್ನ ಫ್ರೆಂಡ್ಸ್ ಎಲ್ಲಾ, ಡಾಕ್ಟರ್ ಇಂಜಿನಿಯರಿಂಗ್ ಓದ್ತಾ ಇರ್ತ್ತಾರೆ, ನಾನು ಒಂದು ವರ್ಷ ಹಿಂದಿನ ತರಗತಿಗೆ ಹೋಗಬೇಕು. +ನಾ ಹೇಗೆ ಹೋಗಲಿ? +ಅಮ್ಮಂಗೆ ಅರ್ಥನೇ ಆಗಲ್ಲ, ಕಾಲೇಜಿಗೆ ಹೋದ್ರೂ ಡಿಗ್ರಿನೇ ಆಗೋದು, ಮನೆಯಲ್ಲಿಯೇ ಓದಿ ಪರೀಕ್ಷೆ ಬರೆದರೂ ಡಿಗ್ರಿನೇ ಆಗೋದು- ನನ್ನ ಹಣೆಯಲ್ಲಿ ಹೀಗೆ ಬರೆದಿರುವಾಗ ಯಾರು ಅದನ್ನು ತಪ್ಪಿಸಲು ಸಾಧ್ಯ. +ಅಜ್ಜಿ ನಾನು ಇಲ್ಲಿಯೇ ಇದ್ದು ಏನಾದ್ರು ಸಾಧಿಸುತ್ತೇನೆ ನೋಡ್ತ ಇರಜ್ಜಿ’ ಅಜ್ಜಿಯ ಹತ್ತಿರ ತನ್ನ ಮನದಾಳದ ಮಾತುಗಳನ್ನು ಹೇಳಿಕೊಂಡಳು. +‘ಹೋಗ್ಲಿಬಿಡು ಚಿನ್ನು, ಅಮ್ಮಂಗೂ ನಿನ್ನ ಡಾಕ್ಟರ್ ಮಾಡಿಸೋಕೆ ಆಗಲಿಲ್ಲವಲ್ಲ ಅನ್ನೋ ನೋವು. +ಓದೋ ವಯಸ್ಸಿನಲ್ಲಿ ನೀನು ತೋಟ, ಮನೆ ಅಂತ ಸುತ್ತಾಡ್ತ ಇದ್ರೆ ಅವಳೆದೆ ಎಷ್ಟು ಉರಿಯಬಹುದು. +ಇರೋ ಒಬ್ಬ ಮಗಳ ಭವಿಷ್ಯ ಹೀಗಾಯಿತಲ್ಲ… ಅನ್ನೊ ನೋವು ಅವಳನ್ನ ಕಾಡ್ತನೇ ಇರುತ್ತದೆ. +ನೀನೇನು ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡ. +ನಿಂಗೇನು ಮಾಡಬೇಕು ಅನ್ನಿಸುತ್ತೋ ಹಾಗೆ ಮಾಡು. +ನಾನು ನಿಮ್ಮಮ್ಮಂಗೆ ಸಮಾಧಾನ ಮಾಡತಿನಿ, ಸಧ್ಯ ಈ ಶಾಲೆ ಒಂದು ಶುರುವಾಗಿದ್ರಿಂದ ನೀಲಗೆ ಅದೆಷ್ಟು ಅನುಕೂಲ ಆಯ್ತು. +ಮನೆಯಲ್ಲಿಯೇ ಕುಳಿತು ಸದಾ ಮೋಹನನ ಯೋಚ್ನೆ ಮಾಡ್ತ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಳು. +ಸ್ಕೂಲಿಗೆ ಹೋಗೋಕೆ ಶುರುವಾದ ಮೇಲೆ ಒಂದಿಷ್ಟು ಗೆಲುವಾಗಿದ್ದಾಳೆ. +ಹೇಗೊ ಈ ಮನೆಗೆ ಬಡಿದಿರೊ ರಾವು ನಿಧಾನಕ್ಕೆ ಹೋದ್ರೆ ಸಾಕು. +ಬೆಳಗ್ಗೆ ನೀ ಹೋಗೊ ಅಷ್ಟರಲ್ಲಿ ತಿಂಡಿ ಮಾಡಿಬಿಡ್ತೀನಿ’ ಅಂಬುಜಮ್ಮ ಇಳಾಗೆ ಹೇಳಿ ಊಟದ ತಟ್ಟೆಗಳನ್ನು ಒಳಗೆ ತೆಗೆದುಕೊಂಡು ಹೋದರು. +ಮೊದಲು ಕಾಲೇಜಿಗೆ ಹೋಗಿ ಪ್ರಾಸ್ಪೆಕ್ಟ್ ತೆಗೆದುಕೊಂಡು ಬಂದು ನಂತರ ಮೀಟಿಂಗ್ ಇರುವ ಕಡೆ ಹೋಗಬೇಕು ಎಂದುಕೊಂಡು- ಬರುವುದು ಎಷ್ಟು ಹೊತ್ತಾಗುವುದೋ? +ಕತ್ತಲಾಗಿಬಿಟ್ಟರೆ ಬರುವುದು ಹೇಗೆ? +ಮೀಟಿಂಗ್ ಎಷ್ಟು ಹೂತ್ತಿಗಾದರೂ ಮುಗಿಯಲಿ ತಾನು ಬೇಗ ಹೊರಟುಬಿಡಬೇಕು. +ಅಲ್ಲಿ ನೆಂಟರಿಷ್ಟರೂ ಯಾರ ಮನೆಗೂ ಹೋಗಿ ಉಳಿಯಲು ಇಷ್ಟವಿಲ್ಲ. +ತಾನು ಹಾಸನಕ್ಕೆ ಹೋಗಿ ಬರುವುದೇ ಅವರಾರಿಗೂ ಗೊತ್ತಾಗುವುದು ಬೇಡ. + ತಾನು ಖಾಸಗಿಯಾಗಿ ಓದುವುದು, ಅಲ್ಲಿ ಸಂಫಟನೆಗಳಲ್ಲಿ ಭಾಗವಹಿಸುವುದು ಸಧ್ಯಕ್ಕೆ ಯಾರಿಗೂ ತಿಳಿಯುವುದು ಬೇಡ. +ಆದರ ಬಗ್ಗೆ ಅವರ ಅಭಿಪ್ರಾಯಗಳನ್ನು ನನ್ನ ಮೇಲೆ ಹೇರುವುದು. +ಇದಾವುದೂ ತನಗೆ ಇಷ್ಟವಾಗದೇ ಇರುವ ವಿಚಾರ, ನೋಡೋಣ ಮುಂದೆ… +ನನ್ನ ಬಗ್ಗೆ ಬೇರೆಯವರು ಆಸಕ್ತಿ ಯಾಕೆ ತೋರಬೇಕು. +ಈಗ ಅಮ್ಮನ, ದೊಡ್ಡಪ್ಪನ ವಿರೋಧ ಸಹಿಸಿದರೆ ಸಾಕಾಗಿದೆ. +ಅಜ್ಜಿ ಒಬ್ಬರೇ ನನ್ನನ್ನು ಬೆಂಬಲಿಸುವುದು. +ಸಧ್ಯ ಅಜ್ಜಿಯಾದರೂ ನನ್ನ ಕಡೆ ಇದ್ದಾರಲ್ಲ ಸಾಕು ಎಂದು ಸಮಾಧಾನಗೊಂಡಳು. +ಕಾಲೇಜಿಗೆ ಹೋಗಿ ಎರಡು ಪ್ರಾಸ್ಪೆಕ್ಟ್ ಕೊಂಡು ಸೀದಾ ಆಟೋ ಹತ್ತಿ ಪರಿಷತ್ತು ಭವನದ ಮುಂದೆ ಇಳಿದಳು. +ಇದೇ ಮೊದಲ ಬಾರಿ ಸಾಹಿತ್ಯ ಪರಿಷತ್ತು ಭವನ ನೋಡುತ್ತ ಇರುವುದು. +ಅದರ ಪಕ್ಕದಲ್ಲಿದ್ದ ಕಲಾಭವನವನ್ನು ನೋಡಿದ್ದಳು. +ಆದರೆ ಸಾಹಿತ್ಯ ಪರಿಷತ್ತು ಭವನ ಇದೆ ಎಂಬುದೇ ಅವಳಿಗೆ ತಿಳಿದಿರಲಿಲ್ಲ. +ಗೇಟು ತರೆದಿತ್ತು ಸೀದಾ ಒಳ ಬಂದಳು. +ಆಷ್ಟರಲ್ಲಾಗಲೇ ಸುಮಾರು ಜನ ಒಳಗೆ ಕುಳಿತು ಮಾತನಾಡುತ್ತಿದ್ದರು. +ಬಾಗಿಲಲ್ಲಿಯೇ ಅನುಮಾನಿಸುತ್ತ ನಿಂತವಳನ್ನು ನಿವಾಸ್ ಗಮನಿಸಿ ಎದ್ದುಬಂದು ‘ಬನ್ನಿ ಇಳಾ, ಯಾಕೆ ತಡವಾಯ್ತು?’ ಎಂದು ಒಳಗೆ ಕರೆದನು. +ಸಂಕೋಚಿಸುತ್ತ ಅವನಿಗೇನೂ ಉತ್ತರಿಸದೆ ಖಾಲಿ ಇರುವ ಕುರ್ಚಿ ಮೇಲೆ ಕುಳಿತುಕೊಂಡಳು. +ಇನ್ನು ಚರ್ಚೆ ಪ್ರಾರಂಭವಾಗಿರಲಿಲ್ಲ. +ಬರುವವರು ಇದ್ದರು ಅಂತ ಕಾಣುತ್ತೆ. +ಅಲ್ಲಿ ನಿವಾಸ್ನನ್ನು ಬಿಟ್ಟರೆ ಬೇರೆ ಯಾರೂ ಪರಿಚಿತರಿರಲಿಲ್ಲ. +ಪಕ್ಕದಲ್ಲಿದ್ದಾಕೆಯ ಕಡೆ ನೋಡಿದಳು. +ಆಕೆಯೂ ಅವಳತ್ತ ತಿರುಗಿ ನೋಡಿತ್ತಿದ್ದವಳು ಇವಳು ನೋಡಿದೊಡನೆ ಕಿರುನಗೆ ಬೀರಿದಳು. +ಇಳಾ ಕೂಡ ನಕ್ಕಳು. +‘ನಾನು ಸ್ಪೂರ್ತಿ ಅಂತ, ಚನ್ನರಾಯಪಟ್ಟಣ ನಮ್ಮದು, ಸೆಕೆಂಡ್ ಡಿಗ್ರಿ ಓದ್ತಾ ಇದ್ದೀನಿ’ ಅಂತ ಪರಿಚಯಿಸಿಕೊಂಡಳು. +‘ನಾನು ಇಳಾ’ ಅಂತ ಹೇಳುವಷ್ಟರಲ್ಲಿ ‘ನಿವಾಸ್ ನಿಮ್ಮ ಬಗ್ಗೆ ಹೇಳಿದ್ದಾರೆ. +ನಿಮ್ಮೂರು ಸಕಲೇಶಪುರದ ಹತ್ತಿರದ ಹಳ್ಳಿ, ನೀವು ಡಾಕ್ಟರಾಗಬೇಕಾಗಿತ್ತು. +ಈಗ ತೋಟ ನೋಡಿಕೊಳ್ಳುವ ಆಸಕ್ತಿ ಬೆಳೆದಿದೆ ಸರೀನಾ’ ನಕ್ಕಳು. +ಅವಳ ಆತ್ಮೀಯತೆ ಇಷ್ಟವಾಗಿತ್ತು ಇಳಾಗೆ. +‘ಸರಿ’ ಎನ್ನುವಂತೆ ತಾನೂ ನಗು ಬೆರೆಸಿದಳು. +ಅಷ್ಟರಲ್ಲಿ ನಿವಾಸ್ ‘ಸ್ನೇಹಿತರೇ, ನಾವೆಲ್ಲ ಯಾಕೆ ಇಲ್ಲಿ ಸೇರಿದ್ದೇವೆ ಅಂತ ನಮ್ಮ ಸ್ನೇಹಿತರೂ, ಹಿತೈಷಿಗಳೂ ಆದ ಮೂರ್ತಿಯವರು ನಿಮಗೆ ತಿಳಿಸುತ್ತಾರೆ’ ಎಂದು ಅನೌನ್ಸ್ ಮಾಡಿದ. +ಮೂರ್ತಿಯವರು ಐವತ್ತು ವರ್ಷದ ಆಸುಪಾಸಿನವರು. +ಒಳ್ಳೆ ಎತ್ತರ ಹೊಂದಿದ್ದು ಪ್ರಸನ್ನ ಮುಖ ಅವರ ಪ್ಲಸ್ ಪಾಯಿಂಟ್ ಆಗಿತ್ತು. +ಎದ್ದುನಿಂತ ಮೂರ್ತಿಯವರು ‘ಸ್ನೇಹಿತರೆ ನಾವೆಲ್ಲ ಯಾಕೆ ಇಲ್ಲಿ ಸೇರಿಕೊಂಡಿದ್ದೇವೆ ಎಂದರೆ ನಮ್ಮ ದೇಶದ ಬೆನ್ನೆಲುಬಾಗಿರುವ ರೈತ ಇವತ್ತು ಹತಾಶನಾಗ್ತ ಇದ್ದಾನೆ. +ಬೆಳೆದದ್ದು ಕೈಗೆ ಬಾರದೆ, ಮಾಡಿರುವ ಸಾಲ ಹೆಚ್ಚಾಗಿ ಬಡ್ಡಿ ಕಟ್ಟಲಾರದೆ ಪ್ರಾಣ ತೆರ್ತ ಇದ್ದಾನೆ. +ದಿನ ಬೆಳಗಾದರೆ ಎಲ್ಲಿಯಾದರೂ ಒಬ್ಬ ರೈತ ಸಾಯ್ತನೇ ಇದ್ದಾನೆ. +ಈ ಸಾವು ಸಹಜವೇ?ಅನಿವಾರ್ಯವೇ? +ಇದನ್ನು ತಡೆಯಲು ಸಾಧ್ಯವಿಲ್ಲವೇ, ಹಾಗಾದ್ರೆ ಏನು ಮಾಡಬೇಕು, ಏನು ಮಾಡಿ ಈ ಆತ್ಮಹತ್ಯಾ ಸರಣಿಯನ್ನು ನಿಲ್ಲಿಸೋಕೆ ಸಾಧ್ಯ ಎಂಬುದರ ಬಗ್ಗೆ ಚರ್ಚೆ ನಡೆಯಬೇಕು. +ಚರ್ಚೆಯಲ್ಲಿ ನೀವೆಲ್ಲರೂ ಭಾಗವಹಿಸಬೇಕು. +ನಿಮ್ಮ ಅನಿಸಿಕೆಗಳನ್ನು ಹೇಳಬೇಕು. +ಎಲ್ಲರ ಅಭಿಪ್ರಾಯ ತಗೊಂಡು ಮುಂದಿನ ಹೆಜ್ಜೆ ಇಡೋಣ’ ಎಂದು ಹೇಳಿದರು. +ಮತ್ತೊಬ್ಬಾತ ಎದ್ದು ನಿಂತು ‘ನನ್ನ ಹೆಸರು ವಿನೋದ್, ನಾನೂ ಕೂಡ ಒಬ್ಬ ರೈತನ ಮಗ, ರೈತರ ಆತ್ಮಹತ್ಯೆ ನನ್ನನ್ನು ಕೆರಳಿಸುತ್ತ ಇದೆ. +ಮೊದಲು ನಾವು ರೈತರಲ್ಲಿ ಜಾಗೃತಿ ಮೂಡಿಸಬೇಕು. +ನಾವೆಲ್ಲರು ತಂಡಗಳಾಗಿ ಮಾಡಿಕೊಂಡು ಒಂದೊಂದು ತಂಡ ಒಂದೊಂದು ಹಳ್ಳಿಯಲ್ಲಿ ರೈತರನ್ನು ಸೇರಿಸಿ ಅವರ ಆತ್ಮವಿಶ್ವಾಸ ಹೆಚ್ಚಿಸಬೇಕು. + ಸಾವೊಂದೇ ಸಮಸ್ಯೆಗೆ ಪರಿಹಾರವಲ್ಲ ಅನ್ನೊಂದನ್ನು ಮನದಟ್ಟು ಮಾಡಬೇಕು.’ + ‘ಒಳ್ಳೆ ಸಲಹೆ’ ಎಂದು ಮೂರ್ತಿಯವರು ತಲೆದೂಗಿದರು. +ಮತ್ತೊಬ್ಬಾಕೆ ಎದ್ದುನಿಂತು ‘ನನ್ನ ಹೆಸರು ರಾಗಿಣಿ, ಕೃಷಿ ಕಾಲೇಜಿನಲ್ಲಿ ಓದ್ತ ಇದ್ದೇನೆ. +ಮೊದಲು ರೈತರ ಸಾಲ ಯಾಕೆ ಮಾಡ್ತಾರೆ. +ಅದನ್ನ ಹೇಗೆ ಉಪಯೋಗಿಸುತ್ತಿದ್ದಾರೆ ಅಂತ ತಿಳ್ಕೋಬೇಕು. + ಸಾಮಾನ್ಯವಾಗಿ ಒಬ್ಬ ರೈತ ಒಂದು ಬೆಳೆ ಬೆಳೆದು ಯಶಸ್ವಿಯಾದ್ರೆ, ಲಾಭಗಳಿಸಿದ್ರೆ, ಎಲ್ಲರೂ ಮುಂದಿನ ವರ್ಷದಿಂದ ಅದೇ ಬೆಳೆಗೆ ಜೋತುಬೀಳ್ತಾರೆ. +ಪೂರೈಕೆ ಜಾಸ್ತಿ ಆದಾಗ ರೇಟು ಬಿದ್ದುಹೋಗುತ್ತದೆ. +ರೇಟು ಸಿಗದ ರೈತ ಹತಾಶನಾಗ್ತಾನೆ, ಆತ ಬುದ್ಧಿ ಕಲಿಯದೆ, ಎಚ್ಚತ್ತುಗೊಳ್ಳದೆ, ಬೇರೆ ಬೆಳೆ ಬಗ್ಗೆ ಮನಸ್ಸು ಮಾಡದೇ ಮತ್ತೆ ಅದೇ ಬೆಳೆ ಬೆಳೆಯುತ್ತಾನೆ. +ಅದೃಷ್ಟಕ್ಕಾಗಿ ಕಾಯುತ್ತಾನೆ, ಎಲ್ಲಾ ರೈತರು ಇದೇ ತಪ್ಪು ಮಾಡ್ತಾ ಇದ್ದಾರೆ. +ಈ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಬೇಕು’ ಎಂದಳು. +ಸ್ಫೂರ್ತಿ ನಿಂತುಕೊಂಡು ‘ನಮ್ಮ ತಂದೆನೂ ರೈತರೇ. +ಅವರು ಪದವಿಪಡ್ಕೊಂಡಿದ್ದರೂ ಕೆಲಸಕ್ಕೆ ಹೋಗದೆ ಭೂಮಿ ಮುಟ್ಟಿ ಕೆಲಸ ಮಾಡ್ತ ನೆಮ್ಮದಿಯಿಂದ ಬದುಕ್ತಾ ಇದ್ದಾರೆ. +ಅವರ ಆಸಕ್ತಿನೇ ನಂಗೂ ಬಂದಿದೆ. +ನಮ್ಮ ತಂದೆ ಭೂಮಿ ಮೇಲೆ ಪ್ರತಿ ವರ್ಷ ಪ್ರಯೋಗ ಮಾಡ್ತಾ ಬರ್ತಾ ಇದ್ದಾರೆ. +ಒಂದೇ ಬೆಳೇನಾ ಅವರು ಯಾವಾಗಲೂ ನೆಚ್ಚಿಕೊಂಡಿಲ್ಲ. +ಮಿಶ್ರ ಬೆಳೆ ಬೆಳೀತಾರೆ. +ಒಂದ್ರಲ್ಲಿ ರೇಟು ಬಿದ್ದುಹೋಗಿ ನಷ್ಟವಾದರೂ, ಮತ್ತೊಂದರಲ್ಲಿ ಲಾಭ ಬರೋ ಹಾಗೆ ಮಾಡಿಕೊಳ್ಳುತ್ತಾರೆ. +ಪ್ರತಿದಿನ ಆದಾಯ ಬರೋ ಹಾಗೆ ತರಕಾರಿ ಬೆಳೀತಾರೆ. +ಬರೀ ಬೋರೊಂದೇ ನಂಬಿಕೊಳ್ಳದೆ ಮಳೆ ನೀರೂ ಸಂಗ್ರಹಿಸುತ್ತಾರೆ. +ಬೋರು ಬತ್ತದ ಹಾಗೆ ನೋಡಿಕೊಂಡಿದ್ದಾರೆ. +ಜೊತೆಗೆ ತಾವು ಬೆಳೆದದ್ದನ್ನು ಯಾವ ಮಧ್ಯವರ್ತಿಗೂ ನೀಡದೆ ನೇರವಾಗಿ ವ್ಯಾಪಾರ ಮಾಡುತ್ತಾರೆ. +ಮಾರುವಾತ ಕೊಳ್ಳುವಾತ ಇವರಿಬ್ಬರ ನಡುವೆ ಮಧ್ಯವರ್ತಿಗೆ ಜಾಗವಿಲ್ಲ. +ಕೊಳ್ಳುವವರು ನೇರವಾಗಿಯೇ ನಮ್ಮಲ್ಲಿಗೆ ಬಂದು ಕೊಂಡು ಪಟ್ಟಣಗಳಲ್ಲಿ ತಂದು ಮಾರುತ್ತಾರೆ. +ಹಾಗಾಗಿ ನಮಗೆ ಒಳ್ಳೆಯ ಲಾಭವಿದೆ. +ಇಂತಹವುಗಳನ್ನು ನಾವು ಎಲ್ಲಾ ರೈತರಿಗೂ ತಿಳಿಸಿ ಮನವರಿಕೆ ಮಾಡಬೇಕು’ ಎಂದಳು. +ಹೀಗೆ ಸುಮಾರು ಜನ ಮಾತನಾಡಿ ತಮ್ಮ ತಮ್ಮ ಅನಿಸಿಕೆಗಳನ್ನು ತಿಳಿಸಿದರು. +ಇಳಾ ಮೌನವಾಗಿ ಕುಳಿತು ಎಲ್ಲವನ್ನು ಕೇಳಿಸಿಕೊಂಡಳು. +ಕೊನೆಯಲ್ಲಿ ನಿವಾಸ್ ಎದ್ದು ನಿಂತು ‘ಗೆಳೆಯರೇ, ನಿಮ್ಮ ಮಾತೂ, ಅಭಿಪ್ರಾಯ ಕೇಳುತ್ತಿದ್ದರೆ ತುಂಬಾ ಸಂತೋಷವಾಗ್ತಾ ಇದೆ. +ಖಂಡಿತಾ ನಾವೊಂದು ಪಡೆ ಕಟ್ಟಿ ಕ್ರಾಂತಿ ಮಾಡುವ ಹುಮ್ಮಸ್ಸು ನಮ್ಮಲ್ಲಿದೆ. +ನಿಮ್ಮೆಲ್ಲರ ಒಟ್ಟಾರೆ ಅಭಿಪ್ರಾಯದಂತೆ ನಾವು ಬೇಗನೆ ಕಾರ್ಯೋನ್ಮುಖರಾಗೋಣ. +ತಂಡಗಳಾಗಿ ಮಾಡಿಕೊಳ್ಳೋಣ. +ಒಂದೊಂದು ತಂಡ ಒಂದೊಂದು ಹಳ್ಳಿಗೆ ಹೋಗಿ ಹಳ್ಳಿಯ ರೈತರನ್ನು ಒಟ್ಟುಗೂಡಿಸಿ ಜಾಗೃತಿ ಮಾಡೋಣ. +ಕೃಷಿ ಹೊರೆಯಾಗದ ಹಾಗೆ, ನಷ್ಟವಾಗದಂತೆ ದುಡಿಯುವ ಕ್ರಮಗಳನ್ನು ತಿಳಿಸೋಣ. +ಈಗಾಗಲೇ ಸಾಲ ಮಾಡಿ ಸೋತಿರುವ ರೈತರನ್ನು ಹತಾಶೆ ಕಾಡಿ ಅನಾಹುತ ಮಾಡಿಕೊಳ್ಳದಂತೆ, ಸಾಲ ತೀರಿಸಿ ಹೇಗೆ ಬದುಕಬಹುದು ಅನ್ನುವುದನ್ನು ಮನದಟ್ಟು ಮಾಡೋಣ. +ತಿಂಗಳಲ್ಲಿ ಒಂದು ದಿನ ನಾವು ಇದಕ್ಕಾಗಿಯೇ ಮೀಸಲಿಡೋಣ. +ರೈತರ ಆತ್ಮಹತ್ಯೆ ತಪ್ಪಿಸಲು ಕೈಲಾದಷ್ಟು ಹೋರಾಡೋಣ. +ಅವರು ನೆಮ್ಮದಿಯಿಂದ ಬದುಕಲು ಸಹಾಯ ಮಾಡೋಣ’ ಎಂದು ಕರೆ ನೀಡಿ ಅಲ್ಲಿದ್ದವರಲ್ಲಿ ತಂಡ ಮಾಡಿ ಒಬ್ಬೊಬ್ಬನನ್ನು ತಂಡದ ನಾಯಕನನ್ನಾಗಿ ಮಾಡಿದರು. +ಅಲ್ಲಿ ಹೆಚ್ಚಾಗಿ ಯುವಕ ಯುವತಿಯರೇ ಇದ್ದರು. +ಇಳಾಳನ್ನು ಒಂದು ತಂಡಕ್ಕೆ ಸೇರಿಸಿದರು. +ಆ ತಂಡದಲ್ಲಿ ಸ್ಫೂರ್ತಿ ಇದ್ದದ್ದು ಇಳಾಗೆ ಸಮಾಧಾನ ತರಿಸಿತು. +ಸಭೆಯನ್ನು ಮುಗಿಸಲಾಯಿತು. +ಮುಂದಿನ ತಿಂಗಳು ಮತ್ತೆ ಸಭೆ ಸೇರಲಾಗುವುದು. +ಅಷ್ಟರೊಳಗೆ ಒಂದೊಂದು ತಂಡ ಒಂದೊಂದು ಹಳ್ಳಿಯಲ್ಲಿ ರೈತರನ್ನು ಸೇರಿಸಿ ತಿಳುವಳಿಕೆ ನೀಡಿರಬೇಕು. +ಬೇಕಾದರೆ ಆ ಕಾರ್ಯಕ್ರಮಗಳಿಗೆ ಪ್ರಗತಿಪರ ರೈತರನ್ನೂ, ಕೃಷಿತಜ್ಞರನ್ನೊ, ಕೃಷಿ ಇಲಾಖೆಯವರನ್ನೋ ಕರೆಸಬಹುದು. +ಅವರಿಂದಲೂ ತಿಳುವಳಿಕೆ ನೀಡಿಸಬಹುದು. +ಅವುಗಳ ಮಾಹಿತಿ ತೆಗೆದುಕೊಂಡು ಮುಂದಿನ ಮೀಟಿಂಗ್‌ಗೆ ಹಾಜರಾಗಬೇಕು ಎಂದು ನಿವಾಸ್ ಹೇಳಿದ. +ಮೀಟಿಂಗ್ ಬೇಗ ಮುಗಿದಿದ್ದು ಇಳಾಗೆ ಬೇಗ ಊರು ತಲುಪಲು ಒಳ್ಳೆಯದಾಯಿತು ಎಂದುಕೊಳ್ಳುತ್ತ ಹೊರಬರಬೇಕು ಎನ್ನುವಷ್ಟರಲ್ಲಿ- ‘ಇಳಾ ನಿಂತ್ಕೊಳ್ಳಿ, ಬಸ್‌ಸ್ಟಾಂಡಿಗೆ ಅಲ್ವಾ… ನಾನೂ ಬರ್ತೀನಿ’ ಎಂದು ನಿಲ್ಲಿಸಿದ. +ಮೂರ್ತಿಯವರಿಗೆ ಇಳಾಳನ್ನು ಪರಿಚಯಿಸಿ ‘ತುಂಬಾ ಟ್ಯಾಲೆಂಟ್ ಇದೆ ಈಕೆಗೆ. +ಕಾಫಿ ತೋಟ ಇದೆ. +ತೋಟದ ಬಗ್ಗೆ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದ. +‘ವೆರಿಗುಡ್, ನಿಮ್ಮಂತ ಯಂಗ್‌ಸ್ಟರ್ಸ್ ಈ ಫೀಲ್ಡ್‌ಗೆ ಬರಬೇಕು ಆಗಲೇ ಏನಾದರೂ ಸಾಧಿಸುವುದು ಸಾಧ್ಯ’ ಎಂದರು. +ಮತ್ತ್ಯಾವ ವಿವರಣೆಯನ್ನು ನಿವಾಸ್ ಹೇಳಿಲ್ಲ ಎಂದುಕೊಂಡು ಸದ್ಯ ಎಲ್ಲರ ಕನಿಕರದ ನೋಟ ಎದುರಿಸುವುದು ತಪ್ಪಿತಲ್ಲ ಎಂದುಕೊಂಡು ನಿವಾಸ್ನ ಸ್ವಭಾವಕ್ಕೆ ಮೆಚ್ಚಿಕೊಂಡಳು. +ಸ್ಫೂರ್ತಿ ಇವಳಿಗಾಗಿ ಹೊರಗಡೆ ಕಾಯುತ್ತ ನಿಂತಿದ್ದಳು. +ಇಳಾ ಒಬ್ಬಳೆ ಬರುತ್ತಿರುವುದನ್ನು ಕಂಡು ತಾನೂ ಅವರ ಜೊತೆ ಸೇರಿಕೊಂಡಳು. +‘ಸ್ಫೂರ್ತಿ ಊರಿಗೆ ಬರ್ತೀಯಾ? +ಇಲ್ಲೇ ಇರ್ತೀಯಾ?’ ಸ್ಫೂರ್ತಿಯನ್ನು ನಿವಾಸ್ ಕೇಳಿದ. +‘ಇವತ್ತು ಬರ್ತೀನಿ. +ನಾಳೆ ಕಾಲೇಜಿಲ್ಲ ನಂಗೆ. +ಊರಲ್ಲಿ ಕೆಲ್ಸ ಇತ್ತು’ ಉತ್ತರಿಸಿದಳು. +ಸ್ಫೂರ್ತಿ ಇಲ್ಲಿ ಮನೆಯೊಂದರಲ್ಲಿ ಪೇಯಿಂಗ್ ಗೆಸ್ಟ್ ಆಗಿ ಇದ್ದಳು. +ಚನ್ನರಾಯಪಟ್ಟಣದಿಂದ ಬಸ್ಸು ಇಳಿದು ಅವಳು ಇರೋ ಊರಿಗೆ ಹೋಗಿ ಬಂದು ಮಾಡುವುದು ಕಷ್ಟವಾದ್ದರಿಂದ ಹಾಸನದಲ್ಲೇ ಇದ್ದು ವಾರಕ್ಕೊಮ್ಮೆ ಊರಿಗೆ ಹೋಗುತ್ತಿದ್ದಳು. +‘ಇಳಾ ನೀವು…’ ಕೇಳಿದ. +‘ನಾನೂ ಹೋಗ್ತಾ ಇದ್ದೀನಿ, ಇಲ್ಲೇನು ಕೆಲ್ಸ ಇಲ್ಲ’ ಎಂದಳು. +‘ಸರಿ, ಊಟ ಮಾಡಿಕೊಂಡು ಹೋಗೋಣ. +ಊರು ಸೇರೋ ಹೊತ್ತಿಗೆ ಊಟದ ಸಮಯ ಮೀರಿಹೋಗಿರುತ್ತೆ’ ಎಂದಾಗ ಇಬ್ಬರೂ ಸರಿ ಎಂದು ತಲೆಯಾಡಿಸಿ ಅವನ ಜೊತೆ ಹೆಜ್ಜೆ ಹಾಕಿದರು.’ +ಸ್ಫೂರ್ತಿ, ಇಳಾ ಮಾತನಾಡದೆ ಬರುತ್ತಿರುವುದನ್ನು ಕಂಡು- ‘ಯಾಕೆ ಸ್ಫೂರ್ತಿ, ಮಾತಾಡ್ತಾನೆ ಇಲ್ಲ, ಇಬ್ರೂ ಹುಡುಗೀರು ಸೇರಿಕೊಂಡರೆ ಮಾತಿಗೇನು ಬರ’ ಎಂದು ಸ್ಫೂರ್ತಿಯನ್ನು ಕೇಳಿದ. +‘ಹೊಟ್ಟೆ ಹಸೀತಾ ಇದೆಯಲ್ಲ, ಮಾತು ಬರ್ತಾ ಇಲ್ಲಾ. +ಹೊಟ್ಟೆ ತುಂಬಿದ ಮೇಲೆ ಶಕ್ತಿ ಬರುತ್ತೆ ನೋಡಿ, ಆವಾಗ ನೀವು ಸಾಕು ನಿಲ್ಸಿ ಅನ್ನುವ ತನಕ ಮಾತಾಡ್ತೀವಿ, ಅಲ್ವಾ ಇಳಾ?’ ಇಳಾಳೆಡೆ ನೋಡಿ ನಕ್ಕಳು. +ಅಷ್ಟರೊಳಗೆ ಹೋಟೆಲ್ ಸಮೀಪ ಬಂದಿದ್ದರು. +ಊಟದ ಸಮಯವಾದ್ದರಿಂದ ಜನಸಂದಣಿ ಇತ್ತು. +ಟೇಬಲ್‌ಗಾಗಿ ಕಾದು ಜನ ಎದ್ದ ಕೂಡಲೇ ಕುಳಿತುಕೊಂಡರು. +ಊಟದ ಟೋಕನ್ ಅನ್ನು ನಿವಾಸ್ನೇ ತೆಗೆದುಕೊಂಡಿದ್ದ. +ಊಟ ಮಾಡುತ್ತ ನಿವಾಸ್ ‘ಸ್ಫೂರ್ತಿ, ಇಳಾ ಒಂದೇ ತಂಡದಲ್ಲಿರುವುದು ಅನುಕೂಲವಾಗಿದೆ. +ನೀವು ಯಾವಾಗ ಎಲ್ಲಿ ಸಭೆ ಸೇರಿಸುತ್ತೀರಾ ಅಂತ ಇಳಾಗೆ ಮೆಸೇಜ್ ಕಳಿಸಿಬಿಡು. +ಸಾಧ್ಯವಾದಷ್ಟು ಬೆಳಿಗ್ಗೆಯೇ ಪ್ರೊಗ್ರಾಂ ಹಮ್ಮಿಕೊಂಡರೆ ಸಂಜೆ ಒಳಗೆ ಊರಿಗೆ ಹೋಗಬಹುದು ಅಲ್ವಾ’ ಎಂದಾಗ ಒಪ್ಪಿಗೆ ಎಂಬಂತೆ ಇಬ್ಬರೂ ತಲೆಯಾಡಿಸಿದರು. +‘ಇಳಾ ನೀವು ಬಾಯೇ ಬಿಡಲಿಲ್ಲ. +ಮುಂದೆ ಹೀಗಾಗಬಾರದು. +ನಿಮ್ಮಿಂದ ಏನಾದರೂ ಸಲಹೆ ಸೂಚನೆಗಳು ಬರ್ತಾ ಇರಬೇಕು’ ಎಂದು ನಿವಾಸ್ ಹೇಳಿದಾಗ – ‘ನಂಗೇನು ಗೊತ್ತಾಗುತ್ತೆ ಸಾರ್, ನಾನಿನ್ನೂ ಈಗ ಈ ಫೀಲ್ಡಿಗೆ ಇಳಿಯುತ್ತ ಇದ್ದೀನಿ. +ನಾನೇ ಒಂದೊಂದಾಗಿ ಕಲಿಯುತ್ತಾ ಇದ್ದೇನೆ. +ಇನ್ನು ನಾನೇನು ಹೇಳಬಲ್ಲೆ’ ಎಂದಳು. +‘ಇರಲಿ ಈ ಬಾರಿ ಪರವಾಗಿಲ್ಲ, ಮುಂದಿನ ಬಾರಿ ಮೀಟಿಂಗ್‌ನಲ್ಲಿ ನೀವು ಮಾತಾಡೊ ಹಾಗಾಗಬೇಕು. +ನಿಮ್ಗೆ ಅನುಭವ ಆಗಬೇಕು ಅಂತ ಏನೂ ಇಲ್ಲ. +ಕೇಳಿ ತಿಳಿದದ್ದನ್ನು, ಓದಿ ಅಥವಾ ನೋಡಿ ತಿಳಿದದ್ದನ್ನು ನೀವು ಹೇಳಬಹುದು- ಒಟ್ಟಿನಲ್ಲಿ ನಿಮ್ಮ ಇನ್ವಾಲ್‌ಮೆಂಟ್ ಇರಬೇಕು ಅಷ್ಟೆ’ ಸಲಹೆ ನೀಡಿದ. +‘ಸರಿ ಸಾರ್’, ಮುಂದಿನ ಸಲ ಪ್ರಯತ್ನಿಸುತ್ತೇನೆ. +ಆದರೆ ಸ್ಫೂರ್ತಿಯಷ್ಟು ದೈರ್ಯ ನಂಗಿಲ್ಲ. +ಸ್ಫೂರ್ತಿ ಚೆನ್ನಾಗಿ ಮಾತಾಡ್ತಾರೆ’ ಅಭಿಮಾನದಿಂದ ಸ್ಫೂರ್ತಿಯತ್ತ ನೋಡಿದಳು. +‘ಸರಿ ಸರಿ ಅಷ್ಟೊಂದು ಹೊಗಳಬೇಡಿ. +ನಾನೂ ನಿಮ್ಮ ಹಾಗೆ ಮಾತಾಡೋಕೆ ಅಂಜತಾ ಇದ್ದೆ. +ನಿವಾಸ್ ಸರ್ ನಂಗೆ ಧೈರ್ಯ ತುಂಬಿ ಮಾತಾಡೋದು ಕಲಿಸಿದ್ದು. +ಅವರು ಹೋಗೋ ಪ್ರೋಗ್ರಾಂಗಳಿಗೆಲ್ಲ ನನ್ನ ಕರ್ಕೊಂಡು ಹೋಗ್ತಾರೆ, ನಮ್ಮ ಅಪ್ಪ ಮಾಡ್ತ ಇರೋ ಕೃಷಿ ಬಗ್ಗೆ ನನ್ನಿಂದ ಹೇಳಿಸ್ತಾರೆ. +ಹಾಗೆ ಮಾತಾಡಿ ಮಾತಾಡಿ ನಂಗೆ ಧೈರ್ಯ ಬಂದು ಬಿಟ್ಟಿದೆ. +ಆ ಕ್ರೆಡಿಟ್ ಎಲ್ಲಾ ನಿವಾಸ್ ಸಾರ್‌ಗೆ ಸೇರಬೇಕು’ ನಿವಾಸ್ನನ್ನು ಹೊಗಳಿದಳು. +‘ಇಳಾ ಈಗ ಹೇಳಿ, ತೋಟದ ಕೆಲಸ ಹೇಗೆ ನಡೆಯುತ್ತಾ ಇದೆ, ಎಷ್ಟು ಎಕರೆ ತೋಟ ಇದೆ, ಏನೇನು ಬೆಳೆದಿದ್ದೀರಿ’ ಎಂದು ಕೇಳಿದ ನಿವಾಸ್. +ಜಮೀನು ಎಷ್ಟಿದೆ, ಅಪ್ಪನ ಸಾಲ ತೀರಿಸಲು ಮಾರಿದ್ದು ಎಷ್ಟು, ಅಲ್ಲೊಂದು ಶಾಲೆ ಈಗ ಪ್ರಾರಂಭವಾಗಿರುವುದು, ಶಾಲೆಯು ಕೂಡ ಹೊಸ ರೀತಿಯ ಬೋಧನೆಯಿಂದ, ಪಠ್ಯವಸ್ತುವಿನಿಂದ ಈಗಾಗಲೇ ಗಮನ ಸೆಳೆಯುತ್ತಿರುವುದು, ಪ್ರತಿಯೊಂದು ಮಗುವೂ ಪಾಠದ ಜೊತೆ ಕೃಷಿ, ಮರಗೆಲಸ, ಟೈಲರಿಂಗ್, ಎಲೆಕ್ಟ್ರಿಕಲ್ ರಿಪೇರಿ, ವಾಹನ ರಿಪೇರಿ… ಹೀಗೆ ಯಾವುದಾದರೊಂದನ್ನು ಕಡ್ಡಾಯವಾಗಿ ಕಲಿಯಲೇಬೇಕಿರುವುದು, ಓದು ಮುಗಿಯುವಷ್ಟರಲ್ಲಿ ಯಾವುದಾದರೊಂದು ವಿಚಾರದಲ್ಲಿ ಪರಿಣತಿ ಪಡೆದು ಮಗು ತನ್ನ ಕಾಲ ಮೇಲೆ ನಿಲ್ಲಲು ಶಕ್ತನಾಗುವಂತೆ ಮಾಡುವ ವಿಧಾನವನ್ನು ಆ ಶಾಲೆಯಲ್ಲಿ ಅಳವಡಿಸಿದ್ದು- ಎಲ್ಲವನ್ನೂ ಹೇಳಿದಳು. +ಇದು ಪೋಷಕರನ್ನು ಹೆಚ್ಚಾಗಿ ಸೆಳೆಯುತ್ತಿದೆ ಎಂದೂ ತಿಳಿಸಿದಳು. +ತೋಟವನ್ನು ಸಾವಯವ ತೋಟವನ್ನಾಗಿ ಮಾಡಲು ನಿರ್ಧರಿಸಿದ್ದು ಅದಕ್ಕಾಗಿ ದೇಶಿಯ ತಳಿಗಳ ಹಸುಗಳನ್ನು ಕೊಂಡಿರುವುದು, ಹಾಲು ಈಗಾಗಲೇ ಮಾರುತ್ತಿದ್ದು ಲಾಭ ಬರುತ್ತಿರುವುದು, ಮುಂದೆ ತೋಟದಲ್ಲಿ ಎರೆಹುಳು ಸಾಕಿ ಗೊಬ್ಬರ ತಯಾರಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿರುವುದು, ತೋಟದಲ್ಲಿ ಕಾಫಿ ಜೊತೆಗೆ ಇನ್ನಿತರೆ ಲಾಭ ತರುವ ಬೆಳೆ ಬೆಳೆಯುವ ಯೋಚನೆ ಮಾಡುತ್ತಿರುವುದು-ಹೀಗೆ ಎಲ್ಲವನ್ನೂ ಸಾಧ್ಯಂತವಾಗಿ ವಿವರಿಸಿದಾಗ ಈ ಪುಟ್ಟ ಹುಡುಗಿಯಲ್ಲಿ ಇಷ್ಟೆಲ್ಲ ಶಕ್ತಿ ಇದೆಯೇ ಎಂದು ಆಶ್ಚರ್ಯ ಮತ್ತು ಅಭಿಮಾನದಿಂದ ಅವಳೆಡೆ ನೋಡಿದ ನಿವಾಸ್. +‘ಗುಡ್, ವೆರಿಗುಡ್, ಹೆಣ್ಣುಮಕ್ಕಳು ಹೀಗಿರಬೇಕು. +ಆಗಿಹೋದ ವಿಚಾರಕ್ಕೆ ಕೊರಗಿ ಕೂರುವ ಬದಲು ಬಂದದ್ದನ್ನು ಎದುರಿಸಿ ಧೈರ್ಯವಾಗಿ ಮುಂದೆ ಹೆಜ್ಜೆ ಇಡುವ ಮನೋಧಾಢ್ಯ ಬೆಳೆಸಿಕೊಳ್ಳಬೇಕು. +ಆಗಲೇ ಈ ದೇಶ ಮುಂದುವರಿಯುವುದು. +ಸಾವಿನತ್ತ ಹೊರಳುವ ಮನಸ್ಸನ್ನು ಹಿಂದೆ ಸರಿಸಿ ಬದುಕುವ ಕೆಚ್ಚದೆ ನಿಮ್ಮಂತವರನ್ನು ನೋಡಿದಾಗ ಬರಬೇಕು. +ಹಾಗೆ ಬದುಕಬೇಕು. +ಇಳಾ ನಿಜಕ್ಕೂ ನಂಗೆ ಸಂತೋಷವಾಗ್ತಾ ಇದೆ. +ನೀವು ಕೃಷಿಯಲ್ಲಿ ಆಸಕ್ತಿ ತೋರುತ್ತಿರುವುದು ಆಶ್ಚರ್ಯ ಕೂಡ ಅನ್ನಿಸುತ್ತದೆ. +ಕೃಷಿ ಕುಟುಂಬದಲ್ಲಿ ಹುಟ್ಟಿದ್ರೂ ನಿಮ್ಮಗುರಿ, ನಿಮ್ಮ ಕನಸೇ ಬೇರೆ ಇತ್ತು. +ಆದರೆ ಎಷ್ಟು ಬೇಗ ಗುರಿಯನ್ನು ಬದಲಾಯಿಸಿಕೊಂಡು, ಬದುಕು ಬಂದಂತೆ ಸ್ವೀಕರಿಸಬೇಕು ಅನ್ನುವುದನ್ನು ತೋರಿಸಿಬಿಟ್ಟಿರಿ. +ನಿಜಕ್ಕೂ ನಿಮ್ಮ ಬದುಕು ಬೇರೆಯವರಿಗೆ ಮಾದರಿಯಾಗಿದೆ, ಸ್ಫೂರ್ತಿಯಾಗಿದೆ ಹ್ಯಾಟ್ಸಾಫ್ ಇಳಾ’ ಮನಃಪೂರ್ವಕವಾಗಿ ಮೆಚ್ಚುಗೆ ಸೂಚಿಸಿದ ನಿವಾಸ್. +ಸ್ಫೂರ್ತಿಗೂ ಅಭಿಮಾನ ತುಂಬಿ ಬಂತು. +ಮೊದಲ ನೋಟದಲ್ಲಿ ಏನೂ ತಿಳಿಯದ ಸಾಮಾನ್ಯ ಹುಡುಗಿ ಅಂತ ಅಂದುಕೊಂಡಿದ್ದಳು. +ಇಷ್ಟೊಂದು ಗಂಭೀರವಾಗಿ ಕೃಷಿ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾಳೆ ಅನ್ನೋದು ತಿಳಿದ ಮೇಲೆ ಅವಳ ಮೇಲಿನ ಸ್ನೇಹ ಇನ್ನೂ ಹೆಚ್ಚಾಗಿ, ಮೆಲ್ಲನೆ ಅವಳ ಕೈ ಅದುಮಿದಳು. +ನೂರು ಮಾತು ಹೇಳಲಾರದ್ದನ್ನು ಆ ಒಂದು ಸ್ಪರ್ಶ ಹೇಳಿತು. +ಇಳಾ ಕೂಡ ಅದೇ ವಿಶ್ವಾಸದಿಂದ ಅವಳ ಸ್ನೇಹವನ್ನು ಸ್ವೀಕರಿಸಿದಳು. +ಊಟ ಮುಗಿಸಿ ಬಸ್ಟಾಂಡಿಗೆ ಬಂದರು. +ಸಕಲೇಶಪುರದ ಬಸ್ಸು ರೆಡಿಯಾಗಿತ್ತು. +ಅವಳನ್ನು ಬಸ್ ಹತ್ತಿಸಿ ಕೈ ಬೀಸಿ, ನಿವಾಸ್, ಸ್ಫೂರ್ತಿ ಚನ್ನರಾಯಪಟ್ಟಣದ ಬಸ್ಸು ನಿಲ್ಲುವ ಕಡೆ ಹೆಜ್ಜೆ ಹಾಕಿದರು. +‘ಸ್ಫೂರ್ತಿ, ಇಳಾನ ನೋಡಿದ್ರೆ ಅಯ್ಯೋ ಅನಿಸುತ್ತೆ. +ಆದ್ರೆ ಹಾಗೇನಾದ್ರೂ ತೋರಿಸಿಬಿಟ್ಟರೆ, ಅವಳು ನಮ್ಮಜೊತೆ ಸೇರೋದೆ ಬಿಟ್ಟುಬಿಡುತ್ತಾಳೇನೋ. +ಮಹಾ ಸ್ವಾಭಿಮಾನಿ ಹುಡುಗಿ. +ಅಪ್ಪ ಶುಂಠಿ ಬೆಳೆದು ನಷ್ಟ ಹೊಂದಿ ಆತ್ಮಹತ್ಯೆ ಮಾಡಿಕೊಂಡ ಮೇಲೆ ಅವಳ ಬದುಕಲ್ಲಿ ಏನೇನು ನಡೆದು ಹೋಗಿ- ಅಪ್ಪ ಸೋತಲ್ಲಿ ತಾನು ಗೆಲ್ಲಬೇಕು ಅನ್ನೋ ಹಠ ಹಿಡಿದು ತೋಟದಲ್ಲಿ ನಿಂತಿದ್ದಾಳೆ. +ಪ್ರಾಯಶಃ ಅವಳಿಗೆ ಯಾವ ಸೇಹಿತೆಯರೂ ಹತ್ತಿರದಲ್ಲಿಲ್ಲ ಅಂತ ಕಾಣುತ್ತೆ. +ನೀನು ಅವಳಿಗೆ ಒಳ್ಳೆ ಗೆಳತಿಯಾಗಿದ್ದು ಅವಳ ಮನಸ್ಸಿಗೆ ಸಮಾಧಾನ ತರೋ ಕೆಲ್ಸ ಮಾಡಬೇಕು. +ಅವಳಿಂದ ನಮ್ಮ ಸಂಘಟನೆಗೂ ಒಂದು ಒಳ್ಳೆಯ ಕೊಡುಗೆ ಸಿಗಬಹುದು. +ನಿಂಗೂ ಅವಳು ಒಳ್ಳೆ ಫ್ರೆಂಡಾಗ್ತಾಳೆ. +ತುಂಬಾ ಒಳ್ಳೆ, ಹುಡುಗಿ. +ಯಾವುದೇ ರೀತಿ ಅವಳಿಗೆ ಬೇಸರ ಆಗದೆ ಇರೊ ರೀತಿ ನೀನು ನೋಡಿಕೊಳ್ಳಬೇಕು’ ನಿವಾಸ್ ಕಳಕಳಿಯಿಂದ ಹೇಳಿದಾಗ‘ಹೌದು ಸಾರ್. +ನಂಗೂ ಹಾಗೇ ಅನ್ನಿಸಿದೆ. +ತುಂಬಾ ಒಳ್ಳೆ ಹುಡುಗಿ, ನಂಗೆ ತುಂಬಾ ಇಷ್ಟವಾಗಿದ್ದಾಳೆ. +ನೋಡ್ತಾ ಇರಿ ನಾವಿಬ್ಬರೂ ಹೇಗೆ ಬೆಸ್ಟ್‌ಫ್ರೆಂಡ್ ಆಗ್ತೀವಿ ಅಂತಾ. +ನಂಗೋಸ್ಕರನಾದ್ರೂ ಅವಳು ಈ ಸಂಘಟನೆಯಲ್ಲಿ ಉಳಿಬೇಕು ಹಾಗೆ ಮಾಡ್ತೇನೆ. +ನಾವು ಮಾಡ್ತ ಇರೋದು ಒಳ್ಳೆ ಕೆಲಸ ಅಲ್ಲಾ ಸಾರ್. +ಅವಳ ತಂದೆ ಮಾಡಿಕೊಂಡ ಹಾಗೆ ಬೇರೆಯವರು ಮಾಡಿಕೊಳ್ಳಬಾರದು ಅಂತ ತಾನೇ ಅವಳ ಆಲೋಚನೆ. +ಯಾವ ಕಾರಣಕ್ಕೂ ಅವಳಿಗೆ ಇಲ್ಲಿ ಬೇಸರ ಆಗೋ ಹಾಗೆ ಮಾಡಲ್ಲ, ನೀವೇ ನೋಡ್ತೀರಲ್ಲ’ ಭರವಸೆ ನೀಡಿದಳು. +ಸ್ಫೂರ್ತಿಗೆ ನಿವಾಸ್ನನ್ನು ಕಂಡರೆ ತುಂಬಾ ಅಭಿಮಾನ. +ಅಷ್ಟೊಂದು ಓದಿಕೊಂಡು ಒಳ್ಳೆ ಸಂಬಳ ಕೊಡುವ ಕೆಲಸವನ್ನು ಬಿಟ್ಟು ಕೃಷಿ ನಂಬಿ ಬದುಕುತ್ತ, ಹೊಸ ಹೊಸ ಅವಿಷ್ಕಾರಗಳನ್ನು ಕೃಷಿ ಭೂಮಿಯಲ್ಲಿ ಕಂಡುಹಿಡಿಯುತ್ತ ಇತರರಿಗೆ ಮಾದರಿಯಾಗಿ ನಿಂತು ಪ್ರಗತಿಪರ ರೈತನೆಂದು ಅನೇಕ ಪ್ರಶಸ್ತಿ ಪಡೆದರೂ, ಅಹಂಕಾರ ಪಡದೆ ತನ್ನಂತಹ ಸಾಮಾನ್ಯರೊಂದಿಗೊ ಸರಳವಾಗಿ ಇರುವುದು ಅವಳು ಮೆಚ್ಚುವ ವಿಚಾರವಾಗಿತ್ತು. +ತಮ್ಮೂರಿನ ಪಕ್ಕದ ಊರಿನಲ್ಲಿಯೇ ನಿವಾಸ್ ಜಮೀನು ಕೊಂಡು ಪಕ್ಕಾ ರೈತನಂತೆ ಹೊಲಕ್ಕಿಳಿದು ಕೆಲಸ ಮಾಡುತ್ತಿರುವುದು ಅವಳು ಅವನನ್ನು ಮೆಚ್ಚಲು ಮತ್ತೊಂದು ಕಾರಣವಾಗಿತ್ತು. +ತಾನು ಹೋಗುವ ಕಾರ್ಯಕ್ರಮದಲ್ಲೆಲ್ಲ ತನ್ನ ತಂದೆಯನ್ನು ಕರೆದುಕೊಂಡು ಹೋಗುವುದು, ಅವರು ಬಾರದಿದ್ದ ದಿನ ತನ್ನನ್ನು ಕರೆದುಕೊಂಡು ಹೋಗಿ ಮಾತನಾಡಲು ಅವಕಾಶ ಕಲ್ಪಿಸಿಕೊಡುವುದು, ಇದೆಲ್ಲ ಅವನ ಒಳ್ಳೆಯತನವೇ ಆಗಿದೆ. +ತಾನೊಬ್ಬನೇ ಬೆಳೆಯದೆ ತನ್ನ ಸುತ್ತ ಇರುವವರನ್ನು ಬೆಳೆಸಿ, ಆ ಮೂಲಕ ತ್ತೃಪ್ತಿಪಡುವ ನಿವಾಸ್ ಸ್ಫೂರ್ತಿಗೆ ಬಹಳ ಇಷ್ಟ. +ನಿವಾಸ್ ಸ್ಫೂರ್ತಿಗೆ ಹತ್ತಿರವಾಗಲು ಮತ್ತೊಂದು ಕಾರಣವಿತ್ತು. +ವ್ಯವಸಾಯ ಮಾಡಿ ಸೋತು ಬಸವಳಿದಿದ್ದ ಸ್ಫೂರ್ತಿಯ ತಂದೆಗೆ ಹೂಸ ಆಲೋಚನೆಗಳನ್ನು ನೀಡಿ ಮಿಶ್ರ ಬೆಳೆ ಬೆಳೆಯುವಂತೆ ಪ್ರೋತ್ಸಾಹಿಸಿ ಅದಕ್ಕಾಗಿ ಧನ ಸಹಾಯ ಕೂಡ ಮಾಡಿದ್ದ. +ನಾಲ್ಕೈದು ವರ್ಷಗಳಲ್ಲಿಯೇ ಮನೆಯ ಸಂಕಷ್ಟಗಳೆಲ್ಲ ತೀರಿ ನಾವೂ ಕೂಡ ಅನುಕೂಲಸ್ಥ ಮನೆಯವರು ಎನಿಸಿಕೊಂಡಿದ್ದು ನಿವಾಸ್ನಿಂದಲೇ ಎಂದು ಸ್ಫೂರ್ತಿಯ ಮನೆಯವರಿಗೆಲ್ಲ ಅಭಿಮಾನ, ಪ್ರೀತಿ, ವಿಶ್ವಾಸ, ಹಾಗೆಂದೇ ನಿವಾಸ್ ಎಲ್ಲಿ ಕರೆದರೂ ಸ್ಫೂರ್ತಿಯನ್ನು ಹಿಂದೆ ಮುಂದೆ ಯೋಚಿಸದೆ ಕಳುಹಿಸಿಕೊಡುತ್ತಿದ್ದರು. +ನಿವಾಸ್ನೂ ಅಷ್ಟೆ, ಜೋಪಾನವಾಗಿ ಕಾಳಜಿಯಿಂದ ಕರೆದುಕೊಂಡು ಹೋಗಿ ಕರೆತರುತ್ತಿದ್ದ. +ಅವನ ಒಡನಾಟದಲ್ಲಿ ಅವನ ಬಗ್ಗೆ ವಿಶೇಷ ಭಾವನೆಯೊಂದು ಅವಳಲ್ಲಿ ಬೆಳೆಯುತ್ತಿತ್ತು. +ಅದರ ಅರಿವಿರದ ನಿವಾಸ್ ಅವಳೊಂದಿಗೆ ಸಹಜವಾಗಿಯೇ ಇರುತ್ತಿದ್ದ. +ಸ್ಫೂರ್ತಿ ಕೂಡ ತನ್ನ ಮನದ ಭಾವನೆ ಎಲ್ಲಿಯೂ ತೋರದಂತಿರುತ್ತಿದ್ದಳು. +ಎಲ್ಲೋ ದೂರದಲ್ಲಿ ಆಸೆಯ ಮಿಣುಕೊಂದು ಮಿನುಗುತ್ತಿತ್ತು. +ಆ ಮಿಣುಕಿನ ಬೆಳಕಿನಲ್ಲಿ ಇರುವುದೇ ಅವಳಿಗೆ ಖುಷಿ ಕೊಡುತ್ತಿತ್ತು. +‘ಹಲೋ ಸ್ಫೂರ್ತಿ ಎಲ್ಲಿ ಹೊರಟುಹೋದೆ. +ನಾನು ಮಾತಾಡ್ತಾನೇ ಇದ್ದೇನೆ, ನೀನು ಎಲ್ಲೋ ಕಳೆದುಹೋಗಿದ್ದೀಯಾ’ ನಿವಾಸ್ ಎಚ್ಚಿರಿಸಿದಾಗ ಮೆಲ್ಲನೆ ನಕ್ಕಳು. +ಸುಮ್ಮನೆ ನಕ್ಕ ಅವಳನ್ನು ಕಂಡು ‘ಏನಾಯ್ತು ಹುಡುಗಿ, ಸುಮ್ನೆ ನಗ್ತಾ ಇದ್ದೀಯಾ. +ಹಾಗೆಲ್ಲ ಸುಮ್ಮಸುಮ್ನೆ ನಗಬಾರದಮ್ಮ. +ಅದು ಮನಸ್ಸಿನ ಆರೋಗ್ಯಕ್ಕೆ ಒಳ್ಳೆಯದಲ್ಲ’ ರೇಗಿಸಿದ. +‘ಹೋಗಿ ಸಾರ್, ಹಾಗೇನು ಇಲ್ಲ. +ನೀವು ಹೇಳೋ ಹಾಗೆ ನಾನೇನು ಸುಮ್ಮಸುಮ್ನೆ ನಕ್ಕು ಮೆಂಟಲ್ ಥರ ಆಡ್ತ ಇಲ್ಲ. +ಏನೋ ನೆನಪಾಗಿ ನಕ್ಕಿದ್ದು ಅಷ್ಟೆ’ ಸಮರ್ಥಿಸಿಕೊಂಡಳು. +‘ಅದ್ರೆ ಇಳಾ ನೋಡು. . ಎಷ್ಟೊಂದು ಗಂಭೀರವಾದ ಹುಡುಗಿ. +ನಿನಗಿಂತ ಚಿಕ್ಕವಳು. +ಈ ವಯಸ್ಸಿನಲ್ಲಿ ಅದೇನು ಗಾಂಭೀರ್ಯ. +ರಿಯಲಿ ಐ ಲೈಕ್ ಹರ್, ಬೇರೆ ಯಾವುದೇ ಹುಡುಗಿ ಆಗಿದ್ರೂ ಏನಾಗಿಬಿಡ್ತ ಇದ್ರೋ? + ಬದುಕನ್ನ ಛಾಲೆಂಜ್ ಆಗಿ ತಗೊಂಡು ಬದುಕಿ ತೋರಿಸ್ತೀನಿ ಅಂತ ಹೊರಟಿದ್ದಾಳೆ. +ವಯಸ್ಸಿಗೆ ಮೀರಿದ ತಿಳುವಳಿಕೆ. +ಒಂದು ಕೆಲ್ಸ ಹಿಡಿದ ಮೇಲೆ ಅದಕ್ಕೆ ಬದ್ದಳಾಗಿರೋ ನಿಯತ್ತು. +ಅದರ ಆಳಕ್ಕೆ ಇಳಿಯೋ ಪರಿಶ್ರಮ. +ಒಟ್ಟಿನಲ್ಲಿ ಇಳಾ ವಿಶೇಷ ವ್ಯಕ್ತಿತ್ವ ಇರೋ ಹುಡುಗಿ. +ಖಂಡಿತಾ ಅವಳು ಸಾಧನೆ ಮಾಡುತ್ತಾಳೆ. +ಆ ವಿಶ್ವಾಸ ನಂಗಿದೆ’ ಎನ್ನುತ್ತ ಇಳಾಳನ್ನು ಹೊಗಳುತ್ತ ಮೈಮರೆತ ನಿವಾಸ್ನನ್ನ ಸ್ಫೂರ್ತಿ ನೋಡಿಯೇ ನೋಡಿದಳು. +ಅರೆ, ಇಷ್ಟು ಬೇಗ ಇಳಾ ನಿವಾಸ್ನನ್ನು ಮೆಚ್ಚಿಸಿಬಿಟ್ಟಳೇ, ಅಂತಹ ಗುಣಗಳೇನಪ್ಪ ಅವಳಲ್ಲಿ ಇದೆ ಎಂದು ಚಿಂತಿಸುವಂತಾಯಿತು ಸ್ಫೂರ್ತಿಗೆ. +ಈ ನಿವಾಸ್ ಇರುವುದೇ ಹೀಗೆ. +ಮೆಚ್ಚುವ ಗುಣ ಅವನಲ್ಲಿ ಸಹಜವಾಗಿಯೇ ಇದೆ. +ಇನ್ನು ಇಳಾಳಂತ ಹುಡುಗಿಯರ ಬಗ್ಗೆ ಮೆಚ್ಚದೆ ಇರಲು ಸಾಧ್ಯವೆ?ಎಂದು ತನ್ನನ್ನು ತಾನು ಸಮಾಧಾನ ಮಾಡಿಕೊಂಡಳು. +ಅಷ್ಟರಲ್ಲಿ ಬಸ್ಸು ಬಂತು. +ಬೇರೆ ಬೇರೆ ಕಡೆ ಸೀಟು ಸಿಕ್ಕಿದ್ದರಿಂದ ಮಾತನಾಡಲಾಗಲಿಲ್ಲ. +ಇಳಾಗೂ ಕೂಡ ನಿವಾಸ್ನ ಬಗ್ಗೆ ಅಪಾರ ಮೆಚ್ಚುಗೆ ಅಭಿಮಾನ ಇರುವುದು ಗೋಚರಿಸಿತ್ತು. + ಎಲ್ಲೊ ಒಂದು ಕಡೆ ಹೃದಯ ಚುಳ್ ಎನಿಸಿದರೂ ಅದನ್ನೇನು ಗಂಭೀರವಾಗಿ ತೆಗೆದುಕೊಳ್ಳುವ ಹುಡುಗಿಯಾಗಿರಲಿಲ್ಲ ಸ್ಫೂರ್ತಿ. +ಬಸ್ಸಿನಿಂದ ಇಳಿಯುವಷ್ಟರಲ್ಲಿ ಸ್ಫೂರ್ತಿಯ ಅಪ್ಪ ಕಾಯುತ್ತ ಇದ್ದರು. +ಮಗಳು ಇಂದು ಬರುವ ವಿಚಾರ ತಿಳಿದಿದ್ದರಿಂದ ಮನೆಗೆ ಕರೆದೊಯ್ಯಲು ಬೈಕ್ ತೆಗೆದುಕೊಂಡು ಬಂದಿದ್ದರು. +ಇವರು ಬಾರದೆ ಇದ್ದರೂ ನಿವಾಸ್ ಸ್ಫೂರ್ತಿಯನ್ನು ತನ್ನ ಬೈಕಿನಲ್ಲಿಯೇ ಮನೆ ತಲುಪಿಸುತ್ತಿದ್ದ. +ಆದರೆ ಅದು ಯಾಕೋ ಬೇಡವೆನಿಸಿ ತಾವೇ ಬಂದಿದ್ದರು. +ಅವರನ್ನು ಸೋಡಿ ಆಚರ್ಯದಿಂದ ನಿವಾಸ್ ‘ಗೌಡ್ರೆ ನೀವು ಯಾಕೆ ಬರೋಕೆ ಹೋದ್ರಿ. +ನಾನೇ ನಿಮ್ಮ ಮಗಳನ್ನು ಕರ್ಕೊಂಡು ಬರುತ್ತಿದ್ದನಲ್ಲ’ ಎಂದು ಹೇಳಿದಾಗ-‘ನಾನು ತರಕಾರಿ ತಗೊಂಡು ಬಂದಿದ್ದೆ. +ಹಾಗೇ ಇವಳನ್ನು ಕರ್ಕೊಂಡು ಹೋಗೋಣ ಅಂತ ಬಂದಿದ್ದೀನಿ’ ಅಂತ ಹೇಳಿ ಮಗಳನ್ನು ಕರ್ಕೊಂಡು ಹೊರಟರು. +ಅಪ್ಪ ಬಂದಿದ್ದು, ಅಪ್ಪನ ಜೊತೆಯಲ್ಲಿ ಹೋಗಬೇಕಾದದ್ದು ಕೊಂಚ ಬೇಸರ ಎನಿಸಿದರೂ, ಅದನ್ನು ತೋರಿಸಿಕೊಳ್ಳದೆ ನಿವಾಸ್‌ಗೆ ಬರ್ತೀನಿ ಅಂತ ಹೇಳಿ ಕೈ ಬೀಸಿದಳು. +ಇವತ್ತು ಸಂಜೆ ಸ್ಫೂರ್ತಿಯನ್ನು ನೋಡಲು ಗಂಡಿನ ಕಡೆಯವರು ಬರುವವರಿದ್ದರು. +ಸಂಬಂಧ ಸರಿ ಎನಿಸಿದರೆ ಮದುವೆ ಮಾಡೇಬಿಡುವ ಮೂಡ್‌ನಲ್ಲಿದ್ದರು. +ಸ್ಫೂರ್ತಿ ಮನೆಗೆ ಬಂದ ಮೇಲೆಯೇ ಈ ವಿಚಾರ ತಿಳಿದಿದ್ದು. +ತಾನು ಇನ್ನೂ ಓದುತ್ತಿರುವಾಗಲೇ ಗಂಡು ಬರೋಕೆ ಯಾಕೆ ಒಪ್ಕೊಂಡೆ ಅಂತ ಕೂಗಾಡಿದಳು. +ಅವರಪ್ಪ ನಕ್ಕು ಸುಮ್ಮನಾಗಿ ಬಿಟ್ಟರು. +ಮನೆಗೆ ಬಂದರೂ ಮುಖ ದುಮ್ಮಿಸಿಕೊಂಡೇ ಇದ್ದಳು. +ಬಂದವರ ಮುಂದೆ ಮನೆಯವರಿಗೆ ಅವಮಾನವಾಗಬಾರದೆಂದು ಬೇಕಾಬಿಟ್ಟಿ ಡ್ರೆಸ್ ಮಾಡಿಕೊಂಡು ಕಾಫಿ ತಿಂಡಿ ಕೊಟ್ಟು ಬಂದಳು. +ಹುಡುಗನನ್ನು ಕತ್ತೆತ್ತಿಯೂ ನೋಡಲಿಲ್ಲ. +ಬಂದವರು ಒಪ್ಪಿದರೋ ಬಿಟ್ಟರೋ ಒಂದೂ ಕೇಳದೆ ಬೆಳಗಾಗುವುದನ್ನೆ ಕಾಯುತ್ತಿದ್ದು ಕಾಲೇಜಿಗೆ ಹೊರಟುಬಿಟ್ಟಳು. +ತಾನಿನ್ನು ಈ ಊರಿಗೆ ಬರಬಾರದು, ಬೇಗ ಡಿಗ್ರಿ ಮುಗಿಸಿ ಒಂದು ಕೆಲಸ ಹಿಡಿಯಬೇಕು. +ಯಾರೋ ಒಬ್ಬನಿಗೆ ಕಟ್ಟಿ ಮುಗಿಸಿಬಿಟ್ಟರೆ ಆಗಿಹೋಯಿತು ಅಲ್ಲಿಗೆ ಜವಾಬ್ದಾರಿ ಮುಗಿಸಿದಂತೆ. +ಮಕ್ಕಳ ಮನಸ್ಸು ಹೇಗಿದೆ ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ ಈ ಹೆತ್ತವರು. +ಛೇ ಏನು ಜನ್ಮವೋ ಈ ಹೆಣ್ಣಿನದ್ದು. +ಮೊದಲ ಬಾರಿಗೆ ತಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ನೊಂದುಕೊಂಡಳು. +ಏನೇ ಆಗಲಿ ತನ್ನ ಮನಸ್ಸಿನ ವಿರುದ್ದ ತಾನು ನಡೆದುಕೊಳ್ಳಲಾರೆ. +ಎಲ್ಲಾ ಹೆಣ್ಣು ಮಕ್ಕಳಂತೆ ಮದುವೆಯೇ ಸರ್ವಸ್ವ ಎಂದು ಭಾವಿಸಿ ವಿವಾಹ ಬಂಧನಕ್ಕೆ ಕೊರಳೊಡ್ಡಲಾರೆ ಎಂದು ಶಪಥ ಮಾಡಿದಳು. +ಮದುವೆಯಾಗುವುದೇ ಆದರೆ ತನ್ನಂತೆಯೇ ಅಭಿರುಚಿ ಉಳ್ಳವರು ಆಗಿರಬೇಕು. +ತನ್ನ ಆಸೆ, ಅಸಕ್ತಿ, ಅಭಿರುಚಿಗೆ ಹೊಂದುವ ವ್ಯಕ್ತಿ ಎಂದರೆ ನಿವಾಸ್ನಂತಿರಬೇಕು. +ಅಥವಾ ನಿವಾಸ್ನೇ ಆಗಬಾರದೇಕೆ?… +ದೂರದಲ್ಲೆಲ್ಲೋ ಮಿನುಗುತ್ತಿದ್ದ ಆಸೆಯ ದೀಪ ಈಗ ಹತ್ತಿರದಲ್ಲಿಯೇ ಪ್ರಕಾಶಮಾನವಾಗಿ ಉರಿಯತೊಡಗಿದಾಗ ಬೆಚ್ಚಿದಳು. +ಇದು ಸಾಧ್ಯವೇ ಎನಿಸಿ ಅವಳ ಹೃದಯ ಒದ್ದಾಡಿತು. +ಇಳಾ ಪ್ರಾಸ್ಪೆಕ್ಟ್ ತಗೊಂಡು ಮೀಟಿಂಗ್ ಮುಗಿಸಿ ಮನೆಗೆ ಬರುವಷ್ಟರಲ್ಲಿ ಸಂಜೆಯೇ ಆಗಿಬಿಟ್ಟಿತ್ತು. +ಹೊಟೆಲಿನಲ್ಲಿ ನಿವಾಸ್ ಊಟ ಕೊಡಿಸಿದ್ದರಿಂದ ಹಸಿವಿರಲಿಲ್ಲ. +ಮುಂದೆ ಓದಲು ಅಮ್ಮನನ್ನು ಹೇಗೆ ಒಪ್ಪಿಸುವುದು- ಎಂಬುದೇ ದೊಡ್ಡ ಚಿಂತೆಯಾಗಿತ್ತು. +ಆದರೆ ಅಮ್ಮ ಶಾಲೆಯಲ್ಲಿಯೇ ಮುಂದುವರೆಯುತ್ತೇನೆ ಎಂದರೆ ಓದಲೇಬೇಕಿತ್ತು. +ಅದೇ ಯೋಚನೆಯಲ್ಲಿ ಮನೆ ಸೇರಿದ್ದೇ ತಿಳಿಯಲಿಲ್ಲ. +ನೀಲಾ ಆಗಲೇ ಮನೆಗೆ ಬಂದಿದ್ದಳು. +ಇವಳಿಗಾಗಿಯೇ ಕಾಯುತ್ತಿದ್ದರು. +ಹೊರ ಹೋಗಿರುವ ಹರೆಯದ ಮಗಳು ಮನೆಗೆ ಬರುವ ತನಕ ಆತಂಕ ತಾಯಂದಿರಿಗೆ ಸಹಜವೇ. +ಹಾಗೆಯೇ ಆತಂಕದಿಂದ ಕಾಯುತ್ತಿದ್ದಳು. +ಅವಳು ಬಂದಿದ್ದನ್ನು ನೋಡಿ ‘ಸಧ್ಯ ಬಂದ್ಯಲ್ಲ…’ ಅನ್ನುತ್ತ ಕಾಫಿ ಕುಡೀತೀಯಾ? +ದೊಡ್ಡಮ್ಮ ಬಿಸಿ ಬಿಸಿ ಪಕೋಡ ಮಾಡಿದ್ದಾರೆ. +ಊಟ ಮಾಡ್ತೀಯೋ, ಕಾಫಿ ಕುಡಿತೀಯೋ…’ ಅಂತ ನೀಲಾ ಮಗಳನ್ನು ಕೇಳಿದಳು. +‘ಊಟ ಮಧ್ಯಾಹ್ನ ಮಾಡಿದೆ ಅಮ್ಮ. +ಈಗ ಕಾಫಿ ಕೊಡು. +ಏನು ಅಜ್ಜಿ ದಿನಾ ಹೀಗೆ ಬೋಂಡಾ, ಪಕೋಡ ಅಂತ ಮಾಡ್ತಾ ಇದ್ರೆ ನಾನು ಚೆನ್ನಾಗಿ ಬೆಲೂನ್ ಥರ ಊದ್ತೀನಿ ಅಷ್ಟೆ; +ಮಧ್ಯಾಹ್ನದ ಊಟವೇ ಜಾಸ್ತಿಯಾಗಿದ್ದು, ಅದು ಅರಗಿರಲೇ ಇಲ್ಲ. +ಇನ್ನು ಈ ಪಕೋಡ ಹೇಗಪ್ಪ ತಿನ್ನುವುದು? +ತಿನ್ನದೆ ಇದ್ದರೆ ಅಜ್ಜಿಗೆ ಬೇಸರ. +ತಿಂದ್ರೆ ನನಗೆ ಸಂಕಟ ಅಂದುಕೊಂಡು ನೀಲಾ ತಂದಿಟ್ಟಿದ್ದ ತಟ್ಟೆಯಿಂದ ಒಂಚೂರು ಪಕೋಡ ಮುರಿದುಕೊಂಡು ‘ಅಮ್ಮ ಮಧ್ಯಾಹ್ನ ಹೋಟೆಲಿನಲ್ಲಿ ಊಟ ಮಾಡ್ದೆ. +ನನ್ನ ಫ್ರೆಂಡ್ ಕರ್ಕೊಂಡು ಹೋಗಿದ್ದರು. +ಈಗ ಕಾಫಿ ಸಾಕು, ರಾತ್ರಿಗೆ ತಿಂತೀನಿ. +ಅಜ್ಜಿಗೆ ಹೇಳಬೇಡ ನೀನೇ ತಿಂದುಬಿಡು’ ಎಂದು ಹೇಳಿ ಕಾಫಿ ಕುಡಿಯುತ್ತ ತಾನು ತಂದಿದ್ದ ಪ್ರಾಸ್ಪಕ್ಟ್ ಅನ್ನು ನೀಲಾಳ ಕೈಗೆ ಇರಿಸಿದಳು. +‘ಇದ್ಯಾಕೆ ಎರಡು ತಂದಿದ್ದೀಯಾ, ಒಂದೇ ಸಾಕಾಗಿರಲಿಲ್ಲವೇ… ಇನ್ನೊಂದು ಯಾರಿಗೆ’ ಅರ್ಥವಾಗದೆ ನೀಲಾ ಪ್ರಶ್ನಿಸಿದಳು. +‘ಒಂದು ನನಗೆ, ಇನ್ನೊಂದು ನಿನಗೆ.’ +‘ನನಗಾ?’ ಆಶ್ಚರ್ಯ’ದಿಂದ ಅವಳನ್ನು ನೋಡುತ್ತ ‘ನಿಂಗೇನು ತಲೆ ಸರಿ ಇದೆಯಾ, ನನಗೆ ತಂದಿದ್ದೀಯಾ, ಏನಾಯ್ತು ನಿಂಗೆ…’ ರೇಗಿದಳು. +‘ಅಮ್ಮ ನಂಗೆ ತಲೆ ಸರಿ ಇದೆ, ನಾನು ಹೇಳೋದನ್ನ ಸುಮ್ನೆ ಗಮನವಿಟ್ಟು ಕೇಳು. +ಈಗ ನೀನು ಸ್ಕೂಲಿನ ಕೆಲ್ಸಕ್ಕೆ ಸೇರಿದ್ದೀಯಾ, ಪಾಪ ವಿಸ್ಮಯ್ ಅವರು ಜಾಗಕೊಟ್ಟರೋ ಓನರ್ ಅಂತ ನಿಂಗೆ ಎಚ್‌ಎಂ ಸ್ಥಾನ ಕೊಟ್ಟುಬಿಟ್ಟಿದ್ದಾರೆ. +ಆದರೆ ಅಲ್ಲಿ ಕೂರೋಕೆ ನಿಂಗೆ ಅರ್ಹತೆ ಬೇಡ್ವಾ? +ಅಲ್ಲಿರುವವರು ಯಾರೂ ಇದುವರೆಗೂ ನಿನ್ನ ವಿದ್ಯಾಭ್ಯಾಸ ಕೇಳಿಲ್ಲ. +ಆದ್ರೆ ಮುಂದೆ ಸಂಸ್ಥೆ ಬೆಳೆದ ಮೇಲೆ ನಿನ್ನ ಕ್ವಾಲಿಫಿಕೇಶನ್ಸ್‌ಗೆ ನಿನ್ನ ಇಟ್ಕೊಳ್ಳೋದಿಕ್ಕೆ ಸಾಧ್ಯಾನಾ… +ಈಗೇನು ಯಾರು ಸಿಕ್ಕಿಲ್ಲ ಅಂತ ನಿನ್ನ ಇಟ್ಕೊಂಡಿದ್ದಾರೆ. +ಮುಂದೆ ಕೆಲ್ಸ ಬಿಡ್ತೀಯಾ?ಮನೆಯಲ್ಲಿರ್ತೀಯಾ? +ನೋಡು ಅದಕ್ಕೆ ಸಿದ್ದವಾಗಿದ್ರೆ ನಾನೇನು ಮತ್ತೆ ಮಾತಾಡಲ್ಲ’ ನಿಷ್ಟೂರ ದನಿಯಲ್ಲಿ ಹೇಳಿದಳು. +ಶಾಲೆ ಬದುಕಿನ ಒಂದು ಅಂಗ ಎನಿಸಿಬಿಟ್ಟಿತ್ತು. +ತಾನಿದ್ದ ಪರಿಸ್ಥಿತಿಯಲ್ಲಿ ಹುಚ್ಚಿಯಾಗಬೇಕಾಗಿತ್ತು. +ಈ ಶಾಲೆಯಿಂದ ತನ್ನ ಬದುಕಿನ ಗತಿಯೇ ಬದಲಾಗಿದೆ. +ಇಂತಹ ಒಂದು ಬದುಕು ಇರಬಹುದೇ ಅಂಬ ಊಹೆಯೂ ಮಾಡದಿದ್ದ ತನಗೆ ಶಾಲೆ ಸಂಜೀವಿನಿಯಾಗಿದೆ. +ಎಲ್ಲವನ್ನು ಮರೆತು ತಾನೂ ಒಂದು ಜೀವಿ ಎನಿಸಲು ಕಾರಣವಾಗಿರುವುದೇ ತನ್ನ ಶಾಲೆಯ ಕೆಲಸದಿಂದ. +ಅದನ್ನು ಬಿಟ್ಟು ಒಂಟಿಯಾಗಿ ಈ ಮನೆಯಲ್ಲಿ ಕೂರಲು ಸಾಧ್ಯವೇ. +ಇಳಾ ಎಷ್ಟು ದಿನ ನನ್ನೊಂದಿಗಿರಬಹುದು. +ದೊಡ್ಡಮ್ಮ ಎಷ್ಟು ದಿನ ಇರಬಹುದು, ಮುಂದೆ… ಭ +ವಿಷ್ಯ ನೆನೆದು ವಿವ್ಹಲಳಾದಳು ನೀಲಾ. +ಮುಂದಿನ ದಿನಗಳು ಕತ್ತಲು ಬರೀ ಕತ್ತಲು ಎನಿಸಿ ಕುರ್ಚಿಯ ಮೇಲೆ ದಪ್ಪೆಂದು ಕುಸಿದಳು. +ತಾನು ಈ ವಯಸ್ಸಿನಲ್ಲಿ ಓದಬಹುದೇ? +ಅದು ತನ್ನಿಂದ ಸಾಧ್ಯವೇ… ನೋಡಿದವರು, ಕೇಳಿದವರು ಏನೆಂದುಕೊಂಡಾರು. +ಭಾವ, ಓರಗಿತ್ತಿ ಊರಿನ ಜನ ನಗುವುದಿಲ್ಲವೇ? ಇಲ್ಲಾ. . ಇಲ್ಲಾ. . ನನ್ನಿಂದ ಇದು ಸಾಧ್ಯವಿಲ್ಲ. +ಆದರೆ ಅವರಾರು ನನಗೆ ಬದುಕನ್ನು ಕಟ್ಟಿಕೊಡಲು ಸಾಧ್ಯವೇ? +ನಾಳೆ ಶಾಲೆಯಿಂದ ಹೊರಹೋಗಿ ಅಂದುಬಿಟ್ಟರೆ ತಾನೆಲ್ಲಿ ಹೋಗಲಿ… +ಮೋಹನನಿಲ್ಲದ ಈ ಮನೆಯಲ್ಲಿ ನೆಮ್ಮದಿಯಾಗಿ ಇರಲು ಸಾಧ್ಯವೇ. +ಇಂತಹ ಸ್ಥಿತಿ ತನಗೆ ಬರಬೇಕಿತ್ತೇ, ಮಗಳೊಂದಿಗೆ ನಾನು ಓದುವುದೇ. +ಓದಿ ಪಾಸು ಮಾಡುವುದೇ, ಸಾಧ್ಯವೇ, ಇದು ಸಾಧ್ಯವೇ? +ಮನದೊಳಗೆ ದೊಡ್ಡ ಹೋರಾಟವೇ ನಡೆಯಿತು. +ಮಗಳ ಕಡೆ ನೋಡಿದರೆ ಇಳಾ ಸಮಸ್ಯೆ ತನ್ನದಲ್ಲ ಎನ್ನುವ ಹಾಗೆ ಪ್ರಾಸ್ಪೆಕ್ಟ್ ಓದುತ್ತಿದ್ದಾಳೆ. +‘ಇಳಾ ಈ ವಯಸ್ಸಿನಲ್ಲಿ ನಾನು ಓದಲು ಸಾಧ್ಯವೇ… +ಓದಿ ಪಾಸು ಮಾಡಲು ಸಾಧ್ಯವೇ…’ ಮೆಲ್ಲನೆ ನುಡಿದಳು. +ಸಡಗರದಿಂದ ಎದ್ದು ಬಂದ ಇಳಾ ‘ಅಮ್ಮ ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು. +ಇದು ಕೇವಲ ಒಂದು ಪರೀಕ್ಷೆ ಅಷ್ಟೆ. +ಇಂತಹ ದಿನ ಬರಬಹುದೇ ಅನ್ನೋ ಆಲೋಚನೆಯೂ ಇರದಿದ್ದ ದಿನಗಳು ಅಂದಿದ್ದವು. +ಆದರೆ ಪರಿಸ್ಥಿತಿ ಹೇಗೇಗೋ ಬದಲಾಯಿಸಿ ಬಿಡುತ್ತಮ್ಮ. +ಅವಶ್ಯಕತೆ ಸಾಧಿಸುವಂತೆ ಮಾಡುತ್ತದೆ. +ನೀನು ಓದ್ತೀಯಾ, ಪಾಸು ಆಗಿಯೇ ಆಗುತ್ತೆ, ನಿನ್ನ ಶಾಲೆಯಿಂದ ಯಾರೂ ಕಳಿಸುವ ಹಾಗಿರುವುದಿಲ್ಲ. +ನಿನ್ನ ಬದುಕು ನಿನ್ನದೇ ಆಗಿರುತ್ತೆ. +ಒಂದು ದಾರಿ ಮುಚ್ಚಿಕೊಂಡರೆ ಹಲವು ದಾರಿ ನಮಗೆ ಗೋಚರಿಸುತ್ತೆ. +ಹೆದರಬೇಡ, ಯಾರಿಗೂ ನೀನು ಅಂಜಬೇಕಿಲ್ಲ, ನಿನ್ನ ಬದುಕು, ನಿನ್ನದೇ ನಿರ್ಧಾರ, ಗಟ್ಟಿಯಾಗಿ ನಿಲ್ಲಮ್ಮ’ ಹುರಿದುಂಬಿಸಿದಳು. +ಮಗಳ ಕೈ ಹಿಡಿದು ನೀಲಾ ಬಿಕ್ಕಳಿಸಿದಳು. +‘ಇನ್ನು ಅಳೋದು ಬೇಡಮ್ಮಾ, ಅಳು, ದುಃಖ, ನೋವು, ಅಪಮಾನ, ವೇದನೆ… ಎಲ್ಲಾ ಇವತ್ತಿಗೆ ಕೊನೆ ಆಗಲಿ. +ಮುಂದೆ ಗೆಲುವು ಮಾತ್ರ ನಮ್ಮ ಗುರಿಯಾಗಿರಲಿ. +ಸಾಧಿಸಿ ತೋರಿಸೋಣ’ ಅಮ್ಮನ ಕಣ್ಣೀರು ಒರೆಸಿದಳು. +ಒಳಗಿನಿಂದಲೇ ಎಲ್ಲವನ್ನು ಕೇಳಿಸಿಕೊಂಡಿದ್ದ ಅಂಬುಜಮ್ಮ ‘ನೀಲಾ, ನೀನು ಎಂಥ ಪುಣ್ಯವಂತೆಯೇ, ಎಂತ ಮಗಳನ್ನು ಪಡೆದಿದ್ದೀಯಾ… ನೀನು ಅವಳ ಬದುಕನ್ನು ರೂಪಿಸಬೇಕಾಗಿತ್ತು. +ಆದರೆ ಅವಳೆ ನಿನ್ನ ಬದುಕಿನ ಗುರಿ ತೋರಿಸುತ್ತಾ ಇದ್ದಾಳೆ. +ಅವಳಿಗಾಗಿ ನೀನು ಓದಬೇಕು ನೀಲಾ. +ಮುತ್ತಿನಂಥ ಮಗಳ ಮುತ್ತಿನಂಥ ಆಸೆ. +ದೇವರು ಒಂದು ಕಿತ್ಕೊಂಡು ಮತ್ತೊಂದು ಕೊಡುತ್ತಾನಂತೆ. +ರತ್ನದಂತ ಮಗಳ್ನ ದೇವರು ಕೊಟ್ಟುಬಿಟ್ಟಿದ್ದಾನೆ. +ಎಂತಹ ಮುಂದಾಲೋಚನೆ ಅವಳದು. +ನೀಲಾ ನಿಂಗೂ ಆ ಆಲೋಚನೆ ಬಂದಿತ್ತಾ ಹೇಳು… +ಯಾರಿಗೂ ಬರದಿರೋ ಆಲೋಚನೆ ಬಂದಿದೆ. +ಮುಂದಿನ ನಿನ್ನ ಒಳ್ಳೆ ಭವಿಷ್ಯಕ್ಕೆ ಮುನ್ನುಡಿ ಬರೆಯುತ್ತಿದ್ದಾಳೆ ನಿನ್ನ ಮಗಳು’ ಇಳಾಳನ್ನು ಕೊಂಡಾಡಿಬಿಟ್ಟರು. +ನೀಲಾ ಪರೀಕ್ಷೆ ತೆಗೆದುಕೊಳ್ಳಲು ಒಪ್ಪಿದರೂ ಈ ವಿಚಾರವನ್ನು ಯಾರಿಗೂ ಹೇಳಬಾರದು, ತಮ್ಮ ಮೂವರ ನಡುವೆ ಮಾತ್ರ ಇದು ಇರಬೇಕು ಎಂದು ವಾಗ್ದಾನ ತೆಗೆದುಕೊಂಡಳು. +ಸಧ್ಯ ಒಪ್ಪಿದ್ದೆ ದೊಡ್ಡದಾಗಿದ್ದುದರಿಂದ ನೀಲಾಳ ಮಾತಿಗೆ ಒಪ್ಪಿಕೊಂಡು ಬಿಟ್ಟಳು. +ಹಾಸನದಲ್ಲಿಯೇ ಪರೀಕ್ಷೆ ಬರೆಯಬಹುದು, ಯಾರಿಗೂ ಗೊತ್ತಾಗುವುದಿಲ್ಲ. +ಪರೀಕ್ಷೆಯ ಸಮಯದಲ್ಲಿ ಶಾಲೆಗೆ ರಜೆ ಇರುತ್ತದೆ. +ಹಾಗಾಗಿ ಶಾಲೆಯಲ್ಲಿಯೂ ಯಾರಿಗೂ ತಿಳಿಯುವಂತಿಲ್ಲ. +ಹಿಂದೆ ಓದುವ ಮನಸ್ಸಿತ್ತು. +ಆದರೆ ಓದುವ ವಯಸ್ಸಿನಲ್ಲಿ ಮದುವೆ ಆಗಿ ಸಂಸಾರ ಮಾಡಿದ್ದಾಯಿತು. +ಈಗ ಸಂಸಾರ ನಡೆಸಬೇಕಾಗಿದ್ದ ಸಮಯದಲ್ಲಿ ಓದುವಂತಾಗಿದೆ. +ತನ್ನ ಹಣೆಯಲ್ಲಿ ಹೀಗೆ ಅಂತ ಬರೆದಿರುವಾಗ ತಾನು ಅಂದುಕೊಂಡಂತೆ ಆಗುತ್ತಿದೆಯೇ? +ಹೇಗೊ ನಡೆದು ಹೋಗಲಿ… +ತನಗೊಂದು ಆಸರೆಯಾಗಿ ಶಾಲೆ ಇದೆ. +ಅದು ಕೈಜಾರದಂತೆ ನೋಡಿಕೊಳ್ಳಬೇಕಷ್ಟೆ. +ವೈರಾಗ್ಯಭಾವ ಮೂಡಿದರೂ, ಓದುವ ಹುಮ್ಮಸ್ಸು ಹುಟ್ಟಿಕೊಂಡಿತು. +ಅರ್ಜಿ ಭರ್ತಿ ಮಾಡಿ ಸಕಲೇಶಪುರದಿಂದಲೇ ಯುನಿವರ್ಸಿಟಿಗೆ ಕಳುಹಿಸಿಕೊಟ್ಟಳು. +ಇನ್ನು ಓದುವ ಕೆಲಸವೂ ಸಾಗಬೇಕು. +ಅಮ್ಮನೂ ಓದುವಂತೆ ಉತ್ತೇಜಿಸಬೇಕು. +ಎಲ್ಲಾ ಕೆಲಸಗಳ ಒತ್ತಡದ ನಡುವೆಯೂ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದುಕೊಂಡಳು. +ಊಟ ಮುಗಿಸಿ ನಿದ್ದೆ ಬರುವ ತನಕ ಏನಾದರೂ ಓದೋಣವೆಂದು ಪುಸ್ತಕಗಳನ್ನು ಜೋಡಿಸಿದ್ದ ಕೊಠಡಿಗೆ ಬಂದಳು. +ಮೋಹನ್‌ಗೆ ಓದುವ ಆಸಕ್ತಿ ಜೊತೆಗೆ ಪುಸ್ತಕಗಳ ಸಂಗ್ರಹ ಕೂಡ ಮಾಡಿದ್ದ. +‘ಓದುವ ಕೊಠಡಿ’ ಎಂದೇ ಒಂದು ಕೊಠಡಿ ಮೀಸಲಿಟ್ಟುಕೊಂಡು ತಂದಿದ್ದ ಪುಸ್ತಕಗಳನ್ನೆಲ್ಲ ಜೋಡಿಸಿದ್ದ. +ಯಾವ ಪುಸ್ತಕಗಳಿವೆಯೆಂದೇ ಇಳಾ ಗಮನಿಸಿರಲಿಲ್ಲ. +ಗಾಜಿನ ಬೀರು ತುಂಬ ಪುಸ್ತಕಗಳಿದ್ದವು. +ಎಷ್ಟೊಂದು ಪುಸ್ತಕಗಳು… ಅಪ್ಪಾ ಅದ್ಯಾವಾಗ ಇವುಗಳನ್ನೆಲ್ಲ ಓದುತ್ತಿದ್ದರೊ, ಓದುವ ಆಸಕ್ತಿ ಅಪ್ಪನಿಂದ ಬಂದಿದ್ದರೂ, ಕಾಲೇಜಿನ ಪುಸ್ತಕ ಓದುವುದರಲ್ಲಿಯೇ ಸಮಯ ಸಾಕಾಗದ ತಾನು ಅವುಗಳನ್ನೆಲ್ಲ ಓದಲು ಸಮಯ ಎಲ್ಲಿತ್ತು. +ಈಗ ಓದೋಣವೆಂದು ನೋಡಿದರೆ, ಯಾವುದು ಓದುವುದು… ಯಾವುದು ಬಿಡುವುದು… ಯಾವ ಪುಸ್ತಕಗಳಿವೆ ಎಂದು ಕಣ್ಣಾಡಿಸಿದಳು. +ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’, ‘ಕಾನೂರು ಹೆಗ್ಗಡತಿ’; +ಬೈರಪ್ಪನವರ ‘ದಾಟು’, ‘ವಂಶವೃಕ್ಷ’, ‘ತಬ್ಬಲಿ ನೀನಾದೆ ಮಗನೆ’; +ರಾವ್ ಬಹದ್ದೂರರ ‘ಗ್ರಾಮಾಯಣ’; +ಮಿರ್ಜಿ ಅಣ್ಣಾರಾಯರ ‘ನಿಸರ್ಗ’, ‘ಅಶೋಕ ಚಕ್ರ’; +ದು.ನಿಂ.ಬೆಳಗಲಿಯವರ ‘ದೇವದಾಸಿ’, ‘ಹಡೆದವರು’, ‘ಮೌನಕ್ರಾಂತಿ; +ಶಾಂತರಸರ ‘ನಾಯಿ ಮತ್ತು ಪಿಂಚಣಿ’: +ಬಸವರಾಜ ಕಟ್ಟೀಮನಿಯವರ ‘ಮಾಡಿ ಮಡಿದವರು’; +ತ್ರಿವೇಣಿ, ವೈದೇಹಿಯ ಕಥೆಗಳು, ಅನುಪಮಾರ ‘ಮಾಧವಿ’, ‘ನೆನಪು ಸಿಹಿ-ಕಹಿ’; +ಜಾವೇದ್ ಅಕ್ತರ್‌ರ ‘ಬತ್ತಳಿಕೆ’, ಜಗದಾನಂದರ ‘ಬದುಕು ಕಲಿಯಿರಿ’- ಒಂದೇ ಎರಡೇ… ಸಾವಿರಾರು ಪುಸ್ತಕಗಳು. +ಇಷ್ಟೆಲ್ಲ ಓದಿಯೂ ಅಪ್ಪ ಎಂತಹ ವಿಚಾರವಂತರಾಗಿದ್ದರು, ಅವರೇಕೆ ದುರ್ಬಲರಾಗಿ ಬಿಟ್ಟರು. +ಬದುಕಿ ಸಾಧಿಸಿ ತೋರಿಸುವ ಛಲ ತೋರಿಸದೆ ಮಣ್ಣಲ್ಲಿ ಮಣ್ಣಾಗಿ ಹೋದರಲ್ಲ. +ವಿಷಾದ ಒತ್ತಿಕೊಂಡು ಬಂತು. +ಪೂರ್ಣಚಂದ್ರ ತೇಜಸ್ವಿಯಮ ‘ಕೃಷಿ‌ಋಷಿ’ ಗಮನ ಸೆಳೆಯಿತು. +ಕೃಷಿ ಅಂತ ಇದೆಯಲ್ಲ ಓದೋಣವೆಂದು ತೆಗೆದುಕೊಂಡು ಕುರ್ಚಿಯ ಮೇಲೆ ಕುಳಿತು ಓದತೊಡಗಿದಳು. +ಸಹಜ ಕೃಷಿ ಮತ್ತು ಪುರೋಕಾ ಬಗ್ಗೆ ಬರೆದ ಲೇಖನ ಗಮನ ಸೆಳೆಯಿತು. +ಕೃಷಿ ಸಮಸ್ಯೆ ಬಗ್ಗೆ ನಮ್ಮ ವಿಜ್ಞಾನಿಗಳು ಏನೂ ಮಾಡಲಿಲ್ಲ. +ಎಲ್ಲಾ ಕೃಷಿಕರು ಒಂದಲ್ಲ ಒಂದು ಸಮಸ್ಯೆಯಲ್ಲಿದ್ದಾರೆ. +ದೊರಕದ ರಸಗೊಬ್ಬರ, ಸಿಗದ ಬೆಂಬಲ ಬೆಲೆ, ಕೃಷಿ ಎಂಬುದು ಉದ್ಯಮವಾಗದ ಸ್ಥಿತಿ, ಕಾರ್ಮಿಕರಿಗೂ ಬೆಳೆಗಾರರಿಗೂ ಅಂಥ ವ್ಯತ್ಯಾಸವೇನೂ ಇಲ್ಲದಂತೆ ಸನ್ನಿವೇಶದಲ್ಲಿ ಸಹಜ ಕೃಷಿ ಪ್ರತಿಪಾದಕ ಮುಸನೊಬು, ಪುಕಾವೋಕಾ ಕಣ್ಮರೆಯಾಗಿದ್ದಾರೆ. +ಅವರ ಸಂಶೋಧನೆ, ನಂಬಿಕೆ, ಛಲ ಮತ್ತು ಅಹಂಕಾರವನ್ನು ಬದಿಗಿಟ್ಟು, ಪ್ರಕೃತಿಯೊಂದಿಗೆ ಒಂದಾಗುವ ವ್ಯಕ್ತಿತ್ವದ ಕುರಿತು ಬರೆದ ಕೃತಿ ಎಂದು ಮುನ್ನುಡಿಯಲ್ಲಿತ್ತು. +ಪುಟಗಳನ್ನು ತಿರುವಿ ಹಾಕುತ್ತ ಹೋದಳು. +ಕುತೂಹಲ ಕೆರಳಿತು. +ಪುಕೊವೋಕಾರ ಒಂದು ಹುಲ್ಲಿನ ಕ್ರಾಂತಿ- ನಾಲ್ಕೆ ಮಾತಿನಲ್ಲಿ ಹೇಳಿ ಮುಗಿಸುವಷ್ಟು ಸರಳ. +ಆದರೆ ಅದಕ್ಕೆ ಬೇಕಾದ ಮನಃಸಿದ್ದತೆ ಇಲ್ಲಿ ಅತ್ಯಂತ ಮುಖ್ಯ. +ಪುಕೊವೋಕಾರು ಬೇಸಾಯ ಪದ್ಧತಿಗೆ ಬೇಕಾದ ನಾಲ್ಕು ಮೂಲ ತತ್ತ್ವವನ್ನು ಮಂಡಿಸಿದ್ದಾರೆ. +ಮೊದಲನೆಯದಾಗಿ ಭೂಮಿ ತನ್ನನ್ನು ತಾನೇ ಉಳುಮೆ ಮಾಡಿಕೊಳ್ಳುತ್ತದೆ. +ಗಿಡಗಳ ಕಳೆಗಳ ಲಕ್ಷಾಂತರ ಬೇರುಗಳು ಭೂಮಿಯೊಳಗೆ ನುಸುಳಿ ಭೂಮಿಯನ್ನು ಉಳುಮೆಗಿಂತ ಚೆನ್ನಾಗಿ ಮೆದು ಮಾಡುತ್ತದೆ. +ಭೂಮಿಯೊಳಗೆ ಜೀವಿಸುವ ಎರೆಹುಳು, ಒಡುಹುಳು, ಗೊಬ್ಬರದ ಹುಳುಗಳು ಭೂಮಿಯೊಳಗೆಲ್ಲ ಸುರಂಗ ಕೊರೆದು ಉಳುಮೆ ಮಾಡಿ, ಸಾಯುವ ಗಿಡಗಳ ಬೇರುಗಳನ್ನು ತಿಂದು ಲಡ್ಡು ಹಿಡಿಸಿ ಕೋಟ್ಯಾಂತರ ಸೂಕ್ಷ್ಮಾಣುಗಳು ಭೂಮಿಯನ್ನು ನಿರಂತರವಾಗಿ ಫಲವತ್ತು ಮಾಡುತ್ತದೆ. +ನಾವು ಉತ್ತಿ ಮೇಲ್ಮಣ್ಣನ್ನು ಬಿಸಿಲಿಗೆ ಒಡ್ಡುವುದರಿಂದ ಈ ಗೊಬ್ಬರವೆಲ್ಲ ಬಿಸಿಲಿನಲ್ಲಿ ಇಂಗಾಲವಾಗುತ್ತದೆ. +ಕ್ರಮೇಣ ಭೂಮಿ ಗೊಡ್ಡು ಬೀಳುತ್ತ ಹೋಗುತ್ತದೆ. +ಎರಡನೆಯದಾಗಿ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸದಿರುವುದು. +ಈ ರಾಸಾಯನಿಕ ಗೊಬ್ಬರ ಭೂಮಿಗೆ ಹಾನಿಕರ. +ಈ ಗೊಬ್ಬರ ಪೊಷಕಾಂಶಗಳನ್ನು ನಿರಂತರವಾಗಿ ಸರಬರಾಜು ಮಾಡುತ್ತಿರುವ ಸೂಕ್ಷ್ಮಾಣುಗಳನ್ನು ನಾಶ ಮಾಡುತ್ತದೆ. +ಗಿಡಗಳಿಗೆ ಬೇಕಾದ ರಾಸಾಯನಿಕಗಳನ್ನು ಇವೇ ಉತ್ಪತ್ತಿ ಮಾಡುವುದರಿಂದ ರಾಸಾಯನಿಕ ಗಿಡಗಳ ಬೀರುಗಳೆಡೆಯಲ್ಲಿ ಇರುವ ಮಣ್ಣಿನ ಫಲವತ್ತತೆಗೆ ಮೂಲ ಅಗತ್ಯವಾದ ಸೂಕ್ಷ್ಮಾಣು ಜೀವಿಗಳು ಈ ರಾಸಾಯನಿಕದಿಂದ ಸಾಯುತ್ತವೆ. +ಹಾಗಾಗಿ ತನ್ನಿಂದ ತಾನೇ ರಾಸಾಯನಿಕ ಕ್ರಿಯೆ ನಿಂತುಹೋಗಿ ಭೂಮಿ ನಿರಂತರವಾಗಿ ಮಾನವ ನೀಡುವ ಕೃತಕ ಗೊಬ್ಬರವನ್ನು ಅವಲಂಬಿಸಬೇಕಾಗುತ್ತದೆ. +ಮೂರನೆಯದಾಗಿ ಉಳುಮೆಯಿಂದಾಗಲಿ, ರಾಸಾಯನಿಕಗಳಿಂದಾಗಲಿ ಕಳೆಗಳನ್ನು ನಿರ್ಮೂಲ ಮಾಡುವುದನ್ನು ನಿಲ್ಲಿಸಬೇಕು. +ಭೂಮಿಗೂ ಈ ಕಳೆಗಳು ಅತ್ಯಗತ್ಯ. +ಆದರೆ ನಮ್ಮ ಬೆಳೆಗಳಿಗೆ ತೊಂದರೆ ಕೊಡದಂತೆ ಕಳೆಗಳನ್ನು ನಾವೇ ಜಮೀನಿನಲ್ಲಿ ಹಚ್ಚಿಸಬೇಕು. +ಈ ಕಳೆಗಳನ್ನು ಬೆಳೆಗಳಿಗಿಂತ ಮಿಗಿಲಾಗಿ ತಲೆ ಎತ್ತದಂತೆ ಕೊಚ್ಚಿ ಕೊಚ್ಚಿ ಹಾಕುತ್ತ ಬಂದರೆ ಸಾಕು, ಭೂಮಿಯ ಫಲವತ್ತು ಹೆಚ್ಚುತ್ತ ಹೋಗುತ್ತದೆ. +ನಾಲ್ಕನೆಯದಾಗಿ ಕ್ರಿಮಿನಾಶಕ ಸಿಂಪರಣೆ ಇತ್ಯಾದಿ ಔಷಧಿಯ ಅವಲಂಬನೆ ಪೂರ್ಣವಾಗಿ ನಿಲ್ಲಬೇಕು. +ಉಳುವ, ರಸಗೊಬ್ಬರಗಳನ್ನು ಉಪಯೋಗಿಸುವ ಕಳೆಗಳನ್ನು ನಾಮಾವಶೇಷ ಮಾಡಿ ಬೆಳೆ ಬೆಳೆಯುವ ವಿಧಾನದಿಂದಲೇ ರೋಗ ರುಜಿನಗಳಿಗೆ ತುತ್ತಾಗುವ ದುರ್ಬಲ ಗಿಡಗಳು ರೂಪುಗೊಳ್ಳುತ್ತವೆ. +ಭೂಮಿಯ ಮೇಲೆ ನಾವು ಉಂಟು ಮಾಡುವ ಈ ಏರುಪೇರುಗಳ ದೆಸೆಯಿಂದಲೇ ಇದ್ದಕ್ಕಿದ್ದಂತೆ ಕ್ರಿಮಿಗಳು ಅಗಣಿತವಾಗಿ ಉದ್ಭವಿಸಿ ತೊಂದರೆ ಕೊಡಲಾರಂಭಿಸುತ್ತವೆ. +ಆರೋಗ್ಯಕರ ವಾತಾವರಣದಲ್ಲಿ ಆರೋಗ್ಯಕರ ಗಿಡಗಳನ್ನು ಬೆಳೆದು ಕೃಷಿ ಮಾಡುವುದೇ ವಿವೇಕಯುಕ್ತವಾದುದು. +ಇದಿಷ್ಟು, ಕೃಷಿಕ ಪುಕೊಕಾಕನ ಅನುಭವ ಜನ್ಮ ವಿಚಾರಗಳು. +ಎಷ್ಟೊಂದು ಸೊಗಸಾಗಿ ಹೇಳಿದ್ದಾನೆ. +ಯಾರೀತ ಎಂಬ ಕುತೂಹಲದಿಂದ ಆತನ ಬಗ್ಗೆ ಮಾಹಿತಿ ಪಡೆಯಲು ಪುಸ್ತಕಗಳನ್ನು ಇಳಾ ಹುಡುಕಿದಳು. +ಯಾವುದೋ ಪತ್ರಿಕೆಯಲ್ಲಿ ಬಂದಿದ್ದ ಆತನ ಬಗ್ಗೆ ಮಾಹಿತಿ ಇರುವ ಕಟಿಂಗ್ ಕಣ್ಣಿಗೆ ಬಿತ್ತು. +ಅಪ್ಪನಿಗೆ ಎಷ್ಟೊಂದು ಆಸಕ್ತಿ, ಹೇಗೆ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ ಎಂದು ಮೆಚ್ಚುಗೆ ಮೂಡಿತು. +ಆತನ ಭಾವಚಿತ್ರದ ಸಮೇತ ಆತನ ಪರಿಚಯ ಕೊಟ್ಟಿದ್ದರು. +ಕೋಲುಮುಖದ ಬಿಳಿಗಡ್ಡದ, ದಪ್ಪ ಮೂಗಿನ, ದೊಡ್ಡ ಕನ್ನಡಕ ಧಾರಿ- ಈತ ಹುಟ್ಟಿದ್ದು ಜಪಾನಿನ ದಕ್ಷಿಣದ ಮೂಲೆಯಲ್ಲಿರುವ ಶಿಕೋಕ ದ್ವೀಪದ ಪುಟ್ಟ ಹಳ್ಳಿಯಲ್ಲಿ. +ಅತ್ಯುತ್ತಮ ಕಾಲೇಜಿನಲ್ಲಿ ವಿದ್ಯಾಭ್ಯಾಸ, ವಿಜ್ಞಾನ ಕ್ಷೇತ್ರದಲ್ಲಿ ಭವಿಷ್ಯ, ಅಚ್ಚುಮೆಚ್ಚಿನ ಗೆಳೆಯರು, ಒಳ್ಳೆಯ ಉದ್ಯೋಗ ಎಲ್ಲವೂ ಇತ್ತು. +ಆದರೂ ಅದೇನೋ ಅತೃಪ್ತಿ ಕಾಡುತ್ತಿತ್ತು. +ಒಂದು ದಿನ ಎಲ್ಲರಿಗೂ ಅಚ್ಚರಿ ಹುಟ್ಟಿಸಿ ಕೆಲಸ ತೊರೆದು ಬಂದ. +ರಾಜೀನಾಮೆಗೆ ಕಾರಣವೇ ಅವನಲ್ಲಿ ಇರಲಿಲ್ಲ. +ತೋಟ ನೋಡಿಕೊಳ್ಳಲು ಹೋಗಿ ತೋಟ ಹಾಳುಮಾಡಿ ತಂದೆಯಿಂದ ಬೈಸಿಕೊಂಡ. +ಒಂದು ದಿನ ಬೀಳುಬಿದ್ದಿದ್ದ ಗದ್ದೆಯಲಿ ಕಳೆಯ ನಡುವೆ ಭತ್ತದ ಗಿಡಗಳು ಹುಲುಸಾಗಿ ಬೆಳೆದು ತೆನೆ ಬಿಟ್ಟಿದ್ದು ಸೋಡಿ ಆಶ್ಚರ್ಯಪಟ್ಟ. +ಇದು ಅವನ ಜೀವನದ ಗತಿಯನ್ನು ಬದಲಿಸಿತು. +ಹಳ್ಳಿಗೆ ಹಿಂತಿರುಗಿ ಕ್ರಾಂತಿಕಾರಕ ಚಟುವಟಿಕೆಗಳನ್ನು ಆರಂಭಿಸಿದ. +ತನ್ನ ಪ್ರಯೋಗ ಪ್ರಾರಂಭಿಸಿದ ಪುಕೋಕಾ ಮೂವತ್ತೂ ವರ್ಷ ಕಾಲ ಹೊರ ಜಗತ್ತಿನ ಸಂಬಂಧವನ್ನೂ ಪೂರ್ತಿ ಕಡಿದುಕೊಂಡು ತನ್ನ ಬದುಕನ್ನು ಕೃಷಿಗಾಗಿ ಮೀಸಲಿಟ್ಟ. +ಯಾರ ಹಂಗೂ ಇಲ್ಲದೆ, ನೆರವು ಇಲ್ಲದೆ, ಗೊಬ್ಬರ ಹಾಕುವವರಿಲ್ಲದೆ ಎತ್ತರವಾಗಿ ಬೆಳೆದ ಅರಣ್ಯದ ಮರಗಳು ಅವನಿಗೆ ಶಿಕ್ಷಣ ನೀಡಿದವು. +ತಾವೇ ವರ್ಷ ವರ್ಷಕ್ಕೆ ಉತ್ತಮವಾದ ಗಟ್ಟಿಯಾದ ಬೀಜ ರೂಪಿಸಿ, ನೆಲಕ್ಕೆ ಬೀಳಿಸಿ, ಎಲೆ ಹೂವು ಕಾಯಿ ಹಕ್ಕಿಗಳ ಹಿಕ್ಕೆ ಇತ್ಯಾದಿಗಳನ್ನು ಬೀಳಿಸಿದರೆ, ಭೂಮಿ ಅವನ್ನು ಗೊಬ್ಬರವಾಗಿರಿಸಿ ಬೀಜ ಮೊಳೆತು ಮರವಾಗುತ್ತದೆ. +ಅರಣ್ಯದ ನೆಲ ಸಾರವಾಗುತ್ತ ಹೋಗುತ್ತದೆ. +ಇದರಿಂದ ರೈತ ಕಲಿತದ್ದು ತೀರ ಕಮ್ಮಿ ಎನ್ನುವುದು ಅವನಿಗೆ ಅರ್ಥವಾಗಿತ್ತು. +ಪುಕೋಕಾನ ಬಗ್ಗೆ ಓದಿದ್ದು ಖುಷಿಯಾಯ್ತು ಇಳಾಗೆ, ಒಬ್ಬ ಕೃಷಿ ಋಷಿಯ ಬಗ್ಗೆ ತಿಳಿದುಕೊಂಡಿದ್ದು, ಆತ ಪ್ರತಿಪಾದಿಸಿದ ತತ್ವಗಳು ನಿಜಕ್ಕೂ ನೈಜತೆಯಿಂದ ಕೂಡಿದೆ. +ಪರಿಸರಕ್ಕಿಂತ ದೊಡ್ಡ ವಿಜ್ಞಾನಿ ಇಲ್ಲ ಎಂದು ಸ್ವತಃ ತೋರಿಸಿಕೊಟ್ಟ ಪುಕೋಕಾ. +ಕೃಷಿ ವಿಜ್ಞಾನದ ಆಧುನಿಕ ಸೂತ್ರಗಳನ್ನೆಲ್ಲ ಗಾಳಿಗೆ ತೂರಿದವನು, ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ ಕಟ್ಟೆಯನ್ನು ಕಟ್ಟಿ ನೀರೆರೆದವರು ಯಾರು ಎಂಬ ಸಿದ್ದಾಂತವೇ ಅವನ ಕೃಷಿ ತಂತ್ರವಾಗಿತ್ತು. +ಈ ವಿಚಾರವನ್ನ ಹಳ್ಳಗಳಲ್ಲಿ ನಡೆಯುವ ಸಭೆಯಲ್ಲಿ ತಿಳಿಸಬೇಕು- ಈ ಬಗ್ಗೆ ಒಂದಿಷ್ಟು ಟಿಪ್ಪಣಿ ಮಾಡಿಕೊಂಡರೆ ಅನುಕೂಲವೆಂದು ಮುಖ್ಯ ಅಂಶಗಳನ್ನು ಒಂದು ಹಾಳೆಯಲ್ಲಿ ಬರೆದು ಇರಿಸಿಕೊಂಡಳು. +ಸಮಯ ನೋಡಿದರೆ ರಾತ್ರಿ ೧೨ ಗಂಟೆಯಾಗಿದೆ. +ಎಷ್ಟು ಹೊತ್ತು ಓದುತ್ತ ಕುಳಿತುಬಿಟ್ಟೆ ಎಂದುಕೊಂಡು ನಿದ್ರೆ ಎಳೆಯಲು ಪ್ರಾರಂಭಿಸಿದಾಗ ತನ್ನ ರೂಮಿಗೆ ಹೋಗಿ ಮಲಗಿದಳು. +ರಾತ್ರಿ ಕನಸಿನಲ್ಲೂ ಅದೇ ಯೋಚನೆ ಪುಕೋಕಾರನನ್ನು ನೋಡಿದಂತೆ ಅವನ ಭೇಟಿ ಮಾಡಿದಂತೆ, ಅವನ ಜೊತೆ ಮಾತನಾಡಿದಂತೆ, ಅವನು ಬೆಳೆದ ಬೆಳೆ, ಅವನು ನಂಬಿದ್ದ ಕೃಷಿ ಧರ್ಮ ಎಲ್ಲವನ್ನು ಕಣ್ಣಾರೆ ಕಂಡಿದ್ದಳು. +ನಿದ್ರೆಯಿಂದ ಎದ್ದ ಮೇಲೂ ಅದೇ ಗುಂಗಿನಲ್ಲಿದ್ದಳು. +ಬೆಳಗ್ಗೆ ತಿಂಡಿ ತಿನ್ನುವಾಗ ನೀಲಾ ಬಳಿ ರಾತ್ರಿ ತಾನು ಓದಿದ್ದ ಮಾಹಿತಿ ಬಗ್ಗೆ ಹೇಳಿದಳು. +ನೀಲಾಳಿಗೇನು ಆ ಬಗ್ಗೆ ಆಸಕ್ತಿ ಮೂಡಲಿಲ್ಲ. +‘ಭೂಮಿ ಉಳದೆ, ಕಳೆ ಕೀಳದೆ ಅದು ಹೇಗೆ ವ್ಯವಸಾಯ ಮಾಡೋಕೆ ಸಾಧ್ಯ ಹೇಳು? +ಬೀಜಗಳನ್ನು ಬಿತ್ತದೆ, ಉಳುಮೆ ಮಾಡದೇ ಕಳೆ ಕೀಳದೆ ಬೇಸಾಯ ಮಾಡೋದು ನಿಜನಾ. +ಏನೊ ಬರ್ಕೊಂಡಿದ್ದಾರೆ. +ಹಾಗೆಲ್ಲ ನೀನು ಮಾಡೋಕೆ ಹೋಗಿ ಇರೋ ಭೂಮಿನಾ ಹಾಳು ಮಾಡಬೇಡ. +ಈಗಾಗಲೇ ತೋಟಕ್ಕೆ, ಗದ್ದಗೆ ರಸಗೊಬ್ಬರ ಬೇಡ ಅಂತ ಹೇಳಿಬಿಟ್ಟದ್ದೀಯಾ, ಸಗಣಿಗೊಬ್ಬರ ತೋಟಕ್ಕಾಗುವಷ್ಟು ಎಲ್ಲಿ ಸಿಗುತ್ತೆ. +ಕಾಫಿ ಪಸಲು ಕಡಿಮೆ ಬಂದರೆ ಉಳಿದಿರೊ ಸಾಲ ತೀರಿಸೋದು ಹೇಗೆ ಇಳಾ.’ +ಇಳಾಳ ಪ್ರಯೋಗದ ಬಗ್ಗೆ ಅಷ್ಟೇನು ಒಲವು ತೋರದ ನೀಲಾ ಹೇಳಿದಳು. +‘ಗೊಬ್ಬರ ಸಾಕಾಗದೆ ಇದ್ರೆ ಬೇರೆ ಕಡೆ ತರಿಸೋಣ ಅಮ್ಮ. +ಒಂದು ವರ್ಷ ಇಳುವರಿ ಕಡಿಮೆ ಆಗಬಹುದು. +ಆದ್ರೆ ಮುಂದೆ ನೋಡ್ತ ಇರು, ಹೇಗೆ ಇಳುವರಿ ಬರುತ್ತೆ ಅಂತ- ಕಿತ್ತಲೆ ಗಿಡದ ಬಗ್ಗೆ ಹೆಚ್ಚು ಗಮನವೇ ಕೊಟ್ಟಿಲ್ಲ ಇದುವರೆಗೂ. +ಆ ಗಿಡಗಳಿಗೆ ವಿಶೇಷ ಆರೈಕೆ ಮಾಡಿಸ್ತಿದಿನಿ. +ಯಾವ ಕಾಲದಲ್ಲಿಯಾದರೂ ನಾವು ಕಿತ್ತಲೆ ಹಣ್ಣು ಮಾರೇ ಇಲ್ಲ ಆಲ್ವಾ. +ಈ ಸಲ ನೋಡು, ಅದನ್ನು ಮಾರಾಟ ಮಾಡಿಸ್ತಿನಿ. +ಹಲಸಿನಹಣ್ಣು, ಕಿತ್ತಲೆ, ಚಕ್ಕೊತ, ಮಾವಿನ ಹಣ್ಣು ಗೋಡಂಬೆ ಇವುಗಳನ್ನು ಕೂಡ ಮಾರಾಟ ಮಾಡಿದ್ರೆ ಒಳ್ಳೆ ಆದಾಯ ಇದೆ ಅಮ್ಮ. + ಹಾಗೆ ಸೀಗೆನೂ ಮಾರೋಣ, ಚಿಲ್ಲರೆ ಹಣ ಅನ್ನಿಸಿದರೂ ಒಟ್ಟು ಸೇರಿಸಿದರೆ ತೋಟದ ಖರ್ಚಿಗೆ ಆಗುತ್ತೆ, ಇನ್ನು ಹಾಲಲ್ಲಿ ಬೇರೆ ಆದಾಯ ಇದೆಯಲ್ಲ- ಅದು ಮನೆ ಖರ್ಚಿಗೆ ಆಗಿ ಮಿಗುತ್ತೆ. +ಅದನ್ನು ಸಾಲಕ್ಕೆ ತಿಂಗಳು ತಿಂಗಳು ಕಟ್ಟೋಣ, ತೋಟದಲ್ಲಿ ಹಳ್ಳ ಇದೆಯಲ್ಲ ಅದಕ್ಕೆ ಮೀನಿನ ಮರಿ ಬಿಡೋಣ ಅಂತ ಅಂದ್ಕೊಂಡಿದ್ದೇನೆ. +ಮರಿ ಬೆಳೆದು ದೊಡ್ಡದಾದರೆ ಒಳ್ಳೆ ರೇಟು ಸಿಗುತ್ತಂತೆ, ಹಳ್ಳನ ಸ್ವಲ್ಪ ಆಳ ಅಗಲ ಜಾಸ್ತಿ ಮಾಡಿಸ್ತಿನಿ, ಹೆಚ್ಚು ಮೀನು ಮಾಡಬಹುದು. +ಅಲ್ಲೊಂದು ಇಲ್ಲೊಂದು ಬಾಳೆಗಿಡ ಇದೆ. +ಇಡೀ ತೋಟದ ಭರ್ತಿ ಬಾಳೆಗಿಡ ಹಾಕಿಸ್ತಿನಿ, ಬಾಳೆಗೊನೆಗೂ ರೇಟಿದೆ. +ನೋಡ್ತ ಇರು, ಇನ್ನೆರಡು ವರ್ಷದಲ್ಲಿ ಎಲ್ಲಾ ಸಾಲ ತೀರಿಸಿ ಹಾಯಾಗಿರಬಹುದು’ ತನ್ನ ಯೋಜನೆಗಳನ್ನೆಲ್ಲ ಇಳಾ ನೀಲಾಳಿಗೆ ಹೇಳಿದಳು. +ಮೋಹನ್ ಅಷ್ಟು ವರ್ಷ ದುಡಿದೇ ಸಾಲ ಮಾಡಿದ್ರು! +ಇನ್ನು ಇವಳು ನೆನ್ನೆ ಮೊನ್ನೆ ಕಣ್ಣುಬಿಟ್ಟವಳು, ತೋಟ ಅಂದ್ರೆ ಏನು ಅಂತ ಗೊತ್ತು ಮಾಡಿಕೊಳ್ಳುತ್ತ ಇದ್ದಾಳೆ. +ಇಲ್ಲಿ ಲಾಭಗಳಿಸಲು ಸಾಧ್ಯವೇ…? +ಅನುಮಾನ ಕಾಡಿದರೂ, ಮಗಳ ಉತ್ಸಾಹ ಕುಂದಿಸಬಾರದೆಂದು ಸುಮ್ಮನಾಗಿ ಬಿಟ್ಟಳು. +ನೀಲಾಳ ನಿರುತ್ಸಾಹ ಇಳಾಳನ್ನು ಕೊಂಚ ಧೃತಿಗೆಡಿಸಿತು. +ಆದರೂ ಇಟ್ಟ ಹೆಜ್ಜೆ ಹಿಂದಕ್ಕೆ ತೆಗೆಯಬಾರದೆಂಬ ಹಟವೂ ಅವಳಲ್ಲಿತ್ತು. +ಸಾವಯವ ಕೃಷಿ ಮಾಡಿ ಉತ್ತಮ ಆದಾಯ ಪಡೆಯುತ್ತಿರುವವರ ಬಗ್ಗೆ ಇದ್ದ ಲೇಖನಗಳನ್ನು ಓದುವಾಗ ರಾಜಾರಾಮ್ ಎಂಬುವವರ ಸಾಧನೆ ಓದಿ ಖುದ್ದಾಗಿ ಅವರ ತೋಟ ನೋಡಿ ಬರಲೆಂದು ಅವರಿಗೆ ಫೋನ್ ಮಾಡಿದರೆ ತಾವು ತೋಟದಲ್ಲಿ ಇರುವುದಾಗಿ ನಾಳೆನೇ ಬನ್ನಿ ಎಂದು ಆಹ್ವಾನ ನೀಡಿದರು. +‘ಅಜ್ಜಿ, ನಾಳೆ ಒಂದು ಕಡೆ ಹೋಗಿ ಬರೋಣ ಬರ್ತೀಯಾ?’ ಎಂದು ಅಂಬುಜಮ್ಮನನ್ನು ಕೇಳಿದಳು. +‘ಎಲ್ಲಿಗೆ ಪುಟ್ಟ, ನಾನೂ ಬರಬೇಕಾ, ಬರ್ತೀನಿ ಬಿಡು. +ನಾನು ಮನೆ, ಅಡುಗೆ ಅಂತ ಎಲ್ಲೂ ಹೊರಗೆ ಹೋಗಿಯೇ ಇಲ್ಲ. +ಹೋಗೋಣ ಬಿಡು’ ಎಂದು ಸಮಸ್ಯೆಯನ್ನು ಬಗೆಹರಿಸಿದ್ದರು ಒಂದೇ ಸಲಕ್ಕೆ. +ಒಬ್ಬಳೆ ಹೋಗುವುದಕ್ಕಿಂತ ಅಜ್ಜಿನೂ ಕರ್ಕೊಂಡು ಹೋದ್ರೆ ಒಳ್ಳೆಯದು. +ಅಲ್ಲಿ ಪ್ರತ್ಯಕ್ಷವಾಗಿ ಕಂಡಿದ್ದನ್ನು ಅಮ್ಮನ ಬಳಿ ಹೇಳಲಿ ಎಂದು ಇಳಾ ಈ ಪ್ಲಾನ್ ಮಾಡಿದ್ದಳು. +ನೀಲಾ ಅಂತೂ ಎಲ್ಲಿಗೂ ಬರೊಲ್ಲ. +ಹೇಳಿದ್ದನ್ನು ನಂಬುವುದಿಲ್ಲ. +ಅಜ್ಜಿಯಿಂದಲಾದರೂ ವಿಚಾರ ತಿಳಿಯಲಿ ಎಂದುಕೊಂಡು ತನ್ನ ಜೊತೆ ಅಜ್ಜಿಯನ್ನು ಹೊರಡಿಸಿದ್ದಳು. +ಆಲೂರಿನ ಸಮೀಪದ ತೋಟ ಅದು. +ದೂರದಿಂದಲೇ ಹಸುರಿನಿಂದ ಕಂಗೊಳಿಸುತ್ತಿತ್ತು. +ಬೇರೆ ತೋಟಗಳಿಗಿಂತ ಭಿನ್ನವಾಗಿತ್ತು. +ಸಾವಯವ ಅಳವಡಿಸಿಕೊಂಡ ತೋಟ ಇತರೆ ತೋಟಗಳಿಗಿಂತ ಭಿನ್ನವಾಗಿರುತ್ತದೆ ಅಂತ ಕೇಳಿದ್ದಳು. +ಈಗ ಪ್ರತ್ಯಕ್ಷವಾಗಿ ನೋಡುವಂತಾಯಿತು. +ಸುತ್ತ ಹಸಿರಿನ ಜೀವಂತ ಬೇಲಿ, ಹತ್ತಾರು ರೀತಿಯ ಬಹು ಉಪಯೋಗಿ ಗಿಡ ಮರಗಳು. +ಉಳುಮೆ ಇಲ್ಲದೆ ಪಾಳು ಬಿಟ್ಟಂತೆ ಕಾಣಿಸಿದ್ದರಿಂದ ಈ ತೋಟದ ಯಜಮಾನ ಸೋಮಾರಿ ಎನಿಸುವಂತಿತ್ತು. +ಅಂಬುಜಮ್ಮ ಅದನ್ನು ಆಡಿಯೇ ತೋರಿಸಿಬಿಟ್ಟರು. +‘ಇದೇನೇ ಪುಟ್ಟಿ ತೋಟ ಹೀಗಿದೆ. +ತೋಟದ ಯಜಮಾನ ಭೂಮಿ ಮುಟ್ಟಿ ಕೆಲ್ಸ ಮಾಡ್ತನೋ ಇಲ್ಲವೋ ಹೀಗೆ ಹಾಳುಬಿದ್ದಿದೆ.’ +‘ಅಜ್ಜಿ ನಿಂಗೆ ಗೊತ್ತಾಗಲ್ಲ ಬಾ, ಅವರತ್ರನೇ ಎಲ್ಲಾ ಕೇಳಿ ತಿಳಿದುಕೊಳ್ಳೋಣ. +ಅವರು ಮುಂದೆ ಹೀಗೆಲ್ಲ ಮಾತಾಡಿಬಿಟ್ಟಿಯಾ ಮತ್ತೆ… ಎಚ್ಚರಿಸಿಯೇ ಅವರ ಮನೆಗೆ ಕರೆದೊಯ್ದಳು. +ಇವರನ್ನು ಬಹು ಆತ್ಮೀಯವಾಗಿ ಸ್ವಾಗತಿಸಿದರು. +‘ಬನ್ನಿ ತಾಯಿ ಬನ್ನಿ, ನೀವು ಬಂದದ್ದು ತುಂಬಾ ಸಂತೋಷವಾಯ್ತು. +ಆಯಾಸ ಆಗಿರಬೇಕು. +ಮೊದ್ಲು ಎಳೆನೀರು ಕುಡಿಯಿರಿ’ ಆಗಲೇ ಕೊಚ್ಚಿ ಸಿದ್ದಮಾಡಿದ್ದ ಎಳೆನೀರನ್ನು ಕೆತ್ತಿಕೊಟ್ಟರು. +ಎಳೆನೀರು ಒಳ್ಳೆ ರುಚಿಯಾಗಿತ್ತು. +ನಡೆದು ಬಂದ ಆಯಾಸವೆಲ್ಲ ಒಂದೇ ಗಳಿಗೆಯಲ್ಲಿ ಮರೆಯಾಗಿ ಬಿಟ್ಟಿತು. +‘ಇನ್ನೊಂದು ಕುಡಿಯಿರಿ, ರುಚಿಯಾಗಿದೆ’ ಅಂತ ಬಲವಂತ ಮಾಡಿ ರಾಜಾರಾಮ್ ಮತ್ತೊಂದು ಎಳನೀರು ಕುಡಿಸಿಯೇ ಬಿಟ್ಟರು. +ಹೊಟ್ಟೆ ತುಂಬಿದಂತಾಗಿ ಹುಸ್ಸೆಂದು ಹುಲ್ಲು ಹಾಸಿನ ಮೇಲೆ ಕುಳಿತೇಬಿಟ್ಟರು ಅಜ್ಜಿ, ಮೊಮ್ಮಗಳು. +‘ಕುತ್ಕೊಳ್ಳಿ ಸ್ವಲ್ಪ ರೆಸ್ಟ್ ತಗೊಳ್ಳಿ, ಕುತ್ಕೊಂಡೇ ಸುತ್ತ ನೋಡಿ… ಅಲ್ಲಿ ಕಾಣಿಸ್ತಿದೆಯಲ್ಲ ತೆಂಗಿನಮರಗಳು ಅವೆಲ್ಲ ನಮ್ದೆ. +ಬೇರೆಯವರ ತೋಟದ ಗಿಡದಲ್ಲಿ, ಅಕ್ಕಪಕ್ಕದ ತೋಟದ ತೆಂಗಿನ ಗಿಡದಲ್ಲಿ ಸರಾಸರಿ ೨೫-೩೦ ಕಾಯಿ ಒಂದು ಗಿಡಕ್ಕೆ ಸಿಗುತ್ತೆ. +ನನ್ನ ತೋಟದಲ್ಲಿ ಒಂದು ಗಿಡಕ್ಕೆ ೫೦-೬೦ ಕಾಯಿ ಸಿಗುತ್ತೆ. +ಬೇರೆ ಬೆಳೆಗಳ ಇಳುವರಿನೂ ಹೆಚ್ಚಾಗಿದೆ’ ಅಂತ ತೋಟ ತೋರಿಸುತ್ತ ಹೇಳಿದರು. +‘ಹಾಗಾದ್ರೆ ಗಿಡಗಳಿಗೆ ಅದೇನು ಗೊಬ್ಬರ ಹಾಕ್ತಿರಪ್ಪ, ಒಳ್ಳೆ ಸಕ್ಕರೆಯಷ್ಟು ಎಳನೀರು ರುಚಿಯಾಗಿದೆ’ ಅಂಬುಜಮ್ಮ ಕೇಳಿದರು. +‘ಅಜ್ಜಿ, ನಾನು ಹಾಕೋ ಗೊಬ್ಬರ ಯಾವುದು ಗೊತ್ತಾ? +ಸಗಣಿ ಗಂಜಲ, ಗ್ಲಿರಿಸಿಡಿಯಾ, ಲಂಟಾನಾ, ವಿಷಮಧಾರಿ – ಹೀಗೆ ೫ ಜಾತಿ ಸೊಪ್ಪುಗಳನ್ನು ನೀರಿನಲ್ಲಿ ತೊಳೆಸಿ ಅದರ ದ್ರಾವಣವನ್ನು ಬೆಳೆಗೆ ಬಳಸುತ್ತೇವೆ. +ಈ ದ್ರವವನ್ನು ಹೆಚ್ಚಾಗಿ ಅಲಂಕಾರಿಕ ಹಾಗೂ ಇತರೆ ಸಸ್ಯಗಳಿಗೆ, ನರ್ಸರಿ ಸಸ್ಯಗಳಿಗೆ ದ್ರವ ಗೊಬ್ಬರವಾಗಿ ಬಳಸುತ್ತೇನೆ. +ಇದು ಬೆಳವಣಿಗೆಗೆ ಪ್ರಚೋದಕ. +ಹಾಗೆ ತೋಟದಲ್ಲಿ ಇರುವ ಕಳೆ, ಕೃಷಿತ್ಯಾಜ್ಯ, ಕಾಂಪೊಸ್ಟ್, ಜೀವತಾರ, ಕೊಟ್ಟಿಗೆ ಗೊಬ್ಬರ ಹೊರತಾಗಿ ಬೇರೇನೂ ಬಳಸದೆ ತೋಟ ನಿರ್ವಹಿಸುತ್ತಿದ್ದೇನೆ. +ಭೂಮಿನಾ ಉಳುಮೆ ಮಾಡಲ್ಲ, ಹೊರಗಿನ ಗೊಬ್ಬರ ಹಾಕಲ್ಲ’ ಎಂದರು. +‘ಹೌದಾ, ಭೂಮಿ ಉಳುಮೆನಾ ಮಾಡಲ್ವಾ, ಸೀಮೆಗೊಬ್ಬರನೂ ಹಾಕಲ್ವ’ ಆಶ್ಚರ್ಯ ವ್ಯಕ್ತಪಡಿಸಿದರು. +‘ಹೌದು, ಅಜ್ಜಿ ಈಗ ಎಲ್ಲರೂ ಹೀಗೆ ಮಾಡೋಕೆ ಹೊರಟಿದಾರೆ. +ಅದಕ್ಕೆ ನಮ್ಮ ತೋಟಾನೂ ಹೀಗೆ ಸಾವಯವ ಕೃಷಿಗೆ ಪರಿವರ್ತಿಸೋಣ ಅಂತ, ಅದರೆ ಅಮ್ಮ, ದೊಡ್ಡಪ್ಪ ಎಲ್ಲಾ ನಂಗೆ ಉತ್ತೇಜನ ಕೊಡೋದೇ ಇಲ್ಲ. +ನಾನೇನೋ ತಪ್ಪು ಮಾಡ್ತೀನಿ ಅಂತ ಸದಾ ಸಂಶಯವಾಗಿಯೇ ನೋಡ್ತಾ ಇರ್ತಾರೆ’ ಇಳಾ ಅಜ್ಜಿಗೆ ಹೇಳಿದರೆ. +ರಾಜಾರಾಮ್ ‘ಹೌದಮ್ಮ ಮೊದ ಮೊದಲು ಎಲ್ಲರೂ ಸಂಶಯವಾಗಿಯೇ ನೋಡೋದು. +ಎಲ್ಲರೂ ಮಾಡೋ ಹಾಗೆ ಮಾಡದೆ ಬೇರೆ ಏನೋ ಮಾಡಿದ್ರೆ ಜನ ಸುಮ್ನೆ ಇರ್ತಾರಾ, ಕುಟುಕುತ್ತಾರೆ. +ನಂಗೂ ಮೊದ್ಲು ಮೊದ್ಲು ಹೀಗೆ ಅನುಭವವಾಯಿತು. +ಸಹಜ ಕೃಷಿ ನಾವು ಅಂದುಕೊಂಡಷ್ಟು ಸುಲಭ ಅಲ್ಲ. +ಈ ಭೂಮಿ ಅಷ್ಟೇನು ಫಲವತ್ತಾಗಿರಲಿಲ್ಲ. +ಉಳುಮೆ ಮಾಡದೆ, ಹೊರಗಿನಿಂದ ತಂದ ಗೊಬ್ಬರ ಹಾಕದೆ, ಕಾಂಪೋಸ್ಟ್ ಗೊಬ್ಬರ ತಯಾರಿಸಿ ಬಳಸಿದರೂ ಪ್ರಯೋಜನ ಕಾಣಲಿಲ್ಲ. +ಕಳೆ ಚೆನ್ನಾಗಿ ಬೆಳೆದು ಹಾಳುಬಿದ್ದ ತೋಟವಾಯ್ತು. +ಬೆಳಯ ಇಳುವರಿ ಕುಸಿದು ೨-೩ ವರ್ಷವಾದರೂ ಕಳೆ ಕರಗದೆ ಗೊಬ್ಬರವಾಗಲೇ ಇಲ್ಲ. +ಆರುವರ್ಷ ಕಷ್ಟಪಟ್ಟೆ. +ಆದರೆ ಆಮೇಲೆ ನೋಡಿ… ಇಡೀ ತೋಟವೇ ಬದಲಾಯಿತು. +ಮೊದಲು ಹಣ್ಣಿನ, ಔಷಧಿಸಸ್ಯ ಗೊಬ್ಬರಕ್ಕಾಗಿ ಹಲವು ಜಾತಿಯ ಗಿಡ ಮರ ಬೆಳೆಸಿದೆ. +ತೆಂಗು ಅಡಿಕೆ ಮದ್ಯೆ ಒಳ್ಳೆ ಗೆಣಸು ಹಾಕಿದೆ. +ಅದು ತೋಟದ ತುಂಬಾ ಹರಡಿ ಕಳೆಗಳು ಬೆಳೆಯದಂತೆ ಮಾಡಿತು. +ನೀರು ನಿರ್ವಹಣೆಯೂ ಸುಲಭ ಆಯ್ತು. +ತೆಂಗಿನ ಕಾಯಿಯ ನೀರು ಕುಡಿಯುತ್ತಿದ್ದ ಇಲಿ ಅಳಿಲುಗಳು ಮರದಿಂದ ಕೆಳಗಿಳಿದವು. +ಗೆಣಸು ಅವಕ್ಕೆ ಆಹಾರವಾಯ್ತು. +ಅದನ್ನು ತಿನ್ನಲು ನೆಲ ಬಗೆದು ಗುಂಡಿ ತೋಡಿದವು. +ಅದೇ ಸಹಜ ಉಳುಮೆ ಆಯಿತು. +ನಂತರ ತೆಂಗು ಅಡಿಕೆಯ ಪಸಲು ಹೆಚ್ಚಾಯಿತು. +ಹಣ್ಣಿನ ಗಿಡಗಳು ಚೆನ್ನಾಗಿ ಫಲಕೊಡೋಕೆ ಶುರು ಮಾಡಿದವು. +ತೋಟವನ್ನೆಲ್ಲ ಸುತ್ತಿಸುತ್ತ ರಾಜಾರಾಮ್ ತಾವು ನಡೆದು ಬಂದ ಕೃಷಿಯ ಹಾದಿಯ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದರು. +ತೋಟದ ತುಂಬ ಬೆಳೆದಿರುವ ಹುಲ್ಲು ಸೋಡಿ ‘ಅದ್ಯಾಕೆ ಹೀಗೆ ಹುಲ್ಲು ಬೆಳೆತಿದಿರಾ, ಈ ಕಳೆನೆಲ್ಲ ತೆಗೆಯಬಾರದೇ’ ಎಂದು ಅಂಬುಜಮ್ಮ ಕೇಳಿದರು. +‘ಅಜ್ಜಿ, ಅದು ಬೆಳೆದಿರೂ ಕಳೆ ಅಲ್ಲ, ಬೆಳೆಸಿರೊ ಕಳೆ, ಇದೊಂದು ಜಾತಿಯ ಹುಲ್ಲು, ಇದನ್ನ ‘ದಶಂತಿ’ ಅಂತಾರೆ. +ಹೆಬ್ಬಾಳದ ಕೃಷಿ ವಿಶ್ವವಿದ್ಯಾನಿಲಯದಿಂದ ತಂದಿದ್ದು. +ಮೇವಿನ ಬೀಜ ಅದು. +ಲೆಗ್ಯುಮಿನಸ್ ಸಸ್ಯಯ ಅಂತಾರೆ. +ಕಳೆಯಂತೆ ಬೆಳೆದರೂ ಇತರೆ ಕಳೆಗಳನ್ನು ನಿಯಂತ್ರಿಸುತ್ತದೆ. +ಬೆಳೆಗೆ ಯಾವುದೇ ಹಾನಿ ಮಾಡದೆ ಐದು ಅಡಿವರೆಗೂ ಬೆಳೆಯುತ್ತದೆ. +ತೋಟದ ಮೂಲೆಯಲ್ಲಿ ಹಾಕಿದ್ದು ಮೊದಲು. +ಈಗ ತೋಟದ ತುಂಬಾ ಸ್ವಾಭಾವಿಕವಾಗಿ ಬೆಳೆದಿದೆ. +ಆಳಬೇರಿಲ್ಲದ ಇದು ಒಂದು ತಿಂಗಳಲ್ಲಿ ನಾಲ್ಕೈದು ಅಡಿ ಎತ್ತರ ಬೆಳೆಯುತ್ತದೆ. +ಕಟಾವು ಮಾಡಿದ ಹಾಗೆ ಚಿಗುರುತ್ತಲೇ ಇರುತ್ತದೆ. +ಇದರ ಜೊತೆ ಯಾವ ಕಳೇನೂ ಬೆಳೆಯುವುದಿಲ್ಲ. +ದನಗಳಿಗೆ ಇದು ಉತ್ತಮವಾದ ಮೇವು ಎಂದು ಹುಲ್ಲಿನ ಬಗ್ಗೆ ವಿವರಣೆ ನೀಡಿದರು. +ಇಡೀ ತೋಟ ಸುತ್ತಿದರು. +ಅಲ್ಲಿದ್ದ -ಹಣ್ಣುಗಳನ್ನು ಕುಯ್ದು ಕೊಟ್ಟರು. +ಹಣ್ಣು ತಿಂದು, ಮತ್ತೇ ಎಳನೀರು ಕುಡಿದು ಆಯಾಸ, ಹಸಿವು ಪರಿಹರಿಸಿಕೊಂಡರು. +ತೋಟ ನೋಡಿದ ಮೇಲೆ ಇಳಾಗೆ ತನ್ನ ನಿರ್ಧಾರ ಯಾವುದೇ ರೀತಿ ತಪ್ಪಲ್ಲ. +ತಾನು ಇಡುತ್ತಿರುವ ಹೆಜ್ಜೆ ಸರಿ ಎನಿಸಿತು. +ಮತ್ತೊಂದಿಷ್ಟು ಹೊತ್ತು ನೆರಳಿನಲ್ಲಿ ಕುಳಿತು ಮಾತುಕತೆ ನಡೆಸಿದರು. +ಅಲ್ಲೂ ಮೋಹನನ ಕಥೆ, ಇಳಾಳ ವಿಷಯ ಪ್ರಸ್ತಾಪವಾಯಿತು. +ಆದರೆ ರಾಜಾರಾಮ್ ಅದನ್ನು ಕೇಳಿಕೊಂಡರೇ ವಿನಃ ಕೆದಕಲಿಲ್ಲ. +ಆ ಗುಣ ಇಳಾಗೆ ತುಂಬಾ ಇಷ್ಟವಾಯಿತು. +ಬಂದು ತುಂಬಾ ಹೊತ್ತಾಯಿತೆಂದು ಅಜ್ಜಿ ಮೊಮ್ಮಗಳು ಹೊರಟು ನಿಂತರು. +ತೋಟದ ತುದಿಯವರೆಗೂ ಬಂದು ರಾಜಾರಾಮ್ ಅವರನ್ನು ಬೀಳ್ಕೊಟ್ಟರು. +ತುಂಬಾ ಆಯಾಸವಾಗಿತ್ತಾದರೂ ತುಂಬ ದಿನದ ನಂತರ ಹೊರಬಂದಿದ್ದ ಅಂಬುಜಮ್ಮ ಉತ್ಸಾಹದಿಂದಲೇ ಹೆಜ್ಜೆ ಹಾಕುತ್ತಿದ್ದರು. +ನಡೆಯುವುದೇನು ಅವರಿಗೆ ಕಷ್ಟವಾಗಿರಲಿಲ್ಲ. +ಒಂದು ಒಳ್ಳೆಯ ತೋಟ ನೋಡಿ ಬಂದ ಖುಷಿ ಇಬ್ಬರಲ್ಲೂ ಇತ್ತು. +ಸ್ಫೂರ್ತಿ ಊರಿಂದ ಬಂದ ಮೇಲೆ ಮತ್ತೆ ಊರಿಗೆ ಹೋಗಬಾರದೆಂದು ನಿರ್ಧರಿಸಿದ್ದಳು. +ತನ್ನದಿನ್ನು ಓದು ಮುಗಿದಿಲ್ಲ-ಆಗಲೇ ಅಪ್ಪ ಮದುವೆ ಮಾಡುವ ಪ್ರಯತ್ನ ನಡೆಸಿದ್ದು ಅವಳಿಗೆ ತುಂಬಾ ನೋವಾಗಿತ್ತು. +ಯಾಕಾಗಿ ಅಪ್ಪ ಇಷ್ಟು ಅವಸರಿಸಿದ್ದು ಎಂದೇ ತಿಳಿಯಲಿಲ್ಲ. +ಓದಿನಲ್ಲಿ ತೊಡಗಿಸಿಕೊಳ್ಳಬೇಕು ಆ ವಿಚಾರಗಳಿಗೆಲ್ಲ ತಲೆ ಕೆಡಿಸಿಕೊಳ್ಳಬಾರದೆಂದು ಮನಸ್ಸಿನಿಂದ ಗಂಡು ಬಂದಿದ್ದು ತನ್ನನ್ನು ನೋಡಿದ್ದು ಎಲ್ಲವನ್ನು ಕಿತ್ತುಹಾಕಲು ಪ್ರಯತ್ನಿಸಿದಳು. +ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. +ವಾರದ ನಂತರ ಮಗಳನ್ನು ನೋಡಲು ಬಂದ ಸ್ಫೂರ್ತಿಯ ಅಪ್ಪ ‘ಮಗಾ, ಗಂಡಿನ ಕಡೆಯವರು ನಿನ್ನ ಒಪ್ಕೊಂಡಿದಾರೆ. +ಈ ವರ್ಷವೇ ಮದ್ವೆ ಮಾಡಿ ಕೊಡಿ ಅಂದಿದ್ದಾರೆ. +ಹುಡುಗನ ಮನೆಯವರು ಬಾರಿ ಅನುಕೂಲಸ್ಥರು, ಅಂತ ಸಂಬಂಧ ನಮ್ಗೆ ಸಿಕ್ತಾ ಇರೋದೇ ಅದೃಷ್ಟ ಕಣವ್ವ, ವರದಕ್ಷಿಣೆನೂ ಕಮ್ಮಿನೇ ಕೇಳ್ತ ಇದಾರೆ. +ಮಾತುಕತೆಗೆ ಮುಂದಿನ ವಾರ ಬರ್ತರಂತೆ, ಅವತ್ತೆ ಎಂಗೇಜುಮೆಂಟು ಮುಗ್ಸಿಬಿಡಿ ಅಂತಿದಾರೆ. +ರೂಮ್ ಖಾಲಿ ಮಾಡ್ಕೊಂಡು ಬಂದು ಬಿಡವ್ವ, ಇನ್ಯಾಕೆ ಕಾಲೇಜು…’ ಅಂದಾಗ ಬೆಚ್ಚಿಬಿದ್ದಳು. +ಅಪಾಯ ಹತ್ತಿರದಲ್ಲಿಯೇ ಬಂದು ವಕ್ಕರಿಸಿತ್ತು. +‘ಏನಪ್ಪ ನೀನು, ಮೊದ್ಲು ನಾನೊಂದು ಡಿಗ್ರಿ ಮಾಡಬಾರದ, ಆ ಮೇಲೆ ಮದ್ವೆ ಆಗೋದು ಇದ್ದೇ ಇದೆ, ಪ್ರಪಂಚದಲ್ಲಿ ಇದೊಂದೇ ಸಂಬಂಧವಾ ಇರೋದು. +ಮುಂದಕ್ಕೆ ನಂಗೆ ಗಂಡೇ ಸಿಗಲ್ವಾ’ ನಯವಾಗಿಯೇ ಹೇಳಿದಳು. +‘ಹಂಗಲ್ಲ ಕಣವ್ವ ಅವರಾಗಿಯೇ ಬಂದಿದ್ದಾರೆ. +ಹುಡುಗ ನಿನ್ನ ಮೇಲೆ ಶಾನೆ ಆಸೆ ಇಟ್ಕೊಂಡಿದಾನೆ. + ನಿನ್ನ ಅವರೂರಿಗೆ ಹೋಗಿದ್ದಾಗಲೇ ನೋಡಿ ಮೆಚ್ಚಿಕೊಂಡಿದ್ದನಂತೆ, ಅದೇನು ಬೇಸಾಯದ ಬಗ್ಗೆ ಬೋ ಚೆಂದಾಗಿ ಮಾತಾಡ್ತ ಇದ್ದೀಯಂತೆ. +ಅವನಿಗೂ ಬೇಸಾಯದ ಮೇಲೆ ಆಸೆ ಅಂತೆ, ತುಂಬಾ ಓದ್ಕೊಂಡಿದಾನಂತೆ. +ನಿನ್ನ ಮಾಡ್ಕೊಬೇಕು ಅಂತ ಬಂದಿದಾನೆ. +ನಾವು ಬೇಡಾ ಅನ್ನಕ್ಕಾಗುತ್ತಾ, ಹೆಂಗೂ ನಿಂಗೂ ಬೇಸಾಯ ಅದೂ ಇದು ಅಂತ ಆಸಕ್ತಿ, ನಿನ್ನ ಥರವೇ ಅವನಿಗೂ ಆಸಕ್ತಿ ಇದೆ, ಹೇಳಿ ಮಾಡಿಸಿದ ಜೋಡಿ ಆಗಾಕಿಲ್ವಾ’ ಅಂದಾಗ ಶಾಕ್ ಆಗಿತ್ತು. +ಅರೆ ನನ್ನನ್ನು ಯಾವಾಗ ಇವನು ನೋಡಿದ್ದು, ಯಾವ ಹಳ್ಳಿಲಿ ನನ್ನ ನೋಡಿದ. +ಅಯ್ಯೋ ನನ್ನ ಮಾತುಗಳೇ, ನನ್ನ ವಿಚಾರಗಳೇ ನನಗೆ ಕುತ್ತು ತಂದಿತಲ್ಲಪ್ಪ. +ನಾನು ಯಾರನ್ನೊ ಬಯಸಿದರೆ, ನನ್ನನ್ನು ಯಾರೋ ಬಯಸಿದರಲ್ಲಪ್ಪ! +ಹೇಗೋ ಬೀಸೊ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದು ಹೇಗೆಂದು ಆಲೋಚಿಸಿದಳು. +‘ಅಪ್ಪ, ಅವನು ನನ್ನ ಮೆಚ್ಚಿರಬಹುದು. +ಆದರೆ ನನಗೆ ಅವನು ಇಷ್ಟವಾಗಬೇಕಲ್ಲ. + ನಾನು ಮೊದಲು ಡಿಗ್ರಿ ಮಾಡಬೇಕು ಆಮೇಲೆ ಮದ್ವೆ ಗಿದ್ವೆ ಎಲ್ಲಾ’ ನಿರ್ಧಾರಿತ ದನಿಯಲ್ಲಿ ಹೇಳಿದಾಗ ‘ಅಲ್ಲಾ ಕಣವ್ವ, ಮದ್ವೆ ಆದ ಮೇಲೂ ಓದಬಹುದು ಅಲ್ವಾ. +ಅವರ ಮನೆಯಿಂದಲೇ ಕಾಲೇಜಿಗೆ ಹೋಗುವಂತೆ, ಅವರೂರಿಗೆ ಹತ್ರದಲ್ಲೇ ಕಾಲೇಜು ಇದೆಯಂತೆ, ದಿನಾ ನಿನ್ನ ಗಂಡನೇ ಬಿಟ್ಟು ಬರ್ತಾನೆ.’ +‘ಥೂ ಹೋಗಪ್ಪ, ಮದ್ವೇನೇ ಆಗಿಲ್ಲ. +ಆಗ್ಲೆ ಗಂಡ ಅಂತಿಯಲ್ಲ. +ವರದಕ್ಷಿಣೆ ಬೇರೆ ಕೇಳ್ತ ಇದಾರೆ ಅಂತಿಯಾ. +ನಾನು ವರದಕ್ಷಿಣೆ ತಗೋಳೋ ಗಂಡನ್ನ ಮದ್ವೆ ಆಗೋದಿಲ್ಲ. +ನನ್ನ ಪಾಡಿಗೆ ಬಿಟ್ಟು ನೀನು ಊರಿಗೆ ಹೋಗು, ನಂಗೆ ನಾಳೆ ಟೆಸ್ಟಿದೆ ಓದ್ಕೊಬೇಕು’ ಸಿಡುಕುತ್ತ ಹೇಳಿದಳು. +ಮಗಳಿಗೆ ಏನೂ ಹೇಳಲಾರದೆ, ಅವಳನ್ನು ನೋಯಿಸಲು ಇಷ್ಟಪಡದೆ ‘ನಿಧಾನವಾಗಿ ಯೋಚ್ನೆ ಮಾಡು ಮಗಾ. +ಒಳ್ಳೆ ಸಂಬಂಧ, ಹುಡುಗ ತುಂಬಾ ಒಳ್ಳೆಯವನು, ಅನುಕೂಲಸ್ಥರು, ಒಂದೇ ಸಲಕ್ಕೆ ಬೇಡಾ ಅನ್ನಬೇಡ’ ಅಂತ ಹೇಳಿ ಹೊರಟರು. +ನಿರಾಶೆ ಕಪ್ಪಾದ ಮೋಡದಂತೆ ಅವರ ಮೋರೆ ತುಂಬ ಕವಿದಿತ್ತು. +ಗಂಡಿನ ಕಡೆಯವರಿಗೆ ಏನು ಉತ್ತರ ಹೇಳವುದು, ತಮ್ಮ ಮಗಳು ಒಪ್ತ ಇಲ್ಲಾ ಅಂದರೆ ಏನು ಅಂದುಕೊಳ್ಳುತ್ತಾರೆ. + ತಾವಾಗಿಯೇ ಹೆಣ್ಣು ಕೇಳಿಕೊಂಡು ಬಂದರೆ ಎಷ್ಟು ಅಹಂಕಾರ ತೋರಿಸುತ್ತಾರೆ ಎಂತ ಅಂದುಕೊಳ್ಳುವುದಿಲ್ಲವೇ. +ಈ ಹುಡುಗಿನಾ ಓದೋಕೆ ಕಾಲೇಜಿಗೆ ಕಳಿಸಿದ್ದೆ ತಪ್ಪಾಯ್ತು. +ವರದಕ್ಷಿಣೆ ಕೊಡಲ್ಲ ಅಂದ್ರೆ ಆಗುತ್ತಾ. +ಕೊಡದೆ ಇದ್ರೆ ಯಾರು ಮದ್ವೆ ಮಾಡ್ಕೊತಾರೆ, ಮಗಳಿಗೆ ಬುದ್ದೀ ಕಡಿಮೆ ಈ ವಿಚಾರದಲ್ಲಿ ಅನ್ನೊ ನಿರ್ಧಾರಕ್ಕೆ ಬಂದರು. +ಅಪ್ಪ ಸುಮ್ನೆ ಎದ್ದು ಹೆಚ್ಚು ತಕರಾರು ಮಾಡದೆ ಹೂರಟಾಗ ಎದೆಯ ಮೇಲಿನ ಭಾರ ಇಳಿದಂತಾಗಿ ನಿರುಮ್ಮಳಾದಳು. +ಸಧ್ಯ ಗಂಡಾಂತರ ತಪ್ಪಿತೆಂಬ ಉತ್ಸಾಹ ಮೂಡಿತು. +ಆದರೆ ಗಂಡಾಂತರ ಬೇರೊಂದು ರೂಪದಲ್ಲಿ ಅವಳ ಮುಂದೆ ನಿಂತಿತು. +ಸಂಜೆ ಕಾಲೇಜು ಮುಗಿಸಿ ಹೊರ ಬರುವಷ್ಟರಲ್ಲಿ ನಿವಾಸ್ ಕಾಯ್ತ ನಿಂತಿದ್ದ. +ಅವನನ್ನು ನೋಡಿ ಅವಳಿಗೆಷ್ಟು, ಸಡಗರವಾಯಿತೆಂದರೆ ನವಿಲು ಮಳೆಯನ್ನು ಕಂಡು ಕುಣಿದಾಡುವಂತೆ ಅವಳಿಗೂ ಕುಣಿದಾಡಬೇಕೆನಿಸಿತು. +ಕುಣಿತದ ನಡೆಯಲ್ಲಿಯೇ ಅವನಿದ್ದಲ್ಲಿಗೆ ಓಡಿ ಬಂದಳು. +ನಿವಾಸ್ನನ್ನು ಇಲ್ಲಿ ಅವಳು ನಿರೀಕ್ಷಿಸಿರಲೇ ಇಲ್ಲ. +‘ಸ್ಫೂರ್ತಿ ನಿನ್ನೊಂದಿಗೆ ಮಾತಾಡಬೇಕು ಅಂತ ಯಾರು ಬಂದಿದಾರೆ ನೋಡು’ ಎಂದ ಕೂಡಲೇ ನಿವಾಸ್ನ ಪಕ್ಕದಲ್ಲಿ ನಸುನಗುತ್ತ ನಿಂತಾತನನ್ನು ಕಂಡು ಶಕ್ತಿಯೆಲ್ಲ ತೂರಿ ಹೋದಂತಾಗಿ ನಿಂತಲ್ಲಿಯೇ ನಿಂತುಬಿಟ್ಟಳು. +‘ಅರೆ ಸ್ಫೂರ್ತಿ, ಇವರ್ಯಾರು ಅಂತ ಗೊತ್ತಾಗ್ತ ಇಲ್ವಾ, ಅಥವಾ ಸಂಕೋಚನಾ? +ನಮ್ಮ ಹೆಣ್ಣುಮಕ್ಕಳೇ ಹೀಗೆ. +ಎಷ್ಟೇ ಬೋಲ್ಡಾಗಿದ್ದರೂ ಮದ್ವೆ ವಿಚಾರ ಬಂದಕೂಡಲೇ ನಾಚಿಕೊಳ್ತಾರೆ. + ಒಬ್ನೆ ನಿನ್ನ ನೋಡೋಕೆ ಸುದರ್ಶನ ಕೂಡ ಸಂಕೋಚ ಪಟ್ಕೊಂಡಿದ್ದರು. +ಅದಕ್ಕೆ ನಾನೇ ಕರ್ಕೊಂಡು ಬಂದೆ. +ನೀವಿಬ್ರೂ ಅದೇನು ಮಾತನಾಡಬೇಕೋ ಮಾತಾಡಿಕೊಳ್ಳಿ. +ನಾನು ಮಧ್ಯೆ ಇರೊದಿಲ್ಲ, ನಂಗೂ ಸಿಟಿ ಒಳಗೆ ಕೆಲಸ ಇದೆ, ನಾನು ಬರ್‍ಲ’ ಅಂತ ರೇಗಿಸಿ ಹಾರಿಹೋಗುವಂತೆ ಹೊರಟೇ ಬಿಟ್ಟಾಗ ಅವನತ್ತಲೇ ನೋಡುತ್ತ ನಿಂತುಬಿಟ್ಟಳು. +‘ಹೋಗೋಣ’ ಸುದರ್ಶನ ಮೆಲುವಾಗಿ ನುಡಿದಾಗ, ತಲೆತಗ್ಗಸಿ ತಲೆಯಾಡಿಸಿದಳು. +ಅವನ ಜೊತೆ ಹೋಗದೆ ವಿಧಿಯೇ ಇರಲಿಲ್ಲ. +ಸೋತ ಹೆಜ್ಜೆಗಳನ್ನು ಬಲವಂತವಾಗಿ ಕೀಳುತ್ತ ಅವನ ಹಿಂದೆ ನಡೆದಳು. +‘ಎಲ್ಲಿಗೆ ಹೋಗೋಣ ಹೊಟೇಲಿಗೆ ಹೋಗೋಣವೇ’ ಅಂತ ಕೇಳಿದ. +ಅವಳಿಂದ ಉತ್ತರವೇ ಬರದಿದ್ದಾಗ ‘ಹೊಟೇಲಿಗೆ ಹೋಗೋಣವೇ’ ಎಂದನು. +ಬೇಡ ಎನ್ನುವಂತೆ ತಲೆಯಾಡಿಸಿದಳು. +‘ಸರಿ ಪಾರ್ಕಿಗೆ ಹೋಗೋಣ ಬನ್ನಿ. +ನಾವಿಬ್ಬರೂ ಮನಸ್ಸು ಬಿಚ್ಚಿ ಮಾತಾಡೋಕೆ ಸರಿಯಾದ ಜಾಗ’ ಎಂದವನೇ ಮುಂದಾಗಿ ಅವನೇ ಹೆಜ್ಜೆ ಹಾಕಿದ. +ಕಾಲೇಜಿನಿಂದ ಪಾರ್ಕು ಹತ್ತೇ ಹೆಜ್ಜೆಯ ದೂರದಲ್ಲಿತ್ತು. +ಪಾರ್ಕು ಹೊಕ್ಕು ಒಂದು ಮರದ ಕೆಳಗೆ ಕುಳಿತನು ಸುದರ್ಶನ. +ಅವನಿಂದ ದೂರವೇ ಕುಳಿತುಕೊಂಡಳು ಸ್ಫೂರ್ತಿ, ಕತ್ತೆತ್ತುವ ಸಾಹಸ ಮಾಡಲಿಲ್ಲ. +ಅವಳ ಸಂಕೋಚ ಕಂಡು ಸುದರ್ಶನನಿಗೆ ನಗು ಬಂತು. +‘ಏನ್ರಿ, ಹೆಣ್ಣು ನೋಡುವ ಶಾಸ್ತ್ರ ಇಲ್ಲೂ ಮುಂದುವರಿಸಬೇಕಾ? +ನೀವು ಕತ್ತು ಬಗ್ಗಿಸಿ ಕುತ್ಕೊಂಡುಬಿಟ್ರೆ, ನಾನು ಮಾತಾಡೋದು ಹೇಗೆ?’ ಛೇಡಿಸಿದ- ಮೆಲ್ಲನೆ ಕತ್ತೆತ್ತಿದವಳೇ ಅವನೆಡೆ ನೋಡಿದಳು. +ಸುದರ್ಶನ ಮುಖ ತುಂಟತನದಿಂದ ಹೊಳೆಯುತ್ತಿತ್ತು. +ಕಣ್ಣುಗಳಲ್ಲಿ ಅಭಿಮಾನದ ಮಹಾಪೂರವೇ ಕಂಡಂತಾಗಿ ತಟ್ಟನೆ ನೋಟ ಬದಲಿಸಿಬಿಟ್ಟಳು. +‘ಸ್ಫೂರ್ತಿ ನಿಮ್ಮ ಹೆಸರು ಅದೆಷ್ಟು ಚೆನ್ನಾಗಿದೆ ಗೊತ್ತಾ’ ಜೇನಿನಲ್ಲಿ ಅದ್ದಿದಂತಿತ್ತು ಧ್ವನಿ. +‘ನನ್ನ ಬದುಕಿಗೂ ಸ್ಫೂರ್ತಿಯಾಗಬೇಕು ನೀವು, ನಿಮ್ಮ ಅವತ್ತಿನ ಮಾತು, ನಿಮ್ಮ ದಿಟ್ಟ ನಡೆ, ನಿಮ್ಮ ಗುಣ ಎಲ್ಲವನ್ನು ಮೆಚ್ಚಿಕೊಂಡಿದ್ದೇನೆ. +ನಿಮ್ಮಂತ ಸಂಗಾತಿಯೇ ಬೇಕೆಂದು ನನ್ನ ಮನಸ್ಸು ನಿರ್ಧರಿಸಿಬಿಟ್ಟದೆ. +ಪ್ಲೀಸ್ ಏನಾದ್ರೂ ಮಾತಾಡಿ’ ಬೇಡಿದ. +ಈಗ ನಾನು ಸುಮ್ಮನಿದ್ದುಬಿಟ್ಟರೆ ಅಭಾಸವಾಗಿ ಬಿಡುತ್ತದೆ ಎಂದು ಎಚ್ಚೆತ್ತು ಕೊಂಡವಳೇ ‘ನಾನು ಡಿಗ್ರಿ ಮಾಡಬೇಕು. +ಅಮೇಲೆ ಮಾಸ್ಟರ್ ಡಿಗ್ರಿ ಮಾಡಬೇಕು ಅನ್ನೋ ಆಸೆ ಇದೆ. +ಇಷ್ಟು ಬೇಗ ಮದ್ವೆ ಆಗೋಕೆ ಇಷ್ಟ ಇಲ್ಲ.’ +‘ಅಬ್ಬಾ ಬದುಕಿಕೊಂಡೇ, ನನ್ನನ್ನೇ ಇಷ್ಟ ಇಲ್ಲ ಅಂತ ಎಲ್ಲಿ ಹೇಳಿಬಿಡ್ತೀರೊ ಅಂತ ಹೆದರಿಕೆಯಾಗಿತ್ತು. +ಈಗ ಸಮಾಧಾನ ಆಯಿತು. +ನೀವು ಡಿಗ್ರಿನಾದ್ರೂ ಮಾಡಿ, ಪಿಹೆಚ್ಡಿಯನ್ನಾದ್ರೂ ಮಾಡಿ. +ನಂದೇನು ಅಭ್ಯಂತರವಿಲ್ಲ. +ನೀವೇನು ಓದ್ತಿನಿ ಅಂದ್ರೂ ಒದಿಸೊ ಜವಾಬ್ದಾರಿ ನಂದು. +ಅದ್ರೆ ನನ್ನ ಮದ್ವೆ ಆಗಲ್ಲ ಅಂತ ಮಾತ್ರ ಹೇಳಬೇಡಿ’ ಎಂದಾಗ. +ಆಯ್ಯೋ ದೇವ್ರೆ ಈ ಮನುಷ್ಯ ನನ್ನ ಆರ್ಥನೇ ಮಾಡಿಕೊಳ್ತ ಇಲ್ವಲ್ಲಪ್ಪ. +ಈಗ್ಲೆ ಮದ್ವೆ ಬೇಡ ಆಂದ್ರೆ ನೀನು ಇಷ್ಟ ಇಲ್ಲಾ ಅಂತ ತಾನೇ ಅರ್ಥ, ಅದನ್ನ ಹೇಗಪ್ಪ ನೇರವಾಗಿ ಹೇಳಲಿ, ಈಗ್ಲೆ ಈ ಮನುಷ್ಯ ಏನೇನೋ ಕನಸು ಕಾಣ್ತಾ ಇರುವಂತಿದೆ. +ನನ್ನ ಕನಸುಗಳು ಬೇರೆಯವೇ ಇದೆ. +ಹೇಗೆ ಇವನಿಂದ ಪಾರಾಗುವುದು? +‘ನಂಗೆ ಈ ವರದಕ್ಷಿಣೆ, ಅದ್ದೂರಿ ಮದುವೆ ಇವೆಲ್ಲ ಇಷ್ಟವಾಗಲ್ಲ. +ವರದಕ್ಷಿಣೆ ಕೇಳೋದನ್ನ ಕಂಡ್ರೆ ನಂಗಾಗಲ್ಲ’ ಪರೋಕ್ಷವಾಗಿ ಅವನನ್ನು ಧಿಕ್ಕರಿಸಲು ಪ್ರಯತ್ನಿಸಿದಳು. +‘ನಾನೂ ವರದಕ್ಷಿಣೆಯ ವಿರೋಧಿಯೇ, ನನಗೂ ಅದ್ದೂರಿ ಮದ್ವೆ ಇಷ್ಟ ಇಲ್ಲ…’ ಎಂದುಬಿಟ್ಟಾಗ ಅಯೋಮಯ ಎನಿಸಿ ಅವನನ್ನು ನೋಡಿದಳು. +ಕುಹಕ ಮಾಡ್ತಾ ಇದ್ದಾನಾ, ತಮಾಶೆ ಮಾಡ್ತ ಇದ್ದಾನಾ. +ನಾನು ಹೇಳಿದ್ದನ್ನ ಪುನರುಚ್ಚರಿಸುತ್ತಿದ್ದಾನಾ…ಗಂಭೀರವಾಗಿಯೇ ಇದ್ದಾನೆ, ಅವನ ಮುಖದಲ್ಲಿ ರೋಚಕವಾಗಲಿ ತಮಾಷೆಯಾಗಲಿ ಕಾಣಿಸುತ್ತ ಇಲ್ಲ. +ಮತ್ತೇ ವರದಕ್ಷಿಣೆ ಕೇಳ್ತಿದಾರೆ… +ಆದರೆ ಬೇರೆಯವರು ಕೇಳೋದಕ್ಕಿಂತ ಕಡಿಮೆ ಕೇಳ್ತಾ ಇದ್ದಾರೆ ಅಂತ ಅಪ್ಪ ಹೇಳಿದ್ದು ನಿಜನೋ ಸುಳ್ಳೋ, ನಿಜಾನೇ ಇರಬೇಕು. +ಈ ಮನುಷ್ಯನಿಗೆ ವರದಕ್ಷಿಣೆ ಬೇಡ ಎನಿಸಿರಬೇಕು. +ಆದರೆ ಅವರ ಅಪ್ಪ ಅಮ್ಮ ಬಿಟ್ಟುಬಿಡ್ತಾರಾ? +ಬಿಟ್ಟಿಯಾಗಿ ಬರುತ್ತೆ ಅಂದ್ರೆ ಯಾರು ಬಿಡ್ತಾರೆ… +‘ಯಾಕೆ, ಸುಮ್ಮನಾಗಿ ಬಿಟ್ಟಿರಿ, ನಮ್ಮ ಮನೆಯಲ್ಲೂ ಕೂಡ ಯಾರು ವರದಕ್ಷಿಣೆ ಬಯಸಲ್ಲ. +ನಮ್ಗೆ ಏನು ಕಡಿಮೆ ಆಗಿದೆ. +ಅಪ್ಪ ಸಂಪಾದಿಸಿದ ಆಸ್ತಿನೇ ಬೇಕಾದಷ್ಟು ಇದೆ. +ಬೇರೆಯವರ ದುಡ್ಡಿನ ಮೇಲೆ ನಮ್ಗೆ ಆಸೆ ಇಲ್ಲ. +ನಿಮ್ಮ ಇಷ್ಟದ ಪ್ರಕಾರ ಸರಳ ವಿವಾಹನೇ ಆಗೋಣ. + ಮದ್ವೆ ಆದ ಮೇಲೆ ಓದೋಕ್ಕೆ ಹೋಗಬಹುದು. +ನಿಮ್ಮ ಸ್ವತಂತ್ರಕ್ಕೆ, ನಿಮ್ಮ ಆಸಕ್ತಿ, ಅಭಿರುಚಿಗೆ ಅಡ್ಡಿ ಬರೊಲ್ಲ ನಾನು. + ನಿಮ್ಮ ಸಂಘಟನೆ ವಿಚಾರವನ್ನು ನಿವಾಸ್ ಹೇಳಿದ್ರು. +ನಾನು ಆ ಸಂಘಟನೆಗೆ ಸೇರಿಕೊಳ್ತಿನಿ. +ನಿವಾಸ್ ಬಗ್ಗೆ ನಂಗೆ ತುಂಬಾ ಗೌರವ ಇದೆ. +ಅವರ ರೀತಿನೇ ನಾನು ಕೂಡ ವ್ಯವಸಾಯದಲ್ಲಿ ಆಚರಣೆಗೆ ತರಬೇಕು ಅಂತ ಇದ್ದೀನಿ. +ಮದ್ವೆ ಆದ ಮೇಲೆ ನಿಮ್ಮ ಸಹಕಾರನೂ ಸಿಗುತ್ತೆ. +ನಾವು ಮಾದರಿ ರೈತ ಕುಟುಂಬ ಎನಿಸಿಕೊಳ್ಳೋಣ’ ಒಬ್ಬನೇ ಎಲ್ಲವನ್ನು ಮಾತಾಡ್ತ ಇದ್ದಾನೆ. +ನನ್ನ ಇಷ್ಟ ಕಷ್ಟದ ಪ್ರಶ್ನೆಯೇ ಅವನಿಗಿಲ್ಲವೇ, ಸಿಟ್ಟು ಬಂತು. +‘ನಂಗೆ ಲೇಟಾಗುತ್ತೆ, ನಾನು ಬರ್ತಿನಿ’ ಎಂದವಳು ಎದ್ದು ನಿಂತಳು. +ಅವನೂ ಅವಳ ಜೊತೆ ನಿಂತು ‘ನಡೆಯಿರಿ ಅಷ್ಟು ದೂರ ಬರ್ತಿನಿ, ಕತ್ಲೆ ಆಗ್ತ ಇದೆ’ ಎಂದು ಅವಳ ಉತ್ತರ ನಿರೀಕ್ಷಿಸದವನಂತೆ ಅವಳೊಂದಿಗೆ ಹೆಜ್ಜೆ ಹಾಕಿದ. +‘ನಾನೊಬ್ಬಳೆ ಹೋಗ್ತಿನಿ ಪರ್ವಾಗಿಲ್ಲ, ನಂಗೆ ಅಭ್ಯಾಸ ಇದೆ’ ಎಂದು ಹೇಳಿದವಳೇ ಸರ ಸರನೆ ಹೊರಟೇಬಿಟ್ಟಾಗ ಕ್ಷಣ ಪೆಚ್ಚಾದರೂ ‘ನಾಚಿಕೆ ಪಾಪ’ ಎಂದು ಆಕ್ಷಣವೇ ಅವಳನ್ನು ಕ್ಷಮಿಸಿಬಿಟ್ಟು ಉಲ್ಲಾಸದಿಂದ ಬಸ್‌ಸ್ಟ್ಯಾಂಡಿಗೆ ನಡೆದನು. +ನಿವಾಸ್ನೊಂದಿಗೆ ಈಗ ಸ್ಫೂರ್ತಿ ಮಾತನಾಡಲೇಬೇಕಿತ್ತು. +ತನ್ನ ಮನದೊಳಗೆ ಏನಿದೆ ಎಂಬುದನ್ನು ಹೊರಹಾಕಿ, ಅವನ ಮನದೊಳಗೆ ಏನಿದೆ ಎಂಬುದನ್ನು ತಿಳಿದುಕೊಳ್ಳುವ ಕುತೊಹಲದಿಂದ ನಿವಾಸ್ನ ಮನೆಗೆ ಹೊರಟಳು. +ತಮ್ಮೂರಿನಿಂದ ಈಚೆಗೆ ಅವನು ಜಮೀನು ಕೊಂಡು ಮನೆ ಕಟ್ಟಿಕೊಂಡಿದ್ದಾನೆ. +ತಂದೆ ತಾಯಿ ಬೇರೆ ಊರಿನಲ್ಲಿದ್ದಾರೆ. +ತಾನೊಬ್ಬನೆ ಜಮೀನಿನ ಮೇಲೆ ಪ್ರಯೋಗ ಮಾಡುತ್ತ ತಾನೇ ಅಡುಗೆ ಬೇಯಿಸಿಕೊಂಡು ಎಲ್ಲಾ ಕೆಲಸ ಮಾಡಿಕೊಂಡು ಕಷ್ಟಜೀವಿ ಎನಿಸಿಕೊಂಡಿದ್ದಾನೆ. +ಕೈತುಂಬಾ ಸಂಬಳ ಬರುವ ಕೆಲಸಬಿಟ್ಟು ಭೂಮಿ ಜೊತೆ ಹೊಡೆದಾಡುವ ಅವನ ಆಯ್ಕೆಗೆ ಕೆಲವರು ಹುಚ್ಚುತನ ಎಂದರೆ ಕೆಲವರು ಮೂರ್ಖ ಎಂದೇ ಭಾವಿಸಿದ್ದಾರೆ. +ಒಣ ಆದರ್ಶದಿಂದ ಎನನ್ನಾದರೂ ಸಾಧಿಸಲು ಸಾಧ್ಯವೇ, ಪಡೆದುಕೊಳ್ಳುವುದು ಸಾಧ್ಯವೇ ಎಂಬುದು ಹಲವರ ಅಭಿಪ್ರಾಯ. +ಆದರೆ ನಿವಾಸ್ ಬೇರೆಯವರಿಗಾಗಿ ಬದುಕದೆ ತನಗಾಗಿ ಬದುಕುತ್ತಿದ್ದಾನೆ. +ಯಾರು ಏನೆಂದರೂ ತಲೆ ಕೆಡಿಸಿಕೊಳ್ಳದೆ ತಾನು ಮಾಡುವುದನ್ನು ಮಾಡುತ್ತಲೇ ಬಂದಿದ್ದಾನೆ. +ಐದು ವರ್ಷದ ಹಿಂದೆ ನಿವಾಸ್ ಅಲ್ಲಿ ಭೂಮಿ ಕೊಂಡು ಸಾವಯುವ ಕೃಷಿ ಮಾಡುತ್ತ ಹೊಸ ಹೊಸ ಪ್ರಯೋಗಗಳಲ್ಲಿ ತೊಡಗಿಸಿಕೊಂಡು ಯಶಸ್ವಿ ರೈತನೆನಿಸಿಕೊಂಡಿದ್ದಾನೆ. +ಸಾವಯವ ಬೇಸಾಯವೆಂದರೆ ರಾಸಾಯನಿಕ ಗೊಬ್ಬರ ಬಳಸದೆ ಇರುವುದು ಮಾತ್ರವಲ್ಲ, ಬಿದ್ದ ಮಳೆ ನೀರನ್ನು ಸರಿಯಾಗಿ ಬಳಸಿಕೊಂಡು ಬೆಳೆ ಬೆಳೆಯುವ ಪರ್ಯಾಯ ವಿಧಾನಗಳನ್ನು ಅನುಸರಿಸಿ, ಮಳೆಯ ನೀರನ್ನು ಅವಲಂಬಿಸಿ ಭೂಮಿಯ ಫಲವತ್ತತೆ ಮತ್ತು ತೇವಾಂಶ ಹೆಚ್ಚಿಸಿಕೊಳ್ಳಲು ಸಾಧ್ಯ ಎಂಬುದನ್ನು ಕಾರ್ಯರೂಪಕ್ಕೆ ತಂದು ತೋರಿಸಿದ್ದಾನೆ. +ತಮ್ಮ ಜಮೀನಿನಲ್ಲಿ ಒಂದು ಭಾಗದಲ್ಲಿ ಶೇಂಗಾ ಬೆಳೆದರೆ, ಮತ್ತೊಂದು ಕಡೆ ಹಿಪ್ಪುನೇರಳೆ ಬೆಳೆದಿದ್ದಾನೆ. +ಈಚೆಗಷ್ಟೆ ಆಲೂಗಡ್ಡೆ ಬೆಳೆದು ಒಂದು ಲಕ್ಷದವರೆಗೂ ಲಾಭಗಳಿಸಿದ್ದಾನೆ. +ಹಿಪ್ಪು ನೇರಳೆ ಕಡ್ಡಿಗಳನ್ನು ನಾಟಿ ಮಾಡಿದ ಬಳಿಕ ಎರಡು ಸಾಲುಗಳ ನಡುವಿನ ಅಂತರದಲ್ಲಿ ಹುರುಳಿಬೀಜ ಚೆಲ್ಲಿ ಹಸುರೆಲೆ ಗೊಬ್ಬರಕ್ಕಾಗಿ ಬೆಳೆಸಿ ಅದನ್ನು ಕಟಾವ್ ಮಾಡಿ ಮಣ್ಣಿಗೆ ಬೆರೆಸಿ ಭೂಮಿಸತ್ವ ಹೆಚ್ಚಿಸಿದ್ದಾನೆ. +ಹುರುಳಿ ಗಿಡಗಳ ಬೇರುಗಳು ನೆಲದಲ್ಲಿರುವಷ್ಟು ದಿನ ಮಣ್ಣಿನಲ್ಲಿ ಇರುವ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ವಿಶಿಷ್ಟ ಶಕ್ತಿ ಪಡೆದಿರುತ್ತವೆ. +ಹಾಗಾಗಿ ತೇವಾಂಶ ಉಳಿದು ಹಿಪ್ಪುನೇರಳೆ ಗಿಡದ ಬೆಳೆಗೆ ಸಹಾಯವಾಗಿದೆ. +ಹುರುಳಿ ಬೇರುಗಳಲ್ಲಿರುವ ಪೌಷ್ಟಿಕಾಂಶವೂ ಹಿಪ್ಪುನೇರಳೆಗೆ ಲಭಿಸಿವೆ. +ಈ ರೀತಿ ಮಾಡುವುದರಿಂದ ಬೆಳೆ ವಿಫಲವಾಗುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. +ನೀರಿನ ಬಳಕೆ ಕಡಿಮೆ ಮಾಡಬಹುದು. +ಮಳೆ ಕೈಕೊಟ್ಟ ಸಂದರ್ಭಗಳಲ್ಲಿ ಬೆಳೆ ಒಣಗದೆ ಉಳಿಸಿಕೊಳ್ಳಲು ಸಾಧ್ಯ. +ಇವೆಲ್ಲವನ್ನು ನೋಡಿಯೇ ಸ್ಫೂರ್ತಿಯ ತಂದೆ ನಿವಾಸ್ನ ಸಲಹೆ ಪಡೆದು ಆತನ ಮಾರ್ಗದರ್ಶನದಲ್ಲಿ ಕೃಷಿ ಮಾಡಿ ಇಂದು ಒಳ್ಳೆ ಸಂಪಾದನೆಯಲ್ಲಿದ್ದಾರೆ. +ತಮ್ಮ ಮನೆಯನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ ನಿವಾಸ್ನನ್ನು ಕಂಡರೆ ಸ್ಫೂರ್ತಿಯ ಮನೆಯವರಿಗೆಲ್ಲ ಅಭಿಮಾನ. +ಆದರೆ ಸ್ಫೂರ್ತಿಗೆ ಅಭಿಮಾನದ ಜೊತೆ ಅದೆಂತಹುದೊ ಭಾವ. +ಆ ಭಾವ ಪ್ರೇಮವಿರಬಹುದೆ. +ಅಂತಹುದೇ ಭಾವ ನಿವಾಸ್ನಲ್ಲಿಯೂ ಇದೆಯೇ ಎಂಬ ತೊಳಲಾಟದಿಂದ ಬಳಲಿ ಹೋಗಿದ್ದಾಳೆ. +ಸುದರ್ಶನ ಬಾರದೆ ಹೋಗಿದ್ದರೆ, ಈ ತೊಳಲಾಟ ಅವಳಲ್ಲಿ ಕಾಣಿಸಿಕೊಳ್ಳುತ್ತಲೇ ಇರಲಿಲ್ಲವೇನೂ… +ಸ್ಫೂರ್ತಿಯನ್ನು ಈ ಸಮಯದಲ್ಲಿ ತನ್ನ ಮನೆಯಲ್ಲಿ ಕಂಡು ನಿವಾಸ್ನಿಗೆ ಆಶ್ಚರ್ಯವಾಗಿ ಹೋಯಿತು. +‘ಅರೆ ಸ್ಫೂರ್ತಿ, ಕಾಲೇಜು ಇಲ್ವಾ, ಇಲ್ಲಿವರೆಗೂ ಬಂದುಬಿಟ್ಟಿದ್ದೀಯಾ’ ಪ್ರಶ್ನಿಸಿದ.’ನೀವೇ ಬರೋ ಹಾಗೆ ಮಾಡಿದ್ರಿ. +ನಾನು ನೆಮ್ಮದಿಯಿಂದ ಕಾಲೇಜಿಗೆ ಹೋಗಲು ನೀವು ಬಿಡ್ತ ಇಲ್ಲ’ ದೂರಿದಳು. +ತಕ್ಷಣ ಯಾಕೆ ಹೀಗೆ ಹೇಳ್ತ ಇದ್ದಾಳೆ ಅಂತ ಅರ್ಥವೇ ಆಗದೆ ಅವಳನ್ನೆ ನೋಡಿ ಪಕ್ಕನೆ ನಕ್ಕುಬಿಟ್ಟ. +‘ಓಹೊ, ನೆನ್ನೆ ಸುದರ್ಶನನನ್ನು ಕರ್ಕೊಂಡು ಬಂದಿದ್ದೆ ಅಂತನಾ, ಅದೃಷ್ಟ ಮಾಡಿದ್ದೆ ನೀನು, ಒಳ್ಳೆ ಹುಡುಗ, ನಿನ್ನ ಮೆಚ್ಚಿ ಆರಾಧಿಸುತ್ತ ಇದ್ದಾನೆ. +ಎಷ್ಟು ಹೆಣ್ಣುಮಕ್ಕಳಿಗೆ ಈ ಭಾಗ್ಯ ಸಿಗುತ್ತೆ ಹೇಳು. +ನಿನ್ನ ಅವನ ಆಸಕ್ತಿ, ಅಭಿರುಚಿ ಎಲ್ಲಾ ಒಂದೇ ಇದೆ. +ನಿನಗೋಸ್ಕರ ಏನು ಮಾಡೋಕು ಸಿದ್ದನಿದ್ದಾನೆ, ನಿಮ್ಮ ಮನೆಯವರು ಅವನ ಮನೆಯವರು ಎಲ್ಲಾ ಒಪ್ಪಿದ್ದಾರೆ, ಇನ್ನೇನು ಆಗಬೇಕು ಹೇಳು.’ +‘ಎಲ್ಲಾ ಒಪ್ಪಿಬಿಟ್ರೆ ಆಯ್ತಾ, ನಾನು ಒಪ್ಪುವುದು ಬೇಡವೇ’ ಸಿಡುಕಿದಳು. +‘ಅಂತಹ ಹುಡುಗನನ್ನು ಒಪ್ಪದೆ ಇರುವುದಕ್ಕೆ ನಿನಗೇನಾಗಿದೆ ದಾಡಿ, ಪುಣ್ಯ ಮಾಡಿದೆ ಸುದರ್ಶನನ್ನು ಮದುವೆ ಮಾಡಿಕೊಳ್ಳೋಕೆ’ಸಹಜವಾಗಿಯೇ ನಿವಾಸ್ ನುಡಿದ. +ಇವನ ಮನಸ್ಸಿನಲ್ಲಿ ನನ್ನ ಬಗ್ಗೆ ಯಾವ ಭಾವನೆಗಳೂ ಇಲ್ಲವೇ. +ತನ್ನನ್ನು ಎಲ್ಲರೂ ರೂಪವಂತೆ ಎನ್ನುತ್ತಾರೆ. +ಈ ರೂಪವಾದರೂ ಅವನನ್ನು ಸೆಳೆಯಲಿಲ್ಲವೇ. +ಹೋಗಲಿ ಅವನಂತೆಯೇ ನನಗೂ ಅವನ ವಿಚಾರಗಳ ಬಗ್ಗೆಯೇ ಆಸಕ್ತಿ ಇದೆ. +ಇಬ್ಬರೂ ಒಟ್ಟೊಟ್ಟಿಗೆ ಅದೆಷ್ಟು ದಿನ ಇಲ್ಲಾ. +ಯಾವ ಗಳಿಗೆಯಲ್ಲಾದರೂ ನನ್ನ ಬಗ್ಗೆ ಕೊಂಚ ಮಧುರ ಭಾವನೆ ಮೂಡಲಿಲ್ಲವೇ. +ಹೆಣ್ಣು ಅಂತ ಒಂದು ಕ್ಷಣವಾದರೂ ಕಾಡಲಿಲ್ಲವೇ. +ಇವನು ಮನುಷ್ಯನೇ ಅಲ್ಲ ಕಲ್ಲು. +ಸೌಂದರ್ಯ ತುಂಬಿದ ಹೆಣ್ಣೊಬ್ಬಳು ಸನಿಹದಲ್ಲಿರುವಾಗಲೂ ಸಹಜವಾಗಿರುತ್ತಾನೆ ಅಂದರೆ ಈತನಿಗೆ ಮನಸ್ಸೇ ಇಲ್ಲವೇ, ಮನಸ್ಸಿನ ತುಂಬ ಆಲೋಚನೆ ಕಾಡಿದರೂ ಬಾಯಿಬಿಟ್ಟು ಹೇಳದಾದಳು ಏನನ್ನೂ. +ಅವನಿಗೆ ಮನಸ್ಸಿದ್ದರೆ ಸಂತೋಷವಾಗಿ ಸುದರ್ಶನನ್ನು ಕರೆದುಕೊಂಡು ಬರುತ್ತಿದ್ದನೆ, ಆದರೂ ನಿವಾಸ್ ಯಾರನ್ನಾದರೂ ಮದುವೆ ಆಗಲೇಬೇಕು. +ಅದು ತನ್ನನ್ನೇಕೆ ಆಗಬಾರದು. +ಹಾಗೆಂದು ಯೋಚಿಸಿದವಳೇ ನೇರವಾಗಿಯೇ ಕೇಳಬೇಕೆಂದು ಧೈರ್ಯ ಮಾಡಿಬಿಟ್ಟಳು. +‘ನೀವಿನ್ನೂ ಮದುವೆ ಆಗದೆ ವ್ಯವಸಾಯ, ಸಂಘಟನೆ, ಅಂತ ದುಡಿಯುತ್ತಿರುವಾಗ, ನಾನಿನ್ನೂ ಚಿಕ್ಕವಳು, ನಿಮಗಿಂತ ಮುಂಚೆನೇ ಹೇಗೆ ಮದ್ವೆ ಆಗಲಿ’ ನೇರವಾಗಿ ಹೇಳಲು ಬಾಯಿ ಬರದೇ ಪರೋಕ್ಷವಾಗಿ ಕೇಳಿಬಿಟ್ಟಳು. +‘ಅಯ್ಯೋ ನನ್ನ ಮದ್ವೆನಾ. +ನಾನು ಮದ್ವೆ ಆಗ್ತೇನೋ ಬಿಡ್ತೀನೋ, ನನ್ನದು ಹೇಗೊ ನಡೆದು ಹೋಗಿಬಿಡುತ್ತದೆ. +ಆದರೆ ನೀನು ಹೆಣ್ಣುಮಗಳು, ಇವತ್ತಲ್ಲದಿದ್ದರೂ ನಾಳೆ ಮದ್ವೆ ಆಗಲೇಬೇಕು. +ಎಲ್ಲಾ ಅನುಕೂಲ ಕೂಡಿ ಬಂದಿರುವಾಗ ಮದ್ವೆನಾ ಮುಂದೆ ಹಾಕೋದು ಮೂರ್ಖತನ.’ +‘ನೀವ್ಯಾಕೆ ಮದ್ವೆ ಆಗಲ್ಲ. +ನಿಮ್ಮ ಮನಸ್ಸಿಗೆ ಹಿಡಿಸೋ ಹುಡುಗಿ ಇನ್ನೂ ಸಿಕ್ಕಿಲ್ವಾ’ ಕೆದಕಿದಳು. +‘ಹುಡುಕ್ತಾ ಇದ್ರೆ ಸಿಕ್ತ ಇದ್ದಳೇನೋ! +ಆದ್ರೆ ನಾನು ಆ ಪ್ರಯತ್ನವೇ ಮಾಡಿಲ್ಲವಲ್ಲ. +ನಿಂಗೊಂದು ವಿಚಾರ ಗೊತ್ತಿಲ್ಲ ಸ್ಫೂರ್ತಿ. +ನನ್ನ ಮನೆಯವರ ಬಗ್ಗೆ, ನನ್ನ ಬಗ್ಗೆ. +ಯಾರ ಬಳಿಯೂ ನಾನು ಏನನ್ನೂ ಹೇಳಿಲ್ಲ. +ನನಗಿರೋ ಮನಸ್ಥಿತೀಲಿ ಮದ್ವೆ ಸಂಸಾರ ಎಲ್ಲಾ ದೂರವೇ’ ದುಗುಡದಿಂದ ಹೇಳಿದ. +‘ನನ್ನ ಹತ್ರಾನೂ ಹೇಳಬಾರದಂತದ್ದೆ ನಿಮ್ಮ ಮನೆಯ ವಿಚಾರ. +ಹೇಳಬಾರದು ಅಂದ್ರೆ ನಾನು ಬಲವಂತಿಸುವುದಿಲ್ಲ’ ಅವನ ದುಗುಡ ಅರ್ಥಮಾಡಿಕೊಂಡು ಮೆಲ್ಲನೆ ಹೇಳಿದಳು. +‘ಹೇಳಬಾರದು ಅಂತೇನಿಲ್ಲ. +ಯಾರಿಗೂ ಇದುವರೆಗೂ ನಾನು ಹೇಳಿಲ್ಲ, ಹೇಳುವ ಪ್ರಸಂಗವೇ ಬಂದಿರಲಿಲ್ಲ. +ಈಗ ನೀನು ಕೇಳ್ತಾ ಇದ್ದೀಯಾ, ನಿನಗೂ ಗೊತ್ತಾಗಲಿ ನಮ್ಮ ಮನೆಯ ವಿಚಾರಗಳು’- ತನ್ನ ಮನೆಯನ್ನು, ಹೆತ್ತವರನ್ನು ನೆನೆಸಿಕೊಂಡು ಕ್ಷಣ ವ್ಯಥಿತನಾದನು. +ನಿವಾಸ್ನ ತಂದೆ ದೊಡ್ಡ ರೈತ. +ಚಿಕ್ಕಪ್ಪ ತಾನು ಮೆಚ್ಚಿದ ಹುಡುಗಿಯೊಂದಿಗೆ ಮದುವೆಯಾದ ಎಂದು ತಮ್ಮನೊಂದಿಗೆ ಸಂಪರ್ಕವನ್ನೇ ತ್ಯಜಿಸಿದ್ದ ನಿವಾಸ್ನ ತಂದೆ. +ತಮ್ಮ ಆಕ್ಸಿಡೆಂಟ್ನಲ್ಲಿ ಸತ್ತಾಗಲೂ ನೋಡಲು ಹೋಗಿರಲಿಲ್ಲ. +ತಮ್ಮನ ಹೆಂಡತಿಗೆ ಸೇರಬೇಕಾದ ಆಸ್ತಿಯನ್ನು ಕೊಡದೆ ತಾವೇ ಅನುಭವಿಸುತ್ತಿದ್ದು, ತಮ್ಮನ ಹೆಂಡತಿ ಗಂಡನನ್ನು ಕಳೆದುಕೊಂಡು ಇರುವ ಒಬ್ಬ ಮಗನನ್ನು ಕಷ್ಟದಿಂದ ಸಾಕುತ್ತಿದ್ದರೆ ಕನಿಕರ ತೋರಿಸಲಿಲ್ಲ. +ನಿವಾಸ್ನಿಗೂ ಒಬ್ಬಳೇ ಅಕ್ಕ. +ಅವಳು ಕೂಡ ಚಿಕ್ಕಪ್ಪನಂತೆ ಯಾರನ್ನೋ ಮೆಚ್ಚಿ ಮದುವೆಯಾಗುತ್ತೇನೆ ಎಂದಾಗ ಅಪ್ಪನು ಅದನ್ನು ವಿರೋಧಿಸಿ ಮನೆಯೊಳಗೆ ಕೂಡಿಹಾಕಿದ್ದರು. +ಅಪ್ಪನ ಬುದ್ಧಿ ಗೊತ್ತಿದ್ದ ನಿವಾಸ್ನ ಅಕ್ಕ ತನ್ನ ಆಸೆ ಕೈಗೂಡದೆಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. +ಮಗಳ ಸಾವಿನ ನೋವು ನಿವಾಸ್ನ ತಾಯಿಗೆ ಆಘಾತವುಂಟಾಗಿ ಕೊರಗಿ ಕೊರಗಿ ಪ್ರಾಣ ಬಿಟ್ಟಿದ್ದರು. +ಮಗಳ ಸಾವು, ಹೆಂಡತಿಯ ಸಾವು ತಂದೆಯನ್ನು ಸಾಕಷ್ಟು ಹಣ್ಣು ಮಾಡಿತ್ತು. +ಹುಣ್ಣಿನ ಮೇಲೆ ಬರೆ ಎಂಬಂತೆ ಅವರ ಜಮೀನನ್ನು ಸರ್ಕಾರ ನಿವೇಶನಕ್ಕಾಗಿ ವಶವಡಿಸಿಕೊಂಡಿತ್ತು. +ದ್ಯೆತನಾಗಿಯೇ ಬದುಕುತ್ತಿದ್ದ ತಂದೆಗೆ ಇದು ತಡೆಯಲಾರದ ಆಘಾತ ತಂದಿತು. +ಪರಿಣಾಮ ತಂದೆ ಇಂದು ಮಾನಸಿಕ ರೋಗಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ತೆ ಪಡೆಯುತ್ತಿದ್ದಾರೆ. +ಸರ್ಕಾರ ಕೊಟ್ಟ ಹಣ ಬ್ಯಾಂಕಿನಲ್ಲಿದೆ. +ಈ ದುರಂತಗಳೆಲ್ಲ ಒಂದರ ಹಿಂದೆ ಒಂದು ತಮ್ಮ ಕುಟುಂಬದಲ್ಲಿ ಆದದ್ದನ್ನು ಕಂಡು ಜಿಗುಪ್ಸೆಗೊಂಡು ಕೆಲಸವನ್ನು ಬಿಟ್ಟು ಇಲ್ಲಿ ಭೂಮಿ ಕೊಂಡು ಭೂಮಿ ಕೆಲಸ ಮಾಡುತ್ತ ಎಲ್ಲವನ್ನು ಮರೆಯುವ ಯತ್ನದಲ್ಲಿ ಇದ್ದೇನೆ. +ತಂದೆಯವರಿಗೆ ಚಿಕಿತ್ಸೆ ಕೊಡುತ್ತಿದ್ದು, ಅವರು ಹುಷಾರಾದ ಕೂಡಲೇ ಇಲ್ಲಿಗೆ ಕರೆತರಬೇಕು. +ರೈತನಾಗಿಯೇ ಬದುಕಿದ್ದ ತಂದೆ ಇಲ್ಲಿ ಕೊನೆವರೆಗೂ ರೈತನಾಗಿ ದುಡಿಯುತ್ತಿರಲಿ ಎಂಬುದು ತನ್ನಾಸೆ. +ಈ ಎಲ್ಲಾ ದುರಂತಗಳ ನಡುವೆ ತನಗೆ ಮದುವೆ ಬಗ್ಗೆಯಾಗಲಿ ಸಂಸಾರದ ಬಗ್ಗೆಯಾಗಲೀ ಆಸಕ್ತಿಯೇ ಇಲ್ಲ. +ಅಪ್ಪ ಹು‍ಷಾರಾಗಿ ಬರುವ ತನಕ ಯಾವುದರ ಬಗ್ಗೆಯೂ ಯೋಚಿಸಲಾರೆ. +ಚಿಕ್ಕಮ್ಮನ ಶಾಪ ನಮ್ಮ ಕುಟುಂಬಕ್ಕೆ ತಗುಲಿರಬಹುದು. +ಅವರು ಎಲ್ಲಿದ್ದಾರೆಂದು ಹುಡುಕಿ ಅವರಿಗೆ ಸಲ್ಲಬೇಕಾಗಿರುವುದನ್ನು ಸಲ್ಲಿಸಿದ ಮೇಲೆಯೇ ತನಗೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗುವುದು. +ಅಲ್ಲಿವರೆಗೆ ಬೇರೆ ಯೋಚನೆಗಳೇ ಇಲ್ಲ- ಎಂದು ಮನೆಯ ಬಗ್ಗೆ ವಿವರ ವಿವರವಾಗಿ ತಿಳಿಸಿದಾಗ ಸ್ಫೂರ್ತಿ ಕೆಲ ನಿಮಿಷ ಮಾತೇ ಆಡಲಿಲ್ಲ. +ಇಷ್ಟೊಂದು ನೋವು ತುಂಬಿಕೊಂಡಿರುವ ನಿವಾಸ್ – ಆ ನೋವು ಒಂದು ಚೂರೂ ಯಾರಿಗೂ ಗೊತ್ತಾಗದಂತೆ ನಡೆದುಕೊಂಡಿದ್ದಾನೆ. +ಅಷ್ಟೊಂದು ಹತ್ತಿರ ಎಂದುಕೊಂಡಿದ್ದ ತನಗೂ ಇದರ ಸುಳಿವು ನೀಡಿರಲಿಲ್ಲ. +ಪಾಪ ನಿವಾಸ್ ಎಲ್ಲರನ್ನು ಕಳೆದುಕೊಂಡು ಒಂಟಿಯಾಗಿದ್ದಾನೆ. +ಆ ಒಂಟಿತನವನ್ನು ತಾನು ನೀಗುವಂತಾದರೆ… +ಕತ್ತಲೆ ತುಂಬಿರುವ ಅವನ ಬದುಕಿನಲ್ಲಿ ಬೆಳದಿಂಗಳಾಗುವ ಅವಕಾಶ ನನ್ನದಾಗುವಂತಿದ್ದರೆ… +ಈ ಪ್ರಪಂಚದಲ್ಲಿ ನಾನೇ ಹೆಚ್ಚು ಸುಖಿ. +‘ನಿಮ್ಮ ಕಥೆ ಕೇಳುತ್ತಿದ್ದರೆ ಹೃದಯ ದ್ರವಿಸಿ ಹೋಗುತ್ತದೆ. +ನೊಂದಿರುವ ಬಾಳಿಗೆ ನೆಮ್ಮದಿ ನೀಡುವ ಅವಕಾಶವನ್ನು ಯಾರಿಗಾದರೂ ನೀವು ಮಾಡಿಕೊಡಬಾರದೆ? +ನಿಮ್ಮೊಂದಿಗೆ ಬರುವಾಕೆ ನಿಮ್ಮ ಬಾಳಿಗೆ ಬೆಳಕಾಗಬಾರದೇಕೆ…?’ +‘ಬೆಳಕು, ಇನ್ನೆಲ್ಲಿಯ ಬೆಳಕು, ಚಿಕ್ಕಮ್ಮನ ಶಾಪ ತಟ್ಟಿರುವ ನಮ್ಮ ಮನೆಗೆ ಸೇರುವ ಬೆಳಕು ನಂದಿಹೋದರೆ… +ಈಗಿರುವ ನೋವುಗಳ ಜೊತೆಗೆ ಮತ್ತೊಂದು ನೋವನ್ನು ಸೇರಿಸಿಕೊಳ್ಳಲು ಸಿದ್ದವಾಗಲೇ? +ಬೇಡ ಸ್ಫೂರ್ತಿ ಅಂತ ಯಾವ ದುರಂತವೂ ನನ್ನ ಬಾಳಿನಲ್ಲಿ ಮುಂದೆ ಆಗಬಾರದು. +ನನ್ನ ಕಣ್ಮುಂದೆ ಮತ್ತೊಂದು ಹೆಣ್ಣು ನಲುಗುವುದು ಬೇಡ, ಇದೆಲ್ಲ ಭ್ರಮೆ ಅಂತ ನಿನಗನ್ನಿಸಬಹುದು. +ನನಗೂ ಒಮ್ಮೊಮ್ಮೆ ಹೀಗೆ ಆಗುತ್ತದೆಯೋ, ಒಳ್ಳೆಯದು ಯಾಕಾಗಬಾರದು ಎಂದು ಅನ್ನಿಸುತ್ತದೆ. +ಆದರೆ ರಿಸ್ಕ್ ತೆಗೆದುಕೊಳ್ಳುವಷ್ಟು ದೈರ್ಯವಿಲ್ಲ’ ವಿಷಾದಭರಿತನಾಗಿ ನುಡಿದ. +‘ಅಂತ ರಿಸ್ಕ್ ತಗೋಳ್ಳೋಕೆ ನಾನು ಒಪ್ಪಿದರೆ…’ ನಡುಗುವ ದನಿಯಲ್ಲಿ ಕೇಳಿಯೇ ಬಿಟ್ಟಳು. +‘ನೀನಾ, ನಿಂಗ್ಯಾಕೆ ಅಂಥ ಸಂಕಷ್ಟ, ಅದೃಷ್ಟವೇ ನಿನ್ನ ಬಳಿಗೆ ಬಂದಿರುವಾಗ ಅಂಥ ಅದೃಷ್ಟ ಕೈ ಬಿಟ್ಟು ಮೂರ್ಖಳಂತೆ ಮಾತಾಡಬೇಡ’ ಮಾತು ಮುಂದುವರಿಸಲು ಇಚ್ಛೆ ಇಲ್ಲದವನಂತೆ ಹೇಳಿದ. +‘ನೋಡಿ, ನಾನು ನಿಮ್ಮನ್ನು ತುಂಬಾ ಇಷ್ಟಪಡ್ತಾ ಇದೀನಿ, ನನ್ನನ್ನ ಅರ್ಥ ಮಾಡಿಕೊಳ್ಳೋಕೆ ನಿಮ್ಗೆ ಆಗಲೇ ಇಲ್ಲ, ಅದಕ್ಕೆ ನೇರವಾಗಿ ಹೇಳ್ತಾ ಇದೀನಿ. +ನೀವಂದ್ರೆ ನನಗೆ ಇಷ್ಟ. +ನಿಮ್ಮ ಜೊತೆ ಇರೋದು ನಂಗಿಷ್ಟ, ನಿಮ್ಮ ಆಸಕ್ತಿ ನಂಗಿಷ್ಟ. +ಒಟ್ಟಿನಲ್ಲಿ ನೀವೇ ನಂಗಿಷ್ಟ. +ಇದು ಪ್ರೀತಿ ಅಂತಾ ನಾ ತಿಳ್ಕೊಂಡಿದ್ದೀನಿ. +ನಿಮ್ಮನ್ನು ಪ್ರೀತಿಸುತ್ತಾ ಇದ್ದೇನೆ. +ನನ್ನ ಮದ್ವೆ ಮಾಡಿಕೊಳ್ಳಿ’ ಅವನ ಮುಂದೆ ಮಂಡಿ ಊರಿ ಕುಳಿತು ತನ್ನ ಹೃದಯದ ಭಾವನೆಗಳನ್ನೆಲ್ಲ ನಿವೇದಿಸಿಕೊಂಡಳು. +ಆಘಾತಗೊಂಡನು ನಿವಾಸ್. +‘ಸ್ಫೂರ್ತಿ, ಏನು ಮಾಡುತ್ತಾ ಇದ್ದೀಯಾ. +ನೀನು ನನ್ನನ್ನು ಪ್ರೀತಿಸ್ತಾ ಇದ್ದೀಯಾ, ನೋ, ಐ ಕಾಂಟ್ ಬಿಲೀವ್ ಇಟ್. +ನಾನು ಯಾವತ್ತಾದ್ರೂ ನಿನ್ನೊಂದಿಗೆ ಹಾಗೆ ನಡ್ಕೊಂಡಿದ್ದೀನಾ? +ಅಂಥ ಭಾವನೆಯೇ ನನ್ನಲ್ಲಿ ಇಲ್ಲ. +ನೀನು ನನ್ನ ಸ್ನೇಹಿತೆ, ಪುಟ್ಟ ಗೆಳತಿ, ಆ ಭಾವ ಮಾತ್ರ ನನ್ನಲ್ಲಿ ಇದೆ. +ನಿನ್ನ ಒಳಿತನ್ನು ಸದಾ ಬಯಸೋ ಹಿತೈಷಿ ನಾನು. +ನಿನ್ನ ಗುಣ ಸ್ವಭಾವ ಮೆಚ್ಚಿದ್ದೀನಿ- ಆದ್ರೆ ಒಬ್ಬ ಸ್ನೇಹಿತನಾಗಿ ಮಾತ್ರ. +ನನ್ನಲ್ಲಿ ಒಮ್ಮೆ ಕೂಡ ಈ ಭಾವನೆ ಬಿಟ್ರೆ ಬೇರೆ ಭಾವನೆ ಬಂದಿಲ್ಲ. +ಎರಡು ಹೃದಯ ಸೇರಿದಾಗ ಪ್ರೀತಿ ಹುಟ್ಟುತ್ತೆ ಅಂತ ಅಂದುಕೊಂಡಿರುವವನು ನಾನು. +ನಿನಗ್ಯಾಕೆ ಆ ಭಾವನೆ ಬಂತು ಸ್ಫೂರ್ತಿ. +ಬೇಡಾ… ಬೇಡಾ… ಆ ಭಾವನೇನಾ ಇಲ್ಲಿಗೇ ಬಿಟ್ಟುಬಿಡು. +ನಿನ್ನ ಮನಸ್ಸಿನಲ್ಲಿರೋದನ್ನ ಕಿತ್ತುಹಾಕು. +ಪ್ಲೀಸ್ ಸ್ಫೂರ್ತಿ ನನ್ನ ಕ್ಷಮಿಸಿಬಿಡು. +ನಿನ್ನ ಭಾವನೆಗಳಿಗೆ ನನ್ನಲ್ಲಿ ಯಾವುದೇ ರೀತಿಯ ಸ್ಪಂದನೆ ಇಲ್ಲ. +ನಾನು ನಿನ್ನ ಗೆಳೆಯ ಮಾತ್ರ’ ದೀರ್ಘವಾಗಿ ನುಡಿದು ಅವಳ ಕೈ ಹಿಡಿದು ಬೇಡಿಕೊಳ್ಳುತ್ತಾ ಭಾವುಕನಾಗಿಬಿಟ್ಟ. +ಅವನ ಕೈಗಳಿಗೆ ಕಣ್ಣು ಒತ್ತಿ ಬಿಕ್ಕಿ ಬಿಕ್ಕಿ ಅತ್ತಳು. +ಅವಳ ಭಾವನಾ ಸಾಮ್ರಾಜ್ಯದ ಕೋಟೆ ಸ್ಫೋಟಿಸಿಬಿಟ್ಟಿತ್ತು. +ಅವಳ ಆಸೆಗಳ ಜಲಪಾತ ಬರಿದಾಗಿ ಹೋಯಿತು. +ಅವಳ ಕನಸುಗಳ ಕೂಸು ಹುಟ್ಟುವದಕ್ಕೆ ಮುಂಚೆಯೇ ಸಾವಿನ ಹಾದಿ ಹಿಡಿಯಿತು. +ಅವನೊಂದಿಗಿನ ಭವ್ಯ ಭವಿಷ್ಯ ಪ್ರಪಾತ ಸೇರಿತ್ತು. +ನಿರಾಶೆಯ ನೋವು ಹೃದಯ ಹಿಂಡಿ ಆ ನೋವಿನಿಂದ ನರಳಿದಳು, ಕೊರಗಿದಳು, ಒದ್ದಾಡಿದಳು. +ಏನೇ ಆದರೂ ವಾಸ್ತವ ನಗುತ್ತಿತ್ತು. +ನಿವಾಸ್ನ ಹೃದಯದಲ್ಲಿ ತನಗೆ ಜಾಗವಿಲ್ಲವೆಂಬ ಘೋರ ಸತ್ಯ ಅವಳಿಗರಿವಾಗಿತ್ತು. +ಮುಂದೆಂದೂ ಅದು ದಕ್ಕಲಾರದು ಎಂಬುದು ಕೂಡ ಅರ್ಥವಾಗಿತ್ತು. +ಮೆಲ್ಲನೆ ಅವಳ ತಲೆ ನೇಮಿಸಿ ‘ಸ್ಫೂರ್ತಿ, ಇಷ್ಟೊಂದು ಹತಾಶಳಾಗಬೇಡ. +ನಿನ್ನನ್ನೇ ನಂಬಿರುವ, ನಿನಗಾಗಿಯೇ ತನ್ನೆಲ್ಲ ಪ್ರೀತಿ ತುಂಬಿ ನಿನಗಾಗಿ ಕಾಯುತ್ತಿರುವ ಸುದರ್ಶನನನ್ನು ನೋಡು. +ಈಗ ನಿನಗಾದ ನಿರಾಶೆ ಅವನಿಗಾಗುವುದು ಬೇಡ, ನಿನಗಾದ ನೋವು ಅವನಿಗಾಗುವುದು ಬೇಡ. +ನಕ್ಷತ್ರಕ್ಕಾಗಿ ಆಸೆ ಪಟ್ಟು ಸೂರ್ಯನನ್ನು ಕಳೆದುಕೊಳ್ಳಬೇಡ. +ನಿನ್ನ ಬದುಕಿನ ಸೂರ್ಯ ನಿನ್ನ ಬಾಳನ್ನು ಬೆಳೆಗಿಸಲು ಕಾಯುತ್ತಿದ್ದಾನೆ. +ಇಲ್ಲಿ ಖಾಲಿಯಾದ ಸ್ಥಾನ ಅಲ್ಲಿ ತುಂಬುತ್ತದೆ. +ನೊಂದುಕೊಳ್ಳಬೇಡ ಸ್ಫೂರ್ತಿ. +ನನಗಿಂತ ಸಾವಿರ ಪಾಲು ಉತ್ತಮ ಸಂಗಾತಿಯಾಗ್ತಾನೆ ಸುದರ್ಶನ. +ಪಾಲಿಗೆ ಬಂದಿರುವುದನ್ನು ಸ್ವೀಕರಿಸು ದುಡುಕಬೇಡ. +ನನ್ನಾಸೆ ಇದೆ ನೀನು ಸುದರ್ಶನನೊಂದಿಗೆ ವೈವಾಹಿಕ ಬದುಕಿಗೆ ಕಾಲಿಡಲೇಬೇಕು. +ಇದು ನನ್ನಾಸೆ ಕೂಡ’-ಮಗುವಿಗೆ ಹೇಳಿ ರಮಿಸುವಂತೆ ಹೇಳಿದ. +ಅಳುತ್ತಲೇ ಇದ್ದ ಅವಳ ಮುಖವನ್ನು ಬೆರಳಿನಿಂದ ಎತ್ತಿ ಕಣ್ಣೀರು ಒರೆಸಿದ. +‘ನಮ್ಮ ಸ್ಫೂರ್ತಿ ಇನ್ನೆಂದಿಗೂ ಅಳಬಾರದು. +ಅವಳು ದೈರ್ಯವಂತೆ, ಬದುಕು ಹೇಗೆ ಬರುತ್ತೆ ಹಾಗೆ ಸ್ವೀಕರಿಸುವ ಹೃದಯವಂತೆ, ಸಾಕು ಅತ್ತದ್ದು’ ಸಮಾಧಾನಿಸಿದ. +ನೀರು ತುಂಬಿದ ಕಣ್ಣುಗಳಿಂದಲೇ ಅವನನ್ನು ನೋಡುತ್ತ-‘ನಿಮ್ಮ ಸ್ನೇಹಾನಾದ್ರೂ ನಂಗೆ ಕೊನೆವರೆಗೆ ಕೊಡ್ತೀರಾ. +ನಿಮ್ಮ ಗೆಳತಿಯಾಗಿಯೇ ಉಳಿದುಬಿಡ್ತೀನಿ’ ಆ ನಿರಾಶೆಯಲ್ಲೂ ಮುದ್ದಾಗಿ ಕಂಡಳು. +‘ಮುದ್ದೂ ಸ್ಫೂರ್ತಿ. +ಅದು ಯಾವಾಗಲೂ ನಿಂದೇ. +ಈ ಹೃದಯದ ಗೆಳತಿ ನೀನು’ ಭರವಸೆ ನೀಡಿದ. +ಭರವಸೆಯ ಕೋಲ್ಮಿಂಚು ಹಿಡಿದು ಸಮಾಧಾನಿಸಿಕೊಂಡಳು. +ನಗು ಬಾರದಿದ್ದರೂ ಪೇಲವವಾಗಿ ನಕ್ಕಳು. +‘ಹೀಗೆ ನಗಬೇಡ, ಹೀಗೆ ನಕ್ಕು ನನ್ನೆದೆಗೆ ಇರಿಯಬೇಡ. +ಸಂತೋಷವಾಗಿ ನಗು, ಆ ನಗು ನನಗೆ ಸ್ಫೂರ್ತಿ ನೀಡಬೇಕು. +ಮೊದಲು ಸುದರ್ಶನ್‌ಗೆ ಫೋನ್ ಮಾಡು, ಸಿಹಿ ಸುದ್ದಿ ತಿಳಿಸು ಅವನಿಗೆ. +ನೀವಿಬ್ಬರೂ ಸಂತೋಷವಾಗಿ ನೂರು ಕಾಲ ಬದುಕಬೇಕು’- ಹೃದಯ ತುಂಬಿ ಹರಸಿದ. +ನೋವಿನಲ್ಲೂ ನಕ್ಕಳು. +ಆ ನಗು ಜೀವಂತವಾಗಿರಲಿಲ್ಲ. +ಅದನ್ನು ಮನಗಂಡ ನಿವಾಸ್ ಕಾಲ ಎಲ್ಲವನ್ನೂ ಮರೆಸುತ್ತೆ ಎಂಬ ವೇದಾಂತದ ಮೊರೆ ಹೊಕ್ಕನು. +ತೋಟಕ್ಕೆ ಗಿಡಗಳ ಮಧ್ಯೆ ಬಾಳೆ ಹಾಕಬೇಕು ಅಂದುಕೊಂಡಿದ್ದ ಇಳಾ ಮೊದಲು ಮಣ್ಣು ಪರೀಕ್ಷೆ ಮಾಡಿಸಬೇಕು ಅಂತ ಗೊತ್ತಾದ ಮೇಲೆ ಅದನ್ನು ಮಾಡಿಸಿದಳು. +ಮಣ್ಣು ಪರೀಕ್ಷೆ ಮಾಡಿಸಿ ಬಾಳೆ ಹಾಕಬಹುದು ಅಂತ ಗೊತ್ತಾದ ಮೇಲೆ ಅಂಗಾಂಶ ಕಸಿ ಪದ್ಧತಿಯಿಂದ ಬಾಳೆ ಬೆಳೆದರೆ ಒಳ್ಳೆ ಇಳುವರಿ ಸಿಗುತ್ತೆ ಅಂತ ಓದಿಕೊಂಡಿದ್ದ ಇಳಾ, ಅದೇ ವಿಧಾನದಲ್ಲಿ ಬಾಳೆ ಬೆಳೆಯಲು ನಿರ್ಧರಿಸಿದಳು. +ಅಂಗಾಂಶ ಕಸಿ ಎಂದರೆ ಯಾವುದೇ ಒಂದು ಸಸ್ಯದ ಕಾಂಡ, ಬೇರು ಅಥವಾ ಜೀವಕೋಶಗಳನ್ನು ಬಳಸಿಕೊಂಡು ಪ್ರಯೋಗ ಶಾಲೆಯಲ್ಲಿ ನಿರ್ಜಂತುಕ ಹಾಗು ನಿಯಂತ್ರಿತ ವಾತಾವರಣದಲ್ಲಿ ಅದನ್ನು ಬೆಳೆಸಿ ಅಧಿಕ ಸಂಖ್ಯೆಯಲ್ಲಿ ಸಸಿಗಳನ್ನು ಉತ್ಪಾದಿಸಬಹುದಾಗಿದೆ. +ಇದಕ್ಕೆ ಮೈಕ್ರೋಪೋಗಾನ್ ಎಂದು ಕರೆಯುತ್ತಾರೆ. +ಒಂದು ಕೊಠಡಿಯನ್ನು ಪ್ರಯೋಗ ಶಾಲೆಗಾಗಿ ಮೀಸಲಿಟ್ಟುಕೊಂಡ ಇಳಾ, ತಾಯಿ ಬಾಳೆ ಗಿಡದ ಜೀವಕೋಶದಿಂದ ತೆಗೆದ ಬೇರು, ಕಾಂಡವನ್ನು ತೆಗೆದುಕೊಂಡು ಅದನ್ನು ನಿರ್ಜಂತುಕರಣಗೊಳಿಸಿ ಜಂತುರಹಿತವಾಗಿ ತಯಾರಿಸಿದ ಗಾಜಿನ ಸೀಸೆಗಳಲ್ಲಿ ಇಟ್ಟು ೪೦ ದಿನಗಳ ನಂತರ ಸೀಸೆಯಲ್ಲಿಟ್ಟಿದ್ದ ಕಾಂಡವು ಚಿಕ್ಕ ಚಿಕ್ಕ ಚಿಗುರುಗಳಿಂದ ಸಸಿಗಳಾಗಿ ಮಾರ್ಪಟ್ಟು, ಸಸಿಗಳ ಗುಚ್ಛವೇ ಸೃಷ್ಟಿಯಾಗಿತ್ತು. +ವಿಜ್ಞಾನದ ವಿದ್ಯಾರ್ಥಿನಿಯಾಗಿದ್ದ ಇಳಾಗೆ ಈ ಪ್ರಯೋಗ ತುಂಬ ಖುಷಿ ನೀಡತೊಡಗಿತ್ತು. +ಹೀಗೆ ಬೆಳೆದ ಸಸ್ಯಯದ ಗುಚ್ಛದಿಂದ ೨೧ ದಿನಗಳಿಗೊಮ್ಮೆ ಸಸಿಗಳನ್ನು ಪ್ರತ್ಯೇಕಗೊಳಿಸಬೇಕು. +ಈ ವಿಧಾನವನ್ನು ಎಂಟು ಸ್ಯೆಕಲ್ಗಳ ಅಂದರೆ ೨೧ ದಿನದ ಎಂಟು ಸೈಕಲ್ಗಳ ಕಾಲ ಮಾಡಿ ಬೇರೆ ಗಾಜಿನ ಸೀಸೆಯಲ್ಲಿ ನೆಡಬೇಕಾಗುತ್ತದೆ. + ಗಾಜಿನ ಸೀಸೆಯಲ್ಲಿಟ್ಟ ಒಂದು ಸಸಿ ಬೆಳೆದು ಹೊರಗೆ ಬರಬೇಕಾದರೆ ೧೬೮ ದಿನಗಳಿಂದ ೧೯೦ ದಿನಗಳ ಕಾಲಾವಧಿ ಹಿಡಿಯುತ್ತದೆ. +ಬಾಟಲಿಯಿಂದ ಹೊರ ತೆಗೆದ ಸಸಿಗಳನ್ನು ಹೊರಗಿನ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯಬೇಕೆಂಬ ದೃಷ್ಟಿಯಿಂದ ೨೧ ದಿನಗಳ ಕಾಲ ಟನಲ್ ಹಾಗು ೭೧ ದಿನಗಳ ಕಾಲ ಮಣ್ಣಿನ ಪ್ಲಾಸ್ಟಿಕ್ ಚೀಲಗಳಲ್ಲಿ ಬೆಳೆಸಲಾಗುತ್ತದೆ. +ಬಳಿಕ ಇವುಗಳನ್ನು ಅಂಗಾಂಶ ಕೃಷಿ ಪದ್ಧತಿಯ ಗಿಡಗಳೆಂದು ದೃಡೀಕರಿಸಿ ತೋಟಗಳಲ್ಲಿ ಹಾಗೂ ಗದ್ದೆಗಳಲ್ಲಿ ಬೆಳೆಯಬಹುದು. +ಈ ಬಾರಿ ಎರಡು ಎಕರೆ ಗದ್ದೆಗೂ ಬಾಳೆ ನೆಟ್ಟು ತನ್ನ ಹೊಸ ಪ್ರಯೋಗ ಹೇಗೆ ಫಲ ಕೊಡಬಹುದು ಎಂದು ಪರೀಕ್ಷೆ ನಡೆಸಿದಳು. +ಗಿಡಗಳು ಹುಲುಸಾಗಿ ಬೆಳೆಯುತ್ತಿವೆ, ಗಿಡಗಳಿಗೆ ಕೊಟ್ಟಿಗೆ ಗೊಬ್ಬರದ ಜೊತೆಗೆ ಕುರಿ ಗೊಬ್ಬರವನ್ನು ತರಿಸಿ ಹಾಕಿಸಿದಳು. +ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ರೋಗಗಳು ಭಾದಿಸದಂತೆ ಜಾಗ್ರತೆವಹಿಸಿದ್ದಾಳೆ. +ತಾನು ಕಂಡು ಬಂದಿದ್ದ ಕೇಳಿದ್ದ ಎಲ್ಲಾ ವಿಧಾನಗಳಿಂದಲೂ ತೋಟದ ಆರೈಕೆ ಮಾಡುತ್ತಿದ್ದಾಳೆ. +ಬರೀ ತೋಟ, ಮನೆ ಅಂತಾ ಇಳಾ ಕೆಲಸದಲ್ಲಿ ಮುಳುಗಿಹೋಗಿದ್ದಾಳೆ. +ಬೆಳಗಾದೊಡನೆ ತೋಟಕ್ಕೆ ಹೊರಟುಬಿಡುತ್ತಾಳೆ. +ಈಗ ತೋಟದ ಎಲ್ಲಾ ಕೆಲಸಗಳ ಪರಿಚಯವಾಗಿ ಬಿಟ್ಟಿದೆ. +ಗೊತ್ತಿಲ್ಲದೆ ಇದ್ದುದ್ದನ್ನು ಆಳುಗಳಿಂದಲೇ ಕೇಳಿ ತಿಳಿದುಕೊಂಡಿದ್ದಾಳೆ. +ದೊಡ್ಡಪ್ಪನಲ್ಲಿಯೂ ಕೇಳುತ್ತಾಳೆ. +ಕೃಷಿ ಬಗ್ಗೆ ಇರುವ ಪುಸ್ತಕ ಓದಿ ಸಾಕಷ್ಟು ವಿಚಾರ ತಿಳಿದುಕೊಂಡಿದ್ದಾಳೆ. +ರೇಡಿಯೊದಲ್ಲಿ ಬರುವ ಕೃಷಿರಂಗ ಕಾರ್ಯಕ್ರಮವನ್ನು ತಪ್ಪದೆ ಕೇಳಿಸಿಕೊಳ್ಳುತ್ತಾಳೆ. +ಒಟ್ಟಿನಲ್ಲಿ ಈಗ ತೋಟ ಮಾಡಿಸುವುದು, ತೋಟದ ಬಗ್ಗೆ ತಿಳಿದುಕೊಳ್ಳುವುದು ಎಂದರೆ ಎಲ್ಲಿಲ್ಲದ ಆಸಕ್ತಿ. +ಹೇಗೋ ಇರಬೇಕಾದ ಮಗಳು ಹೇಗೋ ಇರುವುದು ನೀಲಾಳ ಹೊಟ್ಟೆಯಲ್ಲಿ ಸಂಕಟದ ಕಿಚ್ಚು ಏಳುವಂತೆ ಮಾಡುತ್ತದೆ. +ಅದಕ್ಕೆ ಕಾರಣನಾದ ಮೋಹನನ ಬಗ್ಗೆ ಅತೀವ ಕೋಪ ಬರುವುದುಂಟು. +ಆಗೆಲ್ಲ ಮನಸ್ಸಿನ ಶಾಂತಿ ಕಳೆದುಕೊಂಡು ಇಡೀ ರಾತ್ರಿ ನಿದ್ರೆ ಇಲ್ಲದೆ ತೊಳಲಾಡುತ್ತಾಳೆ. +ಮಗಳು ಈ ರೀತಿ ತೋಟ ಸುತ್ತುತ್ತಿದ್ದರೆ ಅದನ್ನು ನೋಡಲಾರದೆ ತನ್ನ ಶಾಲಾ ಕೆಲಸದಲ್ಲಿ ಮುಳುಗಿ ಹೋಗಿಬಿಡುತ್ತಾಳೆ. +ತನ್ನೆಲ್ಲ ಚಿಂತೆ, ಯೋಚನೆಗಳು, ನೋವು, ಸಂಕಟಗಳನ್ನೆಲ್ಲ ಶಾಲೆಯಲ್ಲಿನ ಕೆಲಸದಲ್ಲಿ ಮರೆಯಲು ಪ್ರಯತ್ನಿಸುತ್ತಿದ್ದಾಳೆ. +ಶಾಲಾ ಮಕ್ಕಳನ್ನು ಪ್ರವಾಸ ಕರೆದೊಯ್ಯಲು ಶಾಲೆಯ ಶಿಕ್ಷಕರೆಲ್ಲ ಕುಳಿತು ಚರ್ಚಿಸಿದರು. +ಸಣ್ಣ ಮಕ್ಕಳಾದ್ದರಿಂದ ಜಿಲ್ಲೆಯೊಳಗೆ ಕರೆದೊಯ್ಯಲು ತೀರ್ಮಾನಿಸಿದರು. +ಬರೀ ಕೆಲಸದಲ್ಲಿ ಮುಳುಗಿಹೋಗಿರುವ ಇಳಾಳನ್ನು ಶಾಲಾ ಪ್ರವಾಸದ ಜೊತೆ ಬರಲು ಬಲವಂತಿಸಿದಳು. +ಮೋಹನ ಸತ್ತಾಗಿನಿಂದಲೂ ಯಾವ ಉಲ್ಲಾಸವೂ ಇಲ್ಲದೆ ಕಳೆಯುತ್ತಿದ್ದ ಇಳಾಳನ್ನು ಪ್ರವಾಸಕ್ಕೆ ಕರೆದೊಯ್ದು ಮಕ್ಕಳ ಜೊತೆ ಎರಡು ದಿನ ನಲಿದಾಡಿಕೊಂಡಿರಲಿ. +ಗಂಗಾ ಕೂಡ ಜೊತೆಯಲ್ಲಿ ಇರುವುದರಿಂದ ಒಳ್ಳೆ ಕಂಪನಿ ಸಿಗುತ್ತದೆ ಎಂದು ಇಳಾಳನ್ನು ಹೊರಡಿಸಿದಳು. +ಸಾಕಷ್ಟು ಕೆಲಸವಿದ್ದು ಪ್ರವಾಸ ಎಂದು ಕಾಲ ತಳ್ಳಲು ಮನಸ್ಸಿರದ ಇಳಾ, ನೀಲಾಳನ್ನು ನೋಯಿಸಲಾರದೆ ಬರಲು ಒಪ್ಪಿದಳು. +ಇಳಾಗೆ ಸದಾ ತೋಟದ್ದೇ ಧ್ಯಾನ. +ಎರೆಹುಳು ತಂದು ತೋಟದಲ್ಲಿ ಬಿಟ್ಟಿದ್ದಳು. +ಬಾಳೆ ಸಸಿಯ ಪ್ರಯೋಗ ಬೇರೆ ಮಾಡುತ್ತಿದ್ದಳು. +ಇನ್ನು ದನಗಳ ಮೇಲ್ವಿಚಾರಣೆ ಹಾಲು ಮಾರಾಟ… ಹೀಗೆ ಒಂದು ಗಳಿಗೆಯೂ ಅವಳಿಗೆ ಬಿಡುವಿಲ್ಲ. +ಇನ್ನು ರೈತರ ಸಮಸ್ಯೆ- ಪರಿಹಾರದ ಸಂಘಟನೆಗೆ ಬೇರೆ ಸೇರಿಕೊಂಡಿದ್ದಳು. +ಅವಳ ತಂಡ ಗ್ರಾಮವೊಂದರಲ್ಲಿ ಕಾರ್ಯಕ್ರಮ ನೀಡಬೇಕಿತ್ತು. +ಈ ಬಾರಿ ತಾನೂ ಮಾತನಾಡುವ ಉತ್ಸಾಹ ತೋರಿದ್ದಳು. +ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಊರಿನಲ್ಲಿಯೇ ಕಾರ್ಯಕ್ರಮ ಹಮ್ಮಿಕೊಂಡಿದ್ದರು. +ಅದಕ್ಕೆ ತಯಾರಿ ಮಾಡಿಕೊಳ್ಳಬೇಕಿತ್ತು. +ಆದರೆ ನೀಲಾಳಿಗೆ ಅದ್ಯಾವುದೂ ಅರ್ಥವಾಗುವಂತಿರಲಿಲ್ಲ. +ತಾನು ಶಾಲೆಯ ಕೆಲಸಕ್ಕೆ ಸೇರಿಕೊಂಡು ತನ್ನ ನೋವನ್ನು ಮರೆಯಲು ಪ್ರಯತ್ನಿಸುತ್ತಿರುವಂತೆ ಇಳಾ ಕೂಡ ತೋಟದ ಕೆಲಸ ಮಾಡುತ್ತ ತನಗಾದ ಸಂಕಟವನ್ನು ಮರೆಯುತ್ತಿದ್ದಾಳೆ ಎಂದೇ ಭಾವಿಸಿ ಪ್ರವಾಸಕ್ಕೆ ಕರೆದೊಯ್ಯಲು ತೀರ್ಮಾನಿಸಿದ್ದಳು. +ಅವಳ ವಯಸ್ಸಿನ ಹೆಣ್ಣುಮಕ್ಕಳು ನಲಿದಾಡಿಕೊಂಡು ಸ್ನೇಹಿತರ ಮಧ್ಯೆ ಇರುತ್ತಾರೆ. +ಒಂದೆರಡು ದಿನಗಳಾದರೂ ಹಾಗಿರಲಿ ಎಂದೇ ಅವಳ ತಾಯಿ ಹೃದಯ ಹಾರೈಸಿತ್ತು. +ಶಾಲೆಯಲ್ಲಿ ಒಟ್ಟು ನಲವತ್ತೊಂಬತ್ತು ಮಕ್ಕಳಿದ್ದರು. +ಎಲ್ಲಾ ಮಕ್ಕಳನ್ನು ಕರೆದೊಯ್ಯುವುದೆಂದು ತೀರ್ಮಾನಿಸಿದರು. + ಪ್ರವಾಸದ ದುಡ್ಡನ್ನು ಪೋಷಕರು ಸಂತೋಷದಿಂದಲೇ ಪಾವತಿಸಿದರು. +ಸಾಲದೆ ಇದ್ದರೆ ತಾನು ಉಳಿದಿದ್ದನ್ನು ಕೊಡುವುದಾಗಿ ವಿಸ್ಮಯ್ ತಿಳಿಸಿದನು. +ವಿಸ್ಮಯನನ್ನು ಪ್ರವಾಸಕ್ಕೆ ಬರಲು ಒತ್ತಾಯಿಸಿದರು. +ಸಕಲೇಶಪುರಕ್ಕೆ ಬಂದು ವರ್ಷವಾಗುತ್ತ ಬಂದಿದ್ದರೂ ವಿಸ್ಮಯ್ ಹಾಸನದ ಯಾವ ಸ್ಥಳಗಳನ್ನೂ ನೋಡಿರಲಿಲ್ಲ. +ವಿಶ್ವಖ್ಯಾತ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಮುಂತಾದ ನೋಡಲೇಬೇಕಾದ ಪ್ರವಾಸಿ ತಾಣಗಳಿಗೆ ಹೋಗುತ್ತಿರುವುದರಿಂದ ವಿಸ್ಮಯ್ ಬರಲೇಬೇಕೆಂದು ಜೋಸೆಫ್ ಕೇಳಿಕೊಂಡರು. +ಅವರ ಬಲವಂತಕ್ಕೆ ವಿಸ್ಮಯ ಒಪ್ಪಿಕೊಂಡನು. +ರೆಸಾರ್ಟ್‌ ಕೆಲಸಗಳನ್ನು ವಿನಾಯಕ ತಾನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ. +ಬಸ್ಸಿನ ಒಳಗೆ ಬಂದ ಇಳಾ ವಿಸ್ಮಯಯನನ್ನು ನೋಡಿ ಅಚ್ಚರಿಗೊಂಡಳು. +’ಅರೇ ವಿಸ್ಮಯ್… ಟೂರ್‌ಗೆ ಬರ್ತಾ ಇದ್ದೀರಾ!…’ ಅವರಂತಹ ಶ್ರೀಮಂತ, ತನ್ನ ಕೆಲಸಗಳಲ್ಲಿಯೇ ಸದಾ ಮುಳುಗಿಹೋಗಿ ಪ್ರಪಂಚವನ್ನೇ ಮರೆಯುತ್ತಿದ್ದ ವಿಸ್ಮಯ್ ಎರಡು ದಿನ ಬಿಡುವು ಮಾಡಿಕೊಂಡು ಮಕ್ಕಳ ಜೊತೆ, ತಾನು ಸಂಬಳ ನೀಡುತ್ತಿರುವ ತನ್ನ ಕೈಕೆಳಗಿನ ಕೆಲಸದವರೊಂದಿಗೆ ಪ್ರವಾಸಕ್ಕೆ ಬರುವುದೆಂದರೆ, ಆಶ್ಚರ್ಯದ ಜೊತೆ ಕೊಂಚ ಮುಜುಗರ ಎನಿಸಿತು. +ವಿಸ್ಮಯ್ ಬರ್ತಾರೆ ಅಂದರೆ ತಾನು ಬರುವುದನ್ನು ಕ್ಯಾನ್ಸಲ್ ಮಾಡಬಹುದಿತ್ತು. +ಈ ಅಮ್ಮ ಏನೂ ಹೇಳಲೇ ಇಲ್ಲವಲ್ಲ. +ಏನೇ ಆಗಲಿ ಅವರೆಲ್ಲರ ಬಾಸ್ ವಿಸ್ಮಯ್, ತಗ್ಗಿ ಬಗ್ಗೆ ನಡೆಯುತ್ತಾರೆ. +ಆದರೆ ತಾನು ಹೇಗೆ ಅವನೊಂದಿಗೆ ವರ್ತಿಸಬೇಕು. +ತನಗೇನು ಆತ ಯಜಮಾನ ಅಲ್ಲ. +ತಾನವನ ಕೈಕೆಳಗಿನ ಕೆಲಸದವಳೂ ಅಲ್ಲ, ಚೆನ್ನಾಗಿಯೇ ಪರಿಚಿತನಾಗಿದ್ದರೂ, ಹೀಗೆ ಒಟ್ಟಿಗೆ ಇರುವ ಅವಕಾಶ ಬಂದಿರಲಿಲ್ಲ. +ಹಾಗಾಗಿ ಇಳಾಳಿಗೆ ಇರುಸು ಮುರುಸು ಆಗಿದ್ದಂತೂ ಖಂಡಿತಾ. +ಇಳಾಳನ್ನು ನೋಡಿ ವಿಸ್ಮಯ್‌ಗೆ ಕೂಡ ಆಶ್ಚರ್ಯವಾಗಿತ್ತು. +‘ಅರೆ ಇಳಾ ನೀವೂ ಇದ್ದೀರಾ, ವೆರಿಗುಡ್, ನಿಮ್ಮಂತಹವರು ಬಸ್ಸಿನಲ್ಲಿದ್ರೆ ಬಸ್ಸಿಗೆ ಒಂದು ರೀತಿ ಕಳೆ ಬಂದುಬಿಡುತ್ತೆ. +ನಿಮ್ಮನ್ನು ನೋಡಿ ತುಂಬಾ ಖುಷಿಯಾಗ್ತಾ ಇದೆ’ ನೇರವಾಗಿಯೇ ತನಗಾದ ಸಂತೋಷವನ್ನು ಹೇಳಿಬಿಟ್ಟ. +ಅಯ್ಯೋ, ನಾನು ನೋಡಿದ್ರೆ ಇವನು ಯಾಕಪ್ಪ ಬಂದಿದಾನೆ ಅಂತ ಅಂದುಕೊಂಡ್ರೆ, ಇವನೇನು ನನ್ನ ನೋಡಿ ಖುಷಿಪಡ್ತ ಇದ್ದಾನಲ್ಲ ಅಂತ ಮನಸ್ಸಿನಲ್ಲಿ ಅಂದುಕೊಂಡು ಅವನತ್ತ ಒಂದು ನಗೆ ಬೀರಿ ಹಿಂದೆ ಹೋಗಿ ಕುಳಿತಳು. +ಮಕ್ಕಳೆಲ್ಲ ಬಸ್ಸಿಗೆ ಹತ್ತಿಕೊಂಡರು. +ಕಳಿಸಿಕೊಡಲು ಮಕ್ಕಳ ಹೆತ್ತವರು ಬಂದಿದ್ದು, ಸಂಭ್ರಮದಿಂದ ತಮ್ಮ ಮಕ್ಕಳಿಗೆ- ‘ಟೀಚರ್ ಕೇಳಿದ ಹಾಗೆ ಕೇಳಬೇಕು. +ಅವರನ್ನು ಬಿಟ್ಟು ಎಲ್ಲೂ ಹೋಗಬಾರದು’ ಅಂತ ಎಚ್ಚರಿಕೆ ನೀಡುತ್ತಿದ್ದರು. +ಕೊಂಚ ಆತಂಕ ಹೊಂದಿದ್ದ ಪೋಷಕರು ‘ನಮ್ಮ ಮಗು ಸ್ವಲ್ಪ ತುಂಟ, ಅವನ ಮೇಲೆ ಸದಾ ಒಂದು ಕಣ್ಣು ಇಟ್ಟಿರಿ. +ಜೋಪಾನ’ ಅಂತ ಶಿಕ್ಷಕರನ್ನು ಕೇಳಿಕೊಳ್ಳುತ್ತಿದ್ದರು. +‘ನೀವೇನು ಹೆದರಿಕೊಳ್ಳಬೇಡಿ, ಎಲ್ಲರನ್ನು ಜೋಪಾನವಾಗಿ ಕರ್ಕೊಂಡು ಬರ್ತೀವಿ’ ಅಂತ ಭರವಸೆ ನೀಡಿದರು. +ಬಸ್ಸು ಹೊರಟಿತು. +ಅವರವರ ಮಕ್ಕಳಿಗೆ ಕೈ ಬೀಸಿ ಶುಭ ಕೋರಿದರು. +ಮೊದಲು ಸಕಲೇಶಪುರದ ಮಂಜರಾಬಾದ್ ಕೋಟೆಗೆ ಭೇಟಿ ನೀಡಿದರು. +ಇಳಾ ಇಷ್ಟು ವರ್ಷ ಸಕಲೇಶಪುರದಲ್ಲಿದ್ದರೂ ಕೋಟೆ ನೋಡಿರಲಿಲ್ಲ. +ಒಂದೆರಡು ಸಾರಿ ಅಲ್ಲಿಗೆ ಹೋಗೋಣ ಎಂದುಕೊಂಡಿದ್ದರೂ, ಕಡಿಮೆ ಜನ ಅಲ್ಲಿ ಹೋಗೋದು ಅಪಾಯ ಎಂಬ ಕಾರಣಕ್ಕೆ ಹೋಗಲಾಗಿರಲೇ ಇಲ್ಲ. +ಭೂಮಟ್ಟದಿಂದ ೩೩೯೩ ಅಡಿ ಎತ್ತರದಲ್ಲಿರುವ ಆಡಾಣಿ ಗುಡ್ಡದ ಮೇಲೆ ಟಿಪ್ಪು ಕೋಟೆಯನ್ನು ನಿರ್ಮಿಸಿದ್ದ. +ಸುಮಾರು ೨೫೨ ಮೆಟ್ಟಿಲುಗಳಿದ್ದವು. +ಮಕ್ಕಳೆಲ್ಲ ಖುಷಿಯಾಗಿ ಹಾರಾಡುತ್ತ ಪುಟ ಪುಟವೇ ಮೆಟ್ಟಿಲು ಹತ್ತುತ್ತಿದ್ದವು. +ದೊಡ್ಡವರಿಗೆ ಹತ್ತಲು ಶ್ರಮ ಎನಿಸಿತ್ತು. +ನೀಲಾ, ಇಳಾ ಕಷ್ಟದಿಂದ ಒಂದೊಂದೇ ಮೆಟ್ಟಿಲು ಹತ್ತುತ್ತಿದ್ದರೆ, ವಿಸ್ಮಯ್ ಅವರನ್ನು ನೋಡಿ ‘ಅರೆ… ಅಮ್ಮ, ಮಗಳಿಬ್ಬರಿಗೂ ಡೋಲಿ ತರಿಸಬೇಕಾಗಿತ್ತು. +ಏನಪ್ಪ ಮಾಡೋಣ, ಪೂರ್ತಿ ಹತ್ತುತಾರೋ ಇಲ್ಲವೊ’ ಅಂತ ಛೇಡಿಸಿದ. +ಅವನ ಮಾತು ಅಪಮಾನ ಅನಿಸಿ ‘ನಾವು ಮಲೆನಾಡಿನವರು ದಿನಾ ಇಂತಹ ಗುಡ್ಡ ಹತ್ತಿ ಇಳಿಯೋರು, ನಮಗೇನು ಕಷ್ಟ ಇಲ್ಲ ಹತ್ತೋಕೆ’ ಅಂತ ಉತ್ತರಿಸಿ ಸರಸರನೇ ಹತ್ತೋಕೆ ಶುರು ಮಾಡಿದಳು. +ಅವಳ ಸಿಡುಕು ಕಂಡು ನಗುತ್ತ- ’ನಿಧಾನ, ನಿಧಾನ, ಬಿದ್ರೆ ನಾನಂತೂ ಹಿಡ್ಕೊಳ್ಳೋದಿಲ್ಲ. +ಇದೇ ಮೊದಲ ಸ್ಥಳ. +ಇನ್ನು ಇದೆ ನೋಡೋ ಪ್ಲೇಸ್‌ಗಳು’ ರೇಗಿಸುತ್ತಲೇ ಅವಳ ಹಿಂದೆ ತಾನು ಮೆಟ್ಟಿಲೇರತೊಡಗಿದ. +ಅವನ ಮೇಲಿನ ಹಠಕ್ಕೆ ಕೋಟೆ ಮೇಲೆ ಹತ್ತಿ ಬಂದವಳಿಗೆ ಸುಸ್ತಾದಂತಾಗಿ ಹುಲ್ಲಿನ ಮೇಲೆ ಕುಳಿತುಬಿಟ್ಟಳು. +ಗಂಟಲೊಣಗಿ ನೀರು ಬೇಕೆನಿಸಿತು. +ನೀರಿನ ಬಾಟಲು ನೀಲಾಳ ಬಳಿ ಇತ್ತು. +ಇಳಾ ಕುಳಿತಿದ್ದನ್ನು ನೋಡಿ ವಿಸ್ಮಯ್ ಕೂಡ ಅವಳ ಪಕ್ಕ ಕೂರುತ್ತ – ‘ಎಷ್ಟು ಚೆನ್ನಾಗಿದೆ ಈ ಕೋಟೆ. +ನಕ್ಷತ್ರದ ಆಕಾರದಲ್ಲಿದೆ- ಆ ಬಾಗಿಲುಗಳು ನೋಡಿ ಅದೆಷ್ಟು ಸುಂದರವಾಗಿದೆ. +ಈ ತಣ್ಣನೆ ಗಾಳಿ, ಹುಲ್ಲುಹಾಸು ನೋಡ್ತಾ ಇದ್ರೆ ಇಲ್ಲೇ ಇದ್ದು ಬಿಡೋಣ ಅನಿಸ್ತಾ ಇದೆ’ ಎಂದು ಹೇಳಿದ. +ಅಷ್ಟರಲ್ಲಾಗಲೇ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಇಳಾ ಕೂಡ ಮನಸೋತಿದ್ದಳು. +‘ಬನ್ನಿ ಮಕ್ಕಳೆಲ್ಲ ಮೇಲೆ ಹತ್ತಿದ್ದಾರೆ. +ನಾವು ಹತ್ತೋಣ’ ಎಂದು ಎದ್ದಳು. +ಕೋಟೆಯ ಹಿಂಬದಿಯಲ್ಲಿ ದೊಡ್ಡ ಕಂದಕ ಕಾಣಿಸಿತು. +ಕೋಟೆಯ ರಕ್ಷಣೆಗಾಗಿ ಸುತ್ತ ಇರುವ ಕಂದಕದಲ್ಲಿ ನೀರು ಬಿಟ್ಟು ಮೊಸಳೆ ಸಾಕುತ್ತಿದ್ದರು. +ಯಾವ ವೈರಿಯೂ ಅಲ್ಲಿ ಹತ್ತಿ ಬರದಂತೆ ಮೊಸಳೆಗಳು ಕಾಯುತ್ತಿದ್ದವು ಎಂದು ಅಲ್ಲಿ ಬಂದಿದ್ದ ಯಾರೋ ಮಾತಾಡಿಕೊಳ್ಳುತ್ತಿದ್ದರು. +ನಾಲ್ಕು ಕಡೆಯಲ್ಲೂ ಗೋಪುರದಂತೆ ಪುಟ್ಟ ಕೋಣೆಗಳಿದ್ದವು. +ಅಲ್ಲಿ ಹೋಗಿ ನೋಡಿದರೆ ಸುತ್ತಲ ಪ್ರದೇಶ ಮನಮೋಹಕವಾಗಿ ಕಾಣಿಸುತ್ತಿತ್ತು. +ಚೌಕಾಕಾರವಾಗಿ ಕಾಣುವ ರಹಸ್ಯ ಕೋಣೆ, ಮದ್ದಿನ ಕೋಣೆ, ಅಸ್ತ್ರಗಳನ್ನು ಸಂಗ್ರಹಿಸುತ್ತಿದ್ದ ಕೋಣೆ ಕಾಣಿಸಿತು. +ಕೋಟೆಯ ಮಧ್ಯ ಬಿಂದುವಿನಲ್ಲಿ ನಾಲ್ಕು ದಿಕ್ಕುಗಳಲ್ಲಿಯೂ ಮೆಟ್ಟಿಲಿರುವ ಕೊಳ ಇತ್ತು. +ಕುದುರೆಗಳನ್ನು ಕಟ್ಟುವ ಲಾಯ ಇತ್ತು. +‘ರೀ ಇಳಾ ಈ ಕೋಟೆ ಕೊಡ್ತಾರಾ ಕೇಳಿ, ಇಲ್ಲಿ ಒಂದು ಫೈವ್‌ಸ್ಟಾರ್ ಹೋಟೆಲ್ ಕಟ್ಟಿಸಿಬಿಡ್ತೀನಿ. +ನಾನೂ ಇಲ್ಲೇ ಒಂದು ಅರಮನೆ ಕಟ್ಟಿಕೊಂಡು ಇದ್ದುಬಿಡೋಣ ಅನಿಸ್ತಾ ಇದೆ. +ರಾಜನಂತೆ ಇರಬಹುದು ಇಲ್ಲಿ’ ಎಂದ. +‘ಆದ್ರೆ ಯಾವ ರಾಣೀನೂ ಇಲ್ಲಿ ಇರೋಕೆ ಒಪ್ಪೊಲ್ಲ ಬಿಡಿ. +ಪಾಪ ರಾಜ ಮಾತ್ರ ಇರಬೇಕಾಗುತ್ತೆ’ ಇಳಾ ಪ್ರತಿಯಾಗಿ ನುಡಿದಳು. +‘ಹೌದಾ, ಹಾಗಾದ್ರೆ ಬೇಡಾ ಬಿಡಿ, ರಾಣಿ ಇಲ್ಲದ ಮೇಲೆ ರಾಜ ಒಬ್ಬನೇ ಇರೋಕೆ ಆಗುತ್ತಾ’ ಅವಳಿಗೆ ಸರಿಸಮನಾಗಿ ಉತ್ತರಿಸಿ ಗಂಭೀರವಾದ ವಿಷಯವನ್ನೇನೋ ತೀರ್ಮಾನ ಮಾಡಿದಂತೆ ನುಡಿದಾಗ ಇಳಾಗೆ ನಗು ತಡೆಯಲಾಗಲಿಲ್ಲ. +ಸ್ವಚ್ಛಂದವಾಗಿ ನಗುತ್ತಿದ್ದವಳನ್ನ ಬೆರಗಿನಿಂದ ನೋಡಿದ ವಿಸ್ಮಯ್. +ಅದೆಷ್ಟು ಸುಂದರವಾಗಿ ನಗುತ್ತಾಳೆ ಎಂದು ಮೊಟ್ಟ ಮೊದಲನೆಯ ಬಾರಿಗೆ ಅನ್ನಿಸಿತು. +ಇಳಾ ನಗುತ್ತಲೇ ಅವನೆಡೆ ನೋಡಿದಳು. +ಅಂತೂ ರಾಣಿ ಇಲ್ಲದೆ ಇಲ್ಲಿ ಅರಮನೆ ಕಟ್ಟಿಸೊಲ್ಲ ಬಿಡಿ, ಗ್ರೇಟ್ ಲಾಸ್ ನಮ್ಮ ಜನರಿಗೆ. +ಮೈಸೂರಿನ ಅರಮನೆಯಂತೆ ಇಲ್ಲೊಂದು ಆರಮನೆ ಆಗಿದ್ದಿದ್ರೆ ಕೋಟೆ ಜೊತೆ ಅರಮನೆಯನ್ನೂ ನೋಡಿ ಜನ ಸಂತೋಷಪಡ್ತಾ ಇದ್ರು. +ಹೋಗ್ಲಿ ಬಿಡಿ ಆ ಅದೃಷ್ಟ ಇಲ್ಲ ನಮಗೆ. +ಎಲ್ಲಾ ಕೆಳಗೆ ಇಳಿಯುತ್ತಿದ್ದಾರೆ ಹೋಗೋಣ’ ಮೆಟ್ಟಿಲು ಇಳಿಯಲು ಪ್ರಾರಂಭಿಸಿದಳು. +ಇಳಿಯುವಾಗ ಮುಗ್ಗರಿಸಿದಂತಾಗಿ ಪಕ್ಕದಲ್ಲಿ ಇಳಿಯುತ್ತಿದ್ದ ವಿಸ್ಮಯನನ್ನು ಗಟ್ಟಿಯಾಗಿ ಹಿಡಿದುಕೊಂಡಳು. +‘ಜೋಪಾನ, ಮೆಲ್ಲಗೆ ಇಳಿಯಿರಿ’ ಕಿವಿಯ ಬಳಿ ವಿಸ್ಮಯ್ ಉಸುರಿದ. +ಅವನ ಧ್ವನಿಯಿಂದ ಕಿವಿ ಬೆಚ್ಚಗಾದಂತಾಗಿ ತಟ್ಟನೆ ಅವನ ಕೈ ಬಿಟ್ಟು ಸರಸರನೇ ಇಳಿದು ಮಕ್ಕಳನ್ನು ಸೇರಿಕೊಂಡಳು. +ಅವಳು ಇಳಿಯುತ್ತಿರುವುದನ್ನೇ ನೋಡುತ್ತ ವಿಸ್ಮಯ್ ಒಂದೊಂದೇ ಮೆಟ್ಟಿಲು ಇಳಿಯುತ್ತ ಯಾವುದೋ ಹೊಸ ಲೋಕದಲ್ಲಿ ತೇಲಿ ಹೋಗುತ್ತಿರುವಂತೆ ಭಾಸವಾಗಿ ಏನಿದು ಹೊಸತನ ಎಂದು ತಲೆ ಕೊಡವಿಕೊಂಡ. +ಇಳಾ ಬಗ್ಗೆ ಅದೇನೋ ಭಾವ ಅವನಲ್ಲಿ ಮೊಳಕೆಯೊಡೆಯಿತು. +ಕೋಟೆ ನೋಡಿಕೊಂಡು ಕೊಣನೂರು ತೂಗು ಸೇತುವೆ ತಲುಪಿದರು. +ಕರ್ನಾಟಕದ ಅತಿ ಉದ್ದದ ಎರಡನೇ ತೂಗುಸೇತುವೆ ಇದು. +ಸುಮಾರು ೧ ಕಿಲೋಮೀಟರ್ ಉದ್ದವಿದೆ. +ಕಾವೇರಿ ನದಿಗೆ ಅಡ್ಡಲಾಗಿ ಈ ಸೇತುವೆ ಕಟ್ಟಲಾಗಿದೆ. +ಅಲ್ಲಿಯೇ ಸಮೀಪ ದೇವಸ್ಥಾನದ ಬಳಿ ಮಕ್ಕಳೆಲ್ಲರಿಗೂ ಕಟ್ಟಿಕೊಂಡು ಹೋಗಿದ್ದ ಪಲಾವ್, ಮೊಸರನ್ನವನ್ನು ಹಂಚಿದರು. +ಮಕ್ಕಳು ಊಟ ಮಾಡಿ ನದಿಯ ನೀರಿನೊಂದಿಗೆ ಆಟವಾಡಿದರು. +ಇಳಾ ವಿಸ್ಮಯನಿಂದ ದೂರವೇ ಕುಳಿತಿದ್ದಳು. +ಸಹಜವಾಗಿ ಅವನೊಂದಿಗಿರಲು ಏಕೋ ಸಂಕೋಚವೆನಿಸಿತ್ತು. +ತಾನು ಅವನ ಕೈಹಿಡಿದುಕೊಂಡಾಗ ತನ್ನ ಬಗ್ಗೆ ಏನೆಂದುಕೊಂಡಾನೋ, ಥೂ ತಾನಾದರೂ ಗಂಗಾ ಜೊತೆಗೆ ಇರುವ ಬದಲು ಅವನೊಂದಿಗೆ ಏಕೆ ಕೋಟೆ ಹತ್ತಬೇಕಾಯಿತು. +ತನ್ನದೇ ತಪ್ಪು ಎಂದುಕೊಂಡು ಆದಷ್ಟು ಗಂಗಾ ಜೊತೆಯೇ ಇರತೊಡಗಿದಳು. +ಈಗ ಅವರು ರುದ್ರಪಟ್ಟಣದ ಸಪ್ತಸ್ವರ ದೇವತಾ ಧ್ಯಾನ ಮಂದಿರದಲ್ಲಿದ್ದರು. +ಕರ್ನಾಟಕದಲ್ಲಿಯೇ ಸಂಗೀತ ಗ್ರಾಮವೆಂದು ಹೆಸರಾದ ಊರು ಅದು. +ತಂಬೂರಿ ಆಕಾರದ ೫೨ ಅಡಿ ಎತ್ತರ ವುಳ್ಳ, ಸಂಗೀತ ಸ್ವರಗಳನ್ನು ಪ್ರತಿನಿಧಿಸುವ ಸಂಗೀತ ಸ್ವರಗಳನ್ನು ಪ್ರತಿನಿಧಿಸುವ ಸಂಗೀತಾಚಾರ್ಯರುಗಳಾದ ಪುರಂದರ, ಕನಕ, ವಾದಿರಾಜ, ತ್ಯಾಗರಾಜ, ಮುತ್ತುಸ್ವಾಮಿ, ಶ್ಯಾಮಾಶಾಸ್ತ್ರಿ ಹಾಗೂ ವಿದ್ಯಾ ಅಧಿದೇವತೆಯಾದ ಸರಸ್ವತಿ ವಿಗ್ರಹಗಳನ್ನು ಇರಿಸಿದ್ದಾರೆ. +ವಿಶ್ವದಲ್ಲಿಯೇ ಈ ನಾದ ಮಂಟಪ ಮೊದಲನೆಯದಾಗಿದೆ. +ಪ್ರತಿವರ್ಷ ಮೂರುದಿನ ಸಂಗೀತ ಮಹೋತ್ಸವ ನಡೆದು ನಾಡಿನ ಪ್ರಸಿದ್ಧ ಸಂಗೀತಗಾರರು, ಸಂಗೀತಾಸಕ್ತರು ಇಲ್ಲಿ ಸೇರುತ್ತಾರೆ. +ದೇವಾಲಯದ ಒಳಗೆ ಕಾಲಿಟ್ಟ ಕೂಡಲೇ ತಂಬೂರಿಯ ಝೇಂಕಾರ ಕೇಳಿಸತೊಡಗುತ್ತದೆ. +ಒಂದೊಂದು ವಿಗ್ರಹವನ್ನು ಪಾದ ಮುಟ್ಟಿ ನಮಸ್ಕರಿಸಿದೊಡನೇ ಆ ವಿಗ್ರಹದ ವ್ಯಕ್ತಿಯ ಬಗ್ಗೆ ಎಲ್ಲಾ ಮಾಹಿತಿಗಳು ಧ್ವನಿವರ್ಧಕದ ಮೂಲಕ ಕೇಳಿಸತೊಡಗುತ್ತದೆ. +ಈ ವಿಶಿಷ್ಟ ರೀತಿಯ ವ್ಯವಸ್ಥೆಯಿಂದಾಗಿಯೇ ಅಲ್ಲಿ ಬಂದವರ ಮನಸ್ಸು ಸೆಳೆಯುತ್ತದೆ. +ಪೂಜೆ ಕೂಡ ಓಂಕಾರದಿಂದಲೇ ನಡೆಯುತ್ತದೆ. +ಇಲ್ಲಿ ಕೆಲ ನಿಮಿಷ ಧ್ಯಾನಾಸಕ್ತರಾದರೆ ಮನಸ್ಸಿನ ವಿಕಾರಗಳೆಲ್ಲ ಮರೆಯಾಗಿ ನೆಮ್ಮದಿ ನೆಲೆಸುತ್ತದೆ. +ಈ ವಿಶಿಷ್ಟ ದೇವಾಲಯವನ್ನು ನೋಡಿ ಎಲ್ಲರೂ ಮುದಗೊಂಡರು. +ಇಂಥ ಅಪರೂಪದ ದೇವಾಲಯವಿರುವುದೇ ತಮಗೆ ತಿಳಿದಿಲ್ಲವಲ್ಲ ಎಂದು ಮಾತಾಡಿಕೊಂಡರು. +ಅಲ್ಲಿಂದ ಮುಂದಕ್ಕೆ ಗೊರೂರು ನೋಡಿಕೊಂಡು ಅಲ್ಲಿನ ಪ್ರವಾಸಿ ಮಂದಿರದಲ್ಲಿ ಉಳಿದುಕೊಂಡರು. +ಗೊರೂರಿನ ಅಣೆಕಟ್ಟೆ ಭವ್ಯವಾಗಿತ್ತು. +ಒಂದು ಬಾಗಿಲಿನಲ್ಲಿ ನೀರು ಬಿಟ್ಟಿದ್ದರು. +ಅದು ರ್ಭೂರ್ಗರೆಯುತ್ತ ಧುಮುಕುತ್ತಿತ್ತು. +ಎಲ್ಲಾ ಬಾಗಿಲಲ್ಲೂ ನೀರು ಬಿಟ್ಟಾಗ ತುಂಬ ರಮ್ಯವಾಗಿರುತ್ತದೆ. +ನೀರು ಕೆಳಗೆ ಬಿದ್ದು ಅಷ್ಟೆ ಎತ್ತರಕ್ಕೆ ಧುಮ್ಮಿಕ್ಕುವ ರಮಣೀಯತೆ ನೋಡುವುದೇ ಕಣ್ಣಿಗೆ ಆನಂದ. +ಸುತ್ತಲೂ ಮಂಜಿನ ಹನಿಯಂತೆ ತುಂತುರ ಹನಿಗಳು ಆಮಿಸಿಕೊಂಡಿರುತ್ತದೆ. +ಅದನ್ನು ಬಣ್ಣಿಸುವುದಕ್ಕಿಂತ ನೋಡುವುದೇ ಚೆನ್ನ ಎಂದು ಡ್ರೈವರ್ ವಿವರಣೆ ನೀಡಿದ. +ಅಣೆಕಟ್ಟೆಯ ಮೇಲೆ ಹತ್ತಿದರೆ ಕಣ್ಣಳತೆಗೂ ಮೀರಿ ನಿಂತಿರುವ ಜಲಸಾಗರ, ಇದೊಂದು ಅವೂರ್ವವಾದ ದೃಶ್ಯಕಾವ್ಯ. +ಅಲ್ಲಿಂದ ಮುಂದೆ ಬೇಲೂರು, ಹಳೆಬೀಡು ನೋಡಿದರು. +ಶಿಲ್ಪಕಲೆಯ ಆ ತವರೂರು ಕಣ್ಮನ ತಣಿಸಿದವು. +ಅಲ್ಲಿನ ಶಿಲ್ಪಕಲಾ ವೈಭವ ಕಂಡು ಬೆರಗಾದರು ಮೂಕರಾದರು. + ವಿಸ್ಮಯ್ ಇಡೀ ದೇವಾಲಯವನ್ನು ಎರಡೆರಡು ಬಾರಿ ಸುತ್ತಿದನು. +ಒಂದೊಂದು ಶಿಲಾಬಾಲಕಿಯ ಮುಂದೂ ನಿಂತು ಇಂಚಿಂಚೂ ಕಣ್ತುಂಬಿಕೊಂಡನು. +ಅವನ ಆಸಕ್ತಿಯನ್ನು ಕುತೂಹಲದಿಂದ ಇಳಾ ಗಮನಿಸಿದಳು. +ಭಾವುಕನಾಗಿ, ತನ್ಮಯನಾಗಿ ಶಿಲಾ ಸೌಂದರ್ಯವನ್ನು ನೋಡುತ್ತ ಮೈಮರೆತಿದ್ದುದನ್ನು ಕಂಡು ಒಳ್ಳೆ ಭಾವನಜೀವಿ ಎಂದು ಮನದಲ್ಲಿಯೇ ಅಂದುಕೊಂಡಳು. +ಹಾಗೆ ನೋಡುವಾಗ ಅಕಸ್ಮಿಕವಾಗಿ ಕಣ್ಣುಗಳು ಮೇಳೈಸಿದರೆ ತಟಕ್ಕನೇ ದೃಷ್ಠಿ ಬದಲಿಸಿಕೊಂಡು ಬಿಡುತ್ತಿದ್ದಳು. +ಏನೇ ಆಗಲಿ ತಾನು ವಿಸ್ಮಯಯನಿಂದ ದೂರವನ್ನು ಕಾಯ್ದುಕೊಳ್ಳಬೇಕೆಂದು ನಿರ್ಧರಿಸಿ ಬಿಟ್ಟಿದ್ದಳು. +ಅವಳೇನೋ ನಿರ್ಧರಿಸಿಕೊಂಡು ಬಿಟ್ಟಿದ್ದಳು. +ಆದರೆ ವಿಸ್ಮಯನಿಗೇನು ಈ ನಿರ್ಧಾರದ ಅರಿವಿರಲಿಲ್ಲವಲ್ಲ. +ಹಾಗಾಗಿ ಅವನು ಹೆಚ್ಚು ಹೆಚ್ಚಾಗಿ ಅವಳ ಸಮೀಪವೇ ಬರುತ್ತಿದ್ದ. +ಮಿಕ್ಕವರೆಲ್ಲ ಅವನು ಶಾಲೆಯ ಸ್ಥಾಪಕ, ಸಂಬಳ ಕೊಡುವ ದಣಿ ಎಂದು ವಿಪರೀತ ಗೌರವ ಕೊಡುತ್ತ ಅಂತರವನ್ನು ಕಾಯ್ದುಕೊಳ್ಳುತ್ತಿದ್ದರೆ, ಅವನು ಯಾರೊಂದಿಗೆ ಬೆರೆಯಲು ಸಾಧ್ಯವಿತ್ತು. +ಹಾಗಾಗಿಯೇ ಪ್ರವಾಸದುದ್ದಕ್ಕೂ ಇಳಾ ದೂರ ದೂರ ಹೋಗುತ್ತಿದ್ದರೂ ತಾನಾಗಿಯೆ ಅವಳ ಸಮೀಪ ಸುಳಿಯುತ್ತಿದ್ದ. +ಅಲ್ಲಿದ್ದವರಿಗೂ ಇದು ಅಸಹಜ ಎನಿಸಿರಲಿಲ್ಲ. +ಆದರೇಕೋ ಇಳಾಳಿಗೆ ಮಾತ್ರ ಇದು ಸರಿಹೋಗುತ್ತಿರಲಿಲ್ಲ. +ಅವನು ಅದಕ್ಕಾಗಿ ತಲೆಕೆಡಿಸಿಕೂಂಡಂತೆ ಕಾಣುತ್ತಿರಲಿಲ್ಲ. +ಬೇಲೂರು, ಹಳೇಬೀಡು ನೋಡಿಕೊಂಡು ಶ್ರವಣಬೆಳಗೊಳಕ್ಕೆ ಹೊರಟರು. +ಈ ಬಾರಿ ವಿಸ್ಮಯನಿಂದ ಛೇಡಿಸಿಕೊಳ್ಳಬಾರದೆಂದು ಮೊದಲೆ ಬೆಟ್ಟಹತ್ತುವ ಉತ್ಸಾಹ ತೋರಿದಳು. +ಅರ್ಧ ಮೆಟ್ಟಿಲು ಏರುವಷ್ಟರಲ್ಲಿ ಅವಳ ಉತ್ಸಾಹ ಕಳೆದುಹೋಗಿತ್ತು. +ನೀಲಾ ತಾನು ಬೆಟ್ಟ ನೋಡಿದ್ದೇನೆ ತಾನು ಕೆಳಗೆ ಇರುವುದಾಗಿ ಹೇಳಿ ಉಳಿದುಬಿಟ್ಟಿದ್ದಳು. +ಮಕ್ಕಳೊಂದಿಗೆ ಗಂಗಾ, ಜೋಸೆಫ್ ಮತ್ತಿತರ ಶಿಕ್ಷಕರು ಮುಂದೆ ಮುಂದೆ ಹೋಗಿಯೇ ಬಿಟ್ಟಾಗ ವಿಸ್ಮಯ್ ಅವಳಿಗಾಗಿ ಹಿಂದೆ ಉಳಿದ. +ಬಾಟಲಿಯಲ್ಲಿದ್ದ ನೀರು ನೀಡಿ ‘ನೀರು ಕುಡಿದು ಸುಧಾರಿಸಿಕೊಳ್ಳಿ. . ನಿಧಾನವಾಗಿ ಬೆಟ್ಟ ಹತ್ತೋಣ’ ಎಂದನು. +ಅವನ ಮೊಗದಲ್ಲೇನಾದರೂ ಛೇಡಿಸುವ ಭಾವವಿದೆಯೇ ಎಂದು ಹುಡುಕಿದಳು. +ಅಲ್ಲಿ ಅಂತಹ ಭಾವವೇನೂ ಕಾಣದೆ, ಬದಲಾಗಿ ಅವಳ ಬಗ್ಗೆ ವಿಪರೀತ ಕಾಳಜಿ ಕಾಣಿಸಿತು. +ನೀರು ಕುಡಿಯುವ ತನಕ ಕಾದಿದ್ದು ‘ಹೋಗೋಣ್ವ’ ಎಂದ. +‘ಇಳಾ ಕೆಳಗೆ ನೋಡಿ, ಕೆಳಗಿರುವವರೆಲ್ಲ ಎಷ್ಟು ಚಿಕ್ಕದಾಗಿ ಕಾಣಿಸುತ್ತ ಇದ್ದಾರೆ, ಹಿಂದೆ ಒಂದು ಸಲ ಶಾಲಾ ಟ್ರಿಪ್‌ಗೆಂದು ಈ ಬೆಟ್ಟಕ್ಕೆ ಬಂದಿದ್ದೆ. +ಆಗ ನಾನು ತುಂಬಾ ತರಲೆ, ಗೋಮಟೇಶ್ವರ ಯಾಕೆ ಚಡ್ಡಿ ಹಾಕಿಕೂಂಡಿಲ್ಲ ಅಂತ ಮೇಷ್ಟ್ರನ್ನ ಕೇಳಿ ಬೈಸಿಕೊಂಡಿದ್ದೆ. +ಇಳಿವಾಗ ಮೆಟ್ಟಿಲಿನಿಂದ ಇಳಿಯದೆ ಆ ಕಡೆ ಜಾರ್ಕೊಂಡು ಹೋದ್ರೆ ಚೆನ್ನಾಗಿರುತ್ತೆ ಅಂತ ಜಾರೋಕೆ ಹೋಗಿ ಒದೆ ತಿಂದಿದ್ದೆ. +ಅದೆಲ್ಲ ಈಗ ನೆನಪಾಗುತ್ತೆ ನೋಡಿ, ಆ ಜೀವನವೇ ಒಂದು ರೀತಿ ಚೆನ್ನಾಗಿತ್ತು’ ಅಂತ ಹೇಳಿ ಅವಳನ್ನು ನಗಿಸಿದ್ದ. +ಅವನ ಜೊತೆ ಮಾತಾಡಿಕೊಂಡು ಬೆಟ್ಟ ಹತ್ತಿದ್ದ ಇಳಾಗೆ ಗೊತ್ತಾಗಲಿಲ್ಲ. +ತುಂಬಾ ಸಾಕಾಯ್ತು ಅನ್ನಿಸಿದಾಗ ಅವಳ ಭುಜ ಹಿಡಿದುಕೊಂಡು ಮೇಲೆ ಹತ್ತಿಸಿದ. +‘ಇಳಾ, ನಿಮ್ಮ ಜೊತೆ ಹೀಗೆ ಹತ್ತುತ್ತಾ ಇದ್ರೆ ಇಂತ ನಾಲ್ಕು ಬೆಟ್ಟನಾದ್ರು ಏರ್ತೀನಿ ಅಂತ ಅನ್ನಿಸುತ್ತ ಇದೆ, ನಾನು ಈ ಟೂರ್‌ಗೆ ಬರದೆ ಇದ್ದಿದ್ರೆ ನಿಮ್ಮ ಕಂಪನಿಯನ್ನ ಮಿಸ್ ಮಾಡಿಕೊಳ್ತ ಇದ್ದೆ. +ನಂಗೆ ನೀವು ತುಂಬಾ ಇಷ್ಟವಾಗಿಬಿಟ್ರಿ’ ಅವಳನ್ನ ನೋಡುತ್ತ ಹೇಳ್ತಾ ಇದ್ರೆ ಇಳಾಗೆ ಕಳವಳ ಎನಿಸಿತು. +ಬೆಟ್ಟದ ಮೇಲಿನ ಮೋಡ, ಹಸಿರು ದಿಗಂತ ಮೊದಲಾದ ಕಲ್ಪನೆಗಳನ್ನು ವಿಸ್ತರಿಸುವ ಮಾತುಗಳು, ಮಾತುಗಳಲ್ಲಿನ ಸ್ನೇಹ ಸಲುಗೆ, ಅವು ಸಲುಗೆ ಸ್ನೇಹವನ್ನೂ ಮೀರಿದ ಭಾವ ಎಂದು ಅರಿವಾದೊಡನೆ ಇಬ್ಬರೇ ಇರುವ ಸಂದರ್ಭ ಮತ್ತೆ ಸೃಷ್ಟಿಯಾಗಬಾರದೆಂದು, ಬೆಟ್ಟವನ್ನು ವೇಗವಾಗಿ ಹತ್ತಲು ಶುರು ಮಾಡಿದಳು. +ವಿಸ್ಮಯನ ಮನಸ್ಸು ಪೂರ್ತಿಯಾಗಿ ಅವಳಲ್ಲಿ ಸಿಕ್ಕಿ ಹಾಕಿಕೊಂಡಿತು. +ಅವಳ ಭಾವವೇನು ಎಂದು ಅರ್ಥವಾಗದೆ ಚಡಪಡಿಸಿದ. +ತನ್ನ ಮನಸ್ಸನ್ನು ಹದ್ದು ಬಸ್ತಿನಲ್ಲಿಡಬೇಕು. +ಅವಳ ಮನಸ್ಸಿನಲ್ಲಿರುವುದೇನು ಎಂದು ತಿಳಿದುಕೊಳ್ಳುವ ತನಕ ತಾನು ತನ್ನ ಮನಸ್ಸಿನ ಭಾವವನ್ನು ಹೊರ ತೋರದಂತಿಡಬೇಕು ಎಂದು ನಿಶ್ಚಯಿಸಿಕೊಂಡ. +ಮುಂದೆ ಹೆಜ್ಜೆ ಇಡಲಾರೆ ಎಂಬಂತೆ ಅವನ ಪಾದಗಳು ಮುಷ್ಕರ ಹೂಡಿದವು. +ಹಾಗೆ ತಿರುಗಿ ಮೆಟ್ಟಿಲಿನ ಮೇಲೆ ಕುಳಿತುಕೊಂಡ. +ಮಧ್ಯಾಹ್ನದ ಬಿಸಿಲಿಗೆ ಪ್ರಪಂಚವೆಲ್ಲ ಕರಗಿ ಅಂಚೂಡೆದು ತನ್ನ ಆಕಾರವನ್ನು ಕಳೆದುಕೊಳ್ಳುತ್ತಿದೆ ಎಂದು ಅನಿಸಿತು. +ತನ್ನನ್ನು ಬಿಟ್ಟು ಇಳಾ ಮೆಟ್ಟಿಲೇರಿ ಹೋಗಿದ್ದು, ಅವಳ ಹಿಂದೆ ತಾನು ಹೋಗುವುದು ಬಿಟ್ಟು ಇಲ್ಲೇಕೆ ಕುಳಿತುಕೊಂಡಿದ್ದೇನೆ? +ಅವಳ ಜೊತೆ ಇಲ್ಲದೆ ನಡೆಯಲಾರೆ ಎಂಬ ಭಾವ ಕಾಡುತ್ತಿದೆಯೇ? +ಇದು ಅಸಂಗತವಲ್ಲವೇ? +ತಾನು ಎದ್ದು ಮೇಲೆ ಹೋಗಬೇಕು ಅಂದುಕೊಂಡರೂ ಎದ್ದು ಹೋಗುವ ಮನೋಭಾವವೇ ಇಲ್ಲದಂತಾಯಿತು. +ಬೆನ್ನು ನೋವು ಕಾಣಿಸಿಕೊಂಡರೂ ಭಂಗಿ ಬದಲಿಸದೆ ಕುಳಿತೆಯೇ ಇದ್ದ. +ಆ ಸಮಯದಲ್ಲಿ ಬೆಟ್ಟ ಹತ್ತುವವರು ಯಾರೂ ಇಲ್ಲದ ಕಾರಣ ನೀರವತೆ ಆವರಿಸಿತ್ತು, ಒಬ್ಬನೇ ಬೆಟ್ಟದ ಸುತ್ತಲೂ ನೋಡುತ್ತ ಕುಳಿತೇಬಿಟ್ಟ. +ಮಕ್ಕಳ ಕಲರವ ಕೇಳಿಸಿಕೊಂಡ ನಂತರ ಅವರೆಲ್ಲ ಬೆಟ್ಟ ನೋಡಿ ಇಳಿಯುತ್ತಿದ್ದಾರೆ ಎಂದುಕೊಂಡು ಎದ್ದು ನಿಂತ. +‘ಯಾಕೆ ಸಾರ್ ಮೇಲಕ್ಕೆ ಬರಲಿಲ್ಲ, ಸಾಕಾಯ್ತ’ ಜೋಸೆಫ್ ಕೇಳಿದ. +‘ಇಲ್ಲಾ, ಮೇಲೆ ಎಲ್ಲಾ ನೋಡಿದ್ದೀನಿ. +ಇಲ್ಲಿಂದ ಕೆಳಗೆ ನೋಡೋದು ನಂಗೆ ಇಷ್ಟ ಆಯ್ತು. +ಅದಕ್ಕೆ ಆ ನೋಟನಾ ಆಸ್ವಾದಿಸುತ್ತಾ ಕುಳಿತುಬಿಟ್ಟೆ.’ ಎನ್ನುತ್ತ ಅವರು ಹೋಗುವುದಕ್ಕೆ ಜಾಗಬಿಟ್ಟ. +ಇಳಾ ಗಂಗಾನ ಜೊತೆ ಏನೋ ಮಾತಾಡ್ತ ನಗ್ತ ಬರ್ತಾ ಇದ್ದಳು. +ಆ ನಗುವನ್ನು ಮನದೂಳಗೆ ತುಂಬಿಕೊಳ್ಳುತ್ತ ನಿಧಾನವಾಗಿ ಕೆಳಗಿಳಿಯತೊಡಗಿದ. +ಅವನ ಜೊತೆ ಸೇರಿದ ಗಂಗಾನೂ ಮೇಲೇಕೆ ಬರಲಿಲ್ಲವೆಂದು ಪ್ರಶ್ನಿಸಿದಳು. +ಇಳಾ ಅದರತ್ತ ಗಮನ ನೀಡದಂತೆ ನಟಿಸಿದರೂ ಕಸಿವಿಸಿ ಅವಳ ಮುಖದಲ್ಲಿ ಕಾಣುತ್ತಿತ್ತು. +‘ನೀವು ಬಿಟ್ಟು ಹೋಗಿಬಿಟ್ರಿ, ನಾನೊಬ್ಬನೇ ಹೇಗೆ ಬರಲಿ, ಬೇಜಾರು ಆಯ್ತು. +ಒಬ್ಬನೇ ಬೆಟ್ಟ ಹತ್ತೋಕೆ’ ಅದು ಇಳಾಳನ್ನು ಉದ್ದೇಶಿಯೇ ಹೇಳಿದ್ದೆಂದು ಇಳಾಗೆ ಅರ್ಥವಾಯಿತು. +ಅದರ ಅರಿವಿರದ ಗಂಗಾ, ‘ಅಯ್ಯೋ ಎಂತ ಕೆಲ್ಸ ಮಾಡಿದ್ವಿ. +ಮಕ್ಕಳ ಜೊತೆ ನಾವು ಹೋಗಿಬಿಟ್ವಿ, ಸಾರಿ ಸಾರ್… +ನಿಮ್ಮನ್ನ ಒಬ್ರೆ ಬಿಟ್ಟಿದ್ದಕ್ಕೆ, ನಮಗೆ ಗೊತ್ತಾಗಲೇ ಇಲ್ಲ’ ಪಶ್ಚಾತ್ತಾಪದಿಂದ ಹೇಳಿದಳು. +‘ಹೋಗ್ಲಿ ಬಿಡಿ, ನೀವು ಪಾಪ ಮಕ್ಕಳನ್ನು ನೋಡಿಕೊಳ್ಳಬೇಕು, ಒಬ್ಬನೇ ಬರೋ ಅಭ್ಯಾಸ ಮಾಡಿಕೊಳ್ತೀನಿ’ ಎಂದ. +ಇಳಾ ಒಂದೂ ಮಾತಾಡಲಿಲ್ಲ. +‘ಹೌದು ಸರ್, ಮಕ್ಕಳ ಜವಾಬ್ಧಾರಿ ನಮ್ಮ ಮೇಲಿರುತ್ತೆ. +ಆದ್ರೆ ಇಳಾ… ನೀನು ಅವರ ಜೊತೆ ಕಂಪನಿ ಕೊಡು. +ಹೇಗೂ ನೀನೂ ಒಬ್ಳೆ ಆಗಿಬಿಡ್ತೀಯಾ. +ನೀನು ನಿಧಾನಕ್ಕೆ ಸರ್ ಜೊತೆ ಬಾ’ ಎಂದು ಹೇಳಿ ಬೇಗ ಬೇಗ ಗಂಗಾ ಕೆಳಗಿಳಿಲಾರಂಭಿಸಿದಳು. +ಗಂಗಾ ಇಳಿದು ಹೋದ ಮೇಲೆ ಇಳಾ, ವಿಸ್ಮಯ್ ಇಬ್ಬರೇ ಉಳಿದರು. +‘ನೀವು ನನ್ನ ಬಿಟ್ಟು ಹೋದರೂ, ವಿಧಿ ಮತ್ತೆ ನನ್ನ ಜೊತೆ ನೀವು ಬರುವಂತೆ ಮಾಡಿದೆ ಏನು ಹೇಳ್ತೀರಿ ಇದಕ್ಕೆ’ ಕೆಣಕಿದನು. +‘ನಾನೇನು ಬಿಟ್ಟು ಹೋಗಲಿಲ್ಲ, ನೀವು ಬರ್ತೀರಾ ಅಂತ ಹೋದೆ ಅಷ್ಟೆ’ ಮಾತು ತೇಲಿಸಿದಳು. +‘ಎಲ್ಲಿ ನನ್ನ ಮುಖ ನೋಡಿಕೊಂಡು ಹೇಳಿ, ಸತ್ಯ ಹೇಳ್ತಾ ಇದ್ದೀನಿ ಅಂತಾ’ ಇದನ್ನು ಹೇಳುವಾಗ ಅವನು ಅವಳ ಮುಖವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದನು. +ಮುಖದಲ್ಲಿ ಕಸಿವಿಸಿ ಕಾಣಿಸಿತು. +ಉತ್ತರಿಸಬಾರದೆಂಬ ಪಟ್ಟು ಅಲ್ಲಿತ್ತು. +ಮೌನವಾಗಿಯೇ ಕೆಳಗೆ ಇಳಿಯತೊಡಗಿದಳು. +ಸಂಪೂರ್ಣ ಅಂತರ ಮುಖಿಯಾಗಿದ್ದಳು. +ಅವಳ ಅಂತರಮುಖತೆ ಅವನನ್ನು ಕಳವಳಕ್ಕೀಡು ಮಾಡಿತು. +ತಾನೂ ಮೌನವಾಗಿಯೇ ಕೆಳಗಿಳಿಯತೊಡಗಿದ. +ಬೆಟ್ಟದಿಂದ ಇಳಿದು ಎಲ್ಲರೂ ಕೊಂಚ ಸುಧಾರಿಸಿಕೊಂಡು ಮಕ್ಕಳಿಗೆ ಕೊಳ್ಳಲು ಅಂಗಡಿಯ ಬಳಿ ಬಿಟ್ಟರು. +ನಂತರ ತಮ್ಮೂರಿನತ್ತ ಪ್ರಯಾಣ ಬೆಳೆಸಿದರು. +ಪ್ರವಾಸ ತುಂಬಾ ಚೆನ್ನಾಗಿತ್ತು. +ಆದರೆ ಇಳಾ ಮತ್ತು ವಿಸ್ಮಯ್ ತುಂಬಾ ದುಗುಡದಲ್ಲಿದ್ದರು. +ಇಳಾಳ ಮನಸ್ಸನ್ನು ಅರಿತವನಂತೆ ವಿಸ್ಮಯ್ ಇಳಾಳೊಂದಿಗೆ ಮತ್ತೆ ಮಾತನಾಡಲು ಹೋಗಲಿಲ್ಲ. +ಅಂತಹ ಸಂದರ್ಭ ಬಂದರೂ ಉಪಾಯವಾಗಿ ತಪ್ಪಿಸಿಕೊಂಡು ಅವಳಿಂದ ದೂರವೇ ಉಳಿದು ಮನಸ್ಸಿಗೆ ಕಡಿವಾಣ ಹಾಕಲು ಯತ್ನಿಸಿದ. +ಇದೂ ಕೂಡ ಇಳಾಳ ಮನಸ್ಸಿಗೆ ಸಮಾಧಾನ ತರಲಿಲ್ಲ. +ಮನೆ ತಲುವುವ ತನಕ ಪೆಚ್ಚಾಗಿಯೇ ಇದ್ದಳು. +ಟೂರ್ ಮುಗಿಸಿ ಬಂದ ಇಳಾ ಮಂಕಾಗಿಯೇ ಇದ್ದಳು. +ಪ್ರವಾಸದ ಆಯಾಸವೆಂದು ತಿಳಿದುಕೊಂಡ ಅಂಬುಜಮ್ಮ ‘ತೋಟಕ್ಕೆ ಒಂದೆರಡು ದಿನ ಹೋಗಲೇಬೇಡ. +ಏನು ಮಾಡಬೇಕೊ, ಇಲ್ಲಿಂದಲೇ ಹೇಳು’ ಎಂದು ಕಟ್ಟುನಿಟ್ಟಾಗಿ ಹೇಳಿ ಅವಳನ್ನು ಯಾವ ಕೆಲಸ ಮಾಡೋಕೂ ಬಿಡಲಿಲ್ಲ. +ಆಳುಗಳು ತಾವೇ ಬಂದು ಕೆಲಸದ ಬಗ್ಗೆ ಕೇಳಿಕೊಂಡರು. +ಅಂಬುಜಮ್ಮನೇ ತೋಟಕ್ಕೆ ಹೋಗಿ ಕೆಲಸ ನೋಡಿಕೊಂಡು ಬಂದರು. +ಮನೆಯಲ್ಲಿ ಕುಳಿತಿರಲು ಬೇಸರವೆಂದರೂ ಅಂಬುಜಮ್ಮ ಒಪ್ಪಲೇ ಇಲ್ಲ. +ಅಷ್ಟರಲ್ಲಿ ಸ್ಫೂರ್ತಿ ಫೋನ್ ಮಾಡಿ ಗ್ರಾಮವೊಂದರಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಬೆಳಿಗ್ಗೆ ಬೇಗ ಬರುವಂತೆ ತಿಳಿಸಿದಳು. +ಇಳಾ ಉತ್ಸಾಹದಿಂದ ಹೊರಟಳು. +ಸ್ಫೂರ್ತಿ ಅವಳಿಗಾಗಿಯೇ ಹಾಸನದಲ್ಲಿ ಕಾಯುತ್ತಿದ್ದಳು. +ಇಬ್ಬರೂ ಆ ಗ್ರಾಮಕ್ಕೆ ಬಸ್ಸಿನಲ್ಲಿ ಹೊರಟರು. +ಇವರು ಬರುವಷ್ಟರಲ್ಲಿ ಅವರ ತಂಡದ ಇತರರು ಕಾರ್ಯಕ್ರಮಕ್ಕೆ ಎಲ್ಲಾ ಏರ್ಪಾಡು ಮಾಡಿದ್ದರು. +ರೈತರನ್ನು, ರೈತ ಕುಟುಂಬವನ್ನು ಅಲ್ಲಿ ಸೇರಿಸಿದ್ದರು. +ಏನೋ ಕಾರ್ಯಕ್ರಮ ಎಂದು ಊರಿನ ಜನರೆಲ್ಲ ಸಮುದಾಯ ಭವನದಲ್ಲಿ ಸೇರಿಬಿಟ್ಟಿದ್ದರು. +ಮುಖ್ಯ ಭಾಷಣಕಾರರಾಗಿ ಬಂದಿದ್ದವರು ಸಹ ಒಬ್ಬ ರೈತರೆ. +ಅವರು ತಮ್ಮ ಮಾತಿನಿಂದಲೇ ರೈತರ ಆಸಕ್ತಿ ಕೆರಳಿಸಿದರು. +‘ಒಂದೇ ಬೆಳೆಗೆ ಜೋತುಬಿದ್ದು ರೈತ ಅವನತಿ ತಂದುಕೊಳ್ತಾ ಇದ್ದಾನೆ. +ರಾಸಾಯನಿಕಗೊಬ್ಬರ, ಕ್ರಿಮಿನಾಶಕ ಅಂತ ಹೆಚ್ಚು ಖರ್ಚು ಮಾಡ್ತಾ ಇದ್ದಾನೆ. +ನಾನು ಎಲ್ಲರೂ ಬೆಳೆಯುವ ರೇಷ್ಮೆ, ರಾಗಿ, ಭತ್ತ ಕೈಬಿಟ್ಟು ಕುಂಬಳಕಾಯಿ ಬೆಳೆಸಿದೆ. +ಒಂದೊಂದು ಕಾಯಿ ೩೦ ರಿಂದ ೪೦ ಕೆ.ಜಿ.ಇಳುವರಿ ಬಂದಿತ್ತು. +ಖರ್ಚು ಕಳೆದು ಒಂದೂವರೆ ಲಕ್ಷ ಲಾಭ ಬಂದಿದೆ. +ಈ ವರ್ಷ ಸಿಹಿಗುಂಬಳ ಹಾಕಿದ್ದೇನೆ ಎಕರೆಗೆ ಐದು ಟ್ರಾಕ್ಟರ್ ತಿಪ್ಪೆ ಗೊಬ್ಬರ ಹಾಕಿದ್ದೇನೆ. +ಬಾಳೆ ಹಾಕಿದ್ದೇನೆ. +ಬಾಳೆ ಮಧ್ಯ ನಡುವಿನ ಜಾಗದಲ್ಲಿ ಕೊತ್ತಂಬರಿ, ಮೆಂತ್ಯ, ಸಬ್ಬಸ್ಸಿಗೆ, ಹುರುಳಿ ಬಿತ್ತಿದ್ದೇನೆ. +ಸೊಪ್ಪಿನಲ್ಲೂ ಆದಾಯವಿದೆ. +ದಿನಾ ದುಡ್ಡು ನೋಡಬಹುದು. +ಕುಂಬಳಕೊಯ್ಲಿನ ನಂತರ ಬಳ್ಳಿಯನ್ನು ಸಣ್ಣ ತುಂಡು ಮಾಡಿ ಕತ್ತರಿಸಿ ಬಾಳೆಗಿಡಗಳಿಗೆ ಹಾಕಿದರೆ ಕೊಳೆತು ಗೊಬ್ಬರವಾಗುತ್ತದೆ. +ಬಾಳೆತೋಟದ ಅಂಚಿನಲ್ಲಿ ಚೆಂಡುಹೂವಿನ ಗಿಡ ಬೆಳೆದರೆ ಬಾಳೆಗೆ ಕೀಟಗಳ ಬಾಧೆ ತಪ್ಪಿಸಬಹುದು. +ಎಲ್ಲರೂ ಬೆಳೆಯುವುದನ್ನೇ ನಾವು ಬೆಳೆದು ನಷ್ಟ ಅನುಭವಿಸುವುದಕ್ಕಿಂತ ಮಿಶ್ರ ಬೆಳೆ ಬೆಳೆದು ಒಂದರಲ್ಲಿ ನಷ್ಟವಾದ್ರೆ ಇನ್ನೊಂದರಲ್ಲಿ ತುಂಬಿಸಿಕೊಳ್ಳಬಹುದು. +ಸದಾ ಆದಾಯ ತರೋ ರೀತಿ ರೈತ ಬೆಳೆ ಬೆಳೆಯಬೇಕು. +ಸಾಲ ಮಾಡಿ ಸಾಲ ತೀರಿಸಲಾರದೆ ಸಾವಿಗೆ ಶರಣಾಗುವ ದುರ್ಬಲ ಮನಃಸ್ಥಿತಿಯಿಂದ ದೂರ ಬರಬೇಕು. +ಬೇಸಾಯದಲ್ಲೂ ಅಪಾರ ಲಾಭಗಳಿಸಬಹುದು. +ಆದರೆ ವಿವೇಚನೆ ಬೇಕು ಅಷ್ಟೆ ಎಂದು ಕರೆ ನೀಡಿದರು. +ಮತ್ತೊಬ್ಬರು ‘ಮಾನವನ ಮೂತ್ರ ಕೂಡ ಒಳ್ಳೆಯ ಗೊಬ್ಬರವಾಗುತ್ತೆ, ಬೇಕಾದಷ್ಟು, ರೈತರು ಮಾನವ ಮೂತ್ರ ಹಾಗೂ ಗೋಮೂತ್ರ ಬಳಸಿ ಕುಂಬಳಕಾಯಿ, ಬಾಳೆ ಬೆಳೆದಿದ್ದು ಉತ್ತಮ ಫಲಿತಾಂಶ ಪಡೆದಿದ್ದಾರೆ. +ಖರ್ಚಿನ ದೃಷ್ಟಿಯಿಂದ ರಸಗೊಬ್ಬರಕ್ಕೆ ಬದಲಾಗಿ ಮಾನವ ಮೂತ್ರ ಬಳಕೆ ಉತ್ತಮ. +ಹತ್ತು ಕುಂಟೆ ಭೂಮಿಯಲ್ಲಿ ಬೂದುಗುಂಬಳ ಬಳ್ಳಿಗೆ ೪೨೦ ಲೀಟರ್ ಮಾನವ ಮೂತ್ರವನ್ನು ಅಷ್ಟೆ ಪ್ರಮಾಣದ ನೀರಿನಲ್ಲಿ ಬೆರೆಸಿ ಮೂರು ಹಂತದಲ್ಲಿ ನೀಡಿದ್ದಕ್ಕೆ ಆರುನೂರು ಕಾಯಿಗಳು ಬಿಟ್ಟಿದ್ದು, ಅವು ೮ ರಿಂದ ೨೪ ಕೆ.ಜಿ.ತೂಗುತಿದ್ದವು’ ಎಂದು ಮಾಹಿತಿ ನೀಡಿದರು. +ರೈತರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸಿ ‘ಯಾರೂ ಹತಾಶರಾಗಬೇಡಿ- ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಸಿದ್ದರಾಗಿ ಹಳೆಯದಕ್ಕೆ ಜೋತುಬೀಳದೆ, ಹೆಚ್ಚು ಖರ್ಚು ಮಾಡದೆ ಸಾವಯವ ಕೃಷಿ ಮಾಡುವಂತೆ ಸಲಹೆ ನೀಡಿದರು. +ಯಾವ ಕಾರಣಕ್ಕೂ ಅತಿ ಸಾಲ ಮಾಡಬೇಡಿ, ಆತ್ಮಹತ್ಯೆಯತ್ತ ಮನಸ್ಸು ಕೊಡಬೇಡಿ. +ಒಂದಲ್ಲ ಒಂದು ಬೆಳೆಯಲ್ಲಿ ಲಾಭ ಬಂದೇ ಬರುತ್ತದೆ. +ಒಂದೇ ಸಲಕ್ಕೆ ಶ್ರೀಮಂತರಾಗುವ ಆಸೆ ಬೇಡ. +ಸಾಲ ಸಂದಾಯ ಮಾಡದೆ ಇರಬೇಡಿ, ಕನಿಷ್ಟ ಬಡ್ಡಿಯನ್ನಾದರೂ ಕಟ್ಟುತ್ತ ಬನ್ನಿ, ಸಾಲದ ಹಣವನ್ನು ಮದುವೆ, ತಿಥಿ ಅಂತ ಖರ್ಚು ಮಾಡದೆ ವ್ಯವಸಾಯಕ್ಕೆ ವ್ಯಯ ಮಾಡಿ. +ಬಂದ ಲಾಭದಲ್ಲಿ ಒಂದಿಷ್ಟು ಹಣವನ್ನು ನಂದಲ್ಲ ಅಂತ ಬೇರೆಕಡೆ ಇಡಿ. +ಅದು ಆಪತ್ಕಾಲಕ್ಕೆ ಆಗುತ್ತದೆ’ ಎಂದು ತಿಳುವಳಿಕೆ ಹೇಳಿದರು. +ಕೆಲ ರೈತರು ತಮ್ಮ ಅನುಭವ ತಿಳಿಸಿದರು. +ಹೊಸ ಕೃಷಿ ಆಳವಡಿಸಿಕೊಂಡಿದ್ದರಿಂದ ತಾವು ಹೇಗೆ ಬೆಳೆಯನ್ನು ಲಾಭದಾಯಕವಾಗಿಸಿಕೊಳ್ಳಬಹುದು ಎಂಬುದನ್ನು ಆನುಭವಿಗಳಿಂದ ಕೇಳಿಕೊಂಡು ತಾವು ಆದರಂತೆ ನಡೆಯುವ ಉತ್ಸಾಹ ತೋರಿದರು ಸ್ಥಳೀಯ ರೈತರು. +ಅವರ ಉತ್ಸಾಹ ಕಂಡು ತಾವು ನಡೆಸಿದ ಕಾರ್ಯಕ್ರಮ ಸಾರ್ಥಕವಾಯಿತೆಂದು ಸಂಘಟಕರು ಗೆಲುವಿನಿಂದ ಹಿಗ್ಗಿದರು. +ಇಳಾಳಿಗೂ ಉತ್ಸಾಹ ಮೂಡಿತು. +ಅವಳಿಗೂ ಪ್ರಯೋಜನವಾಗುವ ವಿಚಾರಗಳು ಅಲ್ಲಿ ಇದ್ದವು. +ಒಟ್ಟಿನಲ್ಲಿ ಆ ದಿನ ಆನುಕೂಲವಾಗಿ ಮಾರ್ಪಟ್ಟಿತು. +ಕಾರ್ಯಕ್ರಮ ಮುಗಿಸಿ ಸ್ಫೂರ್ತಿ ಇಳಾ ಒಟ್ಟಿಗೆ ಹಾಸನಕ್ಕೆ ಬಂದರು. +ಸ್ಫೂರ್ತಿ ಇಳಾಳನ್ನು ತಾನು ಪಿ.ಜಿ. ಆಗಿದ್ದ ಮನೆಗೆ ಕರೆತಂದಳು. +ಸ್ವಲ್ಪ ಹೊತ್ತು ಅಲ್ಲಿದ್ದ ಇಳಾ ತಡವಾಗುವುದೆಂದು ಊರಿಗೆ ಹೊರಟು ನಿಂತಳು. +ಬಸ್‌ಸ್ಟಾಂಡಿಗೆ ನಡೆದುಕೊಂಡೆ ಹೊರಟಳು ಇಳಾ. +ಹಾಗೆ ಬರುವಾಗ ನಿವಾಸ್ ಆಕಾಶವಾಣಿಯಿಂದ ಹೊರಬರುತ್ತಿದ್ದ. +ಅವನನ್ನು ಕಂಡು ನಿಂತಳು. +‘ಪ್ರೋಗ್ರಾಂಗೆ ಹೋಗಿದ್ದೀರಾ, ಹೇಗಾಯ್ತು’ ಅವಳನ್ನು ಕಂಡು ಹತ್ತಿರ ಬರುತ್ತ ಕೇಳಿದ. +ನಡೆದದೆಲ್ಲವನ್ನು ಹೇಳಿದಳು. +ಇಬ್ಬರೂ ಮಾತನಾಡುತ್ತ ಹೆಜ್ಜೆ ಹಾಕಿದರು. +ಆಕಾಶವಾಣಿಯಲ್ಲಿ ಕೃಷಿ ವಿಚಾರವಾಗಿ ಮಾತುಕತೆ ರೆಕಾರ್ಡ್ ಇತ್ತೆಂದು, ಹಾಗೆಂದೇ ಆಲ್ಲಿಗೆ ಬರಲಾಗಲಿಲ್ಲವೆಂದು ತಿಳಿಸಿ ಊರಿನ ಸಮಾಚಾರ ಕೇಳಿದ. +ಈಗ ಬಾಳೆ ಬಗ್ಗೆ ಅಂಗಾಂಶ ಕಸಿ ಮಾಡುತ್ತಿದ್ದು ಒಳ್ಳೆ ರಿಸಲ್ಟ್ ಬರುತ್ತದೆ ಎಂದು ತಿಳಿಸಿದಳು. +ಗದ್ದೆಗೂ ಬಾಳೆ ಹಾಕಿಸುತ್ತಿರುವುದಾಗಿ, ಮಳೆ ಹೆಚ್ಚಾಗಿ ಕಾಫಿ ಬೀಜಗಳು ಉದುರುತ್ತಿದ್ದು, ಅಕಾಲದಲ್ಲಿ ಹೂವಾಗುವ ಹೆದರಿಕೆ ಇದೆ. +ನೋಡೋಣ ಕೈ ಹಾಕಿದ್ದಾಗಿದೆ. +ಕಾಫಿಯಲ್ಲಿ ಈ ಬಾರಿ ನಷ್ಟಕ್ಕೆ ಮಾನಸಿಕವಾಗಿ ಸಿದ್ದವಾಗಿದ್ದು, ಆ ನಷ್ಟವನ್ನು ಬೇರೆ ಬೆಳೆಯಲ್ಲಿ ತುಂಬಿಕೊಳ್ಳಲು ಯತ್ನಿಸುತ್ತಿದ್ದೇನೆ ಎಂದಳು. +ಅವಳ ಸಿನ್ಸಿಯಾರಿಟಿ ಕಂಡು ಮೆಚ್ಚುತ್ತ ‘ಇಳಾ, ನಿನ್ನಂಥ ಧೈರ್ಯ ಪ್ರತಿ ಹೆಣ್ಣುಮಕ್ಕಳಿಗೂ ಬರಬೇಕು. +ಆಗಲೇ ಈ ದೇಶದಲ್ಲಿ ಕೃಷಿಕ್ರಾಂತಿ ಮಾಡಬಹುದು. +ಧೈರ್ಯವಾಗಿ ಹೀಗೆ ಮುನ್ನುಗ್ಗುವುದಕ್ಕೆ ಗಂಡಸರೇ ಹೆದರುತ್ತಾರೆ, ನೋಡು ಈ ಕ್ಷೇತ್ರದಲ್ಲಿ ನೀನು ಸಾಧನೆ ಮಾಡಿಯೇ ಮಾಡುತ್ತಿಯಾ ಅಂತ ನಂಗೆ ಭರವಸೆ ಇದೆ. +ಮೊದಲೇ ವಿಜ್ಞಾನದ ವಿದ್ಯಾರ್ಥಿನಿ. +ಹೊಸ ಹೊಸ ಪ್ರಯೋಗ ಮಾಡಿ ಈ ರಂಗಕ್ಕೆ ಬೆಳಕು ತೋರಿಸೋ ದೀಪವಾಗಬೇಕು ನೀನು’ ಮನಸ್ಸಿನಾಳದಿಂದ ನುಡಿದ. +‘ನಿಮ್ಮೆಲ್ಲರ ಪ್ರೋತ್ಸಾಹ ಸಾರ್, ನಂಗೆ ಈ ಕ್ಷೇತ್ರದಲ್ಲಿ ದುಡಿಬೇಕು ಅನ್ನೊ ಉತ್ಸಾಹ ಮೂಡ್ತಾ ಇದೆ. +ಕೃಷಿ ರಂಗದಲ್ಲೂ ಲಾಭವಿದೆ, ಅದು ಕೂಡ ಒಂದು ಉತ್ಪಾದನಾ ಕ್ಷೇತ್ರ ಅನ್ನೋದನ್ನ ಮನವರಿಕೆ ಮಾಡಿ ಕೊಡ್ತೀನಿ ಸಾರ್’ ನಿರ್ಧಾರಿತ ದನಿಯಲ್ಲಿ ಹೇಳಿದಳು. +‘ಈ ಛಲ, ಈ ಹಟ ಇದ್ದಾಗ ಖಂಡಿತಾ ಸಾಧನೆಯ ಮೆಟ್ಟಿಲೇರಬಹುದು. +ನಾನು ಈ ಜಮೀನನ್ನು ನಂಬಿ ಬಂದಾಗ ನನ್ನನ್ನು ಆಡಿಕೊಂಡವರೆಷ್ಟೋ, ಮೂರ್ಖ, ಒಳ್ಳೆ ಸಂಬಳ ಬರುವ ಕೆಲಸ ಬಿಟ್ಟಿದ್ದಾನೆ. +ವ್ಯವಸಾಯ ಎಂದರೆ ಸುಮ್ನೆನಾ, ಅದೇನು ಮಾಡ್ತಾನೋ ಅಂತ ನನ್ನ ಕಾಲೆಳೆದಿದ್ದರು. +ಕೆಲಸ ಬಿಡಬೇಡ ಅಂತ ಅದೆಷ್ಟೋ ಜನ ಬುದ್ದಿ ಹೇಳಿದ್ದರು. +ಆದರೆ ಆದೇ ಜನ ನನ್ನ ಮೆಚ್ತಾ ಇದ್ದಾರೆ. +ಎಲ್ಲರೂ ಬಿಳಿ ಕಾಲರಿನ ಕೆಲಸವೇ ಬೇಕು ಅಂದ್ರೆ ನಾವು ತಿನ್ನೊ ಅನ್ನ ಕೊಡೋರು ಯಾರು. +ಎಷ್ಟು ಜನಕ್ಕೆ ಕೆಲಸ ಸಿಗುತ್ತೆ. +ಕೆಲಸ ಸಿಗದೆ ನಿರಾಶರಾಗುವ ಬದಲು ತುಂಡು ಭೂಮಿಲಿ ಕೂಡ ಚಿನ್ನ ಬೆಳೆಯಬಹುದು. +ಆದರೆ ಅದನ್ನು ಅರ್ಥಮಾಡಿಕೊಳ್ಳಬೇಕಷ್ಟೆ- ಮಾತನಾಡುತ್ತಲೇ ಬಸ್‌ಸ್ಟಾಂಡ್ ತಲುಪಿದ್ದರು. +‘ಒಮ್ಮೆ ನಮ್ಮೂರಿಗೆ ಬನ್ನಿ ಸಾರ್, ನಮ್ಮ ತೋಟ, ನಮ್ಮ ಶಾಲೆ ಎಲ್ಲಾನೂ ನೋಡಿಕೊಂಡು ಬರಬಹುದು’ ಆಹ್ವಾನಿಸಿದಳು. +‘ಖಂಡಿತಾ ಬರ್ತಿನಿ, ನಂಗೂ ನಿಮ್ಮ ತೋಟ, ದನ, ಶಾಲೆ, ನಿಮ್ಮಮ್ಮ, ಅಜ್ಜಿನಾ ನೋಡಬೇಕು ಅಂತ ಅನ್ನಿಸಿದೆ. +ಬಂದೇ ಬರ್ತಿನಿ’ ಅಂತ ಹೇಳಿ ಬೀಳ್ಕೊಟ್ಟ. +ಆತನ ಅಭಿಮಾನಕ್ಕೆ, ಆತನ ಆದರ, ಸ್ನೇಹಕ್ಕೆ ಇಳಾ ಮನಸೋತಿದ್ದಳು. +ನಿವಾಸ್ನ ಸರಳತೆ, ಯಾವುದೇ ಅಹಂ ಇಲ್ಲದ ನೇರ ನಡೆ ನುಡಿ ಅವಳನ್ನು ಸೆಳೆದಿತ್ತು. +ಅವನನ್ನು ಕುರಿತು ಚಿಂತಿಸುತ್ತಲೇ ಮನೆ ತಲುಪಿದಳು. +ಸಂಜೆ ಬರುವ ಇಳಾಳಿಗಾಗಿ ಕಳಲೆ ಪಲ್ಯ ಮಾಡಿ, ಅವಳು ಬಂದೊಡನೆ ಬಿಸಿ ಬಿಸಿ ರೊಟ್ಟಿ ಮಾಡಿ ಅಂಬುಜಮ್ಮ ತಂದಿಟ್ಟರು. +ಚೆನ್ನಾಗಿ ಹಸಿದಿದ್ದ ಇಳಾಗೆ ಕಳಲೆ ಪಲ್ಯ ಕಂಡು ಹಸಿವು ಮತ್ತಷ್ಟು ಹೆಚ್ಚಾಯಿತು. +ಈ ಕಳಲೆ ಯಾವಾಗಲೂ ಸಿಗುವುದಿಲ್ಲ. +ಅದು ಸುಲಭವಾಗಿಯೂ ಸಿಗುವುದಿಲ್ಲ. +ಬಿದುರು ಮೆಳೆಗಳ ಮದ್ಯೆ ಮೊಳಕೆಯೊಡೆದು ನಿಂತ ಕಳಲೆಯನ್ನು ಕಿತ್ತು ತರುವುದು ಅಷ್ಟು ಸುಲಭದ ಕೆಲಸವಲ್ಲ. + ಜಾಸ್ತಿ ಬಲಿಯದ ಹಾಗೂ ಹೆಚ್ಚು ಎಳೆಯದೂ ಅಲ್ಲದ ಕಳಲೆ ಕಿತ್ತುಕೊಂಡು ಬಂದರೆ ಇದರ ಕೆಲಸ ಮುಗಿಯಲಾರದು. +ಇದರ ಮೇಲಿನ ಸಿಪ್ಪೆಯನ್ನು ಒಂದಾದ ನಂತರ ಒಂದು ತೆಗೆದು ನಂತರ ಉಳಿಯುವ ಎಳೆಯ ಭಾಗವನ್ನು ಕತ್ತರಿಸಿ ನೀರಿನಲ್ಲಿ ನೆನೆಸಿಡಬೇಕು. +ಆದರೆ ನೀರನ್ನು ಪ್ರತಿದಿನ ಬದಲಿಸುತ್ತ ಇರಬೇಕು. +ಆ ಮೇಲೆಯೇ ಈ ಎಳೆ ಬಿದಿರು ಅಂದರೆ ಕಳಲೆಯನ್ನು ತಿನ್ನಲು ಯೋಗ್ಯ. +ವರ್ಷದಲ್ಲಿ ಒಮ್ಮೆಯಾದರೂ ಕಳಲೆ ತಿನ್ನಬೇಕು ಎಂದು ಹಳ್ಳಿ ವೈದ್ಯರು ಸಲಹೆ ನೀಡುತ್ತಾರೆ. +ಇದು ಎಷ್ಟು ರುಚಿಯೋ, ಅಷ್ಟೆ ಗರಂಕೂಡ ಹೌದು, ಮೂರು ನಾಲ್ಕು ತಿಂಗಳ ಎಳೆ ಬಸುರಿಯರಿಗೆ ಕಳಲೆಯನ್ನು ತಿನ್ನಲು ಕೊಡುವುದೇ ಇಲ್ಲ, ಮನೆಯ ಹಿರಿಯರು. +ಮಲೆನಾಡ ಹೆಂಗಸರು ಕಳಲೆಯಿಂದ ಹತ್ತು ಹಲವು ಪದಾರ್ಥ ಸಿದ್ದಪಡಿಸುತ್ತಾರೆ. +ಕಳಲೆ ಸಾಂಬಾರು, ಪಲ್ಯ, ಬಜಿ, ಚಿತ್ರಾನ್ನ, ಉಪ್ಪಿನಕಾಯಿ ಹೀಗೆ ತರಾವರಿ ಸಿದ್ದಪಡಿಸಿ ತಿನ್ನಿಸುತ್ತಾರೆ. +ಆದರೆ ಶೂನ್ಯಮಾಸ ಆರಂಭವಾಯಿತೆಂದರೆ ಇಲ್ಲಿಯ ಜನ ಜಪ್ಪಯ್ಯ ಎಂದರೂ ಕಳಲೆ ಮುರಿಯುವುದಿಲ್ಲ, ತಿನ್ನುವುದಿಲ್ಲ. +ವರ್ಷ ಪೂರ್ತಿ ಕಳಲೆ ತಿಂದರೆ ಬಿದಿರಿನ ಸಂತತಿ ನಾಶವಾದೀತು ಎಂದು ಚಿಂತನೆ ಇರಬಹುದು. +ಆದರೆ ಕಳಲೆ ಮಾಡುವಾಗ ಕೆಲ ಎಚ್ಚರಿಕೆಗಳೂ ಇವೆ. +ಕಳಲೆ ಹೆಚ್ಚಿದ ನಂತರ ಉಳಿದ ತರಕಾರಿಯ ಸಿಪ್ಪೆಯಂತೆ ಇದನ್ನು ದನಕರುಗಳಿಗೆ ಹಾಕಬಾರದು, ಇದನ್ನು ನೆನಸಿಟ್ಟ ತುಂಡು, ನೀರು, ಎಲ್ಲವೂ ಘೋರ ವಿಷವಾಗಿ ದನಕರುಗಳು ಸಾವನ್ನಪ್ಪುತ್ತವೆ. +ದನಕರುಗಳು ಹೋಗುವ ಜಾಗದಲ್ಲಿ ಅವುಗಳನ್ನು ಹಾಕಬಾರದು. +ಸೃಷ್ಟಿಯ ವೈಚಿತ್ರವೇ ಹೀಗಿದೆ. +ದನಕರುಗಳು ತಿಂದರೆ ವಿಷ, ಮನುಷ್ಯರಿಗೆ ಮಾತ್ರ ಸವಿಯಾದ ತಿನಿಸು. +‘ಹೆಂಗಿದೆಯೊ ಕಳಲೆ ಪಲ್ಯ, ಮಗೂ’ ಅಜ್ಜಿ ಕೇಳಿದರು. +‘ನಿನ್ನ ಕೈ ರುಚಿ ಅಂದ್ರೆ ಕೇಳಬೇಕಾ ಅಜ್ಜಿ, ತುಂಬಾ ಚೆನ್ನಾಗಿದೆ. +ಇನ್ನು ಸ್ವಲ್ಪ ಪಲ್ಯ ಹಾಕು, ಚೆನ್ನಾಗಿ ತಿಂದುಬಿಡ್ತೀನಿ, ಅಮ್ಮ ಬಂದಿಲ್ವಾ ಇನ್ನು.’ +‘ಇಲ್ಲಾ ಕಣೆ ಮುದ್ದು, ಇವತ್ಯಾಕೋ ಇಷ್ಟು ಹೊತ್ತಾದರೂ ಬಂದಿಲ್ಲ. +ಆಗ್ಲೆ ಬೆಲ್ ಆಯ್ತು ಮೀಟಿಂಗ್ ಮಾಡ್ತಾ ಇದ್ದಾರೇನೊ.’ +‘ಇರಬಹುದೇನೋ ಬಿಡು, ಬರ್ತಾರೆ. +ಅಮ್ಮಂಗೆ ಸ್ಕೂಲ್ ಒಂದು ಇದ್ದುಬಿಟ್ರೆ ಆಯ್ತು. +ಅದೇ ಪ್ರಪಂಚದಲ್ಲಿ ಮುಳುಗಿ ಹೋಗಿ ಬಿಡ್ತಾರೆ, ನಾನಿದ್ದೇನಿ, ನೀನಿದ್ದೀಯಾ, ಈ ತೋಟ ಇದೆ ಅಂತ ನೆನಪಾದ್ರು ಇದೆಯೋ ಇಲ್ವೋ.’ +‘ಹೋಗ್ಲಿ ಬಿಡು ಚಿನ್ನೂ, ಈ ಸ್ಕೂಲ್ ಒಂದು ಇರೋಕೆ, ಅವಳು ಒಬ್ಳು ಮನುಷ್ಯೆ ಆಗಿದ್ದಾಳೆ. +ಇಲ್ಲದಿದ್ದರೆ ಕೊರಗಿ ಕೊರಗಿ ನಿಮ್ಮಪ್ಪನ ದಾರಿಯನ್ನ ಹಿಡಿದುಬಿಡ್ತ ಇದ್ದಳೇನೊ, ಅವಳಿಗೆ ಈ ತೋಟ ಈ ಮನೆ ಅಂದ್ರೆನೇ ಜಿಗುಪ್ಸೆ ಬಂದುಬಿಟ್ಟಿದೆ. +ಏನೋ ಆ ಪುಣ್ಯಾತ್ಮ ಈ ಕಾಡಲ್ಲಿ ಒಂದು ಸ್ಕೂಲ್ ಶುರು ಮಾಡಿ ಈ ಮನೆನಾ ಉಳಿಸಿದ್ದಾನೆ. +ದೇವ್ರು ಅವನ್ನ ಚೆನ್ನಾಗಿ ಇಟ್ಟಿರಲಿ. +ಎಷ್ಟು ಮಕ್ಕಳಿಗೆ ಅನುಕೂಲವಾಯ್ತು’ ಬಾಯಿ ತುಂಬ ವಿಸ್ಮಯನನ್ನು ಅಂಬುಜಮ್ಮ ಹೊಗಳಿದರು. +ವಿಸ್ಮಯನ ನೆನಪಿನಿಂದಾಗಿ ಪ್ರವಾಸದ ಆ ಕ್ಷಣಗಳು ಮರುಕಳಿಸಿದಂತಾಗಿ ತುಟಿಗಳು ಬಿರಿದವು. +ಬೆಟ್ಟ ಹತ್ತುವಾಗ ತನ್ನ ಭುಜ ಬಳಸಿ ವಿಸ್ಮಯ್ ಹತ್ತಿಸಿದ್ದು, ಅವನ ಸಾಮಿಪ್ಯ, ಆ ಮಾತುಗಳು ನೆನಪಾಗಿ ತನು ಮೆಲ್ಲನೆ ಕಂಪಿಸಿತು. +ವಿಸ್ಮಯನ ನೆನಪುಗಳು ಮನದೊಳಗಿನ ಕೋಗಿಲೆಯನ್ನು ತಟ್ಟಿ ಎಬ್ಬಿಸಿ ಮಧುರವಾಗಿ ಹಾಡುವಂತೆ ಮಾಡಿತು. +ತಾನು ಅವನಿಂದ ದೂರ ಸರಿದು ಅವನನ್ನು ಅವಾಯ್ಡ್‌ ಮಾಡಿದ್ದು, ಆತ ಮುನಿಸಿಕೊಂಡು ಮತ್ತೇ ತನ್ನೊಂದಿಗೆ ಮಾತೇ ಆಡದ್ದು, ಅವನ ಆ ರೀತಿಗೆ ತಾನು ಬೇಸರಿಸಿಕೊಂಡದ್ದು ಎಲ್ಲವೂ ನೆನಪಾಗಿ ನಕ್ಕಳು. +‘ಯಾಕೆ ಪುಟ್ಟಾ ಒಬ್ಬೊಬ್ಬಳೇ ನಗ್ತಾ ಇದ್ದೀಯಾ. +ಏನು ನೆನಪಾಯ್ತು ನಿಂಗೆ, ನಂಗೂ ಹೇಳು, ನಾನು ನಗ್ತಿನಿ ನಿನ್ನ ಜೊತೆ’ ಅಂಬುಜಮ್ಮ ತಾವು ನಗುತ್ತ ಹೇಳಿದಾಗ ‘ಅಜ್ಜಿ ಟೂರ್‌ನಲ್ಲಿ ನಡೆದದ್ದು ನೆನಪಾಯ್ತು ಅಜ್ಜಿ, ವಿಸ್ಮಯ್ ಚಿಕ್ಕವರಿದ್ದಾಗ ಶ್ರವಣಬೆಳಗೊಳದ ಬೆಟ್ಟಕ್ಕೆ ಹೋಗಿದ್ದರಂತೆ, ಗೊಮ್ಮಟೇಶ್ವರ ಯಾಕೆ ಚಡ್ಡಿನೇ ಹಾಕಿಲ್ಲ ಅಂತ ಕೇಳಿ ಮೇಷ್ಟ್ರಿಂದ ಬೈಸಿ ಕೊಂಡಿದ್ದರಂತೆ. +ಅದು ನೆನಪಾಗಿ ನಗು ಬಂತು’ ಎನ್ನುತ್ತ ಮತ್ತೇ ನಕ್ಕಳು. +ಅವಳ ನಗುವನ್ನೇ ನೋಡುತ್ತ ‘ಎಷ್ಟು ಚೆನ್ನಾಗಿ ನಗ್ತಿಯೇ ತಾಯಿ, ನಿನ್ನ ನಗುವೇ ನಾನು ನೋಡಿರಲಿಲ್ಲ. + ಆ ಪುಣ್ಯಾತ್ಮನ ಹೊಟ್ಟೆ ತಣ್ಣಗಿರಲಿ, ನಿನ್ನ ಮುಖದಲ್ಲಿ ನಗೆ ಮೂಡಿಸಿದನಲ್ಲ’ ವಿಸ್ಮಯನನ್ನು ಬಾಯಿ ತುಂಬಾ ಹೊಗಳಿದರು. +ಅಷ್ಟರಲ್ಲಿ ನೀಲಾ ಮನೆಗೆ ಬಂದಿದ್ದಳು. +‘ಏನೂ ಅಜ್ಜಿ ಮೊಮ್ಮಗಳು ಹಾಯಾಗಿ ಮಾತಾಡಿಕೊಂಡು ಕುತ್ಕೊಂಡು ಬಿಟ್ಟಿದ್ದೀರಾ, ಇಳಾ ಬೇರೆ ನಗ್ತ ಇದ್ದಾಳೆ’ ಪಕ್ಕದಲ್ಲಿ ಕೂರುತ್ತ ಕೇಳಿದಳು. +‘ಟೂರ್ ವಿಷಯ ಏನೋ ಹೇಳ್ತ ಇದ್ದಳು, ನೀನ್ಯಾಕೆ ಇಷ್ಟೊಂದು ತಡವಾಗಿ ಬಂದಿದ್ದೀಯಾ’ ಅಂಬುಜಮ್ಮ ತಿಂಡಿ ತಂದು ಕೊಡುತ್ತ ಕೇಳಿದರು. +‘ನಮ್ಮ ಶಾಲೆ ತೋಟ ತುಂಬಾ ಚೆನ್ನಾಗಿದೆ ಅಂತ ಯಾರೋ ಪೇಪರಿನೋರು ಬಂದಿದ್ದರು. +ನಾಳೆ ಪೇಪರಿನಲ್ಲಿ ಹಾಕ್ತರಂತೆ. +ಫೋಟೋ ತಗೋತ ಇದ್ದರು. +ಅದಕ್ಕೆ ತಡವಾಯಿತು’ ವಿವರಣೆ ನೀಡಿದಳು. +‘ಪೇಪರಿನಲ್ಲಿ ಹಾಕಿಸೋ ಅಷ್ಟು ಚೆನ್ನಾಗಿದೆಯಾ ಅಮ್ಮ, ನಿಮ್ಮ ಮಕ್ಕಳು ಮಾಡಿರೋ ತೋಟ’ ಆಚರ್ಯ ಪಟ್ಟಳು ಇಳಾ.’ +ನೀನು ಆ ಕಡೇ ಬಂದೇ ಇಲ್ಲ ಅಲ್ವಾ. +ನೋಡು ಬಾ ಏನೇನು ಬೆಳೆದಿದಾರೆ ಅಂತ. +ಮಾಸ್ಟರಿಗೆ ಅದೇನು ಆಸಕ್ತಿ ಅಂತಿಯಾ ಸಂಜೆ ಮೂರು ಗಂಟೆಯಿಂದ ಕಡ್ಡಾಯವಾಗಿ ಮಕ್ಕಳನ್ನು ತೋಟಕ್ಕೆ ಇಳಿಸಿಬಿಡುತ್ತಾರೆ. +ದೊಡ್ಡ ಕೆಲಸಕ್ಕೆ ಆಳುಗಳ ನೆರವು ಪಡೆಯುತ್ತಾರೆ. +ಪ್ರತಿ ಮಗುನೂ ಒಂದೊಂದು ಗಿಡ ತಂದು ಅದನ್ನು ತಾವೇ ಜವಾದ್ದಾರಿ ವಹಿಸಿಕೊಂಡು ಬೆಳೆಸಬೇಕು, ಹಾಗೆ ಕಡ್ಡಾಯ ಮಾಡಿದ್ದಾರೆ. +ಎಷ್ಟು ಖರ್ಚಾದ್ರೂ ವಿಸ್ಮಯ್ ಹಿಂದೆ ಮುಂದೆ ನೋಡದೆ ಖರ್ಚು ಮಾಡುತ್ತಾರೆ. +ಇನ್ನೇನು ಆಗಬೇಕು ತೋಟ ಸುಂದರವಾಗಿರೋಕೆ’ ಮತ್ತೆ ವಿಸ್ಮಯ್ ಗುಣಗಾನ. +‘ನಾಳೇ ಬೆಳಗ್ಗೆನೇ ನಿಮ್ಮ ಶಾಲೆಯ ತೋಟ ನೋಡಿಕೊಂಡು ಬರ್ತೀನಿ. +ಅದೇನು ಬೆಳೆದಿದ್ದಾರೋ ನೋಡೋಣ’ ಕುತೂಹಲದಿಂದ ಹೇಳಿದಳು. +ಬೆಳಗ್ಗೆ ಎದ್ದವಳೇ ಶಾಲೆಯತ್ತ ನಡೆದಳು. +ಶಾಲೆಯ ಪಕ್ಕದಲ್ಲಿಯೇ ತೋಟವಿತ್ತು. +ಹಳೆಯ ಮರಗಳನ್ನು ಹಾಗೆಯೇ ಬಿಟ್ಟಿದ್ದರು. +ಶಾಲೆಯ ಮುಂದಿನ ಜಾಗವನ್ನೂ ಖಾಲಿ ಬಿಟ್ಟಿರಲಿಲ್ಲ. +ಅಚ್ಚಹಸಿರ ಹುಲ್ಲು ಬೆಳೆದು ಇಡೀ ಅಂಗಳ ಹಸಿರಾಗಿ ಕಾಣುತ್ತಿತ್ತು. +ಹತ್ತಾರು ಔಷಧಿಯ ಗಿಡ ಬಳ್ಳಿಗಳು ಗಾಳಿ ಬೀಸಿದಾಗ ಬಳುಕುವ ಬಳ್ಳಿಗಳು, ಗಿಡ ಮರಗಳ ಮೇಲೆ ಕುಳಿತು ಚಿಲಿಪಿಲಿ ಗುಟ್ಟುತ್ತಿರುವ ಹಕ್ಕಿಗಳ ಬಳಗ, ಅಳಿಲುಗಳ ಪುಟ ಪುಟನೇ ಓಡಾಟ, ದುಂಬಿಗಳು ಒಂದು ಹೂವಿನಿಂದ ಮತ್ತೊಂದು ಹೂವಿಗೆ ಝೇಂಕರಿಸುತ್ತ ಹಾರಾಡುತ್ತಿದ್ದು ಕಣ್ಣಿಗೆ ಹಬ್ಬವೆನಿಸಿತ್ತು. +ಈ ಗಿಡಗಳನ್ನೆಲ್ಲ ಅದೆಲ್ಲಿಂದ ತಂದು ಬೆಳೆಸಿದರೋ, ವಿವಿಧ ಬಣ್ಣದ ಗುಲಾಬಿಗಳು ಪಾಂಪ್ಲೆಂಟ್ ಬಳ್ಳಿ, ಚರ್ರಿ, ಬಗೆ ಬಗೆಯ ದಾಸವಾಳಗಳು, ರಾತ್ರಿ ರಾಣಿ, ತುಳಸಿ, ನಿಂಬೆಗಿಡ, ಕರಿಬೇವಿನ ಗಿಡ, ನುಗ್ಗೆ ಇವುಗಳ ಜೊತೆಗೆ ಸೊಪ್ಪುಗಳನ್ನು ಬೆಳೆಸಿದ್ದಾರೆ. +ಗಿಡಗಳನ್ನು ಕತ್ತರಿಸಿ ಅಂದವಾದ ಆಕಾರ ಕೊಟ್ಟಿದ್ದಾರೆ. +ಶಾಲೆಯ ಮುಂದೆ ಸಾಲಾಗಿ ಕುಂಡಗಳನ್ನು ಜೋಡಿಸಿದ್ದಾರೆ. +ಅವು ವಿದ್ಯಾರ್ಥಿಗಳೇ ತಂದ ಕುಂಡಗಳಾಗಿವೆ. + ಸುಂದರ ಶಾಲೆ, ಸುಂದರ ಉದ್ಯಾನ, ಸುಂದರ ಪರಿಸರ ಒಟ್ಟಿನಲ್ಲಿ ಶಾಲಾ ವಾತಾವರಣವೇ ಸುಂದರವಾಗಿದೆ. +ಶಿಕ್ಷಕರ ಪರಿಸರ ಪ್ರೇಮವನ್ನು ಮೆಚ್ಚತಕ್ಕದ್ದೆ. +ಮಕ್ಕಳಿಗೂ ಅದೇ ಪರಿಸರ ಪ್ರೇಮವನ್ನು ಬೆಳೆಸುತ್ತಿದ್ದಾರೆ. +ಮೆಚ್ಚುಗೆ ತುಂಬಿ ಬಂತು. +ಮೈಮರೆತು ಪ್ರಕೃತಿಯ ಆಸ್ವಾದನೆಯಲ್ಲಿ ಮುಳುಗಿ ಹೋಗಿದ್ದಾಳೆ. +ಕಿವಿಯ ಬಳಿ ಕುಹೂ ಕುಹೂ ಅಂತ ಕೇಳಿದಂತಾಗಿ ಬೆಚ್ಚಿ ಇತ್ತ ತಿರುಗಿದರೆ ವಿಸ್ಮಯ್ ಜಾಗಿಂಗ್ ಡ್ರೆಸ್‌ನಲ್ಲಿ ನಿಂತು ವಿನೋದವಾಗಿ ನಗುತ್ತಿದ್ದಾನೆ. +‘ಏನ್ರಿ ಪ್ರಪಂಚನೇ ಮರೆತು ನಿಂತುಬಿಟ್ಟಿದ್ದೀರಾ, ಎಚ್ಚರಿಸಬಾರದು ಅಂತಿದ್ದೆ, ಆದರೆ ಅವತ್ತಿನ ಕೋಪ ಹೋಗಿದೆಯೋ ಇಲ್ಲವೋ ಅಂತ ತಿಳ್ಕೊಬೇಕು ಅಂತ ಕೋಗಿಲೆತರ ನಿಮ್ಮ ಕಿವಿಯ ಹತ್ತಿರ ಕೂಗಿದೆ.’ +ಅವನ ತುಂಟ ನಗು, ಕೀಟಲೆ ತುಂಬಿದ ಮಾತುಗಳಿಂದ ನಗು ಬಂದರೂ ಗಂಭೀರವಾಗಿ ‘ನಿಮ್ಮ ಮೇಲೆ ನಾನ್ಯಾಕೆ ಕೋಪ ಮಾಡಿಕೊಳ್ಳಲಿ, ಅಷ್ಟಕ್ಕೂ ನನಗ್ಯಾಕೆ ನಿಮ್ಮ ಮೇಲೆ ಕೋಪ’ ಅವನನ್ನೆ ನೋಡುತ್ತ ಹೇಳಿದಳು. +ಮತ್ತಷ್ಟು ಹತ್ತಿರ ಬಂದ ವಿಸ್ಮಯ್ ‘ನಿಜ ಹೇಳಿ, ನನ್ನ ಮೇಲೆ ನಿಜವಾಗಲೂ ಕೋಪ ಇಲ್ಲವಾ’ ಅವಳ ಕಣ್ಣುಗಳನ್ನು ದಿಟ್ಟಿಸುತ್ತ ಹೇಳಿದ. +ಅವನ ಕಣ್ಣುಗಳನ್ನು ಎದುರಿಸಲಾರದೆ ದೃಷ್ಟಿ ತಪ್ಪಿಸಿದಳು. +ಅವನು ಅಷ್ಟು ಹತ್ತಿರದಲ್ಲಿ ನಿಂತಿರುವುದು ಉಸಿರು ಕಟ್ಟಿದಂತಾಗಿ ಒಂದೆರಡು ಹೆಜ್ಜೆ ಹಿಂದೆ ಸರಿದಳು. +ವಿಸ್ಮಯ್ ಕೂಡ ಮುಂದಕ್ಕೆ ಹೆಜ್ಜೆ ಇರಿಸಿದ. +ಅವಳ ಮೊಗವನ್ನು ಬೆರಳಿನಿಂದ ಮೆಲಕ್ಕೆತ್ತಿ ‘ನಿಮಗೆ ನಿಜವಾಗಲೂ ನನ್ನ ಮೇಲೆ ಕೋಪ ಇಲ್ಲ ಅಂದರೆ ನನಗೆ ತುಂಬಾ ಸಂತೋಷವಾಗುತ್ತೆ. +ಆದರೆ ಈ ಮುಖ ಇಷ್ಟೊಂದು ಸುಂದರವಾಗಿದೆ. +ಆದರೆ ಅದು ನಗುವಿನಿಂದ ಅರಳಬಾರದೆ? +ನೀವು ನಕ್ಕಿದ್ದನ್ನ ನಾನು ನೋಡಿದ್ದು ಒಂದೇ ಸಲ. +ನೋಡಿ ಆ ಹೂವು ಅರಳಿ ಎಷ್ಟೊಂದು ಸುಂದರವಾಗಿ ನೋಡುಗರಿಗೆ ಸಂತೋಷ ಕೊಡ್ತಾಯಿದೆ. +ಆ ಸಂತೋಷ ನಿಮ್ಮಿಂದ ಬೇರೆಯವರಿಗೆ ಸಿಗಬಾರದು ಅನ್ನೋ ಸ್ವಾರ್ಥಿ ನೀವು’ ತನ್ಮಯವಾಗಿ ಅವಳನ್ನು ದಿಟ್ಟಿಸುತ್ತ ಮೆಲ್ಲನೆ ಉಸುರಿದ. +ತನ್ನ ಮುಖವನ್ನು ಹಿಡಿದು ಎತ್ತಿದ್ದ ಅವನ ಬೆರಳನ್ನು ಅತ್ತ ಸರಿಸಿ ಅಲ್ಲಿಂದ ಓಡಿ ಹೋಗಿಬಿಟ್ಟಳು. +ಅವಳು ಓಡುತ್ತಿದ್ದರೆ ಜಿಂಕೆಮರಿ ಓಡುತ್ತಿದ್ದಂತೆ ಭಾಸವಾಗಿ ಅತ್ತಲೇ ನೋಡುತ್ತ ನಿಂತುಬಿಟ್ಟ. +ಮನೆಗೆ ಬಂದರೂ ಅವಳ ಉಸುರಿನ ಏರಿಳಿತ ನಿಂತಿರಲಿಲ್ಲ. +ಓಡಿಬಂದಿದ್ದರಿಂದ ಮುಖವೆಲ್ಲ ಕೆಂಪಾಗಿ ಬೆವರು ಹರಿಯುತ್ತಿತ್ತು. +ಮನೆಯ ಮುಂದಿನ ಜಗಲಿ ಮೇಲೆ ಕುಳಿತು ಕಣ್ಮುಚ್ಚಿದಳು. +ವಿಸ್ಮಯ್ ಇನ್ನು ಹತ್ತಿರದಲ್ಲಿರುವಂತೆ, ಅವನ ಬೆರಳು ತನ್ನ ಮುಖವನ್ನು ಸ್ಪರ್ಶಿಸುತ್ತಿರುವಂತೆ ಭಾಸವಾಗಿ ಮೆಲ್ಲನೆ ಕಂಪಿಸಿದಳು. +ಉದ್ವೇಗದಿಂದ ಉಸುರಿನ ಗತಿ ಏರು ಪೇರಾಯಿತು. +ಥೂ ವಿಸ್ಮಯ್ ತಾನು ಹೋಗಿದ್ದಾಗಲೇ ಅಲ್ಲಿಗೆ ಬರಬೇಕೆ? +ತಾನು ಹೀಗೆ ಓಡಿಬಂದಿದ್ದಕ್ಕೆ ಏನು ಅಂದುಕೊಂಡನೊ. +ತಾನಾದರೂ ಯಾಕೆ ಓಡಿ ಬರಬೇಕಾಗಿತ್ತು. +ಅವನ ಬೆರಳನ್ನು ಸರಿಸಿ ಸಹಜವಾಗಿ ಮಾತನಾಡಬೇಕಿತ್ತು. +ಅವನು ಹತ್ತಿರ ಬಂದಾಗ ತಾನು ದೂರವೇ ನಿಂತು ಉತ್ತರಿಸಬೇಕಿತ್ತು. +ತನ್ನ ಮೌನದಿಂದ, ತನ್ನ ನಡವಳಿಕೆಯಿಂದ ಮತ್ತಷ್ಟು, ಬೇಸರವಾಯಿತೋ ಏನೋ, ಥೂ ತನಗೇನಾಯಿತು. +ಏಕೆ ಅವನೊಂದಿಗೆ ಸಹಜವಾಗಿರಲು ತನ್ನಿಂದ ಸಾಧ್ಯವಾಗುತ್ತ ಇಲ್ಲ. +ಅವನಿಂದ ತಪ್ಪಿಸಿಕೊಳ್ಳಲು ಏಕೆ ಸದಾ ಬಯಸುತ್ತೇನೆ ಎಂದು ಪರಿತಪಿಸಿದಳು. +ಕಾಫಿ ಕುಡಿಯುತ್ತ ಹೊರ ಬಂದ ನೀಲಾ, ಇಳಾ ಜಗುಲಿ ಮೇಲೆ ಕಣ್ಮುಚ್ಚಿ ಕುಳಿತಿದ್ದನ್ನು ಕಂಡು ಆತಂಕದಿಂದ ‘ಇಳಾ, ಇಲ್ಯಾಕೆ ಕುಳಿತಿದ್ದಿಯಾ?ಏನಾಯ್ತು?ಎಂದು ಕೇಳಿದಳು. +ಮೆಲ್ಲನೆ ಕಣ್ಣುಬಿಟ್ಟು ತನ್ನ ಆಲೋಚನೆಯಿಂದ ಹೊರ ಬಂದ ಇಳಾ ‘ಯಾಕಮ್ಮ ಗಾಭರಿ ಆಗ್ತಿಯಾ? +ಏನೂ ಆಗಿಲ್ಲ. +ತೋಟದಿಂದ ಈಗ ತಾನೆ ಬಂದೆ. +ತೋಟನ್ನೆಲ್ಲ ಸುತ್ತಿಬಂದೆ. +ಎಷ್ಟೊಂದು ಚೆನ್ನಾಗಿ ತೋಟ ಮಾಡಿದ್ದರಮ್ಮ, ಅಲ್ಲಿ ಇಲ್ಲದೆ ಇರೋ ಗಿಡಗಳೇ ಇಲ್ಲವೇನೋ ಅನ್ನಿಸ್ತು. +ನಮ್ಮ ಜಾಗದ ಚಿತ್ರಣವೇ ಬದಲಾಗಿ ಬಿಟ್ಟಿದೆ. +ನಮ್ಮ ಜಾಗ ಖಾಲಿ ಇದ್ದು ಪಾಳುಬಿದ್ದಂತೆ ಕಾಣುತ್ತಿತ್ತು. +ಈಗ ನೋಡು ನಂದನವನ ಆಗಿಬಿಟ್ಟಿದೆ. +ಶಾಲೆ ಮುಂದೆ ಬೆಳೆಸಿರೊ ಲಾನ್ ಕೂಡ ಶಾಲೆಗೆ ಒಳ್ಳೆ ಕಳೆ ತಂದು ಕೊಟ್ಟಿದೆ. +ಊಟಿಯಲ್ಲಿರೋ ಬಟಾನಿಕಲ್ ಗಾರ್ಡನ್ನಿನ ಒಂದು ಭಾಗವೇನೋ ಅನ್ನೋ ಹಾಗಿದೆ. +ನಿಮ್ಮ ಶಾಲೆಯ ಉದ್ಯಾನವನ್ನು ಚೆನ್ನಾಗಿ ಮೇಂಟೇನ್ ಮಾಡಿದ್ದಿರಾ. +ಎಲ್ಲಾ ಸುತ್ತಾಡಿ ಬಂದೆನಲ್ಲ ಸ್ವಲ್ಪ ಆಯಾಸ ಅನ್ನಿಸಿ ಕಣ್ಣುಮುಚ್ಚಿ ಕುಳಿತಿದ್ದೆ ಅಷ್ಟೆ. +ಅಜ್ಜಿ ಕಾಫಿ ಕೊಡು’ ಅಲ್ಲಿಂದಲೇ ಅಜ್ಜಿಗೆ ಕೂಗು ಹಾಕಿದಳು. +ಅವಳು ಬಂದಿದ್ದು ಗೊತ್ತಾಗಿ ಅಷ್ಟರಲ್ಲಾಗಲೇ ಅಂಬುಜಮ್ಮ ಕಾಫಿ ಬೆರಸಿ ತರುತ್ತಿದ್ದರು. +ಅಜ್ಜಿಯಿಂದ ಕಾಫಿ ತೆಗೆದುಕೊಂಡ ಇಳಾ ‘ಅಜ್ಜಿ ನಿಮಗೆ ಹೇಗೆ ನನ್ನ ಮನಸ್ಸು ಅರ್ಥವಾಗುತ್ತೆ. +ನನಗೆ ಬಂದ ಕೂಡಲೇ ಕಾಫಿ ಕೊಡಬೇಕು ಅಂತ ಹೇಗಜ್ಜಿ ನಿಮ್ಗೆ ಗೊತ್ತಾಯ್ತು, ಮನಸ್ಸು ಓದೋ ವಿದ್ಯೆ ಬರುತ್ತಾ’ ಅಭಿಮಾನದಿಂದ ಕೇಳಿದಳು. +‘ಇದಕ್ಕೆ ಯಾಕೆ ಮುದ್ದು, ಮನಸು ಓದೋ ವಿದ್ಯೆ ಬೇಕು, ಈ ಚಳೀಲಿ ಅಲ್ಲಿವರೆಗೂ ಹೋಗಿದ್ದೀಯಾ, ನಡುಗ್ತ ಬಂದಿದ್ದೀಯಾ, ಈಗ ಬಿಸಿ ಬಿಸಿ ಕಾಫಿ ಬೇಕು ಅಂತ ಅನ್ನಿಸೋದು ಸಹಜ ಅಲ್ವೆ, ಅದಕ್ಕೆ ನಿನ್ನ ದನಿ ಕೇಳಿದ ಕೂಡಲೇ ಕಾಫಿ ಬೆರಸಿ ತಂದೆ’ ಸಹಜವಾಗಿಯೇ ಹೇಳಿದರು. +‘ಇಳಾ, ತೋಟಕ್ಕೆ ಬಾಳೆಗಿಡ ಹಾಕಿಸಿದಿಯಾ, ಗದ್ದೆಗೂ ಹಾಕಿಸಿದಿಯಾ, ಅದಕ್ಕೆಲ್ಲ ಕೆಲ್ಸ ಮಾಡೋಕೆ ಆಳುಗಳಿಗೆ ಕಷ್ಟವಾಗುತ್ತೆ ಕಣೆ, ಕಾಫಿ ತೋಟದ ಕೆಲಸ ಸಾಕಷ್ಟಿದೆ. +ಇರೋ ಆಳುಗಳಲ್ಲಿ ಈಗ ಹಸು ನೋಡಿಕೊಂಡು, ಹಾಲು ಕರೆದು ಡೈರಿಗೆ ಹಾಕೋಕೆ ಬಿಟ್ಟಿದ್ದೀಯಾ, ನಿಂಗೆ ಗೊತ್ತಾಗಲ್ಲ ಇಳಾ. +ಈಗ ಆಳುಗಳು ಸಿಗ್ತಾಯಿಲ್ಲ. +ಇಲ್ಲಿರೋರು ಮೊದಲಿನಿಂದ ಇದ್ದೋರೇ, ಹೆಚ್ಚು ಕೆಲಸ ಅಂದ್ರೆ ಆಳುಗಳನ್ನು ಎಲ್ಲಿ ಹೊಂದಿಸೋದು’ ಕೊಂಚ ಚಿಂತೆಯಲ್ಲಿಯೇ ಹೇಳಿದಳು. +‘ಈಗೇನು ಅಂತ ಸಮಸ್ಯೆ ಬಂದಿಲ್ಲವಲ್ಲ, ನೋಡೋಣ ಮುಂದೆ- ಈಗ್ಲೆ ಯಾಕೆ ಚಿಂತೆ ಮಾಡ್ತೀಯಾ’ ನೀಲಾಳಿಗೆ ಸಮಾಧಾನಿಸಿದಳು. +‘ಹಾಗಲ್ಲ ಇಳಾ, ಇರೋ ದುಡ್ಡನ್ನೆಲ್ಲ ಸುರಿದಿದ್ದೀಯಾ, ಅದಕ್ಕೆ ತಕ್ಕಂತೆ ಕೆಲಸ ನಡಿಬೇಕು ತಾನೇ, ಲಾಭ ಬರದಿದ್ರೂ ಪರ್ವಾಗಿಲ್ಲ, ಆದರೆ ನಷ್ಟ ಆದ್ರೆ ಅದನ್ನ ನಿಭಾಯಿಸೊ ಶಕ್ತಿ ನಮಗೆ ಇರಬೇಕಲ್ಲ’ ನೀಲಾಳ ಚಿಂತೆ ಕಡಿಮೆಯಾಗಿರಲೇ ಇಲ್ಲ. +‘ಅಮ್ಮ, ನಿಧಾನವಾಗಿ ಕೆಲ್ಸ ಮಾಡಿಸಿದರೆ ಆಯ್ತು. +ತೀರ ಸಾಲದೆ ಇದ್ರೆ ದೊಡ್ಡಪ್ಪಂಗೆ ಹೇಳೋದು, ಹೇಗೊ ಅಡೆಜಸ್ಟ್ ಮಾಡುತ್ತಾರೆ’ ಅನುಭವವಿಲ್ಲದ ಇಳಾ ಹೇಳುತ್ತಿದ್ದರೆ-‘ಇಳಾ, ಇದೇ ಸಮಸ್ಯೆ ನಿಮ್ಮಪ್ಪ ಶುಂಠಿ ಹಾಕಿದಾಗಲೂ ಕಾಡಿತ್ತು. +ಎಲ್ಲೂ ಆಳುಗಳು ಸಿಗದೆ ಬೇರೆ ಕಡೆಯಿಂದ ವ್ಯಾನ್ ಮಾಡಿ ಕರಿಸಿಕೊಂಡರು. +ಅವರು ಚೆನ್ನಾಗಿ ಕೆಲಸ ಮಾಡಲಿ ಎಂದು ಒಂದಕ್ಕೆ ಎರಡರಷ್ಟು ಕೂಲಿ ಕೊಟ್ಟರು. +ಅವರಿಗೆ ಕುಡಿಸಿ, ತಿನ್ನಿಸಿ ಹಣವನ್ನು ನೀರಿನಂತೆ ಚೆಲ್ಲಿದರು. +ಹೇಗೂ ಶುಂಠಿ ರೇಟು ಸಿಕ್ಕೆಸಿಗುತ್ತೆ ಅನ್ನೊ ಧೈರ್ಯ ನಿಮ್ಮಪ್ಪಂಗೆ, ಏನಾಯ್ತು ಕೊನೆಗೆ… +ಲಾಭ ಇರಲಿ, ಅಸಲು ಕೂಡ ಹುಟ್ಟದೆ ತಲೆ ಮೇಲೆ ತೀರಿಸೋಕೆ ಆಗದೆ ಇರೋ ಸಾಲ ಹೊತ್ಕೊಂಡು ಈ ಲೋಕನೇ ಬಿಟ್ಟು ಹೋದರು. +ಅದಕ್ಕೆ ಹೇಳ್ತಾ ಇದ್ದೀನಿ. +ಏನೇನೋ ಪ್ರಯೋಗ ಮಾಡೋಕೆ ಹೋಗಿ ಈಗ ತಿನ್ತ ಇರೋ ಅನ್ನಕ್ಕೂ ಕಲ್ಲು ಹಾಕಬೇಡ’ ಏಕೋ ಧ್ವನಿ ಕಠಿಣವಾಯ್ತು. +ಇಳಾಗೆ ಅಮ್ಮನ ಮಾತು ಒರಟು ಎನಿಸಿದರೂ ಬೇಸರಗೊಳ್ಳಲಿಲ್ಲ. +ಅಮ್ಮಂಗೆ ಇವತ್ತಲ್ಲ ನಾಳೆ ಗೊತ್ತಾಗುತ್ತೆ, ನಾನು ಅಪ್ಪನ ರೀತಿ ಹೆಜ್ಜೆ ಇಡದೆ ಬೇರೆ ತರನೇ ಇದ್ದೀನಿ ಅಂತ. +ಬರೀ ಕಾಫಿನೇ ನೆಚ್ಚಿಕೊಂಡಿಲ್ಲ. +ಬಾಳೆನೂ ನೆಚ್ಚಿಕೊಂಡಿಲ್ಲ, ಇನ್ನೊಂದು ವರ್ಷ ಹೇಗೆ ಆದಾಯ ಬರೋಕೆ ಶುರುವಾಗುತ್ತೆ ಕಾಯೋ ತಾಳ್ಮೆ ಅಮ್ಮನಿಗಿಲ್ಲ ಎಂದುಕೊಂಡು ಏನೂ ಮಾತಾಡದೆ ಎದ್ದು ಒಳ ನಡೆದಳು. +ಅವಳು ಅತ್ತ ಹೋಗುತ್ತಿದ್ದ ಹಾಗೆ ಅಂಬುಜಮ್ಮ ನೀಲಾಗೆ ‘ನೀಲಾ ಅಷ್ಟೊಂದು ಒರಟಾಗಿ ಮಾತನಾಡಬಾರದಿತ್ತು ನೀನು, ಮಗು ನೊಂದುಕೊಂಡು ಹೋಯಿತು. +ಅವಳು ತುಂಬಾ ಜಾಣೆ ಕಣೆ, ಯಾವುದನ್ನು ಮುಂದಾಲೋಚನೆ ಇಲ್ಲದೆ ಮಾಡುವುದಿಲ್ಲ. +ಈ ರೀತಿ ತೋಟ ಮಾಡೋಕೆ ಮುಂಚೆ ಅಂತಹ ಹತ್ತಾರು ತೋಟ ನೋಡಿಕೊಂಡು ಅವರು ಲಾಭ ಗಳಿಸುತ್ತಿರೋದನ್ನ ನೋಡಿಯೇ ನಮ್ಮ ತೋಟದಲ್ಲಿ ಹಾಗೆ ಮಾಡ್ತ ಇದ್ದಾಳೆ. +ಅವಳೇನು ಹಾಳು ಮಾಡಬೇಕು ಅಂತ ಇದ್ದಾಳಾ. +ಬೇರೆ ಹೆಣ್ಣುಮಕ್ಕಳಾಗಿದ್ರೆ ಟಿ.ವಿ.ನೋಡ್ಕೊಂಡು ಹೇಗೊ ಕಾಲ ತಳ್ಳಿಬಿಡುತ್ತಿದ್ದವು. +ಈ ವಯಸ್ಸಿನಲ್ಲಿ ತೋಟದ ಜವಾಬ್ಧಾರಿ ಹೊತ್ತುಕೊಂಡು ಬಿಡುವಿಲ್ಲದೆ ದುಡಿಯುತ್ತ ಇದ್ದಾಳೆ. +ಹಾಲಲ್ಲೇ ನೋಡು, ಪ್ರತಿ ತಿಂಗಳು ತಪ್ಪದೇ ಆದಾಯ ಬರ್ತಾ ಇದೆ. +ಅದರ ಗೊಬ್ಬರದಿಂದ ಬೇರೆ ಗೊಬ್ಬರ ಕೊಳ್ಳೋದು ತಪ್ಪಿತು. +ನಿನ್ನ ಗಂಡನ ತರ ಸುಮ್ನೆ ದುಡ್ಡು ಚೆಲ್ತ ಇಲ್ಲ. +ಒಂದಕ್ಕೆರಡು ಲಾಭ ಬರೋ ಹಾಗೆ ಪ್ಲಾನ್ ಮಾಡಿದ್ದಾಳೆ. +ತೋಟದಲ್ಲಿ ಸಿಗೊ ಎಲ್ಲಾ ಪದಾರ್ಥಗಳಿಗೂ ರೇಟು ಇದೆ. +ಅದನ್ಯಾರು ಮಾರ್ತಾರೇ ಅಂತ ನಿನ್ನ ಗಂಡ ಹಾಳು ಬಿಟ್ಟಿದ್ದ. +ಈಗ ನೋಡು ಇಳಾ ಅದಕ್ಕೂ ಗಿರಾಕಿ ಹೊಂದಿಸಿ ದಿನಾ ಒಂದೊಂದನ್ನ ಮಾರ್‍ತಾ ಇದ್ದಾಳೆ. +ಕಿತ್ತಲೆ ಹಣ್ಣು, ಗೋಡಂಬಿ, ಸೀಗೆ ಹೀಗೆ ಎಲ್ಲಕ್ಕೂ ದುಡ್ಡು ಸಿಗ್ತಾ ಇದೆ. +ಹೇಗೋ ಖರ್ಚಿಗೆ ಆಗುತ್ತೆ. +ಅವಳನ್ನ ಏನೇನೋ ಅಂದು ಆಡಿ ಆ ಮಗು ಮನಸ್ಸನ್ನು ನೋಯಿಸಬೇಡ, ಹೇಗೂ ಎಲ್ಲವನ್ನು ಮರೆತು ಗಂಡು ಹುಡುಗನಂತೆ ದುಡೀತಾ ಇದೆ. +ನೀನೇನೋ ಸ್ಕೂಲ್ ಅಂತ ಹೋಗಿಬಿಡ್ತೀಯಾ. +ಅವಳು ಆಸಕ್ತಿ ತೊಗೊಳ್ದೆ ಇದ್ದಿದ್ರೆ ತೋಟ ಹಾಳು ಬಿದ್ದುಹೋಗ್ತಾಯಿತ್ತು’ ವಿವರವಾಗಿ ಅವಳ ಮನಸ್ಸಿಗೆ ಇಳಾ ಮಾಡ್ತ ಇರೋದು ಸರಿ ಅನ್ನುವಂತೆ ಸ್ಪಷ್ಟಪಡಿಸಿದರು. +ಇಳಾ ಬೇಸರಿಸಿಕೊಂಡು ಎದ್ದುಹೋದದ್ದು ನೀಲಾಳಿಗೂ ಕಸಿವಿಸಿ ಎನಿಸಿತ್ತು. +ದೊಡ್ಡಮ್ಮ ಹೇಳಿದ ಮೇಲೆ ಇನ್ನು ಯಾವ ವಿಚಾರಕ್ಕೂ ತಲೆ ಹಾಕಬಾರದೆಂದು ನೀಲಾ ನಿರ್ಧರಿಸಿಕೊಂಡಳು. +ಏನಾದರೂ ಮಾಡಿಕೊಳ್ಳಲಿ ತಾನಂತು ಎಲ್ಲದಕ್ಕೂ ಸಿದ್ದವಾಗಿರಬೇಕು. +ಲಾಭನಾದ್ರೂ ಆಗಲಿ ನಷ್ಟವಾದರೂ ಆಗಲಿ ಎಷ್ಟು ವರ್ಷ. +ಒಂದು ಮದುವೆ ಮಾಡಿಬಿಟ್ರೆ ಅವಳ ಗಂಡ ಜವಾಬ್ದಾರಿ ವಹಿಸಿಕೊಳ್ಳುತ್ತಾನೆ. +ಆಗ ತಾನು ನೆಮ್ಮದಿಯಾಗಿರಬಹುದು ಎಂದುಕೊಂಡು ದೊಡ್ಡಮ್ಮನ ಮಾತನ್ನು ವಿರೋಧಿಸದೆ ಸುಮ್ಮನಾದಳು. +ಸ್ಫೂರ್ತಿ ನಿವಾಸ್ನ ಮನೆಯಿಂದ ಬಂದ ಮೇಲೆ ಕೊಂಚ ದಿನ ಎಲ್ಲದರಲ್ಲೂ ನಿರಾಸಕ್ತಳಾಗಿದ್ದಳು. +ನಿವಾಸ್ನ ಕುಟುಂಬದ ಕಥೆ ಕೇಳಿ, ಅವನ ಮೇಲಿದ್ದ ಗೌರವ ಆದರ ಮತ್ತಷ್ಟು ಹೆಚ್ಚಾಗಿತ್ತು. +ಜೊತೆಗೆ ಅನುಕಂಪ ಕೂಡ ಸೇರಿಕೊಂಡಿತು. +ಪಾಪ ನಿವಾಸ್ ಅದೆಷ್ಟು ಸಂಕಟ ಅನುಭವಿಸಿದ್ದಾರೆ. +ಚಿಕ್ಕಂದಿನಿಂದಲೂ ವಿದ್ಯಾಭ್ಯಾಸ ಅಂತ ಹೆತ್ತವರಿಂದ ದೂರ ಇದ್ದರು. +ಈಗ ಹೆತ್ತವರೇ ಅವರಿಂದ ದೂರ ಆಗಿಬಿಟ್ಟಿದ್ದಾರೆ. +ಪಾಪ ಒಂಟಿಯಾಗಿ ಬದುಕುತ್ತ ಮನಸ್ಸಿನಲ್ಲಿ ಅದೆಷ್ಟು ನೋವು ಅನುಭವಿಸುತ್ತಿದ್ದಾರೆ. +ಸಹೋದರಿ ಕಣ್ಣ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಆದೇ ಕೊರಗಿನಲ್ಲಿ ತಾಯಿ ಸತ್ತದ್ದು, ಅಪ್ಪನಿಗೆ ಬುದ್ಧಿಭ್ರಮಣೆಯಾಗಿ ಹುಚ್ಚಾಸ್ಪತ್ರೆಯಲ್ಲಿ ಇರುವುದು. +ಒಂದೇ ಸಲ ಅಷ್ಟು ದುರಂತಗಳನ್ನು ಕಾಣಬೇಕಾದ ವಿಪರ್ಯಾಸ ನಿವಾಸ್ನದ್ದು. +ಆದರೂ ನೋವುಂಡೇ ಇತರರಿಗೆ ನೆರವಾಗುತ್ತಿದ್ದಾರೆ. +ತಾನೆಷ್ಟು ಸಂಕಟ ಅನುಭವಿಸುತ್ತಿದ್ದರೂ ಯಾರಿಗೂ ತೋರಿಸಿಕೊಳ್ಳದೆ ಸದಾ ದುಡಿಮೆಯಲ್ಲಿ ಮುಳುಗಿ ಹೋಗಿರುವ ನಿವಾಸ್ನ ಧೀಮಂತ ವ್ಯಕ್ತಿತ್ವಕ್ಕೆ ಸ್ಫೂರ್ತಿ ಮಾರುಹೋಗಿದ್ದಳು. +ಅವನ ಸಂಕಟಕ್ಕೆ ಜೊತೆಯಾಗಿ ಅವನ ನೋವಿನಲ್ಲಿ ಪಾಲುದಾರಳಾಗಿ ಬದುಕಿನ ಹಾದಿಯಲ್ಲಿ ಹೆಜ್ಜೆ ಜೋಡಿಸುವ ಅವಳ ಕನಸಿಗೆ, ಅವಳ ಆಕಾಂಕ್ಷೆಗೆ, ಅವಳ ಬಯಕೆಗೆ ನಿವಾಸ್ ತಣ್ಣೀರು ಎರಚಿದ್ದ. +ಅವಳ ಕನಸುಗಳನ್ನು ಭಗ್ನಗೊಳಿಸಿದ್ದ; +ಆವಳ ಬಯಕೆಯ ಸೌಧವನ್ನು ಉರುಳಿಸಿದ್ದ. +ಅವಳ ಪ್ರೇಮಾರಾಧನೆಯನ್ನು ನಿರಾಕರಿಸಿದ್ದ. +ಆದರೇನು ಅವನ ಮೇಲೆ ಅವಳಿಗೆ ರೋಷವಿಲ್ಲ, ಕೋಪವಿಲ್ಲ, ತಿರಸ್ಕಾರವಿಲ್ಲ. +ತನಗೆ ಅವನ ಪ್ರೀತಿ ಸಿಗದಿದ್ದರೂ ಪರವಾಗಿಲ್ಲ. +ಅವನು ಚೆನ್ನಾಗಿರಬೇಕು. +ಬರೀ ಸಂಕಷ್ಟಗಳನ್ನು ಉಣ್ಣುತ್ತಿರುವ ನಿವಾಸ್ನಿಗೆ ಬದುಕ ಬೆಳದಿಂಗಳಾಗಿಸುವ ಸಂಗಾತಿ ದೊರೆತು ಅವನ ಬದುಕು ಹಸನಾಗಬೇಕು, ಅವನ ಮನ ಗೆಲ್ಲುವ, ಅವನ ಪ್ರೀತಿ ಪಡೆಯುವ, ಅವನ ಆಸಕ್ತಿ, ಅಭಿರುಚಿಗೆ ಸರಿಸಮಾನವಾಗಿ ನಿಲ್ಲುವ, ಅವನ ಬದುಕಿನಲ್ಲಿ ಹೆಜ್ಜೆ ಇರಿಸುವ ಅದೃಷ್ಟ ಯಾರಿಗಿದೆಯೋ, ತನಗಂತೂ ಆ ಅದೃಷ್ಟವಿಲ್ಲ. +ತಾನೇ ಅಂತಹ ಹುಡುಗಿಯನ್ನು ಹುಡುಕಿಕೊಟ್ಟು ಮದುವೆ ಮಾಡಿಸಬೇಕು. +ಅಂತಹ ಹುಡುಗಿ ಸಿಕ್ಕರೆ ನಿವಾಸ್ ಖಂಡಿತಾ ತಮ್ಮ ನಿರ್ಧಾರ ಬದಲಿಸುತ್ತಾರೆ. +ಮರಳುಗಾಡಿನಂತಿರುವ ಅವರ ಬದುಕಿನಲ್ಲಿ ಓಯಸ್ಸಿಸ್ಸು ಖಂಡಿತಾ ಚಿಮ್ಮುತ್ತದೆ. +ಈ ಪ್ರಯತ್ನ ನನ್ನಿಂದಾಗಬೇಕು. +ಅವರು ಮದುವೆಗೆ ಒಪ್ಪುವಂತೆ ನಾನು ಮಾಡಲೇಬೇಕು ಎಂದು ಶಪಥ ಮಾಡಿಕೊಂಡಳು. +ಆಗಷ್ಟೆ ಮನಸ್ಸಿಗೆ ನಿರಾಳವಾದದ್ದು. +ನಿರಾಶೆ ಮನದಲ್ಲಿ ಹೆಪ್ಪುಗಟ್ಟಿದರೂ, ನಿವಾಸ್ನ ಆಸೆಯಂತೆ, ಸುದರ್ಶನನನ್ನು ಮದುವೆಯಾಗಲು ಒಪ್ಪಿದಳು. +ಸುದರ್ಶನನಿಗಂತೂ ಸ್ಫೂರ್ತಿ ತನ್ನನ್ನು ಒಪ್ಪಿರುವುದು ತಿಳಿದು ಹಕ್ಕಿಯಂತೆ ಹಾರಾಡಿದ. +ಅದೇ ಹುರುಪಿನಲ್ಲಿ ಅವಳನ್ನು ಹುಡುಕಿಕೊಂಡು ಹಾಸನಕ್ಕೆ ಬಂದುಬಿಟ್ಟ. +ತನಗಾಗಿ ಕಾಯುತ್ತಿದ್ದ ಸುದರ್ಶನನನ್ನು ನೋಡಿ, ಸ್ಫೂರ್ತಿ ಗೆಲುವು ತಂದುಕೊಳ್ಳುತ್ತ ಅವನತ್ತ ಬಂದಳು. +ಹಾಗೆ ನಡೆದು ಬರುವಾಗ ಬಿಳಿಯ ಚೂಡಿದಾರ್ ಹಾಕಿದ್ದ ಸ್ಫೂರ್ತಿ ಹಂಸ ನಡೆದು ಬರುವಂತೆ ಭಾಸವಾಗಿ ಕಣ್ಣರಳಿಸಿ ನೋಡಿಯೇ ನೋಡಿದ. +ತನ್ನ ಪ್ರೇಮದೇವತೆ ತನ್ನ ಆರಾಧನೆಯ ಪುತ್ಥಳಿ ಜೀವತಳೆದು ಎದುರಿಗೆ ನಿಂತಾಗ ಕ್ಷಣ ಮೈಮರೆತ. +‘ಹಲೋ, ನನ್ನ ಜೊತೆ ಮಾತನಾಡಬೇಕು ಅಂತ ಬಂದವ್ರು, ಎಲ್ಲಿ ಕಳೆದು ಹೋದ್ರಿ’ ಸ್ಫೂರ್ತಿ ಎಚ್ಚರಿಸಿದಳು. +ಅವಳ ಲವಲವಿಕೆಯ ಮಾತುಗಳು ಅವನಿಗೆ ಮುದ ನೀಡಿದವು. +ಹೋದಬಾರಿ ಬಂದಾಗ ಇಂತಹ ಲವಲವಿಕೆ ಅವಳಲ್ಲಿರಲಿಲ್ಲ. +ತನ್ನನ್ನು ಕತ್ತೆತ್ತಿ ನೋಡಲೂ ಶ್ರಮಪಡುತ್ತಿದ್ದ, ಮಾತಾಡಲೂ ಪ್ರಯಾಸ ಪಡುತ್ತಿದ್ದ, ಹೊತ್ತಾಯಿತೆಂದು ಹಾರಿ ಹೋಗಿಯೇಬಿಟ್ಟಿದ್ದ, ಸ್ಫೂರ್ತಿ ಇವಳೇನಾ ಎನ್ನುವಷ್ಟು ಬೆರಗು ಹುಟ್ಟಿಸಿದ್ದ ಸ್ಫೂರ್ತಿ ಮಾತಿನ ಮಲ್ಲಿಯಾಗಿದ್ದಳು. +‘ಸುದರ್ಶನ, ಇದು ಕಾಲೇಜು ಎಲ್ಲಾ ನಮ್ಮನ್ನು ನೋಡ್ತಾ ಇದ್ದಾರೆ. +ನಾಳೇನೇ ನಂಗೆ ಪ್ರಿನ್ಸಿಪಾಲರಿಂದ ಬುಲಾವ್ ಬರುತ್ತೆ . +ಬಾಯ್‌ಫ್ರೆಂಡ್ ಜೊತೆ ಕಾಲೇಜಿನ ಹತ್ತಿರವೇ ಮಾತಾಡುವಷ್ಟು ಧೈರ್ಯಾನಾ ಅಂತ ನನ್ನ ಕೇಳ್ತಾರೆ. +ದಿನಾ ಬಾಯ್‌ಫ್ರೆಂಡ್ ಹುಡುಕಿಕೊಂಡು ಬರ್ತಾ ಇದ್ದಾರೆ ಅಂತ ಅಪ್ಪ ಅಮ್ಮಂಗೆ ಫೋನ್ ಹೋಗುತ್ತೆ. +ಬೇಗ ನಡೆಯಿರಿ, ಮೊದ್ಲು ಈ ಜಾಗದಿಂದ ಬೇರೆ ಕಡೆ ಹೋಗೋಣ’ ಎಂದು ಅವಸರಿಸಿದಳು. +‘ಬೈಕ್ ತಂದಿದೀನಿ. +ಯಾವ ಕಡೆ ಹೋಗೋಣ ಸ್ಫೂರ್ತಿ’ ಉತ್ಸಾಹದಿಂದ ಅವಳನ್ನೇ ಕೇಳಿದ. +‘ವಾಹ್, ಬೈಕ್ ತಂದಿದ್ದೀರಾ. +ನಿಮಗೆ ಗೊತ್ತಾ ನಂಗೆ ಬೈಕ್ ಅಂದ್ರೆ ತುಂಬಾ ಇಷ್ಟ. +ಬೈಕಲ್ಲಿ ಕೂತ್ಕೊಂಡು ಹೋಗ್ತ ಇದ್ರೆ ಹಕ್ಕಿ ಹಾಗೆ ಹಾರಾಡಿದ ಖುಷಿ ಸಿಗುತ್ತೆ. +ಸ್ಟೇಡಿಯಂ ಕಡೆ ಹೋಗೋಣ ಬನ್ನಿ’ ಎನ್ನುತ್ತ ಅವನ ಹಿಂದೆ ಕುಣಿಯುವ ಹೆಜ್ಜೆಯಲ್ಲಿ ನಡೆದಳು. +ಬಸ್‍ಸ್ವಾಂಡಿನ ಎದುರು ನಿಲ್ಲಿಸಿದ್ದ ಬೈಕ್ ತೆಗೆದುಕೊಂಡು ಅವಳನ್ನು ಕೂರಿಸಿಕೊಂಡು ಸ್ಟೇಡಿಯಂ ಕಡೆ ಗಾಡಿ ಓಡಿಸಿದ. +ಸುದರ್ಶನನ ಹಿಂದೆ ಬೈಕಿನಲ್ಲಿ ಕುಳಿತು ಅವನಿಗೆ ಒರಗಿಕೊಂಡಾಗ ಪುಳಕಿತಗೊಂಡಳು. +ಅಂತಹುದೇ ರೋಮಾಂಚನ ಹೊಂದಿದ ಸುದರ್ಶನ ವೇಗವಾಗಿ ಗಾಡಿಯನ್ನು ಓಡಿಸುತ್ತ ಸಣ್ಣದಾಗಿ ಸಿಳ್ಳೆ ಹಾಕಿದ. +‘ಬಿದ್ದುಬಿಡ್ತೀರಾ ಗಟ್ಟಿಯಾಗಿ ನನ್ನ ಹಿಡಿದುಕೊಳ್ಳಿ’ ಎಂದು ಹಂಪ್ ನೆಗೆಯುವಾಗ ಸೂಚನೆ ನೀಡಿದ. +ಸಂಕೋಚ ಎನಿಸಿದರೂ ಬಿದ್ದುಬಿಡುವ ಭಯದಿಂದ ಮೆಲ್ಲನೆ ಅವನ ಸೊಂಟವನ್ನು ಬಳಸಿದಳು. +ತನ್ನ ಸೊಂಟ ಬಳಸಿದ ಅವಳ ಕೈಯನ್ನು ತನ್ನ ಎಡಗೈಯಿಂದ ಸವರಿದ ಸುದರ್ಶನ. +‘ಇದು ರಸ್ತೆ, ಮುಂದೆ ಹೆಚ್ಚು ಗಮನವಿರಲಿ’ ಅವನ ಸ್ಪರ್ಶದಿಂದ ಅಮಲು ಏರಿದಂತಾಗಿ ಮೆಲ್ಲನೆ ಅವನ ಕಿವಿ ಬಳಿ ಪಿಸುಗುಟ್ಟಿದಳು. +ಸ್ಫೂರ್ತಿಯ ಮುಂಗುರುಳು ಕಿವಿ ಬಳಿ ಕಟಗುಳಿ ಇಟ್ಟಂತಾಗಿ ನಸುನಗುತ್ತ ಅವಳ ಕೈಮೇಲಿನಿಂದ ಕೈತೆಗೆದು ಗಾಡಿ ಓಡಿಸಿದ. +ಸ್ಫೂರ್ತಿ ಮತ್ತು ಸುದರ್ಶನ್ ಸ್ಟೇಡಿಯಂ ತಲುಪಿ ಗಾಡಿ ನಿಲ್ಲಿಸಿ ಅಲ್ಲಿದ್ದ ಮೆಟ್ಟಿಲುಗಳ ಮೇಲೆ ಕುಳಿತರು. +ಕ್ರೀಡಾಪಟುಗಳು ಆಟ ಆಡುತ್ತಿದ್ದರು. +ವ್ಯಾಯಾಮ ಮಾಡುವವರು, ವಾಕಿಂಗ್ ಮಾಡುವವರು, ಮಕ್ಕಳನ್ನು ಕರೆದುಕೊಂಡು ಬಂದ ತಾಯಂದಿರು, ಹರಟೆ ಹೊಡೆಯುತ್ತಿರುವ ಹಿರಿಯ ನಾಗರಿಕರು, ಮೆಟ್ಟಿಲು ಹತ್ತಿ ಇಳಿಯುತ್ತಿದ್ದ ಪುಟಾಣಿಗಳು ಎಲ್ಲರನ್ನು ನೋಡುತ್ತ ಸುದರ್ಶನ ಹೇಳಿದ. +‘ನಾನು ಸ್ಟೇಡಿಯಂಗೆ ಬಂದೇ ಇರಲಿಲ್ಲ. +ಸ್ಟೇಡಿಯಂ ಇಷ್ಟೊಂದು ಜನರಿಗೆ ಅನುಕೂಲ ಆಗ್ತಾ ಇದೆ ಅಂತ ಇವತ್ತೇ ನೋಡಿದ್ದು.’ +‘ಹೂಂ, ವಾಕಿಂಗ್ ಮಾಡೋರೊ, ಆಟ ಆಡೋರೊ ಬೆಳಿಗ್ಗೆನೂ ಇಲ್ಲಿಗೇ ಬರ್ತಾರೆ. +ಯಾವಾಗಲೂ ಹೀಗೆ ಜನ ಇರ್ತಾರೆ. +ಕತ್ಲೆ ಆದ್ರೂ ಆಡ್ತಾನೇ ಇರ್ತಾರೆ’ +‘ಆದ್ರೆ ನಮ್ಮಂತವರಿಗೆ ಇದು ಸೂಕ್ತ ಜಾಗ ಅಲ್ಲ. +ಎಲ್ಲಾದರೂ ಏಕಾಂತವಾಗಿರೋ ಜಾಗಕ್ಕೆ ಹೋಗಬಹುದಿತ್ತು’ ಜನರನ್ನು ನೋಡಿ ನುಡಿದ. +‘ಪರ್ವಾಗಿಲ್ಲ, ಯಾರೂ ಯಾರನ್ನೂ ಗಮನಿಸುವುದಿಲ್ಲ. +ಅವರವರ ಲೋಕದಲ್ಲಿ ಅವರಿರುತ್ತಾರೆ. +ನಮ್ಮ ಪ್ರೈವೈಸಿಗೇನು ತೊಂದರೆ ಇಲ್ಲ. +ಆ ಕಡೆ ನೋಡಿ ಅಲ್ಲೊಂದು ಜೋಡಿ ತಮ್ಮದೇ ಲೋಕದಲ್ಲಿ ಮೈಮರೆತಿದ್ದಾರೆ. +ಇಲ್ಲಿ ಅವೆಲ್ಲ ಕಾಮನ್. +ತಣ್ಣಗೆ ಗಾಳಿ ಬೀಸ್ತಾ ಇದೆ. +ವಾತಾವರಣ ಚೆನ್ನಾಗಿದೆ. +ಯಾರೂ ಕುತೂಹಲ ತೋರುವುದಿಲ್ಲ. +ಹಾಸನದಲ್ಲಿ ಸಧ್ಯಕ್ಕೆ ಇದೊಂದೇ ಜಾಗ ಸೇಫ್’ ವಿವರಣೆ ನೀಡಿದಳು. +‘ಸರಿ ನಿಮಗೆ ಇಷ್ಟವಾದ್ರೆ, ನಿಮಗೆ ಮುಜುಗರವಾಗದೆ ಇದ್ರೆ ಆಯ್ತು. +ನಂಗೇನು ಅಭ್ಯಂತರವಿಲ್ಲ. +ನಿಮಗೆ ಸಂಕೋಚವಾಗಬಹುದು ಅಂದುಕೊಂಡಿದ್ದೆ. +ನಂಗೇನು ಕಣ್ಣಿಗೆ ತಂಪು, ಮನಸ್ಸಿಗೂ ತಂಪು’ ತಮ್ಮ ಮುಂದೆ ಟ್ರಾಕ್ ಸೂಟ್ ಹಾಕಿಕೊಂಡು ಓಡುತ್ತಿದ್ದ ಹುಡುಗಿಯರನ್ನು ನೋಡಿಕೊಂಡು ತುಂಟತನದಿಂದ ಹೇಳಿದಾಗ, ಸ್ಫೂರ್ತಿ ‘ಈ ಗಂಡಸರ ಹಣೆ ಬರಹವೇ ಇಷ್ಟು, ಸದಾ ಕಣ್ಣಿಗೆ ತಂಪು ಮಾಡಿಕೊಳ್ಳುವ ಮನಸ್ಸಿನಲ್ಲಿಯೇ ಇರುತ್ತಾರೆ’ ಸಣ್ಣಗೆ ಸಿಡುಕಿದಳು. +‘ರೀ ಕೋಪ ಮಾಡಿಕೊಳ್ಳಬೇಡ್ರಿ. +ನಾನು ಸುಮ್ನೆಯ ತಮಾಷೆಗೆ ಹೇಳಿದೆ. +ನನ್ನ ಹುಡುಗಿಗಿಂತ ಬೇರೆ ಹುಡುಗಿ ಬೇಕಾ, ಈ ಕಣ್ಣು ಸದಾ ನಿಮ್ಮನ್ನು ಮಾತ್ರ ನೋಡೋಕೆ ಬಯಸುತ್ತವೆ’ ಸೀರಿಯಸ್ಸಾಗಿ ಹೇಳಿದಾಗ ನಾಚಿದಳು ಸ್ಫೂರ್ತಿ. +ನನ್ನ ಹುಡುಗಿ ಅಂತ ಅವಳನ್ನು ಪ್ರೇಮಪೂರಿತ ನೋಟ ಬೀರುತ್ತ ನುಡಿದಾಗ ಹೃದಯದಲ್ಲಿ ಅನುರಾಗದ ಅಲೆಗಳು ಎದ್ದವು. +ಅರೇ, ಇದೆಂಥ ಮನಸ್ಸು. +ನೆನ್ನೆವರೆಗೂ ನಿವಾಸ್ನ ಜಪ ಮಾಡುತ್ತಿದ್ದ ಈ ಹೃದಯ ಈಗಾಗಲೇ ಸುದರ್ಶನ ಪ್ರೀತಿಯನ್ನು ಒಪ್ಪಿಕೊಂಡು ಅವನ ಬಗ್ಗೆ ಅನುರಾಗ ತಾಳುತ್ತಿದೆ! +ಈ ಮನಸ್ಸು ಇಷ್ಟೊಂದು ಚಂಚಲವೇ. +ಛೇ, ಛೇ ನಿವಾಸ್ನ ಬಗ್ಗೆ ಗೌರವ ಆದರ ಇದೆ. +ಅವನಿಂದ ಪ್ರೀತಿ ಪಡೆಯಲು ಸಾಧ್ಯವಿಲ್ಲವೆಂದು ತಿಳಿದ ನಂತರ ತಾನೇ ಸುದರ್ಶನನ ಪ್ರೀತಿಯನ್ನು ತಾನು ಒಪ್ಪಿದ್ದು. +ಒಪ್ಪಿದ ಮೇಲೆ ಆ ಪ್ರೀತಿಗೆ ತನ್ನಿಂದ ಸ್ಪಂದನೆ ಸಿಗದಿದ್ದರೆ ಸುದರ್ಶನ ನೊಂದುಕೊಳ್ಳುವುದಿಲ್ಲವೆ? +ಈ ಪ್ರೀತಿ ಪ್ರಾಮಾಣಿಕವಾದದ್ದು, ನೈಜವಾದದ್ದು- ತನ್ನನು ತಾನು ಸಮರ್ಥಿಸಿಕೊಂಡಳು. +ಮನಸ್ಸುಗಳ ಶೀಘ್ರ ಬದಲಾವಣೆಗೆ ಅಚ್ಚರಿಗೊಂಡಳು ಕೂಡ. +ಹೋದ ಬಾರಿ ಸುದರ್ಶನ ಬಂದಾಗ ಅವನ ಭೇಟಿ ಅಸಹನೀಯವೆನಿಸಿತ್ತು. +ಅವನೊಂದಿಗೆ ಕಳೆಯುವ ಕ್ಷಣ ಹಿತ ಎನಿಸುತ್ತಿದೆ. +ಅವನೊಂದಿಗಿನ ಮಾತು ಸಿಹಿ ಜೇನು ಸವಿದಂತಾಗುತ್ತಿದೆ. +ಎಷ್ಟು ಬೇಗ ನಾನು ಪರಿವರ್ತನೆ ಹೊಂದಿದ್ದೇನೆ, ಇದಕ್ಕೆ ಸುದರ್ಶನನ ಪ್ರೇಮವೂ ಕಾರಣವಿರಬಹುದೇ? +ಅವನ ಆರಾಧನೆ, ಪ್ರೀತಿ, ಅವನ ಬೇಡಿಕೆ-ನನ್ನ ಕಂಡೊಡನೆ ಪ್ರೇಮದಿಂದ ಅರಳುವ ಅವನ ಮುಖವನ್ನು ಇದೆಲ್ಲವನ್ನೂ ಪ್ರೀತಿಯಿಂದ ನೋಡಿದಳು. +‘ಸ್ಫೂರ್ತಿ, ನೀವು ನನ್ನನ್ನು ಒಪ್ಪಿದ್ದು ನಂಗೆಂಥ ಸಂತೋಷ ನೀಡಿತು ಗೊತ್ತಾ? +ನೀವು ಒಪ್ಪದೆ ಇದ್ದ ಪಕ್ಷದಲ್ಲಿ ನಾನು ಏನಾಗಿ ಹೋಗುತ್ತಿದ್ದನೋ… +ಮೊಟ್ಟಮೊದಲ ಬಾರಿಗೆ ನಿಮ್ಮನ್ನು ನೋಡಿದ ಕೂಡಲೇ, ಮದ್ವೆ ಅಂತ ಆದ್ರೆ ಅದು ನಿಮ್ಮನ್ನೇ ಅಂತ ತೀರ್ಮಾನಿಸಿಬಿಟ್ಟೆ. +ನಿಮ್ಮ ಕೃಷಿಯಾಸಕ್ತಿ ನನ್ನನ್ನು ಸೆಳೆದು, ನಿಮ್ಮಂಥ ಸಂಗಾತಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಅನ್ನೊ ಆಶ್ವಾಸನೆ ಸಿಕ್ಕಿತು. +ನಾನು ವ್ಯವಸಾಯವನ್ನೆ ನಂಬಿ ಹಳ್ಳಿಯಲ್ಲಿದ್ದೇನೆ. +ಬೇರೆ ಯಾರೋ ನನ್ನ ಮದ್ವೆ ಆದರೆ ನನ್ನೊಂದಿಗೆ ಸಹಕರಿಸಲು ಆಕೆಯಿಂದ ಸಾಧ್ಯವೇ? +ಈಗಿನ ಕಾಲದ ಹೆಣ್ಣುಮಕ್ಕಳಿಗೆ ಸಿಟಿಯಲ್ಲಿರಬೇಕು, ಕೆಲಸಕ್ಕೆ ಹೋಗುವ ಗಂಡ ಬೇಕು ಅಂತ ಅಪೇಕ್ಷೆ ಪಡುತ್ತಾರೆ. +ಆದರೆ ಅಪರೂಪದ ಹೆಣ್ಣು ನೀವು. +ಕಾಲೇಜಿನಲ್ಲಿ ಓದುತ್ತಿದ್ದರೂ ರೈತರಿಗಾಗಿ ದುಡಿಯುತ್ತಿದ್ದೀರಾ, ನಿಮ್ಮ ಓದಿನ ನಡುವೆಯೂ ಇಂತಹ ಸಂಘಟನೆಗಳಲ್ಲಿ ದುಡಿಯುತ್ತ ಇದ್ದೀರಿ. +ನಾನು ಅದೆಷ್ಟು ಪುಣ್ಯ ಮಾಡಿದ್ದೇನೋ. +ನಿಮ್ಮಂತ ಹುಡುಗಿ ಸಂಗಾತಿಯಾಗಿ ಸಿಗಲು…’ +ಅವಳ ಕೈ ಹಿಡಿದು ಪ್ರೇಮದಿಂದ ತುಡಿಯುತ್ತ ಅವಳ ಹಸ್ತವನ್ನು ತುಟಿಗಿರಿಸಿಕೊಂಡ. +ತಟ್ಟನೆ ಕೈ ಬಿಡಿಸಿಕೊಂಡ ಸ್ಫೂರ್ತಿ- ‘ಸುದರ್ಶನ್, ಇದು ಪಬ್ಲಿಕ್ ಪ್ಲೇಸ್, ನಿಮ್ಮ ರೋಮಾನ್ಸ್ ಎಲ್ಲಾ ಮದುವೆ ಆದ ಮೇಲೆ ಇರಲಿ’ ನಾಚುತ್ತ ನುಡಿದಳು. +ಅವಳ ನಾಚಿಕೆ ತುಂಬಿದ ಮುಖವನ್ನೆ ಆರಾಧನೆಯಿಂದ ಆಸ್ವಾದಿಸಿದ. +ಹಳ್ಳಿಯ ಮುಗ್ಧ ಹೆಣ್ಣು ನನ್ನವಳು ಎನಿಸಿ ಅಭಿಮಾನ ತುಂಬಿ ಬಂತು. +‘ಸ್ಫೂರ್ತಿ, ನಿಮ್ಗೆ ನಾನು ವರದಕ್ಷಿಣೆ ಕೇಳ್ತೀನಿ ಅಂತ ಕೋಪ ಇತ್ತು ಅಲ್ವ. +ಅದು ನಿಮ್ಮ ಮನೆಗೆ ಕರೆತಂದವರು ಮಾಡಿದ ಅವಾಂತರ. +ನಾನು ಮೊದಲಿನಿಂದಲೂ ವರದಕ್ಷಿಣೆ ವಿರೋಧಿ. +ಚೊಕ್ಕ ಚಿನ್ನವೇ ಸಿಗುತ್ತಿರುವಾಗ ಹಣ, ಒಡವೆ ಅಂತ ಆಸೆಪಡೋ ಅಸಂಸ್ಕೃತ ನಾನಲ್ಲ. +ನಿಮ್ಮ ಮನೆಯಿಂದ ನಾನು ಒಂದು ಪೈಸೇನೂ ಬಯಸೋಲ್ಲ. +ಅದ್ದೂರಿ ಮದುವೆ ನಂಗೂ ಇಷ್ಟ ಇಲ್ಲ. +ನಿವಾಸ್ ಜೊತೆ ಮಾತನಾಡಿದ್ದೇನೆ. +ಒಂದು ಒಳ್ಳೆಯ ದಿನ ಅಂದರೆ ನಿಮ್ಮ ಸಂಘಟನೆಯ ಕಾರ್ಯಕ್ರಮದ ದಿನ ಸರಳವಾಗಿ ಮದುವೆಯಾಗಿಬಿಡೋಣ, ನಿಮ್ಮ ಮನೆಯವರಿಗೆ ಒಬ್ಬಳೇ ಮಗಳು. +ಚೆನ್ನಾಗಿ ಮದುವೆ ಮಾಡಬೇಕು ಅಂತ ಆಸೆ ಇದೆಯಂತೆ. +ನಾನೂ ಒಬ್ಬನೇ ಮಗ. +ನಮ್ಮ ಪೇರೆಂಟ್ಸ್‌ಗೂ ಮದ್ವೆ ಚೆನ್ನಾಗಿ ಆಗಬೇಕು ಅಂತ ಆಸೆ ಇದೆ. +ಇಬ್ರು ಮನೆಯವ್ರಿಗೂ ಬೇಸರ ಆಗುತ್ತೆ. +ಅದಕ್ಕಾಗಿ ತಲೆ ಕೆಡಿಸಿಕೊಳ್ಳುವುದು ಬೇಡ’ ಮದುವೆ ಕುರಿತು ನನ್ನ ಅಭಿಪ್ರಾಯ ತಿಳಿಸಿದನು. +ಸ್ಫೂರ್ತಿಯೂ ಅದೇ ಮನಸ್ಸಿನವಳು. +ತನ್ನ ಮನಸ್ಸಿನಂತೆಯೇ ಸುದರ್ಶನ ನುಡಿಯುತ್ತಿದ್ದಾನೆ. +ಮದುವೆಗಾಗಿ ನಾಲ್ಕೈದು ಲಕ್ಷ ಖರ್ಚು ಮಾಡುವುದು. +ನಂತರ ಸಾಲ ತಲೆ ಮೇಲೆ ಹೊತ್ತು ತೀರಿಸಲಾರದೆ ಒದ್ದಾಡುವುದು. +ಇಂತಹ ಅದ್ಧೂರಿತನ ಬೇಡ ಅಂತ ಅಲ್ಲವೇ… +ತಾವು ರೈತರಿಗೆ, ಜನತೆಗೆ ಸಂದೇಶ ಸಾರುತ್ತಿರುವುದು. +ನಾನೂ ಅದಕ್ಕೆ ಬದ್ಧಳಾಗಿರಬೇಕಲ್ಲವೇ. +ಹೇಳುವುದು ಒಂದು, ಮಾಡುವುದು ಒಂದು ಆಗಬಾರದು ಎಂಬುದು ತನ್ನ ಮನದ ಇಂಗಿತವಾಗಿತ್ತು. +ನಾವು ಮಾದರಿಯಾಗಿ ನಡೆದುಕೊಂಡರೆ ಅದರ ಸ್ಫೂರ್ತಿಯಿಂದ ಮತ್ತಿತರರು ನಡೆದುಕೊಂಡಾರು. +ಹೇಗೆ ನಡೆದರೂ ಮದುವೆಯೇ, ನಂತರ ಬಾಳುವುದಷ್ಟೆ ಮುಖ್ಯ ಎಂಬುದು ಅವಳ ನಿಲುವಾಗಿತ್ತು. +ಈಗ ಅಂತಹ ನಿಲುವಿಗೆ ಬೆಂಬಲ ನೀಡುವ, ಸರಳ ಮದುವೆಯನ್ನು ಒಪ್ಪಿಕೊಳ್ಳುವ ಹೃದಯವಂತ ತನಗೆ ಸಿಕ್ಕಿರುವುದು ನಿಜವಾಗಲೂ ನನ್ನ ಅದೃಷ್ಟ. +ನಿವಾಸ್ ಹೇಳಿದ್ದು ಸರಿ. +ಸುದರ್ಶನ ತುಂಬಾ ಒಳ್ಳೆ ಮನಸ್ಸಿನ, ತನ್ನನ್ನು ಉತ್ಕೃಷ್ಟವಾಗಿ ಪ್ರೀತಿಸಬಲ್ಲ ವ್ಯಕ್ತಿ. +ಇವನೊಂದಿಗಿನ ತನ್ನ ಬದುಕು ಹೂವ ಹಾದಿಯೇ ಸರಿ. +ನಿವಾಸ್ ಸಿಗದಿದ್ದರೂ, ಅಂತಹುದೇ ಮನಸ್ಸಿರುವ, ಅಂತಹುದೇ ಅಭಿರುಚಿ, ಆಸಕ್ತಿ ಇರುವ ಸುದರ್ಶನ ನನಗೆ ಲಭಿಸಿದ್ದಾನೆ. +ಇನ್ನು ತಾನೇಕೆ ಚಿಂತಿಸಬೇಕು. +ಅವನ ಮಾತಿಗೆ ತನ್ನ ಸಂಪೂರ್ಣ ಸಮ್ಮತಿ ತಿಳಿಸಿದಳು. +ಮದುವೆಯ ನಂತರ ತಮ್ಮ ಮನೆಯಿಂದಲೇ ಓದಲು ಹೋಗಬಹುದು. +ಎಷ್ಟು ಓದುವೆನೆಂದರೂ ಓದಿಸಲು ತಾನು ಸಿದ್ಧ. +ಮನೆಯವರೂ ಈ ಬಗ್ಗೆ ಅಡ್ಡಿ ಮಾಡಲಾರರು ಎಂಬ ಭರವಸೆ ಕೂಡ ನೀಡಿದ. +ಕತ್ತಲಾಗುತ್ತ ಬಂದರೂ ಸ್ಫೂರ್ತಿಗೆ ಆತಂಕವಾಗಲಿಲ್ಲ. +ನನ್ನವನಾಗುವವನ ಜೊತೆ ತಾನೇ ತಾನು ಇರುವುದು ಎಂಬ ಧೈರ್ಯದಿಂದ ಕುಳಿತೇ ಇದ್ದಳು. +ಸುದರ್ಶನನೇ ಕತ್ತಲಾಯಿತು, ಮನೆ ತಲುಪಿಸಿ ತಾನು ಹೊರಡುವೆ ಎಂದು ಮೇಲಕ್ಕೆದ್ದ. +ಅವನನ್ನು ಬಿಟ್ಟು ಹೊರಡುವುದೆಂದರೆ ಸಂಕಟವಾಗತೊಡಗಿತು. +ಅವನಿಗೂ ಇದು ಹಿಂಸೆಯ ಕೆಲಸವೇ. +ಆದರೆ ಹೋಗಲೇಬೇಕಿತ್ತಲ್ಲವೇ. +ಕೆಲವೇ ದಿನ ಈ ದೂರ- ಅಲ್ಲೀವರೆಗೂ ವಿಧಿ ಇಲ್ಲದೆ ಸಹಿಸಿಕೊಳ್ಳಲೇಬೇಕು ಎಂದು ಸಮಾಧಾನ ತಾಳುತ್ತ ಒಬ್ಬರನ್ನೊಬ್ಬರು ಬೀಳ್ಕೊಟ್ಟರು. +ಸರಳ ಮದುವೆ ಮುಂದಿನ ತಿಂಗಳಲ್ಲೇ ಮದುವೆ ನಿಗದಿಯಾಯಿತು. +ಎರಡೂ ಕಡೆಯ ಹಿರಿಯರು ಮೊದಮೊದಲು ಸರಳ ಮದುವೆಗೆ ಒಪ್ಪಲೇ ಇಲ್ಲ. +ನಿವಾಸ್ನ ಮಾತುಗಳು ಹಾಗೂ ಸ್ಫೂರ್ತಿ-ಸುದರ್ಶನರ ಹಠದಿಂದಾಗಿ ಅಸಮಾಧಾನದಿಂದಲೇ ಒಪ್ಪಿದರು. +ಎರಡೂ ಕಡೆಯಿಂದ ನೆಂಟರು ನೂರು ಜನ, ಸ್ನೇಹಿತರು ಐವತ್ತು ಜನ ಇಷ್ಟೇ ಜನ ಸಾಕೆಂದು ತೀರ್ಮಾನಿಸಿಕೊಂಡರು. +ಹಾರ ಬದಲಾಯಿಸಿಕೊಂಡು, ರಿಜಿಸ್ಪರ್ ಆಫೀಸಿನಲ್ಲಿ ಮದುವೆ ನೋಂದಣಿ ಮಾಡುವುದು, ಬಂದವರಿಗೆಲ್ಲ ಒಂದು ಸರಳ ಸಿಹಿ ಊಟ. +ಇದಿಷ್ಟರಲ್ಲೇ ಮದುವೆ ಮುಗಿಸಬೇಕು ಎಂಬುದು ಸ್ಫೂರ್ತಿ ಹಾಗೂ ಸುದರ್ಶನರ ನಿರ್ಧಾರ. +ಸ್ನೇಹಿತರ ಪೈಕಿ ತನ್ನ ಕಾಲೇಜಿನ ನಾಲ್ಕಾರು ಗೆಳತಿಯರು ಹಾಗೂ ಇಳಾಳನ್ನು ಮಾತ್ರ ಸ್ಫೂರ್ತಿ ಆಹ್ವಾನಿಸಿದ್ದಳು. +ಇಷ್ಟು ಬೇಗ ಸ್ಫೂರ್ತಿ ಮದುವೆ ನಿಶ್ವಯವಾಯಿತೆ ಎಂದು ಅಚ್ಚರಿಪಟ್ಟಳು ಇಳಾ. +ಸ್ಫೂರ್ತಿ ಫೋನಿನಲ್ಲಿಯೇ ಸುದರ್ಶನ ತನ್ನನ್ನು ಮೆಚ್ಚಿದ್ದು, ಮೊದಮೊದಲು ತಾನು ಅವನನ್ನು ನಿರಾಕರಿಸಿದ್ದು, ನಿವಾಸ್ ಆತನ ಬಗ್ಗೆ ಹೇಳಿ ಒಪ್ಪಿಸಿದ್ದು. +ಕೊನೆಗೆ ಸುದರ್ಶನನ ಸರಳತೆ, ಆದರ್ಶ, ವಿಚಾರವಂತಿಕೆ, ಆಸಕ್ತಿ ಅಭಿರುಚಿಗೆ ತಾನೂ ಮನಸೋತಿದ್ದು, ಇಬ್ಬರ ಆಸೆಯಂತೆ ಸರಳವಾಗಿ ಮದುವೆ ಆಗುತ್ತಿದ್ದು, ಬರಲೇಬೇಕೆಂದು ಆತ್ಮೀಯವಾಗಿ ಇಳಾಳನ್ನು ಒತ್ತಾಯಿಸಿದಳು. +ಸ್ಫೂರ್ತಿಗೋಸ್ಕರ ಮದುವೆಗೆ ಬಂದೇಬರುವೆ ಎಂದು ಮಾತುಕೊಟ್ಟಳು. +ಮದುವೆ ಸ್ಫೂರ್ತಿಯ ಊರಿನಲ್ಲಿಯೇ ನಡೆಯಿತು. +ಇಳಾ ಬೆಳಿಗ್ಗೆಯೇ ಬಂದಿದ್ದಳು. +ಯಾವ ಆಡಂಬರವೂ ಇಲ್ಲದೆ, ಹಾರ ಬದಲಿಸಿಕೊಳ್ಳುವಷ್ಟರಲ್ಲಿ ಮದುವೆ ಮುಗಿದೇಹೋಯಿತು. +ಯಾರೂ ಉಡುಗೊರೆ ನೀಡಬಾರದೆಂದು ಮೊದಲೇ ಹೇಳಿಬಿಟ್ಟಿದ್ದರು. +ಹಾಗಾಗಿ ಆ ರಗಳೆಯೂ ಇರಲಿಲ್ಲ. +ಒಂದು ಹಬ್ಬದಂತೆ ಮದುವೆ ನಡೆದದ್ದು ಇಳಾಗೆ ಅಚ್ಚರಿ ತರಿಸಿತ್ತು. +ಮದುವೆ ಎಂದರೆ ಇಷ್ಟೊಂದು ಸುಲಭವಾಗಿ ನಡೆಯಬಹುದೇ. +ಎಲ್ಲಾ ಮದುವೇನೂ ಹೀಗೆ ನಡೆದರೆ ಅದೆಷ್ಟು ಲಕ್ಷಗಳು ಉಳಿಯುತ್ತವೆ. +ತಾನು ನೋಡಿದ್ದ ಮದುವೆಗಳೆಲ್ಲಾ ಅದ್ಧೂರಿ ಮದುವೆಗಳೇ. +ನಿಶ್ಚಿತಾರ್ಥವೇ ಒಂದು ಮದುವೆಯಂತೆ ಈಗ ನಡೆಯುತ್ತದೆ. +ತಾಳಿ ಒಂದು ಕಟ್ಟುವುದಿಲ್ಲ ಅಷ್ಟೆ. +ಇನ್ನು ಮದುವೆ ಹಿಂದಿನ ದಿನ ಆರತಕ್ಷತೆ, ವಿವಿಧ ರೀತಿಯ ಶೈಲಿಯ ಊಟ ತಿಂಡಿಗಳು, ಲಕ್ಷ ಲಕ್ಷ ಹಣ ನೀರಿನ ಹೊಳೆಯಂತೆ ಹರಿದಿರುತ್ತದೆ. +ಮದುವೆ ದಿನವೂ ಅದ್ಧೂರಿಯೇ. +ಬಟ್ಟೆ, ಒಡವೆ ಉಡುಗೊರೆ ಅಂತ ಖರ್ಚೋ ಖರ್ಚು. +ನನ್ನ ಮದುವೆಗೂ ಹೀಗೆ ಖರ್ಚು ಮಾಡಬೇಕಾದೀತೆಂದೇ ಅಮ್ಮ ಯೋಚನೆ ಮಾಡುತ್ತಿರುತ್ತಾಳೆ. +ಆದರೆ ಇಂತಹ ಸರಳ ಮದುವೆಗಳಿಂದ ಎಷ್ಟೊಂದು ಅನುಕೂಲ. +ತಾನೂ ಕೂಡ ಮದುವೆ ಆಗುವುದೇ ಆದರೆ ಇದೇ ರೀತಿ ಸರಳ ಮದುವೆ ಮಾಡಿಕೊಳ್ಳಬೇಕು. +ಆದರೆ ತಮ್ಮ ಮನೆಯಲ್ಲಿ ಇದು ಸ್ವಲ್ಪ ಕಷ್ಟವೇ. +ಅಮ್ಮ, ದೊಡ್ಡಪ್ಪ, ಮಾವಂದಿರೂ ಸುಲಭವಾಗಿ ಒಪ್ಪಲಾರರು. +ನೋಡೋಣ ಆ ಕಾಲ ಬಂದಾಗ ಎಂದು ಕೊಂಡು ಸ್ಫೂರ್ತಿಯ ಮದುವೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಳು. +ನಿವಾಸ್ ಕೂಡ ಸಡಗರದಿಂದ ಓಡಾಡುತ್ತಿದ್ದ. +ಮದುವೆಗೆಂದು ರೇಷ್ಮೆ ಶರ್ಟ್, ಪಂಚೆ ಉಟ್ಟಿದ್ದು ಅವನಿಗೆ ವಿಶೇಷವಾಗಿ ಕಾಣಿಸುತ್ತಿತ್ತು. +ಅವನೇ ಮದುಮಗನೇನೋ ಎನ್ನುವಂತೆ ಕಾಣುತ್ತಿದ್ದ. +ಆ ದಿರಿಸಿನಲ್ಲಿ ಮತ್ತಷ್ಟು ಚೆಲುವ ಚೆನ್ನಿಗನಂತೆ ಕಾಣಿಸುತ್ತಿದ್ದಾನೆ ಎಂದುಕೊಂಡಳು ಇಳಾ. +ಸ್ಫೂರ್ತಿಯ ಬಲವಂತಕ್ಕೆ ಅವಳದೇ ಸೀರೆ ಉಟ್ಟಿದ್ದ ಇಳಾ ದೊಡ್ಡ ಹೆಂಗಸಿನಂತೆ ಕಾಣುತ್ತಿದ್ದಳು. +ಅದುವರೆಗೂ ಪುಟ್ಟ ಹುಡುಗಿಯಂತೆಯೇ ಕಾಣುತ್ತಿದ್ದ ಇಳಾ ತಿಳಿಹಸಿರು ರೇಶಿಮೆ ಸೀರೆಯಲ್ಲಿ, ಅಪರೂಪಕ್ಕೆ ಹಾಕಿಕೊಂಡಿದ್ದ ಮುತ್ತಿನ ಓಲೆ, ಜುಮುಕಿ, ಕೊರಳಿನಲ್ಲಿ ಉದ್ದನೆಯ ಮುತ್ತಿನ ಸರ, ಜಡೆ ಹೆಣೆದು ಮಲ್ಲಿಗೆ ಮುಡಿದಿದ್ದು, ಸ್ಫೂರ್ತಿಯ ಪಕ್ಕದಲ್ಲಿ ನಿಂತಿದ್ದರೆ ಎಲ್ಲರೂ ಅವಳನ್ನೇ ನೋಡುತ್ತಿದ್ದರು. +ನಿವಾಸ್ ಕೂಡ ಕಣ್ಣರಳಿಸಿ ಅವಳತ್ತ ನೋಡಿದ್ದ. +ಎಲ್ಲರ ನೋಟ ಎದುರಿಸಲಾರದೆ ಇಳಾ ಮುಜುಗರಪಡುತ್ತಿದ್ದಳು. +ಎಷ್ಟು ಬೇಗ ಸೀರೆ ಕಳಚಿ ಚೂಡಿದಾರ್ ಹಾಕಿಕೊಂಡೆನೊ ಅಂತ ತವಕಿಸುತ್ತಿದ್ದಳು ಇಳಾ. +ನಿವಾಸ್ ಮೆಚ್ಚುಗೆಯಿಂದ ಇಳಾಳತ್ತ ನೋಡುತ್ತಿದ್ದುದನ್ನು ಸ್ಫೂರ್ತಿ ಗಮನಿಸಿದಳು. +ಕ್ಷಣ ಅಸೂಯೆಯಿಂದ ಮನಸ್ಸು ನರಳಿದರೂ, ತಕ್ಷಣವೇ, ಆ ಭಾವನೆಯನ್ನು ಕಿತ್ತು ಹಾಕಿದಳು. +ಇಳಾ ಮುದ್ದಾದ ಹುಡುಗಿ, ಯಾವುದೇ ಕಲ್ಮಶವಿಲ್ಲದ ನೇರ ನುಡಿಯ ಎದೆಗಾರಿಕೆ ಇರುವ ಹುಡುಗಿ. +ವಯಸ್ಸು ಚಿಕ್ಕದು ಎಂಬುದನ್ನು ಬಿಟ್ಟರೆ ನಿವಾಸ್ಗೆ ಇಳಾ ಒಳ್ಳೆ ಜೋಡಿ. +ಅವರಿಬ್ಬರ ಮನಸ್ಸು ಒಂದಾಗಲಿ ಎಂದು ಮನಸ್ಸಿನಲ್ಲಿಯೇ ಹಾರೈಸಿದಳು. +ಅವಳ ಮನಸ್ಸಿನಲ್ಲಿರುವುದನ್ನು ಅರಿಯದ ಇಳಾ, ನಿವಾಸ್ ಸಹಜವಾಗಿಯೇ ನಡೆದುಕೊಂಡಿದ್ದರು. +ಹೊಸ ತರಹದ ಮದುವೆ ಸಮಾಜಕ್ಕೆ ಮಾದರಿಯಾಗಬೇಕೆಂದು ಅಲ್ಲಿಗೆ ಬಂದಿದ್ದವರೆಲ್ಲ ಹೇಳಿದರು. +ಸ್ಫೂರ್ತಿಸುದರ್ಶನರ ಮದುವೆ ಒಂದು ಕ್ರಾಂತಿ ಸೃಷ್ಟಿಸಿತು. +ಇಳಾ ಮದುವೆ ಮುಗಿಸಿ ಹೊರಟು ನಿಂತಳು. +ಚನ್ನರಾಯಪಟ್ಟಣದವರೆಗೂ ಒಬ್ಬಳೆ ಹೋಗಬೇಕಾಗಿದ್ದು ಅವಳನ್ನು ಬಿಡಲು ನಿವಾಸ್ನೇ ಹೊರಟ. +ನಿವಾಸ್ನ ಹಿಂದೆ ಬೈಕಿನಲ್ಲಿ ಕುಳಿತು ಅಲ್ಲಿದ್ದವರಿಗೆ ಕೈ ಬೀಸಿ ಹೊರಟಾಗ ಒಳ್ಳೆ ಜೋಡಿ ಎಂದು ಕೊಂಡರು ಎಲ್ಲರು. +ಸ್ಫೂರ್ತಿ ಕೂಡ ಈ ಜೋಡಿ ಒಂದಾಗಲಿ ಎಂದು ತುಂಬು ಮನಸ್ಸಿನಿಂದ ಹಾರೈಸಿದಳು. +ಚನ್ನರಾಯಪಟ್ಟಣದ ಬಸ್ ಸ್ಟಾಂಡಿಗೆ ಅವಳನ್ನು ಕರೆ ತಂದು ಬಸ್ ಹತ್ತಿಸಿ, ತಡವಾಗಿದೆ ಜೋಪಾನ ಎಂದು ಸಾರಿ ಸಾರಿ ಹೇಳಿ ಬಸ್ಸು ಹೊರಡುವ ತನಕ ಇದ್ದು ಮನೆ ತಲುಪಿದ ಕೂಡಲೇ ಫೋನ್ ಮಾಡುವಂತೆ ತಿಳಿಸಿ ಬಸ್ಸು ಹೊರಟಾಗ ಕೈ ಬೀಸಿದ. +ಬಸ್ಸು ಅತ್ತ ಹೋದ ಕೂಡಲೇ ಮನಸ್ಸಿಗೆ ಒಮ್ಮೆಲೆ ಶೂನ್ಯ ಆವರಿಸಿದಂತಾಗಿ, ಇದೇನು ಹೊಸತರ… ನೆನ್ನೆ ಮೊನ್ನೆ ಪರಿಚಯವಾದವಳು ಈ ಹುಡುಗಿ. +ಇವಳನ್ನು ಮನಸ್ಸು ಇಷ್ಟೊಂದು ಹಚ್ಚಿಕೊಂಡಿದೆಯೇ… ತನ್ನನ್ನೆ ಸಂಶಯಿಸಿಕೊಂಡ. +ಛೇ ಇರಲಾರದು, ಬೆಳಿಗ್ಗೆಯಿಂದ ಒಟ್ಟಿಗೆ ಇದ್ದುದರಿಂದ ಹಾಗಾಗಿದೆ. +ಇದುವರೆಗೂ ಹೀಗೆ ಇಡೀ ದಿನ ನಾವು ಒಟ್ಟಿಗಿರಲಿಲ್ಲ. +ಹಾಗೆಂದೇ ಇಳಾ ಹೋದ ಕೂಡಲೇ ಕೊಂಚ ಪೆಚ್ಚನಿಸಿರಬೇಕು ಎಂದು ಕೊಂಡು ಅದಕ್ಕಷ್ಟು ಪ್ರಾಮುಖ್ಯತೆ ಕೊಡದೆ ಬೈಕಿನತ್ತ ನಡೆದ. +ಬೈಕ್ ಮೇಲೆ ಇಳಾ ಮುಡಿದಿದ್ದ ಮಲ್ಲಿಗೆ ಹೂಗಳು ಬಿದ್ದಿದ್ದವು. +ಮೆಲ್ಲನೆ ಅವನೆತ್ತಿಕೊಂಡು ಮೂಗಿನ ಹತ್ತಿರ ಹಿಡಿದು ಅದರ ವಾಸನೆಯನ್ನು ಆಸ್ವಾದಿಸಿದ. +ಹಾಯ್ ಎನಿಸಿ ಅರೆಗಳಿಗೆ ಕಣ್ಮುಚ್ಚಿದ. +ಇಳಾಳೇ ಅಲ್ಲಿ ನಿಂತಿರುವಂತೆ ಭಾಸವಾಗಿ ಬೆಚ್ಚಿ ಕಣ್ಣು ಬಿಟ್ಟು, ಥೂ ಇವತ್ತೇನಾಗುತ್ತಿದೆ ನನಗೆ? +ಏನೋ ಭಾವ, ಏನೋ ತಲ್ಲಣ. +ತಾನು ಸರಿಯಾಗಿದ್ದೇನಾ. +ಛೇ… ಎನ್ನುತ್ತ ತಲೆ ಕೊಡವಿಕೊಂಡು, ಬೈಕು ಹತ್ತಿ ಊರ ಕಡೆ ನಡೆದ. +ಸ್ಫೂರ್ತಿಯ ಮದುವೆ ಮುಗಿಸಿಕೊಂಡು ಮನೆಗೆ ಬಂದ ಮೇಲೂ ಇಳಾ ಅದೇ ಗುಂಗಿನಲ್ಲಿದ್ದಳು. +ಅವಳ ಮದುವೆಯದ್ದೆ ಮಾತು ಮನೆಯಲ್ಲಿ. +ಅಜ್ಜಿಯ ಬಳಿ, ನೀಲಾಳ ಬಳಿ ಆ ಬಗ್ಗೆ ಹೇಳಿದ್ದೆ ಹೇಳಿದ್ದು. +ನಿಜಕ್ಕೂ ಈ ಕಾಲದಲ್ಲಿ ಇಂತಹ ಮದುವೆಗಳ ಅವಶ್ಯಕತೆ ಇದೆ. +ಸುಮ್ಮನೆ ಮದುವೆಗಾಗಿ ಲಕ್ಷಾಂತರ ಖರ್ಚು ಮಾಡುವುದು ಅದೆಷ್ಟು ವ್ಯರ್ಥ. +ಹಾಗಾಗಿಯೇ ಹೆಣ್ಣುಮಕ್ಕಳನ್ನು ಸಮಾಜದ ಹೊರೆ ಎಂದು ಭಾವಿಸುವಂತಾಗಿದೆ. +ಹಾಗೆ ಖರ್ಚು ಮಾಡುವುದರಿಂದ ಏನಾದರೂ ಉಪಯೋಗವಿದೆಯೇ. +ಅದೇ ಹಣವನ್ನು ಹುಡುಗಿಯ ಹೆಸರಿನಲ್ಲಿಟ್ಟರೆ ಅಥವಾ ಆಸ್ತಿಯ ಮೇಲೆ ಹಾಕಿದರೆ, ಅವಳಿಗೆ ಭದ್ರತೆ ಉಂಟಾಗುವುದಿಲ್ಲವೇ ಎಂದೆಲ್ಲ ಇಳಾ ಹೇಳಿದ್ದೇ ಹೇಳಿದ್ದು. +ನೀಲಾ ಮತ್ತು ಅಂಬುಜಮ್ಮ ಮದುವೆಗೆ ಹೋಗದಿದ್ದರೂ ಮದುವೆಗೇ ಹೋಗಿ ಬಂದ ಅನುಭವವಾಗುವಷ್ಟು ಮದುವೆ ಬಗ್ಗೆ ಹೇಳಿದ್ದಳು. +ಕೆಲ ದಿನ ಅದೇ ಗುಂಗಿನಲ್ಲಿದ್ದಳು. +ಮನಸ್ಸಿನಲ್ಲಂತೂ ನಿರ್ಧಾರ ತಳೆದುಬಿಟ್ಟಿದ್ದಳು. +ತಾನು ಮದುವೆ ಆಗುವುದೇ ಆದರೆ ಅದೇ ರೀತಿಯ ಸರಳ ಮದುವೆ ಆಗುತ್ತೇನೆ. +ಅದಕ್ಕಾಗಿ ಯಾರನ್ನು ಬೇಕಾದರೂ ಎದುರಿಸಲು ಸಿದ್ಧ ಎಂದು ತೀರ್ಮಾನಿಸಿ ಬಿಟ್ಟಿದ್ದಳು. +ಸಧ್ಯಕ್ಕಂತು ಮದುವೆಯ ವಿಚಾರವಿಲ್ಲ. +ಆದರೆ ಎಂದಾದರೊಮ್ಮೆ ಮದುವೆ ಆಗಲೇ ಬೇಕಲ್ಲ. +ಮದುವೆಯಾಗದ ಹಾಗೆ ಉಳಿಯುತ್ತೇನೆ ಎಂದರೆ ನನ್ನನ್ನ ಬಿಟ್ಟಾರೆಯೇ. +ಥೂ ಏನು ಹಾಳು ಸಮಾಜವೋ. +ನಮಗೆ ಇಷ್ಟ ಬಂದ ಹಾಗೆ ನಾವು ಬದುಕುವಂತಿಲ್ಲ. +ಈ ಮದುವೆ ಸಂಸಾರ‍ ಯಾರಿಗೆ ಬೇಕಾಗಿದೆ. +ಎಂತವನು ಗಂಡನಾಗಿ ಬರುತ್ತಾನೋ. +ಎಂತವನೊಂದಿಗೆ ತಾನು ಏಗಬೇಕಾಗಿದೆಯೋ. +ಮದುವೆಯ ನಂತರ ಈ ತೋಟ, ಈ ಗದ್ದೆ, ಈ ಮನೆ, ಅಮ್ಮ ಅಜ್ಜಿ ಎಲ್ಲರನ್ನೂ ಬಿಟ್ಟು ಕೋಲೇ ಬಸವನಂತೆ ಗಂಡನ ಹಿಂದೆ ನಡೆದು ಬಿಡಬೇಕು. +ಅವನು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು. +ನಮ್ಮ ಸ್ವತಂತ್ರ್ಯಕ್ಕೆ, ನಮ್ಮ ಸ್ವಂತಿಕೆಗೆ, ನಮ್ಮ ಆಸಕ್ತಿಗೆ, ನಮ್ಮ ಆಸೆಗಳಿಗೆ ಬೆಲೆ ಎಲ್ಲಿರುತ್ತದೆ? +ನಾನು ಮದುವೆಯಾಗಿ ಹೋಗಿ ಬಿಟ್ಟರೆ ಈ ಜಮೀನನ್ನು ಯಾರು ಮಾಡಿಸುತ್ತಾರೆ. +ಅಮ್ಮನನ್ನು ಯಾರು ಕೊನೆಯತನಕ ನೋಡಿಕೊಳ್ಳುತ್ತಾರೆ. +ಅಜ್ಜಿ ಇರುವ ತನಕ ಪರವಾಗಿಲ್ಲ. +ಆ ಮೇಲೆ ಅಮ್ಮ ಒಂಟಿಯಾಗಿ ಬಿಡುತ್ತಾಳೆ. +ಅಳಿಯನ ಮನೆಗೆ ಬಂದಿರಲು ಒಪ್ಪುತ್ತಾಳೆಯೇ? +ಸ್ವಾಭಿಮಾನಿ ಹಾಗೆಲ್ಲ ಬರಲು ಸಾಧ್ಯವೇ ಇಲ್ಲ. +ನಾನೇ ಇಲ್ಲಿರುವಂತಾದರೆ, ಅಂತಹ ಹುಡುಗ ಎಲ್ಲಿ ಸಿಗುತ್ತಾನೆ. +ಮನೆ ಅಳಿಯ ಬೇಕು ಅಂತಾದರೆ, ಆಸ್ತಿ ಆಸೆಗೆ ಬರುತ್ತಾನೆ. +ಅಂತಹವನನ್ನು ತಾನು ಒಪ್ಪುವುದಾದರೂ ಹೇಗೆ, ಥೂ ಈ ಮದುವೆ ಅಂತ ಯಾಕಾದರೂ ಮಾಡಿದ್ದಾರೋ. +ನಾನಂತು ಈ ತೋಟ, ಗದ್ದೆ ಅಂತ ಒಂಟಿಯಾಗಿ ಇರಬಲ್ಲೆ. +ಸಾಧನೆಗೆ ಮದುವೆಯೇ ಮುಖ್ಯ ತೊಡಕು. +ಅಮ್ಮ, ಅಜ್ಜಿ, ದೊಡ್ಡಪ್ಪ ಅಂತೂ ಸಾಧನೆಯೇ ಬೇಡ. +ಮದುವೆಯೇ ಮುಖ್ಯ ಎನ್ನುತ್ತಾರೆ ಎಂದು ಗೊತ್ತಿದ್ದ ಇಳಾ, ಸಧ್ಯಕ್ಕಂತೂ ಸುಮ್ಮನಿರುವುದು. +ಮುಂದೆ ಮದುವೆ ವಿಚಾರ ಬಂದಾಗ ನೋಡಿಕೊಳ್ಳೋಣ ಎಂದು ಮದುವೆಯ ವಿಚಾರವನ್ನು ಮನಸ್ಸಿನಿಂದ ತೆಗೆದು ಹಾಕಿದಳು. +ತೋಟದ ಕಡೆ ಗಮನ ಹರಿಸಿದಳು. +ಬಾಳೆ ಗಿಡಗಳು ಚೆನ್ನಾಗಿ ಬಂದಿದ್ದವು. +ಪ್ರತಿ ಗಿಡಕ್ಕೂ ಒಂದೊಂದು ಬುಟ್ಟಿ ಗೊಬ್ಬರ ನೀಡುತ್ತಿದ್ದು, ನಾಲ್ಕು ದಿನಗಳಿಗೊಮ್ಮೆ ಮೇಲಿಂದ ಮೇಲೆ ನೀರು ಹಾಯಿಸಲಾಗುತ್ತಿತ್ತು. +ಸ್ಪಿಂಕ್ಲರ್ ಇದ್ದುದರಿಂದ, ಪಕ್ಕದಲ್ಲಿಯೇ ಹಳ್ಳದ ನೀರು ಹರಿಯುತ್ತಿದ್ದು ನೀರಿಗೇನು ತೊಂದರೆ ಇರಲಿಲ್ಲ. +ಮೊದಲ ಬಾರಿ ಇಷ್ಟೊಂದು ಬಾಳೆ ಬೆಳೆದಿರುವುದರಿಂದ ಇಳಾ ಅತ್ಯಂತ ಎಚ್ಚರಿಕೆ ವಹಿಸಿದ್ದಳು. +ಕೃಷಿ ತಜ್ಞರ ಸಲಹೆ ಪಡೆಯುತ್ತಿದ್ದು ಅವರ ಸೂಚನೆಗಳನ್ನು ಚಾಚೂ ತಪ್ಪದೆ ಅನುಸರಿಸುತ್ತಿದ್ದಳು. +ತಜ್ಞರು ಸೊರಗು ರೋಗ ಹಾಗೂ ಬೇರು ಕೊಳೆಯುವ ರೋಗ ಭಾದಿಸಬಹುದು ಎಂದು ಎಚ್ಚರಿಸಿದ್ದರು. +ಕಾಲಕಾಲಕ್ಕೆ ನೀರು, ಗೊಬ್ಬರ ನೀಡಿಕೆಯ ಬಗ್ಗೆ ಹಾಗೂ ಬಾಧಿಸುವ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಿದರೆ ವರ್ಷದಲ್ಲಿ ನಿರಂತರ ಬೆಳೆ ಪಡೆಯುವುದು ಕಷ್ಟವಲ್ಲ ಎಂದು ತಿಳಿಸಿದ್ದರು. +ಮೊದಲನೆಯ ಬೆಳೆ ವರ್ಷ ಪೂರ್ತಿ, ಎರಡನೆಯ ಮೂರನೆಯ ನಾಲ್ಕನೆಯ ಬೆಳೆಯನ್ನು ಒಂಬತ್ತರಿಂದ ೧೦ ತಿಂಗಳವರೆಗೂ ಪಡೆಯಬಹುದು. +ಕಳೆ, ಕಸ ತೆಗೆದು ಸ್ವಚ್ಛವಾಗಿರಿಸಿ ಗಿಡಗಳ ಕಾಳಜಿ ವಹಿಸಿದರೆ ಐದನೆಯ ಬೆಳೆಯನ್ನೂ ಬೆಳೆದು ಭರ್ಜರಿ ಲಾಭ ಪಡೆಯಬಹುದು ಎಂದು ಬಾಳೆ ಬೆಳೆದು ಲಾಭ ಗಳಿಸಿದ್ದ ರೈತರು ಹೇಳಿದ್ದು ಇಳಾಳ ಮನಸ್ಸಿನಲ್ಲಿತ್ತು. +ಈಗಾಗಲೇ ಎಕರೆಗೆ ೧,೫೦೦ ಗಿಡ ನೆಟ್ಟಿದ್ದಳು. +ಖರ್ಚು ಸಾಕಷ್ಟು ಆಗಿತ್ತು. +ಆದರೆ ಗಿಡಗಳು ಬೆಳೆದು ನಿಂತು ಗೊನೆ ಹೊತ್ತು ತೂಗುತ್ತಿದ್ದರೆ ನೋಡಲೇ ಕಣ್ಣಿಗೆ ಆನಂದವಾಗುತ್ತಿತ್ತು. +ಒಂದೊಂದು ಗೊನೆ ೫೦-೬೦ ಕೆ.ಜಿ.ಭಾರ ತೂಗುವಂತಿತ್ತು. +ತೋಟದ ಮದ್ಯೆ ಬೆಳೆದ ಬಾಳೆ ಗಿಡಗಳೂ ಹುಲುಸಾಗಿ ಬೆಳೆದು ಗೊನೆ ತೂಗುತ್ತಿದ್ದವು. +ಗದ್ದೆಯ ಚಿತ್ರಣವೇ ಬದಲಾಗಿ ಹೋಗಿತ್ತು. +ಬಾಳೆ ಇದ್ದ ಗದ್ದೆಗಳು ಹಸಿರು ವನದಂತೆ ಬಹು ದೂರದವರೆಗೂ ಕಾಣಿಸುತ್ತಿತ್ತು. +ಬಾಳೆ ಗಿಡಗಳಲ್ಲಿ ಬಂಪರ್ ಬೆಳೆ ಬಂದಿದೆ ಎಂದು ಎಲ್ಲರೂ ಮಾತನಾಡಿಕೊಳ್ಳತೊಡಗಿದರು. +ಕೃಷಿ ಇಲಾಖೆಯವರು ಖುದ್ದಾಗಿ ಇಳಾಳ ತೋಟಕ್ಕೆ ಬಂದು ಬಾಳೆ ಬೆಳೆಯನ್ನು ಪರಿಶೀಲಿಸಿ, ಈ ಭಾಗದಲ್ಲಿ ಯಾರೂ ಈ ರೀತಿಯ ಬೆಳೆಯನ್ನು ಬೆಳೆದಿಲ್ಲ. +ಇಳಾ ಧೈರ್ಯ ಮಾಡಿ ನಾಲ್ಕು ಎಕರೆಗೆ ಬಾಳೆ ಹಾಕಿದ್ದು, ಅಂಗಾಂಶ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಿದ್ದು-ಈ ಸಾಹಸ ಎಲ್ಲರ ಗಮನ ಸೆಳೆಯಿತು. +ರೋಗ ರಹಿತ ಹಾಗೂ ಅಧಿಕ ಇಳುವರಿ ಸಾಮರ್ಥ್ಯದ ಗಜಬಾಳೆ ಸಸಿಗಳನ್ನು ಅಂಗಾಂಶ ಕೃಷಿ ತಂತ್ತಜ್ಞಾನದ ಮೂಲಕ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಳಾಳ ಶ್ರಮ, ಸಾಧನೆಯ ಯಶಸ್ಸು ಅನೇಕ ರೈತರನ್ನು ಆಕರ್ಷಿಸಿತು. +ತಂಡ ತಂಡವಾಗಿ ರೈತರು ಇಳಾಳ ಬಾಳೆ ತೋಟವನ್ನು ನೋಡಿ ಅಂಗಾಂಶ ಕಸಿ ಪದ್ಧತಿಯ ಬಗ್ಗೆ ಮಾಹಿತಿ ಪಡೆದರು. +ಒಟ್ಟಿನಲ್ಲಿ ಬೆಳೆ ಬೆಳೆದು ಇಳಾ ಒಂದೇ ವರ್ಷದಲ್ಲಿ ಕೃಷಿ ಕ್ಷೇತ್ರದಲ್ಲಿ ಗಮನ ಸೆಳೆದಳು. +ಬಾಳೆ ಗೊನೆಗಳನ್ನು ಮಾರಿದಾಗ ಇಳಾಗೆ ದೊರೆತ ಹಣ ನಾಲ್ಕು ಲಕ್ಷದ ಎಂಬತ್ತೈದು ಸಾವಿರ. +ಅಷ್ಟೊಂದು ಹಣವನ್ನು ಒಟ್ಟಿಗೆ ನೋಡಿ ಗಳಗಳನೇ ಅತ್ತು ಬಿಟ್ಟಳು ಇಳಾ. +ಭೂಮಿತಾಯಿ ಅವಳ ಕೈ ಬಿಡದೆ ಕಾಪಾಡಿತ್ತು. +ಒಂದಕ್ಕೆ ಮೂರರಷ್ಟು ಲಾಭ ತಂದುಕೊಟ್ಟಿತ್ತು. +ಭೂಮಿಗಿಳಿದ ಮೊದಲ ವರ್ಷದಲ್ಲಿಯೇ ತಾನು ಯಶಸ್ಸು ಸಾಧಿಸುವೆನೆಂಬ ಯಾವ ಭರವಸೆಯೂ ಅವಳಲ್ಲಿ ಇರಲಿಲ್ಲ. +ಇವಳ ಕೆಲಸ ಕಾರ್ಯಗಳನ್ನು ಹೊರಗಿನವರು ಇರಲಿ, ಮನೆಯವರು, ಆಳು ಕಾಳುಗಳು ಕೂಡ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. +ಏನೋ ಓದಿದ್ದನ್ನು, ಕೇಳಿದ್ದನ್ನು ಪ್ರಯೋಗ ಮಾಡೋಕೆ ಹುಡುಗಿ ಹೊರಟಿದೆ, ಚಿಕ್ಕ ವಯಸ್ಸು ಅನುಭವ ಸಾಲದು ಅಂತ ಗೇಲಿ ಮಾಡಿದ್ದವರೆಲ್ಲ ಈಗ ಮೂಗಿನ ಮೇಲೆ ಬೆರಳು ಇಡುವಂತೆ ಮಾಡಿದ್ದಳು. +ಪತ್ರಿಕೆಯಲ್ಲಿ ಅವಳ ಫೋಟೋ, ರೇಡಿಯೋದಲ್ಲಿ ತೋಟದ ವಿವರ ಕೇಳಿ-ಓದಿ ಸೋಜಿಗಪಟ್ಟಿದ್ದರು. +ಸುಂದರೇಶ್ ಬಾಳೆ ಗಿಡ ನೋಡಿ ನಾವಿಷ್ಟು ವರ್ಷ ಬೇಸಾಯ ಮಾಡಿದ್ದೇ ದಂಡ. +ನಮಗಾಗಿರೋ ಅನುಭವ ನಾವು ತಿಳಿದು ಕೊಂಡಿದ್ದ ವಿಚಾರಗಳೆಲ್ಲ ನಿನ್ನ ಮುಂದೆ ಪ್ರಯೋಜನಕ್ಕೆ ಬಾರದಾದವು. +ನಿಜಕ್ಕೂ ನೀನು ಮಣ್ಣಿನ ಮಗಳು. +ಭೂಮಿ ಸೇವೆ ಮಾಡಲೇ ಹುಟ್ಟಿದವಳು. +ನಿನ್ನಿಂದ ನಾವು ಕಲಿಯುವುದು ಸಾಕಷ್ಟಿದೆ ಎಂದು ಕೊಂಡಾಡಿದಾಗ ಸಂತಸದ ಅಲೆ ಎದ್ದು ಇಳಾ ಧನ್ಯತೆ ಅನುಭವಿಸಿದಳು. +ನೀಲಾ ಕೂಡ ಬೆರಗಾಗಿ ಹೋಗಿದ್ದಳು. +ಈ ಸಾಧನೆ ಮಾಡಿರುವುದು ತನ್ನ ಮಗಳೇ! +ನೆನ್ನೆ ಮೊನ್ನೆ ಇನ್ನು ಅಂಬೆಗಾಲಿಟ್ಟು ನಡೆದದ್ದು ನೆನಪಿದೆ. +ಇಷ್ಟು ದೊಡ್ಡ ಸಾಧನೆ ಮಾಡುವಷ್ಟು ಬೆಳೆದು ಬಿಟ್ಟಳೇ. +ಇಷ್ಟೊಂದು ಸೀರಿಯಸ್ಸಾಗಿ ಕೃಷಿ ಬಗ್ಗೆ ಕೆಲಸ ಮಾಡುತ್ತಾಳೆ ಎಂಬ ಯಾವ ಭರವಸೆಯೂ ಅವಳಲ್ಲಿ ಇರಲಿಲ್ಲ. +ಮೋಹನನಂತ ಮೋಹನನೇ ಕೃಷಿ ಬಗ್ಗೆ ಅಪಾರ ಆಸಕ್ತಿ. +ಶ್ರದ್ದೆ ಇಟ್ಟುಕೊಂಡವನೇ ಕೃಷಿ ನಂಬಿ ಮುಳುಗಿ ಹೋಗಿ ಮಣ್ಣು ಸೇರಿರುವಾಗ, ಈಗಿನ್ನೂ ಕೃಷಿ ಜಗತ್ತಿಗೆ ಕಾಲಿಟ್ಟ ಪುಟ್ಟ ಹುಡುಗಿ ಏನುತಾನೇ ಮಾಡಿಯಾಳು. +ಹೇಗೋ ಸಮಯ ಕಳೆಯಲಿ ಎಂದೂ ಅವಳ ಯಾವ ಕೆಲಸದ ಬಗ್ಗೆಯೂ ತಲೆ ಕೆಡಿಸಿಕೊಂಡಿರಲಿಲ್ಲ. +ಆದರೆ ಇದ್ದ ಹಣವನ್ನೆಲ್ಲ ಖರ್ಚು ಮಾಡತೊಡಗಿದಾಗ ಆತಂಕವಾಗಿತ್ತು. +ತಿಳುವಳಿಕೆ ಇಲ್ಲದೆ ಎಲ್ಲಿ ಹಣವನ್ನೆಲ್ಲ ಹುಡಿ ಮಾಡಿಬಿಡುತ್ತಾಳೋ ಎಂದು ಮಗಳನ್ನು ಎಚ್ಚರಿಸಿದ್ದಳು. +ಇರುವ ಸಾಲದ ಮೇಲೆ ಮತ್ತಷ್ಟು ಎಲ್ಲಿ ಸಾಲ ಮಾಡಬೇಕಾದೀತೋ, ಸಾಲ ತೀರಿಸುವುದಿರಲಿ, ಮತ್ತೆ ಸಾಲವಾದರೆ ಮುಂದೆ ಇಳಾಳ ಭವಿಷ್ಯ ಹೇಗೋ ಏನೋ ಎಂದು ಹೆದರಿದ್ದಳು. +ಆದರೆ ಇಳಾ ಇಷ್ಟೊಂದು ಆಳವಾಗಿ ಕೃಷಿಯನ್ನು ಅಭ್ಯಸಿಸಿ ಒಳ ಹೊರಗನ್ನು ತಿಳಿದುಕೊಂಡು, ಹತ್ತಾರು ಕಡೆ ನೋಡಿ, ಕೇಳಿ ನಂತರವೇ ಪ್ರಯೋಗಕ್ಕಿಳಿಯುವ ಸಾಹಸ ಮಾಡಿ, ಅತ್ಯುತ್ಸಾಹದಿಂದಲೇ ಗೆದ್ದೆ ಗೆಲ್ಲುವೆ ಎಂಬ ದೃಢತೆಯಿಂದಲೇ ಮುಂದಡಿ ಇರಿಸಿದ್ದು, ಕಷ್ಟಪಟ್ಟು ದುಡಿದು ಈಗ ಇಷ್ಟೊಂದು ಹಣ ಸಂಪಾದಿಸಿ ಗೆಲುವು ಸಾಧಿಸಿದ್ದು ನೀಲಾಗೆ ನಂಬಲೇ ಆಗುತ್ತಿಲ್ಲ. +ತಾನಿನ್ನೂ ಮಗು ಎಂದು ಕೊಂಡಿದ್ದ ಇಳಾ ಅಪಾರ ಬುದ್ಧಿವಂತೆ, ವ್ಯವಹಾರಸ್ಥೆ, ವಾಸ್ತವತೆ ತಿಳಿದು ಕೊಂಡ ವಿಚಾರವಂತೆ ಎಂದು ಅವಳ ಗೆಲುವು ಸೂಚಿಸಿತ್ತು. +ವಯಸ್ಸು ಚಿಕ್ಕದಾದರೂ ತಾನು ಮಾಡಿದ ಕೆಲಸ ಚಿಕ್ಕದಲ್ಲ, ತನ್ನ ವಿಚಾರಧಾರೆ ಚಿಕ್ಕದಲ್ಲ, ತನ್ನ ಶ್ರಮ ಅಲ್ಪವಲ್ಲ. +ತನ್ನ ಶ್ರದ್ಧೆ, ಆಸಕ್ತಿ ಅಪ್ರಯೋಜಕವಲ್ಲ ಎಂದು ತನ್ನ ಕೃತಿಯಲ್ಲಿ ಮಾಡಿ ತೋರಿಸಿದ್ದಳು. +ಇಷ್ಟೆಲ್ಲ ಹಿರಿಮೆಗೆ ಮತ್ತೂಂದು ಗರಿ ಎಂಬಂತೆ ಈ ವರ್ಷದ ‘ಅತ್ಯುತ್ತಮ ಕೃಷಿ ಸಾಧನೆ ಪ್ರಶಸ್ತಿ’ ಅವಳನ್ನು ಹುಡುಕಿಕೊಂಡು ಬಂದಿತು. +ರಾಜ್ಯಮಟ್ಟದ ಪ್ರಶಸ್ತಿ ನಗದು, ಪ್ರಶಸ್ತಿ ಫಲಕ ಒಳಗೊಂಡಿದ್ದು ಕಾರ್ಯಕ್ರಮದಂದು ಸನ್ಮಾನ ಕೂಡ ಇತ್ತು. +ಸಾವಯವ ಕೃಷಿಯನ್ನೆ ಆಧರಿಸಿ ಯಾವುದೇ ರಾಸಾಯನಿಕ ಬಳಸದೆ ಹೊಸ ತಂತ್ರಜ್ಞಾನದ ಅಂಗಾಂಶ ಕಸಿ ಪದ್ಧತಿಯಿಂದ ಇಳಾ ದಿಢೀರನೆ ಜನಪ್ರಿಯಳಾಗಿದ್ದಳು. +ಅಭಿನಂದನೆಗಳ ಸುರಿಮಳೆಯೇ ಆಯಿತು. +ಮೌನವಾಗಿದ್ದುಕೊಂಡೇ ತನ್ನ ಗುರಿ ಸಾಧಿಸಿಕೊಂಡಿದ್ದಳು. +ಅಪ್ಪ ಸೋತು ಹೋದಲ್ಲಿಯೇ ತಾನು ಗೆಲುವು ಸಾಧಿಸಿದ್ದಳು. +ಸೋತು ಹತಾಶರಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸಿನ ವ್ಯಕ್ತಿಗಳಿಗೆ ಹೊಸ ದಾರಿ ತೋರುವ ದಾರಿ ದೀಪವಾದಳು. +ಸಾಧಿಸಲು ಹೊರಟರೆ ನೂರಾರು ದಾರಿಗಳಿವೆ, ಕೊಂಚ ವಿವೇಚನೆ, ಕೊಂಚ ಜವಾಬ್ದಾರಿ, ಹತ್ತಾರು ಸಾಧಕರ ಅನುಭವ ಒಂದಿಷ್ಟು ಎದೆಗಾರಿಕೆ, ಸಾಕಷ್ಟು, ಶ್ರಮ ಇವೆಲ್ಲ ಇದ್ದಲ್ಲಿ ಸಾಧಿಸುವುದೇನೋ ಕಷ್ಟಕರವಲ್ಲ ಎಂದು ಅನುಭವದ ಮೂಲಕ ತೋರಿಸಿಕೊಟ್ಟಳು. +ಕೃಷಿಯನ್ನು ನಂಬಿಯೂ ಬದುಕಬಹುದು ಗೆಲ್ಲಬಹುದು. + ಕೈತುಂಬಾ ಸಂಪಾದಿಸುವ ಮಾರ್ಗ ಇದೆ ಎಂದು ಕೃಷಿ ಎಂದರೆ ಮೂಗು ಮುರಿಯುವವರಿಗೆ ಪಾಠ ಕಲಿಸಿದಳು. +ಎರೆಹುಳು ಗೊಬ್ಬರ ತಯಾರಿಸುವ ಫಟಕದಲ್ಲಿ ಹುಳುಗಳು ಹೆಚ್ಚಾಗಿದ್ದು, ಹುಳುಗಳನ್ನು ಮಾರಾಟ ಮಾಡಿದ್ದಳು. +ತಮ್ಮ ತೋಟಕ್ಕೆ ಆಗಿ ಮಿಕ್ಕ ಗೊಬ್ಬರಕ್ಕೂ ಗಿರಾಕಿಗಳಿದ್ದರು. +ಅದೂ ಆದಾಯದ ಮೂಲವಾಯಿತು. +ಒಟ್ಟಿನಲ್ಲಿ ಹೊಸ ಕೃಷಿ ವಿಧಾನದಿಂದ ನಷ್ಟವೇನೂ ಇಳಾಗೆ ಆಗಲಿಲ್ಲ. +ಈ ವರ್ಷ ಕಾಫಿಯಿಂದೇನೂ ಲಾಭವಾಗಲಿಲ್ಲ. +ಆದರೆ ಎದೆ ಗುಂದಲಿಲ್ಲ. +ಮುಂದಿನ ಬಾರಿ ಅದು ಲಾಭ ತಂದು ಕೊಟ್ಟೆ ಕೊಡುತ್ತದೆ ಎಂಬ ತುಂಬ ಭರವಸೆ ಅವಳಲ್ಲಿತ್ತು. +ಬಂದ ಆದಾಯದಲ್ಲಿ ಬೋನಸ್ಸು ರೂಪದಲ್ಲಿ ತೋಟದ ಕೆಲಸದಾಳುಗಳಿಗೂ ಸ್ವಲ್ಪ ಭಾಗ ಹಂಚಿ, ಸ್ವತಃ ದುಡಿಮೆ ಹೆಚ್ಚಿಸುವ ನಿಟ್ಟಿನಲ್ಲಿ ಆಳುಗಳನ್ನು ಪ್ರಚೋದಿಸಿದಳು. +ಬೆಳೆಗೆ ಲಾಭ ಬಂದರೆ, ಆದರ ಲಾಭ ತಮಗೂ ಸಂದಾಯವಾಗುತ್ತದೆ ಎಂದು ತಿಳಿದಾಗ ಆಳುಗಳೂ ಕೂಡ ಹೊಸ ಹುರುಪಿನಿಂದ ಕೆಲಸ ಮಾಡಲು ಉತ್ತೇಜಿತರಾದರು. +ಈ ಸಂಬಳದ ಜೊತೆಗೆ ಬೋನಸ್ಸಿನ ಆಸೆಗೆ ಹೊರಗಡೆಯಿಂದಲೂ ಆಳುಗಳು ಬರತೊಡಗಿದರು. +ಅಲ್ಲಿಗೆ ಆಳುಗಳ ಸಮಸ್ಯೆಯೂ ತೀರಿದಂತಾಯಿತು. +ವಿಸ್ಮಯ, ಇಳಾಳ ಸಾಧನೆಯನ್ನು ಅಭಿನಂದಿಸಲು ಶಾಲೆಯಲ್ಲಿಯೇ ಒಂದು ಸಮಾರಂಭ ಏರ್ಪಡಿಸಿದನು. +ಸುತ್ತಮುತ್ತಲ ತೋಟದವರು ಕೃಷಿ ಇಲಾಖೆಯ ಅಧಿಕಾರಿಗಳು, ಸುದ್ದಿ ಮಾಧ್ಯಮದವರನ್ನು ಆಹ್ವಾನಿಸಿದ್ದನು. +ಇಂತಹ ಪ್ರಚಾರ ತನಗೆ ಬೇಡವೇ ಬೇಡ, ತಾನು ಈಗಷ್ಟೆ ಈ ಕ್ಷೇತ್ರಕ್ಕೆ ಕಾಲಿಟ್ಟಿರುವವಳು. +ಸಾಧನೆ ಮಾಡಿದವರು ಸಾಕಷ್ಟು ಜನರಿದ್ದಾರೆ, ತನಗೆ ಇದು ಇಷ್ಟವಿಲ್ಲ ಎಂದು ಸಾಕಷ್ಟು ವಿರೋಧಿಸಿದಳು. +ಆದರೆ ವಿಸ್ಮಯ್ ಹಾಗೂ ಸುತ್ತಮುತ್ತಲಿನ ನಾಗರಿಕರು ಅವಳ ವಿರೋಧವನ್ನು ಲೆಕ್ಕಿಸದೆ ಕಾರ್ಯಕ್ರಮ ಏರ್ಪಡಿಸಿಯೇ ಬಿಟ್ಟರು. +ಮುಖ್ಯವಾಗಿ ವಿಸ್ಮಯನಿಗೆ ಈ ಕಾರ್ಯಕ್ರಮ ಮಾಡಲೇಬೇಕೆಂಬ ಅಭಿಲಾಶೆ ಉಂಟಾಗಿತ್ತು. +ಹೀಗೊಂದು ಸಾಹಸಗಾಥೆಯನ್ನು ಹತ್ತಾರು ಜನರಿಗೆ ತಿಳಿಸುವಂತಹ ಸಾಧನೆಯನ್ನು ಪ್ರಶಂಸಿಸಿ ಗೌರವ ನೀಡುವ ಜವಾಬ್ಧಾರಿ ಹೊತ್ತು ಅತ್ಯಂತ ಉತ್ಸಾಹದಿಂದ ಮುನ್ನುಗಿದ್ದನು. +ಅಂದು ಭಾನುವಾರ ಶಾಲೆಯ ಮುಂಭಾಗದಲ್ಲಿ ದೊಡ್ಡದಾಗಿ ಶಾಮಿಯಾನ ಹಾಕಿ ವೇದಿಕೆ ನಿರ್ಮಿಸಿದ್ದರು. +ಆಹ್ವಾನಿತರೆಲ್ಲ ಬಂದರು. +ಊರ ಜನ ಕೂಡ ತಮ್ಮ ಹುಡುಗಿ ತಮ್ಮೂರಿನ ಹೆಸರನ್ನು ಖ್ಯಾತಿಪಡಿಸಿದವಳು ಎಂಬ ಅಭಿಮಾನದಿಂದ ಸೇರಿದರು. +ಅದೊಂದು ಖಾಸಗಿ ಕಾರ್ಯದಂತೆ ಭಾಸವಾಗದಂತೆ ಜನ ಸೇರಿದ್ದರು. +ಆ ಊರಿನಲ್ಲಿ ಅದೇ ಮೊದಲು ಅಂತಹ ಕಾರ್ಯಕ್ರಮ. +ಕುತೂಹಲದಿಂದಲೋ, ಆಸಕ್ತಿಯಿಂದಲೋ ಸುತ್ತಮುತ್ತಲಿನ ಹಳ್ಳಿಯವರು ಸೇರಿದ್ದರು. +ಆಹ್ವಾನಿತರೆಲ್ಲ ಇಳಾಳನ್ನು ಕೊಂಡಾಡಿದರು. +ಕೃಷಿ ಸಾಧಕಿ ಪ್ರಶಸ್ತಿ ಪಡೆದದ್ದು ತಮ್ಮೂರಿಗೆ ಹೆಮ್ಮೆಯ ವಿಜಾರ, ಇಡೀ ಊರಿಗೆ ಕೀರ್ತಿ ತಂದಿದ್ದಾಳೆ. +ಇದುವರೆಗೂ ಯಾರು ಮಾಡದ ಈ ಸಾಧನೆಯನ್ನು ಮಾಡಿ ಹೆತ್ತವರಿಗೆ ಗೌರವ ಹೆಚ್ಚಿಸಿದ್ದಾಳೆ. +ಈ ಪ್ರಾಂತ್ಯದಲ್ಲಿ ಎಲ್ಲರೂ ಕೃಷಿ ಮಾಡುತ್ತಿದ್ದರೂ ಹಳೆ ವಿಧಾನಗಳಿಗೆ ಅಂಟಿಕೊಂಡು ಹೊಸತನ್ನು ಅಳವಡಿಸಿಕೊಳ್ಳುವ ಎದೆಗಾರಿಕೆ ಇದೆಲ್ಲ. +ಕೃಷಿ ಪ್ರಯಾಸಕರ ಕಷ್ಟಕರ ಎಂಬುದನ್ನ ಬಿಂಬಿಸುತ್ತಿದ್ದ ಈ ದಿನಗಳಲ್ಲಿ ಆಗಷ್ಟೆ ಕೃಷಿ ಕ್ಷೇತ್ರದಲ್ಲಿ ಕಣ್ಣು ಬಿಡುತ್ತಿದ್ದರೂ, ಸಾಧನೆ ಗೈದಿರುವುದು ಸಾಮಾನ್ಯ ಸಂಗತಿಯಲ್ಲ. +ಎಲ್ಲರಿಗೂ ಇದು ಮಾದರಿಯಾಗಲಿ ಎಂದು ಹಾಡಿ ಹೊಗಳಿದರು. +ಶಾಲು ಹೊದಿಸಿ ಫಲಪುಷ್ಟ ನೀಡಿ ನಟರಾಜನ ವಿಗ್ರಹ ನೀಡಿ ಸತ್ಕರಿಸಿದರು. +ಈ ಅಭೂತಪೂರ್ವ ಸನ್ಮಾನದಿಂದ ಇಳಾ ಭಾವ ಪರವಶಳಾದಳು. +ಸಂಕೋಚದಿಂದ ತಗ್ಗಿಸಿದ ತಲೆಯನ್ನು ಎತ್ತಲಾಗಲೇ ಇಲ್ಲ. +ಮಾತನಾಡಿ ಎಂದು ಮೈಕ್ ಕೊಟ್ಟರೆ ಗಂಟಲುಬ್ಬಿ ಬಂದು ಒಂದೂ ಮಾತನಾಡಲಾರದೆ ಆನಂದಭಾಷ್ಪ ಸುರಿಸಿದಳು. +ಮೂಲೆಯಲ್ಲಿ ನಿಂತಿದ್ದ ವಿಸ್ಮಯ್ ಕೈಕಟ್ಟಿ ನಿಂತು ಎಲ್ಲವನ್ನು ನೋಡುತ್ತಿದ್ದು, ಇಳಾ ಅವನತ್ತ ಕೃತಜ್ಞತೆಯಿಂದ ನೋಡಿದಾಗ ನಸುನಕ್ಕನು. +ಈ ಕಾರ್ಯಕ್ರಮದ ರೂವಾರಿಯಾದ ವಿಸ್ಮಯ್ ಯಾರೆಷ್ಟೇ ಕರೆದರೂ ವೇದಿಕೆ ಏರಲಿಲ್ಲ. +ದೂರದಲ್ಲಿ ನಿಂತುಕೂಂಡೇ ಈ ಅಪೂರ್ವ ಗಳಿಗೆಯನ್ನು ಆಸ್ವಾದಿಸಿದ್ದ. +ವರ್ಷದ ಹಿಂದೆ ಹೇಗೊ ಎಲ್ಲೋ ಇದ್ದ ವಿಸ್ಮಯ್ ಇಂದು ಇಲ್ಲಿ ಎಲ್ಲರ ಗೌರವ ಪ್ರೀತಿಗೆ ಪಾತ್ರನಾಗಿ ಅವರಲ್ಲೊಬ್ಬನಂತೆ ಬೆರೆತು ಹೋಗಿದ್ದಾನೆ. +ನೋವುಂಡ ಎರಡು ಜೀವಗಳು ಇಂದು ವಿಸ್ಮಯನಿಂದಾಗಿ ಧನ್ಯತೆಯಿಂದ ಪುಳಕಗೊಂಡಿವೆ. +ಶಾಲೆ ತೆಗೆದು ನೀಲಾಳ ಬದುಕಿಗೆ ಓಯಸ್ಸಿಸ್ ಆದರೆ, ಅವಳ ಮಗಳಿಗೆ ಗೌರವ ನೀಡಿ ಈ ಅಭೂತಪೂರ್ವವಾದ ಹಾಗೂ ಎಂದೂ ಮರೆಯಲಾರದ ಸನ್ಮಾನ ನೀಡಿ ಊರಿನ ಗೌರವ ಹೆಚ್ಚಿಸಿದ್ದಾನೆ. +ಯಾರೂ ಮಾಡದ ಕಾರ್ಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. +ಹೀಗೆ ಗೌರವಿಸುವುದು ತನ್ನ ಕರ್ತವ್ಯವೆಂದೇ ಭಾವಿಸಿರುವ ವಿಸ್ಮಯಗೆ ಇದರಲ್ಲೇನು ಹೆಚ್ಚುಗಾರಿಕೆ ಕಾಣಿಸುತ್ತಿಲ್ಲ. +ಅದು ಅವನ ದೊಡ್ಡತನವೆಂದೇ ಎಲ್ಲರೂ ಕೊಂಡಾಡಿದರು. +ವೇದಿಕೆಯ ಮೇಲೆ ಕುರ್ಚಿಯೊಂದರಲ್ಲಿ ಕೂರಿಸಿ ಇಳಾಳಿಗೆ ಗಂಧದ ಹಾರ ಹಾಕಿ, ಶಾಲು ಹೊದಿಸುತ್ತಿದ್ದರೆ-ನೀಲಾ ಮತ್ತು ಅಂಬುಜಮ್ಮ ಹೆಮ್ಮೆಯಿಂದ ಬೀಗಿದರು. +ಇಂತ ಸನ್ಮಾನವನ್ನು ತನ್ನ ಜೀವಮಾನದಲ್ಲಿ ನೋಡುತ್ತಿರುವುದು ಮೊದಲು, ತಮ್ಮ ಮನೆತನದಲ್ಲಿ ಯಾರೂ ಇಂತಹ ಗೌರವಕ್ಕೆ ಪಾತ್ರರಾಗಿರಲಿಲ್ಲ. +ತಮ್ಮ ಕಣ್ಮುಂದಿನ ಪೋರಿ ತಮ್ಮ ಮನೆತನದ ಕುಡಿ ಸಾವಿರಾರು ಜನರ ಮುಂದೆ ಗೌರವ ಸ್ವೀಕರಿಸಿದ್ದು ಸುಂದರೇಶರಿಗೂ ಸಂತೋಷದಿಂದ ಕಣ್ಣು ತುಂಬಿ ಬಂದು ಶಾಲಿನ ತುದಿಯಿಂದ ಕಣ್ಣೊರಿಸಿಕೊಂಡು ಆ ಆನಂದದ ಕ್ಷಣಗಳನ್ನು ಸವಿದರು. +ಮನೆಯವರನ್ನೆಲ್ಲ ಕರೆತಂದು ಮುಂದಿನ ಸಾಲಿನಲ್ಲಿಯೇ ಕೂರಿಸಿಬಿಟ್ಟಿದ್ದರು. +ಮುಖ್ಯವಾಗಿ ಮಗ ಇದನ್ನು ನೋಡಿ ಕಲಿತುಕೊಳ್ಳಲಿ ಎಂದೇ ಆಶಿಸಿದರು. +ಪಟ್ಟಣಕ್ಕೆ ಹೋಗುವೆನೆಂದು ಕುಣಿಯುತ್ತಿರುವ ತಮ್ಮ ಕುಮಾರ ಕಂಠೀರವ ತಂಗಿಯನ್ನು ನೋಡಿಯಾದರೂ ಬದಲಾಗಲಿ, ಅವಳ ಸಾಧನೆ ಅವನಿಗೆ ಸ್ಫೂರ್ತಿಯಾದೀತೆಂದು ನಿರೀಕ್ಷಿಸಿದ್ದರು ಸುಂದರೇಶ್. +ಗಂಡು ಮಗನಾದ ತಮ್ಮ ಮಗನೇ ಕೃಷಿಯಲ್ಲಿ ಆಸಕ್ತಿ ತೋರುತ್ತಿಲ್ಲ. +ತೋಟವೆಂದರೆ…. ತೋಟದ ಕೆಲಸವೆಂದರೆ ಅಸಡ್ಡೆ. +ತಾವೇ ಎಲ್ಲವನ್ನು ಹೇಳಿ ಹೇಳಿ ಮಾಡಿಸಬೇಕಿತ್ತು. +ಒಂದು ವೇಳೆ ತಾವು ಏನೂ ಹೇಳದಿದ್ದರೆ ಸ್ವಂತ ಬುದ್ಧಿಯಿಂದ ಯಾವ ಕೆಲಸಕ್ಕೂ ಕೈಹಾಕದೆ ಸುಮ್ಮನಿದ್ದುಬಿಡುತ್ತಿದ್ದ ಸುಪುತ್ರನ ಬಗ್ಗೆ ಸುಂದರೇಶರಿಗೆ ಸದಾ ಅಸಮಾಧಾನವೇ. +ಇರುವ ಒಬ್ಬ ಮಗ ಆಸ್ತಿಯನ್ನು ನೋಡಿಕೊಳ್ಳದಿದ್ದರೆ ಮತ್ಯಾರು ನೋಡಿಕೊಂಡಾರು? +ಹೋಗಲಿ ವಿದ್ಯೆಯಾದರೂ ಚೆನ್ನಾಗಿ ಹತ್ತಿ ಒಂದು ನೌಕರಿ ಸಂಪಾದಿಸುವಷ್ಟು ಬುದ್ದೀವಂತನಾದನೇ ಅಂದ್ರೆ ಅದೂ ಇಲ್ಲ. + ಪಿ.ಯು.ಸಿಗೆ ಮುಗ್ಗರಿಸಿ ಮನೆಸೇರಿದ್ದ. +ಇವನ ಓದಿಗೆ ಅದಾವ ಕೆಲಸ ಸಿಕ್ಕೀತು? +ಸ್ವಂತ ಬಂಡವಾಳ ಹೂಡಿ ಗೆಲ್ಲುವಷ್ಟು ಚಾಣಕ್ಷತನವೂ ಇಲ್ಲ, ಇರುವ ಆಸ್ತಿ ನೋಡಿಕೊಳ್ಳುವ ಮನಸ್ಸು ಇಲ್ಲ. +ಒಟ್ಟಿನಲ್ಲಿ ದೊಡ್ಡ ತಲೆನೋವಾಗಿದ್ದ. +ಇನ್ನು ಹೆಣ್ಣು ಮಗಳೋ ತೋಟಕ್ಕೂ ತಮಗೂ ಸಂಬಂಧವೇ ಇಲ್ಲ. +ತಾವು ಮದುವೆಯಾಗಿ ಹೊರಟು ಹೋಗುವೆವೆಂದು ತುದಿಗಾಲಲ್ಲಿ ನಿಂತಿದ್ದಾರೆ. +ತನಗೊಬ್ಬನಿಗೆ ಬೇಕಾಗಿದೆ ಆ ಆಸ್ತಿ! +ಎಲ್ಲರ ಮನೆಗಳ ಪರಿಸ್ಥಿತಿಯೂ ಹೆಚ್ಚು ಕಡಿಮೆ ಹೀಗೆಯೇ ಇರುವಾಗ ಇಳಾ ಒಬ್ಬಳು ತೋಟದ ಬಗ್ಗೆ, ಕೃಷಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದು ಅಚ್ಚರಿ ಹುಟ್ಟಿಸುವಂತಿತ್ತು. +ಅಪ್ಪನನ್ನು ಕಳೆದುಕೊಂಡ ದುಃಖದಲ್ಲಿ ಹುಚ್ಚು ಅವೇಶ ಬಂದಿರಬೇಕು. +ವ್ಯವಸಾಯದ ಕಷ್ಟಸುಖ ಗೂತ್ತಾದರೆ ಮೈಸೂರಿಗೆ ಓಡುತ್ತಾಳೆ ಎಂದೇ ಭಾವಿಸಿದ್ದರು. +ಅವಳ ಕೆಲಸಗಳೆಲ್ಲವೂ ಹುಚ್ಚಾಟಗಳೆಂದೇ ತೋರುತ್ತಿತ್ತು. +ಅಮ್ಮನ ಹಾಲು ಕುಡಿದ ತೇವವೇ ಆರಿಲ್ಲ. +ತೋಟವನ್ನೇನು ಮಾಡಿಸುತ್ತಾಳೆ ಎಂದೇ ಉಡಾಫೆ ತೋರಿದ್ದರು. +ದುಡ್ಡನ್ನೆಲ್ಲ ಹುಡಿ ಮಾಡಿಬಿಡುತ್ತಾಳೋ, ಅಪ್ಪನಂತೆ ಮತ್ತೆ ಸಾಲದಲ್ಲಿ ಮುಳುಗಿ ಹೋಗುವಂತೆ ಮಾಡಿಬಿಡುತ್ತಾಳೋ ಎಂಬ ಆತಂಕದಿಂದಲೇ ನೋಡುತ್ತಿದ್ದರು. +ಏನಾದರೂ ಹೇಳಿದರೆ ತಂದೆ ಇಲ್ಲದ ಮಗು ಎಲ್ಲಿ ನೊಂದುಕೊಳ್ಳುತ್ತದೊ ಎಂದು ನಿಯಂತ್ರಿಸಿಕೊಳ್ಳುತ್ತಿದ್ದರು. +ಕೆಲವೊಮ್ಮೆ ಅಪ್ಪನಂತಲ್ಲ ಮಗಳು – ಬುದ್ಧಿವಂತೆ, ಮೌನವಾಗಿಯೇ ಸಾಧಿಸುತ್ತಾಳೇನೋ ಎನಿಸಿದರೂ, ವ್ಯವಸಾಯ ನಂಬಿಕೊಂಡು ಕಷ್ಟ ಪಡುತ್ತಿರುವವರನ್ನು ಕಂಡಾಗ, ಹಾಲುಗಲ್ಲದ ಹುಡುಗಿ ಓದಿಕೊಂಡು ಇರುವುದು ಬಿಟ್ಟು ಇದೇನು ಮಾಡುತ್ತಾಳೋ ಎಂದು ಅಪನಂಬಿಕೆಯಿಂದ ಇರುವಾಗ ಇದೇನು ಸಾಹಸ ಮಾಡಿ ಬಿಟ್ಟಳು. +ಅಷ್ಟೊಂದು ಧೈರ್ಯ. +ಮುನ್ನುಗ್ಗುವ ಎದೆಗಾರಿಕೆ, ಕೆಲಸಗಳಿಗೆ ಅಂಜದೆ, ಹಿಡಿದದ್ದನ್ನು ಸಾಧಿಸುವ ಛಲ ತೋರಿಸಿ ಗೆದ್ದೇಬಿಟ್ಟಳು. +ಮನೆಯ ಹೆಸರನ್ನು ಎತ್ತರಕ್ಕೇರಿಸಿ ಬಿಟ್ಟಳು. +ಭಾಷಣದಲ್ಲಿಯೂ ತಮ್ಮನ ಮಗಳನ್ನು ಕೊಂಡಾಡಿದರು. +ಹುಟ್ಟಿದರೆ ಇಂತಹ ಮಕ್ಕಳು ಹುಟ್ಟಬೇಕು. +ಇಲ್ಲದಿದ್ದರೆ ಮಕ್ಕಳೇ ಬೇಡ ಎಂದು ಮಗನ ಮೇಲಿದ್ದ ಅಸಹಾಯಕತೆಯನ್ನು ಕಕ್ಕಿದರು. +ಒಟ್ಟಿನಲ್ಲಿ ಅಪರೂಪಕ್ಕೆ ಒಂದು ಒಳ್ಳೆಯ ಕಾರ್ಯಕ್ರಮ ನಡೆದು ಎಲ್ಲರೂ ಇಳಾಳನ್ನು ಗುರ್ತಿಸುವಂತಾಯಿತು. +ಈ ಸನ್ಮಾನ ಹಾಗೂ ಪ್ರಶಸ್ತಿಯಿಂದ ಇಳಾಳ ಮೇಲಿದ್ದ ಜವಾಬ್ದಾರಿ ಮತ್ತಷ್ಟು ಹೆಚ್ಚಾಯಿತು. +ಮುಂದಿನ ಸಾಧನೆಗಳಿಗೆ ಸ್ಫೂರ್ತಿಯೂ ಆಯಿತು. +ಕೃಷಿಗೆ ತನ್ನನ್ನು ಮೀಸಲಾಗಿಡುವ ನಿರ್ಧಾರ ಮತ್ತಷ್ಟು ಗಟ್ಟಿಯಾಯಿತು. +ಹೇಗೊ ಏನೋ ಎಂಬ ಆತಂಕದ ಹೊರೆ ಕಳಚಿ ನಿರಾಳಭಾವ ಮೂಡಿ, ಮತ್ತಷ್ಟು ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಿತು. +ಈ ಸಂದರ್ಭದಲ್ಲಿ ಅಪ್ಪನ ನೆನಪು ಮತ್ತಷ್ಟು ಕಾಡಿ ಇದಕ್ಕೆಲ್ಲ ಅಪ್ಪನೇ ಪರೋಕ್ಷವಾಗಿ ಕಾರಣಕರ್ತನಾದನಲ್ಲ, ಅಪ್ಪನಿದ್ದಿದ್ದರೆ ತಾನು ಇಲ್ಲಿರುತ್ತಿದ್ದೇನೆ, ಯಾರ ಬದುಕಿನಲ್ಲಿ ಏನೇನು ಆಗಬೇಕೊ ಅದೆಲ್ಲ ಆಗಲೇಬೇಕಲ್ಲವೇ, ನನ್ನ ಹಣೆಯಲ್ಲಿ ಹೀಗೆ ಬರೆದಿರುವಾಗ ಅಪ್ಪನನ್ನು ಅಪ್ಪನ ಕೃತ್ಯವನ್ನು ದೂಷಿಸಿ ಫಲವೇನು ಎಂದು ಸಮಾಧಾನಿಸಿಕೊಂಡಳು. +ಈ ಕಾರ್ಯಕ್ರಮ ಬೇಡವಾಗಿತ್ತು. +ವಿಸ್ಮಯ್ ಯಾಕೀಂತ ಕಾರ್ಯಕ್ರಮ ಹಮ್ಮಿಕೊಂಡರು? +ಹೇಗೊ ನಾಲ್ಕು ಜನರ ಮಧ್ಯ ಕಾಣದಂತಿರಲು ಬಯಸುತ್ತಿದ್ದ. +ಆದರೆ ಕಾಣುವಂತಾಯಿತು. +ಇದೆಲ್ಲ ಬೇಕಿತ್ತೆ? +ತನ್ನನ್ನ ಪ್ರಶ್ನಿಸಿಕೊಂಡಳು. +ವಿಸ್ಮಯ್ ಉಪಕಾರದ ಹೊರೆ ಹೊರಸಿದ್ದಾರೆ. +ಮೊದಲು ಅಮ್ಮನಿಗೆ, ಈಗ ನನಗೆ, ಮನಸ್ಸು ಸಮಾಧಾನ ಹೊಂದಲೇ ಇಲ್ಲ. +ಮನೆಗೆ ಬಂದರೂ ಅದೇ ಭಾವ ಕಾಡುತ್ತಿತ್ತು. +ಅಂಬುಜಮ್ಮ ‘ಎಷ್ಟು ಜನರ ದೃಷ್ಟಿ ತಗುಲಿದೆಯೊ, ದೃಷ್ಟಿ ತೆಗಿತೀನಿ ತಾಳು’ ಅಂತ ಇಳಾಳನ್ನು ಕೂರಿಸಿ ಮೆಣಸಿನಕಾಯಿ ನಿವಾಳಿಸಿ ಒಲೆಗೆ ಎಸೆದರು. +ಅದು ಚಟಪಟ ಅಂತ ಸದ್ದು ಮಾಡಿದಾಗ ‘ನೋಡಿದೆಯಾ ಎಷ್ಟೊಂದು ದೃಷ್ಟಿ ಆಗಿದೆ’ ಅಂತ ಹೇಳಿ ಸಂಭ್ರಮಿಸಿದರು. +‘ಥೂ ಏನಜ್ಜಿ ಇದೆಲ್ಲ. +ನಾನೇನು ಮಗುನಾ ದೃಷ್ಠಿಯಾಗೋಕೆ…’ ರೇಗಿದಳು. +‘ನಿಂಗೆ ಈಗ ಗೊತ್ತಾಗಲ್ಲ ನಾಳೆ ಹುಷಾರಿಲ್ಲದೆ ಮಲಗಿದರೆ ಗೊತ್ತಾಗುತ್ತೆ. +ಈ ಅಜ್ಜಿ ಮಾಡಿದ್ದು ಸರಿ ಅಂತ ಅದೆಷ್ಟು ಜನ ಸೇರಿದ್ದು, ಎಲ್ಲರೂ ನಿನ್ನ ನೋಡೋರೆ. +ಎಲ್ಲರ ಬಾಯಿಯಲ್ಲೂ ನಿನ್ನ ಗುಣಗಾನವೆ. +ಎಂತ ಪುಣ್ಯವಂತರಪ್ಪ ಹೆತ್ತವರು ಅಂತ ಹೇಳ್ತಾ ಇದ್ದರು. +ನಿನ್ನನ್ನ ಸನ್ಮಾನ ಮಾಡ್ತ ಇದ್ರೆ ನೋಡೋಕೆ ಎರಡು ಕಣ್ಣು ಸಾಲುತ್ತಿಲ್ಲ ಅನ್ನಿಸ್ತು. +ಸಾಯೋಕೆ ಮುಂಚೆ ಅದನ್ನೆಲ್ಲ ನೋಡಿದೆನಲ್ಲ ಅಂತ ಒಂದೇ ಸಂತೋಷ. +ಸಾರ್ಥಕವಾಯ್ತು ಕಣೆ ನಿನ್ನ ನಾನು ಸಪೊರ್ಟ್‌ ಮಾಡಿದಕ್ಕೆ, ನಿನ್ನ ಬಗ್ಗೆ ಕಾಳಜಿ ವಹಿಸಿಕೊಂಡಿದ್ದಕ್ಕೆ, ನನ್ನ ಮೊಮ್ಮಗಳು ಹೀಗೆಲ್ಲ ಆದಳಲ್ಲ ಅನ್ನೊದೇ ಖುಷಿ ಕಣೆ ನಂಗೆ’ ಹೇಳಿಕೊಂಡು ಮತ್ತಷ್ಟು ಸಂಭ್ರಮಿಸಿದರು. +ಅಜ್ಜಿ ಮಾತಾಡಿ ಎಲ್ಲವನ್ನು ಹಂಚಿಕೊಂಡರೆ ನೀಲಾ ಏನೂ ಹೇಳದೆ ಮನದೊಳಗೇ ಸಂಭ್ರಮಿಸುತ್ತಿದ್ದಳು. +ಮುಖ ಅರಳಿ ಕಂಗೊಳಿಸುತ್ತಿತ್ತು. +ಮಗಳನ್ನು ಹೊಸಬಳನ್ನು ನೋಡುವಂತೆ ನೋಡುತ್ತಿದ್ದಳು. +ಅವಳ ಖುಷಿ ಸಂಭ್ರಮ ಹೆಮ್ಮೆಗಳೆಲ್ಲ ಕಣ್ಣಲ್ಲಿ ತುಂಬಿ ತುಳುಕುತ್ತಿತ್ತು. +ಮಗಳು ಎದ್ದು ಹೋಗುತ್ತಿದ್ದಾಗ ಎದ್ದು ನೀಲಾ ಮಗಳನ್ನು ಅಪ್ಪಿಕೊಂಡು ‘ನಿನ್ನಂತ ಮಗಳಿಗೆ ತಾಯಾಗಿದ್ದು ಅದೆಷ್ಟು ಜನ್ಮದ ಪುಣ್ಯವೋ, ಹೆತ್ತ ಹೊಟ್ಟೆಯನ್ನು ತಂಪು ಮಾಡಿಬಿಟ್ಟೆ’ ಕಣ್ಣೀರು ಹರಿಸುತ್ತಲೇ ಮುತ್ತಿಟ್ಟಳು. +ಅಮ್ಮನ ಆ ಅಪ್ಪುಗೆಯಿಂದ ಇಹವನ್ನೆ ಮರೆತವಳಂತೆ ಒಂದೂ ಮಾತಾಡದೇ ಸುಖಾನುಭೂತಿ ಅನುಭವಿಸಿದಳು. +ಆ ವಾತ್ಸಲ್ಯದಪ್ಪುಗೆಯಲ್ಲಿ ಕರಗಿ ಹೋಗಿ ಪ್ರಪಂಚದಿಂದಲೇ ದೂರ ಹೋದಂತೆ ಮೈ ಮರೆತಳು. +ವಿಸ್ಮಯನ ಉಪಕಾರ ಹೊರೆ ಹೆಚ್ಚಾಗುತ್ತಿದೆ ಎಂದು ಇಳಾಳಿಗೆ ಭಾಸವಾಗತೊಡಗಿತು. +ತನಗಾಗಿ ಕಾರ್ಯಕ್ರಮ ಆಯೋಜಿಸುವ ಅಗತ್ಯವಿರಲಿಲ್ಲ. +ಅನಾವಶ್ಶಕವಾಗಿ ಖರ್ಚು ಮಾಡುವುದೇನಿತ್ತು. +ಯಾಕಾಗಿ ಹೀಗೆ ಮಾಡಿದನು. +ಇದೆಲ್ಲ ತನಗೆ ಇಷ್ಟವಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಅವನಿಗೆ ತಿಳಿಸಬೇಕು. +ತಾನೇನು ಪರೋಪಕಾರ ಮಾಡಿಲ್ಲ. +ಬೇರೆಯವರಿಗಾಗಿ ದುಡಿದಿಲ್ಲ, ದೇಶಕ್ಕೇನಾದರೂ ಕೊಡುಗೆ ಕೊಡುವಂತಹ ಕೆಲಸ ಮಾಡಿಲ್ಲ. +ಸಮಾಜ ಸೇವೆಯಂತೂ ನಾನು ಮಾಡಿಯೇ ಇಲ್ಲ. +ನಾನು ಮಾಡಿರುವುದು ನನಗಾಗಿ, ನನ್ನ ನೆಮ್ಮದಿಗಾಗಿ ನಮ್ಮ ಮನೆಯ ಸಂಕಷ್ಟ ತೀರಿಸುವ ಸಲುವಾಗಿ. + ಅಪ್ಪನಿಂದಾದ ಆಘಾತದಿಂದ ಹೊರ ಬಂದು ನಾನು ನಾನಾಗಿಯೇ ಬದುಕಬೇಕೆಂದು, ಒಂದು ಕಡೆ ಅವಕಾಶ ಮುಚ್ಚಿಹೋದರೆ ಮತ್ತೊಂದು ಕಡೆ ಅವಕಾಶ ಇರುತ್ತದೆ ಎಂದು ತೋರಿಸುವ ಉದ್ದೇಶದಿಂದ, ಅಪ್ಪ ಸೋತಲ್ಲಿ ತಾನು ಗೆಲ್ಲಬೇಕು ಎಂಬ ಛಲದಿಂದ ಕಷ್ಟಪಟ್ಟೆ. +ದೈವದ ಸಹಾಯ ನನಗಿತ್ತು. +ಮೊದಲೇ ನೊಂದಿರುವ ನಾನು ಮತ್ತಷ್ಟು ನೋಯಬಾರದೆಂಬ ಉದ್ದೇಶದಿಂದಲೇ ನನ್ನ ಮೊದಲ ಪ್ರಯತ್ನ ಯಶಸ್ವಿಯಾಗಿರಬೇಕು. +ಅದೇನು ಮಹಾಸಾಧನೆ, ಸನ್ಮಾನ ಮಾಡಿ ಗೌರವ ತೊರುವಂತಹದೇನು ನಾನು ಮಾಡಿರುವುದು, ಚೆನ್ನಾಗಿ ಇಳುವರಿ ಬಂದಿದೆ. +ಹಾಗಾಗಿ ಕೃಷಿ ಸಾಧನೆ ಪ್ರಶಸ್ತಿ ದೊರಕಿದೆ. +ಅದರಲ್ಲಿ ಏನಿದೆ ಹೆಚ್ಚುಗಾರಿಕೆ, ಆ ಸನ್ಮಾನ ಸ್ವೀಕರಿಸುವಾಗ ನಾಚಿಕೆಯಿಂದ ಕುಗ್ಗಿ ಹೋಗುವಂತಾಗಿತ್ತು. +ಅದೆಷ್ಟು ಇರಿಸು ಮುರಿಸು ಉಂಟಾಗಿತ್ತು. +ಇದೆಲ್ಲ ಬೇಕಿತ್ತೆ? +ವಿಸ್ಮಯ್ ಒಳ್ಳೆ ದೃಷ್ಟಿಯಿಂದಲೇ ಮಾಡಿರಬಹುದು. +ಅದಕ್ಕಾಗಿ ತಾನು ಕೃತಜ್ಞಳಾಗಿರಬೇಕಾದುದು ಧರ್ಮವೇ, ಆದರೆ ಇಂತಹುದೆಲ್ಲ ತನಗೆ ಇಷ್ಟವಾಗುವುದಿಲ್ಲ ಎಂದು ವಿಸ್ಮಯನಿಗೆ ಸ್ಪಷ್ಟಪಡಿಸಬೇಕು. +ಬೆಳಿಗ್ಗೆ ಜಾಗಿಂಗ್‌ಗೆಂದು ಶಾಲಾ ತೋಟದಲ್ಲಿರುತ್ತಾನೆ. +ಅಲ್ಲಿಗೆ ಹೋಗಿ ಮಾತನಾಡಬೇಕೆಂದು ನಿಶ್ಚಯಿಸಿಕೊಂಡಾಗಲೆ ಇಳಾಗೆ ನಿರಾಳವಾದದ್ದು. +ಬೆಳಗ್ಗೆ ಬೇಗ ಎದ್ದು, ಸ್ವೆಟರ್ ಏರಿಸಿಕೊಂಡು ಶಾಲೆಯ ತೋಟದಲ್ಲಿ ಅವನಿಗಾಗಿ ಕಾಯುತ್ತ ನಿಂತಳು. +ಅಲ್ಲಿನ ಪ್ರಕೃತಿ ರಮಣೀಯವಾಗಿದ್ದರೂ ಆಸ್ವಾದಿಸುವ ಮನಸ್ಸಿರಲಿಲ್ಲ. +ಎಷ್ಟು ಹೊತ್ತಾದರೂ ವಿಸ್ಮಯ್ ಕಾಣಿಸದೆ ಇದ್ದಾಗ ಅವನ ಮನೆಯತ್ತ ಹೆಜ್ಜೆ ಹಾಕಿದಳು. +ಶಾಲೆಯ ಸ್ವಲ್ಪ ದೂರದಲ್ಲಿ ರೆಸಾರ್ಟಿಗೆ ಹೊಂದಿ ಕೊಂಡಂತೆ ವಿಸ್ಮಯನ ಮನೆ ಇತ್ತು. +ಮನೆಯೆಂದರೆ ಆದೊಂದು ರೂಮ್ ಎಂದೇ ಹೇಳಬಹುದಿತ್ತು. +ತಾತ್ಕಾಲಿಕವಾಗಿ ಕಟ್ಟಿದ ಪುಟ್ಟ ಮನೆ. +ಒಂದು ರೂಮ್, ಅಡುಗೆಮನೆ, ಬಚ್ಚಲು ಇತ್ತು. +ಕಟ್ಟುವಾಗ ನೋಡಿದ್ದಳಷ್ಟೆ. +ಕಟ್ಟಿ ವಿಸ್ಮಯ ವಾಸ ಮಾಡಲು ಪ್ರಾರಂಭಿಸಿದ ಮೇಲೆ ಆತ್ತ ಹೋಗಿರಲೇ ಇಲ್ಲ. +ದಾರಿಯಲ್ಲಿ ಸಿಗಬಹುದು ಎಂಬ ನಿರೀಕ್ಷೆಯೊಂದಿಗೆ ಅತ್ತ ನಡೆಯುತ್ತಿದ್ದಳು. +ಮನೆಯ ಹತ್ತಿರ ಬಂದರೂ ಅವನ ಸುಳಿವಿಲ್ಲ. +ಮನೆಯೊಳಗೆ ಹೋಗಲು ಸಂಕೋಚವೆನಿಸಿ ವಾಪಸ್ಸು ಹೋಗಿ ಬಿಡಬೇಕು ಎಂದುಕೊಳ್ಳುವಷ್ಟರಲ್ಲಿ ವಿಸ್ಮಯ ಹೊರಗೆ ಕಾಣಿಸಿದ. +ಇಳಾಳನ್ನು ನೋಡಿ ಅಚ್ಚರಿಪಡುತ್ತ –‘ಆರೇ, ಇಳಾ ನೀವಿಲ್ಲಿ, ಇಷ್ಟು ದೂರ, ವಾಕಿಂಗ್ ಬಂದಿದ್ರಾ?’ ಪ್ರಶ್ನೆ ಕೇಳಿ ಅವನೇ ಉತ್ತರವನ್ನು ಹೇಳಿಬಿಟ್ಟಾಗ, ನಿಮ್ಮನ್ನೆ ಹುಡುಕಿಕೊಂಡು ಬಂದೆ ಎಂದು ಹೇಳಲಾರದೆ, ಯಾವುದೇ ಸುಳ್ಳನ್ನು ಹೇಳಲಾರದೆ ಸುಮ್ಮನೆ ನಕ್ಕಳು. +‘ನಿಮ್ಮ ಮನೆ ಮುಗಿತಾ’ ಬೇರೆ ವಿಷಯ ಮಾತಾಡಿದಳು. +‘ಇನ್ನೇನು ಮುಗಿದ ಹಾಗೆಯೇ, ಬನ್ನಿ ನೋಡುವಿರಂತೆ’ ಎಂದು ಹೊಸ ಮನೆಯತ್ತ ಕರೆದ. +ಮನೆ ತುಂಬಾ ಚೆನ್ನಾಗಿ ಕಟ್ಟಿಸುತ್ತಿದ್ದಾನೆ. +ಅರಮನೆಯಂತೆ ಇದೆ, ಸುತ್ತಮುತ್ತ ಎಲ್ಲೂ ಇಂಥ ಮನೆ ಇಲ್ಲಾ ಅಂತ ಆಳುಗಳೆಲ್ಲ ಮಾತನಾಡಿಕೊಳ್ಳುವುದನ್ನು ಕೇಳಿದ್ದಳು. +ದುಡ್ಡಿದೆ ಬೇಕಾದಷ್ಟು ಕಟ್ಟಿಸದೆ ಏನು ಮಾಡುತ್ತಾರೆ. +ಅದರಲ್ಲೇನು ಹೆಚ್ಚುಗಾರಿಕೆ ಎಂದು ಕೊಂಡು ಹೆಚ್ಚು ಗಮನ ನೀಡಿರಲಿಲ್ಲ. +ಎಲ್ಲರೂ ಬಂದು ಮನೆ ನೋಡಿಕೊಂಡು ಹೋಗುತ್ತಿದ್ದರೂ ಇಳಾಗೇನೂ ಆಸಕ್ತಿ ಇರಲಿಲ್ಲ. +ಅವಳದೇ ಕೆಲಸ ಸಾಕಷ್ಟಿತ್ತು. +ಆದರೆ ಆವನಾಗಿಯೇ ಕರೆಯುವಾಗ ಬೇಡ ಎಂದು ತಿರಸ್ಕರಿಸುವುದು ಸಭ್ಯತೆ ಅಲ್ಲ ಎಂದುಕೊಂಡು ಅವನ ಹಿಂದೆ ನಡೆದಳು. +ಮನೆ ಭವ್ಯವಾಗಿತ್ತು. +ಪುಟ್ಟ ಅರಮನೆ ಎಂದೇ ಹೇಳಬಹುದಾಗಿತ್ತು. +ಕೋಟಿಗಟ್ಟಲೆ ಮನೆಗೆ ಸುರಿದಂತಿತ್ತು. +ಈ ಕೊಂಪೇಲಿ ಯಾಕಪ್ಪ ಇಂತಹ ಮನೆ ಎಂದುಕೊಂಡಳು. +‘ಒಳ್ಳೆ ಅರಮನೆಯನ್ನೆ ಕಟ್ಟಿಸಿದ್ದೀರಿ. +ಮಂಜರಬಾದಿನಲ್ಲೊಂದು ಅರಮನೆ ಕಟ್ಟಿಸಬೇಕು ಅಂತ ಇದ್ರಿ’ ಕೆಣಕಿದಳು. +‘ಹುಂ ಜಾಗ ಕೊಟ್ಟಿದ್ರೆ ಅರಮನೆಯನ್ನೊ, ಫೈವ್‌ಸ್ಟಾರ್ ಹೋಟೇಲನ್ನೊ ಕಟ್ಟಿಸಬಹುದಿತ್ತು.’ +‘ಪಾಪಾ ಲಾಸಾಯ್ತು. +ಇಲ್ಲೊಬ್ಬಳು ರಾಣಿನ, ಅಲ್ಲೊಬ್ಬಳು ರಾಣಿನ ಇಟ್ಕೊ ಬಹುದಿತ್ತು.’ +‘ಛೇ ಛೇ ನಾನು ಏಕ ಪತ್ನಿವ್ರತಸ್ಥ ಕಣ್ರಿ. +ಇಲ್ಲಿರೊ ರಾಣಿನೇ ಅಲ್ಲಿಗೂ ಕರ್ಕೊಂಡು ಹೋಗ್ತ ಇದ್ದೆ’ ಅವಳ ಮಾತಿಗೆ ಪ್ರತಿಯಾಗಿ ನುಡಿದ. +‘ಹಾಗಾದ್ರೆ ರಾಣಿ ಸಿಕ್ಕಿದ್ದಾಳೆ ಅನ್ನಿ. +ಗೃಹಪ್ರವೇಶನೂ ಒಟ್ಟಿಗೆ ಅಂತ ಕಾಣುತ್ತೆ, ಬೇಗ ಊಟ ಹಾಕಿಸಿಬಿಡಿ, ನಮ್ಮರನ್ನು ಮರೆಯಲ್ಲ ತಾನೇ.’ +‘ಅಯ್ಯೋ ನೀವಿಲ್ದೆ ಗೃಹಪ್ರವೇಶ ಆಗುತ್ತಾ’ ಮತ್ತೇನೋ ಮಾತನಾಡಲಿದ್ದವನು ತುಟಿಕಚ್ಚಿಕೊಂಡ. +ಆದರೆ ಇಳಾ ಅದನ್ನೇನು ಗಮನಿಸಲೇ ಇಲ್ಲ. +ಮನೆಯ ವೈಭವದಲ್ಲಿ ತನ್ಮಯಳಾಗಿ ಬಿಟ್ಟಿದ್ದಳು. +‘ಈ ಮನೆಲೇ ಒಂದು ಹತ್ತು ಸಂಸಾರ ವಾಸ ಮಾಡಬಹುದು. +ಅಷ್ಟು ದೊಡ್ಡದಿದೆ. +ನಿಮ್ಮೊಬ್ಬರಿಗೆ ಇಷ್ಟು ದೊಡ್ಡ ಮನೆ ಬೇಕಾ?’ ಬೆರಗಿನಿಂದ ಕೇಳಿದಳು. +‘ಇಷ್ಟು ದೊಡ್ಡ ಮನೆಯಲ್ಲಿ ಹುಟ್ಟಿ ಬೆಳೆದಿದ್ದು ನಾನು. +ಹಾಗಾಗಿ ಅಂತಹುದೇ ಮನೆ ಕಟ್ಟಿಸಿದ್ದೇನೆ. +ನನ್ನೊಬ್ಬನಿಗೆ ದೊಡ್ಡದಾಗುತ್ತ ಅಂತ ಯೋಚನೆನೇ ಮಾಡಲಿಲ್ಲ ನೋಡಿ.’ +‘ಹೋಗ್ಲಿ ಬಿಡಿ, ಮದ್ವೆ ಮಾಡ್ಕೊಂಡು ಹತ್ತು ಮಕ್ಕಳು ಆದ್ರೆ ಈ ಮನೆಗೆ ಸರಿಯಾಗುತ್ತೆ’ ತಮಾಷೆ ಮಾಡಿದಳು. +‘ಹತ್ತುಮಕ್ಕಳೇ!’ ಅಚ್ಚರಿಪಡುತ್ತ, ‘ಹೆತ್ತು ಕೊಟ್ಟರೆ ಸಾಕೋಕೇನು ನನ್ನ ಅಭ್ಯಂತರವಿಲ್ಲ’ ಅವಳನ್ನೆ ನೋಡುತ್ತ ಹೇಳಿದಾಗ ಇಳಾ ಗಲಿಬಿಲಿಗೊಂಡು ಮನೆಯ ಮುಂಭಾಗಕ್ಕೆ ಬಂದು ‘ಇಲ್ಲೊಂದು ಗಾರ್ಡನ್ ಮಾಡಿದ್ರೆ ಚೆನ್ನಾಗಿರುತ್ತೆ. +ಮಧ್ಯೆ ಉಯ್ಯಾಲೆ ಹಾಕಿದ್ರೆ ಉಯ್ಯಾಲೆ ಮೇಲೆ ತೂಗಿಕೊಳ್ಳುತ್ತ ಗಾರ್ಡನ್ನಲ್ಲಿರೋ ಗಾಳೀನ ಸವಿಯಬಹುದು.’ +‘ನೀವು ಹೇಗೆ ಹೇಳ್ತಿರೋ ಹಾಗೆ ಮಾಡಿಸೋಣ’ ತಟಕ್ಕನೆ ಹೇಳಿದಾಗ ‘ಆಯ್ಯೋ ನಾನು ಸುಮ್ನೆ ಹೇಳಿದೆ ಅಷ್ಟೆ. +ನಿಮಗೆ ಹೇಗೊ ಹಾಗೆ ಮಾಡ್ಕೊಬೇಕು. +ಏಕೆಂದರೆ ಇದು ನಿಮ್ಮ ಮನೆ. +ನೀವು ಸದಾ ಇಲ್ಲಿರಬೇಕಾದೋರು. +ಒಟ್ಟಿನಲ್ಲಿ ನಮ್ಮೂರನ್ನೆ ಬದಲಾಯಿಸಿ ಬಿಟ್ಟಿರಿ. +ನೀವು ಬರೋಕೆ ಮುಂಚೆ ಈ ಜಾಗ ಎಲ್ಲಾ ಹಾಳುಬಿದ್ದಿತ್ತು. +ನಿಮ್ಮ ಟೇಸ್ಟೆ ಚೆನ್ನಾಗಿದೆ. +ತುಂಬ ಬುದ್ಧಿವಂತರಪ್ಪ ನೀವು’ ಇಳಾ ಹೊಗಳುತ್ತಿದ್ದರೆ, ಛೇ ಈ ಹುಡುಗಿಗೆ ಸೂಕ್ಷ್ಮತೇನೆ ಇಲ್ಲ. +ಇನ್ನೂ ಪುಟ್ಟ ಹುಡುಗಿಯೇ ಎಂದು ಬೈಯ್ದುಕೊಂಡ. +‘ನಿಮ್ಮ ತಾಯಿ ತಂದೆ, ನಿಮ್ಮ ಮನೆಯವರಾರೂ ಒಂದು ಸಲನೂ ಬಂದಿಲ್ಲ ಇಲ್ಲಿ. +ಗೃಹಪ್ರವೇಶಕ್ಕೆ ಬರ್ತಾರಾ?’ ಎಂದು ಕೇಳಿದಾಗ ವಿಸ್ಮಯನ ಮುಖ ಮಂಕಾಯಿತು. +ಗೆಲುವು ಕಳೆದು ಕೊಂಡವನಂತೆ ಮನೆಯ ಮುಂದಿನ ಮೆಟ್ಟಿಲಿನ ಮೇಲೆ ಕುಳಿತು ಎತ್ತಲೊ ನೋಡುವವನಂತೆ ಮಗ್ನವಾದಾಗ, ಹತ್ತಿರ ಬಂದ ಇಳಾ ಏನೋ ಅಪಶೃತಿ ಅವನ ಬದುಕಿನಲ್ಲಿದೆ ಎಂದು ಊಹಿಸಿ, ಅವನ ಪಕ್ಕವೇ ಕೂರುತ್ತ-‘ನಿಮಗೆ ಬೇಸರ ಆದ್ರೆ ಆ ವಿಚಾರ ಮತ್ತೆ ತಾನು ಕೇಳಲ್ಲ. +ನೀವು ಬಂದಾಗಿನಿಂದಲೂ ಒಬ್ರೆ ಇದ್ದದ್ದನ್ನು ನೋಡಿ ಹಾಗೆ ಕೇಳಿಬಿಟ್ಟೆ. +ದಯವಿಟ್ಟು ಕ್ಷಮಿಸಿ ಪಶ್ಚಾತ್ತಾಪದ ದನಿಯಲ್ಲಿ ಹೇಳಿದಳು. +‘ನಿಮ್ಮ ತಪ್ಪೇನು ಇಲ್ಲ ಬಿಡಿ ಸಹಜವಾಗಿ ಎಲ್ರೂ ಕೇಳೋದನ್ನೆ ನೀವು ಕೇಳ್ತಾ ಇದ್ದೀರಿ, ನಾನೇ ಸ್ವಲ್ಪ ಎಕ್ಸೈಟ್ ಆಗಿಬಿಟ್ಟಿ. +ಮನಸ್ಸಿನ ನೋವನ್ನ ಯಾರ ಬಳಿಯಾದ್ರೂ ಹೇಳಿಕೊಂಡ್ರೆ ಕಡಿಮೆ ಆಗುತ್ತೆ ಅಂತಾರೆ. +ಆದರೆ ಯಾರ ಬಳಿನೂ ಹೇಳಿಕೊಳ್ಳುವಷ್ಟು ಹತ್ತಿರ ಇರೋ ಸ್ನೇಹಿತರಾಗಲಿ, ಬಂಧುಗಳಾಗಲಿ ಯಾರಿದ್ದಾರೆ ನಂಗೆ’ ಎಂದಾಗ ಇಳಾ ಮರುಗಿ ಹೋದಳು. +‘ಯಾಕೆ, ಹಾಗೆ ಅಂದುಕೊಳ್ಳುತ್ತೀರಾ, ನಿಮ್ಗೆ ಹೇಳಿಕೊಳ್ಳಬೇಕು ಅನ್ನಿಸಿದ್ರೆ ಕೇಳೋಕೆ ನಾನು ರೆಡಿ ಇದ್ದೇನೆ ಪ್ಲೀಸ್ ಹೇಳಿ’ ಕಕ್ಕುಲತೆಯಿಂದ ಹೇಳಿದಳು. +ಅವಳ ಕಾಳಜಿ, ಕಕ್ಕುಲತೆ ಅವನನ್ನು ತಟ್ಟಿತು. +‘ನಮ್ಮ ತಂದೆ ತಾಯಿಗೆ, ನಾವು ಮೂರು ಜನ ಮಕ್ಕಳು, ನಾನೇ ದೊಡ್ಡವನು. +ಒಬ್ಬ ತಮ್ಮ, ಒಬ್ಬಳು ತಂಗಿ ಇದ್ದಾರೆ ನಂಗೆ. +ಚಿಕ್ಕ ವಯಸ್ಸಿನಿಂದಲೂ ನಮ್ಮ ಅಪ್ಪ ನನ್ನ ತಮ್ಮನ್ನ, ತಂಗೀನಾ ಪ್ರೀತಿಸೋ ಹಾಗೆ ನನ್ನ ಪ್ರೀತಿಸ್ತಾ ಇಲ್ಲ ಅಂತ ಗೊತ್ತಾಗ್ತ ಇತ್ತು. +ಹಾಗಂತ ನನ್ನನ್ನೇನೂ ದ್ವೇಷ ಮಾಡ್ತ ಇರಲಿಲ್ಲ. +ನಾನು ಕೇಳಿದ್ದನ್ನ ಕೊಡಿಸ್ತ ಇದ್ದರು. +ಆದ್ರೆ ತಮ್ಮನ್ನ, ತಂಗಿನಾ, ಮುದ್ದಾಡೊ ಹಾಗೆ, ಅವರನ್ನ ಎತ್ತಿಕೊಂಡು ಆಟ ಆಡಿಸೋ ಹಾಗೆ, ಆವರ ಜೊತೆ ಬೆರೆಯೋಥರ ನನ್ನ ಜೊತೆ ನಮ್ಮಪ್ಪ ಇರ್‍ತ ಇರ್ಲಿಲ್ಲ. +ಕೆನ್ನೆ ತಟ್ಟಿಯೋ, ತಲೆ ಸವರಿಯೋ ಮಾಡಿಬಿಟ್ಟರೆ ಅವರ ಪ್ರೀತಿ ಮುಗಿದು ಹೋಗುತ್ತಿತ್ತು. +ನನ್ನನ್ನು ಓದಿನ ನೆವ ಹಾಕಿ ಅಷ್ಟಾಗಿ ಹೊರಗೆ ಕರೆದುಕೊಂಡು ಹೋಗ್ತಿರಲಿಲ್ಲ. +ತಮ್ಮ, ತಂಗಿನಾ ಬೈಯುವಂತೆ, ರೇಗುವಂತೆ, ಕೈ ಎತ್ತಿ ಹೊಡೆಯುವಂತೆ ಕೂಡ ನಂಗೆ ಮಾಡ್ತ ಇರಲಿಲ್ಲ. +ನಮ್ಮಪ್ಪ ನನ್ನನ್ನ ಬೈದಿದ್ದೆ ನಂಗೆ ಗೊತ್ತಿಲ್ಲ. +ಒಂದೇ ಮನೆಯಲ್ಲಿ ಈ ರೀತಿ ನಡೆಯುತ್ತ ಇರುವಾಗ ನಂಗೆ ಅಸಹನೆ ಕಾಣಿಸಿಕೊಳ್ತ ಇತ್ತು. +ಅಮ್ಮನ ಮುಂದೆ ರೇಗುತ್ತಿದ್ದೆ, ಅಪ್ಪನ್ನ ಬೈಯ್ತ ಇದ್ದೆ. +ಅಮ್ಮ ಏನೋ ಸಮಾಧಾನಿಸಿ ಸುಮ್ಮನಿರಿಸಿ ಬಿಡುತ್ತಿದ್ದಳು. +ಅಪ್ಪನನ್ನು ವಹಿಸಿಕೊಂಡು ಏನಾಗಿದೆ ನಿಂಗೆ, ಎಷ್ಟು ಚೆನ್ನಾಗಿ ನೋಡ್ಕೊತಾರೆ’ ಅಂತ ನನ್ನ ಬೈಯ್ದು ಬಿಡುತ್ತಿದ್ದಳು. +ಆಗೆಲ್ಲ ನಂಗೆ ರೋಷ ಉಕ್ಕುತ್ತಾ ಇತ್ತು. +ಅಪ್ಪನ ಜೊತೆ ಬೇಕು. +ಅಪ್ಪ ನನ್ನನ್ನು ತಬ್ಬಿ ಮುದ್ದಾಡಬೇಕು ಅಪ್ಪನ ಜೊತೆ ಕ್ರಿಕೆಟ್ ಆಡಬೇಕು. +ಅಪ್ಪನನ್ನ ಒಲೈಸಬೇಕು ಅಂತ ಸದಾ ತಹ ತಹಿಸುತ್ತಿದ್ದೆ. +ಅಪ್ಪನ ನಿರ್ಲಿಪ್ತತೆ, ನನ್ನ ದೂರ ಇರಿಸುವಿಕೆ ಅರ್ಥವೇ ಆಗದೆ ತಳಮಳಿಸುತ್ತಿದ್ದೆ. +ಈ ಎಲ್ಲ ಬೇಗುದಿಗಳಿಗೆ, ತಳಮಳಗಳಿಗೆ, ವ್ಯತ್ಯಾಸಗಳಿಗೆ ಕಾರಣ ಸಿಕ್ಕಿಬಿಟ್ಟಿತು. + ನನ್ನ ರೋಷ, ನನ್ನ ಪ್ರತಿಭಟನೆ, ನನ್ನ ಆಸೆ, ಇವೆಲ್ಲ ತಪ್ಪು ಅಂತ ಗೊತ್ತಾಗಿಬಿಟ್ಟಿತು. +ನಾನು ಅಪ್ಪನಿಂದ ಪ್ರೀತಿಯನ್ನಾಗಲಿ, ವಾತ್ಸಲ್ಯವನ್ನಾಗಲಿ, ಸಾಮಿಪ್ಯವನ್ನಾಗಲಿ ಬಯಸಬಾರದು, ಅವರು ಕೊಟ್ಟರಷ್ಟೆ ತೆಗೆದುಕೊಳ್ಳಬೇಕು. +ನಾನಾಗಿಯೇ ಅವರಲ್ಲಿ ಏನನ್ನು ಕೇಳೊ ಅಧಿಕಾರವಾಗಲಿ, ಹಕ್ಕಾಗಲಿ ನನ್ನಗಿಲ್ಲ ಅಂತ ಗೊತ್ತಾಯ್ತು. +ಏಕೆಂದರೆ ಅವರು ನನ್ನ ಅಪ್ಪನೇ ಅಲ್ಲ. +ನಾನು ಸಣ್ಣ ಮಗುವಿದ್ದಾಗಲೇ ನನ್ನಪ್ಪ ಅಪಘಾತದಲ್ಲಿ ತೀರಿಹೋಗಿದ್ದರು. +ಈಗಿರೋ ಅಪ್ಪ ನನ್ನ ಅಮ್ಮನಿಗೆ ಬಾಳು ಕೊಟ್ಟವರು. +ನನ್ನನ್ನು ಮಗನಾಗಿ ಒಪ್ಪಿಕೊಂಡೋರು, ಪ್ರಪಂಚದ ಮುಂದೆ ನನ್ನನ್ನು ಮಗನಾಗಿ ಒಪ್ಪಿಕೊಂಡಿರೋ ಅವರಿಗೆ ಅಪ್ಪನಾಗಿ ಒಬ್ಬ ಮಗನಿಗೆ ನೀಡಬೇಕಾದುದನ್ನು ನೀಡಲು ಅವರಿಂದಾಗಲೇ ಇಲ್ಲ. +ಆದರೆ ಅದೇ ಪ್ರೀತಿಯನ್ನು ತಮ್ಮ ಮಕ್ಕಳಿಗೆ ನೀಡುವಾಗ ನನ್ನ ಮನಸ್ಸಿನ ಮೇಲೆ ಆಗುವ ಪರಿಣಾಮದ ಬಗ್ಗೆ ಅವರು ಆಲೋಚನೇನೆ ಮಾಡಲೇ ಇಲ್ಲ. +ನನ್ನನ್ನು ಪ್ರೀತಿಸಲೂ ಇಲ್ಲ. +ದ್ವೇಷಿಸಲೂ ಇಲ್ಲ. +ಅವರು ನನ್ನ ಅಪ್ಪ ಅಲ್ಲ ಅಂತ ಗೊತ್ತಾದ ಮೇಲೆ ನಾನು ನನ್ನ ಚಿಪ್ಪೊಳಗೆ ಸೇರಿಕೊಂಡು ಬಿಟ್ಟೆ, ನಾನಾಯಿತು, ನನ್ನ ವಿದ್ಯಾಭ್ಯಾಸವಾಯಿತು ಅಂತ ನನ್ನೊಳಗಿನ ಎಲ್ಲ ನಿರಾಶೆಗಳನ್ನು ಅದುಮಿಡುತ್ತ ಒಳಗೊಳಗೆ ನೋಯುತ್ತ ಎಲ್ಲರಿಂದ ದೂರವೇ ಇದ್ದುಬಿಟ್ಟೆ. +ನನ್ನ ಒಳ್ಳೆ ಸ್ಕೂಲಿನಲ್ಲಿ, ಕಾಲೇಜಿನಲ್ಲಿ ಓದಿಸಿದರು. +ಹಾಸ್ಟಲಿನಲ್ಲಿಟ್ಟರೆ ಅಮ್ಮ ಎಲ್ಲಿ ನೊಂದುಕೊಳ್ಳುವಳೋ ಅಂತ ಅಲ್ಲಿ ಬಿಡದೆ, ಡೊನೇಷನ್ ಕೊಟ್ಟು ಇಂಜಿನಿಯರಿಂಗ್ ಸೇರಿಸಿದರು. +ಆದರೆ ಆ ಮನೆಯಿಂದಲೇ ನಾನು ದೂರ ಇರಬೇಕು ಅಂತ ಬಯಸಿದ್ದೆ. +ನನ್ನ ವಿದ್ಯಾಭ್ಯಾಸ ಮುಗಿಯೋತನಕ ಅವರ ಜೊತೆಗೇ ಇದ್ದು ಮಾನಸಿಕವಾಗಿ ಅಂತರವಿಟ್ಟುಕೊಂಡೇ ಬೆಳೆದೆ. +ಎಂಜಿನಿಯರಿಂಗ್ ಮುಗಿಸಿದ ಕೂಡಲೆ ಆ ಮನೆಯಿಂದ, ಆ ಜನರಿಂದ ದೂರವಾಗಬೇಕು ಅಂತ ರೆಸಾರ್ಟ್‌ ನೆವ ಹೇಳಿ ಇಲ್ಲಿ ಬಂದೆ. +ನಾನು ಕಳೆದುಕೊಂಡದ್ದೆಲ್ಲ ಇಲ್ಲಿ ನನಗೆ ಸಿಕ್ಕಿತು. +ಈ ಜನರ ಪ್ರೀತಿ, ವಿಶ್ವಾಸ, ಅವರು ತೋರೊ ಅಂತಃಕರಣ ನನ್ನನ್ನು ಇಲ್ಲಿಯೇ ನೆಲೆಸುವಂತೆ ಮಾಡಿದೆ. +ನನ್ನ ಶಾಲೆಯ ಜನ, ಮಕ್ಕಳು, ಪೋಷಕರು, ಇಲ್ಲಿ ಕೆಲಸ ಮಾಡುವ ಆಳುಗಳೂ ಕೂಡ ನನಗೆ ಪ್ರೀತಿ ವಿಶ್ವಾಸ ತೋರುತ್ತಿದ್ದಾರೆ. +ಆ ಪ್ರೀತಿ ವಿಶ್ವಾಸದಲ್ಲಿ ನನ್ನವರನ್ನೆಲ್ಲ ಮರೆತು ಬಿಟ್ಟಿದ್ದೇನೆ. +ಅವರಿಗೂ ನನ್ನನ್ನು ನೆನಸಿಕೊಳ್ಳುವಷ್ಟು ಪುರುಸೂತ್ತು ಇಲ್ಲ. +ತಿಂಗಳಿಗೊ, ಎರಡು ತಿಂಗಳಿಗೂ ಫೋನ್ ಮಾಡಿ ವಿಚಾರಿಸಿದರೆ ಅಪ್ಪನ ಕರ್ತವ್ಯ ಮುಗಿದು ಹೋಗುತ್ತದೆ. +ತಮ್ಮ ತಂಗಿಯರನ್ನ ನಾನು ಹಚ್ಚಿಕೊಂಡೆ ಇಲ್ಲ. +ಅವರಿಗೂ ನಾನು ಬೇಕಾಗಿಲ್ಲ. +ಇನ್ನು ಅಮ್ಮನಿಗೊ ನನ್ನ ಮೇಲೆಯೇ ಅಸಮಾಧಾನ, ಇಷ್ಟು ಒಳ್ಳೆಯ ಮನಸ್ಸಿನ ವ್ಯಕ್ತಿಯನ್ನು ಅಪ್ಪ ಎಂದು ಒಪ್ಪಿಕೊಳ್ಳಲಾರದೆ ದೂರವಿದ್ದೇನೆ ಎಂದು. +ಹೇಗೊ ಸುಖವಾಗಿರಲಿ ಎಂದು ದೂರದಿಂದಲೇ ಹಾರೈಸುತ್ತಾಳೆ. +ನನ್ನ ಹೆತ್ತ ತಂದೆಯ ಆಸ್ತಿಯೆಲ್ಲವನ್ನು ಜೋಪಾನವಾಗಿ ಕಾಪಾಡಿ ನನಗೊಪ್ಪಿಸಿದ್ದಾರೆ. + ತಾವು ದುಡಿದ ಆಸ್ತಿಯಲ್ಲಿಯೂ ಭಾಗ ಮಾಡಿ ಕೊಡುವಷ್ಟು ಹೃದಯವಂತಿಕೆ ತೋರಿಸಿದ್ದಾರೆ. +ಬೇಕಾದಷ್ಟು ಹಣವಿದೆ, ಆಸ್ತಿ ಇದೆ. +ಆದರೆ ನಾನು ಬಯಸಿದ್ದೇನು ನನಗೆ ಸಿಗಲಿಲ್ಲ. +ಎಲ್ಲರು ಇದ್ದರೂ ನಾನು ಒಂಟಿ.’ತನ್ನೆಲ್ಲ ಕಥೆ ವ್ಯಥೆಯನ್ನು ಇಳಾಳೊಂದಿಗೆ ಹಂಚಿಕೊಂಡು ಮನಸ್ಸನ್ನು ಹಗುರ ಮಾಡಿಕೊಂಡ. +ಈ ವಿಷಾದಭರಿತ ವಿಸ್ಮಯನ ಮಾತುಗಳಿಂದ ಇಳಾ ದ್ರವಿಸಿ ಹೋದಳು. +ಬಾಲ್ಯದಿಂದಲೂ ನೋವುಂಡು ಬೆಳೆದು, ತನ್ನ ನೋವನ್ನು ತಾನೇ ನುಂಗಿಕೊಂಡು ಇಷ್ಟೊಂದು ಹೃದಯವಂತಿಕೆ ಸುಸಂಸ್ಕೃತತೆ, ಸಹೃದಯತೆ ಬೆಳೆಸಿಕೊಂಡು ಇಡೀ ಸಮಾಜವೇ ಒಪ್ಪುವಂತೆ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡ ವಿಸ್ಮಯ್ ಬಗ್ಗೆ ಗೌರವ ಮೂಡಿತು. +ತನ್ನದೇ ಮಹಾ ನೋವು ಎಂದು ಕೊಂಡಿದ್ದವಳಿಗೆ ತಾಯಿ ಇದ್ದು ತಾಯಿ ಪ್ರೀತಿ ತೋರದ, ಅಪ್ಪನೆನಿಸಿಕೊಂಡವರೂ ಮಗನನ್ನೆಂದು ಒಪ್ಪಿಕೊಳ್ಳಲಾರದ, ಒಡಹುಟ್ಟಿದವರಿದ್ದೂ ಇಲ್ಲದಂತಿರುವ ನೋವು ಕಡಿಮೆಯದಲ್ಲ. +ತನ್ನ ಯಾವ ಮಾತುಗಳೂ ಅವನ ನೋವನ್ನು, ಅವನ ಹತಾಶೆಯನ್ನು ಕಡಿಮೆ ಮಾಡುವುದಿಲ್ಲ ಎಂದು ಮನಗಂಡ ಇಳಾ ತಾನೂ ಕೂಡ ಮೌನದ ಮೊರೆ ಹೊಕ್ಕಳು. +ಆ ಸಮಯದಲ್ಲಿ ತನ್ನಿಂದೇನಾದರೂ ಮಾಡುವಂತಿದ್ದರೆ ಆ ಕ್ಷಣದಲ್ಲಿಯೇ ಮಾಡಿಬಿಡುವ ಮನಸ್ಥಿತಿಯಲ್ಲಿದ್ದಳು. +‘ಇಳಾ ನನ್ನ ಕಥೆ ಕೇಳಿ ಮೌನವಾಗಿ ಬಿಟ್ರಾ. +ಅದೇನು ಅಂತ ದುರಂತ ಕಥೆ ಅಲ್ಲ ಬಿಡಿ, ಪ್ರಪಂಚದಲ್ಲಿ ಅದೇಷ್ಟೊ ಮಂದಿ ನನಗಿಂತಲೂ ದುರದೃಷ್ಟವಂತರಿರುತ್ತಾರೆ. +ಅವರ ಮುಂದೆ ನನ್ನದೇನು ವ್ಯಥೆಯೇ ಅಲ್ಲ. +ಅತಿಸೂಕ್ಷ್ಮತೆಯನ್ನು ಹೊಂದಿದ್ದರಿಂದ ನಾನು ನೋವು ಪಡುವಂತಾಯಿತು ಅಷ್ಟೆ’ ಮತ್ತೆ ತಾನೇ ಸಮಾಧಾನ ತಂದುಕೊಂಡ. +‘ಈ ಊರಿಗೆ ಬಂದ ಮೇಲೆ ನನ್ನ ಬದುಕಿನಲ್ಲಿ ಸಂತೋಷ ಸಿಕ್ಕಿದೆ. +ನಾನು ಉಲ್ಲಾಸದಿಂದಿದ್ದೇನೆ. +ನಾನು ಇಲ್ಲಿಯೇ ಇರಬೇಕು ಅನ್ನೋ ಆಸೆ ಬಲವಾಗಿದೆ. +ನನ್ನ ಬಾಳಿನಲ್ಲಿ ತಂಗಾಳಿ ಬೀಸ್ತಾಯಿದೆ. +ಆರುಣೋದಯದ ಪಲ್ಲವಿ ಪಲ್ಲವಿಸುತ್ತಾಯಿದೆ. +ಅದಕ್ಕೆ ಮತ್ತೊಂದು ಕಾರಣವೂ ಇದೆ…’ ಅವಳನ್ನೆ ನೋಡುತ್ತ ಹೇಳುತ್ತಿದ್ದವನು ಮಾತು ನಿಲ್ಲಿಸಿದ. +‘ಮತ್ತೊಂದು ಕಾರಣನಾ….’ ಚಕಿತಳಾಗಿ ನುಡಿದಳು. +‘ಇಳಾ ನನ್ನ ಬದುಕಿನ ಬೆಳದಿಂಗಳಾಗಿ ಬರ್ತೀರಾ, ನನ್ನನ್ನ ಒಪ್ಕೊತೀರಾ, ಅವತ್ತೇ ಹೇಳಿದ್ದೆ. +ನೀವು ಅಂದ್ರೆ ನಂಗಿಷ್ಟ ಅಂತ’ ದೀನನಾಗಿ ಕೇಳುತ್ತಿದ್ದಾನೆ. +ಕಣ್ಣುಗಳಲ್ಲಿ ಪ್ರೇಮದ ಪ್ರಖರತೆ ಮಿನುಗುತ್ತಿದೆ. +ಈ ಪ್ರಪಂಚದ ಒಲವನ್ನೆಲ್ಲ ಬಾಚಿ ಕೊಡಬಲ್ಲೆ ಅನ್ನೂ ಆಶ್ವಾಸನೆ ಆ ಕಣ್ಣುಗಳಲ್ಲಿದೆ. +ಆರಾಧನೆಯ ಜ್ಯೋತಿ ಅಲ್ಲಿ ಬೆಳಗುತ್ತಿದೆ. +ಇದೇ ಪ್ರೇಮವೇ, ಇದೇ ಪ್ರೀತಿಯೇ? + ಅರ್ಥ ಮಾಡಿಕೊಳ್ಳಲಾರದೆ ತಬ್ಬಿಬ್ಬಾಗಿದ್ದಾಳೆ. +ಆ ಕ್ಷಣದಲ್ಲಿ ಏನು ಉತ್ತರಿಸಬೇಕೊ ತಿಳಿಯದೆ ಮಾತುಗಳೇ ನಿಂತು ಹೋಗಿವೆ. +ಅವಳ ಕೈಯನ್ನು ತೆಗೆದುಕೊಂಡು ತನ್ನ ಕೆನ್ನಗೆ ಒತ್ತಿಕೊಂಡ ವಿಸ್ಮಯ್ ‘ಇಳಾ ನಾನು ನಿಮ್ಮನ್ನ ತುಂಬಾ ತುಂಬಾ ಪ್ರೀತಿಸುತ್ತೇನೆ. +ಈ ಪ್ರಪಂಚದಲ್ಲಿ ನಿಮ್ಮ ಪ್ರೀತಿ ಒಂದೇ ಸಾಕು ನಂಗೆ, ನಿಮಗಾಗಿ ಬದುಕುತ್ತೇನೆ. +ಈ ಉಸಿರು ಆಡುವುದೇ ನಿಮಗಾಗಿ, ಈ ಹೃದಯ ಮಿಡಿಯುವುದೇ ನಿಮ್ಮ ಸನಿಹದಲ್ಲಿ, ಅನುರಾಗದ ಹೊಳೆ ಹರಿಯುವುದೇ ನಿಮ್ಮಿಂದ, ಇದುವರೆಗೂ ನಾನು ಯಾವ ಹೆಣ್ಣನ್ನು ಇಷ್ಟೊಂದು ಆರಾಧಿಸಿಲ್ಲ. +ಯಾವ ಹೆಣ್ಣು ನನ್ನ ಬದುಕಿನಲ್ಲಿ ನಿಮ್ಮಷ್ಟು ಪ್ರಭಾವ ಬೀರಿಲ್ಲ. +ನೀವಿಲ್ಲದೆ ನಾನಿಲ್ಲ ಇಳಾ’ ಭಾವ ಪರವಶತೆಯಿಂದ ಹೇಳುತ್ತಿದ್ದರೆ ಇಳಾ ಕರಗಿ ಹೋದಳು. +ಅವನ ಪ್ರೇಮದ ಅಲೆಯಲ್ಲಿ ಕೊಚ್ಚಿಹೋದಳು. +ವಿಸ್ಮಯ್ ನನ್ನವನು, ನಾನು ಅವನಿಗೆ ಸೇರ ಬೇಕಾದವಳು. +ಇದು ಜನ್ಮ ಜನ್ಮಾಂತರದ ಬಂಧ, ಹಾಗೆಂದೇ ಎಲ್ಲಿಯೋ ಇದ್ದ ವಿಸ್ಮಯನನ್ನು ಇಲ್ಲಿಗೆ ಎಳೆದು ತಂದಿದೆ. +ನಾನು ಅವನಿಗಾಗಿಯೇ ಹುಟ್ಟಿದವಳು. +ಇದು ವಿಧಿಲೀಲೆ, ಈ ಲೀಲೆ ನಡೆಯಲೆಂದೇ ನನ್ನ ಬದುಕಿನಲ್ಲಿ ಏನೆಲ್ಲ ನಡೆದುಹೋದವು. +ವಿಸ್ಮಯ್ ವಿಸ್ಮಯ್ ಎಂದು ಪಿಸುಗುಡುತ್ತ ಅವನ ಮಡಿಲಿಗೆ ಜಾರಿದಳು. +ಮೃದುವಾಗಿ ಅವಳನ್ನು ಬಳಸಿ ‘ಥ್ಯಾಂಕ್ಯೂ… ಥ್ಯಾಂಕ್ಯೂ ಇಳಾ. +ನಾನೆಂಥ ಅದೃಷ್ಟವಂತ, ನಿನ್ನ ಪ್ರೇಮ ನನಗೆ ಸಿಕ್ಕಿತು. +ನಿನ್ನ ಪಡೆಯಲೆಂದೇ ನನ್ನ ಬದುಕು ಈ ತಿರುವು ಕಂಡಿತೇನೊ’ ಬಡಬಡಿಸಿದ. +ಒಂದೂ ಮಾತಾಡದೆ ಇಳಾ ಅವನೆದೆಯಲ್ಲಿ ಕಣ್ಮುಚ್ಚಿ ಹೊಸ ಲೋಕದ, ಹೊಸ ಅನುಭವದ ಹೊಸ ಸಂಬಂಧದ ಅನುಬಂಧದಲ್ಲಿ ಬಂಧಿಯಾದಳು. +ಸಾವಿರ ಮಾತು ಹೇಳಲಾರದ ಭಾವ ಅವಳ ಸ್ಪರ್ಶದಲ್ಲಿತ್ತು. +ನಿಧಿ ಸಿಕ್ಕಿದ್ದಂತೆ ಆಪ್ಯಾಯಮಾನವಾಗಿ ಅವಳನ್ನು ಅಪ್ಪಿಕೊಂಡು ತೋಳ ಬಿಗಿಯನ್ನು ಹೆಚ್ಚಿಸಿದ. +ಅದೆಷ್ಟು ಹೊತ್ತು ಹಾಗೆ ಕುಳಿತಿದ್ದರೋ, ಇಳಾಳೇ ಮೊದಲು ಎಚ್ಚೆತ್ತು ‘ತುಂಬಾ ಹೊತ್ತಾಯಿತು ನಾನು ಬಂದು, ಮನೆಯಲ್ಲಿ ಹೇಳದೆ ಬಂದಿದ್ದೀನಿ’ ಮೆಲ್ಲನೆ ಹೇಳುತ್ತ ಅವನ ತೋಳುಗಳಿಂದ ಹೊರ ಬಂದಳು. +ಸುಖಾನುಭೂತಿಯಿಂದ ಅವಳೆಡೆ ನೋಡಿ ‘ಈ ಕಾಲ ಹೀಗೆ ನಿಂತು ಹೋಗಬಾರದೆ, ನಾವಿಬ್ಬರೂ ಸದಾ ಜೊತೆಯಾಗಿಯೇ ಇದ್ದುಬಿಡಬಹುದು’ ಎಂದು ಮುತ್ತಿನಲಿ ಹೇಳಿದ. +‘ಕಾಲ ನಿಂತು ಹೋಗುವುದಿಲ್ಲ. +ನಿಮ್ಮಾಸೇನೂ ನೆರವೇರುವುದಿಲ್ಲ. +ಇನ್ನು ಸ್ಪಲ್ಪ ಹೊತ್ತು ಹೀಗೆ ಕುಳಿತಿದ್ದರೆ, ನಾನು ಕಳೆದು ಹೋಗಿದ್ದೇನೆ ಅಂತ ಸುದ್ದೀ ಆಗುತ್ತೆ. +ನಾನು ಹೊರಡುತ್ತೇನೆ’ ಎದ್ದಳು. +ಅವಳ ಕೈ ಹಿಡಿದು ಜಗ್ಗಿ ‘ಹೋಗಲೇಬೇಕಾ, ನೀವು ಹೋಗಿಬಿಟ್ಟರೆ ಪ್ರಪಂಚನೇ ಶೂನ್ಯ ಎನಿಸಿಬಿಡುತ್ತದೆ, ನಾನು ಬಂದುಬಿಡ್ತೀನಿ ನಿಮ್ಮ ಮನೆಗೆ’ ತುಂಟ ಬಾಲಕನಂತೆ ನುಡಿದ. +‘ಹಾಗೆಲ್ಲ ಬರೋಕೆ ಸಾಧ್ಯ ಇಲ್ಲ. +ಮೊದಲು ಪರ್ಮಿಶನ್ ತಗೋಬೇಕು ಹಿರಿಯರಿಂದ, ಅ ಮೇಲೆ ಬರೋಕೆ ಸಾಧ್ಯ’ ಎಂದಳು. +‘ಪರ್ಮಿಶನ್ ಈಗ್ಗೆ ತಗೋತಿನಿ ಇಳಾ, ಮೇಡಂ… ನಿಮ್ಮನೆಗೆ ಬರ್ತಿನಿ ಅಂದ್ರೆ ಬೇಡಾ ಅಂತಾರ’ ನುಡಿದ. +‘ಆಯ್ಯೋ ಪರ್ಮಿಶನ್ ಅಂದ್ರೆ, ನಿಮ್ಮ ಮಗಳನ್ನ ನಂಗೆ ಮದ್ವೆ ಮಾಡಿಕೊಡ್ತೀರಾ ಅಂತಾ ಕೇಳೋದು’ ಪರಿಹಾಸ್ಯ ಮಾಡುತ್ತ ಹೇಳಿದಳು. +‘ನೀಲಾ ಮೇಡಂ, ಆಗಲ್ಲ ಆಂದು ಬಿಟ್ರೆ’ ತಟ್ಟನೆ ಗಂಭೀರವಾದ. +ಆತಂಕದ ಛಾಯೆ ಕಾಣಿಸಿತು. +‘ಆಗ ಏನು ಮಾಡ್ತಿರಾ’ ಆಟವಾಡಿಸುವ ಧಾಟಿಯಲ್ಲಿ ಆಂದಳು. +‘ಆಗಲ್ಲ ಆಂದ್ರೆ ಹೊತ್ತುಕೊಂಡು ಹೋಗ್ತಿನಿ ಪೃಥ್ವಿರಾಜನಂತೆ ಅಂತೀನಿ’ ವೀರಾವೇಶದಿಂದ ಹೇಳಿದಾಗ ಪಕ ಪಕನೇ ನಕ್ಕಳು ಇಳಾ. +ಅವಳ ನಗುವನ್ನೆ ನೋಡುತ್ತ ಆಸ್ವಾದಿಸುತ್ತ ಬೆರಗುಗೊಂಡನು. +‘ಅಂಥ ಶ್ರಮ ಬೇಡ. +ಅಮ್ಮ ಕುಣಿದಾಡಿಕೊಂಡು ಒಪ್ತಾಳೆ. +ನಿಮ್ಮನ್ನ ಕಂಡ್ರೆ ತುಂಬ ಅಭಿಮಾನ ಅಮ್ಮನಿಗೆ, ನಿಮ್ಮಂತ ಅಳಿಯ ಸಿಗೋದೇ ತನ್ನ ಪುಣ್ಯ ಅಂದುಕೊಳ್ತಾಳೆ. +ಆ ಬಗ್ಗೆ ನಾನು ಭರವಸೆ ಕೊಡ್ತೀನಿ. +ಆದ್ರೆ ನಿಮ್ಮ ಮನೆಯವರು ಏನಂತರೊ’ ಸಂದೇಹಿಸಿದಳು. +‘ನಾನು ಯಾರನ್ನು ಮದ್ವೆ ಮಾಡಿಕೊಂಡರೂ ಅವರದೇನು ಅಭ್ಯಂತರವಿಲ್ಲ. +ಒಟ್ಟಿನಲ್ಲಿ ನಾನು ಮದುವೆ ಅದ್ರೆ ಸಾಕು, ’ನಿನ್ನಂಥ ಚಿನ್ನದ ಹುಡುಗಿ ಸಿಗುತ್ತಾಳೆ ಅಂದ್ರೆ ಯಾರು ತಾನೇ ಬೇಡಾ ಅಂತಾರೆ, ನಾನಂತು ಮನೆ ಅಳಿಯ ಆಗಿ ಇದ್ದುಬಿಡ್ತೀನಿ’ ಅಂತ ನಕ್ಕನು. +‘ನನಗೂ ಬೇರೆ ಕಡೆ ಹೋಗುವ, ಅಲ್ಲಿ ಕಷ್ಟಪಡುವ ತೊಂದರೆಯೇ ತಪ್ಪಿತು, ನಿಮ್ಮನ್ನ ಮದ್ವೆ ಆದ ಮೇಲೂ ನನ್ನ ತೋಟ, ಗದ್ದೆ ಅಂತ ಕೆಲಸ ಮಾಡಿಸಬಹುದು. +ಅಮ್ಮನ್ನ ಬಿಟ್ಟು ಹೋಗುವಂತಿಲ್ಲ. +ಅಮ್ಮನಿಗೆ ಎಂಥ ಅಳಿಯ ಸಿಗ್ತಾನೋ ಅಂತ ಭಯ ಆಗ್ತಾ ಇತ್ತು. +ಒಟ್ಟಿನಲ್ಲಿ ನನಗಂತೂ ನಿಮ್ಮನ್ನ ಮದ್ವೆ ಆಗೊದ್ರಿಂದ ಪ್ಲಸ್ ಪಾಯಿಂಟ್ಸ್ ಜಾಸ್ತಿ ಇವೆ. +ಆದ್ರೆ ಹೀಗೆ ನೀವು ನನ್ನ ಮೆಚ್ಚಿಕೊಳ್ತೀರಾ ಅನ್ನೋ ನಂಬಿಕೆನೇ ನನಗೆ ಬರ್ತಾ ಇಲ್ಲ. +ಇದೇನು ಕನಸಾ, ನಿಜನಾ ಅಂತ ಸಂದೇಹ ಕಾಡ್ತಾ ಇದೆ’ಎದ್ದು ನಿಂತಿದ್ದ ಅವಳ ಪಕ್ಕಕ್ಕೆ ಬಂದು ಕೈಗಳಿಂದ ಅವಳ ಮೊಗ ಹಿಡಿದು ಹಣೆಗೆ ತುಟಿ ಒತ್ತಿ ‘ಈಗ ನಂಬಿಕೆ ಬಂತಾ? +ಇದು ನಿಜಾ ಅಂತ… ನಾನೇ ಸಾಕ್ಷತ್ ವಿಸ್ಮಯ್ ಈ ಮುದ್ದು ಹುಡುಗಿ ಇಳಾಳ ಪ್ರೇಮದ ಬಲೆಯಲ್ಲಿ ಬಿದ್ದು ಯಾವಾಗ ನನ್ನವಳಾಗ್ತಾಳೆ ಅಂತಾ ಕಾಯತ್ತಾ ಇದ್ದೀನಿ. +ಪ್ಲೀಸ್ ಬೇಗ ನಮ್ಮ ಮನೆಗೆ ಬಂದುಬಿಡಿ. + ನಿಮ್ಮನ್ನ ಬಿಟ್ಟಿರೋಕೆ ನಂಗೆ ತುಂಬಾ ಕಷ್ಟ ಆಗ್ತ ಇದೆ’ ನಿವೇದಿಸಿಕೊಂಡ. +‘ಆಗ್ಲೆ ಕಷ್ಟನಾ, ನಾನಿನ್ನೂ ನಿಮ್ಮ ಹೆಂಡತಿ ಆಗೇ ಇಲ್ಲ. +ಕಷ್ಟ ಅಂತ ಮನೆಯವರೆಗೂ ಹುಡುಕಿಕೊಂಡು ಬಂದುಬಿಡಬೇಡಿ. +ಆಗ ನಂಗೆ ಕಷ್ಟವಾಗುತ್ತೆ. +ನೀವು ಹೀಗೆ ಆಡ್ತ ಇದ್ರೆ ನೋಡಿದವರು ಏನಂತಾರೆ? +ಪ್ರೇಮದ ಅಮಲು ಏರಿಬಿಟ್ಟಿದೆ. +ನಾನಿನ್ನೂ ಇಲ್ಲಿಯೇ ಇದ್ರೆ ಅಪಾಯ. +ಬರ್ತೀನಿ’ ಅವನಿಂದ ಬಿಡಿಸಿಕೊಂಡು ಓಡಿದಳು. +ಓಟಕ್ಕೆ ಕುಣಿತದ ನಡೆ ಬಂದಿತ್ತು. +ಹರ್ಷದಿಂದ ಬೀಗುತ್ತ ಎದೆಯೊಳಗೆ ತುಂಬಿಕೊಂಡ ಮಧುರಾನುಭೂತಿಯಿಂದ ಆಕಾಶದಲ್ಲಿ ತೇಲುತ್ತಿರುವಂತೆ ಭಾಸವಾಯಿತು. +ಹೊಸ ಅನುಭವ, ವಿಸ್ಮಯನ ಸಾನಿಧ್ಯ, ಅವನ ಪ್ರೇಮ, ಅವನ ಸಮರ್ಪಣೆ ಹೊಸ ಲೋಕದ ಬಾಗಿಲು ತೆರೆದಂತಾಯಿತು. +ಅವಳು ಅವಳಾಗಿರಲಿಲ್ಲ. +ಎಲ್ಲಿದ್ದೆನೋ, ಹೇಗಿದ್ದೆನೋ ಒಂದು ಅರ್ಥವಾಗದಂತಾಗಿ ಅನುರಾಗದ ಅಲೆಗಳಲ್ಲಿ ಕೊಚ್ಚಿ ಹೋಗಿ ಮನೆಮುಟ್ಟಿದ್ದೆ ತಿಳಿಯಲಿಲ್ಲ. +ಬಾಗಿಲಲ್ಲಿಯೇ ನೀಲಾ ಕಾಯುತ್ತ ನಿಂತಿದ್ದರೂ, ಅವಳನ್ನು ನೋಡುತ್ತಿದ್ದರೂ ನೋಡದವಳಂತೆ ಒಳ ಹೋದಾಗ ‘ಏನಾಯ್ತು ಈ ಹುಡುಗಿಗೆ ಎಲ್ಲಿ ಹೋಗಿದ್ದಳು ಇಷ್ಟು ಹೊತ್ತು’ ಎಂದುಕೊಂಡು ಅವಳ ಹಿಂದೆಯೇ ಬಂದಳು. +ಒಂದೂ ಮಾತಾಡದೆ ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು ಹೊಸ ಪರಿ ಎನಿಸಿ ಯಾವುದೋ ಲಹರಿಯಲ್ಲಿದ್ದಾಳೆ. +ಅವಳ ಲಹರಿ ಹಾಳು ಮಾಡುವುದು ಬೇಡ, ನೆನ್ನೆ ತಾನೇ ಅಷ್ಟೊಂದು ಜನ ಮುಂದೆ ಅವಳ ಸಾಧನೆಗೆ ಗರಿ ಸಿಕ್ಕಿದೆ. +ಅದೇ ಮೂಡ್‌ನಲ್ಲಿರಬೇಕು, ಹುಚ್ಚು ಹುಡುಗಿ ಎಂದು ಕೊಂಡ ನೀಲಾ ಮಗಳ ತಂಟೆಗೆ ಹೋಗಲಿಲ್ಲ. +ಅವಳಿಗೂ ಹೃದಯ ತುಂಬಿದಂತಿತ್ತು. +ಮೋಹನ ಸತ್ತ ಮೇಲೆ ಅದೆಷ್ಟೊ ದಿನಗಳ ನಂತರ ಇಂತದೊಂದು ಸಂತೋಷದ ವಾತಾವರಣ ಅಲ್ಲಿ ನಿರ್ಮಾಣವಾಗಿತ್ತು. +ತನ್ನ ಹಾಗೂ ವಿಸ್ಮಯನ ಪ್ರೇಮದ ಬಗ್ಗೆ ತಾಯಿ ನೀಲಾಳಿಗೆ ಹೇಗೆ ಹೇಳುವುದೆಂದು ಇಳಾ ಗೊಂದಲದಲ್ಲಿ ಬಿದ್ದಳು. +ಅಮ್ಮ ಕುಣಿದಾಡುತ್ತ ಒಪ್ಪಿಬಿಡುತ್ತಾಳೆ ಎಂದು ವಿಸ್ಮಯನ ಮುಂದೆ ಹೇಳಿದ್ದಳು. +ಆದರೆ ಅದನ್ನ ತಿಳಿಸಲೇ ಹಿಂಜರಿಕೆಯಾಗಿ ಅವತ್ತೆಲ್ಲ ಹಾಗೆಯೇ ಕಳೆದುಬಿಟ್ಟಳು. +ಈಗ ಹೇಳೋಣ… ಆಗ ಹೇಳೋಣ… ಎಂದುಕೊಂಡೇ ಕಾಲ ತಳ್ಳಿದಳು. +ತನ್ನಿಂದ ಹೇಳಲು ಅಸಾಧ್ಯವಾಗಬಹುದು, ವಿಸ್ಮಯನೇ ಅಮ್ಮನನ್ನು ಕೇಳಿಕೊಳ್ಳಲಿ ಎಂದು ತೀರ್ಮಾನಿಸಿ ಎದೆ ಭಾರ ಕಳೆದುಕೊಂಡಳು. +ವಿಸ್ಮಯ್ ತನ್ನ ಪ್ರೇಮವನ್ನು ಕುರಿತು ಹೇಳುವಾಗ ಅಮ್ಮನ ಪ್ರತಿಕ್ರಿಯೆ ಹೇಗಿರುತ್ತದೊ ನೋಡೋಣ ಎಂದು ಸುಮ್ಮನಿದ್ದು ಬಿಟ್ಟಳು. +ಈ ಬಾರಿಯ ಕೃಷಿ ಸಾಧನೆ ಪ್ರಶಸ್ತಿ ಬಂದಿರುವುದನ್ನು ಅಭಿನಂದಿಸಲು ನಿವಾಸ್ ಖುದ್ದಾಗಿ ಇಳಾಳ ಊರಿಗೆ ಬಂದಿಳಿದ. +ದೊಡ್ಡ ಬೊಕೆ ಹಿಡಿದುಕೊಂಡು ಕಾರಿನಿಂದ ಇಳಿಯುತ್ತಿರುವ ನಿವಾಸ್ನನ್ನು ಕಂಡು ಆಶ್ಚರ್ಯದಿಂದ ಕಾರಿನತ್ತ ಓಡಿಬಂದಳು. +‘ಸಾರ್, ನೀವು ಬರ್‍ತೀನಿ ಅಂತ ಒಂದು ಮಾತು ತಿಳಿಸಿರಲಿಲ್ಲವಲ್ಲ. +ಆಶ್ಚರ್ಯ ಆಗ್ತಾಯಿದೆ. +ಇಷ್ಟು ದೂರ ಬಂದಿದ್ದೀರಲ್ಲ…’ ಸಡಗರದಿಂದ ಸ್ವಾಗತಿಸಿದಳು. +‘ನಿಮ್ಗೆ ಸರ್‌ಪ್ರೈಸ್ ಕೊಡಬೇಕು ಅಂತನೇ ನಾನು ಮೊದಲೇ ತಿಳಿಸಿರಲಿಲ್ಲ. +ಕೃಷಿ ಸಾಧಕಿಗೆ ಅಭಿನಂದನೆಗಳು. +ನಾನು ಹೇಳ್ತ ಇರ್ಲಿಲ್ವ, ನೀವೇನಾದರೂ ಸಾಧಿಸಿಯೇ ಸಾಧಿಸುತ್ತೀರಾ ಅಂತ. +ಆದ್ರೆ ಇಷ್ಟು ಬೇಗ ಆ ದಿನ ಬರುತ್ತೆ ಅಂತ ಅಂದುಕೊಂಡಿರಲಿಲ್ಲ. +ನನ್ನ ಆಲೋಚನೆಗಳಿಗಿಂತಲೂ ನೀವು ಫಾಸ್ಟ್ ಆಗಿ ಸಾಧನೆ ಗರಿ ಪಡೆದುಕೊಂಡು ಬಿಟ್ಟಿರಿ. +ಈ ಸಾಧನೆಗೆ ಮತ್ತಷ್ಟು ಗರಿಗಳು ಸೇರಲಿ ಅಂತ ನನ್ನಾಸೆ’ ಬೊಕೆ ನೀಡುತ್ತ ಹಾರೈಸಿದ. +ಬೊಕೆ ತೆಗೆದುಕೊಂಡು ‘ಇದೆಲ್ಲ ಯಾಕೆ ಸಾರ್, ಹಾಗೆ ಅಭಿನಂದನೆ ಹೇಳಿದ್ದರೇ ಆಗಿತ್ತು, ಒಳಗೆ ಬನ್ನಿ… ಅಮ್ಮ ಅಜ್ಜಿಯ ಪರಿಚಯ ಮಾಡಿಸ್ತಿನಿ’ ಒಳಗೆ ಬಂದಳು. +ಅವಳ ಜೊತೆ ನಿವಾಸ್ ಕೂಡ ಒಳ ಬಂದು ಸೋಫಾದ ಮೇಲೆ ಕುಳಿತ. +ಒಳಹೋದ ಇಳಾ ಜೊತೆಯಲ್ಲಿ ನೀಲಾಳನ್ನು, ಅಂಬುಜಮ್ಮನನ್ನು ಕರೆತಂದಳು. +‘ಇವರು ನಮ್ಮ ತಾಯಿ ನೀಲಾ ಅಂತ. +ನಮ್ಮ ಅಜ್ಜಿ, ಅಮ್ಮನ ದೊಡ್ಡಮ್ಮ’ ಅಂತ ಪರಿಚಯಿಸಿದಳು. +‘ನಿಮ್ಮ ಬಗ್ಗೆ ಇಳಾ ಹೇಳ್ತಿರುತ್ತಾಳೆ. +ನೀವು ಬಂದಿದ್ದು ತುಂಬಾ ಸಂತೋಷ, ನಿಮ್ಮ ಮಾರ್ಗದರ್ಶನ ಅವಳ ಕೆಲಸಗಳಿಗೆ ಸ್ಫೂರ್ತಿ, ಈ ವಯಸ್ಸಿಗೆ ಅದೆಷ್ಟು ಸಾಧನೆ ಮಾಡಿದಿರಪ್ಪ ನೀವು’ ಎಂದು ಬಾಯಿ ತುಂಬ ಹೊಗಳುತ್ತ ಅಭಿಮಾನದಿಂದ ಹೇಳಿದಳು. +ಅವಳ ಹೊಗಳಿಕೆಗೆ ನಸುನಕ್ಕು ‘ನಿಮ್ಮ ಮಗಳ ಸಾಧನೆ ಮುಂದೆ ನಮ್ಮದೇನು ಇಲ್ಲ ಬಿಡಿ, ಸಾಧನೆ ಮಾಡೋಕೆ ಹುಟ್ಟಿರೋಳು ನಿಮ್ಮ ಮಗಳು’ ಅಂತರಾಳದಿಂದ ನುಡಿದ. +ಅಂಬುಜಮ್ಮ ಅವನನ್ನೇ ಮಿಕಿ ಮಿಕಿ ನೋಡುತ್ತಿದ್ದು ಒಂದೂ ಮಾತಾಡಿರಲಿಲ್ಲ. +ಎಲ್ಲೋ ಮೊದಲೇ ನೋಡಿದಂತೆ, ತುಂಬಾ ಪರಿಚಿತ ಮೊಗದಂತೆ ನಿವಾಸ್ ಕಾಣಿಸಿ ಎಲ್ಲಿರಬಹುದು ಎಂದು ನೆನೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. +ಎಷ್ಟೆ ನೆನಪಿಸಿಕೊಂಡರೂ ನೆನಪಾಗಲೇ ಇಲ್ಲ. +ಚನ್ನರಾಯಪಟ್ಟಣದವನು ನಿವಾಸ್ ಎಂದು ಇಳಾ ಹೇಳಿದ್ದಳು. +ತಾನಂತೂ ಚನ್ನರಾಯಪಟ್ಟಣಕ್ಕೆ ಹೋಗಿಯೇ ಇಲ್ಲ. +ತಮ್ಮ ಕಡೆಯವರಾಗಲಿ, ಪರಿಚಿತರಾಗಲಿ ಅಲ್ಲಿ ಯಾರೂ ಇಲ್ಲ, ಹಾಗಿದ್ದರೆ ನಿವಾಸ್ನನ್ನು ಎಲ್ಲಿ ನೋಡಿದ್ದೇನೆ. +ತುಂಬಾ ಪರಿಚಿತ ಮುಖ ಎನಿಸುತ್ತಿದೆ- ಗೊಂದಲದಲ್ಲಿಯೇ ಮುಳುಗಿದ್ದರು. +ಅದೇ ಗೊಂದಲದಲ್ಲಿಯೇ ಕಾಫಿ ತಂದಿತ್ತರು. +ಕಾಫಿ ಕುಡಿದಾದ ಮೇಲೆ ತೋಟ ನೋಡುವೆನೆಂದಾಗ ಇಳಾ ಅವನಿಗೆ ತೋಟ ತೋರಿಸಿ ಬರಲು ಹೊರಟಳು. +ತಾನೂ ಬರುವುದಾಗಿ ಅಂಬುಜಮ್ಮ ಅವರ ಹಿಂದೆ ಹೊರಟರು. +ಅವನು ಯಾರು? +ಅವನನ್ನು ತಾನು ಎಲ್ಲಿ ನೋಡಿದ್ದೆ?ಎಂದು ತಿಳಿದುಕೊಳ್ಳುವ ಕುತೂಹಲದಿಂದ ಅವರ ಜೊತೆಯಲ್ಲಿಯೆ ನಡೆದರು. +ತೋಟ ನೋಡಿ ತುಂಬಾ ಮೆಚ್ಚಿಕೊಂಡ. +ಎರೆಹುಳು ಘಟಕ, ಹಸುಗಳ ಕೊಟ್ಟಿಗೆ, ಅಂಗಾಂಶ ಕೃಷಿಯ ಪ್ರಯೋಗ ಕೋಣೆ ಎಲ್ಲಾ ನೋಡಿ ‘ಇಳಾ ನಿಮ್ಗೆ ಆ ದೇವರು ವರ ಕೊಟ್ಟುಬಿಟ್ಟಿದ್ದಾನೆ. +ಇಲ್ಲದೆ ಇದ್ರೆ ಇಷ್ಟು ಬೇಗ ಇದರಲ್ಲಿ ಪಳಗಲು ಸಾಧ್ಯವಿಲ್ಲ. +ಅಪರೂಪದ ತಿಳುವಳಿಕೆ ನಿಮಗಿದೆ, ಆದ್ದರಿಂದಲೇ ನೀವು ಇಲ್ಲಿ ಯಶಸ್ಸು ಗಳಿಸುತ್ತಿರುವುದು, ಅದೆಷ್ಟು ವರ್ಷಗಳಿಂದ ಕೃಷಿ ಮಾಡುತ್ತಿದ್ದರೂ ಗೆಲುವಿಗಿಂತ ಸೋಲನ್ನ ಅನುಭವಿಸಿದವರು ತುಂಬಾ ಜನ, ಅಂತಹ ಸಮಯದಲ್ಲಿ ಇನ್ನೊಂದು ರಿಸ್ಕ್ ತಗೊಂಡು ಗೆದ್ದುಬಿಟ್ಟಿರಿ. +ಈ ಗೆಲುವು ಸದಾ ಹೀಗೆ ಇರಬೇಕು.’ಮಾತನಾಡುತ್ತ ಇಡೀ ತೋಟ ಸುತ್ತಾಡಿದರು. +ಒಂದೂ ಮಾತನಾಡದೆ ಬರುತ್ತಿದ್ದ ಅಂಬುಜಮ್ಮ ತಟ್ಟನೆ ನಿಂತುಕೊಂಡರು. +‘ಏನಪ್ಪ ನೀನು ದೇವರಾಜರಾಯರ ಮಗನಾ?’ ನಿವಾಸ್ನನ್ನು ಕೇಳಿದರು. +‘ಹೌದು, ನಿಮಗೆ ಅವರು ಗೊತ್ತಾ?’ ಚಕಿತನಾಗಿ ನಿವಾಸ್ ಉತ್ತರಿಸಿದ. +‘ಗೊತ್ತೇನು, ನನ್ನ ಇಡೀ ಬದುಕಿನ ಸಂತೋಷವನ್ನೆಲ್ಲ ನುಂಗಿ ನೀರು ಕುಡಿದವರು. +ನಮ್ಮನ್ನ ಬೀದಿಪಾಲು ಮಾಡಿ ನಮ್ಗೆ ಸೇರಬೇಕಾದ ಆಸ್ತಿನೆಲ್ಲ ಲಪಟಾಯಿಸಿ ಮೋಸ ಮಾಡಿದೋರು, ನಾನು ಶಾಪ ಹಾಕದ ದಿನವಿಲ್ಲ, ರಾಜನಂತೆ ಬೆಳೀಬೇಕಾದ ನನ್ನ ಮಗನ ಅದೃಷ್ಟವನ್ನು ಕಿತ್ತುಕೊಂಡೋರು, ಅವರು ನನ್ನ ಭಾವ ಅಂತ ಹೇಳಿಕೊಳ್ಳೋಕು ಅಸಹ್ಯ ಆಗುತ್ತೆ’ ಎಂದವರೆ ದುರ್ದಾನ ತೆಗೆದುಕೊಂಡವರಂತೆ ಸಿಟ್ಟಿನಿಂದ ಕಂಪಿಸುತ್ತ ವಾಪಸ್ಸು ತಿರುಗಿ ಸರಸರನೆ ನಡೆದುಬಿಟ್ಟಾಗ ನಿವಾಸ್ ದಿಗ್ಮೂಢನಾಗಿ ನಿಂತುಬಿಟ್ಟ. +ಇಲ್ಲಿ ಹೀಗೆ ಚಿಕ್ಕಮ್ಮನನ್ನು ಕಾಣುತ್ತೇನೆ, ಅವರಿಲ್ಲಿ ಸಿಗುತ್ತಾರೆ ಎಂಬ ಯಾವ ನಿರೀಕ್ಷೆಯೂ ಅವನಿಗೆ ಇಲ್ಲದೆ ದಂಗುಬಡಿದು ಹೋಗಿದ್ದಾನೆ. +ತಾನಿಷ್ಟು ದಿನ ಹುಡುಕುತ್ತಿದ್ದ ಚಿಕ್ಕಮ್ಮ ಇಲ್ಲಿಯೇ ಇದ್ದರೆ? +ಅವರಿಗಾಗಿ ತಾನು ಅದೆಷ್ಟು ಹುಡುಕಾಟ ನಡೆಸಿದ್ದೆ… +ಯಾರ್ಯಾರ ಬಳಿ ಅವರನ್ನ ವಿಚಾರಿಸಿದ್ದ. +ಆದರೆ ಅದು ಪ್ರಯೋಜನವೇ ಆಗಿರಲಿಲ್ಲ. +ಇಂದು ನಾನು ಕಾಯುತ್ತಿದ್ದ ಸಮಯ ಬಂದಿದೆ, ತಲೆ ಮೇಲಿನ ಹೊರೆ ಇಳಿಸಿಕೊಳ್ಳುವ, ಎದೆಭಾರ ಕಳೆದುಕೊಳ್ಳುವ ಸುವರ್ಣ ಗಳಿಗೆ ಬಂದಿದೆ-ತಕ್ಷಣವೆ ಚೇತರಿಸಿಕೊಂಡು ಹಿಗ್ಗಿದನು. +ಈ ಅನಿರೀಕ್ಷಿತ ಘಟನೆಯಿಂದ ಇಳಾ ಕೂಡ ಬೆಪ್ಪಾಗಿ ಹೋಗಿದ್ದಳು. +ನಿವಾಸ್ ತನ್ನ ಹತ್ತಿರದ ಸಂಬಂಧಿ, ಅಜ್ಜಿಯ ಭಾವನ ಮಗ, ಆದರೆ ಆತನ ತಂದೆ ದೊಡ್ಡ ಮೋಸಗಾರ, ಅಜ್ಜಿಯ ಆಸ್ತಿಯನ್ನು ಲಪಟಾಯಿಸಿದ ವಂಚಕ, ಅಜ್ಜಿಯ ಎಲ್ಲಾ ಕಷ್ಟಗಳಿಗೆ ಕಾರಣರಾದವರು ನಿವಾಸ್ನ ತಂದೆ. +ಈ ಸತ್ಯವನ್ನು ಅರಗಿಸಿಕೊಳ್ಳಲಾರದೆ ಪ್ರಯಾಸಪಟ್ಟಳು. +ನಿವಾಸ್ನಿಗೇನು ಹೇಳಿ ಸಂತೈಸಬೇಕು, ಅಜ್ಜಿಯ ಕೋಪವನ್ನು ಹೇಗೆ ಶಮನಗೊಳಿಸಬೇಕು ಎಂದು ತಿಳಿಯದೆ ನಿಶ್ಚಲಳಾಗಿ ನಿಂತುಬಿಟ್ಟಳು. +‘ಇಳಾ ಈಗ ಮನೆಗೆ ಹೋಗೋಣ ಬನ್ನಿ’ ಅವಳ ಕೈ ಹಿಡಿದು ಸರಸರನೆ ಅಂಬುಜಮ್ಮ ಹೋದ ದಾರಿಯಲ್ಲಿ ನಡೆದನು. +ಇಳಾಳ ಕೈಹಿಡಿದುಕೊಂಡಿದ್ದೇನೆ ಎಂಬ ಅರಿವೇ ನಿವಾಸ್ನಿಗಿರಲಿಲ್ಲ. +ಇಳಾ ಸಂಕೋಚಿಸಿದರೂ ಅವನ ಈಗಿನ ಮನಸ್ಥಿತಿ ಬಗ್ಗೆ ಯೋಚಿಸುತ್ತ ಅತ್ತ ಗಮನ ನೀಡದೆ ಅವನ ಜೊತೆ ಮನೆ ಸೇರಿದಳು. +ಅಂಬುಜಮ್ಮ ಏನೂ ಆಗದವರಂತೆ ಅಡುಗೆ ಮನೆಯಲ್ಲಿದ್ದರು. +ಅವರು ಬಂದಿದ್ದನ್ನು ನೋಡಿ ‘ಇಳಾ, ಊಟಕ್ಕೇಳಿಸಮ್ಮ ಅಮನ್ನ, ಬೇಗ ಪಾಯಸ ಮಾಡಿ ಬಿಡುತ್ತೇನೆ, ನೀಲಾ ಕೂಡ ಅಷ್ಟು ಹೊತ್ತಿಗೆ ಬರ್ತಾಳೆ, ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವಿರಂತೆ’ ಎಂದು ಹೇಳುತ್ತಿದ್ದರೆ ಅಜ್ಜಿಯನ್ನೆ ಅದ್ಭುತ ಎಂಬಂತೆ ನೋಡಿದಳು! +ಅವರ ದೊಡ್ಡ ಗುಣದ ಬಗ್ಗೆ ತಲೆದೂಗುತ್ತ ಅತಿಥಿ ಸತ್ಕಾರ ಮಾಡುವ ಅವರ ಮನಸ್ಸು ಅದೆಷ್ಟು ವಿಶಾಲ ಎಂದುಕೊಂಡಳು. +ಮನಸ್ಸಿನಲ್ಲಿಯೇ ಅಜ್ಜಿಯನ್ನು ಮೆಚ್ಚಿಕೊಂಡಳು. +ಸೀದಾ ಅಡುಗೆಮನೆಗೆ ಬಂದ ನಿವಾಸ್ ‘ಚಿಕ್ಕಮ್ಮ, ನಮ್ಮನ್ನ ಕ್ಷಮಿಸಿಬಿಡಿ, ನಿಮಗೆ ಮಾಡಿದ ಅನ್ಯಾಯಕ್ಕೆ ನಮ್ಮ ಇಡೀ ಮನೆಯೇ ದುರಂತಮಯವಾಗಿದೆ. +ಅಕ್ಕ ಆತ್ಮಹತ್ಯೆ ಮಾಡಿಕೊಂಡಳು. +ಅಮ್ಮ ಅದೇ ಚಿಂತೆಯಲ್ಲಿ ಕೊರಗಿ ನಮ್ಮನ್ನೆಲ್ಲ ಬಿಟ್ಟುಹೋದಳು. +ನಮ್ಮ ಇಡೀ ಜಮೀನ್ನು ಸರ್ಕಾರ ವಹಿಸಿಕೊಂಡಿತು. +ಇದನ್ನೆಲ್ಲ ನೋಡಿ ಅಪ್ಪ ದುರ್ಬಲಗೊಂಡು ಮಾನಸಿಕ ಸ್ವಾಸ್ಥ ಕೆಡಿಸಿಕೊಂಡು ಹುಚ್ಚರಾಗಿದ್ದಾರೆ. +ನಾವು ಮಾಡಿದ ಪಾಪದ ಫಲವನ್ನು ನಾವೇ ಅನುಭವಿಸಬೇಕು ಚಿಕ್ಕಮ್ಮ. +ಈ ದುರಂತಗಳಿಂದ ಕಂಗೆಟ್ಟು ನಾನು ಕೆಲಸಬಿಟ್ಟು ಜಮೀನು ಕೊಂಡು ವ್ಯವಸಾಯ ಮಾಡುತ್ತ ಇದ್ದೀನಿ. +ಜಮೀನಿಗೆ ಸರ್ಕಾರ ಕೊಟ್ಟ ಹಣದಲ್ಲಿ ನಿಮ್ಮ ಪಾಲಿನ ಹಣವನ್ನು ಬ್ಯಾಂಕಿನಲ್ಲಿಟ್ಟು ನಿಮಗಾಗಿ ಹುಡುಕುತ್ತಿದ್ದೆ. +ಯಾರೂಬ್ಬರೂ ನಿಮ್ಮ ವಿಚಾರ ತಿಳಿಸಲಿಲ್ಲ. +ನಿಮ್ಮಕಡೆಯವರ ಬಗ್ಗೆಯೂ ನಂಗೆ ಸರಿಯಾದ ಮಾಹಿತಿ ಸಿಗಲಿಲ್ಲ. +ನನ್ನ ತಂದೆಯನ್ನು ಕ್ಷಮಿಸಿ, ನಿಮ್ಮ ಹಣ ತೆಗೆದುಕೊಳ್ಳಿ ಚಿಕ್ಕಮ್ಮ’ ಅಂಬುಜಮ್ಮನ ಕಾಲಿಗೆ ಬಿದ್ದು ಬೇಡಿಕೊಂಡ. +‘ಅಯ್ಯೋ ನೀನ್ಯಾಕಪ್ಪ ನನ್ನ ಕಾಲಿಗೆ ಬೀಳ್ತಿಯಾ. +ನಿಂದೇನು ತಪ್ಪಿದೆ ಇದರಲ್ಲಿ. +ಇದೆಲ್ಲ ಆಗುವಾಗ ನೀನು ಹುಟ್ಟಿಯೇ ಇರಲಿಲ್ಲ. +ನಾನು ನಿನ್ನನ್ನು ನೋಡಿಯೇ ಇರಲಿಲ್ಲ. +ನಿಮ್ಮಪ್ಪನ ಹೋಲಿಕೆ ಇದ್ದುದರಿಂದ ಎಲ್ಲೊ ನೋಡಿದಂತೆ ಅನ್ನಿಸಿತು. +ನಿಮ್ಮಪ್ಪನ ಮೇಲೆ ಕೋಪ ಇದೆ. +ಅಸಹ್ಯನೂ ಇದೆ. +ಆದ್ರೆ ನಾನು ಯಾವತ್ತೂ ನಿಮ್ಮ ಮನೆ ಸರ್ವನಾಶ ಆಗಲಿ ಅಂತ ಶಾಪ ಹಾಕಿರಲಿಲ್ಲ. +ಎಷ್ಟೆ ಆಗಲಿ ನನ್ನ ಗಂಡನ ಅಣ್ಣನ ಸಂಸಾರ ಅದು. +ನಿಮ್ಮಕ್ಕ, ನಿಮ್ಮಮ್ಮ ಸತ್ತುಹೋಗಿಬಿಟ್ಟರೆ? +ಪಾಪ…’ ಕಣ್ಣೀರು ಹಾಕಿದರು. +ಚಿಕ್ಕಮ್ಮನ ಹೃದಯವಂತಿಕೆಗೆ ಮಾರುಹೋದ ನಿವಾಸ್ನು ‘ಚಿಕ್ಕಮ್ಮ ನಿಮ್ಮದೆಂತಹ ದೊಡ್ಡ ಗುಣ, ಸರ್ವನಾಶ ಮಾಡಿದ ವಂಚಕನ ಮಗ ನಾನು ಅಂತ ಗೊತ್ತಾದರೂ ನನ್ನನ್ನು ಕ್ಷಮಿಸಿದ್ದೀರಿ, ಅದೇ ರೀತಿ ನಿಮಗೆ ಸೇರಬೇಕಾದ ಹಣವನ್ನು ತೆಗೆದುಕೊಂಡು ನನ್ನನ್ನು ಋಣಮುಕ್ತನಾಗಿ ಮಾಡಿ’ ಕೇಳಿಕೊಂಡನು. +‘ಈಗ್ಯಾಕಪ್ಪ ನಂಗೆ ಹಣ, ಆವಾಗ ಬೇಕಿತ್ತು, ಬದುಕಬೇಕಿತ್ತು, ಮಗನನ್ನು ಸಾಕಬೇಕಿತ್ತು. +ಮಗನಿಗೊಂದು ನೆಲೆ ಕಾಣಿಸಲು ಹಣ ಬೇಕಿತ್ತು. +ಈಗ ಅವನು ಚೆನ್ನಾಗಿದ್ದಾನೆ. +ಒಳ್ಳೆ ಕೆಲಸ ಇದೆ. +ನಿಮ್ಮ ಮನೆಯಲ್ಲಿ ಇನ್ನೊಂದು ದುರಂತ ನಡೆದಿರುವಾಗ ಆ ಹಣ ನಾ ಹೇಗೆ ತೆಗೆದುಕೊಳ್ಳಲಿ, ನೀನೇ ಇಟ್ಟುಕೊಳ್ಳಪ್ಪ’ ಹಣ ತೆಗೆದುಕೊಳ್ಳಲು ನಿರಾಕರಿಸಿದರು. +‘ಚಿಕ್ಕಮ್ಮ, ನಿಮಗೆ ಬೇಡವಾದ್ರೆ ಬಿಡಿ, ಆದ್ರೆ ಅಣ್ಣನಿಗಾದರೂ ಆ ಹಣ ಸೇರಲೇಬೇಕು. +ಅದು ಅವನ ಹಣ, ಅದನ್ನ ಇಟ್ಟುಕೊಳ್ಳುವ ಯಾವ ಹಕ್ಕಾಗಲಿ, ಅಧಿಕಾರವಾಗಲಿ ನನಗಿಲ್ಲ. +ದಯವಿಟ್ಟು ಚಿಕ್ಕಮ್ಮ, ಬೇಡ ಅನ್ನಬೇಡಿ. +ಅದು ನಿಮ್ಮ ಹಣ, ನಾಳೇನೇ ಅಣ್ಣನ ಹತ್ತಿರ ಹೋಗಿ ಈ ವಿಚಾರ ತಿಳಿಸೋಣ’ ಒತ್ತಾಯಿಸಿದ. +ಅವನ ಒತ್ತಾಯಕ್ಕೆ ಮಣಿದ ಅಂಬುಜಮ್ಮ ನಿರ್ಲಿಪ್ತತೆಯಿಂದಲೇ ಒಪ್ಪಿಕೊಂಡರು. +ನಾಳೆ ನಿವಾಸ್ನೊಂದಿಗೆ ಮಗನ ಮನೆಗೆ ಬರಲು ಸಮ್ಮತಿಸಿದರು. +ನೀಲಾ ಬಂದಾಗ ಇಳಾ ಸಂಭ್ರಮದಿಂದ ನಿವಾಸ್ ಅಜ್ಜಿಯ ಭಾವನ ಮಗ, ತಮಗೆ ಹತ್ತಿರದ ಸಂಬಂಧಿ ಎಂಬ ವಿಚಾರವನ್ನು ತಿಳಿಸಿದಳು. +ನೀಲಾಗೂ ಈ ವಿಚಾರ ಸಂತೋಷ ತಂದಿತು. +ಅವರ ಆಸ್ತಿಯ ಹಣವನ್ನು ಬ್ಯಾಂಕಿನಲ್ಲಿಟ್ಟು ಅವರಿಗಾಗಿ ಹುಡುಕಾಡಿದ್ದು ಈಗ ಅಕಸ್ಮಿಕವಾಗಿ ಇಲ್ಲಿ ಸಿಕ್ಕಿದ್ದು, ನಾಳೆಯೇ ದೊಡ್ಡಮ್ಮ ನಿವಾಸ್ನೊಂದಿಗೆ ಮಗನ ಮನೆಗೆ ಹೊರಟಿರುವುದು ತಿಳಿದು ಕೊನೆಗೂ ದೊಡ್ಡಮ್ಮನ ಆಸ್ತಿ ಕೈ ಸೇರುವಂತಾಯಿತಲ್ಲ ಎಂದು ಸಮಾಧಾನಿಸಿದಳು. +ನಿವಾಸ್ನ ಮನೆಯ ದುರಂತದ ಚಿತ್ರಣ ನೀಡಿದ ಅಂಬುಜಮ್ಮ ತುಂಬಾ ನೊಂದಕೊಂಡರು. +ತಮ್ಮ ಆಸ್ತಿ ನೀಡದೆ ಮೋಸಮಾಡಿದ ಭಾವನಿಗೆ ಶಾಪ ಹಾಕುತ್ತಿದ್ದು ನಿಜವಾದರೂ ಅದು ಕೋಪದಿಂದಷ್ಟೆ. +ಅವರ ಮನೆಯವರ ಬಗ್ಗೆ ಅಂಬುಜಮ್ಮನಿಗೆ ಯಾವುದೇ ಕೋಪವಿರಲಿಲ್ಲ. +ನಿವಾಸ್ನ ತಾಯಿ ಎಷ್ಟೋ ಬಾರಿ ಗಂಡನಿಗೆ ಹೇಳಿದ್ದರು. +ಅವರ ಆಸ್ತಿ ಅವರಿಗೆ ಕೊಟ್ಟುಬಿಡಿ, ಅವರು ನಮ್ಮ ಮುಂದೆ ಕಷ್ಟಪಡುತ್ತಿದ್ದರೆ ನಾವು ನೋಡಿಕೊಂಡು ಹೇಗೆ ಸಹಿಸುವುದು ಎಂದು ಗಂಡನೊಂದಿಗೆ ಜಗಳವಾಡಿದ್ದರು. +ಆದರೆ ಆ ಮನುಷ್ಯ ಯಾರ ಮಾತನ್ನು ಕೇಳುವಂತಿರಲಿಲ್ಲ. +ಆತ ಮಾಡಿದ ತಪ್ಪಿಗೆ ಆಕೆ ಶಿಕ್ಷೆ ಅನುಭವಿಸುವಂತಾಗಿದ್ದು ಅಂಬುಜಮ್ಮನವರಿಗೆ ನೋವೇ ತಂದಿತ್ತು. +ಒಟ್ಟಿನಲ್ಲಿ ಕೊನೆಗೂ ಆಸ್ತಿಯ ಹಣ ಕೈ ಸೇರುತ್ತಿದೆ. +ಇನ್ನು ಮಗನುಂಟು, ನಿವಾಸ್ನುಂಟು, ವೈರಾಗ್ಯ ಭಾವ ತಾಳಿದರು. +ಭಾವನ ಮಗನಿಗೆ ಹಬ್ಬದ ಅಡುಗೆಯನ್ನೆ ಮಾಡಿ ಬಡಿಸಿ ಕಕ್ಕುಲಾತಿಯಿಂದ ಉಪಚಾರ ಮಾಡಿ ತಿನ್ನಿಸಿದ್ದರು. +ದೊಡ್ಡಮ್ಮ ನಿವಾಸ್ನಿಗೆ ತೋರುತ್ತಿರುವ ಪ್ರೀತಿ ಕಾಳಜಿ ನೋಡಿ ‘ಪಾಪ, ತಮಗೆ ಅನ್ಯಾಯ ಮಾಡಿದವನ ಮಗನಾದರೂ ಅದೆಷ್ಟು ಅಕ್ಕರೆ ತೋರುತ್ತಿದ್ದಾರೆ. +ನಿವಾಸ್ ಕೂಡ ಒಳ್ಳೆ ಹುಡುಗ, ಇಲ್ಲದಿದ್ದರೆ ಹಣ ಜೋಪಾನವಾಗಿ ತೆಗಿದಿರಿಸಿ ಕೊಡುತ್ತಿದ್ದನೆ? +ಇಂಥ ಪ್ರಮಾಣಿಕರು ಈ ಕಾಲದಲ್ಲೂ ಇರುವರೆ ಎಂದು ನೀಲಾ ಸೋಜಿಗಪಟ್ಟಳು. +‘ಸಾರ್, ಅಮ್ಮನ ಶಾಲೆಯ ತೋಟ ತುಂಬಾ ಚೆನ್ನಾಗಿದೆ ನೋಡುತೀರಾ’ ಊಟ ಮುಗಿಸಿದ ಮೇಲೆ ಇಳಾ ಕೇಳಿದಳು. +‘ಶಾಲೆಯ ತೋಟ ಬೇಡ, ನಿಮ್ಮ ತೋಟವನ್ನೆ ಸರಿಯಾಗಿ ನೋಡಲಿಲ್ಲವಲ್ಲ, ಅಲ್ಲಿಗೆ ಹೋಗೋಣ ನಡೆಯಿರಿ’ ಎಂದು ಎದ್ದು ನಿಂತ. +‘ಈಗಿನ್ನು ಊಟ ಮಾಡಿದ್ದೀರಾ, ಕೊಂಚ ಕುತ್ಕೊಂಡು ರೆಸ್ಟ್ ತಗೊಂಡು ಆ ಮೇಲೆ ಹೋಗಬಹುದಲ್ವಾ’ ನೀಲಾ ಹೇಳಿದಳು. +‘ನಾನು ಬಂದಿರುವುದೇ ಇಳಾಳ ಕೃಷಿ ಹೇಗಿದೆ ಅಂತ ನೋಡೋಕ್ಕೆ, ಕುತ್ಕೊಂಡು ಯಾಕೆ ಟೈಂ ವೇಸ್ಟ್ ಮಾಡಬೇಕು, ಹೋಗಿ ಬರುತ್ತೇವೆ’ ಹೊರಟುನಿಂತನು. +ಇಬ್ರೂ ಜೊತೆಯಾಗಿ ಹೋಗುತ್ತಿದ್ದರೆ-ನೀಲಾ, ಅಂಬುಜಮ್ಮ ನಿಂತು ನೋಡಿದರು. +‘ನೀಲಾ, ನಮ್ಮ ಇಳಾಗೆ, ಆ ಹುಡುಗನ್ನ ಕಂಡ್ರೆ ತುಂಬಾ ಇಷ್ಟ ಅಂತ ಕಾಣುತ್ತೆ. +ಅವನು ತುಂಬಾ ಒಳ್ಳೆ ಹುಡುಗನಂತೆ ಕಾಣಿಸುತ್ತಾನೆ, ಅಪ್ಪನಂತಲ್ಲ ಅವನು, ಒಂದೇ ಸಲಕ್ಕೆ ಒಳ್ಳೆ ಅಭಿಪ್ರಾಯ ಮೂಡಿಸಿದ್ದಾನೆ. +ಯಾರಿಗೊ ಇಳಾಳನ್ನು ಕೊಟ್ಟು ಮದುವೆ ಮಾಡುವ ಬದಲು ಇವನಿಗೆ ಮಾಡಿದ್ರೆ ಹೇಗಿರುತ್ತೆ ನೀಲಾ, ನಂಗೂ ಕರುಳ ಸಂಬಂಧ, ಏನಂತಿಯಾ’ ಮನದೊಳಗಿದ್ದದ್ದನ್ನು ಹೊರ ಹಾಕಿದರು. +‘ನಂಗೂ ಹಾಗೆ ಅನ್ನಿಸುತ್ತೆ ದೊಡ್ಡಮ್ಮ, ನೋಡೋಣ ಇರು, ಅವರ ಅಭಿಪ್ರಾಯ ಹೇಗಿರುತ್ತೋ, ಇಳಾ ಅಂತು ಮದುವೆ ವಿಷಯ ಎತ್ತಿದರೆ ರೇಗಿಬಿಡುತ್ತಾಳೆ, ನಂಗೂ ನಿವಾಸ್ ಹಿಡಿಸಿದ್ದಾನೆ. +ಇಬ್ರೂದೂ ಒಂದೇ ಆಸಕ್ತಿ, ಒಂದೇ ಅಭಿರುಚಿ, ಮದ್ವೆ ಆದ್ರೆ ನಂಗೂ ಸಂತೋಷವೇ. +ಆದ್ರೆ ಅವರ ಸ್ನೇಹ ಹೇಗೊ ಏನೋ…’ ಮುಂದುವರಿಯಲು ಹಿಂಜರಿದಳು. +‘ಅವರ ಮನಸ್ಸಿನಲ್ಲಿ ಮದ್ವೆ ವಿಚಾರ ಇಲ್ಲದೆ ಇದ್ರೆ, ನಾವೇ ಆ ವಿಚಾರ ಎತ್ತೋಣ ಬಿಡು, ಸಂತೋಷವಾಗಿ ಒಪ್ಪಿಕೊಳ್ತಾರೆ, ಬೇಗ ಮದ್ವೆ ಮಾಡಿ ಇಳಾಳ ಮಗುವನ್ನು ಎತ್ತಿ ಆಡಿಸೋಣ’ ಅವರಾಗಲೇ ಇಳಾ- ನಿವಾಸ್ಗೆ ಮದುವೆ ಮಾಡಿ ಮಗುವನ್ನು ಎತ್ತಿ ಆಡಿಸುವಂತೆ ಕನಸು ಕಂಡರು. +ದೊಡ್ಡಮ್ಮನ ಕನಸು ಕಂಡು ನೀಲಾ ನಕ್ಕಳು. +ತೋಟದೊಳಗೆ ನಿವಾಸ್ ಗಿಡಗಳನ್ನು ನೋಡಿ ಕೆಲವು ಸೂಚನೆಗಳನ್ನು ನೀಡಿದ. +ಕೊಡಗಿನ ಕಿತ್ತಲೆಗೆ ಒಳ್ಳೆ ಬೇಡಿಕೆ ಇರುವುದರಿಂದ ಮತ್ತಷ್ಟು ಕಿತ್ತಲೆ ಗಿಡಗಳನ್ನು ಹಾಕಿಸುವಂತೆಯೂ, ಕಾಫಿಗಿಡದ ಜೊತೆಗೆ ಆ ಗಿಡಗಳನ್ನು ಚೆನ್ನಾಗಿ ನೋಡಿಕೊಂಡರೆ ಒಳ್ಳೆ ಪಸಲು ಸಿಗುತ್ತದೆ. +ಹಾಗೆಯೇ ಏಲಕ್ಕಿ ಗಿಡಗಳಿಗೆ ರೋಗ ಬಡಿಯದಂತೆ ಸುಲಭವಾಗಿ ಪರಿಹಾರಗಳನ್ನು ತಿಳಿಸುತ್ತ, ಕಾಫಿ ಗಿಡದ ಮಧ್ಯದಲ್ಲಿ ಅರಿಶಿಣ ಕೂಡ ಹಾಕಿ ಬೆಳೆಸಬಹುದು. +ಕಾಫಿ ಒಂದನ್ನೆ ನೆಚ್ಚಿಕೊಳ್ಳುವುದು ಬೇಡ. +ಒಂದರಲ್ಲಿ ತಪ್ಪಿದರೆ ಮತ್ತೊಂದರಲ್ಲಿ ಆದಾಯ ಬರುತ್ತಿರುವಂತೆ ನೋಡಿಕೊಳ್ಳಬೇಕು. + ಹೀಗೆ ಮಾತನಾಡುತ್ತ ಇಡೀ ತೋಟ ಸುತ್ತಿ ಮರದ ಕೆಳಗೆ ವಿಶ್ರಮಿಸಲು ಕುಳಿತುಕೊಂಡರು. +ನಿವಾಸ್ ಬಹಳ ಸಂತೋಷದಲ್ಲಿದ್ದ. +ಅವನ ಬಹುದಿನದ ಹೊರೆಯೊಂದು ಇಳಿದಂತಾಗಿ ಹಗುರವಾಗಿದ್ದ. +ತಾನು ಹುಡುಕುತ್ತಿದ್ದ ಚಿಕ್ಕಮ್ಮ ಸಿಕ್ಕಿದ್ದು, ತಮ್ಮವರನ್ನು ಕ್ಷಮಿಸಿ ಋಣಭಾರದಿಂದ ತನ್ನನ್ನು ಮುಕ್ತ ಮಾಡಿದ್ದು, ಚಿಕ್ಕಮ್ಮನ ದೊಡ್ಡತನ, ಅವರ ಪ್ರೀತಿ ಆದರ-ಎಲ್ಲವೂ ಅವನ ಮನಸ್ಸನ್ನು ತುಂಬಿ ಈ ಚಿಕ್ಕಮಮ್ಮ ಮೊದಲೆ ಸಿಕ್ಕಿದ್ದರೆ? +ತಮ್ಮ ಮನೆಯ ದುರಂತಗಳನ್ನು ತಪ್ಪಿಸಬಹುದಿತ್ತೇನೋ ಎಂದು ನೆನಸಿಕೊಂಡು ನಿಡುಸುಯ್ದು. +ತಲೆಯ ಮೇಲಿನ ಭಾರ ಕಡಿಮೆ ಆದ ಮೇಲೆ ಮನಸ್ಸು ಇನ್ನಿತರ ವಿಚಾರಗಳತ್ತ ಹರಿದಿತ್ತು. +ಇಳಾ ಚಿಕ್ಕಮ್ಮನ ಮೊಮ್ಮಗಳೆಂದು, ತೀರಾ ಹತ್ತಿರದ ಸಂಬಂಧಿ ಎಂದು ಅರಿವಾಗಿ ಮನದ ಮೂಲೆಯೊಂದರಲ್ಲಿ ಹೊಸ ಆಸೆಯ ಅಲೆಯೊಂದು ಎದ್ದಿತು. +ಮೊಟ್ಟ ಮೊದಲ ಬಾರಿಗೆ ಮಧುರವಾದ ವೀಣೆ ಅವನೆದೆಯಲ್ಲಿ ಮಿಡಿಯ ತೊಡಗಿತು. +ಆ ಮೃದು ಮಧುರವಾದ ಭಾವನೆಯಿಂದ ಅವನೆದೆ ಹಿತವಾಗಿ ಕಂಪಿಸಿತು. +ಇನ್ನು ತಡಮಾಡಕೂಡದು, ತನ್ನೆದೆಯ ಭಾವನೆಗಳನ್ನಲ್ಲ ಇಳಾಳ ಮುಂದೆ ಹೇಳಿಬಿಡಬೇಕು, ತನ್ನೊಲುಮೆಯನ್ನು ಒಪ್ಪಿಕೊಳ್ಳುವಂತೆ ಅವಳನ್ನೇ ಕೇಳಿಬಿಡಬೇಕೆಂದು ನಿರ್ಧರಿಸಿ-‘ಇಳಾ, ಮುಂದಿನ ನಿಮ್ಮ ಬದುಕಿನ ಕನಸು ಹೇಗಿರಬೇಕು ಅಂತ ಅಂದು ಕೊಂಡಿದ್ದೀರಾ. +ಅಂದ್ರೆ ನಿಮ್ಮನ್ನ ಮದುವೆಯಾಗುವಾತ ಹೇಗಿರಬೇಕು? +ಯಾರಾಗಬಹುದು ಅಂತ ಆಲೋಚನೆ ಮಾಡಿದ್ದೀರಾ?’ ಪೀಠಿಕೆ ಹಾಕಿದ. +ಆ ಮಾತು ಕೇಳಿ ವಿಸ್ಮಯನ ನೆನಪಿನಿಂದ ಕೆಂಪಾದಳು. +ಏನಂತ ಹೇಳುವುದು, ತಾನು ವಿಸ್ಮಯನ ಪ್ರೇಮದ ಬಲೆಯಲ್ಲಿ ಬಿದ್ದಿದ್ದೇನೆಂದೇ, ವಿಸ್ಮಯ್ ನನ್ನನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದಾನೆಂದೇ, ಅವನ ಆರಾಧನೆಯನ್ನು ಹೇಗೆಂದು ಬಣ್ಣಿಸಲಿ- ಮೌನವಾದಳು. +ಅವಳಿಂದ ಯಾವ ಉತ್ತರವೂ ಸಿಗದಿದ್ದಾಗ ಅವಳೆಡೆ ನೋಡಿದನು. +ಕನಸುಗಣ್ಣಿನಲ್ಲಿ ಯಾವುದೊ ಹೊಳಪು ನಕ್ಷತ್ರದಂತೆ ಹೊಳೆಯುತ್ತಿದೆ. +ಅರೆಬಿರಿದ ತುಟಿಗಳಲ್ಲಿ ನೂರು ಮಾತುಗಳಿವೆ. +ಮೊಗ ಕೆಂದಾವರೆಯಾಗಿದೆ, ಇಡೀ ತನು ನಸು ಕಂಪಿಸುತ್ತಿದೆ. +ಏನಿದು ಇಳಾಳ ಹೊಸ ಪರಿ- ವಿಚಿತ್ರವೆನಿಸಿತು. +ಬೇರೆಯೇ ಲೋಕಕ್ಕೆ ಸೇರಿದ ಅಲೌಕಿಕ ಭಾವದ ಪ್ರತಿಮೆಯಂತೆ ಕುಳಿತೇ ಇದ್ದಾಳೆ. +‘ಇಳಾ, ಯಾವ ಲೋಕದಲ್ಲಿದ್ದೀಯಾ?’ ನಿವಾಸ್ನ ದ್ವನಿ ಎಚ್ಚರಿಸಿದಾಗ ವಿಸ್ಮಯನ ನೆನಪಿನಿಂದ ಈಚೆ ಬಂದು ‘ಹೇಳಿ ಸಾರ್’ ಎಂದಳು. +‘ಇಷ್ಟು ವರ್ಷ ನಮ್ಮ ಮನೆಯ ದುರಂತಗಳಿಂದಾಗಿ ನನಗೆ ಬೇರೆ ಯಾವ ಕಡೆಯೂ ಮನಸ್ಸು ಹೊರಳಿರಲಿಲ್ಲ. +ಅಕ್ಕನ ಸಾವು ನನಗೆ ಆಘಾತ ತಂದಿತ್ತು. +ಅದಕ್ಕಿಂತ ದೊಡ್ಡ ಆಘಾತ ಅಮ್ಮನ ಸಾವು. +ಅಮ್ಮನನ್ನು ನಾನು ತುಂಬಾ ಹಚ್ಚಿಕೊಂಡಿದ್ದೆ. +ಅಮ್ಮನಿಲ್ಲದ ಬಾಳು ನನ್ನ ಕಲ್ಪನೆಯಲ್ಲಿಯೇ ಇರಲಿಲ್ಲ. +ಅಪ್ಪನಿಂದ ಮಾನಸಿಕವಾಗಿ ಅಮ್ಮ ತುಂಬಾ ನೊಂದಿದ್ದಳು. +ಅಮ್ಮನನ್ನು ಸುಖವಾಗಿಟ್ಟುಕೊಳ್ಳಬೇಕು. +ಹಾಗೆ ಸುಖವಾಗಿಟ್ಟುಕೊಳ್ಳಬೇಕಾದರೆ ನಾನು ಚೆನ್ನಾಗಿ ಓದಿ ಒಳ್ಳೆ ಕೆಲಸ ಸಂಪಾದಿಸಬೇಕು ಎಂಬ ಹಠದಿಂದ ಚೆನ್ನಾಗಿ ಓದಿದೆ. +ಎಂ.ಬಿ.ಎ.ಮುಗಿಸಿ ಒಳ್ಳೆ ಕೆಲಸವನ್ನು ಹಿಡಿದೆ. +ನನ್ನ ಜೊತೆ ಬಾ ಎಂದು ಅಮ್ಮನಿಗೆ ಹೇಳಿದರೆ ಅಮ್ಮ ಅಪ್ಪನನ್ನು ಬಿಟ್ಟು ಬಂದಿರಲು ಒಪ್ಪಲೇ ಇಲ್ಲ. +ಆ ದಿನಗಳಲ್ಲಿಯೇ ಅಕ್ಕ ಯಾರನ್ನೊ ಮೆಚ್ಚಿ ಮದುವೆಯಾಗುವುದಾಗಿ ಹಠ ಹಿಡಿದಳು. +ಪ್ರೇಮ ವಿವಾಹಗಳೆಂದರೆ ಸಿಡಿದೇಳುತ್ತಿದ್ದ ಅಪ್ಪ ಅದೇ ಕಾರಣಕ್ಕಾಗಿ ಚಿಕ್ಕಪ್ಪನನ್ನು ದೂರ ಇಟ್ಟಿದ್ದರು. +ಮಗಳು ಯಾವ ಕಾರಣಕ್ಕೂ ತಾನು ಮೆಚ್ಚಿದವನ ಜೊತೆ ಹೋಗಬಾರದೆಂದು ದಿಗ್ಬಂಧನ ಹೇರಿದರು. +ಕೋಣೆಯಲ್ಲಿ ಕೂಡಿ ಹಾಕಿ ಬೇರೊಂದು ಮದುವೆ ಮಾಡುವ ಪ್ರಯತ್ನ ನಡೆಸಿರುವಾಗಲೇ ಅಕ್ಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಳು. +ಅಕ್ಕನ ಸಾವು ಅಮ್ಮನಿಗೆ ದೊಡ್ಡ ಆಘಾತವುಂಟಾಗಿ ಅದೇ ಕೊರಗಿನಲ್ಲಿ ಸಾವು ತಂದುಕೊಂಡಳು. +ಅಪ್ಪನಿಗೆ ಹುಚ್ಚು ಹಿಡಿಯಿತು. +ಈ ಎಲ್ಲಾ ಪ್ರಕರಣಗಳಿಂದ ನನ್ನೆದೆಯ ಎಲ್ಲಾ ಮಧುರ ಭಾವಗಳು ಸತ್ತುಹೋದವು. +‘ಆದರೆ ಚಿಕ್ಕಮ್ಮ ಸಿಕ್ಕಿದ್ದು, ಅವಳು ನನ್ನನ್ನು ಕ್ಷಮಿಸಿದ್ದು ನನ್ನೆದೆಯ ಭಾರವನ್ನೆಲ್ಲ ಕಡಿಮೆ ಮಾಡಿವೆ. +ಅದೇ ಹಗುರ ಭಾವದಲ್ಲಿ ಹೊಸ ಕನಸು ಸೃಷ್ಟಿಯಾಗಿದೆ. +ಆ ಕನಸಿನ ದೋಣಿಯಲ್ಲಿ ತೇಲ್ತಾ ಇದ್ದೀನಿ, ನನ್ನ ಕನಸು ನನಸಾಗುವುದೇ?… +‘ನಿವಾಸ್ ಹೇಳುತ್ತಲೇ ಇದ್ದಾನೆ. +ಅವನ ಹೊಸ ಕನಸಿನ ಕಲ್ಪನೆ ಇಲ್ಲದ ಇಳಾ ಅವನ ಮಾತುಗಳನ್ನೆ ತದೇಕಚಿತ್ತಳಾಗಿ ಕೇಳುತ್ತ ಕುತೂಹಲಗೊಂಡಿದ್ದಾಳೆ. +‘ನನ್ನ ಕನಸು ಯಾವುದು ಗೊತ್ತಾ ಇಳಾ? +ನನ್ನ ಕನಸುಗಳಿಗೆ ಸಾಕಾರ ಕೊಡುವ, ನನ್ನ ಮನಸ್ಸಿಗೆ ಹಿತನೀಡುವ, ನನ್ನೆಲ್ಲ ಕೆಲಸಗಳಲ್ಲೂ ಸಹವರ್ತಿಯಾಗಿ ನಿಂತು ಪ್ರೋತ್ಸಾಹ ನೀಡುವ, ನನ್ನದೇ ಕ್ಷೇತ್ರದ ಬಗ್ಗೆ ಆಸಕ್ತಿ ತೋರುವ, ಅಭಿರುಚಿ ಬೆಳೆಸಿಕೊಂಡಿರುವ ಹುಡುಗಿಯನ್ನು ಮದುವೆಯಾಗಿ ಬದುಕಿನ ನಂದನವನದಲ್ಲಿ ವಿಹರಿಸುವುದು…’ ಕನಸು ಕಾಣುತ್ತಿರುವ ದನಿಯಲ್ಲಿ ನುಡಿದ. +‘ತುಂಬಾ ಒಳ್ಳೆ ನಿರ್ಧಾರ ಸರ್, ಒಂಟಿಯಾಗಿಯೇ ಬದುಕುತ್ತಿರುವ ನೀವು ಮದುವೆ ಆಗಬೇಕು. +ಆಗಲೇ ಬದುಕಿಗೊಂದು ಅರ್ಥ, ನಿಮಗಾಗಿ ಜೀವವೊಂದು ಮಿಡಿಯುತ್ತಿದೆ, ಆ ಜೀವ ತಾನಾಗಿಯೇ ಬದುಕುತ್ತಿದೆ ಎಂದಾಗ ಬದುಕು ಸಾರ್ಥಕತೆ ಕಾಣುತ್ತದೆ. +ಬೇಗ ಮದುವೆ ಆಗಿ ಬಿಡಿ ಸಾರ್’ ಅವನ ನಿರ್ಧಾರವನ್ನು ಬೆಂಬಲಿಸಿದಳು. +ಅವಳ ಮಾತುಗಳಿಂದ ಅವನ ಹೃದಯ ಅರಳಿತು. +‘ಇಳಾ, ಆ ಸಂಗಾತಿ ನೀವೇ ಆಗ್ತೀರಾ’ ದನಿಯಲ್ಲಿ ಪ್ರೀತಿಯ ಜಲಪಾತವೇ ಧುಮ್ಮಿಕ್ಕುತ್ತಿತ್ತು. +ಒಲುಮೆಯ ಹೊಳೆಯಲ್ಲಿ ತೇಲುತ್ತ ಇಳಾಳನ್ನೆ ನೋಡುತ್ತ ಕೇಳಿದನು. +ಅವನ ಮಾತು ಕೇಳಿ ಬೆಚ್ಚಿದಳು. +ಶಿಲೆಯಂತೆ ನಿಂತುಬಿಟ್ಟಳು. +ನಿವಾಸ್ನೇ ಹೀಗೆ ಕೇಳುತ್ತಿರುವುದು! +ಇವನಿಗೆ ನನ್ನ ಮೇಲೆ ಪ್ರೀತಿ ಇದೆಯೇ? +ಇದೇನಾಗಿ ಹೋಯ್ತು. +ತನ್ನೊಂದಿಗಿನ ಯಾವ ಗಳಿಗೆಯಲ್ಲೂ ಈ ಭಾವ ವ್ಯಕ್ತಪಡಿಸದ ನಿವಾಸ್ ಮನದಲ್ಲಿ ಈ ಭಾವ ಗುಪ್ತಗಾಮಿನಿಯಂತಿತ್ತೆ? +ಆ ಭಾವದ ಸೂಚನೆಯೂ ಒಂದು ಬಾರಿಯು ವ್ಯಕ್ತವಾಗಿರಲಿಲ್ಲ. +ನಿವಾಸ್ ತನ್ನನ್ನು ಪ್ರೀತಿಸುವುದೆ? +ಅಂತಹ ಕಲ್ಪನೆ ಕೂಡ ಅಸಾಧ್ಯವೆನಿಸಿತು. +ಹೀಗೆ ನಮ್ಮ ಮನೆಗೆ ಬಂದಾಗ ನಿವಾಸ್ ಈ ಭಾವ ವ್ಯಕ್ತಪಡಿಸಿದ್ದು ಯಾಕೊ ಸೂಕ್ತವೆನಿಸಲಿಲ್ಲ. +ನಿವಾಸ್ ಬಗ್ಗೆ ಆದರವಿದೆ, ಸ್ನೇಹವಿದೆ, ಎಲ್ಲದಕ್ಕಿಂತ ಹೆಚ್ಚಾಗಿ ಗೌರವವಿದೆ, ಆತ್ಮೀಯತೆ ಇದೆ. +ಅದು ಬಿಟ್ಟರೆ ತನ್ನಲ್ಲಿ ಮತ್ತಾವ ಭಾವವೂ ಇಲ್ಲ. +ವಿಸ್ಮಯ್ ಬಗ್ಗೆಯೂ ಹಾಗೆ ಇತ್ತಲ್ಲವೆ? +ಆದರೆ ಹೃದಯದ ಜಾಗ ಖಾಲಿಯಾಗಿದ್ದು, ವಿಸ್ಮಯನ ಪ್ರೀತಿಗೆ ಮನಸ್ಸು ಓಗುಟ್ಟಿತ್ತು. +ಅದರೀಗ ನಿವಾಸ್ನಿಗೆ ಏನು ಹೇಳುವುದು, ಒಂದು ವೇಳೆ ನಿವಾಸ್ನೇ ವಿನ್ಮಯನಿಗಿಂತ ಮುಂಚೆ ತನ್ನ ಪ್ರೇಮವನ್ನು ಅರುಹಿದ್ದರೆ, ಈ ಮನಸ್ಸು ಒಪ್ಪುತ್ತಿತ್ತೆ…? +ಯೋಚಿಸಿ ಗೊಂದಲಕ್ಕೊಳಗಾದಳು. +ಅವಳ ಮೌನ, ತಗ್ಗೆಸಿದ ತಲೆ, ನಿರ್ಭಾವದ ಮೋರೆ ಆ ಗಳಿಗೆಯಲ್ಲಿ ಅಪ್ರಸ್ತುತ ಎನಿಸಿ, ವಿವ್ಹಲಕ್ಕೊಳಗಾದನು. +‘ಸಾರ್, ನಿಮಗೆ ಹೇಗೆ ಹೇಳಬೇಕೊ ಅಂತ ತಿಳಿತಾ ಇಲ್ಲ, ನೆನ್ನೆವರೆಗೂ ಈ ಹೃದಯ ಖಾಲಿ ಹಾಳೆಯಂತಿತ್ತು. +ನಾನು ಯಾರ ಬಗ್ಗೆಯೂ ಚಿಂತಿಸಿದವಳಲ್ಲ, ಯಾರನ್ನು ಪ್ರೀತಿ ದೃಷ್ಟಿಯಿಂದ ನೋಡಿದವಳಲ್ಲ. +ಮದುವೆ ಈ ಸಮಾಜದಲ್ಲಿ ಅನಿವಾರ್ಯ ಅಂತ ಗೊತ್ತಿತ್ತು. +ಹಾಗೆಂದೇ ಮದುವೆಯಾಗುವುದೇ ಆದರೆ ನನ್ನದೇ ಮನಸ್ಸು ಉಳ್ಳ, ನನ್ನ ಭಾವನೆಗಳಿಗೆ ಬೆಲೆ ಕೊಡುವ ವ್ಯಕ್ತಿ ಸಿಕ್ಕರೆ ಆಗಲಿ ಎಂದುಕೊಂಡಿದ್ದೆ. +ಅಂತಹ ವ್ಯಕ್ತಿ ನೆನ್ನೆ ತನ್ನ ಮನದ ಭಾವಗಳನ್ನು ಹೇಳಿಕೊಂಡು ಖಾಲಿ ಆಗಿದ್ದ ಈ ಹೃದಯದ ಹಾಳೆ ಮೇಲೆ ತನ್ನ ಹೆಸರು ಬರೆದುಬಿಟ್ಟ. +ಒಂದೇ ಒಂದು ದಿನ ನೀವು ತಡ ಮಾಡಿಬಿಟ್ಟಿರಿ, ಈಗಾಗಲೇ ಈ ಹೃದಯ ಮನಸ್ಸು ವಿಸ್ಮಯನ ಸೊತ್ತಾಗಿ ಹೋಗಿದೆ. +ನಾನು ಅವನ ಪ್ರೇಮವನ್ನು ಒಪ್ಪಿಕೊಂಡು ಅವನಿಗೆ ಆಶ್ವಾಸನೆ ಕೊಟ್ಟುಬಿಟ್ಟಿದ್ದೇನೆ. +ನನ್ನದೆ ಕೂಡ ಒಲವಿನ ಪಲ್ಲವಿಯನ್ನು ಹಾಡುತ್ತಿದೆ. +ಅವನನ್ನು ನನ್ನವನು ಎಂದು ಒಪ್ಪಿಕೊಂಡು ಬಿಟ್ಟಿದ್ದೇನೆ. +ದಯವಿಟ್ಟು ಕ್ಷಮಿಸಿ.’ನಿಜವನ್ನು ಅರುಹಿ ತನ್ನದೆಯ ಗೊಂದಲವನ್ನು ಕೊಡವಿಕೊಂಡು ಬಿಟ್ಟಳು. +ಅವನ ಪ್ರತಿಕ್ರಿಯೆ ನೋಡುವ ಧೈರ್ಯವಿಲ್ಲದೆ ಮೆಲ್ಲನೆ ಎದ್ದು ಬಂದು ಬಿಟ್ಟಳು. +ಪಾತಾಳಕ್ಕೆ ತಳ್ಳಿದಂತಾಗಿ, ಕುಸಿದು ಹೋದನು. +ಶೂನ್ಯಭಾವ ಆವರಿಸಿತು. +ಅವಳಿಲ್ಲದಿದ್ದರೆ ಬದುಕಿನಲ್ಲಿ ಅರ್ಥವಿಲ್ಲ ಎನಿಸಿ, ತಾನು ಹೇಗೆ ಈ ಪ್ರೀತಿಯ ಸುಳಿಯಲ್ಲಿ ಸಿಲುಕಿದೆ-ಎಂದು ತನ್ನೊಳಗನ್ನು ಹುಡುಕ ತೊಡಗಿದ. +ಎಂತಹ ವಿಪರ್ಯಾಸ ಸ್ಥಿತಿ ಇದು! +ಒಂದು ಅದೃಷ್ಟವನ್ನು ನಾನೇ ದೂರಮಾಡಿಕೊಂಡೆ, ಮತ್ತೊಂದು ಅದೃಷ್ಟವನ್ನು ಹುಡುಕಿ ಹಿಡಿಯಲು ಹೋದರೆ, ಆ ಅದೃಷ್ಟವೇ ತನ್ನಿಂದ ದೂರ ಹೋಗುತ್ತಿದೆ. +ಒಂದು ಪ್ರೀತಿ ಹುಡುಕಿ ಬಂದಾಗ ಅರ್ಥಮಾಡಿಕೊಳ್ಳದೆ ತಳ್ಳಿದೆ. +ಆ ಪ್ರೀತಿಗೆ ಅದೆಂತ ಆಫಾತವಾಗಿರಬಹುದು? +ಅದೇ ಆಘಾತ ತನಗಿಂದು ಉಂಟಾಗಿದೆ. +ಬದುಕು ಚಕ್ರವಲ್ಲವೆ? +ಅಂದು ಮೇಲಿದ್ದೆ… ಇಂದು ಕೆಳಗಿದ್ದೇನೆ… ವಿಷಾದದಿಂದ ನಕ್ಕನು. +ಯಾರಿಗೆ ಯಾರೂ ಅನಿವಾರ್ಯವಲ್ಲ, ವಿಧಿ ಬರಹಕ್ಕೆ ಬದ್ದರಾಗಿರಲೇಬೇಕು. +ತಾನು ಬಯಸಿದ ಪ್ರೀತಿ ತನಗೆ ಸಿಗಲಿಲ್ಲವೆಂದ ಮಾತ್ರಕ್ಕೆ ತಾನೇಕೆ ನೊಂದುಕೊಳ್ಳಬೇಕು? +ಬಯಸಿದ ಪ್ರೀತಿ ಪಡೆವ ಅದೃಷ್ಟವಿಲ್ಲ ಅಷ್ಟೆ. +ಬಯಸಿದ್ದಲ್ಲವೂ ಕೈಗೆ ಎಟುಕಲೇಬೇಕೆಂದರೆ ಹೇಗೆ? +ನಮ್ಮಾಸೆಯಂತೆ ನಡೆಯದಿರುವುದೇ ಜೀವನ? +ತಾನು ಕುಗ್ಗಬಾರದು- ಈ ನಿರಾಶೆ ನನ್ನನ್ನು ಸೋಲಿಸಬಾರದು, ನನ್ನ ಬದುಕಿಗೊಂದು ಧ್ಯೇಯವಿದೆ, ಗುರಿ ಇದೆ. +ಆ ಗುರಿ ಸಾಧನೆಯಲ್ಲಿ ಈ ನಿರಾಶೆ ಮರೆಯಬೇಕು. +ಈಗಾಗಲೇ ಇಳಾ ತನ್ನ ಪ್ರತಿಕ್ರಿಯೆಗಾಗಿ ಕಾಯುತ್ತಿರುತ್ತಾಳೆ. +ನಾನು ನೊಂದುಕೊಂಡರೆ ಅವಳು ನೋಯುತ್ತಾಳೆ. +ಹೂ ಮನದ ಹುಡುಗಿಗೆ ಯಾವುದೇ ಗಾಯವಾಗಬಾರದು. +ಅವಳು ಸದಾ ನಗುತ್ತಿರಬೇಕು. +ಅವಳ ಬದುಕು ಹೊನ್ನಾಗಬೇಕು, ಅವಳು ನಡೆವ ಹಾದಿಯಲ್ಲಿ ಹೂ ಹಾಸಿರಬೇಕು. +ಕಲ್ಲುಮುಳ್ಳು ಅವಳನ್ನು ಘಾಸಿಗೊಳಿಸಬಾರದು. +ಅವಳ ನಿರಾಕರಣೆ ನನ್ನಲ್ಲಿ ಯಾವ ಗಾಯವೂ ಆಗಿಲ್ಲ ಎಂದು ನಾನು ತೋರಿಸಿಕೊಳ್ಳಲೇಬೇಕು. +ನನ್ನ ಗೆಲುವಿನ ನಡೆನುಡಿ ಅವಳಿಗೆ ಸಮಾಧಾನ ತರಿಸಬೇಕು ಎಂದು ನಿರ್ಧರಿಸಿಕೊಂಡವನೇ ಎದ್ದು ಇಳಾ ಹೋದ ಹಾದಿಯಲ್ಲಿ ಹೆಜ್ಜೆ ಹಾಕಿದ. +ಕೊಂಚ ದೂರದಲ್ಲಿ ಇಳಾ ನಿಂತುಕೊಂಡಿದ್ದಾಳೆ. +ಸಾಕಷ್ಟು ಯೋಚನೆ ಅವಳನ್ನು ಘಾಸಿಗೊಳಿಸಿದೆ ಎಂದು ಅವಳ ಮೊರೆಯೇ ಹೇಳುತ್ತಿದೆ. +ತಪ್ಪಿತಸ್ಥ ಭಾವದಿಂದ ಬಳಲಿ ಹೋಗಿದ್ದಾಳೆ. +ಹತ್ತಿರ ಬಂದ ನಿವಾಸ್-‘ಅರೆ, ಇಲ್ಲೆ ಇದ್ದೀರಾ, ನಾನು ಮನೆಗೆ ಹೋಗಿರಬಹುದು ಅಂತ ಅಂದುಕೊಂಡಿದ್ದೆ. +ನನಗಾಗಿ ಇಲ್ಲೇ ಕಾಯುತ್ತಿದ್ದೀರಾ, ನಡೆಯಿರಿ ಹೋಗೋಣ’ ನಿರ್ಭಾವದಿಂದ ನಿವಾಸ್ ಹೇಳುತ್ತಿದ್ದರೆ, ಅವನ ಮುಖದಲ್ಲೇನಾದರೂ ಹತಾಶೆಯ ಭಾವ ಕಾಣುತ್ತಿದೆಯೇ ಎಂದು ಇಳಾ ಹುಡುಕಿದಳು. +‘ಇಳಾ, ಯಾವುದೇ ತಪ್ಪಿತಸ್ಥ ಭಾವನೆ ನಿನಗೆ ಬೇಡ, ನಿನ್ನ ಆಯ್ಕೆಯನ್ನು ನಾನು ಸ್ವೀಕರಿಸಿದ್ದೇನೆ, ವಿಸ್ಮಯ್ ತುಂಬಾ ಅದೃಷ್ಟವಂತ, ಹಾಗಂತ ನನಗೆ ಬೇಸರವೇ ಅಗಲಿಲ್ಲವೇ ಅಂದುಕೊಳ್ಳಬೇಡ. +ದುರಂತಗಳನ್ನೆ ನೋಡಿ ಬದುಕುತ್ತಿರುವ ನನಗೆ ನಿನ್ನ ನಿರಾಕರಣೆಯಿಂದ ಕೊಂಚ ನೋವಾದರೂ ಸಹಿಸುವ ಶಕ್ತಿ ಈ ಹೃದಯಕ್ಕೆ ಇದೆ. +ಇಲ್ಲಿಗೆ ಈ ಪ್ರಕರಣವನ್ನು ಮರೆತುಬಿಡೋಣ, ನಾನು ನಿನ್ನ ಪ್ರೇಮವನ್ನು ಬಯಸಿದ್ದೆ ಎಂಬ ಸತ್ಯ ನಮ್ಮಿಬ್ಬರ ಮಧ್ಯೆಯೇ ಕರಗಿ ಹೋಗಿಬಿಡಲಿ, ಅದು ನಿನ್ನ ಮುಂದಿನ ಬಾಳಿನಲ್ಲಿ ಮುಳ್ಳಾಗಿ ಕಾಡದಿರಲಿ, ನಮ್ಮ ಮುಂದಿನ ಸ್ನೇಹ ವಿಶ್ವಾಸಕ್ಕೆ ಅಡ್ಡಿಯಾಗದಿರಲಿ, ನಾವು ಮೊದಲಿನಂತೆಯೇ ಗೆಳೆಯರಾಗಿ ಉಳಿಯೋಣ, ನಮ್ಮ ಸ್ನೇಹಕ್ಕೆ ಯಾವುದೇ ಅಡ್ಡಿ ಬಾರದಿರಲಿ, ಸ್ನೇಹ ಈಗ ನೆಂಟಸ್ತಿಕೆಯಲ್ಲಿ ನಿಂತಿದೆ. +ಮುಂದೆ ಸದಾ ನಾವು ಒಬ್ಬರನೊಬ್ಬರು ಸಂಧಿಸಲೇಬೇಕಾಗುತ್ತದೆ. +ಆಗ ಈ ನೆನಪು ನಮ್ಮಿಬ್ಬರನ್ನು ಚುಚ್ಚಬಾರದು. +ನೀನು ಯಾವತ್ತಿಗೂ ನನ್ನ ಅಭಿಮಾನದ ಹುಡುಗಿಯೇ…’ ಆತ್ಮೀಯವಾಗಿ ಹೇಳಿ ಇಳಾಳ ಮುಜುಗರವನ್ನು ತೊಡೆದು ಹಾಕಿದ. +ಮತ್ತೂ ಪೆಚ್ಚಾಗಿಯೇ ಇರುವ ಇಳಾಳನ್ನು ನೋಡಿ ‘ಇಳಾ, ನೀನು ನನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಅಂತ ಸನ್ಯಾಸಿಯಂತೆ ಮೀಸೆ ಗಡ್ಡ ಬಿಟ್ಟುಕೊಂಡು ದೇವದಾಸನಂತೆ ಆಡಲಾರೆ. +ಆದಷ್ಟು ಬೇಗ ನನಗೊಂದು ಹುಡುಗಿಯನ್ನು ಹುಡುಕಿ ಮದುವೆಯಾಗುತ್ತೇನೆ. +ಈಗ ಸಮಾಧಾನ ಆಯಿತಾ?’ ಎಂದಾಗ ಚಿಂತೆಯ ಕಾರ್ಮೋಡ ಕರಗಿದಂತಾಗಿ ಹಿತವಾಗಿ ನಕ್ಕಳು. +‘ವೆರಿಗುಡ್, ನೀವು ಹೀಗೆ ಸದಾ ನಗ್ತಾ ಇರಬೇಕು. +ಈ ನಗು ಶಾಶ್ವತವಾಗಿ ನಿಮ್ಮ ಬಾಳಿನಲ್ಲಿ ಇರಬೇಕು ಎಂದೇ ಈ ಗೆಳೆಯ ಸದಾ ಹಾರೈಸುತ್ತಾನೆ’ ಅವಳ ತಲೆ ಸವರಿ ನುಡಿದ. +ಮನದೊಳಗಿನ ದುಗುಡಗಳೆಲ್ಲ ಕಳೆದುಕೊಂಡು ನಿರಾಳ ಮನಸ್ಸಿನಿಂದ ಇಬ್ಬರೂ ಮನೆಗೆ ಬಂದರು. +ನೀಲಾ ಶಾಲೆಗೆ ಹೋಗದೆ ಇವರಿಗಾಗಿಯೇ ಕಾಯುತ್ತ ಕುಳಿತುಕೊಂಡಿದ್ದಳು. +ನಿವಾಸ್ ಹೋಗುವ ಮೊದಲು ಅವನ ಮನದಲ್ಲಿ ಇಳಾಳ ಬಗ್ಗೆ ಇರುವ ಆಸಕ್ತಿ ಎಂತಹುದು ಎಂದು ಕೇಳುವ ತವಕದಲ್ಲಿದ್ದಳು. +‘ಚಿಕ್ಕಮ್ಮ, ಹೊರಡಿ ಇವತ್ತು ನಮ್ಮೂರಿನಲ್ಲಿದ್ದು ನಾಳೆ ಅಣ್ಣನ ಮನೆಗೆ ಹೋಗೋಣ’ ಅಂಬುಜಮ್ಮನನ್ನು ಹೊರಡಲು ಆಗ್ರಹಿಸಿದನು. +ಅಂಬುಜಮ್ಮ ಬಿಸಿ ಬಿಸಿ ಬೋಂಡ ತಂದಿಡುತ್ತ ‘ಹೋಗೋಣ, ನಿನ್ನ ಜೊತೆ ಸ್ವಲ್ಪ ಮಾತಾಡಬೇಕು’ ಅವನ ಪಕ್ಕ ಕುಳಿತುಕೊಳ್ಳುತ್ತ ಹೇಳಿದರು. +‘ಏನು ಚಿಕಮ್ಮ, ಮತ್ತೇ ಆ ಹಣ ಬೇಡ ಅಂತ ಹೇಳಿ ನನ್ನನ್ನು ಇಕಟ್ಟಿಗೆ ಸಿಕ್ಕಿಸಬೇಡಿ, ಅಣ್ಣನಿಗೆ ಈ ಹಣದ ಅಗತ್ಯ ಖಂಡಿತಾ ಇರುತ್ತದೆ. +ಮೊದಲು ನೀವು ಹೊರಡಿ’ ಒತ್ತಾಯಿಸಿದ. +‘ಆ ವಿಚಾರ ಅಲ್ಲಪ್ಪ ನಾನು ಕೇಳ್ತ ಇರೋದು, ನೀನಿನ್ನೂ ಮದ್ವೆ ಆಗಿಲ್ಲ ಯಾಕೆ? +ಹಿರಿಯವಳಾಗಿ ನಾನು ಆ ಜವಾಬ್ದಾರಿ ತಗೋಬೇಕಲ್ಲಪ್ಪಾ’ ಆತ್ಮೀಯವಾಗಿ ಹೇಳುತ್ತಿದ್ದರೆ, ನಿವಾಸ್ನ ಕಣ್ಣುಗಳು ಹನಿಗೂಡಿದವು. +‘ಚಿಕ್ಕಮ್ಮ ನಿಮ್ಮದೆಂತಹ ಹೃದಯ, ನಮ್ಮಪ್ಪ ಮಾಡಿದ ತಪ್ಪನ್ನು ಕ್ಷಮಿಸಿ, ಅವರ ಮಗನ ಒಳಿತಿಗಾಗಿ ಬಯಸುತ್ತ ಇದ್ದೀರಿ. + ಇಷ್ಟು ದಿನ ನಂಗೆ ಅಮ್ಮ ಇಲ್ಲ ಅಂತ ಕೊರಗುತ್ತ ಇದ್ದ. +ಆ ಕೊರತೆ ನೀವು ನೀಗಿಸಿಬಿಟ್ಟಿರಿ ಚಿಕ್ಕಮ್ಮ. + ಇಷ್ಟು ದಿನ ಮದುವೆ ಆಗೋ ಆಲೋಚನೆ ಇರಲಿಲ್ಲ. +ಆದ್ರೆ ಈಗ ನೀವು ನೋಡಿದ ಹುಡುಗಿನೇ ಮದ್ವೆ ಆಗ್ತೀನಿ. +ನಿಮ್ಗೆ ಎಂತಹ ಸೊಸೆ ಬೇಕು ಅಂತ ನೀವೇ ಆರಿಸಿಬಿಡಿ ಚಿಕ್ಕಮ್ಮ’ ಎಂದಾಗ ಸಂತೋಷದಿಂದ ಬಿರಿದರು ಅಂಬುಜಮ್ಮ. +‘ಆಯ್ಯೋ ನನ್ನ ರಾಜ, ಎಂತ ಮುತ್ತಿನಂತ ಮಾತಾಡಿದೆಯಪ್ಪ. +ಹಿರಿಯರನ್ನು ಕಂಡರೆ ಅದೆಷ್ಟು ಗೌರವ ನಿಂಗೆ. +ನಾನು ಹೇಳಿದ ಹುಡುಗಿನಾ ಮದ್ವೆ ಆಗ್ತೀಯಾ, ಕೇಳಿದೆಯಾ ನೀಲಾ ನಮ್ಮ ನಿವಾಸ್ ಶುದ್ದ ಅಪರಂಜಿ, ಇಂತ ಅಪರಂಜಿನ ಬಿಟ್ಟವರುಂಟೇ’ ಸಡಗರಿಸಿದರು. +‘ನೋಡು ನಿವಾಸ್, ಈಗ ನೀನು ನಮ್ಮ ಭಾವನ ಮಗ, ನೀಲಾಗೆ ತಮ್ಮನಾಗಬೇಕು. +ಅಂದ್ರೆ ಇಳಾಗೆ ಸೋದರಮಾವ, ಈ ಸಂಬಂಧನ ನಾವ್ಯಾಕೆ ಶಾಶ್ವತಗೊಳಿಸಬಾರದು. +ಇಳಾನಾ ನೀನ್ಯಾಕೆ ಮದ್ವೆ ಆಗಬಾರದು’ ಉತ್ಸಾಹದಿಂದ ಹೇಳುತ್ತಿದ್ದರೆ ಕೊಂಚ ಮಂಕಾದ ನಿವಾಸ್, ತಕ್ಷಣವೇ ಚೇತರಿಸಿಕೊಂಡು. +‘ಅಯ್ಯೋ ಚಿಕ್ಕಮ್ಮ ಆ ಅದೃಷ್ಟ ನನಗೆಲ್ಲಿದೆ? +ಇಳಾ ಆಗ್ಲೆ ತನ್ನ ರಾಜಕುಮಾರನ್ನ ಹುಡುಕಿಕೊಂಡಿದ್ದಾಳೆ’ ಹಾಗೆಂದ ಕೂಡಲೇ ಶಾಕ್‌ಗೆ ಒಳಗಾದ ನೀಲಾ- ನಮ್ಮ ಇಳಾ ಈಗಾಗಲೇ ಹುಡುಗನ್ನ ನೋಡಿಕೊಂಡಿದ್ದಾಳೆಯೇ!… + ಆಘಾತಕ್ಕೊಳಗಾಗಿ ನಿರಾಶೆಯಿಂದ ಕುಗ್ಗಿದಳು. +‘ಹೌದು ಅಕ್ಕ, ನಿಮ್ಮ ಮಗಳು ಚೊಕ್ಕ ಚಿನ್ನ, ಚಿನ್ನದಂತಹ ಹುಡುಗನನ್ನ ಆರಿಸಿಕೊಂಡಿದ್ದಾಳೆ. +ಅವಳು ಶಾಶ್ವತವಾಗಿ ನಿಮ್ಮ ಕಣ್ಣು ಮುಂದೆಯೇ ಇರುತ್ತಾಳೆ.’ +‘ಯಾರಪ್ಪ ಆ ಹುಡುಗ’ ಆಳವಾದ ಸ್ವರದಲ್ಲಿ ಅಂಬುಜಮ್ಮ ಕೇಳಿದರು. +‘ಗೆಸ್ ಮಾಡಿ ನೋಡೋಣ…. +ಸಾಧ್ಯವೇ ಇಲ್ಲ. +ನೀವು ಗೆಸ್ ಮಾಡೊಕೆ’ ಆಟವಾಡಿಸಿದ. +ಇಳಾ ತಲೆ ತಗ್ಗಿಸಿ ಕುಳಿತುಬಿಟ್ಟಿದ್ದಳು. +ನೀಲಾ, ಅಂಬುಜಮ್ಮ ಕಾತುರತೆಯಿಂದ ನಿವಾಸ್ನನ್ನು ನೋಡಿದರು. +ಹೆಚ್ಚು ಸತಾಯಿಸದಂತೆ ‘ಈ ಮನೆಗೆ ಅಳಿಯನಾಗಿ ಬರುವ ಅದೃಷ್ಟವಂತ ವಿಸ್ಮಯ್’ ಎಂದು ಘೋಷಿಸಿಬಿಟ್ಟ. +‘ನಮ್ಮ ವಿಸ್ಮಯನೇ’ ಅಚ್ಚರಿ, ಆನಂದ, ಉದ್ವೇಗದಿಂದ ನೀಲಾ ಚೀರಿದಳು. +‘ಹೌದು ಅಮ್ಮ, ವಿಸ್ಮಯನೇ ಈ ವಿಚಾರ ನನಗೆ ತಿಳಿಸಿದ. +ಎಲ್ಲಾ ರೀತಿಯಲ್ಲೂ ಯೋಗ್ಯವಾಗಿರುವ ವಿಸ್ಮಯನನ್ನು ನಿರಾಕರಿಸಲು ನನಗೆ ಕಾರಣವೇ ಸಿಗಲಿಲ್ಲ. +ನಿನ್ನನ್ನು, ಈ ತೋಟವನ್ನು ಬಿಟ್ಟುಹೋಗುವುದು ಹೇಗೆ ಎಂಬ ಚಿಂತೆಯಲ್ಲಿದ್ದೆ. +ಅದನ್ನು ನೆನೆಸಿಕೊಂಡಾಗಲೆಲ್ಲ ಮದುವೆಯೇ ಬೇಡವೆನಿಸುತ್ತಿತ್ತು. + ವಿಸ್ಮಯನಂತ ಹೃದಯವಂತ ಗುಣವಂತ ಈ ಮನೆಗೆ ಅಳಿಯ ಆದರೆ ನಿನಗೂ ಸಂತೋಷವಾಗುತ್ತೆ ಅಂತ ಒಪ್ಪಿಕೊಂಡೆ’ ಮೆಲುದನಿಯಲ್ಲಿ ಇಳಾ ಹೇಳಿದಾಗ ನೀಲಾಗೆ ತುಂಬಾ ಸಂತೋಷವಾಯಿತು. +ವಿಸ್ಮಯ್ ಚೊಕ್ಕ ಚಿನ್ನ ಎಂದು ಬಹು ಹತ್ತಿರದಿಂದ ನೋಡಿದ್ದಳು. +ತನ್ನ ಮಗಳಿಗೆ ಅವನಿಗಿಂತ ಸರಿಯಾದ ಜೋಡಿ ಸಿಗಲಾರದು. +ಅಂಬರದ ತಾರೆ ಕೈಗೆ ಎಟುಕಿದಂತಿದೆ. +ಶ್ರೀಮಂತ ಸಹೃದಯಿ, ಸನ್ನಡತೆ ಎಲ್ಲವೂ ಮಿಳಿತವಾಗಿದ್ದ ಭವ್ಯ ವ್ಯಕ್ತಿತ್ವದ ವಿಸ್ಮಯ್ ತನ್ನ ಅಳಿಯ ಎಂದು ಊಹಿಸಿಯೇ ಸಂಭ್ರಮಗೊಂಡಳು. +ನಿರಾಶೆಯಾಗಿದ್ದರೂ ಅಂಬುಜಮ್ಮ ಕೂಡ ವಿಸ್ಮಯನನ್ನು ಸಂತೋಷದಿಂದ ಒಪ್ಪಿಕೊಂಡರು. +ಅಂತೂ ಈ ಮನೆಗೆ ಕವಿದಿದ್ದ ಗ್ರಹಣ ನಿಧಾನವಾಗಿ ಬಿಡುಗಡೆಗೊಂಡು ಹೊಸ ಬೆಳಕಿನ ಕಿರಣ ಪ್ರವೇಶಿಸತೊಡಗಿತ್ತು. +ಅಂಬುಜಮ್ಮ ನಿವಾಸ್ನ ಜೊತೆ ಹೋಗಿ ಮಗನ ಕೈಗೆ ಅವನ ಹಕ್ಕಿನ ಹಣವನ್ನು ಒಪ್ಪಿಸಿ ಮತ್ತೆ ವಾಪಸ್ಸು ನೀಲಾಳ ಮನೆಗೆ ಬಂದುಬಿಟ್ಟರು. +ಈ ಮನೆಯೇ ಅವರ ಮನೆಯಂತಾಗಿತ್ತು. +ಸಾಯುವ ತನಕ ಇದೇ ಮನೆಯಲ್ಲಿರಲು ಅವರು ತೀರ್ಮಾನಿಸಿದ್ದರು. +ಒಂದು ಒಳ್ಳೆಯ ದಿನ ನೋಡಿ ನೀಲಾ ತನ್ನ ಅಣ್ಣ ತಮ್ಮಂದಿರು ಭಾವ ಅತ್ತಿಗೆಯರನ್ನಲ್ಲ ಆಹ್ವಾನಿಸಿ, ಇಳಾಳ ಮದುವೆಯ ಮಾತುಕತೆ ನಡೆಸಿದಳು. +ವಿಸ್ಮಯ್ ಕೂಡ ಅಗಮಿಸಿದ್ದ. +ತನ್ನ ಮದುವೆ ಸರಳವಾಗಿ ನಡೆಯಬೇಕೆಂದು ಇಳಾ ಪಟ್ಟುಹಿಡಿದಳು. +ವಿಸ್ಮಯನಿಗೂ ಇಳಾಳ ತೀರ್ಮಾನದ ಬಗ್ಗೆ ವಿರೋಧವಿರಲಿಲ್ಲ. +ಆದರೆ ನೆಂಟರಿಸ್ಟರು ಆಡಿಕೊಂಡು ನಗುವಂತೆ ಆಗಬಾರದು ಮದುವೆ ಗ್ರಾಂಡಾಗಿಯೇ ಮಾಡೋಣವೆಂದು ದೊಡ್ಡಪ್ಪ, ಮಾವಂದಿರು ಹೇಳಿದಾಗ ಇಳಾ ಸ್ಪಷ್ಟವಾಗಿ ನಿರಾಕರಿಸಿಬಿಟ್ಟಳು. +ಇಷ್ಟವಿಲ್ಲದಿದ್ದರೂ ಇಳಾಳ ಮನಸ್ಸನ್ನು ನೋಯಿಸಲಾರದೆ ಎಲ್ಲರೂ ಒಪ್ಪಿಕೊಂಡರು. +ಮನೆಯ ಹತ್ತಿರವೇ ನೂರಾರು ಜನರ ಸಮ್ಮುಖದಲ್ಲಿ ಇಳಾ, ವಿಸ್ಮಯನ ಮಡದಿ ಆದಳು. +ಅಷ್ಟು ಸರಳವಾಗಿ ಮದುವೆ ನಡೆದದ್ದನ್ನು ಅಲ್ಲಿ ಯಾರೂ ನೋಡಿರಲಿಲ್ಲ. +ಇಳಾ-ವಿಸ್ಮಯರ ಸುಂದರ ದಾಂಪತ್ಯ ಹಸಿರ ಸಿರಿಯ ಸೊಬಗಿನಲ್ಲಿ ಪ್ರಾರಂಭವಾಗಿತ್ತು. +ಮರಗಳಿಂದ ಬೀಸುವ ತಂಗಾಳಿ ಅಲ್ಲಿ ಸುಯ್ಯತೊಡಗಿತು. -- GitLab