diff --git "a/Data Collected/Kannada/MIT Manipal/Kannada-Scrapped-dta/\340\262\255\340\263\215\340\262\260\340\262\256\340\262\243.txt" "b/Data Collected/Kannada/MIT Manipal/Kannada-Scrapped-dta/\340\262\255\340\263\215\340\262\260\340\262\256\340\262\243.txt" new file mode 100644 index 0000000000000000000000000000000000000000..d840683787bd16d5393a567d8353e11e209cf6ed --- /dev/null +++ "b/Data Collected/Kannada/MIT Manipal/Kannada-Scrapped-dta/\340\262\255\340\263\215\340\262\260\340\262\256\340\262\243.txt" @@ -0,0 +1,4915 @@ +ದಟ್ಟವಾದ ಕಾಡಿನಲ್ಲಿ ಓಡುತ್ತಿದ್ದಾನೆ ಸಾಯಿ. +ಅವನು ತೊಟ್ಟ ಮಿಲಿಟರಿಯವರಂತಹ ಪೋಷಾಕು ಕಾಡಿನ ಹಸಿರಿನಲ್ಲಿ ಒಂದಾದಂತೆ ಕಾಣುತ್ತಿದೆ. +ಬಹು ಚಿಕ್ಕ ಕಲ್ಲು ಬಂಡೆಗಳ ದಾರಿ. +ಅದರ ಪರಿಚಯ ಅವನಿಗೆ ಚೆನ್ನಾಗಿರುವುದು ಓಟದಿಂದ ಸ್ಪಷ್ಟವಾಗುತ್ತಿದೆ. +ಇಳಿಜಾರಾದ ದಾರಿ ಚಿಕ್ಕ ಬಂಡೆಯೊಂದಕ್ಕೆ ಎಡವಿದ ಅವನು ತೂರಾಡಿ ಗಿಡ ಒಂದನ್ನು ಹಿಡಿದು ನಿಲ್ಲುತ್ತಾನೆ. +ಮೌನದಲ್ಲಿ ಅವನ ಏದುಸಿರಿನ ಸದ್ದು ಕಾಡಿನಲ್ಲಿ ಬಹುದೂರದವರೆಗೆ ಹರಡುತ್ತಿರುವಂತೆ ಧ್ವನಿಸುತ್ತಿದೆ. +ಮುಖದಲ್ಲಿ ತುಂಬಿದ ಬೆವರನ್ನು ಮೊಣ ಕೈಯಿಂದಲೇ ಒರೆಸುತ್ತಾನೆ. +ಮೇಲಕ್ಕೆ ಹರಿಯುತ್ತದೆ ನೋಟ, ಬೆಟ್ಟ ಕಾಣದಂತೆ ತುಂಬಿಕೊಂಡಿದ ಗಿಡಗಂಟೆಗಳು. +ಗುರಿ ಸಮೀಪಿಸಿದಂತೆ ಸಾಯಿಯ ಕಣ್ಣುಗಳಲ್ಲಿ ಹೊಳಪು ತುಂಬಿಬರುತ್ತದೆ. +ಏದುಸಿರು ಕಡಿಮೆಯಾಗುತ್ತಿರುವಂತೆ ಮತ್ತೆ ಓಟ ಆರಂಭಿಸುತ್ತಾನೆ. +ಮಿಲಟರಿ ತರಹದಂತಹ ಪೋಷಾಕದಲ್ಲಿದ್ದ ಕಲ್ಯಾಣಿಯ ಕಾಲಿಗೆ ದಪ್ಪನೆಯ ಬೂಟುಗಳು. +ತಲೆಗೆ ಕ್ಯಾಪಿಲ್ಲ. +ದಟ್ಟವಾದ ಕೂದಲನ್ನು ಹಿಂದೆ ಗಂಟುಕಟ್ಟಿದ್ದಾಳೆ. +ಅವು ಬಹುದಿನದಿಂದ ಸಂಸ್ಕಾರ ಕಂಡ ಲಕ್ಷಣ ಕಾಣುತ್ತಿಲ್ಲ. +ಬಂಡೆಯೊಂದರ ಮೇಲೆ ಕುಳಿತ ಅವಳು ಹಿಂದಿದ್ದ ಬಂಡೆಗೆ ಆನಿಕೊಂಡಿದ್ದಾಳೆ. +ಯಾವುದೋ ಯೋಚನೆಯಲ್ಲಿ ತೊಡಗಿದಂತಿದೆ ಅವಳ ಮುಖ ಭಾವ. +ಅವಳ ಮುಖದಲ್ಲಿ ವಯಸ್ಸಿಗಿಂತ ಹೆಚ್ಚಿನ ನೋವನ್ನು ಅನುಭವಿಸಿರುವಂತಹ ಲಕ್ಷಣಗಳು ಕಂಡು ಬರುತ್ತಿವೆ. +ಎದುರಿಗೆ ನಾಗೇಶ, ಮಲ್ಲಪ್ಪ, ಶಂಕರ ಮತ್ತು ಹರಿನಾಥ ನಿಂತಿದ್ದಾರೆ. +ಮಿಲಿಟರಿಯಂತಹದೇ ಪೋಶಾಕದಲ್ಲಿರುವ ಅವರುಗಳ ತಲೆಗೆ ಕ್ಯಾಪೊಂದು ಅಲಂಕರಿಸಿದೆ. +ಅವರಲ್ಲಿ ಎಲ್ಲರಿಗಿಂತ ದೊಡ್ಡವನು ಹರಿನಾಥ. +ಅವನ ವಯಸ್ಸು ಎಪ್ಪತ್ತೆರಡು, ಅವರೆಲ್ಲರ ಮುಖದಲ್ಲಿ ವ್ಯಾಕುಲತೆ ಸ್ಪಷ್ಟವಾಗಿ ಕಂಡುಬರುತ್ತಿದೆ. +ಅವರು ನಿಂತ ಭಂಗಿ ಮತ್ತು ಕಲ್ಯಾಣಿ ಕುಳಿತ ಭಂಗಿಯಿಂದ ಆಕೆ ಅವರ ನಾಯಕಿ ಎಂಬುವುದು ಸ್ಪಷ್ಟ. +“ಸಾಯಿ ಇನ್ನೂ ಬಂದಿಲ್ಲ. +ಅವನಿಗೇನಾದರೂ ಆಗಿರಬಹುದೆ?” ವ್ಯಾಕುಲತೆಯನ್ನು ಇನ್ನು ಹತ್ತಿಕ್ಕಿಕೊಳ್ಳಲಾರದವನಂತೆ ಕೇಳಿದ ನಾಗೇಶ. +ಅವನು ಅಲ್ಲಿದ್ದವರಲ್ಲಿ ಎಲ್ಲರಿಗಿಂತ ಚಿಕ್ಕವನು. +ಅವನಿಗೆ ಹತ್ತೊಂಭತ್ತು ವರ್ಷ. +ಕಾಡಿನ ಗಿಡಗಂಟೆಗಳಿಂದ ಎದುರಿಗೆ ನಿಂತವರ ಕಡೆ ಕಲ್ಯಾಣಿ ತನ್ನ ನೋಟವನ್ನು ಹರಿಸಿದಳು. +ಯಾರ ಮುಖದಲ್ಲೂ ಯಾವ ತರಹದ ಭಯಾಂದೋಳನವೂ ಕಾಣಲಿಲ್ಲ. +ನಾಗೇಶನ ಮುಖದಲ್ಲಿ ವ್ಯಾಕುಲತೆ ಮಿಕ್ಕವರಿಗಿಂತ ಹೆಚ್ಚಾಗಿರುವಂತೆ ಕಂಡಿತು. +ಅವನ ಮೇಲಿಂದ ನೋಟ ಸರಿಸದೆ ನಿರ್ಭಾವ ದನಿಯಲ್ಲಿ ಹೇಳಿದಳು,“ಅವನಿಗೇನೂ ಆಗುವುದಿಲ್ಲ ಬರುತ್ತಾನೆ. ”ಬರೀ ಆ ಮಾತಿನಿಂದಲೇ ಅವನಲ್ಲಿ ವ್ಯಾಕುಲತೆ ಕಡಿಮೆಯಾದಂತೆ ಕಂಡಿತ್ತು. +ಮಿಕ್ಕ ಮೂವರಲ್ಲಿ ಅ ಮಾತು ಸಮಾಧಾನ ತಂದಿರಬೇಕು. +ಅದನ್ನೇ ಗಮನಿಸಿ ಮತ್ತೆ ತಾನೆ ಮಾತಾಡಿದಳು ಕಲ್ಯಾಣಿ. +“ಅವರು ಮೂವರಿದ್ದಾರೆಂದಿರಲ್ಲ.” +“ಹೌದಕ್ಕ” ಎಂದ ಮಲ್ಲಪ್ಪ. +“ಅವರುಗಳು ರಾಮಯ್ಯನ ದಳದವರೆಂದು ಹೇಳಿಕೊಂಡರೂ ಅದು ಸುಳ್ಳಾಗಿರಬಹುದು. +ಅವರುಗಳು ಯಾವ ದಳದವರೂ ಅಲ್ಲ ದರೋಡೆಕೋರರೇ ಸರಿ, ಪೊಲೀಸಿನವರಿಗಿಂತ ಇಂತಹವರು ನಮ್ಮ ಚಳುವಳಿಗೆ ಬಹಳ ಅಪಾಯಕಾರಿ. +ಇವರುಗಳ ಕೆಲಸ ಮೊದಲು ಮುಗಿಸಬೇಕು. +ಅದೇ ನಿರ್ಭಾವ ದನಿಯಲ್ಲಿ ಹೇಳಿದಳು ಕಲ್ಯಾಣಿ, ಆಜ್ಞೆಗಾಗಿ ಕಾದ ಶಿಸ್ತು ಸೈನಿಕರಂತೆ ನಿಂತಿದ್ದರು ಅವರೆದುರು ನಿಂತ ಯುವಕರು. +ಅವರೆಲ್ಲರ ಮೇಲೆ ಒಮ್ಮೆ ನೋಟ ಹಾಯಿಸಿ ನಾಗೇಶನನ್ನು ನೋಡುತ್ತಾ ಕೇಳಿದಳು. +“ನೀನೊಬ್ಬನೇ ಆ ಕೆಲಸ ಮಾಡಬಲ್ಲೆಯಾ ನಾಗೇಶ?” +“ಖಂಡಿತ ಮಾಡುತ್ತೀನಿ. +ನಾನು ಆಯುಧವನ್ನು ಉಪಯೋಗಿಸಿ ಬಹಳ ದಿನಗಳಾದವು” ಕೂಡಲೇ ಉತ್ಸಾಹದ ದನಿಯಲ್ಲಿ ಉತ್ತರಿಸಿದ ನಾಗೇಶ. +ಅವನ ಎರಡೂ ಕಾಲುಗಳು ಹತ್ತಿರವಾಗಿ ಎದೆ ಸೆಟೆದು ಮುಂದೆ ಬಂದಿತ್ತು. +ಬಂಡೆಯ ಮೇಲಿಂದ ಎದ್ದು ಹೇಳಿದಳು ಕಲ್ಯಾಣಿ. +“ನಾ ಹೇಳಿ ಕೊಟ್ಟಿದ್ದನ್ನು ಇನ್ನು ನೀನು ಸರಿಯಾಗಿ ಕಲೆತಿಲ್ಲ’ಅವಳ ಮುಖದ ಮೇಲೆ ನೆಟ್ಟಿದ ಅವನ ನೋಟ ಮಾತುಗಳಿಗೆ ನಿಲುಕದಂತಹ ಭಾವವನ್ನು ಹೊರಗೆಡಹುತ್ತಿತ್ತು. +ಮಲ್ಲಪ್ಪನ ಕಡೆ ತಿರುಗಿ ಮಾತಾಡಿದಳು ಕಲ್ಯಾಣಿ. +“ಅವನೇನು ತಪ್ಪು ಮಾಡಿದ.” +“ಭಾವುಕತೆಯಿಂದ ಮಾತಾಡಿದ” ಕೂಡಲೇ ಉತ್ತರಿಸಿದ ಮಲ್ಲಪ್ಪ. +“ಅದು ತಪ್ಪೆ?” ಎಂದ ಕಲ್ಯಾಣಿ ಹಿಂತಿರುಗಿ ತಾ ಕುಳಿತ ಬಂಡೆಯ ಬಳಿ ಇದ್ದ ಎ.ಕೆ.೪೭ ನನ್ನು ಎತ್ತಿಕೊಂಡಳು. +ತಪ್ಪು, ನಾವು ಎಲ್ಲಾ ಭಾವಾವೇಶದಿಂದ ಮುಕ್ತರಾಗಬೇಕು. +ಆಗಲೇ ನಮ್ಮ ಗುರಿ ತಲುಪಲು ಸಾದ್ಯ ಪಾಠವೊಂದನ್ನು ಒಪ್ಪಿಸುವಂತೆ ಕೂಡಲೇ ಹೇಳಿದ ಮಲ್ಲಪ್ಪ. +ಹೆಗಲಿಗೆ ಅಯುಧವನ್ನು ಏರಿಸಿಕೊಂಡು ತನ್ನ ಸಂಗಡಿಗರ ಕಡೆ ತಿರುಗಿ ಕೇಳಿದಳು ಕಲ್ಯಾಣಿ. +‘ನಾಗೇಶ ನಮ್ಮ ತಂಡದಲ್ಲಿ ಸೇರಿ ಎಷ್ಟು ದಿನಗಳಾದವು?’ +“ತೊಂಬತ್ತನಾಲ್ಕು ದಿನ” ಕೂಡಲೇ ಉತ್ತರಿಸಿದ ಹರಿನಾಥ. +“ಇಷ್ಟು ದಿನಗಳಲ್ಲಿ ಇದೊಂದು ಚಿಕ್ಕ ವಿಷಯ ಕಲಿತಿಲ್ಲ. +ಈಗ ಕಲಿ ನಾಗೇಶ್” ಹೇಳಿದಳು ಕಲ್ಯಾಣಿ. +ಅದಕ್ಕೆ ಉತ್ತರಸಲಿಲ್ಲ ನಾಗೇಶ. +ಹಿಂತಿರುಗಿ ಬಂದು ಬಂಡೆಯ ಮೇಲೆ ಕುಳಿತುಕೊಂಡು ಆಯುಧವನ್ನು ತೊಡೆಯಲ್ಲಿಟ್ಟುಕೊಂಡು ಹೇಳಿದಳವಳು. +“ಈಗ ಕಲಿ ನಾಗೇಶ. +ಮಲ್ಲಪ್ಪ, ನಿನ್ನ ಹೊಡೆಯುತ್ತಾನೆ. +ನೀನು ಭಾವಪರವಶನಾಗಬಾರದು. +ನೋವು ತೃಣಮಾತ್ರವು ನಿನ್ನ ಮುಖದ ಮೇಲೆ ಕಾಣಿಸಿಕೊಳ್ಳಬಾರದು. +ಸಾಧ್ಯವಾದಷ್ಟು ನೋವಿನ ಭಾವವನ್ನೂ ಮುಖದಲ್ಲಿ ಕಾಣದ ಹಾಗೆ ತಡೆ ಹಿಡಿ”ಆದಕ್ಕೂ ನಾಗೇಶ ಏನೂ ಹೇಳಲಿಲ್ಲ. +ಹಸುಗೂಸಿನಂತಹ ಅವನ ಮುಖ ಭಾವರಹಿತ ಕಲ್ಲು ಬಂಡೆಯಂತೆ ಕಾಣುತ್ತಿತ್ತು. +‘ಮಲ್ಲಪ್ಪ!ಅವನಿನ್ನೂ ಮೊದಲ ಪಾಠವನ್ನೇ ಕಲೆತಿಲ್ಲ. +ಅದನ್ನು ಕಲಿಸು.’ತಕ್ಷಣ ನಾಗೇಶನೆದುರು ಬಂದ ಮಲ್ಲಪ್ಪ ಅವನಿಗೆ ತನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿ ಹೊಡೆಯಲಾರಂಭಿಸಿದ. +ಕೇವಲ ಒಂದು ನಿಮಿಷದ ಹೊಡೆತವನ್ನು ಎದುರಿಸುವಲ್ಲಿ ನೋವಿನ ಚೀತ್ಕಾರ ಹೊರಳಿತು ನಾಗೇಶನ ಬಾಯಿಯಿಂದ. +ಅದು ಇಡೀ ಕಾಡನ್ನೇ ನಡುಗಿಸುವಂತಿತ್ತು. +“ಸಾಕು ನಿಲ್ಲಿಸು” ನಿರ್ಭಾವ ದನಿಯಲ್ಲಿ ಹೇಳಿದಳು ಕಲ್ಯಾಣಿ. +ಅದೊಂದು ಆಜ್ಞೆ ಎಂಬಂತೆ ಹೊಡೆಯುವುದನ್ನು ನಿಲ್ಲಿಸಿ ಅಲ್ಲೇ ನಿಂತ ಮಲ್ಲಪ್ಪ. +“ನಿನ್ನ ಸ್ಥಾನಕ್ಕೆ ನೀ ಹೋಗು.”ಕಲ್ಯಾಣಿಯ ಬಾಯಿಂದ ಮಾತು ಬರುತ್ತಲೆ ತನ್ನ ಸ್ಥಾನಕ್ಕೆ ಹೋದ ಮಲ್ಲಪ್ಪ. +ಸರಿಯಾಗಿ ನಿಂತ ನಾಗೇಶನನ್ನು ನೋಡುತ್ತಾ ಹೇಳಿದಳವಳು. +“ಶಭಾಷ್!ಕೊಡವನ್ನು ನುಂಗುವುದನ್ನು ಕಲಿಯುತಿರುವಿ, ನೋವನ್ನು ಸಹಿಸುವುದು ಇನ್ನೂ ಕಲಿಯಬೇಕು ಅದು ಸುಲಭದ ಕೆಲಸವಲ್ಲ. +ಸಾವನ್ನು ಎದುರಿಸುವುದು ಸುಲಭ. +ಸಮಯ ಸರಿದ ಹಾಗೇ ಅದನ್ನೂ ಕಲಿಯುತ್ತಿ” ಈ ಮಾತಾಡುವಾಗಲೂ ಅವಳ ದನಿ ನಿರ್ಭಾವವಾಗಿತ್ತು. +ಅವರನ್ನು ಮರೆತಂತೆ ಆಪ್ಯಾಯತೆಯಿಂದ ಕಲ್ಯಾಣಿ ತನ್ನ ಆಯುಧದ ಮೇಲೆ ಕೈಯಾಡುತ್ತಿದ್ದಾಗ ಕಾಡಿನ ಮೌನದಲ್ಲಿ ಅಸ್ಪಷ್ಟ ಹೆಜ್ಜೆಯ ಸಪ್ಪಳ ಕೇಳಿಬರತೊಡಗಿತು. +ಆಯುಧದಿಂದ ನೋಟವನ್ನು ಹರಿನಾಥನ ಕಡೆ ತಿರುಗಿಸಿದಳು. +ಅವನು ಬಾಯಿಂದ ವಿಚಿತ್ರ ಶಬ್ದವನ್ನು ಹೊರಡಿಸಿದ. +ಅವನಿಂದ ಹೊರಟ ಆ ಸದ್ದು ಕಾಡೆಲ್ಲಾ ಹರಡತೊಡಗಿತು. +ಒಂದು ನಿಮಿಷ ಕಳೆದರೂ ಅಂತಹ ಇನ್ನೊಂದು ಸದ್ದು ಕೇಳಿಸದಾಗ ನಿಂತ ನಾಲ್ವರೂ ಓಡಿ ತಮ್ಮ ಆಯುಧಗಳನ್ನು ತಂದುಕೊಂಡು ಆಜ್ಞೆಗಾಗಿ ಎಂಬಂತೆ ಕಲ್ಯಾಣಿಯ ಕಡೆ ನೋಡಿದರು. +ಆಗ ತೇಲಿಬಂತು ಅಂತಹದೇ ಕೂಗು. +ಅದರ ಸದ್ದು ಕಾಡಿನಲ್ಲಿ ಅಡಗುತ್ತಿದ್ದಂತೆ ಹೇಳಿದಳು ಕಲ್ಯಾಣಿ-“ಅವನು ಓಡಿ ಬರುತ್ತಿದ್ದಾನೆ ಬಹಳ ದಣಿದಿರಬಹುದು.”ಆಕೆಯ ಮಾತನ್ನು ಕೇಳಿಯೂ ಯಾರೂ ಆಯುಧಗಳನ್ನು ಕೆಳಗಿಡಲಿಲ್ಲ. +ಒಬ್ಬೊಬ್ಬರು ಒಂದೊಂದು ದಿಕ್ಕಿನಿಂದ ಬೆಟ್ಟದ ಕೆಳಗಿನ ದೃಶ್ಯವನ್ನು ನೋಡತೊಡಗಿದರು. +ಹೆಜ್ಜೆಯ ಸದ್ದು ಹತ್ತಿರವಾಗುತ್ತಾ ಬರುತ್ತಿತ್ತು. +ಕೆಲನಿಮಿಷಗಳ ಬಳಿಕ ಆ ನಾಲ್ವರೂ ಮತ್ತೆ ಕಲ್ಯಾಣಿ ಎದುರು ಬಂದು ನಿಂತರು, ಹೇಳಿದ ಹರಿನಾಥ“ಸಾಯಿನೇ ಬರುತ್ತಿದ್ದಾನೆ.” +“ನೀವೆಲ್ಲಾ ಕೂಡಿ ಅವನು ವಿಶೇಷ ಸುದ್ದಿ ತಂದಿರಬಹುದು” ಹೇಳಿದಳು ಕಲ್ಯಾಣಿ. +ನಾಲ್ವರೂ ತಮ್ಮ ತಮ್ಮ ಆಯುಧಗಳನ್ನು ಬದಿಗಿಟ್ಟುಕೊಂಡು ಅವಳೆದುರು ಬಂದು ಕುಳಿತರು. +ಗಿಡಗಳ ಮರೆಯಿಂದ ಹೊರ ಬಂದ ಸಾಯಿ ಅವರನ್ನು ಕಾಣುತ್ತಲೇ ಏದುಸಿರುಬಿಡುತ್ತಾ ನಡೆಯುತ್ತಾ ಬಂದ. +ಅವನ ಬಟ್ಟೆಗಳೆಲ್ಲಾ ಬೆವರಿನಿಂದ ತೊಯ್ದುಹೋಗಿತ್ತು. +ಅವನು ಕಲ್ಯಾಣಿ ಎದುರು ಬಂದಾಗ ಇನ್ನೂ ಏದುಸಿರು ಕಡಿಮೆಯಾಗಿರಲಿಲ್ಲ. +“ಹೋಗು!ಮುಖ ತೊಳೆದು, ಸುಧಾರಿಸಿಕೊಂಡು ಬಾ” ಅವನನ್ನೇ ನೋಡುತ್ತಿದ್ದ ಕಲ್ಯಾಣಿ ಹೇಳಿದಳು. +“ಬಹು ಮುಖ್ಯ…”ಸಾಯಿ ಮಾತು ಆರಂಭಿಸುತ್ತಿದ್ದಂತೆ ಕಟುವಾದ ನೋಟ ಅವನ ಕಡೆ ಬೀರಿದಳು ಕಲ್ಯಾಣಿ. +ಮಾತನ್ನು ಅಲ್ಲಿಗೇ ನಿಲ್ಲಿಸಿದ ಸಾಯಿ, ಮುಖ ತೊಳೆಯಲು, ತನ್ನ ತಾ ಸುಧಾರಿಸಿಕೊಳ್ಳಲು ಹೋದ. +ತನ್ನೆದುರು ಕುಳಿತವರನ್ನು ನೋಡುತ್ತಾ ಹೇಳಿದಳು ಕಲ್ಯಾಣಿ. +“ನಮಗೆ ಬೇಕಾದ ಮೂವರೂ ಇಲ್ಲೇ ಎಲ್ಲೊ ಇದ್ದಾರೆ. +ಶಂಕರ, ಹರಿ ನೀವಿಬ್ಬರೂ ಅವರ ಕೆಲಸ ಮುಗಿಸಬೇಕು. +ಮಲ್ಲಪ್ಪ ನೀನವರಿಗೆ ರಕ್ಷಕನಂತೆ ಕೆಲಸ ಮಾಡಬೇಕು. +ಬರೀ ಚಾಕು, ಭರ್ಜಿಗಳಿಂದ ಈ ಕೆಲಸವಾಗಬೇಕು. +ಯಾವ ಮಾರಕ ಆಯುಧವನ್ನು ಉಪಯೋಗಿಸಬಾರದು.” +“ಸರಿಯಕ್ಕ” ಎಂದ ಹರಿ. +ಅವನು ಮೂವರ ಪರವಾಗಿ ಮಾತಾಡಿದಂತಿತ್ತು. +ದಣಿವಿನಿಂದ ಸುಧಾರಿಸಿಕೊಂಡು ಬಂದ ಸಾಯಿ ಅವಳೆದುರು ಕೂಡುತ್ತಾ ಹೇಳಿದ. +“ಅವರು ಹಳ್ಳಿಯಲ್ಲೇ ಇದ್ದಾರಕ್ಕ, ಇವತ್ತು ರಾತ್ರಿಯೂ ಇಲ್ಲೇ ಇರಬಹುದು.” +“ಜಮೀನ್ದಾರರಿಂದ ನಮ್ಮ ಹೆಸರು ಹೇಳಿ ದೋಚಿ ತಂದ ಹಣವೂ ಅವರ ಬಳಿ ಇರಬಹುದೇ?” ಕೇಳಿದಳು ಕಲ್ಯಾಣಿ. +“ಇರಬಹುದು, ಅವರುಗಳು ಮಜಾ ಮಾಡುತ್ತಿರುವ ಲಕ್ಷಣಗಳು ಕಾಣುತ್ತಿವೆ” ಹೇಳಿದ ಸಾಯಿ. +“ಈ ರಾತ್ರಿ ಅವರ ಕೆಲಸ ಮುಗಿಯುತ್ತದೆ. +ಸಾಯಿ ನೀನು ಬಹಳ ದಣಿದಿದ್ದಿ, ಆ ಜಮೀನ್‌ದಾರರಿಗೆ ಅವರ ಬಳಿಯಿಂದ ಹಣ ದೋಚಿದವರು ನಾವಲ್ಲ. +ಆ ಕೆಲಸ ಮಾಡಿದವರ ಕಥೆ ಮುಗಿದಿದೆ ಎಂದು ಅವರುಗಳ ಶವಸಂಸ್ಕಾರವಾಗುವ ಮುನ್ನ ಆ ಜಮೀನುದಾರರಿಗೆ ಆ ವಿಷಯ ತಿಳಿಸಬೇಕು. +ಅದು ಸಾಧ್ಯವೇ?” ಕೇಳಿದಳು ಕಲ್ಯಾಣಿ. +“ಅದು ದೊಡ್ಡ ಕೆಲಸವಲ್ಲ ಅಕ್ಕ. +ಬೆಳಗಾಗುವದರೊಳಗೆ ಆ ವಿಷಯ ಅವರಿಗೆ ತಿಳಿಯುತ್ತದೆ. +ಅದಕ್ಕೆ ನಾವೇ ಹೋಗಬೇಕಾಗಿಲ್ಲ” ಆಕೆಯ ಮಾತು ಮುಗಿದ ಕೂಡಲೇ ಹೇಳಿದ ಸಾಯಿ. +“ಅದಕ್ಕೆ ನಂಬಿಕಸ್ಥರು ಬೇಕು” ಮುಂದಿನ ಯೋಜನೆಯಲ್ಲಿ ತೊಡಗಿರುವಂತೆ ಮಾತಾಡಿದಳು ಕಲ್ಯಾಣಿ. +ಅದಕ್ಕೆ ಹರಿನಾಥ ವಿವರಣೆ ನೀಡಿದ. +“ನಿಮ್ಮನ್ನು ಎಷ್ಟು ಜನ ಆರಾಧಿಸುತ್ತಾರೆಂಬ ಅರಿವು ನಿಮಗಿಲ್ಲ ಅಕ್ಕ! +ನಿಮಗಾಗಿ ತಮ್ಮ ಪ್ರಾಣ ಕೊಡಲೂ ಎಷ್ಟೋ ಜನ ಸಿದ್ಧರಿದ್ದಾರೆ. +ನಿಮಗದರ ಅರಿವು ಸರಿಯಾಗಿ ಇರಲಿಕ್ಕಿಲ್ಲ. +ಬೆಳಗಾಗುವದರೊಳಗೆ ಜಮೀನ್‌ದಾರರಿಗೆ ಸುದ್ದಿ ತಲುಪುತ್ತದೆ.”ಅವನ ದನಿಯಲ್ಲಿ ಆತ್ಮವಿಶ್ವಾಸವಿತ್ತು. +ತನ್ನದೇ ನಿರ್ವಿಕಾರ ದನಿಯಲ್ಲಿ ಹೇಳಿದಳು ಕಲ್ಯಾಣಿ. +“ಈ ಪೋಲೀಸಿನವರು ಯಾವಾಗ ಹೇಗೆ ಬರುತ್ತಾರೋ ಹೇಳುವ ಹಾಗಿಲ್ಲ. +ನಮ್ಮ ಜಾಗ್ರತೆಯಲ್ಲಿ ನಾವಿರಬೇಕು.” +“ಸಾಯಿ ಹಳ್ಳಿಯಲ್ಲಿ ಪೋಲೀಸಿನವರ ಚಟುವಟಿಕೆ ಏನಾದರೂ ಹೆಚ್ಚು ಕಂಡುಬಂತೇ?” ಕೇಳಿದ ಶಂಕರ. +“ಇಲ್ಲ, ನಾವು ಇಲ್ಲಿರುವುದು ಅವರುಗಳು ಇನ್ನೂ ಊಹಿಸಿದಂತಿಲ್ಲ. +ಇದ್ದರೂ ಅವರು ಕಲ್ಲಕ್ಕನ ಹೆಸರು ಕೇಳೇ ಭಯದಿಂದ ಸಾಯುತ್ತಾರೆ” ಹೇಳಿದ ಸಾಯಿ. +ಕಲ್ಯಾಣಿ ತನ್ನ ಸಂಗಡಿಗರೊಡನೆ ಮುಂದಿನ ಯೋಜನೆ ರೂಪಿಸುವದರಲ್ಲಿ ತೊಡಗಿದಳು. +ಬಂಡೇರ ಹಳ್ಳಿ ಕುಗ್ರಾಮ, ಬಹು ದೊಡ್ಡದಲ್ಲದ ಆ ಹಳ್ಳಿಯಲ್ಲಿ ಬಡತನ ತಾನೇತಾನಾಗಿ ತಾಂಡವವಾಡುತ್ತಿತ್ತು. +ಅಲ್ಲಿನ ಒಬ್ಬ ಜಮೀನುದಾರ ಅ ಹಳ್ಳಿಗರ ಅಲ್ಪ ಸ್ವಲ್ಪ ಸುಖವನ್ನೂ ಅವರಿಂದ ಕಸಿದುಕೊಳ್ಳುತ್ತಾ ತಾನು ಇನ್ನೂ ದೊಡ್ಡ ಜಮೀನ್ದಾರನಾಗಲು ಯತ್ನಿಸುತ್ತಿದ್ದ. +ಆರು ತಿಂಗಳ ಹಿಂದೆ ಕಲ್ಯಾಣಿಯ ತಂಡದವರು ಆ ಬಡ ಹಳ್ಳಿಗರನ್ನು ಅವನ ಹಿಂಸೆಯಿಂದ ಪಾರು ಮಾಡಿದ್ದರು. +ಕ್ರಾಂತಿಕಾರಿಯರ ಮಾತು ಕೇಳದಿದ್ದರೆ ತನ್ನ ನಾಮರೂಪವಿಲ್ಲದಂತೆ ಹೋಗಬಹುದೆಂದು ಅರಿತುಕೊಂಡ ಜಮೀನ್ದಾರನು ಬಡರೈತರಿಂದ ಕಸಿದುಕೊಂಡ ಜಮೀನನ್ನು ಯಾವ ಶರತ್ತೂ ಇಲ್ಲದೆ ಅವರಿಗೆ ಹಿಂತಿರುಗಿಸಿದ್ದ. +ಅದಕ್ಕಾಗೇ ಅಲ್ಲಿನ ಬಡವರ ಜೀವನ ಮೊದಲಿಗಿಂತ ಸುಖಕರವಾಗಿತ್ತು. +ತಮ್ಮ ಬದಲಾದ ಜೀವನಗತಿಗೆಲ್ಲಾ ಕಾರಣ ಕಲ್ಲಕ್ಕನೇ ಎಂದು ಆ ಹಳ್ಳಿಯವರಿಗೆಲ್ಲಾ ಗೊತ್ತಿತ್ತು. +ಅಲ್ಲಿಯ ಬಡವರು ಅವಳನ್ನು ಕಲ್ಲಕ್ಕ, ಕಾಳಿ, ನ್ಯಾಯವನ್ನು ಒದಗಿಸಲು ಅವತಾರ ತಾಳಿದ ಜಗದಾಂಭೆಯೇ ಎಂದು ಗೌರವದಿಂದ, ಆತ್ಮೀಯತೆಯಿಂದ ಕರೆಯುತ್ತಿದ್ದರು. +ಬಂಡೇರಹಳ್ಳಿಯ ಬಡವರ ವಾಸಸ್ಥಾನದ ನಡುವೆ ಆ ರಾತ್ರಿ ಕಲ್ಲಕ್ಕ ಬರುವಳೆಂಬ ಸುದ್ದಿ ಬಾಯಿಂದ ಬಾಯಿಗೆ ಹರಡಿತ್ತು. +ಅಲ್ಲೇ ಇದ್ದ ಮೈದಾನ ಒಂದರಲ್ಲಿ ಬಡರೈತರು ಅವರ ಕುಟುಂಬದವರು ಕತ್ತಲಾಗುತ್ತಲೇ ಅಲ್ಲಿ ನೆರೆಯತೊಡಗಿದ್ದರು. +ಸರಿಯಾಗಿ ಎಂಟು ಗಂಟೆಗೆ ಕಲ್ಯಾಣಿ, ನಾಗೇಶ ಸಾಯಿಯರೊಡನೆ ಅಲ್ಲಿ ಬಂದಾಗ ಅವಳ ಹೆಸರಿನ ಜಯಘೋಷಗಳು ಆರಂಭವಾದವು. +ಎಲ್ಲರಿಗೂ ಸುಮ್ಮನಿರುವಂತೆ ಕೈಮಾಡಿದಾಗ ಮೌನವಹಿಸಿತು ಬಡವರ ಸಮೂಹ. +ಪುಟ್ಟ ಭಾಷಣ ಮಾಡಿದಳು ಕಲ್ಯಾಣಿ, ಅವರ ಹಕ್ಕುಗಳ ಕುರಿತಾಗಿ, ಅವರಿಗೆ ಆಗುತ್ತಿರುವ ಅನ್ಯಾಯದ ಕುರಿತಾಗಿ, ಮನುಷ್ಯರಿಗೆ ದೊರೆಯಬೇಕಾದಂತಹ ಗೌರವ ಅವರಿಗೆ ಹೇಗೆ, ಯಾಕೆ ದೊರೆಯುತ್ತಿಲ್ಲವೆಂಬ ಕುರಿತಾಗಿ, ಅಲ್ಲಿ ನೆರೆದ ಜನಸಮೂಹ ಅವಳ ಮಾತುಗಳನ್ನು ಬಹಳ ಗಮನವಿಟ್ಟು ಕೇಳಿತು. +ತನ್ನ ಪುಟ್ಟ ಭಾಷಣದಲ್ಲಿ ಪ್ರತಿ ಮಾತೂ ಅವರ ಮನಸ್ಸಿಗೆ ತಟ್ಟುವ ಹಾಗೆ ಹೇಳಿದಳು. +ಭಾಷಣ ಮುಗಿದನಂತರ ಗುಂಪು ಒಡೆದು ಜನರು ವೃತ್ತಾಕಾರದಲ್ಲಿ ಕುಳಿತಿದ್ದರು. +ಎಲ್ಲಿಂದಲೋ ಡೋಲು ಡಪ್ಪು ಬಂದವು. +ಜನರ ನಡುವಿನಿಂದ ಎದ್ದ ಇಬ್ಬರು ಗಂಡಸರು, ಇಬ್ಬರು ಹೆಂಗಸರು ಕ್ರಾಂತಿಕಾರಿ ಗೀತೆಗಳನ್ನು ಜಾನಪದಶೈಲಿಯಲ್ಲಿ ಹಾಡತೊಡಗಿದರು. +ಧನವಂತರ ದಬ್ಬಾಳಿಕೆ ಮುಗಿದು ತಮ್ಮ ಕಾಲ ಹೇಗೆ ಬರುವದೆಂಬ ಸಾರಾಂಶದ ಹಾಡು. +ಒಂದೊಂದು ಸಲ ಹಾಡಿನ ಸಾಲುಗಳಿಗೆ ಇಡೀ ಜನಸಮೂಹವೇ ತಮ್ಮ ದನಿಯನ್ನು ಸೇರಿಸುತ್ತಿತ್ತು. +ಬಸ್‌ಸ್ಟಾಂಡಿನಿಂದ ಸ್ವಲ್ಪ ದೂರದಲ್ಲೇ ಸಾರಾಯಿ ಖಾನೆ, ಹೊಲಸು ಪಂಚೆ ಸುತ್ತಿದ್ದ ಮಲ್ಲಪ್ಪ ತಲೆ ತುಂಬಾ ಕಂಬಳಿ ಹೊದ್ದು ಬಂದು ಮೂಲಗೆ ತನ್ನದೇ ಗತಿಯಲ್ಲಿ ಸಾರಾಯಿ ಕುಡಿಯುತ್ತಿದ್ದ. +ಅವನ ನೋಟ ಅಲ್ಲಿ ಕುಳಿತವರ ಮೇಲೆಲ್ಲಾ ಹರಿದಾಡಿ ಮೂವರ ಮೇಲೆ ಕೇಂದ್ರಿಕೃತವಾಗಿತ್ತು. +ಬಹು ಖುಶಿಯಲ್ಲಿದ್ದಂತೆ ಕಾಣುತ್ತಿದ್ದ ಆ ಮೂವರೂ ಅವರಿಗೆ ಬೇಕಾದವರು. +ಕಲಕ್ಕನ ಹೆಸರು ಹೇಳಿ ಪಕ್ಕದ ಹಳ್ಳಿಯ ಜಮೀನ್ದಾರನಿಂದ ಹಣ ಸುಲಿದವರು. +ಆ ಜಮೀನ್‌ದಾರ ಮೊದಲೇ ಕಲಕ್ಕನೊಡನೆ ಸಂಧಾನಕ್ಕೆ ಬಂದವ. +ಆಕೆ ಹೇಳಿದ ಎಲ್ಲಾ ಮಾತುಗಳನ್ನು ಕೇಳಲು ಒಪ್ಪಿಕೊಂಡವ. +ಕಲಕ್ಕೆ ಮತ್ತೆ ತನ್ನವರನ್ನು ಕಳಿಸಿದ್ದಾಳೆಂದರೆ ಆಶ್ಚರ್ಯವಾಗಿತ್ತು. +ಅವರ ಬೆದರಿಕೆಯ ಮಾತುಗಳಿಗೆ ಆಗ ತನ್ನಲ್ಲಿದ್ದ ಹಣ ಮತ್ತು ವಡವೆಗಳನ್ನು ಕೊಟ್ಟುಬಿಟ್ಟಿದ್ದ. +ಮರುದಿನ ಅದು ತಿಳಿದು ಹುಡುಕಿಸುವ ಕೆಲಸ ಆರಂಭಿಸಿದ್ದಳವಳು. +ಎರಡು ದಿನಗಳ ಬಳಿಕ ಆ ದಿನ ಬಂಡೇರಹಳ್ಳಿಯಲ್ಲಿ ಕಾಣಿಸಿಕೊಂಡಿದ್ದರವರು. +ಅದೇ ಕೆಲಸದಲ್ಲಿ ತೊಡಗಿದ್ದ ಸಾಯಿಗೆ ಹಳ್ಳಿಗರ ಸಹಾಯದಿಂದ ಅವರನ್ನು ಗುರುತಿಸುವುದು ಕಷ್ಟವಾಗಿರಲಿಲ್ಲ. +ಮಲ್ಲಪ್ಪನಿಗೆ ಅವರನ್ನು ತೋರಿಸಿ ಕಲ್ಯಾಣಿಯನ್ನು ಸೇರಿಕೊಂಡಿದ್ದ ಸಾಯಿ. +ಎಂಟೂವರೆ ಸುಮಾರಿಗೆ ಆ ಮೂವರೂ ಸರಾಯಿ ಖಾನೆಯಿಂದ ಹೊರಬಿದ್ದರು. +ದೂರ ಕತ್ತಲಲ್ಲಿ ನಿಂತಿದ್ದರು ಹರಿ ಮತ್ತು ಶಂಕರ. +ಆ ಮೂವರ ಹಿಂದೆಯೆ ಕಂಬಳಿ ಹೊದ್ದು ಹೊರಬಂದ ಮಲ್ಲಪ್ಪನನ್ನು ಗಮನಿಸಿದರವರು. +ಮಲ್ಲಪ್ಪ ಹಿಂದಾಗುತ್ತಾ ಬಂದ, ಶಂಕರ ಮತ್ತು ಹರಿ ಆ ಮೂವರನ್ನೂ ಗಮನಿಸುವದರಲ್ಲಿ ನಿರತರಾದರು. +ಸರಾಯಿಖಾನೆಯಿಂದ ಸ್ವಲ್ಪ ದೂರದಲ್ಲಿ ದೇಹ ಮಾರಿಕೊಂಡು ಬದುಕುವವರ ಗುಡಿಸಲುಗಳು. +ಅಲ್ಲಿ ಬಂದ ಆ ಮೂವರೂ ಕೆಲ ಹೆಂಗಸರು ಹುಡುಗಿಯರೊಡನೆ ಮಾತಾಡಿದರು. +ಅವರನ್ನು ತಮ್ಮ ಬಳಿ ಸೆಳೆಯಲು ಪೈಪೋಟಿ ನಡೆದಂತೆ ಕಂಡಿತು ಹುಡುಗಿಯರಲ್ಲಿ. +ಅದಕ್ಕೆ ಕಾರಣ ಅವರು ಕೈಯಲ್ಲಿ ಆಡಿಸುತ್ತಿದ್ದ ಹಣ, ಎತ್ತರದ ದನಿಯಲ್ಲಿ ಮಾತುಗಳು, ನಗೆಯ ಬಳಿಕ ಮೂವರೂ ಒಬ್ಬೊಬ್ಬ ಹುಡುಗಿಯೊಡನೆ ಒಂದೊಂದು ಗುಡಿಸಿಲನ್ನು ಹೊಕ್ಕರು. +ಕಂಬಳಿ ಹೊದ್ದು ರಸ್ತೆಯ ಆಚೆ ಇದ್ದ ಶಂಕರ ಮತ್ತು ಹರಿ ನಿಧಾನವಾಗಿ ಆ ಗುಡಿಸಲುಗಳ ಕಡೆ ಹೆಜ್ಜೆ ಹಾಕತೊಡಗಿದರು. +ನಿಧಾನವಾಗಿ ನಡೆಯುತ್ತಾ ಬಂದ ಮಲ್ಲಪ್ಪ ಅವರ ಸ್ಥಾನವನ್ನು ಆಕ್ರಮಿಸಿದ. +ಹರಿ ಮತ್ತು ಶಂಕರ ಗುಡಿಸಲುಗಳ ಸಮೀಪ ಬರುತ್ತಿದ್ದಂತೆ ಅವರನ್ನು ಮೂವರು ಹುಡುಗಿಯರು ಸುತ್ತುವರಿದರು. +ಅವರ ಪರವಾಗಿ ಚೌಕಾಸಿ ಮಾಡಲು ಒಬ್ಬ ಗಂಡು ಬಂದ. +ಆ ಗಂಡನ್ನು ಸ್ವಲ್ಪ ದೂರ ಕರೆದೊಯ್ದು ಹೇಳಿದ ಹರಿ. +“ನಾವು ಕಲ್ಲಕ್ಕನ ತಂಡದವರು. +ನೀವೆಲ್ಲಾ ಬಾಯಿ ಮುಚ್ಚಿಕೊಂಡು ನಿಂತಿರಿ. +ಇಲ್ಲದಿದ್ದರೆ ನಿಮ್ಮನ್ನೂ ಮುಗಿಸಿಬಿಡಬೇಕಾಗುತ್ತದೆ.”ಅದನ್ನು ಕೇಳಿದ ಅವನ ನರನರದಲ್ಲೂ ಭಯ ತುಂಬಿ ಬಂತು. +ಕೈಮಾಡಿ ಹುಡುಗಿಯರನ್ನು ತನ್ನ ಕಡೆ ಕರೆದ. +ಅವರು ದೂರ ಸರಿಯುತ್ತಿದಂತೆ ಮುಂದೆ ಹೋದ ಶಂಕರ ಬಂದು ಗುಡಿಸಲಿನ ಬಾಗಿಲನ್ನು ನೂಕಿದ. +ಕಂದೀಲಿನ ಬೆಳಕಿನಲ್ಲಿ ನಗ್ನ ಜೋಡಿ ಕಾಮಕೇಳಿಯಲ್ಲಿ ತೊಡಗಿತ್ತು. +ಹೆಣ್ಣಿನ ನೋಟ ಅವನ ಮೇಲೆ ಬಿದ್ದಾಗ ಹೇಳಿದ ಶಂಕರ“ನಾನು ಕಲ್ಲಕ್ಕನ ತಂಡದವ. +ಬಾಯಿ ಮಾಡಿದರೆ ಕೊಂದುಬಿಡುತ್ತೇನೆ. +ನೀ ಹೊರಹೋಗು”ಅವನ ಮಾತು ಮುಗಿಯುತ್ತಿದ್ದಂತೆ ಬತ್ತಲೇ ಆ ಹೆಣ್ಣು ಗುಡಿಸಿಲಿನಿಂದ ಹೊರಗೋಡಿದಳು. +ಬತ್ತಲಾದ ಗಂಡು ಅವರಸದಲ್ಲಿ ತನ್ನ ಆಯುಧ ಹುಡುಕುತ್ತಿದ್ದಾಗ ಅವನ ಮೇಲೆ ಬಿದ್ದ ಶಂಕರ ಅವನ ಕೈಯಲ್ಲಿ ಭರ್ಜಿ ಸಿದ್ಧವಾಗಿತ್ತು. +ಬತ್ತಲಾದ ವ್ಯಕ್ತಿ ಇನ್ನೂ ತನ್ನ ಆಯುಧ ಹುಡುಕುತ್ತಿರುವಾಗಲೇ ಪೂರ್ತಿ ಬಲದಿಂದ ಅವನ ಎದೆಗೆ ಇರಿದು ಪೂರ್ತಿ ಒಳಹೋದ ಆಯುಧವನ್ನು ಎರಡು ಸಲ ತಿರುವಿ ಹೊರಗೆಳೆದ. +ಕೆಲಕ್ಷಣಗಳು ಅತ್ತಿತ್ತ ಹೊಡೆದುಕೊಂಡ ಅವನ ದೇಹ ನಿಸ್ತೇಜವಾಯಿತು. +ಅವನ ದೇಹಕ್ಕೆ ಚೂರಿಯನ್ನು ಒರಿಸಿ ಏನೂ ಆಗದವನಂತೆ ಗುಡಿಸಲಿನಿಂದ ಹೊರಬಿದ್ದ ಶಂಕರ. +ಹರಿ ಮತ್ತೊಂದು ಗಡಿಸಲನ್ನು ಪ್ರವೇಶಿಸುತ್ತಿದ್ದುದನ್ನು ನೋಡಿ ಅಲ್ಲಿದ್ದ ಹೆಂಗಸರು, ಹುಡುಗಿಯರಿಗೆ ಅಭಯ ನೀಡುವಂತೆ ಹೇಳಿದ. +“ನಿಮಗೇನೂ ಆಗುವುದಿಲ್ಲ. +ನೀವು ಹಾಗೇ ಸುಮ್ಮನೆ ನಿಂತಿರಿ. +ನಾವೀಗ ಹೊರಟು ಹೋಗುತ್ತೇವೆ”ಭಯದಿಂದ ನಡುಗುತ್ತಿದ್ದ ಅವರು ಅದಕ್ಕೇನೂ ಹೇಳಲಿಲ್ಲ. +ಹರಿ ಮತ್ತೊಂದು ಗುಡಿಸಲನ್ನು ಹೊಕ್ಕು ತಾನ್ಯಾರೆಂದು ಹೇಳಿದಾಕ್ಷಣ ಭಯದಿಂದ ಆ ಗುಡಿಸಲಿನಲ್ಲಿದ್ದ ಹುಡುಗಿಯೂ ಬತ್ತಲೆಯೇ ಹೊರಗೋಡಿದಳು. +ಕುಡಿದ ಗಂಡು ಏನಾಗುತ್ತಿದೆ ಎಂದು ಯೋಚಿಸುವ ಮುನ್ನ ಅವನ ಮೇಲೆ ಬಿದ್ದ ಹರಿ ಹೊಟ್ಟೆಗೆ ಚೂರಿ ಅದುಮಿ ಹಿಡಿದು ಕೇಳಿದ. +“ಜಮೀನ್‌ದಾರನ ಬಳಿಯಿಂದ ಲೂಟಿ ಮಾಡಿದ ಹಣ, ವಡವೆ ಎಲ್ಲಿದೆ ಹೇಳು ನಿನ್ನ ಈ ಒಂದುಸಲ ಕ್ಷಮಿಸಿಬಿಡುತ್ತೇನೆ”ಕಲಕ್ಕನ ಹೆಸರು ಕೇಳೇ ಅವನ ನಿಶೆಯೆಲ್ಲಾ ಇಳಿದು ಹೋಗಿತ್ತು. +ಭಯಾತಿರೇಕದ ದನಿಯಲ್ಲಿ ಹೇಳಿದ. +“ಎಲ್ಲಾ… ಎಲ್ಲಾ ಹೇಳುತ್ತೇನೆ. +ನನ್ನ ಕೊಲ್ಲಬೇಡಿ” +“ಒಂದು ಸಲ ಹೇಳಿದೆನಲ್ಲಾ!ಎರಡೆರಡು ಸಲ ಹೇಳುವವರಲ್ಲ ನಾವು ಎಲ್ಲಿದೆ ಹಣ, ವಡವೆ” ಕಟುವಾಗಿ ಬಂತು ಹರಿಯ ಮಾತು. +ತಕ್ಷಣ ಅವನು ಜಮೀನ್‌ದಾರನಿಂದ ಪಡೆದ ಹಣವೆಷ್ಟು ಅದರಲ್ಲಿ ಮಿಕ್ಕಿದೆ, ವಡವೆಗಳನ್ನು ಎಲ್ಲಿಟ್ಟಿದ್ದೇವೆಂಬ ವಿವರ ಕೊಟ್ಟ. +ಅವನ ಮಾತು ಮುಗಿಯುತ್ತಿದ್ದಂತೆ ಚೂರಿ ಹೊಟ್ಟೆಯಲ್ಲಿ ಇಳಿದು ಮೂರು ಸಲ ತಿರುಗಿ ಅವನ ಕರುಳನ್ನು ಕಿತ್ತು ಹೊರಬಂತು. +ಅವನ ದೇಹಕ್ಕೆ ಚೂರಿಗಂಟಿದ ರಕ್ತವನ್ನು ವರೆಸಿ ಹೊರಬಂದ ಹರಿ. +ಶಂಕರನೂ ತನ್ನ ಅಂದಿನ ಎರಡನೆಯ ಬಲಿಯನ್ನು ತೆಗೆದುಕೊಂಡು ಗುಡಿಸಲಿನಿಂದ ಹೊರಬಿದ್ದ. +ಅವನೂ ಆ ವ್ಯಕ್ತಿಯಿಂದ ಹಣ ವಡವೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ. +ಅದನ್ನೇ ಇಬ್ಬರೂ ಮಾತಾಡಿಕೊಂಡು ಆ ಮೂರೂ ಗುಡಿಸಲುಗಳಲ್ಲಿ ಮತ್ತೆ ಪ್ರವೇಶಿಸಿ ಅವರ ಬಳಿ ಇದ್ದ ನೋಟಿನ ಕಂತೆಗಳನ್ನೆಲ್ಲಾ ಶೇಖರಿಸಿ ಹೊರಬಂದರು. +ಭಯಾತಿರೇಕದಿಂದ ನಡುಗುತ್ತಾ ಕುಳಿತಿದ್ದ ಹೆಂಗಸರು, ಹುಡುಗಿಯರನ್ನು ಉದ್ದೇಶಿಸಿ ಹೇಳಿದ ಹರಿ. +“ಪೊಲೀಸಿನವರು ನಿಮ್ಮನ್ನು ಗೋಳುಹೊಯ್ದುಕೊಂಡರೆ ಅವರದೂ ಇದೇ ಗತಿಯಾಗುತ್ತದೆಯೆಂದು ಹೇಳಿ. +ನೀವು ಭಯಪಡಬೇಕಾಗಿಲ್ಲ. +ನಾವು ನಿಮ್ಮವರೇ ಅದನ್ನು ಮರೆಯಬೇಡಿ.”ಅದಕ್ಕೆ ಅವರಿಂದ ಏನೂ ಉತ್ತರ ಬರಲಿಲ್ಲ. +ಯಾವ ಅವಸರವೂ ಇಲ್ಲದಂತೆ ಮುಂದೆ ನಡೆದರು ಶಂಕರ ಮತ್ತು ಹರಿ, ದೂರದಿಂದ ಅವರನ್ನು ಗಮನಿಸುತ್ತಾ ಬರುತ್ತಿದ್ದ ಮಲ್ಲಪ್ಪ. +ಆ ಮೂವರೂ ಬಡರೈತರ ವಾಸಸ್ಥಾನದ ಬಳಿ ಬಂದಾಗ ಅಲ್ಲಿನ್ನೂ ಕ್ರಾಂತಿಕಾರಿ ಹಾಡುಗಳು ಸಾಗೇ ಇದ್ದವು. +ಬಡವರು ತಮ್ಮ ಬಡತನವೆಲ್ಲಾ ದೂರವಾದಂತೆ ಅದರಲ್ಲಿ ತನ್ಮಯರಾಗಿದ್ದರು. +ಅವರ ನಡುವೆ ಒಬ್ಬರಂತೆ ಕುಳಿತ ಕಲ್ಯಾಣಿ ಅವರನ್ನು ನೋಡಿ ಎದ್ದು ಹತ್ತಿರ ಬಂದಳು. +ಸಾಯಿ ಮತ್ತು ನಾಗೇಶ ನೆರಳಿನಂತೆ ಅವಳ ಅಕ್ಕಪಕ್ಕದಲ್ಲೇ ಇದ್ದರು. +“ಕೆಲಸ ಮುಗಿಯಿತು” ಹೇಳಿದ ಹರಿ, ಕ್ರಾಂತಿಕಾರಿ ಹಾಡಿನಲ್ಲಿ ತನ್ಮಯರಾದ ಯಾರೂ ಆ ಮಾತನ್ನು ಕೇಳಿಸಿಕೊಳ್ಳುವ ಹಾಗಿರಲಿಲ್ಲ. +ಶಂಕರ ತನ್ನಲಿಂದ ನೋಟಿನ ಕಂತೆ ತೆಗೆದು ಹೇಳಿದ. +“ಅವರ ಬಳಿಯಿಂದ ಐವತ್ತು ಸಾವಿರದವರೆಗೆ ಹಣ ಸಿಕ್ಕಿದೆ. +ವಡವೆಗಳನ್ನು ಎಲ್ಲಿಟ್ಟಿದ್ದಾರೆಂಬುವುದು ಹೇಳಿದ್ದಾರವರು” +“ಸಾಯಿ ನಮ್ಮ ಸಂದೇಶದೊಡನೆ ಆ ಜಮೀನ್ದಾರನಿಗೆ ಈ ಹಣವನ್ನು ತಲುಪಿಸುವ ಏರ್ಪಾಟು ಮಾಡು, ವಡವೆಗಳನ್ನು ಇಟ್ಟುಕೊಂಡವರು ತಕ್ಷಣ ಅದನ್ನು ಅವರಿಗೆ ಹಿಂತಿರುಗಿಸಬೇಕಾಗಿ ಸಂದೇಶ ಕಳುಹಿಸು” +“ಸರಿ ಅಕ್ಕ ಇದೇ ರಾತ್ರಿ ಆ ಕೆಲಸವೆಲ್ಲಾ ಆಗುತ್ತದೆ” +“ಸಮಯ ವ್ಯರ್ಥ ಮಾಡಬೇಡ ನೀ ಹೋಗು” ಎಂದ ಕಲ್ಯಾಣಿ ಹಾಡುವವರ ಹತ್ತಿರ ಬಂದು ಕೈಮೇಲೆ ಮಾಡಿದಳು. +ಒಮ್ಮೆಲೆ ವೀರಾವೇಶದಲ್ಲಿ ಸಾಗುತ್ತಿದ್ದ ಹಾಡು ನಿಂತಿತು. +ಹೇಳಿದಳು ಕಲ್ಯಾಣಿ“ನೀವು ಹಾಡನ್ನು ಮುಂದುವರೆಸಿ, ಅಕ್ಕಪಕ್ಕದ ಹಳ್ಳಿಯವರಿಗೂ ಈ ಹಾಡುಗಳನ್ನು ಕಲೆಸಿ, ನಾ ಮತ್ತೆ ಬರುತ್ತೇನೆ… +ಹಾಡು ನಡುವೆಯೇ ನಿಲ್ಲಬಾರದು”ಅವಳ ಮಾತು ಮುಗಿಯುತ್ತಲೇ ಬಿಟ್ಟ ಕಡೆಯಿಂದ ಹಾಡನ್ನು ಎತ್ತಿಕೊಂಡು ಹಾಡತೊಡಗಿದರವರು. +ಕಲ್ಯಾಣಿ ತನ್ನ ಸಂಗಡಿಗರೊಡನೆ ಕಾಡಿನ ಕತ್ತಲಲ್ಲಿ ಮರೆಯಾದಳು. +ಗೃಹಸಚಿವ ದಯಾನಂದರಿಗೆ ಕ್ರಾಂತಿಕಾರಿಯರು ಒಂದು ತಲೆನೋವಾಗಿ ಬಿಟ್ಟಿದ್ದರು. +ಮುಖ್ಯಮಂತ್ರಿಯವರು ಬಹುದಿನದಿಂದ ತಮ್ಮ ರಾಜ್ಯವನ್ನು ಇಡೀ ದೇಶದಲ್ಲೇ ಒಂದು ಮಾದರಿ ರಾಜ್ಯವಾಗಿ ರೂಪಿಸಲು ಬಹು ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದರು. +ಕ್ರಾಂತಿಕಾರಿಯರು ಆಗಾಗ ಅಲ್ಲಲ್ಲಿ ಸ್ಫೋಟಿಸುತ್ತಿದ್ದ ಬಾಂಬುಗಳು, ರಾಜಕಾರಣಿಯರ, ಗಣ್ಯರ ಕೊಲೆಗಳು ಅವರಿಗೆ ಗಂಭೀರ ಸಮಸ್ಯೆಯಾಗಿದ್ದವು. +ಮುಖ್ಯಮಂತ್ರಿಯವರೇ ಶರಣಾಗತರಾದ ಕ್ರಾಂತಿ ಕಾರಿಯರಿಗೆ ವಿವಿಧ ಸವಲತ್ತುಗಳನ್ನು ಘೋಷಿಸಿದ ನಂತರ ಬಹುಜನ ಕ್ರಾಂತಿ ಕಾರಿಯರು ಶರಣಾಗತರಾಗಿದ್ದರು. +ಶರಣಾಗತರಾಗದ ಕ್ರಾಂತಿಕಾರಿ ತಂಡಗಳ ಜಾಡು ಹಿಡಿದು ಹೋಗಿ ಪೋಲಿಸಿನವರು ಹಲವರನ್ನು ಮುಗಿಸಿದ್ದರು. +ಹಾಗೆ ನೋಡಿದರೆ ಈ ಮುಖ್ಯಮಂತ್ರಿಯವರ ಪ್ರಾಮಾಣಿಕ ಮನೋಧರ್ಮದ ಕಾರಣ ರಾಜ್ಯದಲ್ಲಿ ಕ್ರಾಂತಿಕಾರಿಯರ ಹಿಂಸಾಚಾರ ಸಾಕಷ್ಟು ಅಡಗಿತ್ತು. +ಮಿಕ್ಕ ಅಲ್ಪಸ್ವಲ್ಪ ಕೆಲಸವನ್ನು ದಯಾನಂದರ ಮೇಲೆ ಬಿಟ್ಟುಬಿಟ್ಟರು ಮುಖ್ಯಮಂತ್ರಿಯವರು. +ರಾಜ್ಯದ ಏಳಿಗೆಗೆ ನೂರಾರು ಕೆಲಸಗಳನ್ನು ಕೈಗೆತ್ತಿಕೊಂಡ ಅವರಿಗೆ ಇನ್ನು ಕ್ರಾಂತಿಕಾರಿಯರ ಕಡೆ ಗಮನ ಕೊಡುವಷ್ಟು ಬಿಡುವಿರಲಿಲ್ಲ. +ಹಲವು ಕ್ರಾಂತಿಕಾರಿ ತಂಡಗಳವರು ಶರಣಾಗತರಾದರೆ, ಇನ್ನೂ ಹಲವರು ಪೋಲೀಸರ ಕೈಯಲ್ಲಿ ಸಾವನ್ನಪ್ಪಿದ್ದರು. +ಅದರಿಂದ ಮಿಕ್ಕ ಕ್ರಾಂತಿಕಾರಿಯರ ಚಟುವಟಿಕೆಗಳು ನಿಷ್ಕ್ರಿಯವಾಗಿದ್ದವೆಂದೇ ಹೇಳಬೇಕು. +ಆದರೆ ಈ ಕಲಕ್ಕನ ತಂಡ ಇನ್ನೂ ಸಕ್ರಿಯವಾಗಿ ತನ್ನ ಕೆಲಸ ಮುಂದುವರೆಸುತ್ತಿತ್ತು. +ಬಂಡೇರಹಳ್ಳಿಯಲ್ಲಿ ಆದ ಕೊಲೆಗಳ ವರದಿ ಅವರಿಗೆ ಒಂದು ದಿನ ತಡವಾಗಿ ಲಭಿಸಿತ್ತು. +ಅದೂ ಅಲ್ಲದೇ ಅವಳ ಹೆಸರು ಹೇಳಿ ದೋಚಲಾದ ಹಣದ ಸ್ವಲ್ಪ ಭಾಗ ಮತ್ತು ವಡವೆಗಳನ್ನು ಆ ಜಮೀನ್ದಾರನಿಗೆ ಮರಳಿಸಲಾಗಿತ್ತು. +ಇದು ಗೃಹಸಚಿವರಿಗೆ ನುಂಗಲಾಗದ ತುತ್ತು. +ತಮ್ಮ ಖಾತೆಯವರು ಮಾಡಬೇಕಾದ ಕೆಲಸವನ್ನು ಕಲ್ಲಕ್ಕ ಮಾಡಿದ್ದಳು. +ಬಂಡೇರಹಳ್ಳಿ ಎಲ್ಲೋ ಇರುವ ಕುಗ್ರಾಮವೆಂದು ಕಡೆಗಣಿಸುತ್ತಿದ್ದಾರೆ. +ಪೋಲಿಸಿನವರು ಅವರನ್ನು ತರಾಟೆಗೆ ತೆಗೆದುಕೊಳ್ಳಬೇಕು. +ಏನೇ ಆಗಲಿ ಆದಷ್ಟು ಬೇಗ ಕಲ್ಲಕ್ಕನ ತಂಡವನ್ನು ಮುಗಿಸಿಬಿಡಬೇಕು. +ಇಲ್ಲದಿದ್ದರೆ ತಮ್ಮ ಕುರ್ಚಿಗೆ ಅಪಾಯ. +ಆಗಲೇ ಬೇರೆ ಕೆಲಸದ ನಿಮಿತ್ತ ಮುಖ್ಯಮಂತ್ರಿಯವರನ್ನು ಭೇಟಿಯಾದಾಗ ಕಲ್ಲಕ್ಕನ ವಿಷಯವೆತ್ತಿದ್ದರು. +ಅವರೀಗ ಬರೀ ರಾಜ್ಯದ ಮುಖ್ಯಮಂತ್ರಿಯೇ ಅಲ್ಲ. +ಪಾರ್ಟಿಯ ಸರ್ವಾಧಿಕಾರಿಯೂ ಆಗಿದ್ದರು. +ತಕ್ಷಣ ಸಂಬಂಧಿತ ಪೋಲಿಸ್ ಅಧಿಕಾರಿಯರನ್ನು ಕರೆದು ಈ ವಿಷಯ ಕೂಲಂಕುಷವಾಗಿ ಚರ್ಚಿಸಿ ಒಂದು ನಿಖರವಾದ ನಿರ್ಣಯ ತೆಗೆದುಕೊಳ್ಳಬೇಕು. +ಕಲಕ್ಕನ ಕ್ರಾಂತಿಕಾರಿ ತಂಡವನ್ನು ಹಿಡಿಯಲು, ಅವರನ್ನು ಶರಣಾಗತರಾಗುವಂತೆ ಮಾಡಲು ಏನೇನು ಮಾಡಬಹುದೆಂದು ಯೋಚಿಸುತ್ತಿದ್ದಾಗ ಫೋನಿನ ಗಂಟೆಯ ನಾದ ಆರಂಭವಾಯಿತು. +ಬಹು ಬೇಸರದಿಂದಲೇ ರಿಸೀವರ್‌ನ್ನು ಎತ್ತಿಕೊಂಡರವರು. +“ಸರ್!ಮುಖ್ಯಮಂತ್ರಿಯವರು ನಿಮ್ಮೊಡನೆ ಮಾತಾಡುತ್ತಾರಂತೆ” ಬಹು ವಿನಯವಾಗಿ ಹೇಳಿದ. +ಅವರ ಸೆಕ್ರೆಟರಿ ಸಂಪರ್ಕ ಮುರಿದ. +ಒಮ್ಮೆಲೇ ಗೃಹಸಚಿವ ದಯಾನಂದರ ನರನಾಡಿಗಳಲ್ಲೆಲ್ಲಾ ಗೌರವಾಭಿಮಾನದ ಭಾವಗಳು ತುಂಬಿಬಂದವು. +ಅದರ ಕಾರಣವಾಗೇ ಅವರು ಕುರ್ಚಿಯಿಂದ ಎದ್ದರು. +ಅದರ ಅರಿವು ಅವರಿಗೂ ಇರಲಿಲ್ಲ. +“ನಾನು ಸರ್ ದಯಾನಂದ!ಹೇಳಿ ಸರ್…” +“ಈ ಬಂಡೇರಹಳ್ಳಿಯದು ಏನು ಗೋಳು” ವಿನಯಾತಿರೇಕದಿಂದ ಅವರ ಮಾತು ಮುಗಿಯುವ ಮುನ್ನ ಕಟುವಾದ ದನಿಯಲ್ಲಿ ಕೇಳಿದರು ಮುಖ್ಯಮಂತ್ರಿ. +“ನಾನೀಗ ಅದರ ಬಗ್ಗೆ ಯೋಚಿಸುತ್ತಿದ್ದೆ ಸರ್” ಇನ್ನೂ ಹೆಚ್ಚಿನ ವಿನಯವನ್ನು ತಮ್ಮ ದನಿಯಲ್ಲಿ ತುಂಬಿಕೊಂಡು ಹೇಳಿದರು ಗೃಹಸಚಿವ ದಯಾನಂದ. +“ಬರಿ ಯೋಚಿಸಿದರೆ ಏನೂ ಆಗುವುದಿಲ್ಲ ದಯಾನಂದ ಅವರೇ!ಏನಾದರೂ ಮಾಡಬೇಕು. +ಏನು ಮಾಡುತ್ತಿದ್ದೀರಿ” ಅಸಮಾಧಾನ ಸ್ಪಷ್ಟವಾಗಿತ್ತು ಮುಖ್ಯಮಂತ್ರಿಯವರ ದನಿಯಲ್ಲಿ. +“ಈಗಲೇ ಸಂಬಂಧಿತ ಪೋಲಿಸ್ ಅಧಿಕಾರಿಯರ ಮೀಟಿಂಗ್ ಕರೆಯುತ್ತೇನೆ. +ಗಂಭೀರ ಚರ್ಚೆ ನಡೆಸಿದ ನಂತರ ಏನು ಮಾಡಬೇಕೆಂಬ ನಿರ್ಣಯ ತೆಗೆದುಕೊಳ್ಳುತ್ತೇವೆ. +ಅದಾದ ತಕ್ಷಣ ನಿಮಗೆ ತಿಳಿಸುತ್ತೇನೆ ಸರ್” ಇನ್ನೂ ನಿಂತೇ ಇದ್ದ ದಯಾನಂದ ಕೂಲಂಕುಷವಾಗಿ ವಿವರ ನೀಡಿದರು. +“ಈ ಕಲಕ್ಕ ಬಹಳ ಬೃಹದಾಕಾರವಾಗಿ ಬೆಳೆಯುತ್ತಿದ್ದಾಳೆ. +ಅದನ್ನು ಆದಷ್ಟು ಬೇಗ ತಡೆಗಟ್ಟಿ” – ಎಂದು ಕಟುವಾಗಿ ಹೇಳಿ ಮುಂದೆ ಮಾತು ಬೇಡವೆಂಬಂತೆ ಸಂಪರ್ಕ ಮುರಿದರು ಮುಖ್ಯಮಂತ್ರಿ. +ಫೋನನ್ನು ಅದರ ಸ್ಥಾನದಲ್ಲಿಡುತ್ತಾ ಕುಳಿತ ದಯಾನಂದ ಮುಂದಿನ ಕಾರ್ಯಾಚರಣೆ ಆರಂಭಿಸಿದರು. +ಅವರ ಸೆಕ್ರೆಟರಿ ಪೋಲಿಸ್ ಕಮೀಷನರಿಗೆ, ಕ್ರೈಮ್ ಬ್ರಾಂಚಿನ ಐಜಿಗೆ ಮತ್ತು ಆಂಟಿ ರೆವೆಲ್ಯೂಷನರಿ ಸ್ಕ್ವಾಡ್‌ನ ಮುಖ್ಯಸ್ಥ ಶ್ರೀವಾಸ್ತವರಿಗೆ ಫೋನ್ ಮಾಡಿ ಇನ್ನರ್ಧ ಗಂಟೆಯಲ್ಲಿ ಗೃಹಸಚಿವರ ಚೇಂಬರಿನಲ್ಲಿ ಅತಿ ಮುಖ್ಯ ಮೀಟಿಂಗ್ ಇದೆ ಎಂದು ಅರ್ಧ ಗಂಟೆಯಲ್ಲಿ ಬರಬೇಕೆಂದು ಫೋನಿನ ಮೂಲಕ ತಿಳಿಸಿದ. +ಪೋಲಿಸ್ ಕಮೀಶನರ್ ರಂಜೀತ್ ಸಿಂಗ್ ಇನ್ನಾವ ತಲೆನೋವು ಹುಟ್ಟಿಕೊಂಡಿರಬಹುದೆಂದು ತಮ್ಮಲ್ಲೇ ಗೊಣಗಿಕೊಳ್ಳುತ್ತಾ ಗೃಹಸಚಿವರು ತನ್ನ ಕರೆಸಿದ್ದರ ಕಾರಣ ಏನಿರಬಹುದೆಂದು ಯೋಚಿಸತೊಡಗಿದರು. +ಅವರಿಗೆ ಅಂತಹ ಯಾವ ಕಾರಣವೂ ಹೊಳೆಯಲಿಲ್ಲ. +ಬಂಡೇರಹಳ್ಳಿಯಲ್ಲಿ ನಡೆದ ಘಟನೆ ಅವರಿಗೆ ಗೃಹಸಚಿವರಿಗಿಂತ ಮೊದಲೇ ಗೊತ್ತಾಗಿತ್ತು. +ಅದನ್ನವರು ಅಷ್ಟು ಮುಖ್ಯವಾಗಿ ಪರಿಗಣಿಸಿರಲಿಲ್ಲ. +ಅವರ ಚಿಂತನೆ ಯಾವ ನಿಖರ ನಿರ್ಣಯಕ್ಕೂ ಬರದಾಗ ಮೆದುಳಿನ ಕಸರತ್ತನ್ನು ಬಿಟ್ಟರು. +ಕ್ರೈಮ್‌ಬ್ರಾಂಚಿನ ಐ.ಜಿ.ಯವರದೂ ಅದೇ ಸ್ಥಿತಿ, ರಾಜ್ಯದಲ್ಲಿ ಯಾವ ತರಹದ ಅಪರಾಧವೂ ನಡೆದಿಲ್ಲ. +ಹಾಗಾದಲ್ಲಿ ತನ್ನ ಕರೆಸಿದ್ದೇಕೆಂಬ ಯೋಚನೆ. +ಇಬ್ಬರೂ ಮೀಟಿಂಗ್‌ಗೆ ಬರಲಿದ್ದಾರೆಂಬುವದು ಅವರಿಗೆ ಗೊತ್ತಿರಲಿಲ್ಲ. +ತನ್ನ ಯಾಕೆ ಕರೆಸಿರಬಹುದೆಂಬುವುದು ಆಂಟಿ ರೆವಲ್ಯೂಷನರಿ ಸ್ಕ್ವಾಡ್‌ನ ಮುಖ್ಯಸ್ಥರಿಗೆ ಗೊತ್ತಿತ್ತು. +ಬಂಡೇರಹಳ್ಳಿಯಲ್ಲಿ ನಡೆದ ಘಟನೆ. +ಆ ಕಲ್ಯಾಣಿ, ಕಲ್ಲಕ್ಕ, ಕಾಳಿ, ಜಗದಾಂಭೆಯನ್ನು ಮನಸ್ಸಿಗೆ ತೋಚಿದಹಾಗೆ ಶಪಿಸತೊಡಗಿದರು. +ಅವಳು ಯಾವಾಗ ಎಲ್ಲಿರುತ್ತಾರೆಂಬುವುದೂ ತಿಳಿಯುವುದು ಕಷ್ಟ. + ಅವಳ ಬಗ್ಗೆ ಮಾಹಿತಿ ಕೊಡಬಲ್ಲ ಒಬ್ಬ ಇನ್‌ಫಾರ್ಮ‌ರನನ್ನು ತಾವು ಹುಡುಕಲು ಸಾಧ್ಯವಾಗಿಲ್ಲ. +ಅವಳನ್ನು ಬಂಧಿಸುವದೇ ಆಗಲಿ ಎನ್‌ಕೌಂಟರಿನಲ್ಲಿ ಮುಗಿಸುವುದೇ ಆಗಲಿ ಅಷ್ಟು ಸುಲಭದ ಕೆಲಸವಲ್ಲವೆಂದು ಈ ರಾಜಕಾರಣಿಗಳಿಗೆ ಹೇಗೆ ತಿಳಿ ಹೇಳಬೇಕು. +ಬಹಳ ಕಷ್ಟದ ಕೆಲಸ. +ಆದರೆ ತಾನೇ ಮಾಡಬೇಕೆಂಬುವುದನ್ನು ತನಗೆ ತಾನು ನೆನಹಿಸಿಕೊಂಡ ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ. +ಅವಳ ಆಗುಹೋಗುಗಳನ್ನು ಅರಿಯಲು ತಾವು ಪಡಬಾರದ ಪಾಡು ಪಟ್ಟಾಗಿದೆ. +ಅವಳು, ಅವಳ ತಂಡದವರು ಯಾವಾಗ ಎಲ್ಲಿ, ಎಂತಹ ದೌರ್ಜನ್ಯವನ್ನು ಎಸಗುತ್ತಾರೆಂಬುದನ್ನು ಊಹಿಸುವುದೂ ಕಷ್ಟ. + ಈವರೆಗೂ ಅವಳ ತಂಡದಲ್ಲಿ ಎಷ್ಟು ಜನರಿದ್ದಾರೆಂಬುವುದು ಗೊತ್ತಾಗಿಲ್ಲ. +ಹೀಗೆ ಕೈಕಟ್ಟಿ ಸುಮ್ಮನಿದ್ದರೆ ಆಗುವುದಿಲ್ಲ. +ಏನಾದರೂ ಮಾಡಬೇಕು ಎಂದುಕೊಂಡು. +ಗೃಹಸಚಿವರನ್ನು ಭೇಟಿಯಾಗಲು ಹೋಗಲು ಸಿದ್ಧನಾದ. +ಆತನಿಗೂ ಅಲ್ಲಿ ಕ್ರೈಮ್‌ಬ್ರಾಂಚ್‌ನ ಐ.ಜಿ.ಮತ್ತು ಕಮೀಷನರು ಬರುತ್ತಾರೆಂದು ಗೊತ್ತಿರಲಿಲ್ಲ. +ಗೃಹಸಚಿವ ದಯಾನಂದರ ಕಾರ್ಯಾಲಯದಲ್ಲಿ ಮೂವರೂ ಪೋಲೀಸ್ ಅಧಿಕಾರಿಯರ ಭೇಟಿಯಾಯಿತು. +ಅವರು ತಮ್ಮಲ್ಲಿ ಮಾತಾಡಿಕೊಳ್ಳುವ ಮೊದಲೇ ಅವರಿಗಾಗಿ ಸಚಿವರು ಕಾಯುತ್ತಿದ್ದಾರೆಂದು ಹೇಳಿದ ಅವರ ಆಪ್ತಕಾರ್ಯದರ್ಶಿ. +ಒಬ್ಬರ ಮುಖವನೊಬ್ಬರು ನೋಡಿಕೊಂಡು ಮುಂದೇನು ಕಾದಿದೆಯೋ ಎಂದುಕೊಳ್ಳುತ್ತಾ ಸಚಿವರ ಚೇಂಬರಿನಲ್ಲಿ ಪ್ರವೇಶಿಸಿದರು ಮೂವರೂ ಪೋಲೀಸ್ ಅಧಿಕಾರಿಯರು. +ಬಿಳಿಯ ನೆಹರೂ ಶರ್ಟ್, ಪೈಜಾಮ್ ತೊಟ್ಟ ಗೃಹಮಂತ್ರಿಯವರ ಮುಖ ಅಧಿಕಾರದ ಅಹಂಭಾವವನ್ನು ಹೊರಗೆಡಹುತ್ತಿತ್ತು. +ಮೂವರು ಅಧಿಕಾರಿಯವರ ಮೇಲೆ ಕಣ್ಣಾಡುತ್ತಿದ್ದಾಗ ಅವರ ತುಟಿಗಳಲ್ಲಿ ವ್ಯಂಗ್ಯದ ಮುಗುಳ್ನಗೆ, ನಾಟಕೀಯವಾಗಿ ಎದುರಿನ ಆಸನಗಳ ಕಡೆ ಕೈತೋರಿಸುತ್ತಾ ಹೇಳಿದರು. +“ಕೂಡಿ… ಕೂಡಿ… ಆಗಿನಿಂದ ನಾ ನಿಮಗಾಗೇ ಕಾಯುತ್ತಿದ್ದೆ”ಅವರ ಅಂತಹ ವ್ಯಂಗ್ಯದ ಮಾತು ಕೇಳಿ ಕೇಳಿ ಅಭ್ಯಾಸವಾಗಿ ಹೋಗಿತ್ತು ಆ ಪೋಲೀಸ್ ಅಧಿಕಾರಿಯವರಿಗೆ. +ಆದರೂ ಪ್ರತಿಸಲ ಅಂತಹ ಮಾತು ಕೇಳಿದಾಗ ಅವರಲ್ಲಿ ಎಲ್ಲಿಲ್ಲದ ಸಿಟ್ಟು ಉಕ್ಕಿ ಬರುತ್ತಿತ್ತು. +ಅದನ್ನು ನುಂಗಿಕೊಳ್ಳುವುದೂ ಅವರಿಗೆ ಅಭ್ಯಾಸವಾಗಿ ಹೋಗಿತ್ತು. +ಯಾವ ಬಗೆಯ ಪ್ರತಿಕ್ರಿಯೆಯನ್ನೂ ತೋರದ ಅವರೆದುರಿನ ಕುರ್ಚಿಗಳಲ್ಲಿ ಕುಳಿತರು. +ತಮ್ಮೆದುರು ಕುಳಿತ ಮೂವರೆಡೆ ನೋಟ ಹಾಯಿಸಿ ಕೇಳಿದರು ಗೃಹಸಚಿವರು. +“ಈ ಕಲ್ಲಕ್ಕ ಮತ್ತವರ ತಂಡ ನಮಗೀ ಜನ್ಮದಲ್ಲಿ ಸಿಗುವದಿಲ್ಲವೇ! +ಅಷ್ಟು ಷಂಡವಾಗಿದೆಯೇ ನಮ್ಮ ಪೋಲಿಸ್ ಖಾತೆ” +“ನಾವು ಸತತವಾಗಿ ನಮ್ಮ ಪ್ರಯತ್ನ ಮಾಡುತ್ತಿದ್ದೇವೆ ಸರ್! +ಆದರೆ ಈವರೆಗೂ ನಮಗೆ ಅವರ ಸ್ವಲ್ಪವೂ ಸುಳಿವು ಸಿಕ್ಕಿಲ್ಲ” ಕೂಡಲೇ ಉತ್ತರಿಸಿದ ಆಂಟಿ ರವೆಲ್ಯೂಷನರಿ ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ. +“ನಿಮಗೆ ಬಂಡೇರಹಳ್ಳಿಯಲ್ಲಿ ಆದ ವಿಷಯ ತಿಳಿದಿರಲಿಕ್ಕಿಲ್ಲ…” +“ಅದನ್ನು ರಾತ್ರಿ ನಾವೇ ನಿಮ್ಮ ಕಾರ್ಯದರ್ಶಿಗೆ ತಿಳಿಸಿದ್ದು ಸರ್” ಅವರ ಮಾತು ಮುಗಿಯುವ ಮುನ್ನ ಹೇಳಿದರು ಕಮೀಶನರ್ ರಂಜೀತ್ ಸಿಂಗ್. +“ಉಪಕಾರ ಮಾಡಿದಿರಿ! +ಆದರೆ ಅದರ ಬಗ್ಗೆ ವಿಚಾರಣೆ ಆರಂಭವಾಗಿದೆಯೇ” ಅವರ ಮಾತು ಮುಗಿಯುತ್ತಲೇ ವ್ಯಂಗ್ಯ ತುಂಬಿದ ದನಿಯಲ್ಲಿ ಬಂತು ಗೃಹಮಂತ್ರಿಯವರ ಮಾತು. +ಅವರ ಅಂತಹ ಪ್ರತಿಮಾತಿನಿಂದ ಅಸಹನೆ ಹೆಚ್ಚಾಗುತ್ತಿತ್ತು. +ಆಂಟಿರೆವೆಲ್ಯೂಷನರಿ ಸ್ಕ್ವಾಡ್‌ನ ಮುಖ್ಯಸ್ಥರಿಗೆ ಅವರು ಉತ್ತರಿಸಿದರು. +“ಬಂಡೇರಹಳ್ಳಿಯಲ್ಲಿ ಪೋಲೀಸ್ ಸ್ಟೇಷನ್ ಇಲ್ಲ. +ರಾಮನಗರದಿಂದ ಪೋಲೀಸಿನವರು ಹೋಗಿ ಶವಗಳನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಿದ್ದಾರೆ. +ಕೊಲೆ ಯಾರು ಮಾಡಿದ್ದಾರೆಂದು ಇನ್‌ವೆಸ್ಟಿಗೇಷನ್ ಮಾಡುವ ಅವಶ್ಯಕತೆ ಇಲ್ಲ ಸರ್. +ಅವರುಗಳೇ ಎಚ್ಚರ ಹೇಳಿಹೋಗಿದ್ದಾರೆ”ಬಹು ಆಸಕ್ತಿಯಿಂದ ಅವರ ಮುಖವನ್ನೇ ನೋಡುತ್ತಾ ಹೇಳಿದರು ಮಂತ್ರಿವರ್ಯರು. +“ಅದನ್ನೆಲ್ಲಾ ನಾನು ಪೇಪರಿನಲ್ಲಿ ಓದಿದ್ದೇನೆ. +ಅದನ್ನು ಕೇಳಲು ನಾನು ನಿಮ್ಮನ್ನು ಕರೆಸಿರಲಿಲ್ಲ. +ನೀವೇನು ಮಾಡುತ್ತಿದ್ದೀರಿ? +ಅದನ್ನು ಕೇಳಲು ಕರೆಸಿದ್ದು”ಮಾತು ಮಾತಿಗೂ ಸ್ಕ್ವಾಡಿನ ಮುಖ್ಯಸ್ಥರ ಸಹನೆ ಮೀರುತ್ತಿತ್ತು. +ತಕ್ಷಣ ಹೇಳಿದರವರು “ನಾವು ಹೇಳಿದ್ದನ್ನೇ ಪೇಪರಿನವರು ಮುದ್ರಿಸಿದ್ದಾರೆ ಸರ್! +ಯಾವ ಪತ್ರಕರ್ತನೂ ಬಂಡೇರಹಳ್ಳಿಗೆ ಹೋಗಿ ಎಲ್ಲಾ ಅನ್ವೇಷಣೆ ಮಾಡಿ ವರದಿ ಬರೆದಿಲ್ಲ”ತಮ್ಮ ಜತೆಗಿನ ಅಧಿಕಾರಿ ಈ ರೀತಿ ಮಾತಾಡಬಾರದಾಗಿತ್ತೆನಿಸಿತು ಮಿಕ್ಕೆಲ್ಲ ಅಧಿಕಾರಿಯರಿಗೆ. +“ಅದನ್ನೇ ನಾ ಕೇಳುತ್ತಿರುವುದು, ಕನಿಷ್ಠ ಈಗ ಆ ದರಿದ್ರ ಕಲ್ಲಕ್ಕ ಎಲ್ಲಿದ್ದಾಳೆಂದು ಗೊತ್ತಾಗಿದೆ ಅವಳನ್ನು ಹಿಡಿಯಲು ನೀವೇನು ಮಾಡುತ್ತಿದ್ದೀರಿ” ಸಿಟ್ಟಿನ ದನಿಯಲ್ಲಿ ಕೇಳಿದರು ದಯಾನಂದ. +ಕಮೀಷನರ್‌ ಅದಕ್ಕೆ ಉತ್ತರಿಸ ಬೇಕೆಂದುಕೊಳ್ಳುತ್ತಿದ್ದಾಗ ಸಿಟ್ಟಿನಲ್ಲಿ ತಾನು ಯಾರೊಡನೆ ಮಾತಾಡುತ್ತಿದ್ದೇ ನೆಂಬುವುದು ಮರೆತ ಆಂಟಿ ರೆವಲ್ಯೂಷನರಿ ಸ್ಕ್ವಾಡಿನ ಅಧಿಕಾರಿ ಹೇಳಿದ. +“ಬಂಡೇರಹಳ್ಳಿ ಎಲ್ಲಿದೆ ನಿಮಗೆ ಗೊತ್ತೆ ಸರ್” +“ಇಲ್ಲ!” ಅವರಿಗರಿವಿಲ್ಲದಂತೆ ದಯಾನಂದರ ಬಾಯಿಂದ ಮಾತು ಹೊರಟಿತು. +ಮಾತು ಹೊರಬಿದ್ದ ಮೇಲೆ ತಾವು ಮಾಡಿದ ತಪ್ಪಿನ ಅರಿವಾಯಿತವರಿಗೆ, ಅವರಿಬ್ಬರ ನಡುವೆ ಮಾತು ಬೆಳೆಯದಿರಲು ಕೂಡಲೇ ನಯವಾದ ದನಿಯಲ್ಲಿ ಹೇಳಿದರು ಕಮಿಷನರ್. +“ಸರ್!ಬಂಡೇರಹಳ್ಳಿಯಲ್ಲದೇ ಅದರ ಸುತ್ತಮುತ್ತಲಿನ ಪ್ರದೇಶ ಕೂಡ ದಟ್ಟವಾದ ಕಾಡಿನಿಂದ ಕೂಡಿದೆ. +ಅಲ್ಲಿ ಕಲ್ಲಕ್ಕನನ್ನು ಹುಡುಕುವುದು ಸುಲಭವಲ್ಲ.” +ತಾವು ಮಾಡಿದ ತಪ್ಪಿನ ಅರಿವು ತಾವು ಅವರುಗಳ ಅಧಿಕಾರಿ ಎಂದು ನಿರೂಪಿಸುವ ಛಲ ದಯಾನಂದರಲ್ಲಿ ಇನ್ನೂ ಸಿಟ್ಟು, ಉಕ್ಕಿ ಬರುವಂತೆ ಮಾಡಿತು. +ಆ ಅವಸ್ಥೆಯಲ್ಲಿ ತಾವೇನು ಮಾತಾಡುತ್ತಿದ್ದೇವೆಂಬುದು ಮರೆತರವರು. +“ಅವಳನ್ನು ಹುಡುಕುವದಲ್ಲ ಕಾಡಿನಲ್ಲೇ ಅವಳನ್ನೂ ಅವಳ ತಂಡವನ್ನು ನಾಮರೂಪವಿಲ್ಲದಂತೆ ಮಾಡಿಬಿಡಿ. +ಅದು ಅಷ್ಟು ಕಷ್ಟದ ಕೆಲಸವೆ!ನಿವೇಲ್ಲಾ ಏನು ಮಾಡುತ್ತಿದ್ದೀರಿ. +ಸ್ವಲ್ಪವಾದರೂ ಬುದ್ದಿ ಉಪಯೋಗಿಸಲಾಗುವುದಿಲ್ಲವೇ”ಗೃಹಸಚಿವರ ಮಾತು ಮುಗಿಯುತ್ತಿದ್ದಂತೆ ಪೋಲೀಸ್ ಅಧಿಕಾರಿಯರು ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. +ಅದಕ್ಕೇನು ಹೇಳಬೇಕೆಂದು ತಕ್ಷಣ ತೋಚಲಿಲ್ಲ. +ಗಂಭೀರ ಮುಖ ಮಾಡಿದ ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ ಅಷ್ಟೇ ಗಂಭೀರದನಿಯಲ್ಲಿ ಹೇಳಿದರು. +“ಹೌದು ಸರ್!ನಾವು ಆ ಬಗ್ಗೆ ಯೋಚಿಸಲೇ ಇರಲಿಲ್ಲ. +ಒಂದು ಕೆಲಸ ಮಾಡಬಹುದು” +“ಏನದು?ಅದರಿಂದ ಕಲ್ಲಕ್ಕ ಮತ್ತವಳ ತಂಡವನ್ನು ಬುಡಸಮೇತ ಮುಗಿಸಲು ಸಾಧ್ಯವೇ?”- ಅವರ ಮಾತು ಮುಗಿಯುತ್ತಲೇ ಗಂಭೀರ, ಆತುರದ ದನಿಯಲ್ಲಿ ಕೇಳಿದರು ಗೃಹಸಚಿವ ದಯಾನಂದರು. +ಅಷ್ಟೇ ಗಂಭೀರ ನಿಧಾನ ದನಿಯಲ್ಲಿ ಪ್ರತಿಕ್ರಿಯಿಸಿದರು ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ. +“ಪ್ರಯತ್ನಿಸಬಹುದು ಸರ್, ಅದಕ್ಕೆ ನಮ್ಮ ಸೈನ್ಯದ ಸಹಾಯಬೇಕು. +ಬರಿ ಇನ್‌ಫೆಂಟರಿಫೋರ್‍ಸ್ ಒಂದೇ ಸಾಲುವುದಿಲ್ಲ, ಏರ್‌ಪೋರ್ಸಿನ ನಾಲ್ಕಾರು ಸ್ಕ್ವಾರ್ಡ್‌ಗಳು ಬೇಕಾಗಬಹುದು. +ಒಂದು ತಿಂಗಳ ಆಪರೇಷನ್. +ಅದರಲ್ಲೂ ನಾವು ಸಫಲರಾಗಬಹುದೆಂದು ಹೇಳುವುದು ಕಷ್ಟ. +ಆ ಹೊತ್ತಿಗೆ ಕಲ್ಲಕ್ಕ ಮತ್ತವಳ ತಂಡದವರು ಪಟ್ಟಣದ ಜನಜಂಗುಳಿಯಲ್ಲಿ ಸೇರಿದರೂ ಸೇರಬಹುದು. +ನೀವು ಸೈನ್ಯದ ಸಹಾಯಕ್ಕೆ ಬರೆಯಿರಿ ಸರ್”ಅವರ ಗಂಭೀರ ಮಾತು ಮುಗಿದಾಗ ಈ ವ್ಯಕ್ತಿಗೆ ತನ್ನ ಕೆಲಸದ ಭಯವಿಲ್ಲವೇ ಎನಿಸಿತು ಮಿಕ್ಕಿಬ್ಬ ಪೋಲೀಸ್ ಅಧಿಕಾರಿಯರಿಗೆ. +ಸ್ಕ್ವಾಡಿನ ಮುಖ್ಯಸ್ಥ ಗಂಭೀರ ದನಿಯಲ್ಲಿ ಆಡಿದ ಹುಡುಗಾಟಿಕೆ ಮಾತಿನ ಅರಿವಾಗಲು ಗೃಹಸಚಿವರಿಗೆ ಸ್ವಲ್ಪ ಸಮಯ ಹಿಡಿಯಿತು. +ಅದು ಗೊತ್ತಾಗುತ್ತಿದ್ದಂತೆ ಮುಖ ಸಿಟ್ಟಿನಿಂದ ಗಂಟುಗಳು ಕಟ್ಟಿತು. +ಅದರ ಪರಿಣಾಮವಾಗೇ ಕುರ್ಚಿಯಿಂದ ಎದ್ದು ಅಬ್ಬರಿಸಿದರು. +“ನೀವು… ನೀವು… ಒಬ್ಬ ಸಾಮಾನ್ಯ ಪೋಲೀಸ್ ಅಧಿಕಾರಿ ನನ್ನೊಡನೆ ಹುಡುಗಾಟವಾಡುತ್ತಿದ್ದೀರಾ”ಆ ಅಬ್ಬರಿಕೆ ಇಡೀ ಚೇಂಬರನ್ನು ನಡುಗಿಸುವಂತಿತ್ತು. +ಇಂತಹ ರಾಜಕಾರಣಿಯರ ಕಾರಣವಾಗೇ ಕ್ರಾಂತಿಕಾರಿಯರು ಹುಟ್ಟಿಕೊಳ್ಳುತ್ತಾರೆ ಎಂದುಕೊಂಡರು ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ. +ಅಬ್ಬರಿಕೆಯ ಅಲೆಗಳು ನಂದುತಿದ್ದಂತೆ ಆವರೆಗೆ ಸುಮ್ಮನಿದ್ದ ಕ್ರೈಮ್‌ನ ಐಜಿ ಮಾತಾಡಿದರು. +“ನೋಡಿ ಸರ್!ನಾವು ಕಲ್ಲಕ್ಕ ಮತ್ತವಳ ತಂಡವನ್ನು ನಾಶ ಮಾಡಬೇಕು ತಾನೆ ಅದರ ಬಗ್ಗೆ ನಾವು ನಮ್ಮಲ್ಲೇ ವಿಚಾರವಿಮರ್ಶೆ ನಡೆಸಿ ಏನು, ಹೇಗೆ ಮಾಡುವುದೆಂದು ತೀರ್ಮಾನಿಸಿ ನಿಮಗೆ ಹೇಳುತ್ತೇವೆ ಸರಿ ತಾನೇ ಸರ್!”ಆ ಮಾತು ಗೃಹಸಚಿವ ದಯಾನಂದರಿಗೆ ಸ್ವಲ್ಪ ಸಮಾಧಾನ ತಂದಂತೆ ಕಂಡಿತು. +ನಿಧಾನವಾಗಿ ಕುರ್ಚಿಯಲ್ಲಿ ಕುಳಿತ ಅವರ ನೋಟ ಸ್ಕ್ವಾಡಿನ ಮುಖ್ಯಸ್ಥರ ಮೇಲೆ ಇತ್ತು. +ಅವರು ಅಲ್ಲಿ ನಡೆಯುತ್ತಿರುವ ಸಮಾವೇಶಕ್ಕೂ ತಮಗೂ ಯಾವ ಸಂಬಂಧವೂ ಇಲ್ಲದಂತೆ ತಲೆಕೆಳಗೆ ಮಾಡಿ ಕುಳಿತಿದ್ದರು. +ಆ ವ್ಯಕ್ತಿಯ ವರ್ಗಾವಣೆ ಖಂಡಿತವೆಂದುಕೊಂಡ ಕಮೀಶನರ್ ನಯವಿನಯದ ದನಿಯಲ್ಲಿ ತಮ್ಮ ನಿರ್ಣಯವನ್ನು ತಿಳಿಸಿದರು. +“ನೀವು ಅನುಮತಿಸಿದರೆ ಸರ್, ನಾವು ಕಲ್ಲಕ್ಕನನ್ನು ಹಿಡಿಯುವ ನಮ್ಮ ಯೋಜನೆಯನ್ನು ರೂಪಿಸಿ ಮತ್ತೆ ನಿಮ್ಮ ಮುಂದೆ ಹಾಜರಾಗುತ್ತೇವೆ, ಸರಿತಾನೆ ಸರ್!”ಗೃಹಸಚಿವರ ಮುಖಭಾವ ಇಬ್ಬರ ನಮ್ರ ಮಾತುಗಳಿಂದ ಸಾಕಷ್ಟು ಬದಲಾಗಿತ್ತು. +ನಿರ್ಣಯ ತೆಗೆದುಕೊಂಡಂತಹ ದನಿಯಲ್ಲಿ ಹೇಳಿದರು,“ಸರಿ!ಹೋಗಿ ಆದಷ್ಟು ಬೇಗ ಯೋಜನೆಯನ್ನು ರೂಪುಗೊಳಿಸಿ ಫೋನ್ ಮಾಡಿ.” +“ಕಲ್ಲಕ್ಕನ ಸಮಸ್ಯೆ ಪರಿಹಾರವಾಗುವರೆಗೂ ನಾವೇನೂ ಬೇರೆಯದನ್ನು ಯೋಚಿಸುವುದಿಲ್ಲ. +ಬರುತ್ತೇವೆ ಸರ್” ಎಂದರು ಕ್ರೈಮ್ಸ್‌ನ ಐ.ಜಿ. ಸಾಹೇಬರು. +ಆ ಮೂವರು ಪೋಲೀಸ್ ಅಧಿಕಾರಿಯರು ಗೃಹಸಚಿವರ ಚೇಂಬರ್‌ನಿಂದ ಹೊರಬಿದ್ದ ಮೇಲೆ ಹೇಳಿದರು ಕಮೀಷನರ್‌ ರಂಜಿತ್‌ಸಿಂಗ್. +“ನನ್ನ ಕಾರ್ಯಾಲಯದಲ್ಲಿ ಕುಳಿತು ಈ ವಿಷಯ ಮಾತಾಡುವ.”ಅದಕ್ಕೆ ತಮ್ಮ ಒಪ್ಪಿಗೆ ಸೂಚಿಸುವಂತೆ ತಲೆ ಹಾಕಿದರು ಮಿಕ್ಕಿಬ್ಬರು. +ಮೂರೂ ವಾಹನಗಳು ಅಲ್ಲಿಂದ ಕಮೀಷನರರ ಕಾರ್ಯಾಲಯದ ಕಡೆ ಓಡತೊಡಗಿದವು. +ಅಲ್ಲಿದ್ದ ಪೇದೆಯರು, ಇನ್ನಿತರ ಪೋಲೀಸ್ ಅಧಿಕಾರಿಯರು ಶಿಸ್ತಿನಿಂದ ಹಾಕುತ್ತಿದ್ದ ಸೆಲ್ಯೂಟ್‌ಗಳನ್ನು ಸ್ವೀಕರಿಸುತ್ತಾ ತಮ್ಮ ಕೋಣೆಯ ಮೊದಲ ಭಾಗದಲ್ಲಿ ಬಂದ ರಂಜೀತ್‌ಸಿಂಗ್ ಯಾರ ಫೋನು ಬಂದರೂ ತನಗೆ ಕನೆಕ್ಷನ್ ಕೊಡಬಾರದೆಂದು, ಯಾರು ಬಂದರೂ ಒಳಗೆ ಬಿಡಬಾರದೆಂದು ತಮ್ಮ ಕಾರ್ಯದರ್ಶಿಗೆ ಹೇಳಿ ಚೇಂಬರನ್ನು ಪ್ರವೇಶಿಸಿದರು. +ಅವರ ಹಿಂದೆಯೇ ಇದ್ದರು ಕ್ರೈಮ್‌ನ ಐ.ಜಿ. ಮತ್ತು ಸ್ಕ್ವಾಡಿನ ಮುಖ್ಯಸ್ಥರು. +ಸದ್ದಿಲ್ಲದಂತೆ ದಪ್ಪನೆಯ ಬಾಗಿಲು ಮುಚ್ಚಿಕೊಳ್ಳುತ್ತಿದ್ದಂತೆ ಹೇಳಿದರು ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ. +“ಇಂತಹ ರಾಜಕಾರಣಿಯರ ಮಾತುಗಳನ್ನು ಕೇಳುತ್ತಿದ್ದರೆ ಹೇಸಿಗೆ ಹುಟ್ಟುತ್ತದೆ. +ಬಂಡೇರಹಳ್ಳಿ ಮತ್ತು ಕಾಡಿನ ವಿಷಯವೇನೂ ತಿಳಿಯದ ಇವರು ಕ್ರಾಂತಿಕಾರಿಯರ ಬಗ್ಗೆ ಮಾತಾಡುತ್ತಾರೆ.” +ಇನ್ನೂ ಇಳಿಯದ ತಮ್ಮ ರೋಷವನ್ನು ಕಾರಿಕೊಳ್ಳುವಂತ್ತಿತ್ತವರ ಮಾತು. +“ಏನೇ ಆಗಲಿ ನೀವು ಹಾಗೆ ಮಾತಾಡಬಾರದಾಗಿತ್ತು” ಹೇಳಿದರು ಕಮೀಷನರ್. +“ಆದದ್ದು ಆಗಿ ಹೋಯಿತು, ಈಗ ಅದರ ಮಾತು ಬೇಡ. +ನಮ್ಮೆದುರಿರುವ ಸಮಸ್ಯೆ ಬಗ್ಗೆ ಯೋಚಿಸುವ” ತಕ್ಷಣ ಮುಖ್ಯ ವಿಷಯಕ್ಕೆ ಬಂದರು ಕ್ರೈಮ್‌ನ ಐ.ಜಿ. “ನಿಜ! +ಮೊದಲು ಕಾಫಿ ನೀರು ತರೆಸಿ” ಹೇಳಿದ್ದ ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ. +ಆ ಮೂವರು ಪೋಲೀಸ್ ಅಧಿಕಾರಿಗಳ ಜವಾಬ್ದಾರಿಗಳು ಬೇರೆ ಬೇರೆಯಾಗಿದ್ದರೂ ಅವರೆಲ್ಲಾ ಐ.ಪಿ.ಎಸ್.ಅಧಿಕಾರಿಯರು ವಯಸ್ಸು ಕೂಡ ಹೆಚ್ಚುಕಡಿಮೆ ಒಂದೇ ಎನ್ನಬಹುದು. +ರಾಜಕಾರಣಿಯರ ಮನೋಧರ್ಮದ ಪ್ರಕಾರ ಅವರ ಹುದ್ದೆಗಳು ಯಾವಾಗ ಹೇಗೆ ಬದಲಾಗುತ್ತವೆ ಎನ್ನುವುದು ಹೇಳಲಾಗುವುದಿಲ್ಲ. +ಬಹುಕಾಲದಿಂದ ಪೋಲೀಸ್ ಖಾತೆಯಲ್ಲಿ ದುಡಿಯುತ್ತಿದ್ದ ಅವರಿಗೆ ಒಬ್ಬರ ಮನೋಭಾವ ಇನ್ನೊಬ್ಬರಿಗೆ ಚೆನ್ನಾಗಿ ಗೊತ್ತಿತ್ತು. +ನೀರು ಕಾಫಿ ಕುಡಿದಾದನಂತರ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು. +“ಇದು ಇಷ್ಟು ಬೇಗ, ಇಷ್ಟು ಅವಸರದಲ್ಲಿ ಆಗುವ ಕೆಲಸವಲ್ಲ, ಆ ಕಲ್ಯಾಣಿಯ ಹುಡುಕಾಟದಲ್ಲಿ ನಮ್ಮವರು ಎಷ್ಟು ಜನ ಸತ್ತಿದ್ದಾರೆಂಬುವುದೂ ಆ ದಯಾನಂದರಿಗೆ ಗೊತ್ತಿಲ್ಲ. +ಅವರನ್ನೇ ಬಂಡೇರಹಳ್ಳಿಯ ಕಾಡಿನ ನಡುವೆ ಬಿಟ್ಟು ಬಂದರೆ ಗೊತ್ತಾಗುತ್ತದೆ.” +“ಅದು ನಮಗೂ ಗೊತ್ತು! +ಈಗ ನಾವು ಕ್ರಾಂತಿಕಾರಿಯರನ್ನು ಕಾಡಿನಲ್ಲಿ ಅಟ್ಟಿಸಿಕೊಂಡು ಹೋಗುವುದು ಬಿಟ್ಟು ಬೇರೆ ಯಾವುದಾದರೂ ವಿಧಾನವನ್ನು ಯೋಚಿಸಬೇಕು. +ಅಂತಹ ಯಾವುದಾದರೂ ಯೋಜನೆ ಹಾಕಬೇಕು” ಹೇಳಿದರು ಕಮೀಷನರ್‌ ರಂಜೀತ. +ಅದೇ ಚಿಂತನೆಯಲ್ಲಿ ಮೂವರೂ ತೊಡಗಿದರು. +ದೊಡ್ಡ ಚೇಂಬರಿನಲ್ಲಿ ಮೌನ. +ತಮ್ಮ ಹಣೆಯನ್ನು ಎಡಗೈಯ ಎರಡೂ ಬೆರಳುಗಳಿಂದ ಉಜ್ಜಿಕೊಳ್ಳುತ್ತಿದ್ದ ಕ್ರೈಮ್ಸ್‌ನ ಐ.ಜಿ.ಸುಮಾರು ಮೂರು ನಿಮಿಷಗಳು ಸಂದಿದ ಮೇಲೆ ಒಮ್ಮೆಲೆ ಏನೋ ನೆನಪಾದಂತೆ ಹೇಳಿದರು. +“ನಾವು ತೇಜ್‌ನನ್ನು ಈ ಕೆಲಸಕ್ಕೆ ಯಾಕೆ ಉಪಯೋಗಿಸಿಕೊಳ್ಳಬಾರದು” ಇನ್ಸ್‌ಪೆಕ್ಟರ್‌ ತೇಜ್‌ನ ಬಗ್ಗೆ ಅಲ್ಲಿದ್ದ ಮೂವರೂ ಪೋಲೀಸ್ ಅಧಿಕಾರಿಯರಿಗೂ ಚೆನ್ನಾಗಿ ಗೊತ್ತಿತ್ತು. +ಡಿ.ಜಿ.ಯನ್ನೇ ನೋಡುತ್ತಿದ್ದ ಸ್ಕ್ವಾಡಿನ ಮುಖ್ಯಸ್ಥ ಕೆಲಕ್ಷಣಗಳ ಬಳಿಕ ಕೇಳಿದರು. +“ಹೇಗೆ?”“ಬುದ್ಧಿವಂತ, ಧೈರ್ಯಶಾಲಿ, ಮನಸ್ಸು ಮಾಡಿದರೆ ಅವನೊಬ್ಬನೇ ಅವರ ಠಿಕಾಣೆಯನ್ನು ಪತ್ತೆ ಹಚ್ಚಬಹುದು” ಹೇಳಿದರು ಕಮೀಶನರ್. +“ನಿಜ!ಅವನು ಸತ್ತರೂ ಅಳಲು ಹಿಂದೆ ಮುಂದೆ ಯಾರೂ ಇಲ್ಲ” ವ್ಯಂಗ್ಯದ ದನಿಯಲ್ಲಿ ತಮ್ಮ ಮಾತನ್ನು ಸೇರಿಸಿದರು ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ. +ಕ್ರಾಂತಿಕಾರಿಯರ ಬಗ್ಗೆ ಅವರಿಗೆ ಗೊತ್ತಿದಷ್ಟು ಚೆನ್ನಾಗಿ ಅಲ್ಲಿದ್ದ ಮಿಕ್ಕಿಬ್ಬರಿಗೆ ಗೊತ್ತಿರಲಿಲ್ಲ. +ತೇಜ್‌ನ ಚಿಂತನೆಯಲ್ಲಿ ತೊಡಗಿದರು ಅಲ್ಲಿದ್ದ ಮೂವರೂ. +ಹಲವು ಕ್ಷಣಗಳ ಮೌನವನ್ನು ಮುರಿದರು ಐ.ಜಿ. +“ನನಗೆ ತೇಜ್‌ನ ಬಗ್ಗೆ ಚೆನ್ನಾಗಿ ಗೊತ್ತು. +ಅವನು ಅಷ್ಟು ಸುಲಭವಾಗಿ ಸಾಯುವವನಲ್ಲ. +ಈಗಾಗಲೇ ಅವನನ್ನು ಮುಗಿಸಲು ಯತ್ನಿಸಿದ ಹಲವರು ತಾವೇ ಸಾವನ್ನು ಅಪ್ಪಿದ್ದಾರೆ” ಆತ್ಮವಿಶ್ವಾಸದಿಂದ ತುಂಬಿತ್ತವರ ಮಾತು. +“ನಾವು ಈ ಬಗ್ಗೆ ಯೋಚಿಸಬಹುದು. +ಅದಕ್ಕೆ ತಮ್ಮ ಮಾತನ್ನೂ ಸೇರಿಸಿದರು ಕಮೀಶನರ್. +ಅವರಿಬ್ಬರ ಕಡೆ ನೋಡುತ್ತಾ ಮಾತಾಡಿದರು ಸ್ಕ್ವಾಡ್‍ನ ಮುಖ್ಯಸ್ಥ ಶ್ರೀವಾಸ್ತವ. +“ಸರಿ!ಯೋಚಿಸುವ, ಅವನೊಬ್ಬನೇ ಈ ಕೆಲಸ ಹೇಗೆ ಸಾಧಿಸಬಲ್ಲ” +“ಅವನನ್ನೇ ಕರೆಸಿ ಅದರ ಬಗ್ಗೆ ಚರ್ಚಿಸಬಹುದಲ್ಲ! +ಅವನೂ ತನ್ನ ಸಲಹೆಗಳನ್ನು ಕೊಡಬಹುದು” ಹೇಳಿದರು ಐ.ಜಿ. +ಮತ್ತೆ ಅವರ ಎರಡು ಬೆರಳುಗಳು ಹಣೆಯನ್ನು ನೀವಿಕೊಳ್ಳುವ ಕೆಲಸ ಆರಂಭಿಸಿದವು. +“ಮೊದಲು ಅವನಿಗೆ ಈ ಕೆಲಸದಲ್ಲಿರುವ ಅಪಾಯದ ಪೂರ್ತಿ ಅರಿವು ಮಾಡಿಕೊಡಬೇಕು. +ಅದನ್ನು ಕೇಳಿದ ಬಳಿಕ ಅವನು ಈ ಕೆಲಸಕ್ಕೆ ಒಪ್ಪಿಕೊಂಡರೆ ಮಾತನ್ನು ಮುಂದುವರೆಸಬಹುದು. +ಈವರೆಗೆ ಸಾಹಸದ ಕೆಲಸಗಳನ್ನು ಮಾಡಿ ಅವನು ಬದುಕಿ ಉಳಿದಿರುವುದೇ ಒಂದು ಪವಾಡ. +ಅವನು ಅನುಮತಿಸಿದರೆ ಮುಂದಿನ ಯೋಜನೆಯ ಬಗ್ಗೆ ಚರ್ಚಿಸಬಹುದು” ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು. +ಅದಕ್ಕೆ ಕಮೀಶನರ್‌ರಿಂದ ಕೂಡಲೇ ಉತ್ತರ ಬಂತು. +“ಅವನು ಒಪ್ಪಿಕೊಳ್ಳುತ್ತಾನೆ ಅದರಲ್ಲಿ ನನಗೆ ಸಂದೇಹವಿಲ್ಲ.” +“ಅವನನ್ನೇ ಬಲಿಪಶುವನ್ನಾಗಿ ಮಾಡುವುದಿದ್ದರೆ ಕರೆಸಿ, ಮಾತಾಡುವ” +ಇನ್ಸ್‌ಪೆಕ್ಟರ್ ಉತೇಜ್‌ನನ್ನು ಬಹುಜನ ತೇಜ್ ಎಂದೇ ಕರೆಯುತ್ತಿದ್ದರು. +ಸುಮಾರು ಆರು ಅಡಿ ಎತ್ತರದ ಅವನದು ದೃಢವಾದ ಅಂಗಸೌಷ್ಟವ. +ಅಷ್ಟೇ ಆಕರ್ಷಕ ಮುಖ. +ಅವನು ಪೋಲೀಸ್ ಯುನಿಫಾರ್ಮ್‌ನಲ್ಲಿರುತ್ತಿದ್ದುದು ತೀರ ವಿರಳ. +ಸಿ.ಸಿ.ಎಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಪೋಲೀಸರ ಪೋಷಾಕದ ಅವಶ್ಯಕತೆ ಇಲ್ಲ. +ಯಾವಾಗಲೂ ನಗುತ್ತಾ, ನಗಿಸುತ್ತಾ ಇರುತಿದ್ದ ಅವನನ್ನು ಪರಿಚಯವಿಲ್ಲದವರು ಪೋಲೀಸ್ ಖಾತೆಗೆ ಸೇರಿದವನೆಂದು ಗುರುತಿಸುವುದು ಕಷ್ಟ. +ಹಾಗೇ ಅವನು ಏನು ಮಾತಾಡುತ್ತಾನೆ ಎಂಬುವುದೂ ಯಾರೂ ಊಹಿಸಲಾರರು. +ಎಂತೆಂತಹ ಹೇಮಾ ಹೇಮೀ ರೌಡಿಯರ ಬಾಯಿಬಿಡಿಸಿದ ಶ್ರೇಯ ಅವನದ್ದಾಗಿತ್ತು. +ಪಿ ಏಜೆಂಟರನ್ನು ಬಂಧಿಸಿ, ಅವರ ಬಾಯಿಬಿಡಿಸಿ ಹತ್ತು ಕೆ.ಜಿ.ಆರ್.ಡಿ.ಎಕ್ಸ್‌ನ್ನು ವಶಪಡಿಸಿದ. +ಆ ಇಬ್ಬರ ಬಂಧನದಿಂದಾಗಿ ಪಟ್ಟಣದ ಹತ್ತಾರು ಯುವಕರು ಅವನ ಜಾಲದಲ್ಲಿ ಸಿಕ್ಕಿಬಿದ್ದಿದ್ದರು. +ಪಟ್ಟಣದಲ್ಲಿ ಆಗಲಿರುವ ಮತಕಲಹಗಳ ವಿಷಯ ಬಯಲಾಗಿತ್ತು. +ಅದರಿಂದಾಗಿ ಅವನ ಮೇಲೆ ಎರಡು ಸಲ ಕೊಲೆಯ ಯತ್ನಗಳು ನಡೆದಿದ್ದವು. +ಅದರ ವಾಸನೆಯನ್ನು ಮೊದಲೇ ಗ್ರಹಿಸಿದ ತೇಜಾ ಅದರಿಂದ ತಪ್ಪಿಸಿಕೊಂಡಿದ್ದ. +ಅವನ ನಗುವ, ನಗಿಸುವಷ್ಟು ಸ್ವಭಾವದ ಕಾರಣ ಎಷ್ಟೋ ಅಪರಾಧಿಗಳು ಅವನ ಮಾತಿಗೆ ಮೋಸಹೋಗಿ ಅವನಿಗೆ ಬಿದ್ದಿದ್ದರು. +ಮೂವರು ಹಿರಿಯ ಪೋಲೀಸ್ ಅಧಿಕಾರಿಗಳೆದುರು ಕುಳಿತಿದ್ದ ತೇಜ. +ಅವನಿಗೆ ಕಲ್ಲಕ್ಕ ಮತ್ತು ತಾವು ಯೋಚಿಸಿದ ಯೋಜನೆಯ ಬಗ್ಗೆ ಕ್ಲಪ್ತವಾದ ವಿವರ ಕೊಟ್ಟು, ಆ ಕೆಲಸವನ್ನು ಮಾಡುವನೇ ಎಂದು ಕೇಳಿದರು ಕಮೀಷನರ್. +ಕೆಲಕ್ಷಣಗಳು ಮಾತ್ರ ಯೋಚಿಸಿದ ತೇಜಾ ಆ ಕೆಲಸ ಮಾಡಲು ಒಪ್ಪಿಕೊಂಡಿದ್ದ. +ಅವನನ್ನೇ ನೋಡುತ್ತಿದ್ದ ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ ಕರುಣಾಜನಕ ನಗೆಯನ್ನು ತುಟಿಗಳ ಮೇಲೆ ತಂದುಕೊಂಡು ಹೇಳಿದರು. +“ನೀನು ಸಾವನ್ನು ಅಪ್ಪಲು ಹೋಗುತ್ತಿರುವೆ, ಅದು ನೆನಪಿಡು.” +“ಅದು ಬಲವಂತವಾಗಿ ಬಂದು ನನ್ನನ್ನು ಅಪ್ಪುವ ಮೊದಲು ನಾವೇ ಹೋಗಿ ಅದನ್ನು ಅಪ್ಪುವುದು ಒಳ್ಳೆಯದಲ್ಲವೇ?” ಅದಕ್ಕೆ ನಗುತ್ತಲೇ ಉತ್ತರಿಸಿದ ತೇಜಾ. +“ಈ ಕೆಲಸ ಹೇಗೆ ಮಾಡುತ್ತಿ?” ಪ್ರಶ್ನಿಸಿದರು ಕಮೀಷನರ್ ಸಾಹೇಬರು. +“ನನಗೆ ಮೊದಲು ಈ ಕಲ್ಲಕ್ಕನ ಎಲ್ಲಾ ವಿವರಗಳು ಬೇಕು. +ನಂತರ ಸ್ಕ್ವಾಡಿನ ಚೀಫಿನೊಡನೆ ಮಾತಾಡಿ ಯೋಜನೆ ರೂಪಿಸಬಹುದು” ಹೇಳಿದ ತೇಜಾ. +“ಹಾಗಾದರೆ ಇವತ್ತಿನ ಮಟ್ಟಿಗೆ ಈ ಕೆಲಸ ಮುಗಿದ ಹಾಗಾಯಿತು” ಹೇಳಿದರು ಕ್ರೈಮ್ಸ್‌ನ ಐ.ಜಿ. +“ನಾ ನಿನಗೆ ಬೇಕಾದ ಎಲ್ಲಾ ವಿವರ ಕೊಡುತ್ತೇನೆ. +ಆರಾಮವಾಗಿ ಯೋಜನೆ ಹಾಕುವ” ಹೇಳಿದರು ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ. +ಅವರು ಕಮೀಶನರ್ ಸಾಹೇಬರ ಚೆಂಬರಿನಲ್ಲಿ ಬಂದಾಗಿನಿಂದ ಮೊದಲ ಬಾರಿ ಟೆಲಿಫೋನಿನ ಗಂಟೆ ಬಾರಿಸತೊಡಗಿತು. +ಯಾವುದೋ ಮುಖ್ಯ ವ್ಯಕ್ತಿಯದೇ ಕರೆ ಇರಬಹುದೆಂದುಕೊಳ್ಳುತ್ತಾ ರಿಸೀವರನ್ನು ಎತ್ತಿಕೊಂಡರು ಕಮೀಷನರ್. +“ಸರ್! ಸಿ.ಎಂ.ಸಾಹೇಬರು ಲೈನಿನಲ್ಲಿದ್ದಾರೆ” ಎಂದ ಅವರ ಸೆಕ್ರೆಟರಿ ಸಂಪರ್ಕ ಮುರಿದ. +“ಹಲೋ ಸರ್ ನಾನು ರಂಜೀತ್ ಸಿಂಗ್…”“ಹೊಂ ಮಿನಿಸ್ಟರಿಗೆ ಹೇಳಿದಂತೆ ಯಾವುದಾದರೂ ಯೋಜನೆ ರೂಪಿಸಿರುವಿರೇ?” ಅವರ ಮಾತನ್ನು ಅರ್ಧಕ್ಕೆ ತಡೆದು ಕೇಳಿದರು ಸಿ.ಎಂ. ಸಾಹೇಬರು. +“ಹೂಂ!ಸರ್!ಅದೀಗ ಸ್ಪಷ್ಟ ರೂಪ ತಾಳುತ್ತಿದೆ. +ಎಲ್ಲರೂ ಇಲ್ಲೇ ಇದ್ದಾರೆ. +ಈ ರಾತ್ರಿಯವರೆಗೆ ಎಲ್ಲವೂ ನಿಖರವಾಗಬಹುದು” ಬಹು ವಿನಯದ ದನಿಯಲ್ಲಿ ಹೇಳಿದರು ಕಮೀಷನರ್. +ಸಾಹೇಬರಿಗೆ ವಿಷಯ ತಿಳಿಸಿರಬಹುದೇ ಎಂದುಕೊಳ್ಳುತ್ತಿದ್ದಾಗ ಸಿ.ಎಂ.ಸಾಹೇಬರ ದನಿ ಕೇಳಿಬಂತು. +“ಹೋಂ ಮಿನಿಸ್ಟರ್‌ರು ಏನೇನು ಮಾತಾಡಿದರೆಂಬುವುದು ನನಗೆ ಗೊತ್ತು. +ನಿಮ್ಮ ಸಂಗಡಿಗರಿಗೆ ಅದರ ಯೋಚನೆ ಬಿಟ್ಟು ಕೆಲಸ ಮುಂದುವರೆಸಲು ಹೇಳಿ, ಈಗಿನಿಂದ ಕೆಲಕಾಲ ಹೋಂಮಿನಿಸ್ಟರಿಯನ್ನು ನಾನೇ ನೋಡಿಕೊಳ್ಳ ಬೇಕೆಂದುಕೊಂಡಿದ್ದೇನೆ. +ನಿಮ್ಮ ಯೋಜನೆ ಪೂರ್ಣ ನಿಖರರೂಪ ತಾಳಿದ ಕೂಡಲೇ ಫೋನ್ ಮಾಡಿ, ಭೇಟಿಯಾಗಿ ಮಾತಾಡುವ… +ರಾತ್ರಿ ಎಷ್ಟು ಹೊತ್ತಾದರೂ ಚಿಂತೆ ಇಲ್ಲ ಫೋನ್ ಮಾಡಿ” ಎಂದ ಸಿ.ಎಂ.ಸಾಹೇಬರು ತಮ್ಮ ಉದ್ದನೆಯ ಮಾತು ಮುಗಿಸಿ ಸಂಪರ್ಕ ಮುರಿದರು. +ಅವರು ಹೇಳಿದ್ದನ್ನೇ ಮೆಲುಕು ಹಾಕುತ್ತಾ ರಿಸೀವರನ್ನು ಕೆಳಗಿಟ್ಟರು ಕಮೀಷನರ್‌. +ಮಾತು ಮುಗಿಯುವವರೆಗೂ ತಮ್ಮನ್ನೇ ನೋಡುತ್ತಲಿದ್ದ ಅಲ್ಲಿ ಕುಳಿತವರಿಗೆ ಸಿ.ಎಂ.ಸಾಹೇಬರು ಹೇಳಿದ ಮಾತನ್ನು ಹೇಳಿದರು ಕಮೀಷನರ್, ಅವರ ಮಾತು ಮುಗಿಯುತ್ತಲೇ ಹೇಳಿದರು ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ. +“ಹೋಂ ಮಿನಿಸ್ಟರ್‌ರ ದಡ್ಡತನ ಅವರಿಗೆ ಗೊತ್ತಾದ ಹಾಗಿದೆ.” +“ಅದರಲ್ಲಿ ಸಂದೇಹವಿಲ್ಲ. +“ಇಂತಹ ದಕ್ಷ, ಬುದ್ಧಿವಂತ ಸಿ.ಎಂ.ಸಾಹೇಬರು ಈ ದಯಾನಂದನನ್ನು ಇಷ್ಟು ದಿನ ಹೇಗೆ ಸಹಿಸಿದರೆಂಬುವುದೇ ಆಶ್ಚರ್ಯ” ಹೇಳಿದರು ಕಮೀಷನರ್. +“ಈ ರಾಜಕೀಯದ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ. +ತೇಜಾನನ್ನು ನಾನೀಗ ಜತೆಗೆ ಕರೆದೊಯ್ಯುತ್ತೇನೆ. +ನಾವು ಯೋಜನೆ ರೂಪಿಸಿದ ನಂತರ ಫೋನ್ ಮಾಡುತ್ತೇನೆ” ತಮ್ಮ ಕುರ್ಚಿಯಿಂದ ಏಳುತ್ತಾ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು. +ತಾನೂ ಎದ್ದು ತೇಜಾ ಅವರಿಂದ ದೂರ ಸರಿದು ನಿಂತ. +“ರಾತ್ರಿ ಎಷ್ಟು ಹೊತ್ತಾದರೂ ಫೋನ್ ಮಾಡಿ, ನಾನು ಸಿ.ಎಂ.ಸಾಹೇಬರಿಗೆ ಎಲ್ಲ ವಿವರ ಕೊಡಬೇಕು” ತಾವು ಕುರ್ಚಿಯಿಂದ ಏಳುತ್ತಾ ಹೇಳಿದರು ಕಮೀಷನರ್. + ಐ.ಜಿ.ಸಾಹೇಬರೂ ಎದ್ದ ಬಳಿಕ ಬಿಡುಗಡೆಯ ಶಿಷ್ಟಾಚಾರ ಮುಗಿಯಿತು. +ಕಮೀಷನರ್‌ರಿಗೆ ಆಕರ್ಷಕ ಭಂಗಿಯಲ್ಲಿ ಸೆಲ್ಯೂಟ್ ಹೊಡೆದು ಆ ಕೋಣೆಯಿಂದ ಹೊರಬಿದ್ದ ತೇಜಾ. +ಸ್ಕ್ವಾಡಿನ ಮುಖ್ಯಸ್ಥರ ವಾಹನದಲ್ಲಿ ಅವರ ಬದಿಗೆ ಅವನು ಕುಳಿತ ಮೇಲೆ ಅದು ಇನ್ನೊಂದು ಪೋಲೀಸ್ ಕಾರ್ಯಾಲಯದ ಕಡೆ ಓಡತೊಡಗಿತು. +ತೇಜಾ ತನ್ನ ಮನೆಯಲ್ಲಿ ಟೇಬಲಿನ ಎದುರು ಕುಳಿತಿದ್ದ. +ಟೇಬಲ್ ಲ್ಯಾಂಪ್ ಪ್ರಖರವಾದ ಬೆಳಕನ್ನು ಚೆಲ್ಲುತ್ತಿತ್ತು. +ಅವನೆದುರು ಹಲವಾರು ಕಪ್ಪು ಬಿಳುಪು ಮತ್ತು ಬಣ್ಣದ ಫೋಟೋಗಳಿದ್ದವು. +ಪ್ರತಿ ಫೋಟೋವನ್ನು ತದೇಕಚಿತ್ತದಿಂದ ನೋಡುತ್ತಿದ್ದ. +ಅವು ಕಲ್ಯಾಣಿ, ಕಲ್ಲಕ್ಕ, ಕಾಳಿ, ಜಗಧಾಂಬೆ ಎಂದು ಕರೆಯಲ್ಪಡುವ ಯುವತಿಯ ಫೋಟೋಗಳು. +ಪೋಲೀಸ್ ಖಾತೆಯವರಿಗೆ ಕಲ್ಯಾಣಿಗೆ ಹುಟ್ಟಿಕೊಂಡ ಅಷ್ಟು ಹೆಸರುಗಳು ಮಾತ್ರ ಗೊತ್ತು ಇನ್ನೂ ಎಷ್ಟು ಹೆಸರುಗಳಲ್ಲಿ ಅವಳು ಯಾವ ಯಾವ ಕೆಲಸಗಳನ್ನು ಮಾಡಿದ್ದಾಳೆಂಬ ಮಾಹಿತಿ ಇಲ್ಲ. +ಅವಳು ಎಂಟು ವರ್ಷದವಳಾಗಿದ್ದಾಗಿನಿಂದ ಬಿ.ಎಸ್.ಸಿ.ಪಾಸಾಗುವವರೆಗಿನ ಫೋಟೋಗಳನ್ನು ಸಂಗ್ರಹಿಸುವಲ್ಲಿ ಸಫಲವಾಗಿತ್ತು ಪೋಲೀಸ್ ಖಾತೆ. +ದೊಡ್ಡ ಕಣ್ಣುಗಳ ಸುಂದರ ಹುಡುಗಿ. +ಅದೂ ಅಲ್ಲದೇ ಒಳ್ಳೆಯ ಮನೆತನದವಳು. +ಇಂತಹವಳು ಕ್ರಾಂತಿಕಾರಿ ಚಳುವಳಿ ಸೇರಿದ್ದೇಕೆಂಬುವುದೇ ಆಶ್ಚರ್ಯ. +ಎಲ್ಲಾ ಫೋಟೋಗಳನ್ನು ನೋಡಿದ ಅವನು ಬರೀ ಅದರಿಂದಲೇ ದಣಿದಂತೆ ಕುರ್ಚಿಯ ಹಿಂದೆ ತಲೆ ಆನಿಸಿ ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿಬಿಟ್ಟ. +ಅವಳ ಫೋಟೋಗಳನ್ನು ಜಾಗ್ರತೆಯಾಗಿ ಒಂದುಕಡೆ ಜೋಡಿಸಿ ಕವರಿನಲ್ಲಿಟ್ಟು ಕಲ್ಯಾಣಿಯ ಬಗ್ಗೆ ವಿವರವಿದ್ದ ಫೈಲನ್ನು ಬಿಚ್ಚಿದ ತೇಜಾ. +ಮತ್ತೆ ತಲೆ ಟೇಬಲಿನ ಮೇಲೆ ಬಾಗಿತು. +ಬಿ.ಎಸ್.ಸಿ.ಕೊನೆಯ ವರ್ಷದ ಪರೀಕ್ಷೆಗಳು ಮುಗಿದ ಎರಡು ದಿನಗಳ ನಂತರವೇ ಮನೆಯಿಂದ ಕಾಣೆಯಾಗಿದ್ದಳು ಕಲ್ಯಾಣಿ. +ಅವಳ ಮನೆಯವರು ಗಾಬರಿಯಾಗದಿರಲೆಂದು ಒಂದು ಚೀಟಿ ಬರೆದಿಟ್ಟು ಹೋಗಿದ್ದಳು. +ತನ್ನ ಬಗ್ಗೆ ಗಾಬರಿಯಾಗಬಾರದು, ತಾನು ಎಲ್ಲಿದ್ದರೂ ಸುಖವಾಗಿರುತ್ತೇನೆ. +ತನ್ನ ಇನ್ನು ಮರೆತುಬಿಡಬೇಕೆಂದು ಮಾತ್ರ ಇತ್ತು ಅದರಲ್ಲಿದ್ದ ವಕ್ಕಣೆ. +ಬೆಳೆದ ಸುಂದರ ಮಗಳು ಹೀಗೆ ಏಕಾ‌ಏಕಿ ಮನಬಿಟ್ಟು ಹೋಗಿದ್ದು ಅವರ ತಂದೆ ತಾಯಿಯರಲ್ಲಿ ಸ್ವಾಭಾವಿಕವಾಗಿ ಗಾಬರಿ ಹುಟ್ಟಿಸಿತ್ತು. +ಮೊದಲು ಅವರ ತಲೆಯಲ್ಲಿ ಬಂದದ್ದು ಯಾರನ್ನಾದರೂ ಕಟ್ಟಿಕೊಂಡು ಓಡಿಹೋಗಿರಬಹುದೇ ಎಂಬ ವಿಚಾರ. +ಆದರೆ ಅದಕ್ಕೆ ಅವರಲ್ಲಿ ಯಾವ ಆಧಾರವೂ ಇರಲಿಲ್ಲ. +ಗಂಭೀರವಾಗಿ ತನ್ನ ಓದಿನಲ್ಲಿ ತನ್ಮಯಳಾಗಿರುತಿದ್ದ ಅವಳು ಒಂದೊಂದು ಸಲ ಇವರೆಗೂ ತನ್ನಷ್ಟು ಬುದ್ಧಿ ಇರುವ ಯಾವ ಗಂಡೂ ತನಗೆ ಭೇಟಿಯಾಗಿಲ್ಲವೆಂದು ಹೇಳುತ್ತಿದ್ದಳು. +ಬೇರೆ ಹುಡುಗಿಯರ ಹಾಗೆ ಸಿನಿಮಾಗಳಿಗೆ ಹೋಗುವುದು, ಹೊಸ ಮಾದರಿಯ ಬಟ್ಟೆಗಳನ್ನು ತೊಟ್ಟು ಮೆರೆಯುವ ಚಟವಿರಲಿಲ್ಲ. +ಯಾರೋಡನೆ ಎಷ್ಟು ಬೇಕೋ ಅಷ್ಟು ಮಾತಾಡುತಿದ್ದ ಅವಳಿಗೆ ಯಾವ ವಿಶೇಷ ಸ್ನೇಹಿತ, ಸ್ನೇಹಿತೆಯರೂ ಇರಲಿಲ್ಲ. +ಅದರಿಂದ ಯಾರೊಡನಾದರೂ ಓಡಿಹೋಗಿರಬಹುದು ಎಂಬ ವಿಚಾರಕ್ಕೆ ಅರ್ಥವಿಲ್ಲವೆನಿಸಿತ್ತು. +ಕಲ್ಯಾಣಿಯು ಚಿಕ್ಕಂದಿನಲ್ಲೇ ಅವಳೊಬ್ಬ ವಿಶೇಷ ಹುಡುಗಿ ಎಂಬ ನಿರ್ಣಯಕ್ಕೆ ಬಂದಿದ್ದರವರ ತಂದೆ. +ಅಷ್ಟು ಬುದ್ಧಿವಂತ ಚೂಟಿ ಹುಡುಗಿಯನ್ನು ತಾವು ಮೊದಲೆಂದೂ ನೋಡಿಲ್ಲವೆಂದು ಮಾತಾಡಿಕೊಂಡಿದ್ದರು. +ಅವರ ಅಕ್ಕಪಕ್ಕದವರು ಮತ್ತು ಬಂಧುಬಳಗ, ಹೈಸ್ಕೂಲನ್ನು ತಲುಪುತ್ತಿದಂತೆ ಅವಳು ಸ್ಕೂಲಿನ ಪುಸ್ತಕಗಳಿಗಿಂತ ಹೆಚ್ಚು ಬೇರೆ ಸಿಕ್ಕ ಸಿಕ್ಕ ಪುಸ್ತಕಗಳನ್ನು ಓದುತ್ತಿದ್ದಳು. +ಅದನ್ನು ಗಮನಿಸಿದ್ದರೂ ಹೆಚ್ಚು ತಲೆಕೆಡಿಸಿ ಕೇಳಲು ಹೋಗಿರಲಿಲ್ಲ ಅವಳ ತಂದೆ. +ಯಾಕೆಂದರೆ ಅವಳು ಓದದಿದ್ದರೂ ಫಸ್ಟ್ ಕ್ಲಾಸಿನಲ್ಲಿ ಪಾಸಾಗುತ್ತಾಳೆ ಎಂಬ ನಂಬಿಕೆ ಅವರಿಗೆ. +ಮಗಳು ಕಾಣೆಯಾದ ವಿಷಯ ಮನೆಯವರು ಪೋಲೀಸಿನವರಿಗೆ ತಿಳಿಸಲಿಲ್ಲ. +ಬುದ್ಧಿವಂತಳಾದ ಮಗಳು ಎಂದಾದರೂ ತಿರುಗಿ ಬರಬಹುದೆಂಬ ಆಸೆ. +ಅವಳು ಮನೆಬಿಟ್ಟು ಹೋದ ಕೆಲದಿನಗಳು ತಾಯಿ ತನ್ನ ಮನದಲ್ಲಿನ ಶೋಕವನ್ನೆಲ್ಲಾ ಹೊರಗೆಡಹಿದ್ದರು. +ತಂದೆ ದಿಕ್ಕು ತೋಚದಂತೆ ಮೌನಿಯಾಗಿದ್ದರು. +ಅಣ್ಣ ಅತ್ತಿಗೆಯರದೂ ಅದೇ ಗತಿ. +ಬರುಬರುತ್ತಾ ಅವಳು ಮನೆಯಲ್ಲಿ ಇಲ್ಲದಿರುವಿಕೆ ಮಾಮೂಲಾಗಿ ಬಿಟ್ಟಿತು. +ತಮ್ಮ ಊಹೆಗಳಲ್ಲಿ ತೇಲಿಹೋಗಿ ಬಾಯಿಗೆ ಬಂದಂತೆ ಆಡಿಕೊಂಡ ನಾಲುಗೆಗಳೂ ದಣಿದು ಹೊಸ ವಿಷಯಗಳ ಕಡೆ ಗಮನಹರಿಸಿದವು. +ದೊಡ್ಡಣ್ಣನ ತಂಡದವರೊಡನೆ ಒಬ್ಬ ಹೆಣ್ಣು ಇದ್ದಾಳೆಂಬ ಸುದ್ದಿ ಆಂಟಿ ರವೂಲ್ಯಷನರಿ ಸ್ಕ್ವಾಡಿನವರ ಕಿವಿಗೆ ಬಿದ್ದಾಗ ಅವಳಾರಿರಬಹುದೆಂಬ ಅನ್ವೇಷಣೆ ಆರಂಭಿಸಿತು ಪೋಲೀಸ್ ಖಾತೆ. +ಕಾಲೇಜಿನ ಯೂನಿಯನ್‌ಗಳಿಂದ ಮಾಹಿತಿ ಪಡೆದ ಅವರಿಗೆ ಕಲ್ಯಾಣಿಯ ಮನೆ ತಲುಪಲು ಹದಿನೈದು ದಿನಗಳು ಹಿಡಿದವು. +ಅವಳ ತಂದೆ, ತಾಯಿಯರ, ಅಕ್ಕಪಕ್ಕದವರ ಬಂಧು ಬಾಂಧವರ ವಿಚಾರಣೆ ನಡೆಸಿ ಕ್ರಾಂತಿಕಾರಿ ಕಲ್ಯಾಣಿ ಫೈಲನ್ನು ಸಿದ್ಧಪಡಿಸಿತ್ತು ಆಂಟಿ ರೆವಲ್ಯೂಷನರಿ ಸ್ಕ್ವಾಡ್. +ಆಗ ಯಾರೂ ಕಲ್ಯಾಣಿ, ಕಲ್ಲಕ್ಕ, ಕಾಳಿ, ಜಗದಾಂಭೆಯಾಗಿ ಇಷ್ಟು ಬೃಹದಾಕಾರ ತಾಳಿ ಬಿಡಬಹುದೆಂದು ಎಣಿಸಿರಲಿಲ್ಲ. +ದೊಡ್ಡಣ್ಣನ ತಂಡ ಬಿರುಕು ಬಿಟ್ಟು ಎರಡಾಯಿತು. +ಅದರಲ್ಲಿನ ಕೆಲವರು ಆರಾಮದ ಜೀವನಕ್ಕೆ ಮಾರುಹೋಗಿ ಧನವಂತರ ಸುಲಿಗೆ ಆರಂಭಿಸಿದರು. +ದೊಡ್ಡಣ್ಣ ತನ್ನ ಮಿಕ್ಕ ಹಿಂಬಾಲಕರೊಡನೆ ಚಳುವಳಿಯನ್ನು ಮುಂದುವರೆಸಿದ. +ಅವರಲ್ಲಿ ಕಲ್ಯಾಣಿಯೂ ಇದ್ದಳೆಂದು ಬೇರೆ ಹೇಳಬೇಕಾಗಿಲ್ಲ. +ಪೋಲೀಸ್‌ರೊಡನೆ ನಡೆದ ಎನ್‌ಕೌಂಟರಿನಲ್ಲಿ ದೊಡ್ಡಣ್ಣ ಮತ್ತು ಅವನ ಒಬ್ಬ ಸಂಗಡಿಗ ಪ್ರಾಣ ನೀಗಿದರು, ಇಬ್ಬರು ಶರಣಾಗತರಾದರು. +ಕಲ್ಯಾಣಿ ಮತ್ತು ಕೆಲವರು ತಪ್ಪಿಸಿಕೊಂಡು ಕಾಡಿನಲ್ಲಿ ಮಾಯವಾದರು. +ಈಗ ಕಲ್ಯಾಣಿಯ ನಾಯಕತ್ವದಲ್ಲಿ ರೂಪುಗೊಂಡ ಕ್ರಾಂತಿಕಾರಿ ತಂಡ ಯಾರಿಗೂ ಬಗ್ಗದೇ ತನ್ನ ಚಟುವಟಿಕೆಗಳನ್ನು ನಡೆಸುತ್ತಿದೆ. +ಆಕೆಯನ್ನು ಬಂಧಿಸುವ, ಕಾಡಿನಲ್ಲಿ ಪತ್ತೆ ಹಚ್ಚುವ ಎಲ್ಲಾ ಯತ್ನಗಳೂ ವಿಫಲವಾಗಿದೆ. +ಅದಕ್ಕೆ ಕಾರಣ ಅವಳಿಗಿರುವ ಜನರ ಬೆಂಬಲ. +ಇದೆಲ್ಲಾ ಕಲ್ಯಾಣಿ ಕಾಣೆಯಾದ ಎರಡು ವರ್ಷಗಳಲ್ಲಿ ನಡೆದುಹೋದ ಘಟನೆಗಳು. +ತಮ್ಮ ಮಗಳು ಕ್ರಾಂತಿಕಾರಿಯಾಗಿದ್ದಾಳೆಂಬ ಸುದ್ದಿ ತಿಳಿಯುತ್ತಲೇ ಅವಳು ತಮ್ಮ ಮಗಳೇ ಅಲ್ಲ ಎಂದು ಘೋಷಿಸಿಬಿಟ್ಟರವರ ತಂದೆತಾಯಿ. +ಅವರೇನೇ ಎಂದರೂ ಸ್ಕ್ವಾಡಿನವರು ಮೊದಮೊದಲು ಅವರ ಮನೆಯ ಮೇಲೆ ನಿಗಾ ಇಡುತ್ತಿದ್ದರು. +ಒಂದು ತಿಂಗಳವರೆಗೆ ನಡೆದ ಆ ಕೆಲಸ ಯಾವ ಫಲವನ್ನು ಕೊಡದಾಗ ಅದನ್ನು ಕೈಬಿಡಲಾಗಿತ್ತು. +ಟೇಬಲ್ ಲ್ಯಾಂಪನ್ನು ಆರಿಸಿ ಕುರ್ಚಿಯಿಂದ ಎದ್ದ ತೇಜಾ, ತಲೆಯಲ್ಲಿ ಸ್ವಲ್ಪ ನೋವು ಆರಂಭವಾಗಿತ್ತು. +ಆರಾಮಾಸನದಲ್ಲಿ ಕುಳಿತು ಎದುರಿನ ಸ್ಟೂಲಿನ ಮೇಲೆ ಕಾಲು ಚಾಚಿದ. +ಕಲ್ಯಾಣಿಯೇ ಅವನ ಮೈಮನವೆಲ್ಲಾ ಆಕ್ರಮಿಸಿಬಿಟ್ಟಿದ್ದಳು. +ನಾಜೂಕಾಗಿ ಮೈಬಳಕಿಸುತ್ತಾ, ಮನೆಯ ಕೆಲಸಗಳನ್ನು ಮಾಡಿಕೊಳ್ಳುತ್ತಾ, ಪ್ರೀತಿಯ ಪತಿಯೊಡನೆ ಚೆಲ್ಲಾಟವಾಡುತ್ತಿರಬೇಕಾದ ಹುಡುಗಿ ಕಾಡಿನಲ್ಲಿ ಮಶೀನ್‌ಗನ್‌ಗಳನ್ನು, ಎ.ಕೆ.೪೭ ಗಳನ್ನು ಹಿಡಿದು ಏನು ಮಾಡುತ್ತಿದ್ದಾಳೆ ಎನಿಸಿದಾಗ ಫೋಟೋದಲ್ಲಿದ್ದ ಅವಳ ಮುಖ ಅವನ ಮೆದುಳಿನಲ್ಲೆಲ್ಲಾ ತುಂಬಿಬಿಟ್ಟಿತ್ತು. +ಆ ಯೋಚನೆಯಿಂದ ಹೊರಬಂದ ತೇಜಾ ಅವಳ ಬಳಿ ತಲುಪುವುದು ಹೇಗೆಂಬ ಚಿಂತನೆ ಆರಂಭಿಸಿದ. +ತನ್ನ ಪ್ರತಿ ನಿರ್ಣಯಕ್ಕೂ ಪೋಲೀಸ್ ಖಾತೆ ಯಾವ ಬಗೆಯ ಪ್ರಶ್ನೆಗಳನ್ನೂ ಕೇಳದೇ ಬೆಂಬಲ ನೀಡುವುದೆಂಬ ಆಶ್ವಾಸನೆ ನೀಡಿದ್ದರು ಸ್ಕ್ವಾಡ್‌ನ ಮುಖ್ಯಸ್ಥರಾದ ಶ್ರೀವಾಸ್ತವ. +ಇಡೀ ಪೋಲೀಸ್ ಅಧಿಕಾರಿ ವರ್ಗದಲ್ಲಿ ಅವರು ಅವನಿಗೆ ಬಹಳ ಪ್ರಿಯರು ಯಾರಿಗೂ ಎಂತಹದಕ್ಕೂ ಅಂಜುವವರಲ್ಲ. +ಅದಕ್ಕೆ ಅಂತಹ ಪ್ರತಿಭಾವಂತ ಅಧಿಕಾರಿಯನ್ನು ನಿರ್ಜೀವ ಕೆಲಸ ಕೊಟ್ಟು ಮೂಲೆಗುಂಪಾಗಿ ಕೂಡಿಸಿಡಲಾಗಿದೆ. +ಆಂಟಿ ರೆವಲ್ಯೂಷನರಿ ಸ್ಕ್ವಾಡಿನಲ್ಲಿ ಯಾವ ವಿಶೇಷ ಕೆಲಸವೂ ಇಲ್ಲ. +ಅಲ್ಲಿ ಮೇಲಿನ ಆದಾಯದ ಮಾತೇ ಇಲ್ಲ. +ಆದರೆ ಅವರಿಗಿರುವ ಯೋಗ್ಯತೆ, ಈಗಿರುವ ಮುಖ್ಯಮಂತ್ರಿಯವರಿಗೆ ಗೊತ್ತು. +ಆ ಕಾರಣವಾಗಿ ಕ್ರಾಂತಿಕಾರಿಯರ ಬಗ್ಗೆ ಅವರು ತೆಗೆದುಕೊಂಡ ನಿರ್ಣಯವೇ ಅಂತಿಮ. +ಬುದ್ಧಿವಂತಿಕೆಯಿಂದ ಅವಳು ಎಲ್ಲಿರಬಹುದೆಂಬುವುದು ಅರಿಯಬೇಕು. +ಬಾಹುಬಲ ತೋರಲು ಹೋದರೆ ಯಾವ ಕ್ಷಣದಲ್ಲಾದರೂ ತಾನು ಅವರ ಗುಂಡಿಗೆ ಗುರಿಯಾಗಬಹುದೆಂದು ಎಚ್ಚರಿಸಿದ್ದಾರೆ. +ಅದೇ ಯಾವ ವಿಧಾನ ಉಪಯೋಗಿಸಬೇಕು. +ಇದು ತಾನೊಬ್ಬನೇ ಮಾಡಬೇಕಾದ ಕೆಲಸ. +ಯೋಚನೆಗಳಿಂದ ಅವನು ಬೆಚ್ಚಿಬೀಳವಂತೆ ಮಾಡಿತು ಫೋನಿನ ಸದ್ದು. +ಬಲವಂತವಾಗಿ ಎಂಬಂತೆ ಎದ್ದು ದೂರದ ಟೇಬಲ್ಲಿನ ಮೇಲಿದ್ದ ಫೋನಿನ ರಿಸೀವರ ಎತ್ತಿದ್ದ. +“ಹಲೋ”“ಏನು ಮಾಡುತ್ತಿದ್ದಿ.”ಅದು ಕುಶಾಲನ ಕಂಠ. +ಕಲ್ಯಾಣಿಯ ಯೋಚನೆಯಿಂದ ಹೊರಬಂದ ತೇಜಾ ಲವಲವಿಕೆಯ ದನಿಯಲ್ಲಿ ಹೇಳಿದ. +“ಒಬ್ಬ ಸುಂದರಿಯ ಕನಸು ಕಾಣುತ್ತಿದ್ದೆ. +ನೀನೆಲ್ಲಿಂದ ಮಾತಾಡುತ್ತಿದ್ದೆ.” +“ಯಾರು ಆ ಅದೃಷ್ಟವಂತೆ!… ಮನೆಯಿಂದ ಯಾರೂ ಇಲ್ಲ. +ಅವಳು ಮಕ್ಕಳನ್ನು ಕರೆದುಕೊಂಡು ಅಮ್ಮನ ಮನೆಗೆ ಹೋಗಿದ್ದಾಳೆ” ಬೇಸರವಿತ್ತು ಕುಶಾಲನ ದನಿಯಲ್ಲಿ. +ಕೂಡಲೇ ಹೇಳಿದ ತೇಜಾ. +“ವಿಸ್ಕಿ ತಗೊಂಡು ಇಲ್ಲಿ ಬಂದುಬಿಡು. +ಆ ಸುಂದರಿಯ ವಿಷಯ ವಿವರವಾಗಿ ಹೇಳುತ್ತೇನೆ.” +“ಈಗ ಬಂದೆ. +ನನಗೂ ಈಗ ಅಂಥಹ ಕಥೆಗಳನ್ನು ಕೇಳುವ ಆಸಕ್ತಿ” ಎಂದ ಕುಶಾಲ್ ಸಂಪರ್ಕ ಮುರಿದ. +ಕುಶಾಲ್ ಮತ್ತು ತೇಜಾರ ಪರಿಚಯ ಇಬ್ಬರೂ ಪೋಲೀಸ್ ಖಾತೆ ಸೇರಿದ ಮೇಲೆ ಆಗಿತ್ತು. +ಇಬ್ಬರೂ ಒಂದೇ ಬ್ಯಾಚಿನಲ್ಲಿ ಟ್ರೈನಿಂಗ್ ಮುಗಿಸಿದ್ದರು. +ಇಬ್ಬರ ಯೋಚನೆಗಳೂ ಒಂದೇ ಆದ ಕಾರಣ ಪರಿಚಯ ಈಗ ಗಾಢ ಸ್ನೇಹದಲ್ಲಿ ಮಾರ್ಪಟ್ಟಿತ್ತು. +ಪೋಲೀಸ್ ಖಾತೆ ಸೇರಿದ ಮಗ ಎಲ್ಲಿ ತಪ್ಪುದಾರಿ ಹಿಡಿಯುತ್ತಾನೊ ಎಂಬ ಗಾಬರಿಯಲ್ಲಿ ಅವನ ತಂದೆ ತಾಯಿ ಬೇಗ ಮದುವೆ ಮಾಡಿಬಿಟ್ಟಿದ್ದರು. +ಈಗವನಿಗೆ ಇಬ್ಬರು ಮಕ್ಕಳು. +ಸರಕಾರದ ಜಾಹಿರಾತಿನಂತೆ ಒಂದು ಗಂಡು, ಒಂದು ಹೆಣ್ಣು. +ಮಗನಿಗೆ ಐದು ವರ್ಷ ಮಗಳಿಗೆ ಎರಡು, ತೇಜಾ ಕುಶಾಲನದು ಎಷ್ಟು ಗಾಢಸ್ನೇಹವೆಂದರೆ ಅವನೂ ಅವರ ಮನೆಯ ಸದಸ್ಯನಂತೆ ಆಗಿಬಿಟ್ಟಿದ್ದ. +ತೇಜಾ, ಮಕ್ಕಳೊಡನೆ ಮಗುವಾಗಿ ಆಡುತ್ತಿದ್ದ ಅವನನ್ನು ನೋಡಿದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ . +ಕುಶಾಲನ ಮನೆಗೆ ಹೋದರೆ ಅವರಿಂದ ಮುಕ್ತಿ ಹೊಂದಿ ಬರುವದೇ ಕಷ್ಟವಾಗುತ್ತಿತ್ತು. +ಪಟ್ಟಣದ ಹೊರ ವಲಯದ ಪೋಲೀಸ್ ಸ್ಟೇಷನ್‌ನಲ್ಲಿದ್ದ ಕುಶಾಲ ಅಲ್ಲಿ ಹೆಚ್ಚು ಕೆಲಸವಿರಲಿಲ್ಲ. +ಅವರ ಸ್ನೇಹದ ವಿಷಯ ಕೂಡ ಇಡೀ ಪೋಲೀಸ್ ಖಾತೆ ಮಾತಾಡಿಕೊಳ್ಳುವಂತಿತ್ತು. +ತಮ್ಮ ತಮ್ಮಲ್ಲಿ ಅವರು ತಮಗೆ ಗೊತ್ತಿದ್ದ ಗೋಪ್ಯ ವಿಷಯಗಳು ಹಂಚಿಕೊಳ್ಳುತ್ತಿದ್ದರು. +ಆದರದು ಬೇರಾರಿಗೂ ಗೊತ್ತಾಗುತ್ತಿರಲಿಲ್ಲ. +ಎಷ್ಟೋ ಸಲ ಕ್ಲಿಷ್ಟವಾದ ಕೇಸುಗಳಲ್ಲಿ ತೇಜಾನ ಸಲಹೆ ಪಡೆಯುತ್ತಿದ್ದ ಕುಶಾಲ. +ಅವನು ತನಗಿಂತ ಬುದ್ಧಿವಂತನೆಂದು ಯಾವ ಸಂಕೋಚವೂ ಇಲ್ಲದೇ ಒಪ್ಪಿಕೊಂಡಿದ್ದ. +ಈಗ ಕುಶಾಲನೊಡನೆ ಮಾತಾಡುತ್ತಾ ಮನವನ್ನು ಹಗುರಗೊಳಿಸಿಕೊಳ್ಳಬಹುದು. +ಕಲ್ಯಾಣಿಯ ಬಗ್ಗೆ ಮಾತು ನಡೆದಾಗ ಮುಂದಿನ ಯೋಜನೆ ತಾನಾಗೇ ರೂಪುಗೊಳ್ಳಬಹುದು ಎಂಬ ಯೋಚನೆಯಲ್ಲಿ ತೊಡಗಿದ್ದಾಗ ಮನೆ ಎದುರು ವಾಹನ ನಿಂತ ಸದ್ದಾಯಿತು. +ಬಾಗಿಲು ತೆಗೆದಾಗ ಕುಶಾಲ ಸ್ಕೂಟರನ್ನು ಸ್ಟ್ಯಾಂಡಿಗೆ ಎಳೆಯುತ್ತಿದ್ದ. +ಬಾಗಿಲನ್ನು ಪೂರ್ತಿ ತೆಗೆದು ಒಳಕೋಣೆಗೆ ಬಂದ ತೇಜಾ ಫ್ರಿಜ್‌ನಿಂದ ನೀರಿನ ಬಾಟಲುಗಳನ್ನು ತೆಗೆದಿಟ್ಟು ಅಡುಗೆಮನೆಯಿಂದ ಪ್ಲೇಟು ಮತ್ತು ಗಾಜಿನ ಗ್ಲಾಸುಗಳನ್ನು ತಂದ, ಅವನವನ್ನು ಸರಿಯಾಗಿ ಜೋಡಿಸುತ್ತಿದ್ದಂತೆ ಒಳಬಂದ ಕುಶಾಲ ಮುಂಬಾಗಿಲು ಹಾಕಿ ಅವನನ್ನು ಸೇರಿಕೊಂಡು ಪಾಲಿಥೀನ್ ಬ್ಯಾಗನ್ನು ಟೇಬಲಿನ ಮೇಲಿಡುತ್ತಾ ಬಹು ಹುರುಪಿನ ದನಿಯಲ್ಲಿ ಕೇಳಿದ. +‘ಯಾವ ಸುಂದರಿಯ ಕನಸು ಕಾಣುತ್ತಿದ್ದೆ ಮೊದಲು ಹೇಳು?’ನಗುತ್ತಾ ಉತ್ತರಿಸಿದ ತೇಜಾ“ಅದಕ್ಕೆ ಮೂಡ್ ಬರಬೇಕು. +ಒಂದು ಪೆಗ್ ಹೊಟ್ಟೆಯಲ್ಲಿ ಇಳಿಯಲಿ” ಸೋಫಾದಲ್ಲಿ ಕುಳಿತ ಕುಶಾಲ ತಿಂಡಿಯನ್ನು ಪ್ಲೇಟಿಗೆ ಹಾಕಿ ವಿಸ್ಕಿ ಬಾಟಲಿನ ಮುಚ್ಚಳ ಬಿಚ್ಚುತ್ತಿದ್ದಾಗ ಪಾಲಿಥಿನ್ ಚೀಲವನ್ನೇ ನೋಡುತ್ತಾ ಕೇಳಿದ ತೇಜಾ. +“ಇನ್ನೂ ಏನೇನು ತಂದಿದ್ದಿ” +“ಮನೆ ಊಟ ಸಾಕಾಗಿದೆ. +ಅದಕ್ಕೆ ಹೊರಗಿನ ಊಟ” ತನ್ನ ಕೆಲಸ ನಿಲ್ಲಿಸದೇ ಹೇಳಿದ ಕುಶಾಲ. +ಎರಡು ಗ್ಲಾಸುಗಳಲ್ಲಿ ಪೇಯ ಹಾಕಿ ಅದರಲ್ಲಿ ನೀರು ಬೆರೆಸಿ ಅವನ್ನು ಇಬ್ಬರೂ ಎತ್ತಿಕೊಂಡಾಗ ಅವನ ಗ್ಲಾಸಿಗೆ ತನ್ನ ಗ್ಲಾಸನ್ನು ತಾಕಿಸುತ್ತಾ ಹೇಳಿದ ಕುಶಾಲ“ನಿನ್ನ ಸ್ವಪ್ನ ಸುಂದರಿಯ ಶ್ರೇಯಕ್ಕೆ”ಅದಕ್ಕೆ ಏನೂ ಹೇಳಲಿಲ್ಲ ತೇಜಾ. +ಎರಡೂ ಗ್ಲಾಸುಗಳು ಒಂದಕ್ಕೊಂದು ತಾಕಿದನಂತರ ಗ್ಲಾಸಿನಲ್ಲಿದ್ದ ಅರ್ಧದಷ್ಟನ್ನು ಬರಿದು ಮಾಡಿ ಟೇಬಲಿನ ಮೇಲಿಟ್ಟ ತೇಜ. +ಒಂದು ಗುಟುಕು ಕುಡಿದು ತನ್ನ ಮಿತ್ರನ ಮುಖವನ್ನೇ ನೋಡುತ್ತಾ ಬಹು ಆಸಕ್ತಿಯ ದನಿಯಲ್ಲಿ ಕೇಳಿದ ಕುಶಾಲ“ಈಗಲಾದರೂ ಹೇಳು ಯಾರು ನಿನ್ನ ಸ್ವಪ್ನ ಸುಂದರಿ?” +“ಕಲ್ಲಕ್ಕ” ಎಂದ ತೇಜಾ ಗಂಭೀರ ದನಿಯಲ್ಲಿ. +ಆಶ್ಚರ್ಯ ತುಂಬಿ ಬಂತು ಕುಶಾಲನ ಮುಖದಲ್ಲಿ ಅಯೋಮಯದಲ್ಲಿರವಂತಹ ದನಿಯಲ್ಲಿ ಕೇಳಿದ“ಯಾರಂದಿ?” +“ಕಲ್ಲಕ್ಕ” ತನ್ನದೇ ಯೋಚನೆಯಲ್ಲಿರುವಂತೆ ಮತ್ತೆ ಹೇಳಿದ ತೇಜಾ. +“ಕಲ್ಲಕ್ಕ!ಅಂದರೆ ಯಾವ ಕಲ್ಲಕ್ಕ, ಎಲ್ಲಿಯವಳು?” ಮಿತ್ರನ ಗಂಭೀರ ಮುಖ ನೋಡಿ ಆತುರದ ದನಿಯಲ್ಲಿ ಕೇಳಿ ಇನ್ನೊಂದು ಗುಟುಕು ಕುಡಿದ. +“ನಿನಗೆ ಯಾವ ಕಲ್ಲಕ್ಕ ಗೊತ್ತು?” ಮಾತು ಮುಗಿಸಿ ತಿಳಿಯಾದ ನಗೆ ನಕ್ಕ ತೇಜಾ. +ಕೆಲಕ್ಷಣ ಮಿತ್ರನ ಮುಖವನ್ನು ನೋಡಿ ಹಗುರ ನಗೆ ನಕ್ಕು ಕೇಳಿದ ಕುಶಾಲ“ನೀನಾ ಕ್ರಾಂತಿಕಾರಿ ಕಲ್ಲಕ್ಕನ ವಿಷಯ ಮಾತಾಡುತ್ತಿಲ್ಲ ತಾನೆ?” +“ಅವಳ ಕನಸುಗಳೇ ಕಾಣುತ್ತಿದ್ದೆ” ತೇಜಾನ ತುಟಿಗಳು ವಿಚಿತ್ರ ನಗೆಯಿಂದ ಅಗಲವಾದವು. +ಮಾತು ಮುಗಿಸಿ ಗ್ಲಾಸನ್ನು ಎತ್ತಿಕೊಂಡ“ಅವಳ ಕನಸು!ಯಾಕೆ…” +“ಅವಳನ್ನು ಅವಳ ತಂಡವನ್ನು ಮುಗಿಸುವ ಜವಾಬ್ದಾರಿ ನನಗೆ ಒಪ್ಪಿಸಲಾಗಿದೆ”ಕುಶಾಲನ ಮುಖದಲ್ಲಿ ಅಪನಂಬಿಕೆಯ ಭಾವ ತುಂಬಿಬಂತು. +ಅದರಿಂದ ಚೇತರಿಸಿಕೊಳ್ಳಲು ಅವನಿಗೆ ಹಲವು ಕ್ಷಣಗಳು ಹಿಡಿದವು. +ನಂತರ ಅಂತಹದೇ ಅಪನಂಬಿಕೆಯ ದನಿಯಲ್ಲಿ ಕೇಳಿದ. +“ನೀ ಹುಡುಗಾಟವಾಡುತ್ತಿಲ್ಲ ತಾನೆ?” +“ಇಲ್ಲ!ಅವಳನ್ನು ಆದಷ್ಟು ಬೇಗ ಮುಗಿಸಬೇಕು. +ಅದು ಹೇಗೆಂಬುದರ ಕನಸುಗಳನ್ನೇ ಕಾಣುತ್ತಿದ್ದೆ” ಗಂಭೀರದ ದನಿಯಲ್ಲಿ ಹೇಳಿದ ತೇಜಾ. +“ಅದು ನಿನ್ನೊಬ್ಬನಿಂದ ಸಾಧ್ಯವೇ? +ಅವಳು ಮೊನ್ನೆ ಮಾಡಿದ ಮೂರು ಘೋರ ಕೊಲೆಗಳ ಬಗ್ಗೆ ಓದಿದ್ದೀಯಾ?” ತಾ ಕೇಳುತ್ತಿರುವುದು ಇನ್ನೂ ನಂಬಲಾಗುತ್ತಿಲ್ಲ ಎಂಬಂತಿತ್ತು ಕುಶಾಲನ ಮಾತು. +ಮಿತ್ರನ ಮುಖವನ್ನೇ ಕೆಲಕ್ಷಣಗಳು ದಿಟ್ಟಿಸಿ ಗ್ಲಾಸಿನಲ್ಲಿ ಮಿಕ್ಕ ಪೇಯ ಮುಗಿಸಿ ಹೇಳಿದ ತೇಜಾ. +“ಇದು ಆಫಿಶಿಯಲ್ ಅಸಾಯನ್‌ಮೆಂಟ್! +ನಾಳಿದಿಂದಲೇ ಕೆಲಸ ಆರಂಭಿಸಬೇಕು. +ಅವಳು ಮಾಡಿಸಿದ ಕೊಲೆಗಳ ಬಗ್ಗೆಯೇ ಅಲ್ಲ. +ಅವಳ ಪೂರ್ತಿ ಚರಿತ್ರೆ ಗೊತ್ತು. +ಹೇಳು ಈಗೇನು ಹೇಳುತ್ತಿ, ನನ್ನ ಕನಸಿನ ಸುಂದರಿಯ ಬಗ್ಗೆ” +“ನೀನು ಅವಳನ್ನು ಮುಗಿಸುವ ಕನಸು ಕಾಣುತ್ತಿದ್ದಿ! +ಅವಳು ಸುಂದರಳಂತೂ ಖಂಡಿತ ಇರಲಿಕ್ಕಿಲ್ಲ. +ಅದೇನೇ ಆಗಲಿ ನಿನಗೆ ಶುಭವಾಗಲಿ” ಎಂದ ಕುಶಾಲ. +ಮುಂದೆ ಕುಡಿತ ಕಡಿಮೆ ಮಾತುಗಳು ಹೆಚ್ಚಾದವು. +ಹಗುರದನಿಯಲ್ಲಿ ಆವರೆಗೆ ನಡೆದ ಎಲ್ಲವನ್ನೂ ವಿವರಿಸಿದ ತೇಜಾ, ಮಿತ್ರ ಈ ಕೆಲಸ ಮಾಡಲು ನಿರಾಕರಿಸಬೇಕಾಗಿತ್ತು ಎಂದುಕೊಂಡ ಕುಶಾಲ, ಆದರೆ ಅವನಿಗೆ ತೇಜಾನ ಸ್ವಭಾವ ಚೆನ್ನಾಗಿ ಗೊತ್ತಿತ್ತು. +ಯಾರೂ ಮಾಡಲು ಸಾಧ್ಯವಾಗದಂತಹ ಕೆಲಸಗಳನ್ನು ಅವನು ಮಾಡಲು ಮುಂದಾಗುತ್ತಿದ್ದ. +ಅವನಿಗೆ ತನ್ನ ಬುದ್ಧಿ ಉಪಯೋಗಿಸಲು, ಸಾಹಸ ತೋರಲು ಅವಕಾಶ ಬೇಕಷ್ಟೆ, ಅದೂ ಅಲ್ಲದೇ ಸಿ.ಸಿ.ಎಲ್.ನಲ್ಲಿ ಇಷ್ಟು ಕಾಲ ಕೆಲಸ ಮಾಡಿ ಅವನಿಗೆ ಬೇಸರ ಉಂಟಾಗಿರಬಹುದು. +ತೇಜಾ ಅವನಿಗೆ ತಾ ಹಾಕಿಕೊಂಡ ಯೋಜನೆಯ ಬಗ್ಗೆ ಹೇಳಿದ. +ಅದಕ್ಕೆ ತನ್ನ ಸಲಹೆಗಳನ್ನೂ ಸೇರಿಸಿದ ಕುಶಾಲ. +ಈ ಕಲ್ಯಾಣಿ ಸಾಮಾನ್ಯ ಕ್ರಾಂತಿಕಾರಿ ಅಲ್ಲವೆಂಬುದು ಅವನಿಗೂ ಗೊತ್ತಿತ್ತು. +ಅವನು ಎದುರಿಸಬಹುದಾದ ಅಪಾಯಯಗಳ ಬಗ್ಗೆ ಕೂಡ ಬಹಳ ಹೊತ್ತು ಮಾತಾಡಿದರು. +ಎರಡೆರಡು ಪೆಗ್‌ಗಳನ್ನು ಮಾತ್ರ ಕುಡಿದ ಅವರು ಮಾತಾಡುತ್ತಲೇ ಊಟ ಮುಗಿಸಿದರು. +ಊಟ ಮುಗಿದ ನಂತರ ಕೂಡ ಮಾತುಗಳು, ಅವರು ಮಾತಾಡುತ್ತಾ ಕುಳಿತರೆ ಸಮಯ ಹೇಗೆ ಸರಿದು ಹೋಗುತ್ತದೆಯೋ ಅವರಿಗೇ ಗೊತ್ತಾಗುತ್ತಿರಲಿಲ್ಲ. +ಹೋಗುವ ಮುನ್ನ ಅವನನ್ನು ಭೇಟಿಯಾಗುವುದಾಗಿ ಹೇಳಿ ಕುಶಾಲನನ್ನು ಹೊರಗೆ ಕಳಿಸಿದಾಗ ರಾತ್ರಿಯ ಒಂದಾಗುತ್ತಿತ್ತು. +ಬಾಗಿಲು ಹಾಕಿಕೊಂಡ ತೇಜ ಮಂಚದಲ್ಲಿ ಮಲಗಿದಾಗ ಕಲ್ಯಾಣಿ ಕರಾಳರೂಪ ತಾಳಿ ಅವನೆದುರು ನಾಟ್ಯವಾಡುತ್ತಿದ್ದಳು. +ಅಂತಹದೇ ಯೋಚನೆಯಲ್ಲಿ ನಿದ್ದೆ ಅವನನ್ನು ಆವರಿಸಿತು. +ತೇಜಾ ಎದ್ದಾಗ ಏಳೂವರೆ ದಾಟಿತ್ತು ಸಮಯ. +ಈಗಲೇ ಬಹಳ ತಡವಾಯಿತೆಂದುಕೊಳ್ಳುತ್ತಾ ಲಗುಬಗೆಯಿಂದ ಬೆಳಗಿನ ವಿಧಿಗಳನ್ನು ಮುಗಿಸಿದ. +ರಾತ್ರಿ ಮಲಗುವ ಮುನ್ನವೇ ಬೆಳಗ್ಗೆ ಏನು ಮಾಡಬೇಕೆಂಬುವುದನ್ನು ನಿರ್ಧರಿಸಿದ್ದ. +ಸ್ನಾನ ಮುಗಿದ ಕೂಡಲೇ ಕಪ್ಪು ಪ್ಯಾಂಟಿನ ಮೇಲೆ ಹಳದಿ ಟೀಶರ್ಟ್‌ನ್ನು ತೊಟ್ಟು ಅದರ ಮೇಲಿಂದ ಸ್ವೆಟರ್ ಕೋಟು ಧರಿಸಿ ಮನೆಯಿಂದ ಹೊರಬಿದ್ದ. +ಕಾಲಿಗೆ ಪೋಲೀಸ್ ಸಂಕೇತವಾದ ಷೂಗಳಿಲ್ಲ. +ಅದರಿಂದ ಯಾರೂ ಅವನನ್ನು ಪೋಲೀಸ್ ಅಧಿಕಾರಿ ಎಂದು ಗುರುತಿಸುವುದು ಕಷ್ಟ. +ಆ ಉಡುಪಿನಲ್ಲಿ ಇನ್ನೂ ಆಕರ್ಷಕವಾಗಿ ಕಾಣುತ್ತಿದ್ದ ತೇಜಾ. +ಪೋಲೀಸ್ ಜೀಪಿನಲ್ಲಿ ಅವನು ಸೆಂಟ್ರಲ್ ಜೈಲಿಗೆ ಬಂದಾಗ ಒಂಬತ್ತಾಗುತ್ತಿತ್ತು. +ಅವನು ಪೋಲೀಸರ ಸಮವಸ್ತ್ರದಲ್ಲಿ ಇರದಿದ್ದರೂ ಪೋಲೀಸ್ ಖಾತೆಗೆ ಸೇರಿದ ಬಹುಜನ ಅವನನ್ನು ಗುರುತಿಸುತ್ತಿದ್ದರು. +ದೊಡ್ಡ ಗೇಟಿನ ಬಳಿ ನಿಂತಿದ್ದ ಸಶಸ್ತ್ರ ಪೋಲೀಸಿನವರು ಅವನಿಗೆ ಶಿಸ್ತಿನ ಸೆಲ್ಯೂಟ್ ಹಾಕಿ ಚಿಕ್ಕ ಬಾಗಿಲು ತೆಗೆದರು. +ಅವರ ಮೂಲಕ ಅವನು ಒಳಗೆ ಹೋಗುತ್ತಲೇ ಮತ್ತೆ ಮುಚ್ಚಿಕೊಂಡಿತು ಚಿಕ್ಕ ಬಾಗಿಲು. +ಎಲ್ಲಾ ಸರಕಾರಿ ಕಾರ್ಯಾಲಯಗಳಲ್ಲಿರುವಂತೆ ಅಲ್ಲೂ ಅವ್ಯವಸ್ಥೆ. +ಜೈಲರ್ ಸಾಹೇಬರು ಇರಲಿಲ್ಲ. +ಅವರ ಸಹಾಯಕನನ್ನು ಹುಡುಕಿ ಅವರಿಗೆ ತಾನ್ಯಾವ ಕೆಲಸದ ನಿಮಿತ್ತ ಬಂದಿದ್ದೇನೆಂದು ಅವನಿಗೆ ವಿವರಿಸಲು ಅರ್ಧಗಂಟೆ ಹಿಡಿಯಿತು. +ಅವನ ಮಾತನ್ನು ಅರ್ಥ ಮಾಡಿಕೊಂಡ ಆತ ಬೇಸರದಿಂದ ಎಂಬಂತೆ ದಾರಿ ತೋರಲು ಮುಂದೆ ನಡೆದ. +ಕ್ರಾಂತಿಕಾರಿಯರನ್ನು ಪ್ರತ್ಯೇಕ ಸೆಲ್‌ಗಳಲ್ಲಿ ಬಂಧಿಸಿಡಲಾಗಿತ್ತು. +ದೊಡ್ಡಣ್ಣನ ತಂಡದವರಿಬ್ಬರು ಅಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. +ಅವರಿಬ್ಬರೂ ಬೇರೆ ಬೇರೆ ಸೆಲ್‌ಗಳಲ್ಲಿದ್ದರು. +ಆ ಒಂದು ಸೆಲ್‌ನ ಬೀಗ ತೆಗೆಯುವಂತೆ ಹೇಳಿದ ತೇಜಾ. + ಅದಕ್ಕಾಗಿ ಇನ್ನೂ ಸ್ವಲ್ಪ ಹೊತ್ತು ಕಾಯಬೇಕಾಯಿತು. +ಕೂಗಿ ಯಾರನ್ನೊ ಕರೆಯುತ್ತಿದ್ದ ಸಹಾಯಕ ಜೈಲರ್. +ಸೆಲ್‌ನ ಒಳಗಿದ್ದ ವ್ಯಕ್ತಿಯ ಹೆಸರು ರಮೇಶ. +ಐವತ್ತನ್ನು ಸಮೀಪಿಸುತ್ತಿದ್ದಿರಬಹುದು ಅವನ ವಯಸ್ಸು, ಆದರೆ ಅದಕ್ಕಿಂತ ಹೆಚ್ಚು ವಯಸ್ಸಾದವನಂತೆ ಕಾಣುತ್ತಿದ್ದ. + ಮುಖದಲ್ಲಿ ಸುಕ್ಕುಗಳು, ಕಣ್ಣಿಗೆ ದಪ್ಪನೆಯ ಕನ್ನಡಕ. +ಅವನು ಹಳ್ಳಿಗನಲ್ಲ ಪಟ್ಟಣವಾಸಿಯೇ. +ಕೊನೆಗೂ ಸೆಲ್‌ನ ಬಾಗಿಲು ತೆಗೆದುಕೊಂಡಿತು. +ತೇಜಾ ಅದರೊಳ ಹೋಗುತ್ತಿದ್ದಂತೆ ಮತ್ತದು ಮುಚ್ಚಿಕೊಂಡಿತು. +ಆಗ ತಲೆ ಎತ್ತಿ ತನ್ನ ದಪ್ಪನೆಯ ಕನ್ನಡಕದ ಮೂಲಕ ಅವನನ್ನು ನೋಡಿದ ರಮೇಶ. +“ಹೇಗಿದ್ದಿ ರಮೇಶ್!” ಅವನ ಬದಿಗೆ ನೆಲದ ಮೇಲೆ ಕೂಡುತ್ತಾ ಬಹು ಆಪ್ಯಾಯದನಿಯಲ್ಲಿ ಕೇಳಿದ ತೇಜಾ. +ಅದಕ್ಕೆ ಏನೂ ಹೇಳದೇ ತನ್ನ ಕನ್ನಡಕ ತೆಗೆದು ಅದನ್ನು ಒರೆಸುವ ಕೆಲಸದಲ್ಲಿ ತೊಡಗಿದ ರಮೇಶ. + ಕನ್ನಡಕ ತೆಗೆದಾಗ ಅವನ ಕಣ್ಣುಗಳು ಇನ್ನೂ ಭಯ ಹುಟ್ಟಿಸುವಂತಿದ್ದವು. +ಕಣ್ಣಿನ ಗುಡ್ಡುಗಳು ದೇಹದಿಂದ ಹೊರಬರಲು ಯತ್ನಿಸುತ್ತಿದ್ದಂತೆ ಕಾಣುತ್ತಿದ್ದವು. +“ನನ್ನ ಗುರುತಿಸಲಿಲ್ಲವೇ?… ಇನ್ನೂ ನೀನು ನಿನ್ನ ಸ್ವಭಾವವನ್ನು ಬದಲಿಸಲಿಲ್ಲ” ಹಳೆಯ ಸ್ನೇಹಿತನಂತೆ ತಾನೇ ಇನ್ನೊಮ್ಮೆ ಮಾತಾಡಿದ ತೇಜಾ. +ಕನ್ನಡಕವನ್ನು ಒರೆಸುವ ಕೆಲಸವನ್ನು ಮುಂದುವರೆಸೇ ಇದ್ದ ಆ ಕ್ರಾಂತಿಕಾರಿ ಅವನ ಕಡೆ ತಿರುಗಿಯೂ ನೋಡಲಿಲ್ಲ. +ಈಸಲ ಗೊಂದಲಕ್ಕೊಳಗಾದವನಂತೆ ಹೇಳಿದ. +“ವೇಷ ಬದಲಾಗಿದೆ ಎಂದು ನೀನು ಗುರುತಿಸಲಿಕ್ಕಿಲ್ಲ. +ನೆನಪಿಸಿಕೊ ನಾನು ನಿಮಗೆ ಸಹಾಯ ಮಾಡಿದೆ”ಕನ್ನಡಕವನ್ನು ಶುಚಿಗೊಳಿಸುವುದು ಮುಗಿಸಿದ ರಮೇಶ ಅದನ್ನು ಕಣ್ಣಿಗೆ ಏರಿಸಿಕೊಂಡು ನಿರ್ಭಾವ ದನಿಯಲ್ಲಿ ಹೇಳಿದ. +“ಇನ್ಸ್‌ಪೆಕ್ಟರ್ ಉತೇಜ್ ನೀನು ನಿನ್ನ ಸಮಯ ವ್ಯರ್ಥ ಮಾಡುತ್ತಿದ್ದಿ”. +ಇಷ್ಟು ಕಾಲದಿಂದ ಜೈಲಿನಲ್ಲಿರುವ ಇವನಿಗೆ ತನ್ನ ಹೆಸರು ಹೇಗೆ ಗೊತ್ತಾಯಿತೆಂಬ ಆಶ್ಚರ್ಯ ತೇಜ್‌ನಿಗೆ. +ಅ ಭಾವ ಅವನ ಮುಖದಲ್ಲಿ ಬರಲಿಲ್ಲ. +ಒಂದು ಬಗೆಯ ಕರುಣೆಯ ದನಿಯಲ್ಲಿ ಹೇಳಿದ. +“ಅರ್ಥವಿಲ್ಲದ ಹೋರಾಟ ನಡೆಸಿ, ನಡೆಸಿ ನಿಮ್ಮ ಮತಿ ಭ್ರಮಿಸಿದೆ. +ನಾನು ಇನ್ಸ್‍ಪೆಕ್ಟರ್ ತೇಜಾನಲ್ಲ. +ನಿನ್ನಿಂದ ಸಹಾಯ ಕೋರಲು ಬಂದಿದ್ದೆ. +ನಿನ್ನ ಭೇಟಿಯಾಗಲೇ ಸಾವಿರಾರು ಖರ್ಚಾಯಿತು. +ಅದಕ್ಕೆ ಪ್ರತಿಫಲವಾಗಿ ಇಂತಹ ಮಾತು… ಇನ್ನೂ ಸ್ವಲ್ಪ ದಿನವಾದರೆ ನೀ ಹುಚ್ಚನಾಗುವೆ.”ದಪ್ಪನೆಯ ಕನ್ನಡಕ ಅವನ ಕಡೆ ತಿರುಗಿತು. +ಅದರಲ್ಲಿಂದ ಹೊರಬರಲು ತವಕಿಸುತ್ತಿರುವಂತಹ ಕಣ್ಣುಗಳು ಆಸಕ್ತಿಯನ್ನು ತೋರುತ್ತಿರುವಂತೆ ಕಂಡವು. +ಎಡಗೈಯಿಂದ ತನ್ನ ಕುರುಚಲು ಗಡ್ಡ ನೀವಿಕೊಳ್ಳುತ್ತಾ ಉತೇಜ್‌ನ ಮೇಲೆ ಉಪಕಾರ ಮಾಡುತ್ತಿರುವಂತಹ ದನಿಯಲ್ಲಿ ಹೇಳಿದ ಕ್ರಾಂತಿಕಾರಿ ರಮೇಶ್. +“ಏನು ಬೇಕು ಹೇಳು ಇನ್ಸ್‌ಪೆಕ್ಟರ್.”ಅವನ ಮಾತು ಮುಗಿಯುತ್ತಲೇ ಸೆಲ್‌ನ ಆಚೆ ಒಮ್ಮೆ ಕಣ್ಣಾಡಿಸಿ ಮೆಲ್ಲನೆಯ ದನಿಯಲ್ಲಿ ಹೇಳಿದ ತೇಜಾ. “ಆಯುಧಗಳಿವೆ. ಅವನ್ನು ಕಾಳಿಗೆ ಒಪ್ಪಿಸಬೇಕು ಹೇಗೆ.”ಗೆಲುವಿನ ಮುಗಳ್ನಗೆ ಹಾಯಿತವನ ತುಟಿಗಳ ನಡುವೆ. +ಭಾವರಹಿತ ದನಿಯಲ್ಲಿ ಹೇಳಿದ ರಮೇಶ. +“ನೀನವಳನ್ನು ಹುಡುಕುತ್ತಾ ಹೋಗು! +ನಿನಗೇ ಹುಚ್ಚು ಹಿಡಿಯುತ್ತದೆ. +ಒಂದು ಮಾತು ಚೆನ್ನಾಗಿ ನೆನಪಿಡು ಇನ್ಸ್‌ಪೆಕ್ಟರ್, ಯಾರೂ ಅವಳ ಹತ್ತಿರ ಹೋಗಲು ಸಾಧ್ಯವಿಲ್ಲ. +ನಮ್ಮಲ್ಲಿ ಅದೊಂದೇ ಆಶಾಕಿರಣ ಈಗ ಬೆಳಗುತ್ತಿರುವುದು… +ಹೋಗು ನನ್ನ ಸಮಯ ಹಾಳು ಮಾಡಬೇಡ.” +ಈಗ ತನ್ನ ಮಾತಿನ ಸರಣಿಯನ್ನು ಬೇರೆ ದಿಕ್ಕಿನಲ್ಲಿ ತಿರುಗಿಸಬೇಕು ವಿಧಿ ಇಲ್ಲ ಎಂದುಕೊಂಡು ತೇಜಾ ಹೇಳಿದ. +“ಯಾತರ ಆಶಾಕಿರಣ!ರಾಜಕೀಯ ಪಾರ್ಟಿಗಳ ಹಾಗೆ ನಿಮ್ಮಲ್ಲೇ ಹತ್ತಾರು ತುಂಡುಗಳಾಗಿವೆ. +ಶರಣಾಗತರಾದ ಹಲವರು ಬಡವರ ಬವಣೆಯನ್ನು ಮರೆತು ರಾಜಭೋಗ ಅನುಭವಿಸುತ್ತಿದ್ದಾರೆ. +ಇನ್ನೂ ಕೆಲವರು ದರೋಡೆಗಳನ್ನು ಮಾಡಲು, ಚಿಲ್ಲರೆ ರೌಡಿಗಳಂತೆ ಜನರನ್ನು ಸುಲಿಯಲು ಆರಂಭಿಸಿದ್ದಾರೆ. +ಅಂತಹದರಲ್ಲಿ ನೀನು ಆಶಾಕಿರಣದ ಮಾತಾಡುತ್ತಿ!ಯಾತರ ಆಶಾಕಿರಣ! +ನೀವೆಲ್ಲಾ ಸೇರಿ ಈ ಕ್ರಾಂತಿಗೆ ಅರ್ಥವಿಲ್ಲವೆಂದು ತೋರಿಸಿಕೊಟ್ಟಿದ್ದೀರಿ” ಭಾವೋದ್ವೇಗದಿಂದ ತುಂಬಿದ ಅವನ ಮಾತು ಮುಗಿಯುತ್ತಿದ್ದಂತೆ ಮತ್ತೆ ಕನ್ನಡಕ ತೆಗೆದ ರಮೇಶ. +ಅವನ ನೋಟ ಸೆಲ್‌ನ ಹೊರಗಡೆ ನೆಟ್ಟಿತ್ತು. +ಮೆಲ್ಲನೆ ನಿರ್ವಿಕಾರ ದನಿಯಲ್ಲಿ ಬಂತವನ ಮಾತು. +“ಪ್ರತಿ ದೊಡ್ಡ ಚಳುವಳಿಯಲ್ಲಿ ಕೆಲವು ಹುಳುಗಳು ಹುಟ್ಟಿಕೊಳ್ಳುತ್ತಾರೆ. +ಯರೆಹುಳುಗಳಂತೆ ಅವರುಗಳು ಹುಟ್ಟಿದಷ್ಟು ಶೀಘ್ರವಾಗೇ ಇಲ್ಲವಾಗುತ್ತಾರೆ. +ಆದರೆ, ಅವರಂತಹವರ ಕಾರಣವಾಗಿ ಚಳುವಳಿ ನಿಲ್ಲುವುದಿಲ್ಲ. +ಅದಕ್ಕೆ ಇನ್ನೂ ಬಲ ಬರುತ್ತದೆ. +ಅದರ ಪ್ರತೀಕವೇ ಕಲ್ಲಕ್ಕ.” +“ನೀವು ಮೊದಮೊದಲು ಕೆಲ ಒಳ್ಳೆಯ ಕೆಲಸಗಳನ್ನು ಮಾಡಿದ್ದೀರಿ ಅದನ್ನು ನಾ ಒಪ್ಪುತ್ತೇನೆ. +ಅದರಿಂದ ಸರಕಾರ ಕೂಡ ಪಾಠ ಕಲಿತಿದೆ. +ಅದರಲ್ಲೂ ಯಾವ ಸಂದೇಹವೂ ಇಲ್ಲ. +ಆದರೆ ಈಗ ಸರಕಾರ ಬಡಬಗ್ಗರಿಗಾಗಿ ಇನ್ನೂ ಒಳ್ಳೆಯ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. +ಅದರಿಂದ ನಿಮಗೆ ಜನಸಾಮಾನ್ಯರಲ್ಲಿ ಮನ್ನಣೆ ಇಲ್ಲ. +ನನ್ನ ಮಾತು ಕೇಳು ರಮೇಶ್ ಈ ಚಟುವಟಿಕೆ, ಕ್ರಾಂತಿಗೆ ಈಗ ಅರ್ಥವಿಲ್ಲ. +ನಾನು ಕಲ್ಲಕ್ಕನನ್ನು ಕಾಣಬೇಕು ಅದು ಹೇಗೆ ಹೇಳು” ಈಗಲೂ ತೇಜಾನ ದನಿ ಭಾವೋದ್ವೇಗದಿಂದ ತುಂಬಿತ್ತು. +ಕೆಲಕ್ಷಣಗಳ ಮೌನದ ನಂತರ ಮಾತಾಡಿದ ರಮೇಶ. +“ನೀನು ನಮ್ಮ ಬಗ್ಗೆ ಒಂದೆರಡು ಒಳ್ಳೆಯ ಮಾತಾಡಿದ್ದಿ ಅದಕ್ಕೆ ಹೇಳುತ್ತಿದ್ದೇನೆ. +ಕಲ್ಲಕ್ಕ ಎಲ್ಲಿ ಸಿಗಬಹುದೆಂಬುವುದು ನನಗೂ ಗೊತ್ತಿಲ್ಲ. + ಆದರೆ ಒಂದು ಮಾತು ಹೇಳುತ್ತೇನೆ ನೆನಪಿಡು. + ಆಕೆ ಒಂದುವೇಳೆ ನಿನ್ನ ಕಡೆ ಕೋಪದಿಂದ ನೋಡಿದರೆ ಯಾವ ಆಯುಧದ ಅವಶ್ಯಕತೆ ಇಲ್ಲದೇ ನೀ ಸಾಯುತ್ತಿ. +ಸಾಯುವ ಮನಸ್ಸಿದ್ದರೆ ಮಾತ್ರ ಅಂತಹ ಧೈರ್ಯ ಮಾಡು” +ಇನ್ನು ಇವನೊಡನೆ ಮಾತಾಡಿ ಯಾವ ಪ್ರಯೋಜನವೂ ಇಲ್ಲವೆನಿಸಿತ್ತು ತೇಜಾನಿಗೆ, ಜೈಲಿನ ಪ್ರಹರಿಯನ್ನು ಕರೆದು ಆ ಸೆಲ್‌ನಿಂದ ಹೊರಬಿದ್ದ. +ಇಷ್ಟು ವಯಸ್ಸಾದ ಇವನು ಕಲ್ಯಾಣಿಯ ಭಕ್ತನಾಗಲು ಯಾವುದೋ ಬಲವಾದ ಕಾರಣವಿರಲೇಬೇಕೆನಿಸಿತು. +ಅಲ್ಲಿಂದ ಮಿಕ್ಕಿಬ್ಬರನ್ನೂ ಹುಡುಕುತ್ತಾ ಹೋದ. +ಸಿಂಗಣ್ಣ ಬಹಳ ಬಡಕಲು ವ್ಯಕ್ತಿ. +ಅವನ ವಯಸ್ಸು ಮುವತೈದಿರಬಹುದು. +ಚಿಕ್ಕ ಕಣ್ಣುಗಳು ಯಾವಾಗಲೂ ನಿದ್ದೆಯ ಗುಂಗಿನಲ್ಲೋ, ಗಾಢ ಯೋಚನೆಯಲ್ಲೋ ಇರುವಂತೆ ಕಂಡುಬರುತ್ತಿದ್ದವು. +ತೇಜಾ ಅವನ ಸೆಲ್ ಅನ್ನು ಪ್ರವೇಶಿಸಿದಾಗ ಅವನು ಚಾಪೆಯಲ್ಲಿ ಉರುಳಿಕೊಂಡಿದ್ದ. +ಜೈಲಿನ ಪೇದೆಗೆ ಹೇಳಿ ಒಂದು ಸ್ಟೂಲನ್ನು ತರಿಸಿಕೊಂಡ ತೇಜಾ. +ಅವನು ಅದರ ಮೇಲೆ ಕೂಡುತ್ತಿದ್ದಂತೆ ಎದ್ದು ಗೋಡೆಗೊರಗಿ ಕುಳಿತ ಸಿಂಗಣ್ಣ ಬೇಸರದ ದನಿಯಲ್ಲಿ ಕೇಳಿದ. +“ಏನು ಬೇಕು?ಕಾಫಿ ಕುಡಿಯುತ್ತೀಯಾ?” ಅವನ ಮಾತನ್ನು ಕೇಳಿಸಿಕೊಳ್ಳದವನಂತೆ ಕೇಳಿದ ತೇಜಾ. +ಅದಕ್ಕೆ ಅವನೇನೂ ಉತ್ತರಿಸಲಿಲ್ಲ. +ಮೊದಲೇ ಪೇದಗೆ ಎರಡು ಕಾಫಿಗಳನ್ನು ಕಳುಹಿಸುವಂತೆ ಹೇಳಿ ಬಂದಿದ್ದ ಅವನು, ಗೋಡೆಗಾನಿ ಕುಳಿತ ಸಿಂಗಣ್ಣನನ್ನು ಪರೀಕ್ಷಾತ್ಮಕವಾಗಿ ನೋಡತೊಡಗಿದ. +ಅವನಿಗೆ ಯಾವುದೋ ಕಾಯಿಲೆ ಇರುವಂತೆ ಕಂಡುಬರುತ್ತಿತ್ತು. +‘ಡಾಕ್ಟರ್ ಬಂದು ನಿನ್ನ ಪರೀಕ್ಷಿಸಿ ಎಷ್ಟು ದಿನಗಳಾದವು?’ ಮಾತು ಹೇಗೆ ಆರಂಭಿಸಬೇಕೆಂದುಕೊಳ್ಳುತ್ತಾ ಕೇಳಿದ ತೇಜಾ. +ಆ ಮಾತು ತನಗೆ ಕೇಳಿಸದವನಂತೆ ಕೇಳಿದ ಸಿಂಗಣ್ಣ. +“ಕಾಫಿ ಏನಾಯಿತು? ” +“ಬರುತ್ತದೆ. ನಾ ಕೇಳಿದ ಪ್ರಶ್ನೆಗೆ ಉತ್ತರಿಸು.” +“ಯಾರು ಬಂದು ಪರೀಕ್ಷಿಸಿ ಏನು ಮಾಡುವುದಿದೆ. +ಸಾವನ್ನು ಆಹ್ವಾನಿಸುತ್ತಾ ಕುಳಿತಿದ್ದೇನೆ… ಯಾರು ನಿನ್ನ ಕಳಿಸಿದ್ದು?” ತನ್ನ ಸಾವು ಹತ್ತಿರದಲ್ಲೇ ಇದೆ ಎಂಬಂತೆ ಧ್ವನಿಸಿತು ಅವನ ಮೊದಲ ಮಾತು. +ಪ್ರಶ್ನೆಯಲ್ಲಿ ಆಸಕ್ತಿ ಹೊಂಚು ಹಾಕಿತ್ತು. +“ಕಲ್ಲಕ್ಕ” ಎಂದ ತೇಜಾ ಅವನ ಮುಖಭಾವವನ್ನೇ ಪರೀಕ್ಷಿಸತೊಡಗಿದ. +ಅವನ ದೇಹದಲ್ಲಿ ಒಮ್ಮೆಲೆ ಎಲ್ಲಿಲ್ಲದ ಚೇತನ ಬಂದಂತೆನಿಸಿತು. +ಚಾಪೆಯ ಇನ್ನೂ ಮೇಲೆ ಸರಿದು ಸರಿಯಾಗಿ ಕುಳಿತ. +ಕಲ್ಲಕ್ಕನಿಗೆ ಸಾವಿಲ್ಲ! +ಅವರು ಯಾರನ್ನಾದರೂ ನನ್ನ ಸಹಾಯಕ್ಕೆ ಕಳಿಸುತ್ತಾರೆಂದು ಗೊತ್ತಿತ್ತು… +ನೀವು ಯಾರು?” ಅವನ ಮಾತಿನ ಧೋರಣೆ ಒಮ್ಮೆಲೆ ಬದಲಾಗಿತ್ತು. +ಮುಖದಲ್ಲೂ ಒಂದು ಬಗೆಯ ಉತ್ಸಾಹದ ಭಾವ. +ಬಲಹೀನತೆಯ ಕಾರಣ ಇವನ ಮನಸ್ಥಿತಿಗೇನಾದರೂ ಆಗಿರಬಹುದೇ ಎಂಬ ಅನುಮಾನ ಬಂತು. +ಮುಖದ ಮೇಲಿಂದ ನೋಟ ಸರಿಸದೇ ಅವನನ್ನು ಪರೀಕ್ಷಿಸುವಂತಹ ದನಿಯಲ್ಲಿ ಕೇಳಿದ“ನಾನ್ಯರಿರಬಹುದು ಊಹಿಸು ನೋಡುವ?” +“ಪೋಲೀಸಿನವರೇ!ಇನ್ಯಾರಿರುತ್ತೀರಿ?” ತಕ್ಷಣ ಬಂತವನ ಉತ್ತರ. +“ಪೋಲೀಸಿನವರತ್ತಿ… ಕಲ್ಲಕ್ಕ ಹೇಳಿದರೆ ನಿನಗ್ಯಾಕೆ ಸಹಾಯ ಮಾಡಬೇಕು”ಅದೇ ಧೋರಣೆಯಲ್ಲಿ ಕೇಳಿದ ತೇಜ. +ಅವನ ಮಾತು ಮುಗಿಯುತ್ತಿದ್ದಂತೆ ವಿಚಿತ್ರ ನಗೆ ನಕ್ಕ ಕ್ರಾಂತಿಕಾರಿ ಬಡಕಲು ಸಿಂಗಣ್ಣ. +ನಕ್ಕಾಗ ಅವನ ಕಣ್ಣುಗಳು ಮುಚ್ಚಿಕೊಂಡುಹೋದಂತೆ ಕಂಡವು. +ಹುಚ್ಚಿನ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ ಎನಿಸಿತು ತೇಜಾನಿಗೆ. +ನಗುವನ್ನು ಬಲವಂತವಾಗಿ ಎಂಬಂತೆ ನಿಲ್ಲಿಸಿ ಕೇಳಿದ. +“ಅದು ನೀನೇ ಹೇಳಬೇಕು.”ಅದಕ್ಕೇನೂ ಉತ್ತರಿಸದೇ ಅವನ ಚಲನವಲನಗಳನ್ನೇ ಗಮನಿಸುತ್ತಿದ್ದ. +ನಗೆ ಮಾಯವಾದ ಮುಖದಲ್ಲಿ ಒಂದು ತರಹದ ನಿರ್ಭಾವುಕ ಭಾವ ಬಂತು. +ಕಣ್ಣುಗಳನ್ನು ನೋಡುತ್ತಿದ್ದ ತೇಜಾನಿಗೆ ಇವನು ಕುರುಡನಾಗಿರಬಹುದೇ ಎಂಬ ಅನುಮಾನ ಬಂತು ತೇಜಾನಿಗೆ. +ಹಲವು ಕ್ಷಣಗಳು ಹಾಗೇ ಸಲಾಕೆಗಳ ಹಿಂದೆ ನೋಡುತಿದ್ದ ಅವನು ಒಮ್ಮೆಲೇ ಏನೋ ನೆನಪಾದಂತೆ ಕೇಳಿದ. +“ಕಾಫಿ ಏನಾಯಿತು?’“ಅವಸರ ಬೇಡ, ಬರುತ್ತದೆ” ಸಮಾಧಾನಪಡಿಸುವಂತಹ ದನಿಯಲ್ಲಿ ಹೇಳಿದ ತೇಜ. +ಕಲ್ಲಕ್ಕ ಹೇಳಿದಂತೆ ಕೇಳಿ ಇಲ್ಲದಿದ್ದರೆ ಅವರು ಹೇಳಿದಂತೆ ಮಾಡುತ್ತಾರೆ ಯಾರನ್ನೂ ಉಳಿಸುವುದಿಲ್ಲ.” + ಕಾಫಿಯನ್ನು ಮರೆತು ಹಿತೋಪದೇಶ ಮಾಡುತ್ತಿರುವಂತಹ ದನಿಯಲ್ಲಿ ಹೇಳಿದ ಸಿಂಗಣ್ಣ. +“ಕಲ್ಲಕ್ಕ ಅಷ್ಟು ಕೆಟ್ಟವಳೆ?” ಇದೇ ಸಮಯ ಉಪಯೋಗಿಸಬೇಕೆಂದುಕೊಂಡು ಕೇಳಿದ ತೇಜಾ. +“ಮರ್ಯಾದೆ ಇಂದ ಅವರ ಹೆಸರು ಎತ್ತಿರಿ!… +ಅವರು ಎಷ್ಟು ಕೆಟ್ಟವರೋ ಅಷ್ಟೇ ಒಳ್ಳೆಯವರು. +ಅವರು ಒಳ್ಳೆಯವರಲ್ಲದಿದ್ದರೆ ನಿಮ್ಮನ್ನು ಇಲ್ಯಾಕೆ ಕಳುಹಿಸುತ್ತಿದ್ದರು” ಮೊದಲ ಮಾತನ್ನು ಆಜ್ಞೆಯಂತೆ ಎರಡನೇಯದನ್ನು ಕಲ್ಲಕ್ಕನ ಮೇಲಿನ ಗೌರವವನ್ನು ವ್ಯಕ್ತಪಡಿಸುತ್ತಿರುವಂತೆ ಧ್ವನಿಸಿತ್ತವನ ಮಾತು. +“ಕಲ್ಲಕ್ಕನ ತಂಡದವರ ಬಳಿ ಎಂತೆಂಥಹ ಆಯುಧಗಳಿವೆ?” ಅವನ ಮಾತು ಮುಗಿಯುತ್ತಲೆ ಇನ್ನೊಂದು ಪ್ರಶ್ನೆ ಹಾಕಿದ. +ಅವನ ಮಾತು ಮುಗಿಯುತ್ತಿದ್ದಂತೆ ನಗೆ ಆರಂಭಿಸಿದ ಸಣಕಲು ಸಿಂಗಣ್ಣ. +ಆ ನಗೆಯಿಂದ ಅವನ ದೇಹದ ಎಲ್ಲಾ ಅಂಗವೂ ನಡುಗುತ್ತಿರುವಂತೆ ಕಂಡುಬಂತು. +ಸಹನೆಯಿಂದ ಅವನ ದೀರ್ಘ ನಗು ನಿಲ್ಲುವವರೆಗೂ ಸುಮ್ಮನಿದ್ದ ತೇಜಾ, ಅವನ ಈ ನಗುವಿಗೆ ಕಾರಣ ಪೋಲೀಸಿನವರು ಕೊಟ್ಟ ಹಿಂಸೆ ಇರಬಹುದೇ ಎನಿಸಿತು. +ಮಾತಾಡಿದಾಗ ಸೆಲ್‌ನ ಹೊರಗೇ ಇತ್ತವನ ನೋಟ. +“ಆಯುಧಗಳು… ಆಯುಧಗಳು ತಗೊಂಡೇನು ಮಾಡುತ್ತಿರಿ!… ಇಲ್ಲಿ… ಇಲ್ಲಿ… ಇಷ್ಟು ಆಯುಧಧಾರಿ ಕಾವಲುಗಾರರಿದ್ದರೂ ಈ ಜೈಲಿನಿಂದ ಪಾರಾಗುವುದು ಕಷ್ಟವೆಂದುಕೊಂಡಿರಾ. +ಇಲ್ಲಾ… ಕಷ್ಟವಲ್ಲ… ಮನಸು ಮಾಡಿದರೆ ಅದು ಬಹು ಸುಲಭ ಅದಕ್ಕೆ ಬುದ್ದಿ ಬೇಕು. +ಆಯುಧಗಳು ಬೇಕಾಗಿಲ್ಲ. +ಕಲ್ಲಕ್ಕನ ಬಳಿ ಅದಿದೆ ಅಪಾರವಾದ ಬುದ್ಧಿಶಕ್ತಿ. +ಅದರೆದುರು ಯಾವ ಆಯುಧವೂ ಕೆಲಸ ಮಾಡಲಾರದು” +ಒಂದೇ ಉಸಿರಿನಲ್ಲಿ ಎಂಬಂತೆ ಮಾತಾಡಿದ್ದ ಸಿಂಗಣ್ಣ, ಸಾಯುವಂತೆ ಬಡಕಲಾಗಿರುವ ಅವನ ಕಂಠ ಬಹಳ ದೊಡ್ಡದಾಗಿತ್ತು. +ಇವನಿಂದ ಏನು ವಿಷಯಗಳು ಸಂಗ್ರಹಿಸಲು ಸಾಧ್ಯ ಎಂದು ತೇಜಾ ಯೋಚಿಸುತ್ತಿದ್ದಾಗ ಹುರುಪಿನ, ಸಂತಸದ ದನಿಯಲ್ಲಿ ಕೂಗಿದ ಸಿಂಗಣ್ಣ. +“ಕಾಫಿ… ಕಾಫಿ… ಕಾಫಿ ಬಂತು ಕಾಫಿ.”ಚಿಕ್ಕ ಮಕ್ಕಳಂತಹ ಅವನ ಚೀತ್ಕಾರಕ್ಕೆ ಹಿಂತಿರುಗಿದ ತೇಜಾ, ಸೆಲ್‌ನ ಬೀಗ ತೆಗೆಯುತ್ತಿದ್ದ ಪ್ರಹರಿಯ ಹೆಗಲಿಗೆ ಪ್ಲಾಸ್ಕು ನೇತಾಡುತ್ತಿತ್ತು. +ಸಲಾಕೆಗಳ ಬಾಗಿಲನ್ನು ನೂಕಿ ಕೆಳಗಿಟ್ಟ ಎರಡು ಕಪ್ಪುಗಳನ್ನೂ ತೆಗೆದು ಅವರ ಹತ್ತಿರ ಬಂದ. +ಅವನು ಕಪ್ಪುಗಳಲ್ಲಿ ಕಾಫಿ ಹಾಕುತ್ತಿರುವಾಗ ಕೇಳಿದ ತೇಜಾ-“ಇವನ ತಲೆ ಸರಿಯಾಗಿದೆ ತಾನೆ?” +“ಸರಿಯಾಗಿಲ್ಲದೇ ಎನ್ ಸರ್!ನಾಟಕವಾಡುತ್ತಾನೆ ನಾಟಕ. +ಈಗಾಗಲೇ ಎರಡು ಸಲ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. +ನಮ್ಮ ಅದೃಷ್ಟ ಚೆನ್ನಾಗಿತ್ತು ಸಿಕ್ಕಿಬಿದ್ದ” ಸಿಟ್ಟಿನ, ಎತ್ತರದ ದನಿಯಲ್ಲಿ ಹೇಳಿದ ಆ ಪ್ರಹರಿ, ಅವನ ಮಾತು ಮುಗಿಯುತ್ತಲೇ ಮತ್ತೆ ತನ್ನದೇ ನಗುವನ್ನು ನಗಲಾರಂಭಿಸಿದ ಸಿಂಗಣ್ಣ. +ಅದು ನಿಲ್ಲುವುದೇ ಇಲ್ಲವೇನೋ ಎಂಬಂತೆ ಸಾಗಿದಾಗ ಬೂಟುಗಾಲಿನಿಂದ ಅವನನ್ನು ಒದ್ದು ಹೇಳಿದ ಜೈಲಿನ ಪೇದೆ. +“ಬಾಯಿ ಮುಚ್ಚು ಬೋಳಿಮಗನೆ!ಮುಚ್ಚು ಬಾಯಿ! +ಬಹಳವಾಯಿತು ನಿನ್ನ ನಾಟಕ.” +ಆ ಒದೆಯ ಪರಿಣಾಮವಾಗಿಯೋ, ಅವನ ಆಗಿನ ಮನಸ್ಥಿತಿಯ ಕಾರಣವಾಗಿಯೋ ಸಿಂಗಣ್ಣ ನಗೆ ನಿಲ್ಲಿಸಿ ಹೇಳಿದ. +“ಹೌದು!ಎಲ್ಲರೂ ನಾಟಕವಾಡುತ್ತಿದ್ದಾರೆ. +ಹಣದ ಬಲದಿಂದ ಹುಟ್ಟಿದ ನಾಟಕ. +ತಮ್ಮ ತಮ್ಮ ಖುಷಿಗಳ ಸಲುವಾಗಿ ಬಡವರನ್ನು ಇಷ್ಟಬಂದಂತೆ ಕುಣಿಸಿ, ಕುಣಿಸಿ ನಾಟಕವಾಡುತ್ತಿದ್ದಾರೆ. +ಈ ನಾಟಕ ಹೆಚ್ಚು ದಿನ ನಡೆಯುವುದಿಲ್ಲ. +ಅದರ ಕೊನ ಸಮೀಪಿಸುತ್ತಿದೆ. +ತೀರಾ ಸಮೀಪ.”ಬಹು ನಾಟಕೀಯವಾಗಿ ಒಬ್ಬ ನಟನಂತ ಕೈಗಳನ್ನು ಆಡಿಸುತ್ತಾ, ಮುಖದ ಹಾವಭಾವಗಳನ್ನು ಬದಲಾಯಿಸುತ್ತಾ ಮಾತಾಡಿದ್ದ ಸಿಂಗಣ್ಣ. +“ಮೊದಲಿದನ್ನು ಕುಡಿ” ಎಂದು ಅವನ ಮುಖದೆದುರು ಕಾಫಿಯ ಕಪ್ಪನ್ನು ಹಿಡಿದ ಜೈಲಿನ ಪ್ರಹರಿ, ಮತ್ತೆ ಒಮ್ಮೆಲೆ ಅವನ ಮುಖಭಾವ ನಾಟಕೀಯ ಪರಿವರ್ತನೆ ಹೊಂದಿತು. +ನಡುಗುವ ಎರಡೂ ಕೈಗಳಿಂದ ಕಪ್ಪನ್ನು ತೆಗೆದುಕೊಂಡು ಬಿಸಿಬಿಸಿ ಕಾಫಿಯನ್ನು ನೀರಿನಂತೆ ಗಟಗಟನೆ ಕುಡಿದು ಮುಗಿಸಿ ಕಪ್ಪನ್ನು ಕೆಳಗಿಟ್ಟ. + ತನ್ನ ಕಪ್ಪಿನಲ್ಲಿದ್ದ ಒಂದು ಗುಟುಕು ಕಾಫಿ ಕುಡಿದ ತೇಜಾ ಒಬ್ಬ ಇಷ್ಟು ನಟನೆ ಮಾಡಲು ಸಾಧ್ಯವೇ ಎಂದು ಯೋಚಿಸುವಂತಾಯಿತು. +ಆಗ ತಾನು ಸೆಲ್‌ನಲ್ಲಿ ಬಂದಾಗ ಅವನಾಡಿದ ಮೊದಲಮಾತು ನೆನಪಾಯಿತು. +ಒಂದು ವೇಳೆ ನಟನೆಯೇ ಇದ್ದರೆ ಇಂತಹ ನಟನೆ ಏಕೆಂಬ ಆಶ್ಚರ್ಯ. +ತಾನೂ ಕಾಫಿಯನ್ನು ಕುಡಿದು ಇನ್ನೂ ಅಲ್ಲೇ ನಿಂತಿದ್ದ ಪ್ರಹರಿಗೆ ಕಪ್ಪನ್ನು ಹಿಂತಿರುಗಿಸುತ್ತಾ ಕೇಳಿದ“ಅವನ ಕೈಗಳು, ದೇಹ ಇಷ್ಟೇಕೆ ನಡುಗುತ್ತಿದೆ?” +“ಅದು ನಾಟಕ ಸರ್!ಅವನಿಗೇನೂ ಆಗಿಲ್ಲ, ನೀವು ಹುಶಾರಾಗಿರಿ. +ಅವನು ಏನು ಬೇಕಾದರೂ ಮಾಡಬಹುದು.” ತೇಜಾನನ್ನು ಎಚ್ಚರಿಸುವಂತೆ ಹೇಳಿ ಹೊರಹೋದ ಪ್ರಹರಿ ಮತ್ತೆ ಸೆಲ್‌ಗೆ ಬೀಗ ಹಾಕಿದ. +ಅವನು ಕಣ್ಮರೆಯಾಗುತ್ತಲೆ ಸಿಟ್ಟಿನ ಆವೇಶದ ದನಿಯಲ್ಲಿ ಮಾತಾಡತೊಡಗಿದ ಸಿಂಗಣ್ಣ. + ಅವನ ಮುಖ ಭಾಗದಲ್ಲಿ ಮತ್ತೊಮ್ಮೆ ಇನ್ನೊಂದು ನಾಟಕೀಯ ಬದಲಾವಣೆಯಾಗಿತ್ತು. +“ಹೌದು!ಹುಷಾರಾಗಿರಿ!ಎಲ್ಲರೂ ಹುಷಾರಾಗಿರಿ! +ಬಡಬಗ್ಗರನ್ನು ಗುಲಾಮರಂತೆ, ಸಾಕುನಾಯಿಗಳಂತೆ ಉಪಯೋಗಿಸಿಕೊಳ್ಳುತ್ತಿರುವ ಎಲ್ಲರೂ ಸಾಯುತ್ತೀರಿ! +ಹುಷಾರಾಗಿರು ನೀನೂ ಸಾಯುತ್ತಿ!”ಮಾತು ಮುಗಿಯುತ್ತಿದ್ದಂತೆ ತಲೆಯನ್ನು ತೇಜಾನ ಕಡೆ ತಿರುಗಿಸಿದ. +ಅವನ ಚಿಕ್ಕ ಕಣ್ಣುಗಳು ಇನ್ನೂ ಚಿಕ್ಕವಾದಂತೆ ಕಂಡವು. +ಅವನ ಮಾತಿನ ಧೋರಣೆಗೆ ಚಕಿತನಾದಂತೆ ಕೇಳಿದ ತೇಜಾ,“ನಾನ್ಯಾಕೆ ಸಾಯುತ್ತೀನಿ?” +ಆ ಮಾತು ಮುಗಿಯುತ್ತಿದ್ದಂತೆ ಮಿಂಚಿನ ಗತಿಯಲ್ಲಿ ಚಾಪೆಯಿಂದ ಎದ್ದ ಸಿಂಗಣ್ಣ ತೇಜಾನ ಕೋಟಿನ ಕಾಲರನ್ನು ಎರಡೂ ಕೈಗಳಿಂದ ಹಿಡಿದು ಎಳೆದು ತನ್ನ ತಲೆಯಿಂದ ಅವನ ಮುಖವನ್ನು ಜಜ್ಜಲು ಹೋದ, ತೇಜಾನ ಬಲಗೈ ಅವನ ಕುತ್ತಿಗೆಯ ಮೇಲೆ ಬಂತು. +ಸಿಂಗಣ್ಣನ ತಲೆಯನ್ನು ದೂರವಿಡಲು ಅವನು ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಬೇಕಾಯಿತು. +ಈ ಸಣಕಲ ವ್ಯಕ್ತಿಯ ಬಳಿ ಇಷ್ಟು ಶಕ್ತಿ ಇರಬಹುದೆಂದು ಯಾರೇ ಆಗಲಿ ಊಹಿಸುವುದೂ ಅಸಾಧ್ಯ. +ಕಾಲರಿನ ಮೇಲಿಂದ ಕೈ ತೆಗೆದ ಸಿಂಗಣ್ಣ ಅವನ ಹೊಟ್ಟೆಗೆ ಗುದ್ದಲು ಹೋದಾಗ ಅವನನ್ನು ದೂರ ನೂಕಿ ಸೊಂಟದ ಮೇಲೆ ಬಲವಾಗಿ ಒದ್ದ, ತೂರಾಡುತ್ತಾ ಹೋದ ಅವನು ಸೆಲ್‌ನ ಗೋಡೆಯ ಆಸರೆ ಪಡೆದ. +ಕೋಟನ್ನು ಸರಿಮಾಡಿಕೊಳ್ಳುತ್ತಾ ತೇಜಾ ದಿಗ್ಬ್ರಾಂತಿಯಿಂದ ಅವನನ್ನೇ ನೋಡುತ್ತಿದ್ದಾಗ ಕೋಪಾವೇಶದ ದನಿಯಲ್ಲಿ ಹೇಳಿದ ಸಿಂಗಣ್ಣ. +“ನೀನು ಮೊದಲು ಸಾಯುತ್ತಿ! +ಯಾಕೆಂದರೆ ಕಲ್ಲಕ್ಕನನ್ನು ಹುಡುಕಲು ಹೊರಟಿರುವಿ! +ಅದಕ್ಕೆ ಮೊದಲು ಸಾಯುತ್ತಿ!”ಅವನ ಹುಚ್ಚು ಆವೇಶವನ್ನು ಹೋಗಲಾಡಿಸಲೆಂಬಂತೆ ಸಮಾಧಾನದ ದನಿಯಲ್ಲಿ ಅವನಿಗೆ ತಿಳಿಹೇಳುವಂತೆ ಹೇಳಿದ ತೇಜಾ. +“ಅಷ್ಟು ಆವೇಶ ಬೇಡ!ಸಮಾಧಾನ ಮಾಡಿಕೋ! +ನಾ ನಿಮ್ಮ ಕಲ್ಲಕ್ಕನನ್ನು ಹುಡುಕಲು ಹೊರಟಿಲ್ಲ.” +“ಇಂತಹ ನಾಟಕಗಳನ್ನು ನಾ ಬಹಳ ನೋಡಿದ್ದೇನೆ! +ತೊಲಗಿಲ್ಲಿಂದ, ತೊಲಗು” ಅಬ್ಬರಿಸಿದ ಕ್ರಾಂತಿಕಾರಿ ಸಣಕಲು ಸಿಂಗಣ್ಣ, ಅವನ ದೇಹದ ಯಾವ ಅಂಗದಲ್ಲೂ ಈಗ ಸ್ವಲ್ಪವೂ ನಡುಕವಿರಲಿಲ್ಲ. +ಆ ಗದ್ದಲ ಕೇಳಿದ ಜೈಲಿನ ಪ್ರಹರಿ ಆಗಲೇ ಲಗುಬಗೆಯಿಂದ ಬೀಗ ತೆಗೆದು ಒಳಬಂದಿದ್ದ. +ಅವನು ಏನು ಮಾಡಬಹುದು ಎಂದು ತೇಜಾ ಯೋಚಿಸುತ್ತಿರುವಾಗಲೇ ಗೋಡೆಗಾನಿ ನಿಂತ ಸಿಂಗಣ್ಣನ ಮುಖಕ್ಕೆ ಬಲವಾಗಿ ಗುದ್ದಿ ಹೇಳಿದ. +“ಮಲಗು… ಮಲಗು… ಬೋಳಿಮಗನೇ ದಿನ ದಿನಕ್ಕೆ ನಿನ್ನ ಸೊಕ್ಕು ಹೆಚ್ಚಾಗುತ್ತಿದೆ.”ಅದಕ್ಕೆ ಪ್ರತಿಯಾಗಿ ಹೊಡೆಯದೇ ಅಬ್ಬರಿಸಿದ ಸಿಂಗಣ್ಣ. +“ಹೊಡೆಯಿರಿ!ಎಷ್ಟು ಹೊಡೆಯುತ್ತೀರೋ ಹೊಡೆಯಿರಿ! +ನಮ್ಮನ್ನೆಲ್ಲಾ ಒಂದೇ ಕಡೆ ಸೇರಿಸಿ ಮುಗಿಸಿಬಿಡಿ! +ನಿಮ್ಮಗಳ ಪೀಡೆ ತೊಲಗುತ್ತದೆ.”ಅವನ ಆ ಅಬ್ಬರ ರೋಧನದಂತೆ ಧ್ವನಿಸಿತು. +ಅಲ್ಲಿ ನಿಲ್ಲಲು ಮನಸಾಗದೇ ಸೆಲ್‌ನಿಂದ ಹೊರಬಿದ್ದ ತೇಜಾ. +ಸೂರ್ಯ ಕೆಳಗಿಳಿದು ಕತ್ತಲಾವರಿಸಲಾರಂಭಿಸಿತ್ತು. +ಆ ಬೆಳಕು ಕತ್ತಲುಗಳ ಆಟ ಕಾಡಿಗೆ ತನ್ನದೇ ಆದ ಪ್ರಕೃತಿ ಸೌಂದರ್ಯವನ್ನು ಒದಗಿಸಿದ್ದವು. +ಪಕ್ಷಿಗಳು ತಮ್ಮ ತಮ್ಮ ಗೂಡಿಗೆ ಸೇರುವ ಸದ್ದೇ ಮೌನವನ್ನು ಕದಡಲು ಯತ್ನಿಸುತ್ತಿತ್ತು. +ಆ ಸದ್ದನ್ನು ಹತ್ತಿಕ್ಕುವಂತೆ ಆಗಾಗ ಕ್ರಿಮಿ, ಕೀಟಗಳ ತಮ್ಮದೇ ಆದ ಕೂಗಾಟವು ಕೇಳಿಸುತ್ತಿತ್ತು. +ಬಂಡೆಯ ಮೇಲೆ ಕುಳಿತು, ಬಂಡೆಗಾನಿಕೊಂಡಿದ್ದ ಕಲ್ಯಾಣಿ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದಳು. +ಎಡಗೈಯಲ್ಲಿ ಎ.ಕೆ.೪೭ ಆಯುಧವನ್ನು ಊರುಗೊಲಿನಂತೆ ಹಿಡಿದಿದ್ದಳು. +ಅವಳೆದುರು ನಾಗೇಶ ಮತ್ತು ಸಾಯಿ ತಮ್ಮ ತಮ್ಮ ಆಯುಧಗಳನ್ನು ಎದುರಿಗಿಟ್ಟುಕೊಂಡು ಕುಳಿತಿದ್ದರು. +ಆಗಾಗ ನಾಗೇಶನ ಮೇಲೆ ಹಾಯುತ್ತಿತ್ತು ಕಲ್ಯಾಣಿಯ ನೋಟ. +ಮೌನ ಕಾಯುವಿಕೆ ಅವನಲ್ಲಿ ಅಸಹನೆ ಹುಟ್ಟಿಸುತ್ತಿರುವಂತೆ ಕಂಡುಬರುತ್ತಿತ್ತು. +ಮತ್ತೆ ಅವನನ್ನು ತಮ್ಮ ತಂಡದಲ್ಲಿ ಸೇರಿಸಿಕೊಂಡು ತಪ್ಪು ಮಾಡಿದನೆ ಎಂಬ ಯೋಚನೆ ಹುಟ್ಟಿತ್ತವಳಲ್ಲಿ. +ಆ ಬಗ್ಗೆ ಅವಳು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. +ಮೊದಲು ಎಷ್ಟು ಸಲ ತನಗೆ ತಾನು ಕೊಟ್ಟುಕೊಂಡ ಉತ್ತರವೇ ಅವಳ ಮನದಲ್ಲಿ ಹಾಯಿತು. +ಎಲ್ಲಾ ಕಲಿಯಲು ಸಮಯ ಹಿಡಿಯುತ್ತದೆ. +ಒಮ್ಮಿಂದೊಮ್ಮೆಲೆ ಯಾರೂ ನುರಿತ ಕಮಾಂಡೋ ಅಥವಾ ಮರ್‌ಸಿನರಿ ಆಗಲು ಸಾಧ್ಯವಿಲ್ಲ. +ಅವರುಗಳಿಗಾದರೆ ನುರಿತವರು ನಿಯಮಿತ ರೀತಿಯಲ್ಲಿ ಶಿಕ್ಷಣ ಕೊಡುತ್ತಾರೆ. +ಹೊತ್ತಿಗೆ ಸರಿಯಾಗಿ ಪೌಷ್ಟಿಕ ಆಹಾರ ಸಿಗುತ್ತದೆ. +ಕ್ರಾಂತಿಕಾರಿಗೆ ಅಂತಹದೇನೂ ಇಲ್ಲ. +ಒಬ್ಬ ನಿಷ್ಠಾವಂತ ಕ್ರಾಂತಿಕಾರಿಯಾಗಲು ಬೇಕಾದ ಪ್ರಮುಖ ಗುಣ ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಎಲ್ಲವನ್ನು ಬಿಟ್ಟು, ಎಲ್ಲರನ್ನೂ ಬಿಟ್ಟು, ಸಾವಿಗೆ ಅಂಜದೇ ಹೋರಾಡುವ ಮನೋಭಾವ. +ಅದಕ್ಕೂ ಮುಖ್ಯವಾಗಿ ಹಸಿವು ಬಾಯಾರಿಕೆಯನ್ನು, ಹಿಂಸೆಯನ್ನು ಸಹಿಸುವ ಮನೋಧಾರ್ಡ್ಯ, ಇವೆಲ್ಲಾ ಗುಣಗಳು ನಾಗೇಶನಲ್ಲಿದೆ. +ಅವನಲ್ಲಿ ಇರುವ ಒಂದೇ ಅವಗುಣವೆಂದರೆ ಅವನ ಭಾವುಕತೆ, ಏನೂ ಅರಿಯದೇ ಒಮ್ಮೆಲೆ ದೊಡ್ಡ ದೊಡ್ಡ ಕೆಲಸಗಳಿಗೆ ಹೋಗುವ ಮಹಾತ್ವಾಕಾಂಕ್ಷೆ. +ಅದಕ್ಕೆ ಕಾರಣ ಅವನ ವಯಸ್ಸು, ಇನ್ನೂ ಹತ್ತೊಂಭತ್ತೂ ಆಗಿರಲಿಕ್ಕಿಲ್ಲ. +ಮುಖದ ಮೇಲೆ ಗಡ್ಡದ ಕುರುಹುಗಳೂ ಕಾಣಿಸಿಕೊಂಡಿಲ್ಲ. +ಒಮ್ಮೆಲೆ ದೊಡ್ಡವನಾಗಿ ಬಿಡಬೇಕೆಂಬ ಆಸೆ. +ಕಲ್ಯಾಣಿ ಚಿಂತಿಸುತ್ತಿದ್ದುದ್ದನ್ನೇ ಹೇಳುವಂತೆ ಮೌನ ಮುರಿದ ನಾಗೇಶ“ಈ ಕೆಲಸ ನಾನು ಮಾಡುತ್ತೇನೆ” +“ಯಾವ ಕೆಲಸ?” ತನ್ನ ಯೋಚನೆಯಿಂದ ಹೊರಬಂದ ಕಲ್ಯಾಣಿ ಬೇಕೆಂತಲೇ ಕೇಳಿದಳು. +“ಬಾಂಬು ಸ್ಫೋಟಿಸುವ ಕೆಲಸ” ಕೂಡಲೇ ಹುಮ್ಮಸ್ಸಿನಿಂದ ಹೇಳಿದ ನಾಗೇಶ. +ಆ ಮಾತನ್ನು ಕೇಳಿಸಿಕೊಳ್ಳದವಳಂತೆ ಹೇಳಿದಳು ಕಲ್ಯಾಣಿ,“ಕತ್ತಲಾಗುತ್ತಿದೆ ದೀಪ ಹಚ್ಚು”ಯಾವ ಮಾತೂ ಇಲ್ಲದೇ ಎದ್ದ ನಾಗೇಶ ಕಂದೀಲನ್ನು ಹೊತ್ತಿಸಿ ತಂದು ನಡುವಿಟ್ಟ. +ಆ ಬೆಳಕಿನಲ್ಲಿ ಅವನ ಮುಖ ನೋಡಿದಳು ಕಲ್ಯಾಣಿ. +ಅವನು ತನ್ನ ನಿರ್ಣಯಕ್ಕಾಗಿ ಕಾದಂತೆ ಕಂಡುಬರುತ್ತಿತ್ತು. +ನಾಗೇಶನಿಗೀಗ ತಿಳಿ ಹೇಳದಿದ್ದರೆ ಮುಂದೆ ಗೊಂದಲಗಳು ಉಂಟಾಗಬಹುದೆಂದು ನಯವಾದ ದನಿಯಲ್ಲಿ ಮಾತಾಡಿದಳು ಕಲ್ಯಾಣಿ. +“ಅದು ಅಷ್ಟು ಸುಲಭದ ಕೆಲಸವಲ್ಲ ನಾಗೇಶ! +ನಿನಗೂ ಎಲ್ಲಾ ಕೆಲಸಗಳೂ ಮಾಡುವ ಅವಕಾಶ ಸಿಗುತ್ತದೆ. +ಮೊದಲು ಬೇರೆಯವರು ಹೇಗೆ ಕೆಲಸ ಮಾಡುತ್ತಾರೆ ನೋಡುತ್ತಿರು. +ಸಮಯ ಸಿಕ್ಕಾಗಲೆಲ್ಲಾ ಹರಿ ಮತ್ತು ಶಂಕರ ನಿನಗೆ ಎಲ್ಲದರ ಬಗ್ಗೆ ತರಬೇತಿ ಕೊಡುತ್ತಿರುತ್ತಾರೆ… +ಇವತ್ತು ಹೇಗೂ ನೀನು ಜತೆಗಿರುತ್ತಿ. +ನೋಡು ಹೇಗೆ ಈ ಕೆಲಸ ಮಾಡುತ್ತಾರೆಂಬುವುದು ಗೊತ್ತಾಗುತ್ತದೆ” +“ಬಾಂಬು ಸ್ಫೋಟಿಸಲು ನಾನೂ ಬರುತ್ತೇನೆಯೇ!”ಅವನ ಆತುರದ ಮಾತು ಅವಳಲ್ಲಿ ಅಸಹನೆಯನ್ನು ಹುಟ್ಟಿಸಿತು. +ಇವನ ಭಾವುಕತೆಯನ್ನು ಹತೋಟಿಯಲ್ಲಿ ತರುವುದು ಸಾಧ್ಯವೇ ಎಂದುಕೊಳ್ಳುತ್ತಾ ಹೇಳಿದಳು. +“ಪ್ರತಿಯೊಂದಕ್ಕೂ ಆತುರ, ಅಸಹನೆ ಭಾವುಕತೆಗಳು ಬೇಡ. +ನೀನು ಎಲ್ಲಾ ಕೆಲಸಗಳನ್ನು ಮಾಡಬೇಕೆಂದುಕೊಂಡರೆ ಮೊದಲು ಭಾವುಕತೆಯನ್ನು ಹತೋಟಿಯಲ್ಲಿಡು” +“ಸರಿಯಕ್ಕ ಅರ್ಥವಾಯಿತು! +ನೀವು ಹೇಳಿದಂತೆ ಕೇಳುತ್ತೇನೆ” ಕೂಡಲೇ ಹೇಳಿದ ನಾಗೇಶ, ಅವನ ಮಾತಿನಲ್ಲಿ ಭಾವುಕತೆ ತುಂಬಿತ್ತು. +ಇವನನ್ನು ಸರಿಪಡಿಸುವುದು ಅಸಾಧ್ಯವೇನೊ ಎನಿಸಿತು ಕಲ್ಯಾಣಿಗೆ ಈ ಕೆಲಸವಾದ ಮೇಲೆ ಅದರ ಬಗ್ಗೆ ಗಹನವಾಗಿ ಯೋಚಿಸಬೇಕು ಎಂದುಕೊಳ್ಳುತ್ತಾ ಹೇಳಿದಳು“ನೀವು ಹೋಗಿ ಅವರು ಬರುತ್ತಿದ್ದಾರೇನೋ ನೋಡಿ.” +ಬೇಸರದಿಂದ ಬಿಡುಗಡೆಗೆ ಅದೇ ಒಳ್ಳೆಯ ಮಾರ್ಗವೆಂದುಕೊಳ್ಳುತ್ತಾ ಎದ್ದರಿಬ್ಬರು. +ತನ್ನ ಯೋಜನೆಯ ಕಡೆ ಮನವನ್ನು ಹರಿಯಬಿಟ್ಟಳು ಕಲ್ಯಾಣಿ. +ಸಾಮಾನ್ಯ ರೌಡಿಯಾಗಿದ್ದ ದೇವಿಯಾದವ ದೊಡ್ಡಣ್ಣನ ಕಾಲದಲ್ಲಿ ಆಯುಧಗಳ ವ್ಯಾಪಾರ ಆರಂಭಿಸಿದ. +ಸರಕಾದಲ್ಲೂ ಅವನ ಪ್ರಭಾವವಿದ್ದ ಕಾರಣ ಪೋಲೀಸಿನವರೂ ಅವನು ಹೇಳಿದಂತೆ ಕುಣಿಯುತ್ತಿದ್ದರು. +ಅದರಿಂದ ಎಂತಹ ಆಯುಧ ಬೇಕೆಂದರಂತಹ ಆಯುಧ, ಆರ್.ಡಿ.ಎಕ್ಸ್‌ನ್ನೊಳಗೊಂಡು ಬಾಂಬು ತಯಾರಿಸಲು ಎಂತಹ ಸಾಮಾಗ್ರಿ ಬೇಕೆಂದರೆ ಅಂತಹದು ಅವನು ತಮಗೆ ಸರಬರಾಜು ಮಾಡುತ್ತಿದ್ದ. +ಕೊನೆಯ ಸಲ ದೊಡ್ಡಣ್ಣ ಅವನಿಗೆ ಆಯುಧ ಮತ್ತು ಸ್ಫೋಟಕಗಳಿಗಾಗಿ ಬೇಕಾದಕ್ಕಿಂತ ಹೆಚ್ಚು ಹಣ ಮುಂಗಡವಾಗಿ ಕೊಟ್ಟಿದ್ದೇವೆಂದು ಹೇಳಿದರು. +ಆ ಸಾಮಗ್ರಿ ಸಮಯಕ್ಕೆ ಬಂದಿರಲಿಲ್ಲ. +ಆ ಬಗ್ಗೆ ಅವರು ಒಂದೆರಡು ಸಲ ಹೇಳಿ ಕಳಿಸಿದ್ದರು. +ಯಾವುದೋ ಒಂದು ನೆಪ ಹೇಳಿ ಆಯುಧಗಳು ಮತ್ತು ಸ್ಫೋಟಕವನ್ನು ಕಳಿಸುವುದನ್ನು ಮುಂದೂಡುತ್ತಾ ಬಂದಿದ್ದ. +ಇದೆಲ್ಲಾ ಕಲ್ಯಾಣಿಗೆ ಮಾತ್ರ ಗೊತ್ತಿತ್ತು. +ಇದರ ನಡುವೆ ಎನ್‌ಕೌಂಟರ್‌ನಲ್ಲಿ ದೊಡ್ಡಣ್ಣನವರು ವೀರಮರಣವನ್ನಪ್ಪಿದ್ದರು. +ದೊಡ್ಡ ಕ್ರಾಂತಿಕಾರಿ ತಂಡ ಒಡೆದು ಚಿಕ್ಕದಾಗಿ ಬಿಟ್ಟಿತ್ತು. +ಒಂದರ ನಾಯಕಿ ತಾನಾಗಿದ್ದಳು. +ಅದರನಂತರ ಒಂದೆರಡು ಸಲ ದೇವಿಯಾದವನಿಗೆ ಆಯುಧಗಳನ್ನು ಕಳಿಸುವಂತೆ ಹೇಳಿಕಳಿಸಿದ್ದಳು. +ಕೊನೆಯ ಸಲ ಶಂಕರ ಹೋದಾಗ ಅವನ ಅವಮರ್ಯಾದೆ ಮಾಡಿ, ಸಾಮಗ್ರಿ ಕಳಿಸುವುದಿಲ್ಲ, ಹಣ ಕೊಡುವುದಿಲ್ಲ ಏನುಬೇಕಾದರೂ ಮಾಡಿಕೊಳ್ಳಿ ಎಂದು ಒರಟಾಗಿ ಹೇಳಿ ಕಳುಹಿಸಿದ್ದ ದೇವಿ ಯಾದವ. +ಹಾಗೇ ದಿನಗಳು ಉರುಳುತ್ತಾ ಹೋಗಿದ್ದವು. +ದೇವಿಯಾದವನ ಪ್ರಾಬಲ್ಯ ಬೆಳೆದು ಅವನೇ ಒಂದು ರಾಜಕೀಯ ಪಾರ್ಟಿಯನ್ನು ಆರಂಭಿಸಿದ್ದ. +ಚುನಾವಣೆಯಲ್ಲಿ ಅವನು ಗೆಲ್ಲುವುದಲ್ಲದೇ ಅವನ ಪಾರ್ಟಿಯ ಹತ್ತು ಜನ ಚುನಾಯಿತರಾಗಿದ್ದರು. +ರಾಜ್ಯದಲ್ಲಿ ಇದೊಂದೇ ಪ್ರಮುಖ ವಿಪಕ್ಷಿದಳವಾಗಿ ಬಿಟ್ಟಿತ್ತು. +ಅದರ ನಾಯಕ ದೇವಿಯಾದವ. +ರಾಜಕಾರಣವನ್ನು ವ್ಯವಹಾರವಾಗಿಸಿ ಕೊಂಡು ಅವನು ಅದರಲ್ಲೂ ಬೇಕಾದಷ್ಟು ಸಂಪಾದಿಸಿದ್ದ. +ಅವನು, ದೊಡ್ಡಣ್ಣ ಮತ್ತು ಅವನೊಡನೆ ಆದ ಒಪ್ಪಂದವನ್ನು ಮರೆತುಬಿಟ್ಟಿರಬಹುದು. +ಆದರೆ ಕಲ್ಯಾಣಿ ಅದನ್ನು ಮರೆತಿರಲಿಲ್ಲ. +ಸಮಯಕ್ಕಾಗಿ ಕಾಯುತ್ತಿದ್ದಳು. +ವಿಪಕ್ಷದ ನಾಯಕ ದೇವಿಯಾದವ ರಾಮನಗರಕ್ಕೆ ಬರಲಿದ್ದಾನೆಂಬ ವಿಷಯ ತಿಳಿದಾಗ ಎಲ್ಲಾ ವಿವರಗಳನ್ನು ಸಂಗ್ರಹಿಸಿಕೊಂಡು ಬರುವಂತೆ ಹರಿ ಮತ್ತು ಶಂಕರನನ್ನು ಕಳುಹಿಸಿದ್ದಳು. +ಮಲ್ಲಪ್ಪ ಬಂಡೇರಹಳ್ಳಿಯಲ್ಲಿನ ಚಟುವಟಿಕೆಗಳನ್ನು ಅರಿತು ಬರಲು ಹೋಗಿದ್ದ. +ತಮ್ಮನ್ನು ಮೋಸ ಮಾಡಿದ, ಜನರ ಹಣವನ್ನು ಲೂಟಿ ಮಾಡುತ್ತಿರುವ ದೇವಿಯಾದವ ಇನ್ನು ಬದುಕಿರಬಾರದೆಂಬ ನಿರ್ಣಯವನ್ನು ಕಲ್ಯಾಣಿ ಬಹು ಮೊದಲೇ ತೆಗೆದುಕೊಂಡಿದ್ದಳು. +ನಾಳೆ ಅವನು ರಾಮನಗರಕ್ಕೆ ಬರುವನೆಂಬ ಸುದ್ದಿ. +ಅದು ಖಚಿತವಾದ ಮೇಲೆ ಮುಂದಿನ ಯೋಜನೆ ಎಂದು ಕಾಯುತ್ತಿದ್ದಳು. +ಇದೆಲ್ಲದರ ಬಗ್ಗೆ ಯೋಚಿಸುವಾಗಲೂ ಭಾವರಹಿತವಾಗಿತ್ತವಳ ಮನ. +ಏಳು ಗಂಟೆಯ ಸುಮಾರಿಗೆ ಹರಿ ಮತ್ತು ಶಂಕರ ಬಂದರು. +ಮನದ ಸಮತೋಲನವನ್ನು ಕಳೆದುಕೊಳ್ಳದೇ ಅವರು ತಂದ ಸುದ್ದಿಯನ್ನು ಕೇಳಿದಳು ಕಲ್ಯಾಣಿ. +ಇವತ್ತು ರಾತ್ರಿಯೇ ರಾಮನಗರಕ್ಕೆ ಹೋಗಲಿದ್ದಾನೆ ದೇವಿಯಾದವ. +ರಾಮನಗರಕ್ಕೆ ಹೋಗಬೇಕಾದರೆ ದೇವನಹಳ್ಳಿಯನ್ನು ಹಾದೇ ಹೋಗಬೇಕು. +ಬಂಡೇರಹಳ್ಳಿ ಒಂದು ಕಡೆಯಾದರೆ ದೇವನಹಳ್ಳಿ ಇನ್ನೊಂದು ಕಡೆ, ಕಾಡಿನ ಅಡ್ಡದಾರಿಯಿಂದ ನಡೆಯುತ್ತಾ ಹೋದರೆ ದೇವನಹಳ್ಳಿಯ ರಾಜಮಾರ್ಗ ತಲುಪಲು ಸುಮಾರು ಎರಡು ಗಂಟೆಗಳಾದರೂ ಬೇಕು. +ಹರಿ ಹೇಳುತ್ತಿದ್ದುದನ್ನೆಲ್ಲಾ ಕೇಳುತ್ತಲೇ ಮುಂದೆ ಮಾಡಬೇಕಾದ ಕೆಲಸದ ತಯಾರಿ ಆರಂಭಿಸಿದ್ದಳು ಕಲ್ಯಾಣಿ. +ತಾವು ಈಗಲೇ ಹೊರಡಬೇಕು ಎಂದು ಅರಿತ ಮಿಕ್ಕವರೂ ತಮ್ಮೊಡನೆ ತೆಗೆದುಕೊಂಡು ಹೋಗಬೇಕಾದ ಆಯುಧಗಳನ್ನು, ಸಲಕರಣೆಗಳನ್ನು ಸಿದ್ಧ ಮಾಡಿಕೊಳ್ಳುವುದರಲ್ಲಿ ತೊಡಗಿದರು. +ಅವರು ಸಿದ್ಧರಾಗುತ್ತಿದ್ದಂತೆ ಬಂಡೇರಹಳ್ಳಿಯಿಂದ ಬಂದ ಮಲ್ಲಪ್ಪ, ಆಗಿನ ಯೋಜನೆ ಗೊತ್ತಾದಮೇಲೆ ಅವನಿಗೆ ಮಾತಾಡಲು ಸಮಯವೇ ಇರಲಿಲ್ಲ. +ಕಲ್ಯಾಣಿಯ ಆದೇಶದ ಮೇರೆಗೆ ಅವನೂ ಅವರೊಡನೆ ಹೊರಡುವ ಸಿದ್ಧತೆ ಆರಂಭಿಸಿದ. +ಎಲ್ಲರ ಬೆನ್ನುಗಳಿಗೆ ಚೀಲಗಳು ಏರಿದವು, ಹೆಗಲಿಗೆ ಆಯುಧ, ಕಾಡಿನ ಗಾಡಾಂಧಕಾರದಲ್ಲಿ ನಡುಗೆ ಆರಂಭವಾಯಿತು. +ಎಲ್ಲರಿಗಿಂತ ಮುಂದಿದ್ದ ಹರಿನಾಥ. +ಅವನ ಹಿಂದೆ ಒಂದೇ ಸಾಲಿನಲ್ಲಿ ನಡೆಯುತ್ತಿದ್ದರು ಮಿಕ್ಕವರು. +ಕೊನೆಗಿದ್ದವಳು ಕಲ್ಯಾಣಿ. +ದಟ್ಟ ಕಾಡಿನಲ್ಲಿ ಗಿಡಗಂಟೆ, ಪೊದೆಗಳ ನಡುವೆ ವೇಗದ ಗತಿಯಲ್ಲಿ ನಡೆಯುವದು ಅಸಂಭವ. +ಬಹು ಜನರಿಗೆ ಅಸಂಭವವಾದದ್ದು ಅವರಿಗೆ ಅಷ್ಟು ಕಷ್ಟಕರವಾಗಿ ಕಾಣುತ್ತಿರಲಿಲ್ಲ. +ಅಂಧಕಾರದಲ್ಲಿ ಅವರನ್ನು ಯಾರೂ ಅಸ್ಪಷ್ಟವಾಗಿಯೂ ಕಾಣುವ ಹಾಗಿರಲಿಲ್ಲ. +ಕಲ್ಯಾಣಿಯ ಮುಂದಿದ್ದ ನಾಗೇಶನ ನಡುಗೆಯ ಗತಿ ಆಗಾಗ ನಿಧಾನಗೊಳ್ಳುತ್ತಿತ್ತು. +ಅದನ್ನು ತಿದ್ದಲೆಂಬಂತೆ ತನ್ನ ಆಯುಧದ ಹಿಂಭಾಗದಿಂದ ಅವನನ್ನು ಮುಂದೆ ನೂಕುತ್ತಿದ್ದಳು ಕಲ್ಯಾಣಿ. +ಅದರ ಕಾರಣ ಎಡವುತ್ತಿದ್ದ ಅವನು ಯಾವ ಮಾತೂ ಆಡದೆ ತೂರಾಡಿ ಸರಿಹೋಗಿ ಇನ್ನೂ ವೇಗವಾಗಿ ನಡೆಯುತ್ತಿದ್ದ. +ಗಾಢ ಮೌನದಲ್ಲಿ ಇವರುಗಳ ನಡುಗೆಯ ಸದ್ದು, ಗಿಡಗಂಟೆಗಳನ್ನು ಮುರಿಯುವ ಸದ್ದು ಮಾತ್ರ ಕೇಳಿಸುತ್ತಿತ್ತು. +ವಾತಾವರಣದಲ್ಲಿ ಹದವಾದ ಚಳಿ ಇದ್ದರೂ, ಆಗಾಗ ತಣ್ಣನೆಯ ಗಾಳಿ ಅವರ ದೇಹವನ್ನು ಸೋಕಿ ಹೋಗುತ್ತಿದ್ದರೂ ಅವರುಗಳ ಹಣೆಯ ಮೇಲೆ ಬೆವರು ಸಾಲುಗಟ್ಟಿ ಕೆಳಗಿಳಿಯುವ ಯತ್ನದಲ್ಲಿದ್ದಾಗ ಅದನ್ನವರು ತಮ್ಮ ಮುಂಗೈಯಿಂದ ವರೆಸಿಕೊಳ್ಳುತ್ತಿದ್ದರು. +ಆ ಬೆವರಿಗೆ ಕಾರಣ ಬರೀ ನಡುಗೆಯ ವೇಗವೇ ಅಲ್ಲ. +ಬೆನ್ನಿಗಿದ್ದ ಭಾರ ಕೂಡ. +ಒಂದು ಮಾತೂ ಇಲ್ಲದೇ ಸಾಗಿತ್ತವರ ನಡುಗೆ, ದಣಿವನ್ನು ಶಮನಗೊಳಿಸಲು ಅವರು ದಾರಿಯಲ್ಲಿ ಒಂದು ಕ್ಷಣವೂ ವಿಶ್ರಮಿಸಲಿಲ್ಲ. +ಅವರಿಗೆ ತಮ್ಮ ಗುರಿ ಮುಖ್ಯವಾದ ಕಾರಣ ಅಂತಹ ಯೋಚನೆಯೂ ಅವರಲ್ಲಿ ಸುಳಿಯಲಿಲ್ಲ. +ಕಾಡಿನ ಮೌನವನ್ನು ಸೀಳುತ್ತಾ ಆಗಾಗ ವಾಹನಗಳ ಓಡಾಟದ ಸದ್ದು ಕೇಳಿಸಲಾರಂಭಿಸಿದಾಗ ಅವರ ನಡುಗೆ ನಿಂತಿತ್ತು. +ಹಿಂದಿದ್ದ ಕಲ್ಯಾಣಿ ಮುಳ್ಳುಗಿಡ ಪೊದೆಗಳ ನಡುವಿನಿಂದ ಹಾದು ಮುಂದೆ ಬಂದಳು. +ಗಿಡ ಗಂಟೆಗಳ ನಡುವಿನಿಂದ ದೂರದ ರೋಡಿನ ಮೇಲೆ ಹೋಗುತ್ತಿರುವ ವಾಹನಗಳ ಬೆಳಕು ಅಸ್ಪಷ್ಟವಾಗಿ ಕಾಣುತ್ತಿತ್ತು. +“ಎಲ್ಲರೂ ಬಗ್ಗಿ ನಿಧಾನವಾಗಿ ಮುಂದೆ ಸರಿಯುತ್ತಾ ಬನ್ನಿ. +ಹೆಚ್ಚು ಶಬ್ದವಾಗಬಾರದು” ಮೆಲ್ಲನೆ ಆಜ್ಞಾಪಿಸುವಂತಹ ದನಿಯಲ್ಲಿ ಹೇಳಿದಳು ಕಲ್ಯಾಣಿ. +ಮೌನದಲ್ಲಿ ಅದು ಎಲ್ಲರಿಗೂ ಸ್ಪಷ್ಟವಾಗಿ ಕೇಳಿಸಿತು. +ಪ್ಯಾಂಟಿನ ಜೇಬಿನಿಂದ ಬೈನಾಕ್ಯುಲರ್‌ ತೆಗೆದು ಪೂರ್ತಿ ಬಗ್ಗಿ ಮುಂದೆ ನಡೆಯಲಾರಂಭಿಸಿದಳು ಕಲ್ಯಾಣಿ. +ಅದೇ ರೀತಿಯಲ್ಲಿ ಮಿಕ್ಕವರೂ ಅವಳನ್ನು ಅನುಸರಿಸತೊಡಗಿದರು. +ಹಾಗೆ ಸುಮಾರು ಹದಿನೈದು ನಿಮಿಷ ಮುಂದುವರೆದ ಮೇಲೆ ಕಾಡಿನಿಂದ ಬಿಡುಗಡೆ ಹೊಂದಿದಂತೆ ಮೈದಾನದಲ್ಲಿ ಬಂದರು. +ಬೈನಾಕ್ಯುಲರ್‌ನ ಮೂಲಕ ಮುಂದಿನ ರೋಡು ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ನೋಡಿದಳು ಕಲ್ಯಾಣಿ. +ಅವರು ಕುಳಿತಲ್ಲಿಂದ ಸ್ವಲ್ಪ ದೂರದಲ್ಲಿರುವ ಹಳ್ಳಿ ಸ್ಪಷ್ಟವಾಗಿ ಕಾಣುತ್ತಿತ್ತು. +ಇನ್ನೂ ಅಲ್ಲಿ ಜನರ ಓಡಾಟ, ಅಂಗಡಿಗಳು ತೆಗೆದುರುವುದು ಕಂಡುಬಂತು. +ನೋಡುವ ತನ್ನ ಕೆಲಸವನ್ನು ನಿಲ್ಲಿಸದೇ ಹೇಳಿದಳು ಕಲ್ಯಾಣಿ. +“ಶಂಕರ್ ನೀ ಹೋಗಿ ಭೂತದ ಗುಡ್ಡದಿಂದ ಸುದ್ದಿ ತಿಳಿದುಕೊಂಡು ಬಾ. +ನಮಗೆ ದೇವಿ ಬರುವ ಸರಿಯಾದ ಸಮಯ ಗೊತ್ತಾಗಬೇಕು. +ಅವನು ಕೂತ ವಾಹನವನ್ನು ನಾವು ಸರಿಯಾಗಿ ಗುರುತಿಸಬೇಕು”ಅವಳ ಮಾತು ಮುಗಿಯುತ್ತಿದ್ದಂತೆ ವೇಷ ಬದಲಿಸಿದ ಶಂಕರ ಸ್ವಲ್ಪ ಮುಂದೆ ನಡೆದು ರೋಡಿಗೆ ಬಂದು ಹಳ್ಳಿಯ ಕಡೆ ವೇಗವಾದ ಹೆಜ್ಜೆಗಳನ್ನು ಹಾಕತೊಡಗಿದ. +ಬೈನಾಕ್ಯುಲರ್‌ನ ಮೂಲಕ ಅವನನ್ನೇ ಕೆಲಕ್ಷಣಗಳು ತದೇಕಚಿತ್ತದಿಂದ ನೋಡಿದಳು ಕಲ್ಯಾಣಿ. +ಹೊಲಸು ಪಂಚೆ, ಪೂರ್ತಿ ತೋಳಿನ ನಿಲುವಂಗಿ, ಕಾಲಿಗೆ ದಪ್ಪನೆಯ ಚಪ್ಪಲಿ ಮತ್ತು ಚಳಿಯನ್ನು ಓಡಿಸಲೆಂಬಂತೆ ಹೊದ್ದ ಕಂಬಳಿಯ ಕಾರಣ ಅವನನ್ನು ಗುರುತಿಸುವುದು ಬಹಳಕಷ್ಟ. +ದೂರದರ್ಶಿನಿಯನ್ನು ಕಣ್ಣಿನಿಂದ ಸರಿಸಿ ಆದೇಶಿಸಿದಳು. +“ಹರಿ ನಿನ್ನ ಕೆಲಸ ಆರಂಭಿಸು, ಎಲ್ಲವನ್ನೂ ಎಷ್ಟು ಜಾಗ್ರತೆಯಾಗಿ ಮಾಡಬೇಕೆಂಬುವದನ್ನು ನಾಗೇಶನಿಗೂ ತೋರಿಸು. +ಅವಸರದಲ್ಲಿ ಕೆಲಸ ಕೆಡಿಸಬೇಡ, ಸಾಯಿ, ಮಲ್ಲಪ್ಪ ನೀವಿಬ್ಬರೂ ವಿರುದ್ಧ ದಿಕ್ಕುಗಳಲ್ಲಿ ಸ್ವಲ್ಪ ದೂರ ನಡೆದು ಕಾವಲಿರಿ. +ಆವಳ ಮಾತು ಮುಗಿಯುತ್ತಿದ್ದಂತೆ ಕೆಲಸ ಆರಂಭಿಸಿದರವರು. +ರಾತ್ರಿಯ ಒಂಭತ್ತೂವರೆಯಾಗುತ್ತಿದ್ದರೂ ದೇವನಹಳ್ಳಿಯವರು ಅಲ್ಲಲ್ಲಿ ಓಡಾಡುತ್ತಿದ್ದರು. +ಆರ್ಥಿಕ ಉದಾರೀಕರಣದ ಪರಿಣಾಮವಾಗಿ ಅಲ್ಲಿ ಒಂದು ಎಸ್.ಟಿ.ಡಿ.ಬೂತ್ ಹುಟ್ಟಿಕೊಂಡಿತ್ತು. +ಗ್ರಾಹಕರಿಲ್ಲದ ಕಾರಣ ಬೇಸರವನ್ನು ಓಡಿಸುವ ಉಪಾಯಗಳನ್ನು ಹುಡುಕುತ್ತಿದ್ದ ಅದರ ಒಡೆಯ. +ಶಂಕರ ಬರುತ್ತಿರುವುದು ಕಂಡು ಅವನಿಗಾಗಿ ಕಾಯತೊಡಗಿದ. +ಇವನು ಫೋನ್ ಮಾಡಲು ಬರುತ್ತಿದ್ದಾನೋ ಇಲ್ಲವೋ ತಿಳಿದುಕೊಂಡು ತನ್ನ ಸ್ಥಾನದಲ್ಲಿ ಹೋಗಿ ಕುಳಿತ ಎಸ್.ಟಿ.ಡಿ.ಬೂತ್‌ನ ಒಡೆಯ ತನ್ನದೇ ಗತಿಯಲ್ಲಿ ನಡೆಯುತ್ತಾ ಬಂದ ಶಂಕರ ಯಾವ ಮಾತೂ ಆಡದೇ ಬೂತಿನಲ್ಲಿ ಸೇರಿ ನಂಬರ್ ಅದುಮತೊಡಗಿದ. +ಇನ್ನೂ ಯಾರಾದರೂ ಬರುವರೇನೋ ಎಂಬಂತೆ ನೋಡುತ್ತಿದ್ದ ಎಸ್.ಟಿ.ಡಿ.ಬೂತಿನವ. +“ಹಲೋ”ಆ ಕಡೆಯಿಂದ ಕೇಳಿ ಬಂದ ಕಂಠವನ್ನು ಗುರುತಿಸಿದ ಶಂಕರ ಕೇಳಿದ. +“ಮೆರವಣಿಗೆ ಹೊರಟಿದೆಯೇ?” +“ಹೂಂ ಇನ್ನೂ ಅರ್ಧ ಗಂಟೆಯಲ್ಲಿ ಬರಬಹುದು” ಆ ಕಡೆಯಿಂದ ಭಾವರಹಿತ ಉತ್ತರ ಬಂತು. +“ಗುರುತಿಸುವುದು ಹೇಗೆ?” +“ಒಂದೇ ಅಂಬಾಸಿಡರ್ ಇದೆ. ಬಿಳಿಯದು. +ಎರುಡ ಸೈಕಲ್ ಮೋಟರ್‌ಗಳ ನಂತರ ಅದು ಬರುತ್ತದೆ” +“ಸರಕಾರದ ರಕ್ಷಣೆ.” +“ಸೈಕಲ್ ಮೋಟರ್‌ಗಳೇ ರಕ್ಷಕರು. +ಮದುವೆ ಸುಲುಭವಾಗಿ ಆಗಬಹುದು”ರಿಸೀವರನ್ನು ಕೆಳಗಿಟ್ಟು ಶಂಕರ ಹೊರಬಂದಾಗ ಕೇಳಿದ ಎಸ್.ಟಿ.ಡಿ.ಯವ“ಇಷ್ಟು ಬೇಗ ಮಾತು ಮುಗಿಯಿತೆ?” +“ಹೆಚ್ಚು ಮಾತಾಡಲು ನನ್ನ ಬಳಿ ಹಣವಿಲ್ಲ” ಎಂದ ಶಂಕರ್‌ ಅವನು ಕೊಳ್ಳ ರಸೀದಿಯ ಮೇಲೆ ಕಣ್ಣಾಡಿಸಿ ಅದನ್ನು ತನ್ನ ನಿಲುವಂಗಿಯ ಕಿಸಗೆ ಸೇರಿಸುತ್ತಾ ಹಣ ಕೊಟ್ಟು ಅಲ್ಲಿಂದ ಹೊರಟ. +ಅವನನ್ನು ಮರೆತ ಅಂಗಡಿಯವ ಅದನ್ನು ಮುಚ್ಚುವ ಕೆಲಸದಲ್ಲಿ ನಿರತನಾದ. +ಬೆಳಕಿನಿಂದ ಕತ್ತಲಲ್ಲಿ ಬರುತ್ತಲೇ ಶಂಕರನ ನಡುಗೆಯ ವೇಗ ತೀವ್ರಗೊಂಡಿತು. +ಗಾಡಾಂಧಕಾರದಲ್ಲಿ ಆಗಲೇ ರಸ್ತೆಯ ನಡುವೆ ಅನುಮಾನ ಬರದಂತೆ ಬಾಂಬನ್ನು ಇಡುವ ಕೆಲಸ ಮುಗಿಸಿದ್ದ ಹರಿ. +ಆಗಾಗ ಅತ್ತಿತ್ತ ಹರಿದಾಡುತ್ತಿದ್ದ ವಾಹನಗಳ ಕಾರಣ ಅವನು ಕೆಲಸ ಮುಗಿಸಲು ತಡವಾಗಿತ್ತು. +ಅದೂ ಅಲ್ಲದೇ ಪ್ರತಿ ಕೆಲಸವನ್ನು ಸಹನೆಯಿಂದ ನಾಗೇಶನಿಗೆ ವಿವರಿಸಿದ್ದ. +ತಾವು ಹಿಡಿದಿರುವ ವಸ್ತು ಎಷ್ಟು ಅಪಾಯಕಾರಿ, ಸ್ವಲ್ಪವಾದರೂ ಹೆಚ್ಚು ಕಡಿಮೆಯಾದರೆ ಎಂತಹ ಘೋರ ಸಂಭವಿಸಬಹುದೆಂದು ಕೇಳಿದಾಗ ನಾಗೇಶನಿಗೆ ಅದನ್ನು ನಂಬುವುದು ಕಷ್ಟವಾಗಿತ್ತು. +ಕಲ್ಯಾಣಿ ದುರ್ಬಿನ್ನಿನಿಂದ ಎಲ್ಲರ ಚಟುವಟಿಕೆಗಳನ್ನೂ ಗಮನಿಸುತ್ತಿದ್ದಳು. +ಅವಳಲ್ಲಿ ಎಂತಹ ಭಯ, ಆತಂಕವಾಗಲಿ ಇರಲಿಲ್ಲ. +ನಾಗೇಶನ ಭಾವುಕತೆಯನ್ನು ಹರಿ ನಿಯಂತ್ರಣದಲ್ಲಿಡುವನೆಂಬ ನಂಬಿಕೆ ಅವಳಿಗಿತ್ತು. +ಶಂಕರ ಹೆಚ್ಚು ಕಡಿಮೆ ಓಡುತ್ತಲೆ ಬಂದು ಅವಳಿಗೆಲ್ಲವನ್ನು ವಿವರಿಸಿದಾಗ, ಅವನಿಗೆ ಮುಂದೇನು ಮಾಡಬೇಕೆಂಬುವುದು ಹೇಳಿದಳು. +ಅವರ ಮಾತು ಮುಗಿಯುತ್ತಿದ್ದಂತೆ ದೂರದಲ್ಲಿದ್ದ ಸಾಯಿಯ ಕಡೆ ಓಡಿದ ಶಂಕರ. +ಅವನು ಅತ್ತ ಹೋಗುತ್ತಿದ್ದಂತೆ ಹರಿ ಮತ್ತು ನಾಗೇಶ ಅವರ ಬಳಿ ಬಂದರು. +ಎಲ್ಲಾ ಕೆಲಸ ಪರ್ಫೆಕ್ಟಾಗಿ ಆಗಿದೆ ಎಂದು ಹೇಳಿದ ಹರಿ. +ರಿಮೋಟನ್ನು ಕೈಯಲ್ಲಿ ಹಿಡಿದುಕೊಂಡು ಕಾಯತೊಡಗಿದಳು ಕಲ್ಯಾಣಿ. +ಅವಳ ಬಲಗೈಯಲ್ಲಿ ರಿಮೋಟ್ ಇದ್ದರೆ ಎಡಗೈಯಲ್ಲಿ ದುರ್ಬೀನು. +ಎದುರಿನ ರಸ್ತೆಯ ಮೇಲಿಂದ ಆಗಾಗ ಬಸ್ಸುಗಳು, ವ್ಯಾನುಗಳು, ಜೀಪುಗಳು ಇನ್ನಿತರ ದ್ವಿಚಕ್ರ ವಾಹನಗಳು ಹಾದುಹೋಗುತ್ತಿದ್ದವು. +ಕಲ್ಯಾಣಿಯ ಬದಿಗೆ ಕುಳಿತ ನಾಗೇಶನಲ್ಲಿ ಆತಂಕ ಹೆಚ್ಚಾಗಿತ್ತು. +ಹರಿ ಹೇಳಿದ ಮಾತುಗಳು ನೆನಪಾಗಿ, ಅದು ನಿಜವಾಗುವುದೇ ಎಂಬ ಅನಿಸಿಕೆಯಿಂದ ಅವನ ಹೃದಯಬಡಿತ ಜೋರಾಗಿತ್ತು. +ಇಂತಹದು ಇದು ಅವನ ಮೊದಲ ಅನುಭವ. +ಅವನು ಈವರೆಗೆ ಬಾಂಬಿನ ಸದ್ದನ್ನು ಕೇಳಿರಲಿಲ್ಲ. +ಸಮಯ ಬಹು ನಿಧಾನವಾಗಿ ಸರಿಯುತ್ತಿದೆ ಎನಿಸತೊಡಗಿತ್ತವನಿಗೆ. +ಹಳ್ಳಿಯ ಕಡೆ ಹೋದ ಮಲ್ಲಪ್ಪನ ಕಡೆ ನೋಡಿದಳು ಕಲ್ಯಾಣಿ, ಸುತ್ತೂ ನೋಟ ಹಾಯಿಸುತ್ತಾ ಕಾವಲಿಗೆ ನಿಂತಿದ್ದನವ. +ಅದರ ಅವಶ್ಯಕತೆಯಿಲ್ಲವೆಂದು ಕಲ್ಯಾಣಿಗೆ ಗೊತ್ತಿದ್ದರೂ ಅವಳು ಎಲ್ಲಾ ಮುಂಜಾಗ್ರತೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಳು. +ದೊಡ್ಡಣ್ಣ ಒಂದು ಸಲ ಅವರು ಮಾಡಿದ ಚಿಕ್ಕ ತಪ್ಪಿನಿಂದ ಇಡೀ ಯೋಜನೆಯಲ್ಲಿ ಹೇಗ ಹಾಳಾಗಿ ಹೋಗಿತ್ತೆಂಬುವುದನ್ನು ವಿವರಿಸಿದ್ದ. +ಆ ದಿನದಿಂದ ಒಂದು ಯೋಜನೆ ಹಾಕುವಾಗ ಪ್ರತಿಚಿಕ್ಕ ವಿಷಯಕ್ಕೂ ಬಹು ಮಹತ್ವ ಕೊಡಲಾರಂಭಿಸಿದ್ದಳು ಕಲ್ಯಾಣಿ. +ಅವಳು ಹಾಕಿದ ಯಾವುದೇ ಯೋಜನೆಯಾಗಲಿ ಈವರೆಗೆ ವಿಫಲವಾಗಿರಲಿಲ್ಲ. +ಅದರಿಂದಾಗಿ ಹುಟ್ಟಿದ ಆತ್ಮವಿಶ್ವಾಸದ ಕಾರಣ ಅವಳು ಯಾವ ಬೇಜವಾಬ್ದಾರಿ ಕೆಲಸವನ್ನೂ ಮಾಡಿರಲಿಲ್ಲ. +ಸಾಯಿ ಮತ್ತು ಶಂಕರ ಕೂಡ ತಮ್ಮ ಕೆಲಸವನ್ನು ಬಹು ಮುತುವರ್ಜಿಯಿಂದ ನಿರ್ವಹಿಸುತ್ತಿರುವಂತೆ ಕಂಡುಬರುತ್ತಿತ್ತು. +ಶಂಕರನ ಬೆನ್ನು ಅವಳ ಕಡೆ ಇತ್ತು. +ದುರ್ಬೀನು ಅವನ ಬಳಿಯೂ ಇತ್ತು. +ಅವನು ರೋಡಿನ ಮೇಲಿಂದ ನೋಟ ಸರಿಸಿಲ್ಲವೆಂಬುವುದು ಅವಳಿಗೆ ಹೇಳಬೇಕಾಗಿರಲಿಲ್ಲ. +ರಾಮನಗರದ ಕಡೆ ಹೋಗುತ್ತಿರುವ ವಾಹನಗಳು ಮೊದಲು ಕಾಣವುದು ಅವನಿಗೆ. +ಎಲ್ಲಾ ತಾನು ಎಣಿಸಿದಂತೆ ಸಮಾಧಾನಕರವಾಗಿ ನಡೆದಿದೆ ಎಂದುಕೊಳ್ಳುತ್ತಾ ಕೈಯಲ್ಲಿದ್ದ ರಿಮೋಟನ್ನು ಸರಿಯಾಗಿ ಹಿಡಿದಳು. +ತನ್ನ ಕೆಲಸ ಮುಗಿದಂತೆ ಹರಿ ನಿಶ್ಚಿಂತೆಯಿಂದ ನೆಲದ ಮೇಲೆ ಒರೆಗಿದ್ದ. +ಇಂತಹ ಹಲವಾರು ಕೆಲಸಗಳನ್ನು ಮಾಡಿದ ಅವನಿಗೆ ಯಾವ ಬಗ್ಗೆಯ ಕಾತುರವೂ ಇಲ್ಲ. +ನಾಗೇಶನಲ್ಲಿ ಬೆಳೆಯುತ್ತಿರುವ ಕಾತುರ ಆತಂಕಗಳು ಅವನನ್ನು ಅಸ್ವಸ್ಥನನ್ನಾಗಿ ಮಾಡುತ್ತಿದ್ದವು. +ಕಾಯುವಿಕೆ ಅವನಲ್ಲಿ ಸಹನೆ ಮೀರುವಷ್ಟು ಬೆಳೆದಾಗ ಇನ್ನು ತಾಳಲಾರದವನಂತೆ ಮಾತಾಡಿದ. +“ಇನ್ನೂ ಎಷ್ಟು ಹೊತ್ತಾಗಬಹುದಕ್ಕಾ?”ಅವನು ಬಹುಮೆಲ್ಲನೆ ಮಾತಾಡಿದರೂ ಮೌನದ ಕಾರಣ ಅದರ ಅಲೆಗಳು ಬಹು ದೂರದವರೆಗೂ ಹರಡಿದ್ದವು. +ಅವರಿಬ್ಬರ ಹಿಂದಿದ್ದ ಹರಿ ಅವನನ್ನು ಒರಟಾಗಿ ತನ್ನ ಕಡೆ ಎಳೆದುಕೊಂಡ. +ಇಂತಹದನ್ನು ನಿರೀಕ್ಷಿಸಿರದ ನಾಗೇಶ ಒಮ್ಮೆಲೆ ಹೋಗಿ ಅವನ ಮೇಲೆ ಬಿದ್ದ. +ಸಿಟ್ಟಿನಿಂದ ಅವನು ಬಾಯಿ ತೆಗೆಯುವ ಮುನ್ನ ಹರಿಯ ಕೈ ಅದರ ಮೇಲೆ ಬಂತು. +ಗಟ್ಟಿಯಾಗಿ ನಾಗೇಶನ ಬಾಯಿ ಮುಚ್ಚಿ ಹಿಡಿದು ಅವನ ಕಿವಿಯ ಬಳಿ ಬರೀ ಅವನಿಗೆ ಮಾತ್ರ ಕೇಳಿಸುವಂತೆ ಹೇಳಿದ ಹರಿ“ಬಾಯಿ ಮುಚ್ಚಿಕೊಂಡು ಆಗುವದನ್ನೆಲ್ಲಾ ನೋಡುತ್ತಿರು. +ಬಾಯಿಂದ ಇನ್ನೊಂದು ಮಾತು ಬಂದರೆ ನಿನ್ನ ಕೊಂದುಬಿಡುತ್ತೇನೆ”ಆಶ್ಚರ್ಯದಿಂದ ಕಲ್ಯಾಣಿಯ ಕಡೆ ನೋಡಿದ ನಾಗೇಶ. +ಇದ್ಯಾವುದೂ ತನ್ನ ಗಮನಕ್ಕೆ ಬರದಂತೆ ಶಂಕರನ ಕಡೆಯೇ ನೋಡುತ್ತಿದ್ದಳವಳು. +ನಾಗೇಶನಿಗೆ ಹರಿಯ ವರ್ತನೆಯಿಂದ ಬಹಳ ಸಿಟ್ಟು ಬಂದಿತ್ತು. +ಇಂತಹದು ಅವನ ಮೊದಲ ಅನುಭವ, ಕ್ರಾಂತಿಕಾರಿ ತಂಡದವರಾರೂ ಅವನೊಡನೆ ಹೀಗೆ ವರ್ತಿಸಿರಲಿಲ್ಲ. +ಇಷ್ಟು ಸಿಟ್ಟಿನಿಂದ ಆಜ್ಞೆ ಕೊಡುವಂತೆ ಮಾತಾಡಿರಲಿಲ್ಲ. +ನಿಧಾನವಾಗಿ ಹರಿ ತನ್ನ ಕೈಯನ್ನು ಅವನ ಬಾಯಿಂದ ಸರಿಸಿದ. +ಈ ಕೆಲಸ ಮುಗಿಯಲಿ ಆಮೇಲೆ ಅವನನ್ನು ನೋಡಿಕೊಳ್ಳುವ ಎಂದುಕೊಂಡ ನಾಗೇಶ ಮತ್ತೆ ಸರಿದು ಬಂದು ಕಲ್ಯಾಣಿಯ ಬದಿಗೆ ಕುಳಿತ. +ಸಾಯಿಯ ಕೈಯಲ್ಲಿದ್ದ ಟಾರ್ಚು ಒಂದು ಸಲ ಹೊತ್ತಿಕೊಂಡು ನಂದಿತು. +ಕಲ್ಯಾಣಿ ಅದನ್ನು ನೋಡಿದಳು. +ಅವಳ ಅವಯವಗಳೆಲ್ಲಾ ಇನ್ನೂ ಚುರುಕಾದವು. +ಹಲವು ಕ್ಷಣಗಳು ಕಳೆದ ಬಳಿಕ ಮೋಟಾರ್ ಸೈಕಲ್‌ನ ಶಬ್ದ ಅಸ್ಪಷ್ಟವಾಗಿ ಕೇಳಿ ಬರಲಾರಂಭಿಸಿತು. +ಹಿಂದಿದ್ದ ಹರಿ ಒಮ್ಮೆಲೆ ಎದ್ದು ಸರಿಯಾಗಿ ಕುಳಿತ. +ಕಲ್ಯಾಣಿಯ ನೋಟ ದೂರದ ರಸ್ತೆಗೇ ಅಂಟಿಕೊಂಡಿತ್ತು. +ಆ ಸದ್ದು ಸ್ವಲ್ಪ ಜೋರಾಗಿ ಕೇಳಿಸತೊಡಗಿದಾಗ ಇನ್ನೊಮ್ಮೆ ಸಾಯಿಯನ್ನು ನೋಡಿದಳು. +ಕಲ್ಯಾಣಿ, ಇನ್ನೊಮ್ಮೆ ಅವನ ಕೈಯಲ್ಲಿದ್ದ ಟಾರ್ಚ್ ಬೆಳಗಿ ನಂದಿತು. +ಮತ್ತೆ ರೋಡಿಗೆ ತಿರುಗಿತು ದುರ್ಬೀನು. +ಒಬ್ಬರ ಪಕ್ಕದಲ್ಲಿ ಒಬ್ಬರು ಬರುತ್ತಿದ್ದ ಸೈಕಲ್ ಮೋಟರ ಸವಾರರು ಸ್ಪಷ್ಟವಾಗಿ ಕಾಣಿಸತೊಡಗಿದರು. +ಒಬ್ಬ ಪೋಲೀಸಿನ ಉಡುಪಿನಲ್ಲಿದ್ದ. +ಅವನು ಇನ್ಸ್‌ಪೆಕ್ಟರ್ ಇರಬಹುದು ಎಂದುಕೊಂಡಳು ಕಲ್ಯಾಣಿ. +ಇನ್ನೊಬ್ಬ ದಷ್ಟಪುಷ್ಟ ವ್ಯಕ್ತಿ ರೌಡಿಯಂತೆ ಕಾಣುತ್ತಿದ್ದ. +ಅವನು ದೇವಿಯಾದವನ ಹಿಂಬಾಲಕ, ಹೆಚ್ಚುಕಡಿಮೆ ನಿರ್ಜನ ರಸ್ತೆಯ ಕಾರಣ ವೇಗವಾಗಿ ಬರುತ್ತಿದ್ದವು ವಾಹನಗಳು. +ಅವುಗಳ ಸಾಕಷ್ಟು ಹಿಂದೆ ಕಾಣಿಸಿಕೊಂಡಿತು ಅಂಬಾಸಿಡರ್, ಸಾಯಿ, ಶಂಕರ ಕುಳಿತ ಕಡೆಯಿಂದ ಇನ್ನೊಮ್ಮೆ ಬೆಳಕು ಬೆಳಗಿ ನಂದಿತು. +ಆಗಲೇ ಅವರನ್ನು ದಾಟಿ ಮುಂದೆ ಬಂದುಬಿಟ್ಟಿದ್ದವು ಸೈಕಲ್ ಮೋಟರ್‌ಗಳು. +ಬಹು ಗಮನವಿಟ್ಟು ಅಂಬ್ಯಾಸಿಡರ್ ಕಾರನ್ನು ಗಮನಿಸತೊಡಗಿದ್ದಳು ಕಲ್ಯಾಣಿ. +ಅದರಲ್ಲಿ ಜನ ತುಂಬಿದಂತೆ ಕಂಡರು. +ಅವರಲ್ಲಿ ದೇವಿಯಾದವ ಇದ್ದಾನೋ ಇಲ್ಲವೋ ಎಂಬ ಶಂಕೆ ಅವಳಲ್ಲಿ ಒಂದು ಕ್ಷಣ ಸುಳಿದು ಮಾಯವಾಯಿತು. +ಅವಳ ಕಣ್ಣುಗಳಿಗಿದ್ದ ದುರ್ಬೀನು ಕಾರನ್ನೇ ಅನುಸರಿಸುತ್ತಾ ಬರತೊಡಗಿತು. +ಅದರಿಂದ ಅವಳ ತಲೆಯೂ ಹಾಗೇ ತಿರುಗುತ್ತಿತ್ತು. +ಸೈಕಲ್ ಮೋಟಾರ್‌ಗಳು ಅವರು ಕುಳಿತ ಕಡೆಯಿಂದ ಹಾದು ಹೊರಟುಹೋಗಿದ್ದವು. +ಒಂದು ನಿಮಿಷದ ಬಳಿಕ ಅಂಬಾಸಿಡರ್ ತಾನೆಂದುಕೊಂಡ ಸ್ಥಾನಕ್ಕೆ ಬಂದಾಗ ರಿಮೋಟನ್ನು ಅದುಮಿದಳು ಕಲ್ಯಾಣಿ. +ಒಮ್ಮೆಲೆ ಬಂದ ಭಯಂಕರ ಶಬ್ದ ದೇವನಹಳ್ಳಿಯನ್ನೇ ಅಲ್ಲ ಇಡೀ ಕಾಡನ್ನೇ ನಡುಗಿಸುವಂತಿತ್ತು. +ಆಕಾಶದ ಎತ್ತರಕ್ಕೆ ಎಂಬಂತೆ ಹಾರಿದ ಅಂಬಾಸಿಡರ್ ಸರಿಯಾಗಿ ನಡುವಿನಿಂದ ಎರಡು ಹೋಳುಗಳಾದಂತೆ ಕಂಡಿತು. +ಆ ಸ್ಫೋಟದಿಂದ ಎದ್ದ ಜ್ವಾಲೆ ಮಿಂಚಿನಂತೆ ಇಡೀ ಪ್ರದೇಶವನ್ನು ಬೆಳಗಿಸಿತು. +ಮತ್ತೆ ನೆಲಕ್ಕೆ ಕುಸಿದ ಕಾರಿನ ಭಾಗಗಳು ಉರಿಯುತ್ತಿರುವುದನ್ನು ಒಂದು ಕ್ಷಣ ನೋಡಿದ ಕಲ್ಯಾಣಿ ಕಾಡಿನ ಒಳಭಾಗದಲ್ಲಿ ನಡೆಯಲಾರಂಭಿಸಿದಳು. +ಆ ಬೆಂಕಿಯ ಜ್ವಾಲೆಯಲ್ಲೂ ಯಾರಿಗೂ ಕಾಣದ ಹಾಗೆ ಕುಳಿತಿದ್ದರು ಕ್ರಾಂತಿಕಾರಿ ತಂಡದವರು. +ದಾರಿತೋರಕನಂತೆ ಮೊದಲೇ ಕಾಡು ಪ್ರವೇಶಿಸಿದ್ದ ಹರಿ, ತಮ್ಮ ಜತೆ ನಾಗೇಶ ಇಲ್ಲದಿರುವುದನ್ನು ಕಂಡು ನಾಲ್ಕು ಹೆಜ್ಜೆ ನಡೆದ ಕಲ್ಯಾಣಿ ಹಿಂತಿರುಗಿಬಂದಳು. +ದಿಗ್ಮೂಢನಾದಂತೆ ಇನ್ನೂ ಉರಿಯುತ್ತಿರುವ ಕಾರಿನ ಅವಶೇಷವನ್ನೇ ನೋಡುತ್ತಾ ಕುಳಿತಿದ್ದ ನಾಗೇಶ. + ಅದನ್ನು ಕಂಡು ಬೂಟುಗಾಲಿನಿಂದ ಜೋರಾಗಿ ಅವನ ಸೊಂಟಕ್ಕೆ ಒದ್ದಳು ಕಲ್ಯಾಣಿ. +ಅದರಿಂದ ಇಹಲೋಕಕ್ಕೆ ಬಂದಂತೆ ಎದ್ದು ನಿಂತ ನಾಗೇಶ. +ಅವನ ತಲೆಯನ್ನು ಹಿಡಿದು ಮುಂದೆ ನೂಕಿ ಅವನ ಹಿಂದ ನಡೆಯತೊಡಗಿದಳು ಕಲ್ಯಾಣಿ. +ಕ್ರಾಂತಿಕಾರಿಯರೆಲ್ಲಾ ಏನೂ ಆಗದಂತೆ ಬೇರೆ ಬೇರೆ ದಿಕ್ಕುಗಳಿಂದ ತಮ್ಮ ಗಮ್ಯದ ಕಡೆ ಸಾಗಿದರು. +ಸ್ಫೋಟದ ಶಬ್ದದೊಡನೆಯೇ ನಿಂತವು ಸೈಕಲ್ ಮೋಟರುಗಳು. +ಅದರ ಸವಾರರು ಹಿಂತಿರುಗಿ ನೋಡಿದಾಗ ಆ ದೃಶ್ಯ ಅವರುಗಳ ಮೈ ನಡುಗಿಸಿತು. +ಕೂಡಲೇ ರಾಮನಗರಕ್ಕೆ, ಪಟ್ಟಣದ ಮುಖ್ಯಾಲಯಕ್ಕೆ ಮೆಸೇಜ್‌ಗಳು ಹೋದವು. +ವಾಹನಗಳನ್ನು ಹಿಂತಿರುಗಿಸಿ ಬಂದ ಅವರು ದೂರದಿಂದಲೇ ಆ ಘೋರ ದೃಶ್ಯವನ್ನು ನೋಡುತ್ತಾ ನಿಂತರು. +ಸುಡುತ್ತಿದ್ದ ಕಾರಿನ ಶಾಖದ ಕಾರಣ ಅವರು ಹತ್ತಿರ ಹೋಗುವ ಹಾಗಿರಲಿಲ್ಲ. +ಆ ಭೀಕರ ದೃಶ್ಯವನ್ನು ನೋಡುತ್ತಾ ಸ್ತಂಭೀಭೂತನಾದಂತೆ ನಿಂತುಬಿಟ್ಟಿದ್ದ ಅವನ ಬಂಟ. +ಹಾಗೇ ಹಲವು ಕ್ಷಣಗಳು ಕಳೆದ ಮೇಲೆ ತಾನು ಒಮ್ಮೆಲೆ ಏಕಾಕಿಯಾಗಿ ಹೋಗಿರುವಂತಹ ಭಾವ ಹುಟ್ಟಿತವನಲ್ಲಿ. +ಕಾರಿನಲ್ಲಿ ದೇವಿಯಾದವನಲ್ಲದೇ ಅವನ ತೀರಾ ಹತ್ತಿರದ ನಾಲ್ವರು ಬಂಟರಿದ್ದರು. +ಅವರಲ್ಲಿ ಒಬ್ಬನಾದರೂ ಉಳಿದಿದ್ದರೆ ತಾನು ಮತ್ತೆ ವ್ಯವಹಾರವನ್ನು ಸರಿಪಡಿಸಲು ಶ್ರಮಿಸಬಹುದಾಗಿತ್ತು. +ಈಗ ಮುಂದೆ ತಾನೇನು ಮಾಡಬೇಕೆಂಬುವುದು ತೋಚದಂತಹ ಸ್ಥಿತಿ. +ಈ ಕಲ್ಲಕ್ಕ ಸಾಮಾನ್ಯ ಹೆಣ್ಣಲ್ಲ ಎಂದುಕೊಳ್ಳುತ್ತಿದ್ದ ಇನ್ಸ್‌ಪೆಕ್ಟರ್‌, ಅವಳ ತಂಡದವರು ಬಂಡೇರಹಳ್ಳಿಯ ಆಸುಪಾಸಿನಲ್ಲೇ ಇರಬಹುದೆಂದು ಇಡೀ ಪೋಲೀಸ್ ಖಾತೆ ನಂಬಿತ್ತು. +ದೇವನಹಳ್ಳಿಯ ಪ್ರತಿ ಮನೆಯನ್ನೂ ನಡುಗಿಸಿತ್ತು ಆ ಭಯಂಕರ ಸದ್ದು. +ಅಲ್ಲಿನ ಎಲ್ಲರಿಗೂ ಅದ್ಯಾರ ಕೆಲಸವೆಂಬುವುದು ಗೊತ್ತಾಗಿತ್ತು. +ಅವರಿಗೆಲ್ಲಾ ಎಲ್ಲಿಲ್ಲದ ಭಯ, ಕಲ್ಲಕ್ಕನಿಂದಲ್ಲ ಪೋಲೀಸಿನವರಿಂದ. +ಅನುಮಾನ ಬಂದ ಪ್ರತಿ ವ್ಯಕ್ತಿಗೂ ಅವರು ಕೊಡುವ ಹಿಂಸೆಯಿಂದ. +ಪಾಪ ಆ ಹಳ್ಳಿಗರು ಯಾರು ಮರಣಿಸಿರಬಹುದೆಂಬುವುದು ಊಹಿಸುವ ಸ್ಥಿತಿಯಲ್ಲಿ ಇರಲಿಲ್ಲ. +ಅದಕ್ಕೆ ಯಾವ ಮನೆಯದಾಗಲಿ, ಗುಡಿಸಲಿನದಾಗಲಿ ಬಾಗಿಲು ತೆಗೆದುಕೊಂಡಿರಲಿಲ್ಲ. +ಅಪಘಾತದ ಮೊದಲ ಹೊಡೆತದಿಂದ ಚೇತರಿಸಿಕೊಂಡ ದೇವಿಯ ಬಂಟ ಸುತ್ತೂ ನೋಡಿದ. +ಅವನಿಗೀಗ ತಾವು ಗಂಟೆಗಟ್ಟಲೆ ಕಾಯಬೇಕೆಂಬುವುದು ಗೊತ್ತಾಗಿತ್ತು. +ಒಂದು ಹೋಟೆಲಿನ ಅಂಗಡಿ ಅವನ ಗಮನ ಸೆಳೆಯಿತು. +ಅತ್ತ ಹೆಜ್ಜೆ ಹಾಕಿದ. +ಅವನನ್ನು ಅನುಸರಿಸಿದ ಇನ್ಸ್‌ಪೆಕ್ಟರ್‌. +ತನ್ನ ಎಲ್ಲಾ ಕೋಪವನ್ನು ಕಾರುವಂತೆ ಆ ಹೋಟಲಿನ ಬಾಗಿಲು ಬಡಿದ. +ಇಂತಹದು ಆಗುವದೆಂದು ನಿರೀಕ್ಷಿಸಿದ ಅದರ ಒಡೆಯ ಕೂಡಲೇ ಬಾಗಿಲು ತೆಗೆದ. +ಪೋಲಿಸಿನವರ ಕೋಪಕ್ಕೆ ಗುರಿಯಾಗುವುದು ಅವನಿಗೆ ಇಷ್ಟವಿರಲಿಲ್ಲ. +“ಎರಡು ಕುರ್ಚಿಗಳು ಹಾಕು. +ಕಾಫಿ ಮಾಡು” ಅಪರಾಧಿಯೊಬ್ಬನನ್ನು ಸಂಬೋಧಿಸುತ್ತಿರುವಂತೆ ಆಜ್ಞಾಪಿಸಿದ ಇನ್ಸ್‍ಪೆಕ್ಟರ್, ಲಗುಬಗೆಯಿಂದ ಕುರ್ಚಿಗಳನ್ನು ತಂದು ಹಾಕಿದ ಹೋಟೆಲಿನವ, ಭಯಪಡುತ್ತಲೇ ವಿನಯದಿಂದ ಹೇಳಿದ. +“ಹಾಲಿಲ್ಲ ಸ್ವಾಮಿ” +“ಎಲ್ಲಿಂದಲಾದರೂ ತಾ!ಇಡೀ ಹಳ್ಳಿಯಲ್ಲೇ ಹಾಲಿಲ್ಲವೇ!” ಗರ್ಜಿಸಿದ ದೇವಿಯಾದವನ ಬಂಟ. +“ಸರಿ ಸ್ವಾಮಿ” ಎಂದ ಹೋಟೆಲಿನವ ಹಾಲಿಗಾಗಿ ಹುಡುಕಾಟ ಆರಂಭಿಸಿದ. +ಅವನಿಗೆ ಕಲ್ಲಕ್ಕನಂತಹವರು ಇನ್ನೂ ಹತ್ತು ಜನ ಇರಬೇಕೆನಿಸಿತು. +ಒಂದು ಗಂಟೆಯನಂತರ ರಾಮನಗರದಿಂದ ಫೈರ್ ಇಂಜಿನ್‌ಗಳೆರಡು ಬಂದವು. +ಆಗಲೇ ರೋಡಿನ ಆ ಭಾಗದಲ್ಲಿ ವಾಹನಗಳ ಓಡಾಟ ನಿಂತುಹೋಗಿತ್ತು. +ಪಟ್ಟಣಕ್ಕೆ ಹೋಗುವ ರಾಮನಗರಕ್ಕೆ ಹೋಗುವ ವಾನಹಗಳು ಸುತ್ತು ಬಳಸು ದಾರಿಯನ್ನು ಉಪಯೋಗಿಸಲಾರಂಭಿಸಿದ್ದವು. +ಇನ್ನೂ ಉರಿಯುತ್ತಿದ್ದ ವಾಹನವನ್ನು ನಂದಿಸುವ ಕೆಲಸ ಆರಂಭಿಸಿದ್ದವು ಫೈರ್ ಇಂಜಿನ್‌ಗಳು. +ರಾಮನಗರದಿಂದ ಕಲೆಕ್ಟರ್ ಮತ್ತು ಎಸ್.ಪಿ.ತಮ್ಮ ತಮ್ಮ ಸಹಾಯಕರೊಡನೆ ಬಂದ ಅರ್ಧ ಗಂಟೆಯ ಬಳಿಕ ಪಟ್ಟಣದಿಂದ ಕಮೀಷನರ್, ಆಂಟೀ ರೆವಲ್ಯೂಷನರಿ ಸ್ಕ್ವಾಡ್ ಮುಖ್ಯಸ್ಥ ಶ್ರೀವಾಸ್ತವ ಮತ್ತು ಕೆಲ ರಾಜಕಾರಣಿಯರೂ ಬಂದಿದ್ದರು. +ಬಂಡೇರಹಳ್ಳಿಯಲ್ಲಿದ್ದ ತೇಜಾನಿಗೆ ಈ ವಿಷಯವನ್ನು ಪಟ್ಟಣದಿಂದ ಸ್ಕ್ವಾಡ್‌ನ ಮುಖ್ಯಸ್ಥರು ತಿಳಿಸಿದ್ದರು. +ರಾಮನಗರದ ಎಸ್.ಪಿ.ಸಾಹೇಬರು ಹೊಸದಾಗಿ ಬಂದ ಅವನಿಗೆ ಈ ವಿಷಯ ತಿಳಿಸುವುದು ಮುಖ್ಯವೆಂದುಕೊಂಡಿರಲಿಲ್ಲ. +ಫೈರ್ ಇಂಜಿನ್ ಬಂದ ಕೆಲ ನಿಮಿಷಗಳ ನಂತರ ಬಂದ ಅವನು ಸುತ್ತಲಿನ ಪರಿಸರವನ್ನು ಪರೀಕ್ಷಿಸುವುದರಲ್ಲಿ ಮಗ್ನನಾಗಿದ್ದ. +ರೋಡಿನ ಎರಡೂ ಕಡೆ ಕಾಡು, ಕಲ್ಲಕ್ಕನ ತಂಡದವರು ಯಾವ ಕಡೆಯಿಂದ ಬಂದು ಈ ಕೆಲಸ ಮಾಡಿಹೋಗಿದ್ದಾರೆಂಬುವುದು ಊಹಿಸುವದೂ ಕಷ್ಟ. +ಅಲ್ಲಿನ ದೃಶ್ಯ ನೋಡಿದರೆ ಆರ್.ಡಿ.ಎಕ್ಸ್.ಉಪಯೋಗಿಸಿದ್ದಾರೆಂಬುವುದರಲ್ಲಿ ಸಂದೇಹವಿಲ್ಲ. +ತಾನು ಬಂಡೇರಹಳ್ಳಿಗೆ ಬಂದ ಮೊದಲನೆಯ ದಿನವೇ ಇಂತಹ ಘಟನೆ ಆಗಬೇಕೆ ಎಂದವನು ಅಂದುಕೊಳ್ಳುತ್ತಿದ್ದ. +ಫೈರ್ ಇಂಜಿನ್‌ಗಳು ಬಂದಾಗ ಹೋಟಲಿನ ಎದುರು ಕುಳಿತ ಇನ್ಸ್‌ಪೆಕ್ಟರ್‌ ಮತ್ತು ಯಾದವನ ಬಂಟ ಅಲ್ಲಿಂದ ಎದ್ದಿರಲಿಲ್ಲ. +ಅವರು ತೇಜಾನನ್ನೂ ಗಮನಿಸಿದ್ದರು. +ಪೋಲೀಸ್ ಜೀಪಿನಲ್ಲಿ ಬಂದ ಕಾರಣ ಅವನು ತಮ್ಮ ಖಾತೆಗೆ ಸೇರಿದವನೆಂದು ಗೊತ್ತಾಗಿತ್ತು ಇನ್ಸ್‌ಪೆಕ್ಟರ್‌ನಿಗೆ. +ಅವನೊಡನೆ ಏನು ಮಾತಾಡುವುದೆಂಬ ತಾತ್ಸಾರದ ಕಾರಣ ಅವನು ತೇಜಾನ ಕಡೆ ಗಮನ ಕೊಡದಂತೆ ವರ್ತಿಸಿದ್ದ. +ಪಟ್ಟಣದಿಂದ ಬಂದ ಕಮೀಶನರ್ ಮತ್ತು ಸ್ಕ್ವಾಡಿನ ಮುಖ್ಯಸ್ಥರು ಬಂದ ಕೂಡಲೇ ಮೊದಲು ಅವನನ್ನೂ ಮಾತಾಡಿಸಲು ಹೋದಾಗ ಎಚ್ಚೆತ್ತಿದ್ದ ಯಾದವನ ರಕ್ಷಣೆಗಾಗಿ ಬಂದ ಇನ್ಸ್‌ಪೆಕ್ಟರ್‌, ರಾಮನಗರದ ಕಲೆಕ್ಟರ್ ಮತ್ತು ಎಸ್.ಪಿ.ಯರಿಗಿಂತ ಈ ವ್ಯಕ್ತಿಯೇ ಹೆಚ್ಚಿನವನ್ನು ಎಂಬ ಭಾವ ಹುಟ್ಟಿತ್ತು. +ಫೈರ್ ಇಂಜಿನ್‌ಗಳು ತಮ್ಮ ಕೆಲಸ ಮುಗಿಸಿ ಸರಿಯುತ್ತಿದ್ದಂತೆ ಪ್ರಖರ ಟಾರ್ಚುಗಳನ್ನು ಹಿಡಿದು ಕಾರಿನ ಅವಶೇಷವನ್ನು ನೋಡಲಾರಂಭಿಸಿದರು ಅಲ್ಲಿದ್ದ ಅಧಿಕಾರಿಯರು. +ಕಾರಿನಲ್ಲಿ ದೇವಿಯಾದವರನ್ನು ಸೇರಿ ಆರು ಜನರಿದ್ದರಂತೆ. +ಎಲ್ಲರನ್ನೂ ಉದ್ದೇಶಿಸಿ ಎಂಬಂತೆ ಹೇಳಿದರು ಕಲೆಕ್ಟರ್ ಸಾಹೆಬರು. +ಅದಕ್ಕೆ ಅಲ್ಲಿದ್ದವರು ಯಾರೂ ಯಾವ ರೀತಿಯಲ್ಲೂ ಪ್ರತಿಕ್ರಿಯಿಸಲಿಲ್ಲ. +ತಮ್ಮ ಅನ್ವೇಷಣೆಯಲ್ಲಿ ತೊಡಗಿದ್ದರು. +ಕಾರಿನಲ್ಲಿದ್ದವರ ದೇಹಗಳು ತುಂಡು ತುಂಡಾಗಿ ಸುತ್ತಮುತ್ತಣ ಪ್ರದೇಶದಲ್ಲೆಲ್ಲಾ ಹರಡಿದಂತೆ ಕಂಡುಬಂತು. +ಒಂದು ಕಡೆ ಕೈ ಇದ್ದರೆ, ಇನ್ನೊಂದು ಕಡೆ ಕಾಲು, ಒಂದು ಕಡೆ ರುಂಡವಿದ್ದರೆ ಮತ್ತೊಂದು ಕಡೆ ಅರೆಬೆಂದ ಮಾಂಸದ ತುಂಡು, ಸುಟ್ಟ ಆವಶೇಷಗಳು ತಮ್ಮ ಗುರುತನ್ನೇ ಕಳೆದುಕೊಂಡಿದ್ದವು. +ಆ ಪ್ರದೇಶದಲ್ಲೆಲ್ಲಾ ದೇವಿಯಾದವನೇ ತುಂಡು ತುಂಡಾಗಿ ಹರಡಿ ತನ್ನ ಕೊನೆಯ ತಾಂಡವ ನೃತ್ಯವನ್ನು ಆಡಿದಂತೆ ಕಂಡುಬರುತ್ತಿತ್ತು. +ಆ ಕೆಲಸ ಮುಗಿಸಿದ ಅಧಿಕಾರ ವೃಂದ ಮತ್ತೆ ಹಳ್ಳಿಯ ಕಡೆ ನಡೆಯತೊಡಗಿದಾಗ ಸ್ಕ್ವಾಡ್‌ನ ಮುಖ್ಯಸ್ಥರ ಗಮನ ದೇವಿಯಾದವನ ಬಂಟನ ಕಡೆ ಹರಿಯಿತು. +“ಇವರಾರು?” ಕೇಳಿದರವರು. +“ದೇವಿಯಾದವರ ಪಾರ್ಟಿಯವರು. +ಇವರೂ ನಮ್ಮ ಇನ್ಸ್‍ಪೆಕ್ಟರರೊಡನೆ ಅವರಿಗೆ ಎಸ್ಕಾರ್ಟ್ ಆಗಿ ಬರುತ್ತಿದ್ದರು” ವಿವರಣೆ ನೀಡಿದ ಇನ್ಸ್‌ಪೆಕ್ಟರ್. +ಆ ಮಾತು ಮುಗಿಯುತ್ತಿದ್ದಂತೆ ಅವನನ್ನು ಒಂದು ಹುಳುವನ್ನು ನೋಡುವಂತೆ ನೋಡಿ ಕಟುವಾದ ದನಿಯಲ್ಲಿ ಹೇಳಿದರು ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ. +“ನಿಮಗೀಗ ಇಲ್ಲೇನೂ ಕೆಲಸವಿಲ್ಲ. +ನೀವು ಹೋಗಬಹುದು.”ಅವರ ಮಾತು ಆಜ್ಞೆಯಂತೆ ಧ್ವನಿಸಿತು. +ಅವಮಾನ ಸಿಟ್ಟುಗಳು ತುಂಬಿ ಬಂತವನ ಮುಖದಲ್ಲಿ. +ಆದರೆ ಏನೂ ಮಾಡುವ ಹಾಗಿಲ್ಲ. +ತನ್ನ ಒಡೆಯ ಬದುಕಿದ್ದರೆ ತನ್ನದೀಗತಿ ಆಗುತ್ತಿರಲಿಲ್ಲವೆಂದುಕೊಂಡ ಅವನು ತನ್ನ ವಾಹನದ ಕಡೆ ನಡೆಯತೊಡಗಿದ. +ಅವನು ಹೋದನಂತರ ಮತ್ತೆ ತಾವೇ ಮಾತಾಡಿದರು ಸ್ಕ್ವಾಡಿನ ಮುಖ್ಯಸ್ಥರು. +“ಈ ಹಳ್ಳಿಯ ಗಣ್ಯರ ಮನೆ ಎಲ್ಲಿದೆ?” +“ಶ್ಯಾಮರಾವ್ ಪಟುವಾರಿಯವರ ಮನೆ ಇಲ್ಲೇ ಇದೆ. +ಅವರು ನಮಗೆ ಸಹಾಯ ಮಾಡಬಹುದು” ಕೂಡಲೇ ಹೇಳಿದ ರಾಮನಗರದ ಎಸ್.ಪಿ. +“ಎಂತಹ ಸಹಾಯ… ತೇಜಾ ನೀನವರೊಡನೆ ಮಾತಾಡು. +ಈಗಿಂದೀಗಲೇ ನಾವು ಕೆಲವು ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. +ನಮಗವರ ಮನೆಯಲ್ಲಿ ಈ ಹೊತ್ತಿನಲ್ಲಿ ಕೂತು ಮಾತಾಡಲು ಅವಕಾಶ ಒದಗಿಸಿಕೊಡಲು ಸಾಧ್ಯವೇ ಕೇಳು” ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು. +“ಅದರಲ್ಲಿ ಅವರನ್ನು ಕೇಳುವುದೇನು ಬಂತು. +ನಾ ಹೇಳಿದರೆ…”“ನೀವು ತೇಜಾನಿಗೆ ಬರಿ ಮನೆ ತೋರಿಸಿ ಅಷ್ಟೇ! +ಅವನೇ ಎಲ್ಲಾ ಮಾತಾಡುತ್ತಾನೆ. +ಯಾರೂ ಇಲ್ಲಿ ಪೋಲೀಸ್ ಖಾತೆಯ ಅನಿಯಮಿತ ಅಧಿಕಾರ ತೋರಿಸುವ ಅವಶ್ಯಕತೆ ಇಲ್ಲ” +ಎಸ್.ಪಿ.ಯವರು ಮಾತು ಮುಗಿಸುವ ಮುನ್ನ ಖಡಾಖಂಡಿತ ದನಿಯಲ್ಲಿ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು. + ಎಸ್.ಪಿ.ಯವರೊಡನೆ ತೇಜಾ ಮುಂದೆ ನಡೆಯಲಾರಂಭಿಸಿದಾಗ ಕಮೀಶನರ್ ಒಬ್ಬರಿಗೆ ಮಾತ್ರ ಕೇಳಿಸುವಂತೆ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು. +“ಹಿಂದೆ ರಾಜಕಾರಣಿಗಳ ಹಿಂಡಿದೆ. +ಅವರು ನಮ್ಮ ಜತೆ ಬರುವುದು ಬೇಡ. +ಕ್ರಾಂತಿಕಾರಿಯರನ್ನು ಹಿಡಿಯಲು ನಾವು ಒಂದು ಗುಪ್ತಸಮಾವೇಶ ನಡೆಸುತ್ತಿರುವುದಾಗಿ ಹೇಳಿ ಅವರನ್ನು ಕಳಿಸಿಬಿಡಿ” +ಆ ಕೆಲಸ ಮಾಡಲು ಹಿಂದುಳಿದರು ಕಮೀಶನರ್ ಸಾಹೇಬರು. +ಅಲ್ಲಿಗೆ ಆ ಸಮಯದಲ್ಲಿ ಬಂದ ಹೆಚ್ಚು ಜನ ರಾಜಕಾರಣಿಯರು ದೇವಿಯಾದವನ ಪಾರ್ಟಿಗೆ ಸೇರಿದವರಿದ್ದರು. +ಅವರು ವಾದವಿವಾದಕ್ಕೆ ಇಳಿದಾಗ ಸಂಯಮದಿಂದ ಅವರಿಗೆ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದರು ಕಮೀಷನರ್ ಸಾಹೇಬರು. +ಕೊನೆಗೂ ಮನಸ್ಸಿಲ್ಲದ ಮನಸ್ಸಿನಿಂದ ಅವರ ಮಾತನ್ನು ಒಪ್ಪಿಕೊಂಡರು ರಾಜಕಾರಣಿಯರು. +ಅವರ ಬರುವಿಗಾಗೇ ಕಾದಂತೆ ತೆಗೆದುಕೊಂಡಿತು ಪಟುವಾರಿಯವರ ಮನೆಯ ದೊಡ್ಡ ಬಾಗಿಲು. +ಆಳು ಅವರಿಗೆ ಕೂಡುವಂತೆ ಹೇಳಿ ತನ್ನ ಒಡೆಯರನ್ನು ಕರೆಯಲು ಹೋದ. +ಆಂಟಿ ರೆವಲ್ಯೂಷನರಿ ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವರ ಪರಿಚಯ ಚೆನ್ನಾಗಿತ್ತು ರಾಮನಗರದ ಎಸ್.ಪಿ.ಯವರಿಗೆ ಅವರು ಹೇಳಿದಂತೆ ಕೇಳುವುದೇ ಉತ್ತಮವೆಂದುಕೊಂಡು ತೇಜಾನನ್ನು ಅಲ್ಲಿ ಬಿಟ್ಟು, ಮಿಕ್ಕವರನ್ನು ಸೇರಿಕೊಳ್ಳಲು ಹೋದರವರು. +ಸಿಲ್ಕಿನ ಪಂಚೆ, ಜುಬ್ಬಾ ತೊಟ್ಟು ಬಂದ ಪಟುವಾರಿಯವರ ವಯಸ್ಸು ಎಪ್ಪತ್ತನ್ನು ದಾಟಿರಬಹುದು. +ಕೆಂಪನೆಯ ಮುಖದಲ್ಲಿ ಎಂತಹದೋ ಆಕರ್ಷಣೆ. +ಅವರು ಹತ್ತಿರ ಬರುತ್ತಿದ್ದಂತೆ ನಿಂತ ತೇಜಾ ವಿನಯವಾಗಿ ಹೇಳಿದ. +“ನಿಮ್ಮನ್ನು ಈ ಹೊತ್ತಿನಲ್ಲಿ ಎಬ್ಬಿಸುತ್ತಿದ್ದೀವಿ ಕ್ಷಮಿಸಿ…” +“ಕೂಡಿ!ಕೂಡಿ!ನೀವ್ಯಾರಾದರೂ ಬಂದೇ ಬರುತ್ತೀರೆಂದು ನನಗೆ ಗೊತ್ತಿತ್ತು… +ನಿವ್ಯಾರು ಗೊತ್ತಾಗಲಿಲ್ಲ.” +“ಉತೇಜ್, ಇನ್ಸ್‌ಪೆಕ್ಟರ್‌ ಉತೇಜ, ಬೆಂಗಳೂರಿನಿಂದ ನಿನ್ನೆ ತಾನೆ ಬಂಡೇರಹಳ್ಳಿಗೆ ಬಂದೆ. +ಎಲ್ಲಾ ಮುಖ್ಯ ಅಧಿಕಾರಿಯರೂ ಬಂದಿದ್ದಾರೆ. +ನಾವಿಲ್ಲಿ ಅರ್ಧ ಮುಕ್ಕಾಲು ಗಂಟೆ ಒಂದು ಗೌಪ್ಯ ಮೀಟಿಂಗ್ ನಡೆಸಬೇಕೆಂದು ಕೊಂಡಿದ್ದೇವೆ. +ಅದಕ್ಕೆ ನಿಮ್ಮಲ್ಲಿ…”“ಅದಕ್ಕೇನಂತೆ ಬನ್ನಿ, ಇದು ದೊಡ್ಡ ಮನೆ ಪ್ರಶಸ್ತವಾದ ಕೋಣೆ ಇದೆ. +ನೀವು ಬೆಳಗಿನವರೆಗೆ ಮಾತಾಡುತ್ತಾ ಕೂಡಬಹುದು. +ಎಲ್ಲರನ್ನೂ ಕರೆದುಕೊಳ್ಳಿ” ಅವನು ಮಾತು ಮುಗಿಸುವ ಮುನ್ನ ಹೃದಯಪೂರ್ವಕವಾಗಿ ಹೇಳಿದರು ಪಟುವಾರಿಯವರು. +“ಧನ್ಯವಾದ!ಅವರಿಗೆ ಹೇಳುತ್ತೇನೆ” ಎಂದ ತೇಜಾ ಮನೆಯಿಂದ ಹೊರಬಿದ್ದ. +ನಿಧಾನವಾಗಿ ಮಾತಾಡುತ್ತಾ ಅತ್ತ ಕಡೆಯೇ ಬರುತ್ತಿದ್ದರು ಕಮೀಶನರ್, ಕಲೆಕ್ಟರ್, ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ ಮತ್ತು ಎಸ್.ಪಿ.ಸಾಹೇಬರು, ತೇಜಾ ಅವರನ್ನು ಸೇರಿಕೊಂಡು ಮತ್ತೆ ಪಟುವಾರಿಯವರ ಮನೆಯ ಕಡೆ ನಡೆಯತೊಡಗಿದ. +ಅವರೆಲ್ಲರನ್ನೂ ಅಪರಾತ್ರಿಯಲ್ಲಿ ಆಹ್ವಾನಿಸುವಂತೆ ಮುಂಬಾಗಿಲಲ್ಲೇ ನಿಂತಿದ್ದರು ಪಟುವಾರಿ. +ಅವರಿಗೆ ಕಲೆಕ್ಟರ್ ಮತ್ತು ಎಸ್.ಪಿ.ಸಾಹೇಬರ ಪರಿಚಯವಿದ್ದಂತಿತ್ತು. +ತೇಜಾ ಅವರಿಗೆ ಮಿಕ್ಕಿಬ್ಬರನ್ನು ಪರಿಚಯಿಸಿದ. +ಅವರೆಲ್ಲರನ್ನೂ ಅಟ್ಟದ ಮೇಲಿದ್ದ ಒಂದು ದೊಡ್ಡ ಕೋಣೆಗೆ ಕರೆದೊಯ್ದರವರು. +ಅಲ್ಲಿ ಸೋಫಾ ಕುರ್ಚಿಗಳು ಓರಣವಾಗಿ ಜೋಡಿಸಿಡಲಾಗಿದ್ದವು. +ಗೋಡೆಗಳಿಗಿದ್ದ ಶೆಲ್ಫ್‌ಗಳಲ್ಲಿ ದಪ್ಪ ದಪ್ಪನೆಯ ಗ್ರಂಥಗಳು. +ಆಳು ಅಲ್ಲಿ ನೀರಿನ ದೊಡ್ಡ ತಂಬಿಗೆ ಮತ್ತು ಗ್ಲಾಸುಗಳನ್ನು ತಂದಿಟ್ಟು ಹೋದ. +ಬಂದವರೆಲ್ಲಾ ಅಲ್ಲಿ ಕೂಡುತ್ತಿದ್ದಂತೆ ಹೇಳಿದರು ಪಟುವಾರಿ. +“ನೀವಿಲ್ಲಿ ಆರಾಮವಾಗಿ ಮಾತಾಡುತ್ತಾ ಕೂಡಬಹುದು! +ಯಾರೂ ನಿಮ್ಮ ಮಾತನ್ನು ಕೇಳಿಸಿಕೊಳ್ಳುವುದಿಲ್ಲ. +ನಿಮಗೇನಾದರೂ ಬೇಕಾದರೆ ಇವನನ್ನು ಕರೆಯಿರಿ. +ಇವನ ಹೆಸರು ಮಲ್ಲ. +ಕೆಳಗೇ ಇರುತ್ತಾನೆ.” +“ಧನ್ಯವಾದ” ಎಂದರು ಸ್ಕ್ವಾಡಿನ ಮುಖ್ಯಸ್ಥರು. +“ಅಂತಹ ಮಾತಾಡಬೇಡಿ, ಇದು ನನ್ನ ಕರ್ತವ್ಯ” ಎನ್ನುತ್ತಾ ಹೊರಟುಹೋದರವರು. +ಅವರು ಹೋಗುತ್ತಿದ್ದಂತೆ ಬಾಗಿಲು ಹಾಕಿ ಅದಕ್ಕೆ ಬೋಲ್ಪನ್ನು ಎಳೆದ ತೇಜಾ. +ಎಕ್ಸ್‌ನ್ನು ಬಳಸಲಾಗಿದೆ ಹೇಳಿದರು ರಾಮನಗರದ ಎಸ್.ಪಿ.ಅವರ ಕಡೆ ಒಮ್ಮೆ ನೋಡಿ ಕಲೆಕ್ಟರ್ ಕಡೆ ತಿರುಗಿದರು ಕಮೀಶನರ್ ಸಾಹಬೇರು. +“ಈ ಕಲ್ಲಕ್ಕನ ಚಟುವಟಿಕೆ ದಿನದಿನಕ್ಕೆ ವಿಸ್ತಾರಗೊಳ್ಳುತ್ತಿದೆ. +ಅದನ್ನು ಆದಷ್ಟು ಬೇಗ ನಿಯಂತ್ರಿಸದಿದ್ದರೆ ಇಡೀ ರಾಜ್ಯದಲ್ಲೇ ಅಲ್ಲೋಲಕಲ್ಲೋಲ ಪರಿಸ್ಥಿತಿ ಹುಟ್ಟಬಹುದು….” +“ಅದಕ್ಕಾಗಿ ನಾವು ನಮ್ಮಿಂದಾದಷ್ಟು ಮಾಡುತ್ತಿದ್ದೇವೆ! +ಆದಷ್ಟು ಬೇಗ ಸಫಲರಾಗುವುದೆಂಬ ನಂಬಿಕೆಯೂ ನಮಗಿದೆ” ಕಮೀಷನರ ಮಾತನ್ನು ನಡುವೆಯೇ ತಡೆದು ಮಾತಾಡಿದರು ಎಸ್.ಪಿ. +ಕಮೀಷನರ್‌ ಅವರ ಕಡೆ ಒಮ್ಮೆ ಕೋಪದಿಂದ ನೋಡಿ, ಕಲೆಕ್ಟರರ ಕಡೆ ತಲೆ ತಿರುಗಿಸಿದರು. +“ನೀವು ಮಾತಿನ ನಡುವೆ ಬಾಯಿ ಹಾಕುವ ಅಭ್ಯಾಸ ಬಿಡಿ! +ಕೇಳಿದ ಪ್ರಶ್ನೆಗೆ ಉತ್ತರಿಸಿ ಅಷ್ಟೆ!” ಕಟುವಾದ ದನಿಯಲ್ಲಿ ಎಸ್.ಪಿ.ಯವರಿಗೆ ಅದೇಶಿಸಿದರು ಕಲೆಕ್ಟರ್. +ತಪ್ಪು ಮಾಡಿದವರಂತೆ ಅವರು ತಲೆ ಕೆಳಹಾಕಿಕೊಂಡಾಗ ತಮ್ಮ ಮಾತನ್ನು ಮುಂದುವರೆಸಿದರು ಕಮೀಷನರ್. +“ನಮಗೆ ಬಂದ ಇಂಟೆಲಿಜೆನ್ಸ್ ರಿಪೋರ್ಟ್‌ಗಳ ಪ್ರಕಾರ ಕಲ್ಲಕ್ಕನ ಜನಪ್ರಿಯತೆ ಹೆಚ್ಚುತ್ತಿದೆ. +ದಿನದಿಂದ ದಿನಕ್ಕೆ ಅವಳ ಸಹಾನುಭೂತಿಪರರು ಹೆಚ್ಚುತ್ತಿದ್ದಾರೆ. +ಅದಕ್ಕೆ ಈಗ ನಡೆದ ಘಟನೆಯೇ ಉದಾಹರಣೆ. +ದೇವಿಯಾದವರು ರಾಮನಗರಕ್ಕೆ ಬರಲಿದ್ದಾರೆಂದು ಅವರು ಇಂತಹ ಸಮಯದಲ್ಲಿ ಈ ದಾರಿಯ ಮೂಲಕ ಹೋಗುವರೆಂದು ಅವರಿಗೆ ಹೇಗೆ ಗೊತ್ತಾಯಿತು. +ಈ ವಿಷಯವನ್ನು ಪಟ್ಟಣದಲ್ಲಿರುವ ಅಥವಾ ರಾಮನಗರ ದಲ್ಲಿರುವ ಅವಳ ಸಹಾನುಭೂತಿಪರರೇ ಅವರಿಗೆ ತಿಳಿಸಿರಬಹುದು. +ಈ ಭಯಂಕರ ಕಾಡಿನಲ್ಲಿ ಅವಳನ್ನು ಅಟ್ಟಿ ಬಂಧಿಸುವುದು, ಮುಗಿಸುವುದು ಅಸಾಧ್ಯ. +ಅದಕ್ಕೆ ಸಿ.ಎಂ.ಸಾಹೇಬರ ಆಜ್ಞೆಯ ಪ್ರಕಾರ ನಾ ಒಂದು ಹೊಸ ಯೋಜನೆ ರೂಪುಗೊಳಿಸಿದ್ದೇವೆ. +ಅದರ ಪ್ರಕಾರ ನಾವೀಗ ಕೆಲಸ ಮಾಡಬೇಕು. +ಅದೇನೆಂಬುದು ನಿಮಗೆ ಸ್ಕ್ವಾಡಿನ ಮುಖ್ಯಸ್ಥರು ವಿವರಿಸುತ್ತಾರೆ.” +ಭಾಷಣದಂತಹ ಮಾತನ್ನು ದಣಿದವರಂತೆ ನಿಲ್ಲಿಸಿದರು ಕಮೀಷನರ್. +ಹತ್ತಿರದಲ್ಲೇ ಇದ್ದ ತಂಬಿಗೆಯಿಂದ ಗ್ಲಾಸಿಗೆ ನೀರನ್ನು ಹಾಕಿ ಅವರಿಗೆ ಕೊಟ್ಟ ತೇಜಾ, ರಾಮನಗರದ ಹಿರಿಯ ಅಧಿಕಾರಿಯರ ಕಡೆ ಒಮ್ಮೆಲೇ ನೋಡಿ ಹೇಳಿದರು ಸ್ಕ್ವಾಡ್‌ನ ಮುಖ್ಯಸ್ಥರು. +“ನಾನು ನಿಮಗೆ ಇನ್ಸ್‌ಪೆಕ್ಟರ್‌ ಉತೇಜ್ ಬಂಡೇರಾಹಳ್ಳಿಗೆ ಯಾಕೆ ಬರುತ್ತಿದ್ದಾನೆ. +ಅಲ್ಲಿ ಪೊಲೀಸ್ ಸ್ಟೇಷನ್ ಹಾಕುವ ಯೋಜನೆ ಇದೆ ಎಂದು ಮೊದಲೇ ಹೇಳಿದ್ದೆ. +ಆದರೂ ನಿವ್ಯಾರೂ ಅವನಿಗೆ ಸರಿಯಾಗಿ ಸಹಕಾರ ನೀಡಲಿಲ್ಲ ಸರಿ ತಾನೆ.” +ಅದಕ್ಕೆ ಏನು ಹೇಳಬೇಕೆಂಬುವುದು ರಾಮನಗರದ ಅಧಿಕಾರಿಗಳಿಗೆ ಕೂಡಲೇ ಹೊಳೆಯಲಿಲ್ಲ. +ಅವರಿಗೆ ಯೋಚಿಸುವ ಅವಕಾಶ ಕೊಡದೇ ಮತ್ತೆ ಮಾತನ್ನು ಮುಂದುವರೆಸಿದರು ಸ್ಕ್ವಾಡಿನ ಮುಖ್ಯಸ್ಥರು. +“ಇಲ್ಲಿ ಇಂತಹ ಘೋರ ಘಟನೆ ನಡೆದಿದೆ. +ನೀವದನ್ನು ಮೊದಲು ಅವನಿಗೆ ತಿಳಿಸಬೇಕಾಗಿತ್ತು. +ಆದರೆ ನೀವು ಹಾಗೆ ಮಾಡಲಿಲ್ಲ. +ನಾನೇ ಬೆಂಗಳೂರಿನಿಂದ ಅವನಿಗೆ ವಿಷಯ ತಿಳಿಸಿದ್ದು. +ಇದು ಸಿ.ಎಂ.ಸಾಹೇಬರಿಗೆ ಗೊತ್ತಾದರೆ ಅವರು ಸುಮ್ಮನಿರುವವರಲ್ಲ.” +“ನಾನು ಅದು ಅಷ್ಟು ಮುಖ್ಯವೆಂದುಕೊಳ್ಳಲಿಲ್ಲ ಸರ್” ಅವರೆಗೆ ಏನಾದರೂ ಹೇಳಬೇಕೆಂದು ತನ್ನ ಯೋಚನೆಗಳನ್ನು ಕಲೆ ಹಾಕುತ್ತಿದ್ದ ಎಸ್.ಪಿ.ಹೇಳಿದ. + “ಅಂದರೆ ನೀವು ಕಲ್ಲಕ್ಕನನ್ನು ಅವಳ ಕ್ರಾಂತಿಕಾರಿ ಚಟುವಟಿಕೆಗಳನ್ನು ಮುಖ್ಯವೆಂದುಕೊಂಡಿಲ್ಲವೇ? +ಅವನ ಮಾತು ಮುಗಿಯುತ್ತಲೇ ಕೇಳಿದರು ಸ್ಕ್ವಾಡಿನ ಮುಖ್ಯಸ್ಥರು. +“ಹಾಗಲ್ಲ ಸರ್!ಇದೆಲ್ಲದಕ್ಕೂ ಇನ್ಸ್‌ಪೆಕ್ಟರ್ ಉತ್ತೇಜ್ ಅಷ್ಟು ಮುಖ್ಯವೆಂದುಕೊಂಡಿರಲಿಲ್ಲ.” ಗೊಂದಲದಲ್ಲಿ ತಮ್ಮ ಸೃಷ್ಟಿಕರಣ ನೀಡಿದರು ಎಸ್.ಪಿ.ಸಾಹೇಬರು. +“ಅಂದರೆ ನಿಮಗೆ ನನ್ನ ಮಾತು ಮುಖ್ಯವೆನಿಸಲಿಲ್ಲವೆಂದರ್ಥ” ಸಿಟ್ಟಿನ ದನಿಯಲ್ಲಿ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು. +“ನೋಡಿ!ಈಗ ಆಗಿದ್ದೇನೋ ಆಗಿಹೋಗಿದೆ. +ಮುಂದಿನ ಯೋಜನೆಯ ಬಗ್ಗೆ ಮಾತಾಡುವ” ಸಂಧಾನ ಒಂದಕ್ಕೆ ಬರುವಂತಹ ದನಿಯಲ್ಲಿ ಹೇಳಿದರು ಕಲೆಕ್ಟರ್ ಸಾಹೇಬರು. +ಅವರ ಮಾತು ಮುಗಿಯುತ್ತಿದ್ದಂತೆ ಬಾಗಿಲ ಮೇಲೆ ಬೆರಳಿನಿಂದ ಬಡಿದ ಸದ್ದಾಯಿತು. +ಹತ್ತಿರದಲ್ಲೇ ಕುಳಿತಿದ್ದ ತೇಜಾ ಬೋಲ್ಟು ತೆಗೆದ. +ಆಳು ಟ್ರೇ ಒಂದರಲ್ಲಿ ಕಾಫಿಯ ಲೋಟಗಳನ್ನು ಹಿಡಿದು ಬಂದಿದ್ದ. +ಪಟುವಾರಿಯವರು ಇನ್ನೂ ಮಲಗಿರಲಿಕ್ಕಿಲ್ಲ ಎಂದುಕೊಳ್ಳುತ್ತಾ ಟ್ರೇ ತೆಗೆದುಕೊಂಡ ತೇಜಾ, ಅದನ್ನು ನಡುವಿದ್ದ ಚಿಕ್ಕ ಟೇಬಲಿನ ಮೇಲಿಟ್ಟ. +ತನ್ನ ಕೆಲಸ ಮುಗಿದಂತೆ ಆಳು ಹೊರಟುಹೋಗುತ್ತಿದ್ದಂತೆ ಮತ್ತೆ ಬಾಗಿಲಿಗೆ ಬೋಲ್ಟು ಎಳೆದ. +ಅಲ್ಲಿದ್ದ ಎಲ್ಲರಿಗೂ ಆಗ ಕಾಫಿಯ ಅವಶ್ಯಕತೆ ಇದ್ದಂತೆ ಕಂಡು ಬರುತ್ತಿತ್ತು. +ಅವರೆಲ್ಲಾ ತಮ್ಮ ತಮ್ಮ ಗ್ಲಾಸುಗಳನ್ನು ತೆಗೆದುಕೊಂಡರು. +ಕಾಫಿ ಕುಡಿದು ಮುಗಿಸುವವರೆಗೂ ಯಾರೂ ಏನೂ ಮಾತಾಡಲಿಲ್ಲ. +ಎಲ್ಲರೂ ತಮ್ಮ ತಮ್ಮ ಯೋಚನೆಗಳಲ್ಲಿ ತೊಡಗಿರುವಂತೆ ಕಂಡುಬರುತ್ತಿತ್ತು. +ತಮ್ಮ ಬರಿದಾದ ಗ್ಲಾಸನ್ನು ಕೆಳಗಿಡುತ್ತಾ ಕೊನೆಯ ಮಾತೆಂಬಂತಹ ದನಿಯಲ್ಲಿ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು. +“ಈ ಸಮಯದಲ್ಲಿ ನಿಮ್ಮೊಡನೆ ವಾದವಿವಾದಕ್ಕೆ ಇಳಿಯುವ ಸಂಯಮ ನನಗಿಲ್ಲ. +ಒಂದು ಮಾತು ಮರೆಯಬೇಡಿ ಈ ಜಿಲ್ಲೆಯ ಯಾವ ಮೂಲೆಗಾದರೂ ಯಾವುದಾದರೂ ಕ್ರಾಂತಿಗೆ ಸಂಬಂಧಿಸಿದ ಘಟನೆ ನಡೆದರೆ ಅದು ಮೊದಲು ಇನ್ಸ್‌ಪೆಕ್ಟರ್‌ ಉತ್ತೇಜ್‌ನಿಗೆ ತಿಳಿಯಬೇಕು. +ಇಡೀ ಜಿಲ್ಲೆಯಲ್ಲಿ ಕ್ರಾಂತಿಕಾರಿ ಚಟುವಟಿಕೆಗಳನ್ನು ನಿಯಂತ್ರಿಸಲು ಅವನನ್ನು ನೇಮಿಸಲಾಗಿದೆ. +ಬಂಡೇರಹಳ್ಳಿಯಲ್ಲಿ ಈಗ ಹುಟ್ಟುತ್ತಿರುವ ಪೋಲಿಸ್ ಸ್ಟೇಷನ್, ಅಲ್ಲಿ ಉತೇಜ್ ಇರುವುದು ನೆಪಮಾತ್ರಕ್ಕಷ್ಟೆ. +ಅವನ ಈ ಕೆಲಸದಲ್ಲಿ ಇಡೀ ಜಿಲ್ಲೆಯ ಪೋಲಿಸ್ ಖಾತೆ, ಇನ್ನಿತರ ಡಿಪಾರ್ಟ್‌ಮೆಂಟ್‌ಗಳು ಅವನಿಗೆ ಸಹಕರಿಸಬೇಕು. +ಬೇಕಾದರೆ ಈ ಕುರಿತಾದ ಪತ್ರವನ್ನು ಸಿ.ಎಂ.ರ ಕಾರ್ಯಾಲಯದಿಂದ ಕಳಿಸುತ್ತೇನೆ, ಅರ್ಥವಾಯಿತೆ.” +“ಅರ್ಥವಾಯಿತು ಇನ್ನು ಮುಂದೆ ಹಾಗೇ ಆಗುತ್ತದೆ” ಹೇಳಿದ ಎಸ್.ಪಿ. +“ಸಿ.ಎಂ.ಸಾಹೇಬರಿಂದ ಪತ್ರ ಕಳಿಸಲೇ” ಮತ್ತೆ ಒತ್ತಿ ಕೇಳಿದರು ಸ್ಕ್ವಾಡಿನ ಮುಖ್ಯಸ್ಥರು. +“ಬೇಡ!ಬೇಡ!ಅದರ ಅವಶ್ಯಕತೆ ಇಲ್ಲ” ಅವಸರದ ದನಿಯಲ್ಲಿ ಹೇಳಿದರು ಕಲೆಕ್ಟರ್ ಸಾಹೇಬರು. +ರಾಮನಗರದ ಆದಾಯ ಎಲ್ಲಿ ಕಳೆದುಕೊಳ್ಳಬೇಕಾಗುವುದೋ ಎಂಬ ಭಯ ಅವರಿಗೆ. +ಹಾಗೇ ಇನ್ನೂ ಸ್ವಲ್ಪ ಸಮಯ ಕಲ್ಲಕ್ಕನ ವಿಷಯ ಮಾತಾಡಿ ಒಂದು ನಿರ್ಣಯಕ್ಕೆ ಬಂದು ಅಲ್ಲಿಂದ ಎದ್ದರವರು. +ಅವರೆಲ್ಲಾ ಅಟ್ಟವನ್ನು ಇಳಿಯುತ್ತಿದ್ದಾಗ ಪಟುವಾರಿಯವರು ಮುಂದಿನ ಕೋಣೆಯಲ್ಲಿ ಬಂದು ನಿಂತಿದ್ದರು. +ಅದು ಯಾರಲ್ಲೂ ಅಚ್ಚರಿ ಹುಟ್ಟಿಸಲಿಲ್ಲ. +ಆ ರಾತ್ರಿಯೇ ಅಂತಹ ರಾತ್ರಿ. +ಹೊರ ಹೋಗುವ ಮುನ್ನ ಎಲ್ಲರೂ ಹಾರ್ದಿಕವಾಗಿ ಅವರ ಕೈ ಕುಲಕಿ ಧನ್ಯವಾದಗಳನ್ನು ಹೇಳಿದರು. +ಕೊನೆಯಲ್ಲಿದ್ದವನು ಸ್ಕ್ವಾಡಿನ ಮುಖ್ಯಸ್ಥರು. +ಪಟುವಾರಿಯವರ ಕೈಯನ್ನ ಹಿಡಿದು ನಿಂತಿದ್ದ ಅವರು ಮಿಕ್ಕವರು ಮನೆಯಿಂದ ದೂರವಾದಾಗ ಕೇಳಿದರು. +“ಈ ಕಲ್ಲಕ್ಕನ ಬಗ್ಗೆ ನಿಮ್ಮ ಅಭಿಪ್ರಾಯವೇನು?”ವಿಚಿತ್ರವೆನಿಸುವಂತಹ ನೋವಿನ ಮುಗುಳ್ನಗೆ ನಕ್ಕು ಹೇಳಿದರವರು. +“ಆಕೆ ಕ್ರಾಂತಿಕಾರಿಯಲ್ಲ. +ತನ್ನದೇ ರೀತಿಯಲ್ಲಿ ಸಮಾಜವನ್ನು ಸುಧಾರಿಸಿಸಲು ಹೊರಟಿದ್ದಾಳೆನಿಸುತ್ತದೆ” +“ಅಂದರೆ ಆಕೆ ಸಮಾಜಸುಧಾರಕೆ!” ಗಂಭೀರದನಿಯಲ್ಲಿ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು ಶ್ರೀವಾಸ್ತವ. +ಅದಕ್ಕೆ ಹೌದೆಂಬಂತೆ ತಲೆ ಹಾಕಿದರು ಪಟವಾರಿ. +ಬಂಡೇರಹಳ್ಳಿಯ ಕಾಡಿನ ತಮ್ಮ ಬೆಟ್ಟದ ಮೇಲೆ ಬರುವಲ್ಲಿ ಬಹಳಷ್ಟು ದಣಿದುಬಿಟ್ಟಿದ್ದರು ಕಲ್ಯಾಣಿಯ ಕ್ರಾಂತಿಕಾರಿ ತಂಡದವರು. +ಹೊಟ್ಟೆ ತುಂಬಾ ನೀರು ಕುಡಿದು ದಣಿವನ್ನು ಆರಿಸಿಕೊಳ್ಳುತ್ತಿರುವಾಗ ಹೇಳಿದ ಮಲ್ಲಪ್ಪ. +“ಈ ಗದ್ದಲದಲ್ಲಿ ನಾನೊಂದು ಮುಖ್ಯ ವಿಷಯ ಹೇಳಲು ಅವಕಾಶವೇ ದೊರೆತಿಲ್ಲ.” +ಕಂದೀಲಿನ ಬೆಳಕಿನಲ್ಲಿ ಅದೇನೆಂಬಂತೆ ಅವನ ಕಡೆ ನೋಡಿದಳು ಕಲ್ಯಾಣಿ. +ದಣಿವಿನ ಕಾರಣ ಅವಳಲ್ಲಿ ಮಾತೂ ಬೇಸರ ಹುಟ್ಟಿಸುವ ಹಾಗಿತ್ತು. +“ಬಂಡೇರಹಳ್ಳಿಯಲ್ಲಿ ಪೋಲಿಸ್ ಸ್ಟೇಷನ್ ತೆಗೆಯಲ್ಲಿದ್ದಾರೆ ಅದಕ್ಕೆ ಬೆಂಗಳೂರಿನಿಂದ ಉತ್ತೇಜ್ ಎಂಬ ಇನ್ಸ್‌ಪೆಕ್ಟರ್‌ ಬಂದಿದ್ದಾನೆ” +ಇದು ಅಲ್ಲಿದ್ದ ಎಲ್ಲರಿಗೂ ಆಶ್ಚರ್ಯದ ವಿಷಯವಾಗಿತ್ತು. +ಅವನು ಹೇಗಿದ್ದಾನೆ! +ಯಾವ ಕಟ್ಟಡವನ್ನು ಪೋಲಿಸ್ ಸ್ಟೇಷನ್ನಿಗಾಗಿ ಉಪಯೋಗಿಸುತ್ತಿದ್ದಾರೆ? +ಎಷ್ಟು ಜನ ಪೇದೆಯರು ಬಂದಿದ್ದಾರೆ?” ತನ್ನ ದಣಿವನ್ನು ಮರೆತು ಆತುರದಲ್ಲಿ ಒಂದರ ಹಿಂದೆ ಒಂದು ಪ್ರಶ್ನೆ ಹಾಕಿದ ಶಂಕರ. +“ಅದರ ಎಲ್ಲಾ ಉಸ್ತುವಾರಿಯನ್ನು ಆ ಇನ್ಸ್‌ಪೆಕ್ಟರ್‌ ಉತ್ತೇಜ್‌ನ ನೋಡಿಕೊಳ್ಳುತ್ತಾನಂತೆ. +ಈ ದಿನವೆಲ್ಲಾ ಬಂಡೇರಹಳ್ಳಿಯಲ್ಲಿ ಇದ್ದನಂತೆ ಒಂದೆರಡು ದಿನದಲ್ಲಿ ಪೊಲೀಸ್ ಸ್ಟೇಷನ್ ಆರಂಭವಾಗಬಹುದೆಂದು ಮಾತಾಡಿ ಕೊಳ್ಳುತ್ತಿದ್ದರು” ವಿವರಣೆ ನೀಡಿದ ಮಲ್ಲಪ್ಪ. +“ಅದು ಆರಂಭವಾಗುತ್ತಲೇ ಅದನ್ನು ಎಗರಿಸಿಬಿಡಬೇಕು” ಆಗತಾನೇ ಬಾಂಬು ಮಾಡಿದ ವಿನಾಶವನ್ನು ನೆನಹಿಸಿಕೊಳ್ಳುತ್ತಾ ಹೇಳಿದ ನಾಗೇಶ. +ಅದನ್ನು ಕೇಳಿಸಿಕೊಳ್ಳದವಳಂತೆ ಮಾತಾಡಿದಳು ಕಲ್ಯಾಣಿ. +“ಹರಿ!ನನಗೆ ಉತೇಜ್‌ನ ಜಾತಕವೆಲ್ಲಾ ಆದಷ್ಟು ಬೇಗ ಬೇಕು ಅದು ಸಾಧ್ಯವೇ?” +“ಖಂಡಿತ ಸಾಧ್ಯ ಅಕ್ಕ” ಆತ್ಮವಿಶ್ವಾಸದ ದನಿಯಲ್ಲಿ ಹೇಳಿದ ಹರಿ. +“ಅದರ ಬಗ್ಗೆ ಯೋಚಿಸು!… +ಇನ್ನು ಎಲ್ಲರೂ ಎಲ್ಲವನ್ನೂ ಮರೆತು ನಿಮ್ಮ ನಿಮ್ಮ ಸ್ಥಳಗಳಲ್ಲಿ ಹಾಯಾಗಿ ಮಲಗಿ.” +ಅದು ಆಜ್ಞೆ ಎಂಬಂತೆ ಯಾರೂ ಒಂದು ಮಾತೂ ಆಡದೇ ಮಲಗಲು ಹೋದರು. +ದಣಿದ ಅವರ ದೇಹಗಳನ್ನು ನೋಡು ನೋಡುತ್ತಿದ್ದಂತೆ ನಿದ್ದೆ ತನ್ನಲ್ಲಿ ಸೆಳೆದುಕೊಂಡು ಬಿಟ್ಟಿತು. +ತನ್ನದೇ ಆದ ವಿನೂತನ ಯೋಜನೆಯನ್ನು ರೂಪಿಸಿ ಅದರ ಬಗ್ಗೆ ಸ್ಕ್ವಾಡಿನ ಮುಖ್ಯಸ್ಥರೊಡನೆ ಚರ್ಚಿಸಿ ಅವರ ಒಪ್ಪಿಗೆ ಪಡೆದು ಬಂಡೇರಹಳ್ಳಿಗೆ ಬಂದಿದ್ದ ತೇಜಾ ಮೊದಲು ರಾಮನಗರದಲ್ಲಿ ಎಸ್.ಪಿ.ಯವರಿಗೆ ರಿಪೋರ್ಟ್ ಮಾಡಿದಾಗ ಅವನನ್ನು ತಮ್ಮ ಚೇಂಬರಿನಿಂದ ಬೇಗ ಅಟ್ಟುವ ಆತುರ ತೋರಿದ್ದರವರು. +ಕ್ರಾಂತಿಕಾರಿಯರು, ಕಲ್ಲಕ್ಕ ಅವರ ದೃಷ್ಟಿಯಲ್ಲಿ ಯಾವ ಮಹತ್ವದ ವಿಷಯಗಳೂ ಆಗಿರಲಿಲ್ಲ. +ಬಂಡೇರಹಳ್ಳಿಯಲ್ಲಿ ಪೋಲಿಸ್ ಸ್ಟೇಷನ್ ಹಾಕುವದೆಂದರೆ ಹುಚ್ಚುತನವೆಂದು ಅವನಿಗವರು ತಾವೇ ಬಾಯಿಬಿಟ್ಟು ಹೇಳಿದ್ದರು. +ಮೇಲಧಿಕಾರಿಯರ ಆಜ್ಞೆಗೆ ತಲೆಬಾಗಬೇಕೆಂಬಂತೆ ತೇಜಾ ಹೇಳಿದ್ದಕ್ಕೆಲ್ಲಾ ಹೂಂಗುಟ್ಟಿದ್ದರು. +ಬಂಡೇರಹಳ್ಳಿಗೆ ಬಂದ ತೇಜಾ ಒಂದು ಹಳೆಯ ಕಟ್ಟಡವನ್ನು ಬಾಡಿಗೆಗೆ ಪಡೆಯುವ ವ್ಯವಸ್ಥೆ ಮಾಡಿದ್ದ. +ಅದರ ಸಮೀಪದಲ್ಲೇ ಅವನ ವಾಸಸ್ಥಾನಕ್ಕೊಂದು ಮನೆ. +ರಾಮನಗರದ ಮುಖ್ಯ ಕಾರ್ಯಾಲಯದಲ್ಲಿದ್ದ ಹಳೆಯ ಫರ್‌ನೀಚರ್‌ನ ರಿಪೇರಿ ಮಾಡಿಸಿ ವ್ಯಾನಿನಲ್ಲಿ ತಂದೂ ಆಗಿತ್ತು. +ಅವನ ಸಹಾಯಕ್ಕೆ ಒಬ್ಬ ಎಸ್.ಐ.ಮತ್ತೊಬ್ಬ ಪೇದೆ ಮಾತ್ರ. +ಆ ಇಬ್ಬರೊಡನೆ ಅವನೂ ಆಳಿನಂತೆ ಕೆಲಸ ಮಾಡಿ ಫರ್‌ನೀಚರನ್ನು ಜೋಡಿಸಿದ್ದ. +ಬಂಡೇರಹಳ್ಳಿಗೆ ಯಾವ ಪೋಲಿಸಿನವನೂ ಬರಲು ಸಿದ್ಧನಿಲ್ಲ. +ಅಲ್ಲಿ ಆದಾಯದ ಯಾವ ಕಸಬು ಇಲ್ಲ. +ಒಬ್ಬ ಎಚ್.ಸಿ.ಮೂವರು ಪೇದೆಯರನ್ನು ಬಂಡೇರಹಳ್ಳಿಯ ಹೊಸ ಪೊಲೀಸ್ ಸ್ಟೇಷನ್ನಿ ವರ್ಗಾಯಿಸುವುದರಲ್ಲಿ ಸಫಲನಾಗಿದ್ದ. +ಅವರೆಲ್ಲರಿಗೂ ತೇಜಾನ ಮೇಲೆ ಎಲ್ಲಿಲ್ಲದ ಕೋಪ. +ಆದರದನ್ನು ಅವರು ಹೊರಗೆಡಹುವಂತಿಲ್ಲ. +ಮತ್ತು ಎಚ್.ಸಿ.ತಾವು ರಾಮನಗರಕ್ಕೆ ಹೋಗಿ ನಾಳೆ ಬಂದು ಮಿಕ್ಕ ಕೆಲಸವನ್ನು ಮಾಡುತ್ತೇವೆಂದಿದ್ದರು. +ಪೇದೆಯರನ್ನು ಆ ದಿನ ಬಂಡೇರಹಳ್ಳಿಯಲ್ಲೇ ಕಳೆಯುವಂತೆ ಆದೇಶಿಸಿದ್ದ. +ಅವರು ಪೊಲೀಸ್ ಸ್ಟೇಷನ್ ಕಟ್ಟಡದಲ್ಲೇ ಮಲಗುವ ಏರ್ಪಾಡು ಮಾಡಿಕೊಂಡಿದ್ದರು. +ಆ ಮೊದಲನೆಯ ದಿನವೇ ಹೊಸ ಪೋಲೀಸ್ ಸ್ಟೇಷನಿಗೆ ಫೋನಿನ ಕನೆಕ್ಷನ್ನೂ ಬರುವಂತೆ ಮಾಡಿದ. +ಇವೆಲ್ಲಾ ಕೆಲಸಗಳು ಮುಗಿಯುವುದರಲ್ಲಿ ಕತ್ತಲಾಗಿ ಹೋಗಿತ್ತು. +ಐ ಮತ್ತು ಎಚ್.ಸಿ.ಯವರು ರಾಮನಗರಕ್ಕೆ ಹೋದಮೇಲೆ ಪೇದೆಯೊಬ್ಬನಿಗೆ ಪಕ್ಕದಲ್ಲಿ ಇದ್ದ ಗುಡಿಸಲ ಹೋಟೆಲಿನಿಂದ ಕಾಫಿ ತರುವಂತೆ ಹೇಳಿ ಕಾಲು ಚಾಚಿ ಕುಳಿತು ದಣಿವು ಆರಿಸಿಕೊಳ್ಳುತ್ತಿದ್ದಾಗ ದಪ್ಪನೆಯ ಪೇಟಾ ಸುತ್ತಿದ ಒಬ್ಬ ದೃಢಕಾಯ ಆಳು ಅವನ ಕೋಣೆ ಪ್ರವೇಶಿಸಿದ. +ಸರಿಯಾಗಿ ಕುಳಿತ ತೇಜಾ ಆತನನ್ನು ಆದರದಿಂದ ಸ್ವಾಗತಿಸಿ ಎದುರಿಗೆ ಕೂಡುವಂತೆ ಹೇಳಿದ. +ಕುರ್ಚಿಯಲ್ಲಿ ಕೊಡುತ್ತಾ ಕೇಳಿದ್ದನಾತ“ನೀವೇನಾ ಈ ಹೊಸ ಪೋಲೀಸ್ ಸ್ಟೇಷನ್ನಿನ ಇನ್ಸ್‌ಪೆಕ್ಟರ್?” +“ಹೌದು ನಾನೇ!… ನಿವ್ಯಾರು ಗೊತ್ತಾಗಲಿಲ್ಲ…” +“ಆದರೆ ಡ್ರೆಸ್‌ನಲ್ಲಿಲ್ಲ. . ”“ +ಇಲ್ಲ. ಬಂಡೇರ ಹಳ್ಳಿಯಲ್ಲಿ ಇರುವ ತನಕ ನಾನು ಪೋಲಿಸ್ ಯುನಿಫಾರಂ ಹಾಕುವುದಿಲ್ಲ. +ನಿಮ್ಮ ಹೆಸರು?” ಅವರ ಮಾತು ಪೂರ್ತಿಯಾಗುವ ಮುನ್ನ ಮಾತಾಡಿದ ತೇಜಾ, ಎದುರಿಗೆ ಕುಳಿತ ದಷ್ಟಪುಷ್ಟ ವ್ಯಕ್ತಿ ಎರಡೂ ಕೈಗಳಿಂದ ತನ್ನ ಪೇಟಾ ಸರಿಪಡಿಸಿಕೊಂಡು ಸ್ವಲ್ಪ ಗತ್ತಿನ ದನಿಯಲ್ಲಿ ಹೇಳಿದ“ನನ್ನ ಸಿದ್ಧಾನಾಯಕ್ ಎನ್ನುತ್ತಾರೆ. +ಇಲ್ಲಿಯ ಪಂಚಾಯಿತಿ ಪ್ರೆಸಿಡೆಂಟ್ ನಾನು, ನನ್ನ ಕೇಳದೇ ಇಲ್ಲಿ ಪೋಲಿಸ್ ಸ್ಟೇಷನ್ ಯಾಕೆ ಹಾಕಿದರು.” +ಎಲ್ಲರಿಗೂ ಅಧಿಕಾರದ ಮದ ಎಂದುಕೊಳ್ಳುತ್ತಾ ವಿನಯದ ದನಿಯಲ್ಲಿಯೇ ಹೇಳಿದ ತೇಜಾ. +“ಇದು ಮೇಲಿನಿಂದ ಬಂದ ಆಜ್ಞೆ, ಅದಕ್ಕೆ ತುರಾತುರಿಯಲ್ಲಿ ಕೆಲಸ ನಡೆದುಹೋಯಿತು. +ಅದರಿಂದಾಗಿ ನಿಮಗೆ ತಿಳಿಸಲು ಆಗಿರಲಿಕ್ಕಿಲ್ಲ.” +ತೇಜಾನ ಕೊನೆಯ ಮಾತು ನಾಯಕನಲ್ಲಿ ಎಲ್ಲಿಲ್ಲದ ಹೆಮ್ಮೆ ಹುಟ್ಟಿಸಿತು. +ಅಂತಹದೇ ದನಿಯಲ್ಲಿ ಹೇಳಿದ್ದ. +“ಏನೇ ಆಗಲಿ!ಒಳ್ಳೆಯದೇ ಆಯಿತು. +ಪೊಲೀಸಿನವರಿದ್ದರೆ ಜನ ಹೆದರುತ್ತಾರೆ. +ತಗ್ಗಿ ಬಗ್ಗಿ ನಡೆಯುತ್ತಾರೆ.” +ಅವನ ಮಾತು ತೇಜಾನಲ್ಲಿ ಆಶ್ಚರ್ಯ ಹುಟ್ಟಿಸಿತ್ತು. +ಆದರೂ ಅದನ್ನು ಕೆದಕುವ ಸಮಯ ಇದಲ್ಲವೆಂದು ಸುಮ್ಮನಾಗಿಬಿಟ್ಟಿದ್ದ. +ಮಂದೇನು ಮಾತಾಡಬೇಕೆಂದು ಆ ಪಂಚಾಯಿತಿ ಪ್ರೆಸಿಡೆಂಟನಿಗೆ ತೋಚಿದ ಹಾಗಿಲ್ಲ. +ಸ್ವಲ್ಪ ಹೊತ್ತು ಕುರ್ಚಿಯಲ್ಲಿ ಮಿಸುಕಾಡಿ ಏಳುತ್ತಾ ಎಚ್ಚರಿಸುವಂತಹ ಮೆಲ್ಲನೆಯ ದನಿಯಲ್ಲಿ ಹೇಳಿದ್ದ. +“ನಾ ಬರುತ್ತೇನೆ! +ಹುಶಾರಾಗಿರಿ ಇಲ್ಲಿಯ ಜನ ಒಳ್ಳೆಯವರಲ್ಲ ಅದರಲ್ಲಿ ನೀವು ಹೊಸಬರು ಬೇರೆ.” +ಮೊದಲ ದಿನವೇ ಇಂತಹ ವಿಚಿತ್ರ ವ್ಯಕ್ತಿಯ ಭೇಟಿಯಾಯಿತಲ್ಲಾ ಎಂದು ಅವನ ಬಗ್ಗೆ ಯೋಚಿಸುವದರಲ್ಲಿ ಸ್ವಲ್ಪ ಸಮಯ ಕಳೆದ. +ಆ ಯೋಚನೆ ದೂರವಾಗುತ್ತಿದ್ದಂತೆ ಪೋಲಿಸ್ ಸ್ಟೇಷನ್ ಸ್ಥಾಪಿಸುವುದರಲ್ಲಿ ತಾನು ಪಟ್ಟ ಪಾಡು ನೆನಪಾಗಿ ಮನ ಗೊಂದಲಕ್ಕೀಡಾಗಿತ್ತು. +ಇಲ್ಲಿ ಎಲ್ಲರೂ ಹೊಸಬರೆ. +ಕನಿಷ್ಟ ತನ್ನ ಕೈಕೆಳಗೆ ಕೆಲಸ ಮಾಡುವವರನ್ನು ತಾನೇ ಆರಿಸಬೇಕಾಗಿತ್ತು. +ಅವರ ಸ್ವಭಾವಗಳ ಪರಿಚಯವಿದ್ದರೆ ಎಲ್ಲವನ್ನೂ ವಿವರಿಸಬಹುದಾಗಿತ್ತು. +ಇವರುಗಳೆದುರು ತನ್ನ ಯೋಜನೆ ಹೇಳಲು ಹೋದರೆ ಹುಚ್ಚನೆಂದುಕೊಳ್ಳಬಹುದು. +ಅದೂ ಅಲ್ಲದೇ ತಾನಿಲ್ಲಿ ಬಂದ ಕೆಲಸವೇ ನಿಷ್ಪ್ರಯೋಜಕ ವಾಗಬಹುದು. +ಹಾಗಾಗಬಾರದು ನಿಧಾನವಾಗಿ ಎಲ್ಲವನ್ನೂ ಸರಿಪಡಿಸುತ್ತಾ ಬರಬಹುದು ಎಂದುಕೊಂಡು ಪೋಲಿಸ್ ಸ್ಟೇಷನ್‌ನಿಂದ ಹೊರಬಿದ್ದಿದ್ದ. +ಕತ್ತಲಲ್ಲಿ ಅಲ್ಲಲ್ಲಿ ದೀಪಗಳು ಬೆಳಗುತ್ತಿದ್ದವು. +ಸುತ್ತೂ ಕಣ್ಣು ಹಾಯಿಸಿದಾಗ ಬೆಳಗುತ್ತಿದ್ದ ದೀಪಗಳು ತುಂಬಾ ಕಡಿಮೆ ಇದ್ದಂತೆ ಕಂಡಿತ್ತು. +ಮನೆಗೆ ಬಂದು ಬಟ್ಟೆ ಬದಲಿಸಿದ್ದ. +ಪ್ಯಾಂಟು ಮತ್ತು ಟೀಶರ್ಟ್‌ನ ಸ್ಥಾನವನ್ನು ಪೈಜಾಮಾ ನೆಹರು ಶರ್ಟ್ ಅಲಂಕರಿಸಿತ್ತು. +ಕಾಲಿಗೆ ಚಪ್ಪಲಿ, ಮನೆಯಿಂದ ಹೊರಬಿದ್ದ ತೇಜಾ ಗೊತ್ತು ಗುರಿ ಇಲ್ಲದಂತೆ ನಡೆಯುತ್ತಿದ್ದ. +ಯೋಚನೆಗಳು ಬಹು ಗೊಂದಲಮಯವಾಗಿದ್ದವು. +ತಾನಿಲ್ಲಿ ಪೊಲಿಸ ಅಧಿಕಾರಿಯಾಗಿ ಬಂದು ತಪ್ಪು ಮಾಡಿದನೇನೋ ಎನಿಸುತ್ತಿತ್ತು. +ಈಗ ತಾನೆಂದರೆ ಇಲ್ಲಿ ಎಲ್ಲರೂ ಭಯಪಡುತ್ತಾರೆ. +ಯಾರೂ ಬಿಚ್ಚು ಮನಸ್ಸಿನಿಂದ ಮಾತಾಡಲಿಕ್ಕಿಲ್ಲ. +ತಾನೀಗ ಅವರಲ್ಲಿ ಒಬ್ಬನಾಗುವುದೂ ಕಷ್ಟವೇನೋ ಎನಿಸುತ್ತಿತ್ತು. +ಬೆಂಗಳೂರು ಬಿಡುವ ದಿನ ಕುಶಾಲನನ್ನು ಭೇಟಿಯಾದಾಗ ಇದರ ಬಗ್ಗೆ ಕೂಲಂಕುಷವಾಗಿ ಮಾತಾಗಿತ್ತು. +ಬಂಡೇರಹಳ್ಳಿಯ ಜನರನ್ನು ಮೋಸಪಡಿಸುವುದು ಬೇಡವೆಂದಿದ್ದನವ. +ಇನ್ಸ್‍ಪೆಕ್ಟರನಲ್ಲದೇ ಬೇರೇನಾದರೂ ಆಗಿರಬರಬಹುದಾಗಿತ್ತು. +ಆದರೆ ಅದು ಗೊತ್ತಾದರೆ ಅವರ ನಂಬಿಕೆಗೆ ಪಾತ್ರನಾಗುವುದು ಅಸಂಭವ ಎಂದಿದ್ದ ಕುಶಾಲ, ಅದೂ ನಿಜವೆನಿಸಿತ್ತು. +ಪೋಲಿಸಿನವರು ಸಾಮಾನ್ಯ ಪ್ರಜೆಗಳಲ್ಲ ಶತೃಗಳಲ್ಲ ಮಿತ್ರರು, ಅವರ ಅಪತ್ಭಾಂಧವರೆನ್ನುವುದನ್ನು ತೋರಿಸುತ್ತೇನೆ ಎಂದು ಕುಶಾಲನಿಗೆ ಹೇಳಿದ್ದ. +ಅದು ಸುಲುಭದ ಕೆಲಸವಲ್ಲ ಅದೂ ಬಂಡೇರಹಳ್ಳಿಯಲ್ಲಿ. +ಇಲ್ಲಿನ ಬಹುಜನರು ಕಲ್ಲಕ್ಕನ ಸಮರ್ಥಕರೆ ಅಂದರೆ ಪೋಲಿಸಿನವರ ಶತ್ರುಗಳು. +ಏನೇ ಆಗಲಿ ತಾನು ನಿರ್ಣಯ ತೆಗೆದುಕೊಂಡದ್ದನ್ನು ಸಾಧಿಸಿಯೇ ಸಾಧಿಸುತ್ತೇನೆ ಎಂಬ ಹಟದಿಂದ ಆ ಹಳ್ಳಿಯಲ್ಲಿದ್ದ ಎಲ್ಲರಿಗಿಂತ ದೊಡ್ಡ ಹೋಟೆಲಿನಲ್ಲಿ ಬಂದು ಕುಳಿತ. +ದೊಡ್ಡ ಹೋಟೆಲ್ ಎಂದರೆ ನಾಲ್ಕು ಟೇಬಲ್‌ಳು ಅವುಗಳೆದುರು ನಾಲ್ಕು ನಾಲ್ಕು ಕುರ್ಚಿಗಳು. +ಹೋಟೆಲಿನ ಹೊರಭಾಗದಲ್ಲೇ ಒಲೆಗಳು. +ಅವುಗಳ ಮೇಲೆ ಚಹಾ, ಕಾಫಿ ತಿಂಡಿಗಳ ತಯಾರಿ ನಡೆದಿತ್ತು. +ಅವನಲ್ಲಿ ಕೂಡುತ್ತಿದ್ದಂತೆ ಹೆಗಲ ಮೇಲೆ ಹೊಲಸು ಟವಲ್ಲನ್ನು ಹಾಕಿಕೊಂಡಿದ್ದ ಸಪ್ಲೆಯರ್ ಅವನ ಹತ್ತಿರ ಬಂದು ವಿನಯವಾಗಿ ಕೇಳಿದ. +“ಏನು ಬೇಕು ಸ್ವಾಮಿ!” +“ಕಾಫಿ” ಎಂದ ತೇಜಾ ಅಲ್ಲಿ ಕುಳಿತವರ ಮೇಲೆ ನಿರಾಸಕ್ತಿಯಿಂದ ಕಣ್ಣಾಡಿಸಿದ. +ಎಲ್ಲರೂ ಭಯಭಕ್ತಿಗಳಿಂದ ಅವನನ್ನೇ ನೋಡುತ್ತಿದ್ದರು. +ಇಬ್ಬರಂತೂ ಅವನ ಕಣ್ಣಲ್ಲಿ ಕಣ್ಣು ಕಲಿಸುವ ಧೈರ್ಯವಿಲ್ಲದವರಂತೆ ತಲೆ ಕೆಳಗೆ ಹಾಕಿಕೊಂಡು ಹೊರಹೊರಟು ಹೋದರು. +ದೊಡ್ಡ ಸ್ವಚ್ಛ ಗಾಜಿನ ಗ್ಲಾಸಿನಲ್ಲಿ ಬಹು ವಿನಯವಾಗಿ ಅವನೆದುರು ನೀರನ್ನು ಇಟ್ಟು ಹೋಗಿದ್ದ ಸಪ್ಲೆಯರ್. +ತಾನಿಲ್ಲಿ ಪೋಲಿಸ್ ಸ್ಟೇಷನ್ ಸ್ಥಾಪಿಸಿ ತಪ್ಪು ಮಾಡಿದನೇನೋ, ಇದರಿಂದ ಕ್ರಾಂತಿಕಾರಿ ಚಟುವಟಿಕೆಗಳು ಇನ್ನೂ ಹೆಚ್ಚಾಗುವವೇನೋ ಎಂದು ತೇಜಾ ಅಂದುಕೊಳ್ಳುತ್ತಿದ್ದಾಗ ಬಿಳಿಯ ದಪ್ಪನೆಯ ಗಡ್ಡದ ಮುದುಕ ಒಬ್ಬ ಅವನೆದುರು ಬಂದು ಕುಳಿತ. +ಹಣೆ, ಕಣ್ಣುಗಳನ್ನು ಆವರಿಸಿದ ಸುಕ್ಕುಗಳಿಂದ ಅವನ ವಯಸ್ಸು ಅರವತ್ತೈದು ಎಪ್ಪತ್ತರ ನಡುವಿರಬಹುದೆನಿಸಿತ್ತು ತೇಜಾನಿಗೆ. +ಕಣ್ಣುಗಳು ಸ್ವಾಭಿಮಾನ, ಸಿಟ್ಟುಗಳನ್ನು ಹೊರಗೆಡಹುತ್ತಿದ್ದವು. +ಅವನು ಮಾತಾಡುವ ಮುನ್ನ ವ್ಯಂಗ್ಯದ ದನಿಯಲ್ಲಿ ಕೇಳಿದ್ದ ಮುದುಕ. +“ಕಲ್ಲಕ್ಕನನ್ನು ಹಿಡಿಯಲು, ಮುಗಿಸಲು ಬಂದಿದ್ದೀರಾ ಇನ್ಸ್‍ಪೆಕ್ಟರ್?” +ಆತನ ಮಾತಿನ ಧೋರಣೆಯಲ್ಲಿ ಯಾತಕ್ಕೂ ಭಯ ಪಡುವುದಿಲ್ಲವೆಂಬಂತಹ ಭಂಡ ಧೈರ್ಯವಿತ್ತು. +ಮುಗಳ್ನಕ್ಕು ಹಿರಿಯರಿಗೆ ಕೊಡುವಂತಹ ಗೌರವದ ದನಿಯಲ್ಲಿ ಹೇಳಿದ್ದ ತೇಜಾ,“ಇಲ್ಲ ತಾತಾ!ನಾನದಕ್ಕೆ ಬಂದಿಲ್ಲ. +ಇಲ್ಲಿನ ಯಾವ ಯಾವ ವ್ಯವಹಾರಗಳು ಬಡತನಕ್ಕೆ ಕಾರಣವಾಗಿರಬಹುದು ತಿಳಿಯಲು, ಅದನ್ನು ಹತೋಟಿಗೆ ತರಲು ಬಂದಿದ್ದೇನೆ.” +“ಓಹೋ!ಅಂದರೆ ಬಂಡೇರಹಳ್ಳಿಯನ್ನು ಉದ್ಧಾರ ಮಾಡಲು ಬಂದಿದ್ದೀರಿ” ಮುದುಕನ ಮಾತಿನಲ್ಲಿ ವ್ಯಂಗ್ಯವಿನ್ನೂ ಹೆಚ್ಚಾಗಿತ್ತು. +ಅದು ತೃಣಮಾತ್ರ ಉತೇಜಾನಲ್ಲಿ ಸಿಟ್ಟು ಹುಟ್ಟಿಸಲಿಲ್ಲ. +ಹಗುರನಗೆ ನಗುತ್ತಾ ಹೇಳಿದ. +“ನಾನು ನಿಮಗಿಂತ ಬಹಳ ಚಿಕ್ಕವನು. +ನನ್ನ ಬಹುವಚನದಲ್ಲಿ ಸಂಬೋಧಿಸಬೇಡಿ… ಹುಂ! +ಬಂಡೇರಹಳ್ಳಿಯ ಉದ್ಧಾರದ ಕೆಲಸ ನನ್ನೊಬ್ಬನಿಂದಲೇ ಆಗದು… +ಅದಕ್ಕೆ ನಿಮ್ಮಂತಹ ಹಿರಿಯರ ಮಾರ್ಗದರ್‍ಶನ ಸಹಕಾರಗಳು ಬೇಕು”ಸ್ವಲ್ಪ ಅಚ್ಚರಿಯಿಂದ ತೇಜಾನ ಮುಖ ನೋಡಿ ಕೇಳಿದ್ದ ಹಿರಿಯ“ಒಮ್ಮಿಂದೊಮ್ಮೆಲೆ ಸರಕಾರಕ್ಕೆ ಬಂಡೇರಹಳ್ಳಿ ಹೇಗೆ ನೆನಪಾಯಿತು”ಆತನ ದನಿಯಲ್ಲಿ ಅಚ್ಚರಿಯೊಡನೆ ವ್ಯಂಗ್ಯವೂ ಸೇರಿತ್ತು. +ಅದು ತನಗೂ ತಿಳಿಯದೆಂಬಂತಹ ಮುಖ ಮಾಡಿ ಹೇಳಿದ್ದ ತೇಜಾ. +“ಬಹುಶಃ ಅದಕ್ಕೆ ಕಾರಣ ಕಲ್ಲಕ್ಕನೇ ಇರಬಹುದೇನೋ” +ಅದರ ಬಗ್ಗೆ ಯೋಚಿಸುತ್ತಿರುವಂತೆ ಕಂಡ ಆ ಹಿರಿಯ ಹೇಳಿದ್ದ. +“ನೀವು ಮೊದಲು…”“ನೀವೂ ಅಲ್ಲ. +ನೀನು ಅನ್ನಿ… ಕಾಫಿ ಕುಡಿಯುತ್ತೀರಾ?” ಅವರ ಮಾತನ್ನು ನಡುವೆಯೇ ತಡೆದು ಹೇಳಿದ್ದ ತೇಜಾ. +ಅದಕ್ಕವರು ಹೇಗೆ ಪ್ರತಿಕ್ರಿಯಿಸಬೇಕೋ ತೋಚದಂತೆ ಮುಖ ಮಾಡಿದ್ದಾಗ ಸಪ್ಲೆಯರನ್ನು ಕರೆದು ಇನ್ನೊಂದು ಕಾಫಿ ತರುವಂತೆ ಹೇಳಿದ್ದ ತೇಜಾ. +ಆಗಲೇ ರಸ್ತೆಯ ಮೇಲೆ ನಡೆದಾಡುತ್ತಿದ್ದ ಜನರು ಅಚ್ಚರಿಯಿಂದ ಹೋಟಲಿನಲ್ಲಿ ಕುಳಿತ ಇಬ್ಬರನ್ನು ನೋಡಿಹೋಗುತ್ತಿದ್ದರು. +ಕೆಲಹುಡುಗರಂತೂ ಗುಂಪು ಕಟ್ಟಿ ರಸ್ತೆಯ ಆಚೆ ನಿಂತು ನಿಸ್ಸಂಕೋಚದಿಂದ ಈ ಇಬ್ಬರನ್ನೇ ನೋಡುತ್ತಿದ್ದರು. +ಸಪ್ಲೆಯರ್ ಗಡ್ಡಧಾರಿ ಹಿರಿಯನೆದುರು ಕಾಫಿ ತಂದಿಟ್ಟ. +“ಕುಡಿಯಿರಿ” ಎನ್ನುತ್ತಾ ತನ್ನ ಗ್ಲಾಸನ್ನು ಎತ್ತಿಕೊಂಡಿದ್ದ ತೇಜಾ ಯೋಚನೆಯಿಂದ ಚೇತರಿಸಿಕೊಂಡ ಹಿರಿಯರು ಗ್ಲಾಸನ್ನು ಎತ್ತಿಕೊಳ್ಳುತ್ತಾ ಹೇಳಿದರು. +“ಮೊದಲು ಒಂದು ಚಿಕ್ಕ ಕೆಲಸ ಮಾಡಬೇಕು. +ಅದನ್ನು ಮಾಡಬಲ್ಲಿರಾ.” +“ಮತ್ತೆ ಬಹುವಚನ!ಮಾಡುತ್ತೀಯಾ ಎಂದು ಕೇಳಿ. +ಆಮೇಲೆ ಅದೇನೆಂಬುವುದು ಮಾತಾಡುವ” ನಗುತ್ತಾ ಹೇಳಿದ ತೇಜಾ. +ಒಮ್ಮೆ ಆ ಬಿಳಿಯ ಗಡ್ಡಧಾರಿ ಎತ್ತರದ ದನಿಯಲ್ಲಿ ನಕ್ಕು ಕೇಳಿದ. +“ಸರಿ!ಒಂದು ಚಿಕ್ಕ ಕೆಲಸ ಮಾಡುತ್ತೀಯಾ?” +“ಅದೇನು ಆಜ್ಞಾಪಿಸಿ” ಅವರ ಮಾತು ಮುಗಿಯುತ್ತಲೇ ಕೇಳಿದ ತೇಜಾ. +“ಇಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆ ಸಾರಾಯಿ ಮಾರಾಟವಾಗುತ್ತಿರುತ್ತದೆ ಅದನ್ನು ನಿಲ್ಲಿಸುತ್ತಿಯಾ?” ಸವಾಲಿನಂತಿತ್ತು ಹಿರಿಯನ ಮಾತು. +ಅದಕ್ಕೆ ನಗುತ್ತಲೇ ಮರುಪ್ರಶ್ನಿಸಿದ್ದ ತೇಜಾ. +“ಅದರಿಂದ ಬಂಡೇರಹಳ್ಳಿ ಉದ್ಧಾರವಾಗುತ್ತದೆಯೇ?” +“ಎಷ್ಟೋ ಜನ ಬರೀ ಕುಡಿತಕ್ಕೆ ಗುಲಾಮರಾಗಿ ತಮ್ಮ ತಮ್ಮ ಸಂಸಾರಗಳನ್ನು ಭಿಕ್ಷೆ ಬೇಡುವ ಗತಿಗೆ ತಂದಿದ್ದಾರೆ. +ಕುಡಿದೂ ಕುಡಿದೂ ನನ್ನ ಮೂವತ್ತು ವರ್ಷದ ಮಗ ಸತ್ತ. +ಈಗ ಈ ವಯಸ್ಸಿನಲ್ಲಿಯೂ ಅವನ ಸಂಸಾರದ ಭಾರ ನನ್ನ ಮೇಲೆ ಬಿದ್ದಿದೆ” ಹಿರಿಯನ ಮಾತಿನಲ್ಲಿ ಸಾರಾಯಿ ಮಾರಾಟಗಾರರ ಮೇಲೆ ಎಲ್ಲಿಲ್ಲದ್ದ ಸಿಟ್ಟು ತುಂಬಿ ಬಂದಿತ್ತು. +ಕಾಫಿ ಕುಡಿದಾದ ಮೇಲೆ ಅವರಿಬ್ಬರೂ ಹಾಗೇ ಸ್ವಲ್ಪ ಹೊತ್ತು ಮಾತಾಡುತ್ತಾ ಕುಳಿತರು. +ಅದೇ ವಿಷಯ. +ಕಲ್ಲಕ್ಕನ ಹೆಸರನ್ನು ಒಂದು ಸಲವೂ ತೆಗೆಯಲಿಲ್ಲ ತೇಜಾ. +ಅವಳೇ ಈ ಕೆಲಸವೇಕೆ ಮಾಡಲಿಲ್ಲವೆಂದು ಕೇಳಲಿಲ್ಲ. +ಸಾರಾಯಿಖಾನೆ ನಿಗದಿತ ಸಮಯದಲ್ಲಿ ಮಾತ್ರ ತೆಗೆದಿರುವುದಲ್ಲದೇ ಕುಡಿತದ ಚಟವನ್ನು ಬಿಡಿಸುವುದು ಹೇಗೆ ಎಂಬ ಬಗ್ಗೆ ಕೂಡಾ ಮಾತು ನಡೆಯಿತು. +ಅವರಿಬ್ಬರೂ ಅಲ್ಲಿಂದ ಏಳುವಾಗ ರಾತ್ರಿಯ ಎಂಟೂವರೆ ದಾಟಿತ್ತು ಸಮಯ. +ಹೋಟೆಲಿನವ ತೇಜಾ ಕಾಫಿಗೆ ಹಣ ಕೊಡಲು ಹೋದಾಗ ತೆಗೆದುಕೊಳ್ಳಲು ನಿರಾಕಿಸಿದ್ದಲ್ಲದೇ ಅದು ಅವನದೇ ಹೋಟಲೆಂದು ತಿಳಿಯಬೇಕೆಂದು ಹೇಳಿದ. +ಅವನು ಹೀಗೆ ವರ್ತಿಸಲು ಕಾರಣ ಪೋಲಿಸಿನವರ ಭಯವೆಂಬುವುದು ತೇಜಾನಿಗೆ ಹೇಳಬೇಕಾದ ಅವಶ್ಯಕತೆ ಇರಲಿಲ್ಲ. +ಬಲವಂತವಾಗಿ ಅವನಿಗೆ ಹಣ ಕೊಟ್ಟು, ಯಾವ ಪೋಲಿಸಿನವನಿಗೂ ಯಾವುದನ್ನೂ ಬಿಟ್ಟಿಗೆ ಕೊಡಬಾರದೆಂದು ಆದೇಶಿಸಿದ್ದ. +ಹಣವನ್ನು ತೆಗೆದುಕೊಂಡ ಹೋಟೆಲಿನ ಒಡೆಯ ದಿಗ್ಭ್ರಾಂತಿಯಿಂದ ಯಾವುದೋ ಹೊಸ ವಸ್ತುವನ್ನು ನೋಡುವಂತೆ ತೇಜಾನನ್ನು ನೋಡುತ್ತಿದ್ದಾಗ ಅವರಿಬ್ಬರೂ ಹೋಟೆಲಿನಿಂದ ಹೊರಬಿದ್ದಿದ್ದರು. +ಹೋಟೆಲಿನ ಹೊರಗಡೆ ಅವರಿಬ್ಬರನ್ನೂ ಆಸಕ್ತಿ ಕಾತುರಗಳಿಂದ ನೋಡುತ್ತಿರುವವರು ಹೆಚ್ಚಾಗಿದ್ದರು. +ಅವರುಗಳ ಕಡೆ ಆ ಹಳ್ಳಿಯ ಹಿರಿಯ ಒಂದು ಸಲ ಹೆಮ್ಮೆಯಿಂದ ನೋಡಿದ್ದನ್ನು ಗಮನಿಸಿದ್ದ ತೇಜಾ ಅವರುಗಳ ಇರುವನ್ನೇ ಮರೆತಂತೆ ಅವನೊಡನೆ ನಡೆಯುತ್ತಿದ್ದ. +ಬಂಡೇರಹಳ್ಳಿಯಲ್ಲಿ ಎರಡು ಸರಕಾರಿ ಸಾರಾಯಿಖಾನೆಗಳಿವೆ ಎಂಬುವುದು ಗೊತ್ತಾಗಿತ್ತು. +ಒಂದು ಬಡಬಗ್ಗರು ವಾಸಿಸುವ ಮನೆ ಗುಡಿಸಲುಗಳ ನಡುವೆ ಮತ್ತೊಂದು ಬಸ್‌ಸ್ಟಾಂಡಿನ ಹತ್ತಿರ. +ಅವರಿಬ್ಬರೂ ಬಸ್‌ಸ್ಟಾಂಡಿನ ಕಡೆ ನಡೆಯುತ್ತಿದ್ದರು. +ಹಿಂದೆ ಯುವಕರ ಗುಂಪೊಂದು ಬರುತ್ತಿತ್ತು. +ಅವರ ಕಡೆ ತೇಜಾನ ಗಮನವೇ ಇರಲಿಲ್ಲ. +ಬಸ್‌ಸ್ಟಾಂಡಿನಿಂದ ಸ್ವಲ್ಪ ದೂರದಲ್ಲಿರುವ ಸರಾಯಿಖಾನೆಯನ್ನು ಪ್ರವೇಶಿಸಿದಾಗ ತೇಜಾನಿಗೆ ಎಲ್ಲಿಲ್ಲದ ಆಶ್ಚರ್ಯ. +ಬಂಡೇರಹಳ್ಳಿಯಂತಹ ಹಳ್ಳಿಯಲ್ಲಿ ಇಷ್ಟು ದೊಡ್ಡ ಸರಾಯಿಖಾನೆ ಇರಬಹುದೆಂದು ಅವನು ಊಹಿಸಿರಲಿಲ್ಲ. +ಅಲ್ಲಿ ಕುಡಿತದ ಜತೆ ತಿನ್ನಲು ಬೇಕಾದುದ್ದನ್ನು ಮಾರುವ ಮೂರು ಗುಡಿಸಲಿನ ತರಹದ ಅಂಗಡಿಗಳಿದ್ದವು. +ಕುಡುಕರು ಕುಳಿತು ಕುಡಿಯಲು ಬೆಂಚುಗಳು, ಸರಾಯಿ ಮಾರಾಟದ ಎರಡು ಕೌಂಟರುಗಳು, ತೇಜಾ ಮತ್ತು ಹಿರಿಯ ಹತ್ತಿರವಾಗುತ್ತಿದ್ದಂತೆ ಮಾರಾಟ ಮಾಡುವವರ ನೋಟಗಳು ಅವರ ಕಡೆ ತಿರುಗಿದ್ದವು. +ಕೌಂಟರ್‌ನಲ್ಲಿ ಕುಳಿತು ಮಾರುತ್ತಿರುವವರು ತೇಜಾನನ್ನು ನೋಡಿರಲಿಲ್ಲ. +ಕುಡುಕರಿಂದ ತಮ್ಮ ಹಳ್ಳಿಯಲ್ಲಿ ಒಂದು ಪೋಲಿಸ್ ಸ್ಟೇಷನ್ ಮಾತ್ರ ಹುಟ್ಟಿಕೊಂಡಿದೆ ಎಂಬುವುದು ಅವರಿಗೆ ಗೊತ್ತಾಗಿತ್ತು. +ಬಿಳಿಯ ಗಡ್ಡದ ಹಿರಿಯನನ್ನು ಇಡೀ ಬಂಡೇರಹಳ್ಳಿಯೇ ಗುರುತಿಸುತ್ತಿತ್ತು. +ತೇಜಾ ಒಂದು ಕೌಂಟರಿನ ತೀರಾ ಸಮೀಪ ಬಂದಾಗ ಎಷ್ಟು ಬೇಕು ಎಂದು ಕೇಳುವಂತಹ ನೋಟದಲ್ಲಿ ಅವನನ್ನು ನೋಡಿದ ಎತ್ತರದಲ್ಲಿ ಕುಳಿತು ಸರಾಯಿ ಮಾರುವಾತ. +“ಎಷ್ಟು ಗಂಟೆಯವರೆಗೆ ತೆಗೆದಿರುತ್ತೀರಿ?” ಸಾಮಾನ್ಯ ಮಾಹಿತಿಯೊಂದನ್ನು ಅರಿಯುವಂತಹ ದನಿಯಲ್ಲಿ ಕೇಳಿದ ತೇಜಾ. +“ನಿನಗೆ ಯಾವಾಗ ಬೇಕೆಂದರಾಗ ಸಿಗುತ್ತದೆ. +ರಾತ್ರಿ ತಡವಾದರೆ ಬಾಗಿಲು ಬಡಿಯಿರಿ ಎದ್ದು ಕೂಡುತ್ತೇವೆ” ಕೂಡಲೇ ಉತ್ತರಿಸಿದ ಕೌಂಟರಿನ ಹಿಂದೆ ಕುಳಿತವ. +ದಷ್ಟಪುಷ್ಟನಾದ ಅವನ ದನಿಯಲ್ಲಿ ಇಂತಹ ಮಾತುಗಳಿಗೆ ಸಮಯವಿಲ್ಲವೆಂಬ ಭಾವ ಎದ್ದು ಕಾಣುತ್ತಿತ್ತು. +ಬಹು ಹಗುರದನಿಯಲ್ಲಿ ಮರು ಪ್ರಶ್ನಿಸಿದ ತೇಜಾ. +“ಇಲ್ಲಿ ಯಾವ ನೀತಿ ನಿಯಮವೂ ಇಲ್ಲವೇ?” +“ನೀನ್ಯಾರು ಅದನ್ನೆಲ್ಲಾ ಕೇಳಲು?” ಕದನಕ್ಕೆ ಕಾಲು ಕೆದರುವಂತಿತ್ತವನ ದನಿ. +ತಕ್ಷಣ ತೇಜಾನ ಬಲಗೈ ಎತ್ತರದಲ್ಲಿ ಕುಳಿತಿದ್ದವನ ಕಾಲರನ್ನು ಬಿಗಿಯಾಗಿ ಹಿಡಿಯಿತು ಹಾಗೇ ಅವನನ್ನು ಕುಳಿತಲ್ಲಿಂದ ಎಬ್ಬಿಸಿದ. +ಅನಿರೀಕ್ಷಿತ ಘಟನೆಯಿಂದ ದಿಗ್ಭ್ರಾಂತಿಯಾಯಿತವನಿಗೆ, ದಿಗಿಲಾಗಲಿಲ್ಲ ಎತ್ತರದ ದನಿಯಲ್ಲಿ ಕೂಗಿದ. +“ಯಾರೋ ನೀನು ಬೋಳಿಮಗನೇ?”ಆ ಮಾತು ಮುಗಿಯುತ್ತಿದ್ದಂತೆ ಅವನನ್ನು ಕೆಳಗೆಳೆದ. +ಕೌಂಟರಿಗೆ ಹಾಕಿದ ಕಟ್ಟಿಗೆಗಳು ಮುರಿಯಿತು. +ಅವನು ಕೆಳಗೆ ಬಂದಮೇಲೆ, ಕಾಲರ್ ಬಿಟ್ಟ ತೇಜಾ ಅವನ ಮುಖಕ್ಕೊಂದು ಬಲವಾಗಿ ಗುದ್ದಿ ಹೇಳಿದ“ನಾನ್ಯಾರು ಗುರುತಿಸು ನೋಡುವ.” +ಆಗಲೇ ಅಲ್ಲಿ ಕುಡಿಯುತ್ತಿದ್ದ ಕುಡುಕರೂ ತಮ್ಮ ಕುಡಿತವನ್ನು ಮರೆತು ಗಾಬರಿಯಿಂದ ಈ ಘಟನೆಯನ್ನು ನೋಡುತ್ತಿದ್ದರು. +ತೇಜಾ ಮತ್ತು ಹಿರಿಯನ ಹಿಂದೆ ಬಂದ ಯುವಕರು ಸರಾಯಿಖಾನೆಯ ಬಾಗಿಲ ಬಳಿಯೇ ನಿಂತು ಇದೆಲ್ಲವನ್ನೂ ನೋಡುತ್ತಿದ್ದರು. +ಇನ್ನೊಬ್ಬ ಸರಾಯಿ ಮಾರುತ್ತಿದ್ದವ ತನ್ನ ಹಣವನ್ನು ಜೋಪಾನಪಡಿಸಿ ಸರಾಯಿಯ ಬ್ಯಾರೆಲ್‌ಗೆ ಬೀಗ ಹಾಕಿ ಇವರ ಬಳಿಬಂದ. +ಅಲ್ಲಿ ಕೆಲಸ ಮಾಡುತ್ತಿದ್ದ ಬೇರೆ ಕೆಲಸಗಾರರೂ ತೇಜಾನನ್ನು ಸುತ್ತುವರಿದರು. +ಮೊದಲ ಹೊಡೆತದಿಂದ ಚೇತರಿಸಿಕೊಂಡ ಸರಾಯಿ ಮಾರುವವ ಸೇಡು ತೀರಿಸಿಕೊಳ್ಳುವವನಂತೆ ಮುಷ್ಟಿ ಬಿಗಿದು ಮುಂದೆ ಬಂದಾಗ ಮಿಂಚಿನ ಗತಿಯಲ್ಲಿ ತಾನೇ ಮುಂದೆ ಬಂದ ತೇಜಾ ಅವನ ಸೊಂಟಕ್ಕೆ ಬಲವಾಗಿ ಒದ್ದ ಅದರ ರಭಸಕ್ಕೆ ಎರಡು ಹೆಜ್ಜೆ ತೂರಾಡಿ ಬಿದ್ದನವ. +ಆಗಲೆ ಗುಂಪಿನಲ್ಲಿ ಯಾರೋ ಹೇಳಿದರು. +“ಇನ್ಸ್‌ಪೆಕ್ಟರ್ ಸಾಹೇಬರು”ಆ ಮಾತು ಗುಸಗುಸನೆ ಹರಡಿತು. +ಆಗ ಅವರ ಹತ್ತಿರ ಬಂದಿದ್ದ ಇನ್ನೊಬ್ಬ ಸಾರಾಯಿ ಮಾರುವವನನ್ನು ಉದ್ದೇಶಿಸಿ ಕೇಳಿದ ತೇಜಾ. +“ನಾನ್ಯಾರೆಂದು ಗೊತ್ತಾಯಿತೆ?” +“ಗೊತ್ತಾಯಿತು ಸ್ವಾಮಿ!ಇನ್ಸ್‌ಪೆಕ್ಟರ್ ಸಾಹೇಬರು”ಆವರೆಗೆ ಕೆಳಗೆ ಬಿದ್ದವ ಎದ್ದು ತನ್ನ ಸಂಗಡಿಗನ ಬಳಿ ಬಂದಿದ್ದ. +“ನೀ ಹೇಳು ನನಗಿದೆಲ್ಲಾ ಕೇಳುವ ಅಧಿಕಾರವಿದೆಯೇ ಇಲ್ಲವೆ?”ಹೊಡೆತ ತಿಂದ ಅವನಲ್ಲಿ ಇನ್ಸ್‌ಪೆಕ್ಟರ್‌ ಎಂಬ ಶಬ್ದ ಭಯವನ್ನು ಹುಟ್ಟಿಸಿತ್ತು. +ತನ್ನ ನೋವನ್ನು ಅವಮರ್ಯಾದೆಯನ್ನು ಮರೆತು ಹೇಳಿದನವ“ಇದೆ”ಆವರೆಗೆ ಕುಡುಕರು ಕೂಡ ತಮ್ಮ ತಮ್ಮ ಗ್ಲಾಸುಗಳನ್ನು ಹಿಡಿದು ಅಲ್ಲಿ ಬಂದಿದ್ದರು. +ಬಾಗಿಲಲ್ಲಿ ನಿಂತ ಯುವಕರಿಗೆ ಬಂಡೇರಹಳ್ಳಿಯಲ್ಲಿ ಒಂದು ಇತಿಹಾಸ ಸೃಷ್ಟಿಯಾಗುತ್ತಿರುವುದನ್ನು ನೋಡುವ ಅವಕಾಶ ಕಳೆದುಕೊಳ್ಳುವ ಇಷ್ಟವಿರಲಿಲ್ಲ. +ಅವರೂ ಒಂದು ಗುಂಪನ್ನು ಸೇರಿಕೊಂಡರು. +ಎಲ್ಲರನ್ನೂ ಉದ್ದೇಶಿಸಿ ಎಂಬಂತೆ ಎತ್ತರದ ದನಿಯಲ್ಲಿ ಮಾತಾಡಿದ ತೇಜಾ. +“ಬೆಳಿಗ್ಗೆ ಹನ್ನೊಂದರ ನಂತರ ಸಾರಾಯಿ ಖಾನೆ ತೆಗೆಯಬೇಕು. +ರಾತ್ರಿ ಒಂಭತಕ್ಕೆಲ್ಲಾ ಇದು ಮುಚ್ಚಬೇಕು. +ಈ ನಿಯಮವನ್ನು ಉಲ್ಲಂಘಿಸಿದರೆ, ಸಾರಾಯಿ ಜಪ್ತಾಗುತ್ತದೆ. +ಮಾರುವವರಿಗೆ ಕಠಿಣ ಶಿಕ್ಷೆಯಾಗುತ್ತದೆ. +ಅದೂ ಅಲ್ಲದೇ ಈಗ ಕೊಟ್ಟಿರುವ ಲೈಸೆನ್ಸ್ ರದ್ದಾಗುತ್ತದೆ. +ಬೆಳಗಿನ ಹೊತ್ತು ಯಾರಾದರೂ ಕುಡಿದು ತೂರಾಡುತ್ತಾ ರಸ್ತೆಯ ಮೇಲೆ ಕಾಣಿಸಿದರೆ ಅವರಿಗೂ ಶಿಕ್ಷೆಯಾಗುತ್ತದೆ. +ಅರ್ಥವಾಯಿತೆ?”ಬಹು ಪ್ರಭಾವಯುಕ್ತವಾಗಿತ್ತು ತೇಜಾನ ಕಂಠ. +ಅದಕ್ಕೆ ಸಾರಾಯಿ ಮಾರುವವರಿಬ್ಬರೂ ಹೆಚ್ಚು ಕಡಿಮೆ ಒಂದೇ ದನಿಯಲ್ಲಿ ಹೇಳಿದರು“ಅರ್ಥವಾಯಿತು ಸರ್.” +ತನ್ನ ಕೈಗಡಿಯಾರ ನೋಡಿಕೊಂಡು ಮಾತಾಡಿದ ತೇಜಾ. +“ಈಗ ಒಂಬತ್ತು ದಾಟಿದೆ. +ಇನ್ನು ನಿಮ್ಮ ವ್ಯವಹಾರ ಮುಗಿಸಿ ಮನೆಗೆ ಹೋಗಿ” ಗ್ಲಾಸುಗಳನ್ನು ಹಿಡಿದು ನಿಂತ ಕುಡುಕರನ್ನು ಉದ್ದೇಶಿಸಿ ಮಾತು ಮುಂದುವರೆಸಿದ. +ಆ ಮಿಕ್ಕದನ್ನು ಕುಡಿದು ಮನೆಗೆ ಹೋಗಿ ಹಾಯಾಗಿ ಮಲಗಿ, ಯಾರೇ ಆಗಲಿ ಕಳ್ಳತನದಿಂದ ಈ ನಿಯಮವನ್ನು ಮುರಿದು ಸಾರಾಯಿ ಮಾರಿದರೆ ಅವರಿಗೂ ಕುಡಿದವರಿಗೂ ಕಠಿಣ ಶಿಕ್ಷೆಯಾಗುತ್ತದೆ. +ಕಾನೂನಿನ ವಿರುದ್ಧ ನೀವು ಯಾವುದೇ ಕೆಲಸ ಮಾಡಿ ಅದು ನನಗೆ ಗೊತ್ತಾಗುತ್ತದೆ. +ಜಾಗ್ರತೆಯಾಗಿರಿ… ಹೂಂ ಇಲ್ಲೇ ಯಾಕೆ ನಿಂತಿದ್ದೀರಿ. +ಹೋಗಿ ಅಂಗಡಿಯನ್ನು ಮುಚ್ಚಿ.”ಸಾರಾಯಿ ಮಾರುವವರು ಲಗುಬಗೆಯಿಂದ ಅಂಗಡಿ ಮುಚ್ಚುವ ಕೆಲಸದಲ್ಲಿ ನಿರತರಾದರು. +ಕುಡುಕರು ತಮ್ಮ ತಮ್ಮ ಮಿಕ್ಕ ಪೇಯ ಕುಡಿದು ಅಲ್ಲಿಂದ ಓಡಿದರು. +ತಿನಿಸುಗಳನ್ನು ಮಾರುವ ಅಂಗಡಿಯವರು ತಮ್ಮ ವ್ಯಾಪಾರವನ್ನು ಅಲ್ಲಿಗೇ ನಿಲ್ಲಿಸಿದರು. +ಎಲ್ಲರೂ ಅಲ್ಲಿಂದ ಹೋಗಿ ಸಾರಾಯಿ ಅಂಗಡಿಗೆ ದಪ್ಪನೆಯ ಬೀಗ ಹಾಕುವವರೆಗೂ ಅಲ್ಲೇ ನಿಂತಿದ್ದ ತೇಜಾ, ಅವನ ಹಿಂದೆ ಬಂದ ಯುವಕರು ದೂರದಲ್ಲಿ ನಿಂತು ತಮ್ಮ ತಮ್ಮಲ್ಲೇ ಏನೇನೋ ಮಾತಾಡಿಕೊಳ್ಳುತ್ತಿದ್ದರು. +ಬಿಳಿಯ ಗಡ್ಡದ ಮುದುಕ ಬಾಯಿ ಕಟ್ಟಿದ್ದವನಂತೆ ಇದೆಲ್ಲವನ್ನೂ ನೋಡುತ್ತಿದ್ದ. +ಈ ಇನ್ಸ್‌ಪೆಕ್ಟರನಿಗೆ ಇಂತಹ ಎದೆಗಾರಿಕೆ ಇರಬಹುದೆಂದು ಅವನು ಕನಸುಮನಸಿನಲ್ಲಿಯೂ ಊಹಿಸಿರಲಿಲ್ಲ. +ಇಬ್ಬರೂ ಕಲೆತು ಮತ್ತೆ ಮುಂದೆ ನಡೆಯಲಾರಂಭಿಸಿದಾಗ ಆವರೆಗೆ ಆದುದೆಲ್ಲಾ ನಿಜವೆಂದು ತನಗೆ ತಾನೆ ಹೇಳಿಕೊಂಡು ಪ್ರಶಂಸೆಯ ನೋಟದಿಂದ ತೇಜಾನನ್ನು ನೋಡುತ್ತಾ ಹೇಳಿದ. +“ನೀವು…”“ಮತ್ತೆ ಅದೇ ಮಾತು ನೀವು ಅಲ್ಲ ನೀನು” ಹಗುರ ನಗೆ ನಗುತ್ತಾ ಆತ ಆರಂಭಿಸಿದ ಮಾತನ್ನು ಸರಿಪಡಿಸಿದ. +ಅದನ್ನು ಅರ್ಥಮಾಡಿಕೊಳ್ಳಲು ಹಿರಿಯನಿಗೆ ಕೆಲಕ್ಷಣಗಳು ಹಿಡಿದವು ಅರ್ಥವಾದ ನಂತರ ಮನಃಪೂರ್ವಕವಾಗಿ ಅವನ ಬೆನ್ನು ತಟ್ಟತ್ತಾ ಮಾತು ಮುಂದುವರೆಸಿದ. +“ನೀನು ಇಂತಹ ಎದೆಗಾರನೆಂದುಕೊಂಡಿರಲಿಲ್ಲ. +ಈಗ ನಾನು ನಿನ್ನ ಪ್ರತಿ ಮಾತನ್ನೂ ನಂಬುತ್ತೇನೆ. +ನಡಿ ಮುಂದೇನು ಮಾಡುತ್ತಿಯೇ ನೋಡುವ”ಬಡವರ ಗುಡಿಸಲ, ಮನೆಗಳ ನಡುವೆ ಒಂದು ಸಾಕಷ್ಟು ದೊಡ್ಡ ಮನೆಯಲ್ಲಿತ್ತು ಸಾರಾಯಿಖಾನೆ. +ದೊಡ್ಡ ಹಜಾರದಲ್ಲಿ ಅಲ್ಲಲ್ಲಿ ಜನ ಕುಳಿತು ಕುಡಿಯುತ್ತಿದ್ದರು. +ತೇಜಾ ಎರಡು ಹೆಜ್ಜೆ ಒಳಗಿಡುವುದರಲ್ಲಿ ಅವನ ಎದುರು ಬಂದ ಸಿದ್ಧಾನಾಯಕ ಎರಡೂ ಕೈಗಳಿಂದ ತನ್ನ ಪೇಟಾ ಸರಿಪಡಿಸಿಕೊಳ್ಳುತ್ತಾ ಅಧಿಕಾರವಾಣಿಯಲ್ಲಿ ಕೇಳಿದ. +“ಆ ಸಾರಾಯಿ ಖಾನೆಯಲ್ಲಿ ಏನೋ ಶೂರತ್ವ ತೋರಿಬಂದಿರಂತೆ”ಆ ಮಾತನ್ನು ಕೇಳಿಸಿಕೊಳ್ಳದವನಂತೆಯೇ ನಯವಾದ ಆಶ್ಚರ್ಯದ ದನಿಯಲ್ಲಿ ಹೇಳಿದ ತೇಜಾ. +“ಓ ನೀವೇ ಪ್ರೆಸಿಡೆಂಟ್ ಸಾಹೇಬರೇ! +ಇಲ್ಲೇನು ಮಾಡುತ್ತಿದ್ದೀರಿ!” +“ನಾಟಕ ಬೇಡ ಇನ್ಸ್‌ಪೆಕ್ಟರ್‌! +ಇವೆರಡೂ ನನ್ನ ಸಾರಾಯಿಖಾನೆಗಳು. +ಇಲ್ಲಿ ನಿನ್ನ ಕಾನೂನು ತೋರಿಸಬೇಡ. +ರಾತ್ರಿ ಬಹಳವಾಗಿದೆ ಹೋಗಿ ಮಲಗು” ಅಧಿಕಾರ ತುಂಬಿತ್ತು. +ನಾಯಕನ ದನಿಯಲ್ಲಿ, ಒಮ್ಮೆಲೇ ತನ್ನ ಕಂಠವನ್ನು ಬದಲಾಯಿಸಿ ಎತ್ತರದ ದನಿಯಲ್ಲಿ ಹೇಳಿದ ತೇಜಾ. +“ಮಾರಾಟ ನಿಲ್ಲಿಸಿ! +ಕುಡಿಯುತ್ತಿರುವವರು ಮನೆಗೆ ಹೋಗಿ, ಇಲ್ಲದಿದ್ದರೆ ಎಲ್ಲರನ್ನೂ ಪೋಲಿಸ್ ಸ್ಟೇಷನ್‌ಗೆ ಎಳೆದುಕೊಂಡು ಹೋಗಬೇಕಾಗುತ್ತದೆ. +“ನಾ ಹೇಳಿದ್ದು ಕೇಳಿಸುತ್ತಿಲ್ಲವೇ?” ಕಿರುಚಿ ಹೇಳಿದ ನಾಯಕ ನಯವಾಗಿ ಅವನನ್ನು ಪಕ್ಕಕ್ಕೆ ನೂಕಿ ಮುಂದೆ ಬಂದ ತೇಜಾ ಸಾರಾಯಿ ಕುಡಿಯಿತ್ತಿದ್ದವನ ಹೊಟ್ಟೆಗೆ ಬಲವಾಗಿ ಒದ್ದ. +ಆ ರಭಸಕ್ಕೆ ಸ್ವಲ್ಪ ಮುಂದೆ ಬಿದ್ದ ಅವನು ಎಲ್ಲವನ್ನೂ ಮರೆತು ಅಲ್ಲಿಂದ ಓಡಿದ. +ಮಿಕ್ಕ ಕುಡುಕರ ಹತ್ತಿರ ಅವನು ಹೋಗುವ ಮೊದಲು ಅಪಾಯವನ್ನು ಅರಿತ ಅವರು ಅಲ್ಲಿಂದ ಜಾಗ ಖಾಲಿ ಮಾಡಿದರು. +ಅಪನಂಬಿಕೆಯಿಂದ ಅದನ್ನೆಲ್ಲಾ ನೋಡುತ್ತಿದ್ದ ನಾಯಕ ಒಮ್ಮೆಲೆ ಚೇತರಿಸಿಕೊಂಡಂತೆ ಕೂಗಿದ. +“ನಾನು ಇಲ್ಲಿನ ಪಂಚಾಯತಿಯ ಪ್ರೆಸಿಡೆಂಟ್! ನಾನೇನೆಂದುಕೊಂಡೆ ಕಲೆಕ್ಟರ್, ಎಸ್‌ ಪಿ, ನನ್ನ ಸ್ನೇಹಿತರು. +ನನ್ನೊಡನೆಯೇ ಹೀಗೆ ವರ್ತಿಸುತ್ತೀಯಾ, ನಾಳೆ ನಿನ್ನ ಕೆಲಸ ಮಾಡುತ್ತೇನೆ” ಮೊದಲ ಸಲ ಅವನನ್ನು ಪರೀಕ್ಷಾತ್ಮಕವಾಗಿ ನೋಡಿ ಶಾಂತ ದನಿಯಲ್ಲಿ ಹೇಳಿದ ತೇಜಾ“ನಾಯಕರೇ!ನೀವಿನ್ನೂ ಬಂಡೇರಹಳ್ಳಿ ಬಿಟ್ಟು ಹೊರಗೆ ಹೋದ ಹಾಗಿಲ್ಲ. +ಕಾನೂನೆಂದರೆ ಎಲ್ಲರಿಗೂ ಒಂದೇ. +ಪ್ರಧಾನಮಂತ್ರಿಯವರು ಅನೈತಿಕ ಕೆಲಸ ಮಾಡಿದರೆ ಅವರನ್ನು ಜೈಲಿನಲ್ಲಿ ಹಾಕುವ ಕಾಲವಿದು. +ಅವರೆದುರು ಬಂಡೇರಹಳ್ಳಿಯ ಪಂಚಾಯತಿಯ ಪ್ರೆಸಿಡೆಂಟ್ ಯಾವ ಲೆಖ್ಖ… +ಒಂದು ಸಲ ಹೊರಗೆ ನೋಡಿ ನಿಮ್ಮ ಕಾರುಭಾರವನ್ನು ಬಯಲು ಮಾಡಲು ಎಷ್ಟು ಜನ ಸೇರಿದ್ದಾರೆ. +ನಾಳೆ ರಾಮನಗರದಲ್ಲಿ ನೀವು ಇದೇ ಮಾತನ್ನು ಹೇಳಬೇಕು. +ಕಲೆಕ್ಟರ್ ಸಾಹೇಬರಿಗೆ, ಎಸ್.ಪಿ.ಸಾಹೇಬರಿಗೆ ಲಂಚ ತಿನ್ನಿಸಿ ಈ ವ್ಯವಹಾರವನ್ನು ನಡೆಸುತ್ತಿದ್ದೇನೆಂದು. +ಅದರಿಂದ ಅವರ ಕೆಲಸಗಳು ಹೋಗುವುದೇ ಅಲ್ಲ ಜೈಲಿನ ಕಂಬಿಗಳನ್ನೂ ಲೆಕ್ಕಿಸಬೇಕಾಗುತ್ತದೆ… +ಈಗ ಈ ವ್ಯವಾಹರ ನಿಲ್ಲಿಸುತ್ತಿರೋ ಅಥವಾ ಬ್ಯಾರಲುಗಳೊಂದಿಗೆ ಪೋಲೀಸ್ ಸ್ಟೇಷನ್ ಬರುತಿರೋ”ಆ ಹಳ್ಳಿಯ ಪಂಚಾಯತಿ ಪ್ರೆಸಿಡೆಂಟ್ ಅವನ ಪ್ರತಿ ಮಾತನ್ನೂ ನಂಬಿದ. +ಸಿಟ್ಟಿನ ದನಿಯಲ್ಲಿ ತನ್ನ ಅನುಚರರಿಗೆ ವ್ಯಾಪಾರ ನಿಲ್ಲಿಸುವಂತೆ ಆದೇಶಿಸಿದ. +ಆ ಮನೆಗೆ ಬೀಗ ಹಾಕುವವರೆಗೆ ಅಲ್ಲಿದ್ದ ತೇಜಾ ಹೋಗುವಾಗ ನಾಯಕರಿಗೆ ಕೇಳಿದ“ನಾಳೆ ನನ್ನ ಜೀಪಿನಲ್ಲೇ ರಾಮನಗರಕ್ಕೆ ಬರುತ್ತೀರೋ?”ಅದಕ್ಕೆ ಆತ ಏನೂ ಉತ್ತರಿಸಲಿಲ್ಲ. +ಬಿಳಿಯ ಗಡ್ಡದ ಮುದುಕನೊಡನೆ ಅವನು ಮುಖ್ಯರಸ್ತೆಗೆ ಬಂದಾಗ ದೂರದಲ್ಲಿ ನಿಂತ ಯುವಕರ ಗುಂಪು ಹೆಚ್ಚಾದಂತೆ ಕಂಡಿತು. +ರಸ್ತೆಯಲ್ಲಿ ಕೆಲ ಹೆಜ್ಜೆಗಳು ನಡೆದಮೇಲೆ ಹೇಳಿದ ಹಿರಿಯ“ಈ ನಾಯಕ ಸಾಮಾನ್ಯನಲ್ಲ. +ರಾಮನರಗದಲ್ಲಿ ಅವನಿಗೆ ಎಲ್ಲಾ ಅಧಿಕಾರಿಯರ ಪರಿಚಯವಿದೆ” ಮುಂದೇನಾಗುವುದೋ ಎಂಬ ಭಯವಿತ್ತು ಅವನ ದನಿಯಲ್ಲಿ. +ಗಂಭೀರ ದನಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿದ ತೇಜಾ“ಒಂದು ಒಳ್ಳೆಯ ಕೆಲಸ ಮಾಡಲು ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. +ಅಂತಹದನ್ನೆಲ್ಲಾ ಎದುರಿಸಲು ನಾನು ಸಿದ್ಧನಾಗಿಯೇ ಬಂದಿದ್ದೇನೆ”ಆ ಮಾತು ಹಳ್ಳಿಯ ಹಿರಿಯನ ಮೇಲೆ ಬಹಳ ಪ್ರಭಾವ ಬೀರಿತು. +ತುಂಬು ಹೃದಯದಿಂದ ಹೇಳಿದ“ನೀನು ಬಂಡೇರಹಳ್ಳಿಯ ಅವಸ್ಥೆಯನ್ನು ಸುಧಾರಿಸಬಹುದು. +ನಿನಗೆ ನನ್ನ ಪೂರ್ಣ ಸಹಕಾರವಿದೆ. +ನನ್ನದೇ ಅಲ್ಲ ನಮ್ಮ ಹಿಂದೆ ತಿರುಗುತ್ತಿದ್ದಾರಲ್ಲ ಯುವಕರದೂ, ಆ ಹುಡುಗರ ಒಬ್ಬರ ಹಿಂದೆ ಹತ್ತು ಹತ್ತು ಜನರಿದ್ದಾರೆ.” +“ಹಾಗಾದರೆ ನೀವು ಭೇಟಿಯಾದದ್ದು ನನ್ನ ಪುಣ್ಯ” ಹೇಳಿದ ತೇಜಾ. +“ನಾ ನಿನ್ನೊಡನೆ ಜಗಳವಾಡಲು ಬಂದಿದ್ದೆ. +ಕಲ್ಲಕ್ಕನನ್ನು ಹಿಡಿಯಲು ಎಷ್ಟೋ ಪ್ರಯತ್ನಗಳು ನಡೆದಿವೆ. +ಯಾವುದೂ ಸಫಲವಾಗಿಲ್ಲ ಎಂಬ ಮಾತನ್ನು ಕೇಳಿದ್ದೆ. +ಮೊನ್ನೆ ಆದ ಮೂರು ಕೊಲೆಗಳ ಹಿಂದೆ ಕಲ್ಲಕ್ಕನ ಕೈವಾಡವಿದೆ ಎಂಬುವುದು ಎಲ್ಲರಿಗೂ ಗೊತ್ತು. +ಅದರ ವಾಸನೆ ಹಿಡಿದು ಸರಕಾರ ನಿನ್ನ ಇಲ್ಲಿ ಹಾಕಿರಬಹುದು ಎಂದುಕೊಂಡಿದ್ದೆ” ಆವೇಶದಲ್ಲಿ ಮನಸಿನಲ್ಲಿದ್ದ ಮಾತನ್ನು ಹೇಳಿದ ಹಿರಿಯ. +ಆ ಮಾತು ಅಷ್ಟು ಮುಖ್ಯವಲ್ಲವೆಂಬಂತೆ ಹೇಳಿದ ತೇಜಾ. +“ನನಗೆ ಹಸಿವಾಗುತ್ತಿದೆ.” +ಆವರೆಗಾದದ್ದು ಎಲ್ಲವನ್ನೂ ಮರೆತಂತೆ ಅಚ್ಚರಿಯ ದನಿಯಲ್ಲಿ ಕೇಳಿದ ಹಿರಿಯ. +“ನಾನದನ್ನು ಮರೆತೇಹೋಗಿದ್ದೆ… ಹಾಗಾದರೆ ನೀವೀಗ ಊಟ ಮಾಡುವುದೆಲ್ಲಿ?”ಅದರ ಬಗ್ಗೆಯೇ ಯೋಚಿಸಿದವನಂತೆ ಹೇಳಿದ ತೇಜ. +“ಏನು ಸಿಕ್ಕರದು ಸ್ವಲ್ಪ ತಿಂದು ಮಲಗುತ್ತೇನೆ”ಹೇಳಬೇಕೋ ಬೇಡವೋ ಎಂಬಂತೆ ಹಿಂದುಮುಂದೇ ನೋಡಿ ಸರಿಯಾದ ಶಬ್ದಗಳಿಗಾಗಿ ಹುಡುಕಾಡಿ ಹೇಳಿದ ಹಿರಿಯ. +“ನೀವು ನಮ್ಮ ಮನೆಯಲ್ಲಿ…”“ಊಟ ಮಾಡಬಹುದೆ! +ಅದಿರಂದ ಯಾರಿಗೂ ಎಂತಹ ತೊಂದರೆಯೂ ಆಗುವದಿಲ್ಲವೆ!” ಅವನಿಗೆ ಕಷ್ಟ ಬೇಡವೆಂಬಂತೆ ತಾನೇ ಆತುರದ ದನಿಯಲ್ಲಿ ಅವನ ಮಾತನ್ನು ಮುಗಿಸಿದ. +ಶಬ್ದಗಳಿಗೆ ನಿಲುಕದಂತಹ ಭಾವಗಳು ತುಂಬಿಬಂದವು. +ಬಿಳಿಗಡ್ಡದ ಮುದುಕನ ಮುಖದಲ್ಲಿ ಹಲವು ಕ್ಷಣಗಳ ನಂತರ ಅವನ ಬಾಯಿಗೆ ಮಾತು ಬಂತು. +“ನೀವು ನಮ್ಮ ಮನೆ…”“ಮತ್ತೆ ಮತ್ತೆ ತಾವು ತಪ್ಪು ಮಾಡುತ್ತಿದ್ದೀರಿ.”ಮನಃಪೂರ್ವಕವಾಗಿ ನಕ್ಕು ಹೇಳಿದ ಹಿರಿಯ. +“ನೀನು ನಮ್ಮ ಮನೆಯಲ್ಲಿ ಊಟ ಮಾಡುತ್ತೀಯಾ… ನಾವು. . ” +“ಸಾಕು!ಸಾಕು!ಮಾತು ಅಲ್ಲಿಗೇ ನಿಲ್ಲಲಿ. +ನೀವು ಮನುಷ್ಯರಲ್ಲವೇ. +ನಾನೂ ನಿಮ್ಮಂತೆಯೇ ಮನುಷ್ಯ, ನನಗ್ಯಾವ ವಿಶಿಷ್ಟ ರೆಕ್ಕೆಪುಕ್ಕಗಳು, ಕವಚ ಕುಂಡಲಗಳು ಹುಟ್ಟಿಕೊಂಡಿಲ್ಲ… +ನಿಮಗೆ ಕಷ್ಟವಾಗುವ ಹಾಗಿದ್ದರೆ ಅದು ಬೇರೆ ಮಾತು.” +ಅವನ ಮಾತನ್ನು ನಡುವೆಯೇ ತಡೆದು ಮಾತಾಡಿದ ತೇಜಾ ನಿರಾಸೆಯ ದನಿಯಲ್ಲಿ ತನ್ನ ಮಾತನ್ನು ಮುಗಿಸಿದ. +“ಹಂಗೇನೂ ಇಲ್ಲ. +ನನ್ನದು ದೊಡ್ಡ ಸಂಸಾರ. +ಒಬ್ಬರು ಊಟ ಮಾಡಿದರೆ ಯಾರಿಗೇನೂ ಕಡಿಮೆಯಾಗುವುದಿಲ್ಲ… +ಆದರೆ ನಮ್ಮ ಮನೆಯ ಊಟ ನಿನಗೆ ಹಿಡಿಸುತ್ತದೆಯೋ ಎಂಬ ಅನುಮಾನ” ಅವಸರದ ದನಿಯಲ್ಲಿ ಮಾತು ಆರಂಭಿಸಿ ಅವನೂ ತನ್ನ ಅಳಕಿನೊಡನೆ ಅದನ್ನು ಮುಗಿಸಿದ. +ಅದಕ್ಕೆ ಯಾವ ಸಂಕೋಚವೂ ಇಲ್ಲದೇ ತನ್ನಭಿಪ್ರಾಯ ವ್ಯಕ್ತಪಡಿಸಿದ ತೇಜಾ. +“ಮನುಷ್ಯ ಬದುಕಲು, ಆರೋಗ್ಯವಂತನಾಗಿ ಉಸಿರಾಡುತ್ತಿರಲು ಊಟ ಬೇಕಷ್ಟೆ, ನಾನು ಊಟ ಮಾಡಲೆಂದೇ ಬದುಕಿರುವವರಲ್ಲಿ ಒಬ್ಬನಲ್ಲ.” +“ಸಂತೋಷ!ಬಾ ಹೊಟ್ಟೆ ತುಂಬ ಊಟ ಮಾಡು… +ನಿನ್ನ ಇವತ್ತಿನ ಕೆಲಸಗಳನ್ನು ನೋಡಿದರೆ ಒಳ್ಳೆಯ ಔತಣ ಕೊಡಬೇಕೆನಿಸುತ್ತಿದೆ. +ಆದರೆ ಈಗ ಅದಕ್ಕೆ ಸಮಯವಿಲ್ಲ” ತುಂಬುಮನಸ್ಸಿನಿಂದ ಹೇಳಿದ ಹಿರಿಯ. +ಇಬ್ಬರೂ ಅವನ ಮನೆಗೆ ಹೋದರು. +ದೊಡ್ಡ ಮನೆ. +ಮನೆಗೆ ಯಾರು ಬಂದಿದ್ದಾರೆಂದು ತಿಳಿದಾಕ್ಷಣ ಕೆಲ ಹೆಂಗಸರು ತೇಜಾನನ್ನು ಇಣಕಿ ನೋಡಿಹೋದರು. +ಅವನ ಬೆಳೆದ ಇಬ್ಬರು ಮೊಮ್ಮಕ್ಕಳು, ಒಬ್ಬ ಮಗ ಗೌರವದಿಂದ, ಸಂತಸಾತೀರೇಕದಿಂದ ಅವನಿಗೆ ಕೈಜೋಡಿಸಿ ನಮಸ್ಕರಿಸಿದರು. +ಗೋಧಿಯ ರೊಟ್ಟಿ, ಸೊಪ್ಪಿನ ಹುಳಿ ಮತ್ತು ಅಲ್ಲಿಯದೇ ಪ್ರತ್ಯೇಕವಾದ ಚಟ್ನಿಯೊಡನೆ ಆರಂಭವಾದ ಊಟ ಅನ್ನ ಹುಳಿಯೊಡನೆ ಮುಗಿಯಿತು. +ಮನೆಯ ಎಲ್ಲರೂ ಅವನ ಉಪಚಾರ ಮಾಡುವವರೆ, ಹೀಗೆ ಇಷ್ಟು ಜನ ಆತ್ಮೀಯರೊಡನೆ ಕುಳಿತು ಊಟ ಮಾಡಿ ಯಾವ ಕಾಲವಾಯಿತೋ ಎಂದುಕೊಂಡ ತೇಜಾನಿಗೆ ಇಂತಹ ಸುಖಸಂಸಾರವನ್ನು ದಿಕ್ಕುಪಾಲು ಮಾಡುವ ಅಧಿಕಾರ ಯಾರಿಗೂ ಇಲ್ಲ ಎನಿಸಿತು. +ಊಟದ ನಂತರ ಎಲೆ ಅಡಿಕೆಯ ಉಪಚಾರ, ಅದಾದಮೇಲೆ ಅವನ ಮನೆಯವರೊಂದಿಗೆಲ್ಲಾ ಹಾರ್ದಿಕವಾಗಿ ಮಾತಾಡಿ ತಾನು ಮತ್ತೆ ಬರುವುದಾಗಿ ಅಲ್ಲಿಂದ ಹೊರಟ ತೇಜ. +ಅವನನ್ನು ಮನೆಯವರೆಗೆ ಬಿಡಲು ಮುದುಕ ಮತ್ತು ಅವನ ಹಿರಿಯ ಮೊಮ್ಮಗ ಬಂದಿದ್ದರು. +ನಾಳೆ ಅವನಿಗಾಗಿ ಒಬ್ಬ ಪ್ರತ್ಯೇಕ ಆಳನ್ನು ಹುಡುಕಿಕೊಡುವುದಾಗಿ, ಅವಳು ಅಡುಗೆ, ಮುಸರೆ ಅಲ್ಲದೇ ಮನೆಯ ಇನ್ನಿತರ ಕೆಲಸಗಳನ್ನೆಲ್ಲಾ ನೋಡಿಕೊಳ್ಳುವುದಾಗಿ ಹೇಳಿದನಾತ. +ಬಹಳ ದಣಿದಿದ್ದರೂ ಆ ರಾತ್ರಿ ತೇಜಾನಿಗೆ ಬೇಗ ನಿದ್ದೆ ಹತ್ತಲಿಲ್ಲ. +ಗಾಢವಾದ ನಿದ್ದೆಯಲ್ಲಿದ್ದಾಗ ಪೇದೆ ಬಂದು ಬೆಂಗಳೂರಿನಿಂದ ಅರ್‍ಜೆಂಟ್ ಫೋನು ಬಂದಿದೆ ಎಂದು ಎಬ್ಬಿಸಿದ್ದ. +ಸ್ಕ್ವಾಡ್‌ನ ಮುಖ್ಯಸ್ಥರು ಶ್ರೀವಾಸ್ತವ ದೇವನಹಳ್ಳಿಯ ವಿಷಯ ತಿಳಿಸುತ್ತಲೇ ಎಲ್ಲವನ್ನೂ ಮರೆತು ಪೇದೆಗೆ ಹೇಳಿ ಜೀಪಿನಲ್ಲಿ ಅಲ್ಲಿಗೆ ಓಡಿದ್ದ. +ಪಟವಾರಿಯವರ ಮನೆಯಲ್ಲಿ ಮಾತುಕತೆ ಮುಗಿದ ಮೇಲೆ ಸ್ಕ್ವಾಡಿನ ಮುಖ್ಯಸ್ಥರೊಡನೆ ಅವನೊಬ್ಬನೇ ಬಹಳ ಹೊತ್ತು ವಿಚಾರ ವಿಮರ್ಶೆ ನಡೆಸಿದ್ದ. +ತಾನು ಬಂಡೇರಹಳ್ಳಿಯಲ್ಲಿ ಮಾಡುವ ಕೆಲಸಕ್ಕೆ ಯಾವ ರಾಜಕೀಯ ನಾಯಕರಾಗಲಿ ರಾಮನಗರದ ಕಲೆಕ್ಟರ್‌, ಎಸ್.ಪಿ.ಯೇ ಆಗಲಿ ಅಡ್ಡಗಾಲು ಹಾಕಬಾರದೆಂದು ತನಗಲ್ಲಿ ಸ್ಟೇಚ್ಛೆಯಿಂದ ಕೆಲಸ ಮಾಡುವ ಅವಕಾಶ ಒದಗಿಸಿಕೊಡಬೇಕೆಂದು ಹೇಳಿದ್ದ. +ಅವನಲ್ಲಿ ಏನೇನು ಮಾಡಬಯಸಿದ್ದಾನೆ, ಬಂಡೇರಹಳ್ಳಿಗೆ ಏನೇನು ಬೇಕೆಂದು ತೇಜಾ ಹೇಳಿದ್ದನೆಲ್ಲಾ ಏಕಚಿತ್ತದಿಂದ ಕೇಳಿದರು ಸ್ಕ್ವಾಡಿನ ಮುಖ್ಯಸ್ಥರು. +ಅವನು ಹೇಳಿದ್ದರ ಬಗ್ಗೆ ಯೋಚಿಸಿ ತಾವು ಆದಷ್ಟು ಬೇಗ ಮುಖ್ಯಮಂತ್ರಿಯವರೊಡನೆ ಮಾತಾಡಿ ಅವನ ಬೇಡಿಕೆಗಳು ಅವರಿಗೆ ವಿವರಿಸಿ ಆದಷ್ಟು ಬೇಗ ಅದರ ಕುರಿತು ಏನಾದರೂ ಮಾಡುವ ಆಶ್ವಾಸನೆ ನೀಡಿದ್ದರು. +ಅವರು ತಮ್ಮ ವಾಹನದ ಕಡೆ ಹೆಜ್ಜೆ ಹಾಕುತ್ತಾ ಹೇಳಿದ್ದರು. +“ಈ ದೇವಿಯಾದವನನ್ನು ಮುಗಿಸಿ ಕಲ್ಯಾಣಿ ಪುಣ್ಯ ಕಟ್ಟಿಕೊಂಡಳು! +ಈ ದರಿದ್ರ ದೇಶಕ್ಕೆ ಚದುಲಿನ ಹಾಗೆ ತಗಲಿಕೊಂಡಿದ್ದ.”ಅದಕ್ಕೆ ಏನೂ ಹೇಳಿರಲಿಲ್ಲ ತೇಜಾ. +ಅದರಿಂದ ಅವನ ಮನದಲ್ಲೂ ಹಳೆಯ ಯೋಚನೆಗಳು ಮರುಕಳಿಸಿ ಹೋಗಿದ್ದವು. +ಅಲ್ಲಿಂದ ಅವನು ಬಂಡೇರಹಳ್ಳಿಗೆ ಮರಳಿದಾಗ ಬೆಳಗಿನ ಆರೂವರೆಯಾಗುತ್ತಿತ್ತು. +ಎಲ್ಲ ಬಗೆಯ ಯೋಚನೆಗಳು ಅವನ ದಣಿವನ್ನು ದೂರ ಓಡಿಸಿಬಿಟ್ಟಿದ್ದವು. +ಪೋಲೀಸ್ ಸ್ಟೇಷನ್‌ನೆದುರು ಜೀಪು ನಿಂತಾಗ ಬಾಗಿಲು ಹಾಕಿಕೊಂಡು ಮಲಗಿದ್ದ ಪೇದೆ ಇನ್ನೂ ನಿದ್ದೆಯಿಂದ ಎಚ್ಚರಗೊಂಡಿರಲಿಲ್ಲ. +ಅವನನ್ನು ಎಬ್ಬಿಸದೇ ನಡೆದೇ ಮನೆಗೆ ಬಂದ. +ಬಟ್ಟೆ ಬದಲಿಸಿ ಬೆಳಗಿನ ವಿಧಿಗಳನ್ನು ಆರಂಭಿಸಿದಾಗ ಅಲ್ಲಿನ ಜನರು ಅನುಭವಿಸುತ್ತಿರುವ ಕಷ್ಟದ ಅರಿವಾಯಿತು. +ನೀರಿಗಾಗಿ ಪರದಾಟ, ವಾಂತಿ ಬರಿಸುವಂತಹ ಶೌಚಾಲಯ. +ಅಲ್ಲಿ ಇದ್ದುದರಲ್ಲೇ ಇದು ಒಳ್ಳೆ ಮನೆ ಎಂದು ಹೇಳಿದ್ದ ಅಲ್ಲಿಯವನೊಬ್ಬ. +ಒಳ್ಳೆಯ ಮನೆಯದೇ ಈ ಗತಿಯಾದರೆ ಬೇರೆ ಮನೆಗಳ ಗತಿ ಹೇಗಿರಬಹುದು ಎಂದು ಯೋಚಿಸುತ್ತಲೇ ತಡೆಯಲಾಗದಂತಹ ನೈಸರ್ಗಿಕ ವಿಧಿಗಳನ್ನು ಮುಗಿಸಿದ. +ಸ್ನಾನಕ್ಕೆ ಪಾತಾಳಕ್ಕೆ ಸೇರಿದ ಬಾವಿಯಿಂದ ನೀರು ತೋಡಬೇಕು ಎಂದುಕೊಳ್ಳುತ್ತಿರುವಾಗ ಬಿಳಿಯ ಗಡ್ಡದ ಹಿರಿಯ ಬಂದ. +ಅವನೊಡನೆ ಒಬ್ಬ ನಲವತ್ತನ್ನು ಸಮೀಪಿಸುತ್ತಿದ್ದ ಹೆಂಗಸಿದ್ದಳು. +ಸ್ನಾನದ ವಿಷಯ ಮರೆತು ಹಿರಿಯನೊಡನೆ ಕುಳಿತು ತಾನಲ್ಲಿ ಇದ್ದುದರಲ್ಲೇ ಸುಖವಾಗಿ ಹೇಗೆ ಬಾಳಬಹುದೆಂಬ ಮಾತು ಆರಂಭಿಸಿದ. +ಅಡುಗೆಮನೆಯಲ್ಲದೇ ಎರಡು ದೊಡ್ಡ ಕೋಣೆಗಳಿರುವ ಮನೆಯದು. +ಅದನ್ನೊಮ್ಮೆ ಸುತ್ತು ಹಾಕಿ ಒಂದು ಮನೆಗೆ ಆಗತ್ಯವಾಗಿ ಬೇಕಾದ ವಸ್ತುಗಳ ತಟ್ಟೆಯನ್ನು ಒರೆಸತೊಡಗಿದ. +ಅವನ ಜತೆಗೆ ಬಂದ ಹೆಣ್ಣು ಅದರಲ್ಲಿ ತನ್ನ ಸಲಹೆಗಳನ್ನು ಸೇರಿಸುತ್ತಿದ್ದಳು. +ಅದೆಲ್ಲಾ ತಲೆನೋವು ಬೇಡ, ನೀನೇ ಎಲ್ಲಾ ವ್ಯವಸ್ಥೆ ಮಾಡೆಂದು ಆ ಹಿರಿಯನಿಗೆ ಹಣ ಕೊಟ್ಟ ತೇಜಾ, ಎಲ್ಲಾ ಸಾಮಾನುಗಳನ್ನು ರಾಮನಗರದಿಂದಲೇ ತರಬೇಕು. +ತನ್ನ ಮೊಮ್ಮಗನಿಂದ ಎಲ್ಲಾ ತರಿಸುವುದಾಗಿ ಹೇಳಿ ಹಣವನ್ನು ಕಿಸೆಯಲ್ಲಿ ಹಾಕಿಕೊಂಡ ಹಿರಿಯ ಆಗ ಆತನ ಹೆಸರು ಗುಂಡು ಎಂದು ಗೊತ್ತಾಯಿತು. +ಅದಕ್ಕೆ ಹಿಂದೆ ಮುಂದೆ ಏನೂ ಇಲ್ಲ ಬರಿ ಗುಂಡು, ಹಿಗ್ಯಾಕೆಂದು ಕೇಳಿದಾಗ, ಅವನ ತಂದೆ ತಾಯಿಗೆ ಹುಟ್ಟಿದ ಮಕ್ಕಳೆಲ್ಲಾ ಆರು ತಿಂಗಳೊಳಗೆ ಸತ್ತು ಹೋಗುತ್ತಿದ್ದರಂತೆ ಹಾಗೆ ಐವರು ಮಕ್ಕಳು ತೀರಿಕೊಂಡ ಮೇಲೆ ಇವನು ಹುಟ್ಟಿದ್ದ. +ಇವನಾದರೂ ಗುಂಡುಕಲ್ಲಿನಂತೆ ಬದುಕಿರಲಿ ಎಂದು ಆಸೆಪಟ್ಟಿದ್ದರಂತೆ. +ತನ್ನೆದುರು ಎಷ್ಟೋ ಜನ ತೀರಿಕೊಂಡರು ತಾನಿನ್ನು ಗುಂಡಕಲ್ಲಿನ ಹಾಗೆ ಇದ್ದೀನೆಂದು ನಗುತ್ತಲೇ ಹೇಳಿದ ಅವನು ಶೌಚಾಲಯವನ್ನು ಶುಚಿಮಾಡಿಸುವ ಕೆಲಸ ಈಗಲೇ ಮಾಡಿಸುವುದಾಗಿ ಹೊರಹೋದ. +ಸ್ನಾನ ಮುಗಿಸಿ ಸ್ವಚ್ಛವಾದ ಪ್ಯಾಂಟು, ಟೀಶರ್ಟನ್ನು ತೊಟ್ಟು ಅವಳಿಂದ ಆದಷ್ಟು ಮನೆ ಶುಚಿ ಮಾಡಬೇಕೆಂದು ಗುಂಡು ತಾತ ಕೆಲಸ ಮುಗಿಸಿದ ಬಳಿಕ ಮನೆ ಬೀಗ ಹಾಕಿ ಯಾರ ಕೈಯಲ್ಲಾದರೂ ಅದನ್ನು ಕಳುಹಿಸುವಂತೆ ಹೇಳಿ ಪೋಲೀಸ್ ಸ್ಟೇಷನಿಗೆ ಹೊರಟ. +ತೇಜಾ ಪೋಲಿಸ್ ಸ್ಟೇಷನ್ನಿಗೆ ಬಂದಾಗ ಅಲ್ಲಿ ಮೂವರು ಪೇದೆಯರು ಮಾತ್ರವಿದ್ದರು. + ಎಚ್.ಸಿ. ಬಂದಿರಲಿಲ್ಲ. + ಇವರು ಕೂಡಾ ಇಲ್ಲಿ ನಿಷ್ಪ್ರಯೋಜಕವೇನೋ ಎನಿಸುತ್ತಿದ್ದಾಗ ಮರೆತದ್ದೇನೋ ಹೊಳೆದಂತಾಯಿತವನಿಗೆ. +ಸಾರಾಯಿಖಾನೆಗಳು ತೆಗೆದು ಸಾರಾಯಿಯಾದರೂ ಮಾರುತ್ತಿದ್ದಾರೆನೋ ನೋಡಿ ಬರಲು ಇಬ್ಬರನ್ನು ಕಳುಹಿಸಿದ. +ಆಗಿನ್ನೂ ಹತ್ತು ಕಾಲು. +ತನ್ನ ರಾತ್ರಿಯ ಮಾತಿನ ಪರಿಣಾಮ ಏನಾದರೂ ಆಗಿದೆಯೇ ಇಲ್ಲವೇ ಎಂದು ನೋಡುವ ಆಸೆ. +ಕೋಣೆಯಲ್ಲೊಬ್ಬನೇ ಕುಳಿತ ತೇಜಾನ ತಲೆಯಲ್ಲಿ ತಾನು ಸ್ಕ್ವಾಡಿನ ಮುಖ್ಯಸ್ಥರೊಡನೆ ಆಡಿದ ಮಾತುಗಳು ಸುಳಿಯುತ್ತಿದ್ದವು. +ಮುಖ್ಯಮಂತ್ರಿಯವರಿಗೆ ಎಲ್ಲವನ್ನೂ ವಿವರಿಸಿತ್ತೇನೆಂದು ಹೇಳಿದ್ದಾರವರು. +ಆದರೆ ಅವರು ಸ್ಕ್ವಾಡಿನ ಮುಖ್ಯಸ್ಥರ ಮಾತನ್ನು ಒಪ್ಪಬಹುದೇ! +ಈ ರಾಜಕಾರಣಿಯರ ಸ್ವಭಾವವನ್ನೇ ಅರಿಯುವುದು ಕಷ್ಟ. +ಆದರೆ ಈ ಸಿ.ಎಂ.ಸಾಹೇಬರು ತಮ್ಮ ರಾಜ್ಯವನ್ನು ಪ್ರಗತಿಯ ಕಡೆ ಒಯ್ಯುತ್ತಿದ್ದಾರೆ ಅದರಲ್ಲಿ ಸಂದೇಹವಿಲ್ಲ. +ಹಾಗೇ ಅವರೀ ಕ್ರಾಂತಿಕಾರಿ ಚಳುವಳಿಯನ್ನು ಬುಡಸಮೇತ ನಿರ್ಮೂಲ ಮಾಡುವ ಪಣ ಕೂಡ ತೊಟ್ಟಿದ್ದಾರೆ. +ಅವರು ಕ್ರಾಂತಿಕಾರಿಯರ ಬಗ್ಗೆ ತೋರುತ್ತಿರುವ ಉದಾರ ನೀತಿಯ ಕಾರಣವಾಗೇ ಹಲವಾರು ಕ್ರಾಂತಿಕಾರಿಯರು ತಮ್ಮ ತಂಡದವರೊಡನೆ ಶರಣಾಗತರಾಗಿದ್ದಾರೆ. +ಬಂಧಿಸಲ್ಪಟ್ಟ ಕೆಲವರು ತಮ್ಮ ಯೋಚನಾ ವಿಧಾನ ಬದಲಾಯಿಸಲು ಸಿದ್ಧರಿಲ್ಲ. +ಅವರಿಗೆ ಕಠಿಣ ಶಿಕ್ಷೆಯಾಗಿದೆ. +ತಾನು ಇಲ್ಲಿಗೆ ಬರುವ ಮುನ್ನ ಜೈಲಿನಲ್ಲಿ ಮಾತಾಡಿಸಿದ್ದು ಅಂತಹವರನ್ನ ಮುಖ್ಯಮಂತ್ರಿಯವರು ಸ್ಕ್ವಾಡಿನ ಮುಖ್ಯಸ್ಥರ ಮಾತನ್ನು ಒಪ್ಪಿಕೊಳ್ಳಬಹುದು. +ಯಾಕೆಂದರೆ ಕ್ರಾಂತಿಕಾರಿಯರ ಪೈಕಿ ಈ ಕಲ್ಯಾಣಿಯೊಬ್ಬಳೇ ಇಡಿ ರಾಜ್ಯಕ್ಕೆ ದೊಡ್ಡ ತಲೆನೋವಾಗಿ ಬೆಳೆದುಬಿಟ್ಟಿದ್ದಾಳೆ. +ಒಂದು ವೇಳೆ ಅವರು ತನ್ನ ಸಲಹೆಗಳನ್ನು ಒಪ್ಪಿಕೊಂಡರೆ ಬಂಡೇರಹಳ್ಳಿಯಲ್ಲಿ ಏನು ಮಾಡಬಹುದೆಂಬ ಕನಸು ಕಾಣತೊಡಗಿದ ತೇಜಾ. +ಮತ್ತು ಎಚ್.ಸಿ. ಬಸ್ಸು ಸರಿಯಾದ ಸಮಯಕ್ಕೆ ಸಿಗಲಿಲ್ಲ ಅದಕ್ಕೇ ತಡವಾಯಿತೆಂದು ಹೇಳಿದರವರು. +ಪೇದೆಯಿಂದ ತಿಂಡಿ ತರಿಸಿಕೊಂಡು ತಿಂದು ತನ್ನ ಆಗಿನ ಹಸಿವನ್ನೂ ನೀಗಿಸಿಕೊಂಡ. +ಸಾರಾಯಿಖಾನೆಯ ವಿಷಯ ತಿಳಿಯಲು ಹೋದ ಪೇದೆಯರು ಇನ್ನೂ ಬಂದಿರಲಿಲ್ಲ. +ಈ ಇಬ್ಬರಿಗೂ ಏನಾದರೂ ಕೆಲಸ ಹಚ್ಚಬೇಕೆಂದುಕೊಂಡು ಅವರಿಗೆ ಹಳ್ಳಿಯೆಲ್ಲಾ ಸುತ್ತಾಡಿ ಅಲ್ಲಿನ ಜನರ ಸಮಸ್ಯೆ ಏನಿದೆ ಎಂಬುದನ್ನು ಹಲವರೊಡನೆ ಮಾತಾಡಿ ಅರಿಯಲು ಕಳುಹಿಸಿದ. +ದಣಿವಿನ ಕಾರಣ, ರಾತ್ರಿಯೆಲ್ಲಾ ನಿದ್ದೆ ಕೆಟ್ಟ ಕಾರಣ ಅವನ ಕಣ್ಣುಗಳು ಮುಚ್ಚಿಕೊಂಡು ಹೋಗುತ್ತಿದ್ದವು. +ಯಾರೂ ಇನ್ನೂ ಮನೆಯ ಬೀಗದಕೈ ತಂದುಕೊಟ್ಟಿರಲಿಲ್ಲ. +ಮನೆಗೆ ಹೋಗಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಬರುವುದು ಒಳ್ಳೆಯದೆನಿಸಿ ಪೇದೆಗೆ ಹೇಳಿ ಮನೆಯ ಕಡೆ ನಡೆದ. +ಕೆಲಸದಾಳು ಅವನಿಗಾಗಿ ಅಡುಗೆ ಮಾಡುವ ಕೆಲಸ ನಡೆಸಿದ್ದಳು. +ಮನೆ ಸಾಕಷ್ಟು ಶುಭ್ರಗೊಂಡಿತ್ತು. +ತಾನೀಗ ಮಲಗುವುದಾಗಿ ಅವಳು ತನ್ನ ಕೆಲಸ ಮುಗಿಸಿ ಬಾಗಿಲು ಹತ್ತಿರ ಎಳೆದುಕೊಂಡು ಹೋಗಬೇಕಾಗಿ ಹೇಳಿ ಹಾಸಿಗೆಯಲ್ಲಿ ಉರುಳಿದ. +ಅದಕ್ಕಾಗೇ ಕಾಯುತ್ತಿದ್ದಂತಿತ್ತು ನಿದ್ದೆ. +ನಾಗೇಶ ಯಾರೂ ಇಲ್ಲದಾಗ ಕರುಣಾಜನಕ ದನಿಯಲ್ಲಿ ತನಗೆ ಹರಿ ಮಾಡಿದ ಅವಮಾನವನ್ನು ವಿವರಿಸಿದ್ದ. +ಅದು ಅವಮಾನವಲ್ಲವೆಂದು ಅಂತಹ ಪರಿಸ್ಥಿತಿಗಳಲ್ಲಿ ಹಾಗೇ ಮಾಡಬೇಕಾಗುತ್ತದೆ ಎಂಬುವುದನ್ನು ವಿವರಿಸುತ್ತಾ ಇನ್ನೂ ಅವನು ಏನೇನು ಕಲಿಯಬೇಕೆಂಬುವುದನ್ನು ಹೇಳಿದ್ದಳು ಕಲ್ಯಾಣಿ. +ಅವಳು ಹೇಳಿದ ಕಲಿಕೆಯ ಮಾತುಗಳು ಅವನ ಬುರುಡೆಯಲ್ಲಿ ಏರಲಿಲ್ಲ. +ಕಲ್ಯಾಣಿ, ಸಮಾಧಾನದಿಂದ ಆತ್ಮೀಯತೆಯಿಂದ ಮಾತಾಡಿದ ದನಿಯೇ ಅವನ ಮನವನ್ನೆಲ್ಲಾ ಸುತ್ತುವರಿದುಬಿಟ್ಟಿತ್ತು. +ತಂಡದ ಎಲ್ಲರಿಗಿಂತ ತಾನೇ ಅವಳಿಗೆ ಹೆಚ್ಚು ಬೇಕಾದವನು ಎಂಬ ಭಾವನೆ ಹುಟ್ಟಿಬಿಟ್ಟಿತು. +ಅದಕ್ಕೆ ಕಾರಣ ಅವನು ಹುಟ್ಟಿದಾಗಿನಿಂದ ಯಾರ ಪ್ರೀತಿ, ಪ್ರೇಮಗಳಿಗೂ ಪಾತ್ರನಾಗಿರಲಿಲ್ಲ. +ಅವಳು ತನ್ನನ್ನು ತನ್ನವನೆಂದುಕೊಳ್ಳುತ್ತಾಳೆ, ಎಲ್ಲರಿಗಿಂತ ತನ್ನ ಬಹಳ ಅಕ್ಕರೆಯಿಂದ ಕಾಣುತ್ತಾಳೆ ಎಂಬ ಅನಿಸಿಕೆ ಅವನನ್ನು ಭಾವುಕ ಹೊಳೆಯಲ್ಲಿ ಹೊಡೆದುಕೊಂಡು ಹೋಗುವಂತೆ ಮಾಡಿತು. +ಬಂಡೇರಹಳ್ಳಿಯಲ್ಲಿ, ಪೋಲೀಸ್ ಸ್ಟೇಷನ್ ಹುಟ್ಟಿಕೊಂಡಿರುವುದು ಕಲ್ಲಕ್ಕನನ್ನು ಮುಗಿಸಲೇ ಎಂದವನು ಗಟ್ಟಿಯಾಗಿ ನಂಬಿದ್ದ. +ಅದರಿಂದ ಈ ಇನ್ಸ್‌ಪೆಕ್ಟರ್ ಮಹಾ ಕಿರಾತಕನಿರಬಹುದು ಅದಕ್ಕೆ ಅವನನ್ನು ಇಲ್ಲಿ ಕಳುಹಿಸಲಾಗಿದೆ ಎಂಬ ಅವನ ಊಹೆಗಳು ಬೃಹದಕಾರಾ ತಾಳಿದ್ದವು. +ಮೊದಲು ಆ ಇನ್ಸ್‌ಪೆಕ್ಟರ್‌ನನ್ನು ಮುಗಿಸಿಬಿಟ್ಟರೆ ಪೀಡೆ ತೊಲಗುತ್ತದೆ. +ಅಕ್ಕನಿಗೆ ಮತ್ಯಾವ ತೊಂದರೆಯೂ ಉಂಟಾಗುವುದಿಲ್ಲ ಎಂಬ ವಿಚಾರ ಅವನಲ್ಲಿ ಅಂಕುರಿಸಿ ಬೆಳೆಯುತ್ತಾ ಹೋದಹಾಗೆ ಅವನಿಗರಿವಿಲ್ಲದಂತೆ ಅದರ ಯೋಜನೆಯೂ ರೂಪು ತಾಳತೊಡಗಿತು. +ಅದರ ಜತೆಜತೆಗೇ ಅಕ್ಕನ ಮೇಲಿದ್ದ ಅವನ ಭಾವುಕ ಅಕ್ಕರೆ ಹೆಚ್ಚಾಗತೊಡಗಿತು. +ಹಳ್ಳಿಯ ಜನ ಏನು ಮಾತಾಡಿಕೊಳ್ಳುತ್ತಿದ್ದಾರೆ. +ಪೋಲಿಸಿನವರು ಏನು ಮಾಡುತ್ತಿದ್ದಾರೆ ತಿಳಿದುಕೊಂಡು ಬರಲು ಅವನನ್ನು ಬಂಡೇರಹಳ್ಳಿಗೆ ಕಳಿಸಿದ್ದಳು ಕಲ್ಯಾಣಿ. +ಹಳ್ಳಿಯಲ್ಲಿ ಅವಳ ತಂಡದವರಾರೇ ಆಗಲಿ ಒಬ್ಬರೇ ಬಂದಾಗ ಅವರ ವೇಷ ಬದಲಾಗಿರುತ್ತಿತ್ತು. +ಅಡ್ಡಪಂಚೆ ಸುತ್ತಿ ಅದರ ಮೇಲೆ ಅರ್ಧ ತೋಳಿನ ಶರ್ಟ್‌ನ್ನು ತೊಟ್ಟು, ಬಂಡೇರಹಳ್ಳಿಗೆ ಬಂದಿದ್ದ ನಾಗೇಶ. +ಅವನು ಸೊಂಟದಲ್ಲಿ ಅಡಗಿಸಿಟ್ಟುಕೊಂಡ ರಿವಾಲ್ವರ್ ಯಾರಿಗೂ ಕಾಣುವ ಹಾಗಿರಲಿಲ್ಲ. +ಹಳ್ಳಿಗರಲ್ಲಿ ಒಬ್ಬನಾಗಿ ಓಡಾಡುತ್ತಿದ್ದ ಅವನು ಯಾರೆಂಬುದು ಅಲ್ಲಿನ ಕೆಲವರಿಗೆ ಗೊತ್ತಿತ್ತು. +ಆದರೆ ಯಾರೂ ಅದರ ಬಗ್ಗೆ ಬಾಯಿಬಿಡುವವರಲ್ಲ. +ಅಷ್ಟೊಂದು ಅಲ್ಲಿಯ ಜನಕ್ಕೆ ಕಲ್ಲಕ್ಕನ ಮೇಲಿರುವ ಆದರಾಭಿಮಾನ. +ತಾವು ಕ್ರಾಂತಿಕಾರಿಯರಾಗಿರದಿದ್ದರೂ ಅವಳಿಗಾಗಿ ತಮ್ಮ ಪ್ರಾಣವನ್ನು ಸಹಿತ ಕೊಡಲು ಸಿದ್ಧರಿದ್ದರು ಹಲವರು. +ಸೊಂಟದಲ್ಲಿ ಸಿಕ್ಕಿಸಿಕೊಂಡ ಆಯುಧವನ್ನು ಎರಡೆರಡು ಸಲ ತಡವಿ ನೋಡಿಕೊಂಡು ಪೊಲೀಸ್ ಸ್ಟೇಷನ್ನಿನ ಕಟ್ಟಡದ ಎದುರಿನಿಂದ ಹಾದ ನಾಗೇಶ. +ಅವನಿಗಲ್ಲಿ ಯಾವ ಚಟುವಟಿಕೆಯೂ ಕಾಣಲಿಲ್ಲ. +ಅದರ ಬಾಗಿಲೆದುರು ಒಬ್ಬ ಪೇದೆ ನಿರಾಸಕ್ತಿಯಿಂದ ಎದುರಿಗೆ ನಡೆಯುತ್ತಿರುವ ಚಟುವಟಿಕೆಯನ್ನು ನೋಡುತ್ತಿರುವಂತೆ ಕುಳಿತಿದ್ದ. +ನಾಗೇಶನ ಬುದ್ದಿ ಕೆಲಸ ಮಾಡಲಾರಂಭಿಸಿತು. +ಪೊಲೀಸ್ ಜೀಪು ಅಲ್ಲೇ ಇದೆ. +ಅಂದರೆ ಇನ್ಸ್ ಪೆಕ್ಟರ್‌ ಇಲ್ಲೇ ಎಲ್ಲೋ ಇರಬೇಕು. +ಅವನು ಪೊಲೀಸ್ ಸ್ಟೇಷನ್‌ನಲ್ಲಿ ಇರಲಿಕ್ಕಿಲ್ಲ. +ಇದ್ದಿದ್ದರೆ ಈ ಪೇದೆಯ ಹಾಗೆ ಸೋಮಾರಿಯಂತೆ ಕುಳಿತಿರುತ್ತಿರಲಿಲ್ಲ. +ಅವನನ್ನು ಹುಡುಕಬೇಕು ಎಂದುಕೊಳ್ಳುತ್ತಾ ಎದುರಿನ ಹೋಟಲಿನಲ್ಲಿ ಹೋಗಿ ಕುಳಿತ. +ಅವನು ಕೇಳದೆಯೇ ಸಪ್ಲೆಯರ್ ಅವನೆದುರು ಕಾಫಿ ತಂದಿಟ್ಟ. +ಪೊಲೀಸ್ ಸ್ಟೇಷನ್ನಿನ ಮೇಲಿಂದ ಗಮನ ಸರಿಸದೇ ಅದನ್ನು ಕುಡಿಯತೊಡಗಿದ ನಾಗೇಶ. +ಆ ಇನ್ಸ್‌ಪೆಕ್ಟರ್‌ನನ್ನು ಕೊಲೆ ಮಾಡುವುದು ಅಷ್ಟು ಕಷ್ಟಕರ ಕೆಲಸವಾಗಿ ಕಾಣುತ್ತಿರಲಿಲ್ಲ ನಾಗೇಶನಿಗೆ ಎದುರಿಗೆ ಹೋಗಿ ಗುಂಡು ಹಾರಿಸಿದರಾಯಿತು. +ಒಂದೇ ಗುಂಡಿಗೆ ಅವನ ಕಥೆ ಮುಗಿಯುತ್ತದೆ. +ಅವರುಗಳು ತನ್ನ ಬಂಧಿಸಬಹುದು ಹಿಂಸೆ ಕೊಡಬಹುದು. +ಏನಾದರೂ ಮಾಡಿ ಕಲ್ಲಕ್ಕ ತನ್ನ ಬಿಡಿಸಿಕೊಳ್ಳುತ್ತಾಳೆ. +ಅದು ಸಾಧ್ಯವಾಗದಿದ್ದರೆ ಈ ಪೋಲಿಸಿನವರು ತನ್ನ ಕೊಲ್ಲಬಹುದು. +ತಾನು ಸತ್ತರ ಸತ್ತೆ ಅಕ್ಕನಂತೂ ಸುರಕ್ಷಿತವಾಗಿರುತ್ತಾಳಲ್ಲ, ಅದೇ ಸಾಕು ಎಂದುಕೊಂಡಿದ್ದ. +ಮತ್ತು ಎಚ್.ಸಿ. ಬಂದದ್ದನ್ನು ನೋಡಿದ. +ಅದರಿಂದ ಅವನ ಹೃದಯಬಡಿತ ಜೋರಾಗಿತ್ತು. +ಇನ್ನೇನು ಇನ್ಸ್‌ಪೆಕ್ಟರ್ ಬರಬಹುದು ತನ್ನ ಕೆಲಸ ಮುಗಿಯುತ್ತದೆ ಎಂಬ ಅನಿಸಿಕೆಯಿಂದಲೇ ಅವನ ಹೃದಯಬಡಿತ ಜೋರಾಯಿತು. +ಇವನನ್ನು ಮುಗಿಸಿದರೆ ತಾನಿನ್ನೂ ಹಸುಳೆಯಲ್ಲ ಎಂಬುವುದು ದಳದವರಿಗೂ ತಿಳಿಯುತ್ತದೆ. +ಅಕ್ಕ ಹೆಮ್ಮೆಯಿಂದ ಹಿಗ್ಗಬಹುದು. +ತನ್ನಲ್ಲಿರುವ ಆಯುಧ ಬಿಹಾರದ ಯಾವುದೋ ಕಳ್ಳ ಕಾರ್ಖಾನೆಯಲ್ಲಿ ತಯಾರಾದದ್ದು ಮತ್ತು ಅದರ ಸಾಮರ್ಥ್ಯ ಎಷ್ಟೆಂಬುವುದು ಅವನಿಗೆ ಗೊತ್ತಿರಲಿಲ್ಲ. +ಮತ್ತು ಎಚ್ ಸಿ. ಬಂದರೂ ಪೊಲೀಸ್ ಸ್ಟೇಷನ್ನಿನಲ್ಲಿ ಯಾವ ಚಟುವಟಿಕೆ ಹುಟ್ಟದಿರುವದು ಅವನಲ್ಲಿ ಆಶ್ಚರ್ಯ, ಕಾತುರಗಳನ್ನು ಹೆಚ್ಚಿಸಿತು. +ಒಂದು ಅರ್ಧ ಗಂಟೆ ಅವನಿಗೆ ಅಲ್ಲಿ ಕೂಡಲಾಗಲಿಲ್ಲ. +ಏನಾದರೂ ಆದಷ್ಟು ಬೇಗ ಕೂಡಲೇ ಮಾಡಬೇಕೆಂಬ ಹಟದಿಂದ ಅಲ್ಲಿಂದ ಎದ್ದ ನಾಗೇಶ, ಅತಿಯಾದ ಆವೇಗ, ವ್ಯಾಕುಲತೆಯ ಕಾರಣ ಅವನು ಸರಿಯಾಗಿ ಯೋಚಿಸುವ ಸ್ಥಿತಿಯಲ್ಲೂ ಇರಲಿಲ್ಲ. +ನೇರವಾಗಿ ನಡೆಯುತ್ತಾ ಬೇಸರದಿಂದ ಕಟ್ಟೆಯ ಮೇಲೆ ಕುಳಿತ ಪೇದೆಯನ್ನು ಕೇಳಿದ. +“ಇನ್ಸ್‌ಪೆಕ್ಟರ್ ಸಾಹೇಬರೆಲ್ಲಿ?” ಆವೇಶದ ಕಾರಣ ಅವನ ದನಿಯಲ್ಲಿ ನಮ್ರತೆಯೂ ಇರಲಿಲ್ಲ. +ಬೇಸರ ತೊಲಗಿದ ಪೇದೆ ಅವನನ್ನು ಕೆಳಗಿನಿಂದ ಮೇಲಿನವರೆಗೆ ಪರೀಕ್ಷಾತ್ಮಕವಾಗಿ ನೋಡಿದ. +ಅವನ ನೋಟವನ್ನು ದಿಟ್ಟತನದಿಂದ ಎದುರಿಸಿದ ನಾಗೇಶನ ಕೈ ಅವನಿಗರಿವಿಲ್ಲದಂತೆ ಸೊಂಟದ ಮೇಲೆ ಹೋಯಿತು. +ತಾನು ನೋಡುವುದನ್ನು ಮುಗಿಸಿದ ಪೇದೆ ಕೇಳಿದ“ಏನು ಕೆಲಸವಿತ್ತು?” +“ಅವರಿಗೇ ಹೇಳಬೇಕು ಯಾವಾಗ ಬರುತ್ತಾರೆ?” ಕೇಳಿದ ನಾಗೇಶ. +ಅವನಿಗೆ ಕೆಲಸ ಬೇಗ ಮುಗಿಸುವ ಆತುರ. +“ಕಾದಿರು ಅವರು ಯಾವ ಸಮಯದಲ್ಲಾದರೂ ಬರಬಹುದು” ಹೇಳಿದ ಪೇದೆ. +ಅವನ ದನಿಯಲ್ಲಿ ಈಗ ಬೇಸರ, ಮರು ಮಾತಿಲ್ಲದೇ ಪೋಲಿಸ್ ಸ್ಟೇಷನ್ನಿನ ಕಟ್ಟಡವನ್ನೆಲ್ಲಾ ಒಮ್ಮೆ ಪರೀಕ್ಷಿಸುವಂತೆ ನೋಡಿ ಮತ್ತೆ ಹೋಟೆಲಿನ ಕಡೆ ಹೆಜ್ಜೆ ಹಾಕಿದ ನಾಗೇಶ. +ಅವನು ಕುಳಿತ ಕಡೆಯಿಂದ ಪೋಲಿಸ್ ಸ್ಟೇಷನ್ನಿನ ಕಟ್ಟಡ ಚೆನ್ನಾಗಿ ಕಾಣುತ್ತಿತ್ತು. +ಆದರೆ ಪೇದೆ ಒಳಗಿನವರಿಗೆ ಹೇಳಿದ ಮಾತು ಅವನಿಗೆ ಕೇಳಿಸಲಿಲ್ಲ. +ಹಾಗೇ ಚಿಕ್ಕ ಕಿಟಕಿಯಿಂದ ಎಚ್.ಸಿ.ಅವನನ್ನೇ ನೋಡುತ್ತಿರುವುದು ಕೂಡ ಅವನ ಗಮನಕ್ಕೆ ಬರಲಿಲ್ಲ. +ಇನ್ನೂ ಇಪ್ಪತ್ತು ನಿಮಿಷಗಳು ಹಾಗೇ ಕಳೆದವು. +ಕ್ಷಣಕ್ಷಣಕ್ಕೂ ಅವನ ಮುಖದಲ್ಲಿ ಕಾತುರ ಹೆಚ್ಚಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. +ಇನ್ನು ಇಲ್ಲಿ ಕುಳಿತರೆ ಪ್ರಯೋಜನವಿಲ್ಲ ತಾನೇ ಅವನನ್ನು ಹುಡುಕುತ್ತಾ ಹೋಗಬೇಕು ಎಂದುಕೊಂಡು ಹೋಟಲಿನಿಂದ ಹೊರಬಿದ್ದ. +“ಕಲ್ಲಕ್ಕೆ ಎಷ್ಟು ಪ್ರಸಿದ್ಧಳೆಂಬುವುದೂ ನಾಗೇಶನಿಗೆ ಗೊತ್ತಿರಲಿಲ್ಲ. +ಅದು ಗೊತ್ತಿದ್ದರೆ ಅವನು ಯಾವ ಹಳ್ಳಿಗನನ್ನಾದರೂ ಕೇಳಿದ್ದರೆ ವಿಷಯ ಸುಲಭವಾಗಿ ತಿಳಿಯುತ್ತಿತ್ತು. +ಎಲ್ಲಿ ಹುಡುಕಬೇಕೆಂಬ ಯೋಚನೆಯಲ್ಲಿ ಹಾಗೇ ಅವನು ಸ್ವಲ್ಪ ದೂರ ಬಂದಾಗ ಹಿಂದಿನಿಂದ ಹೇಳಿದ ಪೇದೆ. +“ಇನ್ಸ್‌ಪೆಕ್ಟರ್ ಸಾಹೇಬರು ಬಂದಿದ್ದಾರೆ.”ಅದನ್ನು ಕೇಳುತ್ತಲೇ ಒಮ್ಮೆಲೆ ಹಿಂತಿರುಗಿದ ನಾಗೇಶ, ಅದಕ್ಕಾಗೆ ಕಾದಂತೆ ಅವನು ಅಲುಗಾಡದ ಹಾಗೇ ಹಿಡಿದವು. + ಎಚ್.ಸಿ.ಯ ಕೈಗಳು, ಅವನು ಅಚ್ಚರಿಯಿಂದ ಚೇತರಿಸಿಕೊಳ್ಳುವ ಮೊದಲು ಪೇದೆ ಅವನ ಸೊಂಟದಿಂದ ರಿವಾಲ್ವರ್ ತೆಗೆದ. +ಇಬ್ಬರೂ ಅವನನ್ನು ನಯವಾಗಿ ಮಾತಾಡಿಸುತ್ತಾ ಪೊಲೀಸ್ ಸ್ಟೇಷನ್ನಿಗೆ ತಂದರು. + ಎಚ್.ಸಿ. ಮತ್ತು ಪೇದೆಯರು ತಮ್ಮನ್ನು ಬಂಡೇರಹಳ್ಳಿಗೆ ವರ್ಗಾಯಿಸಿದ ರೋಷವನ್ನೆಲ್ಲಾ ಅವನ ಮೇಲೆ ತೀರಿಸಿಕೊಳ್ಳಲಾರಂಭಿಸಿದರು. + ಎಸ್.ಐ.ಮುಖಕ್ಕೆ ಬಲವಾದ ಗುದ್ದು ಗುದ್ದಿ ಕೇಳಿದ. +“ನೀನು ಕಲ್ಲಕ್ಕನ ದಳದವನೇನೋ?” +“ಅಲ್ಲ” ನೋವನ್ನು ಸಹಿಸುತ್ತಾ ಸಿಟ್ಟಿನಿಂದ ಅವನನ್ನು ದುರುಗುಟ್ಟುತ್ತಾ ಹೇಳಿದ ನಾಗೇಶ. +ಪಕ್ಕದಲ್ಲಿ ನಿಂತಿದ್ದ ಎಚ್.ಸಿ.ಯ ಬೂಟುಗಾಲು ಅವನ ಪುಷ್ಟಕ್ಕೆ ಅಪ್ಪಳಿಸಿತು. +ವ್ಯಂಗ್ಯದ ದನಿಯಲ್ಲಿ ಹೇಳಿದ. +“ಈ ಬೋಳಿಮಕ್ಕಳು ಹೀಗೆ ಬಾಯಿ ಬಿಡುವುದಿಲ್ಲ. +ಇವನನ್ನು ಕುರ್ಚಿಗೆ ಕಟ್ಟಿಹಾಕಿ”ನಾಗೇಶನನ್ನು ಅಲ್ಲಿದ್ದ ಎಲ್ಲರೂ ಸುತ್ತುವರೆದಿದ್ದರು. +ಮುಂಬಾಗಿಲ ಕಡೆ ಒಮ್ಮೆ ಕಣ್ಣು ಹಾಯಿಸಿದ ಅವನು ಎದುರಿಗಿದ್ದ ಎಸ್.ಐ.ನ ಹೊಟ್ಟೆಗೆ ಬಲವಾಗಿ ಒದ್ದ. +ಅನಿರೀಕ್ಷಿತ ಆ ಏಟಿಗೆ ಕೆಳಗೆ ಬಿದ್ದನಾತ. +ಹೊರಗೆ ಓಡಲು ನಾಗೇಶ ಒಂದು ಹೆಜ್ಜೆ ಹಾಕಿದಾಗ ಹಿಂದಿನಿಂದ ಅವನ ಸೊಂಟಕ್ಕೆ ಬಿತ್ತು ಬಲವಾದ ಒದೆ. +ಮುಗ್ಗರಿಸಿ ಅವನು ಕೆಳಗೆ ಬಿದ್ದ. +ಮುಖದ ಮೇಲೆ ಬಿದ್ದ ಹೊಡೆತದ ಕಾರಣ, ಈಗ ಮುಗ್ಗರಿಸಿ ಕೆಳಗೆ ಬಿದ್ದ ಕಾರಣ ಅವನ ಮೂಗು ತುಟಿಗಳಿಂದ ರಕ್ತ ಬರಲಾರಂಭಿಸಿತ್ತು. +ಬಿದ್ದ ಅವನನ್ನು ಕುತ್ತಿಗೆಯ ಮೇಲೆ ಕೈಹಾಕಿ ಎಬ್ಬಿಸಿದ ಒಬ್ಬ ಪೇದೆ. +ತನ್ನ ಆವರೆಗಿನ ಸರ್ವೀಸಿನಲ್ಲಿ ಎಂದೂ ಪೊಲೀಸ್ ಸ್ಟೇಷನ್ನನಲ್ಲೇ ಒಬ್ಬ ಬಂದಿಯಿಂದ ಹೊಡೆಸಿಕೊಂಡಿರಲಿಲ್ಲ ಆ ಎಸ್.ಐ. +ಅವನು ತನ್ನ ಆರೋಪವನ್ನೆಲ್ಲಾ ನಾಗೇಶನ ಮೇಲೆ ತೀರಿಸಿಕೊಳ್ಳಲಾರಂಭಿಸಿದ. +ಹೊಡೆತಗಳ ನೋವು ತಾಳಲಾರದೇ ಅವನ ಬಾಯಿಂದ ವಿವಿಧ ಚೀತ್ಕಾರಗಳು ಹೊರಡತೊಡಗಿದವು. +ಆ ಕೂಗುಗಳು ಬಹುದೂರದವರೆಗೆ ಹರಡಿ ಹಳ್ಳಿಗರನ್ನು ಭಯಭ್ರಾಂತರನ್ನಾಗಿ ಮಾಡಿದವು. +ಗಾಢನಿದ್ದೆಯಲ್ಲಿದ್ದ ತೇಜಾನನ್ನು ಅಲುಗಿಸಿ ಎಬ್ಬಿಸಿದ ಗುಂಡು. +ಎಚ್ಚೆತ್ತ ಅವನು ಇನ್ನೂ ತನ್ನ ನಿದ್ದೆಯ ಗುಂಗಿನಿಂದ ಹೊರಬರುವ ಮೊದಲು ಹೇಳಿದ ಗುಂಡು. +“ನಿಮ್ಮವರು ಪೋಲೀಸ್ ಸ್ಟೇಷನ್‌ನಲ್ಲಿ ಒಬ್ಬನನ್ನು ಹೊಡೆದು ಕೊಂದುಬಿಡುತ್ತಿದ್ದಾರೆ”ಆ ಮಾತು ಮೆದುಳಿನಲ್ಲಿ ಇಳಿಯುತ್ತಿದ್ದ ಹಾಗೇ ತೇಜಾ ನಿದ್ದೆಯ ಗುಂಗಿನಿಂದ ಹೊರಬಂದ. +ಯಾವ ಮಾತೂ ಆಡದೇ ಲಗುಬಗೆಯಿಂದ ಬಟ್ಟೆ ಬದಲಿಸಿದ ಅವನು ಪೊಲೀಸ್ ಸ್ಟೇಷನ್ ಕಡೆ ಧಾವಿಸಿದ. +ತೇಜಾ ಅಲ್ಲಿಗೆ ಬರುವಲ್ಲಿ ಅರೆಜೀವವಾಗಿದ್ದ ನಾಗೇಶ. +ಕೋಪಾವೇಶದಿಂದ ಗರ್ಜಿಸಿ ಹೊಡೆಯುತ್ತಿದ್ದ ತನ್ನವರನ್ನು ತಡೆದು ಮೊದಲು ವಿಷಯ ತಿಳಿದುಕೊಂಡ. +“ಈ ಬೋಳಿಮಗ ನನ್ನ ಪೋಲಿಸ್ ಸ್ಟೇಷನ್ನಿನಲ್ಲಿ ಹೊಡೆದಿದ್ದಾನೆ ಸರ್. +ನನ್ನ ಜೀವಮಾನದಲ್ಲಿ ಯಾರಿಂದಲೂ ಏಟು ತಿಂದವನಲ್ಲ ನಾನು”ತನಗಾದ ಅವಮಾನಕ್ಕೆ ನಾಗೇಶನನ್ನು ಕೊಂದೇಬಿಡಬೇಕು ಎಂಬಂತಿತ್ತವನ ಮಾತಿನ ಧೋರಣೆ. +ಅದನ್ನು ಕೇಳಿಸಿಕೊಳ್ಳದವನಂತೆ ನಾಗೇಶನನ್ನು ಪೂರ್ತಿ ಚೆಕ್ ಮಾಡಿ ಅವನಲ್ಲಿ ಇನ್ಯಾವ ಆಯುಧ ಮತ್ತು ವಿಷವಿಲ್ಲವೆಂಬುವುದು ಖಚಿತಪಡಿಸಿಕೊಂಡು ಅವನನ್ನು ತನ್ನ ಕೋಣೆಯಲ್ಲಿ ಹಾಕಿ ಬಾಗಿಲು ಮುಚ್ಚಿ ತನ್ನ ಸಹೋದ್ಯೋಗಿಗಳನ್ನು ದೂರ ಕರೆದು ಸಿಟ್ಟಿನ ದನಿಯಲ್ಲಿ ಹೇಳಿದ ತೇಜಾ. +“ನಿಮಗೇನಾದರೂ ಬುದ್ದಿ ಇದೆಯೇ! +ಕ್ರಾಂತಿಕಾರಿಯರನ್ನು ಎಂದಾದರೂ ನೋಡಿದ್ದೀರಾ! +ಇತ್ತೀಚೆಗಷ್ಟೇ ಕ್ರಾಂತಿಕಾರಿಯರ ಚಟುವಟಿಕೆಗಳು ಇಲ್ಲಿ ಆರಂಭವಾಗಿದೆ. +ಅದಕ್ಕೆ ಅವರ ಬಗ್ಗೆ ನಿಮಗೇನೂ ಗೊತ್ತಿಲ್ಲ. +ಇವನನ್ನು ಕೊಂದು ನಾವು ಸುಲಭವಾಗಿ ಕಾಡಿನಲ್ಲಿ ಎಸೆದುಬಿಡಬಹುದು! +ಅದರಿಂದ ಏನಾಗುತ್ತದೆ. +ನೀವುಗಳು ಮನೆಗೆ ಸುರಕ್ಷಿತವಾಗಿ ಸೇರುತ್ತಿರೋ ಇಲ್ಲವೋ ಹೇಳಲಾಗುವುದಿಲ್ಲ. +ಬರೀ ನಿಮಗೆ ಅಲ್ಲ ನಿಮ್ಮ ಮನೆಯವರೂ ಇದರ ಪರಿಣಾಮವನ್ನು ಎದುರಿಸಬೇಕಾಗಿರಬರಬಹುದು… +ಸ್ವಲ್ಪ ಬುದ್ಧಿ ಉಪಯೋಗಿಸಿ ಕೆಲಸ ಮಾಡಿ ನಾವಿಲ್ಲಿ ಬಂದಿರುವುದು ಈ ಸಣ್ಣಪುಟ್ಟ ಕ್ರಾಂತಿಕಾರಿ ಹಸುಳೆಗಳನ್ನು ಹಿಡಿಯಲಿಕ್ಕಲ್ಲ. +ನಮಗೆ ಇವರ ನಾಯಕಿ ಬೇಕು. +ನೀವು ಎಷ್ಟೇ ಹಿಂಸೆ ಕೊಡಿ ಅವನು ಬಾಯಿ ಬಿಡಲಿಕ್ಕಿಲ್ಲ. +ಯಾಕೆಂದರೆ ತಾನು ಸತ್ತಿದ್ದೇನೆಂದು ತಿಳಿದೇ ಅವನೀ ಚಳುವಳಿಯಲ್ಲಿ ಸೇರಿರುವುದು. +ಒಂದು ವೇಳೆ ಬಾಯಿಬಿಟ್ಟರೂ ಆವರೆಗೆ ಇವನ ನಾಯಕಿ ಮತ್ತು ದಳದ ಇನ್ನಿತರ ಸದಸ್ಯರು ತಮ್ಮ ಠಿಕಾಣಿ ಬದಲಾಯಿಸಿ ಬಿಟ್ಟಿರಬಹುದು. +ಒಂದು ಮಾತು ಚೆನ್ನಾಗಿ ನೆನಪಿಡಿ ಅವರುಗಳು ತಮ್ಮ ಸೇಡನ್ನು ತೀರಿಸಿಕೊಳ್ಳುವವರೆಗೂ ಸುಮ್ಮನಿರುವವರಲ್ಲ ಅರ್ಥವಾಯಿತೆ. ” +ಸಿಟ್ಟು, ನಿಸ್ಸಹಾಯತೆಗಳಿಂದ ತುಂಬಿದ ತೇಜಾನ ಭಾಷಣದಂತ ಮಾತು ಅವರೆಲ್ಲರ ಮೇಲೂ ಬಹಳ ಪ್ರಭಾವ ಬೀರಿತು. +ಸಾವಿನ ಭಯ ಅವರೆಲ್ಲರ ಮುಖದಲ್ಲಿ ಅಷ್ಟೊತ್ತಿದ್ದಂತೆ ಕಂಡುಬರುತ್ತಿತ್ತು. +ಅಪರಾಧಿಗಳಂತೆ ನಿಂತಿದ್ದ ಅವರಲ್ಲಿ ಯಾರೂ ಮಾತಾಡಲಿಲ್ಲ. +ಅವರಿಗೆ ಸಮಾಧಾನ ಹೇಳುವಂತ ದನಿಯಲ್ಲಿ ಮತ್ತೆ ತಾನೇ ಮಾತಾಡಿದ ತೇಜಾ. +“ಆದದ್ದು ಆಗಿ ಹೋಯಿತು! +ಇನ್ನು ಮುಂದಾದರೂ ಜಾಗ್ರತೆಯಾಗಿ ಕೆಲಸ ಮಾಡಿ… +ಎಲ್ಲಿ ಅವನ ಬಳಿಯಿದ್ದ ರಿವಾಲ್ವರ್ ಇಲ್ಲಿ ಕೊಡಿ. +ನಾನವನೊಡನೆ ಮಾತಾಡುತ್ತೇನೆ. ” +ಎಚ್.ಸಿ.ನಾಗೇಶನಿಂದ ವಶಪಡಿಸಿಕೊಂಡಿದ್ದ ರಿವಾಲ್ವರನ್ನು ಅವನಿಗೆ ಕೊಟ್ಟ. +“ಯಾರನ್ನೂ ಒಳಬಿಡಬೇಡಿ” ಎಂದ ತೇಜಾ ತನ್ನ ಕೋಣೆಯಲ್ಲಿ ಹೋದ. +ಹೊಡೆತಗಳ ಹಿಂಸೆಯಿಂದ ಮುಕ್ತನಾದ ನಾಗೇಶ ಕುರ್ಚಿಯೊಂದರಲ್ಲಿ ಕುಸಿದು ಕುಳಿತಿದ್ದ ಅವನ ಮುಖ ಭಾವ ಎಲ್ಲಾ ಯೋಚನೆಗಳಿಂದ ಮುಕ್ತವಾದಂತೆ ಕಂಡುಬರುತ್ತಿತ್ತು. +ಕರವಸ್ತ್ರವನ್ನು ನೀರಿನಲ್ಲಿ ಅದ್ದಿ ಅವನ ಗಾಯಗಳನ್ನು ಶುಚಿಗೊಳಿಸಲಾರಂಭಿಸಿದ ತೇಜಾ, ತುಟಿ ಒಡೆದು ಅದರಿಂದ ರಕ್ತ ಇನ್ನೂ ಬರುತ್ತಲೇ ಇತ್ತು. +ಕೋಣೆಯಿಂದ ಹೊರಗಿಣುಕಿದ ಅವನು ಸ್ಟೇಷನ್ನಿನ ಹೊರಗೆ ಇದ್ದ ಮುದುಕನನ್ನು ಕರೆಯುವಂತೆ ಪೇದೆಗೆ ಹೇಳಿದ. +ಗುಂಡು ತಾತ ಬರುತ್ತಲೇ ಅವನಿಗೆ ಅಲ್ಲಿ ಯಾರಾದರೂ ಡಾಕ್ಟರ್, ಕಾಂಪೌಂಡರ್, ವೈದ್ಯ ಯಾರನ್ನಾದರೂ ಕರೆತರುವಂತೆ ಹೇಳಿದ. +ಆತ ಆ ಕೆಲಸಕ್ಕೆ ಓಡುತ್ತಲೇ ಒಳಬಂದ ಅವನು ಕರವಸ್ತ್ರವನ್ನು ಇನ್ನೂ ನೆನಸಿ ನಾಗೇಶನ ಒಡೆದ ತುಟಿಯ ಮೇಲೆ ಒತ್ತಿ ಹಿಡಿದು ಬಹು ಕಾಳಜಿಯ ದನಿಯಲ್ಲಿ ಕೇಳಿದ –“ಬಹಳ ನೋಯುತ್ತಿದೆಯೇ?”ಅದಕ್ಕೆ ನಾಗೇಶ ಯಾವ ಉತ್ತರವನ್ನೂ ಕೊಡಲಿಲ್ಲ. +ಮತ್ತೆ ತೇಜಾನೇ ಮಾತಾಡಿದ“ಇದನ್ನು ಹೀಗೆ ಗಟ್ಟಿಯಾಗಿ ಒತ್ತಿ ಹಿಡಿ, ರಕ್ತ ಬರುವುದು ನಿಲ್ಲುತ್ತದೆ. +ಈಗ ಡಾಕ್ಟರ್ ಬರುತ್ತಾರೆ.”ನಾಗೇಶ ಯಾಂತ್ರಿಕವಾಗಿ ಅವನು ಹೇಳಿದಂತೆ ಮಾಡಿದ. +ಎದುರಿನ ಕುರ್ಚಿಯಲ್ಲಿ ಇನ್ನೂ ಗಡ್ಡಮೀಸೆ ಬರದ ಯುವಕನನ್ನು ನೋಡುತ್ತಾ ಕುಳಿತ ತೇಜಾ, ಯಾವ ಮಾತೂ ಆಡಲು ಹೋಗಲಿಲ್ಲ. +ಅಪಾಯಕಾರಿ ಕೆಲಸಗಳಿಗೆ ಹೋಗುವ ಕ್ರಾಂತಿಕಾರಿಯರು ತುಟಿಯ ಕೆಳಗೆ ಯಾವುದೋ ವಿಷದ ಗುಳಿಗೆಯನ್ನು ಇಟ್ಟುಕೊಂಡಿರುತ್ತಾರೆಂಬ ಮಾತು ಕೇಳಿದ್ದ ನಾಗೇಶ. +ಪೊಲೀಸಿನವರಿಗೆ ಬಂದಿಯಾಗುತ್ತಿದ್ದೇವೆ ಬಿಡಿಸಿಕೊಳ್ಳುವ ಯಾವ ಉಪಾಯವೂ ಇಲ್ಲ ಎಂದು ತಿಳಿದಾಕ್ಷಣ ಅದನ್ನು ಕಚ್ಚಿ ನುಂಗಿಬಿಡುತ್ತಾರಂತೆ. +ಅದನ್ನು ಅಗಿದಾಕ್ಷಣ ನಾವು ಪೋಲಿಸಿನವರ ಹಿಂಸೆಗೆ ಗುರಿಯಾಗುವ ಪ್ರಶ್ನೆಯೇ ಇಲ್ಲ. +ಅಂತಹದನ್ನು ತಾನೂ ಜತೆಗಿಟ್ಟುಕೊಳ್ಳಬೇಕಾಗಿತ್ತು ಎಂದುಕೊಂಡ. +ಅದು ಸೈನೈಡ್‌ಕ್ಯಾಪ್ಸುಲ್ ಎಂಬುವುದು ಅವನಿಗೆ ಗೊತ್ತಿರಲಿಲ್ಲ. +ಈಗ ಅಕ್ಕನಿಗೆ ಏನೆಂದು ಮುಖ ತೋರಿಸಲಿ ಎಂಬ ಯೋಚನೆ ಬಂದಾಗ ಪೋಲಿಸಿನವರ ಹೊಡೆತಕ್ಕಿಂತ ಹೆಚ್ಚು ಹಿಂಸೆಯಾಗುತ್ತಿತ್ತು. +ಅವಮಾನ ಅವನನ್ನು ಒಂದು ತರದಲ್ಲಿ ಮೂಕನನ್ನಾಗಿ ಮಾಡಿಬಿಟ್ಟಂತಿತ್ತು. +ಬಂಡೇರಹಳ್ಳಿಯಲ್ಲಿ ಒಂದು ಚಿಕ್ಕ ಸರಕಾರಿ ದವಾಖಾನೆ ಇದೆ. +ಅಲ್ಲಿ ಒಬ್ಬ ಡಾಕ್ಟರ್ ಒಬ್ಬ ಫಾರ್‌ಮಾಸಿಸ್ಟ್ ಮತ್ತೊಬ್ಬ ಗಾಯಗಳಿಗೆ ಪಟ್ಟಿ ಕಟ್ಟುವ ಡ್ರೆಸರ್‌ ಇದ್ದಾನೆ. +ಆದರೆ ಯಾರೂ ಎಂದೂ ಸರಿಯಾದ ಸಮಯಕ್ಕೆ ಬರುವುದಿಲ್ಲ. +ರಾಮನಗರದಿಂದ ಬರಬೇಕಾದ ಡಾಕ್ಟರ್ ತಿಂಗಳಲ್ಲಿ ಎಷ್ಟೋ ದಿನಗಳು ಬರುವುದಿಲ್ಲ. +ಆದರೂ ಸಂಬಳ ಸರಿಯಾಗಿ ತೆಗೆದುಕೊಳ್ಳುತ್ತಾನೆ. +ಫಾರ್‌ಮಾಸಿಸ್ಟ್ ಅಥವಾ ಕಾಂಪೌಂಡರ್ ಏನೇ ಅನ್ನಿ ಅವನದೇ ಎಲ್ಲಾ ಪಾರಪತ್ಯ. +ಮನೆಯಲ್ಲಿ ರೋಗಿಗಳನ್ನು ನೋಡಿ ಔಷಧಿ ಕೊಡುತ್ತಾನೆ, ಇಂಜೆಕ್ಷನ್ ಮಾಡುತ್ತಾನೆ. +ಅದಕ್ಕೆ ಹಣ ಕೊಡಬೇಕು. +ಗಾಯಗಳಿಗೆ ಬ್ಯಾಂಡೇಜ್ ಕಟ್ಟಿಸಿಕೊಳ್ಳಲು ಅವನ ಮನೆಗೆ ಹೋಗಬೇಕು. +ಎಷ್ಟೋ ಸಲ ಗಾಯಮಾಯಲು ಮುಲಾಮನ್ನು ಹಚ್ಚುವುದಲ್ಲದೇ ಎಂತಹ ಔಷಧಿಯನ್ನು ತೆಗೆದುಕೊಳ್ಳಬೇಕೆಂದು ಕೂಡ ಅವನೇ ಬರೆದು ಕೊಡುತ್ತಾನೆ. +ಅದಕ್ಕೆಲ್ಲಾ ಅವನಿಗೂ ಹಣ ಕೊಡಬೇಕು. +ಡಾಕ್ಟರರು ರಾಮನಗರದಿಂದ ಬಂದ ದಿನ ಮಾತ್ರ ಆಸ್ಪತ್ರೆ ತೆಗೆದುಕೊಳ್ಳುತ್ತದೆ. +ಈ ವಿಷಯವೆಲ್ಲಾ ತೇಜಾನಿಗೆ ಮೊದಲೇ ತಿಳಿದಿತ್ತು. +ಇದರ ಬಗ್ಗೆಯೂ ಅವನು ಸ್ಕ್ವಾಡ್ ಮುಖ್ಯಸ್ಥರೊಡನೆ ಮಾತಾಡಿದ್ದ. +ಸರಕಾರಿ ಕೆಲಸ ಅದು ಯಾವಾಗ ಆಗುತ್ತದೆಯೋ ಹೇಳುವ ಹಾಗಿಲ್ಲ. +ಸ್ಕ್ವಾಡಿನ ಮುಖ್ಯಸ್ಥರ ಮಾತು ಸಿ.ಎಂ.ಸಾಹೇಬರು ಕೇಳುತ್ತಾರೋ ಇಲ್ಲವೋ ಎನ್ನುವುದು ಕೂಡ ಅನುಮಾನ. +ಗುಂಡು ತಾತಾ ಇನ್ಸ್‌ಪೆಕ್ಟರ್‌ರ ಹೆದರಿಕೆ ತೋರಿಸಿ ಆ ಇಬ್ಬರನ್ನೂ ಕರೆತಂದಿದ್ದ. +ಡ್ರೆಸರ್ ಮತ್ತು ಕಾಂಪೌಂಡರ್ ಏನು ಮಾಡಬೇಕೆಂಬುವುದು ತಿಳಿದು ತಮ್ಮ ತಮ್ಮ ಉಪಕರಣಗಳೊಡನೆ ಬಂದಿದ್ದರು. +ನಾಗೇಶನ ತುಟಿಯಿಂದ ರಕ್ತ ಹರಿಯುವುದು ಕಡಿಮೆಯಾಗಿತ್ತು. +ತುಟಿಯನ್ನು ಸ್ವಚ್ಛಗೊಳಿಸಿದ ಡ್ರೆಸರ್ ಅದಕ್ಕೆ ಚಿಕ್ಕ ಪ್ಲಾಸ್ಟರನ್ನು ಅಂಟಿಸಿ ಸ್ವಲ್ಪ ಹೊತ್ತು ಪರೀಕ್ಷಿಸಿ ನೋಡಿದ. +ರಕ್ತ ಬರುವುದು ಪೂರ್ತಿ ನಿಂತಿತ್ತು. +ಮುಖದ ಮೇಲೆ ಬಿದ್ದ ಗುದ್ದುಗಳ ಕಾರಣ ಅದು ಊದಿಕೊಂಡಿತ್ತು. +ಅದನ್ನು ಸ್ವಚ್ಛಪಡಿಸಿ ಅವನನ್ನು ಎದ್ದು ನಿಲ್ಲುವಂತೆ ಹೇಳಿದ. +ಯಾಂತ್ರಿಕವಾಗಿ ಯಾವ ಮಾತೂ ಆಡದೇ ಇದೆಲ್ಲಾ ಉಪಚಾರವನ್ನು ಮಾಡಿಸಿಕೊಳ್ಳುತ್ತಿದ್ದ ನಾಗೇಶ. +ಅವನಿಗೆ ಬಿದ್ದ ಬೇರೆ ಗಾಯಗಳು ಎದ್ದು ಕಾಣುವ ಹಾಗಿರಲಿಲ್ಲ. +ಅವೆಲ್ಲಾ ಗುಪ್ತಗಾಯಗಳು. +ತನ್ನ ಕೆಲಸ ಮುಗಿಸಿ ಡ್ರೆಸರ್ ಬದಿಗೆ ಸರಿಯುತ್ತಿದ್ದಂತೆ ಡಿಸ್‌ಪೋಸ್‌ಬಲ್ ಸಿರೆಂಜ್ ಜತೆಗೆ ತಂದಿದ್ದ ಕಾಂಪೌಂಡರ್‌ ಅವನಿಗೊಂದು ಆಂಟಿಟಿಟಾನಸ್ ಇಂಜೆಕ್ಷನ್ ಚುಚ್ಚಿದ್ದ. +ನೋವು ಕಡಿಮೆಯಾಗಲು ಬಾವು ಇಳಿಯಲು ನಾಗೇಶನಿಗೆ ಕೆಲ ಗುಳಿಗೆಗಳನ್ನು ಕೊಟ್ಟ. +ಎರಡನ್ನು ಆಗಲೇ ನಾಗೇಶನಿಂದ ನುಂಗಿಸಿದ ತೇಜಾ, ತಮ್ಮ ಕೆಲಸ ಮುಗಿದ ಮೇಲೆ ಬಹು ವಿನಯದ ದನಿಯಲ್ಲಿ ಕೇಳಿದ ಕಂಪೌಂಡರ್. +“ನಾವಿನ್ನು ಹೋಗಬಹುದೇ ಸರ್!” +“ನಾಳೇ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರಬೇಕು. +ಡಾಕ್ಟರ್ ಬರದಿದ್ದರೂ ತೆಗೆಯಬೇಕು. +ಏನೂ ಅರಿಯದ ಬಡಬಗ್ಗರಿಗೆ ಸರಕಾರಿ ಔಷಧಿಗಳನ್ನು ಕೊಟ್ಟು ಹಣ ಸುಲಿಯುತ್ತಿದ್ದೀರೆಂದು ಕೇಳಿದ್ದೇನೆ. +ಅದು ನಿಲ್ಲಬೇಕು. +ಇಲ್ಲದಿದ್ದರೆ ನೀವು ಕೆಲಸ ಕಳೆದುಕೊಂಡು ನಿಮ್ಮ ಹೆಂಡತಿ ಮಕ್ಕಳು ಉಪವಾಸ ಸಾಯುವ ಗತಿ ಬರಬಹುದು. +ನಾನೀ ವಿಷಯ ಕಲೆಕ್ಟರ್‌ರೊಡನೆ ಮಾತಾಡುತ್ತೇನೆ” ಕಟುವಾಗಿ ಆಜ್ಞಾಪಿಸುವಂತಹ ದನಿಯಲ್ಲಿ ಹೇಳಿದ ತೇಜಾ. +ತಲೆ ಕೆಳಹಾಕಿಕೊಂಡು ಆ ವೈದ್ಯಕೀಯ ಸಿಬ್ಬಂದಿಯ ಇಬ್ಬರೂ ಅದಕ್ಕೆ ಏನೂ ಹೇಳಲಿಲ್ಲ. +“ಮಾತಾಡಿ… ಮಾತಾಡಲು ಬರುವುದಿಲ್ಲವೆ?” ಗಡುಸಾದ ದನಿಯಲ್ಲಿ ಬಂತು ತೇಜಾನ ಪ್ರಶ್ನೆ. +“ನಾಳೆ ಸರಿಯಾದ ಸಮಯಕ್ಕೆ ಆಸ್ಪತ್ರೆ ತೆಗೆಯುತ್ತೇವೆ ಸರ್” ತಲೆ ಕೆಳಹಾಕಿಕೊಂಡೇ ಮೆಲ್ಲನೆ ದನಿಯಲ್ಲಿ ಹೇಳಿದ ಕಂಪೌಂಡರ್. +“ಯಾರ ಬಳಿಯಿಂದಲೂ ಹಣ ತೆಗೆದುಕೊಳ್ಳುವುದಿಲ್ಲ ಸರ್” ಹೇಳಿದ ಡ್ರೆಸರ್. +“ಹೋಗಿ… ಹೋಗಿ… ನಿಯತ್ತಿನಿಂದ ಕೆಲಸ ಮಾಡಿ” ಎಂದ ತೇಜಾ ಬೇಸರದ ದನಿಯಲ್ಲಿ. +ಅದೇ ಮಾತಿಗಾಗಿ ಕಾದಿದ್ದಂತೆ ಅವರಿಬ್ಬರೂ ಅಲ್ಲಿಂದ ಹೋದರು. +ಇನ್ನಲ್ಲಿ ತನ್ನ ಅವಶ್ಯಕತೆ ಇಲ್ಲವೆಂದುಕೊಂಡ ಗುಂಡು ತಾತಾ ಕೂಡ ಹೋಗುತ್ತಿದ್ದಂತೆ ಕೋಣೆಯ ಬಾಗಿಲು ಹಾಕಿ ತನ್ನ ಕುರ್ಚಿಯಲ್ಲಿ ಬಂದು ಕುಳಿತ ತೇಜಾ, ಅವನ ನೋಟ ನಾಗೇಶನನ್ನೇ ಗಮನಿಸುತ್ತಿತ್ತು. +ಈ ಇನ್ಸ್‌ಪೆಕ್ಟರನ ವರ್ತನೆ ವಿಚಿತ್ರವಾಗಿ ತೋರಿತು ನಾಗೇಶನಿಗೆ. +ಆ ವೈದ್ಯಕೀಯ ಸಿಬ್ಬಂದಿಯವರೊಡನೆ ಆಡಿದ ಮಾತುಗಳು ಕೂಡ ಅವನ ಮೇಲೆ ಬಹಳ ಪ್ರಭಾವ ಬೀರಿದ್ದವು. +ಒಬ್ಬ ಕ್ರಾಂತಿಕಾರಿಯೊಡನೆ ಪೋಲಿಸ್ ಇನ್ಸ್‌ಪೆಕ್ಟರ್ ಹೀಗೆ ವರ್ತಿಸಬಹುದೆಂದು ಅವನು ಕನಸುಮನಸಿನಲ್ಲಿಯೂ ಊಹಿಸಿರಲಿಲ್ಲ. +ಯಾಕೊ ಅವನಿಗೆ ಇಂತಹ ವ್ಯಕ್ತಿ ಕೊಲ್ಲಬಾರದೆನಿಸಿತು. +ಸ್ವಲ್ಪ ಹೊತ್ತು ಅವನ ಮುಖದಲ್ಲಿನ ಭಾವೊದ್ವೇಗವನ್ನು ಗಮನಿಸಿದ ತೇಜಾ ಪೇದೆಯನ್ನು ಕರೆದು ಎರಡು ಕಾಫಿ ಕಳುಹಿಸುವಂತೆ ಹೇಳಿದ. +ಅವನು ಆಜ್ಞೆ ಪಾಲಿಸಲು ಹೋದನಂತರ ತನ್ನ ಸ್ಥಾನದಿಂದ ಎದ್ದ ತೇಜಾ ನಾಗೇಶನ ಹಿಂದೆ ಬಂದು ಅವನ ತಲೆ ಕೂದಲನ್ನು ಆತ್ಮೀಯವಾಗಿ ಸವರುತ್ತಾ ಹೇಳಿದ. +“ಕಲ್ಲಕ್ಕನಾಗಲಿ, ನೀನಾಗಲಿ ನನ್ನ ಶತ್ರುಗಳಲ್ಲ. +ಅದನ್ನು ಚೆನ್ನಾಗಿ ನೆನಪಿಡು” ತೇಜಾನ ವರ್ತನೆ ಮತ್ತು ಮಾತು ನಾಗೇಶನ ಮನವನ್ನು ಕದಡಿತು. +ಆವರೆಗೂ ಯಾರೂ ಅವನೊಡನೆ ಹಾಗೆ ವರ್ತಿಸಿರಲಿಲ್ಲ. +ಅಷ್ಟು ಆತ್ಮೀಯವಾಗಿ ಮಾತಾಡಿರಲಿಲ್ಲ. +ಅವನ ಹಿಂದೆ ನಿಂತೇ ಮತ್ತೆ ಮಾತಾಡಿದ ತೇಜಾ. +“ಕಲ್ಲಕ್ಕನಷ್ಟೆ, ನಿಮ್ಮಷ್ಟೆ ಬಡಬಗ್ಗರ ಯೋಚನೆ ನನಗಿದೆ. +ನನ್ನ ಶತ್ರುಗಳು ಕಾಡಿನಲ್ಲಿಲ್ಲ. +ಇಲ್ಲೇ ನನ್ನ ಸುತ್ತಮುತ್ತಲೇ ಇದ್ದಾರೆ. +ನಿನ್ನ ಅನ್ಯಾಯವಾಗಿ ಹೊಡೆದರಲ್ಲ ಅವರು ನನ್ನ ಶತ್ರುಗಳು, ನಿನಗೆ ಔಷಧೋಪಚಾರ ಮಾಡಿ ಹೋದರಲ್ಲ ಅವರು ನನ್ನ ಶತ್ರುಗಳು”ನಾಗೇಶನಿಗೆ ಆಶ್ಚರ್ಯವಾಯಿತು. +ಅವನ ಮಾತು ಕೇಳಿ, ಅದಕ್ಕೆ ಏನಾದರೂ ಹೇಳಬೇಕೆನಿಸಿತು. +ಏನು ಹೇಳಬೇಕೆಂಬುವುದು ತೋಚಲಿಲ್ಲ. +ತೇಜಾನೇ ತನ್ನ ನಿಂತ ಮಾತನ್ನು ಮುಂದುವರಿಸುವಂತೆ ಮಾತಾಡಿದ. +“ನಾನು ನಿನ್ನ ಕಲ್ಲಕ್ಕನ ಅಭಿಮಾನಿ ಅದನ್ನವರಿಗೆ ಹೇಳು.”ಈ ಮಾತಂತೂ ನಾಗೇಶನಲ್ಲಿ ದಿಗ್ಭ್ರಾಂತಿ ಹುಟ್ಟಿಸಿತು. +ಇವರು ತನ್ನ ಬಿಟ್ಟು ಬಿಡಬಹುದೇ, ಬಂದಿಯಾದ ಕ್ರಾಂತಿಕಾರಿಯನ್ನು ಪೋಲೀಸಿನವರು ಬಿಟ್ಟುಬಿಡಬಹುದೇ! +ಸಾಧ್ಯವಿಲ್ಲ ಅವರು ಕ್ರಾಂತಿಕಾರಿಯರನ್ನು ಮತ್ತೆ ಕಾಡಿನಲ್ಲಿ ಕರೆದೊಯ್ದು ಎನ್‌ಕೌಂಟರಿನ ಹೆಸರಿನಲ್ಲಿ ಮುಗಿಸಿಬಿಡುತ್ತಾರೆಂದವನು ಕೇಳಿದ್ದ. +‘ನನ್ನ ಬಿಟ್ಟುಬಿಡುತ್ತಿರಾ?’ ಎಂದು ಕೇಳಬೇಕೆಂಬ ಮನಸ್ಸಾಯಿತು. +ಆದರೆ ಆ ಮಾತುಗಳು ಬಾಯಿಗೆ ಬರಲಿಲ್ಲ. +ಪೇದೆ ಬಂದು ಎರಡು ಕಾಫಿಯ ಲೋಟಗಳನ್ನಿಟ್ಟು ಹೋದ. +ನಾಗೇಶನ ಹಿಂದೆಯೇ ಗಂಭೀರ ಮುಖ ಮಾಡಿ ಅತ್ತಿಂದಿತ್ತ, ಇತ್ತಿಂದತ್ತ ನಡೆಯುತ್ತ ತೇಜಾ ಕಾಫಿಯ ಲೋಟವನ್ನು ಎತ್ತಿಕೊಂಡು ಹೇಳಿದ. +“ಪೋಲೀಸ್ ಸ್ಟೇಷನ್ನಿನಲ್ಲಿ ಹೊಡೆಸಿಕೊಂಡೆ ಎಂಬ ಅವಮಾನದ ಭಾವವೇನಾದರೂ ಇದ್ದರೆ ಅದನ್ನು ತೆಗೆದುಹಾಕು. +ಜೀವನದಲ್ಲಿ, ಅದೂ ನಿನ್ನಂತಹ ವಯಸ್ಸಿನಲ್ಲಿ ಇಂತಹವೆಲ್ಲಾ ನಡೆಯುತ್ತಿರುತ್ತವೆ. +ಅದು ಮಾಮೂಲು… ಕಾಫಿ ಕುಡಿ.”ತೇಜಾನ ಮಾತಿಗೆ ಮಾರು ಹೋದವನಂತೆ ಲೋಟವನ್ನು ಎತ್ತಿಕೊಂಡು ಕಾಫಿ ಕುಡಿಯತೊಡಗಿದ. +ಹಿಂದೆ ಮೆಲ್ಲನೆ ಹೆಜ್ಜೆ ಹಾಕುತ್ತಿದ್ದ ತೇಜಾ ಅವನನ್ನ ಗಮನಿಸುತ್ತಿದ್ದ ಅವನ ಹೊಟ್ಟೆಯಲ್ಲಿ ಎರಡು ಗುಟುಕು ಬಿಸಿ ಕಾಫಿ ಇಳಿದ ಮೇಲೆ ತಾನು ಮೊದಲು ಮಾತಾಡುತ್ತಿದ್ದಂತಹ ದನಿಯಲ್ಲಿಯೇ ಕೇಳಿದ. +“ಒಂದು ಮಾತು ಕೇಳುತ್ತೇನೆ ನಿಜ ಹೇಳಬೇಕು! +ನಿನ್ನ ಕಲ್ಲಕ್ಕನ ಆಣೆಯಾಗಿ ನಿಜ ಹೇಳಬೇಕು ನಿನ್ನ ಬಿಟ್ಟುಬಿಡುತ್ತೇನೆ ಹೇಳುತ್ತಿಯಾ?”ಅವನಿಗರಿವಿಲ್ಲದಂತೆ ಹೇಳುತ್ತೇನೆಂಬಂತೆ ತಲೆ ಹಾಕಿದ ನಾಗೇಶ, ತನ್ನ ಬರಿದಾದ ಲೋಟವನ್ನು ಟೇಬಲ್ಲಿನ ಮೇಲಿಡುತ್ತಾ ತನ್ನ ಸ್ಥಾನದಲ್ಲಿ ಬಂದು ಕುಳಿತು ಕೇಳಿದ ತೇಜಾ. +“ಹೇಳು ಈ ಪಿಸ್ತೂಲ್ ತೆಗೆದುಕೊಂಡು ಯಾಕಿಲ್ಲಿ ಬಂದಿದ್ದಿ?”ಮೊದಲ ಸಲ ತಲೆ ಮೇಲೆತ್ತಿ ಅವನನ್ನು ನೋಡುತ್ತಾ ಯಾವ ಅಳಕೂ ಇಲ್ಲದೇ ಹೇಳಿದ ನಾಗೇಶ. +“ನಿಮ್ಮ ಕೊಲೆ ಮಾಡಲು”ಅವನು ಆಗಿನಿಂದ ತೇಜಾನೊಡನೆ ಆಡಿದ ಮೊದಲ ಮಾತದು. +ಮಾತು ಮುಗಿಸಿದ ಅವನು ಆಗುವುದಾಗಲಿ ಎಂಬಂತೆ ತೇಜಾನನ್ನೇ ನೋಡುತ್ತಿದ್ದ. +ಟೇಬಲಿನ ಡ್ರಾ ಎಳೆದು ಅವನು ತಂದ ಆಯುಧವನ್ನು ಟೇಬಲಿನ ಮೇಲಿಟ್ಟು, ತಾನು ತನ್ನ ಬೆಲ್ಟಿಗಿದ್ದ ಚಿಕ್ಕ ರಿವಾಲ್ವರನ್ನು ತೆಗೆದು ಅದನ್ನು ಅವನ ಆಯುಧದ ಬದಿಯಲ್ಲೇ ಇಟ್ಟು ಈಗ ಆಜ್ಞಾಪಿಸುವಂತಹ ದನಿಯಲ್ಲಿ ಹೇಳಿದ ತೇಜಾ. +“ತಗೋ ಒಂದು ರಿವಾಲ್ವರ್!ಮುಗಿಸಿಬಿಡು ನನ್ನ”ನಾಗೇಶನ ಮುಖಭಾವ ದಿಗ್ಭ್ರಾಂತಿಯ ಪರಮಾವಧಿಗೆ ಮುಟ್ಟಿದ್ದನ್ನು ಸ್ಪಷ್ಟಪಡಿಸುತ್ತಿತ್ತು. +ಏನು ಮಾಡಬೇಕೊ ತೋಚದವನಂತೆ ಅವನ ನೋಟ ತೇಜಾನಿಂದ ಆಯುಧಗಳ ಕಡೆ ಆಯುಧಗಳಿಂದ ತೇಜಾನ ಕಡೆ ಎರಡು ಸಲ ಹರಿದಾಡಿತು. +ಬಾಯಿಗೆ ಮಾತು ಬರಲಿಲ್ಲ. +ಅವನಿಗೆ ಅಭಯ ನೀಡುವಂತಹ ದನಿಯಲ್ಲಿ ಮತ್ತೆ ಹೇಳಿದ ತೇಜಾ. +“ಇಲ್ಲ ಗುಂಡು ಹಾರಿಸಿದರೆ ಪೋಲೀಸಿನವರು ಹಿಡಿದುಬಿಟ್ಟಾರೆಂಬ ಭಯಬಿಟ್ಟುಬಿಡು. +ನಡಿ ಇಬ್ಬರೂ ಕಾಡಿಗೆ ಹೋಗುವ ಅಲ್ಲಿ ನನ್ನ ಕೊಲೆ ಮಾಡಿ ಆರಾಮವಾಗಿ ನಿನ್ನ ಕಲ್ಲಕ್ಕನ ಹತ್ತಿರ ಹೊರಟು ಹೋಗು… ನಾ ಹುಡುಗಾಟವಾಡುತ್ತಿಲ್ಲ. +ನಾನು ಯಾವ ಆಯುಧವನ್ನು ಮುಟ್ಟುವುದಿಲ್ಲ. +ನಿನ್ನ ಪಿಸ್ತೂಲನ್ನು ತೊಗೋ ನಡಿ ಹೋಗುವ.” +ಭಾವನಾತ್ಮಕ ದನಿಯಲ್ಲಿ ಮಾತು ಮುಗಿಸದ ತೇಜಾ ಕುರ್ಚಿಯಿಂದ ಏಳುತ್ತಿದ್ದಾಗ ನಾಗೇಶನಿಗೆ ಇನ್ನು ತನ್ನ ಭಾವಾವೇಶವನ್ನು ತಡೆಯಲಾಗಲಿಲ್ಲ. +ಅವನ ಕಣ್ಣಲ್ಲಿ ನೀರು ತುಂಬಿಬಂದವು. +ಒಮ್ಮೆಲೆ ತಲೆ ಕೆಳಹಾಕಿಕೊಂಡು ಹೇಳಿದ“ನನ್ನಿಂದ ತಪ್ಪಾಯಿತು ಸರ್! +ನೀವು ಇಂತಹವರೆಂದು ನನಗೆ ಗೊತ್ತಿರಲಿಲ್ಲ” ಆ ಮಾತನ್ನು ಕೇಳಿಸಿಕೊಳ್ಳದವನಂತೆ ಹೇಳಿದ ತೇಜಾ. +“ನೀನು ಕಲ್ಲಕ್ಕನ ಆಜ್ಞೆಯನ್ನು ಪಾಲಿಸಲೇಬೇಕು… ಇಲ್ಲದಿದ್ದರೆ ಅವರೇನೆಂದುಕೊಳ್ಳುತ್ತಾರೆ… ಹೋಗುವ ನಡಿ” +“ಇದು ಕಲ್ಲಕ್ಕನ ಆಜ್ಞೆ ಅಲ್ಲ! +ನೀವು ಕಲ್ಲಕ್ಕನ ಶತ್ರುವೆಂದುಕೊಂಡು ನಾನೇ ನಿಮ್ಮನ್ನು ಮುಗಿಸಲು ಬಂದಿದ್ದೆ” ಅವನ ಮಾತು ಮುಗಿಯುತ್ತಲೇ ವಿವರಣೆ ನೀಡಿದ ನಾಗೇಶ. +“ಅಂದರೆ ನೀನೀಗ ನನ್ನ ಕೊಲೆ ಮಾಡುವ ಇರಾದೆಯನ್ನು ಬದಲಿಸಿದಿಯಾ? +ನನ್ನ ಕೊಲೆ ಮಾಡುವುದಿಲ್ಲವೇ?” ಪ್ರತಿ ಶಬ್ದವನ್ನು ಎತ್ತಿ ಕೇಳಿದ ತೇಜಾ. +“ಇಲ್ಲ ಸರ್!ನೀವು ಬಹಳ ಒಳ್ಳೆಯವರು. +ಇನ್ನೊಮ್ಮೆ ಅಂತಹ ಯೋಚನೆಯೂ ನನ್ನ ತಲೆಯಲ್ಲಿ ಸುಳಿಯುವುದಿಲ್ಲ” +“ನಡಿ ಇನ್ನು ಹೋಗು! +ಕಲ್ಲಕ್ಕ ನಿನಗಾಗಿ ಕಾಯುತ್ತಿರಬಹುದು. +ಒಂದು ಮಾತು ತಪ್ಪದೇ ಅವರಿಗೆ ಹೇಳು, ನಾನವರ ಅಭಿಮಾನಿ. +ಅವರನ್ನು ಒಂದು ಸಲ ನೋಡುವ ಆಸೆ ಇದೆ ಎಂದು ಹೇಳು” ನಾಗೇಶನ ಮಾತು ಮುಗಿಯುತ್ತಲೇ ಎದ್ದು ನಿಂತು ಹೇಳಿದ ತೇಜಾ. +“ಅಂದರೆ ನಾನಿನ್ನು ಹೋಗಬಹುದೇ?” ಅಪನಂಬಿಕೆಯ ದನಿಯಲ್ಲಿ ಕೇಳಿದ ನಾಗೇಶ. +“ಅನುಮಾನವ್ಯಾಕೆ!ಇನ್ನೊಂದು ಮಾತು ಚೆನ್ನಾಗಿ ನೆನಪಿಡು, ಉತೇಜ್ ಎಂದೂ ಸುಳ್ಳಾಡುವುದಿಲ್ಲ. +ಮೋಸ ಮಾಡುವುದಿಲ್ಲ. +ನೀನಿನ್ನು ಹೋಗು”ಅನುಮಾನಪಡುತ್ತಲೇ ಎದ್ದ ನಾಗೇಶ ಬಾಗಿಲ ಕಡೆ ಹೆಜ್ಜೆ ಹಾಕತೊಡಗಿದಾಗ ಅವನು ಮರೆತದ್ದನ್ನು ಜ್ಞಾಪಿಸುವಂತೆ ಹೇಳಿದ ತೇಜಾ. +“ನಿನ್ನ ಆಯುಧ ಇಲ್ಲೇ ಬಿಟ್ಟು ಹೋಗುತ್ತಿರುವೆ.ತಗೊ! +ದಾರಿಯಲ್ಲಿ ಯಾರ ಕೊಲೆಯನ್ನೂ ಮಾಡಬೇಡ ಅಷ್ಟೆ.”ಹಿಂತಿರುಗಿದ ನಾಗೇಶನ ಮುಖದಲ್ಲಿ ಮತ್ತೆ ಅಪನಂಬಿಕೆಯ ಭಾವ ತುಂಬಿತ್ತು. +ಅವನ ಕೈಗೆ ಅವನ ಪಿಸ್ತೂಲನ್ನು ಕೊಟ್ಟ ತೇಜ. +ಯಾಂತ್ರಿಕವಾಗಿ ಅದನ್ನು ತನ್ನ ಸೊಂಟದಲ್ಲಿ ಸಿಕ್ಕಿಸಿಕೊಂಡ ನಾಗೇಶ. +ಅವನನ್ನು ಪೋಲೀಸ್ ಸ್ಟೇಷನ್ನಿನ ಮುಂಬಾಗಿಲವರೆಗೆ ಬಿಡಲು ಬಂದ ತೇಜಾ, ಬಾಗಿಲ ಹೊರಗಡಿ ಇಡುವಾಗ ಹಿಂತಿರುಗಿ ಕೃತಜ್ಞತಾ ಭಾವ ತುಂಬಿದ ದನಿಯಲ್ಲಿ ಹೇಳಿದ ನಾಗೇಶ. +“ನಿಮ್ಮ ಉಪಕಾರವನ್ನು ಎಂದೂ ಮರೆಯುವುದಿಲ್ಲ ಸರ್!”ಅದಕ್ಕೇನೂ ಹೇಳಲಿಲ್ಲ ತೇಜಾ, ನಾಗೇಶ ಕಾಡಿನ ಕಡೆ ನಡೆಯತೊಡಗಿದ್ದ. +ಅವನನ್ನೇ ಸ್ವಲ್ಪ ಹೊತ್ತು ನೋಡಿ ತನ್ನ ಕೋಣೆಯಲ್ಲಿ ಬಂದು ಕುಳಿತ. +ತೇಜಾನಿಗೆ ಕಲ್ಯಾಣಿಯ ಮೇಲೆ ಎಲ್ಲಿಲ್ಲದ ಸಿಟ್ಟು ಉಕ್ಕಿಬಂದಿತ್ತು. +ಏನೂ ಅರಿಯದ ಮುಗ್ಧ ಯುವಕರನ್ನು ತನ್ನ ಕ್ರಾಂತಿಕಾರಿ ದಳದಲ್ಲಿ ಸೇರಿಸಿಕೊಂಡು ಅವರಿಗೆ ಹಿಂಸೆಯ ಭಯಾನಕ ಮಾರ್ಗ ತೋರಿಸುತ್ತಿದ್ದಾಳೆ. +ಈ ಮುಗ್ಧ ಯುವಕರು ತಾವೇನು ಮಾಡುತ್ತಿದ್ದೇವೆಂದು ಅರಿಯುವ ಮುನ್ನ ಪೋಲೀಸರ ಗುಂಡಿಗೆ ಬಲಿಯಾಗುವುದು ಖಚಿತ. +ಇದನ್ನು ಇನ್ನು ಬೆಳೆಯಗೊಡಬಾರದು ಅವಳನ್ನು ಅವಳ ತಂಡದ ಸದಸ್ಯರನ್ನು ಬಂಧಿಸಿ ಜೈಲಿನಲ್ಲಿ ಹಾಕುವುದು ಕೂಡ ನಿಷ್ಪ್ರಯೋಜಕ. +ಅವರನ್ನು ಮುಗಿಸಿಯೇ ಬಿಡಬೇಕು. +ತನ್ನ ಯೋಜನೆ ಸಫಲವಾದಲ್ಲಿ ಅದು ಕಷ್ಟದ ಕೆಲಸವಲ್ಲ. +ಆ ಯೋಜನೆ ವಿವಿಧ ತಿರುವುಗಳನ್ನು ತೆಗೆದುಕೊಳ್ಳುತ್ತಾ ಹೋದಂತೆ ಆದಷ್ಟು ಬೇಗ ತನ್ನ ಇಲ್ಲಿನ ಕೆಲಸ ಮುಗಿಸಬೇಕೆಂಬ ನಿರ್ಣಯಕ್ಕೆ ಬಂದ. +ಗುಂಡು ತಾತಾ ಟಿಫನ್ ಕ್ಯಾರಿಯರನ್ನು ಹಿಡಿದುಬಂದಾಗ ತಾನಂದು ಇನ್ನೂ ಊಟವೇ ಮಾಡಿಲ್ಲವೆಂಬುದು ನೆನಪಾಯಿತು ತೇಜಾನಿಗೆ. +“ನೀವ್ಯಾಕೆ ತಂದಿರಿ ಯಾರೊಡನಾದರೂ ಕಳುಹಿಸಬಹುದಾಗಿತ್ತಲ್ಲ” ಕುರ್ಚಿಯಿಂದ ಏಳುತ್ತಾ ಹೇಳಿದ ಉತೇಜ. +“ನಿನ್ನೊಡನೆ ಸ್ವಲ್ಪ ಮಾತಾಡುವುದೂ ಇತ್ತು ಅದಕ್ಕೆ ಈ ನೆಪ ಮಾಡಿಕೊಂಡು ಬಂದೆ” ಗಂಭೀರ ದನಿಯಲ್ಲಿ ಹೇಳಿದ ಆತ ಟೇಬಲ್ಲಿನ ಮೇಲೆ ಕ್ಯಾರಿಯರನ್ನು ಇಟ್ಟು, ಹೆಗಲಿಗೆ ಹಾಕಿಕೊಂಡ ಚೀಲದಿಂದ ಸ್ಟೀಲಿನ ತಟ್ಟೆಯನ್ನು ತೆಗೆದ. +ಪೇದೆಯನ್ನು ಕರೆದ ತೇಜಾ ತಟ್ಟೆಯನ್ನು ತೊಳೆದು ನೀರು ತಂದಿಡುವಂತೆ ಹೇಳಿದ. +ಅವನು ತಟ್ಟೆಯನ್ನು ತೆಗೆದುಕೊಂಡು ಹೋದಮೇಲೆ ಇನ್ನೂ ನಿಂತೇ ಇದ್ದ ಹಿರಿಯನಿಗೆ ಕೂಡುವಂತೆ ಹೇಳಿ ಕೇಳಿದ. +“ಏನಾದರೂ ಹೇಳುವುದಿತ್ತೆ?” +“ನಮ್ಮ ಮನೆಯ ಪಕ್ಕದ ಹೆಣ್ಣು ಎಂಟು ದಿನದಿಂದ ನರಳುತ್ತಿದ್ದಾಳೆ! +ವಿಪರೀತ ಜ್ವರ. +ಇಂಜೆಕ್ಷನ್ ಮಾಡಿಸಿ, ಎಲ್ಲಾ ಮಾಡಿಸಿ ಆಯಿತು. +ಸ್ವಲ್ಪವೂ ಸುಧಾರಿಸಿಲ್ಲ. +ಈಗ ಹೊಟ್ಟೆನೋವೆಂದು ಚೀರಾಡುತ್ತಿದ್ದಾಳೆ. +ಯಾವಾಗಲಾದರೂ ಅವಳು ಸಾಯಬಹುದೇನೋ ಎನಿಸುತ್ತಿದೆ.” +“ಅವಳನ್ನು ರಾಮನಗರಕ್ಕೆ ಯಾಕೆ ಕರೆದುಕೊಂಡು ಹೋಗಿಲ್ಲ…” +“ಅವಳಿಗೀಗ ಯಾರೂ ದಿಕ್ಕಿಲ್ಲವೆಂದೇ ಹೇಳಬಹುದು. +ಗಂಡುಮಕ್ಕಳು ಮದುವೆ ಮಾಡಿಕೊಂಡು ಪಟ್ಟಣ ಸೇರಿದ್ದಾರೆ…. +ಅವಳಿಗೀಗ ಬಸ್ಸಿನಲ್ಲಿ ಹೋಗುವ ತ್ರಾಣವೂ ಇಲ್ಲ”ಕಳಕಳಿಯ ಆತನ ಮಾತು ಕೇಳುತ್ತಿದ್ದಂತೆ ಒಂದು ನಿರ್ಣಯಕ್ಕೆ ಬಂದು ಎಸ್.ಐ.ಯನ್ನು ಕೂಗಿ ಕರೆದ ತಕ್ಷಣ ಬಂದ ಅವನು ಶಿಸ್ತಿನಿಂದ ಎದುರು ನಿಂತಾಗ ಹೇಳಿದ ತೇಜಾ,“ಇವರ ಮನೆಯ ಬಳಿ ಒಬ್ಬ ಪೇಶಂಟ್ ಸೀರಿಯಸ್ ಇದ್ದಾಳಂತೆ. +ತಕ್ಷಣ ಆಕೆಯನ್ನು ನಮ್ಮ ಜೀಪಿನಲ್ಲಿ ರಾಮನಗರಕ್ಕೆ ಕರೆದುಕೊಂಡು ಹೋಗಿ… +ನಿಮ್ಮ ಬಳಿ ಲೈಸೆನ್ಸ್ ಇದೆ ತಾನೆ” +“ಇದೆ ಸರ್!”“ಹೋಗಿ ತಾತ ಆಕೆಗೆ ಸರಿಯಾದ ಚಿಕಿತ್ಸೆ ಕೊಡಿಸಿ… +ಏನಾದರೂ ಹಣ ಬೇಕೆ” ಎಸ್.ಐ.ನ ಮಾತು ಮುಗಿಯುತ್ತಲೇ ಹೇಳಿದ ತೇಜಾ. +“ಬೇಡ… ಬೇಡ… ಆದಷ್ಟು ಬೇಗ ನಾವು ರಾಮನಗರ ಸೇರಿದರೆ ಸಾಕು” +“ಹಾಗಾದರೆ ಬೇಗ ಹೊರಡಿ” ಎಂದ ತೇಜ ಅವಸರದ ದನಿಯಲ್ಲಿ. +“ಪುಣ್ಯ ಕಟ್ಟಿಕೊಳ್ಳುತ್ತಿದ್ದಿಯಪ್ಪಾ” ಎಂದ ಗುಂಡು ತಾತಾ ಎಸ್.ಐ.ನ ಹಿಂದೆ ಹೊರಟು ಹೋದ. +ಊಟ ಆರಂಭಿಸಿದಾಗ ಅಡುಗೆಯ ಆಳನ್ನು ಮನಸ್ಸಿನಲ್ಲೇ ಹೊಗಳಿಕೊಂಡ ತೇಜ, ಈ ಸಲ ಭಕರಿ ಇರಲಿಲ್ಲ. +ಅನ್ನ, ಹುಳಿ, ಚಟ್ನಿ ಮತ್ತು ಮೊಸರು. +ಎಲ್ಲವೂ ರುಚಿಯಾಗಿದ್ದವು. +ಈ ತಾತ ಎಲ್ಲಿಂದಲೋ ಅಡುಗೆ ಪಾತ್ರೆಗಳನ್ನು ತಂದು ತನಗಾಗಿ ಬಹಳ ಕಷ್ಟಪಡುತ್ತಿದ್ದಾನೆ ಎನಿಸಿದಾಗ ಮನಸಿನಲ್ಲಿ ಕೃತಜ್ಞತಾ ಭಾವ ತುಂಬಿ ಬಂತು. +ಬಹುಶಃ ಇವತ್ತು ಸಂಜೆಯವರೆಗೆ ಆತನ ಮೊಮ್ಮಗ ರಾಮನಗರದಿಂದ ತನ್ನ ಸಾಮಾನು ಸರಂಜಾಮು ತರಬಹುದೆನಿಸಿತು. +ಊಟ ಮುಗಿದ ಮೇಲೆ ಪೇದೆ ಪಾತ್ರೆಗಳನ್ನು ಶುಚಿ ಮಾಡಲು ತೆಗೆದುಕೊಂಡು ಹೋದ. +ಹೊಟ್ಟೆ ತುಂಬಿದ ನಂತರ ಕಲ್ಯಾಣಿಯ ಕಡೆ ತಿರುಗಿತು ಅವನ ಯೋಚನೆ. +ಅದು ಮುಂದುವರೆಯದಂತೆ ಇನ್ನೊಬ್ಬ ಪೇದೆ ಬಂದು ಹೇಳಿದ“ನಿಮ್ಮನ್ನು ಇಬ್ಬರು ಯುವಕರು ಕಾಣಲು ಬಂದಿದ್ದಾರೆ ಸರ್!” +“ಕಳಿಸು” ಎಂದ ಅವನು ಅವರಾರಿರಬಹುದೆಂಬ ಯೋಚನೆಯಲ್ಲಿ ತೊಡಗಿದ. +ಒಳಗಿರುವ ಇಬ್ಬರು ಯುವಕರು ಬಂದು ಅವನೆದುರು ಕೈಕಟ್ಟಿನಿಂತರು. +ಏನು ಎಂಬಂತೆ ಅವರ ಕಡೆ ನೋಡಿದ ತೇಜಾ. +“ನೀವು ನಿನ್ನೆ ಸಾರಾಯಿ ಖಾನೆಗಳು ಬೆಳಿಗ್ಗೆ ಹನ್ನೊಂದಕ್ಕೆ ತೆಗೆಯಬೇಕು ರಾತ್ರಿ ಒಂಭತ್ತಕ್ಕೆ ಮುಚ್ಚಬೇಕು ಎಂದು ಹೇಳಿದ್ದಿರಲ್ಲ ಸರ್” ಅವರಲ್ಲಿ ಒಬ್ಬ ವಿನಯದಿಂದ ಹೇಳಿದ. +ಆಗ ತಾನು ಬೆಳಗೆ ಕಾನ್ಸ್ ಟೇಬಲ್ಲರಿಗೆ ಒಪ್ಪಿಸಿದ ಕೆಲಸ ನೆನಪಾಯಿತು. +“ಈಗೇನಾಯಿತು ಇವತ್ತವರು ತಮ್ಮ ಅಂಗಡಿಯನ್ನು ಬೇಗ ತೆಗೆದರೆ?” ಅದೇ ಇರಬಹುದೆಂದುಕೊಳ್ಳುತ್ತಾ ಸಿಟ್ಟಿನ ದನಿಯಲ್ಲಿ ಕೇಳಿದ ತೇಜಾ. +“ಇಲ್ಲ ಸರ್!ಅವರು ಸರಿಯಾಗಿ ಹತ್ತು ಗಂಟೆಗೆ ತೆಗೆದರು. +ಆದರೆ ಬೆಳಗಿನ ಆರು ಗಂಟೆಯಿಂದ ಬೇರೆ ಕಡೆ ಮಾರುತ್ತಿದ್ದರು” ಹೇಳಿದ ಇನ್ನೊಬ್ಬ. +ಇಂತಹ ವ್ಯವಹಾರ ತಡೆಯುವುದು ಕಷ್ಟವೆಂದುಕೊಳ್ಳುತ್ತಾ ಹೇಳಿದ ತೇಜಾ. +“ಬೆಳಿಗ್ಗೆ ನಮ್ಮ ಕಾನ್ಸ್ ಟೇಬಲ್ಲರನ್ನು ಅದೆಲ್ಲಾ ನೋಡಿಬರುವಂತೆ ಕಳಿಸಿದ್ದೆನಲ್ಲಾ” +“ಅವರೂ ಬಂದಿದ್ದರು ಸರ್!ತಮ್ಮ ಪಾಲಿನ ಹಣ ತೆಗೆದುಕೊಂಡು ಏನೂ ನೋಡದವರಂತೆ ಹೊರಟುಹೋದರು”ತೇಜಾನ ಮುಖದಲ್ಲಿ ನಿಸ್ಸಹಾಯಕ ಸಿಟ್ಟು ತುಂಬಿಬಂತು. +ಮುಖ ಗಂಟಿಕ್ಕಿತು. +ತಾನು ಇಷ್ಟು ಬೇಗ ತನ್ನವರಿಗೆ ಮೇಲಿನ ಆದಾಯದ ಮಾರ್ಗ ತೋರಿಸಿಕೊಟ್ಟೆನೇ ಎಂದುಕೊಳ್ಳುತ್ತಾ ಹೇಳಿದ. +“ನೀವು ರಾತ್ರಿ ಎಂಟರ ಸುಮಾರಿಗೆ ಬನ್ನಿ ಅದನ್ನೂ ತಡೆಯುವ ಮಾರ್ಗ ಯೋಚಿಸುವ” +“ಅದಕ್ಕೆ ಏನಾದರೂ ಮಾಡಲೇಬೇಕು ಸರ್! +ನನ್ನ ತಂದೆ ಯಾವಾಗಲೂ ನಶೆಯಲ್ಲೇ ಇರುತ್ತಾರೆ. +ಒಂದು ಕೆಲಸವನ್ನೂ ಮಾಡುವುದಿಲ್ಲ” ಹೇಳಿದ ಮೊದಲು ಮಾತಾಡಿದವ. +ಏನು ಮಾಡಬೇಕು ಎಂಬ ಯೋಚನೆಯಲ್ಲಿ ತೊಡಗಿ ಹೇಳಿದ ತೇಜಾ“ಮಾಡುವ!ಖಂಡಿತ ಮಾಡುವ! +ನೀವು ನಾ ಹೇಳಿದಂತೆ ಬನ್ನಿ”. +ಅದಕ್ಕೆ ಏನು ಮಾಡಬಹುದೆಂಬುವದು ಆಗ ಅವನಿಗೂ ಗೊತ್ತಿರಲಿಲ್ಲ. +ಸರಕಾರಿ ನೌಕರರಿಂದ ಈ ಮೇಲಿನ ಆದಾಯದ ಪಿಶಾಚಿಯನ್ನು ತೊಲಗಿಸುವುದು ಅಸಂಭವವೇನೋ ಎನಿಸಿತೊಡಗಿತು ತೇಜಾನಿಗೆ. +ಕಲ್ಯಾಣಿ ಮೊದಲು ನಾಗೇಶನ ಅವಸ್ಥೆ ಕಂಡು ಗಾಬರಿಯಾದಳು. +ಯಾವ ಮುಚ್ಚುಮರೆಯೂ ಇಲ್ಲದೇ ಅವನು ತನ್ನೀ ಅವಸ್ಥೆಯ ಕಾರಣವನ್ನು ಹೇಳಿದಾಗ ಅವಳಿಗೆ ಸಿಟ್ಟು ತಡೆಯಲಾಗಲಿಲ್ಲ. +ಆ ಸಿಟ್ಟನ್ನು ಹೊರಗೆಡಹಲೆಂಬಂತೆ ಅವನನ್ನು ತನ್ನ ಬೂಟುಗಾಲಿನಿಂದ ಬಲವಾಗಿ ಒದ್ದಳು. +ಪೊಲೀಸಿನವರಿಂದ ವಿಚಿತ್ರ ಹಿಂಸೆ ಅನುಭವಿಸಿ ಬಂದಿದ್ದ ನಾಗೇಶನ ಮೇಲೆ ಅದು ಅದ್ಭುತ ಪ್ರಭಾವ ಬೀರಲಿಲ್ಲ. +ಅಕ್ಕ, ಅವಳ ಆಜ್ಞೆ ಇಲ್ಲದೇ ತಾನು ಮಾಡಿದ ಸಾಹಸಕ್ಕೆ ಸಿಟ್ಟಾಗುತ್ತಾಳೆಂಬುವುದು ನಾಗೇಶನಿಗೆ ಗೊತ್ತಿತ್ತು. +ಆಕೆಯ ಸಿಟ್ಟು ನಿಧಾನವಾಗಿ ಶಮನಗೊಳ್ಳುತ್ತಾ ಹೋದಂತೆ ಹೇಳಿದಳವಳು. +“ನೀನು ಬರಲು ಇಷ್ಟು ತಡವಾದ್ದದು ನೋಡಿ ಏನಾದರೂ ಅನಾಹುತವಾಗಿರಬಹುದೇನೋ ಎಂದು ಊಹಿಸಿದೆ, ನಿನ್ನ ಹುಡುಕಲು ಸಾಯಿಯನ್ನು ಕಳಿಸಿದ್ದೆ… ಬೊಗಳು ಅಲ್ಲಿ ಏನಾಯಿತು. +ಆ ಇನ್ಸ್‍ಪೆಕ್ಟರ್ ನಿನ್ನನ್ಯಾಕೆ ಬಿಟ್ಟ.” +ಈಗಾಗಲೇ ತೇಜಾ ನಾಗೇಶನ ದೃಷ್ಟಿಯಲ್ಲಿ ಮಹಾನ್‌ವ್ಯಕ್ತಿ ಯಾಗಿಬಿಟ್ಟಿದ್ದ. +ತನ್ನ ಭಾವುಕತೆಯನ್ನು ತಡೆಯುತ್ತಾ ಎಲ್ಲವನ್ನೂ ವಿವರವಾಗಿ ಹೇಳಿದ. +ತೇಜಾ ಅವಳಿಗೆ ಹೇಳಲೆಂದ ಮಾತುಗಳನ್ನು ಒತ್ತಿ ಹೇಳಿದ. +ಅವನು ಮಾಡಿದ ಉಪಕಾರದ ಕಾರಣ ನಾಗೇಶನ ಮಾತುಗಳಲ್ಲಿ ಹೊಗಳಿಕೆ ಹೆಚ್ಚಾಗಿತ್ತು. +ಹಾಗೇ ಮನುಷ್ಯ ಸಹಜ ಗುಣದ ಕಾರಣ ಅವನ ದೃಷ್ಟಿಯಲ್ಲಿ ಹೀರೋ ಆದ ಇನ್ಸ್‌ಪೆಕ್ಟರನ ವಿಷಯದಲ್ಲಿ ತನ್ನ ಊಹೆಗಳನ್ನೂ ಸೇರಿಸಿದ್ದ. +ಅವನು ಹೇಳಿದ್ದನೆಲ್ಲಾ ಏಕಚಿತ್ತದಿಂದ ಕೇಳಿದ ಕಲ್ಯಾಣಿ ಯೋಚನೆಯಲ್ಲಿ ತೊಡಗಿದಳು. +ಈ ಇನ್ಸ್‌ಪೆಕ್ಟರ್ ಉತೇಜ್ ಯಾವುದೋ ಹೊಸ ಯೋಜನೆ ರೂಪಿಸಿ ಬಂದಿದ್ದಾನೆ ಎನಿಸಿತು. +ಅದೆಂತಹ ಯೋಜನೆಯಾಗಿರಬಹುದೆಂದವಳು ಯೋಚನೆಯಲ್ಲಿ ತೊಡಗಿದಳು. +ಅದು ಯಾವ ಗುರಿಯನ್ನೂ ಮುಟ್ಟಲಿಲ್ಲ. +ಕೈಗೆ ಆಯುಧಸಹಿತ ಬಂಧಿಯಾದ ಕ್ರಾಂತಿಕಾರಿಯನ್ನು ಯಾವ ಇನ್ಸ್‌ಪೆಕ್ಟರನೂ ಬಿಡುವುದಿಲ್ಲ. +ಬಿಡುವುದಲ್ಲದೇ ಈ ವ್ಯಕ್ತಿ ನಾಗೇಶನಿಗೆ ತನ್ನ ಆಯುಧವನ್ನು ಮರಳಿಸಿದ್ದಾನೆ. +ಇದರ ಮರ್ಮ ಅರ್ಥವಾಗುವುದು ಕಷ್ಟ. +ಈ ರಾತ್ರಿ ಅವನ ಜಾತಕವೆಲ್ಲಾ ತನ್ನ ಕೈಗೆ ಸಿಗಬಹುದು. +ಅದನ್ನು ನೋಡಿ ಅವನು ಎಂತಹ ವ್ಯಕ್ತಿ ಎಂಬುವುದು ತಿಳಿಯಬಹುದೇನೋ ಎಂದುಕೊಂಡು ಆ ವಿಷಯವನ್ನು ಅಲ್ಲಿಗೇ ಬಿಟ್ಟಳು. +ತಾವಿಲ್ಲಿ ಠಿಕಾಣಿ ಹೂಡಿ ಮೂರು ದಿನಕ್ಕೂ ಹೆಚ್ಚಾಗಿದೆ. +ದೇವನಹಳ್ಳಿಯಲ್ಲಿನ ಸ್ಫೋಟದಿಂದ ಪೋಲೀಸಿನವರ, ತನ್ನ ಇತರ ಶತ್ರುಗಳ ಗಮನವನ್ನು ಬೇರೆ ಕಡೆ ತಿರುಗಿಸಬಹುದೆಂದುಕೊಂಡಿದ್ದಳು. +ಆದರೆ ಈ ಉತೇಜನ ಆಗಮನದಿಂದ ಅದು ಸಾಧ್ಯವಾಗಿಲ್ಲ. +ಅವರುಗಳಿಗೆ ತಾನಿನ್ನೂ ಬಂಡೇರಹಳ್ಳಿಯ ಆಸುಪಾಸಿನ ಕಾಡಿನಲ್ಲೆ ಇರುವನೆಂಬುವುದು ಗೊತ್ತಾಗಿದೆ. +ಈ ಜಾಗ ಖಾಲಿ ಮಾಡುವ ಮುನ್ನ ಇಲ್ಲಿ ಇನ್ನೂ ತಾನೇನು ಮಾಡಬೇಕೆಂಬ ಕಡೆ ಗಮನ ಹರಿಸಿದಳು. +ಕಲ್ಯಾಣಿ ಆ ಚಿಂತನೆಯಲ್ಲಿ ತೊಡಗಿರುವಾಗಲೆ ಸಾಯಿ ಬಂದ. +ನಾಗೇಶನನ್ನು ಅವನಲ್ಲಿ ನೋಡುತ್ತಲೆ ತನಗೆ ಹೆಚ್ಚು ಮಾತಾಡುವ ಅವಶ್ಯಕತೆ ಇಲ್ಲವೇನೋ ಎನಿಸಿತು. +ನಾಗೇಶನನ್ನು ಪೋಲಿಸಿನವರು ಬಿಟ್ಟು ಬಿಟ್ಟಿರುವ ವಿಷಯ ತಿಳಿಯುತ್ತಲೇ ಅವನು ಬಂಡೇರಹಳ್ಳಿಯಲ್ಲಿನ ಬೇರೆ ಬೆಳವಣಿಗೆಗಳ ಕಡೆ ಗಮನ ಹರಿಸಿದ್ದ. +ಅದೃಷ್ಟವಶಾತ್ ಅವನಿಗೆ ಗುಂಡು ತಾತಾನ ಭೇಟಿಯಾಗಿತ್ತು. +ಅವರೊಡನೆ ಮಾತಾಡಿದಾಗ ತಿಳಿದ ಸಂಗತಿಗಳು ಅವನಲ್ಲಿ ದಿಗ್ಭ್ರಾಂತಿ ಹುಟ್ಟಿಸಿದ್ದವು. +ಅದೇ ತಿಳಿಯಬೇಕೆಂಬಂತೆ ಮಾತಾಡಿದಳು ಕಲ್ಯಾಣಿ. +“ಇವನು ಮಾಡಿದ ಘನಕಾರ್ಯ ತಿಳಿಯಿತು. +ಇನ್ನೇನಾದರೂ ವಿಷಯಗಳಿವೆಯೇ” +“ಈ ಇನ್ಸ್‌ಪೆಕ್ಟರ್ ಉತೇಜಾ ತಾ ಬಂದ ಒಂದು ದಿನದಲ್ಲೇ ಬಹಳಷ್ಟು ಸಾಧಿಸಿ ಬಿಟ್ಟಿದ್ದಾನಕ್ಕಾ!” +ಅದು ನಂಬಲಸಾಧ್ಯವೆಂಬಂತೆ ಧ್ವನಿಸಿತು ಸಾಯಿಯ ಮಾತು, ಸಾಯಿ ಹೀಗೆ ಮಾತಾಡುತ್ತಿದ್ದಾನೆಂದರೆ ಈ ಇನ್ಸ್‌ಪೆಕ್ಟರ್ ಅಪರೂಪದ ವ್ಯಕ್ತಿಯೇ ಇರಬೇಕೆಂದುಕೊಂಡು ನಿರ್ಭಾವ ದನಿಯಲ್ಲಿ ಕೇಳಿದಳು ಕಲ್ಯಾಣಿ. +“ಅದೇನು ಹೇಳು”“ಆ ಗುಂಡು ತಾತಾ ಸಿಕ್ಕಿದ್ದುದರಿಂದ ನನಗಿಷ್ಟೆಲ್ಲಾ ತಿಳಿಯಿತು. +ಇಲ್ಲದಿದ್ದರೆ…”“ನೀನೂ ನಾಗೇಶನ ಹಾಗೆ ಭಾವುಕನಾಗುತ್ತಿರುವೆ ಮುಖ್ಯ ವಿಷಯಕ್ಕೆ ಬಾ”ಅವನ ಮಾತನ್ನು ನಡುವೆಯೇ ಕತ್ತರಿಸಿ ಕಟುವಾದ ದನಿಯಲ್ಲಿ ಹೇಳಿದಳು ಕಲ್ಯಾಣಿ. +ಆ ಮಾತಿನಿಂದ ತನ್ನ ತಾ ಸಂಭಾಳಿಸಿಕೊಂಡು ನಿಧಾನವಾಗಿ ನಿರ್ಭಾವುಕ ದನಿಯಲ್ಲಿ ಮಾತಾಡತೊಡಗಿದ ಸಾಯಿ. +“ಸಿದ್ಧಾನಾಯಕನ ಸೊಕ್ಕು ಅಣಗಿಸಿದ್ದಾನಂತೆ. +ಸಾರಾಯಿಖಾನೆ ತೆಗೆಯುವ ಮುಚ್ಚುವ ವೇಳೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ವ್ಯವಸ್ಥೆ ಮಾಡಿದ್ದಾನಂತೆ. +ಹಳ್ಳಿಗರಲ್ಲಿ ಒಬ್ಬನಾಗಿ ಬಿಟ್ಟಿದ್ದಾನಂತೆ. +ಹಿರಿಯರೊಡನೆ ಅತಿ ಗೌರವ ಮರ್ಯಾದೆಗಳಿಂದ ಮಾತಾಡುತ್ತಿದ್ದಾನಂತೆ. +ಅಚವ್ವ ಸಾಯುವ ಸ್ಥಿತಿಯಲ್ಲಿದ್ದಾಗ ಪೋಲಿಸ್ ಜೀಪಿನಲ್ಲಿ ಅವಳನ್ನು ಆಸ್ಪತ್ರೆಗೆ ಸಾಗಿಸಿದ್ದಾನಂತೆ. +ಇವತ್ತು ರಾತ್ರಿ ಹಳ್ಳಿಯ ಮೈದಾನದಲ್ಲಿ ಹಾಡು, ಭಜನೆಗಳ ಕಾರ್ಯಕ್ರಮವಿದೆಯಂತೆ. +ಅದರಲ್ಲಿ ಕ್ರಾಂತಿಗೀತೆಗಳೂ ಇವೆಯಂತೆ. +ಹಳ್ಳಿಯಲ್ಲಿ ಅವನನ್ನು ಹೊಗಳುವವರೇ, ಯಾರು ಅವನ ಬಗ್ಗೆ ಕೆಟ್ಟ ಮಾತಾಡಿದ್ದನ್ನು ನಾ ಕೇಳಿಲ್ಲ”ಅವನ ಉದ್ದನೆಯ ಮಾತು ಮುಗಿಯುತ್ತಲೇ ಉತ್ಸಾಹದ ದನಿಯಲ್ಲಿ ಉದ್ಗರಿಸಿದ ನಾಗೇಶ“ನಾ ಹೇಳಿರಲಿಲ್ಲವೇ ಅಕ್ಕ!” +“ನೀ ಬಾಯಿ ಮುಚ್ಚು ಮಾತಾಡಿಸಿದರಷ್ಟೆ ಮಾತಾಡು” ಕಟುವಾಗಿ ಆಜ್ಞಾಪಿಸಿದಳು ಕಲ್ಯಾಣಿ. +ಅವಳು ತನ್ನದೇ ಯೋಚನೆಯಲ್ಲಿ ಸ್ವಲ್ಪ ಹೊತ್ತು ತೊಡಗಿ ಕೇಳಿದಳು. +“ನನ್ನ ಬಗ್ಗೆಯಾಗಲಿ ಕ್ರಾಂತಿಕಾರಿಯರ ಬಗ್ಗೆಯಾಗಲಿ ಅವನು ಯಾವ ಮಾತನ್ನೂ ತೆಗೆಯಲಿಲ್ಲವಂತೆಯೋ?” +ಇಲ್ಲ!ಆದರೆ ಒಂದು ಸಲ ಮಾತ್ರ ತಾತನೆದುರು ಹೇಳಿದ್ದನಂತೆ, ಈ ಕಲ್ಲಕ್ಕ ಅದ್ಭುತ ಹೆಣ್ಣಿನ ಹಾಗಿದ್ದಾಳೆ. +ಆಕೆಯನ್ನು ಒಂದು ಸಲ ಭೇಟಿಯಾದರೆ ನನ್ನ ಪುಣ್ಯವೆಂದು” ಆಕೆಯ ಮಾತು ಮುಗಿಯುತ್ತಲೇ ಈಸಲ ಪೂರ್ತಿ ನಿರ್ಭಾವುಕ ದನಿಯಲ್ಲಿ ಹೇಳಿದ ಸಾಯಿ. +ಬಾಯಿಗೆ ಬಂದ ಯಾವುದೋ ಮಾತನ್ನು ನುಂಗಿಕೊಂಡ ನಾಗೇಶ. +ಈ ಉತೇಜ್ ಎಂತಹ ವ್ಯಕ್ತಿ ಇರಬಹುದೆಂಬ ಯೋಚನೆಯಲ್ಲಿಯೇ ತೊಡಗಿದಳು ಕಲ್ಯಾಣಿ. +ಒಬ್ಬೊಬ್ಬರಾಗೇ ದಳದ ಸದಸ್ಯರೆಲ್ಲರೂ ಬಂದರು. +ಉತೇಜ್‌ನ ಬಗೆಗಿನ ಪೂರ್ತಿ ವಿವರ ತರಲು ಹೋಗಿದ್ದ ಹರಿಗಾಗಿ ಕಾಯುತ್ತಿದ್ದಳು. +ಕಲ್ಯಾಣಿ, ಯಾವ ಕೆಲಸವೂ ಇಲ್ಲದೇ ಕುಳಿತ ದಳದವರಿಗೆ ತಮ್ಮ ತಮ್ಮ ಆಯುಧಗಳನ್ನು ಶುಚಿಗೊಳಿಸಿಕೊಳ್ಳುವಂತೆ ಹೇಳಿದಳು. +ಅವಳ ಮೈ ಮನದ ತುಂಬಾ ಆ ಇನ್ಸ್‌ಪೆಕ್ಟರನೇ ತುಂಬಿದ್ದ. +ಹರಿ ತಂದ ವಿವರ ಓದಿ ತಮ್ಮ ಠಿಕಾಣಿ ಬದಲಾಯಿಸುವ ನಿರ್ಣಯ ತೆಗೆದುಕೊಂಡರು. +ತನ್ನ ಪೇದೆಯರು ಲಂಚ ತೆಗೆದುಕೊಳ್ಳುತ್ತಿದ್ದಾರೆಂದು ಆ ಯುವಕರು ಹೇಳಿಹೋದ ಬಳಿಕ ಗುಂಡುತಾತನ ಮನೆಗೆ ಹೋಗಿದ್ದ ತೇಜಾ. + ಅವನನ್ನು ಅಲ್ಲಿ ಕಂಡು ಎಲ್ಲರಿಗೂ ಆಶ್ಚರ್ಯ! +ಒಬ್ಬ ಪೋಲೀಸ್ ಅಧಿಕಾರಿ ತಾತನ ಮನೆಗೆ ಬರುವದೆಂದರೇನು? +ಅವರು ಪೋಲಿಸ್ ಸ್ಟೇಷನಿನ್ನಲ್ಲಿ ಕುಳಿತೀ ಯಾರನ್ನು ಬೇಕಾದರವರನ್ನು ಕರೆಸಿಕೊಳ್ಳಬಹುದು. +ಅಂತಹವರು ಒಬ್ಬ ಬಡವನ ಮನೆಗೆ ಬಂದಿದ್ದಾರೆಂದರೆ ಸಾಮಾನ್ಯ ಮಾತಲ್ಲ. +ಸೊಕ್ಕು ಸೆಡವು ಇಲ್ಲದ ಸರಳ ಮನುಷ್ಯ. +ತಮ್ಮ ತಮ್ಮ ಮನೆಯ ಬಾಗಿಲುಗಳಲ್ಲಿ ಗುಂಪುಗೂಡಿ ಅವನು ತಾತನ ಮನೆಯಲ್ಲಿ ಹೋಗುವುದನ್ನು ನೋಡಿದ್ದರು. +ಗುಂಡು ತಾತನೊಡನೆ ಅಲ್ಲಿಯ ಯುವಕರ ಬಗ್ಗೆ ಮಾತು ತೆಗೆದಿದ್ದ ತೇಜ. +ಅವನಲ್ಲಿ ಒಬ್ಬರಿಬ್ಬರು ಹಾಡುಗಳನ್ನು ಚೆನ್ನಾಗಿ ಬರೆಯುವವರಿದ್ದಾರೆಂದು ತಿಳಿದಾಗಲೇ ಅವನ ತಲೆಯಲ್ಲಿ ಆ ರಾತ್ರಿ ಮಾಡಬೇಕಾದ ಕಾರ್ಯಕ್ರಮ ರೂಪುಗೊಂಡಿತ್ತು. +ಅಲ್ಲಿ ಕಾಫಿಯ ಉಪಚಾರವಾದ ಮೇಲೆ ಆ ಹಿರಿಯನೊಡನೆ ಹೊರಬಿದ್ದಿದ್ದ. +ಮುಖ್ಯ ದಾರಿಗೆ ಬಂದಾಗ ಅಂತಹ ಪ್ರತಿಭೆ ಇರುವ ಎಲ್ಲ ಹುಡುಗರನ್ನೂ ತನ್ನ ಮನೆಗೆ ಕರೆತರುವಂತೆ ಹೇಳಿ, ಅವನು ತನ್ನ ಮನೆಯ ದಾರಿ ಹಿಡಿದಿದ್ದ. +ಅಡುಗೆಯ ಮನೆಯ ಕೆಲಸದಾಳು ಗಂಗವ್ವ ಮನೆಯನ್ನು ಶುಭ್ರಗೊಳಿಸುವದಲ್ಲದೇ ಅದಕ್ಕೆ ಒಂದು ಮನೆಯ ಕಳೆಯನ್ನು ತಂದಿದ್ದಳು. +ದಣಿದಿದ್ದ ಅವನು ಆರಾಮ ಕುರ್ಚಿಯಲ್ಲಿ ಕುಳಿತ ಹತ್ತು ನಿಮಿಷದಲ್ಲೇ ಕಾಫಿಯ ಲೋಟವನ್ನು ಹಿಡಿದು ಬಂದಳವಳು. +ಅಕ್ಕ ಬದುಕಿದ್ದರೆ ಇದೇ ರೀತಿ ತನ್ನ ನೋಡಿಕೊಳ್ಳುತ್ತಿದ್ದಳೇನೋ ಎನಿಸಿತು. +ಅವಳು ಕ್ಯಾನ್ಸರಿನಿಂದ ಅಕಾಲ ಮರಣಕ್ಕೆ ಗುರಿಯಾಗಿದ್ದಳು. +ತೆಗೆದುಕೊಳ್ಳುತ್ತಾ ಕೇಳಿದ ತೇಜಾ,“ನಿನಗೆಷ್ಟು ಜನ ಮಕ್ಕಳು ಗಂಗವ್ವ” +“ನಾಲ್ಕು ಜನ ಧಣಿ!ಎಲ್ಲರದೂ ಮದುವೆಯಾಗಿದೆ. +ಒಬ್ಬನೇ ಗಂಡು ಮಗ ಅವನ ಜತೆ ಇದ್ದೇನೆ”ಕಾಫಿಯ ಲೋಟ ಕೊಟ್ಟ ಅವಳು ದೂರ ನಿಂತು ತಲೆತಗ್ಗಿಸಿ ಮಾತಾಡಿದ್ದಳು. +“ನೀನು ಬೆಳಿಗ್ಗೆ ಇಲ್ಲಿ ಬಂದು ಎಲ್ಲಾ ಕೆಲಸ ನೋಡಿಕೊಂಡು ರಾತ್ರಿಯ ಅಡುಗೆ ಮಾಡಿಟ್ಟು ಹೋಗಲು ಸಾಧ್ಯವೆ. +ಅದಕ್ಕೆ ನಾನು ತಕ್ಕ ಸಂಬಳ ಕೊಡುತ್ತೇನೆ”ತೇಜಾ ಹೇಳಿದ ಆ ಮಾತಿಗೆ ಕೂಡಲೇ ಅವಳಿಂದ ಉತ್ತರ ಬಂತು“ತಾತ ಹಾಗೇ ಮಾಡಲು ಹೇಳಿದ್ದಾರೆ, ಅದಕ್ಕೆ ಬೆಳಗ್ಗೆ ಬಂದ ನಾನು ಮನೆಗೇ ಹೋಗಿಲ್ಲ”. +ಬೆಳಗಿನಿಂದ ಇವಳು ಇಲ್ಲೇ ಇದ್ದಾಳೆಂಬ ವಿಷಯ ತನಗ್ಯಾಕೆ ಹೊಳೆಯಲಿಲ್ಲ ಎಂದುಕೊಂಡಾಗ ತಾತ ತನ್ನ ಎಲ್ಲಾ ಬೇಕುಬೇಡಗಳ ಕಡೆ ಗಮನವಿಟ್ಟಿದ್ದಾನೆ ಎನಿಸಿ ಅವನನ್ನು ಮತ್ತೊಮ್ಮೆ ಮೆಚ್ಚಿಕೊಳ್ಳದೇ ಇರಲಾಗಲಿಲ್ಲ. +ಇನ್ನೂ ಏನಾದರೂ ಮಾತಾಡುವುದಿದೆಯೋ ಎಂಬಂತೆ ನಿಂತಿದ್ದ ಗಂಗವ್ವನಿಗೆ ಕೊನೆಯ ಮಾತೆಂಬಂತೆ ಹೇಳಿದ“ಯಾವ ಸಂಕೋಚವೂ ಇಲ್ಲದೇ ನನಗೆ ಮಾಡಿದ ಅಡುಗೆಯನ್ನ ಊಟ ಮಾಡು. +ಎಷ್ಟು ಸಲ ನಿನಗೆ ಬೇಕೋ ಅಷ್ಟು ಸಲ ಕಾಫಿ ಮಾಡಿಕೊಂಡು ಕುಡಿ ಹಣವೇನಾದರೂ ಬೇಕಾದರೆ ಕೇಳು, ಈಗ ಏನಾದರೂ ಬೇಕೆ?” +“ಬೇಡ ಧಣಿ!ಈಗೇನೂ ಬೇಡ, ತಿಂಗಳಾದ ಮೇಲೆ ಕೊಡಿ” +“ಹೋಗು!ಒಟ್ಟಿನಲ್ಲಿ ನಾ ಹೇಳುವುದು ಇಷ್ಟೆ ಇದನ್ನು ನಿನ್ನ ಮನೆಯೆಂದುಕೋ” +“ಇದು ನಿಮ್ಮ ದೊಡ್ಡ ಮನಸ್ಸು ಸ್ವಾಮಿ” ಎಂದ ಅವಳು ಅಡುಗೆಮನೆಯ ಕಡೆ ಹೋದಳು. +ತೇಜಾ ಕಾಫಿ ಕುಡಿದು ಮುಗಿಸುವುದರಲ್ಲಿ ಎಂಟು ಹತ್ತು ಯುವಕರೊಡನೆ ಬಂದ ಗುಂಡುತಾತ. +ಅವರೆಲ್ಲ ಒಂದಲ್ಲ ಒಂದು ಪ್ರತಿಭೆ ಇರುವವರೇ. +ಅವರಲ್ಲಿ ಇಬ್ಬರು ಕವಿಗಳು. +ಅವರಿಗೆ ಲಂಚದಿಂದ ಆಗುತ್ತಿರುವ ದೇಶದ ಅಧೋಗತಿಯ ಕುರಿತು, ಕುಡಿತದಿಂದ ಆಗುತ್ತಿರುವ ಸಂಸಾರಗಳಂಥ ಪತನ ಕುರಿತು, ಹೆಣ್ಣುಗಳ ಹುಚ್ಚಿನಿಂದ ಹುಟ್ಟಿಕೊಳ್ಳುತ್ತಿರುವ ಮಹಾಮಾರಿಯ ಕುರಿತು ಕುರ್ಚಿಯ ಆಸೆಗೆ ಅಧಿಕಾರಕ್ಕೆ ಅಂಟಿಕೊಂಡಿರುವಾಗ ಭ್ರಷ್ಟ ರಾಜಕಾರಣಿಗಳು ದೇಶವನ್ನು ಮಾರಿಕೊಳ್ಳುವ ಸ್ಥಿತಿಗೆ ತಲುಪಿರುವ ಕುರಿತು ಹಾಡುಗಳನ್ನು ಆಡುಭಾಷೆಯಲ್ಲಿ ಬರೆಯಲು ಹೇಳಿದ. +ಆವರೆಗೆ ಆ ಯುವಕರನ್ನು ಯಾರೂ ಮರ್ಯಾದೆಯಿಂದ ಮಾತಾಡಿಸಿ ಕೂಡ ಇರಲಿಲ್ಲ. +ಒಬ್ಬ ಇನ್ಸ್‌ಪೆಕ್ಟರ್ ತಮ್ಮನ್ನು ಮನೆಗೆ ಕರೆಸಿಕೊಂಡು ಕವನ, ಹಾಡು ಬರೆಯುವಂತೆ ಹೇಳುವುದು ಅವರಲ್ಲಿ ಎಲ್ಲಿಲ್ಲದ ಉತ್ಸಾಹ ಹುಟ್ಟಿಸಿತು. +ನೋಡು ನೋಡುತ್ತಿದ್ದಂತೆ ಕಾಗದ ಪೆನ್ನುಗಳು ಬಂದವು. +ಆ ಇಬ್ಬರೂ ಯುವಕರು ಒಂದೊಂದು ಮೂಲೆಗೆ ಕುಳಿತು ತಮಗೆ ತೋಚಿದ್ದನ್ನು ಬರೆಯತೊಡಗಿದರು. +ಆಗಲೇ ಗುಂಡುತಾತನಿಗೆ ಆ ಸಂಜೆ ಆರೂವರೆಗೆ ಹಳ್ಳಿಯ ಮೈದಾನದಲ್ಲಿ ಹಾಡು, ನಾಟಕ, ಹಾಸ್ಯದ ಸಾಂಸ್ಕೃತಿಕ ಕಾರ್ಯಕ್ರಮವಿದೆ ಎಂದು ಊರಿಗೆಲ್ಲಾ ಡಂಗುರ ಸಾರುವಂತೆ ಹೇಳಿದ ತೇಜ. +ಅವರಲ್ಲಿ ಒಬ್ಬ ಹಾಸ್ಯಚಟಾಕಿಗಳನ್ನು ಹಾರಿಸುವಲ್ಲಿ, ಬೇರೆಯವರ ದನಿಯಲ್ಲಿ ಅವರಂತೆಯೇ ಮಾತಾಡುವಲ್ಲಿ ಪ್ರತಿಭೆ ಹೊಂದಿದವ. +ಅವನಿಗೆ ಆ ರಾತ್ರಿ ತಾ ಹೇಳಿದ ವಿಷಯಗಳ ಬಗ್ಗೆ ಆ ಊರಿಗೆಲ್ಲಾ ಗೊತ್ತಿರುವ ವ್ಯಕ್ತಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುವುದನ್ನು ಅವರ ದನಿಯಲ್ಲಿ ಅವರುಗಳು ಕೈಕಾಲು, ದೇಹವನ್ನು ಆಡಿಸುವಂತೆಯೇ ಆಡಿಸಿ ತೋರಿಸಲು ಹೇಳಿದ. +ಒಂದು ಕಡೆ ಹೋಗಿ ಅದನ್ನು ಅಭ್ಯಾಸ ಮಾಡುವಲ್ಲಿ ತೊಡಗಿದನವ. +ಬಂದ ಯುವಕರಲ್ಲಿ ಕಾನ್ಸ್ ಟೇಬಲರು ಲಂಚ ತೆಗೆದುಕೊಳ್ಳುತ್ತಿದ್ದಾರೆಂದು ಹೇಳಲು ಬಂದವರೂ ಇದ್ದರು. +ಆ ಇಬ್ಬರಲ್ಲಿ ಒಬ್ಬನಿಗೆ ಲೇಖಕನಾಗುವ ಹುಮ್ಮಸ್ಸು. +ತೇಜಾನ ಸಹಾಯ ಸಲಹೆಯಿಂದ ಬಂದು ಮೂರು ಪಾತ್ರಗಳ ನಾಟಕ ಸಿದ್ಧವಾಗತೊಡಗಿತು. +ಈ ನಡುವೆ ಗಂಗವ್ವನಿಗೆ ಎಲ್ಲರಿಗೂ ಕಾಫಿ ತಿಂಡಿಗಳನ್ನು ಒದಗಿಸುವ ಏರ್ಪಾಟು ಮಾಡಲು ಹೇಳಿದ. +ಅದಕ್ಕೆ ಪಾತ್ರೆಗಳು ಬೇಕು. +ಆ ವ್ಯವಸ್ಥೆ ತಾವು ನೋಡಿಕೊಳ್ಳುವುದಾಗಿ ಹೇಳಿದರು ಯುವಕರು ಉತ್ಸಾಹದಿಂದ ಹೊರಹೋದರು. +ಉತೇಜ್‌ನ ಬಂಡೇರಹಳ್ಳಿಯ ಮನೆಯಲ್ಲಿ ಆ ದಿನ ಸಡಗರವೋ ಸಡಗರ. +ಕವಿಗಳು ತಾವು ಬರೆದ ಹಾಡನ್ನು ಹಾಡಿ ತೋರಿಸಿದಾಗ ಅದನ್ನು ತಿದ್ದಿ ಅಸಲು ಭಾವ, ವಿಷಯ ಹೊರತರುವಂತೆ ಸಲಹೆಗಳನ್ನು ಕೊಟ್ಟ. +ಇಬ್ಬರು ಯುವಕರು ಓಡಿ ಎಲ್ಲಿಂದಲೋ ಡೋಲು ಡಪ್ಪುಗಳನ್ನು ತಂದರು. +ಆ ದೊಡ್ಡ ಮನೆಯಲ್ಲಿ ಎಲ್ಲ ಬಗೆಯ ಕಾರ್ಯಕ್ರಮಗಳ ರಿಹರ್ಸಲ್‌ನ ಗದ್ದಲವೋ ಗದ್ದಲ, ಹಲವಾರು ಜನ ಹೆಣ್ಣು, ಗಂಡು, ಮಕ್ಕಳು ಯಾವ ತಾರತಮ್ಯವೂ ಇಲ್ಲದಂತೆ ನಡೆದಿರುವುದನ್ನು ನೋಡಲು ಬಾಗಿಲಲ್ಲಿ ಗುಂಪುಗೂಡಿದರು. +ಅವರೆಲ್ಲಾ ಒಳಗೆಲ್ಲಿ ನುಗ್ಗುತ್ತಾರೋ ಎಂಬಂತಹ ಸ್ಥಿತಿ ಬಂದಾಗ ಆ ಯುವಕರಲ್ಲೇ ಮೂವರು ಅವರನ್ನು ನಿಯಂತ್ರಿಸಲು ಹೋದರು. +ತನ್ನ ತಲೆಯಲ್ಲಿ ಬಹು ಚಿಕ್ಕ ರೂಪ ತಾಳಿದ ಒಂದು ವಿಚಾರ ಹೀಗೆ ಮಾರ್ಪಡುವದೆಂದು ತೇಜಾ ಊಹಿಸಿರಲಿಲ್ಲ. +ಅವನೂ ಆ ಯುವಕರಲ್ಲಿ ಒಬ್ಬನಾಗಿ ಪ್ರತಿಯೊಂದಕ್ಕೂ ತನ್ನ ಸಲಹೆ, ಸಹಕಾರಗಳನ್ನು ಒದಗಿಸಿದ. +ಆ ಸಂಜೆ ಆರೂವರೆಗೆ ಬಂಡೇರಹಳ್ಳಿಯ ಮೈದಾನದಲ್ಲಿ ಮನರಂಜನೆಯ ಕಾರ್ಯಕ್ರಮವಿದೆ ಎಂದು ಯಾರಿಗೂ ಸಾರಿ ಹೇಳುವ ಅವಶ್ಯಕತೆಯೇ ಇರಲಿಲ್ಲ. +ಬಾಯಿಯಿಂದ ಬಾಯಿಗೆ ಆ ಮಾತು ಉರಲ್ಲೆಲ್ಲಾ ಹಬ್ಬಿಬಿಟ್ಟಿತು. +ಮೈದಾನದ ಒಂದು ಕೊನೆಗೆ ತಾತ ತನ್ನ ಕೆಲ ನಡುವಯಸ್ಸಿನ ಸ್ನೇಹಿತರನ್ನು ಕಲೆ ಹಾಕಿ ಬಂಡೆಗಳನ್ನು ಜೋಡಿಸಿ ಅದರ ಮೇಲೆ ದೊಡ್ಡ ದೊಡ್ಡ ಮೂರು ಹಲಗೆಗಳನ್ನು ಹಾಕಿ ಎತ್ತರದ ಸ್ಟೇಜನ್ನು ತಯಾರಿಸಿದ. +ವಯಸ್ಸಿನ ಬೇಧವಿಲ್ಲದೆ ಹೆಣ್ಣು, ಗಂಡಿನ ಬೇಧವಿಲ್ಲದೇ ಎಲ್ಲರಿಗೂ ಈ ಕಾರ್ಯಕ್ರಮ ಹೇಗೆ ನಡೆಯುತ್ತದೆಯೋ ಎಂದು ನೋಡುವ ಉತ್ಸಾಹ. +ಆರರ ಸುಮಾರಿಗೆ ಒಂದು ಸಲ ಮೈದಾನವನ್ನು ನೋಡಿ ಬಂದ ತೇಜ. +ಆಗಲೇ ಅಲ್ಲಿ ಜನ ಸೇರುವುದು ಆರಂಭವಾಗಿತ್ತು. +ಅವನಿಗೆ ಕಾರ್ಯಕ್ರಮ ಹೇಗೆ ನಡೆಯುವದೋ ಎಂಬ ಆತಂಕ. +ಅದರೊಡನೆಯೇ ಇಲ್ಲಿ ನಡೆಯುತ್ತಿರುವ ಜನರನ್ನು ಕಂಡು ಮೊದಲೆಂದೂ ಇಲ್ಲದಂತಹ ಹುಮ್ಮಸ್ಸು, ತೇಜಾನಿಗೆ ತನ್ನ ಕಾಲೇಜಿನ ದಿನಗಳ ನೆನಪಾಯಿತು. +ಕಾರ್ಯಕ್ರಮದ ಸಮಯ ಹತ್ತಿರವಾಗುತ್ತಿದ್ದಂತೆ ಅವನ ಆತಂಕ ಹೆಚ್ಚತೊಡಗಿತು. +ಸಂಜೆ ಆರೂವರೆಯ ಹೊತ್ತಿಗೆ ಬಂಡೇರಹಳ್ಳಿಯ ನಾಗರಿಕರಿಂದ ತುಂಬಿಬಿಟ್ಟಿತ್ತು ಮೈದಾನ. +ಕತ್ತಲಾದರೆ ಆ ಜಾಗವನ್ನು ಬೆಳಗಿಸಲು ಪೆಟ್ರೋಮ್ಯಾಕ್ಸ್‌ಗಳನ್ನು ತರಿಸಿದ್ದ ತೇಜಾ. +ಆ ಕಾರ್ಯಕ್ರಮಕ್ಕೆ ಆಗುತ್ತಿರುವ ಖರ್ಚೆಲ್ಲಾ ಅವನದೇ. +ಮೊದಲೇ ಮಾತಾಡಿಕೊಂಡಂತೆ ಗುಂಡುತಾತ ವೇದಿಕೆಯ ಮೇಲೆ ಬಂದು ಜನರಿಗೆ ಸುಮ್ಮನಾಗುವಂತೆ ಕೈ ಮಾಡಿ ಹೇಳಿದ. +“ಇದು ಮೊದಲ ಬಾರಿ ನಮ್ಮ ಹಳ್ಳಿಯವರೇ ನಮ್ಮ ಸುಖದುಃಖಗಳನ್ನು ಹಂಚಿಕೊಳ್ಳುವ ಕಾರ್ಯಕ್ರಮ. +ಹೊಟ್ಟೆ ತುಂಬಾ ನಗುವ, ನೋವಿನಿಂದ ಕಣ್ಣಲ್ಲಿ ನೀರು ತರಿಸುವ ಕಾರ್ಯಕ್ರಮ. +ಎರಡೇ ದಿನದಲ್ಲಿ ಬಂಡೇರಹಳ್ಳಿಯವರೇ ಆಗಿಬಿಟ್ಟ ಇನ್ಸ್‌ಪೆಕ್ಟರ್ ಸಾಹೇಬರು ರೂಪಿಸಿದ ಕಾರ್ಯಕ್ರಮ. +ನೋಡಿ ನಕ್ಕು, ನಲಿದು ಮನೆಗೆ ಹೋಗಿ ಮಲಗುವಾಗ ಇದರ ಬಗ್ಗೆ ಯೋಚಿಸಿ. +ಈಗ ನಮ್ಮ ಯುವಕರಿಂದ ಹಾಡುಗಳು” ಎಂದ ತಾತ ಎರಡೂ ಕೈಗಳನ್ನು ಮೇಲೆತ್ತಿ ನಮಸ್ಕರಿಸಿದ. +ಕೂಡಲೇ ಕಿವಿ ಕಿವುಡಾಗುವಂತಹ ಚಪ್ಪಾಳೆ ಸದ್ದು. +ಅವನ ಪುಟ್ಟ ಭಾಷಣ ಮುಗಿದ ಕೂಡಲೇ ಡೋಲು, ಡಪ್ಪುಗಳನ್ನು ಹಿಡಿದು ಯುವಕರು ಹಾಡಲು ವೇದಿಕೆ ಏರಿದರು, ಕರತಾಡನ ನಿಂತಿತು. +ತಾತ ತೇಜಾನ ಹತ್ತಿರ ಬರುತ್ತಲೇ ಅಸಮಾಧಾನದ ದನಿಯಲ್ಲಿ ಕೇಳಿದ“ನನ್ನ ಹೆಸರು ಯಾಕೆ ತೆಗೆದಿರಿ? +ಅದು ಬೇಡವೆಂದು ನಾನೆಷ್ಟು ಸಲ ಹೇಳಿದ್ದೆ” +“ನಿನ್ನ ಹಸರು ಎಲ್ಲಿ ತೆಗೆದ ಬರೀ ಇನ್ಸ್‌ಪೆಕ್ಟರ್ ಎಂದೆನಷ್ಟೆ” ಹಗುರ ದನಿಯಲ್ಲಿ ಹೇಳಿದ ತಾತ. +“ಅದನ್ನು ಕೂಡ ಹೇಳಬಾರದೆಂದಿದ್ದೆ” ತನ್ನ ಅಸಮಾಧಾನ ಹೊರಗೆಡಹಿದ ತೇಜಾ. +“ನಾ ಹೇಳಬೇಕೆಂದುಕೊಂಡಿರಲಿಲ್ಲ. +ಮನದಾಳದಲ್ಲಿದ್ದ ಮಾತು ತಾನೇ ತಾನಾಗಿ ಬಾಯಿಗೆ ಬಂದು ಬಿಟ್ಟಿತು.” +ಆ ಮಾತು ಅಲ್ಲಿಗೆ ನಿಂತು ಇಬ್ಬರ ಗಮನವೂ ವೇದಿಕೆಯ ಮೇಲೆ ಹರಿಯಿತು. +ಜಾನಪದ ಶೈಲಿಯ ಹಾಡು ನಗೆ ಉಕ್ಕಿಸುವಂತಿತ್ತು. +ಹೆಣ್ಣುಗಳ ಚಪಲದಿಂದ ಏಡ್ಸ್ ಅಂಟಿಸಿಕೊಂಡು ಹಾಸಿಗೆ ಹಿಡಿದವನ ವೃತ್ತಾಂತ. +ಅದನ್ನು ಅವನೇ ಹೇಳುತ್ತಿರುವಂತೆ ಹಾಡನ್ನು ಕಟ್ಟಲಾಗಿತ್ತು. +ಮೊದಲು ನಗಿಸಿ ನಗಿಸಿ ಏಡ್ಸ್ ಆದ ಮೇಲಿನ ಶೋಚನೀಯ ಸ್ಥಿತಿ ಎಂತಹವರ ಮನವನ್ನ ಆಗಲಿ ಕದಡುವಂತಿತ್ತು. +ಕೊನೆಗೆ ಹೆಂಡತಿ ಮಕ್ಕಳು ಸಂಸಾರವೇ ಹೇಗೆ ಗತಿ ಎಂಬ ಮಾತು. +ಹಾಗೇ ವಿವಿಧ ವಿಷಯಗಳ ಮೇಲೆ ಮೂರು ಹಾಡುಗಳಾದವು. +ಡೋಲು ಡಪುಗಳ ಸಹಕಾರದಿಂದ ಹಾಡಿದ ಆ ಹಾಡುಗಳು ನೆರೆದ ಜನರನ್ನು ಕಟ್ಟಿ ಹಿಡಿದವು. +ಅದರ ಬಳಿಕ ಮಿಮಿಕ್ರಿ. +ಆ ಯುವಕ ಅದನ್ನು ತಾತನ ಭಾಷಣದಿಂದಲೇ ಆರಂಭಿಸಿದ. +ಅವನ ಮುಖದ ಹಾವಭಾವ, ಕೈಗಳು ಆಡಿಸುವುದು, ದನಿ ಅಚ್ಚೊತ್ತಿದಂತೆ ತಾತನ ಹಾಗೇ ಇತ್ತು. +ಅವನ ಪ್ರತಿ ಮಾತಿಗೂ ಜನರಲ್ಲಿ ನಗೆಯ ಅಲೆ ಏಳುತ್ತಿತ್ತು. +ನಂತರ ಸಿದ್ದಾನಾಯಕನ ಪಾತ್ರ. +ಅವನೇ ತನ್ನದೇ ಸಾರಾಯಿ ಅಂಗಡಿಯಲ್ಲಿ ಕುಳಿತು ಕುಡಿದು ಇನ್ಸ್‌ಪೆಕ್ಟರರೊಡನೆ ಹೇಗೆ ವರ್ತಿಸುದ್ದಾನೆ ಹೇಗೆ ಮಾತಾಡುತ್ತಿದ್ದನೆಂಬ ನಟನೆ. +ಪ್ರತಿ ಮಾತು ನಾಯಕ್ ಮತ್ತು ಉತ್ತೇಜ್‌ನೇ ಆಡಿದಂತಿತ್ತು. +ಅದನ್ನು ಕೇಳುತ್ತಿದ್ದ ತೇಜಾನಿಗೆ ತಾನೆ ಅಲ್ಲಿ ಮಾತಾಡುತ್ತಿದ್ದೇನೇನೋ ಎಂಬಂತೆನಿಸಿತು. +ಅವನ ಒಂದೊಂದು ಮಾತಿಗೆ ಜನ ಸಮುದಾಯದಿಂದ ನಗೆಬುಗ್ಗೆ ಎದ್ದು ಮುಂದಿನ ಮಾತು ಕೇಳಲು ಜನ ಮೌನವಾಗುತ್ತಿದ್ದರು. +ಅದರನಂತರ ಬಂಡೇರಹಳ್ಳಿಯ ಸಮಸ್ಯೆಗಳನ್ನು ಕುರಿತಾದುದೇ ಒಂದು ಮೂರು ಪಾತ್ರಗಳ ನಾಟಕ, ಅದೂ ಜನರ ಮನವನ್ನು ರಂಜಿಸಿತು. +ಕೊನೆಗೆ ಇನ್ಸ್‌ಪೆಕ್ಟರ್‌ ಉತ್ತೇಜ್ ವೇದಿಕೆಯ ಮೇಲೆ ಬಂದು ಎರಡು ಮಾತು ಹೇಳಬೇಕೆಂದು ಕೋರಿಕೊಂಡ ತಾತ. +ವೇದಿಕೆಯ ಮೇಲೆ ಬಂದ ತೇಜಾ ಎಲ್ಲರಿಗೂ ನಮಸ್ಕರಿಸಿ ಹೇಳಿದ “ನಾವು ಪೋಲಿಸಿನವರು ನಿಮ್ಮ ಶತ್ರುಗಳಲ್ಲ. +ಅವರನ್ನು ನೋಡಿ ಭಯಪಡಬೇಕಾಗಿಲ್ಲ. +ನಾವು ನಿಮ್ಮ ಸ್ನೇಹಿತರು ಕಷ್ಟದ ಸಮಯದಲ್ಲಿ ಸಹಾಯ ಮಾಡುವವರು ಎಂತಹದೇ ಸಮಸ್ಯೆ ಇದ್ದರೂ, ಯಾವ ಸಮಯದಲ್ಲಾದರೂ ನೀವು ನನ್ನ ಬಳಿ ಬರಬಹುದು. +ನಿಮ್ಮ ಸಹಾಯಕ್ಕೆ ನಾನು ಸಿದ್ಧನಿರುತ್ತೇನೆ. +ನಾವೆಲ್ಲಾ ಸೇರಿ ಬಂಡೇರಹಳ್ಳಿಯನ್ನು ಸ್ವರ್ಗ ಮಾಡುವಂತಹ ಕನಸು ಕಾಣುವ… ನಮಸ್ಕಾರ”ಮಾತು ಮುಗಿಸಿದ ತೇಜಾ ಕೆಳಗಿಳಿಯುತ್ತಿದ್ದಂತೆ ಜನಸಮೂಹವೆಲ್ಲಾ ಎದ್ದು ನಿಂತು ಚಪ್ಪಾಳೆ ಬಾರಿಸುತ್ತಿದ್ದರು. +ಅವನಿಗಾಗೇ ಕಾದಂತೆ, ಮಾತಾಡಿದ ತಾತ, ಯುವಕರು, ನಡು ವಯಸ್ಕರು ಎಲ್ಲರೂ ಅವನನ್ನು ಸುತ್ತುವರೆದರು. +ಬಂಡೇರಹಳ್ಳಿಯ ಇತಿಹಾಸದಲ್ಲೇ ಅಂತಹ ಕಾರ್ಯಕ್ರಮವಾಗಿಲ್ಲವೆಂದು ಹೊಗಳಿದರು. +ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೆ ಕಂಬಳಿ ಹೊದ್ದ ಕಲ್ಯಾಣಿ ಎಲ್ಲವನ್ನೂ ನೋಡಿದ್ದಳೆಂಬುವುದು ಕೆಲವರಿಗೆ ಮಾತ್ರ ಗೊತ್ತಿತ್ತು. +ಎಲ್ಲರೊಡನೆ ಮಾತು ಮುಗಿಸಿ ತೇಜಾ ಮಲಗಿದಾಗ ಹನ್ನೆರಡು ಸಮೀಪಿಸುತ್ತಿತ್ತು ಸಮಯ. +ಮನಸ್ಸಿಗೆ ಒಂದು ತರಹದ ತೃಪ್ತಿ. +ಆ ಯುವಕರು ಹೇಳಿದ ಕೆಲಸವನ್ನು ಇಂದು ಮಾಡಲಾಗಲಿಲ್ಲವಲ್ಲ ಎಂಬ ಅಸಂತೋಷ . +ಈಗಲೂ ಕಳ್ಳತನದಿಂದ ಸಾರಾಯಿ ಮಾರಾಟವಾಗುತ್ತಿರಬಹುದೆಂಬ ಯೋಚನೆ ಅವನನ್ನು ಅಸ್ಪಸ್ಥನನ್ನಾಗಿ ಮಾಡಿತು. +ಬಹಳ ದಣಿವಿನ ಕಾರಣ ಈ ಯಾವ ಯೋಚನೆಗಳೂ ಅವನನ್ನು ಹೆಚ್ಚು ಹೊತ್ತು ಕಾಡಲಿಲ್ಲ. +ಅವನಿಗರಿವಿಲ್ಲದ ಹಾಗೆ ನಿದ್ದೆ ಅವನನ್ನು ಆವರಿಸಿಬಿಟ್ಟಿತು. +ಯಾರೋ ಬಲವಾಗಿ ಅಲಗಿಸುತ್ತಿರುವಂತಾಗಿ ಎಚ್ಚರಗೊಂಡ ತೇಜ. +ಬೆಡ್‌ಲ್ಯಾಂಪು ಸಾಕಷ್ಟು ಪ್ರಕಾಶ ಬೀರಿರಲಿಲ್ಲ. +ಕಣ್ಣಗಲಿಸಿ ಮಂಚದ ಬದಿಗೆ ನಿಂತ ವ್ಯಕ್ತಿಯನ್ನು ನೋಡಿದ. +ಅವನ ಮುಖದ ಮೇಲೆ ನೆರಳು ಬಿದ್ದಿತು. +ಯಾರೆಂಬುವುದು ಗುರುತಿಸಲಾಗಲಿಲ್ಲ. +ಅವನು ಎದ್ದು ಕುಳಿತಾಗ ಮಾತಾಡಿದನಾ ವ್ಯಕ್ತಿ“ನೀನು ಕಲ್ಲಕ್ಕನನ್ನು ಭೇಟಿಯಾಗುವೆಯಾ”ಕಲ್ಲಕ್ಕ ಎಂದ ಕೂಡಲೇ ಅವನ ನಿದ್ದೆಯ ಗುಂಗಲ್ಲಾ ಮಾಯವಾಯಿತು. +ಕೂಡಲೇ ಹೇಳಿದ. +“ಹೂಂ!ಭೇಟಿಯಾಗುತ್ತೇನೆ”“ನಡಿ ಹೋಗುವ” ನಿರ್ಭಾವ ದನಿಯಲ್ಲಿ ಬಂತವನ ಮಾತು. +ಲಗುಬಗೆಯಿಂದ ಎದ್ದ ತೇಜ ಬಟ್ಟೆ ಬದಲಿಸುತ್ತಿರುವಾಗ ಹೇಳಿದನಾ ವ್ಯಕ್ತಿ. +“ನಿನ್ನ ರಿವಾಲ್ವರ್‌ಗಾಗಿ ಹುಡುಕಬೇಡ. +ಅದು ನನ್ನ ಬಳಿ ಇದೆ”ಆಶ್ಚರ್ಯವಾಯಿತು ತೇಜಾನಿಗೆ ಆದರೂ ಏನೂ ಹೇಳಲಿಲ್ಲ. +ಕೈಗಡಿಯಾರ ನೋಡಿದ. +ನಾಲ್ಕು, ಎಷ್ಟು ಅನಾಯಾಸವಾಗಿ ಈ ವ್ಯಕ್ತಿ ಬಾಗಿಲು ತೆಗೆದುಕೊಂಡು ಬಂದಿರಬಹುದು ಎಂದು ಯೋಚಿಸುತ್ತಲೇ ಕಾಲಿಗೆ ಬೂಟುಗಳನ್ನು ಏರಿಸಿದ. +ಅದು ಮುಗಿದ ಮೇಲೆ ಸಿದ್ಧವಾದವನಂತೆ ಹೇಳಿದ“ನಡಿ”“ಗಡಿಯಾರವನ್ನೂ ಬಿಚ್ಚಿಡು. +ಅದೂ ಬೇಡ” ಎಂದನಾ ವ್ಯಕ್ತಿ. +ಅದು ಯಾವ ಅಪಾಯಕಾರಿ ವಸ್ತುವೆಂದು ಯೋಚಿಸುತ್ತಲೇ ಗಡಿಯಾರ ಬಿಚ್ಚಿ ಹಾಸಿಗೆಯ ದಿಂಬಿನ ಕೆಳಗಿಟ್ಟ. +ಅದನ್ನು ನೋಡಿ ಹೇಳಿದ ಆ ವ್ಯಕ್ತಿ“ನೀ ಮುಂದೆ ನಡಿ”ಮರು ಮಾತಿಲ್ಲದೇ ಅವನ ಆಜ್ಞೆಯನ್ನು ಪಾಲಿಸಿದ. +ಇಬ್ಬರೂ ಹೊರಬಂದ ಮೇಲೆ ಅವನೇ ಮುಂಬಾಗಿಲಿನ ಬೋಲ್ಟನ್ನು ಎಳೆದ. +ಇನ್ನೂ ಗಾಡಾಂಧಕಾರ ಆವರಿಸಿಯೇ ಇತ್ತು. +ದಾರಿ ತೋರಕನಂತೆ ಮುಂದೆ ಬಂದ ಆ ವ್ಯಕ್ತಿ. +ಅವನ ಹಿಂದೆ ನಡೆಯುತ್ತಾ ತೇಜ ಕಾಡನ್ನು ಹೊಕ್ಕ. +ಆ ಕಾಡಿನಲ್ಲಿ ಹೊಸ ವ್ಯಕ್ತಿ ಸ್ವಲ್ಪ ದೂರ ಹೋದರೆ ಮತ್ತೆ ಬಂಡೇರಹಳ್ಳಿಯನ್ನು ಸೇರುವುದು ಕಷ್ಟ. +ಹಾಗೇ ಅವನು ಕಾಡಿನಲ್ಲೇ ಅಲೆಯುತ್ತಿರಬೇಕೆಂಬುವುದು ತೇಜಾನಿಗೆ ಗೊತ್ತಿತ್ತು. +ಕಾಡಿನಲ್ಲಿ ನಾಲ್ಕು ಹೆಜ್ಜೆ ನಡೆದ ಮೇಲೆ ಅವನನ್ನು ಕರೆದೊಯ್ಯಲು ಬಂದವ ಹೇಳಿದ“ಸರಿಯಾಗಿ ನನ್ನ ಹಿಂದೆ ಬಾ. +ಇಲ್ಲದಿದ್ದರೆ ಅಪಾಯ”ಅದಕ್ಯಾವ ರೀತಿಯಲ್ಲೂ ಪ್ರತಿಕ್ರಿಯಿಸದೇ ಅವನನ್ನು ಅಂಟಿಕೊಂಡ ನಡೆಯುತ್ತಿರುವಂತೆ ಹೆಜ್ಜೆ ಹಾಕುತ್ತಿದ್ದ. +ಗಾಡಾಂಧಕಾರದಲ್ಲಿ ಕಾಡು ತನ್ನದೇ ಶಬ್ದಗಳನ್ನು ಹೊರಡಿಸುತ್ತಿತ್ತು. +ಮುಂದೆ ನಡೆಯುತ್ತಿದ್ದ ವ್ಯಕ್ತಿ ದಾರಿ ತನಗೆ ಚೆನ್ನಾಗಿ ಗೊತ್ತಿರುವಂತೆ ನಡೆಯುತ್ತಿದ್ದ. +ಆಗಾಗ ಅವರ ದೇಹಗಳಿಗೆ ಅಕ್ಕಪಕ್ಕದ ಟೊಂಗೆಗಳು ಸವರಿ ಹೋಗುತ್ತಿದ್ದವು. +ಒಂದೊಂದು ಸಲ ಮುಂದೆ ನಡೆಯುತ್ತಿದ್ದವನ ನಡುಗೆಯ ವೇಗ ಕಡಿಮೆಯಾಗುತ್ತಿತ್ತು. +ಅಸ್ಪಷ್ಟವಾಗಿ ಅವನ ಆಕಾರ ತೇಜಾನಿಗೆ ಕಾಣುತ್ತಿತ್ತು. +ಅಡ್ಡ ಬರುತ್ತಿರುವ ಗಿಡಗಂಟೆಗಳಿಂದ ತಪ್ಪಿಸಿಕೊಳ್ಳಲು ಅವನು ಬಗ್ಗುತ್ತಿದ್ದ. +ಅದನ್ನು ಗಮಿಸಿದ ತೇಜಾ ಕೂಡ ಹಾಗೇ ಮಾಡುತ್ತಿದ್ದ. +ಹದವಾದ ಚಳಿ ಕಾಡಿನಲ್ಲಿ ಇನ್ನೂ ಹೆಚ್ಚಾಗಿತ್ತು. +ನಡುಗೆ ವೇಗ ತೇಜಾನ ದೇಹವನ್ನು ಬಿಸಿ ಮಾಡಿತು. +ದಾರಿ ಒಂದೊಂದು ಸಲ ಪರ್ವತದ ಮೇಲೇರುತ್ತಿರುವಂತೆ ಕಂಡರೆ ಮತ್ತೊಂದು ಸಲ ಯಾವುದೋ ಕಂದಕದಲ್ಲಿ ಇಳಿಯುತ್ತಿರುವಂತಹ ಭಾಸ ಹುಟ್ಟಿಸುತ್ತಿತ್ತು. +ಆಗಿಂದಾಗ ಅವನ ದಾರಿ ತೋರಕ ಹೇಗೆ ನಡೆಯಬೇಕೆಂಬ ಎಚ್ಚರಿಕೆಯ ಮಾತುಗಳನ್ನು ಹೇಳುತ್ತಿದ್ದ. +ಅವನ ಆದೇಶವನ್ನು ಪಾಲಿಸುತ್ತಿದ್ದ ತೇಜಾ. +ಹಾಗೆ ಅವನು ಎಷ್ಟು ಹೊತ್ತು ನಡೆದಿರಬಹುದೆಂಬ ಅಂದಾಜು ಇರಲಿಲ್ಲ ತೇಜಾನಿಗೆ. +ಹಕ್ಕಿಗಳು ಎಚ್ಚರಗೊಂಡ ಸದ್ದು ಕಾಡನ್ನೆಲ್ಲಾ ತುಂಬುತ್ತಾ ಬರತೊಡಗಿತು. +ಬರೀ ಆ ಚಿಲಿಪಿಲಿ ಶಬ್ದಗಳೇ ಕಿವಿಗಳನ್ನು ತುಂಬಿದ್ದಂತೆ ಭಾಸವಾಗುತ್ತಿತ್ತು. +ಇದು ಬೆಳಗಾಗುತ್ತಿರುವ ಸೂಚನೆಗಳು ಅಂದರೆ ತಾವು ಅರ್ಧ ಗಂಟೆ ನಡೆದಿರಬಹುದೇ, ಮುಕ್ಕಾಲು ಗಂಟೆ ನಡೆದಿರಬಹುದೆ ಅಥವಾ ಸುಮಾರು ಒಂದು ಗಂಟೆಯಿಂದ ನಡೆಯುತ್ತಲೇ ಇದ್ದೇವೆಯೇ ಎಂಬ ಲೆಕ್ಕಾಚಾರ ಹಾಕುವುದರಲ್ಲಿ ತೊಡಗಿದ ತೇಜ. +ಎಷ್ಟು ಹೊತ್ತು ಆಗಿರಬಹುದೆಂಬ ನಿಖರ ಅಂದಾಜು ಹಾಕುವುದರಲ್ಲಿ ಅಸಫಲವಾಯಿತವನ ಮೆದುಳು. +ಆಗ ಅವನಿಗೆ ಈ ವ್ಯಕ್ತಿ ತನಗೆ ಗಡಿಯಾರವನ್ನು ಯಾಕೆ ಜತೆಗೆ ತರಬೇಡವೆಂದು ಹೇಳಿದ್ದಾನೆಂಬುವುದು ಹೊಳೆಯಿತು. +ಇಷ್ಟು ಚಿಕ್ಕ ವಿಷಯ ಅರಿಯಲು ಇಷ್ಟು ಹೊತ್ತೇ ಎಂದು ತನ್ನ ತಾನು ಬೈದುಕೊಂಡ. +ಹಕ್ಕಿಗಳ ಚಿಲಿಪಿಲಿಯೊಡನೆ ಕತ್ತಲನ್ನು ಓಡಿಸುವ ಯತ್ನವನ್ನು ಆರಂಭಿಸುತ್ತಿದ್ದಂತೆ ಕದಡಿತು ಬೆಳಕು. +ಈಗಲೇ ತೇಜಾ ಹಗುರವಾಗಿ ಬೆವರತೊಡಗಿದ. +ಈ ನಡುಗೆ ಸಾಕು ಎಲ್ಲಾದರೂ ಕುಳಿತು ಸ್ವಲ್ಪ ವಿಶ್ರಮಿಸಬೇಕು ಎನಿಸುತ್ತಿತ್ತು. +ದಾರಿ ಮೇಲೆ ಹೋಗುತ್ತಿದ್ದುದಂತಹ ಭಾಸ. +ಹಾಗೆ ಹೇಳಿದ ದಾರಿ ತೋರಕ ವ್ಯಕ್ತಿ“ಸರಿಯಾಗಿ ನನ್ನ ಹಿಂದೆಯೇ ನಡಿ, ಹೆಜ್ಜೆ ಸ್ವಲ್ಪವಾದರೂ ಅತ್ತಿತ್ತ ಬಿದ್ದರೆ ಸಾಯುತ್ತೀ”ಮೊದಲು ಅಕ್ಕಪಕ್ಕದಲ್ಲಿ ಕಂದಕಗಳಿರಬಹುದೇ ಎಂಬ ಯೋಚನೆ ಬಂತು. +ಕೆಲಕ್ಷಣಗಳ ಚಿಂತನೆಯ ಬಳಿಕ ಸುತ್ತೂ ಲ್ಯಾಂಡ್‌ಮೈನ್ಸ್ ಹರಡಲಾಗಿರಬಹುದು ಎಂದುಕೊಂಡ. +ಒಂದು ವೇಳೆ ಅದೇ ನಿಜವಾಗಿದ್ದರೆ ತಾನೇ ಅಲ್ಲ ಅವನೂ ಸಾಯುತ್ತಾನೆ ಎನಿಸಿತ್ತು. +ಅವನ ಅನಿಸಿಕೆ ನಿಜವೆಂಬಂತೆ ಮುಂದೆ ನಡೆಯುತ್ತಿರುವ ವ್ಯಕ್ತಿಯ ನಡುಗೆಯ ವೇಗ ಕಡಿಮೆಯಾಯಿತು. +ಅಂದರೆ ತಾವು ಗುರಿಯನ್ನು ಸಮೀಪಿಸುತ್ತಿದ್ದೇವೆ ಎಂದುಕೊಂಡ ತೇಜಾ. +ಒಂದು ಪರ್ವತಶಿಖರದ ಮೇಲೆ ಏರುತ್ತಿರುವಂತಹ ಹಾಗೇ ಎಷ್ಟು ಹೊತ್ತು ಮೇಲೇರುತ್ತಾ ಹೋದವೆಂಬ ಅರಿವಿಲ್ಲ. +ನಿರಂತರ ನಡುಗೆಯ ಹಿಂಸೆಯ ಕಾರಣ ಅದರ ಬಗ್ಗೆ ಯೋಚಿಸಲೂ ನಿರಾಕರಿಸಿತವನ ಮೆದುಳು. +“ಬನ್ನಿ, ಮಿಸ್ಟರ್ ಉತ್ತೇಜ್! ಬನ್ನಿ. +ನಾವು ದೇಶವನ್ನು ಉದ್ಧಾರ ಮಾಡಲು ಎಷ್ಟು ಕಷ್ಟಪಡುತ್ತಿದ್ದೇವೆಂಬುದು ನಿಮಗೀಗಲಾದರೂ ಗೊತ್ತಾಗಿರಬಹುದು”ಪ್ರಭಾವಶಾಲಿ ಹೆಣ್ಣು ಕಂಠ ಕೇಳಿಸಿತು. +ಎದುರಿಗೆ ನಡೆಯುತ್ತಿದ್ದವ ಬದಿಗೆ ಸರಿದ. +ಚಿಕ್ಕ ಮೈದಾನದಲ್ಲಿ ಕಲ್ಲು ಬಂಡೆಗಳಿರುವುದು ಕಾಣುತ್ತಿತ್ತು. +ಬಿಗಿಯಾದ ಜೀನ್ಸ್ ಮತ್ತು ಜಾಕೆಟ್ ತೊಟ್ಟ ಹೆಣ್ಣು ಬಂಡೆಗಾನಿ ನಿಂತಿದ್ದಳು. +ಅವಳು ಹೆಣ್ಣೆಂದು ಗುರುತಿಸಲು ಎರಡು ಸಂಕೇತಗಳು ಅವಳು ತಲೆಗೆ ಕಟ್ಟಿದ ಕೂದಲ ಗಂಟು ಮತ್ತು ಉಬ್ಬಿದ ಎದೆ ಭಾಗ, ನಡುಗೆಯ ತನ್ನ ದಣಿವನ್ನು ಆರಿಸಿಕೊಳ್ಳುತ್ತಾ ಸುತ್ತೂ ನೋಡಿದ. +ಗಿಡಗಂಟೆಗಳಿಂದ ಮುಕ್ತವಾದ ಚಿಕ್ಕ ಮೈದಾನ, ಕಲ್ಯಾಣಿ ನಿಂತ ಕಡೆ ಎತ್ತರಕ್ಕೇರಿದ ಬಂಡೆಗಳ ಸಮೂಹ. +ಒಂದು ಬಂಡೆ ಎತ್ತರಕ್ಕೇರಿದ್ದರೆ ಅದರ ಅಕ್ಕಪಕ್ಕದಲ್ಲಿ ಎತ್ತರ ತಗ್ಗುತ್ತಾ ಬಂದು ನೆಲಕ್ಕೆ ಸಮಾನವಾದಂತಹ ಬಂಡೆಗಳು. +ತೇಜಾನಿಗದು ಪೈಂಟರ್ ಒಬ್ಬ ಊಹಿಸಬಹುದಾದಂತಹ ಸುಂದರ ದೃಶ್ಯದಂತೆ ಕಂಡಿತು. +ಏದುಸಿರು ಕಡಿಮೆಯಾದ ಮೇಲೆ ಹೇಳಿದ ತೇಜಾ. +“ನಿನ್ನ ನೋಡಲು ಬಂದೆ ಕಲ್ಯಾಣಿ, ಇಷ್ಟು ಕಷ್ಟಗಳನ್ನು ಅನುಭವಿಸುತ್ತಾ ನೀನು ಹೇಗೆ ಬದುಕುತ್ತಿರುವೆ ಎಂಬುದನ್ನು ನೋಡಲು ಬಂದೆ” +“ಕೂಡಿ!ದಣಿವನ್ನು ಆರಿಸಿಕೊಳ್ಳಿ. +ನಿಮ್ಮೊಡನೆ ಕೆಲ ವಿಷಯಗಳು ಮಾತಾಡಬೇಕೆನಿಸಿತು. +ಅದಕ್ಕೆ ಕರೆಸಿದೆ… ಇದೊಂದು ಹಿಲ್ ಸ್ಟೇಷನ್ ಎಂದುಕೊಳ್ಳಿ. +ಈಗ ನಿಮಗೆ ಕಾಫಿ ಬರುತ್ತದೆ”ನೆಲದ ಮೇಲೆ ಕುಳಿತ ತೇಜಾನಿಗೆ ಅಲ್ಲೇ ಮುಗಿಸಿಬಿಡಬೇಕೆನಿಸಿತು. +ಆ ಯೋಚನೆಯನ್ನು ತಕ್ಷಣ ಬದಿಗೆ ತಳ್ಳಿ ಮತ್ತೆ ಸುತ್ತೂ ನೋಡಿದ. +ಅವಳ ವಿನಹ ಅವಳ ತಂಡದವರಾರೂ ಕಾಣಲಿಲ್ಲ. +ಸಮಯ ವ್ಯರ್ಥ ಮಾಡಬಾರದೆಂದು ಕೊಳ್ಳುತ್ತಾ ಮಾತಾಡಿದ. +“ನಾಗೇಶ ಹೇಗಿದ್ದಾನೆ?” +“ಕಾಡಿನಲ್ಲಿ ಪ್ರಾಣಿಗಳಂತೆ ಅಲೆಯುವವರಿಗೆ ಏನೂ ಆಗುವುದಿಲ್ಲ. +ಅವನನ್ನು ನೀವು ಸರಿಯಾಗಿ ನೋಡಿಕೊಂಡಿರಿ ಅದಕ್ಕೆ ಥ್ಯಾಂಕ್ಸ್ ಹೇಳಬೇಕೆ ಬೇಡವೇ ಎನ್ನುವುದೇ ನನಗಿನ್ನೂ ಅರ್ಥವಾಗಿಲ್ಲ”. +ಅದಕ್ಕೆ ತೇಜಾ ಉತ್ತರಿಸಲು ಹೋದಾಗ ಒಬ್ಬ ಅವನ ಕೈಗೆ ಕಾಫಿಯ ಲೋಟ ಕೊಟ್ಟು ಮಾಯವಾದ. +ತನ್ನ ಮನೆಗೆ ಬಂದ ಅತಿಥಿಯನ್ನು ಕೇಳುವಂತೆ ಕೇಳಿದಳು ಕಲ್ಯಾಣಿ. +“ನೀರು ಬೇಕೇ?” +“ಬೇಡ!… ಅಂತೂ ನೀವಿಲ್ಲಿ ಫೈವ್‌ಸ್ಟಾರ್ ಹೋಟಲಿನಲ್ಲಿ ಇದ್ದ ಹಾಗೆ ಇದ್ದಂತೆ ಕಾಣುತ್ತದೆ” ಉತೇಜನ ಮಾತಿನಲ್ಲಿ ಅಚ್ಚರಿ, ಅಣಕದ ಭಾವಗಳಿದ್ದವು. +ಅದಕ್ಕೆ ಕೂಡಲೇ ಬಂತು ಕಲ್ಯಾಣಿಯಿಂದ ಪ್ರತಿಕ್ರಿಯೆ. +“ನಾನು ಜನರನ್ನು ಲೂಟಿ ಮಾಡಿ ಮಜಾ ಮಾಡುತ್ತಿಲ್ಲ ಉತೇಜ್. +ಈ ವ್ಯಂಗ್ಯದ ಮಾತುಗಳನ್ನು ನಿಮ್ಮ ಎಸ್.ಪಿ.ಮತ್ತು ಸಿದ್ದಾನಾಯಕ್‌ರಿಗೆ ಹೇಳಿ. +ಇಲ್ಲಿ ನನ್ನ ಅಭಿಮಾನಿಗಳು, ಹಿತೈಷಿಯರು ದೇಶದ ಹಿತ ಬಯಸುವವರು ನನಗೆ ಬೇಕಾದುದೆಲ್ಲವನ್ನು ಒದಗಿಸುತ್ತಾರೆ”ತಕ್ಷಣ ತಾನು ಹಾಗೆ ಮಾತಾಡಿದ್ದು ಸರಿಯಲ್ಲವೆನಿಸಿತು ತೇಜಾನಿಗೆ. +ತನ್ನ ಯೋಜನೆಯ ಪ್ರಕಾರ ಮೊದಲು ತಾನವಳ ವಿಶ್ವಾಸವನ್ನು ಸಂಪಾದಿಸಬೇಕು. +ಮುಂದಿನ ಮಾತುಗಳಲ್ಲಿ ಅದನ್ನು ತಿದ್ದಿಕೊಳ್ಳುವ ಎಂದುಕೊಳ್ಳುತ್ತಾ ಕಾಫಿ ಕುಡಿಯುವ ಕಡೆ ಗಮನಹರಿಸಿದ. +ದಣಿವಿನ ಕಾರಣ ಅದವನಿಗೆ ಬಹು ಆಹ್ಲಾದಕರ ಅನುಭವ ನೀಡುತ್ತಿತ್ತು. +ಬೆಳಕು ಹೆಚ್ಚಾಗಿ ಸೂರ್ಯ ಉದಯಿಸಲಿರುವ ಲಕ್ಷಣಗಳು ಕಂಡುಬರತೊಡಗಿದವು. +ಕಾಫಿಯ ಗ್ಲಾಸನ್ನು ಕೆಳಗಿಟ್ಟ ತೇಜಾ ಕೆಲಕ್ಷಣ ತದೇಕಚಿತ್ತದಿಂದ ಕಲ್ಯಾಣಿಯನ್ನು ನೋಡಿದ. +ಆ ಮನಮೋಹಕ ದೃಶ್ಯದ ಹಿನ್ನೆಲೆಯಲ್ಲಿ ಅವಳಿನ್ನೂ ಸುಂದರವಾಗಿ ಕಂಡಳು. +“ನೀವು ಫೂಲನ್‌ದೇವಿಯ ಹಾಗೆ ಇರಬಹುದೆಂದುಕೊಂಡಿದ್ದೆ ಇಷ್ಟು…” +“ನಾಟಕ ಬೇಡ ಉತೇಜ್! +ನೀವು ನನ್ನ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿಯೇ ಇಲ್ಲಿ ಬಂದಿದ್ದೀರಿ. +ನನ್ನ ಹಲವಾರು ಫೋಟೋಗಳನ್ನು ನೀವು ನೋಡಿರಬಹುದು. +ಮೊದಲು ನಾ ನಿಮ್ಮ ಜಾತಕವನ್ನು ಓದುತ್ತೇನೆ ಮುಂದೆ ನಾವು ಮಾತಾಡಲು ಅದು ಸುಲಭವಾಗಬಹುದು” ಎಂದ ಕಲ್ಯಾಣಿ ಜೀನ್ಸ್ ಕಿಸೆಯಿಂದ ಒಂದು ಕಾಗದ ತೆಗೆದು ಓದಲಾರಂಭಿಸಿದಳು. +“ನಿಮ್ಮ ತಂದೆ ತಾಯಿ ತೀರಿಕೊಂಡಿದ್ದಾರೆ. +ಇದ್ದ ಒಬ್ಬ ಅಕ್ಕ ಕ್ಯಾನ್ಸರ್‌ನಿಂದ ಮರಣಿಸಿದ್ದಾಳೆ. +ಕಾಲೇಜು ಮುಗಿಯುತ್ತಲೇ ಯಾರ ಶಿಫಾರಸು ಇಲ್ಲದೇ ನೀವು ಪೊಲೀಸ್ ಖಾತೆಯನ್ನು ಸೇರಿದಿರಿ. +ಅಪರಾಧಿಗಳನ್ನು ಸದೆಬಡಿದು ದೇಶವನ್ನು ಉದ್ಧಾರ ಮಾಡುವ ಮಹತ್ವಾಕಾಂಕ್ಷೆ ನಿಮ್ಮಲ್ಲಿ ತುಂಬಿತ್ತು. +ಲಂಚ ತೆಗೆದುಕೊಳ್ಳುವವರನ್ನು ಹೇಸಿಸಿಕೊಳ್ಳುತ್ತಿದ್ದೀರಿ. +ಅದರಿಂದ ನಿಮಗೆ ಒಂದು ಪೋಲೀಸ್ ಸ್ಟೇಷನ್ನಿನಿಂದ ಇನ್ನೊಂದಕ್ಕೆ ವರ್ಗವಾಗಲಾರಂಭವಾಯಿತು. +ಎಸ್.ಐ.ಆಗಿದ್ದಾಗ ಒಂದು ಸಲ ದೇವಿಯಾದವ ಅನಿರಿಕ್ಷಿತವಾಗಿ ಕಳ್ಳಮಾಲಿನೊಡನೆ ನಿಮಗೆ ಸಿಕ್ಕಿಬಿದ್ದ. +ಅವನಾಗ ಒಬ್ಬ ಮರಿ ರೌಡಿಯಾಗಿದ್ದ. +ಅವನನ್ನು ನೀವು ಪೋಲಿಸ್ ಸ್ಟೇಷನ್ನಿಗೆ ತಂದು ತದಕುತ್ತಿದ್ದಾಗ ಕಮೀಷನರ್ ಫೋನ್ ಮಾಡಿ ಅವನನ್ನು ಬಿಟ್ಟು ಬಿಡುವಂತೆ ಆಜ್ಞಾಪಿಸಿದರು. +ಅವನು ನಿಮಗೆ ಬಾಯಿಗೆ ಬಂದ ಹಾಗೆ ಬೈದು ರಾಜಾರೋಷವಾಗಿ ಮುಕ್ತನಾದ. +ಈಗ ನಾನವನನ್ನು ಮುಗಿಸಿದ್ದು ನಿಮ್ಮಲ್ಲಿ ಸಂತಸ ಹುಟ್ಟಿಸಿರಬೇಕು. +ಒಬ್ಬ ಮಂತ್ರಿಯ ಮಗನ ಕೊಲೆಗಾರನನ್ನು ಒಂದು ತಿಂಗಳೊಳಗೆ ಪತ್ತೆ ಹಚ್ಚಿ ಬಂದಿಸಿದ ಕಾರಣ ನಿಮಗೆ ಬೇಗ ಪ್ರಮೋಷನ್ ಬಂತು. +ಎಸ್.ಐ.ನಿಂದ ಇನ್ಸ್‌ಪೆಕ್ಟರ್ ಆದಿರಿ. +ಆದರೆ ಲಂಚದ ವಿರುದ್ಧ ಹೋರಾಡುವ ನಿಮ್ಮ ಅವಗುಣವನ್ನು ನೀವು ಬಿಡಲಿಲ್ಲ. +ಅದಕ್ಕೆ ಈಗ ಕಂಟ್ರೋಲ್‌ರೂಂನಲ್ಲಿ ಅಂದರೆ ಸೆಂಟ್ರಲ್ ಕ್ರೈಮ್ ಸ್ಟೇಷನ್ನಿನಲ್ಲಿದ್ದಿರಿ… +ಈಗ ಮಾತು ಮುಂದುವರಿಸುವುದು ಸುಲಭ”ಬರೆದುಕೊಂಡ ಭಾಷಣ ಓದುವಂತಹ ಅವಳ ಶೈಲಿಯೂ ಆಕರ್ಷಕವಾಗಿತ್ತು. +ಅದು ನಿಂತಕೂಡಲೇ ಚಪ್ಪಾಳೆ ತಟ್ಟಿ ಹೇಳಿದ ತೇಜ“ಶಭಾಶ್ ಬಹಳ ಚೆನ್ನಾಗಿ ಭಾಷಣ ಮಾಡುತ್ತೀರಿ. +ಅದಕ್ಕಾಗೇ ನಾಗೇಶನಂತಹ ಹಸುಳೆಯರು ನಿಮ್ಮ ಬಲೆಯಲ್ಲಿ ಸಿಕ್ಕಿದ್ದಾರೆ” +“ಈಗ ನಿಮಗೆ ಗೊತ್ತಾಗಿರಬಹುದು. +ನನ್ನ ಅಭಿಮಾನಿಯರು ಎಲ್ಲೆಲ್ಲಿ ಹರಡಿದ್ದಾರೆಂಬುವುದು. +ನಾನ್ಯಾರನ್ನೂ ಬಲೆಯಲ್ಲಿ ಹಾಕಿಕೊಳ್ಳುವುದಿಲ್ಲ, ಅವರೇ ನನ್ನೆಡೆ ಸೆಳೆಯಲ್ಪಡುತ್ತಾರೆ…” ಅವನ ಮಾತು ಮುಗಿಯುತ್ತಲೇ ಹೇಳಿದಳವಳು. +“ಅದನ್ನೇ ಹೇಳಬಯಸಿದ್ದೇನೆ ಕಲ್ಯಾಣಿ! +ನಿನ್ನ ಈ ಜನಪ್ರಿಯತೆಯನ್ನು ನೀನ್ಯಾಕೆ ಸದುಪಯೋಗಪಡಿಸಿಕೊಳ್ಳುವುದಿಲ್ಲ. +ಹಿಂಸೆಯಿಂದ ಏನನ್ನೂ ಸಾಧಿಸಲಾಗುವುದಿಲ್ಲ. +ಪ್ರೇಮ, ಪ್ರೀತಿ, ವಿಶ್ವಾಸದಿಂದ ಏನನ್ನು ಬೇಕಾದರೂ ಸಾಧಿಸಬಹುದು. +ಕೂಡಲೇ ಮಾತಾಡಿದ ತೇಜಾ ಅವನಿಗರಿವಿಲ್ಲದಂತೆ ಏಕವಚನವನ್ನು ಉಪಯೋಗಿಸಿದ್ದ. +ಅವಳೂ ಏಕವಚನದಲ್ಲಿ ಮಾತಾಡುವುದೇ ಸರಿ ಎಂದುಕೊಂಡು ಹೇಳಿದಳು. +“ನೀತಿ, ನಿಜಾಯತಿ ಕಾರ್ಯದಕ್ಷತೆಯಿಂದ ನೀ ಹೇಳಿದ ಹಾಗೆ ಪ್ರೀತಿ, ಪ್ರೇಮ, ವಿಶ್ವಾಸದಿಂದ ನೀನೇನು ಸಾಧಿಸಿರುವೆ ಹೇಳು. +ಒಬ್ಬ ಕೊಲೆಗಾರನನ್ನು ಬಂಧಿಸಿದ್ದಕ್ಕಾಗಿ ನಿನಗೆ ಪ್ರಮೋಷನ್ ಸಿಕ್ಕಿದೆ. +ಎಷ್ಟು ಜನ ಪೋಲಿಸಿನವರು ಎಷ್ಟು ಜನ ಕೊಲೆಗಾರರನ್ನು ಬಂಧಿಸಿಲ್ಲ. +ಅವರಿಗೆಲ್ಲಾ ಪ್ರಮೋಶನ್ ಸಿಕ್ಕಿದೆಯೇ! ಇಲ್ಲ. +ನಿನಗೆ ಸಿಕ್ಕಿದೆ ಯಾಕೆಂದರೆ ನೀನೊಬ್ಬ ಮಂತ್ರಿಯ ಮಗನ ಕೊಲೆಗಾರನನ್ನು ಬಂಧಿಸಿರುವಿ. +ಈ ದೇಶದಲ್ಲಿ ನೀತಿ ನಿಜಾಯಿತಿಯಿಂದ ಏನನ್ನೂ ಸಾಧಿಸಲಾಗುವುದಿಲ್ಲ. +ಭಯ!ಆಡಳಿತ ವರ್ಗದವರಲ್ಲಿ ಭಯವನ್ನು ಹುಟ್ಟಿಸಿ ಏನನ್ನಾದರೂ ಸಾಧಿಸಬಹುದು. +ಅದೇ ನಾ ನಿನಗೆ ಹೇಳಲು ಕರೆಸಿದ್ದು, ನಿನಗೆ ಹೆಂಡತಿ ಮಕ್ಕಳ ಗೋಳಿಲ್ಲ. +ಈ ಪ್ರೀತಿ ಪ್ರೇಮಗಳ ಹುಚ್ಚು ಅರ್ಥಹೀನ ಭಾವುಕತೆಯನ್ನೂ ಮನಸ್ಸಿನಿಂದ ತೆಗೆದುಹಾಕಿ ನಮ್ಮಲ್ಲಿ ಸೇರಿಕೋ ನಮ್ಮಿಂದಾದಷ್ಟು ಬಡಬಗ್ಗರ ನಿರ್ಗತಿಕರ ಸಹಾಯ ಮಾಡೋಣ… ಯೋಚಿಸುತ್ತಿರು. +ನಾನೀಗ ಬರುತ್ತೇನೆ. +ಅಡ್ಡಾಡಬೇಕೆನಿಸಿದರೆ ಇಲ್ಲೇ ಅಡ್ಡಾಡುತ್ತಿರು. +ದೂರ ಹೋಗಬೇಡ ಅಪಾಯ”ತನ್ನ ಉದ್ದನೆಯ ಮಾತು ಮುಗಿಸಿ ಕಲ್ಲು ಬಂಡೆಗಳ ಹಿಂದೆ ಮರೆಯಾದಳು ಕಲ್ಯಾಣಿ. +ತಾ ಕುಳಿತಲ್ಲಿಂದ ಎದ್ದ ತೇಜಾ ಮೈಮುರಿದು ಬಂದು ಒಂದು ಬಂಡೆಗೆ ತನ್ನ ಬೆನ್ನನು ಆನಿಸಿ ಕುಳಿತ. +ಈಗ ತನ್ನ ವಾದವನ್ನು ಮುಂದಿಡುವುದು ಹೇಗೆ, ಅವರನ್ನು ದಾರಿಗೆ ತರುವುದು ಹೇಗೆ ಎಂಬ ಬಗ್ಗೆ ಯೋಚಿಸುತ್ತಿದ್ದ ತೇಜಾ, ಮನುಷ್ಯ ಸ್ವಭಾವದ ಎಲ್ಲಾ ಭಾವನೆಗಳಿಂದ ಮುಕ್ತರಾಗಿ ತಮ್ಮ ಗುರಿಯನ್ನು ಸಾಧಿಸುವದೊಂದೇ ಈ ಕ್ರಾಂತಿಕಾರಿಯರ ಉದ್ದೇಶ. +ಅದನ್ನು ಕದಡಿ ನೋಡಬೇಕು ಎಂದುಕೊಂಡ. +ಅದೇ ಚಿಂತನೆಯಲ್ಲಿದ್ದಾಗ ಬಂಡೆಗಳ ಹಿಂದಿನಿಂದ ಬಂದ ಕಲ್ಯಾಣಿ ಹೇಳಿದಳು. +“ನಿನ್ನ ಸಾಂಸ್ಕೃತಿಕ ಕಾರ್ಯಕ್ರಮ ನೋಡಿದೆ. +ಒಳ್ಳೇ ಸಿನಿಮಾ ಒಂದು ಒದಗಿಸಬಹುದಾದಂತಹ ಮೋಜನ್ನದು ಒದಗಿಸಿತು ಅದು. +ಎಷ್ಟು ಸುಲಭವಾಗಿ ಜನರನ್ನು ಕೆಲ ಸಮಯವಾದರೂ ಅವರ ಬಡತನದ ಬವಣೆಯಿಂದ ದೂರ ಒಯ್ಯಬಹುದಲ್ಲವೇ… +ನಿನ್ನ ಭಾಷಣ ಕೂಡ ಚೆನ್ನಾಗಿತ್ತು. +ಅದರ ಫಲ ಆದಷ್ಟು ಬೇಗ ನಿನಗೆ ಸಿಗುತ್ತದೆ.” +“ಅಂದರೆ?” ಅಚ್ಚರಿಯ ದನಿಯಲ್ಲಿ ಕೇಳಿದ. +“ಅಂದರೆ ಇದು ಬಂಡೇರಹಳ್ಳಿ, ಪಟ್ಟಣವಲ್ಲ. +ಅದೇನಾಗುವುದು ಎಂದು ನಿನಗೆ ಗೊತ್ತಾಗುತ್ತದೆ. . +ಅದು ಹೋಗಲಿ ಮುಖ್ಯ ವಿಷಯಕ್ಕೆ ಬರುವ ನಾ ಹೇಳಿದರ ಬಗ್ಗೆ ಏನನ್ನಾದರೂ ಯೋಚಿಸಿದ್ದೀಯಾ?” ಆ ವಿಷಯ ಮುಖ್ಯವಲ್ಲವೆಂಬಂತೆ ಮೊದಲಿನ ಮಾತಿಗೆ ಬಂದಳು ಕಲ್ಯಾಣಿ. +ಇಲ್ಲೀಗ ನಿನ್ನ ಸಹಚರರು, ಸಹಾಯಕರು ಯಾರಾದರೂ ಇದ್ದಾರೆಯೋ?” ಕೇಳಿದ ತೇಜಾ. +ಅನುಮಾನದ ದನಿಯಲ್ಲಿ ಕೇಳಿದಳು ಕಲ್ಯಾಣಿ. +“ಯಾಕೆ?”ಅವಳ ಮುಖವನ್ನೇ ನೋಡುತ್ತಾ ಮುಗುಳ್ನಗೆ ನಕ್ಕು ಹೇಳಿದ ತೇಜಾ. +“ಭಯ ಬೇಡ!ನಾನೇನೂ ದೇವಿಯಾದವನಲ್ಲ. +ಕೆಲ ವಿಷಯಗಳು ಮಾತಾಡುವುದಿತ್ತು. +ಅದನ್ನು ಬೇರೆ ಯಾರೂ ಕೇಳಿಸಿಕೊಳ್ಳಬಾರದೆಂದು ಕೇಳಿದನಷ್ಟೆ”ನಕ್ಕಳು ಕಾಣಿ. +ವ್ಯಂಗ್ಯದ ಮುಗುಳ್ನಗೆ, ಆ ನಗು ಅವಳನ್ನು ಇನ್ನೂ ಸುಂದರವಾಗಿಸಿದೆ ಎನಿಸಿತು ತೇಜಾನಿಗೆ. +ನಗೆ ಹೋಗಿ ತುಟಿಗಳು ಒಂದಾಗುತ್ತಿದ್ದಂತೆ ಹೇಳಿದಳು“ಯಾರೂ ಇಲ್ಲ! +ಆದರೂ ನನ್ನ ಮತ್ತು ನನ್ನ ಸಹಚರರ ನಡುವೆ ಯಾವ ಮುಚ್ಚುಮರೆಯೂ ಇಲ್ಲ” +“ನಿನ್ನ ಸಹಚರರಲ್ಲಿ ನಿನಗೆ ಎಲ್ಲರಿಗಿಂತ ಹತ್ತಿರವಾದವನು ನಾಗೇಶ ಅಲ್ಲವೆ?” ಅವಳ ಮಾತು ಮುಗಿಯುತ್ತಲೇ ಕೇಳಿದ ತೇಜಾ. +ಈ ಅನಿರೀಕ್ಷಿತ ಪ್ರಶ್ನೆ ಅರೆಕ್ಷಣ ಅವಳನ್ನು ಗೊಂದಲಕ್ಕೀಡು ಮಾಡಿದಂತೆ ಕಂಡಿತು. +ತಕ್ಷಣ ಸುಧಾರಿಸಿಕೊಂಡು ನಿರ್ಭಾವ ದನಿಯಲ್ಲಿ ಹೇಳಿದಳು“ಇಲ್ಲ”“ನೀನು ಸುಳ್ಳು ಹೇಳುತ್ತಿದ್ದಿ. +ಎಲ್ಲರನ್ನೂ ಕಳೆದುಕೊಂಡ ನಾಗೇಶ ನಿನ್ನಲ್ಲಿ ಅವನ ತಾಯಿಯನ್ನೋ, ಅಕ್ಕನನ್ನೋ ಹುಡುಕುತ್ತಿದ್ದಂತೆ ಕಾಣುತ್ತದೆ.” +ಹಗುರ ಸಿಟ್ಟಿನ ದನಿಯಲ್ಲಿ ಪ್ರತಿ ಮಾತನ್ನೂ ಒತ್ತಿ ಹೇಳಿದ ತೇಜಾ. +ಅವಳ ಮುಖದಲ್ಲಿ ಒಂದು ಬಗೆಯ ನೋವು ಕಾಣಿಸಿಕೊಂಡು ಮಾಯವಾಯಿತು. +ಆದರೂ ಅದೇ ಮೊದಲಿನಂತಹದೇ ನಿರ್ಭಾವ ದನಿಯಲ್ಲಿ ಹೇಳಿದಳು. +“ಅವನಿನ್ನೂ ಮೆಚೂರ್ ಆಗಿಲ್ಲ ಭಾವುಕ. +ಆ ಭಾವುಕತೆಯ ಹೊಳೆಯಲ್ಲಿ ಹೊಯ್ದಾಡುತ್ತಿದ್ದಾನೆ. +ಸಮಯ ಅವನನ್ನು ತಾನೇ ಸರಿಪಡಿಸುತ್ತದೆ. +“ಯಾವುದೇ ಮನುಷ್ಯ ನಿರ್ಭಾವುಕನಾಗಿರುವುದು ಅಸಂಭವ. +ಅಂತಹವನು ಯಾರಾದರೂ ಇದ್ದರೆ ಅವನನ್ನು ಆಬ್‌ನಾರ್ಮಲ್ ಎನ್ನುತ್ತದೆ ಮನಶ್ಯಾಸ್ತ್ರ… +ಅದು ಹೋಗಲಿ ನೀನು ಶೀಲವತಿಯೋ?”ತೇಜಾನ ಮೊದಲ ಮಾತಿಗೆ ಅವಳು ಏನು ಹೇಳಬೇಕೆಂದು ಯೋಚಿಸುತ್ತಿರುವಾಗಲೆ ಅನಿರೀಕ್ಷಿತವಾಗಿ ಬಂತು ಪ್ರಶ್ನೆ. +ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿದಳು“ಅಂದರೆ?” +“ಶೀಲ ಅಂದರೇನೆಂಬುದು ನಿನಗೆ ಗೊತ್ತಿಲ್ಲವೆ? +ಈ ಶೀಲದ ಹರಣದ ಕಾರಣವಾಗಿಯೇ ಬಂಡೇರಹಳ್ಳಿಯ ಹೆಣ್ಣುಗಳ ಕೊಲೆ ಕೂಡ ಆಗಿರಬಹುದು. +ಈಗಲಾದರೂ ಗೊತ್ತಾಯಿತೇ ಶೀಲವಂತರೇನೆಂಬುವುದು?”ಬೇಕೆಂತಲೇ ತೇಜಾ ಪ್ರತಿ ಶಬ್ದವನ್ನೂ ಒತ್ತಿ ಹೇಳಿದ. +ಎರಡನೆಯ ಸಲ ನಕ್ಕಳು ಕಲ್ಯಾಣಿ ತಿಳಿಯಾದ ಹುಡುಗಾಟಿಕೆಯ ಮುಗುಳ್ನಗೆ ನಗು ತುಟಿಗಳಿಂದ ಮಾಯವಾಗುತ್ತಿದ್ದಂತೆ ಕೇಳಿದಳು. +“ಯಾಕೆ ನೀನಿಲ್ಲಿ ನನ್ನ ಮದುವೆಯಾಗಲು ಬಂದಿದ್ದೀಯಾ?” +“ಅಂತಹ ಬಂಧನದಲ್ಲಿ ಸಿಕ್ಕಿಬೀಳುವ ಇಷ್ಟ ನನಗಿಲ್ಲ. +ನಾ ಸತ್ತರೆ ನನಗಾಗಿ ಅಳುವವರು ಯಾರೂ ಇರಬಾರದು… +ಹೋಗಲಿ ಮಾತು ಎಲ್ಲಿಂದಲ್ಲಿಗೋ ಹೋಗುತ್ತಿದೆ. +ನನ್ನ ಪ್ರಶ್ನೆಗೆ ನೀನು ಉತ್ತರಿಸಲಿಲ್ಲ. +ನೀನು ಶೀಲವಂತೆಯೇ?” ಹಗುರ ದನಿಯಲ್ಲಿ ಮಾತನ್ನು ಆರಂಭಿಸಿ ಗಂಭೀರ ಪ್ರಶ್ನೆಯಲ್ಲಿ ಅದನ್ನು ಮುಗಿಸಿದ ತೇಜಾ, ಅವಳೂ ಅದಕ್ಕೆ ನಿರ್ಭಾವುಕ ದನಿಯಲ್ಲಿಯೇ ಉತ್ತರಿಸಿದಳು. +“ಹೌದು!ಆ ದೃಷ್ಟಿಯಿಂದ ನೋಡಿದರೆ ನಾನಿನ್ನೂ ಶೀಲವತಿ, ಆ ಪ್ರಶ್ನೆ ಯಾಕೀಗ?”ಅವಳ ಯೌವ್ವನದಿಂದ ತುಂಬಿದ ದೇಹದ ತಿರುವು ಮುರುವುಗಳನ್ನು ಅಳೆಯುವಂತೆ ನೋಡಿ ಮಾತಾಡಿದ ತೇಜಾ. +“ಇಷ್ಟು ಜನ ಗಂಡಸರ ನಡುವೆ ಈ ಕಾಡಿನಲ್ಲಿ ನೀನೊಬ್ಬಳೇ ಇರುತ್ತಾ ನೀನು ನಿನ್ನ ಶೀಲವನ್ನು ಕಾಪಾಡಿಕೊಂಡು ಬಂದಿರುವೆ ಎಂಬ ಮಾತನ್ನು ನಂಬುತ್ತೇನೆ. +ಆದರೆ ಅದನ್ನು ಇನ್ನೂ ಯಾಕೆ ಕಾಪಾಡುತ್ತಿರುವಿ ಎಂಬುವುದೇ ನನ್ನ ಪ್ರಶ್ನೆ, ಈವರೆಗೂ ನಿನ್ನ ದೇಹ ಪುಳಕತಿಗೊಂಡಿಲ್ಲವೇ? +ಗಂಡಿನ ದೇಹದ ಸುಖವನ್ನು ಆಶಿಸಲಿಲ್ಲವೇ? +ಅಥವಾ ನಿನ್ನಲ್ಲಿನ ಹೆಣ್ಣುತನ ಸತ್ತುಹೋಗಿದೆಯೋ?” +“ನನಗದರ ಬಗ್ಗೆ ಯೋಚಿಸಲು ಸಮಯವಿಲ್ಲ. +ಅದೂ ಅಲ್ಲದೇ ಅದು ನನಗಷ್ಟು ಮುಖ್ಯವೂ ಅಲ್ಲ” ಕೂಡಲೇ ಉತ್ತರಿಸಿದಳು ಕಲ್ಯಾಣಿ. +“ಸುಳ್ಳು ಕಲ್ಯಾಣಿ ಸುಳ್ಳು! +ನಿನಗದರ ಬಗ್ಗೆ ಯೋಚಿಸಲು ಇಲ್ಲಿ ಸಾಕಷ್ಟು ಸಮಯ ಸಿಗುತ್ತದೆ. +ಒಂದು ವಯಸ್ಸಿನ ಬಳಿಕ ಅದು ಊಟದಷ್ಟೇ ಮುಖ್ಯವಾಗಿ ಬಿಡುತ್ತದೆ. +ನಿಜ ನಾ ಹೇಳುತ್ತೇನೆ. +ಕಾಲಾನುಕಾಲದಿಂದ ಅದು ಪಾಪವೆಂದು ನಮ್ಮವರು ಹೇಳಿಕೊಟ್ಟ ಪಾಠ ಅದಕ್ಕೆ ಬೇಕಾದ ಸಂಸ್ಕಾರ, ಸಂಪ್ರದಾಯ ಕೂಡ ನಿನ್ನ ನರನರಗಳಲ್ಲಿ ತುಂಬಿದೆ ಎನ್ನಬಹುದು. +ಆ ಕಾರಣಕ್ಕಾಗೇ ನೀನಿನ್ನೂ ಶೀಲವತಿಯಾಗಿದ್ದಿ” +“ಅದು ನಿನ್ನ ಭ್ರಮೆಯಷ್ಟೆ” ಅವನ ಮಾತು ಮುಗಿಯುತ್ತಲೇ ಹೇಳಿದಳು ಕಲ್ಯಾಣಿ. +“ಹಾಗೇ ಹೇಳಿ ನಿನ್ನ ನೀನು ಮೋಸಮಾಡಿಕೊಳ್ಳುತ್ತಿರುವಿ ಯೋಚಿಸು ಈ ಹಿಂಸೆಯ ಮಾರ್ಗದಿಂದ ಏನನ್ನೂ ಸಾಧಿಸಲಾರೆ. +ನಿನ್ನೊಡನೆ ಬಹಳ ಮಾತಾಡಬೇಕು ಮಳೆ ಬರುವ ಲಕ್ಷಣಗಳು ಕಾಣಿಸುತ್ತಿದೆ. +ಮತ್ತೊಮ್ಮೆ ಬರುತ್ತೇನೆ” ಎಂದು ಎದ್ದ ತೇಜಾ ಎರಡು ಹೆಜ್ಜೆ ಮುಂದೆ ಹಾಕಿದ ಒಮ್ಮೆಲೇ ಕೂಗಿದಳು ಕಲ್ಯಾಣಿ“ನಿಲ್ಲು!ಎಲ್ಲಿ ಹೋಗುತ್ತಿ” +“ಬಂಡೇರಹಳ್ಳಿಯ ನನ್ನ ಪೋಲಿಸ್ ಸ್ಟೇಷನ್ನಿಗೆ ಈಗಾಗಲೇ ಅಲ್ಲಿಯವರು ನನ್ನ ಹುಡುಕಾಡುತ್ತಿರಬಹುದು” ಹಿಂತಿರುಗಿ ನೋಡದೇ ಹೇಳಿದ ತೇಜಾ. +“ಮಾರ್ಗದರ್ಶನವಿಲ್ಲದೇ ನೀನಿಲ್ಲಿಂದ ಎಲ್ಲಿಗೂ ಹೋಗಲಾರೆ. +ಕಾಡಿನಲ್ಲಿ ಹುಚ್ಚನಂತೆ ಅಲೆಯುತ್ತಿರಬೇಕಾಗುತ್ತದೆ” ಹೇಳಿದಳು ಕಲ್ಯಾಣಿ. +ಅವಳ ಮಾತನ್ನು ಲೆಕ್ಕಿಸದಂತೆ ಇನ್ನೆರಡು ಹೆಜ್ಜೆ ಮುಂದೆ ಹಾಕಿ ಹೇಳಿದ ತೇಜಾ. +“ಅದು ನೋಡೇಬಿಡುವ. +ನಾಲ್ಕಾರು ಗಂಟೆ ಅಲೆಯಬೇಕಾಗಿ ಬರಬಹುದು. +ಹೇಗಾದರೂ ಅಲ್ಲಿ ತಲಪುತ್ತೇನೆ” +“ನಾಲ್ಕಾರು ಗಂಟೆಯಲ್ಲ ನಾಲ್ಕಾರು ತಿಂಗಳು ಅಲೆದರು ನಿನಗೆ ದಾರಿ ಗೊತ್ತಾಗುವುದಿಲ್ಲ. +ತಾಳು ನಮ್ಮವರು ಬಂದಮೇಲೆ ಹೋಗುವಿಯಂತೆ”ಅವಳ ಮಾತು ಲೆಕ್ಕಿಸದೇ ನಡೆಯುತ್ತಾ ಹೇಳಿದ ತೇಜಾ. +“ಅದನ್ನೂ ಪರೀಕ್ಷಿಸಿಯೇ ಬಿಡುತ್ತೇನೆ. +ಈ ಉತ್ತೇಜ್‌ಗೂ ಎಷ್ಟು ಬುದ್ಧಿಯಿದೆ ಎಂಬುವುದು ಗೊತ್ತಾಗುತ್ತದೆ”ಓಡಿ ಬಂದ ಕಲ್ಯಾಣಿ ಅವನ ತೋಳನ್ನು ಬಲವಾಗಿ ಹಿಡಿದು ಆರ್ತ ದನಿಯಲ್ಲಿ ಹೇಳಿದಳು. +“ಮುಂದೆ ಒಂದು ಹೆಜ್ಜೆಯೂ ಹಾಕಬೇಡ, ಎಲ್ಲಾ ಕಡೆ ಲ್ಯಾಂಡ್ ಮೈನ್ಸ್ ಹರಡಿದ್ದೇವೆ”ಅವಳ ಕಡೆ ವಿಚಿತ್ರ ನೋಟ ಬೀರಿದ ತೇಜಾ, ಆಗಲೇ ಮಳೆಹನಿಗಳು ಆರಂಭವಾದವು. +ಒಂದು ಕ್ಷಣ ಇಡೀ ಆಕಾಶವನ್ನೇ ಬೆಳಗುವಂತೆ ಮಿಂಚಿ ಗುಡುಗಿನ ಶಬ್ದ ಬಂತು. +ಅದರೊಡನೆಯೇ ಧಾರಾಕಾರವಾದ ಮಳೆ ಬೀಳಲಾರಂಭಿಸಿತು. +ಕದಲದೇ ಹಾಗೇ ನಿಂತಿದ್ದ ತೇಜಾ ಕೇಳಿದ“ನಾ ಸತ್ತರೆ ನಿನಗೇನಂತೆ! +ನೀ ಒಬ್ಬ ಪೋಲೀಸಿನವನನ್ನು ಯಾಕೆ ಕಾಪಾಡಬೇಕು?”ಧಾರಾಕಾರವಾದ ಮಳೆಯ ಸದ್ದಿನಲ್ಲೂ ಅವನ ಮಾತು ಸ್ಪಷ್ಟವಾಗಿ ಕೇಳಿಸುವ ಹಾಗಿತ್ತು. +ಆಗಲೇ ಆ ಮಳೆಯಲ್ಲಿ ಅವರಿಬ್ಬರೂ ಸಾಕಷ್ಟು ನೆನೆದಿದ್ದರು. +ಕದಲದೇ ಕಲ್ಲಿನಂತೆ ನಿಂತಿದ್ದ ತೇಜಾ. +ಅವನನ್ನು ಬಲವಂತವಾಗಿ ಎಳೆದು ಹೇಳಿದಳು. +“ನಿನ್ನ ಕಾಪಾಡುತ್ತಿರುವುದು ನನ್ನ ಸ್ವಾರ್ಥಕ್ಕೆ. +ಅದೇ ಮಾತಾಡುವ ಬಾ… ಓಡು”ಪೂರ್ತಿಯಾಗಿ ಮಳೆಯಲ್ಲಿ ನೆನೆದಿದ್ದ ಅವಳು ಅವನ ಕೈಯನ್ನು ಹಿಡಿದು ಓಡುತ್ತಾ ಬಂಡೆಗಳ ಹಿಂದೆ ಬಂದಳು. +ಹಿಂಭಾಗದಲ್ಲಿ ಬಂಡೆಗಳು ಕವಲು ಬಿಟ್ಟು ಒಂದು ಗುಹೆ ಏರ್ಪಟ್ಟಿತ್ತು. +ಆ ಗುಹೆಯೊಳ ಹೋಗಲು ಒಬ್ಬರು ತೂರಬಹುದಾದಂತಹ ಸಂದು ತೆಗೆದುಕೊಂಡಿತ್ತು. +ಕಲ್ಯಾಣಿಯ ಹಿಂದೆ ಅದರೊಳ ತೂರಿದ ತೇಜಾ. +ಒಳಗಿದ್ದ ವಿಶಾಲವಾದ ಸ್ಥಳ ಅವನಲ್ಲಿ ಅಚ್ಚರಿ ಹುಟ್ಟಿಸಿತು. +ಪ್ರಕೃತಿ ಮಾಡಿದ ಮನೆ. +ನೆನೆದಿದ್ದ ತೇಜಾ ತನ್ನ ಶರ್ಟನ್ನು ಕಳಚಿದ. +ನೆನದ ತನ್ನ ಬಟ್ಟೆಯನ್ನು ಏನು ಮಾಡಬೇಕೆಂದು ಯೋಚಿಸುತ್ತಿದ್ದಂತೆ ಕಂಡಳು ಕಲ್ಯಾಣಿ. + ಅವಳ ಕಡೆ ನೋಡಿದ ತೇಜಾ, ಪೂರ್ತಿ ನೆನೆದ ಕಾರಣ ಅವಳ ದೇಹದ ಏರುತಗ್ಗುಗಳೂ ಇನ್ನೂ ಸ್ಪಷ್ಟವಾಗಿ ಕಾಣುತ್ತಿದ್ದವು. +ಅವಳ ಮೇಲಿಂದ ನೋಟ ಸರಿಸದೇ ಹತ್ತಿರ ಬಂದ. +ಭಯ ನಾಚಿಕೆಗಳಿಂದ ಅವಳು ಮುದುಡಿ ನಿಂತಳು. +ಅವಳ ಭುಜದ ಮೇಲವನು ಕೈ ಹಾಕಿದಾಗ“ಬೇಡ!ಬೇಡ!” ಎಂದಳವಳು. +ಅವಳ ದನಿಯಲ್ಲಿ ನಾಚಿಕೆಯೊಡನೆ ಉನ್ಮಾದವು ಬೆರೆತಿತ್ತು. +ಆ ಮಾತನ್ನು ಕೇಳಿಸಿಕೊಳ್ಳದವನಂತೆ ಬಹು ಜಾಗರೂಕತೆಯಿಂದ ಅವಳ ನೆನೆದ ಬಟ್ಟೆಗಳನ್ನು ಕಳಚತೊಡಗಿದ. +ಇನ್ನೂ ತಾಳಲಾರದವಳಂತೆ ಅವನನ್ನು ಬಿಗಿದಪ್ಪಿದಳು ಕಲ್ಯಾಣಿ. +ಅವಳ ದೇಹದ ಮೇಲೆ ತನ್ನ ಹಿಡಿತವನ್ನು ಬಿಗಿಪಡಿಸಿ ತನ್ನ ಕೆಲಸವನ್ನು ಮುಂದುವರೆಸಿದ. +ನೋಡನೋಡುತ್ತಿದ್ದಂತೆ ಆ ಎರಡೂ ದೇಹಗಳು ಬತ್ತಲಾದವು. +ಅರೆ ಬೆಳಕು ಅರೆ ಕತ್ತಲಿರುವ ಗುಹೆ. +ಹೊರಗೆ ಧಾರಕಾರವಾದ ಮಳೆ, ಗುಹೆಯೊಳಗೆ ಅವರಿಂದ ಸ್ವಲ್ಪ ದೂರದಲ್ಲಿ ಮಾರಕಾಯುಧಗಳು, ಭಯಂಕರ ಬಾಂಬುಗಳನ್ನು ತಯಾರಿಸಬಹುದಾದಂತಹ ವಿವಿಧ ವಸ್ತುಗಳು, ಮಳೆಯೊಡನೆ ಗುಹೆಯಲ್ಲಿ ಬೀಸುತ್ತಿದ್ದ ತಣ್ಣನೆಯ ಗಾಳಿ ಅವರನ್ನು ಇದೆಲ್ಲವನ್ನೂ ಮರೆಯುವಂತೆ ಮಾಡಿತು. +ಇಹಲೋಕದ ಪರಿವೆಯೇ ಇಲ್ಲದವರಂತೆ ಒಂದಾಗುವ ಯತ್ನ ಆರಂಭಿಸಿದವು ಆ ದೇಹಗಳು. +ಕಲ್ಯಾಣಿಯ ದೇಹದ ಮೇಲೆಲ್ಲಾ ಪ್ರತಿ ಮೂಲೆ ಸಂದುಗಳಲ್ಲೆಲ್ಲಾ ಕೈ ಆಡುತ್ತಿದ್ದಾಗ ಹೊಸದೊಂದು ಅನುಭವ, ತನ್ಮಯನಾಗಿ ಹೋಗುವಂತಹ ಸುಖ. +ಆ ಸುಖದ ಆಟವನ್ನು ಅರಿಯುವ ಅನುಭವಿಸುವ ಉನ್ಮಾದದಲ್ಲಿದ್ದ ತೇಜಾ ,ತನಗೆ ಪ್ರಿಯನಾದ ಒಬ್ಬ ಗಂಡಿನ ಸ್ಪರ್ಷ ತನಗೆ ಇಂತಹ ಅನುಭೂತಿಯನ್ನು ಕೊಡಬಹುದೆಂದು ಊಹಿಸಿರಲಿಲ್ಲ ಕಲ್ಯಾಣಿ. +ಅವನ ಅಗಲವಾದ ಎದೆಯ ಮೇಲೆ ತನ್ನ ಕಪೋಲಗಳನ್ನು ಸವರುತ್ತಾ ಎರಡು ಕೈಗಳನ್ನು ಅವನ ದೇಹದ ಮೇಲೆಲ್ಲಾ ಆಡುತ್ತಾ ಎಲ್ಲಾ ಸುಖವನ್ನು ಒಮ್ಮೆಲೆ ಹೀರಿಬಿಡಬೇಕೆಂಬ ಆತುರ ತೋರುತ್ತಿದ್ದಳು. +ವಾತವರಣದಲ್ಲಿದ್ದ ಚಳಿಯ ಅನುಭವದಿಂದ ಮುಕ್ತವಾದ ಆ ಎರಡು ದೇಹಗಳು ಕಾವಿನ ಪರಮಾವಧಿಗೆ ಹೋಗಿ, ಪ್ರಕೃತಿ ಮಾನವ ಕುಲಕ್ಕೆ ನೀಡಿರುವ ಒಂದೇ ಒಂದು ಪರಮಸುಖ ಪರಮಾವಧಿಗೆ ಹೋಗಿ ಮತ್ತೆ ನಿಧಾನವಾಗಿ ಇಹಲೋಕಕ್ಕೆ ಆ ಕಾಡಿನಲ್ಲಿದ್ದ ಗುಹೆಗೆ ಮರಳತೊಡಗಿದವು. +ಅವಳನ್ನಪ್ಪಿ, ಅವಳ ಕಪೋಲದ ಮೇಲೆ ತನ್ನ ಕಪೋಲವನ್ನು ಸವರುತ್ತಾ ಯಾವುದೋ ಬೇರೆಯ ಲೋಕದಿಂದ ಮಾತಾಡುತ್ತಿರುವಂತಹ ದನಿಯಲ್ಲಿ ಹೇಳಿದ ತೇಜಾ. +“ಇದರಲ್ಲಿ ಇಂತಹ ಸುಖವಿದೆ ಎಂದು ನನಗೆ ಗೊತ್ತಿರಲಿಲ್ಲ.” +“ನನಗೂ ಗೊತ್ತಿರಲಿಲ್ಲ” ಅವನ ತಲೆಕೂದಲಲ್ಲಿ ಬೆರಳಾಡುತ್ತಾ ಅದನ್ನು ಇನ್ನೂ ಹತ್ತಿರ ಎಳೆದುಕೊಳ್ಳುತ್ತಾ ಹೇಳಿದಳು ಕಲ್ಯಾಣಿ. +“ಸ್ವರ್ಗ ಸುಖವೆಂದರೆ ಇದೇ ಇರಬಹುದು” ಅವಳ ಕಿವಿಯ ಬಳಿ ಪಿಸುಗುಟ್ಟಿದ ತೇಜಾ. +“ಇರಬಹುದು” ನಶೆಯಲ್ಲಿರುವಂತಹ ದನಿಯಲ್ಲಿ ಅವನ ಮಾತನ್ನು ಒಪ್ಪಿಕೊಂಡಳವಳು. +ಹಾಗೆ ಇನ್ನೂ ಸ್ವಲ್ಪ ಸಮಯ ಕಳೆದಮೇಲೆ ತೇಜಾನ ತಲೆಯ ಮೇಲೆ ತನ್ನೆರಡೂ ಕೈಗಳನಿಟ್ಟು ಹೇಳಿದಳು ಕಲ್ಯಾಣಿ. +“ಈ ಕ್ಷಣದಿಂದ ನೀನು ನನ್ನ ಪತಿ”ಅವಳ ಕಪೋಲವನ್ನು ಹಗುರವಾಗಿ ಚುಂಬಿಸಿ, ತನ್ನೆರಡೂ ಕೈಗಳಿಂದ ಅವಳ ತಲೆಯನ್ನು ಹತ್ತಿರ ಎಳೆದುಕೊಂಡು ಹಣೆಗೆ ಮುದ್ದಿಟ್ಟು ಹೇಳಿದ ತೇಜಾ. +“ಇವತ್ತು ನನ್ನ ಮದುವೆಯಾಯಿತು. +ಆದರೆ ಹೀಗಾಗುತ್ತದೆ ಎಂದು ಕೊಂಡಿರಲಿಲ್ಲ” +“ಇದೇ ತಾಳಿ ಕಟ್ಟುವ ಶುಭಮುಹೂರ್ತವೆಂದುಕೊಳ್ಳುವ. +ಮಂತ್ರ ಘೋಷಗಳೊಡನೆ ಆಣೆ ಪ್ರಮಾಣಗಳನ್ನು ಮಾಡಿಸುತ್ತಾರಲ್ಲ. +ಅದನ್ನು ನಾವೇ ಮಾಡುವ” ಆಲಿಂಗನದ ಬಿಗಿತವನ್ನು ಹೆಚ್ಚಿಸಿ ಕಣ್ಣು ಮುಚ್ಚಿಕೊಂಡು ಹೇಳಿದಳು ಕಲ್ಯಾಣಿ. +“ನಾನು ನಿನಗಾಗಿ ಪ್ರಾಣವನ್ನೂ ಕೂಡ ಕೊಡುತ್ತೇನೆ” ಎಂದ ತೇಜಾ. +“ನಾನೂ ನಿನಗಾಗಿ ಏನು ಬೇಕಾದರೂ ಮಾಡುತ್ತೇನೆ. +ಒಬ್ಬರ ವಿಚಾರಧಾರೆಗೆ ಇನ್ನೊಬ್ಬರು ಅಡ್ಡ ಬರಬಾರದು. +ಗಂಡ ಹೆಂಡಿರದಿಬ್ಬರದೂ ಸಮಾನ ಅಧಿಕಾರ” ಹೇಳಿದಳು ಕಲ್ಯಾಣಿ. +“ಸಮಾನ ಅಧಿಕಾರ, ಚರ್ಚೆ ವಿಚಾರವಿಮರ್ಶೆ ಮಾಡಿ ಯಾವುದೇ ವಿಷಯದ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು” ಹೇಳಿದ ತೇಜಾ. +“ಚರ್ಚೆ ವಿಚಾರ ವಿಮರ್ಶೆಯ ನಂತರವೂ ಬೇಧವಿದ್ದರೆ ಒಬ್ಬರ ವಿಚಾರಕ್ಕೆ ಇನ್ನೊಬ್ಬರು ಮರ್ಯಾದೆ ಕೊಡಬೇಕು” ಹೇಳಿದಳು ಕಲ್ಯಾಣಿ. +“ತಥಾಸ್ತು” ಎಂದ ತೇಜ. +“ತಥಾಸ್ತು” ಎಂದಳು ಕಲ್ಯಾಣಿ. +ಇವೆಲ್ಲಾ ಪ್ರಮಾಣ ವಚನಗಳು ಒಬ್ಬರ ದೇಹದ ಮೇಲೆ ಒಬ್ಬರು ಕೈ ಆಡಿಸುತ್ತಲೇ ನಡೆಸಿದ್ದರು. +ದೇಹಗಳು ಮತ್ತೆ ಕಾವೇರತೊಡಗಿದವು. +ಇನ್ನು ಯಾವ ಅವಸರವೂ ಇಲ್ಲದೇ ಅವರು ಮತ್ತೊಮ್ಮೆ ಪರಮಾನಂದದ ಶಿಖರಕ್ಕೇರಿ ಇಳಿದರು. +ಮಳೆಯ ರಭಸ ಮೊದಲಿನಷ್ಟಿರಲಿಲ್ಲ. +ಬಟ್ಟೆ ತೊಟ್ಟ ತೇಜ ಮತ್ತು ಕಲ್ಯಾಣಿ ಗುಹೆಯ ದ್ವಾರವಾದ ಚಿಕ್ಕ ಸಂದಿನಲ್ಲಿ ಒಬ್ಬರಿಗೊಬ್ಬರು ಅವಚಿಕೊಂಡು ಕುಳಿತು ಹೊರಗಿನ ದೃಶ್ಯವನ್ನು ನೋಡುತ್ತಿದ್ದರು. +ಆ ಕಡೆ ಕಲ್ಲು ಬಂಡೆಗಳಾದ ಮೇಲೆ ಚಿಕ್ಕ ಬಯಲು ಅದನ್ನು ದಾಟುತ್ತಲೇ ಆಳವಾದ ಕಂದಕವೆಂದು ಹೇಳಿದಳು ಕಲ್ಯಾಣಿ. +ಮುಂದೆ ಕಂದಕವಿದೆ ಎಂದು ಯಾರೂ ಊಹಿಸಲೂ ಸಾಧ್ಯವಿಲ್ಲ. +ಹಾಗೆ ಬೆಳೆದುಬಿಟ್ಟಿದ್ದವು ಗಿಡಮರಗಳು. +ತುಂತುರು ಮಳೆಯಲ್ಲಿ ಆ ದೃಶ್ಯ ಮನಮೋಹಕವಾಗಿ ಕಾಣುತ್ತಿತ್ತು. +“ಎಷ್ಟು ಮನಮೋಹಕವಾಗಿದೆಯಲ್ಲವೇ ಈ ದೃಶ್ಯ” ಹೇಳಿದ ತೇಜಾ ಅವನ ಹೆಗಲ ಮೇಲೆ ತಲೆ ಇಟ್ಟು ಹೇಳಿದಳು ಕಲ್ಯಾಣಿ“ಹೂಂ! +ಇಂತಹದನ್ನು ನಾಶ ಮಾಡುತ್ತಿರುವ ವೀರಪ್ಪನ್‌ನನ್ನು ಬಿಟ್ಟು ನಮ್ಮ ಹಿಂದೆ ಬಿದ್ದಿದೆ ಸರಕಾರ”ಅವಳ ತಲೆ ಕೂದಲಲ್ಲಿ ಬೆರಳುಗಳನಾಡುತ್ತಾ ಹೇಳಿದ ತೇಜಾ. +ಅವನು ಕಾಡನ್ನು ಮಾತ್ರ ನಾಶ ಮಾಡುತ್ತಿದ್ದಾನೆ. +ನೀವು ಮನುಷ್ಯರನ್ನು, ಅವರು ಉಪಯೋಗಿಸುವ ವಾಹನಗಳನ್ನು ಅಂದರೆ ಜನ ಸಂಪತ್ತಿಯಾದ ರೈಲು, ಬಸ್ಸುಗಳನ್ನು ನಾಶಮಾಡುತ್ತಿದ್ದೀರಿ”ಅವನ ಹೆಗಲ ಮೇಲಿಂದ ತಲೆ ಸರಿಸದೇ ಕಾಡನ್ನೇ ನೋಡುತ್ತಾ ಹೇಳಿದಳು ಕಲ್ಯಾಣಿ. +“ನನ್ನ ದಳದವರು ರೈಲು, ಬಸ್ಸುಗಳ ತಂಟೆಗೆ ಹೋಗುವುದಿಲ್ಲ, ಧನವಂತರಿಂದ ಹಣ ಸುಲಿಗೆ ಮಾಡುವುದಿಲ್ಲ. +ದೇವಿಯಾದವನಂತಹ ನೀಚರನ್ನು ಕೊಲೆ ಮಾಡುತ್ತೇವೆ. +ಅದರಿಂದ ಅಂತಹ ಬೇರೆಯವರಲ್ಲಿ ಭಯ ಹುಟ್ಟಿ ಅವರು ಸರಿಯಾದ ಮಾರ್ಗದಲ್ಲಿ ನಡೆಯುತ್ತಾರೆ” +“ಆದರೆ ಬೇರೆ ದಳದ ಕ್ರಾಂತಿಕಾರಿಗಳು ಮಾಡುತ್ತಾರಲ್ಲ” ಹೇಳಿದ ತೇಜಾ. +ಅದಕ್ಕೆ ನಮ್ಮ ನಮ್ಮಲ್ಲೇ ವಿಚಾರ ವಿಬೇಧಗಳು ಬಂದು ಈ ಚಳುವಳಿ ತುಂಡು ತುಂಡಾಗಿರುವುದು. +ತುಂಡಾದ ತುಂಡುಗಳಲ್ಲಿ ಮತ್ತೆ ತುಂಡುಗಳು. +ಸರಕಾರಕ್ಕೂ ಅದೇ ಬೇಕಾಗಿದೆ. +ಈಗ ನಮ್ಮವರೇ ಹೊಡೆದಾಡಿಕೊಂಡು ಸಾಯುತ್ತಿದ್ದಾರೆ” ಒಂದು ಬಗೆಯ ನೋವಿತ್ತು ಕಲ್ಯಾಣಿಯ ಮಾತಿನಲ್ಲಿ. +ಅದು ತೇಜಾನಿಗೆ ಗೊತ್ತಿದ್ದ ವಿಷಯವೇ ಆಗಿತ್ತು. +ಏನೋ ಯೋಚಿಸುತ್ತಾ ಕೇಳಿದ“ಅಂದರೆ ನೀನು ಕ್ರಾಂತಿಕಾರಿ ಅಲ್ಲವೇ?” +“ಯಾರು ಏನು ಬೇಕಾದರೂ ಕರೆದುಕೊಳ್ಳಲಿ ನನಗದರಿಂದ ಯಾವ ವ್ಯತ್ಯಾಸವೂ ಆಗುವುದಿಲ್ಲ. +ನನ್ನ ಕೈಲಾದಷ್ಟು ಭ್ರಷ್ಟ ರಾಜಕಾರಣಿಯರನ್ನು, ರೈತರನ್ನು ಒತ್ತೆ ಆಳಾಗಿಸಿಕೊಂಡು ಅವರ ಬದುಕನ್ನು ನಾಯಿಗಿಂತ ಅಧ್ವಾನ ಮಾಡುತ್ತಿರುವ ಭೂಮಾಲಿಕರನ್ನು, ಕೊಟ್ಯಾಂತರ ಸಂಪಾದಿಸುತ್ತಾ ಕಾರ್ಮಿಕರಿಗೆ ಸರಿಯಾದ ಸಂಬಳ ಕೊಡದ ಉದ್ಯಮಪತಿಗಳನ್ನು ಮುಗಿಸುತ್ತಾ ಹೋಗುತ್ತೇನೆ” + ಅವಳ ಮಾತು ಬಹು ಮಲ್ಲನೆ ಬಂದರೂ ಅದೊಂದು ದೃಢನಿರ್ಧಾರದಂತಿತ್ತು. +ತಲೆಯಿಂದ ಅವಳ ಬೆನ್ನ ಮೇಲೆ ತನ್ನ ಕೈ ತಂದ ತೇಜಾ ಬೆನ್ನನ್ನು ಅಪ್ಯಾಯತೆಯಿಂದ ಸವರುತ್ತಾ ಮಾತಾಡಿದ. +“ನೋಡು ಕಲ್ಯಾಣಿ ನೀನು ಹಾಗೆ ಎಷ್ಟು ಜನರನ್ನು ಕೊಲ್ಲುತ್ತಾ ಹೋಗುತ್ತಿ. +ಒಬ್ಬ ದೇವಿಯಾದವ ಸತ್ತರೆ ಮತ್ತೊಬ್ಬ ಹುಟ್ಟಿಕೊಳ್ಳುತ್ತಾನೆ. +ಇದಕ್ಕೆ ಕೊನೆ ಇಲ್ಲ. +ಇದರಿಂದ ಏನೂ ಸಾಧಿಸಲಾಗುವುದಿಲ್ಲ. +ನಮ್ಮ ಬದುಕು ನಿರರ್ಥಕವಾಗುತ್ತದಷ್ಟೆ ನಾವೇ ನಾಶವಾಗುತ್ತೇವೆ” +“ದೊಡ್ಡಣ್ಣ ಇಲ್ಲಿ ಬರುವ ಮೊದಲು ಬಂಡೇರಹಳ್ಳಿಯ ಸ್ಥಿತಿ ಹೇಗಿತ್ತು ಗೊತ್ತೇ ತೇಜಾ! +ಹೊಲದಲ್ಲಿ ಎತ್ತುಗಳಂತೆ ದುಡಿದರೂ ಅವರಿಗೆ ಎರಡು ಹೊತ್ತಿನ ಊಟ ಸಿಗುತ್ತಿರಲಿಲ್ಲ. +ಈಗ ಹೇಗಿದ್ದಾರೆ ನೋಡಿದ್ದೀಯಾ, ಅದೇ ನಾವು ಸಾಧಿಸಿರುವುದು. +ಹಾಗೇ ಇನ್ನೂ ಹಲವಾರು ಕಡೆ ಮಾಡಿದರೆ ನನ್ನ ಜೀವನ ಸಾರ್ಥಕವಾದಂತೆ”ಅವನ ಮಾತು ಮುಗಿದ ಕೂಡಲೇ ಹೇಳಿದಳು ಕಲ್ಯಾಣಿ. +ಸ್ವಲ್ಪ ಹೊತ್ತು ಮೌನವಾವರಿಸಿತು. +ಮಳೆ ಹನಿಗಳ ಶಬ್ದ. +ಗಾಳಿಗೆ ತೂಗಾಡುತ್ತಿದ್ದ ಮರಗಳ ಶಬ್ದ ಬಿಟ್ಟರೆ ಇನ್ನೇನೂ ಕೇಳಿಸುತ್ತಿರಲಿಲ್ಲ. +ತನ್ನದೇ ಚಿಂತನೆಯಲ್ಲಿ ತೊಡಗಿದ ತೇಜಾ ತಾನೇ ಮೌನ ಮುರಿದ. +“ನೀ ಸಾಧಿಸಿದ್ದನ್ನು ಬೇರೆ ದಾರಿಯಿಂದಲೂ ಸಾಧಿಸಬಹುದು. +ನೋಡುನಾ ಬಂದ ಕೂಡಲೇ ಹೇಗೆ ಸಾರಾಯಿ ಮಾರಾಟದ ಮೇಲೆ ನಿಯಂತ್ರಣ ತಂದನೋ ಹಾಗೇ ಬೇರೆ ಕೆಲಸಗಳನ್ನು ಕೂಡ ಮಾಡುತ್ತಾ ಹೋಗುತ್ತೇನೆ. +ಆ ಕೆಲಸಗಳೆಲ್ಲಾ ನಿಧಾನವಾಗಬಹುದು. +ಆದರೂ ಆಗುತ್ತದೆ. +ಅದರ ಬಗ್ಗೆ ನಿನ್ಯಾಕೆ ಯೋಚಿಸಬಾರದು”ಒಮ್ಮೆಲೆ ತನ್ನ ಕೈಯನ್ನು ಅವನ ಭುಜದ ಸುತ್ತೂ ಹಾಕಿ ಗಟ್ಟಿಯಾಗಿ ಹಿಡಿದು ಚಿಕ್ಕ ಮಗುವನ್ನು ಅಲುಗಿಸುವಂತೆ ಅತ್ತ ಇತ್ತ ಅಲುಗಿಸುತ್ತಾ ಹೇಳಿದಳು ಕಲ್ಯಾಣಿ. +ಅವಳು ಮಾತಾಡುವ ಧೋರಣೆ ಚಿಕ್ಕ ಮಕ್ಕಳೊಡನೆ ಮಾತಾಡುವಂತಿತ್ತು. +“ಓ ತೇಜಾ!ನನ್ನ ತೇಜಾ!ನೀನಿನ್ನೂ ಎಂತಹ ಮುಗ್ಧ ಕೂಸು. +ಯಾವಾಗಂದರಾಗ ಸಾರಾಯಿ ಬಂಡೇರಹಳ್ಳಿಯಲ್ಲಿ ದೊರೆಯುವುದು ನಿಲ್ಲುವುದಿಲ್ಲ! +ನಾ ಮೊದಲೇ ಹೇಳಿದ ಹಾಗೆ ನೀನು ಏರ್ಪಡಿಸಿದ ಕಾರ್ಯಕ್ರಮವೂ ಸರಕಾರಕ್ಕೆ ಇಷ್ಟವಾಗುವುದಿಲ್ಲ. +ನೀನು ನಿನ್ನ ಬುದ್ಧಿಯನ್ನೆಲ್ಲಾ ಉಪಯೋಗಿಸಿ, ಸುಳ್ಳಿನ ಕಥೆಗಳನ್ನು ಕಟ್ಟಿದರೆ ಮಾತ್ರ ನಿನ್ನ ವರ್ಗಾವಣೆ ಆಗದಿರುವುದು ಸಾಧ್ಯ. +ಇಷ್ಟು ಕಾಲದಿಂದ ನೀನು ಪೋಲಿಸ್ ಖಾತೆಯಲ್ಲಿ ಕೆಲಸ ಮಾಡುತ್ತಿರುವ ನಿನಗಿಷ್ಟು ಗೊತ್ತಾಗುವುದಿಲ್ಲವೇ?”ಅವಳು ಹೇಳಿದ ಮಾತಿನಲ್ಲಿ ಅತಿಶಯೋಕ್ತಿ ಇಲ್ಲವೆನಿಸಿತು ತೇಜಾನಿಗೆ. +ಆದರೂ ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ ಕೊಟ್ಟ ಆಶ್ವಾಸನೆಯಿಂದ ಅದು ಅವಳು ಹೇಳಿದ ಹಾಗಾಗಲಿಕ್ಕಿಲ್ಲ ಎನಿಸಿತು. +ಮತ್ತೆ ಆವರಿಸಿದ ಮೌನವನ್ನು ಆತುರ ದನಿಯಲ್ಲಿ ಮುರಿದಳು ಕಲ್ಯಾಣಿ. +ಇದೆಲ್ಲಾ ಹೋಗಲಿ ಮುಖ್ಯ ವಿಷಯ ಹೇಳುವುದು ಮರೆತಿದ್ದೆ. +ಆ ಸಿದ್ಧಾನಾಯಕ್ ಬಹಳ ಅಪಾಯಕಾರಿ ವ್ಯಕ್ತಿ, ಅವನ ವ್ಯಾಪಾರ ರಾಮನಗರದಲ್ಲೂ ಇದೆ. +ಅವನು ತನ್ನ ಕೆಲಸ ಸಾಧಿಸಲು ಸೇಡು ತೀರಿಸಿಕೊಳ್ಳಲು ಏನು ಮಾಡಲೂ ಹೇಸುವುದಿಲ್ಲ. +ಅವನಿಂದ ಎಚ್ಚರವಾಗಿರು. +ಇವತ್ತು ನಮ್ಮ ಭೇಟಿಯಾಗಿ ಈ ಮದುವೆಯ ಸಮಾರಂಭ ನಡೆಯದಿದ್ದರೆ ಅವನ್ನು ಮುಗಿಸುವ ಯೋಜನೆ ಇತ್ತು. +ನೀನಿಗಾಗಲೇ ಅವನ ಶತೃತ್ವ ಕಟ್ಟಿಕೊಂಡಿದ್ದಿಯಾದ್ದರಿಂದ ನಾನು ಹಾಗೆ ಮಾಡುವ ಹಾಗಿಲ್ಲ. +ಅವನನ್ನು ನಿನ್ನ ತಂಟೆಗೆ ಬರದಂತೆ ನಾ ಹೆದರಿಸಬಹುದು. +ಹಾಗೆ ಮಾಡಿದರೂ ಅವನು ನಿನ್ನನ್ನು ಸಿಕ್ಕಿಸಲು…” +“ಕಲ್ಯಾಣಿ!ನಾನೇನೂ ಮಗುವಲ್ಲ. +ನನ್ನ ನಾನು ರಕ್ಷಿಸಿಕೊಳ್ಳಬಲ್ಲೆ. +ನೀನವನ ತಂಟೆಗೆ ಹೋಗಬೇಡ, ನಿನ್ನ ಬಗ್ಗೆ ಯೋಚಿಸು. +ನಮ್ಮ ಭವಿಷ್ಯದ ಬಗ್ಗೆ ಯೋಚಿಸು.” ಅವಳಿಗೆ ಮಾತು ಪೂರ್ತಿ ಮಾಡುವ ಅವಕಾಶ ಕೊಡದೇ ಹೇಳಿದ ತೇಜ. +ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿದಳು ಕಲ್ಯಾಣಿ. +ಅದರ ಬಗ್ಗೆಯೂ ಇನ್ನೊಂದು ಸಲ ವಿವರವಾಗಿ ಮಾತಾಡುವ. +ನೀನು ಒಬ್ಬನೇ ಕಾಡಿನ ಕಡೆ ಆಯುಧ ಜತೆಗಿಲ್ಲದೇ ಸುಳಿದಾಡಬೇಡ. +ನನ್ನ ಶತ್ರು ದಳದವರೂ ಆಗಾಗ ಅತ್ತ ಬರುತ್ತಿರುತ್ತಾರೆ. +ನಿನಗೆ ನನ್ನ ತುರ್ತಾಗಿ ಕಾಣುವುದಿದ್ದರೆ ತಾತನಿಗೆ ಹೇಳು. +ನನ್ನ ಹೆಸರನ್ನು ಬಹಳ ಜನ ಉಪಯೋಗಿಸಿ ಜನರನ್ನು ಹೆದರಿಸುತ್ತಿದ್ದಾರೆ, ಸುಲಿಯುತ್ತಿದ್ದಾರೆ. +ನಾನಿನ್ನ ಕಾಣಬಯಸಿದಾಗ ಕಾಳಿ ಎಂಬ ಹೆಸರನ್ನು ಮಾತ್ರ ಉಪಯೋಗಿಸಿದರೆ ಅವರನ್ನು ನಂಬು. + ಕಲ್ಲಕ್ಕ ಮತ್ತಿನ್ಯಾವುದಾದರೂ ಹೆಸರನ್ನು ಉಪಯೋಗಿಸಿದರೆ ಅವನ್ನು ಅನುಮಾನದಿಂದ ನೋಡಿ ಮಾತಾಡು ಅರ್ಥವಾಯಿತೆ” + “ಸರಿ!ನನಗಂತೂ ಈಗ ಇಲ್ಲಿಂದ ಹೋಗಬೇಕೆನಿಸುತ್ತಿಲ್ಲ. +ಮಳೆ ಇನ್ನೂ ನಿಂತಿಲ್ಲ. +ಒಳಗೆ ಹೋಗಿ ಸ್ವಲ್ಪ ಹೊತ್ತು ಬೆಚ್ಚಗೆ ಮಲಗುವ ನಡಿ” ಎನ್ನುತ್ತಾ ಅವಳನ್ನು ಎಬ್ಬಿಸಿದ ತೇಜಾ, ಹೆಚ್ಚು ಬಲವಂತವಿಲ್ಲದೆ ಎದ್ದಳವಳು. +ಮತ್ತೆ ಗುಹೆಯೊಳ ಹೋದ ಅವರು ಆಗ ತಾನೆ ತಾವು ಆವಿಷ್ಕರಿಸಿದ ಪರಮಾನಂದ ಕಾರ್ಯಕ್ರಮವನ್ನು ಮತ್ತೆ ಆರಂಭಿಸಿದರು. +ತೇಜಾ ಬಂಡೇರಹಳ್ಳಿ ಸೇರಿದಾಗ ಎರಡು ಗಂಟೆ. +ಅವನು ಮನೆಯಲ್ಲಿ ಮತ್ತು ಪೋಲಿಸ್ ಸ್ಟೇಷನ್ನಿನಲ್ಲಿ ಅವರೆಗೂ ಇಲ್ಲದಿರುವಿಕೆ ಯಾರನ್ನೂ ಹೆಚ್ಚಿನ ಕಳವಳಕ್ಕೆ ಒಳಪಡಿಸಿರಲಿಲ್ಲ. +ಮನೆಕೆಲಸದಾಳೇ ಆ ವಿಷಯವನ್ನು ಗುಂಡು ತಾತನಿಗೆ ತಿಳಿಸಿದ್ದಳು. +ಯಾವುದೋ ಕೆಲಸದ ಮೇಲೆ ಹೋಗಿರುತ್ತಾನೆ ನಿನ್ನ ಕೆಲಸ ನೀನು ಮಾಡು ಎಂದು ಹಗುರದನಿಯಲ್ಲಿ ಹೇಳಿದ್ದನಾತ. +ರಾತ್ರಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯುವಕರು ಒಂದೆರಡು ಸಲ ಅವನಿಗಾಗಿ ತಿರುಗಾಡಿದ್ದರು. +ಅವನು ಬೆಳಗಿನಿಂದ ಅಷ್ಟು ಹೊತ್ತು ಇಲ್ಲದಿರುವಿಕೆ ಬಹುಜನರ ಗಮನವನ್ನು ಸೆಳೆಯದಿರಲು ಇನ್ನೊಂದು ಕಾರಣ ಮಳೆ, ಭೋರ್ಗರೆಯುವ ಮಳೆ. +ಅದು ಇನ್ನೂ ನಿಂತೂ ನಿಂತೂ ಬರುತ್ತಲೇ ಇತ್ತು. +ಮತ್ತು ಎಚ್.ಸಿ.ಕೆಲಸಕ್ಕೆ ಬಂದಿರಲಿಲ್ಲ. +ಮೂವರು ಪೇದೆಯರು ಮಳೆ ಚಳಿಯ ಕಾರಣ ಪೋಲಿಸ್ ಸ್ಟೇಷನ್‌ನಲ್ಲೇ ಬೆಚ್ಚಗೆ ಹೊದ್ದು ಕುಳಿತಿದ್ದರು. +ಗಾಳಿ ಮಳೆಗಳ ಕಾರಣ ಟೆಲಿಫೋನ್ ಕೆಲಸ ಮಾಡುತ್ತಿರಲಿಲ್ಲ. +ಮನೆಯಲ್ಲಿ ಕೆಲಸದಾಳಿನೊಡನೆ ಮಾತಾಡಿ ಪೋಲಿಸ್ ಸ್ಟೇಷನ್‌ಗೆ ಬಂದು ಕುಳಿತಿದ್ದ ತೇಜಾ, ಕಲ್ಯಾಣಿಯನ್ನು ಬಿಳ್ಕೊಟ್ಟು ಕಾಡಿನಿಂದ ಮರಳುವಾಗ ಅವನಿಗೆ ಮೊದಲಿನಷ್ಟು ದಣಿವು ಆಗಿರಲಿಲ್ಲ. +ಆದರೆ ಮೆದಳು ಮಾತ್ರ ಯುದ್ಧರಂಗವಾಗಿತ್ತು. +ಕೆಲಗಂಟೆಗಳಲ್ಲಿ ತನ್ನ ಜೀವನ ಗತಿ ಇಷ್ಟು ಬದಲಾಗಿ ಬಿಡಬಹುದೆಂದು ಅವನು ಎಣಿಸಿರಲಿಲ್ಲ. +ಮುಂದೇನು ಎಂಬ ಪ್ರಶ್ನೆ ಅವನೆದುರು ಬೃಹದಾಕಾರ ತಾಳಿ ನಿಂತಿತ್ತು. +ಅವನು ಅದರ ಬಗ್ಗೆಯೇ ಚಿಂತನೆ ನಡೆಸಿದ್ದಾಗ ಕೊಡೆಯನ್ನು ಹಿಡಿದು ಬಂದ ಸಿದ್ಧಾನಾಯಕ್. +ಅವನ ಮುಖದಲ್ಲಿ ಒಂದು ಬಗೆಯ ಅಸಹನೆ, ಕೋಪ ಎದ್ದು ಕಾಣುತ್ತಿತ್ತು. +ಎರಡೂ ಕೈಗಳಿಂದ ತನ್ನ ಪೇಟಾ ಸರಿಪಡಿಸಿಕೊಳ್ಳುತ್ತಾ ಕುಳಿತು, ತೇಜಾನನ್ನೇ ದುರುಗುಟ್ಟುತ್ತಾ ಹೇಳಿದ ನಾಯಕ್. +“ನೀನಿಲ್ಲಿ ಬಂದು ಒಂದು ಇತಿಹಾಸ ಸೃಷ್ಟಿಸಿರುವಿ. +ಬಂಡೇರಹಳ್ಳಿಯಂತಹ ಯಾವ ಹಳ್ಳಿಯಲ್ಲೂ ಸರ್ಕಲ್ ಇನ್ಸ್‌ಪೆಕ್ಟರ್ ಇರುವಂತಹ ಪೋಲಿಸ್ ಸ್ಟೇಷನ್ ಇರುವದಿಲ್ಲ. +ನೀನಿಲ್ಲೇನು ಸಾಧಿಸಲು ಬಂದಿದ್ದಿ” +“ನಾಯಕ್‌ರೇ ಮರ್ಯಾದೆಯಾಗಿ ಮಾತಾಡಿ, ನೀನು ಅಲ್ಲ ನೀವೂ, ಇಲ್ಲದಿದ್ದರೆ ನಾನೂ ನನ್ನ ಪೋಲಿಸ್ ಭಾಷೆಯನ್ನು ಉಪಯೋಗಿಸಬೇಕಾಗುತ್ತದೆ” ಕಟುವಾದ ದನಿಯಲ್ಲಿ ಹೇಳಿದ ತೇಜಾ. +ಒಮ್ಮೆಲೇ ನಾಯಕರ ಮುಖದಲ್ಲೆಲ್ಲಾ ವ್ಯಂಗ್ಯದ ಮುಗುಳ್ನಗೆ ತುಂಬಿ ಬಂತು. +ಅಂತಹ ದನಿಯಲ್ಲಿ ಅಂತಹದೇ ನಗೆಯನ್ನು ಮುಖದಲ್ಲೆಲ್ಲಾ ತುಂಬಿಕೊಂಡು ಹೇಳಿದ ನಾಯಕ್. +“ತಪ್ಪಾಯಿತು!ಇನ್ಸ್‌ಪೆಕ್ಟರ್ ಸಾಹೇಬರೆ ತಪ್ಪಾಯಿತು!… +ನೀವೇ ಹೇಳಿ ನನ್ನ ಬಂಡೇರಹಳ್ಳಿಯಲ್ಲಿ ಈ ಸರ್ಕಲ್ ಇನ್ಸ್‌ಪೆಕ್ಟರ್‌ ಇರುವಂತ ಪೋಲಿಸ್ ಸ್ಟೇಷನ್ ಯಾಕೆ ಬೇಕಾಯಿತು”ಎದುರಿಗೆ ಕುಳಿತ ಆ ಪಂಚಾಯತಿ ಪ್ರಸಿಡೆಂಟ್‌ನನ್ನು ಅಳೆಯುವಂತೆ ನೋಡುತ್ತಾ ಮಾತಾಡಿದ ತೇಜಾ. +“ಅದನ್ನು ನೀವು ಕಲೆಕ್ಟರ್ ಸಾಹೇಬರಿಗೆ ಕೇಳಿ ಅವರೇ ಅದಕ್ಕೆ ಸರಿಯಾದ ಉತ್ತರ ಕೊಡುತ್ತಾರೆ. +ಹೇಗೂ ಅವರು ನಿಮ್ಮ ಸ್ನೇಹಿತರು. +ಅದೂ ಅಲ್ಲದೇ ರಾಮನಗರದಲ್ಲೂ ನಿಮ್ಮ ವ್ಯವಹಾರ ಹರಡಿದೆ” +“ನೀವಿಲ್ಲಿ ಕಲ್ಲಕ್ಕನನ್ನು ಹಿಡಿಯಲು ಬಂದಿದ್ದೀರೆಂದು ತಿಳಿಯಿತು. +ಆದರೆ ಆಕೆ ಈಗ ಇಲ್ಲಿಲ್ಲ. +ತನ್ನ ಠಿಕಾಣಿ ಬದಲಾಯಿಸಿದ್ದಾಳೆ” ಎಲ್ಲಾ ತನಗೆ ಗೊತ್ತೆಂಬಂತಹ ದನಿಯಲ್ಲಿ ಮಾತಾಡಿದ ನಾಯಕ್. +ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದ ತೇಜಾ. + ಆ ನೋಟ ನಾಯಕನ ಕಣ್ಣಿನಿಂದ ದೇಹವೆಲ್ಲಾ ಹರಿದಾಡುವ ಹಾಗಿತ್ತು. +ಕೆಲಕ್ಷಣಗಳ ನಂತರ ಗಲಿಬಿಲಿಗೊಂಡಂತೆ ಕೇಳಿದ ಪಂಚಾಯತಿಯ ಮುಖ್ಯಸ್ಥ“ಏನು?ಯಾಕೆ ಹಾಗೆ ನೋಡುತ್ತಿದ್ದಿರಿ?” +“ನಿಮಗೆಲ್ಲ ಕಲ್ಲಕ್ಕಳ ಬಗ್ಗೆ ಇನ್ನೂ ಏನೇನು ಗೊತ್ತು ನಾಯಕರೆ?” +ಅಪರಾಧಿಯೊಬ್ಬನನ್ನು ಪ್ರಶ್ನಿಸುವಂತಹ ದನಿಯಲ್ಲಿ ಕೇಳಿದ ತೇಜಾ. +ನಾಯಕನ ಮುಖ ಇನ್ನೂ ಗೊಂದಲಮಯವಾಯಿತು. +ಕುರ್ಚಿಯಿಂದೆದ್ದು ನೋಟವನ್ನು ಅವನ ಮುಖದಿಂದ ಸರಿಸದೇ ಮತ್ತೆ ತಾನೇ ಮಾತಾಡಿದ ತೇಜಾ“ಮಾತಾಡಿ ಇನ್ನೂ ಏನೇನು ಗೊತ್ತು? +ಈಗವಳು ಎಲ್ಲಿದ್ದಾಳೆ?”ಅವನ ಮಾತಿನ ಧಾಟಿ ಈಗ ನಾಯಕನ ಮುಖದಲ್ಲಿ ಭಯ ಹುಟ್ಟಿಸಿತ್ತು. +ಮೊದಲ ದನಿಯಲ್ಲಿ ಹೇಳಿದ“ನನಗೇನೂ ಗೊತ್ತಿಲ್ಲ!ನಾ ಸುಮ್ಮನೆ ಹೇಳಿದೆ” +“ಏಳು ಬೋಳಿಮಗನೆ!ಕುರ್ಚಿಯಿಂದೇಳು!ನೀವೆಲ್ಲಾ ಪೋಲಿಸಿನವರೆಂದರೆ ಏನೆಂದು ಕೊಂಡಿದ್ದೀರಿ. +ಪಂಚಾಯಿತಿ ಪ್ರಸಿಡೆಂಟರ, ಎಂ.ಎಲ್.ಎ.ಯರ, ಮಂತ್ರಿಯರ, ಗುಲಾಮರೆಂದು ಕೊಂಡಿದ್ದೀರಾ! +ಇಡೀ ರಾಜ್ಯ ಕ್ರಾಂತಿಕಾರಿಯರ ಚಟುವಟಿಕೆಯಿಂದ ತಲ್ಲಣಗೊಳ್ಳುತ್ತಿರುವಾಗ ನಿಮಗದು ಹುಡುಗಾಟವಾಗಿದೆಯೋ! +ನಾನು ಸಾರಾಯಿ ಮಾರುವ ಸಮಯವನ್ನು ಪಾಲಿಸಿ ಎಂದರೆ ಸಿಕ್ಕ ಸಿಕ್ಕಲ್ಲಿ ಸಮಯವಲ್ಲದ ಸಮಯದಲ್ಲಿ ಅದರ ಮಾರಾಟ ಆರಂಭಿಸಿದ್ದೀರಾ ಅದಕ್ಕೆ ಕಾರಣ ನೀನೇ ನಾಯಕ್! +ನಿನ್ನ ಸದೆಬಡಿದರೆ ಎಲ್ಲಾ ತಾನೇ ಸರಿಹೋಗುತ್ತದೆ” ಎಂದ ತೇಜಾ, ಒಬ್ಬ ಕಾನ್ಸ್‌ಟೇಬಲ್‌ನನ್ನು ಕೂಗಿ ಕರೆದ. +ಏನೋ ಅನಾಹುತವಾಗಿದೆ ಎಂಬಂತೆ ಅವನು ಓಡಿ ಬಂದು ಅಟೆನ್ಷನ್‌ನಲ್ಲಿ ನಿಲ್ಲುತ್ತಿದ್ದಂತೆ ಆಜ್ಞಾಪಿಸಿದ ತೇಜಾ. +“ಇವರನ್ನು ರಾಮನಗರಕ್ಕೆ ಕರೆದುಕೊಂಡು ಹೋಗಬೇಕು. +ಆವರೆಗೂ ಇವರನ್ನು ಲಾಕ್‌ಅಪ್ನಲ್ಲಿ ಹಾಕು”ಭಯದಿಂದ ಬಿಳಿಚಿಕೊಂಡಿತು ನಾಯಕನ ಮುಖ, ಭಯಗಾಬರಿಗಳ ದನಿಯಲ್ಲಿ ಹೇಳಿದ“ಇದು ಅನ್ಯಾಯ, ನನಗೆ ಕಲ್ಲಕ್ಕೆ ಎಲ್ಲಿದ್ದಾಳೆಂಬುವುದು ಗೊತ್ತಿಲ್ಲ…”ಆಗಲೇ ಪೋನ್ ಗಂಟೆಯ ನಾದವನ್ನು ಹೊರಹೊಮ್ಮಿಸತೊಡಗಿತು. +ಈಗ ಸರಿಹೋಯಿತು ಎಂದುಕೊಳ್ಳುತ್ತಾ ರಿಸಿವರನ್ನು ಎತ್ತಿಕೊಂಡ ತೇಜಾ. +ಭಯದ ಮುಖಭಾವ ಹೊತ್ತ ನಾಯಕ್ ಅಲ್ಲೇ ನಿಂತಿದ್ದ. +ಅವನ ಬದಿಗೇ ನಿಂತ ಕಾನ್ಸ್‌ಟೇಬಲ್‌ನ ಮುಖದಲ್ಲಿ ಏನು ಮಾಡಬೇಕು ತೋಚದಂತಹ ಭಾವವಿತ್ತು. +ಅತ್ತ ಕಡೆಯಿಂದ ಸ್ಕ್ವಾಡ್‌ನ ಮುಖ್ಯಸ್ಥ ಶ್ರೀವಾಸ್ತವ ಮಾತಾಡುತ್ತಿದ್ದರು. +“ನಾನೀಗ ರಾಮನಗರದಿಂದ ಮಾತಾಡುತ್ತಿದ್ದೇನೆ ಕೂಡಲೇ ಬಾ” +“ಸರಿ ಸಾರ್!ಇಲ್ಲಿನ ಪಂಚಾಯತಿ ಪ್ರೆಸಿಡೆಂಟ್ ಸಿದ್ದಾನಾಯಕರು ಪೊಲೀಸ್ ಸ್ಟೇಷನ್ನಿನಲ್ಲೆ ಇದ್ದಾರೆ. +ಅವರಿಗೆ ಕಲ್ಲಕ್ಕ ಎಲ್ಲಿದ್ದಾಳೆಂಬುವುದು ಗೊತ್ತಿದೆ ಎಂದು ನನ್ನ ಅನುಮಾನ. +ಅವರನಲ್ಲಿ ಕರೆತರೋಣವೆಂದು ಕೊಳ್ಳುತ್ತಿದ್ದೆ” +“ಕರೆದುಕೊಂಡು ಬಾ!ನಾನೇ ಮಾತಾಡಿಸುತ್ತೇನೆ. +ನೀನು ತಕ್ಷಣ ಹೊರಟು ಬಾ” ಎಂದು ಸ್ಕ್ವಾಡಿನ ಮುಖ್ಯಸ್ಥರು ರಿಸೀವರನ್ನು ಕೆಳಗಿಟ್ಟ ಶಬ್ದ ಕೇಳಿಸಿತು. +ತೇಜಾ ತಾನೂ ರಿಸೀವರನ್ನು ಕೆಳಗಿಡುತ್ತಾ ಆಜ್ಞಾಪಿಸಿದ. +“ನಡಿ!ಹೋಗುವ ನೀನವರನ್ನು ಹಿಡಿದು ಹಿಂದೆಕೂಡು. +ಸ್ಕ್ವಾಡಿನ ಮುಖ್ಯಸ್ಥರೆ ಇವರೊಡನೆ ಮಾತಾಡುತ್ತಾರಂತೆ”ಭಯಾತಿರೇಕದಿಂದ ಕಿರುಚಿದ ನಾಯಕ್. +“ಇದು ಅನ್ಯಾಯ, ನಾನು ಏನೋ ಹೇಳಲು ಬಂದರೆ ನನ್ನ ಸಿಕ್ಕಿಹಾಕಿಸುತ್ತಿದ್ದೀರಿ. +ನಾನು ಫೋನ್ ಮಾಡಬೇಕು”ಆ ಮಾತನ್ನು ಕೇಳಿಸಿಕೊಳ್ಳದವನಂತೆ ಜೀಪಿನ ಕಡೆ ನಡೆದ ತೇಜಾ, ಕಾನ್ಸ್ ಟೇಬಲ್ ನಾಯಕರ ರಟ್ಟೆ ಹಿಡಿದು ಹೊರಗೆ ಕರೆತಂದು ಜೀಪಿನ ಹಿಂದೆ ಕೂಡಿಸಿದ. +ಅದಕ್ಕಾಗೇ ಕಾಯುತ್ತಿದ್ದ ತೇಜಾ ಜೀಪನನ್ನು ಸ್ಟಾರ್‍ಟ್ ಮಾಡಿದ. +ಪೋಲಿಸ್ ಜೀಪು ಬಂಡೇರಹಳ್ಳಿಯನ್ನು ಹಿಂದೆ ಹಾಕಿ ರಾಮನಗರದ ಕಡೆ ಓಡಲಾರಂಭಿಸಿದಾಗ ನಾಯಕರ ಮುಖದಲ್ಲಿ ನಿಧಾನವಾಗಿ ಭಯದ ಭಾವ ಹೋಗಿ ಅದರ ಸ್ಥಾನದಲ್ಲಿ ಸಿಟ್ಟು ತುಂಬಿಬರಲಾರಂಭಿಸಿತು. +ಇನ್ನೂ ಸ್ವಲ್ಪ ದಾರಿ ಸವಿಸಿದ ಮೇಲೆ ತಮ್ಮ ರೋಷವನ್ನು ಹೊರಗೆಡಹಿದರು ನಾಯಕರು. +“ಇನ್ಸ್‌ಪೆಕ್ಟರ್‌!ನೀನಿದರ ಫಲ ಅನುಭವಿಸುತ್ತಿ! +ನಾನ್ಯಾರೆಂಬುವುದು ನಿನಗಿನ್ನೂ ಗೊತ್ತಾಗಿಲ್ಲ. +ನನ್ನ… ನನ್ನ… ಸಿದ್ದಾನಾಯಕ್‌ನ ಬಂಧಿಸಿ ರಾಮನಗರಕ್ಕೆ ಕರೆದೊಯ್ಯುತ್ತಿಯಾ, ತಿಳಿಯುತ್ತದೆ. +ರಾಮನಗರದಲ್ಲಿ ನಿನಗೆ!ನಾನ್ಯಾರೆಂಬುವುದು ಗೊತ್ತಾಗುತ್ತದೆ”ಅದಕ್ಕೆ ತೇಜಾನೇ ಆಗಲಿ, ಕಾನ್ಸ್‌ಟೇಬಲ್‌ನೇ ಆಗಲಿ ಯಾವ ರೀತಿಯಲ್ಲೂ ಪ್ರತಿಕ್ರಿಯಿಸಲಿಲ್ಲ. +ಪಟ್ಟಣದಿಂದ ಸ್ಕ್ವಾಡಿನ ಮುಖ್ಯಸ್ಥರು ರಾಮನಗರಕ್ಕೆ ಯಾಕೆ ಬಂದಿರಬಹುದು. +ಅವರೊಡನೆ ತಾನು ಏನೇನು ಹೇಳಬೇಕು ಏನು ಹೇಳಬಾರದು ಎಂಬ ಯೋಚನೆಯಲ್ಲಿ ತೊಡಗಿದ. +ತೇಜಾನ ಮನದಿಂದ ಈಗ ಕ್ರಾಂತಿ ಕಾರಿಯರು, ಭ್ರಷ್ಟ ರಾಜಕಾರಣಿಗಳು, ಬಡಬಗ್ಗರ ಮೇಲೆ ನಡೆಯುತ್ತಿರುವ ಅತ್ಯಾಚಾರ ಎಲ್ಲಾ ಬಹುದೂರವಾಗಿತ್ತು. +ಅವನನ್ನು ಕಲ್ಯಾಣಿಯೇ ಆಕ್ರಮಿಸಿ ಬಿಟ್ಟಿದ್ದಳು. +ತಾವಿಬ್ಬರೂ ಕಲೆತು ಸುಖಶಾಂತಿಯಿಂದ ಬಾಳುವುದು ಹೇಗೆ ಎಂಬ ಯೋಚನೆಯೇ ಅವನನ್ನು ಕಾಡುತ್ತಿತ್ತು. +ಸುಳ್ಳು ಮೋಸಗಳನ್ನು ಅರಿತವನಲ್ಲ ತೇಜಾ, ಆದರೆ ಈಗ ಸುಳ್ಳುಗಳನ್ನು ಹುಟ್ಟಿಸಬೇಕು. +ಕಲ್ಯಾಣಿಗಾಗಿ ನಿಜವೆನಿಸುವಂತಹ ಸುಳ್ಳುಗಳು. +ಇದು ಸರಿಯೇ ಎಂಬ ಪ್ರಶ್ನೆ ಅವನಲ್ಲಿ ಎದ್ದಿರಲಿಲ್ಲ. +ಅವನಿಗೀಗ ಬೇಕಾದದ್ದು ಒಂದೇ ಕಲ್ಯಾಣಿ. +ಕಲ್ಯಾಣಿಗಾಗಿ ಅವನು ಏನು ಬೇಕಾದರೂ ಮಾಡುತ್ತೇನೆ ಎಂಬ ಶಪಥವನ್ನು ತೆಗೆದುಕೊಂಡಿದ್ದ. +ಅದು ಮಂತ್ರ ಘೋಷಗಳಿಂದ ಉಗುಳು ನುಂಗುವ ಶಪಥವಾಗಿರಲಿಲ್ಲ. +ಇಬ್ಬರ ಹೃದಯಾಂತರಾಳದಿಂದ ಬಂದ ಮಾತಾಗಿತ್ತು. +ಸ್ಕ್ವಾಡಿನ ಮುಖ್ಯಸ್ಥರೊಡನೆ ಹೇಗೆ ಮಾತಾಡಬೇಕೆಂಬ ಚಿಂತನೆ ಹೆಚ್ಚಾದಾಗ ಮೊದಲು ಅವರ ಮಾತುಗಳನ್ನು ಕೇಳಿ ಅದಕ್ಕೆ ತಕ್ಕಂತೆ ಉತ್ತರಿಸಬೇಕೆಂಬ ನಿರ್ಣಯಕ್ಕೆ ಬಂದ. +ಡಿಸ್ಟ್ರಿಕ್ಟ್ ಹೆಡ್ ಕ್ವಾರ್‌ಟ್ರ್ಸನ ಎಸ್.ಪಿ.ಯವರ ಮುಖ್ಯ ಕಾರ್ಯಾಲಯದೆದುರು ಜೀಪು ನಿಂತಾಗ ಕಾನ್ಸ್ ಟೇಬಲ್ ಹಿಂದೆಯೇ ಇಳಿದ ನಾಯಕ್ ವರಟು ದನಿಯಲ್ಲಿ ಹೇಳಿದ“ನನ್ನ ಕೈಹಿಡಿಯಬೇಡ. +ನಾ ಬರುತ್ತೇನೆ”“ಅವರನ್ನು ಮುಟ್ಟಬೇಡ ತಾವಾಗೇ ಅವರು ನಮ್ಮ ಜತೆ ಬರುತ್ತಾರೆ” ಹೇಳಿದ ತೇಜಾ. +ಎಸ್.ಪಿ.ಸಾಹೇಬರ ಕೋಣೆಯಲ್ಲಿ ಸ್ಕ್ವಾಡ್‌ನ ಮುಖ್ಯಸ್ಥರು ಕುಳಿತಿದ್ದರು. +ತೇಜಾ ಆ ಕೋಣೆ ಪ್ರವೇಶಿಸುತ್ತಲೆ ಇಬ್ಬರಿಗೂ ಆಕರ್ಷಕ ಭಂಗಿಯಲ್ಲಿ ಸೆಲ್ಯೂಟ್ ಹಾಕಿದ“ಸಿದ್ಧಾನಾಯಕರನ್ನು ಕರೆತಂದಿದ್ದೀರಾ?” +“ತಂದಿದ್ದೇನೆ ಸರ್” ಹೇಳಿದ ತೇಜಾ. +“ಅವರ ಮೇಲೆ ನಿಮಗ್ಯಾಕೆ ಅನುಮಾನ ಬಂತು” ಅವನನ್ನೇ ಅನುಮಾನಿಸುತ್ತಿರುವವರಂತೆ ಕೇಳಿದರು ಎಸ್.ಪಿ. + “ಅವರೇ ಹೇಳಿದರು ಸರ್ ಕಲ್ಲಕ್ಕ ಇಲ್ಲಿಲ್ಲವೆಂದು” ಕೂಡಲೇ ಉತ್ತರಿಸಿದ ತೇಜಾ. +ಅದಕ್ಕೆ ಸ್ಕ್ವಾಡಿನ ಮುಖ್ಯಸ್ಥರು ಹೇಳಿದರು“ನೀವು ಹೋಗಿ ಅವರೊಡನೆ ಮಾತಾಡಿ, ನಾನಾಮೇಲೆ ಬಂದು ನಿಮ್ಮನ್ನು ಸೇರಿಕೊಳ್ಳುತ್ತೇನೆ. +ತೇಜಾನೊಡನೆ ಗಂಭೀರ ವಿಷಯಗಳು ಚರ್ಚಿಸಬೇಕು. +ಯಾರನ್ನೂ ಒಳಬಿಡಬಾರದೆಂದು ಹೇಳಿ” +“ಸರಿ” ಎಂದ ಎಸ್.ಪಿ.ಮನಸ್ಸಿಲ್ಲದ ಮನಸ್ಸಿನಿಂದ ತಮ್ಮ ಕುರ್ಚಿ ಖಾಲಿ ಮಾಡಿದರು. +ಅವರು ಹೊರಹೋಗಿ ದಪ್ಪನೆಯ ಬಾಗಿಲು ಮುಚ್ಚಿಕೊಳ್ಳುತ್ತಿದ್ದಂತೆ ಸಿಟ್ಟಿನ ದನಿಯಲ್ಲಿ ಹೇಳಿದರು ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ. +“ಬಂಡೇರಹಳ್ಳಿಯಲ್ಲಿ ಏನು ಮಾಡುತ್ತಿದ್ದಿ! +ನಿನಗೆ ರಾಜಕೀಯ ನಾಯಕನಾಗುವ ಇರಾದೆ ಇದೆಯೇ!”ಇಷ್ಟು ಬೇಗ ಪಟ್ಟಣಕ್ಕೆ ಈ ಸುದ್ದಿ ಮುಟ್ಟಿ ಸ್ಕ್ವಾಡಿನ ಮುಖ್ಯಸ್ಥರೇ ರಾಮನಗರಕ್ಕೆ ಬಂದಿದ್ದಾರೆಂದರೆ ಇವರ ಹಿಂದೆ ಸಿದ್ದಾನಾಯಕ್‌ನ ಕೈವಾಡವಿದೆ ಎಂಬುವುದು ಸ್ಪಷ್ಟವಾಯಿತು ತೇಜಾನಿಗೆ. +ಅವರ ಹಿಂದೆಯೇ ಕಲ್ಯಾಣಿ ಹೇಳಿದ ಮಾತು ಮನದಲ್ಲಿ ಹಾದುಹೋಯಿತು. +“ನಾನಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ನೀವು ಹೇಳುತ್ತಿದ್ದೀರೆಂದು ಕೊಳ್ಳುತ್ತೇನೆ” ಹೇಳಿದ ತೇಜಾ. +“ಹೂಂ!ಅದೇ ವಿಷಯ ಏನೋ ದೊಡ್ಡ ಭಾಷಣವನ್ನು ಬಿಗಿದಿಯಂತೆ… +ನಿಂತೇ ಯಾಕಿದ್ದಿ ಕೂಡು” ಅವರ ಸಿಟ್ಟಿನಲ್ಲೂ ಅಪ್ಯಾಯತೆ ತುಂಬಿತ್ತು. +ಇಂತಹ ಅಧಿಕಾರಿ ಎದುರು ಸುಳ್ಳು ಹೇಳಬೇಕಾಗುತ್ತದಲ್ಲ ಎಂಬ ಹಿಂಸೆ ತೇಜಾನಿಗೆ. +ಅವರ ಎದುರಿನ ಕುರ್ಚಿಯಲ್ಲಿ ಕುಳಿತು ಮಾತಾಡಿದ. +“ಪೂರ್ತಿ ಬಂಡೇರಹಳ್ಳಿಯವರೆ ಕಲ್ಯಾಣಿಯ ಭಕ್ತರಾಗಿದ್ದಾರೆ ಸರ್! +ಅವಳ ವಿರುದ್ಧ ಯಾರೂ ಒಂದು ಮಾತನಾಡಿದರೂ ಅವರು ಸಹಿಸುವುದಿಲ್ಲ. +ಅದಕ್ಕಾಗಿ ನಾನು ಮಾಡಬೇಕಾಗಿದ್ದ ಮೊದಲು ಕೆಲಸ ಅಲ್ಲಿಯವರ ವಿಶ್ವಾಸ ಸಂಪಾದಿಸುವುದು. +ಅದಕ್ಕೆ ಅವರಲ್ಲಿ ಒಬ್ಬನಾಗಬೇಕಾಯಿತು. +ನಾನೇನೂ ದೊಡ್ಡ ಭಾಷಣವನ್ನು ಮಾಡಲಿಲ್ಲ ಸರ್! +ಪೋಲಿಸಿನವರಿಗೆ ಹೆದರಬೇಡಿ ಅವರು ನಿಮ್ಮ ಸ್ನೇಹಿತರೇ ಎಂದಷ್ಟೆ ಹೇಳಿದೆ. +ಆ ಹಳ್ಳಿಗರ ವಿಶ್ವಾಸ ಸಂಪಾದಿಸಲು ಅವರಲ್ಲಿ ಒಬ್ಬನಾಗಲು ನಾನು ಏನೆಲ್ಲಾ ಮಾಡಬೇಕಾಯಿತೆಂಬ ರಿಪೋರ್ಟು ನಿಮಗೆ ಬಂದಿರಬಹುದು”ಅವನು ಹೇಳಿದ್ದನ್ನು ಬಹು ಗಮನವಿಟ್ಟು ಕೇಳಿದ ಸ್ಕ್ವಾಡ್‌ನ ಮುಖ್ಯಸ್ಥರು ತಮ್ಮ ನುಣುಪಾದ ಕಪೋಲವನ್ನು ಕೆರೆದುಕೊಂಡು ಹೇಳಿದರು. +“ಈ ರಾಜಕಾರಣಿಯರ ದಬ್ಬಾಳಿಕೆಯಲ್ಲಿ ಯಾವ ಕೆಲಸವೂ ಆಗುವುದು ಕಷ್ಟವಾಗಿ ಹೋಗಿದೆ. +ಈ ಸಿ.ಎಂ.ಸಾಹೇಬರ ಕಾರಣವಾಗಿ ಕ್ರಾಂತಿಕಾರಿ ಚಳುವಳಿಯನ್ನು ಬಹಳಮಟ್ಟಿಗೆ ಹತ್ತಿಕ್ಕಲು ಸಾಧ್ಯವಾಗುತ್ತಿದೆ. +ನಿನ್ನೆ ಹತ್ತು ಜನಕ್ರಾಂತಿಕಾರಿಯರು ಗುಂಡಿನೇಟಿಗೆ ಬಲಿಯಾದರು. +ಇನ್ನೂ ಹದಿನೈದು ಜನ ಶರಣಾಗತರಾಗಿದ್ದಾರೆ. +ಅಂತಹದರಲ್ಲಿ ಈ ಕಲ್ಯಾಣಿಯನ್ನು ಮುಗಿಸಲು ನಮಗ್ಯಾಕಿಷ್ಟು ಕಷ್ಟವಾಗುತ್ತಿದೆಯೋ ಅರ್ಥವಾಗುತ್ತಿಲ್ಲ” +“ಅದಕ್ಕೆ ಕಾರಣ ಅವಳು ಎಲ್ಲರಂತಹ ಕ್ರಾಂತಿಕಾರಿ ಅಲ್ಲವೇನೋ ಸರ್” ಅವರ ಮಾತು ಮುಗಿಯುತ್ತಲೇ ತನ್ನ ಅನಿಸಿಕೆಯನ್ನು ಮುಂದಿಡುವಂತೆ ಹೇಳಿದ ತೇಜಾ. +“ದೇವನಹಳ್ಳಿ ಪಟವಾರಿಯೂ ಅದನ್ನೇ ಹೇಳುತ್ತಿದ್ದ. +ಅವಳು ಕ್ರಾಂತಿಕಾರಿ ಅಲ್ಲ ಸಮಾಜಸೇವಕಳೆಂದು ಮರೆತದನ್ನು ಜ್ಞಾಪಿಸಿಕೊಳ್ಳುವಂತೆ ಮಾತಾಡಿದರು ಸ್ಕ್ವಾಡಿನ ಮುಖ್ಯಸ್ಥರು. +ಅವರ ಮಾತು ತೇಜಾನಲ್ಲಿ ಆಶ್ಚರ್ಯ ಹುಟ್ಟಿಸಿತು. +ಕೂಡಲೇ ಹೇಳಿದ“ನೀವೇ ನೋಡಿ ಸರ್!ಒಬ್ಬ ಧನವಂತನ ಅಭಿಪ್ರಾಯ ಅವಳ ಬಗ್ಗೆ ಹಾಗಿದ್ದರೆ ಇನ್ನು ಬಡಬಗ್ಗರದಿನ್ನೆಷ್ಟಿರಬಹುದು… +ಇದು ಸುಲಭವಾಗಿ ಪರಿಹಾರವಾಗುವ ಸಮಸ್ಯೆ ಅಲ್ಲ ಸರ್! +ಇದನ್ನು ಪರಿಹರಿಸಲು ಅವಳನ್ನು ಶರಣಾಗತಳಾಗುವಂತೆ ಮಾಡಲು ಸಮಯ ಬೇಕು. +ಈಗ ನೀವೇ ಹೇಳಿ ನಾನೇನು ಮಾಡಲಿ”ಸುಳ್ಳು, ಸತ್ಯಗಳನ್ನು ಬೆರೆಸಿ ಅವನಾಡಿದ ಮಾತು ಬಹಳ ಪ್ರಭಾವಕಾರಿಯಾಗಿತ್ತು. +ಇನ್ನೊಂದು ಕಪೋಲ ತುರಿಸಿಕೊಳ್ಳುವುದನ್ನು ನಿಲ್ಲಿಸಿ ಗಂಭೀರ ದನಿಯಲ್ಲಿ ಹೇಳಿದರವರು. +“ಇದು ಕಷ್ಟಕರ ಕೆಲಸವೆಂಬುವುದು ನನಗೂ ಗೊತ್ತು. +ಆದರದು ಈ ದರಿದ್ರ ರಾಜಕಾರಣಿಯರಿಗೆ ತಿಳಿಯಬೇಕಲ್ಲ! +ಸಿ.ಎಂ.ಸಾಹೇಬರೇನೋ ನಾ ಹೇಳಿದ್ದಕೆಲ್ಲಾ ಒಪ್ಪುತ್ತಾರೆ. +ಆದರೆ ನಡುವಿರುವ ಚಮಚಾಗಳದೇ ಗೋಳು. +ಅವರಿಗೂ ತಮ್ಮ ಕುರ್ಚಿಯನ್ನು ಕಾಪಾಡಿಕೊಳ್ಳುವುದು ಮುಖ್ಯ. +ನೋಡು ಈ ಸಾಮಾನ್ಯ ಪಂಚಾಯತಿ ಪ್ರಸಿಡೆಂಟ್‌ನೇ ಅವರ ಮೇಲೆ ಎಲ್ಲಿಂದಲೋ ಒತ್ತಡ ತಂದಿರಬೇಕು. +ಅದರಿಂದಾಗಿ ನಾನು ನಿನ್ನೊಡನೆ ಮಾತಾಡಲು ಇಲ್ಲಿಯವರೆಗೆ ಬರಬೇಕಾಯಿತು… +ಹೋಗಲಿ ಈ ನಾಯಕನ್ಯಾಕೆ…”ಅವರ ಮಾತು ಮುಗಿಯುವ ಮುನ್ನ ಸುತ್ತೂ ಒಮ್ಮೆ ನೋಡಿ ಮೆಲ್ಲನೆಯ ದನಿಯಲ್ಲಿ ಹೇಳಿದ ತೇಜಾ“ಅವನು ನನ್ನ ಮೇಲೆ ರೋಪ್ ಹಾಕಲು ಪೋಲಿಸ್ ಸ್ಟೇಷನ್‌ಗೆ ಬಂದಿದ್ದ. +ಬಾಯಿ ಜಾರಿ ಏನೋ ಮಾತಾಡಿದ ಭಯವಿರಲಿ ಎಂದು ಇಲ್ಲಿ ಎಳೆತಂದೆ”ಸ್ಕ್ವಾಡ್‌ನ ಮುಖ್ಯಸ್ಥರ ಹುಬ್ಬುಗಳು ಮೇಲೇರಿದವು. +ಕಲಕ್ಷಣಗಳು ಯೋಚಿಸಿ ಕೇಳಿದರು. +“ಕಲ್ಯಾಣಿಯನ್ನು ಬಂಧಿಸಲು, ಕನಿಷ್ಠ ಅವಳ ಠಿಕಾಣಿಯ ಪತ್ತೆ ಹಚ್ಚಲು ನಿನಗೆಷ್ಟು ಸಮಯ ಬೇಕು”ತಾನು ಯೋಚಿಸಿದಂತೆ ಮಾಡಿ ಮಾತಾಡಿದ ತೇಜಾ. +“ಏನಿಲ್ಲವೆಂದರೂ ಇನ್ನೂ ಮೂರು ತಿಂಗಳಾದರೂ ಬೇಕು ಸರ್! …. +ಮುಖ್ಯವಾಗಿ ನನಗೆ ಸಂಪೂರ್ಣ ಸ್ವಾತಂತ್ರ್ಯ ಬೇಕು…” +“ಅಂದರೆ?” ಅವನು ಮಾತು ಮುಗಿಸುವ ಮುನ್ನ ಮತ್ತೆ ಹುಬ್ಬೇರಿಸಿ ಕೇಳಿದರು ಸ್ಕ್ವಾಡಿನ ಮುಖ್ಯಸ್ಥರು. +“ಈ ಸಿದ್ಧಾನಾಯಕ್‌ನ ಅಲ್ಲಿ ಎರಡು ಸಾರಾಯಿ ಖಾನೆಗಳಿವೆ. +ಅವು ದಿನದ ಇಪ್ಪತ್ತನಾಲ್ಕು ಗಂಟೆಗಳೂ ತೆಗೆದಿರುತ್ತಿದ್ದವು. +ಮೊದಲು ಅದನ್ನು ನಾನು ನಿಯಂತ್ರಿಸಿದೆ. +ಆದರೆ ನಮ್ಮ ಪೇದೆಗಳು ಲಂಚ ತೆಗೆದುಕೊಂಡು ಮತ್ತೆ ಎಲ್ಲಾ ಮೊದಲಿನಂತೆ ಆಯಿತು. +ಅಲ್ಲಿ ಇವನ ಲಾಟರಿ ಟಿಕೆಟ್‌ಗಳನ್ನು ಮಾರುವ ಅಂಗಡಿಯಿದೆ. +ಅದರಿಂದ ಕೆಲ ಹಳ್ಳಿಗರಲ್ಲಿ ಜನ ಭಿಕಾರಿಗಳಾಗಿದ್ದರೆ. +ಅದನ್ನು ಮುಚ್ಚಿಸಬೇಕು. +ಆ ಹಳ್ಳಿಯ ಕೆಲ ಯುವಕರನ್ನು ನಾನು ನಿಯಮಿಸಿಕೊಂಡು ಅವರಿಂದ ಕೆಲಸ ತೆಗೆದುಕೊಳ್ಳುವ ಅನುಮತಿ ಬೇಕು. +ಈ ಸಿದ್ಧಾನಾಯಕ್ ಕೆಲ ರೌಡಿಯರನ್ನು ಸಾಕಿದ್ದಾನಂತೆ ಅವರನ್ನು ಹದ್ದು ಬಸ್ತಿನಲ್ಲಿ ತರಬೇಕು. +ಆಗ ಅಲ್ಲಿ ಕಲ್ಯಾಣಿಗಿಂತ ಪೋಲೀಸಿನವರ ಪ್ರಾಮುಖ್ಯತೆ ಹೆಚ್ಚುತ್ತದೆ. +ನನಗೆ ಸ್ವಾತಂತ್ರ್ಯ ಬೇಕು ಎಂಬುದು ಇದೇ ಅರ್ಥದಲ್ಲಿ ಅವರ ಒಂದು ಶಬ್ದದ ಪ್ರಶ್ನೆಗೆ ಉದ್ದನೆಯ ವಿವರಣೆ ಕೊಟ್ಟ ತೇಜಾ. +ಈ ಸಲ ಕುರ್ಚಿಯಿಂದೇಳುತ್ತಾ ಯಾವುದೋ ನಿರ್ಣಯ ತೆಗೆದುಕೊಂಡಂತೆ ಮಾತಾಡಿದರು ಸ್ಕ್ವಾಡಿನ ಮುಖ್ಯಸ್ಥರು. +“ನಾನೇ ಬಂಡೇರಹಳ್ಳಿಗೆ ಬಂದು ಎಲ್ಲಾ ನೋಡುತ್ತೇನೆ… +ಈ ನಾಯಕ ಏನು ಹೇಳಿದ” +“ಈ ಚಿಕ್ಕ ಹಳ್ಳಿಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್‌ ಇರುವ ಪೋಲಿಸ್ ಸ್ಟೇಷನ್ ಯಾಕೆ? +ಕಲ್ಲಕ್ಕ ಬಂಡೇರಹಳ್ಳಿಯ ಕಾಡುಗಳಲ್ಲಿಲ್ಲ ನಿನ್ಯಾಕೆ ಇಲ್ಲಿದ್ದಿ ಎಂದು…” +“ಸಾಕು!ಇವನಿಗೂ ಕಲ್ಲಕ್ಕನಿಗೂ ಯಾವ ನೆಂಟೂ ಇಲ್ಲ ತಾನೆ?” +ಅವನ ಮಾತನ್ನು ನಡುವೆ ತಡೆದು ಮಾತಾಡಿದರು ಸ್ಕ್ವಾಡಿನ ಮುಖ್ಯಸ್ಥರು. +“ಇಲ್ಲ ಸರ್!ಅದು ನಾ ಹುಟ್ಟಿಸಿದ್ದು” ಮೆಲ್ಲನೆಯ ದನಿಯಲ್ಲಿ ಹೇಳಿದ ತೇಜಾ. +“ಕಾಫಿ ಬರುತ್ತದೆ ಕುಡಿಯುತ್ತಾ ಕುಳಿತಿರು ನಾನೀಗ ಬಂದೆ” ಎಂದು ಅವರು ಎಸ್.ಪಿ.ಯವರ ಚೇಂಬರಿನಿಂದ ಹೊರಬಿದ್ದರು. +ಸ್ಕ್ವಾಡಿನ ಮುಖ್ಯಸ್ಥರು ಅವರಿಗಿಂತ ಸೀನಿಯರ್ ಆದಕಾರಣ ಅವರು ಒಳಬರುತ್ತಲೇ ಎದ್ದರು ಎಸ್.ಪಿ.ಸಾಹೇಬರು. +ನಾಯಕರೂ ದಯನೀಯ ಮುಖ ಮಾಡಿ ಎದ್ದರು. +“ಇವರು ಪಟ್ಟಣದಿಂದ ಬಂದಿರುವ ಹಿರಿಯ ಅಧಿಕಾರಿ, ಇವರು ಸಿದ್ಧಾನಾಯಕರು ಸರ್ ಬಂಡೇರಹಳ್ಳಿಯ ಪಂಚಾಯಿತಿ ಪ್ರಸಿಡೆಂಟರು”ಪರಿಚಯ ಮಾಡಿಸುವ ಕೆಲಸವನ್ನು ಮುಗಿಸಿದರು ಎಸ್.ಪಿ.ಸಾಹೇಬರು. +ಸ್ವಲ್ಪ ಬಾಗಿ ಎರಡೂ ಕೈಗಳನ್ನು ಜೋಡಿಸಿದರು ಸಿದ್ಧಾನಾಯಕ್. +ಸ್ಕ್ವಾಡಿನ ಮುಖ್ಯಸ್ಥರ ಸೂಟು, ಮುಖದ ಮೇಲಿನ ಕಳೆ ಅವರ ಮೇಲೆ ಬಹಳ ಪ್ರಭಾವ ಬೀರಿತು. +“ಕೂಡಿ… ಕೂಡಿ… ನಿಮ್ಮ ಹೆಸರನ್ನು ಬಹಳ ಕೇಳಿದ್ದೇನೆ ನಾಯಕರೇ ಆಗಾಗ ಅಸೆಂಬ್ಲಿಯಲ್ಲಿ ಮಂತ್ರಿಯರೂ ನಿಮ್ಮ ಬಗ್ಗೆ ಮಾತಾಡುತ್ತಿರುತ್ತಾರೆ”ಪ್ರಶಂಸೆ ತುಂಬಿದ ದನಿಯಲ್ಲಿ ಹೇಳುತ್ತಾ ಎಸ್.ಪಿ.ಯವರ ಬದಿಯಲ್ಲಿ ಕುಳಿತರು. +“ಅದೆಲ್ಲಾ ಆ ಪರಮಾತ್ಮನ ದಯೆ ಸ್ವಾಮಿ” ಬಹು ವಿನಮ್ರ ದನಿಯಲ್ಲಿ ಹೇಳಿದ ನಾಯಕ“ನಾನು ಸಿ.ಎಂ.ಸಾಹೇಬರ ಆಜ್ಞೆಯ ಮೇರೆಗೆ ತನಿಖೆ ಮಾಡಲು ಬಂದಿರುವೆ. +ಈ ಇನ್ಸ್‌ಪೆಕ್ಟರ್ ಅಲ್ಲಿನ ಲೀಡರ್ ಆಗುವ ಕೆಲಸ ಆರಂಭಿಸಿದ್ದಾನಂತಲ್ಲ” ಬಹು ಗಂಭೀರ ದನಿಯಲ್ಲಿ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು. +“ಹೌದು ಸ್ವಾಮಿ!ನಿನ್ನೆ ಅಲ್ಲೊಂದು ಕಾರ್ಯಕ್ರಮ ಏರ್ಪಡಿಸಿ ಭಾಷಣ ಮಾಡಿದ್ದಾರೆ. +ಅದು ಪೋಲಿಸಿನವರ ಕೆಲಸವೇ?”ದೂರು ಕೊಡುವಂತಹ ದನಿಯಲ್ಲಿ ಮಾತಾಡಿದರು ನಾಯಕ್“ಅಲ್ಲ… ಅಲ್ಲ… ಅದು ಪೋಲಿಸಿನವರ ಕೆಲಸ ಖಂಡಿತ ಅಲ್ಲ. +ಅದೆಲ್ಲಾ ನಿಮ್ಮಂತಹವರು ಮಾಡಬೇಕಾದ ಕೆಲಸ… +ರಾಮನಗರದಲ್ಲಿ ನಿಮ್ಮ ಬಾರುಗಳು ಎಷ್ಟಿವೆ?” ಮೊದಲ ಮಾತನ್ನು ವ್ಯಂಗ್ಯದ ದನಿಯಲ್ಲಿ ಪ್ರಶ್ನೆಯನ್ನು ಗಂಭೀರ ದನಿಯಲ್ಲಿ ಕೇಳಿದರು ಸ್ಕ್ವಾಡಿನ ಮುಖ್ಯಸ್ಥರು. +“ಎರಡಿದೆ ಸ್ವಾಮಿ!… ಯಾಕೆ ನಾನು ಬಾರುಗಳ ಮಾಲಿಕನಾಗುವುದು ಕಾನೂನಿನ ವಿರುದ್ಧವೇ” ದಿಟ್ಟ ದನಿಯಲ್ಲಿಯೇ ಮಾತಾಡಿದರು ನಾಯಕ. +“ಛೇ, ಛೇ, ಈ ಕಾಲದಲ್ಲಿ ಯಾರೂ ಬೇಕಾದರೂ ಶ್ರೀಮಂತನಾಗಬಹುದು. +ಅದರ ಮೇಲಿಂದ ನೀವು ಪಂಚಾಯಿತಿ ಪ್ರಸಿಡೆಂಟು, ಶ್ರೀಮಂತರಾಗದೇ ಇರಲು ಸಾಧ್ಯವೆ! +ಇಲ್ಲಿ ಎರಡು ಬಾರುಗಳಿವೆ. +ಬಂಡೇರಹಳ್ಳಿಯಲ್ಲಿ ಎರಡು ಸಾರಾಯಿಖಾನೆಗಳಿವೆ. +ಅದು ಅಪರಾಧವಲ್ಲವೇ ಅಲ್ಲ. +ಆದರೆ ಕಲ್ಲಕ್ಕನಿಗೆ ಮಾಮೂಲು ಕೊಡುವುದು ಅಪರಾಧ. +ಅಂತಹವರನ್ನು ನಾವಿಲ್ಲಿ ಮಾತಾಡಿಸುವುದಿಲ್ಲ ಪಟ್ಟಣದ ಕಂಟ್ರೋಲ್‌ರೂಂನಲ್ಲಿ ಮಾತಾಡಿಸುತ್ತೇವೆ” ಗಂಭೀರ ದನಿಯಲ್ಲಿ ಸಾಮಾನ್ಯ ವಿಷಯ ಹೇಳುತ್ತಿರುವಂತೆ ಮಾತಾಡಿದರು ಶ್ರೀವಾಸ್ತವ. +“ಯಾರು ಹೇಳಿದರು ಸರ್ ನಾನು ಕಲ್ಲಕ್ಕನಿಗೆ ಮಾಮೂಲು ಕೊಡುತ್ತಿದ್ದೇನೆಂದು. +ಆ ಇನ್ಸ್‌ಪೆಕ್ಟರನೇ ಅವನೆ…” +“ನಾಯಕ್!ಇದು ನಿಮ್ಮ ಊರಿನ ಪಂಚಾಯಿತಿಯಲ್ಲ. +ನಿಧಾನವಾಗಿ ಮರ್ಯಾದೆಯಾಗಿ ಮಾತಾಡಿ” ನಾಯಕನ ಮಾತನ್ನು ಕತ್ತರಿಸಿ ಕಟುವಾದ ದನಿಯಲ್ಲಿ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು. +ನಾಯಕನಿಗೆ ಭಯ ತೊಲಗಿ ಆವರೆಗೆ ಬಹಳ ಧೈರ್ಯ ಬಂದುಬಿಟ್ಟಿತ್ತು. +ಅದಕ್ಕೆ ಎಸ್.ಪಿ.ಯವರ ಮಾತುಗಳೂ ಸಹಕಾರ ನೀಡಿದ್ದವು. +ತನ್ನನು ತಾನು ಸಂಭಾಳಿಸಿಕೊಂಡು ಮಾತಾಡಿದ ನಾಯಕ್. +“ಆ ಇನ್ಸ್‌ಪೆಕ್ಟರ್ ಸುಳ್ಳು ಹೇಳುತ್ತಿದ್ದಾರೆ ಸರ್!ಅವರ ಬಳಿ ಅದಕ್ಕೇನಾದರೂ ಪುರಾವೆಗಳಿವೆಯೇ?”ಅವನು ಸ್ವಾಮಿಯಿಂದ ಸರ್‌ಗೆ ಬಂದದ್ದು ಸ್ಕ್ವಾಡಿನ ಮುಖ್ಯಸ್ಥರ ಗಮನಕ್ಕೆ ಬಂತು. +ಕಟುವಾದ ದನಿಯಲ್ಲಿ ಹೇಳಿದರು. +“ಇದು ಕ್ರಾಂತಿಕಾರಿಯರಿಗೆ ಸಂಬಂಧಿಸಿದ ವಿಷಯ ಇದರಲ್ಲಿ ನಾವು ಪುರಾವೆ, ಸಾಕ್ಷಿಗಳನ್ನು ಹುಡುಕಲು ಹೋಗುವುದಿಲ್ಲ. +ಇದಕ್ಕಿಂತ ಮೊದಲು ನೀವೇ ಕೇಳಿದ್ದೀರಿ ಯಾರು ಹೇಳಿದರೆಂದು. +ಈ ವಿಷಯಗಳೂ ನಮಗೆ ಯಾರೂ ಹೇಳುವುದಿಲ್ಲ, ಗೊತ್ತಾಗುತ್ತವೆ. +ಬಂಡೇರಹಳ್ಳಿಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಇರುವ ಪೋಲಿಸ್ ಸ್ಟೇಷನ್ ಯಾಕೆಂದು ಕೇಳಿದಿರಂತೆ ಅದು ನಿಮಗೆ ಸಂಬಂಧಿಸಿದ ವಿಷಯವೇ! +ಪಂಚಾಯತಿ ಪ್ರಸಿಡೆಂಟರಾಗಿ ಅಲ್ಲಿ ಅದು ಬೇಡವಾಗಿದ್ದರೆ ಬರೆದುಕೊಡಿ ನಾನು ಸಿ.ಎಂ.ಸಾಹೇಬರೊಡನೆ ಮಾತಾಡಿ ಅದು ಯಾಕೆಂಬ ವಿವರ ಬರೆದು ಕಳಿಸುವಂತೆ ಹೇಳುತ್ತೇನೆ… +ಇನ್ನೂ ನಿಮ್ಮೊಡನೆ ಬಹಳ ಮಾತಾಡಬೇಕು. +ನಾ ನಿಮ್ಮ ಹಳ್ಳಿಗೆ ಬರುತ್ತಿದ್ದೇನೆ ಅಲ್ಲಿ ಬಂದು ನನಗಾಗಿ ಕಾದಿರಿ”ಎಂದ ಸ್ಕ್ವಾಡಿನ ಮುಖ್ಯಸ್ಥರು ಮಾತು ಮುಗಿದಂತೆ ಅಲ್ಲಿಂದೆದ್ದರು. +ಪೇದೆಯೊಬ್ಬ ತಂದುಕೊಟ್ಟ ಕಾಫಿಯನ್ನು ಕುಡಿದು ಮುಗಿಸಿ ಕಾಯುತ್ತಿದ್ದ ತೇಜಾ. +ಆ ಕೋಣೆಯಲ್ಲಿ ಬಂದವರೆ ತಮ್ಮ ಜತೆಗಿದ್ದ ಎಸ್.ಪಿ.ಯವರಿಗೆ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು. +“ಇವರ ಜೀಪನ್ನು ನೀವು ಯಾರೊಡನೆ ಆದರೂ ಬಂಡೇರಹಳ್ಳಿಗೆ ಕಳಿಸಿ. +ನಾವಿಬ್ಬರೂ ನನ್ನ ಕಾರಿನಲ್ಲಿ ಹೋಗುತ್ತಿದ್ದೇವೆ. +ಸಿ.ಎಂ.ಸಾಹೇಬರು ಹೇಳಿದ ಒಂದು ಮಾತನ್ನು ನಾನೀ ಇನ್ಸ್‌ಪೆಕ್ಟರ್ ಮುಂದೆಯೇ ಹೇಳಬಯಸುತ್ತೇನೆ. +ಬಂಡೇರಹಳ್ಳಿಗೆ ಅದೇ ಅಲ್ಲ ಈ ಜಿಲ್ಲೆಯ ಎಲ್ಲಾದರೂ ಕ್ರಾಂತಿಗಳ ಉಪಟಳವಾದರೆ ಅದನ್ನು ಇನ್ಸ್‌ಪೆಕ್ಟರ್‌ ಉತ್ತೇಜ್ ನೋಡಿಕೊಳ್ಳುತ್ತಾರೆ. +ನೀವು ಅವರಿಗೆ ಸಹಾಯ ಮಾಡಬೇಕಷ್ಟೆ. +ಕ್ರಾಂತಿಕಾರಿಯರಿಗೆ ಸಂಬಂಧಿಸಿದ ಯಾವ ವಿಷಯದಲ್ಲೂ ನೀವು ತಲೆ ಹಾಕಬಾರದು. +ಸ್ಕ್ವಾಡಿನ ಮುಖ್ಯಸ್ಥರು ಹೊರಹೋಗುತ್ತಿದ್ದಂತೆ ಎಸ್.ಪಿ.ಸಾಹೇಬರಿಗೆ ಸೆಲ್ಯೂಟ್ ಹಾಕಿ ಅವರನ್ನು ಹಿಂಬಾಲಿಸಿದ ತೇಜಾ. +ಗುಂಡು ತಾತಗೆ ತೇಜಾ ಪಟ್ಟಣದಿಂದ ಒಬ್ಬ ಹಿರಿ ಅಧಿಕಾರಿಯೊಡನೆ ಬಂದಿದ್ದಾನೆಂದು ತಿಳಿದಾಕ್ಷಣ ಅವನು ಯುವಕರನ್ನು ಒಟ್ಟುಗೂಡಿಸಿದ. +ಬಂಡೇರಹಳ್ಳಿಯನ್ನು ಪ್ರವೇಶಿಸುವ ಮಾರ್ಗದಲ್ಲೇ ಕಾರಿನಿಂದಳಿದು ನಡೆಯುತ್ತಾ ಬರುತ್ತಿದ್ದರು ತೇಜಾ ಮತ್ತು ಸ್ಕ್ವಾಡಿನ ಮುಖ್ಯಸ್ಥರು. +ಅಕ್ಕಪಕ್ಕದಲ್ಲಿನ ಕೆಲ ಗುಡಿಸಲುಗಳನ್ನು ದಾಟಿದ ಮೇಲೆ ಸುತ್ತೂ ನೋಡುತ್ತಾ ಕೇಳಿದರು ತೇಜಾನ ಅಧಿಕಾರಿ. +“ಕೊಲೆಗಳಾದ ಸೂಳೆಗೇರಿ ಎಲ್ಲಿದೆ?” +“ಅದೇನು ಸರ್ ಸ್ವಲ್ಪ ಮುಂದೆ ಬಲಕ್ಕೆ ನೋಡಿ”ತೇಜಾ ಹೇಳಿದ ಕಡೆ ಕಣ್ಣು ಹಾಯಿಸಿದರವರು. +ಒಬ್ಬ ನಡುವಯಸ್ಕ ಇಬ್ಬರು ಹುಡುಗಿಯರೊಡನೆ ಮಾತಾಡುತ್ತಾ ನಿಂತಿದ್ದ. +ಅರೆಕ್ಷಣ ಮಾತ್ರ ಅತ್ತ ನೋಡಿ ತೇಜಾನ ಕಡೆ ತಿರುಗಿ ಕೇಳಿದರವರು. +“ನೀನಿನ್ನೂ ಅವರ ಕಡೆ ಗಮನ ಹರಿಸಿಲ್ಲವೆ?” +“ಸಮಯವೆಲ್ಲಿದೆ ಸರ್!ನಡುವೆ ಈ ಸಿದ್ಧಾನಾಯಕನ ಗೋಳು ಬೇರೆ” +“ರಾಮನಗರಕ್ಕೆ ಹೋದಾಕ್ಷಣ ವ್ಯಾನ್ ಕಳಿಸುತ್ತೇನೆ. +ಎಲ್ಲರನ್ನೂ ಅದರಲ್ಲಿ ಹಾಕಿ ಕಳಿಸಿಬಿಡು. +ಮತ್ತೆ ಈ ವ್ಯವಹಾರ ಇಲ್ಲಿ ಆರಂಭವಾಗಬಾರದು” ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು. +“ಸರಿ ಸರ್” ಎಂದ ತೇಜ. +ಇಬ್ಬರಲ್ಲಿ ಯಾರೂ ಇನ್ನೊಮ್ಮೆ ಆ ಹೆಣ್ಣುಗಳಿರುವ ಗುಡಿಸಲಿನ ಕಡೆ ಕಣ್ಣು ಹಾಯಿಸಲಿಲ್ಲ. +ತೇಜಾನನ್ನು ಗುರಿತಿಸಿದ ಆ ನಡುವಯಸ್ಕ ಹುಡುಗಿಯರನ್ನು ಒಳಗೆ ಕಳಿಸಿ ತಾನೂ ಮಾಯವಾದ. +ಹಾಗೇ ಅವರಿಬ್ಬರೂ ಇನ್ನೂ ಸ್ವಲ್ಪ ದಾರಿ ಸವಿಸಿದ ಮೇಲೆ ಎದುರಾಯಿತು ಸಾರಾಯಿಖಾನೆ. +ರಸ್ತೆಯ ಮೇಲೆ ನಿಂತೇ ಅದರೊಳಗೆ ನೋಟ ಹಾಯಿಸಿದರಿಬ್ಬರು. +ಸಂಜೆಯಾಗುತ್ತಿದ್ದುದರಿಂದ ಅಲ್ಲಿ ಸಾಕಷ್ಟು ಜನ ಕುಡುಕರು ಸೇರಿದ್ದರು. +ತದೇಕಚಿತ್ತದಿಂದ ಒಳಗಿನ ದೃಶ್ಯವನ್ನೇ ಕೆಲ ಕ್ಷಣಗಳು ನೋಡಿ ಹೇಳಿದರು ಮುಖ್ಯಸ್ಥರು“ಬಂಡೇರಹಳ್ಳಿ ಸಾಕಷ್ಟು ದೊಡ್ಡದಿರುವ ಹಾಗಿದೆ” +“ಹೌದು ಸರ್!ಈಗಿದು ಸಾಕಷ್ಟು ಬೆಳೆದಿದೆಯಂತೆ ಅದಕ್ಕೂ ಕಲ್ಲಕ್ಕನೇ ಕಾರಣ ಎಂದು ಮಾತಾಡಿಕೊಳ್ಳುತ್ತಾರೆ ಇಲ್ಲಿಯ ಜನ” ಹೇಳಿದ ತೇಜ. +ಅದರ ಬಗ್ಗೆಯೇ ಯೋಚಿಸುತ್ತಿರುವ ಹಾಗೆ ಕಪೋಲ ಕರೆಯಲಾರಂಭಿಸಿದರು ಸ್ಕ್ವಾಡಿನ ಮುಖ್ಯಸ್ಥರು. +ಅತ್ತ ಇತ್ತ ನೋಡುತ್ತಾ ಜನ ಸಂಚಾರ ಹೆಚ್ಚಿರುವ ಕಡೆ ಬಂದಾಗ ಒಬ್ಬ ಯುವಕ ತೇಜಾನೆದುರು ಬಂದು ಕೈಜೋಡಿಸಿ ನಮಸ್ಕರಿಸಿ ಹೇಳಿದ“ನಾವು ನಿಮಗಾಗೇ ಕಾಯುತಿದ್ದೆವು ಸರ್!”ಆ ಮಾತು ಬೆಳೆಸುವುದು ಬೇಡವೆಂದುಕೊಂಡು ಶ್ರೀವಾಸ್ತವರನ್ನು ಅವನಿಗೆ ಪರಿಚಯಿಸಿದ. +ಅವರು ಪಟ್ಟಣದಿಂದ ಬಂದಿರುವ ಸ್ಕ್ವಾಡಿನ ಮುಖ್ಯಸ್ಥರೆಂದು, ಕಮೀಷನರ ಸಾಹೇಬರ ಸಮದರ್ಜೆಯವರೆಂದು ಬಂಡೇರಹಳ್ಳಿಯನ್ನು ನೋಡಲು ಬಂದಿದ್ದಾರೆಂದು ಹೇಳಿದಾಗ ಅವನು ಆದರ ಗೌರವಗಳಿಂದ ಎರಡು ಕೈಗಳನ್ನು ಜೋಡಿಸಲು ಅವನು ಮೇಲೆತ್ತಿದಾಗ ಅವನನ್ನು ಹತ್ತಿರ ಎಳೆದುಕೊಂಡ ಮುಖ್ಯಸ್ಥರು ಹೆಗಲ ಮೇಲೆ ಕೈಹಾಕಿ ಹೇಳಿದರು“ನಡಿ ನೀನೇ ನನಗೆ ಬಂಡೇರಹಳ್ಳಿಯನ್ನು ತೋರಿಸು”ಕಮೀಷನರ್‌ರಂತಹ ಅಧಿಕಾರಿ ತನ್ನ ಹೆಗಲ ಮೇಲೆ ಕೈಹಾಕಿ ಆತ್ಮೀಯವಾಗಿ ಮಾತಾಡಿದ್ದು ಆ ಯುವಕನಲ್ಲಿ ಎಲ್ಲಿಲ್ಲದ ಸಂತಸ, ಹೆಮ್ಮೆಗಳನ್ನು ಹುಟ್ಟಿಸಿತು. +“ಖಂಡಿತ ತೂರಿಸುತ್ತೇನೆ ಸರ್! +ಈ ಇನ್ಸ್‍ಪೆಕ್ಟರ್ ಸಾಹೇಬರು ಬಂದಾಗಿನಿಂದ ನಮ್ಮ ಹಳ್ಳಿಗೆ ಕಳೆ ಬಂದಿದೆ” ಉತ್ಸಾಹದ ದನಿಯಲ್ಲಿ ಹೇಳಿದನಾ ಯುವಕ. +“ಓ ಹಾಗೋ!ಯಾಕಪ್ಪಾ ನಿಮ್ಮೊಡನೆ ಡಾನ್ಸು ಮಾಡುತ್ತಾರೇನು?” ನಗುತ್ತಾ ಕೇಳಿದರು ಸ್ಕ್ವಾಡಿನ ಮುಖ್ಯಸ್ಥರು. +“ಬಹಳ ಒಳ್ಳೆಯವರು ಸರ್! +ಮಾಡೆಂದರೆ ಖಂಡಿತ ಮಾಡುತ್ತಾರೆ. +ನೀವು ನಿನ್ನೆ ಕಾರ್ಯಕ್ರಮ ನೋಡಬೇಕಾಗಿತ್ತು ಸರ್” ಹೆಚ್ಚಿದ ಸಂತಸದ ದನಿಯಲ್ಲಿ ಹೇಳಿದನವ. +“ನಾನೂ ನಿಮ್ಮೊಡನೆ ಡ್ಯಾನ್ಸ್ ಮಾಡಲೇ” ಹಾಸ್ಯದ ದನಿಯಲ್ಲಿ ಕೇಳಿದರವರು“ಮಾಡುತ್ತಿರಾ ಸರ್!… ನಿಜವಾಗೂ…” +“ಯಾಕಪ್ಪಾ ನನಗೆ ಡ್ಯಾನ್ಸ್ ಬರುವುದಿಲ್ಲವೆಂದುಕೊಂಡೆಯಾ! ಅಥವಾ ನಾನು ಮುದುಕ ಅದಕ್ಕೆ ಲಾಯಕ್ಕಿಲ್ಲ ಎಂದುಕೊಂಡೆಯಾ”ಅದಕ್ಕೆ ಲಗುಬಗೆಯ ದನಿಯಲ್ಲಿ ತಪ್ಪು ಮಾಡಿದವನಂತೆ ಹೇಳಿದನಾ ಯುವಕ“ಇಲ್ಲ ಸರ್… ಇಲ್ಲ… ಯಾರು ಸರ್ ನಿಮ್ಮನು ಮುದುಕರೆನ್ನುವವರು. +ನೀವಿನ್ನೂ ಸ್ಮಾರ್ಟ್ ಆಗಿದ್ದೀರಿ”ಮೂವರೂ ಮುಂದೆ ನಡೆದಂತೆ ಕೆಲವರು ಅವರನ್ನು ಅಚ್ಚರಿಯಿಂದ ಕೆಲವರು ಗೌರವದಿಂದ ನೋಡುತ್ತಿದ್ದರು. +ಅವರ ಜತೆ ಜತೆಗೆ ಕೆಲ ಯುವಕರು ನಡೆಯತೊಡಗಿದರು. +ಅವರು ಪೋಲೀಸ್ ಸ್ಟೇಷನ್ನಿಗೆ ಬರವದರಲ್ಲಿ ಅವರ ಸಂಖ್ಯೆ ಹೆಚ್ಚಾಗಿತ್ತು. +ಪೊಲೀಸ್ ಸ್ಟೇಷನ್ನಿನೆದುರು ಗುಂಡುತಾತ ಸುಮಾರು ಮುವತ್ತು, ನಲವತ್ತು ಜನರೊಡನೆ ಕಾಯುತ್ತಿದ್ದ. +ಅವನ ಕೈಯಲ್ಲಿ ದಪ್ಪನೆಯ ಹೂವಿನ ಹಾರವಿತ್ತು. +ತಮ್ಮ ಕಣ್ಣನ್ನು ತಾವೇ ನಂಬಲಾಗದವರಂತೆ ಸ್ಕ್ವಾಡಿನ ಮುಖ್ಯಸ್ಥರು ತೇಜಾನ ಕಡೆ ನೋಡಿದರು. +ಅವನಿಗೂ ಇದೊಂದೂ ಅರ್ಥವಾಗಲಿಲ್ಲ. +ಆ ದೃಶ್ಯ ಅವನಲ್ಲಿ ಶಬ್ದಗಳಿಗೆ ನಿಲುಕಲಾರದಂತಹ ಭಾವನೆಗಳನ್ನು ಹುಟ್ಟಿಸಿದವು. +ತನಗೇನೂ ಗೊತ್ತಿಲ್ಲ ಎಂಬಂತೆ ಮುಖ್ಯಸ್ಥರ ಕಡೆ ನೋಡಿದ. +ಅವರು ಆ ಗುಂಪಿನ ಹತ್ತಿರವಾಗುತ್ತಿದ್ದಂತೆ ಕೂಗಿದ ಒಬ್ಬ“ಕಮೀಷನರ್ ಸಾಹೇಬರಿಗೆ ಜಯವಾಗಲಿ”ಪೋಲಿಸ್ ಸ್ಟೇಷನ್‌ನ ಹತ್ತಿರ ತೇಜಾ ಮತ್ತು ಸ್ಕ್ವಾಡ ಮುಖ್ಯಸ್ಥರ ಹಿಂದಿನವರು ಕೂಡ ಆದಕ್ಕೆ ತಮ್ಮ ದನಿಯನ್ನು ಕೂಡಿಸಿದರು. +ಎತ್ತರದ ದನಿಯ ಆ ಜಯಕಾರ ಇಡೀ ಬಂಡೇರಹಳ್ಳಿಯಲ್ಲಿ ಪ್ರತಿಧ್ವನಿಸುವಂತಿತ್ತು. +“ಇನ್ಸ್‌ಪೆಕ್ಟರ್ ಸಾಹೇಬರಿಗೆ ಜಯವಾಗಲಿ” ಎಂದು ಕೂಗಿದ ಮತ್ತೊಬ್ಬ. +ಅದಕ್ಕೂ ಹಾಗೆ ಎಲ್ಲರೂ ತಮ್ಮ ದನಿಯನ್ನು ಸೇರಿಸಿದರು. +ಏನು ಮಾಡಬೇಕು, ಏನು ಮಾತಾಡಬೇಕು ಎಂಬುವುದು ತೋಚದಂತಹ ಸ್ಥಿತಿಯಲ್ಲಿದ್ದ ತೇಜಾ, ಇದು ಪೂರ್ವನಿಯೋಜಿತ ಕಾರ್ಯಕ್ರಮದಂತೆ ಕಾಣುತ್ತಿದ್ದರೂ ಅದು ಹಾಗಲ್ಲ ಏಕಾ‌ಏಕಿ ಸ್ಫೂರ್ತಿಯಿಂದ ಹುಟ್ಟಿಕೊಂಡ ಸಂತಸವೆಂದು ಸ್ಕ್ವಾಡ್‌ನ ಮುಖ್ಯಸ್ಥರಿಗೆ ಗೊತ್ತಾಯಿತು. +ಅಸೂಯೆ ಪಡುವಂತೆ ಜನಪ್ರಿಯತೆಯನ್ನು ಸಂಪಾದಿಸಿದ್ದಾನೀ ತೇಜಾ ಎನಿಸಿತು. +ಗುಂಡು ತಾತ ಸ್ಕ್ವಾಡಿನ ಮುಖ್ಯಸ್ಥರಿಗೆ ಹೂವಿನ ಹಾರ ಹಾಕಿದ. +ಎಲ್ಲರೂ ಕಿವಿ ಕಿವುಡಾಗುವಂತೆ ಚಪ್ಪಾಳೆ ತಟ್ಟಿದರು. +ಹಾರ ತೆಗೆದು ಪಕ್ಕದಲ್ಲಿ ನಿಂತಿದ್ದ ಕಾನ್ಸ್‌ಟೇಬಲ್‌ನಿಗೆ ಕೊಟ್ಟು ತಾತನನ್ನು ಬಿಗಿದಪ್ಪಿದರು ಸ್ಕ್ವಾಡಿನ ಮುಖ್ಯಸ್ಥರು, ಅವನಿಗೆ ಪರಮಾನಂದ. +ಅಪ್ಪುವಿಕೆ ಮುಗಿದ ಮೇಲೆ ಮತ್ತೊಮ್ಮೆ ಕೂಗಿದ“ಕಮೀಶನರ್ ಸಾಹೇಬರಿಗೆ ಜಯವಾಗಲಿ”ಎಲ್ಲರ ಕಂಠದಿಂದ ಹೊರಟ ಆ ಜಯನಾದ ಸುತ್ತಲೂ ಮಾರ್ದನಿಸಿತ್ತು. +“ನಿಮ್ಮ ಮಾತನ್ನು ಇವರೆಲ್ಲರೂ ಕೇಳುತ್ತಾರೆಯೇ” ತಾತನಿಗೆ ಕೇಳಿದರು ಸ್ಕ್ವಾಡಿನ ಮುಖ್ಯಸ್ಥರು. +“ಕೇಳುತ್ತಾರೆ ಸ್ವಾಮಿ” ಜನರ ಗದ್ದಲದಲ್ಲಿ ಅವರಿಗೆ ಕೇಳಿಸುವಂತೆ ಹೇಳಿದ. +“ನಾನಿನ್ನೂ ಬಹಳ ಹೊತ್ತು ಇರುತ್ತೇನೆ. +ಎಲ್ಲರೊಡನೆ ಮಾತಾಡುತ್ತೇನೆ. +ಎಲ್ಲವನ್ನೂ ನೋಡುತ್ತೇನೆಂದು ಹೇಳಿ”ಸ್ಕ್ವಾಡಿನ ಮುಖ್ಯಸ್ಥರ ಮಾತನ್ನು ಎಲ್ಲರಿಗೂ ಕೇಳಿಸುವಂತೆ ಕೂಗಿ ಹೇಳಿದ ಗುಂಡು ತಾತ. +ಜನಸಮೂಹದಲ್ಲಿ ಗದ್ದಲ ಕಡಿಮೆಯಾಯಿತು. +ಬದಿಯಲ್ಲೇ ನಿಂತಿದ್ದ ತೇಜಾನಿಗೆ ಕಿವಿಯ ಬಳಿ ಬಾಯಿ ತಂದು ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು“ಒಂದೇ ಒಂದು ಕಡಿಮೆ ಇದೆ” +“ಏನು ಸರ್?” ಕೌತುಕ ದನಿಯಲ್ಲಿ ಕೇಳಿದ ತೇಜಾ. +“ಫೋಟೋಗ್ರಾಫರ್‍ಸ್ ಮತ್ತು ವಿಡಿಯೋ ಕ್ಯಾಮರಾಗಳು”ಅವರ ಹುಡುಗಾಟಿಕೆಯ ಮಾತನ್ನು ಗಂಭೀರವಾಗಿ ಪರಿಗಣಿಸಿ ಹೇಳಿದ ತೇಜಾ“ಇದೆಲ್ಲಾ ನನಗೆ ಗೊತ್ತಿಲ್ಲ ಸರ್!ನೀವಿಲ್ಲಿ ಬರುವೀರೆಂಬುವುದೂ ಗೊತ್ತಿರಲಿಲ್ಲ”ಅವನ ಮಾತನ್ನು ಕೇಳಿಸಿಕೊಳ್ಳದವರಂತೆ ಹೇಳಿದರು . +“ಸಿ.ಎಂ.ಸಾಹೇಬರು ವಿಡಿಯೋ, ಫೋಟೋಗಳನ್ನು ನೋಡಿದ್ದರೆ ಅವರು ನನ್ನ ತಮ್ಮ ಪ್ರತಿಸ್ಪರ್ಧಿ ಎಂದು ಭಾವಿಸುತ್ತಾರೆಂಬುವುದರಲ್ಲಿ ಸಂದೇಹವಿಲ್ಲ.”ಅವರು ಹುಡುಗಾಟದ ಮಾತನ್ನು ಅರ್ಥ ಮಾಡಿಕೊಂಡು ನಕ್ಕ ತೇಜ. +ಹಿರಿಯನೊಬ್ಬನನ್ನು ಒಳಬರುವಂತೆ ಹೇಳಿ ಪೋಲೀಸ್ ಸ್ಟೇಷನ್‌ನೊಳ ನಡೆದರು ಸ್ಕ್ವಾಡಿನ ಮುಖ್ಯಸ್ಥರು. +ಅವರ ಹಿಂದೆಯೇ ಅನುಸರಿಸಿದರು ತೇಜಾ ಮತ್ತು ಗುಂಡು ತಾತಾ. +ತೇಜಾನ ಕುರ್ಚಿಯಲ್ಲಿ ಆಸೀನರಾದರು ಮುಖ್ಯಸ್ಥರು. +ಅವರೆದುರು ಎರಡು ಕುರ್ಚಿಗಳು ಮಾತ್ರ ಇದ್ದವು ಅಲ್ಲಿ ತೇಜಾ ಮತ್ತು ತಾತ ಕುಳಿತರು. +ಎದುರಿಗೆ ಕುಳಿತ ಹಿರಿಯನನ್ನೇ ನೋಡುತ್ತಾ ಕೇಳಿದರು ಶ್ರೀವಾಸ್ತವ“ನಿಮ್ಮ ಹೆಸರೇನು?”ಯಾವ ಅಳುಕೂ ಇಲ್ಲದೆ ಕೂಡಲೇ ಹೇಳಿದನಾತ “ಇವರೆಲ್ಲಾ ನನ್ನ ತಾತ, ಗುಂಡು ತಾತ ಎಂದು ಕರೆಯುತ್ತಾರೆ ನಿಮಗೆ ಸರಿತೋರಿದ ಹಾಗೆ ಕರೆಯಬಹುದು” +“ನೀವಂತೂ ನನ್ನ ತಾತನ ವಯಸ್ಸಿನವರಲ್ಲ. ... +ಹೋಗಲಿ ಈ ಕಲ್ಲಕ್ಕಳ ಬಗ್ಗೆ ನಿಮ್ಮದೇನು ಅಭಿಪ್ರಾಯ?”ಇಂತಹ ಪ್ರಶ್ನೆ ಬರಬಹುದೆಂದು ಊಹಿಸಿರಲಿಲ್ಲ ತಾತ. +ಅವನ ಮುಖಭಾವ ಒಮ್ಮೆಲೆ ಬದಲಾಯಿತು. +ಸಿಟ್ಟಿನ, ವ್ಯಂಗ್ಯ ಮಿಳಿತ ದನಿಯಲ್ಲಿ ಕೇಳಿದ“ನೀವು ಅವಳನ್ನು ಹಿಡಿಯಲು, ಕೊಲ್ಲಲು ಬಂದಿರುವಿರಾ ಸ್ವಾಮಿ!”ಅವನ ಮುಖವನ್ನ ಗಮಿಸುತ್ತಿದ್ದ ಮುಖ್ಯಸ್ಥರು ನಕ್ಕು ಹೇಳಿದರು. +“ನೀವು ಆಕೆಯನ್ನು ಎಷ್ಟು ಪ್ರೀತಿಸುತ್ತೀರೆಂದು ಕೇಳಿದೆನಷ್ಟೆ!ಕೋಪ ಬೇಡ. +ನಾನೂ ನಿಮ್ಮ ತೇಜಾನಂತಹವನೆ”ತಾತನ ಮುಖದಲ್ಲಿನ ಸಿಟ್ಟಿನ ಗಂಟುಗಳು ಸಡಿಲಗೊಂಡವು. +ಎಲ್ಲೋ ಕಳೆದುಹೋದಂತ ಭಾವುಕ ದನಿಯಲ್ಲಿ ಹೇಳಿದ“ಕಲ್ಲಕ್ಕ, ಕಾಳಿ, ಜಗದಾಂಭೆ, ಆಕೆ ಸಾಮಾನ್ಯ ಹೆಣ್ಣಲ್ಲ ಸ್ವಾಮಿ ದೇವತೆ, ಆಕೆಯ ಕಾರಣವಾಗೇ ನಾವೀಗ ಇಲ್ಲಿ ಸುಖದಿಂದ ಬಾಳುತ್ತಿದ್ದೇವೆ”ಆತನ ಭಾವುಕ ಮಾತುಗಳು ಕೇಳಿದ ತೇಜಾ ತಾನು ಅಂತಹವಳ ಪತಿಯಾದ್ದದು ಅದೃಷ್ಟ ಎಂದುಕೊಂಡ. +ಹಗುರ ದನಿಯಲ್ಲಿ ಕೇಳಿದರು ಮುಖ್ಯಸ್ಥರು. +“ದೇವತೆಯರು ಕೊಲೆಗಳನ್ನು ಮಾಡುತ್ತಾರೆಯೇ?” +“ಕೊಲೆಗಳಲ್ಲ ಸ್ವಾಮಿ ಅವು ಭೂದೇವಿಗೆ ಪಾಪಿಯರ ರಕ್ತ ಬೇಕಾಗಿದೆ. +ಅದಕ್ಕೆ ನಮ್ಮ ಕಾಳಿ ಈ ಪಾಪಿಗಳ ರಕ್ತದಿಂದ ತರ್ಪಣ ಕೊಡುತ್ತಿದ್ದಾಳೆ. +ಚಂಡಾಲರನ್ನು ಚಚ್ಚಿ ಹಾಕುತ್ತಿದ್ದಾಳೆ. +ಕಾಳಿಕಾದೇವಿ ಮಾಡಿದ್ದೇನು ಅದೇ. +ಆಕೆ ದೇವತೆ ಅಲ್ಲವೇ!ಹಾಗೇ ನಮ್ಮ ಕಲ್ಲಕ್ಕ ಕಲಿಯುಗದ ದೇವತೆ. +ಈ ಕಲಿಯುಗದ ಕಾಳಿ ಯಾವುದಾದರೂ ಒಬ್ಬ ಒಳ್ಳೆಯವನನ್ನು ಬಲಿ ತೆಗೆದುಕೊಂಡ ಉದಾಹರಣೆ ಕೊಡಿ ನೋಡುವ” ಮತ್ತೆ ತಾತನ ಮಾತು ಭಾವಾತಿರೇಕದಿಂದ ತುಂಬಿತ್ತು. +ಇನ್ನೊಮ್ಮೆ ಕಲ್ಯಾಣಿ ತನ್ನವಳು, ತನ್ನ ಮಡದಿ ಎಂದು ನೆನಿಸಿಕೊಂಡು ತೇಜಾನ ಎದೆ ಗರ್ವದಿಂದ ಉಬ್ಬಿತು. +“ಆಕೆ ನಿಮಗೆ ಅಂತಹದೇನು ಉಪಕಾರ ಮಾಡಿದ್ದಾಳೆ ”ಅವನ ಮುಖದಿಂದ ನೋಟ ಸರಿಸದೇ ಕೇಳಿದರು ಅಧಿಕಾರಿ. +“ಕಲ್ಲಕ್ಕ ಬರುವ ಮುನ್ನ ವೈಭವ ಇಲ್ಲಿಯ ಸ್ಥಿತಿಯನ್ನು ನೋಡ ಬೇಕಾಗಿತ್ತು ಸ್ವಾಮಿ! +ಹೊಲದಲ್ಲಿ ಕೆಲಸ ಮಾಡುವವರು ಒತ್ತೆ ಆಳುಗಳಾಗಿದ್ದರು. +ಭೂಸ್ವಾಯರು ಅವರಿಗೆ ಕೊಟ್ಟ ಸಾಲದ ಬಡ್ಡಿಯಲ್ಲಿಯೇ ಹೋಗುತ್ತಿತ್ತು ಕೆಲಸ ಹಣ. +ಅದೂ ಅವರಾಗಿ ಕೊಡುತ್ತಿದ್ದುದು ಬಿಡಿಕಾಸು. +ಅಲ್ಪಸ್ವಲ್ಪ ಜಮೀನು ಇರುವವರ ಜಮೀನನ್ನು ಅಡವಾಗಿಟ್ಟುಕೊಂಡು ಕೊಟ್ಟ ಹಣ ರೈತರು ಮರಳಿಸುವ ಸ್ಥಿತಿಯಲ್ಲಿ ಇರಲಿಲ್ಲ. +ಬಡ್ಡಿ ಬೆಳೆಯುತ್ತಾ ಹೋಗಿ ಕೊನೆಗೆ ಆ ಹೊಲ ಕೂಡ ಅವರದೇ ಆಗಿಬಿಟ್ಟಿತು. +ನಾಲ್ಕಾರು ಎಕರೆ ಹೊಲವಿದ್ದವರು ಕೂಲಿ ಆಳುಗಳಾಗಿದ್ದರು. +ಕೂಲಿ ಆಳುಗಳಾದವರಿಗೆ ಎರಡು ಹೊತ್ತಿನ ಊಟ ಸಿಗುವುದು ಕಷ್ಟವಾಗಿತ್ತು. +ಒಂದು ದಿನ ಬಂದ ಕಲ್ಲಕ್ಕ ನಯವಾಗಿ ರೈತರಿಗೆ, ಅದರಲ್ಲಿ ಕೂಲಿ ಮಾಡುವವರಿಗೆ ನ್ಯಾಯ ಒದಗಿಸಬೇಕೆಂದು ಒಬ್ಬ ಜಮೀನುದಾರನಿಗೆ ಹೇಳಿದಳು. +ಅವಳನ್ನು ಹುಚ್ಚಿಯನ್ನು ಅಟ್ಟುವಂತೆ ಅಟ್ಟಿಬಿಟ್ಟ ಹಣದ ಮದದಿಂದ ಕೊಬ್ಬು ಸ್ವಾಮಿ. +ಅದೇ ದಿನ ಹಾಡುಹಗಲಲ್ಲೇ ಕಲ್ಲಕ್ಕ ಅವನ ರಕ್ತವನ್ನು ಭೂದೇವಿಗೆ ಅರ್ಪಿಸಿ ಮಿಕ್ಕ ಇಂತಹ ಅತ್ಯಾಚಾರಗಳನ್ನು ಮಾಡುತ್ತಿದ್ದ ಜಮೀನುದಾರರಿಗೆ ಎಚ್ಚರಿಸಿ ಹೋದಳು. +ಆಗಲೂ ಅವಳ ಮಾತನ್ನು ಯಾರೂ ಕೇಳಲಿಲ್ಲ. +ಪೋಲಿಸಿನವರನ್ನು ಕರೆತಂದರು ಅವರು ಬಂದು ಸಿಕ್ಕಸಿಕ್ಕ ಬಡಬಗ್ಗರನ್ನೆಲ್ಲಾ ಹಿಡಿದೊದ್ದು ಚಿತ್ರಹಿಂಸೆ ಕೊಟ್ಟರು. +ಅದೇ ದಿನ ಒಬ್ಬ ಪ್ರಮುಖ ಪೋಲೀಸ್ ಅಧಿಕಾರಿಯ ರಕ್ತವನ್ನು ತರ್ಪಣ ಬಿಟ್ಟಳು. +ಹೀಗೆ ಇನ್ನೊಂದೆರಡು ಸಲ ಆದನಂತರ ಜಮೀನುದಾರರಿಗೇ ಅಲ್ಲ ಪೋಲಿಸಿನವರಿಗೂ ಅವಳೆಂದರೆ ಭಯ ಹುಟ್ಟಿಬಿಟ್ಟಿತ್ತು. +ತಮ್ಮ ರಕ್ತ ತರ್ಪಣ ಎಲ್ಲಿ ಆಗುವುದೋ ಎಂಬ ಭಯದಿಂದ ಭೂಮಾಲಿಕರು ಕಲ್ಲಕ್ಕ ಹೇಳಿದ ಹಾಗೆ ಕೇಳಲಾರಂಭಿಸಿದರು. +ಯಾರ್‍ಯಾರು ತಮ್ಮ ತಮ್ಮ ಹೊಲಗಳನ್ನು ಅಡುವಿಟ್ಟು, ಕಳೆದುಕೊಂಡಿದ್ದರೋ ಅದು ಮತ್ತವರಿಗೆ ವಾಪಸು ಸಿಕ್ಕಿತು. +ಈಗ ಇಲ್ಲಿ ಎಲ್ಲರಿಗೂ ನ್ಯಾಯವಾದ ಕೂಲಿ ಸಿಗುತ್ತಿದೆ ಎಂದರೆ ಅದು ಆ ದೇವತೆಯ ಕಾರಣವಾಗೇ. +ಇನ್ನೇನು ಮಾಡಬೇಕು ಸ್ವಾಮಿ ನಮ್ಮಂತಹ ಬಡರೈತರಿಗೆ! +ಇದಕ್ಕಿಂತ ಹೆಚ್ಚಿನದೇನು ಬೇಕು ಸ್ವಾಮಿ! +ಈಗ ನೀವೇ ನ್ಯಾಯವಾಗಿ ಹೇಳಿ ಆಕೆ ದೇವತೆಯೇ ಅಲ್ಲವೋ” ಭಾವುಕ ದನಿಯಲ್ಲಿ ಕಲ್ಯಾಣಿಯ ವೃತ್ತಾಂತ ಹೇಳಿದ ತಾತ. +ಕಪೋಲವನ್ನು ಕರೆಯುವ ಕೆಲಸ ಆರಭಿಸಿದರು ಅಧಿಕಾರಿ. +ಕಲ್ಯಾಣಿ ಇಷ್ಟೆಲ್ಲಾ ಹೇಗೆ ಮಾಡಿರಬಹುದೆಂಬ ಊಹೆಯಲ್ಲಿ ನಿರತನಾದ ತೇಜ. +ತಾತನ ಮಾತುಗಳು ಇನ್ನೂ ಕಿವಿಯಲ್ಲಿ ಹೂಂಗುಟ್ಟುತ್ತಿರುವಂತಿತ್ತು. +ಆ ಸ್ವಲ್ಪ ಹೊತ್ತಿನ ಮೌನವನ್ನು ಮುರಿದರು ಅಧಿಕಾರಿ“ನೀವು ಹೇಳುವುದೇ ಸರಿ ಎನಿಸುತ್ತದೆ. +ಕಾಡಿನಲ್ಲಿ ಇಲ್ಲದ ಕಷ್ಟಗಳನ್ನು ಅನುಭವಿಸುತ್ತಾ ಇಂತಹದನ್ನೆಲ್ಲಾ ಮಾಡುವವಳು ದೇವತೆಯೇ ಆಗಿರಬೇಕು”ಅವರ ಮನದಾಳದಿಂದ ಬಂದಂತಿತ್ತು ಮಾತು. +“ಇವರೂ ಬಹಳ ಒಳ್ಳೆಯವರು ಸ್ವಾಮಿ! +ಸಾಯುತ್ತಿರುವ ಒಬ್ಬ ಬಡ ಹೆಣ್ಣಿನ ಪ್ರಾಣ ಕಾಪಾಡಿದ್ದಾರೆ! +ತೇಜಾನ ಕಡೆ ನೋಡುತ್ತಾ ಹೇಳಿದ ತಾತ ಅಚ್ಚರಿಯಿಂದ ತೇಜಾನ ಕಡೆ ಪ್ರಶ್ನಾರ್ಥಕವಾಗಿ ನೋಡಿದರು ಅವನ ಅಧಿಕಾರಿ. +ಆ ವಿಷಯ ಮರೆತೇ ಹೋಗಿದ್ದ ತೇಜಾ ಹಗುರ ದನಿಯಲ್ಲಿ ಹೇಳಿದ“ಏನಿಲ್ಲ ಸರ್! +ಜ್ವರದಿಂದ ಪರಿತಪಿಸುತ್ತಿದ್ದ ಒಬ್ಬಳನ್ನು ನಮ್ಮ ಜೀಪಿನಲ್ಲಿ ರಾಮನಗರಕ್ಕೆ ಕಳಿಸಿದ್ದೇ ಅಷ್ಟೆ”ಆ ಮಾತು ಅಷ್ಟು ಮುಖ್ಯವಲ್ಲವೆಂಬಂತೆ ತಾತನನ್ನ ಕೇಳಿದರು. +“ಈ ಸಿದ್ಧಾನಾಯಕ್ ಎಂತಹವರು?”ಗುಂಡುತಾತನ ತುಟಿಗಳ ನಡುವೆ ವೇದಾಂತಿಯಂತಹ ನಗೆ ಸುಳಿಯಿತು ಅದೇ ಧಾಟಿಯಲ್ಲಿ ಹೇಳಿದ“ಹಣ ಮನುಷ್ಯರಲ್ಲಿ ಇಷ್ಟು ಸೊಕ್ಕು ಯಾಕೆ ತುಂಬುತ್ತದೋ ಆ ಪರಮಾತ್ಮನೇ ಬಲ್ಲ ಅದರೊಡನೆ ಅವರೀಗ ಪಂಚಾಯತಿ ಪ್ರೆಸಿಡೆಂಟ್ ಬೇರೆ! +ನಮ್ಮ ಇನ್ಸ್‌ಪೆಕ್ಟರ್ ಸಾಹೇಬರು ಈಗಾಗಲೇ ಅವರ ಸ್ವಲ್ಪಮಟ್ಟಿನ ಸೊಕ್ಕನ್ನು ಅಡುಗಿಸಿದ್ದಾರೆ. +ನಿಮ್ಮಂತಹ ದೊಡ್ಡ ಅಧಿಕಾರಿಯ ಸಹಕಾರವಿದ್ದರೆ ಅವರ ಸೊಕ್ಕು ಪೂರ್ತಿ ಮುರಿಯಬಹುದು.”ಮಾತುಗಳನ್ನು ಅಲ್ಲಿಗೇ ಮುಗಿಸಿ ಮೂವರೂ ಹೊರಬಂದರು. +ಅಲ್ಲಿ ನೆರದ ಜನರು ಕಾಯುತ್ತಾ ಕುಳಿತಿದ್ದರು. +ಅವನ ನಡುವೆ ಹೋಗಿ ನಿಂತ ಸ್ಕ್ವಾಡ್‌ನ ಮುಖ್ಯಸ್ಥರು ಎಲ್ಲರ ದೂರುಗಳನ್ನು ಕೇಳುತ್ತಿದ್ದರು. +ಮತ್ತು ಎಚ್.ಸಿ.ಅವರಿಗಿಂತ ಮೊದಲೇ ಪೋಲೀಸ್ ಸ್ಟೇಷನ್‌ಗೆ ಓಡಿ ಬಂದಿದ್ದರು. +ಒಂದು ನೋಟ್‌ಬುಕ್ ಹಿಡಿದು ಅವರ ಬದಿಗೆ ನಿಂತಿದ್ದ ಎಸ್.ಐ.ಸ್ಕ್ವಾಡಿನ ಅಧಿಕಾರಿಯರು ಹೇಳಿದನ್ನು ಬರೆದು ಕೇಳುತ್ತಿದ್ದ. +ಅದೆಲ್ಲಾ ಮುಗಿಯಲು ಸುಮಾರು ಒಂದು ಗಂಟೆ ಹಿಡಿಯಿತು. +ಅಲ್ಲಿಂದ ಅವರು ತೇಜಾನೊಡನೆ ಬಂಡೇರಹಳ್ಳಿ ಸಂದುಗೊಂದುಗಳನ್ನೆಲ್ಲಾ ಸುತ್ತಾಡಿದರು. +ಅಲ್ಲಿ ಮೋರಿಗಳನ್ನು, ತಿಪ್ಪೆಗಳನ್ನು ಹೇಗೆ ಅವರುಗಳೇ ಸ್ವಚ್ಛವಾಗಿಡಬಹುದೆಂಬ ಸಲಹೆ ಕೊಟ್ಟರು. +ಅವರ ಹಿಂದೆ ಹಳ್ಳಿಯ ಯುವಕರ ಹಿಂಡಿತ್ತು. +ಹಾಗೇ ನಡೆಯುತ್ತಾ ಅವರು ಗುಂಡುತಾತ ಮನೆಯೆದುರು ಬಂದಾಗ ಬಂಡೇರಹಳ್ಳಿಗೆ ಬಂದ ಅವರು, ಕನಿಷ್ಠ ತಮ್ಮ ಮನೆಯಲ್ಲಿ ಕಾಫಿಯನ್ನಾದರೂ ಕುಡಿಯಬೇಕೆಂದು ಒತ್ತಾಯಿಸಿದ. +ಅವನ ಆತ್ಮೀಯ ಒತ್ತಾಯಕ್ಕೆ ಮನ್ನಣೆ ಕೊಡಬೇಕೆಂದುಕೊಂಡು ಮನೆಯೊಳಬಂದರು. +ತಾತ ಮೊದಲೇ ಮನೆಗೆ ಹೇಳಿಕಳಿಸಿ ಎಲ್ಲಾ ವ್ಯವಸ್ಥೆ ಮಾಡಿದಂತಿತ್ತು. +ಅಲ್ಲಿ ಅವನ ಮೊಮ್ಮಕ್ಕಳೊಡನೆ ಹುಡುಗಾಟವಾಡಿ ಕಾಫಿಯ ಉಪಚಾರ ಸ್ವೀಕರಿಸಿದರು ಸ್ಕ್ವಾಡಿನ ಮುಖ್ಯಸ್ಥರು. +ಸಿದ್ಧಾನಾಯಕನ ಮನೆಯ ಬಳಿ ಬಂದಾಗ ಅವನು ಅವರ ಬರುವಿಗಾಗೇ ಎಂಬಂತೆ ಬಾಗಿಲೆದುರೇ ಕಾದಿದ್ದ. +ಅವರನ್ನು ಹಾರ್ದಿಕವಾಗಿ ಸ್ವಾಗಿತಿಸಿದರೂ ಒಳಗೆ ಹೋಗಲಿಲ್ಲ ಸ್ಕ್ವಾಡಿನ ಮುಖ್ಯಸ್ಥರು. +ಸಾರಾಯಿ ಮಾರಾಟದ ವಿಷಯ, ಅವನು ಪೇದೆಗಳಿಗೆ ಲಂಚ ಕೊಡಿಸಿದ ವಿಷಯ ಪ್ರಸ್ತಾಪಿಸಿ ಇನ್ನು ಮುಂದೆ ಅಂತಹದು ನಡೆಯಬಾರದೆಂದು. +ಯಾವ ಅಪರಾಧಿಯನ್ನೇ ಆಗಲಿ ಬಂಧಿಸುವ ಅಧಿಕಾರ ಪ್ರತಿನಾಗರೀಕನಿಗೂ ಇದೆ ಎಂದೂ ಇಡೀ ಹಳ್ಳಿಯೇ ಅವರ ವ್ಯವಹಾರದ ಮೇಲೆ ನಿಗಾ ಇಟ್ಟಿರುವುದಾಗಿ ಹೇಳಿದರು. +ಲಾಟರಿ ಟಿಕೆಟ್ ಮಾರುವ ಅಂಗಡಿಯ ವಿಷಯ ಗುಂಪಿನಲ್ಲಿದ್ದ ಒಬ್ಬ ಯುವಕ ತೆಗೆದ. +ನಾಳಿನಿಂದ ಅದನ್ನು ಮುಚ್ಚಿಬಿಡಬೇಕೆಂದು ಆಜ್ಞಾಪಿಸಿದರು. +ಈ ಮಾತುಗಳನ್ನು ಅವರು ಪಾಲಿಸದಿದ್ದರೆ ಸಿ.ಎಂ.ಸಾಹೇಬರಿಗೆ ಹೇಳಿ ಪಾರ್ಟಿಯ ಸದಸ್ಯತ್ವದಿಂದ ಕೂಡ ಅವರನ್ನು ತೆಗೆದುಹಾಕುವುದಾಗಿ ಹೇಳಿದರು. +ಇಡೀ ಹಳ್ಳಿ ಎದುರು ಆಗುತ್ತಿದ್ದ ತನ್ನ ಅವಮಾನವನ್ನು ನುಂಗಿಕೊಂಡು ಪ್ರತಿಯೊಂದಕ್ಕೆ ಒಪ್ಪಿಕೊಂಡ ಸಿದ್ದಾನಾಯಕ್. +ಕೊನೆಗೆ ತೇಜಾನೊಬ್ಬನನ್ನೇ ಬದಿಗೆ ಕರೆದು ತಾವು ಸಿ.ಎಂ.ಸಾಹೇಬರಿಗೆ ಹೇಳಿ ಹಳ್ಳಿಯ ಏಳಿಗೆಗಾಗಿ ಸಾಕಷ್ಟು ಹಣವನ್ನು ಮಂಜೂರು ಮಾಡಿಸುವುದಾಗಿ, ಅದನ್ನು ಇಲ್ಲಿನ ಯುವಕರನ್ನು ನಿಯಮಿಸಿಕೊಂಡು ಕೆಲಸ ಮಾಡಬೇಕೆಂದು ಹೇಳಿದರು. +ಅವರು ತಮ್ಮ ಕಾರನ್ನು ಹತ್ತುವಾಗ ತೇಜಾನೊಬ್ಬನಿಗೆ ಕೇಳಿಸುವಂತೆ ಹೇಳಿದರು. +“ಕಲ್ಯಾಣಿಯ ಸುಳಿವು ಸಿಕ್ಕರೆ, ಅವಳನ್ನು ಕೊಲ್ಲಬೇಡ. +ಅಂತಹವರು ಬಹುಕಾಲ ಬದುಕಿರಬೇಕು”ಅವರ ಮಾತಿನಿಂದ ತೇಜಾನ ಹೃದಯ ತುಂಬಿ ಬಂತು ಹೇಳಿದ“ಇಲ್ಲ ಸರ್!ಅಂತಹದು ಆಗುವುದಿಲ್ಲ”ಬಂಡೇರಹಳ್ಳಿಯವರ ಜಯಘೋಷದೊಡನೆ ಅವರ ಕಾರು ರಾಮನಗರದ ಕಡೆ ಸಾಗಿತ್ತು. +ಮತ್ತು ಎಚ್.ಸಿ.ಯನ್ನು ಮುಖ್ಯ ಕೆಲಸವಿದೆ ಎಂದು ಉಳಿಸಿಕೊಂಡ ಮೇಲೆ ಪೋಲಿಸ್ ಸ್ಟೇಷನ್ನೊಳ ಹೋದ ತೇಜಾ, ಅವರು ಮಾಡಬೇಕಾದ ಕೆಲಸವನ್ನು ವಿವರಿಸಿದ. +ಅಂತಹ ಕೆಲಸ ಅದೇ ರಾತ್ರಿ ಮಾಡಬೇಕಾಗಿ ಬರುತ್ತದೆ ಎಂದವರು ಅಂದುಕೊಂಡಿರಲಿಲ್ಲ. +ತೇಜ ಜೀಪನ್ನು ನಡೆಸುತ್ತಿದ್ದ ಅವನ ಬದಿಗೆ ಕುಳಿತಿದ್ದ ಎಸ್.ಐ.ಹಿಂದೆ ಒಬ್ಬ ಪೇದೆ. +ಅದು ಬಂಡೇರಹಳಿಯನ್ನು ದಾಟಿ ಸ್ವಲ್ಪ ದೂರ ಹೋಗಿ ಬಂದು ಬದಿಗೆ ನಿಂತಿತ್ತು. +ಆಗಲೇ ರಾತ್ರಿಯ ಹನ್ನೊಂದು ಗಂಟೆ. +ಅವರ ಕಾಯುವಿಕೆ ಆರಂಭವಾಯಿತು. +ಅವರು ಹೆಚ್ಚು ಹೊತ್ತು ಕಾಯಬೇಕಾಗಿ ಬರಲಿಲ್ಲ. +ಅರ್ಧಗಂಟೆಯಲ್ಲಿ ರಾಮನಗರದ ಕಡೆಯಿಂದ ಬಂದ ಪೋಲಿಸ್ ವ್ಯಾನೊಂದು ಅವರ ಬದಿಗೆ ನಿಂತಿತು. +ಅದರಲ್ಲಿ ಡ್ರೈವರನ್ನು ಬಿಟ್ಟು ಒಬ್ಬ ಎಸ್.ಐ.ಮಾತ್ರವಿದ್ದ. +ಅವರಿಬ್ಬರೂ ಕೆಳಗಿಳಿದು ಸೆಲ್ಯೂಟ್ ಹೊಡೆಯುತ್ತಿದ್ದಂತೆ ಏನೇನು ಹೇಗೆ ಮಾಡಬೇಕೆಂಬುವದನ್ನು ವಿವರಿಸಿದ ತೇಜಾ ಅವನ ಮಾತು ಮುಗಿಯುತ್ತಲೇ ವ್ಯಾನನ್ನು ಹತ್ತಿದರವರು. +ಅದು ಬಂಡೇರಹಳ್ಳಿಯ ಕಡೆ ಓಡತೊಡಗಿತು. +ತನ್ನ ಜೀಪಿನಲ್ಲಿ ಡ್ರೈವಿಂಗ್ ವೀಲ್‌ನೆದುರು ಕುಳಿತ ತೇಜಾ ಯಾವ ಅವಸರವೂ ಇಲ್ಲದಂತೆ ಅದನ್ನು ಸ್ಟಾರ್‍ಟ್ ಮಾಡಿ ವ್ಯಾನನ್ನು ಹಿಂಬಾಲಿಸತೊಡಗಿದ. +ಬಹಳ ದಣಿದಿದ್ದರೂ ಅವನ ಯೋಚನೆಗಳು ಕಲ್ಯಾಣಿಯ ಸುತ್ತ ಹರಿಯತೊಡಗಿದವು. +ತಾ ಮಾಡುತ್ತಿದ್ದ ಇದೆಲ್ಲ ಕೆಲಸ ನಿರರ್ಥಕವೆನಿಸತೊಡಗಿತ್ತು. +ಅವಳೊಡನೆ ಎಲ್ಲಾದರೂ ಹೋಗಿ ಸುಖವಾಗಿದ್ದರೆ ಸಾಕು ಅದೇ ಈ ಜೀವನದ ಅರ್ಥ. +ಅದೇ ಬದುಕಿನ ಗುರಿ ಎಂಬ ನಿರ್ಣಯಕ್ಕೆ ಬಂದಿದ್ದ. +ಶರವೇಗದಿಂದ ಹೋದ ವ್ಯಾನು ಕರ್ಕಶ ಶಬ್ದದೊಡನೆ ಗುಡಿಸಲುಗಳೆದುರು ನಿಂತದ್ದು ಕಾಣಿಸಿತು. +ಸೈನ್ಯದ ತುಕಡಿಯ ಮೇಲೆ ಆಕ್ರಮಣ ಮಾಡುವಂತೆ ವ್ಯಾನಿನಿಂದ ಧುಮುಕಿದರು ಪೋಲಿಸಿನವರು. +ಹೆಣ್ಣು ಗಂಡುಗಳ ಕೂಗಾಟ ಕಿರುಚಾಟ ಕೇಳಿಸಿತು. +ತನ್ನ ವಾಹನದ ಗತಿಯನ್ನು ಇನ್ನೂ ನಿಧಾನಗೊಳಿಸಿದ. +ಅರೆ ಬತ್ತಲೆ ಇದ್ದ, ಇನ್ನೂ ಬಟ್ಟೆಗಳನ್ನು ತೊಡುವ ಅವಸರದಲ್ಲಿದ್ದ ಐವರು ಹೆಣ್ಣು ಐವರು ಗಂಡುಗಳನ್ನು ಹೊರಗೆ ತಂದು ನಿಲ್ಲಿಸಿದರು ಪೋಲಿಸಿನವರು. +ಆ ಗುಂಪಿನಲ್ಲಿ ಒಬ್ಬ ನಡುವಯಸ್ಕ ಮತ್ತೊಬ್ಬ ಗಂಡೂ ಇದ್ದ. +ತೇಜಾನ ಜೀಪು ವ್ಯಾನಿನ ಹಿಂದೆ ಬಂದು ನಿಲ್ಲುವುದರಲ್ಲಿ ಎಲ್ಲರೂ ಬಟ್ಟೆಗಳನ್ನು ತೊಟ್ಟಿದ್ದರು. +ವ್ಯಾನಿನಿಂದ ಇಳಿದ ತೇಜಾ ದಣಿವಿನ ನಡುಗೆ ನಡೆಯುವಂತೆ ನಡೆಯುತ್ತಾ ನಡುವಯಸ್ಕನ ಬಳಿ ಬಂದು ತನ್ನ ಬೇಸರವನ್ನೆಲ್ಲಾ ಹೊರಗಡಹುವಂತೆ ಬಲವಾಗಿ ಅ ಹೊಟ್ಟೆಯಲ್ಲಿ ಒಂದು ಗುದ್ದು ಗುದ್ದಿದ್ದ. +ಅವನಿಂದ ನೋವಿನ ಚೀತ್ಕಾರ ಹೊರಟಿತು. +ಎರಡು ಹೆಜ್ಜೆ ಹಿಂದೆ ತೂರಾಡಿ ನಿಂತ. +ಬದಿಗೆ ನಿಂತ ಗಂಡು ಭಯದಿಂದ ಹಿಂದೆ ಸರಿಯಲು ಹೋದಾಗ ಒಂದು ಹೆಜ್ಜೆ ಮುಂದೆ ಹಾಕಿ ಬಲವಾಗಿ ಅವನ ತೊಡೆಗಳ ನಡುವೆ ಒದ್ದ. +ನೋವಿನಿಂದ ಕೂಗಿದ ಅವನು ತನ್ನ ಎರಡೂ ಕೈಗಳನ್ನು ಮರ್‍ಮಾಂಗದ ಬಳಿ ತಂದ. +ತೂರಾಡಿ ನಿಂತ ನಡುವಯಸ್ಕನ ಬಳಿ ಬಂದು ಅವನ ಮುಖದ ನಡುವೆ ಒಂದು ಗುದ್ದು ಗುದ್ದಿದ. +ಅದರ ರಭಸಕ್ಕೆ ಅವನು ಹಿಂದೆ ಉರುಳಿ ಅಂಗತವಾಗಿ ಬಿದ್ದ. +ತನ್ನ ಗತಿ ಏನಾಗುವುದೋ ಎಂದುಕೊಂಡು ಮರ್‍ಮಾಂಗ ಹಿಡಿದ ವ್ಯಕ್ತಿ ನೋವಿನ ದನಿಯಲ್ಲಿ ಕೂಗಿದ. +“ತಪ್ಪಾಯಿತು ಧಣಿ!ನಮ್ಮಿಂದ ತಪ್ಪಾಯಿತು”ಅವನನ್ನು ಮರೆತಂತೆ ತೇಜಾ ಕೆಳಗೆ ಬಿದ್ದವನ ಮುಖಕ್ಕೆ ಒದ್ದ. +ಇದೆಲ್ಲವನ್ನೂ ನೋಡುತ್ತಿದ್ದ ಪೋಲಿಸಿನವರು. +ಅಲ್ಲಿ ನಿಂತ ಹೆಣ್ಣು ಗಂಡುಗಳು ಒಂದು ಮಾತನ್ನೂ ಆಡಲಿಲ್ಲ. +ತನ್ನ ಅಧಿಕಾರಿಗೆ ಹುಚ್ಚು ಹಿಡಿದಿರಬಹುದೇ ಎನಿಸಿತು ಎಸ್.ಐ.ಗೆ ನೆಲಕ್ಕೆ ಬಿದ್ದ ನಡುವಯಸ್ಕ ನರಳುತ್ತಾ ಹೇಳಿದ. +“ಇನ್ನೊಂದು ಸಲ ಇಂತಹದು ಆಗುವುದಿಲ್ಲ ಸ್ವಾಮಿ… ದಯಮಾಡಿ ನಮ್ಮನ್ನು ಕ್ಷಮಿಸಿ” +“ನೀನು ಯಾವ ಊರಿನವನು” ಮೊದಲ ಬಾರಿ ಮಾತಾಡಿದ ತೇಜ. +“ರಾಯಚೂರಿನವನು ಧಣಿ… ತಪ್ಪಾಯಿತು” ಕೂಡಲೇ ಮಾತಾಡದಿದ್ದರೆ ಎಲ್ಲಿ ಹೊಡೆಸಿಕೊಳ್ಳಬೇಕಾಗುತ್ತದೆ ಎಂಬಂತೆ ಉತ್ತರಿಸಿದನವ. +“ಇವನ್ಯಾರು?” ಎರಡನೆಯ ಪ್ರಶ್ನೆ“ರಾಮನಗರದವನು, ಇಲ್ಲಿ ಕಾವಲಿರುತ್ತಾನೆ” ಕೇಳಿದ್ದಕ್ಕಿಂತ ಹೆಚ್ಚಿನ ವಿವರ ಕೊಟ್ಟ ನಡುವಯಸ್ಕ,“ಹುಡುಗಿಯರು ಎಲ್ಲಿಯವರು?” +“ಇಬ್ಬರು ಬೀದರಿನವರು. +ಒಬ್ಬಳು ಗೋವಾದವಳು. +ಮಿಕ್ಕವರು ಅಕ್ಕಪಕ್ಕದ ಹಳ್ಳಿಯವರು” ತೇಜಾನ ಪ್ರಶ್ನೆ ಮುಗಿಯುತ್ತಲೇ ಬರುತ್ತಿತ್ತು ನಡುವಯಸ್ಕನ ಉತ್ತರ. +“ನಿನ್ನಲ್ಲಿ ಯಾರು ಕರೆತಂದರು?” +“ನಾನೇ ಮೊದಲು ಒಬ್ಬ ಹುಡುಗಿಯೊಡನೆ ಬಂದ” +“ಈ ಗುಡಿಸಲುಗಳ ಒಡೆಯ ಯಾರು?” +“ಹಳ್ಳಿಯ ನಡುವಿದೆ ಅವನ ಮನೆ!ಸೋಮಣ್ಣ! +ಸೋಮು”ಹೆಣ್ಣುಗಳ ಹತ್ತಿರ ನಿಂತಿದ್ದ ಇಬ್ಬರು ಎಸ್.ಐ.ರನ್ನು ಕೈಮಾಡಿ ಕರೆದ ಓಡುತ್ತಾ ಬಂದ ಅವರು ಆಜ್ಞೆಗಾಗಿ ಎಂಬಂತೆ ತೇಜಾನೆದುರು ನಿಂತರು. +ಯಾವ ಭಾವೋದ್ವೇಗವೂ ಇಲ್ಲದ ದನಿಯಲ್ಲಿ ಹೇಳಿದ“ಈ ಮನೆ ಒಡೆಯನನ್ನು ಹಿಡಿದು ಅವನು ರಾಮನಗರ ಸೇರುವವರೆಗೂ ಒದೆಯುತ್ತಿರಿ. +ಈ ಹೆಣ್ಣುಗಳ, ಹುಡುಗಿಯರ ಎಲ್ಲಾ ಸಾಮಾನುಗಳೊಡನೆ ಇಲ್ಲಿಂದ ಸಾಗಹಾಕಿ ಮತ್ತವರು ಬಂಡೇರಹಳ್ಳಿಯಲ್ಲಿ ಕಾಣಿಸಬಾರದು. +ಸೋಮಣ್ಣನೊಡನೆ ಈ ಇಬ್ಬರನ್ನು ಬಂಧಿಸಿರಿ. +ಇವರುಗಳ ಅವಶೇಷವೂ ಇಲ್ಲಿ ಇರಬಾರದು. +ಬೇಗ ಕೆಲಸ ಆರಂಭಿಸಿ.”ಒಬ್ಬ ಎಸ್.ಐ.ನಡುವಯಸ್ಕನನ್ನು ಕರೆದುಕೊಂಡು ವ್ಯಾನಿನಲ್ಲಿ ಸೋಮಣ್ಣನ ಮನೆಯ ಕಡೆ ಹೋದ. +ಮಿಕ್ಕವರು ಬಂದಿಗಳನ್ನು ಹೆಣ್ಣು ಗಂಡುಗಳನ್ನು ಬೇರ್ಪಡಿಸಿ ಹಗ್ಗದಿಂದ ಕಟ್ಟುವ ಕೆಲಸದಲ್ಲಿ ನಿರತರಾದರು. +ಅವರೆಲ್ಲರ ಕಡೆ ಒಮ್ಮೆ ನೋಡಿ ನಿಧಾನವಾಗಿ ತನ್ನ ಜೀಪಿನ ಕಡೆ ಹೆಜ್ಜೆ ಹಾಕಿದ ತೇಜ. +ಮನೆಗೆ ಬಂದಾಗ ತಾನಿನ್ನೂ ಏನೂ ತಿಂದಿಲ್ಲವೆಂಬುವುದು ನೆನಪಾಯಿತು. +ಅಡುಗೆಯಮನೆಗೆ ಹೋದ. +ಅಲ್ಲಿ ಅವನ ಊಟ ಸಿದ್ಧವಾಗಿತ್ತು. +ಕೈಕಾಲು ತೊಳೆದು ಬಟ್ಟೆ ಬದಲಿಸಿ ಊಟ ಮಾಡಿದ. +ಕಲ್ಯಾಣಿ ಊಟ ಮಾಡಿರಬಹುದೇ ಎಲ್ಲಿ ಮುಗಿಯಬಹುದೆಂಬ ಯೋಚನೆ ಬಂತು. +ಅವಳು ನೆನಪಾದಾಗ ನಾಯಕನ ಬಗ್ಗೆ ಹೇಳಿದ್ದು ಜ್ಞಾಪಕವಾಯಿತು. +ಬಾಗಿಲನ್ನು ಸರಿಯಾಗಿ ಹಾಕಿದ. +ಅದು ತೆಗೆದುಕೊಂಡರೆ ಸಪ್ಪಳ ಬರುವಂತೆ ಬಾಗಿಲಿಗೆ ಬಂಡೆಗಳನ್ನು ಜೋಡಿಸಿದ. +ತಾ ಮಾಡಿದ ಕೆಲಸವನ್ನು ಒಮ್ಮೆ ನೋಡಿ ತೃಪ್ತಿಯಿಂದ ಒಳಬಂದು ಬೆಲ್ಟ್‌ನಿಂದ ರಿವಾಲ್ವರ್ ತೆಗೆದ. +ಅದನ್ನು ಬಿಚ್ಚಿ ಒಳಗಿರುವ ಬುಲೆಟ್‌ಗಳನ್ನು ಪರೀಕ್ಷಿಸಿಕೊಂಡ. +ಎಲ್ಲಾ ಸರಿಯಾಗಿದ್ದವು. +ಹಾಸಿಗೆ ಬುಡದಲ್ಲಿ ತನ್ನ ಕೈಗೆ ಮಾತ್ರ ರಿವಾಲ್ವರ್ ಸಿಗುವಂತೆ ಇಟ್ಟುಕೊಂಡು ಹಾಸಿಗೆಯ ಮೇಲೆ ಉರುಳಿದ. +ಎಲ್ಲಾ ಹಿಂಸೆಗಳಿಂದ ಮುಕ್ತಿ ದೊರೆತಂತಹ ಅನುಭವವಾಯಿತು. +ನೋಡನೋಡುತ್ತಿದ್ದಂತೆ ನಿದ್ದೆ ಅವನನ್ನು ಆವರಿಸಿಬಿಟ್ಟಿತ್ತು. +ಮರುದಿನ ಸಿದ್ಧಾನಾಯಕ್‌ ತಾನಾಗೇ ತನ್ನ ಲಾಟರಿ ಅಂಗಡಿಯನ್ನು ಮುಚ್ಚಿಬಿಟ್ಟ. +ತೇಜಾ ತನ್ನೊಡನೆ ರೌಡಿಯಂತೆ ವರ್ತಿಸಿದ್ದ ಘಟನೆಯನ್ನು ಅವನು ಮರೆಯುವುದು ಅಸಾಧ್ಯವಾಗಿತ್ತು. +ಅಂತಹ ಅವಮಾನಕ್ಕೆ ಅವನು ಈ ಮೊದಲೆಂದೂ ಗುರಿಯಾಗಿರಲಿಲ್ಲ. +ಅದು ಮತ್ತು ತನ್ನ ರಾಮನಗರಕ್ಕೆ ಬಂಧಿಯಂತೆ ಕರೆದೊಯ್ದದ್ದು, ತನ್ನ ಮನೆ ಎದುರೇ ಹಳ್ಳಿಯ ಜನರೆದುರು ಪಟ್ಟಣದಿಂದ ಬಂದ ಹಿರಿಯ ಪೋಲಿಸ್ ಅಧಿಕಾರಿಯಿಂದ ತನಗೆ ಛೀಮಾರಿ ಹಾಕಿಸಿದ್ದು ಅವನಲ್ಲಿ ಆರಲಾಗದ ಉರಿಯಂತೆ ಉರಿಯುತ್ತಿದ್ದವು. +ಉರಿಯುತ್ತಿರುವ ಬೆಂಕಿಯ ಮೇಲೆ ಪೆಟ್ರೋಲ್ ಹಾಕಿದಂತೆ ಬೆಳೆಯುತ್ತಿರುವ ತೇಜಾನ ಜನಪ್ರಿಯತೆ. +ಕೇವಲ ಒಂದೆರಡು ದಿನದಲ್ಲಿ ತೇಜಾ ಇಷ್ಟು ಜನಪ್ರಿಯ ಹೇಗಾದ ಎಂಬುದರ ಬಗ್ಗೆ ಬಹಳ ಯೋಚಿಸಿದ ಸಿದ್ಧಾನಾಯಕ್. +ಅದಕ್ಕವನಿಗೆ ಸರಿಯಾದ ಉತ್ತರ ಸಿಗಲಿಲ್ಲ. +ಅಸೂಯೆ ಹೆಚ್ಚಾಯಿತಷ್ಟೆ. +ಸಮಯ ಸಾಧಿಸಿ ಅವನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂಬ ಯೋಚನೆ ಬೃಹದಾಕಾರ ತಾಳಿತ್ತು. +ಯಾವಾಗಲೂ ತನ್ನ ಬದುಕಿನ ಖಳನಾಯಕನಂತೆ ತೇಜಾ ಅವನ ಮನವನ್ನು ಹಿಂಸಿಸುತ್ತಲೇ ಇದ್ದ. +ತೇಜಾನಿಗೆ ಅದ್ಯಾವುದರ ಚಿಂತೆಯೂ ಇರಲಿಲ್ಲ. +ಕಲ್ಯಾಣಿಯೇ ಅವನ ಮೈಮನವನ್ನೆಲ್ಲಾ ಆಕ್ರಮಿಸಿಬಿಟ್ಟಿದ್ದಳು. +ಮದುವೆಯಾದ ದಿನದಿಂದಲೇ ಮಡದಿಯಿಂದ ದೂರವಿರುವುದೇ ಇದೆಂತಹ ಅನ್ಯಾಯ ಎಂದು ತನಗೆ ತಾನೆ ಹೇಳಿಕೊಂಡು ಮನಸಿನಲ್ಲಿ ನಕ್ಕಿದ್ದ. +ಯೋಚನೆ ಗಂಭೀರವಾದಾಗ ಏನೇ ಆಗಲಿ ತಾವು ಲೋಕದ ಎಲ್ಲಾ ಯೋಚನೆಗಳನ್ನು ಬಿಟ್ಟು, ತಮ್ಮದೇ ಆದ ಮನೆಯಲ್ಲಿ ಸಾಮಾನ್ಯರಂತೆ ಸಂಸಾರ ಆರಂಭಿಸಬೇಕು. +ಅವಳೊಡನೆ ತಾನು ಊರೆಲ್ಲಾ ಸುತ್ತಾಡಬೇಕು. + ತಾವು ತಮ್ಮ ವೈಯಕ್ತಿಕ ವಿಷಯಗಳನ್ನು ಯಾರ ಯೋಚನೆ, ಭಯವೂ ಇಲ್ಲದೇ ಮಾತಾಡುತ್ತಾ ಕೂಡಬೇಕು ಎನಿಸಲಾರಂಭಿಸಿತು. +ಅದು ಸಾಧಿಸುವುದು ಹೇಗೆ ಎಂಬ ಕಡೆ ತನ್ನ ಯೋಚನೆಯನ್ನು ಹರಿಯಬಿಟ್ಟ. +ಅದಕ್ಕೆ ಅಡ್ಡ ಗೋಡೆಗಳೇ ಎದುರಾಗುತ್ತಿದ್ದವು ಯಾವ ಪರಿಹಾರಮಾರ್ಗವೂ ಕಾಣಿಸುತ್ತಿರಲಿಲ್ಲ. +ಮತ್ತು ಎಚ್.ಸಿ.ಅಂದು ಲಾಟರಿಯ ಅಂಗಡಿಯನ್ನು ತೆಗೆದಿಲ್ಲವೆಂಬ ಮಾಹಿತಿಯನ್ನು ಅವರೇ ನೀಡಿದರು ತೇಜಾನೂ ಅದರ ಬಗ್ಗೆ ಯೋಚಿಸುವ ಸ್ಥಿತಿಯಲ್ಲಿ ಇರಲಿಲ್ಲ. +ಯಾರು ಎಲ್ಲಿ ಹಾಳಾಗಿ ಹೋದರೆ ತನಗೇನು ಎಂಬಂತಿತ್ತವನ ಮನಸ್ಥಿತಿ. +ಅಂದು ತಾನು ಕಲ್ಯಾಣಿಯನ್ನು, ತನ್ನ ಪತ್ನಿಯನ್ನು ಕಾಣದಿದ್ದರೆ ತನಗೇನಾಗಿ ಹೋಗುವುದೋ ಎಂಬ ಬಹು ಅಸಹಜ ಭಯ ಹುಟ್ಟಿತವನಲ್ಲಿ. +ಬೆಟ್ಟದ ಕೆಳಗೆ, ದಟ್ಟ ಕಾಡಿನ ನಡುವೆ ಒಂದು ಕಡೆ ಮೇಲಿನಿಂದ ಹರಿದು ಕೆಳಗೆ ಜಲಪಾತದಂತೆ ಬೀಳುತ್ತಿದ್ದ ನೀರು ಒಂದು ಹೊಂಡದಲ್ಲಿ ತುಂಬಿ ಹಾಗೇ ಮುಂದೆ ಹರಿದುಹೋಗುತ್ತಿತ್ತು. +ಎಂತಹವನನ್ನೇ ಆಗಲಿ ಕಟ್ಟಿ ಹಿಡಿಯುವಂತಹ ಆ ದೃಶ್ಯ ಕಲ್ಯಾಣಿಯ ಮೇಲೆ ಯಾವ ಪ್ರಭಾವವನ್ನೂ ಬೀರುತ್ತಿರಲಿಲ್ಲ. +ವಿರಹವೇದನೆ ಅವಳನ್ನು ಆವರಿಸಿಬಿಟ್ಟಿತ್ತು. +ಒಮ್ಮಿಂದೊಮ್ಮೆಲೆ ತನ್ನ ಬದುಕಿನಲ್ಲಿ ಇಂತಹ ಬದಲಾವಣೆಯಾಗಬಹುದೆಂದು ಅವಳು ಊಹಿಸಿರಲಿಲ್ಲ . +ಅದೇ ಯೋಚನೆಯಲ್ಲಿ ಬೇಡವಾದದ್ದನ್ನು ಕಳಚಿ ಆದಷ್ಟು ಕಡಿಮೆ ಬಟ್ಟೆಯಲ್ಲಿ ಹೊಂಡದಲ್ಲಿ ಇಳಿದಳು. +ಚಳಿ, ತಣ್ಣನೆಯ ನೀರು ಅವಳಲ್ಲಿ ನಡುಕ ಹುಟ್ಟಿಸಲಿಲ್ಲ. +ಸ್ನಾನ ಮಾಡಲಾರಂಭಿಸಿದ ಅವಳು ದೇಹದ ಪ್ರತಿ ಭಾಗವನ್ನೂ ಸ್ವಚ್ಛಗೊಳಿಸಿಕೊಳ್ಳುವ ಕ್ರಿಯೆ ಆರಂಭಿಸಿದಳು. +ಕೈಗಳು ಬತ್ತಲು ದೇಹವನ್ನು ಉಜ್ಜಿಕೊಳ್ಳುತ್ತಿದ್ದಾಗ ತನ್ನ ಪ್ರತಿ ಅಂಗವು ಈಗ ಸಾರ್ಥಕತೆ ಪಡೆದಿದೆ ಎನಿಸಿತು. +ಬರೀ ಅನಿಸಿಕೆಯಿಂದಲೇ ಪುಳಕಿತಗೊಂಡಿತವಳ ದೇಹ, ಅಲ್ಲಿಂದಲೇ ಎದ್ದು ತೇಜಾನ ಬಳಿ ಓಡಿಹೋಗಬೇಕೆನಿಸಿತು. +ಮೇಲಿನಿಂದ ಬೀಳುತ್ತಿರವ ತಣ್ಣನೆಯ ನೀರಿನ ಕೆಳಗೆ ತಲೆಯನ್ನು ಹಿಡಿದಳು. +ಆದರೂ ತೇಜಾನ ನೆನಪು ಅವಳಿಂದ ದೂರವಾಗಲಿಲ್ಲ. +ಅವನು ಎಷ್ಟು ಬುದ್ಧಿವಂತ, ಅದಕ್ಕೆ ತಕ್ಕಂತಹ ಕಂಠ. +ಅವನು ತನ್ನ ವಾದವನ್ನು ಮಂಡಿಸುವ ರೀತಿ ಎಂತಹವರನ್ನೇ ಆಗಲಿ ಮರುಳು ಮಾಡಿಬಿಡಬಹುದು. +ಎಂತಹ ಹೆಣ್ಣನ್ನೇ ಆಗಲಿ ಆಕರ್ಷಿಸುವ ಅಂಗಸೌಷ್ಟವ. +ಮುಖದಲ್ಲಿ ಎದ್ದು ಕಾಣುವ ಮೂಗು ಅದಕ್ಕೆ ತನ್ನದೇ ಆಕರ್ಷಣೆಯನ್ನು ಕೊಟ್ಟಿತ್ತು. +ಅಷ್ಟಾದರೂ ಅವನು ಈವರೆಗೆ ಬ್ರಹ್ಮಚಾರಿಯಾಗಿದ್ದ ಎಂದರೆ ಆಶ್ಚರ್ಯ. +ಯಾವ ಹೆಣ್ಣೂ ಅವನನ್ನು ಆಕರ್ಷಿಸಿರಲಿಕ್ಕಿಲ್ಲವೇ! +ತಾನು ಅವನಲ್ಲಿ ಏನು ಕಂಡೆ ಎಂಬ ಪ್ರಶ್ನೆಯನ್ನು ಹಾಕಿಕೊಂಡಳು. +ಅವನ ಅಂಗಸೌಷ್ಟವಕ್ಕೆ, ಮುಖದಾಕರ್ಷಣೆಗಂತೂ ತಾನು ಮಾರುಹೋಗಿಲ್ಲ. +ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿದ್ದಾಗಲೇ ಅವನ ಮಾತಿನ ಚಾತುರ್ಯ, ತಾನು ಇನ್ಸ್‌ಪೆಕ್ಟರನಾದರೂ ಅದು ಏನೂ ಇಲ್ಲವೆಂಬಂತೆ ವರ್ತಿಸುತ್ತಿದ್ದ ರೀತಿಯನ್ನು ಮೆಚ್ಚಿಕೊಂಡಿದ್ದಳು. +ನಾಯಕ ನಡೆಸುತ್ತಿದ್ದ ಸಾರಾಯಿ ಖಾನೆಯಲ್ಲಿ ಅವನು ವರ್ತಿಸಿದ ರೀತಿ, ನಾಯಕನೊಡನೆ ಅವನು ನಿಷ್ಟಾವಂತ, ಯಾರಿಗೂ ಹೆದರದ ಪೋಲೀಸ್ ಅಧಿಕಾರಿಯಂತೆ ಮಾತಾಡಿದ ವಿವರವನ್ನು ಕೂಡಾ ಕೇಳಿದ್ದಳವಳು. +ಅದು ಅವಳಲ್ಲಿ ಅಚ್ಚರಿ ಹುಟ್ಟಿಸಿತ್ತು. +ಈವರೆಗೂ ಯಾರೂ ಬಂಡೇರಹಳ್ಳಿಯಲ್ಲಿ ನಾಯಕನೊಡನೆ ಆ ರೀತಿ ವರ್ತಿಸಿದ್ದನ್ನವಳು ನೋಡಿರಲಿಲ್ಲ. +ಎಲ್ಲಕ್ಕಿಂತ ಮಿಗಿಲಾಗಿ ಆಯುಧದೊಡನೆ ಬಂದಿಯಾದ ನಾಗೇಶನಿಗೆ ತನ್ನಿಂದಾದಷ್ಟು ಚಿಕಿತ್ಸೆ ಒದಗಿಸಿ ಆಯುಧ ಸಹಿತ ಬಿಟ್ಟುಬಿಟ್ಟದ್ದು ಅವಳಲ್ಲಿ ಅಚ್ಚರಿ ಹುಟ್ಟಿಸಿ, ಈ ಇನ್ಸ್‌ಪೆಕ್ಟರನ ಮನದಲ್ಲೇನಿದೆ ಎಂಬುವುದನ್ನು ಅರಿಯಲು ಕರೆಸಿದ್ದಳು. +ಅದು ಈ ರೀತಿ ಮದುವೆಯಲ್ಲಿ ಮಾರ್ಪಟಾಗಬಹುದೆಂದು ಅವನು ಬಂದಾಗಲೂ ಊಹಿಸುವುದು ಕಷ್ಟವಾಗಿತ್ತು. +ಸ್ನಾನ ಮುಗಿಸಿ ದಡಕ್ಕೆ ಬಂದು ಮೈ ಒರೆಸಿಕೊಳ್ಳುತ್ತಿದ್ದಾಗ ಚಳಿ ತನ್ನ ಇರುವನ್ನು ಅವಳಿಗೆ ತೋರಿಸಿಕೊಟ್ಟಿತು. +ಲಗುಬಗೆಯಿಂದ ಬಟ್ಟೆ ಧರಿಸಿ ತನ್ನ ವಾಸಸ್ಥಾನದ ಬಂಡೆಗಳ ಕಡೆ ಏರತೊಡಗಿದಳು. +ದೇಹದ ತೀವ್ರಗತಿಯ ಚಲನ ಅವಳಿಂದ ಮತ್ತೆ ಚಳಿಯನ್ನು ದೂರ ಓಡಿಸುವಲ್ಲಿ ಸಫಲವಾಯಿತು. +ಅವಳ ಸಹಚರರೆಲ್ಲರೂ ಅವಳಿಗಾಗಿ ಕಾದು ನಿಂತಿದ್ದರು. +ಅವರ ಮುಖದಲ್ಲಿ ಯಾವ ರೀತಿಯ ಬದಲಾವಣೆಯೂ ಕಾಣಲಿಲ್ಲ. +ಇಂದಲ್ಲ ನಾಳೆ ಇವರಿಗೆ ತನ್ನ ಮದುವೆಯ ವಿಷಯ ಹೇಳಲೇಬೇಕಾಗುತ್ತದೆ ಎಂದುಕೊಂಡ ಕಲ್ಯಾಣಿ ಕೇಳಿದಳು“ಏನು ವಿಶೇಷ?” +“ಬಂಡೇರಹಳ್ಳಿಯವರು ಹಣ ಕೊಟ್ಟಿದ್ದಾರೆ. +ತಾತನೇ ಅದನ್ನು ಕೊಟ್ಟ”ಬರೀ ಬಂಡೇರಹಳ್ಳಿಯವರೇ ಅಲ್ಲ, ಆಸುಪಾಸಿನ ಹಳ್ಳಿಯವರು ಕೂಡ ತಮ್ಮಿಂದಾದಷ್ಟು ಹಣ ಶೇಖರಿಸಿ ಒಬ್ಬ ನಂಬಿಕಸ್ಥ ಹಳ್ಳಿಯ ಹಿರಿಯನ ಕೈಯಲ್ಲಿ ಅದನ್ನು ಕೊಡುತ್ತಿದ್ದರು. +ಆತನ ಮೂಲಕ ಅದು ಕಲ್ಯಾಣಿಗೆ ಸೇರುತ್ತಿತ್ತು. +ಹೀಗೆ ಹಣ ಕೊಡಬೇಕೆಂಬ ನಿಯಮವನ್ನು ಯಾರೂ ನಿಯಮಿಸಿರಲಿಲ್ಲ. +ಕಲ್ಲಕ್ಕ ಯಾರ ಬಳಿಯಿಂದಲೂ ಹಣ ಸುಲಿದು ಬದುಕುವವಳಲ್ಲವೆಂದು ತಿಳಿದ ಮೇಲೆ ಹಳ್ಳಿಗರೇ ತಮ್ಮ ತಮ್ಮಲ್ಲಿ ಮಾತಾಡಿಕೊಂಡು ಹುಟ್ಟಿಸಿದ ಪದ್ಧತಿ ಇದು. +ಅದಕ್ಕೆ ಮೊದಲು ವಿರೋಧ ತೋರಿದಳು ಕಲ್ಯಾಣಿ. +ಆದರೆ ಆ ಹಳ್ಳಿಗರು ತಾವು ತಮ್ಮ ಸ್ವಾರ್ಥಕ್ಕಾಗಿ ಈ ಕೆಲಸ ಮಾಡುತ್ತಿದ್ದೇವೆಂದು, ಕಲ್ಯಾಣಿ ಎಷ್ಟು ಕಾಲ ಬದುಕಿದ್ದರೆ ಅಷ್ಟು ದಿನ ತಾವು ಸುಖವಾಗಿ ಇರಬಹುದೆಂದು ವಾದಿಸಿದ್ದರವರು. +ಕಲ್ಯಾಣಿಗೂ ತನ್ನ ದಳದ ಕಾರ್ಯ ಕಲಾಪ ನಡೆಸಲು ಹಣ ಬೇಕು ಅದಕ್ಕೆ ಒಪ್ಪಿಕೊಂಡಿದ್ದಳವಳು. +ಹಾಗೆಯೇ ಊರುಗಳಲ್ಲಿ ಅವಳಿಂದ ಪ್ರಭಾವಿತರಾದ ಧನವಂತರೂ ಇದ್ದರು. +ಸರಕಾರದಲ್ಲಿ ಕಾಲಾನುಕಾಲದಿಂದ ಕೊಳೆಯುತ್ತಾ ಬಿದ್ದ ಅವರ ನ್ಯಾಯೋಚಿತ ಕೆಲಸಗಳನ್ನು ಅವಳು ನೋಡುನೋಡುತ್ತಿದ್ದಂತೆ ಮಾಡಿಸಿ ಕೊಟ್ಟಿದ್ದಳು. +ಆವರೆಗೆ ಆ ಕೆಲಸಕ್ಕಾಗಿ ಅವರು ಹೇರಳ ಹಣವನ್ನು ಲಂಚದ ರೂಪದಲ್ಲಿ ಕೊಟ್ಟಿದ್ದರು. +ಆ ಹಣವನ್ನೂ ಆಯಾ ಅಧಿಕಾರಿಯರು ಹಿಂತಿರುಗಿಸುಂತೆ ಮಾಡಿದ್ದಳು. +ತಮ್ಮ ಈ ಜನ್ಮದಲ್ಲಿ ಆಗುವುದಿಲ್ಲ ಎಂದು ಕೈ ಚಲ್ಲಿ ಕುಳಿತ ಅವರುಗಳ ಪಾಲಿಗೂ ದೇವತೆಯಾಗಿದ್ದಳು ಕಲ್ಯಾಣಿ. +ಕೇಳದೆಯೇ ಅವರಿಂದಲೂ ದೇಣಿಗೆ ಬರುತ್ತಿತ್ತು. +ಮೊದಲು ಕ್ರೂರಿಗಳಾಗಿ ಬಡರೈತರ ರಕ್ತ ಹೀರುತ್ತಿದ್ದ ಕೆಲ ಭೂಮಾಲಿಕರೂ ಈಗ ಸರಿದಾರಿಗೆ ಬಂದು ಅವಳ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದರು. +ಅವರಿಂದಲೂ ಹಣ ಬರುತ್ತಿತ್ತು. +ಇಷ್ಟೆಲ್ಲಾ ಆದರೂ ತಾನು ಎಷ್ಟು ಪ್ರಸಿದ್ಧಳೆಂಬುವುದು ಕಲ್ಯಾಣಿಗೇ ಗೊತ್ತಿರಲಿಲ್ಲ. +ಪಟ್ಟಣದಲ್ಲೂ ಅವಳ ಬಗ್ಗೆ ಹಲವಾರು ದಂತಕಥೆಗಳು ಹರಡಿಕೊಂಡಿದ್ದವು. +ಯಾರೂ ಅವಳನ್ನು ನೋಡದಿದ್ದರೂ ಆ ದಂತಕಥೆ ಮತ್ತು ಪತ್ರಿಕೆಗಳಲ್ಲಿ ಬರುವ ಸುದ್ದಿಯನ್ನು ಓದುತ್ತಿದ್ದ ರಾಜ್ಯದ ಎಲ್ಲ ಕಡೆಗಳಲ್ಲೂ ಅವಳ ಅಭಿಮಾನಿಯರಿದ್ದರು. +ಆದರೆ ಪೋಲಿಸರ ಭಯದಿಂದ ಅದನ್ನವರು ಬಾಯಿಬಿಚ್ಚಿ ಹೇಳುತ್ತಿರಲಿಲ್ಲ. +ಇಡೀ ರಾಜ್ಯದಲ್ಲೇ ಕಲ್ಯಾಣಿ ಹೆಸರು ಮಾಡಿರುವ ವಿಷಯ ಸರಕಾರಕ್ಕೆ ಹೇಗೆ ಗೊತ್ತಿರಲಿಲ್ಲವೋ ಹಾಗೆಯೇ ಅದು ಪೋಲಿಸಿನವರಿಗೂ ಗೊತ್ತಿರಲಿಲ್ಲ. +“ಇನ್ನೇನು ಬಂಡೇರಹಳ್ಳಿಯಲ್ಲಿನ ಬದಲಾವಣೆ” ತೇಜಾನ ಬಗ್ಗೆ ಯೋಚಿಸುತ್ತಾ ಮಾತಾಡಿದಳು ಕಲ್ಯಾಣಿ. +“ಸ್ಕ್ವಾಡಿನ ಮುಖ್ಯಸ್ಥರು ನಿನ್ನೆ ಸಂಜೆ ಬಂದು ರಾತ್ರಿ ಹನ್ನೊಂದಕ್ಕೆ ಹೋದರಂತೆ. +ಹಳ್ಳಿಯವರೆಲ್ಲಾ ಅವರಿಗೆ ಭವ್ಯಸ್ವಾಗತ ನೀಡಿದರಂತೆ. +ಅವರು ನಾಯಕ್‌ನನ್ನು ಹೆದರಿಸಿ ಹೋಗಿದ್ದಾರೆ. +ಅವನು ಇವತ್ತು ತನ್ನ ಲಾಟರಿ ಅಂಗಡಿಯನ್ನು ತೆಗೆದಿಲ್ಲ. +ನಿಗದಿತ ಸಮಯದನಂತರ ಸರಾಯಿಯೂ ಎಲ್ಲೂ ಕಳ್ಳತನದಿಂದಲೂ ಮಾರಾಟವಾಗುತ್ತಿಲ್ಲವಂತೆ” ವರದಿಗಾರ ವರದಿ ಒಪ್ಪಿಸುವಂತೆ ಹೇಳಿದ ಹರಿ. +“ಈ ಇನ್ಸ್‌ಪೆಕ್ಟರ್ ಒಳ್ಳೆಯ ಕೆಲಸಗಳು ಮಾಡುತ್ತಿದ್ದಂತೆ ಕಾಣುತ್ತದೆ” ತನ್ನದೇ ಯೋಚನೆಯಲ್ಲಿ ತೊಡಗಿದಂತೆ ಹೇಳಿದಳು ಕಲ್ಯಾಣಿ. +“ನಾನೀವರೆಗೂ ಎಲ್ಲೂ ಪೋಲೀಸನವರನ್ನು ಇಷ್ಟು ಹಚ್ಚಿಕೊಂಡ ಹಳ್ಳಿಗರನ್ನು ನೋಡಿಲ್ಲ. +ಪೋಲೀಸಿನವರು ರಾಕ್ಷಸರಲ್ಲ. +ತಮ್ಮ ಆತ್ಮಬಂಧುಗಳಂತೆ ವರ್ತಿಸುತ್ತಿದ್ದಾರೆ ಜನ. +ಈ ಇನ್ಸ್‌ಪೆಕ್ಟರ್ ಉತೇಜ್ ಏನು ಮಾಯಾಮಂತ್ರ ಮಾಡಿದ್ದಾನೋ ಆ ದೇವರಿಗೆ ಗೊತ್ತು” ತನಗಿನ್ನೂ ಅದನ್ನು ನಂಬಲಾಗುತ್ತಿಲ್ಲ ಎಂಬಂತೆ ಹೇಳಿದ ಶಂಕರ್“ಎಲ್ಲರೂ ಮನುಷ್ಯರೇ ಅವರಲ್ಲಿ ಮೇಲುಕೀಳಿಲ್ಲ ಎಂಬುವುದನ್ನು ಅವನು ಚೆನ್ನಾಗಿ ಅರಿತಿದ್ದಾನೆ. +ಬಡಬಗ್ಗರ ಬಗ್ಗೆ ನಮಗಿರುವಂತಹ ಕಾಳಜಿ ಅವನಿಗೂ ಇದೆ. +ಅಹಂಕಾರಿ ಧನವಂತರನ್ನು ಹೇಗೆ ಸದೆಬಡಿಯಬೇಕೆಂಬುವುದೂ ಅವನಿಗೆ ಗೊತ್ತಿದೆ. +ಅದಕ್ಕೆ ಜನ ಅವನನ್ನು ಅಷ್ಟು ಮೆಚ್ಚಿಕೊಳ್ಳುತ್ತಿದ್ದಾರೆ…. +ಮಲ್ಲಪ್ಪ ನೀ ಹೋದ ಕೆಲಸವೇನಾಯಿತು?” ತೇಜಾನ ಪ್ರಶಂಸೆ ಮುಗಿಸಿ ಮಲ್ಲಪ್ಪನ ಕಡೆ ತಿರುಗಿದಳು ಕಲ್ಯಾಣಿ. +“ಚೌಧರಿಯವರ ದಳ ಎಲ್ಲಿ ತಿರುಗುತ್ತಿದೆಯೋ ಇನ್ನೂ ಗೊತ್ತಾಗಿಲ್ಲ” ಹೇಳಿದ ಮಲ್ಲಪ್ಪ. +“ಸದ್ಯಕ್ಕೆ ನಮಗೆ ಪೋಲಿಸರ ಭಯವಿಲ್ಲ. +ಚೌದರಿ ಮತ್ತವನ ದಳದವರನ್ನು ನಾವು ಆದಷ್ಟು ಬೇಗ ಹುಡುಕಿ ಮುಗಿಸಬೇಕು. +ಯಾವ ಯಾವ ಊರುಗಳಲ್ಲಿ ದರೋಡೆ ನಡೆಯುತ್ತಿದೆಯೋ ನೋಡಿ ಏನಾದರೂ ಸುಳಿವು ಸಿಗಬಹುದು. +ನಾಗೇಶ ನೀನು ಹರಿಯೊಡನೆಯೇ ಇರು ಅವನನ್ನು ನಿನ್ನ ಗುರು ಎಂದುಕೊ ಆಗ ಎಲ್ಲವನ್ನೂ ಬೇಗ ಬೇಗ ಕಲಿಯಬಲ್ಲೆ. +ಶಂಕರ ನೀನು ಇನ್ಸ್‌ಪೆಕ್ಟರ್‌ನಿಗೆ ರಾತ್ರಿ ಎಂಟು ಗಂಟೆಗೆ ದೇವನಹಳ್ಳಿಯ ಪಟವಾರಿಯವರ ಮನೆಗೆ ಬರಲು ಹೇಳು” +“ಸರಿ ಅಕ್ಕ” ಎಂದ ಶಂಕರನಾಗೇಶನ ಕಡೆ ತಿರುಗಿ ಮತ್ತೆ ಒತ್ತಿ ಕೇಳಿದಳು ಕಲ್ಯಾಣಿ. +“ನಾ ಹೇಳಿದ್ದು ನಿನಗೆ ಅರ್ಥವಾಯಿತೇ ನಾಗೇಶ್” +“ಅರ್ಥವಾಯಿತಕ್ಕ” ನನ್ನ ದನಿಯಲ್ಲಿ ಹೇಳಿದ ನಾಗೇಶ. +“ಹೋಗಿ ಯಾರ್‍ಯಾರಿಗೆ ಎಷ್ಟೆಷ್ಟು ಹಣ ಬೇಕೋ ಹರಿ ಬಳಿಯಿಂದ ತೆಗೆದುಕೊಳ್ಳಿ”ಎಂದ ಕಲ್ಯಾಣಿ ಮಾತು ಮುಗಿದಂತೆ ಹಿಂದೆ ಗುಹೆಯಲ್ಲಿನ ಆಯುಧ ಭಂಡಾರವನ್ನು ಪರೀಕ್ಷಿಸಲು ಹೋದಳು. +ಮುಂದಿದ್ದ ಟೇಬಲ್ಲಿನ ಮೇಲೆ ಕಾಲು ಚಾಚಿ ಆರಾಮವಾಗಿ ಕುಳಿತಿದ್ದ ತೇಜನ್ನೂ ತನ್ನ ವೈವಾಹಿಕ ಜೀವನದ ಭವಿಷ್ಯದ ಬಗೆಯೇ ಯೋಚಿಸುತ್ತಿದ್ದ. +ಎಲ್ಲಾ ಅಂಧಕಾರಮಯವಾಗಿಯೇ ಕಾಣುತ್ತಿತ್ತು. +ಎಲ್ಲೂ ಬೆಳಕಿನ ಲಕ್ಷಣವಿಲ್ಲ. +ಕಲ್ಯಾಣಿಯೊಡನೆ ಮಾತಾಡುತ್ತಾ ಕುಳಿತರೆ ಯಾವುದಾದರೂ ಮಾರ್ಗ ಕಾಣಬಹುದೇನೋ ಎಂದುಕೊಳ್ಳುತ್ತಿದ್ದಾಗ ಪೇದೆ ಬಂದು ಅವನನ್ನು ಇಬ್ಬರು ಯುವಕರು ಕಾಣಲು ಬಂದಿದ್ದಾರೆಂದು ಹೇಳಿದ. +ಟೇಬಲ್ಲಿನ ಮೇಲಿನಿಂದ ಕಾಲನ್ನು ತೆಗೆಯುತ್ತಾ ಅವರನ್ನು ಕಳುಹಿಸುವಂತೆ ಹೇಳಿದ ತೇಜಾ. +ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಲ್ಲರಿಗಿಂತ ಮುಂದಾಗಿ ಕೆಲಸ ಮಾಡಿದ ಯುವಕರು. +ಅವರನ್ನು ಕೂಡುವಂತೆ ಹೇಳಿದ ತೇಜ. +ಕೂಡುತ್ತಾ ಸ್ವಲ್ಪ ಕಾಳಜಿಯ ದನಿಯಲ್ಲಿ ಕೇಳಿದ ಒಬ್ಬ ಯುವಕ. +“ಏನು ಸರ್!ಏನಯಿತು!ಹೀಗ್ಯಾಕಿದ್ದೀರಿ?”ತನ್ನ ವಿರಹವೇದನೆ ಅಷ್ಟು ಅಚ್ಚು ಒತ್ತಿದಂತೆ ಮುಖದಲ್ಲಿ ಕಂಡು ಬರುತ್ತಿದೆಯೇ ಎಂದುಕೊಳ್ಳುತ್ತಾ ಮುಗಳ್ನಕ್ಕು ಹೇಳಿದ ತೇಜ. +“ಏನೂ ಆಗಿಲ್ಲ!ಬೇಜಾರು ಅಷ್ಟೆ” +“ಮದುವೆ ಮಾಡಿಕೊಂಡುಬಿಡಿ ಸರ್!ಬೇಜಾರಾಗುವುದು ತಾನಾಗೆ ಹೊರಟು ಹೋಗುತ್ತದೆ.” ಕೂಡಲೇ ಹೇಳಿದ ಮತ್ತೊಬ್ಬ ಯುವಕ. +ಹಾಗೆ ಮಾತಾಡಬಾರದೆಂಬಂತೆ ಅವನ ಸ್ನೇಹಿತ ಸಿಟ್ಟಿನಿಂದ ನೋಡಿದ. +“ಹೌದು ಮದುವೆ ಮಾಡಿಕೊಂಡರೆ ಬೇಜಾರು ಹೋಗಬಹುದು. +ಅದಕ್ಕೆ ನಿಮ್ಮ ಸಹಾಯ ಬೇಕು” ಹುಡುಗಾಟಿಕೆಯ ದನಿಯಲ್ಲಿ ಆ ಕ್ಷಣ ಬಾಯಿಗೆ ಬಂದದ್ದನ್ನು ಹೇಳಿದ ತೇಜ. +“ನಮ್ಮ ಸಹಾಯ?” ಹೆಚ್ಚು ಕಡಿಮೆ ಆ ಇಬ್ಬರೂ ಒಂದೇ ದನಿಯಲ್ಲಿ ಹೇಳಿದರು. +ಜೋರಾಗಿ ನಕ್ಕು ನಗು ನಿಂತ ಮೇಲೆ ಹೇಳಿದ ತೇಜ. +“ಹುಡುಗಾಟಕ್ಕೆ ಹೇಳಿದೆ… ಹೇಳಿ ಏನು ವಿಶೇಷ”ಸರಿಯಾಗಿ ಕುಳಿತರು ಇಬ್ಬರು ಯುವಕರು, ಒಬ್ಬ ಗಂಭೀರ ದನಿಯಲ್ಲಿ ಹೇಳಿದ“ನಾವು ನಿಮ್ಮ ಅನುಮತಿ ಇಲ್ಲದೇ ಉತ್ತೇಜ್ ಯುವಕರ ಸಂಘ ಎಂಬ ಹೆಸರಿನ ಒಂದು ಸಂಘವನ್ನು ಸ್ಥಾಪಿಸಿದ್ದೇವೆ ಸರ್. +ಅದಕ್ಕೆ ನೀವೇ ಅಧ್ಯಕ್ಷರು”ಅದನ್ನು ಕೇಳಿ ಅಚ್ಚರಿಯ ಪರಮಾವಧಿಗೆ ಮುಟ್ಟಿದ ತೇಜ, ಕೂಡಲೇ ಏನು ಹೇಳಬೇಕೋ ತೋಚಲಿಲ್ಲ. +ಕಲ್ಯಾಣಿ ಆ ಹೊತ್ತಿಗಾದರೂ ಅವನ ಮನದಿಂದ ದೂರವಾದಳು. +ಅವನ ಮುಖಭಾವ ಮೌನ ಕಂಡು ಮತ್ತೊಬ್ಬ ಯುವಕ ಕೇಳಿದ“ಯಾಕೆ ಸರ್!ಇದು ನಿಮಗೆ ಇಷ್ಟವಾಗಿಲ್ಲವೇ?” +“ನನ್ನ ಹೆಸರು ಯಾಕೆ? +ನಾನು ಪೊಲಿಸ್ ಖಾತೆಯವನು ಇಂತದೆಲ್ಲಾ ಮಾಡಬಾರದು”ಇನ್ನೂ ಅಚ್ಚರಿಯಿಂದ ಹೊರಬರದವನಂತೆ ಹೇಳಿದ ತೇಜ. +“ಯಾಕೆ ಮಾಡಬಾರದು ಸರ್!ರಾಮನಗರದ ಎಸ್.ಐ.ಸಾಹೇಬರು ಎರಡು ಸಂಘಗಳ ಅಧ್ಯಕ್ಷರಾಗಿದ್ದಾರೆ. +ಅಂತಹದರಲ್ಲಿ ನೀವು ಅದನ್ನೇ ಮಾಡಿದರೆ ಯಾಕೆ ತಪ್ಪು. +ಅಂತಹದೇನಾದರೂ ಕಾನೂನಿದೆಯೇ ಸರ್” ಭಾವುಕ ದನಿಯಲ್ಲಿ ಹೇಳಿದ ಮತ್ತೊಬ್ಬ ಯುವಕ. +ಅವರಿಗೆ ಏನು ಹೇಳಬೇಕೆಂಬುವುದು ತೋಚಲಿಲ್ಲ ತೇಜನಿಗೆ. +ಈ ಸಂಘ ಹುಟ್ಟಿಕೊಂಡು ತನ್ನ ಹೆಸರಿನಲ್ಲಿ ಚಟುವಟಿಕೆಗಳು ಆರಂಭವಾದರೆ ರಾಜಕೀಯ ನಾಯಕರು ನನ್ನ ಮೇಲೆ ಉರಿದುಬೀಳುವುದು ಸಹಜ. +ಆದ್ದರಿಂದ ತನ್ನ ವರ್ಗಾವಣೆಯಾಗಬಹುದು. +ಏನೇ ಆಗಲಿ ಕಲ್ಯಾಣಿಯಿಂದ ದೂರವಿರುವುದು ಅಸಾಧ್ಯ. +ತನ್ನ ಮನದ ತಳಮಳವನ್ನು ತೂರಗೊಡದೇ ಹೇಳಿದ“ನನ್ನ ಹೆಸರಿನಲ್ಲಿ ಸಂಘವ್ಯಾಕೆ. +ಇದೇ ಊರ ಹಿರಿಯರ ಯಾರದಾದರೂ ಹೆಸರನ್ನಿಡಿ. +ಗುಂಡು ತಾತ ಇದ್ದಾರೆ ಅವರ ಹೆಸರು ಇಡಬಹುದು, ಇಲ್ಲದಿದ್ದರೆ ಬಂಡೇರಹಳ್ಳಿಯ ಯುವಕರ ಸಂಘ ಎಂದು ಹೆಸರಿಡಿ….” +“ಹೇಗೂ ಕೆಳಗೆ ಊರ ಹೆಸರು ಬರುತ್ತದೆ ಸರ್! +ನೀವು ನಮಗೆ ಸ್ಫೂರ್ತಿ ನೀಡಿದವರು ಅದಕ್ಕೆ ನಿಮ್ಮ ಹೆಸರು ಇಡುತ್ತೇವೆ” ಖಚಿತ ದನಿಯಲ್ಲಿ ಹೇಳಿದ ಮತ್ತೊಬ್ಬ ಯುವಕ. +ಯೋಚನೆಯಲ್ಲಿ ತೊಡಗಿದ ತೇಜ. +ಸ್ವಲ್ಪ ಹೊತ್ತು ಮೌನವಾವರಿಸಿತು. +ಯಾವುದೋ ನಿರ್ಣಯಕ್ಕೆ ಬಂದಂತೆ ಹೇಳಿದ. +“ನೀವು ಒಂದು ಅರ್ಧ ಗಂಟೆ ಬಿಟ್ಟು ಬನ್ನಿ ಹೇಳುತ್ತೇನೆ” +“ಸರಿ ಸರ್!ಸರಿಯಾಗಿ ಅರ್ಧ ಗಂಟೆಯ ಬಳಿಕ ಬರುತ್ತೇವೆ” ಎಂದ ಒಬ್ಬ. +ಇಬ್ಬರೂ ಹೊರಹೋದ ಮೇಲೆ ಫೋನಿನ ರಿಸೀವರ್ ಎತ್ತಿಕೊಂಡು ಸ್ಕ್ವಾಡಿನ ಮುಖ್ಯಸ್ಥರ ನಂಬರ್ ಅದುಮಿದ. +ಬಂಡೇರಹಳ್ಳಿಯಲ್ಲಿಯೂ ಎಸ್.ಟಿ.ಡಿ. ಸೌಕರ್ಯ ಬಂದಿರುವುದು ಪುಣ್ಯವೆನಿಸಿತ್ತು. +ಅತ್ತಕಡೆಯಿಂದ ಅವರ ದನಿ ಕೇಳಿಬರುತ್ತಲೇ ಹೇಳಿದ“ನಾನು ಸರ್ ತೇಜಾ!ಇಲ್ಲೊಂದು ಸಮಸ್ಯೆಯಲ್ಲಿ ಸಿಕ್ಕಿಕೊಂಡಿದ್ದೇನೆ” +“ಎಂತಹ ಸಮಸ್ಯೆ?” ಪ್ರಶ್ನಿಸಿದರವರು“ಇಲ್ಲಿನ ಯುವಕರು ನನ್ನ ಹೆಸರಿನಲ್ಲಿ ಒಂದು ಸಾಂಸ್ಕೃತಿಕ ಸಂಘ ತೆಗೆಯುವೆವು ಎಂದು ಹಟ ಹಿಡಿದಿದ್ದಾರೆ. +ಅದರಿಂದ…”“ಗೋ ಅಹೆಡ್!ಬಂಡೇರಹಳ್ಳಿಗೆ ಒಳಿತಾಗುವುದನ್ನು ಏನೇನು ಮಾಡಬಹುದೋ ಮಾಡು. +ನಾನಾಗಲೇ ಸಿ.ಎಂ.ಸಾಹೇಬರಿಗೆ ಎಲ್ಲಾ ವಿವರಿಸಿದ್ದೇನೆ. +ಇನ್ನು ಆ ನಾಯಕನೂ ಬಾಲ ಆಡಿಸುವುದಿಲ್ಲ. +ನನಗಿನ್ನೂ ರಿಟೈರ್ ಆಗಲು ಮೂರು ತಿಂಗಳುಗಳು ಮಾತ್ರ ಮಿಕ್ಕಿವೆ. +ಆವರೆಗೆ ಏನು ಬೇಕಾದರೂ ಮಾಡು ನಾನಿದ್ದೇನೆ ನಿನ್ನ ರಕ್ಷಿಸಲು ಅವನ ಮಾತನ್ನು ಅರ್ಧಕ್ಕೆ ತಡೆದು ಉತ್ಸಾಹದ ದನಿಯಲ್ಲಿ ಹೇಳಿದರು ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ. +“ಥ್ಯಾಂಕ್ಯೂ ವೆರಿಮಚ್” ಆನಂದ ತಾಳಲಾರದೇ ಉದ್ಗರಿಸಿದ ತೇಜಾ. +“ಯು ಆರ್ ವೆಲ್‌ಕಮ್! +ನಾ ಹೇಳಿದ್ದು ಮರೆಯಬೇಡ ಡೋಂಟ್ ಕಿಲ್‌ಹರ್”ಎಂದ ಅವರು ಸಂಪರ್ಕ ಮುರಿದರು. +ಈ ಸ್ಕ್ವಾಡಿನ ಮುಖ್ಯಸ್ಥರಿಗೆ ಯಾರ ಭಯವೂ ಇಲ್ಲ. +ತಾವು ಮಾತಾಡಿಕೊಂಡದ್ದನ್ನು ಯಾವುದಾದರೂ ಆಪರೇಟರ್ ಕೇಳಿಸಿಕೊಂಡರೆ! +ಅದು ಸಾಧ್ಯವಿಲ್ಲವೇನೋ ಯಾಕೆಂದರೆ ಅದು ಕ್ರಾಂತಿಕಾರಿಯರನ್ನು ನಿರ್ಮೂಲಿಸುವ ಪ್ರತ್ಯೇಕ ವಿಭಾಗ, ಅವರ ಮುಖ್ಯಸ್ಥರು ಫೋನಿನಲ್ಲಿ ಮಾತಾಡುವುದನ್ನು ಬೇರಾರೂ ಕೇಳಿಸಿಕೊಳ್ಳುವುದು ಅಸಾಧ್ಯ. +ಬಹುಶಃ ಕೇಳಿಸಿಕೊಂಡರೂ ಭಯಪಡುವವರಲ್ಲ ಸ್ಕ್ವಾಡಿನ ಮುಖ್ಯಸ್ಥರು. +‘ಏನು ಬೇಕಾದರೂ ಮಾಡು’ ಎಂಬ ಅವರ ಮಾತೇ ತೇಜಾನಲ್ಲಿ ಎಲ್ಲಿಲ್ಲದ ಉತ್ಸಾಹಾನಂದವನ್ನು ತುಂಬಿತ್ತು. +ಅಂತೂ ಸಿ.ಎಂ.ಸಾಹೇಬರಿಗೆ ಎಲ್ಲವನ್ನೂ ವಿವರಿಸಿ ಅವರನ್ನು ಒಪ್ಪಿಸಿದ್ದಾರೆ. +ಅದೇ ದೊಡ್ಡ ಮಾತು. +ಹಳ್ಳಿಯ ಯುವಕರನ್ನು ಅವರು ಕಟ್ಟಲಿರುವ ಸಂಘವನ್ನು ಆಗಲೇ ಮರೆತುಬಿಟ್ಟಿದ್ದ ತೇಜಾ, ಕಲ್ಯಾಣಿಯನ್ನು ಕಾಣುವ ತಹತಹಿಕೆ ಮತ್ತೆ ಅವನಲ್ಲಿ ಹುಟ್ಟಿಕೊಂಡಿತ್ತು. +ಅವಳ ಯೋಚನೆಯಲ್ಲಿಯೇ ಲೊಲೂಪನಾದಾಗ ಯುವಕರಿಬ್ಬರು ಬಂದರು ಹೆಚ್ಚು ಮಾತಿಗೆ ಅವಕಾಶ ಕೊಡದೇ ತನ್ನ ಒಪ್ಪಿಗೆ ಸೂಚಿಸಿ, ಮುಂದಿನ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮುನ್ನ ಒಮ್ಮೆ ಎಲ್ಲರೂ ಕುಳಿತು ಮಾತಾಡುವ ಎಂದು ಹೇಳಿ ಕಳಿಸಿಬಿಟ್ಟ. +ತನ್ನನ್ನು ತಕ್ಷಣ ಕಾಣಬೇಕಾದರೆ ಏನು ಮಾಡಬೇಕೆಂಬುವುದನ್ನು ಹೇಳಿದ್ದಳು ಕಲ್ಯಾಣಿ. +ಅದನ್ನೀಗ ಉಪಯೋಗಿಸಲೇ ಎಂಬ ಯೋಚನೆ ಬಂದಾಗ ಅಷ್ಟು ಅವಸರ ಬೇಡ. +ಅದೂ ಅಲ್ಲದೇ ತಾನು ಯಾವುದಾದೂರ ಕೆಲಸದ ಮೇಲೆ ಹೋದರೆ ಬರುವುದು ಎಷ್ಟು ಹೊತ್ತಾಗುತ್ತದೆಂಬುವುದು ತನಗೇ ಗೊತ್ತಿಲ್ಲವೆಂದು ಹೇಳಿದ್ದಳು ಕಲ್ಯಾಣಿ. +ಅವಳಿಗೂ ತನ್ನನ್ನು ಕಾಣಬೇಕೆಂಬ ಹಂಬಲ ಹುಟ್ಟುತ್ತಿರಲಿಕ್ಕಿಲ್ಲವೇ! +ಅಥವಾ ಯಾರಾದಾದರೂ ಕೊಲೆಯ ಯೋಜನೆ ಹಾಕುತ್ತಾ ಕುಳಿತಿರಬಹುದೇ ಎಂದುಕೊಳ್ಳುತ್ತಾ ಮನೆಗೆ ಹೋಗಲು ಎದ್ದ. +ತೇಜಾ ನಾಲ್ಕು ಹೆಜ್ಜೆ ಮುಂದೆ ಹೋಗುವುದರಲ್ಲಿ ಒಬ್ಬ ಕೆಂಪು ರುಮಾಲನ್ನು ಸುತ್ತಿದ ವ್ಯಕ್ತಿ ಎದುರಿನಿಂದ ಬರುತ್ತಿರುವುದು ಕಂಡಿತು. +ಅವನನ್ನೆಲ್ಲೋ ನೋಡಿದ್ದೇನೆಂದುಕೊಳ್ಳುತ್ತಿರುವಾಗಲೇ ಹತ್ತಿರ ಬಂದ ಆ ವ್ಯಕ್ತಿ ಮಲ್ಲನೆಯ ದನಿಯಲ್ಲಿ ಹೇಳಿದ“ಕಾಳಿ!ಅಕ್ಕ ರಾತ್ರಿ ಎಂಟಕ್ಕೆ ದೇವನಹಳ್ಳಿಯ ಪಟ್‌ವಾರಿಯವರ ಮನೆಗೆ ಬರಲು ಹೇಳಿದ್ದಾರೆ”ತಾನು ಏನೂ ಹೇಳಲೇ ಇಲ್ಲವೇನೋ ಎಂಬಂತೆ ಆ ವ್ಯಕ್ತಿ ತನ್ನದೇ ಗತಿಯಲ್ಲಿ ನಡೆಯುತ್ತಾ ಮುಂದೆ ಹೊರಟುಹೋದ. +ದೇವನಹಳ್ಳಿ, ಪಟ್‌ವಾರಿ ಯವರ ಮನೆಗ್ಯಾಕೆ. +ಅವರು, ಇವಳ ಹಿತೈಷಿಯಂದೇ ಎಷ್ಟೇ ಹಿತೈಷಿ, ಸಹಾನುಭೂತಿಪರರಾದರೂ ಇಂತಹ ಅಪಾಯವನ್ನು ಯಾರೂ ಬಯಸುವುದಿಲ್ಲ. +ತಾನು ಅಲ್ಲಿ ಹೋಗಿ ಅವಳನ್ನು ಭೇಟಿಯಾಗುವುದು ಸರಿಯೇ ಎಂಬ ಯೋಚನೆ ಹಾದಾಗ ಅದನ್ನು ತಕ್ಷಣ ತಳ್ಳಿಹಾಕಿದ. +ಕಲ್ಯಾಣಿಯ ಪ್ರೇಮಪಾಶದಲ್ಲಿ ಸಿಲುಕಿ ಅವಳನ್ನು ತಮ್ಮದೇ ವಿಚಿತ್ರ ರೀತಿಯಲ್ಲಿ ಮದುವೆಯಾದಾಗಿನಿಂದ ಅವಳ ವಿನಹ ಲೋಕದ ಬೇರಾವ ಸಂಗತಿಯೂ ಮುಖ್ಯವಾಗಿರಲಿಲ್ಲ ತೇಜಾನಿಗೆ. +ಸಮಯ ಯಾವಾಗ ಸರಿಯುವುದೊ ಯಾವಾಗ ಎಂಟಾಗುವುದೋ ಎಂದು ಕಾಯ ತೊಡಗಿದ. +ತೇಜಾನಿಗೆ ಒಂದೊಂದು ಗಂಟೆ ಒಂದೊಂದು ಯುಗದಂತೆ ಭಾಸವಾಗುತ್ತಿತ್ತು. +ಬಹುಕಷ್ಟಪಟ್ಟು ತನ್ನ ಕಾತುರವನ್ನು ಯಾರಿಗೂ ಕಾಣದ ಹಾಗೆ ಅದುಮಿಟ್ಟಿದ. +ಮತ್ತು ಎಚ್ ಸಿ.ಅವನ ಅಪ್ಪಣೆ ಪಡೆದು ರಾಮನಗರಕ್ಕೆ ಹೋಗಿಬಿಟ್ಟಿದ್ದರು. +ಏಳಾಗುತ್ತಿದ್ದಾಗ ಪೇದೆಯವರನ್ನು ಕರೆದು ತಾನು ಸುತ್ತಲಿನ ಹಳ್ಳಿಗಳಲ್ಲೆಲ್ಲಾ ಒಂದು ರೌಂಡು ಸುತ್ತಿ ಬರುವುದಾಗಿ ಯಾವಾಗ ಬರುತ್ತೇನೆಂಬುವುದು ಹೇಳಲಾಗುವುದಿಲ್ಲವೆಂದು ಹೇಳಿದ. +ಏಳುಕಾಲು ಆಗುತ್ತಿದ್ದಾಗ ಜೀಪ್ ಹತ್ತಿದ ತೇಜಾ ನಿಧಾನವಾಗಿ ವಾಹನವನ್ನು ಮುಂದೆ ಬಿಟ್ಟ. +ಆಗಿನಿಂದಲೇ ಅವನಿಗರಿವಿಲ್ಲದಂತೆ ಅವನ ಹೃದಯ ಬಡಿತ ಜೋರಾಗಿತ್ತು. +ತಾನು ಪೇದೆಗೆ ಹೇಳಿದ್ದು ನಿಜವೆಂಬುದನ್ನು ನಿರೂಪಿಸಲು ದಾರಿಯಲ್ಲಿ ಬಂದ ಹಳ್ಳಿಗಳ ಬಳಿ ವಾಹನ ನಿಲ್ಲಿಸಿ ಅಲ್ಲಿದ್ದ ಒಬ್ಬರಿಬ್ಬರನ್ನು ಕರೆದು ಕಲ್ಲಕ್ಕನ ಬಗ್ಗೆ ವಿಚಾರಿಸಿದ. +ಪೋಲಿಸು ವಾಹನ ಮತ್ತು ಕಲ್ಲಕ್ಕನ ಹೆಸರು ಕೇಳುತ್ತಲೇ ಅವರುಗಳು ಅವನನ್ನು ಒಂದು ಹುಳುವನ್ನು ನೋಡುವಂತೆ ನೋಡಿ ಹೊರಟುಹೋಗಿದ್ದರು. +ಒಂದು ಹಳ್ಳಿಯಲ್ಲಿ ಒಬ್ಬ ಹಿರಿಯನನ್ನು ಕರೆದು ಆ ಕಲ್ಲಕ್ಕ ಒಳ್ಳೆಯವಳೇ ಕೆಟ್ಟವಳೇ ಎಂದು ಕೇಳಿದ. +ಆ ವಿಷಯವೇ ಬೇಕಾಗಿದ್ದಂತೆ ಆತ ಅವಳ ಹೊಗಳುವಿಕೆ ಆರಂಭಿಸಿದ. +ಮಾತಿಗೆ ಮಾತು ಬೆಳೆಯುತ್ತಾ ಹೋಯಿತು. +ಕೊನೆಗೆ ಯಾರಾದರೂ ಪೋಲಿಸಿನವರು ಅವಳನ್ನು ಹಿಡಿಯಲು ಬಂದರೆ ಅವರನ್ನು ಕೊಂದುಹಾಕುತ್ತೇವೆಂದ ಆ ಮಾತುಗಾರನಿಂದ ಅವನ ಮನ ನೋಯಿಸದಂತೆ ತಪ್ಪಿಸಿಕೊಳ್ಳಲು ತೇಜಾನಿಗೆ ಬಹಳ ಕಷ್ಟವಾಯಿತು. +ಕೊನೆಗೂ ಅವನಿಂದ ಪಾರಾಗಿ ದೇವನಹಳ್ಳಿಯ ಕಡೆ ವಾಹನವನ್ನು ಓಡಿಸಿದ. +ಪಟ್‌ವಾರಿಯವರ ಮನೆ ಎದುರು ಜೀಪು ನಿಂತಾಗ ಕೈಗಡಿಯಾರ ನೋಡಿಕೊಂಡ ಐದು ನಿಮಿಷ ತಡವಾಗಿತ್ತು. +ಕಾಡಿನ ಕಠಿಣ ದಾರಿಯಿಂದ ಬರಬೇಕಾದ ಅವಳು ಇನ್ನೂ ಬಂದಿರಲಿಕ್ಕಿಲ್ಲ ಎಂದುಕೊಳ್ಳುತ್ತಲೇ ಬಾಗಿಲು ಬಡಿದ. +ಕೆಲ ಕ್ಷಣಗಳನಂತರ ಬಾಗಿಲು ತೆಗೆದುಕೊಂಡಿತ್ತು. +ಗಂಟಿಕ್ಕಿದ ಮುಖದ ಆಳು ಏನು ಬೇಕೆಂಬಂತೆ ತೇಜಾನ ಕಡೆ ನೋಡಿದ. +“ಪಟ್‌ವಾರಿ ಸಾಹೇಬರನ್ನು ಕಾಣಬೇಕಾಗಿತ್ತು” ಹೇಳಿದ ತೇಜಾ. +“ನಿಮ್ಮ ಹೆಸರು?” ಒರಟು ದನಿಯಲ್ಲಿಯೇ ಪ್ರಶ್ನಿಸಿದ ಆಳು. +“ತೇಜಾ… ಇನ್ಸ್‌ಪೆಕ್ಟರ್‌ ಉತೇಜ್” ಪೋಲಿಸಿನ ಗಡಸುತನವಿರಲಿಲ್ಲ. +ಅವನ ಮಾತಿನಲ್ಲಿ ಒಮ್ಮೆಲೆ ಅವನ ಮುಖದ ಗಂಟುಗಳು ಸಡಿಲಾದವು. +ಬಹು ವಿನಯದ ದನಿಯಲ್ಲಿ ಹೇಳಿದ. +“ಬನ್ನಿ ಸ್ವಾಮಿ!ಬನ್ನಿ!ಧಣಿ ಇಲ್ಲ. +ನೀವು ಮೇಲೆ ಹೋಗಿ”ಆಶ್ಚರ್ಯವಾಯಿತು. +ತೇಜಾನಿಗೆ ಏನು ಹೇಳಬೇಕೋ ತೋಚದೇ ಅಟ್ಟದ ಮೇಲೇರಿದ. +ಒಂದು ಕೋಣೆಯ ಬಾಗಿಲೆದುರು ನಿಂತವಳನ್ನು ಹಾಗೇ ನೋಡುತ್ತಾ ನಿಂತುಬಿಟ್ಟ. +ಅವಳನ್ನು ಗುರಿತಿಸಲೂ ಅವನಿಗೆ ಕನಿಷ್ಠ ಒಂದು ನಿಮಿಷ ಹಿಡಿಯಿತು. +ಹಸಿರು ಬಣ್ಣದ ಸೀರೆ ಅದೇ ಬಣ್ಣದ ರವಿಕೆ ತೊಟ್ಟ ಕಲ್ಯಾಣಿ. +ಅಪ್ಸರೆಯಂತೆ ಕಾಣುತ್ತಿದ್ದಳು. +ಅವಳ ಮುಖದಲ್ಲೂ ಸಂತಸ ತುಂಬಿಬಂತು ಮುಗುಳ್ನಕ್ಕು ಕೋಣೆಯೊಳಗೆ ಹೋದಳು. +ಒಮ್ಮೆಲೆ ಎಚ್ಚೆತ್ತವನಂತೆ ಉದ್ದನೆ ಹೆಜ್ಜೆ ಹಾಕುತ್ತಾ ಆ ಕೋಣೆ ಪ್ರವೇಶಿಸಿದ ತೇಜಾ ಅವಳನ್ನು ಬಿಗಿದಪ್ಪಿದ. +ಅವಳೂ ಅವನ ಮೇಲೆ ತನ್ನ ಹಿಡಿತವನ್ನು ಬಲಪಡಿಸಿದಳು. +ಎಷ್ಟೋ ಕಾಲದನಂತರ ಭೇಟಿಯಾದಂತಿತ್ತು ಆಲಿಂಗನ. +ತುಟಿಗೆ ತುಟಿಗಳು ಕಲೆತವು ಎಲ್ಲಿ ಉಸಿರುಗಟ್ಟುವುದೋ ಎನಿಸಿದಾಗ ತನ್ನ ಬಾಯನ್ನು ಸರಿಸಿ ಕೇಳಿದ“ಪಟ್‌ವಾರಿ ಸಾಹೇಬರೆಲ್ಲಿ?” +“ಅವರು ತಮ್ಮ ಕೋಣೆಯಲ್ಲಿ ಓದಿಕೊಳ್ಳುತ್ತಿದ್ದಾರೆ. +ಯಾವ ಭಯವೂ ಬೇಡ ಇದು ನಮ್ಮ ಮನೆ” ಅವನ ಗಂಟಲು ಎದೆಗಳ ಮೇಲೆ ಕೈಸವರುತ್ತಾ ಹೇಳಿದಳು ಕಲ್ಯಾಣಿ. +“ನಿನ್ನ ಬಿಟ್ಟು ನನಗಿರಲಾಗುವುದಿಲ್ಲ ಕಲ್ಯಾಣಿ! +ಇನ್ನೂ ಕೆಲದಿನ ಹೀಗೆ ಆದರೆ ನನಗೆ ಹುಚ್ಚು ಹಿಡಿದುಬಿಡುತ್ತದೆಯೇನೋ?” ಅವಳ ತುಟಿಗಳನ್ನು ತನ್ನ ತುಟಿಗಳಿಂದ ಸವರುತ್ತಾ ಹೇಳಿದ ತೇಜಾ“ನನ್ನದೂ ಅದೇ ಗತಿಯಾಗಿದೆ. +ಯಾವ ಕೆಲಸದಲ್ಲೂ ಮನಸ್ಸು ನಿಲ್ಲುತ್ತಿಲ್ಲ. +ಯಾವಾಗಲೂ ನಿನ್ನದೇ ಯೋಚನೆ”ಅವಳ ಮಾತು ಮುಗಿಯುತ್ತಿದ್ದಂತೆ ದೇಹದ ಮೇಲೆಲ್ಲಾ ಆಡತೊಡಗಿದ ತೇಜಾ. +ಅವನಿಂದ ದೂರ ಸರಿದು ಹೇಳಿದಳು ಕಲ್ಯಾಣಿ“ಇದು ನಮ್ಮ ಮನೆ ಎಂದೆನಲ್ಲ. +ಇನ್ನೂ ಊಟದ ಸಮಯವಾಗಿಲ್ಲ. +ಏನು ತರಲಿ ಕಾಫಿ…” +“ನನಗೇನೂ ಬೇಡ ನೀನು ಬೇಕು” ಅವಳ ಕೈಹಿಡಿದು ತನ್ನ ಹತ್ತಿರ ಎಳೆದುಕೊಳ್ಳುತ್ತಾ ಹೇಳಿದ. +“ನಾನು ನಿನ್ನವಳೇ!ಅದನ್ಯಾರಿಲ್ಲ ಅಂದಿದ್ದಾರೆ. +ಹೀಗ್ಯಾಕೆ ಮಾಡುತ್ತಿದ್ದಿ?” ನಯವಾಗಿ ಅವನ ಹಿಡಿತದಿಂದ ಮುಕ್ತಳಾಗುತ್ತಾ ಕೇಳಿದಳು ಕಲ್ಯಾಣಿ. +ಅದಕ್ಕವನು ಉನ್ಮಾದದ ದನಿಯಲ್ಲಿ ಹೇಳಿದ. +“ಮದುವೆಯಾದ ಹೊಸತರಲ್ಲಿ ಹೀಗೆ ಆಗುತ್ತದೆ.” +“ಈಗ ಕಾಫಿ ತರುತ್ತೇನೆ” ಎಂದ ಕಲ್ಯಾಣಿ ಅವನಿಗೆ ಮಾತಾಡುವ ಅವಕಾಶ ಕೊಡದೇ ಆ ಕೋಣೆಯಿಂದ ಹೊರಹೋದಳು. +ಆಗ ಎಚ್ಚೆತ್ತವನಂತೆ ಸುತ್ತೂ ನೋಡಿದ. +ಸಿರಿವಂತಿಕೆಯಿಂದ ಅಲಂಕರಿಸಲಾದ ದೊಡ್ಡ ಕೋಣೆ. +ನಡುವೆ ಇಬ್ಬರು ಮಲಗುವಂತಹ ಹಳೆಯ ಕಾಲದ ಮಂಚ, ಮಂಚವನ್ನು ನವವಧು-ವರರಿಗೆ ಅಲಂಕರಿಸುವಂತೆ ಅಲಂಕರಿಸಲಾಗಿತ್ತು. +ಮಲ್ಲಿಗೆ ಹೂವಿನ ವಾಸನೆ ಕೋಣೆಯಲ್ಲೆಲ್ಲಾ ತುಂಬಿತ್ತು. +ಕೋಣೆಯ ಒಂದು ಕಡೆ ಪುರಾತನ ಆರಾಮ ಕುರ್ಚಿ, ಮತ್ತೆರಡು ಸಾಮಾನ್ಯ ಕುರ್ಚಿಗಳು. +ತಾವು ಬಾಂಬು ಸ್ಫೋಟವಾಗಿ ದೇವಿಯಾದವನ ಕಾರು ನಾಶನವಾದಾಗ ಕುಳಿತ ಕೋಣೆ ಇದಲ್ಲ. +ತೇಜಾನ ಪೊಲೀಸ್‌ ಬುದ್ಧಿ ಕೆಲಸವಾರಂಭಿಸಿತು. +ಈ ಪಟ್‌ವಾರಿ ಸಾಹೇಬರು ಯಾರು? +ಇವರೂ ಕ್ರಾಂತಿಕಾರಿಯರೇ. +ಇಷ್ಟು ಧನವಂತರಾದ ಅವರು ಕ್ರಾಂತಿಕಾರಿಯಾಕಾಗಬೇಕು. +ಕಲ್ಯಾಣಿ ಇದೇ ಕೋಣೆಯಿಂದ ರಿಮೋಟ್ ಅದುಮಿ ಬಾಂಬು ಸ್ಫೋಟಿಸಿರಬಹುದೇ ಅಥವಾ ಆ ಕೆಲಸವನ್ನು ಪಟ್‌ವಾರಿಯವರು ಮಾಡಿರಬಹುದೇ. +ಇಂತಹದೇ ಯೋಚನೆಯಲ್ಲಿ ಅವನು ತಲ್ಲೀನನಾದಾಗ ಕಾಫಿಯ ಎರಡು ಲೋಟಗಳನ್ನು ಹಿಡಿದು ಬಂದ ಕಲ್ಯಾಣಿ ಅವನ ಬದಲಾದ ಮುಖಭಾವ ಕಂಡು ವ್ಯಂಗ್ಯದನಿಯಲ್ಲಿ ಹೇಳಿದಳು“ನಿನ್ನ ಪೋಲೀಸ್ ಬುದ್ಧಿ ಮತ್ತೆ ಕೆಲಸ ಮಾಡಲಾರಂಭಿಸಿದ್ದ ಹಾಗಿದೆ. +ಅವಳ ಕೈಯಿಂದ ಒಂದು ಲೋಟವನ್ನು ತೆಗೆದುಕೊಂಡು, ಕೊರಳಲ್ಲಿ ಕೈಹಾಕಿ ಮಂಚದ ಕಡೆ ನಡೆಯುತ್ತಾ ಹೇಳಿದ“ಪೋಲೀಸಿನವನಿಗಲ್ಲಾ ಅದು ಯಾರಿಗಾದರು ಸ್ವಾಭಾವಿಕವಲ್ಲವೇ”ಮಂಚದ ಮೇಲೆ ಅವನ ಬದಿಯಲ್ಲೇ ಕುಳಿತು ಕೇಳಿದಳು ಕಲ್ಯಾಣಿ“ಅದು ಅಂದರೆ ಯಾವುದು?” +“ನಿನ್ನಿಂತಹವಳು ಈ ಧನವಂತನ ಮನೆಯಲ್ಲಿ ಇಷ್ಟು ಸ್ಟೇಚ್ಛೆಯಾಗಿರುವುದು” ತನ್ನಲ್ಲೇ ಯೋಚಿಸಿಕೊಳ್ಳುತ್ತಿರುವಂತೆ ಮಾತಾಡಿದ ತೇಜಾ. +“ಇವರನ್ನು ದೇಶದ್ರೋಹಿ ಕ್ರಾಂತಿಕಾರಿ ಎಂದುಕೊಂಡೆಯಾ?” ವ್ಯಂಗ್ಯದ ದನಿಯಲ್ಲಿ ಕೇಳಿದಳು ಕಲ್ಯಾಣಿ. +ಅದಕ್ಕವನಿಂದ ಕೂಡಲೇ ಯಾವ ಉತ್ತರವೂ ಬರದಾಗ ಅಕ್ಕರೆಯ ದನಿಯಲ್ಲಿ ಹೇಳಿದಳವಳು. +“ಕಾಫಿ ಕುಡಿ!ತಣ್ಣಗಾಗುತ್ತದೆ”ಅವಳ ತಲೆ ಕೂದಲಲ್ಲಿ ಬೆರಳಾಡುತ್ತಾ ಕಾಫಿ ಕುಡಿದು ಮುಗಿಸಿದ ತೇಜ ಕಲ್ಯಾಣಿಯು ಕಾಫಿ ಕುಡಿದಾಯಿತು. +ತೇಜಾನ ಯೋಚನೆ ಆಗಲೇ ಪಟ್ವಾರಿ ಯವರಿಂದ ದೂರ ಸರಿದಿತ್ತು. +ಕಲ್ಯಾಣಿಯ ತಲೆಯಿಂದ ಸರಿದ ಅವನ ಕೈ ಕೆಳಗಿಳಿಯತೊಡಗಿದಾಗ ಅದನ್ನು ಅಲ್ಲೇ ತಡೆದು ಹೇಳಿದಳವಳು. +“ಅವಸರ ಬೇಡ!ಮೊದಲು ನಿನ್ನ ಅನುಮಾನ ತಿರಿಸಿಕೋ, ನಡಿ ಅವರ ಕೋಣೆಗೆ ಹೋಗುವ” +“ಅದೆಲ್ಲಾ ಆಮೇಲೆ!ನನಗ್ಯಾರ ಮೇಲೂ ಎಂತಹ ಅನುಮಾನವೂ ಇಲ್ಲ” ಅವಳನ್ನಪ್ಪಿ ಹೇಳಿದ ತೇಜಾ. +“ಚಿಕ್ಕ ಮಕ್ಕಳ ಹಾಗೆ ಹಟ ಮಾಡಬಾರದು ನಡಿ, ನಿನ್ನ ಬುದ್ಧಿಯೂ ಚುರುಕಾಗುತ್ತದೆ” ಎಂದ ಅವಳು ಏಳಲು ಹೋದಾಗ ಏಳದಂತೆ ಎರಡೂ ಕೈಗಳಿಂದ ಅಪ್ಪಿ ಹಿಡಿದು ಹೇಳಿದ ತೇಜಾ. +“ಅವರೊಡನೆ ನಾನು ಮಾತಾಡಲು ಸಾಕಷ್ಟು ಸಮಯವಿರುತ್ತದೆ ನಮಗೆ…” +“ಈ ರಾತ್ರಿಯೆಲ್ಲಾ ನಮ್ಮದೇ!ಅದೂ ಅಲ್ಲದೇ ಇದು ನಮ್ಮ ಮನೆಯೇ ಎಂದು ಹೇಳಿದೆನಲ್ಲಾ ನಡಿ” ಮಕ್ಕಳಿಗೆ ಸಮಾಧಾನ ಹೇಳುವಂತಹ ದನಿಯಲ್ಲಿ ಮಾತಾಡಿದಳು ಕಲ್ಯಾಣಿ. +ಅವನಿಂದ ಬಿಡಿಸಿಕೊಂಡು ಅವಳು ಏಳುತ್ತಿದ್ದಂತೆ ವಿಧಿ ಇಲ್ಲದವನಂತೆ ಎದ್ದ ತೇಜಾ. +ಇಬ್ಬರೂ ಆ ಮಹಡಿಯಲ್ಲಿರುವ ಇನ್ನೊಂದು ದೊಡ್ಡ ಕೋಣೆಗೆ ಹೋದರು ಅಲ್ಲಿ ಪಟುವಾರಿ ಸಾಹೇಬರು ಮತ್ತವರ ಮಡದಿ ಕುಳಿತಿದ್ದರು. +ಆ ಕೋಣೆಯ ಗೋಡೆ ಕಾಣದಂತೆ ನಾಲ್ಕೂ ಕಡೆ ಶಲ್ಫುಗಳು. +ಅದರಲ್ಲಿ ತುಂಬಿದ ಪುಸ್ತಕಗಳು. +ಒಂದು ಮೂಲೆಗೆ ಟೇಬಲ್ ಅದರೆದುರು ಕುರ್ಚಿ, ಆ ಟೇಬಲಿನ ಮೇಲೂ ಪುಸ್ತಕಗಳು, ಪೆನ್ನು ಕಾಗದ. +ಅದು ಬರೆಯಲು, ಓದಲು ಉಪಯೋಗಿಸುತ್ತಾರೆಂಬುವುದು ಸ್ಪಷ್ಟಪಡಿಸುತ್ತಿತ್ತು. +“ನಮಸ್ಕಾರ ಸರ್!ನನ್ನ ಪರಿಚಯವಿರಬಹುದು” ಅವರ ಹತ್ತಿರ ಬರುತ್ತಾ ಹೇಳಿದ ತೇಜಾ. +“ಬಾ… ಬಾ… ಕಲ್ಯಾಣಿ ಹೇಳಿದ ಮೇಲೆ ಚೆನ್ನಾಗಿ ಪರಿಚಯವಾಯಿತು. +ಇವರು ನನ್ನ ಮಡದಿ ಲಕ್ಷ್ಮಿ, ಇವನು ತೇಜಾ” ಎಂದು ಅವರು ಮಡದಿಯನ್ನೂ ಪರಿಚಯಿಸಿದರು. +ಕೈ ಜೋಡಿಸಿ ಅವರಿಗೂ ನಮಸ್ಕರಿಸಿದ ತೇಜಾ ಪಟ್‌ವಾರಿಯವರ ಬದಿಯಲ್ಲಿ ಕುಳಿತ. +ಮೆತ್ತನೆಯ ಆಧುನಿಕ ಮಾದರಿಯ ಸೋಫಾ. +ಕಲ್ಯಾಣಿ ಅವರ ಮಡದಿಯ ಬದಿಯಲ್ಲಿ ಕುಳಿತಳು. +ಏನು ಮಾತಾಡಬೇಕು, ಮಾತು ಹೇಗೆ ಆರಂಭಿಸಬೇಕೆನ್ನುವುದು ತೋಚಲಿಲ್ಲ. +ಅವನ ಮೌನ ಕಂಡು ತಾವೇ ಮಾತಾಡಿದರು ಪಟ್‌ವಾರಿಯವರು. +“ಏನೂ ಕೇಳುವುದಿಲ್ಲವೇ?” +“ಏನು ಕೇಳಲಿ ಸರ್!ಕಲ್ಯಾಣಿಯನ್ನು ಮದುವೆಯಾದಾಗಿನಿಂದ ಯಾರನ್ನು ಏನು ಕೇಳಲೂ ಭಯವಾಗುತ್ತದೆ.” ಕಲ್ಯಾಣಿಯ ಕಡೆ ನೋಡುತ್ತಾ ಹೇಳಿದ ತೇಜಾ“ಭಯಪಡಬಾರದು. +ಭಯದ ಕಾರಣವಾಗೇ ಇಲ್ಲದ ರೋಗಗಳು ಹುಟ್ಟಿಕೊಳ್ಳುತ್ತವೆ. +ಕಲ್ಯಾಣಿಯನ್ನು ಮದುವೆಯಾಗುವಾಗ ಭಯವಾಗಲಿಲ್ಲವೇ?” +“ನಾ ಹೇಳಿದ್ದು ಅಂತಹ ಭಯವಲ್ಲ ಸರ್! +ನಿಮ್ಮ ಮನಸ್ಸು ಎಲ್ಲಿ ನೋಯಿಸಬೇಕಾಗುತ್ತದೆ ಎಂಬ ಭಯವಷ್ಟೆ” ಅವರ ಮಾತು ಮುಗಿದ ಕೂಡಲೇ ಸ್ಪಷ್ಟಿಕರಣ ನೀಡಿದ ತೇಜಾ. +“ನನ್ನ ಮನ ನೊಂದು ನೊಂದು ಜಡ್ಡು ಬಿದ್ದು ಬಿಟ್ಟಿದೆ. +ಅದಕ್ಕೀಗ ಏನಾದರೂ ನೋವಾಗುವುದಿಲ್ಲ. +ನಾಳೆ ಕಲೆಕ್ಟರ್ ಬಂದು ಈ ಮನೆ ನನ್ನದೆ ಅಂದು ನನ್ನ, ನನ್ನ ಹೆಂಡತಿಯನ್ನು ಹೊರ ಹಾಕಿದರೂ ನೋವಾಗುವುದಿಲ್ಲ. +ಅರ್ಥವಾಯಿತೆ ನನ್ನ ನೋವು ಎಂತಹದೆಂದು” ನಿರ್ಭಾವ ದನಿಯಲ್ಲಿ ಹೇಳಿದರು ಪಟ್‍ವಾರಿ. +“ಸ್ವಲ್ಪ, ಸ್ವಲ್ಪ ಅರ್ಥವಾಯಿತು ಸರ್!… ಭ್ರಷ್ಟಾಚಾರದ ವಿರುದ್ಧ ಹೋರಾಡಲು ನೀವು ಕ್ರಾಂತಿಕಾರಿಯರಿಗೆ ಸಹಾಯ ಮಾಡುತ್ತಿದ್ದೀರಾ” ಅನುಮಾನದ ದನಿಯಲ್ಲಿ ತನ್ನ ಮಾತು ಮುಗಿಸಿದ ತೇಜಾ. +“ಇವರು ಒಂದು ಕಾಲದಲ್ಲಿ ಬಹಳ ಹೆಸರು ಮಾಡಿದ ಕ್ರಾಂತಿಕಾರಿ ಆಗಿದ್ದರಪ್ಪಾ! +ಬಿಳಿಯರ್ ಹಂಟರ್ ಏಟುಗಳ ಛಾಪು ಇನ್ನೂ ಅವರ ಬೆನ್ನ ಮೇಲಿದೆ…” +“ನೀವು ಫ್ರೀಡಂಫೈಟರ್ ಆಗಿದ್ದಿರಾ ಸರ್!” ಅವರ ಮಡದಿ ಮಾತು ಮುಗಿಸುವ ಮುನ್ನ ಕೆಳಿದ ತೇಜಾ. +“ಫ್ರೀಡಂಫೈಟರ್” ವ್ಯಂಗ್ಯ, ಸಿಟ್ಟುಗಳು ತುಂಬಿದ ದನಿಯಲ್ಲಿ ಹೇಳಿ ಮಾತು ಮುಂದುವರಿಸಿದರು ಪಟ್‌ವಾರಿ “ಈಗ ಬ್ರಿಟಿಶರ ಕಾಲದಲ್ಲಿ ಜೇಬುಕಳ್ಳನಾದವನು, ದರೋಡೆ ಮಾಡಿದವನು, ವ್ಯಭಿಚಾರ ಮಾಡಿ ಜೈಲಿಗೆ ಹೋದವನೂ ಫ್ರಿಡಂಫೈಟರ್ ಆಗಿಬಿಟ್ಟಿದ್ದಾನೆ. +ಆ ಶಬ್ದ ಕೇಳೇ ನನಗೆ ಹೇಸಿಗೆಯಾಗುವಂತಾಗಿದೆ. +ಈಗ ಅವರ ಮಕ್ಕಳೂ ತಮ್ಮ ಎಲ್ಲಾ ಸವಲತ್ತುಗಳು ಬೇಕೆಂದು ಮೆರವಣಿಗೆ ತೆಗೆಯುತ್ತಾರೆ. +ಎಂತಹ ನಾಚಿಕೆಗೇಡು” ಭಾವುಕ ದನಿಯಲ್ಲಿ ಅವರ ಮಾತು ನಿಂತಾಗ ಕೇಳಿದ ತೇಜಾ. +“ಯಾಕೆ ಸರ್!ಫ್ರೀಡಂ ಫೈಟರ್‌ಗೆ ಪೆನ್‌ಶನ್‌ ಇನ್ನಿತರ ಸವಲತ್ತು ಕೊಡಬಾರದೆ?”ಅವರನ್ನು ಕೆಣಕಲೆಂಬಂತ್ತಿತ್ತು ಅವನ ಮಾತು. +ಕೂಡಲೇ ಅದಕ್ಕೆ ಇನ್ನೂ ಭಾವುಕ ದನಿಯಲ್ಲಿ ಪ್ರಶ್ನಿಸಿದರು ಪಟ್‌ವಾರಿ. +“ನಿನ್ನ ತಾಯಿಯನ್ನೂ ಮಾನಭಂಗದಿಂದ ಕಾಪಾಡಿದ್ದಕ್ಕೆ ನೀ ಪಾರಿತೋಷಕ ಕೇಳುತ್ತೀಯಾ?”ಅದಕ್ಕೇನೂ ಹೇಳಲಿಲ್ಲ. +ತೇಜಾ, ಇವರು ಪೆನ್‌ಶನ್ ತೆಗೆದುಕೊಳ್ಳುತ್ತಿಲ್ಲವೆಂಬುವುದು ಸ್ಪಷ್ಟವಾಯಿತು. +ತಮ್ಮ ಕೋಪವನ್ನು ತಡೆಯಲಾರದವರಂತೆ ಮತ್ತೆ ಅವರೇ ಮಾತನ್ನು ಮುಂದುವರೆಸಿದರು. +“ಬಿಳಿಯರು ಹೋದರು ದೇಶ ಸ್ವತಂತ್ರವಾಯಿತು. +ಇವರುಗಳೀಗ ದೇಶವನ್ನು ಲೂಟಿ ಮಾಡಲು ಹೊರಟಿದ್ದಾರೆ! +ಕಳ್ಳಕಾಕರು, ಭಂಡರೂ ದೇಶವನ್ನಾಳುತ್ತಿದ್ದಾರೆ” ಕೆಮ್ಮು ಬಂದ ಕಾರಣ ಮಾತು ನಿಲ್ಲಿಸಿದರು. +ಓಡಿ ಹೋದ ಕಲ್ಯಾಣಿ ಗ್ಲಾಸಿನಲ್ಲಿ ನೀರು ತಂದಳು. +ಕೆಮ್ಮು ನಿಂತ ಮೇಲೆ ಹೇಳಿದಳು ಕಲ್ಯಾಣಿ. +“ನೀವು ಸುಮ್ಮನಿರಿ!ನಾನಿವನಿಗೆ ಹೇಳಿದ ಮೇಲೆ ನೀವು ಮಾತಾಡುವಿರಂತೆ” ಎಂದ ಕಲ್ಯಾಣಿ ತೇಜಾನ ಕಡೆ ತಿರುಗಿ ತನ್ನ ಮಾತನ್ನು ಮುಂದುವರೆಸಿದಳು. +“ಭಗತಸಿಂಗ್, ಚಂದ್ರಶೇಖರ ಅಜಾದ್ ನಂತಹವರಿಂದ ಪ್ರೇರೇಪಿತರಾಗಿ ಈ ಜಿಲ್ಲೆಯಲ್ಲಿ ವೈಸರಾಯ್ ಮೀಟಿಂಗ್ ಏರ್ಪಡಿಸಿದಾಗ ನಮ್ಮ ಜನರ ಗುಂಪನ್ನು ಚದುರಿಸಲು ಇವರು ಮತ್ತು ಇವರ ಸ್ನೇಹಿತರು ಮೂರು ಮೂಲೆಗಳಿಂದ ಭಯಂಕರ ಶಬ್ದವಾಗುವಂತಹ ಬಾಂಬುಗಳನ್ನು ಸ್ಫೋಟಿಸಿದ್ದರು. +ಆ ಶಬ್ದದ ಭಯದಿಂದ ಜನ ದಿಕ್ಕಾಪಾಲಾಗಿ ಓಡಿಹೋಗಿದ್ದರು. +ದೇಶದ ಸ್ವಾತಂತ್ರ್ಯಕ್ಕೆ ಹೋರಾಡುವ ಯಾರೇ ಬಂದರೂ ಇವರ ಮನೆಯಲ್ಲೇ ಊಟ, ವಸತಿ. +ಅದಕ್ಕಾಗಿ ಐವತ್ತು ಎಕರೆ ಜಮೀನು ಮಾರಿಕೊಂಡರು. +ನಮ್ಮ ಹೇಡಿ ದೇಶ ದ್ರೋಹಿಗಳ ಕಾರಣವಾಗೇ ಇವರು ಮೂರು ಸಲ ಜೈಲಿನ ವಾಸ ಅನುಭವಿಸಿದರಲ್ಲದೇ ಆ ಬಿಳಿಯರ ಒದೆತ, ಹೊಡೆತಗಳನ್ನು ತಿಂದಿದ್ದಾರೆ. +ಸ್ವಾತಂತ್ರ್ಯ ಬಂದ ಮೇಲೆ ಎಂದೂ ತಾನು ಸ್ವಾತಂತ್ರ್ಯ ಹೋರಾಟಗಾರನೆಂದು ಡಂಗುರ ಸಾರಿಕೊಳ್ಳಲಿಲ್ಲ”ಕಲ್ಯಾಣಿ ಮಾತು ಮುಗಿಸಿದ ಮೇಲೆ ತನ್ನ ಅನುಮಾನ ನಿವಾರಿಸಿಕೊಳ್ಳುವಂತೆ ಕೇಳಿದ ತೇಜಾ. +“ದೇವಿಯಾದವ ಬಾಂಬು ಸ್ಫೋಟದಲ್ಲಿ ನಾಶವಾದ ದಿನ ನಾವೆಲ್ಲಾ ನಿಮ್ಮ ಮನೆಗೆ ಬಂದಿದ್ದೆವು ಆಗ ಎಸ್.ಪಿ., ಕಲೆಕ್ಟರ್ ನಿಮ್ಮ ಪ್ರಾಣಮಿತ್ರ…” +“ಅದೆಲ್ಲಾ ನಟನೆ, ಕಲ್ಯಾಣಿಯನ್ನು ಕಾಪಾಡಲು ನಟನೆ, ಅದು ಆ ದರಿದ್ರರಿಗೆ ಗೊತ್ತಾಗುವುದಿಲ್ಲ. +ಆಗಾಗ ಅವರ ಮುಖಕ್ಕೆ ಭಿಕ್ಷೆಯನ್ನು ಎಸೆಯುತ್ತೇನೆ ಅದೂ ಕಲ್ಯಾಣಿಗಾಗಿ. +ಅವರುಗಳು ತಮ್ಮ ಅಧಿಕಾರ ಚಲಾಯಿಸುವುದರಲ್ಲಿ ಲೋಲುಪರಾಗಿದ್ದಾರೆ ಅದನ್ನು ಅರಿಯುವಷ್ಟು ಬಿಡುವಿಲ್ಲ ಅವರ ಬಳಿ” ಅವನ ಮಾತು ಮುಗಿಯುವ ಮುನ್ನ ಉದ್ದನೆಯ ವಿವರಣೆ ನೀಡಿದರವರು. +“ಅಂದರೆ ಇಲ್ಲಿಂದಲೇ ರಿಮೋಟ್…” +“ಇಲ್ಲ.ನಾನೇನು, ಯಾವಾಗ ಮಾಡುತ್ತೇನೆಂಬುವುದು ಅವರಿಗೆ ಗೊತ್ತಿಲ್ಲ… ನಿನ್ನ ಹಾಗೆ” ಅವನು ಮಾತು ಪೂರ್ತಿ ಮಾಡುವ ಮುನ್ನ ಹೇಳಿದಳು ಕಲ್ಯಾಣಿ. +“ಈಗ ಇವಳನ್ನು ಕ್ರಾಂತಿಕಾರಿ ಎಂದು ಬೇಟೆ ಆಡುತ್ತಿದೆ ಸರಕಾರ. +ಅದೇ ಚಂಡಾಲರನ್ನು, ದೇಶದ್ರೋಹಿಯರನ್ನು ಏನೂ ಮಾಡುವುದಿಲ್ಲ. +ನಿಯತ್ತಿನ ಸರಕಾರವಾಗಿದ್ದರೆ ಆ ದಾವುದ್ ಇಬ್ರಾಹಿಂ, ಆರುನಗೌಳಿ, ವೀರಪ್ಪನ್ ಇಂತಹ ಎಷ್ಟೋ ಜನರಿದ್ದಾರೆ ಅವರನ್ನು ಕೊಂದು ಎನ್‌ಕೌಂಟರ್‌ ಅನ್ನಬೇಕು. +ಅದನ್ನು ಬಿಟ್ಟು ದೇಶ ನಾಶಮಾಡಲು ಹೊರಟಿರುವ ಕ್ರಿಮಿಗಳನ್ನು ಇವರು ಹೊಸಕಿಹಾಕುತ್ತಿದ್ದಾರೆ. +ಇವಳನ್ನು ಮುಗಿಸಲು ಯತ್ನಿಸುತ್ತದೆ ಈ ಸರಕಾರ. +ಈಗಲಾದರೂ ಎಚ್ಚರಗೊಳ್ಳದಿದ್ದರೆ ದೇಶ ನಾಶವಾಗಿ ಹೋಗುತ್ತದೆ. +ತಮ್ಮ ಕೋಪವನ್ನು ತಡೆಯಲಾರದವನಂತೆ ಹೇಳಿದರು ಪಟ್‌ವಾರಿ“ನಿಮ್ಮ ಊಟ…. ” +“ಆಯಿತು ಸರಿಯಾಗಿ ಏಳೂವರೆಗೆ ಎರಡು ಚಪಾತಿಯನ್ನು ತಿನ್ನುತ್ತಾರೆ ಅದೇ ಅವರ ಊಟ” ಮತ್ತೆ ತೇಜಾ ಮಾತಾಡುತ್ತಿದ್ದಂತೆ ಉತ್ತರಿಸಿದಳು ಕಲ್ಯಾಣಿ ತನ್ನ ಮನದ ಗೊಂದಲಕ್ಕೆ ಅರ್ಥ ಹುಡುಕುವಂತೆ ಕೇಳಿದ ತೇಜಾ. +“ಈಗ ದೇಶವನ್ನು ಮುಂದೆ ತರಲು ಏನು ಮಾಡಬೇಕು ಸರ್?” +“ಮೊದಲು ಒಗ್ಗಟ್ಟು ಬೇಕು. +ಅಂತರಾಷ್ಟ್ರೀಯ ಸ್ಥರದಲ್ಲಿ ಮಾತಾಡುವಾಗ ಪಾರ್ಟಿಗಳೂ ತಮ್ಮ ಮತ ಭೇದವನ್ನು ಮರೆತು ಏಕಕಂಠದಿಂದ ಮಾತಾಡಬೇಕು. +ಮೊನ್ನೆ ಪೋಖರಾನ್‌ನಲ್ಲಿ ಅಣುಬಾಂಬನ್ನು ಸ್ಫೋಟಿಸಿದಾಗ, ನಮ್ಮ ಶಕ್ತಿಯನ್ನು ಲೋಕಕ್ಕೆಲ್ಲಾ ತೋರಿದಾಗಲೂ ಎಲ್ಲಾ ಪಾರ್ಟಿಗಳು ನಾವು ಮಾಡಿದ್ದು ಸರಿ ಎಂದು ಕೂಗಿ ಹೇಳಲಿಲ್ಲ. +ಈ ಬಲಿಷ್ಟ ರಾಷ್ಟ್ರಗಳ ಬಾಲ ಹಿಡಿದು ತೇಕುವುದು ಬಿಡಬೇಕು” ಅವರು ಲಹರಿಯಲ್ಲಿ ಬೇರೆಲ್ಲೊ, ಹೋಗುತ್ತಿದ್ದನೆನಿಸಿ ಅವರು ಮಾತು ನಿಲ್ಲಿಸಿದಾಗ ಕೇಳಿದ ತೇಜಾ. +“ನಮ್ಮ ದೇಶ ಮುಂದೆ ಬರಬೇಕಾದರೆ, ನಮ್ಮ ಕಾಲ ಮೇಲೆ ನಾವು ನಿಲ್ಲುವಂತಾಗಬೇಕಾದರೆ ಏನು ಮಾಡಬೇಕು”ಸೋಫಾದಲ್ಲಿ ಕಾಲು ಚಾಚಿ ಕೂಡುತ್ತಾ ಹೇಳಿದರು ಪಟ್‌ವಾರಿ“ಮೊದಲು ಹಂದಿಯ ಸಂತಾನದಂತೆ ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಬೇಕು. +ಎಲ್ಲ ಹಂತಗಳಲ್ಲೂ ಭ್ರಷ್ಟಚಾರ ಲಂಚಕೋರತನ ನಿಲ್ಲಬೇಕು. +ಅದು ಕಷ್ಟದ ಕೆಲಸವೆಂದು ನೀ ಹೇಳಬಹುದು. +ಆದರೆ ಮನಸ್ಸು ಮಾಡಿದರೆ ಯಾವುದೂ ಕಷ್ಟವಲ್ಲ. +ಪೊಲೆಟಿಕಲ್ ವಿಲ್ ಬೇಕು. +ಒಂದು ಮಗುವಾಗುತ್ತಲೇ ಕೇಳದಿದ್ದರೆ ಬಲವಂತವಾಗಿಯಾದರೂ ಮುಖ್ಯವಾಗಿ ಒಂದು ಮಗುವಿಗೆ ಜನ್ಮವಿತ್ತ ಹೆಣ್ಣಿಗೆ ಆಪರೇಶನ್ ಮಾಡಿಬಿಡಬೇಕು. +ಯಾವ ಪಾರ್ಟಿ ಸರಕಾರಕ್ಕೆ ಬಂದರೂ ಇದನ್ನು ಮಾಡುವುದಿಲ್ಲ. +ಯಾಕೆಂದರೆ ಅವರುಗಳಿಗೆ ಓಟಿನ ಚಿಂತೆ. +ಈಗಂತೂ ರಾಜಕೀಯ ಒಂದು ದೊಡ್ಡ ವ್ಯಾಪಾರವಾಗಿ ಬಿಟ್ಟಿದೆ. +ಅದು ನಿಲ್ಲಬೇಕು. +ಭ್ರಷ್ಟಾಚಾರದಲ್ಲಿ ಸಿಲುಕಿರುವವರನ್ನು ಕಲ್ಯಾಣಿ ಮುಗಿಸುತ್ತಿರುವ ಹಾಗೆ ಮುಗಿಸಿಬಿಡಬೇಕು. +ಎಲ್ಲರಿಗೂ ಶಿಕ್ಷಣ ದೊರೆತರ ಇದನ್ನು ಮಾಡುವುದು ಸುಲಭ. +ಆದರೆ ಈಗ ಅದು ಕೂಡ ಬೃಹತ್ ವ್ಯಾಪಾರವಾಗಿ ಬೆಳೆದುಬಿಟ್ಟಿದೆ. +ಈಗಿನ ನಮ್ಮ ರಾಜಕಾರಣಿಯರನ್ನು ನೋಡು ಪ್ರಧಾನಮಂತ್ರಿಯರೂ ಕೋಟ್ಯಾನುಗಟ್ಟಲೆ ತಿಂದಿದ್ದಾರೆಂದರೆ ಈ ದೇಶದ ಗತಿ ಏನು? +ಮಣ್ಣಿನಮಗನೆಂದು ಒಬ್ಬ ಪ್ರಧಾನ ಮಂತ್ರಿಯವರ ಹಳ್ಳಿಯ ಹಾಳಾದ ಮನೆಯನ್ನು ಟಿ.ವಿಯಲ್ಲಿ ತೋರಿಸುತ್ತಾರೆ. +ಅವರಿಗೀಗ ಪಟ್ಟಣದಲ್ಲಿ ಎಷ್ಟು ಬಂಗಲೆಗಳಿವೆ. +ಹೆಂಡತಿ ಮಕ್ಕಳು ಅಳಿಯಂದಿರ ಹೆಸರಿನಲ್ಲಿ ಎಷ್ಟು ಆಸ್ತಿ ಇದೆ ತೋರಿಸುತ್ತಾರೆಯೇ! ಇಲ್ಲ. +ಮಾಫಿಯಾ ಗ್ಯಾಂಗಿಗೆ ಸೇರಿದವರು ಮುಖ್ಯಮಂತ್ರಿಯಗಳಾಗಿದ್ದಾರೆ, ಮುದುಕರಾದರೂ ಇನ್ನೂ ಹೆಣ್ಣು, ಹೆಂಡದ ರುಚಿಯನ್ನು ತಾವು ಬಿಟ್ಟಿಲ್ಲ ಎಂಬುವವರು ಮುಖ್ಯಮಂತ್ರಿಗಳಾಗಿದ್ದಾರೆ. +ಇವರುಗಳನ್ನು ಕೋರ್ಟು ಕಚೇರಿಗಳಿಗೆ ತಿರುಗಿಸಬಾರದು ಒಂದೇ ಸಲ ಮುಗಿಸಿ…” ಮತ್ತೆ ಅವರಿಗೆ ಕೆಮ್ಮು ಆರಂಭವಾಯಿತು. +ಕಲ್ಯಾಣಿ ಅವರ ಇನ್ನೊಂದು ಬದಿಗೆ ಕುಳಿತು ಬೆನ್ನು ನೀವತೊಡಗಿದಳು. +ಕೆಮ್ಮು ನಿಂತ ಮೇಲೇ ಅವರೇ ಟೇಬಲಿನ ಮೇಲಿದ್ದ ಗ್ಲಾಸಿನಿಂದ ಎರಡು ಗುಟುಕು ನೀರು ಕುಡಿದರು. +“ನಿಮಗಿನ್ನು ಮಲಗುವ ಸಮಯವಾಯಿತು ಮಲಗಿ” ಹೇಳಿದಳು ಕಲ್ಯಾಣಿ. +“ನೋಡು ತೇಜಾ ನನಗೆ ಗಂಡುಮಗನಿಲ್ಲ. +ನಿನ್ನನ್ನೇ ನನ್ನ ಮಗನೆಂದುಕೊಳ್ಳುತ್ತೇನೆ. +ಕಲ್ಯಾಣಿಯಂತಹ ಹುಡುಗಿ ನಿನ್ನ ಮದುವೆಯಾದದ್ದು ನಿನ್ನ ಪುಣ್ಯ. +ಯಾರಿಗೂ ಭಯಪಡದೇ ಸುಖವಾಗಿರಿ. +ಮುಂದೇನು ಆಗಲಿದೆಯೋ ಅದು ಅಗುತ್ತದೆ”ಅವನ ಬೆನ್ನು ತಟ್ಟುತ್ತಾ ಹೇಳಿದರು ಪಟ್‍ವಾರಿ. +ಅವನಿಗರಿವಿಲ್ಲದಂತೆ ಬಗ್ಗಿ ಅವರ ಕಾಲುಗಳಿಗೆ ನಮಸ್ಕರಿಸಿ ಕೇಳಿದ ತೇಜಾ. +“ನನಗೆ ತಂದೆ ಇಲ್ಲ. +ನಿಮ್ಮನ್ನು ಅಪ್ಪಾ ಎಂದು ಕರೆಯಬಹುದೇ?” +“ಅದಕ್ಕಿಂತ ಸಂತೋಷದ ವಿಷಯ ನಮಗ್ಯಾವುದಪ್ಪಾ, ನಾವೇ ನಿನಗೆ ತಾಯಿ ಎಂದು ತಿಳಿ. +ಕಲ್ಯಾಣಿ, ನಿನ್ನ ಬಗ್ಗೆ ಎಲ್ಲಾ ಹೇಳಿದ್ದಾಳೆ” ತುಂಬು ಮನಸ್ಸಿನಿಂದ ಹೇಳಿದರು ಅವರ ಮಡದಿ. +ಎದ್ದ ತೇಜಾ ಅವರ ಕಾಲಿಗೂ ನಮಸ್ಕರಿಸಿದ. +ಸೋಫಾದಿಂದೆದ್ದು ನಗುತ್ತಾ ಹೇಳಿದರು ಪಟ್‌ವಾರಿ ಸಾಹೇಬರು. +“ನೀನೊಂದು ಒಳ್ಳೆಯ ಕೆಲಸ ಮಾಡಿರುವೆ. +ಮನುಷ್ಯರ ಭಾವನೆಗಳನ್ನು ಅಣಗಿಸಿ ಅವರನ್ನು ಯಂತ್ರಗಳಂತೆ ರೂಪಿಸಬೇಕೆಂದುಕೊಂಡಿದ್ದಳು ಕಲ್ಯಾಣಿ. +ನಿನ್ನ ಮದುವೆಯಾದಾಗಿನಿಂದ ಅದು ಸಾಧ್ಯವಿಲ್ಲವೆಂದು ಗೊತ್ತಾಗಿದೆ ಅವಳಿಗೆ” +“ಹೌದು!ಆ ವಿಷಯದಲ್ಲಿ ತೇಜಾ ನನಗೆ ತನ್ನದೇ ರೀತಿಯಲ್ಲಿ ಪಾಠ ಕಲಿಸಿದ” ಒಪ್ಪಿಕೊಂಡಳು ಕಲ್ಯಾಣಿ. +“ನೀವು ಹೋಗಿ ಊಟ ಮಾಡಿ ಸುಖವಾಗಿ ಯಾರ ಭಯವೂ ಇಲ್ಲದೇ ಮಲಗಿ” ಹೇಳಿದರು ಪಟ್‌ವಾರಿ. +“ನೀವಿಬ್ಬರೂ ಒಂದು ಕಡೆ ನಿಲ್ಲಿ ನಾವು ಆಶೀರ್ವಾದ ಪಡೆದು ಹೋಗುತ್ತೇವೆ” ಎಂದಳು ಕಲ್ಯಾಣಿ. +“ಈಗೀಗ ಇದನ್ನೂ ಕಲಿತಿದ್ದಾಳೆ. +ನಮ್ಮ ಕೆಲ ಸಂಪ್ರದಾಯಗಳನ್ನು ನಾವು ಬಿಡಬಾರದು. +ಅದು ಬಿಟ್ಟರೆ ನಮ್ಮ ಅಸ್ತಿತ್ವವೇ ಇರುವುದಿಲ್ಲ” ಎಂದ ಪಟ್‌ವಾರಿಯವರು ತಮ್ಮ ಮಡದಿಯ ಬದಿ ಬಂದು ನಿಂತರು. +ತೇಜಾ ಮತ್ತು ಕಲ್ಯಾಣಿ ಅವರಿಬ್ಬರ ಕಾಲಿಗೆ ನಮಸ್ಕರಿಸಿದರು. +“ಮತ್ತೊಬ್ಬ ಭಗತಸಿಂಗ ಈ ಮನೆಯಲ್ಲೇ ಹುಟ್ಟಲಿ ಹೋಗಿ” ಎಂದು ಆಶೀರ್ವದಿಸಿದರವರು. +ಅವರಿಬ್ಬರೂ ತಮ್ಮ ಮಲಗುವ ಕೋಣೆಯ ಒಳಗೆ ಹೋಗುವವರೆಗೂ ನೋಡುತ್ತಲಿದ್ದ ಕಲ್ಯಾಣಿ ಮತ್ತು ತೇಜಾ ಮುಂದೆ ನಡೆದರು. +ಅವನನ್ನು ಅಡುಗೆಯ ಮನೆಗೆ ಕರೆದೊಯ್ದಳು ಕಲ್ಯಾಣಿ. +ಅಲ್ಲಿ ಹೋದ ಮೇಲೆ ಕೇಳಿದಳವಳು. +“ನಿನ್ನ ಅನುಮಾನ ನೀಗಿತೆ?” +“ಇಂತಹ ಮಹಾಪುರುಷರ ಭೇಟಿಯಾಗಿದ್ದು ನನ್ನ ಪುಣ್ಯವೆನಿಸುತ್ತದೆ” ಇನ್ನೂ ಅವರ ಮಾತಿನ ಗುಂಗಿನಲ್ಲೇ ಇದ್ದ ತೇಜಾ ಹೇಳಿದ. +“ಇನ್ನೊಮ್ಮೆ ತೋರಿಸುತ್ತೇನೆ. +ನೆಹರು, ಗಾಂಧಿ, ಪಟೇಲ್‌ರ ಜತೆ ಅವರ ಹಳೇ ಫೋಟೋಗಳಿವೆ. +ಸ್ವಾತಂತ್ರ್ಯ ಬಂದನಂತರ ನೆಹರು ಇವರನ್ನು ಎಲೆಕ್ಷನ್‌ಗೆ ನಿಲ್ಲಿ ಎಂದರಂತೆ. +ಇವರು ನನ್ನ ಕೆಲಸ ಮುಗಿಯಿತು ಮುಂದಿನದೆಲ್ಲಾ ನೀವೇ ನೋಡಿಕೊಳ್ಳಿ ಎಂದರಂತೆ” ಹೇಳಿದಳು ಕಲ್ಯಾಣಿ. +ದೊಡ್ಡ ಅಡುಗೆಮನೆ. +ಅದರಲ್ಲಿ ಹೊಸದಾಗಿ ಹಾಕಿಸಿದಂತಹ ಡೈನಿಂಗ್ ಟೇಬಲ್ ವಯಸ್ಸಾದುದರಿಂದ ಅವರಿಗೆ ಕೆಳೆಗ ಕೂಡಲು ಕಷ್ಟವಾಗಬಹುದೆಂದು ಅದನ್ನು ತಾನೇ ಅವರಿಗೆ ಬಲವಂತ ಮಾಡಿ ತರಿಸಿರುವದಾಗಿ ಹೇಳಿದಳು ಕಲ್ಯಾಣಿ. +ಅವತ್ತು ಪಟ್‌ವಾರಿ ಮತ್ತು ಅವರ ಮಡದಿ ಸೇರಿ ಹಬ್ಬದ ಅಡುಗೆ ಮಾಡಿಸಿದ್ದರು. +ಇಬ್ಬರೂ ಊಟ ಆರಂಭಿಸಿದಾಗ ಕೇಳಿದ ತೇಜಾ. +“ಇಲ್ಲಿ ಎಷ್ಟು ಜನ ಆಳುಗಳಿದ್ದಾರೆ? ”. +“ಹೊಲದಲ್ಲಿ ಕೆಲಸ ಮಾಡಿಹೋಗುವವರು ಬಹಳ ಜನರಿರಬಹುದು. +ನಾನು ಬಂದಾಗ ಮನೆ ಕಾವಲಿಗೆ ಮೂವರಿರುತ್ತಾರೆ. +ನಿಜ ಹೇಳಬೇಕೆಂದರೆ ಅದರ ಅವಶ್ಯಕತೆ ಇಲ್ಲ. +ಯಾಕೆಂದರೆ ಇಡೀ ಊರೇ ಇವರು ಹೇಳಿದಂತೆ ಕೇಳುತ್ತದೆ. +ನಾನಿಲ್ಲಿ ಬಂದದ್ದು ನಂತರ ನೀನು ಬಂದದ್ದು ಬಹು ಜನ ನೋಡಿರಬಹುದು. +ಆದರೆ ಅದರ ಬಗ್ಗೆ ಯಾರೂ ಮಾತಾಡುವುದಿಲ್ಲ. +ಅದು ಪೋಲಿಸಿನವರಿಗೇ ಆಗಲಿ ಅವರಿಗೆ ಮಾಹಿತಿ ಕೊಡುವವರಿಗೇ ಆಗಲಿ ಗೊತ್ತಾಗುವುದಿಲ್ಲ” ಪೂರ್ತಿ ಆತ್ಮವಿಶ್ವಾಸದ ದನಿಯಲ್ಲಿ ಹೇಳಿದಳು ಕಲ್ಯಾಣಿ. +ಊಟ ಮಾಡುತ್ತಲೇ ಅವರು ಪಟವಾರಿಯವರ ಸಂಸಾರದ ಬಗ್ಗೆ ಮಾತಾಡಿದರು. +ಅವರಿಗೆ ಒಬ್ಬಳೇ ಮಗಳು. +ಮಗ ಸೊಸೆ ಅಮೆರಿಕಾದಲ್ಲಿದ್ದಾರೆ. +ವರ್ಷಕ್ಕೆ, ಎರಡು ವರ್ಷಕ್ಕೆ ಒಂದು ಸಲ ತಂದೆಯನ್ನು ಭೇಟಿಯಾಗಲು ಬರುತ್ತಾಳೆ ಮಗಳು. +ಮಗಳೊಡನೆ ಮಾತಾಡಲೇ ಫೋನು ಇರಿಸಿಕೊಂಡಿದ್ದಾರೆ. +ಅದರ ನಂಬರ್ ಆಮೇಲೆ ಬರೆದುಕೊಳ್ಳುತ್ತೇನೆಂದ ತೇಜ. +ಅವರ ಮಾತಿಗೆ ದೇವನಹಳ್ಳಿಯಲ್ಲೇ ಅಲ್ಲ ಅಕ್ಕಪಕ್ಕ ಹಳ್ಳಿಗಳಲ್ಲೂ ಗೌರವವಿದೆ. +ತಾನು ಅವರ ಮನೆಗೆ ಬರುವುದು ಹೋಗುವುದು ಬಹಳ ಜನರಿಗೆ ಗೊತ್ತು. +ಆದರೂ ಈವರೆಗೆ ಪೋಲಿಸರ ಇಂಟೆಲಿಜೆನ್ಸ್ ಶಾಖೆಯಾಗಲಿ, ಸ್ಕ್ವಾಡಿನ ಮುಖ್ಯಸ್ಥರು ಶ್ರೀವಾಸ್ತವರಾಗಲಿ ಅದನ್ನು ಕಂಡುಹಿಡಿಯಲಾಗಿಲ್ಲ. +ವಿವರಗಳು ಅವಳಿಂದ ಬರುತ್ತಿರುವುದರಲ್ಲಿ ಊಟ ಮುಗಿಯಿತು. +ಮಲಗುವ ಕೋಣೆಯಲ್ಲಿ ಒಂದು ಮಂಚದಲ್ಲಿ ಉರುಳಿದರೂ ಪಟವಾರಿಯವರ ಮಾತುಗಳೇ ತೇಜಾನ ತಲೆಯಲ್ಲಿ ಸುತ್ತುತ್ತಿದ್ದವು. +ತನ್ನದು ಯಾವ ದಾರಿ ಎಂದವನು ಈಗಲೂ ನಿಶ್ಚಯಿಸಲು ಸಾಧ್ಯವಾಗಿರಲಿಲ್ಲ. +ಬಾಗಿಲಿಗೆ ಬೋಲ್ಟು, ಎಳೆದುಬಂದು ಅವನ ಬದಿಯಲ್ಲಿ ಮಲಗಿದ ಕಲ್ಯಾಣಿ ಎದೆಕೂದಲಲ್ಲಿ ಕೈಯಾಡುತ್ತಾ ಕೇಳಿದಳು. +“ಏನು ಯೋಚಿಸುತ್ತಿದ್ದಿ?” +“ನಾನ್ಯಾವ ಮಾರ್ಗವನ್ನು ಅನುಸರಿಸಬೇಕೋ ನನಗಿನ್ನೂ ಗೊತ್ತಾಗುತ್ತಿಲ್ಲ.” ಅವಳ ಕಡೆ ನೋಡದೆ ಹೇಳಿದ ತೇಜಾ. +“ಅದರಲ್ಲಿ ಯೋಚಿಸುವುದು ಏನೂ ಇಲ್ಲ ತೇಜಾ, ನಿನ್ನ ಕೆಲಸ ನೀನು ಮುಂದುವರೆಸು ಮುಂದೆ ಏನಾಗುವುದಿದೆಯೋ ಅದೇ ಆಗುತ್ತದೆ. +ನಮ್ಮ ಕೈಯಲ್ಲಿ ಏನೂ ಇಲ್ಲ” ಅವನಿಗೆ ಸಮಾಧಾನ ಹೇಳುವಂತಹ ದನಿಯಲ್ಲಿ ಮಾತಾಡಿದಳು ಕಲ್ಯಾಣಿ. +“ಎಷ್ಟು ದಿನ ನಾನು ಸರಕಾರಕ್ಕೆ ಸುಳ್ಳುಗಳು ಹೇಳಿ ಮೋಸಮಾಡಲಿ” ತನ್ನನ್ನು ತಾನೇ ಕೇಳಿಕೊಳ್ಳುವಂತೆ ಮಾತಾಡಿದ ತೇಜಾ. +“ನೀನು ಸುಳ್ಳು ಹೇಳುತ್ತಿಲ್ಲ ತೇಜಾ. +ಕಲ್ಯಾಣಿ ಎಲ್ಲಿದ್ದಾಳೆಂದು ಯಾರೂ ಕಂಡು ಹಿಡಿಯಲಾರರು. +ನೀನು ಇಲ್ಲಿ ಈಗ ಮನಸ್ಸು ಮಾಡಿದರೂ ನನ್ನ ಬಂಧಿಸಲಾರೆ. +ಅದನ್ನು ಸರಿಯಾಗಿ ಅರ್ಥ ಮಾಡಿಕೊ, ಆಗ ನೀನು ಸುಳ್ಳು ಹೇಳುತ್ತಿಲ್ಲವೆಂಬುವುದು ನಿನಗೇ ಗೊತ್ತಾಗುತ್ತದೆ.” ಮತ್ತೆ ಅವನಿಗೆ ತಿಳಿಹೇಳುವಂತಹ ದನಿಯಲ್ಲಿಯೇ ಮಾತಾಡಿದಳು ಕಲ್ಯಾಣಿ. +“ಈ ಅನಿಶ್ಚಿತ ಬದುಕು ಎಷ್ಟು ದಿನ ಬದುಕುವದು” ನಿಸ್ಸಹಾಯಕನಂತೆ ಹೇಳಿದ. +“ಎಷ್ಟು ದಿನ ಉಸಿರಾಡುತ್ತಿರುತ್ತೇವೋ, ಎಷ್ಟು ದಿನ ಬದುಕಿರುತ್ತೇವೋ ಹೀಗೇ ಬದುಕಬೇಕು ಬೇರೆ ಮಾರ್ಗವಿಲ್ಲ.” ವೇದಾಂತಿಯಂತೆ ಹೇಳಿದಳು ಕಲ್ಯಾಣಿ ಯಾವುದೋ ಯೋಚನೆಯಲ್ಲಿ ಮುಳುಗಿಹೋದವನಂತೆ ಮಾತಾಡಿದ ತೇಜ. +“ನೀನು ಈ ನಿನ್ನ ದಾರಿಯನ್ನು ಬಿಡಲು ಸಾಧ್ಯವಿಲ್ಲವೆ?”ವ್ಯಂಗ್ಯದ ನಗೆ ನಕ್ಕು ಮಾತಾಡಿದಳು ಕಲ್ಯಾಣಿ. +“ನಾನೀ ಮಾರ್ಗವನ್ನು ಬಿಟ್ಟು ಮುಖ್ಯ ಧಾರೆಯಲ್ಲಿ ಸೇರುತ್ತೇನೆಂದರು ಪೋಲೀಸಿನವರು ನನ್ನ ಬಂಧಿಸಿ ಕಾಡಿನಲ್ಲಿ ಕೊಂದುಹಾಕುತ್ತಾರೆ. +ಅಂತಹ ನಿಷ್ಕ್ರಿಯ, ಹೇಡಿಯ ಸಾವು ನನಗೆ ಬೇಡ.”ಏನು ಮಾಡಬೇಕೋ ತೋಚದವನಂತೆ ಅವಳ ಕಡೆ ತಿರುಗಿದ. +ಅವನನ್ನೇ ನೋಡುತ್ತಿದ್ದ ಅವಳು ಉಕ್ಕಿಬಂದ ಪ್ರೀತಿಯಿಂದ ಅವನನ್ನು ಮುದ್ದಿಸಿ ಹೇಳಿದಳು. +“ನಿನ್ನ ಬಿಟ್ಟು ನನ್ನಿಂದ ಬದುಕಿರಲು ಸಾಧ್ಯವಿಲ್ಲ. +ದಯವಿಟ್ಟು ನಾ ಬದುಕಿರುವವರೆಗಾದರು ನನ್ನ ಬಿಟ್ಟು ಹೋಗಬೇಡ ತೇಜಾ” +“ಇಲ್ಲಾ!ನಿನ್ನ ಬಿಟ್ಟು ನಾ ಹೋಗುವುದಿಲ್ಲ. +ನೀನೇ ಜತೆಗಿಲ್ಲದಿದ್ದರೆ ನಾನ್ಯಾರು”ಭಾವುಕವಾಗಿದ್ದವು. +ಅವನ ಮಾತುಗಳು, ಆ ಎರಡೂ ದೇಹಗಳು ಒಂದಾಗುವಂತೆ ಒಬ್ಬರನ್ನೊಬ್ಬರು ಅಪ್ಪಿದರು. +ಕಲ್ಯಾಣಿಯ ಕಿವಿಯ ಬಳಿ ಉಸುರಿದ ತೇಜಾ. +“ಭಗತ್‌ಸಿಂಗ್‌ನನ್ನು ರೂಪಿಸುವ ಕೆಲಸ ಆರಂಭವಾಯಿತು”ಅವನ ಕಪೋಲಕ್ಕೆ ತನ್ನ ಕಪೋಲ ಉಜ್ಜುತ್ತಾ ಉನ್ಮಾದ ದನಿಯಲ್ಲಿ ಹೇಳಿದಳು ಕಲ್ಯಾಣಿ“ಅವರ ಮಾತು ನಿಜವಾಗಲಿ.” +ಆ ರಾತ್ರೀ ಅವರಿಬ್ಬರೂ ಬಿಡುವಾಗಿ ಒಬ್ಬರ ಅವಯವಗಳನ್ನೊಬ್ಬರು ಅರ್ಥ ಮಾಡಿಕೊಳ್ಳುವ ಕೆಲಸದಲ್ಲಿ ತೊಡಗಿದರು. +ಆ ದಿನದಿಂದ ಸುಮಾರು ಒಂದೂವರೆ ತಿಂಗಳು ಯಾವ ವಿಶೇಷ ಘಟನೆಯೂ ನಡೆಯದೇ ಉರುಳಿಹೋಯಿತು ಕಾಲ. +ಬಂಡೇರಹಳ್ಳಿಯ ಆಸ್ಪತ್ರೆ ಸರಿಯಾದ ಸಮಯಕ್ಕೆ ತೆಗೆಯುತ್ತಿತ್ತು. +ಅಲ್ಲಿಗೆ ಬಂದ ಹೊಸ ಡಾಕ್ಟರ್ ಯಾವ ಲಂಚದ ಆಮಿಷವೂ ಇಲ್ಲದೇ ಅಲ್ಲಿಯವರ ಚಿಕಿತ್ಸೆ ಮಾಡುತ್ತಿದ್ದ. +ಕಳ್ಳತನದಿಂದ ಸಾರಾಯಿ ಮಾರುವುದು ನಿಂತು ಕೆಲ ಕುಡುಕರು ಸುಧಾರಿಸಿ ತಮ್ಮ ತಮ್ಮ ಕೆಲಸಗಳಿಗೆ ಹೋಗಲಾರಂಭಿಸಿದ್ದರು. +ಲಾಟರಿಯಿಂದ ಒಮ್ಮಿಂದೊಮ್ಮೆ ಧನವಂತರಾಗುವ ಕನಸನ್ನು ಬಿಟ್ಟ ಜೂಜುಖೋರರಲ್ಲಿ ಕೆಲವರು ಬೇರೆ ಜೂಜಿನ ಮಾರ್ಗ ಹುಡುಕುತ್ತಿದ್ದರು. +ಇನ್ನೂ ಕೆಲವರು ಎಲ್ಲಾ ಹತ್ತಿರದಲ್ಲಿ ಆ ಅಂಗಡಿ ಇಲ್ಲದ ಕಾರಣ ಜೂಜಿನ ಚಟವನ್ನು ಮರೆತು ಹಣವನ್ನು ಕೂಡಿಹಾಕುವ ಯೋಚನೆಯಲ್ಲಿ ಸಿಕ್ಕ ಕೆಲಸ ಮಾಡಲಾರಂಭಿಸಿದರು. +ಸಿದ್ಧಾನಾಯಕ್‌ನ ವರ್ತನೆಯಲ್ಲಿ ಬಹಳಷ್ಟು ಮಾರ್ಪಾಟಾಗಿತ್ತು. +ಎಲ್ಲರೊಡನೆ ಕಲೆತು ಮೇಲೆತು ಇರತೊಡಗಿದ. +ಉತೇಜ್‌ನ ಹೆಸರಿನಲ್ಲಿ ಆರಂಭವಾದ ಸಂಘ ಆಗಲೇ ಮೂರು ಒಳ್ಳೆ ಕಾರ್ಯಕ್ರಮಗಳನ್ನು ಕೊಟ್ಟು ಹೆಸರು ಮಾಡಿತ್ತು. +ಬೇರೆ ಊರುಗಳಲ್ಲಿ ಅವರಿಗೆ ತಮ್ಮ ಕಾರ್ಯಕ್ರಮ ನಡೆಸಲು ಆಹ್ವಾನಗಳು ಬರಲಾರಂಭಿಸಿದ್ದವು. +ವಾರಕ್ಕೊಂದು ಸಲ ತನ್ನ ಪರಿಧಿಯಲ್ಲಿದ್ದ ಹಳ್ಳಿಗಳನ್ನು ಒಂದು ಸಲ ಸುತ್ತಿ ಹಾಕಿ ಬರುತ್ತಿದ್ದ ತೇಜಾ, ಆ ಒಂದೂವರೆ ತಿಂಗಳಲ್ಲಿ ಕೇವಲ ಆರು ಸಲ ಕಲ್ಯಾಣಿಯನ್ನು ಪಟವಾರಿಯವರ ಮನೆಯಲ್ಲಿ ಭೇಟಿಯಾಗಿದ್ದ ತೇಜ. +ಆ ದಿನಗಳಲ್ಲಿ ನಡೆದ ಒಂದೇ ಒಂದು ವಿಶೇಷವೆಂದರೆ ಊರಿನ ಜನರನ್ನೆಲ್ಲಾ ಕರೆದು, ರಾಮನಗರದಿಂದ ಕಲೆಕ್ಟರ್ ಮತ್ತು ಎಸ್.ಪಿ.ಯವರಿಗೆ ಕೂಡ ಆಹ್ವಾನ ಕಳಿಸಿ ತೇಜಾನನ್ನು ತಾವು ದತ್ತುಪುತ್ರನನ್ನಾಗಿ ಸ್ವೀಕರಿಸುಟ್ತಿರುವುದಾಗಿ ಘೋಷಿಸಿದ್ದರು ಪಟುವಾರಿಯವರು. +ಅವರ ಮನೆ ಎದುರೇ ಎಲ್ಲರಿಗೂ ಹಬ್ಬದ ಅಡುಗೆಯ ಊಟವಾಗಿತ್ತು. +ಉತೇಜ್ ದೇವನಹಳ್ಳಿಯ ರಾಮಚಂದ್ರ ಪಟವಾರಿಯವರ ದತ್ತು ಪುತ್ರನೆಂದೂ ದಾಖಲಾಗಿತ್ತು. +ಆ ದಿನ ಪಟವಾರಿಯವರ ಮನೆಗೆ ಹೋದಾಗ ಅವನನ್ನು ಬಿಗಿದಪ್ಪಿ ತಾನು ತಿಂಗಳು ತಪ್ಪಿ ಹದಿನೈದು ದಿನಗಳಾಯಿತೆಂದು ಹೇಳಿದಳು ಕಲ್ಯಾಣಿ. +ಅವರಿಬ್ಬರ ಸಂತಸ ಸಂಭ್ರಮಕ್ಕೆ ಪಾರವೇ ಇರಲಿಲ್ಲ. +ಕೂಡಲೇ ಈ ವಿಷಯವನ್ನು ಅಪ್ಪನಿಗೆ ತಿಳಿಸಬೇಕೆಂದು ಹೇಳಿದ ತೇಜಾ, ಪಟವಾರಿ ಮತ್ತವರ ಮಡದಿ ಈಗವನಿಗೆ ಅಪ್ಪ, ಅಮ್ಮ. +ಅವನು ಬಂಡೇರಹಳ್ಳಿಯಿಂದ ದೇವನಹಳ್ಳಿಗೆ ತನ್ನ ವಾಸಸ್ಥಾನವನ್ನು ಬದಲಾಯಿಸಿದರೂ ಬಂಡೇರಹಳ್ಳಿಯ ಮನೆಯನ್ನು ಬಿಟ್ಟಿರಲಿಲ್ಲ. +ತಾನು ತಾಯಿಯಾಗಲಿರುವ ವಿಷಯ ತನಗೆ ಹೇಳಲು ನಾಚಿಕೆ ಎಂದಳು ಕಲ್ಯಾಣಿ. +ತಾನೇ ಹೇಳುತ್ತೇನೆಂದು ಅವಳನ್ನು ಅವರ ಕೋಣೆಗೆ ಬಲವಂತವಾಗಿ ಕರೆತಂದ. +ಒಮ್ಮೆಲೆ ಮಗ ಸೊಸೆ ಬಂದದ್ದು ಆಶ್ಚರ್ಯ ಹುಟ್ಟಿಸಿತು ಹಿರಿಯರಲ್ಲಿ. +ಅವರಿಬ್ಬರಿಗೂ ಕಾಲುಮುಟ್ಟಿ ನಮಸ್ಕರಿಸಿದಾಗ ಇನ್ನೂ ಆಶ್ಚರ್ಯ,“ನಿಮ್ಮ ಆಸೆ ನೆರವೇರಲಿದೆಯಪ್ಪಾ” ಎಂದ ತೇಜಾ, ಆಗಲೂ ಅವರಿಗೆ ಅರ್ಥವಾಗಲಿಲ್ಲ. +“ಎಂತಹ ಆಸೆ” ಒಂದೂ ಅರ್ಥವಾಗದವರಂತೆ ಕೇಳಿದರು. +“ನಿಮ್ಮ ಮನೆಗೆ ಭಗತ್‌ಸಿಂಗ್ ಬರಲಿದ್ದಾನೆ… ಇವಳಿಗೆ ಹೇಳಲು ನಾಚಿಕೆಯಂತೆ”ತೇಜಾನನ್ನು ಮರೆತ ಆ ಹಿರಿಯರು ಕಲ್ಯಾಣಿಯನ್ನು ಬಿಗಿದಪ್ಪಿ, ಅವಳ ಮುಖದ ಮೇಲೆಲ್ಲಾ ಮುದ್ದಿನ ಸುರಿಮಳೆ ಸುರಿಸಿದರು. +ಆಗಿನಿಂದಲೇ ಅವಳು ಏನು ಮಾಡಬೇಕು, ಏನು ಮಾಡಬಾರದು ಏನು ತಿನ್ನಬೇಕು ಏನು ತಿನ್ನಬಾರದು ಎಂಬ ತಾಕೀತು ಆರಂಭಿಸಿದರು ಅಮ್ಮ. +ಅಲ್ಲಿ ಅವರನೊಡನೆ ಮಾತು ಮುಗಿಸಿ ತನ್ನ ಕೋಣೆಗೆ ಮರಳುತ್ತಿದ್ದಾಗ ಹೇಳಿದ ತೇಜಾ. +“ಇದೆಲ್ಲಿಯ ನ್ಯಾಯ!ಕಷ್ಟ ನನ್ನದು, ಬಹುಮಾನ ನಿನಗೆ”ಅವನನ್ನು ತಬ್ಬಿ ಹೇಳಿದಲು ಕಲ್ಯಾಣಿ. +“ಯಾಕೆಂದರೆ ಮುಂದೆ ಕಷ್ಟ ಅನುಭವಿಸುವವಳು ನಾನೇ. +ಇನ್ನೂ ಎಂಟು ತಿಂಗಳು, ಏನೇನು ಕಷ್ಟಗಳನ್ನು ಅನುಭವಿಸಬೇಕೋ! +ಇವತ್ತೇ ನನ್ನ ಸಹಚರರಿಗೆ ನೀನು ನನ್ನ ಪತಿ ಎಂಬ ವಿಷಯ ಹೇಳಿದೆ. +ಹೇಗೂ ಮುಂದೆ ಅವರಿಗೆ ಗೊತ್ತಾಗುತ್ತದೆ” +'ಏನೆಂದರು?' ಆಸಕ್ತಿಯಿಂದ ಕೇಳಿದ. +“ನಾಗೇಶನಿಗೆ ಬಹಳ ಸಂತೋಷವಾದಂತಿದೆ. +ಮಿಕ್ಕವರಲ್ಲಿ ನಾನು ಪರಕೀಯಳಾಗುತ್ತಿದ್ದೇನೆಂಬ ಭಾಸ ಹುಟ್ಟಿರಬಹುದು. +ಆದರೂ ಅದು ಹಾಗಲ್ಲವೆಂದು ಅವರಿಗೆ ಸಮಾಧಾನ ಹೇಳಿದೆ” ಹೇಳಿದಳು ಕಲ್ಯಾಣಿ. +“ಅವರಿಗೆ ನನ್ನ ಮೇಲೆ ಕೋಪ ಬಂದಿರಬಹುದು” ಹೇಳಿದ ತೇಜಾ. +“ಇಲ್ಲ, ಅಂತಹದೇನಿಲ್ಲ. +ಅವರೆಲ್ಲಾ ಈಗ ನಿನ್ನ ಭಾವ ಎಂದು ಕರೆಯುತ್ತಾರೆ” +“ಇಷ್ಟು, ಭಾವ ಮೈದುನಂದಿರು!” ನಗುತ್ತಾ ಹೇಳಿದ ತೇಜಾ. +ಅವನು ಮಾತಾಡಿದ ರೀತಿಗೆ ಕಲ್ಯಾಣಿಯೂ ನಕ್ಕಳು. +ದೇಹಗಳ ಕಾವು ಇಳಿದರೂ ಆ ರಾತ್ರಿ ಅವರಿಬ್ಬರೂ ಮಲಗಲಿಲ್ಲ. +ಭವಿಷ್ಯದ ಚಿಂತನೆ, ಮುಂದೇನಾಗುವುದೋ ಎಂಬ ಗಾಬರಿ ಇದರ ಸುತ್ತ ಅವರ ಮಾತುಗಳು ಸಾಗಿದ್ದವು. +ಈಗ ತೇಜ ಪಟವಾರಿಯವರ ಮನೆಯಲ್ಲಿ ಇರುತ್ತಿದ್ದುದರಿಂದ ಅವರ ಭೇಟಿ ಸುಲಭವಾಗಿತ್ತು. +ದೇವನಹಳ್ಳಿಯ ಯುವಕರನ್ನೂ ಒಗ್ಗೂಡಿಸಿ ಅವರಿಗೂ ಒಂದು ಸಾಂಸ್ಕೃತಿಕ ಸಂಘ ಕಟ್ಟುವಂತೆ ಪ್ರೇರೇಪಿಸಿದ. +ದೇವನಹಳ್ಳಿ ಬಂಡೇರಹಳ್ಳಿಯಷ್ಟು ದೊಡ್ಡದಲ್ಲ. +ಅದಕ್ಕೆ ಅಲ್ಲಿನ ಯುವಕರಲ್ಲಿ ಅದರ ಬಗ್ಗೆ ನಿರಾಸಕ್ತಿ, ಪಟವಾರಿಯವರ ಮನೆಯ ಬದಿಗೆ ಒಂದು ದೊಡ್ಡ ಕೋಣೆ ಇತ್ತು. +ಅದರಲ್ಲಿ ಅವರ ಪೂರ್ವಜರ ಕಾಲದಲ್ಲಿ ಮನೆಯ ಕಾವಲುಗಾರರು ಮಲಗುತ್ತಿದ್ದರು. +ಈಗ ಕೆಲಸಕ್ಕೆ ಬಾರದ ಸಾಮಾನುಗಳಿಂದ ತುಂಬಿತ್ತು. +ಅದನ್ನು ಖಾಲಿ ಮಾಡಿಸಿ ಅದರಲ್ಲಿದ್ದ ಸಾಮಾನುಗಳನ್ನೆಲ್ಲಾ ತಮ್ಮ ಮನೆಗೆ ರವಾನಿಸಿದ್ದ. +ಅಲ್ಲಿನ ಯುವಕರೊಡನೆ ತಾನೂ ಸೇರಿ ಆ ಕೋಣೆಯನ್ನು ಸ್ವಚ್ಛ ಮಾಡಿದ. +ಯಾವ ಆಳನ್ನೂ ಆ ಕೆಲಸಕ್ಕೆ ಉಪಯೋಗಿಸಿರಲಿಲ್ಲ. +ಪಟವಾರಿಯವರ ಮಗ ಅದೂ ಅಲ್ಲದೇ ಇನ್ಸ್‌ಪೆಕ್ಟರ್ ಸಾಹೇಬರು ಅಂತಹ ಕೆಲಸ ಮಾಡಲಾರಂಭಿಸಿದ್ದು ನೋಡಿ ದಂಗಾದ. +ಯುವಕರು ಅವನು ಕಸ ಗುಡಿಸುವುದನ್ನು ನಿಲ್ಲಿಸಲು ಹೋಗಿದ್ದರು. +ಪ್ರತಿ ಮನುಷ್ಯನೂ ಕಷ್ಟಪಡಬೇಕೆಂದು ಕೆಲಸ ಮಾಡಬೇಕೆಂದು ಧನವಂತರು, ಬಡವರು, ಜಮೀನುದಾರರು, ರೈತರು, ಬ್ರಾಹ್ಮಣರು, ಬೇರೆ ಜಾತಿಯವರೆಂಬ ಭೇದಭಾವವನ್ನು ಬಿಡಬೇಕೆಂದು, ಈ ಲೋಕದಲ್ಲಿ ಯಾವ ಮನುಷ್ಯನೂ ಕೀಳುಜಾತಿಗೆ ಸೇರಿದವನಲ್ಲವೆಂದು, ಪ್ರತಿ ಮನುಷ್ಯನಲ್ಲಿ ಇನ್ನೊಬ್ಬನಲ್ಲಿಲ್ಲದ ವಿಶಿಷ್ಟ ಗುಣವಿರುತ್ತದೆ ಎಂದು, ಎಲ್ಲರೂ ಅಂತಹ ಕೀಳರಿಮೆಯನ್ನು ಬಿಡಬೇಕೆಂದು ಹೇಳಿದ್ದ. +ದೇವನಹಳ್ಳಿಯವರಿಗೆ ಆ ಮಾತೇನೂ ಹೊಸದಾಗಿರಲಿಲ್ಲ. +ಪಟವಾರಿ ಸಾಹೇಬರು ಇಂತಹ ಮಾತುಗಳನ್ನಾಡುತ್ತಾರೆಂದವರು ಬೇರೆಯವರ ಬಾಯಿಂದ ಕೇಳಿದ್ದರು. +ಆದರೆ ಅವನವರ್‍ಯಾರೂ ದೊಡ್ಡ ಮನುಷ್ಯರು ಇಂತಹ ಕೆಲಸ ಮಾಡುವುದನ್ನು ನೋಡಿರಲಿಲ್ಲ. +ಆ ಕೋಣೆಯಲ್ಲಿ ಯುವಕರು ಕ್ಯಾರಮ್ ಮತ್ತು ಚೆಸ್ ಆಡುವ ಏರ್ಪಾಟು ಮಾಡಿದ. +ಆ ಯುವಕರ ಹತ್ತಿರವಾಗಲು, ಅವರಲ್ಲಿ ಒಬ್ಬನಾಗಲು ತೇಜಾನಿಗೆ ಸಾಕಷ್ಟು ಸಮಯ ಹಿಡಿದಿತ್ತು. +ಈಗ ಅವರು ತೇಜಾನಿಲ್ಲದಾಗಲೂ ವಾರಕ್ಕೊಂದು ದಿನ ಪಟವಾರಿಯವರ ಮನೆಯಲ್ಲಿ ಸೇರುತ್ತಿದ್ದರು. +ಅಲ್ಲಿ ಕಾಫಿ ಫಲಹಾರಗಳ ಉಪಚಾರವಾಗುತ್ತಿತ್ತು. +ಪಟವಾರಿಯವರು ಅವರ ನಡುವೆ ಕುಳಿತು ತಮ್ಮ ಗತದಿನಗಳ ಅನುಭವಗಳನ್ನು ರಸವತ್ತಾಗಿ ಹೇಳುತ್ತಿದ್ದರು. +ತಮ್ಮ ದೇಶ ಬ್ರಿಟಿಷರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಲು ಎಷ್ಟು ಕಷ್ಟವಾಯಿತು. +ಎಷ್ಟು ಜನರು ನಿಷ್ಠೆಯಿಂದ ಹೋರಾಡಿ ತಮ್ಮ ಪ್ರಾಣವನ್ನು ಕಳೆದುಕೊಂಡರು. +ಬಿಳಿಯರ ದಬ್ಬಾಳಿಕೆ ಹೇಗಿತ್ತು ಎಂಬ ವಿಷಯಗಳನ್ನು ಬಹಳ ರಸವತ್ತಾದ ಕಥೆಗಳನ್ನಾಗಿ ಮಾಡಿ ಹೇಳಿದ್ದರವರು. +ಈಗ ಯುವಕರ, ಅವರ ನುಡವಿನ ಕಂದಕ ತೊಲಗಿ ಮಾತುಗಳ ಚಕಮಕಿ ನಡೆಯತೊಡಗಿತು. +ಅದರಿಂದ ಪಟವಾರಿಯವರಲ್ಲೂ ಹೊಸ ಲವಲವಿಕೆ ಹುಟ್ಟಿ ಬಂದಿತ್ತು. +ಈಗ ಪಟವಾರಿಯ ಮಗನಾದ ತೇಜಾನ ಮೇಲೆ ಮನೆಯನ್ನು, ಹೊಲಗದ್ದೆಗಳನ್ನು ನೋಡಿಕೊಳ್ಳುವ ಭಾರ ಬಿದ್ದಿತು. +ಅದನ್ನವನು ತನ್ನ ಅಪ್ಪನಿಂದ ಮತ್ತು ಅಲ್ಲಿಯ ಯುವಕರಿಂದ ಕಲೆತ. +ಅಷ್ಟು ಆಸ್ತಿ, ಅಷ್ಟು ಹೊಲಗದ್ದೆಗಳನ್ನು ನೋಡಿದ ಅವನು ದೇವನಹಳ್ಳಿಗಾಗಿ ಏನೇನು ಮಾಡಬಹುದೆಂಬ ಕನಸುಗಳನ್ನು ಕಾಣತೊಡಗಿದ. +ರಾಮನಗರದಲ್ಲಿದ್ದ ಪಟವಾರಿಯವರ ಬ್ಯಾಂಕ್ ಅಕೌಂಟು ಇವನ ಹೆಸರಿಗೆ ವರ್ಗವಾಯಿತು. +ಆ ಬಹು ಕಡಿಮೆ ಸಮಯದಲ್ಲಿ ಆ ವೃದ್ಧರಿಬ್ಬರ ಬಹು ಅಕ್ಕರೆಯ ಮಗನಾಗಿ ಬಿಟ್ಟಿದ್ದ ತೇಜಾ, ಇದು ಕಲ್ಯಾಣಿಯಲ್ಲೂ ಎಲ್ಲಿಲ್ಲದ ಸಂತಸವನ್ನು ಹುಟ್ಟಿಸಿತ್ತು. +ಅವನನ್ನು ದತ್ತಕ್ಕೆ ಸ್ವೀಕರಿಸುವ ಒಂದು ದಿನ ಮೊದಲೇ ತೇಜಾನನ್ನು ಬದಿಗೆ ಕೂಡಿಸಿಕೊಂಡು ಅಮೇರಿಕಾದಲ್ಲಿದ್ದ ತಮ್ಮ ಮಗಳಿಗೆ ಫೋನ್ ಮಾಡಿ ಅವಳಿಗೊಬ್ಬ ಬೆಳೆದ ತಮ್ಮ ಹುಟ್ಟಿಕೊಳ್ಳಲಿದ್ದಾನೆಂದು ಹೇಳಿ ಬೇಕಾದ ವಿವರ ಕೊಟ್ಟರು. +ಅವನು ಪಕ್ಕದಲ್ಲೇ ಕುಳಿತಿದ್ದಾನೆಂದು ಅವನಿಗೆ ರಿಸೀವರ ಕೊಟ್ಟಿದ್ದರು ಪಟವಾರಿಯವರು. +ಅಕ್ಕ ತಮ್ಮನದು ಇಂಗ್ಲೀಷಿನಲ್ಲೇ ಮಾತಾಯಿತು. +ಬಹಳ ಸಂತಸ ತುಂಬಿದ ದನಿಯಲ್ಲಿ ಮಾತಾಡಿದ್ದಳವಳು. +ಆದಷ್ಟು ಬೇಗ ತಾನಲ್ಲಿಗೆ ಬರುವುದಾಗಿ ಅವನ ಫೋಟೋ ತಕ್ಷಣ ಕಳುಹಿಸಬೇಕೆಂದು ಒತ್ತಾಯಿಸುವ ದನಿಯಲ್ಲಿ ಹೇಳಿದಳು. +ಪಟವಾರಿಯವರ ಮಗನಾದ ಉತ್ತೇಜ್‌ನ ಜೀವನಕ್ರಮದಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದವು. +ಹೊಲ, ಗದ್ದೆಗಳ ಕೆಲಸ ನೋಡಿಕೊಳ್ಳಬೇಕು. +ತಂದೆ, ತಾಯಿಯರ ಆರೋಗ್ಯದ ಮೇಲೆ ಯಾವಾಗಲೂ ಕಣ್ಣಿಟ್ಟಿರಬೇಕು. +ಅಲ್ಲಿಯ ಯುವಕರೊಡನೆ ಸಮಯ ಕಳೆಯಬೇಕು. +ಅದರೊಡನೆಯೇ ಎಲ್ಲವನ್ನೂ ಆಧುನೀಕರಣಪಡಿಸಬೇಕೆಂಬ ಬಗ್ಗೆ ಯೋಚಿಸುತ್ತಿದ್ದ. +ಪಟ್ಟಣಕ್ಕೆ ಹೋಗಿ ತನ್ನ ಅಲ್ಲಿನ ಮನೆ ಖಾಲಿ ಮಾಡಿ ಅಲ್ಲಿದ್ದ ತನ್ನ ಸಾಮಾನನ್ನು ರವಾನಿಸುವುದು ಯಾವಾಗ ಎಂಬ ಚಿಂತೆಯೂ ಅವನನ್ನು ಕಾಡುತ್ತಿತ್ತು. +ಪೋಲಿಸ್ ಸ್ಟೇಷನ್‌ನ ತನ್ನ ಕುರ್ಚಿಯಲ್ಲಿ ಕುಳಿತು ಕಲ್ಯಾಣಿ ಕೊಟ್ಟ ಸಂತಸದ ಸುದ್ದಿಯನ್ನು ಯಾರೊಡನೆ ಹಂಚಿಕೊಳ್ಳಬೇಕೆಂಬ ಬಗ್ಗೆ ಯೋಚಿಸುತ್ತಿದ್ದ. +ಎಂತಹ ಅನ್ಯಾಯ ತನ್ನ ಮದುವೆಯಾಗಿದೆ ಯಾರಿಗೂ ತಿಳಿಸುವ ಹಾಗಿಲ್ಲ. +ತಾವಿಬ್ಬರೂ ಕಲೆತು ಎಲ್ಲೂ ತಿರುಗಾಡುವ ಹಾಗಿಲ್ಲ. +ಮದುವೆಯ ನಂತರ ಇಂತಹ ಅವಸ್ಥೆಯನ್ನು ತಾನು ಅನುಭವಿಸಬೇಕಾಗುತ್ತದೆ ಎಂದು ಊಹಿಸಿರಲಿಲ್ಲ. +ಹಾಗೆಯೇ ಈ ವಿನೂತನ ವಿಧಾನದಲ್ಲಿ ಕಲ್ಯಾಣಿಯಂತಹ ಹೆಣ್ಣು ತನ್ನ ಮಡದಿಯಾಗುತ್ತಾಳೆಂದೂ ಅಂದುಕೊಂಡಿರಲಿಲ್ಲ. +ಸಾಯುವವರೆಗೂ ಇದೇ ಅವಸ್ಥೆ ಅನುಭವಿಸಬೇಕಾಗುತ್ತದೆಯೇನೋ ಎಂದುಕೊಳ್ಳುತ್ತಿರುವಾಗ ಗಂಟೆಯ ನಾದ ಕೇಳಿಸಲಾರಂಭಿಸಿತು. +ಯಾಂತ್ರಿಕವಾಗಿ ರಿಸೀವರನ್ನು ಎತ್ತಿಕೊಂಡ“ಹಲೋ”“ಯಾಕೋ ನನ್ನ ಮರೆತೇಬಿಟ್ಟಿಯೇನೊ?” ಕುಶಾಲನ ಕಂಠ. +ಅದು ತೇಜಾನಲ್ಲಿ ಎಲ್ಲಿಲ್ಲದ ಸಂತಸನ ಹುಟ್ಟಿಸಿತ್ತು. +ಭಾವುಕ ದನಿಯಲ್ಲಿ ಹೇಳಿದ. +ನಿಜ ಕಣೋ ಮರೆತೇಬಿಟ್ಟಿದ್ದೆ. +ಇಲ್ಲಿ ನನ್ನ ಸ್ಥಿತಿ ಹಾಗಿದೆ. +ದಯವಿಟ್ಟು ಇಲ್ಲಿ ಬಾ. +ನಿನಗೆ ಬಹಳ ಹೇಳಬೇಕು. +ಬಹಳ ಮಾತಾಡಬೇಕು” +“ಈ ನಡುವೆ ದಯವಿಟ್ಟು ಎಲ್ಲಿಂದ ಬಂತು” +“ನೋಡೋ ಅದೇ ನನ್ನ ಮನಸ್ಥಿತಿಯ ಅವಸ್ಥೆಯನ್ನು ತೋರಿಸುತ್ತದೆ. +ತಕ್ಷಣ ಹೊರಟು ಬಾ” ಅವಸರದ, ಆತುರದ ದನಿಯಲ್ಲಿ ಹೇಳಿದ ತೇಜಾ. +“ನೀನ್ಯಾರದೊ ಮಗನಾಗಿ ಬಿಟ್ಟಿದ್ದೀಯಂತೆ… ಇಲ್ಲೆಲ್ಲಾ ಅದೇ ಸುದ್ದಿ…” +“ಅದೇ ಅಲ್ಲ ಇನ್ನೂ ಬಹಳ ವಿಷಯಗಳು ಮಾತಾಡಬೇಕು ಯಾವಾಗ ಬರುತ್ತಿ” ಅವನ ಮಾತನ್ನು ನಡುವೆಯೇ ತಡೆದು ಹೇಳಿದ ತೇಜಾ. +“ತಕ್ಷಣ ಬರದಿದ್ದರೆ ನೀನೆಲ್ಲಿ ಸತ್ತು ಹೋಗುತ್ತಿಯೋ ಎಂಬ ಭಯ ಹುಟ್ಟಿದೆ. +ಎಲ್ಲಿಗೆ ಬರಲಿ”“ದೇವನಹಳ್ಳಿಗೆ ಬಾ!ಅಲ್ಲಿ ಪಟವಾರಿಯವರ ಮನೆ ಎಂದರೆ ಯಾರಾದರೂ ತೋರಿಸುತ್ತಾರೆ. +ದೇವನಹಳ್ಳಿ ರಾಮನಗರಕ್ಕೆ ಹೋಗುವ ದಾರಿಯಲ್ಲೇ ಇದೆ” ಮತ್ತೆ ಅವಸರದ ದನಿಯಲ್ಲಿ ಹೇಳಿದ. +“ನೀನು ಮೊದಲೆಂದೂ ಹೀಗೆ ಮಾತಾಡಿದ್ದನ್ನು ಕೇಳಿರಲಿಲ್ಲ. +ಯಾವುದೋ ಅನಾಹುತವಾದಂತೆ ಕಾಣುತ್ತದೆ. +ಈಗ ಹೊರಟೆ” ಎಂದ ಕುಶಾಲ ಸಂಪರ್ಕ ಮುರಿದ. +ಕುಶಾಲ ಬರುತ್ತಿದ್ದಾನೆಂಬ ಅನಿಸಿಕೆಯಿಂದಲೇ ಸಂತಸ ತುಂಬಿಬಂದಿತ್ತು. +ತಾನವನನ್ನು ಇಷ್ಟು ದಿನ ಹೇಗೆ ಮರೆತೆ. +ಅದಕ್ಕೆ ಕಾರಣ ಇಲ್ಲಿನ ಆಗುಹೋಗುಗಳು ಮತ್ತು ಕಲ್ಯಾಣಿ, ಎಂದು ತನಗೆ ತಾನೇ ಹೇಳಿಕೊಂಡ ತೇಜಾ. +ಹತ್ತೂ ಕಾಲು ಅವನು ತನ್ನ ಕಾರಿನಲ್ಲೇ ಬರಬಹುದು. +ಎರಡೂವರೆ ಗಂಟೆಯ ದಾರಿ, ಅಂದರೆ ಅವನು ಬಂದು, ಒಂದೂವರೆಯೊಳಗೆ ಬರಬಹುದು. +ಅದರ ಲೆಕ್ಕಾಚಾರ ಮುಗಿಯುತ್ತಲೆ ಮನೆಗೆ ಫೋನ್ ಮಾಡಿದ. +ಅವನ ತಾಯಿಯೇ ರಿಸಿವರ್‌ ಎತ್ತಿದ್ದು. +“ನಾನಮ್ಮ ತೇಜಾ!ಪಟ್ಟಣದಿಂದ ತನ್ನ ಅಪ್ತ ಗೆಳೆಯನೊಬ್ಬ ಬರುತ್ತಿದ್ದಾನೆ. +ಆಳಿಗೆ ಒಳ್ಳೆಯ ಅಡುಗೆ ಮಾಡಲು ಹೇಳು” +“ನೀ ಯಾವಾಗ ಬರುತ್ತಿ?” ಕೇಳಿದರವರು“ಹನ್ನೆರಡು ಗಂಟೆಗೆಲ್ಲಾ ಬಂದು ಬಿಡುತ್ತೇನೆ” +“ತಡ ಮಾಡಬೇಡ, ತಡವಾಗುವ ಹಾಗಿದ್ದರೆ ಫೋನ್ ಮಾಡು” ಪ್ರತೀ ಮಾತನ್ನು ಒತ್ತಿ ಹೇಳಿದರವನ ತಾಯಿ, ಆ ವೃದ್ಧ ದಂಪತಿಯರಿಗೆ ಅವನದೇ ಚಿಂತೆ. +“ಇಲ್ಲಮ್ಮ ಎಂತಹುದೇ ಕೆಲಸವಿದ್ದರೂ ತಡವಾಗುವುದಿಲ್ಲ. +ಇಡಲೆ”“ಹೂಂ!” ಎಂದ ಅವರು ರಿಸೀವರನ್ನು ಕೆಳಗಿಟ್ಟ ಶಬ್ದ ಕೇಳಿಸಿದ ಮೇಲೆ ತಾನು ಹಾಗೇ ಮಾಡಿದ. +ಇಷ್ಟು ಬೇಗ ತಾನವರ ಹತ್ತಿರವಾಗಲು, ಅವರು ತನ್ನನ್ನು ಹುಟ್ಟಿದಾಗಿನಿಂದ ಸಾಕಿದ ಮಗನಂತೆ ನೋಡಿಕೊಳ್ಳಲು ಕಾರಣವೇನಿರಬಹುದೆಂಬ ಯೋಚನೆ ಆರಂಭವಾಯಿತು. +ಅದಕ್ಕೆ ಕಾರಣವಿಷ್ಟೆ, ಅವರಿಗೆ ತನ್ನ, ತನಗೆ ಅವರ ಅವಶ್ಯಕತೆ ಇದೆ. +ಅಂದರೆ ತನಗೆ ತನ್ನ ತಂದೆ ತಾಯಿಯ ಪ್ರೇಮ ಸಿಕ್ಕಿಲ್ಲ. +ಅವರು ಯಾರು ದಿಕ್ಕಿಲ್ಲದವರಂತೆ ದೇವನಹಳ್ಳಿಯಲ್ಲಿ ಏಕಾಕಿಗಳಾಗಿದ್ದಾರೆ. +ಅವರಿಗೆ ಒಬ್ಬ ಮಗ ಬೇಕು. +ಹಾಗೆ ನೋಡಿದರೆ ಅವರು ತಮ್ಮ ಬಂಧು ಬಳಗದವರಲ್ಲಿ ಯಾರನ್ನಾದರೂ ದತ್ತುಕ್ಕೆ ತೆಗೆದುಕೊಳ್ಳಬಹುದಾಗಿತ್ತು. +ತಾನು, ತನ್ನ ವಿಚಾರಗಳು ಅವರಿಗೆ ಇಷ್ಟವಾಗಿವೆ. +ಇದು ಕೂಡ ಕಲ್ಯಾಣಿಯೊಡನೆ ಹುಟ್ಟಿದ ಪ್ರೇಮ ದಂತಹುದೇ ಇನ್ನೊಂದು ರೂಪ ಎಂದುಕೊಂಡ. +ಕಲ್ಯಾಣಿ ತನ್ನ ಮಡದಿಯಾಗುವುದು, ಪಟವಾರಿಯವರು ಮತ್ತು ಲಕ್ಷ್ಮಿ ತನ್ನ ತಂದೆ ತಾಯಿಯಾಗುವುದು ತನ್ನ ಪೂರ್ವಜನ್ಮದ ಫಲವೇನೋ ಎನಿಸಿತು. +ಇವತ್ತು ಎರಡು ಹಳ್ಳಿಗಳಿಗೆ ಹೋಗಿ ಅಲ್ಲಿನ ವ್ಯವಸ್ಥೆಯನ್ನು ನೋಡಬೇಕೆಂದುಕೊಂಡಿದ್ದ. +ಅದೀಗ ಆಗುವುದಿಲ್ಲ. +ತಾನು ಸ್ವಲ್ಪ ಮೊದಲೇ ಹೊರಟುಬಿಟ್ಟಿದ್ದರೆ ಕುಶಾಲನ ಫೋನು ಮಿಸ್ ಆಗುತ್ತೇನೋ ಎನಿಸಿ ಬೇಸರ ಕಳೆಯಲು ಹೊರಬಂದ. +ತಮಗೆ ದಾರಿ ಗೊತ್ತಿದ್ದಂತೆ ಗುಂಡು ತಾತನ ಮನೆಯಕಡೆ ಬೀಳತೊಡಗಿದವು ಹೆಜ್ಜೆಗಳು. +ಯಾವುದೋ ಕೆಲಸದಲ್ಲಿ ತೊಡಗಿದ್ದ ತಾತನ ಮುಖ ತೇಜಾನನ್ನು ನೋಡುತ್ತಲೇ ಸಂತಸದಿಂದ ಅಗಲವಾಯಿತು. +ಹಾರ್ದಿಕ ದನಿಯಲ್ಲಿ ಹೇಳಿದ“ಬಾ… ಬಾ… ಏನು ಹೀಗೆ ಅನಿರೀಕ್ಷಿತ…”“ +ಬೇಸರವಾಗುತ್ತಿತ್ತು ತಾತ ಬಂದೆ. +ಕಾಫಿ ಕೊಡಲು ಹೇಳಿ” ಅವರ ಮನೆಯೊಳಗಡಿ ಇಡುತ್ತಾ ಹೇಳಿದ. +ಅಲ್ಲಿಂದ ಕೂಗಿ ಎರಡು ಲೋಟಾ ಕಾಫಿ ತರುವಂತೆ ಹೇಳಿ ಕೈ ತೊಳೆದು ಅವನೊಡನೆ ಹಜಾರಕ್ಕೆ ನಡೆದರು. +“ಏನಾದರಾಗಲಿ!ನೀನು ಪಟವಾರಿಯವರ ಮಗನಾದದ್ದು ನಮ್ಮ ಪುಣ್ಯ! +ಇನ್ನು ನಿನ್ನಂತೂ ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗುವ ಹಾಗಿಲ್ಲ. +ಅವನ ಬದಿಯಲ್ಲಿ ಕೂಡುತ್ತಾ ಸಂತಸದ ದನಿಯಲ್ಲಿ ಹೇಳಿದ್ದರು. +ಈ ಮೊದಲು ಅವರು ಅದೇ ಮಾತನ್ನು ಹೇಳಿದ್ದರು. +ಇದು ಎಷ್ಟನೆ ಸಲವೆಂಬುವುದು ಅವರಿಗೆ ನೆನಪಿರಲಿಕ್ಕಿಲ್ಲ. +“ಬಹಳ ಬೇಜಾರಾಗುತ್ತಿದೆ ತಾತ! +ಏನು ಮಾಡಲಿ?” ಏನಾದರೂ ಮಾತಾಡಬೇಕೆಂಬಂತೆ ಮಾತಾಡಿದ್ದ ತೇಜಾ. +ಯಾವುದೋ ಹೊಸದೊಂದು ವಿಚಾರ ಅವರಿಗೆ ಹೊಳೆದಂತೆ ಹಿಗ್ಗಿನ ಮುಖ ಮಾಡಿ ಕೇಳಿದರು. +“ನಾನೊಂದು ವಿಷಯ ಹೇಳುತ್ತೇನೆ! +ಅದು ಮಾಡುತ್ತಿಯಾ?”“ಏನು ಹೇಳಿ” ತೇಜಾನ ಈ ಮಾತಿನಲ್ಲೂ ಬೇಸರವಿತ್ತು. + “ಮದುವೆಯಾಗಿಬಿಡು. ಬೇಸರ ತಾನಾಗೇ ದೂರವಾಗುತ್ತದೆ” ಗೆಲುವಿನ ದನಿಯಲ್ಲಿ ಹೇಳಿದರು ಅವನ ಮದುವೆಯ ಯೋಚನೆಯಿಂದಲೇ ಅವರಲ್ಲಿ ಉತ್ಸಾಹ ತುಂಬಿ ಬಂದಂತಿತ್ತು. +ಹೆಂಡತಿ ಬೇಸರ ನೀಗಿಸುವ ವಸ್ತುವೇ ಎಲ್ಲರೂ ಅದೇ ಸಲಹೆ ಕೊಡುತ್ತಾರೆ ಎಂದುಕೊಂಡ ತೇಜಾ, ಈಗ ಅದರ ಕಾರಣವಾಗೇ ಬಿಡಿಸಿಕೊಳ್ಳಲಾಗದಂತಹ ಗಂಟುಗಳಲ್ಲಿ ಸಿಕ್ಕಿ ಕೊಂಡಿದ್ದೇನೆಂದು ಹೇಳಲೇ ಎಂದುಕೊಂಡ. +ಅವರ ಮೊಮ್ಮಗಳು ಎರಡು ಕಾಫಿಯ ಲೋಟಗಳನ್ನು ಹಿಡಿದು ಬಂದಳು. +ಅದನ್ನು ಕುಡಿಯುತ್ತಾ ಲೋಕಾಭಿರಾಮ ಹರಟೆಯಲ್ಲಿ ತೊಡಗಿದ. +ಕೆಲಸಕ್ಕೆ ಬಾರದ ಮಾತುಗಳಲ್ಲಿ ಸಮಯ ದೂಡಿ ಪೋಲಿಸ್ ಸ್ಟೇಷನ್ನಿಗೆ ಮರಳಿದಾಗ ಹನ್ನೊಂದೂವರೆ, ಬಾಗಿಲಿನಿಂದಲೇ ತಾನು ಮನೆಗೆ ಹೋಗುತ್ತಿರುವುದಾಗಿ ಏನಾದರೂ ವಿಶೇಷವಿದ್ದರೆ ಅಲ್ಲಿಗೆ ಫೋನ್ ಮಾಡಬೇಕೆಂದು ಹೇಳಿದ. +ಜೀಪು ಅವನನ್ನು ಮನೆಗೆ ತಲುಪಿಸುವುದರಲ್ಲಿ ಹನ್ನೆರಡಾಗಿಬಿಟ್ಟಿತ್ತು ಸಮಯ. +ಅವನ ಬರುವಿಗಾಗೇ ಕಾಯುತ್ತಿದ್ದರು ತಂದೆ ತಾಯಿ. +“ಯಾರೋ ನಿನ್ನ ಆ ಸ್ನೇಹಿತ?” ಕೇಳಿದರು ಪಟವಾರಿ. +“ನನ್ನ ಡಿಪಾರ್ಟ್‌ಮೆಂಟ್‌ನ ಆಪ್ತ ಸ್ನೇಹಿತನಪ್ಪ!” ಬಟ್ಟೆ ಬದಲಿಸಿ ಬಂದ ತೇಜಾ ಅವರ ಬದಿಗೆ ಕೂಡುತ್ತಾ ಹೇಳಿದ. +“ನಿನ್ನ ಡಿಪಾರ್ಟ್‌ಮೆಂಟ್ ಅಂದರೆ?” ಅನುಮಾನದ ದನಿಯಲ್ಲಿ ಪ್ರಶ್ನಿಸಿದರವರು. +“ನನ್ನ ಡಿಪಾರ್ಟ್‌ಮೆಂಟ್ ಅಂದರೆ ಪೋಲಿಸ್ ಖಾತೆ, ಪಟ್ಟಣದ ಹೊರವಲಯದ ಯಾವುದೋ ಪೋಲಿಸ್ ಸ್ಟೇಷನ್ನಿನಲ್ಲಿ ಅವನನ್ನು ಹಾಕಿದ್ದಾರೆ. +ಅಲ್ಲಿ ಅವನಿಗೇನೂ ಕೆಲಸವಿಲ್ಲ.”ಅವರ ಅನುಮಾನವನ್ನು ಪೂರ್ತಿ ನಿವಾರಿಸುವಂತೆ ಹೇಳಿದ. +“ಅವನನ್ನು ನಂಬಬಹುದೇ?” ಇನ್ನೂ ತಮ್ಮ ಅನುಮಾನ ಹೋಗಿಲ್ಲವೆಂಬಂತೆ ಕೇಳಿದರವರು. +“ನಂಬಬಹುದಪ್ಪಾ!ನನ್ನ ನಂಬಿದಷ್ಟೆ, ನೀವು ಅವನನ್ನೂ ನಂಬಬಹುದು. +ಅವನು ನಮಗೆ ಸಮಯ ಬಿದ್ದರೆ ಬೇಕಾದ ಸಹಾಯವನ್ನೂ ಮಾಡುತ್ತಾನೆ” ಪೂರ್ತಿ ವಿಶ್ವಾಸದ ದನಿಯಲ್ಲಿ ಹೇಳಿದ ತೇಜಾ. +ಸ್ವಲ್ಪ ಹೊತ್ತು ಸುಮ್ಮನಿದ್ದ ಅವನ ತಂದೆ ತಮಗೆ ತಾವೇ ಹೇಳಿಕೊಳ್ಳುವಂತೆ ಮಾತಾಡಿದರು. +“ಏನೇ ಆಗಲಿ ಈ ಪೋಲಿಸ್‌ನವರನ್ನು ನಂಬುವುದು ಕಷ್ಟ.” +ನಗುತ್ತಾ ಹೇಳಿದ ತೇಜಾ,“ನೀವು ನನ್ನ ನಂಬಲಿಲ್ಲವೇ. +ನಿಮ್ಮ ಮಗನಾಗಿ ಮಾಡಿಕೊಳ್ಳಲಿಲ್ಲವೇ?”ಗಂಭೀರ ದನಿಯಲ್ಲಿ ಹೇಳಿದರು ಅವನ ತಂದೆ. +“ನೀನೊಬ್ಬ ಅಪರೂಪದ ವ್ಯಕ್ತಿ. +ಎಲ್ಲರೂ ನಿನ್ನಂತಿರುವುದಿಲ್ಲ” ಆ ಮಾತೂ ಅವರು ತಮಗೆ ತಾವೇ ಹೇಳಿಕೊಂಡಂತಿತ್ತು. +ಮತ್ತೆ ನಕ್ಕು ಹೇಳಿದ ತೇಜಾ. +“ನಿಮ್ಮ ಬಾಯಿಂದ ನನ್ನ ಹೊಗಳಿಕೆ ಕೇಳಿದರೆ….” +“ಸಾಕು!ಸಾಕು! ಉಬ್ಬಿಹೋಗಬೇಡ. +ಎಲ್ಲಿ ನಿಮ್ಮಮ್ಮ ಏನು ಕಾರುಭಾರ ಮಾಡುತ್ತಿದ್ದಾಳೋ ನೋಡು” ಅವನ ಮಾತನ್ನು ನಡುವೆಯೋ ತಡೆದು ಹೇಳಿದರವನ ತಂದೆ. +ಅವರ ಆಜ್ಞೆ ಪಾಲಿಸಲು ಎದ್ದ ತೇಜಾ. +ಒಂದು ಮುಕ್ಕಾಲಿಗೆ ತೇಜಾನ ಮನೆ ಎದುರು ಅವನ ಜೀಪಿನ ಬದಿಗೆ ಬಂದು ನಿಂತಿತು ಕುಶಾಲನ ಮಾರುತಿ ಕಾರು. +ಅವನು ಕಾರಿನೊಳಗಿಂದ ಇಳಿಯುತ್ತಿದ್ದಂತೆ ಬಂದ ತೇಜಾ ಅವನನ್ನು ಅಪ್ಪಿದ, ಅಚ್ಚರಿಯ ನೋಟದಲ್ಲಿ ಮಿತ್ರನ ಉದ್ವಿಗ್ನ ಮುಖ ನೋಡಿ ಹೇಳಿದ ಕುಶಾಲ. +“ಏನಾಗಿ ಹೋಗಿದೆಯೋ ನಿನಗೆ… ಏನಾಗಿದೆ… ಅಲ್ಲಿಂದ ಬರುವಾಗ ಚೆನ್ನಾಗಿದ್ದಿ” +“ಏನೇನು ಆಗಬೇಕೋ ಎಲ್ಲಾ ಆಗಿ ಹೋಗಿದೆ. +ಮುಂದೇನಾಗುತ್ತದೆಯೋ ಆ ದೇವರಿಗೇ ಗೊತ್ತು… ಬಾ” ಎಂದ ತೇಜಾ ಅವನ ಹೆಗಲಲ್ಲಿ ಕೈ ಹಾಕಿ ಮನೆಯೊಳ ಕರೆದೊಯ್ದ. +ಅತಿಥಿಗಾಗಿ ಮುಂದಿನ ಕೋಣೆಯಲ್ಲಿ ಕಾದಿದ್ದರು ಹಿರಿಯರಿಬ್ಬರೂ“ಇವರು ನನ್ನ ತಂದೆ ರಾಘವೇಂದ್ರ ಪಟವಾರಿ. +ಇವರು ತಾಯಿ ಲಕ್ಷ್ಮೀದೇವಿ… +ಇವನು ಕುಶಾಲ ನನಗಿರುವ ಒಬ್ಬನೇ ಆಪ್ತಮಿತ್ರ” ಹೇಳಿದ ತೇಜಾ. +ಅವರಿಬ್ಬರ ಕಾಲಿಗೆ ನಮಸ್ಕರಿಸಿ ಮಾತಾಡಿದ ಕುಶಾಲ್. +“ಇಂತಹ ಮಗನನ್ನು ಪಡೆಯಲು ನೀವು ಪುಣ್ಯ ಮಾಡಿದ್ದೀರಿ ಸರ್” +“ತಪ್ಪು!ಇಂತಹ ತಂದೆ, ತಾಯಿಯರನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. +ನಿನಗಿನ್ನೂ ಅವರ ಬಗ್ಗೆ ಏನೂ ಗೊತ್ತಿಲ್ಲ. +ಅವನ ತಪ್ಪನ್ನು ಸರಿಪಡಿಸುತ್ತಿರುವಂತೆ ಮಾತು ಮುಗಿದ ಕೂಡಲೇ ಹೇಳಿದ ತೇಜಾ. +“ಅದೇನೇ ಆಗಲಿ ಅವನಿಂದ ಈ ಮನೆಗೊಂದು ಕಳೆ ಬಂದಿದೆ. +ನಡಿಯಿರಿ ಆಗಲೇ ಬಹಳ ತಡವಾಗಿದೆ ಊಟ ಮಾಡುವಿರಂತೆ” ಎಂದಳು ತೇಜಾನ ತಾಯಿ. +ತನ್ನ ಬೂಟುಗಳನ್ನು ಕುಶಾಲ್ ಬಿಚ್ಚಿದ ಮೇಲೆ ಎಲ್ಲರೂ ಮೇಲೆ ಹೋದರು. +ಆಳು ಮುಂಬಾಗಿಲನ್ನು ಹಾಕಿದ. +ತೇಜಾನ ತಂದೆ ತಾಯಿಯರ ಊಟ ಸಮಯಕ್ಕೆ ಸರಿಯಾಗಿ ಆಗಿಹೋಗಿತ್ತು. +ಆದರೂ ಅವರು ಕುಶಾಲ ಮತ್ತು ತೇಜಾ ಊಟ ಮಾಡುವಾಗ ಅಲ್ಲಿ ಕುಳಿತಿದ್ದರು. +ಟೇಬಲ್ಲಿನ ಮೇಲಿದ್ದ ಅಡುಗೆಯನ್ನು ಲಕ್ಷ್ಮಿದೇವಿಯವರೇ ಬಡಿಸುತ್ತಿದ್ದರು. +ಊಟ ಮಾಡುತ್ತಾ ಹೇಳಿದ ಕುಶಾಲ್“ಏನು ಹಬ್ಬದ ಅಡುಗೆ ಮಾಡಿಬಿಟ್ಟಿದ್ದೀರಿ”ಇವನು ನನ್ನ ಮಗನಾದಾಗ ಏರ್ಪಡಿಸಿದ್ದ ಔತಣಕ್ಕೆ ನೀನು ಬಂದಿರಲಿಲ್ಲವಲ್ಲ ಅದಕ್ಕೆ” ಹೇಳಿದರು ಪಟವಾರಿ. +ತೇಜಾನ ತಾಯಿ ಬಲವಂತಪಡಿಸಿ ಅವರಿಬ್ಬರಿಗೆ ಬಡಿಸುತ್ತಿದ್ದರು. +ಆಗಾಗ ಕುಶಾಲ್‌ನ ನೋಟ ಆ ಇಬ್ಬರು ಹಿರಿಯರಿಂದ ತೇಜಾನ ಮೇಲೆ ಹರಿದಾಡುತ್ತಿತ್ತು. +ಸಿಹಿ ಬಡಿಸುವಾಗ ಬಲವಂತವಾಗಿ ಇನ್ನೂ ಬಡಿಸಲು ಹೋದಾಗ ತನ್ನ ಎರಡೂ ಕೈಗಳನ್ನು ಅಡ್ಡ ತಂದು ಹೇಳಿದ ಕುಶಾಲ“ಇಷ್ಟು ಮಾಡಿದ್ದೆ ಹೆಚ್ಚಾಗಿದೆ. +ಇನ್ನೂ ತಿಂದರೆ ಇಲ್ಲಿಂದ ಏಳಲಾಗುವುದಿಲ್ಲ” +“ಸಾಕಮ್ಮ ಅವನಿಗೆ ಹೆಚ್ಚು ಬಲವಂತಪಡಿಸಬೇಡ. +ಎಲ್ಲಾದರೂ ಕಾರು ನಡೆಸುತ್ತಲೇ ನಿದ್ದೆ ಹೋದಾನು”. +ಅವನ ತಟ್ಟೆ ಬಿಟ್ಟು ಮಗನಿಗೆ ಬಡಿಸಿದರವನ ತಾಯಿ. +ಇನ್ನೂ ಹಾಕಲು ಹೋದಾಗ ಯೋಚಿಸುವಂತಹ ದನಿಯಲ್ಲಿ ಹೇಳಿದ ತೇಜಾ. +“ಸಾಕಮ್ಮ ಸಾಕು ಮತ್ತೆ ನಾನು ಸ್ಟೇಷನ್ನಿಗೆ ಹೋಗಬೇಕು” +“ಸಾಕುಮಾಡೇ ದಿನದಿನಕ್ಕೆ ನಿನ್ನ ಆಸೆ ಹೆಚ್ಚಾಗುತ್ತಿದೆ” ಹಗುರ ಗದರುವ ದನಿಯಲ್ಲಿ ಹೇಳಿದರು ಪಟವಾರಿ. +“ನಿಮಗೇನು ಗೊತ್ತು ಬಿಡಿ!ಯಾಕೊ ಈ ನಡುವೆ ಅವನ ಊಟ ಕಡಿಮೆಯಾಗಿದೆ” ಎಂದು ತಮ್ಮನ್ನು ಸಮರ್ಥಿಸಿಕೊಂಡು ಬಡಿಸುವುದನ್ನು ನಿಲ್ಲಿಸಿದರು. +ಮಗ ಮತ್ತು ತಂದೆ, ತಾಯಿಯರ ವರ್ತನೆಯನ್ನು ನೋಡುತ್ತಲೇ ಊಟ ಮಾಡುತ್ತಿದ್ದ ಕುಶಾಲ್. +ಅವರ ಊಟ ಮುಗಿದ ಮೇಲೆ ಹಿರಿಯರು ತಮ್ಮ ಕೋಣೆಗೆ ಹೋದರು. +ತೇಜಾನ ಕೋಣೆ ಸೇರುತ್ತಲೇ ಅಚ್ಚರಿಯ ದನಿಯಲ್ಲಿ ಕೇಳಿದ ಕುಶಾಲ. +“ಏನಾಗಿದೆಯೋ ಯಾ…”“ನನ್ನ ಮದುವೆಯಾಯಿತು” ಅವನ ಮಾತು ಮುಗಿಯುವ ಮುನ್ನ ಹೇಳಿದ ತೇಜಾ, ಅದನ್ನು ನಂಬಲಾಗದವನಂತೆ ಅವನು ಮಿತ್ರನ ಮುಖವನ್ನೇ ನೋಡುತ್ತಿದ್ದಾಗ ಬಾಗಿಲಿಗೆ ಬೋಲ್ಟ್ ಎಳೆದು ಕೇಳಿದ ತೇಜಾ,“ಯಾರೊಡನೆ ಊಹಿಸು ನೋಡುವ?”ಅವನ ಮುಖಭಾವ, ವರ್ತನೆ ಕಂಡು ದಂಗಾದ ಕುಶಾಲ್. +ಅಂತಹದೇನು ಗುಟ್ಟು ಎಂದುಕೊಳ್ಳುತ್ತಾ ಹೇಳಿದ. +“ಈ ಪಟವಾರಿಯವರ ಯಾವ ಹತ್ತಿರದ ಬಂಧುವನ್ನೊ ಮದುವೆ ಯಾಗಿರಬಹುದು”ತೇಜಾನ ಮುಖದಲ್ಲಿ ಒಮ್ಮೆಲೆ ಸಿಟ್ಟು ನೋವುಗಳ ಭಾವ ತುಂಬಿಬಂತು ಹೇಳಿದ. +“ಇವರ ಆಸ್ತಿ ಲಪಟಾಯಿಸಲು ದತ್ತು ಪುತ್ರನಾಗಿ ಇವರ ಬಂಧುವನ್ನು ಮದುವೆಯಾಗಿರಬಹುದೆಂದಲ್ಲವೇ ನೀ ಯೋಚಿಸುತ್ತಿರುವುದು. +ಇಷ್ಟೇನೇನೋ ತೇಜಾನನ್ನು ನೀ ಅರ್ಥ ಮಾಡಿಕೊಂಡಿರುವುದು… ಅದು ನಿನ್ನ ತಪ್ಪಲ್ಲ ಬಿಡು. +ಎಲ್ಲರೂ ಹಾಗೆ ತಿಳಿಯುತ್ತಾರೆ ಅವರಲ್ಲಿ ನೀನೊಬ್ಬ”ತಕ್ಷಣ ತನ್ನ ತಪ್ಪನ್ನು ತಿದ್ದಿಕೊಳ್ಳುವಂತೆ ತೇಜಾನ ಹೆಗಲ ಮೇಲೆ ಕೈಹಾಕಿ ಹೇಳಿದ ಕುಶಾಲ್“ಐಯಾಮ್ ಸಾರಿ… ಹಾಗಾದರೆ ಯಾರನ್ನು ನೀ ಮದುವೆಯಾದದ್ದು” +“ಕಲ್ಯಾಣಿಯನ್ನು” ಕುರ್ಚಿಯ ಹತ್ತಿರ ಹೆಜ್ಜೆ ಹಾಕುತ್ತಾ ಹೇಳಿದ ತೇಜಾ. +ಕುಶಾಲನ ಮುಖ ದಿಗ್ಭ್ರಾಂತಿಯಿಂದ ಅಪನಂಬಿಕೆಯ ಭಾವಗಳಿಂದ ತುಂಬಿತು. +ಅವನಿಗೆ ಕೂಡಲೇ ಏನು ಮಾತಾಡಬೇಕೋ ತೋಚಲಿಲ್ಲ. +ಹಿಂದಿದ್ದ ಆರಾಮ ಕುರ್ಚಿಯಲ್ಲಿ ಕುಸಿದು ಕುಳಿತು ಉದ್ಗರಿಸಿದ. +“ಕಲ್ಯಾಣಿ, ಕಲ್ಲಕ್ಕ, ಕಾಳಿ, ಜಗದಾಂಭ, ಅವಳೀಗ ನನ್ನ ಮಡದಿ ಅವನಿಗೆ ಸ್ಪಷ್ಟವಾಗಲಿ ಎಂಬಂತೆ ಹೇಳಿದ. +ಕುಶಾಲನ ಮುಖ ಇನ್ನಷ್ಟು ರಂಗುಗಳನ್ನು ಬದಲಿಸಿತು. +ಈನ್ನಷ್ಟು ಸಮಯ ತೆಗೆದುಕೊಂಡು ಮತ್ತೆ ಉದ್ಧರಿಸಿದ. +“ಯಾರನೆಂದೆ!”“ಕಲ್ಯಾಣಿ, ಕಲ್ಲಕ್ಕ, ಕಾಳಿ, ಜಗದಾಂಭೆ, ಅವಳೀಗ ನನ್ನ ಮಡದಿ” ಅವನಿಗೆ ಸ್ಪಷ್ಟವಾಗಲಿ ಎಂಬಂತೆ ಹೇಳಿದ. +ಕುಶಾಲನ ಮುಖ ಇನ್ನಷ್ಟು ರಂಗುಗಳನ್ನು ಬದಲಿಸಿತು. +ಇನ್ನಷ್ಟು ಸಮಯ ತೆಗೆದುಕೊಂಡು ಮತ್ತೆ ಉದ್ಗರಿಸಿದ. +“Have you gone mad!”“Yes I have! +I have gone mad in love”ಆ ಮಾತು ಕುಶಾಲನ ಮೆದುಳಿಗಿಳಿದು ಅವನು ಅದನ್ನು ಅರಗಿಸಿಕೊಳ್ಳಲು ಸಮಯ ಹಿಡಿಯಿತು. +ನಂತರ ಸರಾಗವಾಗಿ ಸಾಗಿದವು ಮಾತುಗಳು. +ಮೊದಲಿನಿಂದ ಕೊನೆಯವರೆಗೆ ಅವನಿಗೆ ಎಲ್ಲವನ್ನೂ ವಿಚಾರಿಸಿದ ತೇಜಾ, ಪಟವಾರಿಯವರ ಮಾತು ಬಂದಾಗ ಅವರ ಬಗ್ಗೆ ಭಾವುದಕದನಿಯಲ್ಲಿ ಹೇಳಿದ ಅವನು ತನ್ನಲ್ಲೇ ಇರಿಸಿಕೊಂಡಿದ್ದ ಅವರ ಹಳೆಯ ಫೋಟೋಗಳನ್ನು ತೋರಿಸಿದ. +ಪ್ರತಿ ಫೋಟೋವನ್ನು ತದೇಕಚಿತ್ತದಿಂದ ನೋಡಿದ ಕುಶಾಲ, ಒಮ್ಮೆಲೆ ಅಷ್ಟೆಲ್ಲಾ ಅನಿರೀಕ್ಷಿತ ಸಂಗತಿಗಳನ್ನು ಕೇಳಿದ ಅವನು ಏನೂ ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ. +ಆರಾಮ ಕುರ್ಚಿಯ ಹಿಂದೆ ಒರಗಿ ಕಣ್ಣು ಮುಚ್ಚಿದ. +ಅವನಿಗೇ ಯಾವುದೋ ಅಪಘಾತವಾದಂತಹ ಭಾವವನ್ನು ಹೊರಗೆಡಹುತ್ತಿತ್ತು ಮುಖ. +ಅದನ್ನು ಕಂಡ ತೇಜಾನೂ ಏನೂ ಮಾತಾಡಲು ಹೋಗಲಿಲ್ಲ. +ಹಾಗೇ ಸುಮಾರು ಐದು ನಿಮಿಷಗಳು ಉರುಳಿದವು. +ಆಗ ಸಾಮಾನ್ಯ ದನಿಯಲ್ಲಿ ಕೇಳಿದ ಕುಶಾಲ. +“ಕಲ್ಯಾಣಿ ಈಗ ಗರ್ಭಿಣಿಯೇ?”“ಹೂಂ!ಅವಳಿದ್ದಿದ್ದರೆ ನಿನ್ನ ಪರಿಚಯಿಸುತ್ತಿದ್ದೆ” ಹೇಳಿದ ತೇಜಾ. +“ಆ ಅದೃಷ್ಟ ನನಗಿರಲಿಕ್ಕಿಲ್ಲ. +ನಡಿ ನಿನ್ನ ತಂದೆ ತಾಯಿಯರೊಡನೆ ಮಾತಾಡುತ್ತಾ ಕೂಡುವ” ಎಂದ ಕುಶಾಲ. +ಕುರ್ಚಿಯಿಂದೆದ್ದ ತೇಜಾ, ಆಗ ಅಲ್ಲಿದ್ದ ಫೋನ್ ಶಬ್ದ ಮಾಡ ತೊಡಗಿತ್ತು. +ತನ್ನ ಕೋಣೆಯಲ್ಲಿ ಎಕ್ಸ್‌ಟೆನ್ಸನ್ ಒಂದನ್ನು ಇರಿಸಿಕೊಂಡಿದ್ದ ತೇಜಾ, ರಿಸೀವರ ಎತ್ತಿದ ಅವನು “ಹಲೋ” ಎಂದ. +ಅತ್ತ ಕಡೆಯಿಂದ ಹಗುರವಾಗಿ ಕೆಮ್ಮಿದ ಸದ್ದು. +ಅದು ಅವನ ಕಲ್ಯಾಣಿಯ ನಡುವೆ ಉಪಯೋಗಿಸಲ್ಪಡುವ ಸಂಕೇತ ಭಾಷೆ. +ಅವಳು ಬಹು ಅಪರೂಪವಾಗಿ ಫೋನ್ ಮಾಡುತ್ತಿದ್ದಳು. +“ಯಾರೊ ಅತಿಥಿಯರು ಬಂದಂತಿದೆ?” ದನಿ ಬದಲಿಸಿ ಕೇಳಿದಳು. +ಇಲ್ಲೇ ಹತ್ತಿರದಿಂದ ಮಾತಾಡುತ್ತಿದ್ದಾಳೆಂಬುವುದು ಗೊತ್ತಾಯಿತು ತೇಜಾನಿಗೆ. +ಅವನ ಮುಖ ಸಂತಸದಿಂದ ಅಗಲವಾಯಿತು. +“ಎಲ್ಲಾ ನಮ್ಮವರೇ ಯಾರು ಬೇಕಾದರೂ ಬರಬಹುದು” ಹೇಳಿದ ತೇಜಾ. +ಅವನ ಆ ಅರ್ಥವಿಲ್ಲಂದಂತಹ ಮಾತು ಅವಳಿಗೆ ಮಾತ್ರ ಅರ್ಥವಾಗುತ್ತಿತ್ತು. +“ಕಾದಿರಿ” ಎಂಬ ಮಾತಿನ ನಂತರ ಸಂಪರ್ಕ ಮುರಿದ ಸದ್ದು. +ಅವನು ಕುಶಾಲನ ಕಡೆ ತಿರುಗುತ್ತಿದ್ದಂತೆ ಅವನೇ ಹೇಳಿದ. +“ಕಲ್ಯಾಣಿಯ ಫೋನ್ ಅಲ್ಲವೆ!” +“ಹೌದು ಅವಳೀಗ ಬರುತ್ತಾಳೆ” ಹೇಳಿದ ತೇಜ. +“ನಡಿ ಅಲ್ಲೇ ಕುಳಿತು ಮಾತಾಡುತ್ತಿರುವ”ಅವರಿಬ್ಬರೂ ಕೋಣೆಯಲ್ಲಿ ಬಂದಾಗ ಹಿರಿಯ ದಂಪತಿಯರು ಹಳೆಯದಾವುದೋ ವಿಷಯವನ್ನು ನೆನಪಿಸಿಕೊಂಡು ನಗುತ್ತಿದ್ದರು. +ನೇರವಾಗಿ ಪಟವಾರಿಯವರ ಬಳಿ ಹೋದ ಕುಶಾಲ ಅವರ ಕಾಲಿಗೆ ನಮಸ್ಕರಿಸಿ ಹೇಳಿದ“ನೀವು ಇಂತಹ ಮಹಾಪುರುಷರೆಂದು ಗೊತ್ತಿರಲಿಲ್ಲ. +ಸರ್!ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಬಿಡಿ!… +ನಿಜವಾಗಲೂ ತೇಜಾ ಅದೃಷ್ಟವಂತ ನಿಮ್ಮಂತಹವರ ಸೇವೆ ಮಾಡುವ ಅವಕಾಶ ಅವನಿಗೆ ಸಿಕ್ಕಿದೆ”ಅವನನ್ನು ಎಬ್ಬಿಸಿ ತಮ್ಮ ಬದಿಗೆ ಕೂಡಿಸಿಕೊಂಡರು ಪಟವಾರಿಯವರು ತಾಯಿಯ ಬದಿಗೆ ಕುಳಿತ ತೇಜ. +“ಇವನು ನಿನಗೆಲ್ಲಾ ಹೇಳಿರಬಹುದು. +ಈಗ ನೋಡು ನಮ್ಮ ಗೋಳು! +ಗರ್ಭಿಣಿಯಾದ ಸೊಸೆ ಕಾಡಿನಲ್ಲಿ ಅಲೆಯುತ್ತಾಳೆ. +ಇವನು ಪೋಲಿಸ್ ಸ್ಟೇಷನ್ ನಲ್ಲಿರುತ್ತಾನೆ” ಹೇಳಿದರು ತೇಜಾನ ತಾಯಿ. +“ನೀ ಒಂದು ಮಾತು ಹೇಳಮ್ಮ ನಾ ಕೆಲಸ ಬಿಟ್ಟು ಬಿಡುತ್ತೇನೆ” ಕೂಡಲೇ ಹೇಳಿದ ತೇಜಾ. +“ಅದೆಲ್ಲಾ ಏನು ಮಾಡಬೇಕೋ ನೀವು ತಂದೆ, ಮಗ ಕುಳಿತು ಮಾತಾಡಿಕೊಳ್ಳಿ. +ಆಗಂತೂ ಇವರು ಬಿಳಿಯರ ವಿರುದ್ಧ ಹೋರಾಡುತ್ತಾ ನನ್ನ ಒಂಟಿಯಾಗಿ ಬಿಟ್ಟಿದ್ದರು. +ಈಗ ಸೊಸೆಯದೂ ಈ ಗತಿ” ಸ್ವಲ್ಪ ಮುನಿಸಿನ ದನಿಯಲ್ಲಿಯೇ ಹೇಳಿದರವನ ತಾಯಿ. +ಆ ಮಾತು ಅಷ್ಟು ಮುಖ್ಯವಲ್ಲವೆಂಬಂತೆ ಹೇಳಿದರು ಪಟವಾರಿ ಸಾಹೇಬರು. +“ನೀನೇ ಹೇಳು ಕುಶಾಲ್ ಕಲ್ಯಾಣಿ ಮಹಾ ಅಪರಾಧಿಯಾಗಿ ಕಾಣುತ್ತಾಳೆಯೇ” +“ಕಾನೂನಿನ ದೃಷ್ಟಿಯಲ್ಲಿ ಅಪರಾಧಿಯಾಗಿರಬಹುದು ಸರ್! +ಆದರೆ ಈ ಯುಗದಲ್ಲಿ ಅಂತಹ ಧೈರ್ಯಶಾಲಿ ಹೆಣ್ಣು ಇದ್ದಾಳೆಂದೂ ಊಹಿಸುವುದು ಕಷ್ಟ. +ಆಕೆಯ ಜನಪ್ರಿಯತೆ ಎಷ್ಟಿದೆ ಎಂದರೆ ಪೋಲಿಸ್ ಖಾತೆಯಲ್ಲೂ ಆಕೆಯ ಭಕ್ತರಿದ್ದಾರೆ” ಅವರ ಮಾತಿಗೆ ಕಲ್ಯಾಣಿಯ ಬಗೆಗಿನ ತನ್ನ ಅಭಿಪ್ರಾಯವನ್ನು ಹೇಳಿದ ಕುಶಾಲ. +“ಧೈರ್ಯದ ಮಾತು ಬಿಡು ನಿನಗೆ, ನನಗೆ ತೇಜಾನಿಗೆ ಧೈರ್ಯವಿಲ್ಲವೇ? +ಕಾಡಿನಲ್ಲಿ ಕಾಡುಪ್ರಾಣಿಯಂತೆ ಅಲೆಯುತ್ತಾ ಸರಿಯಾದ ಸಮಯಕ್ಕೆ ಅನ್ನ ನೀರುಗಳಿಲ್ಲದೇ ದೇಶ ಸೇವೆ ಮಾಡುತ್ತಿದ್ದಾಳೆ. +ದೇಶವನ್ನು ಹೆಗ್ಗಣಗಳಂತೆ ತಿಂದೂ ತಿಂದೂ ಮಜಾ ಮಾಡುತ್ತಿರುವ ಈ ಭ್ರಷ್ಟರನ್ನು ಮುಗಿಸುವುದು ದೇಶಸೇವೆಯಲ್ಲವೇ, ಒಂದು ರೀತಿಯಲ್ಲಿ ಅವಳು ನಿಮ್ಮ ಕೆಲಸವನ್ನು ಸುಲಭ ಮಾಡುತ್ತಿದ್ದಾಳೆ. +ಇನ್ನು ಕಾನೂನಿನ ವಿಷಯ, ಎಷ್ಟು ಮುಖ್ಯಮಂತ್ರಿಯ ವಿರುದ್ಧ, ಎಷ್ಟು ಜನ ಪ್ರಧಾನಮಂತ್ರಿಯರ ವಿರುದ್ಧ ಕಾನೂನು ರೀತ್ಯಾ ಮೊಕದ್ದಮೆಗಳಿಲ್ಲ. +ಆದರೆ ಕಾನೂನು ತನ್ನದೇ ಗತಿಯಲ್ಲಿ ತೆವಳುತ್ತದೆ. +ಆವರೆಗೆ ಅವರುಗಳು ಇಹಲೋಕಯಾತ್ರೆ ಮುಗಿಸಿ ಅಮರರಾಗಿ ಬಿಡುತ್ತಾರೆ. +ಮುಂದೆ ಅವರ ಫೋಟೋಗಳ ಪೂಜೆ ನಡೆಯುತ್ತದೆ. +ಕಲ್ಯಾಣಿ ಪೂಲನ್‌ದೇವಿಯಂತೆ ದರೋಡೆಗಳನ್ನಂತೂ ಮಾಡಿಲ್ಲ” ಕುಶಾಲನ ಮಾತಿಗೆ ಭಾಷಣದಂತಹ ವಿವರ ಕೊಟ್ಟರು ಪಟವಾರಿಯವರು. +ಅವರ ಮಾತಿನ ಮಾರುದನಿ ಕೋಣೆಯಲ್ಲಿ ನಂದುತ್ತಿದ್ದಂತೆ ಹೇಳಿದ ಕುಶಾಲ. +“ನೀವು ಹೇಳುವುದೆಲ್ಲಾ ನಿಜ ಸರ್! +ಆದರೆ ರಾಜಕಾರಣ ಅಂತಹದು. +ನಾವು ರಾಜಕಾರಣಿಯರಿಗೆ ಗುಲಾಮರಾಗಿದ್ದೇವೆ.” +“ಗುಲಾಮರಾಗಿ ನೀವೂ ಧನವಂತರಾಗುತ್ತಿದ್ದೀರಿ ಅಲ್ಲವೆ?” ಅವನ ಮಾತು ಮುಗಿದ ಕೂಡಲೇ ಮಾತಾಡಿದರು ತೇಜಾನ ತಂದೆ. +“ಕೆಲವರನ್ನು ಬಿಟ್ಟು ಬಹಳ ಜನ ಹಾಗಾಗುತ್ತಿದ್ದಾರೆ. +ಅದನ್ನು ಒಪ್ಪಿಕೊಂಡ ಕುಶಾಲ. +“ಅಂದರೀಗ ಇಲ್ಲಿ ಬಂದರೆ ತಮ್ಮ ಗುಂಪಿನೊಡನೆ ಬಂದರೆ ತೇಜಾನನ್ನು, ಕಲ್ಯಾಣಿಯನ್ನು ಅರೆಸ್ಟ್ ಮಾಡಿ ಪಾರಿತೋಷಕ ತೆಗೆದುಕೊಳ್ಳುವುದಿಲ್ಲವೇ?”ಅವರು ತನ್ನನ್ನೇ ಉದ್ದೇಶಿಸಿ ಮಾತಾಡುತ್ತಿದ್ದಾರೆಂದುಕೊಂಡ ಕುಶಾಲ ಹೇಳಿದ. +“ನನ್ನದು ತೇಜಾನದು ಎರಡು ದೇಹಗಳು ಸರ್! +ಆದರೆ ಪ್ರಾಣ ಒಂದೇ. +ನನ್ನ ನಿಮ್ಮ, ತೇಜಾನ ವಿಚಾರಗಳೂ ಒಂದೇ. +ಅಂತಹ ಪ್ರಶ್ನೆ ಕೇಳಿ ನೀವು ನನ್ನ ಅವಮಾನ ಮಾಡುತ್ತಿದ್ದೀರಿ ಸರ್!” ಅವನ ಮಾತಿನಲ್ಲಿ ನೋವಿತ್ತು. +ಕೂಡಲೇ ಹೇಳಿದರು ಪಟವಾರಿಯವರು“ನಾ ನಿನ್ನ ಉದ್ದೇಶಿಸಿ ಹೇಳಿರಲಿಲ್ಲ. +ನಿನಗದು ಹಾಗನಿಸಿದ್ದರೆ ನನ್ನ ಕ್ಷಮಿಸು. +ನಿನ್ನ, ತೇಜಾರಂತೆ ಕೆಲವರಿದ್ದಾರೆಂದೇ ಈ ದೇಶ ಇನ್ನೂ ನಾಶವಾಗಿಲ್ಲ”ಅದಕ್ಕೆ ಕುಶಾಲ ಉತ್ತರಿಸಲು ಹೋದಾಗ ಬಂದಳು ಕಲ್ಯಾಣಿ. +ಅವಳನ್ನು ನೋಡುತ್ತಲೇ ಅಚ್ಚರಿ ಸಂತಸದ ಭಾವ ತುಂಬಿ ಬಂತು ಹಿರಿಯರ ಮುಖದಲ್ಲಿ. +ಒಬ್ಬ ಅಪರೂಪದ ವ್ಯಕ್ತಿಯನ್ನು ನೋಡುತ್ತಿರುವಂತೆ ನೋಡುತ್ತಿದ್ದ ಕುಶಾಲ ಅವಳು ಬಹಳ ದಣಿದವಳಂತೆ ಕಂಡುಬರುತ್ತಿದ್ದಳು. +ಅವಳ ಕೈ ಹಿಡಿದು ಕರೆತಂದು ಸೋಫಾದಲ್ಲಿ ಕೂಡಿಸಿದ ತೇಜಾ, ಉಕ್ಕಿಬಂದ ಪ್ರೇಮದಿಂದ ಅವಳ ತಲೆಯ ಮೇಲೆ ಕೈಸವರುತ್ತಾ ಕೇಳಿದರು ಅತ್ತೆ. +“ಏನಾಯಿತಮ್ಮ… ನನ್ನ ಕೂಸಿಗೆ ಏನಾಯಿತೇ… ಹಸಿವಾಗಿದೆಯೇ?”ಸೊಸೆಯನ್ನು ಉದ್ದೇಶಿಸಿದ ಮಾತು ಮುಗಿದ ಮೇಲೆ ಆಳಿಗೆ ದೊಡ್ಡ ಲೋಟದಲ್ಲಿ ಬಿಸಿಬಿಸಿ ಹಾಲು ತರುವಂತೆ ಹೇಳಬೇಕೆಂದು ಮಗನಿಗೆ ಆಜ್ಞಾಪಿಸಿದರು. +ಅದನ್ನು ಮಾಡಲು ಎದ್ದು ಹೋದ ತೇಜ, ಅವನು ಹೋಗುತ್ತಿದ್ದಂತೆ ಹೇಳಿದರು ಅವಳ ಮಾವ. +“ನೋಡಮ್ಮ ಇನ್ನೂ ಒಂದೆರಡು ತಿಂಗಳು ಕೆಲಸ ಕಡಿಮೆ ಮಾಡಿಕೊ! +ಈ ಸಮಯದಲ್ಲಿ ನಿನಗೆ ರೆಸ್ಟ್ ಬೇಕು…” +“ನನಗೇನೂ ಆಗಿಲ್ಲ ಅಪ್ಪ!ಬರೀ ರೆಸ್ಟ್ ತೆಗೆದುಕೊಳ್ಳುತ್ತಾ ಕೂತರೆ ನಿಮ್ಮ ಮನೆಗೆ ಭಗತ್‌ಸಿಂಗ್‌ ಬರುತ್ತಾನೆಯೇ” ಅವರ ಮಾತನ್ನು ನಡುವೆಯೇ ತಡೆದು ಮಾತಾಡಿದಳು ಕಲ್ಯಾಣಿ. +ಅವಳ ದನಿಯಲ್ಲಿ ದಣಿವಿನ ಅಂಶವು ಲವಲೇಶವೂ ಇರಲಿಲ್ಲ. +ಬಹಳ ಪ್ರಭಾವಿ ಕಂಠ ಎನಿಸಿತು. +ಕುಶಾಲನಿಗೆ ಮತ್ತೆ ಬಂದ ತೇಜಾ ಅವರಿಬ್ಬರ ಪರಿಚಯ ಮಾಡಿಸಿದ. +ಕೈಜೋಡಿಸಿ ನಮಸ್ಕಾರ ಮಾಡಿದ ಕುಶಾಲ ಹೇಳಿದ. +“ನೀವು ನನಗಿಂತ ಚಿಕ್ಕವರಾದರೂ ನಾನು ನಿಮಗೆ ಕಾಲು ಮುಟ್ಟಿ ನಮಸ್ಕರಿಸುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದೀರಿ…. +”“ಛೇ… ಛೇ… ಅಂತಹ ಮಾತಾಡಬಾರದು. +ನಾನೊಬ್ಬ ಸಾಮಾನ್ಯ ಹೆಣ್ಣು ನಿಮ್ಮ ಮಿತ್ರನ ಮಡದಿ” ಅವನ ಮಾತನ್ನು ನಡುವೆಯೇ ತಡೆದು ಹೇಳಿದಳು ಕಲ್ಯಾಣಿ. +“ಅದೇನೇ ಹೇಳಿ ನಿಮ್ಮನ್ನು ಮದುವೆಯಾಗಲು ನಮ್ಮ ತೇಜ ಪುಣ್ಯ ಮಾಡಿದ್ದ” ತನ್ನ ಮಾತು ನಿಜವೆಂಬಂತಹ ದನಿಯಲ್ಲಿ ಮಾತಾಡಿದ ಕುಶಾಲ ವ್ಯಂಗ್ಯದ ನೋವಿನ ನಗೆ ನಕ್ಕು ಹೇಳಿದಳು ಕಲ್ಯಾಣಿ. +“ಅಮ್ಮಾ ಹೀಗೆ ನಿನ್ನ ತೊಡೆಯಲ್ಲಿ ತಲೆ ಇಟ್ಟು ಶಾಶ್ವತವಾಗಿ ಮಲಗಿಬಿಡಬೇಕೆನಿಸುತ್ತಿದೆ.” +“ಅದೇನದು ಕೆಟ್ಟ ಮಾತು! +ಇನ್ನೊಂದು ಸಲ ಅಂತಹ ಮಾತಾಡಬಾರದು” ಸಿಟ್ಟಿನಿಂದ ಎತ್ತರದ ದನಿಯಲ್ಲಿ ಹೇಳಿದರವರ ಅತ್ತೆ. +ಸರಿಯಾಗಿ ಕುಳಿತ ಕಲ್ಯಾಣಿಯ ಮುಖದಿಂದ ದಣಿವಿನ ಭಾವ ಪೂರ್ತಿ ಇಳಿದುಬಿಟ್ಟಿತು. +ಅಕ್ಕರೆಯಿಂದ ಪಟವಾರಿಯವರ ಕಡೆ ನೋಡುತ್ತಾ ಕೇಳಿದಳು. +“ಅಪ್ಪಾ!ನಾ ನಿಮ್ಮ ಮಗನೊಡನೆ ಸ್ವಲ್ಪ ಮಾತಾಡುವುದಿತ್ತು ಅವರನ್ನು…” +“ಹೋಗಿ!ಹೋಗಿ… ಏನು ಮಾತಾಡವುದಿದೆಯೋ ಮಾತಾಡಿ” ಅವಳು ಮಾತು ಮುಗಿಯುವ ಮುನ್ನ ಅಪ್ಪಣೆ ಕೊಟ್ಟರು ಪಟವಾರಿ. +ತೇಜಾ, ಕಲ್ಯಾಣಿ ಎದ್ದು ತಮ್ಮ ಕೋಣೆಯ ಕಡೆ ನಡೆದರು ಆ ಕೋಣೆಯಿಂದ ಹೊರಬೀಳುತ್ತಲೇ ಕಲ್ಯಾಣಿಯ ಮುಖಭಾವ ಬದಲಾಗಿತ್ತು. +ಯಾವುದೋ ವಿಪತ್ತು ಸಂಭವಿಸಿದೆ ಎಂದುಕೊಂಡ ತೇಜಾ, ತಮ್ಮ ಕೋಣೆಯೊಳಗೆ ಹೋಗುತ್ತಲೇ ಬಾಗಿಲ ಬೋಲ್ಟ್ ಹಾಕಿ ಕೇಳಿದಳು ಕಲ್ಯಾಣಿ. +“ನಿಮ್ಮ ಸ್ನೇಹಿತನನ್ನು ನಂಬಬಹುದೇ?” +“ಎಂತಹ ಹುಚ್ಚು ಪ್ರಶ್ನೆ ಕೇಳುತ್ತಿ ಅಷ್ಟು ನಂಬಿಕೆ ಇಲ್ಲದಿದ್ದರೆ ನಿನ್ನ ಭೇಟಿ ಮಾಡಿಸುತ್ತಿದ್ದೆನೆ”“ಯಾಕೋ ಬದುಕಿನ ಮೇಲೆ ಆಸೆ ಬೆಳೆಯುತ್ತಾ ಹೋದ ಹಾಗೆಲ್ಲಾ ಇಲ್ಲದ ಅನುಮಾನಗಳು ಹುಟ್ಟಿಕೊಳ್ಳತೊಡಗಿವೆ… + ನಾ ನಿನಗೆ ಒಂದು ವಿಶೇಷ ಸುದ್ದಿ ಕೊಡಲು ಬಂದೆ. +ಚಲ್ಲಪ್ಪನ ತಂಡದವರು ಬಂಡೇರಹಳ್ಳಿಗೆ ಬಂದಿದ್ದಾರೆ. +ಅವರು ಒಂದು ಸಲ ಸಿದ್ದಾನಾಯಕ್‌ನ ಮನೆಯಲ್ಲಿ ಸಭೆ ಸೇರಿದ್ದರಂತೆ. +ಬಂಡೇರಹಳ್ಳಿಗೆ ಇದನ್ನು ಹೇಳಲು ಶಂಕರನನ್ನು ಕಳಿಸಿದ್ದೆ. +ನೀನಿಲ್ಲಿ ಬಂದಿದ್ದಿ ಎಂದು ಗೊತ್ತಾಗಿ ನಾನೇ ಬಂದೆ” ಅವನನ್ನೂ ಎಚ್ಚರಿಸುವಂತಿತ್ತು ಮಾತು. +ಅದರ ಬಗ್ಗೆಯೇ ಯೋಚಿಸುತ್ತಾ ಕೇಳಿದ ತೇಜಾ“ಅವರುಗಳ್ಯಾಕೆ ನಾಯಕನ ಮನೆಗೆ ಬಂದಿರಬಹುದು. +ಎಂತಹ ಸಂಚು…”“ಚೆಲ್ಲಪ್ಪ ಕ್ರಾಂತಿಕಾರಿಯರ ಹೆಸರಿನಲ್ಲಿ ದರೋಡೆ ಮಾಡುತ್ತಾನೆಂದು ನಿಮ್ಮ ಪೋಲಿಸ್ ಖಾತೆಯವರಿಗೂ ಗೊತ್ತು. +ನಾಯಕ್ ನಿನ್ನ ಮೇಲಿನ ದ್ವೇಷ ತೀರಿಸಿಕೊಳ್ಳಲು ಅವರನ್ನು ಕರೆಸಿದ್ದಾನೇನೋ ಎಂದು ನನ್ನ ಅನುಮಾನ… +ನಾವೇ ಅವರನ್ನು ಮುಗಿಸಿಬಿಡಬೇಕೆ” ಈ ಸಲ ಯೋಜನೆ ಹಾಕುತ್ತಿರುವಂತೆ ಮಾತು ಮುಗಿಸದಳು ಕಲ್ಯಾಣಿ. +ಕೂಡಲೇ ಆತುರದ ದನಿಯಲ್ಲಿ ಹೇಳಿದ ತೇಜಾ. +“ಬೇಡ… ಬೇಡ. . ನೀವೇನೂ ಮಾಡಬೇಡಿ ನಾನೇ ಎಲ್ಲಾ ನೋಡಿಕೊಳ್ಳುತ್ತೇನೆ. +ಅವರು ಎಷ್ಟು ಜನರಿದ್ದಾರೆ. +ಅವರ ಬಳಿ ಎಂತಹ ಆಯುಧಗಳಿರಬಹುದು”ಅದಕ್ಕೆ ಅವಳಲ್ಲಿ ಉತ್ತರ ಸಿದ್ಧವಾಗಿತ್ತು. +“ನಾಲ್ಕು ಜನರಿದ್ದಾರೆ. +ಚೂರಿ, ಚಾಕು, ಬರ್ಜಿಯಂತಹ ಆಯುಧಗಳು ಮಾತ್ರ ಇರುತ್ತವೆ ಎಂದು ನನಗೆ ಗೊತ್ತು. +ನಾಯಕ ಅವರುಗಳಿಗೆ ರಿವಾಲ್ವರ್ ಕೊಟ್ಟಿದ್ದರೂ ಕೊಟ್ಟಿರಬಹುದು. +ಅವು ಕಳಪೆ ದರ್ಜೆಯವು”ಕೆಲ ಕ್ಷಣಗಳು ಯೋಚಿಸಿ ಕೇಳಿದ ತೇಜ“ಎ.ಕೆ.೪೭ ಸ್ಟನ್‌ಗನ್‌ನಂತಹವು…” +“ಛೇ… ಛೇ… ತಿಂದು ಕುಡಿದು ಮಜಾ ಮಾಡುವವರಿಗೆ ಅದೆಲ್ಲಿಂದ ಬರುತ್ತದೆ. +ಸರಿಯಾಗಿ ಯೋಚಿಸು…”“ಎಲ್ಲಾ ಯೋಚಿಸಿದ್ದೇನೆ. +ನೀ ನಡುವೆ ಬರಬೇಡ. +ನನ್ನ ರಕ್ಷಣೆಗೂ ನೀನ್ಯಾವ ಮನುಷ್ಯರನ್ನೂ ಕಳಿಸಬೇಡ. +ಇದು ನಮ್ಮ ಭವಿಷ್ಯದ ಪ್ರಶ್ನೆ” ಕಲ್ಯಾಣಿಯ ಮಾತನ್ನು ತಡೆದು ದೃಢವಾದ ದನಿಯಲ್ಲಿ ಹೇಳಿದ ತೇಜಾ. + “ಜಾಗ್ರತೆಯಾಗಿರು. ನಿನಗೇನಾ…”“ಎಂತಹ ಮಾತಾಡುತ್ತಿ ಕಲ್ಯಾಣಿ… ನೀ ನಿಶ್ಚಿಂತೆಯಿಂದಿರು. +ಬೆಳಗಾಗುವುದರೊಳಗೆ ಅವರ ಗತಿ ಏನಾಗಿದೆ ಎಂಬುವುದು ನಿನಗೆ ಗೊತ್ತಾಗುತ್ತದೆ. +ಆತ್ಮವಿಶ್ವಾಸದ ದನಿಯಲ್ಲಿ ಹೇಳಿದ ತೇಜಾ. +ಅವನ ಕೊರಳ ಸುತ್ತೂ ಕೈಹಾಕಿ ಗಾಢವಾದ ಮುದ್ದು ಕೊಟ್ಟು ಹೇಳಿದಳು ಕಲ್ಯಾಣಿ“ನಾನಿಲ್ಲಿಂದಲೇ ಹೊರಟುಹೋಗುತ್ತೇನೆ. +ಅಮ್ಮ ಅಪ್ಪನಿಗೆ ಏನಾದರೂ ಸುಳ್ಳು ಹುಟ್ಟಿಸಿ ಹೇಳು… ಜಾಗ್ರತೆ.”ಮಾತು ಮುಗಿಸಿದ ಅವಳು ಬೋಲ್ಟನ್ನು ತೆಗೆಯುತ್ತಿರುವಾಗ ಹೇಳಿದ ತೇಜಾ“ನೀನೂ ಜಾಗ್ರತೆ. +ಈಗ ನೀನೊಬ್ಬಳೇ ಅಲ್ಲ. +ನಿನ್ನೊಡನೆ ಅಪ್ಪನ ಭಗತ್‌ಸಿಂಗನೂ ಇದ್ದಾನೆ”ಅವನು ಅವಳನ್ನು ಬೀಳ್ಕೊಡುವ ಮುದ್ದಿನಂತೆ ಗಾಢವಾಗಿ ಮುದ್ದಿಸಿದ. +ಬಾಗಿಲು ತೆಗೆದ ಅವಳು ಮಟ್ಟಿಲಿನಿಂದ ಕೆಳಗಿಳಿದಳು. +ತೇಜಾ ಅಪ್ಪ, ಅಮ್ಮ ಮತ್ತು ಮಿತ್ರ ಕುಳಿತಿರುವ ಕೋಣೆಯ ಕಡೆ ಹೆಜ್ಜೆ ಹಾಕಿದ. +ಅವನು ಕೋಣೆಯೊಳ ಹೋಗುತ್ತಲೇ ಕೇಳಿದಳವನ ತಾಯಿ. +“ಅವಳೆಲ್ಲಿ?”“ಯಾರೊ ಬಡವ ಅವಳಿಗಾಗಿ ಎಲ್ಲೊ ಕಾಯುತ್ತಿದ್ದಾನಂತಮ್ಮ ಅದಕ್ಕೆ ಅವಸರದಲ್ಲಿ ಹೊರಟುಹೋದಳು ನಿಮ್ಮೆಲ್ಲರ ಕ್ಷಮೆ ಕೇಳಿದ್ದಾಳೆ” ಯಾರೆ ಆಗಲಿ ನಂಬುವಂತಹ ದನಿಯಲ್ಲಿ ಹೇಳಿದ ತೇಜಾ. +ಅತಿಯಾದ ಸಿಟ್ಟಿನ ಎತ್ತರದ ದನಿಯಲ್ಲಿ ಹೇಳಿದರವನ ತಾಯಿ. +“ತಂದೆ ಮಗ ಕಲೆತು ಅವಳನ್ನು ತಲೆಯ ಮೇಲೆ ಹತ್ತಿಸಿಕೊಂಡಿದ್ದೀರಿ! +ಲೋಕದ ಚಿಂತೆ ಅವಳಿಗ್ಯಾಕೆ? +ಇವರು ನನ್ನ ದೇಶ ನನ್ನ ದೇಶ ಅಂತ ಅಲೆಮಾರಿಗಳ ಹಾಗೆ ಊರೂರು ಸುತ್ತಾಡಿದ್ದರು. +ಅವರಿಗೇನು ಬಂತು ಭಾಗ್ಯ. +ಇನ್ನು ಮುಂದೆ ಮನೆಯಲ್ಲೇ ಇರಲಿ ಯಾವ ಪೋಲಿಸಿನವನು ಬರುತ್ತಾನೋ ನಾನೂ ನೋಡಿಕೊಳ್ಳುತ್ತೇನೆ” ಅವರ ಸಿಟ್ಟಿನ ಮಾತಿನಲ್ಲಿ ಅತಿಯಾದ ಮಮಕಾರವೂ ತುಂಬಿತ್ತು. +ಶಾಂತ ದನಿಯಲ್ಲಿ ಹೇಳಿದರು ಪಟವಾರಿ. +“ಅಷ್ಟ್ಯಾಕೆ ಕೂಗುತ್ತಿ ಲಕ್ಷ್ಮಿ, ನಿನ್ನ ಸೊಸೆ ಏನೂ ಸಾಮಾನ್ಯ ಹೆಣ್ಣಲ್ಲ. +ಅವಳು ಕಾಳಿ, ಅವಳಿಗೇನೂ ಆಗುವುದಿಲ್ಲ, ನೀನು ಸುಮ್ಮನೆ ಕೊರಗಿ ನಿನ್ನ ಆರೋಗ್ಯ ಕೆಡಿಸಿಕೊಳ್ಳಬೇಡ.” +“ಅಪ್ಪಾ ಹೇಳುತ್ತಿರುವುದು ನಿಜವಮ್ಮ! +ನೀ ಸುಮ್ಮನೆ ಕೊರಗಬೇಡ” ತಂದೆಯ ಮಾತಿಗೆ ತನ್ನ ದನಿಯನ್ನೂ ಸೇರಿಸಿದ ತೇಜಾ, ತಂದೆ, ಮಗ ಇಬ್ಬರ ಕಡೆ ಒಂದೊಂದು ನೋಟ ಬೀರಿ ಕುಶಾಲನ ಕಡೆ ತಿರುಗಿ ಹೇಳಿದರು ಲಕ್ಷ್ಮೀದೇವಿ. +“ನೋಡಿದಯೇನಪ್ಪಾ, ನೀನೇ ನೋಡು ಒಬ್ಬರ ಮಾತಿಗೆ ಒಬ್ಬರು ದನಿ ಹೇಗೆ ಕೂಡಿಸುತ್ತಿದ್ದಾರೋ”ಎಲ್ಲರನ್ನೂ ನೋಡಿ ನಕ್ಕು ಹೇಳಿದ ಕುಶಾಲ. +“ನಿಮ್ಮ ಜಗಳದ ನಡುವೆ ನಾ ಬರುವುದಿಲ್ಲವಮ್ಮ! +ಇಲ್ಲದಿದ್ದರೆ ನೀವೂ ನನ್ನ ಬೈಯುತ್ತೀರಿ”ಅದೇ ಸಮಯವೆಂಬಂತೆ ಹೇಳಿದ ತೇಜಾ. +“ಅಪ್ಪಾ!ನಾನಿವನಿಗೆ ನಮ್ಮ ಹಳ್ಳಿ ತೋರಿಸಿಕೊಂಡು ಬರುತ್ತೇನೆ” +“ಹೋಗಿ!ನೋಡಪ್ಪಾ ನಮ್ಮ ದೇವನಹಳ್ಳಿ ಹೇಗಿದೆ ಎಂಬುದು ನೋಡು” ಕೂಡಲೇ ಅಪ್ಪಣೆ ನೀಡಿದರವನ ತಂದೆ. +ಕುಶಾಲ್ ಮತ್ತು ತೇಜಾ ಮನೆಯಿಂದ ಹೊರಬಿದ್ದು ಚಿಕ್ಕದಾರಿಯ ಮೂಲಕ ಹೊಲಗಳ ಕಡೆ ನಡೆಯುತ್ತಿರುವಾಗ ಹೇಳಿದ ತೇಜಾ. +“ಇವತ್ತು ರಾತ್ರಿ ನೀನಿಲ್ಲೆ ಇದ್ದು ಬಿಡು” +“ಯಾಕೆ ನಿನ್ನ ಸಮಸ್ಯೆಗೆ ಪರಿಹಾರ ಹುಡುಕಲೋ?” ಕೇಳಿದ ಕುಶಾಲ. +“ನನ್ನ ಸಮಸ್ಯೆಗೆ ಯಾವ ಪರಿಹಾರವೂ ಇಲ್ಲ. +ಸಮಯವೇ ಅದನ್ನು ನಿರ್ಣಯಿಸುತ್ತದೆಂದು ಸುಮ್ಮನಿದ್ದು ಬಿಡಬೇಕಷ್ಟೆ… +ಕೆಲವರು ಕ್ರಾಂತಿಕಾರಿಯರ ಹೆಸರಿನಲ್ಲಿ ದರೋಡೆ ಮಾಡುವವರನ್ನು ಬಂಧಿಸಬೇಕಾಗಿದೆ. +ಅವರೀಸಲ ನನ್ನ ಕೊಲೆ ಮಾಡಲು ಬಂಡೇರಹಳ್ಳಿಗೆ ಬಂದಿರಬಹುದು. +ಅದೇ ವಿಷಯ ಹೇಳಲು ಬಂದಿದ್ದಳು ಕಲ್ಯಾಣಿ”ಗಂಭೀರವಾಯಿತು ಕುಶಾಲನ ಮುಖ. +ಕೆಲಕ್ಷಣಗಳು ಕಳೆದ ಬಳಿಕ“ನಾ ಮನೆಗೆ ಫೋನ್ ಮಾಡುತ್ತೇನೆ” +“ಈ ವಿಷಯ ಅಪ್ಪ ಅಮ್ಮನಿಗೆ ತಿಳಿಯಬಾರದು”ಹುಚ್ಚನನ್ನು ನೋಡುವಂತೆ ತೇಜಾನ ಕಡೆ ನೋಡಿದ ಕುಶಾಲ. +ವೇಗವಾಗಿ ಬಂದ ಜೀಪು ಪೋಲೀಸ್ ಸ್ಟೇಷನ್‌ನೆದುರು ನಿಂತಿತು. +ಅವರು ಬರುತ್ತಿದ್ದಂತೆ ಕುರ್ಚಿಯಲ್ಲಿ ಕುಳಿತ ಎಸ್.ಐ.ಶಿಸ್ತಿನಿಂದ ಎದ್ದು ನಿಂತ. +ಸುತ್ತೂ ನೋಡುತ್ತಾ ಕೇಳಿದ ತೇಜಾ“ಏನೂ ಕೆಲಸವಿಲ್ಲ! +ಈ ಪೋಲಿಸ್ ಸ್ಟೇಷನ್ ಮುಚ್ಚಿಬಿಟ್ಟರೆ ಒಳ್ಳೆಯದೇನೋ… +ನಾನು ಗುಂಡು ತಾತನ ಮನೆಯಲ್ಲಿ ಅಥವಾ ನನ್ನ ಮನೆಯಲ್ಲಿ ನಮ್ಮ ಸಂಘದವರೊಡನೆ ಹರಟೆ ಹೊಡೆಯುತ್ತಿರುತ್ತೇನೆ. +ಏನಾದರೂ ಕೆಲಸವಿದ್ದರೆ ಅಲ್ಲಿ ಹೇಳಿಕಳಿಸಿ” ಬಹು ಬೇಸರದ ದನಿಯಲ್ಲಿ ಹೇಳಿದ ತೇಜ. +ಮತ್ತೆ ಹೊರಗಡಿ ಇಡಲು ಹೋಗುತ್ತಿದ್ದಾಗ ಏನೋ ಹೇಳಲು ಆಳಕುತ್ತಿರುವಂತೆ ಕಂಡ ಎಸ್.ಐ. ಅವನ ಕಡೆ ತಿರುಗಿ ಕೇಳಿದ ತೇಜಾ“ಏನಾದರೂ ಬೇಕಾಗಿತ್ತೆ? +ಕೈಗಡಿಯಾರ ನೋಡಿಕೊಂಡ ತೇಜ, ಆರಾಗಲು ಇನ್ನೂ ಹತ್ತು ನಿಮಿಷವಿತ್ತು. +ಉದಾಸೀನ ದನಿಯಲ್ಲಿ ಹೇಳಿದ. +“ಹೋಗಿ!ಹೇಗೂ ನಾನು ಇವತ್ತು ರಾತ್ರಿಯೆಲ್ಲಾ ಇಲ್ಲೇ ಇರುತ್ತೇನೆ” ಎನ್ನುತ್ತಾ ಹೊರಗಡಿ ಇಟ್ಟ. +ಯಾರ ಮುಖದಲ್ಲಿ ಎಂತಹ ಬದಲಾವಣೆಯಾಗಿದೆ ಎಂಬುವುದು ನೋಡಲು ಹೋಗಲಿಲ್ಲ. +ತೇಜಾ, ಅವನ ಮೊದಲಿನ ಗುರಿ ತಾನಿವತ್ತು ರಾತ್ರಿ ಬಂಡೇರಹಳ್ಳಿಯ ಮನೆಯಲ್ಲೇ ಇರುತ್ತೇನೆಂಬುವುದು ಸಿದ್ದಾನಾಯಕ್‌ನಿಗೆ ಗೊತ್ತಾಗಬೇಕು. +ಮುಖ್ಯರಸ್ತೆಯಲ್ಲಿ ಯಾರೊಡನೆಯೋ ಹರಟುತ್ತಾ ನಿಂತ ಗುಂಡು ತಾತ ಅವನನ್ನು ನೋಡುತ್ತಲೇ ಮುಗುಳ್ನಗೆ ನಗುತ್ತಾ ಹತ್ತಿರ ಬಂದ. +ಸಂಜೆಯ ಸಮಯವಾದುದರಿಂದ ರಸ್ತೆಯಲ್ಲಿ ಅತ್ತ ಇತ್ತ ಸಾಕಷ್ಟು ಜನ ನಡೆದಾಡುತ್ತಿದ್ದರು. +“ಇಲ್ಲೇನು ಮಾಡುತ್ತಿದ್ದೀರಿ ಮನೆಯಲ್ಲಿ ಕೂತೂ ಮಾತಾಡುವ ಬನ್ನಿ” ಹಗುರ ದನಿಯಲ್ಲಿ ಹೇಳಿದ ತೇಜಾ. +“ಯಾರ ಮನೆಯಲ್ಲಿ?” ಕೇಳಿದ ತಾತ. +“ನನ್ನ ಮನೆಯಲ್ಲೇ, ಅಲ್ಲಾದರೆ ಯಾವ ಗದ್ದಲವೂ ಇರುವುದಿಲ್ಲ” ಹೇಳಿದ ತೇಜಾ. +“ಅದನ್ನು ಮೊದಲು ಸ್ವಚ್ಛ ಮಾಡಿಸಬೇಕು. +ಎಷ್ಟೋ ದಿನಗಳಿಂದ ಯಾರೂ ಅತ್ತ ಹಾದೇ ಇಲ್ಲ” ಹೇಳಿದ ತಾತ. +“ಯಾರೊಡನಾದರು ಆಳಿಗೆ ಹೇಳಿ ಕಳುಹಿಸು. +ಇವತ್ತು ರಾತ್ರಿ ನಾನಿಲ್ಲೆ ಇರುತ್ತೇನೆ”ತೇಜಾನ ಮಾತು ಮುಗಿಯುತ್ತಿದ್ದಂತೆ ಯಾರನ್ನೊ ಕೂಗಿ ಕರೆದ ಆತ ಆಳಿಗೆ ಬೇಗ ಒಂದು ಮನೆ ಸ್ವಚ್ಛಗೊಳಿಸುವಂತೆ, ಅಡಿಗೆ ಮಾಡುವಂತೆ, ಇವತ್ತು ರಾತ್ರಿ ಸಾಹೇಬರು ಇಲ್ಲೇ ಇರುತ್ತಾರೆಂದು ಹೇಳಿ ಕಳುಹಿಸಿದ. +ಮಾತು ಮುಗಿಯುತ್ತಿದ್ದಂತೆ ಅವನೆದುರು ನಿಂತಿದ್ದ ಹದಿನಾರು ವರ್ಷದ ಹುಡುಗ ಓಡಿದ. +ಇಬ್ಬರು ನಿಧಾನವಾಗಿ ತೇಜಾನ ಮನೆಯ ಕಡೆ ನಡೆಯತೊಡಗಿದರು. +ಸ್ವಲ್ಪ ದೂರ ಹೋದ ಮೇಲೆ ಮೌನವನ್ನು ಸಹಿಸಲಾರದೇ ಕೇಳಿದ ತಾತ. +“ಯಾಕೆ ಇವತ್ತು ಇಲ್ಲೇನಾದರೂ ವಿಶೇಷವಿದೆಯೇ?”ಚಿಕ್ಕ ಓಣಿಯಲ್ಲಿ ಅವರು ನಡೆಯುತ್ತಿದ್ದರು ಸುತ್ತೂ ನೋಡಿ ಮೆಲ್ಲನೆ ಹೇಳಿದ ತೇಜ“ನಮ್ಮ ಗುಂಪಿನಲ್ಲಿನ ಮೂವರು ನಂಬಿಕಸ್ಥರು, ಧೈರ್ಯವಂತರು, ಮಾತು ಕಡಿಮೆ ಆಡುವಂತಹವರನ್ನು ಕರೆದುಕೊಂಡು ಬಾ”ಒಂದೂ ಅರ್ಥವಾಗದಂತೆ ತೇಜಾನ ಮುಖ ನೋಡಿದ ತಾತ. +“ಅಂತಹ ಯುವಕರು ನಮ್ಮ ಗುಂಪಿನಲ್ಲಿಲ್ಲವೇ?” ಅವನ ನೋಟ ಗಮನಿಸಿದವನಂತೆ ಕೇಳಿದ ತೇಜಾ. +“ಇದ್ದಾರೆ, ಮೂವರಲ್ಲ ಹತ್ತು ಜನ ಇದ್ದಾರೆ. +ಆದರೆ ಯಾಕೆ?” ಅಚ್ಚರಿಯ ದನಿಯಲ್ಲಿ ಕೇಳಿದ ತಾತ. +ಅವರಾಗಲೇ ನಡೆಯುತ್ತಾ ತೇಜಾನ ಮನೆಯ ಹತ್ತಿರ ಬಂದಿದ್ದರು. +ಬೇರೆಯ ಸಂದಿನಿಂದ ಬಂದ ಮನೆಯ ಆಳು ಬೀಗ ತೆಗೆಯುತ್ತಿದ್ದಳು. +“ಮೊದಲು ನಾವು ಕೂಡುವ ಕೋಣೆ ಸ್ವಚ್ಛ ಮಾಡೆಂದು ಹೇಳು” ಹೇಳಿದ ತೇಜಾ. +ಅದನ್ನೇ ಅವನು ಕೂಗಿ ಆಳಿಗೆ ಹೇಳಿದ. +“ಅದೆಲ್ಲಾ ಆಮೇಲೆ ಹೇಳುತ್ತೀನಿ. +ನನಗೆ ಮೂವರು ನಾ ಹೇಳಿದಂತಹ ಗುಣವುಳ್ಳ ಯುವಕರು ಬೇಕಷ್ಟೆ, ಹೆಚ್ಚು ಜನರ ಗದ್ದಲ ಬೇಡ, ನಾನಿಲ್ಲಿರುವುದು ತಿಳಿದು ಎಲ್ಲರೂ ಬಂದಾರು ಅದೂ ಆಗಬಾರದು. +ನಿನ್ನ ಬುದ್ಧಿ ಉಪಯೋಗಿಸಿ ನಾ ಹೇಳಿದ ಹಾಗೆ ಮಾಡು ಹೇಳಿದ ತೇಜಾ. +ಅವನ ಮಾತು ಮುಗಿಯುತ್ತಿದ್ದಂತೆ ಗುಂಡುತಾತ ಹೋಗಲು ಒಂದು ಹೆಜ್ಜೆ ಮುಂದಿಟ್ಟಾಗ ಅವನ ರಟ್ಟೆ ಹಿಡಿದು ಹೇಳಿದ ತೇಜಾ. +“ಈಗಲೇ ಅಲ್ಲ ನಾವಿಬ್ಬರು ಐದು ನಿಮಿಷ ಮನೆಯಲ್ಲಿ ಕುಳಿತ ಮೇಲೆ ಹೋಗು. +ನಿನಗಿನ್ನೊಂದು ವಿಷಯ ಹೇಳಬೇಕು”ಅವರಿಬ್ಬರೂ ಮನೆಯೊಳಬಂದಾಗ ರಭಸವಾಗಿ ಕಸಗುಡಿಸುತ್ತಿರುವ, ಧೂಳು ಜಾಡಿಸುತ್ತಿರುವ ಸದ್ದು ಕೇಳಿಸುತ್ತಿತ್ತು. +ತಾತನಲ್ಲಿ ಕೌತುಕ ಬೆಳೆಯುತ್ತಿತ್ತು. +ಒಂದು ಕೋಣೆಯ ಕೆಲಸ ಮುಗಿಸಿದ ಮೇಲೆ ಹೊರಬಂದ ಆಳು ಆ ಕೋಣೆ ಸ್ವಚ್ಛಗೊಂಡಿದೆ ಎಂದು ಹೇಳಿದಳು. +ಇಬ್ಬರೂ ಒಂದು ಕುರ್ಚಿಗಳಲ್ಲಿ ಕುಳಿತ ಮೇಲೆ ಮಾತಾಡಿದ ತೇಜಾ. +“ನೀನು ನಡುವೆ ಪ್ರಶ್ನೆಗಳನ್ನು ಕೆಳದಂತೆ ನಾ ಹೇಳಿದ ಹಾಗೆ ಮಾಡು. +ಆಮೇಲೆ ಅದ್ಯಾಕೆಂಬುವುದು ನಿನಗೇ ಗೊತ್ತಾಗುತ್ತದೆ. +ಮೊದಲು ನಾಯಕನಿಗೆ ನಾನೀ ರಾತ್ರಿ ಇಲ್ಲೇ ಇರುತ್ತೇನೆಂಬುವುದು ತಿಳಿಯಬೇಕು. +ಅದು ನಾ ಹೇಳಿಸಿದಂತಿರಬಾರದು. +ನೀನು ಸರಾಯಿಖಾನೆಗೆ ಹೋಗುತ್ತಿಯಾ?” +“ಅಪರೂಪಕ್ಕೆ… ಮನೆಗೆ ತರಿಸಿ ಕುಡಿಯುತ್ತೇನೆ” ತನ್ನ ಅಭ್ಯಾಸವನ್ನು ಒಪ್ಪಿಕೊಂಡ ತಾತ. +“ನಿನ್ನ ಬಳಿ ಕೆಂಪು ರುಮಾಲು ಇದೆಯೇ?” +ಈ ಪ್ರಶ್ನೆಗಳು ಅರ್ಥವಿಲ್ಲದಂತೆ ಎನಿಸಿದವು ತಾತನಿಗೆ, ಆದರೂ ತಲೆಹರಟೆ ಮಾಡದೇ ಹೇಳಿದ“ನಾನು ಹೆಚ್ಚು ಸುತ್ತುವುದು ಅದನ್ನೇ?” +ಅವನ ಮಾತು ಮುಗಿಯುತ್ತಲೇ ಮಾತಾಡಿದ ತೇಜಾ. +“ನಾ ಹೇಳಿದಂತಹ ಮೂವರು ಹುಡುಗರನ್ನು ಇಲ್ಲಿಗೆ ಕಳಿಸಿ ಕೆಂಪುರುಮಾಲು ಸುತ್ತಿ ಸರಾಯಿಖಾನೆ ಎದುರು ನಿಲ್ಲು, ಜನರ ಗದ್ದಲದಿಂದ ದೂರ ನಿಲ್ಲಬೇಕು. +ಒಬ್ಬ ನಿನ್ನ ಬಳಿ ಬಂದು ನಿನಗೆ ಮಾತ್ರ ಕೇಳಿಸುವಂತೆ ‘ತೇಜಾ’ ಎನ್ನುತ್ತಾನೆ. +ಅದನ್ನು ಕೇಳಿದ ಕೂಡಲೇ ‘ನಮಸ್ಕಾರ’ ಅನ್ನು, ಅದಾದ ಮೇಲೆ ನೀನು ಅವನ ಹಳೆಯ ಸ್ನೇಹಿತನಂತೆ ಮಾತಾಡುತ್ತಾ ಇಲ್ಲಿಗೆ ಕರೆದುಕೊಂಡು ಬಾ. +ಆದಷ್ಟು ನೀವಿಬ್ಬರೂ ಇಲ್ಲಿ ಬರುತ್ತಿರುವುದು ಯಾರೂ ನೋಡದಿದ್ದರೆ ಒಳ್ಳೆಯದು ಅರ್ಥವಾಯಿತೆ”ಈ ಮಾತುಗಳೆಲ್ಲಾ ಗೊಂದಲಮಯವಾಗಿ ಕಂಡವು ತಾತನಿಗೆ ಮನದಲ್ಲಿ ಎಷ್ಟೋ ಪ್ರಶ್ನೆಗಳು ಏಳುತ್ತಿದ್ದವು. +ಬಹು ಕಷ್ಟಪಟ್ಟು ಅವನ್ನು ಕಡೆಗಣಿಸಿ ಹೇಳಿದ“ಅರ್ಥವಾಯಿತು”ಅವನ ಮುಖಭಾವವನ್ನೇ ಗಮನಿಸುತ್ತಿದ್ದ ತೇಜಾ ಅವನು ಮಾಡಬೇಕಾದ ಕೆಲಸವನ್ನು ಇನ್ನೊಮ್ಮೆ ವಿವರಿಸಿದ. +ಅದೆಲ್ಲಾ ಮತ್ತೆ ಕೇಳಿದ ಮೇಲೆ ನಾಯಕ ಯಾವುದಾದರೂ ಸಂಚು ಹೂಡಿತ್ತಿರಬಹುದೆನಿಸಿತು ತಾತನಿಗೆ. +ಅವನು ಹೋದಮೇಲೆ ಗಂಗವ್ವನಿಗೆ ಒಂದು ಲೋಟಾ ಕಾಫಿ ಮಾಡಿ ಕೊಡುವಂತೆ ಹೇಳಿ ಯೋಚನೆಯಲ್ಲಿ ತೊಡಗಿದ. +ಇವರುಗಳೊಡನೆ ಮಾತು ಮುಗಿಸಿದ ಕೂಡಲೇ ಪೋಲಿಸ್ ಸ್ಟೇಷನ್‌ಗೆ ಹೋಗಿ ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವರೊಡನೆ ಮಾತಾಡಬೇಕು. +ಅದರ ಅವಶ್ಯಕತೆ ಯಾಕೆಂದರೆ ಇದರಲ್ಲಿ ಸಿದ್ಧಾನಾಯಕನೂ ಸೇರಿಕೊಂಡಿದ್ದಾನೆ. +ಯೋಚಿಸಿದ್ದನ್ನೇ ಮತ್ತೆ ಯೋಚಿಸಿ ಬೇಸರವಾದ ತೇಜಾ ರಿವಾಲ್ವರನ್ನು ತೆಗೆದು ಅದರಲ್ಲಿ ಇರುವ ಗುಂಡುಗಳನ್ನು ಪರೀಕ್ಷಿಸಿಕೊಂಡ. +ಅದನ್ನು ಮುಚ್ಚಿ ಕೈಯಲ್ಲಿ ಎರಡು ಮೂರು ಸಲ ಆಡಿಸಿ ಮತ್ತೆ ಟೊಂಕದಲ್ಲಿ ಸೇರಿಸಿದ. +ಆಗ ಗಂಗವ್ವ ಕಾಫಿಯ ಲೋಟ ಹಿಡಿದು ಬಂದಳು. +ಏನೋ ನೆನಪಾದಂತೆ ಕೇಳಿದ“ಈಗ ಹಾಲು ಎಲ್ಲಿಂದ ತಂದಿ?” +“ಇಲ್ಲೇ ಒಬ್ಬರ ಮನೆಯಲ್ಲಿ ಎಮ್ಮೆಗಳಿವೆ ದಣಿ ಅವರು ಹಾಲು ಮಾರುತ್ತಾರೆ” +“ಹಣ?” ಕೇಳಿದ ತೇಜ. +“ನೀವು ಕೊಟ್ಟು ಹೋಗಿದ್ದೀರಲ್ಲ ಅದರಲ್ಲೇ ತಂದೆ” ಹೇಳಿದಳವಳು. +ತಾನು ಅವಳಿಗೆ ಯಾವಾಗ ಹಣ ಕೊಟ್ಟದ್ದು ನೆನಪಾಗಲಿಲ್ಲ ತೇಜಾನಿಗೆ. +ಪರ್ಸಿನಿಂದ ಐವತ್ತು ರೂಪಾಯಿಯ ಒಂದು ನೋಟನ್ನು ತೆಗೆದು ಅವಳಿಗೆ ಕೊಡುತ್ತಾ ಹೇಳಿದ ತೇಜ,“ತಾತ ಮತ್ತು ಹುಡುಗರು ಬರುತ್ತಾರೆ ಇನ್ನೂ ಕಾಫಿ ಬೇಕಾಗಬಹುದು” +“ಊಟ”“ಬೇಡ!ಏನಾದರೂ ಫಲಹಾರ ಮಾಡು”ಅವನ ಮಾತು ಮುಗಿಯುತ್ತಿದ್ದಂತೆ ಅಲ್ಲಿಂದ ಹೋದಳು ಗಂಗವ್ವ. +ತೇಜಾ ಕಾಫಿ ಕುಡಿದು ಮುಗಿಸಿದ ಸ್ವಲ್ಪ ಹೊತ್ತಿನಲ್ಲಿ ಮೂವರು ಯುವಕರು ಒಬ್ಬರ ಹಿಂದೆ ಒಬ್ಬರು ಬಂದರು. +ವಿನಯವಾಗಿ ನಮಸ್ಕರಿಸಿದ ಅವರು ತೇಜಾ ಹೇಳಿದ ಮೇಲೆ ಕುಳಿತರು. +ಅವರ ಮೇಲೆ ಪರೀಕ್ಷಾತ್ಮಕ ನೋಟ ಹಾಯಿಸಿದ. +ಮೊದಲು ಬಹಳ ಸಲ ನೋಡಿದರೂ ಈಗಿನ ಅವನ ನೋಟವೇ ಬೇರೆಯಾಗಿತ್ತು. +ಮೂವರ ವಯಸ್ಸೂ ಇಪ್ಪತ್ತೆರಡನ್ನು ದಾಟಿರಲಾರದು. +ಇಬ್ಬರದು ಸಾಮ ಮಾಡಿದಂತಹ ದೇಹಧಾರ್ಡ್ಯ. +ಒಬ್ಬನು ಸಾಮಾನ್ಯ ಮೈಕಟ್ಟಿನವ ವಿಧೇಯ ವಿದ್ಯಾರ್ಥಿಗಳಂತೆ ಕುಳಿತಿದ್ದ. +ಅವರು ಅವನ ಮಾತಿಗಾಗೇ ಕಾಯುತ್ತಿದ್ದಂತಿದ್ದರು. +ಅವರ ಕಡೆಯೇ ನೋಡುತ್ತ ಕೇಳಿದ ತೇಜಾ“ನೀವು ಪತ್ತೇದಾರಿ ಕಾದಂಬರಿಗಳನ್ನು ಓದುತ್ತೀರಾ?” +ಸಾಮಾನ್ಯ ಮೈಕಟ್ಟಿನವ ಹೇಳಿದ “ನಾನು ಓದುತ್ತೇನೆ ಸರ್!”ಮಿಕ್ಕಿಬ್ಬರು ಓದುವುದಿಲ್ಲವೆಂದು ಹೇಳಿದರು. +ಆ ಪ್ರಶ್ನೆ ಯಾಕೆಂಬುವುದು ಅವರಿಗೆ ಗೊತ್ತಾಗಲಿಲ್ಲ. +“ನೀವು ಪತ್ತೇದಾರಿ ಕೆಲಸವನ್ನು ಮಾಡಬಲ್ಲಿರಾ?”ಆ ಪ್ರಶ್ನೆಯಿಂದ ಅವರು ತಮಗ್ಯಾವುದೋ ವಿಶಿಷ್ಟ ಕೆಲಸ ಹಚ್ಚಲಿದ್ದಾರೆಂದೆನಿಸಿತು. +“ಮಾಡುತ್ತೇವೆ ಸರ್” ಎಂದ ಸಾಮ ಮಾಡಿದಂತಹ ದೇಹವುಳ್ಳ ವ್ಯಕ್ತಿ ಮಿಕ್ಕಿಬ್ಬರೂ ಅದೇ ತರಹದ ಉತ್ತರ ಕೊಟ್ಟರು. +“ಇವತ್ತು ಯಾರಾದರೂ ಹೊಸಬರನ್ನು ನಮ್ಮೂರಿನಲ್ಲಿ ಗಮಿಸಿದ್ದೀರಾ?” ಕೇಳಿದ ತೇಜ. +ಅದಕ್ಕೆ ಆ ಮೂವರಿಂದಲೂ ನಕಾರಾತ್ಮಕ ಉತ್ತರವೇ ಬಂದಿತು. +ಅವರಿಗೆ ಯೋಚಿಸಲು ಸ್ವಲ್ಪ ಸಮಯ ಕೊಟ್ಟು ಕೇಳಿದ ತೇಜಾ. +“ಸಿದ್ದಾನಾಯಕ್‌ನ ಮನೆ ಮುಂದೆಯಾಗಲಿ, ಅದರ ಆಸುಪಾಸಿನಲ್ಲಾಗಲಿ ಯಾರಾದರೂ ಹೊಸ ವ್ಯಕ್ತಿ ಸುಳಿದಾಡುತ್ತಿರುವುದನ್ನು ನೋಡಿದ್ದೀರಾ?” +“ನಾ ನೋಡಿದ್ದೆ ಸರ್!ಯಾರೋ ಇಬ್ಬರು ಅವನ ಮನೆಯ ಬಾಗಿಲೆದುರು ನಿಂತು ಮಾತಾಡುತ್ತಿದ್ದರು. +ಆಮೇಲೆ ನಾಯಕರೊಡನೆ ಆ ಇಬ್ಬರೂ ಅವರ ಮನೆಯಲ್ಲಿ ಹೋದರು” ಕೂಡಲೇ ಏನೋ ನೆನಪಾದಂತೆ ಹೇಳಿದ ಸೊಣಕಲು ವ್ಯಕ್ತಿ. +“ಅವರು ಇಲ್ಲಿಗೆ ಹೊಸಬರೆ?” ಕೇಳಿದ ತೇಜಾ. +“ಮೊದಲೆಂದೂ ಇಲ್ಲಿ ನೋಡಿದ ನೆನಪಿಲ್ಲ ಸರ್! +ಯಾವುದೋ ಕೆಲಸದ ನಿಮಿತ್ತ ಅವರ ಬಳಿ ಬಂದಿರಬಹುದೆಂದುಕೊಂಡೆ” ವಿವರಣೆ ನೀಡಿದನವ. +“ಅವರನ್ನು ಗಮನಿಸಲು ಏನು ಕಾರಣ?” ಕೇಳಿದ ತೇಜಾಅದಕ್ಕೂ ಕೂಡಲೇ ಉತ್ತರಿಸಿದ ಸೊಣಕಲು ವ್ಯಕ್ತಿ“ಕಟ್ಟು ಮಸ್ತಾದ ಆಳುಗಳು ಸರ್! +ಒಬ್ಬನು ಮೀಸೆಯನ್ನು ವಿಚಿತ್ರವಾಗಿ ತಿರುವಿದ್ದ” +“ಅವರನ್ನೀಗ ನೋಡಿದರೆ ಗುರುತಿಸಬಲ್ಲೆಯಾ?” +“ಖಂಡಿತ ಸರ್!” ಆತ್ಮವಿಶ್ವಾಸದಿಂದ ಹೇಳಿದನಾ ವ್ಯಕ್ತಿ. +ಅವನ ಮಾತು ಮುಗಿಯುತ್ತಿದ್ದಂತೆ ತಾತ ಮತ್ತು ಕುಶಾಲ ಬಂದರು. +ಕುಶಾಲನನ್ನು ತಕ್ಷಣ ಗುರುತಿಸುವುದು ಕಷ್ಟ, ಹೊಲಸಾದ ಪಂಚೆ, ಅದರ ಮೇಲೆ ಕೆಂಪು ಚೌಕಗಳಿರುವ ಪೂರ್ತಿ ತೋಳಿನ ಬ್ಲು ಶರ್ಟ್, ತಲೆಗೆ ಸುತ್ತಿದ ಟವಲ್ ಅವನನ್ನು ಪೂರ್ತಿ ಹಳ್ಳಿಗನನ್ನಾಗಿ ಮಾಡಿಬಿಟ್ಟಿತ್ತು. +ಮುಂಬಾಗಿಲನ್ನು ಹಾಕಿ ಅವರನ್ನು ಸೇರಿಕೊಂಡ ಕುಶಾಲ್. +ಅವನು ಹತ್ತಿರ ಬರುತ್ತಿದ್ದಂತೆ ಅಲ್ಲಿದ್ದವರಿಗೆ ಹೇಳಿದ ತೇಜಾ. +“ಇವರು ಇನ್ಸ್‌ಪೆಕ್ಟರ್ ಕುಶಾಲ್… ನೀನು ನಾಯಕನ ಮನೆ ಎದುರು ನೋಡಿದ್ದನ್ನೆಲ್ಲಾ ಇವರಿಗೆ ಹೇಳು. +ಆಮೇಲೆ ಇವರು ಏನು ಮಾಡಬೇಕೆಂಬುವುದು ವಿವರಿಸುತ್ತಾರೆ. +ನಾನೀಗ ಪೋಲೀಸ್ ಸ್ಟೇಷನ್‌ಗೆ ಹೋಗಿ ಬರುತ್ತೇನೆ” ಎಂದ ತೇಜಾ ಅಲ್ಲಿಂದ ಎದ್ದ. +ತನ್ನೊಡನೆ ಪಕ್ಕಾ ಹಳ್ಳಿಗನಂತೆ ಹರಟುತ್ತಾ ಬಂದ ಈತ ಇನ್ಸ್‌ಪೆಕ್ಟರ್‌ನೇ ಎಂದು ಕಣ್ಣಗಲಿಸಿ ನೋಡಿದ ತಾತ. +ಯುವಕರಿಗೂ ಆಶ್ಚರ್ಯ. +ಆರಾಮಕುರ್ಚಿಯಲ್ಲಿ ಕೂಡುತ್ತಾ ಕೇಳಿದ ಕುಶಾಲ. +“ಹೇಳು ಮರಿ ನೀನೇನು ನೋಡಿದಿ”ತೇಜಾ ಪೋಲಿಸ್ ಸ್ಟೇಷನ್ ಸೇರಿದಾಗ ಅಲ್ಲಿದ್ದ ಒಬ್ಬನೇ ಕಾನ್ಸ್ ಟೇಬಲ್ ಟೇಬಲಿನ ಮೇಲೆ ತಲೆ ಇಟ್ಟು ಒರೆಗಿದ್ದ. +ತೇಜಾನ ಬೂಟುಗಾಲಿನ ಸದ್ದು ಕೇಳಿಸುತ್ತಲೇ ಶಾಕ್ ಹೊಡೆದವನಂತೆ ಎದ್ದು ನಿಂತ. +“ನೀನಿಲ್ಲಿಂದ ಕದಲಬೇಡ” ಎಂದು ಹೇಳಿದ ತೇಜಾ, ತನ್ನ ಕೋಣೆ ಸೇರಿ ಒಳಗಿನಿಂದ ಬಾಗಿಲು ಹಾಕಿ ಬಂದು ಸ್ಕ್ವಾಡಿನ ಮುಖ್ಯಸ್ಥರ ಮನೆಗೆ ಫೋನ್ ಮಾಡಿದ. +“ಹಲೋ” ಅತ್ತ ಕಡೆಯಿಂದ ಹೆಣ್ಣು ಕಂಠ ಕೇಳಿ ಬಂದಿತು. +“ಚೀಫ್ ಇದ್ದಾರೆಯೇ ನಾನು ಬಂಡೇರಹಳ್ಳಿಯಿಂದ ಮಾತಾಡುತ್ತಿದ್ದೇನೆ” ಹೇಳಿದ ತೇಜ. +ಕೆಲ ಕ್ಷಣಗಳಲ್ಲೇ ಅತ್ತಕಡೆಯಿಂದ ಅವರ ದನಿ ಕೇಳಿ ಬಂತು. +“ನಾನು ಸರ್ ತೇಜಾ! +ಇನ್ನೊಂದು ಸಮಸ್ಯೆ!ಫೋನಿನಲ್ಲಿ ಹೇಳಬಹುದೇ?”ಅದು ಮುಖ್ಯವೆಂಬಂತೆ ಆತುರದ ದನಿಯಲ್ಲಿ ಹೇಳಿದ. +“ಹೇಳು!ನಮ್ಮ ಮಾತು ಯಾರೂ ಕೇಳಲಿಕ್ಕಿಲ್ಲ” ಎಂದರವರು. +ಕೇಳಿದರೂ ಚಿಂತೆ ಇಲ್ಲ ತಾನು ಏನೇ ಆಗಲಿ ಅವರ ಸಲಹೆ ಪಡೆಯಲೇಬೇಕೆಂದು ಹೇಳಿದ. +ಇದೀಗ ಕ್ರಾಂತಿಕಾರಿಯರ ಮುಸುಕಿನಲ್ಲಿ ಒಂದು ದರೋಡೆಕೋರರ ತಂಡ ಬಂದಿದೆ. +ಅವರು ನಾಯಕನ ಸಲಹೆ ಮೇಲೆ ನನ್ನ ಮುಗಿಸಲು ಬಂದಿದ್ದಾರೆಂಬ ಇನ್‌ಫರ್‌ಮೇಷನ್ ಬಂದಿದೆ. +ನಾನೆಲ್ಲಾ ಸಿದ್ಧತೆಯಲ್ಲಿದ್ದೇನೆ. +ಕುಶಾಲ ನನ್ನ ನೋಡಲು ಬಂದಿದ್ದ ಅವನೂ ನನ್ನ ಜತೆಗಿದ್ದಾನೆ ಏನು ಮಾಡಲಿ”“ +ಅವರಷ್ಟು ಜನರಿದ್ದಾರೆ?” ಕೂಡಲೇ ಪ್ರಶ್ನಿಸಿದರು ಮುಖ್ಯಸ್ಥರು. +“ಐವರು ಇದ್ದ ಹಾಗಿದೆ” +“ಅವರಲ್ಲಿ ಮೂವರನ್ನು ಮುಗಿಸಿಬಿಡು. +ನಾಯಕ ಮತ್ತಿಬ್ಬರನ್ನು ಬಂಧಿಸಿ ಇಲ್ಲಿಗೆ ಕಳಿಸು. +ನಿನ್ನ ಆಪರೇಷನ್ ಯಾವಾಗ ಆರಂಭವಾಗುತ್ತದೆ” +“ಇನ್ನೂ ಗೊತ್ತಿಲ್ಲ ಸರ್!” +“ಸರಿ ನಾನೊಂದು ಗಂಟೆ ಬಿಟ್ಟು ಕಲೆಕ್ಟರ್‌ಗೆ ಫೋನ್ ಮಾಡುತ್ತೇನೆ. +ಆತ ಅಲ್ಲಿ ವ್ಯಾನ್ ಕಳಿಸುತ್ತಾನೆ ಅವರನ್ನೆಲ್ಲಾ ಅದರಲ್ಲಿ ಹಾಕಿ ಕಳಿಸಿಬಿಡು” +“ಅವರು ರಾಮನಗರದಲ್ಲೆ…” +“ಇಲ್ಲ, ನೇರವಾಗಿ ಇಲ್ಲಿಗೆ ಕಳಿಸುವಂತೆ ಹೇಳುತ್ತೇನೆ. +ಆದರೆ ಆ ಮಿಕ್ಕಿಬ್ಬರೂ ನಾಯಕನ ವಿರುದ್ಧ ಸಾಕ್ಷಿ ಕೊಡಬೇಕು. +ಅವರನ್ನು ಒದ್ದು ನಿಜವನ್ನು ಬೊಗಳಿಸು” +“ಥ್ಯಾಂಕ್ಯೂ ಸರ್”“ಬೆಸ್ಟ್ ಆಫ್ ಲಕ್ ಅಂಡ್ ಟೇಕ್ ಕೇರ್” ಎಂದ ಅವರು ಸಂಪರ್ಕ ಮುರಿದರು. +ಬಾಗಿಲು ತೆಗೆದು ಹೊರಬಂದ ತೇಜಾ, ಈ ಮುಖ್ಯಸ್ಥರು ಎಷ್ಟು ಸುಲಭವಾಗಿ ಮುಗಿಸಿಬಿಡು ಎನ್ನುತ್ತಾರೆ ಎಂದುಕೊಳ್ಳುತ್ತಾ ಮನೆ ಸೇರಿದ. +ಅಲ್ಲಿ ಕುಶಾಲ ಹೇಳುವುದೆಲ್ಲಾ ಮುಗಿದಂತೆ ಕಾಣುತ್ತಿತ್ತು. +ಅವರು ತನಗಾಗೇ ಕಾಯುತ್ತಿದ್ದಂತಿದ್ದರು. +ತೇಜಾ ಬರುತ್ತಲೇ ಎಲ್ಲರಿಗೂ ಫಲಹಾರ ತಂದುಕೊಟ್ಟಳು ಗಂಗವ್ವ. +ಅದು ತಿಂದಮೇಲೆ ಎಲ್ಲರಿಗೂ ಕಾಫಿ ಕೊಡುತ್ತಿದ್ದಾಗ ಅವಳಿಗೆ ಮನೆಗೆ ಹೋಗುವಂತೆ ಹೇಳಿದ ತೇಜಾ, ಆಗಲೇ ಹತ್ತೂವರೆಯಾಗಲು ಬಂದಿತ್ತು. +ಪೂರ್ತಿ ಬಂಡೇರಹಳ್ಳಿ ಮಲಗಿಬಿಟ್ಟಂತೆ ಭಾಸವಾಗುತ್ತಿತ್ತು. +ಕಾಫಿ ಕುಡಿದಾದ ಮೇಲೆ ತೇಜಾನೆಡೆ ತಿರುಗಿ ಮಾತಾಡಿದ ಕುಶಾಲ. +“ನನ್ನ ಪ್ರಕಾರ ಅವರೊಂದು ವೇಳೆ ದಾಳಿ ಮಾಡುವುದಿದ್ದರೆ ರಾತ್ರಿ ಹನ್ನೆರಡರ ನಂತರವೇ ಮಾಡುತ್ತಾರೆ. +ಇಲ್ಲಿ ಇಬ್ಬರಿರಲಿ, ಅವರು ಬೇರೆ ಬೇರೆ ಕೋಣೆಯಲ್ಲಿರಬೇಕು. +ನೀ ಹೇಳುವವರೆಗೆ ಅವರು ಅಲ್ಲಿಂದ ಹೊರಬರಬಾರದು. +ನಾನು ಅವರನ್ನು ಹೊರಗೆ ಗಮನಿಸುತ್ತಿರುತ್ತೇನೆ. +ತಾತಾ ನೀ ಮನೆಗೆ ಹೋಗಿ ಮಲಗು” +“ಇಲ್ಲ… ಇಲ್ಲ ನಾನ್ಯಾಕೆ ಮಲಗಲಿ ನಾನೂ ನಿಮ್ಮ ಜತೆಗಿರುತ್ತೇನೆ” ಅವನ ಮಾತು ಮುಗಿದ ಕೂಡಲೇ ಹಠಹಿಡಿದವನಂತೆ ಹೇಳಿದ ಗುಂಡು ತಾತ. +“ಸರಿ!ಅವರೂ ಇಲ್ಲೇ ಯಾವುದೋ ಕೋಣೆಯಲ್ಲಿರಲಿ ಮುಂದೆ?” ಕೇಳಿದ ತೇಜಾ. +ಒಂದು ವೇಳೆ ಅವರಿಲ್ಲಿಗೆ ಬರದೇ ಬೇರಾವುದಾದರೂ ಮನೆಗೆ ದರೋಡೆಗೆ ಹೋಗುತ್ತಿದ್ದರೆ ನಿನಗೆ ಕೂಡಲೇ ತಿಳಿಸುತ್ತೇವೆ” ಹೇಳಿದ ಕುಶಾಲ. +“ದರೋಡೆ ಮಾಡುವಂತಹ ಮನೆಗಳು ಇಲ್ಲಿ ಯಾವುವೂ ಇಲ್ಲ. +ದರೋಡೆ ಮಾಡುವುದೇ ಇದ್ದರೆ ನಾಯಕನ ಮನೆಯಲ್ಲಿ ದರೋಡೆ ಮಾಡಬೇಕಷ್ಟೆ” ಹೇಳಿದ ತಾತ. +“ಒಂದು ಕೆಲಸ ಮಾಡುವ, ಅವರನ್ನು ಗುರುತಿಸುವ ಇವನು ಒಬ್ಬನೇ ಅಲ್ಲದೇ ಬೇರೆ ಯಾರಾದರೂ ಹೊಸಬರು ಅನುಮಾನಾಸ್ಪದ ವ್ಯಕ್ತಿಗಳು ಕಾಣಿಸುತ್ತಾರೇನೋ ಎಂದು ಇಲ್ಲಿರುವ ಮತ್ತೊಬ್ಬನೊಡನೆ ಹೋಗಲಿ, ಇಲ್ಲೊಬ್ಬನಿದ್ದರೆ ಸಾಕು. +ಹೇಗೂ ತಾತನೂ ಇಲ್ಲೇ ಇರುತ್ತೇನೆನ್ನುತ್ತಿದ್ದಾರೆ ಕುಶಾಲ ನೀನು ಇನ್ನೊಂದು ದಿಕ್ಕಿಗೆ ಒಬ್ಬನನ್ನು ಜತೆಗೆ ಕರೆದೊಯ್ಯಿ” ಹೇಳಿದ ತೇಜಾ. +ಅದಕ್ಕೆ ಎಲ್ಲರೂ ಒಪ್ಪಿಕೊಂಡರು. +ಸೊಣಕಲು ವ್ಯಕ್ತಿ ಮತ್ತವನ ಜತೆಗೆ ಹೋಗುವವರೆಡೆ ನೋಡುತ್ತಾ ಮತ್ತೆ ಮಾತು ಮುಂದುವರೆಸಿದ ತೇಜಾ. +“ಅಂತಹ ಯಾರೇ ಆಗಲಿ ಕಾಣಿಸಿದರೆ, ಅವರನ್ನು ನೀನು ಗುರುತಿಸಿದರೆ, ಕೂಡಲೇ ಸಂದುಗೊಂದಲುಗಳಲ್ಲಿಂದ ಇಲ್ಲಿ ಬಂದು ತಿಳಿಸಬೇಕು. +ಯಾರೂ ಅವರ ಗಮನ ಸೆಳೆಯಬಾರದು. +ನೀವು ಯಾರಿಗೂ ಅನುಮಾನ ಬರದಂತೆ ಅವರನ್ನು ಹುಡುಕಬೇಕು”ಅವನ ಮಾತು ಮುಗಿಯುತ್ತಲೇ ಕುಶಾಲ ಮಾತಾಡಿದ“ಈಗ ರಸ್ತೆಯ ಮೇಲೆ ಜನಸಂಚಾರವಿರುವುದಿಲ್ಲ. +ನೀವು ಹೆಚ್ಚು ಯಾರಿಗೂ ಕಾಣದಂತೆ ಕತ್ತಲಲ್ಲಿ, ಬೀದಿ ದೀಪವಿದ್ದರೆ ಅದರ ಬೆಳಕಿನಿಂದ ತಪ್ಪಿಸಿಕೊಂಡು ನಡೆಯಬೇಕು ಅರ್ಥವಾಯಿತೆ” +“ಒಂದು ಅನುಮಾನ ಸರ್” ಹೇಳಿದ ಸೊಣಕಲು ವ್ಯಕ್ತಿ. +“ಒಂದು ವೇಳೆ ಹೇಗೊ ನಮ್ಮನ್ನು ನೋಡಿ ಅವರೇ ಬಂದು ನಮ್ಮನ್ನು ಮಾತಾಡಿಸಿದರೆ?” +“ಮಾತಾಡಿ, ಈ ಊರಿನ ನೀವು ಸ್ನೇಹಿತರು ನಿದ್ದೆ ಬರುತ್ತಿಲ್ಲ ತಿರುಗುತ್ತಿದ್ದೇವೆಂದು ಹೇಳಿ ಹಾಗೆ ಮಾತಾಡಲು ಸಾವಿರ, ಲಕ್ಷ ವಿಷಯಗಳಿವೆ. +ಒಂದು ಮಾತು ಚೆನ್ನಾಗಿ ನೆನಪಿಡಿ ನಿಮಗೆ ಅನುಮಾನವಿದೆ ಎಂಬುವುದು ನೋಟದಿಂದಲೂ ಗೊತ್ತಾಗಬಾರದು. +ಅವರು ಇತ್ತಕಡೆ ಬರುತ್ತಿದ್ದರೆ ಹಿಂಬಾಲಿಸುವುದನ್ನು ಬಿಟ್ಟುಬಿಡಿ. +ನನಗನಿಸಿದಂತೆ ಅವರು ಸುಮ್ಮಸುಮ್ಮನೆ ನಿಮ್ಮೊಡನೆ ಜಗಳ ತೆಗೆಯಲಿಕ್ಕಿಲ್ಲ. +ಹಾಗೇನಾದರೂ ಆದರೇ ಅವರನ್ನು ಚೆನ್ನಾಗಿ ತದಕಿ ಓಡಿಹೋಗದಂತೆ ಹಿಡಿದು ಸಹಾಯಕ್ಕೆ ಜನರನ್ನು ಕರೆಯಿರಿ. +ಅರ್ಥವಾಯಿತೆ”ಸೊಣಕಲು ಯುವಕ ಮತ್ತು ಒಳ್ಳೆಯ ದೇಹದಾರ್ಡ್ಯದ ಯುವಕರು ಅರ್ಥವಾಯಿತೆಂಬಂತೆ ತಲೆ ಹಾಕಿದರು. +ಬಾಗಿಲ ಬಳಿ ಹೋದ ತೇಜಾ, ಕುಶಾಲನನ್ನು ಕರೆದು ಬೇರಾರಿಗೂ ಕೇಳಿಸದಹಾಗೆ ಸ್ಕ್ವಾಡಿನ ಮುಖ್ಯಸ್ಥರು ಹೇಳಿದ ವಿಷಯ ಹೇಳಿದ. +ಅದರಿಂದ ಅವನ ಮುಖದಲ್ಲಿ ಸಂತಸ ತುಂಬಿ ಬಂದಂತೆ ಕಂಡಿತು, ಹೇಳಿದ. +“ಮುಗಿಸುವ ಕೆಲಸವನ್ನು ನಾನು ಮಾಡುತ್ತೇನೆ”ಲೋಕದ ಅಪರಾಧಿಗಳನ್ನೆಲ್ಲಾ ಮುಗಿಸಿಬಿಡಬೇಕೆನ್ನುವುದು ಅವನ ವಾದ. +“ಅದನ್ನು ಆಮೇಲೆ ನಿರ್ಣಯಿಸುವ. +ನಮಗೆ ನಾಯಕ ವಿರುದ್ಧ ಸಾಕ್ಷಿ ಕೊಡಲು ಇಬ್ಬರು ಅಪರಾಧಿಯರು ಬೇಕೇ ಬೇಕು” ಎಂದ ತೇಜ. +ಆ ನಿರ್ಣಯ ತೆಗೆದುಕೊಂಡ ಮೇಲೆ ಇಬ್ಬರಿಬ್ಬರ ಎರಡು ತಂಡಗಳು ಸ್ವಲ್ಪ ಸಮಯದ ಅಂತರ ಬಿಟ್ಟು, ಮನೆಯಿಂದ ಹೊರಬಿದ್ದವು. +ಅವರು ಹೋದಮೇಲೆ ಬಾಗಿಲ ಬೋಲ್ಟ್ ಎಳೆದು ಬಂದ ಯುವಕ. +ಅವರಿಗೆ ಯಾವ ಯಾವ ಕೋಣೆಯಲ್ಲಿ ಸುಮ್ಮನೆ ಮಲಗಿರಬೇಕೆಂಬುವುದು ತೋರಿಸಿದ ತೇಜಾ ಎಂತಹದೇ ಸದ್ದಾದರೂ ಹೊರಬರಬಾರದೆಂದು ತಾನು ಕರೆಯುವವರೆಗೆ ಅವರು ಸುಮ್ಮನಿರಬೇಕೆಂದು ಆದೇಶಿಸಿದ. +ಅದನ್ನು ಪಾಲಿಸಲು ಅವರುಗಳು ತಮ್ಮ ತಮ್ಮ ಕೋಣೆಗೆ ಹೋದರು. +ಮಂಚದಲ್ಲಿ ಉರುಳಿದ ತೇಜಾನ ಕಾಯುವಿಕೆ ಆರಂಭವಾಯಿತು. +ಇಡೀ ಬಂಡೇರಹಳ್ಳಿ ಮಲಗಿ ಸುಖ ನಿದ್ದೆಯಲ್ಲಿರುವಂತೆ ಕಂಡುಬರುತ್ತಿತ್ತು. +ಸೊಣಕಲು ವ್ಯಕ್ತಿ ಮತ್ತು ಅವನ ಸಂಗಡಿಗ ಕತ್ತಲಲ್ಲಿ, ಬೆಳಕಿದ್ದರೆ ಅದರಿಂದ ತಪ್ಪಿಸಿಕೊಳ್ಳುತ್ತಾ ಕಣ್ಣಗಲಿಸಿ ತಮ್ಮ ಹುಡುಕಾಟದಲ್ಲಿ ತೊಡಗಿದರು. +ಯಾವ ಮಾತೂ ಇಲ್ಲದೇ ನಿಧಾನವಾಗಿ ಬೀಳುತ್ತಿದ್ದ ಅವರ ಹೆಜ್ಜೆಗಳು. +ಅವರಿಬ್ಬರಲ್ಲಿ ಇಂತಹ ಪತ್ತೇದಾರಿ ಕೆಲಸ ಮಾಡುತ್ತಿದ್ದೇವಲ್ಲ ಎಂಬ ಹುರುಪು ಹುಟ್ಟಿಬಂದಿತ್ತು. +ತಮ್ಮ ಕೈಗೆ ಅವರು ಸಿಕ್ಕರೆ ತದಕುವ ಅವಕಾಶ ಕೊಡಬೇಕಾಗಿತ್ತು ತೇಜಾ ಸಾಹೇಬರು ಎಂದುಕೊಳ್ಳುತ್ತಿದ್ದ ದಷ್ಟಪುಷ್ಟ ಮೈಕಟ್ಟಿನ ವ್ಯಕ್ತಿ. +ಬಹು ನಿಧಾನವಾಗಿ ನಡೆದರೂ ಇಡೀ ಬಂಡೇರಹಳ್ಳಿಯನ್ನು ಎರಡು ಗಂಟೆಯೊಳಗೆ ಸುತ್ತು ಹಾಕಿಬಿಡಬಹುದು. +ಹಾಗೆ ಅವರು ಒಂದು ಗಂಟೆ ನಡೆದರೂ ಯಾವ ಅನುಮಾನಾಸ್ಪದ ವ್ಯಕ್ತಿಯೂ ಕಾಣಲಿಲ್ಲ. +ಅವರಲ್ಲಿ ನಿರಾಸೆ ಹುಟ್ಟತೊಡಗಿತ್ತು. +ಇನ್ಸ್‌ಪೆಕ್ಟರ್ ಸಾಹೇಬರು ಇಲ್ಲದ್ದನ್ನು ಊಹಿಸಿಕೊಂಡಿರ ಬೇಕೆಂದು ಗುಸುಗುಸು ಮಾತಾಡಿಕೊಂಡರು. +ಹಾಗವರು ಸಂದುಗೊಂದುಗಳಿಂದ ನಡೆಯುತ್ತಿರುವಾಗ ಒಂದು ಗುಡಿಸಲಿನಿಂದ ಮಾತುಗಳು ಕೇಳಿಸಿದವು. +ಬದಿಯಲ್ಲಿ ನಿಂತು ಗಮನವಿಟ್ಟು ಕೇಳಿದ ಸೊಣಕಲು ವ್ಯಕ್ತಿ. +ಎರಡೂ ಗಂಡು ಕಂಠಗಳೇ, ತನ್ನ ಮಿತ್ರನ ಕೈ ಹಿಡಿದು ಎಳೆದ ಹಾಗೇ ಅವರು ಸ್ವಲ್ಪ ದೂರ ಹೋದ ಮೇಲೆ ಬಹು ಮೆಲ್ಲನೆ ಹೇಳಿದ. +“ಇಲ್ಲೇ ಕಾಯುವ”“ಯಾರೋ ಕುಡುಕರು ಕುಡಿಯುತ್ತಾ ಕುಳಿತಿರಬಹುದು ಅಷ್ಟೆ. +ಮೆಲ್ಲನೆ ಹೇಳಿದ ಆ ಇನ್ನೊಬ್ಬ ಯುವಕ. +ತೇಜಾ ಬಂದಾಗಿನಿಂದ ಸಮಯವಲ್ಲದ ಸಮಯದಲ್ಲಿ ಕಳ್ಳತನದಿಂದ ಸರಾಯಿ ಮಾರಾಟವಾಗುತ್ತದೆ ಎಂಬುವುದು ಇಬ್ಬರಿಗೂ ಗೊತ್ತಿತ್ತು. +“ಅದೇ ಅವರು ಕುಡಿತ ಮುಗಿಸಿ ಹೊರಬೀಳುತ್ತಾರೆ. +ಅವರಾರೆಂದು ನೋಡುವ” ಹೇಳಿದ ಸೊಣಕಲು ವ್ಯಕ್ತಿ. +ಅವನ ಸಂಗಡಿಗನಿಗೆ ಇನ್ನು ಹುಡುಕಾಟ ಸಾಕೆನಿಸಿತ್ತು. +ಇಬ್ಬರೂ ಕತ್ತಲು ಮಯವಾಗಿರುವ ಸ್ಥಳವನ್ನು ಹುಡುಕಿ ಕಾಯುತ್ತಾ ಕುಳಿತರು. +ಸೊಣಕಲು ದೇಹದವನ ನೋಟ ಆ ಗುಡಿಸಲಿನಿಂದ ಕದಲಲಿಲ್ಲ. +ಕುಶಾಲ ರಸ್ತೆಗೆ ಬಂದಾಗ ಅಲ್ಲೊಬ್ಬರು ಇಲ್ಲೊಬ್ಬರು ಓಡಾಡುತ್ತಿದ್ದರು ಸುತ್ತೂ ಒಮ್ಮೆ ನೋಟ ಹಾಯಿಸಿ ಇಲ್ಲಿ ಅನೈತಿಕ ಕೆಲಸಗಳನ್ನು ಮಾಡುವ ಸ್ಥಳವೆಲ್ಲಿದೆ ಎಂದು ತನ್ನ ಜತೆಗಿದ್ದ ಯುವಕನಿಗೆ ಕೇಳಿದ. +ತಾವು ಹುಡುಕುವುದು ಹಳ್ಳಿಯಲ್ಲೊ ಕಾಡಿನಲ್ಲೋ ಎಂದು ಗೊತ್ತಾಗದ ಆ ಯುವಕ ಅದು ಎಲ್ಲಿರಬಹುದೆಂಬ ದಿಕ್ಕನ್ನು ಬೆರಳು ಮಾಡಿ ತೋರಿಸಿದ. +ಬೆಳಕಿನಿಂದ ದೂರವಾಗುತ್ತಾ ಇಬ್ಬರೂ ಅತ್ತ ನಡೆಯತೊಡಗಿದರು. +ಹತ್ತು ನಿಮಿಷದ ದಾರಿ ಸವೆಸುತ್ತಿರುವಂತೆ ಗುಡಿಸಲುಗಳಿಂದ ಹಳ್ಳಿಯ ತಮ್ಮದೇ ತರಹ ಮನೆಗಳಿಂದ ಮುಕ್ತರಾಗಿ ಅವರು ಕಲ್ಲು, ಮುಳ್ಳು ಗಿಡಗಳಿರುವ ಮೈದಾನಕ್ಕೆ ಬಂದಿದ್ದರು. +ಕತ್ತಲಲ್ಲೂ ಅಲ್ಲಲ್ಲಿ ಬಂಡೆಗಳು ಕಾಣಿಸುತ್ತಿದ್ದವು. +ಅಲ್ಲಿ ಆಸುಪಾಸು ವಾಸಿಸುವ ಜನರು ಬಯಲಿಗೆ ಹೋಗಲು ಆ ಸ್ಥಳವನ್ನು ಉಪಯೋಗಿಸುತ್ತಿದ್ದರು. +ಬಂಡೆಗಳ ದಿಕ್ಕಿಗೆ ಹೋಗುವ ಕಾಲ್‌ದಾರಿ. +ಅದೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. +ಗಿಡಗಂಟೆಗಳ ಕಾರಣ, ನೆಲದ ಮೇಲಿನ ಸಣ್ಣ ಸಣ್ಣ ಕಲ್ಲು ಬಂಡೆಗಳ ಕಾರಣ ಅವರು ನಡೆಯುತ್ತಿರುವ ಸದ್ದು ಸ್ಪಷ್ಟವಾಗಿ ಕೇಳಿಬರುತ್ತಿತ್ತು. +ತನ್ನ ಜತೆಗಿದ್ದ ಯುವಕನ ಭುಜದ ಮೇಲೆ ಕೈ ಹಾಕಿ ಬಹು ಮೆಲ್ಲನೆ ಹೇಳಿದ ಕುಶಾಲ. +“ಸದ್ದಾಗದಂತೆ ಮೆಲ್ಲನೆ ನಡಿ, ಒಂದುವೇಳೆ ಯಾವುದಾದರೂ ಆಕಾರ ಕಂಡು ಬಂದರೆ ಬಯಲಿಗೆ ಕುಳಿತವನಂತೆ ಕುಳಿತು ಬಿಡು. +”“ಎಲ್ಲಾ ಮುಳ್ಳು ಗಿಡಗಳು ದಾರಿ ಅಷ್ಟು ಸರಿಯಾಗಿಲ್ಲ” ಮೆಲ್ಲನೆ ಹೇಳಿದ ಆ ಯುವಕ. +“ನಿನಗೆ ಕಾಲ್‌ದಾರಿ ಗೊತ್ತಿರಬಹುದು. +ಅದರಲ್ಲಿ ನಡಿ, ನಾ ನಿನ್ನ ಹಿಂದಿರುತ್ತೇನೆ” ಎಂದ ಕುಶಾಲ್. +ಆ ಯುವಕ ಮುಂದೆ ನಡೆಯಲಾರಂಭಿಸಿದ ಅವನ ಹಿಂದೆ ಕುಶಾಲ. +ಅಸ್ಪಷ್ಟವಾಗಿ ಕಾಣುತ್ತಿರುವ ಬಂಡೆಗಳ ನಂತರ ಭಯಂಕರವಾಗಿ ಹರಡಿದ ಕಾಡು ಕಂಡುಬರುತ್ತಿತ್ತು. +ಅಲ್ಲಿಯ ಜನರು ಮಾಡಿದ ಹೇಸಿಗೆಯ ವಾಸನೆ ಮೂಗಿಗಪ್ಪಳಿಸುತ್ತಿತ್ತು. +ಹುಳು ಹುಪ್ಪಟೆಗಳು ಮಾಡುತ್ತಿದ್ದ ಸದ್ದು ಬಿಟ್ಟು ಬೇರಾವ ಸದ್ದೂ ಕೇಳಿಬರುತ್ತಿರಲಿಲ್ಲ. +ಮುಂದೆ ಹೋದ ಹಾಗೆಲ್ಲ ಹೇಸಿಗೆ ವಾಸನೆ ಹೆಚ್ಚಾಗುತ್ತಿತ್ತು. +ಇದೆಲ್ಲಿಯ ಹಿಂಸೆಯಲ್ಲಿ ಸಿಕ್ಕಿಕೊಂಡೆ ಎಂದುಕೊಳ್ಳುತ್ತಿದ್ದ ಯುವಕ. +ಪ್ರತಿ ಹೆಜ್ಜೆಗೆ ಅವನಲ್ಲಿ ಅಸಹನೆ ಹೆಚ್ಚಾಗುತ್ತಿತ್ತು. +ದುರ್ನಾತದ ಕಾರಣ ಕುಶಾಲನಿಗೆ ವಾಕರಿಕೆ ಬರುವಂತಾಗುತ್ತಿತ್ತು. +ಬಹು ಕಷ್ಟಪಟ್ಟು ಬಾಯಿಂದ ಸದ್ದು ಹೊರಡದಂತೆ ನುಂಗಿಕೊಂಡ. +ಅಂತಹ ವಾಸನೆಗೆಲ್ಲಾ ಅಭ್ಯಸಿತವಾಗಿತ್ತಾ ಯುವಕನ ಮೂಗು. +ಹದಿನೈದು ನಿಮಿಷದ ಬಹು ಮೆಲ್ಲನೆಯ ನಡುಗೆಯ ಪರಿಣಾಮವಾಗಿ ಅವರು ಒಂದು ದೊಡ್ಡ ಬಂಡೆಗೆ ಸಮೀಪವಾಗುತ್ತಿದ್ದರು ಅಸ್ಪಷ್ಟವಾಗಿ ಕೇಳಿಬರುತ್ತಿದ್ದ ಮಾತುಗಳು ಕುಶಾಲನ ಕಿವಿಗಳನ್ನು ನಿಮಿರಿಸಿದ್ದವು. +ತನ್ನ ಆಯುಧವನ್ನು ತಡವಿ ನೋಡಿಕೊಂಡು ಯುವಕನ ಕಿವಿಯ ಬಲಿ ತಲೆ ತಂದು ಕೇಳಿದ“ನಿನಗೇನಾದರೂ ಕೇಳಿಸುತ್ತಿದೆಯೋ?”ಯುವಕನಿಗೂ ಅಸ್ಪಷ್ಟ ಮಾತುಗಳು ಕೇಳಿಸಿದ್ದವು. +ಅವನು ರೋಮಾಂಚನಗೊಂಡವನಂತೆ ಹೇಳಿದ. +“ಹುಂ!ಯಾರಿರಬಹುದು” +“ಮೆಲ್ಲನೆ ಮಾತಾಡು. +ಈಗ ಪೂರ್ತಿ ಬಗ್ಗಿ ಆ ಬಂಡೆಯ ಕಡೆ ನಡಿ. +ಮಾತುಗಳು ಸ್ವಲ್ಪ ಸ್ಪಷ್ಟವಾಗಿ ಕೇಳಿಸುತ್ತಿದ್ದ ಹಾಗೇ ನಾವಿಬ್ಬರೂ ಬದಿಗೆ ಸರಿದು ಪ್ಯಾಂಟು ಬಿಚ್ಚಿ ಕಕ್ಕಸಿಗೆ ಕುಳಿತಂತೆ ಕೂಡಬೇಕು. +ಅರ್ಥವಾಯಿತ” ಅವನ ಮಾತು ಮುಗಿಯುತ್ತಲೇ ಮತ್ತೆ ಕಿವಿಯ ಬಳಿ ಹೇಳಿದ ತೇಜಾ. +ಮುಂದೆ ಇದ್ದ ಯುವಕ ಬಗ್ಗಿ ಒಂದು ಹೆಜ್ಜೆ ಹಾಕಿದ. +ಹಿಂದಿದ್ದ ಕುಶಾಲ ಎಷ್ಟು ಬಗ್ಗಬೇಕು ತೋರಿಸುವವನಂತೆ ಅವನನ್ನು ಇನ್ನೂ ಬಗ್ಗಿಸಿದ. +ಅದಕ್ಕವನು ಮಾತಾಡಲಿಲ್ಲ. +ಇನ್ನೂ ಬಗ್ಗಿದ. +ಇಬ್ಬರೂ ಹಾಗೆ ಮುಂದೆ ನಡೆಯತೊಡಗಿದ್ದರು. +ಒಂದೊಂದು ಹೆಜ್ಜೆ ಮುಂದೆ ಬಿಳುತ್ತಿದ್ದಂತೆ ಮಾತುಗಳು ಇನ್ನೂ ಸ್ಪಷ್ಟವಾಗತೊಡಗಿದವು. +ಯುವಕನ ಹೃದಯಬಡಿತ ಜೋರಾಯಿತು. +ಮಾತುಗಳು ಸ್ಪಷ್ಟವಾಗಿ ಕೇಳಿಸತೊಡಗಿದಾಗ ಯುವಕನನ್ನು ಒಂದು ಕಡೆ ಹೋಗುವಂತೆ ನೂಕಿದ್ದ. +ಈಗ ತಾನೇನು ಮಾಡಬೇಕೆಂಬುದು ಸ್ಪಷ್ಟವಾದಂತೆ ಕಲ್ಲು ಮುಳ್ಳುಗಳ ದಾರಿಯಲ್ಲಿ ಸ್ವಲ್ಪ ದೂರ ಸಾಗಿ ಪ್ಯಾಂಟು ಬಿಚ್ಚತೊಡಗಿದ. +ಅವನ ಆಕಾರವನ್ನು ಗಮನಿಸುತ್ತಿದ್ದ ಕುಶಾಲನಿಗೆ ಅವನಿನ್ನೂ ದೂರ ಹೋಗಬೇಕಾಗಿತ್ತೆನಿಸಿತು. +ತನ್ನ ಇರಾದೆ ಬದಲಿಸಿ ಅವನ ಕಡೆಗೆ ನಡೆದ. +ಕುಶಾಲ ತನ್ನತ್ತಲೇ ಬರುತ್ತಿರುವುದು ಕಂಡು ಆಶ್ಚರ್ಯವಾಯಿತು ಯುವಕನಿಗೆ ಆದರೂ ಏನೂ ಹೇಳುವಹಾಗಿಲ್ಲ. +ಪ್ಯಾಂಟು ಕಾಚಾ ಬಿಚ್ಚಿ ಕುಳಿತ ಅವನಿಗೆ ನಾಚಿಕೆ ಎನಿಸಿತು. +ಎದ್ದು ಮತ್ತೆ ತನ್ನ ಕೆಳಬಟ್ಟೆಯನ್ನು ಮೇಲೇರಿಸುತ್ತಿದ್ದಾಗ ಅವನ ಹತ್ತಿರ ಬಂದಿದ್ದ ಕುಶಾಲ ಮೆಲ್ಲನೆಯ ದನಿಯಲ್ಲಿ ಹೇಳಿದ. +“ಇನ್ನೂ ದೂರ ನಡಿ! +ಯಾವದಾದರೂ ಪೊದೆಯ ಹಿಂದೆ ಇಬ್ಬರೂ ಕಲಿತು ಬಯಲಿಗೆ ಬಂದವರಂತೆ ಕೂಡುವ.”ಮಾತು ಮುಗಿಸಿದ ಕುಶಾಲ ಯಾವದಾದರೂ ಪೊದೆ ಕಾಣುವದೇನೋ ನೋಡಲು ಕಣ್ಣಗಲಿಸಿ ಹೆಜ್ಜೆಗಳನ್ನು ಮುಂದೆ ಹಾಕತೊಡಗಿದ. +ಕಾಲ್ ದಾರಿ ಇಂದ ಅವರಾಗಲೇ ಸಾಕಷ್ಟು ದೂರ ಬಂದಿದ್ದರು. +ಪೊದೆಯಂತಹ ಮುಳ್ಳಿನ ಗಿಡ ಒಂದು ಹತ್ತಿರವಾದಾಗ ಕೆಳ ಬಟ್ಟೆ ಬಿಚ್ಚಿ ಕಕ್ಕಸಿಗೆ ಕುಳಿತವನಂತೆ ಕೂಡುತಾ ಯುವಕನ ಕಡೆ ನೋಡಿದ. +ಅವನು ತನ್ನ ಕೆಳ ಬಟ್ಟೆ ಕಳಚಲು ಹಿಂದು ಮುಂದಾಗುತ್ತಿದ್ದ. +ಎದ್ದ ಕುಶಾಲ ಅವನ ಹತ್ತಿರ ಬಂದು ಗದರುವಂತಹ ದನಿಯಲ್ಲಿ ಉಸರಿದ. +“ಪ್ಯಾಂಟು ಬಿಚ್ಚಿ ಕೂಡು! +ಅವರ ಬಳಿ ಟಾರ್ಚ್ ಇರಬಹುದು. +ಕೂಡು ಯಾತರ ನಾಚಿಕೆ” ಗಾಡಾಂಧಕಾರವಿದ್ದರೂ ಇನ್ಸ್‌ಪೆಕ್ಟರ್‌ ಸಾಹೇಬರೆದುರು ಕಕ್ಕಸಿಗೆ ಕುಳಿತಂತೆ ಕೂಡುವದೇ ಅವನ ನಾಚಿಕ ಕುಶಾಲನ ಎಂಬ ಗದರುವಿಕೆಯಿಂದ ಮಾಯವಾಯಿತು. +ಪ್ಯಾಂಟು ಬಿಚ್ಚತೊಡಗಿದ. +ಅವನಿಂದ ದೂರ ಸರಿದು ಕುಳಿತ ಕುಶಾಲನ ಕಿವಿಗಳು ನಿಮಿರಿದ್ದವು. +ಹತ್ತಿರದಲ್ಲೇ ಎಂಬಂತೆ ಮಾತುಗಳು ಸ್ಪಷ್ಟವಾಗಿ ಕೇಳಿಸುತ್ತಿದ್ದವು. +ಯುವಕನ ಹೃದಯ ಬಡಿತ ಅವನಿಗರಿವಿಲ್ಲದಂತೆ ಜೋರಾಯಿತು. +ಈ ಇನ್ಸ್‌ಪೆಕ್ಟರ್‌ ಬಹು ಬುದ್ಧಿವಂತ ನೆಂದುಕೊಂಡ. +ಕುಶಾಲನಿಗೆ ತನ್ನ ಊಹೆ ಸರಿಯಾದದ್ದು ಸಂತಸವನ್ನು ಹುಟ್ಟಿಸಿತ್ತು. +“ಎಲ್ಲಾ ಮೊದಲು ನಾವೆಂದುಕೊಂಡಂತೇ ಆಗಬೇಕು. +ಹೊರಗಿರುತ್ತೇನೆ ನೀವಿಬ್ಬರೂ ಕೆಲಸ ಮುಗಿಸಿ ಬನ್ನಿ.” ಹೇಳಿದ ಒಬ್ಬ. +“ಇಲ್ಲಾ ನೀನೇ ಹೊರಗಿರು ನಾ ಒಳಹೋಗುತ್ತೇನೆ” ಒಂದು ಕಂಠ. +“ನೀನು ಕುಡಿಯಬೇಡವೆಂದರು ಕುಡಿದಿ ಅದಕ್ಕೆ ಈ ಇಲ್ಲದ ಜಗಳ” ಇನೊಂದು ಕಂಠ. +“ಈ ಇನ್ಸ್‌ಪೆಕ್ಟರನ ಬಳಿ ರಿವಾಲ್ವರ್ ಇದ್ದೇ ಇರುತ್ತದೆ.” ಮತ್ತೊಂದು ಕಂಠ. +“ನಾಯಕರು ಕೊಟ್ಟ ರಿವಾಲ್ವರ್ ನನ್ನ ಬಳಿ ಇದೆ.” ಮೊದಲ ಕಂಠ. +ಮೂವರು ಮಾತ್ರ ಬಂಡೆಗಳ ಹಿಂದೆ ಇದ್ದಾರೆಂಬುವುದು ಸ್ಪಷ್ಟವಾಯಿತು ಕುಶಾಲನಿಗೆ. +“ನಡಿಯಿರಿ!ಆಗಲೇ ಬಹಳ ಹೊತ್ತಾಯಿತು” ಎರಡನೆ ಕಂಠ. +ಕಲ್ಲು ಬಂಡೆಗಳ ಸದ್ದು. +ಅದರ ಮೇಲಿಂದ ನಡೆಯುತ್ತಿರುವಂತಹ ಸದ್ದು. +ಆ ಹೆಜ್ಜೆಗಳ ಸದ್ದು ದೂರವಾಗತೊಡಗಿತು. +ಕುಶಾಲ್ ಮತ್ತು ಯುವಕ ಕುಳಿತ ವಿರುದ್ಧ ದಿಕ್ಕಿನಲ್ಲಿ ಟಾರ್ಚಿನ ಬೆಳಕು ಆಗಾಗ ಅತ್ತ ಇತ್ತ ಹರಿದಾಡಿದಂತೆ ಕಂಡುಬರುತ್ತಿತ್ತು. +ಈ ಇನ್ಸ್‌ಪೆಕ್ಟರ್ ಹೇಳಿದ ಮಾತು ಎಷ್ಟು ನಿಜವೆನಿಸಿತು ಯುವಕನಿಗೆ. +ಅವರು ಬಂದ ಕಾಲ್‌ದಾರಿಯ ಬಳಿ ಟಾರ್ಚಿನ ಬೆಳಕು ಕತ್ತಲನ್ನು ಸರಿಸುತ್ತಿದ್ದ ಹಾಗೆ ಮೂರು ಆಕಾರಗಳು ಅಸ್ಪಷ್ಟವಾಗಿ ಕಾಣಿಸಿದ್ದವು. +ಕಾಲದಾರಿಗೆ ಇಳಿದ ಕೂಡಲೇ ಒಂದು ಸಲ ನಾಲ್ಕು ದಿಕ್ಕಿನಲ್ಲಿ ಹರಿದಾಡಿತು ಟಾರ್ಚಿನ ಬೆಳಕು. +ಪೊದೆಯಂತಹ ಗಿಡದ ಹಿಂದೆ ಇನ್ನೂ ಅವಿತ ಆ ಯುವಕ. +ಅವನಿಗೆ ಭಯವಿಲ್ಲ. +ಇದೊಂದು ರೋಮಾಂಚನ ಹುಟ್ಟಿಸುವಂತಹ ಘಟನೆ. +ಇನ್ನೆರಡು ಸಲ ಸುತ್ತಲೂ ಹರಿದಾಡಿದ ಬೆಳಕು ಕಾಲ್‌ದಾರಿಯ ಮೇಲೆ ಕೇಂದ್ರಿಕೃತವಾಯಿತು. +ಮುಂದೇನು ಎಂದು ಯೋಚಿಸುತ್ತಿದ್ದ ಯುವಕ. +ಅವನ ನಾಚಿಕೆ ಯಾವಾಗಲೋ ದೂರವಾಗಿ ಬಿಟ್ಟಿತ್ತು. +ಕುಶಾಲನ ಮೂಗಿಗೆ ಈಗ ಯಾವ ಹೊಲಸು ವಾಸನೆಯೂ ಬರುತ್ತಿರಲಿಲ್ಲ. +ಸೊಣಕಲು ಯುವಕ ಮತ್ತವನ ಸಂಗಡಿಗನ ಸಹನ ಮುಕ್ತಾಯವಾಗುವಂತೆ ಆ ಗುಡಿಸಲಿನಿಂದ ಇಬ್ಬರು ಹೊರಬಿದ್ದರು. +ಅವರ ಹೆಜ್ಜೆಗಳು ರಸ್ತೆಯ ಕಡೆಗೇ ಬೀಳುತ್ತಿದ್ದವು. +ಅದನ್ನು ನೋಡಿ ಇನ್ನೂ ದೂರ ಸರಿದು ಯಾರಿಗೂ ಕಾಣದಂತೆ ಗಾಢ ಕತ್ತಲಲ್ಲಿ ಅವಿತು ಕುಳಿತರು ಯುವಕರು. +ತಮ್ಮದೇ ಗುಂಗಿನಲ್ಲಿ ರಸ್ತೆಗೆ ಬಂದ ಅವರು ಯಾರ ಪರಿವೆಯೂ ಇಲ್ಲದಂತೆ ನಡೆಯುತ್ತಿದ್ದರು. +ಬೀದಿ ದೀಪದ ಬೆಳಕಿನಲ್ಲಿ ಅವರು ಬಂದಾಗ ಸೊಣಕಲು ಯುವಕನ ಹೃದಯಬಡಿತ ಜೋರಾಯಿತು. +ಆ ಇಬ್ಬರಲ್ಲಿ ಒಬ್ಬ ತಾನು ನಾಯಕನ ಮನೆ ಎದುರು ಕಂಡ ಮೀಸೆಯವ. +ಅವರು ದೂರವಾಗುವವರೆಗೂ ಸುಮ್ಮನಿದ್ದ ಅವನು ತನ್ನ ಸ್ನೇಹಿತನ ಕಿವಿಯಲ್ಲಿ ಉಸುರಿದ. +“ಇವರೇ ಅವರು”ಅದನ್ನು ಕೇಳಿ ಅವನೂ ಕಣ್ಣಗಲಿಸಿ ಅವರನ್ನು ನೋಡಿದ. +ಅವರಿಬ್ಬರೂ ದರೋಡೆಕೋರರಂತೆಯೇ ಕಾಣುತ್ತಿದ್ದರು. +ಒಮ್ಮೆಲೆ ಅವನ ಕಾಯುವಿಕೆಯ ಬೇಸರ ಮಾಯವಾಯಿತು. +ತಾನು ಒಳ್ಳೆಯ ಪತ್ತೇದಾರನಾಗಬಲ್ಲೆ ಎನಿಸಿತು. +ಸೊಣಕಲು ಯುವಕನಿಗೆ ಅವರು ಇನ್ನೂ ಮುಂದೆ ಹೋಗುವವರೆಗೂ ತಡೆದು ಯಾರಿಗೂ ಕಾಣದಂತೆ ಅವರನ್ನು ಹಿಂಬಾಲಿಸ ತೊಡಗಿದರು. +ಅವರು ತೇಜಾನ ಮನೆಯ ಕಡೆ ಹೋಗುವ ದಾರಿ ದಾಟಿ ಬಯಲಿನ ಕಡೆ ಹೆಜ್ಜೆ ಹಾಕುತ್ತಿದ್ದಾಗ ಇಬ್ಬರಿಗೂ ನಿರಾಸೆಯಾಯಿತು. +ಆ ಇಬ್ಬರಲ್ಲಿ ಯಾರೂ ಹೆಚ್ಚು ಕುಡಿದವರಂತೆ ಕಾಣುತ್ತಿರಲಿಲ್ಲ. +ಅವರನ್ನು ಹಿಂಬಾಲಿಸಿ ಏನು ಮಾಡುವದು ಎಂಬ ಯೋಚನೆ ಸೊಣಕಲು ವ್ಯಕ್ತಿಯ ತಲೆಯಲ್ಲಿ ಹಾಯುತ್ತಿದ್ದಾಗ ಎದುರಿನಿಂದ ಮೂವರು ಬರುತ್ತಿರುವದು ಕಾಣಿಸಿತು. +ಏನು ಮಾಡಬೇಕೆಂದು ತೋಚದೇ ಕತ್ತಲಲ್ಲಿ ಒಂದಾಗುವಂತೆ ಗೋಡೆಗಾನಿ ನಿಂತರು. +ಎಷ್ಟು ಯತ್ನಿಸಿದರು ತಾವು ಅವರ ಕಣ್ಣಿಗೆ ಬೀಳುವದು ಖಂಡಿತವೆನಿಸಿದಾಗ ತಾವು ಹಿಂಬಾಲಿಸುತ್ತಿದ್ದ ಇಬ್ಬರು, ಮುಂದಿನಿಂದ ಬರುತ್ತಿದ್ದ ಮೂವರು ಕೆಲ ಕ್ಷಣಗಳು ನಿಂತು ಏನೋ ಮಾತಾಡಿಕೊಳ್ಳುತ್ತಿರುವದು ಕಾಣಿಸಿತು. +ಒಮ್ಮೆಲೆ ಯಾವದೋ ಯೋಚನೆ ಹೊಳೆದಂತೆ ತನ್ನ ಜತೆಗಿದ್ದವನ ಕೈ ಹಿಡಿದು ಲಗುಬಗೆಯಿಂದ ಹಿಂದೆ ಹೆಜ್ಜೆ ಹಾಕಿದ. +ಇವನೇನು ಮಾಡುತ್ತಿದ್ದಾನೆ ತಿಳಿಯದವನಂತೆ ಅವನನ್ನು ಹಿಂಬಾಲಿಸಿದ ಧಾಂಡಿಗ ಯುವಕ, ಹಲವು ಹೆಜ್ಜೆಗಳು ಲಗುಬಗೆಯಿಂದ ಕ್ರಯಿಸಿದಾಗ ಒಂದು ಹೊಲಸು ಹಾಕುವ ಸಂದು. +ಅದು ಮುಂದಿನ ಒಂದು ದಾರಿಗೆ ಸೇರಿಕೊಳ್ಳುತ್ತಿತ್ತು. +ಅದನ್ನು ಈಗ ಬಹು ಅಪರೂಪದ ಜನರು ಮಾತ್ರ ಉಪಯೋಗಿಸುತ್ತಿದ್ದರು. +ಅದೀಗ ಹೊಲಸನ್ನು ಹಾಕುವ ಜಾಗವಾಗಿ ತಯಾರಾಗಿತ್ತು. +ಇಬ್ಬರೂ ಆ ಸಂದಿನಲ್ಲಿ ಹೋಗಿ ನಿಂತರು. +ತಾವು ಹಿಂಬಾಲಿಸುತ್ತಿರುವ ಮೂವರು ಇನ್ನಿಬ್ಬರೊಡನೆ ಮಾತಾಡಿದ್ದನ್ನು ಗಮನಿಸಿದ್ದರು ಕುಶಾಲ್ ಮತ್ತು ಅವನೊಡನೆ ಇದ್ದ ಯುವಕ. +ಮಾತು ಮುಗಿಸಿದ ಅವರು ತಮ್ಮ ಕಡೆಯೇ ಬರುತ್ತಿದ್ದಾಗ ಅವರಿಗೆ ಕಾಣದಂತೆ ಅಡಗಲು ಅಲ್ಲಿ ಸಾಕಷ್ಟು ಸ್ಥಳವಿತ್ತು ತಕ್ಷಣ ನಿರ್ಣಯ ತೆಗೆದುಕೊಂಡ ಕುಶಾಲ ಅವನ ಕಿವಿಯಲ್ಲಿ ಉಸುರಿದ. +“ಅವರ ಮೇಲೆ ನಿಗಾ ಇಡು. +ಯಾವಾಗಲೂ ಹಿಂದೆ ಕೂಡ ನೋಡುತ್ತಿರು ನಾನ್ಯಾರನ್ನಾದರೂ ಕಳುಹಿಸುವೆನು ಅವರು ತಪ್ಪಿಸಿಕೊಳ್ಳಬಾರದು ನಿನ್ನಲ್ಲಿ ಹಗ್ಗವಿದೆತಾನೆ” +“ಇದೆ”“ಯಾರನ್ನಾದರೂ ಕಳಿಸುತ್ತೇನೆ ಆವರೆಗೂ ಏನೂ ಮಾಡಬೇಡ. +ನಮ್ಮವರು ಬಂದ ಮೇಲೂ ಹುಶಾರಾಗಿ ಕೆಲಸ ಮಾಡಿ ಅವರಲ್ಲಿ ಆಯುಧ ಇರಬಹುದು” ಎಂದ ಕುಶಾಲ ಅವನನ್ನು ಮರೆತವನಂತೆ ಲಗುಬಗೆಯಿಂದ ಹೆಜ್ಜೆಯ ಸಪ್ಪಳವಾಗದ ಹಾಗೆ ಗಾಢ ಕತ್ತಲಲ್ಲಿ ಆ ಮೂವರನ್ನು ಹಿಂಬಾಲಿಸ ತೊಡಗಿದ. +ಅವನಿಂದ ದೂರದಲ್ಲಿ ಹಾದು ಹೋದ. +ಅವರು ತಮ್ಮದೇ ಗುಂಗಿನಲ್ಲಿರುವಂತೆ ಕಂಡರು. +ಕುಶಾಲನ ಹೆಜ್ಜೆಯ ಗತಿ ತೀವ್ರವಾಯಿತು. +ಹೊಲಸು ಹಾಕುವ ಸಂದಿನಲ್ಲಿ ನಿಂತ ಯುವಕರ ಮುಂದಿನಿಂದಲೇ ಹೋದರು ಆ ಮೂವರು ಧಾಂಡಿಗರು, ಏನು ಮಾಡಬೇಕೆಂಬುವುದು ತೋಚದಾಯಿತವರಿಗೆ. +ಮುಂದೆ ಹೋದ ಆ ಮೂವರನ್ನು ಹಿಂಬಾಲಿಸುವದೊ ಅಥವಾ ಕುಡಿದು ಗುಡಿಸಿಲಿನಿಂದ ಹೊರ ಬಂದ ಇಬ್ಬರನ್ನೋ! +ಸಂದಿನಿಂದ ಹೊರ ಬಂದ ಅವರು ಇನ್ಸ್‌ಪೆಕ್ಟರ್ ಮನೆಯ ಕಡೆ ಹೋಗುತ್ತಿರುವ ಮೂವರನ್ನು ನೋಡುತ್ತಾ ನಿಂತಾಗ ಒಮ್ಮೆಲೆ ಹಿಂದಿನಿಂದ ಹೆಜ್ಜೆಯ ಸದ್ದು ಕೇಳಿ ಬರಲಾರಂಭಿಸಿತು. +ಚಕಿತರಾದಂತೆ ಹಿಂತಿರುಗಿದರು. +ಅರೆ ಕತ್ತಲೆಯಲ್ಲಿ ಕುಶಾಲನನ್ನು ಅವರು ಗುರುತಿಸಿದರು. +ಅವರ ಹತ್ತಿರ ಬರುತ್ತಲೇ ಆತುರದ ದನಿಯಲ್ಲಿ ಹೇಳಿದ ಕುಶಾಲ್. +“ಆ ಇಬ್ಬರನ್ನೂ ಹಿಂಬಾಲಿಸುತ್ತಿದ್ದಾನೆ ನಿಮ್ಮ ಮಿತ್ರ ವೆಂಕಟ್. +ಓಡಿ ಹೋಗಿ ಆ ಇಬ್ಬರನ್ನು ಬಂಧಿಸಿ ಜಾಗ್ರತೆ ಅವರು ತಪ್ಪಿಸಿಕೊಳ್ಳಬಾರದು.”ಆತುರದಲ್ಲಿ ಹೇಳಿದರು ಬಹು ಮೆಲ್ಲನೆ ಮಾತಾಡಿದ. +ಮಾತು ಮುಗಿಸಿ ತೇಜಾನ ಮನೆ ಇರುವ ಗಲ್ಲಿಯಲ್ಲಿ ಹೋದ ಆ ಮೂವರ ಹಿಂದೆ ಬಿದ್ದ ಕುಶಾಲ್. +ಸೊಣಕಲು ಯುವಕ ಮತ್ತು ದೃಢಕಾಯ ಅವರ ಸ್ನೇಹಿತರಿರುವ ದಿಕ್ಕಿನಲ್ಲಿ ಓಡಿದರು. +ಕಾಯುವಿಕೆ ತೇಜಾನಲ್ಲಿ ಬಹಳ ಬೇಸರ ಹುಟ್ಟಿಸುತ್ತಿತ್ತು. +ಎಷ್ಟೋಸಲ ಅವನು ಕಲ್ಯಾಣಿ ಕೊಟ್ಟ ಮಾಹಿತಿ ತಪ್ಪಾಗಿರಬಹುದೇ? +ನಾಯಕ್ ಬೇರಾವದಾದರೂ ಸಂಚನ್ನು ಹೂಡಿರಬಹುದೇ?ಎಂದು ಯೋಚಿಸುವಂತೆ ಮಾಡಿತ್ತು. +ಇಲ್ಲಾ ಕಲ್ಯಾಣಿ ಇಲ್ಲಿನ ಜನರನ್ನು ಅವರ ಮನೋಭಾವವನ್ನು ಚೆನ್ನಾಗಿ ಬಲ್ಲಳು. +ಅವಳ ಊಹೆ ತಪ್ಪಾಗಿರಲು ಸಾಧ್ಯವಿಲ್ಲ. +ಕಾಯಬೇಕು ಕಾಯುವದೇ ತಮ್ಮ ಕೆಲಸವೆಂಬುವದ್ದನ್ನು ತನಗೆ ತಾನು ಜ್ಞಾಪಿಸಿಕೊಂಡ. +ಈಗ ಬೇಸರವನ್ನು ಓಡಿಸಲು ಒಂದೇ ಉಪಾಯವೆಂದು ತೋಚಿತವನಿಗೆ ಕಲ್ಯಾಣಿ ಬಗ್ಗೆ ತಮ್ಮ ಭವಿಷ್ಯದ ಬಗ್ಗೆ, ಅವರಿಂದ ಜನ್ಮತಾಳಲಿರುವ ಭಗತಸಿಂಗ್‌ನ ಬಗ್ಗೆ ಯೋಚಿಸುವದು. +ಮನವನ್ನು ಅತ್ತ ತಿರುವಿದಾಗ ಸಮಯ ಸುಲಭವಾಗಿ ಸರಿಯಲಾರಂಭಿಸಿತು. +ಗುಂಡು ತಾತನಲ್ಲಂತೂ ಚಡಪಡಿಕೆ ಹೆಚ್ಚಾಗಿತ್ತು. +ಕಾಯುವಿಕೆಯ ಬೇಸರದಿಂದ ಅವನು ಮುಕ್ತನಾಗಲು ಎಲ್ಲವನ್ನು ಮರೆತು ಮಲಗಲು ಯತ್ನಿಸಿದ ಆದರೆ ನಿದ್ದೆಯೂ ಅವನ ಹತ್ತಿರ ಸುಳಿಯಲಿಲ್ಲ. +ಈ ಕಾಯುವಿಕೆ ವ್ಯರ್ಥ ಏನೂ ಆಗುವುದಿಲ್ಲ. +ಈ ತೇಜಾ ಇಲ್ಲದ್ದನೇನೋ ಊಹಿಸಿಕೊಂಡಿದ್ದಾನೆ ಎನಿಸತೊಡಗಿತು. +ತನ್ನ ಚಡಪಡಿಕೆಯನ್ನು ಬಹು ಕಷ್ಟದಿಂದ ನಿಯಂತ್ರಣದಲ್ಲಿಟ್ಟುಕೊಂಡು ತನ್ನಲ್ಲಿ ಇದ್ದ ಬದ್ದ ಸಹನೆಯನ್ನೆಲ್ಲಾ ಕೂಡಿಹಾಕಿ ಕಾಯುತ್ತಿದ್ದ. +ಕಾದು, ಕಾದು ಬೇಸತ್ತ ಇನ್ನೊಂದು ಕೋಣೆಯಲ್ಲಿದ್ದ ಯುವಕ ಏನೂ ಆಗುವುದಿಲ್ಲ, ಬಂಡೇರಹಳ್ಳಿಯಲ್ಲಿ ಇಂತಹ ಘಟನೆ ನಡೆಯುವುದೆಂದರೇನು ಎಲ್ಲರ ತಲೆ ಕೆಟ್ಟಿದೆ. +ಹೇಗಾದರೂ ರಾತ್ರಿ ಕಳೆದು ಬೆಳಿಗ್ಗೆ ಎದ್ದು ಮನೆಗೆ ಹೋದರಾಯಿತು ಎಂದುಕೊಳ್ಳುತ್ತಿದ್ದ. +ಅಷ್ಟಾದರೂ ಅವನ ಯೋಚನೆ ತೇಜಾ ಮತ್ತು ಅವನ ವ್ಯಕ್ತಿತ್ವದ ಸುತ್ತಲೂ ಸುಳಿದಾಡುತ್ತಿತ್ತು. +ಅವನಿಂದ ಬಹಳ ಆಕರ್ಷಿತನಾದ ಆ ಯುವಕ ಇಂತಹ ವ್ಯಕ್ತಿ ಏನೂ ಇಲ್ಲದೇ ಇಂತಹ ಯೋಜನೆ ಹಾಕುವದು ಸಾಧ್ಯವೇ ಎಂದುಕೂಡ ಯೋಚಿಸುತ್ತಿದ್ದ. +ಬೆಳಗಾಗಲು ಕಾಯುತ್ತಿದ ಅವನಲ್ಲಿ ಏನೆಲ್ಲಾ ಯೋಚನೆಗಳು ಸುಳಿದಾಡಿ ಹೋಗುತ್ತಿದ್ದವು. +ಮುಂಬಾಗಿಲ ಬಳಿ ಸದ್ದಾದಾಗ ಒಮ್ಮೆಲೆ ಆ ಮೂವರ ಎಲ್ಲಾ ಅವಯವಗಳು ಒಮ್ಮೆಲೇ ಚುರುಕಾದವು. +ಬೇಸರವೆಲ್ಲಾ ಮರೆತರು. +ತನ್ನ ರಿವಾಲ್ವರನ್ನು ಮುಟ್ಟಿಕೊಂಡು ಕಾಯುತ್ತಿದ್ದ ತೇಜಾ, ಮುಂದೆ ಕೇಳಿ ಬಂದ ಸದ್ದು ಸ್ವಲ್ಪ ಜೋರಾಯಿತು. +ಅದರೊಡನೆಯೇ ಒಳಗಿನ ಬೋಲ್ಟು ಬಿಚ್ಚಿಕೊಂಡ ಶಬ್ದ. +ರಿವಾಲ್ವರ್ ಹಿಡಿದು ಹಾಸಿಗೆಯಿಂದ ಎದ್ದ ತೇಜಾ ಮುಂಬಾಗಿಲು ಕಾಣುವಂತಹ ಸ್ಥಳದಲ್ಲಿ ಬಂದು ನಿಂತ. +ಕಿರ್ರನೆ ಸದ್ದು ಮಾಡುತ್ತಾ ಒಂದು ಬಾಗಿಲು ಮಾತ್ರ ತೆಗೆದುಕೊಂಡಿತು. +ಕತ್ತಲಲ್ಲಿ ಒಬ್ಬರ ಹಿಂದೆ ಒಬ್ಬರು ಮೂವರು ಒಳನುಗ್ಗಿದರು. +ಹಜಾರದಲ್ಲಿ ಬಂದ ಮೇಲೆ ಒಬ್ಬ ಟಾರ್ಚ್ ಬೆಳಗಿಸಿದ. +ಅದನ್ನು ಕಂಡು ಒಮ್ಮೆಲೆ ಮರೆಯಾದ ತೇಜಾ, ಬೆಳಕು ಮನೆಯ ಸುತ್ತು ಮುತ್ತು ಒಂದೆರಡು ಸಲ ಹರಿದಾಡಿತು. +ಬೆಳಕು ಬೇರೆಯಡೆ ಇದ್ದಾಗ ನೋಡಿದ ತೇಜಾ, ಮುಂಬಾಗಿಲಿನಿಂದ ಇನ್ನೂ ಒಳಗೆ ಬಂದಿದ್ದರಾ ಮೂವರು. +ಒಬ್ಬನ ಕೈಯಲ್ಲಿ ಮಾತ್ರ ರಿವಾಲ್ವರಿತ್ತು. +“ಬನ್ನಿ ನಾನಿಲ್ಲಿದ್ದೇನೆ” ಎಂದ ತೇಜಾ. +ಆ ಮಾತಿನಿಂದ ಅವರು ದಂಗಾದಂತೆ ಕಂಡಿತು. +ಮಾತು ಬಂದ ಕಡೆ ಗುಂಡು ಹಾರಿತು. +ರಿವಾಲ್ವರ್ ಹಿಡಿದವ. +ಒಮ್ಮೆಲೆ ಮುಂದೆ ಬಂದ ತೇಜಾ ಅವನ ಎದೆಯ ನಡುವೆ ತನ್ನ ರಿವಾಲ್ವರನ ಬುಲೆಟನ್ನು ತೂರಿಸಿದ. +ಅದರ ಹಿಂದೆಯೇ ಎತ್ತರದ ದನಿಯಲ್ಲಿ ಆಜ್ಞಾಪಿಸಿದ. +“ಹೊರಗೆ ಬನ್ನಿ ಮುಂದಿನ ಬಾಗಿಲು ಹಾಕಿ”ಅಂತಹ ಆಜ್ಞೆಗಾಗೇ ಕಾಯುತ್ತಿದ್ದ ಯುವಕ ಮಿಂಚಿನ ಗತಿಯಲ್ಲಿ ಮುಂಬಾಗಿಲ ಬಳಿ ಬಂದ, ದೀಪ ಹೊತ್ತಿಸಿದ ತೇಜ. +ಒಮ್ಮೆಲೆ ಬಂದ ಬೆಳಕಿನಲ್ಲಿ ತಮ್ಮ ಸಂಗಡಿಗ ಶವವಾಗಿ ಬಿದ್ದದ್ದನ್ನು ಕಂಡರವರು. +ಓಡಲು ದಾರಿ ಇಲ್ಲದಂತೆ ಯುವಕ ಮುಂಬಾಗಿಲ ಬಳಿ ನಿಂತಿದ್ದ. +ಭಯದ ಕಾರಣ ಅವನ ಕಡೆ ಓಡಿದ ಒಬ್ಬ ಅವನ ತೊಡೆಯಲ್ಲಿ ತೇಜಾನ ರಿವಾಲ್ವರನಿಂದ ಹೊರಟ ಬುಲೇಟ್ ಸೇರಿತು. +ನೋವಿನಿಂದ ಕಿರುಚಿ ತೊಡೆಯನ್ನು ಹಿಡಿದುಕೊಂಡು ಕುಳಿತನವ, ಗಾಬರಿಯಿಂದ ಅವನನ್ನೇ ನೋಡುತ್ತಿದ್ದ ಕೊನೆಯವನಿಗೆ ಹೇಳಿದ ತೇಜಾ,“ನೀನೂ ಅಲ್ಲಿಂದ ಅಲ್ಲಾಡಿದರೆ ಸಾಯುತ್ತಿ”ಒಮ್ಮೆಲೆ ರಭಸವಾಗಿ ಬಾಗಿಲು ತಳ್ಳಲಾಯಿತು. +ಈ ಅನಿರೀಕ್ಷಿತ ಘಟನೆಯಿಂದ ಎರಡು ಹೆಜ್ಜೆ ಮನೆಯೊಳ ಬಂದ ಯುವಕ. +ಆಗ ಗುರಿ ಇಟ್ಟು ತೇಜಾ ರಿವಾಲ್ವರ್ ಹಿಡಿದಾಗ ಒಳಬಂದ ಕುಶಾಲ. +“ಇದೇನಿದು ಹೀಗೆ ನುಗ್ಗುವುದೇ ಒಂದು ಕ್ಷಣ ಹೆಚ್ಚು ಕಡಿಮೆಯಾಗಿದ್ದರೆ ನೀನು ಸಾಯುತ್ತಿದ್ದಿ.”ಆ ಮಾತನ್ನು ಕೇಳಿಸಿಕೊಳ್ಳದವನಂತೆ ತೊಡೆ ಹಿಡಿದು ಕುಳಿತವನ ಮುಖಕ್ಕೆ ತನ್ನ ಬೂಟುಗಾಲಿನಿಂದ ಜೋರಾಗಿ ಒದ್ದು ಮಾತಾಡಿದ ಕುಶಾಲ“ನೀವು ಪ್ಲಾನ್ ಯಾಕೆ ಬದಲಾಯಿಸಿದಿರಿ? +ಹೊರಗೆ ಒಬ್ಬ ಕಾವಲಿರುವದಾಗಿ ಯೋಜನೆ ಹಾಕಿದ್ದರಲ್ಲ.”ನೋವಿನಿಂದ ಇನ್ನೊಂದು ಕೂಗು ಹೊರಟಿತವನ ಬಾಯಿಯಿಂದ ಏನೂ ಮಾತಾಡಲಿಲ್ಲ. +ಮತ್ತೊಮ್ಮೆ ಒದ್ದು ಕೋಪಾವೇಶದಲ್ಲಿ ಹೇಳಿದ ಕುಶಾಲು. +“ಬೇಗ ಬಾಯಿಬಿಡು ಇಲ್ಲದಿದ್ದರೆ ಕೊಂದುಬಿಡುತ್ತೇನೆ” +“ಮನೆ ಹತ್ತಿರ ಬಂದಾಗ ಯಾರೂ ಕಾವಲಿರುವ ಅವಶ್ಯಕತೆ ಇಲ್ಲವೆಂದು ಎಲ್ಲಾರೂ ಒಳಬಂದೆವು ಸ್ವಾಮಿ.” +“ಕುಶಾಲ ನೀನು, ಇವನು ಕಲೆತು ಇವರ ಬಾಯಿಬಿಡಿಸಿ. +ಸಿದ್ದಾನಾಯಕ್‌ ಇವರಿಗೆ ಎಷ್ಟು ಹಣ ಕೊಟ್ಟಿದ್ದಾನೆಂದು ತಿಳಿಯಬೇಕು.” +“ಇವರುಗಳು ಹೇಳಿದ್ದಾರೆ ಈ ರಿವಾಲ್ವರ್ ನಾಯಕ್ ಕೊಟ್ಟಿದೆಂದು” ತೇಜಾ ಮಾತು ಪೂರ್ತಿ ಮಾಡುವ ಮುನ್ನ ಸಿಟ್ಟಿನ ದನಿಯಲ್ಲಿಯೇ ಹೇಳಿದ ಕುಶಾಲ್. +“ಅದೇ ಎಲ್ಲಾ ವಿವರ ಸಂಗ್ರಹಿಸಿ ನಾ ಪೋಲೀಸ್ ಸ್ಟೇಷನ್‌ಗೆ ಹೋಗಿ ಬರುತ್ತೇನೆ” ಎಂದ ತೇಜಾ ಅಲ್ಲಿಂದ ಹೊರಬಿದ್ದ. +ಯುವಕ ಮತ್ತು ಕುಶಾಲ ಇಬ್ಬರನ್ನೂ ಒಳತಂದು ಬಾಯಿಬಿಡಿಸುವ ಕೆಲಸ ಆರಂಭಿಸಿದರು. +ದಂಗುಬಡಿದಂತೆ ಇದ್ದೆಲ್ಲವನ್ನೂ ನೋಡುತ್ತಿದ್ದ ತಾತ ಚೇತರಿಸಿಕೊಂಡು ಅವರುಗಳು ಹೇಳಲಿರುವ ಮಾತುಗಳನ್ನು ಕೇಳಲು ಸಿದ್ಧನಾದ. +ಬುಲೆಟ್ ಸೇರಿದ ಕಾಲಿನ ಕಡೆ ತೋರಿಸುತ್ತ ಯುವಕನಿಗೆ ಹೇಳಿದ ಕುಶಾಲ. +“ಅದನ್ನು ತಿರುವು ನೋಡುವ, ಮುರಿದು ಕೈಗೆ ಬರುತ್ತದೇನೋ”ಅತಿ ಆನಂದದಿಂದ ಆ ಕಾಲನ್ನು ಹಿಡಿದು ಪೂರ್ತಿ ತಿರುವಿದ ಆ ಯುವಕ. +ಆ ಬಂದಿಯ ಆರ್ತನಾದ ಇಡೀ ಬಂಡೇರಹಳ್ಳಿಗೆ ಕೇಳುವಂತಿತ್ತು. +“ಈಗ ಮಾತಾಡು ಇಲ್ಲದಿದ್ದರೆ ಬರೀ ನೋವಿನಿಂದ ಸಾಯುತ್ತಿ. +ಬೇಗ ಬೇಗ ಎಲ್ಲವನ್ನು ಹೇಳು ಇಲ್ಲಿಗೆ ನಿಮ್ಮನ್ನು ನಾಯಕ್ ಹೇಗೆ, ಕರೆ ತಂದ? +ತೇಜಾನನ್ನು ಕೊಲಲ್ಲು ಎಷ್ಟು ಹಣ ಕೊಟ್ಟ? +ನಿಮ್ಮ ಅವನ ಸಂಬಂಧ ಎಷ್ಟು ಹಳೆಯದು. +ಎಲ್ಲಾ ಹೇಳು.”ತಾತ ತನ್ನ ಸಂಗಡಿಗನನ್ನು ನೋಡಿದ, ಈಗ ಹಿಂಸೆಗೆ ಗುರಿಯಾಗುತ್ತಿರುವ ಇವನನ್ನು ನೋಡುತ್ತಿದ್ದವ ಕೈಯಲ್ಲಿ ಒಮ್ಮೆಲೆ ಒಂದು ಬರ್ಜಿ ಪ್ರತ್ಯಕ್ಷವಾಯಿತು. +ಹತ್ತಿರದಲ್ಲೆ ಇದ್ದ ಯುವಕನ ಮೇಲೆ ದಾಳಿ ಮಾಡಲು ಹೋದ ಆವರೆಗೆ ರಿವಾಲ್ವರನ್ನು ಜೇಬಿನಲ್ಲಿ ಇಟ್ಟುಕೊಂಡು ಬಿಟ್ಟಿದ್ದ ಕುಶಾಲ ಯುವಕ ಬರ್ಜಿ ಏಟಿನಿಂದ ತಪ್ಪಿಸಿಕೊಂಡು ಅವನು ಆಯುಧವಿದ್ದ ಕೈಯನ್ನು ಬಲವಾಗಿ ಹಿಡಿದ. +ಅವಸರದಲ್ಲಿ ಮಾಡಿದ ಆ ಕೆಲಸದಿಂದಾಗಿ ಅವನ ಎಡಭುಜಕ್ಕೆ ಬರ್ಜಿಯ ಏಟು ಬಿತ್ತು. +ಅದೇ ಕ್ಷಣದಲ್ಲಿ ಕುಶಾಲ ಬಲವಾಗಿ ಅವನ ಹೊಟ್ಟೆಗೆ ಒದ್ದ. +ಈ ಕಲಹವನ್ನು ನೋಡುತ್ತಿದ್ದ ತಾತ ಎದ್ದು ಅವನ ಕೈಯಲ್ಲಿದ ಚೂರಿಯನ್ನು ಬಿಡಿಸಿದ. +ಕೆಳಗೆ ಬಿದ್ದ ಅದನ್ನು ತಾತ ತೆಗೆದುಕೊಳ್ಳುತ್ತಿದ್ದಂತೆ ಹೇಳಿದ ಕುಶಾಲ. +“ನಿನಗೇನೂ ಆಗಿಲ್ಲ. +ಹೊಡಿ ಇವನನ್ನು ಎಷ್ಟು ಹೊಡೆಯಬಲ್ಲೆಯೋ ಹೊಡಿ.”ಯುವಕನ ಭುಜಕ್ಕಾದ ಗಾಯದಿಂದ ರಕ್ತ ಬಂದು ಅವನ ಶರ್ಟ್ ನೆನೆಯಲಾರಂಭಿಸಿತ್ತು. +ಅದನ್ನು ಲೆಕ್ಕಿಸದೇ ಅವನು ತನ್ನ ರೋಷವನ್ನೆಲ್ಲಾ ಅವನ ಮೇಲೆ ಕಾರಲಾರಂಭಿಸಿದ. +ತೀವ್ರವಾದ ಹಿಂಸೆಗೆ ಗುರಿಯಾದ ಅವರು ತಮ್ಮ ತಮ್ಮ ಜಾತಕವನೆಲ್ಲಾ ಉಗುಳತೊಡಗಿದ್ದರು. +ಬಡಕಲು ಯುವಕ, ವೆಂಕಟ್ ಮತ್ತೊಬ್ಬ ಕಲೆತು ಆ ಇಬ್ಬರನ್ನು ಬಂಧಿಸುವದು ಕಷ್ಟವಾಗಲಿಲ್ಲ. +ಆ ಇಬ್ಬರು ಕೈಗಳಿಗೆ ಹಗ್ಗ ಕಟ್ಟಿ ಇಷ್ಟಬಂದಂತೆ ಒದೆಯುತ್ತಾ ಹೊಡೆಯುತ್ತಾ ಇಡೀ ಬಂಡೇರಹಳ್ಳಿಯನ್ನೇ ಎಬ್ಬಿಸುವಂತೆ ಮಾತಾಡಿಸುತ್ತಾ ಅವರು ಆ ಇಬ್ಬರನ್ನೂ ತೇಜಾನ ಮನೆಗೆ ಕರೆತಂದರು. +ಬಂದಿಗಳ ಬಾಯಿಯಿಂದ ನಾಯಕನ ವೃತ್ತಾಂತ ಕೇಳಿ ದಂಗಾದರು ಗುಂಡು ತಾತ. +ಆ ಯುವಕರಿಗೂ ಅದನ್ನು ನಂಬುವದು ಕಷ್ಟವಾಗಿ ತೋರಿತು. +ಅವರುಗಳ ಪ್ರಕಾರ ಈ ಬಂಡೇರಹಳ್ಳಿಯ ಪಂಚಾಯತಿ ಪ್ರೆಸಿಡೆಂಟ್ ಸಿಫಾನಾಮರ್ ಬರೀ ಬಂಡೇರಹಳ್ಳಿಯಲ್ಲಿ ಅಲ್ಲದೇ ಆಸುಪಾಸಿನ ಹಳ್ಳಿಗಳಲ್ಲೂ ಆದ ಘೋರಗಳಿಗೆ ಅವನೇ ಕಾರಣ. +ಅದಕ್ಕೆ ಪೂರಕವೆಂಬಂತೆ ಮೊದಲಿನಿಂದ ಬಂಡೇರಹಳ್ಳಿಯಲ್ಲಿ ನಡೆದ ಘಟನೆಗಳನ್ನು ಆಸುಪಾಸಿನ ಹಳ್ಳಿಗಳಲ್ಲಿ ಆದ ಕೊಲೆಗಳ ವಿವರವನ್ನು ಕೊಟ್ಟರು. +ಅಷ್ಟೆಲ್ಲಾ ಕೇಳಿದ ಮೇಲೆ ಅದನ್ನು ಯಾರೇ ಆಗಲಿ ನಂಬದೇ ಇರುವದು ಅಸಾಧ್ಯ. +ಯುವಕರನ್ನೊಳಗೊಂಡು ಮುದಿಯ ಗುಂಡು ತಾತನಿಗೂ ಅವನನ್ನು ಕೊಂದು ಹದ್ದು ನಾಯಿಗಳಿಗೆ ಆಹಾರ ಮಾಡಿಬಿಡಬೇಕೆಂದೆನಿಸುತ್ತಿತ್ತು. +ತೇಜಾ ಪೋಲೀಸ್‌ಸ್ಟೇಷನ್ ತಲುಪಿದಾಗ ಅಲ್ಲಿ ಪೋಲೀಸ್ ವ್ಯಾನೊಂದು ನಿಂತಿತು. +ಒಳಗೆ ಮಲಗಿದ್ದವರನ್ನು ಎಬ್ಬಿಸುವದರಲ್ಲಿ ತೊಡಗಿದ್ದ ಹೊಸ ಪೇದೆಯೊಬ್ಬ, ತೇಜಾನನ್ನು ನೋಡುತ್ತಲೇ ಅಲ್ಲಿದ್ದ ಕುರ್ಚಿಯೊಂದರಲ್ಲಿ ಕಾಲು ಚಾಚಿ ಕುಳಿತಿದ್ದ ಇನ್ಸ್‌ಪೆಕ್ಟರ್‌ ಎದ್ದು ಕೈ ಮುಂದೆ ಚಾಚಿ ಹೇಳಿದ. +“ಇನ್ಸ್‌ಪೆಕ್ಟರ್ ಮುನಿಸ್ವಾಮಿ!ನೀವು ಇನ್ಸ್ ಪೆಕ್ಟರ್ ತೇಜಾ ಇರಬಹುದು” +“ಹೌದು” ಎಂದು ತೇಜಾ ಮುಖವೆಲ್ಲಾ ನಗುತುಂಬಿ ಹಾರ್ದಿಕವಾಗಿ ಅವನ ಕೈ ಕುಲುಕಿದ. +“ಈಗತಾನೆ ಬಂದೆ ಪಟ್ಟಣದಿಂದ ಮೆಸೇಜ್ ಬಂತು.ಕೆಲಸ…” +“ಬಹಳ ಮುಖ್ಯವಾದದ್ದು ಒಳಗೆ ಬನ್ನಿ ಮಾತಾಡುವ… ನಿಮ್ಮ ಜತೆ ಎಷ್ಟು ಜನರಿದ್ದಾರೆ? +ಒಬ್ಬ ಎಚ್.ಸಿ.ಮೂವರು ಕಾನ್‌ಸ್ಟೇಬಲ್ಸ್” ಅವನನ್ನು ಹಿಂಬಾಲಿಸುತ್ತಾ ಹೇಳಿದ ಇನ್ಸ್ ಪೆಕ್ಟರ್ ಮುನಿಸ್ವಾಮಿ, ಅದಕ್ಕೆ ನಗುತ್ತಾ ಹೇಳಿದ ತೇಜಾ,“ನನ್ನ ಪೋಲೀಸ್ ಸ್ಟೇಷನ್ನಲ್ಲಿ ಇರುವವರಷ್ಟೆ”ಅದಕ್ಕೇನು ಹೇಳಬೇಕೊ ತೋಚಲಿಲ್ಲ ರಾಮನಗರದಿಂದ ಬಂದ ಇನ್ಸ್‌ಪೆಕ್ಟರ್‌ನಿಗೆ. +ಇಬ್ಬರೂ ಕೋಣೆಯಲ್ಲಿ ಬಂದು ಕುಳಿತ ಮೇಲೆ ಕೇಳಿದ ತೇಜಾ. +“ನಿಮಗೆ ಏನಂತ ಮೆಸೇಜ್ ಬಂತು?” +“ಇಲ್ಲಿ ಕೆಲ ಅಪರಾಧಿಗಳಿದ್ದಾರೆಂದು ಅವರನ್ನು ನೇರವಾಗಿ ಪಟ್ಟಣಕ್ಕೆ ತರಬೇಕೆಂದು” ಹೇಳಿದ ಇನ್ಸ್‌ಪೆಕ್ಟರ್‌ ಮುನಿಸ್ವಾಮಿ. +“ಅಷ್ಟೇನೇ?” ಕೇಳಿದ ತೇಜಾ“ಅಷ್ಟೆ. +ಇನ್ನೂ ಏನಾದರು……”ಅವನ ಮಾತನ್ನು ನಡುವೆ ತಡೆಯುತ್ತಾ ಒಂದು ನಿಮಿಷ” ಎಂದ ತೇಜಾ ರಿಸೀವರನ್ನು ಎತ್ತಿಕೊಂಡು ಸ್ಕ್ವಾಡಿನ ಮುಖ್ಯಸ್ಥರ ಮನೆಯ ನಂಬರ್ ಅದುಮತೊಡಗಿದ. +ಅಚ್ಚರಿಯಿಂದ ಅವನನ್ನೇ ನೋಡುತ್ತಾ ಕುಳಿತ ರಾಮನಗರಿಂದ ಬಂದ ಇನ್ಸ್‌ಪೆಕ್ಟರ್‌, ಅತ್ತ ಕಡೆಯಿಂದ ಎರಡು ರಿಂಗ್ ಕೇಳಿ ಬರುತ್ತಲೇ ರಿಸೀವರನ್ನು ಎತ್ತಿ ಅದರ ಮೂಲಕ ಸ್ಕ್ವಾಡಿನ ಮುಖ್ಯಸ್ಥರ ಕಂಠ ಕೇಳಿ ಬಂತು. +ಇನ್ನೂ ಮಲಗಿಲ್ಲವೇ ಎಂಬ ಅಚ್ಚರಿಯನ್ನು ಅದಮುತ್ತಾ ಮಾತಾಡಿದ ತೇಜಾ. +“ನಾನು ಸರ್ ತೇಜಾ ಬಂದಿಗಳೆಲ್ಲಾ ಸಿಕ್ಕಿಬಿದ್ದಿದ್ದಾರೆ. +ಒಬ್ಬನನ್ನು ನಾನು ಸೆಲ್ಪ್ ಡಿಫೆನ್ಸ್‌ಗಾಗಿ ಮುಗಿಸಬೇಕಾಯಿತು. +ನೀವು ಹೇಳಿದಂತೆ ರಾಮನಗರದಿಂದ ಇನ್ಸ್‌ಪೆಕ್ಟರ್‌ ಮುನಿಸ್ವಾಮಿಯವರು ಬಂದಿದ್ದಾರೆ. +ನಾಯಕರ ವಿರುದ್ಧ ಎಲ್ಲಾ ಪುರಾವೆಗಳು ಸಿಕ್ಕಿವೆ ಏನು ಮಾಡಲಿ” +“ಏನು ಮಾಡುತ್ತೀರಿ. +ಅವರನ್ನು ಅರೆಷ್ಟು ಮಾಡಿ ಕರೆತನ್ನಿ, ಕುಶಾಲ್ ಅಲ್ಲೆ ಇದ್ದಾನೆಯೋ?” +“ಇದ್ದಾನ ಸರ್. +ಅವನು ಬಂದಿಗಳೊಡನೆ ನನ್ನ ಮನೆಯಲ್ಲೇ ಇದ್ದಾನೆ.” +“ಆ ರಾಮನಗರದ ಇನ್ಸ್‌ಪೆಕ್ಟರ್‌ನಿಗೆ ಫೋನ್ ಕೊಡು”ತಮ್ಮ ಮಾತು ಕೇಳದಂತೆ ರಿಸೀವರ್‌ನ ಮೇಲೆ ಕೈ ಇಟ್ಟು ಹೇಳಿದ ತೇಜಾ. +“ಸ್ಕ್ವಾಡಿನ ಚೀಫ್, ನಿಮ್ಮೊಡನೆ ಮಾತಾಡಬೇಕಂತೆ”ಅದನ್ನು ಕೇಳಿದವನೇ ಮುನಿಸ್ವಾಮಿ ಲಗುಬಗೆಯಿಂದ ಎದ್ದು ರಿಸೀವರ್ ಎತ್ತಿಕೊಂಡ. +ಅವನು ಅತ್ತಕಡೆಯ ಮಾತುಗಳನ್ನು ಕೇಳುತ್ತಾ ಎಲ್ಲದ್ದಕ್ಕೂ ಬರೀ “ಎಸ್ ಸರ್” ಎನ್ನುತ್ತಿದ್ದನಷ್ಟೆ. +ಮಾತು ಮುಗಿಸಿದ ಅವನು ರಿಸೀವರನ್ನು ಮತ್ತೆ ತೇಜಾನ ಕೈಗೆ ಕೊಟ್ಟ. +ಅದನ್ನು ತೆಗೆದುಕೊಂಡು ಹೇಳಿದನವ. +“ನಾನು ಸರ್ ತೇಜಾ.” +“ನಾನಾ ಇನ್ಸ್‌ಪೆಕ್ಟರ್‌ನಿಗೆ ಎಲ್ಲಾ ಹೇಳಿದ್ದೇನೆ. +ಆ ನಾಯಕನ ಮನೆಯನ್ನು ರೈಡ್ ಮಾಡಿ.” +“ಸರಿ ಸಾರ್!”“ವೆರಿ ಗುಡ್ ವರಿ ವೆಲ್‌ಡನ್” ಸ್ಕ್ವಾಡಿನ ಮುಖ್ಯಸ್ಥರ ಮಾತಿನಲ್ಲಿ ಪ್ರಶಂಸೆ ತುಂಬಿತ್ತು. +ವಿನಯವಾಗಿ ಹೇಳಿದ ತೇಜಾ,“ಥ್ಯಾಂಕ್ಯೂ ಸರ್!”“ಗುಡ್‌ನೈಟ್” ಎಂದ ಅವರು ರಿಸೀವರ್ ಕೆಳಗಿಟ್ಟರು. +ತೇಜಾನು ಅದನ್ನು ಫೋನಿನ ಮೇಲಿಡುತ್ತಾ ರಾಮಸ್ವಾಮಿಯ ಕಡೆ ನೋಡಿದ. +“ನಡೆಯಿರಿ ಕೆಲಸ ಆರಂಭಿಸುವ” ಎಂದನಾತ. +ಇಬ್ಬರೂ ಕೋಣೆಯಿಂದ ಹೊರಬಂದರು. +ತೇಜಾನ ಪೇದೆಯರು ಎದ್ದಿದ್ದರು. +ಅವರಲ್ಲಿ ಒಬ್ಬನಿಗೆ ತನ್ನ ಮನೆಯನ್ನು ಎಸ್.ಐ.ಗೆ ತೋರಿಸುವಂತೆ ಹೇಳಿ ಅಲ್ಲಿದ್ದ ಬಂದಿಗಳನ್ನೆಲ್ಲಾ ಕರೆತರುವಂತೆ ಆದೇಶಿಸಿದ. +ಎಚ್.ಸಿಯನ್ನು ಕೂಡಾ ಕರೆದುಕೊಂಡು ಬಂದಿಗಳನ್ನು ಕರೆತರಲು ಹೋದನ ಪೇದೆ. +ಕಟ್ಟಡದ ಹೊರಬಂದು ತಣ್ಣನೆಯ ಗಾಳಿಯನ್ನು ಹೀರುತ್ತಾ ನಿಂತರು ಇನ್ಸ್‌ಪೆಕ್ಟರರಿಬ್ಬರು. +ಮುಂದಿನ ಕೆಲಸಗಳು ತುರಾತುರಿಯಲ್ಲಿ ನಡೆದವು. +ಬಂದಿಯರೊಡನೆ ಒಂದು ಶವವನ್ನು ಹೊತ್ತು ತಂದರು ಪೋಲೀಸಿನವರು. +ಒಬ್ಬ ಬಂದಿ ಬಹು ಕಷ್ಟದಿಂದ ಒಂದು ಕಾಲಮೇಲೆ ನಡೆಯುತ್ತಿದ್ದ. +ಮಾರುವೇಶದಲ್ಲಿದ ಕುಶಾಲನನ್ನು ಗುರುತಿಸಲಿಲ್ಲ ಮುನಿಸ್ವಾಮಿ. +ಕುಶಾಲನ ಬಗ್ಗೆ ಸ್ಕ್ವಾಡಿನ ಮುಖ್ಯಸ್ಥರು ಫೋನಿನಲ್ಲಿ ಹೇಳಿದರು. +ಸರಕಾರಿ ಸಮವಸ್ತ್ರದಲ್ಲಿದ್ದ ಅವನನ್ನು ಗುರುತಿಸಿ ತಾನೇ ಕೈ ಮುಂದೆ ಮಾಡಿ ಹೇಳಿದ ಕುಶಾಲ್. +“ಇನ್ಸ್‌ಪೆಕ್ಟರ್ ಕುಶಾಲ್”ಅದನ್ನು ಕುಲುಕುತ್ತಾ ಪ್ರಶಂಸೆಯ ದನಿಯಲ್ಲಿ ಹೇಳಿದ ಮುನಿಸ್ವಾಮಿ. +“ಇನ್ಸ್‌ಪೆಕ್ಟರ್ ಮುನಿಸ್ವಾಮಿ… ನಿಮ್ಮನ್ನು ಗುರುತಿಸುವದೇ ಕಷ್ಟ. +ಬಹಳ ದೊಡ್ಡ ಕೆಲಸ ಸಾಧಿಸಿದ ಹಾಗಿದೆ.”ಅದಕ್ಕೆ ಕುಶಾಲ ನಗುತ್ತಾ ಹೇಳಿದ“ಗುರುತಾಗದ ಹಾಗೇ ಕೆಲಸ ಮಾಡುವದು ನನ್ನ ಅಭ್ಯಾಸ”ಶವವನ್ನು ರಾಮನಗರದ ಆಸ್ಪತ್ರೆಯಲ್ಲಿ ಹಾಕಿ ಗಾಯಗೊಂಡ ಕೈದಿಗೆ ಪಟ್ಟಣದಲ್ಲೇ ಚಿಕಿತ್ಸೆ ಕೊಡಿಸುವುದೆಂದು ನಿರ್ಧಾರವಾಯಿತು. +ಮೂವರು ಇನ್ಸ್‌ಪೆಕ್ಟರು, ಎಸ್.ಐ.ಎಲ್ಲರೂ ತೇಜಾನ ಜೀಪಿನಲ್ಲಿ ಕುಳಿತರು. +ತೇಜಾನೇ ಡ್ರೈವಿಂಗ್ ವೀಲ್‌ನೆದುರು ಕುಳಿತು ಅದನ್ನು ರಭಸವಾಗಿ ಓಡಿಸುತ್ತಾ ನಾಯಕ್‌ರ ಮನೆ ಎದುರು ತಂದು ಅಕ್ಕಪಕ್ಕದವರು ನಿದ್ದೆಯಿಂದ ಏಳುವಂತಹ ಕರ್ಕಶ ಬ್ರೇಕ್ ಹಾಕಿದ. +ಅದು ನಿಲ್ಲುತ್ತಿದ್ದಂತೆ ಬುಡು ಬುಡನೆ ಇಳಿದರು ಪೋಲಿಸಿನವರೆಲ್ಲಾ. +ಮುಂದೆ ಓಡಿದ ಕುಶಾಲ ನಾಯಕರ ಮನೆಯ ಬಾಗಿಲು ಮುರಿಯುವಂತೆ ಬಡಿಯತೊಡಗಿದ. +ಬಾಗಿಲು ತೆಗೆದು ಅಲ್ಲಿ ನಾಯಕರಿಲ್ಲ ಎಂದ ಆಳು ಅವನನ್ನು ತಳ್ಳಿಕೊಂಡು ಒಳನುಗ್ಗಿದ ಕುಶಾಲ್. +ಅವನ ಹಿಂದೆ ತೇಜಾ ಅಳಕುತ್ತಲೇ ಮೆಲ್ಲಗೆ ಅಡಿ ಇಟ್ಟ, ರಾಮನಾಗರದ ಇನ್ಸ್‌ಪೆಕ್ಟರ್‌ ಮುನಿಸ್ವಾಮಿ. +ಆ ಗದ್ದಲ್ಲದ ಕಾರಣ ಮನೆಯವರೆಲ್ಲಾ ಎದ್ದು ಬಿಟ್ಟು ಬಾಯಿಗೆ ಬಂದ ಹಾಗೆ ಕೂಗುವದು, ಕಿರಚುವದು ಬೈಯ್ಯುವದು ಅಳುವದು ಮಾಡುತ್ತಿದ್ದರು. +ಅದನ್ನು ಕೇಳಿಸಿಕೊಳ್ಳದವರಂತೆ ಆ ಇಬ್ಬರು ಇನ್ಸ್‌ಪೆಕ್ಟರರು ನಾಯಕನಿಗಾಗಿ ಮನೆಯಲ್ಲಾ ಶೋಧಿಸಲಾರಂಭಿಸಿದರು. +ಕೊನೆಗೂ ಬಚ್ಚಲ ಮನೆಯಲ್ಲಿ ಅಡಗಿ ಕೊಂಡಿದ್ದ ನಾಯಕನ ಕೈಗಳಿಗೆ ಬೇಡಿ ತೊಡಿಸಿದ ಕುಶಾಲ. +ಅವನನ್ನು ಜೀಪಿನಲ್ಲಿ ಹಾಕಿಕೊಂಡು ಬಂಡೇರಹಳ್ಳಿ ಪೋಲೀಸ್ ಸ್ಟೇಷನ್‌ಗೆ ತಂದರು. +ಅಲ್ಲಿ ಮಿಕ್ಕ ಖೈದಿಯರನ್ನೂ ವ್ಯಾನಿನಲ್ಲಿ ಕೂಡಿ ಹಾಕಲಾಯಿತು. +ಈಗ ನಾಯಕ್‌ನಲ್ಲಿ ಸಿಟ್ಟು ಹೋಗಿ ಭಯ ತುಂಬಿಬಂದಿರುವುದು ಸ್ಪಷ್ಟವಾಗಿ ಗುರುತಿಸಬಹುದಾಗಿತ್ತು. +ಎಸ್.ಐ. ಮತ್ತು ಪೇದೆಯರು ಹಿಂದೆ ಬಂಧಿಯರ ಕಾವಲಿಗೆ ವ್ಯಾನಿನಲ್ಲಿ ಏರಿದರು. +ಮುಂದೆ ಡ್ರೈವರ್‌ನ ಬದಿಗೆ ಬಂದು ಕುಳಿತ ಇನ್ಸ್ ಪೆಕ್ಟರ್‌ ಮುನಿಸ್ವಾಮಿ, ತೇಜಾ ಮತ್ತು ಕುಶಾಲ ಆತನ ಕೈಯನ್ನು ಹಾರ್ದಿಕವಾಗಿ ಕುಲಕಿದರು. +ಬಂಧಿಯರ ಸಮೇತ ವ್ಯಾನು ರಾಮನಗರಕ್ಕೆ ಅಲ್ಲಿಂದ ಪಟ್ಟಣಕ್ಕೆ ಪಯಣ ಆರಂಭಿಸಿತು. +ವ್ಯಾನು ಹೋಗುತ್ತಿರುವುದನ್ನೇ ನೋಡುತ್ತಿದ್ದರು ಗುಂಡು ತಾತ ಮತ್ತು ಅವರಿಗೆ ಸಹಾಯ ಮಾಡಿದ ಯುವಕರು, ಹಾರ್ದಿಕವಾಗಿ ಅವರೆಲ್ಲರ ಕೈಕುಲಕಿ ಧನ್ಯವಾದಗಳನ್ನು ಹೇಳಿದರು ತೇಜಾ ಮತ್ತು ಕುಶಾಲ. +ಹೋಗುತ್ತಿದ್ದ ಅವರನ್ನೇ ನೋಡುತ್ತಾ ಹೇಳಿದ ಕುಶಾಲ್“ಇನ್ನೂ ಒಳ್ಳೆಯವರೇ ಹೆಚ್ಚಿದ್ದಾರೀ ಲೋಕದಲ್ಲಿ”ಅವರು ಮುಂದಿನ ಓಣಿಯಲ್ಲಿ ಕಣ್ಮರೆಯಾದರು . +ತೇಜಾ ಜೀಪಿನ ಕಡೆ ಹೋಗಲು ತಿರುಗಿದಾಗ ಒಬ್ಬ ಮುದುಕಿ ಕೋಲೂರುತ್ತಾ ಅವರ ಬಳಿ ಬಂದಳು. +ಈ ಅಪರಾತ್ರಿಯಲ್ಲಿ ಇವಳಿಲ್ಲಾಕೆ ಬಂದಳು ಎಂದುಕೊಳ್ಳುತ್ತಿರುವಾಗ ನಡಗುವ ದನಿಯಲ್ಲಿ ಹೇಳಿದಳವಳು. +“ನನ್ನ ರಾಮನಗರದವರೆಗೆ ಬಿಡುತ್ತೀರಾ ಸ್ವಾಮಿ!” +“ನಾವು ರಾಮನಗರಕ್ಕೆ ಹೋಗುತ್ತಿಲ್ಲ. +ಅವಳ ಮೇಲೆ ಕರುಣೆ ಬಂದರೂ ವಿಧಿ ಇಲ್ಲದಂತೆ ಹೇಳಿದ ತೇಜಾ. +“ಪಾಪ ಏನು ಕೆಲಸವೋ ಬಿಟ್ಟು ಹೋಗುವ ನಮಗೆ ಸ್ವಲ್ಪ ತಡವಾಗಬಹುದು” ಎಂದ ಕುಶಾಲ್. +ತನ್ನ ಪೋಲೀಸ್‌ಸ್ಟೇಷನ್ ಕಡೆ ನೋಡಿದ ತೇಜಾ, ಪೇದೆಯರಾರು ಬಾಗಿಲಲ್ಲಿ ಕಾಣಲಿಲ್ಲ. +ತಾವೂ ವ್ಯಾನಿನ ಹಿಂದೆ ಹೊರಟು ಹೋಗಿರಬೇಕೆಂದು ಅವರು ಮಲಗುವ ತಯಾರಿಯಲ್ಲಿರಬಹುದು ಎಂದುಕೊಳ್ಳುತ್ತಾ ಮುದುಕಿಗೆ ಹಿಂದೆ ಕೂಡುವಂತೆ ಹೇಳಿದ ತೇಜಾ. +ಅವಳು ಕೂಡುತ್ತಿದ್ದಂತೆಯೇ ಜೀಪು ರಭಸವಾಗಿ ಮುಂದೆ ಸಾಗಿತು. +ಜೀಪು ನಡೆಸುತ್ತಲೇ ನೋವಿನ ದನಿಯಲ್ಲಿ ಹೇಳಿದ ತೇಜಾ. +“ನೀನಿಲ್ಲ್ಯಾಕೆ ಬಂದಿ ಕಲ್ಯಾಣಿ”ದಿಗ್ಭ್ರಾಂತನಾದಂತೆ ಹಿಂತಿರುಗಿ ನೋಡಿದ ಕುಶಾಲ ಅವನ ಮುಖದಲ್ಲಿ ಅಪನಂಬಿಕೆ ತುಂಬಿಬಂದಿತ್ತು. +“ನಿನ್ನ ಕೆಲಸ ನೋಡಲು ನಿನ್ನ ರಕ್ಷಿಸಲು. +ಪುರಾಣಗಳ ಪ್ರಕಾರ ಪತಿಯನ್ನು ರಕ್ಷಿಸುವದೂ ಪತ್ನಿಯ ಧರ್ಮವಲ್ಲವೇ” ಹೇಳಿದಳು ಮುದುಕಿಯ ವೇಶದಲ್ಲಿದ್ದ ಕಲ್ಯಾಣಿ. +“ನೀನಿವಳನ್ನು ಹೇಗೆ ಗುರುತಿಸಿದಿ?” ಅಪನಂಬಿಕೆ ತುಂಬಿದ ದನಿಯಲ್ಲಿ ಕೇಳಿದ ಕುಶಾಲ. +“ನನ್ನ ಮನಸ್ಸು ಹೇಳಿತು. +ನಂತರ ಅವಳಲ್ಲಿ ಇರುವ ಎ.ಕೆ.ಘಾರ್ಟಿಸೆವನ್ ಅದನ್ನು ಖಚಿತ ಪಡಿಸಿತು” ಇನ್ನೂ ಸಿಟ್ಟಿನಲ್ಲೇ ಇದ್ದ ತೇಜಾ. + “ಎ.ಕೆ.ಫಾರ್ಟಿಸೆವನ್!” ಉದ್ಧರಿಸಿದ ಕುಶಾಲ. +ವಾಹನದ ವೇಗ ಕಡಿಮೆ ಮಾಡಿ ತಗ್ಗು ದಿಣ್ಣೆಗಳನ್ನು ನೋಡುತ್ತಾ ಜೀಪನ್ನು ಓಡಿಸುತ್ತಿದ್ದ ತೇಜಾ. +“ಅವಳು ತಲೆ ತುಂಬಾ, ಮೈಯೆಲ್ಲಾ ಸೆರಗೂ ಹೊದ್ದಿರುವದು ನೋಡಿ ಹೆಗಲಿಗಿರುವ ಬ್ಯಾಗಿನ ಕಡೆ ಗಮನ ಹರಿಸಿದೆ. +ಅದರಲ್ಲಿ ಆಯುಧವಿದೆ… ನೋಡು ಕಲ್ಯಾಣಿ ನೀನು ಆದಷ್ಟು ರೆಷ್ಟು ತೆಗೆದುಕೊಳ್ಳಬೇಕಾದ ಸಮಯವಿದು. +ಅದನ್ನು ಅರ್ಥಮಾಡಿಕೊ” ಒಂದೇ ಮಾತಿನಲ್ಲಿ ಇಬ್ಬರೊಡನೆಯೂ ಮಾತಾಡಿದ ತೇಜಾ. +“ಅರ್ಥಮಾಡಿಕೊಂಡೇ ಬಂದದ್ದು ತೇಜಾ! +ನಾವಿಬ್ಬರೂ ಶಪಥಗಳು ಮಾಡಿದ್ದು ನೆನಪಿಲ್ಲವೇ?” ಕೇಳಿದಳು ಕಲ್ಯಾಣಿ. +“ನಿನ್ನದು ಅತಿಯಾಗಿದೆ ನನ್ನ ಹುಚ್ಚನನ್ನಾಗಿ ಮಾಡಿಬಿಡುತ್ತಿ” ನಿಸ್ಸಹಾಯ ದನಿಯಲ್ಲಿ ಹೇಳಿದ ತೇಜಾ, ಅವನ ಮಾತು ಅರ್ತನಾದದಂತಿತ್ತು. +“ಈ ಲೋಕದಲ್ಲಿ ಹುಚ್ಚರಾಗಿ ಬಿಡುವದೇ ವಾಸಿ ಯಾವದನ್ನೂ ಮನಸ್ಸಿಗೆ ಹಚ್ಚಿಕೊಳ್ಳದಂತೆ ಆರಾಮವಾಗಿರಬಹುದು…. . +ನೀ ಪಟ್ಟ ಶ್ರಮವೆಲ್ಲಾ ವ್ಯರ್ಥ. +ನಾಯಕ್‌ನಿಗೆ ಏನೂ ಆಗುವುದಿಲ್ಲ ಅವನೇ ಪಂಚಾಯತಿ ಪ್ರಸಿಡೆಂಟ್‌ನಾಗಿ ಮುಂದುವರೆಯುತ್ತಾನೆ. +ಯಾಕೆಂದರೆ ಇದು ಸ್ವತಂತ್ರದೇಶ! +ಇಲ್ಲಿ ನಿಲ್ಲಿಸು ನನ್ನವರು ಕಾದಿರುತ್ತಾರೆ” ಹೇಳಿದಳು ಕಲ್ಯಾಣಿ. +“ಮನೆಗೆ ಬರುವದಿಲ್ಲವೇ?” ಕೇಳಿದ ತೇಜಾ“ಇಲ್ಲ ಅಲ್ಲಿ ಬಂದರೆ ಅಪ್ಪ ಅಮ್ಮನನ್ನು ಬಿಟ್ಟು ಬರುವದು ಕಷ್ಟವಾಗುತ್ತದೆ. +ಇಲ್ಲೇ ನಿಲ್ಲಿಸು” ಆತುರದ ದನಿಯಲ್ಲಿ ಹೇಳಿದಳು ಕಲ್ಯಾಣಿ. +ಒಮ್ಮೆಲೆ ಬ್ರೇಕನ್ನು ಹಾಕಿದ ತೇಜ, ಜೀಪಿನಿಂದಿಳಿಯುತ್ತಾ ಹೇಳಿದಳು ಕಲ್ಯಾಣಿ. +“ಇಂತಹ ವಿಷಯಗಳಲ್ಲಿ ನಾ ಹೇಳಿದ ಹಾಗೆ ಕೇಳು ತೇಜಾ ಇಲ್ಲದಿದ್ದರೆ ಅನಾಹುತವಾಗಿ ಹೋಗುತ್ತದೆ”ಗಾಡಾಂಧಕಾರ, ಕಾಡಿನಲ್ಲಿ ಹೋಗುತ್ತಿರುವ ಕಲ್ಯಾಣಿಯ ಆಕಾರವನ್ನು ತದೇಕಚಿತ್ತದಿಂದ ನೋಡುತ್ತಿದ್ದ ಕುಶಾಲ್. +ಆಗಲೇ ಅವಳ ದೇಹದಿಂದ ಸೀರೆ ಮಾಯವಾಗಿತ್ತು. +ಕಾಡಿನಲ್ಲಿ ಅವಳು ಕಣ್ಮರೆಯಾದ ಮೇಲೆ ಮಿತ್ರನ ಕಡೆ ತಿರುಗಿದ. +“ಎಂತಹ ಸಾಹಸ……”ಅವನ ಮಾತು ಆರಂಭವಾಗುತ್ತಿದಂತೆ ಸ್ಟೇರಿಂಗ್ ವಿಲ್‌ನ ಮೇಲೆ ತಲೆಯಿಟ್ಟು, ಅಳತೊಡಗಿದ ತೇಜಾ, ಅವನ ಅಳುವಿನ ದನಿ ಕಾಡಿನಲ್ಲಿ ಬಹು ದೂರದವರೆಗೆ ಹರಿದು ಬಂದಿತ್ತು. +ಅವನ ವ್ಯಥೆಯನ್ನು ಅರ್ಥ ಮಾಡಿಕೊಂಡವನಂತೆ ಬೆನ್ನು ನೀವತೊಡಗಿದ ಕುಶಾಲ. +ಪ್ರೇಮ ಮನುಷ್ಯನನ್ನು ಎಷ್ಟು ಬದಲಾಯಿಸಿಬಿಡುತ್ತದೆ ಎನಿಸಿತವನಿಗೆ. +ಎಷ್ಟು ವರ್ಷಗಳಿಂದ ತಾನವನನನ್ನು ನೋಡುತ್ತಿದ್ದೇನೆ. +ಈವರೆಗೆ ಅವನ ಕಣ್ಣಲ್ಲಿ ಒಂದು ಹನಿ ನೀರು ಬಂದದ್ದನೂ ನೋಡಿಲ್ಲ. +ಈಗ ಮಗುವಿನ ಹಾಗೆ ಅಳುತ್ತಿದ್ದಾನೆ. +ಅಳು ನಿಲ್ಲಿಸಿ ತನ್ನನ್ನು ತಾನು ಸಂಭಾಳಿಸಿಕೊಂಡು ಹೇಳಿದ ತೇಜಾ“ಐಯಾಮ್ ಸಾರಿ”“ನಾನರ್ಥಮಾಡಿಕೊಳ್ಳಬಲ್ಲೆ! +… ನಾನಿಲ್ಲೇ ಬಟ್ಟೆ ಬದಲಾಯಿಸಿ ಬಿಡುತ್ತೇನೆ. +ಇನ್ನೊಮ್ಮೆ ನಿಲ್ಲಿಸುವ ಅವಶ್ಯಕತೆ ಇರುವದಿಲ್ಲ” ಎಂದ ಕುಶಾಲ ಜೀಪಿನಿಂದಿಳಿದು. +ಹಿಂದಿನ ಸೀಟಿನ ಕೆಳಗೆ ಇಟ್ಟ ತನ್ನ ಪ್ಯಾಂಟು, ಶರ್ಟನ್ನು ತೆಗೆದು ಬಟ್ಟೆ ಬದಲಾಯಿಸುವ ಕೆಲಸದಲ್ಲಿ ತೊಡಗಿದ. +“ಆ ಬಟ್ಟೆಗಳನ್ನು ಇಲ್ಲಿ ತಾ ನಾನು ಮತ್ತೆ ಮರೆತುಬಿಟ್ಟರೆ ಕಷ್ಟ” ಬಹು ಬೇಗ ತೇಜನ ದನಿ ಮಾಮೂಲಿಗೆ ಬಂದಿತು. +ದೇವನಹಳ್ಳಿಯಲ್ಲಿ ಯಾರಿಂದ ಬಟ್ಟೆ ಪಡೆದನೊ ಅವರಿಗೆ ಹಿಂತಿರುಗಿಸುವದು, ಮರೆತರೆ ಮತ್ತೆ ಇಲ್ಲದ ತಲೆಹರಟೆ ಎಂದುಕೊಳ್ಳುತಾ ಬಿಚ್ಚಿದ ಪಂಚೆ ನಿಲುವಂಗಿ ಮತ್ತು ಟವಲನ್ನು ಒಂದು ಕಡೆ ಸುತ್ತಿ ಅವನ ಬಳಿ ಬಂದು ಕುಳಿತ. +ಸ್ಟಾರ್ಟ್ ಆದ ಜೀಪು ಮುಂದೋಡತೊಡಗಿತು. +ಇಷ್ಟು ರಾತ್ರಿಯಾದುದಕ್ಕೆ ಇವನ ತಂದೆ ಏನೆಂದುಕೊಳ್ಳುತ್ತಾರೋ ಎಂಬ ಯೋಚನೆ ಬಂದಾಗ ತಾನು ಮರೆತದ್ದೇನೋ ನೆನಪಾಯಿತು ಕುಶಾಲನಿಗೆ ಮಾತನ್ನು ಬೇರೆ ದಿಕ್ಕಿಗೆ ಕೂಡ ತಿರುಗಿಸಿದಂತಾಗುತ್ತದೆ ಎಂದುಕೊಳ್ಳುತ್ತ ಹೇಳಿದ. +“ಇಂತಹ ಶೂರ ಸ್ವಾತಂತ್ರ್ಯಯೋಧರು ಹೀಗೆ ಮೂಲೆಗುಂಪಾಗಿ ದೇವನಹಳ್ಳಿಯಲ್ಲಿ ಕುಳಿತಿರಬಾರದು”ತನ್ನದೇ ಯೋಚನೆಯಲ್ಲಿ ತೊಡಗಿದ್ದ ತೇಜಾ ಕೇಳಿದ. +“ಹಾಗಾದರೆ ಏನು ಮಾಡಬೇಕು?” +“ಅದು ಇಡೀ ದೇಶಕ್ಕೆ ಗೊತ್ತಾಗಬೇಕು” ಕೂಡಲೇ ಉತ್ತರಿಸಿದ ಕುಶಾಲ. +“ಅದರಿಂದೇನಾಗುತ್ತದೆ?” +“ಏನಾಗುತ್ತದೆ ಎಂದರೆ? +ಅವರ ಬದುಕಿನಿಂದ ಈಗಿನ ಪೀಳಿಗೆಯವ ಒಬ್ಬನಾದರೂ ನಿಜವಾದ ದೇಶ ಭಕ್ತನಾದರೆ ಸಾಕು” ಮತ್ತೆ ಅವನ ಪ್ರಶ್ನೆಗೆ ಕೂಡಲೇ ಉತ್ತರಿಸಿದ ಕುಶಾಲ. +“ಅದಕ್ಕೆಲ್ಲಾ ಅಪ್ಪ ಒಪ್ಪುವುದಿಲ್ಲ.” ಬೇರಾವುದೋ ಯೋಚನೆ ಯಲ್ಲಿರುವಂತೆ ಹೇಳಿದ ತೇಜಾ. +“ನನ್ನ ಬಹಳ ಜನ ಸ್ನೇಹಿತರಿದ್ದಾರೆ. +ನಾವು ಅವರಿಗೂ ಉಪಕಾರ ಮಾಡಿದಂತಾಗುತ್ತದೆ. +ಯಾವಾಗಲೂ ಒಳ್ಳೆ ಸ್ಟೋರಿ ಬೇಕು ಒಳ್ಳೆಯ ಸ್ಟೋರಿ ಬೇಕೆಂದು ಬಡಕೊಳ್ಳುತ್ತಿರುತ್ತಾರೆ. +ಇದಕ್ಕಿಂತ ಒಳ್ಳೇ ಸ್ಟೋರಿ ಅವರಿಗೆ ಸಿಗಲಾರದು. +ಹೇಗಾದರೂ ಅಪ್ಪನನ್ನು ಒಪ್ಪಿಸು. +ಹಳೆಯ ಫೋಟೋಗಳನ್ನು ಅವರಿಗೆ ಕೊಡು ಅವರದನ್ನು ಮತ್ತೆ ಹಿಂತಿರುಗಿಸುತ್ತಾರೆ. +ಈ ಸಲ ಬೇಡಿಕೆಯಂತಹ ದನಿಯಲ್ಲಿ ಮಾತಾಡಿದ ಕುಶಾಲ. +“ಆ ಫೋಟೋಗಳನ್ನು ತೆಗೆದುಕೊಂಡು ಏನು ಮಾಡಬೇಕಾಗಿದೆ. +ಅವನ್ನು ಬಿಸಾಡು ಎಂದವರು ಅವನ್ನು ನನಗೆ ಕೊಟ್ಟಿದು. +ನಾನೇ ಅದನ್ನು ಜಾಗ್ರತೆಯಾಗಿ ತೆಗೆದಿಟ್ಟಿದ್ದೇನೆ” ಹೇಳಿದ ತೇಜಾ. +ಅವನ ಮನಸ್ಸು ಸ್ವಲ್ಪ ಹಗುರವಾಗಿತ್ತು. +“ಹಾಗಾದರೆ ಇನ್ನೂ ಒಳ್ಳೆಯದಾಯಿತು. +ದೇವನ ಹಳ್ಳಿಯಂತಹ ಕುಗ್ರಾಮದಲ್ಲಿ ಅವರಂತಹ ವ್ಯಕ್ತಿ ಇದ್ದಾರೆಂದು ಲೋಕಕ್ಕೆಲ್ಲಾ ಗೊತ್ತಾಗಲಿ. +”ಆ ಮಾತಿಗೆ ಯಾವ ರೀತಿಯಲ್ಲೂ ಪ್ರತಿಕ್ರಿಯಿಸಲಿಲ್ಲ ತೇಜಾ, ತನ್ನ ಮನಸ್ಸಿನಲ್ಲಿದ್ದದ್ದು ನೇರವೇರಿದಂತೆ ಕುಶಾಲ ಮಾತಾಡಲಿಲ್ಲ. +ಸ್ವಲ್ಪದೂರ ಸಾಗಿದ ಮೇಲೆ ತನಗೆ ತಾನೇ ಹೇಳಿಕೊಳ್ಳುವಂತೆ ಮಾತಾಡಿದ ತೇಜಾ. +“ನನ್ನದೂ ಎಂತಹ ಜೀವನ ಗಂಡ ಪೋಲಿಸ್ ಇನ್ಸ್‌ಪೆಕ್ಟರ್ ಹೆಂಡತಿ ಏಕೆ ಫಾರ್ಟಿ ಸೇವನ್ ಹಿಡಿದು ಕಾಡಿನಲ್ಲಿ ಅಲೆದಾಡುವ ಕ್ರಾಂತಿಕಾರಿ. +ಇದು ಯಾವಾಗ ಎಲ್ಲಿ ಕೊನೆಗೊಳ್ಳುತ್ತದೆಯೋ”ಸಮಾಧಾನ ಹೇಳುವಂತಹ ದನಿಯಲ್ಲಿ ಮಾತಾಡಿದ ಕುಶಾಲ. +“ಒಂದಲ್ಲ ಒಂದು ದಿನ ಎಲ್ಲಾ ಸರಿ ಹೋಗುತ್ತದೆ”ಅವನ ಮಾತಿನಲ್ಲಿ ಅವನಿಗೇ ನಂಬಿಕೆ ಇಲ್ಲದಂತೆ ಧ್ವನಿಸಿತದು. +ವ್ಯಂಗ್ಯದ ನಗೆಯೊಡನೆ ಹೇಳಿದ ತೇಜಾ. +“ಹೌದು!ಒಂದಲ್ಲ ಒಂದು ದಿನ ಎಲ್ಲಾ ಸರಿಹೋಗುತ್ತದೆ. +ಅವಳು ಕಾಡಿನಲ್ಲಿ ಸಾಯುತ್ತಾಳೆ. +ನಾನು ಅದೇ ಕಾಡಿನಲ್ಲಿ ಹುಚ್ಚನಾಗಿ ಅಲೆಯುತ್ತಿರುತ್ತೇನೆ.” +ಬಂಡೆಗೆ ಒರಗಿ ನಿಂತಿದ್ದಳು ಕಲ್ಯಾಣಿ. +ಅವಳ ಹೊಟ್ಟೆ ಗರ್ಭಿಣಿ ಎಂಬುದನ್ನು ಸ್ಪಷ್ಟಪಡಿಸುತ್ತಿತ್ತು. +ಅದಕ್ಕಾಗಿ ಅವಳು ತನ್ನ ಮೇಲಿನ ವಸ್ತ್ರವನ್ನು ಬದಲಾಯಿಸಿದಳು. +ಅವಳೆದುರು ಅವಳ ಹಿಂಬಾಲಕರು ಅದೇ ವಿಧೇಯ ರೀತಿಯಲ್ಲಿ ನಿಂತಿದ್ದರು. +ಹೊಸದೊಂದು ಸುದ್ದಿಯನ್ನು ತಂದಿದ್ದ ಶಂಕರ. +ಅದಕ್ಕೆ ಆ ವಿಶೇಷ ಸಭೆ. +“ಚೌಧರಿಯ ಜನರು ಎಷ್ಟಿದ್ದಾರೆ?” ತನ್ನದೇ ನಿರ್ಭಾವ ದನಿಯಲ್ಲಿ ಕೇಳಿದಳು ಕಲ್ಯಾಣಿ. +“ಎಂಟು ಜನ” ಕೂಡಲೇ ಉತ್ತರಿಸಿದ ಶಂಕರ. +“ಅವರಿಗೆ ನಮ್ಮ ಠಿಕಾಣಿ ಗೊತ್ತಾಗಿದೆಯೇ?” ಕೇಳಿದಳು ಕಲ್ಯಾಣಿ. +“ಗೊತ್ತಾದ ಹಾಗೆ ಮುಂದೆ ಬರುತ್ತಿದ್ದಾರೆಂಬ ಸುದ್ದಿ ಬಂದಿದ” +“ಹೇಗೆ ಗೊತ್ತಾಗಿರಬಹುದು?” +“ನನಗೆನಿಸಿದಂತೆ ಅವರು ಕಾಡೆಲ್ಲಾ ಜಾಲಾಡಿರಬಹುದು ಒಂದು ಅಂದಾಜಿನ ಮೇಲೆ ಬರುತ್ತಿರಬಹುದು.” ಮೊದಲ ಬಾರಿ ವಿವರಣೆ ನೀಡಿದ ಹರಿ. +ಅವಳ ಹುಬ್ಬುಗಳು ಗಂಟಿಕ್ಕಿದ್ದವು. +ಬಂಡೆಗಾನಿ ನಿಲ್ಲುವುದೂ ಕಷ್ಟವೆನಿಸುತ್ತಿತ್ತು. +ಹಣೆಯನ್ನು ವರೆಸಿಕೊಂಡಳು. +“ನಾ ಕುರ್ಚಿ ತರುತ್ತೇನಕ್ಕ!” ಹೇಳಿದ ನಾಗೇಶ. +ಅವಳು ಮೂರು ತಿಂಗಳ ಗರ್ಭಿಣಿಯಾದಾಗಲೇ ಅವಳ ಹಿಂಬಾಲಕರು ಕುರ್ಚಿಯ ವ್ಯವಸ್ಥೆ ಮಾಡಿದ್ದರು. +ಅದಕ್ಕವಳು ಏನೂ ಹೇಳದಾಗ ಹರಿ ಆದೇಶಿಸಿದ. +“ಕುರ್ಚಿ ತಾ”ಅಕ್ಕನ ನಂತರ ಅವನೇ ನಾಯಕ. +ಅದಕ್ಕೇನೂ ಹೇಳಲಿಲ್ಲ ಕಲ್ಯಾಣಿ. +ನಾಗೇಶ ಕುರ್ಚಿ ತಂದು ಹಾಕಿದ. +ಅದೇ ಬೇಕಾಗಿದ್ದವಳಂತೆ ಅದರಲ್ಲಿ ಕುಳಿತಳು ಕಲ್ಯಾಣಿ. +“ದೇವಿಯಾದವ ಅವರಿಗೆ ಏನೇನು ಕೊಡುತ್ತಿದ್ದ?” ಹರಿಯನ್ನು ನೋಡುತ್ತಾ ಪ್ರಶ್ನಿಸಿದಳು. +“ಆಯುಧಗಳನ್ನಲ್ಲದೇ ಹಣವನ್ನು ಕೊಡುತ್ತಿದ್ದ” ಹೇಳಿದ ಹರಿ. +“ಅವನಿಗೆ ಅದರ ಪ್ರತಿಫಲವೇನು ಸಿಗುತ್ತಿತ್ತು?” ಕೇಳಿದಳು ಕಲ್ಯಾಣಿ. +“ಕ್ರಾಂತಿಕಾರಿಯರ ಹೆಸರಿನಲ್ಲಿ ಇವರು ಅವನ ಬೇಕಾದ ಕೆಲಸ ಮಾಡುತಿದ್ದರು” +ಇದೆಲ್ಲಾ ತಮಗೆ ಗೊತ್ತಿದ್ದ ವಿಷಯ ಯಾಕೆ ಹೀಗೆ ಕೇಳುತ್ತಿದ್ದಾಳೋ ಅರ್ಥವಾಗಲಿಲ್ಲ ನಾಗೇಶನಿಗೆ. +“ಇದೆಲ್ಲಾ ನಿಮಗೆ ಗೊತ್ತಿರುವ ವಿಷಯ. +ಆದರೂ ಯಾಕೆ ಹೇಳುತ್ತಿದ್ದೇನೆ ಗೊತ್ತೆ?”ತನ್ನ ಮನಸ್ಸಿನಲ್ಲಿ ಸುಳಿದ ಪ್ರಶ್ನೆಯನ್ನು ಕೂಡಲೇ ಕೇಳಿದಳಲ್ಲ ಎಂದುಕೊಂಡು ಹೇಳಿದ ನಾಗೇಶ. +“ಇಲ್ಲ”“ಯಾಕೆಂದರೆ ನಿಮಗೆಲ್ಲಾ ಗೊತ್ತಾಗಬೇಕು! +ಕ್ರಾಂತಿಯ ಹೆಸರಿನಲ್ಲಿ ಧನವಂತರನ್ನು ಸುಲಿದು ಮಜಾ ಮಾಡುವುದು, ರಾಜನೀತಿಜ್ಞರ ಗುಲಾಮರಾಗಿ ಕೆಲಸ ಮಾಡುವುದು ಜನರಿಗೆ ಗೊತ್ತಾಗಿ ಹೋಗುತ್ತದೆ. +ಅದು ಯಾರೂ ಅವರಿಗೆ ಹೇಳಬೇಕಾಗಿಲ್ಲ. +ಅದೇ ಕಾರಣಕ್ಕೆ ಕೆಲ ತಂಡಗಳು ನಾಶವಾಗಿವೆ. +ಇನ್ನೂ ಕೆಲ ತಂಡದ ಹಿಂಬಾಲಕರು ಸಿಕ್ಕಿಬಿದ್ದು ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. +ಅವರನ್ನು ಹಿಡಿದುಕೊಟ್ಟವರು ಯಾರು ಜನರೆ! +ನಿಮ್ಮನ್ನು ಸುತ್ತುಮುತ್ತಿನ ಹಳ್ಳಿಗಳಲ್ಲಿ, ರಾಮನಗರದಲ್ಲಿ ಜನ ಗುರುತಿಸುತ್ತಾರೆ. +ಆದರೆ ಯಾರೂ ನಿಮಗೆ ಕೇಡು ಬಗೆಯುವುದಿಲ್ಲ, ಪೋಲಿಸಿನವರಿಗೆ ಇವರೇ ಕಲ್ಲಕ್ಕನ ಕ್ರಾಂತಿಕಾರಿ ತಂಡದವರು ಎಂದು ಯಾರೂ ಬೆರಳು ಮಾಡಿತೋರಿಸುವುದಿಲ್ಲ. +ಯಾಕೆ?ಯಾಕೆಂದರೆ ಯಾವಾಗಲೂ ನಾವು ಜನಸಾಮಾನ್ಯರ ಏಳಿಗೆಯನ್ನು ಬಯಿಸಿದ್ದೆವಷ್ಟೆ. +ಅವರ ನಂಬಿಕೆಗೆ ಎಂದೂ ದ್ರೋಹ ಬಗೆದಿಲ್ಲ. +ನಾವು ಯಾರಲ್ಲಾದರೂ ಕೈಚಾಚಿ, ಹೆದರಿಸಿ ಹಣ ಕೇಳಿದ್ದೇವೆಯೇ? ಇಲ್ಲ. +ಅವರೇ ಮನಸ್ಪೂರ್ತಿಯಾಗಿ ನಮಗೆ ಬೇಕಾದುದನ್ನೆಲ್ಲಾ ಕೊಡುತ್ತಾರೆ. +ಯಾಕೆ?ಯಾಕೆಂದರೆ ನಮ್ಮಿಂದ ಅವರಿಗೆ ಯಾವುದೇ ರೀತಿಯ ಸಹಾಯ ಸಿಕ್ಕಿರಬಹುದು. +ಅದನ್ನು ನಿಮಗೆಲ್ಲಾ ಮನದಟ್ಟಾಗಲೆಂದೇ ಆ ಪ್ರಶ್ನೆ ಕೇಳಿದ್ದು. +ಜನರ ಮನ ಗೆಲ್ಲಿ ಅವರು ನಿಮಗಾಗಿ ಪೋಲಿಸಿನವರನ್ನೂ ಕೊಲ್ಲುತ್ತಾರೆ. +ನಿಮಗಾಗಿ ಅವರು ಏನು ಬೇಕಾದರೂ ಮಾಡುತ್ತಾರೆ. +ಅದನ್ನು ನೀವು ನೋಡಿದ್ದೀರಿ. +ನನಗೆ ಗಂಡನಿದ್ದಾನೆ, ಮನೆ ಇದೆ. +ನಾನು ಎಂತಹ ಅವಸ್ಥೆಯಲ್ಲಿದ್ದೇನೆಂಬುವುದು ನೀವು ನೋಡುತ್ತಿದ್ದೀರಿ. +ಆದರೂ ನಿಮ್ಮ ಜತೆಗಿದ್ದನೆ. +ಬಡಬಗ್ಗರ ನಿಸ್ಸಾಹಾಯಕತೆಯನ್ನು, ಅವರ ಅವಹೇಳನೆಯನ್ನು ನೀಗಿಸಲಿದ್ದೇನೆ. +ಅವರಿಗೆ ತಮ್ಮ ಆತ್ಮಗೌರವವನ್ನು ಮರಳಿ ಪಡೆಯುವಂತೆ ಮಾಡಲು ನಾನಿಲ್ಲಿದ್ದೇನೆ. +ಅದಕ್ಕಾಗಿ ಕೆಲಸ ಮಾಡಿ. +ಯಾಕೋ ನನಗಿಂದು ನಿಮ್ಮೊಡನೆ ಮಾತಾಡುತ್ತಿರುವುದು ಕೊನೆಯ ಸಲವೇನೋ ಎನಿಸುತ್ತಿದೆ. +ಎಲ್ಲಾ ಗಮನವಿಟ್ಟು ಕೇಳಿ ನನ್ನ ನಂತರ ಹರಿಯೇ ನಾಯಕ. +ಅವನು ಬುದ್ಧಿವಂತ, ನಿಷ್ಠಾವಂತ ಅವನ ಮಾರ್ಗದರ್ಶನದಲ್ಲಿ ಈ ಚಳುವಳಿ ಮುಂದುವರೆಯಲಿ . +ಕಲ್ಯಾಣಿ ಮಾತು ನಿಲ್ಲಿಸಿದಾಗ ನಾಗೇಶನ ಕಣ್ಣಲ್ಲಿಂದ ಧಾರಾಕಾರವಾಗಿ ನೀರು ಹರಿಯುತ್ತಿತ್ತು. +ಬೇರೆಲ್ಲರ ಮುಖದಲ್ಲೂ ಶೋಕದ ಭಾವ ತುಂಬಿಬಂದಿತ್ತು. +ಅವನನ್ನು ಕೈಮಾಡಿ ಹತ್ತಿರ ಕರೆದಳು. +ಅವನು ಅವಳ ಕುರ್ಚಿಯನ್ನು ಹಿಡಿದು ಕುಳಿತು ಅಳತೊಡಗಿದ. +ಅವನ ತಲೆಯ ಮೇಲೆ ಅಕ್ಕರೆಯಿಂದ ಕೈ ಸವರುತ್ತಾ ತಾನು ಮಾತಾಡುವುದನ್ನು ನಿಲ್ಲಿಸಿಯೇ ಇಲ್ಲವೇನೋ ಎಂಬಂತೆ ಹೇಳತೊಡಗಿದ್ದಳು. +“ನಾನು ಮೊದಲು ಈ ಭಾವೋದ್ವೇಗಗಳನ್ನು ಹೊರಗೆಡಹಬೇಕು. +ನಾವೆಲ್ಲಾ ನಿರ್ವಿಕಾರರಾಗಬೇಕು ಎಂಬ ಬೋಧನೆ ಮಾಡುತ್ತಿದ್ದೆ. +ಅದು ಆಗದ ಮಾತೆಂದು ನನಗೆ ತೇಜಾ ತೋರಿಸಿಕೊಟ್ಟ. +ನಂತರ ಯೋಚಿಸಿದಾಗ ಬಡವರ ಕಣ್ಣೀರು, ಆಡಳಿತ ಅವರಿಗೆ ಮಾಡುತ್ತಿರುವ ಅನ್ಯಾಯಗಳ ಬಗೆಗಿನ ಆಕ್ರಂದನ ಕೇಳಿ ನಾವು ಈ ದಾರಿಗೆ ಇಳಿದಿರುವುದು! +ಈಗ ಭಾವೋದ್ವೇಗಗಳೆಲ್ಲ ಮನುಷ್ಯನ ಅಂಶವೇನೋ ಎನಿಸುತ್ತದೆ. +ಆದರೆ ನಾವದನ್ನು ಬಸ್ತಿನಲ್ಲಿಡುವುದು ಕಲಿಯಬೇಕು. +ಏಳು ನಾಗೇಶ ಅಳು ನಿಲ್ಲಿಸು ಮುಂದಿನ ಕೆಲಸದಕಡೆ ಗಮನ ಕೊಡು. +ಹರಿ ಈಗೊಂದು ಮುಖ್ಯ ವಿಷಯ. +ತೇಜಾನ ಟ್ರಾನ್ಸ್‌ಫರ್ ಆಗಿದೆ. +ಅದರ ವಿರುದ್ಧ ಬಂಡೇರಹಳ್ಳಿಯವರು ಗದ್ದಲವೆಬ್ಬಿಸುತ್ತಿದ್ದಾರೆ. +ನಾ ಹೇಳಿದ ಹಾಗೆ ಇಷ್ಟು ಅನ್ಯಾಯ ಅತ್ಯಾಚಾರಗಳನ್ನು ಮಾಡಿದರೂ ನಾಯಕ್ ಇನ್ನೂ ಪಂಚಾಯತಿಯ ಪ್ರೆಸಿಡೆಂಟೇ ಆಗಿದ್ದಾನೆ. +ಮೊದಲು ಅವನ ಕಥೆ ಮುಗಿಸಬೇಕು. +ಯಾವ ಪೋಲಿಸ್ ಅಧಿಕಾರಿಯೇ ಆಗಲಿ, ಯಾರೇ ಜನರ ಮೇಲೆ ಅತ್ಯಾಚಾರ ಮಾಡಿದರೆ ಅವರು ನಾಶಿಸಬೇಕು. +ತೇಜಾ ಹೋದಮೇಲೆ ನಾಯಕರೊಡನೆ, ನೀವು ಎಸ್.ಪಿ. ಕಲೆಕ್ಟರ್‌ರನ್ನು ಮುಗಿಸಬೇಕು. +ಕನಿಷ್ಠ ರಾಮನಗರವನ್ನಾದರೂ ಭ್ರಷ್ಟಾಚಾರದಿಂದ ಮುಕ್ತಿ ಹೊಂದಿಸಬೇಕು. +ಕೊನೆಯ ಮಾತು ನಾನು ಬದುಕಿರುವವರೆಗೂ ನಾಯಕಿ ನಾ ಹೇಳಿದ್ದನ್ನು ನೀವು ಮಾಡಬೇಕು. +ನಾನಿಲ್ಲೇ ಇದ್ದುಬಿಡುತ್ತಿದ್ದೆ. +ಆದರೆ ಅಪ್ಪನಿಗೆ ಒಂದು ವಚನ ಕೊಟ್ಟು ಬಂದಿದ್ದೇನೆ ಅದನ್ನು ನಿಭಾಯಿಸಬೇಕು. +ಈಗ ಇಷ್ಟು ಸಾಕು… “ಶಂಕರ ಅವರುಗಳಿಲ್ಲಿ ತಲುಪಲು ಎಷ್ಟು ಸಮಯಬೇಕು?” +“ಇನ್ನೇನು ಅರ್‍ಧ ಗಂಟೆಯಲ್ಲಿ ಇಲ್ಲಿಗೆ ತಲುಪಬಹುದು” ಹೇಳಿದ ಶಂಕರ. +“ಶಂಕರ, ಮಲ್ಲಪ್ಪ, ನಾಗೇಶ, ನೀವು ಎಲ್ಲಾ ದಿಕ್ಕುಗಳಿಂದ ನೋಡುತ್ತಿರಿ ಅವರು ಬರುತ್ತಿರುವ ಸೂಚನೆ ಸ್ವಲ್ಪವಾದರೂ ಕಂಡುಬಂದರೆ ತಿಳಿಸಿ”ಅವಳ ಮಾತು ಮುಗಿಯುತ್ತಿದ್ದಂತೆ ದುರ್ಬೀನುಗಳನ್ನು ತೆಗೆದುಕೊಂಡು ಮೂವರೂ ಮೂರು ಮೂರು ದಿಕ್ಕುಗಳಿಗೆ ಹೋದರು. +ಅವರು ಕಣ್ಮರೆಯಾಗುತ್ತಿದ್ದಂತೆ ಅಲ್ಲಿ ಮಿಕ್ಕ ಹರಿ ಮತ್ತು ಸಾಯಿಯ ಕಡೆ ತಿರುಗಿ ಮಾತಾಡಿದಳು ಕಲ್ಯಾಣಿ“ಎಲ್ಲಾ ವ್ಯವಸ್ಥೆ ಚೆನ್ನಾಗಿದೆ ತಾನೇ” +“ಅದರಲ್ಲಿ ಸಂದೇಹವೇ ಇಲ್ಲವಕ್ಕ ಅವರಲ್ಲಿ ಒಬ್ಬನೂ ಉಳಿಯುವುದಿಲ್ಲ” +ಹರಿಯ ಮಾತು ಮುಗಿಯುತ್ತಲೇ ಕೇಳಿದಳು ಕಲ್ಯಾಣಿ“ನಮ್ಮಲ್ಲಿ” +“ನನ್ನ ಯೋಜನೆಯಂತೆ ನಡೆದರೆ ನಮ್ಮವರೊಬ್ಬರಿಗೂ ಏನೂ ಆಗುವುದಿಲ್ಲ”ಮತ್ತೆ ಪೂರ್ತಿ ವಿಶ್ವಾಸದಿಂದ ಹೇಳಿದ ಹರಿ. +“ಇನ್ನೊಮ್ಮೆ ನಿನ್ನ ಯೋಜನೆ ವಿವರಿಸು” ಕೇಳಿದಳು ಕಲ್ಯಾಣಿ“ಅವರು ಎತ್ತ ಕಡೆಯಿಂದ ಬೆಟ್ಟವೇರುತ್ತಿದ್ದಾರೆಂದು ತಿಳಿದಾಕ್ಷಣ ನಾನು, ಸಾಯಿ ಬೇರೆ ದಿಕ್ಕಿನಿಂದ ಇಳಿದು ಕೆಳಗೆ ಹೋಗಿ ಅವರನ್ನು ಹಿಂದಿನಿಂದ ಸುತ್ತುವರೆಯುತ್ತೇವೆ. +ಬೆಟ್ಟವೇರಲು ಆರಂಭಿಸಿದಾಕ್ಷಣ ನಮ್ಮ ಮೈನುಗಳಿಂದ ಅವರಲ್ಲಿನ ಒಬ್ಬರಿಬ್ಬರು ಸಾಯುತ್ತಾರೆ. +ಭಯದಿಂದ ಹಿಂತಿರುಗಿ ಓಡಲು ಯತ್ನಿಸಿದರೆ ನಾವವರನ್ನು ಮುಗಿಸುತ್ತೇವೆ” ತನ್ನ ಯುದ್ಧನೀತಿಯನ್ನು ವಿವರಿಸಿದ ಹರಿ. +“ಆ ಚೌಧರಿಗೆ ನಾವು ಮೈನುಗಳನ್ನು ಹರಡಿರಬಹುದೆಂಬ ಅನುಮಾನ ಮೊದಲೇ ಬಂದಿದ್ದರೆ?” ಕೇಳಿದಳು ಕಲ್ಯಾಣಿ. +ಅವನಿಗಷ್ಟು ಬುದ್ಧಿ ಇದ್ದಿದ್ದರೆ ಯಾವಾಗಲೋ ನಮ್ಮ ಠಿಕಾಣಿಯನ್ನು ಪತ್ತೆಹಚ್ಚುತ್ತಿದ್ದ. +ನಾವೀ ಎತ್ತರದ ಬೆಟ್ಟದ ಮೇಲಿರಬಹುದೆಂದು ಅವನಿಗೆ ಯಾರೋ ಹೇಳಿದ್ದಾರೆ. +ಅದರ ಅಂದಾಜಿನ ಮೇಲವನಿಲ್ಲಿ ಬರುತ್ತಿದ್ದಾನೆ. +ನಾವಿಲ್ಲೆ ಇದ್ದೇವೆಂಬುವುದು ಅವನಿಗೆ ಖಚಿತವಾಗಿ ಗೊತ್ತಿಲ್ಲ.” +“ಯಾರು ಹೇಳಿರಬಹುದು?” ಮತ್ತೆ ಅದೇ ಅನುಮಾನ ಅವಳಿಗೆ“ನನಗನಿಸಿದಂತೆ ಕಾಡಿನಲ್ಲಿ ಬಂದ ಯಾರನ್ನೊ ಅವನು ಬಹಳ ಹಿಂಸಿಸಿರಬೇಕು. +ಅವನಿಂದ ಮುಕ್ತಿ ಹೊಂದಲು ಅವನೂ ಈ ಎತ್ತರದ ಸ್ಥಾನವನ್ನು ತೋರಿಸಿರಬಹುದು. +ಇದೆಲ್ಲಾ ಬರೀ ಅಂದಾಜಿನ ಮೇಲೆ ನಡೆದ ಕೆಲಸ. +ಯಾಕೆಂದರೆ ಬಂಡೇರಹಳ್ಳಿಯಲ್ಲಿನ ಯಾರಿಗೂ ನಾವೆಲ್ಲಿದ್ದೇವೆಂಬುವುದು ಗೊತ್ತಿಲ್ಲ”ಸ್ವಲ್ಪ ಹೊತ್ತು ಯೋಚಿಸಿ ಹೇಳಿದಳು“ನೀನು ಸಾಯಿ ಕೆಳಗೆ ಹೋಗುವುದು ಬೇಡ. +ಮಲ್ಲಪ್ಪ ಶಂಕರನನ್ನು ಕಳಿಹಿಸುವ”ಅವಳ ಮುಖದ ಕಡೆ ನೋಡುತ್ತಿದ ಹರಿಗೆ ಅದ್ಯಾಕೆಂದು ಕೇಳುವ ಧೈರ್ಯ ಬರಲಿಲ್ಲ. +ಮುಂದೆ ಅವರ ಮಾತು ಬೆಳೆಯದಂತೆ“ಅವರು ಬರುತ್ತಿದ್ದಾರೆ” ಎಂದು ಹೇಳಿದ ಮಲ್ಲಪ್ಪ. +ಆ ಮಾತಿನೊಡನೆಯೇ ಯುದ್ಧದ ಸಿದ್ಧತೆ ಆರಂಭವಾಯಿತು. +ಹರಿ ಓಡಿಹೋಗಿ ಬೈನಾಕ್ಯುಲರ್‌ನ ಮೂಲಕ ಬಹು ಜಾಗ್ರತೆಯಿಂದ ವೀಕ್ಷಿಸಿದ. +ಆಯುಧಗಳನ್ನು ಹಿಡಿದು ಎಂಟು ಜನ ಒಂದೇ ದಿಕ್ಕಿನಿಂದ ಗಿಡಗಂಟೆಗಳನ್ನು ಸರಿಸಿಕೊಳ್ಳುತ್ತಾ ಬರುತ್ತಿದ್ದರು. +ತಾ ಹೇಳಿದ್ದು ನಿಜವಾದುದಕ್ಕೆ ಅವನಿಗೆ ಎಲ್ಲಿಲ್ಲದ ಸಂತಸ. +ಎಲ್ಲರನ್ನೂ ಕಲ್ಲಕ್ಕನ ಬಳಿ ಕರೆ ತಂದ. +ಅವರಲ್ಲಿ ಬರುತ್ತಲೇ ಹೇಳಿದಳು ಕಲ್ಯಾಣಿ. +“ಮಲ್ಲಪ್ಪ, ಶಂಕರ ನೀವು ಈ ದಿಕ್ಕಿನಿಂದ ಇಳಿದು ದೂರದ ಮಾರ್ಗದಿಂದ ಅವರ ಹಿಂದೆ ಬನ್ನಿ, ನಿಮ್ಮಲ್ಲಿ ಎಲ್ಲ ವಿಧದ ಆಯುಧಗಳು, ಸೈನೆಡ್‌ಗಳೂ ಇರಬೇಕು, ಇದು ಧೈರ್ಯಕ್ಕಿಂತ ಹೆಚ್ಚಾಗಿ ಬುದ್ಧಿವಂತಿಕೆಯ ಕೆಲಸ. +ಅವರೊಂದು ವೇಳೆ ಓಡಿಹೋಗತೊಡಗಿದರೆ ಒಬ್ಬರೂ ಮಿಕ್ಕಿರಬಾರದು. +ಹೋಗಿ ಜಯ ನಿಮ್ಮದೇ” ಆಕೆಯ ಮಾತು ಮುಗಿಯುತ್ತಿದ್ದಂತೆ ತಮ್ಮ ತಮ್ಮ ಮಾರಕ ಆಯುಧಗಳನ್ನು ಎತ್ತಿಕೊಳ್ಳಲು ಅವರು ಗುಹೆಯ ಕಡೆ ಓಡಿ ಅಲ್ಲಿ ತಮಗೆ ಬೇಕಾಗಬಹುದಾದಂತಹ ಸ್ಫೋಟಕಗಳನ್ನು ತೆಗೆದುಕೊಂಡು, ಯುದ್ಧಕ್ಕೆ ಹೋಗುವ ಸೈನಿಕರಂತೆ ಕೆಳಗೆ ಜಾರತೊಡಗಿದರು. +ತಾ ಹಾಸಿದ ಲ್ಯಾಂಡ್ ಮೈನ್‌ಗಳು ಎಲ್ಲಿವೆ ಎಂಬುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು. +ಹರಿ ಮತ್ತು ಸಾಯಿ ದುರ್ಬೀನಿನಿಂದ ಚೌದರಿಯ ದಳದವರನ್ನು ಪರಿಕ್ಷಿಸುತ್ತಿದ್ದರು. +ಮಾರಕ ಆಯುಧಗಳನ್ನು ಹಿಡಿದ ಅವರು ತಮಗೆ ಗೊತ್ತಿದ್ದ ಗುರಿಯ ಕಡೆ ನಡೆಯುತ್ತಿದ್ದಂತಿತ್ತು. +ನಾಗೇಶ ಬರೀ ಅವರ ಚಟುವಟಿಕೆಗಳನ್ನು ಗಮನಿಸುತ್ತಿದ್ದ. +ಅವರು ಸಮೀಪವಾಗುತ್ತಿದ್ದಂತೆ ಹಿಂದಕ್ಕೆ ನೋಟ ಹರಿಸಿದ ಹರಿ. +ಮಲ್ಲಪ್ಪ ಒಂದು ದಿಕ್ಕಿನಿಂದ, ಶಂಕರ ಇನ್ನೊಂದು ದಿಕ್ಕಿನಿಂದ ಬಂದು ನೆಲದ ಮೇಲೆ ಮಲಗಿ ತಮ್ಮ ಆಯುಧಗಳನ್ನು ಸಿದ್ಧವಾಗಿ ಹಿಡಿದಿದ್ದರು. +ನುರಿತ ಸೈನಿಕರಂತಹ ಅವರ ಶಿಸ್ತಿಗೆ ಮೆಚ್ಚದೇ ಇರುವುದು ಕಷ್ಟ. +ಇಂತಹವರು ಜತೆಗಿದ್ದರೆ ಏನನ್ನಾದರೂ ಸಾಧಿಸಬಹುದು ಎನಿಸಿತು. +ಕುರ್ಚಿಯಲ್ಲಿ ಕುಳಿತ ಕಲ್ಯಾಣಿಯ ಕಿವಿಗಳು ಭಯಂಕರ ಸ್ಫೋಟವನ್ನು ಕೇಳಲು ಸಿದ್ಧವಾಗಿದ್ದವು. +ಮುಂದಿನ ಜೀವನದ ಬಗ್ಗೆ ಅವಳಿಗೆ ಯೋಚನೆ ಇಲ್ಲ. +ಅಪ್ಪನ ಒಂದು ಇಷ್ಟಾರ್ಥವನ್ನು ನೆರವೇರಿಸಿದರಾಯಿತು. +ಅಲ್ಲಿಗೆ ತನ್ನದೊಂದು ಕರ್ತವ್ಯ ಮುಗಿಯುತ್ತದೆ ಎಂದುಕೊಂಡಳು. +ಚೌಧರಿ ಸಹಿತ ಅವನ ಮೂವರು ಸಂಗಡಿಗರು ಒಂದೇ ಸಲ ಮೈನಿನ ಮೇಲೆ ಕಾಲಿಟ್ಟರು. +ಭಯಂಕರ ಸ್ಫೋಟದೊಡನೆ ಅವರ ದೇಹಗಳು ಮೇಲೆ ಹಾರಿದವು. +ನೆಲಕ್ಕೆ ಬೀಳುವಾಗ ಒಂದೊಂದು ದೇಹ ನಾಲ್ಕಾರು ತುಂಡುಗಳಾಗಿತ್ತು. +ಭಯ-ಭ್ರಾಂತಿಗಳಿಂದ ತಕ್ಷಣ ಹಿಂದೆ ಸರಿದರು ಮಿಕ್ಕವರು. +ಏನು ಮಾಡಬೇಕೆಂಬಂತ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ತಮ್ಮ ನಾಯಕನೇ ಇಲ್ಲದಿರುವ ಅರಿವು ಅವರಲ್ಲಿ ಎಲ್ಲಿಲ್ಲದ ಭಯವನ್ನು ಹುಟ್ಟಿಸಿತು. +ಕಾಡಿನಲ್ಲಿ ಓಡಲಾರಂಭಿಸಿದರು. +ಮಲ್ಲಪ್ಪ ಮತ್ತು ಶಂಕರರ ಆಯುಧಗಳಿಂದ ಗುಂಡುಗಳ ಸುರಿಮಳೆ ಆರಂಭವಾಯಿತು. +ಇನ್ನೂ ಮೂವರು ಆ ಗುಂಡುಗಳಿಗೆ ಬಲಿಯಾದರು. +ಮಿಕ್ಕ ಇಬ್ಬರೂ ತಮ್ಮ ಆಯುಧಗಳನ್ನು ಸರಿಪಡಿಸಿಕೊಳ್ಳುತ್ತಾ ನೆಲಕ್ಕುರಳಿ ತಾವು ಗುಂಡುಗಳನ್ನು ಹಾರಿಸತೊಡಗಿದರು. +ಶಂಕರ ಮತ್ತು ಮಲ್ಲಪ್ಪ ಗಿಡ ಮರಗಳ ಹಿಂದೆ ಇದ್ದ ಕಾರಣ ಅವರಿಗೆ ಕಾಣುವ ಹಾಗಿರಲಿಲ್ಲ. +ಹಲವು ಕ್ಷಣಗಳು ಗುಂಡುಗಳ ಸದ್ದು ನಿಂತಿತು. +ಮತ್ತೆ ಆ ಕಾಡಿಗೆ ಅಸಹಜವೆನಿಸುವಂತಹ ಸದ್ದು ನಿಂತು ಮೌನವಾವರಿಸಿತು. +ಚೌದರಿಯ ದಳದ ಇಬ್ಬರೂ ತಮ್ಮ ಶತ್ರುಗಳನ್ನು ನೋಡಲು ತಲೆ ಮೇಲೆತ್ತಿದ್ದರು. +ಶಂಕರ್ ಅವರ ಮೇಲೆ ಗ್ರೈನೆಡ್ ಎಸೆದ ಗ್ರೈನೆಡ್ ಅವರಿಗೆ ಕಾಣಲಿಲ್ಲ. +ಎರಡೂ ಗ್ರೆನೆಡ್‌ಗಳು ಭಯಂಕರ ಶಬ್ದ ಮಾಡಿ ಒಬ್ಬನನ್ನು ಬಲಿ ತೆಗೆದುಕೊಂಡಾಗ ತನ್ನ ಸ್ಥಾನದಿಂದ ಎದ್ದು ಅವನ ಹತ್ತಿರ ಬಂದು ಗುಂಡುಗಳನ್ನು ಹಾರಿಸತೊಡಗಿದ ಮಲ್ಲಪ್ಪ. +ನೋಡುನೋಡುತ್ತಾ ಆ ಮಿಕ್ಕ ಒಬ್ಬನೂ ನೆಲಕ್ಕೆ ಕುಸಿದ. +ಬೈನಾಕುಲರ್‌ನ್ನು ಕಣ್ಣಿನಿಂದ ಸರಿಸಿದ ಹರಿ ಕುರ್ಚಿಯಲ್ಲಿ ಕುಳಿತ ಕಲ್ಯಾಣಿಯ ಬಳಿ ಓಡಿಬಂದು ಹೇಳಿದ“ಎಲ್ಲಾ ನಾ ಹೇಳಿದಂತೆ ನಡೆಯಿತು ಅವರಲ್ಲಿ ಒಬ್ಬನೂ ಮಿಕ್ಕಿಲ್ಲ.” +“ಶಭಾಷ್!ನಿನ್ನ ಬುದ್ಧಿವಂತಿಕೆ ಮೆಚ್ಚಿಕೊಳ್ಳಬೇಕು… +ಆದಷ್ಟು ಬೇಗ ಈ ಜಾಗ ಖಾಲಿ ಮಾಡಿ ದೇವನಹಳ್ಳಿಯ ಹತ್ತಿರ ಒಂದು ದಿನ ಇರಿ ಮತ್ತೆ ಅಲ್ಲಿಂದಲೂ ಬದಲಾಗಬೇಕು…” +“ಎಲ್ಲಾ ಮೊದಲಿನ ಹಾಗೆ!” ಅವಳ ಮಾತನ್ನೂ ಪೂರ್ತಿ ಮಾಡಿದ ಹರಿ. +“ಹೌದು!ಎಲ್ಲಾ ಮೊದಲಿನ ಹಾಗೆ, ತೇಜಾ ಬಂಡೇರಹಳ್ಳಿ ಬಿಡುತ್ತಿದ್ದಾನೆಂದರೆ ಮತ್ತೆ ಎಲ್ಲಾ ಮೊದಲಿನ ಸ್ಥಿತಿಗೆ ಬರುತ್ತದೆ.” ಹಳೆಯ ದಿನಗಳನ್ನು ನೆನೆಸಿಕೊಳ್ಳುತ್ತಿರುವಂತೆ ಹೇಳಿದಳು ಕಲ್ಯಾಣಿ, ಮಾತಾಡಲು ಇನ್ನು ಏನೂ ವಿಶೇಷವಿಲ್ಲವೆಂಬಂತೆ ತನ್ನ ಸಂಗಡಿಗರಿಗಾಗಿ ಕಾಯುತ್ತಾ ನಿಂತ. +ಎಲ್ಲವನ್ನು ನೋಡುವುದು ಮುಗಿಸಿಬಂದ ನಾಗೇಶ ಹೇಳಿದ“ಆ ಎಂಟು ಜನರ ಕಥೆಯೂ ಮುಗಿದುಹೋಯಿತಕ್ಕಾ! +ತುಂಡು ತುಂಡುಗಳಾಗಿ ಕಾಡಿನಲ್ಲೆಲ್ಲಾ ಹರಡಿಬಿಟ್ಟಿದ್ದಾರೆ”ಅವನ ದನಿಯಲ್ಲಿ ಉತ್ಸಾಹ ಉದ್ವೇಗಗಳು ತುಂಬಿದ್ದವು. +ಅವನ ಹಿಂದೆಯೇ ಬಂದ ಸಾಯಿ ಸುಮ್ಮನೆ ನಿಂತಿದ್ದ. +“ನೀವಿಬ್ಬರೂ ಹೋಗಿ ಸಾಮಾನು ಕಟ್ಟುವ ಕೆಲಸ ಆರಂಭಿಸಿ ನಾವೀ ಜಾಗ ಖಾಲಿ ಮಾಡುತ್ತಿದ್ದೇವೆ” ಹೇಳಿದಳು ಕಲ್ಯಾಣಿ. +ಯಾವ ಮಾತು ಆಡದೆ ಸಾಯಿ, ನಾಗೇಶ ಹಿಂದೆ ಹೋದರು. +ಅವರು ಕಣ್ಮರೆಯಾಗುತ್ತಿದ್ದಂತೆ ಮತ್ತೆ ಮಾತು ಆರಂಭಿಸಿದಳು ಕಲ್ಯಾಣಿ. +“ನೋಡು ಹರಿ!ನಿಮ್ಮನ್ನು ಬಿಟ್ಟು ಹೋಗುವ ಇಷ್ಟ ನನಗೂ ಇಲ್ಲ. +ಆದರೆ ನನ್ನ ಈ ಅವಸ್ಥೆಯಲ್ಲಿ ನಿಮಗೆ ತೊಂದರೆ ಕೊಡುವುದು ನ್ಯಾಯವಲ್ಲ. +ಕೆಲದಿನಗಳು ನಿಮ್ಮಿಂದ ದೂರವಿರುತ್ತೇನೇ. +ಮತ್ತೆ ಬಂದು ನಿಮ್ಮನ್ನು ಸೇರಿಕೊಳ್ಳುತ್ತೇನೆ. +ನಾನು ಅಪ್ಪನ ಮನೆಯಲ್ಲಿದ್ದರೂ ನೀವು ಆಗಾಗ ಬಂದು ನನ್ನ ಭೇಟಿಯಾಗಬಹುದು. +ಯಾವುದೇ ಮುಖ್ಯ ವಿಷಯವೇ ಆಗಲಿ ನನ್ನ ಅನುಮತಿ ಇಲ್ಲದೇ ಮಾಡಬೇಡಿ” +“ಸರಿ ಅಕ್ಕಾ!ನಾನೆಲ್ಲಾ ನೋಡಿಕೊಳ್ಳುತ್ತೇನೆ ನಿಮಗ್ಯಾವ ಚಿಂತೆಯೂ ಬೇಡ. +ಅದೂ ಅಲ್ಲದೇ ನೀವು ದೂರವೇನೂ ಹೋಗುತ್ತಿಲ್ಲ. +ಹತ್ತಿರದಲ್ಲೇ ಇದ್ದೀರಿ. +ಅದೇ ನಮಗೆ ಎಲ್ಲಿಲ್ಲದ ಬಲ” ಎಂದ ಹರಿ. +ಶಂಕರ ಮತ್ತು ಮಲ್ಲಪ್ಪ ಬಂದು ತಮ್ಮ ವಿಜಯದ ವಿಷಯ ಹೇಳಿದರು. +ಅವರನ್ನು ಪ್ರಶಂಸಿಸಿ ಈಗ ಇಲ್ಲಿಂದ ಜಾಗ ಖಾಲಿ ಮಾಡಬೇಕೆಂದು ಹೇಳಿ ಅವರ ಸಿದ್ಧತೆ ಮಾಡುವಂತೆ ಆದೇಶಿಸಿದಳು. +ಎಲ್ಲರೂ ತಮ್ಮ ತಮ್ಮ ಗಂಟು ಮೂಟೆಗಳನ್ನು ಕಟ್ಟಿದರು. +ಆಯುಧಗಳು ಒಂದೆಡೆ, ಸ್ಫೋಟಕಗಳು ಒಂದೆಡೆಯಾಗಿ ಅವು ಎರಡು ಮೂಟೆಗಳಾದವು. +ಎಲ್ಲವನ್ನೂ ಹೊತ್ತುಕೊಂಡು ಕೆಳಗಿಳಿಯತೊಡಗಿತು ಕಲ್ಯಾಣಿಯ ತಂಡ. +ಒಂದು ಜಾಗದಲ್ಲಿ ಅವರು ಮೊದಲೆಂದೂ ಇಷ್ಟು ದಿನವಿದ್ದಿಲ್ಲ. +ಹೆಚ್ಚು ದಿನದ ಇರುವಿಕೆಯ ಕಾರಣ ಆ ಜಾಗ ಅವರಿಗೆ ತಮ್ಮ ಮನೆಯಂತೆಯೇ ಆಗಿಹೋಗಿತ್ತು ಈಗ ಎಲ್ಲರಿಗೂ ಅದರ ಅಗಲಿಕೆಯ ವ್ಯಥೆ. +ಅದನ್ಯಾರೂ ಮಾತಿನಲ್ಲಿ ಹೇಳಲಿಲ್ಲ. +ಮುಖದಲ್ಲಿ ಅದರ ಛಾಯೆ ಕಾಣಿಸುತ್ತಿತ್ತು. +ಎಲ್ಲರಿಗಿಂತ ಕೊನೆಯಲ್ಲಿ ಇಳಿಯುತ್ತಿದ್ದವಳು ಕಲ್ಯಾಣಿ. +ಏಳುವುದು ಇಳಿಯುವುದು ಈಗವಳಿಗೀಗ ಬಹಳ ಕಷ್ಟವಾದ ಕೆಲಸ. +ನೋಡಿದವರಿಗೆ ಆ ಗರ್ಭಿಣಿ ಯಾವಾಗಲಾದರೂ ಹಡೆಯಬಹುದೆಂಬಂತೆ ಕಾಣಿಸುತ್ತಿದ್ದಳು. +ನಿಧಾನವಾಗಿ ಇಳಿಯುತ್ತಿದ್ದ ಅವಳ ತೋಳನ್ನು ಹಿಡಿದಿದ್ದ ನಾಗೇಶ. +ಅವಳು ಎಲ್ಲಿ ಎಡವಿಬೀಳುವಳೋ ಎಂಬ ಭಯ ಅವನಿಗೆ. +ಕಲ್ಯಾಣಿಗೆ ಆ ಬಳಲಿಕೆಯ ನೋವಿಗಿಂತ, ಬಹು ದೊಡ್ಡದೊಂದು ಕುಟುಂಬವನ್ನು ಬಿಟ್ಟು ಹೋಗುತ್ತಿದ್ದೇನಲ್ಲಾ ಎಂಬ ನೋವು ಹೆಚ್ಚಾಗಿತ್ತು. +ಮನೆಯಲ್ಲಿ ಮಂಚದಲ್ಲಿ ಉರುಳಿದ ತೇಜಾ ಗತವನ್ನೆಲ್ಲಾ ಮೆಲುಕು ಹಾಕುವುದರಲ್ಲಿ ತೊಡಗಿದ್ದ. +ಈಗವನಿಗೆ ಕಲ್ಯಾಣಿ ಹಿಡಿದ ದಾರಿಯೇ ಸರಿ ಎನಿಸತೊಡಗಿತ್ತು. +ದಿನಗಳು ಹೇಗೆ ನೋಡು ನೋಡುತ್ತಾ ಉರುಳಿಹೋಗುತ್ತವೆ ಎನಿಸುತ್ತಿತ್ತು. +ಸಿದ್ಧಾನಾಯಕ್ ಬಂದಿಯಾಗಿ ಪಟ್ಟಣಕ್ಕೆ ಹೋದ ಮರುದಿನವೇ ಬಂಡೇರಹಳ್ಳಿಗೆ ಬಂದಿದ್ದ. +ಅವನ ಪಾರ್ಟಿ ಪ್ರೆಸಿಡೆಂಟ್‌ಗಿರಿಗೆ ಯಾವ ಧಕ್ಕೆಯೂ ಒದಗಿರಲಿಲ್ಲ. +ಸರಕಾರಿ ನೌಕರನ್ಯಾರಾದರೂ ಅರೆಸ್ಟ್ ಆಗಿ ಬೇಲ್‌ನ ಮೇಲೆ ಬಿಡುಗಡೆಯಾದರೂ ಅವನನ್ನು ಸಸ್ಪೆಂಡ್ ಮಾಡಲಾಗುತ್ತದೆ. +ರಾಜಕಾರಣದಲ್ಲಿ ಅಧಿಕಾರದಲ್ಲಿರುವವರಿಗೆ ಆ ಕಾನೂನು ವರ್ತಿಸುವುದಿಲ್ಲ. +ಕೋರ್ಟ್ ಆದೇಶದ ಮೇರೆಗೆ ನಾಯಕನ ಕೇಸನ್ನು ರಾಮನಗರಕ್ಕೆ ರವಾನಿಸಲಾಗಿತ್ತು. +ಎಷ್ಟೇ ಕಾಲ ಕೇಸು ನಡೆದರೂ ತೀರ್ಪು ನಾಯಕನ ಪರವಾಗಿಯೇ ಬರುತ್ತದೆ ಎಂಬುವುದಂತೂ ನಿಸ್ಸಂದೇಹ. +ನ್ಯಾಯಾಧೀಶರು ಭ್ರಷ್ಟರಲ್ಲ ಎಂದು ಹೇಳುವ ಹಾಗೇ ಇಲ್ಲ. +ಸ್ಕ್ವಾಡಿನ ಮುಖ್ಯಸ್ಥರು ರಿಟೈರಾದ ನಾಲ್ಕು ತಿಂಗಳಲ್ಲೇ ತೇಜಾನ ವರ್ಗಾವಣೆಯಾಗಿ ಬಿಟ್ಟಿತ್ತು. +ಅದನ್ನು ಕೇಳಿದ ಬಂಡೇರಹಳ್ಳಿಯ ಜನರೆಲ್ಲಾ ಸಿಡಿದೆದ್ದರು. +ಗಲಾಟೆ ಮಾಡಿದರು. +ಅವರನ್ನು ನಿಯಂತ್ರಿಸಲು ರಾಮನಗರದಿಂದ ಪೋಲೀಸ್ ವ್ಯಾನುಗಳು ಬಂದಿದ್ದವು. +ಕೊನೆಗೆ ತಾನೇ ಅವರಿಗೆ ಸಮಾಧಾನ ಮಾಡಿ, ಇಲ್ಲೇ ಹತ್ತಿರವೇ ದೇವನಹಳ್ಳಿಯಲ್ಲಿಯೇ ಇರುತ್ತೇನಲ್ಲಾ ಎಂದು ಹೇಳಿ ರಾಮನಗರದಿಂದ ರಿಲಿವಿಂಗ್ ಆರ್ಡರ್ ತೆಗೆದುಕೊಂಡು, ಪಟ್ಟಣಕ್ಕೆ ಹೋಗಿ ಅದೇ ಮೊದಲಿದ್ದ ಕೆಲಸದಲ್ಲೇ ಸೇರಿ ಮರುದಿನದಿಂದಲೇ ಎರಡು ತಿಂಗಳ ರಜೆ ಹಾಕಿ ಬಂದಿದ್ದ. +ಆಗ ತಾನೇ ಪಟ್ಟಣದಿಂದ ಬಂದ ಅವನು ಮಂಚದಲ್ಲುರುಳಿ ಮೆಲುಕು ಹಾಕುವಿಕೆಯ ಕೆಲಸದಲ್ಲಿ ತೊಡಗಿದ. +ಬಂಡೇರಹಳ್ಳಿಯ ಜನರಿಗೂ ತನಗೂ ಒಳ್ಳೆಯ ಸಂಪರ್ಕವೇರ್ಪಟ್ಟಿತು. +ಅವರಿಗೆಲ್ಲಾ ಅವನು ಬಹು ಆತ್ಮೀಯನಾಗಿ ಬಿಟ್ಟಿದ್ದ. +ಅಲ್ಲಿನ ಹೆಂಗಸರು ಯುವತಿಯರು ಕೂಡ ಅವನಿಂದ ಭಯಪಡುವುದು ಬಿಟ್ಟರು. +ಹಲವಾರು ಯುವತಿಯರೂ ಅವನೊಡನೆ ಆತ್ಮೀಯವಾಗಿ ಮಾತಾಡುತ್ತಿದ್ದರು. +ಅವರನ್ನೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದ ತೇಜಾ. +ಮಾತುಗಳಲ್ಲಿ ಅಲ್ಲಿನ ಗಂಡಸರಿಗೂ ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸಬೇಕಾಗಿ, ಅವರನ್ನೂ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಡಬೇಕಾಗಿ ಒತ್ತಾಯಿಸುತ್ತಿದ್ದ. +ಅದರ ಕಾರಣವಾಗೇ ವರ್ಗಾವಣೆಯ ಮೊದಲು ಅಲ್ಲಿ ಅವನು ಮಾಡಿದ ಕೊನೆಯ ಕಾರ್ಯಕ್ರಮದಲ್ಲಿ ಇಬ್ಬರು ಹುಡುಗಿಯರು ಭಾಗವಹಿಸಿದ್ದರು. +ಅವರಿಂದ ವಿದಾಯ ಹೊಂದುವ ದಿನ ದೊಡ್ಡ ಸಮಾರಂಭವನ್ನು ಏರ್ಪಡಿಸಿದರು. +ಬಹುಜನರು ಅವನಿಗೆ ಹಾರಗಳನ್ನು ಹಾಕಿ ನಮಸ್ಕರಿಸಿದ್ದರು. +ಆ ಸಭೆಯಲ್ಲಿ ಎಲ್ಲಿ ಗದ್ದಲವಾಗುವುದೋ ಎಂದು ಅವನ ಸ್ಥಾನಕ್ಕೆ ಬಂದ ಇನ್ಸ್‌ಪೆಕ್ಟರ್‌ ಸರಕಾರಿ ಉಡುಪಿನಲ್ಲಿ ತನ್ನ ಸಿಬ್ಬಂದಿಯೊಂದಿಗೆ ಬಂದಿದ್ದ. +ಅವನ ಹೆಸರು ಜಗದೀಶ, ಬಿಗಿದುಕೊಂಡ ಅವನ ಮುಖದಲ್ಲಿ ಅಧಿಕಾರದ ಅಹಂಭಾವ ಕಾಣುತ್ತಿತ್ತು. +ಅಲ್ಲಿ ನೆರೆದ ಜನರ ಮೇಲೆಲ್ಲಾ ತನ್ನ ಶತ್ರುಗಳ ಮೇಲೆ ಕಣ್ಣಾಡಿಸಿದಂತೆ ಕಣ್ಣಾಡಿಸುತ್ತಿದ್ದ. + ಆ ಸಮಾರಂಭದ ಮುಖ್ಯ ಅತಿಥಿ ಗುಂಡು ತಾತ ಆಗಿದ್ದ. +ಗದ್ಗದ ಕಂಠದಲ್ಲಿ ಅವನು ಮಾತಾಡಿದಾಗ ಅಲ್ಲಿ ನೆರೆದ ಸಾಕಷ್ಟು ಜನರ ಕಣ್ಣಲ್ಲಿ ನೀರು ಬಂದುಬಿಟ್ಟಿತು. +ಅಷ್ಟು ಜನರಿಗೆ ತಾನು ಬೇಕಾದವನು ಎಂಬುವುದು ತೇಜಾನಿಗೂ ಗೊತ್ತಿರಲಿಲ್ಲ. +ಮಾತಾಡುವ ತನ್ನ ಸರದಿ ಬಂದಾಗ ತೇಜಾನ ಹೃದಯ ತುಂಬಿಬಂದಿತ್ತು. +ಬಹುಕಷ್ಟದಿಂದ ತನ್ನ ಭಾವೋದ್ವೇಗವನ್ನು ತಡೆದುಕೊಂಡು ಅವರು ತನ್ನ ಪ್ರತಿ ತೋರಿದ ವಿಶ್ವಾಸಕ್ಕೆ ತಾನು ಋಣಿ ಎಂದು ಅವರನ್ನು ಎಂದೂ ಮರೆಯುವುದಿಲ್ಲವೆಂದು, ಈಗ ಬಂದಿರುವ ಇನ್ಸ್‌ಪೆಕ್ಟರ್‌ ಸಾಹೇಬರೂ ಅವರಿಗೆಲ್ಲಾ ನ್ಯಾಯ ಒದಗಿಸಿಕೊಂಡುವರೆಂದು ಹೇಳಿದ್ದ. +ಜೀಪಿಗೆ ಹತ್ತುವ ಮುನ್ನ ಅವನನ್ನು ಅಪ್ಪಿದ ತಾತ, ಕಾಲಿಗೆ ನಮಸ್ಕಾರ ಮಾಡಿದ ವೆಂಕಟ್ ಮತ್ತಿನ್ನಿತರ ಯುವಕರು, ಮನೆ ಆಳಾದ ಗಂಗವ್ವನನ್ನು ಸೇರಿಕೊಂಡು ಕೆಲ ಹೆಂಗಸರು ಗಳಗಳನೆ ಅತ್ತುಬಿಟ್ಟಿದ್ದರು. +ಇದೆಲ್ಲಾ ಒಂದು ನಾಟಕ, ಒಂದು ತಮಾಶೆ ಎಂಬಂತೆ ನೋಡುತ್ತಾ ನಿಂತಿದ್ದ ಹೊಸ ಇನ್ಸ್‌ಪೆಕ್ಟರ್ ಜಗದೀಶ್. +ಈ ಹೆಂಗಸರು ತನ್ನನ್ನು ಇಷ್ಟು ಯಾಕೆ ಹಚ್ಚಿಕೊಂಡಿದ್ದಾರೆಂಬುವುದೇ ಅರ್ಥವಾಗಿರಲಿಲ್ಲ. +ತೇಜಾನಿಗೆ ಮನೆಯಲ್ಲಿದ್ದ ಪಾತ್ರೆಗಳನ್ನು, ಇನ್ನಿತರ ವಸ್ತುಗಳನ್ನು ಮನೆ ಆಳಾದ ಗಂಗವ್ವನಿಗೆ ಕೊಟ್ಟುಬಿಟ್ಟಿದ್ದ. +ಅವಳು ತನಗೆ ಅಭಾರಿಯಾಗಿ ಕಣ್ಣೀರು ಹಾಕಿರಬಹುದು ಆದರೆ ಮಿಕ್ಕವರು? +ಅದೆಲ್ಲದಕ್ಕಿಂತ ವೆಂಕಟ್ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಮಾಡಿ ಎಂದು ಅತ್ತ ದೃಶ್ಯ ಅವನ ಕಣ್ಣಿಗೆ ಕಟ್ಟಿದಂತಿತ್ತು. +ಇನ್ನೂ ಎಷ್ಟೋ ಯುವಕರ ಹೆಸರುಗಳು ಕೂಡ ಅವನಿಗೆ ನೆನಪಿಲ್ಲ. +ಅವರಿಗೆಲ್ಲಾ ಆಗಾಗ ತನ್ನಲ್ಲಿಗೆ ಬರುತ್ತಿರುತ್ತೇನೆಂದು ಅವರು ಯಾವಾಗ ಬೇಕಾದರಾಗ ದೇವನಹಳ್ಳಿಯ ತನ್ನ ಮನೆಗೆ ಬರಬಹುದೆಂದು ತಾನು ಕೆಲಸಕ್ಕೆ ರಜ ಹಾಕುತ್ತಿರುವೆನೆಂದೂ ಹೇಳಿದ್ದ. +ತಾತನೊಡನೆ ಯುವಕರೆಲ್ಲಾ ಅವನ ಮನೆಯ ಫೋನ್ ನಂಬರು ಬರೆದು ಕೊಂಡಿದ್ದರು. +ಪಟ್ಟಣದಲ್ಲಿ ರಜೆ ಹಾಕಿ ಬರುವ ಮುನ್ನ ನಿವೃತ್ತಿ ಹೊಂದಿದ ಸ್ಕ್ವಾಡಿನ ಮುಖ್ಯಸ್ಥರ ಮನೆಗೆ ಹೋಗಿದ್ದ. +ಅವರಾಗಲೇ ಪೇಪರುಗಳಲ್ಲಿ ವಾರಪತ್ರಿಕೆಗಳಲ್ಲಿ ಪಟುವಾರಿಯವರ ಬಗ್ಗೆ ಓದಿದ್ದರು. +ತೇಜಾ ಈಗ ಅವರ ದತ್ತಪುತ್ರ ನಾಗಿದ್ದಾನೆಂಬುವುದು ಗೊತ್ತಿತ್ತು. +ನೀನು ಹೇಗಿದ್ದಿ?ಹೇಗಿದೆ ಜೀವನ?ಎಂಬಂತಹ ಮಾತುಗಳ ನಂತರ ಅವರಿಗೆ ಕುಶಾಲನಿಗೆ ಹೇಳಿದಂತೆ ತಾನು ಕಲ್ಯಾಣಿಯನ್ನು ಮದುವೆಯಾಗುವುದಾಗಿ ಹೇಳಿ ಯಾವ ಮುಚ್ಚೂ ಮರೆಯೂ ಇಲ್ಲದೇ ಎಲ್ಲವನ್ನೂ ವಿವರಿಸಿದ್ದ. +ಅವನ ವರ್ಗಾವಣೆಯ ವಿಷಯ ಅವರಿಗೆ ತಿಳಿದಿತ್ತು. +ತಾನು ರಜೆ ಹಾಕಿದ್ದನ್ನೂ ಕುಶಲೋಪರಿ ಮಾತುಗಳ ನಡುವೆಯೇ ಹೇಳಿಬಿಟ್ಟಿದ್ದ. +ಅವನು ಹೇಳಿದ ವಿವರಗಳನ್ನು ಕೇಳಿ ಅವರು ಗಂಭೀರ ಚಿಂತನೆಯಲ್ಲಿ ತೊಡಗಿದ್ದರು. +ತೇಜಾ ಅವರಿಗೆ ಬಹಳ ಬೇಕಾಗಿದ್ದವನಾಗಿದ್ದ. +ಇನ್ನೂ ಚಿಂತನೆಯಲ್ಲಿ ತೊಡಗಿರುವವರಂತೆ ಹೇಳಿದರವರು. +“ಏನೇ ಆಗಲಿ ಒಳ್ಳೆಯದು ಮಾಡಿದೆ ನಿನಗೆ ಲಾಯಕ್ಕಾದ ಹೆಂಡತಿ”ಮಾತು ಮುಗಿಸಿ ಚಿಂತನೆಯನ್ನು ಮುಂದುವರೆಸಿದ್ದರು. +ನಂತರ ಹೇಸಿಗೆಯಿಂದ ನಾರುತ್ತಿರುವ ರಾಜಕೀಯದ ಬಗ್ಗೆ, ನಿಷ್ಟಾವಂತ ಆಡಳಿತ ವರ್ಗದವರ ಅಸಹಾಯತೆ ಬಗ್ಗೆ ಮಾತಾಡಿದರು. +ಅವನ ತಂದೆಯ ಬಗ್ಗೆ ಮತ್ತು ಆಗಿನ, ಇಂದಿನ ‘ದೇಶಭಕ್ತ’ ‘ದೇಶಸೇವೆ’ ಎಂಬ ಪದದ ಅರ್ಥಗಳಲ್ಲಿ ಆದ ವ್ಯತ್ಯಾಸದ ಕುರಿತು ಅವರು ಹೇಳಿದ ಮಾತು ಎಷ್ಟು ಸತ್ಯವೆಂಬುವುದನ್ನು ವಿವರಿಸಿದರು. +ಅತ್ತ, ಇತ್ತ ಸುತ್ತಿದ ಮಾತುಗಳು ಮತ್ತೆ ತೇಜಾನ ಮದುವೆಯ ವಿಷಯ ಬಂದಾಗ ಗಂಭೀರದನಿಯಲ್ಲಿ ಹೇಳಿದ್ದರವರು. +“ವಿಚಿತ್ರ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದಿ. +ಯಾರನ್ನು ನಿನ್ನ ಬಂಧಿಸೆಂದು ಕಳಿಸಿದ್ದರೋ ಅವಳನ್ನೇ ಮದುವೆಯಾಗುವುದೇ! +ಆದರೂ ನಾವು ಅದರ ಯಾವುದಾದರೂ ಪರಿಹಾರ ಮಾರ್ಗ ಹುಡುಕುವ, ಹೋಗು ನೀನು ನಿಶ್ಚಿಂತೆಯಾಗಿ ನಿನ್ನ ತಂದೆ ತಾಯಿಯರನ್ನು ನೋಡಿಕೊ”ಆ ಅವರ ಗಂಭೀರ ದನಿಯೂ ನಿಸ್ಸಾಯಕನೊಬ್ಬನ ಅರಣ್ಯರೋಧನ ದಂತೆ ಕೇಳಿಸಿತ್ತು ತೇಜಾನಿಗೆ. +ಅಲ್ಲಿಂದ ಅವನು ಕುಶಾಲನ ಮನೆಗೆ ಹೋಗಿದ್ದ. +ಆ ದಿನ ಅಲ್ಲೇ ಊಟ ಮಾಡಿ ಹೋಗಬೇಕೆಂದು ಫೋನ್ ಮಾಡಿದಾಗ ಒತ್ತಾಯಿಸಿದ್ದ ಕುಶಾಲ. +ಅವನ ಮನೆಯವರೆಲ್ಲಾ ಹಾರ್ದಿಕವಾಗಿ ಸ್ವಾಗತಿಸಿ ಮಾತಾಡಿಸಿದ್ದರು. +ಅವನ ಹೊಸದಾಗಿ ಹುಟ್ಟಿಕೊಂಡ ತಂದೆ ತಾಯಿಯವರು ಎಂತಹವರೆಂದು ವಿಚಾರಿಸಿದ್ದರವನ ತಾಯಿ, ತಂದೆಯ ಬಗ್ಗೆ ಪೇಪರುಗಳಲ್ಲಿ ಬಂದದ್ದನೆಲ್ಲಾ ಓದಿದ್ದ ಅವರು ಅವನ ತಂದೆ ಈ ದೇಶದ ಒಬ್ಬ ಮಹಾನ್ ಪುರುಷರೆಂದಿದ್ದರು. +ಮಿತ್ರರಿಬ್ಬರೇ ಕುಳಿತು ಮಾತಾಡುತ್ತಿದ್ದಾಗ ತಾನು ಸ್ಕ್ವಾಡಿನ ಮುಖ್ಯಸ್ಥರಿಗೆ ಎಲ್ಲಾ ವಿಷಯಗಳನ್ನು ತಿಳಿಸಿರುವುದಾಗಿ ಹೇಳಿದ ತೇಜಾ ನಿವೃತ್ತರಾದ ಸ್ಕ್ವಾಡಿನ ಮುಖ್ಯಸ್ಥರ ಮಾತು ಅವನಲ್ಲಿ ಅಸಮಾಧಾನ ಹುಟ್ಟಿಸಿತ್ತು. +ಅದನ್ನೇ ಕುಶಾಲನೆದುರು ಕಾರಿದ್ದ. +“ನಾನು ಅವಳನ್ನಲ್ಲಿ ಬಂಧಿಸಲು ಹೋಗಿದ್ದೆ ನಿಜ. +ಅವಳ ಜನಪ್ರಿಯತೆ ನನ್ನ ದಂಗು ಪಡಿಸಿತ್ತು. +ಅವಳನ್ನು ಅವಳ ಅನುಯಾಯಿಯರನ್ನು ಜೀವ ಸಹಿತ ಹಿಡಿಯುವುದೂ ಅಸಂಭವವೆಂದು ಗೊತ್ತಾಗಿತ್ತು. +ಆಗ ಇದೇ ಸ್ಕ್ವಾಡಿನ ಮುಖ್ಯಸ್ಥರು ಅವಳನ್ನು ಕೊಲ್ಲಬೇಡ ಎಂದು ನನಗೆ ಆದೇಶ ನೀಡಿದ್ದರು. +ಅದನ್ನವರು ಮರೆತು ಹೋಗಿರಬೇಕು.” +ಅವರೊಬ್ಬ ನಿವೃತ್ತ ಅಧಿಕಾರಿ ಈಗ ಅವರ ಕೈಯಲ್ಲಿ ಏನೂ ಇಲ್ಲ ಅದಕ್ಕೇ ಏನೋ ಹೇಳಿದ್ದಾರೆ ಎಂದು ಸಮಾಧಾನ ಮಾಡಿದ್ದ ಕುಶಾಲ. +ಕುಶಾಲ ಒಂದು ಕೆಲಸವನ್ನು ಮಾತ್ರ ಬಹಳ ಚೆನ್ನಾಗಿ ಮಾಡಿದ್ದ. +ದೇವನಹಳ್ಳಿ ಎಂಬ ಕುಗ್ರಾಮ ಒಂದು ದೇಶದಲ್ಲಿದೆ ಎಂದು ಜನರಿಗೆ ಗೊತ್ತುಮಾಡಿದ್ದ. +ಅವರಿಬ್ಬರೂ ಸೇರಿ ನಾಯಕನನ್ನು ಅರೆಸ್ಟ್ ಮಾಡಿ ಕಳಿಸಿ ಮರಳುವಾಗ ಜೀಪಿನಲ್ಲಿ ಹೇಳಿದ ಮಾತುಗಳು ಬರೀ ಮಾತುಗಳಾಗಿರಲಿಲ್ಲ. +ಒಂದು ವಾರದೊಳಗಾಗಿ ಒಂದು ಬೆಳಗ್ಗೆ ಹೆಗಲಿಗೆ ದೊಡ್ಡ ಬ್ಯಾಗನ್ನು ಏರಿಸಿದ ಪತ್ರಕರ್ತನೊಬ್ಬ ಅವರ ಮನೆಗೆ ಬಂದಿದ್ದ. +ಜೀಪಿನಲ್ಲಿ ಆದ ಮಾತುಗಳನ್ನು ಮರೆತೇ ಹೋಗಿದ್ದ ತೇಜ ಅವನನ್ನು ಅನುಮಾನದಿಂದ ನೋಡಿದಾಗ ತನ್ನ ಕುಶಾಲ ಕಳುಹಿಸಿರುವುದಾಗಿ ಹೇಳಿ ತನ್ನ ಕಾರ್ಡನ್ನು ಕೊಟ್ಟಿದ್ದ. +ಅದರ ಹಿಂದೆ ಕುಶಾಲನ ಸಹಿ ಇತ್ತು. +ದೇಶದಲ್ಲಿ ಬಹು ಹೆಚ್ಚಾಗಿ ಮಾರಾಟವಾಗುವ ಇಂಗ್ಲೀಷ್ ದಿನಪತ್ರಿಕೆಯೊಂದರ ವರದಿಗಾರ. +ಅವನನ್ನು ಹಾರ್ದಿಕವಾಗಿ ಸ್ವಾಗತಿಸಿ ತಂದೆಗೆ ಪರಿಚಯಿಸಿದ್ದ ತೇಜಾ, ಮೊದಲು ಬೇಡವೆಂದರು ಆ ವರದಿಗಾರ ಕೇಳಿದ ಪ್ರಶ್ನೆಯೊಂದು ಅವರನ್ನು ರೇಗಿಸಿತ್ತು. +ಮಾತನ್ನಾಡಲಾರಂಭಿಸಿದ್ದರು ಹಾಗೆ ಆರಂಭವಾದ ಮಾತುಗಳು ಮಧ್ಯಾಹ್ನದವರೆಗೆ ನಡೆದವು. +ಆ ವರದಿಗಾರನ ಊಟವೂ ಅವರ ಮನೆಯಲ್ಲಿಯೇ ಆಯಿತು. +ಅವರಾಡಿದ್ದ ಪ್ರತಿ ಮಾತನ್ನು ಬರೆದುಕೊಂಡಿದ್ದ ವರದಿಗಾರ ಫೋಟೋಗಳು ತೆಗೆಯುವ ಕೆಲಸ ಆರಂಭಿಸಿದ. +ಬೇರೆ ಬೇರೆ ಕೋನಗಳಿಂದ ದೇವನಹಳ್ಳಿಯ ಫೋಟೋಗಳನ್ನು ತೆಗೆದ. +ನಂತರ ಅವರ ಮನೆಯ ಫೋಟೋ ಹಲವಾರು ಭಂಗಿಯಲ್ಲಿ ಕುಳಿತಿರುವ ತಂದೆಯ, ತಾಯಿಯರು ಕುಳಿತಿರುವ ನಿಂತಿರುವ, ಅವರೊಡನೆ ದತ್ತಕಪುತ್ರನಾದ ತೇಜಾನ, ತೇಜಾ ಒಬ್ಬನೇ ನಿಂತಿರುವ, ಹೀಗೆ ಲೆಕ್ಕವಿಲ್ಲದಷ್ಟು ಫೋಟೋಗಳನ್ನು ಹಿಡಿದನಾತ. +ನಂತರ ತನ್ನಲ್ಲಿರುವ ತಂದೆಯ, ಗಾಂಧಿ, ನೆಹರು, ಇನ್ನಿತರ ನಾಯಕರೊಡನೆ ಇದ್ದ ಫೋಟೋಗಳನ್ನು ಕೊಟ್ಟ. +ಅದೇ ಅಲ್ಬಂನಲ್ಲಿ ತಂದೆ ತಾಯಿ ಮದುವೆಯಾದಾಗಿನ ಫೋಟೋ ಇತ್ತು. + ಅದನ್ನು ಮತ್ತು ಅಮೆರಿಕೆಯಲ್ಲಿರುವ ತನ್ನ ತಂಗಿಯ ಫೋಟೋವನ್ನು ಕೂಡ ತೆಗೆದುಕೊಂಡನಾತ. +ಹೆಚ್ಚು ಕಡಿಮೆ ಮನೆಯಲ್ಲಿ ಆ ದಿನವೆಲ್ಲಾ ಅದೇ ಸಂಭ್ರಮ ನಡೆದಿತ್ತು. +ಆದಿನ ತಂದೆ, ತಾಯಿ ಮಗ ಆ ಬಗ್ಗೆ ಸ್ವಲ್ಪ ಹೊತ್ತು ಮಾತಾಡಿ ಅದನ್ನು ಮರೆತುಬಿಟ್ಟಿದ್ದರು. +ಸುಮಾರು ಹದಿನೈದು ದಿನಗಳನಂತರ ಯಾವುದೋ ಕೆಲಸದ ನಿಮಿತ್ತ ರಾಮನಗರಕ್ಕೆ ಹೋದಾಗ ಬಹುವ್ಯಂಗ್ಯವಾಗಿ ತಾನು ಪ್ರಸಿದ್ಧನಾಗುತ್ತಿದ್ದೇನೆಂದು ಹೇಳಿದ್ದರು ಎಸ್.ಪಿ. ಸಾಹೇಬರು ಹಾಗೆ ಅವನಿಗೆ ಆ ದಿನ ಪತ್ರಿಕೆಯ ರವಿವಾರದ ವಿಶೇಷ ಸಂಚಿಕೆಯಲ್ಲಿ ತನ್ನ ತಂದೆಯ ವಿಷಯ ಬಂದಿದ್ದು ಗೊತ್ತಾಗಿತ್ತು. +ಅವನು ರಾಮನಗರಕ್ಕೆ ಹೋದದ್ದು ಮಂಗಳವಾರ ಆ ಪತ್ರಿಕೆಯನ್ನು ಅಲ್ಲಿನ ಅವನ ಮಿತ್ರರಿಂದ ಹುಡುಕಾಡಿಸಿ ಪಡೆದು ಕೂಲಂಕುಷವಾಗಿ ಓದಿದ. +‘ದಿ ಆನ್‌ನೊನ್ ಹಿರೋ’ ಎಂಬ ತಲೆಬರಹದಲ್ಲಿ ಎರಡು ಪುಟಗಳ ವರದಿ. +ಅದರಲ್ಲಿ ಕೆಲವು ಪೋಟೋಗಳು. +‘ತೇಜಾನನ್ನ ಯಾಕೆ ದತ್ತಕ ಪುತ್ರನನ್ನಾಗಿ ಆರಿಸಿಕೊಂಡಿರಿ?’ ಎಂಬ ಪ್ರಶ್ನೆ ಅವನ ತಂದೆ ಕೊಟ್ಟ ಉತ್ತರ. +‘ನನ್ನ ಪುತ್ರ ದೇಶಭಕ್ತನಾಗಿರಬೇಕೆಂದು ಮೊದಲಿನಿಂದ ಕನಸು ಕಾಣುತ್ತಿದ್ದೆ. +ಅಂತಹ ನಿಜವಾದ ದೇಶಭಕ್ತ ಅವನೆಂದು ಗುರುತಿಸಿದೆ’ ಎಂದು ಉತ್ತರಿಸಿದ್ದರವನ ತಂದೆ. +ಅವರ ಮಾತುಗಳನ್ನು ತೇಜಾ ಕೇಳಿಸಿಯೇ ಕೊಂಡಿರಲಿಲ್ಲವಾದುದ್ದರಿಂದ ಅವನಿಗೆ ಅಚ್ಚರಿಯಾಯಿತು. +ಬಹುರಂಜನೀಯವಾಗಿ, ರಸವತ್ತಾಗಿ ಬರೆದ ವರದಿಯದು. +ಫೋಟೋಗಳಲ್ಲಿ ಅವನದು, ಅವನ ತಂಗಿಯದು ಬಂದಿತ್ತು. +ಓದಿದ್ದನ್ನೇ ಎರಡೆರಡು ಸಲ ಓದಿದ್ದ. +ಅದನ್ನ ಉತ್ತೇಜ್ ತನ್ನ ಅಪ್ಪಾ ಅಮ್ಮಂದಿರಿಗೆ ತೋರಿಸಿದಾಗ ಅವರಿಗೂ ಖುಷಿಯಾಗಿತ್ತು. +“ಅಂತೂ ನನ್ನಂತಹವನ್ನೊಬ್ಬ ಇನ್ನೂ ಬದುಕ್ಕಿದ್ದೇನೆಂದು ಕೆಲವರಿಗಾದರೂ ಗೊತ್ತಾಯಿತಲ್ಲ. +ಅದೇ ಸಂತೋಷ” ಎಂದಿದ್ದರವರು. +ಮುಂದಿನ ಒಂದು ತಿಂಗಳೆಲ್ಲಾ ಇಡೀ ಉತ್ಸವ, ದೇಶ ವಿವಿಧ ಭಾಷೆಯ ಪತ್ರಿಕೆಗಳವರು ಮನೆಗೆ ಬಂದು ಅಪ್ಪನ ಸಂದರ್ಶನ ಪಡೆದುಹೋಗಿದ್ದರು. +ಹಾಗೇ ಟಿ.ವಿ.ಯ ವಿವಿಧ ಚಾನಲ್‌ಗಳವರು ಬಂದು ತಮ್ಮ ತಮ್ಮ ವಿಶಿಷ್ಟ ರೀತಿಯಲ್ಲಿ ಅವರ ಸಂದರ್ಶನ ಪಡೆದು ಚಿತ್ರೀಕರಣ ಆರಂಭಿಸಿದ್ದರು. +ಸಿನಿಮಾದ ಒಬ್ಬ ದರ್ಶಕ ಅವರ ಬಗ್ಗೆ ಒಂದು ಡಾಕ್ಯೂಮೆಂಟರಿಯನ್ನು ಮಾಡುತ್ತೇನೆಂದು ಹೇಳಿದ್ದ. +ದೇಶದ ಎಲ್ಲಾ ಭಾಷೆಗಳಲ್ಲೂ ಪಟವಾರಿಯವರ ಎಲ್ಲಾ ವಿವರ ಪ್ರಕಟವಾಗಿತ್ತು. +ಪ್ರತಿ ಪತ್ರಿಕೆಯ ವರದಿಗಾರ ಅದಕ್ಕೆ ತನ್ನದೇ ಒಂದು ವಿಶಿಷ್ಟ ಆಯಾಮ ಕೊಟ್ಟಿದ್ದ. +ಕೆಲವು ವಾರ ಪ್ರತಿಗಳ ಮುಖಪುಟದ ಮೇಲೆ ಅವರ ಚಿತ್ರ ಎದ್ದು ಕಾಣುವಂತೆ ಮುದ್ರಿತವಾಗಿತ್ತು. +ಟಿ.ವಿ.ಯ ಕೆಲವು ಚಾನಲ್‌ಗಳು ತಮ್ಮದೇ ರೀತಿಯಲ್ಲಿ ಅವರ ಜೀವನಚರಿತ್ರೆಯನ್ನು ಬಿತ್ತಿರಿಸಿದ್ದವು. +ಅಂತೂ ದೇಶದ ಯಾವುದೊ ಮೂಲೆಯಲ್ಲಿ ದೇವನಹಳ್ಳಿ ಎಂಬ ಕುಗ್ರಾಮವಿದೆ ಅಲ್ಲಿ ವಿಶಿಷ್ಟ ಸ್ವಾತಂತ್ರಯೋಧ ರಾಮಚಂದ್ರ ಪಟವಾರಿಯವರು ಇದ್ದಾರೆ ಎಂಬುವುದು ದೇಶದ ಬಹುಪಾಲು ಜನರಿಗೆ ಗೊತ್ತಾಗಿತ್ತು. +ಅದರಿಂದಲೇ ರಾಮನಗರ ಕೂಡ ಎಚ್ಚೆತ್ತುಕೊಂಡಿತ್ತು. +ಕಲೆಕ್ಟರ್ ಸಾಹೇಬರು ಸ್ವಾತಂತ್ರ ದಿನದಂದು ಅವರನ್ನು ಮುಖ್ಯ ಅತಿಥಿಯಾಗಬೇಕೆಂದು ಬೇಡಿಕೊಂಡರು. +ಅವರ ಒತ್ತಾಯಕ್ಕೆ ಮಣಿದು, ದೇಶದ ದುರ್ಗತಿಯನ್ನು ಜನರಿಗೆ ಹೇಳುವ ಅವಕಾಶ ಸಿಕ್ಕಿದೆ ಅದನ್ನು ಉಪಯೋಗಿಸಬೇಕೆಂದು ಒಪ್ಪಿಕೊಂಡಿದ್ದರು. +ಅವರ ವಿಶಿಷ್ಟ ಭಾಷಣವನ್ನು ಕೆಲವು ಪತ್ರಿಕೆಗಳು ಯಾವ ಮುಲಾಜೂ ಇಲ್ಲದೇ ಪ್ರಕಟಿಸಿದ್ದವು. +ಅಂತಹ ಪತ್ರಿಕೆಗಳನ್ನು ಓದುವವರು ತೀರಾ ಕಡಿಮೆ. +ಕ್ರಾಂತಿಕಾರಿಯರು ಹುಟ್ಟಿಕೊಳ್ಳಲು ಕಾರಣ ಈಗಿನ ರಾಜಕಾರಣಿಗಳು ವ್ಯವಸ್ಥೆಯಲ್ಲಿ ತುಂಬಿರುವ ಭ್ರಷ್ಟಾಚಾರವೆಂದು ಹೇಳಿದ ಅವರು ಅದಕ್ಕೆ ಪೂರಕವಾದ ಉದಾಹರಣೆಗಳನ್ನು ಕೊಟ್ಟಿದ್ದರು. +ಅದೂ ಅಲ್ಲದೇ ಸ್ವಾತಂತ್ರ್ಯದ ನಂತರ ಜನರಲ್ಲಿ ದೇಶಭಕ್ತಿಯ ಭಾವ ಕಡಿಮೆಯಾಗುತ್ತಿದೆ ಎಂದು ಅದಕ್ಕೂ ಕಾರಣ ರಾಜಕಾರಣ ವ್ಯವಹಾರವಾಗಿ ಮಾರ್ಪಟಿರುವುದೇ ಎಂದು ಇನ್ನೂ ಎಷ್ಟೋ ನಿಷ್ಠೂರ ಸಂಗತಿಗಳನ್ನು ಹೇಳಿದರು. +ಆಗ ಇವರನ್ನು ಮುಖ್ಯ ಅತಿಥಿಯಾಗಿ ಕರೆಸಿ ತಪ್ಪು ಮಾಡಿದವೇನೋ ಎನಿಸಿತು ಕಲೆಕ್ಟರ್ ಸಾಹೇಬರಿಗೆ. +ಅವರೂ ತಮ್ಮ ಮನಃಪೂರ್ವಕವಾಗಿ ಮಾಡಿದ ಕೆಲಸವಲ್ಲವದು. +ಪಟ್ಟಣದಿಂದ ಬಂದ ಆಜ್ಞೆಯನ್ನು ಅವರು ಪಾಲಿಸಿದ್ದರಷ್ಟೆ. +ದಿನಗಳು ಉರಳಿದಂತೆ ಪತ್ರಿಕೆಗಳಲ್ಲಿ ಬಂದ, ಟಿ.ವಿ.ಯಲ್ಲಿ ಬಿತ್ತರಿಸಿದ ಅವರ ಬಗೆಗಿನ ಮಾಹಿತಿಯನ್ನು ಮರೆಯತೊಡಗಿದರು ಜನ. +ಅದು ಪತ್ರಿಕೆಯವರಿಗೂ ಹಳೆಯ ಸುದ್ದಿಯಾಗಿ ಬಿಟ್ಟಿತ್ತು. +ಇವೇ ದಿನಗಳಲ್ಲಿ ಕಲ್ಯಾಣಿಯಿಂದಲೂ ವಿಚಿತ್ರ ಹಿಂಸೆಯನ್ನು ಅನುಭವಿಸಿದ್ದ ತೇಜಾ. +ಅವಳು ಯಾವಾಗ ಬರುತ್ತಾಳೆ. +ಯಾವಾಗ ಹೋಗುತ್ತಾಳೆಂಬುವುದು ತನಗೂ ಗೊತ್ತಿರಲಿಲ್ಲ. +ದಿನ ಕಳೆಂದತೆ ಅವಳ ಹೊಟ್ಟೆಯಲ್ಲಿರುವ ಮಗು ತನ್ನ ಇರುವನ್ನು ಸಾರಲಾರಂಭಿಸಿದ್ದ. +ದೇವನಹಳ್ಳಿಯ ಜನರಿಗೆ ಕಲ್ಲಕ್ಕ ತೇಜಾನ ಮಡದಿ ಎಂದು ಗೊತ್ತಾಗಿ ಹೋಗಿತ್ತು. +ಹಾಗೆ ಗೊತ್ತಾದ ಆ ಸುದ್ದಿ ದೂರದ ಊರುಗಳಲ್ಲಿರುವ ಅವಳ ಅಭಿಮಾನಿಯರಿಗೂ ತಿಳಿದಿತ್ತು. +ಬಂಡೇರಹಳ್ಳಿಯವರಿಗೂ ಆ ಸುದ್ದಿ ತಿಳಿದೇ ಇರಬೇಕು. +ಆದರೆ ಯಾರೂ ವಿಷಯ ಅವನ ಮುಂದೆ ಎತ್ತಿರಲಿಲ್ಲ. +ಇನ್ನು ನಿನ್ನ ಕೆಲಸ ನಿಲ್ಲಿಸು ಮಗು ಜನಿಸುವವರೆಗೂ ವಿಶ್ರಾಂತಿ ಪಡಿ ಎಂದವನು ಅವಳಿಗೆ ಗೋಗರೆಯುವಂತೆ ಹೇಳಿದ್ದ. +ಹಳ್ಳಿಯ ಹೆಂಗಸರು ಹೇಗೆ ಮಗು ಜನಿಸುವವರೆಗೂ ದುಡಿಯುತ್ತಲೇ ಇರುತ್ತಾರೆ ಎಂಬುವದವನಿಗೆ ಜ್ಞಾಪಿಸಿದ್ದಳು ಕಲ್ಯಾಣಿ. +ಅದೇ ದಿನಗಳಲ್ಲಿ ಬೇರೆ ಬೇರೆ ಹಳ್ಳಿಗಳಲ್ಲಿ ಇಬ್ಬರು ಭೂಮಾಲೀಕರ ಕೊಲೆಯಾಗಿತ್ತು. +ಅವರು ಬಹಳ ಕ್ರೂರಿಯರು, ರೈತರನ್ನು ಗುಲಾಮರಂತೆ ಕಾಣುತ್ತಿದ್ದರೆಂಬುವುದು ಎಲ್ಲರಿಗೂ ಗೊತ್ತಿದ್ದ ವಿಷಯ. +ಅದು ತನ್ನ ತಂಡದವರ ಕೆಲಸವೆಂದು ಅವನು ಭಯಪಡಬಾರದೆಂದು ತಾನವನಿಗೆ ಮಗುವನ್ನು ಕೊಟ್ಟೇ ಮಡಿಯುವೆನೆಂದು ವಚನ ಕೊಡುವಂತೆ ಹೇಳಿದ್ದಳು ಕಲ್ಯಾಣಿ. +ಕಾಡುಗಳಲ್ಲಿ ಅಲೆಯುವ, ಭ್ರಷ್ಟಾಚಾರ ನಿರ್ಮೂಲ ಮಾಡುವ ವಿಷಯ ಬಂದಾಗ ತಾನು ನಾಯಕನ ವಿಷಯ ಹೇಳಿದ್ದನ್ನು ಜ್ಞಾಪಿಸಿದ್ದಳು. +ಏನು ಮಾಡಬೇಕೋ ತೋಚದಂತಹ ನಿಸ್ಸಹಾಯ ಸ್ಥಿತಿಯಲ್ಲಿ ಅವಳ ಯೋಚನೆಯ ಹಿಂಸೆಯನ್ನು ಅನುಭವಿಸುತ್ತಾ ದಿನಗಳನ್ನು ಕಳೆದಿದ್ದ ತೇಜಾ. +ಅಮ್ಮನ ಸ್ಥಿತಿಯಂತೂ ಇನ್ನೂ ಶೋಚನೀಯವಾಗಿತ್ತು. +ಉಬ್ಬಿದ ಹೊಟ್ಟೆಯನ್ನು ಹೊತ್ತುಕೊಂಡು ಅವಳನಪ್ಪಿ ಅತ್ತು ಬಿಟ್ಟಿದ್ದಳು ಅಮ್ಮ. +ಇನ್ನೂ ಹೊರಗೆ ತಿರುಗುವುದು ಸಾಕೆಂದಿದ್ದಳು. +ಅಕ್ಕರೆಯಿಂದ, ಪ್ರೇಮದಿಂದ ಅಮ್ಮನನ್ನು ಸಮಾಧಾನಪಡಿಸಿ ತನ್ನ ಯಾವ ಚಿಂತೆಯೂ ಮಾಡಬಾರದೆಂದು ಪ್ರತಿದಿನ ಒಬ್ಬ ಬಂದು ತೇಜಾನಿಗೆ ಆರೋಗ್ಯದ ವರದಿ ಒಪ್ಪಿಸುತ್ತಾನೆಂದು ಹೇಳಿಹೋಗಿದ್ದಳು. +ಅದರಿಂದ ದಿನಾಗಲೂ ಬೆಳಗೆ ಸುತ್ತಾಡಿ ಕಲ್ಯಾಣಿ ಆರೋಗ್ಯವಾಗಿದ್ದಾಳೆಂಬ ವರದಿ ಒಪ್ಪಿಸುತ್ತಿದ್ದ ತೇಜಾ. +ಅಪ್ಪನಿಗಂತೂ ಅವಳ ಆರೋಗ್ಯದ ಯೋಚನೆ ಹೆಚ್ಚಾಗಿ ಇದ್ದಂತೆ ತೋರಲಿಲ್ಲ. +ಜಾಗ್ರತೆಯಾಗಿರು ಎಂದು ಅವಳಿಗೆ ಹೇಳಿದ್ದರು. +ಮಾವ, ಸೊಸೆ ಕ್ರಾಂತಿಕಾರಿಯರೇ ಎಂದು ಮನದಲ್ಲೇ ಬೈದುಕೊಂಡಿದ್ದ ತೇಜಾ. +ಅವನು ಎಷ್ಟು ಹಿಂದಿನದೆಲ್ಲಾ ಮೆಲುಕು ಹಾಕುವುದರಲ್ಲಿ ಲೀನನಾಗಿದ್ದನೆಂದರೆ, ಪಟವಾರಿಯವರು ಬಂದು ಅವನ ತಲೆಯ ಬಳಿ ನಿಂತದ್ದೂ ಗಮನಕ್ಕೆ ಬರಲಿಲ್ಲ. +ಅವನ ಮುಖವನ್ನೇ ನೋಡುತ್ತಾ ಕೇಳಿದರವರು“ಏನು ಯೋಚಿಸುತ್ತಿದ್ದಿ?”ಒಮ್ಮೆಲೆ ಬೆಚ್ಚಿಬಿದ್ದು ಎದ್ದು ಕುಳಿತನವ. +ಅಪ್ಪನನ್ನು ಎದುರಿಗೆ ನೋಡಿ ಗಲಿಬಿಲಿಗೊಂಡು ಕೇಳಿದ“ಏನಪ್ಪಾ ಏನಾಯಿತು?”ಅವನ ಪ್ರಶ್ನೆಯಿಂದ ಅವನು ತಮ್ಮ ಮಾತನ್ನು ಕೇಳಿಸಿಕೊಳ್ಳಲಿಲ್ಲವೆಂಬುವುದು ಸ್ಪಷ್ಟವಾಯಿತವರಿಗೆ ಮತ್ತೆ ಕೇಳಿದರು. +“ಏನು ಯೋಚಿಸುತ್ತಿದ್ದಿ?”ಆವರೆಗೆ ಪೂರ್ತಿ ಚೇತರಿಸಿಕೊಂಡಿದ್ದ ತೇಜಾ ಸಿಟ್ಟಿನ ದನಿಯಲ್ಲಿ ಹೇಳಿದ“ನಾನು ಕಲ್ಯಾಣಿಯನ್ನು ಮದುವೆಯಾಗಿ ಘೋರ ಅಪರಾಧ ಮಾಡಿದನೇನೋ ಎಂದು ಯೋಚಿಸುತ್ತಿದ್ದೆ”ಅದಕ್ಕೆ ಅವರು ನಿಷ್ಠುರ ದನಿಯಲ್ಲಿ ಹೇಳಿದರು. +“ನೀನವಳನ್ನು ಮದುವೆಯಾಗದಿದ್ದರೆ ನನ್ನ ಮಗನೂ ಆಗುತ್ತಿರಲಿಲ್ಲ”ಎದ್ದು ಅವರ ಜತೆ ಕೋಣೆಯಿಂದ ಹೊರಬರುತ್ತಾ ಹೇಳಿದ ತೇಜಾ. +“ನನ್ನದು ಬಿಡಪ್ಪಾ ಅಮ್ಮನದು ಏನು ಗತಿಯಾಗಿದೆ ನೋಡು” +“ದೇಶಕ್ಕೆ ಸ್ವಾತಂತ್ರ್ಯ ಬರಲು ಲಕ್ಷಾಂತರ ಮಕ್ಕಳ ಬಲಿಯಾಯಿತು. +ಒಂದು ಒಳ್ಳೆಯ ಕೆಲಸ ಮಾಡಲು ತ್ಯಾಗಗಳು ಮಾಡಬೇಕಾಗುತ್ತದೆ. +ಕಷ್ಟಗಳು ಅನುಭವಿಸಬೇಕಾಗುತ್ತದೆ. +ಅದರಲ್ಲಿ ಇದೂ ಒಂದು” ನಿರ್ವಿಕಾರ ದನಿಯಲ್ಲಿ ಹೇಳಿದರವನ ತಂದೆ. +ನಿಸ್ಸಹಾಯದ ಎತ್ತರದ ದನಿಯಲ್ಲಿ ಹೇಳಿದ ತೇಜಾ“ಈಗ ದೇಶಕ್ಕೆ ಸ್ವಾತಂತ್ರ್ಯ ಬಂದಿದೆಯಪ್ಪಾ! +ನಾವು ಯಾರ ಗುಲಾಮರೂ ಅಲ್ಲ. +ನಾವೇ ಸರ್ಕಾರವನ್ನು ಆರಿಸುತ್ತಿದ್ದೇವೆ. +ಪ್ರೇಮದಿಂದ ಸಾಧಿಸಬಹುದಾದದ್ದನ್ನು ಹಿಂಸೆಯಿಂದ ಸಾಧಿಸಲಾಗುವುದಿಲ್ಲವೆಂದು ಗಾಂಧೀಜಿ ಯವರೇ ಹೇಳಿದ್ದಾರೆ”ತಮ್ಮ ಅದೇ ನಿರ್ವಿಕಾರ ದನಿಯಲ್ಲಿ ಹೇಳಿದರವನಪ್ಪ“ಸುಭಾಷ್ ಚಂದ್ರ ಬೋಸ್, ಭಗತ್‌ಸಿಂಗ್, ಚಂದ್ರಶೇಖರ ಆಚಾದ್‌ನಂತಹವರು ಹುಟ್ಟದಿದ್ದರೆ ಗಾಂಧಿಯವರ ಮಾತನ್ನು ಯಾರೂ ಕೇಳುತ್ತಿರಲಿಲ್ಲ. +ಅವರ ಕೊಡುಗೆಯನ್ನು ಮರೆತಿದ್ದಾರೆ ಜನ”ಅವರ ಮಾತು ಮುಗಿಯುತ್ತಲೇ ಹೇಳಿದ ತೇಜಾ. +“ನಾನು ನೋಡಿ ಯಾವ ಹೆಚ್ಚಿನ ಕೆಲಸವನ್ನೂ ಮಾಡದೆಯೇ ಇಡೀ ಬಂಡೇರಹಳ್ಳಿಯ ಪ್ರೇಮ ವಿಶ್ವಾಸಗಳನ್ನು ಹೊಂದಿದೆ. ಹಾಗೆ…. ” +“ನೀನಲ್ಲಿ ಇನ್ನೂ ಬಹಳ ಕೆಲಸ ಮಾಡಿದ್ದಿ ಅದನ್ನು ನೀನು ಮರೆಯುತ್ತಿದ್ದಿ. +ಅಥವಾ ನಿನ್ನ ಅಹಿಂಸಾವಾದವನ್ನು ಪ್ರತಿಪಾದಿಸಲು ಹಾಗೆ ಮಾಡುತ್ತಿದ್ದಿ… +ನಿನ್ನನ್ನು ಮೆಚ್ಚಿ ಭೇಟಿಯಾದ ದಿನವೇ ನಿನ್ನ ಮದುವೆಯಾಗುವಷ್ಟು ಹುಚ್ಚಿಯಲ್ಲ ಕಲ್ಯಾಣಿ. +ನೀನಲ್ಲಿ ಸರಾಯಿಖಾನೆಗಳನ್ನು ನಿಮಿತ ರೀತಿಯಲ್ಲಿ ನಡೆಯುವಂತೆ ಮಾಡಿದ್ದಿ. +ಅದಕ್ಕೆ ಬಲಪ್ರಯೋಗ ಮಾಡಿ, ಲಾಟರಿಯನ್ನು ಮುಚ್ಚಿಸಿದ್ದಿ. +ಸಿದ್ಧಾನಾಯಕನಂತಹ ಕಿರಾತಕನನ್ನು ಬಂಧಿಸಿದೆ. +ನೀ ಬಂದ ದಿನದಿಂದ ನಿನ್ನ ಪ್ರತಿ ಚಲನವಲನವನ್ನು ಗಮನಿಸಿರುತ್ತಾಳೆ ಕಲ್ಯಾಣಿ. +ನಿನ್ನ ಚರಿತ್ರೆ ಓದಿದ ಮೇಲೆ ಅವಳು ನಿನಗೆ ಮಾರು ಹೋಗಿರಬಹುದು. +ಅದರಿಂದಾಗಿಯೇ ನಿನ್ನ ನೋಡಲು ಕರೆಸಿಕೊಂಡಿರುತ್ತಾಳೆ. +ಭೇಟಿಯಾದ ದಿನವೇ ನಿಮ್ಮ ಮದುವೆಯಾಗಲು ಕಾರಣ ಅವಳು ನಿನ್ನ ಮೊದಲಿನಿಂದಲೂ ಪ್ರೀತಿಸುತ್ತಿರಬಹುದು… +ನಿನ್ನಿಂದಾಗಿ ಶಾಂತವಾಗಿತ್ತು ಬಂಡೇರಹಳ್ಳಿ. +ಇನ್ನು ಮುಂದೆ ನೋಡು ಅಲ್ಲಿ ಕಿರಾತಕತ್ವ ತಾಂಡವಾಡುತ್ತದೆ. +ಅವನ ಮಾತನ್ನು ತಡೆದು ಒಂದೇ ಉಸಿರಿನಲ್ಲಿ ಹೇಳುವಂತೆ ತಮ್ಮ ಸೊಸೆಯನ್ನು ಹೊಗಳಿದರು ಪಟವಾರಿಯವರು. +ಅದಕ್ಕೇನು ಹೇಳಬೇಕೆಂದು ಯೋಚಿಸಿ ಮಾತಾಡಿದ ತೇಜಾ. +“ಇದಕ್ಕೆ ಕೊನೆಯಿಲ್ವ ಅಪ್ಪಾ!” +“ಕೊನೆ ಇದೆ!ಇಂತಹ ಕೆಲ ಕಲ್ಯಾಣಿಯರು ಹುಟ್ಟಿಕೊಂಡರೆ ಸರಕಾರ ಎಚ್ಚೆತ್ತುಕೊಳ್ಳುತ್ತದೆ. +ಸಾವಿರಾರು ಚಪ್ಪಲಿ, ಬೂಟುಗಳ ಜೋಡಿಗಳನ್ನು, ಆ ಬೂಟು, ಚಪ್ಪಲಿಗಳ ಬಣ್ಣಕ್ಕೆ ಹೊಂದುವಂತಹ ಬೆಲೆ ಬಾಳುವ ಉಡುಪುಗಳನ್ನು ಹವಾನಿಯಂತ್ರಿತ ಬಸ್ಸುಗಳನ್ನು ಮಾಡಿಕೊಳ್ಳುವಂತಹ ಮುಖ್ಯಮಂತ್ರಿಯವರು ಮುಂದೆ ಬರಲಿಕ್ಕಿಲ್ಲ. +ಎಪ್ಪತ್ತಾದರೂ ತಮ್ಮಗಿನ್ನೂ ಹುಡುಗಿಯರ ಗೀಳಿದೆ ಎಂದು ರಾಜಾರೋಷವಾಗಿ ಹೇಳಿಕೊಳ್ಳುವಂತಹ ಮುಖ್ಯಮಂತ್ರಿಯರು ಇಲ್ಲವಾಗುತ್ತಾರೆ. +ಮಾಫಿಯಾ ಗ್ಯಾಂಗುಗಳ ಬೆಂಬಲದಿಂದ ರಾಜಕಾರಣಕ್ಕೆ ಇಳಿದವರು ಇಲ್ಲವಾಗುತ್ತಾರೆ. +ಓಟುಗಳಿಗಾಗಿ ಜನಹಿತಕರ ನಿರ್ಣಯಗಳನ್ನು ತೆಗೆದುಕೊಳ್ಳಲಾಗದ ಸರಕಾರ ಹೆಚ್ಚು ದಿನ ಬಾಳುವುದಿಲ್ಲ. +ನಮ್ಮ ದೇಶ ಮತ್ತೆ ಸೊನೆಕಿ ಚಿಡಿಯಾ… ಬಂಗಾರದ ಗುಬ್ಬಿಯಾಗುತ್ತದೆ” ಭಾವುಕ ದನಿಯಲ್ಲಿ ಹೇಳಿದರವನ ಅಪ್ಪ. +ಅವರಿಬ್ಬರೂ ಮಾತಾಡುತ್ತಾ ಕೆಳಗೆ ಬಂದು ಮುಂದಿನ ಕೋಣೆಯಲ್ಲಿ ಕುಳಿತಿದ್ದರು. +ಅಪ್ಪನ ಭವಿಷ್ಯವಾಣಿ ನಿಜವಾಗಬಹುದೇ ತಮ್ಮ ದೇಶ ಮತ್ತೆ ದೊಡ್ಡ ಬಲಾಢ್ಯ ದೇಶಗಳ ಪ್ರತಿಸ್ಪರ್ಧಿಯಾಗಬಹುದೇ ಎಂಬ ಯೋಚನೆಯಲ್ಲಿ ತೊಡಗಿದ್ದ ತೇಜಾ, ಬಾಗಿಲು ಬಡಿದ ಸದ್ದಾಯಿತು. +ಯಾರಿರಬಹುದು ಎಂದವನು ಅಂದುಕೊಳ್ಳುತ್ತಿರುವಾಗ ಆಳು ಬಂದು ಬಾಗಿಲು ತೆಗೆದ. +ಕಲ್ಯಾಣಿ!ಅವಳ ಅವಸ್ಥೆ ಕಂಡು ತಂದೆ, ಮಗ ಇಬ್ಬರೂ ಒಮ್ಮೆಲೆ ಎದ್ದು ಅವಳ ಬಳಿ ಬಂದರು. +ಕಲ್ಯಾಣಿಯ ಒಂದು ಕೈಯನ್ನು ತನ್ನ ಭುಜದ ಮೇಲೆ ಹಾಕಿಕೊಂಡು ಹಿಡಿದು ಅವಳನ್ನು ಒಳತರ ತೊಡಗಿದ ತೇಜಾ. +ಅಕ್ಕರೆಯಿಂದ ಅವಳ ತಲೆಯನ್ನು ನೇವರಿಸುತ್ತಾ ಕೇಳಿದರು ಅವಳ ಮಾವ“ಏನಾಯಿತಮ್ಮ?ಏನಾಯಿತು?”ಕಾಡಿನಲ್ಲಿ ನಡೆದೂ ನಡೆದೂ ಬಹಳ ದಣಿದಿದ್ದಳು ಕಲ್ಯಾಣಿ. +ಅವಳ ಮುಖ ಕಳೆಗುಂದಿತ್ತು. +ಮುಖದಲ್ಲಿ ಬೆವರಿನ ಸಾಲುಗಳು ಹುಟ್ಟಿಕೊಂಡಿದ್ದವು. +“ಏನಾಗಿಲ್ಲ ಅಪ್ಪಾ ಬಹು ದಣಿದಿದ್ದೇನೆ ಅಷ್ಟೆ!” ಎಂದಳು ಕಲ್ಯಾಣಿ. +ಅವಳ ಮಾತಿನಲ್ಲೂ ದಣಿವು ಎದ್ದು ಕಾಣುತ್ತಿತ್ತು. +ಆಗಲೇ ಮೇಲೆ ಹೋದ ಆಳು ಲಕ್ಷ್ಮೀದೇವಿಯವರಿಗೆ ಅವರ ಸೊಸೆ ಬಂದಿರುವ ವಿಷಯ ತಿಳಿಸಿದ. +ಆಕೆ ಎಲ್ಲಿಲ್ಲದ ಉತ್ಸಾಹದಿಂದ ನವಯುವತಿಯಂತೆ ಮೆಟ್ಟಿಲುಗಳನ್ನು ಇಳಿದು ಬಂದಳು. +ಅವರು ಬರುತ್ತಿರುವುದು ನೋಡಿದ ತಂದೆ ಮಗ ಇಬ್ಬರೂ ಅವಳ ಬದಿಯಿಂದ ಸರಿದರು. +ಕಲ್ಯಾಣಿಯ ಬದಿಗೆ ಕುಳಿತ ಅವರ ಅತ್ತೆ ಅವಳನ್ನು ತಬ್ಬಿ ಅವಳ ಮೈಯೆಲ್ಲಾ ಸವರುತ್ತಾ ಹೇಳಿದರು. +“ಹೇಗಿದ್ದಿ ಕೂಸು!ಬಹಳ ದಣಿವಾಗಿದೆಯೇ ನಡಿ… +ನಿಧಾನವಾಗಿ ಮೆಟ್ಟಲೇರು… +ಲೇ ಭಿಮಾ ನೀ ಹೋಗಿ ವೈದ್ಯರನ್ನು ಕರೆದುಕೊಂಡು ಬಾರೋ” +“ನನಗಂತಹದೇನೂ ಆಗಿಲ್ಲವಮ್ಮ” ಆಕೆಯನ್ನು ತಬ್ಬಿ ಹೇಳಿದರು ಕಲ್ಯಾಣಿ. +“ನಿನಗೇನು ಗೊತ್ತಾಗುತ್ತದೆ ಮಣ್ಣು. +ವೈದ್ಯರು ಬಂದು ನೋಡಿ ಹೇಳಿದ ಆಮೇಲೆ ದಾಯಮ್ಮನ ಕರೆಸೋಣ. +ಈ ಊರಿನಲ್ಲಿ ಆದ ಹೆರಿಗೆಗಳನ್ನೆಲ್ಲಾ ಅವಳೇ ಮಾಡಿಸಿದ್ದಾಳೆ” ಅಕ್ಕರೆಯಿಂದ ಗದರುವ ದನಿಯಲ್ಲಿ ಹೇಳಿದರವಳ ಅತ್ತೆ. +ಕಲ್ಯಾಣಿಯನ್ನು ಮೇಲೆ ಹತ್ತಿಸುವಲ್ಲಿ ತಾಯಿಗೆ ಸಹಾಯ ಮಾಡಿದ ತೇಜಾ, ಮೇಲೆ ಹತ್ತುತ್ತಿದ್ದ ಆ ಮೂವರನ್ನು ನೋಡುತ್ತಿದ್ದ ಪಟವಾರಿಯವರ ಮುಖದಲ್ಲಿ ತೃಪ್ತಿಯ ಭಾವವಿತ್ತು. +ಮಂಚದಲ್ಲಿ ಮಲಗಿಸಿದ ಮೇಲೆ ತಂದೆ, ಮಗನನ್ನು ಹೊರಗೇ ಇರುವಂತೆ ಹೇಳಿ ಅವಳ ಬಟ್ಟೆಗಳನ್ನೆಲ್ಲಾ ಬಿಚ್ಚಿ, ನೀರನ್ನು ಕಾಯಿಸಿ ತಂದು ಅದರಲ್ಲಿ ಬಟ್ಟೆ, ಅದ್ದಿ ಅವಳ ದೇಹವನ್ನೆಲ್ಲಾ ಅದರಿಂದ ವರೆಸತೊಡಗಿದರು ಲಕ್ಷ್ಮೀದೇವಿ. +ಮಂಚದಲ್ಲಿ ಮಲಗುತ್ತಲೇ ಅವರೆಗಿನ ದಣಿವೆಲ್ಲಾ ಒಮ್ಮೆಲೇ ದೂರವಾದಂತೆನಿಸಿತು ಕಲ್ಯಾಣಿಗೆ ಬೀಸಿನೀರಿನಲ್ಲಿ ಅದ್ದಿದ ಬಟ್ಟೆಯಿಂದ ದೇಹವೆಲ್ಲಾ ವರೆಸುತ್ತಿದ್ದಾಗ ಹೊಸ ಜೀವನ ಬರುತ್ತಿರುವಂತಹ ಅನುಭವ. +ಅಕ್ಕರೆ ತುಂಬಿದ ಕಣ್ಣುಗಳಿಂದ ಅತ್ತೆಯನ್ನೆ ನೋಡುತ್ತಾ ಹೇಳಿದಳು ಕಲ್ಯಾಣಿ. +“ಯಾಕಮ್ಮ ಇಷ್ಟೆಲ್ಲಾ ಕಷ್ಟ ನನ…” +“ನೋಡು ಮೈಯೆಲ್ಲ ಎಷ್ಟು ಹೊಲಸು!ನೀ ಬಾಯಿ ಮುಚ್ಚಿಕೊಂಡು ಮಲಗು… +ಈಗ ನಾ ಮಾಡುತ್ತಿರುವ ಕೆಲಸ ನಿನ್ನ ಹೊಟ್ಟೆಯಲ್ಲಿರುವ ಕೂಸಿಗೂ ಗೊತ್ತಾಗುತ್ತದೆ. +ಪಾಪ ನಿನ್ನ ಜತೆಗೆ ಅದನ್ನೂ ಗೋಳುಹಾಕಿಕೊಂಡಿ” ಅವಳ ಮಾತನ್ನು ನಡುವೆಯೇ ತಡೆದು ಹೇಳಿದರವಳ ಅತ್ತೆ. +ಸಂತಸದ ಭರದಲ್ಲಿ ಏನೇನೋ ಮಾತಾಡುತ್ತಿದ್ದಾರೆ ಎಂದುಕೊಂಡ ಕಲ್ಯಾಣಿ ಕಣ್ಣು ಮುಚ್ಚಿದಳು. +ತೇಜಾನ ಗಾಬರಿಗೊಂಡ ಮುಖವೇ ಅವಳ ಕಣ್ಣಿಗೆ ಕಟ್ಟಿದಂತಾಗಿತ್ತು. +ಲುಗಬಗೆಯಿಂದ ಬಂದ ವೈದ್ಯರು. +ತಂದೆ ಮಗನೊಡನೆ ಮುಂದಿನ ಕೋಣೆಯಲ್ಲೇ ಕಾಯುತ್ತಾ ಕುಳಿತರು. +ಲಕ್ಷ್ಮೀದೇವಿ ತಮ್ಮ ಸೊಸೆಗೆ ಶುಭ್ರವಾದ ಸೀರೆ ಉಡಿಸಿದ ಮೇಲೆ ವೈದ್ಯರನ್ನು ಮೇಲೆ ಕರೆದರು. +ಅವರು ಅವಳ ನಾಡಿ ಪರೀಕ್ಷಿಸಿ. +ಏನೂ ಆಗಿಲ್ಲ ಕಲ್ಯಾಣಿ ಮತ್ತು ಅವಳ ಮಗು ಸ್ವಸ್ಥವಾಗಿದ್ದಾರೆ ಎಂದು ಪುಷ್ಟಿಕರವಾದ ಆಹಾರ ಕೊಡಬೇಕೆಂದು ಹೇಳಿಹೋದರು. +ವೈದ್ಯರೊಡನೆಯೇ ಅವಳ ಕೋಣೆಗೆ ಬಂದರು ತಂದೆ, ಮಗ, ಪಟವಾರಿಯವರು ತಮ್ಮ ಸೊಸೆಯ ತಲೆಯ ಮೇಲೆ ಕೈಯಾಡಿಸುತ್ತಾ ಹೇಳಿದರು. +“ನೀನ್ಯಾವುದರ ಬಗ್ಗೆಯೂ ಯೋಚಿಸಬೇಡಮ್ಮ ಎಲ್ಲಾ ಸರಿ ಹೋಗುತ್ತದೆ” +“ನೀವಿದ್ದ ಮೇಲೆ ನನಗ್ಯಾತರ ಯೋಚನೆಯಪ್ಪಾ… +ನಿಮ್ಮ ಮಗನಿಗೆ ಹೇಳಿ ಎಲ್ಲಾ ನೋವನ್ನು ಅವರೇ ಅನುಭವಿಸುತ್ತಿದ್ದ ಹಾಗೆ ಕಾಣುತ್ತದೆ” ಹೇಳಿದಳು ಕಲ್ಯಾಣಿ. +ಅವಳ ಮಾತಿನಲ್ಲೀಗ ಲವಲವಿಕೆ ತುಂಬಿ ಬಂದಿತ್ತು. +“ನೀನೇ ಹೇಳಮ್ಮ ಆಗಲೇ ಅವನಿಗೆ ಅರ್ಥವಾಗುವುದು… +ನಡೀ ಲಕ್ಷ್ಮೀ ನಾವು ಸ್ವಲ್ಪ ಹೊತ್ತು ಹೊರಗೆ ಕೂಡುವ” ಹೇಳಿದರವಳ ಮಾವ. +“ನಾ ಹಾಲು ಕಳಿಸುತ್ತೇನೆ ಅವಳಿಗೆ ಕುಡಿಸು… +ನಿನ್ನ ತಲೆ ಕೆಟ್ಟ ಪೋಲಿಸ್ ಮಾತುಗಳು ಆಡಬೇಡ” ಎಂದ ಲಕ್ಷ್ಮೀದೇವಿಯವರು ತಮ್ಮ ಪತಿಯೊಡನೆ ಕೋಣೆಯಿಂದ ಹೊರ ಹೋದರು. +ತೇಜಾನ ಭುಜದ ಮೇಲೆ ಕೈ ಹಾಕಿ ಮೇಲೆ ಸರಿಯುತ್ತಾ ಕೇಳಿದಳು ಕಲ್ಯಾಣಿ. +“ಬೇಜಾರಾಗಿದೆಯೇ?”ದಿಂಬನ್ನು ಅವಳ ಬೆನ್ನಿಗಾನುವಂತೆ ಸರಿಸಿ ಅವಳು ಅದಕ್ಕೊರಗಿ ಕುಳಿತಾಗ ಹಣೆಗೆ ಮುದ್ದಿಸಿ ಹೇಳಿದ“ನಾನು ಎಷ್ಟು ಹಿಂಸೆ ಅನುಭವಿಸುತ್ತಿದ್ದೇನೆಂದು… ನನಗೇ ಗೊತ್ತು. +ಈಗ ಸ್ವಲ್ಪ ಮನಸ್ಸಿಗೆ ಶಾಂತಿ ದೊರೆತಿದೆ”ಇಬ್ಬರೂ ಒಬ್ಬರನ್ನೊಬ್ಬರು ಆರಾಧಕ ನೋಟದಿಂದ ನೋಡಿಕೊಳ್ಳುತ್ತಿದ್ದರು. +“ಸ್ವಲ್ಪವೆಂದರೆ… ಪೂರ್ತಿ ಶಾಂತಿ ದೊರೆತಿಲ್ಲವೇ?” ಅವನ ತಲೆಯ ಮೇಲೆ ಕೈಸವರುತ್ತಾ ಕೇಳಿದಳು. +ಅವಳ ಹೊಟ್ಟೆಯ ಮೇಲೆ ಕೈ‌ಆಡುತಾ ಹೇಳಿದ ತೇಜಾ“ನಮ್ಮ ಭಗತ್‌ಸಿಂಗ್ ಹೊರಬರುವವರೆಗೂ ಅವನು ಹೊರಬಂದು ನೀನು ಸ್ವಸ್ಥವಾಗುವವರೆಗೂ ನನಗೆ ಪೂರ್ತಿ ಶಾಂತಿ ದೊರೆಯುವುದಿಲ್ಲ” +“ಆ ಅನುಮಾನವ್ಯಾಕೆ?” ಕೇಳಿದಳವಳು. +“ನೀನು ತೆಗೆದುಕೊಳ್ಳಬೇಕಾದ ಇಂಜೆಕ್ಷನ್‌ಗಳನ್ನು ಔಷಧಿಗಳನ್ನು ತೆಗೆದುಕೊಂಡಿಲ್ಲ. +ಮಾಡಿಸಿಕೊಳ್ಳಬೇಕಾದ ಟೆಸ್ಟುಗಳನ್ನು ಮಾಡಿಸಿಕೊಂಡಿಲ್ಲ. +ಆದರಿಂದ…”ಅವನ ಮಾತನ್ನು ಅಲ್ಲಿಗೆ ತಡೆಯುತ್ತಾ ಹೇಳಿದಳು ಕಲ್ಯಾಣಿ. +“ಅದರಿಂದ ಗಾಬರಿಯಾಗುವ ಅವಶ್ಯಕತೆ ಇಲ್ಲ. +ನಮ್ಮ ಮಗ ದಷ್ಟಪುಷ್ಟವಾಗಿ ಆರೋಗ್ಯವಂತನಾಗಿ ಹುಟ್ಟುತ್ತಾನೆ… +ನಮ್ಮ ಪೂರ್ವಜರು ಅದನ್ನೆಲ್ಲಾ ತೆಗೆದುಕೊಳ್ಳುತ್ತಿದ್ದರೆ, ನನಗೆ ಕೂಸಿಗೆ ಏನೂ ಆಗುವುದಿಲ್ಲ. +ನೀವದರ ಬಗ್ಗೆ ಯೋಚಿಸಬೇಡ… ಟ್ರಾನ್ಸ್‌ಫರ್‌ದು ಏನಾಯಿತು?” +“ಆ ಮಾತುಗಳು ಈಗ ಬೇಡ” ಅನ್ಯಮನಸ್ಕ ದನಿಯಲ್ಲಿ ಹೇಳಿದ ತೇಜಾ. +“ಹೇಳು ಅದೇನೂ ಅಂತಹ ವಿಷಯವಲ್ಲ” ಒತ್ತಾಯಿಸುವ ದನಿಯಲ್ಲಿ ಹೇಳಿದಳು ಕಲ್ಯಾಣಿ. +“ಟ್ರಾನ್ಸ್‌ಫರ್ ಆಯಿತು. +ಸಿಸಿ‌ಎಸ್‌ನಲ್ಲಿ ಜಾಯಿನ್ ಆಗಿ ಲೀವ್ ಹಾಕಿ ಬಂದಿರುವೆ” ಮನಸಿಲ್ಲದ ಮನಸ್ಸಿನಿಂದ ಹೇಳಿದ ತೇಜಾ. +“ಇನ್ನು ನೋಡು ಬಂಡೇರಹಳ್ಳಿಯಲ್ಲಿ ಆರಂಭವಾಗುತ್ತದೆ ಪೋಲೀಸರ ಕಿರಾತಕತೆ” ಹೇಳಿದಳು ಕಲ್ಯಾಣಿ. +ಯಾವಾಗಲೂ ಹಾಗೇ ಕೆಟ್ಟದಾಗಿ ಯಾಕೆ ಯೋಚಿಸುತ್ತಿ ಈಗ ಬಂದಿರುವ ಇನ್ಸ್‌ಪೆಕ್ಟರ್‌ನೂ ಒಳ್ಳೆಯವನಿರಬಹುದು. +ನನ್ನಂತೆ…”“ನಿನ್ನಂತಹ ಅಧಿಕಾರಿಯರು ಪೋಲಿಸ್ ಖಾತೆಯಲ್ಲಿರುವುದು ತೀರಾ ಅಪರೂಪ. +ಮೈಮೇಲೆ ಪೋಲೀಸರ ಉಡುಪು ಬರುತ್ತಲೇ ತಾವೇ ಸರ್ವಾಧಿಕಾರಿಗಳೆಂದುಕೊಳ್ಳುತ್ತಾರೆ ಎಲ್ಲರೂ. +ಆಗಲೇ ಆ ಇನ್ಸ್ ಪೆಕ್ಟರನ ಜಾತಕ ತರಿಸಿ ನೋಡಿದ್ದೇನೆ…” +“ಸಾಕು!ಸಾಕು ಕಲ್ಯಾಣಿ ಆ ಮಾತುಗಳು ಸಾಕು. +ಇನ್ನೇನಾದರೂ ಮಾತಾಡೋಣ ಕನಸುಗಳನ್ನು ಕಟ್ಟೋಣ” ಕಟುವಾಗಿ ಅವಳ ಮಾತನ್ನು ತಡೆದ ತೇಜಾ ತಾನೇ ಕನಸು ಕಾಣುತ್ತಿರುವಂತೆ ಮಾತು ಮುಗಿಸಿದ. +ಬಾಗಿಲಿಗೆ ಬೆರಳಿನಿಂದ ಬಡಿದ ಸದ್ದಾದಾಗ ಎದ್ದ ತೇಜಾ ಆಳಿನ ಕೈಯಿಂದ ಹಾಲಿನ ಗ್ಲಾಸನ್ನು ತೆಗೆದುಕೊಂಡು ಬಾಗಿಲು ಹಾಕಿಬಂದು ಅವಳ ಕೈಗೆ ಅದನ್ನು ರವಾನಿಸಿದ. +ಬಿಸಿ ಹಾಲನ್ನು ಒಂದು ಗುಟುಕು ಕುಡಿದು ತಾನೂ ಕನಸಿನ ರಾಜ್ಯದಲ್ಲಿ ತೇಲಿಹೋಗುತ್ತಿರುವಂತೆ ಕೇಳಿದಳು ಕಲ್ಯಾಣಿ. +“ಹೇಳು ಎಂತಹ ಕನಸು ಕಾಣುವ?”ಆದಕ್ಕವನು ಉತ್ತರಿಸಲು ಹೋದಾಗ ಟೆಲಿಫೋನ್ ಶಬ್ದ ಮಾಡತೊಡಗಿತು. +ಎದ್ದು ಹೋಗಿ ರಿಸಿವರನ್ನು ಎತ್ತಿಕೊಂಡ. +“ಹಲೋ…”“ನಾನಪ್ಪಾ ತಾತ ಇಲ್ಲೊಂದು ಘೋರವಾಗಿ ಹೋಗಿದೆ” ತೇಜಾನ ಕಂಠವನ್ನು ಗುರುತಿಸಿದ ತಾತ ಕೂಡಲೇ ಮಾತಾಡಿದ. +ಅವನ ದನಿಯಲ್ಲಿ ದುಃಖ ತುಂಬಿತ್ತು. +ಕಲ್ಯಾಣಿಯ ಕಡೆ ಒಮ್ಮೆ ನೋಡಿ ಮಾಮೂಲು ದನಿಯಲ್ಲಿ ಕೇಳಿದ. +“ಏನು?”“ವೆಂಕಟನ ಕೊಲೆಯಾಗಿದೆ. +ಈಗ ಬಂಡೆಗಳ ಬಳಿ ಅವನ ಶವ ಸಿಕ್ಕಿದೆ…” +ತೇಜಾನ ಹೊಟ್ಟೆಯಲ್ಲಿ ಯಾರೊ ಕೈಹಾಕಿ ಕರುಳುಗಳನ್ನು ಹಿಸುಕಿದಂತಾಯಿತು. +ಆದರೂ ಅವನು ತನ್ನ ಮುಖಭಾವ ಬದಲಿಸಲಿಲ್ಲ. +ಹೇಳಿದ“ನಾನೀಗ ಬಂದೆ”ಮಾತು ಮುಗಿಸಿ ರಿಸೀವರನ್ನು ಕೆಳಗಿಡುತ್ತಿದ್ದಾಗ ಕೇಳಿದಳು ಕಲ್ಯಾಣಿ. +“ಯಾರು?”“ಗುಂಡು ತಾತನ ಮೈಯಲ್ಲಿ ಹುಷಾರಿಲ್ಲವಂತೆ. +ನಾ ಬಂಡೇರಹಳ್ಳಿಗೆ ಹೋಗಿ ಬರುತ್ತೇನೆ… +ಆದಷ್ಟು ಬೇಗ ಬಂದುಬಿಡುತ್ತೇನೆ”ಗುಂಡುತಾತನ ಬಗೆಗಿನ ಕಾಳಜಿ ತೇಜಾನ ಮುಖದಲ್ಲಿ ಎದ್ದು ಕಾಣುತ್ತಿತ್ತು. +ವ್ಯಂಗ್ಯದ ಮುಗುಳ್ನಗೆ ನಕ್ಕು ಹೇಳಿದಳು ಕಲ್ಯಾಣಿ“ಸುಳ್ಳು, ಬೇಡ! +ನನ್ನೆದುರು ಎಂತಹ ನಟನೆಯೂ ಬೇಡ, ನನಗೆಲ್ಲಾ ಗೊತ್ತಾಗುತ್ತದೆ. +ಹೋಗಿ ಬನ್ನಿ. +ಅಲ್ಲಿ ಯಾವುದೋ ಘಟನೆ ನಡೆದಿರಬಹುದು. +ಅಮ್ಮನಿಗೆ ಏನಾದರೂ ಸುಳ್ಳು ಹೇಳಿ ಅವರ ಮುಂದೆ ಬಂಡೇರಹಳ್ಳಿಯ ಹೆಸರು ಎತ್ತುವುದು ಬೇಡ” ನಿರ್ಭಾವ ದನಿಯಲ್ಲಿ ಹೇಳಿದಳು ಕಲ್ಯಾಣಿ. +ಇವಳು ಬಹಳ ಬುದ್ಧಿವಂತೆ ಎಂದು ತನಗೆ ತಾನು ಮತ್ತೆ ಜ್ಞಾಪಿಸಿಕೊಂಡು, ಅವಳ ಕಪೋಲ ಸವರಿ ಹಣೆಗೆ ಮುದ್ದಿಸಿ ಕೋಣೆಯಿಂದ ಹೊರಬಿದ್ದ ತೇಜಾ, ತಂದೆ ತಾಯಿಯರಿಗೆ ಯಾವುದೋ ಸುಳ್ಳು ಹುಟ್ಟಿಸಿ ಹೇಳಿ ಲಗುಬಗೆಯಲ್ಲಿ ಮನೆಯಿಂದ ಹೊರಬಿದ್ದ. +ಲಕ್ಷ್ಮೀದೇವಿ ಮತ್ತು ಪಟವಾರಿಯವರು ತಮ್ಮ ಸೊಸೆಯ ಕೋಣೆಯ ಕಡೆ ನಡೆದರು. +ಪಟ್ಟಣದ ತನ್ನ ಬಾಡಿಗೆ ಮನೆಯನ್ನು ಬಹುಮೊದಲೇ ಖಾಲಿ ಮಾಡಿ ಅಲ್ಲಿದ್ದ ತನ್ನ ಸಾಮಾನುಗಳನ್ನೆಲ್ಲಾ ಇಲ್ಲಿಗೆ ತಂದಿದ್ದ ತೇಜಾ. +ಅವರೊಡನೆ ಅವನ ಸ್ಕೂಟರ್ ಕೂಡಾ ಬಂದಿತ್ತು. +ಪೋಲೀಸು ವಾಹನವಿಲ್ಲದ ಕಾರಣ. +ಈಗ ಅದನ್ನೇ ಉಪಯೋಗಿಸಬೇಕಾಗಿ ಬಂತು. +ಮೊದಲೇ ಅದನ್ನು ಒಳ್ಳೆ ಕಂಡಿಶನ್‌ನಲ್ಲಿ ಮಾಡಿ ತಂದ ಕಾರಣ ಇಲ್ಲಿಯೂ ಆಗಾಗ ಉಪಯೋಗಿಸುತ್ತಿದ್ದ ಕಾರಣ ಅದು ಒಂದೇ ಕಿಕ್ಕಿಗೆ ಸ್ಟಾರ್ ಆಯಿತು. +ಏರು ತಗ್ಗುಗಳ ದಾರಿಯಲ್ಲಿ ಅದನ್ನು ಮುಖ್ಯರಸ್ತೆಗೆ ತಂದು ವೇಗವಾಗಿ ಓಡಿಸತೊಡಗಿದ. +ವೆಂಕಟ್‌ನ ಕೊಲೆ ಅವನಲ್ಲಿ ವಿಚಿತ್ರ ಸಂಕಟ ನೋವುಗಳನ್ನು ಹುಟ್ಟಿಸಿತ್ತು. +ಇದು ನಾಯಕನ ಬಂಟರೇ ಮಾಡಿರುವ ಕೆಲಸವೆಂಬುವುದರಲ್ಲಿ ಸಂದೇಹವಿಲ್ಲ. +ಅವನು ತನ್ನ ಕೊಲ್ಲಲು ಹೂಡಿದ ಸಂಚಿಗೆ ವೆಂಕಟನೇ ಮುಖ್ಯ ಸಾಕ್ಷಿಯಾಗಿದ್ದ. +ಪೋಲಿಸ್ ಖಾತೆಗೆ ಸೇರಿದವನಾದ ಅವನ ಮಾತನ್ನು ನ್ಯಾಯಾಲಯ ನಂಬಲಿಕ್ಕಿಲ್ಲ. +ಅದೂ ಅಲ್ಲದೇ ವೆಂಕಟನ ಭಂಡ ಧೈರ್ಯದ ಕಾರಣ ನಾಯಕನಿಗೆ ಅವನ ಮೇಲೆ ವಿಪರೀತ ಕೋಪವಿದೆ ಎಂಬ ಮಾತನ್ನು ಯುವಕರು ಹೇಳಿದ್ದರು. +ಈಗಲೇ ಏನಾದರೂ ಮಾಡಬೇಕು ಇಲ್ಲದಿದ್ದರೆ ಈ ನಾಯಕ್ ಒಬ್ಬೊಬ್ಬರನ್ನೆ ಮುಗಿಸುತ್ತಾ ಹೋಗಬಹುದು. +ಇಂತಹ ಯೋಚನೆಗಳಲ್ಲೇ ವಾಹನವನ್ನು ಅತಿ ತೀವ್ರಗತಿಯಿಂದ ಓಡಿಸುತ್ತಿದ್ದ ತೇಜಾ. +ಅವನು ಬಂಡೇರಹಳ್ಳಿ ಸೇರಿದಾಗ ರಾತ್ರಿಯ ಒಂಭತ್ತೂವರೆ. +ವೆಂಕಟನ ಗುಡಿಸಲ ಮುಂದೆ ಸಾಕಷ್ಟು ಜನ ಕುಳಿತಿದ್ದರು. +ಒಳಗಿನಿಂದ ಹೆಂಗಸರ ರೋಧನ ಎಂತಹವರ ಹೃದಯವನ್ನಾದರೂ ಕುಲುಕುವಂತಿತ್ತು. +ತೇಜಾ ವಾಹನವನ್ನು ಸ್ಕ್ವಾಡಿಗೆ ಎಳೆಯುತ್ತಿದ್ದ ಹಾಗೆ ಹತ್ತಿರ ಬಂದ ತಾತ ಅವನ ಹೆಗಲ ಮೇಲೆ ತಲೆ ಇಟ್ಟು ಅಳತೊಡಗಿದ. +ಅವನ ಭುಜ ತಟ್ಟುತ್ತಾ ಕೇಳಿದ ತೇಜಾ. +“ವೆಂಕಟ…”“ಆಗಲೇ ಪೋಲಿಸಿನವರು ಅವನನ್ನು ರಾಮನಗರದ ಆಸ್ಪತ್ರೆಗೆ ಸಾಗಿಸಿದ್ದಾರೆ. +ಶವ ಪರೀಕ್ಷೆ ಮಾಡುತ್ತಾರಂತೆ”ಪೋಸ್ಟ್ ಮಾಟಂಗೆ ಕಳಿಸಿರಬಹುದೆಂದು, ತನಗೆ ಮೊದಲೆ ಏಕೆ ಹೊಳೆಯಲಿಲ್ಲ ಎಂದುಕೊಂಡ ತೇಜ ಗುಡಿಸಲ ಹತ್ತಿರಬಂದ. +ಅವನು ಬಂದ ಸುದ್ದಿ ಆಗಲೇ ಒಳಗಿದ್ದ ಹೆಂಗಸರಿಗೆ ತಿಳಿದಿತ್ತು. +ಇಬ್ಬರು ಹೊರಬಂದು ಅವನನ್ನು ತಬ್ಬಿ ತಮ್ಮ ರೋಧನದ ನಡುವೆ ಹೇಳಿದರು. +“ನೀವಿಲ್ಲಿಂದ ಹೋದಿರಿ ಸ್ವಾಮಿ ಪೋಲಿಸಿನವರ ಅತ್ಯಾಚಾರ ಶುರು ಆಗಿದೆ. +ಅನ್ಯಾಯವಾಗಿ ನನ್ನ ಬೆಳೆದ ಮಗನನ್ನು ಹೊಟ್ಟೆಗೆ ಹಾಕಿಕೊಂಡರು… +ಯಾರ ತಂಟೆಗೂ ಹೋದವನಲ್ಲ ನಮ್ಮ ವೆಂಕಟ… +ನೀವು ಭಾಷಣ ಮಾಡಿದ್ದರಲ್ಲ ಸ್ವಾಮಿ ಪೋಲಿಸಿನವರು ಯಾರ ಶತೃಗಳೂ ಅಲ್ಲ ಮಿತ್ರರೆಂದು… +ಆ ಪಾಪಿ ಇನ್ಸ್‌ಪೆಕ್ಟರ್ ಜೀಪಿನಲ್ಲಿ ವೆಂಕಟನನ್ನು ಹಾಕಿ ಕಳಿಸೇಬಿಟ್ಟ… +ಅವನ ಪ್ರಾಣ ತೆಗೆದುಕೊಂಡವರ ವಂಶನಾಶವಾಗ…”ಹೀಗೆ ಅಳುವಿನ ನಡುವೆ ವೆಂಕಟನ ಕೊಲೆ ಮಾಡಿದವರನ್ನು ಶಪಿಸುತ್ತಾ ಅವನ ಗುಣಗಾನ ಮಾಡುತ್ತಾ ಶಪಿಸುತ್ತಲೇ ಇದ್ದರವರು. +ಇಬ್ಬರು ಯುವಕರು ಆ ಹೆಂಗಸರನ್ನು ಮತ್ತೆ ಗುಡಿಸಲಿನಲ್ಲಿ ಕರೆದುಕೊಂಡು ಹೋದಾಗ ಅದರೆದುರು ಉರಿಯುತ್ತಿರುವ ಬೆಂಕಿಯನ್ನು ನೋಡಿದ ತೇಜ. +ಅವನು ಹಾಗೇ ನೋಡುತ್ತಿದ್ದಾಗ ಈ ರೋಧನಗಳೇ ಬೆಂಕಿಯ ಜ್ವಾಲೆಗಳಾಗಿ ಅನ್ಯಾಯಗಳನ್ನು ಎಸಗಿದವರನ್ನು ಸುಟ್ಟುಬಿಡುತ್ತವೇನೋ ಎನಿಸಿತು. +ಅಲ್ಲಿನ ಜನರಿಂದ ದೂರ ಬಂಡೆಯೊಂದರ ಮೇಲೆ ಕುಳಿತಾಗ ಯುವಕರು, ಗುಂಡುತಾತ ಮತ್ತಿತರರು ಅವನೆದುರು ಬಂದು ಕುಳಿತರು. +ಇದೆಲ್ಲಾ ಹೇಗಾಯಿತೆಂದು ಕೇಳಿದಾಗ ಹೇಳಿದ ಒಬ್ಬ. +“ಏಳು ಏಳೂವರೆಯ ಸಮಯದಲ್ಲಿ ಒಬ್ಬ ಬಯಲಿಗೆ ಹೋದಾಗ, ಅವನಿಂದ ಸ್ವಲ್ಪ ದೂರದಲ್ಲಿ ಮನುಷ್ಯ ಒಬ್ಬನು ಬಿದ್ದಿರುವಂತೆನಿಸಿತಂತೆ. +ಆ ಮುಳ್ಳುಗಿಡಗಳ ನಡುವೆ ಯಾರು ಮಲಗಿರಬಹುದೆಂದು ಹತ್ತಿರ ಹೋಗಿ ಕಡ್ಡಿ ಗೀಚಿ ನೋಡಿದರಂತೆ. +ವೆಂಕಟನನ್ನು ಗುರುತಿಸಿದ ಅವನು ಇನ್ನೊಂದು ಕಡ್ಡಿ ಗೀಚಿದಾಗ ಎದೆಯಿಂದ ಬರುತ್ತಿರುವ ರಕ್ತ ಕಾಣಿಸಿತಂತೆ. +ಒಮ್ಮೆಲೆ ಕೂಗುತ್ತಾ ಓಡಿಬಂದ. +ವೆಂಕಟನನ್ನು ಹೊತ್ತುಕೊಂಡು ಇಲ್ಲಿಗೆ ತಂದೆವು. +ಹದಿನೈದು ನಿಮಿಷದ ಬಳಿಕ ಬಂದ ಇನ್ಸ್‌ಪೆಕ್ಟರ್‌ ಮತ್ತು ಎಸ್.ಐ.ಸಾಹೇಬರು ನಮ್ಮನ್ನು ಬಾಯಿಗೆ ಬಂದತೆ ಬೈದು, ವೆಂಕಟನನ್ನು ಜೀಪಿನಲ್ಲಿ ಹಾಕಿಕೊಂಡು ಹೋದರು”ಪೂರ್ತಿ ವಿವರ ಸಿಕ್ಕಂತಾದ ಮೇಲೆ ಕೇಳಿದ ತೇಜಾ“ಮೊದಲು ಶವವನ್ನು ನೋಡಿದವ ಎಲ್ಲಿ?” +“ಅವನನ್ನೂ ಕರೆದುಕೊಂಡು ಹೋಗಿ ಪೋಲೀಸ್ ಸ್ಟೇಷನ್‌ನಲ್ಲಿ ಕೂಡಿಸಿದ್ದಾರೆ. +ಅವನೇ ಕೊಲೆ ಮಾಡಿದಂತೆ ಮಾತಾಡುತ್ತಿದ್ದರು ಪೋಲಿಸಿನವರು”. +ತಾನೀಗ ಏನು ಮಾಡಬೇಕೆಂಬ ಬಗ್ಗೆ ಯೋಚಿಸುತ್ತಿದ್ದ ತೇಜಾ ಸ್ವಲ್ಪ ಹೊತ್ತು ಯೋಚಿಸಿ ಕೇಳಿದ“ಇನ್ಸ್‌ಪೆಕ್ಟರ್ ಸಾಹೇಬರು ಪೋಲೀಸ್ ಸ್ಟೇಷನ್‌ಲ್ಲಿದ್ದಾರೆಯೇ?”“ಇರಬಹುದು ಸ್ವಾಮಿ” ಹೇಳಿದ ಒಬ್ಬ. +“ನಾನೀಗ ಬರುತ್ತೇನೆ” ಎಂದ ತೇಜಾ ಸ್ಕೂಟರನ್ನು ಸ್ಟಾರ್ ಮಾಡಿ ಪೋಲೀಸ್ ಸ್ಟೇಷನ್ನಿನ ಕಡೆ ಓಡಿಸಿದ. +ಅಲ್ಲಿದ್ದ ಎಸ್.ಐ.ಮತ್ತು ಕಾನ್ಸ್‌ಟೇಬಲರು ಹೊಸಬರೇ. +ಅಲ್ಲಿನ ಸಿಬ್ಬಂದಿ ಹೆಚ್ಚಾಗಿರುವಂತೆ ಕಂಡಿತು. +ಕೋಣೆಯಲ್ಲಿ ಪ್ರವೇಶಿಸುತ್ತಲೆ ಮುಗುಳ್ನಗುತ್ತಾ ಕೈಮುಂದೆ ಚಾಚಿದ ಬಂಡೇರಹಳ್ಳಿಯ ಹೊಸ ಪೆಕ್ಟರ್ ಜಗದೀಶ, ಅದನ್ನು ಕುಲಕಿ ಮುಂದೆ ಕುಳಿತಾಗ ಅವನೇ ಕೇಳಿದ“ಇಲ್ಲಿ ಹೇಗೆ ಬರೋಣವಾಯಿತು” +“ವೆಂಕಟ್‌ನ ಕೊಲೆಯಾಗಿದೆ. +ಅದಕ್ಕೆ ಬಂದೆ” ನೀವು ಅವನನ್ನು ನೋಡಿದವನನ್ನು ಇಲ್ಲಿ ತಂದು ಕೂಡಿಸಿದ್ದೀರಂತೆ”ಅವನ ಕುಚೋದ್ಯದ ಮುಗುಳ್ನಗೆ ತುಂಬಿ ಬಂತು. +ಅಂತಹದೇ ದನಿಯಲ್ಲಿ ಮಾತಾಡಿದ. +“ಓಹೋ!ನೀವು ಅದಕ್ಕಾಗಿ ಬಂದಿದ್ದೀರಾ?” +“ಹೂಂ!ಅದಕ್ಕೆ!ಈ ಹಳ್ಳಿಯಲ್ಲಿ ಹೊಸದಾಗಿ ಬಂದಿದೆ ಸ್ಟೇಷನ್. +ಹಳ್ಳಿಗರಿಗೆ ಕೊಲೆಯಾದವನನ್ನು ನೋಡುತ್ತಲೇ ಪೋಲಿಸಿನವರಿಗೆ ತಿಳಿಸಬೇಕೆಂಬುವುದು ಗೊತ್ತಿಲ್ಲ” ಅವನ ಮಾತಿನಲ್ಲಿದ್ದ ವ್ಯಂಗ್ಯವನ್ನು ಗಮನಿಸದವನಂತೆ ಹೇಳಿದ ತೇಜಾ. +“ನೋಡಿ, ಮಿಸ್ಟರ್ ತೇಜಾ, ಈಗ ಬಂಡೇರಹಳ್ಳಿಯ ಇನ್ಸ್‌ಪೆಕ್ಟರ್ ನಾನು. +ನನಗೆ ನೀವು ಪಾಠ ಕಲಿಸಬೇಕಾಗಿಲ್ಲ. +ಎಲ್ಲಾ ತರಹದ ಹಳ್ಳಿಗಳಲ್ಲಿ ಕೆಲಸ ಮಾಡಿರುವವನು ನಾನು. +ಅವರ ಸ್ವಭಾವ ಪಟ್ಟಣದವರಾದ ನಿಮಗಿಂತ ಚೆನ್ನಾಗಿ ನನಗೆ ಗೊತ್ತು. +ಅದಕ್ಕೆ ನನಗೆ ನಿಮ್ಮ ಉಪದೇಶದ ಅವಶ್ಯಕತೆ ಇಲ್ಲ” ವರಟು ದನಿಯಲ್ಲಿ ಹೇಳಿದ ಇನ್ಸ್‌ಪೆಕ್ಟರ್ ಜಗದೀಶ, ಇಂತಹ ಮಾತಿನಿಂದ ತೇಜಾನ ಸಹನೆ ಮೀರಿತು, ಹೇಳಿದ. +“ವೆಂಕಟ್ ಸಿದ್ಧಾನಾಯಕರ ವಿರುದ್ಧವಿರುವ ಕೇಸಿನ ಮುಖ್ಯ ಸಾಕ್ಷಿಯಾಗಿದ್ದ. +ನೀವು ಮೊದಲು ಅವರನ್ನು ಪೋಲಿಸ್ ಸ್ಟೇಷನ್ನಿಗೆ ಹಿಡಿದು ತರಬೇಕಾಗಿತ್ತು…” +“ಅದೆಲ್ಲಾ ನನಗೆ ಗೊತ್ತು. +ನಾ ಮೊದಲೇ ಹೇಳಿದ ಹಾಗೆ ನೀವು ನನಗೆ ಉಪದೇಶ ಕೊಡಬೇಡಿ. +ಈ ಕೊಲೆಗೂ ನಾಯಕರ ಮೇಲಿರುವ ಕೇಸಿಗೂ ಯಾವ ಸಂಬಂಧವೂ ಇಲ್ಲ. +ನೀವಿನ್ನು ಹೋಗಬಹುದು”ತನ್ನ ಸಹೋದ್ಯೋಗಿಯಿಂದ ಇಂತಹ ಅವಮಾನ ತೇಜಾನಿಗೆ ಮೊದಲೆಂದೂ ಆಗಿರಲಿಲ್ಲ. +ಕುರ್ಚಿಯಿಂದ ಏಳುತ್ತಾ ಕಟುವಾದ ದನಿಯಲ್ಲಿ ಹೇಳಿದ ತೇಜಾ. +“ನೀವು ನನ್ನೊಡನೆಯು ಹೀಗೆ ವರ್ತಿಸುವಿರೆಂದು ನಾನು ತಿಳಿದಿರಲಿಲ್ಲ ಮಿಸ್ಟರ್‌ ಜಗದೀಶ್ ಎಚ್ಚರಿಕೆಯಂತಹ ಒಂದು ಮಾತು ಹೇಳಿ ಹೋಗುತ್ತೇನೆ. +ಈ ಹಳ್ಳಿಯ ಜನ ಎಷ್ಟು ಒಳ್ಳೆಯವರೋ ಅಷ್ಟೇ ಕೆಟ್ಟವರು. +ಜಾಗ್ರತೆಯಾಗಿರಿ”ಅದಕ್ಕೆ ಇನ್ಸ್‌ಪೆಕ್ಟರ್‌ ಜಗದೀಶ ಪ್ರತಿಕ್ರಿಯಿಸುವ ಮುನ್ನ ಕೋಣೆಯಿಂದ ಹೊರಬಿದ್ದಿದ್ದ ತೇಜಾ, ಅವನು ನಾಲ್ಕು ಹೆಜ್ಜೆ ಹಾಕುತ್ತಿದ್ದಂತೆ ಹಿಂದಿನಿಂದ ಬೂಟುಗಾಲಿನ ಓಟ ಕೇಳಿಬಂತು. +ನಿಂತು ಹಿಂತಿರುಗಿದ. +ಓಡಿ ಅವನ ಬದಿಗೆ ಬಂದ ಎಚ್.ಸಿ. ಹೇಳಿದ. +“ಇದು ಕ್ರಾಂತಿಕಾರಿಯರ ಕೇಸು. +ಜಾಗ್ರತೆಯಿಂದಿರಿ ಇಲ್ಲದಿದ್ದರೆ, ಇಲ್ಲದ ಪೇಚಿಗೆ ಸಿಕ್ಕಿಹಾಕಿಕೊಳ್ಳುತ್ತೀರಿ ಎಂದು ನಿಮಗೆ ಹೇಳುವಂತೆ ಹೇಳಿದ್ದಾರೆ ಸರ್, ಇನ್ಸ್‌ಪೆಕ್ಟರ್ ಸಾಹೇಬರು”ಅವನನ್ನು ಕೆಲಕ್ಷಣ ದುರುಗುಟ್ಟಿ, ಅದೇ ತನ್ನ ಉತ್ತರವೆಂಬಂತೆ ವೇಗವಾಗಿ ಮುಂದೆ ನಡೆದ ತೇಜ. +ಮುಂದೆ ದಾರಿಯ ಆಚೆ ಎಸ್.ಟಿ.ಡಿ.ಯ ಬೂತ್‌ ಕಾಣಿಸಿದಾಗ ಅವನ ನಡುಗೆಯ ಗತಿ ನಿಧಾನಗೊಂಡಿತು. +ಮುಂದೇನು ಮಾಡುವುದೆಂದು ಯೋಚಿಸಿದ. +ಸರಕಾರಿ ಆಸ್ಪತ್ರೆಗೆ ಪೋಸ್ಟ್ ಮಾಟರ್ಂಗೆ ಹೋದ ಶವ ಈ ರಾತ್ರಿಯಂತೂ ಬರುವುದಿಲ್ಲ. +ತಾನು ಮನೆಗೆ ಹೋಗಿಬರುವುದೇ ಇಲ್ಲೇ ಇರುವುದೇ ಎಂಬ ಬಗ್ಗೆ ಯೋಚಿಸುತ್ತಾ ನಡೆದ. +ತಾನಾಗಿಯೇ ಹೆಜ್ಜೆಗಳು ಎಸ್.ಟಿ.ಡಿ ಬೂತ್ ಬಳಿ ಬಂದವು. +ಅವನನ್ನು ನೋಡಿ ಗೌರವದಿಂದ ನಮಸ್ಕರಿಸಿ ಎದ್ದು ನಿಂತ ಬೂತಿನ ಮಾಲಿಕ. +ಅವನಿಗೆ ಯಾಂತ್ರಿಕವಾಗಿ ಪ್ರತಿ ನಮಸ್ಕರಿಸಿ ರಿಸೀವರನ್ನು ಎತ್ತಿಕೊಂಡು ಮನೆಯ ನಂಬರ್ ತಿರುವಿದ, ರಿಸೀವರನ್ನು ಅಮ್ಮಾ ಎತ್ತಿದ್ದರು. +ಆಕೆಯ ಮಾತು ಕೇಳಿಸುತ್ತಲೇ ಹೇಳಿದ“ಅಮ್ಮಾ ನಾನು. +ಒಂದು ನಿಮಿಷ ಕಲ್ಯಾಣಿಗೆ ಕೊಡು”ಬೂತಿನಲ್ಲಿ ಹೊಕ್ಕ ಅವನ ಮಾತನ್ನು ಯಾರೂ ಕೇಳಿಸಿಕೊಳ್ಳುವ ಹಾಗಿರಲಿಲ್ಲ. +ಕಲ್ಯಾಣಿಯ ದನಿ ಕೇಳಿಸಿದಾಗ ಹೇಳಿದ“ಇಲ್ಲಿ ನನ್ನ ಮಿತ್ರನೊಬ್ಬ ಮಡಿದಿದ್ದಾನೆ. +ಶವಸಂಸ್ಕಾರ ನಾಳೆಯೇ ಆಗುವ ಹಾಗಿದೆ. +ನನಗೀ ರಾತ್ರಿ ಬರಲಾಗುವುದಿಲ್ಲವೆಂದು ಅಮ್ಮ, ಅಪ್ಪನಿಗೆ ಹೇಳುತ್ತೀಯಾ” +“ಹೇಳುತ್ತೇನೆ ಅವಸರ ಬೇಡ ನಿಮ್ಮ ಕೆಲಸವನ್ನು ಮುಗಿಸಿಕೊಂಡು ಬನ್ನಿ” ಎಂದ ಕಲ್ಯಾಣಿ ರಿಸೀವರನ್ನು ಕೆಳಗಿಟ್ಟಳು. +ಮಡದಿಯ ನಿರ್ವಿಕಾರ ದನಿಯನ್ನು, ಕೆಲಸಕ್ಕೆ ಬಾರದ ಮಾತುಗಳನ್ನು ತೆಗೆಯದಿರುವುದನ್ನು ಮೆಚ್ಚಿಕೊಳ್ಳುತ್ತಾ ಫೋನ್ ಮಾಡಿದ್ದಕ್ಕೆ ಹಣ ಕೊಡಲು ಹೋದಾಗ ವಿನಯದ ದನಿಯಲ್ಲಿ ಹೇಳಿದ ಬೂತಿನ ಮಾಲಿಕ“ಇರಲಿ ಸ್ವಾಮಿ! +ನೀವು ನಮ್ಮ ಹಳ್ಳಿಗಾಗಿ ಇಷ್ಟು ದುಡಿದಿದ್ದೀರಿ, ನಿಮ್ಮಿಂದ ಹಣದ ಪಡೆಯುವುದೆಂದರೇನು”ಅವನ ಬೆನ್ನು ತಟ್ಟುತ್ತಾ ಹೇಳಿದ ತೇಜಾ. +“ತಗೊ ನೀ ಕಷ್ಟಪಡುತ್ತಿದ್ದಿ ತೊಗೊ, ನಾನು ಬಂಡೇರಹಳ್ಳಿಗಾಗಿ ಏನೂ ಮಾಡಿಲ್ಲ ನನ್ನ ಕರ್ತವ್ಯ ನಾ ನಿಭಾಯಿಸಿದ್ದೇನಷ್ಟೆ”ಮೊದಲಿನ ಅವನ ಕಠಿಣ ಮಾತಿಗೆ ಇಷ್ಟವಿಲ್ಲದಿದ್ದರೂ ಹಣ ತೆಗೆದುಕೊಳ್ಳುತ್ತಿರುವಂತೆ ತೆಗೆದುಕೊಂಡನಾತ. +ಚಿಲ್ಲರೆಯನ್ನು ಮರಳಿ ಪಡೆಯುತ್ತಾ ಕೇಳಿದ ತೇಜಾ“ಹೊಸ ಇನ್ಸ್‌ಪೆಕ್ಟರ್ ಸಾಹೇಬರು ಏನನ್ನುತ್ತಾರೆ” +“ಕಲ್ಲಕ್ಕ ಮತ್ತವರ ತಂಡದವರನ್ನು ನಾಶಮಾಡೇ ಮಾಡುತ್ತೀನಿ ಎಂದು ಶಪಥ ಮಾಡಿ ಬಂದಿದ್ದಾರಂತೆ. +ಸಿಕ್ಕ ಸಿಕ್ಕವರನ್ನೆಲ್ಲಾ ಎಳೆದುಕೊಂಡು ಹೋಗಿ ಪೋಲಿಸ್ ಸ್ಟೇಷನ್‌ನಲ್ಲಿ ತದಕುತ್ತಿದ್ದಾರೆ” ಆ ಇನ್ಸ್‌ಪೆಕ್ಟರ್‌ ಹುಚ್ಚ ಎಂಬಂತಹ ದನಿಯಲ್ಲಿ ಬಂದಿತ್ತವನ ಮಾತು. +ಅವನ ಅಭಿಪ್ರಾಯ ತಿಳಿಯಲು ಕೇಳುವಂತೆ ಕೇಳಿದ“ಅದು ಆಗ ಬಹುದನ್ನುತ್ತೀಯಾ?” +“ಇವನಿಂದ ಏನು ಸರ್!ಪಟ್ಟಣದಿಂದ ಇದ್ದ ಬದ್ದ ಎಲ್ಲಾ ಪೋಲಿಸ್‌ದಳವು ಇಲ್ಲಿ ಬಂದರೆ ಅದು ಸಾಧ್ಯವಾಗದ ಮಾತು” ದಿಟವಾದ ದನಿಯಲ್ಲಿ ಹೇಳಿದನವ. +ವೆಂಕಟನ ಮನೆಯಕಡೆ ನಡೆಯುತ್ತಾ ಇವನಿಗೆ ಕಲ್ಯಾಣಿ ತನ್ನ ಮಡದಿ ಎಂಬುವುದು ಗೊತ್ತಿರಬಹುದೇ ಎಂದುಕೊಂಡ ತೇಜಾ ವೆಂಕಟನ ಶವ ಬರುವುದು ನಾಳೆಯೆಂದು ತಿಳಿದ ಕೆಲವರು ಹೊರಟುಹೋಗಿದ್ದರು. +ಇನ್ನೂ ಕೆಲವರು ಹೋಗಬೇಕೋ ಬೇಡವೋ ಎಂಬ ಪೇಚಿನಲ್ಲಿ ಸಿಕ್ಕಿಹಾಕಿಕೊಂಡಿದ್ದಂತೆ ಕಂಡರು ಇಬ್ಬರು ನಡುವಯಸ್ಕರು ಮತ್ತು ಯುವಕರ ನಡುವೆ ಕುಳಿತಿದ್ದ ತಾತ. +ಅವನು ಬರುತ್ತಿರುವುದು ಕಂಡು ಎಲ್ಲರೂ ಎದ್ದು ನಿಂತರು. +ಅವರೊಡನೆ ನೆಲದ ಮೇಲೆ ಕುಳಿತ ತೇಜಾ, ಸ್ವಲ್ಪ ಹೊತ್ತು ವೆಂಕಟನ ಸುತ್ತೂ ತಿರುಗಿದ ಮಾತು ಬಂಡೇರಹಳ್ಳಿಯ ಹೊಸ ಇನ್ಸ್‌ಪೆಕ್ಟರ್‌ನ ಕಡೆ ತಿರುಗಿತು. +ಆಗಲೇ ಸಾರಾಯಿಖಾನೆಗಳು ಮಾಮೂಲು ಸ್ಥಿತಿಗೆ ಬಂದಿವೆ. +ಲಾಟರಿಯಲ್ಲಿ ಅಂಗಡಿ ವಿಜಯೋತ್ಸಾಹದಿಂದ ತೆರೆಯಲಾಗಿದೆ ಎಂಬ ವಿಷಯ ತಿಳಿಯಿತು. +ಬಹುಬೇಗ ನಾಯಕ್ ಮತ್ತು ಇನ್ಸ್‌ಪೆಕ್ಟರ್ ಆತ್ಮ ಸ್ನೇಹಿತರಾಗಿ ಬಿಟ್ಟಿದ್ದಾರಂತೆ. +ದಿನಾಗಲೂ ರಾತ್ರಿ ಅವರ ಮನೆಯಲ್ಲೇ ಕುಡಿತದ ಪಾರ್ಟಿ ನಡೆಯುತ್ತದೆ. + ವೈನ್‌ಷಾಪ್ ನಿಧಾನವಾಗಿ ಆರಂಭವಾಗುತ್ತಿದೆ ಎಂಬ ಸಂಗತಿಗಳೂ ತಿಳಿದವು. +ವೆಂಕಟ್‌ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. +ಅದು ನಾಯಕ್ ಮಾಡಿಸಿದ ಕೆಲಸವೆ ಎಂದು ಅಲ್ಲಿಯವರೆಲ್ಲ ಖಡಾಖಂಡಿತವಾಗಿ ಹೇಳಿದರು. +ಹಾಗೇ ಮಾತುಗಳಲ್ಲಿ ಸಮಯ ಸರಿಯತೊಡಗಿತು. +ಇಬ್ಬರು ಯುವಕರು ಹೋಗಿ ಎಲ್ಲಿಂದಲೋ ಕಾಫಿ ಮಾಡಿ ತಂದರು. +ತಾತಾ ತೇಜನಿಗೆ ‘ಊಟ ಮಾಡುತ್ತೀಯಾ’ ಎಂದು ಕೇಳಿದ. +ಅದಕ್ಕೆ ಬೇಡವೆಂದನವ. +ಕಲ್ಲಕ್ಕನನ್ನು ಹಿಡಿಯುವ ಭರದಲ್ಲಿ ಆಗಲೇ ಆ ಇನ್ಸ್‌ಪೆಕ್ಟರ್ ಇಬ್ಬರು ಯುವಕರನ್ನು ಅನುಮಾನದ ಮೇಲೆ ಹಿಡಿದುಕೊಂಡು ಹೋಗಿ ಪಕ್ಕೆ ಮುರಿಯುವಂತೆ ಹಿಂಸೆ ಕೊಟ್ಟಿದ್ದಾನೆಂದು ಅವರಿನ್ನೂ ಹಾಸಿಗೆಯಿಂದ ಎದ್ದಿಲ್ಲವೆಂದು ಹೇಳಿದ ತಾತ. +ಹಾಗೇ ಮಾತುಗಳಲ್ಲಿ ರಾತ್ರಿ ಕಳೆಯಿತು. +ಮಧ್ಯಾಹ್ನವಾಗುತ್ತಿದ್ದಾಗ ವೆಂಕಟನ ಬಂಧು ಬಳಗದವರು ಒಂದು ವ್ಯಾನಿನಲ್ಲಿ ಶವವನ್ನು ಹಾಕಿಕೊಂಡು ತಂದರು. +ಅವನ ಶವ ಬಂದಿದೆಯೆಂದು ತಿಳಿದ ಕೂಡಲೇ ಹಳ್ಳಿಯ ಬಹುಪಾಲು ಜನ ಅಲ್ಲಿಗೆ ಬಂದರು. +ಹೆಂಗಸರ, ಗಂಡಸರ ರೋಧನ ಹೆಚ್ಚಾಯಿತು. +ವೆಂಕಟನ ಮುಖವನ್ನು ನೋಡಿದ ತೇಜ ಅವನು ಬದುಕಿನ, ಯೌವ್ವನದ ಉತ್ಸಾಹ ಯಾವುದೂ ಬೇಡವೆಂಬಂತೆ ಮಲಗಿದ್ದ. +ಡೋಲಿನ ಸದ್ದಿನೊಡನೆ ಕುಣಿತದೊಡನೆ ವೆಂಕಟನ ಶವಯಾತ್ರೆ ಸ್ಮಶಾನಕ್ಕೆ ಸಾಗಿತು. +ಅವನನ್ನು ಮಣ್ಣು ಮಾಡುವ ಕೆಲಸ ಮುಗಿದ ಮೇಲೆ ತಾತನಿಗೆ ಮತ್ತು ಯುವಕರಿಗೆ ಹೇಳಿ ಬಂಡೇರಹಳ್ಳಿಯ ದಾರಿ ಹಿಡಿದ ತೇಜಾ ಕಲ್ಯಾಣಿ ಇನ್ನೂ ಕಾಡಿನಲ್ಲೇ ಇದ್ದಿದ್ದರೆ ಇದಕ್ಕೆ ಸರಿಯಾದ ನ್ಯಾಯ ಒದಗಿಸುತ್ತಿದ್ದಳೇನೋ ಎಂದುಕೊಂಡ ತೇಜಾ. +ಮರುದಿನ ಹಾಡುಹಗಲಿನಲ್ಲಿ ಬಂದ ಇಬ್ಬರು ನಾಯಕನನ್ನು ಮುಗಿಸಿ ಹೊರಟು ಹೋಗಿದ್ದರು. +ಗುಂಡಿನ ನಾದ ಬಹುದೂರದವರೆಗೆ ಹರಡಿದರೂ ಯಾರೂ ಏನಾಗುತ್ತಿದೆ ಎಂಬುವುದು ನೋಡಲು ಹೊರಬರಲಿಲ್ಲ. +ಅವರಿಗೆಲ್ಲಾ ಏನಾಗುತ್ತಿದೆ ಎಂಬುವುದು ಚೆನ್ನಾಗಿ ಗೊತ್ತಿತ್ತು. +ಬೇರೆ ಹಳ್ಳಿಗೆ ಹೋದ ಇನ್ಸ್‌ಪೆಕ್ಟರ್ ಜಗದೀಶ ಅರ್ಧಗಂಟೆಯ ನಂತರ ಅಲ್ಲಿ ತನ್ನ ಸಹಾಯಕರೊಡನೆ ಹೋದ, ನಾಯಕನ ಶವ ಶವವಾಗಿ ಕಾಣಲಿಲ್ಲ ಅವನಿಗೆ. +ಅವನು ಕುಡಿದು ಗಾಢನಿದ್ದೆಯಲ್ಲಿರುವಂತೆ ಕಂಡಿತು. +ಒಂದು ಸಲ ಮಾತ್ರ ಶವದ ಮೇಲೆ ಕಣ್ಣಾಡಿಸಿ ಪೋಲೀಸ್ ಸ್ಟೇಷನ್ನಿಗೆ ಬಂದ ಅವನು, ಆ ವಿಷಯವನ್ನು ತನ್ನ ಹಿರಿಯ ಅಧಿಕಾರಿಯರಿಗೆ ತಿಳಿಸಿದ. +ಅದಕ್ಕಿಂತ ಮೊದಲೇ ಕ್ರಾಂತಿಕಾರಿಯರು ಮಾಡಿದ ಪಂಚಾಯತಿ ಪ್ರೆಸಿಡೆಂಟ್‌ನ ಕೊಲೆಯ ಬಗ್ಗೆ ತಿಳಿದ ಪತ್ರಕರ್ತರು ಅಲ್ಲಿಗೆ ಬಂದು ಫೋಟೋಗಳು ಹಿಡಿದು ತಮ್ಮ ವರದಿಯನ್ನು ತಯಾರಿಸಿದ್ದರು. +ಹಳ್ಳಿಗರಿಂದ ಅದಕ್ಕೆ ಕಾರಣವೇನಿರಬಹುದು ಎಂದು ಕೇಳಿದ ಅವರಿಗೆ ಸಿದ್ದಾನಾಯಕನ ವಿರುದ್ಧ ಕೋರ್ಟಿನಲ್ಲಿ ಇದ್ದ ಕೇಸಿನ ವಿಷಯ, ಮುಖ್ಯ ಸಾಕ್ಷಿಯಾದ ವೆಂಕಟನ ಕೊಲೆಯ ವಿಷಯ, ಈಗ ಹೊಸದಾಗಿ ಬಂದಿರುವ ಇನ್ಸ್‌ಪೆಕ್ಟರ್‌ರ ಕ್ರೂರತೆಯ ವಿಷಯ ಎಲ್ಲವನ್ನೂ ಹೇಳಿದರು. +ರಾಮನಗರದಿಂದ ಕಲೆಕ್ಟರ್ ಮತ್ತು ಎಸ್.ಪಿ.ಸಾಹೇಬರು ತಮ್ಮ ತಮ್ಮ ಹಿಂಬಾಲಕರೊಡನೆ ಅಲ್ಲಿಗೆ ಬಂದು ಎಲ್ಲವನ್ನೂ ನೋಡಿದ ಮೇಲೆ ಶವವನ್ನೂ ಅಲ್ಲಿಂದ ಸಾಗಿಸಲಾಯಿತು. +ಇನ್ಸ್ ಪೆಕ್ಟರಿಗೆ ರಾಮನಗರದಿಂದ ಹೆಚ್ಚಿನ ಪೋಲಿಸ್ ದಳವನ್ನು ಕಳುಹಿಸುವ ಆಶ್ವಾಸನೆ ನೀಡಿದರು ಎಸ್.ಪಿ.ಸಾಹೇಬರು. +ಏನೇ ಆಗಲಿ ತಾನು ಕಲ್ಲಕ್ಕನ ದಳವನ್ನು ಮುಗಿಸುವನೆಂದು ಹೇಳಿದ ಇನ್ಸ್‌ಪೆಕ್ಟರ್. +ನಾಯಕನೆ ತನ್ನ ಶಿಫಾರಸಿನ ಮೇಲೆ ತೇಜಾನ ಸ್ಥಾನದಲ್ಲಿ ಜಗದೀಶನನ್ನು ವರ್ಗಾವಣೆ ಮಾಡಿಸಿದ್ದ. +ಏನೇ ಆಗಲಿ ತೇಜಾನ ಮೇಲಿನ ತನ್ನ ಸೇಡನ್ನು ತೀರಿಸಿಕೊಳ್ಳುವುದು ಅವನ ಹಠವಾಗಿತ್ತು. +ತನ್ನ ಹಿತೈಷಿಯ ಕೊಲೆಯಾದ ಮೇಲೆ ಸೇಡು ತೀರಿಸಿಕೊಳ್ಳುವ ಭಾರ ಇನ್ಸ್ ಪೆಕ್ಟರ ಜಗದೀಶನ ಮೇಲೆ ವರ್ಗವಾಗಿತ್ತು. +ಅವನಿಗೆ ಕ್ರಾಂತಿ, ಕ್ರಾಂತಿಕಾರಿಯರ ಮನೋಭಾವ ಅರಿಯುವ ಇಷ್ಟವಿಲ್ಲ. +ಅವರನ್ನು ಅಟ್ಟಿಸಿಕೊಂಡು ಹೋಗಿ ಮುಗಿಸುವುದು ಬಹು ಸುಲಭವೆಂದು ಭಾವಿಸಿದ್ದನವ. +ರಾಮನಗರದಿಂದ ಬಂದ ಎಲ್ಲಾ ಹಿರಿ ಅಧಿಕಾರಿಯರೂ ಹೋಗುತ್ತಿದ್ದಂತೆ ಅವನು ಮಾಡಿದ ಮೊದಲ ಕೆಲಸವೆಂದರೆ, ಒಬ್ಬ ಬಡಕಲು ಪೇದೆಯನ್ನು ಯಾವುದಾದರೂ ಉಪಾಯ ಮಾಡಿ ದೇವನಹಳ್ಳಿಯಲ್ಲಿರುವ ತೇಜಾನ ಮನೆಯ ಮೇಲೆ ಕಣ್ಣಿಡಲು ಕಳುಹಿಸಿದ್ದು. +ಅಡ್ಡ ಪಂಚೆ, ಜುಬ್ಬಾ ತೊಟ್ಟು ಕಾಲಿಗೆ ಹವಾಯಿ ಚಪ್ಪಲಿ ಮೆಟ್ಟಿದ್ದ ಆ ಆಸಾಮಿ ದೇವನಹಳ್ಳಿಯ ಬಸ್‌ಸ್ಟಾಂಡ್‌ನಲ್ಲಿಳಿದು, ಅಲ್ಲಿ ಬಡಕಲು ಪಟವಾರಿಯವರ ಮನೆ ಯಾವುದೆಂದು ತಿಳಿದುಕೊಂಡ ಯಾರಿಗೂ ಗೊತ್ತಾಗದ ಹಾಗೆ ಆ ಮನೆಯ ಮೇಲೆ ಕಣ್ಣಿಡುವುದು ಹೇಗೆ ಎಂಬುವದೇ ಒಂದು ಸಮಸ್ಯೆಯಾಯಿತು ಪತ್ತೇದಾರನಿಗೆ. +ಅಲ್ಲಿದ್ದ ಹೋಟಲಿನಲ್ಲಿ ಕಾಫಿ ಕುಡಿಯುತ್ತಾ ಅದರ ಬಗ್ಗೆ ಯೋಚಿಸತೊಡಗಿದ. +ಹೋಟಲನ್ನು ಎರಡು ಹೆಜ್ಜೆ ದಾಟಿ ನೋಡಿದರೆ ಪಟವಾರಿಯವರ ಬಂಗಲೆ ಸ್ಪಷ್ಟವಾಗಿ ಕಾಣುತ್ತದೆ. +ಅಲ್ಲಿ ಕೆಲಸ ಮಾಡುತ್ತಾ ಇನ್ಸ್‌ಪೆಕ್ಟರ್‌ ಸಾಹೇಬರು ತನಗೊಪ್ಪಿಸಿದ ಕೆಲಸವನ್ನೂ ಕೂಡ ಮಾಡಬಹುದೆಂದುಕೊಂಡ. +ಇನ್ಸ್‌ಪೆಕ್ಟರ್‌ ಜಗದೀಶನಿಗಾಗಲಿ ಆ ಬಡಪಾಯಿ ಪತ್ತೇದಾರಿ ಕೆಲಸ ಮಾಡಲು ಬಂದ ಕಾನ್ಸ್ ಟೇಬಲ್ಲನಿಗಾಗಲಿ ಅಲ್ಲಿನ ಪ್ರತಿವ್ಯಕ್ತಿ ಪಟವಾರಿಯವರ ಪತ್ತೇದಾರರೆಂಬುವುದು ಗೊತ್ತಿರಲಿಲ್ಲ. +ಸ್ವಲ್ಪ ಹೊತ್ತು ಅತ್ತ ಇತ್ತ ಓಡಾಡಿದ ಆ ಬಡಕಲು ಆಸಾಮಿ ಹೋಟೆಲಿಗೆ ಬಂದು ತಾನು ದೂರದ ಊರಿನವನೆಂದು ಹಣವಿಲ್ಲವೆಂದು ಸಪ್ಲೆಯರ್ ಕೆಲಸ ಕೊಡಬೇಕೆಂದು ಕೇಳಿದ. +ಅಲ್ಲಿಂದ ಆರಂಭವಾಯಿತು ಯಜಮಾನನ ಪ್ರಶ್ನೆ, ಯಾವ ಊರಿನವನು? +ಇಲ್ಲೇಕೆ ಬಂದೆ?ಇತ್ಯಾದಿ… +ಅವನನ್ನು ದೇವನಹಳ್ಳಿಯಲ್ಲಿ ಅಡಿ ಇಟ್ಟಾಗಿನಿಂದ ಗಮನಿಸುತ್ತಿದ್ದ ಐವರು ಅವನನ್ನು ಸುತ್ತುವರೆದರು. +ಇಂತಹ ಪರಿಸ್ಥಿತಿ ಎದುರಾಗಬಹುದೆಂದು ಅವನು ಊಹಿಸಿರಲಿಲ್ಲ. +ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಬರಲಾರಂಭಿಸಿದಾಗ ಅವನದಕ್ಕೆ ಸರಿಯಾದ ಉತ್ತರ ಕೊಡದಾದ. +ಅವನು ಹೇಳುತ್ತಿರುವುದೆಲ್ಲಾ ಸುಳ್ಳು ಎಂದರಿತ ಅವರು ಅವನ ರಟ್ಟೆ ಹಿಡಿದು ದೂರ ಕೊಂಡೊಯ್ದು ಪ್ರಶ್ನಿಸಲಾರಂಭಿಸಿದರು. +ನಿಜ ಹೇಳದಿದ್ದರೆ ಕೊಂದು ಇಲ್ಲೇ ಹೂಳಿಟ್ಟುಬಿಡುತ್ತೇವೆ ಎಂಬಂತಹ ಮಾತುಗಳಿಂದ ಅವರು ಹೆದರಿಸಿದಾಗ ನಿಜವನ್ನು ಹೇಳಿ ಪ್ರಾಣ ಸಹಿತ ಪಾರಾಗುವುದೇ ಉತ್ತಮವೆನಿಸಿತವನಿಗೆ. +ಇನ್ಸ್‌ಪೆಕ್ಟರ್ ಸಾಹೇಬರು ಹೇಳಿದ ಮಾತನ್ನು ಚಾಚೂತಪ್ಪದೇ ಹೇಳಿಬಿಟ್ಟ. +ಅವನಿಗೆ ಒಂದು ಕಾಫಿಯನ್ನು ಕುಡಿಸಿ ಕಳುಹಿಸಿಬಿಟ್ಟರು ಹಳ್ಳಿಗರು. +ಅವರಿಗೆಲ್ಲಾ ಕಲ್ಲಕ್ಕ ಅಲ್ಲಿದ್ದಾಳೆಂಬ ವಿಷಯ ತಿಳಿದಿತ್ತು. +ಬಾಯಿಯಿಂದ ಬಾಯಿಗೆ ಹರಡಿದ ಆ ವಿಷಯ ನೋಡುನೋಡುತ್ತಿದ್ದಂತೆ ಅಕ್ಕಪಕ್ಕದ ಎಲ್ಲಾ ಊರುಗಳ ಜನರಿಗೆ ಗೊತ್ತಾಗಿಹೋಯಿತು. +ತನ್ನ ಪತ್ತೇದಾರ ಆ ಸುದ್ದಿ ತರುವ ಬಹಳ ಮೊದಲೇ ಬಂಡೇರಹಳ್ಳಿಯವರಿಗೆ ಆ ವಿಷಯ ತಿಳಿದುಹೋಗಿತ್ತೆಂಬುವುದು ಇನ್ಸ್‌ಪೆಕ್ಟರ್ ಜಗದೀಶನಿಗೆ ಊಹಿಸಲು ಕಷ್ಟವಾದ ಸಂಗತಿಯಾಗಿತ್ತು. +ತೇಜಾನಿಗೆ ಸಿದ್ಧಾನಾಯಕ್ ಕೊಲೆಯಾದ ವಿಷಯ ಮಾತ್ರ ಗೊತ್ತಾಗಿತ್ತು. +ಅದು ಕಲ್ಯಾಣಿಯ ಕೆಲಸವೇ ಎಂದು ಯಾರೂ ಬಿಡಿಸಿ ಹೇಳಬೇಕಾಗಿರಲಿಲ್ಲ. +ಮೊದಲೇ ಆದೇಶ ಕೊಟ್ಟು ಬಂದಿರಬಹುದೇ ಎಂದವನು ಯೋಚಿಸುತ್ತಾ ಆ ವಿಷಯವನ್ನವಳಿಗೆ ಹೇಳಿದ್ದ “ಗೊತ್ತು” ಎಂದಿದ್ದಳು ಕಲ್ಯಾಣಿ. +ಅವಳ ದನಿ ನಿರ್ವಿಕಾರವಾಗಿತ್ತು. +“ನೀನಿಲ್ಲೇ ಮಲಗಿದ್ದಿ ನಿನಗೆ ಹೇಗೆ ಗೊತ್ತು!” ಅಚ್ಚರಿಯ ದನಿಯಲ್ಲಿ ಕೇಳಿದ್ದ ತೇಜಾ“ನಾನೆಲ್ಲೇ ಇರಲಿ ನನಗೆಲ್ಲಾ ಗೊತ್ತಾಗುತ್ತದೆ ಮತ್ತೆ ಅಂತಹದೇ ದನಿಯಲ್ಲಿ ಮಾತಾಡಿದ್ದಳು. +ತಮ್ಮ ಆಳು ಭೀಮಾನೇ ಹೇಳಿರಬೇಕು. +ಅವನೂ ಇವರ ಸಹಾನುಭೂತಿ ಪರನೇ ಎಂದವನು ಯೋಚಿಸುತ್ತಿದ್ದಾಗ ಹೇಳಿದ್ದಳು ಕಲ್ಯಾಣಿ. +“ನಿನ್ನೊಡನೆ ಆ ಇನ್ಸ್‌ಪೆಕ್ಟರ್‌ ಅವಮಾನಕರವಾಗಿ ಮಾತಾಡಿದ ನಲ್ಲವೇ?”ಅವಳ ಈ ಪ್ರಶ್ನೆಗೆ ಅವನನ್ನು ಆಶ್ಚರ್ಯದ ಪರಮಾವಧಿಗೆ ಮುಟ್ಟಿಸಿತು. +ಅವನಿಗೆ ಏನು ಹೇಳಬೇಕೋ ತೋಚಲಿಲ್ಲ. +ಕೆಲಕ್ಷಣಗಳು ಬಿಟ್ಟು ಮತ್ತೆ ಕಲ್ಯಾಣಿಯೇ ಮಾತಾಡಿದಳು. +“ಒಳ್ಳೆಯ ಕೆಲಸಗಳನ್ನು ಮಾಡು, ಜನರ ಪ್ರೀತಿ ವಿಶ್ವಾಸ ಸಂಪಾದಿಸು ನಿನಗೂ ಎಲ್ಲಾ ಗೊತ್ತಾಗುತ್ತದೆ. +ಸುಮ್ಮನೆ ತಲೆ ಕೆಡಿಸಿಕೊಳ್ಳಬೇಡ, ನಡಿ ಊಟಮಾಡುವ” ಎನ್ನುತ್ತಾ ಮಂಚದಿಂದ ಎದ್ದಳು ಕಲ್ಯಾಣಿ. +ಅವಳ ಮುಖದಲ್ಲಿ ನೋವನ್ನು ಗುರುತಿಸಿದ ತೇಜಾ ಎಲ್ಲವನ್ನೂ ಮರೆತು ಕೇಳಿದ. +“ಅಂದರೆ ನಾ ಒಳ್ಳೆಯವನಲ್ಲವೇ?” +“ಬಹಳ ಒಳ್ಳೆಯವನು ಇಲ್ಲದಿದ್ದರೆ ನೀ ನನ್ನ ಪತಿಯಾಗುತ್ತಿರಲಿಲ್ಲ… ನಡಿ” ಎಂದವಳು ಎದ್ದಾಗ ಊಟಕ್ಕೆ ಕರೆದೊಯ್ಯಲು ಬಂದಿದ್ದಳು ಅಮ್ಮಾ. +ಮನೆಯಲ್ಲಿನ ನಾಲ್ವರೂ ಕಲೆತು ಊಟ ಮಾಡಿಯಾಗಿತ್ತು. +ಅಮ್ಮ ಅವಳೊಡನೆ ಮಾತಾಡುತ್ತಾ ಕುಳಿತಿದ್ದರು, ತಂದೆ ಮಗ ಮುಂದಿನ ಕೋಣೆಯಲ್ಲಿ ಕುಳಿತು ಯಾವುದೋ ವಿಷಯದ ಬಗ್ಗೆ ಚರ್ಚೆ ಚರ್ಚೆಯಲ್ಲಿ ತೊಡಗಿದ್ದರು. +ಹೊರಗೆ ಬಹಳ ಗದ್ದಲ ಕೇಳಿಬರಲಾರಂಭಿಸಿದಾಗ ಬಾಗಿಲು ತೆಗೆದ ತೇಜಾ, ಅವನಿಗೆ ತನ್ನ ಕಣ್ಣನ್ನು ತಾನೇ ನಂಬಲಾಗಲಿಲ್ಲ. +ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ತಂಡೋಪ ಹಿಂಡು ಜನ ನರೆದಿದ್ದರು. +ಹೊರ ಬಂದ ತೇಜಾ ತನ್ನ ಮನೆಯ ಒಂದು ಸುತ್ತು ಹಾಕಿದ. +ನಾಲ್ಕೂ ಕಡೆಯಿಂದ ಮನೆಯನ್ನು ಸುತ್ತುವರೆದಿತ್ತು ಜನಸಮೂಹ. +ಒಮ್ಮೆಲೆ ಅವನಿಗೆ ಎಲ್ಲವೂ ಅರ್ಥವಾದಂತಾಯಿತು. +ಮನೆಯೊಳ ಬಂದು ಅಮ್ಮ ಕುಳಿತಿರುವುದನ್ನು ಲೆಕ್ಕಿಸದೇ ಕೇಳಿದ“ಹೊರಗೇನು ನಡೆಯುತ್ತಿದೆ ನಿನಗೆ ಗೊತ್ತೆ?” +“ಇಲ್ಲ, ಆದರೆ ಊಹಿಸಬಲ್ಲೆ. +ಜಗದೀಶ ನಿನ್ನ ಅರೆಸ್ಟ್ ಮಾಡಲು ಬರುತ್ತಿರಬಹುದು. +ನಾನಿಲ್ಲಿರುವೆನೆಂಬುದು ಅವರಿಗೆ ಗೊತ್ತಿಲ್ಲ. +ಅದನ್ನು ಮಾತ್ರ ಖಚಿತವಾಗಿ ಹೇಳಬಲ್ಲೆ” ಸ್ವಲ್ಪ ಬಳಲಿದ ದನಿಯಲ್ಲಿ ಹೇಳಿದಳು ಕಲ್ಯಾಣಿ. +“ನೀನವಳನ್ನು ಗೋಳು ಹೊಯ್ದುಕೊಳ್ಳಬೇಡ ಹೋಗೋ! +ಏನಾಗುವುದಿದ್ದರೆ ಅದಾಗುತ್ತದೆ ಹೋಗು” ಯಾವುದನ್ನು ಲೆಕ್ಕಿಸದವಳಂತೆ ಹೇಳಿದಳವನ ಅಮ್ಮ. +ಬಹಳ ಗಾಬರಿ ಹೊಂದಿದ್ದ ತೇಜಾ ಕೆಳಗೆ ಬಂದು ಕುಶಾಲನಿಗೆ ಫೋನ್ ಮಾಡಿ ವಿಷಯ ತಿಳಿಸಿದ. +ತಾನು ಇನ್ನೇನು ಮಾಡಲು ಸಾಧ್ಯವೆಂದು ಯೋಚಿಸುತ್ತಾ ಅಪ್ಪನ ಬದಿಗೆ ಬಂದು ಕುಳಿತ. +ಅವರು ಅಲ್ಲಿ ನೆರೆಯುತ್ತಿರುವ ಜನಜಂಗುಳಿಯ ಗದ್ದಲದ ಸದ್ದು ಕೇಳಿ ಬರಲಾರಂಭಿಸಿದಾಗಿನಿಂದ ಕುಳಿತ ಸ್ಥಳದಿಂದ ಕದಲಿರಲಿಲ್ಲ. +ಮುಖ ಗಂಟಿಕ್ಕಿ ಯಾವುದೋ ಗಂಭೀರ ಯೋಚನೆಯಲ್ಲಿ ಲೀನರಾಗಿರುವಂತೆ ಕಂಡುಬಂದರು. +ಅವನು ಅವರ ಕಡೆಯೇ ನೋಡುತ್ತಾ ಏನೋ ಹೇಳಬೇಕೆಂದುಕೊಂಡಾಗ ಹೇಳಿದರವರು“ನೀ ಹೋಗು ಜನರೊಡನೆ ಮಾತಾಡು, ಪೋಲಿಸಿನವರು ಬಂದರೆ ಅವರಿಗೇನು ಬೇಕೆಂದು ಕೇಳು”ಮೊದಲಿದ್ದ ಕಡೆಯೇ ಇತ್ತು ನೋಟ. +ಮುಖಭಾವ ಬದಲಾಗಿರಲಿಲ್ಲ. +ನಿರ್ವಿಕಾರ ದನಿಯಲ್ಲಿ ಬಂದಿತ್ತವರ ಮಾತು. +ಒಮ್ಮೆಲೇ ಅವರು ಬದಲಾಗಿಬಿಟ್ಟಂತೆ ಕಂಡರು ತೇಜಾನಿಗೆ ಇನ್ನೊಂದು ಕ್ಷಣ ಅವರ ಕಡೆ ನೋಡಿ ಲಗುಬಗೆಯಿಂದ ಹೊರಗೋಡಿದ. +ಸೊಣಕಲು ವ್ಯಕ್ತಿ ಬಂದು ತನಗಾದ ಗತಿಯ ಮಾಹಿತಿ ಕೊಡುತ್ತಲೇ ಕೋಪಾ ತಾಳಲಾರದೇ ಅವನನ್ನು ಬಲವಾಗಿ ಒದ್ದ. +ಅದರ ರಭಸಕ್ಕೆ ಅವನು ಸ್ವಲ್ಪ ದೂರ ಹೋಗಿ ಗೊಡೆಗೊರಗಿ ನಿಂತ. +ತಕ್ಷಣ ನಿರ್ಣಯಕ್ಕೆ ಬಂದು ಎಸ್.ಐ.ಎಚ್.ಸಿ. ಮತ್ತಿಬ್ಬರು ಪೇದೆಯರನ್ನು ಜೀಪಿನಲ್ಲಿ ಕೂಡಿಸಿಕೊಂಡು ವೇಗವಾಗಿ ದೇವನಹಳ್ಳಿಯ ಕಡೆ ಸಾಗಿದ. +ಅರ್ಧ ದಾರಿ ಕ್ರಮಿಸುವುದರಲ್ಲಿ ಅತ್ತ ಕಡೆ ಲಾರಿಯಲ್ಲಿ ತುಂಬಿಹೋಗುತ್ತಿದ್ದ ಜನ ಕಾಣಿಸಿದರು. +ಒಂದು ಲಾರಿಯಲ್ಲ, ಲಾರಿಯ ಹಿಂದೆ ಲಾರಿ, ಯಾವುದೋ ಮಹಾನಾಯಕನ ಭಾಷಣ ಕೇಳಲು ಹೋಗುತ್ತಿದ್ದಂತೆ ಅವರಲ್ಲಿ ತುಂಬಿದ್ದ ಜನ. +ಅದನ್ನು ನೋಡುತ್ತಾ ಜೀಪಿನ ವೇಗ ಇನ್ನೂ ನಿಧಾನಗೊಳಿಸಿದ. +“ಅಲ್ಲಿ ಏನೋ ಗದ್ದಲವಾಗುತ್ತಿದ್ದ ಹಾಗಿದೆ ಸರ್!” ಸ್ವಲ್ಪ ಭಯದ ದನಿಯಲ್ಲಿಯೇ ಹೇಳಿದ ಎಸ್.ಪಿ. +ಜೀಪಿಗೇ ಅಂಟಿದ ವೈರ್‌ಲೆಸ್ ಏನೇನೋ ಹೇಳುತ್ತಿತ್ತು. +ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ ಅವರು. +ಆ ಗದ್ದಲ ನೋಡಿದ ಮೇಲೆ ಅವರ ನೆನಪಾಗಿ ಪಕ್ಕದಲ್ಲಿ ಕುಳಿತಿರುವವನಿಗೆ ಎಸ್.ಐ.ನಿಗೆ ಇದೇ ಮೆಸೇಜನ್ನು ರಾಮನಗರಕ್ಕೆ ಕಳುಹಿಸುವಂತೆ ಹೇಳಿದ ಬಂಡೇರಹಳ್ಳಿಯ ಇನ್ಸ್‌ಪೆಕ್ಟರ್‌ ಜಗದೀಶ. +ರಾಮನಗರದ ಪೋಲೀಸ್ ಮುಖ್ಯಾಲಯದಲ್ಲಿ ಎರಡು ಬಾಂಬು ಸ್ಫೋಟಗಳಾದವು. +ಭಯಾತಿರೇಕದಿಂದ ಅಲ್ಲಿದ್ದ ಪೋಲಿಸಿನವರೆಲ್ಲಾ ದಿಕ್ಕಾಪಾಲಾಗಿ ಓಡಿದರು. +ತಮ್ಮ ವಾಹನದ ಕಡೆ ಓಡುತ್ತಿದ್ದ ಎಸ್.ಪಿ. ಸಾಹೇಬರ ಮೇಲೆ ಗುಂಡಿನ ಸುರಿಮಳೆಯಾಯಿತು. +ಅವರು ತಮ್ಮ ವಾಹನದ ಮೇಲೆ ಕೈಹಾಕಿ ಪ್ರಾಣ ನೀಗಿದರು. +ಕಲ್ಲಕ್ಕನನ್ನು ಕೊಲ್ಲಲು ಪೋಲೀಸ್‌ದಳ ಸುತ್ತುವರಿದಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಅಲ್ಲಿ ಎಲ್ಲ ಅಂಗಡಿ ಕಾರ್ಯಾಲಯಗಳು ತಮಷ್ಟಕ್ಕೇ ತಾವೇ ಮುಚ್ಚಿಕೊಂಡವು. +ಎಸ್.ಪಿ.ಯವರಿಗಾದ ಗತಿಯ ವಿಷಯ ತಿಳಿದ ಕಲೆಕ್ಟರ್ ಸಾಹೇಬರು ತಮ್ಮ ಕಾರ್ಯಾಲಯ ಬಿಟ್ಟು ಮಿತ್ರನೊಬ್ಬನ ಮನೆಯಲ್ಲಿ ಹೋಗಿ ಅಡಗಿಕೊಂಡು ಅಲ್ಲಿಂದಲೇ ಪಟ್ಟಣಕ್ಕೆ ಫೋನ್ ಮಾಡಿ ವಿಷಯ ತಿಳಿಸಿದರು. +ಬರಿದಾದ ಕಲೆಕ್ಟರ್‌ ಕಾರ್ಯಾಲಯದ ಕಟ್ಟಡದಲ್ಲಿ ಎರಡು ಭಯಂಕರ ಸ್ಫೋಟಗಳಾದವು. +ಆ ಕಟ್ಟಡ ಅವಶೇಷವಿಲ್ಲದಂತೆ ನೆಲಕ್ಕೆ ಕುಸಿಯಿತು. +ಪಟ್ಟಣದಲ್ಲೂ ಕಲ್ಲಕ್ಕನನ್ನು ಪೋಲಿಸಿನವರು ಸುತ್ತುವರೆದ ವಿಷಯ ಎಲ್ಲಾ ಕಡೆ ಬಿರುಗಾಳಿಯಂತೆ ಹರಡಿತು. +ಅಲ್ಲಿನ ಅಂಗಡಿಗಳು ಯಾರ ಬಲವಂತವೂ ಇಲ್ಲದೇ ಮುಚ್ಚಿಕೊಂಡರೆ ಮಿಕ್ಕವನ್ನು ಕಲ್ಯಾಣಿಯ ವಿಚಾರಧಾರ ಯುಳ್ಳವರು, ಅವಳ ಪ್ರೀತಿಯ ಸಹಾನುಭೂತಿ ಹೊಂದಿದ್ದವರು ಮುಚ್ಚಿಸಿದರು. +ಕಲ್ಲಕ್ಕನಿಗೆ ಏನೂ ಆಗಬಾರದ್ದು ಏನಾದರೂ ಆದರೆ ಇಡೀ ರಾಜ್ಯವೇ ಬೆಂಕಿಯ ಜ್ವಾಲೆಯಾಗುವುದೆಂಬ ನಿನಾದಗಳನ್ನು ಕೂಗುತ್ತಾ ದೊಡ್ಡ ಮೆರವಣಿಗೆಯೊಂದು ಮುಖ್ಯಮಂತ್ರಿಯವರ ನಿವಾಸದ ಕಡೆ ಹೊರಟಿತು. +ಇದಕ್ಕಿಂತ ಒಳ್ಳೆಯ ಅವಕಾಶ ಸಿಗುವುದಿಲ್ಲವೆಂಬಂತ ಟಿ.ವಿ.ಯವರು ನಡೆಯುತ್ತಿರುವದನ್ನೆಲ್ಲಾ ಆಗಿಂದಾಗ ಪ್ರಸಾರ ಮಾಡಲಾರಂಭಿಸಿದರು. +ಹಲವು ಚಾನಲ್‌ನವರು ಈ ಸುವರ್ಣಾವಕಾಶ ಬಿಡಬಾರದೆಂಬಂತೆ ಬಂಡೇರಹಳ್ಳಿಯ ಕಡೆ ತಮ್ಮ ಎಲ್ಲಾ ಉಪಕರಣಗಳೊಂದಿಗೆ ಓಡಿದರು. +ನಿವೃತ್ತರಾದ ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವರನ್ನು ಕೂಡಲೇ ಕರೆಸಿಕೊಂಡರು ಸಿ.ಎಂ.ಸಾಹೇಬರು. +ಆಗಲೇ ಅಲ್ಲಿಗೆ ಬಂದಿದ್ದ ಕಮೀಶನರರು ಅವರನ್ನು ಸೇರಿಕೊಂಡರು. +ಕೇವಲ ಹದಿನೈದು ನಿಮಿಷದ ಮಾತುಕತೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. +ಸ್ಥಿತಿಯನ್ನು ಹದ್ದುಬಸ್ತಿಗೆ ತರುವ ಎಲ್ಲಾ ಜವಾಬ್ದಾರಿಯನ್ನು ನಿವೃತ್ತ ಪೋಲಿಸ್ ಅಧಿಕಾರಿಗೆ ವಹಿಸಿದರು ಸಿ.ಎಂ.ಸಾಹೇಬರು. +ಅವರು ಹೇಳಿದಂತೆ ನಡೆದುಕೊಳ್ಳಬೇಕೆಂದು ಕಮೀಷನರರಿಗೆ ಅಜ್ಞಾಪಿಸಿದರು. +ವಿಷಯ ತಿಳಿದ ಕೂಡಲೇ ಕುಶಾಲನ ಜೀಪು ದೇವನಹಳ್ಳಿಯ ಕಡೆ ಓಡತೊಡಗಿತು. +ಇನ್ಸ್‌ಪೆಕ್ಟರ್‌ ಜಗದೀಶನ ಕರೆಗೆ ರಾಮನಗರ ಪೋಲಿಸ್ ಮುಖ್ಯಾಲಯದಿಂದ ಯಾವ ಉತ್ತರವೂ ಬರಲಿಲ್ಲ. +ಅಲ್ಲೀಗ ಯಾರೂ ಇಲ್ಲ ಎಂಬುವುದು ಅವನು ಊಹಿಸುವುದೂ ಕಷ್ಟವಾಯಿತು. +ಸುಮಾರು ಹದಿನೈದು ನಿಮಿಷದ ನಂತರ ಪೋಲಿಸಿನವರಿಂದ ತುಂಬಿದ ಎರಡು ವ್ಯಾನುಗಳು ಬಂಡೇರಹಳ್ಳಿ ಕಡೆ ಹೋಗುತ್ತಿದ್ದಾಗ ಅದನ್ನವನು ಅನುಸರಿಸಿದ. +ಹೊರಗೆ ಬಂದ ತೇಜ ಕ್ಷಣಕ್ಷಣಕ್ಕೂ ಬೆಳೆಯುತ್ತಿರುವ ಜನಸಮೂಹವನ್ನು ನೋಡಿ ದಂಗಾದ. +ಅವರೊಡನೆ ಮಾತಾಡಲು ಹತ್ತಿರ ಬಂದಾಗ“ನೀವು ಮನೆಯಲ್ಲೇ ಇರಿ” ಎಂದು ಕೂಗಿದ ಒಬ್ಬ. +ಅದಕ್ಕೆ ಅಲ್ಲಿದ್ದ ಎಲ್ಲರ ಕಂಠಗಳೂ ತಮ್ಮ ದನಿಯನ್ನು ಸೇರಿಸಿದವು. +ಬಾಗಿಲಿಗೆ ಬಂದಿದ್ದ ಪಟವಾರಿಯವರು ಇದನ್ನು ನೋಡಿದರು. +ಹಿಂದೆ ಅವರು ಕೈ ಮಾಡುತ್ತಿದ್ದಂತೆ ಒಂದು ಮೈಕನ್ನು ತಂದು ಅವರ ಕೈಗೆ ಕೊಟ್ಟ ಒಬ್ಬ. +ಅವರ ಮೂಲಕ ಅವರು ಹೇಳಿದರು. +“ನಾನು ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿದ ರಾಮಚಂದರ್ ಪಟವಾರಿ ದಯವಿಟ್ಟು ಎಲ್ಲರೂ ಶಾಂತರಾಗಿ ನನ್ನ ಮಾತು ಕೇಳಿ”ಅದನ್ನು ನೋಡಿ ತೇಜಾನಿಗೆ ಎಲ್ಲಿಲ್ಲದ ಆಶ್ಚರ್ಯ. +ಅಪ್ಪ ಇಂತಹದನ್ನು ಮೊದಲೇ ನಿರೀಕ್ಷಿಸಿದ್ದರೆ, ಅವನ ಯೋಚನೆ ಮುಂದುವರೆಯದಂತೆ ಧ್ವನಿವರ್ಧಕದ ಮೂಲಕ ತಮ್ಮ ಪ್ರಭಾವಯುಕ್ತ ಮಾತನ್ನು ಮುಂದುವರೆಸಿದರು. +“ಯಾರೂ ಎಂತಹ ಗದ್ದಲವೂ ಮಾಡಬಾರದು. +ಪೋಲಿಸಿನವರ ಮೇಲೆ ಕೈ ಎತ್ತಬಾರದು ಯಾವ ಪೋಲಿಸ್ ಅಧಿಕಾರಿಯಾಗಲಿ, ಇನ್ನಾರೇ ಆಗಲಿ ನನ್ನೊಡನೆ ಮಾತಾಡುವುದಿದ್ದರೆ ಮೊದಲು ಧ್ವನಿವರ್ಧಕ ಮೂಲಕ ಮಾತಾಡಲು ಹೇಳಿ.” +“ಕಲ್ಲಕ್ಕ ಹೇಗಿದ್ದಾರೆ” ಜನಸಂದಣಿಯಲ್ಲಿ ಒಬ್ಬ ಕೂಗಿ ಕೇಳಿದ. +“ನಿಮ್ಮ ಕಲ್ಲಕ್ಕ ಚೆನ್ನಾಗಿದ್ದಾಳೆ. +ಅವಳೀಗ ತುಂಬು ಗರ್ಭಿಣಿ ಅದೆಲ್ಲಾ ನಿಮಗೆ ಗೊತ್ತು ತಾಳ್ಮೆ ಇಂದಿರಿ ಅವಳೂ ನಿಮ್ಮೊಡನೆ ಮಾತಾಡುತ್ತಾಳೆ”. +“ಕಲ್ಲಕ್ಕನಿಗೆ ಜಯವಾಗಲಿ” ಎಂಬ ಆ ಜನಸಮೂಹದ ಏಕಕಂಠ ಕೂಗುಗಳು, ನಿನಾದಗಳು ದೇವನಹಳ್ಳಿಯನ್ನು ದಾಟಿ ದೇಶದ ಮೂಲೆ ಮೂಲೆಗೆ ತಲುಪುವ ಯತ್ನ ನಡೆಸಿದಂತೆ ಕಂಡವು. +ಮುಂಬಾಗಿಲು ದಾಟಿ ಮುಂದೆ ಬಂದಿದ್ದ ಪಟವಾರಿಯವರು ಧ್ವನಿವರ್ಧಕದ ಮೂಲಕ ಇನ್ನೊಮ್ಮೆ ಜನಸಮೂಹಕ್ಕೆ ವಿನಂತಿಸಿಕೊಂಡರು. +“ಪತ್ರಿಕಾಕರ್ತರು, ಟಿ.ವಿ.ಯವರು ಯಾರಾದರೂ ಬರಬಯಸಿದರೆ ಅವರ ಬಳಿ ಯಾವ ಬಗೆಯ ಆಯುಧಗಳೂ ಇಲ್ಲವೆಂಬುವುದು ಖಚಿತಪಡಿಸಿ ಕೊಂಡು ಬರಗೊಡಿ. +ಅದನ್ನೆಲ್ಲಾ ನೋಡಲು ನಿಮ್ಮಲ್ಲೇ ಒಬ್ಬನನ್ನು ಆರಿಸಿಕೊಳ್ಳಿ”ಜನಸಮೂಹದ ನೂಕುನುಗ್ಗಲು ಗದ್ದಲ ಮುಖ್ಯರಸ್ತೆಯವರೆಗೆ ಹರಡಿತ್ತು. +ಎರಡೂ ಕಡೆಯಿಂದ ವಾಹನ ಸಂಚಾರ ನಿಂತುಹೋಗಿತ್ತು. +ಪಟ್ಟಣದಿಂದ ಮತ್ತು ರಾಮನಗರದಿಂದ ಹರಿದಾಡುವ ವಾಹನಗಳು ಬೇರೆ ದಾರಿ ಹುಡುಕಿಕೊಳ್ಳಬೇಕಾಯಿತು. +ಅಲ್ಲಿಗೆ ಮೊದಲು ಬಂದವರು ಟಿ.ವಿ.ಯವರು. +ಅವರ ವಾಹನವನ್ನು ಸರಿಯಾಗಿ ಪರೀಕ್ಷಿಸಿ ಅವರಲ್ಲಿ ಯಾವ ಆಯುಧವೂ ಇಲ್ಲವೆಂಬುವುದನ್ನು ಖಚಿತಪಡಿಸಿಕೊಂಡಮೇಲೆ ವಾಹನಕ್ಕೆ ಮುಂದೆ ಹೋಗಲು ದಾರಿ ಮಾಡಿಕೊಟ್ಟರವರು. +ಆಗಲೇ ವ್ಯಾನಿನ ಮೇಲೆ ಏರಿದ ಒಬ್ಬ ಜನಸಮೂಹದ ಚಿತ್ರೀಕರಣ ಆರಂಭಿಸಿದ್ದ. +ಹಾಗೆ ಮೂರು ವಾಹನಗಳು ತೇಜಾನ ಮನೆಯ ಬಳಿ ಬಂದವು. +ಜನಸಮೂಹದ ಚಿತ್ರೀಕರಣದೊಡನೆ ಅಲ್ಲಿ ಸೇರಿದವರ ಅಭಿಪ್ರಾಯಗಳ ಶೇಖರಣೆಯನ್ನು ಆರಂಭಿಸಿದರು. +ಹೆಚ್ಚ ಕಡಿಮೆ ಎಲ್ಲರೂ ಹೇಳಿದ್ದು ಒಂದೇ ಮಾತು. +“ಕಲ್ಲಕ್ಕ ದೇವತೆ. +ಬಡಬಗ್ಗರ ಗೋಳನ್ನು ನಿವಾರಿಸುವ ದೇವತೆ, ಚಂಡಾಲರನ್ನು ಚಂಡಾಡುವ ಕಾಳಿ ಅವಳಿಗಾಗಿ ತಾವೆಲ್ಲಾ ಪ್ರಾಣವನ್ನು ಅರ್ಪಿಸಲು ಸಿದ್ದ” ಅವರಲ್ಲಿ ಕರೆತಂದವರು ಯಾರೆಂದಾಗ ತಮ್ಮ ಇಷ್ಟದಿಂದ ಬಂದಿರುವುದಾಗಿ ಕಲ್ಲಕ್ಕನಿಗೇನಾದರೂ ಆದರೆ ಸಹಿಸುವುದಿಲ್ಲವೆಂದು ಅವಕ್ಕೆ ಕೆಲಕಡ ಹಣ ಧನವಂತರೇ ಒದಗಿಸಿದರೆ, ಇನ್ನೊಂದು ಕಡೆ ತಾವು ಚಂದಾಹಣ ಜಮಾಯಿಸಿಕೊಂಡು ಬಂದಿರುವುದಾಗಿ ಹೇಳಿದರು. +ತೇಜಾನ, ಪಟವಾರಿಯವರ ಚಿತ್ರೀಕರಣ ನಡೆದ ಮೇಲೆ ತಾವು ಕಲ್ಲಕ್ಕನ ಚಿತ್ರೀಕರಣ ಮಾಡಬೇಕೆಂದು ಗೋಗರೆದು ಕೇಳಿದರವರು. +ಒಬ್ಬೊಬ್ಬರೇ ತಮ್ಮ ಪಾದರಕ್ಷೆಗಳನ್ನು ಬಿಚ್ಚಿ ಮೇಲೆ ಹೋಗಬೇಕಾಗಿ ಹೇಳಿದರು ಪಟವಾರಿ. +ಮನೆಯಲ್ಲಿ ಜಗಜಗಿಸುವ ಬೆಳಕು ಬೆಳಗಲಾರಂಭಿಸಿತು. +ಮನೆಯ ಒಳಭಾಗದಲ್ಲೆಲ್ಲಾ ಚಿತ್ರೀಕರಣ ಮಾಡುತ್ತಾ ಮೇಲೆ ಹೋದರು. +ಗರ್ಭಿಣಿ ಕಲ್ಯಾಣಿಯ, ಲಕ್ಷ್ಮೀದೇವಿಯವರ ಆ ಪುರಾತನ ಮನೆಯ ಕೋಣೆ ಚಿತ್ರೀಕರಣವಾದ ಮೇಲೆ ಕಲ್ಯಾಣಿಯ ಬಾಯಿ ಬಳಿ ಮೈಕನ್ನು ಹಿಡಿದು ಕೇಳಿದ ಒಬ್ಬ“ನೀವು ಕ್ರಾಂತಿಕಾರಿಯೋ?” +“ಏನು ಬೇಕಾದರೂ ಅಂದುಕೊಳ್ಳಿ! +ನಾನು ದೇಶವನ್ನು ಭ್ರಷ್ಟರಿಂದ ದೇಶದ್ರೋಹಿಗಳಿಂದ ಮುಕ್ತಮಾಡಬಯಸಿದ್ದೇನೆ. +ಕಡುಬಡವನೂ ಆತ್ಮಗೌರವವನ್ನು ಕಳೆದುಕೊಳ್ಳದೇ ಬದುಕ ಬೇಕೆಂಬುವುದೇ ನನ್ನ ಆಸೆ.” +“ನೀವು ತೇಜಾ ಅವರನ್ನು ಮದುವೆಯಾಗಿ ಪ್ರೀತಿಸುತ್ತಿರುವಿರಾ, ಪ್ರೀತಿಸಿ ಮದುವೆಯಾಗಿದ್ದೀರಾ” +“ಪ್ರೀತಿಸಿ ಮದುವೆಯಾದೆ. +ನಮ್ಮ ಮದುವೆ ಬಹುಜನರಿಗೆ ಅರ್ಥವಾಗುವುದು ಕಷ್ಟ” +“ಜನರಿಗೆ ನಿಮ್ಮ ಸಂದೇಶವೇನು?” +“ಬಡಬಗ್ಗರನ್ನು ಗೌರವದಿಂದ ನೋಡಿ. +ಅವರನ್ನು ಪ್ರೀತಿಸಿ, ದೇಶವನ್ನು ಪ್ರೀತಿಸಿ. +ಬಡಬಗ್ಗರೇ ಈ ದೇಶ ಎಂಬುವುದನ್ನು ಮರೆಯಬೇಡಿ.”ಅವಳು ಅಷ್ಟು ಮಾತಾಡುವಾಗಲೆ ಬಹಳ ದಣಿದಿದ್ದಳು. +ಇನ್ನು ಸಾಕೆಂದು ಅವರನ್ನೂ ಹೊರಗೆ ಕಳುಹಿಸಿದ ತೇಜಾ ಅವಳ ಬಳಿ ಕುಳಿತು ಅಕ್ಕರೆಯಿಂದ ತಲೆಯ ಮೇಲೆ ಕೈ ಆಡುತ್ತಾ ಕೇಳಿದ“ನೋವು ಆರಂಭವಾಗಿದ್ದೆಯೋ” +“ಇಲ್ಲ” ಎಂಬಂತೆ ತಲೆ ಆಡಿಸಿದಳು ಕಲ್ಯಾಣಿ“ನೀ ಹೊರಗೆ ಹೋಗೊ ನಾನದೆಲ್ಲಾ ನೋಡಿಕೊಳ್ಳುತ್ತೇನೆ . +ದಯಾಳಿಗೆ ಬರುವಂತೆ “ಹೇಳಿ ಕಳಿಸು” ಗದರಿದರವನ ಅಮ್ಮ. +ರಸ್ತೆಯ ಎರಡೂ ಕಡೆಯಿಂದ ಬಂದ ಪೊಲೀಸ್ ವ್ಯಾನುಗಳು ಎಲ್ಲಿ ಹೋಗಬೇಕು ತೋಚದಂತೆ ನಿಂತುಬಿಟ್ಟಿದ್ದವು. +ಮೊದಲು ಬಂದ ಕುಶಾಲ ಜನಸಮೂಹವನ್ನು ನೋಡಿ ದಂಗಾದ ಅದನ್ನು ನೋಡಿ ಅವನ ಬಾಯಿ ಕಟ್ಟಿಹೋಗಿತ್ತು. +ಜನರ ನಡುವೆ ನಗುತ್ತಾ ನಾನು ತೇಜಾನ ಸ್ನೇಹಿತ ಹೋಗಗೊಡಿ ಎಂದು ಜನರಿಗೆ ಎರಡರಡು ಸಲ ಕೂಗಿ ಹೇಳಿದ. +ಬಾಯಿಂದ ಬಾಯಿಗೆ ಸಾಗುತ್ತಾ ಆ ಮಾತು ತೇಜಾನ ಮನೆಯನ್ನು ತಲುಪಿತು. +ಅವರನ್ನು ಬರಗೊಡಿ ಎಂದು ಧ್ವನಿವರ್ಧಕದ ಮೂಲಕ ಹೇಳಿದರು ಪಟವಾರಿಯವರು. +ಜನಸಮೂಹ ಅವನಿಗೆ ದಾರಿ ಮಾಡಿಕೊಟ್ಟಿತು. +ತೇಜಾ ಹತ್ತಿರ ಬಂದ ಮೇಲೆ ಅವನು ಮತ್ತೆ ಜನಸಮೂಹದ ಕಡೆ ತಿರುಗಿ ಹೇಳಿದ. +ಇದು ನಂಬಲಸಾಧ್ಯ. +ಇಷ್ಟು ಜನ ಇವಳ ಬೆಂಬಲಿಗರಿದ್ದಾರೆಂದು ನಾನು ಊಹಿಸಿರಲಿಲ್ಲ… +ಇನ್ನೂ ಎಷ್ಟು ಜನರಿಗೆ ಬರಲಾಗಲಿಲ್ಲವೋ ಆ ದೇವರೇ ಬಲ್ಲ. +“ನನಗೂ ಇದನ್ನು ನಂಬಲಾಗುತ್ತಿಲ್ಲ” ತೇಜಾ ತನ್ನ ದಿಗ್ಭ್ರಮೆಯನ್ನೂ ವ್ಯಕ್ತಪಡಿಸುತ್ತಿದ್ದಂತೆ ಒಬ್ಬ ಗೈನಕಾಲಜಿಸ್ಟ್ ಬರಬಯಸಿದ್ದಾನೆಂಬ ಮಾತು ಬಾಯಿಯಿಂದ ಬಾಯಿಗೆ ಹರಿದು ಅವರವರೆಗೆ ತಲುಪಿತು. +ಅವರನ್ನು ಬರಗೊಡಿ ಎಂಬ ಆದೇಶವನ್ನು ಪಟುವಾರಿಯವರು ಹೊರಡಿಸುತ್ತಿದ್ದಂತೆ ನಡುವಯಸ್ಸಿನಲ್ಲಿದ್ದ ವ್ಯಕ್ತಿ ತನ್ನ ಸಲಕರಣೆಗಳ ಪೆಟ್ಟಿಗೆಯನ್ನು ಹಿಡಿದು ಜನಸಮೂಹದಿಂದ ಮುಕ್ತನಾಗಿ ಬರತೊಡಗಿದ. +ಕಲ್ಯಾಣಿಯ ಭಕ್ತರು ಮೊದಲೇ ಅವನೆದುರಿಗೆ ಪೆಟ್ಟಿಗೆ ಒಳಗಿರುವ ವಸ್ತುಗಳನ್ನು ಪರೀಕ್ಷಿಸಿ ಅದರಲ್ಲಿ ಯಾವ ಆಯುಧ ಇಲ್ಲವೆಂದು ಖಚಿತಪಡಿಸಿಕೊಂಡಿದ್ದರು. +ಅವನ ಮೇಲೆ ಕುಶಾಲನ ನೋಟ ಬೀಳುತ್ತಲೆ ದಿಗ್ಭ್ರಾಂತಿಯ ದನಿಯಲ್ಲಿ ಉಸರಿದ. +“ಇವರು ಪಟ್ಟಣದ ಪ್ರಮುಖ ಗೈನಾಕಾಲಜಿಸ್ಟ್”ಹತ್ತಿರ ಬಂದ ಅವರು ಪಟವಾರಿಯವರನ್ನು ಕೇಳಿದಳು. +“ನಾನು ಅವರನ್ನು ಚೆಕ್ ಮಾಡಬಹುದೇ! +ನಾನೂ ಅವರ ಅಭಿಮಾನಿ” ಡಾಕ್ಟರರಿಗೆ ಕಲ್ಯಾಣಿ ಮಲಗಿದ್ದ ಕೋಣೆಯನ್ನು ತೋರಿಸಲು ಹೋದ ತೇಜ. +ಧ್ವನಿವರ್ಧಕದ ಮೂಲಕ ಮಾತು ಕೇಳಿ ಬರಲಾರಂಭಿಸಿತು“ರಾಮಚಂದ್ರ ಪಟವಾರಿಯವರೆ ನಿಮ್ಮೊಡನೆ ಮಾತಾಡುವ, ಒಂದು ಸಂಧಾನಕ್ಕೆ ಬರುವ ಅಧಿಕಾರವನ್ನು ನನಗೆ ಸಿ.ಎಂ.ಸಾಹೇಬರು ಒಪ್ಪಿಸಿ ಕೊಟ್ಟಿದ್ದಾರೆ ನನ್ನೊಡನೆ ಕಮೀಶನರ್ ಸಾಹೇಬರೂ ಇದ್ದಾರೆ ನಾವು ಬರಬಹುದೆ” +“ನೀವ್ಯಾರು?ನಿಮ್ಮ ಹೆಸರೇನು?” ಧ್ವನಿವರ್ಧಕದ ಮೂಲಕವೇ ಕೇಳಿದರು ಪಟವಾರಿಯವರು. +“ನಾನು ಶ್ರೀವಾಸ್ತವ. +ಸ್ಕ್ವಾಡಿನ ಮುಖ್ಯಸ್ಥ”ಅವರ ದನಿಯನ್ನು ಆಗಲೇ ಗುರುತಿಸಿದ್ದರು ತೇಜಾ ಮತ್ತು ಕುಶಾಲ. +“ಬರುವ ಮುನ್ನ ಮೊದಲು ನನ್ನ ಕೆಲ ಮಾತುಗಳನ್ನು ಕೇಳಿ, ಕಲ್ಯಾಣಿ, ಕಲ್ಲಕ್ಕ, ಕಾಳಿ ಅವಳನ್ನು ಇನ್ನೇನೂ ಹೆಸರಿನಿಂದ ಕರೆಯುತ್ತಾರೋ ಅದು ಈ ಜನ ಸಮೂಹಕ್ಕೆ ಗೊತ್ತು ಅವಳು ದೇಶದ್ರೋಹಿ ದೇಶವನ್ನು ನಾಶನ ಮಾಡುವ ಕ್ರಾಂತಿಕಾರಿಯಲ್ಲ. +ನನ್ನಂತೆಯೇ ದೇಶಭಕ್ತಳು. +ನಾನು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆ. +ಅವಳು ನಮ್ಮ ಸ್ವತಂತ್ರ ಭಾರತ ಭ್ರಷ್ಟಾಚಾರ, ದಬ್ಬಾಳಿಕೆ ವಿರುದ್ಧ ಹೋರಾಡುತ್ತಿದ್ದಾಳೆ. +ಈಗ ಜೈಲಿನಲ್ಲಿರಬೇಕಾದವರು, ನೇಣುಕಂಬವನ್ನು ಹತ್ತಬೇಕಾದವರು ರಾಜ್ಯಗಳನ್ನಾಳುತ್ತಿದ್ದಾರೆ. +ಅವರುಗಳ ವಿರುದ್ಧ ಕೇಸುಗಳು ನಡೆಯುತ್ತಲೇ ಇರುತ್ತವೆ. +ಅವರುಗಳು ಸಾಯುವವರೆಗೂ ನಡೆಯುತ್ತಿರುತ್ತದೆ. +ಇನ್ನೂ ನಿಮಗೆ ವೀರಪ್ಪನ್‌ನನ್ನು ಹಿಡಿಯಲಾಗಿಲ್ಲ, ದೇಶದ್ರೋಹಿ ದಾವುದ್ ಇಬ್ರಾಹಿಂನನ್ನು ತಂದು ಶಿಕ್ಷಿಸಲಾಗಿಲ್ಲ, ಕೈತೊಳೆದುಕೊಂಡು ಕಲ್ಯಾಣಿಯ ಹಿಂದೆ ಬಿದ್ದಿದ್ದಿರಿ ಇಂತಹ ಅನ್ಯಾಯಗಳು ನಿಲ್ಲದಿದ್ದರೆ ಮತ್ತೆ ನಾನು ಕ್ರಾಂತಿಕಾರಿ ಹೋರಾಟಗಾರನಾಗಬೇಕಾಗುತ್ತದೆ. +ಈ ದೇಶವನ್ನು ನಮ್ಮವರೆ ಆದ ಭ್ರಷ್ಟರಿಂದ ಕಾಪಾಡಲು! +ದೇಶದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಚಳವಳಿ ನಡೆಸಿದ ನನಗೆ ಕಾಲ್ಯಾಣಿ ನನ್ನ ಸೊಸೆ ಎಂದು ಹೇಳಿಕೊಳ್ಳಲು ಗರ್ವವಾಗುತ್ತದೆ. +ನಿಮ್ಮಲ್ಲಿಂದಲೇ ಬಂದ ನಿಷ್ಟಾವಂತ ತೇಜಾ ನನ್ನ ಮಗನಾಗಿದ್ದಕ್ಕೆ ಗರ್ವವಾಗುತ್ತದೆ. +ಅವನನ್ನು ನೀವು ಕಲ್ಯಾಣಿಯನ್ನು ಕೊಲೆ ಮಾಡಲು ಅವಳ ತಂಡವನ್ನು ಮುಗಿಸಲು ಕಳಿಸಿದ್ದೀರಿ. +ಅದೇ ಕೆಲಸವನ್ನು ಶಾಂತಿಯಿಂದ, ಪ್ರೇಮವಿಶ್ವಾಸದಿಂದ ಮಾಡಲು ಯತ್ನಿಸಿದ ಅವರೆ ಅದಕ್ಕೂ ನೀವು ಸಮಯ ಕೊಡಲಿಲ್ಲ. +ಈ ಜನಸಮೂಹದ ಮುಂದೇ ನನ್ನ ಶರತ್ತುಗಳನ್ನು ಹೇಳುತ್ತೇನೆ. +ಮೊದಲನೆಯದಾಗಿ ಕಲ್ಯಾಣಿಯನ್ನು ವಿನಾಶಕಾರಿ ಕ್ರಾಂತಿಕಾರಿ ಎಂದು ಪರಿಗಣಿಸಬಾರದು. +ಅವಳು ನಿಜವಾದ ದೇಶಭಕ್ತಳೆಂದು ಒಪ್ಪಿಕೊಳ್ಳಬೇಕು. +ಅವಳಿಗೆ, ಅವಳ ತಂಡದವರಿಗೆ ಯಾವ ಶಿಕ್ಷೆಯು ಆಗಬಾರದು. +ಅವರು ಇಲ್ಲೇ ಇದ್ದು ಶಾಂತಿಯ ಪ್ರೇಮದ ಮಾರ್ಗದಲ್ಲಿ ತಮ್ಮ ನಾಡಿನ ದೇಶದ ಸೇವೆ ಮಾಡುವ ಅನುಮತಿ ಕೊಡಬೇಕು. +ಅವರು ಮತ್ತೆ ಹಿಂಸೆಯ ಮಾರ್ಗಕ್ಕೆ ಇಳಿಯುವುದಿಲ್ಲವೆಂಬ ಆಶ್ವಾಸನೆ ಕೊಡುತ್ತೇನೆ. +ಹಾಗೇ ತೇಜಾ ಅವಳನ್ನು ಮದುವೆಯಾದುದಕ್ಕಾಗಿ ಅವನ ಮೇಲೆ ಯಾವ ಕ್ರಮವನ್ನೂ ತೆಗೆದುಕೊಳ್ಳಬಾರದು. +ಒಬ್ಬ ಒಳ್ಳೆಯ ಯುವಕನ ಕೊಲೆಗೆ ಕಾರಣವಾದ ಬಂಡೇರಹಳ್ಳಿಯ ಹೊಸ ಇನ್ಸ್ ಪೆಕ್ಟರನ ಮೇಲೆ ಕಠಿಣಕ್ರಮ ತೆಗೆದುಕೊಳ್ಳಬೇಕು. +ನೀವು ಇದೆಲ್ಲದಕ್ಕೆ ಒಪ್ಪಿ, ಸಿ.ಎಂ.ಸಾಹೇಬರೂ ಒಪ್ಪುವದಾದರೆ ಬನ್ನಿ”ಅವರ ಭಾಷಣ ಮುಗಿಯುವವರೆಗೂ ನಿಶ್ಯಬ್ದವಾಗಿತ್ತು. +ಜನಸಮೂಹ ಅದು ಮುಗಿದ ಕೂಡಲೇ ಚಪ್ಪಾಳೆ ಸದ್ದು ನಿರ್ವಿರಾಮವಾಗಿ ಎರಡು ನಿಮಿಷ ಇಡೀ ದೇವನಹಳ್ಳಿಯಲ್ಲಿ ಪ್ರತಿಧ್ವನಿಸಿತು. +“ನಾನಾಗಲೇ ಸಿ.ಎಂ.ಸಾಹೇಬರಿಗೆ ಸಂದೇಶ ಕಳಿಸಿರುವೆ ಅವರು ಬರುತ್ತಿದ್ದಾರೆ. +ನಾ ಬರಲೇ”“ಬನ್ನಿ” ಎಂದ ಪಟ್‌ವಾರಿಯವರು ಮೈಕನ್ನು ಭೀಮನ ಕೈಗೆ ಕೊಟ್ಟರು. +ಜನಸಮೂಹದಲ್ಲಿ ಕಲ್ಯಾಣಿಯ ಜಯಜಯಕಾರ ತುಂಬಿತು. + ಸಿ.ಎಂ.ಸಾಹೇಬರು ಬರಲು ಸಾಕಷ್ಟು ಸಮಯವಿದ್ದುದರಿಂದ ಪಟ್ವಾರಿಯವರ ಮನೆಯೆದುರು ಜನರು ಹಾಡು ಕುಣಿತಗಳನ್ನೂ ಆರಂಭಿಸಿದರು. +ಕುಶಾಲ ಮತ್ತು ತೇಜಾ ವಂದನೆಗಳನ್ನು ಸ್ವೀಕರಿಸಿದ ಇಬ್ಬರು ಪೋಲೀಸ್ ಅಧಿಕಾರಿಯರು ಮುಂದೆ ನಿಂತಿದ್ದ ಪಟ್ವಾರಿಯವರಿಗೆ ಕೈಜೋಡಿಸಿ ನಮಸ್ಕರಿಸಿದರು ಕಮೀಶನರ್ ಸಾಹೇಬರು. +ಸ್ಕ್ವಾಡಿನ ಮುಖ್ಯಸ್ಥರಾದ ಶ್ರೀವಾಸ್ತವ ಅವರ ಕಾಲು ಮುಟ್ಟಲು ಹೋದಾಗ ಅದನ್ನು ತಡೆದು ಅವರನ್ನು ಎಬ್ಬಿಸಿ ತಬ್ಬಿಕೊಂಡರು. +ಅದರ ನಂತರ ಮೂವರೂ ಒಳಹೋದರು. +ಎಲ್ಲಾ ಘಟನೆಗಳನ್ನು ನಿರ್ವಿರಾಮವಾಗಿ ಚಿತ್ರೀಕರಿಸುತ್ತಿದ್ದವು ಟಿ.ವಿ.ಕ್ಯಾಮರಾಗಳು. +ಗೈನಾಕಾಲಜಿಸ್ಟ್, ಹಳ್ಳಿಯ ವೈದ್ಯ ಕಲ್ಯಾಣಿಯ ಪರೀಕ್ಷಣೆಯನ್ನು ಮುಗಿಸಿ ಹೊರಬಂದಿದ್ದರು. +ಆ ಮೂವರೂ ಕಲ್ಯಾಣಿಯ ಕೋಣೆಯಲ್ಲಿ ಒಳಹೋದಾಗ ಅಮ್ಮ ಮತ್ತು ಆಯಾ ಪಕ್ಕಕ್ಕೆ ಸರಿದುಕೊಂಡರು. +ಅವರ ಕಡೆ ನೋಡಿದ ಕಲ್ಯಾಣಿ ಬಹು ಕಷ್ಟದಿಂದ ಮುಗುಳ್ನಕ್ಕು ಎರಡೂ ಕೈಗಳನ್ನೂ ಜೋಡಿಸಿ ನಮಸ್ಕಾರ ಮಾಡಿದಳು. +ಆ ಎರಡೂ ಕೈಗಳನ್ನು ಹಿಡಿದುಕೊಂಡ ಶ್ರೀವಾಸ್ತವ ಅವಳ ಹಣೆಗೆ ಮುದ್ದಿಸಿದರು. +ಅವಳ ಭುಜ ತಟ್ಟುತಾ“ಬ್ರೇವ್ ಗರ್ಲ್” ಎಂದರು ಕಮೀಷನರ್. +ಕಲ್ಯಾಣಿಗೆ ಆಗಲೇ ಪ್ರಸವದ ನೋವು ಆರಂಭವಾದ ಕಾರಣ ಅವರು ಅಲ್ಲಿ ಹೆಚ್ಚು ಹೊತ್ತು ಇರುವ ಹಾಗಿರಲಿಲ್ಲ. +ಮುಂದಿನ ಕೋಣೆಯಲ್ಲಿ ಬಂದು ಕುಳಿತರು. +ಅವರ ಉಪಾಚಾರದ ವ್ಯವಸ್ಥೆಯಲ್ಲಿ ತೊಡಗಿದ ಭೀಮಾ. +ಗ್ಲೌಸುಗಳನ್ನೂ ಕೈಗೆ ಏರಿಸಿದ ಗೈನಕಾಲಜಿಸ್ಟ್ ಅವಳ ಹೊಟ್ಟೆಯನ್ನೊಮ್ಮೆ ಪರೀಕ್ಷಿಸಿ ನೋಡಿ, ಇಂಜೆಕ್ಷನ್ ಒಂದನ್ನು ಅವಳ ಕೈಗೆ ಚುಚ್ಚಿದರು. +ಕಲ್ಯಾಣಿಗೆ ಪ್ರಸವದ ನೋವು ಆರಂಭವಾಗಿತ್ತು. +ಬಾಗಿಲು ಹಾಕಿದರೂ ಹೊರಗಿನವರಿಗೆ ಹರಿದು ಬರುತ್ತಿದ್ದವು ಅವಳ ನೋವಿನ ಕೂಗುಗಳು. +ತೇಜಾನನ್ನು ಅಪ್ಪನನ್ನು ಅಮ್ಮನನ್ನ ನೆನೆಸುತ್ತಾ ಕೂಗುತ್ತಾ ನೋವನ್ನು ಅನುಭವಿಸುತ್ತಿದ್ದಳು ಕಲ್ಯಾಣಿ. +ಅವಳಿಗೆ ತಲೆಯ ಬಳಿ ನಿಂತ ಅಮ್ಮ ಸಮಾಧಾನ ಹೇಳುತ್ತಿದ್ದಳು. +ಅದನ್ನು ಕೇಳುತಿದ್ದ ಪಟ್‌ವಾರಿಯವರು ತಮಗೆ ತಾವೇ ಹೇಳಿಕೊಳ್ಳುವಂತೆ ಹೇಳಿದರು,“ಈವರೆಗೂ ಕಾಡಿನ ನೋವಾಯಿತು! +ಈಗ ಸಂಸಾರದ ನೋವು” +“ಕಷ್ಟ ಪಡದೆ, ನೋವನ್ನು ಅನುಭವಿಸದೇ ಏನನ್ನು ಸಾಧಿಸಲಾಗುವುದಿಲ್ಲ” ಎಂದರು ಶ್ರೀವಾಸ್ತವ. +ಸಿ.ಎಂ.ಸಾಹೇಬರು ಬಂದರು ಎಂಬ ಕೂಗು ಹೊರಗೆ ಕೇಳಿ ಬರುತ್ತಿದ್ದಂತೆ ಬಾಗಿಲ ಹೊರ ಬಂದ ಪಟ್‌ವಾರಿಯವರು ಮೈಕಿನಲ್ಲಿ ಅವರಿಗೆ ಜಾಗ ಮಾಡಿಕೊಡುವಂತೆ ಜನಸಮೂಹವನ್ನು ಕೋರಿದರು. +ಜನರ ನಡುವಿನಿಂದ ಅವರ ಕಾರು ಹಾದು ಬರುತ್ತಿದ್ದಾಗ ನಿಶ್ಯಬ್ದ. +ಯಾವ ಬಗೆಯ ಜಯಕಾರವೂ ಇಲ್ಲ. +ಅವರ ಸೆಕ್ಯೂರಿಟಿಯವರು ಮೊದಲು ಒಳಬಂದು ಎಲ್ಲವನ್ನೂ ಪರೀಕ್ಷಿಸುವ ಕೆಲಸ ಮುಗಿಸಿದರು. +ಕಲ್ಯಾಣಿಯ ಪ್ರಸವದ ಕೂಗುಗಳು ಇನ್ನೂ ನಿಂತೂ ನಿಂತೂ ಕೇಳಿ ಬರುತ್ತಿದ್ದವು. +ಕಾರಿನಿಂದ ಇಳಿದ ಯುವ ಸಿ.ಎಂ.ಪಟವಾರಿಯವರ ಕಾಲಿಗೆ ನಮಸ್ಕರಿಸಲು ಬಾಗಿದಾಗ ಅವರನ್ನೆತ್ತಿ ತಬ್ಬಿಕೊಂಡರವರು. + ಸಿ.ಎಂ.ಸಾಹೇಬರು ಮನೆಯೊಳಗೆ ಬರುತ್ತಿದ್ದಂತೆ ಕಲ್ಯಾಣಿಯ ನೋವಿನ ಕೂಗುಗಳು ನಿಂತವು. +ಹಲವು ಕ್ಷಣಗಳು ಕಳೆದ ಮೇಲೆ ಹೊರಬಂದ ಲಕ್ಷ್ಮೀದೇವಿ ಹೊರಬಂದು ಸಂತಸದ ದನಿಯಲ್ಲಿ ಹೇಳಿದರು. +“ಭಗತ್‌ಸಿಂಗ್ ಮತ್ತೆ ಜನ್ಮ ತಾಳಿದ”ತಂದೆ ಮಗ ಇಬ್ಬರಿಗೂ ಶುಭಾಷಯಗಳನ್ನು ಹೇಳಿದ ಸಿ.ಎಂ.ಸಾಹೇಬರು ತಾವು ಭಗತ್‌ಸಿಂಗ್‌ನ ದರ್ಶನ ಪಡೆದೇ ಹೋಗುವುದಾಗಿ ಹೇಳಿದರು. +ಬಾಗಿಲಿಗೆ ಬಂದ ಪಟ್‌ವಾರಿಯವರು ಆ ಸಂತಸದ ಸುದ್ದಿಯನ್ನು ಜನಸಮೂಹಕ್ಕೆ ಹೇಳಿದರು. +ಒಮ್ಮೆಲೆ ಅವರಲ್ಲೆಲ್ಲಾ ಸಂತಸ, ಸಂಭ್ರಮಗಳ ಅಲೆ ಹರಿಯಿತು. +ಮತ್ತೆ ಹಾಡು ಕುಣಿದಾಟ ಆರಂಭವಾಯಿತು. +ಸಿ.ಎಂ.ರ, ಪೊಲೀಸ್ ಅಧಿಕಾರಿಯರ, ಪಟ್‌ವಾರಿಯವರ ಚರ್ಚೆ ವಿಚಾರ ವಿಮರ್ಶೆ ಮುಗಿಯುವುದರಲ್ಲಿ ಕಲ್ಯಾಣಿ ತನ್ನ ಮಗುವನ್ನು ಬದಿಯಲ್ಲಿ ಹಾಕಿಕೊಂಡು ಅವನ ತಲೆಯ ಮೇಲೆ ಕೈ‌ಆಡುತ್ತಾ ಅಕ್ಕರೆಯಿಂದ ನೋಡುತ್ತಿದ್ದಳು. +ಮೊದಲು ಆ ಕೋಣೆಯಲ್ಲಿ ಬಂದ ತೇಜಾನ ಆನಂದಕ್ಕೆ ಪಾರವೇ ಇಲ್ಲ. +ಇಬ್ಬರೂ ಸ್ವಸ್ಥರಾಗಿದ್ದಾರೆ ಅದು ಅವನಿಗೆ ಮುಖ್ಯವಾಗಿತ್ತು. +ಆತ ಹಣೆಯನ್ನು ಮುದ್ದಿಸಿದಾಗ ಹೇಳಿದಳು ಕಲ್ಯಾಣಿ“ಪೂರ್ತಿ ನಿಮ್ಮ ಹಾಗೇ ಇದ್ದಾನೆ” +“ಏನೇ ಆಗಲಿ, ಇವನು ಜನ್ಮಿಸಿ ನನ್ನ ಒಂದು ಹಿಂಸೆಯಿಂದ ಮುಕ್ತ ಮಾಡಿದ.” +ಪಟ್‌ವಾರಿಯವರೊಡನೆ ಸಿ.ಎಂ.ಸಾಹೇಬರು ಬಂದು ಮಗುವನ್ನು ನೋಡಿದರು. +ತಮ್ಮ ಮೊಮ್ಮಗನನ್ನು ಮುದ್ದಿಸಿದ ಪಟ್‌ವಾರಿಯವರು ಮತ್ತೆ ಬರುವುದಾಗಿ ಕಲ್ಯಾಣಿಗೆ ಹೇಳಿದರು. +ತಮ್ಮ ಅಂಗರಕ್ಷಕರೊಡನೆ ಸಿ.ಎಂ.ಸಾಹೇಬರು ಹೊರಬಂದಾಗ ಜನರಲ್ಲಿನ ಗದ್ದಲ ಅಡಗಿ ನಿಶ್ಯಬ್ದತೆ ಆವರಿಸಿತು. +ಅವರೇನು ಹೇಳುತ್ತಾರೋ ಕೇಳುವ ಕೌತಕ ಎಲ್ಲರಿಗೂ“ಕಲ್ಯಾಣಿ, ಕಲ್ಲಕ್ಕ ಒಬ್ಬ ದೇಶಭಕ್ತಳೆಂಬುವುದರಲ್ಲಿ ಸಂದೇಹವಿಲ್ಲ. +ಏನೂ ಮಾಡಲಾಗದಂತಹ ಹತಾಶೆಯ ಸ್ಥಿತಿಯಲ್ಲಿ ಕೆಲವರು ಹಿಂಸೆಯ ಮಾರ್ಗವನ್ನು ಅನುಸರಿಸುತ್ತಾರೆ. +ಎಲ್ಲದಕ್ಕೂ ಹಿಂಸೆಯೇ ಸರಿಯಾದ ಮಾರ್ಗವಲ್ಲ. +ನಾನು ಪಟ್‌ವಾರಿಯವರ ಎಲ್ಲಾ ಶರತ್ತುಗಳನ್ನು ಒಪ್ಪಿಕೊಂಡಿದ್ದೇನೆ. +ಈ ಕ್ಷಣದಿಂದಲೇ ಬಂಡೇರಹಳ್ಳಿಯ ಇನ್ಸ್‌ಪೆಕ್ಟರನ್ನು ಸಸ್ಪೆಂಡ್ ಮಾಡುತ್ತಾ ಆ ಸ್ಥಾನಕ್ಕೆ ಮತ್ತೆ ಇನ್ಸ್‌ಪೆಕ್ಟರ್‌ ತೇಜಾನನ್ನು ಹಾಕಬೇಕೆಂಬ ಆಜ್ಞೆ ಕೊಟ್ಟಿದ್ದೇನೆ. +ನಾನು ನಿಮ್ಮಲ್ಲಿಂದು ಬಯಸುವುದಿಷ್ಟೆ, ಹಿಂಸೆಯ ಮಾರ್ಗವನ್ನು ಬಿಡಿ. +ಈಗ ಕಲ್ಯಾಣಿಯ ನೇತೃತ್ವದಲ್ಲಿ ಸಮಾಜಕ್ಕೆ ಉಪಕಾರವಾಗುವಂತಹ ಕೆಲಸ ಮಾಡಿ. +ಪ್ರತಿ ಒಳ್ಳೆಯ ಕೆಲಸಕ್ಕೆ ಸರಕಾರದ ಸಹಾಯವಿರುತ್ತದೆ. +ಇದು ನಿಮ್ಮದೇ ಜಯ” ಎಂದವರು ಭಾಷಣ ಮುಗಿಸಿದಾಗ ಕರತಡಾನ ಶಬ್ದದೊಡನೆ ಅವರ ಜಯ ಜಯಕಾರದ ಕೂಗುಗಳು ನಿರಂತರವಾಗಿ ಹೊರಬರತೊಡಗಿದ್ದವು. +ಸಿ.ಎಂ.ಸಾಹೇಬರು ಹೊರಟು ಹೋಗುತ್ತಿದ್ದಂತೆ ಜನ ಸಂದಣಿಯ ನಡುವಿನಿಂದ ಹರಿ, ಶಂಕರ, ಮಲ್ಲಪ್ಪ, ಸಾಯಿ ಮತ್ತು ನಾಗೇಶ ಬಂದರು. +ಅವರಿಗೆ ಆ ಉತ್ಸವದಲ್ಲೆಲ್ಲಾ ಆಸಕ್ತಿ ಇರಲಿಲ್ಲ. +ಮೊದಲು ಕಲ್ಲಕ್ಕ ಮತ್ತು ಕೂಸನ್ನು ನೋಡುವ ಆಸೆ. +ಸ್ಕ್ವಾಡಿನ ಮುಖ್ಯಸ್ಥರಿಗೆ ಅವರೇ ಕಲ್ಯಾಣಿಯ ದಳದವರೆಂದು ತಾಯಿಮಗುವನ್ನು ನೋಡಿದ ಮೇಲೆ ಎಲ್ಲರೂ ಅವರ ಕಾಡಿನಲ್ಲಿನ ವಾಸಸ್ಥಳಕ್ಕೆ ಹೋಗಿ ಅವರ ಬಳಿ ಇರುವ ಎಲ್ಲಾ ಮಾರಕ ಆಯುಧಗಳನ್ನು ವಶಪಡಿಸಿಕೊಳ್ಳೋಣವೆಂದು ಹೇಳಿದ. +ನಾಲೈದು ಜನ ಹೆಂಗಸರು ಒಳಬಂದು ಕಲ್ಯಾಣಿಯನ್ನು ಮಗುವನ್ನು ಕೊಡುವ ಕೋಣೆಗೇ ರವಾನಿಸುವ ಕೆಲಸ ನಿಷ್ಠೆಯಿಂದ ಮಾಡಿದರು. +ಹೊರಗೆ ಜನ ಅವಳನ್ನು ಮಗುವನ್ನು ನೋಡಲು ಸಾಲುಗಟ್ಟಿ ನಿಂತರು. +ಮಗುವಿಗೆ ಹಗುರವಾಗಿ ಮುದ್ದಿಸಿದ ಹರಿ ಮೆಲ್ಲನೆ ಹೇಳಿದ“ಭಗತಸಿಂಗ್ ಕೀ ಜೈ”ಅವರನ್ನೆಲ್ಲಾ ನೋಡಿ, ಕಲ್ಯಾಣಿಯ ಕಡೆ ನೋಟ ತಿರುಗಿಸಿ ಹೇಳಿದ ತೇಜಾ. +“ನನಗೀಗ ಐವರು ಭಾವ ಮೈದಿನಂದಿರು”ಹೆಮ್ಮೆಯಿಂದ ಮುಗುಳ್ನಕ್ಕಳು ಕಲ್ಯಾಣಿ. +ಹೀಗೆ ಆಗುತ್ತದೆಯೇ? ಆಗಬೇಕೇ? +ಕಲ್ಯಾಣಿಯಂತಹವರು ಹುಟ್ಟಬೇಕೆ? +ನನಗೆ ಗೊತ್ತಿಲ್ಲ. +ಏನೇ ಆಗಲಿ “ಭಾರತ್ ಮಾತಾ ಕೀ ಜೈ”.