diff --git "a/Data Collected/Kannada/MIT Manipal/Kannada-Scrapped-dta/\340\262\256\340\262\262\340\263\206\340\262\227\340\262\263\340\262\262\340\263\215\340\262\262\340\262\277_\340\262\256\340\262\246\340\263\201\340\262\256\340\262\227\340\262\263\340\263\201-part-2.txt" "b/Data Collected/Kannada/MIT Manipal/Kannada-Scrapped-dta/\340\262\256\340\262\262\340\263\206\340\262\227\340\262\263\340\262\262\340\263\215\340\262\262\340\262\277_\340\262\256\340\262\246\340\263\201\340\262\256\340\262\227\340\262\263\340\263\201-part-2.txt" new file mode 100644 index 0000000000000000000000000000000000000000..a7e6b7d989f2c38c66f9ab3e6298bee9132011c1 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\256\340\262\262\340\263\206\340\262\227\340\262\263\340\262\262\340\263\215\340\262\262\340\262\277_\340\262\256\340\262\246\340\263\201\340\262\256\340\262\227\340\262\263\340\263\201-part-2.txt" @@ -0,0 +1,8348 @@ +’ಹಂಗಾರೆ ನಮ್ಮ ಹಳೆಮನೆ ದೊಡ್ಡಣ್ಣ ಹೆಗ್ಗಡೇರ್ದೆ ಇರ್ಬೆಕು’ +’ ಅವರದ್ದೆ ಇರಬೈದು, ಜೊಡುನಲ್ಲಿ ಇನ್ನ್ಯಾರ್ಹತ್ರ ಅದೆ?’ + ’ಏನು ಎಲ್ಡು ಬಂದಿ ಬಿದ್ದವೇನೋ? +ಕೂಡೆ ಕೂಡೆ ಎಲ್ಡು ಈಡು ಕೇಳಿಸ್ತಲ್ಲಾ?’ +’ನಿಂಗೊತ್ತಿಲ್ಲ, ದೊಡ್ಡಣ್ಣ ಹೆಗ್ಗಡೇರ ಈಡುಗಾರಿಕೆ. +ಚಂಗ್ ಚಂಗ್ ಚಂಗ್ ಅಂತಾ ಹಳೀನಲ್ಲಿ ಹಾರ್ತಾ ಇದ್ರೂ, ಕಣ್ಣಿಗೆ ಕಾಣಿಸ್ದೆ ಮಿಂಚು ನೆಗೆದ್ಹಾಂಗೆ ನೆಗೀತಾ ಇದ್ರೂ ಅವರು ಇಟ್ಟ ಗುರಿ ತಪ್ಪಾದಿಲ್ಲ!’ – ಹಿಂಗೆ ಮಾತಾಡ್ಕೋತಿದ್ರು ಹಳೀನವ್ರು, ಐಗಳೇ! +ಅವೊತ್ತು ಎಲ್ಡು ಹಂದೀನೂ ಕೂಡೆಕೂಡೆ ಅವನು ಹೊಡೆದಿದ್ದು. +ಒಂದು ದಡ್ಡೆ, ಒಂದು ಸಲಗ! +ಆವೊತ್ತೆ ಅಂತಾ ನೆಂಪು ನಂಗೆ, ಒಂದೋ ಎಲ್ಡೋ ನಾಯೀನೂ ಸತ್ವು! +ಹಂದಿ ಕ್ವಾರೀಗೆ ಸಿಕ್ಕಿ! +ಕೋವಿ ಈಡಿಗೂ ಸಿಕ್ಕಿ! +ಹಂದಿ ಹೊಡೆದಾದ ಮ್ಯಾಲೆ ತಿರುಗಿ ನೋಡ್ತಾನಂತೆ. +ಜೇನು ಎದ್ದುಬಿಟ್ಟದೆ! +ತುಡುವೆ, ಕರಿತುಡುವೆ! +ಇದೇ ಒಟ್ಟೇಲಿ! +ಆಗ ನಮ್ಮ ದೊಡ್ಡಣ್ಣ ಶಂಕ್ರ ಇಬ್ಬರೂ ಒಳ್ಳೆ ಪರಾಯಕ್ಕೆ ಬಂದ ಹುಡುಗರು. +ಹೆಣ್ಣು ಕೊಡಾಕೆ ನಾ ಮುಂದೆ ನಾ ಮುಂದೆ ಅಂತಾ ಬರ್ತಿದ್ದ ಕಾಲ ಅಂತಾ ಇಟ್ಕೊಳ್ಳಿ! +ಸರಿ, ಇಬ್ಬರೂ ಸೇರಿ, ಬ್ಯಾಟೆ ಕತ್ತೀಲೆ ಒಟ್ಟೆ ಕಂಡೀನ ಕಡಿದೂ ಕಡಿದೂ ಮಾಡಿ ಜೇನು ಕಿತ್ತೇ ಕಿತ್ರು! +ನಮ್ಮ ದೊಡ್ಡಣ್ಣನೆ ಕಿತ್ತಿದ್ದು. +ಶಂಕರಗೆ ಬ್ಯಾಟಿ ಗೀಟೆ ಒಂದೂ ಹಿಡಿಸ್ತಾನೆ ಇರಲಿಲ್ಲ; +ಈಗ ಹ್ಯಂಗೋ ಆಗ್ಲೂ ಹಂಗೇ! +ಅಂವ ಓಡಿಹೋಗಿ ದೂರ ನಿಂತಿದ್ನಂತೆ! +ದೊಡ್ಡಣ್ಣಗೆ ಹೊಡ್ದಿದ್ವೂ ಹುಳಾ, ಕಣ್ಣೂ ಮಕಾ ಮೋರೆ ನೋಡದೆ! +ಮರುದಿನ ಅಂವನ ಮಕಾಊದಿ ಕುಂಬಳಕಾಯಿ ಆಗಿತ್ತು! +ಕಣ್ಣು ಎಲ್ಲವೆ ಅಂತಾನೆ ಗೊತ್ತಾಗ್ತಿರಲಿಲ್ಲ! +ಹಿಹ್ಹಿಹ್ಹಿಹ್ಹಿ!ಅರಸಿನ ಮಸಿಕೆಂಡ ತೇದು ಹಚ್ಚಿ, ಹುಲಿಬಣ್ಣ ಆಗಿಬಿಟ್ಟಿತ್ತು! +ಹಿಹ್ಹಿಹ್ಹಿಹ್ಹಿ!ನೆನಸಿಕೊಂಡರೆ ನಂಗೆ ನಗೆ ತಡೆಯಾಕೆ ಆಗಾದಿಲ್ಲ. +ಹಿಹ್ಹಿಹ್ಹಿಹ್ಹಿ!!” ಹೆಗ್ಗಡೆಯವರು ಮತ್ತೆ ಸಿಂಬಳ ಸುರಿದು ನಗೆ ಕಣ್ಣೊರೆಸಿಕೊಂಡರು. +ಮುಂದೆ ಮಾತಾಡದೆ ಸುಮ್ಮನೆ ಏನನ್ನೊ ಯೋಚಿಸುವಂತೆ ನೆಲ ನೋಡುತ್ತಾ ಕುಳಿತುಬಿಟ್ಟರು. +ಮತ್ತೆ ತುಸು ಹೊತ್ತಿನ ಮೇಲೆ, ಅವರಿಗೆ ದಣಿವಾರಿದ ಅನಂತರ, ಐಗಳು ಅವರನ್ನು ಮೆಲ್ಲಗೆ ನಡೆಸಿಕೊಂಡು ಹೊರಟರು. +ಮುಂದೆ ಅವರು ಮಾತಾಡುವುದನ್ನೇ ನಿಲ್ಲಿಸಿಬಿಟ್ಟರು. +ಮೇಗರವಳ್ಳಿಯನ್ನು ಸಮೀಪಿಸುತ್ತಿದ್ದಾಗ ಎದುರಿನಿಂದ ಒಂದು ಹೊಲೆಯರ ಗುಂಪು ಸಾಲಾಗಿ ಕಾಡುದಾರಿಯಲ್ಲಿ ಬರುತ್ತಿದ್ದುದು ಕಾಣಿಸಿತು, ಹತ್ತಿರಕ್ಕೆ ಬಂದಾಗ ಐಗಳಿಗೆ ಗೊತ್ತಾಯಿತು, ಅವರೆಲ್ಲ ಬೆಟ್ಟಳ್ಳಿ ಹೊಲಗೇರಿಯವರು ಎಂದು. +ಒಬ್ಬಿಬ್ಬರನ್ನು ಗುರುತಿಸಿಯೂ ಬಿಟ್ಟರು. +ಬರುತ್ತಿದ್ದ ಗಂಡಸರಲ್ಲಿ ದೊಡ್ಡಬೀರ, ಅವನ ಹಿರಿಯ ಮಗ ಸಣ್ಣಬೀರ, ಅವನ ತಮ್ಮ ಪುಟ್ಟಬೀರ ಇದ್ದರು; +ಹೆಂಗಸರಲ್ಲಿ ದೊಡ್ಡಬೀರನ ಹೆಂಡತಿ  ಸೇಸಿ, ಅವನ ಮಗಳು ತಿಮ್ಮಿ, ಪುಟ್ಟಬೀರನ ಹೆಂಡತಿ ಚಿಕ್ಕಪುಟ್ಟಿ ಇದ್ದರು. +ಹಳೆಮನೆ ದೊಡ್ಡ ಹೆಗ್ಗಡೆಯವರನ್ನು ಗುರುತಿಸಿದೊಡನೆಯೆ ಗಂಡಾಳುಗಳೆಲ್ಲ, ಹೊಟ್ಟೆ ಅಡಿಯಾಗಿ ಮಣ್ಣು ಹಣೆ ಮುಟ್ಟುವಂತೆ, ಎಲ್ಲಿ ಅಂದರಲ್ಲಿ ನಿಂತಿದ್ದ ಎಡೆಯಲ್ಲಯೆ ಮುಳ್ಳು ಪೊದೆ ಒಂದನ್ನೂ ಲೆಕ್ಕಿಸದೆ ’ಅಡ್ಡಬಿದ್ದೆ ಒಡೇರಿಗೆ!’ ಎಮದು ಪದ್ದತಿಯ ಗೌರವವನ್ನು ಯಾಂತ್ರಿಕವಾಗಿ ಉಚ್ಚರಿಸುತ್ತಾ ಉದ್ದುದ್ದಕ್ಕಾಗಿ ಅಡ್ಡಬಿದ್ದು ದೀರ್ಘದಂಡ ನಮಸ್ಕಾರ ಮಾಡಿದರು! +ಹೆಣ್ಣಾಳುಗಳೆಲ್ಲಾ ಒಡೆಯರ ಕಣ್ಣಿಗೆ ನೇರವಾಗಿ ಬಿದ್ದರೆ ಅವರಿಗೆಲ್ಲಿ ಮೈಲಿಗೆ ಸೀಕುವುದೊ ಎಂದು ಹೆದರಿದಂತೆ ಹಳುವಿನಲ್ಲಿ ಅಲ್ಲಲ್ಲಿಯೆ ಮರೆಹೊಕ್ಕರು. +ಹೆಗ್ಗಡೆಯವರು ಒಂದು ಮಾತನ್ನೂ ಆಡಲಿಲ್ಲ. +ಐಗಳು “ಎಲ್ಲಿಂದ ಬರ್ತಿದ್ದಿರೊ?” ಎಂದು ಕೇಳಿದರು, ಅವರೆಲ್ಲ ಎದ್ದು ಕೈಮುಗಿದುಕೊಂಡು ಸೊಂಟಬಾಗಿ ದೂರ ಪಕ್ಕಕ್ಕೆ ಸರಿದು ನಿಂತಮೇಲೆ. +ತಿಮ್ಮಿಯ ಅಪ್ಪ ಮುದುಕ ದೊಡ್ಡಬೀರ “ಸಿಂಬಾವಿ ಕೇರಿಗೆ ಹೋಗಿದ್ವಯ್ಯಾ, ಹುಡುಗಿ ಕರಕೊಂಡು ಹೋಗ್ತಾ ಇದ್ದೀಂವಿ, ನಮ್ಮ ಕೇರಿಗೆ” ಎಂದನು. +ಬೇರೆಯ ಸನ್ನಿವೇಶವಾಗಿದ್ದರೆ ಐಗಳು ಇನ್ನಷ್ಟು ಪ್ರಶ್ನೆ ಹಾಕಿ ಉತ್ತರ ಪಡೆದು, ತಮ್ಮ ಕಿವಿಗೆ ಬಿದ್ದಿದ್ದ ಗಾಳಿಸುದ್ದಿಗೆ ವಿವರಣೆಯನ್ನೊ ಸಮರ್ತನೆಯನ್ನೊ ದೊರಕಿಸಿ ಕೊಳ್ಳುತ್ತಿದ್ದರು. +ಆದರೆ ದಣಿದ ದುಃಖಿ ಹೆಗ್ಗಡೆಯವರಿದ್ದ ಸ್ಥಿತಿಯಲ್ಲಿ ಅದೊಂದನ್ನೂ ಕೇಳಲು ಅವರಿಗೆ ಮನಸ್ಸಾಗಲಿಲ್ಲ. +ಹೆಗ್ಗಡೆಯವರು ಸರಿಯಾಗಿದ್ದ ಸಮಯದಲ್ಲಿ,  ಮಾತನಾಡಲು ಅವರೂ ಒಂದು ಗಂಡೆಯಾದರೂ ಹರಟೆ ಕೊಚ್ಚದೆ ಬಿಡುತ್ತಿರಲಿಲ್ಲ. +ಗುತ್ತಿ ತಿಮ್ಮಿಯರ ಶೃಂಗಾರ ಸಾಹಸದ ಕಥೆಯನ್ನೆಲ್ಲ ಬಯಲಿಗೆಳೆಯುತ್ತಿದ್ದರು ಮಾತ್ರವಲ್ಲದೆ, ಹಿಂದಿನ ದಿನ ಸಾಯಂಕಾಲ ಸಿಂಬಾವಿಯ ಹೊಲಗೇರಿಯ ಬಳಿ ನಡೆದಿದ್ದ ಯಾವ ದುರ್ಘಟನೆಯನ್ನು ಬೆಟ್ಟಳ್ಳಿಯ ದೊಡ್ಡಬೀರನು ಮುಚ್ಚಿಡಲು ಪ್ರಯತ್ನಿಸಿದ್ದನೊ ಅದನ್ನೂ ಹೊರಹಾಕದೆ ಬಿಡುತ್ತಿರಲಿಲ್ಲ. +ಆದರೂ ಸ್ವಾರಸ್ಯವಾದ ಸಂವಾದಕ್ಕೆ ಅವಕಾಶ ಕಲ್ಲಿಸಿಕೊಳ್ಳುವ ಅಂತಹ ಘಟನಾಗರ್ಭಿತಪ್ರಸಂಗ ತಮ್ಮ ಪಾದಗಳೆಡೆಗೇ ಬಂದಿದ್ದರೂ, ಹೆಗ್ಗಡೆಯವರು ಸಾಕ್ಷಿಪ್ರಜ್ಞರಾದಂತೆ ನಿಂತಿದ್ದರು; +ಅವರ ಸಾಮಾನ್ಯವಾದ ಉಸಿರೂಸುಯ್ಯುಸಿರಾಗಿದ್ದುದು ಬಳಿಯಿದ್ದವರಿಗೆ ಗೊತ್ತಾಗುವಂತಿತ್ತು. +ಆದ್ದರಿಂದಲೆ ಐಗಳ ಮುಂದಿನ ಮಾತು, ಗುತ್ತಿ ಹಾರಿಸಿಕೊಂಡು ಹೋಗಿದ್ದ ತಿಮ್ಮಿಯನ್ನು ಬಲಾತ್ಕಾರವಾಗಿ ಹಿಂದಕ್ಕೆ ಎಳೆದು ತರಬೇಕೆಂದು ಬೆಟ್ಟಳ್ಳಿ ಕಲ್ಲಯ್ಯಗೌಡರ ಕಟ್ಟಜ್ಞೆಯನ್ನು ಕುರಿತು ತಾವು ಕೇಳಿದ್ದ ಸುದ್ದಿಯ ವಿಚಾರವಾಗಿರದೆ, ಸಂಪೂರ್ಣವಾಗಿ ಬೇರೆಯ ತರಹದ್ದಾಗಿ ಅನಿರೀಕ್ಷಿತ ಎಂಬಂತ್ತಿತ್ತು. +ಐಗಳು ದೊಡ್ಡಬೀರನಿಗೆ “ಯಾರಾದರೂ ಇಬ್ಬರನ್ನ ಕಳಿಸೋ, ನಮ್ಮನ್ನ ಮೇಗರೊಳ್ಳಿಗೆ ಮುಟ್ಟಿಸಿ ಬರಲಿ” ಎಂದರು ಪಿಸುದನಿಯಲ್ಲಿ, ಹೆಗ್ಗಡೆಯವರಿಗೆ ಕೇಳಿಸಿದಂತೆ. +ದೊಡ್ಡಬೀರನಿಗೆ ತುಸು ಬೆಕ್ಕಸವಾಯಿತು. +ಮೇಗರವಳ್ಳಿ ಇನ್ನೊಂದು ಮೈಲಿಯೊ ಅರ್ಧಮುಕ್ಕಾಲು ಮೈಲಿಯೊ ಇರುವಲ್ಲಿ, ಜೊತೆಗೆ ಇಬ್ಬರು ಯಾಕೆ ಬೇಕು ಎಂದು. +ಆದರೆ ಅವನು ಪ್ರಶ್ನಿಸಲಿಲ್ಲ. +ಐಗಳೆ ಅವನ ಪ್ರಶ್ನಮುಖಮುದ್ರೆಯನ್ನರಿತು ಕಣ್ಣು ಮಿಸುಕಿನಿಂದ ಹೆಗ್ಗಡೆಯವರ ಆಯಾಸ್ಥಿತಿಯನ್ನು ನಿರ್ದೇಶಿಸಿ, ಏನಾದರೂ ವಿಷಯ ಪರಿಸ್ಥಿತಿಯೊದಗಿದರೆ ಸಹಾಯ ಬೇಕಾಗಬಹುದು ಎಂಬುದನ್ನು ಸೂಚಿಸಿದರು. +ಅಪ್ಪನ ಕಣ್ಣಪ್ಪಣೆಯಂತೆ ಸಣ್ಣಬೀರ ಪುಟ್ಟಬೀರ ಇಬ್ಬರೂ ಐಗಳು ಮೆಲ್ಲಗೆ ನಡೆಸಿಕೊಂಡು ಹೋಗುತ್ತಿದ್ದ ಹಳೆಮನೆ ಒಡೆಯರ ಹಿಂದೆ ತುಸು ದೂರದಲ್ಲಿಯೆ ಮೈಗಾವಲಾಗಿ ಹೊರಟರು. +ಅತ್ಯಂತ ಅನಿವಾರ್ಯ ವಿಷಮಸ್ಥಿತಿ ಒದಗಿದಲ್ಲದೆ ಹೊಲೆಯರು ಮೈಮುಟ್ಟಿ ನೆರವೀಯುವಂತಿರಲಿಲ್ಲ! +ಒಂದರ್ಧ ಮೈಲಿ ಹೋಗುವುದರಲ್ಲಿಯೆ ಹೆಗ್ಗಡೆಯವರ ಕಾಲು ತತ್ತರಿಸತೊಡಗಿತು. +ಏನನ್ನೊ ಹೇಳಲು ಪ್ರಯತ್ನಪಟ್ಟರು, ಆಗಲಿಲ್ಲ. +ತಮ್ಮ ಭರವನ್ನೆಲ್ಲ ಐಗಳ ಮೇಲೆ ಬಿಟ್ಟು ವಾಲಿದರು. +ಕುಳ್ಳಿನಲ್ಲಿ ಸಮಾನವಾಗಿದ್ದರೂ ಆಳುತನದಲ್ಲಿ ಹೆಗ್ಗಡೆಯವರಿಗಿಂತಲೂ ಬಹಳ ಮಟ್ಟಿಗೆ ಕಡಿಮೆಯಾಗಿದ್ದ ಐಗಳು ನಿತ್ತರಿಸಲಾರದೆ ಅವರನ್ನು ಹೇಗೋ ಪ್ರಯತ್ನಪೂರ್ವಕ ಆತು ನಿಂತು, ಹಿಂದೆ ಬರುತ್ತಿದ್ದವರನ್ನು ನೆರವಿಗೆ  ಕರೆದರು. +ಹೊಲೆಯಿಬ್ಬರೂ ಓಡಿ ಸಾರಿದರು. +ಆದರೆ ಮುಟ್ಟಲು ಹಿಂಜರಿದು ನಿಂತರು. +ಐಗಳು ಹುಬ್ಬುಗಂಟಿಕ್ಕಿ ಸೂಚಿಸಿದ ಮೇಲೇಯೆ ಅವರಿಬ್ಬರು ಹೆದರಿ ಹೆದರಿ, ವಿಷಸರ್ಪ ನುಗ್ಗಿದ ಗರ್ಭಗುಡಿಗೆ ಬ್ರಾಹ್ಣಣ ಪೂಜಾರಿ ಹಾವನ್ನು ಹೊಡೆದು ತನ್ನನ್ನು ಕಾಪಾಡಿ ಎಂದು ಆರ್ತನಾದದಿಂದ ಆಹ್ವಾನಿಸಲು ಅಂಜಿ ಅಂಜಿ ಒಳನುಗ್ಗುವ ದಂಡಧಾರಿ ಶೂದ್ರಂತೆ, ಹೆಗ್ಗಡೆಯವರನ್ನು ಬೀಳದಂತೆ ಆತುಹಿಡಿದು, ಮೆಲ್ಲಗೆ ನಡೆಸಿಕೊಂಡು ಹೋಗಿ, ಬಿದ್ದಿದ್ದ ಒಂದು ಮರದ ದಿಂಡಿನ ಮೇಲೆ ಕೂರಿಸಿದರು. +“ಓಡಿ ಹೋಗು, ಅಂತಕ್ಕಸೆಡ್ತಿ ಮನೆಗೆ. +ಇಸ್ಕೂಲು ಕಟ್ತಾರಲ್ಲಾ ಅಲ್ಲಿ ಬೆಟ್ಟಳ್ಳಿ ದೇವಯ್ಯಗೌಡ್ರು, ಪಾದ್ರಿ, ಕಣ್ಣಪ್ಪ ಎಲ್ಲ ಇರ್ತಾರೆ. +ನಾ ಹೇಳ್ದೆ ಅಂತಾ ಹೇಳು, ಹಿಂಗಾಗಿದೆ ಅಂತಾ. +ಹೆಗ್ಗಡೇರನ್ನ ಎತ್ತಿಕೊಂಡು ಹೋಗಾಕೆ ಬೇಗ ಒಂದು ಡೋಲಿ ಮಾಡಿಕೊಂಡು ಬರಲಿ.” +ಪುಟ್ಟಬೀರ ಐಗಳ ಮಾತು ಮುಗಿಯುವುದರೊಳಗೆ ವಿಷಯವನ್ನೆಲ್ಲ ಗ್ರಹಿಸಿ ಓಡಿ ಹಳುವಿನಲ್ಲಿ ಕಣ್ಮರೆಯಾದನು. +ದೇವಯ್ಯ ಬೈಸಿಕಲ್ಲು ಹತ್ತಿ ಅಂತಕ್ಕಸೆಡ್ತಿಯ ಮನೆಯಿಂದ ಇಸ್ಕೂಲು ಕಟ್ಟುತ್ತಲಿದ್ದಲ್ಲಿಗೆ ಹೋಗುತ್ತಿದ್ದುದನ್ನೆ ನೋಡುತ್ತಾ ಬಾಗಿಲು ಸಂಧಿಯಲ್ಲಿ ನಿಂತಿದ್ದ ಕಾವೇರಿಯನ್ನು ಕದ್ದು ನೋಡುತ್ತಿದ್ದು, ತನ್ನೊಳಗೆ ತಾನೆ ಏನನ್ನೊ ಬಗೆದು ನಗುತ್ತಾ, ಚೀಂಕ್ರ ಸೇರೆಗಾರ ತಾನೂ ಇಸ್ಕೂಲಿನ ಹತ್ತಿರಕ್ಕೆ ಹೋಗಲೆಂದು ಉಣುಗೋಲನ್ನು ದಾಟುತ್ತಿದ್ದಾಗ, ಏದುಸಿರಾಗಿ ಓಡಿಬರುತ್ತಿದ್ದ ಪುಟ್ಟಬೀರನನ್ನು ಕಂಡನು. +ಅವನು ಹತ್ತಿರ ಬಂದವನೆ ಮೇಲುಸಿರು ಕೆಲವುಸಿರಾಗಿ “ಎ…. ಎ…. ಎಲ್ಲಿ ನ…. +ನಮ್ಮ ಸ…. ಸ…. ಸಣ್ಣಯ್ಯ. ಹ…. ಹ…. ಹಳೆಮನೆ…. ಹೆಗ್ಗಡೇರು…. ಹೋ…. ಹೋದ್ರು…. ” ಎಂದು ಹೆಗ್ಗಣ್ಣಾಗಿ ನಿಂತನು. +ದಿಗಿಲುಗೊಂಡ ಚೀಂಕ್ರ, ದಿಕ್ಕುತೋಚದವನಂತೆ, ಸ್ಕೂಲು ಕಟ್ಟಡದ ಕಡೆಗೆ ಹೋಗುತ್ತಿದ್ದ ಬೈಸಿಕಲ್ಲಿನ ಕಡೆಗೆ ಕೈತೋರಿಸಿದೊಡನೆಯೆ ಪುಟ್ಟಬೀರ ಓಡಿಹೋಗಿ ದೇವಯ್ಯಗೆ ಐಗಳು ಹೇಳಿದ್ದನ್ನು ಗಾಬರಿ ಗಾಬರಿಯಾಗಿ ಹೇಳಿದನು. +ದೇವಯ್ಯನಿಗೆ ಏನು? +ಎಂತು?ಏಕೆ?ಒಂದೂ ಅರ್ಥವಾಗಲಿಲ್ಲ. +ಮನೆಯಲ್ಲಿ ಸುಖವಾಗಿರಬೇಕಾಗಿದ್ದ ’ಹಳೆಮನೆ ದೊಡ್ಡಪ್ಪಯ್ಯ’ ಇಲ್ಲಿಗೆ ಎಲ್ಲಿಂದ ಬಂದರು? +ಹಲವು ವರ್ಷಗಳು ಮನೆಯನ್ನೆ ಬಿಟ್ಟು ಹೊರಡದಿದ್ದ ಅವರು ಇವತ್ತೇಕೆ ಹುಲಿಕಲ್ಲು ನೆತ್ತಿಯ ಕಾಡಿಗೆ ಬಂದದ್ದು? +ಐಗಳೇನೋ ಬರುತ್ತಾರೆ ಎಂಬುದು ಗೊತ್ತಿತ್ತು. +ಆದರೆ ಅವರೇಕೆ ಈ ಮುದುಕನನ್ನು ಕರೆತರುತ್ತಾರೆ? +ಅವರಿಗೇನು ಅಷ್ಟು ಬುದ್ಧಿ ಇರಲಿಲ್ಲವೆ? +ಎಂಬೆಲ್ಲ ಯೋಚನೆಗಳು ಮಿಂಚು ಸಂಚರಿಸುವಂತೆ ಜಾಲವತ್ತಾಗಿ ತಲೆ ತುಂಬಿದವು. +ಮೈಮೇಲೆ ಹಠಾತ್ತಾಗಿ ಕುದಿನಿರು ಚೆಲ್ಲಿದಂತಾಯಿತು. +ಪಾದ್ರಿಗೆ ಪಂಡಿತನಿಗೆ ಸಮಾಚಾರ ತಿಳಿಸಿ, ಬೇಕಾದ ಸಲಕರಣೆಗಳನ್ನೆಲ್ಲ ತೆಗೆಯಿಸಿಕೊಂಡು. +ಅವರನ್ನೂ ಕರೆದುಕೊಂಡು ಪುಟ್ಟಬೀರನ ಹಿಂದೆ ಓಡುತ್ತಲೆ ಹೋದನು, ಕಾಡಿನ ಕೊರಕಲು ಹಾದಿಯಲ್ಲಿ. +ಜೀವರತ್ನಯ್ಯ ತಾನು ಪ್ರವಾಸದಲ್ಲಿರುವಾಗ ಯಾವಾಗಲೂ ತನ್ನ ಬಳಿ ಆಪದ್ದನವಾಗಿ ಇಟ್ಟುಕೊಂಡಿರುತ್ತಿದ್ದ ಔಷಧಿಪೆಟ್ಟಿಗೆಯನ್ನು ತನ್ನೊಡನೆ ಕೊಂಡೊಯ್ಯುವುದನ್ನು ಮರೆತಿರಲಿಲ್ಲ. +ಅಂತಕ್ಕ, ತನ್ನ ಮಗಳು ಕಾವೇರಿಯ ನೆರವಿನಿಂದ, ಅತ್ಯಂತ ಕಾತರೆಯಾಗಿ ಅವಸರ ಅವಸರವಾಗಿ ಜಗಲಿಯ ಮೇಲೊಂದು ಹಾಸಗೆ ತಯಾರು ಮಾಡಿದಳು. +ತನ್ನ ಬಳಿ ಇದ್ದ, ತಾನು ಅತ್ಯುತ್ತಮ ಎಂದು ಪರಿಗಣಿಸಿದ್ದ ತಡಿ ದಿಂಬು ಜಮಖಾನೆ ಜಾಡಿಗಳನ್ನೆ ಹುಡುಕಿ ಹಾಕಿದ್ದಳು. +ಆದರೂ ಎಣ್ಣೆಯ ಕೊಳೆಹತ್ತಿದ್ದ ದಿಂಬಿನ ನುಣುಪುಜಿಡ್ಡೂ,ಅಲ್ಲಲ್ಲಿ ಕಲೆಕಲೆಯಾಗಿದ್ದ ಪುರಾತನ ತಡಿಯ ಕೊಳಕುಕವುರೂ ಎದ್ದು ಕಾಣುತ್ತಿದ್ದುವು. +ಅದನ್ನೆಲ್ಲ ಮುಚ್ಚಲು, ಮಗಳ ಸಲಹೆ ಮೇರೆಗೆ, ಒಂದು ಜಮಖಾನೆಯನ್ನು ಮಗ್ಗಲು ಹಾಸಿಗೆಯಂತೆ ಮೇಲ್ವಾಸಿಬಿಟ್ಟರು! +ಅದೂ ಜಿಡ್ಡು ಜಿಡ್ಡಾಗಿ ಕೊಳಕಾಗಿಯೆ ಇದ್ದಿತಾದರೂ ಕೆಂಪು ಕಪ್ಪು ಪಟ್ಟೆಗಳಿದ್ದುದರಿಂದ ಕೊಳಕು ಅಷ್ಟು ಎದ್ದು ಕಾಣುವುದಿಲ್ಲ ಎಂದು ತಾಯಿ ಮಗಳಿಬ್ಬರೂ ಸಮಾಧಾನ ಪಟ್ಟುಕೊಂಡಿದ್ದರು. +ಆಮೇಲೆ ಅಂತಕ್ಕ ಮತ್ತೆ ಮತ್ತೆ ಅಂಗಳಕ್ಕೆ ಹೋಗಿ ಹೆದ್ದಾರಿಯ ಕಡೆ ನೋಡಿ ನೋಡಿ ಬಂದಳು. +ಕಾಯುವುದೆ ಒಂದು ತರಹದ ದಣಿವಾಗಿ ತೋರಿ, ಕಡೆಗೆ ತೆಣೆಯ ಮೇಲೆ ಕುಕ್ಕುರುಗಾಲಲ್ಲಿಯೆ ಕುಳಿತು, ಮಗಳಿಗೆ ಹೋಗಿ ನೋಡಿಬರುವಂತೆ ಹೇಳತೊಡಗಿದಳು. +ಮಗಳು ನಾಲ್ಕಾರು ಸಾರಿ ಹೋಗಿ ನೋಡಿ ಬಂದಳು. +ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರನ್ನು ಹೊತ್ತ ಡೋಲಿಯಾಗಲಿ, ಆ ಕಾರ್ಯಕ್ಕಾಗಿ ಹೋಗಿದ್ದವರಾಗಲಿ ಯಾರೂ ಗೋಚರಿಸಲಿಲ್ಲ. +ಹೊತ್ತು ಕಳೆದಂತೆ ಅಂತಕ್ಕನಿಗೆ ಗಾಬರಿ ಹೆಚ್ಚಿತು. +ಹೊಟ್ಟೆಯಲ್ಲಿ ಏನೋ ಸಂಕಟವಾಗತೊಡಗಿತು. +ಕಾವೇರಿ ತನ್ನ ತಾಯಿಯ ಅವಸ್ಥೆಯನ್ನು ಗಮನಿಸಿ “ಯಾಕೆ, ಅಬ್ಬೆ, ಅಳುತ್ತಿದ್ದೀಯಲ್ಲಾ?” ಎಂದಳು ತುಳುವಿನಲ್ಲಿ. +ಅಂತಕ್ಕ ತುಳುವಿನಲ್ಲಿಯೆ “ಯಾರೇ ಅಳುತ್ತಿರುವುದು?” ಎಂದು ನಸುಮುನಿದ ಭಂಗಿಯಲ್ಲಿ ನಿರಾಕರಿಸಿ, ಕಣ್ಣೊರೆಸಿಕೊಂಡು ಸುಯ್ದಳು. +ತನ್ನ ಭಾವದೌರ್ಬಲ್ಯವನ್ನು ಮಗಳು ಗುರುತಿಸಬಾರದಾಗಿತ್ತು ಎಂಬುದು ಅವಳ ಅಂತರಂಗವಾಗಿತ್ತು. +ಮತ್ತೆ ಸುಮ್ಮನಿದ್ದವಳು ಸ್ವಲ್ಪ ಹೊತ್ತಿನ ಮೇಲೆ “ಯಾಕೆ ಇಷ್ಟು ಹೊತ್ತಾದರೂ ಯಾರೂ ಬರಲಿಲ್ಲ? +ಪಾಪ!ಹಳೆಮನೆ ದೊಡ್ಡ ಒಡೆಯರಿಗೆ….” ತಡೆತಡೆದು ಅಳುದನಿಯಲ್ಲಿ ಹೇಳಿದಳು “ಏ-ನಾ-ಗಿಬಿಟ್ಟಿದೀಯೋ?” +ಅಂತಕ್ಕನ ಗಂಡ ಸುಬ್ಬಯ್ಯಶೆಟ್ಟರು ಮೇಗರವಳ್ಳಿಯ ಹತ್ತಿರವಿದ್ದು ಹಳೆಮನೆಗೆ ಸೇರಿದ್ದ ಜಮೀನನ್ನು ಒಕ್ಕಲು ಮಾಡಿಕೊಂಡಿದ್ದರು. +ಅವರಿಗೆ ಕಂತ್ರಾಟು ಕೆಲಸದಿಂದಲೂ ಅನೇಕ ತೆರನಾದ ದಳ್ಳಾಳಿ ವ್ಯಾಪಾರದಿಂದಲೂ ಬರುತ್ತಿದ್ದ ಆದಾಯದ ಜೊತೆಗೆ ಇಕ್ಕಲುತನದ ಗದ್ದೆ ಬೇಸಾಯದ ಆದಾಯವೂ ಸೇರಿತ್ತು. +ಸುಬ್ಬಣ್ಣಹೆಗ್ಗಡೆಯವರು ಸುಬ್ಬಯ್ಯಶೆಟ್ಟರನ್ನು ಒಡೆಯರು ಒಕ್ಕಲನ್ನು ಕಾಣುವಂತೆ ಕಾಣದೆ, ತಮ್ಮ ಆಪ್ತವರ್ಗಕ್ಕೆ ಸೇರಿದವರೆಂದು ತಿಳಿದುಕೊಂಡಿದ್ದರು. +ಸೆಟ್ಟರೂ ಹೆಗ್ಗಡೆಯವರೊಡನೆ ಆಪ್ತಮಿತ್ರ ಭಾವದಿಂದ ನಡೆದುಕೊಳ್ಳುತ್ತಾ ಅವರ ಅನಧಿಕೃತ ಕಾರ್ಯದರ್ಶಿಯಂತಿದ್ದರು. +ಅವರಿಬ್ಬರ ಪರಸ್ಪರ ವಿಶ್ವಾಸವನ್ನೂ ಗಾಢಸ್ನೇಹವನ್ನೂ ಕಂಡು ಕರುಬಿದ್ದ ಕೆಲವರು ಆ ಮೈತ್ರಿಗೆ ಅಶ್ಲೀಲಕಾರಣಗಳನ್ನೂ ಆರೋಪಿಸಿದ್ದರು. +ಸುಮಾರು ಎಂಟು ಹತ್ತು ವರ್ಷಗಳ ಹಿಂದೆ ಸುಬ್ಬಯ್ಯಸೆಟ್ಟರು ಕಾಡಿನಲ್ಲಿ ಒಂದು ಹೆಮ್ಮರವನ್ನು ನಾಟಾ ಕಡಿಸುತ್ತಿದ್ದಾಗ (ಕಳ್ಳನಾಟ ಎಂದು ಕೆಲವರು ಆಡಿಕೊಳ್ಳುತ್ತಿದ್ದರು) ಬೀಳುತ್ತಿದ್ದ ಮರದ ಒಂದು ಹೆಗ್ಗೊಂಬೆ ತಗುಲಿ ಅಪಘಾತವಾಗಿ ತೀರಿಕೊಂಡಿದ್ದರು. +ಆಗ ಸುಬ್ಬಣ್ಣಹೆಗ್ಗಡೆಯವರು, ಅವರೂ ಬಿಗಿಮುಷ್ಟಿಯವರೆಂದೂ ಜುಗ್ಗರೆಂದೂ ನಿಂದಿಸುತ್ತಿದ್ದ ಅವರು, ಅತ್ಯಂತ ಉದಾರವಾಗಿ ವರ್ತಿಸಿ ಅಂತಕ್ಕನ ಕೃತಜ್ಞತೆಗೆ ಭಾಜನರಾಗಿದ್ದರು. +ಅವರು ಮೇಗರವಳ್ಳಿಗೆ ಬಂದಾಗಲೆಲ್ಲ ಅಲ್ಲಿಯ ಕೆಳಪೇಟೆಯ ಕಾಮತರ ದಿನಮಳಿಗೆಯಲ್ಲಾಗಲಿ, ಭಟ್ಟರ ಜವಳಿ ಅಂಗಡಿಯ ಮಹಡಿಯ ಮೇಲಾಗಲಿ ಉಳಿದುಕೊಳ್ಳದೆ ಮೇಲಿನ ಮೇಗರವಳ್ಳಿಯಲ್ಲಿ ಅಂತಕ್ಕನ ಮನೆಯಲ್ಲಿಯೆ ತಂಗುತ್ತಿದ್ದರು, ಜನರ ಕುಹಕನಿಂದೆಯನ್ನು ಇನಿತೂ ಲೆಕ್ಕಿಸದೆ. +ದೊಡ್ಡಣ್ಣಹೆಗ್ಗಡೆ ತಿರುಪತಿಗೆ ಹೋದ ಮೇಲೆ ಸುಬ್ಬಣ್ಣಹೆಗ್ಗಡೆಯವರು ಒಮ್ಮೆಯೂ ಮೇಗರವಳ್ಳಿಯ ಕಡೆಗೆ ಮುಖ ಹಾಕಿರಲಿಲ್ಲ. +ಒಂದೆರಡು ಸಾರಿ ಅಂತಕ್ಕನೆ ತನ್ನ ಮಗಳೊಡನೆ ಹಳೆಮನೆಗೆ ಹೋಗಿ, ಅವರ ಕಾಲಿಗೆ ಅಡ್ಡಬಿದ್ದು, ಕಾಣಿಕೆ ಒಪ್ಪಿಸಿ ಬಂದಿದ್ದಳು, ಅಷ್ಟೆ. +ಇಷ್ಟು ವರ್ಷಗಳ ಮೇಲೆ ಹೆಗ್ಗಡೆಯವರು ಮೇಗರವಳ್ಳಿಗೆ ಬಂದು ತನ್ನ ಅತಿಥಿಯಾಗುತ್ತಾರೆ ಎಂದು ಹಿಗ್ಗಿದ್ದ ಅಂತಕ್ಕನ ಹೃದಯಕ್ಕೆ, ಅವರಿಗೊದಗಿದ್ದ ಅಪಘಾತದ ಸುದ್ದಿ, ಸಿಡಿಲೆರಗಿದಂತಾಗಿತ್ತು. +ಆದರೂ, ಅವರು ಅಸ್ವಸ್ಥರಾದರೂ ಚಿಂತೆಯಿಲ್ಲ, ಜೀವಂತವಾಗಿ ತನ್ನ ಸೇವೆ ಮತ್ತು ಶುಶ್ರೂಷೆಯನ್ನು ಸ್ವೀಕರಿಸಿದ್ದರೆ ತಾನು ಧನ್ಯೆಯಾಗುತ್ತಿದ್ದೆನಲ್ಲಾ ಎಂದು ಅಂತಕ್ಕ ಹಂಬಲಿಸುತ್ತಿದ್ದಳು. +ಮತ್ತೆ ಮತ್ತೆ ಅಂಗಳಕ್ಕಿಳಿದು ಉಣುಗೋಲಿನ ಹತ್ತಿರಕ್ಕೆ ಹೋಗಿ ಹಾದಿ ನೋಡಿ ಹಿಂದಿರುಗುತ್ತಿದ್ದ ಕಾವೇರಿ, ಒಮ್ಮೆ ಹಾಗೆ ಹಾದಿ ನೋಡಲು ಹೋದವಳು ಕೂಗಿಕೊಂಡಳು. +“ಅಬ್ಬೆ, ಯಾವನೋ ಒಬ್ಬ ಓಡಿ ಓಡಿ ಬರುತ್ತಿದ್ದಾನೆ!” +ಅಂತಕ್ಕನಿಗೆ ಉದ್ವೇಗಾತಿಶಯದಿಂದ ಕಾಲು ನಡುಗುತ್ತಿದ್ದರೂ ಎದ್ದು ಮಗಳೆಡೆಗೆ ತತ್ತರಿಸುತ್ತಲೆ ಓಡಿ ನಿಂತು ನೋಡಿದಳು. + “ಅಯ್ಯೊ ಬೆಪ್ಪು ಹುಡುಗಿ, ನಿನಗೆ ಗೊತ್ತಾಗಲಿಲ್ಲವೆ? +ಕೋಣೂರು ಅನಂತೈಗಳಲ್ಲವೆ ಬರುತ್ತರುವವರು?” ಎಂದಳು. +ಕಾವೇರಿಯೂ ಅವರು ತುಸು ಬಳಿಸಾರಿದ ಮೇಲೆ ಗುರುತಿಸಿ “ಹೌದಂಬ್ಹಾಂಗೆ ಕಾಣ್ತದೆ, ಅಬ್ಬೆ, ಕುಂಟಿ ಕುಂಟಿ ಬರುತ್ತಾರಲ್ಲವೆ?” ಎಂದಳು. +ಅಷ್ಟರಲ್ಲಿ ಸಮೀಪಿಸಿದ ಐಗಳು, ಉಣುಗೋಲು ತೆಗೆದು ದಾಟಿ, ಉಸಿರೆಳೆಯುತ್ತಲೆ ಹೇಳಿದರು. + “ಅಂತಕ್ಕ, ಆ ಪಾದ್ರಿ ಹೇಳಿದರು, ಅದೇನೋ ಹೊಸ ಪುಡಿ ಕೊಟ್ಟಿದ್ದಾರಂತಲ್ಲಾ? +ಅದರದ್ದು ಕಷಾಯ ಮಾಡಿಡಬೇಕಂತೆ, ಹೆಗ್ಗಡೇರಿಗೆ ಕುಡಿಸಲಿಕ್ಕೆ.” +ಕಾಫಿ ಮಾಡಲು ಹೇಳಿದ್ದಾರೆ ಎಂದರಿತ ಅಂತಕ್ಕ “ಎಲ್ಲಿದ್ದಾರೆ ಅವರು? +ಹೇಗಿದ್ದಾರೆ?” ಎಂದು ಗಾಬರಿಯಿಂದ ವಿಚಾರಿಸಿದಳು. +ಐಗಳು “ಡೋಲಿಯ ಮೇಲೆ ತರುತ್ತಿದ್ದಾರೆ. +ಪಾದ್ರಿ ಕೊಟ್ಟ ಗುಳಿಗೆ ಔಷಧ ಬಹಳ ಪರಿಣಾಮಕಾರಿಯಾಯಿತು. +ಈಗ ತಕ್ಕಮಟ್ಟಿಗೆ ಪ್ರಜ್ಞೆಯಲ್ಲಿದ್ದಾರೆ. +ಒಂದು ಹಾಸಿಗೆ ಮಾಡಬೇಕಿತ್ತಲ್ಲಾ?” ಎಂದರು ಜಗಲಿಯ ಕಡೆ ನೋಡುತ್ತಾ. +ಆಗಲೆಯೆ ಒಳಗೆ ಅವಸರವಾಗಿ ಓಡಿಹೋಗಿದ್ದ ತಾಯಿಗೆ ಬದಲಾಗಿ ಮಗಳೆ ಉತ್ತರ ಹೇಳಿದಳು. “ಹಾಸಿಗೆ ಆಗಲೆ ತಯಾರಾಗಿದೆ, ಐಗಳೆ, ಜಗಲಿ ಮೇಲೆ.” +ತುಸು ಹೊತ್ತಿನಲ್ಲಯೆ ಡೋಲಿಯೊಡನೆ ಪಾದ್ರಿ, ದೇವಯ್ಯ ಎಲ್ಲರೂ ಬಂದರು. +ಸುಬ್ಬಣ್ಣಹೆಗ್ಗಡೆಯವರನ್ನು ನಿಧಾನವಾಗಿ ಇಳಿಸಿ ಎತ್ತಿಕೊಂಡು ಹೋಗಿ ಹಾಸಗೆಯ ಮೇಲೆ ಮಲಗಿಸಿದರು. +ದೇವಯ್ಯ ಅವರ ಮುಂಡಾಸವನ್ನು ಮೆಲ್ಲಗೆ ಕಳಚಿ ಜೋಪಾನವಾಗಿಡಲು ಹೇಳಿ, ಅಂತಕ್ಕನ ಕೈಗೆ ಕೊಟ್ಟನು. +ನಿಲುವಂಗಿಯನ್ನು ತೆಗೆಯುವುದು ಹೇಗೆ ಎಂದು ಆಲೋಚಿಸುತ್ತಿರಲು ಪಾದ್ರಿ ’ಬೇಡ’ ಎಂದು ಸನ್ನೆಯಿಂದ ಸೂಚಿಸಿ, ಅಲ್ಲಿ ನೆರೆದಿದ್ದವರಿಗೆಲ್ಲ ಹೊರಟುಹೋಗಲು ಹೇಳಿ, ತಾನೂ ದೇವಯ್ಯನನ್ನು ಕರೆದುಕೊಂಡು ಇಸ್ಕೂಲು ಕಟ್ಟುವಲ್ಲಿಗೆ ಹೋದನು. +ಹೋಗುವ ಮುನ್ನ ಅಂತಕ್ಕಗೆ ಹೆಗ್ಗಡೆಯವರನ್ನು ನೋಡಿಕೊಳ್ಳುವ ವಿಚಾರವಾಗಿ ಹೇಳಬೇಕಾದ ಎಚ್ಚರಿಕೆಗಳನ್ನೆಲ್ಲ ಹೇಳಿದನು. +ಆದರೆ…?ಎಚ್ಚತ್ತು, ಪ್ರಜ್ಞೆ ತಿಳಿದು, ಸುಬ್ಬಣ್ಣಹೆಗ್ಗಡೆ ಕಣ್ಣು ತೆರೆದು ಸುತ್ತಲೂ ನೋಟ ಹೊರಳಿಸಿದರು. +ಅವರ ಕಾಲಿನ ಬುಡದಲ್ಲಿಯೆ ಕಂಬಕ್ಕೆ ಒರಗಿ ಕುಳಿತಿದ್ದ ಅಂತಕ್ಕನನ್ನು ತುಸುವೊತ್ತು ಎವೆಯಿಕ್ಕದೆ ನೋಡಿದರು. +ಗುರುತು ಸಿಕ್ಕಿದ ಹೊಳಹು ಅವರ ಕಣ್ಣುಗಳಲ್ಲಿ ಮಿಂಚಿತೇನೋ? +“ಯಾರದು?” ಎಂದರು, ಸೋತ ದನಿಯಲ್ಲಿ. +“ನಾನು, ಅಯ್ಯಾ, ಅಂತಕ್ಕ.” +“ಸುಬ್ಬಣ್ಣನ ಹೆಂಡ್ತಿಯೆ?” +“ಹೌದು, ನನ್ನೊಡೆಯ.” + ತನ್ನನ್ನು ತಮ್ಮ ಆಪ್ತಮಿತ್ರ ಸುಬ್ಬಯ್ಯ ಸೆಟ್ಟಿಯ ಹೆಂಡತಿ ಎಂದು ಗುರುತಿಸಿದ್ದರಲ್ಲಿ ಏನೊ ಒಂದು ಆತ್ಮೀಯತೆಯನ್ನು ಅನುಭವಿಸಿ, ಅಂತಕ್ಕ ಆಗಲೆ ಸ್ತ್ರೀ ಸಹಜವಾಗಿ ಭಾವಾವಿಷ್ಟೆಯಾಗಲಾರಂಭಿಸಿದ್ದಳು. +“ಅದಕ್ಕೇ ಮತ್ತೆ? +ನಾನು ಯಾಕೋ ಅಂತಿದ್ದೆ!” +“ಏನು ಹೇಳಿದಿರಿ, ಅಯ್ಯಾ?” +“ಸುಬ್ಬಯ್ಯ ಬಂದಿದ್ದ ಈಗ! +ಎಚ್ಚರಾಗಾಕೆ ಮುಂಚೆ.” +“ಕನಸು ಕಂಡಿರಾ?” +“ಅಂವ ಸತ್ತು ಇಷ್ಟು ವರ್ಷದ ಮೇಲೆ ಇವತ್ತೆ ಅವನ್ನ ಕಂಡಿದ್ದು. +ನನ್ನೂ ಕರೆದ, ’ನೀವು ಬಂದುಬಿಡಿ, ಇಲ್ಲಿ ಚೆನ್ನಾಗಿದೆ’ ಅಂತಾ. +’ನಮ್ಮ ದೊಡ್ಡಣ್ಣ ತಿರುಪತಿಗೆ ಹೋದಾಂವ ಇನ್ನೂ ಬಂದೇ ಇಲ್ಲ ಕಣೋ; +ಅಂವ ಬಂದಮ್ಯಾಲೆ ಬತ್ತೀನಿ?’  ಅಂದೆ…. +’ದೊಡ್ಡಣ್ಣ ಇಲ್ಲೇ ಇದಾನೆ! +ಬನ್ನಿ, ತೋರಿಸ್ತೀನಿ!’ ಅಂದ. +ತೋರಿಸು ಅಂತಾ ಹೇಳಿ ಅವನ ಹಿಂದೆ ಹೋದರೆ, ತೊಟ್ಟಲಾಗಿದ್ದ ಒಂದು ಬಾಲೆ ತೋರಿಸಿ ’ಇವನೆ ನಿಮ್ಮ ದೊಡ್ಡಣ್ಣ!’ ಅನ್ನೋದೇನು? +ನನಗೆ ಒಂದು ತರಾ ಹೆದರಿಕೆಯಾಗಿ ಕಣ್ಣುಬಿಟ್ಟುಬಿಟ್ಟೆ!” +ಅಂತಕ್ಕ ಬಸ ಬಸ ಬಸ ಅಳತೊಡಗಿ ಹೆಗ್ಗಡೆಯವರ ಕಾಲಿಗೆ ಅಡ್ಡಬಿದ್ದು ಕೈ ಮುಗಿದುಕೊಂಡು ಹೇಳಿದಳು. + “ಬ್ಯಾಡ, ನನ್ನೊಡೆಯ, ಬ್ಯಾಡ. +ನೀವು ಅವರ ಮಾತು ಕೇಳಬ್ಯಾಡಿ, ನಿಮ್ಮ ದಮ್ಮಯ್ಯ ಅಂತೀನಿ. +ನಮ್ಮನ್ನೆಲ್ಲ ನಡುನೀರಿನಲ್ಲಿ ಕೈಬಿಟ್ಟು ಅವರಂತೂ ಹೋಗಿಬಿಟ್ಟರು. +ಈಗ ’ಇಲ್ಲಿ ಖುಷಿಯಾಗಿದೆ, ಇಲ್ಲಗೇ ಬನ್ನಿ’ ಅಂತಾ ಎಲ್ಲರ್ನೂ ಕರೆಯಾಕೆ ಸುರುಮಾಡಿದಾರೆ? +ಖಂಡಿತಾ ಅವರ ಮಾತು ಕೇಳಬ್ಯಾಡಿ ನೀವು! …. ನಮ್ಮ ಗತಿ ನಾಯಿಗತಿ ಆಗ್ತದೆ, ನೀವು ಕೈಬಿಟ್ಟರೆ!” +“ಏನೋ ಕನಸು ಬಿತ್ತು! +ಅದಕ್ಕೆಲ್ಲ ಅಳಾದ್ಯಾಕೆ, ಅಂತಕ್ಕ? +ನಂಗೇನಾದ್ರೂ ಕುಡಿಯಾಕೆ ಕೊಡ್ತೀಯ?”ಅಂತಕ್ಕ ಮೈಮರೆತಿದ್ದವಳು ಪಕ್ಕನೆ ಎಚ್ಚತ್ತಂತೆ “ಅಯ್ಯೋ ಒಡೆಯಾ, ನಾನೆಂಥಾ ಬಿರುಗು! +ಕಾಪಿ ಮಾಡಿಟ್ಟೀನಿ. +ನಿವು ಎದ್ದ ಕೂಡ್ಲೆ ಕೊಡೋಕೆ ಹೇಳಿದ್ರೂ ಆ ಪಾದ್ರಿ. +ಮರೆತೇ ಹೋಗಿತ್ತು. +ಎಂಥೆಂಥದೊ ಮಾತಾಡಿಬಿಟ್ಟೆ. +ನಾನೊಂದು ಮೂಳೆ!” ಎಂದು ತನ್ನನ್ನು ತಾನೆ ಬೈದುಕೊಳ್ಳುತ್ತಾ ಒಳಗೆ ಹೋಗಿ ಬಿಸಿಬಿಸಿ ಕಾಫಿ ತಂದು ಕುಡಿಯಲು ಕೊಟ್ಟಳು. +ಹೆಗ್ಗಡೆ ಹಾಸಗೆಯ ಮೇಲೆ ಮೆಲ್ಲನೆ ಎದ್ದು ಕುಳಿತು. +ಗಳಾಸನ್ನು ಕೈಗೆ ತೆಗೆದುಕೊಂಡು, ನೋಡಿ, ಮೂಸಿ ನೋಡಿ, ಮುಖ ಸಿಂಡರಿಸಿ, “ಇದು ಎಂಥದೇ ಕಷಾಯ?” ಎಂದರು. +“ಕಾಪಿ!” ಎಂದಳು ಅಂತಕ್ಕ, ತನ್ನ ಪ್ರಗತಿಶೀಲತೆಗೆ ತಾನೆ ನಸು ನಾಚಿದಂತೆ. +“ಎಂಥದೂಊ?” ಹಣೆ ಸುಕ್ಕಿ ಕೇಳಿದರು ಹೆಗ್ಗಡೆ. +“ಕಾಪಿ!” ಪುನರುಚ್ಚರಿಸಿದ ಅಂತಕ್ಕ ಆಗಲೆ ನಗುಮೊಗವಾಗಿದ್ದಳು. +“ಕಾಪಿ?ಹಾಂಗಂದ್ರೆ?” +“ಅದೊಂದು ತರದ ಬೀಜಾನ ಹುರಿದು, ಪುಡಿಮಾಡಿ, ಬೆಲ್ಲದನೀರು ಕುದಿಸಿ, ಹಾಕಿ, ಕಷಾಯ ಮಾಡಿ, ಅದಕ್ಕೆ ಹಾಲು ಹಾಕಿ ಮಾಡಿದ್ದು…. +ತೀರ್ಥಹಳ್ಳಿ ಗೀರ್ತಳ್ಳಿ ಪ್ಯಾಟೆ ಕಡೇಲೆಲ್ಲ ದಿನಾ ಹೊತಾರೆ ಕುಡಿಯಾಕೆ ಸುರುಮಾಡಿದ್ದಾರಂತೆ ಅದನ್ನ…. +ಸರೀರಕ್ಕೆ ಬಾಳ ಒಳ್ಳೇದಂತೆ…. +ಆ ಪಾದ್ರಿ ತಂದುಕೊಟ್ಟಿದ್ದು, ಒಡೆಯಾ. +ಇಲ್ಲಿದ್ರೆ ನನಗೆಲ್ಲಿಂದ ಬರಬೇಕು ಬಡವಿಗೆ? +ಆ ಪಾದ್ರಿ ಇಲ್ಲಿಗೆ ಬಂದು ಉಳಿದಾಗಲೆಲ್ಲ ಹೊತಾರೆ ಅದನ್ನೆ ಕುಡಿಯೋದು.” +ಹೆಗ್ಗಡೆ ಗಳಾಸನ್ನು ತುಟಿಗಿಟ್ಟು ಒಂದು ಸ್ವಲ್ಪ ಕುಡಿದಿದ್ದರೋ ಇಲ್ಲವೊ ಥ್ಛೂ!ಥ್ಛೂ!ಥ್ಛೂ! +ಎಂದು ಹಾಸಗೆಯ ಬದಿ ಇಟ್ಟಿದ್ದ ವಾಂತಿ ಬಟ್ಟಲಿಗೆ ವಾಕರಿಸಿ ಉಗುಳಿಬಿಟ್ಟರು. +“ಇದನ್ಯಾರು ಕುಡಿದಾರೇ? +ಈ ಔಂಸ್ತೀನ? +ಹಾಳು ಕಾಪೀನಾ ಬಿಸಾಕ!” ಎಂದು ಶಪಿಸಿ, ಗಳಾಸನ್ನು ಹಿಂದಕ್ಕೆ ಕೊಟ್ಟು, “ಬ್ಯಾರೆ ಏನಾದ್ರೂ ಇದ್ರೆ ತಬಾ. +ಇಲ್ದಿದ್ರೆ ಬರೀ ನೀರನೆ ಕೊಡು!” ಎಂದು ತುಸು ಸಿಟ್ಟಾದವರಂತೆ ಮಲಗಿಬಿಟ್ಟರು. +ಅಂತಕ್ಕ ಒಳಗೆ ಹೋಗಿ ಅಕ್ಕಿಬೋಜದ ಹೆಂಡವನ್ನೂ ಸ್ವಾರ್ಲು ಮಿನಿನ ಚಟ್ನಿಯನ್ನು ತಂದುಕೊಟ್ಟ ಮೇಲೆಯೆ ಹೆಗ್ಗಡೆಯವರು ನಂಚಿಕೊಂಡು ಕುಡಿದು, ಸ್ವಲ್ಪ ಚೇತರಿಸಿಕೊಂಡಂತಾಗಿ, ಪ್ರಸನ್ನರಾದದ್ದು! +ಅವರ ದೈಹಿಕ ಸ್ಥಿತಿ ಸ್ವಲ್ಪ ಉತ್ತಮಗೊಂಡು, ಪ್ರಜ್ಞೆ ಸಾಮಾನ್ಯಕ್ಕೆ ಬಂದ ಮೇಲೆ, ನೆನಪು ಮರುಕಳಿಸಿ “ಐಗಳೆಲ್ಲಿ, ನನ್ನ ಸಂಗಡ ಬಂದವರು?” ಎಂದರು. +ಅಂತಕ್ಕ ನಡೆದದ್ದನ್ನೆಲ್ಲ ತನಗೆ ತಿಳಿದುಬಂದಂತೆ ಹೇಳಿ “ಪಾದ್ರಿಗಳು, ಕಣ್ಣಾಪಂಡಿತರು, ಬೆಟ್ಟಳ್ಳಿ ದೇವಯ್ಯಗೌಡರು ಎಲ್ಲಾ ಇಸ್ಕೂಲು ಕಟ್ಟಡದ ಹತ್ತಿರ ಹೋಗಿದ್ದಾರೆ. +ಬಾಂವಿ ತೋಡಿಸಾಕೆ ಹಸರುಕಡ್ಡಿ ಹಿಡಿಸ್ತಾರಂತೆ ಐಗಳ ಕೈಲಿ. +ಅದಕ್ಕೇ ಅವರನ್ನೂ ಕರಕೊಂಡು ಹೋದರು ” ಎಂದಳು. +ಐಗಳು ಎಲ್ಲಿದ್ದಾರೆ ಎಂಬುದರ ಕಡೆಗಾಗಲಿ, ಅವರು ಎಲ್ಲಿಗೆ ಏತಕ್ಕೆ ಹೋದರು ಎಂದು ಅಂತಕ್ಕ ಹೇಳಿದ ವಿವರಣೆಯ ಕಡೆಗಾಗಲಿ ಹೆಗ್ಗಡೆಯವರ ಗಮನ ಹರಿದಂತೆ ಕಾಣಿಸಲಿಲ್ಲ. +ತಲೆಯನ್ನು ತಡಕಿ ನೋಡಿಕೊಂಡರು; + ತಲೆದಿಂಬಿನ ಅಕ್ಕಪಕ್ಕ ನೋಡಿದರು. +ಏನನ್ನೊ ಹುಡುಕುವಂತೆ. +“ಏನು ಬೇಕಾಗಿತ್ತು, ಅಯ್ಯಾ?”ಅಂತಕ್ಕನ ಪ್ರಶ್ನೆಗೆ ಏನನ್ನೊ ನೆನೆಯುವರಂತೆ ತುಸು ತಡೆದು “ಏನೂ ಇಲ್ಲಾ…. +ನನ್ನ ಮುಂಡಾಸು ಎಲ್ಲಿ ಹೋಯ್ತೋ ಏನೋ! +ಕಾಡಿನಾಗೇ ಬಿಸಾಕಿ ಬಂದ್ರೋ? +ತಂದ್ರೋ?ಅಂತಾ ನೋಡ್ದೆ….” ಎಂದು, ಬೆಲೆಯುಳ್ಳ ಯಾವುದನ್ನೊ ಕಳೆದುಕೊಂಡವರಂತೆ ಖಿನ್ನಮುಖಿಯಾದರು. +ಅಂತಕ್ಕ ತುಸು ಮುಗುಳು ನಗುತ್ತಾ “ಇಲ್ಲೇ ಅದೆ. +ನನ್ನ ಹತ್ರಾನೆ ಕೊಟ್ಟಿದ್ದಾರೆ. +ಜೋಪಾನವಾಗಿ ಇಡು ಅಂತಾ” ಎಂದು ಮಗುವನ್ನು ಸಂತೈಸುವಂತೆ ಮಾತನಾಡಿದಳು. +“ಎಲ್ಲಿ?ನೋಡಾನ! +ತಗೊಂಡು ಬಾ!” ಅಂತಕ್ಕನ ಆಶ್ವಾಸನೆಯಲ್ಲಿ ನಂಬುಗೆ ಸಾಲದೆ, ಪ್ರತ್ಯಕ್ಷ ಪ್ರಮಾಣ ಬಯಸುವವರಂತೆ ಹೇಳಿದರು ಹೆಗ್ಗಡೆ. +“ಕಾವೇರೀ, ಅಯ್ಯೋರ ಮುಂಡಾಸ ಮೆಲ್ಲಗೆ ತೆಗೊಂಡು ಬರ್ತೀಯಾ?” ಅಂತಕ್ಕ ಒಳಗಿದ್ದ ಮಗಳಿಗೆ ಕೂಗಿ ಹೇಳಿದಳು. +ಕಾವೇರಿ ಮುಂಡಾಸ ಎತ್ತಿಕೊಂಡು ಬಂದಳು, ಎರಡೂ ಕೈಯಲ್ಲಿ! +“ಜ್ವಾಕೆ, ಹುಡುಗೀ, ಕೆಳಗ್ಗಿಳಗೆ ಹಾಕಿಬಿಟ್ಟೀಯಾ? +ಬಿಚ್ಚಿಹೋದರೆ ಮತ್ತೆ ಕಟ್ಟಾಕೆ ಎಡು ದಿನಾನೆ ಬೇಕಾಗ್ತದೆ!” ಎಚ್ಚರಿಕೆ ಹೇಳಿದ ಹೆಗ್ಗಡೆಯವರು ಅದನ್ನು ಅಮೂಲ್ಯ ವಸ್ತುವನ್ನು ತೆಗೆದುಕೊಳ್ಳುವಂತೆ ಎರಡು ಕೈಯಲ್ಲಿಯೂ ಹಿಡಿದು ತಲೆದಿಂಬಿನ ಪಕ್ಕದಲ್ಲಿ ಜೋಕೆಯಿಂದ ಇಟ್ಟುಕೊಂಡು, ಹರ್ಷಚಿತ್ತರಾಗಿ ಕಾವೇರಿಯ ಕಡೆ ನೋಡಿ “ಇದು ಯಾರ ಈ ಹುಡುಗಿ?” ಅಂತಕ್ಕನನ್ನು ಪ್ರಶ್ನಿಸಿದರು. +“ಒಡೇರಿಗೆ ಮರತೇ ಹೋಗ್ಯದೆ…. +ಅವರು ಹೋದಾಗ ಇವಳು ಮೂರು ನಾಲ್ಕು ವರ್ಷದ ಮಗು. +ಇವಳು ನನ್ನ ಮಗಳು; +ಕಾವೇರಿ ಅಂತಾ ಹೆಸರು.” +“ನಮ್ಮ ’ಬುಚ್ಚಿ’ ವಯಸ್ಸೆ ಇರಬೇಕು ಇವಳಿಗೆ?” ಎಂದರು ಹೆಗ್ಗಡೆ, ಕಾವೇರಿಯ ಮುಖವನ್ನೆ ಎವೆಯಿಕ್ಕದೆ ನೋಡುತ್ತಾ. +ಕಾವೇರಿ ನಾಚಿಕೊಂಡು ತಾಯಿಯ ಮರೆಗೆ ಹೋದಳು. +“ಹೌದು ಇವಳಿಗೂ ಮಂಜಮ್ಮನೋರ ವಯಸ್ಸೆ. +ಎರಡು ಮೂರು ತಿಂಗಳು ಹೆಚ್ಚು ಕಡಿಮೆ ಇರಬಹುದು” ಎಂದಳು ಅಂತಕ್ಕ. +“ಮದೇಗಿದೇ ಮಾಡೋ ಯೋಚ್ನೆ ಇಲ್ಲೇನು? +ಪರಾಯಕ್ಕೆ ಬಂದ ಹುಡುಗೇರನ….” ಎಂದು ಅರ್ಧಕ್ಕೆ ನಿಲ್ಲಿಸಿ ಹೆಗ್ಗಡೆಯವರು ಅಂತಕ್ಕನ ಕಣ್ಣನ್ನೆ ನೋಡಿದರು. +ಅರಿತ ಅಂತಕ್ಕ ಸುಯ್ದು “ಒಂದು ಗಂಡೇನೊ ಗೊತ್ತಾಗಿದೆ. +ಆದರೆ ಆ ಹುಡುಗ ಗಟ್ಟದ ಮೇಲೆ ಇಲ್ಲೇ ಇರೋಕೆ ಒಪ್ತಾ ಇಲ್ಲಂತೆ….” ಎಂದಳು. +“ಗಟ್ಟದ ಮ್ಯಾಲೆ ಇರಾಕೆ ಆಗ್ದಿದ್ರೆ ಕೆಳಕ್ಕೆ ಹೋಗ್ಲಿ” +“ನಮ್ಮದು ಅಳಿಯ ಸಂತಾನ. +ಕನ್ನಡ ಜಿಲ್ಲೆಯ ಸೆಟ್ಟರಲ್ಲಿ ಗಂಡು ತರುತ್ತಾರೆ; +ಹೆಣ್ಣು ಕಳಿಸುವುದಿಲ್ಲ, ಗಟ್ಟದ ಮೇಲಿನವರ ಹಾಂಗೆ.” +“ಹೌದಲ್ಲಾ? …. ಮರೆತಿದ್ದೆ!” ಎಂದು ಗಟ್ಟಿಯಾಗಿಯೆ ನಕ್ಕು ಬಿಟ್ಟರು ಹೆಗ್ಗಡೆ. +“ಮಂಜಮ್ಮೋರ ಮದುವೆ ಇಚಾರ ಏನಾಯ್ತೊ? +ಸಿಂಬಾವಿ ಹೆಗ್ಡೇರಿಗೆ ಕೊಡ್ತಾರೆ ಅಂತಾ ಸುದ್ದಿ ಹುಟ್ಟಿತ್ತು” ಪ್ರಸ್ತಾಪವೆತ್ತಿದಳು ಅಂತಕ್ಕ. +“ಅದೊಂದು ಕತೇನೆ ಆಗ್ಯದೆ ಬಿಡು! +ಆ ಜಟ್ಟಕ್ಕ ನನ್ಹತ್ರ ಬಂದು ಬಾಯ್ ಬಾಯ್ ಹುಯ್ಕೊಂಡು ಬಿಡ್ತು. +ಈಗ ವದಂತಿ, ಆ ಹೂವಳ್ಳಿ ಎಂಕ್ಟಣ್ಣನ ಹುಡುಗೀನ ಭರ್ಮಯ್ಯಗೆ ಕೇಳ್ಯಾರಂತೆ! +ಎಂಕ್ಟಣ್ಣನೂ ತನ್ನ ಸಾಲಾನೆಲ್ಲ ತೀರಿಸಿಬಿಡಾಕೆ ಭಾರಿ ಮೊತ್ತದ ತೆರಾನೆ ಕೇಳ್ಯಾನಂತೆ! +ನೋಡಬೇಕು ಏನಾಗ್ತದೋ ಯವಹಾರ? …. ಎಲ್ಲ ಆ ಕಲ್ಲೂರು ಸಾಹುಕಾರರ ಕೈವಾಡದಾಗೆ ನಡೀತಾ ಅದೆಯಂತೆ….” +“ಅವರ ಕೈಗೆ ಸಿಕ್ಕರಾ?ಆಯ್ತು ಬಿಡಿ!” ಎನ್ನುತ್ತಾ ತನಗೊದಗಿದ್ದ ಏನನ್ನೋ ನೆನಪಿಗೆ ತಂದುಕೊಂಡಲು ಅಂತಕ್ಕ. +ಮತ್ತೆ ಸ್ವಲ್ಪ ತಡೆದು ಅಂಜುತ್ತಂಜುತ್ತಲೆ ಹೇಳಿದಳು. +“ನಾನೇನೂ ಇನ್ನೊಂದು ಸುದ್ದಿ ಕೇಳಿದ ಹಾಂಗಿದೆ?” +“ಯಾವ ಸುದ್ದಿ?” +“ಹೂವಳ್ಳಿ ನಾಯಕರ ಮಗಳನ್ನ ಮುಕುಂದೇಗೌಡರು ತಾವೇ ಆಗಬೇಕು ಅಂತಾ ಮಾಡಿಕೊಂಡದ್ರಂತೆ? …. ” +“ಯಾರೇ?ಕೋಣೂರು ಮುಕುಂದನಾ?” +“ಹ್ಞೂ!ಅವರಿಗೂ ಹೂವಳ್ಳಿ ಚಿನ್ನಕ್ಕಗೂ ಹುಡುಗರಾದ್ದಾಗಿನಿಂದಲೂ ಬಹಳ ಪಿರೀತಿಯಂತೆ!” ಎಂದ ಅಂತಕ್ಕ ತನ್ನ ಮಾತಿಗೆ ತಾನೆ ನಾಚಿದವಳಂತೆ ಮುಖ ತಿರುಗಿಸಿ, ಹಿಂದೆ ಪಕ್ಕದಲ್ಲಿ ನಿಂತು ಎಲ್ಲವನ್ನೂ ಕಿವಿಗೊಟ್ಟು ಆಸಕ್ತಿಯಿಂದ ಆಲಿಸುತ್ತಿದ್ದ ಮಗಳ ಕಡೆ ನೋಡಿ. +ಹಲ್ಲು ಬಿಟ್ಟಳು. +ಸುಬ್ಬಣ್ಣ ಹೆಗ್ಗಡೆಯವರೂ ಕಾವೇರಿಯ ಮುಖದ ಕಡೆ ನೋಡಿ ಕಿಲಕ್ಕನೆ ನಕ್ಕು “ಈ ಹುಡುಗರ ಆಟಾನೆಲ್ಲ ಲೆಕ್ಕಕ್ಕೆ ತಗೊಂಡ್ರೆ ಆದ್ದಾಂಗೆ ಆಯ್ತು ಬಿಡು! +ಏನು ಮನೇಲಿ ಹೇಳೋರು ಕೇಳೋರು, ಹಿರೇರು ದೊಡ್ಡೋರು, ಯಾರೂ ಇಲ್ಲೇನು? +ಇವರಿವರೆ ಗೊತ್ತುಮಾಡಿಕೊಳ್ಳಕೆ? +ನಾವೇನು ಕಿಲಸ್ತರೆ? +ಮದೇಗೆ ಮುಂಚೇನೆ ಮಾತುಕತೆ ಎಲ್ಲ ಮಾಡಿಕೊಂಡು ಬರಾಕೆ?” ಎಂದವರು ಅರ್ಧ ವಿನೋದಕ್ಕೆಂಬಂತೆ ನೇರವಾಗಿ ಕಾವೇರಿಯನ್ನೆ ಸಂಭೋಧಿಸಿದರು. +“ಏನೇ, ಹುಡುಗಿ, ನೀನೆ ಹೇಲೇ. +ಮುದುಕನ ಮಾತು ಸರಿಯೋ ತಪ್ಪೋ?”ಆಡಿದ್ದನ್ನೆಲ್ಲ ಹೀರಿಕೊಳ್ಳುವಂತೆ ಮನಸ್ಸಿಟ್ಟು ಆಲಿಸುತ್ತಿದ್ದ ಕಾವೇರಿ, ಕಿಲಸ್ತರ ಸ್ವಾತಂತ್ರೈದ ವಿಚಾರವಾಗಿ ಸುಬ್ಬಣ್ಣಹೆಗ್ಗಡೆಯವರು ಮಾಡಿದ್ದ ಟೀಕೆಯನ್ನು ಕೇಳಿ, ಆಗಲೆ ತನ್ನ ಹೃದಯದಲ್ಲಿ ಆ ಪದ್ಧತಿಯ ಪರವಾಗಿ ಸಹಾನುಭೂತಿಯಿಂದಿದ್ದವಳು, ತನ್ನ ಮುಖವನ್ನು ಕಂಬದ ಮರೆಯಲ್ಲಿ ಅಡಗಿಸಿಕೊಂಡು ನಿಂತಳು. +ಅಂತಕ್ಕ ಲಘುವಾಗಿ ನಗುತ್ತಾ “ಅವಳನ್ನು ಕೇಳಿದರೆ ಏನು ಹೇಳುತ್ತಾಳೆ? +ಒಟ್ಟಾರೆ ಈಗಿನ ಕಾಲದ ಮಕ್ಕಳೆಲ್ಲ, ಹೆಣ್ಣಾಗಲಿ, ಗಂಡಾಗಲಿ, ಎಲ್ಲ ಒಂದೇ! +ನಮ್ಮ ಕಾಲದಲ್ಲಿ….” ಎಂದು ಮುಂದುವರೆಸಿ, ತಾವು ಹುಡುಗರಾಗಿದ್ದ ಕಾಲದಲ್ಲಿ ಸಾಮಾಜಿಕ ನಡತೆಯಲ್ಲಿ ಎಂತಹ ಕಟ್ಟೂನಿಟ್ಟೂ ಇದ್ದುವು ಎಂಬುದನ್ನು ಹೆಗ್ಗಡೆಯವರಿಗೆ ನೆನಪುಮಾಡಿಕೊಟ್ಟಳು. +ಹೆಗ್ಗಡೆಯವರು “ಅಲ್ಲದೆ ಮತ್ತೆ?” ಎಂದು ಸಮ್ಮತಿಸಿದರೂ, ತಮ್ಮ ಪ್ರಾಯದ ಕಾಲದ ಅಸಂಯಮ ವರ್ತನೆಗಳ ನೆನಪಾಗಿ ಒಳಗೊಳಗೆ ನಗುತ್ತಿದ್ದರು. +ಅವರ ಮಂದಹಾಸದ ಧ್ವನಿ ಅಂತಕ್ಕನ ಅಂತರಾಳದಲ್ಲಿಯೂ ಪ್ರತಿಧ್ವನಿತವಾಗಿ ಅವಳೂ ತನ್ನ ಮಾತಿನ ಅಸತ್ಯತೆಗೆ ತಾನೆ ನಗುತ್ತಾ ಸೆರಗಿನಿಂದ ಮುಖ ಮರೆಸಿಕೊಂಡಳು. +ಪಾದ್ರಿ ಜೀವರತ್ನಯ್ಯಗೆ ಕೊಂಚ ಯೋಚನೆಗಿಟ್ಟುಕೊಂಡಿತು. +ಮಿಶನ್ ಸ್ಕೂಲಿನ ಹತ್ತಿರ ಬಾವಿ ತೋಡಿಸಲು ಸ್ಥಳ ಗೊತ್ತುಮಾಡುವ ಕಾರ್ಯದಲ್ಲಿ ನೀರಿನ ಪರಿಮಾಣ, ನೀರಿರುವ ಸ್ಥಾನ, ನೀರು ದೊರೆಯುವ ಆಳ ಇವುಗಳನ್ನು ನಿರ್ಧರಿಸುವುದಕ್ಕೆ ಐಗಳ ವಿಶೇಷ ಸಾಮರ್ಥ್ಯದ ಹಸುರುಕಡ್ಡಿಯ ವಿಧಾನವನ್ನು ಉಪಯೋಗಿಸಿಕೊಳ್ಳಬಹುದೆ ಬಾರದೆ ಎಂಬುದರ ವಿಚಾರವಾಗಿ ಕ್ರೈಸ್ತರಾದ ತಾವು, ಮುಖ್ಯವಾಗಿ ಕ್ರೈಸ್ತ ಮತ ಪ್ರಚಾರಕ್ಕಾಗಿಯೆ ನಿರ್ಮಿತವಾಗಲಿರುವ ಸಂಸ್ಥೆಗೆ, ಕ್ರೈಸ್ತ ಸಮ್ಮತವಲ್ಲದ ಹಿಂದೂ ದುರ್ಮಂತ್ರವಿಧಾನದ ಸಹಾಯ ಪಡೆಯಬಹುದೆ? +ನಿಮಿತ್ತ ಕೇಳುವುದು, ಗಣ  ಬರಿಸುವುದು, ದೆಯ್ಯದ ಹರಕೆ ಪೂಜೆ ಮಾಡುವುದು ಇತ್ಯಾದಿಗಳನ್ನೆಲ್ಲ ಅವಹೇಳನ ಮಾಡಿ ಖಂಡಿಸುತ್ತಿದ್ದ ತಾವೆ ಈ ಅವೈಜ್ಞಾನಿಕವಾದ ಅಪ್ರಾಕೃತ ಉಪಾಯವನ್ನು ಕೈಗೊಂಡರೆ ನಾಳೆ ತಮ್ಮ ದೊಡ್ಡ ಗುರುಗಳಾದ ರೆವರೆಂಡ್ ಲೇಕ್‌ಹಿಲ್ ದೊರೆಗಳು ಏನೆಂದಾರು? +ಆದರೆ ಕಣ್ಣಾ ಪಂಡಿತರು, ಬೆಟ್ಟಳ್ಳಿ ದೇವಯ್ಯಗೌಡರು, ಕಡೆಗೆ ಅಲ್ಲಿಗೆ ಸುಮ್ಮನೆ ನೋಡಿಕೊಂಡು ಹೋಗಲು ಬಂದಿದ್ದ ಕರಿಮಿನು ಸಾಬರೂ ಕೂಡ ಹಸುರುಕಡ್ಡಿಯ ವಿಧಾನದ ಸಮರ್ಪಕತೆಯ ವಿಷಯವಾಗಿ ತಮ್ಮ ತಮ್ಮ ಅನುಭವಗಳನ್ನು ಒತ್ತಿ ಹೇಳಿ ಸಮರ್ಥಿಸಿ, ಅದು ಅನಿರ್ವಚನೀಯ ಶಕ್ತಿಯಾದರೂ ಅತ್ಯಂತ ಸಹಜವಾದದ್ದೆಂದೂ, ಅದಕ್ಕೂ ದೆವ್ವ ಭೂತಗಣ ನಿಮಿತ್ತಾದಿಗಳಿಗೂ ಏನೂ ಸಂಬಂಧವಿಲ್ಲವೆಂದೂ ದೃಢಪಡಿಸಿದ ಮೇಲೆ ಜೀವರತ್ನಯ್ಯ ಪರೀಕ್ಷಾರ್ಥವಾಗಿ ಪ್ರಯೋಗಿಸಲು ಅನುಮತಿಯಿತ್ತರು. +ಜೀವರತ್ನಯ್ಯಗೂ ಕೆರಳಿ ಅತ್ಯಂತ ಜಾಗರೂಕ ಮನಸ್ಸಿನಿಂದ ಸಮೀಕ್ಷಿಸತೊಡಗಿದರು, ಏನಾದರೂ ದುರ್ಮಂತ್ರದ ಸುಳಿವು ಕಂಡೊಡನೆಯ ಪ್ರಯೋಗ ವಿರಾಮ ಮಾಡಲು ನಿಶ್ಚಯಿಸಿ. +ಐಗಳಿಗೆ, ಪೀಠಿಕೆಪ್ರಾಯವಾಗಿ, ಮೈಮೇಲೆ ಬಂದಂತಾಗಿ ಹೂಂಕರಿಸಬಹುದೆಂದು ನಿರೀಕ್ಷಿಸಿದ್ದ ಜೀವರತ್ನಯ್ಯಗೆ ಆಶ್ಚರ್ಯವಾಯಿತು. + ಐಗಳು ತಮ್ಮ ದಿನನಿತ್ಯದ ಸಹಜ ಸ್ಥಿತಿಯಲ್ಲಿಯೆ ಇದ್ದು, ಚೀಂಕ್ರನಿಗೆ ಒಂದು ಕವಲೊಡೆದ ಹಸುರುಕಡ್ಡಿಯನ್ನು ಯಾವುದಾದರೂ ಒಂದು ಗಿಡದಿಂದ ಮುರಿದುಕೊಂಡು ಬರುವಂತೆ ಹೇಳಿದುದನ್ನು ನೋಡಿ! +ಚೀಂಕ್ರ ಕೀಳುಜಾತಿಗೆ ಸೇರಿದ್ದ ಅಸ್ಪ್ರಶ್ಯ; +ಅವನ ಹತ್ತಿರ ಅದನ್ನು ತರಲು ಹೇಳುತ್ತಿದ್ದಾರಲ್ಲಾ? +ಅಂತಹ ಅಸಾಧಾರಣ ದೈವಿಕ ಕಾರ್ಯನಿರ್ವಹಣೆಗೆ? +ಚೀಂಕ್ರ ಯಾವ ಮುಚ್ಚುಮರೆಯು ಇಲ್ಲದೆ ಬಹಿರಂಗವಾಗಿಯೆ ಸಮೀಪದಲ್ಲಿದ್ದ ಒಂದು ಗಿಡದಿಂದ ಎಲ್ಲರೂ ನೋಡುತ್ತಿದ್ದಂತೆಯೆ ಒಂದು ದೊಡ್ಡ ಕವಲು ಕಡ್ಡಿಯನ್ನು ಮುರಿದು ತಂದ. +ಐಗಳು ಅದನ್ನು ಹಿಡಿದು ನೋಡಿ “ಏನೊ ಇದು? +ಯಾರಿಗಾದರೂ ಹೊಡೆಯುವುದಕ್ಕೆ ಬರಲು ಮುರಿದುಕೊಂಡು ಬರುವಂತೆ ತಂದಿದ್ದೀಯಲ್ಲಾ ಇಷ್ಟು ದೊಡ್ಡ ಹರೆಯನ್ನ? +ಸಣ್ಣದಾಗಿರಬೇಕು; ಬಳುಕಬೇಕು.” ಎಂದು ಹೇಳುತ್ತಿರುವಾಗಲೆ ಕಣ್ಣಾಪಂಡಿತರು ತಾವೆ ಹೋಗಿ ಒಂದನ್ನು ಮುರಿದು ತಂದರು. +ಅದು ಐಗಳಿಗೆ ಒಪ್ಪಿಗೆಯಾಯಿತೆಂದು ಅವರ ಮುಖಭಂಗಿಯಿಂದಲೆ ಗ್ರಹಿಸಿದರು ಪಾದ್ರಿ. +ಎಲ್ಲರಿಗೂ ಪವಾಡ ಸಂದರ್ಶನದ ಕುತೂಹಲ, ಆತುರ. +ದೂರ ದೂರ ಕೆಲಸ ಮಾಡುತ್ತಿದ್ದ ಆಳುಗಳೆಲ್ಲ ಕೆಲಸ ನಿಲ್ಲಿಸಿ, ನಿಂತು, ಇತ್ತಕಡೆಗೇ ನೋಡುತ್ತಿದ್ದವರು, ಈಗ ಸುತ್ತಣಿಂದಲೂ ಬಳಿ ಸಾರಿ ಗುಂಪಾಗಿ ಸಾಲಾಗಿ ಐಗಳಿಗೆ ತುಸು ದೂರವಾಗಿ ನಿಂತು, ಹುಬ್ಬು ನಿಮಿರಿಸಿ ನೋಡತೊಡಗಿದರು. +ಐಗಳು ಆ ಬಳಕುವ ಹಸುರು ಕಡ್ಡಿಯ ಕವಲಿನ ಎರಡೂ ತುದಿಗಳನ್ನು ತಮ್ಮ  ಎರಡೂ ಕೈಯಲ್ಲಿ ಪ್ರತ್ಯೇಕವಾಗಿ ಹಿಡಿದು, ತಮ್ಮ ಎದೆಗೆ ನೇರವಾಗಿ ಚಾಚಿಕೊಂಡರು. +ಅದು ಯಾವ ಒಂದು ಕಡ್ಡಿಯಿಂದ ಎರಡಾಗಿ ಕವಲಿತ್ತೊ ಆ ಕಡ್ಡಿಯ ಮೂರು ನಾಲ್ಕು ಅಂಗುಲದುದ್ದದ ಮೂಲಭಾಗ ಸಮತಲವಾಗಿ ಮುಂದಕ್ಕೆ ಚಾಚಿತ್ತು. +ಐಗಳು ಮುಂದುವರೆದು ನಡೆಯತೊಡಗಿದರು, ಬಾವಿ ತೊಡಿಸಬೇಕು ಎಂದಿದ್ದ ಎಡೆ. +ನೀರು ಸಿಕ್ಕುವ ತಾಣಕ್ಕೆ ಬಂದೊಡನೆ ಆ ಹಸುರುಕಡ್ಡಿಯ ಚಾಚಿದ್ದ ಮೂಲಭಾಗ ನೆಲದ ಕಡೆ ತನಗೆ ತಾನೆ ಬಾಗುತ್ತದೆ ಎಂದು ಕೇಳಿದ್ದ ಅವರೆಲ್ಲರೂ ಆ ಕಡ್ಡಿಯ ಕೊನೆಯ ಕಡೆಗೆ ನೋಡುತ್ತಾ ಐಗಳನ್ನು ಹಿಂಬಾಲಿಸಿದರು. +ಪಾದ್ರಿಯೂ ನಡೆಯಬಹುದಾದ ಮೋಸವನ್ನು ಕಂಡುಹಿಡಿಯುವ ಪತ್ತೇದಾರಿಕೆ ಬುದ್ಧಿಯಿಂದ ಕಣ್ಣಿನ ಮೇಲೆ ಕಣ್ಣಿಟ್ಟುಕೊಂಡು ಎಲ್ಲರಿಗಿಂತಲೂ ಮುಂದಾಗಿಯೆ ಐಗಳನ್ನು ಅನುಸರಿಸುತ್ತಿದ್ದನು. +ಪಾದ್ರಿ ಬಾವಿ ಅಗೆಯಲು ನಿರ್ದೇಶಿಸಿದ್ದ ಜಾಗದಲ್ಲಿ ಹಸುರುಕಡ್ಡಿ ಭಾಗಲಿಲ್ಲ. +ಐಗಳು ಇನ್ನೂ ಮುಂಬರಿದರು. +ಸ್ವಲ್ಪ ದೂರ ಸಾಗುವುದರಲ್ಲಿಯೆ ಕಡ್ಡಿಯ ತುದಿ ನೆಲದ ಕಡೆ ನಮಸ್ಕಾರ ಮಾಡುತ್ತದೆಯೊ ಎಂಬಂತೆ  ನಸುವೆ ಬಾಗತೊಡಗಿತು. +ಅದನ್ನು ಕಂಡೊಡನೆ ಹೋ ಎಂದು ಜಯಘೋಷ ಮಾಡುವಂತೆ ನೆರೆದವರ ಅನಂದ್ಗೋದ್ಗಾರವೆದ್ದಿತು. +ಪಾದ್ರಿಗೆ ನಂಬಿಕೆಯಾಗಲಿಲ್ಲ. +ಐಗಳೇ ತಮ್ಮ ಕೈಚಳಕದಿಂದ ಆ ಬಳುಕುವ ಹಸುರು ಕಡ್ಡಿಯ ತಲೆಯನ್ನು ಹಾಗೆ ನೆಲದ ಕಡೆಗೆ ತುಯ್ಯುವಂತೆ ಮಾಡುತ್ತಿರಬೇಕು ಎಂದುಕೊಂಡನು. +ಐಗಳು ಇನ್ನೂ ಮುಂದುವರಿದರು, ಕಡ್ಡಿ ಮತ್ತೆ ತಲೆಯೆತ್ತಿ ಮೊದಲಿನಂತೆ ನಿಂತಿತು. +“ಅತ್ತ ಕಡೆ ಪ್ರಯೋಜನವಿಲ್ಲ, ಐಗಳೆ. +ಇತ್ತ ಮೊಕ ತಿರುಗಿ, ಆ ಹಲಸಿನ ಮರದ ಕಡೆಗೆ” ಎಂದರು ಕಣ್ಣಾಪಂಡಿತರು. +ಕಣ್ಣಾಪಂಡಿತರ ಸೂಚನೆಯ ಮೇರೆಗೆ ಐಗಳು ಹಲಸಿನ ಮರದ ದಿಕ್ಕಿಗೆ ತಿರುಗಿ ನಡೆಯತೊಡಗಿದರು. +ಹಲಸಿನ ಮರ ಸಮಿಪಿಸಲು ಹಸುರು ಕಡ್ಡಿಯ ತಲೆ ಇದ್ದಕ್ಕಿದ್ದಂತೆ, ಅದರ ತುದಿಗೆ ಕಟ್ಟಿದ್ದ ಅದೃಶ್ಯ ಸೂತ್ರವನ್ನು ಯಾರೋ ನೆಲದ ಕಡೆಗೆ ಬಲವಾಗಿ ಜಗ್ಗಿಸಿ ಎಳೆದರೋ ಎಂಬಂತೆ, ಮುರಿಯುವಷ್ಟರ ಮಟ್ಟಿಗೆ ಬಾಗಿ ಕೊಂಕಿಬಿಟ್ಟಿತು! +ನೋಡುತ್ತಿದ್ದವರಿಗೆ ಆ ಕ್ರಿಯೆ ಎಷ್ಟು ವಿಸ್ಮಯಕರವಾಗಿತ್ತೆಂದರೆ,  ಯಾವುದೊ ಅತಿಮಾನುಷವಾದ ಜೀವಂತ ಶಕ್ತಿಯೆ ಆ ನಿರ್ಜೀವ ಹಸುರು ಕಡ್ಡಿಯಲ್ಲಿ ಸೇರಿಕೊಂಡು ಆಟವಾಡುತ್ತಿದೆಯೋ ಏನೋ ಎಂಬ ಭ್ರಾಂತಿಭಯ ಮೂಡುವಂತಾಯಿತು. +’ಇದು ಖಂಡಿತ ದೇವರ ಶಕ್ತಿಯಲ್ಲ; +ದೇವರ ವೈರಿಯಾದ ಸೈತಾನನ ಶಕ್ತಿಯೆ ಇರಬೇಕು!’ ಎಂದುಕೊಂಡರು ಪಾದ್ರಿ ಜೀವರತ್ನಯ್ಯ. +ಯೇಸುಕ್ರಿಸ್ತನು ಮಾಡಿದ ಮಹಾದ್ಭುತಕರವಾದ ಪವಾಡಗಳಲ್ಲಿ ಅವರಿಗೆ ಅಪಾರ ಶ್ರದ್ಧೆಯಿದ್ದರೂ, ಕ್ರೈಸ್ತನಲ್ಲದವನಲ್ಲಿ ತೋರಿಬರುವ ಆ ಪವಾಡಶಕ್ತಿ ಎಂದಿಗೂ ಸೈತಾನನದೇ ಎಂಬುದು ಅವರ ಅವೈಚಾರಿಕ ಮತಶ್ರದ್ಧೆಯಾಗಿತ್ತು. +ಐಗಳೆ, ಸ್ವಲ್ಪ ನಿಲ್ಲಿ, ಇಲ್ಲಿ ಕೊಡಿ, ನಾನು ನೋಡುತ್ತೇನೆ ಆ ಹಸುರುಕಡ್ಡಿಯನ್ನ, ಎಂದರು ಪಾದ್ರಿಗಳು . +ಪರಿಹಾಸ ಮುಖ ಮುದ್ರೆಯಿಂದಲೆ ತಮ್ಮ ಎರಡೂ ಕೈ ಹಿಡಿದಿದ್ದ ಹಸುರು ಕಡ್ಡಿಯನ್ನು ಜೀವರತ್ನಯ್ಯಗೆ ನೀಡಿದರು. +ಅವರು ಅದನ್ನು ಸ್ವಲ್ಪ ಎಚ್ಚರಿಕೆಯಿಂದಲೆ ತೆಗೆದುಕೊಂಡು ಅತ್ತ ಇತ್ತ ತಿರುಗಿಸಿ ನೋಡಿ “ನಾನು ಬೇರೆ ಒಂದು ಕಡ್ಡಿ ಮುರಿದು ಕೊಡಬಹುದೇ?” ಎಂದರು. +ಐಗಳೊಡನೆ ನಾಲ್ಕಾರು ದನಿಗಳು “ಅದಕ್ಕೇನಂತೆ ಮುರಿದು ಕೊಡಿ” ಎಂದುವು ಒಟ್ಟಿಗೆ. +ಪಾದ್ರಿ ಸ್ಕೂಲಿನ ಸುತ್ತಲೂ ಕಡಿದು ಬಯಲು ಮಾಡಿದ್ದ ಕಾಡಿನ ಅಂಚಿಗೆ ಹೋಗಿ ಒಂದು ಕವಲುಕಡ್ಡಿಯನ್ನು ಮುರಿದು ತಂದರು. +ಅದನ್ನು ಕೈಗೆ ತೆಗೆದುಕೊಳ್ಳುತ್ತಾ ಬೆಟ್ಟಳ್ಳಿ ದೇವಯ್ಯಗೌಡರು “ಇದು ಅದಕ್ಕಿಂತ ಪಸಂದಾಗಿದೆ. +ಲಾಯಖ್ಖಾಗಿ ಬಳುಕ್ತದೆ.” ಎಂದು ಐಗಳಿಗೆ ಕೊಟ್ಟರು. +ಐಗಳು ಮೆಚ್ಚಿನೋಡಿ ಹಿಂದಿನ ಕಡ್ಡಿಯನ್ನು ಹಿಡಿದ್ದಂತೆಯೆ ಇದನ್ನೂ ಹಿಡಿದುಕೊಂಡರು. +ಒಡನೆಯೆ, ನೋಡುತ್ತಿದ್ದ ಜನರೆಲ್ಲ ಕೈಚಪ್ಪಾಳೆ ಹೊಡೆದು ಹೋ ಎಂದ ಸದ್ದು ಪಾದ್ರಿಯ ಕಿವಿಗೆ ಅಪ್ಪಳಿಸಿದಂತಾಯ್ತು. + ಪಾದ್ರಿ ನೋಡುತ್ತಾರೆ. ತಾವು ಕೊಟ್ಟಿದ್ದ ಹಸುರುಕಡ್ಡಿ ಹಿಂದಿನ ಕಡ್ಡಿಗಿಂತಲೂ ಹೆಚ್ಚಾಗಿ ತಲೆಬಾಗಿದಂತಾಗಿ, ಹಲಸಿನ ಮರದ ಬುಡದಲ್ಲಿ ಬಾವಿ ಅಗೆದರೆ ನೀರು ಸಮೃದ್ಧವಾಗಿ ಉಕ್ಕುತ್ತದೆ ಎಂಬುದನ್ನು ಮೌನವಾಗಿ ಘೋಷಿಸುತ್ತದೆ! +ಪಾದ್ರಿಯ ಸೂಚನೆಯ ಪ್ರಕಾರ ಐಗಳು ಆ ಕಡ್ಡಿಯನ್ನೆ ಹಿಡಿದು ಮೊದಲು ನಡೆದ ಹಾದಿಯಲ್ಲಿಯೆ ಮತ್ತೊಮ್ಮೆ ನಡೆದರೂ ಈ ಕಡ್ಡಿ ಆ ಕಡ್ಡಿ ಗಿಂತಲೂ ಸ್ಪಷ್ಟವಾಗಿ ಬಾಗಿ ಅಥವಾ ಬಾಗದೆ ಮೊದಲಿನ ಕಡ್ಡಿ ಬರೆದಿದ್ದ ಇತಿಹಾಸವನ್ನೆ ಬರೆದುಬಿಟ್ಟಿತು. +“ಐಗಳೆ, ನಾನು ಕಡ್ಡಿ ಹಿಡಿಯುತ್ತೇನೆ, ನೋಡೋಣ ಇತ್ತ ಕೊಡಿ “ ಎಂದರು ಪಾದ್ರಿ, ಪರೀಕ್ಷೆ ನಡೆಸುವ ಉದ್ದೇಶದಿಂದ. +ಪಾದ್ರಿ ಗಳು ಹಿಡಿದಿದ್ದಂತೆಯೆ ಹಿಡಿದು ಅಲ್ಲೆಲ್ಲ ಸುತ್ತಾಡಿದರು. +ಕಡ್ಡಿ ಇನಿತೂ ಮಿಸುಕಲಿಲ್ಲ. +ನೆರೆದಿದ್ದವರೆಲ್ಲ ನಕ್ಕರು ಅಷ್ಟೆ! +ಅಷ್ಟರಲ್ಲಿ ಐಗಳು ವಿನೋದ ಮಾಡಿ ನೋಡುವ ಉದ್ದೇಶದಿಂದ “ಪಾದ್ರಿಗಳೆ, ಇನ್ನೊಮ್ಮೆ ಹಿಡಿಯಿರಿ ನೀವು. +ಒಂದು ವಿಚಿತ್ರ ತೋರಿಸುವಾ!” ಎಂದು ಕಡ್ಡಿಯನ್ನು ಸರಿಯಾಗಿ ಹಿಡಿಸುವ ನೆವದಿಂದ ಅವರ ತೋಳನ್ನು ಮುಟ್ಟಿಹಿಡಿದು “ಹ್ಞೂ! +ಈಗ ನಡೆಯಿರಿ!” ಎಂದರು. +ಹತ್ತು ಹೆಜ್ಜೆ ಹೋಗುವುದರಲ್ಲಯೆ ಪಾದ್ರಿ ಹಿಡಿದಿದ್ದ ಹಸುರುಕಡ್ಡಿ ಬಳುಕತೊಡಗಿತು! +ಪಾದ್ರಿಗೆ ವಿಸ್ಮಯ, ದಿಗಿಲು! +ತಾನೆಲ್ಲ ಸೈತಾನನ ಪ್ರಭಾವಕ್ಕೆ ಒಳಗಾದೆನೋ ಎಂದು! +ಆದರೂ ಧೈರ್ಯಮಾಡಿ ನಡೆದರು. +ಹಲಸಿನ ಮರದ ಬುಡಕ್ಕೆ ಬರುವಷ್ಟರಲ್ಲಿ ಪಾದ್ರಿ ಹಿಡಿದಿದ್ದ ಹಸುರುಕಡ್ಡಿ ಐಗಳು ಹಿಡಿದಿದ್ದಾಗ ಹೇಗೆ ಬಾಗಿತೋ ಹಾಗೆಯೆ ಬಾಗಿತ್ತು! +“ಹಾಗಾದರೆ ಇದು ಎಲ್ಲರಿಗೂ ಬಾಗುತ್ತದೆ! +ಎಲ್ಲರಿಗೂ ಸಾಧ್ಯ!” ಎಂದ ಜೀವರತ್ನಯ್ಯ ನೋಡುತ್ತಾರೆ, ಬಾಗಿದ್ದ ಕಡ್ಡಿ ನೆಟ್ಟಗೆ ನಿಂತಿದೆ, ಏನು ಮಾಡಿದರೂ ಬಾಗುವ ಚಿಹ್ನೆ ತೋರಿಸಿದೆ! +ಪಾದ್ರಿ ಬೆರಗಾಗಿ ಹೋದರು. +ಆದರೆ ಮತ್ತೆ ನೋಡುತ್ತಿದ್ದಂತೆ, ಕಡ್ಡಿ ಮೊದಲಿನಂತೆ ಬಾಗಿತ್ತು! +ಪಾದ್ರಿ ವಿಸ್ಮಯ ಸಂಮೂಢರಾದಂತೆ ಬೆಪ್ಪುನಗೆ ನಗುತ್ತಾ ಹಲ್ಲು ಬಿಡುತ್ತಿದ್ದುದನ್ನು ನೋಡಿ, ಗುಟ್ಟು ಅರಿತಿದ್ದ ದೇವಯ್ಯ ಮತ್ತು ಕಣ್ಣಾಪಂಡಿತರು ಗಹಗಹಿಸಿ ನಕ್ಕರು. +ಪಾದ್ರಿಯ ಪ್ರಶ್ನಾರ್ಥಕ ಮುಖಮುದ್ರೆಯನ್ನು ನೋಡಿ ಕಣ್ಣಾಪಂಡಿತರು ರಾಗಸ್ವರದಲ್ಲಿ “ಅಯ್ಯೋ, ಪಾತ್ರಿಗಳೇ, ನಿಮಗೆ ಇಷ್ಟೂ ಗೊತ್ತಾಕಕಿಲ್ಲವೋ? +ಐಗಳು ನಿಮ್ಮ ರಟ್ಟೆ ಹಿಡಿದುಕೊಂಡಿದ್ದರಲ್ಲವಾ? +ಅವರು ನಿಮ್ಮನ್ನು ಮುಟ್ಟಿದಾಗ ಕಡ್ಡಿ ಬಾಕುತ್ತಿತ್ತು; +ಬಿಟ್ಟಾಗ ನೆಟ್ಟಕಾಕುತಿತ್ತು… ಅವರೆ ಹಿಡಿದುಕೊಂಡರೂ ಸೈ, ಯಾರೆ ಹಿಡಿದುಕೊಂಡಿರಲಿ ಅವರು ಮೈಮುಟ್ಟಿದರೂ ಸೈ, ಹಸುರುಕಡ್ಡಿ ಕೆಲಸಮಾಡುತ್ತದೆ!” ಎಂದರು. +ಜೀವರತ್ನಯ್ಯ ಸ್ವಲ್ಪ ಅಪ್ರತಿಭರಾದರು. +ಅದರ ತರ್ಕ ಅವರಿಗೆ ಬಗೆಹರಿಯಲಿಲ್ಲ. +ಇದು ಮಂತ್ರಶಕ್ತಿಯೋ? +ಅಥವಾ ವಿದ್ಯುಚ್ಛಕ್ತಿಯಂತೆಯೆ ಒಂದು ತರಹದ ನೈಸರ್ಗಿಕ ಶಕ್ತಿಯೋ? +ನೈಸರ್ಗಿಕ ಶಕ್ತಿಯಾದರೆ ಎಲ್ಲರಲ್ಲಿಯೂ ಏಕೆ ಇಲ್ಲ? +ಅಥವಾ ಬುದ್ಧಿಶಕ್ತಿಯಂತೆ, ಮೇಧಾ ಪ್ರತಿಭಾ ಶಕ್ತಿಗಳಂತೆ, ದೈವದತ್ತವಾಗಿ ಒಬ್ಬರಲ್ಲಿದ್ದು ಇನ್ನೊಬ್ಬರಲ್ಲಿ ಇರದೆ ಇರಬಹುದಲ್ಲವೆ? +ಆದರೆ ಬುದ್ಧಿ ಮೇಧಾ ಮತ್ತು ಪ್ರತಿಭಾಶಕ್ತಿಗಳನ್ನು ಪಡೆದವರು ಐಗಳಂತೆ ಆ ಶಕ್ತಿಗಳನ್ನು ಇತರರಲ್ಲಿ ಸ್ಪರ್ಶಮಾತ್ರದಿಂದ ಪ್ರಚೋದಿಸಲು ಸಾಧ್ಯವೇ? +ಅಲ್ಲದೆ ಐಗಳೇನು ತಮ್ಮ ಇಚ್ಛಾಶಕ್ತಿಯಿಂದ ಅದನ್ನು ಇತರರಲ್ಲಿ ಪ್ರಚೋದಿಸುತ್ತಿಲ್ಲ. +ಅವರು ಯಾರನ್ನು ಮುಟ್ಟಿದರೂ, ಇಚ್ಛೆಯಿರಲಿ ಇಲ್ಲದಿರಲಿ ಹಸುರುಕಡ್ಡಿ ಕೆಲಸಮಾಡುತ್ತದೆ! +ಇದೆಂತಹ ವಿಚಿತ್ರಶಕ್ತಿ? +“ಅನಂತಯ್ಯನವರೆ, ನಿಮಗೆ ಈ ಶಕ್ತಿ ಹೇಗೆ ಬಂತು? +ಎಲ್ಲಿ ಸಂಪಾದಿಸಿರಿ? +ಯಾರಾದರೂ ಮಂತ್ರ ಹೇಳಿಕೊಟ್ಟರೇ?” ಎಂದು ಐಗಳನ್ನೇ ಕೇಳಿದರು ಪಾದ್ರಿ. +ಐಗಳು ನಕ್ಕರು. “ಮಂತ್ರವೂ ಇಲ್ಲ, ತಂತ್ರವೂ ಇಲ್ಲ. +ನಾನು ಹುಡುಗನಾಗಿದ್ದಾಗ ನಮ್ಮೂರಲ್ಲಿ, ಗಟ್ಟದ ತಗ್ಗಿನಲ್ಲಿ ಸೋಮೇಶ್ವರದ ಸಮೀಪದ ಒಂದು ಹಳ್ಳಿ, ಅಲ್ಲಿ ಯಾರೋ ಹೀಗೆಯೆ ಬಾವಿ ತೋಡಿಸಲು ಇಬ್ಬರನ್ನು ಕರೆಯಿಸಿದ್ದರು. +ನಾವು ನಾಲ್ಕಾರು ಮಕ್ಕಳು ಅಲ್ಲಿಯೆ ಚಿಣ್ಣಿಕೋಲು ಆಡುತ್ತಿದ್ದರು ನೋಡುತ್ತಾ ನಿಂತೆವು. +ಅವರು ಹೀಗೆಯೆ ಹಸುರುಕಡ್ಡಿ ಹಿಡಿದು ಹೋಗುತ್ತಿದ್ದಾಗ ಅದು ಬಾಗುತ್ತಿತ್ತು, ನೆಟ್ಟಗಾಗುತ್ತಿತ್ತು, ಮತ್ತೆ ಬಾಗುತ್ತಿತ್ತು. +ನಮಗೆ ಅದನ್ನು ಕಂಡು ಬೆಪ್ಪು ಬೆರಗು! +“ಅಂವ ಏನೋ ಕೈಚಳಕ ಮಾಡ್ತಿದ್ದಾನೆ; +ಕಳ್ಳ!” ಎಂದ ನಮ್ಮಲ್ಲಿ ಒಬ್ಬ. +“ನಾವೂ ಮಾಡಿ ನೋಡುವಾ!” ಎಂದ ಇನ್ನೊಬ್ಬ. +ಅವರೆಲ್ಲರೂ ಹೋದಮೇಲೆ ಮಾವೋ ಕವಲೊಡೆದ ಹಸರುಕಡ್ಡಿ ಮುರಿದು ತಂದು, ಅವನು ಹಿಡಿದಿದ್ದ ಹಾಗೆಯೆ ಹಿಡಿದುಕೊಂಡು ನಡೆದಾಡಿದೆವು. +ಯಾರ ಕಡ್ಡಿಯೂ ಬಳುಕಲಿಲ್ಲ; +ನನ್ನ ಕಡ್ಡಿ ಮಾತ್ರ ಅವನ ಕಡ್ಡಿಯಂತೆಯೆ ಬಳಕುತ್ತಿತ್ತು, ನೆಟ್ಟಗಾಗುತ್ತಿತ್ತು; +ಒಂದು ಕಡೆ ಚೆನ್ನಾಗಿ ಬಾಗಿಯೆ ನಿಂತೂಬಿಟ್ಟಿತು! +ಮಕ್ಕಳೆಲ್ಲರಿಗೂ ಬೆರಗೋ ಬೆರಗು! …. ನನಗೆ ಬಂದದ್ದು, ನೋಡಿ, ಹೀಗೆ, ಈ ಶಕ್ತಿ….” +“ಹೋಯ್, ಐಗಳೇ, ಕೂಗುತ್ತಾರಂತೆ ಹೆಗ್ಗಡೇರು” ಎಂದರು ಯಾರೋ ಒಬ್ಬರು ಗುಂಪಿನಲ್ಲಿದ್ದವರು. +ಅಷ್ಟರಲ್ಲಿ ಅಂತಕ್ಕನ ಮನೆಗೆಲಸ ಆಳು, ಕೊರಗ ಹುಡುಗ, ಅನಂತಯ್ಯನವರ ಕಡೆಗೆ ಧಾವಿಸಿ ಬಂದು, ಹೆಗ್ಗಡೆಯವರು ಕರೆಯುತ್ತಾರೆ ಎಂದು ತುಳುವಿನಲ್ಲಿ ಹೇಳಿದನು. +ಪಾದ್ರಿಗೆ ಗಾಬರಿಯಾಗಿ “ಏನಂತೆ?” ಎಂದರು. +ಅನಂತಯ್ಯ ಮತ್ತೆ ತುಳುವಿನಲ್ಲಿಯೆ ಆ ಹುಡುಗನೊಡನೆ ಮಾತಾಡಿ, ಪಾದ್ರಿಗೆ ಹೇಳಿದರು. + “ಏನೂ ಇಲ್ಲ, ಸುಮ್ಮನೆ ಹೇಳಿಕಳಿಸಿದ್ದಾರೆ ನನಗೆ, ಅಷ್ಟೆ ಹಾಸಗೆಯ ಮೇಲೆ ಎದ್ದು ಕುಳಿತ್ತಿದ್ದಾರಂತೆ. +ಮಾತುಕತೆ ಆಡುತ್ತಿದ್ದಾರಂತೆ….”ಊಟದ ಹೊತ್ತು ಆಗಲೆ ಮೀರಿ ಹೋಗಿತ್ತು. +ಎಲ್ಲರೂ ಹಗಲೂಟಕ್ಕಾಗಿ ಕೆಲಸ ನಿಲ್ಲಿಸಿ ಹೊರಟರು. +ಜೀವರತ್ನಯ್ಯ, ದೇವಯ್ಯ, ಅನಂತಯ್ಯ ಮೂವರೂ ಅಂತಕ್ಕನ ‘ಹೋಟೆಲ್’ ಆಗಿ ಪರಿವರ್ತಿತವಾಗಿದ್ದ ಮನೆಗೆ ನಡೆದರು. +ಅದನ್ನಾಗಲೆ ‘ಓಟ್ಲುಮನೆ’ ಎನ್ನತೊಡಗಿದ್ದರು ಜನ. +ಅಂತಕ್ಕನ ಓಟ್ಲುಮನೆಯ ಜಗಲಿಯಲ್ಲಿ ಸ್ವಸ್ಥರಾದಂತೆ ಹಾಸಗೆಯ ಮೇಲೆ ಎದ್ದು ಕುಳಿತಿದ್ದ ಸುಬ್ಬಣ್ಣಹೆಗ್ಗಡೆಯವರು ತಡಬೆ ಹತ್ತಿಳಿದು ದಾಟಿಬರುತ್ತಿದ್ದ ದೇವಯ್ಯ ಜೀವರತ್ನಯ್ಯರನ್ನು ಕಂಡು, ತಮಗೆ ರೂಢಮೂಲವಾಗಿದ್ದ ಹಳ್ಳಿಯ ಯಜಮಾನಿಕೆಯ ದೊಡ್ಡ ಗಂಟಲಿನಿಂದಲೆ ಕೇಳಿದರು “ಓಯ್ ಅನಂತೈಗಳೆ, ನನ್ನ ಜೋಡು ಅಲ್ಲೇ ಬಿಟ್ಟು ಬಂದಿರಾ ಏನು ಕತೆ? +ಬೆತ್ತದ ದೊಣ್ಣೇನೂ ಕಾಣಾದಿಲ್ಲ? …. ”ತಮ್ಮ ವಸ್ತುಗಳ ವಿಚಾರದಲ್ಲಿ ಹೆಗ್ಗಡೆಯವರಿಗೆ ಕೃಪಣೋಪಮ ಮನೋಧರ್ಮವಿರುವುದನ್ನೂ, ಅವು ಎಲ್ಲಿಯಾದರೂ ಕಳೆದುಹೋಗುವುದಿರಲಿ ತುಸು ಕಣ್ಮರೆಯಾದರೂ ಹುಡುಗರಂತೆ ರೊಚ್ಚಿಗೆದ್ದು ಹಠಮಾಡುತ್ತಾರೆ ಎಂಬುದನ್ನೂ ಅರಿತಿದ್ದ ಅನಂತಯ್ಯ ಮಕ್ಕಳನ್ನು ಸಾಂತ್ವನಗೊಳಿಸುವಂತೆ “ಇಲ್ಲ ಇಲ್ಲ; +ಎಲ್ಲವನ್ನೂ ತೆಗೆದುಕೊಂಡು ಬಂದಿದ್ದೇವೆ. +ದೇವಯ್ಯಗೌಡರೆ ತೆಗೆದು ಇಟ್ಟಿದ್ದಾರೆ “ ಎಂದು ಹಿಂದೆ ಅಂಜಿಕೆಯಿಂದಲೆಂಬಂತೆ ತುಸು ಹುದುಗಿಯೆ ಬರುತ್ತಿದ್ದ ದೇವಯ್ಯನ ಕಡೆ ಮುಖ ಮಾಡಿ “ಅಲ್ಲವೋ, ದೇವಯ್ಯಾ? +ನಿಮ್ಮ ಕಡೆಗೇ ನಾನು ಕೊಟ್ಟೆನಲ್ಲವೇ?” ಎಂದು ಹೆಗ್ಗಡೆಯವರಿಗೆ ಗೊತ್ತಾಗದಂತೆ ಕಣ್ಣು ಮಿಟುಕಿಸಿದರು. +ದೇವಯ್ಯನಿಗೂ ಗೊತ್ತಿತ್ತು, ತನ್ನ ಹಳೆಮನೆ ದೊಡ್ಡಪ್ಪಯ್ಯನ ಸ್ವಭಾವ. +ಆದ್ದರಿಂದಲೆ ಅವನಿಗೆ ಐಗಳ ಕಣ್ಮಿಟುಕು ಅರ್ಥವಾಗಿ, ಮೆಟ್ಟು ದೊಣ್ಣೆಗಳು ಎಲ್ಲಿವೆಯೋ ಏನೋ ಎಂಬುದು ಅವನಿಗೆ ಸ್ವಲ್ಪವೂ ಗೊತ್ತಿಲ್ಲದಿದ್ದರೂ “ಅಲ್ಲೆ ಇವೆ, ಐಗಳೆ, ಕಲಬಿ ಹಿಂದುಗಡೆ “ ಎಂದುಬಿಟ್ಟನು, ಹೆಗ್ಗಡೆಯವರಿಗೆ ಕೇಳಿಸುವಂತೆ ಗಟ್ಟಿಯಾಗಿ. +ಜಗಲಿಯ ಕೆಳಗಣ ಅರೆಗತ್ತಲೆ ಕಿರುಜಗಲಿಯ ಮೂಲೆಯಲ್ಲಿದ್ದ ಪುರಾತನವಾದ ಆ ಕಲಬಿಯ ಮೇಲೆ ಮಲಗಿದ್ದ ಯಾವನೊ ಒಬ್ಬ ಊಟದ ಗಿರಾಕಿ ಕಲಬಿಯ ಸುತ್ತಮುತ್ತ ಮೇಲೆ ಕೆಳಗೆ ಕಣ್ಣಟ್ಟಿನೋಡಿ, ಯಾವ ಮೆಟ್ಟನ್ನೂ ದೊಣ್ಣೆಯನ್ನೂ ಕಾಣದೆ ಸೋಜಿಗಪಟ್ಟು ಸುಮ್ಮನಾದದ್ದನ್ನು ಯಾರೂ ಗಮನಿಸಲಿಲ್ಲ. +ಜೀವರತ್ನಯ್ಯಗೆ ಮುದುಕ ಹೆಗ್ಗಡೆಯ ವರ್ತನೆ ಕಂಡು ಸೋಜಿಗವೆನಿಸಿತು. +ತನ್ನ ಹಿರಿಯ ಮಗ ದೊಡ್ಡಣ್ಣಹೆಗ್ಗಡೆಯ ಅನ್ವೇಷಣೆಗೆ ಶೋಕಕಾತರವಾಗಿ ಮನೆಯಿಂದ ಹೊರಟು, ಹತ್ತಲಾರದ ಗುಡ್ಡ ಹತ್ತಿ, ಆಯಾಸದಿಂದಲೆ ಮೈಮರೆತು, ಇತ್ತೋ ಇತ್ತೋ ಎಂಬ ಸ್ಥಿತಿಗಿಳಿದು, ಈಗತಾನೆ ಚೇತರಿಸಿಕೊಂಡಿದ್ದ ಆತನು, ಕಡು ಬಡತನದ ಬಾಳಿನವರಿಗೆ ಮಾತ್ರ ಸಹಜವಾಗುವ ಜಿಪುಣ ರೀತಿಯಲ್ಲಿ ಮೆಟ್ಟು ದೊಣ್ಣೆಗಳಂತಹ ಅಲ್ಪ ಬೆಲೆಯ ಸಾಮಾನ್ಯ ವಸ್ತುಗಳಿಗಾಗಿ ಅಷ್ಟೊಂದು ಸೋದ್ವಿಗ್ನನಾಗಿ ಗೋಗರೆಯುತ್ತಿರುವುದನ್ನು ಕಂಡು! +ಜೊತೆಗೆ ಬೆಟ್ಟಳ್ಳಿ ದೇವಯ್ಯಗೌಡರ ವರ್ತನೆಯೂ ಆಶ್ಚರ್ಯಕರವಾಗಿಯೆ ಇತ್ತು. + ಸ್ಕೂಲು ಜಾಗದಿಂದ ಬದುವಾಗ ಅಂತಕ್ಕನ ಮನೆಯ ಅಂಗಳದೊಳಕ್ಕೆ ಬೈಸಿಕಲ್ಲನ್ನು ತಂದು ನಿಲ್ಲಿಸುವ ಸಲುವಾಗಿ ಪಾದ್ರಿ ಉಣುಗೋಲಿನ ಗಳುಗಳನ್ನು ಸರಿಸಲು ಹೋದಾಗ, ಹಿಂದೆ ಬೈಸಿಕಲ್ಲನ್ನು ನೂಕಿಕೊಂಡು ಬರುತ್ತಿದ್ದ ದೇವಯ್ಯ ಬೇಡವೆಂದು ಸನ್ನೆಮಾಡಿ, ಬೈಸಿಕಲ್ಲನ್ನು ಹೊರಗಡೆಯೆ ಮರೆಯಾಗಿ ನಿಲ್ಲಿಸಿ, ಇತರರಂತೆ ತಡಬೆ ಹತ್ತಿ ದಾಟಿಯೆ ಬಂದಿದ್ದನು. +ಅಂಗಳದೊಳಕ್ಕೆ ಬಂದ ಮೇಲೆಯೂ, ಬೆತ್ತಹಿಡಿದ ಮೇಷ್ಟರನ್ನು ಎದುರುಗೊಳ್ಳಲು ಹಿಂಜರಿವ ತಪ್ಪುಮಾಡಿದ ಹುಡುಗನಂತೆ, ಸುಬ್ಬಣ್ಣಹೆಗ್ಗಡೆಯವರ ಸಾನ್ನಿಧ್ಯದಲ್ಲಿ ಕುಗ್ಗಿ ಕುನುಗಿ ಜಣುಗುವಂತೆ, ಹೆದಹೆದರಿ ನಡೆದುಕೊಳ್ಲುತ್ತಿದ್ದನ್ನು. +ಶರೀರ ದಾರ್ಢ್ಯದಲ್ಲಿ, ಧೈರ್ಯದಲ್ಲಿ, ವ್ಯಕ್ತಿತ್ವದಲ್ಲಿ, ದಿಟ್ಟತನದಲ್ಲಿ ಇತರರೆಲ್ಲರಿಗೂ ಮೀರಿ ಎದ್ದು ಕಾಣುತ್ತಿದ್ದ ಅವನು ಇತರ ಯಾರ ಮುಂದೆಯೂ ನಡೆದುಕೊಳ್ಳದಿದ್ದ ರೀತಿಯಲ್ಲಿ ಸುಬ್ಬಣ್ನಹೆಗ್ಗಡೆಯವರ ಮುಂದೆ ನಡೆದುಕೊಳ್ಲುತ್ತಿದ್ದುದನ್ನು ನೋಡಿ ಪಾದ್ರಿ ಕಕ್ಕಾವಿಕ್ಕಿಯಾದನು. +“ಏನೋ, ದೇವು? +ನೀನ್ಯಾವಾಗ ಬಂದ್ಯೋ? +ಮನೇಕಡೆ ಎಲ್ಲ ಹ್ಯಾಂಗಿದಾರೊ? +ನಿನ್ನ ಅಪ್ಪಯ್ಯ ಚಂದಾಗಿದಾರೇನೋ?” ದೇವಯ್ಯನ ಧ್ವನಿಯನ್ನು ಕೇಳಿದ ಹೆಗ್ಗಡೆಯವರು ಆತನು ಸಮೀಪಿಸಿದೊಡನೆ ಪ್ರಶ್ನೆಯ ಹಿಂದೆ ಪ್ರಶ್ನೆಯ ಬಾಣಬಿಟ್ಟರು. +ಆತ ತಡವರಿಸುತ್ತಿದ್ದುದನ್ನು ನೋಡಿ “ಯಾಕೋ ಮಾತಾಡೋದಿಲ್ಲಾ?” ಎಂದೂ ಕೇಳಿಬಿಟ್ಟರು. +ದೇವಯ್ಯ ಪಾದ್ರಿಯ ಪಕ್ಕದ ರಕ್ಷೆಯಲ್ಲೆಂಬಂತೆ ಸಂಕುಚಿತನಾಗಿ ನಿಮತು “ನಾನಾಗ್ಲೆ ಬಂದಿದ್ದೆ, ದೊಡ್ಡಪಯ್ಯ…. +ಮನೇಲೆಲ್ಲ ಚಂದಾಗಿದ್ದಾರೆ” ಎಂದು ಉತ್ತರ ಹೇಳಿ, “ನಿಮಗೆ ಹ್ಯಾಂಗದೆ ಈಗ, ದೊಡ್ಡಪ್ಪಯ್ಯ?” ಎಂದು ಯೋಗಕ್ಷೇಮ ವಿಚಾರಿಸಿದನು. +ದೊಡ್ಡ ಗಂಟಲಿನಿಂದ ರಭಸವಾಗಿ ಎಂಬಂತೆ ಸುಬ್ಬಣ್ಣಹೆಗ್ಗಡೆ “ಈಗ ಹ್ಯಾಂಗದೆ ಅಂತಾ ಕೇಳ್ತೀಯಲ್ಲಾ? +ನಂಗೇನಾಗಿದ್ಯೋ?” ಎಂದು ಹ್ಹ ಹ್ಹ ಹ್ಹ ನಕ್ಕರು. +ಮುದುಕನಿಗೆ ತನಗೇನಾಗಿತ್ತು ಎಂಬುದರ ಅರಿವೂ ನೆನಪೂ ತಪ್ಪಿದೆ ಎಂಬುದೇನೊ ಎಲ್ಲರಿಗೂ ಗೊತ್ತಾಯಿತು. +ಆದ್ದರಿಂದ ಜೀವರತ್ನಯ್ಯ ತಾನು ವಿಚಾರಿಸಬೇಕೆಂದಿದ್ದ ಯೋಗಕ್ಷೇಮದ ಪ್ರಶ್ನೆಯನ್ನು ತಡೆಹಿಡಿದು, ಬೇರೆ ರೀತಿಯಲ್ಲಿ ಮಾತಾಡತೊಡಗಿದನು, ಜಗುಲಿಯ ಮೇಲಿದ್ದ ಚಾಪೆಯ ಮೇಲೆ ಕುಳಿತುಕೊಂಡು. +ದೇವಯ್ಯ ಮಾತ್ರ ನಿಂತೇ ಇದ್ದನು. + ಹಳೆಯ ಹಿರಿಯರ ಮುಂದೆ ಕೈಕಟ್ಟಿಕೊಂಡು, ಮಾತಾಡದೆ, ವಿಧೇಯತಾಭಂಗಿಯಲ್ಲಿ ನಿಲ್ಲುವ ಆ ಬಾಲ್ಯ ಅಭ್ಯಾಸ ಸ್ನಾಯುಗತವಾಗಿತ್ತು ಆತನಿಗೆ ಮತ್ತು ಆ ಕಾಳದ ಮಲೆನಾಡಿನ ನಾಮಧಾರಿ ಗೌಡರ ದೊಡ್ಡ ಮನೆತನದ ಹಲವು ಮಕ್ಕಳಿಗೆ! +“ಯಜಮಾನರಿಗೆ ಬಹಳ ಪ್ರಯಾಸವಾಗಿರಬೇಕು, ಗುಡ್ಡ ಹತ್ತಿ ಇಳಿದು ಇಲ್ಲಿಯವರೆಗೆ ನಡೆದು ಬರುವುದಕ್ಕೆ, ಅಲ್ಲವೆ?” ಪಾದ್ರಿ ಔಪಚಾರಿಕವಾಗಿ ಮಾತು ಪ್ರಾರಂಭಿಸಿದರು. +“ನೀವೇನೊ ನಮ್ಮ ದೊಡ್ಡಣ್ಣ ವಿಚಾರ ಹೇಳಿದರಂತೆ, ಅನಂತಯ್ಯ ತಿಳಿಸಿದರು. +ಇಷ್ಟು ವರ್ಷ ಆ ಸುದ್ದಿ ಈ ಸುದ್ದಿ ಕೇಳಿ ಕೇಳಿ, ಕಾದೂ ಕಾದೂ ಸಾಕಾಗಿದೆ ನನಗೆ, ಪಾದ್ರಿಗಳೆ” ಎನ್ನುತ್ತಿದ್ದ ಹಾಗೆ ಸುಬ್ಬಣ್ಣಹೆಗ್ಗಡೆಯವರ ಮುಖಚರ್ಯೆ, ಕಂಠಧ್ವನಿ, ಯಾಜಮಾನ್ಯದ ಭಂಗಿ, ಮಾತಿನ ರೀತಿ ಎಲ್ಲ ಬದಲಾಯಿಸಿದಂತೆ ತೋರಿತು. +ಗಂಟಲು  ತುಸು ಗದ್ಗದವಾಗಿ ಮುಂದುವರೆಸಿದರು, ಹನಿಗೂಡುತ್ತಿದ್ದ ಕಣ್ಣುಗಳಿಂದ ಜೀವರತ್ನಯ್ಯನ ಕಣ್ಣುಗಳನ್ನೆ ನೇರವಾಗಿ ನೋಡುತ್ತಾ. “ಮ್ಯಾಲೆ ಮ್ಯಾಲೆ ಹಸಿಯಾಗಿದ್ದ್ಹಾಂಗೆ ಕಾಣ್ತೀನಿ; + ಒಳಗೆಲ್ಲಾ ಬೆಂದು ಸುಟ್ಟು ಹೋಗ್ಯದೆ…. +ಆ ಪಾಪದ ಹುಡುಗಿ, ನನ್ನ ಸೊಸೇ ಗೋಳೋ ಹೇಳಬಾರದು; +ಮುಂಡೇನೂ ಅಲ್ಲ, ಮುತ್ತೈದೇನೂ ಅಲ್ಲ; +ಅಂತರಾಳದಲ್ಲಿ ಸಿಕ್ಕಿ ನಕ್ಕಬಳೀತಾ ಅದೆ. +ಅಂವ ಸತ್ತೇಹೋದಿದ್ರೂ, ಅತ್ತೂ ಕರೆದೂ ಪೂರೈಸ್ತಿತ್ತು. +ಬದುಕಿದಾನೆ ಅಂತಾ ಹೇಳಿದ್ರು. +ಎಲ್ಲಿದಾನೋ?ಹ್ಯಾಂಗಿದಾನೋ? +ಏನೇನು ಕಷ್ಟಪಡ್ತಿದಾನೊ? +ಹೆಂಡ್ತಿ ಮಕ್ಕಳ್ನೆಲ್ಲ ಎಷ್ಟು ನೆನೆದು ಗೋಳಾಡ್ತಿದಾನೋ? +ಚಿಂತೆ ಮಾಡಿ ಮಾಡಿ ಅದೂ ಸಾಯ್ತಾ ಅದೆ; +ನಾನೂ ಅಬ್ರಿ ತುದಿಗೆ ಜಾರ್ತಾ ಇದೀನಿ. +ಈ ಸಾರಿ ಸತ್ತಿದಾನೆ ಇಲ್ಲ ಬದುಕಿದಾನೆ, ಒಂದನ್ನ ನಿಚ್ಚೆಯ್ಸಿಕೊಂಡು ಹೋಗಾನ ಅಂತಾ ಹತ್ತಲಾರದ ಗುಡ್ಡಾನೂ ಹತ್ತಿ ಬಂದೆ…. +ಎಲ್ಲಿ ಕಂಡ್ರಿ?ಯಾರು ಕಂಡ್ರು? +ಅವನೇ ಹೌದೆ?ಇಲ್ಲ, ಹಿಂದೆಲ್ಲ ಆದ ಹಂಗೆ, ಯಾರನ್ನೋ ಏನೋ ಅವನು ಅಂತಾ ಹೇಳ್ತಿದಾರೋ? …. ” +ಅಷ್ಟರಲ್ಲಿ ಅಂತಕ್ಕ ದೇವಯ್ಯನನ್ನು ಒಳಗೆ ಕರೆದಳು. +ಸುಬ್ಬಣ್ಣಹೆಗ್ಗಡೆಯವರು ಊಟಕ್ಕೆ ಏರ್ಪಾಡಾಗುತ್ತಿದೆ ಎಂಬುದನ್ನು ಅರಿತು “ಪಾದ್ರಿಗಳೆ, ಪಾಪ, ನಿಮಗೆ ಊಟಕ್ಕೆ ಬಾಳ ಹೊತ್ತಾಯ್ತು. +ಮೊದಲು ಊಟ ಮುಗಿಸಿ” ಎಂದರು. +ಇತ್ತೀಚೆಗೆ, ಸಾಮಾನ್ಯವಾಗಿ, ಪಾದ್ರಿಯೊಡನೆಯೆ ಹೊರಗಡೆ ಜಗಲಿಯಲ್ಲಿ ಊಟಕ್ಕೆ ಕುಳಿತುಕೊಳ್ಳುತ್ತಿದ್ದ ದೇವಯ್ಯ ಇವತ್ತು ಹಾಗೆ ಮಾಡಲು ಅಂಜಿ, ಜೀವರತ್ನಯ್ಯ ಒಬ್ಬರಿಗೇ ಕುಳಿತುಕೊಳ್ಳುತ್ತಿದ್ದ ದೇವಯ್ಯ ಇವತ್ತು ಹಾಗೆ ಮಾಡಲು ಅಂಜಿ, ಜೀವರತ್ನಯ್ಯ ಒಬ್ಬರಿಗೇ ಜಗಲಿಯಲ್ಲಿ ಬಳ್ಳೆಹಾಕಲು ಹೇಳಿ, ತಾನೂ ಐಗಳೂ ಒಳಗೆ ಜಾತಿಯವರು ಕೂರುವಲ್ಲಿ ಊಟಕ್ಕೆ ಕುಳಿತರು. +ಬೆಟ್ಟಳ್ಳಿ ದೇವಯ್ಯಗೌಡರ ಆ ಬದಲಾಯಿಸಿದ ವರ್ತನೆಯನ್ನು ಗಮನಿಸಿ ಜೀವರತ್ನಯ್ಯ ಒಳಗೊಳಗೆ ತುಸು ಅಸಮಾಧಾನ ಪಟ್ಟುಕೊಂಡರು. +ಊಟವಾದ ಮೇಲೆ ಜೀವರತ್ನಯ್ಯ ಸುಬ್ಬಣ್ಣಹೆಗ್ಗಡೆಯವರು ಮಲಗಿದ್ದ ಹಾಸಗೆಯ ಪಕ್ಕಕ್ಕೆ ಹೋದರು. +ಮುದುಕ ಮಲಗಿ ನಿದ್ರಿಸುತ್ತಿದ್ದಂತೆ ತೋರಿತು. +ಆದರೆ ತುಸು ಹೆಚ್ಚು ಸಂಖ್ಯೆಯಲ್ಲಿಯೆ ಅಲ್ಲಿ ನಿತ್ಯವಾಸವಾಗಿದ್ದ ಮನೆಯೆ ನೊಣಗಳು ವೃದ್ಧನ ಮುಖದ ಮೇಲೆ ಕುಳಿತೂ ಹಾರಿ, ಹಾರೀ ಕುಳಿತು, ನಿದ್ದೆಯ ನಿರಂತರತೆಗೆ ಭಂಗ ತರುತ್ತಿದ್ದುವು. +ಪಾದ್ರಿ ತನ್ನ ಅಂಗವಸ್ತ್ರದಿಂದ ಅವುಗಳನ್ನು ಅಟ್ಟಿದಾಗ, ಅದರ ಗಾಳಿ ಬೀಸಿದಕ್ಕೆ ಮುದುಕ  ಕಣ್ಣುತೆರೆದರು. +“ತಮಗೆ ನಿದ್ರಾಭಂಗವಾಯಿತೇನೊ? +ನೊಣ ಅಟ್ದೆ ಅಷ್ಟೆ, ಮಲಗಿ ನಿದ್ದೆಮಾಡಿ.” +“ಇಲ್ಲ ಇಲ್ಲ, ನಿದ್ದೆ ಬಂದಿರಲಿಲ್ಲ. +ಸುಮ್ಮನೆ ಕಣ್ಣುಮುಚ್ಚಿಕೊಂಡು ಮಲಗಿದ್ದೆ,  ಬನ್ನಿ, ಕೂತುಕೊಳ್ಳಿ….” ಎಂದು ಸುಬ್ಬಣ್ಣಹೆಗ್ಗಡೆ ಏಲತೊಡಗಿದರು. +“ಬೇಡ, ಬೇಡ, ಏಳುವುದು ಬೇಡ. +ನೀವು ಮಲಗೇ ಇರಿ. +ನಾನು ಕೂತು ಕೊಳ್ಳುತ್ತೇನೆ” ಎಂದು ಪಾದ್ರಿ ಏಳುತ್ತಿದ್ದ ಹೆಗ್ಗಡೆಯವರನ್ನು ಮಲಗಿರುವಂತೆ ಮಾಡಿ, ತಾವು ಪಕ್ಕದಲ್ಲಿ ಕುಳಿತುಕೊಂಡರು. +ದೇವಯ್ಯನೂ ಅನಂತಯ್ಯನೂ ಎಲೆ, ಅಡಿಕೆ, ಹೊಗೆಸೊಪ್ಪು, ಸುಣ್ಣದಡಬ್ಬಿ ಇರುವ ಮಾಸಿದ ಹಳೆಯ ಬೆತ್ತದ ತಟ್ಟೆಯೊಂದನ್ನು ತಂದು ಇಟ್ಟು, ತಾವೂ ಪಾದ್ರಿಯ ಪಕ್ಕದಲ್ಲಿಯೆ ಕುಳಿತರು. +ಪಾದ್ರಿ ಪ್ರಶಾಂತ ಧ್ವನಿಯಿಂದ ನಿಧಾನವಾಗಿ ಹೇಳತೊಡಗಿದರು. +ಮುದುಕನಿಗೆ ಉದ್ವೇಗ ಹೆಚ್ಚಿ, ಮತ್ತೆ ಎಲ್ಲಿಯಾದರು. +ಹೃದಯಾಘಾತಕ್ಕೆ ಅವಕಾಶವಾದೀದು ಎಂಬುದು ಅವರ ಭಯಾಶಂಕೆಯಾಗಿತ್ತು. +“ಆ ದಿನ ನಮ್ಮ ಮಿಶಲ್ ಆಸ್ಪತ್ರೆ ನೋಡಲು ಮಂಡಗದ್ದೆಗೆ ಬಂದಿದ್ದ ಸಿಂಧುವಳ್ಳಿ ಚೆನ್ನಪ್ಪಗೌಡರು, ಸಾಯಂಕಾಲ ನಮ್ಮ ದೊಡ್ಡ ಗುರು ರೆವರೆಂಡ್ ಲೇಕ್‌ಹಿಲ್ ಸಾಹೇಬರು ಮತ್ತು ಲೇಡಿ ಡಾಕ್ಟರರಾಗಿರುವ ಮಿಸ್ ಕ್ಯಾಂಬೆಲ್ ಇವರೊಡನೆ ಹೊಳೆಯ ಕಡೆ ವಾಕ್ ಹೋಗಿದ್ದರು. +ಅಂದರೆ ಸುಮ್ಮನೆ ಗಾಳಿಸೇವನೆಯಾಗಿ ತಿರುಗಾಡಲು ಹೋಗಿದ್ದರಂತೆ. +ತುಂಗಾ ನದಿಯ ತೀರದ ಒಂದು ಕಡೆ ಬಯಲಿನಲ್ಲಿ ಗೋಸಾಯಿಗಳು ಬಿಡುಬಿಟ್ಟಿದ್ದರಂತೆ. +ನಮ್ಮ ರೆವರೆಂಡ್ ಸಾಹೇಬರು, – ಅವರು ಅಂಥ ಜನರನ್ನು ಕಂಡರೆ ಯೋಗಕ್ಷೇಮ ಇಚಾರಿಸದೆ ಹೋಗುವುದಿಲ್ಲ, – ಬೀಡಿನ ಹತ್ತಿರಕ್ಕೆ ಹೋಗಿ ಅವರ ಯಜಮಾನನೊಡನೆ ಮಾತನಾಡುತ್ತಿದ್ದಂತೆ. +ಅವರು ಕನ್ನಡಭಾಷೆ ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ. +ಉಪನ್ಯಾಸವನ್ನೂ ಕೊಡಬಲ್ಲರು. +ನಮ್ಮ ಮೇಗರವಳ್ಳಿ ಮಿಶನ್‌ಸ್ಕೂಲಿನ ಕಟ್ಟಡ ಮುಗಿದ ಮೇಲೆ, ಇದನ್ನು ಪ್ರಾರಂಭಮಾಡುವ ಸಂದರ್ಭದಲ್ಲಿ, ಅವರನ್ನೆ ಕರೆಯಬೇಕು ಎಂದಿದ್ದೇವೆ. +ಆಗ ನೀವು ಅವರನ್ನು ನೋಡಬಹುದು, ಮತ್ತು ಕನ್ನಡದಲ್ಲಿಯೇ ಮಾತನ್ನೂ ಆಡಬಹುದು. +ಅವರು ಇಂಗ್ಲೀಷ್ ಜನರಲ್ಲಿ ಬಹಳ ದೊಡ್ಡ ಧರ್ಮಗುರುಗಳು….” +“ದೊಡ್ಡಣ್ಣಹೆಗ್ಗಡೆಯವರ ವಿಚಾರ ಹೇಳುತ್ತಿದ್ದಿರಲ್ಲಾ?” ನಡುವೆ ಬಾಯಿ ಹಾಕಿದರು ಐಗಳು ಅನಂತಯ್ಯ, ಪಾದ್ರಿಯ ಗಮನವನ್ನು ಪ್ರಕೃತ ವಿಷಯಕ್ಕೆ ತಿರುಗಿಲೆಂದು. +ಪಾದ್ರಿ ಮುಂದುವರಿದರು.“ಕಾವಿಲ್ಲದ ಬಾವುಟ ಅಲ್ಲಲ್ಲಿ ನೆಟ್ಟು, ಒಂದು ಎರಡು ಮಾರು ದೂರದೂರದಲ್ಲಿ ಬಣ್ಣ ಬಣ್ಣದ ತೇಪೆಹಾಕಿದ ಬಟ್ಟೆಯ ಸಣ್ಣಸಣ್ಣ ಡೇರೆ ಹಾಕಿಕೊಂಡಿದ್ದರಂತೆ. +ಚಿನ್ನಪ್ಪಗೌಡರು ಅವುಗಳ ನಡುನಡುವೆ ಸುಮ್ಮನೆ ಕುತೂಹಲಕ್ಕಾಗಿ ಕಂಡವರೊಡನೆ ಮಾತಾಡುತ್ತಾ ಹೋಗುತ್ತಿದ್ದರು. +ಇದ್ದಕ್ಕಿದ್ದಹಾಗೆ ಅವರ ಗಮನ ದೊಡ್ಡಣ್ಣ ಹೆಗ್ಗಡೆಯವರ ನೆನಪುತರುವ ಹಾಗಿದ್ದ ಒಬ್ಬ ಗೋಸಾಯಿಯ ಮೇಲೆ ಬಿತ್ತು. +ಅವನನ್ನೂ ಮಾತಾಡಿಸಿರಂತೆ ಹತ್ತಿರ ಹೋಗಿ. +ಗಡ್ಡ ಮೀಸೆ ಕೆದರಿಬಿಟ್ಟಿದ್ದನಂತೆ, ತಲೆಕೂದಲು ಉದ್ದುದ್ದ ಬೆಳೆದು ಸಿಕ್ಕುಗಟ್ಟಿತಂತೆ. +ಸುಮ್ಮನೆ ಇವರನ್ನೆ ದುರುದುರು  ನೋಡಿದರಂತೆ. +ಚಿನ್ನಪ್ಪಗೌಡರಿಗೆ ಅನುಮಾನ ಬಂದು ರೆವರೆಂಡ್ ಲೇಕ್‌ಹಿಲ್‌ರಿಗೂ ತಿಳಿಸಿದರಂತೆ. +ಅವರು ಯಜಮಾನ ಗೋಸಾಯಿಯನ್ನು ಪ್ರಶ್ನಿಸಿದಾಗ ಅವನು ಒಪ್ಪಕೊಂಡನಂತೆ, ಚಿನ್ನಪ್ಪಗೌಡರು ಕಂಡ ಗೋಸಾಯಿ ನಿಜವಾದ ಗೋಸಾಯಿ ಅಲ್ಲವೆಂದೂ, ಕೆಲವು ವರ್ಷಗಳ ಹಿಂದೆ ತಿರುಪತಿಗೆ ಬಂದಿದ್ದ ಯಾತ್ರಿಕರು ಸತ್ತನೆಂದು ಬಿಟ್ಟುಹೋಗಿದ್ದ ಯಾವನೊ ಒಬ್ಬನನ್ನು ತಮ್ಮ ಕಡೆಯವರು ನೋಡಿ, ಜೀವವಿದ್ದಂತೆ ತೋರಿದ್ದರಿಂದ ಮದ್ದುಕೊಟ್ಟು ಬದುಕಿಸಿಕೊಂಡರೆಂದೂ, ಆದರೆ ಆದರೆ ಅವನಿಗೆ ತನ್ನ ಪೂರ್ವ ಜೀವನವೆಲ್ಲ ಮರೆತುಹೋಗಿ, ತಾನು ಯಾರು? +ಎಲ್ಲಿಂದ ಬಂದವನು? +ಎಂಬ ವಿಷಯ ಯಾವುದನ್ನೂ ಹೇಳಲಾರದೆ ಹೋದನಂತೆ. +ಕಡೆಗೆ ಮಾತು ಕೂಡ ಆಡಲಾರದೆ ಮೂಗನಂತೆ ಗೋಸಾಯಿಗಳ ಸಂಗಡ ಅಲೆಯುತ್ತಾ ಇದ್ದಾನಂತೆ.” +“ಗೋಸಾಯಿಗಳೇ ಮದ್ದುಹಾಕಿ ದೊಡ್ಡಣ್ಣ ಹೆಗ್ಗಡೆಯವರಿಗೆ ಅವರ ಹಿಂದಿನದೆಲ್ಲ ಮರೆಯುವಂತೆ ಮಾಡಿರಲಿಕ್ಕೂ ಸಾಕು! +ಮಂತ್ರ ಮಾಟದಲ್ಲಿ ಕದೀಮರಂತೆ ಈ ಗೋಸಾಯಿಗಳು” ಐಗಳು ನಡುವೆ ಬಾಯಿಹಾಕಿದರು. +“ಹಾಗಿರಲಿಕ್ಕಿಲ್ಲ, ಐಗಳೆ” ಅನಂತಯ್ಯನವರ ಅಭಿಪ್ರಾಯಕ್ಕೆ ಈ ಸಂದರ್ಭದಲ್ಲಿ ಆದಾರವಿಲ್ಲ ಎಂಬುದನ್ನು ಸಮರ್ಥಿಸಲು ಪಾದ್ರಿ ಮುಂದುವರೆದರು. + “ಆ ಯಜಮಾನ ಗೋಸಾಯಿ, ಪಾಪ. +ಆ ದಿಕ್ಕುಗೆಟ್ಟ ಅನಾಥನನ್ನು ತಾವು ಹೋದಲೆಲ್ಲ ಕರೆದುಕೊಮಡು ಹೋಗಿ, ಅವನ ಊರು ಮನೆ ವಾರಸುದಾರರನ್ನು ಪತ್ತೆಮಾಡಲು ಬಹಳ ಪ್ರಯತ್ನ ಮಾಡಿದನಂತೆ. +ಈಗಲೂ ಪ್ರಯತ್ನ ಮಾಡುತ್ತಲೆ ಇದ್ದಾನಂತೆ. +ತಾವು ಅಲೆಯುತ್ತಾ ಹೋಗಿ ಬೀಡು ಬಿಟ್ಟ ಅನೇಕ ಊರುಗಳಲ್ಲಿ ವಿಚಾರಿಸಿದರಂತೆ; +ಯಾರೂ ಗುರುತಿಸಲಿಲ್ಲವಂತೆ. +ಈಗ್ಗೆ ಸುಮಾರು ಐದಾರು ತಿಂಗಳ ಹಿಂದೆ ಬೀರೂರು ಹತ್ತಿರ ಅವರು ಬೀಡು ಬಿಟ್ಟಿದ್ದಾಗ ಕತ್ತೆ ಹೇರೆತ್ತುಗಳ ಮೇಲೆ ಅಡಿಕೆ ಸಾಗಿಸುತ್ತಿದ್ದ ಒಡ್ಡರ ಗುಂಪು ಸಿಕ್ಕಿ, ಅವರಲ್ಲೊಬ್ಬನು – ತೀರ್ಥಹಳ್ಳಿ ಕಡೆ ಯಾರೊ ಒಬ್ಬರು ತಿರುಪತಿಗೆ ಹೋಗಿದ್ದವರು ತಪ್ಪಿಹೋಗಿದ್ದಾರೆಂದು ಬಹಳ ಕಾಲದಿಂದಲೂ ಹುಡುಕುತ್ತಿದ್ದಾರೆ ಎಂಬ ವದಂತಿ ಹೇಳಿದನಂತೆ. +ಆದ್ದರಿಂದಲೆ ಅವರು ಈ ಕಡೆ ಬೀಡು ತಿರುಗಿಸಿ ಹೊರಟಿದ್ದಾರಂತೆ….” +ಮಲಗಿ ಆಲಿಸುತ್ತಿದ್ದ ಸುಬ್ಬಣ್ಣ ಹೆಗ್ಗಡೆಯವರಿಗೆ ಸಂತೋಷಾಧಿಕ್ಯದಿಂದಲೆ ಉಕ್ಕಿ ಬರುತ್ತಿದ್ದ ದುಃಖಪ್ರವಾಹವನ್ನು ತಡೆಯಲಾಗಲಿಲ್ಲ. +ಕಣ್ಣೀರು ಸುರಿಸುತ್ತಾ ಎದ್ದು ಕುಳಿತು “ಮತ್ಯಾಕೆ ಅನುಮಾನ? +ಬಿಡಿ, ಬಿಡಿ, ಪಾದ್ರಿಗಳೆ, ಅಂವ ನಮ್ಮ ದೊಡ್ಡಣ್ಣ ಅಲ್ಲದೆ ಬ್ಯಾರೆ ಯಾರೂ ಅಲ್ಲ. +ಹೋಗಾನ, ನಾನೂ ಬರ್ತಿನಿ. +ಹ್ಯಾಂಗಾರು ಮಾಡಿ ಅವನ್ನೊಂದು ಮನೆಗೆ ಕರಕೊಂಡು ಬಂದ್ರೆ ಸಾಕು. +ತಣ್ಣಗೆ ಕಣ್ಣು ಮುಚ್ತೀನಿ…. +ಅಂತೂ ಕಡೆಗೂ ಕಣ್‌ಬಿಟ್ಟ ನಮ್ಮ ತಿರುಪತಿ ತಿಮ್ಮಪ್ಪ!” ಎನ್ನುತ್ತಾ ತಮ್ಮ ಎರೆಡೂ ಕೈಗಳನ್ನು ಜೋಡಿಸಿ ಹಣೆಗಿಟ್ಟುಕೊಂಡು “ಸ್ವಾಮಿ!ಸ್ವಾಮಿ!ಕಾಪಾಡಪ್ಪಾ!” ಎಂದು ಅಗೋಚರನಿಗೆ ಕೃತಜ್ಞತೆ ಅರ್ಪಿಸುವ ಭಂಗಿಯಲ್ಲಿ ನಮಸ್ಕಾರ ಮಾಡಿದರು. +ದೇವಯ್ಯನಿಗೆ ಭಾವಾವೇಗದಿಂದ ಗಂಟಲು ಉಬ್ಬಿಬಂದ ಹಾಗಾಗಿ ಮುಖ ತಿರುಗಿಸಿಕೊಂಡನು. +ಬಾಗಿಲು ಸಂಧಿಯಲ್ಲಿ ಮರೆಯಾಗಿ ನಿಂತು ಆಲಿಸುತ್ತಿದ್ದ ಕಾವೇರಿ ಓಡಿ ಹೋಗಿ ತನ್ನ ತಾಯಿಗೆ ಮಂಗಳವಾರ್ತೆಯನ್ನು ಒದರಿಬಿಟ್ಟಳು. +ಹೆಗ್ಗಡೆಯವರು ತಿರುಪತಿ ತಿಮ್ಮಪ್ಪಗೆ ಕೃತಜ್ಞತೆ ಸಲ್ಲಿಸಿದ್ದನ್ನು ನೋಡಿ, ಪಾದ್ರಿ ಕನಿಕರದಿಂದ ಮುಗುಳುನಗುತ್ತಾ ಹೇಳಿದರು. + “ಸ್ವಲ್ಪ ಸಮಾಧಾನ ತಂದುಕೊಳ್ಳಿ, ಯಜಮಾನರೆ. +ನಿಮ್ಮ ತಿರುಪತಿ ತಿಮ್ಮಪ್ಪನವರು ಇನ್ನೂ ಪೂರ್ತಿ ಕಣ್ಣುಬಿಟ್ಟಂತೆ ತೋರುತ್ತಿಲ್ಲ!” +“ಯಾಕೆ ಕಣ್ಣು ಬಿಡಬಾರದು ಅವನು? +ಅವನಿಗೆ ಸಲ್ಲಿಸಬೇಕಾದ ಕಾಣಿಕೆ ಗೀಣಿಕೆ ಎಲ್ಲ ಸಲ್ಲಿಸಿ, ಋಣ ತೀರಿಸಿ, ಹಿಂದಕ್ಕೆ ಬರ್ತಿದ್ದಾಗಲೆ ಅಲ್ಲೇನು ನಮ್ಮ ದೊಡ್ಡಣ್ಣ ಕಾಯಿಲೆ ಬಿದ್ದದ್ದು? +ನಮ್ಮ ಕಷ್ಟಾನೆಲ್ಲ ಕಾಣದೆ ಇರಾಕೆ ಅವನ ಕಣ್ ಇಂಗಿ ಹೋಗ್ಯಾದೇನು? +ನಾವೇನು ಪಾಪ ಮಾಡಿದ್ದು ನಮಗೀ ದುಕ್ಕ ಕೊಡಾಕೆ?” ಹೇಳುತ್ತಾ ಸಿಟ್ಟು ದುಃಖಕ್ಕೆ ತಿರುಗಿ ಅಳತೊಡಗಿದರು ಸುಬ್ಬಣ್ಣ ಹೆಗ್ಗಡೆ. +ತಾನು ‘ಸ್ವಾಮಿ, ಕಾಪಾಡಪ್ಪಾ!’ ಎಂದು ಸ್ವಲ್ಪ ಹೊತ್ತಿಗೆ ಮುನ್ನ ಕೃತಜ್ಞತೆಯಿಂದ ಕೈಮುಗಿದಿದ್ದ ತನ್ನ ದೇವರನ್ನೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಸವಾಲು ಹಾಕುತ್ತಿದ್ದ ಮುದುಕ ಹೆಗ್ಗಡೆಯ ಹಿಂದೂಭಕ್ತಿ ಕ್ರೈಸ್ತಪಾದ್ರಿಗೆ ಅರ್ಥವಾಗದೆ ಬೆಪ್ಪು ಬೆರಗಾಗಿ ಹೋದನು. +“ಇವರ ಕೈಗೆಲ್ಲಿಯಾದರೂ ಇವರ ದೇವರು ಸಿಕ್ಕರೆ, ಗುದ್ದಿಯೂ ಬಿಡುತ್ತಾರೆ!” ಎಂದುಕೊಂಡನು ಮನಸ್ಸಿನಲ್ಲಿಯೆ ಜೀವರತ್ನಯ್ಯ. +ಆದರೆ ಅಳುತ್ತಿದ್ದ ಮುದುಕನನ್ನು ನೋಡಿ, ಮನಕರಗಿ, ಸಹಿಸಲಾರದೆ ಸಂತೈಸಿದನು. + “ಅಳಬೇಡಿ, ಯಜಮಾನರೆ, ದೇವರು ಒಳ್ಳೆಯದು ಮಾಡಿಯಾನು…. +ಆ ಗೋಸಾಯಿ ಕಳೆದು ಹೋಗಿದ್ದ ದೊಡ್ಡಣ್ಣಹೆಗ್ಗಡೆಯವರೇ ಹೌದು ಎನ್ನುವುದಕ್ಕೇನೂ ಬೇಕಾದಷ್ಟು ಸಾಕ್ಷಿ ಸಿಕ್ಕಿದೆ. +ತೀರ್ಥಹಳ್ಳಿಯ ದಾಸಯ್ಯನವರೂ ಅವರ ಕೆಲವು ಪರಿಚಯಸ್ಥರೂ ಅವರನ್ನು ಗುರುತಿಸಿದ್ದಾರೆ. +ಆದರೆ ಅವರಿಗೆ ನೆನಪು ತಪ್ಪಿ ಹೋಗಿದೆ. +ಹಳೆಯದೊಂದೂ ಜ್ಞಾಪಕವಿಲ್ಲ. +ತನಗೆ ತಾನೆ ಒಮ್ಮೊಮ್ಮೆ ಏನನ್ನೊ ಹೇಳಿಕೊಳ್ಳುತ್ತಿದ್ದಾರಂತೆ. +ಆದರೆ ಅದು ಏನು ಎತ್ತ ಎಂದು ಯಾರಿಗೂ ಅರ್ತವಾಗಲಿಲ್ಲ. +ಅದಕ್ಕೇ ಯಾವುದೋ ಬೇರೆಯ ಪ್ರೇತ ಅವರ ದೇಹಕ್ಕೆ ಸೇರಿಕೊಂಡುಬಿಟ್ಟಿದೆ ಎಂದು ಹೇಳತೊಡಗಿದ್ದಾರೆ. +ಆದರೆ ಅದೆಲ್ಲ ನಂಬಲಾರ್ಹವಾದುದೆಲ್ಲ….” +“ಈಗ ಎಲ್ಲಿದ್ದಾನೆ ಅವನು?” ಮುದುಕನ ಪ್ರಶ್ನೆ. +“ತೀರ್ಥಹಳ್ಳಿ ಲಾಕಪ್ಪಿನಲ್ಲಿ!” ಪಾದ್ರಿಯ ಉತ್ತರ. +ಸುಬ್ಬಣ್ಣಹೆಗ್ಗಡೆಯವರಂತೆ ದೇವಯ್ಯನೂ ಐಗಳು ಬೆಚ್ಚಿದಂತಾದರು. +“ಆ?ಲಾಕಪ್ಪಿನಲ್ಲೇಕೆ?” ಕೇಳಿದನು ದೇವಯ್ಯ. +“ಪೋಲಿಸರ ವಶದಲ್ಲಿ! …. ನೀವು ಯಾರೂ ಗಾಬರಿಯಾಗುವ ಅವಶ್ಯಕತೆ ಏನಿಲ್ಲ…. +ಯಜಮಾನ ಗೋಸಾಯಿ ಏನೊ ದೊಡ್ಡಣ್ಣಹೆಗ್ಗಡೆಯವರಂತಿರುವ ಆ ಮೂಕಗೋಸಾಯಿಯನ್ನು ನಮ್ಮ ಕಡೆ ಒಪ್ಪಿಸಲು ಸಿದ್ಧನಾಗಿದ್ದ…. +ಆದರೆ ಆ ಗೋಸಾಯಿ ನಮ್ಮ ಜೊತೆ ಬರಲು ನಿರಾಕರಿಸಿದ. +ಅಲ್ಲದೆ ಸಿಂಧುವಳ್ಳಿ ಚಿನ್ನಪ್ಪಗೌಡರಿಗೂ ತೀರ್ಥಹಳ್ಳಿ ದಾಸಯ್ಯನವರಿಗೂ ಹೊಡದೇಬಿಟ್ಟ! +ಜೊತೆಗೆ ನಮ್ಮ ರೆವರೆಂಡ್ ಸಾಹೇಬರೂ ಒಂದು ವಿಚಾರ ಎಚ್ಚರಿಕೆ ಹೇಳಿದರು. +ಅದು ಕಾನೂನಿಗೆ ಸಂಬಂಧಪಟ್ಟದ್ದು….” +“ಏನಂತೆ?ಕಾನೂನಿಗೆ ಸಂಬಂಧಪಟ್ಟದ್ದು?” +“ಆಮೇಲೆ ಅವನು ಒಂದು ವೇಳೆ ದೊಡ್ಡಣ್ಣಹೆಗ್ಗಡೆ ಅಲ್ಲ ಎಂದು ಹತ್ತಿರದ ಸಂಬಂಧಿಗಳು ಹೇಳಿಬಿಟ್ಟರೆ? +ಯಜಮಾನ ಗೋಸಾಯಿಗೆ ಎರಡು ಸಾವಿರ ರೂಪಾಯಿ ಕೊಡುತ್ತೇವೆ ಎಂದು ನಾವು ಒಪ್ಪಿಕೊಂಡಿದ್ದೇವೆ. +ಅವನು ದೊಡ್ಡಣ್ಣಹೆಗ್ಗಡೆಯವರ ರಕ್ಷಣೆ ಪೋಷಣೆಗಾಗಿ ಖರ್ಚು ಮಾಡಿದ್ದೇನೆ ಎಂದು ಹೇಳುತ್ತಿರುವ ಸಾವಿರದ ಐನೂರು. +ಜೊತೆಗೆ ಅವನು ಮಾಡಿರುವ ಉಪಕಾರಕ್ಕಾಗಿ ಬಹುಮಾನರೂಪಾಯಿ ಕೊಡುವ ಐನೂರು….” +ಸುಬ್ಬಣ್ಣಹೆಗ್ಗಡೆಯವರು ಆ ಭಯಂಕರ ಪ್ರಮಾಣದ ಮೊತ್ತಕ್ಕೆ ದಿಗ್‌ಭ್ರಮೆ ಹೊಡೆದವನಂತೆ ಕಣ್ಣುಬಾಯಿ ಬಿಟ್ಟುಕೊಂಡು ತಮ್ಮನ್ನೆ ನೋಡುತ್ತಿದ್ದ ಭಯಭಂಗಿಯ ಅರ್ಥ ಏನು ಎಂಬುದನ್ನು ಗ್ರಹಿಸಿಯೂ ಗ್ರಹಿಸದವರಂತೆ ಜೀವರತ್ನಯ್ಯ ಮುಂದುವರಿದರು. + “ಆತ ದೊಡ್ಡಣ್ಣಹೆಗ್ಗಡೆಯವರೇ ಹೌದು ಎಂದಾದರೆ ನಾವು ಕೊಡುವುದೇನು ಹೆಚ್ಚಲ್ಲ ಎಂದು ಇಟ್ಟುಕೊಳ್ಳಿ….” + ತಟಕ್ಕನೆ ಬಾಯಿ ಹಾಕಿದರು ಸುಬ್ಬಣ್ಣಹೆಗ್ಗಡೆ, ಮುನಿದ ದನಿಯಿಂದ. “ಹ್ಯಾಂಗೆ ಹೆಚ್ಚಲ್ಲ ಅಂತೀರಿ, ಪಾದ್ರಿಗಳೆ? +ದೊಡ್ಡಣ್ಣ ತಿರುಪತಿಗೆ ಹೋಗುವಾಗ ಅವನ ಸೊಂಟದಾಗೆ ಇದ್ದ ಚಿನ್ನದ ನೆವಣಾನೆ ಸಾವಿರಾರು ರೂಪಾಯಿ ಬೆಲೆಬಾಳ್ತದೆ. +ಒಂದು ಕಿರುಬೆಳ್ಳು ಗಾತ್ರಾನೆ ಇತ್ತು ಆ ನೆವಣ! +ಅವನ ಕಿವೀಲಿ ಇದ್ದ ಒಂಟಿಗಳಿಗೇ ಸುಮಾರು ದುಡ್ಡು ಆಗ್ತಿತ್ತು. +ಅದನ್ನೆಲ್ಲ ಕಿತ್ತಿಕೊಂಡು ಆ ನಿಮ್ಮ ಯಜಮಾನ ಗೋಸಾಯಿ ಮತ್ತೂ ಎರಡು ಸಾವಿರ ರೂಪಾಯಿ ನುಂಗಾನ ಅಂತಾ ಮಾಡ್ಯಾನೆ! +ಅವನ ಮ್ಯಾಲೆ ಫಿರ್ಯಾದಿ ಕೊಡ್ತೀನಿ, ಅಮಲ್ದಾರ ಹತ್ರ, ನನ್ನ ಮಗನ್ದೆಲ್ಲಾ ದೋಚಿಕೊಂಡಿದಾನೆ ಅಂತಾ! …. ”ಪಾದ್ರಿಗೆ ಇಸ್ಸಿ ಎನಿಸಿತು. +ಇಂತಹ ದುರಂತ ಸನ್ನಿವೇಶವಲ್ಲದಿದ್ದರೆ ಅವನು ನಗುತ್ತಿದ್ದನೊ ಏನೊ! +ಅನಂತಯ್ಯನೂ ಏನು ಸನ್ನಿವೇಶವಲ್ಲದಿದ್ದರೆ ಅವನು ನಗುತ್ತಿದ್ದನೊ ಏನೊ! +ಅನಂತಯ್ಯನೂ ಏನು ಹೇಳುವುದಕ್ಕೂ ತೋಚದೆ ಪೆಚ್ಚಾದವನಂತೆ ಕುಳಿತು. +ನೆಲ ನೋಡುತ್ತಿದ್ದನು. +ದೇವಯ್ಯನಿಗೆ ತುಂಬ ಅವಮಾನವಾದಂತಾಗಿ “ಬಿಡಿ, ದೊಡ್ಡಪ್ಪಯ್ಯ; + ಈಗ ಅದನ್ನೆಲ್ಲ ಯಾಕೆ ಎತ್ತಬೇಕು? +ಮೊದುಲು ಆ ಗೋಸಾಯಿ ನಮ್ಮ ದೊಡ್ಡಣ್ಣಯ್ಯ ಹೌದೇ ಅಲ್ಲವೇ ಅಂತ ಗೊತ್ತಾಗಲಿ” ಎಂದು ಮನಸ್ಸಿನ ದಿಕ್ಕು ಬದಲಾಯಿಸುವ ಸಲುವಾಗಿ ಜೀವರತ್ನಯ್ಯನ ಕಡೆಗೆ ತಿರುಗಿ “ಮಂಡಗದ್ದೆ ಮಿಶನ್ ಆಸ್ಪತ್ರೆ ಲೇಡಿ ಡಾಕ್ಟರು ಪರೀಕ್ಷೆ ಮಾಡಿ ಅದೇನೊ ಹೇಳಿದರು ಅಂತಾ ಹೇಳಿದ್ಹಾಂಗಿತ್ತು ನೀವು?” ಎಂದನು. +“ಅವರು ಸಾಧಾರಣ ಪರೀಕ್ಷೆ ಮಾಡಿದರಷ್ಟೆ. +ಆದರೆ ಅವನನ್ನು ಪೋಲಿಸು ಇನ್‌ಸ್ಪೆಕ್ಟರ್ ಸಹಾಯದಿಂದ ತೀರ್ಥಹಳ್ಳಿಗೆ  ತಂದಮೇಲೆ, ತೀರ್ಥಹಳ್ಳಿ ಆಸ್ಪತ್ರೆ ಡಾಕ್ಟರೇ ಪರೀಕ್ಷೆ ಮಾಡಿ, ಔಷಧ ಪಥ್ಯ ಎಲ್ಲ ನೋಡಿಕೊಳ್ತಿದ್ದಾರೆ. +ಅವನು ಕಾನೂನು ಪ್ರಕಾರ ಲಾಕಪ್ಪಿನಲ್ಲಿದ್ದಾನೆ ಅಷ್ಟೆ. +ಆದರೆ ವಾಸ್ತವವವಾಗಿ ಆಸ್ಪತ್ರೆಯ ಹತ್ತಿರ ಇರುವ ನಮ್ಮ ಮನೆಯ ಹಿಂಭಾಗದ ಒಂದು ಕೋಣೆಯಲ್ಲಿ ಇಟ್ಟಿದ್ದೇವೆ. +ನನ್ನ ಮಗಳೂ ಸಹಾಯ ಮಾಡುತ್ತಿದ್ದಾಳೆ. +ಎಷ್ಟೋ ವರ್ಷ ಆಗಿರಬೇಕು ಆ ಪುಣ್ಯಾತ್ಮ ಸ್ನಾನಮಾಡಿ, ನಮಗೆ ನಾಲ್ಕೈದು ಜನಕ್ಕೆ ಸಾಕೋಸಾಕಾಯ್ತು, ಅವನಿಗೆ ಸ್ನಾನ ಮಾಡಿಸಬೇಕಾದರೆ! +ಅವನಿಗೊಂದು ಕ್ಷೌರ ಮಾಡಿಸುವುದಕ್ಕೆ ಪ್ರಯತ್ನ ಮಾಡಿದೆವು; +ನಮ್ಮಿಂದಾಗಲಿಲ್ಲ ಕ್ಷೌರದ ಕತ್ತಿಯನ್ನೆ ಹಿಡಿದೆಳೆಯುವುದರಲ್ಲಿದ್ದ. +ಗಡ್ಡ ಕೂದಲು ಎಲ್ಲ ಕತ್ತರಿಸಿದರೆ ದೊಡ್ಡಣ್ಣಹೆಗ್ಗಡೆ ಹೌದೊ ಅಲ್ಲವೊ ಎನ್ನುವುದನ್ನು ಸಂಶಯಕ್ಕೆ ಆಸ್ಪದವಿಲ್ಲದಂತೆ ಹೇಳಿಬಿಡಬಹುದು ಎನ್ನುತ್ತಿದ್ದಾರೆ ತೀರ್ಥಹಳ್ಳಿಯ ದಾಸಯ್ಯ ಮತ್ತು ಇತರ ಮಿತ್ರರು. +“ಆ ಅಣ್ಣಪ್ಪಯ್ಯ ನೋಡಿದರೇನು?” ಅನಂತಯ್ಯ ಕೇಳಿದರು. +“ಕಾಫಿ ಹೋಟೆಲ್ ಇಟ್ಟಿದ್ದಾರಲ್ಲಾ ಅವರೇ?” +“ಹೌದು, ಅವರೆ! +ಕಾಡು ಕೊಂಕಣಿ, ಗೌಡ ಸಾರಸ್ವತರು.” +“ಇಲ್ಲ ಅವರು ನೋಡಿಲ್ಲ.”ಸುಬ್ಬಣ್ಣಹೆಗ್ಗಡೆಯವರು ಕೀರಲು ಧ್ವನಿಯಲ್ಲಿ ಚಪ್ಪಾಳೆ ಹೊಡೆದು ಹೇಳಿದರು, ಕಣ್ಣಾಮುಚ್ಚಾಲೆಯಲ್ಲಿ ಕಳ್ಳನನ್ನು ಕಂಡು ಹಿಗ್ಗಿ ಕೂಗುವ ಹುಡುಗನಂತೆ ಹೌದೆ ಸೈ, ಪಾದ್ರಿಗಳೆ! +ಅಣ್ಣಪ್ಪಯ್ಯಗೆ ನೀವು ತೋರಿಸಿದ್ರೆ, ಒಂದು ಚಣಕ್ಕೆ ಗುರ್ತು ಹಿಡಿದುಬಿಡ್ತಿದ್ದ! +ಬಾಳ ಸೂಟಿ ಮನುಷ್ಯ. +ನಮ್ಮ ದೊಡ್ಡಣ್ಣ ಹೌದೆ ಅಲ್ಲೆ ಅಂತಾ ಕಡ್ಡಿ ತುಂಡು ಮಾಡಿದ್ಹಾಂಗೆ ಹೇಳಿಬಿಡ್ತಿದ್ದ! …. +ಅಂವ ತೀರ್ಥಹಳ್ಳಿ ಹೋದಾಗ್ಲೆಲ್ಲಾ ಅಲ್ಲೆ ಉಂಡು ಮಲಗ್ತಿದ್ದ! +ಅಂವ ಒಂದು ಬುರುಬುರಿ ಮಾಡ್ತಾನೆ ನೋಡಿ, ಪಸಂದಾಗಿರ್ತದೆ! …. ”ಎಲ್ಲರೂ ಕಿಸಕ್ಕನೆ ನಕ್ಕುಬಿಟ್ಟರು, ಮುದುಕನ ಮೇದುಳಿನ ಕಲಸುಮೇಲೋಗರದ ತಿಕ್ಕಲುತನಕ್ಕೆ! +ಆದರೆ ಆ ನಗೆ ಒಂದು ಉಪಕಾರ ಮಾಡಿತ್ತು. +ಹೆಗ್ಗಡೆಯವರ ಕೃಪಣಕಟುವಾದ ಮಾತುಗಳಿಂದ ಜಿಗುಪ್ಸಾಕಲುಷಿತವಾಗಿದ್ದ ಮನೋವಾರಣ ತಿಳಿಯಾಗಲು ಸಹಾಯ ಮಾಡಿತು. +ಬಿಗಿಗೊಂಡಿದ್ದ ಸರ್ವರ ಚಿತ್ತಸ್ಥಿತಿಯೂ ಸಡಿಲಗೊಂಡಂತಾಯಿತು. +ಅಂಗಳದಲ್ಲಿ ಕಸವನ್ನು ಕೆದಕುತ್ತಿದ್ದ ಕೋಳಿಗಳಲ್ಲಿ ಒಂದು ಹುಂಜ ತೆಣೆಯ ಮೇಲಕ್ಕೆ ನೆಗೆದು, ಅಸಹ್ಯ ಮಾಡಿ, ಅಲ್ಲಿಯೆ ಮಲಗಿ ನಿದ್ರಿಸುತ್ತಿದ್ದ ನಾಯಿಯನ್ನು ನೋಡುತ್ತಾ ಲೊಕ್ ಲೊಕ್ ಲೊಕ್ ಎಂದು ಹೆದರುಸದ್ದು ಮಾಡಲು, ಕಣ್ದೆರೆದ ನಾಯಿ ಎದ್ದು ಕೂತಿದ್ದನ್ನು ಕಂಡು, ಅದು ಮತ್ತೆ ಅಂಗಳಕ್ಕೆ ಹಾರಿದುದನ್ನು ಅಷ್ಟೇನೂ ಗಮನಿಸದೆ ಸುಮ್ಮನೆ ನೋಡುತ್ತಿದ್ದ ಜೀವರತ್ನಯ್ಯ  ನಗುನಗುತ್ತಲೆ “ಯಜಮಾನರೆ, ನೀವೀಗ ಅಣ್ಣಪ್ಪಯ್ಯನ ಬುರುಬುರಿ ರುಚಿ ನೋಡುವ ಅವಶ್ಯಕತೆ ಏನಿಲ್ಲ! …. + ಸದ್ಯಕ್ಕೆ ನನ್ನ ಸಂಗಡ ಐಗಳೊಬ್ಬರು ಬಂದರೆ ಸಾಕು. +ಆ ಗೋಸಾಯಿ ದೊಡ್ಡಣ್ಣಹೆಗ್ಗಡೆಯವರೇ ಹೌದು ಎಂದಾದರೆ, ಸರಕಾರದ ಅನುಮತಿ ಪಡೆದು, ಅವರನ್ನು ಕರೆತರುತ್ತೇವೆ. +ಒಂದು ವೇಳೆ ಕಾನೂನು ಪ್ರಕಾರ ಅವರ ಹತ್ತಿರದ ಸಂಬಂಧಿಗಳು, – ಅಂದರೆ ಹೆಂಡತಿ, ಮಕ್ಕಳು, ಅಣ್ಣ, ತಮ್ಮ, ತಂದೆ, ತಾಯಿ – ಯಾರಾದರೂ ಬಂದು, ಗುರುತಿಸಬೇಕು ಎಂದು ಅಮಲ್ದಾರರು ಹೇಳಿದರೆ, ಆಗ ನೀವಾಗಲಿ ನಿಮ್ಮ ಸೊಸೆಯಾಗಲಿ ಬರಬೇಕಾಗಬಹುದು….” +“ನಾನು ಗುರುತಿಸಿದರೆ ಸಾಲದೇನು?” ದೇವಯ್ಯ ಕೇಳಿದನು. +“ಸಾಕಾಗದೆ ಏನು? +ನೋಡೋಣ” ಎಂದರು ಜೀವರತ್ನಯ್ಯ. +ಯಾವ ದಿನ ಅರುಣೋದಯಕ್ಕೆ ಮುನ್ನ, ಹುಲಿಕಲ್ಲು ನೆತ್ತಿಯ ಕಲ್ಲುಮಂಟಪದಲ್ಲಿ ಆ ಇರುಳನ್ನು ಕಳೆದಿದ್ದ ಗುತ್ತಿ, ತಾನು ಹಾರಿಸಿಕೊಂಡು ಬಂದ ತಿಮ್ಮಿಯೊಡನೆ ಕಾಡಿನ ಕಳ್ಳದಾರಿಯಲ್ಲಿ ನಡೆದು ಸಿಂಬಾವಿಯ ತಮ್ಮ ಕೇರಿಯನ್ನು ಗುಪ್ತವಾಗಿ ಸೇರಲು ಯೋಚಿಸಿ, ಗುಡ್ಡವಿಳಿಯತೊಡಗಿದ್ದನೋ ಅದೇ ದಿನ ಅದೇ ಹೊತ್ತಿನಲ್ಲಿ ಸಿಂಬಾವಿಯ ದೊಡ್ಡ ಚೌಕಿಮನೆಯ ಒಂದು ಕಗ್ಗತ್ತಲೆ ಕವಿದಿದ್ದ ಕೋಣೆಯಲ್ಲಿ ಮಲಗಿದ್ದ ಭರಮೈಹೆಗ್ಗಡೆಯವರು ನಿದ್ದೆಯಿಲ್ಲದೆ ಹೊರಳಿ ಗುತ್ತಿಯನ್ನೆ ನೆನೆಯುತ್ತಿದ್ದರು. +ತಾವು ಬರೆದು ಅವನ ಕೈಯಲ್ಲಿ ಕಳುಹಿಸಿದ್ದ ಕಾಗದಕ್ಕೆ ಏನು ಉತ್ತರ ಬರುತ್ತದೆಯೋ ಎಂದು ಕಾತರರಾಗಿದ್ದರು. +ತಮ್ಮ ಹೆಂಡತಿ ಜಟ್ಟಮ್ಮನ ಅನುರೋಧದಿಂದಾಗಿ ಹಳೆಮನೆಗೆ ಹೆಣ್ಣು ಕೊಟ್ಟು ಹೆಣ್ಣು ತರುವ ಆಲೋಚನೆಯನ್ನು ಕೈಬಿಟ್ಟಿದ್ದರು. +ಆದರೆ ಹೂವಳ್ಳಿ ವೆಂಕಟಪ್ಪ ನಾಯಕರ ಮಗಳನ್ನು ತಮಗೆ ಮದುವೆ ಮಾಡಿಕೊಡುವಂತೆ ಅವರನ್ನು ಒಪ್ಪಿಸುವ ಭಾರವನ್ನು ಸುಬ್ಬಣ್ಣಹೆಗ್ಗಡೆಯವರ ಮೇಲೆಯೆ ಹಾಕಿದ್ದರು. +ಭರಮೈಹೆಗ್ಗಡೆಯವರು ಮಲಗಿದ್ದ ಮಂಚ ಇಬ್ಬರೂ ಆರಾಮವಾಗಿ ಮಲಗುವಷ್ಟು ಅಗಲವಾಗಿದ್ದರೂ, ಅವರು ತಡಿ ದಂಪತಿಗಳಿಗಾಗಿಯೆ ರಚಿತವಾಗಿದ್ದು ವಿಶಾಲವಾಗಿದ್ದರೂ, ಮಂಚದ ಮೇಲೆ ಅವರೊಬ್ಬರೇ ಮಲಗಿ ಹೊರಳುತ್ತಿದ್ದರು. +ಅವರ ಹೆಂಡತಿ ಕೋಣೆಯಲ್ಲಿ ಮಲಗಿರಲಿಲ್ಲ ಎಂದಲ್ಲ. +ಜಟ್ಟಮ್ಮ ಅಲ್ಲಿಯೆ ಮಲಗಿದ್ದರು ಕೆಳಗೆ ಮೆಲದಮೇಲೆ, ಒಂದು ಚಾಪೆಕಂಬಳಿ ಹಾಸಿಕೊಂಡು. +ನಿನ್ನೆ ಬೈಗು ಅವರಿಗೂ ಅವರ ನಾದಿನಿ ಲಕ್ಕಮ್ಮಗೂ ನಡೆದಿದ್ದ ಜಗಳದಲ್ಲಿ ಭರಮೈಹೆಗ್ಗಡೆ ತಂಗಿಯ ಪರ ವಹಿಸಿದ್ದರ ಅಥವಾ ವಹಿಸಿದ್ದರೆಂದು ಜಟ್ಟಮ್ಮ ಭಾವಿಸಿದ್ದುದರ ಪರಿಣಾಮವಾಗಿ! +ನಾಡಿಗೆಲ್ಲ ಬೆಳಕು ಬಿಟ್ಟಿದ್ದರೂ ಸಿಂಬಾವಿಗೆ ಇನ್ನೂ ಬೆಳಕು ಬಿಟ್ಟಿರಲಿಲ್ಲ. +ಆ ಮನೆಗೆ ಮುಟ್ಟಿಕೊಂಡಂತೆಯೆ ಕಾಡುತುಂಬಿದ್ದ ಗುಡ್ಡವೊಂದು ಅರ್ಧ ಆಕಾಶದವರೆಗೂ ಎದ್ದು ನಿಂತು ಸುತ್ತುವರಿದಂತಿತ್ತು. +ಸೂರ್ಯ ಸಿಂಬಾವಿ ಮನೆಗೆ ಪೂರ್ವ ದಿಕ್ಕಿನಲ್ಲಿ ಕಾಣಿಸಿಕೊಳ್ಳಬೇಕಾದರೆ ಗುಡ್ಡವೇರಿ ಬಹುದೂರ ಬರಬೇಕಾಗಿತ್ತು. +ಆದರೆ ಜಟ್ಟಮ್ಮ ಬೆಳಕಿಗಾಗಿ ಕಾಯಲಿಲ್ಲ. +ಕೋಳಿ ಕೂಗಿದ್ದೆ ಅವರಿಗೆ ಸಾಕಾಗಿ, ಚಾಪೆಯಿಂದೆದ್ದು ದಿನನಿತ್ಯದ ಮನೆಕೆಲಸ ಪ್ರಾರಂಭಿಸಲು ಅಡುಗೆಮನೆ ಕಡೆಗೆ ಹೋದರು. +ಕಡಗ ಬಳೆಗಳ ಕಿಣಿಕಿಣಿ ಸ್ದಿಗೆ ಆ ಕಡೆ ತಿರುಗಿ, ಮೆಲ್ಲನೆ ಬಾಗಿಲು ತರೆದು ಅವರು ಹೋದದ್ದನ್ನು ಹೆಗ್ಗಡೆ ನೋಡಿದ್ದರು. +ಅಷ್ಟೆ ಅಲ್ಲ, ಸಣ್ಣದನಿಯಲ್ಲಿ ಹೆದರಿ ಹೆದರಿ ಹೆಸರು ಹಿಡಿದೂ ಕರೆದಿದ್ದರು ‘ಜಟ್ಟೂ!’ ಎಂದು. +ಆದರೆ ಅವರು ತುಸುವೂ ನಿಲ್ಲದೆಯೆ, ಹಿಂದಿರುಗಿಯೂ ನೋಡದೆ, ಹೆಗ್ಗಡೆ ಸಂಕಟವುಕ್ಕುವಂತೆ ಮಾಡಿದ್ದರು. +ಜಟ್ಟಮ್ಮ ಹೋಗುವಾಗ ಆ ಕೋಣೆಗಿದ್ದ ಒಂದೇ ಬಾಗಿಲನ್ನು ಹಾಕಿಕೊಳ್ಳದೆ ಹಾರುಹೊಡೆದೆ ಹೋಗಿದ್ದರು. +ಅದರ ಮೂಲಕ ಹೌದೊ ಅಲ್ಲೊ ಎನ್ನುವಷ್ಟು ಬೆಳಕು, ಕತ್ತಲೆಗೆ ಸೋತು ಕರಿಚಿಕೊಂಡಿದ್ದ ಬೆಳಕು, ಪ್ರವೇಶಿಸಿತ್ತು. +ಕತ್ತಲೆಗೆ ತುಂಬ ಅಭ್ಯಾಸವಾಗಿದ್ದ ಹೆಗ್ಗಡೆಯ ಕಣ್ಣಿಗೆ ಆ ಬೆಳಕಿನ ನೇಸಲಿನಲ್ಲಿ ಕೋಣೆಯಲ್ಲಿದ್ದ ಪರಿಚಿತ ವಸ್ತುಗಳು ಆಕಾರಮಾತ್ರವಾಗಿ ಕಾಣತೊಡಗಿದ್ದುವು. +ಜಿಡ್ಡು ಹಿಡಿದ ಹಿತ್ತಾಳೆಯ ದೀಪದ ಕಂಬದ ಮೇಲೆ, ಅರೆ ಉರಿದು ಆರಿಸಿದ್ದ ಬತ್ತಿಯ, ಹರಳೆಣ್ಣೆಯ ಕರಿಹಣತೆ ಮೂಲೆಯಲ್ಲಿ ಜಟ್ಟಮ್ಮನ ಬೆಲೆಯುಳ್ಳ ಸೀರೆ ಬಟ್ಟೆ ಒಡವೆಗಳನ್ನೆಲ್ಲ ಗರ್ಭದಲ್ಲಿ ಅಡಗಿಸಿಕೊಂಡಿದ್ದ ಒಂದು ದೊಡ್ಡ ಸಂದೂಕ; +ಅದೇ ಮೂಲೆಯಲ್ಲಿ ಸಂದುಕದ ಹಿಂದೆ ಎರಡು ಗೋಡೆಗಳು ಸೇರುವೆಡೆ, ಹತ್ತೆ ಕೆಳಗಾಗಿ ಒರಗಿಸಿಟ್ಟಿದ್ದ ಜೋಡುನಳಿಕೆಯ ಕೇಪಿನ ಕೋವಿ; +ಎಲ್ಲಕ್ಕೂ ಹೆಚ್ಚಾಗಿ ಮನೋವೇದಕವಾಗಿ, ತೊಟ್ಟಿಲನ್ನು ತೂಗುಹಾಕುವುದಕ್ಕಾಗಿ ನಾಗಬಂದಿಗೆಯಿಂದ ನಾಗಂದಿಗೆಗೆ ಅಡ್ಡಲಾಗಿ ಹಾಕಿದ್ದ ನಿಡಿದಾದ ಬಲಿಷ್ಠವಾದ ಹೆಬ್ಬಿದಿರಿನ ಗಳು, ಮತ್ತು ಅದಕ್ಕೆ ನೇಲು ಬೀಳುವಂತೆ ಹಾಕಿದ್ದು, ಉಪಯೋಗವಿಲ್ಲದಿದ್ದುದರಿಂದ ಬಹಳ ಕಾಲದಿಂದಲೂ ಗಳುವಿಗೆ ಸುತ್ತಿದ್ದ ತೊಟ್ಟಿಲ ಹಗ್ಗ! +ವಸ್ತುವಿನಿಂದ ವಸ್ತುವಿಗೆ ನಿರ್ಲಕ್ಷವಾಗಿ ಅಲೆದೆಲೆದು ಹೋಗುತ್ತಿದ್ದ ಹೆಗ್ಗಡೆಯ  ಕಣ್ಣು ಆ ಗಳುವನ್ನೂ ಅದಕ್ಕೆ ಸುತ್ತಿದ್ದ ಹಗ್ಗವನ್ನೂ ತಲುಪಿದೊಡನೆ ಮುಗ್ಗುರಿಸಿದಮತೆ, ಯಾರೊ ಹಿಡಿದಲುಬಿನಂತೆ, ಫಕ್ಕನೆ ನಿಂತುಬಿಟ್ಟಿತು! +ತೊಟ್ಟಿಲ ನೇಣು ಸುತ್ತಿದ್ದ ಆಗಳು ಅವರನ್ನು ತಮ್ಮ ಬದುಕಿನ ಸಮಸ್ಯೆಯ ಕೇಂದ್ರಕ್ಕೆ ಕರೆತಂದು ಬಿಟ್ಟಿತ್ತು! +ಆ ನೇಣಿಗೆ ಒಮ್ಮೆಯಾದರೂ ತೊಟ್ಟಿಲನ್ನು ಹೊರುವ ಭಾಗ್ಯ ಒದಗಿರಲಿಲ್ಲ; +ಆ ಗಳುವಿಗೆ ಒಮ್ಮೆಯಾದರೂ ಅಳುವ ಕಂದನ ಹೊತ್ತು ತೂಗುವ ಮಧುರ ಭಾರವನ್ನು ಸವಿಯುವ ಯೋಗ ಒದಗಿರಲಿಲ್ಲ. +ಅದು ತನ್ನ ಹೆಂಡತಿಯ ಬಂಜೆತನದ ಪ್ರತೀಕವಾಗಿ ತೋರುತ್ತಿತ್ತು ಹೆಗ್ಗಡೆಗೆ. +ವಂಶೋದ್ಧಾರಕನಾದ ಕುಮಾರನೊಬ್ಬನನ್ನು ಪಡೆಯುವ ನೆವವೊಡ್ಡಿ ಹೆಗ್ಗಡೆ ಮತ್ತೊಂದು ಮದುವೆಯಾಗುವ ಪ್ರಸ್ತಾಪವೆತ್ತಿದ್ದಾಗ ಅವರ ಹೆಂಡತಿ ಜಟ್ಟಮ್ಮ ಆ ತೊಟ್ಟಿಲ ಹಗ್ಗದಿಂದಲೇ ಅದೇ ಗಳುವಿಗೆ ನೇಣುಹಾಕಿಕೊಳ್ಳುತ್ತೇನೆ ಎಂದು ಹೆದರಿಸಿದ್ದ ಭಯಂಕರ ಪ್ರಸಂಗವಂತೂ ಮರೆಯುವಂತಿರಲಿಲ್ಲ. +ಮದುವೆಯಾದ ಮೊದಲ ದಿನಗಳಲ್ಲಿ ಅತ್ಯಂತ ಸವಿಯ ಮತ್ತು ಸುಖದ ಅನುಭವಗಳಿಗೆ ಆಕರವಾಗಿದ್ದ ಆ ಕೋಣೆ ಬರಬರುತ್ತಾ ಹೆದರಿಕೆಯ ಹೆಗ್ಗವಿಯಾಗಿ ಬಿಟ್ಟಿತ್ತು. +ಸಾಧಾರಣವಾಗಿ ಬಿಸಿಲು ಇಣುಕುವವರೆಗೂ ಮಲಗಿರುತ್ತಿದ್ದ ಭರಮೈಹೆಗ್ಗಡೆಗೆ ಆವೊತ್ತು ಇನ್ನು ಮುಂದೆ ಮಲಗಲಾಗಲಿಲ್ಲ. +ಕೋಣೆಯಲ್ಲಿ ಕತ್ತಲೆ ತುಂಬಿದ್ದಂತೆಯೆ, ಹೊದೆದಿದ್ದ ಶಾಲನ್ನು ಕೆಲಕ್ಕೆ ಸರಿಸಿ, ಎದ್ದು ಕುಳಿತರು ಮಂಚದಮೇಲೆ, ಕಾಲು ಇಳಿಬಿಟ್ಟುಕೊಂಡು. +ಸೊಂಟದ ಉಡಿದಾರಕ್ಕೆ ಕಟ್ಟಿದ್ದ ಲಂಗೋಟಿ ವಿನಾ ಸಂಪೂರ್ಣ ನಗ್ನರಾಗಿದ್ದ ಅವರು ಕೈನೀಡಿ ತಡಕಿದರು, ರಾತ್ರಿ ಮಲಗುವಾಗ ಬಿಚ್ಚಿ ತಲೆದಿಸಿ ಇಟ್ಟಿದ್ದ ಅಡ್ಡಪಂಚೆಗಾಗಿ. +ಕತ್ತಲೆಯಿದ್ದರೂ ಕಣ್ಣಂದಾಜಿನಿಂದಲೆ ಅದನ್ನು ಹೆಗಲಮೇಲೆ ಹಾಕಿಕೊಂಡು ಎದ್ದುನಿಂತರು. +ತಮ್ಮ ದೇಹವೆ ತಮಗೆ ಕಾಣದಷ್ಟು ಕಪ್ಪು ಕವಿದಿತ್ತಾದರೂ ಹೆಗ್ಗಡೆ ಸ್ವಾಭಾವಿಕವಾದ ಸಂಕೋಚವನ್ನನುಭವಿಸಿ ಸುತ್ತಲೂ ಕಳ್ಳನೋಟ ಬೀರಿ, ನಾಗಂದಿಗೆಗೆ ಕೈಹಾಕಿ ಏನೋ ಔಷಧಿಯ ಡಬ್ಬಿಯನ್ನು ತೆಗೆದುಕೊಂಡು, ಕೌಪೀನವನ್ನು ಸಡಿಲಿಸಿ ಬಿಚ್ಚಿ, ಕೈಯ ಅಂದಾಜಿನಿಂದಲೆ ಮರ್ಮಸ್ಥಾನದ ವ್ರಣಗಳಿಗೆ ಮದ್ದು ಲೇಪಿಸಿಕೊಂಡರು. +ಮತ್ತೆ ಲಂಗೋಟಿ ಕಟ್ಟಿಕೊಂಡು, ಹೆಗಲಮೇಲಿದ್ದ ಅಡ್ಡಪಂಚೆ ಸುತ್ತಿಕೊಂಡು, ಹಾಸಗೆಯ ಮೇಲಿದ್ದ ಶಾಲನ್ನೇತ್ತಿ ಹೊದೆದು, ಕೋಣೆಯ ಬಾಗಿಲಿಗೆ ಬಂದು ಅಂಗಳದ ಕಡೆ ನೋಡುತ್ತಾ ನಿಂತರು. +ಅಂಗಳದಲ್ಲಿದ್ದ ಕಲ್ಲಿನ ತುಳಸಿಕಟ್ಟೆಗೆ ಅನೈಚ್ಚಿಕವಾಗಿಯೊ ಎಂಬಂತೆ. +ಬರಿಯ ಅಭ್ಯಾಸದ ಯಾಂತ್ರಿಕ ಚಲನೆಯ ಭಂಗಿಯಿಂದ ಕೈಮುಗಿದು, ಕೆಮ್ಮುತ್ತಾ ಜಗಲಿಗೆ ನಡೆದರು. +ಅಡುಗೆ ಮನೆಯ ದಿಕ್ಕಿನಿಂದ ಮಜ್ಜಿಗೆ ಕಡೆಯುತ್ತಿದ್ದ ಕಡಗೋಲಿನ ಸದ್ದು ಕೇಳಿಬರುತ್ತಿತ್ತು. +ಮನೆಗೆ ಅಂಟಿಕೊಂಡಿದ್ದ ದನದಕೊಟ್ಟಿಗೆಯಿಂದ ಕೋಡುಗಳ ಸದ್ದೂ, ಗೊರಸುಗಳ ಸದ್ದೂ, ಕರುಗಳು ಕರೆಯುವ ಅಂಬಾ ಸದ್ದೂ, ತಾಯಿಹಸುಗಳ ಉತ್ತರಧ್ವನಿನಿರೂಪದ ಹಂಬಾ ಸದ್ದೂ ಕೇಳಿಸುತ್ತಿತ್ತು. +ಕೋಳಿಒಡ್ಡಿಯಿಂದ, ಆಗತಾನೆ ಬೆಳಕು ಬಿಡುತ್ತಿರುವುದನ್ನು ಕಂಡು, ಹೊರಗೆ ಹಾರಲು ಕಾತರವಾಗಿ ತರತರದ ಉಲಿಹಗಳನ್ನು  ಬೀರುತ್ತಿದ್ದ ಹೇಟೆ ಹುಂಜ ಸಳುಗ ಮರಿಗಳ ಸದ್ದೂ ಆ ದೊಡ್ಡಮನೆಯ ಒಳಗಣ ಬಿಮ್ಮೆಂಬ ನಿಃಶಬ್ದತೆಯನ್ನು ಹಿತಕರವಾಗಿ ಭಂಗಿಸಿತ್ತು. +ನಿತ್ಯಪರಿಚಿತವಾದ ಆ ನಾದಸಮೂಹವನ್ನು ಆಲಿಸಿದರೂ ಲಕ್ಷಿಸಿದ ಉದಾಸೀನತೆಯಿಂದ ಹೆಗ್ಗಡೆ ಬಚ್ಚಲು ಮನೆಯ ಕಡೆಗೆ ಹೋದರು. +ಸ್ವಲ್ಪ ಹೊತ್ತಿನ ಮೇಲೆ ಜಗಲಿಗೆ ಹಿಂದಿರುಗಿದವರು ತಾವು ಅನೇಕ ವರ್ಷಗಳಿಂದ ನಿತ್ಯವೂ ತಪ್ಪದೆ ಕೂರುತ್ತಿದ್ದ ಜಾಗದಲ್ಲಿ ಕೂತು, ಮುಂಡಿಗೆಗೆ ಬೆನ್ನೊರಗಿ, ಶಾಲುಗೂಡಾದರು. +“ದೊಳ್ಳಾ!ಏ ದೊಳ್ಳಾ!”ಹೆಗ್ಗಡೆ ಕರೆದುದಕ್ಕೆ ದೊಳ್ಳ ಓಕೊಳ್ಳಲಿಲ್ಲ. +ಆದರೆ ಅಡುಗೆಮನಿಯಿಂದ ಬಂದು ಬಾಗಿಲಲ್ಲಿ ಇಣುಕಿದ ತರುಣಿ ಲಕ್ಕಮ್ಮ “ಅಂವ ಹಟ್ಟೀಲಿ ಮುರು ಹಾಕ್ತಾ ಇದಾನೆ, ಅಣ್ಣಯ್ಯ ಕರೀಬೇಕೇನು?” ಎಂದು ಕೇಳಿದಳು. +“ಆ ಹಳೇಪೈಕದ ಬುಲ್ಡ ಬಂದನೇನು ನೋಡ್ತೀಯಾ, ತಂಗಿ?” +“ಹ್ಞೂ ಬಂದಿದ್ದ. +ತಂದುಕೊಟ್ಟು ಹೋಗ್ಯಾನೆ. +ತರಲೇನು?” +“ತ” ಬಾರಕ್ಕ, ಒಂದು ಚೂರು. +ಹಾಳುಹೊಟ್ಟೇಲೇ ಕುಡೀಬೇಕು ಅಂತಾರೆ ಹೇಳ್ಯಾರೆ ಪಂಡಿತ್ರು.” +ಧರ್ಮಸ್ಥಳಕ್ಕೆ ಯಾತ್ರೆ ಹೋಗಿದ್ದಾಗ ಕನ್ನಡ ಜಿಲ್ಲೆಯಲ್ಲಿ ಆಡಿದ ಆಟಗಳ ಪರಿಣಾಮವಾಗಿ ಹೆಗ್ಗಡೆಯವರಿಗೆ ಮರ್ಮಪ್ರಾಪ್ತವಾಗಿತ್ತು. +ಕಣ್ಣಾಪಂಡಿತರು ಮದ್ದುಕೊಟ್ಟು ಬೆಳಿಗ್ಗೆ ಆಗತಾನೆ ಇಳಿಸಿದ  ತೆಂಗಿನ ಕಳ್ಳನ್ನು ಕುಡಿಯಬೇಕೆಂದು ಪಥ್ಯ ವಿಧಿಸಿದ್ದರು. +ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಹಾಗಾಗಿತ್ತು ಭರಮೈಹೆಗ್ಗಡೆಯವರಿಗೆ. +ಮೊದಲೆ ಕಳ್ಳು ಹೆಂಡ ಸಾರಾಯಿಗಳಲ್ಲಿ ಮುಳುಗಿ ಏರುತ್ತಿದ್ದವರಿಗೆ ವೈದ್ಯರು ವಿಧಿಸಿದ್ದ ಪಥ್ಯದ ದೆಸೆಯಿಂದ ರೋಗವೂ ಆಸ್ವಾದ್ಯವಾಗಿಯೆ ಸಂಭವಿಸಿತ್ತು. +ಆದರೆ ಪಥ್ಯದಲ್ಲಿ ಆಗುತ್ತಿದ್ದದ್ದು ಒಂದೇ ವ್ಯತ್ಯಾಸ. +ಕಳ್ಳು ಆಗತಾನೆ ಇಳಿಸಿದ್ದಾಗಿರಬೇಕು ಎಂಬ ನಿಯಮವನ್ನು ಪರಿಪಾಲಿಸುವುರಲ್ಲಿ ಹಳೇ ಪೈಕದ ಬುರುಡ ಅಷ್ಟೇನೂ ನಿಷ್ಠಾವಂತನಾಗಿರಲಿಲ್ಲ. +ಒಂದೆರಡು ಸಾರಿ ಅವನು  ಆ ನಿಷ್ಟೆಯನ್ನು ಪರಿಪಾಲಿಸಿ ಹೆಗ್ಗಡೆಯವರ ಕೈಯಲ್ಲಿ ಏಟು ತಿನ್ನುವುದೊಂದೆ ಬಾಕಿಯಾಗಿತ್ತು. +“ಇದೇನು ಕಳ್ಳೊ?ನೀರೊ? +ನಿನ್ನ ಹಲ್ಲು ಹೊಟ್ಟಗೆ ಹೋಗೋ ಹಾಗೆ ಹೊಡೆದುಬಿಡ್ತೀನಿ, ನೋಡು, ಕಳ್ಳಲೌಡಿ ಮಗನೆ!” ಎಂದು ರೇಗಿದ್ದರು. +ಆಮೇಲೆ ಅವನು ಒಡೆಯರ ಬಾಯಿರುಚಿಗೆ ಇಷ್ಟವಾದ ಬಲಿಷ್ಠವಾದ ಮದ್ಯವನ್ನೆ ಒದಗಿಸತೊಡಗಿದ್ದನು. +ತುಂಬ ತುಂಬಿದ್ದ ಮೊಗೆಯಲ್ಲಿ ಲಕ್ಕಮ್ಮ ಹೊರಲಾರದೆ ಹೊತ್ತು ತಂದದ್ದು ಆ ಬಲಿಷ್ಠ ಮದ್ಯವನ್ನೆ! +“ನೀನೆ ಯಾಕೆ ಹೊತ್ತುಕೊಂಡು ಬಂದ್ಯೇ? +ಮಂಜ ಇರಲಿಲ್ಲೇನೆ?” +“ಅತ್ತಿಗಮ್ಮ ಬಿಡಬೇಕಾಯ್ತಲ್ಲಾ ಅವನ್ನ?” ಮೇಲುಸಿರೆಳೆಯುತ್ತಲೆ ಹೇಳಿದಳು ಲಕ್ಕಮ್ಮ, ಆಪಾದನೆಯ ಧ್ವನಿಯಲ್ಲಿ. +“ಏನು ಮಾಡ್ತಿದಾನ್ಯೆ ಅವನು?” +“ಮಜ್ಜಿಗೆ ಕಡೀತಿದಾನೆ!” +“ಅವಳು ಏನು ಮಾಡ್ತಿದ್ದಾಳೋ?” ಸಿಡುಕಿ ಕೇಳಿದರು ಹೆಗ್ಗಡೆ. +“ರೊಟ್ಟಿ ಮಾಡ್ತಿದಾರೆ.” +ತಂಗಿ ಸೀರೆಯನ್ನು ಎತ್ತಿಕಟ್ಟಿದ್ದ ಭಂಗಿಯನ್ನು ನೋಡಿ ಹೆಗ್ಗಡೆ “ನೀನೇನು ಹಾಲು ಕರ್ಯಾಕೆ ಹಟ್ಟಿಕಡೆ ಹೊರಟ್ಹಾಂಗದೆ?” ಎಂದರು. +“ದಿನಾ ಮತ್ಯಾರು ಕರೆಯೋರು?ನಾನೆ!” +“ಆ ಗಲ್ಟ ಅಲ್ಲಿಟ್ಟು ಹೋಗು. +ನಾ ಬೊಗಿಸಿಕೊಳ್ತೀನಿ.” +ಲಕ್ಕಮ್ಮ ಕಳ್ಳು ಕುಡಿಯುವುದಕ್ಕಾಗಿಯೆ ತಯಾರಾಗಿ ನುಣ್ಣಗೆ ಮಾಡಿದ್ದ ಕರಟವನ್ನು ಮೊಗೆಯ ಬಾಯಿಂದ ತೆಗೆದು ಕೆಳಗಿಟ್ಟು, ಹಾಲು ಕರೆಯಲು ಹಟ್ಟಿಗೆ ಹೋದಳು. +ಹೆಗ್ಗಡೆ ಕಳ್ಳು ಬೊಗ್ಗಿಸಿಕೊಂಡು, ಕಳ್ಳಿನಲ್ಲಿಯೆ ಕೈತೊಳೆದು, ಬಾಯಿ ಮುಕ್ಕಳಿಸಿ ಅಂಗಳಕ್ಕೆ ಉಗುಳಿ, ನಿಧಾನವಾಗಿ ಸವಿದು ಸವಿದು ಕುಡಿಯತೊಡಗಿದರು. +ಕಳ್ಳಿನ ಕೆಂಪು ಸುತ್ತಲೂ ವ್ಯಾಪಿಸತೊಡಗಿತು. +ಸೂರ್ಯ ಮನೆಯ ಮುಂದಣ ಮಲೆಯ ನೆತ್ತಿಗೇರಿ ಕಾಣಿಸಿಕೊಂಡ ಸ್ವಲ್ಪ ಹೊತ್ತಿನಲ್ಲಿಯೆ, ಹೆಗ್ಗಡೆ ಮರಾಟಿ ಮಂಜನನ್ನು ಕೂಗಿಹೇಳಿದರು, “ಆ ದೊಳ್ಳಗೆ ಹೇಳೋ, ಹೊಲೇರ ಕೇರಿಗೆ ಹೋಗಿ, ಗುತ್ತಿ ಬಂದನೇನು ಕೇಳಿಕೊಂಡು ಬರಲಿ.” + ಸುಮಾರು ಒಂದು ಗಂಟೆ ಕಳೆದ ಮೇಲೆ ದೊಳ್ಳ ಹೆಬ್ಬಾಗಿಲಲ್ಲಿ ಕಾಣಿಸಿಕೊಂಡು ಬಿಜಿಲು ಬಿಜಿಲು ಮಾತಿನಲ್ಲಿ “ಅಂವಿನ್ನೂ ಬಂದಿಲ್ಲಂತೆ” ಎಂದನು. +“ಇಷ್ಟೊತ್ತು ಬೇಕಾಯ್ತೇನೊ ನಿಂಗೆ, ಹೊಲೇರ ಬಿಡಾರಕ್ಕೆ ಹೋಗಿಬರಾಕೆ?” ಗದರಿಸಿದರು ಹೆಗ್ಗಡೆ. +“ಅಗೋಡಿಗೆ ದನಾ ನುಗ್ಗಿದ್ವು. +ಅಟ್ಟಿ ಬಂದೆ.” ದೊಳ್ಳ ಸುಳ್ಳೆ ಹೇಳಿದನು. +“ಮನೆಹಾಳು ಮುಂಡೆಗಂಡರು!” ಹೆಗ್ಗಡೆ ಆಶೀವರ್ದಿಸಿ ಕಳ್ಳಿಗೆ ಕೈಹಾಕಿದರು. +ದೊಳ್ಳ ಒಡೆಯರ ಅಪ್ಪಣೆಯಂತೆ ಹೊಲೆಯರ ಬಿಡಾರಕ್ಕೆ ಹೋಗಿ ಗುತ್ತಿ ಹಿಂದಿರುಗಿದ್ದಾನೆಯೆ ಇಲ್ಲವೆ ಎಂಬುದನ್ನು ವಿಚಾರಿಸುತ್ತಿದ್ದ ಸಮಯದಲ್ಲಿ, ಗುತ್ತಿ ತಿಮ್ಮಿಯನ್ನು ಹತ್ತಿರದ ಕಾಡಿನಲ್ಲಿ ಮರೆಯಾಗಿ ಕುಳ್ಳಿರಲು ಹೇಳಿ, ತನ್ನ ನಾಯಿ ಹುಲಿಯನನ್ನು ಮೆಲ್ಲಗೆ ಎತ್ತಿ ತಂದು ಲಕ್ಕುಂದದ ಹಳೆಪೈಕದ ಸೇಸನಾಯ್ಕನ ಮನೆಯ ಹಿತ್ತಲು ಕಡೆಯಲ್ಲಿ ಕಾಡಿಯ ಸಹಾಯದಿಂದ ಔಷಧೋಪಚಾರದ ಶುಶ್ರೂಷೆಯಲ್ಲಿ ತನ್ಮಯರಾಗಿದ್ದನು. +ಆವೊತ್ತು ಹೊತ್ತಾರೆ ಹುಲಿಕಲ್ಲು ನೆತ್ತಿಯಲ್ಲಿ ಕುರ್ಕನೊಡನೆ ಹೋರಾಡಿ ಗಾಯಗೊಂಡಿದ್ದ ಹುಲಿಯ ಮೊದಮೊದಲು ಗುತ್ತಿ ತಿಮ್ಮಿಯರ ಹಿಂದೆ ಮುಂದೆ ಅತ್ತ ಇತ್ತ ಹಳುವಿನಲ್ಲಿ ಓಡಿಯಾಡುತ್ತಾ ಬರುತ್ತಿತ್ತು. +ಸ್ವಲ್ಪದೂರ ಹೋಗುವುದರಲ್ಲಿ ಅತ್ತ ಇತ್ತ ಓಡಿಯಾಡುವುದನ್ನು ನಿಲ್ಲಿಸಿ ಅವರ ಹಿಂದೆಯೆ ಬರತೊಡಗಿತ್ತು. +ಆಗಲೆ ಗುತ್ತಿಗೆ ಅನುಮಾನವಾಗಿ, ನಾಯಿಯನ್ನು ಹತ್ತಿರಕ್ಕೆ ಕರೆದು, ತಲೆ ತಟ್ಟಿ ಮುದ್ದುಕಮಾಡಿ ಹುರಿದುಂಬಿಸಿದ್ದನು. +ನಾಯಿ ಕುಂಟುತ್ತಾ ಮೆಲ್ಲಗೆ ನಡೆಯುತ್ತಿತ್ತು. +ಕಾಡಿನಲ್ಲಿ ಇನ್ನೂ ಸ್ವಲ್ಪದೂರ ನಡೆದಮೇಲೆ ಒಂದು ಕಡೆ ಹಂದಿಯ ಹಿಂಡು ಅಡ್ಡಹಾಯಿತು. +ಹಳುವಿನಲ್ಲಿ ಒಂದು ಮೊಲ, ಒಂದು ಬರ್ಕ, ಒಂದು ಚಿಟ್ಟುಗೋಳಿ, ಒಂದು ಉಡ, ಕಡೆಗೆ ಒಂದು ಓತಿ ಇಂತಹ ಅಲ್ಪ ಮತ್ತು ಅತ್ಯಲ್ಪ ಪ್ರಾಣಿಗಳೂ ಸುಳಿದರೆ ಸಾಕು ಅತ್ಯುತ್ಸಾಹದಿಂದ ನುಗ್ಗಿ ಅಟ್ಟಿಕೊಂಡು ಹೋಗುತ್ತಿದ್ದ ಬೇಟೆನಾಯಿ ಹುಲಿಯ ಈಗ ದೊಡ್ಡ ಹಂದಿಯ ಹಿಂಡೇ ಅಡ್ಡ ಹಾಯ್ದರೂ ಅಟ್ಟದೆ ಬೊಗಳದೆ ತಲೆ ಜೋಲು ಹಾಕಿ ತಮ್ಮ ಹಿಂದೆ ಮೆಲ್ಲಗೆ ಕುಂಟುತ್ತಾ ಬರುತ್ತಿದ್ದುದನ್ನು ಗಮನಿಸಿ ಗುತ್ತಿಗೆ ಜೀವವೆ ಹಾರಿಹೋದಂತಾಯಿತು! +ಸಂಕಟದ ಧ್ವನಿಯಿಂದ “ಅಯ್ಯೋ, ತಿಮ್ಮಿ, ಏನಾಯ್ತು ನಾಯಿಗೆ?” ಎಂದು ಹಿಂದಕ್ಕೆ ಓಡಿ ಬಂದು ಹುಲಿಯನ ಪಕ್ಕದಲ್ಲಿ ಕೂತು ಪರಿಶೀಲಿಸತೊಡಗಿದನು. +ಚಿರತೆಯ ಕೂರುಗುರುಗಳಿಂದ ಆಗಿದ್ದ ಗಾಯಗಳಿಂದ ನೆತ್ತರು ಸೋರಿ ಆ ಕರಿಯ ಬಣ್ಣದ ನಾಯಿಯ ಮೈಯೆಲ್ಲಾ ಕೆಂಪಗಾದಂತಿತ್ತು. +ಜೊತೆಗೆ ಒಂದು ಉಗುರೋ ಹಲ್ಲೋ ತಾಗಿ ಒಂದು ಕಣ್ಣೂ ಊದಿಕೊಂಡು ರಕ್ತಮಿಶ್ರವಾದ ನೀರು ಇಳಿಯುತ್ತಿತ್ತು. +ಗುತ್ತಿ ಮುಟ್ಟಿದೊಡನೆ ನಾಯಿ ನೋವಿಗೆ ನರಳಿತು. +ಅದರ ಕಣ್ಣಿನ ನೋಟವಂತೂ ಗುತ್ತಿಯ ಕರುಳಿಗೆ ಇರಿದಂತಾಯಿತು. +ಯಾರ ಮೇಲೋ ಏಕೋ ದುಃಖಮಿಶ್ರವಾದ ಮಹಾಸಿಟ್ಟು ಉಕ್ಕಿದಂತಾಯಿತು, ತನ್ನ ನಚ್ಚಿನ ನಾಯಿಗೆ ಆ ಗತಿ ಒದಗಿದುದಕ್ಕಾಗಿ! +ಭಾವಾಂಧನಾಗಿ ಗುತ್ತಿ ತಿಮ್ಮಿಯ ಕಡೆಗೆ ತಿರುಗಿ “ಸನಿಮುಂಡೆ, ನಿನ್ನ ದೆಸಿಂದ  ನನ್ನ ನಾಯಿನೂ ಹೋಯ್ತಲ್ಲೇ! +ಯಾವ ಇಸಗಳಿಗೇಲಿ ಹುಟ್ಟಿದ್ಯೋ ನೀನು, ಹುಲಿಯನ ತಿನ್ನಾಕೆ!” ಎಂದು ಸಿಡುಕಿದನು. +ಅವನ ಕಣ್ಣು ಆಗಲೆ ನೀರು ತುಂಬಿಕೊಂಡಿತ್ತು. +ತಿಮ್ಮಿಗೆ ಏನೂ ತೋಚಲಿಲ್ಲ, ತಾನು ಏನು ತಪ್ಪು ಮಾಡಿದುದಕ್ಕಾಗಿ ಬಾವ ಬಯ್ಯುತ್ತಿದ್ದಾನೆ ಎಂದು. +ನಿಂದೆಯ ಆಘಾತಕ್ಕೆ ಮೊದಲು ತಟಕ್ಕನೆ ಬೆಪ್ಪುಬೆರಗಾದಳು. +ಒಡನೆಯೆ, ಬಂಡೆಯಬೆಟ್ಟ ದನಿಗೆ ಮರುದನಿಕೊಡುವಂತೆ, ನಿಸರ್ಗ ಸಹಜವಾದ ಪ್ರತಿಕ್ರಿಯೆಯಿಂದಲೂ ಎಂಬಂತೆ ಪಡಿನುಡಿದೆ ಬಿಟ್ಟಳು. + “ನಾನ್ಯಾಕೆ ಆದೇನು ಸನಿಮುಂಡೆ? +ಬೇಕಾದರೆ ನೀನೆ ಆಗು ಸನಿಮುಂಡೆ ಗಂಡ!”ಸನ್ನಿವೇಶ ಲಘುತರವಾಗಿದ್ದು, ಇಬ್ಬರೂ ಧ್ವನಿಗ್ರಹಣಶಕ್ತಿಯುಳ್ಳವರಾಗಿದ್ದರೆ, ಚೆನ್ನಾಗಿ ನಗಬಹುದಾಗಿತ್ತೊ ಏನೊ? +ಆದರೆ ಗುತ್ತಿ ತಲೆಯೆತ್ತಿ ತಿಮ್ಮಿಯ ಮುನಿದ ಮೋರೆಯನ್ನು ದುರುದುರು ನೋಡುತ್ತಾ “ನೋಡೂ, ತಿಮ್ಮಿ, ಹುಡುಗಾಟಿಕೆ ಮಾಡಬ್ಯಾಡ. +ನಂಗೆ ಸಿಟ್ಟು ಬಂದ್ರೆ ನಿನ್ನ….” ಮಾತನ್ನು ಅರ್ಧಕ್ಕೆ ತಡೆದು ನಾಯಿಯ ಕಡೆತಿರುಗಿದನು. +ತಿಮ್ಮಿಗೆ ಆಗಲೆ ಅಳುಬರುವಂತಾಗಿತ್ತು. +ಬಾವನ ಮುನಿದ ಮುಖ, ಇರಿವ ದೃಷ್ಟಿ, ಹಲ್ಲುಮಟ್ಟೆಕಚ್ಚಿದ್ದ ತುಟಿಗಳನ್ನು ಕಂಡು ಹೆದರಿಕೆಯೆ ಆಯಿತು. +ಅದರಲ್ಲಿಯೂ ಕಗ್ಗಾಡು; +ಕೂಗಿಕೊಂಡರೂ ನೆರವಿಗೆ ಬರಲು ಬೇರೆ ಯಾರೂ ಇಲ್ಲ; +ಗುತ್ತಿಯ ದೊಣ್ಣೆ ಕತ್ತಿಗಳೂ ಆ ಸಂದರ್ಭದಲ್ಲಿ ಭಯಂಕರವಾಗಿಯೆ ಕಂಡುವು! +ಅವನು ‘ನಂಗೆ ಸಿಟ್ಟು ಬಂದ್ರೆ ನಿನ್ನ….’ ಎಂದು ನಿಲ್ಲಿಸಿದ್ದರೂ ಅವಳು ತನ್ನ ಮನದಲ್ಲಿಯೆ ‘ಕಡಿದು ತುಂಡು ಮಾಡಿಬಿಡ್ತೀನಿ!’ ಎಂದು ವಾಕ್ಯವನ್ನು ಪೂರೈಸಿಕೊಂಡು, ಬಿಕ್ಕಿಬಿಕ್ಕಿ ಅಳತೊಡಗಿದಳು. +“ಯಾಕೇ ಅಳ್ತೀಯಾ? +ಯಾರು ಸತ್ರೂ ಅಂತಾನೆ?” ಗುತ್ತಿಯ ಸಿಟ್ಟು ಬೆರಸಿದ ತಪ್ಪೊಪ್ಪಿಗೆಯ ದನಿ ಕೇಳಿತು?” +“ಮತ್ತೆ?ಒಬ್ಬಳ್ನೇ ಕಾಡಿಗೆ ಕರಕೊಂಡು ಬಂದು, ಕತ್ತರ್ಸಿ ಹಾಕ್ತೀನಿ ಅಂತೀಯಲ್ಲಾ?”ಗುತ್ತಿಗೆ ಒಳಗೊಳಗೇ ನಗೆ ತಡೆಯಲಾಗಲಿಲ್ಲ. +ಆದರೆ ನಕ್ಕರೆ ಸದರ ಕೊಟ್ಟ ಹಾಗಾಗುತ್ತದೆ ಎಂದು ತಲೆಯೆತ್ತದೆ “ ಕತ್ತರ್ಸಿ ಹಾಕ್ತೀನಿ ಅಂತಾ ಯಾವಾಗ್ಲೆ ಹೇಳ್ದೆ? +ಸುಳ್ಳಿ!” ಎನ್ನುತ್ತಾ ಹುಲಿಯನ ಮೆಯ್ಯ ಗಾಯದ ಪರಿಶೀಲನೆಯನ್ನೆ ಮುಂದುವರಿಸಿದನು. +ಬಾವ ಮೃದುವಾಗುತ್ತಿದ್ದುದನ್ನು ಅರಿತು, ತಿಮ್ಮಿ ಮತ್ತೂ ಗಟ್ಟಿಯಾಗಿ ಬಿಕ್ಕಿ ಅಳುತ್ತಾ “ನೀನು ಹೇಳ್ನಿಲ್ಲಾ? +ಕಡಿದುಹಾಕಿಬಿಡ್ತೀನಿ ಅಂತಾ? …. +ಊಞ, ಊಞ, ಊಞ….ನಾ ಹೇಳ್ತೀನಿ ಅತ್ತೆಮ್ಮನ ಹತ್ರ…. +ಊಞ, ಊಞ,ಊಞ….” +“ಅಯ್ಯೋ ನಿನ್ನಾ! +ಒಳ್ಳೆ ಗಿರಾಚಾರ ಆಯ್ತಲ್ಲಾ! +ಸುಮ್ನೆ ಸಿಟ್ಟಿಗೆ ಹೇಳಿದ್ನೇ ಬದ್ದಾ ಅಂದುಕೊಂಡು ರಂಪಾ ಮಾಡ್ತೀಯಲ್ಲೇ! +ಹ್ಹಿಹ್ಹಿಹ್ಹಿಹ್ಹಿ!ಪುಣ್ಯಾತಗಿತ್ತೀ, ತೆಪ್ಪಾಯ್ತು ಅಂತೀನೆ, ಸುಮ್ಮಕಿರು.” ಎನ್ನುತ್ತಾ ಗುತ್ತಿ ತಲೆಯೆತ್ತಿ, ದೂರ ನಿಂತಿದ್ದ ತಿಮ್ಮಿಯ ಮುಖವನ್ನು ನಗೆಗೂಡಿ ನೋಡಿ “ಅಲ್ಲೇ? +ಏನೋ ಒಂದು ಮದೇಮಾಡಿಕೊಳ್ಳಾನ, ಒಳ್ಳೆ ಚೆಲುವಿ ಹೆಣ್ತಿ ಆಗ್ತಾಳೆ ಅಂತಾ ಹಾರಿಸಿಕೊಂಡು ಬಂದ್ರೆ, ಕಾಡಿಗೆ ಕರಕೊಂಡು ಬಂದು ಕತ್ತರ್ಸಿ ಹಾಕ್ತೀನಿ ಅಂತಾ ಹೇಳ್ದೆ ಅಂತೀಯಲ್ಲಾ? +ನೀನೊಂದು ಮೂಳಿ, ಬಿಡು! +ತಮಾಸೆಗಿಮಾಸೆ ಒಂದೂ ಅರ್ತಾನೆ ಆಗಾದಿಲ್ಲ ನಿಂಗೆ…. +ಹೋಗ್ಲಿ, ಬಾ ಇಲ್ಲಿ, ನನ್ನ ದೊಣ್ಣೆ, ಕತ್ತಿ, ಕಂಬ್ಳಿ ಹಿಡ್ಕಾ. +ನಾ ನಾಯಿನ ಎತ್ಕೊಂಡಾರು ಬರ್ತಿನಿ.” +“ಆಗ ಮಾತ್ರ ಉರಿಮಾರೆ ಮಾಡಿಕೊಂಡಿದ್ದೀ? +ಈಗ ನಗ್ನೆಗ್ತಾ ಮಾತಾಡ್ತೀಯ! +ನಂಗೆ ಅರ್ಥಾಗದಿಲ್ಲೇನು ನಿನ್ನ ತಮಾಸೆ?” ಎಂದು ಮೂದಲಿಸುವಂತೆ ನುಡಿದು, ತಿಮ್ಮಿ ಗುತ್ತಿಯ ದೊಣ್ಣೆ ಕತ್ತಿಕಂಬಳಿಗಳನ್ನು ಎತ್ತಿ ಹೊತ್ತುಕೊಂಡಳು. +ಗುತ್ತಿ ನಾಯಿಯ ಕುತ್ತಿಗೆಗೆ ಒಂದು ಕೈ, ಬಾಲದ ಹಿಂದಕ್ಕೆ ಒಂದು ಕೈ ಕೊಟ್ಟು ಅದನ್ನೆತ್ತಿ ಎದೆಗವಿಚಿಕೊಂಡು ಹೊರಟನು. +ಹುಲಿಯನನ್ನು ಹೊತ್ತುಕೊಂಡು ಹೋಗುವುದು ಗುತ್ತಿಯಂಥ ಬಲಿಷ್ಠನಿಗೂ ಸುಲಭವಾಗಿರಲಿಲ್ಲ. +ಕಾಡಿನಲ್ಲಿ ಅಲ್ಲಲ್ಲಿ ಇಳಿಸಿ, ದಣಿವಾರಿಸಿಕೊಂಡು, ದಾರಿಗೆ ಸರಲು ಅಡ್ಡ ಬಂದೆಡೆಯಲ್ಲೆಲ್ಲ ಅದಕ್ಕೆ ನೀರು ಕುಡಿಸಿ, ತಲೆಗೂ ಸ್ವಲ್ಪ ನೀರು ಚಿಮುಕಿಸಿ ತಟ್ಟಿ, ತಣ್ಣಗೆ ಮಾಡಿ, ಲಕ್ಕುಂದದ ಸಮೀಪಕ್ಕೆ ಬಂದರು. +ಉಂಡು ತಿಂದು ಕುಡಿದು, ಒಡವೆ ವಸ್ತ್ರ ತೊಟ್ಟು ಉಟ್ಟು, ಮನೆಯಲ್ಲಿ ಸುಖವಾಗಿ ಮೆರೆಯುತ್ತಿರಬಹುದಾಗಿದ್ದ ಮದುಮಗಳು ತಿಮ್ಮಿಗೆ ನಾಯಿ ಹೊತ್ತ ಬಾವನ ಹಿಂದೆ ಅವನ ಕತ್ತಿ ದೊಣ್ಣೆ ಕಂಬಳಿ ಹೊತ್ತುಕೊಂಡು ಮಲೆಗಳಲ್ಲಿ ಅಲೆಯುವ ಪ್ರಣಯಸಾಹಸ ಪ್ರಾರಂಭದಲ್ಲಿಯೆ ಒಗರಾಗತೊಡಗಿತ್ತು. +ಅದರ ಜೊತೆಗೆ ಅವರು ಲಕ್ಕುಂದದ ಹಳೆಪೈಕದ ಸೇಸನಾಯ್ಕರ ಮನೆಯ ಸಮೀಪದ ಕಾಡಿಗೆ ಬಂದಾಗ ಗುತ್ತಿ “ತಿಮ್ಮಿ, ನೀನಿಲ್ಲೆ ಹುಳುವಿನಾಗೆ ಅಡಗಿಕೊಂಡಿರು. +ನಾ ಸೇಸನಾಯ್ಕರ ಮನೆಗೆ ಹೋಗಿ ಹುಲಿಯಗೆ ಒಂದೀಟು ಗಂಜಿ ಗಿಂಜಿ ಹಾಕಿಸಿ, ಮದ್ದುಗಿದ್ದು ಮಾಡಿ, ಹುಸಾರು ಮಾಡಿಕೊಂಡು ಬತ್ತೀನಿ. +ಒಬ್ಬಳೆ ಅಂತಾ ನೀ ಏನೂ ಹೆದರಬ್ಯಾಡ. +ಹೊಗೆ ಕಾಣ್ತದೆ ನೋಡು…. +“ಇಲ್ಲೆ ಅದೆ ಅವರ ಮನೆ… ನಾಯಿ ಕೂಗಾದು ಕೇಳಿಸ್ತದೆ ನೋಡು…. +ಕೇಳಿದ್ಯಾ?ಕೋಳಿ ಕೂಗಾದೂ ಕೇಳಿಸ್ತದೆ!” ಎಂದಾಗ ತಿಮ್ಮಿಯ ಹೃದಯದಲ್ಲಿ ಸಿಟ್ಟೂ ಎಣೆಯಾಡಿದುವು. +“ಅಡಗಿಕೊಂಡರಾಕೆ ನಾ ಏನೂ ಕದ್ದುಕೊಂಡು ಬಂದಿಲ್ಲ! +ನಾನೂ ಬತ್ತೀನಿ. +ನಿನ್ನ ಸೇಸನಾಯ್ಕರು, ಸೇಸನಾಯ್ಕರ ಮನೆ, ನಾ ಕಾಣದಿದ್ದಲ್ಲ! +ನಂಟರ ಮನೆಗೆ ಕರಕೊಂಡು ಹೋಗ್ತಿದ್ದೀನಿ ಅಂತ ಹೇಳು, ಕೇಳಿದ್ರೆ. +ನಿನ್ನ ಸ್ವಾದರತ್ತೆ ಮಗಳಲ್ಲೇನು ನಾನು? …. +ನಾ ಒಬ್ಬಳೆ ಇಲ್ಲಿರಾಕೆ ಹೆದರಿಕೆ.” +ತಾನು ಚಿಕ್ಕಂದಿನಿಂದಲೂ ಅರಿತಿದ್ದ ಹುಡುಗಿ ಎಷ್ಟು ಬದಲಾಯಿಸಿದ್ದಾಳೆಂದು ಗುತ್ತಿಗೆ ಆಶ್ಚರ್ಯವಾಯಿತು, ತಿಮ್ಮಿಯ ಮಾತು ಕೇಳಿ, ತಲೆಯೆತ್ತಿ, ನೋಟನೆಟ್ಟು ನೋಡಿದನು ಅವಳ ಕಡೆ. +ಅವಳು ಚಿಕ್ಕ ಹುಡುಗಿಯಲ್ಲ ತರುಣಿ ಎಂಬುದನ್ನು ಸಾರುವಂತಿತ್ತು ಅವಳ ಸರ್ವಾಂಗ ಭಂಗಿ. +‘ನಾನು ಇವಳಿಗೆ ಅಧೀನವಾಗದಿದ್ದರೆ ಇವಳು ನನಗೆ ಅಧೀನವಾಗುವ ಚೇತನವಲ್ಲ’ ಎಂಬರ್ಥದ ಒಂದು ಭಾವಸಂಚಾರವಾಗಿ ಗುತ್ತಿ ಬೇಡಿಕೊಳ್ಳುವ ದನಿಯಲ್ಲಿ “ನಿಂಗಿಲ್ಲಿ ಹೆದರಿಕೆ ಆದರೆ ಅವರ ಮನೆ ಹತ್ರಕ್ಕೇ ಬಾ. +ಆದರೆ, ತಿಮ್ಮಿ, ನಾವು ರಾತಾರಾತ್ರಿ ಓಡಿ ಬಂದೀವಿ. +ನಮ್ಮನ್ನ ಹುಡುಕಕ್ಕೆ ಗೌಡರು ಜನಾ ಅಟ್ಟದೆ ಬಿಡ್ತಾರೇನು? +ಪೋಲೀಸರಿಗೂ ಹೇಳಿದ್ರೂ ಹೇಳಿದ್ರೇ! +ನಾವೆಲ್ಲಾರು ಸಿಕ್ಕಿಬಿದ್ರೆ ಚಮಡಾ ಸುಲ್ದು ಬಿಡ್ತಾರೆ. +ನಂದಂತೂ ಇರಲಿ ಬಿಡು; + ನಿನ್ನೂ ಹೊಡೆದೂ ಬಡಿದೂ ಎಳೆಕೊಂಡು ಹೋಗಿ ಆ ಕಿಲಸ್ತರ ಬಚ್ಚಗೆ ಗಂಟುಹಾಕದೆ ಬಿಡಾದಿಲ್ಲ! +ಎನು?ಗೊತ್ತಾತೇನು ನಾ ಹೇಳಿದ್ದು?”ಗುತ್ತಿ ವರ್ಣಿಸಿದ್ದನ್ನು ಕೇಳಿ, ತಿಮ್ಮಿ ಹೌಹಾರಿ ಸಂಪೂರ್ಣ ಶರಣಾದಳು. + “ನೀ ಹೇಳ್ದ್ಹಾಂಗೆ ಕೇಳ್ತೀನಿ, ಬಾವ!” ಎಂದು ಅಳುದನಿಯಲ್ಲಿ ಮುಂದುವರಿದಳು. + ನನ್ನ ಎಲಕೊಂಡು ಹೋಗಿ ಆ…. +ಆ ಸುಡುಗಾಡು ಮುಂಡೆ ಮಗನಿಗೆ. . ” ಮುಂದೆ ಬಾಯಿಬಿಟ್ಟು ಹೇಳಲಾರದೆ ಬಿಕ್ಕತೊಡಗಿದಳು. +“ನಿಂಗ್ಯಾಕೆ ಆ ಹೆದರಿಕೆ? +ನಾ ಇದ್ದೀನಿ!” ಗುತ್ತಿ ಧೈರ್ಯ ಹೇಳಿ, ಸೇಸನಾಯಕನ ಮನೆಯ ಕೊಟ್ಟಿಗೆಯವರೆಗೂ ಅವಳನ್ನು ಕರೆದೊಯ್ದು, ಅಲ್ಲಿ ಒಂದು ಮಟ್ಟಿನ ಹಿಂದೆ ಕುಳಿತಿರುವಂತೆ ಹೇಳಿ, ತಾನು ಹುಲಿಯನೊಡನೆ ಮನೆಯ ಕಡೆಗೆ ಹೋದನು. +ನಾಯಿಗಳು ಬೊಗಳಿ ಗಲಾಟೆ ಮಾಡಿದ್ದನ್ನು ಕೇಳಿ, ಕಾಡಿ ಬಾಗಿಲಲ್ಲಿ ಇಣುಕಿದಳು ಹುಲಿಯನ್ನು ಹೊತ್ತು ಬರುತ್ತಿದ್ದ ಗುತ್ತಿಯನ್ನು ಗುರುತಿಸಿ ಬೆರಗಾದಳು. +ದಾರಿಯಲ್ಲಿ ಬರುತ್ತಿದ್ದಾಗ ಹುಲಿಯ ಒಂದು ಕುರ್ಕನನ್ನು ಅಟ್ಟಿಸಿಕೊಂಡು ಹೋಗಿ ಅದರ ಮೇಲೆ ಬಿದ್ದಿತೆಂದೂ, ಅದಕ್ಕೂ ಇದಕ್ಕೂ ಜಟಾಪಟಿಯಾಗಿ ಹುಲಿಯ ಗಾಯಗೊಂಡಿತೆಂದೂ ಗುತ್ತಿ ಕತೆ ಹೇಳಿದ ಮೇಲೆ, ಕಾಡಿ ಅರಸಿನ ಕಾಡುಜೀರಿಗೆ ಅರೆದು ಕುದಿಸಿ, ಗಾಯಗಳಿಗೆ ಹೆಚ್ಚುವಂತೆ ಮದ್ದು ಮಾಡಿಕೊಟ್ಟು “ಕುರ್ಕನ ಉಗುರಿನ ನಂಜು ಹೊಡೀತದೆ ಕಣೋ?” ಎಂದು ಭರವಸೆ ನೀಡಿದಳು. +ಆ ಮೇಲೆ ಸ್ವಲ್ಪ ಗಂಜಿಯನ್ನೂ ತಂದು ಕುಡಿಸಲು ಕೊಟ್ಟಳು. +ಗಂಜಿ ಹೊಟ್ಟೆಗೆ ಹೋದಮೇಲೆ ಹುಲಿಯ ನಿಜವಾಗಿಯೂ ಸ್ವಲ್ಪ ಹುಷಾರಾಗಿ ಎದ್ದು ನಿಂತಿತು. +ಗಾಯಕ್ಕೆ ಹಚ್ಚಿದ ಮದ್ದಿನ ಉರಿಯನ್ನು ತಾಳಲಾರದೆ ಅದು ಮೈನೆಕ್ಕಿಕೊಳ್ಳಲು ಪ್ರಯತ್ನಿಸಿದಾಗ ಗುತ್ತಿ ಒಂದು ಏಟುಕೊಟ್ಟು ಸುಮ್ಮನಿರಿಸಿದನು. +ಕೊನೆಯದಾಗಿ, ಕಾಡಿ ಇನ್ನೂ ಒಂದು ಉಪಾಯ ಸೂಚಿಸಿದಳು. + ಸ್ವಲ್ಪ ಹೆಂಡ ಕುಡಿಸಿದರೆ, ಹುಮ್ಮಸ್ಸು ಬಂದ ಹಾಗಾಗಿ, ಲಕ್ಕುಂದದಿಂದ ಸಿಂಬಾವಿಯವರೆಗೂ ನಾಯಿಯನ್ನು ಹೊರುವ ತೊಂದರೆ ತಪ್ಪುತ್ತದೆ ಎಂದು. +ಗುತ್ತಿಗೂ ಹುಲಿಯನನ್ನು ಹೊತ್ತು ಸಾಕಾಗಿತ್ತು. +ಅದನ್ನು ಲಕ್ಕುಂದದಲ್ಲಿಯೆ ಕಾಡಿಯ ಬಳಿ ಶುಶ್ರೂಸೆಗೆ ಬಿಟ್ಟು ಹೋಗುವ ಆಲೋಚನೆಯನ್ನೂ ಮಾಡಿದ್ದನು. +ಆದ್ದರಿಂದ, ನಾಯಿ ನಡದೇ ಸಿಂಬಾವಿಗೆ ತನ್ನೊಡನೆ ಬರುವಂತಾದರೆ ಆಗಲಿ ಎಂದು, ಕಾಡಿ ಕೊಟ್ಟ ಹೆಂಡವನ್ನೂ ಕುಡಿಸಿದನು. +ಹುಲಿಯನೂ ತನಗೆ ಪೂರ್ವಾಭ್ಯಾಸವಿದ್ದಿತೊ ಎಂಬಂತೆ ಲೊಚಗುಟ್ಟುತ್ತ ಮದ್ಯಪಾನ ಮಾಡಿತು. +ಹೆಂಡ ಕುಡಿಸಿದ ಮೇಲೆ ಒಂದು ಪವಾಡವೆ ನಡೆದುಹೋಯಿತು. +ಹುಲಿಯ ತುಂಬ ಚಟುವಟಿಕೆಯಾಯಿತು. +ಗುತ್ತಿ ಸಂತೋಷಾತಿಶಯದಿಂದ “ಗೆದ್ದೆ ಕಣ್ರೋ!ನಿಮ್ಮ ಹಸ್ತಗುಣ! …. +ನಾ ಬತ್ತೀನ್ರೋ, ಕಾಡಮ್ಮ.” ಎಂದು ತನ್ನ ರೀತಿಯಲ್ಲಿ ವಂದಾನರ್ಪಣೆ ಮಾಡಿ ಬೀಳ್ಕೊಂಡನು, ತನ್ನೊಡನೆ ಚಟುವಟಿಕೆಯಿಂದ ನಡೆದು ಬರುತ್ತಿದ್ದ ಹುಲಿಯನನ್ನು ಕೂಡಿ. +ಹುಲಿಯನನ್ನು ಮೆಲ್ಲಗೆ ನಡೆಸಿಕೊಂಡು ತಿಮ್ಮಿಯೊಡನೆ ಗುತ್ತಿ ಸಿಂಬಾವಿಯ ಹೊಲೆಗೇರಿಯ ತಮ್ಮ ಬಿಡಾರವನ್ನು ಪ್ರವೇಶಿಸಿದಾಗ ಆಗಲೆ ಬಿಸಿಲೇರಿತ್ತು. +ಅವನ ತಾಯಿ ಗಿಡ್ಡಿಗೆ ಅನಿರೀಕ್ಷಿತವಾಗಿ ನೆಂಟರ ಮನೆಗೆ ಆಗಮಿಸಿದ್ದ ತನ್ನ ಸೋದರ ಸೊಸೆಯನ್ನು ಕಂಡು ಸಂತೋಷವಾದರೂ ಸ್ವಲ್ಪ ಸೋಜಿಗವೂ ಆಯಿತು. +“ಏನೋ?ತಿಮ್ಮಿ ಒಬ್ಬಳೆ ಬಂದಿದಾಳೇನೋ ನಿನ್ನ ಸಂಗಡ?” ಎಂದು ತಾಯಿ ಕೇಳಿದ ಪ್ರಶ್ನೆಯ ಧ್ವನಿಯನ್ನರಿತ ಗುತ್ತಿ ಅವಳ ಕಿವಿಯಲ್ಲಿ ಪಿಸು ಮಾತಾಡಿದಮೇಲೆ, ಗಿಡ್ಡಿ ತುಸು ಭೀತಳಾದರೂ ಅದನ್ನು ತೋರಗೊಡಲಿಲ್ಲ. +ಗುತ್ತಿಯ ಅಪ್ಪ ಕರಿಸಿದ್ದ ಮನೆಯಲ್ಲಿರಲಿಲ್ಲ; +ಕೆಲಸಕ್ಕೆ ಹೋಗಿದ್ದನು. +“ಅಯ್ಯ ಹೇಳಿ ಕಳಿಸಿದ್ದ್ರೋ, ದೊಳ್ಳಯ್ಯನ ಕೈಲಿ, ನೀ ಬಂದಿಯೋ ಇಲ್ಲೋ ಕೇಳಿಕೊಂಡು ಬಾ ಅಂತ. +ಯಾಕೋ ಏನೊ? ಗೊತ್ತಿಲ್ಲ. + ಬ್ಯಾಗ ಮನೀಗೆ ಹೋಗಿ ಅವರನ್ನ ನೋಡು. +ತಾಯಿ ತಿಳಿಸಿದೊಡನೆಯ ಗುತ್ತಿ ಅವಸರವಸರವಾಗಿ ‘ಬಿಡಾರ’ದಿಂದ ‘ಮನೆ’ಗೆ ಓಡಿದನು. +ಅವನಿಗೆ ಭರಮೈಹೆಗ್ಗಡೆಯವರ ಮನೋಧರ್ಮದ ಉಗ್ರಪರಿಚಯ ಚೆನ್ನಾಗಿಯೆ ಇತ್ತು. +ಹಿಂದಿನ ದಿನವೆ ಕಾಗದಕ್ಕೆ ಉತ್ತರ ತೆಗೆದುಕೊಂಡು ಬರಬೇಕಾಗಿದ್ದ ಗುತ್ತಿ ಒಂದು ದಿನ ತಡವಾಗಿ ಬಂದದ್ದು ಮಾತ್ರವಲ್ಲದೆ ಹೊತ್ತಾಗಿಯೂ ಬಂದದ್ದಕ್ಕೆ ಭರಮೈಹೆಗ್ಗಡೆ ಅವನನ್ನು ಅವರ ಬೈಗುಳದ ನಿಭಂಟಿನಿಂದ ಆಯ್ದು ತೆಗೆದ ಪದಗಳನ್ನೆಲ್ಲ ಪ್ರಯೋಗಿಸಿ ಚೆನ್ನಾಗಿ ತರಾಟೆಗೆ ತೆಗೆದುಕೊಂಡರು. +ಗುತ್ತಿ ಹಳೆಮನೆ ದೊಡ್ಡ ಹೆಗ್ಗಡೆಯವರು ಕಾಗದ ಕೊಡಲಿಲ್ಲವೆಂದೂ, ಕೊಟ್ಟಿದ್ದರೆ ಆವತ್ತೆ ಹೊರಟು ಬರುತ್ತಿದ್ದೆನೆಂದೂ, ತಾನು ಹೊತ್ತಾಗಿ ಬಂದುದಕ್ಕೆ ಕಾರಣ ಹೇಳಲು ಹೋಗಿ ಮತ್ತಷ್ಟು ಅನ್ನಿಸಿಕೊಂಡನು. +“ಮತ್ಯಾಕೆ ನಿಂತಿರೋದು? +ಹೋಗಬಹುದು ತಳವಾರರ ಸವಾರಿ!” ಮಾತು ಮುಗಿಸಿದ ಮೇಲೆ ಹೆಗ್ಗಡೆಯವರು ತಲೆಬಗ್ಗಿಸಿ ಏನೊ ಲೆಕ್ಕ ಬರೆಯುತ್ತಿದ್ದವರು ಮತ್ತೆ ತಲೆಯೆತ್ತಿ ನೋಡಿ, ಇನ್ನೂ ನಿಂತೇ ಇದ್ದ ಗುತ್ತಿಗೆ ವ್ಯಂಗ್ಯವಾಗಿ ಭರ್ತ್ಸನೆ ಮಾಡುವಂತೆ ಹೇಳಿದರು. +ಆದರೂ ಗುತ್ತಿ ಹಂದದೆ ನೆಲ ನೋಡುತ್ತಾ ನಿಂತನು. +ತಾನು ಒಡೆಯರ ಅನುಮತಿಯಿಲ್ಲದೆ ಮಾಡಿದ್ದ ಸಾಹಸವನ್ನು ಅವರಿಗೆ ತಿಳಿಸಲೋ ಬೇಡವೊ? +ತಿಳಿಸಿದರೆ ಏನು ಹೇಳುತ್ತಾರೊ? +ಇಂದಾಗಲಿ ನಾಳೆಯಾಗಲಿ, ತಾನಾಗಲಿ ತನ್ನ ತಂದೆಯಾಗಲಿ, ಒಡೆಯರಿಗೆ ವಿಷಯವನ್ನು ತಿಳಿಸಿಯೆ ತೀರಬೇಕಾಗುತ್ತದೆ. +ಏಕೆಂದರೆ ಅವರ ಒಪ್ಪಿಗೆ, ಬೆಂಬಲ, ಧನ ಸಹಾಯ, ಕಡೆಗೆ ಜನಸಹಾಯ ಇವುಗಳಿಲ್ಲದೆ ಬೆಟ್ಟಳ್ಳಿ ಕಲ್ಲಯ್ಯಗೌಡರಂಥವರಿಂದ ಅವರ  ಜೀತದಾಳೊಬ್ಬಳನ್ನು ದಕ್ಕಿಸಿಕೊಳ್ಳುವುದು ಅಸಾಧ್ಯ. +ಆದರೆ ಅವಳನ್ನು ಹಾರಿಸಿಕೊಂಡು ಬರುವ ಮುನ್ನವೆ ಒಡೆಯರಿಗೆ ಒಂದು ಮಾತು ತಿಳಿಸಿದ್ದರೆ ಅದರ ಹೊಣೆಗಾರಿಕೆಯ ಬಹುಪಾಲು ಅವರದ್ದೆ ಆಗಿರುತ್ತಿತ್ತು. +ಈಗ ಒಡೆಯರಿಗಂತೂ ಇರಲಿ, ತನ್ನ ಸ್ವಂತ ತಾಯಿ ತಂದೆಯರಿಗೇ ಗೊತ್ತಿಲ್ಲದ ರೀತಿಯಲ್ಲಿ ಕೆಲಸಮಾಡಿಬಿಟ್ಟದ್ದೇನೆ! …. +ಆಲೋಚಿಸಿದಷ್ಟು ಆಳವಾಗಿ ತೋರ ತೊಡಗಿತ್ತು, ತಾನು ಹಾಯಲು ಇಳಿದಿದ್ದ ಹೊಳೆ. +ಆದ್ದರಿಂದಲೆ ಒಡೆಯರ ಮೂದಲಿಕೆಯ ಉಕ್ತಿಗೆ ಯಾವ ಪ್ರತಿಕ್ರಿಯೆಯನ್ನೂ ತೋರಲಾರದೆ ಗುತ್ತಿ ಹಂದದೆ ನೆಲ ನೋಡುತ್ತಾ ನಿಂತದ್ದು. +ಹೆಗ್ಗಡೆ ಮತ್ತೊಮ್ಮೆ ತಲೆಯೆತ್ತಿ “ಯಾಕೋ? +ಕಲ್ಲು ನಿಂತ್ಹಾಂಗೆ ನಿಂತೀಯ? +ಮತ್ತೂ ಏನಾದ್ರೂ ಬೇಕೋ? +ಕನಾತಿ?ಬರಿ ಬಾಯಲ್ಲಿ ಬೈದಿದ್ದು ಸಾಲದು ಅಂತಾ ಕಾಣ್ತದೆ!” ಎಂದು ಗದರಿಸಿದರು. +“ನಿಮ್ಮ ಹತ್ರ ಒಂದು ಇಸಿಯ ಕೇಳಾನ ಅಂತಾ….” +ಎಂದು ಗುತ್ತಿ ಕಿವಿಯ ಹಿಂದೆ ತಲೆ ಕರೆದುಕೊಳ್ಳುತ್ತಾ ಮುಖವೆತ್ತಿದನು. +“ಏನೋ ಅದು?ಬೊಗಳೋ? ” +“ನನ್ನ…. ಸ್ವಾದರ ಮಾವನ ಮಗಳು ತಿಮ್ಮೀನ….” ತಲೆ ಕೆರೆದುಕೊಳ್ಳುತ್ತಾ ಇದ್ದಬಿದ್ದ ಹಲ್ಲುಗಳನ್ನೆಲ್ಲಾ ಪ್ರದರ್ಶಿಸುತ್ತಾ ಗುತ್ತಿ ಇನ್ನೂ ಮುಂದುವರಿಯುವಷ್ಟರಲ್ಲಿ ಭರಮೈಹೆಗ್ಗಡೆ ಕೈಯಲ್ಲಿ ಹಿಡಿದಿದ್ದ ಲೆಕ್ಕದ ಪುಸ್ತಕವನ್ನು ದೂರ ನೂಕಿ, ತಾಟಸ್ಥ್ಯವನ್ನೆಲ್ಲ ಆಚೆಗೆ ತಳ್ಳಿ.“ನಿನಗೇನು ಸೊಕ್ಕೇನೊ? +ತಲೆಗಿಲೆ ಕೆಟ್ಟಿದೆಯೋ? +ಅವರ ಸಾಲಾನೆಲ್ಲ ತೀರಿಸಿ, ಅವಳಿಗೆ ಅಷ್ಟೊಂದು ತೆರಾ ಕೊಟ್ಟು, ನಾ ನಿನಗೆ ಮದೇಮಾಡ್ಸಿ, ನನ್ನ ಮನೇ ಹಾಳು ಮಾಡಿಕೊಳ್ಳಲೇನೊ? +ನಿನಗೆ, ನಿನ್ನ ಅಪ್ಪಗೆ, ಕೊಟ್ಟ ಸಾಲಾನೇ ಕುತ್ತರ ಬೆಳೆದ್ಹಾಂಗೆ ಬೆಳೆದು ನಿಂತದೆ! +ಅದನ್ನೇ ನೀವು ತೀರಿಸಾದು ಯಾವಾಗಲೋ? …. +ಹೇಳ್ತೀನಿ, ನೋಡು. +ನಿಂಗೆ ಅವಳನ್ನ ಮದೇ ಮಾಡಿಕೊಳ್ಳಲೇಬೇಕು ಅಂತಾ ಅಷ್ಟೊಂದು ತೆವಲು ಹತ್ತಿದ್ರೆ, ಬೆಟ್ಟಳ್ಳಿ ಗೌಡ್ರಿಂದಲೆ ಸಾಲಾ ತಗೊಂಡು, ನನ್ನ ಸಾಲಾನೆಲ್ಲ ತೀರ್ಸಿ, ಅವರ ಕೇರೀಗೇ ಹೋಗಿ, ಅವಳನ್ನೇ ಮದೇ ಮಾಡಿಕೊಂಡು ಸುಕಾಗಿರು! +ಯಾರು ಬ್ಯಾಡ ಅಂತಾರೆ?” ಎಂದು, ಮಳೆ ಹೊಯ್ದಂತೆ ಮಾತಾಡಿ, ಸಿಟ್ಟಿಗೆ ಮೈಕೆರೆದುಕೊಳ್ಳುವಂತೆ, ಶಾಲಿನೊಳಗೆ ಕೈಹಾಕಿಕೊಂಡು ತುರಿಗಜ್ಜಿಯ ದೇಹಭಾಗಗಳನ್ನು ಪರಪರನೆ ತುರಿಸಿಕೊಳ್ಳಲಾರಂಭಿಸಿದರು. +ಗುತ್ತಿ ಒಡೆಯರಿಂದ ಬೇರೆ ರೀತಿಯ ಮಾತನ್ನು ನಿರೀಕ್ಷಿಸಿದರು. +ಒಡೆಯರಿಗೆ ದುಡಿಯಲು ಮತ್ತೊಂದು ಹೆಣ್ಣಾಳು ದೊರೆಯುವುದರಿಂದ ತನ್ನ ಪ್ರಯತ್ನಕ್ಕೆ ಪ್ರೋತ್ಸಾಹ ಲಭಿಸುತ್ತದೆ ಎಂದು ಹಾರೈಸಿದ್ದನು. +ಅಲ್ಲದೆ ಆಳುಗಳ ವಿಚಾರಕ್ಕಾಗಿಯೆ ಹಿಂದಿನಿಂದಲೂ ಸಿಂಬಾವಿಗೂ ಬೆಟ್ಟಳ್ಳಿಗೂ ಒಂದು ಸ್ಪರ್ಧಾ ಮನೋಭಾವ ಬೆಳೆದು, ಕೆಲವೊಮ್ಮೆ ಮನಸ್ತಾಪಕ್ಕೂ ಜಗಳಕ್ಕೂ ಕೂಡ ಕಾರಣವಾಗಿತ್ತು ಬಿಟ್ಟಿತ್ತು. +ನನ್ನ ತಂದೆ ಕರಿಸಿದ್ದಗೆ ಬೆಟ್ಟಳ್ಳಿ ಕೇರಿಯ ದೊಡ್ಡಬೀರನ ತಂಗಿ ಗಿಡ್ಡಿಯನ್ನು ತಂದಾಗಲೆ ಬೆಟ್ಟಳ್ಳಿ ಕಲ್ಲಯ್ಯಗೌಡರಿಗೂ ಭರಮೈಹೆಗ್ಗಡೆಯ ತಂದೆ ಸಿಂಬಾವಿಯ ದಿವಂಗತ ದುಗ್ಗಣ್ಣಹೆಗ್ಗಡೆಯವರಿಗೂ ಹೊಡೆದಾಟವಾಗುವುದರಲ್ಲಿತ್ತಂತೆ ಎಂಬುದು ಬಿದ್ದಿತ್ತು ಗುತ್ತಿಯ ಕಿವಿಗೆ, ಪೂರ್ವೇತಿಹಾಸ ರೂಪದಲ್ಲಿ. +ಆಗ ಕಲ್ಲೂರು ಸಾಹುಕಾರ ಮಂಭಟ್ಟರ ಮಧ್ಯಸ್ತಿಕೆಯಲ್ಲಿ ಪಂಚಾಯಿತಿ ನಡೆದು, ಸಿಂಭಾವಿಯಕೇರಿಯ ಗುತ್ತಿಯ ಅಪ್ಪ ಕರಿಸಿದ್ದನ ತಂಗಿ ಸೇಸಿಯನ್ನು ಬೆಟ್ಟಳ್ಳಿ ಕೇರಿಯ ತಿಮ್ಮಿಯ ಅಪ್ಪ ದೊಡ್ಡಬೀರನಿಗೆ ಮದುವೆ ಮಾಡಿಸಿ, ಆಳಿಗೆ ಆಳು ಬದಲು ಬಂದು ತುಂಬಿಕೊಳ್ಳುವಂತೆ ಮಾಡಿ, ಎರಡು ಮನೆತನಗಳಿಗೂ ರಾಜಿ ಮಾಡಿಸಿದ್ದರಂತೆ. +ಎರಡು ಮನೆತನಗಳೂ ಅಂತಹ ಜಗಳಗಳೂ ಅಂತಹ ರಾಜಿಗಳೂ ಅನೇಕ ಸಾರಿ  ಅನೇಕ ಕಾರಣಗಳಿಗಾಗಿ ನಡೆದಿದ್ದುವು. +ಎರಡು, ಮನೆತನಗಳಿಗೂ ಪರಸ್ಪರ ನೆಂಟಸ್ತಿಗೆ, ಹೋಗಿ ಬರುವುದು, ಮಾತುಕತೆ ಎಂದಿನಂತೆ ನಡೆದುಕೊಂಡೇ ಬರುತ್ತಿದ್ದರೂ ಅದೆಲ್ಲ ಮೇಲುಮೇಲಿನ ವಿಷಯವಾಗಿತ್ತು; + ಒಳಗೊಳಗೆ, ಅಂತರಂಗದಲ್ಲಿ, ಪರಸ್ಪರ ಸ್ಪರ್ಧಾಭಾವವೂ ಪ್ರತಿಷ್ಠೆಯ ಪೈಪೋಟಿಯೂ ಗವೆಯುತ್ತಿತ್ತು. +ಒಡೆಯರ ಕೋಪೋಕ್ತಿಯ ಹೊಗೆಯ ಆ ಹಳೇಯ ಜಿದ್ದಿನ ಕಿಡಿಗಳೆ ಆಡುತ್ತಿದ್ದುವು ಎಂಬುದನ್ನು ಗುತ್ತಿ ಗ್ರಹಿಸಲಿಲ್ಲ. +ಜೊತೆಗೆ, ತಮ್ಮ ಸ್ವಂತ ಮದುವೆಯ ಸಮಸ್ಯೆಯೆ ದಿನದಿನಕ್ಕೂ ಹೆಚ್ಚು ಹೆಚ್ಚು ಕಗ್ಗಂಟಾಗುತ್ತಿದ್ದು, ಅನಿಶ್ಚಯ ಪರಿಸ್ಥಿತಿಯಲ್ಲಿರುವಾಗ ಈ ಹಾಳು ಹೊಲೆಯ ತನ್ನ ಮದುವೆಯ ಕೆಂಜಿಗೆ ಹಿಂಡಿಲನ್ನು ಕಡಿದು ನನ್ನ ಮೇಲೆ ತಳ್ಳುತ್ತಿದ್ದಾನಲ್ಲಾ ಎಂಬ ಮದುವೆಯ ಕೆಂಜಿಗೆ ಹಿಂಡಿಲನ್ನು ಕಡಿದು ತನ್ನ ಮೇಲೆ ತಳ್ಳುತ್ತಿದ್ದಾನಲ್ಲಾ ಎಂಬ ಸಿಡುಕೂ ಅವರ ಸಿಟ್ಟಿನ ನುಡಿಗಳಿಗೆ ಕಾರಣವಾಗಿತ್ತು. +ಗುತ್ತಿಗೆ ತಟಕ್ಕನೆ ದಿಕ್ಕುಗೆಟ್ಟಂತಾಯಿತು. +ಒಡೆಯರ ಬಲದ ಮತ್ತು ಬೆಂಬಲದ ಧೈರ್ಯದಿಂದ ಯಾವ ಸಾಹಸಕ್ಕೆ ಕೈಹಾಕಿದ್ದನೊ, ಯಾವ ಸಾಹಸವನ್ನು ಕೆಚ್ಚಿನಿಂದಲೂ ಹಿಗ್ಗಿನಿಂದಲೂ ಸಾಧಿಸಿಯೆ  ಬಿಟ್ಟಿದ್ದನೊ ಅದು ಈಗ ಅವಿವೇಕಸಾಹಸದಂತೆ ಅಪಾಯಕಾರಿ ತೋರತೊಡಗಿ, ಅವನ ಪ್ರಾಣದಲ್ಲಿ ಒಂದು ಅವ್ಯಕ್ತ ಭಯಸಂಚಾರವಾಯಿತು; +ಮೂಕ ದುಃಖವೂ ಉಕ್ಕಿ ಬಂತು. +ತಿಮ್ಮಿಯನ್ನು ತಾನು ರಾತ್ರಾರಾತ್ರಿ ಹಾರಿಸಿಕೊಂಡು ಬಂದಿದ್ದೇನೆ ಎಂಬುದನ್ನು ಆಗಲೆ ಒಡೆಯರಿಗೆ ತಿಳಿಸುವುದಾಗಿರಲಿಲ್ಲ ಅವನ ಇರಾದೆ. +ಆದರೆ ಅವಳನ್ನು ಹಾರಿಸಿಕೊಂಡು ಬಂದು ತಾನು ಮದುವೆಯಾಗುವುದಕ್ಕೆ ಒಡೆಯರ ಅನುಮತಿಯನ್ನು ಮೊದಲು ಪಡೆದು ಆಮೇಲೆ ತಕ್ಕ ಸಮಯದಲ್ಲಿ ಹಾರಿಸಿಕೊಂಡು ಬಂದೆ ಎಂದು ಹೇಳುವುದು ಅವನ ಇಚ್ಛೆಯಾಗಿತ್ತು. +ಆದರೆ ಈಗ? +ಹಾರಿಸಿಕೊಂಡು ಬರುವುದಕ್ಕೆ ಅನುಮತಿ ನೀಡುವುದಿರಲಿ ಬೆಟ್ಟಳ್ಳಿಗೌಡರಿಂದ ಹಣ ಪಡೆದು, ತಮ್ಮ ಸಾಲ ತೀರಿಸಿ, ನೀನೆ ಅಲ್ಲಿಗೆ ಹೋಗಿ, ಅವಳನ್ನು ಮದುವೆಯಾಗಿ, ಅವರ ಜೀತದಾಳಾಗಿ ಸುಖವಾಗಿರು – ಎನ್ನುತ್ತಿದ್ದಾರೆ! +ಬಚ್ಚನಿಗೇ ಅವಳನ್ನು ಮದುವೆ ಮಾಡಬೇಕೆಂದು ಹಟತೊಟ್ಟಿರುವ ಗೌಡರು, ‘ನನ್ನ ಅಪ್ಪನಿಗೆ ನಾ ಹುಟ್ಟಿದ್ದರೆ’ ಎಂದೆಲ್ಲ ಏನೇನೋ ಆಣೆ ಭಾಷೆ ಹಾಕಿ ಪ್ರತಿಜ್ಞೆ ಮಾಡಿರುವ ಗೌಡರು, ನಾನು ಸಿಕ್ಕರೆ ನನ್ನನ್ನು ಜೀವಸಹಿತ ಬಿಟ್ಟಾರೆಯೆ? +ನನ್ನ ಒಡೆಯರ ಬಲ ಮತ್ತು ಬೆಂಬಲ ದೊರೆಯದಿದ್ದರೆ ನಾನು ಕೆಟ್ಟೆ; +ಬದುಕ ಬೇಕಾದರೆ ಊರು ಬಿಟ್ಟು ಕಾಡು ಸೇರುವುದೊಂದೇ ದಾರಿ;  + ಇಲ್ಲದಿದ್ದರೆ ದೇಶಾಂತರ ಹೊಗಬೇಕು – ಈ ರೀತಿಯ ತರತರದ ಭಾವನೆ ಮತ್ತು ಆಲೋಚನೆಗಳ ಆವರ್ತಗರ್ತಕ್ಕೆ ಸಿಕ್ಕಿದಂತಾಗಿದ್ದ ಗುತ್ತಿಯ ಮನಸ್ಸು ತತ್ತರಿಸಿ, ಶರಣಾಗತಿಯ ಕೊಟ್ಟಕೊನೆಯ ಆಶ್ರಯವನ್ನು ನಿಶ್ಚಯಿಸಿತು. +ಹೆಗ್ಗಡೆ ಇನ್ನೂ ಕಜ್ಜಿ ತುರಿಸಿ ಮುಗಿಸಿರಲಿಲ್ಲ. +ತುರಿಗಜ್ಜಿಯ ಹಣೆಯ ಬರಹವೆ ಹಾಗೆ! +ಒಂದು ಕಡೆ ತುರಿಕೆ ಶುರುವಾಯಿತು ಅಂದರೆ ಅದನ್ನು ತುರಿಸಿತುರಿಸಿ ನವೆಯನ್ನು ಸಮಾಧಾನ ಸ್ಥಿತಿಗೆ ತರುವಷ್ಟರಲ್ಲಿಯೆ ಅದರ ಪಕ್ಕದ ಸೀಮೆಯಲ್ಲಿ ಆಂದೋಳನಕ್ಕೆ ಪ್ರಾರಂಭ! +ಹರಿತವಾದ ಉಗುರಿನ ಕೈಬೆರಳುಗಳನ್ನು ಅಲ್ಲಿಗೆ ಕಳಿಸಿ ಆ ಕ್ರಾಂತಿಯನ್ನು ಹತ್ತಿಕ್ಕುವುದೆ ತಡ ಆ ಸ್ಥಳಕ್ಕೆ ಸ್ವಲ್ಪವೂ ಸಂಬಂಧವಿಲ್ಲದ ಇರುವ ತೊಡೆಯ ಸಂಧಿಯ ದೂರ ಪ್ರಾಂತದಲ್ಲಿ ಗಲಭೆ ಷುರು! +ಹಾಳು ತುರಿಗಜ್ಜಿ! +ಹೆಗ್ಗಡೆಗೆ ಸೇರಿದ್ದ ದೇಹಚಕ್ರಾಧಿಪತ್ಯವೆಲ್ಲ ತುರಿಗಜ್ಜಿಯ ಕ್ಷೋಭೆಗೆ ಒಳಗಾಗಿದ್ದುದರಿಂದ ಅವರು ಇನ್ನೂ ಕಜ್ಜಿ ತುರಿಸಿ ಪೂರೈಸಿರಲಿಲ್ಲ! +ನೋಡುತ್ತಾರೆ ಗುತ್ತಿ ಮೈಮೇಲೆ ಬಂದವನಂತೆ ಮುಖ ಊದಿಸಿ ಕೆಂಪಗೆ ಮಾಡಿಕೊಂಡು, ಕಣ್ಣೀರು ಸುರಿಸುತ್ತಾ, ಕೈ ಕೈ ಮುಗಿಯುತ್ತಾ, ಸೊಂಟ ಬಗ್ಗಿ ಮುಂಬರಿದು, ತೆಣೆಯ ಕೆಳಗೆ ಅಂಗಳದಲ್ಲಿ, ಹೆಗ್ಗಡೆಯವರಿಗೆ ನೇರ ಇದಿರಿನಲ್ಲಿ, ಬಡಿಗೆ ಬೀಳುವಂತೆ ಬೀಳುತ್ತಾ “ಅಯ್ಯಾ, ನಿಮ್ಮ ದಮ್ಮಯ್ಯ, ನನ್ನ ಕೈಬಿಡಬ್ಯಾಡಿ. +ಸಾಯೋವರೆಗೂ ನಿಮ್ಮ ಗುಲಾಮನಾಗಿ ದುಡಿದು ರುಣ ತೀರಿಸ್ತೀನಿ “ ಎಂದು ಗದ್ಗದಿಸುತ್ತಾ ಉದ್ದಂಡ ನಮಸ್ಕಾರ ಮಾಡಿದ್ದಾನೆ! +ಹೆಗ್ಗಡೆಗೆ ಮೈಮೇಲೆ ಬಿಸಿನೀರು ಚೆಲ್ಲಿದಂತಾಯ್ತು. +ದೈನಂದಿನ ತಟಸ್ಥಭಾವದಲ್ಲಿದ್ದ ಅವರ ಚೇತನ ಮಿಂಚನ ಚಾಟಿಗೆಂಬಂತೆ ತನ್ನ ಉದಾಸೀನವನ್ನೆಲ್ಲಾ ಕೊಡಹಿ ತಳ್ಳಿ ಎಚ್ಚರಗೊಂಡಿತು. +ಗುತ್ತಿಯ ಅನಿರೀಕ್ಷಿತ ವರ್ತನೆ ಅವರ ಮನಸ್ಸನ್ನು ಹೆಡೆಯೆತ್ತಿ ನಿಲ್ಲಿಸಿತು. +ಅದುವರೆಗೂ ಎಷ್ಟೆ ತುರಿಸಿಕೊಂಡರೂ ಶಮನಗೊಳ್ಳದೆ ಹತೋಟಿಗೆ ಬರದಿದ್ದ ತುರಿಗಜ್ಜಿಯ ಕೆರೆತವೂ ತಟಕ್ಕನೆ ನಿಂತು, ಅವರ ಪ್ರಜ್ಞಾಸೀಮೆಯಿಂದಲೆ ಗಡಿಪಾರಾಗಿ ಹೋಯಿತು. +ಅಂಗಳದ ಮಣ್ಣಿನಲ್ಲಿ ಅಡ್ಡಬಿದ್ದು, ಎದ್ದುನಿಂತು, ಕೈಮುಗಿದುಕೊಂಡು ಅಂಗಲಾಚುತ್ತಿದ್ದ ಗುತ್ತಿಯನ್ನು ಎವೆಯಿಕ್ಕದೆ ನೋಡುತ್ತಾ ಅವನ ಮಾತಿಗೆ ಕಿವಿಕೊಟ್ಟರು. +“ನಾನೊಂದು ನಿಮ್ಮ ಕಾಲ ಕಸ! +ಸಾಯೋವರೆಗೂ ನಿಮ್ಮ ಗುಲಾಮನಾಗಿ ದುಡಿದು ರುಣ ತೀರಿಸ್ತೀನಿ! +ಅಯ್ಯಾ, ನಾನೇನು ನನಗಾಗಿ ಮಾಡಿದ್ದಲ್ಲ. +ನಮ್ಮ ಧಣೀರ ಮಾನಮರ್ವಾದೆ ಕಾಪಾಡಕ್ಕಾಗಿ ನಾನು ಹಾಂಗೆ ಮಾಡಿದ್ದು….” +“ಏನು ಮಾಡಿದೆಯೋ ನೀನು?” + ಒಡೆಯರ ಪ್ರಶ್ನೆಯನ್ನು ಗಮನಿಸದವನಂತೆ ಮುಂಬರಿದನು ಗುತ್ತಿ. +“ಆ ಲುಚ್ಚ!ಆ ನೀಚ!ಆ ಹೊಲೇರ ಕುರುದೆ! +ಆ ಬಚ್ಛ, ಅಂವ ಮೂರುಕಾಸಿನ ಮನುಷ್ಯ. +ನನ್ನ ಒಡೇರನ್ನ ನನ್ನ ಮುಂದೆ “ಅವನು ಇವನು ನೀನು ತಾನು” ಅಂತಾ ಮಾತಾಡಬೈದೇನು? +ಹೇಳಿ!ನೀವೇ ಹೇಳಿ! +ಅದಕ್ಕೆ ನಾನು ಮಾಡಿದ್ದು ಹಾಂಗೆ! …. ” +“ಏನು ಮಾಡಿದ್ದೊ? +ಬಿಡಿಸಿ ಹೇಳೊ ಸರಿಯಾಗಿ.” ಹೆಗ್ಗಡೆಯ ಧ್ವನಿ ಮೃದುತರವಾಗಿ ಸಹಾನುಭೂತಿಸೂಚಕವಾಗಿತ್ತು. +ಅದನ್ನು ಗ್ರಹಿಸಿದ ಗುತ್ತಿ ನಡೆದದ್ದೆಲ್ಲವನ್ನು ತನಗೆ ಪ್ರತಿಕೂಲವಾಗುವಂತಃ ಅಂಶಗಳನ್ನೆಲ್ಲ ತ್ಯಜಿಸಿಯೊ ತೇಲಿಸಿಯೊ ಭಾವಪೂರ್ಣವಾಗಿ  ವರದಿ ಮಾಡಿದನು. +ಬೆಟ್ಟಳ್ಳಿಗೌಡರ ಪ್ರತಿಜ್ಞೆಯ ವಿಚಾರವಾಗಿ ಹೇಳುವಾಗ ಸಿಂಬಾವಿ ಹೆಗ್ಗಡೆಯವರಿಗೆ ಅವಮಾನಕರವಾಗಿ ಅವರನ್ನು ಕೆರಳಿಸುವಂತಹ ಅಲ್ಪಸ್ವಲ್ಪ ನಿಂದಾಂಶವನ್ನು ಸೇರಿಸಲು ಮರೆಯಲಿಲ್ಲ. +ಆಲಿಸುತ್ತಾ ಆಲಿಸುತ್ತಾ ಹೆಗ್ಗಡೆಯ ಹೃದಯದಲ್ಲಿ ಮನೆತನದ ರಚ್ಚು ಉಸಿರಾಡಿತು. +ಹಲ್ಲು ಬಿಗಿದು ತುಟಿಗಚ್ಚಿತು. +“ಏನೋ?ನಿಜ ಹೇಳ್ತಿದ್ದಿಯೇನೋ?” ಹೆಗ್ಗಡೆಯ ಗಡಸುದನಿ. +“ಧರ್ಮಸ್ಥಳದ ದೇವರಾಣೆಗೂ! +ನಾ ಹೇಳಿದ್ದು ಸುಳ್ಳಾಗಿದ್ರೆ ನನ್ನ ನಾಲಿಗೆ ಬಿದ್ದೇ ಹೋಗ್ಲಿ!” +“ಆ ಹುಡುಗಿ ಅದರ ಒಪ್ಪಗೆಯಿಂದಲೆ ನಿನ್ನ ಸಂಗಡ ಬಂತೇನೊ?” +“ಹೌದು, ನನ್ನೊಡೆಯಾ. +ಅದು, ಅದರ ಅವ್ವ, ಇಬ್ಬರಿಗೂ ಒಪ್ಪಿಗೆ. +ತಿಮ್ಮಿಯಂತೂ ಆ ಬಚ್ಛನ್ನ ಬಾಯಿಗೆ ಬಂದ್ಹಂಗೆ ಬೈತದೆ! +ಅದರ ಅಪ್ಪನೂ ಕಿಲಸ್ತರ ಜಾತಿಗೆ ಸೇರೋ ಜಾತಿಕೆಟ್ಟಂವಗೆ ಕೊಡಾಕೆ ಒಪ್ಪಿಲ್ಲವಂತೆ. +ಆದ್ರೆ ಗೌಡರ ಹೆದರಿಕೆಗೆ ಹ್ಞೂ ಅಂದಿದ್ನಂತೆ. +ನಾ ಕಾಣಾದೆ ತಡ, ಅತ್ತೆ “ಅಪ್ಪಾ, ಹೆಂಗಾದ್ರೂ ಮಾಡಿ ನನ್ನ ಹುಡುಗೀನ ಬದುಕ್ಸು” ಅಂತ ಹೇಳಿ ನನ್ನ ಸಂಗಡ ರಾತಾರಾತ್ರಿ ಕಳ್ಸಿಕೊಟ್ಟು, ಬ್ಯಾರೆ ಯಾರಿಗೂ ಗೊತ್ತಿಲ್ದಂಗೆ. +ನಂದೇನೂ ತಪ್ಪಿಲ್ಲ, ನನ್ನೊಡೆಯಾ!”ಸೊಂಟಬಾಗಿ, ಕೈಮುಗಿದು, ದೀನವದನನಾಗಿ ನಿಂತಿದ್ದ ಸುದೃಢಕಾಯದ ತಮ್ಮ ಕುಳ್ಳಬಂಟನನ್ನು ಕೃಪಾದೃಷ್ಟಿಯಿಂದ ಸ್ವಲ್ಪ ಹೊತ್ತು ನೋಡುತ್ತಿದ್ದು ಭರಮೈಹೆಗ್ಗಡೆ ಏನೇನನ್ನೊ ಮನಸ್ಸಿನಲ್ಲಿ ನಿಶ್ಚಯಿಸಿ ಹೇಳಿದರು. +“ನಿನ್ನ ಅಪ್ಪನ್ನ ಬಂದು ನನ್ನ ನೋಡಾಕೆ ಹೇಳೊ, ಹೋಗೋ!” +ಗುತ್ತಿ ಹರ್ಷಮುಖಿಯಾಗಿ, ಕೇರಿಯ ಕಡೆ ತಿರುಗುವುದಕ್ಕೆ ಬದಲು, ಜಟ್ಟಮ್ಮ ಹೆಗ್ಗಡತಿಯವರನ್ನು ಕಂಡು ಹೋಗಲು ಹಿತ್ತಲು ಕಡೆ ಬಾಗಿಲಿಗೆ ಹೋದನು. +ತವರು ಮನೆಯ ಇಷ್ಟವಾರ್ತೆಗಳನ್ನೆ ಹೇಳಿ ಮನಸ್ಸು ಸಂತೋಪಡಿಸಿದರೆ ‘ಹೆಗ್ಗಡ್ತಮ್ಮೋರು’ ಏನಾದರೂ ‘ಬಾಯಿಗೆ ಕೊಡದೆ’ ಇರುತ್ತಾರೆಯೆ? +ಬೆಟ್ಟಳ್ಳಿಯ ಹೊಲೆಯರ ಕೇರಿಯಲ್ಲಿ ಆಗತಾನೆ ಒಡ್ಡಿಗಳಿಂದ ಹೊರಟ ಊರುಹಂದಿಗಳು, ಸಲಗ – ದಡ್ಡೆ – ಮಣಕ – ಮರಿಗಳು, ಗುರುಗಳು ಕುಂಯಿಕುಂಯಿ ಸದ್ದು ಮಾಡುತ್ತಾ ಗುಡಿಸಲು ಗುಡಿಸಲಿನ ನಡುವಣ ಸಂಧಿಗಳಲ್ಲಿ ದಿನನಿತ್ಯದ ಪದ್ಧತಿಯಂತೆ ಆಹಾರಾನ್ವೇಷನೆಯಲ್ಲಿ ತೊಡಗಿದ್ದುವು. +ಕೋಳಿಗಳೂ, ಹುಂಜ – ಹೇಟೆ – ಸಳಗ – ಮರಿ – ಹೂಮರಿ, ಗೂಡುಗಳಿಂದ ಗೊತ್ತುಗಳಿಂದ ಹೊರಗೆ ಹಾರಿ ಕೊಚ್ಚೆಯ ಸ್ಥಳಗಳಲ್ಲಿ ಕೆದಕುವ ಕೆಲಸಕ್ಕೆ ಕಾಲು ಕೊಕ್ಕು ಹಾಕಿದ್ದುವು. +ಅಡುಗೆ ಒಲೆಗಳಿಂದ ಹೊಮ್ಮಿದ ನೀಲಿ ಹೊಗೆ ಗುಡಿಸಲುಗಳಿಗೆ ಹೊದಿಸಿದ್ದ ಹುಲ್ಲಿನ ಬಿರುಕುಗಳಿಂದ ಮೆಲ್ಲಗೆ ಹೊರಟು ಗಾಳಿಯಲ್ಲಿ ತಿಳ್ಳೆಯಾಟವಾಡಲು ಮೊದಲುಮಾಡಿತ್ತು. +ಬೆಳಗಿನ ಹೊತ್ತಿನಲ್ಲಿ ಅಂತಹ ಕೇರಿಗಳಿಗೆ ಸ್ವಾಭಾವಿಕವಾಗಿರುತ್ತಿದ್ದ ದುರ್ವಾಸನೆಗಳ ಒಕ್ಕೂಟ ಆ ಕೇರಿಯವರ ಮೂಗಿಗೆ ಅಗೋಚರವಾಗಿದ್ದರೂ ಹೊರಗಿನಿಂದ ಬರುವವರಿಗೆ ಮೂಗು ಮುಚ್ಚಿಕೊಳ್ಳುವಂತೆ ತುಂಬಿ ಹಬ್ಬಿತ್ತು. +ಆದ್ದರಿಂದಲೆ ದೇವಯ್ಯಗೌಡರು ಕಳಿಸಿದ್ದ ಗಟ್ಟದ ತಗ್ಗಿನ ಸೆಟ್ಟಿಯಾಳು ಮೂಗು ಮುಚ್ಚಿಕೊಂಡು ಬಾಯಿಂದಲೆ ಉಸಿರಾಡುತ್ತಾ ನಿಂತಿದ್ದು, ಬಚ್ಚನ ಬಿಡಾರದ ಮುಂದೆ. +ಬಚ್ಚನಿಗೆ ಗೌಡರು ಕಳಿಸಿದ್ದ ಸಂದೇಶವನ್ನು ನೀಡಿ, ಹೆಚ್ಚುಹೊತ್ತು ನಿಲ್ಲಲು ಸಾಧ್ಯವಾಗದೆ, ಅವನು ಹೊರಟುಹೋದ ಅನಂತರ, ತನ್ನ ಸಾರಥಿತ್ವದ ಸಮವಸ್ತ್ರವನ್ನು ಧರಿಸಿ, ತನಗೆ ಹೆಣ್ಣು ಕೊಡಬೇಕಾಗಿದ್ದ ಭಾವಿ ಮಾವ ದೊಡ್ಡಬೀರನ ಬಿಡಾರಕ್ಕೆ ನಡೆದು, ಗೌಡರು ಈ ಕೂಡಲೆ ಬರಬೇಕೆಂದು ಹೇಳಿಕಳುಹಿಸಿದ್ದ ವಾರ್ತೆಯನ್ನು ಠೀವಿಯಿಂದ ತಿಳಿಸಿ, ಹೆಚ್ಚಿನ ಸಂಭಾಷಣೆಗೆ ತೊಡಗುವುದಕ್ಕೆ ಅವಕಾಶವಿಲ್ಲದಷ್ಟು ಬಿಗುಮಾನದಿಂದಲೂ ಬೇಗದಿಂದಲೂ ಹಿಂದಿರುಗಿ, ಒಡೆಯರ ಮನೆಯ ಕಡೆಗೆ ಬಿರುಬಿರನೆ ಕಾಲುಹಾಕಿದ್ದನು. +ಹಿಂದಿನ ದಿನ ಸಾಯಂಕಾಲ ದೇವಯ್ಯಗೌಡರ ಬೈಸಿಕಲ್ಲು ಕಲಿಕೆಯ ಸಾಹಸದಲ್ಲಿ ಭಾಗಿಯಾಗಿ, ಬಿದ್ದು, ಗಾಯವಾಗಿ, ಮೈಕೈ ನೋವಿನಿಂದ ನರಳುತ್ತಿದ್ದ ಮುದುಕ, ಆ ಕಾಲದಲ್ಲಿದ್ದ ಮಲೆನಾಡಿಗರ ಆಯುಃಪ್ರಮಾಣದ ದೃಷ್ಟಿಯಿಂದ ಅವನನ್ನು ‘ವಯಸ್ಸಾದವನು’ ಎಂದು ಹೇಳುವುದಕ್ಕಿಂತ ‘ಮುದುಕ’ ಎಂದು ಹೇಳಿದರೇ ಸತ್ಯಕ್ಕೆ ಹೆಚ್ಚು ನಿಕಟವಾಗುತ್ತದೆ. + ದೊಡ್ಡಬೀರ, ಇನ್ನೂ ತನ್ನ ಕಂಬಳಿ ಹಾಸಗೆಯಿಂದ ಎದ್ದಿರಲಿಲ್ಲ. +ಅಲ್ಲದೆ ತನ್ನ ಮಗಳು ತಿಮ್ಮಿ, ಮದುಮಗಳಾಗಿರಬೇಕಾಗಿದ್ದವಳು, ಹಠಾತ್ತನೆ ಕಾಣೆಯಾಗಿದ್ದದ್ದೂ, ಅವಳಿಗಾಗಿ ಕೆರೆ ಬಾವಿ ಕಾಡುಗಳಲ್ಲಿ ನಡುರಾತ್ರಿಯವರೆಗೆ ಹುಡುಕಿ ಹತಾಶರಾಗಿದ್ದದ್ದೂ ಮುದುಕನ ಮನಸ್ಸನ್ನು ಕದಡಿ, ದಣಿಸಿ, ಅದನ್ನು ದೈನ್ಯ ಸ್ಥಿತಿಗೆ ತಂದಿತ್ತು. +ಗೌಡರು ಹೇಳಿಕಳುಹಿಸಿದ್ದು ಏತಕ್ಕೆ ಎಂಬುದನ್ನು ಒಡನೆಯೆ  ಊಹಿಸಿ, ದೊಡ್ಡಬೀರ ಹೆಂಡತಿಯನ್ನು ಕರೆದು “ಹೋಗೆ, ಸಣ್ಣಬೀರನ್ನ ಬರಾಕ್ಹೇಳೆ” ಎಂದನು. +ಹಿರಿಯಮಗ ಸಣ್ಣಬೀರ ಬರಲು “ಗೌಡರು ಹೇಳಿ ಕಳಿಸ್ಯಾರೆ. +ನಂಗೆ ಮೈಕೈ ನೋವು. +ಏಳಾಕೆ ಆಗದಿಲ್ಲ. +ನೀನೆ ಹೋಗಿ ಬಾ” ಎನ್ನಲು ಸಣ್ಣಬೀರ ತಾನೊಬ್ಬನೆ ಹೋಗಲು ಒಪ್ಪಲಿಲ್ಲ. +ತಿಮ್ಮಿ ಕಣ್ಮರೆಯಾಗುವ ವಿಚಾರಕ್ಕಾಗಿಯೆ ತನ್ನ ಅಪ್ಪನನ್ನು ಕರೆಯಿಸುತ್ತಿರುವುದು ಎಂಬುದೂ ಅವನಿಗೂ ಗೊತ್ತಾಯಿತು. +ತಿಮ್ಮಿ ಕಾಣೆಯಾದುದಕ್ಕೆ ನಿಜವಾದ ಕಾರಣ ಅವಳು ಕೆರೆ ಬಾವಿಗಳಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದಲ್ಲ. +ಕಿಲಸ್ತರ ಜಾತಿಗೆ ಸೇರಲಿರುವ ಬಚ್ಚನಿಗೆ ಮದುವೆ ಮಾಡಿಕೊಡಲು ಇಷ್ಟವಿಲ್ಲದೆ ಅವಳ ತಂದೆತಾಯಿಯವರು ಅವಳನ್ನು ಗುಟ್ಟಾಗಿ ಅಡಗಿಸಿಟ್ಟು, ಅವಳೆಲ್ಲಿಯೊ ಕಾಣೆಯಾಗಿದ್ದಾಳೆ ಎಂಬ ಗುಲ್ಲು ಹಬ್ಬಿಸಿದ್ದಾರೆ ಎಂಬ ಗುಸುಗುಸು ಸುದ್ದಿಯೂ ಗುಡಿಸಲುಗಳಲ್ಲಿ ಹಬ್ಬಿತ್ತು. +ಜೊತೆಗೆ ಹಿಂದಿನ ದಿನ ಸಂಜೆ ಬೈಸಿಕಲ್ಲು ಸವಾರಿಯಾಗುತ್ತಿದ್ದಾಗ ಬೆಟ್ಟಳ್ಳಿ ಹಕ್ಕಲಿನಲ್ಲಿ ನೆರೆದಿದ್ದ ಜನಸಂದಣಿಯಲ್ಲಿ ಗುತ್ತಿಯನ್ನು ಕಂಡಿದ್ದವರನೇಕರು ತಿಮ್ಮಿ ಕಾಣೆಯಾಗಿದ್ದುದಕ್ಕೆ ಅವನೇ ಕಾರಣವಾಗಿರಬೇಕೆಂದೂ ಊಹಿಸಿ ನಂಬಿದ್ದರು. +ಏಕೆಂದರೆ, ಸಿಂಬಾವಿ ಗುತ್ತಿಯೆ ತಿಮ್ಮಿಯನ್ನು ಮದುವೆಯಾಗುತ್ತಾನೆ ಎಂದೂ, ತಿಮ್ಮಿಯೂ ಅವಳ ತಾಯಿ ಸೇಸಿಯೂ ಗುತ್ತಿಯ ಪರವಾಗಿಯೆ ಇದ್ದಾರೆಂದೂ ಕೇರಿಯವರಿಗೆ ಸಾಧಾರಣವಾಗಿ ತಿಳಿದ ವಿಷಯವಾಗಿತ್ತು. +ದೊಡ್ಡಬೀರ ಮೊದಮೊದಲು ಗೌಡರ ಹೆದರಿಕೆಗೆ ತನ್ನ ಮಗಳನ್ನು ಕೇರಿಯ ಹೊರಗೆ ಕೊಡುವುದಿಲ್ಲ ಎಂದು ಬಚ್ಚನಿಗೆ ಕೊಡಲು ಸಮ್ಮತಿಸಿದ್ದರೂ ಅವನು ದೇವಯ್ಯಗೌಡರೊಡನೆ ಕಿಲಸ್ತರನಾಗುತ್ತಾನೆ ಎಂಬ ವದಂತಿ ಹಬ್ಬಿದ ಮೇಲೆ ಮನಸ್ಸು ಬದಲಾಯಿಸಿದ್ದನು. +ಈ ಎಲ್ಲ ಒಳಗುಟ್ಟಿನ ವಿಷಯಗಳನ್ನೂ ಬಚ್ಚನಿಂದ ಕೇಳಿ ತಿಳಿದಿದ್ದ ದೇವಯ್ಯ ತನ್ನ ತಂದೆ ಕಲ್ಲಯ್ಯಗೌಡರಿಗೆ ಹೇಳಿ, ದೊಡ್ಡಬೀರನಿಗೆ ಕರೆಕಳಿಸಿದ್ದನು. +ಏನಾದರೂ ಹೆಚ್ಚು ಕಡಿಮೆಯಾದರೂ ದೊಡ್ಡಬೀರ ಮುದುಕನಾದ್ದರಿಂದ ಅವನಿಗೆ ದೇಹ ದಂಡನೆಯಾಗುವ ಸಂಭವ ಅಷ್ಟಾಗಿರಲಿಲ್ಲ. +ಆದರೆ ಸಣ್ಣಬೀರನಿಗೆ ತನ್ನ ವಯೋಧರ್ಮದಿಂದ ಆ ರಕ್ಷೆ ಪಡೆಯುವ ಧೈರ್ಯವಿರಲಿಲ್ಲ. +ಅವನಿಗೆ ಕಲ್ಲಯ್ಯಗೌಡರ ಮತ್ತು ದೇವಯ್ಯಗೌಡರ ಸಿಟ್ಟಿನ ಬೆತ್ತದ ರುಚಿಯನ್ನು ಅನುಭವಿಸುವ ಸಂದರ್ಭಗಳೂ ಹಿಂದೆ ಒಂದೆರಡು ಸಾರಿ ದೊರೆಕೊಂಡಿದ್ದುವು. +ಆದ್ದರಿಂದಲೆ ಅವನು ತಾನೊಬ್ಬನೆ ಹೋಗಿ ಗೌಡರ ಕೋಪಕ್ಕೆ ಎದುರಾಗಲು ಒಪ್ಪಲಿಲ್ಲ. +ಅಂತೂ ಕಡೆಗೆ ತಂದೆಮಕ್ಕಳಿಬ್ಬರೂ ಹೋಗುವುದೆಂದು ನಿರ್ಣಯವಾಯಿತು. +ಕಿರಿಯ ಮಗನಿಗೆ ಹೇಳಿಕಳಿಸಿದರೆ ಅವನು ಬಿಡಾರದಿಂದಲೆ ಹೊರಡಲಿಲ್ಲ. +ತನ್ನ  ಹೆಂಡತಿ ಚಿಕ್ಕಪುಟ್ಟಿಯ ಕೈಲಿ ತನಗೆ ‘ಸಣ್ಣಕೆ ಒಡಲ ಜರ ಬಂದದೆ’ ಎಂದು ಹೇಳಿ ಕಳುಹಿಸಿ ನುಣುಚಿಕೊಂಡಿತು. +ದೊಡ್ಡಬೀರನನ್ನು ಮೆಲ್ಲಗೆ ನಡೆಸಿಕೊಂಡು ಸಣ್ಣಬೀರನು ಬೆಟ್ಟಳ್ಳಿ ಮನೆಯ ಹೊರ ಚಾವಡಿಗೆ ಸೇರಿ, ಅಲ್ಲಿ ಕಂಬದ ಬುಡದಲ್ಲಿ ಕಂಬಳಿ ಹಾಕಿಕೊಂಡು ಇಬ್ಬರೂ ಕೂತರು. +ಆಗಲೆ ಚಾವಡಿಯಲ್ಲಿ ಬೀಡಿಯ ವಾಸನೆಯಿದ್ದುದನ್ನು ಗಮನಿಸಿ, ಸಣ್ಣಬೀರನಿಗೆ ಭಯಾಶಂಕೆಯಾಗಿ, ದೊಡ್ಡಬೀರನನ್ನು ಕುರಿತು “ಅಪ್ಪಾ, ಯಾಕೋ ಬೀಡಿವಾಸನೆ ನೋಡಿದ್ರೆ, ಸಾಬರನ್ನ ಕರೆಸಿದ್ಹಾಂಗೆ ಕಾಣ್ತದೋ! +ಹೊತಾರೆ ಎಡದ ಮಗ್ಗುಲಾಗೆ ಎದ್ದಡನೋ ಏನೋ ನಾನು? +ಏನು ಗಿರಾಚಾರ ಕಾದಿದೆಯೋ? +ಅವತ್ತು ಹೊಡೆಸಿದ್ರಲ್ಲಾ ಮಗ್ಗಲು ಮುರಿಯ ಹಾಂಗೆ, ಹೊನ್ನಳ್ಳಿಹೊಡ್ತಾ….” ಎನ್ನುತ್ತಿದ್ದವನು ಬೆಚ್ಚಿ ಬೆದರಿ ದೂರ ನೋಡಿ ಹೇಳಿದನು “ನೋಡಿದ್ಯಾ? +ನಾ ಹೇಳಿದ್ದು ಸುಳ್ಳೊ ಬದ್ದೋ? +ಆ ಇಜಾರದ ಸಾಬ್ರು, ಲುಂಗೀಸಾಬ್ರು ಇಬ್ರೂ ಬಂದಾರೆ!”ಅಷ್ಟರಲ್ಲಿ ಒಳಗಿನ ಅಂಗಳದಿಂದ ಆ ಇಬ್ಬರು ಹೊನ್ನಾಳಿ ಸಾಬಿಗಳೂ ಈ ಇಬ್ಬರೂ ಕುಳಿತಿದ್ದಲ್ಲಿಗೆ ಬಂದು ಸ್ವಲ್ಪ ದೂರದಲ್ಲಿ ನಿಂತರು. +ಕಟುಕನು ತಾನು ಕಡಿಯಲಿರುವ ಕುರಿಗಳು ಪುಷ್ಟವಾಗಿವೆಯೋ ಇಲ್ಲವೋ ಎಂಬುದನ್ನು ಅರಿಯಲು ಅವುಗಳನ್ನು ನೋಡುವಂತೆ ದೊಡ್ಡಬೀರ ಸಣ್ಣಬೀರನನ್ನು ದುರುದುರುದುರನೆ ನೋಡಿದರು. +ಸಿಂಡಮೂಗಿನ ಕುಳ್ಳ ಲುಂಗೀಸಾಬಿಯ ಮುಖದಲ್ಲಿ ಪರಿಹಾಸ್ಯದ ನಗೆ ತನ್ನನ್ನು ಮೊದಲಿಸುತ್ತಿದ್ದಂತೆ ಭಾಸವಾಯಿತು ಸಣ್ಣಬೀರನಿಗೆ. +ಆದರೆ ಬಲಿಷ್ಠಕಾಯನೂ ದೀರ್ಘದೇಹಿಯೂ ಆಗಿದ್ದ ಇಜಾರದ ಸಾಬಿಯ ಮುಖದಲ್ಲಿ ದೌಷ್ಟಕ್ರೌರ್ಯಗಳ ಭಯಾಕನತೆಯ ಮುದ್ರೆಗೊಂಡಂತಿದ್ದುದನ್ನು ಕಂಡ ತಂದೆ ಮಕ್ಕಳಿಬ್ಬರೂ ನಿರಾಶಾಹತರಾದಂತೆ ಸುಮ್ಮನೆ ನಿಷ್ಕಾರಣ ಕೃತಕ ಬೆಪ್ಪುನಗೆ ನಗುತ್ತಾ ಮಿಳ್ಮಳನೆ ನೋಡುತ್ತಾ ಕುಳಿತಿದ್ದರು. +“ಓಹೋಹೋ!ಸರದಾರ ಮಕ್ಕಳು! +ಏನು ದೌಲತ್ತೋ ನಿಮಗೆ? +ನವಾಬರು ಕೂತಹಾಂಗೆ ಕೂತಿದಾರೆ! +ಏಳ್ರೋ!ಎದ್ದು ನಿಲ್ರೋ! +ಏನು ಜಂಭ ಇವಕ್ಕೆ? +ಕೂತೇ ಒದಾವೆ!” ಹಂದಿ ಹೂಂಕರಿಸಿ ತಿವಿಯುವಂತೆ ಗದರಿದನು ಇಜಾರದ ಸಾಬಿ. +ಅನೈಚ್ಛಿಕವೆಂಬಂತೆ ದಿಗಿಲುಬಿದ್ದು ತಟಕ್ಕನೆ ಎದ್ದು ನಿಂತುಬಿಟ್ಟನು ಸಣ್ಣಬೀರ! +ಲುಂಗೀಸಾಬಿ ನಕ್ಕನು. + “ಗಮಾರ!ಹಳ್ಳಿಗಮಾರ!” + “ಏ, ಸುಮ್ನೆ ಕೂತ್ಕೂಬಾರ್ದೇನೋ, ಹುಡುಗಾ?” + ದೊಡ್ಡಬೀರ ಕೂತಲ್ಲಿಂದ ಒಂದು ಚೂರೂ ಹಂದದೆ, ಎದ್ದು ನಿಂತಿದ್ದ ಸಣ್ಣಬೀರನನ್ನು ರಟ್ಟೆಹಿಡಿದೆಳೆದು ಕೂರಿಸಿ, ಹುಸಿನಗು ನಗುತ್ತಾ “ಈ ಇಜಾರದ ಸಾಬಣ್ಣಗೆ ಕದಬಿಲ್ಲ. +ಹೋದಲ್ಲಿತನಕ ದುಂಡಾವರ್ತಿ, ದರ್ಬಾರು, ಜಬರದಸ್ತು! +ಅದಕ್ಕೇ ಮತ್ತೆ, ಕಮ್ಮಾರಸಾಲೇಲಿ ಪುಟ್ಟಾಚಾರ ಮೇಲೆ ಕೈಮಾಡಿ, ಹೂವಳ್ಳಿ ನಾಯಕರ ಹತ್ರ ಗನಾಗಿ ಕನಾತಿ ತಿಂದದ್ದು!” ಎಂದು ಇಜಾರದ ಸಾಬಿಯನ್ನು ತಿರಸ್ಕಾರದಿಂದ ನೋಡುತ್ತಾ ಮೂದಲಿಸಿದನು. +ಇಜಾರದ ಸಾಬಿ ಲುಂಗೀಸಾಬಿಯ ಕಡೆ ತಿರುಗಿ ತುರುಕಮಾತಿನಲ್ಲಿ “ಇವನಿಗೆ ಏನಂತೀಯಾ ಸೊಕ್ಕು! +ಕೇರಿಗೆ ಯಜಮಾನ ಅಂತಾ ಬಹಳ ದಿಮಾಕು. +ಆವೊತ್ತು ನಾನೂ ಅಜೀಜು ಚಮಡಕ್ಕಾಗಿ ಕುದುರೆ ತಟ್ಟು ತೆಗೆದುಕೊಂಡು ಇವರ ಕೇರಿಗೆ ಹೋದರೆ ‘ನೀವು ಕೇರಿ ಒಳಗೆಲ್ಲ ಬರಬಾರದು. +ನಮಗೂ ದೇವರು ದಿಂಡರೂ ಇದಾವೆ. +ನಮ್ಮ ಜಾತಿ ಕೆಟ್ಟುಹೋಗ್ತದೆ’ ಅಂತಾ ಏನೇನೋ ಬೊಗಳಿಬಿಟ್ಟ…. +ಇವತ್ತು ಇವನ, ಇವನ ಮಗನ, ಸೊಕ್ಕನೆಲ್ಲ ಇಳಿಸಿಬಿಡ್ತೀನಿ; + ಗೌಡರು ಬೆತ್ತ ತಗೋ ಅನ್ನಲಿ!” ಎಂದು ದೊಡ್ಡಬೀರನ ಕಡೆ ನೋಡಿ, ಮೀಸೆ ಕುಣಿಸುತ್ತಾ ಮುಂದುವರೆಸಿದನು ಕನ್ನಡದಲ್ಲಿ. + “ನಿನಗೆ ಇವತ್ತು; ನಾಳೆ, ನಿನ್ನ ಹೂವಳ್ಳಿ ನಾಯಕರಿಗೆ; + ಜಾಸ್ತಿಯಾಗಿದ್ದ ಚರ್ಬಿ ಎಲ್ಲಾ ಕರಗ್ತದೆ, ನೋಡ್ತಾ ಇರು.” + “ಈವತ್ತು ಗೊತ್ತಾಗ್ತದ್ಯೋ ನಿಮ್ಮಿಬ್ಬರಿಗೂ, ಹೊನ್ನಳ್ಳಿ ಹೊಡೆತದ ರುಚಿ! +ಮದುವೆ ಮಾಡಿಕೊಡುತ್ತೇನೆ ಎಂದು ಹುಡುಗೀನೆ ಪರಾರಿ ಮಾಡಿಸಿದ್ದೀಯಲ್ಲಾ, ನೀನೆಂಥ ದಗಲಬಾಜಿ?” ಎಂದನು ಲುಂಗೀಸಾಬು. +“ಜಕಣಿಗೆ ಸರಿಯಾಗಿ ಹರಕೆ ನಡೆಸ್ಲಿಲ್ಲ ಅಂತಾ ಕಾಣ್ತದೆ. +ಜಕಣಿ ಅಡಗಿಸಿಟ್ರೆ ಯಾರೇನು ಮಾಡಾಕೆ ಆಗ್ತದೆ? +ಸರಿಯಾಗಿ ಹರಕೆಮಾಡ್ತೀವಿ ಅಂತಾ ಹೇಳಿಕೊಂಡ್ರೆ, ಹುಡುಗೀನೇನು ಮುಚ್ಚಿಟ್ಟುಕೊಳ್ತದೆಯೆ?” ರಾಗವಾಗಿ ದನಿಎಳೆದ ದೊಡ್ಡಬೀರನನ್ನು ಮೂದಲಿಸುವಂತೆ ಅಣುಕು ದನಿಯಲ್ಲಿ ಇಜಾರದ ಸಾಬಿ ಹಂಗಿಸಿದನು; +“ಆಗ್ತದೆ!ಆಗ್ತದೆ! +ಸರ್ರೀಯಾಗಿ ಹರಕೆ ಆಗ್ತದೆಯೋ ಇವತ್ತು! +ಜಕಿಣಿ… ನುಂಗಿದ ಹುಡುಗೀನ ವಾಂತಿ ಮಾಡಿಬಿಡಬೇಕು…. +ಹಂಗಾಗ್ತದೆ ಇವತ್ತಿನ ಹರಕೆ!”ಅಷ್ಟರಲ್ಲಿ ಜಗಲಿಯಿಂದ ‘ಯಜಮಾನ ಕೆಮ್ಮು’ ಕೇಳಿಸಿತು; +ಸೊಂಟಕ್ಕೆ ಸದಾ ನೇತು ಹಾಕಿಕೊಂಡೇ ಇರುತ್ತಿದ್ದ ಬೀಗದ ಕೈ ಗೊಂಚಲಿನ ಸದ್ದೂ ಸಮೀಪಿಸಿತು. +ನಾಲ್ವರೂ ಆ ಕಡೆ ನೋಡುತ್ತಿದ್ದಂತೆ, ಮೊಣಕಾಲಿನವರೆಗೆ ಕಚ್ಚೆಪಂಚೆ ಹಾಕಿದ್ದು, ಕಸೆ ಅಂಗಿಯ ಮೇಲೆ ಹಸುರು ಶಾಲು ಹೊದೆದಿದ್ದು, ವೃದ್ಧರಾದರೂ ಸೊಂಟಬಾಗದಿರುವ ಸುದೃಡಕಾಯದ ಬಲಿಷ್ಠ ವ್ಯಕ್ತಿ ಕಲ್ಲಯ್ಯಗೌಡರು ಚಾವಡಿಗೆ ಬಂದು ಕಲ್ಲುಮಂಚದ ಮೇಲೆ ಒರಗಿ ಕೂತರು. +ಅವರು ಬರುತ್ತಿದ್ದಂತೆಯೆ ದೊಡ್ಡಬೀರ ಸಣ್ಣಬೀರರು ಎದ್ದು ನಿಂತು, ಸೊಂಟಬಾಗಿ, ನೆಲಮುಟ್ಟಿ, ನಮಸ್ಕಾರ ಸಲ್ಲಿಸಿದರು. +ಸಾಬರಿಬ್ಬರೂ ಗೌರವಸೂಚಕವಾಗಿ ಸಲಾಂ ಮಾಡಿ, ಸರಿದು, ದೂರ ನಿಂತರು. +‘ಎಲೆ’ಯಲ್ಲಿ ಹುಳುವಾಗಿದ್ದ ಕರೆಯುವ ಹಸುವೊಂದಕ್ಕೆ ಔಷಧಿ ಹಾಕಿಸಿ ಆಗತಾನೆ ಕೊಟ್ಟಿಗೆಯಿಂದ ಹಿಂದಿರುಗಿದ್ದ ಗೌಡರ ಮೈಯಿಂದ ಬರುತ್ತಿದ್ದ ಸೆಗಣಿ ಗಂಜಲ ಮಿಶ್ರವಾದ ಕೊಟ್ಟಿಗೆಯ ವಾಸನೆ ಸಾಬಿಗಳಿಗೆ ತುಸು ಅಹಿತಕರವಾಗಿಯೆ ತೋರಿತು; +ಹೊಲೆಯರಿಗೆ ಅದರ ಪರಿವೆಯೆ ಇರಲಿಲ್ಲ. +ಜೀವವಿರುವ ದನಗಳನ್ನು ಕೊಂದು ತಿನ್ನುವವರಿಗೂ ಸತ್ತ ಬಡು ತಿನ್ನುವವರಿಗೂ ಅಷ್ಟಾದರೂ ಬೇಡವೆ ವ್ಯತ್ಯಾಸ? +“ಏನೋ? +ನಿನ್ನ ಮಗಳು ಸಿಕ್ಕಲಿಲ್ಲೇನೋ?” ಗೌಡರ ಧ್ವನಿಯಲ್ಲಿ ಉಗ್ರಗಾಂಭೀರ್ಯವಿತ್ತೆ ವಿನಾ ಕಾತರತೆಯಿರಲಿಲ್ಲ. +“ಇಲ್ಲ, ನನ್ನೊಡೆಯಾ.” ನಿಂತೆ ಇದ್ದ ದೊಡ್ಡಬೀರ ಮತ್ತೊಮ್ಮೆ ಸೊಂಟ ಬಗ್ಗಿಸಿ ಕೈಮುಗಿದು ಹೇಳಿದನು. +“ಯಾವ ಯಾವ ಕೆರೆ ಬಾವಿ ಹಳ್ಳ ಗುಂಡಿ ಎಲ್ಲ ಹುಡುಕಿ ಆಯಿತೋ?” ಗೌಡರ ಧ್ವನಿ ನಿಷ್ಠುರವಾಗಿತ್ತು; +ಸತ್ತುಹೋದವಳು ಸಿಕ್ಕಿದಳೊ ಇಲ್ಲವೊ ಎಂಬ ವಿಚಾರದಲ್ಲಿ ಇರಬೇಕಾಗಿದ್ದ ಯಾವ ತರಹದ ಉದ್ವೇಗವೂ ಇರಲಿಲ್ಲ. +ಜೊತೆಯಲ್ಲಿ ವ್ಯಂಗ್ಯದ ಛಾಯೆ ಇಣುಕುತ್ತಿತ್ತು. +ದೊಡ್ಡಬೀರ, ಅದಾವುದನ್ನೂ ಅರಿಯದವನಂತೆ, ಪ್ರಶ್ನೆಗೆ ಸರಿಯಾದ ಉತ್ತರಕೊಡುವ ಮನಸ್ಸಿನಿಂದ ಹಾಡ್ಯದ ಕೆರೆ, ಮಕ್ಕಿಗದ್ದೆಯ ಬಾವಿ, ಕೋಡ್ಲುಗುಂಡಿ ಎಂದು ಮೊದಲಾಗಿ ಒಂದು ಪಟ್ಟಯನ್ನೆ ನಿವೇದಿಸತೊಡಗಿದ್ದನು. +ಗೌಡರು ಜಿಗುಪ್ಸೆಯಿಂದ ಮುಖ ಕಂತ್ರಿಸಿಕೊಂಡು, ದೊಡ್ಡಬೀರ ನನ್ನು ನಡುವೆ ತಡೆದು, ವ್ಯಂಗ್ಯ ಸ್ಪಷ್ಟವಾಗುವಂತೆ ನಿಧಾನವಾಗಿ, ಶುದ್ಧ ಸಾಹಿತ್ಯರೀತಿಯಿಂದ ಕೇಳಿದರು. + “ಅಡಕೆ ಮರದ ಚೊಂಡೀಲಿ ಹುಡುಕಿದರೇನೋ?. + ಈ ಸಾರಿಯ ಪ್ರಶ್ನೆಯಲ್ಲಿ ಉಗ್ರತೆ ವ್ಯಂಗ್ಯ ಎರಡೂ ಸ್ಪಷ್ಟವಾಗಿದ್ದುದು ಮುದುಕನಿಗೆ ಅರ್ಥವಾಯಿತೆಂದು ತೊರುತ್ತದೆ. +ಅವನು ಮುಂದೆ  ಮಾತಾಡದೆ ನೆಲ ನೋಡತೊಡಗಿದನು. +ಸಾಬಿಗಳಿಬ್ಬರೂ ನಗೆ ತಡೆಯಲಾರದೆ ಮುಖ ತಿರುಗಿಸಿಕೊಂಡರು. +ನೋಡತೊಡಗಿದನು ಸಾಬಿಗಳಿಬ್ಬರೂ ನಗೆ ತಡೆಯಲಾರದೆ ಮುಖ ತಿರುಗಿಸಿಕೊಂಡರು. +ಸಣ್ಣಬೀರನಿಗೆ ಆಗಲೆ ತೊಳ್ಳೆ ನಡುಗತೊಡಗಿತ್ತು! +“ಯಾರ ಹತ್ರವೂ ತನ್ನ ಈ ಪಡಪೋಸಿ?” ಗೌಡರ ಇಂಗಿತವರಿತ ಇಜಾರದ ಸಾಬಿ ದೊಡ್ಡಬೀರನಿಗೆ ನೇರವಾಗಿ ಪ್ರಶ್ನೆ ಹಾಕಿದನು. +“ಯಾಕೋ ಕಾಲು ನಡುಗಿಸುತ್ತಾ ನಿಂತೀಯ? +ನೀನಾದರೂ ನಿಜ ಹೇಳೋ. +ನಿನ್ನ ತಂಗೀನ ಎಲ್ಲಿ ಮುಚ್ಚಿಟ್ಟಿದ್ದಾರೋ? +ಎಲ್ಲಿಗೆ ಕಳ್ಸಿದ್ರೋ?” ಮಿಳ್ಮಳನೆ ಮಾತು ಹೊರಡದೆ ಕಣ್ಣು ಕಣ್ಣು ಬಿಡುತ್ತಿದ್ದ ಸಣ್ಣಬೀರನನ್ನು ನಿರ್ದೇಶಿಸಿ ಲುಂಗೀಸಾಬು ಮತ್ತೆ ಎಚ್ಚರಿಕೆ ಹೇಳಿದನು. + “ಹೇಳುತ್ತಿದ್ದರೆ ಒಳ್ಳೆ ಮಾತಿನಲ್ಲಿ ಹೇಳು. +ಇಲ್ಲದಿದ್ದರೆ, ನಿನಗೆ ಗೊತ್ತೆ ಇದೆಯಲ್ಲಾ ಕಂಬಕ್ಕೆ ಕಟ್ಟಿ ಬಾಯಿ ಬಿಡಿಸುತ್ತಾರೆ.”ಸಣ್ಣಬೀರ ನಡುಕುದನಿಯಲ್ಲಿ ಕೈಕೈ ಮುಗಿಯುತ್ತಾ “ಅಯ್ಯಾ, ನಿಮ್ಮ ಉಪ್ಪು ಅನ್ನ ತಿಂದು ನಿಮಗೆ ನಾ ಸುಳ್ಳು ಹೇಳಾದಿಲ್ಲ. +ಧರ್ಮಸ್ಥಳದ ದೇವ್ರಾಣೆಗೂ ನಂಗೊತ್ತಿಲ್ಲ….” ಅವನಿನ್ನೂ ಹೇಳಿ ಮುಗಿಸಿರಲಿಲ್ಲ; +ಗೌಡರು ಲುಂಗೀ ಸಾಬುವನ್ನು ಕುರಿತು “ಹೇಗೊ, ಬುಡನ್, ಒಂದಷ್ಟು ಹುಣಿಸೇ ಬರಲು ಮುರುಕೊಂಡು ಬಾರೊ!” ಎಂದು ಇಜಾರದ ಸಾಬಿಯ ಕಡೆ ನೋಡಿ “ಏನೋ ನೋಡ್ತೀಯಾ? +ಕಟ್ಟೋ ಅವನ್ನ ಕಂಬಕ್ಕೆ!” ಎಂದು ಕಠಿಣಧ್ವನಿಯಲ್ಲಿ ಆಜ್ಞಾಪಿಸಿದರು. +ಇಜಾರದ ಸಾಬು ತನ್ನ ಕೈಯಿಂದ ಉಗ್ರಸನ್ನೆ ಮಾಡಿ ತಲೆಯಾಡಿಸಿ ಕರೆದೊಡನೆಯೆ, ಗಾಡಿಯ ನೊಗಕ್ಕೆ ಹೆಗಲು ಕೊಟ್ಟೂ ಕೊಟ್ಟೂ ಅಭ್ಯಾಸವಿದ್ದ ಗಾಡಿಯೆತ್ತು ಗಾಡಿ ಹೊಡೆಯುವವನು ಮೂಕಿಗೆ ಕೈಹಾಕಿ ಎತ್ತಿ ಲೊಚಗುಟ್ಟಿದೊಡನೆಯೆ ನೊಗಕ್ಕೆ ವಿಧೇಯತೆಯಿಂದ ಹೆಗಲು ಕೊಡುವಂತೆ, ಸಣ್ಣಬೀರ ನಡುನಡುಗುತ್ತಲೆ, ನಾಲಗೆ ಬಿದ್ದುಹೋಗಿ ಮಾತು ಸತ್ತವನಂತೆ, ಮೂಕಪಶುವಿನಂತೆ, ಒಮ್ಮೆ ಕೆರಳಿ ಕುಳಿತಿದ್ದ ಗೌಡರನ್ನೂ ಒಮ್ಮೆ ದುಃಖದೀನನಾಗಿ ಪರಿತಪಿಸುತ್ತಿದ್ದ ತನ್ನ ತಂದೆಯನ್ನೂ ನೋಡುತ್ತಾ ಶಿಕ್ಷಾ ಸ್ತಂಭದ ಕಡೆ ಮುಂದುವರಿದನು. +ಅವನು ಹೋದ ರೀತಿ, ಆ ಕಂಬವನ್ನು ತಬ್ಬಿ ನಿಂತ ರೀತಿ, ಎರಡು ಕೈಗಳನ್ನೂ ಜೋಡಿಸಿ ಹಗ್ಗ ಬಿಗಿದುಕೊಂಡ ರೀತಿ, ಹೇಗಿತ್ತು ಎಂದರೆ ಆ ಯೂಪಸ್ತಂಭಕ್ಕೆ ಬಲಿ ಕಟ್ಟಿಸಿಕೊಳ್ಳುವ ಯಜ್ಞವಿಧಾನ ಅವನಿಗೆ ಪೂರ್ವ ಪರಿಚಿತವಾದದ್ದು ಎಂಬುದು ಚೆನ್ನಾಗಿ ಗೊತ್ತಾಗುವಂತಿತ್ತು. +ತಾನು ಮಾತ್ರವೆ ಅಲ್ಲದೆ ಇತರ ಅಪರಾಧಿಗಳೂ ಗೌಡರ ಕ್ರೋಧಕ್ಕೆ ಪಾತ್ರರಾಗಿ ಆ ಯೂಪಸ್ತಂಭಕ್ಕೆ ಯಜ್ಞಪಶುಗಳಾಗಿದ್ದುದನ್ನು ಅವನು ಹಿಂದೆ ಎಷ್ಟೋ ಸಾರಿ ಕಂಡೂ ಇದ್ದನು, ಅನುಭವಿಸಿಯೂ ಇದ್ದನು. +ಆಜ್ಞಯಾದೊಡನೆಯೆ ಹೋಗಿ, ನೊಗಕ್ಕೆ ಹೆಗಲು ಕೊಡುವಂತೆ ಕಂಬವನ್ನು ತಬ್ಬಿ ನಿಂತು ಕೈ ಕಟ್ಟಿಸಿಕೊಳ್ಳಲು ಒಪ್ಪದೆ ಪ್ರತಿಭಟಿಸಿದವರಿಗೆ ಏನು ಯಮಶಿಕ್ಷೆ ಒದಗುತ್ತಿತ್ತು ಎಂಬುದೂ ಅವನಿಗೆ ಗೊತ್ತಿದ್ದ ವಿಷಯವೇ ಆಗಿತ್ತು. +ಆದ್ದರಿಂದಲೆ ಅವನು ಚಕಾರವೆತ್ತದೆ ಬೇಗಬೇಗ ಹೋಗಿ ಕಂಬವನ್ನಪ್ಪಿ ಕೈ ಕಟ್ಟಿಸಿಕೊಂಡದ್ದು! +ಲುಂಗೀಸಾಬು ತಂದು ಒಟ್ಟಿದ ಹುಣಿಸೆಬರಲುಗಳಲ್ಲಿ ಒಂದನ್ನು ತಜ್ಞನಂತೆ. +ಪರಿಶೀಲಿಸಿ ಆರಿಸಿಕೊಂಡ ಇಜಾರದ ಸಾಬು ಸಣ್ಣಬೀರನ ಬತ್ತಲೆಯ ಬೆನ್ನಮೇಲೆಯೂ (ಹೊದೆದಿದ್ದ ಕಂಬಳಿಯನ್ನು ಸಣ್ಣಬೀರನೆ ಕಂಬ ತಬ್ಬಲು ಹೋಗುವ ಮುನ್ನ ಅನಿವಾರ್ಯ ರೂಢಿಗೆ ವಶನಾಗಿ ತೆಗೆದುಹಾಕಿದ್ದನು.) +ಕೊಳಕಲಾಗಿದ್ದ ಹರಕಲು ಪಂಚೆ ಸುತ್ತಿದ್ದ ಅಂಡಿನ ಮೇಲೇಯೂ ಸಶಬ್ದವಾಗಿ ಪ್ರಯೋಗ ಮಾಡಿದನು. +ಚಿಟಾರನೆ ಕೂಗಿಕೊಂಡು ಕೀರಿ ರೋಧಿಸುತ್ತಾ “ದಮ್ಮಯ್ಯ, ಸಾಬ್ರೆ, ಹೊಡೀಬ್ಯಾಡಿ. +ನಾ ಸಾಯ್ತೀನಿ. +ನನ್ನ ಹೆಂಡ್ರು ಮಕ್ಕಳ ಬಾಯ್ಗೆ ಮಣ್ಣು ಹಾಕಬ್ಯಾಡಿ. +ನಿಮ್ಮ…. (ಒಂದು ಅಸಹ್ಯ ಪದ ಪ್ರಯೋಗ ಮಾಡಿ) ತಿನ್ತೀನಿ! +ಅಯ್ಯೋ ಅಪ್ಪಾ ಬಿಡಿಸೋ! +ನಂಗೊತ್ತಿಲ್ಲೋ, ತಿಮ್ಮಿ ಎಲ್ಲಿ ಹೋದ್ಲು ಅಂತಾ! +ಅಯ್ಯೋ ಅಯ್ಯೋ ಅಯ್ಯೋ!” ಎಂದು ಸಣ್ಣಬೀರ ಒದ್ದಾಡಿಕೊಂಡು ಒರಲುತ್ತಿದ್ದ ಹಾಗೆಯೆ ಇಜಾರದ ಸಾಬಿ ಮತ್ತೂ ಒಂದು ಎರಡು ಮೂರು ಸಾರಿ ಬರಲನ್ನು ಬೀಸಿಬೀಸಿ ಹೊಡೆದೇಬಿಟ್ಟನು. +ಮೊದಲಬಾರಿಯ ಹೊಡೆತಕ್ಕೇ ಬಾಸುಂಡೆಗಳೆದ್ದಿದ್ದ ಬೆನ್ನು ಎರಡನೆಯ ಸುತ್ತಿನ ಪೆಟ್ಟುಗಳಿಗೆ ಇದ್ದಕಿದ್ದ ಹಾಗೆ ಕೆಂಪಾಯಿತು, ನೆತ್ತರು ಚಿಮ್ಮಿ! +ಅವನು ಉಟ್ಟಿದ್ದ ಪಂಚೆ ಒದ್ದೆಯಾಗಿ ಕಾಲಮೇಲೆ ಇಳಿದ ಉಚ್ಚೆಗೆ ತೊಯ್ದಿತು. +ಅಂಡಿನ ಬಟ್ಟೆಯೂ ರಕ್ತದಿಂದ ಕೆಂಪಾಯಿತು. +ಅವನ ಕೂಗೂ ಒಮ್ಮೆಗೆ ನಿಂತುಬಿಟ್ಟಿತು! +ತಲೆ ಕತ್ತಿನ ಮೇಲೆ ನಿಲ್ಲಲೊಲ್ಲದೆ ಜೋಲಿತು! +ದೊಡ್ಡಬೀರ ಗದ್ಗದಿಸುತ್ತಾ ಎದ್ದು ಓಡಿಹೋಗಿ ಗೌಡರ ಕಾಲಬಳಿ ದೊಪ್ಪನೆ ಬಿದ್ದು “ಒಡೆಯಾ, ನನ್ನ ಮಗನ್ನ ಉಳಿಸಿಕೊಡೀ!”ಎಂದು ಕೂಗಿಕೊಂಡನು. +ಅಷ್ಟರಲ್ಲಿ ತನ್ನ ಗಂಡಗೂ ಮಗಗೂ ಏನು ಗತಿಯಾಗುತ್ತದೆಯೊ ಎಂದು ಹೆದರಿ, ಬಿಡಾರದಿಂದ ಓಡೋಡಿ ಬಂದು, ಬಚ್ಚನೊಡನೆ ದೂರದಲ್ಲಿ ಮರೆಯಾಗಿ ನಿಂತಿದ್ದ ಸೇಸಿಯೂ ಎದೆಎದೆ ಬಡಿದುಕೊಳ್ಳುತ್ತಾ ಬಂದು, ಇಜಾರದ ಸಾಬಿಯ ಕೈಲಿದ್ದ ಹುಣಿಸೆಯ ಬರಲನ್ನು ಕಸಿದೆಸೆದು, ಅವನನ್ನು ತಳ್ಳಿ, ತಲೆ ಜೋಲುತ್ತಿದ್ದ ತನ್ನ ಮಗನನ್ನು ಆತುಕೊಂಡಳು! +ದಾಂಡಿಗನೂ ಬಲಿಷ್ಠನೂ ಕ್ರೂರಿಯೂ ಆಗಿ, ಇಂತಹ ಧೂರ್ತಕರ್ಮಗಳಲ್ಲಿ ನುರಿತು ನಿಷ್ಠುರನಾಗಿದ್ದ ಇಜಾರದ ಸಾಬುಗೆ ಅದೇನಾಯಿತೀ ಏನೋ? +ಇದ್ದಕ್ಕಿದ್ದಂತೆ ಸತ್ವಹೀನನಾದವನಂತೆ ನಿರ್ಬಲವಾಗಿ, ಸೇಸಿ ದುಃಖಾರ್ತೆಯಾಗಿ ಓಡಿಬಂದು ಎಳೆದೊಡನೆ ಅವನ ಕೈಲಿದ್ದ ಹುಣಸೆಬರಲು ತನಗೆ ತಾನೆ ಎಂಬಂತೆ ಕೈಬಿಟ್ಟುಹೋಗಿತ್ತು! +ಅವಲು ತಳ್ಳುದೊಡನೆ ಒಂದಲ್ಲ, ಎರಡು ಮಾರು, ಹಿಂಜರಿದು ಸ್ತಂಭೀಭೂತನಾದಂತೆ ನಿಂತು ಬಿಟ್ಟನು! +ಹೊಲೆಯಳಾದರೂ, ಬಡವಳಾದರೂ, ಯಾವ ವಿಧವಾದ ವ್ಯಕ್ತಿತ್ವ ವಿಶೇಷವೂ ಲವಲೇಶವೂ ಇಲ್ಲದವಳಾದರೂ, ಸಂಕಟತಪ್ತ ತಾಯ್ತನ ಎಂತಹ ಅಲ್ಪ ಸ್ತ್ರೀಯನ್ನಾದರೂ ಭೂಮಪಟ್ಟಕ್ಕೇರಿಸಿಬಿಡುತ್ತದೆಯೋ ಏನೋ ಎಂಬಂತೆ, ಅವಳ ಮಾತೃ ದುಃಖ ಜನ್ಯಕ್ರೋಧದ ಸಾನ್ನಿಧ್ಯಭೀಷಣೆಗೆ ಕ್ಷಣಮಾತ್ರ ಭೀತಚೇತಸನಾದನು ಇಜಾರದ ಸಾಬಿ! +ಗೌಡರ ಆಜ್ಞೆಯನ್ನು ಮರೆತು, ಸೇಸಿಯ ಮಾತಿಲ್ಲದ ಆಭತಿಗೆ ಒಳಗಾದವನಂತೆ, ಬೇಗಬೇಗನೆ ಸಣ್ಣಬೀರನನ್ನು ಬಿಗಿದಿದ್ದ ಹಗ್ಗದ ಕಟ್ಟುಗಳನ್ನೆಲ್ಲ ಬಿಚ್ಚಿಹಾಕಿದನು. +ಪ್ರಜ್ಞೆ ತಪ್ಪಿದ್ದ ಪ್ರಾಯದ ಮಗನ ಭಾರವನ್ನು ಆತೂ  ಆನಲಾರದೆ ನೆಲದ ಮೇಲೆ ಮಲಗಿಸಿದಳು ಸೇಸಿ. +ಮೈಮೇಲೆ ಜಕಣಿ ಬಂದಿತೋ ಎಂಬಂತೆ, ಗೌಡರನ್ನು ಕಂಡರೆ ನೂರುಮಾರು ದೂರದಲ್ಲಿಯೆ ಕುಗ್ಗಿ ಹೆದರಿ ಹದುಗಿ ಹುದುಗಿಕೊಳ್ಳುವ ಸ್ವಭಾವದ ಸಹಜಭೀರು, ಆ ಹೊಲತಿ, ಏದುತ್ತಾ ನೀಡಿದಾಗಿ ಉಸಿರೆಳೆದು ಬಿಡುತ್ತಾ ಗೌಡರ ಕಡೆ ತಿರುಗಿ ಕೈಮುಗಿದಿಕೊಂಡು ರೋದನ ಮಿಶ್ರವಾದ ತಾರಸ್ವರದಲ್ಲಿ “ಸ್ವಾಮಿ, ನನ್ನ ಬೇಕೆಂದರೆ ಹೊಡೆದು ಹಾಕಿಸಿ! +ನನ್ನ ಗಂಡ ಮಕ್ಕಳನ್ನು ಕೊನ್ನಬ್ಯಾಡಿ, ದಮ್ಮಯ್ಯ, ನನ್ನ ತಂದೇ! …. ತಿಮ್ಮಿ ಮತ್ತೆಲ್ಲಿಗೂ ಹೋಗಿಲ್ಲ. +ಅವಳ ಮಾವನ ಮನೆಗೆ, ಸಿಂಬಾವಿ ಕೇರಿಗೇ ಹೋಗಿರಬೈದು. +ನಿನ್ನೆ ಅವಳ ಬಾವ ಬಂದಿದ್ದ…. +ಅರಿಯದ ಮಗು…. +ನಾ ಹೋಗಿ ಅವಳನ್ನೂ ಕರಕೊಂಡು ಬತ್ತೀನಿ…. +ನಿಮ್ಮ ಉಪ್ಪು ಅನ್ನದ ರುಣ ತೀರಿಸ್ತೀವಿ, ನನ್ನ ಗಂಡನ್ನ ಮಗನ್ನ ಹೊಡೆದಬ್ಯಾಡೀ. +ನನ್ನೊಡೆಯಾ, ತಪ್ಪಾಯ್ತು, ಕಾಲಿಗೆ ಬಿದ್ದೇ!” ಎಂದು, ಮೂರ್ಛಿತನಾಗಿ ಬಿದ್ದಿದ್ದ ಮಗನ ಪಕ್ಕದಲ್ಲಿಯೆ, ಗೌಡರು ಕೂತಿದ್ದ ಕಲ್ಲುಮಂಚದ ದಿಕ್ಕಿಗೆ ಉದ್ದುದ್ದವಾಗಿ ಅಡ್ಡಬಿದ್ದಳು. +ಬೆಟ್ಟಳ್ಳಿಯ ಕಲ್ಲಯ್ಯಗೌಡರು ಕಲ್ಲುಮಂಚದ ಮೇಲೆ ಕಲ್ಲಾಗಿಯೆ ಕುಳಿತಂತೆ ತೋರುತ್ತಿದ್ದರು. +ತೋರುತ್ತಿದ್ದರು ಮಾತ್ರವ ವಾಸ್ತವವಾಗಿ ಅವರು ಸ್ವಭಾವತಃ ಕಲ್ಲೆದೆಯವರಾಗಿರಲಿಲ್ಲ. +ಅವರು ನಡುವಯಸ್ಸಿನವರೆಗೂ ಮೆಲ್ಲದೆಯವರಾಗಿಯೆ ಇದ್ದು, ತಮ್ಮ ಮೆಲ್ಲೆದೆತನದ ದುರುಪಯೋಗ ಮಾಡಿಕೊಂಡು ತಮಗೂ ತಮ್ಮ ಸಂಸಾರಕ್ಕೂ ಕಷ್ಟನಷ್ಟಗಳನ್ನು ಉಂಟುಮಾಡಿದ್ದವರಿಂದ ರಕ್ಷಣೆ ಪಡೆಯುವ ಸಲುವಾಗಿ ಕಲ್ಲೆದೆತನವನ್ನು ಆರೋಪಿಸಿಕೊಂಡು, ಕಠೋರತೆಯನ್ನು ರಕ್ಷಾಕವಚದಂತೆ ತೊಟ್ಟುಕೊಂಡಿದ್ದರಷ್ಟೆ! +ಬುದ್ದಿಪೂರ್ವಕವಾಗಿ, ಒಂದು ಉದ್ದೇಶ ಸಾಧನೆಗಾಗಿ, ತಮ್ಮ ಮೃದುತ್ವವನ್ನು ಅಪಾಯದಿಂದ ಪಾರುಮಾಡುವುದಕ್ಕಾಗಿ ಕಠಿಣತೆಯ ಖರ್ಪರವನ್ನು ಅದರ ಸುತ್ತ ಬೆಳೆಸಿಕೊಂಡ ಮೇಲೆ ಅವರ ದರ್ಪಕ್ಕೆ ಹೆದರಿದ ಜನರಿಂದ ಅವರ ಕೆಲಸಗಳೆಲ್ಲ ಸುಸೂತ್ರವಾಗಿ ನಡೆಯತೊಡಗಿದ್ದುವು. +ಆದರೆ ಕ್ರೌರ್ಯವನ್ನು ಪ್ರಯೋಗಿಸಿದ ಮೇಲೆ ಪ್ರತಿಸಲವೂ ತಪ್ಪದೆ ಅದರ ಪ್ರತೀಕಾರಕ್ಕೆ ಒಳಗಾಗುತ್ತಿದ್ದರು, ಹೊಟ್ಟೆನೋವು, ತಲೆನೋವು, ಹಲ್ಲುನೋವು, ವಾಂತಿ, ದುಃಸ್ವಪ್ನಗಳಿಂದ ನಿದ್ದೆಗೇಡು, ವಿಕಾರರೂಪಗಳನ್ನು ಕಂಡು ಬೆದರುವ ಮಾನಸಿಕ ಭ್ರಾಂತಿ, ಏನೋ ಅಚಿಂತ್ಯ ಅಧೈರ್ಯ, ಏನೋ ಗೊತ್ತುಗುರಿಯಿಲ್ಲದ ಮನಃಕ್ಲೇಶ – ಇತ್ಯಾದಿಯಾಗಿ ಒಂದಲ್ಲ ಒಂದು ತೊಂದರೆಯಿಮದ ನರಳುತ್ತಿದ್ದರು. +ಈ ಕ್ರೌರ್ಯಪ್ರಯೋಗಕ್ಕೂ ತರುವಾಯ ಸಂಭವಿಸುತ್ತಿದ್ದ ದೈಹಿಕ ಅಥವಾ ಮಾನಸಿಕ ವ್ಯಾಧಿಗಳಿಗೂ ಕಾರ್ಯಕಾರಣ ಸಂಬಂಧವಿರಬಹುದೆಂಬುದನ್ನೂ ಕಲ್ಲಯ್ಯ ಗೌಡರು ಆಲೋಚಿಸಿರಲಿಲ್ಲ. +ಯಾರಾದರೂ ಹೇಳಿದ್ದರೂ ಅವರು ನಂಬಲೂ ಸಿದ್ಧರಿರಲಿಲ್ಲ. +ಅದಕ್ಕೆ ಬದಲಾಗಿ ದೆವ್ವ ದೇವರು ಭೂತ ಜಕಿಣಿ ಗ್ರಹ ಪಿಶಾಚಾದಿ ಅಲೌಕಿಕ ಮತ್ತು ಅತೀಂದ್ರಿಯ ಶಕ್ತಿಗಳ ಚೇಷ್ಟೆಯನ್ನೆ ಅವರು ನಿಜವಾದ ಕಾರಣ ಎಂದು ನಂಬಿ, ಅದಕ್ಕೆ ಅನುಗುಣವಾದ ಪರಿಹಾರೋಪಾಯಗಳನ್ನೆ ಕೈಗೊಳ್ಳುತ್ತಿದ್ದರು. +ಆದರೆ ಪ್ರಾಜ್ಞೆಯಾಗಿದ್ದ ಅವರ ಹೆಂಡತಿ, ದೊಡ್ಡಮ್ಮ ಹೆಗ್ಗಡಿತಿಯವರು, ದೆಯ್ಯದ್ಯಾವರುಗಳಲ್ಲಿ ಇತರರಂತೆ ಶ್ರದ್ಧೆಯಿದ್ದವರಾದರೂ, ತನ್ನ  ಗಂಡನ ಕ್ರೂರ ವರ್ತನೆಗೂ ತರುವಾಯ ಒದಗುತ್ತಿದ್ದ ದೈಹಿಕ ಮಾನಸಿಕ ವ್ಯಾಧಿ ವ್ಯಾಪಾರಗಳಿಗೂ ಸಂಬಂಧವಿರುವುದನ್ನು ಅನುಭವದಿಂದ ಕಂಡುಕೊಂಡಿದ್ದರು. +ಅದಕ್ಕಾಗಿ ಅವರು ತನ್ನ ಗಮಡನನ್ನು ಕ್ರೌರ್ಯಪ್ರಯೋಗದಿಂದ ಪರಾಖಿಯನ್ನಾಗಿ ಮಾಡಲು ಸತತವೂ ಪ್ರಯತ್ನಿಸುತ್ತಿದ್ದರು. +ಸೂಚನೆ ಕೊಟ್ಟಿದ್ದರು; +ಬುದ್ಧಿವಾದ ಎಂದು ತೋರದಿರುವಂತೆ ಬುದ್ಧಿಹೇಳಿದ್ದರು; +ಯಾವುದೂ ಪರಿಣಾಮಕಾರಿಯಾಗದಿರಲು ಕೆಲವು ದಿನಗಳು ಮಾತು ಬಿಟ್ಟಿದ್ದರು; +ಕಡೆಗೆ ಉಪವಾಸವನ್ನೂ ಮಾಡತೊಡಗಿದ್ದರು. +ಹೆಂಡತಿ ಮಾತುಬಿಟ್ಟಾಗ ಮತ್ತು ಉಪವಾಸಕ್ಕೆ ತೊಡಗಿದಾಗ ಗೌಡರು ಹೆದರಿ ಹಿಂಜರಿಯುತ್ತಿದ್ದರು. +ಆದರೂ ಅನಿವಾರ್ಯವೆಂದು ಅವರಿಗೆ ತೋರಿದಾಗ ತಮ್ಮ ಹೆಂಡತಿಗೆ ತಿಳಿಯದಂತೆ ದಂಡನಕಾರ್ಯದಲ್ಲಿ ತೊಡಗುತ್ತಿದ್ದರು. +ಆ ದಿನ ಅವರು ತೊಡಗಿದ್ದ ದಂಡನ ಕಾರ್ಯವೂ ಗೋಪ್ಯ ಸ್ವರೂಪದ್ದೇ ಆಗಿತ್ತು. +ಆದ್ದರಿಂಲೇ ಇಜಾರದ ಸಾಬಿಯ ಹೊನ್ನಳ್ಳಿಹೊಡೆತಕ್ಕೆ ಸಣ್ಣಬೀರನು ಚಿಟಾರನೆ ಚೀರಿಚೀರಿ ಗೋಳಿಟ್ಟುದನ್ನು ಕೇಳಿದಾಗ ಅವರ ಸಹಜ ಮರುಕ ಹೃದಯದ ಅಂತರಾಳದಲ್ಲಿ ಇಣಿಕಿಬಂದರೂ ಅದನ್ನು ದರ್ಪಹೀನತೆಯ ದೌರ್ಬಲ್ಯವೆಂದು ದಮನಮಾಡಿ, ಅವನ ರೋದನ ಎಲ್ಲಿಯಾದರೂ ದೂರದ ಒಳಗೆ ಅಡುಗೆಮನೆಯಲ್ಲಿರುವ ತಮ್ಮ ಹೆಂಡತಿಗೆ ಕೇಳಿಸಿಬಿಟ್ಟೀತಲ್ಲಾ ಎಂದು ಸಿಟ್ಟಿಗೆದ್ದು “ಏನು ಒರಲ್ತಾನೊ ಹೊಲೆಮುಂಡೆಗಂಡ? +ಅವನ ಬಾಯಿಗೆ ಒಂದು ಬಟ್ಟೆನಾದ್ರೂ ತುರುಕೋ!” ಎಂದು ಸಿಡುಕಿದರು. +ತನ್ನ ಕಾರ್ಯದಲ್ಲಿಯೇ ಮಗ್ನನಾಗಿದ್ದ ಇಜಾರದ ಸಾಬಿಗೆ ಅದು ಕೇಳಿಸಿರಲಿಲ್ಲವಾದ್ದರಿಂದ ಆ ಬಾಯಿಗೆ ಬಟ್ಟೆ ತುರುಕುವ ರೋದನನಿರೋಧ ಕಾರ್ಯ ನಡೆದಿರಲಿಲ್ಲ! +ಸಣ್ಣಬೀರನ ರೋದನ ತಕ್ಕಮಟ್ಟಿಗೆ ದೂರಗಾಮಿಯಾಗಿಯೆ ಇದ್ದಿತಾದರೂ ಬೆಟ್ಟಳ್ಳಿ ಮನೆ ನೂರಾರು ವರ್ಷಗಳ ಹಿಂದಿನ ಭದ್ರ ರಚನೆಯಾಗಿ, ಸುವಿಶಾಲವಾಗಿದ್ದುದರಿಂದ ಚಾವಡಿಗೂ ಅಡುಗೆ ಮನೆಗೂ ಸುಮಾರು ದೂರವಿದ್ದು, ಚಾವಡಿಯಲ್ಲಿ ನಡೆಯುವ ಗದ್ದಲ ಸಾಧಾರಣವಾಗಿ ಅಲ್ಲಿಗೆ ತಲುಪುತ್ತಲೆ ಇರಲಿಲ್ಲ. +ಆದರೂ ದೊಡ್ಡಮ್ಮ ಹೆಗ್ಗಡತಿಯವರಿಗೆ ಅದು ಗೊತ್ತಾಯಿತು! +ಯಾರ ಚಾಡಿಯ ಪರಿಣಾಮವಾಗಿಯೇ ದೊಡ್ಡಬೀರ ಸಣ್ಣಬೀರರು ಈಗ ಚಾವಡಿಶಿಕ್ಷೆಗೆ ಗುರಿಯಾಗಿದ್ದರೋ ಆ ಬಚ್ಚನೆ ಓಡಿಹೋಗಿ ಹಿತ್ತಲುಕಡೆಯ ಬಾಗಿಲಲ್ಲಿ ದೊಡ್ಡಮ್ಮ ಹೆಗ್ಗಡತಿಯವರಿಗೆ ದೂರು ಕೊಟ್ಟಿದ್ದನು. +ತನ್ನ ಮದುವೆಗೆ ಗೊತ್ತಾಗಿದ್ದ ಹೆಣ್ಣನ್ನು ಅನ್ಯರ ಪಾಲುಮಾಡಲು ಹವಣಿಸಿದ್ದ ದೊಡ್ಡಬೀರನಿಗೆ ಗೌಡರಿಂದ ಗದರಿಸಿ ಬುದ್ದಿ ಹೇಳಿಸಿ, ತಿಮ್ಮಿಯನ್ನು ಹಿಂದಕ್ಕೆ ಎಳೆಯಿಸಿ ತಂದು ತಾನೆ ಮದುವೆಯಾಗಬೇಕು ಎಂಬ ಆಶೆಯಿಂದ ಅವನು ಆ ಚಾಡಿಯ ಕೆಲಸದಲ್ಲಿ ತೊಡಗಿದ್ದನೆ ವಿನಾ ‘ಹೊನ್ನಳ್ಳಿಹೊಡೆತ’ಕ್ಕೆ ತನ್ನ ಮಾವ ಬಾವಂದಿರನ್ನು ಗುರಿಪಡಿಸಬೇಕೆಂದು ಎಂದಿಗೂ ಅವನ ‘ಇರಾದೆ’ ಆಗಿರಲಿಲ್ಲ. +ಆದ್ದರಿಂದ ಸಣ್ಣಬೀರನನ್ನು ಕಂಬಕ್ಕೆ ಕಟ್ಟಿಸಿ ಸಾಬರಿಂದ ಹೊಡೆಯಿಸುತ್ತಾರೆಂದು ಗೊತ್ತಾದೊಡನೆ ಮರೆಯಲ್ಲಿ ನಿಂತು ವೀಕ್ಷಿಸುತ್ತಿದ್ದ ಅವನು ತನ್ನ ಅತ್ತೆ ಸೇಸಿಗೆ ಆ ದುರಂತ ವಾರ್ತೆಯನ್ನು ತಿಳಿಸಲೆಂದು ಕೇರಿಯ ಕಡೆಗೆ ಓಡುತ್ತಿದ್ದವನಿಗೆ ತನ್ನ ಇದಿರಾಗಿ ಏದುತ್ತಾ ಬೇಗಬೇಗನೆ ಕುಕ್ಕೋಟದಿಂದ ಧಾವಿಸಿ ಬರುತ್ತಿದ್ದ ಸೇಸಿಯ ಇದಿರಾಗಿದ್ದಳು. +ಮಗಳನ್ನು ಗುತ್ತಿಯೊಡನೆ ಓಡಿಹೋಗುವಂತೆ ಮಾಡಿ ಅದನ್ನು ಗುಟ್ಟಾಗಿಟ್ಟಿದ್ದ ತನ್ನ ವರ್ತನೆಯಿಂದ ತನ್ನ ಗಂಡನಿಗೂ ಹಿರಿಯ ಮಗನಿಗೂ ಏನು ಗತಿಯಾಗುತ್ತದೆಯೋ ಎಂದು ಹೆದರಿ, ಪಶ್ಚಾದವಿವೇಕದಿಂದ ಪ್ರಚೋದಿತಳಾಗಿ ಅವಳು “ಮನೆ” ಗೆ ಓಡಿಬರುತ್ತಿದ್ದಳು. +ಬಚ್ಚನಿಂದ ನಡೆಯುತ್ತಿದ್ದ ಸಂಗತಿಯನ್ನೆಲ್ಲ ತಿಳಿಯುತ್ತಾ ಅವರೊಡನೆ ಅವನ ಹಿಂದೆಯೆ ಓಡೋಡಿ ಬಂದು ಚಾವಡಿಗೆ ತುಸು ದೂರದಲ್ಲಿದ್ದ ಹೆಬ್ಬಸಿರಿ ಮರದ ಬುಡದಲ್ಲಿ ಮರೆಯಾಗಿ ನಿಂತು ನೋಡುತ್ತಿದ್ದಂತೆಯೆ ಮಗನ ಒರಲು ಕಿವಿಗೆ ಬಿದ್ದು ತಾಯಿಯ ಕರುಳನ್ನೆ ಇರಿದು ಕೊರಲನ್ನೆ  ಕೊಯ್ದಂತಾಗಲು, ಪುತ್ರಮೋಹಾವೇಶವಶಳಾಗಿ ಸಣ್ಣಬೀರನ ರಕ್ಷೆಗೆ ನುಗ್ಗಿದಳು! +ಸೇಸಿ ಅತ್ತ ನುಗ್ಗಿದೊಡನೆ ಬಚ್ಚ ಇತ್ತ ಹಿತ್ತಲು ಕಡೆಯ ಬಾಗಿಲಿಗೆ  ಧಾವಿಸಿ ಆಸ್ತಾನದಲ್ಲಿ ಆಗುತ್ತಿದ್ದ ಅನಾಹುತವನ್ನು ತಪ್ಪಿಸಲು ಅಂತಃಪುರಕ್ಕೆ ದೂರುಕೊಟ್ಟಿದ್ದನು. +ಅಡುಗೆಯ ಮನೆಯಲ್ಲಿ, ಒಲೆಗಳಿದ್ದ ಸ್ಥಳದಿಂದ ಸ್ವಲ್ಪದೂರದಲ್ಲಿ, ಮರದ ಸರಳುಗಳ ಬೆಳಕಂಡಿಯಿಂದ ತೂರಿಬರುತ್ತಿದ್ದ ಎಳಬಿಸಿಲಿನ ಪಟ್ಟೆಪಟ್ಟೆ ರಂಗೋಲಿಯಂತಹ ಬೆಳಕು ನೆಳಲಿನ ಜಾಗದಲ್ಲಿ ‘ಉರುಡು ಹಾಸಗೆ’ಯ ಮೇಲೆ ಅಂಗಾತನೆ ‘ಉರುಡುಹಾಕಿದ್ದ’ ಬತ್ತಲೆ ಮೆಯ್ಯ ಮೊಮ್ಮಗ ಚೆಲುವಯ್ಯನನ್ನು ಆಡಿಸುವ ಸುಖದಲ್ಲಿ ಸಂಪೂರ್ಣವಾಗಿ ಮಗ್ನರಾಗಿದ್ದ ದೊಡ್ಡಮ್ಮ ಹೆಗ್ಗಡಿತಿಯವರು ಬಚ್ಚನು ಕಿಟಕಿಯಾಚೆಯಿಂದಲೆ ಕೂಗಿ ಹೇಳಿದ್ದನ್ನು ಕೇಳಿ “ತಮ್ಮಾ, ತಮ್ಮಾ, ಅಲ್ಲಿ ಓಡಿಹೋಗಪ್ಪಾ! +ಏನಾದ್ರೂ ಆದಲಾರದ್ದು ಆಗಿಬಿಟ್ಟಾತು! +ಅವರಿಗೆ ಸಿಟ್ಟು ಬಂದಾಗ ಮೈಮೇಲೆ ಎಚ್ಚರಿರಾದಿಲ್ಲ. +ಅಯ್ಯೋ ದೇವರೆ!” ಎಂದು, ಅಂಕಟದನಿಯಲ್ಲಿ, ಒಲೆಯ ಬಳಿ ತನ್ನ ಹೆಂಡತಿ ದೇವಮ್ಮಗೆ ಕಾಫಿಗೆ ಹಾಕುವ ಹಿಟ್ಟಿನ ಪ್ರಮಾಣವನ್ನೂ ಕಾಫಿ ತಯಾರಿಸುವ ರೀತಿಯನ್ನೂ ತೋರಿಸಿ ಕೊಡುತ್ತಿದ್ದ ದೇವಯ್ಯನಿಗೆ ಹೇಳಿದರು. +ಮುದ್ದು ಮೊಮ್ಮಗನ ಮಿದುವಾದ ನಸುಗೆಂಪಿನ ಮೆಯ್ಯ ಕೋಮಲತೆಯನ್ನು ತನ್ನ ಮುದಿ ಒರಟು ಅಂಗೈಯಿಂದ ಮುಟ್ಟಿ ನೀವಿ ದಿವ್ಯಸುಖಾನುಭವ ಮಾಡುತ್ತಿದ್ದ ಅಜ್ಜಮ್ಮಗೆ ಬಚ್ಚನು ಕೊಟ್ಟ ಸುದ್ದಿ ಕಡು ಕಠಿನ ಕರ್ಕಶದಂತೆ ತೋರಿತ್ತು. +ಹಿಂದೊಮ್ಮೆ ಜೀತದಾಳು ಹೊಲೆಯನೊಬ್ಬನ ಎದೆಯಮೇಲೆ ಹಲಗೆ ಹಾಕಿಸಿ ಮೆಟ್ಟಿಸಿ, ಅವನು ರಕ್ತಕಾರಿಕೊಂಡು, ತರುವಾಯ ಮೃತನಾಗಿದ್ದ ಕಹಿನೆನಪು ಮರುಕೊಳಿಸಿ ಅವರಿಗೆ ಅಸಹ್ಯವೇದನೆ ಯಾಯಿತು. +ಶಿಶು ಚೆಲುವಯ್ಯನ ಕೈ ಕಾಲು ಒದರಾಟ, ತೊದಲು ತೊದಲು ಉಲಿದಾಟ, ತಿಳಿಯಾದ ಮುಗ್ಧ ಕಣ್ಣುಗಳ ಸುಳಿದಾಟ – ಇವುಗಳ ತಮ್ಮ ಗಂಡನನ್ನೂ ತನ್ನನ್ನೂ ಕ್ರೂರಕರ್ಮಗಳಿಗಾಗಿ ಭರ್ತ್ಸನೆಮಾಡುವಂತೆ ಭಾಸವಾಯಿತು. +ಮತ್ತೊಮ್ಮೆ ದೇವಯ್ಯನಿಗೆ ಅಂಗಲಾಚಿದರು. +“ಹೋಗೋ, ತಮ್ಮಾ, ಬ್ಯಾಗ ಆ ದುಣ್ಣ ಮುಂಡೇಗಂಡ, ಸಾಬಿ, ಹೊಡೆದು ಕೊಂದೇ ಬಿಟ್ಟಾನು! +ಆ ಪಾಪ ಹೊತ್ತುಕೊಂಡು ನಾವು ಎಲ್ಲಿ ತೀರಿಸಾನ? +ಆ ಸಣ್ಣಬೀರನೊ ಮೊನ್ನೆ ಮೊನ್ನೆ ಮದುವೆ ಆಗ್ಯಾನೆ! +ಅಯ್ಯೋ ದೇವರೆ!”ಬೆಟ್ಟಳ್ಳಿಮನೆಗೆ ಕಾಫಿ ಪ್ರವೇಶವಾಗಿ ಬಹಳಕಾಲ ಆಗಿರಲಿಲ್ಲ. +ತನ್ನ ತಾಯಿಗೂ ಹೆಂಡತಿಗೂ ಕಾಫಿ ಸರಿಯಾಗಿ ತಯಾರಿಸಲು ಬರುವುದಿಲ್ಲ ಎಂಬುದು ದೇವಯ್ಯನ ಮತವಾಗಿತ್ತು. +ಅವನ ಪಾಲಿಗೆ ಉತ್ತಮ ಕಾಫಿಗೆ ಒರೆಗಲ್ಲು ಎಂದರೆ ಪಾದ್ರಿ ಜೀವರತ್ನಯ್ಯನ ಮಗಳು, ಜೋತಿರ್ಮಣಿಯಮ್ಮ, ಅವರು ತೀರ್ಥಹಳ್ಳಿಗೆ ಹೋದಾಗಲೆಲ್ಲ ಅವನಿಗೆ ಮಾಡಿಕೊಡುತ್ತಿದ್ದ ಕಾಫಿ. +ದೇವಮ್ಮ ಗಂಡನ ಉಪದೇಶಾತ್ಮಕ ಉಪನ್ಯಾಸವನ್ನು ಪರಿಹಾಸಾಂಚಿತ ಕಿರು ನಗೆಯಿಂದ ಸುಮ್ಮನೆ ಹೂಂಗುಡುತ್ತಿದ್ದಳು. +ಅವಳಿಗೆ ಅವನ ಬೋಧನೆಯಿಂದ ಯಾವ ಪ್ರಯೋಜನವೂ ಆಗುವಂತಿರಲಿಲ್ಲ. +ತನ್ನ ಗಂಡನಿಗಿಂತಲೂ ತನಗೇ ಅದರಲ್ಲಿ ಹೆಚ್ಚು ಅಭಿರುಚಿಯೂ ಅನುಭವವೂ ಇದೆ ಎಂಬುದು ಅವಳ ನಂಬಿಕೆಯಾಗಿತ್ತು. +ಜೋತಿರ್ಮಣಿಯ ಕಾಫಿಯ ರುಚಿಗೆ ಏನು ಕಾರಣ ಎಂಬುದೂ ಅವಳ ಹೆಣ್ಣೆದೆಗೆ ಗೋಚರವಾಗಿತ್ತು! +ಆದ್ದರಿಂದಲೆ ಅವಲು ಸ್ವಲ್ಪ ವಿಡಂಬನ, ಸ್ವಲ್ಪ ಪರಿಹಾಸ, ಸ್ವಲ್ಪ ತಿರಸ್ಕಾರ, ಸ್ವಲ್ಪ ಮಾತ್ಸರ್ಯಗಳಿಂದ ಹಾಸುಹೊಕ್ಕಾಗಿ ಕಿರುನಗೆಯನ್ನು ಬೀರುತ್ತಾ ಪಾತ್ರೆಯ ಮೇಲೆ ಬಾಗಿ ಗಂಡನ ಮಾತಿಗೆ ಕಿವಿಗೊಡುವಂತೆ ನಟಿಸುತ್ತಿದ್ದಳು. +ಅವಲ ಮನಸ್ಸೆಲ್ಲ ‘ಉರುಡು ಹಾಸಿಗೆ’ಯ ಮೇಲಿದ್ದ ಮುದ್ದು ಕಂದನಿಗೆ ಮೊಲೆಕೊಡಲು ಹೊತ್ತಾಯಿತಲ್ಲಾ ಎಂಬುದರ ಕಡೆಗೇ ಇದ್ದಿತು. +ಅತ್ತೆ ಗಂಡನಿಗೆ ಬೇಗ ಚಾವಡಿಗೆ ಹೋಗುವಂತೆ ಬೆಸನಿತ್ತಾಗ, ಅವಳು ಅದ್ಯಕ್ಕೆ ಉಪದೇಶ ಮುಗಿಯುವುದಲ್ಲಾ ಎಂದು ಸುಯ್ಯುತ್ತಾ ನೆಟ್ಟಗೆ ನಿಂತಳು, ಕೊರಳಿನಿಂದ ನೇತುಬಿದ್ದಿದ್ದ ಕರಿಮಣಿ ತಾಳಿಯ ಸರವೂ ಕಟ್ಟಾಣಿಯೂ ಎದೆಗವುಚಿ ಗೊಬ್ಬೆ ಸೆರಗಿನಲ್ಲಿ ಹುದುಗುವಂತೆ. +ಅವ್ವನ ಆಣತಿಗೆ ದೇವಯ್ಯ “ಇರಲವ್ವಾ, ಹೋಗ್ತೀನಿ…. +ಆ ಬಟ್ಟಿ ಮಕ್ಕಳಿಗೆ ಬೆನ್ನು ಮುರಿಯೋ ಹಾಂಗೆ ಒಂದೆರಡು ಬೀಳಲಿ! …. +ಬಚ್ಚನಿಗೆ ಹೇಳಿದ್ರಂತೆ ಆ ದೊಡ್ಡಬೀರನ ಬಿಡಾರದವರು….” + “ಏ, ನೀ ಎತ್ತಲಾಗಿ ನೋಡ್ತಿದ್ದೀಯೆ? +ನಾ ಹೇಳಾದನ್ನ ಸ್ವಲ್ಪ ಕಿವಿ ಮೇಲೆ ಹಾಕಿಕೊ! +ಸುಮ್ಮನೆ ದಿನಾ ಬೋರುಗಾಫಿ ಮಾಡಬ್ಯಾಡ!” ಎಂದು ಆಗತಾನೆ ನೆಟ್ಟಗೆ ನಿಂತಿದ್ದ ಹೆಂಡತಿಯ ಕಡೆ ಮುನಿದು ನುಡಿದು, ಮತ್ತೆ ತಾಯಿತನ್ನು ನಿರ್ದೇಶಿಸಿ ಹೇಳಿದನು. + “ಹೇಳಿದ್ರಂತೆ ಆ ದೊಡ್ಡಬೀರನ ಕಡೆಯವರು ನಮ್ಮ ಗಾಡಿ ಬಚ್ಚನಿಗೆ ‘ನಿನಗ್ಯಾರೋ  ಹೆಣ್ಣುಕೊಡ್ತಾರೆ? +ಸಣ್ಣಗೌಡ್ರು ತಾಂವೂ ಜಾತಿ ಕೆಡೋದಲ್ಲದೆ, ನಿನ್ನೂ ಜಾತಿ ಕೆಡಿಸಾಕೆ ಹೊಲ್ಟಾರೆ! +ನಮಗೆ ಇಷ್ಟಾ ಇಲ್ಲಪ್ಪ, ಜಾತಿ ಕೆಡಾಕೆ!’ ಅಂತ….” +“ಕಾಫಿ ಹಿಟ್ಟು, ಈಗೇನು ಎಲ್ಲಿಗೂ ಓಡಿಹೋಗೋದಿಲ್ಲ! +ಆಮೇಲೆ ಹೇಳಿಕೊಡಬಹುದಂತೆ! +ಈಗ ಹೋಗಿ; ಬಿಡಿಸಿ ಅವನ್ನ!” ಎಂದಳು ದೇವಮ್ಮ, ತನ್ನ ಕಡೆ ನೋಡುತ್ತಿದ್ದ  ಗಂಡನ ಕಣ್ಣನ್ನು ಒಲವಿನಿಂದಿರಿದು ನೋಡಿ. +ದೇವಯ್ಯ ನಿರುಪಾಯನಾದವನಂತೆ ಸರಕ್ಕನೆ ಎದ್ದು ಚಾವಡಿಗೆ ಧಾವಿಸಿದನು. +ಅವನು ಹೋಗಿ ಎರಡು ಮೂರು ನಿಮಿಷ ಆಗಿರಲಿಲ್ಲ. +ಮತ್ತೆ ಓಡುತ್ತಲೆ ಒಳಗೆ ಬಂದು  “ಅವ್ವಾ, ಅವ್ವಾ, ಒಂದು ಸ್ವಲ್ಪ ತೆಂಗಿನೆಣ್ಣೆ ಕೊಡು….” ಎಂದು ಬರಿದಾಗಿದ್ದ ಉರುಡು ಹಾಸಗೆಯ ಬಳಿಯಿದ್ದ ತಾಯಿಗೆ ಹೇಳಿ, ತನ್ನ ಹೆಂಡತಿಯನ್ನು ಹುಡುಕುವವನಂತೆ ಅತ್ತ ಇತ್ತ ನೋಡಿ “ಅವಳೇಲ್ಲಿ? +ಆ ಪಾದ್ರಿ ಕೊಟ್ಟಿದ್ದ ಗಾಯಕ್ಕೆ ಹಾಕುವ ಔಷಧ, ಬಿಳಿಪುಡಿ, ಬೇಕಿತ್ತಲ್ಲಾ!” ಎಂದನು. +ತುಸು ಕತ್ತಲಾಗಿದ್ದೆಡೆಯಲ್ಲಿ ಚೆಲುವಯ್ಯನಿಗೆ ಮೊಲೆ ಕೊಡುತ್ತಾ ಆ ಸುಖಾನುಭವದಲ್ಲಿ ಮಗ್ನೆಯಾಗಿ ಕುಳಿತಿದ್ದ ದೇವಮ್ಮ ತನ್ನ ಬಿಳಿ ಮೈ ಕಾಣಿಸುತ್ತಿದ್ದ ವಕ್ಷಭಾಗವನ್ನು, ಮಗನಿಗೆ ಮೊಲೆ ಉಣ್ಣಲು ತೊಂದರೆಯಾಗದಂತೆ, ಬೇಗಬೇಗನೆ ಸೆರಗೆಳೆದು ಓರೆಮಾಡಿಕೊಂಡು ಹೇಳಿದಳು. +“ಆ ಬಿಳಿಪುಡಿ ಪುಟ್ಣಾನೆ? +ನಮ್ಮ ಕೋಣೆ ನಾಗಂದಿಗೆ ಮೇಲೆ ಇರಬೇಕು. +ಹುಡುಕಿನೋಡಿ ನೀವೇ ತಗೊಳ್ಳಿ” ತಾನು ಆಗತಾನೆ ಕೈಗೊಂಡಿದ್ದ ಕೆಲಸದ ಮಹತ್ತು ಗಂಡನಿಗೆ ಮನದಟ್ಟಾಗಲಿ ಎಂಬುದು ಅವಳ ಇಂಗಿತವಾಗಿತ್ತು. +“ಏನಾಗಿದೆಯೋ, ತಮ್ಮಾ?” ದೊಡ್ಡಮ್ಮ ಹೆಗ್ಗಡತಿಯರು ಆದಷ್ಟು ಸರಭಸವಾಗಿ ಕಾತರತೆಯಿಂದಲೆ ಎದ್ದು ಎಣ್ಣೆ ಕುಡಿಕೆಯನ್ನು ಮೂಲೆಯಲ್ಲಿದ್ದ ಸಿಕ್ಕದಿಂದ ತೆಗೆದುಕೊಡುತ್ತಾ ಕೇಳಿದರು. +“ಆಗೋದೇನು? +ಆ ಕೋಣೆಯ, ಇಜಾರದ ಸಾಬಿ, ಅಡಸಲಾ ಬಡಸಲಾ ಹೊಡೆದು ಬಿಟ್ಟಿದ್ದಾನೆ!” ಎನ್ನುತ್ತಾ ಎಣ್ಣೆಕುಡಿಕೆ ಈಸಿಕೊಂಡು, ಗಾಯಕ್ಕೆ ಹಾಕುವ ಔಷಧಿಯನ್ನು ತೆಗೆದುಕೊಳ್ಳಲು ತಮ್ಮ ಮಲಗುವ ಕೋಣೆಗೆ ಓಡಿದನು, “ನಮ್ಮ ಅಪ್ಪಯ್ಯಗೆ ಯಾವಾಗ ಬುದ್ದಿ ಬರ್ತದೆಯೋ? +ನಾ ಕಾಣೆ!” ಎಂದುಕೊಳ್ಳುತ್ತಾ. +ಅದನ್ನಾಲಿಸಿದ ಅವನ ತಾಯಿ, ಹಿಂದೊಮ್ಮೆ ದೇವಯ್ಯ ತುಳಸಿಕಟ್ಟೆಯನ್ನು ಮೀಟಿ ತೆಗೆಯಲು ಸವೆಗೋಲು ತೆಗೆದುಕೊಂಡು ಅಂಗಳಕ್ಕಳಿದಾಗ ಬಾರುಮಾಡಿದ್ದ ಕೋವಿಯನ್ನೆ ಮಗನ ಕಡೆಗೆ ಗುರಿಹಿಡಿದು, ತಾನು ಅದನ್ನು ತಡೆದಿದ್ದಾಗ ಇದ್ದ ತನ್ನ ಗಂಡನ ಉಗ್ರ ಸ್ವರೂಪವನ್ನು ನೆನೆದುಕೊಂಡು “ಅಯ್ಯೋ!ದೇವರೇ!” ಎಂದು ದೀರ್ಘವಾಗಿ ಸುಯ್ದರು! +ಆದರೆ ಅಡುಗೆಮನೆಯ ಒಂದು ಕಂಬಕ್ಕೆ ಬೆನ್ನು ಆನಿಸಿ ಇರಗಿ ಚಿಕ್ಕಾಲು ಬಕ್ಕಾಲು ಹಾಕಿ ಅರೆಗತ್ತಲಲ್ಲಿ ಕುಳಿತಿದ್ದ ಅಮ್ಮನ ತೊಡೆಯ ಮೇಲೆ  ಮಲಗಿ ಮೃದು ಸಶಬ್ದವಾಗಿ ಮೊಲೆಯುಣ್ಣುತ್ತಿದ್ದ ಕಂದನ ಆನಂದವನ್ನು ಸಾಸಿರ್ಮಡಿಯಾಗಿ ಸವಿಯುತ್ತಾ ಸುಖಮೂರ್ಛೆಗೆ ಸದೃಶವಾದ ಚಿತ್ತಸ್ಥಿತಿಯಲ್ಲಿದ್ದ ಚೊಚ್ಚಲುತಾಯಿ ದೇವಮ್ಮನ ಪ್ರಜ್ಞೆಗೆ ಹೊರಗಣ ಲೋಕದ ಕಠೋರತೆಯಾಗಲಿ ಕ್ರೌರ್ಯವಾಗಲಿ ತಮ್ಮ ತೀಕ್ಷ್ಣವಾಸ್ತವ ರೂಪದಲ್ಲಿ ಪ್ರವೇಶಿಸುವಂತಿರಲಿಲ್ಲ. +ಕಾವ್ಯ ಪ್ರಪಂಚದಲ್ಲಿ ಯಾತ್ರಿಯಾಗುವ  ರಸಾಸ್ವಾದಿ ಸಹೃದಯನ ಪ್ರಜ್ಞೆಗೆ ಸಂಭವಿಸುತ್ತದೆ ಎಂದು ಹೇಳಲಾಗುವ ಒಂದು ಸದ್ಯಃಪರವಾದ ನಿರ್ವೃತಿ ಅವಳ ಚೇತನವನ್ನು ತನ್ನ ವಕ್ಷಸ್ಥಲದಲ್ಲಿಟ್ಟುಕೊಂಡು ರಕ್ಷಿಸಿತ್ತು. +ತನ್ನ ಜೀವದ ಸಾರಸರ್ವಸ್ವವೆ ಬಹಿರ್ಭೂತವಾಗಿ ಮುದ್ಧಿನ ಮುದ್ದೆಯಾದಂತಿದ್ದ ತನ್ನ ಕಂದನ ಮಿದು ತುಟಿ ತನ್ನೆದೆಯ ಪೀಯೂಷಕಲಶದ ತೊಟ್ಟಿಗೆ ಸೋಕಿ ಅದನ್ನು ಚೀಪುತ್ತಿರುವಾಗ ಸಂಸಾರದ ಯಾವ ಕೋಟಲೆಯೂ ಅವಳ ರಸನಿದ್ರಾ ಸಮಾಧಿಗೆ ಭಂಗ ತರಲು ಸಮರ್ಥವಾಗಿರಲಿಲ್ಲ. +ಸಣ್ಣಬೀರನ ಸಂಕಟವಾಗಲಿ, ತನ್ನ ಗಂಡನ ಬಹು ಪ್ರಣಯಾಶಂಕೆಯಾಗಲಿ, ತನ್ನ ಹಳೆಮನೆಯ ಅಕ್ಕಯ್ಯಗೆ ಒದಗಿದ್ದ ಮಹಾವಿಪತ್ತಾಗಲಿ! ತಾಯಿ ಕೊಟ್ಟಳು; +ಮಗು ಈಂಟಿತು. +ಜಗತ್ತಿನ ಇತರ ಕರ್ಮಗಳೆಲ್ಲ ತತ್ಕಾಲದಲ್ಲಿ ಸ್ಥಗಿತಗೊಂಡಂತಿದ್ದುವು, ವಿಶ್ವಗೌರವಭಾಜನವಾದ ಆ ಜಗದ್ಭವ್ಯ ಘಟನೆಯ ಮುಂದೆ! +ಒಡೆಯರ ಮನೆಯಿಂದ ಗಂಡನನ್ನೂ ಹಿರಿಯ ಮಗನನ್ನೂ ರಕ್ಷಿಸಿ ಕೇರಿಗೆ ಕರೆದುಕೊಂಡು ಬಂದ ಸೇಸಿ ಆ ದಿನವೆ ಮಧ್ಯಾಹ್ನದ ಮೇಲೆ, ಕಲ್ಲಯ್ಯಗೌಡರಿಗೆ ಮಾತುಕೊಟ್ಟಿದ್ದ ಪ್ರಕಾರ, ಮಗಳನ್ನು ಹಿಂದಕ್ಕೆ ಕರೆತರುತ್ತೇನೆಂದು ಹೇಳಿ ತನ್ನ ಕಿರಿಯ ಮಗ ಪುಟ್ಟಬೀರನನ್ನು ಜೊತೆಗಿಟ್ಟಿಕೊಂಡು ಸಿಂಬಾವಿಗೆ ಹೊರಟಳು. +ಪುಟ್ಟಬೀರನಿಗೆ ಬದಲಾಗಿ ಅವನ ಹೆಂಡತಿ ಚಿಕ್ಕಪುಟ್ಟಯನ್ನೆ ಕರೆದುಕೊಂಡು ಹೋಗಲು ಮೊದಲು ಮನಸ್ಸು ಮಾಡಿದ್ದಳು, ಆದರೆ ಆ ಸೊಸೆ ತಾನು ಬರಲೊಲ್ಲೆ ಎಂದು ಬಿಟ್ಟಿದ್ದಲ್ಲದೆ ‘ಇವರ ಕಿಸುರಿಗೆ ನೀವ್ಯಾಕೆ ಹೋಗಿ ಸಿಕ್ಕುಹಾಕ್ಕೊಳ್ತೀರಿ?’ ಎಂದು ತನ್ನ ಗಂಡನನ್ನೂ ಅವನ ತಾಯಿಯೊಡನೆ ಹೋಗದಂತೆ ಪುಸಲಾಯಿಸಿದ್ದಳು. +ಆದರೆ ಬಾಸುಂಡೆಗಾಯಗಳಿಂದ ಅವನೇ ಜೊತೆ ಹೋಗುವಂತೆ ಮಾಡಿದ್ದನು. +ಅದಕ್ಕೆ ಇನ್ನೂ ಒಂದು ಕಾರಣವಿತ್ತು. + ನೆಂಟರ ಮನೆಗೆ ಹೋಗುವುದೆಂದರೆ ಅವನ ಹೆಂಡತಿ ಲಕ್ಕಿಗೆ (ಅವಳು ಸಣ್ಣಸಣ್ಣ ಅನ್ನದ ದಿಬ್ಬಗಳನ್ನೆ ತಿನ್ನುತ್ತಿದ್ದುದರಿಂದ ಅವಳಿಗೆ ‘ಹೊಟ್ಟೆಲಕ್ಕಿ’ ಎಂಬ ಅಡ್ಡ ಹೆಸರೂ ಇತ್ತು.) ರೆಕ್ಕೆಯೆ ಬಂದಂತಾಗುತ್ತಿತ್ತು. +ಅವಳೇ ಕಾತರಳಾಗಿದ್ದಳು ಅತ್ತೆಯೊಡಗೂಡಿ ಸಿಂಬಾವಿಗೆ ಹೋಗಲು, ಗಂಡನಿಗೆ ಏಟುಬಿದ್ದಿದೆ ಆತನಿಗೆ ಶುಶ್ರೂಷೆ ಮಾಡಬೇಕೇಂದೇನೂ ಅವಳಿಗೆ ಅಷ್ಟಾಗಿ ಅನ್ನಿಸಿರಲಿಲ್ಲ. +ಅಷ್ಟೆ ಅಲ್ಲ, ಗಂಡನನ್ನು ಚೆನ್ನಾಗಿ ಹೊನ್ನಳ್ಳಿ ಹೊಡೆತ ಹಾಕಿ ಥಳಿಸಿದರು ಎಂಬ ಸುದ್ದಿ ಅವಳ ಕಿವಿಗೆ ಬಿದ್ದಾಗ ಅವಳು ಮುತಿ ಚೂಪಗೆ ಮಾಡಿಕೊಂಡು “ಹಂಗಾಗಬೇಕು ಅವರಿಗೆ! +ಬೀಳಲಿ ಇನ್ನೂ ಎಲ್ಡು ಕನಾತಿ! +ನಂಗೆ ಮಾತ್ರ ಬೆನ್ನಮ್ಯಾಲೆ ಇಕ್ಕಡಿಸ್ತಾರಲ್ಲಾ? +ನಂಗೆ ಹೆಂಗೆ ನೋವಾಗ್ತದೆ ಅನ್ನಾದು. +ಈಗ್ಲಾದ್ರೂ ಗೊತ್ತಾಗ್ಲಿ!” ಎಂದು ಮೂದಲಿಸಿದ್ದಳು. +ಆದರೆ ಸಣ್ಣಬೀರನನ್ನು ತನ್ನ ಮಾವನೂ ಅತ್ತೆಯೂ ಮೆಲ್ಲಗೆ ನಡೆಸಿಕೊಂಡು ಬಂದು ಬಿಡಾರದಲ್ಲಿ ಚಾಪೆಯ ಮೇಲೆ ಮಲಗಿಸಿದಾಗ ಗಾಯಗಳನ್ನೂ, ಅದಕ್ಕೆ ಹಚ್ಚಿದ್ದ ತೆಂಗಿನೆಣ್ಣೆಯನ್ನೂ ಮೀರಿ ಹರಿಯುತ್ತಿದ್ದ ನೆತ್ತರನ್ನೂ, ಅಲ್ಲಲ್ಲಿ ಬೆಳ್ಳಗಿದ್ದ ಔಷಧಿಯ ಬಿಳಿಪುಡಿಯ ರಂಪವನ್ನೂ ಮೀರಿ ಹರಿಯುತ್ತಿದ್ದ ನೆತ್ತರನ್ನೂ, ಅಲ್ಲಲ್ಲಿ ಬೆಳ್ಳಗಿದ್ದ ಔಷಧಿಯ ಬಿಳಿಪುಡಿಯ ರಂಪವನ್ನೂ ನೋಡಿ, ಲಬಲಬನೆ ಬಾಯಿಬಡಿದುಕೊಂಡೂ ಎದೆಗುದ್ದಿಕೊಂಡೂ ಕೇರಿಯಲ್ಲಾ ನೆರೆಯುವಂತೆ ಗೋಳುಹೊಯ್ದುಕೊಂಡಿದ್ದಳು! +ಇಜಾರದ ಸಾಬಿಯನ್ನು ಬಯ್ಯುವ ನೆವದಿಂದ ಎಲ್ಲರಿಗೂ ಸಹಸ್ರನಾಮಾರ್ಚನೆ ಮಾಡಿದ್ದಳು. + “ಪಾಪಿ ಮುಂಡೇಗಂಡ! +ಅವನ ಯದಿಗೆ ರಣ ಹೊಡಿಯಾ! +ಅವನಿಗೆ ದೊಡ್ಡರೋಗ ಬರಾ! +ಅವನ ಬಾಯಿಗೆ ಹುಳಾ ಬೀಳಾ! +ಅವನ ರಟ್ಟೆ ಸೇದಿಹೋಗಾ! +ಅವನ ಹೆಂಡ್ತಿ….!” ಎಂದು ಮೊದಲಾಗಿ ತನಗೆ ಗೊತ್ತಿದ್ದ ನಿಂದಾ ನಿಘಂಟನ್ನೆಲ್ಲ ಬರಿದುಮಾಡಿದ್ದಳು! +ಆದರೂ ಸ್ವಲ್ಪ ಹೊತ್ತಿನಲ್ಲಯೆ ಅವಳು ತನ್ನ ಅತ್ತೆ ಸೇಸಿಯೊಡನೆ ಸಿಂಬಾವಿ ಕೇರಿಯ ನೆಂಟರ ಮನೆಗೆ ಹೊರಡಲು ಉತ್ಸುಕಳಾಗಿದ್ದಳು! +ಕಡೆಗೂ ಅವಳು ಸಿಂಬಾವಿಗೆ ಹೊರಡದಿದ್ದುದಕ್ಕೆ ಕಾರಣವಾಗಿದ್ದ ಒಳಗುಟ್ಟೆಂದರೆ, ನೆರೆಯ ಬಿಡಾರದ ಮೈದುನ ಪುಟ್ಟಬೀರನ ಹೆಂಡತಿ, ಚಿಕ್ಕಪುಟ್ಟಿ, ತಾನಿಲ್ಲದ ವೇಳೆಯಲ್ಲಿ ತನ್ನ ಗಂಡನಿಗೆ ಅನ್ನಗಂಜಿ ಕೊಡುವ ನೆವದಲ್ಲಿ ಎಲ್ಲ ಗುಡಿಸಿಲಿಗೆ ಬಂದು ಏನು ಮಾಡಿಬಿಡುತ್ತಾಳೊ ಎಂಬುದೆ ಆಗಿತ್ತು! +ಸೇಸಿ ಹೊರಡುವ ಮುನ್ನ ತನ್ನ ಮಗಳು ಮದುವಣಗಿತ್ತಿಯಾಗಿ ಧರಿಸಿದ್ದು, ಗುತ್ತಿಯೊಡನೆ ಓಡಿಹೋಗುವ ಮೊದಲು ಗಂಟು ಕಟ್ಟಿ ತನಗೆ ಕೊಟ್ಟಿದ್ದ ನಗದ ಗಂಟನ್ನೂ ಮಡಿಲಿಗೆ ಹಾಕಿಕೊಂಡಿದ್ದಳು. +ಮಗಳನ್ನೆ ಸಿಂಬಾವಿಯಿಂದ ಹಿಂದಕ್ಕೆ ಕರೆತರಲು ಹೋಗುವವಳು ಬೆಟ್ಟಳ್ಳಿಗೌಡರದಾಗಿದ್ದ ನಗಗಳನ್ನು ಏತಕ್ಕೆ ಒಯ್ಯುತ್ತೀಯೆ ಎಂದು ಯಾರಾದರೂ ಕೇಳಿದ್ದರೆ ಉತ್ತರ ಹೇಳುವುದಕ್ಕೆ ಅವಳಿಗೇ ಸರಿಯಾಗಿ ಗೊತ್ತಾಗುತ್ತಿತ್ತೊ ಇಲ್ಲವೊ? +ಅವಳ ಮನಸ್ಸಿನಲ್ಲಿಯೂ ಯಾವುದೂ ಇನ್ನೂ ಸ್ಪಷ್ಟವಾಗಿರಲಿಲ್ಲ. +ಮಗನಿಗಾಗಿದ್ದ ರಾಕ್ಷಸ ಶಿಕ್ಷೆಯನ್ನು ಕಂಡಾಗಣಿಂದ, ಹಿಂದೆ ಅವಳ ಮನಸ್ಸಿನಲ್ಲಿ ಅಸ್ಪಷ್ಟವಾಗಿದ್ದ ಅಭಿಪ್ರಾಯವೊಂದು ಖಚಿತವಾಗತೊಡಗಿತ್ತು. +ತನ್ನ ಮಗನನ್ನು ದನ ಹೊಡೆದ  ಹಾಗೆ ಹೊಡೆದದ್ದೇನೋ ಆಗಿಹೋಗಿತ್ತು. +ಅದಕ್ಕೆ ಪ್ರತೀಕಾರವಾಗಿ ಅವರ ನಗಗಳನ್ನೆಲ್ಲ ಮಗಳೇ ಓಡಿಹೋಗುವಾಗ ತೆಗೆದುಕೊಂಡು ಹೋಗಿ ಹಾಳುಮಾಡಿಬಿಟ್ಟಿದ್ದಾಳೆ ಎಂದು ಹೇಳಿ ಲಪಟಾಯಿಸಬಾರದೇಕೆ? +ಮತ್ತೂ ಒಂದು ಯೋಚನೆ ಮಗಳನ್ನು ಹಿಂದಕ್ಕೆ ಕರೆತಂದು ಕಟುಕರಿಗೆ ಒಪ್ಪಿಸುವುದಿರಲಿ ತಾನೇ ಹಿಂದಿರುಗಿ ಬರೆದಿದ್ದರಾಯಿತು. +ತನ್ನ ಗಂಡನನ್ನು ಉಪಾಯದಿಂದ ಸಿಂಬಾವಿಗೇ ಬಂದು ಹೆಗ್ಗಡೆಯವರ ಆಳಾಗಿರುವಂತೆ ಒಪ್ಪಿಸಿದರಾಯಿತು! +ಎಂತಿದ್ದರೂ ಗೌಡರಿಗೂ ಹೆಗ್ಗಡೆಯವರಿಗೂ ಹಿಂದಿನಿಂದಲೂ ಜಿದ್ದು! +ಅದನ್ನೇಕೆ ನಮ್ಮ ಕ್ಷೇಮಕ್ಕೆ ಬಳಸಿಕೊಳ್ಳಬಾರದು? +ಹೀಗೆಲ್ಲಾ ಸೇಸಿಯ ತಲೆಯಲ್ಲಿ ದೂರಾಲೋಚನೆ ದುರಾಲೋಚನೆಗಳು ಒಳಸಂಚು ಹುಡುತ್ತಿದ್ದ ಹಾಗೆಯೆ ದಾರಿ ಸಾಗುತ್ತಿತ್ತು. +ತಾಯಿಯ ಮಣವನ್ನು ಗಮನಿಸಿದ ಪುಟ್ಟಬೀರ ಒಂದೆರಡು ಸಾರಿ ನಿಂತು, ಅವಳು ಮುಂದೆ ಹೋಗುತ್ತಿದ್ದ ತನ್ನನ್ನು ಬಳಿಸಾರಿದೊಡನೆ “ಯಾಕವ್ವಾ ಬಾ’ಳ ದಣಿವಾಯ್ತೆ?” ಎಂದು ಪ್ರಶ್ನಿಸಿದ್ದನು. +ಅದಕ್ಕೆ ಅವಳು ಅಳುದನಿಯಿಂದ “ಇಲ್ಲಪ್ಪಾ, ನಿನ್ನ ಅಣ್ಣನ್ನ ಆ ರೀತಿ ಜಪ್ಪಿದರಲ್ಲಾ ಅದನ್ನೆ ನೆನೆಸಿಕೊಂಡು ಬರ್ತಿದ್ದೆ! +ಅವರೇನು ನರಮನುಸರೋ ರಾಕ್ಷೇಸರೋ? +ನಾವಿನ್ನು ಅವರ ಹತ್ರ ಹೆಂಗೆ ಗೆಯ್ದು ಕಾಲಹಾಕಾದು ಅಂತಾ….” ಎಂದು ಅರ್ಧಕ್ಕೆ ನಿಲ್ಲಿಸಿ ದೀರ್ಘವಾಗಿ ಸುಯ್ದಿದ್ದಳು. +ತನ್ನ ಮನಸ್ಸಿನಲ್ಲಿದ್ದ ಕ್ರಾಂತಿಕಾರಕ ವಿಚಾರಗಳನ್ನು ಹೆದರುಪುಕ್ಕಲು ಮತ್ತು ಬಾಯಿಹರಕಲು ಸ್ವಭಾವದ ಮಗನಿಗೆ ತಿಳಿಸಲು ಅಂಜಿದಳು. +ಸೇಸಿ ಪುಟ್ಟಬೀರರು ಸಿಂಬಾವಿಯ ಕೇರಿಯ ಸಮೀಪಕ್ಕೆ ಬರುವಷ್ಟರಲ್ಲಿ ದನ ಕೊಟ್ಟಿಗೆಗೆ ಬರುವ ಹೊತ್ತಾಗಿತ್ತು. +ಹಿಂದೆ ಎಷ್ಟೋ ಸಾರಿ ಸೇಸಿ ಬೆಟ್ಟಳ್ಳಿಯಿಂದ ಸಿಂಬಾವಿಯ ತವರು ಮನೆಗೆ ಹೀಗೆಯೆ ನಡೆದುಕೊಂಡು ಬಂದಿದ್ದಳು. +ತರುಣಿ ನವವಧುವಾಗಿ ಯುವಕನಾಗಿದ್ದ ದೊಡ್ಡಬೀರನೊಡನೆ ಸಂಭ್ರಮದಿಂದ ನಡೆದು ಬಂದಿದ್ದಳು. +ಆಗ ತನ್ನ ತಂದೆತಾಯಿಯರಿದ್ದರು. +ಕೇರಿಗೆ ಕೇರಿಯ ತಮ್ಮನ್ನು ಉತ್ಸಾಹದಿಂದ ಇದಿರುಗೊಂಡಿತ್ತು. +ಆಮೇಲೆ ಶಿಶುವಾಗಿದ್ದ ಸಣ್ಣಬೀರನನ್ನು ಹೊತ್ತು ನಡೆದು ಬಂದಿದ್ದಳು. +ಆಮೇಲೆ ಶಿಶು ಪುಟ್ಟಬೀರನನ್ನು ಹೊತ್ತುಕೊಂಡು ಬಾಲಕ ಸಣ್ಣಬೀರನನ್ನು ನಡೆಸಿಕೊಂಡು ಬಂದಿದ್ದಳು. +ಒಂದು ಸಾರಿ ಬಂದಾಗ ತಂದೆ ತೀರಿಹೋಗಿದ್ದ ಕೇರಿಯಾಗಿತ್ತು. +ಮತ್ತೊಂದು ಸಾರಿ ಬಂದಾಗ ತಾಯಿ ಇಲ್ಲದ ಕೇರಿಯಾಗಿತ್ತು. +ಅಣ್ಣ ಕರಿಸಿದ್ದ ಅತ್ತಿಗೆ ಗಿಡ್ಡಿಯೊಡನೆ ಇದಿರುಗೊಂಡು ತನ್ನನ್ನೂ ತನ್ನ ಮಕ್ಕಳನ್ನೂ ಸ್ವಾಗತಿಸಿ ಸತ್ಕರಿಸಿದ್ದರು. +ತಂದೆತಾಯಿ ತೀರಿಹೋದಮೇಲೆ ಸಿಂಬಾವಿಗೆ ಬರುವುದೆ ಅಪರೂಪವಾಗಿ ಹೊಗಿತ್ತು ಸೇಸಿಗೆ. +ಮೊದಮೊದಲು ಹೇಗೊ ಪ್ರಯತ್ನಮಾಡಿ ವರ್ಷಕ್ಕೆ ಒಮ್ಮೆಯಾದರೂ ಬಂದು ಹೋಗುತ್ತಿದ್ದಳು. +ಕಡೆಕಡೆಗೆ ಅದು ಸಾಧ್ಯವಾಗದೆ ಹೋಗಿತ್ತು. + ಸೊಂಟ ನಸುಬಾಗಿ, ಕೂದಲು ನರೆ ಕಂಡು, ನಡುವಯಸ್ಸಿನಲ್ಲಿಯೆ ನಡು ಡೊಂಕಿ ಮುದಿತನಕ್ಕೆ ಕಾಲಿಟ್ಟ ಅವಳಿಗೆ. +ಮೂರು ವರ್ಷಗಳ ಹಿಂದೆ ಒಮ್ಮೆ ಅಣ್ಣನಿಗೆ ಸಖತ್ತು ಕಾಯಿಲೆಯಾಗಿ ಅತ್ತಮುಖವೊ ಇತ್ತ ಮುಖವೊ ಎಂಬಂತಾಗಿದೆ ಎಂಬುದನ್ನು ಕೇಳಿ ಮುದುಕಿ ತನ್ನ ಮುದಿ ಗಂಡನೊಡನೆ, ಮಳೆಗಾಲವಾಗಿದ್ದರೂ ಕೂಡ, ಅರ್ಧ ದಿನವೆಲ್ಲಾ ನಡೆದೂ ನಡೆದೂ ಸಿಂಬಾವಿಗೆ ಬಂದು ಒಪ್ಪತ್ತು ಇದ್ದು ಹೋಗಿದ್ದಳು. +ಆಗಲೆ ಅವಳು ಮನಸ್ಸು ಮಾಡಿದ್ದು, ಕಟ್ಟಾಳಾಗಿದ್ದ ತರುಣ ಗುತ್ತಿಯನ್ನು ನೋಡಿ, ತನ್ನ ಮಗಳು ತಿಮ್ಮಿಯನ್ನು, ಏನೇ ಆಗಲಿ, ಅವನಿಗೇ ಕೊಟ್ಟು ಅಳಿಯನನ್ನಾಗಿ ಮಾಡಿಕೊಳ್ಳಬೇಕೆಂದು. +ಆದರೆ ಜೀತದಾಳುಗಳಿಗೆ ಆ ಹಕ್ಕನ್ನು ಎಲ್ಲಿಂದ ಬರಬೇಕು? +ಒಡೆಯರ ಆಸ್ತಿಯಾಗಿದ್ದ ಅವರನ್ನು ಯಾರಿಗೆ ಕೊಡಬೇಕು? +ಎಂಬುದನ್ನು ತಂದೆತಾಯಿಗಳು ನಿರ್ಧರಿಸಲು ಸಾಧ್ಯವೆ? +ತಮ್ಮ ಜಾನುವಾರಗಳನ್ನು ಬಿಕರಿ ಮಾಡುವ ಹಕ್ಕು ಎಂತೋ ಅಂತೆ ಬೇಲರು ಹೊಲೆಯರು ಮಾದಿಗರು ಮೊದಲಾದ ತಮ್ಮ ಹೆಣ್ಣುಗಂಡು ಜೀತದಾಳುಗಳನ್ನೂ ಇಡುವ ಕೊಡುವ ಬಿಡುವ ಹಕ್ಕು ಅವರದ್ದೆ ತಾನೆ? +ವಸ್ತುತಃ ಹಾಗಿದ್ದರೂ, ಸೇಸಿ ಎಷ್ಟಾದರೂ ಮನುಷ್ಯ ವರ್ಗಕ್ಕೆ ಸೇರಿದವಳಲ್ಲವೆ? +ಅವಳೇನು ದನ ಅಲ್ಲವಲ್ಲ! +ಮಾನವ ವರ್ಗಕ್ಕೇ ಸಹಜವಾದ ಸ್ವಾತಂತ್ರೈ ಇಚ್ಛೆ, ಆಶೆ, ಅಪೇಕ್ಷೆ, ಪ್ರಯತ್ನಶೀಲತೆ ಇವುಗಳಿಂದ ಅವಳು ತಪ್ಪಿಸಿಕೊಳ್ಳಲು ಸಾಧ್ಯವೆ? +ಆ ಇಚ್ಛೆ ಆಶೆ ಅಪೇಕ್ಷೆಗಳು ಕೈಗೂಡಲಿ ಬಿಡಲಿ, ಪ್ರಯತ್ನಮಾಡುವುದರಿಂದ ತಪ್ಪಿಸಿಕೊಳ್ಳಲಾದೀತೆ? +ಅದರಿಂದ ಎಂತಹ ಹಾನಿಯೆ ಒದಗಲಿ, ಸರ್ವನಾಶವೆ ಬೇಕಾದರೂ ಆಗಲಿ, ಮಾನವತ್ವವನ್ನು ತಲುಪಿದ ಚೇತನ ಕಲ್ಲು ಮಣ್ಣುಗಳಂತೆ ತಟಸ್ಥವಾಗಿ ಬಿದ್ದಿರಲು ಸಾಧ್ಯವಿಲ್ಲ. +ಆದ್ದರಿಂದಲೆ ಸೇಸಿಯ ಚೇತನ, ಅದು ಪ್ರಾಣಿಸಮೀಪವೇ ಆಗಿದ್ದರೂ, ತನ್ನ ಮನುಷ್ಯತ್ವ ಸಹಜವಾಗಿದ್ದ ಹಕ್ಕನ್ನು ಸ್ಥಾಪಿಸಿಕೊಳ್ಳಲು, ಭಯಂಕರವಾದ ಕ್ರೂರವಾದ ದುರ್ದಮ್ಯವಾದ ಪ್ರತಿಭಟನೆ ಮತ್ತು ಪ್ರತೀಕಾರಗಳ ಮೃತ್ಯುಭೀಕರ ರೌರವ ನರಕವೆ ತನ್ನಿದಿರೇ ಆ ಎಂದು ಬಾಯಿ ತೆರೆಯುವ ಸಂಭವವಿದ್ದರೂ, ಅಂಜುತಂಜುತ್ತಲೆ ಬದ್ದಕಂಕಣವಾದಂತೆ ಯತ್ನಶೀಲವಾಗಿತ್ತು. +ನೂರಾರು ಚಿಂತೆಗಳಿಂದ ಆಕುಲವಾಗಿದ್ದ ಅವಳಿಗೆ, ಮೂರು ವರುಷಗಳ ತರುವಾಯ ತವರನ್ನು ಸಮೀಪಿಸುತ್ತಿದ್ದರೂ, ಹಿಂದೆ ಆಗುತ್ತಿದ್ದ ಹಿಗ್ಗು ಒದಗಲಿಲ್ಲ. +ಅದಕ್ಕೆ ಬದಲಾಗಿ ಏನೊ ಉದ್ವೇಗವೆ ಹೃದಯವನ್ನು ಕದಡಿದಂತಿತ್ತು. +ಇಕ್ಕಟ್ಟಾಗಿದ್ದ ಕಾಲು ಹಾದಿಯ ಇಕ್ಕಲಗಳಲ್ಲಿಯೂ ಮುತ್ತಿದ್ದ ಗಿಡಪೊದೆಗಳ ನಡುವೆ, ತನಗಿಂತಲೂ ಮುಂದೆ ನಡೆಯುತ್ತಿದ್ದ ಪುಟ್ಟಬೀರನು ತಟಕ್ಕನೆ ನಿಂತು, ತನ್ನನ್ನು ಸಂಬೋಧಿಸಿದಾಗಲೆ ಅವಳಿಗೆ ಎಚ್ಚರವಾದಂತಾಗಿದ್ದು. +“ಅವ್ವಾ, ಆಲೇಸು! +ಏನೋ ವಾಲಗ ಕೇಳಿಸ್ತದೆ ಅಲ್ಲೇನು? +ಕೇರೀಲಿ!” ತಿರುಗಿ ನಿಂತು, ಕಿವಿಗೊಡುವ ಭಂಗಿಯಿಂದ ತಲೆಯನ್ನು ತುಸು ಓರೆಮಾಡಿ, ತಾಯಿಯನ್ನೆ ಪ್ರಶ್ನಾರ್ಥಕವಾಗಿ ನೋಡುತ್ತಿದ್ದನು ಪುಟ್ಟಬೀರ. +ಸೇಸಿ ಸೊಂಟಗೈಯಾಗಿ ಸುಯ್ದು ನಿಂತು ಆಲಿಸಿದಳು. +ಹೌದು, ಕೆಳಗೆ ಕಣಿವೆಯಲ್ಲಿ, ಗದ್ದೆಕೋಗಿನ ನೆತ್ತಿಯಲ್ಲಿ, ದಟ್ಟವಾಗಿ ಬೆಳೆದ ಮರಗಳ ಮರೆಯಲ್ಲಿ ತನ್ನ ಹುಟ್ಟು ಕೇರಿಯಿಂದ ಬೈಗುಗಾಳಿಯಲ್ಲಿ ತೇಲಿಬರುತ್ತಿದೆ ವಾಲಗದ ಸುಸ್ವರ! +ಏಕೋ ಏನೋ? +ಸುಖವೋ ದುಃಖವೋ? +ಸೇಸಿಯ ಗಂಟಲಲ್ಲಿ ಏನೊ ಕಟ್ಟಿಕೊಂಡಂತಾಗಿ ಅದನ್ನು ಕೆಮ್ಮಿನಿಂದ ಮರೆಮಾಚಿದಳು. +ಕೊನೆಬೈಗಿನ ಮುದಿಬಿಸಿಲಲ್ಲಿ ಕೇರಿಯ ಬಿಡಾರಗಳಿಂದೇಳುತ್ತಿದ್ದ ಅಡುಗೆಯ ಹೊಗೆ ಹೇಗೆ ಕಾಣಿಸುತ್ತಿದೆ, ಎಂದೋ ತೀರಿಹೋಗಿದ್ದ ಅವ್ವನ ನೆನಪಾಗುವಂತೆ! +‘ಯಾರದ್ದೊ ಮದೆಮನೆ ಇರಬೈದು’ ಎಂದಳು ತಾಯಿ. +ತಾಯಿಯ ಕಡೆಗೆ ತಿರುಗಿ ನಿಂತು ಅವಳನ್ನೆ ಗಮನಿಸುತ್ತಿದ್ದ ಪುಟ್ಟಬೀರ “ಅದೆಂಥದವ್ವಾ? +ಜೋತುಬೀಳಾಹಾಂಗೆ ಮಡ್ಲುತುಂಬ ತುಂಬಿಕೊಂಡಿದ್ದೀಯಲ್ಲಾ ಅಷ್ಟು ಭಾರಾನ? +ಹೊರೆಯಾದ್ರೆ ಇತ್ತ ಕೊಟ್ಟಾದ್ರೂ ಕೊಡು” ಎಂದನು. +“ಎಂಥದಿಲ್ಲೋ…ಹುಡುಗರಿಗೆ ಕೊಡಾನ ಅಂತ ಒಂದು ಚೂರು ಕೊಬ್ರಿ ಕಡ್ಲೆ ಬೆಲ್ಲಾ ಹಾಕ್ಕೋಂಡೀನಿ…. +ಏನು ಭಾರ ಬಿಡು! +ನಿಮ್ಮನ್ನೆಲ್ಲ ಹೊತ್ತೋಳಿಗೆ?” ಎಂದು ಮುದುಕಿ ನಗೆಸುಳಿಸಿ, ಮುಂದಕ್ಕೆ ಕಾಲು ಹಾಕಿದಳು “ಹೋಗಾನ ಬಾ. +ಹೊತ್ತು ಮುಳುಗ್ತು.” +ಇಬ್ಬರೂ ಹತ್ತು ಹೆಜ್ಜೆ ಹಾಕಿ ಗುಡ್ಡವಿಳಿಯುತ್ತಿರಲು ಪಕ್ಕದೊಂದು ಮಟ್ಟಿನ ಹತ್ತಿರದಿಂದ ಅಗೆಯುವ ಸದ್ದು ಕೇಳಿಸಿತು. +ಕತ್ತಲಾಗುತ್ತಿರುವ ಅಷ್ಟುಹೊತ್ತಿನಲ್ಲಿ ಯಾರು ಏನನ್ನು ಅಗೆಯುತ್ತಿರಬಹುದು ಎಂಬ ಕುತೂಹಲದಿಂದ, ಮುಂದೆ ಹೋಗುತ್ತಿದ್ದ  ಪುಟ್ಟಬೀರ “ಯಾರೋ ಅದೂ? +ಹೋಯ್?” ಎಂದು ಕೂಗಿದನು. +ಗೂಡಿಗೂ ಗೊತ್ತಿಗೂ ಹಾರಿಹೋಗುತ್ತಿದ್ದ ಹಕ್ಕಿಗಳ ಸದ್ದಿನೊಡನೆ ಬೆರೆತು ಅವನ ಪ್ರಶ್ನೆಗೆ ಉತ್ತರವಾಗಿ ತುಸು ಅಣುಕುದನಿಯ ‘ಹೋಯ್!’ ಕೇಳಿಸಿತು. +ಆ ಕಡೆ ನೋಡುತ್ತಿದ್ದಂತೆಯೆ ಸವೆಗೋಲನ್ನೂ ಕಿತ್ತಿದ್ದ ಬೇರುಗಳನ್ನೂ  ಹೆಗಲಮೇಲೆಯೂ ಕೈಯಲ್ಲಿಯೂ ಹೊತ್ತು ಹಿಡಿದಿದ್ದ ಸಿಂಬಾವಿ ಹೆಗ್ಗಡೆಯವರ ಕೆಲಸದ ಹುಡುಗ, ದೊಳ್ಳ, ಪೊದೆಯ ಸಂಧಿಯಿಂದ ಕಾನಿಸಿಕೊಮಡು “ಓಹೋಹೋ! +ಏನು ಸೇಸಿ ಸವಾರಿ ಹಾಜರು, ಮಗಳಮದುವೆಗೆ!” ಎನ್ನುತ್ತಾ ಹತ್ತಿರಕ್ಕೆ ಬಂದನು. +ದೊಳ್ಳ ಹೇಳಿದ್ದನ್ನು ಸರಿಯಾಗಿ ಗ್ರಹಿಸದೆ ಸೇಸಿ ವಿಷಾದ ಸ್ವರದಲ್ಲಿ “ಹೌದು, ದೊಳ್ಳಯ್ಯಾ, ಮಗಳನ್ನು ಮದುವೆ ಮಾಡಾಕೆ ಕರಕೊಂಡು ಹೋಗಾಕೆ ಬಂದೀನಿ, ನಮ್ಮ ಗಿರಾಚಾರ!” ಎಂದಳು. +“ಎಲ್ಲೀಗೆ ಕರಕೊಂಡು ಹೋಗ್ತೀಯಾ? …. +ಇಲ್ಲೇ ಅಂತೆ ಮದುವೆ! +ಇವತ್ತು ರಾತ್ರೀನೆ ಧಾರೆಯಂತೆ! +ಕೇಳ್ಸದಿಲ್ಲೇನು ವಾಲಗ, ನಿಮ್ಮ ಕೇರೀಲಿ?” +“ಯಾರದ್ರಾ ಧಾರೆ?” ಬೆಪ್ಪಾಗಿ ಕೇಳಿದನು ಪುಟ್ಟಬೀರ. +“ಯಾರದ್ದೂ? …. ಹಿ ಹ್ಹಿ ಹ್ಹಿ! +ನಿನ್ನ ತಂಗೀದೋ! +ನಿನ್ನ ಸ್ವಾದರತ್ತೆಮಗ, ನಿನ್ನ ಬಾವ ಇದಾನಲ್ಲಾ, ಆ ಗುತ್ತಿಗೇ ಕೊಟ್ಟು ಮದುವೆ! …. +ಹಂಗಾರೆ ನಿಮಗೆ ಯಾರಿಗೂ ಗೊತ್ತೇ ಇಲ್ಲ? …. ಹಿಹ್ಹಿಹ್ಹಿ! …. + ನೀವು ಯಾರೂ ಬರಾದಿಲ್ಲ ಅಂತಾನೂ ಹೇಳ್ತಿದ್ರು ಅಂತಾ ಇಟ್ಟುಗೋ, ಅದ್ಕೇ ನಿಮ್ಮಿಬ್ಬರನ್ನೂ ಕಂಡು ನನಗೆ ಸೋಜಿಗ ಆಯ್ತು, ಅಂತೂ ಬಂದೇಬಿಟ್ರಲ್ಲಾ ಮದೇಗೆ ಅಂತಾ! +ಹಿಹ್ಹಿಹ್ಹಿ!” +ದೊಳ್ಳ ತಾನು ಸಂತೋಷ ವಾರ್ತೆಯನ್ನೆ ಹೇಳುತ್ತಿದ್ದೇನೆ ಎಂದು ಲಘು ಹೃದಯದಿಂದ ಹೇಳುತ್ತಿದ್ದ ಆ ಮಾತುಗಳನ್ನು ಕೇಳಿ ಸೇಸಿಗೆ ದಿಗ್‌ಭ್ರಮೆಯಾಯಿತು. +ಒಮ್ಮೆ ಸಂತೋಷವೆ  ಉಕ್ಕಿದಂತಾಯಿತು! +ಆದರೆ ಕ್ಷಣಮಾತ್ರದಲ್ಲಿ ಏನೋ ಭೀತಿ ಕವಿದು ಅವಳ ಮೋರೆಗೆ ದೆವ್ವ ಕಂಡವರ ಮುಖದ ವಿಕೃತಛಾಯೆ ಮೂಡಿತು. +ಅವಳಿಗೆ ದೊಳ್ಳನ ಮಾತು ಅರ್ಥವಾಗಲಿಲ್ಲ; +ಅದರಲ್ಲಿ ನಂಬಿಕೆಯೂ ಬರಲಿಲ್ಲ. +ಸುಳ್ಳೆ ಹೇಳುತ್ತಿದ್ದಾನೆ ಅಥವಾ ತಪ್ಪು ತಿಳಿವಳಿಕೆಯಿಂದ ಆಡುತ್ತಿರಬೇಕು ಎಂದು ಭಾವಿಸಿದಳು. +ಎಷ್ಟಾದರೂ ಬುದ್ಧಿ ಬಲಿಯದ ಹುಡುಗ! …. +ಹಿಂದಿನ ರಾತ್ರಿ ಗುತ್ತಿಯೊಡನೆ ಓಡಿಬಂದ ತನ್ನ ಮಗಳಿಗೆ ಈ ರಾತ್ರಿಯೆ ಮದುವೆಯಾಗುತ್ತಿದೆ ಎಂಬುದು ಅವಳಿಗೆ ಅಸಂಭವನೀಯವಾಗಿತ್ತು. +“ಏನು ಬೇರೋ ಅದು? +ಯಾರಿಗ್ರೋ?” ಎಂದು ಪ್ರಶ್ನಿಸಿ ವಿಷಯದ ದಿಕ್ಕನ್ನೆ ಬದಲಾಯಿಸಿದಳು ಸೇಸಿ. +“ಹೆಗ್ಗಡೇರಿಗೆ ಕಸಾಯಕ್ಕೆ!” ಉತ್ತರಿಸಿದನು ದೊಳ್ಳ, ಅಳಲೆಕಾಯಿ ಪಂಡಿತನೆಂಬಂತೆ! +ಹಸಿಬೇರಿನ ವಾಸನೆ ಮೂಗಿಗೂ ಹಿತಕರವಾಗಿ ವ್ಯಾಪಿಸುತ್ತಿದ್ದುದನ್ನು ಗಮನಿಸಿ ದೊಳ್ಳ ತನ್ನ ಅಭಿಜ್ಞತೆಯನ್ನು ಪ್ರದರ್ಶಿಸಲು ಮುಂದುವರೆದನು. + “ಸಣಲೆ ಸದುಗನ್ನ ಕಿತ್ತುಕೊಂಡು ಬಾ ಅಂದ್ರು, ಮರಾಟಿ ಮಂಜಗೆ. +‘ನಂಗೊತ್ತಿಲ್ಲಮ್ಮಾ’ ಅಂದ ಅಂವ…. +ಹಿಹ್ಹಿಹ್ಹಿ! …. ಆಮ್ಯಾಲೆ ನನ್ನ ಕೇಳಿದ್ರೂ ‘ನಿಂಗೊತ್ತೇನೊ?’ ಅಂತ. +ಹಿಹ್ಹಿಹ್ಹಿ!‘ಗೊತ್ತಿಲ್ದೆ ಏನು?’ ಅಂದೆ…. +ನಾನಿಲ್ದೆ ಇದ್ರೆ ನಮ್ಮ ಜಟ್ಟಮ್ಮ ಹೆಗ್ಗಡ್ತೇರಿಗೆ ಕೈಕಾಲೆ ಬಿದ್ದುಹೋದ್ಹಾಂಗಾಗ್ತದೆ! +ಆ ಹಳ್ಳಿಮುಕ್ಕ ಮರಾಟಿ ಮಂಜನ್ನ ಕಟ್ಟಿಕೊಂಡು ಎಂಥದು ಮಾಡ್ತಾರೆ ಅವರಾದ್ರೂ? …. +ಒಂದಿಷ್ಟು ಕೂಳು ಬೇಯಿಸಕ್ಕೆ ಗೊತ್ತು ಅವನಿಗೆ ಅಷ್ಟೆ. +ಅದಕ್ಕೆ ನಮ್ಮ ಒಡೇರು ನಂಗೆ ‘ನೀ ಕೆಲಸಕ್ಕೆ ಬ್ಯಾಡ ಹೋಗೋ’ ಅಂದ್ರೂ, ನಮ್ಮ ಜಟ್ಟಮ್ಮ ಹೆಗ್ಗಡ್ತೇರು ‘ನೀ ಹೋದ್ರೆ ಅವರಿಗೆ ಗಿಡಮೂಲಿಕೆ ತಂದು ಕೊಡೋರು ಯಾರಪ್ಪಾ? ಇರು. ’ ಅಂತಾ ಹೇಳಿದ್ದು! …. + ಆ ಹೆಗ್ಗಡೇರ ತಂಗೀಗೆ ಮಾತ್ರ ನನ್ನ ಕಂಡರಾಗಾದಿಲ್ಲಾ…. +ನಾಯಿ ಕಂಡ್ಹಾಂಗೆ ಮಾಡ್ತಾರೆ….” +“ಹೆಗ್ಗಡೇರಿಗೆ ಏನು? …. ಕಾಯಿಲೇನಾ?” ಕೇಳಿದಳು ಸೇಸಿ, ದೊಳ್ಳನ ಮಾತಿನ ಹೊನಲಿಗೆ ತಡೆಹಾಕಲೆಂದು. +“ಅಯ್ಯೋ ಅವರಿಗೆ ರ್ವಾತೆ ತಪ್ಪಿದ್ದು ಯಾವಾಗ? +ಮೂರು ಹೊತ್ತೂ ಕಾಯಿಲೆ, ಕಾಯಿಲೆ!ಹಿಹ್ಹಿಹ್ಹಿ! …. +ಕೆಮ್ಮು, ಸೀತ, ಗೂರ್ಲು, ಸೊಂಟನೋವು, ಜರ, ಹಸಿಬಕ್ಕೆ, ತುರಿಗಜ್ಜಿ, ಕುರು, ಆಮಶಂಕೆ, ತಲೆನೋವು, ಉಬ್ಬಸ! +ಒಂದೊ, ಎಲ್ಡೊ? ಹಿಹ್ಹಿಹ್ಹಿ…. ”“ಕತ್ತಲಾತು, ದೊಳ್ಳಯ್ಯ, ನೀವು ಹೊಲ್ಡಿ,” ಎಂದು ನಡುವೆ ಬಾಯಿಹಾಕಿ ಪುಟ್ಟಬೀರ ಸರಸರನೆ ಕೇರಿಯ ದಿಕ್ಕಿಗೆ ಇಳಿದುನಡೆದನು, ತಾಯಿಯೊಡಗೂಡಿ. +ಭರಮೈಹೆಗ್ಗಡೆಯವರು ಗುತ್ತಿಗೆ “ನಿನ್ನ ಅಪ್ಪನ್ನ ಬಂದು ನನ್ನ ನೋಡಾಕೆ ಹೇಳೋ! +ಹೋಗೋ!” ಎಂದಾಗ ಗುತ್ತಿಗೆ ಹೋದ ಜೀವ ಮತ್ತೆ ಬಂದಂತಾಯಿತು. +ಹಿತ್ತಲು ಕಡೆ ಬಾಗಿಲಿಗೆ ಹೋಗಿ, ಜಟ್ಟಮ್ಮ ಹೆಗ್ಗಡತಿಯವರಿಗೆ ಕಣ್ಣಾಪಂಡಿತರು ಇನ್ನೊಂದೆರಡು ಮೂರು ದಿನಗಳಲ್ಲಿ ಔಷಧ ತಯಾರಿಮಾಡಿಕೊಂಡು ತಾವೇ ಖುದ್ದು ಬಂದು, ಹೆಗ್ಗಡೆ ಹೆಗ್ಗಡತಿ ಇಬ್ಬರಿಗೂ ಮಕ್ಕಳಾಗುವುದಕ್ಕೂ ಆರೋಗ್ಯವಾಗುವುದಕ್ಕೂ ಮದ್ದು ಕೊಡುವುದಾಗಿ ಹೇಳಿದರು ಎಂಬುದಾಗಿ ತಿಳಿಸಿ, ತಂಗಳನ್ನ ಮಜ್ಜಿಗೆ ಉಪ್ಪಿನಕಾಯಿಗಳನ್ನು ಕಾಣಿಕೆಯಾಗಿ ಪಡೆದು, ಬಿಡಾರಕ್ಕೆ ಹಿಂತಿರುಗಿದ್ದನು. +ಹಗಲೂಟಕ್ಕೆ ಕೆಲಸ ಬಿಟ್ಟು ಬಂದ ಕರಿಸಿದ್ದನಿಗೆ ಮಗನೊಡನೆ ಅನಿರೀಕ್ಷಿತವಾಗಿ ಒಬ್ಬಳೆ ಬಂದಿದ್ದ ತಂಗಿಯ ಮಗಳನ್ನು ಕಂಡು ಅಚ್ಚರಿಗಿಂತಲೂ ಹೆಚ್ಚು ಅನುಮಾನವಾಯಿತು. +ಆದರೆ ಗುತ್ತಿ ನಡೆದಿದ್ದ ಸಂಗತಿಯನ್ನು ಸಂಕ್ಷೇಪವಾಗಿ ತಿಳಿಸಿದ ಮೇಲೆ ಅವನಿಗೂ ಧೈರ್ಯ ಹಿಂತಿರುಗಿದಂತಾಗಿತ್ತು. +ಮಗನು ತಿಳಿಸಿದಂತೆ ಹೋಗಿ ಒಡೆಯರನ್ನು ಕಂಡನು. +ಅವರು ಅವನೊಡನೆ ಸ್ವಲ್ಪ ಆಲೋಚನೆ ಮಾಡಿ, ಮರುದಿನ ಬೆಳಗಾಗುವುದರೊಳಗೆ ಆ ರಾತ್ರಿಯೆ ಲಗ್ನ ಪ್ರಸ್ತ ಎಲ್ಲವನ್ನೂ ಮಾಡಿ, ಮುಗಿಯಿಸಿ ಬಿಡಬೇಕೆಂದು ಸಲಹೆ ಮಾಡಿದ್ದರು. +ಲಗ್ನಕ್ಕೆ ಬೇಕಾದ ಕೆಲವು ಸಾಮಗ್ರಿಗಳನ್ನೂ ಕೊಡಿಸಿದರು. +‘ವಾಲಗ ಎಂತಿದ್ದರೂ ನಿಮ್ಮದೇ ಅದೆ. +ನಿಮ್ಮ ಒಡ್ಡಿಯದೇ ಒಂದು ಹಂದಿ ಕಡಿದು ಬಿಡಿ. +ಮನೆಯಿಂದ ಅಕ್ಕಿ ಬೆಲ್ಲ ಕೊಡಿಸ್ತೇನೆ. +ಹೆಣ್ಣಿಗೆ ಗಂಡಿಗೆ ಉಡಾಕೆ ತೊಡಾಕೆ ಏನು ಬೇಕೋ ತಗೊಂಡು ಹೋಗು….’ ಎಂದು ಪ್ರೋತ್ಸಾಹಿಸಿ ಕಳುಹಿಸಿದ್ದರು. +ಹುಡುಗಿಯ ತಂದೆ ತಾಯಿಯರಿಲ್ಲದೆ, ಬೇರೆ ಊರಿನ ಕೇರಿಗಳ ನಂಟರಿಷ್ಟರಿಗೆ ತಿಳಿಸದೆ, ಕರೆಯದೆ, ಹೇಗೆ ಲಗ್ನ ಮಾಡುವುದು ಎಂಬುದಕ್ಕೆ‘ಆ ಶಾಸ್ತ್ರಾನೆಲ್ಲಾ ಹಿಂದಿನಿಂದ ಮಾಡಿಕೊಳ್ಳಬಹುದು.’ ಎಂದು ಸಮಾಧಾನ ಹೇಳಿದ್ದರು. +ಬೆಟ್ಟಳ್ಳಿಗೌಡರ ಕಡೆಯಿಂದ ಕಾಗದವಾಗಲಿ ಜನವಾಗಲಿ ಬರುವ ಮೊದಲೇ ಲಗ್ನ ನೆರವೇರಿಬಿಟ್ಟಿದ್ದರೆ ತಮ್ಮ ಕೇರಿಗೆ ಒಂದು ಹೆಣ್ಣಾಳನ್ನು ಗಿಟ್ಟಿಸಿಕೊಂಡಂತಾಗುತ್ತದೆ ಎಂಬುದು ಅವರ ಉದ್ದೇಶದ ಒಂದು ಪಾದವಾಗಿತ್ತು; +ಇನ್ನೊಂದು, ಬೆಟ್ಟಳ್ಳಿ ಮನೆತನದ ಮೇಲೆ ಸಿಂಬಾವಿ ಮನೆತನ ಒಂದು ವಿಜಯ ಸಾಧಿಸಿದಂತಾಗುತ್ತದೆ ಎಂಬ ಪ್ರತಿಷ್ಠೆ. +ಕರಿಸಿದ್ದ ಕೇರಿಯರ ನೆರವಿನಿಂದ ಮಗನ ಲಗ್ನಕ್ಕೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡನು. +ಆದರೆ ಹೆಣ್ಣಿನ ತಾಯಿ, ತನ್ನ ಒಡಹುಟ್ಟಿದವಳು, ಲಗ್ನದ ಉತ್ಸವದಲ್ಲಿ ಮುಖ್ಯಭಾಗಿನಿಯಾಗಿ ಇರಬೇಕಾದವಳು ಇಲ್ಲದುದಕ್ಕಾಗಿ ಅವನ ಮನಸ್ಸು ಖಿನ್ನವಾಗಿತ್ತು. +ಆದ್ದರಿಂದಲೆ ಸೇಸಿ ಪುಟ್ಟಬೀರರು ಅನಿರೀಕ್ಷಿತವಾಗಿ ಕೇರಿಯಲ್ಲಿ ಕಾಣಿಸಿಕೊಂಡಾಗ ಅವನ ಹಿಗ್ಗು ಸಗ್ಗಕ್ಕೇರಿತ್ತು! +ಏನೋ ಒಂದು ಶುಭಶಕುನವೆ ಇಳಿದು ಬಂದಂತಾಗಿ, ದೇವರ ಆಶೀರ್ವಾದ ತನ್ನ ಕಡೆಗಿದೆ ಎಂದು ಭಾವಿಸಿದ್ದನು. +ಬಹು ಭಾವ ಸಂಚಲನೆಯ ಗರಗಸದಲ್ಲಿ ಸಿಕ್ಕಿದಂತಾಗಿದ್ದ ಸೇಸಿಯ ಹೃದಯವೂ ಎಲ್ಲ ವಿಷಯಗಳನ್ನೂ ಅಣ್ಣನಿಂದ ಕೇಳಿ ತಿಳಿದಮೇಲೆ ತಕ್ಕಮಟ್ಟಿಗೆ ನಿಶ್ಚಿಂತವಾಯಿತು. +ಜೊತೆಗೆ  ಹೆಗ್ಗಡೆಯವರೂ ಅವಳನ್ನು ಮನೆಗೆ ಕರೆಸಿ, ಧೈರ್ಯ ಹೇಳಿದರು. +“ಹೆಂಗಿದ್ರೋ ನೀನೂ ನಮ್ಮ ಕೇರಿಯ ಮಗಳೇ! +ನಿನ್ನ ಮಗಳೊ ನಿನ್ನ ತವರಿಗೇ ಸೇರುವುದರಲ್ಲಿ ನ್ಯಾಯ ಇದೆ! +ಏನು ಬಂದ್ರೂ, ನಾನು ನೋಡಿಕೊಳ್ಳುತ್ತೇನೆ, ಇದೇನು ಬಲಾತ್ಕಾರದ ಮದುವೆ ಅಲ್ಲ. +ಹೆಣ್ಣು, ಹೆಣ್ಣಿನ ತಾಯಿ, ಹೆಣ್ಣಿನ ಸೋದರಮಾವ ಎಲ್ಲಾ ತಮ್ಮ ಸ್ಮಂತ ಖುಷಿಯಿಂದಲೇ ಒಪ್ಪಿ ಲಗ್ನ ನಡೆದ ಮೇಲೆ, ಯಾರು ಏನು ಮಾಡುವ ಹಾಂಗಿದ್ದಾರೆ?” +ಪುಕ್ಕಲೆದೆಯ ಪುಟ್ಟಬೀರನಿಗೆ ಅದೆಲ್ಲವನ್ನೂ ಕೇಳಿ, ನೋಡಿ, ದಿಗಿಲೋ ದಿಗಿಲು! +ತನ್ನ ತಾಯಿಯನ್ನು ಗುಟ್ಟಾಗಿ ಕರೆದು “ಅವ್ವಾ, ತಿಮ್ಮೀನ ಕರಕೊಂಡು ಹೋಗಾಕೆ ಅಂತ ಬಂದವರು ನಾವೇ ಅವಳನ್ನು ಅವಸರವಸರವಾಗಿ ಲಗ್ನ ಮಾಡಿಕೊಟ್ಟೆವು ಅಂತಾ ಗೊತ್ತಾದ್ರೆ ನಮ್ಮ ಗೌಡ್ರು ನಮನ್ನ ಸುಮ್ನೆ ಬಿಟ್ಟಾರೆ? +ಸಿಗಿದು ತೋರಣ ಕಟ್ಟಿಸ್ತಾರಲ್ಲ ನಮ್ಮನ್ನೆಲ್ಲ! …. ” +ಎಂದು ತನ್ನ ಭೀತಿಯನ್ನು ತೋಡಿಕೊಂಡಾಗ ಸೇಸಿ “ಹೆಗ್ಗಡೇರು ಹೇಳಿದಾರೆ, ನಾನೆಲ್ಲ ನೋಡಿಕೊಳ್ತೀನಿ ಅಂತಾ. +ನಮಗೇನು ಹೆದರಿಕೆ? ಸುಮ್ಮನೀರು. + ಅಷ್ಟರಮ್ಯಾಲೆ, ನಮ್ಮನ್ನೆಲ್ಲ ಹೊಡೆಸ್ತಾರೆ ಅಂತಾ ಕಂಡ್ರೆ, ಆ ಊರನ್ನೆ ಬಿಟ್ಟು ಇಲ್ಲಿಗೇ ಬಂದರಾಯ್ತು.” ಎಂದು ಸಮಾಧಾನ ಹೇಳಿ ಧೈರ್ಯ ಕೊಟ್ಟಿದ್ದಳು. +ಸೇಸಿಗೂ ಗೊತ್ತಿತ್ತು, ಒಂದು ವೇಳೆ ತಿಮ್ಮಿಯನ್ನು ಹಿಂದಕ್ಕೆ ಕರೆದುಕೊಂಡು ಹೋಗಿದ್ದರೂ ಏನೇನು ದುರಂತ ನಡೆಯಬಹುದಿತ್ತು ಎಂದು. +ತಮ್ಮೆಲ್ಲರ ಇಷ್ಟಕ್ಕೆ ವಿರುದ್ದವಾಗಿ, ಹೆಣ್ಣಿನ ಇಚ್ಛೆಯನ್ನೂ ನಿರ್ದಯವಾಗಿ ತುಳಿದು, ತನ್ನ ಮಗಳನ್ನು ಆ ಬಚ್ಚನ ಕೊರಳಿಗೆ ಕಟ್ಟಿ ಬಿಡುತ್ತಾರೆ ಎಂದು. +ಆದ್ದರಿಂದ ದೇವರೆ ತಮ್ಮನ್ನು ಪಾರುಮಾಡಿದ ಎಂದುಕೊಂಡು ಸೇಸಿ ಮಗಳ ಮದುವೆಯಲ್ಲಿ ಮನಃಪೂರ್ವಕವಾಗಿ ಭಾಗವಹಿದಳು. +ತಾನು ಗುಟ್ಟಾಗಿ ತಂದಿದ್ದ ಬೆಟ್ಟಳ್ಳಿಗೌಡರ ‘ನಗದ ಗಂಟಿ’ನಿಂದ ಒಂದೆರಡು ಆಭರಣಗಳನ್ನೂ ತೆಗೆದು, ಮದುವಣಗಿತ್ತಿಗೆ ತೊಡಿಸಿ, ನೋಡಿ, ಹೆಮ್ಮೆಯಿಂದ ಸೊಗಸಿದ್ದಳು! +ಎರಡು ಮೂರು ದಿನಗಳಾದರೂ ಸೇಸಿಯಾಗಲಿ ಪುಟ್ಟಬೀರನಾಗಲಿ ಹಿಂತಿರಿಗದಿದ್ದುದನ್ನು ನೋಡಿ ದೊಡ್ಡಬೀರನಿಗೆ ಕಳವಳವಾಯಿತು. +ಬಚ್ಚನನ್ನು ಕರೆದು, ತನ್ನ ಹೆಂಡತಿಯನ್ನೂ ಕಿರಿಯ ಮಗಳನ್ನೂ ಅವನಿದಿರಿನಲ್ಲಿಯೆ ಬಾಯಿಗೆ ಬಂದಂತೆ ಬಯ್ದು, ಇನ್ನೊಂದು ದಿನದೊಳಗೆ ಯಾರೂ ಬರದಿದ್ದರೆ ತಾನೆ ಹೋಗಿ ಬರುವುದಾಗಿ ಗೌಡರಿಗೆ ತಿಳಿಸುವಂತೆ ಹೇಳಿದನು. +ಆದರೆ ಬಚ್ಚನಿಗಾಗಲೆ ಗಾಳಿಸುದ್ದಿ ತಲುಪಿತ್ತು. +ಅದನ್ನು ದೇವಯ್ಯಗೌಡರಿಗೆ ಹೇಳಿಯೂ ಇದ್ದನು. +ಆದ್ದರಿಂದಲೆ ಆ ದಿನವೆ ಸಂಜೆ ಪುಟ್ಟಬೀರನೊಬ್ಬನೆ ಹಿಂತಿರುಗಿ, ತಂಗಿಗೆ ಗುತ್ತಿಯೊಡನೆ ಮದುವೆಯಾಗಿ ಹೋಯಿತೆಂದೂ, ತಾನೂ ತಾಯಿಯೂ ಎಷ್ಟು ಹೇಳಿದರೂ ಕೇಳಲಿಲ್ಲವೆಂದೂ, ಸಿಂಬಾವಿ ಹೆಗ್ಗಡೆಯವರೆ ಖುದ್ದು ನಿಂತು ಲಗ್ನ ಮಾಡಿಸಿದರೆಂದೂ, ಗೌಡರಿಗೆ ವರದಿಯೊಪ್ಪಿಸಿದಾಗ ಅದು ಅವರಿಗೆ ಹೊಸವಾರ್ತೆಯಾಗಿರಲಿಲ್ಲ. +ಕಲ್ಲಯ್ಯಗೌಡರಿಗೆ ಸಿಟ್ಟು ನೆತ್ತಿಗೇರಿತು. +ತಮಗೆ ಸೇರಿದ ಹೆಣ್ಣಾಳೊಂದನ್ನು ಅವರ ಆಳೊಬ್ಬನು ಹಾರಿಸಿಕೊಂಡು ಹೀಗಿದ್ದಾನೆಂದೂ ಅವಳನ್ನು ಒಡನೆಯೆ ಕಳಿಸಿಕೊಡಬೇಕೆಂದೂ ಕಾಗದ ಬರೆದು ಕಳಿಸಿದರು. +ಅದಕ್ಕೆ ಉತ್ತರವಾಗಿ ಸಿಂಬಾವಿ ಹೆಗ್ಗಡೆಯವರು, ಕಾಗದ ಬರೆದು ಕಳಿಸಿದರು. +ಅದಕ್ಕೆ ಉತ್ತರವಾಗಿ ಸಿಂಬಾವಿ ಹೆಗ್ಗಡೆಯವರು, ನಡೆದ ಅವಿವೇಕಕ್ಕೆ ತಮ್ಮ ವಿಷಾದವನ್ನು ವ್ಯಕ್ತಪಡಿಸಿ, ತಾವು ವಿಚಾರಿಸಿದ್ದಲ್ಲಿ ಆ ಗಂಡು ಹೆಣ್ಣುಗಳಿಗೆ ಆಗಲೆ ಮದುವೆ ನಡೆದುಹೋಗಿದೆಯೆಂದೂ, ಹೆಣ್ಣು ಮತ್ತು ಹೆಣ್ಣಿನ ತಾಯಿ, ಅಣ್ಣ ಎಲ್ಲರೂ ಒಪ್ಪಿಯೆ ಮದುವೆಯಾಗಿರುವುದರಿಂದ ಅದರಲ್ಲಿ ಯಾವ ಜುಲುಮ್ಮಿನ ಅಂಶವೂ ಕಾಣಿಸುತ್ತಿಲ್ಲವೆಂದೂ ಉತ್ತರ ಬರೆದರು. +ಬೆಂಕಿ ಆರಿಸಲೆಂದು ತುಪ್ಪ ಹೊಯ್ದಂತಾಯಿತು! +ಉಪಾಯದಿಂದಾಗಲಿ ಬಲಪ್ರಯೋಗದಿಂದಾಗಲಿ ತಮ್ಮ ಜೀತದವಳಾಗಿ ಯಮಗೆ ಸೇರಿರುವ ತಮ್ಮ ಕೇರಿಯ ಹುಡುಗಿಯನ್ನು ಕರೆತಂದೋ ಎಳೆತಂದೋ ಬಚ್ಚನಿಗೆ ಮದುವೆ ಮಾಡಿಸಿಯೇ ತೀರಬೇಕೆಂದು ಕಲ್ಲಯ್ಯಗೌಡರು ಹಠಪ್ರತಿಜ್ಞೆ ಮಾಡಿಕೊಂಡರು. +ಆದರೆ ತಮ್ಮ ಮನಸ್ಸಿನ ಗುಟ್ಟನ್ನು ಹೊರಗೆ ಹಾಕಲಿಲ್ಲ. +ಸಮಯ ಕಾದು ಕೆಲಸ ಮಾಡಲು ನಿರ್ಧರಿಸಿದರು. +ಆ ಹುನಾರಿನ ಅಂಗವಾಗಿ ಸಿಂಬಾವಿ ಹೆಗ್ಗಡೆಯವರಿಗೆ ಒಂದು ಕಾಗದ ಬರೆದರು. +ಆದದ್ದು ಆಗಿಹೋಯಿತು. +ಆದರೆ ನಮ್ಮ ಹೊಲಗೇರಿಯ ಹೆಣ್ಣಿಗೆ ಬದಲಾಗಿ ನಿಮ್ಮ ಹೊಲಗೇರಿಯಿಂದ ಒಂದು ಹೆಣ್ಣನ್ನು ನಮ್ಮ ಕೇರಿಯ ಆಳುಹುಡುಗನೊಬ್ಬನಿಗೆ ತಂದುಕೊಳ್ಳುವ ಇಚ್ಛೆ ಇದೆ. +ನಿಮ್ಮ ಆಳುಹುಡುಗ ಹಾರಿಸಿಕೊಂಡು ಹೋದ ದೊಡ್ಡಬೀರನ ಮಗಳನ್ನು ಈ ಹುಡುಗನಿಗೆ ಲಗ್ನ ಮಾಡಲು ಎಲ್ಲ ಏರ್ಪಾಡು ಆಗಿತ್ತು. +ಆದ್ದರಿಂದ ಆ ವಿಚಾರದಲ್ಲಿ ನಮಗೆ ಆದಷ್ಟು ಬೇಗನೆ ಸಹಾಯ ಮಾಡುವಿರೆಂದು ನಂಬಿದ್ದೇನೆ – ಎಂದು. +ಇದರ ಮಧ್ಯೆ ಕಲ್ಲಯ್ಯಗೌಡರು ಮದುಮಗಳಿಗೆ ತೊಡಿಸಲೆಂದು ತಾವು ಕೊಟ್ಟಿದ್ದ ನಗಗಳನ್ನು ಹಿಂತಿರುಗಿಸುವಂತೆ ದೊಡ್ಡಬೀರನನ್ನು ಕೇಳಿದರು. +ತಿಮ್ಮಿ ಕಾಣೆಯಾದ ಮೇಲೆ ತನ್ನ ಹೆಂಡತಿ ಸೇಸಿ ಆ ನಗದ ಗಂಟನ್ನು ತನಗೆ ತೋರಿಸಿ ಇಟ್ಟಿದ್ದು ನೆನಪಿಗೆ ಬಂದರೂ ದೊಡ್ಡಬೀರ ಆ ನಗವೆಲ್ಲ ಮಗಳ ಮೈಮೇಲೆಯೆ ಇತ್ತೆಂದೂ ಅವಳು ಓಡಿಹೋಗುವಾಗ ಅವನ್ನೂ ತೆಗೆದುಕೊಂಡೇ ಹೋಗಿದ್ದಾಳೆಂದೂ ಹೇಳಿಬಿಟ್ಟನು. +ಆ ಆಭರಣಗಳನ್ನೆಲ್ಲ ಕಳುಹಿಸಿಕೊಡಿ ಎಂದು ಸಿಂಬಾವಿ ಹೆಗ್ಗಡೆಯವರಿಗೆ ಬರೆದ ಕಾಗದಕ್ಕೆ ಅವರು, ಆ ನಗಗಳನ್ನೆಲ್ಲ ಗಂಟುಕಟ್ಟಿ ಬಿಡಾರದಲ್ಲಿಯೆ ಬಿಟ್ಟು ಬಂದುದಾಗಿ ಹುಡುಗಿ ಹೇಳುತ್ತಾಳೆಂದೂ ಇಲ್ಲಿ ಅವಳ ಬಿಡಾರವನ್ನೆಲ್ಲ ಸೋಸಿ ನೋಡಿದರೂ ಒಂದೂ ನಗ ಕಾಣಿಸಲಿಲ್ಲವೆಂದೂ ಉತ್ತರ ಬರೆದರು. +ಕಲ್ಲಯ್ಯಗೌಡರು ಮೇಗರವಳ್ಳಿಯ ವಸೂಲಿಸಾಬರ ಗುಂಪನ್ನು ಗುಟ್ಟಾಗಿ ಕರೆಯಿಸಿ, ಅವರಿಗೆ ಹೇಳಬೇಕಾದುದನ್ನೆಲ್ಲ ಹೇಳಿದರು. +ದೊಡ್ಡಬೀರನನ್ನೂ ಕರೆದು ಸಾಮ ದಾನ ಭೇದ ದಂಡೋಪಾಯಗಳೆಲ್ಲವನ್ನೂ ಅವನ ಮುಂದಿಟ್ಟು, ವಸೂಲಿ ಸಾಬರನ್ನು ಅವನಿಗೆ ಬೆಂಬಲ ನೀಡುವುದಾಗಿ ತಿಳಿಸಿದರು. +ಅವನೇನಾದರೂ ತಾವು ಹೇಳಿದಂತೆ ಮಾಡಲು ಹಿಂಜರಿದರೆ, ಮೋಸಮಾಡುವ ಸೂಚನೆ ಏನಾದರೂ ಕಂಡುಬಂದರೆ, ಅವನ ಕೈಗೆ ಕೋಳಹಾಕಿಸಿ, ಮೈ ಮುರಿಯುವಂತೆ ಲಾಕಪ್ಪಿನಲ್ಲಿ ಹೊಡೆಯಿಸಿ, ಜೈಲಿನಲ್ಲಿಯೆ ಸಾಯುವಂತೆ ಮಾಡುವುದಾಗಿಯೂ ಬೆದರಿಕೆ ಹಾಕಿದರು. +ಕಲ್ಲೂರು ಸಾಹುಕಾರ ಮಂಜಭಟ್ಟರು ತುರುತ್ತಾಗಿ ಬಂದು ತಮ್ಮನ್ನು ಕಾಣಬೇಕೆಂದು ಸಿಂಬಾವಿ ಭರಮೈ ಹೆಗ್ಗಡೆಯವರಿಗೆ ಹೇಳಿ ಕಳಿಸಿದ್ದರು. +ಬ್ರಾಹ್ಮಣರನ್ನು ಅವರ ಮನೆಯಲ್ಲಿಯೆ ನೋಡಹೋಗುವ ನಿಮಿತ್ತ ಭರಮೈಹೆಗ್ಗಡೆಯವರು ಮಿಂದು, ಆದಷ್ಟು ಮಡಿಯಾದ ಬಟ್ಟೆ ಹಾಕಿಕೊಂಡು ಹೊರಟರು ಕಲ್ಲೂರಿಗೆ, ಭಟ್ಟರು ಕಳುಹಿಸಿದ್ದ ಆಳಿನೊಡನೆ. +ಸೀತೂರು ಗುಡ್ಡವನ್ನು ಹತ್ತಿಳಿದು. +ಲಕ್ಕುಂದವನ್ನು ದಾಟಿ, ದಟ್ಟಗಾಡಿನ ಹಳುವಿಡಿದ ಕಾಲುದಾರಿಯಲ್ಲಿ ಹೋಗುತ್ತಿದ್ದಾಗ ಎದುರಾಗಿ ಬರುತ್ತಿದ್ದ ಬೆಟ್ಟಳ್ಳಿ ಹೊಲೆಯರ ಗುಂಪು ಕಾಣಿಸಿತು. +ದೊಡ್ಡಬೀರ, ಸಣ್ಣಬೀರ ಮತ್ತು ಅವನ ಹೆಂಡತಿ ಚಿಕ್ಕಪುಟ್ಟಿ ಹೊಟ್ಟೆಲಕ್ಕಿ (ಸಣ್ಣಬೀರನ ಹೆಂಡತಿ) ಚಿಕ್ಕಪುಟ್ಟಿಯೊಡನೆ ಹೋಗಲು ಒಪ್ಪದೆ ಹಿಂದೆಯೆ ಉಳಿದಿದ್ದರು. +ರೂಢಿಯಂತೆ ಗಂಡಸರೆಲ್ಲರೂ ನೆಲಮುಟ್ಟಿ ನಮಸ್ಕಾರ ಮಾಡಿ, ಅರುಗಾಗಿ ನಿಂತರು; +ಹೆಂಗಸು ಹಳುವಿನಲ್ಲಿ ಮರೆಯಾಗಿ ನಿಂತಳು. +“ಎಲ್ಲಿಗ್ರೋ? +ಎಲ್ಲ ಗುಂಪುಕಟ್ಟಿಕೊಂಡು ಹೊರಟೀರಲ್ಲಾ! +ಅಪ್ಪಾ ಮಕ್ಕಳು?” ಹೆಗ್ಗಡೆಯವರು ಅಧಿಕಾರವಾಣಿಯಲ್ಲಿ ಕೇಳಿದರು. +“ಅಳಿಯ – ಮಗಳನ್ನೂ ಕರಕೊಂಡು ಹೋಗಾನ ಅಂತ ನೆಂಟರ ಮನೆಗೆ ಹೋಗ್ತಾ ಇದ್ದೀವಿ, ಒಡೆಯಾ!” ಸೊಂಟಬಾಗಿ ಕೈಮುಗಿದು ವಿನಯದಿಂದ ಉತ್ತರಿಸಿದ ದೊಡ್ಡಬೀರ. +“ನಿಮ್ಮ ಗೌಡರು ಹೇಳಿ ಕಳಿಸಿದಾರೇನೋ?” ಹೆಗ್ಗಡೆಯವರ ಪ್ರಶ್ನೆ ಅರ್ಥಗರ್ಭಿತವಾಗಿತ್ತು. +“ಇಲ್ಲ, ಅಯ್ಯಾ. +ಲಗ್ನ ಆದ ಹುಡುಗೀನ ತವರು ಮನೆಗೆ ಕರಕೊಂಡು ಹೋಗಾನ ಅಂತಾ….” +“ಕರಕೊಂಡು ಹೋಗಿ….” +“ನಾಕು ದಿನ ಇಟ್ಟುಕೊಂಡು ಕಳಿಸ್ತೀನಿ.” +“ನೀನೇನು ಆ ಹುಡುಗೀನ ಬಲಾತ್ಕಾರವಾಗಿ ಇನ್ಯಾರಿಗೊ ಕೊಡಾಕೆ ಮಾಡಿದ್ಯಂತೆ?” +“ನಮ್ಮ ದೊಡ್ಡಗೌಡರ ಅಪ್ಪಣೆ ಏನೊ ಆಗಿತ್ತು….” + ಸ್ವಲ್ಪ ತಡೆದೂ ತಡೆದೂ ದೊಡ್ಡಬೀರ ಮುಂದುವರಿದನು. + “ಆದರೆ…. ನಮಗ್ಯಾರಿಗೂ…. ಅಷ್ಟೇನೂ…. ಮನಸ್ಸಿರಲಿಲ್ಲ…. + ಈಗ ಆಗಿದ್ದೆಲ್ಲ ಒಳ್ಳೇದ್ಕೇ ಆಯ್ತಲ್ಲ! …. ”  ಎಂದು ಹಲ್ಲು ಬಿಟ್ಟು ನಕ್ಕು, ತನ್ನ ಸಮ್ಮತಿಯನ್ನೂ ಸಂತೋಷವನ್ನೂ ಹೆಗ್ಗಡೆಯವರಿಗೆ ಮನದಟ್ಟಾಗುವಂತೆ ಸೂಚಿಸಿದನು. +“ಆಗ್ಲಿ ಹೋಗೋ…. +ಆದರೆ ಗುತ್ತೀನ ಮಾತ್ರ ಈಗ ಕರಕೊಂಡು ಹೋಗಬ್ಯಾಡ…. +ಗದ್ದೆ ಕೆಲಸ ಸುರುವಾಗ್ಯದೆ” ಎಂದು ಎಚ್ಚರಿಕೆ ಹೇಳಿ, ಹೆಗ್ಗಡೆ ಮುಂದೆ ನಡೆದು ಹಳುವಿನಲ್ಲಿ ಮರೆಯಾದರು. +ಭರಮೈಹೆಗ್ಗಡೆಯವರು ತಮ್ಮ ಸಾಧಾರಣ ಮನಃಸ್ಥಿತಿಯಲ್ಲಿ ಇದ್ದಿದ್ದರೆ ದೊಡ್ಬೀರನನ್ನು ಅಷ್ಟು ಸುಲಭದಲ್ಲಿ ಅಷ್ಟು ಶೀಘ್ರವಾಗಿ ಬಿಟ್ಟು ಹೋಗುತ್ತಿರಲಿಲ್ಲ. +ಅಷ್ಟು ಹೊಟ್ಟೆಯಡಿಯಾಗಿ ಅಡ್ಡಬಿದ್ದರೂ, ಕೈಮುಗಿದುಕೊಂಡೆ ಸೊಂಟಬಾಗಿ ಭಯಭಕ್ತಿಗಳಿಂದ ಮಾತನಾಡಿದ್ದರೂ ಅವನನ್ನು ಅಷ್ಟು ಸರಳವಾಗಿ ನಂಬುತ್ತಲೂ ಇರಲಿಲ್ಲ. +ತಾವು ಕೈಕೊಳ್ಳಬೇಕಾದ ಮುಂಜಾಗ್ರತೆಯ ಕಾರ್ಯಕ್ರಮಗಳನ್ನು ಕೈಕೊಳ್ಳದೆ ಬಿಡುತ್ತಿರಲಿಲ್ಲ. +ಆದರೆ ಅವರು ಅಂದು ಒಂದು ಅಸಾಧರಣ ಮನಃಸ್ಥಿತಿಯಲ್ಲಿದ್ದರು. +ಹೂವಳ್ಳಿ ವೆಂಕಪ್ಪನಾಯಕರ ಮಗಳನ್ನು, ತಾವು ಕೇಳುವುದೆ ತಡ, ಅನುಗ್ರಹ ಮಾಡಿದಂತಾಯಿತೆಂದು ದುಂಬಾಲು ಬಿದ್ದು ತಮಗೆ ಕೊಟ್ಟುಬಿಡುತ್ತಾರೆ ಎಂದು ಭಾವಿಸಿದ್ದರು ಸಿಂಬಾವಿ ಭರಮೈಹೆಗ್ಗಡೆ. +ವೆಂಕಟಣ್ಣನಂತಹ ಬಡವ ಮತ್ತು ಸಾಲಗಾರ, ಅವನ ಮನೆತನದ ಹಿಂದಿನ ದೊಡ್ಡಸ್ತಿಕೆ ಏನೆ ಆಗಿರಲಿ, ತಮ್ಮಂತಹ ಸಿರಿವಂತರೂ ಜಮೀನುದಾರರೂ ಬಯಸಿದ್ದಾರೆಂದು ಗೊತ್ತಾದರೆ, ತನ್ನ ಮಗಳನ್ನು ಮದುವೆ ಮಾಡಿಕೊಡಲು ಎಂದಾದರೂ ಹಿಂದೆ ಮುಂದೆ ನೋಡುತ್ತಾನೆಯೆ? +ಅಲ್ಲದೆ, ತೆರ ಕೊಡುವ ದೃಷ್ಟಯಿಂದಲಾದರೂ ತನಗಿಂತಲೂ ಹೆಚ್ಚು ಕೊಡುವವರು ಯಾರಾದರೂ ಇದ್ದರೆಯೆ?ಎಂಬುದು ಅವತ ಠೀವಿಯಾಗಿತ್ತು. +ಆದರೆ ಭರಮೈಹೆಗ್ಗಡೆಯವರ ಹೆಂಡತಿ ಜಟ್ಟಮ್ಮ ಹೆಗ್ಗಡಿತಿಯವರು ಮಧ್ಯಸ್ಥಗಾರರ ಮುಖಾಂತರ ಆ ಪ್ರಸ್ತಾಪವೆತ್ತಿದಾಗ ಹೂವಳ್ಳಿ ವೆಂಕಟಣ್ಣ ಏನೇನೊ ಸಬೂಬು ಹೇಳಿ ನುಣುಚಿಕೊಂಡಿದ್ದನು. +ಅವನು ಕೊಟ್ಟಿದ್ದ ಮುಖ್ಯ ಕಾರಣ, ಹುಡುಗಿಯ ಅಜ್ಜಿಗೆ ಇಷ್ಟವಿಲ್ಲ ಎಂದು. +ಕೋಣೂರು ಮುಕುಂದಯ್ಯ ತನ್ನನ್ನು ಒಂದು ದಿನ ಗುಟ್ಟಾಗಿ ಸಂಧಿಸಿ, ತನ್ನ ಮಗಳು ಚಿನ್ನಮ್ಮನನ್ನು ರೋಗಿಷ್ಠನೂ, ವಯಸ್ಸಾದವನೂ, ಮೊದಲ ಹೆಂಡತಿ ಇನ್ನೂ ಬದುಕಿರುವವನೂ ಆಗಿರುವ ಸಿಂಬಾವಿ ಹೆಗ್ಗಡೆಗೆ ಖಂಡಿತ ಕೊಡಬಾರದೆಂದು ಪ್ರಕಟವಾಗಿಯೂ, ತನಗೂ ಚಿನ್ನಮ್ಮಗೂ ಚಿಕ್ಕಂದಿನಿಂದಲೂ ಪರಸ್ಪರ ಅನುರಾಗವಿದ್ದು ಒಬ್ಬರನ್ನೊಬ್ಬರು ಒಪ್ಪಿರುವುದರಿಂದ ಆಕೆಯ ಮತ್ತು ತನ್ನ ಇಬ್ಬರ ಸುಖವೂ ಆಕೆಯನ್ನು ತನಗೇ ಕೊಟ್ಟು ಮದುವೆ ಮಾಡುವುದರಿಂದ ಸಾಧಿತವಾಗುತ್ತದೆ ಎಂದು ಇಂಗಿತವಾಗಿಯೂ, ಸೂಚಿಸಿದ್ದ ಏಕಾಂತ ವಿಷಯವನ್ನು ಮಾತ್ರ ವೆಂಕಟಣ್ಣ ಯಾರೊಡನೆಯೂ ಹೇಳಿರಲಿಲ್ಲ. +ಆದರೂ ಅದು, ಚಿನ್ನಮ್ಮನ ಮೇಲೆ ಮುಕುಂದಯ್ಯನಿಗಿದ್ದ ಮನಸ್ಸು, ಅಷ್ಟೇನೂ ರಹಸ್ಯವಿಷಯವಾಗಿ ಉಳಿದಿರಲಿಲ್ಲ. +ಆ ಸುದ್ದಿಗಾಳಿ ಭರಮೈ ಹೆಗ್ಗಡೆಯ ಕಿವಿಗೂ ಬೀಸಿತ್ತು. +ಗುಣದಿಂದ ಗೆಲ್ಲಲಾದುದನ್ನು ಹಣದಿಂದ ಗೆಲ್ಲಲಾರೆನೆ? +ಎಂಬ ಹಠದಿಂದ ಭರಮೈ ಹೆಗ್ಗಡೆ ಬೇರೆಯ ದಾರಿ ಹಿಡಿದಿದ್ದರು, ಚಿನ್ನಮ್ಮನ ತಂದೆಯನ್ನು ದಣಿಸಿ, ಸೋಲಿಸಿ, ವಶಪಡಿಸಿಕೊಳ್ಳಲು. +ಆ ವಿಚಾರವಾಗಿ ಕಲ್ಲೂರು ಸಾಹುಕಾರರಿಗೂ ಕಿವಿಮಾತು ಹೇಳಿ, ಅವರನ್ನೂ ಒಳಗೆ ಹಾಕಿಕೊಂಡಿದ್ದರು. +ಹೂವಳ್ಳಿಯ ಅಂಗಳದಲ್ಲಿ ಎದ್ದು ಓಡುವ ಭರದಲ್ಲಿ ಮುಂಡಿಗೆಗೆ ಹಾಯ್ದು, ಪೆಟ್ಟಾಗಿ, ಹಣೆಯೊಡೆದು, ರಕ್ತಸೋರಿ, ಅವಮಾನಿತನಾಗಿ ಹಿಂತಿರುಗಿದ ಲುಂಗೀಸಾಬು ಕಲ್ಲೂರು ಸಾಹುಕಾರರು ಮಂಜಭಟ್ಟರ ಕರಣಿಕರಾಗಿದ್ದ ಕಿಟ್ಟೈತಾಳರ ಮೂಖಾಂತರ ಸಾಹುಕಾರರ ಕಿವಿಯಲ್ಲಿ ಹೂವಳ್ಳಿ ವೆಂಕಪ್ಪನಾಯಕರ ಮೇಲೆ, ತನಗಾಗಿದ್ದ ಅವಮಾನಕ್ಕೆ ರಚ್ಚು ತೀರಿಸಿಕೊಳ್ಳುವ ಸಲುವಾಗಿ, ವಿಷವನ್ನೆ ಕಾರಿದ್ದನು. + “ಆ ಕಟ್ಟೈತಾಳ ನನಗೆ ಗೊತ್ತಿಲ್ಲೇನೋ? +ಹಾದರಗಿತ್ತಿ ಹೆಂಡತೀನೆ ಆಳಲಾರದೆ ಸಾಹುಕಾರರ ಮಗಗೆ ಗುತ್ತಿಗೆ ಕೊಟ್ಟಾಂವ, ಅಂವ ನನ್ನಾಟ ಹರಿಯೋದು ಅಷ್ಟರೊಳಗೆ ಇದೆ!” + “ನಿನ್ನ ಸಾಹುಕಾರ ಮಂಜಭಟ್ಟನನ್ನೂ ನಾ ಬಲ್ಲೆ, ಬಿಡು; + ಜುಗ್ಗ!ಹೇಲಿನಾಗೆ ಬಿದ್ದ ಕಾಸ್ನೂ ನಾಲಿಗೇಲಿ ನೆಕ್ಕೊಳ್ತಾನೆ!” + “ಹಡಬೇತಿರುಗೋ ಮಗನ್ನ ಸರಿಮಾಡಲಾರದೆ, ಆ ಬಡ ಸೊಸೇನ, ಮಾವನೂ ಅತ್ತೇನೂ ಸೇರಿಕೊಂಡು, ಕಾಲು ತಿರುಪಿ ಹೆಳವ ಮಾಡಿದಾರಲ್ಲಾ ಹಾಂಗಲ್ಲ…. +ನನ್ನ ಸುದ್ದಿ ಬಂದರೆ, ಅವನ ಜನಿವಾರ ಹರಿದು ಅವನ ಹೆಂಡ್ತೀನಾ….” +ಇಂತಹ ಬೈಗುಳವನ್ನೆಲ್ಲ ಸ್ಪಷ್ಟನೆ ಮಾಡಿ, ವೆಂಕಪ್ಪನಾಯಕರ ಮೇಲೆ ಹೇರಿ, ಕಿಟ್ಟೈತಾಳರನ್ನೂ ಮಂಜಭಟ್ಟರನ್ನೂ ಮೆಟ್ಟಿದ ಘಟಸರ್ಪಗಳನ್ನಾಗಿ ಕೆಣಕಿ ಛೂ ಬಿಟ್ಟನು ಲುಂಗೀಸಾಬಿ. +ಆ ಬೈಗುಳಗಳೆಲ್ಲ ಬರಿಯ ಭಾವೋಪಯೋಗದವುಗಳಾಗಿದ್ದಿದ್ದರೆ ಬೈಸಿಕೊಂಡವರು ಅಷ್ಟೊಂದು ರೇಗುತ್ತಿದ್ದರೋ ಇಲ್ಲವೋ? +ಆದರೆ ದುರದೃಷ್ಟವಶಾತ್ ಅವುಗಳಿಗೆ ಲೋಕ ಸಂವಾದವೂ ಇದ್ದುದರಿಂದ ಹಸಿಗಾಯದ ಮೇಲೆ ಬಿಸಿನೀರು ಹೊಯ್ದಹಾಗಾಗಿತ್ತು. +ಕಿಟ್ಟತಾಳನ ಹೆಂಡತಿ ಹಾದರಗಿತ್ತಿ ಎಂಬುದಾಗಲಿ, ಮಂಜಭಟ್ಟರ ಪೋಲಿ ಮಗ ತನ್ನ ಸಾತ್ವಿಕ ಶೀಲದ ಹೆಂಡತಿಯನ್ನು ನಿರ್ಲಕ್ಷಿಸಿ ಐತಾಳರ ಹೆಂಡತಿಯೊಡನೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬುದಾಗಲಿ, ಮಂಜಭಟ್ಟರೂ ಅವರ ಹೆಂಡತಿಯೂ ಸೇರಿ ಸೊಸೆಯ ಕಾಲು ಮುರಿದಿದ್ದಾರೆ ಎಂಬುದಾಗಲಿ – ವೆಂಕಟಪ್ಪನಾಯಕರಿಗೆ ಗೊತ್ತಿದ್ದ ವಿಷಯಗಳಾಗಿರಲಿಲ್ಲ; + ಅವೆಲ್ಲ ಹೊಕ್ಕು ಬಳಸುತ್ತಿದ್ದ ಲುಂಗೀಸಾಬುವಂತಹರಿಗೆ ಮಾತ್ರ  ತಿಳಿದಿದ್ದ ಗುಟ್ಟುಗಳಾಗಿದ್ದುವು. +ಆ ಅಂತಃಪುರದ ಅಂತರಂಗದ ರಹಸ್ಯಗಳನ್ನೆಲ್ಲ ಬಯಲಿಗೆಳೆದುದಕ್ಕಾಗಿ ವೆಂಕಟಪ್ಪನಾಯಕರ ಮೇಲೆ ಸೇಡು ತೀರಿಸಿಕೊಳ್ಳಲು ಉಗ್ರಕ್ರಮ ಕೈಗೊಳ್ಳಲು ನಿಶ್ಚಯಿಸಿದರು, ಭಟ್ಟರು ಮತ್ತು ಅವರ ಕರಣಿಕರು. +ಪರಿಣಾಮವಾಗಿ, ಒಂದು ದಿನ ಹೊತ್ತಾರೆ ಗಟ್ಟದಾಳೊಬ್ಬನು ಓಡೋಡಿ ಬಂದು ಹೂವಳ್ಳಿ ವೆಂಕಟಣ್ಣನಿಗೆ ಹೇಳಿದ, “ನಿಮ್ಮ ಗದ್ದೆಯನ್ನು ಯಾರೊ ಹತ್ತಿಪ್ಪತ್ತು ಜನರು ಎತ್ತು ನೇಗಿಲುಗಳೊಡನೆ ಬಂದು ಉಳತೊಡಗಿದ್ದಾರೆ” ಎಂದು. +ವೆಂಕಟಣ್ಣ ಹೋಗಿ ನೋಡುತ್ತಾನೆ. ಕಲ್ಲೂರು ಸಾಹುಕಾರ ಮಂಜಭಟ್ಟರ ಕರಣಿಕರಾಗಿದ್ದ ಕಿಟ್ಟೈತಾಳರೆ ಖುದ್ದು ನಿಂತು, ತನಗೆ ಸೇರಿದ್ದ ಗದ್ದೆಯನ್ನು ಸಾಗುವಳಿ ಮಾಡಲು ತೊಡಗಿದ್ದಾರೆ! +“ಏನು?ಏಕೆ?” ಎಂದು ಕೇಳಿದ್ದಕ್ಕೆ, “ಸಾಹುಕಾರರ ಅಪ್ಪಣೆಯಾಗಿದೆ, ಅದರಂತೆ ನಾವು ಕೆಲಸ ಮಾಡುತ್ತಿದ್ದೇವೆ. +ನೀವು ಏನು ಹೇಳಿಕೊಳ್ಳುದಿದ್ದರೂ ಅವರ ಹತ್ತಿರವೆ ಹೋಗಿ ಹೇಳಿಕೊಳ್ಳಿ” ಎಂದುಬಿಟ್ಟರು. +ಮಾತಿಗೆ ಮಾತು ಮಸೆಯಿತು. +ಊಳುವುದನ್ನು ತಡೆಯಲು ಹೋಗಿ, ಎತ್ತಿನ ಮೂಗುದಾರವನ್ನು ಹಿಡಿದು ನಿಲ್ಲಿಸಿದ ವೆಂಟಣ್ಣನನ್ನು ಲುಂಗೀಸಾಬು, ಇಜಾರದ ಸಾಬು, ಅಜ್ಜೀಸಾಬು ಮೂವರೂ ಸೇರಿ ಇತರ ಆಳುಗಳ ಬೆಂಬಲದೊಡನೆ ಹೊಡೆದು ಗದ್ದೆಯಿಂದಾಚೆಗೆ ನೂಕಿದರು. +ಹೊಡೆದಾಟದಲ್ಲಿ ಎರಡು ಕಡೆಯವರಿಗೂ ಪೆಟ್ಟು ಬಿದ್ದು ನೆತ್ತರು ಸೋರಿತು. +ಆ ದೊಂಬಿಯ ವಾರ್ತೆ ಕೋಣೂರು ರಂಗಪ್ಪಗೌಡರಿಗೆ ತಲುಪಿ, ಅವರು ಮುಕುಂದಯ್ಯನನ್ನೂ ಕರೆದುಕೊಂಡು ಕೆಲವು ಆಳುಗಳೊಡನೆ ಸ್ಥಳಕ್ಕೆ ಧಾವಿಸಿಬಂದರು. +ಎದುರುಪಕ್ಷಕ್ಕೆ ಸೇರಿದವರು ಬಹಳ ಜನ ಬಂದುದನ್ನು ಕಂಡು ನರಿಬುದ್ದಿಯ ಐತಾಳರು, ನಮಸ್ಕಾರ ಪೂರ್ವಕವಾಗಿ ಕೋಣೂರು ರಂಗಪ್ಪಗೌಡರನ್ನು ಸ್ವಾಗತಿಸಿ, ಅಂಧಾನ ನಡೆಸಿದರು. +ಹೂವಳ್ಳಿ ವೆಂಕಟಪ್ಪನಾಯಕರು ತಮ್ಮ ಜಮೀನನ್ನೆಲ್ಲ ಕಲ್ಲೂರು ಸಾಹುಕಾರರಿಗೆ ಕ್ರಯಕ್ಕೆ ಬರೆದುಕೊಟ್ಟಿರುವುದರಿಂದ ಅವರಿಗೆ ಸೇರಿರುವ ಜಮೀನಿನ ಬೇಸಾಯಕ್ಕೆ ಅವರು ಏರ್ಪಾಡು ಮಾಡಿರುವರೆಂದೂ, ಅದರ ತೀರ್ಮಾನ ಅವರಿಗೇ ಸೇರಿದ್ದೆಂದೂ, ತಾನಾಗಲಿ ಬೇಸಾಯದ ಕೆಲಸಕ್ಕೆ ಬಂದಿರುವ ಆಳುಗಳಾಗಲಿ ಹೊಣೆಯಲ್ಲವೆಂದೂ ತಿಳಿಸಿದರು. +ರಂಗಪ್ಪಗೌಡರು ಗದ್ದೆಯಂಚಿನ ಮೇಲೆಯೆ ಸಂಬಂಧಪಟ್ಟವರೆಲ್ಲರನ್ನೂ ಕೂರಿಸಿಕೊಂಡು ಪಂಚಾಯಿತಿ ನಡೆಸಿದರು. +ಅದರ ಪರಿಣಾಮವಾಗಿ ಕಿಟ್ಟೈತಾಳರು ಆಳು ಎತ್ತು ನೇಗಿಲುಗಳನ್ನೆಲ್ಲ ವಾಪಾಸು ಕಳಿಸಿ. +ಇನ್ನೊಂದು ವಾರದೊಳಗಾಗಿ ವೆಂಕಟಪ್ಪನಾಯಕರು ಸಾಹುಕಾರರಲ್ಲಗೆ ಬಂದು ಯಾವುದನ್ನೂ ಇತ್ಯರ್ಥಮಾಡಿ ಕೊಳ್ಳಬೇಕೆಂದೂ, ತಡಮಾಡಿದರೆ ಮಳೆ ಹಿಡಿಯುವುದರೊಳಗೆ ಗದ್ದೆಯ ಬೇಸಾಯಕ್ಕೆ ತೊಡಗುವುದಾಗಿಯೂ ತಿಳಿಸಿ ಹಿಂದಿರುಗಿದರು. +ಐತಾಳರು ಹೋದಮೇಲೆ ರಂಗಪ್ಪಗೌಡರು ವಿಚಾರಿಸಿದರು. +ಹೂವಳ್ಳಿ ವೆಂಕಟಣ್ಣ ತನಗೆ ಭಟ್ಟರಲ್ಲಿದ್ದ ಸಾಲದ ಮೊತ್ತವನ್ನು ತಿಳಿಸಿ, ನಂಬಿಕೆ ಕ್ರಯ ಬರೆದುಕೊಟ್ಟಿದ್ದನ್ನು ನಿಜಕ್ರಯವೆಂದೇ ಮೋಸ ಮಾಡಿದ್ದಾರೆಂದು ಅವರನ್ನು ನಿಂದಿಸತೊಡಗಿದನು. +ಭಟ್ಟರು ಸಾಹುಕಾರರಾದ ವಂಚನೆಯ ರೀತಿಗಳನ್ನು ವೆಂಕಟಣ್ಣನ ನೆನಪಿಗೆ ತಂದುಕೊಟ್ಟು ‘ಅವರ ಹತ್ತಿರ ಹೋದವರು ಅನೇಕರು ಹಾಳಾಗಿದ್ದಾರೆ. +ನೀನು ಹೇಗಾದರೂ ಉಪಾಯದಿಂದ ಪಾರಾಗದಿದ್ದರೆ ನಿನ್ನ ಜಮೀನು ಉಳಿಯುವುದಿಲ್ಲ’ ಎಂದು ರಂಗಪ್ಪಗೌಡರು ಎಚ್ಚರಿಕೆ ಹೇಳಿದ್ದಕ್ಕೆ ವೆಂಕಟಣ್ಣ ನರಿನಗೆ ನಗುತ್ತಾ ಕಣ್ಣು ಮಿಂಚಿಸಿ ಹೇಳಿದನು. + “ಕಾನೂನು ಪರ್ಕಾರ ಅವರು ನನ್ನ ಜಮೀನು ದಕ್ಕಿಸಿಕೊಳ್ಳಾದು ಅಷ್ಟೇನು ಸುಲಭ ಅಲ್ಲಾ! +ಅವರಿಗೆ ಬರಕೊಡಾಕೆ ಮುಂಚೇನೆ ಅದರಲ್ಲಿ  ಸುಮಾರು ಪಾಲು ಗದ್ದೆ ತೋಟಾನ ಬೆಟ್ಟಳ್ಳಿ ಗೌಡರಿಗೆ, ಹಳೆಮನೆ ಹೆಗ್ಗಡೇರಿಗೆ, ಸಿಂಬಾವಿ ಹೆಗ್ಗಡೇರಿಗೆ ಎಲ್ಲ ದೀಡು, ಭೋಗ್ಯ, ಕ್ರಯ ಎಲ್ಲಾ ಮಾಡಿಟ್ಟೀನಿ! …. +ಅವರಲ್ಲೂ ಹತ್ರಾನೂ ಸುಮಾರು ಸಾಲ ಅದೆ ನನಗೆ!” +ಹೊರನೋಟಕ್ಕೆ ಸ್ಥೂಲಕಾಯವಾಗಿ ಸ್ಥೂಲಮತಿಯಾಗಿ ತೋರುತ್ತಿದ್ದ ವೆಂಕಟಣ್ಣನ ದಪ್ಪಬುದ್ದಿಯ ಚಪ್ಪಡಿಬೆಪ್ಪಿನ ಅಡಿಯಲ್ಲಿ ಎಂತೆಂತಹ ವಿಷದ ಹಾವು ಚೇಳು ಮನೆಮಾಡಿ ಅಡಗಿಕೊಂಡಿವೆ ಎಂಬುದನ್ನರಿತು ರಂಗಪ್ಪಗೌಡರಿಗೂ ಮುಕುಂದಯ್ಯನಿಗೂ ಬೆರಗುಬಡಿದಂತಾಯಿತು. +‘ಈ ಮನುಷ್ಯ ಏನು ಬೇಕಾದರೂ ಮಾಡಲು ಸಿದ್ಧ!’ ಎಂದುಕೊಂಡರು ಮನಸ್ಸಿನಲ್ಲಿಯೆ. +ಅವನು ಚಿನ್ನಮ್ಮನ ತಂದೆ ಎಂಬುದನ್ನು ಗ್ರಹಿಸಿದ ಮುಕುಂದಯ್ಯನ ಹೃದಯದಲ್ಲಿ ಏತಕ್ಕೊ ಏನೊ ಭೀತಿಸಂಚಾರದ ಅನುಭವವಾಯಿತು. +ಮಂಜಭಟ್ಟರ ಸಾಲಕ್ಕೆ ರಂಗಪ್ಪಗೌಡರು ಜಾಮೀನು ನಿಂತು ನಂಬಿಕೆಯ ಕ್ರಯಪತ್ರವನ್ನು ಬಿಡಿಸಿಕೊಡಬೇಕೆಂದು ವೆಂಕಟಣ್ಣ ಮುಗ್ಧಭಂಗಿಯಿಂದ ಸೂಚಿಸಲು ರಂಗಪ್ಪಗೌಡರು ಹೌಹಾರಿ “ಎಲ್ಲಾರು ಉಂಟೆ, ಮಾರಾಯ? +ಹೊಳೇಲಿ ಮುಳುಗೋನ್ನ ಎತ್ತಿಕೊಂಡು ಬರ್ತಿನಿ ಅಂತಾ ಮೀಸು ಬರದ ಮೂಳ ಹೊಳೀಗೆ ಹಾರದ್ಹಂಗೆ ಆದಾತು!” ಎಂದು ನಿರಾಕರಿಸಿದರು. +ವೆಂಕಟಣ್ಣ ಮುಕುಂದಯ್ಯನ ಕಡೆ ಸಹಾಯ ಯಾಚನೆಯ ನೋಟ ಬೀರಿದಾಗ, ಅವನು ತಾನು ಅಣ್ಣನ ಅಧೀನನಾಗಿರುವುದರಿಂದ ಏನನ್ನೂ ಸ್ವತಂತ್ರಿಸಿ ಮಾಡಲಾರೆ ಎಂಬುದನ್ನು ಸೂಚಿಸುವಂತೆ ನೆಲದ ಕಡೆ ನೋಡತೊಡಗಿದ್ದನು. +ಆದಿನ ರಾತ್ರಿಯೆ ಚಿನ್ನಮ್ಮನ ಬಾಳಿನಹಣೆಬರಹ ನಿರ್ಣಯವಾದದ್ದು. +ಮುಕುಂದಯ್ಯನದೂ ಕೂಡ! +ಮಂಜಭಟ್ಟರ ಮೊಸಳೆಬಾಯಿಂದ ಹೇಗೆ ತಪ್ಪಿಸಿಕೊಳ್ಳುವುದು?ಎಂದು ನಿದ್ದೆಯಿಲ್ಲದೆ ಯೋಚಿಸುತ್ತಾ ಮಲಗಿದ್ದ ವೆಂಕಟಣ್ಣನಿಗೆ ತನ್ನನ್ನು ಸದ್ಯದ ಕಷ್ಟದಿಂದ ಪಾರುಮಾಡಲು ಶಕ್ತವಾಗಿ ತೋರಿದ್ದೆಂದರೆ ಒಂದೇ ಒಂದು ದಾರಿ. +ಎಷ್ಟಾದರೂ ತೆರಕೊಟ್ಟು ತನ್ನ ಮಗಳನ್ನು ಮದುವೆಯಾಗಲು ಉತ್ಸುಕರಾಗಿದ್ದ ಸಿಂಬಾವಿ ಭರಮೈಹೆಗ್ಗಡೆಯವರನ್ನೆ ಜಾಮೀನು ನಿಲ್ಲಲು ಕೇಳಿ, ಅವರು ಒಪ್ಪಿದರೆ, ಕೃತಜ್ಞತಾರೂಪವಾಗಿ ಅವರನ್ನೆ ಅಳಿಯನನ್ನಾಗಿ ಮಾಡಿಕೊಳ್ಳುವುದು! +ತಮ್ಮ ಭಾವಿ ಮಾವನ ಆ ನಿಶ್ಚಯದ ಪರಿಣಾಮವಾಗಿಯೆ, ಅಂದು ಸಿಂಬಾವಿ ಹೆಗ್ಗಡೆಯವರು ಕಲ್ಲೂರು ಮಂಜಭಟ್ಟರಲ್ಲಿಗೆ ಹೊರಟಿದ್ದರು. +ಆದ್ದರಿಂದಲೆ ಅವರು ಅಸಾಧಾರಣ ಮನಸ್ಥಿತಿಯಲ್ಲಿದ್ದದ್ದು. +ದೊಡ್ಡಬೀರನ ದೀರ್ಘದಂಡ ನಮಸ್ಕಾರಕ್ಕೂ ಸೊಂಟಬಾಗಿನ ಮತ್ತು ಕೈ ಮುಗಿಹದ ಮರುಳು ಮಾತಿಗೂ ಒಳಗಾಗಿ, ಮದುಮಗಳು ತಿಮ್ಮಿಯನ್ನು ಅವಳ ತವರಿಗೆ ನೆಂಟರುಪಚಾರಕ್ಕಾಗಿ ಕರೆದುಕೊಂಡು ಹೋಗಬಹುದೆಂದೂ, ಬೇಗನೆ ಗಂಡನ ಮನೆಗೆ ಹಿಂದಕ್ಕೆ ಕಳುಹಿಸಿಕೊಡಬೇಕೆಂದೂ ಹೇಳಿ, ಒಪ್ಪಿಗೆ ಕೊಟ್ಟದ್ದು! +ಹಡಬೆ ತಿರುಗುವ ಚಾಳಿಯ ಮಗನ ತಂದೆಯಾಗಿ, ಸೊಸೆ ಕಾಲನ್ನೆ ತಿರುಪಿ ಹಾಕಿದ್ದ ಸಾಹುಕಾರ ಮಂಜಭಟ್ಟರಿಗೆ ಶೂದ್ರತ್ವವೊಂದರಿಂದ ಮಾತ್ರವೆ ಬೇರೆಯಾಗಿ, ಉಳಿದುದೆಲ್ಲದರಲ್ಲಿಯೂ ತದ್ರೂಪಗುಣ ಸದೃಶರಾಗಿದ್ದ ಹೆಗ್ಗಡೆಯವರು ಅಂದು ಅವರಿಗೆ ಎಷ್ಟು ಕೃತಜ್ಞರಾಗಿದ್ದರೆಂದರೆ, ಎಳೆಹರೆಯದ ನವವಧುವಿನ ಪಾಣಿಗ್ರಹಣ ಮಾಡಿ, ಆಗಳೆಯ ಮಧುಮಂಚಕ್ಕೆ ಅವಳನ್ನೂ ಒಯ್ಯುತ್ತಿದ್ದಾರೆಯೊ ಎಂಬಂತೆ, ಮಹಾ ಉದಾರ ಮನಸ್ಕರಾಗಿದ್ದರು, ತಮ್ಮ ಎಂದಿನ ಹುಟ್ಟುಗುಣವಾದ ಕೃಪಣ ಬುದ್ದಿಯ ಜಾಗರೂಕತೆಯಿಂದಲೂ ದೂರವಾಗಿ ಲಕ್ಕುಂದಕ್ಕೂ ಸಿಂಬಾವಿಗೂ ನಡುವೆ ಅಡ್ಡಲಾಗಿದ್ದ ಸೀತೂರು ಗುಡ್ಡದ ಒಂದು ತೋಳಿನಲ್ಲಿ, ಹಿಂದೊಮ್ಮೆ ಅಂದು ಹಳೆಮನೆಯ ಸುಬ್ಬಣ್ಣ ಹೆಗ್ಗಡೆಯವರಿಗೆ ಸಿಂಬಾವಿ ಭರಮೈ ಹೆಗ್ಗಡೆಯವರು ಬರೆದುಕೊಟ್ಟಿದ್ದ ಕಾಗದವನ್ನು ಹೊತ್ತಿದ್ದ ಗುತ್ತಿ ಬಿರುಮಳೆಯಿಂದ ನೆರೆಯುಕ್ಕಿ ಹರಿಯುತ್ತಿದ್ದ ಹಳ್ಳವನ್ನು ದಾಟಲಾರದೆ ಅದರ ‘ಹೆಣಾಕಾಯ್ತಾ’ ಕುಳಿತಿದ್ದ ದಿಬ್ಬಕ್ಕೆ ಹಿಂದೆಯೆ, ಮೇಲಕ್ಕೆ, ಸುಮಾರು ಎರಡು ಫರ್ಲಾಂಗು ದೂರದಲ್ಲಿದ್ದ ಗುಡ್ಡದೆತ್ತರದ ಭುಜಪ್ರದೇಶದಲ್ಲಿ, ಕಾಡು ಒಂದು ಹತ್ತು ಮಾರು ಬಯಲಾಗಿ ತುಸು ಇಳಿಜಾರಾಗಿದ್ದ ಕಿರುಹಕ್ಕಲಿನಲ್ಲಿ  ಹಾದುಹೋಗುತ್ತಿದ್ದ ಕಾಳುದಾರಿಯ ಪಕ್ಕದಲ್ಲಿದ್ದ ಒಂದು ಕುನ್ನೇರಿಳೆಯ ಮಟ್ಟಿಗೆ ಕಟ್ಟಿಕೊಂಡು ನಿಂತಿತ್ತು. +ಅಷ್ಟೇನೂ ಪುಷ್ಟವಲ್ಲದ ಸಾಧಾರಣ ಜಾತಿಯ ಒಂದು ಕುದುರೆ, ಆ ಕುದುರೆಯ ಬಳಿಯಾಗಲಿ ಸಮೀಪದಲ್ಲಾಗಲಿ ಯಾರೂ ಕಾಣಿಸುತ್ತಿರಲಿಲ್ಲ. +ನಿರ್ಜನವಾಗಿದ್ದ ಆ ಮಲೆಗಾಡಿನ ಪಕ್ಷಿಕೂಜನ ವಿನಾ ನಿಃಶಬ್ದತೆಯಲ್ಲಿ, ವಿಶೇಷವಾಗಿ ನಗರ ನಾಗರಿಕತೆಯ, ಸಮರ ಸಾಹಸವಲಯದ, ವ್ಯಾಪಾರ ವಾಣಿಜ್ಯ ಜನಜಂಗುಳಿಯ ಮತ್ತು ರಾಜಸ್ಥಾನ ವೈಭವ ಕ್ಷೇತ್ರದ ಸಂಬಂಧಿಯಾಗಿದ್ದ ಆ ಪ್ರಾಣಿ ವಿದೇಶಿಪ್ರವಾಸಿಯಂತೆ ವಿಚಿತ್ರವಾಗಿ ತೋರುತ್ತಿತ್ತು. +ಅದು ತನಗೆ ಅನ್ವಯವಾಗುವ ಸನ್ನೇವೇಶದಲ್ಲಿ ಇರುವಂತೆ ತೋರುತ್ತಿರಲಿಲ್ಲ. +ಹಿಂಡುತಪ್ಪಿಯೂ ದಿಕ್ಕುತಪ್ಪಿಯೊ ಬಂದಂತಿತ್ತು. +ಮಲೆನಾಡಿನ ಆ ಕಾಡುಬೆಟ್ಟಗಳಿಗೆ ಕುದುರೆಗಳೇನೂ ಅಪರಿಚಿತ ಪ್ರಾಣಿಗಳಾಗಿರಲಿಲ್ಲ, ಸುಮಾರು ಅರ್ಧಶತಮಾನದ ಹಿಂದೆ! +ನಗರ, ಇಕ್ಕೇರಿ, ಕೌಲೆದುರ್ಗ ಮೊದಲಾದ ಸಂಸ್ಥಾನಗಳೂ ಪಾಲೇಯಪಟ್ಟುಗಳೂ ಪ್ರಬಲವಾಗಿದ್ದ ಕಾಲದಲ್ಲಿ ಸೈನಿಕ ಅಶ್ವಗಳ ಹೇಷಾರವದಿಂದಲೂ ಖುರಪುಟಧ್ವನಿಗಳಿಂದಲೂ ಆ ಕಾಡುಬೆಟ್ಟಗಳು ಅನುಕರಣಿತವಾಗಿದ್ದುವು! +ಆದರೆ ಈಗ, ಬ್ರಿಟಿಷರ ಸಾಮ್ರಾಜ್ಯ ಸ್ಥಾಪನೆಯಾಗಿ, ಹಿಂದಿದ್ದ ಅರಸಿಕೆ ಪಾಳೆಯಗಾರಿಕೆಗಳೆಲ್ಲ ಮಣ್ಣು ಪಾಲಾಗಿ, ಸಹ್ಯಾದ್ರಿ ಶ್ರೇಣಿಯ ಆರಣ್ಯಕ ರಂಗದಲ್ಲಿ ಸ್ಮಶಾನ ಮೌನ ವ್ಯಾಪಿಸಿದಮೇಲೆ, ಕುದುರೆ ಎಲ್ಲಿ ಅಪೂರ್ವ ವಸ್ತುವಾಗಿತ್ತು; ಸ್ವಲ್ಪ ಮಟ್ಟಗೆ ವಿದೇಶೀಯವೂ ಆಗಿದ್ದಂತೆ ತೋರುತ್ತಿತ್ತು. +ದನ, ಎತ್ತು, ಹುಲಿ, ಮಿಗ, ಕಡ, ಕುರ್ಕ, ಬರ್ಕ, ಮೊಲ, ಮುಂಗುಸಿ,ನವಿಲು, ಹೊರಸಲು, ಕಾಜಾಣ, ಪಿಕಳಾರ, ಕಾಡುಕೋಳಿ, ಕೆಣೆಹಂದಿ ಮೊದಲಾದ ಜಂತುಗಳಂತೆ ಸ್ಥಳೀಯವಾಗಿರಲಿಲ್ಲ. +ತಾವು ಕಟ್ಟಿದ್ದ ಸಾಮ್ರಾಜ್ಯವನ್ನು ಕಳೆದುಕೊಂಡಿದ್ದರೂ, ಅದರ ದೌಲತ್ತಿನ ಅವಶೇಷರೂಪವಾಗಿ ಸಾಬರು ಮಾತ್ರವೆ ವಿಶೇಷವಾಗಿ ಹೊರೆಹೊರಲೂ ಕಾಡುಮೇಡುಗಳ ಇಕ್ಕಟ್ಟಿನ ಕಾಲುದಾರಿಯಲ್ಲಿ ಸಂಚರಿಸಲೂ ಉಪಯೋಗಿಸುತ್ತಿದ್ದ ಬಡಕಲು ಪ್ರಾಣಿಯಾಗಿ ಉಳಿದಿತ್ತು. +ಅದಕ್ಕೆ ಹಿಂದಿನ ಔನ್ನತ್ಯವಾಗಲಿ ವೇಗಪಟುತ್ವವಾಗಲಿ ಠೀವಿಯಾಗಲಿ ತೇಜಸ್ಸಾಗಲಿ ಇನಿತೂ ಇರಲಿಲ್ಲ. +ಹಯ, ಅಶ್ವ, ವಾರುವ, ತೇಜಿ ಇತ್ಯಾದಿ ವೈಭವದ ಮತ್ತು ಗೌರವದ ಹೆಸರುಗಳಿಗಿರಲಿ, ಕುದುರೆ ಎಂಬ ಹೆಸರಿಗೂ ಅದು ಯೋಗ್ಯವಾಗಿರಲಿಲ್ಲ; +ಆ  ಹೆಸರಿಗೂ ಅದು ಬೆದರಿ ಹಿಂಜರಿಯುತ್ತಿತ್ತು. +ಆದ್ದರಿಂದಲೆ ಅದಕ್ಕೆ ನಾಚಿಕೆಯಾಗಿ ಕುಗ್ಗದಿರಲಿ ಎಂದು ಅಲ್ಲಿಯ ಜನಸಾಮಾನ್ಯರು ಅದನ್ನು ‘ಸಾಬರ ತಟ್ಟು’ ಎಂಬ ಸುಸಾಮಾನ್ಯಮಾನದಿಂದಲೆ ಕರೆಯುತ್ತಿದ್ದರು. +ಒದಗಿಬಂದಿದ್ದ ಅವನತಿಯಲ್ಲಿ ಅವರೂ ಕುದುರೆಯೊಡನೆ ಸಮಪಾಲುದಾರರಾಗಿದ್ದರಲ್ಲವೆ? +ಅಲ್ಲಿ ನಿಂತಿದ್ದುದೂ ಜಾತಿಯಲ್ಲಿ ಕುದುರೆಯಾಗಿದ್ದರೂ ಸ್ಥಿತಿಯಲ್ಲಿ ಸಾಬರ ತಟ್ಟೆ ಆಗಿತ್ತು. +ಮೇಗರವಳ್ಳಿಯ ಚಮಡ ಸಾಗಿಸುವ ಅಜ್ಜೀಸಾಬು ಹೇರಿಗೂ ಫೇರಿಗೂ ಬಳಸುತ್ತಿದ್ದ ತಟ್ಟಿಗಿಂತ ತುಸು ಉತ್ತಮವಾಗಿತ್ತು ಎನ್ನಬಹುದು. +ಅದಕ್ಕೂ ಹೆಸರಿಗೆ ಒಂದು ಕಡಿವಾಣ, ಲಗಾಮು, ಜೀನು ಎಲ್ಲ ಇದ್ದಂತಿತ್ತು. +ಪಕ್ಕೆಲುಬು ತುಸು ಇಣುಕುವಂತಿದ್ದ ಬೆನ್ನಿನ ಮೇಲೆ ಇಕ್ಕೆಲಗಳಲ್ಲಿಯೂ ಅಮಾನು ತುಂಬಿ ಜೋತುಬಿದ್ದಿದ್ದ ಹಸುಬೆ ಚೀಲವೂ ಇತ್ತು. +ಯಾರಾದರೂ ಪಕ್ಕದಲ್ಲಿದ್ದ ಕಾಳುದಾರಿಯಲ್ಲಿ ಹಾದುಹೋಗಿದ್ದರೆ, ಅವರ  ಮೂಗಿಗೇ ಗೊತ್ತಾಗುತ್ತಿತ್ತು ಹಸುಬೆಚೀಲದ ಒಳಗಿದ್ದ ಪ್ರಧಾನವಸ್ತು ಯಾವುದು ಎಂದು. +ಸ್ವಾರ್ಲು ಮತ್ತು ಬಂಗಡೆ ಮೀನಿನ ಗಬ್ಬುವಾಸನೆಯೊಡನೆ ಕುದುರೆಯ ಲದ್ದಿಯ ಮತ್ತು ಉಚ್ಚೆಯ ಕಟುದುರ್ವಾಸನೆಯೂ ಕೂಡಿದ್ದನ್ನೂ ನೋಡಿದರೆ ಅಲ್ಲಿ ಬಹಳ ಹೊತ್ತಿನಿಂದಲೊ ಕಟ್ಟುಗೊಂಡಿದೆ ಎಂಬುದನ್ನೂ ಊಹಿಸಬಹುದಾಗಿತ್ತು. +ಅದಕ್ಕೂ ನಿಂತೂ ನಿಂತೂ ಬೇಜಾರಾಗಿ ಹಿಂಗಾಲುಗಳನ್ನು ಒಮ್ಮೆ ಬಲಕ್ಕೆ ಒಮ್ಮೆ ಎಡಕ್ಕೆ ಎತ್ತಿ ಎತ್ತಿ ಇಟು ಕಿನಿಸಿಗೆಯನ್ನು ಪ್ರದರ್ಶಿಸುತ್ತಿತ್ತು. +ಅಲ್ಲದೆ ಆಗೊಮ್ಮೆ  ಈಗೊಮ್ಮೆ ಕಾಡಿನ ಇಳಿಜಾರದ ಕಡೆ ಕತ್ತು ತಿರುಗಿಸಿ ನೋಡಿ ಕೆನೆಯುತ್ತಲೂ ಇತ್ತು. +ಅದು ಕೆನೆತ ಆ ಕಾಡಿನ ಸದ್ದಿಲಿತನದಲ್ಲಿ ಬಹುದೂರದವರೆಗೂ ಸಂಚರಿಸುತ್ತಿತ್ತು. +ಅದು ಕೆನೆದಾಗಲೆಲ್ಲ ಸುತ್ತ ಹತ್ತಿರದ ಮರಗಳಲ್ಲಿದ್ದ ಕಾಡು ಹಕ್ಕಿಗಳು ಗಾಬರಿಗೊಂಡು ಕೂಗಿಕೊಂಡು ಹಾರುತ್ತಿದ್ದುವು. +ಬೇಜಾರಿನ ಜೊತೆಗೆ ನೆತ್ತರು ಹೀರುವ ಕಾಡುನೊಣಗಳ ಪೀಡನೆಯೂ ಸೇರಿ, ಅವುಗಳನ್ನೋಡಿಸಲು ಚವರಿಬಾಲ ಬೀಸುವುದರ ಜೊತೆಗೆ ಗೊರಸಿನಿಂದ ನೆಲವನ್ನೊದ್ದು ಕುದುರೆ ಮೈಯಲ್ಲಾಡಿಸಿ ಕುಣಿಯುತ್ತಿತ್ತು. +ಹಾಗೆ ಕುಣಿದಾಗಲೆಲ್ಲ ಅದರ ನೆತ್ತಿಯ ಜುಲ್ಪಿನ ಕೆಳಗೆ, ಕೆಂಬರು ಹಣೆಯ ಬಿಳಿಯ ದಾಸಪಟ್ಟೆಯ ಮೇಲೆ, ಅಲಂಕಾರಾರ್ಥವಾಗಿ ಇಳಿಬಿಟ್ಟಿದ್ದ ಗೆಜ್ಜೆಯ ಕುಚ್ಚಿನಿಂದ ಗಲಿರು ಗಲಿರೆಂದು ಕಿಂಕಿಣಿಯಾದ ಹೊಮ್ಮುತ್ತಿತ್ತು. +ಅದರ ಒಡೆಯನ ವ್ಯಾಪಾರ ಬುದ್ದಿಯ ಯಾವುದೊ ಒಂದು ಮೂಲೆಯಲ್ಲಿದ್ದ ಷೋಕಿಗೂ ಸಾಕ್ಷಿಯಾಗಿ! +ಇದಕ್ಕಿದ್ದಹಾಗೆ ಕುದುರೆ ಕಿವಿಗಳನ್ನು ಕತ್ತರಿಎಬ್ಬಿಸಿ, ಕಾಡಿನ ಹಳುವಿನಲ್ಲಿ ಇಳಿದು ಹೋಗಿದ್ದ ಕಾಲುದಾರಿಯ ಕಡೆ ಕತ್ತುಕೊಂಕಿಸಿ ನೋಡತೊಡಗಿತು, ಯಾರೊ ಮಾತನಾಡುಕೊಳ್ಳುತ್ತಾ ಗುಡ್ಡ ಹತ್ತಿ ಬರುತ್ತಿದ್ದ ಗೊಣಗೊಣ ಸದ್ದು ಹತ್ತಿರ ಹತ್ತಿರವಾಗುತ್ತಾ ಬಂದು, ದಾರಿಯಲ್ಲಿ ಸಿಕ್ಕಿದ್ದ ಹೆಗ್ಗಡೆಯವರನ್ನು ಬೀಳುಕೊಂಡು ಸಿಂಬಾವಿಯ ಕೇರಿಗೆ ಹೊರಟಿದ್ದ ಬೆಟ್ಟಳ್ಳಿ ದೊಡ್ಡಬೀರನ ತಲೆಗಳು ಒಂದರ ಹಿಂದೆ ಒಂದು, ಸಾಲಾಗಿ ಕಾಣಿಸಿಕೊಂಡುವು. +ಕುದುರೆ ನೀಡುತ್ತಿದ್ದಂತೆಯೆ ಎದೆ, ಹೊಟ್ಟೆ, ಸೊಂಟ, ಕಾಲು ಗೋಚರವಾಗಿ, ಆ ನಾಲ್ಕು ಮನುಷ್ಯರೂ ಸಮೀಪಿಸಿದರು. +ತನ್ನ ಒಡೆಯನಿಗಾಗಿ ಕಾದೂ ಕಾದೂ ಅವನೇ ಬಂದನೇನೋ ಎಂದು ನಿರೀಕ್ಷಿಸಿದ್ದ ಆ ಪ್ರಾಣಿಗೆ ತುಂಬ ನಿರಾಶೆಯಾದಂತಾಗಿ ಮುಖ ಇಳಿಸಿ ತಟಸ್ಥಭಂಗಿಯಲ್ಲಿ ನಿಂತುಕೊಂಡಿತು. +“ಇದೇನೋ?ಅಜ್ಜೀಸಾಬರ ತಟ್ಟು?ಇಲ್ಲಿ?” +“ಅಜ್ಜೀ ಸಾಬರದಲ್ಲೋ, ಮೇಗ್ರೊಳ್ಳಿ ಕರೀಮೀನು ಸಾಬರದ್ದು ಅಂತ ಕಾಣ್ತದೆ.” +“ಯಾರ ಹಿತ್ತಲ ಕಬ್ಬೋ? +ಯಾರ ತ್ವಾಟದ ಬಾಳೆಕೊನೇನೋ? +ಲೂಟಿಯಾಗ್ತಿರಬೈದು!” +“ಅಂತೂ ಈ ಸಾಬರ ತಂಡದ ದೆಸೆಯಿಂದ ಸುಖಾ ಇಲ್ಲ.” +“ಆ ದುಣ್ಣಮುಂಡೇಗಂಡ!ಇಜಾರದ ಸಾಬಿ! +ಅಂವನ್ನ ಯಾರಾದರೂ ಕಡಿದು ಹಾಕಿದ್ರೆ, ಉಂದು ಹಂಡೇ ಹಾಲು ಕುಡೀತಿದ್ದೆ!” +ಪ್ರತೀಕಾರ ಮಾಡಲಾರದ ಸಿಟ್ಟಿನಿಂದ ಸಣ್ಣಬೀರ ಹೇಳಿದ್ದನ್ನು ಕೇಳಿ ನಕ್ಕು ಅವನ ತಂದೆ ದೊಡ್ಡಬೀರ ವಿಷಯದ ಕಟುತ್ವವನ್ನು ವಿನೋದದಿಂದ ಕಡಿಮೆ ಮಾಡಲೆಂಬಂತೆ ಹೇಳಿದನು. +“ಎಲ್ಲಿಂದ ತರ್ತಿಯೋ ಅಷ್ಟೊಂದು ಹಾಲ್ನ? +ನಿನ್ನ ಹೇಣ್ತಿ ಹಡದ್ರೆ ಬಾಲೆಗೆ ಹಾಲು ಕುಡಿಸಾಕೆ ಒಂದು ಒಳಾಲೆ ಹಾಲಿಗೆ ಗತಿ ಇಲ್ಲ? …. +“ನೀ ತಮಾಸೆ ಮಾಡಬ್ಯಾಡ, ಅಪ್ಪಾ! …. +ಆ ಮಾಕೀಮನೆ ಈರಣ್ಣನ್ನ ಕಡ್ದು ರಕ್ತ ಕುಡಿದ್ರಂತಲ್ಲಾ ಹಾಂಗೇ ಅವನ ರಕ್ತ ಕುಡೀದೆ ಇದ್ರೆ ನಾನು ಅಪ್ಪಗೆ ಹುಟ್ಟಿದಾಂವ ಅಲ್ಲಾ! +ನೋಡ್ತೀರು!ನನ್ನ ಬೆನ್ನಿನ ಬಾಸುಂಡೆ ಇನ್ನೂ ಮಾದಿಲ್ಲ…. +ಏನೋ ನಮ್ಮ ಧಣಿ, ಉಪ್ಪು ಅನ್ನ ಹಾಕಿ ಸಾಕ್ದೋರು ಇದ್ರಲ್ಲಾ ಅಂತಾ ಅವೊತ್ತು ಸುಮ್ಮನಿದ್ದೆ! +ಇನ್ನೊಂದು ಸಲ ನನಗೆ ಸಿಕ್ಲಿ ಸಮಯ? +ನೋಡ್ತೀನಿ ನನ್ನ ಕೈಲಿ ಏನಾಗ್ತದೆ ಅಂತಾ? +ಬಗನೇ ಕತ್ತೀನ ಮಸೆದು ಇಟ್ಟುಕೊಂಡ್ಹಾಂಗೆ ಇಟ್ಟುಕೊಂಡೀನಿ, ನನ್ನ ಕೆಲಸದ ಕತ್ತೀನ! +ಉಂದೆ ಕೊಚ್ಚಿಗೆ ಅವನ ಆನೆಗಾತ್ರದ ಕುತ್ತಿಗೆ ಕತ್ತರಿಸಿ ಬೀಳಬೇಕು, ಹಾಂಗೆ ಹೊಡೀತೀನಿ….”ಸಣ್ಣಬೀರ ಇನ್ನೂ ಮುಂದುವರಿಸುವುದರಲ್ಲಿದ್ದ! +ಅಷ್ಟರಲ್ಲಿ ದೊಡ್ಡಬೀರ ತಿರುಗಿ ನಿಂತು ಗದರಿಸಿದ. + “ಈ ಸೊಕ್ಕಿನ ಮಾತೆಲ್ಲ ಕಟ್ಟಿಡು! +ಅಂಬಲಿ ತಿನ್ನಾಂವ ಅಂಬರಕ್ಕೆ ಹಾರಿದ್ಹಾಂಗೆ ಆದಾತು. +ತೂದೂರು ಕಟ್ಟೇಲಿ ಮಾರಾಜರ ದಂಡಿನೋರು, ಸುಮಾರು ಜನ ಗೌಡ್ರನ್ನೆ ಕುತ್ತಿಗೀಗೆ ನೇಣುಹಾಕಿ ಮರಕ್ಕೆ ನೇತಾಕಿದ್ರಂತಲ್ಲಾ, ಹಾಂಗೇ ಆಗ್ತದೆ ನಿನ್ಗೂ, ಗೊತ್ತಾತೇನು? +ಕಡೀಗೆ ನಿನ್ನ ದೆಸಿಂದ ನಮ್ಮನ್ನೂ ಎಲ್ಲ ತೀರ್ಥಹಳ್ಳಿ ಕಚೇರಿಗೆ ಎಳಕೊಂಡು ಹೋದಾರು ಕರೀಪೇಟದೋರು, ಗೊತ್ತಾತೇನು? …. ” +ದೊಡ್ಡಬೀರನ ಗುಂಪು ಮಾತಾಡುತ್ತಲೆ ಮುಂದುವರಿದು ಹಳುವಿನಲ್ಲಿ ಮರೆಯಾಯಿತು. +ಕುದುರೆ ಅವರು ಹೋದ ಕಡೆಯೆ ನೋಡುತ್ತಾ ನಿಂತಿತ್ತು. +ಸಣ್ಣಬೀರ ಸ್ವಲ್ಪದೂರ ಹೋದವನು, ಹಿಂದುಳಿದು, ಹಾದಿಯ ಪಕ್ಕದ ಹಳುವಿನಲ್ಲಿ ಜಲಬಾಧೆಗೆ ಹೋಗುವವನಂತೆ ಮರೆಯಾಗಿ ಕುಳಿತನು. +ಉಳಿದವರು ಮುಂಬರಿದರು. +ಕುದುರೆ ನೋಡುತ್ತಿದ್ದಂತೆಯೆ ಸಣ್ಣಬೀರ ಹಿಂದಿರುಗಿ ಬರುತ್ತಿದ್ದುದು ಅದಕ್ಕೆ ಕಾಣಿಸಿತು. +ನೇರವಾಗಿ ತನ್ನ ಕಡೆಯೆ ಬರುತ್ತಿದ್ದ ಅವನನ್ನು ಅದು ಕುತೂಹಲದಿಂದಲೂ ಅಚ್ಚರಿಯಿಂದಲೊ ಸಂಶಯದಿಂದಲೊ ನೋಡುತ್ತಲೆ ಇತ್ತು. +ಸಣ್ಣಬೀರ ಹತ್ತಿರ ಬಂದು, ಅದನ್ನು ಸಮಾಧಾನಪಡಿಸಲು ಅದರ ಕಡಿವಾಣವಿದ್ದ ಬಾಯಿಯ ಹತ್ತಿರ ಯಾವುದೊ ಸೊಪ್ಪನ್ನು ಹಿಡಿದನು. +ಕುದುರೆ ಮೊದಲು ಅಪನಂಬಿಕೆಯಿಂದ ಮೂಗಿನ ಸೊಳ್ಳೆಯನ್ನು ಹಿಗ್ಗಿಸಿ ಕುಗ್ಗಿಸಿ ಮೂಸಿ ಮೂಸಿ ಬೆಚ್ಚುತ್ತಿದ್ದುದು ಕೊನೆಗೆ ಅದನ್ನು ತಿನ್ನಲೆಂಬಂತೆ ಸ್ವೀಕರಿಸಿತು. +ಆದರೆ ತಿನ್ನಲಿಲ್ಲ ಕೆಳಕ್ಕೆ ಬೀಳಿಸಿತು. +ಅದರ ಮೈಯನ್ನು ಉಪಚರಿಸಿ ತಟ್ಟುತ್ತಾ ಸಣ್ಣಬೀರ ಹಸುಬೆ ಚೀಲದ ಬಾಯನ್ನು ಹುಡುಕಿ, ಒಳಗೆ ಕೈಹಾಕಿ, ಸ್ವಾರ್ಲುಮೀನಿನ ಕೆಂತೆಗಳನ್ನು ಎಳೆದು ತೆಗೆದನು. +ತಟಕ್ಕನೆ ಸೊಂಟದ ಕತ್ತಿಯಿಂದ ಕುದುರೆಯನ್ನು ಕಟ್ಟಿಹಾಕಿದ್ದ ಕುನ್ನೇರಿಲು ಮಟ್ಟಿನ ರೆಂಬೆಯನ್ನು ಕತ್ತರಿಸಿ, ಅತ್ತ ಇತ್ತ ಹುಡುಕುನೋಟವಟ್ಟಿ ಕಣ್ಣುಸುಳಿಸುತ್ತಾ, ತನ್ನವರು ಹೋದ ದಿಕ್ಕಿಗೆ ಓಡಿದನು. +ನಿಂತೂ ನಿಂತೂ ಬೇಜಾರಾಗಿದ್ದ ಕುದುರೆ ಕುನ್ನೇರಿಲ ರೆಂಬೆಸಹಿತವಾಗಿ ಕಿರುಬಯಲಿನಲ್ಲಿ ಗಟ್ಟಿಯಾಗಿ ಕೆನೆಯುತ್ತಾ ಓಡಾಡತೊಡಗಿತು. +ಅದು ಇನ್ನೆತ್ತ ಓಡುತ್ತಿತ್ತೋ? +ಮನೆಯ ನೆನಪಾಗಿ ಮೇಗರವಳ್ಳಿಯ ಕಡೆಗೇ ಹೋಗುತ್ತಿತ್ತೋ? +ಅಥವಾ ತನ್ನ ಯಜಮಾನ ಹೋಗಿದ್ದ ದಿಕ್ಕಿಗೆ ಸೀತೂರಿನ ಕಡೆಗೇ ಸಾಗುತ್ತತ್ತೋ? +ಆದರೆ ಅಷ್ಟರಲ್ಲಿ ಅದರ ಪ್ರತಿಧ್ವನಿಯೊ ಎಂಬಂತೆ ಪ್ರತ್ಯುತ್ತರವಾಗಿ ಮತ್ತೊಂದು ಕುದುರೆ ಕೆನೆದ ಸದ್ದು ಕೇಳಿಸಿ, ಆ ಹೆಣ್ದನಿಗೆ ಹಿಗ್ಗಿದ ಈ ಕುದುರೆಗಂಡು ಕತ್ತೆತ್ತಿ ಕಿವಿ ನಿಮಿರಿಸಿ ಆಲಿಸುತ್ತಾ ನಿಂತಿತು. +ಅದು ಬಹಳ ಹೊತ್ತು ಹಾಗೆ ನಿಂತಿರಲಿಲ್ಲ. +ಅಜ್ಜೀಸಾಬು ಲಕ್ಕುಂದದ ದಿಕ್ಕಿನಿಂದ, ಭಾರವಾದ ಹೇರನ್ನು ಹೊತ್ತು ಮೆಲ್ಲಗೆ ಗುಡ್ಡವೇರುತ್ತಿದ್ದ ತನ್ನ ತಟ್ಟಿನ ಪಕ್ಕದಲ್ಲಿ, ಲಗಾಮು ಹಿಡಿದುಕೊಂಡು ನಡೆಯುತ್ತಾ ಬಂದನು. +ಬಂಧನ ವಿಮುಕ್ತವಾಗಿದ್ದ ಗಂಡು ಕುದುರೆ ಆ ಬಂದ ಹೆಣ್ಣು ಕುದುರೆಯನ್ನೂ ಅದರ ಗಡ್ಡದೊಡೆಯನನ್ನೂ ಕಂಡು, ಗುರುತಿಸಿ, ಹಿಗ್ಗಿನಿಂದ ಬಳಿಸಾರಿತು. +ಲಗಾಮಿನ ತುದಿಯಲ್ಲಿದ್ದ ರೆಂಬೆಯನ್ನು ಕಂಡ ಅಜ್ಜೀಸಾಬು ಕರೀಂಸಾಬು ಪೊದೆಗೆ ಕಟ್ಟಿಹೋಗಿದ್ದ ಕುದುರೆ ಅದನ್ನು ಜಗ್ಗಿಸಿ ಎಳೆದು ಮುರಿದುಕೊಂಡಿರಬೇಕೆಂದು ಊಹಿಸಿದನು. +ಅದರ ಬೆನ್ನಿನಿಂದ ಜಾರಿ ಕೆಳಗೆ ಬಿದ್ದಿದ್ದ ಹಸುಬೆ ಚೀಲವನ್ನು ಎತ್ತಿ ತಂದು ತನ್ನ ಪಕ್ಕದಲ್ಲಿಟ್ಟುಕೊಂಡು ಕಾಯುತ್ತಾ ಕುಳಿತನು. +ಕುದುರೆಗಳೆರಡೂ ಒಂದರ ಮುಖ ಮೈಗಳಿಗೆ ಮತ್ತೊಂದರ ಮುಕ ಮೈಗಳನ್ನು ತಿಕ್ಕುತ್ತಾ ಪರಸ್ಪರ ಅನುರಾಗ ಪ್ರದರ್ಶನ ಮಾಡುತ್ತಾ ತಮ್ಮ ಸ್ವಾಭಾವಿಕ ಲೈಂಗಿಕ ಸ್ವರೂಪವನ್ನು ಮೆರೆಯತೊಡಗಿದುವು. +ಸ್ವಲ್ಪ ಹೊತ್ತಿನಲ್ಲಿ ಸೀತೂರಿನ ದಿಕ್ಕಿನಿಂದ ಇಜಾರದ ಸಾಬಿಯೂ ಲುಂಗೀಸಾಬಿಯೂ ಹಳುವಿನಲ್ಲಿ ಗುಡ್ಡವೇರಿ ಬರುತ್ತಿದ್ದುದು ಕಾಣಿಸಿತು. +ಇಜಾರದ ಸಾಬಿಯ ಬೆನ್ನಿನ ಮೇಲೆ ಒಂದು ಭಾರೀ ಕರಿಬಾಳೆ ಗೊನೆ ಇತ್ತು; +ಲುಂಗೀಸಾಬುವಿನ ಹೆಗಲಮೇಲೆ ಒಂದು ತಕ್ಕಮಟ್ಟಿಗೆ ದೊಡ್ಡದೆ ಆದ ದಾಸ ಕಬ್ಬಿನ ಹೊರೆ ಇತ್ತು. +ಇಬ್ಬರೂ ಅಜ್ಜೀಸಾಬುವಿನ ಸಮೀಪಕ್ಕೆ ಬಂದು ಉಸ್ಸೆನ್ನುತ್ತಾ ಹೊರೆಗಳನ್ನಿಳಿಸಿ, ಇತ್ತೀಚಿನ ಮಳೆಗಳಿಂದ ಆಗತಾನೆ ಹಸುರಾಗತೊಡಗಿದ್ದ ನೆಲದ ಮೇಲೆ ಕೂತರು. +ಅಜ್ಜೀಸಾಬು ಬಾಳೆಯ ಗೊನೆಯನ್ನೂ ಕಬ್ಬಿನ ಹೊರೆಯನ್ನೂ ತುಸು ಕರುಬಿನಿಂದಲೆ ನೋಡುತ್ತಾ ಸಾಬರ ಮಾತಿನಲ್ಲೇ ಕೇಳಿದನು. +“ಎಂಥಾ ಬಾಳೆಕೊನೆ! +ಅಬ್ಬ! …. ಏನು ಕೊಟ್ಟೆ?” +“ಹರಾಮ್ ಬಾಂಚೊತ್! +ಏನು ಉಡಾಫಿ ಮಾತು ಆಡಿದ ಅವನು?” ಎಂದನು ಇಜಾರದ ಸಾಬು, ಅವರ ಭಾಷೆಯಲ್ಲಿಯೆ. +ವ್ಯಾಪಾರದ ಚೌಕಾಸಿಯಲ್ಲಿ ಭಿನ್ನಾಭಿಪ್ರಾಯ ಬಂದು ಮಾತಿಗೆ ಮಾತು ಹತ್ತಿರಬಹುದೆಂದು ಊಹಿಸಿ ಅಜ್ಜೀಸಾಬು “ಎಲ್ಲಿ? +ತೋಟದಲ್ಲೇ ಯಾಪಾರ ಆಯ್ತಾ?” ಎಂದನು. +“ಆಗಿದ್ದು ತೋಟದಲ್ಲೇ! +ಯಾಪಾರ ಮಾತ್ರ ಅಲ್ಲ!” ಎಂದನು ಲುಂಗೀಸಾಬಿ ವ್ಯಂಗ್ಯವಾಗಿ ನಗುತ್ತಾ. +“ಚೂರಿ ತೋರಿಸಿದ್ದೆ ತಡ, ಲೌಡೀಮಗ ಪರಾರಿಯಾಗಿಬಿಟ್ಟ!” ಎನ್ನುತ್ತಾ ಇಜಾರದ ಸಾಬಿ ವಿಕಟವಾಗಿ ನಗತೊಡಗಿದನು. +ಬಹುಮಟ್ಟಿಗೆ ಅಸೂಯೆಯಿಂದಲೆ ಪ್ರೇರಿತವಾಗಿದ್ದು, ದುರ್ಬಲನೂ ಕೃಶಶರೀರಿಯೂ ಆಗಿದ್ದ ಅಜ್ಜೀಸಾಬಿಯ ನೀತಿಪ್ರಜ್ಞೆ ಎಚ್ಚತ್ತಂತಾಗಿ, ತನ್ನ ಮನದಲ್ಲಿಯೆ “ನೀನು ಹೀಗೇ ಕಂಡಕಂಡವರ ಅಡಕೆತೋಟಕ್ಕೊ ಬಾಳೆ ತೋಟಕ್ಕೊ ಕಬ್ಬಿನಹಿತ್ತಲಿಗೋ ನುಗ್ಗಿನುಗ್ಗಿ ದುಂಡಾವರ್ತಿಯಿಂದ ಲೂಟಿಮಾಡುತ್ತಿರು? …. + ಒಂದು ದಿನ ನಿನಗೆ ಆಗ್ತದೆ, ಸರಿಯಾಗಿ!” ಎಂದುಕೊಳ್ಳುತ್ತಾ, ಕೊಬ್ಬಿ ಬೆಳೆದಿದ್ದ ಹಂದಿಕತ್ತಿನ ಇಜಾರದ ಸಾಬಿಯ ಮಹಾಕಾಯದ ಕಡೆಗೆ ಕೈಲಾಗದ ಜುಗುಪ್ಸೆಯಿಂದ ನೋಡಿದನು. +ಅಷ್ಟರಲ್ಲಿ ಒಂದು ಕಾಡುದಾರಿಯ ಕಡೆಯ ಹಳು ಅಲುಗಿದಂತಾಗಿ, ಆ ಕಡೆಯೆ ನೋಡುತ್ತಿದ್ದ ಲುಂಗೀಸಾಬುಗೆ ಹಲಸಿನ ಹಣ್ಣನ್ನು ಹೆಗಲ ಮೇಲೆ ಹೊತ್ತು ಬರುತ್ತಿದ್ದ ಲಕ್ಕುಂದದ ಸೇಸನಾಯ್ಕನ ಮಗ ಹಮೀರನ ತಲೆವಸ್ತ್ರ ಕಾಣಿಸಿತು, ಹಳುವಿನ ಮರೆಯಿಂದಲೆ ಕಿರುಹಕ್ಕಲಿನಲ್ಲಿ ಕುಳಿತಿದ್ದ ಸಾಬರ ತಂಡವನ್ನು ಕಂಡ ಹಮೀರನಾಯ್ಕನು ಹೆಗಲ ಹೊರೆಯನ್ನು ಫಕ್ಕನೆ ಹಳುವಿನಲ್ಲಿಯೆ ಬಗ್ಗಿ ಮರೆಸಿಟ್ಟು, ಏನೊ ಕಾಣದವನಂತೆ ಮುಂದುವರಿದನು. +ಅದರೆ ಲುಂಗೀಸಾಬು ಅದನ್ನಾಗಲೆ ಕಂಡುಬಿಟ್ಟಿದ್ದನು! +ಹಮೀರನಾಯ್ಕನು ಹಾಗೆ ಹಣ್ಣನ್ನು ಮುಚ್ಚಿಡುವುದಕ್ಕೆ ಕಾರಣ ಈ ಸಾಬರ ತಂಡದವರ ಸುಲಿಗೆಯ ಅನುಭವವೆ! +ಯಾರಾದರೂ ಒಬ್ಬೊಬ್ಬರೆ ದಾರಿಯಲ್ಲಿ ಸಿಕ್ಕರೆ, ಅವರು ಗುರುತಿನವರಾದರೆ, ನಗುನಗುತ್ತಲೆ ಬೋಳೆಯ ಮಾತಗಳನ್ನಾಡುತ್ತಾ, ತಮಾಷೆಮಾಡುವವರಂತೆಯೆ ಕಸಿದುಕೊಳ್ಳುತ್ತಿದ್ದರು. +ಅಪರಿಚಿತರಾದರೆ, ಬೆದರಿಸಿಯೊ ಹೊಡೆದೊ ಬಡಿದೊ ದೋಚುತ್ತಿದ್ದರು. +ಇಜಾರದ ಸಾಬಿ ಅಣಕುಗೌರವವನ್ನು ನಟಿಸುತ್ತಾ “ಓಹೋಹೋ ಏನು ಹಮ್ಮೀರನಾಯ್ಕರ ಸವಾರಿ, ಕಾಡ ಕಡೆಯಿಂದ ಬರ್ತಾ ಇದೆಯಲ್ಲಾ, ಖಾಲಿ ಕೈಲಿ?” ಎಂದು ಹಲ್ಲುಬಿಟ್ಟನು. +“ಭರ್ತೀನೆಲ್ಲಾ ಅಲ್ಲೇ ಹಳುವಿನಾಗೆ ಇಟ್ಟರೆ, ಖಾಲಿಯಾಗದೆ ಮತ್ತೇನು ಕೈ?” ಎಂದು ಲುಂಗೀಸಾಬಿ ನಕ್ಕು, ಹಮ್ಮೀರನ ಮುಣವನ್ನೇ ಅರ್ಥಗರ್ಭಿತ ವ್ಯಂಗ್ಯದೃಷ್ಟಿಯಿಂದ ನೋಡುತ್ತಾ ಕೇಳಿದನು. +“ಹೌದೋ?ಅಲ್ಲೋ? +ಹೇಳಿ ಮತ್ತೆ ನೀವೆ, ಹಮ್ಮೀರನಾಯಕರೆ?”ಹೆದರಿದವನಿಗೆ ವಿನೋದ ಗ್ರಾಹ್ಯವಾಗಲಿಲ್ಲ. +ಆದರೂ ಪೆಚ್ಚಾಗಿ ಪಿಚ್ಚನೆ ಹಲ್ಲು ಬಿಟ್ಟನು ಹಮೀರ. +ಮೇಲುಸಾಲಿನ ಮೂರು ಹಲ್ಲುಗಳೂ ಮುರಿದು ಹೆಬ್ಬಾಗಿಲು ತರದಂತಿದ್ದ ಅವನ ಬಾಯನ್ನು ನೋಡಿ ಮೂವರು ಸಾಬರೂ ಗಟ್ಟಿಯಾಗಿ ನಗತೊಡಗಿದರು. +ಅವರೂ ಕೇಳಿದ್ದರು ಆ ಹಲ್ಲು ಉದುರಿದ ಸನ್ನಿವೇಶದ ಕಥೆಯನ್ನು. +ಹಮೀರ ಒಂದು ದಿನ ಬೈಗುಗತ್ತಲಲ್ಲಿ ಮಿತಿಮೀರಿ ಕುಡಿದು, ಮತ್ತೇರಿ, ಹಾದಿಬದಿಯಲ್ಲಿ ಎಡವಿ ಬಿದ್ದನಂತೆ. +ಅವನು ಮುಖ ಅಡಿಯಾಗಿ ಏಳೆಂಟು ಅಡಿ ಎತ್ತರದ ಕೊರಕಲಿಗೆ ಬಿದ್ದಿದ್ದನಂತೆ. +ಬಿದ್ದಾಗ ಒಂದು ಕಗ್ಗಲ್ಲು ಅವನ ಬಾಯಿಗೆ ಬಡಿದ ಹೊಡೆತಕ್ಕೆ ಹಲ್ಲು ಸಡಿಲಿ ಮುರಿದುವಂತೆ. +ಅವನ ಹಿಂದೆ ಅವನಂತೆಯೆ ಕುಡಿದು ಬರುತ್ತಿದ್ದವರು ಅವನನ್ನು ಎತ್ತಿ ನಿಲ್ಲಿಸಲು ಹೋದಾಗ, ಅವನು ಮರುಳನಂತೆ ಕಿಲಕಿಲನೆ ನಗುತ್ತಾ, ಬಾಯಿಂದ ಸೋರುತ್ತಿದ್ದ ರಕ್ತವನ್ನೂ ಲೆಕ್ಕಿಸದೆ ‘ತಗಾ ನಿಂಗೊಂದು! +ತಗಾ ನಿಂಗೊಂದು!ತಗಾ ನಿಂಗೊಂದು!’ ಎಂದು ಅಲುಹುತ್ತಿದ್ದ ಹಲ್ಲುಗಳನ್ನು ಒಂದೊಂದನ್ನು ಕಿತ್ತೂ ಕಿತ್ತೂ ತನ್ನನ್ನು ಎತ್ತಿದವರಿಗೆ ಇನಾಮು ಕೊಟ್ಟಿದ್ದನಂತೆ! +ಆ ಕಥೆ ಜನರಿಂದ ಜನಕ್ಕೆ ಹಬ್ಬಿ, ನಾಡಿನ ಒಂದು ಹಾಸ್ಯವಾಗಿ ಪರಿಣಮಿಸಿತ್ತು. +‘ತಗಾ ನಿಂಗೊಂದು!’ ಎಂದೊಡನೆ, ಜನ ಹಮೀರನ ಹಲ್ಲನ್ನು ನೆನೆದು ನಗೆಯಲ್ಲಿ ಮುಳುಗುತ್ತಿದ್ದರು. +ವ್ಯಕ್ತಿಯನ್ನು ನೋಡದಿದ್ದವರು ಯಾರಾದರೂ ಹಮೀರನಾಯ್ಕ ಎಂಬ ಹೆಸರನ್ನು ಕೇಳಿದ್ದರೆ ಅವರ ಕಲ್ಪನೆಯಲ್ಲಿ ಸುಳಿಯುತ್ತಿದ್ದ ಆ ವ್ಯಕ್ತಿಯ ಚಿತ್ರಕ್ಕೂ ಅವರು ಆ ವ್ಯಕ್ತಿಯನ್ನೆ ಸಾಕ್ಷಾತ್ತಾಗಿ ನೋಡಿದಾಗ ಕಾಣುತ್ತಿದ್ದ ಚಿತ್ತರಕ್ಕೂ ಆನೆಗೂ ಆಡಿಗೂ ಇರುವಷ್ಟು ವ್ಯತ್ಯಾಸವಿರುತ್ತಿತ್ತು. +ಅಂತಹ ಸಾಧಾರಣ ದುರ್ಬಲ ವ್ಯಕ್ತಿಗೆ ಎಂತಹ ಹೆಸರಿಟ್ಟಿದ್ದರು! +ಆದರೆ ಅದಕ್ಕೆ ಸಮರ್ಥನೀಯವಾದ ಒಂದು ಆಧಾರವೂ ಇತ್ತು. ಆ ಬಡಕಲು ‘ಹಮೀರ’ನ ಹೆಸರನ್ನೇ ಹೊತ್ತಿದ್ದ ಅವನ ಮುತ್ತಜ್ಜನೊ, ಅವನಜ್ಜನೊ, ದುರ್ಗದ ಪಾಳೇಯಗಾರರ ಹಳೆಪೈಕದ ಪಡೆಗೆ ಪಡೆದವಳನಾಗಿದ್ದನಂತೆ! +ಅವನ ಶಕ್ತಿ ಪ್ರತಾಪ ಸಾಹಸಗಳ ವಿಚಾರವಾದ ಅನೇಕ ನಿಜವೋ ಸುಳ್ಳೋ ಕಥೆಗಳು ಲಕ್ಕುಂದದ ಸೇಸನಾಯಕನ ಮನೆತನದ ಗತವೈಭವದ ಸ್ಮಾರಕನಿಕೇತನಗಳಾಗಿದ್ದುವು. +ಆ ಮಹಿಮೆಯಿಂದಲೆ ಅವನಿನ್ನೂ ಹಳೆಪೈಕದವರ ಮುಖಂಡನಾಗಿ, ಕುಲದವರ ವಿಧೇಯತೆಗೆ ಪಾತ್ರನಾಗಿದ್ದನು. +ಆದರೆ ಹತ್ತೊಂಭತ್ತನೆಯ ಶತಮಾನದ ಅಂತ್ಯದ ಗತವೈಭವಕ್ಕೆ ನಿದರ್ಶನಪ್ರಾಯನಾಗಿದ್ದ ನಮ್ಮ ಹಮ್ಮೀರನಾಯಕನಿಗೆ ಅವನ ಮೋರೆಯ ಮೇಲೆ, ಪೌರುಷದ ಚಿಹ್ನೆಯ ಮಾತಂತಿರಲಿ, ಪುರುಷ ಲಕ್ಷಣವಾದ ರೋಮವೂ ಇರಲಿಲ್ಲ. +ಅವನ ಅಪ್ಪ ಸೇಸನಾಯಕನಿಗಿದ್ದಂತೆ ಅವನ ಕೈಕಾಲುಗಳಲ್ಲಿಯೂ ಕೂದಲು ಹುಟ್ಟಿಯೆ ಇಲ್ಲವೆಂಬತೆ ನುಣ್ಣಗೆ ಕ್ಷೌರ ಮಾಡಿಸಿದಂತೆ ಕಾಣುತ್ತಿತ್ತು. +ಆದ್ದರಿಂದಲೆ ಇಜಾರದ ಸಾಬಿಗೆ ಅವನನ್ನು ಕಂಡರೆ, ಸೀರೆಯುಡದೆ ಸೊಂಟಕ್ಕೆ ಅಡ್ಡಪಂಚೆ ಸುತ್ತಿ, ಹರಕಲು ಅಂಗಿ ಹಾಕಿಕೊಂಡ ಬೆಳ್ಳನೆ ತೆಳ್ಳನೆ ಹುಡುಗಿಯನ್ನು ಕಂಡಂತಾಗಿ, ಖುಷಿಯಾಗುತ್ತಿದ್ದದ್ದು! +“ಭಾಗವತರಾಟದಲ್ಲಿ ಹೆಣ್ಣುವೇಷ ಹಾಕಿದರೆ ಲಾಯಖ್ಖಾಗ್ತದೆ ನಮ್ಮ ಹಮ್ಮೀರಣ್ಣಗೆ!” ಎಂದನು ಇಜಾರದ ಸಾಬು. +ತಾನು ಹಳುವಿನಲ್ಲಿ ಹಲಸಿನ ಹಣ್ಣು ಇಟ್ಟಿದ್ದನ್ನು ಅಜ್ಜೀಸಾಬು ಕಂಡುಬಿಟ್ಟಿದ್ದಾನೆಯೊ ಏನೋ ಎಂದು ಮೊದಲು ಪೆಚ್ಚಾಗಿದ್ದ ಹಮೀರನು ಇಜಾರದ ಸಾಬು ಹೇಳಿದ್ದನ್ನು ಕೇಳಿ ನಾಚಿ ನೆಲಕ್ಕಿಳಿದಂತಾಗಿ“ಏ, ಈ ಸಾಬರಿಗೆ ಕಸುಬಿಲ್ಲ!” ಎಂದು ಬೆಪ್ಪುನಗೆ ನಕ್ಕನು. +“ಅವನು ಯಾಕೆ ಹೆಣ್ಣುವೇಷ ಹಾಕುತ್ತಾನೆ ಇನ್ನು? +ಮದುವೆ ಗಂಡು ಆಗುವವನು? +ಅಲ್ಲವೇನೋ?” ಕೇಳಿದನು ಲುಂಗೀಸಾಬು. +“ವ್ಹಾರೆವ್ಹಾ!ಹೆಣ್ಣಿಗೆ ಯಾರೋ ಹೆಣ್ಣು ಕೊಡುವವರು?” ಇರಿಯಿತು ಇಜಾರ ಸಾಬಿಯ ಕುಹಕ ಹಾಸ್ಯ. +“ಸೀತೂರು ತಿಮ್ಮನಾಯ್ಕರೋ! +ಮಗಳ ಕೊಟ್ಟು ಇವನ್ನ ಅಳಿಯ ಮಾಡಿ ಕೊಳ್ತಾರಂತೆ” ಲುಂಗೀಸಾಬು ಎಂದನು. +ಇದ್ದಕಿದ್ದಹಾಗೆ ಕನ್ನಡವನ್ನು ಬಿಟ್ಟು ತುರುಕುಮಾತಿನಲ್ಲಿ ಇಜಾರದ ಸಾಬಿ ಏನನ್ನೊ ಹೇಳಿದುದಕ್ಕೆ ಉಳಿದ ಇಬ್ಬರು ಸಾಬರೂ ಹಮೀರನನ್ನೆ ನೋಡುತ್ತಾ ಬಿದ್ದು ಬಿದ್ದು ಗಹಗಹಿಸಿ ನಗತೊಡಗಿದರು. +ಏನನ್ನೋ ತುಂಬ ಅಸಹ್ಯವಾದ ಅಶ್ಲೀಲವನ್ನು ಇಜಾರದ ಸಾಬಿ ನುಡಿದಿರಬೇಕೆಂದು ಗೊತ್ತಾದರೂ ಅದರ ಇರಿತದ ಮೊನೆಯನ್ನು ನಿವಾರಿಸುವ ರೀತಿಯಲ್ಲಿ ಹಮೀರನೂ ನಗತೊಡಗಲು, ಉಳಿದ ಮೂವರೂ ಮತ್ತಷ್ಟು ಬಿದ್ದುಬಿದ್ದು ಹ್ಹೆಹ್ಹೆಹ್ಹೆಹ್ಹೇ ಎಂದು ಅಟ್ಟಹಾಸಮಾಡಿದ ರಭಸಕ್ಕೆ ಕುದುರೆಗಳೆರಡೂ ಬೆಚ್ಚಿ, ನಾಲ್ಕು ಹೆಜ್ಜೆ ಓಡಿ ನಿಂತುವು. +“ಹೋಗಲಿ ಬಿಡು, ಹಮೀರಣ್ಣ; +ನೀನು, ನಿಕಾ ಮಾಡಿಕೊ; ಸಂತೋಷ…. +ಅಲ್ಲಯ್ಯಾ, ನನ್ನ ಕುದುರೆ ಬೇಡ ಅಂತಾ ಹೇಳಿಬಿಟ್ಯಂತೆ? …. +ನನ್ನ ಕುದುರೆ ಸ್ವಲ್ಪ ಬಡಕಲಾದ ಮಾತ್ರಕ್ಕೆ ನಿನ್ನ ಹೊರೋದಕ್ಕೆ ಆಗ್ತಿರಲಿಲ್ಲವೆ ಅದಕ್ಕೆ? +ನೀನೇನು ಭಾರಿ ಆಳೇ? +ಮದುವೆ ಗಂಡಾದ ಕೂಡ್ಲೆ ನಿನ್ನ ತೂಕ ಹೆಚ್ಚಿಬಿಡುತ್ತದ್ಯೋ?” ಕೇಳಿದನು ಅಜ್ಜೀಸಾಬು. +“ಕುದುರೇನೇ ನಿಕಾ ಮಾಡಿಕೊಳ್ತಾನೇನೋ?” ಗಹಗಹಿಸಿ ನಗುತ್ತಾ ಕೇಳಿದನು ಇಜಾರದ ಸಾಬು. +ನಾಲ್ವರ ನಗೆಯ ಮಧ್ಯೆ ಲುಂಗೀಸಾಬು ವಿವರಿಸಿದನು. “ಅವನು ಮಾಡಿಕೊಳ್ತೇನೆ ಅಂದ್ರೂ ಕುದುರೆ ಒಪ್ಪಬೇಕಲ್ಲಾ? +ಅದಕ್ಕಾಗಲೆ ಗಂಡು ಸಿಕ್ಕಯ್ತೆ, ಅಲ್ಲಿ ನೋಡಿ ಕಾಣ್ತದಲ್ಲಾ! +ಭರ್ಜರಿ ಗಂಡು! +ಇವನ ಹಾಗೆ ಬಡಕಲಲ್ಲ!” ಎಲ್ಲರೂ ಆ ಕಡೆ ಕಣ್ಣಾದರು, ಪ್ರಣಯ ಸಿದ್ಧತೆಯ ಪೂರ್ವ ಲೀಲೆಯಲ್ಲಿ ತೊಡಗಿದ್ದ ಕುದುರೆಗಳ ಕಡೆ, “ಹಾಂಗಿಲ್ಲ ಆ ವಿಷಯಾ….” ಎಂದು ಮತ್ತೆ ಮುಂದುವರೆಸಿದನು ಲುಂಗೀಸಾಬು “ಹಳೆಪೈಕದವರು ದಂಡಿಗೆ ಹತ್ತಬಾರದು, ಕುದುರೆ ಏರಬಾರದು ಅಂತಾ ಸರಕಾರದ ತನಕ ಹೊಡೆದಾಡಿ ಹಕ್ಕು ಮಾಡಿಕೊಂಡಿದಾರೆ ಗೌಡರು. +ದುರ್ಗದವರ ಕಾಲದಲ್ಲಿ ನಾವೂನೂ ರಾಜ್ಯ ಕಟ್ದೋರು, ರಾಜ್ಯ ಆಳ್ದೋರು, ನಮಗೆ ಅದು ಪೂರ್ವದಿಂದ ಬಂದ ಹಕ್ಕು ಅಂತಾ ಹಳೆಪೈಕದೋರು…. +ಈಗ ಸೀಮೆ ಮುಖಂಡರು ಲಕ್ಕುಂದದ ಸೇಸನಾಯ್ಕರು ಸೀತೂರು ತಿಮ್ಮನಾಯ್ಕರು ಎಲ್ಲಾ ಸೇರಿ, ಹಮ್ಮಿರಣ್ಣನ ಮದುವೇಲಿ ಮದುವೆ ಗಂಡನ್ನ ಕುದುರೆ ಮೇಲೆ ಹತ್ತಿಸಿ ಹೆಣ್ಣಿನ ಮನೆಗೆ ದಿಬ್ಬಣ ತಗೊಂಡು ಹೋಗ್ತಾರಂತೆ; +ಗಂಡು ಹೆಣ್ಣನ್ನ ಕರಕೊಂಡು ಬರುವಾಗ ದಂಡೀಗೆ ಮೇಲೆ ಕರಕೊಂಡು ಬರ್ತಾರಂತೆ; +ಈಗ ಗೌಡರ ಕಡೆ ಸೀಮೆ ಮುಖಂಡರೆಲ್ಲ ಸೇರಿ ಮಸಲತ್ತು ಮಾಡಿಕೊಂಡಿದಾರಂತೆ; +ಸೇಸನಾಯ್ಕರ ಮಗನ ಮದುವೇಲಿ ಗಂಡನ್ನ ಕುದುರೆ ಮೇಲೆ ಹತ್ತಿಸಿದ್ರೆ, ದಿಬ್ಬಣ ತಡೆದು, ಕುದುರೆ ಕಾಲು ಮುರಿದು ಹಾಕಬೇಕು ಅಂತಾ….” + ಒಂದು ಕ್ಷಣ ಮಾತು ನಿಲ್ಲಿಸಿ, ಹಮಿರನ ಕಡೆ ತಿರುಗಿ, ವ್ಯಂಗ್ಯ ಮೃದುಹಾಸದಿಂದ ಕೇಳಿದನು. + “ಅದಕ್ಕೇ ಅಲ್ಲೇನೊ, ಹೇಳೊ, ಹಮ್ಮಿರಣ್ಣಾ, ಇದ್ದಿದ್ದರಲ್ಲಿ ಬಲವಾದ ಗಂಡುಕುದುರೇನೆ ಆರಿಸಿಕೊಂಡದ್ದು?”ಹಮೀರನು ಲುಂಗೀಸಾಬಿಯ ಧ್ವನಿಯ ವ್ಯಂಗ್ಯವನ್ನು ಗ್ರಹಿಸಲು ಅಸಮರ್ಥನಾಗಿ, ಅಜ್ಜೀಸಾಬಿಯ ಬಡಕಲು ಕುದುರೆಯ ಪಕ್ಕದಲ್ಲಿ ನಿಂತು ಹೋಲಿಕೆಯಿಂದ ಹೆಚ್ಚು ಎತ್ತರವೂ ಆಗಿ ಕಾಣುತ್ತಿದ್ದ ಕರೀಂ ಸಾಬರ ಕುದುರೆಯನ್ನು ಮೆಚ್ಚಿ ನೋಡುತ್ತಾ, ಬೆಪ್ಪುನಗೆ ನಗುತ್ತಾ, ತನ್ನ ಗಂಭೀರವಾದ ಅಭಿಪ್ರಾಯವನ್ನು ಗಂಭೀರವಾಗಿಯೆ ಮಂಡಿಸುವವನಂತೆ ಉತ್ತರಿಸಿದನು. + “ ಮತ್ತೆ?ನೀವು ಹೇಳಾದೇನು ಸುಳ್ಳಾ? +ಕರ್ಮಿನು ಸಾಬರ ಕುದುರೆ ಹ್ಯಾಂಗದೆ ನೋಡಿ! +ಅದರ ಕಾಲು ಮುರಿಯಾಕೆ ಬಂದೋರಿಗೆ ಒಂದು ಒದೆ ಒದ್ದರೆ ಸಾಲ್ದೇನು? +ಹಲ್ಲು ಮುರಿದ್ಹೋಗ್ತಾರೆ! …. ” +ಅವನು ಇನ್ನೂ ಮುಂದುವರಿಯುತ್ತಿದ್ದನೊ ಏನೊ? +ಎಲ್ಲರೂ ಗೊಳ್ಳೆಂದು ನಕ್ಕುದನ್ನು ನೋಡಿ, ಪಿಚ್ಚನೆ ಹಲ್ಲು ಬಿಡುತ್ತಾ ತೆಪ್ಪಗಾದನು. +“ಅದೆಲ್ಲಾ ಸೈ. +ನೀನು ಕುದುರೆ ಮೇಲೆ ಯಾವಾಗಲಾದರೂ ಹತ್ತಿದ್ದೀಯೊ?” ಇಜಾರದ ಸಾಬಿ ಲೇವಡಿಮಾಡಿದನು. +“ಕುದುರೆ ಮ್ಯಾಲೆ ಹತ್ತದಿದ್ರೆ ಏನಂತೆ? …. ನಾ ಹುಡುಗನಾಗಿದ್ದಾಗ ದನಾಕಾಯಾಕೆ ಹೋಗ್ತಿದ್ದಾಗ ದನದ ಮೇಲೆ ಎಮ್ಮೆ ಮೇಲೆ ಎಷ್ಟುಸಾರಿ ಹತ್ತಿಲ್ಲ? …. ” + ಪ್ರತಿಭಟಿಸುವಂತೆ ಮಾತಾಡಿದನು ಹಮೀರ. +“ಹಾಗಾಂದ್ರೆ ನೀ ಅದನ್ನೂ ಮಾಡಿದ್ದೀಯಾ ಅನ್ನು, ಹೋರಿ ಕೆಲಸಾನ?” ಇಜಾರದ ಸಾಬಿಯ ಮಾತಿನ ಅಶ್ಲೀಲ ಇಂಗಿತವನ್ನು ಗ್ರಹಿಸಲಾರದೆ ನಿಂತಿದ್ದ ಹಮೀರನಿಗೆ ಅದನ್ನು ಸ್ಪಷ್ಟಪಡಿಸಲೆಂಬಂತೆ ಒತ್ತಿ ವಿವರಿಸಿದನು “ಅಯ್ಯೋ ಬೆಪ್ಪಾ! +ಕುದುರೆ ಮೇಲೆ ಹತ್ತೋದು ಅಂದರೆ ಬೆನ್ನಮೇಲೆ ಹತ್ತಿ ಸವಾರಿ ಮಾಡೊದೋ? +ಅದರ ಬಾಲ ಎತ್ತಿ ಹಿಂದುಗಡೆಯಿಂದ  ಹತ್ತೋದಲ್ಲ, ನೀ ದನಕ್ಕೆ ಎಮ್ಮೆಗೆ ಹತ್ತಿದ ಹಾಂಗೆ! …. ” +ಎಲ್ಲರೂ ನಗುತ್ತಿದ್ದುದನ್ನು ನೋಡಿ ಹಮೀರನಿಗೆ ತಟ್ಟನೆ ಹೊಳೆಯಿತು, ಸಾಬಿಯ ಪೋಲಿಮಾತಿನ ಅರ್ಥ. +ಅವನ ಮುಖ ಸಿಟ್ಟಿನಿಂದಲೂ ಜಿಗುಪ್ಸೆಯಿಂದಲೂ ಸಣ್ಣಗಾಯಿತು. + “ಥ್ಪೂ!” ಎಂದನು ಯಾರ ಮುಖಕ್ಕೊ ಉಗುಳುವಂತೆ “ನಾನೇನು ಹಗಲು ಹನ್ನೆರಡು ಗಂಟೆಗೆ ರಾಜ್ಯ ಕಳಕೊಂಡವರ ಜಾತಿ ಅಲ್ಲ, ಹಾಂಗೆಲ್ಲ ಮಾಡಾಕೆ!”ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿನಲ್ಲೆ ಶ್ರೀರಂಗಪಟ್ಟಣವನ್ನು ಕಳೆದುಕೊಂಡರೆಂದು ಮುಸಲ್ಮಾನರನ್ನು ಮೂದಲಿಸುವುದು ಆಗ ವಾಡಿಕೆಯಾಗಿತ್ತು. +ಮುಸಲ್ಮಾನರಿಗೂ ಆ ನಿಂದೆ ಅತ್ಯಂತ ದುಸ್ಸಹನೀಯವಾಗಿ ಅವಮಾನಕರವಾಗಿದ್ದುದರಿಂದ ಹಾಗೆ ನಿಂದಿಸಿದವರನ್ನು ಖೂನಿ ಮಾಡಲೂ ಹೇಸುತ್ತಿರಲಿಲ್ಲ. +ತಟಕ್ಕನೆ ಇಜಾರದ ಸಾಬಿಯ ಮುಖ ಕರ್ಕಶವಾಯ್ತು. +ಹಮೀರನ ಕೆಚ್ಚಲ್ಲದಿದ್ದರೂ ಅವನ ಮೊಂಡ ಮೂರ್ಖತೆಯ ಅವನ ಬಾಯಿಂದ ಏನನ್ನು ಬೇಕಾದರೂ ಹೇಳಿಸಿಬಿಡಬಹುದುದೆಂದು ಲುಂಗೀಸಾಬುವಿಗೆ ದಿಗಿಲಾಯಿತು. +ವಿಷಾದದ ದಿಕ್ಕಿನ ಇಳಿಜಾರಿನ ಕಡೆಗೆ ಜಾರುತಿದ್ದ ವಿನೋದದ ಅಪಘಾತವನ್ನು ತಡೆಗಟ್ಟುವ ಉದ್ದೇಶದಿಂದ “ತಮಾಷೆಗೆ ಹೇಳಿದ್ದಕ್ಕೆಲ್ಲ ಸಿಟ್ಟುಮಾಡಬೇಡಣ್ಣಾ, ಹಮೀರಣ್ಣಾ! …. +ನಿನ್ನ ಲಗ್ನಕ್ಕೆ ನಾನೂ ಬುಡನ್ ಇಬ್ಬರೂ ಬಿರುಸು ಬಾನ ಗರ್ನಾಲು ಹಾರಿಸೋಕೆ ಒಪ್ಪಿಕೊಂಡಿದ್ದೀವಿ…. +ನೋಡ್ತೀರು, ಎಷ್ಟು ಪಸಂದಾಗಿ ಜಬರ್ದಸ್ತಿನಿಂದ ನಿನ್ನ ಲಗ್ನದ ದರ್ಬಾರು ನಡೀತದೆ! …. ನೋಡ್ತೀರು, ಎಷ್ಟು ಪಸಂದಾಗಿ ಜಬರ್ದಸ್ತಿನಿಂದ ನಿನ್ನ ಲಗ್ನದ ದರ್ಬಾರು ನಡೀತದೆ! …. +ಇರ್ಲಿ ಬಿಡೂ…. +ಈಗ ಬಹಳ ಹಸಿವಾಗೈತೆ ನಮಗೆ ‘ಹಸಿದು ಹಲಸಿನ ಹಣ್ಣು, ಉಂಡು ಬಾಳೆಹಣ್ಣು” ತಿನ್ನಬೇಕಂತೆ! …. +ಆ ಹಳುವಿನಾಗೆ ಒಂದು ಹಲಸಿನ ಹಣ್ಣು, ಉಂಡು ಬಾಳೆಹಣ್ಣು’ ತಿನ್ನಬೇಕಂತೆ!… +ಆ ಹಳುವಿನಾಗೆ ಒಂದು ಹಲಸಿನ ಹಣ್ಣು ಇಟ್ಟಿದ್ದ ಹಣ್ಣು ಇಟ್ಟಿದ್ದೆ! +ಹೋಗಿ ತಗೊಂಡು ಬಾ’ಣ್ಣಾ!” ಎನ್ನುತ್ತಾ ಹಮೀರ ಹಲಸಿನ ಹಣ್ಣನ್ನು ಅಡಗಿಸಿಟ್ಟಿದ್ದ ಜಾಗದ ಕಡೆ ಕೈತೋರಿದನು. +“ಆ ಆ ಆ!ನೀ ಒಳ್ಳೆ ಗಟ್ಟಿಗ ಕಣೋ, ಸಾಬಣ್ಣಾ! +ಅದನ್ನ ಯಾರಿಗೋ ಕೊಡಾಕಂತಾ ತಂದೀನೀ….” ಹಮೀರನ ಮುಖ ತಟಕ್ಕನೆ ಮೊದಲಿನ ಮುಗ್ಧಭಂಗಿಗೆ ತಿರುಗಿ, ಸಸ್ನೇಹ ವಾಣಿಯಿಂದ ಹೇಳಿ ಸರಸರನೆ ತಾನು ಹಲಸಿನ ಹಣ್ಣು ಅಡಗಿಸಿಟ್ಟಿದ್ದ ಸ್ಥಳಕ್ಕೆ ಹೋಗಿ ಅದನ್ನು ಹೊತ್ತು ತಂದನು. +ಹಮೀರನ ಕ್ರಿಯೆಯನ್ನೆ ಗಮನಿಸುತ್ತಾ ಇಜಾರದ ಸಾಬಿ “ಹಳ್ಳಿಗಮಾರ; +ಆದರೂ ನರೀಬುದ್ದಿ ಬಿಟ್ಟಿಲ್ಲ!” ಎಂದನು. +ಸರಿ, ಇನ್ನೇನು ಮಾಡುತ್ತಾನೆ ಹಮೀರ? +ಕಂಡಮೇಲೆ ಬಿಡುವುದಿಲ್ಲ ಈ ಸಾಬರ ಹಿಂಡು! +ತುಸು ಪ್ರತಿಭಟಿಸಿ ನೋಡಿದ. +ಆದರೆ ಪ್ರಯೋಜನ ಕಾಣಲಿಲ್ಲ. +ಹಲಸಿನಹಣ್ಣಿನ ಮಹಾ ಗಾತ್ರವನ್ನು ನೋಡಿ ಅಜ್ಜೀಸಾಬು ಕೇಳಿದನು “ಬಿಳುವನೋ? +ಬಕ್ಕೆಯೋ?”ಹಣ್ಣನ್ನು ಕೆಳಗಿಳಿಸುತ್ತಾ ಹಮೀರ “ಬಿಳುವ!” ಎಂದನು. +ಅವನ ಕೊರಳಿನಲ್ಲಿ ತುಸು ಅಸಮಾಧಾನವಿತ್ತು. +“ಹಾಂಗಾದರೆ ಕತ್ತಿ ಚೂರಿ ಏನೂ ಬೇಡ, ತೊಟ್ಟು ಹಿಡಿದು ಬಲವಾಗಿ ಎಳೆದರೆ ಹಿಸಿದು ಎರಡು ಭಾಗ ಆಗ್ತದೆ.” ಎನ್ನುತ್ತಾ ಕೂತಲ್ಲಿಂದ ಎದ್ದ ಲುಂಗಿಸಾಬು ಹಮೀರನೆಡೆಗೆ ಬಂದು “ಎಲ್ಲಿ? +ಸ್ವಲ್ಪ ಸರಿ!” ಎಂದು ಅವನ ಜಾಗದಲ್ಲಿ ತಾನೆ ನಿಂತು, ಒಂದು ಕೈಯಲ್ಲಿ ಹಣ್ಣಿನ ತೊಟ್ಟು ಹಿಡಿದು, ಇನ್ನೊಂದರಿಂದ ಹಣ್ಣನ್ನು ಒತ್ತಿ, ಬಲವಾಗಿ ಎಳೆದನು. +ಹಣ್ಣು ಹಿಸಿದು ಇಬ್ಭಾಗವಾಗಿ ತನ್ನ ಹೊಟ್ಟೆಯ ತೊಳೆಚುಳಿಕಿಗಳನ್ನೆಲ್ಲ ಬಯಲಿಗೆ ಹಾಕಿತು. +ಚೆನ್ನಾಗಿ ಕಳಿತು ಲೋಳಿಲೋಳಿಯಾಗಿದ್ದ ತೊಳೆಗಳನ್ನು ನಾಲ್ವರೂ ಹಿಸುಕಿ, ಬೀಜ ಹೊರಗೆ ಹಾಕಿ, ಅಗಿಯಲು ಹಲ್ಲಿಗೂ ಸಿಕ್ಕದಂತಿದ್ದ ಅವುಗಳನ್ನು ನಾಲಗೆಯಿಂದ ಅತ್ತ ಇತ್ತ ಓಡಾಡಿಸಿ ಗುಳು ಗುಳು ನುಂಗತೊಡಗಿದರು. +“ಈ ಬಿಳುವನಹಣ್ಣಿನ ತೊಳೆ ಆಗಿಯೋ ರಗಳೇನೆ ಇಲ್ಲ. +ಮುದುಕರಿಗಂತೂ ಪಸಂದು, ಹಿಹಿಹಿ!” ಎಂದನು ಹಮೀರ. +“ಮುದುಕರಿಗೆ ಮಾತ್ರಾನೇ? +ಹಲ್ಲು ಉದುರಿಸಿಕೊಂಡೋರಿಗೆಲ್ಲರಿಗೂ ಪಸಂದೆ!” ಎನ್ನುತ್ತಾ ಲುಂಗೀಸಾಬು ಮುಂಬಲ್ಲು ಮುರಿದಿದ್ದ ಹಮೀರನ ಕಡೆ ನೋಡಿ ನಕ್ಕನು. + “ಅದಕ್ಕೆ ಅಂತಾ ಕಾಣ್ತದೆ, ನೀನು ಬಕ್ಕೇ ತರದೆ ಬಿಳುವನ್ನೇ ತಂದದ್ದು!”ಕಾಡಿನ ಹಳುವಿನಲ್ಲಿ ಯಾರೋ ಮಾತಾಡಿಕೊಂಡು ಬರುತ್ತಿರುವುದು ಕೇಳಿಸಿ, ಒಬ್ಬೊಬ್ಬರು ಒಂದೊಂದು ಕಡೆಗೆ ತಿರುಗಿ ನೋಡಿದರು. +ಸೀತೂರು ದಿಕ್ಕಿನತ್ತ ನೋಡುತ್ತಿದ್ದ ಹಮೀರಗೆ  ಆ ಕಡೆಯ ಗುರುಗಿ ಹಳು ಅಲುಗಾಡುವುದು ಕಾಣಿಸಿ, ನೋಡುತ್ತದ್ದಂತೆಯೇ ಮೇಗರವಳ್ಳಿಯ ‘ಕರ್ಮಿನ್ ಸಾಬರೂ’ ಅವರ ತಮ್ಮ ‘ಪುಡೀ ಸಾಬರೂ’ ಗೋಚರಿಸಿದರು. +ಇಬ್ಬರೂ ಮಲೆಯಾಳಿ ಭಾಷೆಯಲ್ಲಿಯೆ ಮಾತಾಡಿಕೊಂಡು ಬಂದರು. +ಇಬ್ಬರೂ ಮಾಪಿಳ್ಳೆ ಲಬ್ಬೆ ಬ್ಯಾರಿ ಮೊದಲಾದ ಮಲೆಯಾಳಿಗಳು ಉಡುವಂತಹ, ಬೇರೆ ಬೇರೆ ಬಣ್ಣದ ಅಡ್ಡಗೀರು ಉದ್ದಗೀರಿನ ಕಣ್ಣುಕಣ್ಣಿನ ಅಡ್ಡಪಂಚಿ ಸುತ್ತಿ, ಉದ್ದುದ್ದ ಬನೀನು ಹಾಕಿದ್ದರು. +ಕಪ್ಪು ಬಣ್ಣದ ಕರಿಮೀನು ಸಾಬು ಅಷ್ಟೇನು ಉದ್ದವಲ್ಲದ ಗಡ್ಡಬಿಟ್ಟಿದ್ದನು; +ಅವನಿಗಿಂತಲೂ ತುಸು ಬೆಳ್ಳಗಿದ್ದ ಪುಡಿಸಾಬುವಿಗೆ ಮೀಸೆ ಮಾತ್ರ ಇತ್ತು. +ಅಣ್ಣನಿಗಿಂತ ತಮ್ಮ ಷೋಕಿಯಾಗಿ ಕಾಣುತ್ತಿದ್ದನು. +ಅಣ್ಣನ ಕಾಲಿನಲ್ಲಿ ಕನ್ನಡಜಿಲ್ಲೆಯ ಮೆಟ್ಟುಗಳಿದ್ದರೆ ತಮ್ಮನ ಕಾಲಿನಲ್ಲಿ ಕೆಂಪುಬಣ್ಣದ ಚಡಾವುಗಳಿದ್ದುವು. +ಹತ್ತಿರಕ್ಕೆ ಬಂದವರೆ ಭಾಷೆಯನ್ನು ಕನ್ನಡಕ್ಕೆ ಬದಲಾಯಿಸಿದರು. +ಏಕೆಂದರೆ, ಉಳಿದ ಮೂವರು ಹೊನ್ನಾಲಿಕಡೆಯ ಸಾಬರಿಗೆ ಮಲೆಯಾಳಿ ಅರ್ಥವಾಗುತ್ತಿರಲಿಲ್ಲ. +ಮಲೆಯಾಳದ ಕಡೆಯ ಇವರಿಬ್ಬರಿಗೆ ಮುಸಲ್ಮಾನ ಭಾಷೆ ಬರುತ್ತಿರಲಿಲ್ಲ. +“ಕುದುರೆ ಎಲ್ಲಿ? ಕಾಣುವುದಿಲ್ಲ. ಇಲ್ಲಿಯೆ ಈ ಮಟ್ಟಿಗೆ ಕಟ್ಟಿ ಹಾಕಿತಲ್ಲಾ?” ಗಾಬರಿಯಿಂದ ಕೇಳಿದನು ಕರೀಂ ಸಾಬು, ಸಾಮಾನು ತುಂಬಿದ್ದ ತನ್ನ ಹಸುಬೆ ಚೀಲವನ್ನು ನೆಲದಮೇಲೆ ಕಂಡು. +ಆಗಲೆ ಗೊತ್ತಾದದ್ದು, ಹಲಸಿನಹಣ್ಣು ತಿನ್ನುತ್ತಿದ್ದ ನಾಲ್ವರಿಗೂ, ಕುದುರೆಗಳೆರಡೂ ಕಣ್ಣು ತಪ್ಪಿಸಿಕೊಂಡಿವೆ ಎಂಬುದು! +“ಅಯ್ಯಯ್ಯೋ, ಇಲ್ಲೇ ಇದ್ವಲ್ಲೋ ಇಷ್ಟೊತ್ತನಕ! +ಯತ್ತ ಮಕ ಹೋದ್ವೋ, ಹಂಗಾರೆ?” ಸೋಜಿಗ ವ್ಯಕ್ತಪಡಿಸಿದನು ಹಮೀರ. +“ಯಾರೋ ಬಿಚ್ಚಿಬಿಟ್ಟಿದ್ದು?” ಕರೀಂ ಸಾಬು ಕೇಳಿದನು, ಸ್ವಲ್ಪ ಕೋಪಧ್ವನಿಯಲ್ಲಿಯೆ. +“ಯಾರೂ ಬಿಚ್ಚಿದ್ದಲ್ಲ.” ದೀರ್ಘಸ್ವರದಲ್ಲಿ ಪದಗಳನ್ನು ವಿರಳವಾಗಿ ಉಚ್ಛರಿಸುತ್ತಾ “ನಾನು ಇಲ್ಲಿಗೆ ಬರುವಷ್ಟರಲ್ಲೆ ಕುದುರೆ, ಕಟ್ಟಿದ್ದ ಹರೆ ಮುರಿದುಕೊಂಡು, ಹಕ್ಕಲಿನಲ್ಲಿ ತಿರುಗುತ್ತಿತ್ತು. +ಲಗಾಮಿನ ತುದಿಗೆ ಕಟ್ಟಿದ್ದ ಹರೆ ನೇತಾಡುತ್ತಿತ್ತು…. +ಕೆಳಗೆ ಬಿದ್ದಿದ್ದ ಮೂಟೇನ ನಾನೆ ಎತ್ತಿ ತಂದಿಟ್ಟದ್ದು.” ಎನ್ನುತ್ತಾ ಎದ್ದನು ಅಜ್ಜೀಸಾಬು, ಕುದುರೆಗಳನ್ನು ಹುಡುಕಿ ತರುವ ಉದ್ದೇಶದಿಂದ. +ಕರೀಂಸಾಬು ಕುನ್ನೇರಿಲ ಪೊದೆಯ ಹತ್ತಿರ ಹೋಗಿ ಬಗ್ಗಿನೋಡಿ “ಸುಳ್ಳು ಹೇಳಬೇಡ. +ಇಲ್ಲಿ ನೋಡು, ಯಾರೋ ಹರೆಯನ್ನು ಕತ್ತಿಯಿಂದ ಕತ್ತರಿಸಿದ್ದಾರೆ, ಬೇಕಂತಲೇ!” ಎನ್ನುತ್ತಿರಲು, ಉಳಿದವರೂ ಹತ್ತಿರ ಹೋಗಿ ನೋಡಿ, ಹೌದೆಂದು ಸಮ್ಮತಿಸಿದರು. +“ಹೊಟ್ಟೆಕಿಚ್ಚಿನ ಬಾಂಚದ್‌ ಸೂಳೆಮಕ್ಕಳು, ಇದ್ದೇ ಇರುತ್ತಾರೆ, ಕಾಡಿನಲ್ಲಿಯೂ!” ಎಂದನು ಪುಡೀಸಾಬು. +ಅವನಿಗೆ ಉಳಿದ ಮೂವರು ಕನ್ನಡಿಗ ಸಾಬರ ಮೇಲೆ ಗುಮಾನಿ! +ಅಜ್ಜೀಸಾಬು ಬೇಗಬೇಗನೆ ನಡೆದು ಕುದುರೆಗಳಿದ್ದ ದಿಕ್ಕಿನ ಹಳುವಿನಲ್ಲಿ ಕಣ್ಮರೆಯಾಗಿ, ಅಲ್ಲಿಯೆ ತುಸು ದೂರದಲ್ಲಿದ್ದ ಎರಡು ಕುದುರೆಗಳನ್ನೂ ಹಿಂದಕ್ಕೆ ಹೊಡೆದು ತಂದನು. +ಕರೀಂಸಾಬು ಮತ್ತು ಪುಡೀಸಾಬೂ ಇಬ್ಬರೂ ತಮ್ಮ ಕುದುರೆಯ ಬಳಿಗೆ ಹೋಗಿ. +ಅದರ ಬೆನ್ನಿಗೆ ಹಸುಬೆ ಚೀಲವನ್ನು ಎತ್ತಿ ತಂದಿಟ್ಟು, ಅದನ್ನು ತೀಕ್ಷ್ಣವಾಗಿ ಪರಿಶೀಲಿಸಿದರು. +ಯಾರೋ ಚೀಲಕ್ಕೆ ಕೈ ಹಾಕಿದ್ದಾರೆ ಎಂಬುದನ್ನು ಅನುಮಾನಿಸಿ, ಸಾಮಾನುಗಳನ್ನು ಅಜಮಾಯಿಸಿ ಮಾಡಿ, ಸ್ವಾರ್ಲುಮೀನು ತುಂಡುಗಳನ್ನು ತೆಗೆದಿದ್ದಾರೆ ಎಂಬುದನ್ನು ಖಾತ್ರಿಮಾಡಿಕೊಂಡು, ಅಲ್ಲಿದ್ದವರಲ್ಲಿ ತಮಗಿಬ್ಬರಿಗೇ ಮಾತ್ರ ಗೊತ್ತಾಗುತ್ತಿದ್ದ ಮಲೆಯಾಳಿಯಲ್ಲಿಯೆ ಸ್ವಲ್ಪಹೊತ್ತು ಮಾತಾಡಿಕೊಂಡರು. +ಮಾತು ಅರ್ಥಗರ್ಭಿತವಾಗಿ ನೋಡಿಕೊಂಡು, ತಮ್ಮನ್ನೆ ಕುರಿತು ತಮಗೆ ತಿಳಿಯಬಾರದ ಏನನ್ನೋ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಊಹಿಸಿ, ಉಳಿದಿದ್ದ ಹಲಸಿನ ತೊಳೆಗಳನ್ನು ತಿನ್ನತೊಡಗಿದರು, ತಮಗೇನೂ ಅರ್ಥವಾಗದವರಂತೆ ಉದಾಸೀನತೆಯನ್ನು ನಟಿಸುತ್ತಾ. +ಅಣ್ಣತಮ್ಮಂದಿರಿಬ್ಬರೂ ಹಸುಬೆ ಚೀಲವನ್ನು ಕುದುರೆಯ ಬೆನ್ನಿಗೆ ಸರಿಯಾಗಿ ಬಿಗಿದು ಕಟ್ಟಿ, ಹಲಸಿನ ಹಣ್ಣಿನ ಬುಡಕ್ಕೆ ಬಂದರು, ಸ್ವಲ್ಪ ಬಿಗುಮೊಗರಾಗಿಯೆ. +ಉಳಿದವರು ತುಸು ಅತ್ತ ಇತ್ತ ಸರಿದು ಅವರಿಬ್ಬರಿಗೂ ತೆರಪು ಮಾಡಿಕೊಡಲು ಅವರೂ ಕುಳಿತು ತೊಳೆಗಳನ್ನು ನುಂಗತೊಡಗಿದರು. +“ಹೋಯ್ ಕರ್ಮೀನ್ ಸಾಬರೇ, ನಿಮ್ಮ ಗಡ್ಡಕ್ಕೆ. +ಮ್ಯಾಣ ಹಿಡಿದಾತು? +ಹುಸಾರಾಗಿ ತಿನ್ನಿ. +ಹಿಹ್ಹಿಹ್ಹಿ!” ಎಂದು ವಿನೋದವಾಡಿದನು ಹಮೀರ. +“ಓಹೋಹೋ, ಈ ಹಲ್‌ಮುರುಕ ಹಮೀರಣ್ಣನ ನಾ ನೋಡ್ಲೆ ಇಲ್ಲ…. +ನಿನ್ನ ಮಾವನ ಮನೀಗೆ ಹೋಗಿದ್ದೆನೋ, ಸೀತೂರಿಗೆ. +ನಿನ್ನ ಹೆಂಡ್ತಿ ಲಗ್ನಕ್ಕೆ ನಾನೆ ಎಲ್ಲ ಸರಬರಾಜು ಮಾಡಿಕೊಡ್ತೀನಿ ಅಂತಾ ಒಪ್ಪಿಕೊಂಡು ಬಂದೀನಪ್ಪಾ! …. +ಅಲೆಲೆಲೇ, ಏನೋ ಬಹಳ ನಾಚಿಕೆ ಮಾಡುತ್ತೀಯಾ? …. ” ಎಂದನು ಕರೀಂಸಾಬು. + ಹಮೀರನ ಹೃದಯದ ಹಿಗ್ಗು ಅವನ ಮೊಗವನ್ನೆಲ್ಲ ಅರಳಿಸಿದುದನ್ನು ಕಂಡು. +ಲಜ್ಜೆಯ ರೂಪನ್ನು ತಾಳಿದ್ದ ಹಮೀರನ ಸಂತೋಷ ಇನ್ನೇನನ್ನೂ ಹೇಳುವುದಕ್ಕೆ ತೋಚದೆ “ಏ, ಸುಮ್ಮನಿರಿ ಅಂದ್ರೆ! +ಈ ಸಾಬಣ್ಣನಿಗೆ ಯಾವಾಗ್ಲೂ ತಮಾಸೇನೆ!” ಎಂದು ಮಾತಿನ ದಿಕ್ಕು ಬದಲಾಯಿಸುವ ಹುನಾರಿನಿಂದ “ಅಲ್ಲಾ? +ಕರ್ಮಿನ ಸಾಬ್ರೆ, ನೀವು ಯಾಕೆ ಇಷ್ಟು ಕರಗಿದ್ದೀರಿ? +ನಿಮ್ಮ ತಮ್ಮ ಆ ಪುಡೀಸಾಬ್ರು, ನೋಡಿ, ಏಸು ಬೆಳ್ಳಗಿದ್ದಾರೆ?” ಎಂದನು. +“ಹಾಗೇ ಮತ್ತೆ? +ನಿನ್ನ ಮಾವನಿಗೆ ಚವರಿ ಮೀಸೆ, ಮೈಯೆಲ್ಲಾ ರೋಮ. +ನಿನಗೆ? +ಹಜಾಮತ್ತು ಮಾಡಿದ ಹಾಗೆ, ಮುಖ ಮೈ ಎಲ್ಲ ಹೆಂಗಸರ ಹಾಗೆ! …. + ನೀ ನೋಡು ಎಷ್ಟು ಬೆಳ್ಳಗಿದ್ದೀಯ? +ಆದರೆ ನಿನ್ನ ಹೆಂಡ್ತಿ? +ನನ್ನಷ್ಟು ಬೆಳ್ಳಗಿಲ್ಲಲ್ಲಾ!” +“ಏನಿಲ್ಲ!ಎಲ್ಲಾ ಸುಳ್ಳು!” ಪ್ರತಿಭಟಿಸಿದನು ಹಮೀರ. + “ಹಾಗಾದ್ರೆ… ನೀನಾಗಲೆ… ಮೈ… ಬಣ್ಣಗಿಣ್ಣ ಎಲ್ಲ ನೋಡಿಬಿಟ್ಟಿದ್ದೀಯಾ ಅನ್ನು?…. ” ನಿಲ್ಲಿಸಿ ನುಡಿದು ಕಣ್ಣುಮಿಟುಕಿಸಿ ಮೂದಲಿಸಿದನು ಕರೀಂಸಾಬು. +ಎಲ್ಲರೂ ಗಟ್ಟಿಯಾಗಿ ನಗತೊಡಗಲು, ಹಮೀರನೂ ಕಣ್ಣಲ್ಲಿ ನೀರು ಬರುವಂತೆ ನಗುತ್ತಾ ಸರಕ್ಕನೆ ಮೇಲೆದ್ದು, ಲಕ್ಕುಂದದ ಕಡೆ ಇಳಿಯುವ ಕಾಡುಹಾದಿಯಲ್ಲಿ ನಡೆಯತೊಡಗಿದನು. +ಅವರೆಲ್ಲರೂ ಸೇರಿ ಕರೆದರೂ ಹಿಂತಿರುಗಿ ನೋಡದೆ ಹಳುವಿನಲ್ಲಿ ಗುಡ್ಡವಿಳಿದು ಮರೆಯಾದನು. +ಆಗಲೆ ಬೈಗಾಗತೊಡಗಿತ್ತು. +ಆಕಾಶದ ಎತ್ತರದಲ್ಲಿ ಇನ್ನೂ ಚೆನ್ನಾಗಿಯೆ ಬೆಳಕು ಇದ್ದರೂ ಕಾಡಿನಲ್ಲಿ ಕಪ್ಪು ಕವಿಯತೊಡಗಿತ್ತು. +ಮೊದಮೊದಲು ಅಲ್ಲೊಂದು ಇಲ್ಲೊಂದು ಕೂಗಲು ತೊಡಗಿದ್ದ ಜೀರುಂಡೆಗಳು ಬರಬರುತ್ತಾ ಸುತ್ತ ನಾಲ್ಕು ದಿಕ್ಕಿನಿಂದಲೂ ಜೀರ್ ಜೀರ್ ಎಂಬ ಕೊರೆಯುವ ಕರ್ಕಶ ಧ್ವನಿಯ ಗರಗಸಬಲೆಯನ್ನೇ ನೇಯ್ದು ಕಾಡಿನ ಮೇಲೆ ಬೀಸಿದ್ದುವು. +ಅವುಗಳ ಆ ಕಿವಿ ಚಿಟ್ಟುಹಿಡಿಸುವ ಚೀರಾಟದಲ್ಲಿ ಹಕ್ಕಿಗಳ ಉಲಿಯಾಗಲಿ, ಕಡೆಗೆ ತಮ್ಮೊಳಗೆ ತಾವು ಆಡಿಕೊಳ್ಳುವ ಮಾತಾಗಲಿ, ಕೇಳಿಸುವುದೆ ಕಷ್ಟವಾಗಿತ್ತು. +ಆ ಜೀರ್ದನಿಯಲ್ಲಿ ಏನೊ ಒಂದು ದುಃಶಕುನದ ಕರೆಕರೆ ಅಡಗಿದ್ದು, ಆಲಿಸುವ ಕಿವಿಗೆ ಒಂದೇನೊ ನಿಡುರೇಜಿಗೆ ಹುಟ್ಟಿ, ಹೃದಯಕ್ಕೆ ಒಂದು ಅಸ್ಪಷ್ಟ ಭೀತಿಭೂತದ ಛಾಯೆ ಬಿದ್ದಂತಾಗುತ್ತಿತ್ತು. +ಎಂತಹ ಕ್ರೂರಕರ್ಮಿ ಧೂರ್ತರನ್ನೂ ಬೇಗಬೇಗನೆ ಕಾಡಿನಿಂದ ಊರ ಕಡೆಗೆ ಅಟ್ಟಿಬಿಡುವ ಒಂದು ಶ್ಮಶಾನ ಸದೃಶವಾದ ಭಯಾನಕತೆ ಆ ಜೀರುಂಡೆಗಳ ಕೊರಲಿನಿಂದ ಹೊಮ್ಮಿ, ಮುಸುಗುತ್ತಿದ್ದ ಕತ್ತಲೆಯೊಡನೆ ಮಿಳಿತವಾಗುತ್ತಿತ್ತು. +ಆ ಅರಣ್ಯಕವಾದ ಅಸಹನೀಯ ಅನುಭವದಿಂದ ಪಾರಾಗಲೋಸುಗದೆ ಹೊತ್ತಿಸಿದ್ದ ಐದು ಬೀಡಿಗಳು ಅವರ ತುಟಿಯ ನಡುವೆ ಕಿಡಿ ಹೊಮ್ಮಿಸಿ, ಹೊಗೆ ಕಾರಿ, ಹೊಗೆಸೊಪ್ಪಿನ ಕಟುವಾಸನೆಯನ್ನು ಹಬ್ಬಿಸಿದ್ದುವು. +ಆ ವಾಸನೆ, ಅವರಿಗೆ ಸುಪರಿಚಿತವಾಗಿದ್ದ ನಾಗರಿಕ ಸಂಸ್ಕಾರಗಳನ್ನೆಬ್ಬಿಸಿ, ಮನಸ್ಸನ್ನು ಆರಣ್ಯಕತೆಯ ಭಾರದಿಂದೆತ್ತಿ ಹಗುರಗೊಳಿಸಿತ್ತು. +ಐವರೂ ಸಿಂಬಾವಿಯ ಕಡೆಗೆ ಹೋಗುವ ಕಾಡುದಾರಿಯಲ್ಲಿ ಎರಡು ಕುದುರೆಗಳನ್ನೂ ನಡೆಸಿಕೊಂಡು ಹೊರಟರು. +ಇಜಾರದ ಸಾಬಿಯ ಬೆನ್ನಿನಮೇಲೆ ಬಾಳೆಯ ಹೆಗ್ಗೊನೆ; +ಲುಂಗೀಸಾಬಿಯ ಹೆಗಲಮೇಲೆ ಕಬ್ಬಿನ ಹೊರೆ – ಚಾಡಿ ಹೇಳುತ್ತಿದ್ದುವು! +ಆವೊತ್ತು ಬೆಳಿಗ್ಗೆ ಸಿಂಬಾವಿಯ ಹೊಲೆಗೇರಿಯಲ್ಲಿ, ಗಟ್ಟದ ತಗ್ಗಿನವರ ಬಿಡಾರಗಳಲ್ಲಿ ಮತ್ತು ಹಳೆಪೈಕದ ಒಕ್ಕಲು ಮನೆಯ ಗುಡಿಸಲುಗಳಲ್ಲಿ ಮಕ್ಕಳಿಗೆ ಸಂಭ್ರಮವೋ ಸಂಭ್ರಮವಾಗಿ ಹೋಯ್ತು. +ಹೊಲಗೇರಿಯ ಅಂಚಿನಲ್ಲಿದ್ದು ಬಹು ಎತ್ತರಕ್ಕೆ ಬೆಳೆದಿದ್ದ ಒಂದು ಬೃಹದಾಕಾರದ ಗೊಜ್ಜಿನ ಮಾವಿನ ಮರದ ಬುಡದಲ್ಲಿ, ಕಳೆದ ರಾತ್ರಿಯಲ್ಲಿ ಗಾಲಿಗೆ ಉದಿರಿದ್ದ ಹಣ್ಣುಗಳನ್ನು ಹೆರಕುವುದಕ್ಕಾಗಿ ಹೊತ್ತಾರೆ ಮುಂಚೆಯೆ ನೆರೆದಿದ್ದ ಹೊಲೆಯರ ಕುರುದೆಗಳಿಗೆ ಅವರ ದೈನಂದಿನ  ನಿತ್ಯಜೀವನದ ನೀರಸ ಸಾಧಾರಣತೆಯನ್ನು ಕಲಕಿ ಅಲ್ಲೋಲಕಲ್ಲೋಲ ಮಾಡುವಂತಹ ಒಂದು ಅಪೂರ್ವ ವಸ್ತು ದೃಗ್ಗೋಚರವಾಯಿತು! +ಅದು ಮೊದಲು ಗೋಚರವಾದದ್ದು ದೃಕ್ಕಿಗಲ್ಲ, ಕರ್ಣಕ್ಕೆ. +ಲಕ್ಕಿಮಟ್ಟಿನ ಬುಡದಲ್ಲಿ, ತನಗೆ ತುಸುದೂರದಲ್ಲಿಯೆ ನಿಂತು ಯಾಚನಾಧ್ವನಿಯಿಂದ ಅರಚಿಕೊಳ್ಳುತ್ತಿದ್ದ ಊರುಹಂದಿಯ ಮತ್ತು ಸದರ ಮರಿಯ ನಿತ್ಯಪರಿಚಿತ ಆರ್ತನಾದವನ್ನು ಗಮನಿಸದೆ, ‘ಹೇಲಕ್ಕೆ ಕೂತಿತ್ತು’ ಒಂದು ಕುರುದೆ! +ಹೆಣ್ಣು ಕುರುದೆ! +ಅದರ ಮೈಮೇಲೆ ಬಟ್ಟೆಯ ಚೂರು ಯಾವ ರೂಪದಲ್ಲಿಯೂ ಇರಲಿಲ್ಲ. +ತಲೆ ಕೆದರಿದ್ದ ಆ ಬತ್ತಲೆಯ ಮಗು ತನ್ನೆದುರಿಗೆ ಬಿದ್ದಿದ್ದು, ಹಕ್ಕಿಯೊ ಅಳಿಲೊ ತಿಂದು ಅರೆಯಾಗಿದ್ದ ಒಂದು ಮಾವಿನ ಹಣ್ಣನ್ನು ಹೆರಕಿಕೊಂಡು ತಿಂದು, ಅದರ ಗೊರಟನ್ನು ಚೀಪುತ್ತಾ ಇತ್ತು. +ಇದ್ದಕ್ಕಿದ್ದ ಹಾಗೆ ತಾನೆಂದೂ ಕೇಳದಿದ್ದ ಒಂದು ಭಯಂಕರ ಗರ್ಜನೆ ಕೇಳಿಸಿದಂತಾಗಿ,  ಚಿಟಾರನೆ ಚೀರುತ್ತಾ, ತನ್ನ ಅಣ್ಣ ಇದ್ದೆಡೆಗೆ ಓಡಿ ಬಂತು. +ಅವನೂ ತನ್ನ ತಂಗಿಯಂತೆಯೆ ನಗ್ನನಾಗಿದ್ದರೂ ಅವಳಿಗಿಂತಲೂ ಬಹುಶಃ ಒಂದು ವರ್ಷಕ್ಕೆ ಹಿರಿಯನಾಗಿದ್ದು, ಸೊಂಟಕ್ಕೆ ಒಂದು ಕೊಳೆಮುಸುಕಿನ ಉಡಿದಾರ ಕಟ್ಟಿದ್ದರಿಂದ ತನ್ನ ತಂಗಿಯ ರಕ್ಷೆಯಧಿಕಾರ ಪಡೆದಿದ್ದನಷ್ಟೆ! +ಆದರೆ ಅವನಿಗೂ ಆ ಅಪರಿಚಿತ ಸದ್ದನ್ನೂ ಕೇಳಿ ಅವನ ತಂಗಿಗೆ ಆಗಿದ್ದಷ್ಟೆ ಹೆದರಿಕೆಯಾಗಿದ್ದರಿಂದ ಅವರಿಬ್ಬರೂ ತಮಗಿಂತಲೂ ಒಂದು ವರ್ಷಕ್ಕೆ ದೊಡ್ಡವನಾಗಿ ಜ್ವರಗಡ್ಡೆಯಿಂದ ಹೊಟ್ಟೆ ಡೊಳ್ಳಾಗಿದ್ದು ಲಂಗೋಟಿದಾರಿಯಾಗಿದ್ದ ಒಬ್ಬನ ಬಳಿಗೆ ಆಶ್ರಯಕ್ಕಾಗಿ ಓಡಿ ಬಂದರು. +ಆ ಲಂಗೋಟಿಯ ಕುರುದೆಗೆ ಆ ಶಬ್ದ ಅಷ್ಟು ಅಪರಿಚಿತವಾದುದಾಗಿರಲಿಲ್ಲ. +ಹೋದ ವರುಷವೆ ಅವನು ಅದನ್ನು ಕೇಳಿದ್ದನು. +ಅವನು ಆ ಶಬ್ದಕ್ಕೆ ಕಾರಣವಾದದು ಅಲ್ಲೆ ಎಲ್ಲಿಯೊ ಮೇಯುತ್ತಿರಬೇಕೆಂದು ನಿಶ್ಚಯಿಸಿ, ನಾಲ್ಕು ಕಡೆಯೂ ನೋಡಿ. +ಕಂಡು “ಕುದ್ರೆ ಕಣ್ರೋ, ಕುದ್ರೆ!ಸಾಬರ ಕುದ್ರೆ!” ‘ಹೇ ಹೇ ಹೇ’ ಎಂದು ಕೂಗಿ ಹರ್ಷಘೋಷ ಮಾಡುತ್ತಾ, ದೂರದಲ್ಲಿ ಮೇಯುತ್ತಿದ್ದಾ ಪ್ರಾಣಿಯ ಕಡೆಗೆ ಓಡಿದನು. +ಸರಿ, ಹೊರಟಿತು ಹತ್ತಾರು ಹುಡುಗರ ಕೊರಳ ಕೂಗು. +“ಕುದ್ರೆ!ಕುದ್ರೆ!ಕುದ್ರೆ!ಕುದ್ರೆ!ಬನ್ರೋ ಬನ್ರೋ!ಕುದ್ರೆ!ಕುದ್ರೆ!ಕುದ್ರೆ!ಹೇ ಹೇ ಹೇ! …. +ಲಂಗೋಟಿ, ಉಡಿದಾರ, ಬತ್ತಲೆ ಇತ್ಯಾದಿ ಎಲ್ಲ ‘ಹೊಲೇರ ಕುರುದೆ’ಗಳೂ ಧಾವಿಸಿ, ಮೇಯುತ್ತಿದ್ದ ಕುದುರೆಗಳಿಗೆ ಸಾಕಷ್ಟು ದೂರದಲ್ಲಿಯೆ ಭಯಭಕ್ತಿಯಿಂದ ಗುಂಪುನಿಂತು ಅವುಗಳ ಅದ್ಭುತ ವೈಚಿತ್ಯ್ರವನ್ನು ಬೆರಗುಗಣ್ಣಾಗಿ ನೋಡತೊಡಗಿದುವು. +ನಾಗರಿಕತೆಗೆ ಸುದುಷ್‌ಪ್ರವೇಶ್ಯವಾಗಿದ್ದ ಆ ಮಲೆನಾಡಿನ ಕೊಂಪೆಯ ಕಾಡುಹಳ್ಳಿಯ ಹುಡುಗರಿಗೆ ಮೇಗರವಳ್ಳಿಯ ಕರ್ಮಿನ್‌ಸಾಬರ ಕುದುರೆಯ ಆಗಮನವೆಂದರೆ ಒಂದು ಮಹತ್ತಾದ ಐತಿಹಾಸಿಕ ಘಟನೆಯೆ! +ಆ ಅಪೂರ್ವಪ್ರಾಣಿಯನ್ನು ನೋಡುವುದೆ ಅವರಿಗೆಲ್ಲ ಒಂದು ಮಹತ್ತಾದ ಅದ್ಭುತಾನುಭವ. +ಜೊತೆಗೆ, ಆ ಅನುಭವವನ್ನು ಮತ್ತಷ್ಟು ಆನಂದಮಯವನ್ನಾಗಿ ಮಾಡುವ ಇನ್ನೊಂದು ಕಾರಣವೂ ಇತ್ತು. +ಕರ್ಮಿನ್ ಸಾಬರು ನೀರುಳ್ಳಿ, ದಿನಸಿ, ಒಣಮೀನು ಮುಂತಾದ, ದೊಡ್ಡವರಿಗೆ ಸಂಸಾರ ನಡೆಸಲು ಆವಶ್ಯಕವಾದ, ಪದಾರ್ಥಗಳ ಜೊತೆಗೆ ಕೊಬರಿ, ಕಡಲರ, ಉತ್ತುತ್ತೆ, ಓಲೆಬೆಲ್ಲ, ಕರ್ಜೂರ, ಮಿಠಾಯಿ, ಬತ್ತಾಸು, ಬೆಂಡು ಮೊದಲಾದ, ವಿಶೇಷವಾದ ಮಕ್ಕಳ ಹಿಗ್ಗಿಗೆ ಕಾರಣವಾಗುವ, ಪದಾರ್ಥಗಳನ್ನೂ ಮಾರಾಟಕ್ಕೆ ತರುತ್ತಿದ್ದರು. +ಮೊದಲನೆಯ ವರ್ಗದ ಸರಕನ್ನು ಬಹಿರಂಗವಾಗಿಯೆ, ಎಂದರೆ ಮನೆಯ “ಮುಂಚೆಕಡೆ”ಯೆ ವ್ಯಾಪಾರ ಮಾಡುತ್ತಿದ್ದರು, ಮನೆಯ ಯಜಮಾನರ ಸಮ್ಮುಖದಲ್ಲಿ. +ಎರಡನೆಯ ವರ್ಗದ ಸರಕಿನ ವ್ಯಾಪಾರವೆಲ್ಲ ಸಾಧಾರಣವಾಗಿ ಅಂತರಂಗದಲ್ಲಿ, ಎಂದರೆ ಮನೆಯ ಹಿತ್ತಲುಕಡೆಯ ಬಾಗಿಲಲ್ಲಿ, ಹೆಂಗಸರು ಮಕ್ಕಳೊಡನೆ ನಡೆಯುತ್ತಿತ್ತು. +“ಹಿತ್ತಲು ಕಡೆಯ” ಮಾರುಕಟ್ಟೆಯಲ್ಲಿಯೆ ಚೆನ್ನಾಗಿ ಗಿಟ್ಟುತ್ತದ್ದುದು! …. + ಅಲ್ಲಿ ನೋಡಿ ಸಿಂಬಾವಿ ಮನೆಯ ಹಿತ್ತಲುಕಡೆಯ ಬಾಗಿಲಾಚೆ, ದೊಡ್ಡ ಹುಣಿಸೆಮರದ ಬುಡದಲ್ಲಿ ನಿಬಿಡವಾಗಿ ಬೆಳೆದಿದ್ದ ಲಕ್ಕಿ, ಅರಮರಲು, ಹುಳಿಚೊಪ್ಪು ಮೊದಲಾದ ಪೊದೆಗಳ ಮಧ್ಯೆ, ಸಹಿಸಬಾರದ ಉಚ್ಚೆಯ ಸಿನುಗು, ಹೇಲಿನ ನಾತಗಳನ್ನು ಒಂದಿನಿತೂ ಗಮನಕ್ಕೂ ತಂದುಕೊಳ್ಳದೆ, ಮನೆಗೆಲಸದ ಹುಡುಗ, ದೊಳ್ಳ, ಏನೋ ಕಳ್ಳ ಕೆಲಸದಲ್ಲಿ ತೊಡಗಿದಂತೆ ಅತ್ತ ಇತ್ತ ನೋಡುತ್ತಾ ಏನನ್ನೊ ಎತ್ತುತ್ತಿದ್ದಾನೆ! +ಕಳೆದ ರಾತ್ರಿಯೆ ಆ ಗೋಣಿಚೀಲದ ಗಂಟನ್ನು ಗುಟ್ಟಾಗಿ ತಂದು ಅಲ್ಲಿ ಬೈತಿಟ್ಟಿದ್ದನು. +ಹಿಂದಿನ ದಿನ ಸಂಜೆಯ ಮುಂಗಪ್ಪಿನಲ್ಲಿ ಕರ್ಮಿನ ಸಾಬರ ಗುಂಪು ಕುದುರೆಗಳೊಡನೆ ಬಂದು, ‘ಹೆಗ್ಗಡೇರು ಇದ್ದಾರೆಯೆ?’ ಎಂದು ವಿಚಾರಿಸಿ, ಅವರು ಕಲ್ಲೂರಿಗೆ ಹೋಗಿರುವುದನ್ನು ತಿಳಿದು, ಜಟ್ಟಮ್ಮ ಹೆಗ್ಗಡಿತಿಯರ ಅಪ್ಪಣೆ ಪಡೆದು, ಸೌದೆ ಕೊಟ್ಟಿಗೆಯ ಕಡಿಮಾಡಿನಲ್ಲಿ ವರ್ಷ ವರ್ಷವೂ ಅವರು ಸಿಂಬಾವಿಗೆ ಹೇರು ತಂದಾಗಲೆಲ್ಲ ಅನುಸರಿಸುವ ಪದ್ಧತಿಯಂತೆ, ಬೀಡು ಬಿಟ್ಟಾಗಲೆ ಮನೆಗೆಲಸದ ಹುಡುಗ, ದೊಳ್ಳ, ಅಡುಗೆ ಕೆಲಸದ ಮರಾಟಿ ಮಂಜನ ಕದರಡಕೆಯ ದಾಸ್ತಾನನ್ನು ಅಜಮಾಯಿಸಿ ಮಾಡಿದ್ದನು. + ಅಂದರೆ ಮರಾಟಿ ಮಂಜನು ಸಾತ್ವಿಕ ಸತ್ಯಸಂಧತೆಯಿಂದ ಶೇಖರಿಸಿದ್ದ ಕದರಡಕೆ ಬರಿಯ ಬೆಟ್ಟೆ ಗೋಟು ಎಂದು ಕಂಡುಬಂದಿದ್ದರಿಂದ ಅದರ ಜೊತೆಗೆ ಸ್ವಲ್ಪ ಹಸ ಮತ್ತು ದಳಗಳನ್ನಾದರೂ ಬೆರಕೆ ಮಾಡದಿದ್ದರೆ ಸಾಬರು ಕಡಲೆ ಕೊಬ್ಬರಿ ಬತ್ತಾಸುಗಳನ್ನು ಸರಿಯಾದ ಪರಿಮಾಣದಲ್ಲಿ ತನಗೆ ಕೊಡುವುದಿಲ್ಲ ಎಂದು ಶಂಕಿಸಿ, ಮನೆಯ ಸ್ವಂತ ಮಾರಾಟದ ಅಡಕೆ ರಾಶಿಗಳಿದ್ದ ಗರಡೀಕೋಣೆಗೂ ಕದ್ದು ನುಗ್ಗಿ, ಮರಾಟಿಮಂಜನ ದಾಸ್ತಾನಿನಲ್ಲಿ ಕಂಡು ಬಂದಿದ್ದ ನ್ಯೂನತೆಯನ್ನು ನಿವಾರಿಸಿ ಕೊಂಡಿದ್ದನು. +ಆದರೂ ಅವನು ಅಷ್ಟೆಲ್ಲ ಮೆಹನತ್ತು ಮಾಡಿದ್ದರೂ, ಕರ್ಮಿನ್ ಸಾಬರ ಟೀಕೆ ಸ್ವಲ್ಪ ನಿರಾಶಾದಾಯಕವಾಗಿಯೆ ಇತ್ತು. +ಯಾರಾದರೂ ಕಂಡುಬಿಟ್ಟಾರು ಎಂದು ಕಳವಳಗೊಂಡಿದ್ದ ದೊಳ್ಳನಿಗೆ ಗಂಟಲು ಗದ್ಗದವಾಗಿ, ಕಣ್ಣು ಹನಿತುಂಬಿ, ಅಳು ಬರುವಂತಾಯ್ತು. +ದೊಳ್ಳ ತಂದಿದ್ದ ಗೋಣಿಚೀಲದ ಗಂಟನ್ನು ಉದ್ದೇಶಪೂರ್ವಕವಾದ ತಿರಸ್ಕಾರದ ಭಾವದಿಂದಲೂ ಔದಾಸೀನ್ಯದಿಂದಲೂ ನಿಧಾನವಾಗಿ ಬಿಚ್ಚುತ್ತಾ, ಅದರಲ್ಲಿದ್ದ ಅಡಕೆಯ ಗುಣಕ್ಕೂ ಪ್ರಮಾಣಕ್ಕೂ ಒಳಗೊಳಗೆ ಹೃದಯ ಹಿಗ್ಗುತ್ತಿದ್ದರೂ ಮುಖವನ್ನು ಸಿಂಪಡಿಸುತ್ತಾ, ಕರೀಂಸಾಬಿ, “ತ್ಚು!ತ್ಚು!ತ್ಚು!ಏ ಹುಡುಗಾ, ಎಂಥಾ ಬುರ್ನಾಸ್ ಅಡಕೆಯೋ ಇದು? +ಎಲ್ಲಿ ಸಿಕ್ಕಿತೊ ನಿನಗೆ?” ಎನ್ನುತ್ತಾ ಅಡಕೆಯಲ್ಲಿ ಕೈಯಾಡಿಸಿ, ತನ್ನ ತಮ್ಮ ಪುಡೀಸಾಬೂಗೆ ಏನನ್ನೊ ಮಲೆಯಾಳಿಯಲ್ಲಿ ಹೇಳಿ ಕಣ್ಣು ಮಿಟುಕಿಸಿದನು. +“ಅದ್ಯಾಕೆ, ಸಾಬ್ರೆ? +ತಾನೇ ತ್ವಾಟದಾಗೆ ಕದರಡಿಕೆ ಹೆರಕಿ, ಸುಲಿದು, ಚೊಗರು ಹಾಕಿ ಬೇಯಿಸಿ ಮಾಡಿದ್ದು.” ದೊಳ್ಳನೆಂದನು ಅಳುಕು ದನಿಯಿಂದಲೆ. +“ಬರೀ ಗೋಟು, ಬೆಟ್ಟ!ಇದಕ್ಕೆ ಏನು ಕೊಡೋದೋ ನಿನಗೆ? …. +ಹೋಗು ಪುಡೀ ಸಾಬರ ಹತ್ತಿರ; +ಕೊಟ್ಟು ಕಳಿಸುತ್ತಾರೆ.” ಎಂದು ಅವಸರವಸರವಾಗಿ, ದೊಳ್ಳನ ಯಾವ ಅಭಿಪ್ರಾಯಕ್ಕೂ ಕಾಯದೆ, ಅಡಕೆಯನ್ನೆಲ್ಲ ತಮ್ಮ ದೊಡ್ಡ ಹಸುಬೆ ಚೀಲಕ್ಕೆ ಸುರಿದುಕೊಂಡು, ದೊಳ್ಳನ ಹರಕಲು ಚೀಲವನ್ನು ಅವನಿಗೆ ಕೊಟ್ಟುಬಿಟ್ಟು, ಅವನು ಅಲ್ಲಿ ಇದ್ದಾನೆಯೆ ಇಲ್ಲವೆ ಎಂಬ ಪ್ರಜ್ಞೆಯೆ ಇಲ್ಲದವರಂತೆ, ಅನ್ಯಕಾರ್ಯದಲ್ಲಿ ಮಗ್ನರಾದರು ‘ಕರ್ಮಿನ ಸಾಬ್ರು!’ತಾನು ಕದ್ದಿದ್ದ ಮರಾಟಿಮಂಜನ ‘ಕದರಡಕೆ’ಗೆ ಸರಿಯಾದ ತಿಂಡಿಸಾಮಾನು ಬರುವುದಿಲ್ಲ ಎಂದು ಶಂಕಿಸಿ. +ಒಡೆಯರ ಮನೆಯ ಅಡಕೆಯ ರಾಶಿಯಿಂದಲೂ ಒಂದಷ್ಟು ಒಳ್ಳೆಯ ಹಸ ಮತ್ತು ದಳಗಳನ್ನು ಕದ್ದು ಸೇರಿಸಿಕೊಂಡು ಬಂದಿದ್ದ ದೊಳ್ಳನಿಗೆ ಕರ್ಮಿನ್ ಸಾಬರು ಬೇಕೆಂದೇ ಸುಳ್ಳೆ ಹೇಳಿ, ತನಗೆ ದಗಾ ಹಾಕುತ್ತಿದ್ದಾರೆಂದು ಗೊತ್ತಾದರೂ, ಉಕ್ಕಿಬರುತ್ತಿದ್ದ ದುಃಖ ಕೋಪಗಳನ್ನು ನುಂಗಿಕೊಂಡನು. +ಮರಾಟಿ ಮಂಜನಾಗಲಿ ಮತ್ತೆ ಯಾರಾದರಾಗಲಿ ಬಂದು ತಾನು ಮಾಡುತ್ತಿದ್ದ ವ್ಯಾಪಾರವನ್ನು ಗಮನಿಸಿದರೆ, ಎಲ್ಲಿ ಸಿಕ್ಕಿಬೀಳುತ್ತೇನೆಯೊ ಎಂದು ಅಂಜಿ, ವಿನಿಮಯ ಕಾರ್ಯವನ್ನು ಆದಷ್ಟು ಬೇಗನೆ ಮುಗಿಸುವ ಆತುರದಿಂದ ಪುಡೀಸಾಬರ ಕಡೆಗೆ ಹೋದನು. +ಅಲ್ಲಿ, ಕಟ್ಟಿ ಇಟ್ಟಿದ್ದ ಚೀಲಗಳಲ್ಲಿ, ಉತ್ತುತ್ತೆಯೊ ಕರ್ಜೂರವೊ ಓಲೆಬೆಲ್ಲೊ ಬತ್ತಾಸೊ ಬೆಂಡೊ ಮಿಠಾಯಿಯೊ ಯಾವ ಯಾವ ದೇವತೆಗಳೊ ತನ್ನನ್ನು ಅನುಗ್ರಹಿಸಲು ಕಾತರರಾಗಿ, ಪ್ರತ್ಯಕ್ಷರಾಗಲು ಕಾದು ಕುಳಿತಿರುವ ಚಿತ್ರವನ್ನು ಕಲ್ಪನೆಯ ಕಣ್ಣುಕೆರಳಿ ಕಾಣುತ್ತಾ ನಿಂತನು. +ಆದರೆ ಪುಡೀಸಾಬು ಬಿದಿರಿನ ಗೆಣ್ಣು ಕತ್ತರಿಸಿ ಇಚಿಸಿದ್ದ ಒಂದು ಸಣ್ಣ ಸಿದ್ದೆಯನ್ನು ಕೈಗೆ ತೆಗೆದುಕೊಂಡು, ಅದನ್ನು ಒಂದು ಚೀಲದೊಳಗೆ ತೂರಿಸಿ, ಹೊರಗೆ ತೆಗೆದು, ದೊಳ್ಳನತ್ತ ಕೈ ಚಾಚಿ ನೀಡಿದಾಗ, ಪ್ರತ್ಯಕ್ಷವಾಗಿದ್ದ ಆ ಬಡಕಲು ಬೂಸಲು ದೇವತೆಯನ್ನು ನೋಡಿ  ಅವನ ಆಶೆ ತಲೆಕೆಳಗಾಗಿ ಉರುಳಿ ಹೋಯಿತು! +ಆ ಸಿದ್ಧೆಯೊಳಗಿದ್ದ ತಿನಿಸಿನ ಗುಣ ಮಾತ್ರ ಎರಡೂ ಅತ್ಯಂತ ನಿರಾಶಾದಾಯಕವಾಗಿತ್ತು! +ಆ ಹಳೆಯ ಮುಗ್ಗಲು ಹುರಿಗಡಲೆಗೆ ನಿಡುಸುಯ್ಯುತ್ತಾ ಇನ್ನೇನು ಮಾಡುವುದು ಎಂದು ಸೆರಗನ್ನೇನೋ ಒಟ್ಟಿದನು, ತನ್ನ ಅಡಕೆಯನ್ನೆಲ್ಲ ಸವನಿಸಿಕೊಂಡು ಕರ್ಮಿನ್ ಸಾಬರು ಹಿಂತಿರುಗಿಸಿದ್ದ ಖಾಲಿ ಚೀಲವನ್ನೆ! +ತಾನು ಕೊಟ್ಟಿದ್ದ ಅಷ್ಟೊಂದು ಅಡಕೆಗೆ ಇನ್ನೂ ಬೇರೆ ಬೇರೆಯ ಉತ್ತಮತರದ ತಿಂಡಿಸಾಮಾನುಗಳೂ ದೊರೆಯುತ್ತವೆ ಎಂದು ಚೀಲವನ್ನೊಡ್ಡಿಕೊಂಡೇ ಕಾದು ನಿರೀಕ್ಷಿಸಿ ನಿಂತಿದ್ದ ದೊಳ್ಳನನ್ನು ಗಂಭೀರ ಮುಖಮುದ್ರೆಯಿಂದ ನೋಡಿ ಪುಡೀಸಾಬು “ಮತ್ತೆ ಯಾಕೆ ನಿಂತೀಯ, ದೊಳ್ಳಣ್ಣಾ?” ಎಂದು ಆಶ್ಚರ್ಯ ಸೂಚಿಸುವ ಧ್ವನಿಯಲ್ಲಿ ಕೇಳಿದನು. +“ಏನು, ಸಾಬ್ರೆ, ಇದು? +ಅಷ್ಟೊಂದು ಅಡಿಕೆ ಕೊಟ್ಟೀನಿ! +ಬರೀ ಉಂದು ಮುಷ್ಟಿ ಕಡಲೆ ಕೊಟ್ಟೀರಲ್ಲಾ? +ಉತ್ತುತ್ತೆ ಕರ್ಜೂರ ಬತ್ತಾಸು ಏನೂ ಇಲ್ಲೇನು?” ತುಸು ಅಳುದನಿಯಿಂದಲೆ ಯಾಚಿಸಿದನು ದೊಳ್ಳ. +“ಉತ್ತುತ್ತೆ ಕರ್ಜೂರ ಅಂದ್ರೆ ಏನೂ ಅಂತಾ ತಿಳಿದುಕೊಂಡಿದ್ದೀಯಾ? +ಅವೇನು ನಿನ್ನ ಅಡಕೆ ಸಿಕ್ಕಹಾಗೆ ಕಾಡು ಬದಿಯ ತೋಟದಾಗೆ ಸಿಕ್ಕುತ್ತವೆ ಅಂತಾ ಮಾಡಿದ್ದೀಯಾ? +ಅವು ಎಲ್ಲಿಂದ ಬರುತ್ತವೆ ನಿನಗೆ ಗೊತ್ತೇ? +ಅರಬ್ಬೀ, ಅರಬ್ಬೀ, ಅರಬ್ಬೀ ದೇಶದಿಂದ ಕಣೋ! +ಸಾವಿರಾರು ಮೈಲಿ ದಾಟಿಕೊಂಡು, ಸಮುದ್ರ ಹಾದು ಬರುತ್ತವೆ!ತಿಳಿಯಿತೇನು? +ನೀನು ತಂದ ಅಡಕೆಯ ಕರೀದಿಯೆಲ್ಲ ಒಂದೇ ಒಂದು ಉತ್ತುತ್ತೆಗೆ ಸಾಲದೋ! +ನಿನ್ನನ್ನೆ ಮಾರಿಕೊಂಡರೂ ಒಂದು ಅಚ್ಚೇರು ಕರ್ಜೂರವೂ ಸಿಗಲಾರದೋ! …. +ಅರೆ!ಇಷ್ಟು ದೊಡ್ಡ ಹುಡುಗನಾಗಿ ಕಣ್ಣೀರು ಹಾಕುತ್ತೀಯಲ್ಲೋ! +ನಾಚಿಕೆ ಆಗೋದಿಲ್ಲವೆ ನಿಮಗೆ?” ಅಣಕು ನಗೆಯಾಡಿದನು ಪುಡೀಸಾಬು, ದೊಳ್ಳನ ಕಣ್ಣಿನಿಂದ ಬಳಬಳನೆ ಎರಡು ಮೂರು ಹನಿ ತೊಟ್ಟಿಕ್ಕಿದುದನ್ನು ಕಂಡು. +ಪಕ್ಕದಲ್ಲಿ ಏನೋ ಬಹು ಮುಖ್ಯವಾದ ಕೆಲಸದಲ್ಲಿ ತೊಡಗಿರುವಂತೆ ನಟಿಸಿಯೂ ಎಲ್ಲವನ್ನೂ ಗಮನಿಸುತ್ತಿದ್ದ ಕರೀಂಸಾಬು ಪುಡೀಸಾಬುಗೆ ಕನ್ನಡದಲ್ಲಿಯೆ “ಹೋಗಲಿ, ಪಾಪ! +ಒಂದೊಂದೇ ಉತ್ತುತ್ತೆ ಕರ್ಜೂರ ಬತಾಸು ಕೊಟ್ಟು ಕಳಿಸು.” ಎಂದನು. +ದೊಳ್ಳ ಕೊಟ್ಟಿದ್ದ ಅಡಕೆಯ ಬೆಲೆ ಅದಕ್ಕೆ ನೂರುಮುಡಿ ಆಗುತ್ತದೆ ಎಂದು ಅವನಿಗೆ ಗೊತ್ತಿಲ್ಲವೆ? +ಕಣ್ಣೀರೊರೆಸಿಕೊಂಡು ದೊಳ್ಳ ಪುಡೀಸಾಬಿಯಿಂದ ಆ ಅನುಗ್ರಹವನ್ನು ಸ್ವೀಕರಿಸಿ, ಅಳುವಿಗೂ ನಗುವಿಗೂ ನಡುವಣ ಮುಖಭಂಗಿಯನ್ನು ಪ್ರದರ್ಶಿಸುತ್ತಾ ಯಾಚಿಸಿದನು. + “ಒಂದೇ ಒಂದು ವಾಲೆಬೆಲ್ಲಾನಾದ್ರೂ ಕೊಡಿ, ಸಾಬ್ರೆ!” + “ಅರೆ ಅಲ್ಲಾ!ನಿನಗೆ ಎಷ್ಟುಕೊಟ್ಟರೂ ಸಾಲದಲ್ಲೊ! …. ” ಎಂದು ಪುಡೀಸಾಬು ಇಡಿಯ ಓಲೆಬೆಲ್ಲವಲ್ಲದಿದ್ದರೆ ಒಂದು ಚೂರನ್ನಾದರೂ ಕೊಡುವ ಮನಸ್ಸುಮಾಡಿ, ಸಾವಧಾನವಾಗಿ ಓಲೆಬೆಲ್ಲವಿದ್ದ ಚೀಲವನ್ನು ಗೊತ್ತುಮಾಡಿಕೊಳ್ಳುವುದರಲ್ಲಿದ್ದನು. +ಅಷ್ಟರಲ್ಲಿ ತನ್ನ ಗಳುಕಾಲುಗಳನ್ನು ನಿಧಾನವಾಗಿ ಎತ್ತಿಎತ್ತಿ ಬೀಸಿ ಹಾಕುತ್ತಾ ದೂರದಲ್ಲಿ ಬರುತ್ತಿದ್ದ ಮರಾಟಿಮಂಜನನ್ನು ಕಂಡು ಹೌಹಾರಿ ದೊಳ್ಳ “ಆಮ್ಯಾಲೆ ಬತ್ತೀನಿ, ಸಾಬ್ರೆ. +ಕೊಡಬೈದಂತೆ!” ಎಂದು ಕರೀಂಸಾಬು ಕಡೆ ತಿರುಗಿನೋಡಿ ಪಿಸುದನಿಯಲ್ಲಿ “ಆ ಮಂಜಗೆ ಹೇಳಬ್ಯಾಡಿ, ಸಾಬ್ರೆ.” ಎಂದು ಪೊದೆಗಳ ನಡುವೆ ನುಸಿದು ಓಡಿ ಕಣ್ಮರೆಯಾದನು. +ಕೊನೆಯ ಮಾತುಗಳನ್ನು ದೊಳ್ಳ ಹೇಳುವುದೇನೂ ಬೇಡವಾಗಿತ್ತು. +ಏಕೆಂದರೆ, ಕಳ್ಳವ್ಯಾಪಾರದಲ್ಲಿ ನುರಿತಿದ್ದ ಕರ್ಮಿನ್ ಸಾಬುವಿಗೆ ಒಬ್ಬ ಗಿರಾಕಿಯ ಗುಟ್ಟನ್ನು ಇನ್ನೊಬ್ಬ ಗಿರಾಕಿಗೆ ಬಿಟ್ಟುಕೊಡಬಾರದು ಎಂಬ ಅರ್ಥಶಾಸ್ತ್ರದ ರಹಸ್ಯ ಅನುಭವಪೂರ್ವಕವಾಗಿಯೆ ಚೆನ್ನಾಗಿ ಗೊತ್ತಾಗಿತ್ತು. +“ನಮ್ಮ…. ದೊಳ್ಳ ಹುಡುಗ…. +ಆ!ಇಲ್ಲೆಲ್ಲಾದ್ರು ಬಂದಿದ್ನ, ಸಾಬ್ರೆ?ಆ?” ಆಲಿಸುವವರಿಗೆ ಆಕಳಿಕೆಯೆ ಬರುವಷ್ಟು ಸಾವಕಾಶವಾಗಿ ಪ್ರಶ್ನಿಸಿದ್ದನು ಮರಾಟಿ ಮಂಜ, ತುಸು ರಾಗಧ್ವನಿಯಲ್ಲಿ. +ತಲೆಯಲ್ಲಾಡಿಸಿ “ಇಲ್ಲ; ಇಲ್ಲಿ ಬರಲಿಲ್ಲ.” ಎಂದರು ಸಾಬರು. +“ಆ?ಆ ಮುಂಡೇಕುರುದೆ ನನ್ನ ಕದರಡಿಕೆ ಕದ್ದುಕೊಂಡು ಹೋಗಿದಾನಲ್ಲಾ! +ಆ? …. ಅಂವ ಏನಾದ್ರೂ ಅಡಿಕೆ ತಂದರೆ, ಹಿಡಿದು ಇಟ್ಟುಕೊಂಡಿರಿ!ಆ?ಆ’ತಾ?ಆ?”ಸಾಬರು ಮಾತನಾಡಲಿಲ್ಲ; +ತಲೆದೂಗಿ ಸಮ್ಮತಿಸಿದರು, ಅಷ್ಟೆ. +ಮಂಜ ಹತಾಶನಾದಂತೆ ಹಿಂದಿರುಗಿ, ತುಸು ಬಿರಬಿರನೆ ನಡೆದನು. +ಹಿಂತಿರುಗಿ ಮನೆಗೆ ಬಂದ ಮರಾಟಿ ಮಂಜನ ಬರಿಗೈಯನ್ನು ಕಂಡು ತರುಣಿ ಲಕ್ಕಮ್ಮ ಸ್ವಲ್ಪ ರಹಸ್ಯಧ್ವನಿಯಲ್ಲಿ ಕೇಳಿದಳು, ಅತ್ತಿಗೆ ಜಟ್ಟಮ್ಮ ಹೆಗ್ಗಡತಿಯವರು ಅಲ್ಲೆಲ್ಲಿಯೂ ಇಲ್ಲ ಎಂಬುದನ್ನು ನಿಶ್ಚಯಿಸಿಕೊಂಡು, “ಏನೋ?ಸಿಕ್ಕಲ್ಲೇನೋ?” +“ಆಞ ಹಾಳು ಮುಂಡೆ ಕುರುದೆ ಅಲ್ಲಿಗೆ ಬರನೇಇಲ್ಲಂತೇ” – ಮಂಜನೆಂದನು ರಾಗಧ್ವನಿಯಿಂದ. . +“ಹಾಂಗಾದರೆ “ ಅತ್ತ ಇತ್ತ ನೋಡಿ, ಸ್ವಲ್ಪ ಆಲೋಚಿಸಿ, ಏನನ್ನೊ ನಿರ್ಣಯಿಸಿದಂತೆ ಸರಕ್ಕನೆ ಹೊರಟು “ಬಾರೋ ನಾನೇ ಕೊಡ್ತೀನಿ.” ಎಂದು ಲಕ್ಕಮ್ಮ ಮನೆಯ ಅಡಕೆ ರಾಶಿಯಿದ್ದ ಕೋಣೆಯ ಕಡೆಗೆ ಹೋದಳು. +ಲಕ್ಕಮ್ಮ ಕೊಟ್ಟಿದ್ದ ಹಸನಡಕೆಯನ್ನು ಮಂಜ ಸಾಬರ ಬೀಡಿಗೆ ಒಯ್ದು, ಹೆಗ್ಗಡೆಯವರ ತಂಗಿಯೆ ಹೇಳಿ ಕಳುಹಿಸಿದ್ದಾರೆ ಎಂಬುದನ್ನೂ ಸ್ಪಷ್ಟಪಡಿಸಿ, ಓಲೆಬೆಲ್ಲ, ಉತ್ತುತ್ತೆ, ಕರ್ಜೂರಾದಿ ತಿಂಡಿಸಾಮಾನುಗಳನ್ನು ಮುಚ್ಚಿಕೊಂಡೆ ತಂದುಕೊಟ್ಟರು. +ಈ ಸಾರಿಯೂ ಕರ್ಮಿನ್ ಸಾಬರು ಲಾಭಕರವಾಗಿಯೆ ವ್ಯಾಪಾರ ಮಾಡಿದ್ದರೂ ದೊಳ್ಳನಿಗೆ ಮಾಡಿದಂತೆ ಬುಡಕಟ್ಟು ಚೌರ ಮಾಡುವ ಸಾಹಸಕ್ಕೆ ಹೋಗಿರಲಿಲ್ಲ. +ಸಿಂಬಾವಿ ಭರಮೈಹೆಗ್ಗಡೆಯವರ ಖಾಸಾ ತಂಗಿಯಾಗಿದ್ದು ಅವಿವಾಹಿತೆಯಾಗಿದ್ದ ಲಕ್ಕಮ್ಮ ತಮ್ಮ ಮನೆಯ ಅಡಕೆಯನ್ನು ತಾನೆಯೆ, ತಮ್ಮ ಅಡುಗೆ  ಆಳಿನ ಸಮ್ಮುಖದಲ್ಲಿಯೆ, ‘ಕದ್ದು ಮುಚ್ಚಿ’ ಮಾಡಿದುದು ಏಕೆ ಎಂದು ಅರಿಯಬೇಕಾದರೆ, ತುಸು ಒಳಹೊಕ್ಕು ನೋಡಿದಲ್ಲದೆ ತಿಳಿಯುವುದಿಲ್ಲ. + ಅಡಕೆಕೊಯ್ಲು ಪೂರೈಸಿ, ಮನೆಯ ಕೊನೆತೆಗೆಯಿಸುವುದೆಲ್ಲ ಮುಗಿದ ಮೇಲೆ ಮನೆಯ ಹೆಂಗಸರು ಮಕ್ಕಳೂ ಮತ್ತು ಅವರ ಅನುಮತಿ ಪಡೆದ ಮನೆಯ ಒಳಗೆಲಸದ ಆಳುಗಳೂ ತೋಟದಲ್ಲಿ ಉದುರಿ ಬಿದ್ದಿರುವ ಅಡಕೆಕಾಯಿಗಳನ್ನು ಆಯ್ದು, ಸುಲಿದು, ಬೇಯಿಸಿ, ಹರಡಿ ಆರಿಸಿ ತಮ್ಮ ತಮ್ಮ ಸ್ವಂತ ಚಿಲ್ಲರೆ ಖರ್ಚನ್ನು ಸಂಪಾದಿಸಿಕೊಳ್ಳಲು ‘ಕದರಡಕೆ’ ಮಾಡಿಕೊಳ್ಳುತ್ತಿದ್ದುದು ವಾಡಿಕೆ. +ಆದರೆ ಸಿಂಬಾವಿ ಭರಮೈಹೆಗ್ಗಡೆಯವರ ಹೆಂಡತಿ ಜಟ್ಟಮ್ಮ ಹೆಗ್ಗಡತಿಗೂ ಅವರ ಗಂಡನ ತಂಗಿ ಲಕ್ಕಮ್ಮನಿಗೂ ಹುಯ್ದಕ್ಕಿ ಬೇಯುತ್ತಿರಲಿಲ್ಲ ವಾದ್ದರಿಂದ ಲಕ್ಕಮ್ಮಗೆ ‘ಕದರಡಿಕೆ’ ಹೆರಕಲು ಆಗದಿರುವಂತೆ ಆಳುಗಳಿಂದ ಅಡಚಣೆ ತಂದೊಡ್ಡಿದ್ದಳು ಜಟ್ಟಮ್ಮ. +ಜಟ್ಟಮ್ಮ ದೊಳ್ಳ ಹುಡುಗನನ್ನು ತನ್ನ ಪರ ಒಳಗೆ ಹಾಕಿಕೊಂಡು ಕೆಲಸ ಮಾಡಿಸುತ್ತಿದ್ದಳು. +ಲಕ್ಕಮ್ಮ ತನ್ನ ಸುಖ ದುಃಖ ತೋಡಿಕೊಂಡು ಕೆಲಸ ಮಾಡಿಸುತ್ತಿದ್ದಳು. +ಲಕ್ಕಮ್ಮ ತನ್ನ ದುಃಖ ತೋಡಿಕೊಂಡು ಅಡುಗೆಯಾಳು ಮರಾಟಿ ನಂಜನ ಸಹಾನುಭೂತಿ ಸಂಪಾದಿಸಿದಳು. +ಆದರೆ ದೊಳ್ಳನ ಚುರುಕಿನ ಮುಂದೆ ಮರಾಟೆ ಮಂಜನ ‘ನಿಧಾನ’ ಏನೇನೂ ನಡೆಯುತ್ತಿರಲಿಲ್ಲ. +ಮಂಜನೂ ತನಗೆ ಬಿಡುವಾದಾಗಲೆಲ್ಲಾ ತೋಟಕ್ಕೆ ಹೋಗಿ ಸ್ವಲ್ಪ ಕದರಡಕೆ ಹೆರಕಿದ್ದನು, ಲಕ್ಕಮ್ಮನಿಗಾಗಿ. +ಆದರೆ ಅದನ್ನೂ ದೊಳ್ಳ ಕದ್ದು ಹಾರಿಸಿದ್ದನು. +ಅತ್ತಿಗೆ ತನಗೆ ಯಾವ ವಿಶೇಷವಾದ ತಿಂಡಿಗಳನ್ನೂ ಕೊಂಡು ಕೊಡುತ್ತಿರಲಿಲ್ಲವಾದ್ದರಿಂದ, ತಾಯಿ ಬದುಕಿದ್ದಾಗ ತಾನು ಹುಡುಗಿಯಾಗಿದ್ದಾಗಿನಿಂದಲೂ ವರುಷ ವರುಷವೂ ಕರ್ಮಿನ್ ಸಾಬರಿಂದ ತಪ್ಪದೆ ತಿಂಡಿ ಸಾಮಾನುಗಳನ್ನು ಕದರಡಕೆ ಕೊಟ್ಟು ಕೊಂಡೂ ತುಡು ತೀರಿಸಿಕೊಂಡ ಅಭ್ಯಾಸವಿದ್ದ ತರುಣಿ ಲಕ್ಕಮ್ಮ ಮನೆಯ ಅಡಕೆಯನ್ನೆ ಕದ್ದೂ ಮುಚ್ಚಿ ತೆಗೆದುಕೊಂಡು ತನ್ನ ಪಾಲಿನ ‘ಕದರಡಕೆ’ ಮಾಡಿಕೊಳ್ಳುತ್ತಿದ್ದುದು ಅನಿವಾರ್ಯವಾಗಿತ್ತು. +ಅದನ್ನು ಕಂಡು ಹಿಡಿದಿದ್ದ ಅತ್ತಿಗೆಗೂ ನಾದಿನಿಗೂ ವರುಷವರುಷವೂ ಜಗಳವಾಗುತ್ತಲೆ ಇತ್ತು. +ನಾದಿನಿ ಮಾಡುತ್ತಿದ್ದ ಮನೆಹಾಳು ಒಗೆತನದ ವಿಚಾರವಾಗಿ ದೂರು ಹೇಳಿದರೂ ತನ್ನ ಗಂಡ ಸುಮ್ಮನಿದ್ದುಬಿಡುತ್ತಿದ್ದುದರಿಂದ ಪ್ರತೀಕಾರಸ್ವರೂಪವಾಗಿ ಜಟ್ಟಮ್ಮ ತಾನೂ ಮನೆಯ ಅಡಕೆಯ ರಾಶಿಯಿಂದಲೆ ಸಾಕಷ್ಟು ‘ಕದರಡಕೆ’ಯನ್ನು ಆಕ್ರಮಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿರಲಿಲ್ಲ, ನಾದಿನಿಗೆ ಇಮ್ಮಡಿ ಮುಮ್ಮಡಿ ಪ್ರತಿಸ್ಪರ್ಧಿಯಾಗಿ. +ಅಂತೂ ಒಟ್ಟಿನಲ್ಲಿ ಕರ್ಮಿನ್‌ಸಾಬರಿಗೆ ‘ಒಳ್ಳೆಯ ಪಡಾವು!’ +ದೊಳ್ಳ ಮತ್ತು ಮಂಜರಂತಹ ಗಿರಾಕಿಗಳು ಒಬ್ಬೊಬ್ಬರಾಗಿ ಬಂದು ಅಕ್ಕಿ ಬತ್ತ ಅಡಕೆಯಂತಹ ಬೆಳೆಯ ಸಾಮಾನುಗಳನ್ನೊ, ಹಾರೆ ಕತ್ತಿ ಸವೆಗೋಲು ಮೆಟ್ಟುಗತ್ತಿ ಮುಂತಾದ ಕದ್ದ ಹತಾರುಗಳನ್ನೊ ಕೊಟ್ಟು ಕರೀಂ ಸಾಬರ ವಾಣಿಜ್ಯ ಜಾಣ್ಮೆ ದಯಪಾಲಿಸಿದಷ್ಟು ತಿಂಡಿ ಪದಾರ್ಥಗಳನ್ನು ತೆಗೆದುಕೊಂಡು ಹೋಗತೊಡಗಿದರು. +ಅಂತಹ ಗಿರಾಕಿಗಳಲ್ಲಿ ಗಂಡಸರಿಗಿಂತಲೂ ಹೆಂಗಸರು ಮಕ್ಕಳೇ ಹೆಚ್ಚಾಗಿರುತ್ತಿದ್ದರು. +ಹೊಲೆಯರು, ದೀವರು, ಗಟ್ಟದ ತಗ್ಗಿನವರು, ಗೌಡರು ಎಲ್ಲ ಜಾತಿವರ್ಗಗಳಿಗೂ ಅಲ್ಲಿ ಪ್ರಾತಿನಿಧ್ಯವಿರುತ್ತಿತ್ತು. +ಗಂಡಸರೂ ಅನೇಕರು ತಮ್ಮ ಸಂಸಾರಕ್ಕೆ ವರ್ಷಕ್ಕೆ ಬೇಕಾಗುವ ದಿನಸಿ ಕೊಬ್ಬರಿ ಕೊತ್ತುಂಬರಿ ಇತ್ಯಾದಿ ವಸ್ತುಗಳನ್ನು ಸಾಮಾನಿಗೋ ದುಡ್ಡಿಗೋ ಒಡವೆ ವಸ್ತ್ರಗಳಿಗೋ ಬಹಿರಂಗವಾಗಿಯೆ ವಿನಿಮಯ ವ್ಯಾಪಾರ ಮಾಡಿಯೋ ಕೊಂಡುಕೊಂಡೋ ಹೋಗುತ್ತಿದ್ದರು. +ಗುತ್ತಿಯೂ ಅವರ ನಡುವೆ ನಿಂತಿದ್ದುದನ್ನು ಕರೀಂಸಾಬರು ಗಮನಿಸಿ, ಅವನ ಕಡೆಗೆ ವಿಶೇಷವಾಗಿ ಎಂಬಂತೆ ನೋಡಿ, ಅವನನ್ನೇ ಪ್ರತ್ಯೇಕವಾಗಿ ಸ್ವಾಗತಿಸಲೆಂಬಂತೆ ಮುಗುಳು ನಕ್ಕರು; ಗುತ್ತಿಯೂ ಹಲ್ಲು ಕಾಣುವಂತೆ ಬಾಯಿ ಹಿಗ್ಗಿಸಿ ನಕ್ಕು, ಸ್ವಾಗತವನ್ನು ಸ್ವೀಕರಿಸಿ, ಕೃತಜ್ಞತೆಯನ್ನು ಪ್ರದರ್ಶಿಸಿದನು. +ಬಂದ ಗಿರಾಕಿಗಳೆಲ್ಲ ಹೋಗುವವರೆಗೆ ದೂರ ಹಿಂದೆ ನಿಂತಿದ್ದ ಗುತ್ತಿ ಹತ್ತಿರಕ್ಕೆ ಬರಲು ‘ಕರ್ಮಿನ್‌ಸಾಬು’ ಅವನು ಹಾಕಿಕೊಂಡಿದ್ದ ಹೊಸ ಬಟ್ಟೆಗಳನ್ನೂ, ಜುಟ್ಟಿಗೆ ಮುಡಿದಿದ್ದ ಹೂವನ್ನೂ, ಎಲ್ಲಕ್ಕೂ ವಿಶೇಷವಾಗಿ ಕಾಲುಬೆರಳಿಗೆ ಹಾಕಿಕೊಂಡಿದ್ದ ದಪ್ಪನಾದ ಬೆಳ್ಳಿಯ ಉಂಗುರವನ್ನೂ ಗಮನಿಸಿ ನಗುತ್ತಾ “ಏನು ಮದುಮಗನ ಸವಾರಿ ಖುದ್ದಾಗಿ ಬಂದುಬಿಟ್ಟಿದೆಯಲ್ಲಾ?” ಎಂದು ಒಡನೆಯೆ ಮುಖಭಂಗಿವನ್ನು ಗಂಭೀರ ಮುದ್ರೆಗೆ ತಿರುಗಿಸಿ “ನಮಗೆ ಬರಬೇಕಾದ ‘ಚಿಲ್ಲರೆ’ ತಂದಿದ್ದೀಯಷ್ಟೆ?” ಎಂದು ವ್ಯಂಗ್ಯಧ್ವನಿಯಲ್ಲಿ ‘ಚಿಲ್ಲರೆ’ ಎನ್ನುವುದನ್ನು ಒತ್ತಿಹೇಳಿ ಮೂದಲಿಸುವಂತೆ ಕೇಳಿದನು. +“ನಮ್ಮ ಹೆಗ್ಗಡೇರು ಮನೇಲಿಲ್ಲ ಕಣ್ರೋ. +ಅವರು ಬಂದ ಕೂಡ್ಲೆ ನಿಮ್ಮ ದುಡ್ಡೆಲ್ಲ ಈಸಿಕೊಟ್ಟು ಬಿಡ್ತೀನಿ. +ಈಗ ತುರುತ್ತಾಗಿ ಅಷ್ಟು ಸಾಮಾನು ಬೇಕಾಗದೆ. +ಮನೀಗೆ ನೆಂಟರು ಬಂದಾರೆ….” +“ಮತ್ತೆ ನೀನು ಆವೊತ್ತು ಏನು ಹೇಳಿದ್ದು? …. ” +“ಯಾವೊತ್ರೋ?” +“ಯಾವೊತ್ತು?ಆವೊತ್ತು, ಬೆಳಿಗ್ಗೆ ಮುಂಚೆ ಮೇಗರವಳ್ಳೀಲಿ ಕಣ್ಣಾ ಪಂಡಿತರ ಹತ್ತಿರ ಅಂತ್ರ ತೆಗೆದುಕೊಂಡು ಹೋದೆಯಲ್ಲಾ….” +“ಏ ಯಾರು ಹೇಳ್ದೋರಾ ನಿಮಗೆ?” ತನ್ನ ಗುಟ್ಟು ಬಯಲಾದುದಕ್ಕೆ ನಾಚಿಕೊಂಡು ಕೇಳಿದ್ದನು ಗುತ್ತಿ. +“ಯಾರಾದರೂ ಹೇಳಲಿ, ನಿನಗೆ ಏಕೆ ಅದು? …. +ಯಾರು ಹೇಳಬೇಕು ಏಕೆ? +ನಮಗೆ ಕಣ್ಣಿಲ್ಲವೊ ನೋಡುವುದಕ್ಕೆ? +ಬೆಕ್ಕು ಕಣ್ಣು ಮುಚ್ಚಕೊಂಡು ಹಾಲು ಕುಡಿಯುತ್ತಂತೆ! …. +ಆವೊತ್ತು ನೀನು ಎಷ್ಟು ದಿಮಾಕಿ ನಿಂದ ಹೇಳಿದೆ? +‘ಇನ್ನೆಂಟು ದಿನಾ ತಡೀರಿ, ನನ್ನ ಮದೇಗೆ ಹೆಗ್ಗಡೇರ ಕೈಲಿ ದುಡ್ಡು ಕೇಳೀನಿ, ಅದರಾಗೆ ನಿಮ್ಮ ಚಿಳ್ರೇನೂ ತೀರಸಿ ಬಿಡ್ತೀನಿ’ ಅಂತಾ. +ಆ ‘ಚಿಳ್ರೇ’ನ ತೀರಿಸಿಬಿಡು ಮೊದಲು. +ಆಮೇಲೆ ಸಾಮಾನು ಕೊಡುವ ಮಾತು. +ಸುಮ್ಮನೆ ಸತಾಯಿಸಬೇಡ.” ಮಾಪಿಳ್ಳೆಯ ಕನ್ನಡದ ಕಾಕುದನಿ ನಿಷ್ಠುರ ನುಡಿದು ನಿಂತಿತು. +ಗುತ್ತಿ ಸ್ವಲ್ಪ ಅತ್ತ ಇತ್ತ ನೋಡಿ, ಕರೀಂ ಸಾಬರಿಗೆ ತುಂಬ ಸಮೀಪಕ್ಕೆ ಸರಿದು ಕಿವಿಯಲ್ಲಿ ಹೇಳುವಂತೆ ಪಿಸುಮಾತಿನಲ್ಲಿ “ಹಂಗ್ಯಾರೆ ಒಂದು ಕೆಲ್ಸ ಮಾಡಿ, ಸಾಬ್ರೆ. +ಈಗ ತುರ್ತು ಸಾಮಾನು ಬೇಕಾಗದೆ. +ಬೆಟ್ಟಳ್ಳಿಯಿಂದ ನನ್ನ ಮಾವ ಬಾವ ಎಲ್ಲ ಬಂದಾರೆ; +ಅವಳನ್ನ ತವರಿಗೆ ಕರಕೊಂಡು ಹೋಗ್ತಾರಂತೆ….” ಎಂದು ಸೊಂಟದ ಪಂಚೆಯಲ್ಲಿ ಸುತ್ತಿದ್ದ ಯಾವುದೋ ಒಂದು ವಸ್ತುವಿಗೆ ಕೈಹಾಕಿ ಬಿಚ್ಚಿ, ಮೆಲ್ಲಗೆ ಕಳ್ಳಭಂಗಿಯಲ್ಲಿ ಹೊರದೆಗೆದು ಮುಚ್ಚುಗೈಯಲ್ಲಿಯೆ ನೀಡಿದನು. +ಅದನ್ನು ಕೈಗೆ ತೆಗೆದುಕೊಂಡು ನೋಡಿದ ಕರೀಂ ಸಾಬಿಗೆ ತನ್ನ ಕಣ್ಣನ್ನೆ ನಂಬಲಾಗಲಿಲ್ಲ. +ಕೇಳಿದನು ತಲೆಯೆತ್ತಿ ಪಿಸುದನಿಯಲ್ಲಿಯೆ “ಎಲ್ಲಿತ್ತೋ ಇದು ನಿನಗೆ?”ಅಂತಹ ಚಿನ್ನದ ಬೆಳ್ಳಿಯ ಆಭರಣಗಳನ್ನೆಷ್ಟೊ ಕಳವು ಮಾಲುಗಳನ್ನು ಲಪಟಾಯಿಸಿ ಜೀರ್ಣಿಸಿಕೊಂಡಿದ್ದ ಸಾಬಿಗೆ ತುಸು ಬೆರಗು ಇದ್ದಿತೆ ಹೊರತು ಅಂಜಿಕೆ ಏನೂ ಇರಲಿಲ್ಲ. +ಆದರೂ ಕಳ್ಳಮಾಲನ್ನು ತಾನು ತೆಗೆದುಕೊಳ್ಳುತ್ತಿರುವುದರಿಂದ ಎಂತಹ ಅಪಾಯ ಸ್ಥಿತಿಯಿಂದ ಗಿರಾಕಿಯನ್ನು ಪಾರು ಮಾಡುತ್ತದ್ದೇನೆಂದೂ ಮತ್ತು ಗಿರಾಕಿಗಾಗಿ ತಾನು ಎಂತಹ ಅಪಾಯವನ್ನು ಎದುರಿಸಬೇಕಾಗಿದೆ ಎಂದೂ ಗಿರಾಕಿಗೆ ಚೆನ್ನಾಗಿ ಮನದಟ್ಟು ಮಾಡಿ, ಅದರ ಬೆಲೆಯನ್ನು ಅರ್ಧಕ್ಕೋ ಕಾಲಿಗೋ ಇಳಿಸುವ ಸಲುವಾಗಿಯೇ ಅವನು ಆ ಪ್ರಶ್ನೆ ಹಾಕಿದ್ದನು. +“ಹಂಗೇನೂ ಕದ್ದಿದ್ದಲ್ಲ, ಸಾಬ್ರೆ! +ನನ್ನತ್ತೆ ಅವಳ ಮಗಳಿಗೆ ಮದೇಮನೇಲಿ ಕೊಟ್ಟದ್ದು. +ನಾನೇನು ಇದನ್ನು ನಿಮಗೆ ಮಾರಾಟ ಮಾಡಾಕೆ ಬಂದಿಲ್ಲ. +ಹೆಗ್ಗಡೇರು ಮನೀಗೆ ಬಂದಕೂಡ್ಲೆ, ನಿಮ್ಮ ದುಡ್ಡು ಈಸಿಕೊಡ್ತೀನಿ. +ಅಲ್ಲಿ ತಂಕಾ ಇದನ್ನು ಅಡು ಇಟ್ಟುಕೊಂಡಿರಿ. +ಆಗಬೈದಾ?”ಅನುಭವಿಯಾದ ಸಾಬಿ ಗುತ್ತಿಯ ಮಾತನ್ನು ನಂಬಲಿಲ್ಲ. +ಒಂದು ವೇಳೆ ಅವನು ಹೇಳುತ್ತಿರುವುದರಲ್ಲಿ ನಿಜಾಂಶ ಇದ್ದರೂ, ಹೊಲೆಯ ತಾನು ಅಡವು ಇಟ್ಟ ಆಭರಣವನ್ನು ಅವಧಿಯೊಳಗಾಗಿಯಾಗಲಿ ಅವಧಿಯ ಹೊರಗೇ ಆಗಲಿ ಬಿಡಿಸಿ ಕೊಂಡಿದ್ದನ್ನು ಅವನು ಎಂದೂ ನೋಡಿಯೂ ಇರಲಿಲ್ಲ; + ಕೇಳಿಯೂ ಇರಲಿಲ್ಲ. +ಒಂದು ವೇಳೆ ಹಣ ದೊರಕಿದರೂ ಅವನು ಬಿಡಿಸಿಕೊಳ್ಳದೆ ಇರುವ ಹಾಗೆ ಸಂಗತಿ ಏರ್ಪಡಿಸಿ, ಸನ್ನವೇಶ ರಚನೆ ಮಾಡುವ ಜಾಣ್ಮೆ ತನಗೆ ಗೊತ್ತಿಲ್ಲವೇ? +ಕರೀಂ ಸಾಬಿ ಮರುಮಾತಾಡದೆ ಗುತ್ತಿ ಕೇಳಿದ ಎಲ್ಲ ಸಾಮಾನುಗಳನ್ನೂ ಕೊಟ್ಟು ಕಳುಹಿಸಿದನು. +ಬೆಟ್ಟಳ್ಳಿ ಕಲ್ಲಯ್ಯಗೌಡರು ತಿಮ್ಮಿ ಬಚ್ಚರ ಮದುವೆಯ ಸಮಯದಲ್ಲಿ ಉಪಯೋಗಿಸಿಕೊಳ್ಳಲಿ ಎಂದು ದೊಡ್ಡಬೀರನಿಗೆ ಕೊಟ್ಟಿದ್ದು, ಗುತ್ತಿಯ ಜೊತೆಯಲ್ಲಿ ಓಡಿಹೋಗುವಾಗ ತಿಮ್ಮಿ ಗಂಟಿಕಟ್ಟಿ ಬಿಡಾರದಲ್ಲಿಯೆ ಇಟ್ಟು ಹೋಗಿದ್ದು, ಸೇಸಿ ಸಿಂಬಾವಿಗೆ ಬರುವಾಗ ಗುಟ್ಟಾಗಿ ಹೊತ್ತು ತಂದಿದ್ದ ಆ ಗಂಟಿನಲ್ಲಿದ್ದ ಆಭರಣಗಳಲ್ಲಿ ಅವಳು ಧಾರೆಯ ಸಮಯದಲ್ಲಿ ಮದುಮಗಳಾಗಿದ್ದ ತನ್ನ ಮಗಳಿಗೆ ತೊಡಿಸಿದ್ದ ಒಂದು ಬಂಗಾರದ ಜಡೆಬಿಲ್ಲೆ ಕರೀಂ ಸಾಬಿಯ ಹಮ್ಮಿಣಿಯೊಳಗೆ ಅಡಗಿಹೋಯಿತು. +ಮರಾಟಿಮಂಜನನ್ನು ಕಂಡು, ಹಳುವಿನಲ್ಲಿ ನುಗ್ಗಿ ಕಣ್ಮರೆಯಾದ ದೊಳ್ಳ, ಮನೆಗೆ ಹಿಂದಿರುಗುವುದಕ್ಕೆ ಬದಲಾಗಿ ಕಾಡಿನ ಕಡೆ ತಿರುಗಿ ಗುಡ್ಡವೇರಿದ್ದನು. +ಹುರಿಗಡಲೆಯನ್ನು ತಿಂದು ಖರ್ಚುಮಾಡಿಯೆ ಮನೆಗೆ ಹೋಗುವುದು ಉತ್ತಮ ಎಂದು ಅವನ ಜಾಣತನ ನಿರ್ಣಯಿಸಿತ್ತು. +ಅಲ್ಲದೆ ಮನೆಗೆ ಹೋಗುವುದು ಉತ್ತಮ ಎಂದು ಅವನ ಜಾಣತನ ನಿರ್ಣಯಿಸಿತ್ತು. +ಅಲ್ಲದೆ ಮನೆಗೆ ಹಿಂದಕ್ಕೆ ಹೋಗುವಾಗ ಪುಡೀಸಾಬರಿಂದ ಓಲೆಬೆಲ್ಲ ಉತ್ತುತ್ತೆ ಖರ್ಜೂರಾದಿಗಳನ್ನು ಈಸಿಕೊಂಡು ಹೋಗಲು ಅನುಕೂಲವಾಗಬಹುದೆಂದೂ ಭಾವಿಸಿದ್ದನು. +ಎಂತಿದ್ದರೂ ಮನೆಗೆ ಹಿಂತಿರುಗಿದ ಮೇಲೆ ಬೈಗುಳ ತಪ್ಪಿದ್ದಲ್ಲ; +ಒಂದೆರಡು ಗುದ್ದೂ ಬಿದ್ದರೂ ಬೀಳಬಹುದು; +ಹುರಿಗಡಲೆಯನ್ನಾದರೂ ವಿರಾಮವಾಗಿ ಕಾಡಿನಲ್ಲಿ ಮರ ಪೊದೆಗಳ ನಡುವೆ ತಿರುಗುತ್ತಾ ಚೆನ್ನಾಗಿ ಮೆದ್ದು ಹೋದರಾಯಿತು ಎಂದು “ನಿಚ್ಚಯ್ಸಿ”ಯೆ “ಕೆಮ್ಮಣ್ಣುಬ್ಬಿ”ನ ಕಡೆ ಹೊರಟಿದ್ದನು. +ಹುರಿಗಡಲೆಯೇ ಅಪೂರ್ವವೂ ಅತ್ಯಮೂಲ್ಯವೂ ಆದ ತಿಂಡಿಯಾಗಿದ್ದ ಆ ಹಳ್ಳಿಯ ಆಳುಗೆಲಸದ ಹುಡುಗನಿಗೆ ಇತ್ತಣ ಧ್ಯಾಸವೆ ಇರಲಿಲ್ಲ. +ಅವನ ಪ್ರಜ್ಞೆಯ ಬಹುಪಾಲು ಅವನು ಅಗಿಯುತ್ತಿದ್ದ ಕಡಲೆಯ ರುಚಿಯ ಆಸ್ವಾದನೆಯಲ್ಲಯೆ ಮಗ್ನವಾಗಿತ್ತು. +ಕಾಡಿನ ಸೌಂದರ್ಯವಾಗಲಿ ಭಯಂಕರತೆಯಾಗಲಿ, ಹಕ್ಕಿಗಳ ಉಲಿಹವಾಗಲಿ ಹೂವುಗಳ ಬಣ್ಣವಾಗಲಿ, ಹಸುರಿನಲ್ಲಿ ಸೋಸಿ ಬರುತ್ತಿದ್ದ ಪೂರ್ವಾಹ್ನದ ಬಿಸಿಲಿನ ಬೆಚ್ಚನೆಯ ಸುಖವಾಗಲಿ, ಆಕಾಶದಲ್ಲಿ ತೇಲುತ್ತಿದ್ದ ಮುಮ್ಮಳೇಗಾಲದ ಮೋಡಗಳ ಚೆಲುವಾಗಲಿ ಯಾವುದಕ್ಕೂ ಅವನ ಒಳಮನಸ್ಸಿನ ವಲಯಕ್ಕೆ ಪ್ರಜ್ಞಾಪೂರ್ವಕವಾಗದ ಪ್ರವೇಶವಿರಲಿಲ್ಲ…. +ಆದರೆ, ಅದೇನು? +ಸಾಮಾನ್ಯವಾಗಿ ಕಾಗೆಗಳೇ ವಿರಳವಾಗಿರುತ್ತಿದ್ದ ಆ ಮಲೆನಾಡಿನಲ್ಲಿ, ಅದೇನು ಅಷ್ಟೊಂದು ಕಾಗೆಗಳು ನೆರೆದು ಕೂಗಿಕೊಳ್ಳುತ್ತಿವೆ, ಆ ಸರಲಿನಲ್ಲಿ ಹರಿಯುವ ಅಡೆಹಳ್ಳದ ಹತ್ತಿರ! +ಮರಗಳಲ್ಲಿ ಮಂಗಗಳೂ ಕಿರಿಚಿಕೊಳ್ಳುವ ಸದ್ದು! +ಸುತ್ತಲೂ ಗಿಡ ಪೊದೆ ಬೆಳೆದು ಎತ್ತರವಾಗಿದ್ದ ಒಂದು ಮೊರಡಿಯ ಬಂಡೆಗಲ್ಲ ಮೇಲೆ ಏರಿನಿಂತು, ಹಳು ತುಂಬಿದ್ದ ಕಣಿವೆಯಲ್ಲಿ ದೂರ ಕೆಳಗೆ ಹರಿಯುತ್ತಿದ್ದ ಅಡೆ ಹಳ್ಳದ ಕಡೆ ನೋಡಿದನು. ನೋಡಿ ಬೆಚ್ಚಿದನು! +ಒಂದು ಮಟ್ಟಿನ ಹಿಂದೆ ಮರೆಯಾಗಿ ನಿಂತು, ಕಾಲ ತುದಿಯ ಹೆಬ್ಬೆಟ್ಟಿನ ಮೇಲೆ ನಿಮಿರಿ ನಿಕ್ಕುಳಿಸಿ ನೋಡಿದನು! +ಬೆರಗಾಯಿತು!ಹೆದರಿಕೆಯೂ ಆಯಿತು! +ಕಡಲೆಯನ್ನು ಅಗಿಯುತ್ತಿದ್ದ ಬಾಯಿ ಅರೆತೆಗೆದು ನಿಷ್ಪಂದವಾಗಿ ಬಿಟ್ಟಿತು! +ಕಾಗೆಗಳು ಹಾರಾಡಿ ಕೂಗುತ್ತಿದ್ದುದನ್ನೂ ಮರಗಳಲ್ಲಿ ಮಂಗಗಳು ಕಿರಿಚಿಕೊಳ್ಳುತ್ತಿದ್ದುದನ್ನೂ ಗಮನಿಸಿದ್ದ ದೊಳ್ಳ, ಕಾಡಿನ ಅನುಭವವವಿದ್ದ ಎಲ್ಲರೂ ಊಹಿಸುವಂತೆ, ಅಲ್ಲೆಲ್ಲಿಯೋ ಹುಲಿಯೋ ಕುರ್ಕನೋ ಇರಬೇಕೆಂದು ಊಹಿಸಿದ್ದನು. +ಅದಕ್ಕಾಗಿಯೆ ಎಚ್ಚರಿಕೆಯಿಂದಾಗಿ ದಿಬ್ಬವೇರಿ ಅರೆಕಲ್ಲ ಮರೆನಿಂತು ಕಣ್ಣಟ್ಟಿ ನೋಡಿದ್ದನು. + ಆದರೆ ಅವನು ಕಂಡದ್ದೇನು? +ಹೆಬ್ಬುಲಿಯೇ ಆಗಿದ್ದರೂ ಅವನಿಗೆ ಅಷ್ಟು ದಿಗಿಲೂ ಬೆರಗೂ ಆಗುತ್ತಿರಲಿಲ್ಲ. +ಸೊಂಟದ ಮೇಲಣ ಮೈಯೆಲ್ಲ ಬತ್ತಲೆಯಾಗಿ, ಮೊಣಕಾಲಿಗೂ ಮೇಲೆ ಮಡಿಚಿದ್ದ ಇಜಾರ ಮಾತ್ರದಿಂದಿದ್ದ ಇಜಾರದ ಸಾಬಿಯೂ ಅವನಂತೆಯೆ ಬತ್ತಲೆಯಾಗಿ ಲುಂಗಿಯನ್ನು ಸೊಂಟದವರೆಗೂ ಎತ್ತಿ ಬಿಗಿದಿದ್ದ ಲುಂಗೀಸಾಬಿಯೂ ಚೂರಿಗಳನ್ನು ಹಿಡಿದು, ಕೈಯೆಲ್ಲ ರಕ್ತಮಯವಾಗಿ, ಯಾರನ್ನೊ ಕೊಲೆಮಾಡುವ ಕರ್ಮದಲ್ಲಿ ತೊಡಗಿದ್ದಂತೆ ಭೈರವವಾಗಿ ಕಾಣುತ್ತಿದ್ದರು. +ಉಸಿರು ಕಟ್ಟಿದಂತಾಗಿ, ಒಡನೆಯೆ ಏದುಸಿರು ಬಿಡತೊಡಗಿದ್ದ ದೊಳ್ಳನ ಕಾಲು ನಡುಗತೊಡಗಿತ್ತು. +ಅವನೂ ಆ ಸಾಬರ ವಿಚಾರ ಏನೇನೊ ಭಯಂಕರ ಸುದ್ದಿಗಳನ್ನು ಕೇಳಿದ್ದನು. +ಗಾಬರಿಯಿಂದ ಕೂಗಿಕೊಳ್ಳಬೇಕೆಂದು ಮನಸ್ಸಾದರೂ ಕೂಗು ಕೊರಳಿನಿಂದ ಹೊರಡಲಿಲ್ಲ. +ಅಲ್ಲದೆ, ತಾನೂ ಒಬ್ಬನೆ ಇದ್ದುದರಿಂದ, ಅವರು ಮಾಡುತ್ತಿದ್ದ ಕೊಲೆಗೆಲಸವನ್ನು ತಾನು ಕಂಡ ಮೇಲೆ ಅವರ ಕೈಗೆ ಸಿಕ್ಕಿಕೊಂಡರೆ, ಆ ಸುದ್ದಿ ಇತರರಿಗೆ ತನ್ನಿಂದ ಗೊತ್ತಾಗುತ್ತದೆ ಎಂಬ ಕಾರಣಕ್ಕಾಗಿಯೇ ತನ್ನನ್ನೂ ಪೂರೈಸದೆ ಬಿಡುವುದಿಲ್ಲ ಎಂದೂ ಅವನಿಗೆ ಭೀತಿ ಬಡಿದಂತಾಗಿತ್ತು. +ಚಲಿಸಿದರೂ ಅವರಿಗೆಲ್ಲಿ ಗೊತ್ತಾಗಿಬಿಡುತ್ತದೆಯೋ ಎಂದು ಮರವಟ್ಟು ನಿಂತು ನಿರುಪಾಯನಾಗಿ ಎವೆಯಿಕ್ಕದೆ ನೋಡುತ್ತಿರಲೇಬೇಕಾಯಿತು. +ಹಾಗೆ ನೋಡುತ್ತಿದ್ದಾಗ, ಸಾಬರು ಅತ್ತ ಇತ್ತ ಚಲಿಸಿದಾಗ, ಅವರು ಯಾರನ್ನೂ ಕೊಲೆ ಮಾಡುತ್ತಿಲ್ಲವೆಂದೂ, ಒಂದು ಸಣ್ಣ ಮರದ ಹರೆಗೆ ಬಳ್ಳಿಯಿಂದ ನೇತುಹಾಕಿದ್ದ ಕುರಿಯನ್ನು ಸುಲಿಯುತ್ತಿದ್ದಾರೆಂದು ಗೊತ್ತಾಗಿ, ದೊಳ್ಳನ ಹೃದಯದಲ್ಲಿ ತುಸು ಧೈರ್ಯ ಸಂಚಾರವಾಗಿ ಮನಸ್ಸಿಗೆ ಸಮಾಧಾನವೂ ಆಯಿತು. +ಆ ದೃಶ್ಯವನ್ನು ಇನ್ನೂ ಸ್ವಲ್ಪ ವಿವರವಾಗಿ ಈಕ್ಷಿಸಲೂ ಸಾಧ್ಯವಾಯಿತು ಅವನಿಗೆ. +ಅವರು ಚರ್ಮ ಸುಲಿಯುತ್ತಿದ್ದ ಕುರಿಯ ತಲೆಯಿಂದ ಅದು ‘ಸೊಪ್ಪುಗುರಿ’  ಎಂದೂ ಗೊತ್ತಾಗುವಂತಿತ್ತು. +ಅದರ ಕೊಂಬೊ ಕಿವಿಯೊ ಗಡ್ಡವೊ ಕುತ್ತಿಗೆಯ ಮೊಲೆಯೊ? +ಯಾವುದೂ ಸ್ಪಷ್ಟವಾಗಿ ತೋರುತ್ತಿರಲಿಲ್ಲವಾದರೂ ಅವನಿಗೆ ಅದು ಪರಿಚಯದ ಪ್ರಾಣಿಯಂತೆಯೆ ಭಾಸವಾಗತೊಡಗಿತು. + ಹಳೆಪೈಕದ ತಿಮ್ಮನ ಹೋತವಿರಬಹುದೇ? +ಇಲ್ಲ, ಗುತ್ತಿಯ ಅಪ್ಪ ಕರಿಸಿದ್ದನ ಗಬ್ಬದ ಆಡು ಇರಬಹುದೇ? +ಛೇಛೇ!ಗಬ್ಬದ ಕುರಿಯನ್ನು ಯಾರಾದರೂ ಕೊಯ್ಯುತ್ತಾರೆಯೇ? +ಹೊಟ್ಟೆಯಲ್ಲಿ ಮರಿಗಳಿಲ್ಲವೆ? +ಪಾಪ!ದೊಳ್ಳ ನೋಡುತ್ತಿದ್ದಂತೆಯೆ, ಮಿಂಚಿನ ವೇಗದಲ್ಲಿ, ಚರ್ಮ ಸುಲಿದ ಕುರಿಯ ಕೆಂಪು ಮಾಂಸದ ಒಡಲು ಗೋಚರಿಸಿ ನೇತಾಡುತ್ತಿತ್ತು! +ಸಾಬರಿಬ್ಬರೂ ತುಂಬ ಚುರುಕಿನಿಂದ ಕೆಲಸ ಸಾಗಿಸುತ್ತಿದ್ದರು. +ಅವರ ಅವಸರದ ಚಲನವಲನಗಳಿಂದಲೂ, ಅವರಿಬ್ಬರೂ ಮತ್ತೆ ಮತ್ತೆ ತಲೆಯೆತ್ತಿ ಆಕಾಶದ ಕಡೆ ಸಿಟ್ಟಿನಿಂದ ನೋಡಿ, ಕೂಗಿ ಎರಗಿ ಹಾರಾಡುತ್ತಿದ್ದ ಕಾಗೆಗಳನ್ನೂ ಮರಗಳಲ್ಲಿ ಕಿರಿಚುತ್ತಿದ್ದ ಕೋತಿಗಳನ್ನೂ ಕಲ್ಲುಬೀರುವಂತೆ ಹೆದರಿಸಿ ಅಟ್ಟಲು ಪ್ರಯತ್ನಿಸುತ್ತಿದ್ದುದರಿಂದಲೂ ತಮ್ಮ ಗುಟ್ಟಿನ ಕಾರ್ಯ ಬಯಲಾಗುವುದಕ್ಕೆ ಅವಕಾಶ ಕೊಡದಂತೆ ಬೇಗಬೇಗನೆ ಮುಗಿಸಬೇಕೆಂಬುದರಲ್ಲಿ ಆಸಕ್ತರಾಗಿದ್ದಂತೆ ತೋರಿತು. +ಅವರು ಪೂರೈಸುವ ಮುನ್ನವೆ ತಾನು ವರ್ತಮಾನ ಕೊಟ್ಟು, ಅವರನ್ನು ಸಿಕ್ಕಹಾಕಿರಬೇಕೆಂದು ಮನಸ್ಸು ಮಾಡಿದ ದೊಳ್ಳ ಮೆಲ್ಲನೆ ಬಗ್ಗಿ ಜುಣುಗಿ ಅರೆಕಲ್ಲಿನಿಂದ ಇಳಿದು ಹಳುವಿನಲ್ಲಿ ಹಿಂದಕ್ಕೆ ಓಡಿದನು. +ತನ್ನ ‘ಕದರಡಕೆ’ಗೆ ನ್ಯಾಯವಾದ ಬೆಲೆಯ ತಿಂಡಿ ಸಾಮಾನು ಕೊಡದೆ ಮೋಸ ಮಾಡಿದ ಸಾಬರಿಗೆ ತಕ್ಕ ಶಾಸ್ತಿ ಮಾಡಿಸುತ್ತೇನೆ ಎಂಬ ಪ್ರತೀಕಾರದ ಹೆಮ್ಮೆಯೂ ಅವನಿಗೆ ಪ್ರೇರಕವಾಗಿತ್ತು. +ಈ ಹೊನ್ನಾಲಿ ಸಾಬರಿಗೆ ಶಿಕ್ಷೆಯಾದರೆ ಆ ಮಲೆಯಾಳಿ ಮಾಪಿಳ್ಳೆಗಳು ಅಷ್ಟೇನೂ ಕಣ್ಣೀರು ಕರೆಯುವುದಿಲ್ಲ ಎಂಬುದು ದೊಳ್ಳನಿಗೆ ಹೇಗೆ ಗೊತ್ತಾಗಬೇಕು? +ಗುಡ್ಡವಿಳಿದು ದೊಳ್ಳನೇನೋ ಬರ್ದಂಡು ಓಡಿದನು. +ಆದರೆ ತಾನು ಕಂಡದ್ದನ್ನು ಹೊಲಗೇರಿಗೆ ಹೋಗಿ ಕರಿಸಿದ್ದನ ಕಡೆಯವರಿಗೆ ಹೇಳಬೇಕೋ? +ಅಥವಾ ಹಳೆಪೈಕದವರ ಹಟ್ಟಿಗೆ ಹೋಗಿ ಹೇಳಬೇಕೋ? +ಎಂಬ ಯೋಚನೆಯಲ್ಲಿ ಯಾವುದರ ಇತ್ಯರ್ಥವೂ ಥಟ್ಟನೆ ಹೊಳೆಯದೆ, ಉತ್ತುತ್ತೆ ಖರ್ಜೂರ ಓಲೆಬೆಲ್ಲಗಳ ನೆನಪಾಗಿ ಸಾಬರ ಬೀಡಿನ ಕಡೆಗೆ ಹೋದನು, ತನಗೆ ಸಲ್ಲಬೇಕಾದ ತಿಂಡಿಸಾಮಾನುಗಳನ್ನು ತೆಗೆದುಕೊಂಡು ಆಮೇಲೆ ದೂರು ಹೇಳುವುದೆಂದು ನಿಶ್ಚಯಿಸಿ. +ಅಲ್ಲಿ, ಅವನು ಪುಡೀಸಾಬರಿಂದ ಒಂದೊಂದೇ ಉತ್ತುತ್ತೆ ಖರ್ಜೂರ ಓಲೆಬೆಲ್ಲದ ಚೂರುಗಳನ್ನು ಪಡೆದು, ಹರಕಲು ದಗಲೆಯ ಜೇಬಿಗೆ ಹಾಕಿಕೊಳ್ಳುತ್ತಿದ್ದಾಗಲೆ ಮರಾಟಿಮಂಜನೂ ಹಾಜರಾದನು! +ಕಳ್ಳನನ್ನು ಮಾಲುಸಮೇತ ಹಿಡಿದ ಪೋಲೀಸಿನವನಂತೆ ದೊಳ್ಳನನ್ನು ರಟ್ಟೆ ಹಿಡಿದು ಮನೆಯ ಕಡೆ ಎಳೆದುಕೊಂಡು ಹೋದನು. +ಅಂತೂ, ಸದ್ಯಕ್ಕೆ ಯಾವ ಗಲಾಟೆಯೂ ಇಲ್ಲದೆ, ಆ ದಿನ ಮಧ್ಯಾಹ್ನದ ಹೊತ್ತಿಗೆ ಕರಿಸಿದ್ದನ ಗಬ್ಬದ ಆಡು ಸಾಬರ ಅಡುಗೆಯ ಪಲಾವಿನ ವಾಸನೆಯಾಗಿ ಪರಿವರ್ತಿತವಾಗಿ ಸಿಂಬಾವಿ ಹಳ್ಳಿಯ ಮಲೆನಾಡಿನ ವಾಯುಮಂಡಲದಲ್ಲಿ ಪಸರಿಸಿತ್ತು. +ಆದರೆ ಅಪರಾಹ್ನದಲ್ಲಿ ವಿಷಯ ವಿಕೋಪಕ್ಕೇರಿತು.ದೊಳ್ಳನನ್ನು ಎಳೆದುಕೊಂಡು ಹೋಗಿ ‘ಸಣ್ಣಮ್ಮ’ನ ಸಮ್ಮುಖದಲ್ಲಿ ನಿಲ್ಲಿಸಿ ಮರಾಟಿಮಂಜ ಅವನಿಗಿನ್ನೂ ಶಿಕ್ಷೆ ವಿಧಿಸಿರಲಿಲ್ಲ, ಬರಿಯ ವಿಚಾರಣೆಯ ಮಟ್ಟದಲ್ಲಿಯೆ ದೊಳ್ಳ ಗೊಳೋ ಎಂದು ಗಟ್ಟಿಯಾಗಿ ಅಳತೊಡಗಿ ‘ದೊಡ್ಡಮ್ಮ’ನ ರಕ್ಷಣೆಗಾಗಿ ಕೂಗಿಕೊಳ್ಳತೊಡಗಿದನು. +ಅಡುಗೆಮನೆಯಲ್ಲಿದ್ದ ಜಟ್ಟಮ್ಮಗೆ ದೊಳ್ಳನ ಕೂಗು ಕೇಳಿಸಿದೊಡನೆಯೆ ಲಕ್ಕಮ್ಮನಿಗೆ  ತೇಜೋವಧೆ ಮಾಡಲು ಅವಕಾಶ ಸಿಕ್ಕಿತೆಂದು ಉರಿಮೋರೆ ಮಾಡಿಕೊಂಡೆ ನುಗ್ಗಿ ಬಂದು ಕೂಗಿದಳು. + “ಯಾಕೋ ಆ ಹುಡುಗನಿಗೆ ಸುಮ್ಮನೆ ಹೊಡೀತಿದ್ದೀಯಾ? +ಪಾಪದಂವ ಸಿಕ್ಕಿದಾ ಅಂತಾ? +ಈ ಮನೇಲಿ ಯಾರೂ ಹೇಳೋರು ಕೇಳೋರು ಇಲ್ಲೇನೋ? ” +“ಆಞನಾ…. ಹೊದೆನೇನಮ್ಮಾ?…. +ನನ್ನ ಕದರಡಿಕೆ ಕದ್ದುಕೊಂಡು ಹೋಗಿ…. +ಆ… ಸಾಬರಿಗೆ ಕೊಟ್ಟು…. +ಉತ್ತುತ್ತೆ ವಾಲೆಬೆಲ್ಲ ತಂದಾನೆ…. +ಆ ನೋಡಿ, ನೀವೇ ನೋಡಿ” ಎಂದು ಮಂಜ ದೊಳ್ಳನ ಜೇಬಿನಿಂದ ಆ ಪದಾರ್ಥಗಳ ಅವಶೇಷಗಳನ್ನು ಹೊರಕ್ಕೆ ತೆಗೆದು ತೋರಿಸಿದನು. +ಆದರೆ ಜಟ್ಟಮ್ಮ ನ್ಯಾಯಾನ್ಯಾಯ ನಿರ್ಣಯಮಾಡಲು ಅಲ್ಲಿಗೆ ಧಾವಿಸಿರಲಿಲ್ಲ. +ಲಕ್ಕಮ್ಮನ ಕಡೆ ದುರುದುರು ನೋಡುತ್ತಾ “ಮನೇಲಿರೋ ದಿಂಡೆಬಸವೀನೆ ಮನೇ ಅಡಕೇನೆಲ್ಲ ಕದ್ದು ಸಾಬರಿಗೆ ಕೊಟ್ಟು ಕೊಬ್ರಿ ಬೆಲ್ಲ ತಿನ್ತಾ ಕೂತ್ರೇ ಆ ಅರಿಯದ  ಹುಡುಗನಿಗೆ ಯಾಕೆ ಸುಮ್ಮನೆ ಹೊಡೀತೀಯಾ?” ಎಂದು, ದೊಳ್ಳನ ಕಡೆ ತಿರುಗಿ ಹೇಳಿದಳು. + “ಹೋಗೋ ನೀನು ಒಳಗೆ, ಕಾರ ಕಡೆಯೋದು ಬಿಟ್ಕೊಂಡು ಇಲ್ಯಾಕೆ ನಿಂತೀಯಾ?”ದೊಳ್ಳನೇನೊ ಸದ್ಯಕ್ಕೆ ಬದುಕಿದೆ ಎಂದುಕೊಂಡು, ಒಳಗೊಳಗೆ ನಗುತ್ತಾ, ಖಾರ ಕಡೆಯಲು ಹೋದನು. +ಆದರೆ ಲಕ್ಕಮ್ಮ ಅತ್ತಿಗೆ ತನ್ನನ್ನು ‘ದಿಂಡೆ ಬಸವಿ’ ಎಂದುದಕ್ಕೆ “ಯಾರೇ ದಿಂಡೇ ಬಸವಿ? +ನಾನೋ?ನೀನೋ? +ಗಂಡನ ಕೊಲ್ಲಾಕೆ, ಔಂಸ್ತಿ ಕೊಡೋ ನೆವ ಹೂಡಿ, ಕಣ್ಣಾಪಂಡಿತರಿಂದ ಗುತ್ತಿ ಕೈಲಿ ಮದ್ದು ತರಸಿ ಹಾಕ್ತಾ ಇದ್ದೀಯಲ್ಲಾ? +ಯಾರಿಗೂ ಗೊತ್ತಿಲ್ಲ ಅಂತಾ ಮಾಡಿಯೇನು? +ಅದಕ್ಕೇ ಅಲ್ಲೇನು? +ಅಣ್ಣಯ್ಯ ದಿನಕ್ಕೂ ಬಡಕಲು ಆಗ್ತಾ, ಹೋಗ್ತಾ ಇರೋದು? +ಗಂಡನ್ನ ತಿಂದು, ಮಿಂಡನ್ನ ಇಟ್ಟುಕೊಳ್ಳಾನ ಅಂತಾ ಮಾಡ್ದೋಳು ನೀನು ದಿಂಡೇ ಬಸವೀನೋ? +ನಾನೋ?” ಎಂದುಬಿಟ್ಟಳು, ತಾನು ಆಪಾದಿಸುತ್ತಿರುವುದು ನಿಜವಲ್ಲವೆಂದು ಗೊತ್ತಿದ್ದರೂ, ಭಾವೋಪಯೋಗಿಯಾದ ನಿಂದನೆಯ ಪ್ರತೀಕಾರ ಖಡ್ಗಧಾರೆ ಎಷ್ಟು ತೀಕ್ಷ್ಣವಾಗಿದ್ದರೆ ಅಷ್ಟೂ ಬಲವಾಗಿ ಹೃದಯಕ್ಕೆ ಏಟು ನಾಟುತ್ತದೆ ಎಂದು. +ಸರಿ, ಇಬ್ಬರಿಗೂ ಪದ್ದತಿಯಂತೆ ಬೈಗುಳದ ಒಂದು ಲಡಾಯವೆ ನಡೆದುಹೋಯ್ತು, ಅವಾಚ್ಯ ಅಶ್ಲೀಲಭಾಷೆಯ ಕುಳ್ಳೆಗಳನ್ನೆ ಒಬ್ಬರಮೇಲೊಬ್ಬರು ಎಸೆಮಾಡಿ. +ಇತ್ತ ಜಟ್ಟಮ್ಮ ಲಕ್ಕಮ್ಮರಿಗೆ ಜಟಾಪಟಿ ನಡೆಯುತ್ತಿದ್ದಾಗ, ಅತ್ತ ತೊಂದರೆಯ ರಂಗದಿಂದ ನುಸುಳಿಹೋಗಿದ್ದ ದೊಳ್ಳ, ಹಿತ್ತಲುಕಡೆಯ ಬಾಗಿಲಲ್ಲಿ ಹೆಗ್ಗಡತಮ್ಮೋರಿಂದ ನಂಟರುಪಚಾರಕ್ಕೆ ಏನಾದರೂ ಈಸಿಕೊಂಡು ಹೋಗಲು ಬಂದು ನಿಂತಿದ್ದ ಗಿಡ್ಡಿಗೆ, ತಾನು ಕೆಮ್ಮಣ್ಣುಬ್ಬಿನಲ್ಲಿ ಕಂಡದ್ದನ್ನು ಭಾವಪೂರ್ಣವಾಗಿ ವರ್ಣಿಸುತ್ತಿದ್ದನು. +ಅಷ್ಟೊಂದು ಆಶೆಪಟ್ಟು ಸಾಕಿದ್ದ ತನ್ನ ಶಬ್ದದ ಆಡಿಗೆ ಆದ ಗತಿಯನ್ನು ಕೇಳಿ ಅವಳು ಮಾತಾಡದಾದಳು. +ಗದ್ಗದ ಸ್ವರದಿಂದ “ನಿಜವಾಗಿಯೂ ಹೌದೇನ್ರೋ ನೀವು ಕಂಡಿದ್ದು? +ಆ ಮುಂಡೇ ಮಕ್ಕಳ ಹೆಂಡ್ರು ಮುಂಡೇರಾಗಾಕೆ! +ಇವತ್ತೋ ನಾಳೇ ಮರಿ ಹಾಕ್ತಿತ್ತಲ್ರೋ ನಮ್ಮ ಕುರಿ!” ಎನ್ನುತ್ತಾ ಬಿಡಾರಕ್ಕೆ ಹೊರಡುತ್ತಿದ್ದವಳಿಗೆ ದೊಳ್ಳ ಕೂಗಿ ಹೇಳಿದ “ ನಾನೇನು ಹತ್ರ ಹೋಗಿ ನೋಡ್ಲಿಲ್ಲೇ! +ಅಂತೂ ಕಂಡ್ಹಂಗಾಯ್ತು, ಹೇಳ್ದೆ. +ನಿಮ್ಮದೋ?ಹಳೇಪೈಕದೋರದೋ? +ಅಂತೂ ಯಾರದ್ದೋ ಒಂದನ್ನು ಕತ್ರಾಯ್ಸಿ ಬಿಟ್ಟಾರೆ ಸಾಬ್ರು.”ಮರುದಿನ ಬೆಳಿಗ್ಗೆ ಮುಂಚೆ ಸೊಸೆಯನ್ನು ತವರುಮನೆಗೆ ಕಳುಹಿಸುವ ಸಂಭ್ರಮದಲ್ಲಿದ್ದ ಕರಿಸಿದ್ದನ ಬಿಡಾರಕ್ಕೆ ಸಿಡಿಲು ಬಡಿದಂತಾಯ್ತು, ದೊಳ್ಳ ತಿಳಿಸಿದ್ದ ಸಂಗತಿಯನ್ನು ಗಿಡ್ಡಿಯಿಂದ ಕೇಳಿ. +ಬಡಹೊಲೆಯರ ಸಂಸಾರಕ್ಕೆ ತಮ್ಮ ಒಂದು ಗಬ್ಬದ ಆಡು ಕೊಲೆಯಾದ ವಿಚಾರ ಹೇಗೆ ತಾನೆ ಲಘುವಾದೀತು? +ಅಲ್ಲದೆ ಹುಟ್ಟಿದಂದಿನಿಂದ ಅವರೊಡನೆ ಬೆಳೆದಿದ್ದ ಅದರೊಡನೆ ಅಕ್ಕರೆಯ ಸಂಬಂಧಗಳು ಬೇರೆ ಬೆಳೆದಿರುತ್ತವೆ! +ಮನುಷ್ಯರಾಗಿದ್ದರೂ ಪಶುಜೀವನದ ಮಟ್ಟಕ್ಕೆ ಅತಿ ನಿಕಟವಾಗಿದ್ದ ಅವರಿಗೆ ತಮ್ಮ ಒಂದು ಪ್ರೀತಿಯ ಪ್ರಾಣಿ ಕಳುವಾಗಿ ಕೊಲೆಯಾದದ್ದು ನಮ್ಮ ಕುಟುಂಬದ ಒಂದು ವ್ಯಕ್ತಿಯೆ ಅಪಮೃತ್ಯುವಿಗೀಡಾದಂತಾಗಿತ್ತು. +ಮೊದಲನೆಯದಾಗಿ, ಆ ಆಡನ್ನು ದಿನವೂ ಅದು ಮೇಯುತ್ತಿದ್ದ ಜಾಗಗಳಲ್ಲಿ ಹುಡುಕಿದರು. +ಗುತ್ತಿ ತಾನು ಅದನ್ನು ಮ್ಹೇ ಮ್ಹೇ ಎಂದು ಕೂಗಿ ಕರೆದು ಸೊಪ್ಪು ತಿನ್ನಿಸುತ್ತಿದ್ದ ರೀತಿಯಲ್ಲಿ ಕರೆದು ಕೂಗಿದನು. +ಅದನ್ನು ಕಂಡಿರಬಹುದಾಗಿದ್ದ ಇತರ ಬಿಡಾರದವರನ್ನು ವಿಚಾರಿಸಿದನು. +ಅದನ್ನು ಹುಡುಕುವುದರಲ್ಲಿ ತನ್ನ ನೆಚ್ಚಿನ ನಾಯಿ ‘ಹುಲಿಯ’ನ ನೆರವನ್ನು ಮಾತ್ರ ಪಡೆಯಲಾರದೆ ಹೋಗಿ ಅವನ ಸಂಕಟ ಇಮ್ಮಡಿಯಾಯಿತು. +ಎರಡು ದಿನಗಳ ಹಿಂದೆ ಹುಲಿಕಲ್ಲು ನೆತ್ತಯಲ್ಲಿ ತಿಮ್ಮಿಯೊಡನೆ ಇಳಿಯುತ್ತಿದ್ದಾಗ ಕುರ್ಕನಿಂದ ಗಾಯಗೊಂಡ ಅದು ನಂಜೇರಿ ನರಳುತ್ತಾ ಮಲಗಿತ್ತು. +ಕಾಡುಜೀರಿಗೆ ಅರೆದು ಹಚ್ಚಿದ್ದ ಅದರ ಒಂದು ಕಣ್ಣಂತೂ ಊದಿಕೊಂಡು ಇನ್ನುಮುಂದೆ ಕೆಲಸಕ್ಕೆ ಬರುವುದಿಲ್ಲ ಎಂಬಂತೆ ತೋರುತ್ತಿತ್ತು. +“ತ್ಚು!ನನ್ನ ಹುಲಿಯ ಸರಿಯಾಗಿದ್ದಿದ್ರೆ ಅದನ್ನು ಒಂದು ಚಣಕ್ಕೆ ಪತ್ತೆ ಹಚ್‌ತಿದ್ದೆ” ಎಂದು ಮರುಗಿದನು ಗುತ್ತಿ. +ಇಜಾರದ ಸಾಬಿಯ ಮೇಲೆ ಸೇಡು ತೀರಿಸಿಕೊಳ್ಳಲು ಅವಕಾಶ ಸಿಕ್ಕಿದರೂ ಸಿಕ್ಕಬಹುದು ಎಂದು ಆಲೋಚಿಸಿದ್ದ ಬೆಟ್ಟಳ್ಳಿಯ ಸಣ್ಣಬೀರ ತನ್ನ ಬಾವನನ್ನು ಹುರಿದುಂಬಿಸಿ, ಹಗಲೂಟವಾದ ಮೇಲೆ, ಕತ್ತಿ ದೊಣ್ಣೆ ತೆಗೆದುಕೊಂಡು, ಒಂದು ಸಣ್ಣ ಗುಂಪನ್ನೆ ಕಟ್ಟಿಕೊಂಡು, ದೊಳ್ಳ ಹೇಳಿದ್ದ ಕೆಮ್ಮಣ್ಣುಬ್ಬಿನ ಹಳ್ಳದ ಆ ಸ್ಥಳಕ್ಕೆ ಹೋದನು, ತಲಾಸು ಮಾಡುವುದಕ್ಕೆ. +ಕುರಿಯನ್ನು ಕೊಂಬೆಗೆ ನೇತುಹಾಕಿ ಚರ್ಮ ಸುಲಿದಿದ್ದ ಜಾಗವನ್ನೇನೋ ರಕ್ತ ಮೊದಲಾದ ಗುರುತುಗಳಿಂದ ಕಂಡುಹಿಡಿದರು. +ಆದರೆ ಕೊಲೆಯಾಗಿ ಸುಲಿಗೆಯಾದದ್ದು ತಮ್ಮ ಗಬ್ಬದ ಆಡೇ ಎಂದು ಗುರುತು ಸಾಕ್ಷಿ ಹೇಳುವಂತಹ ಯಾವ ಪದಾರ್ಥವೂ ಅಲ್ಲಿ ಇರದಂತೆ ಮಾಡಿದ್ದರು, ಆ ಕಲೆಯಲ್ಲಿ ನಿಷ್ಟಾತರಾಗಿದ್ದ ಸಾಬರು. +ಇನ್ನೇನು ಹತಾಶರಾಗಿ ಹಿಂದಿರುಗಬೇಕು; +ಅಷ್ಟರಲ್ಲಿ ಅವರ ಜೊತೆ ಬಂದಿದ್ದ ಅವರ ಕೇರಿಯ ಒಂದು ಮೂಳೂನಾಯಿ ಹಳ್ಳದ ಪಾತ್ರದ ಪಕ್ಕದಲ್ಲಿದ್ದ ಒಂದು ಮಳಲಿನ ದಂಡೆಯನ್ನು ಪರಪರನೆ ಸೋದ್ವಿಗ್ನವಾಗಿ ಕರೆಯುತ್ತಿದ್ದುದು ಗೋಚರಿಸಿತು. +ಆ ಸ್ಥಳದ ಮಳಲನ್ನು ಕೆದಕಿ ತೆಗೆದು ನೋಡಿದಾಗ.“ಅಯ್ಯಯ್ಯೋ!ಅಯ್ಯಯ್ಯೋ! +ಹಾಳು ಮುಂಡೇಮಕ್ಕಳು! +ಅವರ ಕುಲ ನಾಶನಾಗ! +ಎರಡು ಮರೀನೂ ಹೂಣಿಬಿಟ್ಟಿದರಲ್ಲೋ!” ರೋದನ ಧ್ವನಿಯಿಂದ ಅರಚಿಕೊಂಡನು ಗುತ್ತಿ, ಸಿಟ್ಟಿನ, ಸಂಕಟದ ಮತ್ತು ದುಃಖದ ಭರದಲ್ಲಿ. +“ಅಯ್ಯಯ್ಯೋ! +ಹೊಟ್ಟೆ ಬಗೆದು ಪಚ್ಚೀನೂ ಹೀಂಗೆ ತೆಗೀಬೇಕು, ಬಾವ, ಬಿಡಬಾರ್ದು ಇವತ್ತು, ಏನೇ ಆಗ್ಲಿ! …. ಥ್ಪೂ!” ಶಪಿಸಿದನು ಸಣ್ಣಬೀರ. +“ಅಯ್ಯಯ್ಯೋ! +ಇಲ್ಲಿ ನೋಡಿ, ಇಲ್ಲಿ! +ತೊಳ್ಳೇನೂ ಬಿಸಾಡಿ ಹೋಗ್ಯಾರೆ.” ಸಂಕಟ ತೋಡಿಕೊಂಡಿತು ಒಂದು ಎಳಸು ಕೀಚಲು ಕಂಠ. +“ತೊಳ್ಳೇನೂ ಪಚ್ಚೀನೂ ತಗಂಡು ಉಂದು ಹಾಳೆಕೊಟ್ಟೆಗಾರೂ ಹಾಕ್ಕೋಳ್ಳೋ.” ಬುದ್ಧಿ ಹೇಳಿತು ಮತ್ತೊಂದು ಕೊರಳು. +ಅಷ್ಟು ಅಮೂಲ್ಯ ವಸ್ತುವನ್ನು ಹೀಗೆ ಎಸೆದು ಹೋಗಿದ್ದಾರಲ್ಲಾ ಎಂಬ ಸಂಕಟಕ್ಕೆ. +ಅಷ್ಟರಲ್ಲಿ ಇನ್ನೊಂದು ಮರಳುದಿಣ್ಣೆಯನ್ನು ಕೆದರುತ್ತಿದ್ದ ಒಬ್ಬ “ಅಯ್ಯಯ್ಯೋ! +ತಲೆಬುಲ್ಡೇನ ಇಲ್ಲೇ ಹಾಕಿ ಹೋಗ್ಯಾರಲ್ಲೋ!” ಎಂದು ಕೂಗಿ, ಅದನ್ನು ಕೊಂಬು ಹಿಡಿದು ಎತ್ತಿ ತೋರುತ್ತಾ ನಿಂತನು. +ಎಲ್ಲರೂ ಓಡಿಹೋಗಿ ನೋಡಿದರು. +ನಿಸ್ಸಂದೇಹವಾಗಿ ಅದು ಗುತ್ತಿಯ ಬಿಡಾರದ ಗಬ್ಬದ ಆಡಿನ ಮುಖವೇ ಆಗಿತ್ತು. +ಗುತ್ತಿ ಅದನ್ನು ಅಕ್ಕೆರೆಗೆಂಬಂತೆ ಎರಡೂ ಕೈಯಲ್ಲಿ ಆಂತು ದುಃಖಿಸತೊಡಗಿದನು. +ದನ ಕೊಟ್ಟಿಗೆಗೆ ಬರುವ ಬೈಗಿನ ಹೊತ್ತು ಕರೀಂ ಸಾಬು ದಿನದ ‘ಯಾಪಾರ’ವನ್ನೆಲ್ಲ ಪೂರೈಸಿ ಗಂಟಿಮೂಟೆ ಕಟ್ಟಿತ್ತಿದ್ದಾಗ ದೂರದಲ್ಲಿ ಏನೋ ಗಲಾಟೆ ಕೇಳಿಸಿತು. +ಏನೊ ಹೊಲೆಯರ ಕೇರಿಯ ಕೂಗಾಟವಿರಬೇಕು ಎಂದುಕೊಂಡು ತನ್ನ ಕೆಲಸ ಮುಂದುವರಿಸುತ್ತಿರಲು, ಯಾರೋ ಹಳುವಿನ ನಡುವೆ ಸದ್ದಾಗುವಂತೆ ಓಡಿ ಬರುತ್ತಿದ್ದುದನ್ನು ಗಮನಿಸಿ ಸತ್ತಕಡೆ ನೋಡುತ್ತಿದ್ದ ಹಾಗೆಯೆ, ದೊಳ್ಳ ಏದುತ್ತಾ ದೌಡಾಯಿಸಿ ಬಂದು ಬಾಲಕ ಸಹಜವಾದ ಬಿಜಿಲು ಬಿಜಿಲು ರೀತಿಯಲ್ಲಿ ಕೂಗಿಕೊಂಡನು “ಕರ್ಮಿನ್‌ ಸಾಬ್ರೇ, ಓಡಿಬನ್ನಿ ಓಡಿಬನ್ನಿ!ಕತ್ತೀಲಿ ಕಡೀತಿದಾರೆ! +ಬಲ್ಲೀ, ಬಲ್ಲೀ, ಬ್ಯಾಗ ಬಲ್ಲಿ!”ಕರೀಂ ಸಾಬು ಬೇಗಬೇಗನೆ ಗಂಟುಮೂಟೆ ಕಟ್ಟಿ, ಅದನ್ನು ಭದ್ರಪಡಿಸಿ ಮೂಲೆಯಲ್ಲಿಟ್ಟು, ತಟ್ಟಿಬಾಗಿಲನ್ನು ಎಳೆದು ಕಟ್ಟಿದನು. +ಹಾಗೆ ಮಾಡುತ್ತಿದ್ದಾಗಲೆ ಕೆಲವು ಪ್ರಶ್ನೆ ಹಾಕಿ ದೊಳ್ಳನಿಂದ ವಿಷಯ ಏನೆಂದು ವಿವರ ತಿಳಿಯಲು ಪ್ರಯತ್ನಿಸಿದನು. +ಆದರೆ ದೊಳ್ಳನ ಹೇಳಿಕೆಗಳು ವಿರೋಧಾಭಾಸದಿಂದ ಕೂಡಿ ನಡೆದ ಸಂಗತಿಯನ್ನು ಸ್ಪಷ್ಟಪಡಿಸುವುದಕ್ಕೆ ಬದಲಾಗಿ, ಮತ್ತಷ್ಟು ಕಳವಳವುಂಟುಮಾಡಿದುವಷ್ಟು. +‘ಸಾಬರಿಗೂ ಹೊಲೇರಿಗೂ ಜಟಾಪಟಿ….’ + ‘ಇಜಾರದ ಸಾಬರಿಗೆ ಕೈ ಕತ್ತರಿಸಿ….ಮಂಡೆಗೆ ಪೆಟ್ಟು ಬಿದ್ದು….’ + ‘ಗುತ್ತಿಗೂ ಕಾಲು ಸಂದಿ ತಪ್ಪಿಹೋಯ್ತು….’ ‘ಅವರ ಗಬ್ಬದ ಕುರೀನ ಇವರು ಕುಯ್ಕೊಂಡು ತಿಂದ್ರಂತೆ….!’ + ‘ಬಂತಪ್ಪಾ ಏನೋ ಮಲಾಮತ್ ಗ್ರಾಚಾರ!’ ಎಂದುಕೊಳ್ಳುತ್ತಾ ಕರೀಂಸಾಬರು ಬೇಗಬೇಗನೆ ದೊಳ್ಳನ ಮಾರ್ಗದರ್ಶನದಲ್ಲಿ ಕುಕ್ಕೋಟ ಓಡುತ್ತಲೆ ಹೋದರು. +ಇವರು ಆ ಸ್ಥಳಕ್ಕೆ ತಲುಪುವಷ್ಟರಲ್ಲಿ ಹೊಡೆದಾಟ ಕೊನೆಯ ಹಂತಕ್ಕೆ ಕಾಲಿಟ್ಟಿತ್ತು. +ಕರೀಂ ಸಾಬರ ಕೊರಳು ಕೇಳಿಸಿ, ಅವರನ್ನು ಕಂಡೊಡನೆ ಇಬ್ಬಣದವರೂ ಕದನವಿರಾಮ ಘೋಷಣೆ ಮಾಡಿದಂತೆ ಕೈ ತಡೆದು ನಿಂತು, ಅವರಿಗೆ ದೂರು ಕೊಟ್ಟು ತಮ್ಮ ತಮ್ಮ ವರ್ತನೆಯ ನ್ಯಾಯ ಸಮರ್ಥನೆ ಮಾಡಿಕೊಳ್ಳುವ ಭಂಗಿಯಲ್ಲಿ ಅವರ ಕಡೆ ತಿರುಗಿ ಬಳಿ ಸಾರಿದರು. +ಕರೀಂಸಾಬರು ಹೊನ್ನಳಿಯ ವಸೂಲಿ ಸಾಬರುಗಳಂತೆ ಮೊನ್ನೆ ಮೊನ್ನೆ ಬಂದು, ಇಂದೊ ನಾಳೆಯೊ ಮರಳುವವರಾಗಿರಲಿಲ್ಲ. +ಅವರು ಬಹುಕಾಲದಿಂದಲೂ ಮೇಗರವಳ್ಳಿಯಲ್ಲಿ ಮನೆಮಾಡಿಕೊಂಡು, ಅಂಗಡಿ ನಡೆಸುತ್ತಾ, ಸುತ್ತಣ ಹಳ್ಳಿಗಳಲ್ಲಿ ವ್ಯಾಪಾರ ಮಾಡುತ್ತಿದ್ದುದರಿಂದ ಎಲ್ಲರಿಗೂ ಪರಿಚಯದವರಾಗಿ, ಬೇಕಾದವರಾಗಿ, ಅನೇಕರ ಗೌರವಕ್ಕೂ ಕೃತಜ್ಞತೆಗೂ ಪಾತ್ರರಾಗಿದ್ದರು. +ಬಡವರಾದ ಸಾಮಾನ್ಯ ಜನರಿಗೆ ಅವರಲ್ಲಿ ಒಂದು ಯಜಮಾನ ಕಳೆ ಕಾಣಿಸುತ್ತಿದ್ದು, ಕಷ್ಟಕಾಲದಲ್ಲಿ ಅವರ ಹಿತೋಪದೇಶದ ಮಾತುಗಳಿಗೆ ಮನ್ನಣೆ ಕೊಡುತ್ತಿದ್ದರು. +ಗಬ್ಬದ ಆಡಿನ ಮಂಡೆಯೂ, ಅಜ್ಜೀಸಾಬುವ ಚರ್ಮದ ಚೀಲದಲ್ಲಿ ಇತರ ಕುರಿ ಮತ್ತು ದನದ ಚರ್ಮಗಳೊಡನೆ ಹುದುಗಿದ್ದು ಗುತ್ತಿಯ ಕಡೆಯವರಿಂದ ಹೊರಗೆ ಎಳೆದುಹಾಕಲ್ಪಟ್ಟಿದ್ದ ಅವರ ಆಡಿನದೇ ಆಗಿದ್ದ ಕಪ್ಪು ಬಿಳಿಯ ಬಣ್ಣದ ರೋಮಮಯ ಚರ್ಮವೂ, ಕುರಿಮರಿಯ ಭ್ರೂಣಗಳೂ ರಕ್ತಮಿಶ್ರಿತವಾದ ಭಯಾನಕ ಸಾಕ್ಷಿಗಳಾಗಿ ಅಲ್ಲಿ ಬಿದ್ದಿದ್ದುವು. +ತಲೆಬುರುಡೆಗೆ ಬಲವಾದ ದೊಣ್ಣೆ ಪೆಟ್ಟು ತಗುಲಿ ರಕ್ತ ಸೋರುತ್ತಿದ್ದ ಇಜಾರದ ಸಾಬಿ ಎತ್ತಿ ಹಿಡಿದಿದ್ದ ಅವನ ಬಲಗೈಯ ಹೆಬ್ಬೆರಳು ಅರ್ಧ ಭಾಗಕ್ಕೂ ಹೆಚ್ಚಾಗಿಯೆ ಕತ್ತರಿಸಿ ನೇತಾಡುತ್ತಿತ್ತು. +ಮೊಣಕಾಲ ಕೆಳಗಿನ ಭಾಗಕ್ಕೆ ಬಲವಾದ ಏಟುತಗುಲಿ ಮಾಂಸ ಹಿಸಿದು, ನೆತ್ತರು ಸೋರಿ, ಎಲುಬೂ ಕಾಣಿಸುತ್ತಿದ್ದ ಗುತ್ತಿಯ ಮುಖ ಮತ್ತು ಭುಜದ ಭಾಗಗಲ್ಲಿ ಚೂರಿಯ ಇರಿತದಿಂದಾಗಿ ಗಾಯಗಳಿಂದ ತೊಯ್ದು, ಉಟ್ಟ ಬಟ್ಟೆ ಕರಿಗೆಂಪು ಕಲೆಗಳಿಂದ ರುದ್ರವಾಗಿತ್ತು. +ಇಕ್ಕಡೆಯ ಇತರರೂ ಸಣ್ಣಪುಟ್ಟ ಗಾಯಗಳಿಂದಲೂ ಮೂಗೇಟುಗಳಿಂದಲೂ ನೊಂದು ಒಬ್ಬರ ಮೇಲೊಬ್ಬರು ದೂರು ಹೇರುತ್ತಾ ಕೂಗಾಡುತ್ತಿದ್ದರು. +ಮರುದಿನ ಹೊತ್ತಾರೆ ಮುಂಚೆ ಸಿಂಬಾವಿಯ ಹೊಲಗೇರಿಯ ಅಂಚಿನಲ್ಲಿ, ಕರಿಸಿದ್ದನ ಬಿಡಾರದಿಂದ ತುಸುದೂರಕ್ಕೆ, ಆಕಾಶ ಮುಟ್ಟುವಂತೆ ಬೆಳೆದಿದ್ದ ಗೊಜ್ಜಿನ ಮಾವಿನ ಮರದ ಹತ್ತಿರ, ಹೊರಡಲು ಅಣಿಯಾಗಿ ನಿಂತಿದ್ದ ಸಣ್ಣಬೀರನು ತುಸು ತಾಳ್ಮೆಗೆಟ್ಟವನಂತೆ ಬೇಸರ ಮೋರೆ ಮಾಡಿಕೊಂಡು, ಕೇರಿಯ ಕಡೆ ತಿರುಗಿ, ತನ್ನ ಮಾವನ ಬಿಡಾರದ ಬಾಗಿಲಕಡೆಯೇ ನೋಡುತ್ತಿದ್ದನು. +ಬಹಳ ಹೊತ್ತಾದರೂ ಬೆಟ್ಟಳ್ಳಿಗೆ ಹೊರಡಬೇಕಾಗಿದ್ದ ಗುಂಪಿನವರು – ಅಪ್ಪ ದೊಡ್ಡಬೀರ, ಅವ್ವ ಸೇಸಿ, ತಮ್ಮ ಪುಟ್ಟಬೀರ, ತಮ್ಮನ ಹೆಂಡತಿ ಚಿಕ್ಕಪುಟ್ಟಿ, ಮದುವಣಗಿತ್ತಿ ತಂಗಿ ತಿಮ್ಮಿ – ಯಾರೊಬ್ಬರೂ ಬಿಡಾರದಿಂದ ಹೊರಕ್ಕೆ ಬರಲಿಲ್ಲ. +ಹೆಗಲಮೇಲಿದ್ದ ಕಂಬಳಿಯನ್ನು ನೆಲಕ್ಕೆ ಹಾಕಿಕೊಂಡು ಅದರ ಮೇಲೆ ಕುಳಿತು ಹಾದಿ ಕಾಯುತ್ತಿದ್ದನು. +ಅವನ ಮುಖದ ಮೇಲೆ, ಕೆನ್ನೆ ಗಲ್ಲಗಳಲ್ಲಿ ಆಗಿದ್ದ ಗಾಯಗಳಿಗೆ ಏನೋ ಕರಿಔಷಧಿ ಹಚ್ಚಿಕೊಂಡಿದ್ದರಿಂದ ಆ ಕಪ್ಪು ಕಲೆಗಳು ವಿಕಾರವಾಗಿ ಎದ್ದು ಕಾಣುತ್ತಿದ್ದುವು. +ಆದರೆ ಅವನ ಮುಖಭಾವದಲ್ಲಿ ಇಜಾರದ ಸಾಬಿಯ ಮೇಲೆ ಸೇಡು ತೀರಿಸಿಕೊಂಡ ಹೆಮ್ಮೆಯ ಕಳೆ ಸಂಚಾರಿಯಾಗಿ ನಲಿದಾಡುತ್ತಿತ್ತು. +ಹಿಂದಿನ ದಿನ ಸಂಜೆ ಆಗಿದ್ದ ಹೊಡೆದಾಟದಲ್ಲಿ ತನ್ನ ಕತ್ತಿಯ ಪ್ರಭಾವದಿಂದ ಇಜಾರದ ಸಾಬಿಯ ಬೆರಳು ಕತ್ತರಿಸಿ, ಕುತ್ತಿಗೆ ಹೆಗಲುಗಳ ಮೇಲೆಯೂ ಘಾತವಾಗಿ ಗಾಯಗಳಾಗಿದ್ದು, ಸಾಬಿಯ ಸ್ಥಿತಿ ವಿಷಮಿಸಿ, ರಾತ್ರಿಯೆ, ಅವನನ್ನು ಕುದುರೆಯ ಮೇಲೆ ಮೇಗರವಳ್ಳಿಗೆ ಸಾಗಿಸಿದ್ದರು, ಕಣ್ಣಾಪಂಡಿತರಿಂದ ತಾತ್ಕಾಲಿಕವಾಗಿ ಮದ್ದು ಹಾಕಿಸಿ, ಆಮೇಲೆ ತೀರ್ಥಹಳ್ಳಿಯ ಆಸ್ಪತ್ರೆಗೆ ಸಾಗಿಸುವ ಉದ್ದೇಶದಿಂದ. +ಆದರೆ ಆ ಭಯಂಕರ ಘಾತವಾದದ್ದು ತನ್ನಿಂದಲೇ ಎಂಬುದು ಮಾತ್ರ ಆ ದೊಂಬಿಯಲ್ಲಿ ಯಾರಿಗೂ ಗೊತ್ತಾಗದಂತೆ ಕುಶಲತೆಯಿಂದ ಕೆಲಸ ನಿರ್ವಹಿಸಿದ್ದನು ಸಣ್ಣಬೀರ. +ತನ್ನ ಬಾವ, ಗುತ್ತಿ, ಸಾಬಿಯ ಬುರುಡೆಗೆ ಬೀಸಿ ಬೀಸಿ ಹೊಡೆದಿದ್ದ ಬಗನಿ ದೊಣ್ಣೆಯ ಪೆಟ್ಟುಗಳೆ ಎಲ್ಲರ ಕಣ್ಣಿಗೂ ಬಿದ್ದಿದ್ದು, ಕತ್ತಿಯ ಏಟುಗಳಿಗೂ ಗುತ್ತಿಯೆ ಕಾರಣ ಎಂಬ ಭಾವನೆಗೆ ಎಡೆಗೊಟ್ಟಿತ್ತು. +ಸಣ್ಣಬೀರ ಆ ಭಾವನೆಯನ್ನು ತಿದ್ದುವ ಗೋಜಿಗೆ ಹೋಗದೆ ಅದಕ್ಕೆ ಪುಷ್ಟಿಯನ್ನೆ ಕೊಟ್ಟಿದ್ದನು. +ಒಂದು ವೇಳೆ ಹುಣ್ಣು ವಿಷಮಿಸಿ ಸಾಬಿ ಎಲ್ಲಿಯಾದರೂ ಸತ್ತುಬಿಟ್ಟರೆ, ತನ್ನ ಮೇಲೆ ಖೂನಿಯ ಆಪಾದನೆ ಬರದಂತೆ ನೋಡಿಕೊಳ್ಳುವುದೂ ಅವನ ಎಚ್ಚರಿಕೆಯಾಗಿತ್ತು. +ಬಿಡಾರದದೊಳಗೆ ಒಂದು ಸಣ್ಣ ರುದ್ರನಾಟಕದ ದೇಶ್ಯವೆ ನಡೆಯುತ್ತಿತ್ತು. +ಕಾಲಿಗೆ ಮದ್ದು ಹಾಕಿ ಬಟ್ಟೆ ಸುತ್ತಿಕೊಂಡಿದ್ದ ಗುತ್ತಿ, ಕಂಬಳಿ ಹೊದೆದು ಚಾಪೆಯ ಮೇಲೆ, ಎಲ್ಲವನ್ನೂ ನೋಡುತ್ತಾ ಮಲಗಿದ್ದನು, ಆ ನಾಟಕದಲ್ಲಿ ಪಾತ್ರಧಾರಿಯಾಗಿದ್ದರೂ ಪ್ರೇಕ್ಷಕನಂತೆ ತಟಸ್ಥನಾಗಿ. +ಗುತ್ತಿಗೆ ತನ್ನ ಹೆಂಡತಿಯನ್ನು ತವರುಮನೆಗೆ ಕಳುಹಿಸಲು ಮನಸ್ಸಿರಲಿಲ್ಲ. +ತನ್ನ ಒಡೆಯರು, ಸಿಂಬಾವಿ ಹೆಗ್ಗಡೆಯವರು, ಮನೆಗೆ ಬಂದ ಮೇಲೆ ಅವರನ್ನು ಕೇಳಿ ಕರೆದುಕೊಂಡು ಹೋಗಬಹುದು ಎಂದಿದ್ದನು. +ಆದರೆ ಹೆಗ್ಗಡೆಯವರೇ ದಾರಿಯಲ್ಲಿ ಸಿಕ್ಕಿ, ತಿಮ್ಮಿಯನ್ನು ತವರಿಗೆ ಕರೆದೊಯ್ಯಲು ಅನುಮತಿ ಕೊಟ್ಟಿದ್ದಾರೆ ಎಂಬುದನ್ನು ಕೇಳಿದ ಮೇಲೆ ಅವನಿಗೆ ಅನುಮಾನ ಇನ್ನೂ ಹೆಚ್ಚಾಗಿತ್ತು. +ಆದ್ದರಿಂದ ತಾನೂ ತಿಮ್ಮಿಯೊಡನೆ ಹೋಗುವುದಾಗಿ ಮನಸ್ಸು ಮಾಡಿದ್ದನು. +ದೊಡ್ಡಬೀರನು ಗುತ್ತಿಯ ಮೇಲಿನ ಗೌಡರ ಸಿಟ್ಟು ಇಳಿಯುವವರೆಗೂ ಗುತ್ತಿ ಬೆಟ್ಟಳ್ಳಿಗೆ ಕಾಲಿಡದಿರುವುದೇ ಲೇಸು ಎಂದು ಉಪಾಯವಾಗಿ ಗುತ್ತಿಯನ್ನು ಬರದಂತೆ ಮಾಡಲು ಪ್ರಯತ್ನಿಸಿ ಬೆದರಿಕೆ ಹಾಕಿದ್ದನು. +ಗುತ್ತಿಯ ಸಂಶಯ ಇನ್ನೂ ಹೆಚ್ಚಿದಂತಾಗಿ ತಾನೂ ಜೊತೆಗೆ ಹೋಗುವುದೆಂದೇ ನಿಶ್ಚಯಿಸಿದ್ದನು. +ಆದರೆ ಹಿಂದಿನ ಸಂಜೆ ನಡೆದ ದುರ್ಘಟನೆಯಲ್ಲಿ ತನಗೆ ಬಲವಾದ ಪೆಟ್ಟು ತಗಲಿ, ತಾನು ಹಾಸಗೆ ಹಿಡಿದುದರಿಂದ ಹತಾಶನಾಗಿ ಮಲಗಿದ್ದನು. +ಹೊರಡುವ ಮುನ್ನ ಕರಿಸಿದ್ದ ತಾನು ತನ್ನ ಒಡೆಯರಿಂದ ಮದುವೆಗಾಗಿ ತಂದು ಸೊಸೆ ತಿಮ್ಮಿಗೆ ತೊಡೊಸಿದ್ದ ಆಭರಣಗಳನ್ನೆಲ್ಲ ಹಿಂದಕ್ಕೆ ತೆಗೆದಿಟ್ಟುಕೊಂಡನು. +ಆಗ ಸೇಸಿಗೆ ಮದುವೆ ಹೊತ್ತಿನಲ್ಲಿ ಮಗಳಿಗೆ ತಾನು ಇಡಿಸಿದ್ದ ಜಡೆಬಿಲ್ಲೆಯ ನೆನಪಾಗಿ, ಅದನ್ನು ತನಗೆ ಕೊಡು ಎಂದು ಮಗಳನ್ನು ಕೇಳಲು, ಅವಳು ಹುಡುಕಿ ಹುಡುಕಿ, ಅದು ಸಿಗದಿರಲು ಅಳತೊಡಗಿದ್ದಳು. +ತಾಯಿ ಮಗಳು ಇಬ್ಬರೂ ಕಣ್ಣೊರೆಸಿ ಕೊಳ್ಳುತ್ತಿದ್ದರೂ ಯಾರಿಗೆ ಗುಮಾನಿ ಬರಲಿಲ್ಲ. +ಗಂಡನನ್ನು ಆ ದುಸ್ಥಿತಿಯಲ್ಲಿ ಬಿಟ್ಟು ಒಬ್ಬಳೆ ತವರಿಗೆ ಹೋಗಬೇಕಾದುದರಿಂದ ಹುಡುಗಿ ಅಳುತ್ತಿದ್ದಾಳೆ ಎಂದೂ, ಮಗಳ ದುಃಖದಲ್ಲಿ ತಾಯಿಯೂ ಭಾಗಿಯಾಗಿದ್ದಾಳೆಂದೂ ಎಲ್ಲರೂ ಭಾವಿಸಿದರು. +ಆದರೆ ಬಹಳ ಹೊತ್ತಾದರೂ ಅವರಿಬ್ಬರೂ ಹುಡುಕುವುದರಲ್ಲಿಯೆ ತೊಡಗಿ ತಡಮಾಡುತ್ತಿದ್ದುದರಿಂದ ದೊಡ್ಡಬೀರ ‘ಹೊರಡಿ’ ಎಂದು ಗದರಿಸಿದ್ದನು. +ಕಳ್ಳಮಾಲು ಕಳುವಾಗಿದ್ದರೂ ಬಾಯಿ ಬಿಡಲಾರದ ಸಂಕಟದಿಂದ ಸೇಸಿ ಏನೇನೋ ನೆವ ಹೇಳುತ್ತಾ ಹುಡುಕುವುದನ್ನು ಮುಂದುವರಿಸಿದ್ದಳು. +ಆದ್ದರಿಂದಲೆ ಬಿಡಾರದ ಬಾಗಿಲಕಡೆ, ಈಗ ಹೊರಡುತ್ತಾರೆ, ಇನ್ನೇನು ಹೊರಡುತ್ತಾರೆ, ಎಂದು ನೋಡುತ್ತಿದ್ದ ಸಣ್ಣಬೀರ ತಾಳ್ಮೆಗೆಟ್ಟು, ಕಂಬಳಿ ಹಾಸಿಕೊಮಡು ಹಾದಿ ಕಾಯುತ್ತಾ ಕೂತದ್ದು. +ಕಡೆಗೆ ತಿಮ್ಮಿಯೆ ಮಲಗಿದ್ದ ಗುತ್ತಿಯ ಕಿವಿಯಲ್ಲಿ ಏನೇನೋ ಹೇಳಿ, ತಾಯಿ ಅತ್ತಿಗೆಯವರೊಡನೆ ಅಣ್ಣಂದಿರನ್ನು ಹಿಂಬಾಲಿಸಿದ್ದಳು. +ದೊಡ್ಡಬೀರನ ಗುಂಪು ಬೆಟ್ಟಳ್ಳಿಗೆ ಹಿಂದಿರುಗುವ ಮಾರ್ಗವಾಗಿ ಲಕ್ಕುಂದ ಮೇಗರವಳ್ಳಿಗಳನ್ನು ದಾಟಿ ಹುಲಿಕಲ್ಲು ಗುಡ್ಡವನ್ನು ಏರುತ್ತಿದ್ದಾಗಲೆ ಕಾಡಿನ ಕಾಲುದಾರಿಯಲ್ಲಿ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರನ್ನು ನಡೆಸಿಕೊಮಡು ಇಳಿದು ಬರುತ್ತಿದ್ದ ಕೋಣೂರಿನ ಐಗಳು ಅನಂತಯ್ಯನವರಿಗೆ ಇದಿರಾದದ್ದು. +ಐಗಳ ಸನ್ನೆಯ ಕೋರಿಕೆಯಂತೆ ದೊಡ್ಡಬೀರನು ಸಣ್ಣಬೀರ ಪುಟ್ಟಬೀರರನ್ನು ಅವರ ಜೊತೆ ಹೋಗುವಂತೆ ಹೇಳಿ ಉಳಿದವರೊಡನೆ ಮುನ್ನಡೆದಿದ್ದನು. +ಐಗಳ ಆದೇಶದಂತೆ ಪುಟ್ಟಬೀರ ಮೇಗರವಳ್ಳಿಗೆ ಓಡಿ, ಅಂತಕ್ಕ ಸೆಟ್ಟಿಗಿತ್ತಿಯ ಮನೆಯಲ್ಲಿದ್ದ ಬೆಟ್ಟಳ್ಳಿ ದೇವಯ್ಯಗೌಡರಿಗೆ ಹಳೆಮನೆ ಹೆಗ್ಗಡೆಯವರಿಗೆ ಒದಗಿದ್ದ ಆಪತ್ತಿನ ವಿಚಾರ ತಿಳಿಸಿ, ದೇವಯ್ಯ ಪಾದ್ರಿಯೊಡಗೂಡಿ ಡೋಲಿಯೊಡನೆ ಹೋಗಿ, ಹೆಗ್ಗಡೆಯವರನ್ನು ಅಂತಕ್ಕನ ಮನೆಗೆ ಸುರಕ್ಷಿತವಾಗಿ ಸಾಗಿಸಿದ ತರುವಾಯ, ಬೆಟ್ಟಳ್ಳಿಗೆ ಹಿಂದಿರುಗುತ್ತಿದ್ದ ಸಣ್ಣಬೀರರ ಕೈಲಿ, ತನ್ನ ತಂದೆಗೆ ‘ಹಳೆಮನೆ ದೊಡ್ಡಪ್ಪಯ್ಯನ್ನ ಬೆಟ್ಟಳ್ಳಿಗೆ ಸಾಗಿಸಲು ಬೇಗ ಗಾಡಿ ಕಳುಹಿಸುವಂತೆ’ ಹೇಳಿಕಳುಹಿಸಿದ್ದನು. +ಏಕೆಂದರೆ ಸುಬ್ಬಣ್ಣಹೆಗ್ಗಡೆಯವರು ಮತ್ತೆ ಹುಲಿಕಲ್ಲಿನ ಕಾಡುದಾರಿಯನ್ನೇರಿ ಹಳೆಮನೆಗೆ ಹಿಂತಿರುಗುವುದು ಅಸಾಧ್ಯವೆಂಬುದು ದೇವಯ್ಯನಿಗೆ ಮನದಟ್ಟಾಗಿತ್ತು. +ಸಾಯಂಕಾಲ ಮೇಗರವಳ್ಳಿಯ ಕಾಡುಕೊರಕಲು ರಸ್ತೆಯಲ್ಲಿ, ಎತ್ತಿನ ಕೊರಳ ಗಗ್ಗರದ ಸರ ಗೈಲುಗೈಲೆಂದು ಚಕ್ರಗಳ ಗಡಗಡದ ಸದ್ದು ಮೊಳಗುವಂತೆ ಇಂಚರ ಗೈಯುತ್ತಾ ಬಂದು ಬೆಟ್ಟಳ್ಳಿಯ ಕಮಾನುಗಾಡಿ ಅಂತಕ್ಕನ ಮನೆಯ ಮುಂದೆ ನಿಲ್ಲಲು, ಸಾಲಂಕೃತನಾಗಿದ್ದ ಸಾರಥಿ ಬಚ್ಚನು ಗಾಡಿಕತ್ತರಿಯಿಂದ ಕೆಳಕ್ಕೆ ನಗೆದು, ಎತ್ತಿನ ಕೊರಲು ಬಿಚ್ಚಿ ನೊಗಕ್ಕೆ ಕಟ್ಟಿ, ಒಳಗೆ ಹೋಗಿ ಒಡೆಯ ದೇವಯ್ಯಗೌಡರಿಗೆ ಸಮಾಚಾರ ತಿಳಿಸಿದನು. +ಬೆಟ್ಟಳ್ಳಿಯ ಗಾಡಿ ತಮ್ಮನ್ನು ಕರೆದೊಯ್ಯಲು ಬಂದುದನ್ನು ಕೇಳಿ ಸುಬ್ಬಣ್ಣಹೆಗ್ಗಡೆಯವರು ದೇವಯ್ಯಗೆ “ಅಯ್ಯೋ ನಿನ್ನ! +ಗಾಡಿ ಯಾಕೆ ಬರಾಕೆ ಹೇಳಿದ್ಯೋ? +ನನಗೇನು ನಡಕೊಂಡು ಹೋಗಾಕೆ ಆಗ್ತಿರ್ಲಿಲೆನೋ?” ಎಂದಾಗ ಅವನು “ನಮ್ಮ ಹೊಲೇರು ಎಲ್ಲೋ ಹೇಳಿರಬೇಕು ಅಂತಾ ಕಾಣ್ತದೆ ಅಪ್ಪಯ್ಯಗೆ. +ಅದಕ್ಕೆ ಗಾಡಿ ಕಳಿಸಿದಾರೆ, ನಿಮ್ಮನ್ನ ಕರಕೊಂಡು ಬರಾಕೆ” ಎಂದು ಸಮಾಧಾನ ಹೇಳಿ, ಅವರನ್ನು ಮೆಲ್ಲಗೆ ಗಾಡಿ ಹತ್ತಿಸಿ, ತಾನು ಗಾಡಿಯ ಹಿಂದೆಯೆ ಬೈಸಿಕಲ್ಲಿನಲ್ಲಿ ಹೊರಡಲು ಹವಣಿಸುತ್ತಿದ್ದನು. +ಅಷ್ಟರಲ್ಲಿ ಜೀವರತ್ನಯ್ಯ ಅವನ ಕಿವಿಯಲ್ಲಿ ಏನನ್ನೊ ಹೇಳಿದುದರ ಪರಿಣಾಮವಾಗಿ ಬೈಸಿಕಲ್ಲನ್ನು ಪಾದ್ರಿಗೆ ಕೊಟ್ಟು, ತಾನೂ ಹಿಂಬಾಗದಿಂದ ಗಾಡಿ ಹತ್ತಿ ಕುಳಿತನು. +ಬಚ್ಚನೂ ಗಾಡಿ ಕತ್ತರಿಗೆ ನೆಗೆದು ಕುಳಿತಿದ್ದೆ ತಡ, ಬಲಿಷ್ಠವೂ ಸುಪುಷ್ಟವೂ ಆದ ಎತ್ತುಗಳು ತುಸು ವೇಗವಾಗಿಯೆ ಕಾಲು ಹಾಕಿದುವು, ಹುರುಳಿಯಾಸೆಯ ಮನೆಯ ಕಡೆಗೆ. +ತಡಿ ದಿಂಬು ಹಾಕಿ ಮೆತ್ತಗೆ ಮಾಡಿದ್ದ ಗಾಡಿಯ ಒಳಗೆ ಒರಗಿ ಕುಳಿತಿದ್ದ ಸುಬ್ಬಣ್ಣಹೆಗ್ಗಡೆ  ಸ್ವಲ್ಪಹೊತ್ತು ಬಾಲಕನೋಪಾದಿಯಲ್ಲಿ ಸುತ್ತಣ ದೃಶ್ಯಗಳನ್ನು ನೋಡುತ್ತಾ ಹಸನ್ಮುಖಿಗಳಾಗಿ ಕುಳಿತಿದ್ದರು. +ನಡುನಡುವೆ, ರಸ್ತೆಯಾಗಲಿ ಗಾಡಿಗಳಾಗಲಿ ಅಪೂರ್ವವಾಗಿದ್ದ ಆ ಕಾಲದ ಆ ಕೊರಕಲು ದಾರಿಯಲ್ಲಿ, ಗಾಡಿ ಭಯಂಕರವಾಗಿ ಅತ್ತಯಿತ್ತ ಕುಲುಕಿದಾಗ ಮಾತ್ರ ಬಾಯಲ್ಲಿ ಏನಾದರೂ ಹೇಳಿಕೊಳ್ಳುತ್ತಿದ್ದರು. ‘ಹೋ ನನ್ನ ಬೆನ್ನು ಮುರಿದುಹೋಗ್ತದೆ.’ + ‘ಇದೊಳ್ಳೆ ಗಾಡಿಸವಾರಿ, ಮಾರಾಯ!’ + ‘ಇಳಿದಾದ್ರೂ ಹೋಗ್ತಿನಪ್ಪಾ ನಾನು!’ ಇತ್ಯಾದಿ, ಸ್ವಲ್ಪ ದೂರ ಹೋದಮೇಲೆ ಇದ್ದಕಿದ್ದಹಾಗೆ ‘ನಿಲ್ಲಿಸೋ, ಗಾಡಿ ನಿಲ್ಲಸೋ!’ ಎಂದು ಕೂಗಿಕೊಂಡರು. +ಗಾಡಿ ನಿಲ್ಲಿಸಿ, ಏಕೆ ಎಂದು ಕೇಳಲು ‘ನನ್ನ ದೊಣ್ಣೆ, ಮೆಟ್ಟು ತಂದೀರೇನೋ?’ ಎಂದು ದೇವಯ್ಯನ ಕಡೆ ಗಾಬರಿಯಾಗಿ ನೋಡಿದರು. +ಬಚ್ಚ ‘ಗಾಡಿಯೊಳಗೆ ಹುಲ್ಲಿನಡಿ ಇಟ್ಟಿದ್ದೇನೆ’ ಎಂದು ಹೇಳಿದ ಮೇಲೆಯೆ ಶಾಂತಚಿತ್ತರಾಗಿ ಮತ್ತೆ ಒರಗಿ ಕುಳಿತರು. +ದೇವಯ್ಯ ಅವರನ್ನು ಮಾತನಾಡಿಸಿದರೆ ಅವರಿಗೆ ಏನೇನೋ ಕೆರಳಿದಂತಾಗುತ್ತದೆ ಎಂದು ಹೆದರಿ ಆದಷ್ಟು ಸುಮ್ಮನಿರಲು ಪ್ರಯತ್ನಿಸುತ್ತಿದ್ದನು. +ಆದರೆ ತುಸುಹೊತ್ತಿನಲ್ಲಿಯೆ ಮತ್ತೆ ಅವರು ತಮ್ಮ ದೊಡ್ಡಮಗ ದೊಡ್ಡಣ್ಣನ ವಿಷಯವಾಗಿ ಸ್ವಲ್ಪ ಅಬದ್ದವಾಗಿಯೆ ಎಂಬಂತೆ ಮಾತಾಡತೊಡಗಿದರು. +ದೇವಯ್ಯಗೆ ಒಳಗೊಳಗೇ ದಿಗಿಲಾದರೂ ಅದನ್ನು ತೋರಗೊಡದೆ ‘ದೊಡ್ಡಪಯ್ಯ, ನಿಮಗೆ ಬೆನ್ನು ನೋಯ್ತದೆ ಅಂತ ಕಾಣ್ತದೆ, ಹಾಳ್ ರಸ್ತೆ! +ಗಾಡಿ ತುಂಬಾ ಜಟಕಾ ಹೊಡೀತದೆ! +ಒಂದು ಸ್ವಲ್ಪ ಮಲಗಿಕೊಳ್ಳಿ’ ಎಂದು ದಿಂಬು ಸರಿಮಾಡಿಟ್ಟು ಕೊಟ್ಟನು. +‘ಆಗಲಪ್ಪಾ!ಉಸ್!’ ಎಂದು ದೀರ್ಘವಾಗಿ ಸುಯ್ದು ಮಲಗುತ್ತಾ ತಮಗೆ ತಾವೇ ಎಂಬಂತೆ ಹೇಳಿಕೊಂಡದ್ದು ದೇವಯ್ಯಗೂ ಕೇಳಿಸಿತ್ತು. +‘ದೊಡ್ಡಣ್ಣಗೆ ಎಲ್ಲ ವಹಿಸಿಕೊಟ್ಟು ತಣ್ಣಗೆ ಕಣ್ಣು ಮುಚ್ಚಿಕೊಂಡು ಬಿಡ್ತೀನಿ!’ಗಾಡಿ ತೊಟ್ಟಿಲು ತೂಗಿತೆಂಬಂತಾಗಿ ಚೆನ್ನಾಗಿ ನಿದ್ದೆ ಮಾಡುತ್ತಿದ್ದ ಮುದುಕನಿಗೆ ಮೋಡವೇರಿದ್ದಾಗಲಿ, ಗುಡುಗು ಮಿಂಚಾಗಲಿ, ಭೋರೆಂದು ಸುರಿದಿದ್ದ ಮಳೆಯಾಗಲಿ ಪ್ರಜ್ಞಾಗೋಚರವಾಗಿರಲಿಲ್ಲ. +ಮಳೇ ಹೊಳವಾಗಿ, ಸೂರ್ಯ ಮುಳುಗಿ, ಕತ್ತಲೆಯ ಮೊದಲ ಛಾಯೆ ಕಾಡನ್ನೆಲ್ಲ ಕವಿಯುತ್ತಿರಲು ಇದ್ದಕಿದ್ದಹಾಗೆ ಕುಮುಟಿ ಎದ್ದು ಕುಳಿತ ಸುಬ್ಬಣ್ಣ ಹೆಗ್ಗಡೆಯವರು “ಅರೆ! +ಎಲ್ಲಿ ಹೋದ್ನೋ?” ಎಂದರು. +“ಯಾರು?” ದೇವಯ್ಯ ಬೆಚ್ಚಿಯೆ ಕೇಳಿದನು. +“ನಮ್ಮ ದೊಡ್ಡಣ್ಣ ಕಣೋ! +ನಿಮ್ಮ ಮನೆ ಅಂಗಳದಲ್ಲಿ ನಿನ್ನ ಜೊತೆ ಸಣ್ಣ ಹುಡುಗನಾಗಿ ಆಡ್ತಿದ್ದ ಕಣೋ! +ಚೆನ್ನಾಗಿ ಕಂಡೆನೋ! …. ” +“ನಿದ್ದೆ ಮಾಡ್ತಿದ್ರಿ; +ಕನಸು ಬಿತ್ತು ಅಂತಾ ಕಾಣ್ತದೆ, ದೊಡ್ಡಪಯ್ಯಾ.ಮಲಗಿಕೊಳ್ಳಿ…. ಮಲಗಿಕೊಳ್ಳಿ…. ಇನ್ನೇನು ಬಂದುಬಿಡ್ತು ನಮ್ಮ ಮನೆ….” +“ಇನ್ನೆಷ್ಟು ದೂರ ಅದಿಯೋ?” +“ಒಂದರ್ಧ ಮೈಲಿ ಒಳಗೇ.” +“ಆಗ್ಲೆ ಕತ್ತಲಾಗಿಬಿಟ್ಟದಲ್ಲೋ….” ಮುದುಕ ಸುತ್ತಲೂ ಕಣ್ಣು ಹೊರಳಿಸಿದನು. +“ಹೌದು ದೊಡ್ಡಪಯ್ಯ. +ಈ ಗಾಡಿ ಹೊಡೆಯೋನು ಲಾಟೀನ್ನೂ ತಂದಿಲ್ಲ….” +“ಕತ್ತಲಾಗಾಕೆ ಮುಂಚೇನೆ ಬತ್ತೀಂವಿ ಅಂತ ಮಾಡಿದ್ದೆ, ಅಯ್ಯಾ” ಬಚ್ಚ ಹೇಳಿದನು ಕ್ಷಮೆ ಕೇಳುವಂತೆ. +ಮುಂದೆ ನಾಲ್ಕು ಮಾರು ಹೋಗುವುದರಲ್ಲಿ ಒಂದು ಲಾಟೀನೂ ಎರಡು ಮೂರು ದೊಂದಿಗಳ ಬೆಳಕೂ ಕಾಡಿನ ನಡುವೆ ಕಾಣಿಸಿ, ಗಾಡಿಯ ಕಡೆಗೆ ಬಂದುವು. +ಮೇಗರವಳ್ಳಿಯಿಂದ ಗಾಡಿ ಬರುವುದು ಹೊತ್ತಾದ್ದರಿಂದ ಬೆಟ್ಟಳ್ಳಿ ಕಲ್ಲಯ್ಯಗೌಡರು ಮುಂಜಾಗ್ರತೆಯ ಕ್ರಮವಾಗಿ ಬೆಳಕು ಕೊಟ್ಟು ಕಳಸಿದ್ದ ಆಳುಗಳು ದೇವಯ್ಯನ ಪ್ರಶ್ನೆಗೆ ಓಗೊಟ್ಟು, ಗಾಡಿಯ ಹಿಂದೆ ಮುಂದೆ ಬೆಳಕು ಹಿಡಿದು ನಡೆಯತೊಡಗಿದರು. +ಗಾಡಿಯ, ಎತ್ತುಗಳ ಮತ್ತು ದೊಂದಿ ಲಾಟೀನು ಹಿಡಿದು ಹಿಂದೆ ಮುಂದೆ ನಡೆದವರ ಕಾಲುಗಳ ಭೂತಾಕಾರದ ನೆರಳುಗಳು ದಾರಿಯ ಪಕ್ಕದ ಕಾಡಿನ ಮೇಲೆಯೂ ರಸ್ತೆಯ ಮೇಲೆಯೂ ಶಕುನಪೂರ್ಣವಾಗಿ ಹಿಂದಕ್ಕೂ ಮುಂದಕ್ಕೂ ಚಲಿಸುತ್ತಿದ್ದುವು. +ಬೆಟ್ಟಳ್ಳಿಗೆ ಹಳೆಮನೆ ಹೆಗ್ಗಡೆಯವರು ಬರದೆ ಒಂದೆರಡು ವರ್ಷಗಳೆ ಆಗಿದ್ದುವೇನೋ? +ಅವರಿಗೇನೂ ಆಪತ್ತು ಒದಗಿದೆ ಎಂಬ ಸುದ್ದಿ ವಿಷಾದಕರವಾಗಿದ್ದಿತಾದರೂ ಅವರನ್ನು ಕರೆದು ತರಲು ಗಾಡಿ ಕಳುಹಿಸಿದ್ದಾರೆ ಎಂಬ ವಾರ್ತೆ ಮನೆಯ ಒಳಗೂ ಹೊರಗೂ ಸಡಗರವನ್ನೆ ತುಂಬಿತ್ತು. +ಕಲ್ಲಯ್ಯಗೌಡರೂ ಸಂಭ್ರಮರಾಗಿಯೆ ಗಾಡಿ ಬರುವುದನ್ನು ಇದಿರು ನೋಡುತ್ತಿದ್ದರು. +ಕತ್ತಲಾದಮೇಲೆ ದೊಂದಿ ಲಾಟೀನುಗಳನ್ನು ಕೊಟ್ಟು ಆಳುಗಳನ್ನು ಕಳುಹಿಸಿದ್ದರು. +ಅವರು ಬರುವುದು ತಡವಾಯಿತೆಂದೆನೆಸಿದಾಗ ಮತ್ತೊಬ್ಬ ಆಳನ್ನು ಒಳದಾರಿಯಿಂದ ಅಟ್ಟಿದ್ದರು. +ಅವನು ಓಡೋಡಿ ಬಂದು ಗಾಡಿ ಬರುತ್ತಿರುವ ಸುದ್ದಿಯನ್ನು ತಿಳಿಸಿದ ಮೇಲೆಯೆ ಗೌಡರು ಹೊರಚಾವಡಿಯಿಂದ ಒಳಜಗಲಿಗೆ ಹೊಗಿ, ಜಗಲಿಗೆ ಲಾಂದ್ರವನ್ನು ಹೊತ್ತಿಸಿದ್ದರು. +ಲಾಂದ್ರ ಲ್ಯಾಂಪು ಲಾಟೀನುಗಳು ಬೆಟ್ಟಳ್ಳಿ ಮನೆಯ ಮುಂದುವರೆಯುತ್ತಿದ್ದ ನಾಗರಿಕತೆಯ ಸಂಕೇತಗಳಾಗಿದ್ದುವು. +ಆ ಪ್ರಾಂತದ ಉಳಿದ ಶ್ರೀಮಂತರ ಮನೆಗಳಲ್ಲಿ ಇನ್ನೂ ಹರಳೆಣ್ಣೆಯ ಹಣತೆ ಮತ್ತು ಚಿಮಿನಿ ದೀಪಗಳೆ ಇದ್ದು, ಬೆಟ್ಟಳ್ಳಿ ಮನೆಯ ಸುಧಾರಿಸಿದ ವಾತಾವರಣವನ್ನು ಇವು ಬೆಳಗುತ್ತಿದ್ದುವು, ಕಮಾನುಗಾಡಿಯಿಂದೆಂತೊ ಅಂತೆ! +ಗಗ್ಗರದ ಸರದ ಸುಸ್ವರ ನಿಂತು, ದೇವಯ್ಯ ತನ್ನ ದೊಡ್ಡಪ್ಪಯ್ಯನವರನ್ನು ಮೆಲ್ಲನೆ ಗಾಡಿಯಿಂದಿಳಿಸಿ, ಜಗಲಿಗೆ ಕರೆತಂದನು. +ಬೊಗಳುತ್ತಿದ್ದ ನಾಯಿಗಳನ್ನು ಗದರಿಸಿ ಅಟ್ಟಿ, ಕಲ್ಲಯ್ಯಗೌಡರು ‘ಬಂದ್ರೇ?’ ಎಂದು ಅತಿಥಿಯನ್ನು ಸ್ವಾಗತಿಸಿ, ಕೆಸರಲಗೆಯ ಮೇಲೆ ಹೊಳೆಯುತ್ತಿದ್ದ ಹಿತ್ತಾಳೆ ಚೊಂಬುಗಳಲ್ಲಿದ್ದ ಬಿಸಿನೀರನ್ನು ಕಾಲು ತೊಳೆದುಕೊಳ್ಳಲು ಕೊಟ್ಟು, ಒರೆಸಿಕೊಳ್ಳಲು ಅಂಗವಸ್ತ್ರವನ್ನು ನೀಡಿ, ಜಗಲಿಯ ಮೇಲೆ ಹಾಸಿದ್ದ ಜಮಖಾನೆಯ ಮೇಲೆ ದಿಂಬಿಗೆ ಒರಗಿ ಕುಳಿತುಕೊಳ್ಳುವಂತೆ ನೆರವಾದರು. +ಅದುವರೆಗೂ ಹೆಚ್ಚು ಮಾತಾಡದೆ ಹೌದು ಇಲ್ಲ ಎಂದು ಒಂದೊಂದೆ ಶಬ್ದದಲ್ಲಿ ಸೋತದನಿಯಿಂದ ಉತ್ತರ ಹೇಳುತ್ತಿದ್ದ ಸುಬ್ಬಣ್ಣಹೆಗ್ಗಡೆಯವರು ಇದ್ದಕಿದ್ದಹಾಗೆ, ಕಿವಿ ಮಂದವಾದವರೊಡನೆ ಮಾತನಾಡುವವರಂತೆ, ಗಟ್ಟಿಯಾಗಿ ಗಂಟಲೆತ್ತಿ ನುಡಿಯತೊಡಗಿದರು. ‘ಹ್ಯಾಂಗಿದ್ದೀರಿ ಈಗ?’ ಎಂದು ಕೇಳಿದ್ದಕ್ಕೆ ‘ಹ್ಯಾಂಗಿರೋದು? +ನೋಡ್ತಿದ್ದೀರಲ್ಲಾ!ಇದ್ದೀನಿ ಹೀಂಗೆ!’ ಎಂದು ಕೂಗಿದರು, ಮಹೋಲ್ಲಾಸ ಧ್ವನಿಯಿಂದ, ನಿಃಶಬ್ದವಾಗಿದ್ದ ಮನೆ ಮರುದನಿ ತುಂಬುವಂತೆ! +‘ಮನೆ ಕಡೆ ಎಲ್ಲ ಕ್ಷೇಮವೇ?’ ಎಂದು ಪದ್ದತಿಯಂತೆ ಕ್ಷೇಮ ಸಮಾಚಾರ ವಿಚಾರಿಸಿದ್ದಕ್ಕೆ ಉತ್ತರವಾಗಿ ಎಲ್ಲ ಕ್ಷೇಮವೇ?’ ಎಂದು ಪದ್ಧತಿಯಂತೆ ಕ್ಷೇಮ ಸಮಾಚಾರ ವಿಚಾರಿಸಿದ್ದಕ್ಕೆ ಉತ್ತರವಾಗಿ ಅಡುಗೆಮನೆಯಲ್ಲಿದ್ದ ಸ್ತ್ರೀ ವರ್ಗವೆಲ್ಲ ಗಾಬರಿಗೊಂಡು ಮಾಣಿಗೆಯ ಬಾಗಿಲಲ್ಲಿ ಬೆರಗಾಗಿ ನೆರೆದು ಇಣಿಕಿ ನೋಡುವಂತೆ, ಗಟ್ಟಿಯಾಗಿ ತಮ್ಮ ಗೃಹಕೃತ್ಯದ ಕಷ್ಟಕೋಟಲೆಗಳನ್ನೆಲ್ಲ ಹೇಳತೊಡಗಿದರು. +ಆಗ ದೇವಯ್ಯ ಯಾವುದನ್ನೊ ನೆವ ಮಾಡಿಕೊಂಡು ತನ್ನ ತಂದೆಯನ್ನು ದೂರ ಕರೆದೊಯ್ದು, ದೊಡ್ಡಪ್ಪಯ್ಯನ ಆ ದಿನದ ಅಸಾಧಾರಣ ಮನಃಸ್ಥಿತಿಯ ವಿಚಾರವಾಗಿ ತಿಳಿಸಿ ಅವರನ್ನು ಎಚ್ಚರಿಸಿದನು. +ಆಮೇಲೆ ಕಲ್ಲಯ್ಯಗೌಡರು ಅವರೊಡನೆ ಹೆಚ್ಚುಮಾತಿಗೆ ಹೋಗಲಿಲ್ಲ. +ಅವರನ್ನು ಆದಷ್ಟು ಬೇಗನೆ ಊಟಕ್ಕೆ ಏಳಿಸಿದರು. +ಅವರ ಗೌರವಾರ್ಥವಾಗಿಯೇ ತಯಾರಿಸಿದ್ದ ಔತಣವನ್ನು ಆತಿಥ್ಯಕ್ಕೆ ಅಪಚಾರವಾಗದಷ್ಟು ಮಿತಪ್ರಮಾಣದಲ್ಲಿ ಬಡಿಸಿದರು. +ಕೋಳಿತುಂಡು, ಕಡಬು, ಕಳ್ಳು ಇವುಗಳ ಸೇವನೆಯಿಂದ ಸಂತೃಪ್ತರಾದ ಹೆಗ್ಗಡೆಯವರು ಊಟ ಪೂರೈಸಿದ ಮೇಲೆ ಎಲೆಯಡಿಕೆ ಹಾಕಿಕೊಳ್ಳುತ್ತಿದ್ದಾಗ ಒಳಗೆ ದೇವಯ್ಯನ ಮಲಗುವ ಕೋಣೆಯಲ್ಲಿ ಅವನ ಮಗು ಚೆಲುವಯ್ಯ ಅಳುತ್ತಿದ್ದುದು ಕೇಳಿಸಿ, ಬೆಚ್ಚಿದಂತಾಗಿ, ಕಣ್ಣರಳಿಸಿ ಸುತ್ತಲೂ ಹುಡುಕುನೋಟದಿಂದಲೆಂಬಂತೆ ಹಣೆ ಸುಕ್ಕಿಸಿ ನೋಡಿ “ಯಾರೋ ಅದೂ? +ನಮ್ಮ ದೊಡ್ಡಣ್ಣನ ಸರಾ ಕೇಳಿಸಿದ್ಹಾಂಗೇ ಆಯ್ತಲ್ಲಾ!” ಎಂದು ತಟಕ್ಕನೆ ಅಂತರ್ಮುಖಿಯಾಗಿಬಿಟ್ಟರು. +ಕಣ್ಣಿಂದ ನೀರು ತೊಟ್ಟಕ್ಕಿತು. +ಬಿಕ್ಕಿ ಬಿಕ್ಕಿ ಅಳತೊಡಗಿದರು. +ಕಲ್ಲಯ್ಯಗೌಡರು ಅವರನ್ನು ಸಮಾಧಾನ ಮಾಡುತ್ತಿರಲು, ದೇವಯ್ಯ “ಯಾರೂ ಅಲ್ಲ, ದೊಡ್ಡಪ್ಪಯ್ಯಾ, ಬ್ಯಾಲೇನ ತೊಟ್ಟಿಲಿಗೆ ಮಲಗಿಸಕ್ಕೆ ಮುಂಚೆ, ಮೈಗೆ ಎಣ್ಣೆ ಹಚ್ತದೆ ಅಂತಾ ಕಾಣ್ತದೆ. +ಅದಕ್ಕೆ ಅಳ್ತಾ ಇದೆ…. +ನೀವು ಸ್ವಲ್ಪ ಮಲಗಿಕೊಳ್ಳಿ. +ಹಾಸಿಗೆ ಹಾಸಿದೆ. +ನಿಮಗೆ ಗಾಡಿ ಪಯಣ ಪೂರಾ ಮೈನೋವಾಗಿರಬೇಕು” ಎಂದು ಅವರನ್ನು ಹಾಸಿಗೆಗೆ ಕರೆದೊಯ್ದು ಮಲಗಿಸಿದನು. +ದೇವಯ್ಯ ಶಾಲು ಹೊದಿಸುತ್ತಿದ್ದಾಗ ಸುಬ್ಬಣ್ಣ ಹೆಗ್ಗಡೆಯವರು ಮತ್ತೆ “ಯಾರು? +ನಿನ್ನ ಮಗನೇನೋ?” ಎಂದು ಕೇಳಿದರು. +“ಹೌದು ಅವನ ಮಗನೆ” ಎಂದರು ಕಲ್ಲಯ್ಯಗೌಡರು. +“ಏನು ಹೆಸರು ಇಟ್ಟಾರೆ ದೋಯಿಸರು?” ಎಂದು ಕೇಳಿದ ಹೆಗ್ಗಡೆಯವರು “ದೊಡ್ಡಣ್ಣ ಅಂತ್ಲೇನೋ?” ಎಂದರು. +“ಅಲ್ಲ ‘ಚೆಲುವಯ್ಯಾ’ ಅಂತಾ.” +ಆವೊತ್ತು ರಾತ್ರಿ ದೇವಯ್ಯ ಮುದುಕನ ಬಳಿಯಲ್ಲಿಯೆ ಹಾಸಗೆ ಹಾಸಿಕೊಂಡು ಮಲಗಿದ್ದನು. +ನಿದ್ದೆಯಲ್ಲಿ ಏನೀನೋ ಅವರು ಕನವರಿಸುತ್ತಿದ್ದರು. +ಒಮ್ಮೆ “ಚೆಲುವಯ್ಯಾ” ಎಂದೂ ಕನಸಿನಲ್ಲಿಯೆ ಕರೆದದ್ದು ಕೇಳಿಸಿತು. +ಎರಡು ಸಾರಿ ಅವರನ್ನು, ದೊಡ್ಡದು ಮಾಡಿದ ಲಾಟೀನು ಬೆಳಕಿನಲ್ಲಿ, ಮೆಲ್ಲಗೆ ನಡೆಸಿಕೊಂಡು ಹೆಬ್ಬಾಗಿಲಾಚೆಗೆ ಹೋಗಿ ಒಂದ ಮಾಡಿಸಿಕೊಂಡು ಕರೆತಂದು ಮಲಗಿಸಿದನು. +ಮರುದಿನ ಬೆಳಿಗ್ಗೆ ಹಳೆಮನೆ ಹೆಗ್ಗಡೆಯವರು ಸಂಪೂರ್ಣವಾಗಿ ಸ್ವಸ್ಥರಾಗಿ ಮುನ್ನಿನ ಸಾಧಾರಣ ಸ್ಥಿತಿಗೆ ಬಂದಂತೆ ಉಲ್ಲಾಸಭರಿತವಾದ ಹರ್ಷಚಿತ್ತದಿಂದ ಮಾತನಾಡುತ್ತಾ ವರ್ತಿಸತೊಡಗಿದರು. +ಕಲ್ಲಯ್ಯಗೌಡರೊಡನೆ ಹಿಂದಿನ ಹಳೆಯ ದಿನಗಳನ್ನು ಕುರಿತು ಅನೇಕಾನೇಕ ವಿನೋದವಾಡಿದರು. +ಬೆಟ್ಟಳ್ಳಿ ಮನೆಯಲ್ಲಿ ಇತ್ತೀಚೆಗೆ ಪ್ರಚಲಿತವಾಗಿದ್ದ ಕಾಫಿ ಕುಡಿಯುವ ನವನಾಗರಿಕ ಚಾಳಿಯನ್ನು ಕುಚೋದ್ಯ ಮಾಡಿ, ತಾವು ಹಾಲು ಹಾಕಿ ತಯಾರಿಸಿದ ಕುನ್ನೇರಿಲುಕುಡಿಯ ಕಷಾಯವನ್ನೆ ಕುಡಿದರು. +ಕಷಾಯ ಕುಡಿಯುತ್ತಿದ್ದಾಗ ಅದರ ರುಚಿಯನ್ನು ಬಹಳವಾಗಿ ಶ್ಲಾಘಿಸುತ್ತಾ, ಅದನ್ನು ತಯಾರು ಮಾಡಿದ್ದ ದೇವಯ್ಯನ ತಾಯಿ ದೊಡ್ಡಮ್ಮ ಹೆಗ್ಗಡಿತಿಯವರಿಗೆ “ಏನು, ದೊಡ್ಡಕ್ಕ, ಗೌಡರಿಗೂ ಕಾಫಿ ಜಲಿಸಿಬಿಟ್ಟಿದ್ದೀರಲ್ಲಾ? +ಕಾಫಿ ಎಷ್ಟಾದರೂ ಉಷ್ಣ. +ಕುನ್ನೇರ್ಲು ಕುಡಿ ಕಷಾಯಾನೇ ತಂಪು. +ಅದರಲ್ಲೂ ನನ್ನ ನಿನ್ಹಾಂಗೆ ವಯಸ್ಸಾದೋರಿಗೆ ಕಾಫಿ ಖಂಡಿತಾ ನಂಜು. +ಅಲ್ಲೇನು ಹೇಳು?” ಎಂದು ಕೇಕೆಹಾಕಿ ನಕ್ಕರು. +ಕಲ್ಲಯ್ಯಗೌಡರು ತಮ್ಮ ಹೆಂಡತಿಯ ಕಡೆ ನೋಡಿ ವಿನೋದವಾಗಿ “ನೋಡಿದ್ಯಾ? +ನಿಂಗೆ ಈಗ್ಲಾದ್ರೂ ಗೊತ್ತಾಯ್ತೇನು, ವಯಸ್ಸಾಗಿದೆ ಅಂತಾ? +ಹೆಗ್ಡೇರೆ ಹೇಳ್ತಿದಾರೆ, ನೀನು ಅವರೂ ವಯಸ್ಸಾದವರು ಅಂತಾ!” ಎಂದು ನಕ್ಕರು. +ನಡುವಯಸ್ಸು ಮೀರಿದ್ದ ಗಂಭೀರ ಮಹಿಳೆ ದೊಡ್ಡಮ್ಮ ಹೆಗ್ಗಡಿತಿಯವರು ಗಂಡನ ಮತ್ತು ಹಳೆಮನೆ ಬಾವನವರ ವಿನೋದದ ಮಾತುಗಳಿಗೆ ಏನೊಂದೂ ಉತ್ತರ ಕೊಡದೆ, ಬಾಯಿಗೆ ಸೆರಗು ಮುಚ್ಚಿಕೊಂಡು ನಕ್ಕರು. +ಸುಮಾರು ಸಮ ಸಮ ವಯಸ್ಕರಾಗಿದ್ದ ಗೌಡರೂ ಬಹಳ ಕಾಲದ ಮೇಲೆ ಒಟ್ಟಿಗೆ ಸೇರಿ ತಮ್ಮ ಎಳೆಗಾಲದ ಮನೋಭಂಗಿಯನ್ನು ಸವಿಯುತ್ತಿದ್ದಂತೆಯೆ, ವರ್ಷವೆಲ್ಲವೂ ತಮಗಿಂತಲೂ ಬಹಳ ಚಿಕ್ಕವರೊಡನೆಯೆ ವ್ಯವಹರಿಸುತ್ತಿದ್ದ ಹೆಗ್ಗಡಿತಿಯವರ ಮನಸ್ಸೂ ಕಳೆದುಹೋಗಿ ಬಹುದೂರವಾಗಿದ್ದ ತಮ್ಮ ಎಳೆಗಾಲದ ಭೂಮಿಕೆಗೆ ಪ್ರವೇಶಿಸಿದಂತಾಗಿತ್ತು. +ಜೊತೆಗೆ, ನಗಲಿರುವೆವರಿಗೆ ಕಚಗುಳಿ ಇಡುವಂತೆ, ದೇವಯ್ಯ ತಾನು ಕುಡಿಯುತ್ತಿದ್ದ ಕಾಫಿಯನ್ನು ಕೆಳಗಿಟ್ಟು ತನ್ನ ತಾಯಿಯ ಕಡೆಗೆ ನಗುಮೊಗವಾಗಿ ನೋಡುತ್ತಾ “ಅಯ್ಯಯ್ಯೋ, ಇದೇನು? +ಅವ್ವಗೆ ಇವತ್ತು ಎಲ್ಲಿಲ್ಲದ ನಾಚಿಕೆಯಾಗಿಬಿಟ್ಟದಲ್ಲಾ!” ಎಂದು ಹಾಸ್ಯವಾಡಿದನು. +ಹೊಗೆಯಿಂದ ತುಂಬಿರುತ್ತಿದ್ದ ಅಡುಗೆಮನೆಯೆಲ್ಲ ನಗೆಯಿಂದ ತುಂಬಿಹೋಯಿತು. +ಅಷ್ಟರಲ್ಲಿ ಬಾಲೆಯಾಡಿಸುವ ಹುಡುಗಿ ಶಿಶು ಚೆಲುವಯ್ಯನನ್ನು ಎತ್ತಿಕೊಂಡು ಹೋಗುತ್ತಿದ್ದುದನ್ನು ಕಂಡ ಹೆಗ್ಗಡೆಯವರು “ಎಲೆಲೆಲೆಲೆ ಹುಡುಗಿ, ಇತ್ತ ಎತ್ತಿಕೊಂಡು ಬಾರೆ; +ನಾನೊಂದಿಷ್ಟು ನೋಡ್ತೀನಿ, ನನ್ನ ಮೊಮ್ಮಗನ್ನ!” ಎಂದು ಅಟ್ಟಹಾಸ ಮಾಡಿದರು. +ಹುಡುಗಿ ಚೆಲುವಯ್ಯನನ್ನು, ಕಿಟಕಿಯಿಂದ ಬಂದ ಎಳಬಿಸಿಲು ಬಿದ್ದಲ್ಲಿ, ಉರುಡು ಹಾಸಗೆ ಹಾಸಿ ಮಲಗಿಸಿದಳು. +ಹಿಂದಿನ ದಿನ ಸಂಜೆ ಬಿದ್ದಿದ್ದ ಬಿರುಮಳೆಗೆ ಚಳಿಯಾಗುವಷ್ಟರಮಟ್ಟಿಗೆ ತಣ್ಣಗಾಗಿದ್ದ ಹವೆಯಲ್ಲಿ, ಎಳಬಿಸಿಲ ಸುಖೋಷ್ಣವನ್ನು ಅನುಭವಿಸಿದ ಆ ಕೂಸು ಅಂಗಾತನೆ ಮಲಗಿ ಕೈಕಾಲು ಆಡಿಸುತ್ತಾ, ನಗುವಂತೆ ಮೊದಲು ದನಿಯೆಸಗುತ್ತಾ, ಅದರ ಕಡೆಗೇ ಕಣ್ಣಾಗಿದ್ದ ಎಲ್ಲರ ಹೃದಯದ ಮೇಲೆಯೂ ಆನಂದ ಕಾಂತಿಯನ್ನು ಸಿಂಚಿಸಿ, ಮುದ್ದು ಮೋಹವುಕ್ಕುವಂತೆ ಮಾಡಿತು. +ಮಣೆಯ ಮೇಲೆ ಕುಕ್ಕುರುಗಾಲಾಗಿ ಕುಳಿತು, ಗೋಡೆಗೆ ಒರಗಿಕೊಂಡಿದ್ದ ಸುಬ್ಬಣ್ಣ ಹೆಗ್ಗಡೆಯವರು ಮಗುವನ್ನು ನೋಡುತ್ತಿದ್ದ ಹಾಗೆಯೆ ಇತರರಿಗೆ ಅಚ್ಚರಿಯಾಗುವಂತೆ ಆನಂದಮಯರಾಗಿ ಬಿಟ್ಟರು. +ಗೋಡೆಗೆ ಒರಗಿದ್ದವರು ನೆಟ್ಟಗೆ ನಿಮಿರಿ ಕುಳಿತರು. +ಮತ್ತೆ ಮುಂದಕ್ಕೆ ಬಾಗಿ, ನಗೆಬೀರಿ ನೋಡತೊಡಗಿದರು. +ಮತ್ತೆ ಮಣೆಯ ಮೇಲಿಂದ ಎದ್ದು ಉರುಡುಹಾಸಿಗೆಯ ಪಕ್ಕಕ್ಕೆ ಸರಿದು, ತುದಿಗಾಲ ಮೇಲೆ ಕುಳಿತು, ಬಗ್ಗಿ, ಮುದ್ದಿಸತೊಡಗಿದರು. +ಆಮೇಲೆ ತುದಿಗಾಲಮೇಲೆ ಕುಳಿತಿದ್ದವರು ಅಂಡೂರಿ ಚಿಕ್ಕಾಲು ಬಕ್ಕಾಲು ಹಾಕಿ ಬಲವಾಗಿ ಕುಳಿತುಬಿಟ್ಟರು. +ಯಾವುದೋ ಭಾವಾವೇಶದಿಂದ ಅವರ ಮುಖಭಂಗಿ ತೇಜಸ್ವಿಯಾಯಿತು. +ಚೆಲುವಯ್ಯನ ಕೆನ್ನೆ ಗಲ್ಲ ಹಣೆಗಳನ್ನು ಮೆಲ್ಲಗೆ ಮುಟ್ಟಿ ನೀವಿ ಸೊಗಸುತ್ತಾ ಲಲ್ಲೆಗೈದು ತೊದಲಾಡಿದರು. +ಅಷ್ಟರಲ್ಲಿ ಅವರ ಪಕ್ಕಕ್ಕೆ ಬಂದು ಕುಳಿತಿದ್ದ ದೇವಯ್ಯನ ಕಡೆ ಹನಿಗಣ್ಣಾಗಿ ನೋಡುತ್ತಾ ‘ಅವನ ಹಾಂಗೆ ಕಾಣ್ತಾನೊ ನಿನ್ನ ಮಗ! +ಅವನೆ ಇವನು ಅನ್ನಬೇಕು, ಹಾಂಗೇ ಅದಾನೆ! +ನಮ್ಮ ದೊಡ್ಡಣ್ಣ ಬಾಲೆ ಆಗಿದ್ದಾಗ ಹಿಂಗೇ ಇದ್ದ ಕಣೋ! +ಅದೇ ಕಣ್ಣು, ಅದೇ ಮೂಗು, ಅದೇ ಚೆಂದ!’ ಎನ್ನುತ್ತಾ ಕಲ್ಲಯ್ಯಗೌಡರು ಮತ್ತು ದೊಡ್ಡಮ್ಮ ಹೆಗ್ಗಡಿತಿಯವರ ಕಡೆಗೂ ತಿರುಗಿ “ಗೌಡರಿಗೆ ಗೊತ್ತಿರಬೇಕಲ್ಲಾ? +ನಮ್ಮ ದೊಡ್ಡಣ್ಣನ ತೊಟ್ಟಿಲಿಗೆ ಹಾಕೋ ಮನೆಗೆ ನೀವಿಬ್ಬರೂ ಬಂದಿದ್ರಲ್ಲಾ?… ನಾ ಹೇಳಾದು ಸುಳ್ಳೋ ಬದ್ದೋ ನೀನೆ ನೋಡು, ದೊಡ್ಡಕ್ಕಾ!” ಎಂದು ಮಗುವನ್ನು ಮೆಲ್ಲಗೆ ಎತ್ತಿ ತೊಡೆಯ ಮೇಲೆ ಮಲಗಿಸಿಕೊಂಡರು. +ಆಗಲೆ ಮುದುಕನ ವರ್ತನೆಯ ಅಸಾಧಾರಣತೆಗೆ ಎಲ್ಲರಿಗೂ ಸ್ವಲ್ಪ ಗಾಬರಿಯಾಗತೊಡಗಿತ್ತು. +ಅದಕ್ಕೆ ಸರಿಯಾಗಿ ಮಗುವೂ ಗಟ್ಟಿಯಾಗಿ ಅಳತೊಡಗಿತು. +ದೇವಯ್ಯ “ದೊಡ್ಡಪ್ಪಯ್ಯಾ, ನಿಮ್ಮ ಬಟ್ಟೇನೆಲ್ಲಾ ಒದ್ದೆಮಾಡಿ ಬಿಟ್ಟಾನು! +ಇತ್ತ ಕೊಡಿ ಅವನ್ನ” ಎಂದು ಮಗನ ಅಳುದನಿಗೇಳಿ ಆಗಲೆಯೆ ಅಲ್ಲಿಗೆ ಬಂದಿದ್ದ ತನ್ನ ಹೆಂಡತಿಯ ಕಡೆ ನೋಡಿದನು. +ದೇವಮ್ಮ ಚೆಲುವಯ್ಯನನ್ನು ಎತ್ತಿ ಎದೆಗವಚಿಕೊಂಡು ಬೇಗಬೇಗನೇ ತಮ್ಮ ಮಲಗುವ ಕೋಣೆಗೆ ಹೋದಳು. +ಆ ದಿನ ಪೂರ್ವಾಹ್ನವೆಲ್ಲ ಹೆಗ್ಗಡೆಯವರ ಹರ್ಷಚಿತ್ತಕ್ಕೆ ಇನಿತೂ ಭಂಗ ಬರಲಿಲ್ಲ. +ಶಿಶು ಚೆಲುವಯ್ಯನನ್ನು ಕಂಡಾಗಣಿಂದ ಅವರ ಮೊಗದ ಮೇಲೆ ಅರಳಿದ್ದ ನಗೆಯ ಮಲರು ಅವರು ಮಧ್ಯಾಹ್ನದ ಊಟ ಮುಗಿಸಿ ಹಗಲು ನಿದ್ದೆ ಮಾಡಿ ಎದ್ದಮೇಲೆಯೂ ಮಾಸದೆ ಬಾಡದೆ ಹುಸುಸಾಗಿಯೆ ಇತ್ತು, ಹಿಂದಿನ ದಿನ ರಾತ್ರಿ ಹಳೆಮನೆಗೆ ಹೋಗಿ ಬಂದಿದ್ದ ಮುಕುಂದಯ್ಯ ಐತನ ಕೈಲಿ ದೇವಯ್ಯಗೆ ಚೀಟಿಕೊಟ್ಟು ಕಳುಹಿಸುವವರೆಗೆ. +ಚೀಟಿಯನ್ನು ಓದಿಕೊಂಡ ದೇವಯ್ಯ ವಿಷಯವನ್ನು ತಟಕ್ಕನೆ ಸುಬ್ಬಣ್ಣ ಹೆಗ್ಗಡೆಯರಿಗೆ ತಿಳಿಸಲಿಲ್ಲ. +ತನ್ನ ತಂದೆಯೊಡನೆ ಪ್ರಸ್ತಾಪಿಸಿದನು. +ಹೆಗ್ಗಡೆಯವರು ಆ ದಿನವೆ ಕಾಲುನಡಿಗೆಯಲ್ಲಿ ಬೆಟ್ಟಳ್ಳಿಯಿಂದ ಹಳೆಮನೆಗೆ ನಡೆದುಕೊಂಡು ಹೋಗುವುದು ಅಸಾಧ್ಯವೆ ಆಗಿತ್ತು. +ಗಾಡಿಯ ಮೇಲೆಯೆ ಕಳುಹಿಸುವುದಕ್ಕೂ ಆಗುವಂತಿರಲಿಲ್ಲ. +ಏಕೆಂದರೆ ಹಳೆಮನೆಗೆ ಗಾಡಿದಾರಿಯೆ ಇರಲಿಲ್ಲ. +ಎತ್ತುಗಾಡಿ ಇಟ್ಟುಕೊಳ್ಳುವುದೇ ಅಪೂರ್ವ ಭೋಗವಾಗಿದ್ದ ಆ ಕಾಲದಲ್ಲಿ ಗಾಡಿಯ ರಸ್ತೆ ಎಲ್ಲಿಂದ ಬರಬೇಕು? +ಕಟ್ಟಿಗೆ ಗೊಬ್ಬರಗಳೂ ತಲೆಹೊರೆಯ ಮೇಲೆಯೆ ಸಾಗುತ್ತಿದ್ದುವು; +ಹೊರಗಡೆಯಿಂದ ಬರುತ್ತಿದ್ದ ದಿನಸಿ ಸಾಮಾನುಗಳೆಲ್ಲ ಹೇರೆತ್ತಿನ ಮೇಲೆ ಆಮದಾಗುತ್ತಿದ್ದವು. +ಹೀಗಾಗಿ ಜನಕ್ಕೆ ಗಾಡಿ ರಸ್ತೆಯ ಅವಶ್ಯಕತೆಯೆ ತೋರಿರಲಿಲ್ಲ. +ಹೆಗ್ಗಡೆಯವರಂತೂ ಸಂತೋಷಚಿತ್ತರಾಗಿ ಸದ್ಯಕ್ಕೆ ತಾಪತ್ರಯಮಯವಾದ ತಮ್ಮ ಮನೆಯನ್ನೇ ಮರೆತುಬಿಟ್ಟಂತೆ ಇದ್ದರು. +ಪದೇ ಪದೇ ಮೊಮ್ಮಗನನ್ನು ಕರೆದು ತರಹೇಳಿ ಮುದ್ದು ಮಾತಾಡಿಸಿ ನಲಿಯುತ್ತಿದ್ದರು. +ಕಲ್ಲಯ್ಯಗೌಡರು ಮನಸ್ಸಿಲ್ಲದ ಮನಸ್ಸಿನಿಂದ ಅವರಿಗೆ ತಮ್ಮ ಮನೆಯ ನೆನಪುಕೊಟ್ಟು, ಅಲ್ಲಿಗೆ ಆ ದಿನವೆ ಹಿಂತಿರುಗಬೇಕಾಗಬಹುದೆಂದು ಸೂಚಿಸಿದಾಗ, ಅವರು ಮುನಿಸಿಕೊಂಡಂತೆ ಮಾತಾಡಿದರು. +“ಅಯ್ಯೋ ಇದ್ದೇ ಇದೆ, ಗೌಡರೆ, ಹಾಳು ಮನೆ! +ಇನ್ನೆರಡು ದಿನ ಇಲ್ಲೇ ಸುಖವಾಗಿ ಇದ್ದುಬಿಡ್ತೀನಿ, ನನ್ನ ಮೊಮ್ಮಗನ್ನ ನೋಡ್ತಾ, ಹಾಯಾಗಿ!”ಕೊನೆಗೆ, ನಿರ್ವಾಹವಿಲ್ಲದೆ, ದೇವಯ್ಯ ಮೆಲ್ಲಗೆ ಮುಕುಂದಯ್ಯನ ಚೀಟಿಯ ಪ್ರಸ್ತಾಪವೆತ್ತಿ, ಹಳೆಮನೆಯಲ್ಲಿ ನಡೆದ ದುರಂತವನ್ನು ಆದಷ್ಟು ಸೌಮ್ಯ ರೀತಿಯಲ್ಲಿ ತಿಳಿಸಿದಾಗ, ಹೆಗ್ಗಡೆಯವರಿಗೆ ಆದ ಸಂಕಟ ಹೇಳತೀರದ್ದಾಗಿತ್ತು. +ಬಾಲಕರಂತೆ ಅವರು ರೋದಿಸುವುದನ್ನು ನೋಡಿ ಕಲ್ಲಯ್ಯಗೌಡರಾದಿಯಾಗಿ ಕಣ್ಣೀರು ತಡೆಯಲಾಗಲಿಲ್ಲ. +“ದೇವಯ್ಯ, ನನ್ನ ದೊಡ್ಡಣ್ಣನ್ನ ಯಾವಾಗ ಕರಕೊಂಡು ಬರತಿಯಪ್ಪಾ ತೀರ್ಥಹಳ್ಳಿಯಿಂದ? +ಎಲ್ಲ ಅವನಿಗೆ ವಹಿಸಿ, ತಣ್ಣಗೆ ಕಣ್ಣು ಮುಚ್ಚಿಕೋಳ್ತಿನಪ್ಪಾ! +ನಂಗೆ ಸಾಕಪ್ಪಾ ಈ ಸಂಸಾರ!” ಎಂದು ತಲೆಮೇಲೆ ಕೈ ಹೊತ್ತುಕೊಂಡು ಅಳುತ್ತಾ ಕುಳಿತುಬಿಟ್ಟರು. +ಗಾಡಿ ಹಿಡಿದುಕೊಳ್ಳುವುದಕ್ಕೂ ದಾರಿಗಡ್ಡವಾದ ಹಳು ಮಟ್ಟು ಸವರುವುದಕ್ಕೂ ಮೂರು ನಾಲ್ಕು ಜನರಿದ್ದರೆ ಗಾಡಿಯನ್ನು ಹೇಗಾದರೂ ಮಾಡಿ ಹಕ್ಕಲು ಬಯಲಿನ ಮುಖಾಂತರ ಹಲೆಮನೆಯ ಹತ್ತಿರದವರೆಗೆ ಹೊಡೆದು ಕೊಂಡು ಹೋಗಬಹುದು ಎಂದು ಬಚ್ಚ ಭರವಸೆ ಕೊಟ್ಟಮೇಲೆ, ಸುಬ್ಬಣ್ಣ ಹೆಗ್ಗಡೆಯವರನ್ನು ತಡಿ ಹಾಸಿ, ದಿಂಬುಗಳ ನಡುವೆ ಮಲಗಿಸಿ, ದೇವಯ್ಯನೂ ಗಾಡಿಯ ಹಿಂದೆ ಅವರಿಗೆ ಮೈಗಾವಲಾಗಿ ಹತ್ತಿದನು. +ವಿಷಣ್ಣ ವಾತಾವರಣದಲ್ಲಿ ಬೆಟ್ಟಳ್ಳಿ ಮನೆಯವರೆಲ್ಲ ನಿಂತು ನೋಡುತ್ತಿರಲು, ಗಾಡಿ ಮರೆಯಾಗಿ ಗಂಟೆ ಗಗ್ಗರದ ಸರಗಳ ಸದ್ದು ಮಾತ್ರ ಕೇಳಿಸಿ, ಕಡೆಗೆ ಅದೂ ನಿಂತಿತು. +ಕಲ್ಲಯ್ಯಗೌಡರು ನೀಡಿದಾಗಿ ಸುಯ್ದು, ಯಾರ ಕಡೆಯೂ ನೋಡದೇ ನೆಲವನ್ನೇ ನೋಡುತ್ತಾ ಒಳಗೆ ನಡೆದರು. +ಅತ್ತೆಯೊಡನೆ ಮಗನನ್ನು ಎತ್ತಿಕೊಂಡು ನಿಂತಿದ್ದ ದೇವಮ್ಮ ತನ್ನ ಅಕ್ಕನಿಗೊದಗಿದ್ದ ಸಂಕಟದ ಸ್ಥಿತಿಗೆ ಕಣ್ಣೀರು ಸುರಿಸುತ್ತಾ, ಮೈದುನ ತಿಮ್ಮಪ್ಪ ಹೆಗ್ಗಡೆಯನ್ನು ಶಪಿಸಿದಳು. +ತನ್ನ ತಮ್ಮನಿಂದ ಚೀಟಿ ತಂದಿದ್ದ ಐತನನ್ನು ಪ್ರತ್ಯೇಕವಾಗಿ ಮನೆಯ ಹಿತ್ತಲು ಕಡೆಯ ಬಾಗಿಲಿಗೆ ಕರೆದು, ಅವನಿಂದ ತಾನು ಕೇಳಿ ತಿಳಿದಿದ್ದ ವಿವರವನ್ನೆಲ್ಲಾ ಗದ್ಗದ ಕಂಠದಿಂದ ಅತ್ತೆ ದೊಡ್ಡಮ್ಮ ಹೆಗ್ಗಡಿತಿಯವರಿಗೂ ಹೇಳಿದಳು. +ಧರ್ಮವನ್ನು ಹಳೆಮನೆಗೆ ಕೆರೆದೊಯ್ದು ಬಿಟ್ಟು, ಕತ್ತಲೆಯಲ್ಲಿಯೆ ಕೋಣೂರಿಗೆ ಹಿಂದಿರುಗಿದ್ದ ಐತನು, ತಾನು ಹಳೆಪೈಕದ ಕೆಲಸದ ಹೆಣ್ಣಾಳು ಹೂವಿಯಿಂದಲೂ, ಬಾಯಿಗೆ ತೆಗೆದುಕೊಂಡು ಬಿಡಾರಕ್ಕೆ ಹೊರಟಿದ್ದ ಹಳೆಮನೆ ಕೇರಿಯ ಹೊಲೆಯರಿಂದಲೂ ಸಂಗ್ರಹಿಸಿದ್ದ ಸುದ್ದಿಯನ್ನು ಮುಕುಂದಯ್ಯನಿಗೆ ತಿಳಿಸಿದನಂತೆ. +ಒಡನೆಯ, ತನ್ನ ಅಕ್ಕನನ್ನು ಹೇಗಾದರೂ ಉಳಿಸಬೇಕೆಂದು, ಮುಕುಂದಯ್ಯ ಅಣ್ಣ ರಂಗಪ್ಪಗೌಡರನ್ನೂ ಕೂಡಿಕೊಂಡು ಹಳೆಮನೆಗೆ ಹೋಗಿ, ಕೋಣೆಯ ಬಾಗಿಲನ್ನು ಒಡೆದು ಒಳನುಗ್ಗಿ, ಪ್ರಜ್ಞೆತಪ್ಪಿ ಮಂಚದ ಮೇಲೆ ಬಿದ್ದುಕೊಂಡಿದ್ದ ರಂಗಮ್ಮನಿಗೆ ಶೈತ್ಯೋಪಚಾರ ಮಾಡಿ, ಧಾತು ಬರುವಂತೆ ಮಾಡಿದ್ದರಂತೆ! +ಹೆಂಡತಿ ದೇಯಿ ತೀರಿಕೊಂಡಾಗ ಸೇರೆಗಾರ ಚೀಂಕ್ರ ಒಂದು ದಿನವೆಲ್ಲ ಶೋಕವನ್ನಾಚರಿಸಿದ್ದನು. +ತನ್ನ ಮೂವರು ಚಿಕ್ಕಮಕ್ಕಳ ಬತ್ತಲೆ ಅರೆಬತ್ತಲೆಯ ಒಡಲುಗಳನ್ನು ತಬ್ಬಿ ತಬ್ಬಿ ಮುಂಡಾಡಿ ಕಣ್ಣೀರು ಕರೆದಿದ್ದನು. +ನೆರೆಯ ಬಿಡಾರದ ಪಿಜಿಣನ ಹೆಂಡತಿ ಅಕ್ಕಣಿಯ ಸಹಾಯದಿಂದ ಮಕ್ಕಳಿಗೆಲ್ಲ ತಾನೆ ಗಂಜಿ ಉಣಬಡಿಸಿದ್ದನು. +ಅಕ್ಕಣಿಯನ್ನು ಬಾಯಿತುಂಬ ಹೊಗಳಿ ತನ್ನ ಕೃತಜ್ಞತೆಯನ್ನು ನೂರುಸಾರಿ ಹೇಳಿಕೊಂಡಿದ್ದನು. +ಜ್ವರ ಬಂದು ತನ್ನ ಬಿಡಾರದ ಮೂಲೆಯಲ್ಲಿ ಕಂಬಳಿ ಹೊದೆದು ಚಾಪೆಯ ಮೇಲೆ ಬಿದ್ದುಕೊಂಡಿದ್ದ ಪಿಜಣನ ಬಳಿ ಬಹಳ ಹೊತ್ತು ಕುಳಿತು ತನ್ನ ದುಃಖವನ್ನು ತೋಡಿಕೊಂಡು ತನ್ನ ಅನಾಥಮಕ್ಕಳಿಗೆ ಇನ್ನುಮುಂದೆ ಅಕ್ಕಣಿಯೆ ಗತಿ ಎಂದು ಅತ್ತಿದ್ದನು. +ಹುಡುಗ ಐತನ ಮುಂದೆಯೆ ಇನ್ನೂ ಹುಡುಗಿಯತನವನ್ನೇ ದಾಟದಿದ್ದ ಅವಳ ಪುಟ್ಟ ಹೆಂಡತಿ ಪೀಂಚಲುಗೆ ದೈನ್ಯದಿಂದ ಕೈಮುಗಿದು, ತನ್ನ ತಬ್ಬಲಿ ಮಕ್ಕಳಿಗೆ ಅವಳೇ ತಾಯಿಯೆಂದೂ ಐತನೇ ತಂದೆ ಎಂದೂ, ಮುತ್ತಿನಂಥ ಹೆಂಡತಿ ಹೋದ ಮೇಲೆ ತಾನಿನ್ನು ಬದುಕುವ ಸಂಭವವಿಲ್ಲವೆಂದೂ, ನಾಟಕವಾಡುತ್ತಿದ್ದಾನೆಯೊ ಎಂಬಷ್ಟರ ಮಟ್ಟಿಗೆ ವರ್ತಿಸುತ್ತಿದ್ದನು. +ಕೇಳಿದವರಿಗೆ ಸಂಕಟವುಕ್ಕುವಂತೆ ಸೇರೆಗಾರನೆಂದು ಮೆರೆಯುತ್ತಿದ್ದವನು ಬರಿಯ ಕೆಲಸದಾಳುಗಳಾದ ತಮ್ಮ ಮುಂದೆ ಅಷ್ಟು ದೈನ್ಯದಿಂದ ಯಾಚಿಸುತ್ತಾ ಶೋಕಿಸುತ್ತಿದ್ದುದನ್ನು ಕಂಡು, ಐತನೊಬ್ಬನು ವಿನಾ, ಸರ್ವರೂ ಚೀಂಕ್ರನ ಸತೀಪ್ರೇಮಕ್ಕೂ ಸಂಕಟಕ್ಕೂ ಸಭ್ಯತೆಗಳು ಬೆರಗಾಗಿ, ಮರುಗಿ ಮಾರುಹೋಗಿದ್ದರು. +ಆದರೆ ಮಾರನೆಯ ದಿನವೆ ಚೀಂಕ್ರನ ಮನಸ್ಥಿತಿ ಬದಲಾಯಿಸಿತ್ತು. +ಮಧ್ಯಾಹ್ನದವರೆಗೂ ಹಾಗೂ ಹೀಗೂ ಕಷ್ಟಪಟ್ಟು ಬಿಡಾರದ ಶೂನ್ಯತೆಯನ್ನು ಸಹಿಸಿಕೊಂಡಿದ್ದನು. +ಅಪರಾಹ್ನದಲ್ಲಿ ಅವನಿಂದ ತಡೆಯಲಾಗಲಿಲ್ಲ. +ಬಿಡಾರದ ತುಂಬ ಬಿಕೋ ತುಂಬಿದಂತಾಯ್ತು. +ಸತ್ತುಹೋದ ಹೆಂಡತಿಯ ಬಡ ಸಂದೂಕವನ್ನು ಬೀಗ ಮುರಿದು ಬಾಯಿ ತೆರೆದು, ಹುಡುಕಿ ಮಾಡಿ, ಕೈಯಾಡಿಸಿದವನು. +ಗತಿಸಿದವಳ ಬಡ ಒಡವೆಯ ಚೂರುಪಾರನ್ನು ಬೊಕ್ಕಣ್ಣಕ್ಕೆ ಹಾಕಿಕೊಂಡನು. +ಅವಳದ್ದೆ ಆಗಿದ್ದು ಅವಳು ಉಡದೇ ಮಾಡದೇ ಇಟ್ಟೇ ರಕ್ಷಿಸಿಕೊಂಡು ಬಂದಿದ್ದ ಒಂದು, ಇದ್ದಿದ್ದರಲ್ಲಿ ಚೆನ್ನಾಗಿದ್ದು ವಿಶೇಷ ಸಂದರ್ಭಗಳಲ್ಲಿ ಉಡಲು ಬೇಕೆಂದು ಜೋಪಾನವಾಗಿಟ್ಟಿದ್ದ, ಸೀರೆಯನ್ನು ಹೊರತೆಗೆದು, ಕಣ್ಣೀರು ಸುರಿಸುತ್ತಲೇ ತನ್ನ ಮಕ್ಕಳಿಗೆ ಹೊರಗೆ ತಲೆಬಾಚುತ್ತಿದ್ದ ಅಕ್ಕಣಿಯನ್ನು ಕರೆದು, ಕಾಣಿಕೆ ನೀಡಿದನು, ಅವಳಿಗೆ ತನ್ನ ಮಕ್ಕಳ ರಕ್ಷಣೆಯ ಹೊಣೆಗಾರಿಕೆ ನೀಡುವಂತೆ. +ಆಮೇಲೆ ಅವನ ಪದ್ಧತಿಯಂತೆ, ತೆಂಗಿನೆಣ್ಣೆ ಹಚ್ಚಿ ತಲೆಬಾಚಿಕೊಂಡು, ತನಗೆ ಸ್ವಲ್ಪ ಕೆಲಸವಿದೆಯೆಂದೂ ಕಪ್ಪಾಗುವುದರೊಳಗೆ ಬಂದು ಬಿಡುತ್ತೇನೆಂದೂ ಅಕ್ಕಣಿಗೆ ಹೇಳಿ, ಕಮ್ಮಾರಸಾಲೆಯ ಕಳ್ಳಂಗಡಿಯ ಕಡೆಗೆ ಹೊರಟು ಹೋದನು. +ಮತ್ತೆ ಎರಡು ದಿನ ಇತ್ತಕಡೆ ತಲೆ ಹಾಕಲಿಲ್ಲ! +ಆ ದಿನ ಕತ್ತಲೆವರೆಗೂ ನೋಡಿ ನೋಡಿ ಅಕ್ಕನಿ, ತಮ್ಮ ಕಾಣೆಯಾದ ಅಬ್ಬೆಯನ್ನು ನೆನೆನೆದು ಅಳುತ್ತಿದ್ದ ಅವನ ಮಕ್ಕಳಿಗೆ ಗಂಜಿಹಾಕಿ, ತನ್ನ ಬಿಡಾರದಲ್ಲೇ ಅವರನ್ನು ಮಲಗಿಸಿಕೊಂಡಿದ್ದಳು. +ಮೂರನೆಯ ದಿನ ಚೀಂಕ್ರ ಬಿಡಾರಕ್ಕೆ ಹಿಂದಿರುಗಿದನು. +ಅವನ ಮುಖದಲ್ಲಿ ಶೋಕದ ಛಾಯೆ ಕೂಡ ಇರಲಿಲ್ಲ. +ಬದಲಾಗಿ ಗೆಲುವಿನ ಕಳೆಯೆ ಕಾಣಿಸುತ್ತಿತ್ತು. +ಅಳುತ್ತಾ ಬಳಿಸಾರಿದ ಮಕ್ಕಳಿಗೆ ತಾನು ತಂದಿದ್ದ ಓಲೆಬೆಲ್ಲವನ್ನು ಕೊಟ್ಟು, ಸಿಂಬಳ ಸುರಿಯುತ್ತಿದ್ದ ಮೂಗು ಮುಸುಡಿಗಳನ್ನು ಒರಸಿ, ಸಮಾಧಾನ ಮಾಡಿದನು. +ಅಕ್ಕಣಿಗೆ ತಾನು ಕಣ್ಣಾಪಂಡಿತರ ಜೊತೆಗೂಡಿ ಮೇಗರ ವಳ್ಳಿಯಲ್ಲಿ ಪಾದ್ರಿ ಕಟ್ಟಿಸಲಿರುವ ಇಸ್ಕೂಲಿನ ಕಂತ್ರಾಟು ಹಿಡಿದಿರುವುದಾಗಿಯೂ, ಒಂದು ನಾಲ್ಕು ದಿನ ಅಲ್ಲಿಯೆ ಇರಬೇಕಾಗಿ ಬರುತ್ತದೆಂದೂ, ನಡುನಡುವೆ ಎರಡೂ ಮೂರು ದಿನಕ್ಕೊಮ್ಮೆ ಬಂದು ಹೋಗುತ್ತಿರುವುದಾಗಿಯೂ ಹೇಳಿ, ಅವಳ ಕೈಗೆ ತನ್ನ ಮಕ್ಕಳ ಬಾಬ್ತು ಖರ್ಚಿಗಾಗಿ ಸ್ವಲ್ಪ ಹಣವನ್ನು ಕೊಟ್ಟನು. +ಹಣವನ್ನೆ ಮುಟ್ಟಿ ಕಾಣದಿದ್ದ ಅವಳು ಚೀಂದ್ರ ಸೇರೆಗಾರರ ಶ್ರೀಮಂತತೆಗೆ ಬೆರಗಾದಳು. +ದೇಯಿಯ ಗಂಡ ಇಷ್ಟು ಸಾಹುಕಾರರಾಗುವ ಸಮಯಕ್ಕೆ ಸರಿಯಾಗಿ ಅವಳು ಸಾಯಬೇಕ? +ಅಯ್ಯೋ ಅವಳಿಗೆ ಅದೃಷ್ಟವಿಲ್ಲದೆ ಹೋಯಿತಲ್ಲಾ! +ಅವಳೇ ಇದ್ದಿದ್ದರೆ ಎಷ್ಟು ಸಂತೋಷಪಡುತ್ತಿದ್ದಳು? ಎಂದುಕೊಂಡಳು. +ಹೀಗೆ ಚೀಂಕ್ರ ಸೇರೆಗಾರನು ಆಗಾಗ್ಗೆ ಬಿಡಾರಕ್ಕೆ ಬಂದು, ಒಂದು ಹಗಲೋ ಒಂದು ಇರುಳೋ ತಂಗಿದ್ದು, ಮತ್ತೆ ಮೇಗರವಳ್ಳಿಗೆ ಕಂತ್ರಾಟು ಕೆಲಸಕ್ಕೆ ಹೋಗುತ್ತೇನೆ ಎಂದು ಕಣ್ಮರೆಯಾಗುತ್ತಿದ್ದನು. +ಅವನು ತಮ್ಮ ಗದ್ದೆ ತೋಟದ ಕೆಲಸಕ್ಕೆ ಬರಬೇಕು; +ಇಲ್ಲಾ?ನಮ್ಮ ಸಾಲಾನೆಲ್ಲ ತೀರಿಸಿ, ಬಿಡಾರ ಖಾಲಿ ಮಾಡಬೇಕು ಎಂದು ಐತನ ಕೈಯಲ್ಲಿ ಹೇಳಿಕಳಿಸಿದರು. +ಒಂದು ದಿನ ಅಕ್ಕಣಿ ತನ್ನ ಖಾಯಿಲೆ ಗಂಡನಿಗೆ ನಿತ್ಯವೂ ಬಡಿಸುವಂತೆ ಕುಚ್ಚಲಕ್ಕೆ ಗಂಜಿ ಮತ್ತು ಒಂದು ಹಸಿಮೆಣಸಿನಕಾಯಿ ಬಡಿಸುವುದಕ್ಕೆ ಬದಲಾಗಿ ಹಚ್ಚನಕ್ಕಿ ಅನ್ನವನ್ನೂ ಸ್ವಾರ್ಲುಮೀನು ಚಟ್ನಿಯನ್ನೂ ಬೆರಕಜೆಸೊಪ್ಪಿನ ಸಾರನ್ನೂ ನಂಚಿಕೊಳ್ಳುವುದಕ್ಕೆ ಮೇಗರವಳ್ಳಿ ಅಂತ್ಯಕ್ಕಸೆಡ್ತಿಯವರ ಮನೆಯಿಂದ ತಂದದ್ದು ಎಂದು ಚೀಂಕ್ರ ತಂದುಕೊಟ್ಟಿದ್ದ ಕಳಲೆ ಉಪ್ಪಿನ ಕಾಯನ್ನೂ ಬಡಿಸಲು, ಪಿಜಿಣ ಆಶ್ಚರ್ಯಚಕಿತನಾಗಿ ಆನಂದದ ಗರಬಡಿದವನಂತೆ ಹೆಂಡತಿಯ ಸುಧಾರಿಸಿದ ಬಟ್ಟೆಬರೆ ಕಡೆಯೂ ನೋಡಿ “ಎಲ್ಲಿಂದ ಬಂತೇ ಇದೆಲ್ಲಾ?” ಎಂದು ಕೇಳಿದನು, ಬೆರಗುಸಿರೆಳೆದು. +“ಏನೋ ಅವರ ಮಕ್ಕಳನ್ನ ನೋಡಿಕೊಳ್ತೇನೆ ಅಂತಾ ಚೀಂಕ್ರ ಸೇರೆಗಾರು ತಂದು ಕೊಟ್ಟದ್ದು.” +“ಅಂತೂ ಹೆಂಡ್ತಿ ಸತ್ತಮೇಲಾದ್ರೂ ಅವನಿಗೆ ದೇವ್ರು ಒಳ್ಳೆಬುದ್ಧಿ ಕೊಟ್ನಲ್ಲಾ!…” + “ಮೇಗ್ರೊಳ್ಳಿ ಕಣ್ಣಾಪಂಡಿತ್ರು ಕೊಟ್ರು ಅಂತಾ ನಿಮ್ಮ ಜಡಕ್ಕೂ ಮದ್ದು ತಂದು ಕೊಟ್ಟಾರೆ… ” + “ಎಲ್ಲಿ ಮತ್ತೆ? +ನೀ ಕೊಡಲೇ ಇಲ್ಲಾ!” +“ಅಂಬಲಿ ಉಂಡಮ್ಯಾಲೆ ತಗೊಳ್ಳಬೇಕಂತೆ. +ಆಮ್ಯಾಲೆ ಕೊಡ್ತೀನಿ.” +ಅಂತೂ ಆ ಊಟ ಔಪಧಿಗಳ ಪ್ರಭಾವದಿಂದಲೋ ಏನೋ ಪಿಜಿಣನಿಗೆ ಹೊಟ್ಟೆ ಗೆಡ್ಡಯ ರೋಗ ಪೂರ್ತಿ ಗುಣವಾಗದಿದ್ದರೂ ಗೌಡರ ಮನೆಯ ಕೆಲಸಕ್ಕೆ ಹೋಗುವಂತಾದನು. +ಅಕ್ಕಣಿಯೂ ಆಗೊಮ್ಮೆ ಈಗೊಮ್ಮೆ ಗೌಡರ ಹೆದರಿಕೆಗಾಗಿ ಕೆಲಸಕ್ಕೆ ಹೋಗುತ್ತಿದ್ದರೂ ಚೀಂಕ್ರ ಸೇರಗಾರನ ಉದಾರ ಕೊಡುಗೆಯಿಂದಾಗಿ ಅವಳಿಗೆ ಕೆಲಸಕ್ಕೆ ಹೋಗಲೇಬೇಕಾದ ಅವಶ್ಯಕತೆ ಅಷ್ಟಾಗಿ ಇರಲಿಲ್ಲ. +ಅಲ್ಲದೆ ಸೇರೆಗಾರನ ಮೂರು ಮಕ್ಕಳ ಯೋಗಕ್ಷೇಮದ ಭಾರ ಬೇರೆ ಅವಳ ಮೇಲೆ ಬಿದ್ದಿತ್ತು. +ಮಕ್ಕಳಿಲ್ಲದ ಅಕ್ಕಣಿ ಚೀಂಕ್ರನ ಮಕ್ಕಳಿಗೆ ಎರಡನೆಯ ತಾಯಿಯಾಗಿ, ಅವರನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾ, ಅವನ ಬಿಡಾರದ ವಹಿವಾಟುಗಾರಳಾಗಿ, ತುಸು ಉತ್ತಮವಾದ ಬಟ್ಟೆಬರೆಗಳಿಂದ ಮೆರೆಯತೊಡಗಿದುದನ್ನು ನೋಡುತ್ತಿದ್ದ ಪೀಂಚಲುಗೆ ಕೆಲವು ದಿನಗಳಲ್ಲಿಯೆ ಏನೋ ಅನುಮಾನ ಸುಳಿಯತೊಡಗಿತು. +ಆದರೆ ಅದುವರೆಗೂ ತನಗೆ ಗೊತ್ತಿದ್ದ ಅಕ್ಕಣಿ ಯಕ್ಕನ ಮೇಲೆ ಅಂತಹ ಅಪವಾದವನ್ನು ಹೊರಿಸಲು ಅವಳ ಮನಸ್ಸು ಬಹಿರಂಗವಾಗಿ ಒಪ್ಪಲಿಲ್ಲ. +ಆದರೂ ಅವಳ ಅಂತರಂಗದಲ್ಲಿ ಆ ಕಹಿ ಕೊರೆಯತೊಡಗಿತ್ತು. +ಅಲ್ಲದೆ ಅಕ್ಕಣಿಯ ಗಂಡ ಪಿಜಿಣನೇ ಚೀಂಕ್ರ ಸೇರೆಗಾರನನ್ನು ಬಾಯಿ ತುಂಬ ಹೊಗಳುತ್ತಾ ಮೆಚ್ಚುಗೆಯಿಂದಿರುವಾಗ ನೆಚ್ಚಿನ ಅವನ ಹೆಂಡತಿಯ ಮೇಲೆ ಯಾರಿಗೆ ತಾನೆ ದೂರು ಹೊರಿಸಲು ಧೈರ್ಯವಾದೀತು? +ಆದರೂ ಪೀಂಚಲು ಒಂದು ರಾತ್ರಿ ತನ್ನ ಗಂಡನೊಡನೆ ಏಕಾಂತದ ಸರಸದಲ್ಲಿದ್ದಾಗ, ಅದೂ ಇದೂ ಮಾತನಾಡುತ್ತಾ ನಾಲಿಗೆ ಸಡಿಲಗೊಂಡು, ಅಕ್ಕಣಿಯ ವಿಚಾರವಾಗಿದ್ದ ತನ್ನ ಅನುಮಾನವನ್ನು ಐತನ ಕಿವಿಗೆ ಪಿಸುಗುಟ್ಟಿದಳು. +ಐತನಿಗೂ ಅಂತಹುದೇ ಅನುಮಾನ ಅಂತಹುದೇ ಅನುಮಾನ ತೋರತೊಡಗಿತ್ತೆಂದು ಅವಳಿಗೆ ಗೊತ್ತಾದ ಮೇಲೆ ನೆರೆಯ ಬಿಡಾರಗಳ ಕಡೆ ಸ್ವಲ್ಪ ವಿಶೇಷ ಆಸಕ್ತಿಯಿಂದ ಕಣ್ಣು ಕಿವಿ ಇಡತೊಡಗಿದಳು. +ಐತ ಒಂದು ಸಂಜೆ ಒಡೆಯರ ತೋಟದ ಕೆಲಸ ಪೂರೈಸಿ ಬಿಡಾರಕ್ಕೆ ಹಿಂದಿರುಗಿದವನು, ಗಂಜಿ ಕಾಯಿಸುತ್ತಿದ್ದ ತನ್ನ ಹುಡುಗಿ ಹೆಂಡತಿಯೊಡನೆ ಸರಸಸಲ್ಲಾಪದಲ್ಲಿದ್ದನು. +ಕೆಲದಿನಗಳಿಂದ ಅವಳಿಗೆ ಬೆಳಿಗ್ಗೆ ಎದ್ದಾಗ ವಾಕರಿಕೆ ಯಾಗುತ್ತಿದ್ದುದನ್ನೇ ಕುರಿತು ಇಬ್ಬರೂ ವಿನೋದವಾಡುತ್ತಿದ್ದರು. +ಹೆಂಡತಿಗೆ ದಿನವೂ ಬೆಳಿಗ್ಗೆ ವಾಂತಿಯಾಗುತ್ತಿದ್ದುದನ್ನು ಕಂಡು ಐತನಿಗೆ ಗಾಬರಿಯಾಗಿತ್ತು. +ಆ ದಿನ ಅವನು ಕೋಣೂರು ಮನೆಗೆ ಕೆಲಸಕ್ಕೆ ಹೋಗಿದ್ದಾಗ ಮುಕುಂದಯ್ಯನ ತಾಯಿ, ಕಾಗಿನಹಳ್ಳಿ ಅಮ್ಮ ಎಂದು ಎಲ್ಲರೂ ಕರೆಯುತ್ತಿದ್ದ ದಾನಮ್ಮ ಹೆಗ್ಗಡಿಯವರು, ಅವನ ಹತ್ತಿರ ತೋಟದಿಂದ ‘ಬಳ್ಳೆ’ ತರಲು ಹೇಳಿದರು. +ಐತ ಅಡಕೆ ತೋಟಕ್ಕೆ ಹೋಗಿ ಒಂದು ಹೊರೆ ಊಟಕ್ಕೆ ಉಪಯೋಗವಾಗುವ ಬಾಳೆಯ ಎಲೆಗಳನ್ನು ತಂದು, ಮನೆಯ ಹಿತ್ತಲು ಕಡೆ ಬಾಗಿಲ ಬಳಿ ಇಟ್ಟನು. +ಕಾಗಿನಹಳ್ಳಿ ಅಮ್ಮ, ಹಾಗೆ ತಾವು ಹೇಳಿದ ಏನಾದರೂ ಸಣ್ಣಪುಟ್ಟ ಕೆಲಸ ಮಾಡಿಕೊಟ್ಟವರಿಗೆ ಕೊಡುವ ಪದ್ಧತಿಯಂತೆ, ಐತನಿಗೂ ಮಜ್ಜಿಗೆ ಉಪ್ಪಿನಕಾಯಿ ಕೊಟ್ಟು, ನಗುತ್ತಾ ಹೇಳಿದ್ದರು. + “ಏನೋ ಹುಡುಗಾ, ಹುಡುಗಿ ಕಟ್ಟಿಕೊಂಡು ಇನ್ನೂ ಒಂದು ವರ್ಷಾನೂ ಆಯ್ತೋ ಇಲ್ಲೋ ಅಷ್ಟರಲ್ಲೇ….” ಎಂದು ಅರ್ಧಕ್ಕೆ ನಿಲ್ಲಿಸಿ, ವ್ಯಂಗ್ಯವಾಗಿ ತನ್ನ ಕಡೆಗೆ ನೋಡಿ ಹಾಸ್ಯ ಮಾಡುವಂತಿದ್ದುದನ್ನು ಕಂಡು ಐತನಿಗೆ ಮುಖವೆಲ್ಲಾ ಪೆಚ್ಚಾಯಿತು. +ಅವನಿಗೆ ಅವರ ವ್ಯಂಗ್ಯದ ಇಂಗಿತ ಹೊಳೆಯಲಿಲ್ಲ. +ಪೀಂಚಲುಗೆ ವಾಂತಿಯಾಗುತ್ತಿರುವುದರಿಂದ ಅವಳನ್ನು ಏನೋ ಅಪಾಯಕ್ಕೆ ತಾನು ಈಡುಮಾಡಿಬಿಟ್ಟಿದ್ದೇನೆ ಎಂದು ಅಮ್ಮ ನಿಂದಿಸುತ್ತಿರಬೇಕೆಂದೇ ಊಹಿಸಬಿಟ್ಟನು! +ತಪ್ಪೊಪ್ಪಿ ಕ್ಷಮೆಯನ್ನು ಅಂಗಲಾಚಿ ಬೇಡುವವನಂತೆ ಗಟ್ಟದ ತಗ್ಗಿನವರ ರೀತಿಯಿಂದ “ನಾನು ಏನು ಮಾಡಲಿ, ಅಮ್ಮಾ? +ಅವಳು ಬೇಡ ಎಂದರೂ ಕೇಳದೆ ಅಲ್ಲಿ ಇಲ್ಲಿ ಹೋಗುತ್ತಾಳೆ; + ಅದನ್ನೂ ಇದನ್ನೂ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತಾಳೆ. +ಮರಹತ್ತಿ ಪ್ಯಾರಲ ಕಡ್ಡೇನೂ ತಿನ್ತಾಳೆ! +ಆವೊತ್ತು ತ್ವಾಟದಾಚೆ ದರೆಯಲ್ಲಿ ಜೇನುಕಿತ್ತು ಮೋರೆ ಊದಿಸಿಕೊಂಡಿದ್ದಳಲ್ಲಾ! +ಈಗ ವಾಂತಿ ಹತ್ತಿ ಬಿಟ್ಟಿದೆ, ದಿನಾ ಹೊತ್ತಾರ! +ದಿನಾ ಬೈಗಿನಹೊತ್ತು ಅದೆಲ್ಲಿಗೋ ಹೋಗ್ತಾಳೆ, ಮದ್ದಿಗೆ ಎಲಿಕೆವಿ ಸೊಪ್ಪ ತರಲಿಕ್ಕಂತೆ! …. . +ನೀವಾದ್ರೂ ಹೇಳಿ, ಅಮ್ಮಾ, ಏನು ಮಾಡುವುದು ಆ ಖಾಯಿಲೆಗೆ?… ” +“ಥೂ ಹುಡುಗಾ!ನೀನೆಂಥಾ ಮಂಗನೋ! +ನಿಂಗೇನು ಅಷ್ಟೂ ತಿಳಿಯಲಿಕ್ಕಿಲ್ಲಾ? +ಅವಳಿಗೆ ಏನೂ ಕಾಯಿಲೆ ಅಲ್ಲೊ, ಬೆಪ್ಪಾ! +ನಾನೇ ಹೇಳಿದ್ದೋ ಆ ಸೊಪ್ಪು ತಂದು, ಹಸೋಳೆ ಮಾಡಿಕೊಳ್ಳಾಕೆ!”ರೋಗದ ವಿಚಾರ ಕೇಳಿ, ಸಂಕಟಪಟ್ಟು, ಸಹಾನುಭೂತಿ ತೋರಿಸುವುದಕ್ಕೆ ಬದಲಾಗಿ, ಹೆಗ್ಗಡ್ತಮ್ಮೋರು ಬೈದು ಮೂದಲಿಸುತ್ತಿರುವುದನ್ನು ಕಂಡು ಐತ ಬೆಪ್ಪಾಗಿ “ಮತ್ತೆ? +ಯಾಕಮ್ಮ ಹಾಂಗೆ ವಾಂತಿ ಮಾಡಿಕೊಳ್ತಾಳಲ್ಲಾ?” ಎಂದನು. +“ಅವಳಿಗೆ ನೀರು ನಿಂತದೆ ಕಣೋ, ಬೆಪ್ಪು ಹುಡುಗಾ!” ಎಂದು ನಕ್ಕು ಸರಕ್ಕನೆ ತಿರುಗಿ ಒಳಗೆ ಹೋಗಿದ್ದರು. +ಐತ ಅದನ್ನೆಲ್ಲ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ಆಶ್ಚರ್ಯಪಡುತ್ತಾ ಬಿಡಾರಕ್ಕೆ ಹಿಂದಿರುಗಿದ್ದನು. +“ನೀರು ನಿಂತದೆ ಅಂದರೆ ಏನೇ?” ಗಂಜಿ ಬೇಯಿಸುತ್ತಾ ಒಲೆಯ ಕಡ ಮುಖ ಮಾಡಿ ಕುಳಿತಿದ್ದ ಹೆಂಡತಿಗೆ ಪ್ರಶ್ನೆ ಹಾಕಿದ್ದನು ಐತ. +ಅವಳು ಮುಖ ಇತ್ತ ತಿರುಗಿಸದೆ ತನ್ನ ಕೆಲಸದಲ್ಲಿ ಮಗ್ನಳಾಗಿ.“ನೀರು ನಿಂತದೆ ಆಂದ್ರೆ? +ನೀರು ನಿಂತದೆ ಅಂತಾನೆ ಅರ್ಥ! +ತ್ವಾಟದ ಹಳ್ಯದಾಗೆ ನೋಡಿಲ್ಲೇನು ನೀನು ನೀರು ನಿಂತಿರೋದನ್ನ?” ಎಂದಳು. +ಐತನಿಗೆ ಸ್ವಲ್ಪ ಸಿಟ್ಟು ಬಂದಂತಾಯ್ತು, ಹಳ್ಳದಲ್ಲಿ ನೀರು ನಿಂತಿರುವ ವಿಚಾರವನ್ನು ಇವಳಿಂದ ತಾನು ಕೇಳಿ ತಿಳಿದುಕೊಳ್ಳಬೇಕಾಗಿತ್ತೇ ಎಂದು. +“ಅದನ್ನಲ್ಲ ನಾ ಕೇಳಿದ್ದು. +ಹೆಗ್ಗಡ್ತಮ್ಮೋರು ಹೇಳಿದ್ರಲ್ಲಾ ನಿಂಗೆ ನೀರು ನಿಂತದೆ ಅಂತಾ, ಅದನ್ನ ನಾ ಕೇಳಿದ್ದು.”ಪೀಂಚಲು ತನ್ನ ಗಂಡನ ಕಡೆಗೆ ತಿರುಗದೆಯೆ, ತಡೆಯಲಾರದೆ, ಕಿಸಕ್ಕನೆ ನಕ್ಕುಬಿಟ್ಟಳು, ಐತನ ದಡ್ಡತನದ ಕಪಾಳಕ್ಕೆ ಹೊಡೆಯುವಂತೆ. +“ಯಾಕೆ?ನಗುತ್ತೀಯಾ?” ಬಿಗುದನಿಯಿಂದಲೆ ಕೇಳಿದನು ಐತ. +ಪೀಂಚಲು ಮುಖ ತಿರುಗಿಸಿ, ಗಂಡನನ್ನು ಪ್ರೀತಿಯುಕ್ಕುವಂತೆ ವಿನೋದದಿಂದ ದೃಷ್ಟಿಸಿ ನೋಡಿ, ನಾಚಿಕೆಯಿಂದ ಮುಖದ ಮುದ್ದು ಇಮ್ಮಡಿಯಾಯಿತೆಂಬಂತೆ ಗದರಿಸಿದಳು. +ಗಂಡನೆಂಬ ಗೌರವಕ್ಕೆ ಇದ್ದಕ್ಕಿದ್ದ ಹಾಗೆ ಬಹುವಚನವನ್ನುಪಯೋಗಿಸಿ.“ನಿಮಗೆ ಯಾಕೆ ಆ ಪಂಚಾಯ್ತಿ?ಗಂಡಸರಿಗೆ? +ಹೆಗ್ಗಡ್ತಮ್ಮೋರ ಹತ್ರ ಏನೇನೆಲ್ಲಾ ಆಡಿಬಿಟ್ಟಿರೋ ಏನೋ? +ಇನ್ನು ನಾನು ಮನೆಗೆ ಹೋದಾಗ ಎಲ್ಲರ ಮುಂದೆ ಹೇಳಿಕೊಂಡು ಏನೆಲ್ಲ ನಗುತ್ತಾರೋ ದೊಡ್ಡ ಅಮ್ಮ? +ನಾನು ನಾಚಿಕೆಯಿಂದ ಮುಖ ಎತ್ತುವುದು ಹೇಂಗೆ?”ಅದುವರೆಗೂ ತನಗೆ ತಿಳಿಯದಿದ್ದ ಯಾವುದೋ ಗುಟ್ಟಿನ ಅರಿವು ತಟಕ್ಕನೆ ಮನಕ್ಕೆ ಮೂಡಿದಂತಾಗಿ ಐತನ ಕಣ್ಣು ಅರಳಿ ಬೆಳಗಿದುವು. +ಮೊಗದಲ್ಲಿ ಮುಗ್ಧ ಮಂದಸ್ಮಿತವೊಂದು ತುಟಿಗಳೆಡೆ ಹೊಮ್ಮಿತು. +ಯಾರೂ ಮೈಮೇಲೆ ನೀರೆರಚಿದಂತಾಗಿ ರೋಮಾಂಚನವಾಯಿತು. +ತನ್ನ ಪುಟ್ಟ ಹೆಂಡತಿಯನ್ನು ಎದ್ದು ಅಪ್ಪಿಕೊಂಡು ಬಿಡಬೇಕು ಎನ್ನಿಸಿತು. +ಅದರೆ ಪೀಂಚಲುವಿನ ಭಂಗಿ ಅಷ್ಟು ಉತ್ತೇಜನಕರವಾಗಿಲ್ಲದುದನ್ನು ಗ್ರಹಿಸಿ, ತನ್ನ ಉಲ್ಲಾಸವನ್ನೆಲ್ಲ “ಓಹೋ! +ಅಷ್ಟೇನೆ?ಈಗ ಗೊತ್ತಾಯ್ತು!ಕಳ್ಳಿ!” ಎಂಬ ಉದ್ಗಾರದಲ್ಲಿ ಮರೆಸಿಬಿಟ್ಟು “ಸೇರಿಗಾರ್ರ ಸವಾರಿ ಬಂದ್ಹಾಂಗೆ ಕಾಣ್ತದೆ, ಅವರ ಬಿಡಾರಕ್ಕೆ ಹೋಗಿ ಬರ್ತೀನಿ” ಎಂದು ಎದ್ದನು. +“ಈಗ ಯಾಕೆ ನೀವು ಹೋಗುವುದು? +ಅಲ್ಲಿ ಅಕ್ಕಣಿ ಮಕ್ಕಳು ಎಲ್ಲ ಇರಲಕ್ಕು!” ಧ್ವನಿಪೂರ್ಣವಾಗಿಯೆ ಇತ್ತು ಪಿಂಚಲು ಹೇಳಿದ್ದು. +“ಗೌಡರು ಕಂಡಾಬಟ್ಟೆ ಬೈದರಲ್ಲಾ ಇವತ್ತು, ನನಗೆ? +ಅವರು ‘ಅವೊತ್ತು ನಾ ಹೇಳಿದ್ದನ್ನ ಚೀಂಕ್ರನಿಗೆ ಹೇಳಿದೆಯೇನೋ?’ ಅಂದರು. +‘ಇಲ್ಲಾ, ಇನ್ನೂ ಅವನು ಸಿಕ್ಕಿಲ್ಲ’ ಅಂದೆ. +‘ನೀವೇಲ್ಲ ಒಂದೇ ಜಾತಿ. +ನನ್ನ ಹತ್ರ ಠಕ್ಕು ಮಾಡ್ತೀಯಾ’ ಅಂದುಬಿಟ್ಟರು. +ಇವತ್ತಾದ್ರೂ ಹೋಗಿ ಹೇಳಿಬಿಡ್ತೀನಿ. +ಐತ ಹೊರಟುಹೋದ ಮೇಲೆ, ಪೀಂಚಲು ಮುಗುಳು ನಗುತ್ತಲೇ ಎಸರು ಕುದಿಯುತ್ತಿದ್ದ ಒಲೆಯ ಕಡೆಗೆ ತಿರುಗಿ, ತನ್ನ ಹೊಟ್ಟೆಯ ಕಡೆ ನೋಡಿಕೊಂಡು, ಯಾವುದೋ ಒಂದು ಹಿಗ್ಗನ್ನು ಮೆಲುಕು ಹಾಕುವಳಂತೆ ನಿಮೀಲಿತನೇತ್ರೆಯಾದಳು. +ಐತ ಬೈಗು ಹೊತ್ತಿನ ಮುಂಗಪ್ಪಿನಲ್ಲಿ, ಪಿಜಿಣನ ಕತ್ತಲು ಕವಿದಿದ್ದ ಬಿಡಾರವನ್ನು ದಾಟಿ, ಚೀಂಕ್ರನ ಬಿಡಾರದ ಬಾಗಿಲಿಗೆ ಬಂದಾಗ ಅದರ ಒಳಗಡೆಯಿಂದ ಮಾತಿನ ಗುಜುಗುಜು ಕೇಳಿಸಿತು. +ಬಾಗಿಲ ಹೊರಗಿದ್ದ ಮಬ್ಬು ಬೆಳಕಿನಲ್ಲಿ ಕೋಳಿತಪ್ಪುಳದ ರಾಶಿ ಚೆದರಿಬಿದ್ದಿದ್ದನ್ನು ಗಮನಿಸಿದನು. +ಕೋಳಿ ಸುಡುವ ವಾಸನೆಯೂ ಮೂಗಿಗೆ ಬಿತ್ತು, ಹಿತಕರವಾಗಿಯೆ! +ಮುಚ್ಚಿದ್ದ ಬಿದಿರು ಕಣೆಯ ತಟ್ಟಿಬಾಗಿಲನ್ನು ತಳ್ಳಿದನು. +ಅದು ತೆರೆದಾಗ ಒಳಗೆ ದೂರದ ಮೂಲೆಯಲ್ಲಿ ಉರಿಯುತ್ತಿದ್ದ ಬೆಂಕಿಯ ಒಲೆಯ ಬಳಿ ಅಕ್ಕಣಿ ಇಡೀ ಕೋಳಿಯನ್ನು ಸುಡುತ್ತಿದ್ದುದನ್ನೂ, ಬಾಗಿಲಿಗೆ ಹತ್ತಿರವಾಗಿ ಹಣತೆ ದೀಪದ ಮಬ್ಬು ಬೆಳಕಿನಲ್ಲಿ ಚೀಂಕ್ರ ತನ್ನ ಮೂರು ಮಕ್ಕಳೊಡನೆ ಏನೋ ವಿನೋದವಾಡುತ್ತಿದ್ದುದನ್ನೂ ನೋಡಿ ಪ್ರವೇಶಿಸದೆ, ಬಾಗಿಲಲ್ಲಿಯೆ, ಅದನ್ನು ತುಂಬಿಕೊಂಡೆ, ನಿಂತನು. +ಏತಕ್ಕೂ ಅವನಿಗೆ ಒಳಕ್ಕೆ ಹೋಗಲು ಸಂಕೋಚವಾಯಿತು. +ತಲೆಯೆತ್ತಿ ನೋಡಿದ ಚೀಂಕ್ರ “ಯಾರು? +ಐತನೇನೋ?” ಎಂದು, ಎದ್ದು, ಬಾಗಿಲಿಗೆ ಬಂದನು. +ಅವನ ಆ ಚಲನೆಯಲ್ಲಿ, ತನ್ನ ಏಕಾಂತದ ನೆಮ್ಮದಿಗೆ ಅನ್ಯರಾರೂ ಒಳನುಗ್ಗಿ ಭಂಗ ತರದಿರಲಿ ಎಂಬ ಇಂಗಿತವಿತ್ತು. +“ಸೊಲ್ಪ ಮಾತಾಡುವುದಿತ್ತು, ಸೇರುಗಾರ್ರೆ” ಎಂದು ಐತ ಹಿಂದಕ್ಕೆ ಕತ್ತಲಿಗೇ ಸರಿದನು. +ಚೀಂಕ್ರನೂ ಅವನನ್ನು ಹಿಂಬಾಲಿಸಿದನು. +ಇಬ್ಬರಿಗೂ ಪರಸ್ಪರ ಆಕಾರ ವಿನಾ ಒಬ್ಬರ ಮುಖ ಇನ್ನೊಬ್ಬರಿಗೆ ಕಾಣಿಸುತ್ತಿರಲಿಲ್ಲ. +ಐತ ಗೌಡರು ತನ್ನೊಂದಿಗೆ ಹೇಳಿ ಕಳುಹಿಸಿದ್ದ ‘ಇಲ್ಲಾ ಒಂದೇ ಕೆಲಸಕ್ಕೆ ಬರಬೇಕು ಇಲ್ಲಾ? +ಸಾಲ ತೀರಿಸಿ, ಬಿಡಾರ ಖಾಲಿ ಮಾಡಬೇಕು’ ಎಂಬ ಕಠೋರ ಸತ್ಯವನ್ನು ತನ್ನ ಕೈಲಾದ ಮಟ್ಟಿಗೆ ಅನಿಷ್ಠುರವಾಗಿಯೆ ತಿಳಿಸಿದನು. +ಬೆಳಕಿದ್ದಿದ್ದರೆ, ಐತನಿಗೆ ಚೀಂಕ್ರನ ಮುಖದ ಮೇಲೆ ಏನೇನು ಭಾವದ ಛಾಯೆ ಕಾಣಿಸುತ್ತಿತ್ತೊ? +ಆದರೆ ಚೀಂಕ್ರನ ಕೃತಕ ವಿನಯದ ವಾಣಿಮಾತ್ರ ಕೇಳಿಸಿತ್ತು ಐತನಿಗೆ. + “ಇಲ್ಲಿ ಕಾಣು, ಐತ, ನಾವೇನೂ ಅವರ ಸಾಲಕ್ಕೆ ದಗಾ ಹಾಕುವುದಿಲ್ಲ. +ಅವರ ಉಪ್ಪು ಅಂಬಲಿ ತಿಂದ ರುಣಾನ ತೀರ್ಸೇ ತೀರಿಸ್ತೀನಿ. +ಏನೋ ಕಣ್ಣಾಪಂಡಿತ್ರು ಅಷ್ಟಲ್ದೆ ಕೇಳಿಕೊಂಡರು. +‘ಮಿಶನ್ ಇಸ್ಕೂಲ್ ಕಂತ್ರಾಟು ಹಿಡಿದು ಬಿಟ್ಟೀನಿ; +‘ಸೇರೆಗಾರ, ನೀನೇನಾದ್ರೂ ಮಾಡಿ ನಾಲ್ಕಾಳು ತಂದು ಕೆಲ್ಸ ಮುಗಿಸಿಕೊಂಡು’ ಅಂತ. +ಒಪ್ಪಿಬಿಟ್ಟೆ. ಅದು ಮುಗಿದ ಒಡನೆಯೆ ನಾನು ಗೌಡರ ಕೆಲಸಕ್ಕೆ ಹಾಜರಾಲ್ದಾ?” ಚೀಂಕ್ರ ಮತ್ತೆ ಏನನ್ನೊ ಗುಟ್ಟು ಹೇಳುವವನಂತೆ ಕೆಳದನಿಯಲ್ಲಿ ಮುಂದುವರಿಸಿದನು. +“ಇಕಾ, ಐತ, ಇನ್ನೊಂದು ಮಾತು ಹೇಳ್ತಿನಿ. +ನಾ ಹೇಳ್ದ ಅಂತಾ ಯಾರಿಗೂ ಹೇಳಬ್ಯಾಡ. +ಆ ಪಾದ್ರಿ ನಿಮ್ಮ ಗೌಡರು ಕೊಡಾಕಿಂತ ಎಲ್ಡರಷ್ಟು ದುಡ್ಡೂನೂ ಪಡೀನೂ ಕೊಡ್ತಾನೋ. +ನೀನೂ ಬರ್ತಿದ್ರೆ ಬಾ, ನೋಡು ಒಂದಿ ಕೈಯ್ನಾ. +ಅಲ್ದೆ, ಜಾಣತನ ಇದ್ರೆ, ಬ್ಯಾರೆ ತರದ ಆದಾಯನು ಮಾಡಿಕೊಳ್ಳ ಬೌದು ಅಂತ ಇಟ್ಟುಕೋ!” ಎಂದು ವ್ಯಂಗ್ಯ ಧ್ವನಿಯಲ್ಲಿ ತಟಕ್ಕನೆ ಮಾತು ನಿಲ್ಲಿಸಿದನು. +“ಅದನ್ನೇ ಏನೋ ಸಣ್ಣಗೌಡರು ಹೇಳ್ತಿದ್ರು ಕಣೊ.” +“ಯಾರೋ?ಏನು ಹೇಳ್ತಿದ್ರೋ” +“ಮುಕುಂದಣ್ಣ ಕಣೋ. +ನೀನು ಆ ಸಾಬರ ಸಂಗಡ ಸೇರಿಕೊಂಡು ಕದಿಯೋದು ಖೂನಿಮಾಡೋದು ಎಲ್ಲಾ ಮಾಡ್ತೀಯಂತೆ ಅಂತಾ ಯಾರೋ ಅವರಿಗೆ ಹೇಳಿದ್ರಂತೆ.”ಚೀಂಕ್ರನ ಧ್ವನಿ ಬಿಗಡಯಿಸಿತು; + “ಯಾರಂತೋ ಕಳ್ಳಸೂಳೇ ಮಕ್ಳು, ಹಂಗೆ ಹೇಳ್ದೋರು? +ಅವರ ಬಾಯಿಗೆ ನನ್ನ….ನ ಹಾಕ!” ಎಂದು ಬೈದವನು, ಮತ್ತೆ ಐತನ ಹೆಗಲ ಮೇಲೆ ಕೈ ಇಟ್ಟು “ನೋಡು, ಯತ ನಾ ಹೇಳ್ತಿನಿ, ನಿನ್ನ ಒಳ್ಳೇದಕ್ಕೆ…. +ಆ ಮುಕುಂದೇಗೌಡ್ರನ್ನ ನಂಬಿ ನೀ ಕಟ್ಟೆ. +ಆದಷ್ಟು ಬ್ಯಾಗ ನಿನ್ನ ಹೆಂಡ್ತೀನ ಇಲ್ಲಿಂದ ಕರಕೊಂಡು ಎಲ್ಲಿಗಾದ್ರು ಹೋಗಿಬಿಡು. +ನಂಗೆ ನೋಡ್ದೋರೆ ಒಬ್ಬರು ಹೇಳಿದ್ರು, ಪೀಂಚಲು ಅವರ ಸಂಗಡ ಕೆಟ್ಟ ಸಂಬಂಧಕ್ಕೆ ಇಳಿದುಬಿಟ್ಟಿದ್ದಾಳೆ ಅಂತಾ. +ಆ ವಾಟೆ ಹಿಂಡಲ ಹತ್ರ ಮಟ್ಟಿನಲ್ಲಿ, ಕತ್ತಲಾದ ಮ್ಯಾಲೆ ಅವರಿಬ್ಬರೂ ಒಟ್ಟಾಗ್ತಾರಂತೆ. +ನಿನ್ನ ಲಗ್ನ ಆಗಬೇಕಾದ್ರೆ ಮುಂಚೇನೆ ಪೀಂಚಲೂಗೂ ಅವರಿಗೂ ಎನೋ ಗುಟ್ಟಿನ ಸಂಬಂಧ ಇತ್ತಂತೆ. +ನೀನು ಮಾತ್ರ ಬೆಪ್ಪನ ಹಾಂಗೆ ‘ಮುಕುಂದಣ್ಣ!ಮುಕುಂದಣ್ಣ!’ ಅಂತಾ ಅವರ ಬಾಲ ಕಟ್ಟಿಕೊಂಡು ತಿರುಗ್ತೀಯ!…  +ನನಗ್ಯಾಕೆ ಬೇಕಿತ್ತು, ಆ ಸುದ್ದೀನ ನಿನಗೆ ಹೇಳಾದು? +ಏನೋ ಮಾತು ಬಂತಲ್ಲಾ, ಹೇಳಿಬಿಟ್ಟೇ” ಎಂದವನು, ಐತ ಒಂದು ಮಾತನ್ನೂ ಆಡದೆ ಮರವಟ್ಟವನಂತೆ ನಿಂತಿದ್ದನ್ನು ನೋಡಿ, ತಾನು ಮಾಡಿದ ಅನಾಹುತವನ್ನು ಪರಿಹರಿಸಲೆಂಬಂತೆ ಆಹ್ವಾನಿಸಿದನು. + “ನಮ್ಮ ಬಿಡಾರಕ್ಕೆ ಊಟಕ್ಕೆ ಬಾರೊ, ಇವತ್ತು ಔಂವುತ್ಲ ಮಾಡೀವಿ!”ಐತ ಯಾವ ಉತ್ತರವನ್ನೂ ಕೊಡದೆ ತನ್ನ ಬಿಡಾರಕ್ಕೆ ಗುಂಡು ತಗುಲಿದ ಮಿಗದಂತೆ ಕಲೆಳೆದುಕೊಂಡೇ ಹೋದನು. +ಚೀಂಕ್ರ ತನ್ನೊಳಗೆ ತಾನೆ ನಗುತ್ತಾ ತನ್ನ ಬಿಡಾರಕ್ಕೆ ಹಿಂದಿರುಗಿ, ಕೋಳಿ ಹಸಿಗೆಯಲ್ಲಿ ಅಕ್ಕಣಿಗೆ ನೆರವಾದನು. +ಚೀಂಕ್ರನ ಬಿಡಾರದಿಂದ ಹಿಂದಿರುಗಿ ಬಂದ ಐತನ ಮುಖಭಂಗಿ ಆ ಬಡಜೋಪಡಿಯ ಒಳಗಿದ್ದ ಬಡಬೆಳಕಿನಲ್ಲಿಯೂ ಪೀಂಚಲುಗೆ ಏನೋ ಶಂಕಾಸ್ಪದವಾಗಿ ಕಂಡಿತು. +ಅವನು ತನ್ನ ನಿತ್ಯದ ರೂಢಿಯಂತಲ್ಲದೆ ಮೌನವಾಗಿದ್ದುದನ್ನು ಗಮನಿಸಿ, ಅವಳಿಗೆ ತುಸು ಗಾಬರಿಯಾಗಿ, ಅವನು ಚೀಂಕ್ರನ ಬಿಡಾರಕ್ಕೆ ಹೋಗುವ ಮುನ್ನ ಅವರಿಬ್ಬರೂ ಮಾತನಾಡುತ್ತಿದ್ದು ತುಂಡುಗಡಿದಿದ್ದ ವಿನೋದ ವಿಚಾರವನ್ನು ಪ್ರಸ್ತಾಪಿಸಿ ಗಂಡನ ಮನಸ್ಸನ್ನು ರಮಿಸಲೆಳೆಸಿದಳು. +ಅದರಿಂದಲೂ ಪ್ರಯೋಜನ ತೋರಲಿಲ್ಲ. +“ನಾನು ಹೇಳಲಿಲ್ಲೇನು ನಿಮಗೆ? +ಆ ಚೀಂಕ್ರನ ಹತ್ತಿರಕ್ಕೆ ಹೋಗಬ್ಯಾಡಿ ಈಗ ಅಂತಾ? +ಈ ಹೊತ್ತಿನಲ್ಲಿ ಅವನಿಗೆ ತಲೆ ಸಮನಾಗಿರುವುದು ಉಂಟೆ? +ಅವನ ಹತ್ತಿರ ಏನೋ ಅನ್ನಿಸಿಕೊಂಡು ಬಂದಿದ್ದೀರಿ ಅಂತಾ ಕಾಣುತ್ತದೆ. +ನಮಗೆ ಯಾಕೆ ಬೇಕಿತ್ತು ಅವನ ತಂಟೆ?” ಎಂದು, ಗಂಡನ ರೀತಿಗೆ ತನ್ನ ವ್ಯಾಖ್ಯಾನವನ್ನೇ ನೀಡಿ, ಸಮಾಧಾನ ಮಾಡಿಕೊಂಡಳು. +ಇಬ್ಬರೂ ಒಟ್ಟಿಗೆ ಊಟಕ್ಕೆ ಕೂತಾಗಲೂ ಐತ ಅವಶ್ಯಕವಾದುದಕ್ಕಿಂತಲೂ ಹೆಚ್ಚಿಗೆ ಮಾತಾಡಲಿಲ್ಲ. +ಪೀಂಚಲು ತನ್ನ ಕಡೆಗೆ ನೋಡದೆ ಇರುವಾಗಲೆಲ್ಲ ಅವಳ ಮುಖವನ್ನೇ ಕದ್ದು ಕದ್ದು ನೋಡುತ್ತಿದ್ದನು. +ತನ್ನ ಒಲವಿನ ಆ ಮುಖದಲ್ಲಿ ಚೀಂಕ್ರನು ಹೇಳಿದ್ದಕ್ಕೆ ಏನಾದರೂ ಸಾಕ್ಷಿದೊರೆಯುತ್ತದೆಯೋ ಎಂದು ಸಮೀಕ್ಷಿಸುವಂತೆ. +ಪೀಂಚಲು ಅದನ್ನೂ ಗಮನಿಸಿ ಒಂದೆರಡು ಸಾರಿ ಗಂಡನ ಕಣ್ಣನ್ನೇ ನೇರವಾಗಿ ನೋಡಿದಳು. +ಹಾಗೆ ನೋಡಿದಾಗಲೆಲ್ಲ ಐತ ತಟಕ್ಕನೆ ತಲೆ ಬಗ್ಗಿಸಿ ಉಣ್ಣಲು ತೊಡಗುತ್ತಿದ್ದನು. +ಆ ರಾತ್ರಿ ಪೀಂಚಲು ಗಂಡನ ಮಗ್ಗುಲಲ್ಲಿ ಮಲಗುವಾಗ ಎಂದಿನಂತೆ ಉಟ್ಟ ಬಟ್ಟೆಯನ್ನು ಬಿಚ್ಚಿಟ್ಟು, ತನ್ನ ಬತ್ತಲೆಯನ್ನು ಅವನ ಮೈಗೊತ್ತಿ ಒಂದೆ ಕಂಬಳಿಯನ್ನು ಹೊದ್ದುಕೊಂಡು ಮಲಗಲಿಲ್ಲ. +ಐತನೂ ಉದಾಸೀನನಂತೆ ತಟಸ್ಥನಾಗಿ ಮುಖ ತಿರುಗಿಸಿ ಮಲಗಿದನು, ನಿದ್ದೆ ಹೋದಂತೆ. +ತನ್ನ ಪುಟ್ಟ ಹೆಂಡತಿ ನಿಃಶಬ್ದವಾಗಿ ಅಳುತ್ತಿದ್ದುದೂ ಅವನಿಗೆ ಗಮನಕ್ಕೆ ಬರಲಿಲ್ಲ. +ಹಾಲಿನಂತಿದ್ದ ಅವರ ಬಡ ಸಂಸಾರದ ಸಿರಿಬಾಳಿಗೆ ಚೀಂಕ್ರ ಸೇರೆಗಾರ ಹುಳಿ ಹಿಂಡಿಬಿಟ್ಟಿದ್ದನು. +ಐತ ಆ ದಿನ ರಾತ್ರಿಯೂ ಮರುಹಗಲೂ ತಾನು ಚೀಂಕ್ರನಿಂದ ಕೇಳಿದ್ದುದನ್ನು ಕುರಿತು ಬಹಳ ಆಲೋಚಿಸಿದನು. +ತಾನು ಪೀಂಚಲುವನ್ನು ಮದುವೆಯಾಗುವ ಮುನ್ನ ಪೀಂಚಲು ಪರವಾಗಿದ್ದ ಮುಕುಂದಯ್ಯನ ವರ್ತನೆಯನ್ನು ಪರಿಚಿಂತಿಸಿದನು. +ಮದುವೆಯಾದ ಮೇಲೂ ತನ್ನ ಕಣ್ಣಿಗೆ ಬಿದ್ದ ಮತ್ತು ಗಮನಕ್ಕೆ ಬಂದ ಎಲ್ಲವನ್ನೂ ನೆನೆದು ನೆನೆದು ವಿಚಾರಮಾಡಿದನು. +ಯಾವುದರಲ್ಲಿಯೂ ಅವನಿಗೆ ಚೀಂಕ್ರ ಹೇಳಿದ್ದು ಸತ್ಯವಾಗಿರುವಂತೆ ತೋರಲಿಲ್ಲ. +ಆದರೆ ಮುಕುಂದಯ್ಯ ಪೀಂಚಲು ಅವರ ಪರಸ್ಪರವಾದ ಸರಳ ಸ್ನೇಹ ವರ್ತನೆಯನ್ನು ಸಂಶಯಕ್ಕೊಳಗಾದ ಮನಸ್ಸು ಹಾಗೆ ಬೇಕಾದರೆ ಹಾಗೆ, ಹೀಗೆ ಬೇಕಾದರೆ ಹೀಗೆ, ಹೇಗೆ ಬೇಕಾದರೂ ಅರ್ಥಯಿಸಬಹುದಿತ್ತು. +ಸಂಶಯಕ್ಕೆ ಪೋಷಕವಾಗಿದ್ದ ಒಂದು ಸಂಗತಿ ಮಾತ್ರ ಚೀಂಕ್ರ ಹೇಳಿದ್ದೂ ಸತ್ಯವಾಗಿತ್ತು. + ಪೀಂಚಲು ತನ್ನ ವಾಕರಿಕೆಗೆ ಮದ್ದು ಮಾಡಲು ಇಲಿಕಿವಿಸೊಪ್ಪು ತರುತ್ತೇನೆಂದು ಬೈಗುಹೋತ್ತಿನಲ್ಲಿ ವಾಟೆಹಿಂಡಲಿನ ಸರಲಿನ ಕಡೆ ಆಗಾಗ್ಗೆ ಹೋಗುತ್ತಿದ್ದುದು ಮತ್ತು ಒಮ್ಮೊಮ್ಮೆ ತುಂಬ ಕತ್ತಲಾದ ಮೇಲೆ ನಿಧಾನವಾಗಿ ಹಿಂದಿರುಗುತ್ತಿದ್ದದ್ದು, ಜೊತೆಗೆ, ಹೊವಳ್ಳಿ ಚಿನ್ನಮ್ಮನನ್ನು ಸಿಂಬಾವಿ ಭರಮೈಹೆಗ್ಗಡೆಯವರು ಕೇಳುತ್ತಿದ್ದಾರೆ ಎಂಬ ಸುದ್ದಿ ಹುಟ್ಟಿದಾಗ, ಹರಕು ಬಾಯಿಯ ಐತವನ್ನು ಬಿಟ್ಟು, ತಾನು ಸಮರ್ಥ ಎಂದು ಭಾವಿಸಿದ್ದ ಪೀಂಚಲುವನ್ನೆ ತನ್ನ ಮತ್ತು ಚಿನ್ನಮ್ಮನ ನಡುವೆ ರಹಸ್ಯ ವ್ಯವಹಾರ ನಡೆಸಲು ಮುಕುಂದಯ್ಯ ಆರಿಸಿಕೊಂಡ ಸಂದರ್ಭದಲ್ಲಿ, ತನ್ನ ಹೆಂಡತಿ ತನಗೆ ತಿಳಿಸಲೊಲ್ಲದ ಏನೋ ಒಂದು ಗುಟ್ಟನ್ನು ತನ್ನಿಂದ ಬೈತಿಡುತ್ತಿದ್ದಳೆ ಎಂಬ ಅನುಮಾನವೊಂದು ಐತನ ಮನಸ್ಸನ್ನು ಹೊಕ್ಕಿತ್ತು. +ಆದ್ದರಿಂದಲೇ ಐತ ತಾನೊಮ್ಮೆ ಪ್ರತ್ಯಕ್ಷವಾಗಿ ಸತ್ಯ ಏನೆಂದು ಪರಿಶೀಲಿಸಲು ನಿಶ್ಚಯಿಸಿದನು. +ಇದಾದ ಮೂರು ನಾಲ್ಕು ದಿನಗಳಲ್ಲಿಯೆ ಒಂದು ಸಂಜೆ, ಕತ್ತಲೆಯ ಮೊದಲ ಅಡಿ ಮಲೆನಾಡಿನ ಬೆಟ್ಟಗಾಡಿನ ಮುಡಿಗೆ ಎರಗುತ್ತಿದ್ದಾಗ, ಪೀಂಚಲು ತನ್ನ ಗಂಡನಿಗೆ ಮದ್ದಿನ ಸೊಪ್ಪು ತರಲು ಹೋಗುತ್ತೇನೆ ಎಂದು ಕರ್ತವ್ಯ ಧ್ವನಿಯಿಂದ ಹೇಳಿ ಹೊರಟಳು. +ಅವಳ ಮಾತಿನಲ್ಲಿ ಏನೋ ಉದ್ವೇಗವಿದ್ದಂತೆ ತೋರಿತು ಐತನಿಗೆ. +ಅವಳ ಚಲನೆಯಲ್ಲಿ ಅವಸರವೂ ಕಾಣಿಸಿತು. +ಅವಳು ಮೂರು ನಾಲ್ಕು ದಿನಗಳಿಂದಲೂ, ಇದ್ದಕ್ಕಿದ್ದಂತೆ ತನ್ನ ಗಂಡ ನಿಷ್ಠುರವಾಗಿ ವರ್ತಿಸುತ್ತಿದ್ದುದನ್ನು ಅರ್ಥಮಾಡಿಕೊಳ್ಳಲಾರದೆ, ಸೋತು, ಕುದಿದು, ಅತ್ತು, ಸೊರಗಿ ಬೇಗುದಿಗೊಂಡಿದ್ದುದನ್ನು  ಮಾತ್ರ ಅವನ ಸಂಶಯ ಪೀಡಿತ ಚಿತ್ತ ಗ್ರಹಿಸಲಿಲ್ಲ. +ತಾನು ಮೊದಲೆ ಮಸೆದು ಹರಿತಮಾಡಿ ಇಟ್ಟಿದ್ದ ಕೆಲಸದ ಕತ್ತಿಯನ್ನು ಸೊಂಟದ ಒಡ್ಯಾಣಕ್ಕೆ, ಸಿಕ್ಕಿಸಿಕೊಂಡು ಐತ ಹತ್ತಿರದ ಒಳದಾರಿಯಿಂದ ತೋಟದ ಮೇಲೆ ಹಾದು ವಾಟೆಹಿಂಡಲನ್ನು ತಲುಪಿ, ಅಲ್ಲಿಗೆ ತುಸುವೆ ದೂರದಲ್ಲಿದ್ದು ಎಲೆ ದಟ್ಟಯಿಸಿ ಬೆಳೆದಿದ್ದ ಒಂದು ಹಲಸಿನ ಮರವನ್ನೇರಿ ಅಡಗಿ ಕುಳಿತು ಕಾದನು. +ಕತ್ತಲೆ ಹೆಚ್ಚು ಹೆಚ್ಚು ಕಪ್ಪಾಗುತ್ತಿತ್ತು. +ಗೊತ್ತು ಕೂರಲು ಹಾರಿ ಹೋಗುತ್ತಿದ್ದ ಹಕ್ಕಿಗಳ ಸದ್ದೂ ಅಡಗಿತು. +ಹಳುವಿನಲ್ಲಿ ಕರ್ಕಶವಾಗಿ ಒರಲುತ್ತಿದ್ದ ಜೀರುಂಡೆಗಳು ಮಾತ್ರ ಉತ್ತೇಜನಗೊಳ್ಳುವಂತೆ ಕಿವಿಗೆ ಚಿಟ್ಟು ಹಿಡಿಯಿಸುತ್ತಿದ್ದುವು. +ಯಾರೂ ಕಾಣಿಸದಿರಲು ಐತನಿಗೆ ತಾನು ಬಹಳ ಹೊತ್ತು ಕಾಯುತ್ತಿದ್ದಂತೆ ಅನುಭವವಾಗತೊಡಗಿತು. +ಒಂದು ಸಾರಿ ಆಕಳಿಸಿಯೂ ಬಿಟ್ಟನು! +‘ಎಲ್ಲಿಗೆ ಹೋದಳು ಅವಳು?’ ಎಂದುಕೊಂಡನು. +‘ಏನಾದರೂ ವಾಸನೆ ತಿಳಿದು ಜಾಗವನ್ನೇ ಬದಲಾಯಿಸಿಬಿಟ್ಟರೇ?’ ಎಂದೂ ಮನದಲ್ಲಿ ಒಂದು ಸಂಶಯ ಸುಳಿಯಿತು. + “ಅಥವಾ ಆ ಹಾಳು ಚೀಂಕ್ರ ಹೇಳಿದ್ದೆಲ್ಲ ಬರಿಯ ಸುಳ್ಳೋ?” + ಆದರೆ ಅವಳೇ ಹೇಳಿದಳಲ್ಲಾ “ಮದ್ದಿಗೆ ಸೊಪ್ಪು ತರಲು ಹೋಗುತ್ತೇನೆ” ಎಂದು? +‘ಚೆನ್ನಾಗಿ ಕತ್ತಲಾದ ಮೇಲೆ ನಾನು ಇಲ್ಲಿ ಕೂತಿದ್ದರೂ ಏನು ಪ್ರಯೋಜನ? +ಏನೂ ಕಾಣಿಸುವುದಿಲ್ಲ!’ ಹೀಗೆಲ್ಲ ಚಿಂತಿಸುತ್ತಿದ್ದಂತೆಯೆ ಸೊಪ್ಪು ತುಂಬಿದ ಬುಟ್ಟಿ ಹಿಡಿದ ಪೀಂಚಲು ಪೊದೆಗಳ ನಡುವೆ ಬರುತ್ತಿದ್ದುದು ಕಾಣಿಸಿ, ಐತನ ಮೈಯಲ್ಲಿ ನೆತ್ತರು ಬಿಸಿಯಾಗಿ, ಹೆಬ್ಬುಲಿಯಂತೆ ಭೋರಿಟ್ಟಿತು! +ಬಂದವಳು ಪೊದೆಗಳ ನಡುವಣ ಒಂದು ಕಿರುಬಯಲಿನಲ್ಲಿ ಕುಳಿತಳು. +ತುಸು ಹೊತ್ತಿನೊಳಗಾಗಿ ಮತ್ತೊಂದು ವ್ಯಕ್ತಿ ನಸುಕು ಮಬ್ಬಿನಲ್ಲಿ ಗೋಚರವಾಯಿತು. +ಅದು ಕೋಣೂರು ಮುಕುಂದಯ್ಯ ಎಂದು ಐತನಿಗೆ ಯಾರೂ ಪರಿಚಯ ಮಾಡಿಕೊಡಬೇಕಾಗಿರಲಿಲ್ಲ! +ಮುಕುಂದಯ್ಯ ಪೀಂಚಲುಗೆ ಒಂದೆರಡು ಮಾರು ದೂರದಲ್ಲಿ ಕುಳಿತುಕೊಂಡನು. +ಇಬ್ಬರೂ ಮಾತನಾಡತೊಡಗಿದರು. +ಆದರೆ ಏನು ಮಾತಾಡುತ್ತಿದ್ದಾರೆ ಎಂಬುದು ಐತನಿಗೆ ಕೇಳಿಸಲಾರದಷ್ಟು ಮೆಲ್ಲಗೆ, ಆ ಮುಂಗಪ್ಪಿನಲ್ಲಿ ಅವರ ಮುಖ ಭಾವಗಳೂ ಆಗೋಚರವಾಗಿತ್ತು. +ಚೀಂಕ್ರ ಹೇಳಿದ ಸತ್ಯಕ್ಕೆ ಪ್ರತ್ಯಕ್ಷ ಪ್ರಮಾಣವನ್ನು ಕಂಡ ಐತನ ಚೇತನ ಕ್ರೋಧವನ್ನು ಅನುಭವಿಸುವುದಕ್ಕಿಂತಲೂ ಹೆಚ್ಚಾಗಿ ದುಃಖದಿಂದ ಬಿಕ್ಕತೊಡಗಿತು. +ಆ ಇಬ್ಬರಲ್ಲಿ ಯಾರೊಬ್ಬರಾದರೂ ತನಗೆ ದೂರದವರಾಗಿ ಅನ್ಯರಾಗಿದ್ದರೆ ಅವನು ಕೋಪವನ್ನೇ ಸ್ವಾಗತಿಸಿ ಪ್ರತೀಕಾರಕ್ಕೆ ಅಣಿಯಾಗುತ್ತಿದ್ದನು. +ಆದರೆ ಅಲ್ಲಿ ಇದ್ದವರಿಬ್ಬರೂ ತನಗೆ ಚಿಕ್ಕಂದಿನಿಂದಲೂ ಪರಿಚಿತರಾಗಿ, ಬೇಕಾದವರಾಗಿದ್ದರು. +ತನ್ನವರೇ ಆದ ಅವರಿಬ್ಬರೂ ಸೇರಿ, ಅವರನ್ನು ನಂಬಿದ್ದ ತನಗೆ, ಇಂತಹ ಅವಮಾನಕರವಾದ ಅನ್ಯಾಯವೆಸಗುತ್ತಿದ್ದಾರಲ್ಲಾ ಎಂದು ಸುಯ್ದು ಐತನ ಕಣ್ಣಿನಿಂದ ನೀರು ತೊಟ್ಟಕ್ಕಿತು. +ತಾನು ಎಷ್ಟೊಂದು ಪ್ರೀತಿಸುತ್ತಿದ್ದ ಪೀಂಚಲು ತನಗೆ ಹೀಗೆ ಮೋಸ ಮಾಡುವುದೆ…? +“ಅರೇ!ಇದೇನು? +ಮತ್ತೂ ಯಾರೋ ಇಬ್ಬರು ಪೊದೆಗಳ ಮಧ್ಯೆ ಮಬ್ಬುಗತ್ತಲಲ್ಲಿ ಬರುತ್ತಿದ್ದಾರೆ! +ಇವರಿಬ್ಬರೂ ಕುಳಿತಿದ್ದೆಡೆಗೇ! +ಬಂದವರು ಸ್ತ್ರೀವ್ಯಕ್ತಿಗಳೆಂಬುದೂ ಐತನಿಗೆ ಚೆನ್ನಾಗಿ ಗೊತ್ತಾಯಿತು. +ಐತನ ಖೇದ ಇದ್ದಕ್ಕಿದ್ದ ಹಾಗೆ ಬೆಕ್ಕಸಕ್ಕೆ ತಿರುಗಿತು. +ಹಾದರಕ್ಕೆ ಹೊರಟವರು ಯಾರಾದರೂ ಹೀಗೆ ಗುಂಪು ನೆರೆಯುತ್ತಾರೆಯೇ? +ಛೇ!ಚೀಂಕ್ರ ಹೇಳಿದ್ದೆಲ್ಲಾ ಸುಳ್ಳೆ! +ಸುಮ್ಮನೆ ನನ್ನನ್ನು ನಾಲ್ಕು ಐದು ದಿನ ಬೇಯಿಸಿಬಿಟ್ಟನಲ್ಲಾ, ಆ ಸೊಣಗ? +ಇವರು ಇಲ್ಲಿ ಸೇರುವುದಕ್ಕೆ ಇನ್ನೇನೋ ಬೇರೆ ರಹಸ್ಯ ಇರಬೇಕು. +ನನ್ನಿಂದ ಮುಚ್ಚಿಡುವಂಥ ಗುಟ್ಟು ಅದೇನು ನನ್ನ ಹೆಂಡತಿಗೆ? +ಐತ ಆಲೋಚಿಸುತ್ತಿದ್ದಂತೆಯೆ ಕವಿದು ಬಂದ ಕತ್ತಲೆಯಲ್ಲಿ ಅವರು ಯಾರೂ ಕಾಣಿಸದಂತಾಯ್ತು. +ಅವರೆಲ್ಲರೂ ಸೇರಿ ಏನನ್ನೋ ಗುಜುಗುಜು ಮಾತಾಡಿಕೊಳ್ಳುತ್ತಿದ್ದದ್ದು ಮಾತ್ರ ಕೇಳಿಸುತ್ತಿತ್ತು. +ಮರದಿಂದಿಳಿದು ಸದ್ದು ಮಾಡದೆ ಪೊದೆಗಳ ನಡುವೆ ಅವರಿದ್ದ ಎಡೆಗೆ ಹೋಗಿ ಆಲಿಸೋಣವೇ ಎನ್ನಿಸಿತು ಐತನಿಗೆ. +ಆದರೆ ಎಲ್ಲಿಯಾದರೂ ಸದ್ದಾಗಿ ತಾನು ಸಿಕ್ಕಿಬಿದ್ದರೆ ಏನು ವಿವರಣೆ ಕೊಡಲು ಸಾಧ್ಯ? +ಈಗ ಮಾಡಿರುವ ಅವಿವೇಕವೆ ಸಾಕು; +ಇನ್ನೂ ಹೆಚ್ಚಿನ ಅವಿವೇಕಕ್ಕೆ ಬೀಳುವುದು ಬೇಡ ಎಂದು, ಗಟ್ಟಿ ಮನಸ್ಸು ಮಾಡಿ, ಮರದಿಂದ ಮೆಲ್ಲನೆ ಇಳಿದು, ತಾನು ಬಂದಿದ್ದ ಒಳದಾರಿಯಿಂದಲೆ ಕತ್ತಲೆಯಲ್ಲಿ ಕಾಲು ತಡವುತ್ತಾ ನಡೆದು ಐತ ಬಿಡಾರ ಸೇರಿ, ಪೀಂಚಲುವಿನ ಬರವನ್ನೇ ಇದಿರು ನೋಡುತ್ತಾ ಕಾತರನಾಗಿ  ಕುಳಿತನು. +ಐತ ಮರದ ಮೇಲೆ ಕುಳಿತಿದ್ದಾಗಲೆ ದೂರ ಪಶ್ಚಿಮ ದಿಗಂತದತ್ತ ಮೋಡ ಕವಿದು ಮಿಂಚುತ್ತಿತ್ತು. +ಅದನ್ನವನು ನೋಡಿದ್ದನೆ ವಿನಾ ಗಮನಿಸಿರಲಿಲ್ಲ. +ಅವನು ಬಿಡಾರ ಸೇರುವ ಹೊತ್ತಿಗಾಗಲೆ ಮುಗಿಲು ಮುಚ್ಚಿ, ಮಿಂಚು ಗುಡುಗು ಸಿಡಿಲು ಪ್ರಾರಂಭವಾಗಿ, ಗಾಳಿ ಜೋರಾಗಿ ಬೀಸಿ, ಮಳೆಯ ತೋರಹನಿ ಟಪ್ಪಟಪ್ಪನೆ ವಿರಳವಾಗಿ ಬೀಳತೊಡಗಿತ್ತು. +ಸ್ವಲ್ಪ ಹೊತ್ತಿನಲ್ಲಿಯೆ ಮುಂಗಾರು ಮಳೆ ಭೋರೆಂದು ಹೊಯ್ದು, ಅರ್ಧಗಂಟೆಯೊಳಗೆ ನಿಂತುಬಿಟ್ಟಿತು. +ಅಲ್ಲಿ ಸೇರಿದ್ದ ನಾಲ್ವರೂ ಚೆನ್ನಾಗಿ ನೆನೆದು ಒದ್ದೆಮುದ್ದೆಯಾಗಿರಬೇಕು ಎಂದು ಭಾವಿಸಿದ ಐತ ತನ್ನ ಬಸುರಿ ಹೆಂಡತಿಯ ಯೋಗಕ್ಷೇಮದ ವಿಚಾರವಾಗಿ ಕಳವಳಗೊಂಡನು! +ಮಳೆಯಲ್ಲಿ ತೊಯ್ದು ಶೀತವಾಗಿ ಜ್ವರಬಂದು ಏನಾದರೂ ಆಗಿಬಿಟ್ಟರೆ? +ಮಳೆ ನಿಂತು ಸ್ವಲ್ಪ ಹೊತ್ತಿನ ಮೇಲೆ ಪಿಂಚಲು, ಸೋಂಟದ ಮೇಲಿಟ್ಟು ಎಡಗೈಯಿಂದ ಹಿಡಿದಿದ್ದ ಬುಟ್ಟಿಯೊಡೆನೆ ಬಿಡಾರದ ಒಳಗೆ ಬಂದು, ಅದನ್ನು ಒಲೆಯ ಬಳಿಯ ಮೂಲೆಯಲ್ಲಿ ಇಳಿಸಿದಳು. +ಅನೈಚ್ಛಿಕವಾಗಿಯೆ ಅತ್ತಕಡೆ ತಿರುಗಿದ್ದ ಐತನ ಕಣ್ಣಿಗೆ ಬುಟ್ಟಿಯಲ್ಲಿ ಸೊಪ್ಪೂ ಮತ್ತು ಅದರ ಪಕ್ಕದಲ್ಲಿದ್ದ ಹಿತ್ತಾಳೆಯ ಪಾತ್ರೆಯೂ ಕಾಣಿಸಿ ಮನಸ್ಸಿಗೆ ಸಂತೋಷವಾಯಿತು. +ಆ ಹಿತ್ತಾಳೆಯ ಪಾತ್ರೆ ಕೋಣೂರು ಮನೆಯದೆಂದೂ ಅದು ತನ್ನ ಹೆಂಡತಿಯೊಡನೆ ಬಿಡಾರಕ್ಕೆ ಬಂದಾಗಲೆಲ್ಲ, ತಿನ್ನಲೋ ನಂಚಿಕೊಳ್ಳಲೋ ಹನಿಸಿಕೊಳ್ಳಲೋ, ದೊಡ್ಡಮ್ಮನ ಕೃಪೆ ಅದರಲ್ಲಿ ಏನಾದರೂ ಇರುತ್ತದೆ ಎಂದೂ ಐತನಿಗೆ ಬಹುಕಾಲದಿಂದಲೂ ಗೊತ್ತು. +“ಎಲ್ಲಿಗೇ ಹೋಗಿದ್ದೇ? +ಇಷ್ಟು ಹೊತ್ತು ಯಾಕೆ?” ಪ್ರಶ್ನಿಸಿದ ಐತನ ಧ್ವನಿಯಲ್ಲಿ ಉಗ್ರತೆಯಿರದೆ ತನಗೆ ಅತ್ಯಂತ ಪರಿಚಿತವಾದ ಸವಿ ಇದ್ದುದನ್ನು ಗಮನಿಸಿ ಪೀಂಚಲು ಸ್ವಲ್ಪ ಚಕಿತೆಯಾದಳು. +ಮೊಗವೆತ್ತಿ ಗಂಡನ ಮುಖದತ್ತ ಕಿರಿಹಿಡಿದು ನೋಡಿದಳು. +ಗಂಡ ಮೊದಲಿನ ಗಂಡನಾಗಿದ್ದನು! +ನಾಲ್ಕೈದು ದಿನಗಳಿಂದಲೂ ಇದ್ದ ಬಿಮ್ಮಾಗಲಿ ಸೆಡೆತವಾಗಲಿ ಮುಖದಲ್ಲಿ ಲೇಶವೂ ಇರಲಿಲ್ಲ. +ಅವನ ಕಣ್ಣೂ ತುಟಿಯೂ ನಗುತ್ತಿದ್ದುವು! +ಅವನಿಗೆ ಸಹಜವಾಗಿದ್ದ ಹುಡುಗುಮೊಗದಲ್ಲಿ ಅಣುಗತನದ ಮಾಸದ ಛಾಯೆಯನ್ನು ಕಂಡು, ತಾಯ್ತನಕ್ಕೆ ನಿಗೂಢ ಅಭ್ಯರ್ಥಿಯಾಗಿದ್ದ ಅವಳ ಹೃದಯ ಮಾತೃಭಾವದಿಂದ ತುಂಬಿಹೋಯಿತು. +ಮುದ್ದುಮಗುವನ್ನು ಅಪ್ಪಿಕೊಂಡು ಮುದ್ದಿಸುವಂತೆ ಗಂಡನನ್ನು ಮುಂಡಾಡಬೇಕು ಎನ್ನಿಸಿತು. +ಆದರೂ ನಾಲ್ಕೈದು ದಿನಗಳಿಂದ ತನಗಾಗಿದ್ದ ಬೇಗೆಯನ್ನು ನೆನೆದು ತನ್ನ ಹಿಗ್ಗನ್ನು ತಡೆಹಿಡಿದು “ಎಲ್ಲಿಗೆ ಹೋಗಿದ್ದೆ? +ಸೊಪ್ಪು ತರಾಕೆ!ಕಾಣದಿಲ್ಲೇನು?” ಎಂದು ಬಿಗುಮಾನವನ್ನು ನಟಿಸಿಯೇ ಉತ್ತರ ಕೊಟ್ಟಳು. +“ಮತ್ತೆ?ಆ ತಂಬಾಳೆ?” +“ಅದು ಮನೆಯದು. +ದೊಡ್ಡಮ್ಮ ಕೊಟ್ಟದ್ದು.” +“ನೀವೆಲ್ಲ ಮಳೆ ಬರುವಾಗ ಅಲ್ಲೇ ಇದ್ದೀರೇನು?” +ಸರಳಹೃದಯದ ಬೆಪ್ಪು ಹುಡುಗ ಐತ ತನ್ನ ಪ್ರಶ್ನೆ ತನಗೇ ದ್ರೋಹ ಬಗೆದು ತನ್ನನ್ನು ಹಿಡಿದುಕೊಡುತ್ತದೆ ಎಂಬುದನ್ನು ಗ್ರಹಿಸಿರಲಿಲ್ಲ. +ಯಾವುದನ್ನು ಮುಚ್ಚಿಡಬೇಕೆಂದು ಎಚ್ಚರಿಕೆ ವಹಿಸಿದ್ದನೋ ಅದನ್ನೇ ಬಿಚ್ಚಿಬಿಟ್ಟನು! +“ಎಲ್ಲೀ?ಯಾರು? +ಏನೆಲ್ಲ ನೀವು ಕೇಳಾದು?” ಅಚ್ಚರಿಯಿಂದ ಐತನ ಕಣ್ಣನ್ನೇ ನೋಡುತ್ತಾ ಕೇಳಿದಳು ಪೀಂಚಲು. +ತಟಕ್ಕನೆ ತನ್ನ ಅವಿವೇಕ ಹೊಳೆದಂತಾಗಿ ಐತ “ಅ…. ಅ…. ಅಲ್ಲಾ…. + ನೀನು ಎಲ್ಲಿದ್ದೇ ಅಂದೆ…  ನಿನಗೆ ಶೀತಗೀತ ಆಗಿಬಿಟ್ಟಾತು ಅಂತಾ ಹೆದರಿದ್ದೆ…. +ಆದ್ರೆ ನೀನು ಮಳೇಲಿ ನೆಂದೇ ಇಲ್ಲಲ್ಲಾ? +ಅದ್ಕೇ ಕೇಳ್ದೆ!” ಎಂದು ನಾಚಿಕೊಂಡಂತೆ ನೆಲ ನೋಡಿದನು. +“ಯಾಕೆ ಹೀಂಗೆ ಮಾಡುತ್ತಿದ್ದೀರಿ ನೀವು, ನಾಲ್ಕೈದು ದಿನಗಳಿಂದಲೂ? +ಚೀಂಕ್ರ ಏನೆಲ್ಲ ಹೇಳಿದ ಆವೊತ್ತು ನಿಮಗೆ? +ನನ್ನ ಜೀವ ಸುಟ್ಟು ಸೋತು ಹೋಯಿತಲ್ಲಾ!”ಪೀಂಚಲು ಧನಿ ಭಾವೋದ್ವೇಗದಿಂದ ಅಳುವಂತೆ, ಗದ್ಗದವಾಗಿತ್ತು. +“ಅಂವ ಸತ್ತ!ಅಂವ ಹೇಳುತ್ತಾನೇನು?ಅವನ ಹೆಣಾ!…  ನನ್ನಿಂದ ತಪ್ಪಾಯ್ತು, ಪೀಂಚಲು! …. . +ನನಗೆ ಹೇಳದೆ ನೀನು ಎನನ್ನೋ ಮುಚ್ಚುಮರೆ ಮಾಡುತ್ತಿದ್ದೀಯಾ ಅಂತಾ….” + ಐತ ಮುಂದೆ ನುಡಿಯಲಾರದೆ, ಅರ್ಧದಲ್ಲಿಯೆ ನಿಲ್ಲಿಸಿ, ಮಗುವಿನಂತೆ ಬಿಕ್ಕಿ ಬಿಕ್ಕಿ ಅಳತೊಡಗಿದನು. +ಪೀಂಚಲು ತಡೆಯಲಾರದೆ ಅವನ ಬಳಿಗೆ ಓಡಿ, ಪಕ್ಕದಲ್ಲಿಯೆ ಅವನಿಗೆ ಒತ್ತಿ ಕುಳಿತು, “ಅಳಬೇಡ, ಐತ ಅಳಬೇಡ!” ಎಂದು ತಾನೂ ಅಳುತ್ತಲೆ ಮಕ್ಕಳನ್ನು ಸಂತೈಸುವಂತೆ ಕಣ್ಣು ಕೆನ್ನೆ ಒರಸಿ ಸಮಾಧಾನ ಮಾಡಿದಳು. +ಮತ್ತೆ ಮೆಲ್ಲಗೆ ಹೇಳತೊಡಗಿಸಳು. +“ನನಗೆ ಗೊತ್ತಾಯ್ತು. +ಆದರೆ ಏನು ಮಾಡಲಿ? …. . +ಮುಕುಂದಯ್ಯ ನನ್ನನ್ನು ನಂಬಿ ಹೇಳಿದ್ದರಲ್ಲಾ; + ‘ಐತನಿಗೆ ಈಗ ಹೇಳಬೇಡ. +ಅವನದು ಹರಕುಬಾಯಿ. +ಯಾರು ಯಾರಿಗೆಲ್ಲಾ ಹೇಳಿಬಿಡುತ್ತಾನೆ. +ಆಮೇಲೆ ಅವನಿಂದಲೂ ಕೆಲಸವಾಗಬೇಕಾದಾಗ ಹೇಳಿದರಾಯ್ತು’ ಅಂತ. +ಅದಕ್ಕೇ ನಾನು ಬಾಯಿ ಕಟ್ಟಿಕೊಂಡಿದ್ದೆ. +ಇವೊತ್ತು ಅವರಿಗೆ ಹೇಳಿಯೆಬಿಟ್ಟೆ, ನೀನು ಮಾತುಬಿಟ್ಟು ಕೊರಗ್ತಾ ಇರೋದ. +‘ಹಾಂಗಾದರೆ ಅವನಿಗೆ ತಿಳಿಸಿಬಿಡು’ ಅಂದಿದ್ದಾರೆ. +ಅದಕ್ಕೇ ಹೇಳ್ತೀನಿ… “ಪೀಂಚಲು ತನ್ನ ಅಡುಗೆ ಕೆಲಸವನ್ನು ಮಾಡುತ್ತಲೇ ಹೇಳುತ್ತಿದ್ದಳು. +ಅವಳು ಕುಳಿತರೆ, ಎದ್ದರೆ, ಅತ್ತ ಇತ್ತ ಓಡಾಡಿದರೆ ಐತನ ಕಣ್ಣು, ಹಸಿದ ನಾಯಿ ತನಗೆ ಅನ್ನ ಹಾಕುವವರು ಬೋಗಣಿ ಹಿಡಿದು ಅತ್ತ ಇತ್ತ ಓಡಾಡಿದರೆ ಅನ್ನವಿರುವ ಆ ಬೋಗಣಿಯನ್ನು ಹಿಡಿದ ಕೈಯ ಕಡೆಗೇ ನೋಡುತ್ತಾ ಬಾಲ ಅಲ್ಲಾಡಿಸುತ್ತಾ ಅವರ ಹಿಂದೇ ಮುಂದೇ ತಿರುಗುವಂತೆ, ತನ್ನ ಹೆಂಡತಿಯನ್ನೇ ಬಯಸಿ ನೋಡಿ, ಬಿಡದೆ ಹಿಂಬಾಲಿಸುತ್ತಿತ್ತು. +ನಡು ನಡುವೆ ಆಗೊಂದು ಈಗೊಂದು ಏನಾದರೂ ಪ್ರಶ್ನೆ ಹಾಕುತ್ತಿದ್ದನು. +‘ಪೀಂಚಲು ಎಂಥ ಚೆಲುವೆ!’ +‘ಅಃ ನನ್ನ ಹೆಂಡತಿ ಅದೆಷ್ಟು ಚೆನ್ನಾಗಿದ್ದಾಳೆ!’ +‘ನಾನೆಷ್ಟು ಪುಣ್ಯ ಮಾಡಿದ್ದೆ ಇವಳನ್ನು ಪಡೆಯುವುದಕ್ಕೆ?’ +‘ನಾನೆಂಥಾ ಪಾಪಿ ಅವಳನ್ನು ಅಷ್ಟು ಬೇಯಿಸಿಬಿಟ್ಟೆನಲ್ಲಾ?’ +‘ಇನ್ನು ಎಂದೆಂದಿಗೂ ಹಾಗೆ ಮಾಡುವುದಿಲ್ಲ!’ ಹೀಗೆಲ್ಲ ಐತನ ಮನಸ್ಸು ತನ್ನೊಳಗ ತಾನೇ ಹೇಳಿಕೊಳ್ಳುತ್ತಿತ್ತು. +ಗೌಡರ ಗದ್ದೆ ತೋಟಗಳಲ್ಲಿ ಕೆಲಸಮಾಡುವ ಗಟ್ಟದ ತಗ್ಗಿನ ಹೆಣ್ಣಾಳುಗಳಿಗೂ (ಗಂಡಾಳುಗಳ ಮಾತು ಅಂತಿರಲಿ!) ಮೈಯನ್ನೆಲ್ಲ ಮುಚ್ಚಿಕೊಳ್ಳುವಷ್ಟು ಬಟ್ಟೆ ಇರುವುದಿಲ್ಲ. +ಕುಪ್ಪಸವನ್ನಂತೂ ಅವರು ಕಂಡೇ ಅರಿಯರು. +ಸೊಂಟಕ್ಕೆ ಸುತ್ತಿಕೊಂಡ ಅರಿವೆಯ ತುಂಡಿನ ಒಂದು ಸೆರಗೇ ಅವರ ಎದೆಯನ್ನೆಲ್ಲ ಗೋಪ್ಯವಾಗಿಡುವ ಕರ್ತವ್ಯವನ್ನೂ ಹಾಗೂ ಹೀಗೂ ಹೊರುತ್ತಿತ್ತು. +ವಯಸ್ಸಾದ ಹೆಣ್ಣಾಳುಗಳಂತೂ ಆ ಗೋಪ್ಯವನ್ನೂ ರಕ್ಷಿಸುವ ಶ್ರಮ ತೆಗೆದುಕೊಳ್ಳಲಾರದಷ್ಟು ಅಸಡ್ಡೆಯಿಂದಿರುತ್ತಿದ್ದರು. +ಐತ ಅಂಥವರ ನಡುವೆಯೆ ಚಿಕ್ಕಂದಿನಿಂದಲೂ ಬೆಳೆದಿದ್ದನು. +ಅವರ ಕೂಡೆಯೆ ಕೆಲಸ ಮಾಡಿಯೂ ಇದ್ದನು. +ಚಿಕ್ಕಂದಿನಿಂದಲೂ ಅವನು ನೋಡುತ್ತಿದ್ದು, ಬಹಿರಂಗವಾಗಿಯೆ ಇರುತ್ತಿದ್ದ ಅಮಗ ಅಂಗ ಭಾಗ ಉಪಾಂಗಗಳ ವಿಚಾರದಲ್ಲಿ ಅವನು ಸಂಪೂರ್ಣವಾಗಿ ಅಲಕ್ಷದಿಂದಿದ್ದನ್ನು. +ಆದರೆ ಇಂದು ಅವನಿಗೆ ಹೊಸ ಕಣ್ಣು ತೆರೆದಂತೆ ಬೇರೆಯ ರೀತಿಯ ಅನುಭವವಾಗತೊಡಗಿತ್ತು. +ಹೂವಳ್ಳಿ ‘ಚಿನ್ನಕ್ಕ’ನ, ಕೋಣೂರು ಮುಕುಂದಯ್ಯನ, ನಾಗಕ್ಕ, ನಾಗತ್ತೆ ಮತ್ತು ಹೂವಳ್ಳಿ ನಾಯಕರ, ಸಿಂಬಾವಿ ಹೆಗ್ಗಡೆಯವರ ಮತ್ತು ಹಳೆಮನೆ ತಿಮ್ಮಪ್ಪ ಹೆಗ್ಗಡೆಯ ವಿಚಾರವಾಗಿ ತಾನು ಕೇಳಿ ತಿಳಿದದ್ದನ್ನೆಲ್ಲ ಹೇಳುತ್ತಿದ್ದ ಪೀಂಚಲು ಎಸರು ಇಳಿಸಲು ಒಲೆಯ ಮೇಲೆ ಬಾಗಿ, ತನ್ನ ಕಡೆಗೆ ಬೆನ್ನಾಗಿ ನಿಂತಾಗ, ಐತನಿಗೆ ತೆಳ್ಳನೆಯ ಸೀರೆಯ ತುಂಡು ಬಿಗಿದು ಮುಚ್ಚಿದ್ದ ಅವಳ ದುಂಡನೆಯ ನಿತಂಬಗಳನ್ನು ನೋಡಿ ಮೋಹವುಕ್ಕಿದಂತಾಯ್ತು. +‘ಎಷ್ಟು ಚೆನ್ನಾಗಿ ಕಾಣುತ್ತಾಳೆ ಈ ಪೀಂಚಲು?’ ಎಂದುಕೊಂಡನು ಮತ್ತೊಮ್ಮೆ! +ಮತ್ತೆ ಅವನ ಕಣ್ಣು ಅವಳ ತೋಳುಗಳತ್ತ ಸರಿದು ‘ಎಷ್ಟು ಬೆಳ್ಳಗಿದ್ದಾಳೆ ನನ್ನ ಹೆಂಡತಿ? +ನಾನು ನೋಡಿಯೆ ಇರಲಿಲ್ಲಾ ಇಷ್ಟು ದಿನ!’ ಎಂದುಕೊಂಡನು. +ಹಾಗೆಯ ಅವಳೊಮ್ಮೆ ಊಟಕ್ಕೆ ಹಾಳೆಯ ಕೊಟ್ಟೆಯನ್ನೂ ಕುಡಿಯಲಿಕ್ಕೆ ಗರಟವನ್ನೂ ಅಣಿಮಾಡಿಡಲೆಂದು ನೆಲಕ್ಕೆ ಬಾಗಿದಾಗ ಸಡಿಲಗೊಂಡ ಅವಳ ಸೆರಗಿನೊಳಗಣ ಮೃದು ಕುಟ್ಮಲಸದೃಶ ಕುಚಗಳನ್ನು ಹಿಗ್ಗಿನೋಡಿ ‘ಅಯ್ಯೋ!ಕಾಣುತ್ತಲೇ ಇರಲಿಲ್ಲ! +ಈಗ ಎಷ್ಟು ದೊಡ್ಡದಾಗಿ ಬಿಟ್ಟಿವೆ? +ಇವತ್ತು ರಾತ್ರಿ ನಾನು ಅವಕ್ಕೊಂದು ಮುತ್ತು ಕೊಡಲೇಬೇಕು!’ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದರೂ ಬಾಯಲ್ಲಿ. +“ಹಾಂಗಾದ್ರೆ ನಾಗಕ್ಕನ ಸೀರುಡಿಕೆ ಮಾಡಿಕೊಂಡಾಯ್ತಾ ಹೂವಳ್ಳಿ ನಾಯಕ್ರು?” ಎಂದು ಕೇಳಿದನು. +“ದೆಯ್ಯದ ಹರಿಕೆ ಆಯ್ತಲ್ಲಾ? +ಅದಾಗಿ ಒಂದು ವಾರಾನೋ ಹದಿನೈದು ದಿನಾನೋ ಆಗಿತ್ತಂತೆ, ನಾಗಕ್ಕ ತಾಳಿ ಕಟ್ಟಿಸಿಕೊಂಡೇ ಬಿಟ್ರಂತೆ!” +“ಮತ್ತೆ ನಾಗಕ್ಕನ ಮೊದಲನೆಯ ಗಂಡ ಸತ್ತಮೇಲೆ ಅವರು ಯಾರನ್ನೂ ಕೂಡಿಕೆ ಮಾಡಿಕೊಳ್ಳೋದಿಲ್ಲಾ ಅಂತ ಹಟ ಹಿಡಿದಿದ್ರಂತೆ? ” +“ಹೌದೋ…. ಆದರೆ ಈ ಸಂಬಂಧ ಅವರು ಒಪ್ಪಿಕೊಂಡಿದ್ದು, ನನಗೆ ಅನ್ನಿಸ್ತದೆ, ಚಿನ್ನಕ್ಕನ ಕಷ್ಟ ತಪ್ಪಿಸೋಕಾಗೇ ಅಂತಾ.” +“ಇವರು ಕೂಡಿಕೆ ಆದ್ರೆ ಚಿನ್ನಕ್ಕನ ಕಷ್ಟ ಹ್ಯಾಂಗೆ ತಪ್ತದೆ?” +“ಹ್ಯಾಂಗೆ ತಪ್ತದೆ ಅಂದ್ರೆ! +ಗಂಡನ್ನ ಮನಸ್ಸನ್ನ ಒಲಿಸಿಕೊಂಡು, ಚಿನ್ನಕ್ಕನ್ನ ಸಿಂಬಾವೀ ಹೆಗ್ಗಡೇರಿಗೆ ಕೊಡೋದು ತಪ್ಪಿಸಿ, ನಮ್ಮ ಮುಕುಂದಯ್ಯಗೇ ಕೊಡೋ ಹಾಂಗೆ ಮಾಡೋದಕ್ಕೆ….” + ನೋಡುತ್ತಾಳೆ, ಗಂಡನ ದೃಷ್ಟಿ ಸಡಿಲವಾಗಿರುವ ತನ್ನ ಸೆರಗಿನ ಒಳಗೆ ನುಗ್ಗಿ ಆಟವಾಡುತ್ತಿದೆ! +“ಏ, ನೀನೇನು ನನ್ನ ಮಾತು ಆಲೈಸ್ತಿದ್ದೀಯೊ? +ಎತ್ತಲಾಗೋ ನೋಡ್ತಿದ್ದೀಯಲ್ಲಾ!” +“ಎತ್ತಲಾಗಿ ನೋಡ್ತಿದ್ದೀನೇ? +ನಿನ್ನ ಕಡೀಗ ಕಣ್ಣಿಟ್ಟೀನಲ್ಲಾ!… ” +“ನನ್ನ ಕಡೀಗೆ ಕಣ್ಣಿಟ್ಟೀಯ ಅನ್ನೋದು ಕಾಣ್ತಾನೆ ಇದೆಯಲ್ಲಾ….” ಎಂದು ಸಡಿಲವಾಗಿ ಎಳಲುತ್ತಿದ್ದ ತನ್ನ ಸೆರಗನ್ನು ಎಳೆದು ಭದ್ರಪಡಿಸಿಕೊಂಡು, ಶೃಂಗಾರಪೂರ್ಣವಾದ ಭರ್ತ್ಸನಾದೃಷ್ಟಿಯಿಂದ ಮುಗುಳು ನಕ್ಕು ಗಂಡನನ್ನು ಸೂರೆ ಹೊಡೆದುಬಿಟ್ಟಳು. +ಇಬ್ಬರೂ ಅಂಬಲಿ ಉಣ್ಣಕ್ಕೆ ಎದುರು ಬದುರಾಗಿ ಕೂತರು. +ಐತನ ಕಣ್ಣು ಪೀಂಚಲು ಮೂಲೆಯಲ್ಲಿಟ್ಟಿದ್ದ ಹಿತ್ತಾಳೆ  ಪಾತ್ರೆಯತ್ತ ಮತ್ತೆ ಮತ್ತೆ ಹೋಗುತಿತ್ತು. +ದೊಡ್ಡ ಅಮ್ಮ ಏನನ್ನೋ ಕೊಟ್ಟಿದ್ದಾರೆ; +ಊಟಕ್ಕೆ ಕುಳಿತೊಡನೆ ಅದನ್ನು ಬಡಿಸುತ್ತಾಳೆ ಎಂದು ಹಾರೈಸಿದ್ದ ಐತನಿಗೆ ತನ್ನ ಹೆಂಡತಿ ಆ ಕಡೆ ಗಮನವನ್ನೆ ಹಾಕದೆ ಉಣ್ಣಲು ಕುಳಿತಿದ್ದನ್ನು ಕಂಡು ನಿರಾಶೆಯಾಯಿತು. +ಮತ್ತೆ ಮತ್ತೆ ಆ ಕಡೆ ನೋಡತೊಡಗಿದನು. +“ಅದು ಗಂಡಸರ ತಿಂಡಿ ಅಲ್ಲ” ಎಂದು ಓರೆಗಣ್ಣಿನಿಂದ ನೋಡಿ ನಕ್ಕಳು ಪೀಂಚಲು. +“ತಿಂಡೀಲಿ ಗಂಡಸರ ತಿಂಡಿ ಹೆಂಗಸರ ತಿಂಡಿ ಅಂತಾ ಬೇರೆ ಬೇರೆ ಇರುತ್ತದೇನು? …. ” ಮೂದಲಿಸಿದನು ಐತ. +“ಇರದೆ ಏನು ಮತ್ತೆ? +ಬಸಿರೇರು ಬಾಣಂತೇರು ತಿನ್ನೋದನ್ನೆಲ್ಲ ಗಂಡಸರೂ ತಿಂತಾರೇನು? …. ” ಅಣಕಿಸಿ ನುಡಿದಳು ಪೀಂಚಲು. +“ಓಹೋಹೋ ಈಗ ಗೊತ್ತಾಯ್ತು ಬಿಡು. +ಅದಕ್ಕೆ ನೀನು ಅಷ್ಟು ಹೊತ್ತಾಗಿ ಬಂದದ್ದು…. . +ದೊಡ್ಡ ಅಮ್ಮಗೆ ಎಲ್ಲಾ ಹೇಳಿಬಿಟ್ಟಿದ್ದೀಯಾ ಅನ್ನು.” +“ಅದಕ್ಕೇನಲ್ಲ ಹೊತ್ತಾಗಿ ಬಂದದ್ದು.” +“ಮತ್ತೇ?” +“ಅದೆಲ್ಲಾ ನಿನಗೆ ಈಗಲೆ ಹೇಳಬಾರ್ದು….” +“ಅದು ಯಾರು? +ಇಬ್ಬರು ಹೆಂಗಸರು ಬಂದ ಹಾಂಗಿತ್ತಲ್ಲಾ ಕತ್ತಲೆ ಆದಮೇಲೆ ನೀವಿದ್ದಲ್ಲಿಗೆ?”ಬಾಯಿಗೆ ಸುರಿದುಕೊಳ್ಳುವುದರಲ್ಲಿದ್ದ ಅಂಬಲಿಯನ್ನು ಕೈಬೊಗಸೆಯಿಂದ ಹಾಗೆಯೆ ಹಾಳೆಕೊಟ್ಟಿಗೆ ಹಾಕಿ, ಪೀಂಚಲು ಬೆರಗು ಬಡಿದವಳಂತೆ ಗಂಡನ ಕಣ್ಣನ್ನೆ ನೋಡತೊಡಗಿದಳು. +“ಅದು ನಿನಗೆ ಹೆಂಗೆ ತಿಳಿದದ್ದು?” ಎಂದಳು ತುಸು ಹೊತ್ತು ತಡೆದು. +“ನಾನು ಅಲ್ಲೇ ಹಲಸಿನ ಮರ ಹತ್ತಿದ್ದೆ, ಕುಜ್ಜು ಸಿಗುತ್ತವೆಯೆ ನೋಡಲಿಕ್ಕೆ… ” +“ನೀನು ಮೇಲೆ ಕಾಣುವಷ್ಟು ಸಾಮಾನ್ಯ ಏನಲ್ಲ, ಹೊಂಚಿ ನೋಡುವ ಅಭ್ಯಾಸ ಬೇರೆ ಕಲಿತುಕೊಂಡಿದ್ದೀಯಾ?” +“ಐತ ತಲೆ ಬಗ್ಗಿಸಿಬಿಟ್ಟನು ಅಪರಾಧಿಯಂತೆ ಅವನ ಮೋರೆ ಬಾಡಿತು. +ಅದನ್ನರಿತು ಪೀಂಚಲು ಅವನ ಮನಸ್ಸನ್ನು ಆ ಕಹಿಯಿಂದ ಪಾರುಮಾಡುವ ಉದ್ದೇಶದಿಂದ “ಹೂವಳ್ಳಿ ಚಿನ್ನಕ್ಕ, ನಾಗಕ್ಕನ್ನ ಕರಕೊಂಡು ಬಂದಿದ್ರು” ಎಂದಳು. +ಅದನ್ನು ನಂಬಲಾರದವನಂತೆ ಐತ ಸರಕ್ಕನೆ ತಲೆಯೆತ್ತಿ “ಆಞ? +ಯಾರು ಬಂದಿದ್ರು ಅಂದೆ?” ಎಂದು ಬೆರಗಾದನು. +“ಹೂವಳ್ಳಿ ಚಿನ್ನಕ್ಕ ನಾಗಕ್ಕನ್ನ ಕರಕೊಂಡು ಬಂದಿದ್ರು… ” ಮತ್ತೆ ಹೇಳಿದಳು ಪೀಂಚಲು. +ಕಲ್ಲೂರು ಮಂಜಭಟ್ಟರ ಸಾಲಕ್ಕೆ ಸಿಂಬಾವಿ ಭರಮೈ ಹೆಗ್ಗಡೆಯವರು ಜಾಮೀನು ನಿಂತು ಹೂವಳ್ಳಿ ವೆಂಕಪ್ಪನಾಯಕರ ತೋಟಗದ್ದೆಗನ್ನು ಉಳಿಸಿಕೊಟ್ಟ ವಿಚಾರವನ್ನೂ, ಚಿನ್ನಮ್ಮನನ್ನು ಭರಮೈ ಹೆಗ್ಗಡೆಯವರಿಗೆ ಕೊಟ್ಟು ಲಗ್ನವಾಗುವ ವಿಚಾರವನ್ನೂ ಕೇಳಿದ ಐತ “ಲಗ್ನ ನಿಶ್ಚಯ ಆಗೇ ಹೋಯ್ತಂತೇನು?” ಎಂದನು. +“ಮಳೆ ಹಿಡಿಯೋದರ ಒಳಗೇ ಮಾಡಿಬಿಡ್ತಾರಂತೆ! +ಆ ಚಿನ್ನಕ್ಕನ ದುಃಖ ನೋಡಾಕೆ ಆಗೋದಿಲ್ಲ. +ಜೀವಕ್ಕ ಏನಾದ್ರೂ ಮಾಡಿಕೊಂಡು ಬಿಟ್ಟಾರು ಅಂತಾ ನಾಗಕ್ಕ ಮೂರು ಹೊತ್ತೂ ಅವರ ಹಿಂದೇನೆ ಇರತಾರಂತೆ. +ಅವರು ಒಂದು ಮಾತು ಆಡಲಿಲ್ಲ. +ಸುಮ್ಮನ ಅಳ್ತಾನೆ ಇದ್ರು. +ನಾಗಕ್ಕನೇ ಎಲ್ಲಾ ಹೇಳಿದ್ದು ಮಾಡಿದ್ದು….” +“ಮತ್ತೆ ನಾಗಕ್ಕ ಉಡಿಕೆ ಮಾಡಿಕೊಳ್ಳಾಕ್ಕ ಒಪ್ಪಿದ್ದು ಚಿನ್ನಕ್ಕನ ಕಷ್ಟ ತಪ್ಪಿಸಾಕೆ ಅಂತಿದ್ದೀ? +ಈಗ ಏನ್ ಆದ್ಹಾಂಗಾತು?” +“ಚಿನ್ನಕ್ಕನ ಅಪ್ಪಯ್ಯನೂ ಒಂದು ತರದ ಮಂಡ ಮನುಷ್ಯ. +ಸಾಲ ತೀರ್ಸಾಕೆ ದುಡ್ಡು ಕೊಡ್ತಾರೆ. +ತೆರಾನೂ ಕೈತುಂಬ ಕೊಡ್ತಾರೆ ಅಂತಾ ಹೇಳಿ ಚಿನ್ನಕ್ಕನ ಕೊರಳೀಗೆ ಆ ರೋಗಿಷ್ಟನ್ನ ಕಟ್ಟಾಕೆ ಒಪ್ಪಿಕೊಂಡುಬಿಟ್ಟಾರ. +ಪಾಪ, ನಾಗಕ್ಕನೂ ಏನೆಲ್ಲ ಮಾಡಿದ್ರಂತೆ. +ಏನೂ ಪ್ರಯೋಜನ ಆಗ್ಲಿಲ್ಲಂತೆ.” +“ಈಗ ಮತ್ತೇನು ಮಾಡಾದೆ?” ತುಂಬ ಸಂಕಟದ ಧ್ವನಿಯಿಂದಲೇ ಕೇಳಿದನು ಐತ. +ಚಿನ್ನಮ್ಮನನ್ನು ಪಾರುಗಾಣಿಸುವ ಹೊಣೆಯನ್ನು ತಾನೆ ಹೊತ್ತುಕೊಂಡು ಬಿಟ್ಟನೊ ಎಂಬಂತೆ. +“ಅದೆಲ್ಲ ನಿನಗ್ಯಾಕ? +ಮುಕುಂದಯ್ಯ ನಾಗಕ್ಕ ನಾನು ಎಲ್ಲಾ ಸೇರಿ ಏನೋ ಹುನಾರು ಮಾಡ್ತೀವಿ. +ನೀನು ಯಾರ ಹತ್ರನೂ ತುಟಿಪಿಟಕ್ಕೆನ್ನದೆ ನಾವು ಹೇಳ್ದಂಗೆ ಮಾಡ್ತಿಯೇನು ಹೇಳು? …. ” +“ನೀ ಹೇಳಿದ್ಹಾಂಗೆ ಅಂದ್ರೆ? +ಮುಕುಂದಯ್ಯ ಹೇಳಿದ್ಹಾಂಗೆ!…  ಅದೇನು ನಾ ಹೇಳಿದ್ಹಾಂಗೆ ಮಾಡಿದ್ರೆ ನಿಂಗೆ ಮಾನ ಮುಕ್ಕಾಗ್ತದೇನೋ?… ” +“ಇಲ್ಲ ಮಹಾರಾಯ್ತೀ, ನೀ ಹೇಳದ್ಹಂಗೇ ಮಾಡ್ತೀನಿ!” ಐತನ ಭಂಗಿಯಲ್ಲಿ ಸಂಪೂರ್ಣ ಶರಣಾಗತಿಯ ಭಾವ ತುಳುಕುತ್ತಿತ್ತು. +ನಾಲ್ಕೈದು ದಿನಗಳಿಂದಲೂ ಪ್ರೇಮಲ ಸ್ವಭಾವದ ಐತನ ಜೀವಕ್ಕೆ, ಸುಡುಬಿಸಿಲಿನಲ್ಲಿ ಬಾಯಾರಿ, ಮರುಭೂಮಿ ಪ್ರವಾಸ ಕೈಗೊಂಡ ಹಾಗೆ ಆಗಿತ್ತು. +ಪಕ್ಕದಲ್ಲಿಯೆ ತಂಪೀಯುವ ಮರುವನವಿದ್ದರೂ ನಿರ್ಮಲ ಶೀತಲೋದಕದ ತಟಾಕವಿದ್ದರೂ ಗರ್ವಕ್ಕೂ ಅಭಿಮಾನಕ್ಕೂ ವಶವಾಗಿದ್ದ ಅವನ ಚೇತನ ಆ ನೀರನ್ನು ಕುಡಿಯಲೊಲ್ಲದೆ, ಆ ತಣ್ಣೆಳಲನ್ನು ಆಶ್ರಯಿಸಲು ತಿರಸ್ಕರಿಸಿ ಬಿಸಿಲಿನಲ್ಲಿಯೆ ಬಿಗುಮಾನದಿಂದ ಬೇಯುತ್ತಿತ್ತು. +ಇಂದು ಅನಿರೀಕ್ಷಿತವಾಗಿ ಆಶ್ಚರ್ಯಕರವಾಗಿ ಆ ದುಃಸ್ವಪ್ನ ಬಿರಿದು ಬಯಲಾಗಿತ್ತು. +ತನ್ನ ಹೆಂಡತಿಯನ್ನು ತಾನು ತಪ್ಪಾಗಿ ತಿಳಿದುಕೊಂಡೆನೆಂದು ಅವನಿಗೆ ಗೊತ್ತಾದ ಒಡನೆಯೆ ಕವಿದಿದ್ದ ಮೋಡವೆಲ್ಲ ತೊಲಗಿ ಹೋಗಿತ್ತು; +ಹುಣ್ಣಿಮೆಯ ತಿಂಗಳ ಬೆಳಕು ಬದುಕನ್ನೆಲ್ಲ ತನ್ನ ತಣ್ಬೆಳಗಿನಿಂದ ಆಹ್ಲಾದಕರವನ್ನಾಗಿ ಮಾಡಿತ್ತು; +ಮಾತ್ಸರ್ಯದ ಚಪ್ಪಡಿ ಬಂಡಿಯಡಿ ಸಿಕ್ಕಿ ಅದರ ನುಗ್ಗುನುರಿ ಮಾಡುತ್ತಿದ್ದ ಭಾರಕ್ಕೆ ಏದುತ್ತಿದ್ದ ಅವನ ಹೃದಯ, ಇದ್ದಕ್ಕಿದ್ದ ಹಾಗೆ ವಿಮುಕ್ತವಾಗಿ, ಹಗುರವಾಗಿ ಗರಿಕೆದರಿ ಗಾಳಿಯಲ್ಲಿ ಹಾರಾಡಿ ತಿಳ್ಳೆಯಾಡುತ್ತಿತ್ತು. +ಪೀಂಚಲುವಿನ ಒಂದೊಂದು ಚಲನೆ, ಒಂದೊಂದು ಭಂಗಿ, ಒಂದೊಂದು ಅಂಗ ಉಪಾಂಗ ಎಲ್ಲವೂ ಸ್ವರ್ಗೀಯವಾಗಿ ತೋರಿ ಅವನನ್ನು ಇಂದ್ರಪಟ್ಟಕ್ಕೇರಿಸಿತ್ತು; +ಅಡಕೆಯ ಸೋಗೆ ಹೊದಿಸಿದ್ದ ಅವನ ಆ ಜೋಪಡಿಬಿಡಾರವನ್ನು ಅಮರಾವತಿಯ ನಂದನವನ್ನಾಗಿ ಮಾರ್ಪಡಿಸಿತ್ತು. +ಪೀಂಚಲು ದೀಪ ಆರಿಸಿ, ಕತ್ತಲೆಯಲ್ಲಿಯೆ ತನ್ನ ಸೀರೆಯನ್ನು ಬಿಚ್ಚಿಟ್ಟು, ಐತನು ಹೊದೆದಿದ್ದ ಕಂಬಳಿಯಡಿ ನುಸುಳಿ, ತನ್ನ ಬತ್ತಲೆ ಮೈಯನ್ನು ಅವನ ಬತ್ತಲೆಯ ಮೈಗೆ ಒತ್ತಿ ಚಾಪೆಯ ಮೇಲೆ ಹಾಸಿದ್ದ ಕಂಬಳಿಯ ಮೇಲೆ ಹಾಸಿದ್ದ ಇನ್ನೊಂದು ಹರಕಲು ಸೀರೆಯನ್ನೇ ಮಗ್ಗಲು ಹಾಸಿಗೆಯನ್ನಾಗಿ ಮಾಡಿದ್ದ ಶಯ್ಯೆಯಲ್ಲಿ ಪವಡಿಸಿದಾಗ ಐತನಿಗೆ ಅದು ಹಂಸತೂಲಿಕಾತಲ್ಪವಾಗಿ ಬಿಟ್ಟಿತ್ತು! +ತನ್ನ ಸರ್ವಸ್ವದಿಂದಲೂ ಅವಳ ಸರ್ವಸ್ವವನ್ನೂ ತಬ್ಬುವಂತೆ ತನ್ನೆರಡು ತೋಳುಗಳಲ್ಲಿ ಅವಳನ್ನು ಬಿಗಿದಪ್ಪಿ, ಕೆನ್ನೆಯ ಮೇಲೆ ಕೆನ್ನೆಯಿಟ್ಟು ಸಮಾಧಿಸ್ಥನಾಗಿ ಕರಗಿಯೆ ಹೋದಂತೆ ಸ್ವಲ್ಪ ಹೊತ್ತು ನಿಶ್ಚಲನಾಗಿ ಬಿಟ್ಟನು. +ಆದರೆ ಅವನ ಅಳ್ಳೆ ಹೊಡೆದುಕೊಳ್ಳುತ್ತಾ ಇದ್ದುದು ಅವಳ ಹೊಡೆದುಕೊಳ್ಳುತ್ತಿದ್ದ ಅಳ್ಳೆಗೆ ಆಪ್ಯಾಯಮಾನವಾಗಿ ಅರಿವಾಗುತ್ತಿತ್ತು. +ನಾಲ್ಕು ತೊಡೆಗಳೂ ನಾಲ್ಕು ಕೈಗಳೂ ಒಂದನ್ನೊಂದು ಬಿಗಿಯುವುದರಲ್ಲಿ ಸೆಣಸುವಂತಿದ್ದುವು. +ಅವಳ ಮೆತ್ತನೆಯ ಕುಚಗಳು ತನ್ನ ವೃಕ್ಷಕ್ಕೆ ಒತ್ತಿದ್ದಂತೆಲ್ಲ ಐತನ ಎಡದ ಕೈ ಅವಳ ಬೆನ್ನಿನ ಮೇಲೆ ಆಡುತ್ತಾ ಆಡುತ್ತಾ ಕೆಳಕೆಳಗಿಳಿದು ಅವಳ ಮೃದುಕಠಿಣ ನಿತಂಬಗಳನ್ನು ಸೋಂಕಿ, ಒತ್ತಿ, ಕೈಮುತ್ತನ್ನೊತ್ತಿ ಸೊಗಸಿದಾಗ ಅವನ ಪ್ರಜ್ಞೆ, ಜೇನುತುಪ್ಪದ ಕೆರೆಯಲ್ಲಿ ನಾಲಗೆಯಾಗಿ ಮುಳುಗಿ ಲಯವಾಗಿಬಿಟ್ಟಿತು. +ಆ ಆನಂದಕ್ಕೆ ಆ ರೋಮಾಂಚನಕ್ಕೆ ಪೀಂಚಲು ಅವಶಳಾಗಿ, ತನ್ನ ಮಾನಸಮಸ್ತದ್ವಾರದ ರತಿಕವಾಟಗಳನ್ನು ಸಂಪೂರ್ಣವಾಗಿ ಅಗಲಿಸಿ ತೆರೆದು, ತನ್ನ ಇನಿಯನ ಮನ್ಮಥಾವಿಷ್ಟ ಪೌರುಷ ಪ್ರವೇಶನಕ್ಕೆ ಸುಗಮ ಮಾರ್ಗ ಮಾಡಿಕೊಟ್ಟು, ಆತನ ಸಮಸ್ತ ಪುರುಷಕಾರವೂ ತನ್ನೊಳಗೆ ಸಂಮಗ್ನಲಗ್ನವಾಗುವಂತೆ ಸ್ವೀಕರಿಸಿದಳು…. +ಹೊರಗೆ ಸುತ್ತಲಿದ್ದ ಹಳುವಿನಲ್ಲಿ, ನೀರಿನಲ್ಲಿ, ಒಡ್ಡಿನಲ್ಲಿ, ಕೆಸರಿನಲ್ಲಿ, ಹುಳುಹುಪ್ಪಟೆ ಕಪ್ಪೆಗಳು, ಆಗಲೆ ಏಳೆಂಟು ಬಾರಿ ಸುರಿದಿದ್ದ ಮುಂಗಾರು ಮಳೆಗಳ ಪ್ರಭಾವದಿಂದ ಮತ್ತವಾದಂತೆ ಕೋಟಿಕೋಟಿಕೋಟಿ ಕೂಗುತ್ತಿದ್ದುವು, ಚೀರುತ್ತಿದ್ದುವು, ವಟಗುಟ್ಟುತ್ತಿದ್ದುವು. +ಆದರೆ ಸುಖನಿದ್ರಾ ಸಮುದ್ರದಲ್ಲಿ ಮಗ್ನವಾಗಿದ್ದ ಕಿವಿಗಳಿಗೆ ಅವು ಗಮನಕ್ಕೂ ಬರಲಿಲ್ಲ. +ನಡುರಾತ್ರಿ ಒಮ್ಮೆ ಹುಲಿಕಲ್ಲಿ ನೆತ್ತಿಯಲ್ಲಿ ಹುಲಿ ಕೂಗಿದಾಗ ಪೀಂಚಲು ಬೆದರಿದಂತೆ ಕುಮುಟಿ, ತುಸು ಸಡಿಲವಾಗಿದ್ದ ತನ್ನ ತೋಳುಗಳನ್ನು ಗಂಡನ ಮೈಗೆ ಬಿಗಿದು ಸುತ್ತಿ ಮತ್ತಷ್ಟು ಒತ್ತಿ ಮಲಗಿದ್ದಳು. +ಬೆಳಗಿನ ಜಾವದಲ್ಲಿ ಐತನಿಗೆ ತನ್ನ ಆಲಿಂಗನದಲ್ಲಿದ್ದು ತನ್ನನ್ನು ಆಲಿಂಗಿಸಿದ್ದ ಪೀಂಚಲು ಆಳುತ್ತಿರುವಂತೆ ಭಾಸವಾಯಿತು. +“ಯಾಕೆ, ಪೀಂಚಲು ಆಳುತ್ತೀಯಾ?” ಎಂದನು, ಮೆಲುದನಿಯಲ್ಲಿ ಮುದ್ದಾಗಿ ಕರೆದು. +ಅವಳು ನಿಡಿದಾಗಿ ಸುಯ್ದು “ಚಿನ್ನಕ್ಕ ಅಳುತ್ತಿದ್ದರು; +ನನಗೂ ಅಳೂ ಹಂಗಾಯ್ತು!” ಎಂದಳು. +“ಕನಸು ಕಂಡೆಯಾ ಏನು?” +“ಅಲ್ಲ ಎಚ್ಚರಾಗಿತ್ತು. +ಆ ವಾಟೆ ಹಿಂಡಲ ಹತ್ತಿರ ಅವರು ಅಳುತ್ತಿದ್ದುದು ನೆನಪಿಗೆ ಬಂತು….” +“ಅಳುವುದು ಯಾಕೆ ಸುಮ್ಮನೆ? +ಮುಕುಂದಯ್ಯ ಹೇಳಿದ ಹಾಗೆ ಮಾಡಿದರಾಯ್ತು. +ಚಿನ್ನಕ್ಕನ ಆ ಮದುವೆ ಹೇಂಗೆ ಆಗುತ್ತದೆ ನೋಡುವಾ!” ಎಂದು ಅವಳ ಕೆನ್ನೆಗೆ ಕೆನ್ನೆಯೊತ್ತಿ ಸಂತೈಸಿದನು. +ಅವಳೂ ಅಪ್ಪುಗೆಯನ್ನು ಸಡಿಲಿಸಿ, ಮಗ್ಗುಲಿಗೆ ತಿರುಗಿ, ತನ್ನ ಬತ್ತಲೆ ಬೆನ್ನನ್ನು ಅವನ ಬತ್ತಲೆ ಹೊಟ್ಟೆಗೆ ಬೆಚ್ಚಗೆ ಅನಿಸಿ ಒತ್ತಿ ಮಲಗಿದಳು. +ಐತ ತನ್ನ ಬಲಗೈಯಿಂದ ಅವಳನ್ನು ಎದೆಗೊತ್ತಿಕೊಂಡು ಮಲಗುವ ನೆವದಲ್ಲಿ ಅವಳ ನಿತಂಬ ಸುಖಾ ಸ್ವಾದನ ಮಾಡುತ್ತಾ ಕೇಳಿದನು, ಪಿಸುದನಿಯಲ್ಲಿ, ಅವಳ ಕಿವಿಯ ಬಳಿಯೆ ಬಾಯಿಬಿಟ್ಟು. +“ಹೌದಾ, ಪೀಂಚಲು, ಚಿನ್ನಕ್ಕ ಮುಕುಂದಯ್ಯನ ಲಗ್ನ ಆದ ಮೇಲೆ, ಅವರಿಬ್ಬರೂ ಹೀಂಗೆ ಮಲಗಿಕೊಳ್ತಾರೇನೇ?” +“ಇಸ್ಸಿ, ಸುಮ್ಮನೆ ಮಲಗಿ! +ನಿಮಗೆ ಬೇರೆ ಕಸುಬಿಲ್ಲ! +ಏನೆಲ್ಲ ಕೇಳುತ್ತೀರಿ!” ಎಂದು ಗದರಿಸಿ, ತನ್ನ ನಿತಂಬದೇಶವನ್ನು ಇನ್ನಷ್ಟು ಬಲವಾಗಿ ಗಂಡನ ಉದರ ಊರು ಸಂಗಮ ಪ್ರದೇಶಕ್ಕೆ ಒತ್ತಿ ಒತ್ತಿ ಹೊಕ್ಕು ಮಲಗಿದಳು. +ಬೆಟ್ಟಳ್ಳಿಯಿಂದ ಕಲ್ಲೂರಿಗೆ ಹೋಗುವ ದಾರಿಯ ಹೆಗ್ಗಾಡಿನ ಕಾಡುರಸ್ತೆಯಲ್ಲಿ ಕಮಾನು ಕಟ್ಟಿದ್ದ ಜೋಡೆತ್ತಿನ ಗಾಡಿಯೊಂದು ನಿಧಾನವಾಗಿ ಹೋಗುತ್ತಿತ್ತು. +ಅದು ಹಾಗೆ ಮೆಲ್ಲಗೆ ಹೋಗುತ್ತಿದ್ದುದಕ್ಕೆ ಕಾರಣ ಎತ್ತುಗಳೂ ಆಗಿರಲಿಲ್ಲ, ಗಾಡಿ ಹೊಡೆಯುವವನೂ ಆಗಿರಲಿಲ್ಲ; +ಹಾದಿಯೆ ಮುಖ್ಯ ಕಾರಣವಾಗಿತ್ತು. +ಅಲ್ಲಿ ಸಾಮಾನ್ಯವಾಗಿ ಯಾವ ನಾಗರಿಕ ವಾಹನವೂ ಸಂಚರಿಸುತ್ತಿರಲಿಲ್ಲ ಎಂಬುದಕ್ಕೆ ಅದರ ಕೊರಕಲೂ. +ಅಪೂರ್ವವಾಗಿ ಉಪಯೋಗಿಸುತ್ತಿದ್ದುದರ ದೆಸೆಯಿಂದಾಗಿ ಎದ್ದು ಕಾಣುತ್ತಿದ್ದ ಅದರ ಪಾಳುತನವೂ ಸಾಕ್ಷಿಯಾಗಿದ್ದುವು; + ಗಾಡಿಯ ಚಕ್ರಗಳು ಹೋಗುತ್ತಿದ್ದ ಕೊರಕಲು ಓಣಿಯಲ್ಲಿ ಬಿದ್ದು ತುಂಬಿದ್ದ ತರಗೆಲೆಗಳೂ ಒಣಕಲು ಕಡ್ಡಿಗಳೂ ಹರಿಯದೆ ಮುರಿಯದೆ ಅಕ್ಷತವಾಗಿದ್ದುವು. +ಗಾಡಿಗೆ ಕಮಾನು ಕಟ್ಟಿದ್ದ ಠೀವಿ, ಎತ್ತುಗಳ ಕೊರಳಿನಲ್ಲಿ ಇಂಚರ ಗೈಯುತ್ತಿದ್ದ ಗಂಟೆ ಗಗ್ಗರದ ಸರಗಳು, ಚೆನ್ನಾಗಿ ಕೀಸಿ ಸೊಗಸುಗೊಳಿಸಿದ್ದ ಕೋಡುಗಳ ತುದಿಯಲ್ಲಿ ಹೊಳೆಯುತ್ತಿದ್ದ ಹಿತ್ತಾಳೆಯ ಕೋಡು ಕುಂಚುಗಳು, ಆ ಕುಂಚಗಳ ತುದಿಯಲ್ಲಿ ಜೋಲಾಡುತ್ತಿದ್ದ ಬಣ್ಣದ ಕುಚ್ಚುಗಳು, ಗಾಡಿ ಹೊಡೆಯುತ್ತಿದ್ದವನು ಹಿಡಿದಿದ್ದ ಬಾರುಕೋಲಿನ ಬಣ್ಣದ ಶೃಂಗಾರ, ಅವನು ತಲೆಗೆ ಸುತ್ತಿದ್ದ ಕೆಂಪು ಎಲೆವಸ್ತ್ರ, ಅವನು ಹಾಕಿಕೊಂಡಿದ್ದ ಅಂಗಿ, ಅವನು ಮೊಣಕಾಲವರೆಗೆ ಸುತ್ತಿ ಉಟ್ಟುಕೊಂಡಿದ್ದ ಕೆಂಪಂಚಿನ ಅಡ್ಡಪಂಚೆ, ಅವನ ಕಿವಿಗಳಲ್ಲಿದ್ದ ಒಂಟಿಗಳು ಎಲ್ಲವೂ ಏನೊ ಒಂದು ಷೋಕಿಯನ್ನೂ ಸೊಗಸುಗಾರಿಕೆಯನ್ನೂ ಮನಸ್ಸಿಗೆ ತರುವಂತಿದ್ದುವು. +ಗಾಡಿಯ ಒಳಗಡೆ ಮೂವರು ಹೆಂಗಸರೂ ಮೂವರು ಹುಡುಗರೂ ಇದ್ದರು. +ಹೆಂಗಸರಲ್ಲಿ ಅತ್ಯಂತ ಕಿರಿಯವಳೆಂದು ತೋರುತ್ತಿದ್ದಾಕೆಯ ತೊಡೆಯ ಮೇಲಿದ್ದ ಕೈಗೂಸೊಂದು ಆಗಾಗ ಅಳುತ್ತಿದ್ದ ಸದ್ದು, ಗಾಡಿ ಜಟಕಾ ಹೊಡೆಯದೆ ಸಮವಾಗಿದ್ದ ರಸ್ತೆಯಲ್ಲಿ ಹೋಗುತ್ತಿದ್ದಾಗ ಮಾತ್ರ, ಗಗ್ಗರದ ಸರದ ಟಿಂಟಿಣಿಯೊಡನೆ ಬೆರೆತು ಕೇಳಿಸುವಂತಿತ್ತು. +ಗಾಡಿಯ ಹಿಂಭಾಗದಲ್ಲಿ ಕುಳಿತು ಕಾಡನ್ನೂ ಆಕಾಸವನ್ನೂ ಪ್ರಾಣಿಪಕ್ಷಿ ಜೀವನದ ವ್ಯಾಪಾರ ವಿಶೇಷಗಳನ್ನೂ ಬಾಲಕ ಸಹಜವಾದ ಕುತೂಹಲದಿಂದ ಈಕ್ಷಿಸುತ್ತಿದ್ದ ಮೂವರು ಹುಡುಗರಲ್ಲಿ ಇಬ್ಬರು, ಗಾಡಿಯ ಶಬ್ದವನ್ನೂ ಮೀರಿಸುವಂತೆ, ತಮ್ಮಿಂದಾದಷ್ಟು ಗಟ್ಟಿಯಾಗಿ ಗಳಪುತ್ತಾ, ಮಕ್ಕಳ ಟೀಕೆಟಿಪ್ಪಣಿಯ ಮುಗ್ಧ ಸಂವಾದದಲ್ಲಿ ತೊಡಗಿದ್ದರು. +ಮೂರನೆಯವನು ತನ್ನ ಸಂಗಾತಿಗಳ ಮಾತಿನಲ್ಲಿಯೂ, ಅವರು ನೋಡಿ ತೋರಿ ನಕ್ಕು ಕೇಕೆ ಹಾಕಿ, ಕೈ ಚಪ್ಪಾಳೆ ಹೊಡೆದು ಗಮನಿಸುತ್ತಿದ್ದ ಪ್ರಕೃತಿದೃಶ್ಯ ಮತ್ತು ಪಶುಪಕ್ಷಿ ಚೇಷ್ಟಿತಗಳಲ್ಲಿಯೂ ಆಸಕ್ತನಂತೆ ತೋರುತ್ತಿದ್ದರೂ ಯಾವೊಂದು ಮಾತನ್ನೂ ಆಡದೆ ನೀರವವಾಗಿದ್ದನು. +ಒಮ್ಮೊಮ್ಮೆ ಅವನು ಅತ್ಯಂತ ಅಂತರ್ಮೂಖನಾದಂತೆ ತತ್ಕಾಲ ದೇಶದಲ್ಲಿರದೆ ಇನ್ನೆಲ್ಲಿಯೋ ಇದ್ದು ಇನ್ನಾವುದನ್ನೋ ಗಮನಿಸುತ್ತಿರುವಂತೆ ಭಾಸವಾಗುತ್ತಿತ್ತು. +ಆದ್ದರಿಂದಲೆ ಒಂದು ಸಾರಿ ತಿಮ್ಮು, ಕಾಡು, ಇಬ್ಬರೂ ಒಟ್ಟಿಗೆ ಒಕ್ಕೊರಲಿನಲ್ಲಿ “ಅಲ್ನೋಡೋ! +ಅಲ್ನೋಡೋ, ಧರ್ಮೂ, ಕಾಡುಕೋಳಿ ಹುಂಜ | ಕಾಡುಕೋಳಿ ಹುಂಜ!ಅಲ್ಲಿ!ಅಲ್ಲಿ!ಅಲ್ಲಿ! +ಆ ಮುಟ್ಟಿನಾಚೀಲಿ” ಎಂದು ಕೂಗಿಕೊಂಡಾಗ ಧರ್ಮು ಕುಮುಟಿ ಬಿದ್ದು ಆಗತಾನೆ ಎಚ್ಚರಗೊಂಡಂತೆ ಗಾಬರಿಯಾಗಿದ್ದನು. +ಅವನು ಹಾಗೆ ಬೆಚ್ಚಿ ಬೆದರಿದ್ದನ್ನು ಗಮನಿಸಿದ್ದ ಬೆಟ್ಟಳ್ಳಿ ಅಜ್ಜಮ್ಮ, ಅವನ ತಾಯಿಯ ತಂಗಿಯ ಅತ್ತೆ, ಬೆಟ್ಟಳ್ಳಿ ಕಲ್ಲಯ್ಯಗೌಡರ ಹೆಂಡತಿ ದೊಡ್ಡಮ್ಮ ಹೆಗ್ಗಡತಿಯವರು, ವಯಸ್ಸಿನಲ್ಲಿ ಉಳಿದ ಇಬ್ಬರಿಗಿಂತ ಹಿರಿಯನಾಗಿದ್ದ ತಮ್ಮ ಕಿರಿಯ ಮಗ ಕಾಡುವನ್ನೂ, ಕೋಣೂರು ರಂಗಪ್ಪಗೌಡರ ಮಗ ತಿಮ್ಮುವನ್ನೂ ಕುರಿತು “ಏ ಹುಡುಗುರಾ, ಯಾಕ್ರೋ ಹಂಗೆ ಕೂಗ್ತೀರಿ?” ಎಂದು ಗದರಿಸಿದ್ದರು. +ಧರ್ಮು ಮಾತ್ರ ಏನೊಂದೂ ಮಾತಾಡದೆ, ತನ್ನ ಅವ್ವನ ಕಡೆ ಅವ್ಯಕ್ತ ದುಃಖ ಮುಖಮುದ್ರೆಯಿಂದ ನೋಡಿ, ಅಭ್ಯಾಸ ಮಾತ್ರವಾಗಿ ಒಂದು ಔಪಚಾರಿಕ ಮುಗುಳು ನಗೆ ಬೀರಿದ್ದನು. +ಚಿಂತಾಮುಖಮುದ್ರೆಯಿಂದಿದ್ದ ಹಳೆಮನೆ ದೊಡ್ಡಣ್ಣ ಹೆಗ್ಗಡೆಯವರ ಸಹಧರ್ಮಿಣಿ ರಂಗಮ್ಮ ತನ್ನ ಮಗನನ್ನು ಸಂತೈಸಲೂ ಎಂಬಂತೆ ಅವನ ತಲೆಯ ಮೇಲೆ ಕೈಯಾಡಿಸಿ, ಪಕ್ಕದಲ್ಲಿ ಶಿಶು ಚೆಲುವಯ್ಯನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕುಳಿತಿದ್ದ ತನ್ನ ತಂಗಿಯ ಬೆಟ್ಟಳ್ಳಿ ದೇವಯ್ಯಗೌಡರ ಸೌಭಾಗ್ಯವತಿ ದೇವಮ್ಮ ಕಡೆ ಅರ್ಥಪೂರ್ಣವಾಗಿ ನೋಡಿದಳು. +ದೇವಮ್ಮ ಚೆಲುವಯ್ಯನನ್ನು ತನ್ನ ಅಕ್ಕಯ್ಯನ ತೊಡೆಗೆ ಸಾಗಿಸಿದಳು. +ಧರ್ಮು ಇದ್ದಕ್ಕಿದ್ದ ಹಾಗೆ, ತನ್ನನ್ನು ಕವಿದಿದ್ದ ಮೋಡಗಳನ್ನೆಲ್ಲ ವಿಸರ್ಜಿಸಿದ ನೀಲಾಕಾಶದಂತೆ, ಸುಪ್ರಸನ್ನವದನನಾಗಿ ತನ್ನ ತಮ್ಮನನ್ನು-ತಾಯಿಯ ತಂಗಿಯ ಮಗ-ಮಾತನಾಡಿಸುತ್ತಾ ಅವನೊಡನೆ ಶಿಶುಲೀಲೆಯಲ್ಲಿ ಮಗ್ನನಾಗಿ ಬಿಟ್ಟನು. +ಇತ್ತೀಚೆಗೆ ಧರ್ಮುಗೆ ತನ್ನ ತಾಯಿಗೆ ಒದಗಿದ್ದ ಮಹಾಸಂಕಟದ ಅರ್ಥವೇನು ಎಂಬುದು ಅರಿವಾಗ ಹತ್ತಿತ್ತು. +ತಾನು ಇನ್ನೂ ಅರಿಯದ ಮೂರುನಾಲ್ಕು ವರ್ಷದ ಮಗುವಾಗಿದ್ದಾಗಲೆ ತನ್ನ ತಂದೆ ತಿರುಪತಿಗೆ ಹೋಗಿ ಹಿಂತಿರುಗಿರಲಿಲ್ಲ. +ಬಾಲ್ಯಕ್ಕೆ ಆ ದುರಂತದ ಅರಿವು ಅರ್ಥ ದುಃಖ ಅನರ್ಥ ಯಾವುದೂ ಅಷ್ಟಾಗಿ ನಾಟಿರಲಿಲ್ಲ. +ಆದರೆ ಅವನ ಚೇತನ ವಯಸ್ಸಾದಂತೆಲ್ಲಾ ಕಣ್ದೆರೆದು ಪ್ರಜ್ಞಾಪೂರ್ವಕವಾಗಿ ಗಮನಿಸುವುದನ್ನು ಕಲಿತಂತೆ, ತನ್ನ ಅವ್ವನ ದುಃಖವೂ ದುಃಸ್ಥಿತಿಯೂ ಅವನ ಹೃದಯಕ್ಕೆ ತಾಗಿದ್ದುವು. +ಆಮೇಲೆ, ತನ್ನ ಮನೆಯ ಅಥವಾ ತನ್ನ ಮಾವನ ಮನೆಯ ಹಿರಿಯರಾರೂ ತನ್ನೊಡನೆಯಾಗಲಿ ತನ್ನಿದಿರಿನಲ್ಲಾಗಲಿ ಆ ಪ್ರಸ್ತಾಪವನ್ನೇ ಎತ್ತುತ್ತಿರಲಿಲ್ಲವಾದರೂ, ಕೋಣೂರಿಗೆ ಐಗಳ ಮಠದಲ್ಲಿ ಓದುವುದಕ್ಕೆ ಹೋದ ತರುವಾಯ ಐತನಂತಹ ಆಳುಮಕ್ಕಳಿಂದಲೂ ಆ ವಿಚಾರವನ್ನು ಸ್ವಲ್ಪಮಟ್ಟಿಗೆ ಗ್ರಹಿಸಿ ಮರುಗಿದ್ದನು. +ಅಲ್ಲದೆ, ಒಮ್ಮೊಮ್ಮೆ ಅವನ ಸಣ್ಣಮಾವ (ಮುಕುಂದಯ್ಯ) ದೊಡ್ಡಮಾವ (ರಂಗಪ್ಪ ಗೌಡರು) ಕಾಗಿನಹಳ್ಳಿ ಅಜ್ಜಮ್ಮ (ದಾನಮ್ಮ ಹೆಗ್ಗಡತಿಯವರು ಮುಕುಂದಯ್ಯ, ರಂಗಪ್ಪ ಗೌಡರು, ಧರ್ಮುವಿನ ತಾಯಿ ಮತ್ತು ಬೆಟ್ಟಳ್ಳಿ ದೇವಯ್ಯನ ಹೆಂಡತಿ ದೇವಮ್ಮ ಇವರನ್ನೆಲ್ಲ ಹೆತ್ತ ತಾಯಿ) ಅತ್ತೆಮ್ಮ (ರಂಗಪ್ಪಗೌಡರ ಹೆಂಡತಿ, ತಿಮ್ಮುವ ತಾಯಿ ಮತ್ತು ತನ್ನ ತಂದೆ ಹಳೆಮನೆ ದೊಡ್ಡನ್ಣ ಹೆಗ್ಗಡೆಯವರ ತಂಗಿ.) + ಇವರೆಲ್ಲ ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದಾಗ ಕದ್ದು ನಿಂತು ಆಲಿಸಿಯೂ ಸತ್ಯಸಂಗ್ರಹ ಮಾಡಿದ್ದನು. +ಕೆಲವು ಸಾರಿ, ತನ್ನ ಇಚ್ಛೆಯಿಂದಲ್ಲದಿದ್ದರೂ, ಘಟನಾವೈಚಿತ್ರದಿಂದಲೇ ತನ್ನ ತಂದೆಗೆ ಒದಗಿರುವ ದುರಂತದ ವಿಚಾರ ಅವನ ಕಿವಿಗೆ ಬಿದ್ದಿತ್ತು. +ಹೀಗಾಗಿ, ಇತ್ತೀಚಿಗಂತೂ, ತನಗೂ ತನ್ನ ತಾಯಿಗೂ ಒದಗಿರುವ ವಿಪತ್ತಿನ ಅರಿವು ಅವನಿಗೆ ತಕ್ಕ ಮಟ್ಟಿಗೆ ಸಂಪೂರ್ಣವಾಗಿಯೆ ಗ್ರಾಹ್ಯವಾಗಿತ್ತು. +ಅದರಲ್ಲಿಯೂ ಆವೊತ್ತು ರಾತ್ರಿ ಅವರೊಡನೆ ಸನಿಹದಲ್ಲಿ ಕೋಣೂರಿನ ಜಗಲಿಯ ಮೇಲೆ ಮಲಗಿದ್ದಾಗ, ಅವನ ಸಣ್ಣ ಮಾವನಿಗೂ ಐಗಳಿಗೂ ನಡೆದ ಸಂಭಾಷಣೆಯನ್ನು ಕೇಳಿ, ಮರುದಿನ ತಾನು ಐತನನ್ನು ಜೊತೆಗೆ ಕರೆದುಕೊಂಡು ಹಳೆಮನೆಗೆ ಹೋದಾಗಿನಿಂದ ನಡೆದ ದುರ್ಘಟನಾ ಪರಂಪರೆಗಳಿಂದ ಅವನ ಶಿಶುಹೃದಯ ಜರ್ಝರಿತವಾಗಿತ್ತು. +ತನ್ನ ತಾಯಿಯನ್ನು ಹೊಡೆದು ಕೋಣೆಗೆ ತಳ್ಳಿ ಚಿಕ್ಕಯ್ಯ ಬೀಗಹಾಕಿದ್ದುದನ್ನು ಕಂಡು ಮಂಜತ್ತೆಮ್ಮನಿಂದ ನಡೆದದ್ದನ್ನೆಲ್ಲ ಕೇಳಿ, ಬೀಗ ತೆಗೆದು ತಾನೆಷ್ಟು ಬಾಗಿಲು ತಳ್ಳಿ ಏನೇನೆಲ್ಲ ಹೇಳಿಕೊಂಡು ಅತ್ತರೂ ಅವ್ವ ಓಕೊಳ್ಳದೆ ಬಾಗಿಲು ತೆಗೆಯದೆ ಇದ್ದು, ಆಮೇಲೆ ಕೋಣೂರಿನಿಂದ ಸಣ್ಣ ಮಾವ ದೊಡ್ಡಮಾವ ಬಂದವರು ಕೊಡಲಿಯಿಂದ ಬಾಗಿಲು ಒಡೆದಮೇಲೆ ಒಳಗೆ ಹೋಗಿ ಪ್ರಜ್ಞೆತಪ್ಪಿ ಮಂಚದ ಮೇಲೆ ಬಿದ್ದಿದ್ದ ತನ್ನ ತಾಯಿಯನ್ನು ನೋಡಿದಾಗ, ಧರ್ಮು ಅವಳ ಪಾದ ಹಿಡಿದುಕೊಂಡು ಆಲಿಸಿದವರೆಲ್ಲರ ಕರುಳು ಬೇಯುವಂತೆ ಅತ್ತಿದ್ದನು. +ಮರುದಿನ ಬೆಟ್ಟಳ್ಳಿಯ ಗಾಡಿ ಅಜ್ಜಯ್ಯನನ್ನು (ಸುಬ್ಬಣ್ಣ ಹೆಗ್ಗಡೆ) ಕರೆತಂದಾಗ ಅವರ ಮೊಣಕಾಲುಗಳನ್ನು ಅಪ್ಪಿ ಬಿಕ್ಕಿ ಬಿಕ್ಕಿ ರೋದಿಸಿದ್ದನು. +ಅಜ್ಜಯ್ಯನಿಗೆ ಸಿಟ್ಟು ಬಂದು, ಚಿಕ್ಕಯ್ಯನನ್ನು (ತಿಮ್ಮಪ್ಪ ಹೆಗ್ಗಡೆ) ಹೀನಾಯಮಾನವಾಗಿ ಬೈದು, ಅವನ ಕಪಾಳಕ್ಕೆ  ಹೊಡೆಯಲು ಹೋದಾಗ, ಅವನು ತಳ್ಳಿದ ರಭಸಕ್ಕೆ ಅವರು ತೆಣೆಯಿಂದ ಕೆಳಗೆ ಉರುಳಿಬಿದ್ದು ಮೂರ್ಛೆ ಹೋಗಿದುದ್ದನ್ನೂ ಧರ್ಮು ಸ್ತಂಭಿತವಾಗಿ ಕಂಡಿದ್ದನ್ನು! +ಆಮೇಲೆ ಅಜ್ಜಯ್ಯ ಹಾಸಿಗೆ ಹಿಡಿದಿದ್ದು, ಎರಡು ಮೂರು ದಿನಗಳಾದರೂ ಇನ್ನೂ ಎದ್ದಿರಲಿಲ್ಲ, ಕೋಣೂರು ದೊಡ್ಡಮಾವ, ಸಣ್ಣಮಾವ, ಬೆಟ್ಟಳ್ಳಿ, ದೇವ್ಯೆ ಚಿಕ್ಕಪ್ಪಯ್ಯು ಎಲ್ಲರೂ ಒತ್ತಿ ಒತ್ತಿ ಹೇಳಿ ಹೇಳಿ ಒಪ್ಪಿಸಿದ ಮೇಲೆ ತನ್ನ ಅವ್ವ ಬೆಟ್ಟಳ್ಳಿಗೆ ಕೆಲವು ದಿನಗಳ ಮಟ್ಟಿಗೆ ಹೋಗಿರಲು ಒಪ್ಪಿದಳು. +ಅವಳೊಡನೆ ತಾನೂ ಬೆಟ್ಟಳ್ಳಿಗೆ ಬಂದು, ಕಲ್ಲೂರು ದೇವಸ್ಥಾನಕ್ಕೆ ಸತ್ಯನಾರಾಯಣ ವ್ರತ ಮಾಡಿಸಲು ಹೋಗುವ ತನ್ನ ತಾಯಿಯನ್ನೂ, ಅತ್ತಿಗೆಯನ್ನೂ ಜೊತೆಗೊಳ್ಳು ತಮ್ಮ ಮನೆ ಬೆಟ್ಟಳ್ಳಿಗೆ ಬಂದಿದ್ದ ಗೆಳೆಯ ಕಾಡುವನ್ನೂ ಅವನೊಡನೆ ಇದ್ದ ತಿಮ್ಮುವನ್ನೂ ಕೂಡಿಕೊಂಡಿದ್ದನು. +ಬೆಟ್ಟಳ್ಳಿಗೆ ಬಂದ ಮೇಲೆ ಧರ್ಮುಗೆ ಒಂದು ಅಪೂರ್ವ ಅನುಭವವಾಗಿತ್ತು. +ನಿಚ್ಚರೋತೆಯ ತಮ್ಮ ಮನೆಯ ವಾತಾವರಣದಿಂದ ಹೊರಬಿದ್ದು ಬೆಟ್ಟಳ್ಳಿ ಮನೆಯ ಸಂತೋಷದ ಮನೋವಲಯಕ್ಕೆ ಪ್ರವೇಶಿಸಿದ್ದುದರ ಪರಿಣಾಮವಾಗಿದ್ದರೂ ಆಗಿರಬಹುದು; +ತನ್ನ ಒಡನಾಡಿಗಳಾಗಿದ್ದ ಕಾಡು, ತಿಮ್ಮು ಅವರನ್ನು ಮರಳಿ ಕೂಡಿಕೊಂಡು ಆತ ಅಲೆದಾಟಗಳಲ್ಲಿ ಮಗ್ನನಾಗಿ ಮನಸ್ಸನ್ನು ದುಃಖಚಿಂತನೆಯಿಂದ ತಾತ್ಕಾಲಿಕವಾಗಿಯಾದರೂ ದೂರಮಾಡಿಕೊಂಡುದರ ಫಲವಾಗಿಯೂ ಇರಬಹುದು; +ಅವರೆಡಕ್ಕಿಂತಲೂ ಅತಿಶಯವಾಗಿ ಪ್ರಭಾವಶಾಲಿಯಾಗಿದ್ದುದೆಂದರೆ, ಅವನ ತಾಯಿಯಲ್ಲಿ ಹಠಾತ್ತನೆ ತೋರಿಬಂದಿದ್ದ ಭಾವಪರಿವರ್ತನೆ! +ತನ್ನ ಅವ್ವನ ಕಣ್ಣಲ್ಲಿ ಹೊಸಬೆಳಕು ಮೂಡಿ, ತನ್ನ ಅಕ್ಕರೆಯ ಆ ಮೊಗದಲ್ಲಿ ‘ಗೆಲವು’ ಕಾಣಿಸಿದುದನ್ನು ಕಂಡ ಧರ್ಮುವ ಹೃದಯವೂ ಗೆಲುವಾಗಿ ಬಿಟ್ಟಿತ್ತು. +ಇಲ್ಲಿ, ಈಗ, ಯಾರೂ ಅವಳನ್ನು ‘ಹುಚ್ಚು ಹೆಗ್ಗಡ್ತಿ’ ಎಂದು ಕರೆಯುತ್ತಲೂ ಇರಲಿಲ್ಲ, ಕರೆಯುವಂತೆಯೂ ಇರಲಿಲ್ಲ. +ಅವಳ ಮನಸ್ಸು, ಮಾತು, ನಡತೆ ಮತ್ತು ಎಲ್ಲ ಕ್ರಿಯೆ ಎಲ್ಲ ಇತರ ಸಾಧಾರಣವಾಗಿ ಸರ್ವರಿಗೂ ಹರ್ಷದಾಯಕವಾಗಿತ್ತು. +ಆ ಪರಿವರ್ತನೆಗೆ ಮೂಲಕಾರಣವಾಗಿದ್ದವನೆಂದರೆ ಚೆಲುವಯ್ಯ! +ಬೆಟ್ಟಳ್ಳಿಗೆ ಬಂದು ತನ್ನ ತಂಗಿಯ ಮಗನನ್ನು, ಬಾಲೆಯಾಡಿಸುವ ಹುಡುಗಿಯ ಸೊಂಟದ ಮೇಲೆ, ಕಂಡಾಗಣಿಂದ ಧರ್ಮುವ ತಾಯಿ ರಂಗಮ್ಮಗೆ ತನ್ನ ಕಷ್ಟ ಸಂಕಟ ದುಃಖ ಎಲ್ಲ ಹೆಡೆಮುಚ್ಚಿದಂತಾಗಿ ಮನಸ್ಸಿಗೆ ಏನೋ ಒಂದು ಅನಿರ್ವಚನೀಯವಾದ ನೆಮ್ಮದಿ ಒದಗಿದಂತಾಗಿತ್ತು. +ಅವಳು ಅವನನ್ನು ಎವೆಯಿಕ್ಕದೆ ನೋಡುತ್ತಾ ನಿಂತುದನ್ನು ನೋಡಿ ಪಕ್ಕದಲ್ಲಿಯೆ ನಿಂತಿದ್ದ ದೇವಮ್ಮಗೆ ತನ್ನ ಅಕ್ಕಯ್ಯನ ಮನಃಸ್ಥಿತಿಯ ವಿಚಾರದಲ್ಲಿ ತುಸು ಕಳವಳ ಉಂಟಾಗಿತ್ತು. +ಅವಳನ್ನು ‘ಹುಚ್ಚು ಹೆಗ್ಗಡತಿ’ ಎಂದು ಜನರು ಕರೆಯುತ್ತಿದ್ದುದು ನೆನಪಿಗೆ ಬಂದು, ಆಕೆಗೆ ಆಗಾಗ ತಲೆ ಕೆಟ್ಟಂತಾಗಿ ಹುಚ್ಚಿಯಂತೆ ವರ್ತಿಸಿ ಬಿಡುವ ಸಂಭವ ಉಂಟು ಎಂಬುದನ್ನೂ ನೆನೆದು, ತನ್ನ ಕಂದನಿಗೆ ಏನಾದರೂ ಅಮಂಗಳವಾದೀತೆಂದು ಒಳಗೊಳಗೆ ಬೆದರಿದ್ದಳು. +ಆದರೆ ಅದನ್ನು ತೋರಗೊಡದೆ, ತನ್ನ ಕಂದನನ್ನು ಹುಡುಗಿಯ ಸೊಂಟದಿಂದ ತಾನೆ ಎತ್ತಿಕೊಂಡು, ಅಕ್ಕನ ಮುಂದೆ ನಿಂತು ತೋರುತ್ತಾ “ನಿನ್ನ ದೊಡ್ಡಮ್ಮನ್ನ ನೋಡೋ, ಮಾತಾಡ್ಸೋ ಏ ತುಂಟಾ” ಎಂದಿದ್ದಳು. +ಚೆಲುವಯ್ಯನೂ ತನ್ನ ದೊಡ್ಡಮ್ಮನ ಕಡೆ ಕಣ್ಣರಳಿ ನೋಡುತ್ತಾ, ಬಿಜಿಲು ಬಿಜಿಲು ದನಿಮಾಡುತ್ತಾ, ಅವಳೇ ಎತ್ತಿಕೊಳ್ಳಲಿ ಎಂಬಂತೆ, ತನ್ನ ಪುಟ್ಟ ಇನಿದೋಳುಗಳನ್ನು ಮುಂದಕ್ಕೆ ಚಾಚಿ ತನ್ನ ಅಮ್ಮನ ವಕ್ಷದಿಂದ ಚಿಮ್ಮತೊಡಗಲು, ರಂಗಮ್ಮ ಅಕ್ಕರೆಯುಕ್ಕಿ ಅವನನ್ನು ಎತ್ತಿಕೊಂಡು, ತನ್ನ ಎದೆಗವುಚಿ, ಕೆನ್ನೆಗೆ ಮೊಗವಿಟ್ಟು, ಮುಂಡಾಡಿದ್ದಳು. +ಆ ಮುದ್ದಾಟದಲ್ಲಿ ಎಂತಹ ಅದ್ಭುತ ಪವಾಡ ನಡೆದು ಹೋಗಿತ್ತೆಂಬುದನ್ನು ಅಲ್ಲಿದ್ದವರಾರೂ ಗ್ರಹಿಸಲಿಲ್ಲ. +ಆದರೆ ಒಂದು ವಿಷಯ ಮಾತ್ರ ಎಲ್ಲರಿಗೂ ಹೃದ್ಗೋಚರವಾಗಿತ್ತು. + ಆ ಕ್ಷಣದಿಂದ ರಂಗಮ್ಮ ಬೇರೆಯ ವ್ಯಕ್ತಿಯಾಗಿದ್ದಳು! +ಅವಳ ಮನಸ್ಸು ವಿಷಣ್ಣತೆಯ ಪೊರೆಗಳಚಿ ಸುಪ್ರಸನ್ನವಾಗಿಬಿಟ್ಟಿತ್ತು! +ಆ ವ್ಯತ್ಯಾಸ ಎಷ್ಟು ಆಶ್ಚರ್ಯಕರವಾಗಿತ್ತು ಎಂದರೆ ಕೆಲವರಿಗಂತೂ ಅದೂ ಅವಳ ಹುಚ್ಚಿನ ಮತ್ತೊಂದು ರೀತಿಯೋ ಏನೋ ಎಂಬ ಶಂಕೆ ತಲೆದೋರಿತ್ತು. +ತನ್ನ ತಾಯಿ ತನಗೆ ಬುದ್ಧಿ ತಿಳಿದ ಮೇಲೆ ಅನೇಕ ವರ್ಷಗಳಿಂದಲೂ ಸರಿಯಾಗಿ ಉಣದೆ, ಉಡದೆ, ಮೀಯದೆ, ಬಾಚಿಕೊಳ್ಳದೆ ಕೃಶಳಾಗಿ, ಮಲಿನವಸ್ತ್ರೆಯಾಗಿ, ನೋಡುವುದಕ್ಕೆ ಹುಚ್ಚಿಯಂತೆಯೆ ತೋರುತ್ತಿದ್ದವಳು ಇದ್ದಕ್ಕಿದಂತೆ ಇತರ ಮುತ್ತೈದೆ ಗರತಿಯರಂತೆ ಇರತೊಡಗಿದುದನ್ನು ಕಂಡು ಧರ್ಮುಗೆ ಕಾಡುಪಾಲಾಗಿದ್ದ ಅವ್ವ; +ಮತ್ತೆ ಮನೆಗೆ ಮರಳಿದಷ್ಟು ಹರ್ಷವಾಗಿತ್ತು. +ತಾಯಿ ಮೂರು ಹೊತ್ತೂ ಚೆಲುವಯ್ಯನನ್ನು ಎತ್ತಿಕೊಂಡೊ, ಅವನಿಗೆ ಉಣಿಸುತ್ತಲೊ, ಸೀರೆ ಸರಿಸಿ ನೀಡಿದ ಕಾಲಿನ ಬತ್ತಲೆ ತೊಡೆಗಳ ಮೇಲೆ ಅವನನ್ನು ಮಲಗಿಸಿಕೊಂಡು ನೀರುಹೊಯ್ದು ಮೈತಿಕ್ಕಿ ಮೀಯಿಸುತ್ತಲೋ, ರಾತ್ರಿ ತೊಟ್ಟಿಲಿಗೆ ಹಾಕಿ ಮಲಗಿಸುವ ಮುನ್ನ ಪದ್ಧತಿಯಂತೆ ಮೈಗೆ ಎಣ್ಣೆ ತಿಕ್ಕುತ್ತಲೊ ಅಥವಾ ತೊಟ್ಟಿಲು ತೂಗುತ್ತಲೊ ಹರ್ಷಚಿತ್ತಳಾಗಿರುವುದನ್ನು ಕಂಡು ಧರ್ಮವೂ ಚೆಲುವಯ್ಯನನ್ನು, ತನ್ನ ಗೆಳೆಯರು ಕಾಡು ತಿಮ್ಮು ಪರಿಹಾಸ್ಯಮಾಡುವಷ್ಟರ ಮಟ್ಟಿಗೆ, ಓಲೈಸುತ್ತಿದ್ದನು. +ಬೆಟ್ಟಳ್ಳಿಯ ಗಾಡಿ ಇವರನ್ನೆಲ್ಲ ಕರೆದುಕೊಂಡು ಕಲ್ಲೂರು ದೇವಸ್ಥಾನಕ್ಕೆ ಸತ್ಯನಾರಾಯಣ ವ್ರತಾಚರಣೆಗಾಗಿ ಹೋಗಲು ಗೊತ್ತಾದ ದಿನಕ್ಕೆ ಹಿಂದಿನ ದಿನ ಸಾಯಂಕಾಲ ಕೋಣೂರಿನಿಂದ ಮುಕುಂದಯ್ಯ ಬಂದಾಗ, ಧರ್ಮು ತಿಮ್ಮು ಕಾಡು ಮೂವರೂ ಅವನ ಸುತ್ತಮುತ್ತ ಕೈಹಿಡಿದುಕೊಂಡೂ ಬಟ್ಟೆ ಹಿಡಿದುಕೊಂಡೂ ಚಪ್ಪಾಳೆ ಹೊಡೆಯುತ್ತಾ ಕುಣಿದಾಡಿದ್ದರು. +ಒಬ್ಬನಿಗೆ ಸಣ್ಣಮಾವ, ಇನ್ನೊಬ್ಬನಿಗೆ ಚಿಕ್ಕಯ್ಯ, ಮತ್ತೊಬ್ಬನಿಗೆ ಸಣ್ಣಭಾವ ಆಗಿದ್ದ ಮುಕುಂದಯ್ಯ ಹುಡುಗರೊಡನೆ ಹುಡುಗನಾಗಿ, ಅವರ ಬಾಲಚೇಷ್ಟೆಗಳಲ್ಲೆಲ್ಲ ಭಾಗಿಯಾಗಿ ಅವರನ್ನು ನಗಿಸಿ ಕುಣಿಸಿ ಸಂತೋಷಪಡಿಸುತ್ತಿದ್ದುದರಿಂದ ಅವನನ್ನು ಕಂಡರೆ ಹುಡುಗರಿಗೆಲ್ಲ ಖುಷಿಯೋ ಖುಷಿ! +ತೀರ್ಥಹಳ್ಳಿಗೆ ಪಾದ್ರಿ ಜೀವರತ್ನಯ್ಯನ ಜೊತೆ ಹೋಗಿ ಅಷ್ಟು ಹೊತ್ತಿಗಾಗಲೆ ಹಿಂದಿರುಗಿ ಬಂದಿರಬಹುದಾಗಿದ್ದ ಮಗಳು ಅನಂತಯ್ಯ ಆ ಗೋಸಾಯಿ ತನ್ನ ತಂದೆ ಹೌದೊ ಅಲ್ಲವೊ ಎಂಬುದರ ವಿಚಾರವಾಗಿ ಏನಾದರೂ ಖಚಿತವಾರ್ತೆಯನ್ನು ತಂದಿರಬಹುದೆಂದು ಊಹಿಸಿ, ತಿಳಿಯಲು ಕಾತರನಾಗಿದ್ದ ಧರ್ಮಗೆ ನಿರಾಶೆಯಾಯಿತು. +ಸಣ್ಣಮಾವ ಆ ಸುದ್ದಿಯನ್ನೇ ಎತ್ತಲಿಲ್ಲ. +ಧರ್ಮೂಗೂ ಆ ಪ್ರಸ್ತಾಪವೆತ್ತಲು ಧೈರ್ಯ ಬರಲಿಲ್ಲ. +ಆದರೂ ಅವನು ಕಿವಿಯಾಗಿ ಕಣ್ಣಾಗಿ, ಸಣ್ಣಮಾವ ದೇವೈಚಿಕ್ಕಪ್ಪಯ್ಯನೊಡನೆ ಕಲ್ಲಜ್ಜಯ್ಯನೊಡನೆ ಸೇರೆಗಾರ ಸುಬ್ಬಣ್ಣಸೆಟ್ಟರೊಡನೆ ಮಾತಾಡುವಾಗಲೆಲ್ಲ ಏನಾದರೂ ನೆವಮಾಡಿಕೊಂಡು ಅವರ ಸಂವಾದವನ್ನು ಆಲೈಸುವಷ್ಟು ಸಮೀಪದಲ್ಲಿಯೆ ಸುಳಿಯುತ್ತಿದ್ದನು. +ಅದರಿಂದಲೂ ಏನೂ ಪ್ರಯೋಜನವಾಗಲಿಲ್ಲ. +ಏಕೆಂದರೆ ಧರ್ಮುವಿನ ಸಂಚು ಮುಕುಂದಯ್ಯನಿಗೂ ಹೊಳೆದುಬಿಟ್ಟಿತ್ತಾದ್ದರಿಂದ ಅವನೂ ಯಾವುದೊ ರಹಸ್ಯವನ್ನು ದೊಡ್ಡವರೊಡನೆ ತುಂಬ ಕೆಳದನಿಯಲ್ಲಿ ಮಾತನಾಡುತ್ತಿದ್ದು, ಧರ್ಮು ಸಮೀಪಕ್ಕೆ ಸುಳಿದೊಡನೆ ಆ ಪ್ರಸ್ತಾಪವನ್ನೆ ತುಂಡುಗಡಿಸಿ, ಇನ್ನೇನನ್ನೊ-ತೋಟ ಗದ್ದೆ ಅಡಕೆಧಾರಣೆ ಷಿಕಾರಿ ಇತ್ಯಾದಿಗಳ ವಿಚಾರವಾಗಿ – ಮಾತನಾಡುತ್ತಿದ್ದವನಂತೆ ದನಿ ಏರಿಸಿ ಹೇಳತೊಡಗುತ್ತಿದ್ದನು! +ಸಾಲದ್ದಕ್ಕೆ ಬೇರೆ, ಕತ್ತಲಾದ ಮೇಲೆ ಜಗಲಿಯಲ್ಲಿ, ಆಗಿನ ಕಾಲಕ್ಕೆ ಆ ಪ್ರಾಂತಕ್ಕೇ ಸುವಿಶೇಷವಾಗಿ ಬೆಟ್ಟಳ್ಳಿ ಮನೆಯ ನವನಾಗರಿಕತೆಯ ಸಾಮಗ್ರಿಗಳಾಗಿದ್ದ ಲಾಟೀನು, ಲಾಂದ್ರ, ಲ್ಯಾಂಪುಗಳ ಉಜ್ವಲ ಪ್ರಕಾಶದಲ್ಲಿ ಮುಕುಂದಯ್ಯ ಹುಡುಗರನ್ನೆಲ್ಲ ಜಮಾಯಿಸಿ ಕುಮ್ ಚಟ್ ಹೊಡೆಯಿಸಿದ್ದನು; +ಲಾಗ ಹಾಕಿಸಿ ನಗಿಸಿದ್ದನು; +ಕುಸ್ತಿ ಮಾಡಿಸಿದ್ದನು; +ಮಗ್ಗಿ ಹೇಳಿಸಿ, ಗೋವಿನ ಕಥೆ ಹಾಡಿಸಿದ್ದನು. +ಕಡೆಗೆ, ಸೇರೆಗಾರ ಸುಬ್ಬಣ್ಣಸೆಟ್ಟರೂ ತಾನೂ ಸೇರಿ ಜೈಮಿನಿಯನ್ನು ರಾಗವಾಗಿ ಓದಿ ಪ್ರಸಂಗವನ್ನೂ ನಡೆಯಿಸಿದ್ದನು. +ಬಲ್ಲವರಿಗೆ ಮುಕುಂದಯ್ಯನ ಉದ್ದೇಶ ಸ್ಪಷ್ಟವಾಗಿತ್ತು; +ಬೆಟ್ಟಳ್ಳಿಗೆ ಬಂದ ಮೇಲೆ ತನ್ನ ಅಕ್ಕ ಮತ್ತು ಅಕ್ಕನ ಮಗ ಇಬ್ಬರೂ ಚೆಲುವಯ್ಯನ ಸಂಗದಲ್ಲಿ ಹರ್ಷಚಿತ್ತರಾಗಿದ್ದಾರೆ ಎಂಬುದನ್ನು ಕೇಳಿ ತಿಳಿದಿದ್ದ ಅವನಿಗೆ ಅವರ ಆ ಗೆಲುವಿಗೆ ಹಾನಿತರುವ ವಾರ್ತೆಯನ್ನು ಬಹಿರಂಗಪಡಿಸಲು ಇಷ್ಟವಿರಲಿಲ್ಲ; +ಮಾತ್ರವಲ್ಲ, ಅವರ ಮನಸ್ಸನ್ನು ಆ ವಿಚಾರದಿಂದ ದೂರವಾಗಿಸಬೇಕೆಂಬುದೂ ಅವನ ಇಚ್ಛೆಯಾಗಿತ್ತು. +ಆದ್ದರಿಂದಲೇ, ಧರ್ಮು ಮೈಮರೆತಂತೆ ತಲ್ಲೀನನಾಗಿ ಚಂದ್ರೂಸನ ಕಥೆಯನ್ನು ಕೇಳಿ, ಭಗವದ್ ಭಕ್ತಿ ಎಂತಹ ಸಂಕಟಗಳನ್ನೂ ನಿವಾರಿಸುತ್ತದೆ ಎಂಬ ಆಶ್ವಾಸನೆಗೆ ಭಾವವುಕ್ಕಿ ಕಣ್ಣೀರು ಕರೆಯುತ್ತಿದ್ದುದನ್ನು ಗಮನಿಸಿದಾಗ ಮುಕುಂದಯ್ಯನಿಗೆ ಸಂತೃಪ್ತಿಯಾಗಿತ್ತು. +ಮರುದಿನ ಕಲ್ಲೂರಿಗೆ ಹೋಗುತ್ತಿದ್ದಾಗ ಗಾಡಿಯ ಮೇಲೆ ತನ್ನ ಗೆಳೆಯರೊಡನೆ ಕುಳಿತಿದ್ದಾಗ ಧರ್ಮು ಅಂತರಮುಖಿಯಾಗಿ ಮನಸ್ಸಿನಲ್ಲಿ ಮೆಲುಕು ಹಾಕುತ್ತಿದ್ದುದೂ ಅದನ್ನೆ! +ಅಲ್ಲೊಂದೆಡೆ ದಾರಿಯ ಪಕ್ಕದಲ್ಲಿದ್ದ ರಂಜದ ಮರದಿಂದ ಹೂವು ಉದುರಿ ನಿಬಿಡವಾಗಿ ಬಿದ್ದಿದ್ದು ಅದರ ಕಂಪು ಘಮ್ಮೆಂದು ಬರುತ್ತಿದ್ದುದನ್ನು ಗಮನಿಸಿದೊಡನೆ ತಿಮ್ಮವೂ ಕಾಡುವೂ, ಅಜ್ಜಮ್ಮ ‘ತಡೆಯಿರೋ; +ತಡೆಯಿರೋ; ಹಾರಬೇಡಿ; ಗಾಡಿ ನಿಲ್ಲಿಸುತ್ತಾನೆ!’ ಎಂದು ಕೂಗಿಕೊಳ್ಳುತ್ತಾ ಗಾಡಿ ಹೊಡೆಯುವವನಿಗೆ ‘ಏ ಬಚ್ಚಾ, ಗಾಡಿ ನಿಲ್ಲಿಸೋ, ಹುಡುಗರು ಇಳೀಬೇಕಂತೆ’ ಎನ್ನುತ್ತಿರುಷ್ಟರಲ್ಲಿಯೆ ಗಾಡಿಯ ಹಿಂಭಾಗದಿಂದ ಕೆಳಗೆ ಹಾರಿಯೆಬಿಟ್ಟರು! +ಕಾಡು ಹೇಗೋ ತತ್ತರಿಸಿ ನಿಂತನು; + ತಿಮ್ಮು ಬಿದ್ದು ಎರಡುರುಳು ಉರುಳಿ, ಕೈಕಾಲು ಕೀಸಿಕೊಂಡು, ಸತ್ಯರಾಯಣೋತ್ಸವಕ್ಕಾಗಿ ಉಟ್ಟುಕೊಂಡಿದ್ದ ಅಡ್ಡಪಂಚೆಗೂ ತೊಟ್ಟಿದ್ದ ಬನೀನಿನ ತೋಳಿಗೂ ರಕ್ತದ ಕಲೆ ಕೆಂಪೇರುವಂತೆ ಮಾಡಿಕೊಂಡನು. +ಸಾಲದ್ದಕ್ಕೆ ತನ್ನನ್ನು ನೂಕಿ ಬೀಳಿಸಿದವನು ಕಾಡಣ್ಣನೇ ಎಂದು ಕಿರಿಚಿ, ಅವನ ಮೈಮೇಲೆ ಬಿದ್ದು ಮುಖ ಮೋರೆ ಎನ್ನದೆ ಗುದ್ದಿಯೂ ಬಿಟ್ಟನು! +ಧರ್ಮು ಬೇಗ ಬೇಗನೆ, ಅಷ್ಟರಲ್ಲಿಯೆ ನಿಂತಿದ್ದ ಗಾಡಿಯಿಂದ ಕೆಳಗೆ ಹಾರಿ, ಅವರಿಬ್ಬರ ನಡುವೆ ನುಗ್ಗಿ, ಜಗಳ ಬಿಡಿಸಬೇಕಾಯಿತು…. +ಗಾಡಿ ಮುಂಬರಿದು ಕಾಡನ್ನು ದಾಟಿ ಒಂದು ಗದ್ದೆ ಕೋಗಿನ ಹತ್ತಿರಕ್ಕೆ ಬಂದಾಗ ಅಡೆಹಳ್ಳವೊಂದು ಅಡ್ಡಬಂದಿತು. +ಗಾಡಿ ನಿಲ್ಲಿಸಿ, ಎತ್ತುಗಳ ಕೊರಳು ಬಿಚ್ಚಿದ ಮೇಲೆ ಎಲ್ಲರೂ ಇಳಿದರು. +ಹೆಂಗಸರು ಮೂವರೂ ಸೇರಿ, ವೀಳೆಯದೆಲೆಯಲ್ಲಿ ಅಡಕೆಯನ್ನು ಮಡಿಚಿಟ್ಟು. +ಪದ್ಧತಿಯಂತೆ ಗಂಗೆಗೆ ವೀಳೆಯ ಅರ್ಪಿಸುವ ಶಾಸ್ತ್ರ ಮಾಡಿದರು. +ಚೆಲುವಯ್ಯನ ಮೇಲೆ ‘ಗಂಗವ್ವಾ ಒಳ್ಳೇದು ಮಾಡಮ್ಮಾ’ ಎಂದು ಪ್ರಾರ್ಥಿಸಿ ತೀರ್ಥ ಚಿಮುಕಿಸಿದರು. +ಹುಡುಗರು ಹಳ್ಳದ ಬಿಳಿಯ ಕಲ್ಲುಗುಂಡುಗಳನ್ನು ತೆಗೆದೆತ್ತಿ ಕಪ್ಪೆಗಳಿಗೆ ಗುರಿಕಟ್ಟಿ ಹೊಡೆಯುವ ಪಂಥದಲ್ಲಿ ತೊಡಗಿದ್ದರು!… +ಹಳ್ಳವನ್ನು ದಾಟಿ ಗಾಡಿ ಗದ್ದೆಕೋಗಿನ ಮೂಲೆಗೆ ಹೋದಾಗ, ಹಾದಿಯ ಬಳಿಯೆ ಇದ್ದ ಹಳೆಪೈಕದವರ ಮನೆಯ ತಡಬೆಗೆ ವಾಲಿಸಿ ನಿಲ್ಲಿಸಿದ್ದ ಬೈಸಿಕಲ್ಲು ಕಣ್ಣಿಗೆ ಬಿತ್ತು. +ಅಲ್ಲಿಯೆ ಪಕ್ಕದಲ್ಲಿದ್ದ ಅಗೋಡಿಯಲ್ಲಿ ಆರುಕಟ್ಟಿ ಉರುಳಿದ್ದ ಆ ಮನೆಯ ಮುದುಕ ಯಜಮಾನ ಗಾಡಿಯನ್ನು ಗುರುತಿಸಿ, ಮೇಣಿಯನ್ನು ಬೇರೆಯವನ ಕೈಗೆ ಕೊಟ್ಟು, ಓಡಿಬಂದು ‘ದ್ಯಾವೇಗೌಡ್ರು, ಮುಕುಂದೇಗೌಡ್ರು ಇಲ್ಲೆ ಷಿಕಾರಿಮಾಡಿ ಒಂದು ಹಂದೀ ಹಸಿಗೆ ಮಾಡಿಸ್ತಿದಾರೆ. +ಗಾಡಿ ಬರಾಕೂ ಹೇಳಿ ನಿಲ್ಲಿಸು ಅಂತಾ ಹೇಳಿದ್ರು ನನ್ನ ಹತ್ರ’ ಎಂದನು. +“ನಾನು ಹೇಳ್ದೆ ‘ದೇವರ ಕೆಲಸಕ್ಕೆ ಹೋಗುವಾಗ ಕೋವಿ ಯಾಕ್ರೋ ತಗೊಂಡು ಹೋಗ್ತೀರಿ?’ ಅಂತಾ. +ನನ್ನ ಮಾತು ಎಲ್ಲಿ ಕೇಳ್ತಾರೆ? +ಇಬ್ಬರೂನೂ ಒಂದೇ ಬೈಸಿಕಲ್ಲಿನ ಮ್ಯಾಲೆ ಹತ್ತಿಕೊಂಡು, ಕೋವೀನೂ ಹಿಡುಕೊಂಡು, ‘ನಾವ್ ಮುಂದೆ ಹೋಗ್ತಾ ಇರ್ತೀವಿ; ನೀವ್ ನಿಧಾನವಾಗಿ ಗಾಡೀಲಿ ಬನ್ನಿ’ ಅಂತಾ ಹೊಲ್ಟರು. +ಈಗ ನೋಡಿದ್ಯಾ? +ಹಂದಿ ಹೊಡಕೊಂಡು, ಹಸಿಗೆ ಮಾಡಿಸ್ತಾ ಕೂತಾರೆ!” ದೊಡ್ಡಮ್ಮ ಹೆಗ್ಗಡಿತಿಯವರು ತಮ್ಮ ಅಸಮಾಧಾನವನ್ನು ಗೊಣಗುತ್ತಾ ‘ಏ ಬಚ್ಚಾ, ಎತ್ತಿನ ಕೊರಳು ಬಿಚ್ಚಿ, ಹೋಗಿ ಕೇಳಿಕೊಂಡು ಬಾರೋ, ‘ನಾವು ಮುಂದೆ ಹೋಗಾದೇನು?’ ಅಂತಾ ದೊಡ್ಡಮ್ಮ ಕೇಳ್ತಾರೆ ಅನ್ನು” ಎಂದು ಗಾಡಿ ಹೊಡೆಯುತ್ತಿದ್ದವನಿಗೆ ಬೆಸಸಿದರು. +ಅವನು ಅವರು ಹೇಳಿದಂತೆ ಮಾಡಿ, ಹಂದಿ ಹಸಿಗೆಯಾಗುತ್ತಿದ್ದ ಜಾಗಕ್ಕೆ ಹಳೆಪೈಕದವನೊಡನೆ ಹೊರಡಲು, ಮೂವರು ಹುಡುಗರೂ ಕುತೂಹಲದಿಂದ ತಕಪಕನೆ ಕುದಿಯುತ್ತಾ ಅವರನ್ನು ಹಿಂಬಾಲಿಸಿದರು. +ಅವ್ವ, ಅಜ್ಜಮ್ಮ ಕೂಗಿ ಕರೆಯುತ್ತಿದ್ದುದನ್ನು ಒಂದಿನಿತೂ ಲೆಕ್ಕಿಸದೆ. ‘ಗಂಡು ಮಕ್ಕಳ ಹಣೆಬರಾನೆ ಹೀಂಗೆ!’ ಎಂದರು ದೊಡ್ಡಮ್ಮ ಹೆಗ್ಗಡಿತಿಯವರು ದೇವಮ್ಮ ತನ್ನ ಅಕ್ಕನ ತೊಡೆಯ ಮೇಲಿದ್ದ ತನ್ನ ಕಂದನನ್ನು ಅವನ ಅಜ್ಜಮ್ಮನ ಟೀಕೆಯಿಂದ ಹೊರತುಪಡಿಸುವಂತೆ, ತನ್ನ ಮಾತೃತ್ವದ ದೃಷ್ಟಿರಕ್ಷೆ ನೀಡಿದಳು, ಮುಗುಳು ನಗೆಗೂಡಿ ನೋಡಿ! +ಮಲೆನಾಡಿನಲ್ಲಿ ಹುಡುಗರೆಲ್ಲರಿಗೂ ಬೇಟೆ ಎಂದರೆ ಪ್ರಾಣ. +ದೊಡ್ಡವರು ನಾಯಿ ಕರೆದುಕೊಂಡು ಕಾಡು ಹತ್ತುವುದನ್ನು ಅವರು ಎಂತಹ ಕರುಬಿನಿಂದ ನೋಡುತ್ತಿರುತ್ತಾರೆ? +‘ನಾವೂ ನಾಯಿಗಳಾಗಿದ್ದಿದ್ದರೆ!’ ಎಂದುಕೊಳ್ಳುವುದೂ ಉಂಟು. +ಯಾವಾಗಲಾದರೂ ಒಮ್ಮೆ ಬೇಟೆ ನುಗ್ಗುವ ಕಾಡು ಅಂತಹ ಅಪಾಯಕರವಾದ ದುರ್ಗಮ ಪ್ರದೇಶವಲ್ಲದಿದ್ದಾಗ ಹುಡುಗರನ್ನೂ ಕರೆದುಕೊಂಡು ಹೋಗುವುದೂ ಉಂಟು. +ಅಂತಹ ಕೃಪೆಗೆ ಪಾತ್ರರಾದಾಗ ಆ ಹುಡುಗರ ಆನಂದ ಹೇಳತೀರದು. +ಬೇಟೆಯಲ್ಲಿ ಅವರ ಆಸಕ್ತಿ ಎಷ್ಟು ಎಂದರೆ, ಬೇಟೆಯಾದ ಪ್ರಾಣಿಯನ್ನು ಹಸಿಗೆ ಮಾಡುವ ಮುನ್ನ ತೋರಿಸಿದರೂ ಸಾಕು, ಧನ್ಯರಾದೆವೆಂದು ಭಾವಿಸುತ್ತಾರೆ! +ಎಷ್ಟೋ ಸಾರಿ ಮಧ್ಯರಾತ್ರಿಯಾಗಿದ್ದು ಅವರು ಗಾಢ ನಿದ್ರೆಯಲ್ಲಿದ್ದರೂ, ತಿಂಗಳ ಬೆಳಕಿನ ಬೇಟೆಯಲ್ಲಿ ಹೊಡೆದು ಮನೆಗೆ ತಂದ ಕಾಡು ಹಂದಿಯನ್ನು ಅವರನ್ನೆಬ್ಬಿಸಿ ತೋರಿಸದಿದ್ದರೆ ಮರುದಿನವೆಲ್ಲಾ ಅವರು ಆ ನಿರಾಶೆಯನ್ನನುಭವಿಸಿ ಸಂಕಟಪಡುತ್ತಾರೆ! +ಬೇಟೆ ಅಂದರೆ ಅಂಥಾ ಹುಚ್ಚು! +ಸಮೀಪಿಸುತ್ತಿದ್ದ ಹಾಗೆಯೇ ‘ಹಸಿಗೆ’ಯಾಗುತ್ತಿದ್ದ ಕಾಡುಹಂದಿಯ ಜಂವಿ ಸುಟ್ಟ ವಾಸನೆ ಗಾಳಿಯಲ್ಲಿ ತೇಲಿಬಂತು. +ಮೂಗಾಳಿ ಸಿಕ್ಕ ನಾಯಿಗಳಂತೆ ಮೂವರು ಹುಡುಗರೂ ಆ ಸ್ಥಳಕ್ಕೆ ಒಬ್ಬರ ಮೇಲೆ ಒಬ್ಬರು ನುಗ್ಗಿ ಓಡಿದರು. +ನಾಲ್ಕಾರು ಜನರು ಒಂದು ದೊಡ್ಡ ಒಂಟಿಗ ಹೋರಿ ಕಾಡು ಹಂದಿಯನ್ನು ದೊಡ್ಡ ಮರಗಳನ್ನಡಕಿ ಹೊತ್ತಿಸಿದ್ದ ಬೆಂಕಿಯಲ್ಲಿ ಸುಡುತ್ತಿದ್ದರು. +ಅದರ ಎರಡೆರಡು ಕಾಲುಗಳನ್ನು ಹೆಬ್ಬಳ್ಳಿಗಳಿಂದ ಬಿಗಿದು ಕಟ್ಟಿ, ನಡುವೆ ಬಿದಿರಗಳು ತೂರಿಸಿ, ಅದನ್ನು ಎತ್ತಿ ಎತ್ತಿ ಮಗ್ಗುಲಿಂದ ಮಗ್ಗುಲಿಗೆ ಬೆಂಕಿಯ ಮೇಲೆ ಕಾಯಿಸಿ, ತಿರುಗಿಸುತ್ತಿದ್ದರು. +ಇನ್ನಿಬ್ಬರು, ಆಚೆಗೊಬ್ಬ ಈಚೆಗೊಬ್ಬ, ಕೀಸಿ ಹರಿತಮಾಡಿದ ಅಡಕೆಯ ದಬ್ಬೆಗಳಿಂದ ಹಂದಿಯ ಚರ್ಮವನ್ನು ಹತ್ತರಿ ಹಿಡಿವಂತೆ ಹೆರಸುತ್ತಿದ್ದರು. +ಅದರ ಅಂಗಾಂಗಗಳೆಲ್ಲ, ಮರ್ಯಾಂಗಗಳೂ ಸೇರಿ, ನಿಮ್ಮನೆ ನಿಗುರಿದ್ದುವು. +ಹುಡುಗರ ಕುಚೋದ್ಯ ಟೀಕೆಗಳಿಗೆ ಪಕ್ಕಾಗಿ ಮೂವರು ಹುಡುಗರೂ ಆ ದೃಶ್ಯವನ್ನು ಆಸೆಯಿಂದ, ಹೆಮ್ಮೆಯಿಂದ, ಪ್ರಶಂಸೆಯಿಂದ ಅವಲೋಚಿಸುತ್ತಾ ನಿಂತರು, ಕೂತರು, ಎದ್ದರು, ಓಡಾಡಿದರು. +ಸುತ್ತಲೂ ಸುತ್ತಿ ಸುತ್ತಿ ಮತ್ತೆ ಮತ್ತೆ ವೀಕ್ಷಿಸಿದವರು. +ಅವರಿಗೆ ಆ ಹಂದಿ ಒಂದು ಪ್ರತೀಕವಾಗಿತ್ತು ಸಹ್ಯಾದ್ರಿಯ ವಿಸ್ತೃತ ಅರಣ್ಯಗಳಿಗೆ, ಅಲ್ಲಿಯ ದುರ್ಗಮ ಕಾನನಾಂತರಕ್ಕೆ, ಅದರ ನಿಬಿಡ ಹಳುವಿಗೆ, ಅದರ ಘೋರ ಭಯಂಕರತೆಗೆ, ಅದರ ಬೇಟೆಯ ಸಾಹಸಕ್ಕೆ. +‘ಹಸಿಗೆ’ಯಾಗುತ್ತಿದ್ದ ಆ ಮಹಾಕಾಯದ ಜಂತುವಿನ ಪ್ರತಿಮಾ ಗವಾಕ್ಷದ ಮುಖಾಂತರ ಅವರ ಚೇತನಗಳಿಗೆ ಅದರ ಹಿಂದಿರುವ ವಿಸ್ಮಯಲೋಕಕ್ಕೆ ಪ್ರವೇಶ ಒದಗಿದಂತಾಗಿತ್ತು. +“ಅಲ್ಲಿ ನೋಡೋ, ಅದರ ಕೋರೆ!” +“ಅದೆಲ್ಲಾದ್ರೂ ತಿಂವಿದ್ರೆ ಹೊಟ್ಟೆಪಚ್ಚಿ ಎಲ್ಲ ಹೊರಗೇ ಬರ್ತದೆ, ಅಲ್ಲೇನೊ?” +“ನಮ್ಮನೇಲಿ ಅವತ್ತೊಂದಿನ ಬ್ಯಾಟೆಗೆ ಹೋಗಿದ್ದಾಗ, ನಮ್ಮದೊಂದು ಹೊಸಾ ಚೀನೀನಾಯಿ ಕಣೋ, ಕಮೀನು, ಚಿಕ್ಕಯ್ಯ ತೀರ್ಥಹಳ್ಳಿಗೆ ಹೋಗಿದ್ದಾಗ ತಂದಿದ್ರು, ಏನು ಚೆನ್ನಾಗಿ ಷಿಕಾರಿ ಮಾಡ್ತಿತ್ತು ಅಂತೀಯಾ? +ಅದನ್ನು ಸಿಗಿದು ಹಾಕಿ ಬಿಟ್ಟಿತ್ತು ಕಣೋ, ಒಂದು ಒಂಟಿಗನ ಹಂದಿ!” ತಿಮ್ಮು ಅದರ ಕತೆ ಹೇಳಿದನು. +“ಇಂಥಾ ಹಂದಿ ಎಂಥಾ ಹೆಬ್ಬುಲೀನೂ ಸೀಳಿಹಾಕಿಬಿಡ್ತದೆ ಕಣೋ. +ಆಗುಂಬೇಲಿ…. ” ಎಂದು ಕಾಡು ತಾನು ಕೇಳಿದ್ದ ಸಂಗತಿಯನ್ನು ಹೇಳಿದನು. +ಅಷ್ಟರಲ್ಲಿ “ಏ ಕಾಡು, ನೀವೆಲ್ಲ ಹೋಗ್ರೋ ಗಾಡಿಗೆ. +ಗಾಡಿ ಹೊರಡ್ತದೆ. +ನಾವು ಆಮೇಲೆ ಬರುತ್ತೀವಿ” ಎಂಬ ದೇವಯ್ಯನ ಆಜ್ಞಾಪನೆ ಕೇಳಿಸಿ, ಮುವರು ಹುಡುಗರೂ ಮನಸ್ಸಿಲ್ಲದ ಮನಸ್ಸಿನಿಂದ, ಹಸಿಗೆಯಾಗುತ್ತಿದ್ದ ಹಂದಿಯ ಕಡೆಗೆ ತಿರುಗಿ ತಿರುಗಿ ನೋಡುತ್ತಾ ಹಿಂದಿರುಗಿದರು. +ಗಾಡಿ ಕಲ್ಲೂರನ್ನು ಸಮೀಪಿಸುತ್ತಿದ್ದಾಗ, ರಸ್ತೆಗೆ ಒಳದಾರಿಯಿಂದ ಬಂದು ಕೂಡುತ್ತಿದ್ದ ಕಾಲುದಾರಿ ಸೇರುವೆಡೆ, ಒಂದು ಬಾನೆತ್ತರ ಬೆಳೆದಿದ್ದ ದೊಡ್ಡ ಧೂಪದ ಮರದ ಬುಡದ ಹೆಬ್ಬೇರಿನ ಮೇಲೆ ಯಾರೋ ಒಬ್ಬರು ಕುಳಿತಿದ್ದುದು ಗಾಡಿ ಹೊಡೆಯುವ ಬಚ್ಚನ ಕಣ್ಣಿಗೆ ಬಿತ್ತು. +ಅವರು ಹಣೆಗೆ ಬಳಿದುಕೊಂಡಿದ್ದ ಬಿಳಿಯ ಮತ್ತು ಕೆಂಪು ನಾಮಗಳ ಪಟ್ಟೆ ಆ ದೂರಕ್ಕೂ ಎದ್ದು ಕಾಣುತ್ತಿತ್ತು. +ಗಾಡಿಯೊಳಗೆ ಮುಂದೆ ಕುಳಿತಿದ್ದ ದೊಡ್ಡಮ್ಮ ಹೆಗ್ಗಡಿತಿಯವರು ಕೇಳಿದರು “ಯಾರೋ ಅದು ಅಲ್ಲಿ ಕೂತಿದಾರಲ್ಲಾ? +ದಾಸಯ್ಯನ ಕಂಡ ಹಾಂಗೆ ಕಾಣ್ತದೆ!”ತುಸು ನಗುತ್ತಾ ಬಚ್ಚ ಹೇಳಿದನು “ಆ ರೀತಿ ನಾಮದ ಪಟ್ಟೆ ಬಡುಕೊಳ್ಳೋರು ಮತ್ಯಾರು? +ಹಳೆಮನೆ ಹಂಚಿನಮನೆ ಅಯ್ಯೋರು ಇರಬೇಕು. +ಅವರು ಆಗಾಗ್ಗೆ ಬರ್ತಾನೆ ಇರ್ತಾರೆ, ಕಲ್ಲೂರು ದೇವರ ಹತ್ರಕ್ಕೆ.” +ಗಾಡಿ ಸಮೀಪಿಸುತ್ತಿದ್ದುದನ್ನು ಕಂಡು ಧೂಪದ ಮರದ ಬೇರಿನ ಮೇಲೆ ಕುಳಿತಿದ್ದ ವ್ಯಕ್ತಿ ಎದ್ದು ನಿಂತಿತು. +“ಓಹೋ, ಬೆಟ್ಟಳ್ಳಿ ಗೌಡರ ಗಾಡಿ ಇರಬೇಕು!” ಎಂದುಕೊಂಡರು. +ಶಂಕರಪ್ಪ ಹೆಗ್ಗಡೆಯವರು, ತಮಗೆ ತಾವೆ ಮತ್ತೆ ಕಾಲುದಾರಿಯ ದಿಕ್ಕಿಗೆ ತಿರುಗಿ, ಯಾರನ್ನೋ ನೀರಿಕ್ಷಿಸುತ್ತಿರುವಂತೆ ಅತ್ತ ನೋಡುತ್ತಾ ನಿಂತರು. +ಅವರ ಹೆಂಡತಿ ಸೀತಮ್ಮ, ಮಗ ರಾಮು, ಬಾಲೆ ಆಡಿಸುವ ಹುಡುಗಿ ಕೆಂಪಿ – ದೂರದಲ್ಲಿ ದಣಿದು ಮೆಲ್ಲಗೆ ಕಾಲುಹಾಕುತ್ತಿದ್ದರು. +ಅವರ ಕೈಕೂಸು ತಾಯಿಯ ಸೊಂಟದಲ್ಲಿತ್ತು. +ಬೆಟ್ಟಳ್ಳಿ ಮನೆಯ ವಿಚಾರವಾಗಿ ಹಳೆಮನೆ ಹೆಂಚಿನ ಮನೆಯ ಶಂಕರಪ್ಪ ಹೆಗ್ಗಡೆಯವರಿಗೆ ನೇರವಾದ ಯಾವ ವೈರಭಾವ ಇರಲಿಲ್ಲವಾದರೂ ತನ್ನ ತಂಗಿ ಜಟ್ಟಮ್ಮನನ್ನು ಭರಮೈಹೆಗ್ಗಡೆಯವರು ಲಗ್ನವಾದಂದಿನಿಂದ ಸಿಂಬಾವಿ ಮನೆಯ ನೆಂಟಸ್ತಿಕೆಯ ದೆಸೆಯಿಂದಾಗಿ ಅವರು ಬೆಟ್ಟಳ್ಳಿಯ ವಿಚಾರದಲ್ಲಿ ಬಿಗುಮನಸ್ಸಿನಿಂದ ಇರುತ್ತಿದ್ದುದೆ ರೂಢಿ. +ಅಲ್ಲದೆ ಜಾತಿ, ನೀತಿ, ಪೂಜೆ, ಪುನಸ್ಕಾರ, ಬಿರಾಂಜರು, ದೇವರು, ದೆಯ್ಯ, ಆಚಾರ, ಕಟ್ಟಳೆಗಳಲ್ಲಿ ಸಂಪ್ರದಾಯನಿಷ್ಠೆಯ ವೀರಾನುಯಾಯಿಯಾಗಿದ್ದ ಶಂಕರಪ್ಪ ಹೆಗ್ಗಡೆಗೆ ಕಿಲಸ್ತರ ಪಾದ್ರಿಗಳನ್ನೆಲ್ಲ ಮನೆಗೆ ಸೇರಿಸಿ, ಅವರೊಡನೆ ಸಹಪಂಕ್ತಿ ಭೋಜನವನ್ನೂ ಮಾಡಿ, ಅವರು ಕೊಟ್ಟ ವಿಲಾಯತಿ ವಸ್ತುಗಳನ್ನೆಲ್ಲ ಲಾಟೀನು, ಬೈಸಿಕಲ್ಲು, ತೋಟಾಕೋವಿ, ಸೀಮೆ ಬಿಸ್ಕತ್ತು, ಕ್ರಾಪು, ಹ್ಯಾಟು, ಬೂಟ್ಸು ಇತ್ಯಾದಿ ಇತ್ಯಾದಿ ತಿರುಪತಿ, ಧರ್ಮಸ್ಥಳಗಳ ದೇವರ ಕಾಣಿಕೆ ಇಟ್ಟಿರುವ ಮನೆಯ ಒಳಕ್ಕೆ ತಂದಿಟ್ಟುಕೊಂಡು, ಕುಲಗೆಟ್ಟು ಹೋಗಿರುವ ಬೆಟ್ಟಳ್ಳಿಯವರನ್ನು ಕಂಡರೆ ತಿರಸ್ಕಾರ, ಜಿಗುಪ್ಸೆ! +ಆದ್ದರಿಂದಲೆ ಎತ್ತಿನ ಕೊರಳ ಗಂಟೆ ಗಗ್ಗರದ ಸರಗಳಿಂದ ಸಶಬ್ದವಾಗಿ ಚಲಿಸುತ್ತಿದ್ದ ಗಾಡಿ ತಮ್ಮ ಬಳಿಯೆ ಬಂದು ನಿಂತು ನಿಃಶಬ್ದವಾದುದನ್ನು ಕಿವಿ ಸಂಪೂರ್ಣವಾಗಿ ಗಮನಿಸಿದ್ದರೂ ಶಂಕರಪ್ಪ ಹೆಗ್ಗಡೆ ಯಾವುದನ್ನೂ ನೋಡದೆ ಏನನ್ನೂ ಆಲಿಸದಿದ್ದವರಂತೆ ಅತ್ತ ಮುಖಹಾಕಿದ್ದವರು ಇತ್ತ ಮುಖ ತಿರುಗಿಸದೆ ನಿಂತಿದ್ದರು! +“ಇಲ್ಲಿ ಯಾಕೆ ನಿಂತೀಯಾ, ಶಂಕರಮಾವಾ?” ಗಾಡಿಯ ಹಿಂದುಗಡೆಯಿಂದ ಕೆಳಗೆ ಹಾರಿದ ತಿಮ್ಮು ಪ್ರಶ್ನೆ ಕೇಳುತ್ತಾ ತಮ್ಮ ಹತ್ತಿರಕ್ಕೆ ಬಂದ ಮೇಲೆಯೆ ಶಂಕರಹೆಗ್ಗಡೆ ಇತ್ತ ಮುಖ ತಿರುಗಿಸಿ ಗಾಡಿಯ ಮುಂಭಾಗದಲ್ಲಿ ಕುಳಿತಿದ್ದ ದೊಡ್ಡಮ್ಮ ಹೆಗ್ಗಡತಿಯವರನ್ನು ಆಗತಾನೆ ಗುರುತಿಸಿದಂತೆ ನೋಡಿ “ಓಹೋಹೋ, ನೀವೇನು? +ನಾನು ಮೇಗರೊಳ್ಳಿ ಜವಳಿ ಅಂಗಡಿ ಪೈಗಳ ಗಾಡಿ ಅಂತ ಮಾಡಿದ್ದೆ!… +ಏನು, ಬೆಟ್ಟಳ್ಳಿ ಚಿಕ್ಕಮ್ಮ, ಎಲ್ಲಾ ಚೆನ್ನಾಗಿ ಇದ್ದೀರಾ?” ಎಂದು ಗಾಡಿಯ ಹತ್ತಿರಕ್ಕೆ ಬಂದು ಅದರ ಮುಂಭಾಗದಲ್ಲಿ ಎತ್ತಿನ ಪಕ್ಕಕ್ಕೆ ನಿಂತು, ತುಸು ತಲೆ ಬಾಗಿಸಿ ಗಾಡಿಯೊಳಕ್ಕೆ ನೋಡಿ “ಓ ಹೋ ಹೋ!ಎಲ್ಲಾ ಹೊರಟಿದ್ದೀರಿ! …. . ದೂರಾ?” ಎಂದರು. +ತಿರುಪತಿಗೆ ಹೋಗಿ ಹಿಂದಿರುಗದಿದ್ದ ದೊಡ್ಡಣ್ಣ ಹೆಗ್ಗಡೆಯೂ ತಾನೂ ಸಣ್ಣ ಹುಡುಗರಾಗಿ ಹಳೆಮನೆಯ ಉಚ್ಛ್ರಾಯ ಕಾಲದ ಕಣ್ಮಣಿಗಳಂತಿದ್ದ ಆ ಪಾಲಾಗುವ ಮುನ್ನಿನ ಬಹುಪೂರ್ವ ಸ್ಮರಣೆಯ ಪುಣ್ಯಕಾಲದಲ್ಲಿ ಬೆಟ್ಟಳ್ಳಿ ಚಿಕ್ಕಮ್ಮ (ದೊಡ್ಡಮ್ಮ ಹೆಗ್ಗಡತಿಯವರು) ಹಳೆಮನೆಗೆ ಬಂದಾಗಲೆಲ್ಲ, ಅವರ ಮಡಿಲಿನಿಂದ ಹೊರಹೊಮ್ಮುತ್ತಿದ್ದ ಕೊಬರಿ ಬೆಲ್ಲವನ್ನೋ ಮಂಡಕ್ಕಿ ಮಿಠಾಯಿಯನ್ನೊ ತಿಂದು, ಸುಖಿಸಿ, ಕೇಕೆ ಹಾಕುತ್ತಿದ್ದ ಸಲಿಗೆಯ ಕಾಲದ ನೆನಪಾಗಿ, ಸೆಡೆತು ನಿಂತಿದ್ದ ಶಂಕರ ಹೆಗ್ಗಡೆಯ ಚೇತನ ಸರಳ ಸ್ಥಿತಿಗಿಳಿದು, ಆಲಿಸಿತು. +“ಏನೋ ಎಲ್ಲಾ ದೇವರು ನಡಸಿ ಹಿಂಗಿದ್ದೀಂವಪ್ಪಾ, ಶಂಕರೂ. +ಇಲ್ಲೇ ಕಲ್ಲೂರಿಗೆ ಹೋಗ್ತಾ ಇದ್ದೀಂವಿ, ದೇವರಿಗೆ ಒಂದು ಹಣ್‌ಕಾಯಿ ಮಾಡ್ಸಿ ಬರಾನಾ ಅಂತಾ. +ನಿಮ್ಮನೇ ಕಡೇ ಹ್ಯಾಂಗಿದಾರೆ, ಸೀತೂ ಮಕ್ಕಳೂ ಎಲ್ಲಾ?” +‘ಚಿಕ್ಕಮ್ಮನ ತಲೆಕೂದಲೆಲ್ಲಾ ಎಷ್ಟು ಬೆಳ್ಳಗಾಗಿ ಹೋಗ್ಯದೆ? +ಅಜ್ಜೀ ನೋಡಿದ್ಹಾಂಗ ಆಗ್ತದಲ್ಲಾ!’ ಮನಸ್ಸಿನಲ್ಲಿಯೆ ಅಂದುಕೊಂಡ ಶಂಕರ ಹೆಗ್ಗಡೆ, ಗಟ್ಟಿಯಾಗಿ ಉತ್ತರಿಸಿದನು ತನ್ನಲ್ಲಿ ಮಾತೃಭಾವವನ್ನು ಉದ್ದೀಪಿಸುತ್ತಿದ್ದ ದೊಡ್ಡಮ್ಮ ಹೆಗ್ಗಡಿತಿಯವರ ಸುಕ್ಕೇರಿದ ಮುಖವನ್ನು ಅಕ್ಕರೆಗೂಡಿದ ಕನಿಕರದಿಂದ ಗಮನಿಸುತ್ತಾ; +“ಹ್ಯಾಂಗಿದಾರೆ ಅಂತಾ ಹೇಳ್ಲಿ, ಚಿಕ್ಕಮ್ಮ?” ದೂರ ಕಾಲುದಾರಿಯತ್ತ ಕಣ್ಣಾಗಿ, “ಅಲ್ಲೇ ದೂರ ಬರತಾ ಇದಾರಲ್ಲಾ, ನೀವೇ ನೋಡಬಹುದು” ಎಂದು ಆ ಕಡೇಗೇ ಹಿಗ್ಗಿ ಕೇಕೆ ಹಾಕುತ್ತಾ ಓಡುತ್ತಿದ್ದ ತಿಮ್ಮು ಧರ್ಮ ಕಾಡು ಅವರನ್ನು ನಿರ್ದೇಶಿಸಿ “ಬಿದ್ದೀರ್ರೋ? +ಯಾಕೆ ಹಂಗೆ ಓಡ್ತಿರೋ?” ಎಂದು ಕೂಗಿದರು. +ತನ್ನ ಕಡೆಗೆ ಓಡಿ ಬರುತ್ತಿದ್ದ ‘ಧರ್ಮಣ್ಣಯ್ಯ’, ‘ಕಾಡಣ್ಣಯ್ಯ’ ಮತ್ತು ‘ತಿಮ್ಮಬಾವ’ ಮೂವರನ್ನೂ ಗುರುತಿಸಿದ ರಾಮು, ಮೆಲ್ಲಗೆ ಏದುತ್ತಾ ಬಹುಪ್ರಯಾಸದಿಂದ ಕಾಲುಹಾಕುತ್ತಿದ್ದ ತನ್ನ ತಾಯಿಯ ಪಕ್ಕದಲ್ಲಿ ಅಷ್ಟೇ ಆಯಾಸದಿಂದ ಮೆಲ್ಲಗೆ ಬರುತ್ತಿದ್ದವನು, ತನ್ನ ಬಡಕಲು ಒಡಲಿನ ಅಸಾಮರ್ಥ್ಯವನ್ನು ಒಂದಿನಿತೂ ಬಗೆಗೆ ತಾರದೆ, ಹಿಗ್ಗಿನ ಹೊನಲಿಗೆ ಸಿಕ್ಕವನಂತೆ ಮುನ್ನುಗ್ಗಿ ಓಡಿದನು. +ಹತ್ತು ಹೆಜ್ಜೆಗಳಲ್ಲಿಯೆ ಬಿದ್ದೂ ಬಿಟ್ಟನು! +ಧರ್ಮ ಓಡಿ ಬಂದು ತಬ್ಬಿ ಅವನನ್ನು ಎತ್ತಿದಾಗ, ಅವನ ಮೊಣಕಾಲು ಮಂಡಿ ಮೊಣಕೈಗಳು ಹಾದಿಯ ಜಂಬಿಟ್ಟಿಗೆ ಕಲ್ಲಿಗೆ ತೀಡಿ ಗಾಯವಾಗಿ, ಅವನು ಸದ್ದು ಮಾಡದೆ ಅಳುತ್ತಿದ್ದನು. +ತಿಮ್ಮು ಕಾಡು ಇಬ್ಬರೂ ರಾಮುವ ಬಟ್ಟೆಗೆ ಬಂದಿದ್ದ ಶಂಕರ ಹೆಗ್ಗಡೆಯವರ ಕೈ ಜೀವಚ್ಛವದಂತಿದ್ದ ತಮ್ಮ ಮಗನ ಬೆನ್ನಿಗೆ ಒಂದು ಏಟನ್ನೂ ಕೊಟ್ಟು ಬಿಟ್ಟಿತು! +‘ಬೇಡ, ಚಿಕ್ಕಯ್ಯ!’ +‘ಬೇಡ, ಶಂಕರಮಾವ!’ +‘ಬೇಡ ಚಿಗಪ್ಪಯ್ಯ!’ ಎಂದು ಕೈ ಅಡ್ಡಹಾಕಿ ಮೂವರು ಹುಡುಗರೂ ಅಂಗಲಾಚಿ ಕೂಗಿ ತಡೆಯದಿದ್ದರೆ ರಾಮೂಗೆ ಇನ್ನೂ ಎಷ್ಟು ಏಟು ಬೀಳುತ್ತಿತ್ತೊ? +ಕಂಕುಳಲ್ಲಿ ಕೂಸನ್ನೆತ್ತಿಕೊಂಡು, ಹಣೆಯ ಮೇಲೆ ಮುಖದಲ್ಲಿ ಬೆವರು ಸುರಿಸುತ್ತಾ, ದೀರ್ಘವಾಗಿ ಸುಯ್ಯುತ್ತಾ ಬಳಿಸಾರಿದ ಸೀತಮ್ಮನನ್ನು ವಿಶ್ವಾಸದಿಂದ ಮಾತಾಡಿಸಿ, ದೊಡ್ಡಮ್ಮ ಹೆಗ್ಗಡತಿಯವರು ಗಾಡಿ ಹತ್ತುವಂತೆ ಹೇಳಿದರು. +ಸೀತಮ್ಮ ಗಂಡನ ಕಡೆ ಒಮ್ಮೆ ಹೌದೊ ಅಲ್ಲವೊ ಎಂಬಂತೆ ಕಣ್ಣು ಸುಳಿಸಿದಳು. +ಅವಳ ಕೃಶತ್ವ, ಅವಳ ದುರ್ಬಲತೆ, ಅವಳಿಗೆ ಆಗ ಇದ್ದ ಆಯಾಸ ಸ್ಥಿತಿ, ಕಂಕುಳಲ್ಲಿದ್ದ ಮಗುವಿನ ಹೊರೆ ಒಂದೊಂದೂ ಗಾಡಿಗೆ ಹತ್ತುವ ಪರವಾಗಿ ವಾದಿಸುತ್ತಿದ್ದರೂ ಅವಳಿಗೆ ಗೊತ್ತು, ತಾನೆಲ್ಲಿಯಾದರೂ ಬೆಟ್ಟಳ್ಳಿ ಗಾಡಿಗೆ ಹತ್ತಿದರೆ ತನ್ನ ಗಂಡ ಆಮೇಲೆ ತನಗೆ ಶನಿ ಬಿಡಿಸುತ್ತಾರೆ ಎಂದು! +ಅವಳು ‘ಒಲ್ಲೆ’ ಎಂಬರ್ಥದಲ್ಲಿ ತಲೆ ಅಲ್ಲಾಡಿಸುತ್ತಿದ್ದಂತೆಯೆ, ಶಂಕರ ಹೆಗ್ಗಡೆ “ಚಿಕ್ಕಮ್ಮ, ಅದಕ್ಕೆ ಗಾಡಿ ಹತ್ತಿದ್ರೆ ಆಗೋದೆ ಇಲ್ಲ. +ತಲೆ ತಿರುಗಿ ಕಕ್ಕಿಕೊಂಡು ಬಿಡ್ತದೆ! +ಅದೂ ಅಲ್ಲದೆ….” + ಮುಂದೆ ಹೇಳುವುದೊ?ಬಿಡುವುದೊ?ಎಂದು ನಾಚಿಸುತ್ತಿರುವಷ್ಟರಲ್ಲಿ, ಬಿಳಿಚಿಕೊಂಡಿರುವ ಮುಖ ಮತ್ತು ಇತರ ದೈಹಿಕ ಲಕ್ಷಣಗಳಿಂದ ಸೀತಮ್ಮಗೆ ಬಸಿರು ನಿಂತಿದ್ದರೂ ನಿಂತಿರಬಹುದೆಂದು ಊಹಿಸಿ ದೊಡ್ಡಮ್ಮ “ಎಷ್ಟು ತಿಂಗಳಾಗಿದೆಯೊ?” ಎಂದು ಕೇಳಿಯೆ ಬಿಟ್ಟರು. +“ಆ-ಗ್ಯದೆ-ಮೂರು ನಾಲ್ಕು ತಿಂಗಳು ಅಂತ್ತಾ ಕಾಣ್ತದೆ.” ಕೆಂಪು ಬಿಳಿಯ ಪಟ್ಟೆನಾಮಗಳ ಧರ್ಮ ಧ್ವಜವನ್ನು ಹಣೆ ತುಂಬ ಎತ್ತಿ ಹಿಡಿದು, ಸುಪುಷ್ಟನಾಗಿ ದುಂಡು ದುಂಡಗೆ ಬೆಳೆದು, ಮೈ ಮುಖ ಎಲ್ಲಿಯೂ ಬಿರಾಂಬರ ಕಳೆ ತುಂಬಿದೆ ಎಂಬ ಖ್ಯಾತಿ ಪಡೆದಿದ್ದ ಶಂಕರಹೆಗ್ಗಡೆ ನಿಧಾನವಾಗಿ ಹೇಳಿದರು. +ಇನ್ನೂ ಒಂದು ವರ್ಷವೂ ಆಗಿದೆಯೋ ಇಲ್ಲವೋ ಎಂಬ ಕೃಶಗಾತ್ರದ ಕೂಸನ್ನು ಸೊಂಟದ ಮೇಲೆ ಹೊರಲಾರದೆ ಹೊತ್ತು ನಿಂತಿದ್ದ ಸೀತಮ್ಮನನ್ನು ಕರುಳುಬೆಂದು ನೋಡಿದರು ಗಾಡಿಯಲ್ಲಿದ್ದ ಮೂವರು ಹೆಂಗಸರೂ! +ರಾಮುವನ್ನಾದರೂ ತಮ್ಮ ಜೊತೆ ಗಾಡಿ ಹತ್ತಿಸಿ ಕರೆದುಕೊಂಡು ಹೋಗುತ್ತೇವೆ ಎಂದ ಹುಡುಗರಿಗೂ ಅದೇ ಮರ್ಯಾದೆಯಾಯಿತು. +ತಾನೆಲ್ಲಿಯಾದರೂ ನೆರೆಮನೆಯ ದಾಯಾದಿಗಳ ಮಗ ಧರ್ಮು ಒಡನೆ ಗಾಡಿ ಹತ್ತಿದರೆ ಅಪ್ಪಯ್ಯ ಚಮಡ ಸುಲಿಯುತ್ತಾನೆ ಎಂದು ಹಿಂದಿನ ಅನೇಕ ಅನುಭವಗಳಿಂದ ಅರಿತಿದ್ದ ರಾಮು ಸುಮ್ಮನೆ ಅಳತೊಡಗಲು, ಶಂಕರ ಹೆಗ್ಗೆಡ “ಅಯ್ಯೋ ಅವನಿಗೆ ಗಾಡೀ ಎತ್ತೂ ಅಂದ್ರೇ ಬಾಳ ಹೆದರಿಕೊಳ್ತಾನೋ!” ಎಂದು ವ್ಯಾಖ್ಯಾನ ಮಾಡಿದರು. +ಗಾಡಿ ಕಾಡಿನ ರಸ್ತೆಯಲ್ಲಿ ಮುಂದುವರಿದು ಕಿಕ್ಕಿರಿದು ಹಳು ಮತ್ತು ಮರಗಳ ನಡುವೆ ಮರೆಯಾಗುವುದನ್ನೆ ಹೆಂಡತಿ ಮಕ್ಕಳೊಡನೆ ನಿಂತು ಕರುಬುಗೂಡಿದ ತಿರಸ್ಕಾರ ಭಾವದಿಂದ ನೋಡುತ್ತಾ ನಿಂತಿದ್ದ ಶಂಕರ ಹೆಗ್ಗಡೆ ಸ್ವಗತ ಎಂಬಂತೆ ಗಟ್ಟಿಯಾಗಿಯೆ ಹೇಳಿಕೊಂಡರು. +ಎಲ್ಲರಿಗೂ ಸ್ಪಷ್ಟವಾಗಿ ಕೇಳಿಸಲಿ ಎಂಬಂತೆ. “ದೇವಸ್ಥಾನಕ್ಕೆ ಹೋಗ್ತಾರಂತೆ, ದೇವಸ್ಥಾನಕ್ಕೆ!ಮ್ಹುಃ! +ಹೊಲೇರವನ್ನ ಗಾಡಿ ಹೊಡೆಯಾಕೆ ಕೂರಿಸಿಕೊಂಡು ಏನು ಮಡಿಯಾಗಿ ಹೋಗ್ತಾರೋ ದೇವರ ಸೇವೆಗೆ? +ನಮ್ಮನ್ನೂ ಬೇರೆ ಗಾಡಿ ಹತ್ತೀ ಅಂತಾರೆ! +ನಮಗೆ ಇರೋ ರ್ವೋತೇನೆ ಸಾಲದು? +ಇನ್ನು ಇವರ ಸಂಗಡ ಮಡಿಗೆಟ್ಟು ಹೋಗಿ, ದೇವರು ಮುನಿದಾ ಅಂದ್ರೆ ಮುಗೀತು ನಮ್ಮ ಗತಿ! +ಈ ಅನಾಚಾರನೆಲ್ಲಾ ಹ್ಯಾಂಗೆ ಸಹಿಸ್ತಾನೋ ಆ ಭಗವಂತ? +ಅವನಿಗೇ ಗೊತ್ತು! …. ಹೂಂ! +ನಡಿಯೋ ರಾಮು, ಇನ್ನು! +ದಣಿವು ಆರಿಸಿಕೊಂಡಿದ್ದು ಆಯ್ತಲ್ಲಾ! …. +ಯಾಕೆ ನಿಂತಿಯೇ?ನಡೆಯೇ! +ನಿಂಗೆ ಆಗ್ದೆ ಇದ್ರೆ ಕೆಂಪೀಕೈಲೊ ಕೊಡೇ ಬಾಲೇನ…. +ಏ ಕೆಂಪೀ, ಕರಕೊಳ್ಳೆ ಅವನ್ನ! +“ಇದೇ ಏನೋ ಕಲ್ಲೂರು?” ಅದೇ ಮೊದಲನೆಯ ಸಾರಿ ಸಲ್ಲಿಗೆ ಬರುತ್ತಿದ್ದ ತಿಮ್ಮು ಊರಿನ ಬೀದಿಯಲ್ಲಿ ಚಲಿಸುತ್ತಿದ್ದ ಗಾಡಿಯ ಹಿಂಭಾಗದಲ್ಲಿ ತನ್ನೊಡನೆ ಕುಳಿತು ಇಣಿಕಿಣಿಕಿ ಅಕ್ಕಪಕ್ಕದ ಮನೆಗಳನ್ನೂ ಅಲ್ಲಿ ಕಾಣಬರುತ್ತಿದ್ದ ಹುಡುಗರು ಮಕ್ಕಳ ಚಲನವಲನಗಳನ್ನೂ ಗ್ರಾಮೀಣ ಕುತೂಹಲದಿಂದ ವೀಕ್ಷಿಸುತ್ತಿದ್ದ ತನ್ನ ಗೆಳೆಯರನ್ನು ಕೇಳಿದನು. +“ಹೌದು ಕಣೋ! +ನೋಡು, ಅದೇ ಹೊಳೆದಂಡೇಲಿ ಕಾಣ್ತಾ ಇದೆಯಲ್ಲಾ?ದೊಡ್ಡಮನೆ? +ಅರ್ಧ ಮಂಗಳೂರು ಹೆಂಚು, ಅರ್ಧ ಓಡುಹೆಂಚು ಹೊದಿಸಿದ್ದು? +ಅದೇ ಕಲ್ಲೂರು ಸಾಹುಕಾರರು ಮಂಜಭಟ್ಟರ ಮನೆ ಕಣೋ!” ಉಳಿದ ಇಬ್ಬರಿಗಿಂತಲೂ ವಯಸ್ಸಿನಲ್ಲಿ ಹಿರಿಯನಾಗಿ, ಹಿಂದೆ ಒಂದೆರಡು ಸಾರಿ, ತನ್ನ ಅಪ್ಪಯ್ಯ ಬೆಟ್ಟಳ್ಳಿ ಕಲ್ಲಯ್ಯಗೌಡರೊಡನೆ, ಅಲ್ಲಿಗೆ ಬಂದಿದ್ದು ಸ್ಥಳಪರಿಚಯ ಪಡೆದಿದ್ದ ಕಾಡು ಹೇಳಿ, ಮತ್ತೆ ಮುಂದುವರಿದನು. “ಅಪ್ಪಯ್ಯನ ಸಂಗಡ ಒಂದು ಸಾರಿ ಕಲ್ಲೂರು ತೇರಿಗೆ ಬಂದಿದ್ದೆ ಕಣೋ. +ಆಗ ಆ ಭಟ್ಟರ ಮನೇಲೇ ಊಟ ಮಾಡಿದ್ದು ನಾವು. +ಹೋಳಿಗೆ ಪಾಯಸ ಏನೇನೋ ಇಕ್ಕಿದ್ರು ಕಣೋ! +ಆದರೆ, ಮನೆ ಒಳಗೆ ಬಳ್ಳೆಹಾಕಿರಲಿಲ್ಲ; +ಹೊರಂಗಳದ ತೆಣೆ ಮೂಲೇಲಿ ಹಾಕಿದ್ರೋ ಅಪ್ಪಯ್ಯನೇ ನನ್ನ ಬಳ್ಳೇನೂ ಎತ್ತಹಾಕಿ, ಅವರೇ ಅಲ್ಲೆಲ್ಲಾ ಗ್ವಾಮಯಾನೂ ಹಾಕಿದ್ರು! +ನಂಗೆ ಇಸ್ಸಿ ಅನ್ನಿಸಿಬಿಟ್ಟಿತ್ತು!…  +ಇನ್ನು ಎಂದೆಂದಿಗೂ ಅವರ ಮನೇಲಿ ಊಟ ಮಾಡಬಾರದು ಅಂತಾ ಮಾಡಿಬಿಟ್ಟೀನಿ!” +ಇನ್ನೂ ಏನೇನು ಹೇಳುತ್ತಿದ್ದನೊ ಕಾಡು? +ಅಷ್ಟರಲ್ಲಿ ಅವನ ಅವ್ವ ದೊಡ್ಡಮ್ಮ ಹೆಗ್ಗಡತಿಯವರು “ಸಾಕು ಬಿಡೋ, ಮತ್ತೇನು ಬಿರಾಂಬ್ರ ಮನೇಲಿ ಗೌಡರನ್ನು ಒಳಗೆ ಕೂರಿಸಿ ಇಕ್ತಾರೆ ಅಂತಾ ಮಾಡಿಯೇನು? +ನಮ್ಮನೇಲಿ, ಆ ಕಿಲಸ್ತರ ಉಪದೇಶಿ ಬರತಾನಲ್ಲ, ಅವನ್ನ ಒಳಗೆ ಕೂರಿಸಿ ಊಟ ಹಾಕ್ತಿಂವೇನು? +ಹಂಗೇನೆ ಬಿರಾಂಬರ ಮನೇಲಿ ನಮ್ಮನ್ನೆಲ್ಲ ಹೊರಗೇ ಕೂರಿಸಿ ಇಕ್ತಾರೆ” ಎಂದು ಬ್ರಾಹ್ಮಣ ಸಮರ್ಥನೆ ಮಾಡಿದರು. +“ಆದ್ರೆ?ದೇವಣ್ಣಯ್ಯ ಉಪದೇಶಿ ಜೊತೇಲೇ ಕೂತು ಉಣ್ತಾನಲ್ಲಾ? +ಹಂಗೇ ಆ ಭಟ್ಟರ ಮಗ ಯಾಕೆ ಕೂರಬಾರದಾಗಿತ್ತು. +ಉಣ್ಣಾಕೆ ನಮ್ಮ ಜೊತೇಲಿ?” ಪ್ರತಿಭಟಿಸಿತ್ತು ಕಾಡಣ್ಣನ ತರ್ಕವಾಣಿ. +“ನಿನ್ನ ದೇವಣ್ಣಯ್ಯ ಜಾತಿಗೀತಿ ಎಲ್ಲಾ ಬಿಟ್ಟಾಗದೆ! +ಬೇಕಾದ್ರೆ ಹೊಲೇರು ಹಟ್ಟರ ಸಂಗಡಾನೂ ಉಣ್ತಾನೆ!” ಎಂದು ಸಿಡುಕಿ, ದೊಡ್ಡಮ್ಮ ಸುಮ್ಮನಾದರು. +ಅಷ್ಟರಲ್ಲಿ ಗಾಡಿ ದೇವಸ್ಥಾನದ ಬಳಿಯ ದೊಡ್ಡ ಅರಳಿ ಕಟ್ಟೆಯ ಬುಡದಲ್ಲಿ, ವಾಡಿಕೆಯಂತೆ, ನಿಂತಿತು. +ಹುಡುಗರೆಲ್ಲ ಸಂಭ್ರಮದಿಂದ, ಬಚ್ಚ ಎತ್ತಿರ ಕೊರಳು ಬಿಚ್ಚಿ ಮೂಕಿಯನ್ನು ನೆಲಕ್ಕೆ ಮುಟ್ಟಿಸುವ ಮುನ್ನವೆ, ಹಿಂದುಗಡೆಯಿಂದ ಹಾರಿಬಿಟ್ಟರು! +ಬೆಟ್ಟಳ್ಳಿಯ ಕಮಾನುಗಾಡಿ ಬಂದದ್ದನ್ನು ಗಮನಿಸಿದ ಜೋಯಿಸರು ಬಂದರು ವಿಚಾರಿಸಿದರು, ಮಡಿ ಕೆಡದಂತೆ ಆದಷ್ಟು ದೂರದಲ್ಲಿಯೆ ನಿಂತು, ಪುಣ್ಯವಶಾತ್ ಅವರಿಗೆ ಗಾಡಿ ಹೊಡೆಯುತ್ತಿದ್ದ ಬಚ್ಚ ಹೊಲೆಯರವನು ಎಂದು ಗೊತ್ತಾಗಲಿಲ್ಲ! +ಬೆಟ್ಟಳ್ಳಿ ಕಲ್ಲಯ್ಯಗೌಡರು ಬಂದಿಲ್ಲ; +ಬದಲಾಗಿ, ಅವರ ದೊಡ್ಡಮಗ ದೇವಯ್ಯಗೌಡರು ಬಂದಿದ್ದಾರೆ ಎಂಬುದನ್ನು ಕೇಳಿದ ಜೋಯಿಸರ ಮುಖ ಮಂಡಲ ತುಸು ನಿಸ್ತೇಜವಾಯಿತು. +ಬ್ರಾಹ್ಮಣರಿಗೆ ತೊರಿಸಬೇಕಾಗಿದ್ದ ಗೌರವದಲ್ಲಿಯೂ ಅವರಿಗೆ ನೀಡಬೇಕಾಗಿದ್ದ ದಾನದಕ್ಷಿಣೆಗಳ ವಿಚಾರದಲ್ಲಿಯೂ ತಮ್ಮ ಸಂಪ್ರದಾಯ ಬದ್ಧತೆಯಿಂದಲೂ ನಿಷ್ಠೆಯಿಂದಲೂ ಔದಾರ್ಯದಿಂದಲೂ ವಿಪ್ರಪೂಜಾಧುರಂಧರ ಎಂದು ಕಲ್ಲೂರಿನ ಹಾರುವರಲ್ಲಿ ಕೀರ್ತಿ ಪಡೆದಿದ್ದ ಕಲ್ಲಯ್ಯಗೌಡರು ಬರದಿದ್ದುದು ಅಪಾರ ನಷ್ಟದ ಬಾಬತ್ತಾಗಿತ್ತು, ಪುಜಾರಿಗಳಾಗಿದ್ದ ಭಟ್ಟರಿಗೂ ಜೋಯಿಸರಿಗೂ, ಜೊತೆಗೆ, ಹಾರುವರ ವಿಚಾರದಲ್ಲಿ ಪಾದ್ರಿಗಳೊಡನೆ ಸೇರಿಕೊಂಡು, ಕೆಟ್ಟ ಅಭಿಪ್ರಾಯವನ್ನು ಸಂಪಾದಿಸಿ, ಅವರನ್ನು ತಿರಸ್ಕಾರದಿಂದಲೂ ದ್ವೇಷದಿಂದಲೂ ಕಾಣುತ್ತಿದ್ದಾನೆ ಎಂಬ ದೇವಯ್ಯನ ‘ಅಪಕೀರ್ತಿ’ ಜನಿವಾರದವರಲ್ಲಿ ತಕ್ಕಮಟ್ಟಿಗೆ ಹಬ್ಬಿಬಿಟ್ಟಿತ್ತು. +ಆದರೂ ದೇವಯ್ಯಗೌಡರನ್ನು ಕಂಡು, ಅವರ ಮನೆಯವರು ಮಾಡಿಸುತ್ತಿದ್ದ ಸತ್ಯನಾರಾಯಣದ ಪೂಜೆಯ ಸಂಬಂಧವಾಗಿ ಮಾತಾಡುವುದು ಒಳ್ಳೆಯದೆಂದು ಭಾವಿಸಿದ ಜೋಯಿಸರು “ಎಲ್ಲಿದ್ದಾರೆ, ದೇವಯ್ಯಗೌಡರು? +ಅವರನ್ನು ಕಾಣಬೇಕಿತ್ತಲ್ಲಾ” ಎಂದಾಗ. +ಕಾಡು “ಅಣ್ಣಯ್ಯ ಇನ್ನೂ ಬಂದಿಲ್ಲ, ಭಟ್ಟರೆ. +ಹ-ಹ-ಹ” ಎಂದು ಹಂದಿ ಹಸಿಗೆ ಮಾಡಿಸುತ್ತಿದ್ದ ಸ್ವಾರಸ್ಯ ವಿಚಾರವನ್ನು ತಿಳಿಸಬೇಕೋ ಬೇಡವೊ ಎಂದು ತಡೆದು ತಡೆದು ಹವಣಿಸುತ್ತಿದ್ದುದನ್ನು ಅರಿತ ಬಚ್ಚ, ಆಗಲಿದ್ದ ಅಚಾತುರ್ಯವನ್ನು ತಪ್ಪಿಸುವ ನೈಪುಣ್ಯ ಪ್ರದರ್ಶನ ಮಾಡಿ “ಹಲಸಿನ ಹಣ್ಣು ಕುಯಿಸುತ್ತಾ ಇದ್ದರು, ದೇವಯ್ಯೋರು; +ನಿಮಗೆ ಕೊಡಾಕೆ ಅಂತಾ ಕಾಣ್ತದೆ. +ಇನ್ನೇನು ಬಂದು ಬಿಡುತ್ತಾರೆ, ಬೈಸಿಕಲ್ ಮ್ಯಾಲೆ!” ಎಂದನು. +ಅತ್ತ, ಅದೇ ಸಮಯದಲ್ಲಿ, ದೇವಯ್ಯಗೌಡರು ಹಸಿಗೆಯಾಗಿದ್ದ ಆ ಕಾಡು ಹಂದಿಯ ಹುರಿದ ಮಾಂಸದ “ಉಪ್ಪು ತುಂಡ”ನ್ನು ಬಾಯಿ ತುಂಬ ಹಾಕಿಕೊಂಡು ಜಗಿದು ತಿನ್ನುತ್ತಾ, ದೇವರ ಕಾರ್ಯಕ್ಕೆ ಹೋಗುತ್ತಿದ್ದುದರಿಂದ ಅದನ್ನು ತಿನ್ನಲು ನಿರಾಕರಿಸಿದ್ದ ಮುಕುಂದಯ್ಯನನ್ನು ಪರಿಹಾಸ್ಯ ಮಾಡುತ್ತಾ ಇದ್ದ ಸತ್ಯ ಸಂಗತಿಯನ್ನರಿಯದೆ ಜೋಯಿಸರು ತುಂಬ ಆಸ್ತಿಕಭಾವದಿಂದ ಹೇಳಿ ಹಿಂತಿರುಗಿದರು. + “ಸತ್ಯ ನಾರಾಯಣ ಪೂಜೆಗೆ ಎಲ್ಲ ಸಿದ್ಧವಾಗಿದೆ. +ಹೆಗ್ಗಡತಿ ಅಮ್ಮನವರಿಗೂ ತಿಳಿಸಿಬಿಡು, ಎಲ್ಲರೂ ಹೊಳೆಯಲ್ಲಿ ಕೈಕಾಲು ಮುಖ ತೊಳೆದುಕೊಂಡು ದೇವಸ್ಥಾನಕ್ಕೆ ಬರಲಿ.” +ತಮ್ಮ ಹಳ್ಳಿಯನ್ನು ‘ಊರು’ ಎಂದಾಗಲಿ ‘ಹಳ್ಳಿ’ ಎಂದಾಗಲಿ ಕರೆಯದ ‘ಮನೆ’ ಎಂದೇ ಕರೆದು, ದೊಡ್ಡದಾದರೂ ಒಂದೊಂದೇ ಬಿಡಿಯಾಗಿದ್ದ ಮನೆಯಲ್ಲಿ ವಾಸಿಸಿ ರೂಢಿಯಾಗಿದ್ದ ಧರ್ಮು ತಿಮ್ಮು ಅವರಿಗೆ ಇಪ್ಪತ್ತೊ ಮೂವತ್ತೊ ಹೆಂಚಿನ ಮನೆಗಳೂ ಸೋಗೆಯ ಮತ್ತು ಹುಲ್ಲಿನ ಗುಡಿಸಲು ಮನೆಗಳೂ ಒಟ್ಟಿಗಿದ್ದು, ಅವುಗಳ ನಡುವೆ ಹಾದುಹೋಗಿದ್ದ ಒಂದು ತೇರುಬೀದಿಯೂ ಇದ್ದ ಕಲ್ಲೂರು, ‘ಪೇಟೆ’ಯಾಗಿ, ಸಾಕಷ್ಟು ವಿಸ್ಮಯ ಗೌರವಾಸ್ಪದವಾಗಿಯೆ ಇತ್ತು. +ಅವರಿಬ್ಬರಿಗಿಂತಲೂ ಮೊದಲೇ ಆ ಊರಿನ ತೇರಿಗೆ ಬಂದು ಹೋಗಿದ್ದ ಕಾಡು ಸರ್ವಜ್ಞ ಮಾರ್ಗದರ್ಶಿಯಾಗಿ ಬಿಟ್ಟನು! +ಕೈಕಾಲು ಮುಖ ತೊಳೆದುಕೊಳ್ಳುವುದಕ್ಕೆ ಎಲ್ಲರೂ ಅಲ್ಲಲ್ಲಿ ಧರಿಸಿ ಹಾಳಾಗಿದ್ದ ಮೆಟ್ಟಲುಗಳನ್ನು ಇಳಿಯುತ್ತಿದ್ದಾಗ ತನ್ನ ಅಮ್ಮನ “ಏ, ಬದಿಗೆ ನಿಂತುಕೊಳ್ರೋ, ಮಡಿಯಮ್ಮ ಬರ್ತಿದ್ದಾರೆ!” ಎಂಬ ಅಜ್ಞಾಧ್ವನಿಯನ್ನು ಕೇಳಿ, ಕಾಡು ತನ್ನ ಗೆಳೆಯರಿಬ್ಬರನ್ನೂ ಪಕ್ಕಕ್ಕೆ ಎಳೆದುಕೊಂಡು ನಿಂತನು. +ಕೆಂಪು ಸೀರೆಯುಟ್ಟು, ನುಣ್ಣಗೆ ಬೋಳಿಸಿದ ಮಂಡೆಗೆ ಸೆರಗು ಮುಚ್ಚಿ, ಕೈಯಲ್ಲೊಂದು ಚೆನ್ನಾಗಿ ಬೆಳಗಿ ಪಳಪಳ ಹೊಳೆಯುತ್ತಿದ್ದ ತಾಮ್ರದ ತಂಬಿಗೆ ಹಿಡಿದು ಬರುತ್ತಿದ್ದ ಹೆಂಗಸೊಬ್ಬಳನ್ನು ಕಂಡು ತಿಮ್ಮು ಕೇಳಿದನು “ಯಾರೋ ಅದು?” + ತಮ್ಮ ಮನೆಯಲ್ಲಿ ಎಲ್ಲರೂ ಗೌರವ ತೋರಿಸುತ್ತಿದ್ದ ತನ್ನ ಅಜ್ಜಮ್ಮನೂ ಕೂಡ ಅವಳಿಗಾಗಿ ಪಕ್ಕಕ್ಕೆ ಸರಿದು ದಾರಿಬಿಡುವಷ್ಟು ಭಯ ಭಕ್ತಿ ಗೌರವಾಸ್ಪದಳಾದ ಆ ಹೆಂಗಸು ಬಹಳ ದೊಡ್ಡ ವ್ಯಕ್ತಿಯೆ ಆಗಿರಬೇಕೆಂದು ಅವನ ಭಾವನೆ. +ಆದರೆ ‘ಸರ್ವಜ್ಞ ಮಾರ್ಗದರ್ಶಿ’ ಪ್ರತ್ಯುತ್ತರ ಕೊಡದೆ, ಅರ್ಧ ಭೀತಿಯಿಂದಲೊ ಎಂಬಂತೆ, ಮೆಟ್ಟಲನ್ನು ಎಣಿಸುತ್ತಿರುವಳೊ ಎಂಬಷ್ಟು ನಿಧಾನವಾಗಿ ಹತ್ತಿ ಹತ್ತಿ ಬರುತ್ತಿದ್ದ ಆ ಬೃಹದಾಕಾರದ, ಸ್ಥೂಲಕಾಯದ, ಉಗ್ರವದನದ ಸ್ತ್ರೀಯನ್ನು ಸುಮ್ಮನೆ ನೋಡುತ್ತಿದ್ದನು. +ಅವಳು ಹತ್ತಿರ ಬಂದಾಗ, ತುಟಿಯನ್ನೆತ್ತಿಕೊಂಡು ಉಬ್ಬಿ ಹೊರಟ ಒಂದು ಕೋರೆ ಹಲ್ಲೂ, ಪಕ್ಕದ ಎರಡು ಮೂರು ಹಲ್ಲು ಬಿದ್ದುಹೋಗಿ ಉಬ್ಬಿದ್ದ ಅಸುಡೂ ನೋಡುವುದಕ್ಕೆ ಹೆದರಿಕೆ ಹುಟ್ಟಿಸುವಂತಿದ್ದುವು. +ಮತ್ತೆ ಕೇಳಿದನು ತಿಮ್ಮು ಮೆಲ್ಲಗೆ “ಯಾರೋ ಅದೂ? +ಗಂಡಸೋ?ಹೆಂಗಸೋ?” +“ಹೆಂಗಸು ಕಣೋ! +ಬೋಳುಹಾರ್ತಿ! …. + ಅವಳ ಕಡೇನೇ ನೋಡಬ್ಯಾಡೋ, ಬಯ್ತಾಳಂತೆ” ಎಂದನು ಕಾಡು. +ಆದಷ್ಟು ಮೆಲ್ಲಗೆ. +ಆದರೆ ಸಮೀಪಿಸಿದ್ದ ಆ ಬ್ರಾಹ್ಮಣ ವಿಧವೆಗೆ ಅದು ಕೇಳಿಸಿತೆಂದು ತೋರುತ್ತದೆ. +ಅವರ ಕಡೆ ದುರುದುರುದುರು ಕಣ್ಣು ಬಿಟ್ಟು, ಬಾಯಲ್ಲಿ ಏನೋ ಶಾಪಹಾಕುತ್ತಾ, ಏದುತ್ತಾ ಮೇಲಕ್ಕೆ ಏರಿ ಮೆಟ್ಟಿಲು ಹತ್ತಿ ಹೋದಳು. +“ಹಾಂಗಂದ್ರೆ?” ತಿಮ್ಮ ಮತ್ತೆ ಪ್ರಶ್ನಿಸಿದನು, ಅವಳು ದೂರ ಹೋದ ಮೇಲೆ. +“ಬೋಳಮ್ಮ ಕಣೋ…. +ಬೋಳು ಮುಂಡೆ!” +“ಛೆ!ಯಾಕೊ ಬಯ್ತೀಯಾ?” +“ಏ, ಬಯ್ಯದಲ್ಲ ಕಣೋ; +ಬ್ರಾಂಬ್ರಲ್ಲಿ ಗಂಡ ಸತ್ತ ಮುಂಡೇರಿಗೆ ಮಂಡೆ ಬೋಳಿಸ್ತಾರೆ, ಅದ್ಕೇ ‘ಬೋಳುಮುಂಡೆ’ ಅನ್ನಾದು!” ಮಾತಾಡುತ್ತಲೆ ಎಲ್ಲರ ಜೊತೆ ಇವರೂ ಹೊಳೆಗೆ ಇಳಿದರು. +ಧರ್ಮು ಏನೊಂದನ್ನೂ ಮಾತನಾಡದೆ ಚಿಂತಾಗ್ರಸ್ತನಾಗಿ ಮೆಲ್ಲಗೆ ಮೆಟ್ಟಲು ಇಳಿಯುತ್ತಿದ್ದನು. +ಕಾಡು ‘ಬೋಳುಹಾರ್ತಿ’ ಎನ್ನುವುದಕ್ಕೆ ಕೊಟ್ಟ ವಿವರಣೆಯನ್ನು ಕೇಳಿ ಅವನಿಗೆ ಗುಂಡು ತನ್ನೆದೆಗೇ ತಗುಲಿದಂತೆ ಆಗಿತ್ತು. +ತಿರುಪತಿಗೆ ಹೋಗಿದ್ದ ತನ್ನ ಅಪ್ಪಯ್ಯ ಸತ್ತಿದ್ದರೆ, ಅಥವಾ ಸತ್ತರೆ, ತನ್ನ ಅವ್ವನೂ ಹೀಗೆಯೆ ಮಂಡೆಬೋಳಿಸಿಕೊಂಡು ಕೆಂಪು ಸೀರೆ ಉಟ್ಟುಕೊಂಡು ವಿಕಾರವಾಗುತ್ತಾಳೆಯೊ ಏನೊ ಎಂಬೊಂದು ಮಹಾ ಸಂಕಟಕರ ಭೀತಿ ಅವನ ಹೃದಯದಲ್ಲಿ ಸಂಚರಿಸತೊಡಗಿತ್ತು. +ಮುಂದೆ ಹೆಂಗಸರ ಜೊತೆ ತಂಗಿಯ ಮಗು ಚೆಲುವಯ್ಯನನ್ನು ಎತ್ತಿಕೊಂಡು ಮೆಟ್ಟಿಲಿಳಿಯುತ್ತಿದ್ದ ತನ್ನ ಮಾತೃಮೂರ್ತಿಯನ್ನು ನೋಡಿದನು. +ಅವನಿಗೆ ಎದೆ ಕರಗಿದಂತಾಯ್ತು. +ಹೆದರಿ ಹೆದರಿ ಪ್ರಶ್ನಿಸಿದನು “ಕಾಡಣ್ಣಯ್ಯ, ನಮ್ಮಲ್ಲಿಯೂ ಹೀಂಗೆ ಮಾಡ್ತಾರೇನೋ, ಗಂಡ ಸತ್ತರೆ?” +“ಥೂಥೂಥೂ!ಎಂಥಾ ಮಾತಾಡ್ತೀಯೋ? +ನಮ್ಮಲ್ಲಿ ಯಾರಿಗೂ ಹೀಂಗೆ ಮಾಡಾದಿಲ್ಲೊ! +ಬ್ರಾಂಬ್ರ ಜಾತೀಲಿ ಮಾತ್ರ ಹಂಗೆ ಮಾಡಾದು.” +“ಸದ್ಯ ನಾನೂ ನನ್ನವ್ವನೂ ಬಿರಾಂಬ್ರಜಾತೀಲಿ ಹುಟ್ಟದೆ ಗೌಡರ ಜಾತೀಲಿ ಹುಟ್ಟಿದ್ದೀವಲ್ಲಾ!” ಮನಸ್ಸಿನಲ್ಲಿಯೆ ಅಂದುಕೊಂಡು ಧರ್ಮು ಹೊಳೆಯ ಅಂಚಿನ ತೆಳ್ಳೆ ನೀರಿಗಿಳಿದನು. +ಹೊಳೆಯಿಂದ ಮೇಲಕ್ಕೆ ಬರುತ್ತಿದ್ದಾಗ ಬಂಡೆಗಳೆಡೆ ದುರ್ವಾಸನೆ ಬರುತ್ತಿರಲು ತಿಮ್ಮು ಮೂಗು ಮುಚ್ಚಿಕೊಂಡನು; +“ಈ ಊರಿನ ಹಾರುವರೆಲ್ಲ ಇಲ್ಲೆ….” ಮೂವರೂ ಅಸಹ್ಯ ಸೂಚಕ ಧ್ವನಿಮಾಡುತ್ತಾ ಆ ಸ್ಥಳದಿಂದ ಬೇಗನೆ ದೂರ ಹೋಗಲು ಓಡಿ ಓಡಿ ಮೆಟ್ಟಲೇರಿದರು. +ದೊಡ್ಡಮ್ಮ ಹೆಗ್ಗಡಿತಿಯವರ ಗಂಭೀರವಾದ ಮುಂದಾಳುತನದಲ್ಲಿ ಎಲ್ಲರೂ ದೇವಸ್ಥಾನದ ಒಳಾಂಗಣಕ್ಕೆ ಹೋದರು. +ಕಾಡು ಮಾತ್ರ ತನ್ನ ಗೆಳೆಯರ ಬಟ್ಟೆ ಹಿಡಿದೆಳೆಯುವ ಸಂಕೇತಮಾಡಿ, ಅವರನ್ನು ಹಿಂದುಳಿಯುವಂತೆ ಮಾಡಿದನು. +ದೇವರ ಪೂಜೆಗೆ ಆದಷ್ಟು ಬೇಗನೆ ಹೋಗಿ, ತನ್ನ ತಾಯಿಗೂ ತನಗೂ ಮಂಗಳವಾಗುವಂತೆ ಪ್ರಾರ್ಥಿಸಿಕೊಳ್ಳಲು ಆತುರದಿಂದಿದ್ದ ಧರ್ಮು “ಯಾಕೋ?ಅಜ್ಜಮ್ಮ ಬಯ್ತಾರೆ; +ಬೇಗ ಹೋಗೋಣೋ” ಎಂದನು. +“ಇನ್ನೂ ಸುಮಾರು ಹೊತ್ತಿದೆಯೋ ಪೂಜೆಗೆ. +ಗಂಟೆ ಜಾಗಟೆ ಎಲ್ಲ ಬಾರಿಸ್ತಾರಲ್ಲಾ? +ಆವಾಗ ಓಡಿದರಾಯ್ತು. +ನಿಮಗೆ ರಥದ ಕೊಟ್ಟಿಗೆ ತೋರಿಸ್ತೀನಿ ಬನ್ನಿ. +ರಥಾನೂ ಇರ್ತದೆ. +ದೊಡ್ಡ ಗಾಲಿಯ ತೇರು ಕಣೋ!”ರಥದ ಕೊಟ್ಟಿಗೆಗೆ ಹೋಗಿ ಮೂವರೂ ವಿಸ್ಮಯದಿಂದ ಅದರ ಬೃಹದಾಕಾರದ ಗಾಲಿಗಳನ್ನು ನೋಡುತ್ತಿದ್ದಾಗ, ಕಾಡು ರಥೋತ್ಸವದಲ್ಲಿ ತೇರನ್ನು ಹೇಗೆ ಸಿಂಗರಿಸುತ್ತಾರೆ, ಹೇಗೆ ಎಳೆಯುತ್ತಾರೆ, ಮಿಣಿ ಕಟ್ಟುವುದು ಹೇಗೆ – ಎಂಬೆಲ್ಲ ತನ್ನ ಅನುಭವಗಳನ್ನು ವಿವರಿಸುತ್ತಿರಲು, ತಿಮ್ಮು ಹಿಗ್ಗಿ ಕೂಗಿಯೆಬಿಟ್ಟನು. + “ಅಲ್ಲಿ ನೋಡೋ!ಅಲ್ಲಿ ನೋಡೋ! +ಅವೆಂಥಾ ಹಕ್ಕಿಯೊ? +ಎಷ್ಟೊಂದು ಇವೆಯೋ?” +“ಅವು ಪಾರಿವಾಳ ಕಣೋ. +ಇಲ್ಲೇ ಅವು ಗೂಡುಕಟ್ಟಿ ಮರೀನೂ ಮಾಡ್ತವೆ.” +“ಅವನ್ನ ಹೊಡಕೊಂಡು ತಿನ್ನಾದಿಲ್ಲೇನೋ…” +“ದೇವರ ಹಕ್ಕಿ, ದೇವರ ಮೀನು ಇವನ್ನ ತಿನ್ತಾರೇನೋ ಯಾರಾದ್ರೂ? +ಅದರಲ್ಲೂ ಇಲ್ಲಿ ಇರೋರೆಲ್ಲಾ ಹೆಚ್ಚಾಗಿ ಹಾರುವರೆ.” +“ಇದೇನೋ ಇಷ್ಟೊಂದು ಕಾಗೆ? +ಹಿಂಡು ಹಿಂಡು? +ನಮ್ಮ ಮನೆ ಹತ್ರ ಹುಡುಕಿದ್ರೂ ಕಾಣಾಕೆ ಸಿಗಾದು ಅಪರೂಪ.” +“ಹಾರ್ ಮಕ್ಕಳು ಇದ್ದಲ್ಲೇ ಹಾಂಗೆ ಕಣೋ! +ಕಾಗೆ, ನಾಯಿ ಹಿಂಡು ಹಿಂಡೇ ಇರ್ತವೆ. +ಚೆಂದಾಗಿ ತಿಂದು ಬಿಸಾಡ್ತಾರೆ ನೋಡು, ಅದಕ್ಕೇ!” +ಕಾಡು ತಿಮ್ಮು ಅವರ ಕೊನೆಮೊದಲಿಲ್ಲವೆಂಬಂತೆ ಸಾಗುತ್ತಿದ್ದ ಮಾತಿನ ಕಡೆಗೆ ಧರ್ಮು ಅಷ್ಟೇನೂ ಹೆಚ್ಚು ಗಮನ ಕೊಟ್ಟಂತೆ ಕಾಣುತ್ತಿರಲಿಲ್ಲ. +ಅವನ ಮನಸ್ಸೆಲ್ಲ ದೇವಸ್ಥಾನದ ಕಡೆಗೇ ಇತ್ತು. +ಒಂದೆರಡು ಸಾರಿ ಅವನಿಗೆ ಗಂಟೆಯೊ ಜಾಗಟೆಯೂ ಬಾರಿಸಿದಂತೆ ಕೇಳಿಸಿತ್ತು. +ಆದರೆ ಕಾಡು “ನಿಂಗೇನೋ ಕಿವಿ ಒಳಗೇ ಯಾರೋ ಗಂಟೆ ಜಾಗಟೆ ಬಾರಿಸ್ತಾರೆ ಅಂತಾ ಕಾಣ್ತಾದೆ!” ಎಂದು ಹಾಸ್ಯ ಮಾಡಿದ್ದನು. +ಆದರೆ ಧರ್ಮು ಮತ್ತೆ ಮತ್ತೆ ಎಚ್ಚರಿಸುತ್ತಲೆ ಇದ್ದುದರಿಂದ ಮೂವರೂ ದೇವಸ್ಥಾನದೊಳಕ್ಕೆ ಯಾರ ಗಮನಕ್ಕೂ ಬೀಳಬಾರದೆಂದು ಮೆಲ್ಲಗೆ ನುಸುಳಿ ನಡೆದರು. +ಕಲ್ಲನ್ನೆ ಹಾಸಿ, ಕಲ್ಲನ್ನೆ ಹೊದಿಸಿ, ಕಲ್ಲಿನ ಕಂಬಗಳ ಮೇಲೆಯೆ ನಿಂತಿದ್ದ ಆ ಗುಡಿಯ ನಿರ್ಮಲವಾಗಿದ್ದ ಒಳಾಂಗಣ ಹೂವು ಗಂಧ ಧೂಪ ಇವುಗಳ ಮಿಶ್ರಪರಿಮಳದಿಂದ ಮನಸ್ಸಿಗೆ ಪವಿತ್ರ ಭಾವನೆಯನ್ನು ತರುತ್ತಿತ್ತು. +ಆ ಕಂಭಗಳಲ್ಲಿ ಆ ಬೋದಿಗೆಗಳಲ್ಲಿ ಕಲ್ಲಿನ ಕೆತ್ತನೆಯ ಕೆಲಸ ಕುತೂಹಲಕಾರಿಯಾಗಿತ್ತಾದರೂ ಬೆಕ್ಕಸಪಡುವಂಥಾದ್ದೇನೂ ಇರಲಿಲ್ಲ, ಹುಡುಗರ ಭಾಗಕ್ಕೆ. +ಏಕೆಂದರೆ ಅವರ ಮನೆಯ ಜಗಲಿಯ ದೊಡ್ಡ ದೊಡ್ಡ ಮಂಡಿಗೆಗಳೇ ಚಿತ್ರಕರ್ಮದಲ್ಲಿ ಆ ಕಲ್ಲುಕಂಭಗಳಿಗಿಂತಲೂ ಮೇಲುಮಟ್ಟದ್ದಾಗಿದ್ದುವು. +ಜಗಲಿಯಂತೆ ಎತ್ತರವಾಗಿದ್ದ ಅಂಗಣದ ಮೇಲುಭಾಗದಲ್ಲಿ ಬ್ರಾಹ್ಮಣ ಮುತ್ತೈದೆಯರು ಕುಳಿತಿದ್ದರು. +ಕೆಳಗಿನ ಅಂಗಳದಲ್ಲಿ ಶೂದ್ರವರ್ಗದವರು ಎಂದರೆ ಬೆಟ್ಟಳ್ಳಿ ಕೋಣೂರು ಹಳೆಮನೆಯ ಹೆಂಗಸರು ಗುಂಪು ಕೂಡಿದ್ದರು. +ಗಾಡಿ ಹತ್ತಲೊಲ್ಲದೆ ದಾರಿಯಲ್ಲಿ ಬಿಟ್ಟು ಬಂದಿದ್ದ ರಾಮುವೂ ತನ್ನ ತಾಯಿಯ ಪಕ್ಕದಲ್ಲಿ ಕುಳಿತಿದ್ದವನು, ಪ್ರವೇಶಿಸಿದ ಈ ಮೂವರನ್ನೂ ಕಂಡೊಡನೆ, ಸನ್ನಿವೇಶದ ಗಾಂಭೀರ್ಯವನ್ನು ಒಂದಿನಿತೂ ಗಮನಿಸದೆ “ಓ!ಧರ್ಮಣ್ಣಯ್ಯ ತಿಮ್ಮಭಾವ ಎಲ್ಲಾ ಬಂದ್ರಲ್ಲಾ!” ಎಂದು ಗಟ್ಟಿಯಾಗಿ ತಮ್ಮ ಹಳ್ಳಿಯ ಮನೆಯಲ್ಲಿ ಕೂಗುವಂತೆ ಕೂಗಿ ಕರೆಯುತ್ತಾ ಎದ್ದು ಓಡಿ ಬಂದು, ಅವರನ್ನು ಸ್ವಾಗತಿಸಿ, ತನ್ನ ಹಳ್ಳಿಗತನದಿಂದ ಎಲ್ಲರ, ವಿಶೇಷವಾಗಿ ಬ್ರಾಹ್ಮಣ ಮಹಿಳಾವರ್ಗದ ಮುಚ್ಚು ನಗೆಗೆ ಪಕ್ಕಾಗಿದ್ದನು! +ಶೂದ್ರವರ್ಗದ ಸ್ತ್ರೀಯರು ಮುಸುಗುನಗೆ ನಟಿಸಿದ್ದರೂ ತಮ್ಮವನಾದ ಹುಡುಗನೊಬ್ಬನ ಅಸಭ್ಯ ಅಥವಾ ಗ್ರಾಮ್ಯವರ್ತನೆಗಾಗಿ ಅವಮಾನಿತರಾಗಿದ್ದರು! +ಬ್ರಾಹ್ಮಣ ಗಂಡಸರಿಗೆ ಸಮೀಪವಾಗಿ, ಆದರೆ ಕೆಳ ಅಂಗಳದಲ್ಲಿ, ಕೆಲವೇ ಶೂದ್ರರೊಡನೆ ಕುಳಿತಿದ್ದ ಪಟ್ಟೆನಾಮದ ಹೆಂಚಿನ ಮನೆಯ ಶಂಕರಪ್ಪ ಹೆಗ್ಗಡೆಯವರು ಹೆಗ್ಗನ್ಣು ಬಿಟ್ಟು ಮಗನನ್ನು ಗದರಿಸಿದರು. +ಧರ್ಮು ಜನರ ಕಣ್ಣಿನಿಂದ ಆದಷ್ಟು ಬೇಗನೆ ತಪ್ಪಿಸಿಕೊಳ್ಳಲೆಂಬಂತೆ, ರಾಮುನ ಕೈಹಿಡಿದುಕೊಂಡೇ ಬೇಗಬೇಗನೆ ಹೋಗಿ, ತನ್ನ ತಾಯಿಯ ಹತ್ತಿರ ಹುದುಗುವವನಂತೆ ಕುಳಿತನು. +ಕಾಡು ತಿಮ್ಮು ಇಬ್ಬರೂ ದೂರದಲ್ಲಿಯೆ ಒಂದು ಕಲ್ಲು ಕಂಬಕ್ಕೆ ಒರಗಿ ನಿಂತು ಎಲ್ಲವನ್ನೂ ನೋಡತೊಡಗಿದರು, ತಾವು ಯಾವುದನ್ನೂ ಲಕ್ಷಿಸುವವರಲ್ಲ ಎಂಬಂತೆ ಸೆಟೆದುನಿಂತು. +ತನ್ನ ತಾಯಿ ಮುಂತಾದವರ ಗೊಬ್ಬೆ ಸೆರಗಿನ ಮಲೆನಾಡಿನ ಉಡಿಗೆಯನ್ನೇ ನೋಡಿ ಅಭ್ಯಾಸವಾಗಿದ್ದ ತಿಮ್ಮುಗೆ ಹಾರುವರ ಹೆಂಗಸರ ಉಡುಗೆಯ ರೀತಿ ವಿನೋದಕರವಾಗಿತ್ತು. +ಅದರಲ್ಲಿಯೂ ಕಚ್ಚೆ ಹಾಕಿದಂತೆ ಸೀರೆ ಉಟ್ಟಿದ್ದವರನ್ನು ನೋಡಿ ಅವನಿಗೆ ನಗೆ ತಡೆಯಲಾಗಲಿಲ್ಲ. +“ಏನೋ, ಕಾಡಣ್ಣಯ್ಯ, ಗಂಡಸರ ಹಾಂಗೆ ಕಚ್ಚೆ ಹಾಕಿಲ್ಲಾರಲ್ಲೋ ಥೂ!” ಎಂದು ಪಿಸುಗುಟ್ಟಿದ್ದನು. +ಅದೊಂದು ತರದ ಬಿರಾಂಬರ ಉಡಿಗೆ ಕಣೋ!” ಎಂದು ವಿವರಿಸಿದ್ದನು ಕಾಡು. +ತಿಮ್ಮುಗೆ ಉಡಿಗೆ ತೊಡಿಗೆಯಲ್ಲಾಗಲಿ ರೂಪದಲ್ಲಾಗಲಿ ಬಣ್ಣದಲ್ಲಾಗಲಿ ತನ್ನ ಹಳೆಮನೆ ಅತ್ತೆಮ್ಮ ಬೆಟ್ಟಳ್ಳಿ ಅತ್ತೆಮ್ಮ ಮುಂತಾದವರ ಮುಂದೆ ಯಾವ “ಹಾರ್ತಿ”ಯೂ “ಚೆಂದ” ಕಾಣಿಸಲಿಲ್ಲ. +ಇವರು ನೋಡುತ್ತಿದ್ದಂತೆಯೆ ಒಬ್ಬಳು ಬ್ರಾಹ್ಮಣ ಯುವತಿ, ಒಳ್ಳೆಯ ಸೀರೆಯನ್ನುಟ್ಟು ಅಲಂಕಾರವಾಗಿದ್ದಳು. + ಮತ್ತೊಬ್ಬಳು ಬ್ರಾಹ್ಮಣ ತರುಣಿಯನ್ನು ನೋಡುವುದಕ್ಕೆ ಬೆಳ್ಳಗೆ ತೆಳ್ಳಗೆ ಲಕ್ಷಣವಾಗಿದ್ದರೂ ತುಂಬ ಕೃಶಳಾಗಿದ್ದು ಟೊಂಕ ತಿರುಪಿದಂತೆ ಕಾಲು ಹಾಕಿ ಕುಂಟುತ್ತಿದ್ದಳು-ಕೈ ಆಪುಕೊಟ್ಟು ಮೆಲ್ಲಗೆ ನಡೆಸಿಕೊಂಡು ಬಂದು ಬ್ರಾಹ್ಮಣ ಮಹಿಳೆಯರ ನಡುವೆ ಕೂರಿಸಿ, ತಾನೂ ಅವಳ ಪಕ್ಕದಲ್ಲಿ ರಕ್ಷಕಳೆಂಬಂತೆ ಕೂತಳು. +ಅಲ್ಲಿ ನೆರೆದಿದ್ದ ಗಂಡಸರ ಮತ್ತು ಹೆಂಗಸರ ದೃಷ್ಟಿಯೆಲ್ಲ ಅವಳ ಕಡೆ ನೆಟ್ಟಿತ್ತು. +ಕೆಲವರು ತಮ್ಮತಮ್ಮಲ್ಲಿಯೆ ಪಿಸುಪಿಸು ಮಾತನಾಡಿಕೊಂಡರು; +ಕೆಲವರು ಕಿಸಕ್ಕನೆ ಮೆಲುನಗೆ ನಕ್ಕಿದ್ದೂ ಕೇಳಿಸಿತು. +ನೋಡುವುದಕ್ಕೆ ಸುಂದರವಾಗಿದ್ದರೂ ಕಾಯಿಲೆ ಹಿಡಿದವಳಂತೆ ಬಿಳಿಚಿ ಕೃಶವಾಗಿದ್ದು ಕುಂಟುತ್ತಾ ಬಂದಿದ್ದ ಆ ತರುಣಿಯನ್ನು ನೋಡಿ, ತನ್ನ ಹುಟ್ಟುಗುಣವಾದ ಸೌಂದರ್ಯ ಪಕ್ಷಪಾತವನ್ನಾಗಲೆ ಪ್ರದರ್ಶಿಸತೊಡಗಿದ್ದ ತಿಮ್ಮು, ಸಂಕಟಮುಖಿಯಾಗಿ, ಸರ್ವಜ್ಞ ಮಾರ್ಗದರ್ಶಿಯ ಸ್ಥಾನಕ್ಕೆ ಸ್ವಯಂ ಪಟ್ಟಕಟ್ಟಿಸಿಕೊಂಡಿದ್ದ ಕಾಡುವನ್ನು ಕುರಿತು “ಅದು ಯಾರೋ ಆ ಹೆಂಗಸು? +ಪಾಪ!ಏನಾಗಿದೆಯೋ ಅವಳಿಗೆ? +ಎಷ್ಟು ಚೆನ್ನಾಗಿದ್ದಾರೆ ಅಲ್ಲಾ? +ನೋಡಕ್ಕೆ ಹೂವಳ್ಳಿ ಚಿನ್ನಕ್ಕನ ಹಾಂಗೆ ಕಾಣ್ತಾರೆ” ಎಂದನು. +ಕಾಡು ತನ್ನ ತಾಯಿ ದೊಡ್ಡಮ್ಮ ಹೆಗ್ಗಡಿತಿಯವರು ಕೂತಿದ್ದಲ್ಲಿಗೆ ಓಡಿಹೋಗಿ, ಅವರೊಡನೆಯೂ ದೇವಮ್ಮ ರಂಗಮ್ಮ ಧರ್ಮು ಅವರೊಡನೆಯೂ ಏನೇನೋ ಪಿಸು ಮಾತಾಡುತ್ತಿದ್ದು, ತಜ್ಞನಾದ ಸಂತೋಷದಿಂದ ಹಿಂದಿರುಗಿ ಬಂದು ಹೇಳಿದನು. +“ಅವರು ಮಂಜಭಟ್ಟರ ಸೊಸೆ ಅಂತೆ ಕಣೋ! +ಅವರನ್ನೆ ಅಂತೆ, ಅತ್ತೆ ಮಾವ ಸೇರಿಕೊಂಡು ಹೊಡೆದೂ ಬಡಿದೂ ಕಾಲು ತಿರುವಿ ಹಾಕಿದ್ದು! +ಆಗ ಒಂದು ಸಾರಿ ಒಬ್ಬ ಒಳಗೆ ಬಂದು ಅವರ ಇವರ ಹತ್ರ ಏನೇನೋ ಕಿವಿಮಾತು ಆಡಿ ಹೊರಗೆ ಹೋದ ನೋಡು, ಬಚ್ಚಗಾನಿ ಉಟ್ಕುಂಡು ಚಿನ್ನದ ರುದ್ರಾಕ್ಷೀನ ಕೊರಳಿಗೆ ಹಾಕಿಕೊಂಡಿದ್ನಲ್ಲಾ? +ನಮ್ಮ ದೇವಣ್ಣಯ್ಯನ ಹಾಂಗೆ ಚೆಂದಾಗಿದ್ದನಲ್ಲೋ?…  +ಅವನೇ ಅಂತೆ ಅವರ ಗಂಡ! +ನಾರಾಯಣಭಟ್ಟ ಅಂತೆ ಕಣೋ ಅವನ ಹೆಸರು…  +ಅಂವ ಇವರನ್ನ ಬಿಟ್ಟು ಕಿಟ್ಟ ಐತಾಳನ ಹೆಂಡ್ತಿ ಇಟ್ಟುಕೊಂಡಿದ್ದಾನಂತೆ….ಯಾರಂತೀಯಾ? +ನೋಡಲ್ಲೇ ಅವರ ಹತ್ರಾನೆ ಕೂತಿದ್ದಾಳಲ್ಲಾ, ಸಿಂಗಾರ ಮಾಡಿಕೊಂಡು, ಗಟ್ಟದ ತಗ್ಗಿನವರರಾಂಗೆ ತಲೆಚಾಚಿ ಕೊಂಡಿದೆಯಲ್ಲಾ ಅವಳೇ!… +“ಅವರನ್ನ ಕೈಹಿಡಿದು ನಡೆಸಿಕೊಂಡು ಬಂದಳಲ್ಲಾ ಅವಳೆ ಏನೋ?” +“ಹ್ಞೂ ಕಣೋ!” +ಅಷ್ಟರಲ್ಲಿ ನೆರೆದಿದ್ದವರೆಲ್ಲ ಗುಡಿಯ ಹೆಬ್ಬಾಗಿಲ ಕಡೆ ದೃಷ್ಟಿಯಾಗಿ ಏನೊ ಗುಜುಗುಜು ಹಬ್ಬಿತು. +ನೋಡುತ್ತಿದ್ದ ಹಾಗೆ ಜೋಯಿಸರ ಸಂಗಡ ದೇವಯ್ಯ, ಮುಕುಂದಯ್ಯ ಪ್ರವೇಶಿಸಿದರು. +ಕೆದರು ಕ್ರಾಪಿನ ತಲೆ, ಹರಳೊಂಟೆ ಹೊಳೆವ ಕಿವಿ, ಕರಿಯ ಕುಡಿಮಾಸೆ, ಹೊನ್ನುಂಗುರದ ಬೆರಳು, ನಶ್ಯದ ಬಣ್ಣದ ಕೋಟು, ಬಿಳಪಲ್ಲಿನಕಚ್ಚೆಪಂಚೆ, ಹೆಗಲ ಮೇಲಿದ್ದ ಹೊಸ ತೋಟಾಕೋವಿ, ಎತ್ತರದ ಬಲಿಷಠ ಭಂಗಿ, ಕ್ರೈಸ್ತಪಾದ್ರಿಗಳ ಮೂಲಕ ಆಗತಾನೆ ಮಲ್ಲಗೆ ಪ್ರವೇಶಿಸುತ್ತಿದ್ದ ನವನಾಗರಿಕತೆಯ ಸ್ಥೂಲರುಚಿಯ ಲಕ್ಷಣಗಳಿಂದ ಸಮನ್ವಿತರಾಗಿದ್ದ ದೇವಯ್ಯ ಗೌಡರನ್ನು ನೋಡಿ ನೆರೆದಿದ್ದವರೆಲ್ಲರೂ, ಹೆಂಗಸರು, ಗಂಡಸರು, ಎಲ್ಲರೂ ಬೆರಗಾದರು; +ಕೆಲವರು ಕರುಬೂ ತಲೆಹಾಕಿತ್ತು; +ಹಲವರಲ್ಲಿ, ಬ್ರಾಹ್ಮಣ ದ್ವೇಷಿಯೆಂದು ಹೆಸರಾಗಿದ್ದ ಅವನ ಮೇಲೆ, ತಿರಸ್ಕಾರ ಭಾವವೂ ಸುಳಿಯದಿರಲಿಲ್ಲ. +ಅವನ ಪಕ್ಕದಲ್ಲಿದ್ದು, ಒಂದು ಸಾಧಾರಣ ಕೋಟು ಹಾಕಿಕೊಂಡು, ಕಟ್ಟಿದ್ದ ಜುಟ್ಟು ಹಿಂದುಗಡೆ ಕಾಣಿಸುವಂತೆ ತಲೆಗೊಂದು ತೋಪಿಯಿಟ್ಟು, ಅಡ್ಡಪಂಚೆಯುಟ್ಟಿದ್ದ ತರುಣ ಮುಕುಂದಯ್ಯನನ್ನು ಯಾರೂ ಅಷ್ಟಾಗಿ ಗಮನಿಸಲಿಲ್ಲ. +ನಾರಾಯಣಭಟ್ಟನ ಹೆಂಡತಿಯ ಪಕ್ಕದಲ್ಲಿ ಕುಳಿತಿದ್ದ ಐತಾಳನ ಹೆಂಡತಿಯಂತೂ, ತನ್ನ ತೋಟಾಕೋವಿಯನ್ನು ಒಂದು ಮೂಲೆಯಲ್ಲಿ ಕಲ್ಲು ಕಂಭಕ್ಕೆ ಒರಗಿಸಿಟ್ಟು, ಮುಕುಂದಯ್ಯನನ್ನು ಹಿಂಬಾಲಿಸಿ, ಶೂದ್ರ ಗಂಡಸರು ಕುಳಿತಿದ್ದೆಡೆಡಗೆ ನಡೆದು ದೇವಯ್ಯ ಅವರ ನಡುವೆ ಕುಳಿತುಕೊಳ್ಳುವವರೆಗೂ ಅವನತ್ತ ಇಟ್ಟಿದ್ದ ದೃಷ್ಟಿಯನ್ನು ಇತ್ತ ತಿರುಗಿಸಿರಲಿಲ್ಲ. +ಆಮೇಲೆಯೂ ಏನಾದರೋಂದು ನೆವ ಮಾಡಿಕೊಂಡು ಮತ್ತೆ ಮತ್ತೆ ಅವನತ್ತ ಕಣ್ಣು ಹಾಕುತ್ತಲೆ ಇದ್ದ್ಳು. +ಒಮ್ಮೆ ಹಾರುವ ಗಂಡಸರ ನಡುವೆ ಕುಳಿತಿದ್ದ ನಾರಾಯಣಭಟ್ಟನು ಎದ್ದು ದೇವಯ್ಯನ ಪಕ್ಕದಲ್ಲಿ ತುದಿಗಾಲಿನ ಮೇಲೆಯೆ ಕುಳಿತು ಸಂಭಾಷಿಸುತ್ತಿದ್ದಾಗಲಂತೂ ಅವರಿಬ್ಬರಿಗಿದ್ದ ತಾರತಮ್ಯವನ್ನು ಚೆನ್ನಾಗಿ ಗಮನಿಸಿದ್ದಳು; +‘ನಾರಾಯಣಭಟ್ಟನೂ ದೇವಯ್ಯನ ಹಾಗೆ ಕ್ರಾಪು ಬಿಟ್ಟಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು?’ ಎಂದುಕೊಂಡಿದ್ದಳು ಅವಳು. +ಪೂಜೆ ಪ್ರಾರಂಭವಾಗುವುದಕ್ಕೆ ಸ್ವಲ್ಪ ಮುಂಚೆ, ತಮ್ಮನ್ನು ಹಿಂಬಾಲಿಸುತ್ತಿದ್ದ ಕರಣಿಕ ಕಿಟ್ಟಿ ಐತಾಳನೊಡನೆ, ಕಲ್ಲೂರಿನಲೆಲ್ಲ ಅತ್ಯಂತ ಶ್ರೀಮಂತರೂ ಗಣ್ಯರೂ ದಕ್ಷರೂ ಎನ್ನಿಸಿಕೊಂಡಿದ್ದ ಮಂಜಭಟ್ಟರೆ ಸಾಕ್ಷಾತ್ತಾಗಿ ಹಾಜರಾದರು. +ಉತ್ತರದಲ್ಲಿ ಸಿಪಾಯಿ ದಂಗೆ ನಡೆಯುತ್ತಿದ್ದ ಕಾಲದಲ್ಲಿ ಹುಡುಗರಾಗಿದ್ದ ಅವರು ದಕ್ಷಿಣಕನ್ನಡ ಜಿಲ್ಲೆಯಿಂದ ಬರಿ ಕೈ ಬೀಸಿಕೊಂಡು ಬಂದಿದ್ದು ಕಲ್ಲೂರಿನ ದೇವಸ್ಥಾನದಲ್ಲಿ ಪೂಜಾರಿಯಾಗಿ ನಿಂತು, ಭಗವಂತನ ವಿಶೇಷಾನುಗ್ರಹದಿಂದ ಪ್ರಭಾವಶಾಲಿಯಾಗಿ ಶ್ರೀಮಂತ ಸ್ಥಿತಿಗೆ ಏರಿದ್ದರು. +ದೇವರ ಆ ಉಪಕಾರವನ್ನು ನಿತ್ಯವೂ ಸ್ಮರಿಸಿ ಕೃತಜ್ಞತೆ ಸಲ್ಲಿಸಲೊ ಎಂಬಂತೆ ಅವರು ಅನಿವಾರ್ಯವೊದಗಿದಾಗ ಹೊರತು ಉಳಿದೆಲ್ಲ ದಿನಗಳಲ್ಲಿಯೂ ತಪಪ್ದೆ ಗುಡಿಗೆ ಬಂದು ದರ್ಶನ ಕೊಟ್ಟೂ ಪಡೆದೂ ಹೋಗುತ್ತಿದ್ದುದು ವಾಡಿಕೆ. +ದೇವರು ಅವರೊಡನೆ ಗೃಹಕೃತ್ಯದ ಸಮಸ್ಯೆಗಳ ವಿಚಾರವಾಗಿ ಒಮ್ಮೊಮ್ಮೆ ಸಂವಾದ ನಡೆಸುತ್ತಿದ್ದನೆಂದೂ ಜನರು ಹೇಳುತ್ತಿದ್ದರು! +ವಿವಾದಗಳನ್ನೂ ಮಂಜಭಟ್ಟರ ಮುಖೇನ ಇತ್ಯರ್ಥಪಡಿಸುತ್ತಿದ್ದನಂತೆ! +ಹಾಗೆ ಇತ್ಯರ್ಥವಾಗಿದ್ದ ಎಷ್ಟೋ ವಿವಾದಗಳು ಮಂಜಭಟ್ಟರಿಗೇ ಸಂಬಂಧಪಟ್ಟವುಗಳಾಗಿ ಇರುತ್ತಿದ್ದುದರಿಂದ ಅವರು ಬಹುಬೇಗನೆ ಪುಣ್ಯವಂತರಾಗಿದ್ದರು! +ಸುಮಾರು ಎಪ್ಪತ್ತು ಎಪ್ಪತ್ತೈದರ ಅವರು ಅಷ್ಟೆನೂ ಎತ್ತರವಾಗಿರದೆ ತುಂಬ ದಪ್ಪವಾಗಿದ್ದರು. +ಸುಪ್ರಸಿದ್ಧವಾಗಿದ್ದ ಅವರ ಜುಗ್ಗುತನ ಉಟ್ಟ ಬಟ್ಟೆಬರೆಗಳಲ್ಲಿ ತೋರುತ್ತಿದ್ದರೂ ಊಟ ತಿಂಡಿ ಪಳಾರಗಳವರೆಗೆ ಅದು ವ್ಯಾಪಿಸಿರಲಿಲ್ಲವೆಂಬುದನ್ನು ಅವರ ಸುಪುಷ್ಟಕಾಯ ಸಾರುತ್ತಿತ್ತು. +ಕೊಳಕಾಗಿದ್ದ ಒಂದು ಮಡಿ ಪಾಣಿಪಂಚೆಯನ್ನು ಮೊಳಕಾಲಿನವರೆಗೆ ಕಚ್ಚಿ ಹಾಕಿದ್ದು, ಅವರ ಡೊಳ್ಳು ಹೊಟ್ಟೆಯೂ ನರೆತ ಕೂದಲು ತುಂಬಿದ್ದ ವಕ್ಷಸ್ಥಲವೂ ಜನಿವಾರ ವಿನಾ ಬತ್ತಲೆಯಾಗಿದ್ದುವು. +ಅವರು ಪ್ರವೇಶಿಸಿದೊಡನೆ ಅಲ್ಲಿ ನರೆದಿದ್ದವರ ಮಾತುಕತೆಯೆಲ್ಲ ನಂತು ನಿಃಶಬ್ದವಾಯ್ತು; +ಗರ್ಭಗುಡಿಯಲ್ಲಿ ಜೋಯಿಸರು ಮೃದುಸ್ವರದಲ್ಲಿ ಹೇಳಿಕೊಡುತ್ತಿದ್ದ ಮಂತ್ರಘೋಷವೂ ಅಸ್ಪಷ್ಟ ಮಧುರವಾಗಿ ಕೇಳಿಸತೊಡಗಿತು. +ಮೂಲೆಯಲ್ಲಿ ಕಣ್ಣು ಸೆಳೆಯುವಂತೆ ನಿಂತಿದ್ದ ತೋಟಾ ಕೋವಿಯನ್ನು ದುರುದುರನೆ ನೋಡಿ “ಯಾರದ್ದೊ ಅದು?” ಎಂದು ಐತಾಳನ್ನು ಕೇಳಿದರು. +“ಬೆಟ್ಟಳ್ಳಿ ದೇವಯ್ಯಗೌಡರದ್ದು.” ಎಂದು ಐತಾಳ ಪಿಸುದನಿಯಲ್ಲಿಯೆ ಉತ್ತರಿಸಲು, ಮಂಜಭಟ್ಟರು ನೇರವಾಗಿ, ಆದರೆ ಅತ್ಯಂತ ಸಾವಾಕಾಶವಾಗಿ, ದೇವಯ್ಯ ಕುಳಿತಿದ್ದೆಡೆಗೆ ಚಲಿಸಿದರು. +ಅವರು ಸಮೀಪಿಸುತ್ತಿರುವುದನ್ನು ಕಂಡು ಮುಕುಂದಯ್ಯ ಎದ್ದುನಿಂತು ಕೈಮುಗಿದನು. +ಆದರೆ ದೇವಯ್ಯ ಪದ್ಮಾಸನ ಹಾಕಿ ಕುಳಿತಿದ್ದವನು ಹಾಗೆಯೆ “ನಮಸ್ಕಾರ ಸಾಹುಕಾರರಿಗೆ!” ಎಂದೆನೆಷ್ಟೆ. +ಅದನ್ನು ಚೆನ್ನಾಗಿ ಗಮನಿಸಿದ ಮಂಜಭಟ್ಟರು ತಮ್ಮ ಅಸಮಾಧಾನವನ್ನು ಒಂದಿನಿಂತೂ ಹೊರಗೆಡಹದೆ ಹುಸಿನಗು ನಗುತ್ತಾ ಮೂದಲಿಕೆಯ ದನಿಯಿಂದ “ಓಹೋಹೋ!ಏನು ದ್ಯಾವಣ್ಣನ ಸವಾರಿ ದೇವಸ್ಥಾನದವರೆಗೂ ಚಿತ್ರೈಸಿದೆಯೆಲ್ಲಾ! …. +ಕಲ್ಲಯ್ಯ ಬಂದಿಲ್ಲೇನೋ?ಹುಷಾರಾಗಿದ್ದಾನಷ್ಟೆ?” ಎಂದರು. +ಬ್ರಾಹ್ಮಣರಾದ ಅವರು ಶೂದ್ರನಾದ ತನ್ನನ್ನು ‘ದೇವಯ್ಯ’ ಎಂದು ಸಂಬೋಧಿಸುವುದಕ್ಕೆ ಬದಲಾಗಿ, ತಮ್ಮ ಮೇಲುತನವನ್ನೂ ಹೆಚ್ಚುಗಾರಿಕೆಯನ್ನೂ ತಿಕ್ಕಿ ಉಜ್ಜಿ ತನ್ನ ಮನಸ್ಸಿಗೆ ತರುವ ಉದ್ದೇಶದಿಂದಲೆ ಕೀಳುಜನರನ್ನು ಕರೆಯುವ ರೀತಿಯಲ್ಲಿ ‘ದ್ಯಾವಣ್ಣ’ ಎಂದುದನ್ನೂ, ಆ ಪ್ರಾಂತದಲ್ಲೆಲ್ಲ ದೊಡ್ಡ ಮನುಷ್ಯರೆಂದು ಸಂಭಾವಿರಾಗಿದ್ದು ಹೆಚ್ಚು ಕಡಮೆ ಅವರಷ್ಟೆ ವಯಸ್ಕರಾಗಿದ್ದು ತನ್ನ ತಂದೆಯನ್ನೂ ಗೌರವಸೂಚಕ ಬಹುವಚನದಿಂದ ‘ಕಲ್ಲಯ್ಯಗೌಡರು’ ‘ಹುಷಾರಾಗಿದ್ದಾರೆಯೆ?’ ಎನ್ನದೆ ‘ಕಲ್ಲಯ್ಯ’ ‘ಹುಷಾರಾಗಿದ್ದಾನೆ?’ ಎಂದು ಏಕವಚನದಿಂದಲೆ ಮಾತನಾಡಿಸಿದುದನ್ನೂ ಗಮನಿಸಿದ ದೇವಯ್ಯನ ಆತ್ಮಗೌರವ ಸೆಟೆದು ನಿಂತು, ‘ಸುಳ್ಳಾದರೂ ಚಿಂತೆಯಿಲ್ಲ ಈ ಹಾರುವನಿಗೆ ಸರಿಯಾಗಿಯೆ ಉತ್ತರ ಹೇಳುತ್ತೇನೆ’ ಎಂದು ನಿಶ್ಚಯಿಸಿ ಲಘುವಾಗಿ ನಗುತ್ತಾ ಹೇಳಿದನು; + “ಯಾರು?ಹಳೇಪೈಕದ ಕಲ್ಲನಾ? +ಅಂವ ಕಳ್ಳಬಗನಿ ಕಳ್ಳು ಇಳಿಸಾಕೆ ಕಾಡಿಗೆ ಹೋಗಿರಬೇಕು!” +“ಅಲ್ಲ, ಮಾರಾಯಾ; +‘ನಿನ್ನ ಅಪ್ಪಯ್ಯ ಕಲ್ಲಯ್ಯಗೌಡರು ಹುಷಾರಾಗಿದ್ದಾರೆಯೆ?’ ಅಂತ ಕೇಳಿದ್ದು…. +ಏನೋ ನಾವು ಹುಡುಗರಾಗಿದ್ದಾಗಿನಿಂದ ನಮ್ಮಿಬ್ಬರದ್ದೂ ಪರಿಚಯ; +ಏಕವಚನದಲ್ಲೇ ಮಾತಾಡಿಸೋದು ರೂಢಿಯಾಗಿ ಬಿಟ್ಟಿದೆ. +ಈಗಿನ ಹುಡುಗರಿಗೆ ಅದೆಲ್ಲಾ ಹಿಡಿಸೋದಿಲ್ಲ, ಅರ್ಥವಾಗೋದಿಲ್ಲಾ. +ಅವಮಾನವಾಯ್ತು ಅಂತಾ ತಿಳಿಕೋತಾರೆ….” ಸ್ವಲ್ಪ ಅಪ್ರತಿಭರಾದ ಮಂಜಭಟ್ಟರು ಕ್ಷಮಾಯಾಚನೆಯ ಭಂಗಿಯಲ್ಲಿ ಹೇಳಿದ್ದರೂ ದೇವಯ್ಯ ತನ್ನ ಮುನ್ನಿನ ಸಂಕಲ್ಪವನ್ನು ಕೈಬಿಡದೆ ಮುಂದುವರಿದನು; +“ಅಪ್ಪಯ್ಯನಾ? …. ನಾನು ಏನೋ ಅಂತಿದ್ದೆ! …. ತಪ್ಪಾಯ್ತು! …. +ಅವರೂ ಮೇಗರೊಳ್ಳಿ ಮಿಷನ್ ಸ್ಕೂಲಿಗೆ ಹೋದರು. +ರೆವರೆಂಡ್ ಲೇಕಹಿಲ್ ದೊಡ್ಡ ಪಾದ್ರಿ ಬರ್ತಾರಂತೆ, ಉಪದೇಶಿ ಜೀವರತ್ನಯ್ಯ ಹೇಳಿದ್ದರು. +‘ಬ್ರಾಹ್ಮಣ ಕೂಣಿಯಲ್ಲಿ ಶೂದ್ರಮೀನು’ ಅಂತಾ ಹರಿಕಥೆ ಮಾಡ್ತಾರಂತೆ….” ಅಷ್ಟರಲ್ಲಿ…. +ಗಂಟೆ ಜಾಗಟೆ ಸದ್ದಾಗಿ ಪೂಜೆ ಪ್ರಾರಂಭವಾಗುವ ಸೂಚನೆಯ ತಮಗೊಂದು ಸದವಕಾಶ ನೆವವಾಯಿತೆಂಬಂತೆ ಮಂಜಭಟ್ಟರು ನಿರ್ದಾಕ್ಷಿಣ್ಯವಾಗಿ ಸಟಕ್ಕನೆ ತಿರುಗಿ ಬ್ರಾಹ್ಮಣ ಸಮುದಾಯದತ್ತ ನಡೆದು ಗರ್ಭಗುಡಿ ಪ್ರವೇಶಮಾಡಿದರು. +ಪೂಜೆಯ ಶಾಸ್ತ್ರವೆಲ್ಲ ಪೂರೈಸಿ, ಬ್ರಾಹ್ಮಣ ಮಹನೀಯರ ಮತ್ತು ಮಹಿಳೆಯರ ನಡುವೆ ಮಂಗಳಾರತಿಯ ತಟ್ಟೆ ಸಂಚರಿಸಿ, ತೀರ್ಥಪ್ರಸಾದಗಳ ವಿನಿಯೋಗವಾದ ಮೇಲೆ, ಶೂದ್ರಸಮುದಾಯಕ್ಕೆ ಅದರ ಪ್ರಯೋಗವಾಗುತ್ತಿತ್ತು. +ಮಂಗಳಾರತಿ ತನ್ನ ಸಮೀಪಕ್ಕೆ ಬಂದೊಡನೆ, ಚೆಲುವಯ್ಯನನ್ನು ತೊಡೆಯ ಮೇಲೆ ಕೂರಿಸಿಕೊಂಡು ಕುಳಿತಿದ್ದ ರಂಗಮ್ಮಗೆ ಮೈಮೇಲೆ ಬಂದ ಹಾಗೆ ಆಗಿ ಸ್ವಚ್ಛವಾದ ಸಾಹಿತ್ಯ ಭಾಷೆಯಲ್ಲಿ ಎಂಬಂತೆ ಗದ್ಗದವರಿಸಿ ಪ್ರಾರ್ಥಿಸತೊಡಗಿದಳು; +ಅವಳ ದೃಷ್ಟಿ ಒಮ್ಮೆ ಗರ್ಭಗುಡಿಯ ಕಡೆಗೂ ಒಮ್ಮೆ ತೊಡೆಯ ಮೇಲಿದ್ದ ತಂಗಿಯ ಮಗನ ಕಡೆಗೂ ಹೊರಳಿದಂತಾಗಿ, ನೋಡುವವರಿಗೆ ಒಮ್ಮೆ ಅವಳು ದೇವರನ್ನು ಸಂಬೋಧಿಸುವಂತೆ ತೋರಿದರೆ, ಮತ್ತೊಮ್ಮೆ ಚೆಲುವಯ್ಯನನ್ನು ಕುರಿತು ಹೇಳುತಿದ್‌ಆಳೆಯೋ ಎನ್ನಿಸುವಂತಿತ್ತು. +“ಏನಂತೆ?” “ಯಾಕಂತೆ?” “ಅಳುತ್ತಾಳಲ್ಲಾ ಯಾಕೆ?” “ಏನು ಹೇಳುತ್ತಿದ್ದಾಳೆ?” “ಯಾರು ಅದು?” ಎಂಬ ಗುಜುಗುಜು ಪ್ರಶ್ನೆಗಳೆದ್ದಂತೆಯೆ “ಅವಳು ಹುಚ್ಚು ಹೆಗ್ಗಡ್ತಿಯಂತೆ!” + “ತಿರುಪತಿಗೆ ಹೋಗಿ ಸತ್ತು ಹೋದ ಹೆಗ್ಗಡೆಯ ಹೆಂಡ್ತಿಯಂತೆ!” + “ಏಳೆಂಟು ವರ್ಷಗಳಿಂದ, ಪಾಪ, ದುಃಖದಲ್ಲಿ ನವೆದೂ ನವೆದೂ ಬುದ್ದಿಯೆ ಕೆಟ್ಟಿದೆಯಂತೆ!” + “ಏನೂ ಇಲ್ಲ; ಅವಳಿಗೆ ಆಗಾಗ್ಗೆ ಹೀಗೆ ಮೈಮೇಲೆ ಬರುವುದು ವಾಡಿಕೆಯಂತೆ!” + “ಅವಳ ತೊಡೆಯ ಮೇಲಿರುವ ಕೂಸನ್ನಾದರೂ ಎತ್ತಿಕೊಳ್ಳಬಾರದೇ? +ಹುಚ್ಚಿನ ಭರದಲ್ಲಿ ಏನಾದರೂ ಮಾಡಿಬಿಟ್ಟರೆ ಅದಕ್ಕೆ?” +“ಹೌದು, ಅದನ್ನೇ ನೋಡುತ್ತಿದೆ ಆಗಾಗ್ಗೆ!” +“ಅರೆ!ಎಂಥ ಗ್ರಂಥಭಾಷೆಯಲ್ಲಿ ಹೇಳುತ್ತಿದ್ದಾಳೆ!” +“ಯಾವ ಜನ್ಮದಲ್ಲಿ ಏನಾಗಿದ್ದಳೋ ಏನು ಕಲಿತಿದ್ದಳೋ ಯಾರಿಗೆ ಗೊತ್ತು?” + “ಅಯ್ಯೋ!ನಾನೆ ಕಂಡಿದ್ದುಂಟು. + ಒಂದು ಸೆಟ್ಟರ ಹೆಂಗಸು ಉಡುಪಿಯಲ್ಲಿ ಮೈಮೇಲೆ ಬಂದಾಗ ಸಂಸ್ಕೃತದಲ್ಲಿ ಶ್ಲೋಕ ಹೇಳಿತ್ತಲ್ಲಾ?” ಎಂಬ ನಾನಾ ರೀತಿಯ ಪ್ರಶ್ನೆಗಳೂ ಉತ್ತರಗಳೂ ವ್ಯಾಖ್ಯಾನಗಳೂ ಎದ್ದುವು. +ಆದರೆ ರಂಗಮ್ಮನ ಆರ್ತವಾಣಿಯ ಅರ್ಥ ಮತ್ತು ಅದರ ಭಾವತೀಕ್ಷ್ಣತೆ ತನ್ನ ತಾಯಿಯ ಪಕ್ಕದಲ್ಲಿಯೆ ಕುಳಿತು ಕಂಬನಿಗರೆದು ಆಲಿಸುತ್ತಿದ್ದ ಧರ್ಮುವಿಗಾದಷ್ಟು ಮತ್ತಾರಿಗೂ ಆಗಲಿಲ್ಲ. +ತಾಯಿ ಕೈಮುಗಿದುಕೊಂಡು ಕಣ್ಣೀರು ಸುರಿಸುತ್ತಾ ಹೇಳುತ್ತಿದ್ದಳು; + “ಸ್ವಾಮೀ, ನಾನೇನು ತಪ್ಪು ಮಾಡಿದೆ? +ನನಗೇಕೆ ಈ ಶಿಕ್ಷೆಕೊಟ್ಟೆ? +ನಿನ್ನ ದರ್ಶನಕ್ಕೆ ಬಂದ ನನ್ನ ಸ್ವಾಮಿಯನ್ನೇಕೆ ಅಪಹರಿಸಿಬಿಟ್ಟೆ? +ನನ್ನ ಕಂದನನ್ನೇಕೆ ಅನಾಥನನ್ನಾಗಿ ಮಾಡಿಬಿಟ್ಟೆ? +ಎಷ್ಟು ವರುಷವಾಯ್ತು, ನನ್ನ ಜೀವಕ್ಕೆ ಬೆಂಕಿಯಿಟ್ಟು? +ಇನ್ನೂ ಉರಿಯುತ್ತಿದೆಯಲ್ಲಾ ಆ ಸೂಡು! +ನಿನ್ನ ಕರುಣಾಜಲದಿಂದ ಅದನ್ನು ನಂದಿಸಬಾರದೇ, ಸ್ವಾಮಿ, ಪರಮಾತ್ಮಾ, ಲೋಕೈಕನಾಥಾ, ಕರುಣಾಸಿಂಧೂ? …. ” + ಇದ್ದಕ್ಕಿದ್ದ ಹಾಗೆ ಗರ್ಭಗುಡಿಯ ಕಡೆಗಿದ್ದ ದೃಷ್ಟಿಯನ್ನು ತೊಡೆಯ ಮೇಲಿದ್ದ ಚೆಲುವಯ್ಯನ ಕಡೆಗೆ ತಿರುಗಿಸಿ, ಬಹುವಚನದಿಂದ ಸಂಭೋದಿಸತೊಡಗಿದಳು; + “ಸ್ವಾಮೀ, ನನ್ನನ್ನಲ್ಲಿಯೇ ಬಿಟ್ಟು ಇಲ್ಲಿಗೇಕೆ ಬಂದಿರಿ ನೀವೊಬ್ಬರೆ? +ಜನ್ಮಜನ್ಮಗಳಲ್ಲಿ ಕೈಹಿಡಿದು ಕಾಪಾಡಿದ ನೀವು ಈ ಜನ್ಮದಲ್ಲೆಕೆ ಹೀಗೆ ಮಾಡಿದಿರಿ? +ನನ್ನನ್ನೂ ಜೊತೆಯಲ್ಲಿ ಕರೆದುಕೊಂಡು ಬರಬಾರದಾಗಿತ್ತೇ? +ನಿಮ್ಮ ಮನಸ್ಸು ಮುರಿಯುವಂಥ ಕೆಲಸ, ಸ್ವಾಮೀ, ನಾನೇನು ಮಾಡಿದೆ? +ಹಗಲಿರುಳೂ ಇಂದು ಬರುತ್ತೀರಿ, ನಾಳೆ ಬರುತ್ತೀರಿ, ಆಗ ಬರುತ್ತೀರಿ, ಈಗ ಬರುತ್ತೀರಿ ಎಂದು ಅನ್ನ ನೀರು ಬಿಟ್ಟು, ಕಣ್ಣೀರಿನಲ್ಲಿ ಮಿಂದು, ಸಂಕಟಗಳಲ್ಲಿ ಬೆಂದು, ಎಂಟು ಹತ್ತು ವರ್ಷಗಳ ಆದುವಲ್ಲಾ, ಸ್ವಾಮೀ, ಸ್ವಾಮೀ, ಸ್ವಾಮೀ, ನಿಮ್ಮ ಪಾದ ಹಿಡಿದುಕೊಂಡಿದ್ದೇನೆ, ಸ್ವಾಮೀ, ಕೈಬಿಡಬೇಡಿ, ಬಿಡಬೇಡಿ, ನಾನಿನ್ನು ತಡೆಯಲಾರೆ!” +ಇದ್ದಕ್ಕಿದ್ದ ಹಾಗೆ ತನ್ನ ಅವ್ವ ತನ್ನ ತೊಡೆಯ ಮೇಲಿದ್ದ ಶಿಶು ಚೆಲುವಯ್ಯನ ಎರಡು ಪಾದಗಳನ್ನು ತನ್ನೆರಡು ಕೈಗಳಿಂದ ಹಿಡಿದುಕೊಂಡಿರುವುದನ್ನು ಕಂಡ ಧರ್ಮು ಬೆಟ್ಟಳ್ಳಿ ಚಿಕ್ಕಮ್ಮಗೆ “ಚಿಕ್ಕಮ್ಮ ಚಿಕ್ಕಮ್ಮ!ತಮ್ಮನ್ನ ಕರಕೋ!ತಮ್ಮನ್ನ ಕರಕೋ!ಅಂವ ಅಳ್ತಾನೆ!” ಎಂದು ಗಾಬರಿಯಿಂದಲೆ ಕೆಳದನಿಯಲ್ಲಿ ಕೂಗಿ ಹೇಳಿದನು. +ಅಷ್ಟರಲ್ಲಿ ಮೊದಲಿನಿಂದಲೂ ತುಸು ಕಳವಳದಲ್ಲಿಯೆ ಇದ್ದ ದೇವಮ್ಮನೂ ತನ್ನ ಅಕ್ಕನ ಕೈಗಳು ತನ್ನ ಮಗನ ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದನ್ನು ಗಮನಿಸಿದಳು. +ತಟಕ್ಕನೆ ಮಗುವನ್ನು ಅಕ್ಕನ ತೊಡೆಯ ಮೇಲಿಂದ ಎತ್ತಿಕೊಳ್ಳುವ ಮನಸ್ಸಿದ್ದರೂ ಹಾಗೆ ಮಾಡುವುದು ಚೆನ್ನಾಗಿರುತ್ತದೆಯೋ?ಇಲ್ಲವೂ? +ಅಕ್ಕನ ವಿಚಾರದಲ್ಲಿ ಚಡಪಡಿಸುತ್ತಿದ್ದವಳು, ಧರ್ಮು ಕೂಗಿದೊಡನೆ, ಅಳತೊಡಗಿದ್ದ ಮಗುವನ್ನು ಅಪಾಯದಿಂದ ರಕ್ಷಿಸುವಂತೆ ಎತ್ತಿಕೊಂಡೆ ಬಿಟ್ಟಳು. +ಅದನ್ನು ಕಂಡ ರಂಗಮ್ಮ ಮಾತನಾಡುವುದನ್ನೂ ಅಳುವುದನ್ನೂ ನಿಲ್ಲಿಸಿ, ಮುಗುಳು ನಗುತ್ತಾ, ನಿಟ್ಟುಸಿರೆಳೆದು, ಫಕ್ಕನೆ ಎಚ್ಚರಗೊಂಡವಳಂತೆ ತನ್ನನ್ನು ತಾನು ಹಿಡಿತದಲ್ಲಿಟ್ಟುಕೊಂಡು, ಮೌನವಾಗಿ ಕಣ್ಣುಮುಚ್ಚಿ ಕುಳಿತು ಬಿಟ್ಟಳು. +ನೆರೆದಿದ್ದವರೆಲ್ಲರೂ ಯಾವುದೊ ಒಂದು ಅರ್ಥವಾಗದ ಅತೀಂದ್ರಿಯ ಭೀಷೆಯಿಂದ ಪಾರಾದವರಂತೆ ದೀರ್ಘವಾಗಿ ಸುಯ್ದು, ಸತ್ಯನಾರಾಯಣ ವ್ರತದ ಕಥೆಯನ್ನು ಹೇಳಲು ಸಿದ್ಧವಾಗುತ್ತಿದ್ದ ಜೋಯಿಸರ ಪೀಠದ ಕಡೆಗೆ ಮುಖಮಾಡಿ ಕುಳಿತರು. +ಜೋಯಿಸರು ಪುರಾಣ ಪ್ರಾರಂಭಾವಾದ ಸ್ವಲ್ಪ ಹೊತ್ತಿನಲ್ಲಿಯೆ ನೆರೆದಿದ್ದವರಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಶ್ರೋತಭಕ್ತರ ಗಮನ ಸೆಳೆಯಬಾರದೆಂದು ಆದಷ್ಟು ಪ್ರಯತ್ನದಿಂದ ಮೆಲ್ಲಗೆ ಎದ್ದು ಹೊರಗೆ ಜುಗುಣತೊಡಗಿದರು. +ದೇವಯ್ಯನೂ ಮುಕುಂದಯ್ಯನ ಕಿವಿಯಲ್ಲಿ “ಈ ಅಜ್ಜಿ ಪುರಾಣ ಯಾರು ಕೇಳ್ತಾರೊ? +ಕೂತುಕೂತು ಕಾಲೆಲ್ಲ ಮರಗಟ್ಟಿ ಹೋಗಿದೆ.” ಎಂದು ಹೇಳಿ, ಎದ್ದು ಮೂಲೆಯಲ್ಲಿ ಒರಗಿಸಿದ್ದ ತೋಟಾ ಕೋವಿಯನ್ನು ಗಾಡಿಯಲ್ಲಿ ಇಡುವ ಸಲುವಾಗಿ ತೆಗೆದುಕೊಂಡು, ಹೊರಗೆ ಹೋದನು. +ಅತ್ತ ಇತ್ತ ನೋಡಿ ಮುಕುಂದಯ್ಯನೂ ಅವನನ್ನು ಹಿಂಬಾಲಿಸಿದನು. +ಇವರಿಬ್ಬರು ಗಾಡಿ ಬಿಟ್ಟಿದ್ದ ಅರಳಿಕಟ್ಟೆಯ ಬಳಿಗೆ ಹೋಗುವಷ್ಟರಲ್ಲಿ ಶ್ರೋತೃಭಕ್ತರ ಏಕಾಗ್ರತೆಗೆ ಒಂದಿನಿಂತೂ ಭಂಗಬಾರದಂತೆ ಅವರ ಗಮನವನ್ನು ಒಂದು ಸ್ವಲ್ಪವೂ ಸೆಳೆಯದ ಧರ್ಮಶ್ರವಣರಂಗದಿಂದ ಇವರಿಗಿಂತ ಮೊದಲೇ ಪಾರಾಗಿ ಬಂದಿದ್ದ ಧರ್ಮು ಕಾಡು ತಿಮ್ಮು ಮೂವರೂ ಹೊಳೆಯ ಕಡೆಯಿಂದ ಓಡಿ ಬರುತ್ತಿದ್ದುದು ಕಾಣಿಸಿತು. +“ನೀವೇನು ಹೊಳೇಲಿ ಆಟ ಆಡಾಕೆ ಬಂದಿದ್ದೇನ್ರೋ? +ದೇವರ ಕಥೆ ಕೇಳಾದುಬಿಟ್ಟು ಯಾಕ್ರೋ ಬಂದ್ರಿ?” ಎಂದು ಮುದುಕಯ್ಯ ಸ್ವಲ್ಪ ವಿನೋದಕ್ಕಾಗಿ ಗದರಿಸಿದನು. +“ಮತ್ತೆ ನೀವೂ ಬಂದೀರಲ್ಲಾ? +ನೀವ್ಯಾಕೆ ಹರಿಕಥೆ ಕೇಳೋದು ಬಿಟ್ಟು ಬಂದೀರಿ?” ಎಂದು ಪ್ರತಿಯಾಗಿ ಅಣಕಿಸಿದನು ಕಾಡು. +“ಸತ್ಯನಾರಾಯಣ ಕಥೆ ಕೇಳದಿದ್ದವರಿಗೆ ಹಾರುವರು ಊಟ ಹಾಕಾದಿಲ್ಲ.” ಮುಕುಂದಯ್ಯ ಪರಿಹಾಸ್ಯ ಮಾಡಿದನು. +“ಹಾಂಗಾರೆ ನಿಮಗೂ ಹಾಕಾದಿಲ್ಲ!” ತಿಮ್ಮ ಪಡಿನುಡಿದನು. +“ನಮಗೇನು ಆ ಹಾರುವರ ಸಿಹಿ ಊಟ ಬೇಕಾಗಿಲ್ಲ. +ನಾವು ಹಂದೀ ಉಪ್ಪು ತುಂಡು ಸಮ್‌ನಾಗಿ ಹೊಟ್ಟೆಮೀರಿ ಹೊಡಕೊಂಡೇ ಬಂದೀವಿ!” ತೋಟಾಕೋವಿಯನ್ನು ಗಾಡಿಯೊಳಗಿಡಲು ಬಚ್ಚನಿಗೆ ಕೊಡುತ್ತಾ ಮೂದಲಿಸಿದನು. +ದೇವಯ್ಯ, “ನನಗೆ ಗೊತ್ತೇ ಇತ್ತು. +ಜೋಯಿಸರ ಅಜ್ಜೀಕಥೇ ಎಲ್ಲಾ ಮುಗಿದು, ಆ ಹಾರುವರಿಗೆಲ್ಲಾ ಮೊದಲು ಸಂತರ್ಪಣೆ ಮಾಡಿಸಿ, ಆಮೇಲೆ ಉಳಿದಿದ್ದ ಅವರ ಎಂಜಲು ಪಂಜಲು ಎಲ್ಲಾ ನಮಗೆ ಹಾಕಬೇಕಾದ್ರೆ ಇವತ್ತು ನಾಲ್ಕು ಗಂಟೇನ ಆಗ್ತದೆಯೋ? +ಐದಾದ್ರೂ ಆಯ್ತೇ! …. +ಅಷ್ಟು ಹೊತ್ತಿನ ತನಕಾ ನಿಮ್ಮ ಹೊಟ್ಟೆಹುಳ ಎಲ್ಲಾ ನಿಗರಬಡ್ಡೆ ಕಂಡಿರ್ತವೆ!” +“ನಮ್ಮ ಹೊಟ್ಟೇನು ತುಂಬಿದೆ. +ನಮಗೂ ಸಿಗ್ತು!” ಎಂದನು ಧರ್ಮು, ದೇವಯ್ಯನ ಮೂದಲಿಕೆಯನ್ನು ಮೂದಲಿಸಿ. +“ಯಾರು ಕೊಟ್ರೋ? +ಏನು ತಿಂದಿರೋ? +ನಿಮ್ಮ ದೆಸೆಯಿಂದ ಆಗಾದಿಲ್ಲ!” ಮುಕುಂದಯ್ಯ ಬೆರಗಾಗಿ ಪ್ರಶ್ನಿಸಿದನು. +ಧರ್ಮು ಹೊಳೆಯ ದಂಡೆಯಲ್ಲಿ ಕೆಳಗಡೆ ತುಸು ದೂರದಲ್ಲಿದ್ದ ಒಂದು ಕಲ್ಲುಮಂಟಪದ ಕಡೆಗೆ ಕೈತೋರಿಸುತ್ತಾ “ಅಲ್ಲೊಬ್ಬ ಸನ್ನೇಸಿ ಗಡ್ಡದಯ್ಯ ಇದಾನಲ್ಲಾ ಅಂವ ಕೊಟ್ಟದ್ದು. +ಏಂಥೆಂಥ ಹಣ್ಣು ಕೊಟ್ಟ? +ನಾವಿದೂವರೆಗೂ ತಿಂದೇ ಇರಲಿಲ್ಲ, ಕಂಡೇ ಇರಲಿಲ್ಲ, ಅಂಥಂಥಾ ಹಣ್ಣು ಕೊಟ್ಟ!” ಎಂದು ಇನ್ನೂ ಮುಂದುವರಿಯುವದರಲ್ಲಿದ್ದನು. +“ಸುಳ್ಳೋ?ಬದ್ದೋ?” ಮುದುಕಯ್ಯ ನಡುವೆ ಕೇಳಿದನು. +ಧರ್ಮುವನ್ನು ಸಮರ್ಥಿಸುವ ಆತುರದ ದನಿಯಲ್ಲಿ ತಿಮ್ಮು “ಹೌದು, ಚಿಕ್ಕಯ್ಯಾ, ಹೌದು! +ಜೋಳಿಗೆಗೆ ಕೈಹಾಕ್ದ, ತಗದಕೊಟ್ಟ! …. +ನಮಗೆಲ್ಲ ನಕ್ಕು ಸಾಕಾಗುವ ಹಾಂಗೆ ಏನೇನೋ ತಮಾಸೆ ಮಾಡಿದ, ಹೇಳಿದ! …. +ಬೇಕಾದರೆ ಮೂಸಿನೋಡು ನನ್ನ ಕೈನ.” ಎಂದು ಮುಕುಂದಯ್ಯನ ಮೂಗಿನ ಬಳಿಗೆ ಕೈಚಾಚಿದನು. +ಅವರಾರೂ ಕೈ ಬಾಯಿ ತೊಳೆಯುವ ಗೋಜಿಗೆ ಹೋಗಿರಲಿಲ್ಲ; +ಅಂಗಿ ಪಂಚೆಗಳ ಮೇಲೆ ಆ ಕೆಲಸ ನಿರ್ವಹಿಸಿದ್ದವು. +ಮೂಗಿಗೆ ಬಂದ ಹಣ್ಣಿನ ವಾಸನೆಗೆ ಮುಂಕುದಯ್ಯ ದಂಗು ಬಡಿದು ನಿಂತನು. +ಹುಡುಗರು ಡೋಂಗೀ ಬಿಡುತ್ತಿದ್ದಾರೆಯೊ ಏನೋ ನೋಡಬೇಕೆಂದು ದೇವಯ್ಯ ಅವರೆಲ್ಲರ ಕೈಗಳನ್ನೂ ಮೂಸಿ ಮೂಸಿ ಹುಬ್ಬೇರಿಸಿ ಕಣ್ಣರಳಿಸಿ ಬೆರಗಾದನು. +ಕಲ್ಲೂರು ಗಡ್ಡದಯ್ಯನ ಪ್ರಸಿದ್ಧಿ ಕೋಣೂರು ಬೆಟ್ಟಳ್ಳಿಗಳಿಗೇನು ಗೊತ್ತಿರದ ವಿಚಾರವಾಗಿರಲಿಲ್ಲ. +ಆದರೆ ಉಪದೇಶಿ ಜೀವರತ್ನಯ್ಯ ‘ನಮ್ಮ ಯೇಸುಸ್ವಾಮಿ ಎಂಥಂಥ ಅಧ್ಭುತ ಮಾಡಿ ತೋರಿಸಿದ್ದಾರೆ! +ಅವರ ಮುಂದೆ ಇದೆಲ್ಲ ಏನು ಮಹಾ? +ಹಾವಾಡಿಗರು, ದೊಂಬರು, ಯಕ್ಷಿಣಿಗಾರರು ಎಲ್ಲರೂ ಮಾಡಿ ತೋರಿಸ್ತಾರೆ!’ ಎಂದು ಅಪಹಾಸ್ಯ ಮಾಡಿದ್ದನಾದ್ದರಿಂದ ದೇವಯ್ಯ ಅದನ್ನು ಲಘುವಾಗಿ ಭಾವಿಸಿ ತಿರಸ್ಕರಿಸಿದನು. +ಮುಕುಂದಯ್ಯನಿಗೆ ಸಾಧುಸನ್ಯಾಸಿಗಳ ವಿಷಯದಲ್ಲಿ ಹೆಚ್ಚು ಗೌರವಭಾವನೆಯಿದ್ದರೂ ಅವರಲ್ಲಿ ಮಂತ್ರ ಮಾಟ ಮಾಡುವ ಮೋಸಗಾರರೂ ಇರುತ್ತಾರೆಂದು ಐಗಳು ಅನಂತಯ್ಯನಿಂದ ತಿಳಿದಿದ್ದನಾದ್ದರಿಂದ ಆ ವಿಷಯದಲ್ಲಿ ತಾನೆ ಮುಂದುವರಿದು ಪರಿಶೀಲಿಸುವ ಗೋಜಿಗೆ ಹೋಗಿರಲಿಲ್ಲ. +ಆದರೆ ಇತ್ತೀಚಿಗೆ, ಹೂವಳ್ಳಿ ಚಿನ್ನಮ್ಮನ ಸಂಬಂಧದಲ್ಲಿ ತಾನು ಸಂಕಟಕ್ಕೆ ಸಿಕ್ಕಿಕೊಂಡ ಮೇಲೆ, ಕೈನೋಡಿಯೋ ಜಾತಕ ನೋಡಿಯೋ ಅಥವಾ ದಿವ್ಯದೃಷ್ಟಿಯಿಂದಲೋ ಭವಿಷ್ಯ ಹೇಳಬಲ್ಲ ಶಕ್ತಿಯುಂಟೆಂದು ಜನ ಹೇಳುತ್ತಿದ್ದ ಕಲ್ಲೂರ ಗಡ್ಡದಯ್ಯನ ಬಳಿಗೆ ಹೋಗಬೇಕೆಂದು ಮನಸ್ಸು ಅವನಲ್ಲಿ ಅಂಕುರಿಸಿತ್ತು. +ಬೆಟ್ಟಬೆಳ್ಳಿಯವರು ಸತ್ಯನಾರಾಯಣವ್ರತಕ್ಕೆ ಕಲ್ಲೂರು ದೇವಸ್ಥಾನಕ್ಕೆ ಹೋಗುತ್ತಾರೆಂದು ತಿಳಿದುಬಂದಾಗ ತಾನೂ ಜೊತೆಗೂಡುತ್ತೇನೆಂದು ಅವನು ದೇವಯ್ಯನಿಗೆ ಹೇಳಿಕಳುಹಿಸಿದುದಕ್ಕೆ ಮುಖ್ಯಪ್ರೇರಣೆ ಗಡ್ಡದಯ್ಯನನ್ನು ನೋಡುವ ಮತ್ತು ಕೇಳುವ ಅವಕಾಶ ದೊರಕಬಹುದೆಂಬುದರಿಂದಲೇ ಒದಗಿತ್ತು. +ಆದ್ದರಿಂದಲೆ ಅವನು ದೇವಯ್ಯನನ್ನೂ ಪುಸಲಾಯಿಸಿ ಕರೆದುಕೊಂಡು ಆ ಗಡ್ಡದಯ್ಯನಿದ್ದ ಕಲ್ಲುಮಂಟಪಕ್ಕೆ ಹೋದದ್ದು. +ಕಲ್ಲೂರು ‘ಗಡ್ಡದಯ್ಯ’ ಯಾರು? +ಏನು?ಎಂತು? +ಯಾರಿಗೊಬ್ಬರಿಗೂ ಸರಿಯಾಗಿ ಗೊತ್ತಿರಲಿಲ್ಲ. +ಸಂನ್ಯಾಸಿ, ಬೈರಾಗಿ, ಗೋಸಾಯಿ ಎಂಬ ಇತರ ಹೆಸರುಗಳಿಂದಲೂ ಅವನನ್ನು ಕರೆಯುತ್ತಿದ್ದರು, ತುಸು ಮೇಲ್ವರ್ಗದ ಜನರು. +ಆದರೆ ಸಾಮಾನ್ಯರು ಅವನನ್ನು ಅವನನ್ನು ಕರೆಯುತ್ತಿದ್ದರು. +‘ಗಡ್ಡ ದಯ್ಯ’ ಎಂದೇ. +ಆತನ ವಿಚಾರವಾದ ಅನೇಕ ಊಹಾಪೋಹಗಳು ಮಾತ್ರ ಗಾಳಿಸುದ್ದಿಗಳಾಗಿ ಹಬ್ಬಿದ್ದುವು. +ಕೆಲವರು ಅವನು ತಲೆ ಮರೆಸಿಕೊಂಡಿರುವ ರಾಜಮನೆತನದವನು ಎಂದು ಹೇಳುತ್ತಿದ್ದರು. +ಬಹುಶಃ ಆತನ ಆಳುತನ, ಮೈಕಟ್ಟು, ಎತ್ತರ, ನಯನಕಾಂತಿ, ವದನತೇಜಸ್ಸು, ವ್ಯಕ್ತಿಭಂಗಿ ಇವುಗಳನ್ನು ಗಮನಿಸಿದರೆ ಹಾಗೆ ಯೇ ಕಾಣುತ್ತಿತ್ತು. +ಸೀಪಾಯಿದಂಗೆ ಎಂದು ವಿದೇಶೀಯ ಆಕ್ರಮಣಕಾರರು ಕರೆದ ಭಾರತದ ಪ್ರಪ್ರಥಮ ಸ್ವಾಂತಂತ್ರ್ಯ ಸಂಗ್ರಾಮಾನಾಂತರ ರಾಷ್ಟ್ರದ ಅನೇಕ ಎಡೆಗಳಲ್ಲಿ ಬ್ರಿಟಿಷರಿಂದ ಪಾರಾಗುವ ಪ್ರಯತ್ನಗಳು ನಡೆದುವು. +ಆ ಪ್ರಯತ್ನದಲ್ಲಿ ಅನೇಕ ದೊಡ್ಡ ಸಣ್ಣ ರಾಜರುಗಳೂ ಪಾಳೆಪಟ್ಟುಗಳು ಪಾಲುಗೊಂಡು, ವಿದೇಶಿಯರ ರಾಜತಂತ್ರಕ್ಕೆ ಬಲಿಯಾದುವು. +ಆ ಪಾಳೆಯಗಾರರು ಮತ್ತು ರಾಜಮನೆತನದವರಲ್ಲಿ ಶತ್ರುವಿಗೆ ಶರಣಾಗತವಾದ ಮತ್ತು ಸೆರೆಸಿಕ್ಕದ ಬಹುಮಂದಿ ನಾನಾ ರೀತಿಗಳಲ್ಲಿ ತಲೆಮರಿಸಿಕೊಂಡರು. +ಹಾಗೆ ಅಡಗುವ ತಂತ್ರಗಳಲ್ಲಿ  ಸನ್ಯಾಂಸಿ ಬೈರಾಗಿ ಗೋಸಾಯಿಗಳ ವೇಷದಲ್ಲಿ ಅವರ ಗುಂಪುಗಳಲ್ಲಿ ಸೇರಿಯೋ ಬಿಡಿಯಾಗಿಯೋ ಇದ್ದುಬಿಡುತ್ತಿದ್ದುದೂ ಒಂದಾಗಿತ್ತು. +ಕೆಲವರಲ್ಲಿ ‘ಗಡದ್ದಯ್ಯ’ನೂ ಅಂತಹನೊಬ್ಬನು ಎಂಬ ಪ್ರತೀತಿ ಹರಡಿತ್ತು. +ಮತ್ತೆ ಕೆಲವರು ಅವನನ್ನು ಯಾವುದೋ ಗುರುಪೀಠದ ಜಗದ್ಗುರುವಾಗಿದ್ದು, ಅದಕ್ಕೆ ಬೇಸತ್ತು ತ್ಯಜಿಸಿಬಂದವನು ಎಂದು ಹೇಳುತ್ತಿದ್ದರು. +ತ್ಯಜಿಸಿ ಬಂದದ್ದಕ್ಕೂ ಪರಸ್ಪರ ವಿರುದ್ದವಾದ ಕಾರಣಗಳನ್ನು ಕೊಡುತ್ತಿದ್ದರು. +ನೀತಿಭ್ರಷ್ಟನಾದುದರಿಂದ ಓಡಿಸಲ್ಪಟ್ಟವನು ಎಂದು ಕೆಲವರು ಹೇಳಿದರೆ, ಸುತ್ತಮುತ್ತಲಿದ್ದ ನೀತಿಭ್ರಷ್ಟರನ್ನು ತಡೆಗಟ್ಟಲಾರದೆ, ಸಹಿಸಲಾರದೆ, ಅವರಿಂದ ಪಾರಾಗಿ ಬಂದವನು ಎಂದು ಇತರರು ಹೇಳುತ್ತಿದ್ದರು. +ಯಾವುದೋ ಕೊಲೆಯಲ್ಲಿ ಪಾತ್ರವಹಿಸಿ ತಲೆತಪ್ಪಿಕೊಂಡು ಬಂದಿರಬೇಕು ಎಂಬುದು ಮಂಜಭಟ್ಟರ ಊಹೆಯಾಗಿತ್ತು. +ಅವನೆಂದಿಗೂ ಬ್ರಾಹ್ಮಣನಾಗಿರಲಾರ ಎಂಬುದೂ ಅವರ ಮತ್ತೊಂದು ಸಿದ್ಧಾಂತವಾಗಿತ್ತು. +ಏಕೆಂದರೆ ಅವನಲ್ಲಿ ಬ್ರಾಹ್ಮಣದ ಬಹಿರ್ಲಾಂಛನಗಳಾವುವೂ ಇರಲಿಲ್ಲ. +ಅವನ ವಿಚಾರವಾಗಿ ಎಂತೊ ಅಂತೆಯೆ ಅವನ ಶಕ್ತಿ, ಮಹಾತ್ಮೆ, ದೌರ್ಜನ್ಯ, ದೌಷ್ಟ್ಯ, ದಯೆ, ದೈನ್ಯ, ಅನುಕಂಪೆ, ಉಪಕಾರ, ಕ್ರೌರ್ಯ, ಕಠೋರತೆ ಇತ್ಯಾದಿಗಳನ್ನು ಕುರಿತೂ ಪರಸ್ಪರ ವಿರುದ್ಧವಾದ ನಾನಾ ರೀತಿಯ ವದಂತಿಗಳು ಹಬ್ಬಿದ್ದುವು. +ಕೆಲವರು, ಹುಟ್ಟಿನಿಂದಲೆ ಪ್ರಶಾಂತ ಸ್ವಭಾವದವರು, ಅವನನ್ನು ಮಹಾಯೋಗಿಶ್ವರನೆಂದೂ ಅಷ್ಟಸಿದ್ಧಿಗಳನ್ನೂ ಪಡೆದಿರುವ ಶಾಪಾನುಗ್ರಹ ಸಮರ್ಥನೆಂದೂ ವರ್ಣಿಸಿದರೆ ಮತ್ತೆ ಕೆಲವರು ಜನ್ಮತಃ ನಿಂದಾಸ್ವಭಾವದವರು, ಅವನೊಬ್ಬ ಮಾಂತ್ರಿಕನೆಂದೂ, ದೆವ್ವ ಪಿಶಾಚಿಗಳನ್ನು ದುರ್ಮಂತ್ರದಿಂದ ವಶಪಡಿಸಿಕೊಂಡಿರುವನೆಂದೂ, ತನಗಿರುವ ಅದೃಶ್ಯವಾಗುವ ಶಕ್ತಿಯಿಂದ ಲಕ್ಷಣವಾಗಿರುವ ಹೆಣ್ಣುಗಳಿರುವಲ್ಲಿಗೆ ಪ್ರವೇಶಿಸಿ ಅವರ ಮಾನಾಪಹರಣ ಮಾಡುತ್ತಾನೆಂದೂ, ದುಃಶಕ್ತಿಗಳ ಸಹಾಯದಿಂದ ಪದಾರ್ಥಗಳನ್ನು ಕದ್ದು ತರಿಸಿ, ಜನರನ್ನು ದಂಗುಬಡಿಸಿ, ಅವರನ್ನು ಅವರರಿಯದಂತೆಯೆ ದೋಚುತ್ತಾನೆಂದೂ ಮಕ್ಕಳೊಡನೆ ಮಾತ್ರ ನೆಗಮಾತಾಡಿ ಅವರಿಗೆ ತಿನ್ನಲು ಹಣ್ಣು ಹಂಪಲುಗಳನ್ನು ಸೃಷ್ಟಿಸಿಯೆ ಕೊಡುತ್ತಾನೆಂದೂ ಮತ್ತೊಂದು ವದಂತಿ. +ಅವನು ಕಲ್ಲೂರಿನ ಮನೆಗಳಲ್ಲಿ ಬ್ರಾಹ್ಮಣ ಶೂದ್ರರೆಂಬ ಭೇದವಿಲ್ಲದೆ ಅನನ್ ಭಿಕ್ಷೆ ಎತ್ತುತ್ತಿದ್ದುದು ಆಗೊಮ್ಮೆ ಈಗೊಮ್ಮೆ ಕಣ್ಣಿಗೆ ಬೀಳುತ್ತಿತ್ತದರೂ ಅದನ್ನು ತಾನು ಊಟ ಮಾಡದೆ ದನ ಕಾಯುವವರಿಗೋ ಹೊಳೆಯ ಮೀನುಗಳಿಗೊ ಬೀದಿ ನಾಯಿಗಳಿಗೋ ಹಾಕುತ್ತಿದ್ದನೆಂಬುದು ಅನೇಕರ ನಂಬುಗೆಯಾಗಿತ್ತು. +ವಾಸ್ತವವಾಗಿ ಅವನು ತನಗೆ ಬೇಕಾದುದನ್ನೆಲ್ಲ ತನ್ನ ಯೋಗಶಕ್ತಿಯಿಂದಲೆ ಸೃಷ್ಟಿಸಿಕೊಂಡು ಭಕ್ಷಿಸುತ್ತಿದ್ದನಂತೆ! +ತಾನಾರು ಏನು ಎಂಬ ಗುಟ್ಟು ಜನರಿಗೆ ತಿಳಿಯದಿರಲಿ ಎಂದೇ ಅವನು ಸಾಮಾನ್ಯನಂತೆ ತೋರಿಸಿಕೊಳ್ಳುವ ಸಲುವಾಗಿಯೆ ಅನ್ನ ಭಿಕ್ಷೆ ಎತ್ತುತ್ತಿದ್ದನಂತೆ! +ಇಂತಹ ಚಿತ್ರವಿಚಿತ್ರವಾದ ವದಂತಿಗಳನ್ನೆಲ್ಲ ಕೇಳಿದ್ದುದರಿಂದಲೆ ದೇವಯ್ಯ ಮುಕುಂದಯ್ಯ ಇಬ್ಬರೂ ತುಸು ಎಚ್ಚರಿಕೆಯಿಂದಲೆ, ಎದೆಡವ ಗುಟ್ಟುತಲೆ, ಕಲ್ಲು ಮಂಟಪದ ಸಮೀಪಕ್ಕೆ ಹೋಗಿದ್ದರು. +ಮುಂಗಾರಿನ ಮೊದಲ ಮಳೆಗಳಿಂದ ತುಸುವೆ ತುಂಬಿ ಬಂಡೆ ಗಳೆಡೆಯಡೆ ಹರಿಯುತ್ತಿದ್ದ ಹೊಳೆಯ ನೀರಿನ, ಮತ್ತು ಪಕ್ಕದಲ್ಲಿದ್ದ ಒಂದು ಮಹಾ ಅಶ್ವತ್ಥವೃಕ್ಷದ ಪರ್ಣಕೋಟಿಯ ಮರ್ಮರನಾದ ವಿನಾ ಸಂಪೂರ್ಣ ನಿಃಶಬ್ದವಾಗಿದ್ದ ಕಲ್ಲುಮಂಟಪ ನಿರ್ಜನವೂ ಆಗಿದ್ದಂತೆ ಭಾಸವಾಯಿತು. + ಮೊದಲ ನೋಟಕ್ಕೆ ಬರಿಗಾಲಿನಲ್ಲಿದ್ದ ಮುಕುಂದಯ್ಯ ಮೆಟ್ಟು ಹಾಕಿಕೊಂಡಿದ್ದ ದೇವಯ್ಯನ ಕಡೆ ನೋಡಿ ಸನ್ನೆ ಮಾಡಲು ಅವನು ಮೆಟ್ಟುಗಳನ್ನು ಹಾಕಿಕೊಂಡಿದ್ದ ದೇವಯ್ಯನ ಕಡೆ ನೋಡಿ ಸನ್ನೆ ಮಾಡಲು ಅವನು ಮೆಟ್ಟುಗಳನ್ನು ಒಂದು ಮೆಟ್ಟಿನ ಬುಡದಲ್ಲಿ ಕಳಚಿಬಿಟ್ಟು ಹಿಂಬಾಲಿಸಿದನು. +ನಿತ್ಯವೂ ಊದಿನಕಡ್ಡಿ ಹೊತ್ತಿಸುವ ಪ್ರದೇಶದಲ್ಲಿ ಸರ್ವದಾ ಎಂಬಂತೆ ಹೊಮ್ಮುತ್ತಿರುವ ಒಂದು ಪರಿಮಳ ಪವಿತ್ರತೆ ಮಂಟಪವನ್ನೆಲ್ಲ ವ್ಯಾಪಿಸಿತ್ತು. +ಸಾಮಾನ್ಯವಾಗಿ ಊರಿನ ಸಮೀಪದಲ್ಲರಿವ ಹೊಳೆಯ ದಂಡೆಯ ಕಲ್ಲುಮಂಟಪಗಳಂತಲ್ಲದೆ ಆ ಮಂಟಪ ನಿರ್ಮಲವಾಗಿ ಕಾನಿಸಿತು. +ಮಂಟಪದ ಒಂದು ಮೂಲೆಯಲ್ಲಿ ಕಾಷಾಯಧಾರಿಯಾಗಿದ್ದ ಒಬ್ಬ ಮನುಷ್ಯ ಮೃಗಚರ್ಮಾಸನದ ಮೇಲೆ ಧ್ಯಾನಸ್ಥನಾಗಿದ್ದಂತೆ ನಿಶ್ಚಲಭಂಗಿಯಲ್ಲಿ ನಿಮೀಲಿತ ನೇತ್ರನಾಗಿ ಕಾಣಿಸಿಕೊಂಡನು. +ಮುಕುಂದಯ್ಯ ತೀರ ಬಳಿಸಾರದೆ ಸ್ವಲ್ಪ ದೂರದಲ್ಲಿಯೆ ನಿಂತು ದೀರ್ಘದಂಡ ಪ್ರಣಾಮ ಮಾಡಿದನು. +ದೇವಯ್ಯನಿಗೂ ಹಾಗೆಯೆ ಅಡ್ಡಬೀಳುವ ಮನಸ್ಸಾದರೂ, ಅತೀ ಭಾವಪ್ರದರ್ಶನವು ಆತ್ಮಗೌರವಕ್ಕೆ ಹಾನಿಕರವೆಂಬ ಅಹಂತಾ ಪ್ರತಿಷ್ಠಿತನಾಗಿ, ನಿತಂತೆಯೆ ಕೈಮುಗಿದು ನಮಸ್ಕಾರ ಮಾಡಿದನು. +ಒಬ್ಬನು ಅಡ್ಡಬಿದ್ದುದನ್ನಾಗಲಿ ಮತ್ತೊಬ್ಬನು ನಿಂತೇ ಕೈಮುಗಿದುದನ್ನಾಗಲಿ ಗಮನಿಸಿದಂತೆ ತೋರಲಿಲ್ಲ ಆ ‘ಗಡ್ಡದಯ್ಯ’ ಒಂದೆರಡು ನಿಮಿಷಗಳು ಹಾಗೆಯೆ ನಿಂತಿದ್ದು ಇಬ್ಬರೂ ಸದ್ದುಮಾಡದೆ ಕಲ್ಲುನೆಲದ ಮೇಲೆ ಚಕ್ಕಾಲುಬಕ್ಕಾಲು ಹಾಕಿ ಕೂತುಕೊಂಡರು. +ಹೆಚ್ಚು ಊರು ಸುತ್ತಿ, ಆಗತಾನೆ ಮಲೆನಡಿಗೆ ಪ್ರವೇಶಿಸಿದ ಪಾಶ್ಚಾತ್ಯ ನಾಗರಿಕತೆಯ ಮುಂಚೂಣಿಯಲ್ಲಿದ್ದ ಕ್ರೈಸ್ತ ಪಾದ್ರಿಗಳ ಸಂಗ ಮತ್ತು ಪ್ರಭಾವದಿಂದ ಹೊಸ ಹೊಸ ತರಹದ ಜನರ ವೇಷಭೂಷಣಗಳ ಪರಿಚಯವಿದ್ದ ದೇವಯ್ಯನಾಗಲಿ ತನ್ನ ಒಂದೆ ಮನೆ ಹಳ್ಳಿಯ ಮತ್ತು ಅದರ ಸುತ್ತ ಮುತ್ತ ಇದ್ದ ಅಂತಹವೇ ಆದ ಹಳ್ಳಿಗಳ, ಅಥವಾ ಹೆಚ್ಚು ಎಂದರೆ, ಮೇಗರವಳ್ಳಿ, ಆಗುಂಬೆ ಮತ್ತು ತೀರ್ಥಹಳ್ಳಿಯಂತಹ ಕಿರಿಊರು ಕಿರುಪೇಟೆಗಳ ಪರಿಚಯ ಮಾತ್ರವಿದ್ದ ಮುಕುಂದಯ್ಯನಾಗಲಿ ಹಿಂದೆಲ್ಲ ಕಂಡಿದ್ದ ಯಾವ ಸನ್ಯಾಂಸಿ, ಬೈರಾಗಿ, ಗೋಸಾಯಿಯಂತೆಯೂ ಇರಲಿಲ್ಲ. +ಅವರ ಮುಂದೆ ಪದ್ಮಾಸನಸ್ಥನಾಗಿ ಕಣ್ಣುಮುಚ್ಚಿ ಕುಳಿತಿದ್ದ ಆ ‘ಗಡ್ಡದ್ದಯ್ಯ’ ಆತನ ಕೆದರುಗೂದಲು, ಗಡ್ಡ, ಮೀಸೆ, ಮುಖ, ಮೈ, ಬಟ್ಟೆ ಎಲ್ಲವೂ ಆ ಮಂಟಪದಂತೆಯೆ ಶುಚಿರ್ಭೂತನಾಗಿ, ಶುಭ್ರವಾಗಿ, ನೈರ್ಮಲ್ಯ ವಾತಾವರಣವನ್ನು ಹೊರಸೂಸುತ್ತಿದ್ದವು. +ತುಸು ತಿರಸ್ಕಾರ ಭಾವನೆಯಿಂದಲೆ ಅಲ್ಲಿಗೆ ಬಂದಿದ್ದ ದೇವಯ್ಯನಂತೂ ಆ ನೈರ್ಮಲ್ಯಕ್ಕೆ ಮನಸೋತನು. +ಹಿಂದೆ ಅವನು ನೋಡಿದ್ದ ಸಂನ್ಯಾಸಿ ಬೈರಾಗಿ ಗೋಸಾಯಿಗಳೆಲ್ಲ ಶುಚಿಯಾಗಿರುವ ಸಭ್ಯರು ಯಾರೂ ಬಳಿಸಾರದಷ್ಟು ಗಲೀಜಾಗಿರುತ್ತಿದ್ದರು. +ನೋಡುವುದಕ್ಕೆ ಗಡ್ಡದಯ್ಯ ವಯಸ್ಸಾದವನಂತೆ ಕಾಣುತ್ತಿರಲಿಲ್ಲ. +ದೇವಯ್ಯನಷ್ಟೆ ವಯಸ್ಸಾದಂತೆ ತೋರುತ್ತಿದ್ದನು. +ತುಂಬ ಮೋಟಾಗಿದ್ದ ಆತನ ಗಡ್ಡವಾಗಲಿ ಕುಡಿಮೀಸೆಯಾಗಲಿ ಕ್ಷೌರಭಾವವನ್ನು ಸೂಚಿಸುತ್ತಿದ್ದುವೆ ಹೊರತು ದಾಡಿ ಬಿಟ್ಟ ಭಾವವನ್ನು ಮನಸ್ಸಿಗೆ ತರುತ್ತಿರಲಿಲ್ಲ. +ಅವನ ಗಡ್ಡ, ಮೀಸೆ ಮತ್ತು ತಲೆಕೂದಲುಗಳ ಮಿಂಚುಗಪ್ಪಿನ ಹಿನ್ನಲೆಯಲ್ಲಿ ಮುಖದ ಮೈಬಣ್ಣ ಹೊಂಗಾಂತಿಯನ್ನು ಮನಸ್ಸಿಗೆ ತರುವ ಹಾಗಿತ್ತು. +ಅವನು ಹಾಕಿಕೊಂಡಿದ್ದ ನೀಳವಾದ ‘ಕಪನಿ’ ಕುಳಿತಿದ್ದ ಅವನ ಮೈಯೆಲ್ಲವನ್ನೂ ಮುಚ್ಚಿತ್ತಾದರೂ ಆ ಮೈಕಟ್ಟಿನ ದೃಢ ಧೀರ ಬಲಿಷ್ಠ ಭಂಗಿಯನ್ನು ಮರೆ ಮಾಡಲು ಸಮರ್ಥವಾಗಿರಲಿಲ್ಲ. +ಮೆಚ್ಚಿ ನೋಡುತ್ತ ಕುಳಿತಿದ್ದ ಅವರಿಗಿಬ್ಬರಿಗೂ ಆದ ಮತ್ತೊಂದು ಆಶ್ಚರ್ಯವೆಂದರೆ ಈ ಕಾಷಾಯಧಾರಿಯಲ್ಲಿ, ಸಾಧಾರಣವಾಗಿ ಅಂತಹ ಇತರರೆಲ್ಲರಲ್ಲಿಯೂ ತಪ್ಪದೆ ಇರುವಂತೆ, ಯಾವ ಭಸ್ಮಾವಲೇಪನವಾಗಲಿ ರುದ್ರಾಕ್ಷಿ ಸರವಾಗಲಿ ಗಾಂಜಾ ಸೇಯುವ ಗುಡಿಗುಡಿಯಂತಹ ಸಕಲಕರಣೆಗಳಾಗಲಿ ಕಂಡುಬರದಿದ್ದುದು. +ಮತ್ತೂ, ಆತನ ಪಕ್ಕದಲ್ಲಿ ದೇವಯ್ಯ ರೆವಡೆಂಡ್ ಲೇಕಹಿಲ್ ದೊಡ್ಡಪಾದ್ರಿಗಳ ಹತ್ತಿರ ನೋಡಿದ್ದಂಥ, ಹೊಳೆವ ಅಚ್ಚಕ್ಷರದ ರಟ್ಟಿನ, ಒಂದೆರಡು ದಪ್ಪದಪ್ಪ ಪುಸ್ತಕಗಳಿದ್ದುದು! +ಆ ಅಕ್ಷರಗಳು ಇಂಗ್ಲೀಷು ಎಂಬುದೂ ದೇವಯ್ಯಗೆ ಗೊತ್ತಾಗಿ, ಮುಕುಂದಯ್ಯನ ಕಿವಿಯಲ್ಲಿ ಏನನ್ನೊ ಪಿಸುಗುಟ್ಟಿದುದೆ ಕಾರಣವಾಯಿತೊ ಏನೋ ಎಂಬಂತೆ ಸಂನ್ಯಾಸಿ ಕಣ್ಣು ತೆರೆದು ಅವರನ್ನು ನೋಡಿದನು. +ಮುಕುಂದಯ್ಯ ದೇವಯ್ಯ ಇಬ್ಬರೂ ತೆಕ್ಕನೆ ಚಕಿರಾದಂತೆ ಬೆರಗುಸಿರೆಳೆದುಕೊಂಡರು, ಹಾಗಿತ್ತು ಆ ಕಣ್ಣಕಾಂತಿ! +ಮೊದಲೆ ತೇಜಃಪುಂಜವಾಗಿ ಕಾಣಿಸುತ್ತಿದ್ದ ಮುಖ ಮಂಡಲ ಆ ಸುವಿಶಾಲ ನೇತ್ರದ್ವಯದ ದೃಷ್ಟಿದೀಪ್ತಿಗೆ ಇನ್ನಷ್ಟು ಭವ್ಯಸುಂದರವಾಯ್ತು; +ಇಬ್ಬರು ಅನೈಚ್ಛಿಕವೆಂಬಂತೆ ಮತ್ತೊಮ್ಮೆ ಕೈಮುಗಿದರು! +ತನ್ನ ವೈಯಕ್ತಿಕ ಸಮಸ್ಯೆಗಳಿಗೆ ಗಡ್ಡದಯ್ಯನಿಂದ ಏನಾದರೂ ಪರಿಹಾರ ದೊರೆಯಬಹುದೆಂದು ಪ್ರಶ್ನೆ ಕೇಳಲು ಕಾತರನಾಗಿ ಬಂದಿದ್ದ ಮುಕುಂದಯ್ಯ ತಾನು ಹಿಂದೆಂದೂ ನೋಡದೆ ಇದ್ದಂತಹ ಇಂತಹ ವಿಶೇಷ ರೂಪದ ಮತ್ತ ರೀತಿಯ ಸನ್ಯಾಸಿಗೆ ಅಂತಹ ಪ್ರಶ್ನೆಗಳನ್ನು ಹೇಗೆ ಹಾಕುವುದೆಂದು ನಾಚಿ ಹೆದರಿ ತನ್ನೊಳಗೆ ತಾನೆ ಸೆಡೆತುಕೊಳ್ಳುವಂತೆ ಮಾತನಾಡಲಾರದೆ ಕುಳಿತುಬಿಟ್ಟನು. +ಮುಕುಂದಯ್ಯನಿಗೋಸ್ಕರವಾಗಿಯೆ ಅವನೊಡನೆ ಬಂದಿದ್ದ ದೆವಯ್ಯ, ಸ್ವಲ್ಪ ಹೊತ್ತು ಕಾದು ನೋಡಿ, ಮುಕುಂದಯ್ಯನ ಕಡೆ ಅರ್ಥಪೂರ್ಣವಾಗಿ ಮತ್ತೆ ಮತ್ತೆ ನೋಡಿದನು. +ಅವನು ಬಾಯಿ ತೆರೆಯದಿದ್ದುದನ್ನು ಕಂಡು ತಾಣೆ ಮಾತಿಗೆ ಮೊದಲು ಮಾಡಿದನು; +ಕ್ರೈಸ್ತ ಉಪದೇಶಿ ಮತ್ತು ಪಾದ್ರಿಗಳೊಡನೆ ಚರ್ಚೆ ನಡೆಸಿ ಅಭ್ಯಾಸವಿದ್ದ ಅವನು ತನ್ನ ಯಾವ ಕೌಟುಂಬಿಕ ಅಥವಾ ವೈಯಕ್ತಿಕ ಸಮಸ್ಯೆಗಳನ್ನೂ ಪ್ರಸ್ತಾಪಿಸದೆ ಹಿಂದೂಮತ, ಜಾತಿಪದ್ಧತಿ, ಬ್ರಾಹ್ಮಣರಿಂದ ಬ್ರಾಹ್ಮಣೇತರಿಗೆ ಆಗುತ್ತಿರುವ ಅನ್ಯಾಯ, ಹಿಂದೂ ದೇವರುಗಳಲ್ಲಿ ಕಂಡುಬರುವ ಅನೈತಿಕ ವ್ಯಾಪಾರ, ಕ್ರೈಸ್ತಮತ ಪ್ರಚಾರ, ಕ್ರೈಸ್ತರು ಕೈಗೊಳ್ಳುತ್ತಿರುವ ಉದ್ದಾರ ಕಾರ್ಯ -ಇತ್ಯಾದಿಗಳನ್ನೆ ಕುರಿತು ಪ್ರಶ್ನೆ ಕೇಳಿದನು. +ಸಂನ್ಯಾಸಿ ತುಂಬ ಸಂತೋಷದಿಂದಲೆ ಉತ್ತರ ಹೇಳಿದನು. +ಆತನ ಧ್ವನಿ ಅಸಾಧಾರಣ ಗಂಭೀರವಾಗಿತ್ತು; +ಆಲಿಸುವುದಕ್ಕೆ ಹಿತವೂ ಆಗಿತ್ತು. +ಆತನು ಆಡುತ್ತಿದ್ದ ಸ್ಪಷ್ಟವೂ ಸ್ವಚ್ಛವೂ ಆಗಿದ್ದ ಗ್ರಂಥಭಾಷೆಯಿಂದ ಅವನ ಹುಟ್ಟುನುಡಿ ಕನ್ನಡವಾಗಿರಲಿಕ್ಕಿಲ್ಲ ಎಂಬಂತೆ ತೋರುತ್ತಿತ್ತು. +ಕನ್ನಡಿಗರಲ್ಲದವರು ಬಹುಕಾಲ ಕನ್ನಡನಾಡಿನಲ್ಲಿದ್ದು ಕಲಿತ ಭಾಷೆಯಂತಿತ್ತು. +ಆತನು ಆಡುತ್ತಿದ್ದ ಮಾತು. +ಅಲ್ಲದೆ ಸಂಸ್ಕೃತ ಭೂಯಿಷ್ಠವಾಗಿ ಆಲಿಸುತ್ತಿದ್ದವರ ಯೋಗ್ಯತೆಗೆ ಮೀರಿ ಬಹು ಎತ್ತರದಲ್ಲಿಯೆ ಚರಿಸುವಂತಿತ್ತು. +ಆದರೆ ಪಾದ್ರಿಯ ಉಪದೇಶಗಳನ್ನು ಕೇಳಿದ್ದ ದೇವಯ್ಯನಿಗೆ ತಾನು ಈಗ ಆಲಿಸುತ್ತಿದ್ದ ಈ ವಾಣಿಯ ಸ್ವರೂಪವೆ ಬೇರೆಯ ಅಂತಸ್ತಿನದು ಎಂದು ವೇದ್ಯವಾಯಿತು. +ಇದರ ಧೀರತೆ, ದಿವ್ಯತೆ, ಬವ್ಯತೆ, ವಸ್ತು, ವಿನ್ಯಾಸಗಳಿಗೂ ಪಾದ್ರಿಯ ಉಪದೇಶಕ್ಕೂ ಒಡ್ಡರ ಬಂಡಿಗೂ ದೇವರ ತೇರಿಗೂ ಇರುವ ಅಂತರವಿತ್ತು. +ಸಂನ್ಯಾಸಿ ಹಿಂದೂಮತ, ಜಾತಿಭೇದ, ಮತಾಚಾರಮೌಢ್ಯ, ಬ್ರಾಹ್ಮಣ ಪುರೋಹಿತವರ್ಗದವರಿಂದ ಇತರರಿಗೆ ಆಗುತ್ತಿರುವ ಅನ್ಯಾಯ ಮತ್ತು ಅಪಚಾರ ಅವುಗಳನ್ನು ಕುರಿತ ದೇವಯ್ಯನ ಖಂಡನೆ ಮತ್ತು ಟೀಕೆಗಳಲ್ಲಿ ಬಹುಭಾಗವನ್ನು ಒಪ್ಪಿಕೊಂಡದ್ದು ಮಾತ್ರವಲ್ಲದೆ ದೇವಯ್ಯನಿಗಿಂತಲೂ ಸಮರ್ಥವಾಘಿ ಸ್ವಾರಸ್ಯಕರವಾಗಿ ನಿದರ್ಶನಪೂರ್ವಕವಾಗಿ ಅವುಗಳನ್ನು ವಿಸ್ತರಿಸಿದ್ದನು. +ಆತನ ತೀಕ್ಷ್ಣ ವಿಡಂಬನೆಗೂ ನಿಶಿತ ಹಾಸ್ಯಕ್ಕೂ ವಶರಾಗಿ ದೇವಯ್ಯ ಮುಕುಂದಯ್ಯ ಇಬ್ಬರೂ ಒಮ್ಮೊಮ್ಮೆ ಬಿದ್ದುಬಿದ್ದು ನಕ್ಕೂ ಇದ್ದರು. +ಆದರೆ ಯಾವಾಗ ವೇದಾಂತ ತತ್ವಗಳನ್ನು ಆಧರಿಸಿ, ಹಿಂದೂ ಧರ್ಮದ ಮತ್ತು ಭಾರತೀಯ ದೃಷ್ಟಿಯ ಸಮರ್ಥನೆಗೆ ಕೈಹಾಕಿದನೋ ಆಗ ಶ್ರೋತೃಗಳಿಬ್ಬರೂ ಒಂದು ಭೂಮಾನುಭೂತಿಯ ಅನುಭವದಲ್ಲಿ ಡಂಗಾಗಿ ಹೋಗಿದ್ದರು. +ಹಿಂದೂಗಳಾಗಿದ್ದ ಅವರು ಮಹೋನ್ನತ ದಿವ್ಯ ದರ್ಶನದ ಆಸ್ತಿಗೆ ಹಕ್ಕುದಾರರಾಗಿದ್ದಾರೆ ಎಂಬುದನ್ನು ಆತನು ವಿವರಿಸಿದಾಗ ಆ ಮಂಟಪದಲ್ಲಿ ಒಂದು ದಿವ್ಯ ಆರಾಧನೆಯ ಸಾನ್ನಿಧ್ಯವೆ ಸೃಷ್ಟಿಯಾಗಿತ್ತು! +ಅದರಲ್ಲಿಯೂ ಆತನು ಚಿಕಾಗೊ ಸರ್ವಧರ್ಮ ಸಮ್ಮೇಲನದಲ್ಲಿ ಅಂದಿಗೆ ಮೂರೇ ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದ ಎಂಬ್ಬೊಬ್ಬ ಸಂನ್ಯಾಸಿ ಹಿಂದೂ ಧರ್ಮದ ಮೇಲ್ಮೆಯ ವಿಚಾರವಾಗಿ ಉಪನ್ಯಾಸಮಾಡಿ, ಲೋಕವೆಲ್ಲ ಬೆರಗಾಗುವಂತೆ ದಿಗ್ವಿಜಯಿಯಾಗಿರುವ ಸಂಗತಿಯನ್ನು ರೋಮಾಂಚನ ಕಾರಿಯಾದ ಭಾಷಾರೀತಿಯಿಂದ ವರ್ಣೀಸಿದಾಗಂತೂ ದೇವಯ್ಯನಿಗೆ ಕುಳಿತುಕೊಳ್ಳಲಾಗಲಿಲ್ಲ; +ಎದ್ದುನಿಂತು ಕುಣಿದಾಡಬೇಕೆಂಬ ಮನಸ್ಸನ್ನು ಹೇಗೊ ತಡೆದುಕೊಂಡನು. +ಸಂನ್ಯಾಸಿ ಮತ್ತೂ ಹೇಳಿದನು; + “ಆ ಸ್ವಾಮಿ ವಿವೇಕಾನಂದರು ಇಂಡಿಯಾಕ್ಕೆ ಬರುವ ದಾರಿಯಲ್ಲಿದ್ದಾರೆ. +ಬಂದ ಮೇಲೆ ಭರತಖಂಡವನ್ನೆಲ್ಲ ಸಂಚರಿಸಿ, ಬೋಧಿಸಿ, ಭಾಷಣಮಾಡಿ ಹೊಸದೊಂದು ಯುಗಶಕ್ತಿಯನ್ನೆ ಉದ್ಭೋಧನಗೊಳಿಸುತ್ತಾರೆ. +ಹಿಂದೂಧರ್ಮವು ಬ್ರಾಹ್ಮಣ ಪುರೋಹಿತರಿಂದ ಪಾರಾಗಿ, ಕ್ರೈಸ್ತಾದಿ ಮತಪ್ರಚಾರಣೆಗೆ ದುರ್ಗಮವಗಿ, ತನ್ನ ವೇದೋಪನಿಷತ್ತಿನ ಶುದ್ಧ ವೇದಾಂತ ದರ್ಶನದಲ್ಲಿ ಪ್ರತಿಷ್ಠಿತವಾಗುವ ಕಾಲ ಸಮೀಪಿಸುತ್ತಿದೆ. +ಅದಕ್ಕಾಗಿ ನಾನೂ, ನನ್ನಂತಹ ಇತರ ಕೆಲವರೂ, ದೇಶದಾದ್ಯಂತ ಸಂಚರಿಸಿ, ಸ್ಥಳೀಯ ದೇವತಾಶಕ್ತಿಗಳನ್ನು ಎಚ್ಚರಿಸುತ್ತಿದ್ದೇವೆ. +ನಾನು ಸ್ವಾಮಿ ವಿವೇಕಾನಂದರು ಕೊಲಂಬೋ ನಗರಕ್ಕೆ ಬರುವಷ್ಟರಲ್ಲಿ ಈ ಕರ್ತವ್ಯವನ್ನು ಮುಗಿಸಿ, ಅವರನ್ನು ಎದುರುಗೊಂಡು ಸ್ವಾಗತಿಸಲು ಅಲ್ಲಿಗೆ ಹೊಗುವ ಹಾದಿಯಲ್ಲಿದ್ದೇನೆ.” +ಮುಕುಂದಯ್ಯ ದೇವಯ್ಯರಿಗೆ ಸಂನ್ಯಾಸಿ ಹೇಳಿದುದರಲ್ಲಿ ಮುಕ್ಕಾಲು ಮೂರು ವೀಸ ಬುದ್ಧಿ ಗಮ್ಯವಾಗಲಿಲ್ಲ; + ಆದರೂ ಅದರ ತಾತ್ಸಾರವು ಭಾವಗೋಚರವಾಗಿ ಅವರು ಒಂದು ಹೊಸ ಜನ್ಮಕ್ಕೆ ಹುಟ್ಟಿಬಂದತಾಗಿತ್ತು. +ಆ ಮಲೆನಾಡಿನ ಕೊಂಪೆಯ ಕಾಡಿಗೆ ಆಗ ಹೊರಲೋಕದ ಸುದ್ದಿ ಸಂಪರ್ಕವೆ ಇರಲಿಲ್ಲ. +ಪತ್ರಿಕೆಗಳೂ ಇರಲಿಲ್ಲ; +ಬೆಂಗಳೂರು ಮೈಸೂರುಗಳಲ್ಲಿ ಆಗ ತಾನೆ ಕನ್ನಡದಲ್ಲಿ ಹೊರಡಲು ಶುರುವಾಗಿದ್ದ ಪತ್ರಿಕೆಗಳೂ ಅಂಚೆಯ ಅಭಾವದಿಂದಾಗಿ ಇನ್ನೂ ಬರತೊಡಗಿರಲಿಲ್ಲ. +ಪಾದ್ರಿ ಪ್ರವೇಶಿಸಿದ ಹಳ್ಳಿಯ ಒಂದೆರಡು ಮನೆಗಳಿಗೆ ಆಗಾಗ ತಿಂಗಳುಗಟ್ಟಲೆ ಹಳೆಯವಾಗಿದ್ದ ಮಿಶನರಿ ಪತ್ರಕೆಗಳು ಬಂದರೂ ಅವನ್ನು ಒದುತ್ತಿದ್ದುದೂ ಅಷ್ಟಕಷ್ಟೆ. +ಹೀಗಿರಲು ಸಂನ್ಯಾಸಿ ಹೇಳಿದ್ದ ವಿದೇಶದ ಹೆಸರುಗಳೂ ವಿದೇಶದ ನಗರಗಳ ಹೆಸರುಗಳೂ ವಿವೇಕಾನಂದರ ಹೆಸರೂ ಉಪನಿಶತ್ತು ವೇದಾಂತ ಮುಂತಾದ ಹೆಸರುಗಳೂ ಎಷ್ಟರ ಮಟ್ಟಿಗೆ ತಾನೆ ಅರ್ಥವತ್ತಾದಾವು? +ಅದರಲ್ಲಿಯೂ ಸಂನ್ಯಾಸಿ ‘ಸ್ಥಳೀಯ ದೇವಾಶಕ್ತಿಗಳನ್ನೂ ಎಚ್ಚರಿಸುತ್ತಿದ್ದೇವೆ.’ ಎಂದಾಗ, ಸುತಾರಾಂ ಭಾವವಾಗದ ದೇವಯ್ಯನು ಮುಕುಂದಯ್ಯನ ಕಡೆ ತಿರುಗಿನೋಡಿ, ಒಳಗೊಳಗೆ ನಕ್ಕು ಸಂದೇಹಗರಸ್ತನಾಗಿದ್ದನು. +ಸಂನ್ಯಾಸಿಯಂತೂ ತನ್ನ ವಿಚಾರವಾಗಿ ದೇವಯ್ಯ ಹಾಕಿದ್ದ ಪ್ರಶ್ನೆಗಳಿಗೆಲ್ಲ ಯಾವ ಉತ್ತರವನ್ನೂ ಕೊಡದೆ ಮುಗುಳುನಕ್ಕಿದ್ದನಷ್ಟೆ! …. +ಇವರಿಗಾಗಿ ಹುಡುಕಿ ಹುಡುಕಿ ಹೊಳೆದಂಡೆಯಿಂದ ಕೂಗುತ್ತಿದ್ದ ಬಚ್ಚನ ಕರೆ ಕೇಳಿಸಿದಾಗ ಮುಕುಂದಯ್ಯನು ದೇವಯ್ಯನ ಕಿವಿಯಲ್ಲಿ ಏನನ್ನೊ ಉಸುರಿದನು. +ದೇವಯ್ಯ ಎದ್ದು ನಿಂತು, ಬಗ್ಗಿ ನಮಸ್ಕಾರ ಮಾಡಿ, ಮತ್ತೊಮ್ಮೆ ದರ್ಶನ ತೆಗೆದುಕೊಳ್ಳುತ್ತೇನೆ ಎಂದು ಹೇಳಿ, ಗೌರವ ಪ್ರದರ್ಶನಕ್ಕಾಗಿ ಹಿಂದು ಹಿಂದಕ್ಕೆ ತುಸು ನಡೆದು, ಆಮೇಲೆ ತಿರುಗಿಕೊಂಡು ಹೊರಟುಹೋದನು. +ದೇವಯ್ಯ ಹೋದಮೇಲೆ ತಾನೊಬ್ಬನೆಯೆ ಆದ ಮುಕುಂದಯ್ಯನಿಗೆ ಸಂನ್ಯಾಸಿಯ ಸಾನ್ನಿಧ್ಯದ ಮಹತ್ತು ಭಾರತರವಾದಂತಾಯ್ತು! +ತನ್ನ ವೈಯಕ್ತಿಕ ಜೀವನದ ಸಮಸ್ಯೆಗಳಿಗೆ ‘ಗಡದ್ದಯ್ಯ’ನಿಂದ ಏನಾದರೂ ಸಹಾಯ ಪಡೆಯಲೆಂದೇ ಅವನು ಆವೊತ್ತು ಅಲ್ಲಿಗೆ ಬಂದಿದ್ದನು. +ಅದಕ್ಕಾಗಿಯೆ ದೇಯಯ್ಯನನ್ನು ಕಳುಹಿಸಿ ತಾನೊಬ್ಬನೆ ಉಳಿದುಕೊಂಡಿದ್ದನು. +ಆದರೆ ಭಾಯಿಂದ ಮಾತು ಹೊರಡದಾಯ್ತು! +ಸುಮ್ಮನೆ ಕೈ ಜೋಡಿಸಿಕೊಂಡು ಸನ್ಯಾಸಿಯ ಪಾದಗಳ ಕಡೆ ನೋಡುತ್ತಾ ಕುಳಿತುಬಿಟ್ಟನು! +ಸಂನ್ಯಾಸಿಯೆ ಮಾತನಾಡಿಸಿದನು. +“ಏನೋ ಆರ್ತಿಯಲ್ಲಿ ಸಿಕ್ಕಿದಿರಲ್ಲವೆ ನೀವು?”ಅರ್ಥವಾಗದಿದ್ದರೂ ಭಾವವಾಯಿತು; +ಆದರೂ ಮುಕುಂದಯ್ಯ ಮಾತಾಡಲಿಲ್ಲ. +ಅವನ ಕಣ್ಣಿಂದ ನೀರು ತೊಟ್ಟಿಕ್ಕಿತು! +ಸಂನ್ಯಾಸಿ ತುಸು ಹೊತ್ತು ಕಣ್ಣುಮುಚ್ಚಿಕೊಂಡು ಕುಳಿತಿದ್ದು, ಮತ್ತೆ ಕಣ್ಮೆರೆದು ಕರುಣಾಪೂರ್ಣಧ್ವನಿಯಿಂದ ಹೇಳಿದನು; + “ಹೋದ ಜನ್ಮದಲ್ಲಿ ನೀವಿಬ್ಬರೂ ದಂಪತಿಗಳಾಗಿದ್ದಿರಿ. +ಈ ಜನ್ಮದಲ್ಲಿಯೂ ಅದು ಮುಂದುವರಿದು ಸಾರ್ಥಕಗೊಳ್ಳುತ್ತದೆ. +ಅದಕ್ಕಾಗಿ ನೀವು ದುಃಖಿಸಬೇಕಾಗಿಲ್ಲ. +ನಿಮ್ಮ ಧರ್ಮ ಕರ್ಮ ನೀವು ಮಾಡುತ್ತಾ ಹೋಗಿ.” +“ಅವಳ ಲಗ್ನ ಇನ್ನೊಬ್ಬರೊಡನೆ ಆಗುವುದು ನಿಶ್ಚಯವಾಗಿದೆ. +ತಮ್ಮ ಅನುಗ್ರಹಕ್ಕೆ ಪಾತ್ರನಾಗಿ ನನ್ನ ಇಷ್ಟಾರ್ಥ ನೆರವೇರಿಸಿಕೊಳ್ಳುವುದಕ್ಕಾಗಿ ಬಂದೆ.” ಮುಕುಂದಯ್ಯನ ಭಾಷೆ ಸಾನ್ನಿಧ್ಯಪ್ರಭಾವದಿಂದ ಏರಿ ನಡೆಯುತ್ತಿತ್ತು. +ಅವನಿಗೆ ಸಂನ್ಯಾಸಿಯ ಸರ್ವಜ್ಞ ಸಾಮರ್ಥ್ಯದ ವಿಷಯದಲ್ಲಿ ಸಂದೇಹ ಮೂಡಲೂ ಇಲ್ಲ; +ಸಮರ್ಥನೆ ಬೇಕೂ ಆಗಿರಲಿಲ್ಲ. +ಆರ್ತನಾಗಿದ್ದ ಅವನ ಮನಸ್ಸು ಅದನ್ನು ಎಂದೋ ಒಪ್ಪಿಕೊಂಡುಬಿಟ್ಟಿತ್ತು. +ಸಂನ್ಯಾಸಿ ಮಾತನಾಡಲಿಲ್ಲ. +ಸುಮ್ಮನೆ ಮುಗುಳುನಕ್ಕನಷ್ಟೆ. +ಆದರೆ ಆ ಮುಗುಳುನಗೆಯಲ್ಲಿ ಎಂತಹ ಅಧಿಕಾರ ಮುದ್ರೆಯಿತ್ತು ಎಂದರೆ ತಾನು ಹೇಳಿದ ಮೇಲೆ ಆಗಿಹೋಯ್ತು ಎಂಬ ದೃಢನಿಶ್ಚಯ ಭಾವ! +ಮುಕುಂದಯ್ಯ ತನ್ನ ಹಳೆಮನೆಯ ಬಾವ ದೊಡ್ಡಣ್ಣ ಹೆಗ್ಗಡೆಗೆ ಸಂಭವಿಸಸಿರುವ ದುರ್ಗತಿಯನ್ನು ವಿಸ್ಕೃತಿಯನ್ನು ಕುರಿತು ಅರಿಕಮಾಡಿಕೊಂಡು, ಆತನಿಗೆ ಪುನಃ ಸ್ಮರಣೆಯುಂಟಾಗಿ, ಮನೆಗೆ ಮರಳುವಂತೆ ಆಶೀರ್ವಾದ ಮಾಡಬೇಕೆಂದು ಕೇಳಿಕೊಂಡಾಗ ಸಂನ್ಯಾಸಿ ಕಣ್ಣುಮುಚ್ಚಿಕೊಂಡೆ ಎಲ್ಲವನ್ನೂ ಆಲಿಸಿದ್ದನು. +ಸ್ವಲ್ಪ ಹೊತ್ತಿನ ಮೇಲೆ ಧೀರ್ಘವಾಗಿ ಸುಯ್ದು ಕಣ್ಣೆರೆದನು; +“ಆತ ತಿರುಪತಿಯಲ್ಲಿಯ ಏಳೆಂಟು ವರ್ಷಗಳ ಪೂರ್ವದಲ್ಲಿಯೆ ಗತಿಸಿದ್ದಾನಲ್ಲಾ? +ಮತ್ತೆ ಏಕೆ ಆ ಚಿಂತೆ? +“ಹಾಗೆಯೆ ಕೆಲವರು ಭಾವಿಸಿದ್ದರು. +ಆದರೆ ಅವರು ಬದುಕಿದ್ದಾರೆ. +ಗೋಸಾಯಿಗಳ ಜೊತೆ ಇದ್ದರು. +ಈಗ ತೀರ್ಥಹಳ್ಳಿಯಲ್ಲಿ ಪೋಲೀಸರ ವಶದಲ್ಲಿ ಇದ್ದಾರೆ. +ವೈದ್ಯರು ನೋಡಿಕೊಳ್ಳುತ್ತಾರೆ. +ಅವರಿಗೆ ತಾನು ಯಾರು ಏನು ಎಂಬುದೆಲ್ಲ ಮರೆತುಹೋಗಿಬಿಟ್ಟಿದೆಯಂತೆ. +ತನ್ನವರು ಯಾರೂ ಗುರುತಿಸಲು ಸಾಧ್ಯವಾಗಿಲ್ಲವೆಂಬಂತೆ. +ಮೊನ್ನೆ ಅವರನ್ನು ಚೆನ್ನಾಗಿ ತಿಳಿದಿದ್ದ ನಮ್ಮ ಒಬ್ಬರು ಐಗಳು ಅಲ್ಲಿಗೆ ಹೊಗಿ ನೋಡಿಕೊಂಡೂ ಬಂದಿದ್ದಾರೆ. +ನಮ್ಮ ಭಾವನೇ ಹೌದೆಂದೂ ನೇಕ ಚಿಹ್ನೆಗಳಿಂದ ಅವರು ಗುರುತಿಸಿದ್ದಾರೆ. +ಹುಲಿಯಿಂದಾಗಿದ್ದ ಒಂದು ಗಾಯದ ಕಲೆಯಂತೂ ಚೆನ್ನಾಗಿ ಗುರುತು ಸಿಕ್ಕುವಂತಿದೆಯಂತೆ…. +ನನ್ನ ಅಕ್ಕ ಏಳೆಂಟು ವರ್ಷಗಲಿಂದ ಕೊರಗುತ್ತಿದ್ದಾರೆ….”ಸಂನ್ಯಾಸಿ ಇದ್ದಕ್ಕಿದ್ದಂತೆ ತನ್ನ ಕೈಯತ್ತಿ ಯಾವುದೋ ಭಾಷೆಯಲ್ಲ ಏನನ್ನೋ ಹೇಳಿದನೋ? +ಹೇಳಿಕೊಂಡನೋ?ಮುಕುಂದಯ್ಯ ಮಾತು ನಿಲ್ಲಿಸಿ ಸುಮ್ಮನಾಗಿಬಿಟ್ಟನು. +“ನಾನು ಈಗ ನಿಮಗೆ ಹೇಳುವುದನ್ನು ನೀವು ಎಂದೂ ಯಾರಿಗೂ ಯಾವ ಸಂದರ್ಭದಲ್ಲಿಯೂ ಹೇಳದೆ ಇರುವುದಾದರೆ ನಿಮಗೆ, ಮನುಷ್ಯ ಸಾಮಾನ್ಯರಿಗೆ ಹೇಳಬಾರದ ಮತ್ತು ಹೇಳಿದರೂ ಅರ್ಥವಾಗಲಾರದ, ಕೆಲವು ರಹಸ್ಯಗಳನ್ನು ತಿಳಿಸುತ್ತೇನೆ; +ನಿಮ್ಮ ಸಮಾಧಾನಕ್ಕಾಗಿ ಮತ್ತು ನಿಮಗೆ ಅರಿಯಲಸಾದ್ಯವಾದ ಒಂದು ಕಾರಣಕ್ಕಾಗಿ…. ” +“ಆಗಲಿ. ತಮ್ಮ ಅಪ್ಪಣೆ ಹಾಗಿರುವುದಾದರೆ ಅದನ್ನು ತಪಪ್ದೆ ಪಾಲಿಸುತ್ತೇನೆ.” ಕುತೂಹಲಾಗ್ನಿ ಕರಳಿ ಮಾತುಕೊಟ್ಟನು ಮುಕುಂದಯ್ಯ, ದೂರದಿಂದಲೆ ಸಂನ್ಯಾಸಿಯ ಪಾದದತ್ತ ಕೈಮುಗಿದು. +“ಎಂತಹ ಕಠಿಣಪ್ರಸಂಗ ಒದಗಿದರೂ ನಿಮ್ಮ ವಚನಪಾಲನೆಗೆ ಭಂಗ ಬರದಿರಲಿ. +ನೀವೀಗ ನನ್ನಿಂದ ಕೇಳುವುದರ ಸತ್ಯತೆಯನ್ನು ನಿಮ್ಮ ಜನ್ಮದಲ್ಲಿಯೆ ಕಾಣುವಿರಿ. +ನಾನು ಇದನ್ನೆಲ್ಲ ನಿಮಗೆ ಹೇಳುತ್ತಿರುವುದಕ್ಕೂ ಒಂದು ಕಾರಣವಿದೆ. +ನಾನು ನಿಮಗೆ ಆಗ ತಿಳಿಸಿದೆನಲ್ಲಾ ಆ ಸ್ವಾಮಿ ವಿವೇಕಾನಂದರಿಮದ ಜಾಗ್ರತವಾಗುವ ಯುಗಧರ್ಮ ಶಕ್ತಿಗೆ ಸೇವೆ ಸಲ್ಲಿಸುವ ಚೇತನಗಳು ನಮ್ಮ ಸಂತಾನರಲ್ಲಿ ಮುಂದೆ ಸಂಭವಿಸಲಿವೆ! +ಒಂದು ರೀತಿಯಿಂದ ಕೆಲವಾಗಲೆ ಸಂಭವಿಸಿಯೂ ಆಗಿದೆ! …. +ತನಗೆ ಗ್ರಾಹ್ಯವಾಗದ ಯಾವುದೋ ಒಂದು ಅನ್ಯಲೋಕದಲ್ಲಿ ಸಂಚರಿಸುತ್ತಿರುವಂತೆ ಮುಕುಂದಯ್ಯ ಬೆರಗುಹೊಡೆದು ಆಲಿಸತೊಡಗಿದನು. +ತನ್ನ ಗ್ರಾಮಿಣ ಬುದ್ದಿಯನ್ನು ಆದಷ್ಟು ಏಕಾಗ್ರತೆಗೊಳಿಸಿ ಗ್ರಹಿಸಲು ಪ್ರಯತ್ನಿಸುವವನಂತೆ. +“ತೀರ್ಥಹಳ್ಳಿಯಲ್ಲಿ ಇರುವುದೇನೋ ನಿಮ್ಮ ಬಾವನಾಗಿದ್ದವರ ಶರೀರವೆ! +ಆದರೆ ಅವರೊಳಗಿರುವುದು ಅವರ ಜೀವವಲ್ಲ. +ಅವರ ಮರಣ ಸಮಯದಲ್ಲಿ ಅಲ್ಲಿಯೆ ಅಕಾಲ ಮೃತ್ಯುವಿಗೆ ತುತ್ತಾಗಿದ್ದು ಇನ್ನೂ ಸಮೆಯಿಸುವ ಕರ್ಮವಿದ್ದ ಒಬ್ಬ ಬೈರಾಗಿಯ ಜೀವ ಅದನ್ನು ಅಕ್ರಮಿಸಿದೆ. +ಅದು ಇಂದೋ ನಾಳೆಯೋ ತನ್ನ ಪ್ರಾರಬ್ಧ ಮುಗಿದೊಡನೆಯೆ ಆ ಶರೀರವನ್ನು ತ್ಯಜಿಸುತ್ತದೆ…. +ಇದೆಲ್ಲ ತಿಳಿಯದೆ ಇದ್ದಿದ್ದರೆ ನೀವು ಹೇಗೆ ವರ್ತಿಸುತ್ತಿದ್ದಿರೋ ಹಾಗೆಯೇ ವರ್ತಿಸಬೇಕು; ಗೊತ್ತಾಯಿತೆ? +ನಿಮ್ಮ ಈ ಜ್ಞಾನವೆಲ್ಲ ಸಾಕ್ಷೀಪ್ರಜ್ಞೆಯಾಗಿಯೆ ಉಳಿಯಬೇಕು. +ಭಗವಂತನಿಗೆ ಪ್ರಾರ್ಥನೆ ಸಲ್ಲಿಸುವುದೊಂದಲ್ಲದೆ ಬೇರೆ ಯಾವ ಕ್ರಿಯೆಯೂ ಕರ್ಮವೂ ನಿಮ್ಮ ಜ್ಞಾನದ ಫಲವಾಗಿ ನಿಮ್ಮಿಂದ ಹೊಮ್ಮಬಾರದು. +ನೀವು ಈ ವಿಚಾರದಲ್ಲಿ ಅತ್ಯಂತ ನಿಸ್ಸಂಗತ್ವವನ್ನು ಸಾಧಿಸಬೇಕು. +ಇಲ್ಲದಿದ್ದರೆ ಅನಗತ್ಯವಾದ ಕ್ಲೇಶ ಕಷ್ಟ ಜಟಿಲತೆಗಳಿಗೆ ಕಾರಣರಾಗುತ್ತೀರಿ…. +ತಿರುಪತಿಗೆ ಹೋಗಿದ್ದ ಆ ನಿಮ್ಮ ಬಾವ ಆಗಲೆ ಇಲ್ಲಿ ಜನ್ಮವೆತ್ತಿದ್ದಾರೆ…. +“ಕ್ಷೌರದ ಅಲಗಿನ ಮೇಲೆ ನಿಂತದ್ದ ಮುಕುಂದಯ್ಯನ ಕುತೂಹಲವನ್ನು ಗಮನಿಸಿ ಸಂನ್ಯಾಸಿ ಹೇಳಿದನು; +“ಇದಕ್ಕೆಲ್ಲ ಅಷ್ಟೊಂದು ವಿಸಮಯ ಏಕೆ? +ಇದೆಲ್ಲ ನಿತ್ಯವೂ ಸೂಕ್ಷ್ಮ ಲೋಕಗಳಲ್ಲಿ ನಡೆಯುತ್ತಿರುವ ಸಾಮಾನ್ಯ ವ್ಯಾಪಾರ…. +ನಿಮ್ಮ ಜೊತೆಯಲ್ಲಿ ಬಂದಿದ್ದು ಈಗ ತಾನೆ ಹೊರಟು ಹೋದರಲ್ಲಾ ಅವರ ಮಗನಾಗಿ! …. ” +ಮುಕುಂದಯ್ಯನಿಗೆ ತಡೆಯಲಾಗಲಿಲ್ಲ; + “ಅವರು ನಮ್ಮ ಪುಟ್ಟಕ್ಕನ ಗಂಡ?” ಎಂದು ಏಕೊ ಏನೊ ತೊದಲಿಬಿಟ್ಟನು. +ಸಂನ್ಯಾಸಿ ಚಿಕ್ಕ ಹುಡುಗನ ಬೆಕ್ಕಸಕ್ಕೆ ದೊಡ್ಡವರು ನಗುವಂತೆ ನಕ್ಕು ಮುಂದುವರಿಸಿದನು; +“ತಿರುಪತಿಯಲ್ಲಿ ತೀರಿಕೊಂಡ ನಿಮ್ಮ ಬಾವನ ಸಹಧರ್ಮಿಣಿ, ನೀವು ಈ ಜನ್ಮದಲ್ಲಿ ಮದುವೆಯಾಗಬೇಕೆಂದಿರುವ ನಿಮ್ಮ ಪೂರ್ವಜನ್ಮದ ಪತ್ನಿಯಲ್ಲಿಯೆ, ನಿಮ್ಮ ಮಗಳಾಗಿ ಹುಟ್ಟಿ, ತನ್ನ ಹಿಂದಿನ ಜನ್ಮದ ಗಂಡನನ್ನೇ ಮದುವೆಯಾಗುತ್ತಾಳೆ! …. +ಭಾವಾವೇಶದಲ್ಲಿ ಮುಕುಂದಯ್ಯನಿಗೆ ಮೆದುಳೆಲ್ಲ ಆವಿಯಾಗಿ ಬಿಟ್ಟಿತೊ ಎನ್ನುವಂತಾಗಿತ್ತು. +ಆದರೂ ಧೈರ್ಯಮಾಡಿ ಹೇಳಿಯೆ ಬಿಟ್ಟನು. +“ನಮ್ಮ ದೊಡ್ಡ ಅಕ್ಕ ಇನ್ನೂ ಬದುಕಿದ್ದಾರೆ. +ಇವತ್ತಿನ ಸತ್ಯನಾರಾಯಣ ವ್ರತಕ್ಕಾಗಿ ದೇವಸ್ಥಾನಕ್ಕೆ ಬಂದಿದ್ದಾರೆ. +ಅಲ್ಲಿ ಅವರಿಗೆ ಏನೊ ಮೈಮೇಲೆ ಬಂದುಬಿಟ್ಟಂತಾಗಿ ದೇವರಿಗೆ ಮೊರೆಯಿಟ್ಟರು! …. ” +“ಬದುಕಿರುವವರೂ ಸಾಯುತ್ತಾರೆ; +ಸತ್ತವರು ಮತ್ತೆ ಹುಟ್ಟುತ್ತಾರೆ. +ಹೀಗೆ ಸಾಗುತ್ತಿದೆ ಭಗವಂತನ ಲೀಲೆ! …. +ನೀವಿನ್ನು ಹೊರಡಿ. +ನಿಮಗಾಗಿ ಕಾಯುತ್ತಿದ್ದಾರೆ. +ನಿಮಗೆ ದೇವರು ಒಳ್ಳೆಯದು ಮಾಡಲಿ!” ಎಂದು ಸಂವಾದವನ್ನು ಸಟಕ್ಕನೆ ತುಂಡುಗಡಿದು ಸಂನ್ಯಾಸಿ ಎದ್ದು ನಿಂತನು. +ಇನ್ನೂ ಏನೇನನ್ನೋ ಕೇಳಬೇಕೆಂದಿದ್ದ ಮುಕುಂದಯ್ಯ ಅತ್ಯಂತ ಭಕ್ತಿಭಾವದಿಂದ ಆತನ ಪಾದತಲದಲ್ಲಿ ಅಡ್ಡಬಿದ್ದು, ಎದ್ದುನಿಂತು, ಏನಾದರೂ ಪ್ರಸಾದ ಕೊಡಬಹುದೇ ಎಂದು ಒಂದು ಕ್ಷಣ ನಿರೀಕ್ಷಿಸಿ, ಅಂತಹ ಸೂಚನೆ ಏನೂ ಕಾಣದಿರಲು ಅಲ್ಲಿಂದ ಹೊರಟನು. +ಆಗತಾನೆ ಉದಯವಾದಂತೆ ತೋರಿತು ಅವನಿಗೆ ಹೊರಗಡೆಯ ಪ್ರಪಂಚ! +ಅದೇ ಹೊಳೆ, ಅದೇ ಹೊಳೆಯ ದಂಡೆ, ಅದೇ ಅಶ್ವತ್ಥವೃಕ್ಷ, ಅದೇ ಅರಳೀಕಟ್ಟೆ, ಅದೇ ಕಲ್ಲೂರು ದೇವಸ್ಥಾನ, ಅದೇ ಮನೆಗಳು-ಆದರೆ ಮುಕುಂದಯ್ಯನಿಗೆ ಇನ್ನೆಂದಿಗೂ ಆ ಪ್ರಪಂಚ ಮೊದಲಿನ ಪ್ರಪಂಚವಾಗಿರಲು ಸಾಧ್ಯವಿರಲಿಲ್ಲ. +ತನ್ನಲ್ಲಿ ಉನ್ಮೇಷಿತವಾದ ನವೋತ್ಥಾನವನ್ನು ಸಾಧಾರಣತೆಯ ಸೋಗಿನಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಹುದುಗಿಸಿಕೊಂಡು ದೇವಸ್ಥಾನಕ್ಕೆ ಹೋದನು. +ಬ್ರಾಹ್ಮಣರ ಅನ್ನಸಂತರ್ಪಣೆ ಮುಗಿದು, ಶೂದ್ರರ ಊಟ ಪ್ರಾರಂಭವಾಗಿತ್ತು. +ತನಗೆ ಏನೊಂದೂ ವಿಶೇಷ ಸಂಭವಿಸದವನಂತೆ ಹೋಗಿ ಪಂಕ್ತಿಯಲ್ಲಿ ಕುಳಿತುಕೊಂಡನು. +ಹಾರುವರು ಹಾಕಿದ ಊಟದ ಸವಿಗೆ ಕಾಡು ಧರ್ಮು ತಿಮ್ಮು ಏನೇನೊ ಮಾತಾಡಿಕೊಳ್ಳುತ್ತಾ ನಗುತ್ತಾ ಉತ್ಸಾಹದಿಂದ ಉಣ್ಣುತ್ತಿದ್ದರು. +ಆ ಹುಡುಗರ ಕಡೆ ನೋಡುತ್ತಾ ಮುಕುಂದಯ್ಯ ‘ಇವರಲ್ಲಿ ಯಾರು ಯಾರಾಗಿರಬಹುದು?’ ಎಂದುಕೊಂಡನು. +ಪ್ರಪಂಚವನ್ನೆಂತೊ ಅಂತೆ ಆ ಮಕ್ಕಳನ್ನೂ ಅವನು ಹಿಂದೆ ನೊಡುತ್ತಿದ್ದಂತೆ ನೋಡಲು ಸಾದ್ಯವಾಗಲೆ ಇಲ್ಲ. +ಕಣ್ಣು ಹೊರಳಿಸಿ ತನ್ನ ಹಳೆಯಮನೆಯ ಅಕ್ಕಯ್ಯ, ರಂಗಮ್ಮ ಹೆಗ್ಗಡತಿಯವರು, ಕೂತಿದ್ದ ದಿಕ್ಕಿಗೆ ನೋಡಿದನು. +ಚೆಲುವಯ್ಯ ಕಣ್ಣಿಗೆ ಬಿದ್ದನು. +ಅದೊಂದು ಅದ್ಭುತ ನಾಟಕದ ಲೀಲಾದೃಶ್ಯವಾಗಿ ತೋರಿ, ಮುಕುಂದಯ್ಯನ ಮುಖ ಭಾವದಿಂದ ಕೆಂಪಾಯಿತು; +ತೊಟ್ಟಿಕ್ಕುವ ಅಶ್ರುವನ್ನು ಅಂಗಿತೋಳಿನಿಂದ ಒರಸಿಕೊಂಡು, ಪಂಚೆಯ ಅಂಚಿನಿಂದ ಮೂಗನ್ನು ಶುಚಿಮಾಡಿ, ಭಾವಗೋಪನಕ್ಕಾಗಿ ಬಗ್ಗಿ ಉಣತೊಡಗಿದನು. +ದೇವರ ಕಾರ್ಯ ಮುಗಿಸಿಕೊಂಡು ಕಲ್ಲೂರಿನಿಂದ ಬೆಟ್ಟಳ್ಳಿಗೆ ಹಿಂತಿರುಗಿದ ಮರುದಿನವಸವಲ್ಲ ಅದರ ಮರುದಿವಸ ಮುಕುಂದಯ್ಯನೊಡನೆ ಧರ್ಮು ಅವನ ತಾಯಿ ಮತ್ತು ತಿಮ್ಮು ಮೂವರೂ ಕೋಣೂರಿಗೆ ಹೋಗುವುದೆಂದು ನಿಶ್ಚಯವಾಗಿತ್ತು. +ಆದರೆ ಆ ದಿನ ಮಳೆ ಬೆಳಗಿದನಂದಲೂ ಹಿಡಿದು ಹೊಡೆಯಲು ಪ್ರಾರಂಭವಾಗಿ ಇಡಿಯ ದಿನವೆಲ್ಲ ಜಡಿ ಸುರಿದಿದ್ದರಿಂದ ಹೊರಡಲಿಲ್ಲ. +ಹಳ್ಳಿಯ ಜನರು ‘ಅಂತೂ ಮಳೆ ಕೂತ್ಹಾಂಗೆ ಆತು!’ ಎಂದುಕೊಂಡಿದ್ದರು, ಮುಗಿಲ ಕಡೆ ನೋಡಿ. +ನಂಟರು ಮರುದಿನ ಬೆಳಿಗ್ಗೆ ಹೊರಟು ನಿಂತಾಗ ಅವರನ್ನು ಬೀಳ್ಕೊಳ್ಳಲು ಮನೆಯ ಗಂಡಸರು ಹೆಂಗಸರು ಎಲ್ಲರೂ ಹೊರ ಅಂಗಳದಲ್ಲಿ ನಿಂತಿದ್ದರು. +ರಂಗಮ್ಮ ಚೆಲುವಯ್ಯನನ್ನು ಎತ್ತಿಕೊಂಡಿದ್ದಳು. +‘ಹೋಗಿ ಬರ್ತೆವೆ’ ‘ಹೋಗಿ ಬನ್ನಿ’ ಎಂದು ಹೇಳುವುದು ಕೇಳುವುದು ಎಲ್ಲ ಪೂರೈಸಿದಾಗ, ಚೆಲುವಯ್ಯನನ್ನು ತನ್ನ ಅಕ್ಕ ರಂಗಮ್ಮನ ಕೈಯಿಂದ ತಾನು ಕರೆದೆತ್ತಿಕೊಳ್ಳಲು ದೇವಮ್ಮ  ತೋಳು ಚಾಚಿ ನಿಂತಾಗ ಅವನು ತನ್ನ ತಾಯಿಯ ಕೈಗೆ ಬರಲೊಲ್ಲದೆ ರಂಗಮ್ಮನ ಎದೆಗಪ್ಪಿಕೊಂಡು ಅವಳ ಸೆರಗಿನಲ್ಲಿ ಮುಖ ಮರೆಸಿಕೊಂಡನು. +ಅದನ್ನು ಕಂಡು ಅಲ್ಲಿದ್ದವರೆಲ್ಲ ನಕ್ಕರು. +ಅಜ್ಜ ಕಲ್ಲಯ್ಯ ಗೌಡರು “ಓ ಹೋ ಹೋ!ನೋಡ್ರಪಾ! +ದೊಡ್ಡಮ್ಮನ್ನ ಬಿಟ್ಟಿರಾಕೇ ಮನಸ್ಸಿಲ್ಲ ಈ ಹುಡುಗ್‌ಗೆ!” ಎಂದು ವಿನೋದವಾಡಿದರು. +ಹತ್ತಿರ ನಿಂತಿದ್ದ ಧರ್ಮು ಚೆಲುವಯ್ಯನ ಕಡೆ ಕೈನೀಡಿ “ನಾನು ಕರಕೋಳ್ತೀನೊ! +ನನ್ನ ಹತ್ರಕ್ಕೆ ಬಾರೊ, ಪುಟ್ಟಾ!” ಎಂದು ಮುದ್ದು ಮಾತಾಡಿ ತೋಳುಚಾಚಲು ಸ್ವಲ್ಪವೂ ಪ್ರತಿಭಟಿಸದೆ ಅವನ ಕೈಗೆ ಹೋದನು. +ಅದನ್ನು ಕಂಡು ಮತ್ತೆ ಎಲ್ಲರೂ ನಕ್ಕರು. +ಆದರೆ ಮತ್ತೆ ತನ್ನನ್ನು ಕರೆದುಕೊಳ್ಳಲು ಬಂದ ತನ್ನ ತಾಯಿಯ ಕೈಗಾಗಲಿ ಅಜ್ಜಿಯ  ಕೈಗಾಗಲಿ ಹೋಗಲೊಲ್ಲದೆ ರೊಚ್ಚೆಮಾಡುತ್ತಿರಲು ತುಸು ಬಲತ್ಕಾರವಾಗಿಯೆ ಅವನ ತಾಯಿ ಎಳೆದೆತ್ತಿಕೊಂಡಾಗ ಅವನು ಅಳತೊಡಗಿದನು. +ಆದರೆ ಆ ಶಿಶುವರ್ತನೆಗೆ, ದೂರದಲ್ಲಿ ನಿಂತು ವಿಸ್ಮಯ ಮುಖಮುದ್ರೆಯಿಂದ ನೋಡುತ್ತಿದ್ದ ಮುಕುಂದಯ್ಯ ವಿನಾ, ಯಾರೂ ಅಷ್ಟು ವಿಶೇಷ ಗಮನ ಕೊಡದೆ ನಂಟರನ್ನು ಬೀಳ್ಕೊಂಡರು. +ರಂಗಮ್ಮ ಹನಿಗಣ್ಣಾಗಿಯೆ ಹೊರಟಳು. +ಅವಳಿಗೆ ಬೆಟ್ಟಳ್ಳಿಗೆ ಬಂದಾಗಿನಿಂದ ಏನೋ ಒಂದು ರೀತಿಯ ಮನಸ್ಸಾಮಾಧಾನ ಒದಗಿತ್ತು. +ಶಿಶು ಚೆಲುವಯ್ಯನ ಸಂಗವೂ ಅವಳ ಮನಸ್ಸನ್ನು ತನ್ನ ಸಂಕಟದಿಂದ ದೂರ ಕರೆದೊಯ್ದು, ಅದರ ದುಃಸ್ಮೃತಿಯ ಮೇಲೆ ತೆಳ್ಳನೆಯ ವಿಸ್ಮೃತಿಯ ಪರದೆಯನ್ನೆಳೆದಂತಾಗಿತ್ತು. +ಅಲ್ಲದೆ ಕಲ್ಲೂರಿನ ದೇವಸ್ಥಾನದಲ್ಲಿ ಇದ್ದಕ್ಕಿದ್ದಹಾಗೆ ದೇವರ ಪಕ್ಕದಲ್ಲಿ ತನ್ನ ಗಂಡ ದೊಡ್ಡಣ್ಣಹೆಗ್ಗಡೆ ತಾನು ತಿರುಪತಿಗೆ ಹೊರಟಾಗ ಇದ್ದಂತೆಯೆ ಕಾಣಿಸಿಕೊಂಡಂತಾಗಿ, ಅವಳ ಹೃದಯದಲ್ಲಿ ಅವಳಿಗೆ ಅರ್ಥವಾಗದ ಏನೋ ಒಂದು ರೀತಿಯ ಪರಿವರ್ತನೆಯಾಗಿತ್ತು. +ಅವಳ ತಮ್ಮ ಮುಕುಂದಯ್ಯ ಅಳಿಂದ ಮಾತ್ರ ಗುಟ್ಟಾಗಿರಲು ಪ್ರಯತ್ನಿಸಿದ್ದ ಸುದ್ದಿ ಐಗಳು ಅನಂತಯ್ಯ ತೀರ್ಥಹಳ್ಳಿಯಿಂದ ಹಿಂದಿರುಗಿ ಬಂದು, “ಆ ಗೋಸಾಯಿ ಬೇರೆ ಯಾರೂ ಅಲ್ಲ, ದೊಡ್ಡಣ್ಣಹೆಗ್ಗಡೆಯೆ ಹೌದು” ಎಂದು ಗುರುತಿಸಿದ್ದ ಸುದ್ದಿ, ಅವಳ ಕಿವಿ ನೇರವಾಗಿ ತಲುಪದಿದ್ದರೂ, ಅವರಿವರ ಗುಟ್ಟಿನ ಮಾತುಗಳಿಂದಲೂ ಗುಟ್ಟಿನ ವರ್ತನೆಯಿಂದಲೂ ಗುಮಾನಿಯಾಗುವಷ್ಟರ ಮಟ್ಟಿಗೆ ಗೊತ್ತಾಗಿತ್ತು ಆದ್ದ್ರಿಂದಲೇ ಅವಳು ಒಮ್ಮೆ ಏಕಾಂತವಾಗಿ ತನ್ನ ಮಗ ಧರ್ಮುವಿನ ಹತ್ತಿರ “ತಮ್ಮಾ, ನೀನಾದ್ರೂ ನನ್ನ ಒಂದು ಸಾರಿ ತೀರ್ಥಹಳ್ಳಿಗೆ ಕರೆದುಕೊಂಡು ಹೋಗ್ತಿಯಾ? +ನನ್ನ ಕಂಡ ಮ್ಯಾಲಾದ್ರೂ ಅವರಿಗೆ ನೆನಪು ಸರಿಯಾಗಿ ಬಂದು, ಸುಖವಾಗಿ ಮನೀಗೆ ಬರ್ತಿದ್ರೋ ಏನೋ?” ಎಂದು ತನ್ನ ಹೃದಯದ ನೋವನ್ನು ತೋಡಿಕೊಂಡಿದ್ದಳು. +ಕೋಣೂರಿಗೆ ಹೊರಟಿದ್ದ ನಂಟರೊಡನೆ ಷಿಕಾರಿ ಉಡುಪಿನಲ್ಲಿದ್ದ ದೇವಯ್ಯನೂ ತನ್ನ ಹೊಚ್ಚಹೊಸ ತೋಟಾಕೋವಿಯನ್ನು ಹೆಗಲಮೇಲೆ ಹಾಕಿಕೊಂಡು ಹೊರಟಿದ್ದನು. +ಅವನು ಸಾರಿಕೆಬೇಟೆಗೆ ಹೋಗಬೇಕೆಂದಿದ್ದ ಆ ಕಾಡಿಗೆ ಕೋಣೂರಿನ ಕಾಲುದಾರಿಯಲ್ಲಿಯೆ ಅಗಚಿ ಹೋಗಬೇಕಾಗಿತ್ತು. +ಅವನನ್ನು ಹಿಂಬಾಲಿಸಿ ಮೂರು ನಾಲ್ಕು ನಾಯಿಗಳೂ ಹೊರಟಿದ್ದುವು. +ದೇವಯ್ಯ ಮುಕುಂದಯ್ಯರು ತಮ್ಮ ತಮ್ಮೊಳಗೆ ಮಾತಾಡಿಕೊಳ್ಳುತ್ತಾ ಹೋಗುತ್ತಿದ್ದರು. +ಕಲ್ಲೂರು ‘ಗಡ್ಡದಯ್ಯ’ನನ್ನು ಸಂದರ್ಶಿಸಿದ್ದರ ವಿಚಾರವಾಗಿ ದೇವಯ್ಯನೆಂದನು. +ಅವರೇನು ಸಾಮಾನ್ಯ ಮನುಷ್ಯರಲ್ಲೋ; +ದೊಡ್ಡ ವಿದ್ವಾಂಸರೇ ಇರಬೇಕು. +ಅವರ ಹತ್ತಿರ ಇತ್ತಲ್ಲಾ ಆ ಇಂಗ್ಲೀಷು ಪುಸ್ತಕ? …. + ನೀ ನೋಡ್ದೇನು? …. + ಇನ್ನೊಂದು ಸಾರಿ ಅವರ ಹತ್ರ ಹೋಗಬೇಕಲ್ಲಾ! +ಯಾವಾಗ ಹೋಗಾನ ಹೇಳು. +ದೇವಯ್ಯನಿಗಿಂತಲೂ ನೂರುಮಡಿ ಗಡ್ಡದಯ್ಯನ ಪ್ರಭಾವವನ್ನು ಅರಿತು ಅನುಭವಿಸಿದ್ದ ಮುಕುಂದಯ್ಯ ಹೆಚ್ಚಿಗೆ ಏನೂ ಮಾತಾಡದೆ “ಹೋಗಾನ…. +ನಮ್ಮ ದೊಡ್ಡಣ್ಣ ಬಾವನ್ನ ಮನೀಗೆ ಕರಕೊಂಡು ಬಂದಮ್ಯಾಲೆ….” ಎಂದನಷ್ಟೆ. +ಆದರೆ ತಾನೊಬ್ಬನೆ ಇದ್ದಾಗ ಗಡ್ಡದಯ್ಯ ತನಗೊಬ್ಬನಿಗೇ ಎಂದು ಹೇಳಿದ್ದ ಭಯಂಕರ ರಹಸ್ಯದ ವಿಚಾರವಾಗಿ ಒಂದು ಚಕಾರದ ಗುಟ್ಟನ್ನೂ ಬಿಟ್ಟುಕೊಡಲಿಲ್ಲ. +ಅಷ್ಟರಲ್ಲಿ ಅವರ ದಾರಿ ಬೆಟ್ಟಳ್ಳಿ ಹೊಲಗೇರಿಯ ಸಮೀಪದಲ್ಲಿದ್ದ  ಕಾರೆಮಟ್ಟಿನ ಅರೆಕಲ್ಲಿನ ಬುಡಕ್ಕೆ ಸಾಗಿತ್ತು. +ಅಲ್ಲಿ ಗುತ್ತಿ ಸಿಂಬಾವಿ ಗುತ್ತಿಯ ನಾಯಿ, ಹುಲಿಯ, ಅವನೊಡನೆ ಅಲ್ಲಿಗೆ ಬಂದಾಗಲೆಲ್ಲ ತಪ್ಪದೆ ಕಾಲೆತ್ತಿ ಗುಂಡುಗಲ್ಲಿಗೆ ಅಭಿಷೇಕ ಮಾಡಿಯೆ ಮಾಡುತ್ತಿತ್ತೋ ಅಲ್ಲಿಗೆ. +ಎಲ್ಲಿ ಗುತ್ತಿ ಹೊಂಚಿ ಕೂತು, ತನ್ನೆಡೆಗೆ ಬೈಕುಪ್ಪಿನಲ್ಲಿ ಕದ್ದು ಓಡಿ ಬಂದಿದ್ದ ತಿಮ್ಮಿಯನ್ನು ಸಂಧಿಸಿ, ಅವಳನ್ನು ಹುಲಿಕಲ್ಲು ನೆತ್ತಿಯ ಮಾರ್ಗವಾಗಿ ಸಿಂಬಾವಿಗೆ ಹಾರಿಸಿಕೊಂಡು ಹೋಗಿದ್ದನೋ ಅಲ್ಲಿಗೆ! +ಅಪ್ರಸಿದ್ಧ ಯಃಕಶ್ಚಿತ ವ್ಯಕ್ತಿಗಳಿಗೆ ಸಂಬಂಧಪಟ್ಟುದಾದರೂ ತೀವ್ರ ಭಾವಮಯವಾದ ವಿಶೇಷ ಘಟನೆಗಳು ಸಂಭವಿಸಿದ ಸಾಧಾರಣ ಸ್ಥಳಗಳಿಗೂ ಒಂದು ಸ್ಮೃತಿಸಂಸ್ಕಾರರೂಪದ ವಿಶಿಷ್ಟ ಮನೋಮಂಡಲ ಕಲ್ಪಿತವಾಗಿದ್ದು, ತರುವಾಯ ಅದನ್ನು ಪ್ರವೇಶಿಸುವ ಸಮಾನ ಸಹಾನುಭೂತಿಯ ಮತ್ತು ಅನುಕಂಪೆಯ ವ್ಯಕ್ತಿಗಳ ಹೃದಯದಲ್ಲಿ ಏನಾದರೂ ಪ್ರತಿಕ್ರಿಯೆಯನ್ನುಂಟು ಮಾಡುತ್ತವೆಂದೂ ಏನೋ? +ಅಥವಾ ತನಗೆ ಪೂರ್ವ ಪರಿಚಯವಿದ್ದು ಅಲ್ಲಿಯೆ ಸಮೀಪದಲ್ಲಿದೆ ಎಂದು ಗೊತ್ತಿದ್ದ ಹೊಲಗೇರಿಯ ಪ್ರಭಾವದಿಂದಲೊ?ಮುಕುಂದಯ್ಯ ದೇವಯ್ಯನನ್ನು ಕೇಳಿದನು. + “ಅಲ್ಲಾ, ಭಾವ, ಮಾವನೂ ನೀನೂ ಸೇರಿಕೊಂಡು ಏನೇನೋ ಪುಕಾರು ಮಾಡ್ತಿದ್ದೀರಂತೆ? +ಆ ಸಿಂಬಾವಿ ಹೊಲೇರ ಗುತ್ತಿ ಮದುವೆಯಾದೋಳ್ನ ಏನೇನೊ ಪುಕಾರುಮಾಡಿ ಕರಕೊಂಡು ಬಂದು, ನಿಮ್ಮ ಗಾಡಿ ಹೊಡಿಯೋ ಬಚ್ಚಗೆ ಬಲಾತ್ಕಾರವಾಗಿ ಕೂಡಿಕೆ ಮಾಡ್ತೀರಂತೆ!ಹೌದೇನು?” +“ಯಾರು ಹೇಳ್ದೊರು ನಿನಗೆ? +ಅವಳನ್ನ ಆ ಬಚ್ಚಗೆ ಕೊಟ್ಟು ಮದೇಮಾಡೋದು ಅಂತಾ ಎಲ್ಲ ನಿಶ್ಚಯವಾಗಿತ್ತು. +ಆ ತಾಯಿಗ್ಗಂಡ ಗುತ್ತಿ, ನಮ್ಮ ಮನೇಮೇಲೆ ಯಾವಾಗ್ಲೂ ಕತ್ತಿಕಟ್ಟೋಕೆ ಸಮಯ ಕಾಯ್ತಾ ಇರ್ತಾನಲ್ಲಾ ಆ ಭರಮೈಹೆಗ್ಗಡೆ, ಅವನ ಮಸಲತ್ತಿಗೆ ಒಳಗಾಗಿ, ಈ ಹುಡುಗೀನ ಹಾರಿಸಿಕೊಂಡು ಹೋಗಿ, ಸುಳ್ಳೆಮಳ್ಳೆ ಮದುವೆ ಆಯ್ತು ಅಂತಾ ಸುದ್ದಿ ಹುಟ್ಟಿಸಿದ್ದ… +ಯಾರೇನು ಎಳಕೊಂಡು ಬರ್ಲಿಲ್ಲ ಅವಳ್ನ. +ಅವಳ ಅಪ್ಪನೇ ಸಿಂಬಾವಿಗೆ ಹೋಗಿ, ಬುದ್ಧಿ ಹೇಳಿ, ಒಪ್ಪಿಸಿ, ಕರಕೊಂಡು ಬಂದಿದ್ದು…. +ಗೊತ್ತಾಯ್ತೇನು?” ದೇವಯ್ಯ ತಾನೂ ತನ್ನ ತಂದೆಯೂ ನಿರಾಪರಾಧಿಗಳೆಂಬುದನ್ನು ಸಮರ್ಥಿಸಿ ಮಾತಾಡಿದ್ದನು. +“ಆ ಹುಡುಗೀಗೆ ಇಷ್ಟ ಇಲ್ಲಂತೆ, ಬಚ್ಚನ್ನ ಮದುವೆ ಆಗೋಕೆ? +ಅವಳೇ ತನ್ನಿಚ್ಛೆಯಿಂದಲೆ ಹೋಗಿದ್ದಂತೆ ಗುತ್ತಿ ಸಂಗಡ? …. + ಕೆರೆ ಬಾವಿ ಹಾರ್ತೀನಿ ಅಂತಾಳಂತೆ ಈಗ!” + “ಹುಡುಗಿ ಇಷ್ಟಾನೋ?ಹಿ ಹ್ಹಿ ಹ್ಹಿ ಹ್ಹಿ! +ಅಪ್ಪ, ಅಮ್ಮ, ಸಾಲ ಕೊಟ್ಟೋರು ಉಪ್ಪು ಅನ್ನ ಹಾಕಿ ಸಾಕ್ದೋರು, ಯಾರ ಇಷ್ಟಾನೂ ಲೆಕ್ಕಕ್ಕಿಲ್ಲ? +ಹುಡುಗಿ ಇಷ್ಟ ಮಾತ್ರ ಲೆಕ್ಕಕ್ಕೆ ಬರ್ತದೆ? +ಒಳ್ಳೇ ನ್ಯಾಯ ಬಿಡೂ ನಿನ್ದೂ? …. +ಈಗಿನ ಕಾಲದಲ್ಲಿ ಯಾರಪ್ಪಾ ಕೇಳ್ತಾರೆ ಹುಡುಗಿ ಇಷ್ಟಾನ?…. +ನಿನಗೆ ಗೊತ್ತಲ್ಲ!” ದೇವಯ್ಯ ಮುಕುಂದಯ್ಯನ ಕಣ್ಣನ್ನು ನೇರವಾಗಿ ನೋಡಿದುದರ ಇಂಗಿತ ಅವನಿಗೆ ತಟ್ಟನೆಹೊಳೆದು, ಮುಖ ತಿರುಗಿಸಿ, ಕಾಡುದಟ್ಟಯಿಸಿದ್ದ ಮಲೆಯ ಸಾಲನ್ನೂ ಅದರಾಚೆ ಮೋಡ ಕವಿದಿದ್ದ ಚಿನ್ನಮ್ಮನ ದುಃಖ ನೋಡುತ್ತಾ ನಿರುತ್ತರನಾದನು, ಮನಸ್ಸಿನ ದಿಗಂತದಲ್ಲಿ ಹೂವಳ್ಳಿ ಚಿನ್ನಮ್ಮನ ದುಃಖ ದಾರುಣ ಮೂರ್ತಿ ಹೊಳೆದಂತಾಗಿ! +ತುಸದೂರ ಇಬ್ಬರೂ ಮೌನವಾಗಿಯೆ ಮುಂಬರಿದಿದ್ದರು…. +ದೇವಯ್ಯ ಕಾಡಿನ ಕಡೆಗೆ ಏರುವ ಓಣಿಯ ಬಳಿ ನಿಂತು “ನಾನಿಲ್ಲೇ ಅಗಚಿ ಹೋಗ್ತೀನೋ, ಮುಕುಂದು” ಎಂದು ತಮಗಿಂತಲೂ ಸ್ವಲ್ಪ ಹಿಂದೆ ಬರುತ್ತಿದ್ದ ತನ್ನ ರಂಗತ್ತೆಯ ಹಿಂದೆ ಮುಂದೆ ಸುತ್ತಮುತ್ತ ಏನೇನೋ ಬಾಲಲೀಲೆಗಳನ್ನಾಡುತ್ತಾ, ಹಣ್ಣುಗಳನ್ನು ಕುಯ್ಯುತ್ತಾ ಮಟ್ಟುಗಳಲ್ಲಿ ಹಕ್ಕಿಯ ಗೂಡುಗಳನ್ನು ಹುಡುಕುತ್ತಾ ಬರುತ್ತಿದ್ದ ಧರ್ಮು ತಿಮ್ಮು ಅವರನ್ನು ಕರೆದು “ಹೋಗಿ ಬರ್ತೀರೇನ್ರೋ, ಏ ತಂಟೆಗಳಾ!” ಎಂದು ವಿನೋದವಾಡಿ, ಅವರಿಬ್ಬರೂ ತನ್ನೆಡೆಗೆ ಓಡಿ ಬರುವಷ್ಟರಲ್ಲಿ ನಾಯಿಗಳೊಡನೆ ಹಳುವಿನಲ್ಲಿ ಹೊಕ್ಕುಬಿಟ್ಟನು. +ನಿಂತಿದ್ದ ಮುಕುಂದಯ್ಯನನ್ನು ಅವನ ಹಳೆಮನೆ ಅಕ್ಕಯ್ಯ ಕೂಡಿಕೊಂಡ ಮೇಲೆ ಮತ್ತೆ ಎಲ್ಲರೂ ಮುನ್ನಡೆದರು. +ನಾಲ್ಕು ಹೆಜ್ಜೆ ಹೋಗಿದ್ದರು. +ರಂಗಮ್ಮ ಕೇಳಿದಳು. +“ತಮ್ಮಯ್ಯ, ನೀವೆಲ್ಲ ಸೇರಿ ಯಾಕೆ ಈ ಮೂಚ್ಚುಮರೆ ಮಾಡ್ತಿದ್ದೀರೋ ನಾ ಕಾಣೆ. +ಇಷ್ಟು ವರ್ಷಾಣೆ ಎಲ್ಲ ಸೈಸಿದವಳು ಇನ್ನು ಮುಂದೆ ಬರಾದನ್ನ ಸೈಸಲಾರನೇ?” +ಮುಕುಂದಯ್ಯ ಐಗಳು ತೀರ್ಥಹಳ್ಳಿಗೆ ಹೋಗಿ ಹಿಂದಿರುಗಿ ಬಂದು ಹೇಳಿದ್ದ ವಿವರಗಳನ್ನೆಲ್ಲ ಹೇಳಿದನು. +ಧರ್ಮು ತಿಮ್ಮು ಇಬ್ಬರಿಗೂ ತಮ್ಮ ಆಟ ಗೀಟ ಎಲ್ಲವನ್ನು ಬಿಟ್ಟು ಅತ್ಯಂತ ಗಂಭೀರವಾಗಿ ರಂಗಮ್ಮನ ಪಕ್ಕದಲ್ಲಿಯೆ ನಡೆಯುತ್ತಾ ಆಲಿಸುತ್ತಿದ್ದರು. +“ಅವರೇ ಹೌದು ಅಂತಾ ಆದಮೇಲೆ ನನ್ನ್ಯಾಕೆ ನೀ ತೀರ್ಥಹಳ್ಳಿಗೆ ಕರಕೊಂಡು ಹೋಗಬಾರದು?” ರಂಗಮ್ಮ  ಕೇಳಿದಳು. +“ಅವರಿಗೆ ಸ್ವಲ್ಪವೂ ನೆನಪೇ ಇಲ್ಲವಂತೆ….” +“ನನ್ನೂ ಧರ್ಮುನೂ ನೋಡಿದರೆ ನೆನ್ಪಾಗಬೈದೋ ಏನೋ?”ಗಡ್ಡದಯ್ಯನನ್ನು ಸಂದರ್ಶಿಸುವುದಕ್ಕೆ ಮೊದಲೇ ಆಗಿದ್ದರೆ ಮುಕುಂದಯ್ಯ ‘ಆಗಲಿ’ ಎನ್ನುತ್ತಿದ್ದನು. +ಆದರೆ ಈಗ ಅವನು ಇತರರಿಗೆ ಇಲ್ಲದಿದ್ದ ಮತ್ತು ಇತರರಿಗೆ ಹೇಳಬಾರದಿದ್ದ ಒಂದು ರಹಸ್ಯಜ್ಞಾನದ ಸಂಕಟಕ್ಕೆ ಸಿಕ್ಕಿದ್ದನು! +“ಸ್ವಲ್ಪ ತಡಿ, ಅಕ್ಕಯ್ಯ, ನಾನೂ ಬೆಟ್ಟಳ್ಳಿ ಬಾವನೂ ನಾಳೆ ನಾಡಿದ್ದರ ಹಾಂಗೆ ಅವರೆ ಗಾಡಿ ಕಟ್ಟಿಸಿಕೊಂಡು ಹೋಗಾನ ಅಂತಾ ಮಾಡಿದ್ದೀವಿ….” +ತುಸು ನಡುಕು ದನಿಂಯಿಂದಲೆ ಹೇಳಿದಳು ರಂಗಮ್ಮ. +“ನೆನಪು ಬರ್ಲಿ, ಬರದೇ ಇರ್ಲಿ, ಕರಕೊಂಡು ಬಂದುಬಿಡು, ತಮ್ಮಯ್ಯಾ, ದೇವರು ಮಾಡಿಸಿದ್ಹಾಂಗ ಆಗ್ತದೆ.” +ಏನಾದರೂ ಆಗಲಿ, ಹೇಗಾದರೂ ಇರಲಿ, ಎಂಟು ವರ್ಷಗಳಿಂದ ಪರಿತಪಿಸುತ್ತಿದ್ದ ರಂಗಮ್ಮಗೆ ತನ್ನ ಗಂಡನ ಮುಖದರ್ಶನವಾದರೂ ಸಾಕು, ಬೆಂದೆದೆಗೆ ತಂಪಾಗಿ ತಾನು ಧನ್ಯೆಯಾಗುತ್ತೇನೆ ಎಂಬ ಮನಸ್ಸು. +ಸ್ವಲ್ಪ ಹೊತ್ತು ಯಾರೊಬ್ಬರೂ ಮಾತಾಡದೆ ತಮ್ಮ ತಮ್ಮ ಚಿಂತೆಯಲ್ಲಿಯೆ ಮಗ್ನರಾದಂತೆ ಮುಂದುವರಿದಿದ್ದರು. +ಇದ್ದಕ್ಕಿದ್ದ ಹಾಗೆ ಮಲೆಯ ಓರೆಯ ಕಾಡಿನ ನಡುವಣೆತ್ತರದಿಂದ ನಾಯಿಗಳು ಬೊಗಳುವ ದೂರದ ಸದ್ದು ಕೇಳಿಸಿತು. +ಧರ್ಮು ತಿಮ್ಮು ಇಬ್ಬರೂ ಉತ್ಸಾಹಿತರಾಗಿ ಕಿವಿಗೊಟ್ಟಿದ್ದರು. +ಆಲಿಸುತ್ತಿದಂತೆಯೆ ಒಂದು ಕೋವಿಈಡೂ ಕೇಳಿಸಿತು. +ದೂರದ ಆ ಢಂಕಾರ ಕಾಡಿನ ಸಾಹಸದ ಕೇಕೆಯಂತೆ ಕೇಳಿಸಿ, ಧರ್ಮು ತಿಮ್ಮು ಇಬ್ಬರೂ ಕುಣಿದಾಡುತ್ತಾ ‘ಬೆಟ್ಟಳ್ಳಿ ಚಿಕ್ಕಪ್ಪಯ್ಯ ಎಂಥದನ್ನೋ ಹೊಡದ್ರು ಅಂತಾ ಕಾನ್ತದೆ!’ + ‘ದ್ಯಾವಣ್ಣಮಾವ ಹಂದಿ ಹೊಡದ್ರೋ! +ದ್ಯಾವಣ್ಣಮಾವ ಹಂದಿ ಹೊಡದ್ರೋ!’ ಎಂದು ಕೂಗುತ್ತಾ ಆ ಸ್ಥಳಕ್ಕೇ ಓಡತೊಡಗಿದರು. +ಮುಕುಂದಯ್ಯ ಗದರಿಸಿ ಇಬ್ಬರನ್ನೂ ಹಿಂದಕ್ಕೆ ಕರೆದು ಭರ್ತ್ಸನೆ ಮಾಡಿದನು. +“ನಿಮಗೇನು ಆಟಾನಾ? +ಅದೆಷ್ಟು ದೂರ ಅಂತಾ ನಿಮಗೇನು ಗೊತ್ತೇ? +ಈಡು ಇಲ್ಲೇ ಕೇಳಿಸಿದ್ಗಾಂಗಾಯ್ತು ಅಂತಾ ಅದೇನು ಇಲ್ಲೆ ಹತ್ರ ಅದೆ  ಅಂತಾ ಮಾಡಿರೇನು? +ಬನ್ನಿ, ಸುಮ್ಮನೆ ಬನ್ನಿ!”ಇವರು ಕಮ್ಮಾರಸಾಲೆ ಇದ್ದ ಜಾಗಕ್ಕೆ ಬರುವಷ್ಟರಲ್ಲಿ ಆಕಾಶವೆಲ್ಲ ಮೋಡ ತುಂಬಿ, ಮೋಡಗತ್ತಲೆಯ ಮಬ್ಬು ಕವಿದಿತ್ತು. +“ಇವತ್ತೂ ನಿನ್ನ ಹಾಂಗೆ ಮಳೆ ಹಿಡಿದು ಹೊಡೀತದೆಯೋ ಏನೋ ಕರ್ಮ?” ಎಂದುಕೊಂಡ ಮುಕುಂದಯ್ಯ, ತನಗೆ ತಾನೆ “ಏನಾದಾರಾಗಲಿ; +ಮುಂಜಾಗ್ರತೆಯ ಕ್ರಮವಾಗಿ ಒಂದು ಓಲೆಕೊಡೆಯನ್ನಾದರೂ ಈಸಿಕೊಂಡು ಬಂದಿರುತ್ತೇನೆ” ಎಂದು ಉಳಿದವರನ್ನು ಹಳುವಿನ ನಡುವಣ ಕಾಲುದಾರಿಯಲ್ಲಿ ನಿಲ್ಲುವಂತೆ ಹೇಳಿ, ತಾನೊಬ್ಬನೆ ಹಿಂದಿನ ದಿನದ ಮಳೆಯಲ್ಲಿ ನಿಂತಿದ್ದ ಕೆಸರು ಹಾರದಂತೆ ಪಂಚೆಯನ್ನು ಎತ್ತಿ ಕಟ್ಟಿಕೊಂಡು, ಪುಟ್ಟಾಚಾರಿಯ ಗುಡಿಸಲಿಗೆ ಹೋದನು. +ಅವೊತ್ತು ಆಚಾರಿ ತಿದಿಬೆಂಕಿ ಹೊತ್ತಿಸಿರಲಿಲ್ಲ; +‘ಕೂತಿದ್ದನು!’ ಎಂದರೆ ರಜಾ ತೆಗೆದುಕೊಂಡಿದ್ದನು! +ಓಲೆಕೊಡೆಯನ್ನು ಕೊಡುತ್ತಾ ಪುಟ್ಟಾಚಾರಿ ಮುಕುಂದಯ್ಯನ ಕಡೆಗೆ ಅರ್ಥಪೂರ್ಣವಾಗಿ ನೋಡಿ “ಗೌಡರ ಸವಾರಿ ಯತ್ತ ಮಕ ಹೋಗಿತ್ತು? …. +ಚೀಂಕ್ರ ಸಿಕ್ಕಲಿಲ್ಲೇನು ನಿಮಗೆ?” ಎಂದನು. +ಮುಕುಂದಯ್ಯ ತಾನು ಇತರರೂ ಬೆಟ್ಟಳ್ಳಿಯಿಂದ ಬರುತ್ತಿದ್ದೇವೆ ಎಂಬುದನ್ನು ತಿಳಿಸಲು, ಪುಟ್ಟಾಚಾರಿ “ಹಂಗಾರೆ ನಿಮಗಿನ್ನೂ ಸುದ್ದಿ ಗೊತ್ತಾಗಿಲ್ಲ?” ಎಂದನು. +“ಯಾವ ಸುದ್ದಿ?” +“ಚೀಂಕ್ರ ಅಂತಕ್ಕನ ಕಡೆಯಿಂದ ಒಂದು ಕಾಗದ ತಂದಿದ್ದ. +ತೀರ್ಥಳ್ಳಿ ಪಾದ್ರಿ ಕಳಿಸಿದ್ದಳಂತೆ….”ಪುಟ್ಟಾಚಾರಿ ಇನ್ನೂ ಮುಗಿಸಿರಲಿಲ್ಲ. +“ಕುಡುಕ ಸೂಳೇಮಗ ಎತ್ತ ಸತ್ತ?” ರೇಗಿ ಕೇಳಿದನು ಮುಕುಂದಯ್ಯ, ಏನು ವಾರ್ತೆ ಕಳುಹಿಸಿದ್ದಾರೆಯೋ ಜೀವರತ್ನಯ್ಯ ಎಂಬ ಕಳವಳಕ್ಕೆ ಸಿಕ್ಕಿ. +“ಆವಾಗ್ಲೆ ಹೋದನಲ್ಲ, ಕೋಣೂರು ಗೌಡ್ರಿಗೆ ಕಾಗದ ಕೋಡ್ತೀನಿ ಅಂತಾ? …. ಸುಳ್ಳೋ…. ಬದ್ದೋ?ಅಂತೂ ಅಂವ ಹೇಳಿದ್ದು. +ದೊಡ್ಡಣ್ಣ ಹೆಗ್ಗಡೇರಿಗೆ ಇಪರೀತ ಕಾಯಿಲೆ ಆಗಿ, ಇನ್ನೇನು ಅತ್ತೋ ಇತ್ತೋ ಅನ್ನೋ ಹಾಂಗಿದಾರಂತೆ! …. ” +ಪುಟ್ಟಾಚಾರಿಯು ಮುಂದಿನ ಮಾತನ್ನು ಕೇಳಲು ಮುಕುಂದಯ್ಯ ಅಲ್ಲಿರಲಿಲ್ಲ. +ಕೊಡೆ ತೆಗೆದುಕೊಂಡು ಬಂದವನು ಯಾರೊಡನೆಯೂ ಏನೂ ಮಾತನಾಡದೆ ಮನೆಯ ಕಡೆಗೆ ಬಿರುಬಿರನೆ ಕಾಲು ಹಾಕತೊಡಗಿದನು. +ಧರ್ಮು ತಿಮ್ಮು ರಂಗಮ್ಮ ಮೂವರೂ ಓಡೋಡಿ ಏದುತ್ತಾ ಅವನನ್ನು ಹಿಂಬಾಲಿಸಬೇಕಾಯಿತು. +ಆದರೆ ಬಹಳ ದೂರ ಹೋಗಿರಲಿಲ್ಲ. +ಎದುರುಗಡೆಯಿಂದ ಓಡಿ ಬರುತ್ತಿದ್ದ ಐತ ಪೊದೆಗಳ ನಡುವೆ ಕಾಣಿಸಿದನು. +“ಏನೋ, ಐತ? +ಯಾಕೋ ಓಡಿಬರುತ್ತಿದ್ದೀಯ?” ಮೇಲೆ ಕೆಳಗೆ ಉಸಿರೆಳೆದು ಏದುತ್ತಿದ್ದ ಐತನಿಗೆ ಮುಕುಂದಯ್ಯ ತುಸು ಭಾವವಶನಾಗಿ ಏದುತ್ತಲೆ ಪ್ರಶ್ನೆ ಹಾಕಿದ್ದನು. +ಐತ ಏನನ್ನೊ ಸೊಂಟದಲ್ಲಿ ಕೈಯಾಡಿಸಿ ಹುಡುಕುತ್ತಾ ಹೇಳಿದನು. +ತೊದಲು ತೊದಲಾಗಿ. “ಮತ್ತೆ…. ಮತ್ತೆ…. ಮತ್ತೆ…. ಕಾಣಿ…. ಇಜಾರದ ಸಾಬೂನ ತೀರ್ಥಹಳ್ಳಿ ಆಸ್ಪತ್ರೆಗೆ…. ಸೇರಿಸಕ್ಕೆ…. ಕರಕೊಂಡು ಹೋಗಿದ್ನಂತೆ ಲುಂಗೀಸಾಬು. +ಸಿಂಗಾವಿ ಗುತ್ತಿ ಕತ್ತೀಲಿ ಕಡಿದುಬಿಟ್ಟಿದ್ನಂತೆ ಅವನ್ನ…. +ಸಾಯಾಕಾಗಿ ಬಿದ್ದಾನಂತೆ ಇಜಾರದ ಸಾಬು! …. +ಖೂನಿ ಮಾಡ್ಯಾನೆ ಅಂತಾ ಹೇಳಿ…. ಗುತ್ತಿನ…. ಕೋಳಹಾಕಿ ಹಿಡುಕೊಂಡು ಹೋಗಾಕೆ ಗೇಟೀಸಿನೋರು ಬಂದಾರಂತೆ…. +ಲುಂಗಿಸಾಬು ಜೊತೇಲಿ! +ಲುಂಗಿಸಾಬು ತಂದುಕೊಟ್ಟನಂತೆ ಈ ಕಾಗದಾನ ಅಂತಕ್ಕನ ಕೈಲಿ. +ಚೀಂಕ್ರ ತಂದುಕೊಟ್ಟ…. +ದೊಡ್ಡ ಗೌಡ್ರು ಓದಿ ನನ್ನ ಕೈಲಿ ಕೊಟ್ರು, ‘ಬೇಗ ಓಡು ಬೆಟ್ಟಳ್ಳಿಗೆ. +ಮುಕುಂದಗೆ ಕೊಡು ಈ ಕಾಗದಾನ’ ಅಂತಾ.” +ಮುಕುಂದಯ್ಯ ಐತನ ಕೈಯಿಂದ ಕಾಗದವನ್ನು ಕಿತ್ತುಕೊಂಡು, ಓದಿ ರಂಗಮ್ಮನ ಕಡೆ ತಿರುಗಿ “ಅಕ್ಕಯ್ಯ, ನೀನಿ ಹುಡುಗರನ್ನ ಕರೆದುಕೊಂಡು ಮನೇಗೆ ಹೋಗು. +ನಾನೀಗ ಜರೂರು ಬೆಟ್ಟಳ್ಳಿಗೆ ಹೋಗಬೇಕಾಗಿದೆ” ಎಂದವನೆ ಓಲೆಕೊಡೆಯನ್ನು ಐತನ ಕೈಗೆ ಕೊಟ್ಟು “ಅಣ್ಣಯ್ಯಗೆ ಹೇಳು, ನಾನು ಬೆಟ್ಟಳ್ಳಿಗೆ ಹೋಗಿ, ಬಾವನ್ನ ಕರಕೊಂಡು, ಗಾಡಿ ಕಟ್ಟಿಸಿಕೊಂಡೇ ತೀರ್ಥಳ್ಳಿಗೆ ಹೋದಾ ಅಂತ…. +ಏ ಧರ್ಮು, ನೀನೂ ಹೇಳ್ತೀಯೇನೋ?” ಎನ್ನುತ್ತಾ ಹಿಂದಕ್ಕೆ ತಿರುಗಿ ಬಂದ ಹಾದಿಯಲ್ಲಿಯೆ ವೇಗವಾಗಿ ಹೊರಟುಬಿಟ್ಟನು. +ಧರ್ಮು “ಆಗಲಿ, ಮಾವಾ!” ಎಂದು ಕೂಗಿದ್ದು ಕೂಡ ಅವನಿಗೆ ಕೇಳಿಸಿರಲಿಕ್ಕಿಲ್ಲ. +ಮುಕುಂದಯ್ಯ ಹಳುವಿನಲ್ಲಿ ಕಣ್ಮರೆಯಾದ ಕೂಡಲೆ ರಂಗಮ್ಮ “ಏನೋ ಅದು, ಐತಾ? +ಯಾಕೋ ಅವನು ಮತ್ತೆ ಹಿಂದಕ್ಕೆ ಹೋಗಿದ್ದು? …. +ಅವರು ಹ್ಯಾಂಗಿದ್ದಾರಂತೋ ತೀರ್ಥಳ್ಳೀಲಿ?” ಎಂದು ಕೇಳುತ್ತಾ ದೀರ್ಘವಾಗಿ ಸುಯ್ದು ಕೋಣೂರಿನ ಕಡೆಗೆ ನಡೆಯತೊಡಗಿದಳು. +“ನಂಗೊತ್ತಿಲ್ಲ, ಅಮ್ಮಾ…. ಗೌಡರು…. ಕಾಗದ ಓದ್ದೋರೇ….” +‘ಅಯ್ಯೋ ದೇವರೇ!’ ಅಂತಾ ತಲೆಮ್ಯಾಲೆ ಕೈಹೊತ್ತುಕೊಂಡು ಕೂತುಬಿಟ್ರು! …. + ಆ ಚೀಂಕ್ರ ಹೇಳ್ತಿದ್ದ. +‘ತಿರುಪತಿಗೆ ಹೋಗಿದ್ದ ಹೆಗ್ಗಡೇರಿಗೆ ಇಪರೀತ ರೇಸ್ಮೆ ಕಾಯ್ಲೆ’ ಅಂತಾ…. +ಹೌದೋ ಸುಳ್ಳೋ? +ಅಂವ ಒಬ್ಬ ಕುಡುಕ ಸೂಳೇಮಗ! +ಮೇಗರವಳ್ಳಿಯಿಂದ ತೀರ್ಥಹಳ್ಳಿಗೆ ಹೋಗುವ ಹೆದ್ದಾರಿ. +ಸಾಮಾನ್ಯರ ಮಾತಿನಲ್ಲಿ ಅದಕ್ಕಿನ್ನೂ ‘ರಸ್ತೆ’ ಎಂಬ ಹೆಸರು ಸರ್ವಸಾಮಾನ್ಯವಾಗಿರಲಿಲ್ಲ. +ಆದರೆ ಬಳಕೆಗೆ ಬರುತ್ತಿತ್ತು. +ಮುಂದೆ ‘ರಸ್ತೆ’ಗೆ ಬದಲಾಗಿ ‘ರೋಡು’ ಎಂಬುದು ಬಳಕೆಗೆ ಬಂದಂತೆ, ಮುಸಲ್ಮಾನರ ದೌಲತ್ತು ಸಂಪೂರ್ಣವಾಗಿ ಸಂಸ್ಥಾಪಿತವಾದಂದು. +‘ರಸ್ತೆ’ಯಾಗುತ್ತಿದ್ದ ಆ ‘ಹೆದ್ದಾರಿ’ ದುರಸ್ತು ಕಾಣದೆ ಬಹುಕಾಲವಾಗಿದ್ದ ಅನುಭವ ಅದರ ಮೇಲೆ ತೀರ್ಥಹಳ್ಳಿಯ ಕಡೆಗೆ ಸಾಗುತ್ತಿದ್ದ ಮೂವರಿಗೂ ಚೆನ್ನಾಗಿಯೆ ಆಗುತ್ತಿತ್ತು. +ಅದರಲ್ಲಿಯೂ ಆ ಅನುಭವದ ‘ಫಜೀತಿ’ ಹಳ್ಳಿಗಾಡಿನ ಕಾಡುಗಳಲ್ಲಿ ಬರಿಗಾಲಿನಲ್ಲಿಯೆ ತಿರುಗಿ ಅಭ್ಯಾಸವಿದ್ದ ಸಿಂಬಾವಿ ಗುತ್ತಿಗೆಗಿಂತಲೂ ನೂರುಮಡಿಯಾಗಿ ವಿಶೇಷವಾಗಿ ಪಟ್ಟಣದ ಬೀದಿಗಳಲ್ಲಿಯೆ ಗಸ್ತು ತಿರುಗುವ ಅಭ್ಯಾಸವಿದ್ದ ಆ ಇಬ್ಬರು ಪೋಲೀಸನವರಿಗೆ ಸಮಧಿಕವಾಗಿ ಅನುಭವಕ್ಕೆ ಬರುತ್ತಿತ್ತು. +ಅದರಲ್ಲಿಯೂ ಏನು ಮಳೆ! +ಮುಂಗಾರಿನ ಪ್ರಾರಂಭದ ಜೋರಿನಿಂದ ಸುರಿಯುತ್ತಿರಲಿಲ್ಲ, ನಿಜ; ಆದರೆ ಹಿಡಿದು ಹೊಡೆಯುತ್ತಿತ್ತು. +ಜಡಿ!ಸುತ್ತಲೂ ಹೆಗ್ಗಾಡು; + ಆಕಾಶದೆತ್ತರಕ್ಕೆ ಬೆಳೆದು ನಿಂತಿದ್ದುವು, ನೂರಾರು ವರ್ಷಗಳ ಸಾಲಧೂಪದ ಹೆಮ್ಮರಗಳು. +ಹಳುವೋ ನಿತ್ಯ ಶ್ಯಾಮಲ! +ರೇಜಿಗೆ ಹಿಡಿಸುವ ಜೀರುಂಡೆಗಳ ಕರ್ಕಶದ ಚೀರುದನಿ ಬೇರೆ. +ಹಕ್ಕಿಗಳ ಸದ್ದೆ ಇಲ್ಲ. +ನಿಲ್ಲದೆ ಸುರಿಯುತ್ತಿದ್ದ ಆ ಮಳೆಯಲ್ಲಿ ಅವು ಎಲ್ಲಿಯೋ ತಲೆ ಉಡುಗಿಸಿದ್ದವು. +ಮಿಂಚು ಗುಡುಗು ಸಿಡಿಲು ಯಾವುದೂ ಇಲ್ಲ; +ಅವಾದರೂ ಇದ್ದಿದ್ದರೆ ಹೆದರಿಕೆಯನ್ನಾದರೂ ಹುಟ್ಟಿಸಿ ಬೇಸರ ಪರಿಹಾರಮಾಡುತ್ತಿದ್ದುವು! +ಬೇಸರ!ಬೇಸರ!ಬೇಸರ!ಜಿಂಯ್ಯೋ ಎಂದು ಮಳೆ ಹೊಡೆಯುತ್ತಿದೆ. +ಆ ಕೊರಕಲು ರಸ್ತೆಯಲ್ಲಿ ಕೆಸರು ಮತ್ತು ಹೊಂಡಗಳನ್ನು ತಪ್ಪಿಸಿ ನಡೆಯುವ ಸಲುವಾಗಿ ನೆಗೆನೆಗೆದು ಹಾರುತ್ತಾ ಬಿಚ್ಚಿ ಸೂಡಿದ್ದ ಎರಡು ಕೊಡೆಗಳು ಸಾಗುತ್ತಿವೆ; +ಅವರ ನಡುವೆ ಆ ಎರಡಕ್ಕೂ ತುಂಬ ಕುಳ್ಳಾಗಿ ಒಂದು ಕಂಬಳಿಕೊಪ್ಪೆ ಸಾಗುತ್ತಿದೆ. +ಇಬ್ಬರು ಪೋಲೀಸರು ಮತ್ತು ಸಿಂಬಾವಿ ಹೊಲೆಯರ ನಾಯಿಗುತ್ತಿ! +ಗುತ್ತಿಗೆಯೊಬ್ಬನೆ ಇದ್ದಾನಲ್ಲಾ! +ಅವನ ನಾಯಿಯೆಲ್ಲಿ?ಹುಲಿಯ! +ಅದಕ್ಕಾಗಿಯೆ ಎಂದು ತೋರುತ್ತದೆ, ಗುತ್ತಿ ಮತ್ತೆ ಮತ್ತೆ ಹಿಂದಕ್ಕೆ ಕಳ್ಳನೋಟವಟ್ಟಿ ನೋಡುತ್ತಾ ಹೋಗುತ್ತಿದ್ದಾನೆ. +ಅಂದು ತಿಮ್ಮಿಯೊಡನೆ ಹುಲಿಕಲ್ಲು ನೆತ್ತಿಯಿಂದ ಇಳಿಯುತ್ತಿದ್ದಾಗ ಕುರ್ಕನ ಸಂಗಡ ಕಾದಾಡಿ ಮಾಡಿಕೊಂಡಿದ್ದ ಉಗುರಿನ ಗಾಯದ ದೆಸೆಯಿಂದ ಒಂದು ಕಣ್ಣು ಹೂಕೂತು ಕಾಣಿಸದಂತಾಗಿ ಒಕ್ಕಣ್ಣಾಗಿದ್ದ ತನ್ನ ನಾಯಿ ಮತ್ತೆ ಎಲ್ಲಿ ಬಂದುಬಿಟ್ಟೀತೋ ಎಂಬ ಅಂಜಿಕೆಯಿಂದ. +ಏಕೆಂದರೆ, ಕೇರಿಯಲ್ಲಿ ಪೋಲೀಸರು ತನ್ನನ್ನು ಹಿಡಿದಾಗ, ಹುಲಿಯ ಒಬ್ಬನ ಮೇಲೆ ಹಾರಿ ಕಚ್ಚಿದ್ದರಿಂದ ಅವನ ಅಂಗಿಯ ತೋಳು ಹರಿದುಹೋಗಿತ್ತು. +ಆಗ ಮತ್ತೊಬ್ಬನು ತನ್ನ ದೊಣ್ಣೆಯಿಂದ ಅದಕ್ಕೊಂದು ಬಲವಾದ ಪೆಟ್ಟುಕೊಟ್ಟು, ಕೂಗಿಕೊಳ್ಳುವಂತೆ ಮಾಡಿ, ಓಡಿಸಿದ್ದನು. +ಆದರೂ ಆ ಒಕ್ಕಣ್ಣಿನ ಸ್ವಾಮಿಭಕ್ತ ತನ್ನನ್ನು ಬೆಂಬಿಡದೆ ಹಿಂಬಾಲಿಸಿತ್ತು. +ರಸ್ತೆಯಲ್ಲಿ ಒಂದೆರಡು ಸಾರಿ ಅದು ಹತ್ತಿರಕ್ಕೆ ಬಂದಾಗ ಆ ಇಬ್ಬರು ಪೋಲೀಸರೂ ಬಡಿಗೆ ಮತ್ತು ಕಲ್ಲುಗಳಿಂದ ಅದನ್ನು ಹೊಡೆದು ಹಿಂದಕ್ಕಟ್ಟಿದ್ದರು. +ಒಂದು ಸಾರಿಯಂತೂ ಪೋಲೀಸನವನು ಎಸೆದ ದೊಡ್ಡದೊಂದು ಕಲ್ಲು ಅದರ ಮೂತಿಗೆ ತಗುಲಿ ಹುಲಿಯ ರೋಧಿಸುತ್ತಾ ಓಡಿತ್ತು. +ಆಗ ಗುತ್ತಿ ಪ್ರತಿಭಟಿಸಿ, ತಲೆಗೊಂದು ಏಟು ತಿಂದಿದ್ದನು. +ಆಮೇಲೆ, ನಾಯಿ ತನ್ನನ್ನು ಹಿಂಬಾಲಿಸಿದರೆ ಪ್ರಾಣಾಯಾಮಕ್ಕೆ ಒಳಗಾಗುತ್ತದೆ ಎಂಬ ಭೀತಿಯಿಂದ ತಾನೂ ಕಲ್ಲೆಸೆದು ಅದನ್ನು ಓಡಿಸಿದ್ದನು, ‘ಹೋಗು, ಹುಲಿಯಾ, ನಡೀ ಕೇರಿಗೆ’ ಎಂದು ಗದರಿಸಿ. +ಆಗ ಬೋಳುಮೀಸೆಯ ಪೋಲೀಸನವರು ‘ಓ ಹೋ ಹೋ! +ಈ ಹೊಲೆಯನ ನಾಯಿ ಹೆಸರು ಹುಲಿ ಅಂತೆ ಹುಲಿ….!’ ಎಂದು ಹಂಗಿಸಿದ್ದನು. +ಈಗ ಗುತ್ತಿ ಮತ್ತೆ ಹಿಂದಕ್ಕೆ ನೋಡುತ್ತಿದ್ದುದನ್ನು ಗಮನಿಸಿದ ಗಿರ್ಲುಮೀಸೆಯ ಪೋಲೀಸನವನು “ಯಾಕೋ? +ಹಿಂದಕ್ಕೆ ಮತ್ತೆ ಮತ್ತೆ ನೋಡ್ತೀಯಾ? +ನಿನ್ನ ನಾಯಿನ ಛೂ ಬಿಟ್ಟು ಪರಾರಿಯಾಗಲು ಯೋಚನೆ ಮಾಡ್ತಿದ್ದೀಯೋ? +ಅದೆಲ್ಲ ಬಿಟ್ಟುಬಿಡು. +ಅದರ ಹೆಣಾನೂ ಹಾಕ್ತೀವಿ! +ಗೊತ್ತಾಯ್ತೇನು? …. ನಾವು ಹಿಡಿಯೋಕೆ ಬಂದಕೂಡ್ಲೆ ಕೇರೀನೆ ಬಿಟ್ಟು ಕಾಡು ಹತ್ತಿದ್ದೆಯಲ್ಲಾ ಹಾಂಗಲ್ಲಾ, ಬದ್ಮಾಷ್, ಗೊತ್ತಾಯ್ತೇನು?” ಎಂದು ಕ್ರೂರನೇತ್ರಗಳಿಂದ ನೋಡಿದ್ದನು. +ಗುತ್ತಿ ಪ್ರತ್ಯುತ್ತರ ಹೇಳದೆ ಚಿಂತಾ ಭಾರನಂತೆ ಕಾಲು ಹಾಕಿದ್ದನು. +ಪೋಲೀಸಿನವರು ತನ್ನನ್ನು ಹಿಡಿದು, ಕೈಗೆ ಕೋಳ ಹಾಕಿ, ತೀರ್ಥಹಳ್ಳಿಗೆ ಕರೆದುಕೊಂಡು ಹೋಗಲು ಬಂದಿದ್ದಾರೆ ಎಂಬ ಸುದ್ದಿ ತಿಳಿದ ಕೂಡಲೆ ಗುತ್ತಿ ಕಂಗಾಲಾಗಿದ್ದನು. +ಅವನ ಅಪ್ಪ ಕರಿಸಿದ್ದನೂ ಅಮ್ಮ ಗಿಡ್ಡಿಯೂ ಯಾರಾದರೂ ಸತ್ತರೆ ಬಾಯಿ ಬಡುಕೊಳ್ಳುವಂತೆ ಲಬಲಬಿಸಿದ್ದರು. +ಕೇರಿಗೆ ಪೋಲೀಸರು ಬರುತ್ತಾರೆ ಎಂಬ ವಾರ್ತೆ ಕೇಳಿದೊಡನೆ ಕೇರಿಯ ಗಂಡಸರು ಹೆಂಗಸರು ಎಲ್ಲರೂ ತಲೆತಪ್ಪಿಸಿಕೊಳ್ಳಲು ಕಾಡು ಹತ್ತಿದ್ದರು. +ನಡೆಯಲಾರದ ಮುದುಕ ಮುದುಕಿಯರೂ ಮಕ್ಕಳೂ ಮಾತ್ರ ತಮ್ಮ ತಮ್ಮ ಬಿಡಾರದ ತಟ್ಟಿ ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಂಡು, ಒಲೆಯನ್ನು ಹೊತ್ತಿಸದೆ ಹುದುಗಿಬಿಟ್ಟರು. +ಪೋಲೀಸರು, ಸಿಂಬಾವಿ ಭರಮೈಹೆಗ್ಗಡೆಯವರೊಡನೆ, ಹೊಲೆಗೇರಿಗೆ ಬಂದಾಗ ತಮ್ಮನ್ನೆದುರುಗೊಂಡ ಅದರ ನಿರವತೆಗಳನ್ನು ನೋಡಿ ಹತಾಶರಾಗಿ ಸಿಡುಕ್ಕಿದ್ದರು. +ಭರಮೈಹೆಗ್ಗಡೆಯವರೇ ಮುನ್ಸೂಚನೆ ಕೊಟ್ಟು, ತಮ್ಮ ಆಳನ್ನು ರಕ್ಷಿಸಲು ಈ ಉಪಾಯ ಹೂಡಿರಬಹುದು ಎಂಬ ಶಂಕೆಯೂ ತಲೆದೂರಿತ್ತು ಆ ಪೋಲೀಸನವರಿಗೆ. +ಆದ್ದರಿಂದ ಅವರಿಗೂ ಹಿತ ಹೇಳುವ ರೀತಿಯಲ್ಲಿ ಮುಚ್ಚುಮರೆಯ ಎಚ್ಚರಿಕೆ ಕೊಡುತ್ತಾ ಅವರೊಡನೆ ಸಿಂಬಾವಿ ಮನೆಗೆ ಹಿಂದಿರುಗಿ, ಅಲ್ಲಿಯೆ ಉಳಿದುಕೊಂಡಿದ್ದರು. +ಭರಮೈಹೆಗ್ಗಡೆಯವರು ಶ್ರೀಮಂತರಾಗಿದ್ದರೂ ಸರಕಾರ, ಪೋಲೀಸು ಎಂದರೆ ಅವರಿಗೆ ತುಂಬ ಪುಕ್ಕಲು. +ಆಗಿನ ಕಾಲದಲ್ಲಿ ಪೋಲೀಸರಿಗೆ ಅಂಜದಿದ್ದವರೆ ಇರಲಿಲ್ಲ; +ಅವರ ಅಧಿಕಾರ, ಜಬರದಸ್ತು ಅಂತಹದ್ದಾಗಿತ್ತು. +ಆದ್ದರಿಂದಲೆ ಆ ದಿನ ಸಿಂಬಾವಿ ಮನೆಯಲ್ಲಿ ಕೋಳಿತುಂಡು, ಕಡಬು, ಕಳ್ಳು ಸಾರಾಯಿಗಳ ಔತಣವನ್ನೇರ್ಪಡಿಸಿ ಸರಕಾರದ ಯಮದೂತರನ್ನು ತೃಪ್ತಿಪಡಿಸಿದ್ದರು. +ಕಾಡಿಗೆ ಓಡಿದ್ದ ಹೊಲೆಯರು ಬಹಳ ಹೊತ್ತು ಅಲ್ಲಿರಲಿಕ್ಕಾಗಿರಲಿಲ್ಲ. +ಮುಚ್ಚಿಕೊಂಡಿದ್ದ ಮೋಡಗಪ್ಪು ಜಡಿಮಳೆಯಾಗಿ ಬಿಡದೆ ಸುರಿಯತೊಡಗಿದ್ದುದರಿಂದ ಅನೇಕರು ತೊಪ್ಪನೆ ತೊಯ್ದು, ಅಲ್ಲಿ ಇಲ್ಲಿ ನುಸುಳಿ, ಕಳ್ಳತನದಿಂದ ತಮ್ಮ ತಮ್ಮ ಬಿಡಾರಗಳಿಗೆ ಹೊಕ್ಕಿದ್ದರು. +ಆದರೆ ಆ ದಿನ ಗಬ್ಬದ ಆಡಿನ ಕೊಲೆಯ ದೆಸೆಯಿಂದಾಗಿ ಸಾಬರೊಡನೆ ನಡೆದಿದ್ದ ಹೊಡೆದಾಟದಲ್ಲಿ ಹಾಜರಿದ್ದು ನೇರವಾಗಿ ಭಾಗವಹಿಸಿದ್ದರು ಯಾರೂ ಹಗಲಿನಲ್ಲಿ ಬಿಡಾರಕ್ಕೆ ಹಿಂದಿರುಗಿರಲಿಲ್ಲ. +ಹಳೆಪೈಕದವರ ಹಟ್ಟಯ ಹಿಂದೆಯೊ ಕೂಡುಹಟ್ಟಿಯ ಅಟ್ಟದ ಮೇಲೆಯೊ, ಸೌದೆ ಕೊಟ್ಟಿಗೆಯ ಸಂಧಿಯಲ್ಲಿಯೊ ಅಡಗಿ ನಿಂತು ಕಾಲನೂಕಿ, ದೊಂಬಿಯಲ್ಲಿ ಅವನ ಕಾಳಿಗೆ ಬಿದ್ದ ಪೆಟ್ಟು ಇರುತ್ತಿದ್ದನಾದರೂ, ಪೋಲೀಸರು ಸಿಂಬಾವಿಗೆ ಬರುವವರೆಗೂ ಹಾಸಗೆಯಲ್ಲಿಯೆ ಹೆಚ್ಚಾಗಿ ಇರುತ್ತಿದ್ದನಾದರೂ, ದೊಳ್ಳ ಮನೆಯಿಂದ ತಂದುಕೊಟ್ಟಿದ್ದ ಬುತ್ತಿಯಿಂದ ಹಗಲೂಟವನ್ನು ಪೂರೈಸಿ ಹಾಗೂ ಹೀಗೂ ಕರೆಯುವ ಕೊಟ್ಟಿಗೆಯ ಅಟ್ಟದ ಮೇಲೆ ಅವಿತಿದ್ದು, ಚೆನ್ನಾಗಿ ರಾತ್ರಿಯಾದ ಮೇಲೆ ಜಡಿಮಳೆಯಲ್ಲಿಯೆ ಕುಂಟುತ್ತಾ ಬಿಡಾರ ಸೇರಿದ್ದನು. +ಮರುದಿನ ಬೆಳಗಿನ ಜಾವದಲ್ಲಿ ಸಿಂಬಾವಿಯಿಂದ ಹೊರಬಿದ್ದು ಎಲ್ಲಿಯಾದರೂ ಲಕ್ಕುಂದದಲ್ಲಿಯೋ ಸೀತೂರಿನಲ್ಲಿಯೋ ಅಡಗಿದ್ದು, ಪೋಲೀಸನವರು ಊರುಬಿಟ್ಟು ಹೋದಮೇಲೆ ಬೆಟ್ಟಳ್ಳಿಗೆ ಹೋಗಿ, ಕಷ್ಟಕ್ಕೆ ಸಿಕ್ಕಿದ್ದ ತಿಮ್ಮಿಯನ್ನು ಎಲ್ಲಿಗಾದರೂ ದೂರ ಓಡಿಸಿಕೊಂಡು ಹೋಗಬೇಕೆಂದು ವ್ಯೂಹಿಸಿದ್ದನು, ಮನದಲ್ಲಿಯೆ. +ಆದರೆ ಇಂಥಾದ್ದನ್ನೆಲ್ಲ ಎಷ್ಟೆಷ್ಟೋ ಕಂಡು ಅನುಭವಿಸಿ ನುರಿತಿದ್ದ ಆ ಪೋಲೀಸಿನವರು ಭರಮೈಹೆಗ್ಗಡೆಯವರಿಗೂ ಗುಟ್ಟು ಬಿಟ್ಟುಕೊಡದೆ, ರಾತ್ರಿ ನಾಲ್ಕು ಗಂಟೆಯ ಹೊತ್ತಿಗೇ, ಮಳೆಯನ್ನೂ ಲೆಕ್ಕಿಸದೆ ಕೇರಿಗೆ ಹೋಗಿ, ಕರಿಸಿದ್ದನ ಬಿಡಾರಕ್ಕೆ ಮುತ್ತಿಗೆ ಹಾಕಿ, ಗುಲ್ಲು ಕೋಲಾಹಲಗಳ ನಡುವೆ, ಲಾಟೀನಿನ ಬೆಳಕಿನಲ್ಲಿಯೆ ಗುತ್ತಿಯನ್ನು ಸೆರೆಹಿಡಿದು ಬಿಟ್ಟಿದ್ದರು! +ಅವನ ಕೈಗೆ ಕೋಳ ಹಾಕಿ ಮನೆಗೆ ಕರೆದೊಯ್ದ ಮೇಲೆಯೇ ಭರಮೈಹೆಗ್ಗಡೆಯವರಿಗೆ ಆ ವಿಷಯ ಗೊತ್ತಾದದ್ದು! +ಅವರು ತಮ್ಮೊಳಗೇ ‘ಶನಿಮುಂಡೇಗಂಡ!ಹೊಲೆಸೂಳೇ ಮಗ! +ಎರಡು ದಿನ ಬಿಡಾರಕ್ಕೆ ಹೋಗಬ್ಯಾಡ ಅಂತಾ ದೊಳ್ಳನ ಕೈಲಿ ಬುತೀನೂ ಕೊಟ್ಟು ಕಳ್ಸಿದ್ರೂ, ಬಿಡಾರಕ್ಕೆ ಹೋಗಿ ಸಿಕ್ಕಿಕೊಂಡಿದ್ದ್‌ಆನಲ್ಲಾ ಪೋಲೀಸರ ಕೈಗೆ!’ ಎಂದು ಗೊಣಗಿ ಶಪಿಸುತ್ತಾ, ಶಾಲು ಹೊದೆದು, ಕೋಣೆಯಿಂದ ಎದ್ದು ಬಂದಿದ್ದರು. +ಪೋಲೀಸರ ಎದುರಿಗೆ ಗುತ್ತಿಯನ್ನು ಬಾಯಿಗೆ ಬಂದಂತೆ ಬಯ್ದು, ‘ಪೋಲೀಸರು ಹೇಳಿದ ಹಾಗೆ ಕೇಳು; +ನಿನಗೇನೂ ಶಿಕ್ಷೆ ಆಗುವುದಿಲ್ಲ. +ಮತ್ತೆ ಓಡಿಗೇಡಿ ಹೋಗಲು ಪ್ರಯತ್ನಿಸೀಯಾ?ಹುಷಾರು!’ ಎಂದು ಬುದ್ದಿ ಹೇಳಿದಂತೆ ಮಾಡಿ, ಯಾರಿಗೂ ಗೊತ್ತಾಗದ ರೀತಿಯಲ್ಲಿ ಕಣ್ಣು ಮಿಟುಕಿಸಿದ್ದರು. +ಪೋಲೀಸರಿಗೂ ಹೊಟ್ಟೆಗೂ ಬಾಯಿಗೂ ಬೆಚ್ಚಗೆ ಮಾಡಿದ್ದಂತೆಯೆ ಕೈಗೂ ಅವರ ನೀರಿಕ್ಷೆಗೆ ಮಿಗಿಲಾಗಿಯೇ ಬೆಚ್ಚಗೆ ಮಾಡಿ, ಕೈಗೆ ಕೋಳ ಹಾಕಿದ್ದನ್ನೂ ತಪ್ಪಿಸಿದ್ದರು. +ಪೋಲೀಸರಿಗೆ ಕಪ್ಪಕಾಣಿಕೆ ಅರ್ಪಿಸುವುದಕ್ಕಾಗಿ ಅವರನ್ನು ಉಪ್ಪರಿಗೆಯ ಮೇಲಕ್ಕೆ ರಹಸ್ಯಕ್ಕೆ ಕರೆದೊಯ್ದು, ಗುತ್ತಿಯ ಪರವಾಗಿ ವಾದಿಸಿದ್ದರು. + “ಅವನೇನು ಖೂನೀಗೀನಿ ಮಾಡುವಂಥಾ ಮನುಷ್ಯನಲ್ಲ. +ಹೇಳಿದ ಹಾಗೆ ಕೇಳಿಕೊಂಡು ಬಹಳ ಒಳ್ಳೆಯವನಾಗಿ ಕೆಲಸ ಮಾಡಿಕೊಂಡು ಇದ್ದಾನೆ. +ನಮ್ಮ ಹೊಲೇರ ಪೈಕಿ ಸಿಪಾಯಿ ಅಂದರೆ ಅವನೊಬ್ಬನೆ ಸೈ! +ಇನ್ನೂ ಹುಡುಗ. +ಆ ಇಜಾಗರದ ಸಾಬಿ ಅವನ ಗಬ್ಬದ ಕುರೀನ ಕೊಯ್ದು ಹಾಕಿದ ಸಿಟ್ಟಿಗೆ ಸ್ವಲ್ಪ ಗಲಾಟೆ ಮಾಡಿಬಿಟ್ಟ. +ಅವನ ಕಾಲಿನ ಎಲುಬು ಮುರಿಯುವ ಹಾಂಗೆ ಏಟು ಕೊಟ್ಟಿದ್ದೂ ಆ ಇಜಾರದ ಸಾಬೀನೇ ಅಂತಾ, ಕಂಡವರೆಲ್ಲ ಹೇಳಿದ್ದಾರೆ ನನಗೆ. +ಅವೊತ್ತಿನ ಹೊಡೆದಾಟದಲ್ಲಿ ಗುತ್ತಿ ಹತ್ತಿರ ಕತ್ತಿಯೆ ಇರಲಿಲ್ಲಂತೆ. +ಕತ್ತೀಲಿ ಕಡಿದವನು ಅವನ ಬಾವನಂತೆ, ಬೆಟ್ಟಳ್ಳಿ ಹೊಲೇರ ಸಣ್ಣಬೀರ! +ಅಂವ ಈಗ ನುಣುಚಿಕೊಂಡು ಬಿಟ್ಟಿದ್ದಾನೆ, ಇವನ್ನ ಸಿಕ್ಕಿಹಾಕಿ! …. +ಪಾಪ, ಕಾಲು ಗಾಯ ಬೇರೆ ಇನ್ನೂ ಮಾದಿಲ್ಲ. +ಕೋಳ ಗೀಳ ಹಾಕಿ ಹಿಂಸೆ ಮಾಡಬೇಡಿ…. +ಅದೂ ಅಲ್ಲದೆ ಮೊನ್ನೆ ಮದುವೆ ಮಾಡಿಕೊಂಡಿದ್ದಾನೆ. +ಅವನ ಹೆಂಡ್ತೀನ ಉಪಾಯವಾಗಿ ತವರಿಗೆ ಕರಕೊಂಡು ಹೋಗ್ತೀಂವಿ ಅಂತ ಕರಕೊಂಡು ಹೋಗಿ, ಈಗ ಅವಳನ್ನ ಮತ್ತೊಬ್ಬನಿಗೆ ಲಗ್ನಾ ಮಾಡ್ತಾರಂತೆ. +ಅದರದ್ದೂ ಒಂದು ಮೊಕದ್ದಮೆ ಬರಬಹುದು ಇಷ್ಟರಲ್ಲೇ ನಿಮ್ಮ ಕಛೇರಿಗೆ….” +ಪೋಲೀಸಿನವರು ತಮಗೆ ಲಭಿಸಿದ ಅನೀರಿಕ್ಷಿತ ಪರಿಮಾಣದ ಪರಿತೋಷದಿಂದ ಸಂತೃಪ್ತರಾಗಿ, ವಿಚಾರಣೆಯಲ್ಲಿ ಗುತ್ತಿಗೆ ಏನೂ ತೊಂದರೆಯಾಗದಂತೆ ಸಾಕ್ಷಿಹೇಳಿಸಿ, ಅವನನ್ನು ಖಂಡಿತ ಖುಲಾಸೆ ಮಾಡಿಸುವುದಾಗಿ ಭರವಸೆಯಿತ್ತು ಹೆಗ್ಗಡೆಯವರಿಗೆ ಸಲಾಂ ಹೇಳಿದ್ದರು. +ಅವರ ಆ ಭರವಸೆಗೆ ಸಾಕಾದಷ್ಟು ಆಧಾರವೂ ಇತ್ತು. +ಏಕೆಂದರೆ ಗುತ್ತಿಯನ್ನು ಅವರು ಹಿಡಿದು ಒಯ್ಯುತ್ತಿದ್ದುದಕ್ಕೆ ಯಾವ ಸಕ್ರಮವಾದ ಅಧಿಕೃತ ಆಜ್ಞೆಯೂ ಇರಲಿಲ್ಲ. +ಇತ್ತ ಭರಮೈಹೆಗ್ಗಡೆಯವರಿಂದ ತಿಂದಂತೆ ಅತ್ತ ಬೆಟ್ಟಳ್ಳಿ ಕಲ್ಲಯ್ಯಗೌಡರ  ಕಡೆಯಿಂದಲೂ ತಿಂದು ಈ ನಕಲಿ ದಸ್ತಗಿರಿಗೆ ಕೈಹಾಕಿದ್ದರು. +ಅವರಿಗೆ ಇಜಾರದಸಾಬಿ ಸಿಕ್ಕಿದ್ದು ಒಂದು ಬರಿಯ ನೆವವಾಗಿತ್ತು. +ಆ ಸಾಬಿ ನಿಜವಾಗಿಯೂ ಸಾಯುವ ಸ್ಥಿತಿಯಲ್ಲೇನೂ ಇರಲಿಲ್ಲ. +ಒಂದು ಬೆರಳು ತುಂಡಾಗಿತ್ತು, ಅಷ್ಟೆ ಅಲ್ಲದೆ ಅವನಿಗಾಗಿದ್ದ ಉಳಿದ ಗಾಯಗಳೂ ಆಸ್ಪತ್ರೆಯಲ್ಲಿ ಗುಣಮುಖವಾಗುತ್ತಿದ್ದುವು. +ಬೆಟ್ಟಳ್ಳಿ ಕಲ್ಲಯ್ಯಗೌಡರು ಮತ್ತು ದೇವಯ್ಯನ ಮುಖಾಂತರ ತೀರ್ಥಹಳ್ಳಿಗೆ ಹೋಗಿ ಪಾದ್ರಿಗೆ ದೂರುಕೊಟ್ಟಿದ್ದ ಬಚ್ಚನಿಂದ ಇಷ್ಟೆಲ್ಲ ಕಿತಾಪತಿ ನಡೆದದ್ದು ಯಾರಿಗೂ ಇನ್ನೂ ಗೊತ್ತಾಗಿರಲಿಲ್ಲ. +ದೇವಯ್ಯಗೌಡರನ್ನೂ ತನ್ನನ್ನೂ ಕಿಲಸ್ತರ ಜಾತಿಗೆ ಸೇರಿಸುತ್ತಾನೆಂದು ಗುತ್ತಿ ಪಾದ್ರಿಗೆ ಬಾಯಿಗೆ ಬಂದ ಹಾಗೆ ಬಯ್ದನು ಎಂದು ಬಚ್ಚ ಜೀವರತ್ನಯ್ಯನ ಕಿವಿಗೆ ವಿಷ ಹೊಯ್ದಿದ್ದನು. +ಅದರಲ್ಲಿ ಬಚ್ಚನಿಗಿದ್ದ ನಿಜವಾದ ಉದ್ದೇಶ ಹೇಗಾದರೂ ಮಾಡಿ ಗುತ್ತಿಯನ್ನು ಲಾಕಪ್ಪಿನಲ್ಲಿ ಇಡಿಸಿಯೋ ಜೈಲಿಗೆ ಹಾಕಿಸಿಯೋ ದೂರವಾಗಿಟ್ಟಿದ್ದರೆ, ತಾನು ತಿಮ್ಮಿಯನ್ನು ನಿರ್ವಿಘ್ನವಾಗಿ ಮದುವೆಯಾಗಬಹುದು ಎಂಬುದೆ! +ಜೀವರತ್ನಯ್ಯ ತನ್ನ ಜಾತಿಯವನೇ ಆಗಿದ್ದ ಜಮಾದಾರನ ಸಹಾಯದಿಂದ ಇದನ್ನೆಲ್ಲ ಏರ್ಪಡಿಸಿದ್ದನು. +ಅದನ್ನೆಲ್ಲ ಪೋಲೀಸಿನವರಿಗೆ ಭರಮೈಹೆಗ್ಗಡೆಯವರಿಗೆ ಯಾವ ಭರವಸೆ ಕೊಡುವುದೂ ಅಷ್ಟೇನೂ ಕಷ್ಟವಾಗಿರಲಿಲ್ಲ. +ಗುತ್ತಿ ಕುಂಟುತ್ತಾ ಪೋಲೀಸಿನವರ ನಡುವೆ ನಿಧಾನವಾಗಿ ಸಾಗಿದ್ದನು. +ತನಗೂ ತನ್ನ ಹೆಂಡತಿಗೂ ಒದಗಿದ್ದ ಕಷ್ಟವನ್ನು ನೆನೆದಂತೆಲ್ಲಾ ಅವನಿಗೆ ದುಃಖ ಉಕ್ಕಿ ಬರುತ್ತಿತ್ತು. +ಮೊನ್ನೆ ಮೊನ್ನೆ ತಾನೇ ಮದುವೆಯಾಗಿ, ಒಂದೆರಡು ದಿನ ಮಗ್ಗುಲಲ್ಲಿ ಮಲಗಿಸಿಕೊಂಡೂ ಅಂಗಸುಖದಿಂದ ರುಚಿಯರಿತಿದ್ದ ಅವನಿಗೆ, ಮಾವ ದೊಡ್ಡಬೀರ ತನ್ನ ಮಗಳನ್ನು ತವರಿಗೆ ಕರೆದೊಯ್ದಾಗಲೆ ಸಹಿಸಲಾರದಷ್ಟು ಖೇದವಾಗಿತ್ತು. +ಜೊತೆಗೆ, ಹಾಳು ಇಜಾರದ ಸಾಬಿಯ ದೆಸೆಯಿಂದ ಕಾಳಿಗೆ ಬೇರೆ ಪೆಟ್ಟು ಬಿದ್ದು ಯಾತನಗೀಡು ಮಾಡಿತ್ತು. +ಒಂದು ದೃಷ್ಟಿಯಿಂದ ಆ ಯಾತನೆಯನ್ನೂ ಅವನು ಸ್ವಾಗತಿಸಿದ್ದನು, ಏಕೆಂದರೆ ಅದು ತಿಮ್ಮಿಯ ಅಗಲಿಕೆಯ ಉರಿಯನ್ನು ಕೊಂಚ ಮಟ್ಟಿಗಾದರೂ ಮರೆಯಿಸುತ್ತಿತ್ತು. +ಕಾಲು ಗುಣವಾದೊಡನೆಯ ತಾನು ಬೆಟ್ಟಳ್ಳಿಗೆ ಹಾರಿಹೋಗಿ ತಿಮ್ಮಿಯನ್ನು ಕರೆತರುತ್ತೇನೆ ಎಂದು ಹೊಂಗನಸು ಕಟ್ಟಿಕೊಂಡಿದ್ದನು. +ಆಗ ಬಂದಿತ್ತು ಗುಸು ಸುದ್ದಿ. +ತಿಮ್ಮಿಯನ್ನು ಕರಕೊಂಡು ಹೋದುದರ ಉದ್ದೇಶ ಅವಳನ್ನು ಹಿಂದಕ್ಕೆ ಕಳುಹಿಸಿ ಕೊಡುವುದಕ್ಕಲ್ಲ ಎಂದು! +ಗುತ್ತಿಯ ಚೇತನವಲ್ಲ ಬೆಂಕಿ ಹೊತ್ತಿಕೊಂಡು ಉರಿಯತೊಡಗಿತ್ತು. +ಕಾಲು ತುಸು ಗುಣವಾದರೆ ಸಾಕಲ್ಲಾ ಎಂದು ಪರಿತಪಿಸುತ್ತಿದ್ದನು. +ಅಷ್ಟರಲ್ಲಿ ಪೋಲೀಸರು ಬಂದು ತನ್ನನ್ನು ಹಿಡಿದಿದ್ದರು! +ಈಗ ಅವರ ನಡುವೆ, ಕಟುಕರ ನಡುವಣ ಕುರಿಯಂತೆ, ತಲೆಬಗ್ಗಿಸಿಕೊಂಡು ಹೋಗುತ್ತಿದ್ದಾನೆ ತೀರ್ಥಹಳ್ಳಿಗೆ! +ಮಳೆ ಸುರಿಯುತ್ತಿದೆ. +ದಾರಿಯುದ್ದಕ್ಕೂ ಅವನು ಏನೊಂದು ಮಾತಿಗೆ ಹೋಗಿರಲಿಲ್ಲ. +ಗುತ್ತಿಯ ತಲೆಯಲ್ಲಿ ಏನೇನೋ ಚಿಂತೆ ಸುಳಿದಾಡುತ್ತಿವೆ. +ಒಡೆಯರು ಹೇಳಿದ್ದನ್ನೆಲ್ಲ ನೆನೆಯುತ್ತಾನೆ. +ಅವರು ಕಣ್ಣು ಮಿಟುಕಿಸಿದುದರ ಅರ್ಥ ಏನು ಎಂದು ಪರಿಚಿಂತಿಸುತ್ತಾನೆ. +ದಾರಿಯಲ್ಲಿ ಪೋಲೀಸರ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡುಬಿಡು ಎಂದರೆಲ್ಲವೆ ಎಂದು ಆಲೋಚಿಸುತ್ತಾನೆ! +ತಿಮ್ಮಿಯ ನೆನಪು ಬರುತ್ತದೆ; +ಒಡನೆಯೆ ಅವನ ಚೈತನ್ಯ ತಪ್ಪಿಸಿಕೊಂಡು ಒಡುವ ಸಾಹಸಕ್ಕೆ ಅನುವಾಗುತ್ತದೆ…. +ಮತ್ತೆ ವಿವೇಕ ಮೂಡುತ್ತದೆ. +ಈ ಇಬ್ಬರು ಪೋಲೀಸರಿಂದ ಹೇಗೆ ತಪ್ಪಿಸಿಕೊಂಡು ಓಡಲಿ? +ಸಿಕ್ಕಿಬಿದ್ದರೆ ನನ್ನ ಗತಿ ಏನಾಗುತ್ತದೆ? +ಕಾಲಾದರೂ ಸರಿಯಾಗಿ ಇದ್ದಿದ್ದರೆ ಒಂದು ಕೈ ನೋಡಬಹುದಿತ್ತು. +ಅಯ್ಯೋ ಎಂದು ಎದೆ ಒಳಗೊಳಗೆ ಬೇಯುತ್ತದೆ. +‘ಇಂದೊಮ್ಮೆ ಹೇಗಾದರೂ ತಪ್ಪಿಸಿಕೊಂಡು ತಿಮ್ಮಿಯನ್ನು ಸೇರಿದರೆ, ಆಮೇಲೆ ನಮ್ಮನ್ನು ಕಂಡುಹಿಡಿಯುವವರಾರು? +ನೋಡುತ್ತೇನೆ!’ ಎಂದುಕೊಳ್ಳುತ್ತದೆ ಅವನ ವಿರಹ ದಗ್ಧ ಮನಸ್ಸು…. +ಚಿಂತಿಸುತ್ತಿದ್ದಂತೆ ಏನೋ ಹೊಳೆಯಿತು ತಲೆಗೆ! +‘ಅದೇ ಉಪಾಯ!ನೋಡಿಯೇಬಿಡುತ್ತೇನೆ!’ ಎಂದು ಧೃಡ ಮಾಡಿಕೊಂಡನು. +ಎಚ್ಚರಿಕೆಯಿಂದ ತನಗೆ ಅಡಿಅಡಿಯೂ ಪರಿಚಿತವಾಗಿದ್ದ ಹೆದ್ದಾರಿಯ ಇಕ್ಕೆಲಗಳನ್ನೂ ಚೆನ್ನಾಗಿ ವೀಕ್ಷಿಸುತ್ತಾ ನಡೆಯತೊಡಗಿದನು…. +‘ಆ ಕ್ಯಾದಗೆ ಹಿಂಡಲ ಹತ್ರ ಕೆರೆ ಅಂಗಳದ ಕಂಪ ಅದೆಯಲ್ಲಾ ಅಲ್ಲೇ ಕೊಟ್ಟರೆ ಕೊಡಬೇಕು ಇವರಿಗೆ ಕೈ! +ಆ ಕಂಪದಾಗೆ ಒಂದು ಕಡಾನೇ ಸಿಕ್ಕೊಂಡು ಬಿದ್ದಿತ್ತು. +ಆ ದೊಡ್ಡ ಬ್ಯಾಟೀಲಿ! +ಇನ್ನು ಈ ಗಿರ್ಲು ಮೀಸೆ ಧಡಿಯ ಹೂತುಕೊಂಡು ಹೋಗಾದೇನು ಹೆಚ್ಚಿ? …. +ಮತ್ತೆ ಈ ಸಣಕಲ ಮೀಸೆ ಬೋಳ? +ಆ ಹಳುವಿನ ಗಿಜರಿನಾಗೆ ಇಂವ ನನ್ನ ಅಟ್ಟಿ ಹಿಡಿಯಾದು ಅದೇ! +ಮಳೆ ಬ್ಯಾರೆ ಹುಯ್ತಾ ಇದೆ! +ಆಗಿದ್ದಾಗ್ಲಿ, ನೋಡೇಬಿಡ್ತೀನಿ! ’…. +ಇದ್ದಕ್ಕಿದ್ದ ಹಾಗೆ ಗುತ್ತಿ ಡುರುಕ್ಕೆಂದು ಹೂಸು ಕೊಟ್ಟು ನಿಂತನು! +ಥೂ!ಥೂ!ಥೂ! +ತುಪ್ಪುತ್ತಾ ಶಪಿಸುತ್ತಾ, ಆದರೂ ನಗು ತಡೆಯಲಾರದ ಕಿಸಕ್ಕನೆ ನಕ್ಕು, ಪೋಲೀಸಿನವರಿಬ್ಬರೂ ಗುತ್ತಿಯಿಂದ ದೂರ ನೆಗೆದು ನಿಂತರು. +ಗುತ್ತಿ ರಸ್ತೆಯ ಮಧ್ಯೆ ಕೂತು, ಹೊಟ್ಟೆ ಕಿವುಚಿಕೊಳ್ಳುತ್ತಾ, ಮುಖದ ಮೇಲೆ ಯಮಯಾತನಾಭಂಗಿಯನ್ನು ಪ್ರದರ್ಶಿಸುತ್ತಾ, ಅಯ್ಯೋ ಅಯ್ಯೋ ಎಂದು ನರಳುತ್ತಿದ್ದನ್ನು ನೋಡಿ ಗಿರ್ಲುಮಿಸೆಯವನು ಸ್ವಲ್ಪ ಹತ್ತಿರಕ್ಕೆ ಬಂದು “ಏನಾಯ್ತೋ?ಏನಾಯ್ತೋ” ಎಂದು ಕೇಳಿದನು. +ಗುತ್ತಿ ಅರ್ಧ ಉಸಿರು ಕಟ್ಟಿದವನಂತೆ ನರಳಿದನು “ಹೊಟ್ಟೆ ಕಚ್ತದೇ, ನನ್ನೊಡೆಯಾ! +ಒಂದು ಚೂರು ಹೊರಕಡೀಗೆ ಹೋಗಿ ಬತ್ತೀನಿ!” +“ಎಲ್ಲಿಗೆ ಹೋಗ್ತಾನಂತೆ? +ಕಳ್ಳಮಾದರ್ಚೋತ್ ಸೂಳೇಮಗ, ಏನೋ ಹುನಾರ್ ತಗೀತಿದಾನೆ! +ಏಳೋ, ಏಳೋ, ಬೋಳಿಮಗನೆ, ಒದಿತೀನಿ ನೋಡು.” ಹತ್ತಿರಕ್ಕೆ ಬರುತ್ತಾ ಬೈದನು ಬೋಳುಮೀಸೆಯನು. +ಎಲ್ಲಿಗೂ ಹೋಗಾದಿಲ್ಲಾ, ನನ್ನೊಡೆಯಾ…. +ಹೊಟ್ಟೆ ಕಚ್ತದೇ…. +ಹೊರಕಡೆಗೆ ಹೋಗಿ ಬತ್ತೀನಿ…. +ದೂರ ಹೋಗದಿಲ್ಲಾ…. +ಇಲ್ಲೇ ಮಟ್ಟಿನ ಹಿಂದೆ ಕೂತುಗೋತೀನಿ!” ಎನ್ನುತ್ತಾ ಕಂಬಳಿಕೊಪ್ಪ ಹಾಕಿದ್ದ ಯಾತನಾಕ್ಲಿಷ್ಟ ಮುಕವನ್ನೆತ್ತಿ ಬೋಳುಮೀಸೆಯವನ ಕಡೆ ದೈನ್ಯದಿಂದ ನೋಡಿದನು. +“ಪಾಯಿಖಾನಿಗೆ ‘ಹೊರಕಡೆ’ ಅಂತಾ ಹೇಳ್ತಾರೆ ಈ ಹಳ್ಳಿ ಜನ. +ಶನಿಸೂಳೆಮಗ ಹೋಗಿಯಾದ್ರೂ ಬರ್ಲಿ.” ಹೇಳಿತು ಗಿರ್ಲುಮೀಸೆಯ ಸಹಾನುಭೂತಿಯ ವಾಣಿ. +ಅಷ್ಟರೊಳಗಾಗಲೆ ಗುತ್ತಿ ಎರಡು ಮೂರು ಸಾರಿ ಹೂಸು ಬಿಟ್ಟಿದ್ದನು. +ಹತ್ತಿರ ಬಂದಿದ್ದ ಬೋಳುಮೀಸೆಯವನು ನಾತ ಸಹಿಸಲಾರದೆ ಮೂಗು ಮುಚ್ಚಿಕೊಂಡು ದೂರ ಹೋಗುತ್ತಾ ಕೂಗಿದನು. +“ಸಾಯೋ ಬೇಗ, ನಿನ್ನ ಹಾಳು ಹೊಟ್ಟೆಗೆ ಬೆಂಕಿಹಾಕ!” +ಗುತ್ತಿ ನಿಧಾನವಾಗಿ ಎದ್ದು, ಕೇದಗೆ ಹಿಂಡಿಲನ್ನೂ, ಉಸುಬಿನ ಕೆರೆಯ ಅಂಗಳವನ್ನೂ ಹಸಿರುಹುಲ್ಲು ಹಬ್ಬಿ ಸಾಧಾರಣ ಬಯಲಿನಂತೆ ತೋರುತ್ತಿದ್ದ ಕಂಪದ ಹುಸಿ ನೆಲವಿದ್ದ ಮೂಲೆಯನ್ನೂ ಸಮೀಕ್ಷಿಸಿದನು. +ತಾನು ಎತ್ತ ಕಡೆಯಿಂದ ಹೋಗಿ, ಎಲ್ಲಿ ‘ಹೊರಕಡೆ’ಗೆ ಕೂರಬೇಕು ಎಂಬುದನ್ನೂ ತಜ್ಞಶೀಘ್ರತೆಯಿಂದ ನಿಶ್ಚಯ ಮಾಡಿಕೊಂಡನು. +ಇದ್ದಕ್ಕಿದ್ದಹಾಗೆ, ಬಹಳ ಅವಸರವಾದಂತೆ, ಮೊಳಕಾಲಿನವರೆಗೆ ಸುತ್ತಿದ್ದು ಕೊಳಕಲು ಮುದ್ದೆಯಾಗಿದ್ದ ತನ್ನ ಅಡ್ಡಪಂಚೆಯನ್ನು ಅಂಡೆಲ್ಲ ಕಾಣುವಂತೆ ಎತ್ತಿ, ಒಳಗೆ ಕಟ್ಟಿದ್ದ ಲಂಗೋಟಿಯನ್ನು ಬಿಚ್ಚುವವನಂತೆ ನಟಿಸುತ್ತಾ ರಸ್ತೆಯನ್ನು ಬಿಟ್ಟು ಇಳಿಜಾರಿನಲ್ಲಿ ಓಡಿದನು! +ಪೋಲೀಸಿನವರಿಬ್ಬರೂ ಅವನ ರೋಮಮಯ ಕುಂಡೆಯ ದರ್ಶನಕ್ಕೆ ಜುಗುಪ್ಸೆ ಪಟ್ಟು, ‘ಥೂ!ಥೂ!ಥೂ!’ ಎಂದು ಉಗುಳುತ್ತಾ ‘ಸಾಕಪ್ಪಾ ಈ ಹೊಲೆಸೂಳೆಮಗನ ಸಾವಾಸ!’ ಎಂದು ಬಯ್ಯುತ್ತಾ ಮುಖತಿರುಗಿಸಿಕೊಂಡರು. +“ಏಯ್ ದೂರ ಹೋಗಬೇಡೋ!” ಎಂದು ಆಜ್ಞೆ ಕೂಗಿತು ಗಿರ್ಲುಮೀಸೆ. +ಅವನ ಅಪ್ಪನ ಮನೆಗೆ ಎಲ್ಲಿಗೆ ಸಾಯ್ತಾನೆ?” ಎಂದಿತು ಬೋಳುಮೀಸೆ. +ಈ ಹಾಳು ಪೋಲೀಸು ಕೆಲಸ ನನಗೆ ಯಾಕೆ ಬೇಕಿತ್ತು, ಮಾಯಿಂದಪ್ಪೂ?” ಎಂದು ರಸ್ತೆಯ ಅಂಚಿನಲ್ಲಿ ತುದಿಗಾಲ ಮೇಲೆ ಕೂತು, ಕೊಡೆಯ ಮರೆಯಲ್ಲಿ ಬೀಡಿ ಹೊತ್ತಿಸಲು ಅನುಗುಣವಾಗುತ್ತಿತ್ತು, ಗಿರ್ಲುಮೀಸೆ. +“ಈ ದನಗೋಳು ಮಳೇಲಿ ಸಾಲದಕ್ಕೆ ಈ ಹೊಲೆಸೂಳೇಮಗನ್ದು ಬೇರೆ ರಂಪ!” ಎಂದು ಬೋಳುಮೀಸೆ ಗುತ್ತಿ ಹೋದತ್ತಕಡೆ ನೋಡುತ್ತಿತ್ತು. +ಯಾವ ಪೊದೆಯ ಮರೆಯಲ್ಲಿ ಗುತ್ತಿ ಪಾಯಖಾನೆಗೆ ಕೂತಹಾಗೆ ಮಾಡಿದ್ದನೋ ಅಲ್ಲಿಂದ ಸ್ವಲ್ಪ ದೂರದಲ್ಲಿ ರಸ್ತೆಯ ಅಂಚಿನ ಕಾಡಿನಲ್ಲಿ ಯಾವುದೋ ಪ್ರಾಣಿ ಓಡಾಡಿದ ಸದ್ದಾಯಿತು. +ಪಟ್ಟಣಜೀವಿಗಳಾದ ಪೋಲೋಸರಿಬ್ಬರಿಗೂ ತುಸು ತಲ್ಲಣವಾಯ್ತು, ಹುಲಿಯೋ ಏನೋ ಎಂದು. +ಆ ಶಂಕೆಯ ನಿವಾರಣಾರ್ಥವಾಗಿಯೂ ಮತ್ತು ಧೈರ್ಯ ತಂದುಕೊಳ್ಳುವುದಕ್ಕಾಗಿಯೂ ಗಿರ್ಲುಮೀಸೆ ‘ಏಯ್, ಆಯ್ತೇನೋ? +ಬೇಗ ಬಾರೊ!’ ಎಂದು ಕೂಗಿ, ಬೀಡಿ ಹೊತ್ತಿಸಲು ಪ್ರಯತ್ನಿಸತೊಡಗಿದನು. +ಆದರೆ ಆ ಮಳೆಗಾಲದಲ್ಲಿ ಅದು ಕೈಗೊಡುವ ಸಂಭವ ಕಾಣಲಿಲ್ಲ. +ಬರಿದೆ ಬೆಂಕಿಕಡ್ಡಿ ಕರ್ಚು ಮಾಡುವುದೇಕೆ ಎಂದು ಪೊಟ್ಟಣವನ್ನೂ ಬೀಡಿಯನ್ನೂ ಜೇಬಿಗೆ ಹಾಕಿಕೊಂಡು ಎದ್ದು ನಿಂತು ನೋಡಿದಾಗ, ಗುತ್ತಿ ಅಲ್ಲಿ ಎಲ್ಲಿಯೂ ಕೂತಿದ್ದಂತೆ ಭಾಸವಾಗಲಿಲ್ಲ! +ಕರೆದರೆ ಉತ್ತರವಿಲ್ಲ! +“ಕೊಟ್ಟ ಕಣೋ ಸೂಳೆಮಗ ಕೈಯ!” ಎಂದೋಡಿ ಕೆರೆಯ ಅಂಗಳದ ನೀರಿಲ್ಲದ ಹಸುರು ನೆಲದ ಕಡೆಗೆ ಹಾರಿ ಧಾವಿಸುತ್ತಾ ಗಿರ್ಲು ಮೀಸೆಯವನು ಬೋಳುಮೀಸೆಯವನಿಗೆ ಕೂಗಿದನು. “ಮಾಯಿಂದಪ್ಪೂ, ಮಾಯಿಂದಪ್ಪೂ, ಅತ್ತ ಕಡೆಯಿಂದ ಓಡಿ ಬಾ! +ಅಡ್ಡಹಾಕು!ಓಡು!ಓಡು!”ಮಾಯಿಂದಪ್ಪು ಕೆರೆಯನ್ನು ಬಳಸಿ ಸುತ್ತುಗಟ್ಟುವ ಉದ್ದೇಶದಿಂದ ಅತ್ತಕಡೆ ಓಡಿ ಕಾಡಿನ ಹಳುವಿಗೆ ನುಗ್ಗಿದನು. +ಆದರೆ ಆ ಮುಳ್ಳಿನ ಗಿಜರಿನಲ್ಲಿ ಅವನು, ಓಡುವುದಿರಲಿ, ಚಲಿಸುವುದೆ ಹರ್ಮಾಗಾಲವಾಯಿತು. +ಕಷ್ಟಪಟ್ಟು ನುಸುಳಿ ನಾಲ್ಕು ಹೆಜ್ಜೆ ಹೋಗುವುದರಲ್ಲಿ ಗುತ್ತಿ ಛೂ ಬಿಟ್ಟಿದ್ದ ಅವನ ದೈತ್ಯನಾಯಿ ಹುಲಿಯ – ಆ ಒಕ್ಕಣ್ಣಿನ ಸ್ವಾಮಿಭಕ್ತ ತನ್ನ ಒಡೆಯನನ್ನೆ ರಸ್ತೆಯ ಅಂಚಿನ ಕಾಡಿನಲ್ಲಿ ಮರೆಯಾಗಿ ಹಿಂಬಾಲಿಸುತ್ತಿತ್ತೆಂದು ತೋರುತ್ತದೆ. +ಅವನ ಮೇಲೆ ರೌದ್ರವಾಗಿ ಬೊಗಳುತ್ತಾ ಎಗರಿತು. +ಆ ಮುಳ್ಳು ಬಳ್ಳಿ ಗಿಜುರುಗಳ ಮಧ್ಯೆ ಮಾಯಿಂದಪ್ಪುಗೆ ನೆಟ್ಟಗೆ ನಿಲ್ಲಲೂ ಆಗುತ್ತಿರಲಿಲ್ಲವಾದ್ದರಿಂದ ಹುಲಿಯನ ಭಾರಕ್ಕೂ ವೇಗಕ್ಕೂ ಕಂಗಾಲಾಗಿ ಕೆಳಗೆ ಬಿದ್ದುಬಿಟ್ಟನು. +ಹುಲಿಯು ಅವನನ್ನು ಕಚ್ಚುವ ಗೋಜಿಗೆ ಹೋಗದೆ, ಕಾಡಿನಲ್ಲಿ ಒಂದೇ ಸಮನೆ ಕುಂಟಿಕುಂಟಿ ಓಡುತ್ತಿದ್ದ ತನ್ನ ಒಡೆಯನ ಮೈಗಾವಲಾಗಿ ಅವನ ಹಿಂದೆ ಹಿಂದೆಯೆ ಓಡಿ ಬಿಟ್ಟಿತ್ತು! +ಮಾಯಿಂದಪ್ಪು ತತ್ತರಿಸಿಕೊಂಡು ಎದ್ದು ನಿಲ್ಲುವ ಹೊತ್ತಿಗೆ, ಆರ್ತಧ್ವನಿಯಿಂದ ತನ್ನನ್ನು ಹೆಸರು ಹಿಡಿದು ಕೂಗುತ್ತಿದ್ದ ದಫೇದಾರ ಮಾನನಾಯಕರ ಬೊಬ್ಬೆ ಕೇಳಿಸಿತು! +ಏನೊಂದು ಅರ್ಥವಾಗದ ಮಾಯಿಂದಪ್ಪು ಹಿಂದುರುಗಿ, ಕೂಗು ಕೇಳಿಸುತ್ತಿದ್ದ ದಿಕ್ಕಿಗೆ ರಸ್ತೆಯ ಕಡೆಗೇ ಮತ್ತೆ ಓಡಿದನು, ಆ ಹಳುವಿನಲ್ಲಿ ತನಗೆ ಪರಮಸಾಧ್ಯವಾದ ವೇಗದಲ್ಲಿ. +ಮಾನನಾಯಕರ ಕೂಗೇನೊ ಕೇಳಿಸುತ್ತಿತ್ತು! +ಆದರೆ ಮಾಯಿಂದಪ್ಪು ಎತ್ತ ಕಣ್ಣು ಹೊರಳಿಸಿದರೂ ದಫೇದಾರರು ದೃಗ್ಗೋಚರವಾಗಲಿಲ್ಲ. +ದಿಗಿಲುಗೊಂಡು ಅತ್ತ ಇತ್ತ ಓಡಿ ಹುಡುಕಿ ನೋಡುತ್ತಾನೆ, ಕೆರೆಯ ಅಂಗಳದ ಹಸುರುನೆಲದಲ್ಲಿ, ಭೂಗರ್ಭದಿಂದ ಮೂಡಿ ನಿಂತ ವರಾಹವತಾರದಂತೆ, ಸೊಂಟದ ಮೆಲೆ ಮಾತ್ರ ಗೋಚರವಾಗಿ ನಿಂತಿದ್ದರೋ ಮಾಯಿಂದಪ್ಪುಗೆ ಅರ್ಥವಾಗಲಿಲ್ಲ. +ಅವರಿಗೆ ನೆರವಾಗಲು ಅವರತ್ತ ಏಕೆ?ಹೇಗೆ?ಹಾಗೆ ನಿಂತಿದ್ದರೋ ಮಾಯಿಂದಪ್ಪುಗೆ ಅರ್ಥವಾಗಲಿಲ್ಲ. +ಅವರಿಗೆ ನೆರವಾಗಲು ಅವರತ್ತ ಓಡ ತೊಡಗಿದನು. +“ಬರಬೇಡ!ಬರಬೇಡ! +ಅಲ್ಲೆ ನಿಲ್ಲು!ನಿಲ್ಲು!ನಿಲ್ಲು!ಉಸುಬು!ಕಂಪ!” ಮಾನನಾಯಕರು ಅಬ್ಬರಿಸಿ ಕೂಗಿದರು. +ಮಾಯಿಂದಪ್ಪಯ ಮರವಟ್ಟಂತಾಗಿ ನಿಂತುಬಿಟ್ಟನು. +ತತ್ಕಾಲದಲ್ಲಿ, ಆ ಜಡಿಮಳೆಯಲ್ಲಿ, ಆ ನಿರ್ಜನ ಕಾಡಿನ ಮಧ್ಯೆ, ಹೇಳುವವರು ಕೇಳುವವರು ದಿಕ್ಕು ದೆಸೆ ಯಾವುದೂ ಇಲ್ಲದಂತಾಗಿದ್ದ ಆ ವಾತಾವರಣದಲ್ಲಿ, ಕಷ್ಟಕ್ಕೆ ಸಿಕ್ಕಿದ್ದ ಅವರಿಬ್ಬರೂ ತಮ್ಮ ಪೋಲೀಸುಗಾರಿಕೆಯ ಮತ್ತು ಅಧಿಕಾರದ ಸರ್ವ ಉಪಾಧಿಗಳಿಂದಲೂ ಬಿಡುಗಡೆ ಹೊಂದಿ ಸಾಮಾನ್ಯ ಮನುಷ್ಯವ್ಯಕ್ತಿಗಳಾಗಿದ್ದರು. +ಒಬ್ಬನು ಬೋವಿ-ಮನೆಯಲ್ಲಿ ಹೆಂಡತಿ ಬಾಣಂತಿಯಾಗಿರುವ ಗಂಡುಕೂಸಿನ ತಂದೆ,- ಮಾನನಾಯಕ! +ಇನ್ನೊಬ್ಬನು ಸೆಟ್ಟಿ ವಿಧವೆಯಾಗಿದ್ದು ರೋಗದಿಂದ ನರಳುತ್ತಿರುವ ತಾಯಿಯ ಒಬ್ಬನೆ ಮಗ, – ಮಾಯಿಂದಪ್ಪು! +ಮಾಯಿಂದಪ್ಪು ನೋಡುತ್ತಿದ್ದಂತೆಯೆ ದೃಗ್ಗೋಚರವಾಗಿದ್ದ ಮಾನನಾಯಕರ ದೇಹಭಾಗ ಮೆಲ್ಲಮೆಲ್ಲನೆ ಕಡಮೆಯಾಗುತ್ತಿದ್ದಂತೆ ತೋರಿತು! +ನಾಯಕರು ಮೇಲೆಳಲು ಪ್ರಯತ್ನಪಟ್ಟಂತೆಲ್ಲ ಕೆಳಕೆಳಕ್ಕೆ ಹೋಗುತ್ತಿದ್ದರು! +ಅವರ ಸೂಚನೆಯ ಮೇರಗೆ ಮಾಯಿಂದಪ್ಪು ತನ್ನ ಪೋಲೀಸಿನ ಕರಿಯಪೇಟವನ್ನು ಬಿಚ್ಚಿ, ಒಂದು ತುದಿ ತನ್ನ ಕೈಯಲ್ಲಿರುವಂತೆ ಹಿಡಿದು, ಸುರಳಿ ಬಿಚ್ಚಿ ಬೀಸಿ ಎಸೆದನು. +ಒಂದೆರಡು ಪ್ರಯತ್ನಗಳಲ್ಲಿಯೆ ನಾಯಕರು ಅದರ ಮತ್ತೊಂದು ತುದಿಯನ್ನು ತಮ್ಮನ್ನು ರಕ್ಷಿಸಲು ಐತಂದ ಪರಮಾತ್ಮನ ಪಾದಾರವಿಂದವೋ ಎಂಬಂತಹ ಭಕ್ತಿಯ ಕೃತಜ್ಞತೆಯಿಂದ ಬಿಗಿಯಾಗಿ ಹಿಡಿದುಕೊಂಡರು. +ಆದರೆ ಮಾಯಿಂದಪ್ಪುವಿನಿಂದ ಉಸುಬಿನಲ್ಲಿ ಭದ್ರವಾಗಿ ಸಿಕ್ಕಿಕೊಂಡಿದ್ದ ಅವರನ್ನು ಹೊರಕ್ಕೆಳೆಯಲಾಗಲಿಲ್ಲ; +ಕೆಳಕೆಳಕ್ಕೆ ಮುಳುಗುತ್ತಿದ್ದುದನ್ನು ತಪ್ಪಿಸಲು ಮಾತ್ರ ಸಾಧ್ಯವಾಯಿತು. +ಮಾನನಾಯಕರ ಕಣ್ಣಿಂದ ನೀರು ಸೋರಿದ್ದನ್ನೇನೋ ಕಂಡನು ಮಾಯಿಂದಪ್ಪು. + ಅದರೆ ಅವರು ತೀರ್ಥಹಳ್ಳಿಯ ರಾಮೇಶ್ವರ ದೇವರಿಗೆ ಅನನ್ಯ ಭಕ್ತಿಯಿಂದ ಮನಸ್ಸಿನಲ್ಲಿಯೆ ಮಾಡಿಕೊಳ್ಳುತ್ತಿದ್ದ ಪ್ರಾರ್ಥನೆ ಮತ್ತು ಹೊತ್ತುಕೊಳ್ಳುತ್ತಿದ್ದ ಹರಕೆ ಕೇಳಿಸಿರಲಿಲ್ಲ; + ‘ಸ್ವಾಮಿ, ಇದೊಂದು ಸಾರಿ ನಮ್ಮನ್ನು ಹೇಗಾದರೂ ಬಚಾವು ಮಾಡು! +ಈ ಪಾಪಿಷ್ಠ ಪೋಲೀಸು ಕೆಲಸಕ್ಕೆ ಖಂಡಿತ ರಾಜಿನಾಮೆಕೊಟ್ಟು, ನನ್ನ ಗದ್ದೆ ತೋಟ ನೋಡಿಕೊಂಡು ಮಾಡಿಕೊಂಡು ನೆಮ್ಮದಿಯಾಗಿ ನಿನ್ನ ಸೇವೆ ಸಲ್ಲಿಸುತ್ತೇನೆ. +ಏನೋ ಆ ಅಮಲ್ದಾರರು ಹೇಳಿದರು-ಬೋವೀ ಜನಾಂಗಕ್ಕೆ ನೀನೊಂದು ಭೂಷಣ ಆಗಿರುತ್ತೀಯಾ; + ದಫೇದಾರನಾಗು-ಅಂತಾ ನಗೂ ದುರ್ಬುದ್ದಿ, ಕೆಟ್ಟಗಳಗೇಲಿ ಹೇಲು ತಿನ್ನಾಕೆ ಒಪ್ಪಿಕೊಂಡು ಕೆಟ್ಟೆ, ಸ್ವಾಮೀ! +ಇದೊಂದು ಸಾರಿ ನನ್ನ ಕಾಪಾಡು!’ +ರಾಮೇಶ್ವರನಿಗೆ ಅವರ ಪ್ರಾರ್ಥನೆ ಮುಟ್ಟಿತೋ ಏನೋ? +ರಾಮೇಶ್ವರದ ದೇವಸ್ಥಾನದಲ್ಲಿ ಗಂಟೆಯ ಸದ್ದಾಗುವಂತೆ ಕೇಳಿಸಿತು ನನಾಯಕರ ಕಿವಿಗಳಿಗೆ! +ಭಗವಂತ ಇಷ್ಟು ಸುಲಭನೇ?ನಾಯಕರಿಗೆ ಅಚ್ಚರಿಯಾಯಿತು. +ಆದರೆ ಆ ಘಂಟೆಯ ದನಿ ಮಾಯಿಂದಪ್ಪುವಿಗೂ ಕೇಳಿಸಿತ್ತು. +ಅವನು ಕತ್ತು ತಿರುಗಿಸಿ ತೀರ್ಥಹಳ್ಳಿಯ ದಿಕ್ಕಿಗೆ ನೋಡಿದನು. +ಏನೂ ಕಾಣಿಸಲಿಲ್ಲ. +ಮೇಗರವಳ್ಳಿಯ ದಿಕ್ಕಿಗೆ ನೋಡಿದಾಗ, ಗಂಟೆ ಗಗ್ಗರ ಕಟ್ಟಿದ್ದ ಸುಸ್ವರದ ಕೊರಳಿನ ಎತ್ತುಗಳು ಕಮಾನುಗಾಡಿಯೊಂದನ್ನು ಎಳೆದುಕೊಂಡು ತಮ್ಮನ್ನು ಸಮೀಪಿಸುತ್ತಿದ್ದುವು. +ಗಾಡಿ ನಿಂತಿತು, ಹಿಂಬಾಗದಿಂದ ದೇವಯ್ಯನೂ ಮುಕುಂದಯ್ಯನೂ ಕೊಡೆ ಸುಡಿಸಿಕೊಳ್ಳುತ್ತಲೆ ಹಾರಿದರು. +ಮಳೆಯಲ್ಲಿ ತೊಯ್ಯುತ್ತಲೆ ಕರಿಪೇಟದ ತುದಿಯನ್ನು ಹಿಡಿದು ನಿಂತಿದ್ದ ಪೋಲೀಸನವನನ್ನು ಗುರುತಿಸಿ, ದೇವಯ್ಯ ಕೇಳಿದನು “ಏನು, ಮಾಯಿಂದಪ್ಪು? +ಇದ್ಯಾಕೆ ಇಲ್ಲಿ ಹೀಂಗೆ ನಿಂತೀಯಾ?”ಅಷ್ಟರಲ್ಲಿ ಕೆರೆಯಂಗಳದ ಕಡೆಯಿಂದ “ನಮಸ್ಕಾರ, ಗೌಡರಿಗೆ.” ಎಂದು ಯಾರೂ ಕೂಗಿದ್ದನ್ನು ಕೇಳಿ ಅತ್ತಕಡೆ ನೋಡುತ್ತಾರೆ. + ಗಿರ್ಲು ಮೀಸೆಯ ದಫೇದಾರ ಮಾನನಾಯಕರು ಹೂತುಕೊಂಡು ನಿಂತಿದ್ದಾರೆ! +ಎತ್ತಿನ ಕೊರಳು ಬಿಚ್ಚಿ, ಗಾಡಿ ಬಿಟ್ಟು, ಕಂಬಳಿಕೊಪ್ಪೆ ಹಾಕಿಕೊಂಡು ಓಡಿಬಂದಿದ್ದ ಬಚ್ಚನಿಗೆ ಆಜ್ಞಾಪಿಸಲು, ಅವನೂ ಮಾಯಿಂದಪ್ಪುವೂ ಸೆರಿ ಮೆಲ್ಲನೆ ಜಗ್ಗಿಸಿ ಎಳೆದೂ ಎಳೆದೂ ದಫೇದಾರರನ್ನು ದಡಕ್ಕೆ ತಂದರು. +ಮಾನನಾಯಕರು ಕಂಪದ ಕೆಸರು ಮೆತ್ತಿದ ಬಟ್ಟೆಗಳನ್ನು ತೆಗೆಯುವುದೆ ಮುಂತಾದ ಕೆಲಸದಲ್ಲಿ ತೊಡಗಿದ್ದಾಗ, ಮಾಯಿಂದಪ್ಪು ನಡೆದುದನ್ನೆಲ್ಲ ಸಂಕ್ಷೇಪವಾಗಿ ತಿಳಿಸಿ. +“ಬಡ್ಡೀಮಗ, ನೋಡಿ, ಎಂಥಾ ಜಾಗ ಆರಿಸಿದ್ದಾನೆ ಓಡಿಹೋಗುವುದಕ್ಕೆ?” ಎಂದನು. +“ದಫೇದಾರ್ರು ಉಳಿದದ್ದೆ ಹೆಚ್ಚು ಈ ಕಂಪದಾಗೆ. +ಇದರೊಳಗೆ ಸುಮಾರು ಹಂದಿ ಹುಲಿ ಕಡ ಮಿಗ ಎಲ್ಲಾ ಹೂತುಕೊಂಡು ಹೋಗ್ಯವೆಯಂತೆ!” ಎಂದನು ಬಚ್ಚ. +“ಅಂತೂ ಗಾಳದ ತುದಿಗೆ ಒಳ್ಳೆ ಎರೆ ಸಿಕ್ಕಿಸಿಕೊಂಡು ಕರೀ ಪೇಟದ ನೇಣು ಹಿಡುಕೊಂಡು ನಿಂತಿದ್ದೀ ಅನ್ನು!” ಅಂತಹ ಅಪಘಾತವೇನೂ ನಡೆಯದೆ ಅಪಾಯದಿಂದ ಪಾರಾಗಿದ್ದುದರಿಂದ ಸಂದರ್ಭವನ್ನು ವಿನೋದಕ್ಕೆ ತಿರುಗಿಸಿದ್ದನು ದೇವಯ್ಯ. +ಆ ತೊಂದರೆಯ ಸನ್ನಿವೇಶದಲ್ಲಿಯೂ ಎಲ್ಲರೂ ನಕ್ಕರು, ತುಸುದೂರದಿಂದ ಆಲಿಸಿದ್ದ ಮಾನನಾಯಕರೂ ಸೇರಿ. +ಮಾಯಿಂದಪ್ಪು ಗುತ್ತಿಯನ್ನು ಮತ್ತೆ ಹಿಡಿಯುವ ಮಾತನ್ನೆತ್ತಿದಾಗ, ದೇವಯ್ಯ ಬುದ್ದಿ ಹೇಳಿದನು. +“ನಿಮ್ಮ ಪೋಲೀಸರನ್ನೆಲ್ಲ ಕರಕೊಂಡು ಬಂದು ಷಿಕಾರಿ ನುಗ್ಗಿದರೂ ಅಂವ ಇನ್ನು ಬಡಪಟ್ಟಿಗೆ ಸಿಕ್ಕೋದಿಲ್ಲ. +ಅಂವ ಏನು ಸಾಮಾನ್ಯ ಅಂತ ಮಾಡಿರೇನು? +ಪುಂಡ!ಜಗಪುಂಡ! +ಆ ಸಿಂಬಾವಿ ಹೆಗ್ಗಡೆಯ ಚಿತಾವಣೆ ಬೇರೆ ಇದೆ ಅವನಿಗೆ ಹುಡಗೇರನ್ನ ಹಾರಿಸೋದು, ದೊಂಬಿ ಮಾಡೋದು, ಕಳವು ಖೂನಿ ನಡಸೋದು, ಒಂದೋ ಎರಡೋ ಅಂವ ಮಾಡದಿದ್ದೇ ಇಲ್ಲ. +ಇತ್ತ ಕಡೆಗೆಲ್ಲಾ ಅವನೊಬ್ಬ ಖದೀಮ್‌ಪುಂಡ ಆಗಿಬಿಟ್ಟಿದ್ದಾನೆ!”ಬಚ್ಚನೂ ತನ್ನ ಸಲಹೆ ಸೇರಿಸಿದ್ದನು. + “ಅಯ್ಯಾ, ಈ ಕಾಡಿನಲ್ಲಿ ಈ ಮಳೇಲಿ ಅಂವ ಇನ್ನೆಲ್ಲಿ ಸಿಕ್ತಾನೆ? +ಎಂತಿದ್ರೂ ಇಂದೋ ನಾಳೆಯೋ ಬೆಟ್ಟಳ್ಳಿಗೆ ನಮ್ಮ ಕೇರಿಗೆ ಬಂದೇ ಬರ್ತಾನೆ. +ಆಗ ಬೇಕಾದ್ರೆ ನಾ ಹಿಡುಕೊಡ್ತೀನಿ ಅಂವನ್ನ!”ತನಗೆ ಚಿಕ್ಕಂದಿನಿಂದಲೂ ಚೆನ್ನಾಗಿ ಪರಿಚಿತನಾಗಿದ್ದು ತುಂಬ ಒಳ್ಳೆಯ ನಿಷ್ಠಾವಂತ ಸೇವಕನಾಗಿದ್ದ ಗುತ್ತಿಯನ್ನು ಕುರಿತು ಅವರಾಡುತ್ತಿದ್ದ ಮಾತುಗಳನ್ನು ಆಲಿಸಿ ಆಶ್ಚರ್ಯಪಡುತ್ತಾ ನಿಂತಿದ್ದನು ಮುಕುಂದಯ್ಯ. +ಮಾನನಾಯಕರು ತಮ್ಮ ಮಾನಸ್ಥಾನದ ಏರ್ಪಾಡುಗಳನ್ನೆಲ್ಲ ಪೂರೈಸಿ ಕೊಂಡಾದ ಮೇಲೆ, ಒದ್ದೆ ಬಟ್ಟೆಗಳಲ್ಲಿ ನಡುಗುತ್ತಿದ್ದ ಆ ಇಬ್ಬರು ಪೋಲೀಸರನ್ನೂ ಅವರ ಸಾಮಾನುಗಳ ಸಹಿತ ಗಾಡಿಯಲ್ಲಿ ಕೂರಿಸಿಕೊಂಡು, ಬೆಟ್ಟಳ್ಳಿಯ ಕಮಾನುಗಾಡಿ ಗಂಟೆ ಗಗ್ಗರಗಳ ಸುಸ್ವರಗೈಯುತ್ತಾ, ಎಡೆಬಿಡದೆ ಸುರಿಯುತ್ತಿದ್ದ ಮಳೆಯಲ್ಲಿ ತೀರ್ಥಹಳ್ಳಿಯ ಕಡೆಗೆ ಹೊರಟಿತು. +“ನೀವೆಲ್ಲಾದರೂ ಬರುವುದು ಸ್ವಲ್ಪ ತಡವಾಗಿದ್ದರೆ, ನನ್ನ ಹೆಣಾನೆ ಹಾಕಿಕೊಂಡು ಹೋಗಬೇಕಾಗುತ್ತಿತ್ತೇನೋ?” ಎಂದರು ದಫೇದಾರರು. +ಹಿಂತಿರುಗಿ ಬರುವಾಗ ಹೆಣಾ ಹಾಕಿಕೊಂಡು ಬರುವ ಅಶುಭಯೋಗವಿದ್ದ ಆ ಗಾಡಿ ಹೋಗುವಾಗೇಕೆ ಹೆಣಾ ಹೊತ್ತುಕೊಂಡು ಹೋದೀತು? +ಹಳೆಮನೆಯ ಹೊಲಗೇರಿಯಿಂದ ಕತ್ತಿ ಕೊಡಲಿ ಹಿಡಿದು, ಕಂಬಳಿಕೊಪ್ಪ ಹಾಕಿಕೊಂಡಿದ್ದ ಆಳುಗಳು-ಮಂಜ, ತಿಮ್ಮ, ಸಿದ್ದ, ಕಿಸಿದ್ದ, ಸಣತಿಮ್ಮ-ಸುಡುಗಾಡು ಪಟ್ಟೆಯಲ್ಲಿ ಕಟ್ಟಿಗೆ ಒಟ್ಟಿ ಸೂಡುಮಾಡಲು ಹೊರಟಿದ್ದರು. +ಮಳೆ ಸಣ್ಣಗೆ ಬೀಳುತ್ತಲೆ ಇತ್ತು. +ಬೆಳಗ್ಗೆ ಒಂಬತ್ತು ಗಂಟೆಯ ಸಮಯವಾಗಿದ್ದರೂ ಆಗತಾನೆ ಹೊತ್ತಾರೆಯಾಗಿದ್ದಂತೆ ಮೋಡಗಪ್ಪು ತುಂಬಿ ಚಳಿಗಾಳಿ ಬೀಸುತ್ತಿತ್ತು. +‘ದುರ್ದಿನ’ ಎಂಬ ವರ್ಣನೆಗೆ ಅತ್ಯಂತ ಅರ್ಹ ನಿದರ್ಶನವಾಗಿತ್ತು ಆ ದಿನ. +‘ಒಡೇರ ದಿಬ್ಬ’ದ ಹತ್ತಿರಕ್ಕೆ ಗುಂಪು ಬಂದ ಮಂಜ “ಹಿಂಗಾಗ್ತದೆ ಅಂತಾ ಯಾರಿಗೆ ಗೊತ್ತಿತ್ತು” ಎಂದು ಅಳು ತಡೆದವನಂತೆ ನಿಡುಸುಯ್ಯುತ್ತಾ ಹೇಳಿದನು. +“ನೋಡು ತಿಮ್ಮಣ್ಣಾ, ಅವರು ತಿರುಪತಿಗೆ ಹೊರಡಾಕೆ ಹಿಂದಿನ ದಿನ, ಇದೇ ದಿಬ್ಬದ ಮೇಲೆ ನಿಂತುಕೊಂಡು ನಮ್ಮನ್ನೆಲ್ಲ ಕೆಲಸಕ್ಕೆ ಕರೆದಿದ್ರು! +ಆವಾಗ್ಲೂ ನನ್ನ ಬಿಡಾರ ಇಲ್ಲೆ ಇತ್ತಲ್ಲಾ, ಹಿಂಗೆ ಎದಿರಿಗೆ! +ಬಿಡಾರದ ಒಳಗಿನಿಂದಲೆ ಅವರನ್ನ ನೋಡಿದ್ದೆ. +ದೇವರ್ನೇ ನೋಡಿದ್ಹಾಂಗೇ ಆಗಿತ್ತು! +ನಂಗೂ ಅವರಿಗೂ ಸುಮಾರು ಒಂದೇ ವಯಸ್ಸು. +ಅವರು ಕೆಲಸಕ್ಕೆ ಕರೆದಿದ್ರೋ! +ಇಷ್ಟು ಬ್ಯಾಗ ಅವರ ಸೂಡು ಕಡಿಯಾಕೆ ಹೋಗ್ತೀನಿ ಅಂತಾ….” + ಮಂಜಗೆ ದುಃಖ ಉಕ್ಕಿ ಬಂದು ಮುಂದೆ ಮಾತಾಡದೆ ಕತ್ತಿ ಹಿಡಿದಿದ್ದ ಕೈಯಿಂದಲೆ ಕಣ್ಣೊರಸಿಕೊಂಡನು. +“ಈ ಸಣ್ಣ ಹೆಗ್ಗಡೇರ್ಹಾಗಲ್ಲ, ಅವರು ಒಂದು ಸಾರೀನೂ ಬೈದಿದ್ದು ನಂಗೆ ನೆನಪಿಲ್ಲ. +ಏನು ವೈನಾಗಿ ಮಾತಾಡ್ಸಿದ್ರು. +‘ತಿಮ್ಮಾ, ಹಾಂಗೆ ಮಾಡಬ್ಯಾಡೋ, ಹೀಂಗೆ ಮಾಡೋ’ ಅಂತಾ ಬುದ್ದಿ ಹೇಳಿ ತಿದ್‌ತಿದ್ರೆ ಹೊರ್ತೂ, ಒಂದು ಪೆಟ್ಟು ಹೊಡೀತಿರ್ಲಿಲ್ಲ, ಒಂದು ಕೆಟ್ಟ ಬೈಗುಳ ಬೈತಿರ್ಲಿಲ್ಲ ಅವರ ಬಾಯ್ಲಿ…. +ನಾನೊಂದು ಸರ್ತಿ, ಏನಾತು ಅಂತೀಯಾ? +ನಮ್ಮ ಬಿಡಾರಕ್ಕೆ ಯಾರೋ ನೆಂಟರು ಬಂದಾರೆ ಅಂತಾ, ಬಾಯಿಗೆ ಹಾಕಾಕೆ ಒಂದೆಲ್ಡು ಈಳ್ಯೆದೆಲೆ ತರಾನ ಅಂತಾ, ಮೆಲ್ಲಕೆ ಕದ್ದುಹೋಗಿ, ಅಡಕೆ ಮರಕ್ಕೆ ಒರಕಿ ಒಂದೆಲ್ಡು ಎಲೆ ಕುಯ್ದಿದ್ದೆ. +ಹಾಳ್‌ಬಳ್ಳಿ!ನನ್ನ ಜೊತೇನೆ ಹರಕೊಂಡು ಬಿದ್ದು ಬಿಡಾದೇನು? +ಅಷ್ಟು ಹೊತ್ತಿಗೆ, ಎಲ್ಲಿಂದ್ಲೋ ಏನೋ, ಇಳಿದು ಬಂದ್ಹಾಗೆ ಬಂದೇ ಬಿಟ್ರು ಅವರು! +ಇನ್ಯಾರಾದ್ರೂ ಆಗಿದ್ರೆ ನನ್ನ ಬೆನ್ನು ಮುರಿಯಾಂಗ ಕನಾತಿ ಕೊಡ್ತಿದ್ರು! ಅವರು…. +ತಂಪು ಹೊತ್ತಿನಾಗೆ ನೇನೀಬೇಕು, ಪುಣ್ಯಾತ್ಮರು, ಸತ್ತು ಸ್ವರ್ಗದಾಗೆ ಇದಾರೆ! …. + ಅವರು ಬೈಲೂ ಇಲ್ಲ, ‘ತಿಮ್ಮಾ, ಎಷ್ಟು ಸಾರಿ ಬುದ್ಧಿ ಹೇಳೋದೋ ನಿನಗೆ? +ತ್ವಾಟದಾಗ ಬಾಳೆಕೊನೆ, ಮೆಣಸು, ವೀಳ್ಯದೆಲೆ, ಕದ್ದೀಬಾರ್ದು ಅಂತಾ? …. + ಎಲೆ ಕದ್ದಿದ್ದರ ಜೊತೆಗೆ ಬಳ್ಳೀನೂ ಜಾರಿಸಿಬಿಟ್ಟಿಯಲ್ಲಾ! +ಈ ಕೆಟ್ಟ ಚಾಳಿ ಬಿಟ್ಟುಬಿಡು ಒಳ್ಳೆದಲ್ಲ!’ ಅಂತಾ ಅಂದು, ಅವರೂನೂ ಒಂದು ಕೈಕೊಟ್ಟು, ನನ್ನ ಕೈಲಿ ಬಳ್ಳಿನೆಲ್ಲಾ ಎತ್ತಿ ಕಟ್ಸಿ…. +ನಾ ಕದ್ದು ಕುಯ್ದು ಎಲೇನೂ ನಂಗೇ ಕೊಟ್ಟು ಕಳ್ಸಿದ್ರು ಕಣೋ! …. ” +ತಿಮ್ಮ ಹೇಳುತ್ತಿದ್ದುದನ್ನು ಕೇಳುತ್ತಾ ಸಿದ್ದ ಸಣತಿಮ್ಮನ ಕಡೆ ನೋಡಿ ನಕ್ಕನು. +ತಿಮ್ಮನ ಆ ಕೆಟ್ಟಚಾಳಿಗೆ ಇನ್ನೂ ನಿವೃತ್ತಿಯ ವಯಸ್ಸಾಗಿರಲಿಲ್ಲ ಎಂಬುದು ಅವರಿಬ್ಬರಿಗೂ ಚೆನ್ನಾಗಿ ಗೊತ್ತಿತ್ತು. +“ರಾತ್ರೇಲಿ ‘ಮನೆ’ಯಿಂದ ಕೋವಿ ಈಡು ಕೇಳಿಸಿದಾಗ ನಂಗೆ ಎದೆ ಹಾರಿಬಿಟ್ಟಿತ್ತು, ದೊಡ್ಡ ಹೆಗ್ಗಡೇರೆ ಹೋದ್ರೋ ಏನೋ ಅಂತಾ! +ನಮ್ಮ ಹೆಗ್ಗಡೇರು ದೂಕಿ ಬೀಳ್ಸಿ ಅವರನ್ನೂ ಹಾಸಿಗೆ ಹಿಡ್ಸಿಬಿಟ್ಟಿದ್ದಾರಲ್ಲಾ!” ಎಂದನು ಕರಿಸಿದ್ದ. +ಯಾರಾದರೂ ತೀರಿಕೊಂಡಾಗ ಆ ಸುದ್ದಿಯನ್ನು ಹತ್ತಿರದ ಹಳ್ಳಿಗಳಿಗೆ ತಿಳಿಸುವ ಒಂದು ವಿಧಾನವಾಗಿತ್ತು, ಹಾಗೆ ಕೋವಿ ಹಾರಿಸುವ ಪದ್ಧತಿ. +“ಇನ್ನೇನು ಬಿಡು, ನಿರುಂಬಳ ಆಯ್ತಲ್ಲಾ ಇವರಿಗೆ! +ಅಪ್ಪಯ್ಯನ ಹಾಸಿಗೆ ಹಿಡ್ಸಿದ್ರು; + ಅಣ್ಣಯ್ಯನ್ನ – ತಿರುಪತಿಗೆ  ಕಳಿಸಿದೋರನ್ನ, – ಅತ್ತ ಮಖಾನೇ ಕಳಿಸಿದಂಗಾಯ್ತು! +ಅವರು ಎಲ್ಲಿ ಮತ್ತೇ ಮನಿಗೆ ಬಂದು ಬಿಡ್ತಾರೋ ಅಂತಾ ಏನೆನೆಲ್ಲ ಮಾಡಿದ್ರೂ? +ಅಂವ ಅಣ್ಣಯ್ಯನೇ ಅಲ್ಲ; +ಯಾವುನೋ ಗೋಸಾಯಿನ ಮನಿಗೆ ಕರಕೊಂಡು ಬರಾಕೆ ಮಾಡ್ತಿದಾರೆ. +ಯಾವನಾದ್ರೇನಂತೆ?ನಮ್ಮತ್ತಿಗೆಮ್ಮಗೆ ಒಬ್ಬ ಗಂಡ ಸಿಕ್ಕಿದ್ರೆ ಸಾಕಾಗಿದೆ? +ಅಂತಾ ಏನೆನಲ್ಲ ಹೇಳಾಕೆ ಸುರು ಮಾಡಿದ್ರು, ಮಾರಾಯರು ನಮ್ಮ ತಿಮ್ಮಪ್ಪಯ್ಯ” ಕರಿಸಿದ್ದ ಮೂದಲಿಸುವ ದನಿಯಿಂದ ತನ್ನ ಟೀಕೆಯನ್ನು ಕೊನೆಗಾನಿಸಲು, ದೊಡ್ಡಣ್ಣ ಹೆಗ್ಗಡೆಯವರ ಶವವನ್ನು ಬೆಟ್ಟಳ್ಳಿ ಗಾಡಿಯ ಮೇಲೆ ತೀರ್ಥಹಳ್ಳಿಯಿಂದ ತರುತ್ತಿದ್ದಾರೆ. +ಎಂಬ ಸುದ್ದಿ ಕಿವಿಗೆ ಬಿದ್ದಾಗಿನಿಂದಲೂ, ಆ ಒಡೆಯನನ್ನು ಚಿಕ್ಕಂದಿನಿಂದಲೂ ಮೆಚ್ಚಿಕೊಂಡು ಒಡನಾಡಿಯಂತೆ ಬೆಳೆದಿದ್ದು, ಈಗ ಆಪ್ತಬಂಧುವನ್ನು ಕಳೆದುಕೊಂಡಂತೆ ದುಃಖಿಸುತ್ತಿದ್ದ ಮಂಜನು ತನ್ನ ಕ್ರೋಧವನ್ನು ತಡೆಯಲಾರದೆ, ತಿಮ್ಮಪ್ಪ ಹೆಗ್ಗಡೆಯ ನೀಚತನವನ್ನು ಮುಲಾಜಿಲ್ಲದೆ ಬಯಲಿಗೆಳೆಯತೊಡಗಿದನು. +“ಯಾರಿಗೇನೂ ಗೊತ್ತಿಲ್ಲೇನು ಇವರ ಹಣೆಬರಾ? +ಇವರ ಕುಲಗೆಟ್ಟ ಅನಾಚಾರನ ಯಾರ ಹತ್ರ ಮುಚ್ಚಿಡ್ತಾರಂತೆ? +ಅವರು ಈಗಂತೂ ಸಣುಬಿನ ನಾಯಿ, ಹಲುಬಿನ ಎತ್ತಿಗಿಂತ ಅತ್ತತ್ತ ಆಗಿಬಿಟ್ಟಾರೆ! +ಹಳೆಪೈಕದೋರು?ಹೊಲೆರೋ?ಸೆಟ್ಟರೋ?ಹಸಲರೋ?ಬಿಲ್ಲರೋ?ಕಡೀಗೆ ಕಿಲಸ್ತರು ಸಾಬರೋ? +ಯಾರಾದರೂ ಸೈ ಹೆಣ್‌ಜಾತಿ ಆಗಿಬಿಟ್ರೆ  ಆತು. +ಮನೆಕೆಲಸಕ್ಕಿರೋ ಆ ಹಳೆ ಪೈಕದ ಹೂವಿ, ಹಡಬೆಹಾದರಗಿತ್ತಿ, ಅದನ್ನ ಪೂಜಿಸಿ ಈಗ ನಮ್ಮ ಕೇರಿಗೆ ಕೈ ಹಾಕ್ಯಾರೆ!” +ಮಂಜನ ಆಪಾದನೆಗೆ ಬೆಚ್ಚಿಬಿದ್ದು ಸಿದ್ದ ಕರಿಸಿದ್ದ ಸಣತಿಮ್ಮ ಮೂವರು ಒಟ್ಟಿಗೆ ಕೂಗಿದರು “ಹೌದೇನೋ? +ಸುಳ್ಳೋ ಬದ್ದೋ?” +“ಸುಳ್ಳು ಹೇಳದ್ರೆ ನನ್ನ ನಾಲಿಗೆ ಬಿದ್ದು ಹೋಗ್ಲಿ!” ಎಂದು ಆಣೆ ಇಟ್ಟುಕೊಳ್ಳುತ್ತಾ ಮಂಜ ಮತ್ತೂ ಬಿರುಸಿನಿಂದ ಮುಂದುವರಿದನು. + “ದೀವರನ್ನ ಯಾರಾದರೂ ಗೌಡರ ಮನೆಗೆ ಸೇರಸ್ತಾರೇನೋ? +ಈ ತಿಮ್ಮಪ್ಪಹೆಗ್ಗಡೇರು ಆ ದೀವರನ್ನ ಹೂವಿನ, ಎತ್ತಿಕಟ್ಟಿದ್ರಿಂದಲೇ ಅಲ್ಲೇನೂ, ಅವಳು ಆವತ್ತು, ಮಂಜಮ್ಮೊರ, ಕೋಣೂರು ಅಮ್ಮೊರ ಕಣ್ಣು ತಪ್ಪಿಸಿ, ಅಡಿಗೆ ಮನೆಯೊಳಗೆ ಹೋಗಿ ಸಿಕ್ಕಿದ ಮೇಲಿದ್ದ ಉಪ್ಪಿನಕುಕ್ಕೆಯಿಂದ ಮುಷ್ಟಿಗಟ್ಲೆ ಉಪ್ಪು ತೆಗೆದು ಪಲ್ಯಕ್ಕೂ ಸಾರಿಗೂ ಹಾಕಿ ಬಂದಿದ್ದು? +ಪಾಪ!ಅವತ್ತೇ ಕೋಣುರು ಅಮ್ಮ ‘ನಾನೇ ಅಡಿಗೆ ಮಾಡ್ತೀನಿ’ ಅಂತಾ ಮಾಡಿದ್ರಂತೆ. +ಅವರನ್ನ ‘ಹುಚ್ಚು ಹೆಗ್ಗಡ್ತೀ’ ಅನ್ನಿಸಿ, ಮನೆಯಿಂದ ಹೊರಗೆ ಹಾಕಬೇಕು ಅಂತಲೇ, ಆ ಹಳೇಪೈಕದೋಳ ಕೈಲಿ ಉಪ್ಪು ಹಾಕಿಸಿ, ಆಮ್ಯಾಲೆ ಉಣ್ಣಕ್ಕೆ ಕೂತಾಗ ರಂಪ ಮಾಡಿ ಎದ್ದು ಹೋಗಿ, ಕಡೀಗೆ ರಂಗಮ್ಮ ಹೆಗ್ಗಡ್ತೇರನ್ನೂ ಗುದ್ದಿ, ಹೊಡೆದು, ಅವರ್ನ ಕೋಣೆ ಒಳಗೆ ಕೂಡಿ, ಬಾಗಿಲು ಹಾಕಿ, ಬೀಗ ಹಾಕಿದ್ದು!” +“ನಮ್ಮ ಕೇರೀಗೂ ಕೈ ಹಾಕ್ಯಾರೆ ಅಂದ್ಯಲ್ಲೋ?” +“ನೋಡು, ಬಾಯಿ ಬಿಟ್ರೆ ಬಣ್ಣಗೇಡು. +ನಮ್ಮ ಬುಡಕ್ಕೇ ಬರ್ತದೆ! …. ” +“ಯಾರು?ನಮ್ಮ ಕುಳವಾಡಿ ಸಣ್ಣಯ್ಯನ ಮಗಳು ಪುಟ್ಟಿನೇನೊ?” +“ಮಾಡಿದೋರ ಪಾಪ ಆಡಿದೋರ ಬಾಯಲ್ಲಂತೆ. +ನಮಗ್ಯಾಕೆ ಆ ಇಚಾರ?” ಮಂಜ ಆ ವಿಷಯವನ್ನು ಅಲ್ಲಿಗೇ ಮುಕ್ತಾಯಗೊಳಿಸುವಂತೆ ನುಡಿದು, ಎದುರಿಗೇ ಕಾನಿಸುವಷ್ಟು ಸಮೀಪಕ್ಕೆ ಬಂದಿದ್ದ ಸುಡುಗಾಡು ಪಟ್ಟೆಯ ಕಡೆ ಕಣ್ಣಟ್ಟಿ “ಚೆನ್ನಾಗಿ ಒಣಗಿದ ಸೌದೇನೆ ಕಡೀಬೇಕ್ರೊ….” ಎಂದು ಮುಗಿಲುಕಡೆ ನೋಡಿ ಹೇಳಿಕೊಂಡನು “ಮಳೆ ಏನೋ ಹೊಳವಾಗೋ ಹಾಂಗೆ ಕಾಣ್ತದೆ…. +ಇನ್ ಸತ್ತೋರ ಪುಣ್ಯ ಹ್ಯಾಂಗಿದೆಯೋ ನೋಡಬೇಕು? +ಒಂದೀಟು ಬಿಸಿಲು ಕಾದಿದ್ರೆ, ಮಳೇಲಿ ನೆನ್ದ ಕಟ್ಟಿಗೆ ಆರಿಯಾದ್ರೂ ಆರ್ತಿತ್ತೇನೋ.” +“ಒಂದು ಸೊಲ್ಪಾನಾದ್ರೂ ಒಣಗಿದ ಸೌದೇನ ತರಬೇಕಾಗ್ತದೆ ಮನೇ ಸೌದೆ ಕೊಟ್ಟಿಗೆಯಿಂದ. +ಇಲ್ದಿದ್ರೆ ಬೆಂಕಿ ಹೊತ್ತಾದಾದ್ರೂ ಹ್ಯಾಂಗೆ?” ಎಂದ ಸಿದ್ದ, ಕಾಡಿನ ನಡುವೆಯಿಂದ ಒಂದು ಶಕುನದ ಹಕ್ಕಿ ವಿಕಾರವಾಗಿ ದನಿಗೈಯುತ್ತಿರುವುದನ್ನು ಆಲಿಸಿ, ತನಗೆ ತಾನೆಂಬಂತೆ ಅಂದುಕೊಂಡನು “ಹಾಳು ಹಕ್ಕಿ!ಮತ್ತೇನು ಕೇಡು ನುಡೀತಾ ಅದೆಯೋ ಮೀಮೀಮೀಮೀ ಅಂತಾ?” +‘ಸುಡುಗಾಡು ಪಟ್ಟೆ’ ಗುಡ್ಡದ ಓರೆಮಗ್ಗುಲಲ್ಲಿದ್ದು, ಇಳಿಜಾರು ಒಂದೆಡೆ ತುಸು ಸಮತಟ್ಟಾಗಿದ್ದ ಸ್ಥಾನವಾಗಿತ್ತು. +ಸುತ್ತಮುತ್ತಣ ಹಕ್ಕಲು ಬಯಲಿಗೂ ಅದಕ್ಕೂ ಯಾವ ವ್ಯತ್ಯಾಸವೂ ಇರಲಿಲ್ಲ. +ಎಲ್ಲ ಕಡೆಯೂ ಇರುವಂತೆಯೆ ಅಲ್ಲಲ್ಲಿ ನೇರಿಳೆ, ಹಲಸು, ಹುಣಿಸೆ, ಹೊನ್ನೆ, ಆಲ, ಮತ್ತಿ, ನೆಲ್ಲಿ, ವಾಟೆ ಮೊದಲಾದ ಮರಗಳಿದ್ದು, ನಡುನಡುವೆ ಅಲ್ಲಲ್ಲಿ ಸೀಗೆ, ಲಕ್ಕಿ, ಕೆಂಜಿಗೆ, ಹುಳಿಚೊಪ್ಪು, ಇಲಾತ್ಸೀಂಗೆ, ಅರಮರಲು, ಬೆಮ್ಮಾರಲು, ಕರ್ಜಿ ಇತ್ಯಾದಿ ಪೊದೆಗಳು ಬೆಳೆದುಕೊಂಡಿದ್ದುವು. +ಅದು ಶ್ಮಶಾನ ಎಂಬುದಕ್ಕೆ ಯಾವೊಂದು ವಿಶೇಷವಾದ ಚಿಹ್ನೆಯೂ ಕಾಣುತ್ತಿರಲಿಲ್ಲ. +ಇತರ ಕಡೆಗಳಂತೆ ಅಲ್ಲಿಯೂ ಹುಲ್ಲು ಹಚ್ಚ ಹಸುರಾಗಿ ಹಬ್ಬಿ ನಯನಮನೋಹರವಾಗಿತ್ತು. +ಅದರಲ್ಲಿಯೂ ಈಗ ಮಳೆಗಾಲವಾದ್ದರಿಂದ ಆ ಹಸುರು ಚ್ಯತಿಯಿಲ್ಲದೆ ಬೆಳೆದು ಹುಲುಸಾಗಿದ್ದು, ಜೀವನವನ್ನಲ್ಲದೆ ಸಾವಿನ ಛಾಯೆಯನ್ನೂ ಸುಳಿಯಗೊಡುತ್ತಿರಲಿಲ್ಲ. +ಅದು ಹಳೆಮನೆ ಮನೆತನದ ಸ್ವಂತ ಶ್ಮಶಾನವಾಗಿತ್ತು. +ಹೊಲೆಯರು, ಹಳೆಪೈಕದವರು, ಗಟ್ಟದತಗ್ಗಿನವರು ಯಾರೂ ಅದನ್ನು ಬಳಸುತ್ತಿರಲಿಲ್ಲ. +ಅದು ಹೆಗ್ಗಡೆ ಮನೆತನದ ಹೆಣಗಳಿಗೆ ಮೀಸಲಾಗಿತ್ತು. +ಆದ್ದರಿಂದ ಅದಕ್ಕೆ ಪದೇಪದೇ ತನ್ನ ಕರ್ತವ್ಯ ನಿರ್ವಹಣೆ ಮಾಡುವ ಅವಕಾಶ ಒದಗುತ್ತಿರಲಿಲ್ಲ. +ವರ್ಷಕ್ಕೋ, ಎರಡು ವರ್ಷಕ್ಕೋ, ಕಡೆಗೆ ಮೂರು ನಾಲ್ಕು ಐದು ಆರು ವರ್ಷಗಳಿಗೊಮ್ಮೆಯೋ ಅದಕ್ಕೆ ಸುಡುಗಾಡುತನ ಅಥವಾ ಶ್ಮಶಾನತ್ವ ಒದಗುತ್ತಿತ್ತು. +ಹುಡುಗರು ಮಕ್ಕಳು ಸತ್ತರೆ ಹೂಳಿಬಿಡುತ್ತಿದ್ದರು. +ದೊಡ್ಡವರು ಸತ್ತರೆ ಮಾತ್ರ ಸುಡುತ್ತಿದ್ದರು. +ಈಗಲೂ ಅಲ್ಲಿ ಹೆಣ ಸುಟ್ಟಿದ್ದರ ಯಾವ ಚಿಹ್ನೆಯೂ ಗೋಚಾರವಾಗದಿದ್ದರೂ ಹುಡುಗರು ಮಕ್ಕಳನ್ನು ಹೂಳಿದ್ದರ ಗುರುತು ಸಣ್ಣ ಸಣ್ಣ ಹಸುರು ದಿಣ್ಣೆಗಳಾಗಿ, ಹುಡುಕಿನೋಡಿದರೆ, ಕಾನಿಸುವಂತಿತ್ತು. +ಇವತ್ತಿಗೆ ಹಿಂದೆ  ಆ ಸ್ಮಶಾನ ಸೂಡಿನ ಬೆಂಕಿ ಕಂಡಿದ್ದು ಎಂದರೆ, ಸುಮಾರು ಹತ್ತು ಹನ್ನೆರಡು ವರ್ಷಗಳಾಚೆ ಸುಬ್ಬಣ್ಣಹೆಗ್ಗಡೆಯವರ ಹೆಂಡತಿ, ಇವತ್ತು ಅಗ್ನಿ ಸಂಸ್ಕಾರಕ್ಕೆ ಒಳಗಾಗಲಿರುವ ದೊಡ್ಡಣ್ಣಹೆಗ್ಗಡೆಯವರ ತಾಯಿ ತೀರಿಕೊಂಡಿದ್ದಾಗಲೆ! +ಅಲ್ಲಿಂದಿತ್ತ ಹೆರಿಗೆ ಯಾದೊಡನೆಯೆ ಸತ್ತಿದ್ದ ಹೆಂಚಿನ ಮನೆ ಶಂಕರಪ್ಪ ಹೆಗ್ಗಡೆಯವರ ಒಂದೆರಡು ಬಾಳದೆ ಹೋದ ಸಂತಾನಗಳನ್ನು ಬಿಟ್ಟರೆ ತನ್ನ ವೃತ್ತಿಯೆ ಮರೆತುಹೋಗಿ ನಿವೃತ್ತಿಯಾದಂತೆ ತೋರತೊಡಗಿತ್ತು! +ಆದರೆ ಈ ಸುಡುಗಾಡಿಗೆ ತನ್ನ ಸ್ವಧರ್ಮ ಸಂಫೂರ್ಣವಾಗಿ ಮರೆತುಹೋಗದಂತೆ ನೋಡಿಕೊಳ್ಳುತ್ತಿದ್ದುವು, ಇದಕ್ಕೆ ತುಸು ಸಮೀಪದಲ್ಲಿಯೆ ಇದ್ದ ಇತರ ಸುಡುಗಾಡು ಪಟ್ಟೆಗಳು. ಹೊಲೆಯರದು, ಹಳೆಪೈಕರದು, ಸೆಟ್ಟರದು ಮತ್ತು ಇತರ ಗಟ್ಟದ ತಗ್ಗಿನ ಕೀಳುಜಾತಿಯವರದ್ದು. +ಹೊರಗಣಿಂದ ಬಂದು ನೋಡಿದರೆ ಆ ಸ್ಥಳ ಒಂದು ಸುಮನೋಹರವಾದ ಗಿರಿವನಭಾಗಿಯಾಗಿ, ಆಹ್ಲಾದಕರವಾಗಿ, ಪ್ರಶಾಂತವಾಗಿ, ಪಕ್ಷಿಕೂಜನದಿಂದ ಸುಮಧುರ ಬಂಧುರವಾಗಿ ಕಾಣಿಸುವಂತಿದ್ದರೂ ಅಲ್ಲಿಯ ನಿವಾಸಿಗಳಿಗೆ ಅದು ‘ಮಸಣ’ವಾಗಿಯೆ ಇತ್ತು, ದುಃಸ್ಮೃತಿ ನಿಧಿಯಾಗಿ. +ರಾತ್ರಿಯ ಹೊತ್ತು ಅಮವಾಸ್ಯೆಯಲ್ಲಿ, ಯಾರೂ ಆ ದಾರಿಯಲ್ಲಿ ಓಡಾಡಲು ಧೈರ್ಯಮಾಡುತ್ತಿರಲಿಲ್ಲ. +ಹೊಲೆಯರ ಸಿದ್ದನನ್ನು ಕೇಳಿದರೆ ಹೇಳುತ್ತಾನೆ. +ಅವನಿಗೆ ಎಷ್ಟು ಸಲ ಕಾಣಿಸಿಕೊಂಡಿಲ್ಲ ಮಸಣಿ? +ಹಳೆಪೈಕದ ಹೂವಿಯನ್ನು ಕೇಳಿದರೆ ಹೇಳುತ್ತಾಳೆ. +ಯಾವುದೋ ವಿಕಾರರೂಪು ಹಿಂದಿನಿಂದ ಬಂದು ಸೆರಗು ಹಿಡಿದು ಎಳೆದ ಹಾಗೆ ಆಗಿಲ್ಲ? +ಮಟಮಟ ಬೇಸಗೆಯ ಮಧ್ಯಾಹ್ನದಲ್ಲಂತೂ ಅಲ್ಲಿ ರಣ ತಿರುಗಾಡುವುದು ಎಲ್ಲರಿಗೂ ಗೊತ್ತಿದ್ದ ವಿಷಯವೆ ಆಗಿತ್ತು! +ಅದನ್ನು ನಂಬದ ಕಿಲಿಸ್ತಾನರ ಕಿಲಾಮತ್ತು ಕೆಲವು ವರ್ಷಗಳ ಹಿಂದೆ ಅದೇ ಸ್ಥಳದಲ್ಲಿಯೆ, ಹಗಲು ಹನ್ನೆರಡು ಗಂಟೆಯಲ್ಲಿ, ರಣ ಹೊಡೆದು ರಕ್ತ ಕಾರಿಕೊಂಡು ಸತ್ತುಹೋಗಿರಲಿಲ್ಲವೆ! +ಆ ಸುಡುಗಾಡಿನ ನಿಸರ್ಗಸುಂದರ ಪ್ರಶಾಂತ ಮುಖಕ್ಕೆ ಮರುಳಾಗಿ ಮೋಸ ಹೋಗುತ್ತಾರೆಂದು ಅದರ ಕರ್ಕಶ ಕರುಳನ್ನರಿತ ಊರು ಮನೆಯವರು? +ಇಂತಹ ವಿಚಾರಗಳನ್ನೆ ಕುರಿತು ಸಂವಾದ ಮಾಡುತ್ತಾ ಹಳೆ ಮನೆಯ ಹೊಲೆಯರು ಕಟ್ಟಿಗೆ ಕಡಿದು ಒಟ್ಟಿ ಸೂಡುಮಾಡುತ್ತಿದ್ದರು. +ಮೊದ ಮೊದಲು ಹೂಳವಾಗಿದ್ದ ಮಳೆ ಬರುಬರುತ್ತಾ ಬಿಸಿಲಿಗೆ ತಾವು ಬಿಡುವಂತೆ ಮೋಡಗಳನ್ನು ಸರಿಯತೊಡಗಿತು. +ಆಗೊಮ್ಮೆ ಈಗೊಮ್ಮೆ ಹೂಬಿಸಿಲು ಆಡ ತೊಡಗಿ, ಕ್ರಮೇಣ ಆಕಾಶ ನಿರ್ಮಲವೂ ಆಯಿತು. +ಬಿಸಿಲು ಚೆನ್ನಾಗಿಯೇ ಕಾಯತೊಡಗಿತು. +“ಅವರ ಪುಣ್ಯ ಕಣೋ!” ಮಂಜನೆಂದಿದ್ದನು. +ಅಷ್ಟರಲ್ಲಿ ಕಾಡು ಗುಡ್ಡಗಳನ್ನೆಲ್ಲ ಮೊಳಗಿಸುತ್ತಾ ಗುಢುಂ ಗುಢುಂ ಗುಢುಂ ಎಂದು ಒಂದಾದ ಮೇಲೊಂದರಂತೆ ಕದಿನಿ ಹಾರಿಸಿದ ಸದ್ದು ಪರ್ವತ ಕಂದಗಳಿಂದ ಭೀಷಣವಾಗಿ ಅನುರಣಿತವಾಯಿತು. +“ತೀರ್ಥಹಳ್ಳಿಯಿಂದ ಗಾಡಿ ಬಂತು ಅಂತಾ ಕಾಣ್ತದೆ!” ಎಂದನು ತಿಮ್ಮ. +ಅವನ ಮುಖಮುದ್ರೆ ಇನ್ನೇನು ಸ್ವಲ್ಪ ಹೊತ್ತಿನಲ್ಲಿಯೆ ಎದುರುಗೊಳ್ಳಬೇಕಾಗಿರುವ ಸಂಕಟಕರ ದೃಶ್ಯವನ್ನು ನೆನೆದು ಹೆದರಿಕೊಂಡಂತ್ತಿತ್ತು. +“ಗಾಡಿ ಮನೆ ಹತ್ರಕ್ಕೆ ಎಲ್ಲಿ ಬತ್ತದೆ? +ಇನ್ನೂ ದಾರೀನೆ ಮಾಡಿಲ್ಲ? +ತ್ವಾಟದಾಚೆ ಹಕ್ಕಲಾಗೇ ನಿಲ್ಲಿಸಿ, ಶವ ಹೊತ್ತುಕೊಂಡು ಬತ್ತಾರೆ” ಎಂದನು ಸಣತಿಮ್ಮ. +ಅವನ ಮುಖ ಬಿಳಿಚಿಕೊಳ್ಳತೊಡಗಿತ್ತು; + ಕಣ್ಣೂ ಹನಿ ತುಂಬಿದಂತಿತ್ತು. +“ಅವರು ಮನೇಬಿಟ್ಟು ತಿರುಪತಿಗೆ ಹೋದಾಗಿನಿಂದ ಎಲ್ಲ ಹಾಳಾಗ್ತಾ ಅದೆ. +ಮನೆಪಾಲೂ ಆಗಿಹೋಯ್ತು! +ಹಾಸಿಗೆ ಹಿಡಿದ ದೊಡ್ಡ ಹೆಗ್ಡೇರು ಇನ್ನೇನು ಮ್ಯಾಲೆ ಏಳೂ ಹಾಂಗೆ ಕಾಣಾದಿಲ್ಲ. +ಹ್ಞೂ! … ನಮ್ಮ ತಿಮ್ಮಪ್ಪಹೆಗ್ಡೇರ ದರ್ಬಾರಿನಾಗೆ ಇನ್ನು ಏನೇನಾಗ್ತದ್ಯೋ ಭಗವಂತಗೇ ಗೊತ್ತು. +ಅವರ ಹತ್ರ ಇನ್ನು ಆ ರಂಗಮ್ಮ ಹೆಗ್ಗಡ್ತೇರು ಹ್ಯಾಂಗೆ ಏಗ್ತಾರೋ ಏನೋ ನಾ ಬ್ಯಾರೆ ಕಾಣೆ! +ಮೊದಲೇ ಅವರ್ನ ‘ಹುಚ್ಚು ಹೆಗ್ಗಡ್ತಿ’ ಮಾಡಿ ಕೂರಿಸ್ಯಾರೆ! +ಅವರ ಮಗ ಧರ್ಮಯ್ಯ ಇನ್ನೂ ಏನೂ ಅರಿಯದ ಹುಡುಗ. +ಅವರು ಇರ್ಲಿ ನಾವೂ ಇನ್ನು ಮ್ಯಾಲೆ ಇವರ ಕೈಲಿ ಹ್ಯಾಂಗೆ ಕಾಲಾ ಹಾಕಾದೋ ಏನೋ? …. ” + ಮಂಜ ತಟಕ್ಕನೆ ಮಾತು ನಿಲ್ಲಿಸಿ ದೂರ ನೋಡಿ ಅದ್ಯಾರೋ ಓಡಿ ಬರ್ತಾ ಇದಾರಲ್ಲಾ!” ಎಂದು ಚೆನ್ನಾಗಿ ನೋಡುತ್ತಾ “ನಮ್ಮ ಹೆಂಚಿನ ಮನೆ ಹೆಗ್ಡೇರು ಅಲ್ಲೇನೋ? …. + ಹೌದು ಕಣೋ…ಅವ್ರೆ” ಎನ್ನುತ್ತಾ ಅವರನ್ನು ಎದುರುಗೊಳ್ಳಲು ಬೇಗ ಬೇಗ ಓಡಿದನು. +ಶಂಕರ ಹೆಗ್ಗಡೆ “ಅವರೆಲ್ಲ ಬರ್ತಿದಾರ್ರೊ…. +ನೀವು ಮುಟ್ಟಾಳ್ಗಳೆಲ್ಲ, ದೂರ ಸರಿದು, ಮರೇಲಿ ನಿಂತ್ಕೊಳ್ಳಿ” ಎಂದರು. +ಅಪ್ಪಣೆಯಂತೆ ಹೊಲೆಯರೂ ಮತ್ತು ಗತಿಸಿದ ಒಡೆಯರಿಗೆ ಅಂತ್ಯ ಗೌರವ ಸಲ್ಲಿಸಲು ಆಗಲೆ ನೆರೆದಿದ್ದ ಐತ, ಪಿಜಿಣ, ತುಕ್ರ, ಕುದುಕ ಮೊದಲಾದ ಗಟ್ಟದ ತಗ್ಗಿನವರೂ ಬೇಗ ಬೇಗನೆ ದಾರಿಬಿಟ್ಟು ದೂರಸರಿದು ಪೊದೆಗಳನ್ನಾಶ್ರಯಿಸಿ ಮರೆಯಲ್ಲಿ ನಿಂತರು, ದೂರದಲ್ಲಿ ಕಾಣಿಸಿಕೊಂಡು ಶ್ಮಶಾನವನ್ನು ಸಮೀಪಿಸುತ್ತಿದ್ದ ಹೆಂಗಸರ ಗುಂಪನ್ನು ಭಯವಿಹ್ವಲನಾದ ನಿರ್ನಿಮೇಷ ನೇತ್ರಗಳಿಂದ ನೋಡುತ್ತಾ! +ಏಳೆಂಟು ವರುಷಗಳಿಂದ ಹಿಂದೆ ತಿರುಪತಿಗೆ ಹೋಗಿ ಹಿಂದಿರುಗದಿದ್ದ ದೊಡ್ಡಣ್ಣಹೆಗ್ಗಡೆಯವರ ಕಳೇಬರವನ್ನು ತೀರ್ಥಹಳ್ಳಿಯಿಂದ ಹಳೆಮನೆಗೆ ದಹನ ಸಂಸ್ಕಾರಾರ್ಥವಾಗಿ ಬೆಟ್ಟಳ್ಳಿಯ ಗಾಡಿಯಲ್ಲಿ ತರುತ್ತಿದ್ದಾರೆ ಎಂಬ ಸಿಡಿಲಸುದ್ದಿ ಮಿಂಚಿನ ವೇಗದಿಂದ ಎಲ್ಲ ನೆಂಟರ ಮನೆಗಳಿಗೂ ಮುಟ್ಟಿ, ಸಿಂಬಾವಿ ಬಾವಿಕೊಪ್ಪ ಹೊಸಮನೆ ಬೆಟ್ಟಳ್ಳಿ ಹೂವಳ್ಳಿ ಕೋಣೂರು ಆದಿಯಾಗಿ ಅನೇಕ ಕಡೆಗಳಿಂದ ಹತ್ತಿರದ ಸಂಬಂಧಿಗಳು ಹಳೆಮನೆಯಲ್ಲಿ ನೆರೆಯತೊಡಗಿದ್ದರು. +ಅದರಲ್ಲಿಯೂ ತನ್ನ ಗಂಡನು ತಿರುಪತಿಗೆ ಹೋಗಿ ಹಿಂತಿರುಗಿ ಬಂದವರೊಡನೆ ಬರಲಿಲ್ಲವೆಂದೂ, ಆತನು ತಿರುಪತಿಯೆ ವಾಂತಿಭೇದಿಯಾಗಿ ತೀರಿಕೊಂಡನೆಂದೂ, ಗೋಸಾಯಿಗಳು ಮದ್ದು ಕೊಟ್ಟು ರಕ್ಷಿಸಿ ತಮ್ಮೊಡನೆ ಕರೆದುಕೊಂಡು ಹೋಗಿದ್ದಾರೆಂದೂ, ಇಂದೊ ನಾಳೆಯೊ ಮನೆಯ ನೆನಪಾಗಿ ಹಿಂತಿರುಗಬಹುದೆಂದು ಏಳೆಂಟು ವರ್ಷಗಳಿಂದ ಆಸೆ ಭಯ ಶಂಕೆ ಹತಾಶೆ ನಿಂದೆ ದ್ವೇಷ ಕಷ್ಟ ದೈನ್ಯ ದಾಸ್ಯಾದಿಗಳಲ್ಲಿ ಸಿಕ್ಕಿ, ನಾನಾ ವಿಧವಾದ  ವಾರ್ತೆಗಳ ಜಂಝಾಟದಲ್ಲಿ ತೊಳಲಿ ಬಳಲಿ ಬೆಂದು ಹೋಗಿದ್ದ ರಂಗಮ್ಮನನ್ನು ‘ಮಾತಾಡಿಸಿಕೊಂಡು’ ಹೋಗಲೆಂದು, ಕೆಲರು ಸಂಪ್ರದಾಯಕ್ಕೂ ಮತ್ತೆ ಕೆಲರು ವಿಶ್ವಾಸಕ್ಕೂ ಬದ್ಧರಾಗಿ, ಅನೇಕ ಹೆಗ್ಗಡಿತಮ್ಮರುಗಳೂ ಬಂದು ಸೇರಿದ್ದರು. +ಶೋಕದ ನಾನಾ ಭಂಗಿಗಳಲ್ಲಿ ಗುಂಪುಕಟ್ಟಿ ಬರುತ್ತಿದ್ದ ಹೆಂಗಸರ ನಡುವೆ, ಎರಡು ಮೂರು ದಿನ ಬಿಚ್ಚದಿದ್ದು ಮಾಸಿದ ಕೊಳಕು ಸೀರೆಯುಟ್ಟು, ಅವರ್ಣನೀಯವಾದ ದುಃಖಾತೀಶಯದಿಂದ ಬಿಕ್ಕಿಬಿಕ್ಕಿ ಅಳುತ್ತಾ, ಎರಡೇ ದಿನಗಳಲ್ಲಿ ಮುದುಕಿಯಾಗಿ ಬಿಟ್ಟಳೆಂಬಂತೆ ಸೊಂಟ ಬಾಗಿ, ತಲೆತಗ್ಗಿಸಿ, ತನ್ನ ವೃದ್ಧಮಾತೆ ದಾನಮ್ಮ ಹೆಗ್ಗಡಿತಿಯವರ- ಕೋಣೂರಿನ ಕಾಗಿನಹಳ್ಳಿ ಅಮ್ಮ-ಮತ್ತು ಸಿಂಬಾವಿ ಭರಮೈಹೆಗ್ಗಡೆ ಯವರ ಹೆಂಡತಿ ಜಟ್ಟಮ್ಮ ಹೆಗ್ಗಡಿತಿಯವರ ನಡುವೆ, ಅವರ ಕೈಯಾಪಿನಲ್ಲಿ, ಸಂಕಟವೆ ಸಾಕಾರಗೊಂಡಂತೆ, ತತ್ತರಿಸುತ್ತಾ ಬರುತ್ತಿದ್ದ ರಂಗಮ್ಮ ಹೆಗ್ಗಡಿತಿಯವರನ್ನು ನೋಡಿ ನೆರೆದಿದ್ದ ಹೆಣ್ಣುಗಂಡು ಆಳುಗಳೆಲ್ಲ ಬಿಕ್ಕಿಬಿಕ್ಕಿ ಅಳತೊಡಗಿದರು; +ಶೋಕದ ನಾನಾ ರೀತಿಯ ಉದ್ಗಾರಗಳೂ ಹೊಮ್ಮಿ ಸುಡುಗಾಡೆಲ್ಲ ರೋದನಮಯವಾಯಿತು. +ಅಳಲು ಬಡಿದು ಮರವಟ್ಟವನಂತೆ ನಿಂತು ನೋಡುತ್ತಿದ್ದ ಐತನನ್ನು ಯಾರೋ ಹಿಂದಿನಿಂದ ಮುಟ್ಟಿದಂತಾಯಿತು. +ತಿರುಗಿ ನೋಡಿದಾಗ, ಅವನ ಹೆಂಡತಿ ಪೀಂಚಲು ಕಣ್ಣುಸನ್ನೆ ಮಾಡಿ ಕರೆದಳು. +ಇತರ ಗಟ್ಟದ ತಗ್ಗಿನ ಗಂಡಸರ ಗುಂಪಿನಿಂದ ಸ್ವಲ್ಪ ದೂರ ಸರಿದ ಮೇಲೆ ಹೇಳಿದಳು. + “ಧರ್ಮಯ್ಯೋರು, ಪಾಪ!ಅಳ್ತಾ ಇದಾರೆ! +‘ಐತನ್ನ ಕರಕೊಂಡು ಬಾರೇ, ಪೀಂಚಲು!’ ಅಂತಾ ನನ್ನ ಕೂಡೆ ಹೇಳಿಕಳ್ಸಿದ್ರು!” +“ಎಲ್ಲಿ ಇದಾರೆ?” ಎಂದು ಕೇಳಿದ ಐತ, ಸ್ವಲ್ಪ ಅಸಮಾಧಾನದಿಂದಲೆ ಹೆಂಡತಿಯ ಕಡೆ ಎವೆಯಿಕ್ಕದೆ ನೋಡುತ್ತಾ “ಅಂತೂ ಬರಬ್ಯಾಡ ಅಂದ್ರೂ  ಬಂದೇಬಿಟ್ಟೀಯಾ!” ಎಂದು ಬಸರಿಯಾಗಿದ್ದ ತನ್ನ ಹೆಂಡತಿಯ ಚೊಚ್ಚಲು ಹೊಟ್ಟೆಯ ಕಡೆ ಮುನಿದುಕೊಂಡಂತೆ ನೋಡಿದನು. +“ದೊಡ್ಡಮ್ಮೋರೆ ‘ಪೀಂಚಲೂ, ನನ್ನ ಸಂಗಡ ಬಾರೆ’ ಅಂತಾ ಕರೆದಮ್ಯಾಲೆ ಬರದೆ ಇರೋಕೆ ಆಗ್ತದೇನು?ಏನೋ ಅವರೀಗೂ ಕಷ್ಟಕಾಲ!” ಎಂದು ಸಮಾಧಾನ ಹೇಳಿ, ತನ್ನ ಗಂಡನನ್ನು ಮಹಿಳೆಯರ ಗುಂಪಿನ ಬಳಿಯಿದ್ದ ಧರ್ಮು ಇದ್ದಲ್ಲಿಗೆ ಕರೆದುಕೊಂಡಿ ಹೋದಳು. +ಗರ್ಭಿಣಿಯರು ಶ್ಮಶಾನ ಮತ್ತು ಶವಸಂಸ್ಕಾರದಂತಹ ಅಮಂಗಲಗಳಿಂದ ದೂರವಾಗಿರಬೇಕೆಂದೂ, ಇಲ್ಲದಿದ್ದರೆ ಹುಟ್ಟುವ ಶಿಶುವಿನ ಮೇಲೆ ಕೆಟ್ಟ ಪರಿಣಾಮವಾಗುತ್ತದೆಂದೂ ಐತನು ಹಳೆಮನೆಗೆ ಹೋಗಬಾರದೆಂದು ಪೀಂಚಲುಗೆ ಕಟ್ಟಪ್ಪಣೆ ಮಾಡಿ, ಅವಳನ್ನು ಬಿಡಾರದಲ್ಲಿಯೆ ಇರಲು ಹೇಳಿ, ತಾನು ಇತರ ಗಂಡಾಳುಗಳೊಡನೆ ಕೋಣೂರಿನಿಂದ ಹಳೆಮನೆಗೆ ಬೆಳಗಿನ ಜಾವದಲ್ಲಿಯೆ ಹೊರಟು ಬಂದಿದ್ದನು. +ಆದರೆ ಅವಳು ಆಪತ್ತಿಗೆ ಸಿಕ್ಕಿದ್ದ ರಂಗಮ್ಮ ಹೆಗ್ಗಡಿತಿಯವರನ್ನು ಬಿಟ್ಟಿರಲಾರದೆ ದಾನಮ್ಮ ಹೆಗ್ಗಡಿತಿಯವರೊಡನೆ, ಗಂಡನ ಆಜ್ಞೆಯನ್ನು ಉಲ್ಲಂಘಿಸಿ, ಹೊರಟು ಬಂದಿದ್ದಳು. +ಸುಡುಗಾಡಿಗೆ ಸುಡುಗಾಡೇ ಚಕಿತವಾದಂತೆ ಅಲ್ಲಿ ನೆರೆದಿದ್ದವರ ಮನಸ್ಸು ಮುಖ ಕಣ್ಣುಗಳೆಲ್ಲ ಗಾಡಿ ನಿಂತಿದ್ದ ದಿಕ್ಕಿನ ದಾರಿಯ ಕಡೆಗೆ ಏಕಾಗ್ರವಾದವು. +ಐಗಳು ಅನಂತಯ್ಯ ‘ಅಗ್ನಿ’ ಹಿಡಿದು ಪೊದೆಪೊದೆಯ ನಡುವಣ ಬಯಲಿನ ಇಕ್ಕಟ್ಟು ಕಾಲುದಾರಿಯಲ್ಲಿ ಬರುತ್ತಿದ್ದುದು ಕಾಣಿಸಿತು. +ಅವರ ಹಿಂದೆ ಚಟ್ಟವನ್ನು ಹೊತ್ತಿದ್ದವರ ಪಂಕ್ತಿ ಗೋಚರಿಸಿತು. +ಅಗ್ರಭಾಗದಲ್ಲಿ ಬೆಟ್ಟಳ್ಳಿ ದೇವಯ್ಯ ಕೋಣೂರು ಮುಕುಂದಯ್ಯ ಹೆಗಲು ಕೊಟ್ಟಿದ್ದರು. +ಹಿಂಭಾಗದಲ್ಲಿ ಹೆಗಲು ಕೊಟ್ಟಿದ್ದವರಲ್ಲಿ ತಿಮ್ಮಪ್ಪನೂ ಸಿಂಭಾವಿ ಭರಮೈಹೆಗ್ಗಡೆಯೂ ಇದ್ದರು. +ಹೂವಳ್ಳಿ ವೆಂಕಟಣ್ಣನ  ಬೃಹತ್ತಾದ ಸುದೀರ್ಘ ಸ್ಥೂಲಕಾಯವೂ ಮುಂಭಾಗದಲ್ಲಿ ಹೆಗಲು ಕೊಟ್ಟಿದ್ದವರೊಡನೆಯೆ ಕಾಣಿಸಿತ್ತಾದರೂ ಅವನು ಇತರರಿಗೆ ತನ್ನ ಎತ್ತರದ ದೆಸೆಯಿಂದ ತೊಂದರೆಯಾಗಬಾರದೆಂದು ಹೆಗಲು ಕೊಡದೆ ಇತರರ ಮಟ್ಟದೆತ್ತರಕ್ಕೆ ಕೈ ಆನಿಸಿಯೆ  ಗೌರವಾರ್ಥವಾಗಿ ಕೂಡಿ, ಕುಂಟಿ ಬರುತ್ತಿದ್ದನು. +ಅವರ ಹಿಂದೆ ಗಂಡಸರದೊಂದು ಗುಂಪೇ ಬರುತ್ತಿತ್ತು. +ಮೇಗರವಳ್ಳಿಯ ಕಣ್ಣಾಪಂಡಿತರು, ಕರೀಂಸಾಬರು, ಜವಳಿ ಅಂಗಡಿ ಕಾಮತರು, ದಿನಸಿ ಅಂಗಡಿ ಪೈಗಳು, ತೀರ್ಥಹಳ್ಳಿ ದಾಸಯ್ಯ, ಪಾದ್ರಿ ಜೀವರತ್ನಯ್ಯ ಇತ್ಯಾದಿ ಇತ್ಯಾದಿ. +ಸೂಡಿಗೆ ಸ್ವಲ್ಪ ಸಮೀಪದಲ್ಲಿ ಚಟ್ಟ ನೆಲಮುಟ್ಟಿದುದೆ ತಡೆ ರೋದನ ಧ್ವನಿಯೊಂದಿಗೆ ನೆರೆದವರ ನೂಕುನುಗ್ಗಲು ಕಿಕ್ಕಿರಿಯಿತು. +ಐತನ ಸಹಾಯದಿಂದ ಧರ್ಮುವೂ ತಾನು ಹಿಂದೆ ನೋಡಿದ್ದಿರಬಹುದಾದ ನೆನಪೂ ಅಳಿಸಿಹೋಗಿದ್ದ ತನ್ನ  ಅಪ್ಪಯ್ಯನ ಮುಖವನ್ನಾದರೂ ಕೊನೆಯ ಸಾರಿ ನೋಡುವ ಉದ್ದೇಶದಿಂದ ಜನರ ಮಧ್ಯೆ ತೂರಿಕೊಂಡು ಹೋಗಿ ನೋಡಿದನು. +ಆದರೆ ಏನೋ ಹೆದರಿಕೆಯಾದಂತಾಗಿ, ಕುತೂಹಲ ಪರಿಹಾರವಾದವನಂತೆ ಮತ್ತೆ ಐತನ ಕೈ ಹಿಡಿದುಕೊಂಡು ಹಿಂದಕ್ಕೆ ಬಂದು, ಬೆದರುಗಣ್ಣಾಗಿ ನಿಂತುಬಿಟ್ಟನು. +ಅವನಿಗೆ ದುಃಖಕ್ಕಿಂತಲೂ ಹೆಚ್ಚು ದಿಗಿಲಾದಂತೆ ತೋರಿತು. +‘ಹೆದರಬೇಡಿ, ಅಯ್ಯಾ’ ಎಂದನು ಐತ. +ಆದಷ್ಟು ಪ್ರಯತ್ನದಿಂದ, ತುಸುಹೊತ್ತಿನಲ್ಲಿಯೆ, ಚಟ್ಟದ ಹತ್ತಿರಕ್ಕೆ ಮುಖ ದರ್ಶನಕ್ಕಾಗಿ ನುಗ್ಗಿದ್ದವರನ್ನೆಲ್ಲಾ ದೂರದೂರ ಹಿಂದಕ್ಕೆ ಕಳಿಸಿದರು. +ಒಂದು ಕಡೆ ತಾಯಿ ದಾನಮ್ಮ ಹೆಗ್ಗಡಿತಿಯವರು ಇನ್ನೊಂದು ಕಡೆ ಅತ್ತಿಗೆ ಜಟ್ಟಮ್ಮ ಹೆಗ್ಗಡಿತಿಯವರು ತೋಳು ಹಿಡಿದಿರಲು ರಂಗಮ್ಮ ಗಂಡನ ಕಳೇಬರವಿದ್ದ ಚಟ್ಟದ ಕಡೆಗೆ, ಬಗ್ಗಿ ಕುಗ್ಗಿ, ಮುಖ ಮುಚ್ಚಿಕೊಂಡು, ಬಿಕ್ಕಿಬಿಕ್ಕಿ ಅಳುತ್ತಾ, ಇನ್ನೊಂದು ಸ್ವಲ್ಪ ಹೊತ್ತಿನಲ್ಲಿಯೆ ಕಳಚಿಹೋಗಲಿರುವ ಕರಿಮಣಿ ಸರದ ತಾಳಿ ಜೋಲುವಂತೆ ಬಾಗಿ, ತುಸು ಹೊತ್ತಿನಲ್ಲಿಯೆ ಒಡೆದು ಬೀಳಲಿರುವ ಬಳೆ ಸದ್ದಾಗುವಂತೆ ನಡುಗುತ್ತಾ ಬಂದಳು. +ಏಳೆಂಟು ವರ್ಷಗಳಿಂದ ತನ್ನನ್ನು ದಹಿಸಿದ್ದ, ಏಳೆಂಟು ವರ್ಷಗಳೂ ತಾನು ಸಹಿಸಿದ್ದ ದುಃಖಾಗ್ನಿಪ್ರವಾಹಗಳೆಲ್ಲ ಒಟ್ಟಾಗಿ ಅವಳ ಹೃದಯವನ್ನು ಸುಟ್ಟುವೆಂಬಂತೆ ಚೀತ್ಕರಿಸಿದಳು. + “ಅಯ್ಯೋ, ಸ್ವಾಮೀ, ತಿರುಪತಿ ತಿಮ್ಮಪ್ಪಾ, ನನ್ನನ್ನೂ ಕರಕೊಳ್ಳಪ್ಪಾ ನಿನ್ನ ಪಾದಾರವಿಂದಕ್ಕೆ! +ಸ್ವಾಮೀ!ಸ್ವಾಮೀ!ಸ್ವಾಮೀ!” ಎನ್ನುತ್ತಾ ನೆರೆದಿದ್ದವರೆಲ್ಲ ಕಿಂಕರ್ತವ್ಯ ವಿಮೂಢರಂತೆ ನೋಡುತ್ತಿರಲು, ಮುನ್ನುಗ್ಗಿ ತನ್ನ ಗಂಡನ ಕಳೇಬರದ ಪಾದಗಳನ್ನು ಹಣೆಗೂ ಮುಖಕ್ಕೂ ಬಲವಾಗಿ ಒತ್ತಿ, ಕೈಯಲ್ಲಿ ಹಿಡಿದಮರಿಕೊಂಡು ಸಾಷ್ಟಾಂಗ ಪ್ರಣಾಮ ಮಾಡುವಂತೆ ಉದ್ದುದ್ದ ಅಡ್ಡಬಿದ್ದಳು! +ಸಂತೈಸುವ ಸಲುವಾಗಿ ಮಗಳ ಒಂದು ಪಕ್ಕದಲ್ಲಿ ದುಃಖದಗ್ಧಳಾಗಿದ್ದ ತಾಯಿಯೂ ಇನ್ನೊಂದು ಪಕ್ಕದಲ್ಲಿ ಚಿಕ್ಕಂದಿನಿಂದಲೂ ಗೆಳತಿಯಾಗಿ ಬೆಳೆದಿದ್ದ ಅತ್ತಿಗೆಯೂ ಕುಳಿತರು. +ಅಷ್ಟರಲ್ಲಿ, ಮನೆಯ ಕಡೆಯಯಿಂದ, ಮಗಳು ಮಂಜಮ್ಮನ ಹೆಗಲ ಮೇಲೆ ಎಡಗೈಯಿಟ್ಟು, ಬಲಗೈಯಲ್ಲಿ ದೊಣ್ಣೆಯೂರಿ, ಮೆಲ್ಲನೆ ಬರುತ್ತಿದ್ದ ಸುಬ್ಬಣ್ಣಹೆಗ್ಗಡೆಯವರನ್ನು ನಡೆಯಿಸಿಕೊಂಡು ಬಂದ ಬೆಟ್ಟಳ್ಳಿ ಕಲ್ಲಯ್ಯಗೌಡರು ಕಳೇಬರದ ಹತ್ತಿರಕ್ಕೆ ಬಂದರು. +“ಮಾವಯ್ಯ ಬಂದ್ರು, ಏಳು, ರಂಗೂ!” ಎಂದು ತಾಯಿಯೂ “ಅತ್ತಿಗೆಮ್ಮಾ!ಅತ್ತಿಗೆಮ್ಮಾ!ಏಳಿ, ಮಾವಯ್ಯ ಬಂದಾರೆ!” ಎಂದು ಜಟ್ಟಮ್ಮನೂ ರಂಗಮ್ಮನನ್ನು ಕರೆದು ಎಬ್ಬಿಸಲು ಪ್ರಯತ್ನಿಸಿದರು. +ಆದರೆ ಗಂಡನ ಪಾದನಗಳನ್ನು ಅದುಮಿ ಹಿಡಿದಿದ್ದ ರಂಗಮ್ಮನ ಕೈಗಳು ಸಡಿಲಲಿಲ್ಲ; +ಪಾದಕ್ಕೆ ಒತ್ತಿದ್ದ ಹಣೆ ಚಲಿಸಲಿಲ್ಲ. +ಉಸಿರಾಡುತ್ತಿದ್ದಾಳೆಯೋ ಇಲ್ಲವೋ ಎಂಬಷ್ಟು ನಿಶ್ಚಲವಾಗಿದ್ದಳು! +ದಾನಮ್ಮ ಹೆಗ್ಗಡಿತಿಯವರಿಗೆ ಯಾಕೋ ಹೆದರಿಕೆಯಾಯಿತು. +“ಮುಕುಂದಾ, ಇಲ್ಲಿ ಬಾರಪ್ಪಾ!” ಎಂದು ಅಳುದನಿಯಿಂದ ಕೂಗಿದರು, ಸ್ವಲ್ಪ ದೂರದಲ್ಲಿಯೆ ನಿಂತಿದ್ದ ಮಗನನ್ನು. +ಮುಕುಂದಯ್ಯ ಹತ್ತಿರ ಬರಲು “ನಿನ್ನ ಅಕ್ಕಯ್ಯ ಯಾಕೋ ಮಾತಾಡಾದಿಲ್ಲ; + ಸ್ವಲ್ಪ ನೋಡಪ್ಪಾ!” ಎಂದು ಎದ್ದು ನಿಂತರು. +ಅವರೊಡನೆ ಜಟ್ಟಮ್ಮನೂ ಎದ್ದು ನಿಂತು ಗಾಬರಿಯಿಂದಲೆ ಸ್ವಲ್ಪ ದೂರ ಸರಿದರು. +ಮುಕುಂದಯ್ಯ ತನ್ನ ಅಕ್ಕನನ್ನು ಕರೆದು, ಮುಟ್ಟಿ, ಎಬ್ಬಿಸಲು ಮಾಡಿದ ಪ್ರಯತ್ನ ವ್ಯರ್ಥವಾಗುತ್ತಿರುವುದನ್ನು ಕಂಡು ದೇವಯ್ಯನೂ ಬಳಿಸಾರಿ ಪರಿಶೀಲಿಸಿದನು. +“ಧಾತು ಹಾರಿರಬೇಕು ಸ್ವಲ್ಪ ನೀರು ತನ್ನಿ” ಎನ್ನುತ್ತಾ ದೇವಯ್ಯ ತನ್ನ ಅಂಗ ವಸ್ತ್ರದಿಂದ ಗಾಳಿ ಬೀಸತೊಡಗಿದನು. +ಹಾಹಾಕಾರವೆದ್ದಿತು!ಮುಖಕ್ಕೆ ನೀರು ಎರಚಿದರು. +ಬಾಯಿಗೂ ನೀರು ಬಿಟ್ಟರು. ತಿರುಪತಿ ತಿಮ್ಮಪ್ಪನು ಧರ್ಮೂ ತಾಯಿಯ ಆರ್ತಪ್ರಾರ್ಥನೆಗೆ ಸಂಪೂರ್ಣವಾಗಿ ಓಗೊಟ್ಟಿದ್ದನು! +ತನ್ನ ಅವ್ವಗೆ ಪ್ರಾಣ ಹೋಯಿತು ಎಂದು ಗೊತ್ತಾದೊಡನೆ, ಐತನ ಕೈಹಿಡಿದು,- ಹುಲಿ ಅಟ್ಟಿ ಕೊಂದು ತಿನ್ನುತ್ತಿದ್ದ ತಾಯಿಯನ್ನು ನೋಡುತ್ತಾ ದಿಕ್ಕುಗೆಟ್ಟು ಹೆದರಿ ದೂರ ನಿಲ್ಲುವ ಜಿಂಕೆಮರಿಯಂತೆ,-ದಿಗ್ಭ್ರಾಂತನಾಗಿ ನಿಂತಿದ್ದ ಧರ್ಮು “ಅಯ್ಯೋ ಐತಾ!” ಎಂದು ನಡುಗಿ ಚೀತ್ಕರಿಸಿ ನೆಲಕ್ಕುರುಳಿ ವಿಲಿವಿಲಿ ಒದ್ದಾಡತೊಡಗಿದನು! +ಐತ ಅವನನ್ನು ಹಿಡಿದೆತ್ತಿ ನಿಲ್ಲಿಸಿ, ತನ್ನ ಎದೆಗೆ ಬಲವಾಗಿ ಅವುಚಿಕೊಂಡು “ಹೆದರಬ್ಯಾಡಿ, ಅಯ್ಯಾ! +ಹೆದರಬ್ಯಾಡಿ ಅಯ್ಯಾ!” ಎಂದೆಂದು ಗದ್ಗದಿಸಿ ಅಳತೊಡಗಿದನು. +ಅದನ್ನು ಗಮನಿಸಿದ ಮುಕುಂದಯ್ಯ ದೇವಯ್ಯ ಇಬ್ಬರೂ ತಮ್ಮೊಳಗೆ ಮಾತಾಡಿಕೊಂಡು ಐಗಳು ಅನಂತಯ್ಯನವರನ್ನು ಕರೆದು ಅವರ ಕಿವಿಯಲ್ಲಿ ಏನನ್ನೊ ಹೇಳಿ ಕಳುಹಿಸಿದರು. +ಅವರು ಐತ ಅಪ್ಪಿ ಹಿಡಿದಿದ್ದ ಧರ್ಮು ಬಳಿಗೆ ಬಂದು ಸಮಾಧಾನ ಪಡಿಸುತ್ತಾ ಅವನನ್ನು ಮನೆಗೆ ಕರೆದು ಕೊಂಡುಹೋದರು, ಐತನನ್ನೂ ಸಂಗಡ ಇರಹೇಳಿ. +ದುಃಖದ ಮೇಲೆ ದುಃಖದ ಆಘಾತವಾಗಿದ್ದ ಬಾಲಕನ ಹೃದಯ ಅವರ ಸಂತೈಕೆಯಿಂದ ತುಸು ಶಾಂತವಾದ ಮೇಲೆ ಐಗಳು ಹೇಳಿದರು. +“ಧರ್ಮು, ನಿನ್ನ ತಾಯಿ ನಿಜವಾಗಿಯೂ ದೈವಭಕ್ತೆ, ಪುಣ್ಯವಂತೆ. +ಆದ್ದರಿಂದಲೆ ದೇವರು ಅವರ ಪ್ರಾರ್ಥನೆಯನ್ನು ತಡಮಾಡದೆ ಸಲ್ಲಿಸಿದ್ದಾನೆ. +ಇಂಥಾ ಇಚ್ಛಾಮರಣ ಎಲ್ಲರಿಗೂ ಸಿಗುವುದಿಲ್ಲ. +ಪತಿವ್ರತೆಗೆ ಮಾತ್ರ ಸಾಧ್ಯ, ಈ ರೀತಿ ಪತಿಯೊಡನೆ ಚಿತೆ ಏರುವ ಭಾಗ್ಯ. +ನಿಮಗೆ ನಾನು ಪುರಾಣದ ಕಥೆಗಳಲ್ಲಿ ಹೀಗೆ ಆಗುವುದನ್ನು ಹೇಳಿದ್ದೆ. +ಇವೊತ್ತು ನಾವೇ ಅಂಥಾದ್ದು ಒಂದನ್ನ ಕಣ್ಣಾರೆ ಕಂಡ ಹಾಗಾಯ್ತು…. +ನೀನು ಚೆನ್ನಾಗಿ ಓದುಬರಹ ಕಲಿತು ದೊಡ್ಡವನಾದರೆ ಸ್ವರ್ಗದಲ್ಲಿರುವ ನಿನ್ನ ತಂದೆ ತಾಯಿಗಳಿಗೆ ತುಂಬಾ ಸಂತೋಷವಾಗುತ್ತದೆ.” +ಯಾರು ಬದುಕಲಿ, ಯಾರು ಸಾಯಲಿ, ಯಾರು ಹುಟ್ಟಲಿ, ಹುಟ್ಟದೆ ಹೋಗಲಿ, ಮಳೆಗಾಲ ನಿಲ್ಲುತ್ತದೆಯೆ? +ಮಳೆಹಿಡಿದು ಕೂತಿತ್ತು, ನಾಲ್ಕುಪಾದಗಳನ್ನೂ ಬಲವಾಗಿ ಊರಿ! +ಮೋಡ ಸದಾ ಕವಿದು ಸೂರ್ಯದರ್ಶನವೆ ಅಪೂರ್ವವಾಯಿತು. +ತನ್ನ ದುರ್ದಮ್ಯ ವ್ಯಾಪಾರಗಳನ್ನು ನಿರ್ಲಕ್ಷವಾಗಿ ನಿರ್ದಾಕ್ಷಿಣ್ಯವಾಗಿ ಸಾಗಿಸಿತ್ತು ಬೃಹತ್ ಪ್ರಕೃತಿ. +ಆ ಪ್ರಕೃತಿಯ ಪ್ರತಿರೂಪವಾದ ಸಹ್ಯಾದ್ರಿ ಪರ್ವತ ಕಾನನ ಶ್ರೇಣಿ ಮನುಷ್ಯರ ಅಲ್ಪ ಸುಖದುಃಖಗಳಿಗೆ ಸಂಪೂರ್ಣ ನಿಸ್ಸಂಗಿಯಾಗಿ ಭೀಷಣ ವರ್ಷಧಾರೆಯಲ್ಲಿ ತೊಪ್ಪನೆ ತೊಯ್ಯುತ್ತಾ ಹಬ್ಬಿ ಕೊಬ್ಬಿ ಉಬ್ಬಿ ನಿಂತಿತ್ತು. +ಆ ಭೂಮ ನಿಸರ್ಗದ ಮುಂದೆ ಹಳೆಮನೆ, ಕೋಣೂರು, ಹೂವಳ್ಳಿ, ಬೆಟ್ಟಳ್ಳಿ ಮತ್ತು ಸಿಂಬಾವಿಯಂತಹ ಏಕಾಗ್ರ ಕ್ಷುದ್ರ ಗ್ರಾಮಗಳ ಬದುಕಿನ ಆಶೆ ನಿರಾಶೆ ಕಷ್ಟ ಸುಖ ಶೋಕ ತಾಪಾದಿಗಳು ಯಃಕಶ್ಚಿತಗಳಾಗಿದ್ದುದರಲ್ಲಿ ಆಶ್ಚರ್ಯವೇನು? +ತಂದೆ ತಾಯಿಯವರನ್ನು ಏಕಕಾಲದಲ್ಲಿ ಅನಿರೀಕ್ಷಿತವಾಗಿ ಕಳೆದುಕೊಂಡ ಧರ್ಮುವ ಮನಃಸ್ಥಿತಿಯಾಗಲಿ; ತಾನು ಬಯಸಿದ ಹೆಣ್ಣು, ಆ ಹೆಣ್ಣಿನ ಇಚ್ಛೆಗೂ ವಿರುಧ್ದವಾಗಿ, ಮತ್ತೊಬ್ಬನ ಪಾಲಾಗುತ್ತದೆಯಲ್ಲಾ ಎಂಬ ಮುಕುಂದಯ್ಯನ ಹೃದಯವ್ಯಥೆಯಾಗಲಿ; ತಾನು ಹಾರಿಸಿಕೊಂಡು ಬಂದು ಮದುವೆಯಾಗಿದ್ದ ಹುಡುಗಿಯನ್ನು ಮತ್ತೆ ತವರಿಗೊಯ್ದು ಬಲಾತ್ಕಾರವಾಗಿ ಮತ್ತೊಬ್ಬನಿಗೆ ಮದುವೆ ಮಾಡಿಸುತ್ತಾರೆ ಎಂಬ ವಾರ್ತೆಯ ಬಡಬಾಗ್ನಿಯನ್ನು ಹೊಟ್ಟೆಯೊಳಗಿಟ್ಟುಕೊಂಡು, ಹೇಗೋ ಉಪಾಯದಿಂದ ಪೋಲೀಸರ ಕೈಯಿಂದ ತಪ್ಪಿಸಿಕೊಂಡು ಮಳೆಗಾಲದ ಕಾಡಿನಲ್ಲಿ ತಲೆಮರೆಸಿಕೊಂಡು ಕಾಲ ಹಾಕುತ್ತಿರುವ ಗುತ್ತಿಯ ದಾರುಣ ಚಿತ್ತಸ್ಥಿತಿಯಾಗಲಿ; ನಿರಂತರ ರೋಗಿಷ್ಟನಾಗಿದ್ದರೂ ತನ್ನನ್ನು ಒಲಿದು ಬದುಕು ಸಾಗಿಸುತ್ತಿದ್ದ ತನ್ನ ಹೆಂಡತಿ ಅಕ್ಕಣಿ ಮೆಲ್ಲಮೆಲ್ಲಗೆ ಜಾರಿ ಚೀಂಕ್ರನಿಗೆ ವಶವಾಗುತ್ತಿದ್ದಾಳಲ್ಲಾ ಎಂದು ಒಳಒಳಗೆ ಕೊರಗಲಾರಂಭಿಸಿರುವ ಪಿಜಿಣನ ಬಾಳಬೇಗೆಯಾಗಲಿ; ಕಡೆಗೆ, ಪಾದ್ರಿಯಿಂದ ಅನೇಕಾನೇಕ ಪರಿತೋಷಗಳನ್ನು ಪಡೆದು, ಆತನಿಗೆ ತಾನು ಕ್ರೈಸ್ತ ಜಾತಿಗೆ ಸೇರುತ್ತೇನೆ ಎಂಬ ನಂಬುಗೆ ಬರುವಂತೆ ಮಾಡಿ, ಒಂದು ರೀತಿಯಲ್ಲಿ ಮಾತನ್ನೂ ಕೊಟ್ಟು, ಈಗ ಅದರಿಂದ ನುಣುಚಿಕೊಳ್ಳಲು ಹವಣಿಸುತ್ತಿರುವ ದೇವಯ್ಯನ ಹಾಸ್ಯಾಸ್ಪದವಾದ ಒಳತೋಟಿಯಾಗಲಿ-ಆ ಸಹ್ಯಾದ್ರಿಯ ಮಲೆ ಕಾಡು ಮಳೆ ಇವುಗಳ ಕಡೆಗಣ್ಣಿನ ಗಮನಕ್ಕಾದರೂ ಬರುತ್ತವೆಯೇ?ಮಲೆಯೋ? +ಅಲೆಅಲೆಅಲೆಯಾಗಿ ಬಾನ್ಮುಟ್ಟಿ ತಲೆಯೆತ್ತಿ ನಿಂತಿದೆ! +ಕಾಡೋ?ದಿಗಂತವಿಶ್ರಾಂತವಾಗಿ, ದಟ್ಟವಾಗಿ, ವ್ಯಾಘ್ರಭೀಷಣವಾಗಿ, ವರಾಕಠೋರವಾಗಿ ಹಸರಿಸಿದೆ! +ಮಳೆಯೋ?ಹಗಲೂ ಇರುಳೂ ಒಂದೇ ಸಮನೆ ಸುರಿಯುತ್ತಿದೆ, ಹೊಡೆಯುತ್ತಿದೆ, ಜಡಿಯುತ್ತಿದೆ! +ಮನೆಮನೆಯಲ್ಲಿಯ ಹಳ್ಳಿಯ ಜನರು ಗದ್ದೆಯ ಕೆಲಸಕ್ಕೆ ಶುರು ಮಾಡಿದ್ದಾರೆ. +ಆರು ಕಟ್ಟುತ್ತಿದ್ದಾರೆ; ಅಗೋಡಿ ಮಾಡುತ್ತಿದ್ದಾರೆ; ಅಂಚು ಕೆತ್ತುತ್ತಿದ್ದಾರೆ. +ಹಗಲು, ಕೂಣಿಹಾಕಿ ಮೀನು ಹಿಡಿಯುತ್ತಿದ್ದಾರೆ; + ರಾತ್ರಿ, ದೊಂದಿ ಲಾಟೀನುಗಳ ಬೆಳಕಿನಲ್ಲಿ ಹತ್ತುಮೀನು ಕಡಿಯುತ್ತಿದ್ದಾರೆ. +ಅಟ್ಟದ ಮೇಲಿದ್ದ ಗೊರಬುಗಳೆಲ್ಲ ಹೆಣ್ಣಾಳುಗಳ ತಲೆಗೇರಿ ಸಂಚರಿಸುತ್ತವೆ; +ಹಾಸಿಗೆಯಲ್ಲಿಯೂ ಸಂಧಿಮೂಲೆಗಳಲ್ಲಿಯೂ ಇದ್ದ ಕಂಬಳಿಗಳೆಲ್ಲ ಕೊಪ್ಪೆಗಳಾಗಿ ಗಂಡಾಳುಗಳ ತಲೆಗೇರಿ ದುಡಿದಾಡುತ್ತಿವೆ. +ಎತ್ತಿನ ಹಟ್ಟಿಯ ಉಳುಮೆಯ ಕೆಲಸದ ಎತ್ತುಗಳೆಲ್ಲ ರಜಾಕಾಲ ಮುಗಿದು ಇಸ್ಕೂಲು ಪ್ರಾರಂಭವಾದಂತಿದೆ! +ಹಳೆಮನೆಯ ದುರಂತ ಸಂಭವಿಸಿದ ತರುಣದಲ್ಲಿ ಯಾರು ಇಬ್ಬರು ಸಂಧಿಸಿದರೂ ಮೊದಮೊದಲಲ್ಲಿ ಮಾತು ಮೊದಲಾಗುತ್ತಿದ್ದದ್ದು ಒಂದೇ ವಿಷಯದಿಂದ. +ತಿರುಪತಿಗೆ ಹೋಗಿದ್ದು ಹಿಂತಿರುಗಿದ್ದ ಹಳೆಮನೆ ದೊಡ್ಡಣ್ಣ ಹೆಗ್ಗಡೆಯವರು ಕಾಲವಾದ ಕಥೆ ಮತ್ತು ಅವರ ಹೆಂಡತಿ ರಂಗಮ್ಮ ಹೆಗ್ಗಡಿತಿಯವರ ಇಚ್ಛಾಮರಣದ ಸುದ್ದಿ! +ಅಳುತ್ತಾ ಮಾತಾಡಿದರು; + ನಗುತ್ತಾ ಮಾತಾಡಿದರು; + ಉಳುತ್ತಾ ಮಾತಾಡಿದರು; ಅಂಚು ಕೆತ್ತುತ್ತಾ ಮಾತಾಡಿದರು; + ಬಾಯಿಗೆ ಹಾಕಿಕೊಳ್ಳುತ್ತಾ ಮಾತಾಡಿದರು; + ಎಲೆಯಡಕೆ ಜಗಿಯುತ್ತಾ ಮಾತಾಡಿದರು; + ಬೆಳಗ್ಗೆ ಕೆಲಸಕ್ಕೆ ಹೋಗುತ್ತಾ ಮಾತಾಡಿದರು; + ಬೈಗಿನಲ್ಲಿ ಮನೆಗೆ ಹಿಂದಿರುಗುತ್ತಾ ಮಾತಾಡಿದರು! +ಎಷ್ಟು ಮಾತಾಡಿದರೂ ಸಾಲದ ಸುದ್ದಿ! +ಎಷ್ಟು ಮೆಚ್ಚಿ ನುಡಿದರೂ ತೀರದ ಸುದ್ದಿ! +ಕರುಣ, ಅದ್ಭುತ ಶಾಂತರಸಗಳಿಗೆ ಅಕ್ಷಯ ಪಾತ್ರೆಯಾಗಿ ಪವಿತ್ರ ತೀರ್ಥವಾರ್ತೆಯಾಗಿತ್ತು ಆ ಸುದ್ದಿ! +ಎಂತಹ ಹೂಳಿನ ಮೇಲೆಯೂ ಕಾಲಕ್ರಮೇಣ ಹುಲ್ಲು ಬೆಳೆಯುತ್ತದೆ; ಎಂತಹ ಸೂಡಿನ ಸುಟ್ಟು ನೆಲವನ್ನಾದರೂ ಕಾಲಕ್ರಮೇಣ ಹಸುರು ತಬ್ಬುತ್ತದೆ. +ಅಲ್ಲಿ ಹೆಣ ಹೂಳಿದ್ದಾರೆಂಬ ಚಿಹ್ನೆಯೆ ಮಾಸಿಹೋಗುತ್ತದೆ; +ಅಲ್ಲಿ ಹೆಣ ಸುಟ್ಟಿದ್ದರು ಎಂಬ ಗರುತೂ ಕಾಣದಂತೆ ಗರುಕೆ ತಬ್ಬಿ ನಳನಳಿಸಿ ಹಸುರು ನಗೆ ಬೀರುತ್ತದೆ. +ಹಾಗೆಯೆ ಬದುಕಿನ ಇತರ ಸದ್ಯೋಮುಖ್ಯ ಸಂಗತಿಗಳು ಬರಬರುತ್ತಾ ಜನಮನವನ್ನಾಕ್ರಮಿಸಿ, ದೊಡ್ಡಣ್ಣಹೆಗ್ಗಡೆ ಮತ್ತು ರಂಗಮ್ಮ ಹೆಗ್ಗಡಿತಿಯವರ ದಾರುಣ ಕಥೆಯನ್ನು ಕ್ರಮೇಣ ದೂರಸ್ಮೃತಿಯನ್ನಾಗಿ ಮಾಡತೊಡಗಿದ್ದವು. +ಉಳಿದೆಲ್ಲರಿಗಿಂತಲೂ ಹೆಚ್ಚಾಗಿ ದುಃಖಿಯಾಗಿದ್ದ ತಬ್ಬಲಿ ಧರ್ಮು ಸೂತಕಾನಂತರ ತಿಥಿ ಮೊದಲಾದ ಕರ್ಮಗಳೆಲ್ಲ ಪೂರೈಸಿದ ಮೇಲೆ ಕೋಣೂರಿಗೆ ಹಿಂದಿರುಗಿ ಮಾವನ ಮನೆಯಲ್ಲಿ, ಅಜ್ಜಿಯ ಮತ್ತು ಅತ್ತೆಯ ಅಕ್ಕರೆಯ ಆಶ್ರಯದಲ್ಲಿ, ಐಗಳ ಮಠದಲ್ಲಿ ಅನಂತಯ್ಯನವರಿಂದ ಎಂದಿನಂತೆ ಇತರ ಮಕ್ಕಳೊಡನೆ ಓದು ಬರಹ ಕಲಿಯಲು ತೊಡಗಿದ್ದನು. +ಅವನ ಗೆಳೆಯರು ಕಾಡು, ತಿಮ್ಮು ಇಬ್ಬರೂ ಅವನಿಗೊದಗಿದ್ದ ದುರಂತದ ನಿಮಿತ್ತ ತಮ್ಮ ಗೆಳೆಯನನ್ನು ಎಂದಿಗಿಂತಲೂ ಹೆಚ್ಚು ಪ್ರೀತಿಯಿಂದಲೂ ಅಕ್ಕರೆಯಿಂದಲೂ ದಾಕ್ಷಿಣ್ಯದಿಂದಲೂ ಕಾಣುತ್ತಿದ್ದರು. +ಧರ್ಮು ಯಾರಿಗೂ ತಿಳಿಯದಂತೆ ಅಳುತ್ತಿದ್ದು ಗೆಳೆಯರು ಸಮೀಪಿಸುತ್ತಿರುವುದನ್ನು ಕಂಡು ಕಣ್ಣೊರೆಸಿಕೊಂಡಾಗಲೆಲ್ಲ ಕಾಡು, ತಿಮ್ಮು ಇಬ್ಬರೂ ಅವನನ್ನು ನಾನಾ ರೀತಿಯಿಂದ ಸಂತವಿಸುತ್ತಿದ್ದರು. +‘ನಿನ್ನ ಅವ್ವ ಅಪ್ಪಯ್ಯ ಸ್ವರ್ಗದಲ್ಲಿದ್ದು ನೋಡುತ್ತಿದ್ದಾರೆ ಕಣೋ!’ ಐತನ ಹೆಂಡತಿ ಪೀಂಚಲು ನೋಡಿದಳಂತೆ, ಸೂಡಿನ ಬೆಂಕಿಯೆಲ್ಲ ಆರುತ್ತಿದ್ದಾಗ ಆಕಾಶದಿಂದ ಒಂದು ರಥ ಇಳಿದು ಬಂದು, ದೊಡ್ಡ ಮಾವಗೂ ದೊಡ್ಡತ್ತೆಗೂ ಹೂವಿನ ಹಾರ ಹಾಕಿ, ಅದರಲ್ಲಿ ಕೂರಿಸಿಕೊಂಡು ಹೋಯಿತಂತೆ!’ + ‘ಮುಕುಂದ ಮಾವನ ಸ್ವಪ್ನದಲ್ಲಿ ದೊಡ್ಡಮ್ಮ ದೊಡ್ಡಪ್ಪಯ್ಯ ಇಬ್ಬರೂ ಬಂದಿದ್ದರಂತೆ ಕಣೋ!’ ಇತ್ಯಾದಿಯಾಗಿ. +ಒಂದು ಸಾರಿ ಧರ್ಮು ಬೈಗುಗತ್ತಲಲ್ಲಿ ಮಗ್ಗಿ ಹೇಳುತ್ತಿದ್ದಾಗಲೆ, ನಡುವೆ ತಂದೆತಾಯಿಯರ ನೆನಪುಕ್ಕಿ ದುಃಖ ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತಾಗ ಅನಂತೈಗಳು ಅನೇಕ ರೀತಿಯಾಗಿ ಸಾಂತ್ವನ ಹೇಳೆ ಅವತ್ತಿನ ಮಗ್ಗಿ ಪಾಠದಂತಹ ಮುಖ್ಯ ವಿಷಯವನ್ನು ನಿಲ್ಲಿಸಿ ಅಡಿಕೆ ಬಿಟ್ಟಿದ್ದರು. +ಆಗ ಕಾಡು ಧರ್ಮುವ ಜೊತೆಯೇ ಹೋಗಿ ಕೆಸರ್ಹಲಗೆಯ ಮೇಲೆ ಅವನ ಪಕ್ಕದಲ್ಲಿಯೆ ಒತ್ತಿ ಕುಳಿತು, ಅಂಗಳಕ್ಕೆ ಕಾಲು ಇಳಿಬಿಟ್ಟಕೊಂಡು ಹೇಳಿದ್ದನು, ತುಳಸೀಕಟ್ಟೆಗೆ ಹೊತ್ತಿಸಿಟ್ಟಿದ್ದ ನೀಲಾಂಜನದ ದೀಪವನ್ನೇ ನೋಡುತ್ತಾ, “ಧರ್ಮೂ, ಆ ‘ಗಡ್ಡದಯ್ಯ’ ಆವೊತ್ತು ಆ ಕಲ್ಲೂರು ಹೊಳೆದಂಡೆ ಮ್ಯಾಲೆ, ಅದೇ ಆ ಜೋಳಿಗೆಗೆ ಕೈ ಹಾಕಿ ಹಾಕಿ ನಮಗೆ ಹಣ್ಣು ಕೊಟ್ಟನಲ್ಲಾ ಆ ಗಡ್ಡದಯ್ಯ, ನಿನ್ನೊಬ್ಬನ್ನೇ ಹತ್ರಕ್ಕೆ ಕರೆದು ಹೆಗಲ ಮೇಲೆ ಕೈ ಹಾಕಿ ಹೇಳಿದ್ದನಲ್ಲಾ? +ನಿಂಗೆ ಗ್ಯಾಪಕ ಅದೆಯೇನು?” ಎಂದು ಕೇಳಲು, ಧರ್ಮು ಮಾತಾಡದೆ ತಲೆದೂಗಿ ಸಮ್ಮತಿಸಿದಂತೆ ತನ್ನ ಕಡೆ ನೋಡುತ್ತಿರಲು, ಕಾಡು ಉತ್ತೇಜಿತನಾಗಿ ಮುಂದುವರಿದಿದ್ದನು. + “ಅಂವ ಹೇಳಿದ್ದೇನು?ಗೊತ್ತೇ?’ಮಗೂ, ನಿನ್ನ ಭವಿಷ್ಯ ಉಜ್ವಲವಾಗಿದೆ. +ಚೆನ್ನಾಗಿ ಓದು ಬರಹ ಕಲಿತುಕೋ. +ನೀನು ಮುಂದೆ ತುಂಬ ದೊಡ್ಡ ಹೆಸರು ಪಡೆದು ದೊಡ್ಡ ಮನುಷ್ಯನಾಗುತ್ತೀಯ! …. ” +“ಹಾಂಗಲ್ಲ ಕಣೋ, ಅಂವ ಅಂದದ್ದು ‘ಕೀರ್ತಿವಂತನಾಗುತ್ತೀಯ’” ಧರ್ಮು ಅತ್ಯಂತ ಸರಳ ಮುಗ್ಧ ಭಾವದಿಂದ ಸ್ನೇಹಿತನ ಜ್ಞಾಪಕವನ್ನು ತಿದ್ದಿದ್ದನು. +ತೀರ್ಥಹಳ್ಳಿಯಿಂದ ಬಂದ ಬೆಟ್ಟಳ್ಳಿಯ ಗಾಡಿಯಿಂದ ಹೆಣವನ್ನು ಇಳಿಸುತ್ತಿದ್ದಾಗ ತಿಮ್ಮಪ್ಪಹೆಗ್ಗಡೆಯೂ ಇತರರಂತೆ ಶೋಕ ಪ್ರದರ್ಶನ ಮಾಡಲು ಮುಂದುವರಿದಿದ್ದನು. +ಆದರೆ ಆ ಹೆಣದ ಮುಖವನ್ನು ನೋಡಿ, ಆ ಕಳೇಬರ ನಿಜವಾಗಿಯೂ ತಿರುಪತಿಗೆ ಹೋಗಿದ್ದ ತನ್ನ ಅಣ್ಣನದೇ ಎಂಬುದು ಖಾತ್ರಿಯಾದ ತರುವಾಯ, ಅವನ ಚೇತನ ಹೌಹಾರಿಬಿಟ್ಟಿತ್ತು. +ಚಿಕ್ಕಂದಿನಿಂದಲೂ ತಾನು ಒಲಿದಿದ್ದಾತನ ಮೃತ್ಯುಸಮ್ಮಖದಲ್ಲಿ ಉಂಟಾಗುವ ಒಂದು ಅಪಾರ್ಥಿವ ಭೀತಿ ಅವನ ಹೃದಯವನ್ನಾಕ್ರಮಿಸಿತ್ತು. +ಏಳೆಂಟು ವರುಷಗಳ ಹಿಂದೆ ಅಣ್ಣ ತಿರುಪತಿಗೆ ಹೋಗುವವರೆಗೂ ತಿಮ್ಮಪ್ಪಗೆ ಅವನಲ್ಲಿ ಉಳಿದೆಲ್ಲರಿಗಿಂತಲೂ ಅತಿಶಯವಾದ ಗಾಢವಿಶ್ವಾಸವಿತ್ತು. +ಏಕೆಂದರೆ ಹುಡುಗ ತಿಮ್ಮಪ್ಪನ ಒರಟು ರೂಪ, ಒರಟುವರ್ತನೆ, ಒಡಲಕೊಳಕು, ಹೊಲಸುಬಾಯಿ ಇವುಗಳ ದೆಸೆಯಿಂದ ತಂದೆ ಸುಬ್ಬಣ್ಣ ಹೆಗ್ಗಡೆಯವರಾದಿಯಾಗಿ ಎಲ್ಲರೂ ಅವನನ್ನು ಜಿಗುಪ್ಸೆಯಿಂದ ಕಡೆಗಣಿಸಿ ಬೈದು ದೂರೀಕರಿಸುತ್ತಿದ್ದಾಗ ಅಣ್ಣ ದೊಡ್ಡಣ್ಣಹೆಗ್ಗಡೆ ಯೊಬ್ಬನೆ ಅವನನ್ನು ಪ್ರೀತಿಯಿಂದ ಕಾಣುತ್ತಿದ್ದನು. +ಷಿಕಾರಿ ಹುಚ್ಚಿನ ದೊಡ್ಡಣ್ಣ ಕಾಡು ಸುತ್ತಲು ಕಾತರನಾಗಿದ್ದ ತಮ್ಮನನ್ನು ಎಷ್ಟೋಸಾರಿ ತನ್ನೊಡನೆ ಸಾರಿಕೆ ಬೇಟೆಗೂ ಮರುಸು ಕೂರುವುದಕ್ಕೂ ಕರೆದುಕೊಂಡು ಹೋಗುತ್ತಿದ್ದನು. +ಜೇನು ಕೀಳುವುದು, ಹಕ್ಕಿ ಹೊಡೆಯುವುದು, ಮೀನಿಗೆ ಗಾಳ ಹಾಕುವುದು, ಕೆರೆಗೆ ಬಲೆಹಾಕಿ ಮೀನು ಹಿಡಿಯುವುದು, ಹಲಸಿನ ಹಣ್ಣೋ ದೀರ್ಕನ ಹಣ್ಣೋ ಮಾವಿನ ಹಣ್ಣೋ ಕಲ್ಲುಸಂಪಿಗೆ ಹಣ್ಣೋ ಕುಯ್ಯುವುದು, ಉರುಳು ಒಡ್ಡಿ ಹುಂಡುಕೋಳಿ ಚಿಟ್ಟುಗೋಳಿ ಕಾಡುಕೋಳಿಗಳನ್ನು ಹಿಡಿಯುವುದು, ಮೊದಲಾದ ನಾನಾ ಲಲಿತ ಮತ್ತು ರುದ್ರ ಸಾಹಸಗಳಲ್ಲಿ ತಿಮ್ಮಪ್ಪ ಅಣ್ಣನೊಡನೆ ಭಾಗಿಯಾಗಿ ಸಂತೋಷಪಟ್ಟಿದ್ದನು. +ತಿರುಪತಿಗೆ ಹೋದ ಅಣ್ಣ ತಿರುಗಿ ಹಿಂದಿರುಗದಿದ್ದಾಗ ತಿಮ್ಮಪ್ಪನ ದುಃಖ ಇತರ ಯಾರ ದುಃಖಕ್ಕೂ ಕಡಿಮೆಯದ್ದಾಗಿರಲಿಲ್ಲ. +ಆದರೆ ಕೌಮಾರ್ಯ ತಾರುಣ್ಯಕ್ಕೇರಿ, ತಾರುಣ್ಯ ಯೌವನದಂಚಿಗೆ ಸಮೀಪಿಸುವಷ್ಟರಲ್ಲಿ, ಇದ್ದ ಒಬ್ಬ ಅಣ್ಣನ ವಿಶ್ವಾಸದಿಂದಲೂ ದೂರನಾಗಿ, ಮನೆಯವರ ಕಟುತ್ವಕ್ಕೆ ಕಹಿಗೊಂಡಿದ್ದ ಅವನ ಚೇತನ ತನ್ನ ಸಿಹಿ ಸಂತೋಷಗಳನ್ನು ತನ್ನವರೂ ಮನೆಯವರೂ ಅಲ್ಲದ ಅನ್ಯರ ಸಂಗದಲ್ಲಿಯೂ ಪಾಪಕ್ಷೇತ್ರಗಳಲ್ಲಿಯೂ ಕಂಡುಕೊಂಡು ವಿಲಾಸಿಸತೊಡಗಿತ್ತು. +ಚೆನ್ನಾಗಿ ಮೀಯಿಸಿ ಶುಚಿಯಾಗಿಟ್ಟು ಒಳ್ಳೆಯ ಆಹಾರ ತಿನ್ನಿಸಿ ಸಾಕಿದ್ದ ಮನೆಯ ಚೀನಿನಾಯಿ, ’ಸಣುಬಿ’ನ ಸಮಯ ಬಂದಾಗ, ದದ್ದು ಹಿಡಿದು ವಿಕಾರವಾಗಿದ್ದರೂ ಲೆಕ್ಕಿಸದೆ ಬೀದಿಯ ನಾಯಿಯ ಸಂಗ ಬಯಸಿ ಸರಪಣಿ ಕಂಪೌಂಡುಗಳಿಂದ ನುಣುಚಿಕೊಂಡು ಪೋಲಿಬೀಳುವಂತೆ, ತಿಮ್ಮಪ್ಪ ಕೀಳು ಜಾತಿಯವರ ಹಟ್ಟಿ ಬಿಡಾರ ಗುಡಿಸಲು ಜೋಪಡಿಗಳಲ್ಲಿಯೂ ಸುಖವನ್ನರಸಿ ಪಡೆದಿದ್ದನು. +ಅವನ ಹೊಲಸು ಶೃಂಗಾರ ಸಾಹಸದ ಇತ್ತೀಚಿನ ಬೇಟೆಗೆ ತುತ್ತಾಗಿದ್ದವಳೆಂದರೆ ಹೊಲೆಯರ ಕುಳುವಾಡಿ ಸಣ್ಣನ ಹಿರಿಯ ಅವಿವಾಹಿತ ಮಗಳು ಪುಟ್ಟಿ! +ಉಂಡಾಡಿ ಬೈರನ ನೆರವು ಪಡೆದು ಅವಳನ್ನು ಉಪಾಯವಾಗಿ ನೆಲ್ಲುಹುಲ್ಲು ಕುತ್ತರೆ ಹಾಕಿದ್ದ ಕಣಕ್ಕೆ ಬೈಗಿನಲ್ಲಿ ಬರುವಂತೆ ಮಾಡಿ, ಕಳ್ಳು ಕುಡಿಸಿ, ತನ್ನ ದೇಹ ತೃಷ್ಣೆಯನ್ನು ಪರಿಹರಿಸಿಕೊಂಡಿದ್ದನು, ‘ಸಣ್ಣ ಒಡೆಯ ತಿಮ್ಮಪ್ಪಯ್ಯ’! +ಆ ಗುಟ್ಟೂ ಎಲ್ಲರ ಗುಟ್ಟಿನ ಪಿಸುಮಾತಾಗಿಯೆ ಬಹಿರಂಗ ವಿಷಯವಾಗಿ ಬಿಟ್ಟಿತ್ತು. +ತಾವು ಊರಿನಲ್ಲಿ ಇಲ್ಲದಿದ್ದಾಗ ನಡೆದಿದ್ದ ಆ ವಿಷಯವನ್ನು ಕೇಳಿತಿಳಿದಿದ್ದ ಅವನ ತಂದೆ ಸುಬ್ಬಣ್ಣಹೆಗ್ಗಡೆಯವರು ಬೆಟ್ಟಳ್ಳಿಯಿಂದ ಹಿಂದಿರುಗಿ ಬಂದಾಗ ಅವನ ಕಪಾಲಕ್ಕೆ ಹೊಡೆಯಲು ಹೋಗಿದ್ದಕ್ಕೆ ನಿಜವಾದ ಅಂತಃಕಾರಣವೂ ಅದೇ ಆಗಿತ್ತು! +ಅಣ್ಣನ ಕಳೇಬರವನ್ನು ಕಂಡಾಗಲೆ ತುಸು ಸೆಡೆತಿದ್ದ ತಿಮ್ಮಪ್ಪನ ನೀಚತ್ವ ಅತ್ತಿಗೆಯ ಆಕಸ್ಮಿಕವಾದ ಮತ್ತು ಅತ್ಯಂತ ಶೋಕದ ಸನ್ನಿವೇಶದಲ್ಲಿ ಅತ್ಯದ್ಭುತವೆಂಬಂತೆ ಸಂಭಿವಿಸಿದ್ದ ಸಾವಿನ ಸಮ್ಮಖದಲ್ಲಿ ಹಠಾತ್ತನೆ ಕುಸಿದು ಬಿದ್ದಂತಾಗಿತ್ತು. +ಏಕೆ?ಏನು?ಎತ್ತ?ಎಂಬುದು ಅವನಿಗೇನೂ ಅರ್ಥವಾಗಿರಲಿಲ್ಲ. +ಯಾವುದೋ ಮಹಾ ದೊಡ್ಡದರ ಮುಂದೆ ತನ್ನ ಅಲ್ಪತ್ವ ಮುದುಗಿ ನಾಚಿ ಹೆದರಿ ಕುಗ್ಗಿ ನೆಲಸಮವಾಗಿ ಹೋದಂತಾಗಿತ್ತು ಅವನಿಗೆ. +ಅದರಿಂದ ಪಾರಾಗುವ ಪ್ರಯತ್ನದಲ್ಲಿ, ಆ ಪಾರಾಗುವಿಕೆಯ ಒಂದು ಅನಿವಾರ್ಯ ವಿಧಾನವೊ ಎಂಬಂತೆ, ಅವನ ಚೇತನ, ಆ ಕುಗ್ಗಿಗೆ ಪ್ರತಿಸ್ಪರ್ಧಿಯಾಗಿ, ತನ್ನ ಪಾತಾಳ  ಸುಪ್ತಸ್ಥಿತಿಯಲ್ಲಿ ಗುಪ್ತವಾಗಿದ್ದ ದೊಡ್ಡತನವನ್ನು ಹೊಡೆದೆಬ್ಬಿಸಿ ನಿಮಿರಿ ನಿಲ್ಲಿಸಿತ್ತು. +ತಾತ್ಕಾಲಿಕವೋ?ಚಿರಕಾಲಿಕವೋ?ಅಂತೂ ಅದನ್ನು ಗಮನಿಸಿದ ಅನೀಕರಿಗೆ ದೊಡ್ಡಣ್ಣಹೆಗ್ಗಡೆಯ ದೊಡ್ಡತನವೆ ತಮ್ಮನ ಮೈಮೇಲೆ ಬಂದಿರಬೇಕು ಅನ್ನಿಸಿತ್ತು. +ಆದ್ದರಿಂದಲೆ ಹಾಸಗೆ ಹಿಡಿದಿದ್ದ ಸುಬ್ಬಣ್ಣಹೆಗ್ಗಡೆಯವರು ಮಲಗಿದ್ದ ಕೋಣೆಗೆ ಬೆಳಿಗ್ಗೆ ಮುಂಚೆ ಪ್ರವೇಶಿಸಿ, ತಿಮ್ಮಪ್ಪ “ಅಪ್ಪಯ್ಯಗೆ ಎಚ್ಚರಾಯ್ತಾ? +ಮಕಾ ತೊಳೆಯಾಕೆ ಬಿಸಿನೀರು ತರಲೇನು?” ಎಂದು ಕೇಳಿದಾಗ, ತಂದೆಗೆ ಆದ ಆಶ್ಚರ್ಯ ಅಷ್ಟಿಷ್ಟಲ್ಲ! +ಇನ್ನೂ ಸ್ವಲ್ಪ ಹೊತ್ತಿನಮೇಲೆ ಮತ್ತೆ ಅವನು ಒಳಕ್ಕೆ ಬಂದು ಅತ್ಯಂತ ವಿನಯವಾಣಿಯಿಂದ “ಅಪ್ಪಯ್ಯಗೆ ಕಣ್ಣಾ ಪಂಡಿತರ ಕಷಾಯ ತಂದುಕೊಡಲೇನು ಅಂತಾ ಕೇಳ್ತದೆ ಬುಚ್ಚಿ.” ಎಂದಾಗ ಆ ಆಶ್ಚರ್ಯ ವಿಸ್ಮಯಕ್ಕೆ ತಿರುಗಿ, ಆನಂದಾತಿಶಯಕ್ಕೆ ಅವರ ಕಣ್ಣು ಹನಿಗೂಡಿತ್ತು! +ನಿನ್ನೆ ತಾನೆ ನಡೆದಿದ್ದ ಎರಡು ಪ್ರಿಯಜೀವಿಗಳ ದೇಹದ ದಹನ ಸಂಸ್ಕಾರದಿಂದ ದುಃಖ ಜರ್ಜರಿತವಾಗಿದ್ದ ಅವರ ಮುದಿಹೃದಯ, ಅದುವರೆಗೂ ಪಕ್ಕೆಯಲ್ಲಿ ಮುಳ್ಳಾಗಿ ಚುಚ್ಚುತ್ತಿದ್ದ ಈ ಮಗನ ಪರಿವರ್ತನೆಯನ್ನು ಕಂಡು, ಕೃತಜ್ಞತೆಗೆ ಹಿಗ್ಗಿ ಹೋಗಿತ್ತು. +ಅವರ ಪಿತೃಚೇತನ ಇದ್ದಕ್ಕಿದ್ದಂತೆ ತಿಮ್ಮಪ್ಪನ ಹಿಂದಿನ ಅಲ್ಪತ್ವ ಅಪರಾಧ ದೌಷ್ಟ್ಯಗಳನ್ನೆಲ್ಲ ಕ್ಷಮಿಸಿ, ಅವನ ಪರವಾಗಿ ವಾದಿಸಿತ್ತು. ’ +ಪಾಪ!ಹುಡುಗ ನಿಜವಾಗಿಯೂ ಒಳ್ಳೆಯವನೆ! +ನಾವೇ ಅವನ್ನ ಬೈದೂ ಹೊಡೆದೂ ದೂರಮಾಡಿ ಹಾಂಗಾಗಿಬಿಟ್ಟಿದ್ದ! +ಏನೊ ದೇವರು ಕಣ್ಣು ಬಿಟ್ಟ ಅಂತಾ ಕಾಣ್ತದೆ ನಮ್ಮ ಮನೇ ಮೇಲೆ!’ಮಂಜಮ್ಮನಂತೂ ತನ್ನ ಒರಟು ಅಣ್ಣಯ್ಯ ತನ್ನನ್ನು, ತನ್ನ ಅಪ್ಪಯ್ಯ ಅಕ್ಕರೆಗೆ ಕರೆಯುವಂತೆ, ’ಬುಚ್ಚಿ’ ಎಂದು ಸಂಭೋಧಿಸಿ ಕರೆಯತೊಡಗಿದ್ದನ್ನು ಕೇಳಿ, ಅವನ ಮೇಲಣ ಮಮತೆಯುಕ್ಕಿ ಕರಗಿದಂತಾಗಿದ್ದಳು. +ತಿಮ್ಮಪ್ಪ ಸಾಧಾರಣವಾಗಿ ತನ್ನ ತಂಗಿಯನ್ನು ತಿರಸ್ಕಾರ ಧ್ವನಿಯಿಂದ ’ಮಂಜಿ’ ಎಂದೇ ಕರೆಯುತ್ತಿದ್ದುದು ವಾಡಿಕೆಯಾಗಿತ್ತು. +ಧರ್ಮುವ ಪರವಾಗಿದ್ದ ತಿಮ್ಮಪ್ಪನ ವರ್ತನೆಯಂತೂ ಸಂಪೂರ್ಣವಾಗಿ ಬದಲಾಯಿಸಿತ್ತು. +ತಾನೆ ಮನೆಯ ಯಜಮಾನನಾಗಿ ಅವನ ಅಭ್ಯುದಯದ ಹೊಣೆಗಾರಿಕೆ ಹೊತ್ತಂತೆ ತೋರುತ್ತಿತ್ತು….’ + ಐಗಳ ಹತ್ರ ಚೆನ್ನಾಗಿ ಓದು ಬರಾ ಕಲಿ. +ಆಮ್ಯಾಲೆ ಮೇಗರೊಳ್ಳೀಲಿ ಹೊಸ ಮಿಶನ್ ಇಸ್ಕೂಲಾಗಿದೆಯಲ್ಲಾ ಅಲ್ಲಿಗೆ ಹೋಗಿ ಇಂಗಲೀಸು ಕಲ್ತು, ಕಡೀಗೆ ತೀರ್ಥಹಳ್ಳಿಗೂ ಹೋಗಬೈದಂತೆ! …. ’ ಎಂದು ತುಂಬ ಮುದ್ದಿನಿಂದ ಮಾತಾಡಿಸಿ ಅವನನ್ನು ಕೋಣೂರಿಗೆ ಕಳಿಸಿದ್ದನು. +ಮನೆ ಹಿಸ್ಸೆಯಾಗಿ ಶಂಕರಹೆಗ್ಗಡೆ ಬೇರೆ ಹೋದಾಗಿನಿಂದಲೂ ಒಮ್ಮೆಯೂ ಅವರ ಮನೆಯ ಕಡೆಗೆ ಸುಳಿಯದಿದ್ದ ತಿಮ್ಮಪ್ಪಹೆಗ್ಗಡೆ, ದೊಡ್ಡಣ್ಣಹೆಗ್ಗಡೆ ಮತ್ತು ರಂಗಮ್ಮ ಹೆಗ್ಗಡಿತಿಯವರ ಹನ್ನೊಂದನೆಯ ದಿನದ ತಿಥಿ ಪೂರೈಸಿದ ಮರುದಿನ ಬೆಳಗ್ಗೆ, ಮೊತ್ತ ಮೊದಲಾಗಿ ಹೆಂಚಿನ ಮನೆಯ ಅಂಗಳಕ್ಕೆ ಕಾಲಿಟ್ಟನು. +ಜಗಲಿಯಲ್ಲಿ ತನ್ನ ಬಾವ ಸಿಂಬಾವಿ ಭರಮೈಹೆಗ್ಗಡೆಯವರೊಡನೆ ಮಾತನಾಡುತ್ತಾ ಕುಳಿತಿದ್ದ ಶಂಕರಹೆಗ್ಗಡೆಗೆ ತನ್ನ ಕಣ್ಣನ್ನೆ ನಂಬಲು ಸಾಧ್ಯವಾಗಲಿಲ್ಲ. +ಬಂಧುಜೀವಗಳೆರಡರ ಸದ್ಯೋಮರಣದ ದುರಂತ ದುಃಖಛಾಯೆ ಯಲ್ಲಿದ್ದ ಶಂಕರಹೆಗ್ಗಡೆಯ ಹೃದಯದಲ್ಲಿಯೂ ತಾತ್ಕಾಲಿಕ ಕ್ಷಮಾಗುಣವು ತನಗೆ ತಾನೆ ಉದ್ದೀಪಿತವಾದ್ದರಿಂದ ಸಿಂಬಾವಿ ಬಾವನ ಇದಿರಿನಲ್ಲಿ ದಾಯಾದಿ ತಿಮ್ಮಪ್ಪನನ್ನು ವಿಶ್ವಾಸದಿಂದಲೆ ಬರಮಾಡಿಕೊಂಡನು. +ತನ್ನಿಂದ ಏನಾದರೂ ಸೇವೆ ಅಥವಾ ಸಹಾಯದ ಆವಶ್ಯಕತೆ ಇದೆಯೆ ಎಂದೂ ವಿಚಾರಿಸಿದ್ದನು. +ತಿಮ್ಮಪ್ಪ ಆ ಮಾತು ಈ ಮಾತು ಆಡಿ, ಸಿಂಬಾವಿ ಬಾವನನ್ನು ಏಕಾಂತಕ್ಕೆ ಕರೆದು ಮಾತಾಡಿದನು. +ಅಲ್ಲಿಂದ ಸೀತತ್ತಿಗಮ್ಮನ ಯೋಗಕ್ಷೇಮ ವಿಚಾರಿಸುವ ನೆವದಿಂದ, ಏನೇನನ್ನೊ ಗಳಪುತ್ತಿದ್ದು ತನ್ನ ಕೈ ಹಿಡಿದುಕೊಂಡು ಪಕ್ಕದಲ್ಲಿಯೇ ನಡೆದುಬಂದ ರಾಮುವಿನೊಡನೆ, ಒಳಗೆ ಹೋಗಿ, ಜಟ್ಟಕ್ಕಯ್ಯನೊಡನೆ ತನ್ನ ನಾನಾ ವಿಧವಾದ ಸುಖ ದುಃಖಗಳನ್ನು ಹೇಳಿಕೊಂಡು, ಮೆಲ್ಲನೆ ಪಿಸುದನಿಯಲ್ಲಿ ತನ್ನ ಮತ್ತು ತಂಗಿ ಮಂಜಮ್ಮನ ಮದುವೆಯ ಪ್ರಸ್ತಾಪವೆತ್ತಿದನು. +“ನೋಡು, ಅಕ್ಕಯ್ಯ, ನನ್ನ ದುರಾದೃಷ್ಟ, ಅಣ್ಣಯ್ಯ ಅತ್ತಿಗೆಮ್ಮ ಇಬ್ಬರೂ ಒಟ್ಟಿಗೆ ಹೋಗಿಬಿಟ್ರು…. +ಅಪ್ಪಯ್ಯನೂ ಹಾಸಿಗೆ ಹಿಡಿದು ಬಿಟ್ಟಾನೆ…. +ಇನ್ನೇನು ಹೊರೆ ಎಲ್ಲಾ ನನ್ನ ಮ್ಯಾಲೇ ಬಿದ್ದ ಹಾಂಗಾಯ್ತು…. +ನೀವೆಲ್ಲ ನನ್ನ ಕೈಹಿಡಿದು ಎತ್ತದೆ ಇದ್ದರೆ, ನನಗೆ ಇನ್ಯಾರು ಗತಿ?” ಅಳುದನಿಯಿಂದಲೆ ನುಡಿದು, ಕಂಬನಿ ಮಿಡಿದು, “ನಮ್ಮ ಮನೆ ಪಾಲಾಗದೆ ಇದ್ದಿದ್ರೆ ಶಂಕರಣ್ಣಯ್ಯನೇ ಎಲ್ಲಾನೂ ನೋಡಿಕೊಳ್ತಿದ್ನೋ ಇಲ್ಲೋ? +ಮನೆ ಪಾಲಾದ್ರೆ ಏನಾಯ್ತು? +ಅಂವ ಅಣ್ಣಯ್ಯ, ನೀನು ಅಕ್ಕಯ್ಯ ಅನ್ನೋದೇನಾದ್ರೂ ತಪ್ತದೆಯೇ? …. ” ಎಂದು ಮೊದಲಾಗಿ ಪೀಠಿಕೆ ಹಾಕಿ, ತನ್ನ ಮತ್ತು ತಂಗಿಯ ಮದುವೆಯ ಭಾರವೂ ಅವರ ಮೇಲೆಯೆ ಬಿದ್ದಿದೆ ಎಂಬುದನ್ನೂ ಸೂಚಿಸಿ, ಭರಮೈಹೆಗ್ಗಡೆಗೆ ತನ್ನ ತಂಗಿ ಮಂಜಮ್ಮನನ್ನು, ಹಿಂದೆ ಮಾತಾಗಿದ್ದು, ಜಟ್ಟಮ್ಮನಿಂದಲೆ ಅದು ಮುರಿದು ಬಿದ್ದುದನ್ನೂ ಇಂಗಿತವಾಗಿ ನುಡಿದು,ತಂದುಕೊಂಡು, ತನಗೆ ಭರಮೈಹೆಗ್ಗಡೆಯ ತಂಗಿ ಲಕ್ಕಮ್ಮನನ್ನು ಕೊಟ್ಟು ಲಗ್ನವೇರ್ಪಡಿಸುವಂತೆ ಸಲಹೆಕೊಟ್ಟನು. +ಆದರೆ ಜಟ್ಟಮ್ಮ ತನ್ನ ಗಂಡನ ಮದುವೆ ಹೂವಳ್ಳಿ ವೆಂಕಪ್ಪನಾಯಕರ ಮಗಳು ಚಿನ್ನಮ್ಮನೊಡನೆ ಆಗಲೆ ನಿಶ್ಚಯವಾಗಿಬಿಟ್ಟಿರುವ ವಿಚಾರ ತಿಳಿಸಿ, “ತಮ್ಮ ತಂಗೀನೇ ಕೊಟ್ಟು, ನಿನ್ನ ತಂಗೀನೇ ತರಾದು ಅಂತಾ ಮೊದಲೇನೋ ವೇಚನೆ ಮಾಡಿದ್ರು. +ಆದರೆ ಈಗ ಯಾಕೋ ಅವರ ಮನಸ್ಸು ಬದಲಾಯಿಸಿದ ಹಾಂಗೆ ಕಾಣ್ತದೆ. +ತಂಗೀನ ಬ್ಯಾರೆ ಯಾರಿಗೋ ಕೊಡಾಕೆ ನೋಡ್ತಿರೊ ಹಾಂಗೆ ಕಾಣ್ತದೆ! …. +ನಂಗೇನೋ ಅವಳನ್ನ ನಿಂಗೇ ಕೊಡಬೇಕು ಅಂತಾ ಮನಸ್ಸು. +ಆದರೆ ಅವರ ತಂಗೀನ ಅವರ ಮನಸ್ಸು ಬಂದೋರಿಗೆ ಕೊಡಬ್ಯಾಡ ಅಂತಾ ಹ್ಯಾಂಗೆ ಹೇಳಾದು, ಹೆಣ್ಣು ಹೆಂಗ್ಸು?” ಎಂದು ಹೇಳಿ, ತುಂಬ ಸಹಾನುಭೂತಿ ವ್ಯಕ್ತಪಡಿಸಿದಳು. +ತಿಮ್ಮಪ್ಪಹೆಗ್ಗಡೆಯ ಕೆಟ್ಟಚಾಳಿಯ ಅಸಹ್ಯ ಕಥೆ ಕಿವಿಯಿಂದ ಕಿವಿಗೆ ಅಸಹ್ಯಾಸಹ್ಯತರವಾಗಿ ಹಬ್ಬಿದುದೇ ತನ್ನ ಗಂಡನ ಮನಸ್ಸು ಬದಲಾಯಿಸಿದುದಕ್ಕೆ ಒಳಗುಟ್ಟಿನ ಕಾರಣ ಎನ್ನುವುದನ್ನು ಮಾತ್ರ ಜಟ್ಟಮ್ಮ ಬಿಟ್ಟುಕೊಟ್ಟಿರಲಿಲ್ಲ. +ನೆರೆಮನೆಗೆ ಹೋಗುವಾಗ ಇದ್ದ ಪ್ರಶಾಂತತೆ ನೆರೆಮನೆಯಿಂದ ಹಿಂತಿರುಗಿದ ತಿಮ್ಮಪ್ಪ ಹೆಗ್ಗಡೆಯಲ್ಲಿ ಇರಲಿಲ್ಲ. +ಅವನ ಮನಸ್ಸು ಸಂಪೂರ್ಣ ವಿಕ್ಷುಬ್ದಗೊಂಡಿತ್ತು. +ತನ್ನ ತಂಗಿ ಮಂಜಮ್ಮನೊಡನೆ ಸಿಂಗಾವಿ ಭರಮೈಹೆಗ್ಗಡೆಯ ವಿವಾಹ ಮುರಿದುಬಿದ್ದಿದ್ದ ವಿಚಾರ ಅವನಿಗೇನೂ ಹೊಸದಾಗಿರಲಿಲ್ಲ. +ಹೂವಳ್ಳಿಯ ಚಿನ್ನಮ್ಮನ ಮದುವೆಯ ವಿಚಾರವೂ ಅವನಿಗೆ ಗೊತ್ತಿದ್ದುದೆ ಆಗಿತ್ತು. +ಆ ಘಟನೆಯಿಂದ ತನ್ನ ಮತ್ತು ಸಿಂಬಾವಿ ಲಕ್ಕಮ್ಮನ ಮದುವೆ ಸ್ವಲ್ಪ ತಡವಾಗ ಬಹುದೇ ಹೊರತು ಇನ್ನೇನೂ ಪ್ರಮಾದಕ್ಕೆ ಅವಕಾಶವಿಲ್ಲ ಎಂದು ಭಾವಿಸಿ ಆಶಾವಾದಿಯಾಗಿದ್ದನು. +ಆದರೆ ಈಗ ಭರಮೈಹೆಗ್ಗಡೆ ತನ್ನ ತಂಗಿಯನ್ನು ತನಗೆ ಕೊಡುವ ವಿಚಾರದಲ್ಲಿ ವಿಮನಸ್ಕನಾಗಿ, ಬೇರೆ ಆಲೋಚನೆಯಲ್ಲಿದ್ದಾನೆಂದು ಅತ್ಯಂತ ಪ್ರಮಾಣಪೂರ್ವಕವಾದ ಅಧಿಕಾರದ ಸ್ಥಳದಿಂದಲೆ ಕೇಳಿ ತಿಳಿದು ದಿಕ್ಕುಗೆಟ್ಟಂತಾಗಿದ್ದನು. +ಅವನ ಆ ದಿಙ್ಮೂಡತ್ವಕ್ಕೆ ಕಾರಣ, ಅಂತಹ ಆದರ್ಶಮಯ ಮಹತ್ವದ ಸಂಗತಿಯಾಗಿರಲಿಲ್ಲ. +ಹೂವಳ್ಳಿ ಚಿನ್ನಮ್ಮನನ್ನು ಭರಮೈಹೆಗ್ಗಡೆಗೆ ದ್ವಿತೀಯ ಪತ್ನಿಯನ್ನಾಗಿ ಮಾಡುತ್ತಾರೆಂದು ಕೇಳಿದಾಗ ಮುಕುಂದಯ್ಯನಿಗುಂಟಾಗಿದ್ದ ದಿಙ್ಮೂಢತ್ವಕ್ಕೂ ಈಗ ತಿಮ್ಮಪ್ಪಹೆಗ್ಗಡಗೆ ಉಂಟಾಗಿದ್ದ ಮನಃಕ್ಷೋಭೆಗೂ ಧ್ಯೇಯಸ್ವರೂಪದಲ್ಲಿ ಯಾವ ದೂರದ ಸಂಬಂಧವೂ ಇರಲಿಲ್ಲ. +ತಿಮ್ಮಪ್ಪಹೆಗ್ಗಡೆ ಆಗಲೆ ಹೆಣ್ಣಿನ ಸುಖವನ್ನು ನಾನಾ ಪಾತ್ರೆಗಳಲ್ಲಿ ಉಂಡುಬಿಟ್ಟಿದ್ದನು. +ಅವನಿಗೆ ಈಗ ಬೇಕಾದದ್ದು ತನ್ನ ಜಾತಿಗೆ ಸೇರಿದ್ದ ಒಂದು ಹೆಣ್ಣು. +ಇತರರಂತೆ ತಾನೂ, ತನ್ನಂತಹ ಮನೆತನದ ಒಂದು ಹೆಣ್ಣನ್ನು ಮದುವೆಯಾಗಿ, ಸಮಾಜದ ಕಣ್ಣಿನಲ್ಲಿ ಎಲ್ಲರಂತೆ ಗೌರವವಾಗಿ ಗೌಡಿಕೆ ಮಾಡಿಕೊಂಡಿದ್ದರಾಯಿತು ಎಂಬುದಷ್ಟೇ ಅವನಿಗೆ ಬೇಕಾಗಿತ್ತು. +ಲಕ್ಕಮ್ಮನೇ ಬೇಕು ಎಂದೂ ಅವನಿಗೆ ಹಟ ಇದ್ದಿರಲಿಲ್ಲ. +ತಾನು ಗೌರವಪೂರ್ವಕವಾಗಿ ಮದುವೆಯಾಗಬಹುದಾದ ಅಂತಹ ಮತ್ತೊಂದು ಹೆಣ್ಣು ಸಿಕ್ಕುವ ಪಕ್ಷದಲ್ಲಿ ಸಂತೋಷದಿಂದಲೆ ಲಕ್ಕಮ್ಮನನ್ನು ತ್ಯಜಿಸುತ್ತಿದ್ದನು. +ತ್ಯಜಿಸುತ್ತಿದ್ದೇನೆ, ತ್ಯಜಿಸಬೇಕಾಯಿತಲ್ಲಾ ಎಂಬ ಯಾವ ಪಶ್ಚಾತ್ತಾಪದ ಚುಚ್ಚೂ ಅವನ ಮನಸ್ಸಿಗೆ ಬರುತ್ತಿರಲಿಲ್ಲ. +ಆದರೆ ಈಗ ಬೇರೆ ಯೂರು ತನಗೆ ಹೆಣ್ಣು ಕೊಡಲು ಒಪ್ಪದಿರುವಾಗ ಸಿಕ್ಕಿದ್ದ ಒಂದು ಹೆಣ್ಣೂ ಕೈಬಿಟ್ಟು ಹೋದರೆ, ತನ್ನ ಮಾನ ಮೂರು ಕಾಸಾಗುವುದಿಲ್ಲವೆ? +ಕಡೆಗೆ, ಯಾವ ಸರೀಕ ಜಾತಿಯವನೂ ಹೆಣ್ಣು ಕೊಡದಿದ್ದ ತನಗೆ, ಯಾವುದಾದರೂ ಒಂದು ಜಾತಿ ಮಾತ್ರದಲ್ಲಿ ಸಮಾನವಾಗಿರುವ, ಕೀಳುಮಟ್ಟದ ಒಕ್ಕಲ ಹೆಣ್ಣು ಗತಿಯಾದರೆ?ಎಷ್ಟು ಅಗೌರವ! +ಆದ್ದರಿಂದಲೆ ಸಿಂಬಾವಿ ಲಕ್ಕಮ್ಮನನ್ನು ಹೇಗಾದರೂ ಮಾಡಿ ದಕ್ಕಿಸಿಕೊಳ್ಳಲೇಬೇಕೆಂದೂ, ಅದಕ್ಕಿರುವ ಒಂದೇ ಒಂದು ದಾರಿ ಎಂದರೆ ಭರಮೈಹೆಗ್ಗಡೆಗೆ ಹೂವಳ್ಳಿ ಚಿನ್ನಮ್ಮ ದಕ್ಕುದಂತೆ ಮಾಡಿ, ಅವನಿಗೆ ತನ್ನ ತಂಗಿ ಮಂಜಮ್ಮನನ್ನೇ ಗತಿ ಎಂಬಂತೆ ಮಾಡಬೇಕೆಂದೂ, ಹಾಗೆ ಮಾಡಿದರೇನೇ ಅವನ ತಂಗಿಯನ್ನು ಅನಿವಾರ್ಯವಾಗಿ ತನಗೇ ಕೊಡಲೇ ಬೇಕಾಗುತ್ತದೆಂದು ತೀರ್ಮಾನಿಸಿ, ಕಾರ್ಯೋನ್ಮುಖನಾಗಲು ಗಟ್ಟಿಮನಸ್ಸು ಮಾಡಿಕೊಂಡನು. +ಸ್ವಭಾವತಃ ರೂಕ್ಷನಾಗಿದ್ದ ತಿಮ್ಮಪ್ಪಹೆಗ್ಗಡೆ, ಯಾವ ಕೆಲಸ ಕೈಗೊಂಡರೂ ರೂಕ್ಷತೆಯೇನು ತಪ್ಪಿದ್ದಲ್ಲವಷ್ಟೇ? +ತೀರ್ಥಹಳ್ಳಿಯಲ್ಲಿ ತನ್ನ ಹಳೆಮನೆ ಬಾವ, ದೊಡ್ಡಣ್ಣಹೆಗ್ಗಡೆ ತೀರಿಕೊಂಡಾಗ, ಮುಂಕುಂದಯ್ಯನ ಮನಸ್ಸು ಒಂದು ವಿಚಿತ್ರ ಮನಸ್ಥಿತಿಯನ್ನು ಅನುಭವಿಸಿತ್ತು. +’ಗಡ್ಡದಯ್ಯ’ನಿಂದ ತಾನು ತಿಳಿದಿದ್ದ ರಹಸ್ಯಜ್ಞಾನದಿಂದಾಗಿ, ಅವನಿಗೆ ಆ ಸಾವು, ಅವನು ಆ ರಹಸ್ಯವನ್ನು ತಿಳಿಯದಿದ್ದರೆ ಎಷ್ಟು ದುಃಖವನ್ನು ತರುತ್ತಿತೋ, ಅಷ್ಟು ದುಃಖವಾಗಿರಲಿಲ್ಲ. +ದೊಡ್ಡಣ್ಣಹೆಗ್ಗಡೆಯದೇ ಆಗಿದ್ದ ಆ ದೇಹದಲ್ಲಿ ಇದ್ದ ಬೇರೆ ಯಾವುದೊ ಜೀವ, ತನ್ನ ಪ್ರಾರಬ್ಧವನ್ನು ಪೂರೈಸಿ, ಇಂದೋ ನಾಳೆಯೋ ದೇಹತ್ಯಾಗ ಮಾಡುತ್ತದೆ ಎಂದು ’ಗಡ್ಡದಯ್ಯ’ ಹೇಳಿದುದನ್ನು ಅವನು ಮತ್ತೆ ಮತ್ತೆ ನೆನೆಯುತ್ತಿದ್ದನು. +ದೊಡ್ಡಣ್ಣಹೆಗ್ಗಡೆಯ ಜೀವವೆ ಈಗ ತನ್ನ ಕಿರಿಯ ಅಕ್ಕ ದೇವಮ್ಮಗೂ ಬೆಟ್ಟಳ್ಳಿಯ ದೇವಯ್ಯಗೂ ಮಗನಾಗಿ ಹುಟ್ಟಿದ್ದಾನೆ ಎಂಬ ’ಗಡ್ಡದಯ್ಯನ’ ಮಾತಿನಲ್ಲಿ ಅವನ ನಂಬುಗೆ ಅಷ್ಟು ಸುಭದ್ರವಾಗಿರಲಿಲ್ಲ. +ಆದರೂ ತನ್ನ ದೊಡ್ಡ ಅಕ್ಕ, ಹಳೆಮನೆ ರಂಗಮ್ಮ, ಬೆಟ್ಟಳ್ಳಿಗೆ ಹೋದಾಗಿನಿಂದ ’ಚೆಲುವಯ್ಯ’ನೊಡನೆ ವ್ಯವಹರಿಸಿದ ರೀತಿಯನ್ನು ಕೇಳಿಯೂ ನೋಡಿಯೂ ಅವನಿಗೆ ’ಗಡ್ಡದಯ್ಯ’ನ ಮಾತು ನಿಜವಿದ್ದರೂ ಇರಬಹುದೇನೋ ಎಂದನ್ನಿಸಿತ್ತು. +ಅಷ್ಟೇ ಅಲ್ಲದೆ, ’ಹುಚ್ಚುಹೆಗ್ಗಡಿತಿ’ ಎನ್ನಿಸಿಕೊಂಡಿದ್ದ ತನ್ನ ಅಕ್ಕ ತನ್ನ ಮುಂದಿನ ಜನ್ಮದಲ್ಲಿ ತನಗೂ ಹೂವಳ್ಳಿ ಚಿನ್ನಮ್ಮನಿಗೂ ಮಗಳಾಗಿ ಹುಟ್ಟಿ, ಮತ್ತೆ ಚೆಲುವಯ್ಯನನ್ನೇ ಮದುವೆಯಾಗಿ, ತನ್ನ ಈ ಜನ್ಮದ ಪ್ರಾರ್ಥನೆಗೆ ಮುಂದಿನ ಜನ್ಮದಲ್ಲಿ ಸಂಪೂರ್ಣವಾದ ಸುಖದ ಸಿದ್ದಿಯನ್ನು ಪಡೆಯುತ್ತಾಳೆ ಎಂಬುದನ್ನೂ ಸೂಚಿಸಿತ್ತು ’ಗಡ್ಡದಯ್ಯ’ನ ಭವಿಷ್ಯದರ್ಶನ. +ಆದರೆ ತನ್ನ ದೊಡ್ಡಅಕ್ಕ ಇಷ್ಟು ಬೇಗನೆ ಇಷ್ಟು ಅನಿರೀಕ್ಷಿತವಾಗಿ ಅದ್ಭುತವೆಂಬಂತೆ ದೇಹತ್ಯಾಗ ಮಾಡಿ ’ಗಡ್ಡದಯ್ಯ’ನ ಮಾತಿಗೆ ಪುಷ್ಟಿ ನೀಡುತ್ತಾಳೆ ಎಂದು ಅವನು ಊಹಿಸಿಯೆ ಇರಲಿಲ್ಲ. +ಈಗ ಅದೂ ನಡೆದು ಹೋಗಿತ್ತು! +ತನಗಿರುವ ರಹಸ್ಯಜ್ಞಾನದ ಮಹಿಮೆಯಿಂದ ಒಂದು ಉಚ್ಚಸ್ತರದಲ್ಲಿ ನೆಲೆಸಿದ್ದ ಅವನ ಮನಸ್ಸಿಗೆ, ಅಕ್ಕನ ಅನಿರೀಕ್ಷಿತ ಮರಣವೂ ಅದಕ್ಕಾಗಿಯೆ ಅಷ್ಟು ಸಂಕಟವನ್ನು ತರದಿದ್ದರೂ, ಧರ್ಮು ಪಡುತ್ತಿದ್ದ ಸಹಿಸಲಾರದ ಶೋಕವನ್ನು ನೋಡಿ ಮಮ್ಮಲ ಮರುಕ ಉಂಟಾಗಿತ್ತು. +ಸಿಂಬಾವಿ ಭರಮೈಹೆಗ್ಗಡೆಗೆ ಮದುವೆ ನಿಶ್ಚಯವಾಗಿರುವ ಹೂವಳ್ಳಿ ಚಿನ್ನಮ್ಮನಲ್ಲಿ ತನಗೆ ಮಗಳು ಸಂಭವಿಸುವ ಅಸಂಭವನೀಯ ವಿಚಾರ ಮನಸ್ಸಿಗೆ ಬಂದಾಗಲೆಲ್ಲ ಅವನಿಗೆ ’ಗಡ್ಡದಯ್ಯ’ನ ಕಣಿ ಒಂದು ಬರಿಯ ಕಟ್ಟುಕಥೆಯಾಗಿ ತೋರುತ್ತಿತ್ತು. +ಚಿನ್ನಮ್ಮನನ್ನು ಆ ವಿವಾಹದಿಂದ ಪಾರು ಮಾಡಲು ಒಳಸಂಚೇನೋ ನಡೆಯುತ್ತಿತ್ತು. +ಆದರೆ ಅದರ ಸಫಲತೆಯ ವಿಷಯದಲ್ಲಿ ಮುಕುಂದಯ್ಯನ ಶ್ರದ್ಧೆ ದೋಲಾಯಮಾನವಾಗಿ ಕಂಪಿಸುತ್ತಿತ್ತು. +ಅದಕ್ಕೆ ತನ್ನವರದ್ದಾಗಲಿ ದೊಡ್ಡವರ ಯಾರ ಬೆಂಬಲವೂ ಇರಲಿಲ್ಲ. +ಅಷ್ಟೇ ಅಲ್ಲ, ಸಾಮಾಜಿಕವಾದ ಮಾನಮರ್ಯಾದೆ ಕಟ್ಟಪಾಡುಗಳ ವಿಚಾರದಲ್ಲಿ ಸಂಪ್ರದಾಯ ದೃಷ್ಟಿಯಿಂದಲ್ ಸಂಪೂರ್ಣಬದ್ಧರಾಗಿದ್ದ ಆ ದೊಡ್ಡವರಿಗೆ ಈ ಸಂಗತಿ ಏನಾದರೂ ಗೊತ್ತಾಗಿದ್ದರೆ ಛೀಮಾರಿ ಹಾಕಿ ಅದನ್ನು ವಿಫಲಗೊಳಿಸಲು ಸರ್ವ ಪ್ರಯತ್ನವನ್ನೂ ಮಾಡುತ್ತಿದ್ದರು. +ಆದ್ದರಿಂದಲೇ, ಒಂದು ದಿನ, ಬೈಗು ಕಪ್ಪಾಗುತ್ತಿದ್ದಾಗ, ಧರ್ಮು ಕಾಡು ತಿಮ್ಮು ಮತ್ತು ಇತರ ಹುಡುಗರೂ ಸೇರಿ ಎಲ್ಲರೂ ಒಡ್ಡಿಗೆ ಕೋಳಿಗಳನ್ನಟ್ಟಿ ಕೂಡುತ್ತಿದ್ದ ಅಟ್ಟಹಾಸದ ಗಲಭೆಯಲ್ಲಿ ಮುಕುಂದಯ್ಯನೂ ವಿನೋದಾರ್ಥಿಯಾಗಿ ಭಾಗಿಯಾಗಿದ್ದಾಗ, ಧರ್ಮುವನ್ನು ಅವನ ಅಜ್ಜಯ್ಯ ಕರೆತರಲು ಹೇಳಿದ್ದಾರೆಂದು ಹಳೆಮನೆಗೆ ಕರೆದುಕೊಂಡು ಹೋಗಲು ಕೋಣೂರಿಗೆ ಬಂದಿದ್ದ ತಿಮ್ಮಪ್ಪಹೆಗ್ಗಡೆ, ಆ ಮಾತು ಈ ಮಾತಿನ ನಡುವೆ “ಮುಕುಂದಬಾವ, ನಾ ಹೇಳ್ತಿನಿ ಕೇಳಿ. +ಈ ಹೂವಳ್ಳಿ ಹೆಣ್ಣನ್ನ ಸಿಂಬಾವಿಗೆ ಲಗ್ನ ಮಾಡಿ ಕೊಡುದನ್ನ ತಪ್ಪಿಸದೆ ಇದ್ದರೆ ನಾವೆಲ್ಲ ಆ ಅನ್ಯಾಯದಲ್ಲಿ ಪಾಲುಗಾರರಾಗಬೇಕಾಗುತ್ತದೆ. +ಇಷ್ಟು ಎಳೇ ಹುಡುಗೀನ ಆ ಹಳೇ ಮುದುಕಗೆ ಕಟ್ಟೋಕೆ ಬದಲಾಗಿ ಅದನ್ನು ಬಾವಿಗಾದ್ರೂ ಹಾಕೋದು ಲೇಸು! +ನಮ್ಮ ಮನೇಲಿ ಕೆಲಸ ಮಾಡ್ತಾಳಲ್ಲಾ ಆ ಹಳೆಪಕ್ಕದ ಹೂವಿ ಹೇಳ್ತಿತ್ತು ’ಆ ಹೂವಳ್ಳಿ ಚಿನ್ನಮ್ಮೋರ ದುಃಖ ಯಾರಿಗೆ ನೋಡಕ್ಕಾಗ್ತದೆ? +ಅವರು ಕಂಡಿತಾ ಕೆರೆಗೋ ಬಾವಿಗೋ ಬೀಳ್ತಾರೆ; +ಇಲ್ಲ, ನೇಣು ಹಾಕಿಕೊಳ್ತಾರೆ!’ ಅಂತಾ”. +ಎಂದು ಏಕಾಂತವಾಗಿ ತನಗೆ ಹೇಳಿದ್ದನ್ನು ಕೇಳಿ ಮುಕುಂದಯ್ಯ ಬೆರಗಾಗಿ ಹೋಗಿದ್ದನು! +ಆದರೆ ತಿಮ್ಮಪ್ಪಹೆಗ್ಗಡೆಯ ಸ್ವಭಾವವನ್ನಿರಿತ್ತಿದ್ದ ಮುಕುಂದಯ್ಯ, ಅವನು ನಿಜವಾಗಿಯೂ ತನ್ನ ಕಡೆಗಿದ್ದಾನೆಯೋ? +ಅಥವಾ ಗುಟ್ಟು ತಿಳಿದುಕೊಂಡು ತಮ್ಮ ಸಂಚನ್ನು ಹೊರಹಾಕಿ, ಹಿಡಿದುಕೊಟ್ಟು, ಹಾಳುಮಾಡ ಲೋಸ್ಕರವೆ ಸೋಗು ಹಾಕುತ್ತಿದ್ದಾನೆಯೋ?ಎಂಬುದನ್ನು ನಿಶ್ಚಯಿಸಲಾರದೆ ಯಾವ ಪ್ರತ್ಯುತ್ತರವನ್ನು ಕೊಡದೆ ಎಚ್ಚರಿಕೆಯಿಂದ ವರ್ತಿಸಿದ್ದನು. +ಮಳೆ ಹಿಡಿದಿದ್ದರಿಂದಲೂ ಬೇಸಾಯಗಾರರೆಲ್ಲ ಪುರುಸೊತ್ತಿಲ್ಲದೆ ಬೆಳಗಿನಿಂದ ಬೈಗಿನವರೆಗೂ ಗದ್ದೆಗಳಲ್ಲಿ ದುಡಿಯಬೇಕಾಗಿದ್ದರಿಂದಲೂ ಹೂವಳ್ಳಿ ಲಗ್ನ ಮುಂದಿನ ವರ್ಷಕ್ಕೆ ಮುಂದುವರಿಯಬಹುದೆಂದು ಇದ್ದ ಒಂದು ದೂರದಾಸೆಯೂ ಭಗ್ನಗೊಂಡಿತ್ತು. +ಸಿಂಬಾವಿ ಹೆಗ್ಗಡೆ ಹೂವಳ್ಳಿ ವೆಂಕಪ್ಪನಾಯಕರಿಗೆ ತಗಾದೆ ಮಾಡಿ “ಆರಿದ್ರೇ ಮಳೆಗೆ ಆದವನೇ ಗಂಡ!’ ಎಂಬ ಗಾದೆಯನ್ನು ಸಾರ್ಥಕಗೊಳಿಸಿದ್ದರು. +ಬರುವವರು ಬರಲಿ ಇಲ್ಲದವರು ಬಿಡಲಿ; +ಮದುವೆಯಂತೂ ಗೊತ್ತಾಗಿದ್ದ ಕಾಲಕ್ಕೆ ನಡೆಯಲೇಬೇಕೆಂದು ಸಾಲಗಾರನಿಗೆ ಸಾಲ ಕೊಟ್ಟವನ ತಗಾದೆ ಆಜ್ಞೆ ಮಾಡಿದ್ದರು! +ಆ ದುರ್ಮುಹೂರ್ತ ಬಳಿಸಾರಿದಂತೆಲ್ಲ ಮನಸ್ಸಿನ ಶಂಕೆ ಮತ್ತು ಎದೆಯ ತಲ್ಲಣ ಹೆಚ್ಚುಹೆಚ್ಚಾಗುತ್ತಿದ್ದ ಮುಕುಂದಯ್ಯ ’ಗಡ್ಡದಯ್ಯ’ನನ್ನು ಮತ್ತೊಮ್ಮೆ ಕಾಣುವ ಅಭಿಸಂಧಿಯಿಂದ, ತನ್ನ ಪುಟ್ಟಕ್ಕ ಮತ್ತು ಪುಟ್ಟಕ್ಕನ ಮಗು ಹೇಗಿದ್ದಾರೆಂದು ವಿಚಾರಿಸುವ ನೆವವೊಡ್ಡಿ, ’ಗದ್ದೆ ಕೆಲಸ ಬಿಟ್ಟು, ನೆಂಟರ ಮನೆ ತಿರುಗ್ತಾನೆ, ಎಂಬ ತನ್ನ ಅಣ್ಣ ರಂಗಪ್ಪಗೌಡರ ಕಟುಟೀಕೆಯನ್ನೂ ಸಹಿಸಿ, ಬೆಟ್ಟಳ್ಳಿಗೆ ಹೋದನು. +ಕಲ್ಲೂರಿಗೆ ಹೋಗಿ ’ಗಡ್ಡದಯ್ಯ’ನನ್ನು ಸಂಧಿಸುವ ತನ್ನ ಮನಸ್ಸನ್ನು ದೇವಯ್ಯನಿಗೆ ತಿಳಿಸಲು ಅವನು, ತಾನು ಸಿಕ್ಕಿಬಿದ್ದಿರುವ ಸಮಸ್ಯೆಯಿಂದ ಪಾರಾಗಲು ತಾನೇ ’ಗಡ್ಡದಯ್ಯ’ನ ಮಾರ್ಗ ದರ್ಶನ ಪಡೆಯಲೆಂದು ಕಲ್ಲೂರಿಗೆ ಹೋಗಿದ್ದುದಾಗಿಯೂ, ಆದರೆ ’ಗಡ್ಡದಯ್ಯ’ ಆ ಕಲ್ಲುಮಂಟಪದಿಂದ ಅದೃಶ್ಯನಾಗಿ ಎಷ್ಟೋ ದಿನಗಳಾದುದಾಗಿ ತಿಳಿದುಬಂದಿತೆಂದೂ ಆತನು ಶೃಂಗೇರಿಯ ದರ್ಶನ ಮಾಡಿಕೊಂಡು ಕನ್ಯಾಕುಮಾರಿಯ ಮಾರ್ಗವಾಗಿ ಕೊಲಂಬೋಗೆ ಹೋಗುವುದಾಗಿ ಹೇಳುತ್ತಿದ್ದನಂತೆ ಎಂದೂ ತಿಳಿಸಿದನು. +ಮತ್ತೆ ಆ ನಿರಾಡಂಬರ ತೇಜಸ್ವಿಯಾಗಿದ್ದ ಪೂಜ್ಯ ಸಂನ್ಯಾಸಿಯನ್ನು ಸಂದರ್ಶಿಸುವ ಭಾಗ್ಯ ತನ್ನ ಜೀವಮಾನದಲ್ಲಿ ಎಂದೆಂದಿಗೂ ಒದಗಲಾರದು ಎಂದು ಚಿಂತಿಸಿ ಖಿನ್ನನಾದ ಮುಕುಂದಯ್ಯನ ಚೇತನಕ್ಕೆ ಹಠಾತ್ತನೆ ಆತನ ಮಹಿಮೆ ಉಜ್ವಲವಾಗಿ ಸ್ಪುರಿಸಿದಂತಾಯ್ತು. +ಅಂದು ಆತನು ಅಮೆರಿಕಾ, ವಿವೇಕಾನಂದ, ವೇದಾಂತ ದರ್ಶನ, ಭಾರತದ ಪುನರುಜ್ಜೀವನ ಇತ್ಯಾದಿಯಾಗಿ ಹೇಳಿದ್ದುದು, ಯಾವುದೂ ಅರ್ಥವಾಗಲಿ ಭಾವವಾಗಲಿ ಆಗದಿದ್ದುದು, ಇಂದು ಮುಕುಂದಯ್ಯನ ಅಗೋಚರ ಆಕಾಶಪ್ರಜ್ಞೆಯ ಅಂಚಿನಲ್ಲಿ, ಆಗತಾನೆ ಆಗಲಿರುವ ಚಂದ್ರೋದಯ ಪೂರ್ವದ ಕನಕಕಾಂತಿಯಿಂದ ಪ್ರಜ್ವಲಿಸತೊಡಗಿತು. +ಆ ಮೂರ್ತಿಯನ್ನು ನೆನೆನೆನೆದು ಮನದಲ್ಲಿಯೆ ಅದಕ್ಕೆ ಅಡ್ಡ ಬಿದ್ದನು! +ಆ ದಿನ ರಾತ್ರಿ, ಊಟಕ್ಕೆ ಮೊದಲೂ ಊಟವಾದ ತರುವಾಯವೂ, ದೇವಯ್ಯ ಮುಕುಂದಯ್ಯ ಇಬ್ಬರೂ ಬಹಳ ಹೊತ್ತಿನವರೆಗೆ ಮಾತಾಡುತ್ತಿದ್ದುದು, ಹೊರಗಡೆ ಸುರಿಯುತ್ತಿದ್ದ ಜಡಿಮಳೆಯ ಜೋಗುಳದಲ್ಲಿ, ತಮ್ಮ ಕೋಣೆಯಲ್ಲಿ ಅರೆಜೊಂಪಿನ ನಿದ್ದೆಯಲ್ಲಿದ್ದ ಕಲ್ಲಯ್ಯಗೌಡರಿಗೆ ಗುನುಗುನುಗುನು ಸದ್ದಾಗಿ ಮಾತ್ರ ಕೇಳಿಸುತ್ತಲೆ ಇತ್ತು. +“ಆ ಭರಮೈಹೆಗ್ಗಡೆ ಮಾಡೋದು ಅಷ್ಟರಲ್ಲೇ ಇದೆ! +ನಾವು ಮಾಡೋದು ಮಾಡಾನ! +ಚಿನ್ನಕ್ಕನ ತಪ್ಪಿಸೋ ಕೆಲಸ ನೀ ನೋಡಿಕೋ; +ಮುಂದಿನ ಕೆಲಸ ನನಗೆ ಬಿಡು. +ನಾ ಎಲ್ಲ ಪ್ಲಾನು ಮಾಡ್ತಿನಿ.” ಮುಕುಂದಯ್ಯನಿಗೆ ಧೈರ್ಯ ಹೇಳಿ ಹುರಿದುಂಬಿಸಿದ ದೇವಯ್ಯ, ಆತನ ಮಗಳ ದಾಕ್ಷಿಣ್ಯಕ್ಕೆ ಸಿಕ್ಕಿಬಿದ್ದಿದ್ದ ತನ್ನನ್ನು ಮತಾಂತರಗೊಳಿಸುವ ಪಾದ್ರಿಯ ಬ್ಯಾಪ್ಟಿಸಮ್ ಏರ್ಪಾಡಿನಿಂದ ತನ್ನನ್ನು ಪಾರುಗಾಣಿಸುವ ವಿಚಾರದಲ್ಲಿ ಇಬ್ಬರೂ ಒಪ್ಪಿಕೊಂಡಿದ್ದ ರೀತಿಯನ್ನು ಕಾರ್ಯಗತ ಮಾಡುವ ವಿಷಯವಾಗಿ ಒತ್ತಿ ಒತ್ತಿ ಎಚ್ಚರಿಕೆ ಹೇಳಿದನು. + “ನೋಡೂ, ಕೋವಿಗೆ ಮಾತ್ರ ಈಡು ತುಂಬಿಕೊಂಡು ಬಂದೀಯಾ, ಹುಷಾರು! +ಆ ದೊಡ್ಡ ಪಾದ್ರಿ ಲೇಕ್ ಹಿಲ್ ದೊರೇನೂ ಬರ್ತಾನಂತೆ ತೀರ್ಥ ಕೋಡೋಕೆ!” +“ಬರೀ ಕೇಪು, ಮಸಿ ಹಾಕ್ಕೊಂಡು ಬರ್ತಿನಿ! +ಸಮಯ ಬಿದ್ದರೆ ಒಂದು ಹುಸಿ ಬೆದರು ಈಡು ಹಾರಿಸೋಕೆ; + ಆಯ್ತಾ? …. ರವೆ, ಗುಂಡು ಹಾಕ್ಕೊಂಡು ಬಂದು ಅವರನ್ನು ಖೂನಿ ಮಾಡಾಕೆ ನಂಗೇನು ಹುಚ್ಚೆ? …. + ಬಾಗಿಲಿಗೆ ಹೊರಗಡೆಯಿಂದ ಚಿಲಕ ಹಾಕಿ ಅಗಳಿ ಹಾಕಾಕೆ ನಮ್ಮ ಐಗಳಿಗೆ ಹಚ್ಚಿಕೊಡ್ತೀನಿ! …. + ಆ ಜಾತಿಗೆ ಸೇರಿಸೋ ಹುಚ್ಚು ಬಿಡಿಸ್ದೇ ಇದ್ರೆ ಆಗೋದಿಲ್ಲ ಆ ಪಾದ್ರಿಗೆ!ಬಾಕಿ ಎಲ್ಲಾ ಒಳ್ಳೆ ಮನುಷ್ಯನೇ!”ಮುಕುಂದಯ್ಯ ಧೈರ್ಯ ಹೇಳಿ ಆಶ್ವಾಸನೆ ಕೊಟ್ಟನು ದೇವಯ್ಯಗೆ. +ದಟ್ಟಗಾಡಿನ ಮರದೆಲೆಗಳ ಮೇಲೆ ಮಳೆ ಬೀಳುತ್ತಿದ್ದ ಸದ್ದಿನಲ್ಲಿಯೂ ಕೆರೆಹೊಂಡದ ಕಂಪಕ್ಕೆ ಹಾರಿ ಉಸುಬಿನಲ್ಲಿ ಸಿಕ್ಕಿಬಿದ್ದು ಕೂಗಿಕುಳ್ಳುತ್ತಿದ್ದ ಗಿರ್ಲುಮೀಸೆ ಪೋಲೀಸೀನವನ ಆರ್ತನಾದವೂ ಗುತ್ತಿಗೆ ಕೇಳಿಸಿತ್ತು; +ಬೇರೆಯ ಕಡೆಯಿಂದ ನನ್ನನ್ನು ಅಡ್ಡಹಾಕಲು ಓಡಿ ಬಂದು ಮುಳ್ಳಿನ ಪೊದೆಗಳಲ್ಲಿ ಸಿಕ್ಕಿಕೊಂಡ ಬೋಳುಮೀಸೆಯ ಪೋಲೀಸಿನವನ ಮೇಲೆ ಹುಲಿಯ ಹಾರಿದಾಗ ಅವನು ಉರುಳಿಬಿದ್ದು ಶಪಿಸಿ ಕೂಗಿಕೊಂಡದ್ದು ಅವನಿಗೆ ಕೇಳಿಸಿತ್ತು. +ಅವನು ಮಾತ್ರ, ಇಜಾರದ ಸಾಬಿಯ ದೊಣ್ಣೆ ಪೆಟ್ಟಿನ ಗಾಯದ ಗುಣ್ಣಿನಿಂದ ನೋಯುತ್ತಿದ್ದ ತನ್ನ ಕಾಲಿನ ಕುಂಟನ್ನು ಒಂದಿನಿತೂ ಲೆಕ್ಕಿಸದೆ, ಒಂದೇ ಸಮನೆ ಗುಡ್ಡವೇರಿ ಕಾಡಿನಲ್ಲಿ ಓಡತೊಡಗಿದ್ದನು. +ಆದಷ್ಟು ಬೇಗನೆ ಅಪಾಯದಿಂದ ದೂರ ಓಡಿ ಪಾರಾಗಬೇಕು ಎಂಬುದೇ ಅವನ ಮುಖ್ಯ ಲಕ್ಷ್ಯವಾಗಿತ್ತು. +ಎಲ್ಲೆಗೆ?ಎತ್ತ ಕಡೆಗೆ?ಅದೊಂದೂ ಅವನ ಪ್ರಜ್ಞೆಯಲ್ಲಿರಲಿಲ್ಲ. +ಕೊಪ್ಪೆ ಹಾಕಿಕೊಂಡಿದ್ದ ಕಂಬಳಿ ಮುಳ್ಳಿಗೆ ಸಿಕ್ಕಿಕೊಂಡಾಗ ಅದನ್ನು ಓಡುತ್ತಲೆ ರಭಸಿದಿಂದ ಎಳೆದು ಬಗಲಿಗೆ ಸೇರಿಸಿದ್ದನು. +ಆಮೇಲೆ ತಲೆಯ ಎಲೆವಸ್ತ್ರ ಪೊದೆಯ ಮುಳ್ಳಿಗೆ ಸಿಕ್ಕಿ ನೇತಾಡುತ್ತಿದ್ದುದನ್ನು, ನಿರ್ದಯವಾಗಿ ಅದು ಹರಿದುದನ್ನೂ ಲೆಕ್ಕಿಸದೆ, ಎಳೆದು ಸೊಂಟಕ್ಕೆ ಸುತ್ತಿಕೊಂಡಿದ್ದನು. +ಕಂಬಳಿಕೊಪ್ಪೆ ಮತ್ತು ತಲೆವಸ್ತ್ರಗಳು ಸ್ಥಳಾಂತರ ಹೊಂದಿದಮೇಲೆ ಮಳೆಯ ನೀರಿನಲ್ಲಿ ತಲೆ ಮೈ ಎಲ್ಲ ತೊಪ್ಪನೆ ತೊಯ್ದಿದ್ದವು. +ಮುಖಕ್ಕೆ ಹರೆ ಗೀರಿ ನೆತ್ತರು ಸೋರಿದ್ದುದು ಅವನಿಗೆ ಗೊತ್ತೆ ಇರಲಿಲ್ಲ. +ಕಾಲಿಗೊಮ್ಮೆ ಕೊರಕಲು ಹೆಟ್ಟದಾಗ ಯಾಂತ್ರಿಕವಾಗೆಂಬಂತೆ ನಿಂತು ಅದನ್ನು ಕಿತ್ತು ಹಾಕಿದ್ದನೆ ಹೊರತು ರಕ್ತ ಹರಿದುದನ್ನು ಗಮನಿಸಲು ಪುರುಸೊತ್ತೆ ಇರಲಿಲ್ಲ. +ಇನ್ನು ಕಾಲಿಗೆ ಹತ್ತಿ, ತೊಡೆಗೇರಿ, ಸೊಂಟದ ಸುತ್ತಮುತ್ತಣ ಪ್ರದೇಶಗಳನ್ನೂ ಆಕ್ರಮಿಸುತ್ತಿದ್ದ ಇಂಬಳಗಳ ತಂಟೆಗೂ ಅವನು ಹೋಗಿರಲಿಲ್ಲ. +ತಲೆಯಮೇಲೆ ಬಿದ್ದ ಮಳೆಯ ನೀರಿನೊಡನೆ ಸಂಗಮವಾಗಿ, ಏದುತ್ತಿದ್ದ ಅವನ ಬಿಸಿಯುಸಿರ ಮೈಯಿಂದ ಇಳಿಯುತ್ತಿದ್ದ ಬೆವರು ಅವನ ದಗಲೆಯನ್ನೂ ಸೊಂಟದ ಪಂಚೆಯನ್ನೂ ಒದ್ದೆಮುದ್ದೆಯನ್ನಾಗಿ ಮಾಡಿತ್ತು. +ಪ್ರಯಾಣಕಾಲದಲ್ಲಿ ತಪ್ಪದೆ ಗುತ್ತಿಯೊಡನೆ ಇರುತ್ತಿದ್ದ ಉಪಕರಣಗಳಲ್ಲಿ ಅವನ ಕತ್ತಿ ಮತ್ತು ಬಗನಿದೊಣ್ಣೆ ಎರಡೂ ಇಂದು ಅವನನ್ನು ಕೈಬಿಟ್ಟಿದ್ದುವು. +ಅವನು ಹೊರಡುವ ಮುಂಚೆ ಅವೆರಡನ್ನೂ ಪದ್ಧತಿಯಂತೆ ತೆಗೆದುಕೊಂಡಾಗ ಗಿರ್ಲುಮೀಸೆಯವನು ಅವನ್ನು ಅವನ ಕೈಯಿಂದ ಕಿತ್ತು ಬಿಡಾರದ ಒಳಕ್ಕೆ ಎಸೆದಿದ್ದನು. +ದೊಣ್ಣೆ ಇರದಿದ್ದರೂ ಚಿಂತೆಯಿರಲಿಲ್ಲ ಗುತ್ತಿಗೆ! +ಕತ್ತಿಯಾದರೂ ಇದ್ದಿದ್ದರೆ? +ದೊಣ್ಣೆಯನ್ನೂ ಮಾಡಿಕೊಳ್ಳಬಹುದಾಗಿತ್ತು; +ಕಾಡಿನಲ್ಲಿ ಹೊಟ್ಟೆ ತುಂಬಿಕೊಳ್ಳುವುದಕ್ಕೂ ಅನುಕೂಲವಾಗುತ್ತಿತ್ತು! +ಎಷ್ಟು ಹೊತ್ತು ಓಡಿದ್ದನೊ?ಗುತ್ತಿಗೆ ಅರಿವಿರಲಿಲ್ಲ! +ಅಂತೂ ಕೊನೆಗೆ, ಅಪಾಯದಿಂದ ಪಾರಾದೆ ಎಂಬ ಧೈರ್ಯ ಹೃದಯಕ್ಕೆ ಸ್ಪುರಿಸಿದಾಗ, ಕಾಡಿನ ನಡುವೆ ಬಿದ್ದಿದ್ದ ಒಂದು ಪುರಾತನ ಮರದ ದಿಂಡಿನ ಮೇಲೆ ಕಂಬಳಿ ಹಾಕಿಕೊಂಡು ಉಸ್ಸೆಂದು ಕೂತನು. +ತೊಪ್ಪನೆ ತೊಯ್ದ ಅವನ ಒಕ್ಕಣ್ಣಿನ ಚತುಷ್ಪಾದಿ ಸ್ವಾಮಿಭಕ್ತ ಹುಲಿಯನೂ ಅವನ ಕಾಲಬುಡದಲ್ಲಿ ಕೂರಲು ಪ್ರಯತ್ನಿಸಿ, ಇಂಬಳಗಳಿಂದ ಪಾರಾಗಲೆಂಬಂತೆ ಗುತ್ತಿ ಕೂತ್ತಿದ್ದ ಹೆಮ್ಮರದ ದಿಂಡಿನ ಮೇಲಕ್ಕೆ ನೆಗೆದು, ಅವನ ಪಕ್ಕದಲ್ಲಿ, ಅವನಿಗಿಂತಲೂ ತುಸು ಎತ್ತರವಾಗಿಯೆ, ಅಂಡೂರಿ ಕೂತುಕೊಂಡಿತು. +ಏದುತ್ತಿದ್ದ ನಾಯಿಯ ತೆರೆದ ಬಾಯಿಯಿಂದ ಜೋಲುತ್ತಿದ್ದ ಕೆನ್ನಾಲಗೆಯಿಂದ ಜೊಲ್ಲೋ ನೀರೋ ತೊಟ್ಟಿಕ್ಕುತ್ತಿತ್ತು. +ಒದ್ದೆಯಾದ ರೋಮಮಯ ಮೈಯಿಂದ ಆವಿಯೂ ಸಿನುಗುವಾಸನೆಯೂ ಹೊಮ್ಮುತ್ತಿದ್ದುದನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ ಒಡೆಯನ ಜಾಗೃತಪ್ರಜ್ಞೆ. +ತಾನು ಮಾಡಿದುದೇನು? +ತನಗಾಗಿರುವುದೇನು?ಎಂಬುದನ್ನು ಬುದ್ಧಿ ಗ್ರಹಿಸತೊಡಗಬೇಕಾದರೆ ಸ್ವಲ್ಪ ಕಾಲವೆ ಹಿಡಿಯಿತು ಗುತ್ತಿಗೆ. +ಏದಾಟ ನಿಂತಮೇಲೆ ಮನಸ್ಸು ಸಾವಧಾನವಾಗಿ ಆಲೋಚಿಸಲು ಸಮರ್ಥವಾಯಿತು. +ತಾನು ಪಾರಾಗಿದ್ದ ಅಪಾಯಕ್ಕಿಂತಲೂ ಹೆಚ್ಚು ಅಪಾಯಕರವಾಗಿ ತೋರಿತು ತಾನು ತಪ್ಪಿಸಿಕೊಂಡಿದ್ದ ಉಪಾಯದ ಸ್ವರೂಪ. +ಆ ಗೀರ್ಲುಮೀಸೆಯವನು ಕಂಪದಲ್ಲಿ ಮುಳುಗಿ ಸತ್ತಿದ್ದರೆ!? +ಅವನನ್ನು ಬಿಡಿಸಲು ಹೋಗಿ ಆ ಮೀಸೆಬೋಳನೂ ಕಂಪದ ಪಾಲಾಗಿದ್ದರೆ?! +ನಾನೇ ಅವರಿಬ್ಬರ ಸಾವಿಗೂ ಕಾರಣನಾದೆನೆಂದು ಮರಣದಂಡನೆಗೆ ಗುರಿಮಾಡದೆ ಬಿಡುತ್ತಾರೆಯೆ? +ಈಗಾಗಲೆ ನನ್ನ ಪತ್ತೆಗೆ ಶುರುವಾಗಿರಬೇಕು. +ನಾನು ಎಲ್ಲಿ ಹೇಗೆ ತಲೆತಪ್ಪಿಸಿಕೊಳ್ಳಲಿ? +ಮುತ್ತೂರು ಸೀಮೆಯ ಕಡೆಗೋ, ಕೊಪ್ಪದ ಸೀಮೆಯ ಕಡೆಗೋ, ಮುಂಡಕಾರು ಸೀಮೆಯ ಕಡೆಗೋ ಹೊಳೆ ದಾಟಿ ಓಡಿಹೋಗಿ, ಹೆಸರುಗಿಸರು ಬದಲಾಯಿಸಿಕೊಂಡು, ಒಂದೆರಡು ವರ್ಷ ಸಿಕ್ಕದಿದ್ದರೆ, ಅಷ್ಟರಲ್ಲಿ ಎಲ್ಲ ಅಡತಿ ಮರೆತು ಹೋಗಬಹುದು…. +ಆದರೆ?ಆದರೆ ತಿಮ್ಮಿ? …. ನನ್ನ ತಿಮ್ಮಿ? …. +ತಿಮ್ಮಿಯ ಯೋಚನೆ ಬಂದೊಡನೆ ಮೈನರಗಳೆಲ್ಲ ಸಡಿಲವಾಗಿ, ಸೋತು, ನಿದ್ದೆಮಾಡಿಬಿಡುತ್ತೇನೆಯೋ ಎಂಬ ಹಾಗಾಯಿತು ಗುತ್ತಿಗೆ. +ಅವನ ಕ್ರಿಯಾಪಟುತ್ವಕ್ಕೇ ಲಕ್ವ ಬಡಿದ ಹಾಗಾಯಿತು. +ಆ ಭಯಂಕರ ಅರಣ್ಯದಲ್ಲಿ, ಆಕಾಶ ಮುಟ್ಟಿ ಬೆಳೆದಿದ್ದ ಮರಗಳ ನಿರ್ದಾಕ್ಷಿಣ್ಯ ತಾಟಸ್ಥ್ಯದಲ್ಲಿ, ಆಗ ತಾನೆ ಮಳೆ ನಿಂತಿದ್ದ ಆ ಭೀಷಣ ನಿರ್ಜನತೆಯಲ್ಲಿ ತನ್ನ ನಿಸ್ಸಾಹಾಯಕವಾದ ಒಂಟಿತನ ತನ್ನನ್ನು ಮೂದಲಿಸುವಂತೆ ತೋರಿ, ಬಿಕ್ಕಿಬಿಕ್ಕಿ ಅಳುತ್ತಾ, ಪಕ್ಕದಲ್ಲಿ ಒಮ್ಮೊಮ್ಮೆ ಮೈ ಕಚ್ಚಿಕೊಳ್ಳುತ್ತಲೂ, ಒಮ್ಮೊಮ್ಮೆ ಸೀನುತ್ತಲೂ, ಮತ್ತೆ ಕಾಡಿನ ಕಡೆಗೂ ತನ್ನ ಒಡೆಯನ ಕಡೆಗೂ ನೋಡುತ್ತಲೂ ಕುಳಿತ್ತಿದ್ದು, ತನಗಿಂತಲೂ ಹೆಚ್ಚು ಎತ್ತರವಾಗಿಯೂ ದೃಢತರವಾಗಿಯೂ ಧೈರ್ಯಶಾಲಿಯಾಗಿಯೂ ತೋರುತ್ತಿದ್ದ ಹುಲಿಯನ ಒದ್ದೆ ಮೈಯನ್ನೇ ಬಲವಾಗಿ ಅಪ್ಪಿ, ಅದರ ಬಲಿಷ್ಠತೆಯನ್ನು ಕುಸಿದು ಬೀಳುತ್ತಿದ್ದ ತನ್ನ ಚೇತನಕ್ಕೆ ಆಪು ಕೊಟ್ಟುಕೊಂಡನು! +ಅವನು ಹಿಂದೆ ಎಂದೂ ಹಾಗೆ ಅತ್ತಿರಲಿಲ್ಲ! +ಹುಲಿಯನಿಗೆ ಅದರ ನಿಜವಾದ ಆರ್ಥವಾಗದೆ, ಒಡೆಯ ತನ್ನೊಡನೆ ಆಟವಾಡುತ್ತಿದ್ದಾನೆಂದು ಭಾವಿಸಿ, ಕ್ರೀಡಾರೂಪದ ಪ್ರತಿಕ್ರಿಯೆಯನ್ನೇ ಪ್ರದರ್ಶಿಸಿತ್ತು! +ತಿಮ್ಮಿಯನ್ನೂ ಜೊತೆಗೆ ಕರೆದುಕೊಂಡು ಓವಿಹೋಗಲೇ?ಹೇಗೆ? +ಅವಳನ್ನು ಬಲಾತ್ಕಾರವಾಗಿ ಬೇರೆಯೊಬ್ಬನಿಗೆ ಮದುವೆ ಮಾಡಿಸುವ ದುರುದ್ದೇಶದಿಂದ ಬೆಟ್ಟಳ್ಳಿ ಕಲ್ಲಯ್ಯಗೌಡರು ಉಪಾಯಹೂಡಿ, ಹುಡುಗಿಯ ತಂದೆ ಅಣ್ಣಂದಿರನ್ನು ಕಳಿಸಿ, ಹುಡುಗಿಯನ್ನು ಕರೆಯಿಸಿಕೊಂಡಿದ್ದಾರೆ ಎಂಬ ಸುದ್ದಿ ಆಗಲೆ ಹರಡಿಬಿಟ್ಟಿತ್ತಲ್ಲಾ? +ಈಗ ನಾನು ಬೆಟ್ಟಳ್ಳಿ ಹೊಲೆಗೇರಿಯಲ್ಲಿ ಕಾಣಿಸಿ ಕೊಂಡರೆ ಸಾಕು, ನನ್ನನ್ನು ಹಿಡಿದು ಪೋಲೀಸರಿಗೆ ಒಪ್ಪಿಸದೆ ಇರುತ್ತಾರೆಯೆ? …. +ಅಯ್ಯೋ, ಹೋದ ಜಲ್ಮದಲ್ಲಿ ನಾನು ಏನು ಪಾಪ ಮಾಡಿದ್ದೆನೋ? +ಇಲ್ಲದಿದ್ದರೆ ಹೀಂಗೆಲ್ಲಾ ಯಾಕೆ ಆಗಬೇಕಿತ್ತು? +ಆ ಹಾಳು ಸಾಬರು ಆವೊತ್ತೆ ಸಿಂಬಾವಿಗೆ ಹೇರು ತರಬೇಕೆ? +ಆ ದುಷ್ಟಮುಂಡೆಗಂಡ ಇಜಾರದಸಾಬಿ ಗಬ್ಬದ ಆಡನ್ನು ಕೊಲ್ಲದಿದ್ದರೆ ನಾನೇಕೆ ಅವನೊಡನೆ ಜಗಳಕ್ಕೆ ಹೋಗ್ತಿದ್ದೆ? +ಅವನದೇ ಎಲ್ಲಾ ತಪ್ಪು! +ಆದರೆ ಪೋಲೀಸರ ಕೈಗೆ ಸಿಕ್ಕಿಬಿದ್ದವನು ನಾನು! +ಕತ್ತಿಬೀಸಿದವನು ಆ  ಸಣ್ಣಬೀರ! +ಹೇಳಿದರೂ ಯಾರೂ ನಂಬುವುದಿಲ್ಲ.’ಆ ಬಡಕಲಗೆ ಎಲ್ಲಿ ಬಂತು ಜೂರತ್ತು, ಕತ್ತಿ ಬೀಸಾಕೆ?’ ಅಂತಾರೆ. +ನಾನು ಬಲಿಷ್ಠನಾಗಿದ್ದದ್ದೇ ತಪ್ಪೇ? +ಏನು ಪಾಪ ಮಾಡಿದ್ದೇನೋ ಹೋದ ಜಲ್ಮದಲ್ಲಿ? +ಅದಕ್ಕೇ ಈಗ ಈ ಶಿಕ್ಷೆ. +ಇದ್ದಕ್ಕಿದ್ದ ಹಾಗೆ ಏನೋ ಮಿಂಚು ಹೊಳೆದಂತಾಯ್ತು ಗುತ್ತಿಗೆ. +“ನಾನು ಹೊಲೆರವನಲ್ಲದೆ ಬ್ಯಾರೆ ಜಾತಿಗೆ ಸೇರಿದವನಾಗಿದ್ದರೆ ಹೀಂಗಾಗ್ತಿತ್ತೇ?” ಎಂದುಕೊಂಡನು, “ಗೌಡರ ಜಾತಿಗೆ? +ಸೆಟ್ಟರ ಜಾತಿಗೆ?ಬಿರಾಂಬರ ಜಾತಿಗೆ? …. + ಉಂಹ್ಞೂ ಈ ಜಲ್ಮದಾಗೆ ಅದೆಲ್ಲಿ ಸಾಧ್ಯ? …. + ಸಾಬರ ಜಾತಿಗೆ?ಕಿಲಸ್ತರ ಜಾತಿಗೆ? …. + ಥೂ ಥೂ ಥೂ!” ತನ್ನ ತಲೆಯಲ್ಲಿ ಸುಳಿದಿದ್ದ ಏನನ್ನೊ ಉಗಳಿ ನಿರಾಕರಿಸಿದನು. +ಆದರೂ ಬೆಟ್ಟಳ್ಳಿ ಹಕ್ಕಲಿನಲ್ಲಿ ದೇವಯ್ಯಗೌಡರಿಗ್ ಬೈಸಿಕಲ್ಲು ಕಲಿಸುತ್ತಿದ್ದಾಗ, ಹೊತ್ತು ಮುಳುಗಿದ ಮೇಲೆ ಬೈಗಿನ ಹೊತ್ತಿನಲ್ಲಿ, ತೀರ್ಥಹಳ್ಳಿಯ ಪಾದ್ರಿ ಮಾಡಿದ ಪ್ರಾರ್ಥನೆಯೂ, ಆಮೇಲೆ ಅವನು ಹೇಳಿದ ಉಪದೇಶ ಭಾಷಣದ ಕೆಲವು ಭಾಗಗಳೂ ಅವನ ನೆನಪಿಗೆ ಬಂದುವು. +ಅದರ ಜೊತೆಜೊತೆಗೇ ಐಗಳೂ ಮುಕುಂದಯ್ಯನೂ ’ಪರ್ಸಂಗ’ದಲ್ಲಿ ಭಾರತ ರಾಮಾಯಣ ಓದುತ್ತಾ ಕಥೆ ಹೇಳುತ್ತಿದ್ದ ಹಿತೋಪದೇಶಗಳೂ ಮನಸ್ಸಿನಲ್ಲಿ ಸುಳಿಯತೊಡಗಿದುವು. +ಅಲ್ಲದೆ ಭಾಗವತರಾಟಗಳಲ್ಲಿ ತಾನು ಕೇಳಿ ಗ್ರಹಿಸಿದ್ದ ಕೆಲವು ವಿಚಾರಗಳೂ ಅವನ ಸುಪ್ತಚಿತ್ತದಿಂದ ಅಪತ್ಸಮಯಾನುಸಂಗಿಗಳಾಗಿ ಮೂಡಿ ಸುಳಿಯತೊಡಗಿದುವು. +ಅಳುವುದನ್ನು ನಿಲ್ಲಿಸಿ, ಏನೋ ಧೈರ್ಯ ಬಂದವನಂತೆ ಉಸಿರೆಳೆದು ನೆಟ್ಟಗೆ ಕುಳಿತು, ತನಗೆ ತಿಳಿದಂತೆ, ಒರಟು ಒರಟಾಗಿ, ಆದರೂ ಭಾವಪೂರ್ವಕವಾಗಿ, ಭಕ್ತಿಯಿಂದ ಭಗವಂತನಿಗೆ ಮೊರೆಯಿಟ್ಟನು. +ಅವನು ಮೊರೆಯಿಟ್ಟ ರೀತಿಯ ಮತ್ತು ಅದರ ಭಾಷೆಯ ಸರಿಯಾದ ಅರ್ಥ ಭಗವಂತನೊಬ್ಬನಿಗೇ ಆಗತಕ್ಕದ್ದಾಗಿತ್ತು! +ಅವನ ಭಗವಂತನೂ ಅಷ್ಟೇ ಜಟಿಲ ಸ್ವರೂಪದವನಾಗಿದ್ದನು. +ಸಾಕಾರ, ನಿರಾಕಾರ, ಆ ಕಾರ, ಈ ಕಾರ ಎಲ್ಲವೂ ಆಗಿಯೂ ಯಾವುದು ಆಗಿರದೆ, ಬರಿಯ ಗುತ್ತಿಯ ಭಾವಮಾತ್ರನಾಗಿದ್ದು, ಎಂತಹ ವೇದಾಂತಿಯ ದರ್ಶನವೂ ತತ್ತರಿಸುವಂತಿತ್ತು! +ಅಂತೂ ಏರಿತ್ತು, ಹೊಲೆಯನ ಹೃದಯದ ಪ್ರಾರ್ಥನೆ, ಭಗವಂತನ ಚರಣಾರವಿಂದಗಳಿಗೆ! +ಸ್ವಲ್ಪ ಕಾಲ ವಿರಮಿಸಿದ್ದ ಮಳೆಗಾಲದ ಹೊಯ್ಯಳೆ ಮತ್ತೆ ಸುರಿಯತೊಡಗಿದಾಗ ಗುತ್ತಿ ಎದ್ದು ಹೊರಟನು. +ಸಾಧಾರಣವಾಗಿ ಮೇಗರ ಹಳ್ಳಿ, ಹಳೆಮನೆ, ಕೋಣೂರು, ಹೂವಳ್ಳಿ, ಸಿಂಬಾವಿ ಇವುಗಳ ಆಸುಪಾಸಿನ ಬೆಟ್ಟಗುಡ್ಡ ಕಾಡುಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಗುತ್ತಿಗೆ ಪರಿಚಿತವಾಗಳಾಗಿದ್ದುವು. +ಬೇಟೆಯಲ್ಲಿ ಹುಳು ನುಗ್ಗಿಯೊ, ವಾಟೆ ಬಿದಿರು ಬೆತ್ತಗಳ ಅನ್ವೇಷಣೆಯಲ್ಲಿಯೊ, ಭೂಮಿಹುಣ್ಣಿಮೆ ಹಬ್ಬದಲ್ಲಿ ನೂಲೆಗೆಣಸು, ಉಗನಿಕಾಯಿ, ಬೆರಕೆಸೊಪ್ಪು ಇತ್ಯಾದಿಗಳನ್ನು ಸಂಗ್ರಹಿಸುವಾಗಲೋ, ಬಗನಿ ಕಟ್ಟಲು ಸರಿಯಾದ ಮರಗಳನ್ನು ಹುಡುಕುವುದಕ್ಕಾಗಿಯೋ, ತುಡುವೆಜೇನು ಕೀಳಲೆಂದು ಮರದ ಪೊಟರೆ ಮತ್ತು ಹುತ್ತಗಳನ್ನು ಅಜಮಾಯಿಸಿ ಮಾಡುತ್ತಾ ಬುತ್ತಿ ಕಟ್ಟಿಕೊಂಡು ಅಲೆಯುವಾಗಲೊ-ಅಂತೂ ಒಂದಲ್ಲ ಒಂದು ರೀತಿಯಲ್ಲಿ ಗುತ್ತಿಗೆ ಸಹ್ಯಾದ್ರಿಯ ಆ ಅರಣ್ಯಪ್ರದೇಶ ಸುಪರಿಚಿತವಾದದ್ದೆ ಆಗಿತ್ತು. +ಕಣ್ಣುಕಟ್ಟಿ ಬಿಟ್ಟರೂ ಊರಿಗೆ ಬರುತ್ತೇನೆ ಎನ್ನುತ್ತಿದ್ದ ಅವನು. +ಆದರೆ ಈ ದಿನ ಅವನು ನಡುಹಗಲು ಪೂರೈಸಿ, ಹೊತ್ತು ಓರೆಯಾಗುವವರೆಗೂ ಅಲೆದರೂ ತಾನು ಎಲ್ಲಿದ್ದೇನೆ? +ಎತ್ತ ಹೋಗುತ್ತಿದ್ದೇನೆ? +ಎಂಬುದರ ಗೊತ್ತು ಸಿಕ್ಕಲಿಲ್ಲ. +ಅಷ್ಟು ನಿಬಿಡವೂ ಉನ್ನತವೂ ಕರಾಳವೂ ಕಂದರಮಯವೂ ಆ ಕಾಣಿಸತೊಡಗಿತ್ತು ಆ ಹೆಗ್ಗಾಡು. +ಇಳಿದು ಏರಿ, ಏರಿ ಇಳಿದು, ಸರಲು ಸರಲುಗಳನ್ನು ದಾಟಿದರೂ ಎಲ್ಲಿಯೂ ಊರು ಸಮೀಪಿಸುವ ಚಿಹ್ನೆ ತೋರಲಿಲ್ಲ.’ಇದೇನಿದು? +ದಿಕ್ಕು ತಪ್ಪಿಬಿಟ್ಟೆನೆ?’ ಎಂದುಕೊಂಡಿದ್ದನು, ’ಅಥವಾ ಹುಚ್ಚುಬಳ್ಳಿ ಎಲ್ಲಿಯಾದರೂ ಕಾಲಿಗೆ ತಗುಲಿಬಿಟ್ಟಿತೆ?’ +ಹೆಗ್ಗಾಡಿನಲ್ಲಿ ಒಂದು ಜಾತಿಯ ವಿಷಬಳ್ಳಿ ಇದೆ ಎಂದೂ, ಅದನ್ನು ಮುಟ್ಟಿದವನು ಮನೆ ಸೇರುವ ಸಂಭವವಿಲ್ಲವೆಂದೂ ಹಳ್ಳಿಗರಲ್ಲಿ ಒಂದು ನಂಬಿಕೆ ರೂಢಿಯಾಗಿತ್ತು. +ಆ ಬಳ್ಳಿ ಮುಟ್ಟಿ ಅನೇಕ ಜನರೂ ಜಾನುವಾರುಗಳೂ ಕಾಡಿನಲ್ಲಿ ದಿಕ್ಕುತಪ್ಪಿ ಅಲೆದೂ ಅಲೆದೂ ಸತ್ತುಹೋಗಿದ್ದುವೆಂಬ ಕಥೆಗಳೂ ಪ್ರಚಲಿತವಾಗಿದ್ದುವು. +ಸಾಯಂಕಾಲವಾಗುತ್ತಾ ಬಂದರೂ ಯಾವ ಊರಿನ ಸನಿಹವೂ ಕಿವಿಗಾಗಲಿ ಕಣ್ಣಿಗಾಗಲಿ ಗೋಚರವಾಗದಿದ್ದಾಗ ಗುತ್ತಿಗೆ ತುಸು ದಿಗಿಲಾಯಿತು. +ಹೊಟ್ಟೆ ಹಸಿವಾಗಿದ್ದಾಗ ಬಗನಿ ಸಸಿಗಳನ್ನು ಕಿತ್ತು ಮರಕ್ಕೆ ಬಡಿದು, ಅವುಗಳ ತಿರುಳನ್ನು ತಿಂದಿದ್ದನು. +ಒಂದುಕಡೆ ಹಲಸಿನ ಮರದಿಂದ ಬಿಳುವನ ಜಾತಿಯ ಹಣ್ಣನ್ನು ಕೆಡವಿ, ಬಿದ್ದ ರಭಸಕ್ಕೆ ಬಿರಿದಿದ್ದ ಅದನ್ನು ಸಿಗಿದು, ತೊಳೆಗಳನ್ನು ನುಂಗಿದ್ದನು. +ಕುರ್ಕನುಗುರು ಬಗೆದಿದ್ದ ಕಣ್ಣಿನ ಗಾಯದ ದೆಸೆಯಿಂದ ಬಹಳ ಕಾಲ ನರಳಿದ್ದುದರ ಫಲವಾಗಿ ಅವನ ತಾಯಿ, ಹುಲಿಯ, ಲಾಚಾರಾಗಿದ್ದರೂ ಮೊಲವನ್ನೊ ಬರ್ಕವನ್ನೊ ಅಥವಾ ಇನ್ನಾವುದೊ ಸಣ್ಣ ಜಂತುವನ್ನೊ ಬೇಟೆಯಾಡಿ ತಿಂದು ತನ್ನ ಹಸಿವೆಯನ್ನು ಪರಿಹರಿಸಿಕೊಂಡಿದ್ದದನ್ನು ಅವನು ಅರಿತಿದ್ದನು, ಬಾಹ್ಯ ಚಿಹ್ನೆಗಳಿಂದ. +ಆದರೆ ಅವನಿಗಾದದ್ದು ಹಸಿವೆಯ ಭೀತಿಯಲ್ಲ. +ಹುಚ್ಚುಬಳ್ಳಿ ಮುಟ್ಟಿ ತಾನು ಯಾವ ಊರನ್ನೂ ಸೇರದೇ ಇರುವಂತಾಗಿಬಿಟ್ಟರೆ ಏನು ಗತಿ?ಎಂಬುದು ಅವನ ಹೃದ್ಗತ ಭಯವಾಗತೊಡಗಿತು. +ಎಷ್ಟೋಸಾರಿ ಮಲೆಯ ನೆತ್ತಿಗಳಲ್ಲಿ ಇದ್ದೇನೆ ಎಂದು ಗೊತ್ತಾದಾಗ, ಬಹಳ ಹೊತ್ತು ಕಿವಿಗೊಟ್ಟು ಆಲಿಸಿದ್ದನು, ಯಾವ ದಿಕ್ಕಿನಿಂದಾದರೂ ಮನುಷ್ಯಾವಾಸದ ಸದ್ದು ಬರುತ್ತದೆಯೆ ಎಂದು. + ದೂರದ ಊರುಕೋಳಿಯ ಕೂಗು? +ನಾಯಿಯ ಬೊಗಳು ದನಿ? +ದನಗಳ ಅಂಬಾ ಶಬ್ದ? +ಅಥವಾ ಯಾರಾದರೂ ಯಾವನನ್ನಾದರೂ ಕೂಗಿ ಕರೆಯುವ ಕಾಕು? +ಆದರೆ ಮರಗಳಲ್ಲಿ ಬೀಳುವ ಮಳೆ ಮತ್ತು ಬೀಸುವ ಗಾಳಿಯ ಸದ್ದಲ್ಲದೆ ಬೇರೆ ಕೇಳಿಸಿರಲಿಲ್ಲ. +ಇಜಾರದ ಸಾಬಿಯ ದೊಣ್ಣೆಯೇಟಿನ ಗಾಯದ ಕಾಲು ಬೇರೆ ಹಿಸಿದು ರಕ್ತ ಸೋರಿ ನೋಯತೊಡಗಿತ್ತು! +ಗುತ್ತಿಯ ಮನಸ್ಸಿನಲ್ಲಿ ಪ್ರಾರ್ಥನೆಗೂ ಜಾಗವಿರದಷ್ಟು ಕಳವಳ ತುಂಬಿಕೊಂಡಿತ್ತು! +ಅವನು ಹೊತ್ತು ಇಳಿದಂತೆಲ್ಲ ಹೆಚ್ಚು ಹೆಚ್ಚು ಗಾಬರಿಯಿಂದ ಉನ್ಮತ್ತನಂತೆ ಬೇಗಬೇಗನೆ ಹತ್ತಿ ಇಳಿದು ಇಳಿದು ಹತ್ತಿ ನಡೆಯತೊಡಗಿದನು. +ಮೋಡವಿರದಿದ್ದರೆ ತನಗೆ ಗೊತ್ತಿದ್ದ ’ಬೆಳ್ಳಿ’ಯನ್ನಾದರೂ ನೋಡಿ ದಿಕ್ಕು ತಿಳಿಯುತ್ತಿದ್ದನೋ ಏನೋ? +ಆದರೆ ಕತ್ತಲಾಗುತ್ತ ಬಂದ ಹಾಗೆ ಮೋಡ ದಟ್ಟಯಿಸಿ, ಮಳೆ ಜೋರಾಗಿ ಸುರಿಯಿತು. +ಆದರೂ ಗುತ್ತಿ, ಕತ್ತಲೆಯಲ್ಲಿಯೂ, ಮುಂದೆ ಸಾಗುವುದನ್ನು ಮಾತ್ರ ಬಿಡಲಿಲ್ಲ. +ಅದೇ ಅವನನ್ನು ಬದುಕಿಸಿದ್ದು! +ರಾತ್ರಿ ಸುಮಾರು ಎಂಟು ಎಂಟೂವರೆ ಗಂಟೆಯ ಹೊತ್ತಿಗೆ, ಗುತ್ತಿಗೆ ತಾನಿದ್ದ ಮಲೆನೆತ್ತಿಯೊಂದರ ಬುಡದಲ್ಲಿ, ಆದರೂ ಬಹುದೂರ ಕೆಳಗಡೆ, ಏನೋ ಒಂದು ಬೆಳಕು ಕಾಣಿಸಿತು. ದೊಂದಿಯೊ?ಲಾಟೀನೊ? +ಮುರುವಿನ ಒಲೆಯ ಬೆಂಕಿಯೊ? +ಆ ಬೆಳಕಿನ ಕಡೆಗೆ ಸ್ವಲ್ಪ ಸಂದೇಹದಿಂದಲೆ ಇಳಿಯತೊಡಗಿದನು. +ಏಕೆಂದರೆ ಮಳೆಯಲ್ಲಿ ನೆನೆದಾಗ ಕೆಲವು ಮರದ ತೊಗಟೆಗಳೂ ಪೊದೆಯ ಕಡ್ಡಿಗಳೂ ಗುಂಪಾಗಿದ್ದು ಉಜ್ವಲಕಾಂತಿಯಿಂದ ಬೆಳಗುತ್ತವೆ-ಎಂಬುದನ್ನು ಗುತ್ತಿ ಅನುಭವದಿಂದ ಅರಿತಿದ್ದನು. +ಆದರೆ ಸ್ವಲ್ಪ ದೂರ  ಇಳಿಯುವುದರಲ್ಲಿ, ಆ ಬೆಳಕು ಮರೆಯಾದರೂ, ಒಂದು ನಾಯಿ ಬೊಗಳಿದ ಸದ್ದು ಕೇಳಿಸಿದ ಗುತ್ತಿಗೆ ಧೈರ್ಯವಾಯಿತು. +ಇನ್ನೂ ಸ್ವಲ್ಪ ದೂರ ಇಳಿದ ಮೇಲೆ ಮಾತಾಡುತ್ತಿದ್ದ ಮನುಷ್ಯರ ಧ್ವನಿಯೂ ಕೇಳಿಸಿ, ಯಾವುದೊ ಮನೆಗೆ ತಾನು ಸಮೀಪಿಸುತ್ತಿದ್ದೇನೆ ಎಂದರಿತು ’ದೇವರೇ ಕಾಪಾಡಿದ’ ಎಂದುಕೊಂಡನು. +ಮಲೆಯ ನೆತ್ತಿಯಿಂದ ಗುತ್ತಿಗೆ ಕಂಡಿದ್ದ ಆ ಬೆಳಕು ಒಂದು ಸೋಗೆ ಹೊದಿಸಿದ್ದ ದೊಡ್ಡ ಚೌಕಿಮನೆಗೆ ಅಂಟಿಕೊಂಡತಿದ್ದ ಅದರ ಬಚ್ಚಲು ಕೊಟ್ಟಿಗೆಯ ಮೂಲೆಯಲ್ಲಿ ಧಗಧಗನೆ ಉರಿಯುತ್ತಿದ್ದ  ಮುರುವಿನ ಒಲೆಯ ಬೆಂಕಿಯದ್ದಾಗಿತ್ತು. +ಆ ಬಚ್ಚಲು ಕೊಟ್ಟಿಗೆಗೆ ಅರೆಗೋಡೆ ಹಾಕಿದ್ದುದರಿಂದಲೆ ಆ ಮುರುವಿನ ಒಲೆಯ ಬೆಂಕಿ ಮಲೆಯ ನೆತ್ತಿಯ ಆ ದೂರಕ್ಕೆ ಗುತ್ತಿ ಯಾವುದೊ ಒಂದು ಕೋನದಲ್ಲಿದ್ದಾಗ ಕಾಣಿಸಿತ್ತು. +ಗುತ್ತಿ ಪ್ರವೇಶಿಸಿದಾಗ ಆ ಒಲೆಯ ಬಳಿ ಹಳೆಪೈಕದವನೊಬ್ಬನು ಸ್ವಲ್ಪ ವಯಸ್ಸಾದಂತೆ ತೋರುತ್ತಿದ್ದ ಗೌಡರೊಬ್ಬರಿಗೆ ಕಳ್ಳುಕಾಯಿಸಿ ಕೊಡುವ ಕೆಲಸದಲ್ಲಿದ್ದನು. +ಮಳೆಯಲ್ಲಿ ತೊಯ್ದು, ಚಳಿಗೆ ಉಡುರುಹತ್ತಿ, ಗಡಗಡನೆ ನಡುಗುತ್ತಿದ್ದ ಒಬ್ಬ ಮನುಷ್ಯನು ಒಂದು ನಾಯಿಯೂ ಬಚ್ಚಲು ಕೊಟ್ಟಿಗೆಯೊಳಗೆ ಬಂದು ಅದರ ಬಾಗಿಲಿಲ್ಲದ ಬಾಗಿಲಲ್ಲಿ ನಿಂತು ಬೆಂಕಿಯ ಬೆಳಕಿನಲ್ಲಿ ಕಾಣಿಸಿಕೊಂಡಾಗ ಒಳಗಿದ್ದವರಿಬ್ಬರೂ ತುಸು ಬೆಚ್ಚಿದಂತೆ ತೋರಿದರು. +ಅಂತಹ ಅವೇಳೆಯಲ್ಲಿ ಅನಿರೀಕ್ಷಿತವಾಗಿ ಪ್ರತ್ಯಕ್ಷನಾದ ಆ ಅಪರಿಚಿತನನ್ನು ಕಂಡು ಅವರಿಬ್ಬರಿಗೂ ಮಾತೇ ಹೊರಡದೆ ಸುಮ್ಮನೆ ನೋಡತೊಡಗಿದ್ದರು. +’ನಾನು, ಒಡೆಯಾ, ಕೊಳಿಗಿ ಸಿದ್ದ!’ ಎಂದು ಗುತ್ತಿ ಹೇಳಿ ಕೊಂಡಾಗಲೆ ಅವರಿಬ್ಬರಿಗೂ ಸಮಾಧಾನವಾಗಿ, ತಾವು ಕಂಡದ್ದು ರಾತ್ರಿ ಹೇಳಬಾರದ ಬೇರೆ ಯಾವುದು ಅಲ್ಲ ಎಂದು ಧೈರ್ಯ ತಾಳಿ ಮಾತಾಡತೊಡಗಿದರು. +ಗುತ್ತಿ ಬೇಕಂತಲೆ ತನ್ನ ನಿಜವನ್ನು ಮರೆಮಾಡಿ, ತನ್ನ ಊರು ಹೆಸರು ಎಲ್ಲವನ್ನೂ ಹುಸಿಹೇಳಿದ್ದನು. +ತಾನು ಹೆಡಗೆಬಳ್ಳಿ ಹುಡುಕುತ್ತಾ ಕಾಡು ಹತ್ತಿದ್ದನೆಂದೂ ದಿಕ್ಕು ತಪ್ಪಿ ಅಲೆದು ಅಲ್ಲಿಗೆ ಬಂದಿದ್ದನೆಂದೂ ತಿಳಿಸಿ, ಬೆಳಿಗ್ಗೆಯಿಂದ ಊಟವಿಲ್ಲದೆ ಹಸಿದಿರುವ ಸಂಗತಿಯನ್ನೂ ಹೇಳಲು ಮರೆಯಲಿಲ್ಲ. +ತಾನು ಎಲ್ಲಿಗೆ ಬಂದಿದ್ದೇನೆ ಎಂಬುದೂ ಅವನಿಗೆ ಗೊತ್ತಿರಲಿಲ್ಲವಾದ್ದರಿಂದ ಹಳೆಪೈಕದವನನ್ನು ಆಲಾಯಿದ ವಿಚಾರಿಸಿ ತಿಳಿದುಕೊಂಡನು. + ’ಕಾಗಿನಹಳ್ಳಿ!’ ಎಂಬ ಹೆಸರನ್ನು ಕೇಳಿದೊಡನೆ ತಾನು ದೇಶಾಂತರ ಬಂದುಬಿಟ್ಟಿದ್ದೇನೆ ಎಂದೇ ಭಾವಿಸಿದ್ದನು. +’ಕಾಗಿನಹಳ್ಳಿ’ ಎಂಬ ಹೆಸರೇನೂ ಅವನಿಗೆ ಪರಿಚಿತವಾಗಿದ್ದದ್ದೆ. +ಕೋಣೂರು ಮುಕುಂದಯ್ಯನ ತಾಯಿ ದಾನಮ್ಮ ಹೆಗ್ಗಡಿತಿಯವರನ್ನು ಆಳುಕಾಳು ಸಾಧಾರಣ ಜನ ಕರೆಯುತ್ತಿದ್ದದ್ದೆ ’ಕಾಗಿನಹಳ್ಳಿ ಅಮ್ಮ’ ಎಂದು. +ದಾನಮ್ಮ ಹೆಗ್ಗಡಿತಿಯವರ ತವರುಮನೆ ’ಕಾಗಿನಹಳ್ಳಿ’ ಎಂದು ಗೊತ್ತಿತ್ತೆ ಹೊರತು ಗುತ್ತಿ ಆ ದೂರದ ಊರಿನ ಮನೆಗೆ ಎಂದೂ ಹೋಗಿರಲಿಲ್ಲ. +ಆದರೂ ತಾನು   ಬಂದದ್ದು ಕಾಗಿನಹಳ್ಳಿ ಅಮ್ಮನ ತವರುಮನೆಗೆ ಎಂಬ ಭಾವನೆ ಅವನಲ್ಲಿ ಅದುವರೆಗೂ ಇದ್ದ ಅಪರಿಚಿತತ್ವ ಮತ್ತು ದೂರತ್ವದ ಭಾವನೆಯನ್ನು ಪರಿಹರಿಸಿ, ಇದು ’ಕಾಗಿನಹಳ್ಳಿ ಅಮ್ಮ’ನ ತವರು ಎಂಬ ಸಲುಗಯ ಭಾವನೆಯನ್ನುದ್ದೀಪಿಸಿತ್ತು. +ಆದ್ದರಿಂದಲೆ ಅವನಿಗೆ ತನಗೆ ಬೇಕಾದ್ದನ್ನು ಕೇಳಿ ಈಸಿಕೊಳ್ಳಲು ನೆಂಟಸ್ತಿಗೆಯ ಹಕ್ಕಿದೆ ಎಂಬ ಗ್ರಾಮೀಣ ಸುಲಭವಾದ ಧೈರ್ಯವೂ ಮೂಡಿತ್ತು. +ತನಗೂ ತನ್ನ ನಾಯಿಗೂ ಹೊಟ್ಟೆ ತುಂಬುವಷ್ಟು ಅನ್ನ ದೊರಕಿಸಿಕೊಳ್ಳುತ್ತೇನೆ ಎಂದು. +ಕಳ್ಳುಕುಡಿಯುತ್ತಿದ್ದ ಗೌಡರಿಗಾಗಲಿ, ಅದನ್ನು ವಿನಿಯೋಗಿಸುತ್ತಿದ್ದ ಹಳೆಪೈಕದವನಿಗಾಗಲಿ ಗುತ್ತಿಯ ನಿಜಸ್ಥಿತಿಯನ್ನು ವಿಚಾರಿಸುವುದಕ್ಕೂ ಅರಿಯುವುದಕ್ಕೂ ಮನಸ್ಸೂ ಇರಲಿಲ್ಲ; +ಸಮಯವೂ ಅಂತಹದ್ದಾಗಿರಲಿಲ್ಲ. +ತಮ್ಮ ಕೆಲಸವನ್ನು ಬೇಗಬೇಗನೆ ಪೂರೈಸಿ ಗೌಡರು ಮನೆಯೊಳಕ್ಕೆ ಹೋದರು; +ಹಳೆಪೈಕದವನೂ ಅಲ್ಲಿಯೆ ಎಲ್ಲಿಯೊ ಸಮೀಪದಲ್ಲಿದ್ದ ತನ್ನ ಗುಡಿಸಲಿಗೆ ನಡೆದನು. +ಗುತ್ತಿಯೂ ಹುಲಿಯನೂ ಮುರುವಿನ ಒಲೆಯ ಬೆಂಕಿಯ ಸಾನಿಧ್ಯದ ಬೆಚ್ಚೆನೆಯ ಮಡಿಲಿಗೆ, ತಾಯಿಯ ಎದೆಗೆ ಮುಗ್ಗುವ ಮಕ್ಕಳಂತೆ, ನುಗ್ಗಿ ಓಡಿ ಚಳಿ ಕಾಯಿಸುತ್ತಾ ಕುಳಿತರು. +ಆಃ!ಹಿಂದೆಂದೂ ಗುತ್ತಿಗೆ ಅಷ್ಟು ಆಪ್ಯಾಯಮಾನವಾಗಿ ತೋರಿರಲಿಲ್ಲ ಬೆಂಕಿ! +ಹುಲಿಯನಂತೂ ಬೆಂಕಿಯ ಜ್ವಾಲೆಗೇ ತನ್ನ ಮುಸುಡಿಯನ್ನು ತೂರಿ, ಒಲೆಯ ಒಳಕ್ಕೆ ನುಗ್ಗುತ್ತದೆಯೊ ಏನೋ ಎಂಬಂತೆ ವರ್ತಿಸುತ್ತಿದ್ದುದನ್ನು ನೋಡಿ, ಗುತ್ತಿ ಎರಡು ಮೂರು ಸಾರಿ ಅದನ್ನು ಬಾಲ ಹಿಡಿದೆಳೆದು ಹಾಕಬೇಕಾಯಿತು! +ಒಂದು ಸಾರಿಯಂತೂ ಅವನ ಶಕ್ತಿಯನ್ನೂ ಮೀರಿ ಅದು ಮುಂದಕ್ಕೆ ಮೈಚಾಚುತ್ತಿರಲು ಅವನಿಗೆ ಸಿಟ್ಟೇರಿ ಬೆನ್ನಿಗೆರಡು ಗುದ್ದು ಕೊಟ್ಟಿದ್ದನು, ಧಿಃಕ್ಕೆಂದು! +ಒಮ್ಮೆ ಬೆನ್ನು ತಿರುಗಿಸಿ, ಒಮ್ಮೆ ಹೊಟ್ಟೆ ತಿರುಗಿಸಿ, ಒಮ್ಮೆ ಎರಡೂ ಕೈಗಳನ್ನು ಜ್ವಾಲೆಯ ಹತ್ತಿರಕ್ಕೆ ಒಡ್ಡಿ, ಒಮ್ಮೆ ಸೊಂಟದ ಪಂಚೆ ಯನ್ನು ಬಿಚ್ಚಿ ಆರಿಸಿ, ಅದನ್ನು ಸುತ್ತಿಕೊಂಡು, ಒಳಗಿನ ಕೌಪೀನವನ್ನೂ ತೆಗೆದು ಒದ್ದೆಹಿಂಡಿ ಒಲೆಯ ಮೇಲೆ ಹರಡಿ ಆರಿಸಿ ಕಟ್ಟಿಕೊಂಡು, ಕಂಬಳಿ ಮತ್ತು ಬಟ್ಟೆಗಳನ್ನು ಮುರುವಿನ ಹಂಡೆಯ ಮೇಲೆಯೂ ಒಲೆಯ ತೋಳುಗಳ ಮೇಲೆಯೂ ಹರಡಿದನು. +ಇಂಬಳಗಳನ್ನು ತನ್ನು ಮೈಯ ಸಂದುಗೊಂದುಗಳಿಂದಲೂ ಹುಲಿಯ ಮೈಯ ಸಂದುಗೊಂದು ರಂಧ್ರಾದಿಗಳಿಂದಲೂ ಕಿತ್ತು ತೆಗೆದು ಕೆಂಡದ ಮೇಲೆ ಜುಂಯೆಂನ್ನುವಂತೆ ಹಾಕಿ ಹೋಮ ಮಾಡಿದನು. +ಅಂತೂ ನರನ ಮತ್ತು ನಾಯಿಯ ಚಳಿ, ಉಡುರು, ನಡುಕ ಎಲ್ಲ ತೊಲಗಿ ಮೈಗೆ ಬಿಸುಪೇರಿ ಸುಖಾನುಭವವಾಗುವ ಹೊತ್ತಿಗೆ ಆಳು ಹುಡುಗನೊಬ್ಬನು ಮೊರದಲ್ಲಿದ್ದ ಬಾಳೆಯ ಕೀತನ ಮೇಲೆ ಹಾಕಿದ್ದ ಅನ್ನ ಸಾರು ಪಲ್ಯ ಉಪ್ಪಿನಕಾಯಿಗಸಿಯ ಊಟವನ್ನು, ಸಣ್ಣಗೆ ಸುರಿಯುತ್ತಿದ್ದ ಮಳೆಯಲ್ಲಿ ಓಡೋಡಿ ಬಂದು, ತಂದಿಟ್ಟನು. +ಅನ್ನವೇನೊ ಮೊರದ ತುಂಬ ಕುತ್ತುರೆಯಾಗಿ ಇದ್ದಿತಾದರೂ ಹಸಿದ ಹೊಲೆಯನಿಗೆ ಅದು ಸಾಲದೆಂಬಂತೆ ತೋರಿ “ತಂಗಳಿದ್ದರೆ ಇನ್ನೊಂದು ಚೂರು ತಂದು ಹಾಕ್ರೋ…. +ನಾಯಿಗೂ ಬೆಳಗಿನಿಂದ ಅನ್ನ ಇಲ್ಲ.” ಎಂದು ರಾಗ ಎಳೆದು, ಮತ್ತೆ ನಗುತ್ತಾ “ಕೋಣೂರಿನ ಕಾಗಿನಹಳ್ಳಿ ಅಮ್ಮ ನಂಗೊತ್ರೋ, ನಾಳೆ ಏನಾದ್ರೂ ಹೇಳಾದಿದ್ರೆ, ಕೊಡಾದಿದ್ರೆ, ನನ್ಹತ್ರ ಹೇಳಿಕೊಡಬೈದು ಅಂತಾ ಹೇಳ್ರೋ ಹೆಗ್ಗಡ್ತಮೋರಿಗೆ” ಎಂದೂ ಸೇರಿಸಿದನು. +ಆ ಹುಡುಗ ಮತ್ತೆ ಮನೆಯೊಳಗೆ ಹೋಗಿ ಬಂದು “ಇದ್ದುಬದ್ದಿದ್ದನೆಲ್ಲಾ ಬಳ್ದು ತಂದೀನೋ; ಒಂದು ಅಗಳೂ ಇಲ್ಲ ಅನ್ನ.” ಎಂದು ಹೇಳಿ, ಕೈಯಲ್ಲಿದ್ದ ಒಂದು ಮೊಗೆಯನ್ನು ಗುತ್ತಿಯ ಮುಂದಿಟ್ಟು, ಮತ್ತೆ ಮಳೆಯಲ್ಲಿಯೆ ಮನೆಯೊಳಕ್ಕೆ ಓಡಿಬಿಟ್ಟನು. +ಮೊಗೆಯಿಂದ ಹೊಮ್ಮಿ ಬಂದ ಕಂಪಿಗೆ ಮೂಗೊಡ್ಡಿದ ಗುತ್ತಿಗೆ ಬ್ರಹ್ಮನಂದವಾಗಿ ಒಂದು ಮುಕ್ಕುಳು ಅದರಿಂದಲೇ ಕುಡಿದೇ ಬಿಟ್ಟನು. +ಹತ್ತಿರವಿಟ್ಟಿದ್ದ ಗರಟಕ್ಕೆ ಹೊಯ್ದುಕೊಂಡು ಕುಡಿಯುವಷ್ಟು ಅನವಸರವೂ ಸಾಧ್ಯವಿರಲಿಲ್ಲ ಅವನಿಗೆ. +ಒಲೆಗೆ ಕಚ್ಚಿದ್ದ ಭಾರಿ ಕುಂಟೆಗಳನ್ನು ಆದಷ್ಟು ಮುಂದೆ ನೂಕಿ, ಬೆಂಕಿ ಬೆಳಗುವವರೆಗೂ ಉಜ್ವಲಿಸುವಂತೆ ಮಾಡಿ, ಗುತ್ತಿ ಉಣ್ಣುವುದಕ್ಕೆ ಕುಳಿತನು. +ಮುರುವಿನ ಹಂಡೆಯಲ್ಲಿ ಕತ್ತರಿಸಿದ್ದ ಹುಲ್ಲು, ಕಲಗಚ್ಚು, ಅನ್ನ ಬಸಿದ ಬಾಗುಮರಿಗೆಯ ಗಂಜಿ, ಹಲಸಿನ ಹಣ್ಣಿನ ಕೊಚ್ಚಿದ ಸೇಡೆ ಇತ್ಯಾದಿ ವಿಶ್ರಣದ ಮುರು ತಕಪಕನೆ ಕುದಿಯುತ್ತಾ ಗೊಜಗೊಜಗೊಜ ಸದ್ದುಮಾಡುತ್ತಿತ್ತು. +ಕರೆಯುವ ಎಮ್ಮೆ ದನಗಳಿಗೆ ಮರುಬೆಳಗಿನ ಉಪಾಹಾರವಾಗಿ. +ದೊಡ್ಡ ದೊಡ್ಡ ತುತ್ತುಗಳನ್ನು ಉಂಡೆ ಕಟ್ಟಿ ಕಟ್ಟಿ ಬಾಯಿಗೆ ಎಸೆದುಕೊಳ್ಳುತ್ತಿದ್ದ ಗುತ್ತಿ ಕೂಳಿನ ಕುತ್ತುರೆ ಅರೆ ಮುಗಿಯುವಷ್ಟರಲ್ಲೆ ನೋಡುತ್ತಾನೆ. +ಹತ್ತಿರ-ಹತ್ತಿರ-ಹತ್ತಿರ-ಹತ್ತಿರ ಒರಕಿಬಂದ ಹುಲಿಯ ಬಳ್ಳೆಯ ಅಂಚಿಗೇ ಮುಟ್ಟೀಕೊಂಡೇ ಕುಳಿತು, ಕರಗಿಹೋಗುತ್ತಿದ್ದ ಅನ್ನದ ರಾಶಿಯ ಕಡೆಗೂ ಗುತ್ತಿಯ ಬಾಯಿಯ ಕಡೆಗೂ ಕೆಳಗೆ-ಮೇಲೆ ಮೇಲೆ-ಕೆಳಗೆ ನೋಡುತ್ತಾ, ನೋಡುತ್ತಾ ಅನ್ನುವುದಕ್ಕಿಂತಲೂ ಕಣ್ಣು ಕಣ್ಣುಬಿಡುತ್ತಾ, ಬಾಲವಳ್ಳಾಡಿಸುತ್ತಾ, ಜೊಲ್ಲು ಸುರಿಸುತ್ತಾ ಕೂತಿದೆ! +’ಹಛೀ!ಏನು ಹೊಟ್ಟೆಬಾಕ ಮುಂಡೇದೊ ಹಾಳ್ ನಾಯಿ!’ ಎಂದು ಶಪಿಸಿ, ಗುತ್ತಿ ಅದನ್ನು ದೂರಕ್ಕೆ ನೂಕಿದನು, ಎಡಗೈಯಿಂದ. +ಅದುವರೆಗೂ ಅವನು ಅದರ ಕಡೆ ನೋಡಿರಲೂ ಇಲ್ಲ; +ಅದನ್ನು ಗಮನಿಸಿರಲೂ ಇಲ್ಲ. +ಈಗ ಪಕ್ಕನೆ ಅದರ ಒಕ್ಕಣ್ಣು ಅವನ ಕಣ್ಣುಗಳಿಗೆ ಇದಿರಾಗಲು, ಕರುಳಿಗೇ ಎನೋ ಇರಿದಂತಾಯಿತು! +ಗುತ್ತಿಯ ಹಸಿವೆಯೇನೋ ಎಲ್ಲವನ್ನೂ ಕಬಳಿಸುವ ಬಡಬಾಗ್ನಿಯಂತಿತ್ತು. +ಆ ಅನ್ನ ತನಗೇ ಸಾಲುವುದಿಲ್ಲ ಎಂಬ ಭಾವನೆಯೂ ಇತ್ತು. +ಅಲ್ಲದೆ, ನಾಯಿ ಕಾಡಿನಲ್ಲಿ ಮೊಲವನ್ನೊ ಏನನ್ನೊ ಹಿಡಿದು ತಿಂದಿದೆ; +ಅದಕ್ಕೆ ಅಷ್ಟೇನೂ ಹಸಿವಾಗಿರಲಾರದು, ಎಂಬ ವಾದವನ್ನೂ ಹೂಡುತ್ತಿತ್ತು ಅವನ ಲೋಭಿಮನಸ್ಸು. +ಆದರೂ ಗುತ್ತಿ ಉಣ್ಣುವುದನ್ನು ನಿಲ್ಲಿಸಿದನು. +“ಇದೊಂದು ಯಾವಾಗಲೂ ನನ್ನ ಬಲಗೊಡೆಯ! +ಬಸವನ ಹಿಂದೆ ಬಾಲ ಬಂದ್ಹಗೆ! +ನೀನು ಇನ್ನೆಲ್ಲಿಯಾದ್ರೂ ನನ್ನ ಹಿಂದೆ ಬಾ. +ನಿನಗೆ ಮಾಡ್ತೀನಿ ತಕ್ಕ ಶಾಸ್ತಿ! +ಕಾಡಿನಾಗೇ ಹೆಡಗೆಬಳ್ಳೀಲಿ ಮರಕ್ಕೆ ಕಟ್ಟಿಹಾಕಿ ಬರದಿದ್ರೆ, ನೋಡು ಮತ್ತೆ, ನಾ ಗುತ್ತೀನೆ ಅಲ್ಲ! +ಇದೇ ಮೊದಲು, ಇದೇ ಕಡೆ! +ಗೊತ್ತಾ’ತಾ?” ಎಂದು ಕಣ್ಣು ಕೆರಳಿ ಹುಲಿಯನ್ನು ಬೈದು ಗದರಿಸಿ, ಅದಕ್ಕೆ ಬುದ್ದಿ ಹೇಳಿ, ಇದೊಂದು ಬಾರಿ ಕ್ಷಮಿಸುವಂತೆ ಉಳಿದಿದ್ದ ತನ್ನ ಅನ್ನದಲ್ಲಿ ಅರ್ಧದಷ್ಟನ್ನು ತೆಗೆದು ನಾಯಿಯ ಮುಂದೆ ನೆಲದಮೇಲೆ ಹಾಕಿದನು. +ಒಡೆಯನ ಬೈಗುಳವನ್ನೆಲ್ಲ ಅನಾಸಕ್ತಿಯಿಂದ ಕೇಳುತ್ತಿದ್ದ, ಇಲ್ಲವೆ ಒಕ್ಕಣ್ಣಿನಿಂದಲೆ ನೋಡುತ್ತಿದ್ದ, ಆ ನಾಯಿ ನಿರ್ದಾಕ್ಷಿಣ್ಯವಾಗಿ, ಆನಂದಾತಿಶಯಕ್ಕೆ ಬಾಲವೆ ಬಿದ್ದುಹೋಗುತ್ತಿದೆಯೊ ಎಂಬಂತೆ ಅದನ್ನು ಅಳ್ಳಾಡಿಸುತ್ತಾ, ಕೂಳನ್ನೆಲ್ಲ ಗಬಗಬನೆ ಖಾಲಿಮಾಡಿಬಿಟ್ಟಿತು, ನಿಮಿಷಾರ್ಧದಲ್ಲಿ! …. +ಮರುದಿನ ಬೆಳಗ್ಗೆ ಸ್ವಲ್ಪ ಹೊತ್ತಾಗಿಯೆ ಎದ್ದ ಗುತ್ತಿ ಮುಂದೇನು ಮಾಡಬೇಕೆಂದು ಯೋಚಿಸತೊಡಗಿದನು. +ಪೋಲೀಸಿನವರು ಕಂಪದಲ್ಲಿ ಸಿಕ್ಕಿ ಸತ್ತ ವಿಚಾರದ ಗಾಳಿಸುದ್ದಿ ಏನಾದರೂ ಕಾಗಿನಹಳ್ಳಿಯನ್ನು ತಲುಪಿ, ಯಾರ ಬಾಯಿಂದಾದರೂ ಬರಬಹುದೋ ಏನೋ ಎಂದು ನಿರೀಕ್ಷಿಸಿದನು. +ಆದರೆ ಕಾಗಿನಹಳ್ಳಿ ಕೋಟಿಮೈಲಿ ಆಚೆಗಿದ್ದರೆ ಎಂತೊ ಅಂತೆ ಆ ವಿಚಾರದಲ್ಲಿ ಅತ್ಯಂತ ಅನಾಸ್ಥೆಯಿಂದಿತ್ತು. +ಆ ದಿನವೆ ಅಮೆರಿಕಾದಲ್ಲಿ ಸ್ವಾಮಿ ವಿವೇಕಾನಂದರು ಒಬ್ಬ ಐರೋಪ್ಯ ಶಿಷ್ಯನಿಗೆ ಸಂನ್ಯಾಸ ದೀಕ್ಷೆಯಿತ್ತು ಆತನನ್ನು ಸ್ವಾಮಿ ಕೃಪಾರಂದರನ್ನಾಗಿ ಮಾಡಿರಬಹುದಾಗಿದ್ದ ಸುದ್ದಿಯ ವಿಷಯವಾಗಿ ಎಷ್ಟು ತಿಳುವಳಿಕೆಯಿತ್ತೊ ಅಷ್ಟೆ ತಿಳುವಳಿಕೆ ಇತ್ತು ಕಾಗಿನಹಳ್ಳಿಗೆ ಸಿಂಬಾವಿ ಗುತ್ತಿ ಪೋಲೀಸರಿಂದ ತಪ್ಪಿಸಿಕೊಂಡು ಬಂದಿದ್ದ ವಿಷಯದಲ್ಲಿಯೂ! +ಆವೊತ್ತು ಕಾಗಿನಹಳ್ಳಿಯನ್ನೆಲ್ಲ ಕಲಕಿದ ಸುದ್ದಿ ಬೇರೊಂದಾಗಿತ್ತು. +ಬೆಳಗ್ಗೆ ಸುಮಾರು ಒಂಬತ್ತು ಗಂಟೆಯ ಹೊತ್ತಿನಲ್ಲಿ ಹಳೆಮನೆ ಹೆಗ್ಗಡೆಯವರು ಕಳಿಸಿದ್ದ ಬೈರ ಬಂದು, ದೊಡ್ಡಣ್ಣಹೆಗ್ಗಡೆಯವರು ತೀರ್ಥಹಳ್ಳಿಯಲ್ಲಿ ವಿಚಾರವನ್ನೂ ಬೆಟ್ಟಳ್ಳಿ ಗಾಡಿಯಲ್ಲಿ ದೇವಯ್ಯಗೌಡರು ಮುಕುಂದಯ್ಯಗೌಡರು ಹೆಣ ತರಲು ಹೋಗಿರುವ ವಿಚಾರವನ್ನೂ ತಿಳಿಸಿದನು. +ತಮ್ಮ ಅಕ್ಕನ ಮಗಳ ಗಂಡನ ಶವಸಂಸ್ಕಾರದಲ್ಲಿ ಪಾಲುಗೊಳ್ಳಲು ಕಾಗಿನಹಳ್ಳಿ ಗೌಡರು ಸುದ್ದಿ ಮುಟ್ಟಿದ ಒಡನೆಯೆ ಸುಮಾರು ಏಳೆಂಟುಮೈಲಿ ದೂರವಿದ್ದ ಹಳೆಮನೆಗೆ ಹೊರಟರು. +ಅವರ ಸಂಗಡವೆ ಮತ್ತೆ ಹಿಂದಕ್ಕೆ ಹೊರಟಿದ್ದ ಬೈರನನ್ನು ಕೂಡಿಕೊಂಡು ಗುತ್ತಿಯೂ ಹೊರಟನು. +ಬೈರನನ್ನು ಕಂಡಾಗ ಗುತ್ತಿ ದಿಗಿಲುಗೊಂಡಿದ್ದನು, ತನ್ನ ಕಥೆ ಅವನಿಗೆ ಗೊತ್ತಿದೆಯೊ ಏನೋ ಎಂದು. +ಆದರೆ ಬೈರನಿಗೆ ಅದಾವುದೂ ತಿಳಿದಿದ್ದಂತೆ ತೋರಲಿಲ್ಲ. +ಬೈರನೇ ಆಶ್ಚರ್ಯ ಸೂಚಿಸಿ, ಸಿಂಬಾವಿಗೆ ಬಹುದೂರದ ಮೂಲೆಯಲ್ಲಿದ್ದ ಕಾಗಿನಹಳ್ಳಿಗೆ ಗುತ್ತಿ ಏಕೆ ಬಂದಿದ್ದನೆಂದು ಕೇಳಿದಾಗ, ಹೆಗ್ಗಡೆಯವರು ಏನೋ ಕಾಗದ ಕೊಟ್ಟಿದ್ದರು, ಅದಕ್ಕಾಗಿ ಬಂದಿದ್ದೆ ಎಂದಿದ್ದನು. +ಅಂತೂ ಹಳೆಮನೆಯವರಿಗೂ ತಲುಪಿಲ್ಲ ಸುದ್ದಿ ಎಂದುಕೊಂಡು ಧೈರ್ಯತಾಳಿದ್ದನು. +ಆದರೂ ಯಾರಿಂದಾದರೂ ಸುದ್ದಿ ಕೇಳಲು ಅವನು ಕಾತರನಾಗಿದ್ದನು. +ಏಕೆಂದರೆ, ಅವನಿಗೆ ಪೋಲೀಸರು ಸತ್ತಿದ್ದಾರೆಯೆ ಇಲ್ಲವೆ ಎಂಬ ವಾರ್ತೆ ಬಹು ಮುಖ್ಯವಾಗಿತ್ತು. +ಅವರೇನಾದರೂ ಸತ್ತಿದ್ದರೆ, ತಾನು ಆ ಕಡೆ ಕಾಲು ಹಾಕುವುದು ಅತ್ಯಂತ ಅಪಾಯಕಾರಿಯಾಗಿತ್ತು. +ಏನಾದರೂ ಆಗಲಿ, ತನ್ನ ಎಚ್ಚರಿಕೆ ತನಗಿರುವುದು ಮೇಲು ಎಂದುಕೊಂಡು, ಅವನು ತನ್ನ ಗುರುತು ಆದಷ್ಟು ಮಟ್ಟಿಗೆ ಫಕ್ಕನೆ ಯಾರಿಗೂ ಸಿಕ್ಕದಿರಲಿ ಎಂದು, ಹಿಂದಿನ ದಿನ ಇಡೀ ದಿನವೆಲ್ಲ ಜಪ್ಪಿದ್ದ ಬಿರುಮಳೆ ಈವೊತ್ತು ಸೋಜಿಗವೆಂಬಂತೆ ನಿಂತು ಚೆನ್ನಾಗಿ ಹೊಳವಾಗಿ ಬಿಸಿಲು ಬಂದಿದ್ದರೂ, ಹಾಕಿದ್ದ ಕಂಬಳಿಕೊಪ್ಪೆಯನ್ನು ತೆಗೆದಿರಲಿಲ್ಲ. +ಹಾದಿ ನೋಡಲು ಎಷ್ಟು ಬೇಕೋ ಅಷ್ಟು ಮಾತ್ರ ಕಂಡಿಬಿಟ್ಟು ಕೊಂಡಿದ್ದನು, ಮುಖವನ್ನೆಲ್ಲ ಆದಷ್ಟು ಮರೆಮಾಡಿಕೊಂಡು. +ಗುತ್ತಿ ಬೈರನೊಡನೆ ಹಳೆಮನೆಯ ಸುಡುಗಾಡಿಗೆ ಹೋಗುವಷ್ಟರಲ್ಲಿ ದೊಡ್ಡಣ್ಣ ಹೆಗ್ಗಡೆಯವರ ಕಳೇಬರವಾಗಲೆ ಅಲ್ಲಿಗೆ ಬಂದಿತ್ತು. +ಹೊಲೆಯರು ಮೊದಲಾದ ಕೀಳು ಜಾತಿಯ ಜನರೆಲ್ಲ ದೂರದೂರ ಪೊದೆಗಳೆಡೆ ಗುಂಪುಸೇರಿ ದುಃಖಿಸುತ್ತಿದ್ದರು. +ಯಾರೂ ಗುತ್ತಿಯನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ. +ಗುತ್ತಿಗೂ ದುಃಖವುಕ್ಕಿ ಬಂದು ನೋಡುತ್ತಾ ನಿಂತಿದ್ದನು. +ಏಕೆಂದರೆ ತನ್ನ ಚಿಕ್ಕಂದಿ ನಿಂದಲೂ ಅವರು ತರುಣರಾಗಿ ಯುವಕರಾಗಿ, ಸಿಂಬಾವಿಯ ನೆಂಟರ ಮನೆಗೆ ಬರುತ್ತಿದ್ದಾಗಿನಿಂದಲೂ ಅವರೊಡನೆ ಆಡಿ ಓಡಾಡಿ ಬೇಟೆಯಾಡಿ, ದೊಡ್ಡಣ್ಣ ಹೆಗ್ಗಡೆಯವರಲ್ಲಿ ಅವನಿಗೊಂದು ಗೌರವಪೂರ್ಣ ವಿಶ್ವಾಸ ಉಂಟಾಗಿತ್ತು. +ಅವನು ನೋಡುತ್ತಾ ನಿಂತಿದ್ದಾಗಲೆ ದೊಡ್ಡಣ್ಣಹೆಗ್ಗಡೆಯವರ ಧರ್ಮಪತ್ನಿ ರಂಗಮ್ಮ ಹೆಗ್ಗಡಿತಿಯವರು ಗಂಡನ ಪಾದಕ್ಕೆ ಅಡ್ಡಬಿದ್ದರು ಎಷ್ಟು ಹೊತ್ತಾದರೂ ಮೇಲೇಳದೆ, ಸತ್ತೇಹೋಗಿದ್ದರು! +ಆಗಂತೂ ನೆರೆದಿದ್ದ ಬಂಧುಗಳೊಡನೆ ಆಳುಕಾಳುಗಳೆಲ್ಲರೂ ಸುಡುಗಾಡೇ ಗೋಳಾಡುವಂತೆ ರೋದಿಸಿದ್ದರು. +ಗುತ್ತಿಗೆ ಆ ರೋದನ, ಆ ಶೋಕ, ಆ ದುಃಖ ಇವುಗಳ ಮುಂದೆ ’ಛೀಃ ತಾನೆಷ್ಟರವನು? +ತನ್ನ ಕಷ್ಟ ಏನು ಮಹಾ?’ ಎಂಬ ಒಂದು ತರಹದ ವೈರಾಗ್ಯಭಾವನೆ ಹುಟ್ಟಿ, ಮುಂದೆ ತನಗೇನಾಗುತ್ತದೆ ಎಂಬ ವಿಚಾರದಲ್ಲಿ ಅಲಕ್ಷವಾಗಿದ್ದನು. ’ +ಹಾಳು ಈ ಭೂಮಿಯ ಬಾಳೇ ಇಷ್ಟು! +ಇಂದಲ್ಲ ನಾಳೆ ಎಲ್ಲರಿಗೂ ಇದೇ ಗತಿ! +ಅದಕ್ಕಾಗಿ ಸುಮ್ಮನೆ ಪಾಡುಪಡುವುದೇಕೆ? +ಬ್ರಹ್ಮ ಹಣೆಯಲ್ಲಿ ಬರೆದದ್ದು ಏನಾಗಬೇಕು ಅಂತಾ ಇದೆಯೋ ಅದೇ ಆಗುತ್ತದೆ!’ +ಆ ದಿನ ರಾತ್ರಿ ಅವನು ಬೈರನ ಬಿಡಾರದಲ್ಲಿಯೆ ಉಳಿದಿದ್ದನು. +ಶವಸಂಸ್ಕಾರದಲ್ಲಿ ಭಾಗಿಗಳಾಗಲು ಬಂದಿದ್ದ ಬಂಧುವರ್ಗದವರ ಮಧ್ಯೆ ತನ್ನ ಒಡೆಯರು ಸಿಂಬಾವಿ ಭರಮೈಹೆಗ್ಗಡೆಯವರನ್ನೂ ನೋಡಿದ್ದನು. +ನಾಳೆ ಅವರನ್ನು ಹೇಗಾದರೂ ಮಾಡಿ ಏಕಾಂತವಾಗಿ ಸಂಧಿಸಿ, ತಾನು ಮುಂದೆ ಮಾಡಬೇಕಾದುದನ್ನು ಅವರಿಂದ ತಿಳಿದು, ಅದರಂತೆ ಮಾಡುತ್ತೇನೆ-ಎಂದು ಆಲೋಚಿಸುತ್ತಾ ಬಿಡಾರದ ಒಳಗೆ ಕತ್ತಲೆಯಲ್ಲಿ ಒಬ್ಬನೆ ಮಲಗಿದ್ದ ಗುತ್ತಿಗೆ, ಯಾರೋ ಬಾಗಿಲ ಬಳಿ ಬಂದದ್ದು ಗೊತ್ತಾಗಿ, ಒಡೆಯರ ಮನೆಗೆಲಸಕ್ಕೆ ಇತರ ಆಳುಗಳೊಡನೆ ಹೋಗಿದ್ದ ಬೈರನೇ ಬಂದನೆಂದು ಭಾವಿಸಿ, “ಯಾರದು?” ಎಂದನು. +ಯಾವ ಉತ್ತರವೂ ಬರಲಿಲ್ಲ; +ಯಾರೂ ಮಾತಾಡಲಿಲ್ಲ; +ಆದರೆ ಕೈ ಬಳೆಗಳ ಕಿಂಕಿಣಿಕಿಣಿ ಕೇಳಿಸಿತು. +ಬೈರನ ಹೆಂಡತಿ ಸತ್ತುಹೋಗಿದ್ದು, ಅವನಿನ್ನೂ ಮದುವೆಯಾಗದೆ ಒಬ್ಬೊಂಟಿಗನಾಗಿಯೆ ಬಿಡಾರದಲ್ಲಿದ್ದುಕೊಂಡು, ತನ್ನ ಅಡುಗೆಯನ್ನು ತಾನೇ ಮಾಡಿಕೊಂಡು ’ಒಂಟಿಗೇಡಿ’ ಎನ್ನಿಸಿಕೊಂಡಿದ್ದಾನೆ ಎಂಬ ಸಂಗತಿಯನ್ನು ತಿಳಿದಿದ್ದ ಗುತ್ತಿಗೆ, ಬಳೆಯ ಸದ್ದು ಕೇಳಿ ತುಸು ಸೋಜಿಗವಾಯಿತು. +ಆದರೆ ಬೈರನ ಶೃಂಗಾರಜೀವನದ ಖುಖ್ಯಾತಿಯನ್ನು ಅರಿತಿದ್ದ ಅವನಿಗೆ ಮನ್ಮಥಕುತೂಹಲ ಕೆರಳಿ ಬಾಗಿಲತ್ತ ನೋಡುತ್ತ ಮಲಗಿಯೆ ಇದ್ದನು. +ಬೈರನ ಬಿಡಾರದ ಒಳಗೆ ಕತ್ತಲೆ ಕವಿದಿದ್ದಿತಾದರೂ ಹೊರಗಡೆ ಇದ್ದ ಬಯಲುಗತ್ತಲೆಯ ಬೆಳಕಿನ ದೆಸೆಯಿಂದ ಬಾಗಿಲಷ್ಟು ಅಗಲದ ಚೌಕದಲ್ಲಿ ಬಾಗಿಲಿಗೆ ಬಂದ ಯಾರನ್ನಾದರೂ ಆಕಾರಮಾತ್ರವಾಗಿ ನೋಡ ಬಹುದಾಗಿತ್ತು. +ಗುತ್ತಿ ಅತ್ತಕಡೆಯೇ ಕಣ್ಣಾಗಿರಲು ಒಂದು ಹೆಣ್ಣಿನ ಆಕೃತಿ ಬಾಗಿಲಿಗೆ ಬಂದು ನಿಂತಿತು. +ಗುತ್ತಿಗೆ ತುಸುವೆ ಮೈ ಬಿಸಿಯೇರಿತು. +ಯಾರಿರಬಹುದು?ಹಳೆಮನೆಯ ಕೇರಿಯವರೆಲ್ಲರೂ ಒಂದಲ್ಲ ಒಂದು ರೀತಿಯಿಂದ ನನಗೆ ಗೊತ್ತಿರುವವರೆ? +ಆಕೃತಿ ನೋಡಿದರೆ ಹುಡುಗಿಯಂತೆ ಕಾಣುತ್ತಿದೆ! +ಬೈರನಿಗಾಗಿ ಬಂದವಳೇ?ಅಥವಾ ತನಗೇ ಆಗಿಯೋ? +ತಾನು ಬಂದದ್ದು ಅಷ್ಟಾಗಿ ಯಾರಿಗೂ ಗೊತ್ತಾಗಿಲ್ಲ. +ಆ ತೆರನ ಸಂಬಂಧದಲ್ಲಿ ತನಗೆ ಗೊತ್ತಿರುವವಳೆಂದರೆ ತಳವಾರ ಸಣ್ಣನ ಮಗಳು ಪುಟ್ಟಿ! +ಹಿಂದೆ ಹುಡುಗಾಟದ ಮಟ್ಟದಲ್ಲಿ ಅವಳ ಸಂಗ ಮತ್ತು ಅಂಗಸುಖಗಳೆರಡನ್ನೂ ಅನುಭವಿಸಿದ್ದನು. +ಅದನ್ನು ನೆನೆದು ಅವನಿಗೆ ನವಿರು ನಿಮಿರಿತು. +ಹೊಲೆಯನ ರೂಕ್ಷಪ್ರಜ್ಞೆಗೆ ಒಂದು ಕ್ಷಣದ ಮಟ್ಟಿಗೆ ಪೂರ್ವಾಪರ ಸಂಬಂಧ ತಪ್ಪಿ ಹೋದಂತಾಗಿ ತಿಮ್ಮಿಯನ್ನೂ ಅವಳ ಸರ್ವಾಂಗ ಸರ್ವಸುಖ ಸಂಬಂಧವನ್ನೂ ಅದು ಮರೆತೆಬಿಟ್ಟಿತ್ತು.! +ಏನನ್ನೋ ಗುಟ್ಟಾಗಿ ಮಾತಾಡುವವನಂತೆ ಗಟ್ಟಿಯಾಗಿ ಪಿಸುದನಿಯಲ್ಲಿ “ಯಾರು?ಪುಟ್ಟಿಯೇನೇ?” ಎಂದು ಕೇಳಿ, ಉತ್ತರವನ್ನು ನಿರೀಕ್ಷಿಸದೆ “ನಾನೊಬ್ಬನೆ ಇದ್ದೀನಿ ಕಣೆ!” ಎಂದು ಆಶ್ವಾಸನೆ ಕೊಡುವಂತೆ ನುಡಿದನು. +ಅಷ್ಟರಲ್ಲಿ ಹೊರಗಡೆ ದೂರದಲ್ಲಿ ಯಾರೊ ಕೆಲವರು ಮಾತನಾಡಿಕೊಳ್ಳುತ್ತಿರುವ ಸದ್ದು ಕೇಳಿಸಿ, ಬಾಗಿಲಲ್ಲಿ ನಿಂತಿದ್ದ ಆಕೃತಿ ತಟಕ್ಕನೆ ಹಿಂದಕ್ಕೆ ಸರಿದು ಮರೆಯಾಯಿತು. +ಬೈರನೂ ಗುತ್ತಿಯನ್ನು ಹೆಸರು ಹಿಡಿದು ಕೂಗುತ್ತಾ ಬಾಗಿಲಿಗೆ ಬಂದನು…. +ಮರುದಿನ ಗುತ್ತಿ ಸಮಯಕಾದು, ಹಳೆಮನೆ ಹೆಂಚಿನ ಮನೆಯಲ್ಲಿ ಉಳಿದುಕೊಂಡಿದ್ದ ತನ್ನ ಒಡೆಯರನ್ನು ಏಕಾಂತವಾಗಿಯೆ ಸಂಧಿಸಿದನು. +ಅವರು ಪೋಲೀಸಿನವನು ಕಂಪದಲ್ಲಿ ಸಿಕ್ಕಿಬಿದ್ದಿದ್ದು, ತೀರ್ಥಹಳ್ಳಿಗೆ ಹೋಗುತ್ತಿದ್ದ ಬೆಟ್ಟಳ್ಳಿ ಗಾಡಿಯಲ್ಲಿದ್ದವರಿಂದ ರಕ್ಷಿಸಲ್ಪಟ್ಟಿದ್ದ ವಿಚಾರವನ್ನು ತಿಳಿಸಿ, ಗುತ್ತಿಯ ದಸ್ತಗಿರಿಗಾಗಿ ವಾರಂಟು ಹೊರಡಿಸುತ್ತಾರಂತೆ ಎಂಬುದನ್ನು ಹೇಳಿ “ನೀನು ಒಂದು ಆರು ತಿಂಗಳು ಒಂದು ವರ್ಷ, ಎಲ್ಲಾದರೂ ತಲೆತಪ್ಪಿಸಿಕೊಂಡಿರು. +ಇದೆಲ್ಲ ತಣ್ಣಗಾದ ಮ್ಯಾಲೆ ಕೇರಿಗೆ ಬರಬಹುದು. +ನಾನೂ ಕಲ್ಲೂರು ಮಂಜಭಟ್ಟರಿಗೆ ಹೇಳಿ ಏನಾದ್ರೂ ಮಾಡಿಸ್ತೀನಿ. +ತೀರ್ಥಹಳ್ಳಿ ಅಮಲ್ದಾರ್ರು ಅವರ ಸಂಬಂಧದೋರಂತೆ.” ಎಂದು ಸಲಹೆ ಕೊಟ್ಟರು. +ದಸ್ತಗಿರಿ, ವಾರಂಟು ಎಂಬ ಭಯಂಕರ ಪದಗಳನ್ನು ಕೇಳಿಯೆ ಗುತ್ತಿಗೆ ಜಂಘಾಬಲ ಉಡುಗಿದಂತಾಯ್ತು. +ಓಡಿಹೋಗಿ ತಲೆ ತಪ್ಪಿಸಿಕೊಂಡಿರುವ ಸಲಹೆ ಅವನಿಗೆ ಅನಾವಶ್ಯಕವಾಗಿತ್ತು. +ಆದರೂ ಧೈರ್ಯ ಮಾಡಿ ಅವನು ತಿಮ್ಮಿಯನ್ನು ಕರೆದುಕೊಂಡೇ ಓಡಿ ಹೋಗುವ ವಿಚಾರವೆತ್ತಿದಾಗ, ಒಡೆಯರು ರೇಗಿ ಬಯ್ದರು. +“ಮುಂಡೇಮಗನೇ, ನಿನ್ನ ತಲೆಯಂತೂ ಹೋಗ್ತದಲ್ಲಾ! +ನಮ್ಮ ತಲೆಗೂ ತಂದಿಡಬ್ಯಾಡ! +ನೀನೆಲ್ಲಾದ್ರೂ ಬೆಟ್ಟಳ್ಳಿ ಕೇರಿಕಡೆ ಸುಳಿದ್ರೆ, ನಿನ್ನ ಹಿಡಿದು ಪೋಲೀಸರಿಗೆ ಕೊಡ್ತಾರೆ?ಗೊತ್ತಾತೇನು? …. +ಕೊಪ್ಪದ ಸೀಮೆ, ಮುತ್ತೂರು ಸೀಮೆ ಕಡೆಗೆ ಹೋಗು. +ತೀರ್ಥಹಳ್ಳಿ ಮ್ಯಾಲೆ ಹೋಗೀಯಾ ಹುಷಾರು! +ಆಗುಂಬೆ ಕಡೆಯಿಂದ ಹೋಗು…. +ಕೊಪ್ಪದ ಹತ್ತಿರ ’ಆಲೆಗದ್ದೆ’ ಅಂತಾ ಇದೆ. +ಅಲ್ಲಿ ಗಣಪಯ್ಯನಾಯ್ಕರು ಅಂತಾ ಅದಾರೆ. +ಅವರ ಹತ್ತಿರ ಕೆಲಸಕ್ಕೆ ಸೇರಿದ್ರೆ, ಪೋಲೀಸರು ನಿನ್ನ ಹತ್ರಾನೇ ಬರಾದಿಲ್ಲ…. +ಅಲ್ಲಿದ್ರೆ ಮುತ್ತೂರು ಸೀಮೇಲಿ ’ಕಾನೂರು’ ಅಂತಾ ಅದೆ. +ಅಲ್ಲಿ ಸುಬ್ಬಯ್ಯಗೌಡ್ರು, ಚಂದ್ರಯ್ಯಗೌಡರು ಅಂತಾ ಎಲ್ಲಾ ಅದಾರೆ. +ಅವರನ್ನಾದ್ರೂ ಸೇರು…ಎಲ್ಲ ತಣ್ಣಗಾದಮ್ಯಾಲೆ ನಾ ಹೇಳಿಕಳಿಸ್ತೀನಿ! …. ” +ಕಾರ್ಮೋಡ ಮುಸುಗಿ ಮಳೆ ಹಿಡಿದು ಹೊಡೆಯುತ್ತಿದ್ದುದರಿಂದ ಹೊತ್ತಿಗೆ ಮುನ್ನವೆ ಬೈಗುಗಪ್ಪು ಕವಿದಿತ್ತು. +ಗದ್ದೆಯ ಕೆಲಸದಿಂದ ಹಿಂದಿರುಗುತ್ತಿದ್ದ ಆಳುಗಳೆಲ್ಲ ’ಇವೊತ್ತು ಎಂದಿಗಿಂತಲೂ ಹೆಚ್ಚು ಹೊತ್ತು ಕೆಲಸಮಾಡಿಬಿಟ್ಟರು ಮುಕುಂದೇಗೌಡರು. ’ ಎಂದು ಮನಸ್ಸಿನಲ್ಲಿಯೆ ತುಸು ಅಸಮಾಧಾನಪಟ್ಟುಕೊಂಡು ತಮ್ಮ ತಮ್ಮ ಬಿಡಾರಗಳಿಗೆ, ಉಪ್ಪು ಮೆಣಸು ಬಾಳೇಕಾಯಿ ಅಕ್ಕಿ ಎಲೆ ಅಡಿಕೆ ಹೊಗೆಸೊಪ್ಪು ಮೊದಲಾದ ಗಂಟುಕಟ್ಟಿದ್ದ ಪಡಿಯ ಸಾಮಗ್ರಿಗಳೊಡನೆ, ಕೆಲವರು ಕಂಬಳಿಕೊಪ್ಪೆ ಹಾಕಿಕೊಂಡೂ, ಕೆಲವರು ಗೊರಬು ಸೂಡಿಕೊಂಡೂ ದಣಿದು ಮೆಲ್ಲನೆ ಹಿಂದಿರುಗುತ್ತಿದ್ದರು. +ಹೆಣ್ಣಾಳುಗಳ ಗುಂಪಿನಲ್ಲಿ ಬರುತ್ತಿದ್ದ ಪೀಂಚಲು ತನ್ನ ಬಿಡಾರದ ಮುಂದೆ ನಿಂತು ಅಕ್ಕಣಿ, ಬಾಗಿ, ಚಿಕ್ಕಿ ಮೊದಲಾದವರನ್ನು ಬರಿಯ ನಗೆಯಿಂದಲೋ ಅಥವಾ ರೂಢಿಯ ಉಪಚಾರದ ಮಾತಿನಿಂದಲೋ ಬೀಳುಕೊಟ್ಟಳು. +ತನ್ನ ಬಿಡಾರದ ತಡಿಕೆ ಬಾಗಿಲಿಗೆ ಬಿಗಿದಿದ್ದ ಹಗ್ಗವನ್ನು ಬಿಚ್ಚಿ, ಅದನ್ನು ನೂಕಿ, ಗೊರಬು ಬಾಗಿಲಿಗೆ ಹಿಡಿಸುವಂತೆ ಅಡ್ಡಡ್ಡವಾಗಿ ತನ್ನೆಲ್ಲ ಗಂಟುಮೂಟೆಗಳೊಡನೆ ಒಳಹೊಕ್ಕು, ಮತ್ತೆ ಬಾಗಿಲು ಹಾಕಿಕೊಂಡಳು, ಹೊರಗಡೆ ಬೀಳುತ್ತಿದ್ದ ಮಳೆಯ ಇರಿಚಲು ಒಳಕ್ಕೆ ಸಿಡಿದುಹಾರಿ ಬಿಡಾರದ ನೆಲ ಒದ್ದೆಯಾಗದಿರಲಿ ಎಂದು. +ಹೊರಗಡೆ ಮೇಯುತ್ತಿದ್ದು, ಒದ್ದೆಮುದ್ದೆಯಾಗಿ ಗರಿ ತಿಪ್ಪುಳು ಮೆಯ್ಗಂಟಿ ಸಣ್ಣಗೆ ಕಾಣುತ್ತಿದ್ದ ಅವಳ ಒಂದು ಹುಂಜವೂ ಎರಡು ಹೇಂಟೆಗಳೂ ಮೂರುನಾಲ್ಕು ಮರಿಗಳೂ ಕತ್ತಲಾಗುತ್ತಿದ್ದುದರಿಂದ ಒಳಕ್ಕೆ ಹೋಗಲು ಮನೆಯ ಯಜಮಾನಿಯ ಆಗಮನವನ್ನೇ ನಿರೀಕ್ಷಿಸುತ್ತಿದ್ದಳು. + ಅವಳು ಬಂದು ಬಾಗಿಲು ತೆಗೆದೊಡನೆಯೆ ಅವಳಿಗಿಂತಲೂ ಮೊದಲೆ ಒಳಕ್ಕೆ ನುಗ್ಗಿ, ಗೊತ್ತು ಕೂರುವ ಜಾಗಕ್ಕೆ ಹೋಗಿದ್ದುವು. +ಪೀಂಚಲು ಮೂಲೆಯಲ್ಲಿ ಗೂಟಕ್ಕೆ ತಗುಲಿಸಿದ್ದ ಒಂದು ಕಣ್ಣುಕಟ್ಟಿನ ದೊಡ್ಡ ಬುಟ್ಟಿಯನ್ನು ತೆಗೆದು ಆ ಕೋಳಿಗಳನ್ನೆಲ್ಲ ಒಟ್ಟಿಗೆ ಮೂಲೆಗೆ ತಳ್ಳಿ ಮುಚ್ಚಿಹಾಕಿದಳು. +ತನ್ನ ಗೊರಬನ್ನು ಆ ಗೂಟಕ್ಕೆ ತಗುಲಿಹಾಕಿದಳು. +ಕೈಯಲ್ಲಿದ್ದ ಗಂಟನ್ನು ಕೆಳಗಿಟ್ಟು, ಆ ಗಂಟಿಗೇ ಒತ್ತಿ ಹಿಡಿದುಕೊಂಡು ಬಂದಿದ್ದ ಒಂದು ಕೆಸುವಿನ ಎಲೆಯ ಕೊಟ್ಟೆಯನ್ನು ತೆಗೆದು, ಪ್ರತ್ಯೇಕವಾಗಿ, ಒಲೆಯಿದ್ದ ಮೂಲೆಯೆಡೆ ಇಟ್ಟಳು. +ಇಟ್ಟೊಡನೆ ಬಿಚ್ಚಿಕೊಂಡ ಆ ಪೊಟ್ಟಣದಲ್ಲಿ ಕೆಲವು ಬೆಳ್ಳೇಡಿ, ಸೋಸಲು, ತೊಳ್ಳೆಮೀನುಗಳಿದ್ದು, ಒಂದು ತೊಳ್ಳೆಮೀನಿಗೆ ಇನ್ನೂ ಜೀವವಿದ್ದುದರಿಂದ ಚಿಮ್ಮಿಹಾರಿ ಒಲೆಯ ಬೂದಿಗೆ ಬಿದ್ದಿತು. +ಪೀಂಚಲು ಅದನ್ನೆತ್ತಿ ನೆಲಕ್ಕೆ ಬಡಿದು ನಿಶ್ಚಲವಾದ ಅದನ್ನು ಮತ್ತೆ ಎತ್ತಿ ಕೊಟ್ಟೆಯ ಎಲೆಗೇ ಹಾಕಿದಳು. +ಒಂದು ಅರುವೆಯಿಂದ ಕೈಕಾಲು ಮುಖದ ಒದ್ದೆಯನ್ನೆಲ್ಲ ಒರಸಿಕೊಂಡು, ತುಸು ಹೆಚ್ಚು ಕತ್ತಲೆ ಕವಿದಿದ್ದ ಮೂಲೆಯಲ್ಲಿ ಬಾಗಿಲಕಡೆಗೆ ಬೆನ್ನಾಗಿ ನಿಂತು ಒದ್ದೆಯಾಗಿದ್ದ ಸೀರೆಯನ್ನು ಬಿಚ್ಚಿ ಹರಡಿದಳು. +ಯಾರೂ ಇರದಿದ್ದರೂ ಯಾರೂ ನೋಡುವ ಸಂಭವವೂ ಇರದಿದ್ದರೂ ಅವಳು ತನ್ನ ನಗ್ನತೆಗೆ ತಾನೇ ನಾಚಿಯೂ ಅದನ್ನು ಸವಿಯದಿರಲಾಗಲಿಲ್ಲ. +ಅದರಲ್ಲಿಯೂ ತುಸುವೆ ಉಬ್ಬಿದಂತಿದ್ದ ತನ್ನ ಬದ್ದೆಯ ಭಾಗವನ್ನು ನೋಡಿಕೊಂಡು ಮುಗುಳುನಗುತ್ತಾ ಏನನ್ನೋ ಸವಿಯುವಂತೆ ಕ್ಷಣಕಾಲ ನಿಂತಳು. +ಅಲ್ಲಿಯೆ ಅಲ್ಲವೆ ಇನ್ನೊಂದು ಆರು ತಿಂಗಳಲ್ಲಿಯೆ ತನಗೆ ಕಂದಮ್ಮನಾಗಿ ಬರುವ ಒಂದು ಜೀವ ಬೆಳೆಯುತ್ತಿರುವುದು? +ಆದರೆ ಚಳಿಯನ್ನನುಭವಿಸಿದ ಮೈ ಅವಳನ್ನು ಎಚ್ಚರಿಸಿದುದರಿಂದ ಬೇಗಬೇಗನೆ ಮತ್ತೊಂದು ಒಣಗಿದ ಉತ್ತಮತರದ ಸೀರೆಯನ್ನು ಸುತ್ತಿಕೊಂಡು, ಮುಂದಿನ ಅಡುಗೆಯ ಕೆಲಸಕ್ಕೆ ತೊಡಗಿದಳು. +ಗಂಡ ದುಡಿದು ದಣಿದು ಮಳೆಯಲ್ಲಿ ಒದ್ದೆಯಾಗಿ ಬರುವ ಹೊತ್ತಿಗೆ ಏನನ್ನಾದರೂ ಬಿಸಿಬಿಸಿ ಮಾಡಿರದಿದ್ದರೆ? +ಐತ ತುಂಬ ಒಲವಿನ ಸ್ವಭಾವದವನಾಗಿದ್ದರೂ ದಣಿದು ಹಸಿದಾಗ, ಹಟಮಾಡುವ ಮಕ್ಕಳ ಹಾಗೆ, ರೇಗಾಡುತ್ತಿದ್ದುದು ಉಂಟು! +ಜೊತೆಗೆ ಈಗೀಗ ಪೀಂಚಲುವಿನ ಸತೀತ್ವ ಪರಿಪಕ್ವವಾಗುತ್ತಾ ಮಾತೃತ್ವಕ್ಕೆ ತಿರುಗುತ್ತಿದ್ದುದು, ಅದರ ಅಕ್ಕರೆಯ ವಲಯಕ್ಕೆ ತನ್ನ ಗಂಡನನ್ನೂ ಸೆಳೆದುಕೊಳ್ಳುವ ಮೃದುಲ ಸಾಹಸದಲ್ಲಿ ಸಂತೋಷಿಸುತಿತ್ತು! +ಒಲೆಯಲ್ಲಿ ಬೂದಿಮುಚ್ಚಿಕೊಂಡಿದ್ದ ಒಂದು ಸಣ್ಣ ಕೊಳ್ಳಿಯನ್ನೂದಿ, ಜಿಗ್ಗು ಕಚ್ಚಿ, ಬೆಂಕಿಮಾಡಿದಳು. +ಅದರಿಂದಲೆ ಒಂದು ಉರಿಯುವ ಕಡ್ಡಿಯಿಂದ ಹಣತೆಯ ಸೊಡರು ಹೊತ್ತಿಸಿಬಿಟ್ಟಳು. +ಆಗತಾನೆ ಹಳ್ಳಿಗಳ ಕಡೆಗೂ ಬರತೊಡಗಿ ಅತಿಅತಿ ಅಪೂರ್ವ ವಸ್ತುವಾಗಿದ್ದ ಒಂದು ಬೆಂಕಿಪೊಟ್ಟಣವನ್ನು ಐತ ಹೇಗೋ ಸಂಪಾದಿಸಿ ಅವಳಿಗೆ ತಂದುಕೊಟ್ಟಿದ್ದನಾದರೂ ಪೀಂಚಲು ಅದನ್ನು ಅಮೂಲ್ಯವಸ್ತುವನ್ನು ರಕ್ಷಿಸುವಂತೆ ಕಾಪಾಡಿಟ್ಟುಕೊಂಡಿದ್ದಳು. +ಕಷ್ಟಕಾಲದಲ್ಲಿ ಅನಿವಾರ್ಯವಾದಾಗ ಮಾತ್ರ ಅದರ ಉಪಯೋಗವೆಂಬುದು ಅವಳ ದೃಢನಿಶ್ಚಯವಾಗಿತ್ತು. +ತನಗೆ ಮಗು ಜನಿಸಿದ ಮೇಲೆ ವೇಳೆಯಲ್ಲದ ವೇಳೆಯಲ್ಲಿ ದೀಪ ಹೊತ್ತಿಸಬೇಕಾಗಿಬರಬಹುದು; +ಬೆಂಕಿಮಾಡಿ ಏನನ್ನಾದರೂ ತಯಾರಿಸಬೇಕಾಗಿ ಬರಬಹುದು! +ಅದಕ್ಕಾಗಿ ದಿನವೂ ಒಲೆಯಲ್ಲಿ ಒಂದು ಗಟ್ಟಿಕೊಳ್ಳಿ ಜೀವಂತವಾಗಿರುವಂತೆ ಮಾಡಿಟ್ಟು, ಸಾಯಂಕಾಲ ಅದನ್ನು ಊದಿಯೆ ಬೆಂಕಿ ಹೊತ್ತಿಸುತ್ತಿದ್ದಳು. +ಒಂದು ವೇಳೆ ಅದು ಆರಿಯೆ ಹೋಗಿದ್ದರೆ ನೆರೆಯ ಬಿಡಾರಗಳಿಗೆ ಹೋಗಿ ಬೆಂಕಿ ತರುತ್ತಿದ್ದಳು. +ಅಂತೂ ತನ್ನಲ್ಲಿದ್ದ ಬೆಂಕಿಪೊಟ್ಟಣದಲ್ಲಿ ಕಡ್ಡಿ ಒಂದೊ ಎರಡಕ್ಕಿಂತ ಹೆಚ್ಚಾಗಿ ಖರ್ಚಾಗದಂತೆ ಭದ್ರವಾಗಿಟ್ಟಿದ್ದಳು, ಒಲೆಯ ಸಮೀಪದಲ್ಲಿ ಥಂಡಿ ತಗುಲದಂತೆ. +ಏಡಿ ಮೀನುಗಳನ್ನು ಕೆಂಡದಲ್ಲಿ ಸುಟ್ಟು, ಚಟ್ನಿಗೆ ನುರಿದಿಟ್ಟು, ಸಣ್ಣ ಗಡಿಗೆಯಲ್ಲಿಟ್ಟಿದ್ದ ಅದಕ್ಕೆ ಸೇರಿಸುವ ಒಣಮೆಣಸಿನಕಾಯಿ ನೀರುಳ್ಳಿ ಕೊಬ್ಬರಿಯ ಚೂರು ಇತ್ಯಾದಿ ಮಸಾಲೆ ಸಾಮಗ್ರಿಗಳನ್ನು ಹುಡುಕತೊಡಗಿದಾಗ ಅವಳು ಹೌಹಾರಿ, ಸಣ್ಣಗೆ ಕೂಗಿಕೊಂಡು, ತಟಕ್ಕನೆ ಎದ್ದು ಹಿಂದಕ್ಕೆ ಚಿಮ್ಮಿ ನಿಂತಳು. +ಐದಾರೇಳು ಕುಂಬ್ರಿ ಹುಳುಗಳೂ ಕೊಡ್ಲಿ ಹುಳುಗಳೂ ಗಡಿಗೆಯಿಂದ ನೆಗೆದು ನೆಲದ ಮೇಲೆಯೂ ಅವಳ ಮೈಮೇಲೆಯೂ ಹರಿದಾಡತೊಡಗಿದವು! +ಒಂದನ್ನು ಕಾಲಿನಿಂದಲೆ ನೆಲಕ್ಕೆ ತಿಕ್ಕಿದಳು. +ಆದರೆ ಸೆರಗಿನೊಳಗೆ ಹೊಕ್ಕ ಒಂದನ್ನು ಅಲ್ಲಿಂದ ಹೊರಡಿಸುವ ಪ್ರಯತ್ನದಲ್ಲಿ ಸದ್ಯಪ್ರಪುಲ್ಲವಾಗಿದ್ದ ಕೋಮಲ ಕುಚದ್ವಯಗಳನ್ನೂ ಪೀಡಿಸಬೇಕಾಗಿ ಬಂತು. +ಅದರಲ್ಲಿ ಒಂದು ಹುಳು ಹಾರಿಹೋಗಿ ಗೊರಬಿನ ಮೇಲೆ ಕೂತಿತು. +ಪೀಂಚಲು ಓಡಿಹೋಗಿ ಮೂಲೆಯಲ್ಲಿದ್ದ ಹಿಡಿಯನ್ನು ತೆಗೆದುಕೊಂಡು ಬಂದು ಬಡಿದಳು. +ಅದು ಅರ್ಧಪ್ರಾಣವಾಗಿ ಬಿದ್ದು ತೆವಳಿಕೊಂಡು ಕೋಳಿಗಳನ್ನು ಕವುಚಿಹಾಕಿದ್ದ ಬುಟ್ಟಿಯೊಳಗೇ ನುಗ್ಗಿತು. +ಕೋಳಿಗಳೇ ಅದರ ಮುಂದಿನ ಕ್ಷೇಮಸಮಾಚಾರ ತೆಗೆದುಕೊಳ್ಳುತ್ತವೆ ಎಂಬ ವಿಶ್ವಾಸದಿಂದ ಪೀಂಚಲು ನೆಲದ ಕಡೆ ತಿರುಗಿ ಅಲ್ಲಿ ಇಲ್ಲಿ ಮರೆಯಾಗಲು ಪ್ರಯತ್ನಿಸುತ್ತಿದ್ದ ಎರಡು ಮೂರನ್ನು ಹಿಡಿಯಿಂದ ಹೊಡೆದು ಕೊಂದಳು. +ಉಳಿದವು ತಪ್ಪಿಸಿಕೊಂಡೆಬಿಟ್ಟುವು. +ಎಳೆಬಸಿರಿ ಏದುತ್ತಾ ನಿಂತು, ತನಗೆ ತಿಳಿದಿದ್ದ ಕೆಲವೇ ಅತ್ಯಂತ ಅಸಹ್ಯವಾದ ಅಶ್ಲೀಲ ಪದಪ್ರಯೋಗದಿಂದ ಅವುಗಳನ್ನು ಶಪಿಸಿದಳು. +ಹೊರಗಡೆ ಬೃಹತ್ ಪ್ರಪಂಚ ಜೀವನದ ಮಹದ್ ವ್ಯಾಪಾರಗಳೂ ಇಷ್ಟೇ ಆಸ್ಥೆಯಿಂದ ಸಾಗಿದ್ದುವು; +ಮಲೆನಾಡಿನ ಮಳೆಗಾಲದ ಜಡಿಮಳೆ ಸುರಿಯುತ್ತಿತ್ತು; + ಕಾರ್ಗತ್ತಲೆ ದಟ್ಟೈಸಿತ್ತು. +ಅಡುಗೆಯನ್ನಲ್ಲ ಮುಗಿಸಿ ಪೀಂಚಲು ಕಾದಳು, ಗಂಡನಿಗಾಗಿ. +ಅವನು ಇವೊತ್ತು ಬರುವುದು ಹೊತ್ತಾಗಬಹುದೆಂದು ಅವಳು ಊಹಿಸಿಯೇ ಇದ್ದಳು. +ಆದರೆ ಈ ಮಳೆಯಲ್ಲಿ ಈ ಕಗ್ಗತ್ತಲೆಯಲ್ಲಿ ಐತನೂ ಮುಕುಂದಯ್ಯಗೌಡರೂ ಆ ಗುತ್ತಿಯನ್ನು ಕಟ್ಟಿಕೊಂಡು ಹುಲಿಕಲ್ಲು ನೆತ್ತಿಯ ಆಚೆಯ ಕಡೆಗಿದ್ದ ಕಲ್ಲುಮಂಟಪವಿದ್ದ ಕಂಟಕಮಯ ಪ್ರದೇಶದಲ್ಲಿ ಏನು ಮಾಡುತ್ತಿರಬಹುದು ಎಂದು ಊಹಿಸಲೂ ಸಾಧ್ಯವಿರಲಿಲ್ಲ ಅವಳಿಗೆ. +ಗಂಡನು ಬಂದ ಮೇಲೆಯೆ ಅವನೊಡನೆ ತಾನು ಉಣ್ಣುವುದು ಎಂದು ಮನಸ್ಸು ಮಾಡಿದ್ದಳು ಪೀಂಚಲು. +ಆದರೆ ಗದ್ದೆಯಲ್ಲಿ ಪಾದಮುಚ್ಚುವಷ್ಟರ ನೀರಿನಲ್ಲಿ ನಿಂತು ದುಡಿದಿದ್ದ ಅವಳಿಗೆ ಹಸಿವು ಜೋರಾಗಿತ್ತು. +ಹಸಿವಿನ ತೀಕ್ಷ್ಣತೆಯನ್ನು ಸ್ವಲ್ಪ ಕಡಿಮೆ ಮಾಡುವ ಉದ್ದೇಶದಿಂದ ಇನಿತೆ ಉಣ್ಣುವೆನೆಂದು ಕುಳಿತಳು. +ಊಟಕ್ಕೆ ಕುಳಿತು, ಒಂದೆರಡು ತುತ್ತು ಏಡಿಮೀನಿನ ಚಟ್ನಿಯೊಡನೆ ಗಂಟಲಿಂದ ಹೊಟ್ಟೆಗಿಳಿದಮೇಲೆ, ನಾಲಗೆಯ ಹತೋಟಿ ಅವಳ ಕೈ ಮೀರಿತ್ತು. +ಮತ್ತೆ ಮತ್ತೆ ಉಣ್ಣುವುದೇಕೆ ಎಂದು ಚೆನ್ನಾಗಿಯೆ ತನ್ನ ಊಟವನ್ನು ಪೂರೈಸಿದ್ದಳು. +ಹಾಗೆಯೆ ಚಾಪೆಯ ಮೇಲೆ ಒರಗಿದ್ದಳು. +ಅರೆ ನಿದ್ದೆಯ ಜೊಂಪು ಹತ್ತಿತ್ತು…. +ಯಾರೊ ಬಾಗಿಲು ದೂಕುವ ಸದ್ದಾಗಿ ಪೀಂಚಲು ಚಾಪೆಯ ಮೇಲೆ ಎದ್ದುಕುಳಿತಳು. +ತನ್ನ ಗಂಡನೆ ಎಂಬ ನಿಶ್ಚಯದಿಂದ ಎದ್ದು, ಹಗ್ಗ ಬಿಚ್ಚಿ, ತಟ್ಟಿಬಾಗಿಲನ್ನು ತುಸುವೆ ಓರೆಮಾಡಿದಳು. +ಪೀಂಚಲು ಬೆಚ್ಚಿಬಿದ್ದಳು; +ಮೈಯೆಲ್ಲ ಬಿಸಿಯೇರಿ ಕಂಪಿಸಿತು; +ಒಂದು ಹೆಜ್ಜೆ ಹಿಂಜರಿದರೂ ಬಾಗಿಲನ್ನು ಮತ್ತೆ ಭದ್ರವಾಗಿ ನೂಕಿ ಹಿಡಿದುಕೊಂಡಳು. +ಅವಳ ಕಣ್ಣಿಗೆ ಬಿದ್ದ ರೂಪು ಐತನದಾಗಿರಲಿಲ್ಲ. +ಸ್ತ್ರೀಯಾಕೃತಿಯೊಂದು ಮಳೆಯಲ್ಲಿ ತೊಯ್ದು ಒದ್ದೆ ಮುದ್ದೆಯಾಗಿ ನಿಂತಿದ್ದುದು ಒಳಗಿನ ಹಣತೆಯ ಸುಮಂದಕಾಂತಿಯಲ್ಲಿ ಅಸ್ಪಷ್ಟವಾಗಿ ವಿಕಾರವಾಗಿ ಗೋಚರಿಸಿತ್ತು. +ಅಳುತ್ತಿದ್ದುದೂ, ತನ್ನ ಹೆಸರನ್ನು ಮೆಲ್ಲಗೆ ಉಚ್ಚರಿಸಿ ಕರೆದು, ತಾನು ಯಾರೆಂಬುದನ್ನು ಹೇಳಿದುದೂ ಕೇಳಿಸಿ, ಅಚ್ಚರಿಗೊಂಡ ಪೀಂಚಲುಗೆ ಯಾವುದೂ ಅರ್ಥವಾಗದಿದ್ದರೂ ಬೆಟ್ಟಳ್ಳಿಯ ಹೊಲೆಯರ ಹುಡುಗಿ ತಿಮ್ಮಿಗೆ ತನ್ನ ಆಶ್ರಯದ ರಕ್ಷೆ ಬೇಕಾಗಿದೆ ಎಂಬುದನ್ನು ತಟಕ್ಕನೆ ಅರಿತಳು. +ಅವಳು ಗುತ್ತಿಯ ಹೆಂಡತಿ ಅಲ್ಲವೆ? +“ಪೀಂಚಲವ್ವಾ, ನಾನು ಬೆಟ್ಟಳ್ಳಿ ತಿಮ್ಮಿ!” ಎಂದಿತು ಆ ಧ್ವನಿ. +ಬಾಗಿಲು ತೆರೆದು, ತಲೆಯಿಂದ ಕಾಲಿನವರೆಗೂ ಒದ್ದೆಯಾಗಿ ಸೀರೆಯಿಂದ ನೀರು ಸೋರುತ್ತಿದ್ದ ಹೊಲೆಯರ ಹುಡುಗಿಯನ್ನು ಒಳಕ್ಕೆ ಬಿಟ್ಟು, ಮತ್ತೆ ಬಾಗಿಲು ಮುಚ್ಚಿ ಹಗ್ಗ ಬಿಗಿದಳು. +ಬೇರೆಯ ಸಮಯ ಅಥವಾ ಸನ್ನಿವೇಶವಾಗಿದ್ದರೆ ಎಷ್ಟೊಂದು ಮೀನಮೇಷ ನಡೆಯುತ್ತಿತ್ತೋ ಮನಸ್ಸಿನಲ್ಲಿ? +ಆದರೆ ಆಗ ಹೊಲೆಯರವಳನ್ನು ಒಳಗೆ ಸೇರಿಸಬಹುದೆ ಬೇಡವೆ ಎಂಬ ಪ್ರಶ್ನೆಗೆ ಅವಳ ಪ್ರಜ್ಞೆಯಲ್ಲಿ ಅವಕಾಶವೆ ಇರಲಿಲ್ಲ. +ತಿಮ್ಮಿಯ ಸೀರೆಯಿಂದ ಧಾರಾಕಾರವಾಗಿ ಸೋರುತ್ತಿದ್ದ ನೀರನ್ನು ನೋಡಿ ಪೀಂಚಲು ಅವಳನ್ನು ಬಿಡಾರದ ಒಂದು ಮೂಲೆಯಲ್ಲಿ ವಿಶೇಷ ಸಂದರ್ಭಗಳಲ್ಲಿ ಕಾಲುತೊಳೆದುಕೊಳ್ಳಲೆಂದು ಹಾಕಿದ್ದ ಸಣ್ಣ ಚಪ್ಪಡಿ ಕಲ್ಲಿಗೆ ಕರೆದೊಯ್ದು ಸೀರೆಯನ್ನು ಹಿಂಡಿಕೊಳ್ಳಲು ಹೇಳಿದಳು. +ತಲೆ ಒರೆಸಿಕೊಳ್ಳಲು ಒಂದು ಅರುವೆ ಕೊಟ್ಟಳು…. +ಆದರೆ ತಿಮ್ಮಿಗೆ ಆ ಉಪಚಾರಗಳೊಂದೂ ಬೇಡವಾಗಿತ್ತು. +ಅವಳ ಕಣ್ಣು ಮುಖಗಳಲ್ಲಿದ್ದ ಬೆದರಿದ ಪ್ರಾಣಿಯ ಗಾಬರಿ ಹಣತೆಸೊಡರಿನ ಮಂದಕಾಂತಿ ಯಲ್ಲಿಯೂ ಗೋಚರವಾಗಿತ್ತು. +“ನನ್ನ ಬ್ಯಾಗ ಅಡಗಿಸಿಡಿ! +ಅಟ್ಟಿಕೊಂಡು ಬರ್ತಿದಾರೆ!ಹುಡುಕ್ತಿದಾರೆ!ಸಿಕ್ಕರೆ ಕೊಂದೇಹಾಕ್ತಾರೆ! +ನಿಮ್ಮ ದಮ್ಮಯ್ಯ! …. ” ಎಂದು ಪಿಸುಮಾತಿನಲ್ಲಿ ಅಳುತ್ತಲೆ ಗಳಪುತ್ತಿದ್ದಳು. +ಏಕೆ?ಏನು?ಎಂತು? +ಯಾವುದನ್ನೂ ಕೇಳುವ ಗೋಜಿಗೆ ಹೋಗದೆ, ಯಾವುದೋ ಸನ್ನಿಹಿತವಾದ ಅಪಾಯವಿರಬೇಕು ಎಂದರಿತು, ಪೀಂಚಲು ಗೂಟಕ್ಕೆ ಸಿಕ್ಕಿ ಹಾಕಿದ್ದ ಗೊರಬನ್ನು ತಂದು ಮೂಲೆಗೆ ಆನಿಸಿಟ್ಟು, ತಾನು ಬೆಚ್ಚಿ ಹರಡಿದ್ದ ತನ್ನ ಗದ್ದೆ ಕೆಲಸದ ಒದ್ದೆ ಸೀರೆಯನ್ನೆ ತೆರೆಮರೆಯಾಗುವಂತೆ ಮಾಡಿ, ತಿಮ್ಮಿಯನ್ನು ಸಂಪೂರ್ಣವಾಗಿ ಮುಚ್ಚಿಟ್ಟಳು…. +ಐದೇ ನಿಮಿಷದ ಹಿಂದೆ ಪ್ರಶಾಂತವಾಗಿ, ಬೇಜಾರಿನ ಬೀಡೊ ಎನ್ನುವಷ್ಟರ ಮಟ್ಟಿಗೆ ತಾಟಸ್ಥ್ಯದಿಂದಿದ್ದ ಐತನ ಬಿಡಾರ ಈಗ ಅಪಾಯ ಬಹಳ ಭಯಂಕರ ಗರ್ಭಿತವಾಗಿ ತೋರತೊಡಗಿತ್ತು ಪೀಂಚಲುಗೆ. +ಮುಂದೇನಾಗುತ್ತದೆಯೊ?ಏನು ಕಾದಿದೆಯೊ? +ಏನಾದರೆ ಏನು ಮಾಡಬೇಕೊ? +ತಾನೊಬ್ಬಳೆ ಇದ್ದೇನಲ್ಲಾ?ಗಂಡನೂ ಇದ್ದಿದ್ದರೆ! +ಅನೇಕ ಭಯ ಭೀತಿ ಭಾವಗಳ ಸಂಚಾರಕ್ಕೆ ವೇದಿಕೆಯಾದ ಪೀಂಚಲುವಿನ ಹೃದಯ ಡವಡವಗುಟ್ಟತೊಡಗಿತು. +ಚಳಿಗೆ ಬದಲಾಗಿ ಸೆಕೆಯಾಗತೊಡಗಿತು. +ಸೆರಗಿನಿಂದ ಬೆವರನ್ನೂ ಒರೆಸಿಕೊಂಡಳು. +ಇದ್ದಕ್ಕಿದ್ದಹಾಗೆ ನಾಲ್ಕಾರು ಜನ ತನ್ನ ಬಿಡಾರದ ಬಳಿಯೆ ಓಡಿದ ಹಾಗೆ ತೋರಿತು. +ಒಂದು ಬೆಳಕೂ, ತಡಿಕೆಯ ಸಂಧಿಗಳಲ್ಲಿ, ಚಲಿಸುತ್ತಿದ್ದುದು ಕಾಣಿಸಿತು. +ಉಸಿರುಕಟ್ಟಿ ಕಾದು ಕುಳಿತಳು ಚಾಪೆಯ ಮೇಲೆ, ಏನೋ ಕೆಲಸದಲ್ಲಿ ತೊಡಗಿರುವಂತೆ ನಟಿಸುತ್ತಾ. +ಹತ್ತಿರವಿದ್ದ ಒಂದು ಮೊರವನ್ನು ಬಳಿಗೆಳೆದುಕೊಂಡು ಅದರಲ್ಲಿದ್ದ ಅಕ್ಕಿಯಲ್ಲಿ ಕೈಯಾಡಿಸತೊಡಗಿದ್ದಳು…. +ಪಕ್ಕದ ಬಿಡಾರದಲ್ಲಿ ಏನೊ ಮಾತುಕತೆ ಗಟ್ಟಿಯಾಗಿ, ನಡೆಯುತ್ತಿದ್ದುದು ಕೇಳಿಸಿತು! +’ಇಲ್ಲಿ ಯಾರೂ ಬರಲಿಲ್ಲವೊ! ’. +’ನಾನು ಕಾಣೆ’!’ಏ ನಿಜ ಹೇಳೋ!’ + ’ಸುಳ್ಳು ಹೇಳಲಿಕ್ಕೆ ನನಗೆ ಏನು ತೆವಲು?’ -ಇಂತಹ ಪ್ರಶ್ನೆ ಉತ್ತರಗಳ ಬಳಿಕ ಎಲ್ಲ ನಿಃಶಬ್ದವಾಯಿತು. +ಮಳೆಯೂ ನಿಂತಿದ್ದಂತೆ ತೋರಿತು. +ಪೀಂಚಲು, ಹುಡುಕಿಕೊಂಡು ಬಂದವರು ಹೋದರೆಂದು ಧೈರ್ಯ ತಾಳಿ, ಗೊರಬಿನ ಕಡೆ ನೋಡಿದಳು. +ಅದು ನಿಶ್ಚಲವಾಗಿ ಮುಗ್ಧವಾಗಿತ್ತು. +ಅದರ ಹಿಂದೆ ಅದೆಂತಹ ಸುಮಹದ್ ದುರಂತವಾಗಬಹುದಾದ ಘಟನಾ ಪರಂಪರೆಯ ಪಿಂಡಿಯೆ ಅಡಗಿ ಕುಳಿತಿತ್ತು? +ಮತ್ತೆ? …. ಅದೇನು?…. ಪೀಂಚಲು ಕಿವಿಗೊಟ್ಟೂ ಆಲಿಸಿದಳು. +ಹಿಂದೆ ಕಾಣಿಸಿಕೊಂಡಿದ್ದ ಬೆಳಕೂ ಕೇಳಿಸಿದ್ದ ಜನರ ಓಡಾಟದ ಸದ್ದೂ ಪುನಃ ಬಳಿಸಾರುವಂತೆ ತೋರಿತು. +ಐತನ ಹೆಂಡತಿಯ ಹೃದಯ ಹೊಡೆದುಕೊಳ್ಳತೊಡಗಿತು. +ಯಾರೋ ಬಿಡಾರದ ತಡಿಕೆಯ ಬಾಗಿಲನ್ನು ಅಳ್ಳಾಡಿಸಿದಂತಾಯ್ತು. +ಆ ಮುಹೂರ್ತದಲ್ಲಿ ಪೀಂಚಲು ಹೇಗೆ ವರ್ತಿಸುತ್ತಾಳೆ ಎಂಬುದರ ಮೇಲೆ ತೂಗುತ್ತಿತ್ತು ಹಲವು ಜೀವಗಳ ಗತಿ ಮತ್ತು ವಿಧಿ! +ಅವಳ ಧ್ವನಿ ಧೈರ್ಯಗೆಟ್ಟಿದ್ದರೆ, ನಡುಗಿದ್ದರೆ, ತಡವರಿಸಿದ್ದರೆ, ಮುಂದಣ ಘಟನಾಪರಂಪರೆಯ ದಿಕ್ಕೇ ಬದಲಾಯಿಸುತ್ತಿತ್ತು! +ಆದರೆ ಐತನ ಸತಿ ಧೈರ್ಯಗೆಡಲಿಲ್ಲ; +ಅವಳ ದನಿ ನಡುಗಲಿಲ್ಲ; +ಅವಳು ತಡವರಿಸಲಿಲ್ಲ. +ಗುತ್ತಿ ಅಂದು ಪರ್ವತಶಿಖರದ ಅರಣ್ಯ ಮಧ್ಯೆ ಹುಲಿಯನನ್ನು ತಬ್ಬಿಕೊಂಡು ಅಳುತ್ತಾ ಭಗವಂತನಿಗೆ ಸಲ್ಲಿಸಿದ್ದ ಪ್ರಾರ್ಥನೆ ಐತನ ಹೆಂಡತಿಯ ಹೃದಯದಲ್ಲಿ ಇಂದು ಅವ್ಯರ್ಥ ಆಶೀರ್ವಾದವಾಗಿತ್ತೆಂದು ತೋರುತ್ತದೆ. +ದಿಟ್ಟದನಿಯಿಂದ “ಯಾರದು?” ಎಂದಳು. +“ಐತಣ್ಣ ಅದಾನೇನು?” ಎಂದಿತು ಒಂದು ಕರ್ಕಶಕಂಠ. +“ಮನೆಗೆ ಹೋಗಿದಾರೆ. +ಈಗ ಬರಬೌದು.”ಮತ್ತೊಂದು ದುರ್ಬಲ ಮುದಿದನಿ ಕೇಳಿತು. + “ಇಲ್ಲಿ ಯಾರಾದ್ರೂ ಬಂದಿದ್ರೇನು, ಕಪ್ಪಾದ ಮ್ಯಾಲೆ?” + “ಯಾರ್ನೂ ನಾ ಕಾಣೆ!” ಎಂದು ತುಸು ರಾಗವೆಳೆದು ಮುಚ್ಚು ಮರೆಯ ಸಂದೇಹಕ್ಕೆ ಒಂದಿನಿತೂ ಅವಕಾಶವೀಯದ ಪ್ರಶಾಂತಮುಗ್ಧವಾಣಿ ಯಿಂದ ಉತ್ತರಿಸಿದಳು ಪೀಂಚಲು. +“ಕಮ್ಮಾರಸಾಲೆ ಹತ್ತಿರಾನೆ ಎಲ್ಲೋ ಅಡಗಿಕೊಂಡಳು ಅಂತಾ ಕಾಣ್ತದೆಯೋ. +ಲೌಡಿ ಎಲ್ಲಿಗೆ ಸಾಯ್ತಾಳೆ ನೋಡಾನ ಬನ್ನಿ” ಎಂದಿತು ಒಂದು ಸಿಟ್ಟಿಗೆದ್ದ ಗಡಸು ದನಿ. +“ಸಿಕ್ಕಲಿ ಅವಳು, ಈ ಸಾರಿ. +ಒಂದು ಕಾಲು ಕಡಿದೇ ಹಾಕ್ತೀನಿ, ಮನೇಬಿಟ್ಟು ಹೋಗದೆ ಇದ್ದ್ಹಾಂಗೆ” ಎಂದಿತು ಮತ್ತೆ ಆ ದುರ್ಬಲ ಮುದಿಧ್ವನಿ. +ಬೆಳಕು ದೂರ ದೂರ ಹೋಗಿ ಕಣ್ಮರೆಯಾಯಿತು; +ಓಡಾಟದ ಸದ್ದು ನಿಂತು, ಮತ್ತೆ ಹನಿಹಾಕತೊಡಗಿದ್ದ ಮಳೆಯ ಮೊದಲ ಹೆಜ್ಜೆಯ ಪಟಪಟ ಸದ್ದೂ ಕೇಳಿಸತೊಡಗಿತು. +ತುಂಬ ಕ್ಲಿಷ್ಟವಾದ, ಆದರೂ ಬಹು ಮುಖ್ಯವಾದ ತನ್ನ ಪಾತ್ರವನ್ನು ಪ್ರೇಕ್ಷಕರು ಮೆಚ್ಚುವಂತೆ ಅಭಿನಯಿಸಿ, ನೇಪಥ್ಯವನ್ನು ಹೊಕ್ಕಮೇಲೆಯೂ ಮುಂದುವರಿಯುತ್ತಿರುವ ಕೈಚಪ್ಪಾಳೆ ಮತ್ತು ಸಿಳ್ಳುಗಳ ಉತ್ಸಾಹ ಕೋಲಾಹಲವನ್ನು ಆಲಿಸುವ ನಟನಂತಾಗಿ ದೀರ್ಘವಾಗಿ ನಿಟ್ಟುಸಿರು ಬಿಟ್ಟು ಕುಳಿತಳು ಪೀಂಚಲು. +ತಿಮ್ಮಿಯನ್ನಂತೂ  ಹೊರಕ್ಕೆ ಕರೆಯುವ ಸಾಹಸಕ್ಕೆ ಹೋಗಲಿಲ್ಲ. +ಅಪಾಯದಿಂದ ಇನ್ನೂ ಸಂಪೂರ್ಣವಾಗಿ ಪಾರಾದೆವೋ ಇಲ್ಲವೋ ಎಂಬ ಸಂಶಯದಿಂದ ಅವಳು ದೃಢಮನಸ್ಸು ಮಾಡಿದ್ದಳು, ತನ್ನ ಗಂಡ ಬರುವವರೆಗೂ ತಿಮ್ಮಿಯನ್ನು ಹೊರಕ್ಕೆ ಕರೆಯಬಾರದು ಎಂದು. +ಕರೆದಿದ್ದರೂ ಆಗ ಹೊರಕ್ಕೆ ಬರುತ್ತಿರಲಿಲ್ಲ ತಿಮ್ಮಿ! +ಹಣತೆಯ ಎಣ್ಣೆ ಮುಗಿಯುತ್ತಾ ಬಂದಿತ್ತು. +ಆದರೂ ಐತ ಬಂದಿರಲಿಲ್ಲ. +ಗೊರಬಿನಾಚೆ ತಿಮ್ಮಿ ಒದ್ದೆಬಟ್ಟೆಯಲ್ಲಿ ನಡುಗುತ್ತಿದ್ದುದು ಗೊತ್ತಾಗಿ, ದೀಪವನ್ನಾರಿಸಿ ತಿಮ್ಮಿಯನ್ನು ಹೊರಕ್ಕೆ ಕರೆದಳು. +ಒಲೆಯ ಬೆಂಕಿಯನ್ನು ತುಸುವೆ ಹೊತ್ತಿಸಿದಳು. +ಅದರ ಮಬ್ಬು ಬೆಳಕಿನಲ್ಲಿ, ಅವಳಿಗೆ ತನ್ನದೊಂದು ಜಡ್ಡುಸೀರೆಯನ್ನು ಕೊಟ್ಟು, ಬಟ್ಟೆ ಬದಲಾಯಿಸುವಂತೆ ಮಾಡಿದಳು. +ಪೀಂಚಲುಗಿಂತಲೂ ಸುಪುಷ್ಟಳಾಗಿದ್ದ ತಿಮ್ಮಿ ಗಟ್ಟದ ಮೇಲಿನವರು ಉಡುವಂತೆ ಆ ಸೀರೆಯನ್ನು ಗೊಬ್ಬೆ ಸೆರಗುಹಾಕಿ ಉಡತೊಡಗಲು ಅದು ಸಾಕಾಗದಿದ್ದುದನ್ನು ಕಂಡು ಗಟ್ಟದ ಕೆಳಗಿನವರು ಉಡುವಂತೆ ತಾನೆ ಅವಳಿಗೆ ಉಡಿಸಿದಳು. +ಒಂದುವೇಳೆ ಯಾರಾದರೂ ಕಂಡರೂ ಅವಳನ್ನು ಗಟ್ಟದ ತಗ್ಗಿನ ಹುಡುಗಿ ಎಂದೇ ತಪ್ಪಾಗಿ ತಿಳಿದುಕೊಳ್ಳಲಿ ಎಂಬುದೂ ಅವಳ ಭಾವವಾಗಿತ್ತು. +ಆಮೇಲೆ ಒಲೆಯ ಬಳಿ ಕತ್ತಲೆಯಲ್ಲಿಯೆ ಕುಳಿತು ಮೈಬಿಸಿ ಮಾಡಿಕೊಳ್ಳುವಂತೆ ಹೇಳಿದಳು. + ಅದಾದಮೇಲೆ  ಗೊರಬು ಮರೆಯಿಟ್ಟದ್ದ ಮೂಲೆಯಲ್ಲಿ ಚಾಪೆಯ ಮೇಲೆ ಮಲಗಿಕೊಳ್ಳುವಂತೆ ಹೇಳಿ, ಸ್ವಲ್ಪ ಬಲಾತ್ಕಾರವಾಗಿಯೆ ಮಲಗಿಸಿದಳು. +ತುಸುಹೊತ್ತು ಹೊರಗನಾಲಿಸುವುದು, ಯಾರೂ ಇಲ್ಲವೆಂದು ಧೈರ್ಯವಾದ ಮೇಲೆ ಮೆಲ್ಲಗೆ ಮಾತಾಡುವುದು, ಮತ್ತೆ ಮಾತು ನಿಲ್ಲಿಸಿ ಆಲಿಸುವುದು, ಮತ್ತೆ ಪಿಸಿಪಿಸಿ ಮಾತಾಡುವುದು, ಹೀಗೆ ಇಬ್ಬರೂ ಮುಂದುವರಿಸಿದರು. +ತಿಮ್ಮಿ ಸಂಕ್ಷೇಪವಾಗಿ ತಾನು ಬಿಡಾರದಿಂದ ಓಡಿಬಂದ ವಿಚಾರವನ್ನೂ, ತನ್ನ ಮದುವೆ ಬಚ್ಚನೊಡನೆ ಆಗಬೇಕೆಂದಿದ್ದ ವಿಚಾರವನ್ನೂ, ತನ್ನ ಗಂಡ ಹಳೆಮನೆಯ ಹೊಲಗೇರಿಗೆ ಬಂದು ತನಗಾಗಿ ಹೊಂಚು ಹಾಕುತ್ತಿದ್ದಾನೆ ಎಂಬುದನ್ನು ತಾನು ಗುಟ್ಟಾಗಿ ಆಲಿಸಿದ ಸಂಗತಿಯನ್ನೂ, ಅವನನ್ನು ಹೇಗಾದರೂ ಮಾಡಿ ಹಿಡಿದು ಪೋಲೀಸರಿಗೆ ಒಪ್ಪಿಸಲು ಸಂಚು ನಡೆಯುತ್ತಿದ್ದುದನ್ನೂ, ಆ ಸಂಚಿಗೆ ಅವನು ಬೀಳುವುದಕ್ಕೆ ಮೊದಲೆ ತಾನು ಅವನನ್ನು ಸೇರಿದರೆ ಇಬ್ಬರಿಗೂ ಕೇಡು ತಪ್ಪುತ್ತದೆ ಎಂದು ತನಗೆ ತೋರಿ, ಗುಮಾನಿಯಾಗದಂತೆ ಜಡಿಮಳೆಯ ರಾತ್ರಿಯನ್ನೆ ಪರಾರಿಯಾಗಲು ಆರಿಸಿದುದನ್ನೂ, ಅಳುತ್ತಳುತ್ತಲೆ ತಿಳಿಸಿದಳು. +ಒಮ್ಮೆ ಇವರು ಮಾತು ನಿಲ್ಲಿಸಿ ಆಲಿಸಿದಾಗ ಯಾರೋ ಬಾಗಿಲಬಳಿ ಬಂದಂತಾಯಿತು. +ತಿಮ್ಮಿ ಬೇಗಬೇಗನೆ ಸೆರಗು ಮುಸುಗು ಹಾಕಿಕೊಂಡು ಚಾಪೆಯ ಮೇಲೆ ಮೂಲೆಯ ಕಡೆ ಮೊಗ ಮಾಡಿ ಮಲಗಿಕೊಂಡಳು. +ಐತ ಹೆಂಡತಿಯ ಹೆಸರು ಹಿಡಿದು ಕರೆದದ್ದು ಕೇಳಿಸಿತು. +ಪೀಂಚಲು ಬಾಗಿಲು ತೆರೆದು ಅವನನ್ನು ಒಳಗೆ ಬಿಟ್ಟು ಬಾಗಿಲು ಮುಚ್ಚಿದಳು. +ಒಲೆಯ ಕೆಂಡದ ಬೆಳಕು ಇದ್ದತಾದರೂ ಐತ ಒಳಗೆ ಬಂದವನೆ ಅತ್ತ ಇತ್ತ ಸಂಶಯದೃಷ್ಟಿ ಬೀರಿ “ಯಾರ ಹತ್ರಾನೆ ಪಿಸಿಪಿಸಿ ಮಾತಾಡ್ತಿದ್ದೆಯಲ್ಲಾ?” ಎಂದು ತನ್ನ ಕಂಬಳಿಕೊಪ್ಪೆಯನ್ನು ಮೂಲೆಗೆ ಕೊಡಹಿ ಗೂಟಕ್ಕೆ ಸಿಕ್ಕಿಸಿದನು. +“ಯಾರ ಹತ್ತಿರ ಮಾತಾಡುವುದು ಮತ್ತೆ? +ಕಾದು ಕಾದು ಸಾಕಾಗಿಹೋಗಿತ್ತಲ್ದಾ? +ನನ್ನಷ್ಟಕ್ಕೆ ನಾನೆ ಏನೊ ಹೇಳಿಕೊಳ್ಳುತ್ತಿದ್ದೆ.” +ಐತ ಹೆಂಡತಿಯ ಕಡೆಗೆ ಮುದ್ದಾಗಿ ನೋಡುತ್ತಾ “ನಿನ್ನ ಒಳಗಿರುವವನ ಕೂಡೆ ಮಾತಾಡುತ್ತಿದ್ದೆ ಅನ್ನು; +ಸುಭದ್ರೆಯ ಗರ್ಭದಲ್ಲಿರುವ ಅಭಿಮನ್ಯು ಸಂಗಡ! +ಐಗಳು ಪರ್ಸಂಗದಲ್ಲಿ ಹೇಳಿದ್ದರಲ್ಲಾ ಹಾಂಗೆ!” ಎನ್ನುತ್ತಾ ಪೀಂಚಲುವಿನ ಕಡೆಗೆ ಪ್ರಣಯಚೇಷ್ಟೆಯ ಉದ್ದೇಶದಿಂದ ಚಲಿಸತೊಡಗಲು ಅವಳು ಗಾಬರಿಯಾದಳು. +ತಾವಿಬ್ಬರೇ ಅಲ್ಲಿರುವುದು ಎಂದು ನಂಬುಗೆಯಿಂದ ಐತ ಏನೆಲ್ಲ ನಾಚಿಕೆಗೇಡಿನ ಕೆಲಸಮಾಡಲು ಹಿಂಜರಿಯುವುದಿಲ್ಲ ಎಂಬುದನ್ನು ನೂರಾರು ಅನುಭವಗಳಿಂದ ಅರಿತಿದ್ದ ಪೀಂಚಲು, ತಟಕ್ಕನೆ ಸರಿದು ನಿಂತು, ಕಣ್ಣುಸನ್ನೆಯಿಂದಲೆ ತಿಮ್ಮಿ ಮುಸುಗು ಹಾಕಿಕೊಂಡು ಮಲಗಿದ್ದ ಕಡೆಗೆ ಕೈದೋರಿ ಎಚ್ಚರಿಸಿದಳು. +ಬೆಚ್ಚಿ ನಿಂತ ಐತ ಒಲೆಯ ಕೆಂಡದ ಅರೆಗತ್ತಲೆಯ ಮಬ್ಬು ಬೆಳಕಿನಲ್ಲಿ ಚಾಪೆಯ ಮೇಲೆ ಮಲಗಿದ್ದ ಮನುಷ್ಯಕಾರವನ್ನೊಮ್ಮೆಯೂ ತನ್ನ ಹೆಂಡತಿಯ ಕಡೆಗೊಮ್ಮೆಯೂ ಸಂಶಯ ಮತ್ತು ಪ್ರಶ್ನದೃಷ್ಟಿ ಪ್ರಸಾರ ಮಾಡತೊಡಗಿದನು. +ಗಂಡಸಿನ ಅನುಮಾನ ಅಸೂಯೆಗಳ ಸ್ವಭಾವವನ್ನು ಚೆನ್ನಾಗಿ ತಿಳಿದಿದ್ದ  ಪೀಂಚಲು ಅರ್ಧ ಮೂದಲೆಯ ಧ್ವನಿಭಂಗಿಯಿಂದ “ಹೆದರುವುದು ಬೇಡ. + ಗಂಡಸಲ್ಲ!” ಎಂದು ತುಟಿ ಕೊಂಕಿಸಿ ನಗೆಬೀರಿದಳು. +ತಮ್ಮ ಭಾಷೆಯಲ್ಲಿ ಮಾತಾಡಿಕೊಂಡರೆ ಗಟ್ಟದ ಮೇಲಿನವರೆಗೆ ತಿಳಿಯುವುದಿಲ್ಲ ಎಂದು “ಮತ್ತೆ ಯಾರೆ ಅದು?” ತುಂಬ ಕೆಳದನಿಯಲ್ಲಿ ಕೇಳಿದನು ಐತ್, ತುಳುವಿನಲ್ಲಿ. +“ನನ್ನ ತಂಗಿ!” ಪರಿಹಾಸ್ಯವಾಡಿದಳು ಪೀಂಚಲು. +ತುಳುವೂ ಪ್ರಯೋಜನವಿಲ್ಲದಾಯ್ತಲ್ಲ! +“ನಿನಗೆ ಎಂಥಾ ತಂಗಿಯೆ? +ನನಗೆ ಗೊತ್ತಿಲ್ಲದವಳು? +“ನಿನಗೆ ಗೊತ್ತಿರುವವಳೆ! +ಗಟ್ಟದ ಕೆಳಗಿನಿಂದ ಬಂದಿದ್ದಾಳೆ!” +“ಒಬ್ಬಳೆಯೊ?ಗಂಡಗಿಂಡ ಉಂಟೊ?” +“ಅದೆಲ್ಲ ಯಾಕೆ ನಿನಗೆ? +ಗಂಡ ಇಲ್ಲದೆ ಒಬ್ಬಳೆ ಬಂದಿದ್ದರೆ ಮತ್ತೊಂದು ಕಟ್ಟಿಕೊಳ್ಳುವ ಆಸೆಯೋ? +ನಾನು ಆಗಲೇ ಸಾಕಾಗಿಬಿಟ್ಟೆನೋ?” +“ನಿನ್ನೊಬ್ಬಳನ್ನೇ ತಣಿಸುವುದು ನನ್ನಿಂದ ಆಗದ ಕೆಲಸ ಆಗಿದೆ. +ಇನ್ನು ಮತ್ತೊಬ್ಬಳನ್ನು ಕಟ್ಟಿಕೊಂಡು ಗುಂಡಿಗೆ ಹಾರಬೇಕು!”ಅಷ್ಟರಲ್ಲಿ ಇದ್ದಕ್ಕಿದ್ದಂತೆ ಚಾಪೆಯಮೇಲೆ ಮೂಲೆಯಲ್ಲಿ ಮುದುಡಿಕೊಂಡಿದ್ದ ವ್ಯಕ್ತಿ ತಡೆಯಲಾರದೆ ಬಟ್ಟೆ ಹರಿದಂತೆ ಕಿಸಕ್ಕನೆ ನಕ್ಕುಬಿಟ್ಟಿತು. +ಹಾಗೆಯೆ ತಟಕ್ಕನೆ ಎದ್ದು ಕುಳಿತು ಮೂಲೆಯ ಕಡೆಗೆ ಮುಖ ತಿರುಗಿಸಿ ಕೊಂಡಿತು, ಸೆರಗು ಮುಚ್ಚಿಕೊಂಡು. +ಆಶ್ಚರ್ಯವಾಯಿತು ಪೀಂಚಲುವಿಗೆ, ಹೊಲೆಯರ ಹುಡುಗಿಗೂ ತುಳು ಅರ್ಥವಾಗುತ್ತೆ! +ಐತನಿಗೆ ಮುಖಭಂಗವಾದಂತಾಗಿ, ತನ್ನ ಕುತೂಹಲ ಪರಿಹಾರ ಮಾಡಿಕೊಳ್ಳುವ ಉದ್ದೇಶದಿಂದ, ಹೆಂಡತಿಗೆ ದೀಪ ಹೊತ್ತಿಸಲು ಅಪ್ಪಣೆ ಮಾಡಿದನು. +ಆದರೆ ಆ ಹಣತೆಯ ಸೊಡರಿನಲ್ಲಿಯೂ ಐತನಿಗೆ ಯಾವ ಗುರುತು ಸಿಕ್ಕಲಿಲ್ಲ. +ತಾನು ನೆಂಟರೊಡನೆ ಊಟ ಪೂರೈಸಿದುದಾಗಿ ಹೇಳಿ ಪೀಂಚಲು ಐತನಿಗೆ ಉಣಬಡಿಸಿದಳು. +ದಿನವೂ ಗಂಡಹೆಂಡಿರಿಬ್ಬರೂ ಒಟ್ಟಿಗೆ ಕುಳಿತು ಮಾತಿನ  ಉಪ್ಪು ಹುಳಿ ಖಾರ ಸಹಿತವಾಗಿ ಉಣ್ಣುತ್ತಿದ್ದುದು ವಾಡಿಕೆ. +ಇವೊತ್ತು ಐತ ಯಾವ ಮಾತನ್ನೂ ಆಡಲಾರದೆ ಉಂಡನು. +ಅವನು ಹೆಂಡತಿಗೆ ಹೇಳುವ ವಿಷಯ ಬಹಳವಿತ್ತು ಬಹಳ ಸ್ವಾರಸ್ಯದ್ದೂ ಆಗಿತ್ತು. +ಆದರೆ ಅಪರಿಚಿತರಿದ್ದುದರಿಂದ ಆ ರಹಸ್ಯವನ್ನು ಹೊರಗೆಡಹಲಿಲ್ಲ. +ಒಮ್ಮೆ ಪೀಂಚಲು ’ಯಾಕೆ ಇಷ್ಟು ಹೊತ್ತು ಮಾಡಿದಿರಿ?’ ಎಂದೇನೊ ಕೇಳಿದ್ದಳು. +ಆಗ ಅವನು ಕಣ್ಣಿಂದಲೆ ’ಗುಟ್ಟಾಗಿರಬೇಕಾದುದನ್ನು ಇತರರೆದುರು ಕೇಳಬ್ಯಾಡ!’ ಎಂದು ಸೂಚಿಸಿದ್ದನು. +ಊಟ ಪೂರೈಸಿದ ತರುವಾಯ ಐತ ಕೈಬಾಯಿ ತೊಳೆಯಲೆಂದೂ ಮತ್ತು ಉಣ್ಣಲು ಬಟ್ಟಲಿನಂತೆ ತಾನು ಉಪಯೋಗಿಸಿದ್ದ ಅಡಕೆಯ ಹಾಳೆಯನ್ನು ಮರುದಿನದ ಊಟಕ್ಕೆ ಬಳಸುವ ಸಲುವಾಗಿ ತೊಳೆದು ತಂದಿಡಲೆಂದು ಬಾಗಿಲಾಚೆಗೆ ಹೋದನು. +ಮಳೆ ತುಸು ನಿಂತಿತ್ತು. +ಕಗ್ಗತ್ತಲೆ ಮಸಿಯ ಗೋಡೆಯಂತೆ ಬದ್ಧಭ್ರುಕುಟಿಯಾಗಿತ್ತು. +ಗಂಡನ ಕೈಗೆ ನೀರು ಹಾಕಲೆಂದು ಪೀಂಚಲು ಒಂದು ನೀರು ತುಂಬಿದ ಮೊಗೆಯೊಡನೆ ಅವನನ್ನು ಹಿಂಬಾಲಿಸಿದಳು. +ಆ ಸಮಯವನ್ನುಪಯೋಗಿಸಿಕೊಂಡು ಐತ ಪಿಸುಗುಟ್ಟಿದನು. +ಗುತ್ತೀಗೆ ಇಲ್ಲಿಗೇ ಬಾ ಮಲಗಾಕ್ಕೆ ಅಂತಾ ಹೇಳಿಬಿಟ್ಟೀನಲ್ಲಾ? +ನಿನ್ನ ತಂಗಿ ಬರ್ತಾಳೆ ಅಂಬೋದು ನನಗೆ ಗೊತ್ತಿರಲಿಲ್ಲ. +ಈಗ ಏನು ಮಾಡುವುದು? +ಅವನನ್ನು ಎಲ್ಲಿ ಮಲಗಿಸುವುದು? +ನಾನೆಲ್ಲಿ ಮಲಗುವುದು? +ನಿನ್ನ ತಂಗೀನ ಎಲ್ಲಿ ಮಲಗಿಸೋದು? +ಒಳ್ಳೆ ಪೀಕಲಾಟಕ್ಕೆ ಬಂದಿತಲ್ಲಾ!” +“ಎಲ್ಲಿಗೆ ಹೋಗಿದಾನೆ ಆ ಗುತ್ತಿ?” +“ಮುಕುಂದಯ್ಯೋರ ಸಂಗಡ ಮನೀಗೆ ಹೋದ, ಅವರನ್ನು ಅಲ್ಲಿ ಬಿಟ್ಟು, ಅಲ್ಲೇ ತಂಗಳುಂಡು ಬರ್ತಾನಂತೆ. +ನಾಳೆ ಹೊತಾರೆ ಮುಂಚೆ ನಾನೂ ಅವನೂ ಹುಲಿಕಲ್ಲು ನೆತ್ತಿಯ ಕಲ್ಲುಮಂಟಪಕ್ಕೆ ಹೋಗ್ತೀಂವಿ.” +“ಮತ್ತೆ ಈವೊತ್ತು ಅಲ್ಲೀಗೆ ಅಲ್ಲೇನು ನೀವು ಹೋಗಿದ್ದು?” +“ಹೋಗಿದ್ದು ಉಂಟು. +ಆದರೆ ದಾರೀಲೆ ಹಳೆಮನೆ ಸಣ್ಣಹೆಗ್ಗಡೇರು ಸಿಕ್ಕಿದ್ರು. +ಅವರು ಸಿಂಬಾವಿಗೆ ಹೋಗಿ ಬರ್ತಿದ್ರು. +ಭರಮೈಹೆಗ್ಗಡೆರಿಗೆ ಈ ಸಂಬಂಧ ತಪ್ಪಿಸಾಕೆ ಏನೇನೋ ಹುನಾರು ಮಾಡ್ತಿದ್ದಾರೆ ಅವರೂ….! +ಕಲ್ಲು ಮಂಟಪಕ್ಕೆ ನಮ್ಮ ಸಂಗಡಾನೆ ಬಂದು ಕೆಲಸಾನೂ ಮಾಡಿಕೊಟ್ರು ಅನ್ನು! +ಅವರ ಕತೇನೆಲ್ಲ ಕೇಳೂದೆ ಸುಮಾರು ಹೊತ್ತು ಆಗಿಬಿಟ್ಟಿತ್ತಲ್ದಾ? …. +ಹೂವಳ್ಳಿ ಚಿನ್ನಕ್ಕನ ಆ ಕಲ್ಲುಮಂಟಪದಾಗೆ ಕದ್ದಡಗಿಸಿ ಇಡುವುದೆಂದು ಗೊತ್ತುಮಾಡಿದ್ದೇವೆ. +ಒಂದು ಹದಿನೈದು ದಿನದ ಮಟ್ಟಿಗಾದರೂ ಅಲ್ಲಿ ಇರುವ ಏರ್ಪಾಡು ಮಾಡಬೇಕಾಗಿದೆ….” +“ಬೇರೆ ಜನಕ್ಕೆ ಗೊತ್ತಾದರೆ?” +“ಈ ದನಗೋಳು ಮಳೆಯಲ್ಲಿ? …. +ಈ ಮಳೆಗಾಲದಲ್ಲಿ ಆ ಹುಳುವಿನ ಬಳಿ ಒಂದು ನರ ನುಸಿ ಸುಳಿಯಲಾರದು. +ನಮಗೇ ಅಲ್ಲಿ ದಾರಿ ಕಾಣಬೇಕಾದರೆ ಸಾಕುಸಾಕಾಯಿತು. +ಅದನ್ನು ತೋರಿಸಿಕೊಟ್ಟವನೂ ಆ ಗುತ್ತಿಯೆ! +ಹಿಂದೆ ಅವನು ಆ ಬೆಟ್ಟಳ್ಳಿ ಹುಡುಗಿಯನ್ನು ಹಾರಿಸಿಕೊಂಡು ಹೋದಾಗ ಅಲ್ಲಿಯೆ ಒಂದು ರಾತ್ರೆ ಮಲಗಿದ್ದನಂತೆ! +ಬಡ್ಡಿಮಗನಿಗೆ ಆವೊತ್ತೆ ಅವಳ ಕೂಡೆ…. +ಹಿಹ್ಹಿಹ್ಹಿ…. ” ಐತ ಅರ್ಧದಲ್ಲಿಯೆ ಮಾತು ನಿಲ್ಲಿಸಿ ಹೆಂಡತಿಯ ಗಲ್ಲವನ್ನು ಅರ್ಥಪೂರ್ಣವಾಗಿ ತಿವಿದನು. +“ಇಸ್ಸಿ!ನಿನಗೆ ಯಾವಾಗಲೂ ಅದೇ!” ರೇಗು ನಟಿಸಿದಳು ಪೀಂಚಲು. +“ಈಗ ಅವನು ಇಲ್ಲಿಗೆ ಬರುವುದೂ ಅದಕ್ಕೆ ಅಲ್ವಾ?” +“ಯಾವುದಕ್ಕೇ?ಆವೊತ್ತು ಮಲಗಿದ ಹಾಂಗೇ ಈವೊತ್ತು ಅವಳ ಮಗ್ಗುಲಿಗೆ ಮಲಗುವುದಕ್ಕಾ? …. ” +“ಇಸ್ಸೀ!ನಿನಗೆ ಯಾವಾಗಲೂ ಅದೇ!” ಪ್ರತೀಕಾರದ ರೇಗು ನಟಿಸಿದ್ದನು ಐತ. +ಗಂಡನ ಮೂದಲೆಯನ್ನು ಗಮನಿಸದವಳಂತೆ ಮುಂದುವರಿಸಿದಳು ಪೀಂಚಲು. + “ಅವನಿಗೆ ಯಾರು ಹೇಳಿದರು, ಅವಳು ಇಲ್ಲಿ ಇದ್ದಾಳೆ ಎಂದು? +ಬೇಕಾದರೆ ಬೆಟ್ಟಳ್ಳಿಗೆ ಹೋಗಿ ಕರೆದುಕೊಂಡು ಬರಲಿ! …. ” +“ಸ್ವಲ್ಪ ತಡೆ, ಮಾರಾಯ್ತೀ…. +ಅದನ್ನೆ ನಿನ್ನ ಹತ್ತಿರ ಹೇಳುವುದಕ್ಕೆ ಅವನು ಬರುತ್ತಾನೆ…. +ನನ್ನ ಹತ್ತಿರ ಹೇಳಿದ. +ನಾನು ಹೇಳಿದೆ ’ಗಂಡಸಿಂದ ಆಗದ ಕೆಲಸ ಅದು’ ಎಂದು…. +ಅವನು ಅಲ್ಲಿಗೆ ಹೋದರೆ ಹಿಡಿದು ಪೋಲೀಸಿಗೆ ಕೊಡುತ್ತಾರಂತೆ. +ಆವೊತ್ತು ನಿನಗೆ ಹೇಳಿದ್ದೆನಲ್ಲಾ ಅವನ ರಾಮಾಯಣ? …. +ಈಗ ನೀನು ಹೇಂಗಾದರೂ ಮಾಡಿ ಅವಳನ್ನು ಕೇರಿಯಿಂದ ತಪ್ಪಿಸಿ ತಂದುಕೊಡಬೇಕಂತೆ. +ಅವಳನ್ನೂ ಕೂಡಿಕೊಂಡೇ ಅವನು ಪರಾರಿಯಾಗುತ್ತಾನಂತೆ, ಆರು ತಿಂಗಳೋ?ಒಂದು ವರ್ಷವೊ? …. +ಅವನ ಒಡೆಯರೂ ಹಾಂಗೇ ಹೇಳಿದ್ದರಂಬ್ರು…. +ತಿಮ್ಮಪ್ಪಹೆಗ್ಗಡೇರೂ ಮುಕುಂದಯ್ಯಗೌಡರೂ ಅವನಿಗೆ ಏನೋನೋ ಧೈರ್ಯ ಹೇಳಿ ನಿಲ್ಲಿಸಿಕೊಂಡಿದ್ದಾರೆ, ಕಲ್ಲುಮಂಟಪದಲ್ಲಿ ಬಿಡಾರ ಮಾಡಿ ಕಾವಲಿರುವುದಕ್ಕೆ! …. + ಈಗ ಹೇಂಗಾದ್ರೂ ಮಾಡಿ ಅವನ ಹೆಂಡತೀನ ಬಿಡಿಸಿಕೊಡಬೇಕಲ್ಲ! …. + ಇಲ್ಲದಿದ್ದರೆ ಅವನು ಒಪ್ಪುತ್ತಿದ್ದನೇ, ಅವನ ಒಡೆಯರಿಗೆ ಗೊತ್ತಾದ ಹೆಣ್ಣನ್ನು ಮುಕುಂದಯ್ಯಗೌಡರಿಗಾಗಿ ಹಾರಿಸುವುದಕ್ಕೆ? …. + ಅದೆಲ್ಲಾ ಇರಲಿ ಈಗ ಅವನು ಬರುತ್ತಾನಲ್ಲಾ ಎಲ್ಲಿ ಮಲಗಿಸುವುದು? …. ” + “ಆ ಗೊರಬನ್ನು ಮರೆಯಾಗಿಟ್ಟು ಈ ಬಾಗಿಲ ಬದಿಯೆ ಮಲಗಿಕೋ ಅಂದರೆ ಸೈ….” + “ನಾವು?” ಐತನ ಪ್ರಶ್ನೆಯಲ್ಲಿ ಬಿಡಿಸಲಾರದ ಮಹಾಸಮಸ್ಯೆಯ ಸಂಕಟಧ್ವನಿ ಇತ್ತು, ತನ್ನನ್ನು ಎಲ್ಲಿ ದೂರ ಮಲಗಿಸಿಬಿಡುತ್ತಾಳೆಯೊ ಎಂದು. +“ನೀನು ಈವತ್ತೊಂದು ದಿವಸ ಗುತ್ತಿಯ ಸಮೀಪದಲ್ಲಿ ದೂರ ಮಲಗಿದರಾಯ್ತು! +ನಾನು ತಂಗಿಯ ಕೂಡೆ ಮಲಗುತ್ತೇನೆ….” ಪೀಂಚಲುವಿನ ಮೊಗದಲ್ಲಿ ತುಂಟುನಗೆ ಆಡುತ್ತಿದ್ದುದು ಐತನಿಗೆ ಆ ಕತ್ತಲೆಯಲ್ಲಿ ಕಾಣಿಸುವಂತಿರಲಿಲ್ಲ. +“ಥೂ!ಥೂ!ಥೂ!ನಾನು ಒಲ್ಲೆ. +ಗೊರಬು ಮರೆಯಿದ್ದರೂ ಹೊಲೆಯನ ಬಳಿ ಮಲಗುವುದೆ?” + ಐತನ ಪ್ರತಿಭಟನೆಯ ನಿಜವಾದ ಕಾರಣ ಬೇರೆಯಾಗಿತ್ತು ಎಂಬುದನ್ನು ಅವನ ಹೆಂಡತಿಗೆ ಹೇಳಿಕೊಡಬೇಕಾಗಿರಲಿಲ್ಲ. +“ಹಾಗಂದರೆ ನಾವು ದಿನವೂ ಮಲಗುವಲ್ಲಿಯೆ ಮಲಗುವ.” +“ನಿನ್ನ ತಂಗಿ?” +“ಅವಳನ್ನು ಗುತ್ತಿಯ ಜೊತೆಯೆ ಮಲಗಿಸಿದರಾಯ್ತು!” +“ಅಯ್ಯಯ್ಯೋ!ನಿನಗೇನು ಪಿತ್ತವೆ?” +“ಮತ್ತೇನು ನಿನ್ನ ಮಗ್ಗುಲಲ್ಲಿ ಮಲಗಿಸಿಕೊಳ್ತೀಯಾ?” +“ಏನು ಮಾತನಾಡುತ್ತಿ ನೀನು? +ಬುದ್ಧಿ ನೆಟ್ಟಗಿದೆಯೋ?” +“ನಿನಗಂತೂ ನೆಟ್ಟಗಿದೆ ಎಂದು ಗೊತ್ತಾಯ್ತಲ್ಲಾ? +ಅಷ್ಟೇ ಸಾಕು!” +“ಯಾಕೆ? …. ಹುಡುಗಾಟವಾಡುತ್ತಿದ್ದೀಯಲ್ಲಾ?” +“ಮತ್ತೆ ನಾನೇನು ಮುದುಕಿಯೆ? …. +ಈಗ ಬಾ ಒಳಗೆ. +ಹನಿ ಬೀಳುತ್ತದೆ…. +ಗುತ್ತಿ ಬರಲಿ. +ನಾನೆಲ್ಲ ಸರಿಮಾಡುತ್ತೇನೆ.”ಅಷ್ಟರಲ್ಲಿ ಕತ್ತಲಲ್ಲಿ ಸದ್ದಾಯಿತು. +ನೋಡಿದರೆ ಏನೂ ಕಾಣಿಸಲಿಲ್ಲ. +ಕರಿಯ ನಾಯಿ, ಹುಲಿಯ, ಐತನ ಕಾಲ ಬಳಿಗ ಬಂದು ಬಾಲ ಆಡಿಸಿ ಕುಂಯಿಗುಟ್ಟಿದ ಮೇಲೆಯೆ ಅವರಿಗೆ ಗೊತ್ತಾಗಿದ್ದು, ಗುತ್ತಿಯೂ ಹಿಂಬಾಲಿಸುತ್ತಿದ್ದಾನೆ ಎಂದು…. +ತಿಮ್ಮಿ ತನಗೆ ಮರೆಯಾಗಿಟ್ಟಿದ್ದ ಗೊರಬಿನ ಸಂಧಿಯಿಂದಲೆ ಬಿಡಾರದ ಬಾಗಿಲಕಡೆ ಓರೆಗಣ್ಣು ಮಾಡಿ ನೋಡುತ್ತಿದ್ದಳು. +ಗಂಡಹೆಂಡಿರಿಬ್ಬರೂ ಏನೋ ಗುಟ್ಟು ಮಾತನಾಡುತ್ತಿದ್ದುದು ಗೊತ್ತಾಗಿ ಅತ್ತಲೆ ಕಿವಿಯಾಗಿಸಿದ್ದಳು. +ಒಂದೆರಡು ಸಾರಿ ತನ್ನ ಗಂಡನ ಹೆಸರೂ ಅವರ ಮಾತಿನಲ್ಲಿ ಕೇಳಿಸಿ, ಅವಳ ಕುತೂಹಲ ಕೆರಳಿ, ಆತುರ ನಿಮಿರಿತ್ತು. +ಗುತ್ತಿ ಹಳೆಮನೆಯ ಹೊಲಗೇರಿಯಲ್ಲಿ ತಲೆಮರೆಸಿಕೊಂಡು, ತನ್ನನ್ನು ಸಂಧಿಸಿ, ಕರೆದುಕೊಂಡು ಎಲ್ಲಿಗಾದರೂ ಓಡಿಹೋಗುವ ಹುನಾರಿನಲ್ಲಿದ್ದಾನೆಂದು ಅವಳಿಗೆ ತಿಳಿದಿತ್ತು. +ಹಳೆಮನೆಯ ಹೊಲಗೇರಿಯನ್ನೇ ಗುರಿಯಾಗಿಟ್ಟೂಕೊಂಡು ಅಂದು ರಾತ್ರಿ ಆ ಭಾರಿ ಮಳೆಯಲ್ಲಿ ಅವಳು ಹೊರಬಿದ್ದಿದ್ದಳು. +ಆದರೆ ಅವಳನ್ನು ಸರ್ಪಕಾವಲು ಕಾಯುತ್ತಿದ್ದವರಿಗೆ ಅದು ತಿಳಿದು ಬೆನ್ನುಹತ್ತಿದ್ದರು. +ಅವಳು ಅಲ್ಲಿ ಇಲ್ಲಿ ಅವಿತು ಆ ಕಗ್ಗತ್ತಲೆಯ ಕಾಡಿನಲ್ಲಿ ಅವರಿಗೆ ದಿಕ್ಕು ತಪ್ಪುವಂತೆ ಮಾಡಿ, ಕಡೆಗೆ ಐತನ ಬಿಡಾರದ ರಕ್ಷೆ ಪಡೆದಿದ್ದಳು. +ಈಗಲೂ ಹೇಗಾದರೂ ಮಾಡಿ ತನ್ನ ಗಂಡನನ್ನೊಮ್ಮೆ ಕೂಡಿಕೊಂಡರೆ ಆಮೇಲೆ ಯಮ ಬಂದರೂ ತನ್ನನ್ನು ಅವನಿಂದ ತಪ್ಪಿಸಲಾರನು ಎಂದುಕೊಂಡಿದ್ದಳು. +ಆದರೆ ಯಾವಾಗ ಐತ ಪೀಂಚಲು ಅವರನ್ನು ಹಿಂಬಾಲಿಸಿ ಗುತ್ತಿಯೂ ಹುಲಿಯನೂ ಒಳಗೆ ಬಂದುದನ್ನು ಕಂಡಳೊ ಆಗ ಅವಳಿಗೆ ನರಗಳೆಲ್ಲ ಸಡಿಲವಾದಂತಾಗಿ, ಶಕ್ತಿಯುಡುಗಿ ಒಡಲು ಸೋತಂತಾಗಿ, ಪ್ರಜ್ಞೆ ಕುಸಿದು, ಮೊದಲಿನಂತೆ ಚಾಪೆಯ ಮೇಲೆ ಒರಗಿಬಿಟ್ಟಳು. +ಭಗವಂತನ ಕೃಪೆ ಅಷ್ಟು ಅನಿರೀಕ್ಷಿತವಾಗಿ, ಆ ಪ್ರಮಾಣದಲ್ಲಿ, ಪ್ರವಾಹದೋಪಾದಿಯಲ್ಲಿ ನುಗ್ಗಿ ಬಂದು ಅಪ್ಪಳಿಸಿದರೆ ಯಾವ ಚೇತನಕ್ಕೆ ತಾನೆ ಪ್ರಜ್ಞೆಯಿಂದಿರಲು ಸಾಧ್ಯ? +ಎಂತಹ ಕಟ್ಟಿದ ನಾಟಕದಲ್ಲಿಯೂ ಇಂತಹ ಮಂಗಳಕರ ಇಷ್ಟಸಿದ್ಧಿ ಈ ರೀತಿ ಒದಗುವುದು ದುಸ್ಸಾಧ್ಯವೆ! +ಗೌಡರ ಮನೆಯ ಮುರುವಿನ ಒಲೆಯ ಬೆಂಕಿಯಲ್ಲಿ ಕಂಬಳಿ ಬಟ್ಟೆಗಳನ್ನೆಲ್ಲ ಒಣಗಿಸಿಕೊಂಡು ಬಂದಿದ್ದ ಗುತ್ತಿ ಬಾಗಿಲ ಬಳಿಯೆ ಕಂಬಳಿ ಹಾಸಿಕೊಂಡು ಕೂತಮೇಲೆ “ಏನು, ಐತಣ್ಣ, ನಾ ಹೇಳಿದ್ದೆಲ್ಲ ಹೇಳಿದೆಯೇನು ಪೀಂಚಲವ್ವಗೆ?” ಎಂದು ಎಲೆ ಅಡಿಕೆ ಹಾಕತೊಡಗಿದನು. +“ಎಲ್ಲ ಹೇಳಿದ್ದೇನೆ. ಆದರೆ…. ” ಐತ ನಗುಮೊಗವಾಗಿದ್ದ ಹೆಂಡತಿಯ ಕಡೆಗೆ ನೋಡಿದನು. +“ನೋಡು, ಗುತ್ತಿ, ಅದೇನು ಸುಲಭದ ಕೆಲಸ ಅಂತಾ ಮಾಡಿದ್ದೀಯಾ? +ಸಿಕ್ಕರೆ ನನ್ನನ್ನೆ ಸಿಗಿದು ಹಾಕಿಬಿಡುತ್ತಾರೆ! …. ” ನಗುತ್ತಲೆ ಹೇಳಿದಳು ಪೀಂಚಲು. +ಅವಳ ಲಘು ಭಂಗಿಯನ್ನು ಗಮನಿಸಿದ ಗುತ್ತಿ ಮನಸ್ಸಿನಲ್ಲಿಯೆ ಈ ಹೆಣ್ಣಿಗೆ ಪರರ ಸಂಕಟ ಏನೂ ಗೊತ್ತೆ ಆಗುವುದಿಲ್ಲ!” ಎಂದುಕೊಂಡು ಹೇಳಿದನು. +“ನಾ ಸಾಯೋ ತನಕಾ ನಿಮ್ಮ ಉಪಕಾರ ಮರೆಯೋದಿಲ್ಲ…. +ಆ ಹುಡುಗಿ ನೇಣುಗೀಣು ಹಾಕಿಕೊಳ್ ತಾಳೋ? +ಹಳ್ಳ ಕೆರೆ ಹಾರ್ತಾಳೋ ಅಂತಾ ಹೆದರಿಕೆ ಆಗ್ಯದೆ ನಂಗೆ. +ಇದೊಂದು ಸತಿ ನಾವು ಒಟ್ಟಾದರೆ, ಮತ್ತೆ ಬಿಡಿ, ನಮ್ಮನ್ನು ಯಾರು ಅಗಚ್ತಾರೆ ನೋಡ್ತೀನಿ. +ಅಗಚಿದ್ರೆ ನಮ್ಮ ಹೆಣಾನೆ ಅಗಚಬೇಕು!ಗೊತ್ತಾತೇನು? …. +ನಮ್ಮನ್ನು ಬದುಕಿಸಿದೋರು ಅಂತಾ ನಿನಗೂ ಐತಣ್ಣಗೂ ಜೀತ ಮಾಡಿಕೊಂಡು ಬೇಕಾದ್ರೂ ಇರ್ತೀಂವಿ!” +“ನಮಗೇನ್ ನಿನ್ನ ಜೀತ ಬ್ಯಾಡ, ಗುತ್ತಿ. +ಪರಾಣ ಹೋದ್ರೂ ಹೆದರದೆ ಮುಕುಂದೇಗೌಡರ ಕೆಲಸಾನ ನಡ್ಸಿ ಕೊಟ್ಟುಬಿಡು. +ಸಾಕೇ ಸಾಕು!” ಎಂದಳು ಪೀಂಚಲು. +“ಏನು ಮಳೆ ಹೊಡೀತಿದೆ! +ನಟ್ಟಿಗದ್ದೆ ಎಲ್ಲ ಕೊಚ್ಚಿಹೋಗ್ತದೆಯೋ ಏನೋ?” ಐತನ ಮಾತಿಗೆ ಎಲ್ಲರೂ ಕಿವಿಗೊಟ್ಟು ಆಲಿಸಿದರು. +ಭೋರ್ಭೋರ್ಭೋರೆಂದು ಆಷಾಢದ ಮಳೆ ಸುರಿಯುತ್ತಿತ್ತು. +“ಅದಕ್ಕೆ ಅಲ್ಲೇನು ಮತ್ತೆ, ನಾನು ಪರಾರಿಯಾಗದೆ ಇಲ್ಲೇ ಇರೋದು?” ಮುಂದುವರಿಸಿದನು ಗುತ್ತಿ, ತುಂಡಾದ ಸಂಭಾಷಣೆಯನ್ನು. +“ತಿಮ್ಮಿ ಸಿಕ್ಕಿದ ಕೂಡ್ಲೆ ಓಡಿಬಿಡ್ತೀಯೋ ಏನೋ?” +“ದೇವರಾಣೆಗೂ ಹಾಂಗೆ ಮಾಡೋನಲ್ಲ ನಾನು, ಪೀಂಚಲವ್ವ.” ಅಂಗಲಾಚಿದನು, ಅಳುದನಿಯ ಗುತ್ತಿ. +ಪೀಂಚಲು ಗೊರಬು ಮರೆಯಾಗಿ ಗುತ್ತಿಗೆ ಕಾಣದಿದ್ದ ರೀತಿಯಲ್ಲಿ ಮುಬ್ಬುಗತ್ತಲೆಯಲ್ಲಿ ಮಲಗಿದ್ದ ತಿಮ್ಮಿಯ ಕಡೆ ನೋಡಿದಳು. +ಅವಳು ನಿದ್ದೆ ಮಾಡುತ್ತಿರಬಹುದೆಂದು ಭಾವಿಸಿ ಹೇಳಿದಳು. +“ನೀವೆಲ್ಲ ಬರೋಕೆ ಮುಂಚೆ, ಸ್ವಲ್ಪ ಹೊತ್ತಿನಲ್ಲಿ ಅವಳನ್ನು ಹುಡುಕಿಕೊಂಡು ಬಂದಿದ್ರೋ!”ಗುತ್ತಿ ಐತ ಇಬ್ಬರೂ ದಿಗಿಲುಬಿದ್ದು “ಯಾರನ್ನ?” ಎಂದು ಒಟ್ಟಿಗೆ ಕೇಳಿಬಿಟ್ಟರು. +“ತಿಮ್ಮೀನ!”“ಯಾಕಂತೆ? +ಎಲ್ಲಿಗೆ ಹೋದಳಂತೆ? +ಹಳ್ಳ ಹಾರಿದಳೋ? +ನೇಣುಹಾಕಿ ಕೊಂಡಳೋ? +ಅಯ್ಯೋ ಕೆಟ್ಟೆನಪ್ಪಾ ನಾನೂ! +ನಾನೀಗ್ಲೆ ಬೆಟ್ಟಳ್ಳಿ ಕೇರಿಗೆ ಹೋಗ್ತೀನಿ!” ಎದ್ದು ನಿಂತು ಕಂಬಳಿಗೆ ಕೈಹಾಕಿದನು ಗುತ್ತಿ. +ತಾನು ಹೇಳಬಾರದ್ದನ್ನು ಹೇಳಿ ಅಚಾತುರ್ಯವಾಯಿತೆಂದು ಪೀಂಚಲು ತಟಕ್ಕನೆ ದನಿ ಬದಲಾಯಿಸಿದಳು. + “ಕುಶಾಲಿಗೆ ಹೇಳಿದರೆ ನಿಜ ಅಂತಾ ಮಾಡಿಕೊಂಡು ಗೋಳಾಡ್ತೀಯಲ್ಲೋ, ಗುತ್ತಿ!ಕೂತುಕೊಳ್ಳೊ! +ಅವಳನ್ನ ಕರಕೊಂಡು ಬಂದು ಕೊಟ್ಟರೆ ಸೈಯಲ್ಲಾ ನಿಂಗೆ….” +“ಯಾವೊತ್ತು?” ಗುತ್ತಿ ಮತ್ತೆ ಕೂರುತ್ತಾ ಕೇಳಿದನು. +“ಯಾವೊತ್ತೇನು?ಈವೊತ್ತು ಬೇಕಾದರೆ ಈವೊತ್ತೆ! +ಈಗ್ಲೆ ಬೇಕಾದ್ರೆ ಈಗ್ಲೆ!” ನಗುನಗುತ್ತಲೆ ಹೇಳಿದಳು ಪೀಂಚಲು, ಐತ ಕಕ್ಕಾವಿಕ್ಕಿಯಾಗೆ. +“ನಿಮಗೆ ಆಟ, ನಂಗೆ ಪರಾಣಸಂಕ್ಟ!” ನರಳಿದನು ಗುತ್ತಿ, ಮುಖ ಗಂಟುಹಾಕಿ. +ಮರುಮಾತಾಡದೆ ಪೀಂಚಲು ನಿರ್ದಾಕ್ಷಿಣ್ಯಭಂಗಿಯಿಂದ ಸರಕ್ಕನೆ ಎದ್ದುನಿಂತಳು. +ಗೊರಬಿನ ಮರೆಗೆ ನಡೆದು, ಬಾಗಿ, ಮೆಲ್ಲಗೆ “ತಿಮ್ಮಿ, ಏ ತಿಮ್ಮಿ, ಏಳೆ!” ಎಂದು ಮೈ ಅಲುಗಾಡಿಸಿದಳು. +ಅವಳು ತನ್ನ ಹೆಂಡತಿಯ ಹೆಸರು ಹಿಡಿದು ಕರೆಯುತ್ತಿದ್ದುದನ್ನು ಕೇಳಿ ಗುತ್ತಿಗೆ ಬೆರಗು ಬಡಿದಂತಾಯಿತು. +ಆದರೆ ಅವನು ಅಂತಹ ಪವಾಡವನ್ನು ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲವಾದುದರಿಂದ ತನ್ನ ಹೆಂಡತಿಯ ಹೆಸರಿನ ಬೇರೆ ಯಾರನ್ನಾದರೂ ಎಬ್ಬಿಸುತ್ತಿರಬೇಕೆಂದು ಭಾವಿಸಿದನು. +ಅಥವಾ ಹಾಸ್ಯಗಾರ್ತಿ ಪೀಂಚಲವ್ವ ಮತ್ತೊಂದೇನಾದರೂ ಕುಶಾಲಿಗೆ ಶುರುಮಾಡಿರಬಹುದೆ?ಎಂದು ಗೊರಬಿನ ಕಡೆಗೇ ಕಣ್ಣಾಗಿ ಕುಳಿತಿದ್ದನು. +ಐತನಂತೂ ಬಿಟ್ಟಕಣ್ಣು ಮುಚ್ಚದೆ, ಅರ್ಧಬಾಯಿ ತೆರೆದು, ಯಕ್ಷಿಣಿ ಮಾಡುವವನನ್ನು ನೋಡುವ ಹಳ್ಳಿಗರಂತೆ ಗಲ್ಲಗೈಯಾಗಿ ನಿಂತಿದ್ದನು, ತನ್ನ ಚತುರೆಯಾದ ಹೆಂಡತಿಯ ಶಯನಸಂವಿಧಾನದ ರಾಜಕಾರಣತಂತ್ರಜ್ಞತೆಗೆ ವಿಸ್ಮಿತನಾಗಿ. +ಪೀಂಚಲು ಗೊರಬನ್ನೆತ್ತಿ ತಂದು ಬಿಡಾರದ ಜಾಗವನ್ನು ಇಬ್ಬಾಗಿಸುವಂತೆ ನಡುವೆ ಇಟ್ಟಳು. +ಒದ್ದೆಮುದ್ದೆಯಾಗಿ ನೆಲದಮೇಲೆ ಬಿದ್ದಿದ್ದ ತಿಮ್ಮಿಯ ಸೀರೆಯನ್ನು, ಆರಿಸುವುದಕ್ಕೋಸ್ಕರ ಹರಡುವಂತೆ, ಅಡ್ಡಡ್ಡವಾಗಿ ಮರೆಕಟ್ಟಿದ್ದಳು. +ತಿಮ್ಮಿ ಮಲಗಿದ್ದ ಚಾಪೆಯನ್ನು ಗುತ್ತಿಗೆ ನೀಡಿ “ನೀನಲ್ಲೆ ಹಾಸಿಕೊಳ್ಳೊ; +ಇವಳಿಗೂ ಸೊಲ್ಪ ಜಾಗ ಕೊಡು!” ಎಂದು, ನಾಚಿಕೆಯಿಂದ ಬಾಗಿ ನಿಂತಿದ್ದ ಹೊಲೆಯರ ಹುಡುಗಿಗೆ “ದೂರ ದೂರ ಬ್ಯಾರೆ ಬ್ಯಾರೆ ಮಲಗಿಕೊಳ್ಳಾಕೆ ನಮ್ಮ ಸಣ್ಣ ಬಿಡಾರದಾಗೆ ಜಾಗ ಇಲ್ಲ ಕಣೇ…. +ನಾವಿಲ್ಲಿ ಮಲಗಿಕೊಳ್ಳಬೇಕು; ನೀ ಆಚೆಗೆ ನಡೇ!” ಎಂದು ತುಸು ಬಲಪ್ರಯೋಗ ಮಾಡಿ ತಳ್ಳಿದಂತೆ ನಟಿಸಿ, ತಿಮ್ಮಿಯನ್ನು ಗುತ್ತಿಯ ಕಡೆಗೆ ಸಾಗಿಸಿಯೇ ಬಿಟ್ಟಳು. +ಐತನನ್ನು ಈ ಕಡೆಗೆ ಕರೆದು, ತನಗೂ ತನ್ನ ಗಂಡನಿಗೂ ಹಾಸಗೆ ಮಾಡತೊಡಗಿದಳು. +ಪೀಂಚಲು ಗೊರಬನ್ನೆತ್ತಿದಾಗ, ಅತ್ತಕಡೆಯೆ ನೋಡುತ್ತಿದ್ದ ಗುತ್ತಿಯ ಕಣ್ಣಿಗೆ, ಆ ಮಬ್ಬು ಬೆಳಕಿನಲ್ಲಿ, ಗಟ್ಟದ ತಗ್ಗಿನವರಂತೆ ಸೀರೆ ಸುತ್ತಿಕೊಂಡಿದ್ದ ಹುಡುಗಿ ಕಾಣಿಸಿತ್ತು. +“ಇವಳಿಗೂ ಸೊಲ್ಪ ಜಾಗ ಕೊಡೊ!” ಎಂದು ತನಗೆ ಹೇಳಿ, ಪೀಂಚಲು ಆ ಹುಡುಗಿಗೆ “ಬ್ಯಾರೆ ಮಲಗಾಕೆ ಇಲ್ಲಿ ಜಾಗ ಇಲ್ಲ; + ನೀ ಆಚೆಗೆ ನಡೀ!” ಎಂದು ಅವಳನ್ನು ತನ್ನ ಕಡೆಗೆ ತಳ್ಳಿದಾಗ, ಮುದುಡಿ ಮಲಗಿದ್ದ ಮೂಲೆಯಿಂದ ನೆಗೆದೆದ್ದು, ಅವಳ ಮೇಲೆ ಹಾರಿ, ಬಾಲ ಅಳ್ಳಾಡಿಸಿದ ಹುಲಿಯನನ್ನು ಕಂಡು ತಿಮ್ಮಿಯನ್ನು ಗುರುತಿಸಿದ ಗುತ್ತಿಗೆ ಏನಾಯಿತೆಂದು ಯಾರು ತಾನೆ ಹೇಳಬಲ್ಲರು? +ಅವನಿನ್ನೂ ಅವಳ ಮುಖದ ಕಡೆಗೆ ನೋಡಿ ಪೂರೈಸಿರಲಿಲ್ಲ; + ಅಷ್ಟರೊಳಗೆ, ಏನವಸರವಾಗಿತ್ತೊ ಆ ಪೀಂಚಲವ್ವಗೆ? + ಬೆಳಕಲ್ಲದ ಬೆಳಕಿನ ಆ ಹಣತೆಯ ಸೊಡರನ್ನೂ ಆರಿಸಿ ಬಿಟ್ಟಳು! +ನಾಚಿಕೆ ಸಂಕೋಚಗಳನ್ನೆಲ್ಲ ನಿವಾರಿಸಿ, ಒಲಿದ ಒಡಲುಗಳನ್ನಪ್ಪಿಸಿ ಒಂದುಗೂಡಿಸುವ ಕಗ್ಗತ್ತಲೆ ದಟ್ಟಯ್ಸಿತು, ರತಿ ಮನ್ಮಥ ಧೈರ್ಯಪ್ರಚೋದಿಯಾಗಿ! …. +ಒಳಗೆ ಎಲ್ಲ ನಿಶ್ಯಬ್ದವಾಗಿ ಸ್ವಲ್ಪ ಹೊತ್ತಾದಮೇಲೆ…. +“ಹಛೀ!ಅನಿಷ್ಟದ್ದೆ!” ಗುತ್ತಿ ಬಯ್ದದ್ದು ಕೇಳಿಸಿ, ತನ್ನ ಮನದನ್ನೆಯ ನಗ್ನತೆಯನ್ನೆಲ್ಲ, ತನ್ನ ಸಂಪೂರ್ಣ ಬತ್ತಲೆಯಿಂದಪ್ಪಿ, ತಬ್ಬಿ, ಕಂಬಳಿ ಹೊದ್ದು ಮಲಗಿದ್ದ ಐತ ಗೊರಬಿನ  ತೆರೆಯ ಆ ಕಡೆಯಿಂದ ಕೇಳಿದನು. “ಏನೋ ಅದು, ಗುತ್ತಿ? +ಯಾರನ್ನೋ ಬಯ್ತಿದೀಯಾ?” +“ಈ ಹಾಳ್ ನಾಯಿ! +ನಮಗೇ ಜಾಗ ಸಾಲದು. +ಅದು ಬ್ಯಾರೆ ಕಂಬಳಿಗೆ ಒತ್ತಿ ಮಲಗಕ್ಕೆ ನೋಡ್ತದಲ್ಲಾ!” ನಕ್ಕನು ಗುತ್ತಿ. +“ನೀವಿಬ್ಬರೂ ಸ್ವಲ್ಪ ಒತ್ತೊತ್ತಿಗೆ ಒತ್ತಿ ಮಲಗಿಕೊಂಡರೆ ಅದಕ್ಕೂ ಒಂದು ಚೂರು ಜಾಗ ಸಿಗ್ತದೆ!ಹಿಹ್ಹಿಹ್ಹಿ” ನಕ್ಕನು ಐತ. +“ಹಾಂಗಾರೆ, ನೀವು ಹಂಗೇ ಮಾಡಿ! +ನಿಮ್ಮ ಹತ್ರಕ್ಕೇ ಹುಲಿಯನ್ನೆ ಕಳ್ಸಿತೀನಿ! +ಆಗಬೈದಾ?ಹಿಹ್ಹಿಹ್ಹಿ!” +“ಅಯ್ಯೋ, ನಿನ್ನ ಉಪಕಾರ! +ಹಾಂಗೊಂದು ಮಾಡಬ್ಯಾಡ ಮಾರಾಯ ಹಿಹ್ಹಿಹ್ಹಿಹ್ಹಿ!”ಗಂಡಸರಿಬ್ಬರ ನಗೆಯ ನಡುವೆ ಹೆಣ್ಣುಗಳೆರಡರ ಕಿಲಿಕಿಲಿಯ ಕಿರುನಗೆ ಮುಳುಗಿ ಹೋಗಿತ್ತು, ಆ ಹೊರಗಣ ಜಡಿಮಳೆಯ ಸದ್ದಿನಲ್ಲಿ! +ಆವೊತ್ತು ಹೊತ್ತಾರೆ ಹಳೆಮನೆ ತಿಮ್ಮಪ್ಪಹೆಗ್ಗಡೆ ಹೂವಳ್ಳಿ ಮನೆಯ ಹೆಬ್ಬಾಗಿಲು ಹೊಕ್ಕು ಜಗಲಿಗೆ ಹೋದಾಗ ವೆಂಕಟಣ್ಣ, ಕಂಬಳಿ ಹೊದ್ದುಕೊಂಡು ಮಲಗಿದ್ದವನು, ಎದ್ದು ಕುಳಿತು ಗಟ್ಟಿಯಾಗಿ ಕೂಗಿ ಹೇಳಿದನು, ಮಗಳಿಗೆ ಹೇಳುವಂತೆ. “ಚಿನ್ನೂ, ಏ ಚಿನ್ನೂ, ನಿನ್ನ ಹಳೆಮನೆ ಅಣ್ಣಯ್ಯ ಬಂದಾನೇ. +ಕಾಲು ತೊಳೆಯಲಿಕ್ಕೆ ಉಂದು ಚೊಂಬು ನೀರು ತಂದಿಡೇ.” +ಚಿನ್ನಮ್ಮಗೆ ಬದಲಾಗಿ ನಾಗಕ್ಕನೆ ಒಂದು ಹಿತ್ತಾಳೆ ಚೊಂಬಿನಲ್ಲಿ ನೀರು ತಂದು ಜಗಲಿಯ ಕೆಸರ್ಹಲಗೆಯ ಮೇಲೆ ಇಟ್ಟು, ಸರಕ್ಕನೆ ಹಿಂದಿರುಗಿ ಹೋಗುತ್ತಿದ್ದಳು. +ಅಷ್ಟರಲ್ಲಿ ವೆಂಕಟಣ್ಣ “ಒಂದು ಜಮಖಾನ ಹಾಸಿ, ದಿಂಬು ಹಾಕ್ತೀಯಾ ನಂಟರಿಗೆ?” ಎಂದು ಹೆಂಡತಿಯಾದವಳಿಗೆ ಗಂಡನು ಆಜ್ಞೆ ಮಾಡುವ ಠೀವಿಯಲ್ಲಿ ಹೇಳಿದನು. +ಅವಳು ನವವಧು ಸಹಜವಾದ ಲಜ್ಜಾ ಭಂಗಿಯಿಂದಲೆಂಬಂತೆ ತಾನು ಕೂಡಿಕೆಯಾಗಿದ್ದ ಗಂಡನ ಅಪ್ಪಣೆಯನ್ನು ನೆರವೇರಿಸಿ ಹೋದಳು. +ತಿಮ್ಮಪ್ಪ ಕೆಸರಾಗಿದ್ದ ಕಾಲುಗಳನ್ನು ಪದ್ಧತಿಯಂತೆ ತೊಳೆದು ಕೊಂಡು, ಅದಕ್ಕಾಗಿಯೆ ಅಲ್ಲಿ ಕಡಿನ ಕೋಡಿನ  ಮೇಲೆ ಹರಡಿದ್ದ ಅಂಗವಸ್ತ್ರ ದಿಂದ ನೀರೊರೆಸಿಕೊಂಡು ಬಂದು ದಿಂಬಿಗೊರಗಿ ಜಮಖಾನದ ಮೇಲೆ ಕೆಸರ್ಹಲಗೆಯಿಂದ ಕಾಲು ಇಳಿಬಿಟ್ಟುಕೊಂಡು ಕುಳಿತನು. +“ಏನ್ ಬಾ’ಳ ಅಪ್ರೂಪಕ್ಕೆ ಬಂದ್ಬಿಟ್ಟೆ, ತಿಮ್ಮೂ, ಬಡೋರ ಮನೀಗೆ? +…ನಿನ್ನ ಅಪ್ಪಯ್ಯ ಹ್ಯಾಂಗಿದಾರೆ…. +ನಾನೇ ಬರ್ಬೇಕು ಅಂತಾ ಮಾಡಿದ್ದೆ, ಮದೇಮನೆ ಕರಿಯಾಕೆ. +ಹಾಂಗ್ಯಾರೆ, ಏನು ಮಾಡಾದು? +ನನ್ನ ಕಾಲಿನ ಈ ಕುಂಟನಹುಣ್ಣು ಜಾಸ್ತಿ ಆಗಿ, ರಸಿಗೆ ಸೋರಕ್ಕೆ ಸುರುವಾತು. +ಆ ಕಣ್ಣಾಪಂಡಿತನ ಔಸ್ತಿ ಹಾಕಿ ಹಾಕಿ ಸಾಕಾತು. +ಈಗ ಆ ಕಮ್ಮಾರಸಾಲೆ ಪುಟ್ಟಾಚಾರಿ ಕೊಟ್ಟ ಔಸ್ತಿ ಹಾಕ್ತಾ ಇದೀನಿ. +ಮೊನ್ನೆಯಿಂದ ಜರಾ ಬ್ಯಾರೆ ಬರಾಕೆ ಸುರು ಮಾಡದೆ…. +ನಾಲಗೆಗೆ ಅಗ್ರ ಆಗಿಬಿಟ್ಟಿದೆ…. +ಹೊಟ್ಟೆಗೇನೂ ಸೇರಾದಿಲ್ಲ…. +ಉಂಡಿದ್ದೆಲ್ಲ ವಾಂತಿ ಆಗ್ತದೆ…. +ಕಲ್ಲೂರು ದೇವರ ಪರ್ಸಾದಾನು ತಂದಾತು. +ಏನೋ ಸನಿ ಹಿಡಿದ್ಹಾಂಗೆ ಆಗ್ಯದೆ ನಂಗೆ….” + ದೀರ್ಘವಾಗಿ ನಿಟ್ಟುಸಿರುಬಿಟ್ಟು ಮುಂದುವರಿಸಿದನು. +“ಆವೊತ್ತು ನಿಮ್ಮನೆ ಸುಡುಗಾಡಿನಾಗೆ…. +ಅದೆಲ್ಲ ನಡೀತಲ್ಲ?ಎಲ್ಲ ಪೂರೈಸಿ ಕತ್ಲೇಲಿ ಹೊಲ್ಟು ಮನೀಗೆ ಒಬ್ಬನೆ ಬರ್ತಾ ಇದ್ದೆ. +ಆ ಚೌಡೀಬನದ ಹತ್ರ, ಹಾಂಗ್ಯಾರೆ ಏನು ಅಂತಾ ಹೇಳಾದು, ಏನೋ ಬಂದು ನನ್ನ ಮೈ ಮುಟ್ಟಿದ್ಹಾಂಗೆ ಆ’ತು! +ಆವತ್ತಿನಿಂದ ಸುರುವಾಗ್ಯದೆ, ನೋಡು, ಈ ರ್ವಾತೆ! …. ” +ತಿಮ್ಮಪ್ಪಹೆಗ್ಗಡೆ ಯಾವ ಔಪಚಾರಿಕ ಪೀಠಿಕೆಯನ್ನೂ ಹಾಕಲಿಲ್ಲ. +ವೆಂಕಟಚಿಕ್ಕಪ್ಪಯ್ಯನ ಸರಮಾತಿನಲ್ಲಿ ಅಡಕವಾಗಿದ್ದ ಯಾವ ಪ್ರಶ್ನೆಯನ್ನೂ  ಗಮನಿಸಿದಂತೆಯೂ ತೋರಲಿಲ್ಲ. +ತಟಕ್ಕನೆ ತಾನು ಯಾವ ಉದ್ದೇಶಕ್ಕಾಗಿ ಬಂದಿದ್ದನೋ ಅದನ್ನೇ ಪ್ರಸ್ತಾಪಿಸತೊಡಗಿದನು. +“ಅಪ್ಪಯ್ಯ ಹೇಳಿ ಕಳಿಸ್ಯಾನೆ.” ಎಂದು ಸುಳ್ಳಿನಿಂದಲೆ ಪ್ರಾರಂಭಿಸಿದ್ದನು. +“ನಿನಗೆ ಕಷ್ಟಕಾಲದಲ್ಲಿ ಸಾಲಗೀಲ ಕೊಟ್ಟು ಉಪಕಾರ ಮಾಡಿದ್ದಕ್ಕೆ ತಕ್ಕ ಉಪಕಾರಾನೆ ಮಾಡೀಯ ನಮಗೆ…. +ನಮಗೆ ಒಂದು ಮಾತು ಕೇಳದೆ ಸಿಂಬಾವಿಗೆ ಹೆಣ್ಣು ಕೊಡಾಕೆ ಹೆಂಗೆ ಒಪ್ಪಿದೆ? +ನನ್ನ ತಂಗೀನ ಭರಂಬಾವಗೆ ಕೊಟ್ಟು ಅವನ ತಂಗೀನ ನಂಗೆ ತರಾದು ಅಂತಾ ಎಲ್ಲ ನಿಶ್ಚಯವಾಗಿದ್ದೂ ನೀನು ಈ ಅನ್ಯಾಯ ಮಾಡೋದೇನು? …. ” +ತಿಮ್ಮಪ್ಪಹೆಗ್ಗಡೇಯ ಈ ಅನಿರೀಕ್ಷಿತ ಆಕ್ರಮಣಕ್ಕೆ ವೆಂಕಟಣ್ಣ ತ್ತತ್ತರಿಸಿ ಬಾಯಿಗೆ ಬಂದದ್ದನ್ನೇ- ಮನಸ್ಸಿಗೆ ಬಂದದ್ದನ್ನಾಗಿಸಿ, ಹೇಳತೊಡಗಿದನು. +“ಹಾಂಗ್ಯಾರೆ…ಹಾಂಗ್ಯಾರೆ ನಮ್ಮ ಹೆಣ್ಣನ್ನ ನಾವು ಯಾರಿಗೆ ಬೇಕಾದ್ರೂ ಕೊಡಾಕೆ ಹಕ್ಕಿಲೇನು ನಮಗೆ? +ನಾನೇನು ಅವನ್ನ ಕಾಲ್ ಕಟ್ಟಿಕೊಂಡು ನನ್ನ ಮಗಳನ್ನು ಮದುವೆ ಆಗೂ ಅಂತಾ ಕೇಳಿಕೊಳ್ಳಲಿಲ್ಲ, ಗೊತ್ತಾತೇನು? +ಹಾಂಗ್ಯಾರೆ…. ಹಾಂಗ್ಯಾರೆ…. ನೀನೆ ಬೇಕಾರೆ ಕೇಳು, ಆ ಕಲ್ಲೂರು ಮಂಜಭಟ್ಟರನ್ನ ಎಂಥಾ ಇಕ್ಕಟ್ಟಿಗೆ ನನ್ನ ಸಿಕ್ಕಿಸಿಕೊಂಡು ’ಒಲ್ಲೇ!ಒಲ್ಲೇ!’ ಅನ್ತಿದ್ದ ನನ್ನ ಮಗಳನ್ನ ನಾನೇ ಬಾಂವಿಗೆ ಹಾಕ್ಹಾಂಗೆ ಮಾಡಿದ್ರೂ ಅಂತಾ ನಿಂಗೇ ಗೊತ್ತಾಗ್ತದೆ….” +“ಕೋಣೂರು ಸಣ್ಣ ಬಾವಗೆ ಕೊಡ್ತೀನಿ ಕೊಡ್ತೀನಿ ಅಂತಾ ಇದ್ದು ಹೀಂಗ್ಯಾಕೆ ಮೋಸ ಮಾಡಬೇಕಾಗಿತ್ತು ನೀನು?” +“ಅವನಿಗೇ ಕೊಡ್ತೀನಪ್ಪಾ ಅಂದೆ…. +ನನ್ನ ಮನೆ ಮಠಾ ಎಲ್ಲಾ ಹೋಗದೆ ಇರೋ ಹಾಂಗೆ ಸಾಲ ತೀರ್ಸೋಕೆ ಸ್ವಲ್ಪ ದುಡ್ಡು ಕೊಡಿ ಅಂತಾನೂ ದಮ್ಮಯ್ಯಗುಡ್ಡೆ ಹಾಕ್ದೆ…. +ಮುಕುಂದನ ಅಣ್ಣ ಒಂದು ಕಾಸ್ನೂ ಕೊಡಾಕೆ ಆಗಾದಿಲ್ಲ ಅಂದುಬಿಟ್ಟ….” ಅಳುದನಿಯಲ್ಲಿ ಮುಂದುವರಿಸಿದನು ವೆಂಕಟಣ್ಣ “ಇನ್ನೇನು ಮಾಡ್ಲಿ? +ನನ್ನ ಕರ್ಳ್ಳ ನಾನು ಕಿತ್ತುಕೊಂಡೆ, ಬ್ಯಾರೆ ಯಾವ ದಾರೀನು ತೋರ್ದೆ, ತಿಮ್ಮೂ!” +“ಈಗಲಾದ್ರೂ ಹೇಳು, ನಮ್ಮ ಹುಡುಗೀನ ಕೊಡಾಕೆ ಆಗಾದಿಲ್ಲ ಅಂತಾ….” +“ನನ್ನ ತಿಂದ್ಹಾಕೆ ಬಿಡ್ತಾರೆ ಕಣೋ! +ಜಾತಿಯಿಂದ ಹೊರಗೆ ಹಾಕ್ಸಿ, ನಾಕು ಜನರ ಎದುರು ತಲೆ ಎತ್ತಿಕೊಂಡು ತಿರುಗದ ಹಾಂಗೆ ಮಾಡಿಬಿಡ್ತಾರೆ…. +ನನ್ನ ಮನೆ ಜಮೀನು ಎಲ್ಲ ಕಸುಕೊಂಡು, ನನ್ನ ಕಾಡಿಗೇ ಅಟ್ಟಿ ಬಿಡ್ತಾರೆ! …. +ಮದುವೆ ಎಲ್ಲ ನಿಶ್ಚಯ ಆಗಿ, ದಿನಾನೂ ಗೊತ್ತಾಗಿ ಹೋಗ್ಯದೆ…. +ಲಗ್ನಪತ್ರಿಕೆನೂ ಬರ್ಸಿ ಕಳಿಸಿ ಆಗ್ಯದೆ….” +ತಿಮ್ಮಪ್ಪ ಹೆಗ್ಗಡೆ ಸ್ವಲ್ಪ ಹೊತ್ತು ಏನೇನನ್ನೋ ಚಿಂತಿಸುತ್ತಾ ಮೌನವಾಗಿ ಕುಳಿತಿದ್ದನು. +ವೆಂಕಟಣ್ಣನ ನಿಸ್ಸಹಾಯಕ ದುಸ್ಥಿತಿ ಅವನಿಗೆ ಚೆನ್ನಾಗಿ ತಿಳಿದಂತಾಗಿತ್ತು.’ +ಈ ಲಗ್ನ ತಪ್ಪುವಂತೆ ಮಾಡುವುದಕ್ಕೆ ನೀನು ಒಪ್ಪಿಗೆ ಕೊಟ್ಟರೆ ನಾನು ಏನಾದರೂ ಮಾಡುತ್ತೇನೆ’ ಎಂದು ಕೇಳಿಬಿಡಲೇನು ಎಂದುಕೊಂಡನು ಒಮ್ಮೆ. +ಮತ್ತೆ ವೆಂಕಟಣ್ಣನಂತಹ ಸ್ಥೂಲ ಬುದ್ಧಿಯ  ಮತ್ತು ಅಸ್ಥಿರ ಮನಸ್ಸಿನ ಮನುಷ್ಯಗೆ ಅಂತಹ ರಹಸ್ಯವನ್ನು ಬಿಟ್ಟುಕೊಡುವುದರಿಂದ ಕಾರ್ಯನಿರ್ವಹಣೆಗೆ ಒದಗುವ ಸಹಾಯಕ್ಕಿಂತಲೂ ಅಪಾಯವೇ ಹೆಚ್ಚು ಎಂದು ಭಾವಿಸಿ ತೆಪ್ಪಗಾದನು. +ಅವನು ಸರಕ್ಕನ್ ಎದ್ದು ನಿಂತು “ನಾನು ಹೋಗಿ ಬರ್ತೀನಿ” ಎಂದಾಗ, ವೆಂಕಟಣ್ಣ ಕುಂಟಿನ ಹುಣ್ಣಿನ ನೋವಿಗೆ ನರಳುತ್ತಾ “ಊಟದ ಹೊತ್ತಾತು; + ಉಂಡುಕೊಂಡೇ ಹೋಗೋ.” ಎಂದುದನ್ನೂ ಆಲಿಸದವನಂತೆ, ಹೂವಳ್ಳಿಯಿಂದ ಹೊರಟು ಕೋಣೂರಿಗೆ ಹೋಗಿದ್ದನು. +ಈ ಸಾರಿ ತಿಮ್ಮಪ್ಪಹೆಗ್ಗಡೆ ತನ್ನ ಮನಸ್ಸಿನಲ್ಲಿದ್ದುದನ್ನು ಮುಚ್ಚುಮರೆ ಮಾಡದೆ ಮುಕುಂದಯ್ಯನ ಮುಂದೆ ಬಿಚ್ಚಿಟ್ಟನು. +ಹಿಂದೊಮ್ಮೆ ಈ ಪ್ರಸ್ತಾಪವೆತ್ತಿದ್ದಾಗ ತಿಮ್ಮಪ್ಪಹೆಗ್ಗಡೆಯ ವಿಷಯದಲ್ಲಿ ನಂಬುಗೆಯಿಲ್ಲದಿದ್ದ ಮುಕುಂದಯ್ಯ ತನ್ನ ಯಾವ ಪ್ರತಿಕ್ರಿಯೆಯನ್ನೂ ತೋರಗೊಟ್ಟಿರಲಿಲ್ಲ. +ಇದ್ದಕ್ಕಿದ್ದ ಹಾಗಿ ಭರಮೈಹೆಗ್ಗಡೆಯ ದ್ವಿತೀಯ ವಿವಾಹಕ್ಕೆ ಭಂಗತರುವ ತಿಮ್ಮಪ್ಪಹೆಗ್ಗಡೆಯ ಪ್ರಯತ್ನ ಅರ್ಥರಹಿತವಾಗಿ ಸಂಶಯಾಸ್ಪದವಾಗಿತ್ತು. +ಆದರೆ ಈಗ ಅದು ಅರ್ಥಪೂರ್ಣವಾದುದರಿಂದ ತಿಮ್ಮಪ್ಪಹೆಗ್ಗಡೆಯ ವರ್ತನೆಯಲ್ಲಿ ವಂಚೆನೆಯಿಲ್ಲವೆಂಬುದು ಸ್ಪಷ್ಟವಾಗಿತ್ತು. +ಮುಕುಂದಯ್ಯ ಮತ್ತು ಹೂವಳ್ಳಿ ಚಿನ್ನಮ್ಮನ ಮದುವೆ ಆಗಬೇಕೆಂಬುದು ಅವನ ಮುಖ್ಯ ಉದ್ದೇಶವಾಗಿರಲಿಲ್ಲ. +ಈ ಮದುವೆ ನಡೆಯದಂತೆ ನೋಡಿಕೊಂಡರೆ ಅವನ ಮತ್ತು ಅವನ ತಂಗಿಯ ಮದುವೆಯ ದಾರಿ ಸರಾಗವಾಗುತ್ತದೆ ಎಂಬುದೆ ಅವನ ಪ್ರಧಾನೋದ್ದೇಶವಾಗಿತ್ತು. +ತಿಮ್ಮಪ್ಪ ಹೆಗ್ಗಡೆಯ ಸ್ವಾರ್ಥ ತನ್ನ ಸ್ವಾರ್ಥಕ್ಕೆ ಸಹಕಾರಿಯಾಗಿಯೂ ಉಪಕಾರಿಯಾಗಿಯೂ ಆಗಿದ್ದುದರಿಂದ ಮುಕುಂದಯ್ಯ ಅವನನ್ನೂ ತನ್ನ ಒಳಸಂಚಿನ ವಲಯಕ್ಕೆ ಸೇರಿಸಕೊಳ್ಳಲೊಪ್ಪಿದ್ದನು. +ಆದರೆ ತಿಮ್ಮಪ್ಪ ಹೆಗ್ಗಡೆಯ ಸಂಚು ಮುಕುಂದಯ್ಯನ ಸಂಚಿನ ವಲಯದ ಮಿತಿಯಲ್ಲಿರಲು ಸಮ್ಮತಿಸದೆ, ಅದಕ್ಕೆ ಸಹಕಾರಿಯಾಗುವ ರೀತಿಯಲ್ಲಿ ತನ್ನ ವಲಯವನ್ನು ವಿಸ್ತರಿಸಿಕೊಂಡು ಮುಂದುವರಿದಿತ್ತು…. +ಆ ಉದ್ದೇಶದಿಂದಲೆ ಅವನು ಸಿಂಬಾವಿಗೆ ಹೋದದ್ದು. +ಈ ಸಾರಿ ಸಿಂಬಾವಿಯಲ್ಲಿ ಕಾಣಿಸಿಕೊಂಡ ತಿಮ್ಮಪ್ಪಹೆಗ್ಗಡೆ ಹೊಸ ರೂಪ ತಾಳಿದ್ದನು. +ಹಿಂದೆಲ್ಲ ಹೋಗುತ್ತಿದ್ದಂತೆ ಸಾಧಾರಣ ವೇಷದಲ್ಲಿ ಹೋಗಿರಲಿಲ್ಲ. +ಭರಮೈಹೆಗ್ಗಡೆಯ ತಂಗಿ ಮೊತ್ತಮೊದಲು, ಜಗಲಿಯಲ್ಲಿ ಹಾಸಿದ್ದ ಜಮಖಾನದ ಮೇಲೆ ಮುಂಡಿಗೆಗೆ ಆನಿಸಿದ್ದ ದಿಂಬಿಗೊರಗಿ ಮಂಡಿಸಿದ್ದ, ಅವನನ್ನು ನೋಡಿದಾಗ ಯಾರೋ ಹೊಸ ನೆಂಟರೆಂದು ಬೆರಗಾಗಿ ನೋಡಿದ್ದಳು. +ಅಂಗಿ, ಪಂಚೆ, ಬಚ್ಚಗಾನಿ, ಕಿವಿಯ ಹರಳೊಂಟಿ, ಕೈಯ ಚಿನ್ನದುಂಗುರ, ಇವುಗಳಿಂದ ಶೋಭಿಸುತ್ತಿದ್ದ ತಿಮ್ಮಪ್ಪಹೆಗ್ಗಡೆ ಹಳೆಮನೆಗೆ ಆಗಲೆ ಯಜಮಾನನಾಗಿದ್ದಾನೆ ಎಂಬುದನ್ನೂ ಪ್ರಕಟಿಸಿತ್ತು. +ಅವನು ಕಳಚಿಟ್ಟಿದ್ದ  ಕನ್ನಡಜಿಲ್ಲೆಯ ಹೂವು ಕೂರಿಸಿದ ಮೆಟ್ಟೂ, ಮಳೆಯಲ್ಲಿ ಬಂದದ್ದರಿಂದ ಒದ್ದೆ ಸೋರುತ್ತಿದ್ದು ಬಿಚ್ಚಿಟ್ಟಿದ್ದ ಹೊಸ ಕೊಡೆಯೂ ಜಮಖಾನದ ಮೇಲೆ ತೆರೆದಿಟ್ಟಿದ್ದ ರೇಷ್ಮೆಯ ಬಣ್ಣದ ಟೋಪಿಯೂ ಆಗಿನ ಕಾಲದ ಹಳ್ಳಿಗಳಲ್ಲಿ ಈಗಿನ ಕಾಲದ ಕಾರುಗಳಿಗೆ ಸಮನಾದ ಭೋಗೈಶ್ವರ್ಯದ ಸಾಮಗ್ರಿಗಳಾಗಿದ್ದು ಬೆರಗುಗೊಳಿಸುತ್ತಿದ್ದವು! +ಛೆಃ ಯಾರು ಹೇಳುತ್ತಾರೆ ತಿಮ್ಮಪ್ಪಹೆಗ್ಗಡೆ ಕೊಳಕಿನ ಕುರೂಪಿ ಎಂದು, ಈಗ? +ಹೂವಳ್ಳಿ ಹೆಣ್ಣಿನಿಂದ ಭರಮೈಹೆಗ್ಗಡೆಯನ್ನು ವಿಮುಖನನ್ನಾಗಿ ಮಾಡಲು ಈ ಸಾರಿ ತಿಮ್ಮಪ್ಪಹೆಗ್ಗಡೆ ಪ್ರಯೋಗಿಸಿದ್ದ ಅಸ್ತ್ರ ತಕ್ಕಮಟ್ಟಿಗೆ ಬ್ರಹ್ಮಾಸ್ತ್ರವೆ ಆಗಿತ್ತು. +ಆ ಹೆಣ್ಣು ಹಿಂದಿನಿಂದಲೂ ಕೋಣೂರು ಮುಕುಂದಯ್ಯನೊಡನೆ ಸ್ನೇಹದಿಂದಿದ್ದು, ಇತ್ತೀಚೆಗೆ ದೇಹಸಂಬಂಧವನ್ನೂ ಸಂಪಾದಿಸಿಕೊಂಡು, ಈಗಾಗಲೆ ಒಂದ ಎರಡೊ ತಿಂಗಳೂ ಆಗಿದೆ ಎಂದೂ ಹೇಳುತ್ತಾರೆ. +ಅವಳನ್ನು ಲಗ್ನವಾದರೆ ಅಪವಾದ ಅವಮಾನ ಎರಡೂ ತಪ್ಪಿದ್ದಲ್ಲ! +ಆದರೆ ಭರಮೈಹೆಗ್ಗಡೆ ಅಂತಹ ಧರ್ಮಸೂಕ್ಷ್ಮತೆಗೆ ಅಳುಕಲಿಲ್ಲ; +ಹಾಗೇನಾದರೂ ಆಗಿದೆ ಎಂದು ಗೊತ್ತಾಗಿ, ಅವಳು ಮದುವೆಯಾಗಿ ಒಂಬತ್ತು ತಿಂಗಳೊಳಗಾಗಿ ಹೆತ್ತುಗಿತ್ತರೆ ಅವಳನ್ನು ಬಿಟ್ಟು, ಓಡಿಸಿ, ಜಾತಿಯಿಂದ ಬಹಿಷ್ಕಾರ ಹಾಕಿದರಾಯ್ತು, ಎಂದು ಉತ್ತರ ಹೇಳಿ ನಿಶ್ಚಿಂತರಾದರು. +ಬಾಯಿಬಿಟ್ಟು ಹೇಳದಿದ್ದ  ಇನ್ನೊಂದು ವಿಚಾರ ಅವರ ಮನಸ್ಸಿನಲ್ಲಿತ್ತು. +ಈಗೆಲ್ಲಿಯಾದರೂ ಒಂದುವೇಳೆ ತಾನೆ ಮದುವೆಯಾಗುವುದಿಲ್ಲ ಎಂದರೆ, ತಾನು ಜಾಮೀನಾಗಿ ನಿಂತು ಕೊಟ್ಟಿದ್ದ ಸಾಲದ ಹಣವೆಲ್ಲ ಮುಳುಗಿಹೋಗುತ್ತದೆ. +ಮದುವೆಯನ್ನು ಮುರಿಯುವುದಕ್ಕೆ ತಾನೆ ಕಾರಣನಾಗುವುದರಿಂದ ಹಣ ಪಡೆಯುವ ಹಕ್ಕಿನಿಂದಲೂ ಚ್ಯುತನಾಗಬೇಕಾಗುತ್ತದೆ. +ಹೆಣ್ಣು ಕೊಡುವುದಿಲ್ಲ ಎಂದು ವೆಂಕಪ್ಪನಾಯಕರೆ ಹೇಳಿ ಕರಾರನ್ನು ಮುರಿದರೆ ಆಗ ಅದರ ಹೊಣೆ ತನ್ನ ಮೇಲೆ ಬೀಳುವುದಿಲ್ಲ, ನನ್ನ ಹಣ ನನಗುಳಿಯುತ್ತದೆ. +ನಾನು ಬೇರೆ ಎಲ್ಲಿಯಾದರೂ-ಹಳೆಮನೆಯ ಹೆಣ್ಣಾದರೆ ಹಳೆಮನೆಯ ಹೆಣ್ಣು-ಹೆಣ್ಣು ನೋಡಬಹುದು. +ಜಗಲಿಯಲ್ಲಿ ಮಾಡಿದ ಪ್ರಯತ್ನ ಸಫಲವಾಗದಿರಲು ತಿಮ್ಮಪ್ಪ ಹೆಗ್ಗಡೆ ಅಂತಃಪುರದ ಕಡೆಗೆ ತಿರುಗಿ, ಜಟ್ಟಕ್ಕಯ್ಯನ ಮೇಲೆ ಬೇರೊಂದು ಮೋಹನಾಸ್ತ್ರ ಪ್ರಯೋಗ ಮಾಡಿದನು. +ಮುಕುಂದಯ್ಯ ಆ ಹುಡುಗಿಯನ್ನು ಮದುವೆಯಾಗದಿರುವುದಕ್ಕೆ ನಿಜವಾದ ಕಾರಣ ಬೇರೆ ಇದೆ. +ಅವನಿಗೇ ಕೊಡಬೇಕೆಂದು ಆ ಹೆಣ್ಣಿನ ಜಾತಕ ನೋಡಿಸಿದಾಗ ಅದು ಗೊತ್ತಾಯಿತಂತೆ. +ಅವಳಿಗೆ ವೈಧವ್ಯಯೋಗವಿದ್ದು, ಮದುವೆಯಾಗಿ ಸ್ವಲ್ಪವೆ ಕಾಲದೊಳಗಾಗಿ ವಿಧವೆಯಾಗುತ್ತಾಳೆ! +ಆದ್ದರಿಂದಲೆ ಕೋಣೂರಿನವರು ಅವಳನ್ನು ತಮ್ಮ ಮನೆಗೆ ತಂದುಕೊಳ್ಳಲು ಒಪ್ಪಲಿಲ್ಲ. +ಅದನ್ನೆಲ್ಲ ಮುಚ್ಚಿಟ್ಟು, ವೆಂಕಟಣ್ಣನೂ ಮಂಜಭಟ್ಟರೂ ಜಾತಕ ನೋಡಿದ ಜೋಯಿಸರನ್ನು ಒಳಗೆ ಹಾಕಿಕೊಂಡು, ಭರಂಬಾವಗೆ ಅವಳನ್ನು ಗಂಟುಹಾಕಿ, ಗಂಟು ನುಂಗಲು ಈ ಹುನಾರು ಮಾಡಿದ್ದಾರೆ! +ಜಟ್ಟಮ್ಮಗೆ ಏನೆಲ್ಲ ದ್ವೇಷಾಸೂಯೆಗಳಿದ್ದರೂ ಗಂಡನನ್ನು ಕಳೆದುಕೊಂಡು ಮುಂಡೆಯಾಗುವ ಭಯಂಕರವಾದ ಅಮಂಗಳಕ್ಕೆ ಗುರಿಯಾಗುವುದು ಬೇಕಿರಲಿಲ್ಲ. +ತನ್ನ ಮೇಲಿನ ಅಕ್ಕರೆಯಿಂದ, ಆ ದನಗೋಳು ಮಳೆಯಲ್ಲಿಯೂ, ಮಾಡಲಿದ್ದ ಬೇಸಾಯದ ಕೆಲಸವನ್ನೆಲ್ಲ ಬದಿಗೊತ್ತಿ, ಅಷ್ಟುದೂರ ಕಷ್ಟಪಟ್ಟು ಕೊಂಡು ಬರುವ ತೊಂದರೆಯನ್ನೂ ಲೆಕ್ಕಿಸದೆ ಬಂದು ಈ ದುರ್ವಾರ್ತೆಯನ್ನು ತಿಳಿಸಿದ ತಮ್ಮನನ್ನು ಮನಸಾರೆ ವಂದಿಸಿದಳು. +ಏನಾದರೂ ಮಾಡಿ ಈ ಲಗ್ನ ನಡೆಯದಂತೆ ಮಾಡಬೇಕೆಂದು ಬೇಡಿಕೊಂಡಳು. +ಅಷ್ಟೆ ಅಲ್ಲ ಈ ಲಗ್ನ ಮುರಿದ ಮೇಲೆ ಮಂಜಮ್ಮನನ್ನೇ ಸಿಂಬಾವಿಗೆ ತಂದುಕೊಳ್ಳುವ ಮತ್ತು ಲಕ್ಕಮ್ಮನನ್ನು ಹಳೆಮನೆಗೆ ಕೊಡುವ ಮಂಗಳಕಾರ್ಯವನ್ನೂ ಮುಗಿಸಿಬಿಡಬೇಕೆಂದು ಅಷ್ಟಲ್ಲದೆ ಹೇಳಿಕೊಂಡಳು. +ಆ ದಿನ ರಾತ್ರಿಯೂಟಕ್ಕೆ ನಂಟರು ಬಂದಿದ್ದಾರೆಂದು ತಯಾರಿಸಿದ್ದ ಕಡಬು ತುಂಡುಗಳನ್ನು ಚೆನ್ನಾಗಿ ಉಂಡು, ಕಳ್ಳುಸರಾಯಿಗಳನ್ನು ಚೆನ್ನಾಗಿ ಕುಡಿದು ಭರಮೈಹೆಗ್ಗಡೆ ತನ್ನ ಕೋಣೆಗೆ ಹೋಗಿ ಮಲಗಿದ ಮೇಲೆ ತಮ್ಮನೂ ಅಕ್ಕನೂ ಬಹಳ ಹೊತ್ತು ಮಾತಾಡಿದರು. +ಲಗ್ನವನ್ನು ಹೇಗೆ ತಪ್ಪಿಸುತ್ತೇವೆ ಎಂಬ ಗುಟ್ಟನ್ನು ತಿಮ್ಮಪ್ಪಹೆಗ್ಗಡೆ ಬಿಟ್ಟುಕೊಡದಿದ್ದರೂ ಲಗ್ನವನ್ನಂತೂ ತಪ್ಪಿಸಿಯೆ ತಪ್ಪಿಸುತ್ತೇವೆ ಎಂದು ಜಟ್ಟಮ್ಮನಿಗೆ ಭರವಸೆಕೊಟ್ಟು ಅದಕ್ಕೆ ಅವಳು ಮಾತ್ರ ಯಾವ ವಿಘ್ನವನ್ನೂ ತಂದೊಡ್ಡಬಾರದೆಂದು ಎಚ್ಚರಿಸಿ, ಅವಳಿಂದ ನಡೆಯ ಬೇಕಾದ ಕಾರ್ಯಗಳ ವಿಚಾರದಲ್ಲಿಯೂ ಕೆಲವು ಸಲಹೆಯಿತ್ತನು. +ಮರುದಿನವೂ ಭಾವಿ ಮಾವನ ಮನೆಯಲ್ಲಿ ಭಾವಿ ಹೆಂಡತಿಯ ಮುಖದ ಸಕೃದ್ದರ್ಶನಗಳಿಂದ ಕೃತಾರ್ಥನಾಗಿ, ಹಗಲೂಟವನ್ನೂ ಪೂರೈಸಿ, ಸ್ವಲ್ಪ ವಿಶ್ರಮಿಸಿದ್ದು, ಮೋಡ ಕವಿದು ಮಳೆ ಜಿನುಗುತ್ತಿದ್ದರೂ ಅಪರಾಹ್ನದಲ್ಲಿಯೆ ಹಳೆಮನೆಗೆ ಹಿಂದಕ್ಕೆ ಹೊರಟಿದ್ದನು. +ಹಳೆಮನೆಯ ಸಣ್ಣಬಾವ ಬಂದು, ಒಂದು ದಿನ ಉಳಿದಿದ್ದು, ಹಿಂತಿರುಗಿಹೋದ ಆ ದಿನದಿಂದ ಮೊದಲುಗೊಂಡು ಲಕ್ಕಮ್ಮನಿಗೆ ತನ್ನ ಪರವಾದ ತನ್ನ ಅತ್ತಿಗೆಯ ವರ್ತನೆಯಲ್ಲಿ ತುಂಬ ವ್ಯತ್ಯಸ್ತವಾದ ಪರಿವರ್ತನೆಯನ್ನು ಕಂಡು ಆಶ್ಚರ್ಯಮಿಶ್ರವಾದ ಸಂತೋಷವುಂಟಾಗಿತ್ತು. +ಹೂವಳ್ಳಿಯಲ್ಲಿ ಪ್ರಾರಂಭವಾಗಿ, ಕೋಣೂರಿನಲ್ಲಿ ಬೆಳೆದು, ಸಿಂಬಾವಿಯಲ್ಲಿ ಪರಿಪಕ್ವವಾಗಿದ್ದ ತನ್ನ ವ್ಯೂಹವನ್ನು ಜಯಪ್ರದವಾಗಿ ಕೊನೆಗಾಣಿಸುತ್ತೇನೆಂಬ ಹಿಗ್ಗಿನಿಂದ ಹಿಂಬರುತ್ತಿದ್ದ ತಿಮ್ಮಪ್ಪಗೆ ಹುಲಿಕಲ್ಲು ನೆತ್ತಿಯ ಇಳಿಜಾರಿನಲ್ಲಿ ಕಲ್ಲುಮಂಟಪದ ಕಡೆಗೆ ಹೋಗುತ್ತಿದ್ದವರ ಗುಂಪು-ಮುಕುಂದಯ್ಯ, ಐತ ಮತ್ತು ಗುತ್ತಿ-ಸಿಕ್ಕಿತ್ತು. +ಉಡುಪಿನಿಂದ ಮದುಮಗನಂತೆ ಡೌಲಾಗಿ ಕಾಣುತ್ತಿದ್ದ ತಿಮ್ಮಪ್ಪನನ್ನು ಕಂಡು, ಮುಕುಂದಯ್ಯನಿರಲಿ, ಐತ ಗುತ್ತಿಯರು ಕೂಡ ಮುಗುಳುನಕ್ಕಿದ್ದರು. +ಅಂತಹ ಅನನ್ವಯ ಎದ್ದು ಕಾಣುತ್ತಿತ್ತು, ಹಿಂದಿನ ತರುಣ ತಿಮ್ಮಪ್ಪಗೂ ಇಂದಿನ ಯುವಕ ತಿಮ್ಮಪ್ಪಹೆಗ್ಗಡೆಯವರಿಗೂ! +ಮೋಡ ದಟ್ಟಯಿಸಿತ್ತು; +ಮಳೆ ಸುರಿಯುತ್ತಿತ್ತು; +ಬೈಗು ಕಪ್ಪಾಗುತ್ತಿತ್ತು. +ಐತ ಹಿಡಿದಿದ್ದ ಲಾಟೀನು ಬೆಳಕೋ ಆ ವರ್ಷಕಾಲದ ನಿಬಿಡಾರಣ್ಯದ ಹಳುವಿನಲ್ಲಿ ನೆಪ ಮಾತ್ರಕ್ಕೆ ಬೆಳಕಾಗಿತ್ತು. +ಆದರೂ ತಿಮ್ಮಪ್ಪಹೆಗ್ಗಡೆ ಅವರ ಸಂಗಡ ಆ ಕಲ್ಲು ಮಂಟಪದ ನಿಭೃತಸ್ಥಾನಕ್ಕೆ ಹೋಗಿ ಅದನ್ನು ವಾಸಯೋಗ್ಯವನ್ನಾಗಿ ಮಾಡುವ ಸಾಹಸದಲ್ಲಿ ಅವರಿಗೆ ನೆರವಾಗಿದ್ದನು. +ತಮ್ಮ ಕೆಲಸವನ್ನೆಲ್ಲ ತಕ್ಕಮಟ್ಟಿಗೆ ಮುಗಿಸಿ ಅವರು ಹಿಂದಿರುಗಿದಾಗ ರಾತ್ರಿ ಬಹಳ ದೂರ ಸಾಗಿತ್ತು. +ಗಟ್ಟದ ತಗ್ಗಿನವರ ಬಿಡಾರಗಳು ಸಮೀಪಿಸಿದಾಗ, ಐತ ತನ್ನ ಕೈಲಿದ್ದ ಲಾಟೀನನ್ನು ಗುತ್ತಿಯ ಕೈಗೆ ಕೊಟ್ಟು, ತನ್ನ ಬಿಡಾರಕ್ಕೆ ಬಂದಿದ್ದನು. +ಗುತ್ತಿ ತಿಮ್ಮಪ್ಪ ಮತ್ತು ಮುಕುಂದಯ್ಯರಿಗೆ ಬೆಳಕುಹಿಡಿದು ದಾರಿತೋರುತ್ತಾ ಮುಂಬಾಲಿಸಿ, ಕೋಣೂರು ಮನೆಗೆ ಹೋಗಿ, ತಂಗಳುಂಡು, ಕಂಬಳಿ ಬಟ್ಟೆಗಳನ್ನು ಮುರುವಿನ ಒಲೆಯ ಬೆಂಕಿಯಲ್ಲಿ ಒಣಗಿಸಿಕೊಂಡು, ಐತನ ಬಿಡಾರಕ್ಕೆ ಬಂದಿದ್ದನು…. +ದೊಡ್ಡಣ್ಣಹೆಗ್ಗಡೆ ಮತ್ತು ಅವರ ಧರ್ಮಪತ್ನಿ ರಂಗಮ್ಮಹೆಗ್ಗಡಿತಿ ಅವರ ಶವ ಸಂಸ್ಕಾರಾನಂತರ ಹಳೆಮನೆಯ ಹೊಲೆಗೇರಿಯಲ್ಲಿ ತಲೆಮರೆಸಿ ಕೊಂಡಿದ್ದ ಗುತ್ತಿ ಶಂಕರಹೆಗ್ಗಡೆಯವರ ಹೆಂಚಿನ ಮನೆಯಲ್ಲಿ ತನ್ನ ಸಿಂಬಾವಿ ಒಡೆಯರನ್ನು ಸಂಧಿಸಿದ್ದನಷ್ಟೆ? +ಒಡೆಯರು ಅವನಿಗೆ ಕೆಲವು ಕಾಲ ದೂರ ಓಡಿಹೋಗಿ ತಲೆತಪ್ಪಿಸಿಕೊಂಡಿರು ಎಂದು ಸಲಹೆ ಕೊಟ್ಟಿದ್ದರು. +ಆದರೆ ತನ್ನ ಹೆಂಡತಿ ತಿಮ್ಮಿಯನ್ನು, ತನ್ನ ಜೊತೆಗೆ ಕರೆದುಕೊಂಡು ಹೋಗಲು ಆಗದಿದ್ದರೂ, ಒಮ್ಮೆಯಾದರೂ ಹೇಗಾದರೂ ಸಂಧಿಸಿ ಅವಳಿಗೆ ಹೇಳುವುದನ್ನೆಲ್ಲ ಹೇಳಿಯಾದರೂ ಹೋಗಬೇಕೆಂದು ನಿರ್ಣಯಿಸಿ, ಯಾರಿಗೂ ಗೊತ್ತಾಗದಂತೆ ಇರುಳಿನಲ್ಲಿ ಕೋಣೂರಿಗೆ ಹೋಗಿ ಐತನನ್ನು ಕೇಳಿಕೊಂಡಿದ್ದನು, ತನಗೆ ನೆರವಾಗಬೇಕು ಎಂದು. +ಐತ ಆ ವಿಚಾರವನ್ನು ಮುಕುಂದಯ್ಯನಿಗೆ ತಿಳಿಸಿದಾಗ, ಅವನು ಗುತ್ತಿಯನ್ನು ತನ್ನಲ್ಲಿಗೆ ಕರೆಯುವಂತೆ ಮಾಡಿ, ದುಡುಕಿ ಓಡಿಹೋಗಬೇಡ ಎಂದು ಅವನಿಗೆ ಧೈರ್ಯಹೇಳಿ, ಚಿನ್ನಮ್ಮನನ್ನು ಅವಳಿಗೆ ಒದಗಲಿರುವ ಸಂಕಟದಿಂದ ಪಾರುಮಾಡುವ ಉದ್ಯಮದಲ್ಲಿ ತನಗೆ ಸೇವೆ ಸಲ್ಲಿಸುವಂತೆಯೂ, ತಾನು ಅವನಿಗೆ ಪೋಲೀಸರಿಂದ ಒದಗಬಹುದಾದ ಕಷ್ಟವನ್ನು ಪರಿಹರಿಸುವುದಾಗಿಯೂ ಮಾತುಕೊಟ್ಟನು. +ಹಾಗೆ ಮಾತು ಕೊಡಲು ಸಾಕಷ್ಟು ಆಧಾರ ಅವನಿಗೆ ದೇವಯ್ಯನಿಂದ ಆಗಲೆ ತಿಳಿದಿತ್ತು. +ಆ ಪೋಲೀಸಿನವರನ್ನು ಕಂಪದಿಂದ ರಕ್ಷಿಸಿ, ಅವರನ್ನು ಗಾಡಿಯ ಮೇಲೆ ತೀರ್ಥಹಳ್ಳಿಗೆ ಕರೆದುಕೊಂಡು ಹೋಗುತ್ತಿದ್ದಾಗಲೆ ಅವರು ತಿಳಿಸಿದ್ದರು. +ಅದನ್ನೆಲ್ಲ ಅಲ್ಲಿಗೆ ಕೈಬಿಡುತ್ತೇವೆ; +ಕೇಸು ಮುಂದುವರಿಸಲು ಸಾಕಷ್ಟು ಆಧಾರವೆ ಇಲ್ಲ ಎಂದು. +ಹುಲಿಕಲ್ಲು ನೆತ್ತಿಯ ಕಲ್ಲುಮಂಟಪವನ್ನು ಹೂವಳ್ಳಿ ಚಿನ್ನಮ್ಮನ ಅಡಗುದಾಣವನ್ನಾಗಿ ಆರಿಸಿಕೊಳ್ಳುವುದಕ್ಕೂ ಬಹುಮಟ್ಟಿಗೆ ಗುತ್ತಿಯೆ ಕಾರಣವಾಗಿದ್ದನು. +ಮೇಗರವಳ್ಳಿಯ ಕಡೆಗೆ ಹೋಗುವ ಕಾಲುದಾರಿಯ ದಿಕ್ಕಿನಿಂದ ಅದನ್ನು ಏರಲೂ ಸೇರಲೂ ಸುಖಿಯಾಗಿ ಬೆಳೆದಿದ್ದ ಹೆಣ್ಣುಮಗಳಿಗೆ ಕಷ್ಟಸಾಧ್ಯವೆಂದು ಗುತ್ತಿ ಸ್ವಲ್ಪ ಬಳಸಿನದ್ದಾದರೂ ಮತ್ತೊಂದು ಕಡಿದಲ್ಲದ ದಾರಿಯನ್ನು ಸೂಚಿಸಿದ್ದನು. +ಮದುವೆಯ ದಿನಕ್ಕೆ ಮುನ್ನವೆ ತಾನೇ ಆ ದಾರಿಯನ್ನು ಯಾರಿಗೂ ಗೊತ್ತಾಗದಂತೆ ಸವರಿಕೊಡುವುದಾಗಿಯೂ ಭರವಸೆ ಕೊಟ್ಟಿದ್ದನು…. +ಬೆಳಕು ಬಿಡುವುದಕ್ಕೆ ಮೊದಲೆ ಯಾರ ಕಣ್ಣಿಗೂ ಬೀಳದಂತೆ ತಾನು ಹುಲಿಕಲ್ಲು ನೆತ್ತಿಯ ಕಲ್ಲುಮಂಟಪವನ್ನು ಸೇರಿಕೊಳ್ಳಬೇಕೇಂಬುದು ಗುತ್ತಿಯ ನಿಶ್ಚಯವಾಗಿತ್ತು. +ಈಗ ದೇವರೆ ನಡೆಸಿಕೊಟ್ಟಂತೆ ಅಕಸ್ಮಾತ್ತಾಗಿ ತಿಮ್ಮಿಯೂ ತನ್ನನ್ನು ಸೇರಿದುದರಿಂದ ಆ ಹೊಣೆಯ ಹೊರೆ ಇಮ್ಮಡಿಸಿತ್ತು. +ರಾತ್ರಿ ಸಿಕ್ಕದಿದ್ದ ಅವಳಿಗಾಗಿ ಬೆಳಗಾದಮೇಲೆ ಪತ್ತೆ ತರದೂದು ಜೋರಾಗಿ ನಡೆಯುತ್ತದೆ ಎಂದೂ ಅವನಿಗೆ ಗೊತ್ತಿತ್ತು. +ಆದ್ದರಿಂದ ಬೆಳಗಿನ ಜಾವ ಕತ್ತಲೆಯಲ್ಲಿಯೆ ಎದ್ದು ಅವಳನ್ನೂ ಕರೆದುಕೊಂಡು ಹೊರಟುಬಿಡಬೇಕೆಂದು ಗಟ್ಟಿಮನಸ್ಸು ಮಾಡಿ ಮಲಗಿದ್ದನು. +ಆದರೆ ದಿನವೆಲ್ಲ ದಣಿದು ರಾತ್ರಿಯೂ ಬಹಳ ಹೊತ್ತಾದ ಮೇಲೆ ಮಲಗಿದ್ದ ಆ ನಾಲ್ವರು ಜೋಡಿ ದಂಪತಿಗಳಿಗೆ  ವರ್ಷಾಕಾಲದ ಸಹಜವಾದ ಗಾಢನಿದ್ರೆ ಹತ್ತಿತ್ತು. +ಅರಿಷಡ್ವರ್ಗಮಯವಾದ ಮನುಷ್ಯಜೀವನ ವ್ಯಾಪಾರಗಳ ಯಾವ ಅರಿವೂ ಗೊಂದಲವೂ ಇಲ್ಲದೆ, ಪೀಂಚಲು ಮೂಲೆಗೆ ತಳ್ಳಿ ಕವುಚಿ ಹಾಕಿದ್ದ ಬುಟ್ಟಿಯೊಳಗಡೆ ಹೇಟೆ ಮರಿಗಳೊಡನೆ ನಿರುಂಬಳವಾಗಿ ನಿದ್ರಿಸುತ್ತಿದ್ದ ಹುಂಜಕ್ಕೆ ಪ್ರಕೃತಿಸಹಜವಾದ ಕೊನೆಯ ಜಾವದ ಜಾಗ್ರತಿಯುಂಟಾಗಿ, ಬುಟ್ಟಿಯೊಳಗಡೆಯೆ ಕೊಕ್ಕೊಕ್ಕೋ ಎಂದು ಕೂಗಿಕೊಳ್ಳಲು ತೊಡಗದೆ ಇದ್ದಿದ್ದರೆ, ಗುತ್ತಿ ತಿಮ್ಮಿಯರ ಬದುಕಿನಲ್ಲಿ ಏನೇನು ಕಷ್ಟ ಸಂಕಟ ಪ್ರಳಯಕ್ರಾಂತಿಗಳೆ ಜರುಗುತ್ತಿದ್ದವೊ ಯಾರಿಗೆ ಗೊತ್ತು? +ಆ ಪ್ರಜ್ಞೆಗೂ ಅರಿವಿಗೂ ದೂರವಾಗಿದ್ದ ಗುತ್ತಿ, ಹುಂಜನ ಪ್ರಚ್ಛನ್ನ ಉಪಕಾರಕ್ಕೆ ಕೃತಜ್ಞನಾಗುವುದಕ್ಕೆ ಬದಲಾಗಿ, ನಿದ್ರಾಭಂಗ ಮಾಡಿದುದಕ್ಕೆ ಅದನ್ನು ಶಪಿಸುತ್ತಾ ಎದ್ದು, ತಿಮ್ಮಿಯನ್ನೂ ಎಬ್ಬಿಸಿದನು, “ಇದರ ಗಂಟಲು ಕಟ್ಟಿಹೋಗಕೆ, ಏನು ಬಡುಕೊಳ್ತದೆಯೋ! +ಏಳೇ, ಹೊತ್ತಾತು. +ಬೆಣಕು ಬಿಡಾಕೆ ಮುಂಚೇನೆ ಹೋಗಾನ್!”ಗುತ್ತಿ ತಿಮ್ಮಿಯರು ಎದ್ದುದನ್ನು ಅರಿತ ಪೀಂಚಲವೂ ಎದ್ದು, ಕತ್ತಲೆಯ ಮರೆಯಲ್ಲಿ ಬಿಚ್ಚಿ ತಲೆಯಡಿ ಇಟ್ಟುಕೊಂಡಿದ್ದ ಸೀರೆಯನ್ನು ಬೇಗಬೇಗನೆ ಸುತ್ತಿಕೊಂಡು, ಐತನನ್ನು ಏಳುವಂತೆ ಹೇಳಿದಳು. +ಅವನು ಮಾತ್ರ ಕಂಬಳಿಯನ್ನು ಇನ್ನೂ ಬಲವಾಗಿ ಸುತ್ತಿ ಹೊದ್ದುಕೊಂಡು ಗೊಣಗಿದನಷ್ಟೆ! +ತಿಮ್ಮಿ ಪೀಂಚಲು ಕೊಟ್ಟಿದ್ದ ಸೀರೆಯನ್ನು ಬಿಚ್ಚಿಟ್ಟು, ಆರಿದ್ದ ತನ್ನ ಸೀರೆಯನ್ನೇ ಉಟ್ಟುಕೊಳ್ಳುತ್ತೇನೆ ಎಂದಾಗ,- ’ಫಕ್ಕನೆ ಯಾರಾದರೂ ನೋಡಿದರೂ ಗಟ್ಟದ ತಗ್ಗಿನವಳೆಂದು ನಿನ್ನನ್ನು ಗುರುತಿಸುವುದಿಲ್ಲ; +ಅದನ್ನೆ ಉಟ್ಟುಕೊಂಡು ಹೋಗು; +ನಿನ್ನ ಸೀರೆಯನ್ನೂ ತೆಗೆದುಕೊಂಡು ಹೋಗು’ ಎಂದಳು ಪೀಂಚಲು. +ಗುತ್ತಿ ಬೇಡ ಬೇಡ ಎಂದರೂ ಪೀಂಚಲು ’ಅವಳು ದಣಿದಿದ್ದಾಳೆ, ನಿನ್ನೆ ರಾತ್ರಿಯೆಲ್ಲ ಓಡಿಯಾಡಿ. +ನೀನು ಗೌಡರ ಮನೆಯಲ್ಲಿ ಚೆನ್ನಾಗಿ ತಂಗಳುಂಡು ಬಂದಿದ್ದಿ!’ ಎಂದು ಬೇಗ ಬೇಗನೆ ರಾತ್ರಿ ಉಳಿದಿದ್ದ ತಂಗಳನ್ನಷ್ಟು ಬುತ್ತಿಮಾಡಿ ಕೊಟ್ಟಳು, ತಿಮ್ಮಿಯ ಕೈಗೆ. +ಕಂಬಳಿಯೊಳಗಿನಿಂದಲೆ ಐತ ತಾನು ಬೆಳಕು ಬಿಟ್ಟಮೇಲೆ ಬರುವುದಾಗಿಯೂ, ಸಾಮಾನು ತರುವುದಾಗಿಯೂ ಕೂಗಿ ಹೇಳಿದನು ಗುತ್ತಿಗೆ. +ಇರುಳೆಲ್ಲ ಹೊಯ್ದಿದ್ದ  ಮಳೆ ಬೆಳಗಿನ ಜಾವದಲ್ಲಿ ನಿಂತಿತ್ತು. +ಕವಿದಿದ್ದ ಮೋಡಗಪ್ಪಿನ ಕತ್ತಲೆ ಬೆಳಗನ್ನಿದಿರು ನೋಡುವಂತಿತ್ತು. +ಗುತ್ತಿ, ತಿಮ್ಮಿ ಮತ್ತು ಹುಲಿಯ ಮೂವರು ನಿಃಶಬ್ದವಾಗಿ ಹುಲಿಕಲ್ಲು ನೆತ್ತಿಯ ಕಡೆಗೆ ಕಾಡು ಹತ್ತಿ ಹೋದರು. +ಬಿಡಾರದ ತಟ್ಟಿಬಾಗಿಲನ್ನು ಹಾಕಿ, ಕಟ್ಟಿ, ಪೀಂಚಲು ಮತ್ತೆ ಐತನ ಕಂಬಳಿಯೊಳಗೆ ಹೊಕ್ಕಳು. +ಪಾದ್ರಿ ತನ್ನ ಕಿವಿಯಲ್ಲಿ ಏನನ್ನೊ ಹೇಳಲು ಅವನಿಗೆ ತನ್ನ ಬೈಸಿಕಲ್ಲನ್ನು ಕೊಟ್ಟು, ಹಳೆಮನೆ ಸುಬ್ಬಣ್ಣಹೆಗ್ಗಡೆಯವರನ್ನು ಕೂರಿಸಿಕೊಂಡು ಬೆಟ್ಟಳ್ಳಿಗೆ ಹೊರಟ್ಟಿದ್ದ  ತಮ್ಮ ಕಮಾನುಗಾಡಿಯನ್ನು ಹಿಂಭಾಗದಿಂದಲೆ ಹತ್ತಿ ಕುಳಿತ ದೇವಯ್ಯನು ಕಾಡಿನ ನಡುವಣ ರಸ್ತೆಯ ತಿರುಗಣೆಯಲ್ಲಿ ಕಣ್ಮರೆ ಯಾಗಲು, ಉಣುಗೋಲನ್ನು ದಾಟಿ ರಸ್ತೆಯ ಅಂಚಿನಲ್ಲಿ, ತಾಯಿ ಅಂತಕ್ಕನ ಪಕ್ಕದಲ್ಲಿ, ನಿಂತು ಎವೆಯಿಕ್ಕದೆ ನೋಡುತ್ತಿದ್ದ ಕಾವೇರಿ ಮೌನವಾಗಿಯೆ ನಿಟ್ಟುಸಿರೆಳೆದು, ತನ್ನಂತೆಯೆ ನಿಡುಸುಯ್ದು ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಿದ್ದ ತಾಯಿಯೊಡನೆ ಮನೆಯೊಳಕ್ಕೆ ನಡೆದಳು. +ಅಂಗಳದ ಒಳಗಡೆಯೆ ಒಡ್ಡಿನ ಬದಿ ನಿಂತಿದ್ದ ಚೀಂಕ್ರ ಸೇರೆಗಾರನು ತಾಯಿಯನ್ನೂ ಮಗಳನ್ನೂ ಮುಗುಳುನಗೆವೆರಸಿ ನೋಡುತ್ತಿದ್ದು “ನಾನೆ ಹಾಕ್ತೆ; ನೀವು ಹೋಯಿನಿ” ಎಂದು, ತಾನೆ ಉಣುಗೋಲಿನ ಗಳುಗಳನ್ನು ಕಂಬದ ತೂತುಗಳಿಗೆ ನೂಕಿ ಹಾಕಿ ಭದ್ರ ಮಾಡಿದನು. +“ಹಾಂಗಾರೆ ನಾನು ಹೋತೆ; ಬೈಗಾಯಿತ್ತು” ಎಂದು ಹೇಳಿ ಬೀಳುಕೊಂಡು, ತಡಬೆಯನ್ನು ಹತ್ತಿ ದಾಟುತ್ತಿದ್ದನು. +“ಕೋಣೂರ ಬಿಡಾರಕ್ಕೆ ಹೋಗುತ್ತೀಯಾ?ಕಪ್ಪಾಯ್ತಲ್ಲೋ? +ಹುಲಿಕಲ್ಲು ಗುಡ್ಡಹತ್ತಿ ಇಳೀಬೇಕಲ್ಲಾ?”ಅಂತಕ್ಕನ ಔಪಚಾರಿಕ ಪ್ರಶ್ನೆಗೆ ಚೀಂಕ್ರ “ಮತ್ತೇನು ಮಾಡು ಲಕ್ಕು? +ಬಿಡಾರದಲ್ಲಿ ಮಕ್ಕಳಿವೆಯಲ್ಲಾ? +ಏನೋ ಆ ಅಕ್ಕಣಿ, ಮಕ್ಕಳಿಗೆ ತಾಯಿಯಾಗಿ ನೋಡಿಕೊಳ್ಳುತ್ತಿದ್ದಾಳೆ. +ಇಲ್ಲದಿದ್ದರೆ ಅವು ಕೂಳಿಲ್ಲದೆ ಸಾಯ ಬೇಕಾಗಿತ್ತು….”ಎನ್ನುತ್ತಲೆ ತಡಬೆ ಹೆದ್ದಾರಿಗಿಳಿದನು. +“ಯಾರೋ ಅದು?ಪುಣ್ಯಾತಗಿತ್ತಿ! +ನಿನಗೆ ಏನಾಗಬೇಕೊ?” +“ಏನು ಆಗಬೇಕಿಲ್ಲ. +ನನ್ನ ಬಿಡಾರದ ಬದಿಯಲ್ಲೆ ಬಿಡಾರ ಮಾಡಿಕೊಂಡಿದಾನಲ್ಲಾ ಆ ಪಿಜಿಣ? +ಅವನ ಬುಡದಿ….”ಮುಂದೆ ಮಾತಿಗೆ ಅವಕಾಶ ಕೊಡದಷ್ಟು ಅವಸರದಲ್ಲಿ ಹೊರಟು ಹೋಗಿದ್ದನು ಸೇರೆಗಾರ ಚೀಂಕ್ರ. +ತಾಯಿ ಚೀಂಕ್ರನೊಡನೆ ಮಾತಾಡುತ್ತಿದ್ದಾಗಲೆ ಅದರಲ್ಲಿ ಸಂಪೂರ್ಣ ಅನಾಸಕ್ತಳಾಗಿ ಕಾವೇರಿ ತನ್ನ ಕೋಣೆಗೆ ಧಾವಿಸಿದ್ದಳು. +ಬಾಗಿಲು ಹಾಕಿಕೊಂಡವಳೆ ಕೈ ನೋಡಿಕೊಂಡಳು. +ಹೌಹಾರಿ ದಿಗಿಲುಬಿದ್ದಳು. +ಮತ್ತೆ ಬಾಗಿಲು ತೆರೆದು ಮುಂಚೆಕಡೆಗೆ ಬಂದು ಅಲ್ಲಿ ಇಲ್ಲಿ ನೆಲದ ಕಡೆ ನೋಡಿ ಹುಡುಕಿದಳು. +ಅಂಗಳಕ್ಕೂ ಇಳಿದು ಕಸಬಿದ್ದಿದ್ದ ನೆಲವನ್ನೆಲ್ಲ ಬಗ್ಗಿ ಹುಡುಕಿದಳು. +ಉಣುಗೋಲು ಬಳಿಯೂ ಹೋಗಿ ಬಾಗಿ ನೋಡಿದಳು. +ಮತ್ತೆ ಹಿಂದಕ್ಕೆ ಬಂದು, ಬಾಗಿಲು ಸಂಧಿಯಲ್ಲಿ ಕತ್ತಲೆಯಾಗಿದ್ದುದರಿಂದ ಕೈಯಿಂದಲೆ ನೆಲ ತಡವಿ ಹುಡುಕಾಡಿದಳು. +ಮತ್ತೆ ಅಡುಗೆ ಮನೆಗೆ ಓಡಿ, ಚಿಮಿಣಿ ಹೊತ್ತಿಸಿ, ಅದನ್ನು ಹಿಡಿದು, ಅದರ ಬೆಳಕಿನಲ್ಲಿ ಜಗಲಿ ಅಂಗಳಗಳನ್ನೆಲ್ಲ ಸೋವಿದಳು. +ಎಲ್ಲಿಯೂ ಕಾಣಿಸಲಿಲ್ಲ, ಆ ದಿನ ಪೂರ್ವಾಹ್ನದಲ್ಲಿ ಕೋಣೆಯೊಳಗೆ ತನ್ನನ್ನು ಮುದ್ದುಮಾಡುತ್ತಾ ದೇವಯ್ಯಗೌಡರು ತನ್ನ ಕೈಬೆರಳಿಗೆ ತೊಡಿಸಿದ್ದ ಹರಳಿನ ಹೊನ್ನುಂಗುರ! +ಕಡೆಗೆ ಕೋಣೆಯ ಬಾಗಿಲು ಹಾಕಿಕೊಂಡು ಕುಳಿತು ಬಿಕ್ಕಿಬಿಕ್ಕಿ ಅಳತೊಡಗಿದಳು. +ದೇವಯ್ಯಗೌಡರ ಉಂಗುರ ಅವಳ ಬೆರಳಿಗೆ ಸಡಿಲವಾಗಿದ್ದುದೇನೊ ನಿಜ. +ಒಂದೆರಡು ಸಾರಿ ಕಳಚಿಬಿದ್ದಾಗಲೂ ಅದನ್ನೆತ್ತಿ ಮತ್ತೆ ಹಾಕಿಕೊಂಡಿದ್ದಳು ಕಾವೇರಿ. +ಅವಳ ತಾಯಿ ಎಚ್ಚರಿಕೆ ಹೇಳಿದ್ದರೂ ಲಕ್ಷಿಸದೆ ತನ್ನ ಮೋಹದ ಆ ಸುಂದರ ಅನರ್ಘ್ಯವಸ್ತುವನ್ನು ಬೆರಳಿನಿಂದ ಕಳಚಿ ಇಡಲು ಇಷ್ಟಪಟ್ಟಿರಲಿಲ್ಲ. +ಆ ಬೆರಳನ್ನು ತುಸು ಕೊಂಕಿಸುವುದರ ಮೂಲಕ ಉಂಗುರ ಜಾರಿಬೀಳದಂತೆ ಜಾಗರೂಕತೆಯಿಂದ ಇದ್ದಳು. +ಆದರೆ ತುದಿಯಲ್ಲಿ, ಸುಬ್ಬಣ್ಣಹೆಗ್ಗಡೆಯವರನ್ನು ಗಾಡಿಗೆ ಸಾಗಿಸುವ ಸಮಯದ ಅಡಾವುಡಿಯಲ್ಲಿ, ಅದು ಎಲ್ಲಿ ಕಳಚಿ ಬಿತ್ತೆಂಬುದು ಅವಳ ಪ್ರಜ್ಞೆಗೆ ಬಂದಿರಲಿಲ್ಲ. +ಬಿದ್ದದ್ದಾದರೂ ಎಲ್ಲಿಗೆ ಹೋಗಬೇಕು? +ಅಲ್ಲೆ ಎಲ್ಲಿಯೊ ಬಿದ್ದಿರಬೇಕು, ಇಲ್ಲವೆ ಯಾರಾದರೂ ಎತ್ತಿಕೊಂಡಿರಬೇಕು. +ಎಲ್ಲೆಲ್ಲಿಯೊ ದೀಪ ಹಚ್ಚಿಕೊಂಡು ಹುಡುಕಿಯಾಯ್ತು. +ಹಾಗಾದರೆ ಯಾರಾದರೂ ಎತ್ತಿಕೊಂಡಿರಬೇಕು. +ಯಾರು? ಆಗ ಅಲ್ಲಿದ್ದವರೆಂದರೆ ಪಾದ್ರಿ, ಸುಬ್ಬಣ್ಣಹೆಗ್ಗಡೆ, ದೇವಯ್ಯ, ಗಾಡಿ ಹೊಡೆಯುವ ಬಚ್ಚ, ಸೇರೆಗಾರ ಚೀಂಕ್ರ, ಐಗಳು ಅನಂತಯ್ಯ, ಕೆಲಸದ ಹುಡುಗ ಕೊರಗ. +ಉಳಿದವರೆಲ್ಲ ಒಡ್ಡಿನ ಆಚೆಯ ರಸ್ತೆಯಲ್ಲಿದ್ದರು. +ಸೇರೆಗಾರ ಚೀಂಕ್ರ ಅವರೆದುರೆ, ಅವರಿಗೆ ಹೇಳಿಯೇ ಹೋಗಿದ್ದಾನೆ. +ಕೆಲಸದ ಹುಡುಗ ಕೊರಗನನ್ನು ಹೆದರಿಸಿ “ಒಳ್ಳೆ ಮಾತಿನಲ್ಲಿ ಉಂಗುರ ಕೊಡುತ್ತೀಯೊ ಇಲ್ಲವೊ?” ಎಂದು ಕೇಳಿದರು. +ಅವನು ದಮ್ಮಯ್ಯಗುಡ್ಡೆ ಹಾಕುತ್ತಲೇ ತಾನು ಅದನ್ನು ದೇವರಾಣೆಗೂ ಕಾಣಲಿಲ್ಲ ಎಂದನು. +ದೇವರಿಗೆ ಸುಳಿಸಿದ ತೆಂಗಿನ ಕಾಯನ್ನೂ ಮುಟ್ಟಿಸಿ ಪ್ರಮಾಣ ಮಾಡುವಂತೆ ಹೇಳಿದರು. +ಅವನು ಅದನ್ನೂ ಧೈರ್ಯವಾಗಿಯೆ ಮಾಡಿಬಿಟ್ಟು ತನ್ನ ಪ್ರಮಾಣಿಕತನವನ್ನು ಸ್ಥಾಪಿಸಿಕೊಂಡನು. +ಕೊನೆಗೆ ಇನ್ನೇನೂ ತೋರದೆ, ಧರ್ಮಸ್ಥಳದ ಅಣ್ಣಪ್ಪ ಭೂತರಾಯಗೆ “ನೋಡೋಣ, ಅಣ್ಣಪ್ಪ ದೇವರಿಗೆ ಶಕ್ತಿ ಇದ್ದಲ್ಲಿ ಉಂಗುರ ಎಲ್ಲಿಗೆ ಹೋಗುತ್ತದೆ?” ಎಂದು ಹೇಳಿಕೊಂಡು, ಮುಡಿಪು ಕಟ್ಟಿದರು. +ಉಂಗುರದ ಅನ್ವೇಷಣೆಯಾಗಲಿ ವಿಚಾರಣೆಯಾಗಲಿ ಹೆಚ್ಚಿನ ಗುಲ್ಲಿಗೂ ಹೋಗುವಂತಿರಲಿಲ್ಲ; +ಏಕೆಂದರೆ ಅದು ಅಕ್ರಮಾತಿಕ್ರಮದ ಪ್ರಣಯ ಪ್ರಪಂಚದ ಗೋಪ್ಯ ವಲಯಕ್ಕೆ ಸೇರಿದುದಾಗಿತ್ತು. +ಬೆಟ್ಟಳ್ಳಿ ದೇವಯ್ಯಗೌಡರು ಅಂತಕ್ಕನ ಮಗಳು ಕಾವೇರಿಯ ಬೆರಳಿಗೆ ತೊಡಿಸಿದ್ದ  ಹರಳಿನ ಹೊನ್ನುಂಗುರ ಕಳುವಾಯಿತಂತೆ ಎಂಬ ಸುದ್ದಿ ಹಬ್ಬಿದರೆ, ಯಾರ ಯಾರ ಎಲ್ಲೆಲ್ಲಿಯ ಸಂಬಂಧ ಬಾಂಧವ್ಯಗಳಲ್ಲಿ ಎಂತೆಂತಹ ದುರಂತವಾಗಲಿಕ್ಕಿಲ್ಲ? +ಕಾವೇರಿ ಹುಡುಕಿ ಸೋತು ಕೋಣೆಯಲ್ಲಿ ಬಿಕ್ಕಿಬಿಕ್ಕಿ ಅಳುತ್ತಿದ್ದಾಗ ಅವಳ ಹರಳುಂಗುರ ಚೀಂಕ್ರನ್ ಸೊಂಟದಲ್ಲಿ ಸುರಕ್ಷಿತವಾಗಿ ಪ್ರಯಾಣ ಮಾಡುತ್ತಿತ್ತು, ಕರ್ಮೀನು ಸಾಬರ ಅಂಗಡಿಗೆ. +ಅಂಗಳದಲ್ಲಿ ಕಳಚಿಬಿದ್ದು ಕಸದಲ್ಲಿ ಮರೆಯಾಗಿ ಬಿದ್ದಿದ್ದ ಅದನ್ನು ಅವನು ಎತ್ತಿಕೊಂಡು ಸೊಂಟದ ಪಂಚೆಯ ಮಡಿಕೆಯಲ್ಲಿ ಸಿಕ್ಕಿಸಿಕೊಂಡಿದ್ದನು. +ಯಾರಾದರೂ ನೋಡಿದ್ದರೆ ಅಥವಾ ವಿಚಾರಿಸಿದ್ದರೆ ಕೊಡುವ ಮನಸ್ಸಿನಿಂದಲೆ ಎತ್ತಿಕೊಂಡಿದ್ದನು. +ಆದರೆ ಯಾರೂ ನೋಡಲಿಲ್ಲ ಎಂದು ಗೊತ್ತಾದೊಡನೆ ಕಳುವ ಕಸುಬಿನಲ್ಲಿ ಪಳಗಿದ್ದ ಅವನ ಮನಸ್ಸು ಬದಲಾಯಿಸಿತ್ತು. +ಅವನು ಅಂಗಳದಿಂದ ಹೊರಡುವ ಮುನ್ನವೆ ಕಾವೇರಿಗೆ ತನ್ನ ಉಂಗುರ ಬಿದ್ದುಹೋದುದು ಗೊತ್ತಾಗಿ ಹುಡುಕಿದ್ದರಾಗಲಿ ವಿಚಾರಿಸಿದ್ದರಾಗಲಿ ಮನಸ್ಸು ಕರಗಿ ಕೊಡುತ್ತಿದ್ದನೇನೊ ಏನೋ? +ಏಕೆಂದರೆ ಹಸಲರವನಾಗಿ ಅಸ್ಪೃಶ್ಯಸದೃಶ್ಯನಾಗಿ ಹೊರಗೇ ನಿಲ್ಲುವ ಕೂಲಿಯಾಳಾಗಿದ್ದರೂ ಸೆಟ್ಟರ ಹುಡುಗಿಯ ರೂಪಕ್ಕೆ ಹುಟ್ಟು ಕಾಮುಕನಾಗಿದ್ದ ಅವನು ಗುಟ್ಟಾಗಿ ಸೋತಿದ್ದನು. +ಉಂಗುರವನ್ನು ಹುಡುಕಿ ಕೊಡುವ ನೆವದಿಂದಾದರೂ ಅವಳ ಮನಸ್ಸಿನಲ್ಲಿ ತುಸು ತಾವನ್ನು ಸಂಪಾದಿಸಲು ಪ್ರಯತ್ನಿಸುತ್ತಿದ್ದನೆಂದು ತೋರುತ್ತದೆ. +ಆದರೆ ತಾನು ಬಿಡಾರಕ್ಕೆ ಹೋಗುತ್ತೇನೆಂದು ಅಂತಕ್ಕನಿಗೆ ಹೇಳಿ, ತನ್ನ ಮೇಲಿನ ಗುಮಾನಿಗೆ ಅವಕಾಶವಿಲ್ಲದಂತೆ ಮಾಡಿ, ತಡಬೆ ದಾಟಿ ಹೊರಟ ಅವನಿಗೆ ಆದಷ್ಟು ಜಾಗ್ರತೆ, ಕಳವು ಮಾಲನ್ನು ಅಡವಿಟ್ಟುಕೊಳ್ಳುವ ಕಸುಬಿನಿಂದಲೆ ವಿಶೇಷವಾಗಿ ಐಶ್ವರ್ಯ ಸಂಪಾದಿಸುತ್ತಿದ್ದ, ಕರೀಂಸಾಬರಿಗೆ ಕೊಟ್ಟು ಪ್ರತಿಫಲ ಪಡೆದು ಕೈತೊಳೆದುಕೊಳ್ಳಲು ಹವಣಿಸಿ ಅವರ ಮಳಿಗೆಗೆ ಹೋದನು. +ಆದರೆ ಅವರು ಸಿಂಬಾವಿಯಲ್ಲಿ ಗಾಯಗೊಂಡು ಅಸ್ತಾವಸ್ತೆಯಲ್ಲಿದ್ದ ಇಜಾರದ ಸಾಬಿಗೆ ಇಲಾಜು ಮಾಡಿಸುವ ಮತ್ತು ಅವನನ್ನು ಆದಷ್ಟು ಬೇಗನೆ ತೀರ್ಥಹಳ್ಳಿಯ ಆಸ್ಪತ್ರೆಗೆ ಸಾಗಿಸುವ ಗಡಿಬಿಡಿಯಲ್ಲಿದ್ದರು. +ಕಣ್ಣಾಪಂಡಿತರು ತಮಗೆ ತಿಳಿದಂತೆ ಔಷಧಿ ಮಾಡುತ್ತಿದ್ದರು. +ಸ್ವಲ್ಪ ಹೊತ್ತಿನಲ್ಲಿಯೆ, ಸಿಂಬಾವಿಯಲ್ಲಿ ಇಜಾರದ ಸಾಬಿಗೆ ಒದಗಿದ್ದ ದುರ್ಘಟನೆಯ ವಿಷಯವನ್ನು ಕೇಳಿ, ದೇವಯ್ಯಗೌಡರ ಕಿವಿಗೆ ಅದನ್ನು ಉಸುರಿ, ಅವರ ಬೈಸಿಕಲ್ಲನ್ನು ಈಸಿಕೊಂಡಿದ್ದ ಜೀವರತ್ನಯ್ಯನವರೂ ಅಲ್ಲಿಗೆ ಧಾವಿಸಿದ್ದರು. +ಮೊದಮೊದಲು, ಏನೊ ಮಾತನಾಡುವುದಿದೆ ಎಂಬುದನ್ನು ದೂರದಿಂದಲೆ ಕಣ್ಣಿನಿಂದಲೆ ಸೂಚಿಸಿ ಚೀಂಕ್ರನು ಎಷ್ಟು ಪ್ರಯತ್ನಪಟ್ಟರೂ ಕರೀಂಸಾಬರು ಅದನ್ನು ಗಮನಿಸಿಯೂ, ಮನಸ್ಸಿಗೆ ಹಾಕಿಕೊಳ್ಳಲಿಲ್ಲ. +ಒಂದೆರಡು ಸಾರಿ ’ತನಗೆ ಕೆಲಸವಿದೆ ಈಗ ಆಗುವುದಿಲ್ಲ’ ಎಂದು ಗದರಿಸಿಯೂ ಬಿಟ್ಟರು. +ಆದರೆ ಅವನು ತನ್ನ ಸೊಂಟಕ್ಕೆ ಕೈಹಾಕಿ ಹಾಕಿ ತೆಗೆಯುವುದರ ಮುಖಾಂತರವೂ ಪುಡಿಸಾಬರೊಡನೆ ಹೇಳಿಕಳಿಸುವುದರ ಮುಖಾಂತರವೂ ಕಾರ್ಯದ ಶ್ರೀಮಂತಗುರುತ್ವವನ್ನು ಅವರ ಮನಸ್ಸಿಗೆ ಮಂದಟ್ಟು ಮಾಡಿದ ಮೇಲೆ ಹತ್ತಿರ ಬಂದು ವಿಚಾರಿಸಿದರು. +ಮನೆಯ ಹಿಂದಣ ಗುಟ್ಟಿನ ಕೋಣೆಗೆ ಕರೆದೊಯ್ದು ಹರಳುಂಗುರವನ್ನು ಕೈಗೆ ತೆಗೆದುಕೊಂಡರು. +ಒಡನೆಯೆ ಬೆಚ್ಚಿದರು. +ಮತ್ತೆ ಬೆಳಕಿಗೆ ಹಿಡಿದು ಚೆನ್ನಾಗಿ ಪರೀಕ್ಷಿಸಿದರು. +’ಅರೆ!ಅದೇ ಉಂಗುರ! +ತೊಲಗಿಸಲು ಎಷ್ಟು ಪ್ರಯತ್ನಪಟ್ಟರೂ ಮತ್ತೆ ಮತ್ತೆ ತನ್ನ ಬಳಿಗೆ ಬರುತ್ತಿದೆಯಲ್ಲಾ!…ಅನೇಕೆ ವರ್ಷಗಳ ಹಿಂದೆ…. +ತಾನಿನ್ನೂ ಯೌವನದಲ್ಲಿದ್ದಾಗ…. +ಇವರ ದರೋಡೆಯ ಗುಂಪು ಆಗುಂಬೆಯ ಘಾಟಿಯಲ್ಲಿ ನಡೆಸಿದ್ದ ಒಂದು ಕೊಲೆಯಲ್ಲಿ ದೊರಕಿದ್ದಲ್ಲವೆ? +ಹೊಸದಾಗಿ ಮದುವೆಯಾಗಿದ್ದ ದಂಪತಿಗಳು-ಸೊನಗಾರರಂತೆ! +ಗಟ್ಟದ ಮೇಲಣ ದುಡಿಮೆಯನ್ನು ಗಟ್ಟದ ಕೆಳಗಿದ್ದ ತಮ್ಮ ಊರಿಗೆ ಕೊಂಡೊಯ್ಯುತ್ತಿದ್ದರು…. +ತಾನು ತಡೆದರೂ ಕೇಳದೆ ಗಂಡನಿಗೆ ಚೂರಿಹಾಕಿ ಬಿಟ್ಟರು!ಪಾಪಿಗಳು! +ಆ ಹೆಂಗಸು, ಅಲ್ಲ ಹುಡುಗಿ, ಗೊಳೋ ಎಂದು ಕೂಗುತ್ತಾ ಅಬ್ಬರಿಗೇ ಹಾರಿಬಿಟ್ಟಳು! …. +ಅವಳ ಒಡಲೂ ಮುರಿದೂ ಮುದ್ದೆಯಾಗಿತ್ತು! +ಅವಳ ಮೈಮೇಲಿದ್ದ ಚೂರುಪಾರು ನಗವನ್ನೂ ಸುಲಿದಿದ್ದರು! …. +ಹಾಳು ನೆನಪು!ಈಗ ನೆನೆದರೇ ಮೈ ನಡುಗುತ್ತದೆ! …. +ಗಂಡನ ಬೆರಳಿನಲ್ಲಿದ್ದ ಈ ಉಂಗುರವನ್ನು ಕಲ್ಲೂರು ಸಾಹುಕಾರರಿಗೆ ದಾಟಿಸಿದ್ದೆ! …. +ಆ ಮಂಜಭಟ್ಟನೂ ಇಂತಹ ಕೆಟ್ಟ ಕಳ್ಳ ಕೊಲೆಯ ಮಾಲನ್ನೇ ಸಂಗ್ರಹಿಸಿ ಇಷ್ಟು ದೊಡ್ಡ ಸಾಹುಕಾರನಾಗಿದ್ದಲ್ಲವೆ? +ಇದು ಹೇಗೆ ಈ ಚೀಂಕ್ರನ ಕೈಗೆ ಬಂತು? +ಕದ್ದನೊ?ಕೊಲೆಗಿಲೆ ಮಾಡಿದನೊ?’-ಕೇಳಬೇಕೆನ್ನಿಸಿತು ಕರೀಂಸಾಬರಿಗೆ. + ಒಂದು ಅರ್ಧ ಕ್ಷಣಕ್ಕೂ ಕಡಮೆಯ ಕಾಲದಲ್ಲಿ ಆ ಉಂಗುರದ ಪೂರ್ವಕಥೆ ಮಿಂಚಿತ್ತು ಮನಸ್ಸಿನಲ್ಲಿ! +ಆದರೆ ಅವರ ಬಾಯಿಂದ ಹೊರಬಿದ್ದದ್ದೇ ಬೇರೆ. +“ಅಲ್ಲವೋ, ಚೀಂಕ್ರ ನಿನಗೆ ಎಲ್ಲಿ ಸಿಕ್ಕುತ್ತವೆಯೋ ಇಂಥ ಪಡಪೋಸಿ ಮಾಲು, ಬರೀ ಗಿಲೀಟು. +ಮೂರು ಕಾಸು ಬಾಳುವುದಿಲ್ಲ… +ಮೊನ್ನೆ ನೀನು ತಂದು ಕೊಟ್ಟ ಅಡಕೆಯೂ ಪಡಪೋಸಿಯದ್ದೆ! +ಹಸಿ ಅಡಕೆಯನ್ನೆ ತಟ್ಟೆಯಿಂದ ಹೊತ್ತು ತಂದಿದ್ದೆಯೋ ಏನೋ? …. + ಸರಿ. ಇರಲಿ ಬಿಡು. +ಆಮೇಲೆ ಮಾತಾಡುವಾ. +ಈಗ ನನಗೆ ಸಮಯ ಇಲ್ಲ. +ನಿನಗೆ ಏನು ಸಾಮಾನು ಬೇಕೋ ಅಂಗಡಿಯಿಂದ ತೆಗೆದುಕೊಂಡು ಹೋಗಿರು. +ಆಮೇಲೆ ಲೆಕ್ಕ ಮಾಡಿದರಾಯಿತು…” ಎಂದು ಮರುಮಾತಿಗೆಡೆಯಿಲ್ಲದಂತೆ ಒಳಗೆ ನಡೆದರು.’ +ಈ ಕರ್ಮೀನ ಸಾಬಿ ಪಕ್ಕಾ ತಾಯಿಗ್ಗಂಡ! +ಉಂಗುರ ಗಿಲೀಟಿನದಂತೆ? +ಅಡಕೆ ಹಸಿಯದಂತೆ! +ಗೌಡರ ಮನೆಯಲ್ಲಿ ಒಣಗಿಸಿ ಆರಿಸಿ ಇಟ್ಟಿದ್ದ ಹಸವನ್ನೆ ನಾನು ತಂದದ್ದು. +ನನಗೆ ಗೊತ್ತಿಲ್ಲವೆ ಅದರ ಬೆಲೆ? +ಅದು ಪಡಪೋಸಿ ಮಾಲಂತೆ! +ಇವನು ಹೇಳಿಬಿಟ್ಟರಾಯಿತೆ?’ ಎಂದು ಮನಸ್ಸಿನಲ್ಲಿಯೆ ಶಪಿಸುತ್ತಾ, ಚೀಂಕ್ರ ತನಗೆ ಬೇಕಾದ ಸಾಮಾನುಗಳನ್ನು ಮಳಿಗೆಯಿಂದ ಈಸಿಕೊಂಡು ಬಿಡಾರಕ್ಕೆ ಹೋಗಿದ್ದನು, ತುಂಬು ಕತ್ತಲೆಯಾದ ಮೇಲೆಯೆ. +ಕಳುವಿನ ವ್ಯಾಪಾರದಲ್ಲಿ ಚೌಕಾಸಿಗೆ ಅವಕಾಶವೆಲ್ಲಿ? +ಚೀಂಕ್ರನ ಬಿಡಾರದಲ್ಲಿ ಐತ ಒಂದು ಇರುಳು ಕಂಡಿದ್ದ ಔತಣದ ಸಂಭ್ರಮವೂ ಚೀಂಕ್ರನ ಈ ತೆರನ ಸಂಪಾದನೆಯಿಂದಲೆ ಸಂಭವಿಸಿತ್ತು! +ಅವನು ಮಾತ್ರ ಹೇಳುತ್ತಿದ್ದನು, ಮೇಗರವಳ್ಳಿಯಲ್ಲಿ ಕಂತ್ರಾಟು ಕೆಲಸ ಮಾಡಿ ದುಡ್ಡು ಮೊಗೆಯುತ್ತಿದ್ದೇನೆ ಎಂದು. +ಅವನ ಮಕ್ಕಳಿಗೆ ತಿಂಡಿ, ಬಟ್ಟೆ; ಅಕ್ಕಣಿಗೆ ಬಳೆ, ಸೀರೆ; +ಅಕ್ಕಣಿಯ ರೋಗಿಷ್ಠ ಗಂಡ ಪಿಜಿಣನಿಗೂ ಕಷ್ಟಕಾಲದಲ್ಲಿ ದುಡ್ಡು, ಕಾಸು, ಸಾರಾಯಿ-ಇತ್ಯಾದಿ ಎಲ್ಲ ವೆಚ್ಚಗಳಿಗೂ ಯಥೇಚ್ಚವಾಗಿತ್ತು ಚೀಂಕ್ರ ಸೇರೆಗಾರನ ಸಂಪಾದನೆ! +ಚೀಂಕ್ರ ಸಭ್ಯನಂತೆ ಸೋಗು ಹಾಕಿಕೊಂಡು, ಸಮಯ ಸಾಧಿಸಿ, ತನ್ನನ್ನು ನಂಬಿದವರು ಇತರರು ಎಂಬ ಭೇದವಿಲ್ಲದೆ ಕದಿಯುತ್ತಿದ್ದುದು ಮಾತ್ರವಲ್ಲದೆ, ಇತ್ತೀಚೆಗೆ ಹೊನ್ನಾಳಿ ಸಾಬರ ಗುಂಪಿನ ಸೆಳೆತಕ್ಕೂ ಸಿಕ್ಕಿ, ಹಾದಿಹೋಕರ ದರೋಡೆಗೂ ನೆರವಾಗಿ ಹೊಸ ತರಹದ ಸಂಪಾದನೆಗೂ ಶುರು ಮಾಡಿದ್ದನು. +ತಾನೇ ಹೊಡೆಯುವ, ಬಡಿಯುವ, ತಲೆಯೊಡೆಯುವ ಮತ್ತು ಚೂರಿಹಾಕುವ ಕೆಲಸಗಳಿಗೆ ನೇರವಾಗಿ ಕೈ ಹಾಕುತ್ತಿರಲಿಲ್ಲ, ನಿಜ. +ಕೂಲಿ ಮಾಡಿ ದುಡಿದು ಆಳಾಗಿ, ಆಳುಗಳಿಗೆ ಸೇರೆಗಾರನಾಗಿ ಇದುವರೆಗೆ ಜೀವನ ಯಾಪನೆ ಮಾಡುತ್ತಿದ್ದ ಆ ಹಸಲರವನಿಗೆ ಪುಂಡಾಟವೆ ಬದುಕಾಗಿದ್ದ ಸಾಬರ ಧೈರ್ಯ, ಧೂರ್ತತೆ, ಕ್ರೌರ್ಯ, ನೈಷ್ಠುರ್ಯ, ನಿರ್ದಾಕ್ಷಿಣ್ಯಗಳು ಸುಲಭಸಾಧ್ಯವಾಗಿರಲಿಲ್ಲ. +ಆದರೆ ರಾತ್ರಿಹೊತ್ತು ಕಾಡುಬೆಟ್ಟಗಳ ಇಕ್ಕಟ್ಟಿನಲ್ಲಿ, ನಿರ್ಜನ ಸ್ಥಳಗಳಲ್ಲಿ, ತಾನೂ ಒಬ್ಬ ಗಟ್ಟದ ತಗ್ಗಿಗೆ ಹೋಗುವ ಪ್ರಯಾಣಿಕನೆಂಬಂತೆ ತಲೆಮೇಲೆ ಕೊಳಕು ಜಾಯಿಕಾಯಿ ಪೆಟ್ಟಿಗೆ ಹೊತ್ತುಕೊಂಡೋ ಕೈಯಲ್ಲಿ ಪಾತ್ರೆ ಪರಟೆ ಹಿಡಿದುಕೊಂಡೋ ಹೋಗುತ್ತಿದ್ದು ಸಹಪ್ರಯಾಣಿಕರ ಐಶ್ವರ್ಯದ ಗುಟ್ಟನ್ನು ಅರಿತು, ಅದನ್ನು ಸಂಕೇತಗಳಿಂದ, ಯಾವುದಾದರೂ ಪದ ಹೇಳಿಯೋ ಕೆಮ್ಮಿಯೋ ಅಥವಾ ದಾರಿತಪ್ಪಿಹೋದ ತನ್ನ ಜೊತೆಯ ಪಯಣಿಗನಿಗೆ ಗಟ್ಟಿಯಾಗಿ ಛದ್ಮವಾಕ್ಯಗಳನ್ನು ಕೂಗಿ ಹೇಳುವಂತೆ ನಟಿಸಿಯೋ, ತಿಳಿಸಿ ಸುಲಿಗೆಗೆ ನೆರವಾಗುತ್ತಿದ್ದನು. + ಅಂತಹ ಪಾಪಕಾರ್ಯಗಳಲ್ಲಿಯೂ ಒಮ್ಮೆ ಅವನಿಗೆ ಪುಣ್ಯ ಸಂಪಾದನೆ ಮಾಡುವ ಅವಕಾಶವೂ ಒದಗಿತ್ತು. + ತನ್ನ ಗುರುತು ಅವರಿಗೆ ಸಿಕ್ಕದಿದ್ದರೂ ತನಗೆ ಪರಿಚಯವಿದ್ದ ಒಬ್ಬ ಉಡುಪಿಯ ಗೃಹಸ್ಥರ ಪ್ರಾಣವನ್ನು ಉಪಾಯದಿಂದ ಉಳಿಸಿದ್ದನು, ಸಾಬರಿಗೆ ಗೊತ್ತಾಗದಂತೆ! +ಮಾತುಕತೆಗಳಿಂದ ಆ ಗೃಹಸ್ಥರು ತಾನು ಸಣ್ಣವನಾಗಿದ್ದಾಗ ತನ್ನ ತಂದೆ ತಾಯಿಗಳಿಗೆ ಅನ್ನ ಹಾಕಿ, ಬಟ್ಟೆ ಕೊಟ್ಟು ತನ್ನನ್ನೂ ಕಾಪಾಡಿದ್ದಾರೆಂಬುದು ಗೊತ್ತಾಗಿ, ಅವರನ್ನು ಹೇಗಾದರೂ ರಕ್ಷಿಸಬೇಕೆಂಬ ಕೃತಜ್ಞತೆಯ ಧರ್ಮಬುದ್ಧಿ ಜಾಗ್ರತವಾಗಿ, ಸಾಬರಿಗೆ ತಪ್ಪು ಮಾರ್ಗದರ್ಶನ ಮಾಡಿ, ಆ ಗೃಹಸ್ಥರನ್ನು ಸುರಕ್ಷಿತ ಸ್ಥಾನಕ್ಕೆ ಒಯ್ದುಬಿಟ್ಟು, ಸೂಕ್ಷ್ಮವಾಗಿ ಎಚ್ಚರಿಕೆ ಹೇಳಿ ಕಣ್ಮರೆಯಾಗಿದ್ದನಂತೆ! +ಆ ಕತೆಯನ್ನು ಅವನು ಇನ್ನಾರದ್ದೋ ಎಂಬಂತೆ ಹೇಳಿ, ಜನರೆ ಮೆಚ್ಚುಗೆಯನ್ನು ಸವಿಯುತ್ತಿದ್ದನು.! +ಕೋಣೂರಿನ ಗಟ್ಟದ ತಗ್ಗಿನವರ ಬಿಡಾರಗಳಲ್ಲಂತೂ ’ಚೀಂಕ್ರ ಸೇರೆಗಾರ’ರ ವಿಚಾರವಾದ ಗೌರವ, ಶ್ಲಾಘನೆ ಹೆಚ್ಚುತ್ತಿತ್ತು. +ಅವನ ದುಶ್ಚಾಳಿಗಳನ್ನು ಅರಿತಿದ್ದವರು ಅವನ ಹೆಂಡತಿ ದೇಯಿ ಸತ್ತುದಕ್ಕೆ ಅವನೇ ಕಾರಣವೆಂದು ಮೊದಮೊದಲು ಅವನನ್ನು ನಿಂದಿಸಿ ತಿರಸ್ಕರಿಸಿದ್ದರೂ ಅವನು ಇದ್ದಕ್ಕಿದ್ದ ಹಾಗೆ ಧನ ಸಂಪಾದನೆ ಮಾಡಿ ತನ್ನ ಮಕ್ಕಳನ್ನೂ ಚೆನ್ನಾಗಿ ನೋಡಿಕೊಳ್ಳುವಂತೆ ಅಕ್ಕಣಿಗೆ ನೆರವಾಗಿ, ಅಕ್ಕಣಿಗೆ ಮಾತ್ರವಲ್ಲದೆ ಅವಳ ಕಾಯಿಲೆ ಗಂಡ ಪಿಜಿಣನಿಗೂ ತನ್ನ ಔದಾರ್ಯವನ್ನು ವಿಸ್ತರಿಸಿದುದನ್ನು ನೋಡಿ, ಅವನ್ ಪರೋಪಕಾರ ಬುದ್ಧಿಯನ್ನು ಬಾಯಿ ತುಂಬ ಹೊಗಳಿದ್ದರು. +ಚೀಂಕ್ರ ಹೇಗೆ ಸಂಪಾದಿಸುತ್ತಿದ್ದಾನೆ ಎಂಬುದರ ಕಡೆಗೆ  ಅವರು ನೋಡಲೂ ಇಲ್ಲ, ನೋಡಬೇಕಾಗಿಯೂ ಇರಲಿಲ್ಲ. +ಆಗೊಮ್ಮೆ ಈಗೊಮ್ಮೆ ಅಲ್ಲಿ ಇಲ್ಲಿ ಒಬ್ಬೊಬ್ಬರು ಅವನ ಸಂಪಾದನೆಯ ವಿಧಾನದ ನಿಜಸ್ವರೂಪದ ವಿಚಾರವಾಗಿ ಆಡಿಕೊಳ್ಳುತ್ತಿದ್ದರೇನೋ ಹೌದು. +ಹಾಗೆ ಆಡಿಕೊಳ್ಳುತ್ತಿದ್ದಾರೆ ಎಂಬುದನ್ನು ಐತ ಒಮ್ಮೆ ಅವನ ಗಮನಕ್ಕೆ ತರಲು ಪ್ರಯತ್ನಿಸಿದಾಗ ಚೀಂಕ್ರ ಆ ವಿಷಯವನ್ನೆ ಹಿಂದಿರುಗಿಸಿ ಐತನ ಸಂಸಾರದ ಸುಖದ ಬಾಳಿಗೇ ವಿಷಪ್ರಯೋಗ ಮಾಡಿದ್ದನಷ್ಟೆ! +ಅಕ್ಕಣಿಯ ಮೂಲಕವಾಗಿ ತನಗೊದಗಿದ ಸಹಾಯಕ್ಕೆ ಪಿಜಿಣ ತುಂಬ ಕೃತಜ್ಞನಾಗಿ ಚೀಂಕ್ರನ ಮಕ್ಕಳನ್ನು ತನ್ನ ಹೆಂಡತಿ ಸಾಕಿ ಸಲಹುತ್ತಿದ್ದುದಕ್ಕೆ ಸಂತೋಷಪಟ್ಟಿದ್ದನು. +ಅಲ್ಲದೆ ತನಗೆ ಮಕ್ಕಳಿಲ್ಲದುದರಿಂದ ದೇಯಿಯ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಬದುಕಿನ ಹಿಗ್ಗನ್ನು ಅನುಭವಿಸುತ್ತಿದ್ದ ಅಕ್ಕಣಿಯ ಮುಖದಲ್ಲಿ ಹೊಮ್ಮುತ್ತಿದ್ದ  ಹರ್ಷಕ್ಕೆ ಪಿಜಿಣನ ಮನಸ್ಸೂ ಹರ್ಷಿಸಿತ್ತು. +ಎಷ್ಟೋ ರಾತ್ರಿಗಳಲ್ಲಿ ಚೀಂಕ್ರ ತನ್ನ ಕರಾಳ ನಿಶಾಚರ ಸಂಪಾದನೆಯ  ಕಾರ್ಯಗಳಲ್ಲಿ ತೊಡಗಿ ಬಿಡಾರಕ್ಕೆ ಬರುತ್ತಲೆ ಇರಲಿಲ್ಲ. +ಆಗ ಅವಳು ಅವನ ಮಕ್ಕಳೊಂದಿಗೆ ಚೀಂಕ್ರನ ಬಿಡಾರದಲ್ಲಿಯೆ ಮಲಗುತ್ತಿದ್ದಳು, ತನ್ನ ಗಂಡನ ಅನುಮತಿಯ ಮೇರೆಗೇ. +ಎಂದಾದರೂ ಮಧ್ಯರಾತ್ರಿಯ ಮೇಲೆಯೋ ಅಥವಾ ಬೆಳಗಿನ ಕಡೆಯ ಯಾಮದಲ್ಲಿಯೋ ಚೀಂಕ್ರ ಬಿಡಾರಕ್ಕೆ ಬಂದಾಗ ಅವಳು ತನ್ನ ಬಿಡಾರಕ್ಕೇ ಬಂದು ಗಂಡನೊಡನೆ ಮಲಗುತ್ತಿದ್ದಳು. +ಪ್ರಾರಂಭದಲ್ಲಿ ಪಿಜಿಣನಿಗೆ ಅದೆಲ್ಲ ತುಂಬ ಸಾಜವಾಗಿಯೇ ಕಂಡಿತ್ತು. +ಸಂತೋಷ ಪ್ರದವಾಗಿಯೂ ಇತ್ತು. +ತನ್ನ ಹೆಂಡತಿ ತನಗೆ ಮಾಡುತ್ತಿದ್ದ ಆರೈಕೆ ಶುಶ್ರೂಷೆಗಳಿಗೆ  ಅವಳ ಮೇಲಣ ಅವನ ಮಮತೆ ಇಮ್ಮಡಿಸಿತ್ತು. +ಅಲ್ಲದೆ ಅಕ್ಕಣಿ ತಲೆಬಾಚಿ, ಹೂ ಮುಡಿದು, ಹೊಸಸೀರೆಯುಟ್ಟು ಗೆಲುವಾಗಿದ್ದುದು ಅವನಿಗೆ ಮಾದಕವಾಗಿಯೂ ಇತ್ತು. +ಮೊದಲಿನಂತಲ್ಲದ ವಿಶೇಷ ರೀತಿಯಿಂದ ಅವಳು ತನಗೆ ಸುಖಕೊಡುತ್ತಿದ್ದುದನ್ನು ಕಂಡು ಅವಳಿಗೆ ಮಕ್ಕಳಾದರೂ ಆಗಬಹುದೇನೋ ಎಂಬ ಆಶೆ ಭರವಸೆಯ ರೂಪಕ್ಕೆ ತಿರುಗಿತ್ತು. +ಒಂದು ದಿನ ಬೆಳಗಿನ ಜಾವ ನೆರೆಯ ಬಿಡಾರದ ಪೀಂಚಲು ಇನ್ನೂ ಚೆನ್ನಾಗಿ ಕತ್ತಲೆಯಾಗಿದ್ದಾಗಲೆ ಪಿಜಿಣನ ಬಿಡಾರಕ್ಕೆ ಬೆಂಕಿ ಕೇಳಲು ಬಂದಳು. +ಪಿಜಿಣ, ಬಿಡಾರದ ಬಾಗಿಲು ಮುಚ್ಚಿದ್ದಂತೆಯೆ, ಒಳಗಣಿಂದ “ಚೀಂಕ್ರ ಬಂದಿಲ್ಲ ಕಾಣ್ತೆ; + ಅವಳು ಅವನ ಬಿಡಾರದಲ್ಲಿ ಮಕ್ಕಳ ಕೂಡೆ ಮಲಗಿರಲಕ್ಕು” ಎಂದನು. +“ರಾತ್ರಿಯೆ ಬಂದಿದ್ದನಲ್ಲಾ ಚೀಂಕ್ರ! +ನಮ್ಮವರ ಹತ್ರ ಮಾತಾಡಿ ಕೊಂಡು ಹೋದ!” ಎಂದು ತನಗೆ ತಾನೆಯೆ ಹೇಳಿಕೊಳ್ಳುವಂತೆ ಹೇಳಿ, ಅಕ್ಕಣಿಯನ್ನು ಕೇಳಿ ಚೀಂಕ್ರನ ಬಿಡಾರದಲ್ಲಿರಬಹುದಾದ ಬೆಂಕಿಯನ್ನು ತರುವ ಉದ್ದೇಶದಿಂದ ಅಲ್ಲಿಗೆ ಹೋದಳು. +ಪೀಂಚಲು ಕರೆದಾಗ ಅಕ್ಕಣಿಗೆ ಬದಲಾಗಿ ಚೀಂಕ್ರನೆ ತನ್ನ ಬಿಡಾರದ ಬಾಗಿಲು ತೆರೆದನು. +“ಬೆಂಕಿ ಕೇಳುವ ಎಂದು ಬಂದೆ. +ಅಕ್ಕಣಿ ಇದ್ದಾಳಾ?” ಎಂದು ಕೇಳಿದ ಪೀಂಚಲುವಿಗೆ ಚೀಂಕ್ರ, ಆ ಕತ್ತಲೆಯಲ್ಲಿ ಕಾಣಿಸದಿದ್ದರೂ, ತಾಂಬೂಲರಾಗದ ದಂತ ಪಂಕ್ತಿಯನ್ನು ಪ್ರದರ್ಶಿಸಿ ನಗುತ್ತಾ “ಅವಳು ಇಲ್ಲಿ ಎಲ್ಲಿದ್ದಾಳೆ? +ನಾನು ಬಂದಾಗಲೆ ರಾತ್ರಿ ತನ್ನ ಬಿಡಾರಕ್ಕೆ ಹೋದಳಲ್ಲಾ! …. + ನೋಡ್ತೆ, ಬೆಂಕಿ ಇದೆಯೆ ಒಲೆಯಲ್ಲಿ?” ಎಂದು ಪೀಂಚಲುವನ್ನು ಬಾಗಿಲ ಹೊರಗೇ ನಿಲ್ಲಿಸಿ, ಒಳಗೆ ಹೋಗಿ, ಒಂದು ಮಡಕೆಯ ಓಡಿನಲ್ಲಿ ಬೆಂಕಿ ಕೆಂಡಗಳನ್ನು ತಂದುಕೊಟ್ಟು, ಬಾಗಿಲು ಹಾಕಿಕೊಂಡನು. +ಪೀಂಚಲುಗೆ ಆಶ್ಚರ್ಯವಾಯಿತು; +ಚೀಂಕ್ರ ಹಿಂದೆಂದೂ ಅಷ್ಟು ದಾಕ್ಷಿಣ್ಯಪರವಾಗಿ ವರ್ತಿಸಿ ತನಗೆ ಅಂತಹ ಸೇವೆಯ ಕೆಲಸ ಮಾಡಿಕೊಟ್ಟಿರಲಿಲ್ಲ. +ಆದರೆ ಆ ಆಶ್ಚರ್ಯ ಬಹಳಕಾಲ ಇರಲಿಲ್ಲ. +ಅವಳು ತನ್ನ ಬಿಡಾರಕ್ಕೆ ಹೋಗುವಷ್ಟರಲ್ಲಿಯೆ ಅದು ವಿಷಾದಕ್ಕೆ ಎಡೆಕೊಟ್ಟಿತ್ತು. +ಅಕ್ಕಣಿ ಎಂದಿನಂತೆ ತನ್ನ ಬಿಡಾರಕ್ಕೆ ಹಿಂದಿರುಗಿರಲಿಲ್ಲ! +ಚೀಂಕ್ರನು ಬಂದಮೇಲೆಯೂ ಅವಳು ರಾತ್ರಿಯನ್ನೆಲ್ಲಾ ಅವನ ಬಿಡಾರದಲ್ಲಿಯೆ ಕಳೆದಿದ್ದಳು! +ತನಗೆ ತಾನೆಂಬಂತೆ ಪೀಂಚಲು ಹೇಳಿಕೊಂಡಿದ್ದನ್ನು ಪಿಜಿಣಿ ಕೇಳಿ ಶಂಕೆಗೊಳಗಾಗಿದ್ದನು. +ನಿಜವೋ ಸುಳ್ಳೋ ಅವನಿಗೆ ಬಗೆಹರಿದಿರಲಿಲ್ಲ. +ಬೆಳಗಾದ ಮೇಲೆ ಅಕ್ಕಣಿ ಬಿಡಾರಕ್ಕೆ ಬಂದಾಗ ಅವನು ಯಾವುದನ್ನೂ ವಿಚಾರಿಸುವ ಗೋಜಿಗೆ ಹೋಗದೆ ಅವಳನ್ನೆ ಮತ್ತೆ ಮತ್ತೆ ನೋಡಿದ್ದನು, ಏನನ್ನೋ ಗ್ರಹಿಸುವವನಂತೆ, ಕಂಡುಹಿಡಿಯಲೆಂಬಂತೆ. +ಅಕ್ಕಣಿಗೂ ಶಂಕೆ ಹುಟ್ಟಿತ್ತು. +ಪೀಂಚಲು ಚೀಂಕ್ರನ ಬಿಡಾರಕ್ಕೆ ಬೆಂಕಿ ಕೇಳಲು ಬರುವ ಮುನ್ನ ತಮ್ಮ ಬಿಡಾರದಲ್ಲಿ ವಿಚಾರಿಸಿಯೆ ಇರಬೇಕು ಎಂದು. +ಅಕ್ಕಣಿ ಮೊದಮೊದಲು ದಾಕ್ಷಿಣ್ಯಕ್ಕೆ ಒಳಗಾಗಿ, ಬರಬುತ್ತಾ ಕೃತಜ್ಞತೆಗೆ ಪ್ರತಿರೂಪವಾಗಿ ಕ್ರಮೇಣ ರುಚಿವಶಳೂ ಆಗಿ ಚೀಂಕ್ರನ ಸಹವಾಸದ ಕೂಣಿಗೆ ಬಿದ್ದಿದ್ದಳು. +ಆದರೆ ತನ್ನ ಗಂಡನ ವಿಚಾರದಲ್ಲಿ ಯಾವ ಉದಾಸೀನವನ್ನೂ ತೋರಗೊಡದೆ ಸೇವೆ ಸಲ್ಲಿಸುತ್ತಿದ್ದಳು. +ಆ ಸೇವೆಯ ಹಿಂದೆ ದಯೆ ಕರುಣೆಗಳೆ ಪ್ರಧಾನವಾಗಿದ್ದು, ದಾಂಪತ್ಯಪ್ರೇಮ ಇಳಿಮುಖ ವಾಗುತ್ತಿದ್ದುದನ್ನು ಗ್ರಹಿಸುವಷ್ಟು ಪ್ರಜ್ಞಾಸೂಕ್ಷ್ಮತೆ ಅವಳಿಗಿರಲಿಲ್ಲ. +ಮೊದಲಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಕಾಯಿಲೆ ಬೀಳುತ್ತಿದ್ದು ಕೃಶನೂ ಅಶಕ್ತನೂ ಆಗಿದ್ದ ಪಿಜಿಣನಿಂದ ಅವಳಿಗೆ ಆರೋಗ್ಯದೃಢ ಕಾಯಳಾದ ತರುಣಿಗೆ ದೊರೆಯಬೇಕಾದ ಲೈಂಗಿಕ ತೃಪ್ತಿ ದೊರೆಯುತ್ತಿರಲಿಲ್ಲ. +ಆದರೆ ಸಂಪ್ರದಾಯದಿಂದ ನೀತಿವಂತೆಯಾಗಿದ್ದ ಅವಳಿಗೆ ಹಾಗೆ ಲೈಂಗಿಕ ತೃಪ್ತಿ ದೊರೆಯುತ್ತಿಲ್ಲ ಎಂಬುದೂ ತಿಳಿದಿರಲಿಲ್ಲ. +ಒಮ್ಮೆ ಪ್ರಮಾದವಶದಿಂದಲೋ ಎಂಬಂತೆ ಆ ಅಜ್ಞಾನ ಜಾರ ಪ್ರವೀಣನಾಗಿದ್ದ ಚೀಂಕ್ರನಿಂದ ಪರಿಹಾರವಾಯಿತು. +ಆದರೆ ಅದನ್ನೊಂದು ಮಹಾ ಅಕಾರ್ಯವೆಂದು ಅವಳು ಭಾವಿಸಿರಲಿಲ್ಲ. +ಚೀಂಕ್ರನಿಂದ ತನಗೂ, ಹೆಚ್ಚಾಗಿ ಕೆಲಸಕ್ಕೆ ಹೋಗಲಾರದೆ ಸಂಪಾದನೆಯಿಲ್ಲದೆ ರೋಗಿಯಾಗಿ ನರಳುತ್ತಿದ್ದ ತನ್ನ ಗಂಡನಿಗೂ, ಆಗುತ್ತಿದ್ದ ಉಪಕಾರಕ್ಕೆ ಒಂದು ರೀತಿಯಲ್ಲಿ ಋಣ ತೀರಿಸುವ ಕೃತಜ್ಞತಾ ರೂಪದ ಪ್ರತ್ಯುಪಕಾರವಾಯಿತೆಂದೇ ಅವಳು ಭಾವಿಸಿದ್ದಳು. +ಅದರಲ್ಲಿಯೂ ತನ್ನ ಹೆಂಡತಿ ದೇಯಿ ತೀರಿಹೋದ ಮೇಲೆ ಅಕ್ಕಣಿಯ ಪರವಾದ ಚೀಂಕ್ರನ ವರ್ತನೆ ಯಾಚನಾಪೂರ್ವಕವಾಗಿ ಆಪ್ಯಾಯಮಾನವಾಗಿತ್ತು. +ಅದಕ್ಕೆ ವಶಳಾಗದೆ ಇರಲು ಅವಳಿಗೂ ಸಾಧ್ಯವಾಗಲಿಲ್ಲ. +ಅಲ್ಲದೆ ತಾನು ಚೀಂಕ್ರನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದುದರಲ್ಲಿಯೂ, ಚೀಂಕ್ರನಿಗೆ ಅನ್ನ ಗಂಜಿ ಮಾಡಿ ಹಾಕುತ್ತಿದ್ದುದರಲ್ಲಿಯೂ, ಅವನು ಬಿಡಾರಕ್ಕೆ ಬರದಿದ್ದ ರಾತ್ರಿಗಳಲ್ಲಿ ಅವನ ಬಿಡಾರದಲ್ಲಿಯೆ ಅವನ ಮಕ್ಕಳೊಡನೆ ಮಲಗಲು ಅನುಮತಿ ಕೊಡುತ್ತಿದ್ದುದರಲ್ಲಿಯೂ ತನ್ನ ಗಂಡನಿಗೂ ಕೂಡ ತನ್ನ ಈ ವಿಚಾರವಾದ ವರ್ತನೆ ಅಷ್ಟೇನೂ ಅನಮ್ಮತವಾಗಿರದಿರಬಹುದು ಎಂದೂ ಅವಳ ಹೃದಯ ಒಳಗೊಳಗೆ ಅನುಮಾನಿಸಿತ್ತು. +ಆದರೆ ಒಮ್ಮೆ ಪಿಜಿಣ ಅವಳ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿ ತಾನೆಂತಿದ್ದರೂ ಇನ್ನು ಹೆಚ್ಚು ಕಾಲ ಬದುಕುವುದಿಲ್ಲವಾದ್ದರಿಂದ ಅಲ್ಲಿಯವರೆಗಾದರೂ ನಾಲ್ಕು ಜನ ಆಡಿಕೊಳ್ಳದಂತೆ ಬಾಳು ಎಂದು ಕಣ್ಣೀರುಗರೆದು, ಹಾಸಗೆಯ ಮೇಲೆ ಎದ್ದು ಕೂತಿದ್ದ ತನ್ನ ಒಣಕಲು ಒಡಲನ್ನು ದೊಪ್ಪನೆ ಕೆಡೆಯುವಂತೆ ಮಾಡಿ ಬಿದ್ದು ಮಲಗಿದಾಗ, ಅಕ್ಕಣಿ ಒಂದು ದಿನವೆಲ್ಲ ಉಣ್ಣದೆ ಅಳುತ್ತಲೆ ತನ್ನ ಕೆಲಸವೆಲ್ಲವನ್ನೂ ಮಾಡಿ, ಚೀಂಕ್ರನು ಬಿಡಾರಕ್ಕೆ ಬರದಿದ್ದರೂ ಆ ರಾತ್ರಿ ಅವನ ಮಕ್ಕಳನ್ನು ಅವನ ಬಿಡಾರದಲ್ಲಿಯೆ ಮಲಗಿಸಿ, ಅವಕ್ಕೆ ನಿದ್ದೆ ಬಂದ ಮೇಲೆ ತಟ್ಟಿಬಾಗಿಲು ಮುಚ್ಚಿ, ಹೊರಗಣಿಂದಲೆ ಬಿಗಿದು ಕಟ್ಟಿ, ತನ್ನ ಬಿಡಾರಕ್ಕೇ ಬಂದು ಪಿಜಿಣನೊಡನೆ ಮಲಗಿದ್ದಳು. +ಆದರೆ ನಡುರಾತ್ರಿ ಆ ಮಕ್ಕಳು ಅಳುತ್ತಾ ’ಅಕ್ಕಣ್ಣಬ್ಬೇ ಅಕ್ಕಣ್ಣಬ್ಬೇ’ ಎಂದು ಕರೆದು ಗೋಳಿಟ್ಟಾಗ ಪಿಜಿಣನೆ ತನ್ನ ಹೆಂಡತಿಗೆ ಸಮಾಧಾನ ಹೇಳಿ ಚೀಂಕ್ರನ ಬಿಡಾರಕ್ಕೆ ಹೋಗಿ ಅವನ ಮಕ್ಕಳೊಡನೆ ಮಲಗುವಂತೆ ಮಾಡಿದ್ದನು. +ಅಕ್ಕಣಿ ತನಗೆ ಮನಸೋಲುತ್ತಿದ್ದಾಳೆಂದು ಗೊತ್ತಾದ ಕೂಡಲೆ ಚೀಂಕ್ರ ಅವಳನ್ನು ಪಿಜಿಣನಿಂದ ಬಿಡಿಸಿ, ಬೇರೆಯೂರಿಗೆ ಹಾರಿಸಿಕೊಂಡು ಹೋಗುವ ಉಪಾಯವನ್ನೂ ಯೋಚಿಸಿದ್ದನು. +ಆದರೆ ಅಕ್ಕಣಿಗೆ ತನ್ನ ಗಂಡನಲ್ಲಿ ದೈಹಿಕರೂಪದ ಸಂಬಂಧವಾಗಿ ವಿರಕ್ತಿ-ಮೂಡಿದ್ದರೂ ಅವನು ತನ್ನವನು ಎಂಬ ಅಭಿಮಾನ ತಪ್ಪಿರಲಿಲ್ಲ. +ಅವನ ಕೈ ಮೀರು ಅವನಿಗೆ ಒದಗಿದ್ದ ಅಸ್ವಸ್ಥತೆಯೊಂದೇ ಪಿಜಿಣನಲ್ಲಿದ್ದ ದೋಷವಾಗಿತ್ತು. +ಉಳಿದೆಲ್ಲದರಲ್ಲಿಯೂ ಅವನು ಚೀಂಕ್ರನಿಗಿಂತ ಸಾವಿರಪಾಲು ಉತ್ತಮ ವ್ಯಕ್ತಿಯಾಗಿದ್ದನು. +ಹೆಂಡತಿ ಇರಲಿ, ಯಾರೂ ಅವನನ್ನು ವಿಶ್ವಾಸಗೌರವಗಳಿಂದಲೆ ಕಾಣಬೇಕು-ಅಂತಹ ಹೃದಯವಿತ್ತು ಅವನಿಗೆ. +ಚೀಂಕ್ರನಲ್ಲಿದ್ದ ಸ್ವಾರ್ಥತೆ, ನಿರ್ದಯೆ, ನಿರ್ದಾಕ್ಷಿಣ್ಯ, ನೈಷ್ಠುರ್ಯಗಳೂ ಅವನಲ್ಲಿರಲಿಲ್ಲ. +ಅವನು ಒಮ್ಮೆಯಾದರೂ ಹೊಡೆದದ್ದು ಅಕ್ಕಣಿಗೆ ಜ್ಞಾಪಕವಿರಲಿಲ್ಲ. +ಅವನ ಷಂಡತನವೇ ಅವನ ಸಾತ್ವಿಕತೆಗೆ ಕಾರಣವೆಂದು ಅವನಿಗೆ ಆಗದವರು ಹೇಳಿಕೊಂಡು ಪರಿಹಾಸ್ಯಮಾಡುತ್ತಿದ್ದರು. +ಆದರೆ ಅವನ ಷಂಡತನವೂ ಪೌರುಷದ ಮಿತಿರೂಪವಾಗಿದ್ದತೆ ಹೊರತು ಅದರ ಅಭಾವ ವಾಗಿರಲಿಲ್ಲ ಎಂಬುದನ್ನು ಅನುಭವದಿಂದ ಅರಿತಿದ್ದ ಅಕ್ಕಣಿ ಅಸುಖಿಯಾಗಿರಲಿಲ್ಲ. +ಆದ್ದರಿಂದಲೆ ತನ್ನ ಗಂಡನ ಗೌರವವನ್ನು ಬಿಟ್ಟುಕೊಡಲು ಅವಳು ಸಿದ್ಧಳಿರಲಿಲ್ಲ. +ಆದ್ದರಿಂದಲೆ ಅವನು ಹೆಚ್ಚು ಹೆಚ್ಚು ಅಸ್ವಸ್ಥನಾದಂತೆಲ್ಲ ಅವನನ್ನು ಹೆಚ್ಚು ಹೆಚ್ಚು ಅಕ್ಕರೆಯಿಂದ ಕಾಣತೊಡಗಿದ್ದಳು. +ಅಕ್ಕಣಿ ತನಗೆ ಮೈಯನ್ನು ಸೋತುಬಿಟ್ಟಮೇಲೆ ಚೀಂಕ್ರನಿಗೆ ಧೈರ್ಯಬಂದು ಅವಳೊಡನೆ ಓಡಿಹೋಗುವ ಪ್ರಸ್ತಾಪವೆತ್ತಿದ್ದನು. +ಆಗ ಅವಳ ರೌದ್ರ ಮುಖಭಂಗಿ ನೋಡಿಯೆ ಚೀಂಕ್ರನಿಗೆ ಹೆದರಿಕೆಯಾಗಿತ್ತು. +’ಈ ರಾಕ್ಷಸಿಯ ಹತ್ತಿರ ನಾನೇಕೆ ಹಾಗೆ ಹೇಳಿದೆನಪ್ಪಾ?’ ಎಂದುಕೊಳ್ಳುವಂತಾಗಿತ್ತು ಅವನಿಗೆ. +ಆ ಕ್ಷಣದಿಂದಲೆ ಅಕ್ಕಣಿ ಅವನೊಡನೆ ಮಾತು ಬಿಟ್ಟಿದ್ದಳು. +ಅವನ ಮಕ್ಕಳನ್ನು ಮೊದಲಿನಂತೆಯೆ ನೋಡಿಕೊಂಡು, ಅವನಿಗೂ ಗಂಜಿಗಿಂಜಿ ಬೇಯಿಸಿ ಹಾಕುತ್ತಿದ್ದಳೆಷ್ಟೊ ಅಷ್ಟೆ! +ಅವನನ್ನು ಒಂದು ನಾಯಿ ಕಂಡಂತೆ ಕಂಡು, ನಾಯಿಗೆ ಅನ್ನ ಹಾಕುವಂತೆಯೇ ಹಾಕುತ್ತಿದ್ದಳು, ಕರ್ತವ್ಯಕ್ಕಾಗಿ ಎಂಬಂತೆ. +ಚೀಂಕ್ರನಿಗೆ ಸಾವಿರ ಬೈಗುಳಕ್ಕಿಂತಲೂ ಭಯಂಕರವಾಗಿತ್ತು ಅವಳ ಮೌನ. +ಅದನ್ನು ಸಹಿಸಲಾರದೆ ಅವನು ಪಿಜಿಣನ ಬಳಿಗೆ ಬಂದು ದೂರು ಹೇಳಿಕೊಂಡಿದ್ದನು, ಕಣ್ಣು ತೇವವಾಗಿ. ’ +ಏನೋ ಕೆಟ್ಟಗಳಿಗೆಯಲ್ಲಿ ಬಾಯಿತಪ್ಪಿ ಏನನ್ನೊ ಮಾತಾಡಿಬಿಟ್ಟೆ ಎಂದು ನಿನ್ನ ಹೆಂಡತಿ ನನ್ನ ಮೇಲೆ ಪೂರಾ ಸಿಟ್ಟುಮಾಡಿ ಮಾತುಬಿಟ್ಟಿದ್ದಾಳೆ! +ನೀನಾದರೂ ಹೇಳು, ಮಾರಾಯ!ತಪ್ಪಾಯಿತು! +ನನ್ನ ಮಕ್ಕಳ ಮುಖನೋಡಿ ನನ್ನ ತಪ್ಪು ಮರೆತುಬಿಡಲಿ!” ಬೆಣ್ಣೆನುಡಿ ನಿಪುಣನಾದ ಸೇರೆಗಾರ ಚೀಂಕ್ರನನ್ನು ನಂಬಿ ಪಿಜಿಣ ಮನಕರಗಿಹೋಗಿದ್ದನು. +ಆದರೆ ಚೀಂಕ್ರ ತಾನು ಹಿಡಿದ ಸಾಧನೆಯನ್ನು ಕೈಬಿಡಲಿಲ್ಲ. +’ಇವಳೆಂಥ ವಿಚಿತ್ರ ಪತಿವ್ರತೆ’ ಎಂದು ತನಗೆ ಅರ್ಥವಾಗದ ಅವಳನ್ನು ಟೀಕಿಸುತ್ತಿತ್ತು ಅವನ ದುರ್ಮನಸ್ಸು. +ಅವನು ತಿಳಿದಿದ್ದ  ಯಾವ ಹೆಣ್ಣಿನ ನಡತೆಯಾಗಲಿ ಯಾವ ಹೆಣ್ಣುಗಳಾಗಲಿ ಅಕ್ಕಣಿಯ ವರ್ತನೆಗೆ  ಕೀಲಿಕೈ ಒದಗಿಸಲು ಸಮರ್ಥವಾಗಿರಲಿಲ್ಲ. +ಪಿಜಿಣನ ಕಾಯಿಲೆ ಗುಣಮುಖವಾಗದೆ ಅದು ಉಗ್ರ ಆಮಶಂಕೆಗೂ  ತಿರುಗಿದಾಗ ಅಕ್ಕಣಿ ಆಗಾಗ ಕಣ್ಣೊರೆಸಿಕೊಳ್ಳುತ್ತಿದ್ದುದನ್ನು ಕಂಡು ಚೀಂಕ್ರ ಕಣ್ಣಾಪಂಡಿತರಿಂದ ಔಷಧಿಕೊಡಿಸಿದ್ದನು. +ತಾನು ಮೇಗರವಳ್ಳಿಯಿಂದ ಬರುವಾಗಲೆಲ್ಲ ಪಿಜಿಣನ ಔಷಧಿಗೂ ಪಥ್ಯಕ್ಕೂ ಬೇಕಾದ ಸಾಮಗ್ರಿಯನ್ನು ತಂದುಕೊಡುತ್ತಿದ್ದನು. +ತನ್ನ ಗಂಡನ ಯೋಗಕ್ಷೇಮದಲ್ಲಿ ಕಾತರನಾಗಿ ಅಷ್ಟೊಂದು ಆಸಕ್ತನಾದ ಚೀಂಕ್ರನ ವಿಚಾರದಲ್ಲಿ ಅಕ್ಕಣಿಗೆ ಕೃತಜ್ಞತೆ ಉಕ್ಕಿತಾದರೂ, ಅವನು ಆಶಿಸಿದಂತೆ ಚೀಂಕ್ರನ ಪರವಾಗಿ ಪ್ರೇಮನಾಮಕವಾದ ಕಾಮಭಾವನೆ ಅವಳಲ್ಲಿ ಉದ್ದೀಪಿತವಾದಂತೆ ತೋರಲಿಲ್ಲ. +ಪಿಜಿಣ ಸತ್ತಲ್ಲದೆ ಅಕ್ಕಣಿಯ ಮನಸ್ಸು ತನ್ನ ಕಡೆಗೆ ಒಲೆಯುವುದಿಲ್ಲ ಎಂಬುದು ನಿಶ್ಚಯವಾದ ಮೇಲೆ ಚೀಂಕ್ರ ತನಗೂ ಅಕ್ಕಣಿಗೂ ನಡುವೆ ಇದ್ದ ಆ ಅಡಚಣೆಯನ್ನೇಕೆ ಪರಿಹರಿಸಬಾರದು ಎಂದೂ ಯೋಚಿಸಿದ್ದನು. +ಅದೇನು ಅಂತಹ ಕಷ್ಟದ ವಿಷಯವಾಗಿಯೂ ತೋರಿರಲಿಲ್ಲ. +ಕಣ್ಣಾಪಂಡಿತರು ಪಿಜಿಣನ ಆಮಶಂಕೆಗೆ ಔಷಧಿ ಕೊಡುವಾಗ ಒಂದು ತರಹದ ಗುಳಿಗೆಗಳನ್ನು ಕೊಡುತ್ತಿದ್ದರು. +ಅದರಲ್ಲಿ ಅಫೀಮು ಇರುವುದರಿಂದ ಅದನ್ನು ಅತ್ಯಂತ ಅಲ್ಪ ಪ್ರಮಾಣದಲ್ಲಿಯೆ ಪ್ರಯೋಗಿಸಬೇಕೆಂದು ಎಚ್ಚರಿಕೆ ಕೊಟ್ಟಿದ್ದರು. +ಅಲ್ಲದೆ ಪಥ್ಯ ಹೇಳುವಾಗ ಸಾರಾಯಿಯಂತಹ ಉಷ್ಣದ ಪದಾರ್ಥಗಳನ್ನು ಸೇವನೆಮಾಡದಂತೆ ನೋಡಿಕೊಳ್ಳಬೇಕೆಂದು ಹೇಳಿದ್ದರು. +ಆ ಗುಣಕಾರಕ ಸಲಹೆಗಳನ್ನೆ ತನ್ನ ಕಾರ್ಯಸಾಧನೆಗೆ ಉಪಯೋಗಿಸಿಕೊಂಡರೆ ಬಹುಬೇಗನೆ ಫಲಸಿದ್ಧಿಯಾಗುತ್ತದೆ ಎಂದು ತೋರಿತ್ತು ಚೀಂಕ್ರನಿಗೆ. +ಅಫೀಮಿನ ಪ್ರಮಾಣವನ್ನು ಹೆಚ್ಚಿಸಿಬಿಟ್ಟರಾಯಿತು, ಏನೂ ಯಾತನೆಯಿಲ್ಲದೆ, ನಿದ್ದೆ ಮಾಡುತ್ತಲೆ ಪರಲೋಕಗತನಾಗುತ್ತಾನೆ. +ಆದರೆ ಆ ದಾರಿ ಏಕೋ ಸರಿಬೀಳಲಿಲ್ಲ ಚೀಂಕ್ರನಿಗೆ. +ಅವನ ಚೇತನ ತನ್ನನ್ನು ನಂಬಿ ತನಗೆ ಉಪಕಾರ ಮಾಡುತ್ತಿದ್ದ ಅಕ್ಕಣಿಯ ಒಲವಿನ ವಸ್ತುವಿಗೆ ವಿಷವೂಡಿಸಿ ಕೊಲ್ಲುವಷ್ಟು ಅಧೋಗತಿಗೆ ಹೋಗಿರಲಿಲ್ಲವಾದ್ದರಿಂದ ಆ ಕೆಲಸ ಮಾಡಲು ಅಂಜಿಕೆಯಾಯಿತು. +ಆದರೆ ಪಿಜಿಣನನ್ನು ನೋಡಿದಾಗಲೆಲ್ಲ, ಅವನು ಸಾವಿನ ಕಡೆಗೆ ಇಳಿಜಾರಿನಲ್ಲಿ ಜಾರುತ್ತಿದ್ದಾನೆಂಬುದು ಚೆನ್ನಾಗಿ ಕಾಣುತ್ತಿತ್ತು. +ಇಂದೊ ನಾಳೆಯೊ ಅಕ್ಕಣಿಗೆ ಅವನ ತೊಂದರೆ ತಪ್ಪಿ, ಅವನಿಂದ ಬಿಡುಗಡೆ ಆಗುತ್ತದೆ. +ನಾಲ್ಕುದಿನ ಮೊದಲೇ ಅದು ಆದರೆ, ಅವನಿಗೂ ನರಳುವ ತೊಂದರೆ ತಪ್ಪೀತು; + ತನಗೂ ಅದರಿಂದ ಉಪಕಾರವಾದೀತು. +ಔಷಧಿಯಿಂದ ತನ್ನ ಸ್ವಾರ್ಥವನ್ನು ಸಾಧಿಸಿಕೊಳ್ಳಲು ಹಿಂಜರಿದ ಅವನ ಮನಸ್ಸು ಪಥ್ಯದಿಂದ ಅದನ್ನು ಪಡೆಯುವುದರಲ್ಲಿ ಪಾಪಭಾವನೆಯನ್ನು ಅನುಭವಿಸಲಿಲ್ಲ. +ಏಕೆಂದರೆ ಅದು ಪಿಜಿಣನಿಗೇ ಬಹಳ ಇಷ್ಟವಾದುದಾಗಿತ್ತು. +ಕಳ್ಳು, ಸಾರಾಯಿ, ಸ್ವಾರ್ಲು ಮೀನು, ಖಾರ ಇತ್ಯಾದಿ ಪದಾರ್ಥಗಳು ಪಿಜಿಣನ ಕಾಯಿಲೆನಾಲಗೆಗೆ ಬಹಳ ಬೇಕಾದದ್ದು, ಅವನ್ನು ಒದಗಿಸದಿದ್ದರೆ ಅಕ್ಕಣಿಯ ಮೇಲೆ ರೇಗಿರೇಗಿ ಬೀಳುತ್ತಾ ಹಟಮಾರಿ ಮಕ್ಕಳಂತೆ ವರ್ತಿಸುತ್ತಿದ್ದನು. +ಚೀಂಕ್ರನು ಅಕೃಪಣ ಹಸ್ತದಿಂದ ತುಂಬ ಉದಾರಿಯಾಗಿ ಆ ಆಮಿಷ ಪದಾರ್ಥಗಳನ್ನು ಒದಗಿಸುವುದರಲ್ಲಿ ತನ್ನ ಇಷ್ಟಾರ್ಥ ನೆರವೇರಿಕೆಗೆ ಸಮೀಪಿಸುತ್ತಿದ್ದನು, ಅದರ ಜವಾಬ್ದಾರಿಯಿಂದ ದೂರನಾಗಿ, ಅಥವಾ ದೂರವಾಗಿದ್ದೇನೆ ಎಂದು ಭ್ರಮಿಸಿ. +ಏಕೆಂದರೆ ಅವನೇ ಪಿಜಿಣನಿಗೆ ಅಕ್ಕಣಿಯ ಇದಿರಿನಲ್ಲಿಯೇ ಪದೇ ಪದೇ ಹೇಳುತ್ತಿರಲಿಲ್ಲವೆ, ಆ ಉಷ್ಣ ಪದಾರ್ಥಗಳೆಲ್ಲ ಈ ರೋಗಕ್ಕೆ ಬಹಳ ಕಟ್ಟವಂತೆ, ತಿನ್ನಬಾರದಂತೆ ಎಂದು? +ಆದರೂ ಪಿಜಿಣ ಬಾಯಿರುಚಿಗೆ ಹಟಮಾಡಿ ಪೀಡಿಸಿ ಅವು ಬೇಕೇಬೇಕು ಎಂದು ತನ್ನ ಹೆಂಡತಿಯನ್ನು ಕಾಡಿಬೇಡಿ ತಿಂದರೆ ತನ್ನದೇನು ಬಂತು ಹೊಣೆ ಅದರಲ್ಲಿ? +ಹೂವಳ್ಳಿ ಮದುವೆಗೆ ಹಿಂದಿನ ದಿವಸ ಚೀಂಕ್ರ ತನ್ನ ಬಿಡಾರಕ್ಕೆ ಹೊತ್ತಿನಂತೆಯೆ ಬಂದ. +ಕೆಸರು ಮೆತ್ತಿದ್ದ ಕಾಲನ್ನು ಗುಡಿಸಲಿನ ಬಾಗಿಲ ಮುಂದೆಯೆ ಕಿರುಕಾಲುವೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ತೊಳೆದುಕೊಂಡು ಒಳಗೆ ಬಂದು, ಕಂಬಳಿಕೊಪ್ಪೆಯನ್ನು ಕೊಡವಿ ಮೂಲೆಯ ಗೂಟಕ್ಕೆ ಸಿಕ್ಕಹಾಕಿ, ಕೊಪ್ಪೆಯ ಒಳಗೆ ಮುಚ್ಚಿಕೊಂಡು ತಂದಿದ್ದ ಕೆಲವು ಶೀಸೆಗಳನ್ನು ಮೆಲ್ಲಗೆ ಎಚ್ಚರಿಕೆಯಿಂದ ಬಾಗಿಲ ಸಂಧಿಯಲ್ಲಿಟ್ಟನು, ಅವಿತಿಡುವಂತೆ. +ಸ್ವಲ್ಪಹೊತ್ತು ಬೆಂಕಿಯ ಮುಂದೆ ಕುಳಿತು ಮಳೆಯಿಂದ ಒದ್ದೆಯಾಗಿದ್ದ ಮೈಯನ್ನು ಬೆಚ್ಚಗೆ ಮಾಡಿಕೊಂಡು, ಮೇಲೆದ್ದು, ಸನ್ನೆಯಿಂದ ಅಕ್ಕಣಿಗೆ ಕೆಲವು ಶೀಸೆಗಳನ್ನು ಎತ್ತಿಕೊಳ್ಳುವಂತೆ ಹೇಳಿ, ತಾನೂ ಕೆಲವನ್ನು ಎತ್ತಿಕೊಂಡು ಪಿಜಿಣನ ಬಿಡಾರಕ್ಕೆ ಹೋದನು. +ಅಪೂರ್ವಕ್ಕೆ ಹೊತ್ತಿಗೆ ಬಹಳ ಮುಂಚೆಯೆ ಬಂದಿದ್ದ ಚೀಂಕ್ರನನ್ನು ನೋಡಿ ಮಲಗಿದ್ದಲ್ಲಿಂದಲೆ ಪಿಜಿಣ ಕೇಳಿದನು “ಏನು ಇವತ್ತು ಸೇರಿಗಾರ್ರ ಸವಾರಿ ಬಹಳ ಬೇಗನೆ ಬಂದಿತ್ತಲ್ಲಾ?”ಪಿಜಿಣನ ಧ್ವನಿ ಉಡುಗಿಹೋಗಿತ್ತು. +ತುಂಬ ನಿಃಶಕ್ತನಾಗಿದ್ದಂತೆ ತೋರಿತು! +“ಏನು ಬಹಳ ಸೋತುಹೋದ ಹಾಂಗಿದೆಯಲ್ಲಾ ನೀನು? +ಹ್ಯಾಂಗಿದೆ ಹೊರಗೆ ಹೋಗುವುದು?” ಚೀಂಕ್ರನೆಂದನು ಔಪಚಾರಿಕವಾಗಿ. +ಅದಕ್ಕೆ ಉತ್ತರವಾಗಿಯೊ ಎಂಬಂತೆ ಪಿಜಿಣ, ಹೊದೆದಿದ್ದ ಕಂಬಳಿಯನ್ನು ಕಾಲತ್ತ ನೂಕಿ, ಏಳಲಾರದೆ ಎದ್ದು ಕುಳಿತನು. +ಸೂಚನೆಯನ್ನು ತಿಳಿದು ಅಕ್ಕಣಿ ಬಳಿಗೆ ನಡೆದು, ಅವನಿಗೆ ಏಳಲು ಸಹಾಯ ಮಾಡಿದಳು. +ಅಲ್ಲಿಯೆ ಮರೆ ಕಟ್ಟಿದ್ದ ಒಂದು ಮೂಲೆಗೆ ಎಲುಬು ಚಕ್ಕಳವಾಗಿದ್ದ ಪಿಜಿಣನನ್ನು ನಡೆಸಿಕೊಂಡು ಹೋಗಿ ಕೂರಿಸಿದಳು. +ಆ ಬಿಡಾರವನ್ನು ತುಂಬಿದ್ದ ದುರ್ವಾಸನೆಗೆ ಕಾರಣ ಚೀಂಕ್ರನಿಗೆ ಗೊತ್ತಾದದ್ದು ಆಗಲೆ! +’ಇನ್ನೇನು ಹೆಚ್ಚು ದಿನಾ ಇಲ್ಲ ಇವನಿಗೆ!’ ಎಂದುಕೊಂಡನು ಚೀಂಕ್ರ ಮನಸ್ಸಿನಲ್ಲಿಯೆ. +ಅಕ್ಕಣಿ ಕೌಪೀನ ಮಾತ್ರ ಧಾರಿಯಾಗಿದ್ದ ಗಂಡನ ರಟ್ಟೆ ಹಿಡಿದು ತಂದು ಚಾಪೆಯ ಮೇಲೆ ಮೆಲ್ಲಗೆ ಮಲಗಿಸಿ ಕಂಬಳಿ ಹೊದಿಸಿದಳು, ತಾಯಿ ಮಗುವನ್ನೆಂತೊ ಅಂತೆ. +“ಮಲಗಿ ಮಲಗಿ ಚರ್ಮ ಎಲ್ಲ ಸುಲಿದೆ ಹೋಯಿತ್ತು! +ಉಸ್ ಸ್ ಸ್ ಸ್!” ಎಂದುಕೊಂಡನು ಪಿಜಿಣ, “ಏನಾದರೂ ಸೊಲ್ಪ ಸಕ್ತಿ ಬರ್ಹಾಂಗೆ ಕೊಟ್ಟಿದ್ರೆ? +ಉಸ್ ಸ್ ಸ್ ಸ್….ಇನ್ನೊಂದು ಸಾರಿ ತಿರುಗಾಡುವಂತಾದ್ರೆ ಮತ್ತೆ ನಾನು ಕಾಯಿಲೆಗೆ ಹೆದರುವುದಿಲ್ಲ….ಉಸ್ ಸ್ ಸ್ ಸ್! …. ಅವು ಎಂಥ ಶೀಸೆಗಳೋ?” +ಚೀಂಕ್ರ ಅಕ್ಕಣಿಗೆ ಹೇಳುವಂತೆ ಗುಟ್ಟಿನ ದನಿಯಲ್ಲಿ ಆ ಶೀಸೆಗಳೆಲ್ಲ ಸಾರಾಯಿ ಶೇಸೆಗಳೆಂದೂ, ಅದೆಲ್ಲ ಮನೆಯ ಬಟ್ಟಿಯಲ್ಲಿಯೆ ತಯಾರಾದ ಬಹಳ ಘಾಟು ಇರುವ ವಸ್ತುವೆಂದೂ, ಅದನ್ನು ತನ್ನ ಬಿಡಾರದಲ್ಲಿ ಬಚ್ಚಿಟ್ಟರೆ ಅನುಮಾನಕ್ಕೆ ಕಾರಣವಾಗಿ ಸಿಕ್ಕಿಹಾಕಿಕೊಳ್ಳುವ ಸಂಭವವಿದೆಯೆಂದೂ, ಪಿಜಿಣನ ಬಿಡಾರದಲ್ಲಿ ಅವಿಸಿಟ್ಟರೆ ಯಾರೂ ಗಮಾನಿಸರೆಂದೂ, ತಾನೂ ಅವುಗಳನ್ನು ಸುರಕ್ಷಿತ ಸ್ಥಾನಕ್ಕೆ ಸಾಗಿಸುವವರೆಗೆ ಅವು ಅಲ್ಲಿಯೆ ಇರಲಿ ಎಂದೂ ವಿವರಣೆ ಕೊಟ್ಟು, ಉರಿಹೊತ್ತಿಸಿ ಬೆಂಕಿಮಾಡಲು ಒಂದು ಮೂಲೆಯಲ್ಲಿ ಜಿಗ್ಗಿನೊಡನೆ ರಾಶಿಹಾಕಿದ್ದ ಕೊನೆಮಟ್ಟೆಗಳಡಿ ಅವನ್ನೆಲ್ಲ ಮುಚ್ಚಿಟ್ಟನು…. +ಐತ ಪೀಂಚಲು ಅವರ ಬಿಡಾರದಲ್ಲಿ ಇದ್ದಾರೆಯೆ ಎಂದು ವಿಚಾರಿಸಿದಾಗ ಅಕ್ಕಣಿ ತಿಳಿಸಿದಳು, ಅವರು ಎರಡು ಮೂರು ದಿನಗಳ ಹಿಂದೆಯೆ ಮದುವೆಯ ಕೆಲಸ ಮಾಡಿಕೊಡಲು ಹೂವಳ್ಳಿ ಮನೆಗೆ ಹೋದರು ಎಂದು. +ಚೀಂಕ್ರ-ತನಗೂ ನಾಯಕರು ಹೇಳಿದ್ದರು, ಎರಡು ದಿನಕ್ಕೆ ಮೊದಲೆ ಬಂದು ಮದುವೆ ಮನೆಯ ಚಪ್ಪರ ಗಿಪ್ಪರ ಹಾಕಿಕೊಡು ಎಂದು, ಆದರೆ ಬೇರೆ ಏನೋ ಕೆಲಸ ಗಂಟು ಬಿದ್ದಿದ್ದರಿಂದ ಹೋಗಲಾಗಲಿಲ್ಲ; +ಇವತ್ತೆ ರಾತ್ರೆ ಹೋಗ್ತೆ; + ನಾಳೆಯಷ್ಟೆ ಮದುವೆಯ ದಿಬ್ಬಣ ಬರುವುದು?-ಎಂದು ಹೇಳಿ ತನ್ನ ಬಿಡಾರಕ್ಕೆ ಹೋಗಿ ರಾತ್ರಿಯೂಟ ಮುಗಿಸಿಕೊಂಡು ಹೂವಳ್ಳಿಗೆ ಹೋದನು. +ಚೀಂಕ್ರನಿಗೆ ಯಾವ ಮದುವೆಯ ಮನೆಗೂ ಕರೆ ಬೇಕಾಗಿರಲಿಲ್ಲ. +ಅವನು ಹೋಗಿಯೆ ಹೋಗುತ್ತಿದ್ದನು, ತುಂಡು ಕಡಬು ಪರಮಾನ್ನಕ್ಕಾಗಿ! +ಮತ್ತು, ಹುಡುಗರು ಮಕ್ಕಳ ಕೈಯಿಂದಲೊ ಮದುವೆಗೆ ಬಂದ ಗರತಿ ನೆಂಡತಿ ಯರ ಮೈಯಿಂದಲೊ ಗ್ರಾಸ್ತರ ಜೇಬಿನಿಂದಲೊ ಉಂಗುರವೋ ಅಡ್ಡಿಕೆಯೋ ಮುಯ್ಯಿಡಲು ತಂದಿದ್ದ ಹಣವೋ…. +ಯಾವುದು ಸಿಕ್ಕರೆ ಅದನ್ನು ಲಪಟಾಯಿಸಿ, ಬಿರುಸು ಬಾಣ ಗರ್ನಾಲು ಹಾರಿಸುವುದಕ್ಕಾಗಿ ಎಲ್ಲ ಮದುವೆ ಮನೆ ಗಳಲ್ಲಿಯೂ ಹಾಜರಿರುತ್ತಿದ್ದ ಸಾಬರ ಮುಖಾಂತರ ಅದನ್ನು ಸಾಗಿಸುವ ಸಂಪಾದನೆಗಾಗಿ! +ಮತ್ತು, ಸಂನಿವೇಶವೊದಗಿ, ಸಾಧ್ಯವಾದರೆ, ಮತ್ತೊಂದು ಕೆಟ್ಟಕೆಲಸಕ್ಕಾಗಿಯೂ! +ಚೀಂಕ್ರ ಹೂವಳ್ಳಿಮನೆಗೆ ತಲುಪಿದಾಗ ಮದುವೆಯ ಕೆಲಸಕ್ಕೆ ಬಂದಿದ್ದ ಆಳುಗಳಿಗೆ ಇನ್ನೂ ರಾತ್ರಿಯೂಟವಾಗಿರಲಿಲ್ಲ. +ಮಳೆಗಾಲದ ಮದುವೆಯಾದ್ದರಿಂದ ಬೇಸಗೆಯಲ್ಲಿ ನೆರೆಯುತ್ತಿದ್ದಂತೆ ನೆಂಟರೂ ಸೇರಿದ್ದಿರಲಿಲ್ಲ. +ಹೂವಳ್ಳಿ ಮನೆ ಹಿಂದಿನ ಕಾಲದ ಚೌಕಿ ಮನೆಯಾಗಿದ್ದರಿಂದ ಆ ಮಳೆಗಾಲದ ಮದುವೆಗೆ ನೆರೆಯಬಹುದಾದ ಅಲ್ಪಸ್ವಲ್ಪ ಜನಕ್ಕೆ ಚೌಕಿಯ ಜಾಗವೆ ಯಥೇಚ್ಛವಾಗಿತ್ತು. +ಮಳೆ ಬಿಡದೆ ಹೊಡೆಯುತ್ತಲೆ ಇದ್ದುದರಿಂದ ಧಾರೆಯ ಮಂಟಪವನ್ನೂ ಪದ್ಧತಿಯಂತೆ ಅಂಗಳದಲ್ಲಿ ನಿರ್ಮಿಸದೆ ಚೌಕಿಯ ಒಂದು ಮೂಲೆಯಲ್ಲಿಯೆ ರಚಿಸಿದ್ದರು. +ಅಲ್ಲಿಯೆ ಪಕ್ಕದಲ್ಲಿ ಹಸೆಗೋಡೆಯನ್ನೂ ಬರೆಯಿಸಿದ್ದರು. +ಹಸೆಗೋಡೆಯನ್ನು ಬರೆಯುತ್ತಿದ್ದವನು ಇನ್ನೂ ಅದನ್ನು ಮುಗಿಸಿರಲಿಲ್ಲ; +ದೀಪದ ಬೆಳಕಿನಲ್ಲಿ ಎಲೆಗಳಿಗೆ ಹಸರು ಬಣ್ಣ ತುಂಬುತ್ತಿದ್ದನು. +ನಾಲ್ಕಾರು ಕೆಲಸದ ಜನರು, ತಮ್ಮ ಗ್ರಾಮೀಣತಾರುಚಿಗೆ ಅದ್ಭುತವಾಗಿ ತೋರುತ್ತಿದ್ದ ಆ ವರ್ಣಕಲೆಯನ್ನು ನೋಡುತ್ತಾ ಬಿಟ್ಟ ಬಾಯಾಗಿ ಪ್ರಶಂಸಿಸುತ್ತಾ ಸುತ್ತ ನಿಂತಿದ್ದರು! +ಚೀಂಕ್ರನೂ ಹೋಗಿ ಅವರ ನಡುವೆ ನಿಂತು ನೋಡತೊಡಗಿ ಅವರ ಮಾತುಕತೆಗಳಲ್ಲಿ ಭಾಗಿಯಾದನು. +ಹಿತ್ತಲುಕಡೆಯ ಬಾಗಿಲಲ್ಲಿ ಹೋಗೀ ಬಂದೂ ಮಾಡುತ್ತಿದ್ದು, ಗಟ್ಟದ ಮೇಲಿನವರಂತೆ ಗೊಬ್ಬೆಸೆರಗುಕಟ್ಟಿ ಹೊಸ ಸೀರೆಯುಟ್ಟು ಮನೋಹರವಾಗಿ ಮೆರೆಯುತ್ತಿದ್ದ ಪೀಂಚಲು ಚೀಂಕ್ರನ ಹಸಿದ ಕಣ್ಣಿಗೆ ಬಿದ್ದಳಾದರೂ ಐತನ ಸುಳಿವು ಮಾತ್ರ ಅಲ್ಲೆಲ್ಲಿಯೂ ಇರಲಿಲ್ಲ. +ವಿಚಾರಿಸಿದಾಗ ಕೆಲಸ ಮಾಡುತ್ತಿದ್ದವರು ಹೇಳಿದರು, ಅವನು ಇತ್ತ ಕಡೆ ಬಂದೇ ಇಲ್ಲ ಎಂದು. +ಪೀಂಚಲು ಇದ್ದಲ್ಲಿ ಐತ ಇಲ್ಲದೆ ಇದ್ದುದಕ್ಕೆ ಸೋಜಿಗ ಪಡುತ್ತಾ ಹೇಳಿಕೊಂಡನು ಚೀಂಕ್ರ ತನ್ನಲ್ಲಿಯೆ. ’ +ಹಾಂಗಾದ್ರೆ ನಾನು ಕೇಳಿದ ಸುದ್ದಿಯಲ್ಲಿ ಏನೋ ಇರಬೇಕು!’ +ಕನಸಿನಿಂದ ಎಚ್ಚೆತ್ತು ಹಾಸಗೆಯಲ್ಲಿ ಮಗ್ಗುಲಿಗೆ ಹೊರಳಿದಾಗ ಚಿನ್ನಮ್ಮಗೆ, ತಾನು ತೊಟ್ಟುಕೊಂಡೆ ಮಲಗಿ ನಿದ್ರಿಸಿದ್ದ ಆಭರಣಗಳಿಂದಲೂ ಉಟ್ಟುಕೊಂಡಿದ್ದ ಹೊಸ ಸೀರೆಯ ಜರಿಯ ಮರ್ಮರದಿಂದಲೂ, ತಾನು ಮದುಮಗಳಾಗಿದ್ದೇನೆ ಎಂಬ ಕಟುತ್ವ ತಟಕ್ಕನೆ ಪ್ರಜ್ಞಾಗೋಚರವಾಯ್ತು. +ಅವಳು ಆ ಬೆಲೆಯುಳ್ಳ ಒಡವೆಗಳನ್ನು ಸಂತೋಷದಿಂದ ತೊಟ್ಟುಕೊಂಡಿರಲಿಲ್ಲ; +ಇತರರ ಬಲಾತ್ಕಾರಕ್ಕಾಗಿ ಇಟ್ಟುಕೊಂಡಿದ್ದಳಷ್ಟೆ! +ಹೂವಳ್ಳಿ ಮನೆಯ ಆ ಕೋಣೆಯಲ್ಲಿ ಇನ್ನೂ ಕತ್ತಲೆ ತನ್ನ ಅಧಿಕಾರವನ್ನು ಬಿಟ್ಟುಕೊಟ್ಟಿರಲಿಲ್ಲ. +ಆಗ ತಾನೆ ಬೆಳಗಾಗಿದ್ದರೂ, ಮೋಡ ಮುಸುಕಿ, ಮಳೆ ಕುಂಭದ್ರೋಣವಾಗಿ ಸುರಿಯುತ್ತಿದ್ದುದರಿಂದ, ಮಳೆಗಾಲದ ಮಲೆನಾಡಿನಲ್ಲಿ ನಿರಂತರವಾಗಿ ದಟ್ಟಯಿಸಿರುವ ಹಗಲುಮಬ್ಬು ಆ ಒಂದೇ ಒಂದು ಸಣ್ಣ ಬೆಳಕಂಡಿ ಇರುವ ಕೋಣೆಯನ್ನು ಬೆಳಗಲು ಪ್ರಯತ್ನಿಸಿ ಸೋತುಹೋದಂತಿತ್ತು. +ಮಲಗಿದ್ದಂತೆಯೆ ಮದುವಣಗಿತ್ತಿ ಚಿನ್ನಮ್ಮ ತುಸು ತಲೆಯೆತ್ತಿ ನೋಡಿದಳು. +ತನಗೆ ತುಸು ಬಳಿಯೆ ಇದ್ದು ಬರಿದಾಗಿದ್ದ ಹಾಸಗೆಯಿಂದ ತನ್ನ ಅಜ್ಜಿ ಆಗಲೆ ಎದ್ದು ಅಡುಗೆ ಮನೆಗೆ ಹೋಗಿದ್ದುದು ಗೊತ್ತಾಯಿತು. +ತನ್ನ ಮತ್ತೊಂದು ಪಕ್ಕದಲ್ಲಿ ಚಾಪೆಗಳ ಮೇಲೆ ಹಾಸಿದ್ದ ಒಂದು ದೊಡ್ಡ ಜಮಖಾನೆಯ ಮೇಲೆ ಮೂವರು ಹುಡುಗರು ಅಸ್ತವ್ಯಸ್ತವಾಗಿ ಮಲಗಿದ್ದುದು ಮಬ್ಬುಮಬ್ಬಾಗಿ ಕಾಣಿಸಿತು. +ಮದುವೆ ಮನೆಯಲ್ಲಿ ಬಂದ ನೆಂಟರಿಗೆಲ್ಲ ಹಾಸಗೆ ಹಾಸುವುದು ಸಾಧ್ಯವಲ್ಲವಾದ್ದರಿಂದ ಚಾಪೆಗಳ ಮೇಲೆ ಜಮಖಾನೆಯನ್ನೊ ಜಾಡಿಯನ್ನೊ ಹೆಗ್ಗಂಬಳಿಯನ್ನೊ ಬಿಚ್ಚಿಹರಡಿದರೆ ಅದೇ ಹಾಸಗೆಯಾಗಿ, ಅಗಲಕ್ಕೆ ತಕ್ಕಂತೆ, ಎಂಟೊ ಹತ್ತೊ ಇಪ್ಪತ್ತೊ ಜನರು ಒಟ್ಟೊಟ್ಟಿಗೆ ಮಲಗುತ್ತಿದ್ದುದು ರೂಢಿ. +ಹಾಗೆಯೆ ಚಿನ್ನಮ್ಮನ ಅಜ್ಜಿಯ ಕೋಣೆಯಲ್ಲಿ ಬಿಡಿ ಹಾಸಗೆಗಳಲ್ಲಿ ಮಲಗಿದ್ದ ಚಿನ್ನಮ್ಮ ಮತ್ತು ಅವಳ ಅಜ್ಜಿಯ ಜೊತೆ, ಹಾಸಿದ್ದ ಒಂದು ಜಮಖಾನೆಯಲ್ಲಿ, ಧರ್ಮು ಕಾಡು ತಿಮ್ಮು ಮೂವರೂ ಒಬ್ಬರ ಹೊಟ್ಟೆಯ ಮೇಲೆ ಒಬ್ಬರು ಕಾಲು ಹಾಕಿಯೊ, ಒಬ್ಬರ ಕಾಲ ಹತ್ತಿರ ಮತ್ತೊಬ್ಬರು ತಲೆ ಇಟ್ಟುಕೊಂಡೊ, ಹೊದಿಕೆಯನ್ನು ಎತ್ತೆತ್ತಲೊ ತಳ್ಳಿ ಮಲಗಿದ್ದರು! +ನಿರುದ್ವಿಗ್ನರೂ ನಿಶ್ಚಿಂತರೂ ಆಗಿ ಅಸ್ತವ್ಯಸ್ತ ವಿಚಿತ್ರ ವಿನ್ಯಾಸ ಭಂಗಿಗಳಿಂದ ನಿದ್ರಾಮಗ್ನರಾಗಿ ಬಿದ್ದಿದ್ದ ಆ ಬಾಲಕರ ಮುಗ್ದರೂಪಗಳನ್ನು ಕಂಡು ಚಿನ್ನಮ್ಮಗೆ ತನ್ನ ಆ ವಿಷಮಸಂಕಟಸ್ಥಿತಿಯಲ್ಲಿಯೂ ಮುಗುಳುನಗದಿರಲಾಗಲಿಲ್ಲ. +ಏಕೋ ಏನೋ? +ಆ ಮಳೆಯ ರೇಜಿಗೆಯ ದುರ್ದಿನದ ನಿರಾಶಾಮಯ ಮ್ಲಾನತೆಯಲ್ಲಿಯೂ ಹಾಗೆ ಪ್ರಶಾಂತವಾಗಿ ನಿದ್ರಿಸುತ್ತಿದ್ದ ಮಕ್ಕಳನ್ನು ಕಂಡ ಅವಳ ಹೃದಯದಲ್ಲಿ ಏನೋ ಆಶಾಭರವಸೆ ಸುಳಿದಂತಾಗಿ, ಮತ್ತೆ ಹಾಗೆಯೆ ಮಲಗಿ ಕಣ್ಣುಮುಚ್ಚಿಕೊಂಡಳು. +ಮನಸ್ಸು ಎಚ್ಚರುವ ಮುನ್ನ ತಾನು ಕಂಡಿದ್ದ ಕನಸನ್ನು ನೆನೆದು ಸೋಜಿಗಪಡಗತೊಡಗಿತ್ತು.-ಹೌದು; + ಮುಕುಂಬಾವ ಕಲ್ಲೂರು ಹೊಳೆದಂಡೆಯಲ್ಲಿ ಕಂಡೆ ಎಂದು ಹೇಳಿದ್ದ ಆ ಗಡ್ಡದಯ್ಯನವರೆ ಇರಬೇಕು, ಕನಸಿನಲ್ಲಿ ನನಗೆ ಕಾಣಿಸಿಕೊಂಡ ಸ್ವಾಮಿಗಳು! +ಅವರ ಸಂಗಡ ಮುಕುಂಬಾವನೂ ಅವರ ದೊಡ್ಡಕ್ಕಯ್ಯನ ಕೈಹಿಡಿದು ನಡೆಸಿಕೊಂಡು ಬಂದರಲ್ಲಾ? +ಏನಾಶ್ಚರ್ಯ! …. ಪಾಪ! …. +ಹಳೆಮನೆ ರಂಗತ್ತಿಗಮ್ಮ ಗಂಡನ ಪಾದ ಹಿಡಿದುಕೊಂಡೇ ಸತ್ತು, ಗಂಡನ ಸಂಗಡಲೇ ಸೂಡಿನಲ್ಲಿ ಮಲಗಿ ಸ್ವರ್ಗಕ್ಕೆ ಹೋದರಲ್ಲಾ! +ಹೆಂಡತಿ ಅಂದರೆ ಹಾಂಗಿರಬೇಕು. +ಗಂಡನ ಜೊತೇಲೆ ಹೋಗಿಬಿಡಬೇಕು! …. +ಗಡ್ಡದಯ್ಯನೋರು ಏನೇನೋ ಹೇಳಿದ್ರಲ್ಲಾ ಮುಕುಂದಬಾವಗೆ…. +ನಂಗೊಂದೂ ಈಗ ನೆನಪಾಗೋದಿಲ್ಲ…. +ರಂಗತ್ತಿಗಮ್ಮ ನನ್ನ ತಲೆ ಸವರುತ್ತಾ ’ಅಳಬೇಡ, ಚಿನ್ನೂ! +ನಮ್ಮ ಮುಕುಂದ ಇದಾನೆ, ಯಾಕೆ ನಿಂಗೆ ಹೆದರಿಕೆ!’ ಅಂತಾ ಹೇಳಿದ್ಹಾಂಗಯ್ತಲ್ಲೇ? …. +ಥೂ ಇನ್ನೂ ಏನೇನೋ! +ಸರಿಯಾಗಿ ನೆನಪೇ ಆಗ ಒಲ್ಲದು…. +ಪಕ್ಕದಲ್ಲಿ ಮಲಗಿದ್ದ ಧರ್ಮು ನಿದ್ದೆಯಲ್ಲಿಯೆ ಏನನ್ನೊ ತಿನ್ನುವ ನಂತೆ ಬಾಯಿ ಚಪ್ಪರಿಸಿದುದನ್ನು ಗಮನಿಸಿ ಚಿನ್ನಮ್ಮಗೆ ಅವನೆ ಮೇಲೆ ಮುದ್ದು ಸೂಸಿದಂತಾಗಿ ಮುಗುಳು ನಗುತ್ತಾ ’ಕನಸಿನಾಗೇ ಎಂಥದನ್ನೋ ತಿಂತಿದಾನೆ ಧರ್ಮು…. +ಪಾಪ ತಬ್ಬಲಿ! …. +ನನ್ನ ಕನಸಿನಲ್ಲಿ ಅವನಮ್ಮ ಬಂದಿದ್ದನ್ನ ಅವನಿಗೆ ಹೇಳಿದ್ರೆ, ಗೊಳೋ ಅಂತಾ ಅತ್ತೇ ಬಿಡ್ತಾನೆ…. +ಎದ್ದಮೇಲೆ, ಅವನಿಗೆ, ನಿನ್ನೆ ನಾನು ನಾಗಕ್ಕ ಸೇರಿ ಮಾಡಿಟ್ಟಿರುವ, ಅರಳುಂಡೆ ಕೊಡ್ತೀನಿ…. +ಅವನು ಆ ಗಡ್ಡದಯ್ಯನೋರ್ನ ನೋಡಿದ್ದನಂತೆ, ಕಾಡು ತಿಮ್ಮು ಜೊತೇಲಿ…. +ಜೋಳಿಗೆಗೆ ಕೈಹಾಕಿ ಹಾಕಿ, ಏನೇನೊ ಹಣ್ಣು ಕೊಟ್ಟಿದ್ದರಂತೆ, ಆ ಗಡ್ಡದಯ್ಯನೋರು! …. ಮುಕುಂದಬಾವ ಹೇಳ್ತಿದ್ರು, ಅವರು ದೊಡ್ಡ ಮಹಾತ್ಮರು ಅಂತಾ…. +ಇದ್ದಕ್ಕಿದ್ದಹಾಗೆ ಧರ್ಮು “ಅವ್ವಾ, ಅವ್ವಾ, ಹೋಗ್ಬೇಡ, ಹೋಗ್ಬೇಡ! +ನಾನೂ ಬತ್ತೀನಿ!ನಾನೂ ಬತ್ತೀನಿ!ದಮ್ಮಯ್ಯ!ದಮ್ಮಯ್ಯ! +ನಿಂತ್ಕೋ ನಿಂತ್ಕೋ” ಎಂದು ಕೂಗಿಕೊಳ್ಳುತ್ತಾ ತಟಕ್ಕನೆ ಎದ್ದು ಕುಳಿತನು, ನಿದ್ದೆಗಣ್ಣಿನಲ್ಲಿಯೆ ಎಲ್ಲಿಗೋ ಓಡುವವನಂತೆ! +ಚಿನ್ನಮ್ಮ ಅವನನ್ನು ತಬ್ಬಿ ಹಿಡಿದು “ತಮ್ಮಯ್ಯಾ, ತಮ್ಮಯ್ಯಾ, ಎಚ್ಚರ ಮಾಡಿಕೊ” ಎಂದು ಕೆನ್ನೆಯ ಮೇಲೆ ಕೈಯಾಡಿಸಿದಳು, ಮದುಮಗಳ ಸಾಲಂಕೃತ ಕರದ ಕಡಗ ಬಳೆಗಳು ಝಣತ್ಕರಿಸುವಂತೆ…. +ಧರ್ಮು ಕಣ್ದೆರೆದು ಬೆಬ್ಬಳಿಸಿಸುತ್ತ ನೋಡುತ್ತಾ, ಚಿನ್ನಮ್ಮನನ್ನು ಗುರುತಿಸಿ, ಅವಳ ಕುತ್ತಿಗೆಗೆ ಸೆಟ್ಟುಹಾಕಿಕೊಂಡು ಅಳತೊಡಗಿದನು. +“ಯಾಕೋ ತಮ್ಮಯ್ಯಾ, ಎಚ್ಚರಮಾಡಿಕೊಳ್ಳೋ! +ನಾನು ಕಣೋ, ನಿನ್ನ ಚಿನ್ನಕ್ಕಯ್ಯ!” +“ಅವ್ವಾ ಬಂದಿತ್ತು, ಚಿನ್ನಕ್ಕಯ್ಯ. +ನಾನು ಕರೆದ್ರೂ ನಿಲ್ಲಲಿಲ್ಲ ಹೋಗೇ ಬಿಡ್ತು.”ಕಣ್ಣೀರೊರಸುತ್ತಾ ಚಿನ್ನಮ್ಮ ಸಂತೈಸಿದಳು. +“ಕನಸು ಕಣೋ ಅದಕ್ಕೆ ಯಾಕೆ ಅಳ್ತೀಯಾ?” +“ಅವೊತ್ತು ನಿಂಗೆ ಹೇಳ್ತಿದ್ದೆನಲ್ಲಾ, ಆ ಗಡ್ಡದಯ್ಯ? +ಅವನೂ ಬಂದಿದ್ದ. +ಅವೊತ್ತನ್ಹಾಂಗೆ ಜೋಳಿಗೆಯಿಂದ ಹಣ್ಣು ತೆಗೆದೂ ತೆಗೆದೂ ಅವ್ವನ ಕೈಗೆ ಕೊಡ್ತಿದ್ದ. +ಅವ್ವ ನಂಗೆ ಕೊಡ್ತಿತ್ತು. +ನಾನೂ ತಿಂದಿದ್ದೇ ತಿಂದಿದ್ದು! …. ” +“ಅದಕ್ಕೆ ಏನೋ, ಬಾಯಿ ಚಪ್ಪರಿಸ್ತಿದ್ದೀ, ನಿದ್ದೇಲೀ? …. +ನಾನು ಎಂಥದನಪ್ಪಾ ಹೀಂಗೆ ತಿನ್ತಾನೆ ಅಂತಿದ್ದೆ? …. ” ಚಿನ್ನಮ್ಮನ ಧ್ವನಿಯಲ್ಲಿ ಹಾಸ್ಯವಿತ್ತು. +ಇಬ್ಬರೂ ಮೆಲ್ಲಗೆ ನಗಾಡಿದರು. +ಮಳೆ ತುಸು ನಿಂತಿದ್ದರಿಂದ ಮದುವೆಮನೆಯ ಗಜಿಬಿಜಿ ಕೋಣೆಯವರೆಗೂ ಕೇಳಿಸಿತ್ತು. +ಬೆಳಕೂ ತುಸುವೆ ಬಲಿತಿತ್ತು. +“ಏ ಎಡದ ಮಗ್ಗುಲಲ್ಲಿ ಏಳಬೇಡೋ?” ಎಚ್ಚರಿಸಿದನು ಧರ್ಮು. +ಹಾಸಗೆಯ ಮೇಲೆ ಎದ್ದು ಕುಳಿತಿದ್ದ ತಿಮ್ಮು ಮತ್ತೆ ಮಲಗಿ, ತನ್ನ ಬಲಗಡೆ ಯಾವುದೆಂದು ಖಾತ್ರಿ ಮಾಡಿಕೊಂಡು, ಬಲದ ಮಗ್ಗುಲಲ್ಲಿ ಎದ್ದುಕುಳಿತನು, ಸಂಭವಿಸಲಿದ್ದ ಯಾವುದೊ ಅಮಂಗಳವನ್ನು ಪರಿಹರಿಸಿಕೊಂಡ ಸಂತೃಪ್ತಿಯಿಂದ. +ಮೂವರು ಹುಡುಗರೂ ಬಡಬಡನೆ ಎದ್ದು ಕೋಣೆಯಿಂದ ಹೊರಗೆ ಓಡುತ್ತಲೆ ಹೋದರು…. +ಕಾಲಿಗೆ ಮುಳ್ಳು ಚುಚ್ಚಿ ಕೀತಿದ್ದ ಬಲಹಿಮ್ಮಡಿಯನ್ನು ಊರಲಾರದೆ ಕಾಡು ಕುಂಟಿ ಟೊಕ್ಕಹಾಕುತ್ತಲೆ ಹೊಸಲು ದಾಟಿದನು. +ಕಳೆದ ರಾತ್ರಿ ಮಲಗುವಾಗಲೆ ಚಿನ್ನಮ್ಮ ಅವನ ಕಾಲಿಗೆ ಎರಡು ದಿನಗಳ ಹಿಂದೆಯೆ ಚುಚ್ಚಿ ಒಳಗೇ ಮುರಿದುಕೊಂಡಿದ್ದ ಮುಳ್ಳನ್ನು ಸೂಜಿಯಿಂದ ಬಿಡಿಸಿ, ತೆಗೆಯುತ್ತೇನೆಂದು ಎಷ್ಟು ಹೇಳಿದರೂ ’ನೋವಾಗುತ್ತದೆ’ ಎಂದು ಮುಳ್ಳನ್ನು ತೆಗೆಯಲು ಬಿಟ್ಟಿರಲೆ ಇಲ್ಲ, ಕಾಡು. +ಮೂವರು ಹುಡುಗರೂ ಹೊರಗೆ ಹೋದ ಮೇಲೆ ಕೋಣೆಯ ಜನವಿಹೀನತಾ ನಿಃಶಬ್ದತೆ ತಟಕ್ಕನೆ ಬಾರಚಪ್ಪಡಿಯಾಗಿ ತನ್ನ ಹೃದಯದ ಮೇಲೆ ಅಪ್ಪಳಿಸಿ ಕೂತಂತಾಯ್ತು. +ಉಸಿರಾಡುವುದು ಕಷ್ಟವಾದಂತಾಗಿ ಪ್ರಯತ್ನಪೂರ್ವಕ ಉಸಿರೆಳೆದುಕೊಳ್ಳತೊಡಗಿದಳು. +ಮಕ್ಕಳ ಸಂಗದಲ್ಲಿ ಅಷ್ಟೇನೂ ಪ್ರಜ್ಞಾಭಾರವಾಗಿರದೆ ಹಗುರವಾದಂತಿದ್ದ ತನ್ನ ಆ ದಿನದ ಘೋರ ಪರಿಸ್ಥಿತಿ, ನೀರಿನೊಳಗಿದ್ದ ಕಲ್ಲುಗುಂಡನ್ನು ನೀರಿನ ಮಟ್ಟದಿಂದ ಮೇಲಕ್ಕೆ ಎತ್ತಿದಾಗ ಆಗುವಂತೆ, ಇಮ್ಮಡಿ ಮುಮ್ಮಡಿ ತೂಕದಿಂದ ಅಸಹನೀಯ ದುರ್ಭರವಾಯಿತು. +ಆ ಪರಿಸ್ಥಿತಿಯಿಂದ ತನ್ನನ್ನು ಪಾರುಮಾಡಲು ರಚಿತವಾಗಿರುವ ವ್ಯೂಹೋಪಾಯವೂ ತನ್ನ ಅಪಾಯಕರ ಸಂದಿಗ್ಧತೆಯಿಂದ ಮತ್ತಷ್ಟು ಭೀಕರವಾಗಿ ಕಂಡಿತು. +ಮುಕುಂದಬಾವ ನಿಂದ ಕಲಿತಿದ್ದ ಪ್ರಾರ್ಥನೆ ನಿಟ್ಟುಸಿರಾಗಿ ಹೊಮ್ಮಿತು. +’ನಿನ್ನ ಪಾದಕ್ಕೆ ಬಿದ್ದೆ; ಕೈ ಹಿಡಿದೆತ್ತಿ ಕಾಪಾಡು, ಸ್ವಾಮಿ, ಸ್ವಾಮಿ, ಪರಮಾತ್ಮಾ!’ಭಗವಂತನಿದ್ದಾನೆ ಎಂಬುದರಲ್ಲಾಗಲಿ, ಭಕ್ತಿಯಿಂದ ಪ್ರಾರ್ಥಿಸಿದರೆ ನಮ್ಮ ಕಷ್ಟಗಳನ್ನೆಲ್ಲ ಪರಿಹರಿಸಿ ಕಾಪಾಡುತ್ತಾನೆ ಎಂಬುದರಲ್ಲಾಗಲಿ, ಅವನಿಗೆ ಅಸಾಧ್ಯವಾದುದು ಏನು ಇಲ್ಲ, ಅವನು ಸರ್ವಶಕ್ತ ಎಂಬುದರಲ್ಲಾಗಲಿ, ಅವಳು ಸಂದೇಹವೆಂಬುದನ್ನೆ ಹುಟ್ಟಿನಿಂದಲೆ ಅರಿಯದವಳಾಗಿದ್ದಳು. +ಅವಳ ಶ್ರದ್ಧೆ ವಿಚಾರನಿಷ್ಠವಾಗಿರಲಿಲ್ಲ, ನಿಸರ್ಗ ಸಿದ್ಧವಾಗಿತ್ತು. +ಭಾಗವತರಾಟಗಳಲ್ಲಿ ತಾಳಮದ್ದಳೆ ಪ್ರಸಂಗಗಳಲ್ಲಿ ಅವಳು ಕೇಳಿ ನೋಡಿದ್ದುದು ಏನಿದ್ದರೂ  ಆ ನಿಸರ್ಗದತ್ತವಾದ ಶ್ರದ್ಧೆಯನ್ನು ಸ್ವಲ್ಪ ಬುದ್ಧಿಜಾಗ್ರತವನ್ನಾಗಿ ಮಾಡುವುದೆಷ್ಟೋ ಅಷ್ಟೆ ಆಗಿತ್ತು. +ದ್ರೌಪದಿಗೆ ಮಾನಾಪಹರಣಕಾರಿಯಾದ ಮಹತ್ ಸಂಕಟ ಒದಗಿದಾಗ ಅವಳ ಪ್ರಾರ್ಥನೆಗೆ ಓಗೊಟ್ಟು ಕಾಪಾಡಲಿಲ್ಲವೆ ಶ್ರೀಕೃಷ್ಣ ಪರಮಾತ್ಮ? +ಮೊಸಳೆಯ ಕೈಗೆ ಸಿಕ್ಕ ಗಜೇಂದ್ರನ ಪ್ರಾರ್ಥನೆ ಕೂಡ ಭಗವಂತನಿಗೆ ಕೇಳಿಸಿರಲಿಲ್ಲವೆ? +ಭಕ್ತರ ಆರ್ತಪ್ರಾರ್ಥನೆಗೆ ಭಗವಂತ ಓಗೊಟ್ಟ ಎಷ್ಟೋ ಕಥೆಗಳನ್ನು ಕೇಳಿದ್ದಳು ಚಿನ್ನಮ್ಮ. +ಆದರೆ ಅವು ಬರಿಯ ಕಾವ್ಯ ಕಥೆಗಳಾಗಿರಲಿಲ್ಲ ಅವಳಿಗೆ; +ಸರಿಯಾಗಿ ಪ್ರಯೋಗವಾದೊಡನೆಯೆ ನಿರ್ದಿಷ್ಟ ಫಲವನ್ನೆ ಅನಿವಾರ್ಯವಾಗಿ ಕೊಡುವ ವೈಜ್ಞಾನಿಕ ಬೀಜಸೂತ್ರಗಳಂತಿದ್ದವು. +ಆ ಸೂತ್ರಗಳಲ್ಲಿ ವಿಜ್ಞಾನಿಗಿರುವ ಶ್ರದ್ಧೆಗೇನೂ ಬಿಟ್ಟುಕೊಡುತ್ತಿರಲಿಲ್ಲ ಈ ಕಥಾಪ್ರತಿಮೆಗಳಲ್ಲಿ ಯಾವಾಗ ಬೇಕಾದರಾವಾಗ ಕ್ರಿಯೆಯಾಗಲು ಅಣಿಯಾಗಿರುವ ಕೃಪಾಶಕ್ತಿಯಲ್ಲಿ ಚಿನ್ನಮ್ಮನಿಗೆ ಇದ್ದ ಶ್ರದ್ಧೆ. +ಅಂಧಶ್ರದ್ಧೆ, ಅವಿಚಾರದಿಂದ ಅಂಧವಾದಷ್ಟೂ ಶಕ್ತಿಯುಕ್ತವಾಗುವ ಶ್ರದ್ಧೆ, ದಿವ್ಯಶ್ರದ್ಧೆ! +ಇದ್ದಕ್ಕಿದ್ದ ಹಾಗೆ ಗಾಳಿ ಮಳೆಗಳ ಭೋರಾಟದ ವಿರಾಮವನ್ನೆ ಅವಕಾಶ ಮಾಡಿಕೊಂಡಂತೆ, ಮದುವೆಮನೆಯ ವಾಲಗ ಮದ್ದಳೆಗಳ ಪೇಂ ಪೇಂ ಪೇಂ ಡುಬ್ ಡುಬ್ ಡುಬ್ ಡುಬ್ ನಾದ, ಅಲ್ಲ ಸದ್ದು ಕೇಳಿಸ ತೊಡಗಿತ್ತು, ಹಿಂದೆ ಅನೇಕ ಸಾರಿ ಚಿನ್ನಮ್ಮ ನಂಟಳಾಗಿ ಹೋಗಿದ್ದ ಮದುವೆ ಮನೆಗಳಲ್ಲಿ ಕೇಳಿಸಿದ್ದಂತೆ ಕರ್ಣಾನಂದಕರವಾಗಿ ಅಲ್ಲ, ಕರ್ಣಕಠೋರವಾಗಿ! +ತೀರ್ಥಹಳ್ಳಿಯಿಂದ ಆ ಜಿರಾಪತಿ ಮಳೆಯಲ್ಲಿ ವಾಲಗದವರು ಬರದಿದ್ದ ಪ್ರಯುಕ್ತ ಹಳೆಮನೆಯ ಕೇರಿಯ ಹೊಲೆಯರನ್ನೆ ಆ ಕೆಲಸಕ್ಕೆ ನೇಮಿಸಿದ್ದರು ಎಂಬ ಕಾರಣದಿಂದಲ್ಲ, ತನಗೊದಗಲಿರುವ ದುರಂತ ಹತ್ತಿರಕ್ಕೆ ಹತ್ತಿರಕ್ಕೆ ಬರುತ್ತಿದೆ ಎಂಬುದನ್ನು ಚಿನ್ನಮ್ಮನ ಪ್ರಜ್ಞೆಗೆ ಚೀರಿಹೇಳುತ್ತಿರುವಂತೆ ತೋರಿದ್ದರಿಂದ. +ಯಾರೋ ಆಜ್ಞೆಮಾಡಿರಬೇಕು ಸುಮ್ಮನಿದ್ದ ಆ ವಾಲಗದವರಿಗೆ. ’ +ಉದ್ರೋ, ಉದ್ರೋ, ಮದೋಳ್ಗೀಗೆ ಸಾಸ್ತ್ರ ಮಾಡಿಸ್ತಾರೆ!’ಆ ಸದ್ದನ್ನೆ ಹಿಂಬಾಲಿಸಿದಂತೆ ಒಬ್ಬರು ಮುತ್ತೈದೆ ನೆಂಟರಮ್ಮ ಕೋಣೆಯನ್ನು ಪ್ರವೇಶಿಸಿ ರಾಗ ತೆಗೆದರು, ತುಂಬ ವಿಶ್ವಾಸದ ಮತ್ತು ವಿನೋದದ ಧ್ವನಿಯಿಂದ. ’ +ಏನೇ?ಮದೋಳ್ಗೀಗೆ ಇನ್ನೂ ನಿದ್ದೆ ಹರೀಲೇ ಇಲ್ಲ ಅಂತಾ ಕಾಣ್ತದೆ….? +ಹೀಂಗೆ ಮನಗಿದ್ರೆ ಆತು ಬಿಡು ಗಂಡನ ಮನೇಲಿ! …. ”ಮುಕುಂದಬಾವ ಹೇಳಿದ್ದರು ಅವಳಿಗೆ, ತನ್ನ ಅಸಮಾಧಾನವನ್ನಾಗಲಿ ದುಃಖವನ್ನಾಗಲಿ ತನಗೆ ಒಪ್ಪಿಗೆಯಿಲ್ಲವೆಂಬ ಭಾವವನ್ನಾಗಲಿ ತೋರಗೊಡಕೂಡದು ಎಂದು ಯಾರ ಸಂಶಯವನ್ನೂ  ಕೆರಳಿಸದಂತೆ ಎಚ್ಚರಿಕೆಯಿಂದ ವರ್ತಿಸಬೇಕು ಎಂದು. +ನೆಂಟರಮ್ಮನ ಮಾತಿಗೆ ಚಿನ್ನಮ್ಮ ನಾಚಿಗೆಯನ್ನು ಪ್ರದರ್ಶಿಸಿ ನಸುನಗುವಂತೆ ತೋರುತ್ತಾ ಮೇಲೆದ್ದು ನಿಂತು “ಈಗ ಬಂದು ಬಿಡ್ತೀನಮ್ಮಾ, ನಾಗಕ್ಕನ್ನ ಸ್ವಲ್ಪ ಬರಾಕೆ ಹೇಳ್ತೀರಾ?” ಎಂದಳು. +ನೆಂಟರಮ್ಮ ಹೊರಗೆ ಹೋದರು. +ಒಂದೆರಡು ನಿಮಿಷಗಳಲ್ಲಿಯೆ ನಾಗಕ್ಕ ಪ್ರವೇಶಿಸಿದಳು. +ಚಿನ್ನಮ್ಮನ ಕಣ್ಣುಸನ್ನೆಯರಿತು ಬಾಗಿಲು ಮುಚ್ಚಿ ತಾಳ ಹಾಕಿದಳು. +ಸುತ್ತ ನೋಡಿ, ಕೋಣೆಯಲ್ಲಿ ತಾವಿಬ್ಬರೆ ಅಲ್ಲದೆ ಬೇರೆ ಯಾರೂ ಇಲ್ಲವೆಂದು ನಿಶ್ಚಯ ಮಾಡಿಕೊಂಡು, ಚಿನ್ನಮ್ಮನ ಬಳಿಗೆ ಬಿರುಬಿರನೆ ನಡೆದಳು. +ದುಃಖವುಕ್ಕಿ ಬಂದ ಚಿನ್ನಮ್ಮ ನಾಗಕ್ಕನ್ನನ್ನು ತೆಕ್ಕನೆ ತಬ್ಬು ಹಾಕಿ, ತನ್ನ ಮುಖವನ್ನು ಅವಳ ಎದೆಗೆ ಒತ್ತಿ, ಬಿಕ್ಕಿ ಬಿಕ್ಕಿ ಅಳತೊಡಗಿದಳು. +“ನೀ ಹೀಂಗೆ ಎದೆಗೆಟ್ರೆ ಹೆಂಗೇ? +ಸೊಲೂಪ ಧೈರ್ಯ ತಂದುಕೊ. +ಯಾಕೆ ಹೆದರ್ಕುತೀಯ?” ಸಂತೈಸಿದಳು ನಾಗಕ್ಕ. +ನಾಗಕ್ಕನ ವಕ್ಷಸ್ಥಲದಿಂದ ಮೊಗವೆತ್ತಿ, ಸೆರಗಿನಿಂದ ಕಣ್ಣೀರು ಒರಸಿಕೊಳ್ಳುತ್ತಾ ಚಿನ್ನಮ್ಮ ಕೇಳಿದಳು “ಪೀಂಚಲು ಇದಾಳೇನು?” +“ನಿನ್ನೆಯಿಂದಲೂ ಅಲ್ಲೇ ಇದಾಳೆ. +ರಾತ್ರೀನೂ ಅಲ್ಲೆ ಬಾಗಿಲಾಚೇನೆ ಮಲಗಿಕೊಂಡಿದ್ದಳು….” +“ಅವಳನ್ನ ಒಂದು ಚೂರು ಒಳಗೆ ಕರೀತೀಯಾ?” +“ಮುಕುಂದಣ್ಣ ಹೇಳಿದಾರೆ, ಯಾರಿಗೂ ಅನುಮಾನ ಹುಟ್ಟದ ಹಾಂಗೆ ನೋಡಿಕೋ ಅಂತಾ…. +ಹಸಲೋರವಳನ್ನ ಒಳಗೆ ಕರೆದಿದ್ದು ಯಾರಿಗಾದ್ರೂ ಗೊತ್ತಾದ್ರೆ? …. +ಪೀಂಚಲು ಹತ್ರ ನೀನು ಹಾಂಗೆ ಪದೇ ಪದೇ ಮಾತಾಡ್ತಾ ಇರೋದನ್ನ ಕಂಡರೆ ಯಾರಿಗಾದ್ರೂ ಅನುಮಾನ ಬರದೇ ಇರ್ತದಯೆ? …. +“ಐತ ರಾತ್ರೆ ಬಂದಿದ್ದನೇ? +ಏನಾದರೂ ಹೇಳಿದ್ನೇ? ಕೇಳಾನಾ ಅಂತಾ-” +“ಬಂದಿದ್ದನಂತೆ….” ಕಿಸಕ್ಕನೆ ನಕ್ಕಳು ನಾಗಕ್ಕ. +“ಗೊಬ್ಬೆ ಸೆರಗುಹಾಕಿ ನಮ್ಮ ಹಾಂಗೆ ಸೀರೆ ಉಟ್ಟಿದ್ದಳಲ್ಲಾ ಪೀಂಚಲು? +ಅದಕ್ಕೇ ಅವನಿಗೆ ಅವಳ ಗುರುತೇ ಸಿಕ್ಕದೆ ’ಹೆಗ್ಗಡ್ತಮ್ಮೋರೆ, ಪೀಂಚಲೂನ ಸೊಲ್ಪ ಬರಾಕೆ ಹೇಳ್ತೀರಾ, ನಿನ್ನ ಗಂಡ ಕರೀತಾನೆ ಅಂತಾ’…. +ಅಂತಾ ಅವಳಿಗೇ ಹೇಳಿದನಂತೆ! +ಅವಳಿಗೆ ನಗೆ ತಡೆಯಾಕೆ ಆಗದೆ ನೆಗಾಡಿದಾಗ ಅವನಿಗೆ ಗೊತ್ತಾಯ್ತಂತೆ, ಅವಳೇ ನನ್ನ ಹೆಂಡತಿ ಅಂತಾ! …. + ಚಿನ್ನಮ್ಮಗೂ ನಗು ತಡೆಯಲಾಗಲಿಲ್ಲ. +ತನ್ನ ಸಂಕಟವೆಲ್ಲ ಪರಿಹಾರವಾಯಿತೊ ಎಂಬಂತೆ ನಕ್ಕುಬಿಟ್ಟಳು. +ನಾಗಕ್ಕ ಮುಂದುವರಿದಳು. + “ನಿನ್ನನ್ನ ಅಡಗಿಸಿ ಇಡಾಕೆ ಏನೇನು ಬೇಕೋ ಅದನ್ನೆಲ್ಲ ಮಾಡಿ ಆಗಿದೆಯಂತೆ. +ಇವತ್ತು ಕತ್ತಲಾದ ಮ್ಯಾಲೆ ಹಿತ್ತಲು ಕಡೀಲಿರುವ ನೀರಿನ ಹಂಡೆಗೆ ಕೋಲು ಬಡಿದು ಸೂಚನೆ ಕೊಟ್ಟಕೂಡಲೆ, ನಾನು ನಿನಗೆ ಹೇಳ್ತೀನಿ. +ನೀನು ’ಹೊರಕಡೆಗೆ’ ಹೋಗ್ತೀನಿ ಅಂತಾ ಎದ್ದು ಬಾ. +ನಾನು ಪೀಂಚಲು ಕೈಲಿ ಚೊಂಬು ಕೊಟ್ಟು ನಿನ್ನ ಹಿಂದೆ ಕಳಿಸ್ತೀನಿ. +ಆ ಹಾಡ್ಯದ ಕಡೆ ನೀವಿಬ್ಬರೂ ಹೋಗಿ. +ಐತ ಅಲ್ಲಿ ಕಾಯ್ತಾ ಇರ್ತಾನೆ. +ಅವನ ಸಂಗಡ ಕಾಡುಹತ್ತಿ ಬಿಡಿ…. +ಮಳೇ ಏನು ನಿಲ್ಲೋ ಹಾಂಗೆ ಕಾಣಾದಿಲ್ಲ. +ಅದಕ್ಕೆಲ್ಲ ಏರ್ಪಾಡು ಮಾಡಿದಾರಂತೆ ಮುಕುಂದಣ್ಣ. +ನೀನು ಮಾತ್ರ ಅಳಾದು, ಹೆದರಾದು, ಪುಕ್ಕಲ್ತನ ಮಾಡಾದು ಎಲ್ಲಾ ಬಿಟ್ಟುಬಿಡು ಗೊತ್ತಾತೇನು? …. ” +ಯಾರೊ ಬಾಗಿಲು ತಟ್ಟಿದ ಸದ್ದು ಕೇಳಿಸಿತು. +“ಬಾಗಿಲು ತಟ್ತಿದಾರೆ. +ನಿನ್ನ ಮೀಯ್ಸಾಕೆ ಕರಕೊಂಡು ಹೋಗ್ತಾರೊ ಏನೊ? +ಮೀಯಿಸಲಿ, ಸೀರೆ ಉಡಿಸಲಿ, ಒಡವೆ ಹಾಕಲಿ, ಏನು ಮಾಡಿದರೂ ಮಾಡಲಿ. +ನೀನು ಸುಮ್ಮನಿದ್ದುಬಿಡು….” ಬಾಗಿಲ ಕಡೆ ತಿರುಗಿ ಕೂಗಿ ಹೇಳಿದಳು ನಾಗಕ್ಕ “ಬಂದ್ಲೂ!ಬಂದ್ಲೂ! +ಸೀರೆ ಉಟ್ಟುಕೊಳ್ತದೆ! …. ” ತುಸು ತಡೆದು, ಚಿನ್ನಮ್ಮ ಕಣ್ಣೊರೆಸಿ ಸೀರೆ ಸರಿಮಾಡಿಕೊಂಡಮೇಲೆ, ಸರಸರನೆ ಬಾಗಿಲೆಡೆಗೆ ಸರಿದು ತಾಳ ತೆಗೆದಳು. +ನಾಲ್ಕಾರು ನೆಂಟರಮ್ಮೋರು ಹೊಸಬಟ್ಟೆಯ ವಾಸನೆಯನ್ನು ಬೀರುತ್ತಿದ್ದ ಸೀರೆಗಳನ್ನುಟ್ಟು ಬರಬರನೆ ಸದ್ದು ಮಾಡುತ್ತಾ ಮದುಮಗಳಿಗೆ ಶಾಸ್ತ್ರ ಮಾಡಿಸಲು ಅವಳನ್ನು ಕರೆದುಕೊಂಡು ಹೋಗಲು ಕೋಣೆಯೊಳಕ್ಕೆ ಬಂದರು. +ಚಿನ್ನಮ್ಮನ ಕೋಣೆಯಿಂದ ಹೊರಬಿದ್ದ ಮೂವರು ಹುಡುಗರೂ ಬಚ್ಚಲಿಗೆ ಓಡುತ್ತಲೆ ಹೋಗಿ, ಮದುವೆಗೆ ಬಂದಿದ್ದು ಸ್ನಾನ ಮುಖ ಪ್ರಕ್ಷಾಲನಾದಿಗಳಲ್ಲಿದ್ದ ನೆಂಟರ ನಡುವೆ ನುಗ್ಗಿ, ಹಲ್ಲುಜ್ಜಿಕೊಳ್ಳುವ ಮುಖ ತೊಳೆದುಕೊಳ್ಳುವ ಶಾಸ್ತ್ರ ಪೂರೈಸಿ, ಅಲ್ಲಿಂದ ಅಡುಗೆ ಮನೆಗೆ ಓಡಿದರು. +ನೆಂಟರು ಗಿಂಟರು ಯಾವ ದಾಕ್ಷಿಣ್ಯಕ್ಕೂ ಕಟ್ಟುಬೀಳದೆ ಉಪಹಾರವನ್ನು ಗಿಟ್ಟಿಸಿಕೊಂಡು ಜಗಲಿಗೆ ಹೊರಟರು. +ಮಳೆಗಾಲವಾದ್ದರಿಂದಲೂ ಮಳೆ ಸುರಿಯುತ್ತಲೆ ಇದ್ದುದ್ದರಿಂದಲೂ ಬೇಸಾಯದ ಕಾಲವಾಗಿ ಜನರಿಗೆ ಪುರಸೊತ್ತು ಇಲ್ಲದಿದ್ದುದರಿಂದಲೂ ಮದುವೆಗೆ ಹೆಚ್ಚಾಗಿ ನೆಂಟರು ಸೇರಿರಲಿಲ್ಲ. +ಕಡೆಗೆ, ಒಂದು ದೆಯ್ಯದ ಹರಕೆಗೆ ಸೇರುವಷ್ಟೂ ಜನ ಸೇರಿರಲಿಲ್ಲ. +ನೆರೆದ ನೆಂಟರಿಗಿಂತಲೂ ಆಳುಕಾಳುಗಳ ಸಂಖ್ಯೆಯೆ ಜಾಸ್ತಿ ಎಂಬಂತಿತ್ತು. +ಮೂವರೂ ಹಸೆಗೋಡೆ ಬರೆದಿದ್ದ ಎಡೆಗೆ ಹೋಗಿ, ಅದನ್ನು ಮೆಚ್ಚಿ ನೋಡಿದರು. +ಅಲ್ಲಿ ಬರೆದಿದ್ದ ಎಲೆ ಹಲಸಿನದೋ ಮಾವಿನದೋ ಎಂದು ಚರ್ಚೆಯನ್ನು ಕೂಡ ನಡೆಸಿದರು. +ತಿಮ್ಮು ಕೈಬೆರಳಿನಿಂದ ಉಜ್ಜಿ ನೋಡಿ “ಅಯ್ಯೋ, ಗಟ್ಟಿ ಬಣ್ಣ ಅಲ್ಲ ಕಣೋ, ನೋಡಿಲ್ಲಿ, ಕೈಗೆ ಹ್ಯಾಂಗೆ ಹಿಡಿದಿದೆ ಈ ಹಸುರು?” ಎಂದು ಟೀಕಿಸಿ ಧರ್ಮು ಕಾಡುವರಿಗೆ ತೋರಿಸಿದನು. +ಅಲ್ಲಿದ್ದ ಯಾರೋ ದೊಡ್ಡವರು ’ಏ ಹುಡುಗರ್ರಾ, ಹಸೆಗ್ವಾಡೆ ಹಾಳು ಮಾಡಬ್ಯಾಡ್ರೋ ಕೈ ತಿಕ್ಕಿ?” ಎಂದು ಕೂಗದಿದ್ದರೆ, ಪರೀಕ್ಷೆ ಇನ್ನೂ ಬಹಳ ಮುಂದುವರಿಯುತ್ತಿತ್ತೆಂದು ತೋರುತ್ತದೆ. +ಆದರೆ ಅಲ್ಲಿಂದ ಧಾರೆಮಂಟಪದ ಸೌಂದರ್ಯ ಸಂವೀಕ್ಷಣೆಗಾಗಿ ಮೂವರೂ ಓಡಿಬಿಟ್ಟರು. +ಆ ಗ್ರಾಮೀಣ ರೂಕ್ಷಾಭಿರುಚಿಯ ಬಣ್ಣಬಣ್ಣದ ಕಲೆಯ ಮಂಟಪವನ್ನಂತೂ ಬಿಟ್ಟಕಣ್ಣಾಗಿ, ತಮ್ಮ ಆಸ್ವಾದನೆಯನ್ನು ಲೊಚಗುಟ್ಟಿ ಪ್ರದರ್ಶಿಸುತ್ತಾ, ನೋಡಿದರು ಮೂವರೂ. +ಆ ಕಂಭಗಳಿಗೆ ಸುತ್ತಿದ್ದ ಕೆಂಪು ಬಿಳಿಯ ಬಟ್ಟೆಯ ಪಟ್ಟಿಗಳನ್ನೂ ಹೊಳೆಯುತ್ತಿದ್ದ ಬೇಗಡೆಯ ಕಾಗದದ ಹೂವು ಮೊದಲಾದ ಅಲಂಕಾರಗಳನ್ನು ’ಅಃ ಎಷ್ಟು ಚಂದಾಗದೆ!’ ಎಂದೆಂದು ಕುಣಿಕುಣಿದು ನೋಡಿದರು. +ಅವಕಾಶ ಒದಗಿದ್ದರೆ ತಿಮ್ಮೆ ಅದರಲ್ಲಿದ್ದ ಒಂದೆರಡು ಬೇಗಡೆಯ ಹೂವುಗಳನ್ನಾದರೂ ಕಿತ್ತು ಜೇಬಿಗೆ ಇಳಿಬಿಡುತ್ತಿದ್ದನೋ ಏನೋ?! +ಆದರೆ ಕುಂಟುತ್ತಿದ್ದ  ಕಾಡು ಮತ್ತೆ ಮತ್ತೆ ಅಭೀಷ್ಟನೇತ್ರ ಗಳಿಂದ ನೋಡುತ್ತಿದ್ದ ವಸ್ತು ಬೇರೆಯ ತರಹದ್ದಾಗಿತ್ತು. +ಚಪ್ಪರಕ್ಕೆ ನೇತುಕಟ್ಟಿದ್ದ ಬಾಳೆಯ ಗೊನೆಗಳಲ್ಲಿ ಒಂದು ವಾಟೆಬಾಳೆಯ ಗೊನೆಯ ಎರಡು ಹೆಣಿಗೆ ಚೆನ್ನಾಗಿ ಕಳಿತು ಹಣ್ಣಾಗಿ ಕಡು ಹಳದಿ ಬಣ್ಣದಿಂದ ಮೋಹಿಸಿ ಕಂಗೊಳಿಸುತ್ತಿದ್ದವು. +ಆದರೆ ಆ ಹಾಳು ಚಪ್ಪರ ಎತ್ತರವಾಗಿದ್ದರಿಂದ ಹುಡುಗರಿಗೆ, ಯಾರಿಗೂ ಗೊತ್ತಾಗದಂತೆ ಗುಟ್ಟಾಗಿ ಕೆಲಸ ಮಾಡುವಷ್ಟು, ಸುಲಭ ಸಾಧ್ಯವಾಗಿರಲಿಲ್ಲ. +ಅಲ್ಲಿಂದ ಮೂವರೂ, ಇದ್ದಕ್ಕಿದ್ದ ಹಾಗೆ ವಾಲಗ ಉಕ್ಕಿ ಕೇಳಿ ಬರುತ್ತಿದ್ದ, ಕೆಳಗರಡಿಯ ಮೂಲೆಗೆ ಧಾವಿಸಿದರು. +ವಾಲಗ ಉದುತ್ತಿದ್ದವರು ಹೊಲೆಯರಾಗಿದ್ದರೂ ಮಳೆಯ ದೆಸೆಯಿಂದಾಗಿ ಅವರಿಗೆ ಮನೆಯೊಳಗೇ ಕೆಳಗರಡಿಯ ಒಂದು ಮೂಲೆಯನ್ನೆ ಬಿಟ್ಟುಕೊಟ್ಟಿದ್ದರು. +ವಾಲಗ ಉದುತ್ತಿದ್ದವರು ತಲೆಗೆ ಕೆಂಪು ಪಟ್ಟೆಯ ಎಲೆವಸ್ತ್ರ ಸುತ್ತಿದ್ದರು; +ಹೊಸದಾಗಿ ತೋರುತ್ತಿದ್ದ ಕರಿಗೀರಿನ ಕಬಚ ಹಾಕಿದ್ದರು; +ತಕ್ಕಮಟ್ಟಿಗೆ ಮಡಿಯಾಗಿ ಕಾಣುತ್ತಿದ್ದ ಅಡ್ಡಪಂಚೆ ಅವರ ಮೊಣಕಾಲಿನವರೆಗೂ ಸುತ್ತಿದ್ದುವು. +ಅಪರಿಚಿತರಾಗಿದ್ದ ಆ ಪರಕೀಯರನ್ನು ಅತಿಯಾಗಿ ಅಮೀಪಿಸದ ಸಂಕೋಚದಿಂದ ಮೂವರೂ ಹುಡುಗರೂ ತುಸುದೂರದಲ್ಲಿಯೆ ನಿಂತರು ಗಾಳಿತುಂಬಿದ ಕೆನ್ನೆಗಳನ್ನು ಹಿಗ್ಗಿಸಿ, ವಾಲಗದ ಸಪುರ ತುದಿಯನ್ನು ತುಟಿ ಬಿಗಿದ ಬಾಯಿಗಿಟ್ಟು ಊದುತ್ತಾ, ವಾಲಗದ ಕಣ್ಣುಗಳಮೇಲೆ ಕೈಯಾಡಿಸಿ ವಿವಿಧ ಸ್ವರಮಾಲೆಗಳನ್ನು ಹೊಮ್ಮಿಸುತ್ತಿದ್ದ ಅವರನ್ನು ತುಸು ಬೆರಗು ಬೆರೆತ ಹಿಗ್ಗಿನಿಂದಲೆ ನೋಡುತ್ತಿದ್ದರು. +ಇದ್ದಕ್ಕಿದ್ದ ಹಾಗೆ ತಿಮ್ಮ ಕಣ್ಣುಕೀಲಿಸಿ ವಾಲಗ ಊದುತ್ತಿದ್ದವನೊಬ್ಬನ ಮುಖವನ್ನೇ ದಿಟ್ಟಿಸತೊಡಗಿದನು. +ಅವನಿಗೆ ಆ ಮುಖ ತನಗೆ ಪರಿಚಿತವಾಗಿದ್ದ ಯಾರದ್ದೊ ಒಂದು ಮುಖವನ್ನು ನೆನೆಪಿಗೆ ತರುತ್ತಿತ್ತು! +“ಕಾಡಣ್ಣಯ್ಯ, ಅವನ್ನ ನೋಡಿದ್ರೆ ಹಳೆಮನೆ ಬೈರನ್ನ ಕಂಡ್ಹಾಂಗೆ ಕಾಣ್ತದಲ್ಲೇನೋ?” ಕಾಡುನ ಕಿವಿಯಲ್ಲಿ ಪಿಸಿಪಿಸಿ ನುಡಿದನು ತಿಮ್ಮು. +“ವಾಲಗದವನೋ ಅವನು! +ಹಳೆಮನೆ ಬೈರನ್ನ ಕೈಲಿ ಮದುವೆ ವಾಲಗ  ಊದಿಸ್ತಾರೇನೋ ಯಾರಾರೂ?” ಎಂದನು ಕಾಡು. +ತಿಮ್ಮ ಆಗಲೆ ನಗುತ್ತಿದ್ದ ಧರ್ಮುವ ಕಡೆಗೆ ತಿರುಗಿ ಪಿಸುಗುಟ್ಟಿದನು “ಅಂವ ನಿಮ್ಮ ಹೊಲೇರ ಬೈರನ್ಹಾಂಗೇ ಇಲ್ಏನೊ, ಧರಂಬಾವ?” +ಧರ್ಮುಗೆ ಆಗಲೆ ಗೊತ್ತಾಗಿತ್ತು, ಅಷ್ಟು ಷೋಕಿಯಾಗಿ ಕುಳಿತು ಅತ್ತಿತ್ತ ತಲೆಯಾಡಿಸಿ ವಾಲಗ ಊದುತ್ತಿದ್ದವರು ತಮ್ಮ ಮನೆಯ ಹೊಲಗೇರಿಯ ಮಂಜ,ತಿಮ್ಮ, ಸಿದ್ದ, ಬೈರ ಎಂದು. +“ಥೂ!ಹೊಲೇರ ಕೈಲಿ ಯಾರಾರೂ ಮದುವೆಮನೆ ವಾಲಗ ಊದಿಸ್ತಾರೇನೊ? +ಅಲ್ಲೇನೋ, ಧರ್ಮು?” ಕಾಡು ಕೇಳಿದನು ಮತ್ತೆ. +ಅಷ್ಟರಲ್ಲಿ ವಾಲಗ ಊದುತ್ತಿದ್ದವನೆ ಇವರತ್ತ ತಿರುಗಿ, ವಾಲಗ ನಿಲ್ಲಿಸಿ, ನಸುನಗುತ್ತಾ ಕೇಳಿದನು “ ನನ್ನ ಗುರುತು ಸಿಕ್ಕಲೇ ಇಲ್ಲಾ ಅಂತಾ ಕಾಣ್ತದೆ ನಮ್ಮ ಕೋಣೂರು ಸಣ್ಣಯ್ಯೋರಿಗೆ? …. ನಾನು ಕಣ್ರೋ, ಹಳೆಮನೆ ಬೈರ!”ತಿಮ್ಮುಗೆ ತುಂಬ ಅವಮಾನವಾದಂತಾಯ್ತು. +ಕೀಳು ಜಾತಿಯ ಹೊಲೆಯನಾಗಿ, ದನಕಾಯುವವನಾಗಿ, ಗೊಬ್ಬರ ಗಿಬ್ಬರ ಹೊತ್ತು ಗದ್ದೆ ತೋಟಗಳಲ್ಲಿ ತಾವು ಹೇಳಿದಂತೆಕೆಲಸ ಮಾಡಿಕೊಂಡಿರುವ ‘ಬಡುತಿನ್ನುವ’ ಜೀತದಾಳೊಬ್ಬನ ಮುಂದೆ, ಅವನು  ಊದುತ್ತಿದ್ದ ವಾಲಗವನ್ನು ಬೆರಗಾಗಿ ಮೆಚ್ಚಿ ಆಲಿಸುತ್ತಿದ್ದುದು ತನ್ನ ಗೌಡಿಕೆಯ ಗೌರವಕ್ಕೇ ಮಸಿ ಬಳಿದುಕೊಂಡಂತಾಯ್ತಲ್ಲಾ ಎಂದು ಮುಖ ಸಣ್ಣಗೆ ಮಾಡಿಕೊಂಡನು. + “ಥೂ, ಬನ್ರೋ!ಈ ಬಡು ತಿನ್ನೋರ ವಾಲಗ ಏನು ಕೇಳಾದು!” ಅಂದವನೆ ಕಾಡು ಧರ್ಮು ಇಬ್ಬರನ್ನೂ ರಟ್ಟೆ ಹೆಡಿದೆಳೆದು ಅಲ್ಲಿಂದ ಹೊರಟನು, ತನಗಾದ ಅವಮಾನಕ್ಕೆ ತಕ್ಕ ಪ್ರತೀಕಾರ ಮಾಡುವವನಂತೆ, ಅಥವಾ ಅಜ್ಞಾನದಿಂದ ತನಗೆ ಸಂಭವಿಸಿದ್ದ ಅವಮರ್ಯಾದೆಗೆ ತಕ್ಕ ಪ್ರಾಯಶ್ಚಿತ್ತ ಮಾಡಿಕೊಳ್ಳುವವನಂತೆ! +ಬಡು ತಿನ್ನುವವರ ವಾಲಗವನ್ನು ಆಲಿಸಲೊಲ್ಲದೆ ತಿರಸ್ಕರಿಸಿ, ತನ್ನಿಬ್ಬರು  ತನಗಿಂತಲೂ ವಯಸ್ಸಾದ ಮಿತ್ರರನ್ನು ಎಳೆದುಕೊಂಡು ಹೊರಟ ತಿಮ್ಮ ಬಾವಿಕಟ್ಟೆಯ ಬಳಿ ಪಣತದ ಕಡಿಮಾಡಿನಲ್ಲಿ ರಾಶಿ ರಾಶಿ ಮಿನು ಸೋಸುತ್ತಿದ್ದ ಹೆಂಗಸರಿದ್ದಲ್ಲಿಗೆ  ನಡೆದನು. +ಮಳೆಯ ಜೋರಿಗೆ ಕೂಣೆಗೆ ಮಸ್ತಾಗಿ ಬಿದ್ದಿದ್ದುವು ಹತ್ತುಮಿನು! +ನಗೆಯುತ್ತಿದ್ದ, ಉಸಿರೆಳೆಯುತ್ತಿದ್ದ, ವಿವಿಧಾಕಾರದ, ಬಣ್ಣ ಬಣ್ಣದ ಜಲಪ್ರಣಿಗಳನ್ನು  ಸ್ವಲ್ಪ ಹೊತ್ತು ಹರ್ಷಿತರಾಗಿ ನೋಡುತ್ತಾ, ಬಾಯಿಗೆ ಬಂದಂತೆ ಏನೇನೋ ಟೀಕೆ ಮಾಡುತ್ತಾ ನಿಂತಿದ್ದರು. +ಮಿನುಗಳನ್ನು ಸೋಸುತ್ತಿದ್ದ ಹೆಂಗಸರು ತಮ್ಮತಮ್ಮೊಳಗೆ ಜರುಗುತ್ತಿದ್ದ ಸಂಭಾಷಣೆಯನ್ನು ತುಂಡುಗಡಿಸದೆ ಮುಂದುವರಿಸಿಯೆ ಇದ್ದರು. +ಹಾಗೆ ಮಾತನಾಡಿಕೊಳ್ಳುತಿದ್ದ ನಾಲ್ಕಾರು ಜೋಡಿ ಸ್ತ್ರೀಯರ ಒಂದಕ್ಕೊಂದು ಸಂಬಂಧವಿಲ್ಲವೆಂಬಂತೆ ಕೇಳಿ ಬರುತ್ತಿದ್ದ ಸಂವಾದದ ತುಂಡುಗಳನ್ನು ಕೇಳಿಯೂ ಆಲಿಸುತ್ತಿರಲಿಲ್ಲ ಆ ಮೂವರು ಹುಡುಗರು. +ಅವರಿಗೆ ಆ ಮಾತುಗಳಲ್ಲಿ ಅರ್ಥದ  ಅನ್ವಯವಿರಲಿಲ್ಲವಾದ್ದರಿಂದ ಅರ್ಥವಾಗುತ್ತಿರಲೂ ಇಲ್ಲ ಅಷ್ಟೆ. ಆದರೆ, ಆ  ಮಾತುಗಳಿಗೆ ಅರ್ಥವಿರಲಿಲ್ಲ ಎಂದರ್ಥವಲ್ಲ. +ಸಂಬಂಧಪಟ್ಟವರು ಆಲಿಸಿದ್ದರೆ ಅರ್ಥಮಾತ್ರವಲ್ಲ, ದ್ವನಿಯೂ ಬೇಕಾದಷ್ಟು ಇರುತ್ತಿತ್ತು. +“ಅಯ್ಯೋ ಅವಳದ್ದು ಏನಂತೀಯಾ? +ಸೊಸೇನ ಕೂಡಿಕೆ ಮಾಡಿಸಿ, ಮನೆ ಯಜಮಾನಿ ಆಗಿ ಬಿಡ್ತೀನಿ ಅಂತಾ ಮಾಡಿದ್ಲು…. +ಆದರೆ ಹೀಂಗಾಯ್ತು!”“ಅವಳಿಗೆ ಮೊದಲಿಂದ್ಲೂ ಆ ಕೆಟ್ಟ ಚಾಳಿ ಇದ್ದೇ ಇತ್ತು… +ಆಗದಿದ್ದೋರಿಗೆ ಮದ್ದು ಬ್ಯಾರೆ ಹಾಕ್ತಾಳಂತೆ! …. ” +“ಅದರಾಗೆ ತತ್ತಿ ಇದೆಯೇನು ನೋಡು, ಪುಟ್ಟಕ್ಕ… ಅವನು ಪೋಲೀಸರಿಗೆ  ಗಸಿ ಕೊಟ್ಟಂವ, ಆ ಹುಡುಗೀನೂ ಹಾರಿಸಿಕೊಂಡು ಕೊಪ್ಪದ ಸೀಮೆ ಕಡೆಗೋ ಸಿಂಗೇರಿ ಸೀಮೆ ಕಡೆಗೋ ಪರಾರಿಯಾದನಂತೆ…” +“…ಅಯ್ಯೋ ನಮಗ್ಯಾಕೆ ಬಿಡೇ ದೊಡ್ಡೋರ ಮಾತು! +ಸಾಲ ತೀರ್ಸಾಕೆ ತೆರ ತಗೊಂಡು ಹೆತ್ತ ಮಗಳ್ನೇ ಬಾಂವಿಗೆ ಹಾಕ್ತಿದಾರೆ?… ಇಸ್ಸಿ! +ಎಂಥದ್ನ ತಿಂದಿತ್ತೊ ಏನೋ ಈ ಹಾಳು ಸೋಸಲು? +ಕೆಟ್ಟ ವಾಸ್ನೆ ಪಚ್ಚೀ ತುಂಬಾ.…. ” +ಅಂವೆಲ್ಲಿ ಕಳಿತಾನೇ ಈ ಮಳೆಗಾಲಾನ? +ಇಲುಗು ತೊಗಲು ಆಗಿ  ಬಿದ್ದು ಕುಂಡಾನಂತೇ, ಹಾಸಿಗೇಲಿ ಹೇಲು ಉಚ್ಚೆ ಎಲ್ಲ ಮಾಡಿಕೊಳ್ತಾ?…” +“ಪಸಂದ್‌ದಾಯ್ತು ಬಿಡು, ಹಾಂಗ್ಯಾರೆ, ಅವನ ಹೆಂಡ್ತೀಗೆ…! ” +“ ನಮ್ಮ ಸುದ್ದಿ ಮಾತ್ರ ಬರ್ಲಿ, ತೋರಿಸ್ತೀನಿ ಅವರಿಗೆ… ಒಡ್ಡು ಮುರ್ದು ದನಾ ಬಿಟ್ಟರಲ್ಲಾ ಅವರ ತ್ವಾಟಕ್ಕೆ?… ನನ್ನ ಗಂಡನೇ ಆಗಿದ್ರೆ, ಕತ್ತೀಲಿ ಕಡಿದು ಹಾಕ್ದೆ ಬಿಡ್ತಿರಲಿಲ್ಲ….!” +ಹೆಂಗಸರು ಮೀನು ಸೋಸುತ್ತಿದ್ದಲ್ಲಿಂದ ಹಳೆಪೈಕದವರು ಕುರಿ ಸುಲಿಯುತ್ತಿದ್ದ ಸೌದೆಕೊಟ್ಟಿಗೆಯ ಒಂದು ಭಾಗಕ್ಕೆ, ಸುರಿಯುತ್ತಿದ್ದ ಮಳೆಯಲ್ಲಿ ಕೆಸರುಕೊಚ್ಚೆ ಮೆಟ್ಟಿಕೊಂಡೆ, ಧಾವಿಸಿದ್ದರು ಆ ಮೂವರೂ. +ಅಲ್ಲಿ ಹೆಚ್ಚು ಹೊತ್ತು ನಿಲ್ಲದೆ ಅದಕ್ಕಿಂತಲೂ ಸ್ವಾರಸ್ಯವೆಂದು ತೋರಿದ ಸೌದೆಕೊಟ್ಟಿಗೆಯ ಮತ್ತೊಂದು ಭಾಗಕ್ಕೆ ಓಡಿದರು. +ಅಲ್ಲಿ ಸಾಬರ ಕಡೆಯವರು ದಿಬ್ಬಣ ಬಂದಕೂಡಲೆ ಹಾರಿಸುವುದಕ್ಕಾಗಿ ಗರ್ನಾಲು, ಬಿರುಸು, ಸುರ್ ಸುರ್ ಬಾಣ, ಅಕಾಶಬಾಣ ಮುಂತಾದವುಗಳನ್ನು ಸಿದ್ಧಮಾಡಿಕೊಳ್ಳುತ್ತಿದ್ದರು. +ಪಕ್ಕದಲ್ಲಿಯೆ ಹೊಲೆಯರೂ ದೀವರೂ ಕದಿನಿಗಳಿಗೆ ಮಸಿಹಾಕಿ ಕುಟ್ಟುವ ಕೆಲಸದಲ್ಲಿ ತೊಡಗಿದ್ದರು. +ತಿಮ್ಮುಗೆ ಹೇಗಾದರೂ ಮಾಡಿ ಒಂದು ಗರ್ನಾಲು ಹಾರಿಸಿಯೋ ಒಂದು ಕದಿನಿ ಹೊಡೆಸಿಯೋ ಅದರ ಭಯಂಕರ ಸದ್ದನ್ನು ಆಲಿಸಬೇಕೆಂಬ ಆಸೆ. +ಆದರೆ ಕಾಡುಗೆ ಹೆದರಿಕೆಯೋ ಹೆದರಿಕೆ! +ಹುಟ್ಟಿದಂದಿನಿಂದಲೂ ಅವನಿಗೆ ಸಿದ್ದಿಮದ್ದಿನ ಸದ್ದು, ಅದು ಕೋವಿಯದ್ದಾಗಲಿ ಕದಿನಿಯದ್ದಾಗಲಿ ಗರ್ನಾಲೆ ಆಗಲಿ, ತುಂಬಾ ಭೀತಿ. +ಅನಿವಾರ್ಯವಾಗಿ ಅದನ್ನು ಕೇಳಬೇಕಾಗಿ ಬಂದಾಗ, ಯಾರಾದರೂ ಕಂಡರೆ ತನ್ನನ್ನು ಪುಕ್ಕಲ ಎಂದು ಹಾಸ್ಯ ಮಾಡುವರೆಂದು ಅಂಜಿ, ಯಾರಿಗೂ ಕಾಣದ ರೀತಿಯಲ್ಲಿ ಏನಾದರೂ ನೆವ ತೆಗೆದು ಕಿವಿಗಳಿಗೆ ಕೈಬೆರಳು ಹಾಕಿ ತೂತುಗಳನ್ನು ಮುಚ್ಚಿಕೊಳ್ಳುತ್ತಿದ್ದನು. +ಮುಂಗಾರ ಮೊದಲಲ್ಲಿ ಮಳೆಯ ಮೋಡಗಳು ಕಿವಿದು ಗುಡುಗು ಮಿಂಚತೊಡಗಿದಾಗಲಂತೂ ಅವನ ಜೀವ ಗತಗತ ನಡುಗುತಿತ್ತು. +ಸಿಡಿಲಿನ ಸದ್ದು ಕೇಳಿದರೆ ಅವನ ಜೀವ ಸತ್ತು ಹುಟ್ಟುತಿತ್ತು! +ಅವನಿಗೊಮ್ಮೆ ಓಂದು ಕನಸು ಬಿದ್ದಿತಂತೆ. +ಅದರಲ್ಲಿ ಅವನು ಯಾವುದೋ ಒಂದು ಭಯಂಕರ ಯುದ್ಧದಲ್ಲಿ ಭಾಗವಹಿಸು ತ್ತಿದ್ದಂತೆಯೂ ಒಂದು ಭಾರಿ ಪಿರಂಗಿ ಸಿಡಿದು ಅದರ ಗುಂಡು ತನಗೆ ಬಡಿದಂತೆಯೂ ತಾನು ರಕ್ತದ ಮಡುವಿನಲ್ಲಿ ಮುಳುಗಿ ಸಾಯುತ್ತಿದ್ದಂತೆಯೂ ಕಂಡು ಹೆದರಿ ಎಚ್ಚತ್ತನಂತೆ. +ಅದನ್ನು ಕೇಳಿ ಧರ್ಮು ‘ಅವನು ಹಿಂದಿನ ಜನ್ಮದಲ್ಲಿ ಸಿಪಾಯಿಯಾಗಿದ್ದು, ಗುಂಡುಬಿದ್ದು ಸತ್ತಿದ್ದರಿಂದಲೆ, ಈ ಜನ್ಮದಲ್ಲಿಯೂ ಈಗ ಸಿಡಿಮದ್ದಿನ ಸದ್ದು ಕೇಳಿದರೆ ಹೆದರಿ ಸಾಯುತ್ತಾನೆ!’ ಎಂದಿದ್ದನಂತೆ. +ಅಂತೂ ತಿಮ್ಮ ಏನೇನೊ ಅಪಾಯ ಮಾಡಿ, ಗೋಗರೆದು, ಲುಂಗಿ ಸಾಬುವನ್ನೊಪ್ಪಸಿದನು…. +ಕಾಡು ‘ತಡಿಯೋ!ತಡಿಯೋ!ನಾನು ಹೋದಮ್ಯಾಲೆ ಹೊಡಿಯೊ’ ಎನ್ನುತಾ ಕಿವಿಮುಚ್ಚಿಕೊಂಡೆ ಅಲ್ಲಿಂದ ಪರಾರಿಯಾಗಿಯೆ ಬಿಟ್ಟನು. +ಗರ್ನಾಲೀನೊ ಹಾರಿತು. +ಆದರೆ ಆ ಮಳೆಯ ದೆಸೆಯಿಂದ ಕೊಟ್ಟಿಗೆಯ ಮಾಡಿನ ಒಳಗಿನಿಂದಲೆ ಲುಂಗಿಸಾಬಿ ಅದನ್ನು ಎಸೆದಿದ್ದರಿಂದ ಅದು ದಿಕ್ಕು ತಪ್ಪಿ ಮನೆಯ ಹತ್ತಿರ ವೆಂಕಪ್ಪನಾಯಕರು ಮಲಗಿದ್ದ ಕೋಣೆಗೆ ಅತಿ ಸಮಿಪವಾಗಿ ಸಿಡಿದು ಸದ್ದು ಮಾಡಿತ್ತು! +ಯಾರೊ ಅಲ್ಲಿಂದಲೆ ಕೂಗಿ ಬಯ್ದರು. +“ಯಾವನೊ ಅವನು, ಹುಚ್ಚುಮುಂಡೇಗಂಡ! +ಗರ್ನಾಲು ಹೊಡೆದವನು? +ಅವನಿಗೇನು ಮುಖದ ಮೇಲೆ ಕಣ್ಣದೆಯೇನೊ? +ನಾಯಕರಿಗೆ ಜರ ಜಾಸ್ತಿ ಆಗಿ ನರಳ್ತಾ ಮಲಗಿದಾರೆ, ಅವರ ಕ್ವಾಣೆ ಬೆಳಕಂಡೀಗೆ ಹೊಡೀತಾನೆ ಇಂವ ಗರ್ನಾಲ?ಪಟಿಂಗ!” +ಲುಂಗೀಸಾಬು ನಾಲಗೆ ಕಚ್ಚಿಕೊಂಡು ಕೆಳದನಿಯಲ್ಲಿ ದೊರಿದನು ತಿಮ್ಮುಗೆ. + “ಹೋಯ್!ನಮ್ಮ ಸಣ್ಣ ಒಡೆಯರ ಮಾತು ಕೇಳಿ ಸಮಾ ಅಯ್ತಲ್ಲಾ ನನಗೆ? +ಸಾಕು, ಮಾರಾಯ್ರಾ, ನಿಮ್ಮ ಸಾವಾಸ!…”ಅಲ್ಲಿದ್ದವರೆಲ್ಲ ಬಿದ್ದು ಬಿದ್ದು ನಕ್ಕರು…. +“ಅಲ್ಲೋ ನಾಯಕರಿಗೆ ಕುಂಟನ ಹುಣ್ಣು ಜಾಸ್ತಿಯಾಗಿ, ಜರದಾಗೆ ನೆರಳ್ತಾ ಸುಮಾರು ದಿವಸ ಆಯ್ತಂತೋ. +ಬಾಯಿಗೆ ಬಧಾಂಗೆ ಹಲವರೀತಾರಂತೆ. +ಹಾಂಗಾದ್ರೆ ಇವತ್ತು ಧಾರೆ ಎರಕೊಡೋರು ಯಾರೋ?”ಒಬ್ಬ ಕೇಳಿದನು. +“ಅವರು ಗೆಲುವಾಗೆ ಇದ್ದಿದ್ರೂ ಧಾರೆ ಎರಕೊಡಾಕೆ ಆಗ್ತಿರಲಿಲ್ಲಾ….” ಮತ್ತೊಬ್ಬನ ಅನಿಸಿಕೆ. +“ಯಾಕೆ?” +“ಯಾಕೆ ಅಂದ್ರೆ? +ಕೂಡಿಕೆ ಮಾಡಿಕೊಂಡ ಕೊಡ್ಲೆ ಕೈ ಹಿಡಿದ ಹೆಂಡ್ತಿ ಆಗಿ ಬಿಡ್ತಾಳೇನು? +ಧಾರೆ ಎರೆದುಕೊಡಬೇಕಾದರೆ ಧರ್ಮಪತ್ನೀನೆ ಆಗಬೇಕು….” +ತಾನು ‘ಧರ್ಮಪತ್ನಿ’ ಎಂಬ ದೊಡ್ಡ ಮಾತನ್ನು ಸರಿಯಾಗಿ ಉಚ್ಚರಿಸಿ ಆಲಿಸುತ್ತಿದ್ದವರನ್ನು ಬೆರಗುಗೊಳಿಸಿದನೆಂದುಕೊಂಡು ಹೆಮ್ಮಯಿಂದ ಮುಂದುವರಿದನು ಹಾಗೆ ಹೇಳುತ್ತಿದ್ದವನು “ಅದಕ್ಕೇ ಒಂದು ಬ್ಯಾರೆ ಏರ್ಪಾಟು ಮಾಡ್ಯಾರಂತೆ….” +“ಬಾರೊ ಹೋಗಾನ, ಚಿನ್ನಕ್ಕಯ್ನ ಹತ್ರಕ್ಕೆ.” + ತಿಮ್ಮ ಸಂವಾದವನ್ನು ಕುತೂಹಲದಿಂದ ಆಲಿಸುತ್ತಿದ್ದ ಧರ್ಮುವನ್ನು ಅಂಗಿತೋಳು ಹಿಡಿದೆಳೆದು ಎಬ್ಬಿಸಿದನು. +ಅವನಿಗೆ ಕೂಡಿಕೆ, ಹೆಂಡ್ತಿ, ಧರ್ಮಪತ್ನಿ, ಧಾರೆ ಈ ಮಾತುಗಳೆಲ್ಲ ತನ್ನನ್ನೆ ಏನೊ ಅರ್ಥವಾಗದ ಫಜೀತಿಗೆ ಸಿಕ್ಕಿಸುವಂತೆ ತೋರಿ, ಅವುಗಳಿಂದ ದೂರವಾದ ತನ್ನ ಸರಳ ಜೀವನಕ್ಕೆ ಪಾರಗಿ ಹೋಗುವಂತೆ, ಅಲ್ಲಿಂದ ತನಗರ್ಥವಾಗುತ್ತಿದ್ದ ಚಿನ್ನಕ್ಕಯ್ಯನ  ಸಾನಿಧ್ಯವನ್ನರಸಿ ಓಡಿದ್ದನು. +ತಿಮ್ಮ ಧರ್ಮು ಇಬ್ಬರೂ ಹಿತ್ತಲು ಕಡೆಯ ಬಾಗಿಲಿನಿಂದ ಒಳಹೊಕ್ಕು, ಒಳಅಂಗಳದ ಅಂಚಿನಲ್ಲಿಟ್ಟಿದ್ದ ದೊಡ್ಡ ತಾಮ್ರದ ಹಂಡೆಯಿಂದ ನೀರು ಮೊಗೆದು ಕೆಸರಾಗಿದ್ದ ಕಾಲುಗಳನ್ನು ತೊಳೆದುಕೊಳ್ಳುತ್ತಿದರು. +ಧರ್ಮು, ಅದಕ್ಕಾಗಿ ಹಾಕಿದ್ದ ಹಾಸುಗಲ್ಲಿನ ಮೇಲೆ ನಿಂತು, ಕಾಲು ತೊಳೆದುಕೊಳ್ಳುತ್ತಿದ್ದಾಗ ತಿಮ್ಮು ತನ್ನ ಸರದಿಗಾಗಿ ಕಾಯುತ್ತಿದ್ದವನು, ಹಂಡೆಯ ಪಕ್ಕದಲ್ಲಿ ಕಂಬಕ್ಕೆ ಒರಗಿಸಿ ಇಟ್ಟಿದ್ದ ಒಂದು ಸೌದೆ ತುಂಡನ್ನು ಕಂಡು, ಯಾವ ಉದ್ದೇಶವೂ ಇಲ್ಲದೆ ಯಾಂತ್ರಿಕವಾಗಿ ಅದನ್ನು ಕೈಗೆ  ತೆಗೆದುಕೊಂಡು, ಮಕ್ಕಳಿಗೆ ಸ್ವಾಭಾವಿಕವಾದ ಸಹಜ ಚೇಷ್ಟೆಯಿಂದ ಪ್ರಚೋದಿತನಾಗಿ, ತಾಮ್ರದ ಹಂಡೆಗೆ ಬಡಿಯತೊಡಗಿದನು. + ಡಣ್ ಡಣ್ ಡಣಕು ಡಣಕು! +ಡಣಕು ಡಣಕು ಡಣ್ ಡಣ್! +ಡಣಕು ಡಣಕು ಡಣಕು ಡಣಕು! +ಡಣ್ ಡಣ್ ಡಣ್ ಡಣ್! +ಆ ಲೋಹಶಬ್ದ ತಕ್ಕಮಟ್ಟಿಗೆ ಜೋರಾಗಿಯೆ ಇದ್ದಿತಾದರೂ ಮದುವೆಮನೆಯ  ಗಜಿಬಿಜಿಯಲ್ಲಿ ಮತ್ತು ಹಿತ್ತಲುಕಡೆಯಲ್ಲಿಯೆ ನಾನಾ ವಿಧವಾದ ಅಡುಗೆಯ ಕೆಲಸ  ಕಾರ್ಯಗಳಲ್ಲಿ ತೊಡಗಿದ್ದ ಜನರ ಗದ್ದಲದಲ್ಲಿ ಅದು ಯಾರ ಗಮನವನ್ನೂ ವಿಶೇಷವಾಗಿ ಸೆಳೆಯುವಂತಿರಲಿಲ್ಲ. +ಆದರೂ ಅದು ಮದುವೆ ಮನೆಯಲಿ ನೆರೆದಿದ್ದ  ನೂರಾರು ಜನರಲಿ ಮೂವರ ಹೃದಯಗಳಲ್ಲಿ ಮಾತ್ರವೆ ವಿಶಿಷ್ಟ ಭಾವತರಂಗಗಳನ್ನು ಹೊಡೆದೆಬ್ಬಿಸಿತ್ತು! +‘ಡಣ್ ಡಣ್ ಡಣಕು ಡಣಕು! +ಡಣ್ ಡಣ್ ಡಣಕು ಡಣಕು.’ + ತನಗೆ ಶಾಸ್ತ್ರ  ಮಾಡಿಸುತ್ತಾ ಸುತ್ತುವರಿದಿದ್ದ ನೆಂಟರಮ್ಮಂದಿರ ನಡುವೆ ಮದುಮಗಳಾಗಿ ವಸನಭೂಷಣ ಭೂಷಿತೆಯಾಗಿ ಬೆವರುತ್ತಾ ಕುಳಿತಿದ್ದ ಚಿನ್ನಮ್ಮ ತಟಕ್ಕನೆ ಚಕಿತೆಯಾಗಿ ಕಿವಿನಿಮಿರಿ ಆಲಿಸಿದಳು. + ‘ಡಣ್ ಡಣ್ ಡಣಕು ಡಣಕು!’ ಹೌದು, ಹಂಡೆಗೆ ಕೋಲು ಬಡಿದ ಸದ್ದು! +ಅರೆ!ಈಗೇಕೆ ಆ ಸದ್ದು? +ಕತ್ತಲಾದಮೇಲೆ ತಾನೆ ಅದು ಕೇಳಿಬರಬೇಕಾದದ್ದು, ಶೂದ್ರರ ಧಾರೆ ಯಾವಾಗಲೂ ನಿಶಾಲಗ್ನದಲ್ಲಿ ತಾನೆ? +ಅದರಲ್ಲಿಯೂ ಇವತ್ತಿನ ಧಾರೆ-ಸಿಂಬಾವಿ ಭರಮೈಹೆಗ್ಗಡೆಯವರಿಗೆ ಹೂವಳ್ಳಿ ಚಿನ್ನಮ್ಮನನ್ನು ದ್ವಿತೀಯ ಪತ್ನಿಯನ್ನಾಗಿ ವಹಿಸಿಕೊಡುವ ಧಾರೆಯ ಸಮಯ ರಾತ್ರಿ ಹನ್ನೆರಡು ಗಂಟೆಗೆ ತಾನೆ ‘ಗಳಿಗೆ ಬರುವುದು?’ ಧಾರಾಮುಹೂರ್ತ? +ಹಾಗಾದರೆ ಈಗಲೆ, ಹಗಲಿನಲ್ಲಿಯೆ ಬಾವ ತನ್ನನ್ನು ಈಗಲೆ…? +“ಏನಾಯ್ತೆ ಮದೋಳ್ಗೀಗೆ? …. + ಜಡೆ ಹೂವು ಭಾರಾಯ್ತೇನೆ? +ಏನು ಬೇಕೆ? …. ಯಾರು ಬೇಕೆ?… +ಯಾಕೆ ಹಾಂಗೆ ನೋಡ್ತೀಯಾ ಸುತ್ತಾಮುತ್ತಾ….” ನಾಲ್ಕಾರು ನೆಂಡತಿಯರು ಚಿನ್ನಮ್ಮನ ತಳಮಳವನ್ನು ಗಮನಿಸಿ ಪ್ರಶ್ನೆಗಳ ಧಾಳಿಯನ್ನೆ ಪ್ರಾರಂಭಿಸಿದರು. +ಒಳಗೆಲಸದಲ್ಲಿದ್ದ ನಾಗಕ್ಕಗೂ ಆ ಹಂಡೆಯ ಸದ್ದು ಕೇಳಿಸಿತ್ತು. +ಅವಳೂ ಚಕಿತೆಯಾಗಿ ಅದನ್ನು ಸ್ವಲ್ಪ ಸಂದಿಗ್ಧಮನೋಭಾವದಿಂದಲೆ ಆಲಿಸಿ, ಅದರ ನಿಜಾಂಶವನ್ನರಿಯಲು ಹಿತ್ತಲುಕಡೆಗೆ ಹೋಗುತ್ತಿರುವಾಗ ದಾರಿಯಲ್ಲಿ ಸಿಕ್ಕಿದ  ನೆಂಟರಮ್ಮ “ನಾಗೂ, ಮದೋಳ್ಗೀಗೆ ಏನೊ ಒಂದು ತರಾ ಆಗ್ಯದೆ, ಸೊಲ್ಪ ಬಾ” ಎಂದು ಅವಳನ್ನು ಮಾಣಿಗೆಗೆ, ಆಗತಾನೆ ಮಿಹದಿಂದ ಹಿಂತಿರುಗಿದ್ದ ಚಿನ್ನಮ್ಮನ ಬಳಿಗೆ ಕರೆದೊಯ್ದರು. +ಚಿನ್ನಮ್ಮ ನಾಗಕ್ಕನ ಕಿವಿಯಲ್ಲಿ ಹೇಳಿದುದಕ್ಕಿಂತಲೂ ಹೆಚ್ಚಾಗಿ ಮತ್ತು ಹೆಚ್ಚು ಸ್ಪಷ್ಟತರವಾಗಿ ಅವಳ ಬೆಚ್ಚಗಣ್ಣುಗಳಿಂದಲೆ ನಾಗಕ್ಕ ಎಲ್ಲವನ್ನು ಅರಿತುಕೊಂಡು, ಸಮಾಧಾನ ಹೇಳಿ, ಶಬ್ದದ ಕಾರಣ ಮತ್ತು ಉದ್ದೇಶಗಳನ್ನು ವಿಚಾರಿಸಲು ಹಿತ್ತಲುಕಡೆಯ ಹೆಂಡಯ ಎಡೆಗೆ ಬಿರುಬಿರನೆ ಧಾವಿಸಿದಳು. +ನಾಗಕ್ಕ ಆ ಸ್ಥಳಕ್ಕೆ ಬರುವುದರೊಳಗೆ ಹಂಡೆಯ ಸದ್ದಿಗೆ ಭಾವಚಕಿತೆಯಾಗಿದ್ದ ಇನ್ನೊಂದು ವ್ಯಕ್ತಿ,-ಮೂರನೆಯ ವ್ಯಕ್ತಿ-ಪೀಂಚಲು ಅಲ್ಲಿಗೆ ಓಡಿಹೋಗಿ, ತುಸು ದೂರದಲ್ಲಿಯೆ ನಿಂತು, “ಅಯ್ಯಾ, ಅಯ್ಯಾ, ಕೋಣೂರು ಸಣ್ಣಯ್ಯಾ, ಹಂಡೆಗೆ ಹೊಡೀಬೇಡಿ, ಹೊಡೀಬೇಡಿ. +ಗಲಾಟೆ ಮಾಡಿದ್ರೆ ಬಯ್ತಾರೆ. +ದೊಡ್ಡಯ್ಯೋರಿಗೆ ಕಾಯಿಲೆ ಜಾಸ್ತಿ ಆಗ್ಯದೆಯಂತೆ…” ಎಂದು ಅಂಗಲಾಚುತ್ತಿದ್ದಳು. +ನಾಗಕ್ಕ ಬರುವಷ್ಟರಲ್ಲಿಯೆ ಡಣಕು ನಿಂತಿತ್ತು. +ತಿಮ್ಮು ಕೈಯಲ್ಲಿ ಸೌದೆ ತುಂಡು ಹಿಡಿದು ಪೀಂಚಲುಗೆ ಏನನ್ನೊ ಹೇಳುತ್ತಿದ್ದನು. +ನಾಗಕ್ಕ ಬಂದು, ವಿಷಯ ಅರಿತು, ತಿಮ್ಮುಗೆ” ಕೋಣೂರು ತಮ್ಮಯ್ಯಂದೋ ಈ ಕೆಲಸ?” ಎಂದಷ್ಟೆ ನಗುತ್ತಾ ಹೇಳಿ, ಪೀಂಚಲು ಇದ್ದಡೆಗೆ ಹತ್ತಿರಕ್ಕೆ ಹೋಗಿ ಮೆಲ್ಲಗೆ ಮಾತಾಡತೊಡಗಿದಳು. +ಧರ್ಮುವ ತರುವಾಯ ತಿಮ್ಮವೂ ಕಾಲು ತೊಳೆದುಕೊಂಡು ಚಿನ್ನಕ್ಕಯ್ಯ ಇದ್ದೆಡೆಗಾಗಿ ಇಬ್ಬರೂ ಓಡಿದರು. +ನಾಗಕ್ಕ ಒಳಗೆ ಹೋದಮೇಲೆ ಪೀಂಚಲು, ರಾತ್ರಿ ಕತ್ತಲೆಯಲ್ಲಿ ಹುಡುಕಲು ಕಷ್ಟವಾಗದಿರಲಿ ಎಂದು, ತಾನೇ ಕಂಬಕ್ಕೆ ಒರಗಿಸಿಟ್ಟಿದ್ದ ಸೌದೆ ತುಂಡನ್ನು ಅಲ್ಲಿಂದ  ತೆಗೆದು, ಹುಡುಗರಿಗೆ ಸಿಕ್ಕದಂತೆ, ನಾಗಂದಿಗೆಯಮೇಲೆ ಅಲ್ಲಿಯೆ ಹತ್ತಿರ ಇಟ್ಟಳು… +ಧರ್ಮುವೊಡನೆ ತಿಮ್ಮ ಹೋಗಿ ನೋಡುತ್ತಾನೆ, ಚಿನ್ನಕ್ಕಯ್ಯ ತನಗೆ ಅಗಮ್ಯವೂ ದುರ್ಗಮವೂ ಆದ ಸ್ಥಳದಲ್ಲಿ ದುಸ್ಸಾಧ್ಯಳಾಗಿ ಕುಳಿತಿದ್ದಾಳೆ, ತಲೆ ಬಗ್ಗಿಸಿಕೊಂಡು. + ಮಳೆಗಾಲದ ಮೋಡಮಬ್ಬು ಕವಿದು ದ್ವಿಗುಣಿತವಾಗಿ ಕತ್ತಲೆ ಮುತ್ತಿದ್ದ ಮಾಣಿಗೆಯೊಳಗೆ, ಕಂಭದ ಮೇಲೆ ಮಿಣಿಮಿಣಿ ಉರಿಯುತ್ತಿದ್ದ ದೊಡ್ದ ಹಣತೆಯ ದೀಪದ ಬೆಳಕಿನಲ್ಲಿ, ತರತರದ ಬಣ್ಣದ ಮತ್ತು ಅಂಚಿನ ಸೀರೆಗಳನ್ನುಟ್ಟಿದ್ದ ಹುಡುಗಿಯರ ಮತ್ತು ಹೆಂಗಸರ  ಕೋಟೆಯ ಮಧ್ಯೆ ಸೆರೆಯಾದಳೆಂಬಂತೆ ಕುಳಿತಿದ್ದಳು ಚಿನ್ನಕ್ಕಯ್ಯ, ನಾನಾ ರೀತಿಯ ಕೊರಳ, ಕಿವಿಯ, ಮೂಗಿನ, ಬೈತಲೆಯ, ಜಡೆಯ, ತೋಳಿನ ಮತ್ತು ಕೈಯ ಆಭರಣಗಳ ಹೊರೆಯಿಂದ ಜಗ್ಗಿದಂತಾಗಿ ಬಾಗಿ!- ಮದುಮಗಳಾಗಿ! +ತಿಮ್ಮ ಧರ್ಮು ಇಬ್ಬರೂ ನಿಸ್ಸಹಾಯಕರಾಗಿ ಆದಷ್ಟು ದೂರ ನಿಂತೇ ನೋಡಿದೌ, ಅಲ್ಲಿ ನೆರೆದಿದ್ದ ನೆಂಟರಮ್ಮಂದಿರ ಕಣ್ಣಿಗೆ ಬೀಳಬಾರದೆಂದು. +ಚಿನ್ನಕ್ಕಯ್ಯ ಏನೋ ಅಪಾಯಕ್ಕೆ ಸಿಕ್ಕಿಬಿದ್ದಿದ್ದಾಳೆ ಎಂದೇ ಭಾವಿಸಿ ತಿಮ್ಮು ಪಿಸಿಪಿಸಿ ಕೇಳಿದನು ಧರ್ಮುವನ್ನು. + “ ಯಾಕೊ ಹಿಂಗೆ ಮಾಡಿದಾರೆ ಚಿನ್ನಕ್ಕಯ್ಗೆ? +“ಅವನೇನೊ ಯಾರಿಗೂ ಕೇಳಿಸಬಾರದೆಂದು ಮೆಲ್ಲಗೆ ಮಾತಾಡಿದ್ದನು. +ಆದರೆ ಸಮಿಪದಲ್ಲಿದ್ದ ನೆಂಟರಮ್ಮ ಒಬ್ಬರು “ ಯಾರದು? +ಕೋಣೂರು ತಮ್ಮಯ್ಯನಾ?…ನಿನ್ನಕ್ಕಯ್ಯನ ಇವತ್ತು ಹೊತ್ತುಕೊಂಡು ಹೋಗ್ತಾರೆ ಕಣೋ, ನಿನ್ನ ಸಿಂಬಾವಿ ಬಾವಯ್ಯ” +“ಬಾವಯ್ಯ ಅಲ್ಲ.ಅವನಿಗೆ ಮಾವಯ್ಯ ಆಗ್ತಾರೆ” ತಿದ್ದಿದರು ಮತ್ತೊಬ್ಬ  ನೆಂಟರಮ್ಮ. +ಅಲ್ಲಿ ನೆರೆದಿದ್ದ ಗರತಿಯರೊಡನೆ ಹುಡುಗಿಯರೂ ಕಿಲಕಿಲನೆ ನಕ್ಕರು. +ಹುಡುಗರಿಬ್ಬರಿಗೂ ತುಂಬ ನಾಚಿಕೆಯಾಗಿ ಅಲ್ಲಿಂದ ಓಟ ಕಿತ್ತರು. +ಅವರಿನ್ನೂ ಮಾಣಿಗೆಯಿಂದ ಹೊರಗೆ ದಾಟಿರಲಿಲ್ಲ, ಯಾರೊ ಗಟ್ಟಿಯಾಗಿ ಹೇಳಿದುದು ಕೇಳಿಸಿತು. +‘ಮಾವಯ್ಯ ಅಲ್ಲ; ಚಿಕ್ಕಪ್ಪಯ್ಯ!’ಚಿಕ್ಕಪ್ಪಯ್ಯ? +ತಿಮ್ಮುಗೆ ಇದ್ದುದ್ದು ಒಬ್ಬನೆ ಚಿಕ್ಕಪ್ಪಯ್ಯ. + ಮುಕುಂದ ಚಿಕ್ಕಪ್ಪಯ್ಯ! +‘ಮತ್ತೊಬ್ಬರು ಯಾರೊ ಚಿಕ್ಕಪ್ಪಯ್ಯನಂತೆ?ಥೂ!’ ಎಂದುಕೊಂಡ ತಿಮ್ಮುನ ಮನಸ್ಸು ಆ ಚಿಕ್ಕಪ್ಪಯ್ಯನ ವಿಚಾರವಾಗಿ ತುಂಬ ಹೇಯಭಾವನೆಯನ್ನನುಭವಿಸಿ, ಅವನು ಚಿನ್ನಕ್ಕಯ್ಯನನ್ನು ಹೊತ್ತುಕೊಂಡು ಹೋಗುವ ವಿಚಾರದಲ್ಲಿ ಅತ್ಯಂತ ಕ್ರೂರವಾದ  ಪ್ರತಿಭಟನೆಯ ಭಂಗಿಯನ್ನೂ ತಾಳಿತ್ತು! +ಸಂಜೆ ಸುಮಾರು ನಾಲ್ಕೊ ನಾಲ್ಕೂವರೆಯೊ ಗಂಟೆಯಾಗಿತ್ತು. +ಆದರೂ ಮೋಡಗತ್ತಲೆ ಕವಿದು ಆರೂವರೆಯೊ ಏಳೊ ಎಂಬ ಭ್ರಾಂತಿಗೆ ಎಡಗೊಡುತ್ತಿತ್ತು. +ಮಳೆ ಸುರಿಯುತ್ತಿತ್ತು. +ಸೋಗೆ ಹೊದಿಸಿದ್ದ ಮನೆಯ ಅನೇಕ ಭಾಗಗಳಲ್ಲಿ ನೀರು ಸೋರಿ ಸೋರಿ, ಅಲ್ಲಲ್ಲಿ ತಂಬಾಳೆ ಬೋಗುಣಿ ಮಡಕೆಗಳನ್ನಿಟ್ಟು ನೀರು ಹಿಡಿದು, ಅದು ಹರಿಯದಂತೆ ಮಾಡಬೇಕಾಗಿ ಬಂದಿತ್ತು. +ಹೂವಳ್ಳಿ ಮನೆಯೊಳಗೆ ಜನ ತುಂಬಿದಂತೆ ಭಾಸವಾಗುತಿತ್ತು. +ನಿಜಕ್ಕೂ ಜನ  ತುಂಬ ವಿರಳವಾಗಿಯೆ ಇತ್ತು. +ಮಳೆಯಿಲ್ಲದ ದಿನವಾಗಿದ್ದರೆ ಹೊರಗೆಲ್ಲ ಸುತ್ತ ಮುತ್ತಾ ಓಡಾಡುತ್ತಾ ಇರುತ್ತಿದ್ದ ಮದುವೆಯ ಉಲ್ಲಾಸ ಉತ್ಸವಗಳು ಮಳೆಯ ನಿಮಿತ್ತ ಮನೆಯೊಳಗೇ ಮುದುಡಿಕೊಂಡು ದಟ್ಟಯ್ಸಿದ ಭ್ರಮೆಗೆ ಕಾರಣವಾಗಿತ್ತಷ್ಟೆ! +ಗಿಜಿಬಿಜಿ ಸದ್ದೂ ಸರ್ವವ್ಯಾಪಿಯಾಗಿತ್ತು. +ಸಿಂಬಾವಿಯಿಂದ ಬರುವ ಗಂಡಿನ ಕಡೆಯ ದಿಬ್ಬಣದ ವಿಚಾರವಾಗಿಯೆ ಗುಂಪು ಗುಂಪಿನಲ್ಲಿ ಮಾತುಕತೆ ಚಚ್ರ್ಚೆ ಜಿಜ್ಞಾಸೆ ಊಹೆ ಎಲ್ಲ ನಡೆದಿತ್ತು. +‘ಈ ಮಳೆಯಲ್ಲಿ ದಿಬ್ಬಣ ಹಂಗೆ ಬರುತ್ತದೆಯೊ ದೇವರೆ ಬಲ್ಲ.’ +‘ಹಳ್ಳ ದಾಟುವುದಾದರೂ ಹ್ಯಾಂಗೆ, ಮಾರಾಯ್ರಾ?’ +‘ದಂಡಿಗೆಯವರು ಕಾಲುದಾರಿಯಲ್ಲಿ ಜಾರಿಬಿದ್ದು ಗಂಡಿನ ಸೊಂಟ ಮುರಿದೆ ತರುತ್ತಾರೆ ಅಂಬೋ ಹಾಂಗೆ ಕಾಣ್ತದೆ.’ +‘ಒಬ್ಬರಿಬ್ಬರಾದರೂ ತೇಲಿ ಹೋಗದೆ ಇರುತ್ತಾರೆಯೆ ತುಂಬಿದ ಹಳ್ಳದಲ್ಲಿ?’ +‘ಅವರಿಗೇನು ಹುಚ್ಚೊ? +ತುಂಬಿದ ಹಳ್ಳಕ್ಕೆ  ಇಳಿಯುವುದಕ್ಕೆ? +ಅಚೆಯ ದಂಡೆಯಲ್ಲಿ ಕಾಯುತ್ತಾರೆ, ಹಳ್ಳ ಇಳಿಯೋ ತನಕ.’ +‘ಹಾಂಗೆ ಕಾಯುವುದಾದರೆ ನಾಳೆ ಬೈಗಿನತನಕ ಅವರು ಕಾಯಬೇಕಾದೀತು, ಈ ಮಳೆ ನೋಡಿದರೆ ನಿಲ್ಲುವ ಹಾಂಗೆ ತೋರುವುದಿಲ್ಲ.’ +‘ಹೆಣ್ಣಿನ ಅದೃಷ್ಟಾನೂ…’ +‘ಅಂಥಾ ದೊಡ್ದೋರ ಕೈ ಹಿಡಿಯುವ ಪುಣ್ಯ ಇರಬೇಕಾಯ್ತಲ್ಲ!’ ‘ಎಂಥಾ ದೊಡ್ಡೋರಪ್ಪಾ? +ದುಡ್ಡಿನ ದೊಡ್ಡವರೋ?’ ‘ಹ್ಞೂ!ಯಾಕಾಗಬಾರದು? +ದುಡ್ದಿನ ದೊಡ್ದವರೇ ಅಂತಾನೂ ಇಟ್ಟುಕೋ…’ +ಈ ಗಜಿಬಿಜಿ ಗಲಾಟೆಯಿಂದ ದೂರವಾಗಿ, ತನ್ನ ಅಜ್ಜಿಯ ಕೋಣೆಯಲ್ಲಿ ಚಿನ್ನಮ್ಮ ಒಬ್ಬಳೆ ಚಾಪೆಯ ಮೇಲೆ ಕುಳಿತು, ಸುತ್ತಿಟ್ಟಿದ್ದ ಅಜ್ಜಿಯ ಹಾಸಗೆಗೆ ಒರಗಿಕೊಂಡು ಗಂಭೀರ ಚಿಂತಾಮಗ್ನಳಾಗಿದ್ದಳು. +ಬೆಳಿಗ್ಗೆ ಶಾಸ್ತ್ರ ಮಾಡಿಸುವಾಗ ಅವಳ  ಅಂಗೋಪಾಂಗಗಳ ಮೇಲೆ ಹೇರಿದ್ದ ಚಿತ್ರ ವಿಚಿತ್ರವಾದ ಆಭರಣ ಸಂದೋಹ ವಿಲ್ಲದಿದ್ದರೂ ಅವಳು ಮದುವಣಗಿತ್ತಿ ಎಂಬುದಕ್ಕೆ ಸಾಕ್ಷಿಯಾಗಿ ಕೆಲವೇ ಅಲಂಕಾರಗಳಿಂದ ಶೋಭಿತೆಯಾಗಿದ್ದಳು; +ಕುಂಕುಮವೆರೆಸಿದ ಕೆಲವು ಅಕ್ಷತೆಗಳೂ ಅವಳ ಸುತ್ತ ಬಿದ್ದಿದ್ದುವು; +ಶಾಸ್ತ್ರ ಮಾಡಿಸುವಾಗ ಅವಳ ತಲೆಗೂದಲಲ್ಲಿ, ಗೊಬ್ಬೆ ಸೆರಗಿನಲ್ಲಿ, ಮಡೀಲಿನಲ್ಲಿ ಸೀರೆಯ ಮಡಿಕೆಗಳಲ್ಲಿ, ಆಭರಣಗಳಲ್ಲಿ ಸಿಕ್ಕಿಕೊಂಡಿದ್ದು, ಕೋಣೆಯ ಏಕಾಂತಕ್ಕೆ ಬಂದು ಕೊಡವಿಕೊಂಡಾಗ ಬಿದ್ದವು ಅವು. +‘ಯಾಕೆ ಹೀಗೆ ಸುರಿಯುತ್ತಿದೆ ಮಳೆ?ಇವತ್ತೆ? …. +ಈ ಮಳೆ ಹೀಗೇ ಬೀಳುತ್ತಿದ್ದರೆ ಗತಿ? +ನನ್ನನ್ನು ಹೇಗೆ ತಪ್ಪಿಸಿಕೊಂಡು ಹೋಗುತ್ತಾರೊ ಮುಕುಂದಬಾವ? +ಸಿಕ್ಕಿಬಿದ್ದರೆ ಏನುಗತಿ?… ತಪ್ಪಿಸಿಕೊಂಡು ಹೋಗುವುದಕ್ಕೆ ಆಗುತ್ತದೆಯೊ ಇಲ್ಲವೋ?… +ಒಂದು ವೇಳೆ ಎಲ್ಲಿ ಯಾದರೂ ಧಾರೆಗೆ ನಿಲ್ಲುವ ಪ್ರಸಂಗ ಬಂದೇ ಬಿಟ್ಟರೆ?… ಬಂದರೆ, ಇದ್ದೇ ಇದೆಯಲ್ಲಾ ನನ್ನ ಹತ್ತಿರ, ಔಷಧಿ! +ನಾಗಕ್ಕನೇ ತಿನ್ನುವುದಕ್ಕೆ ಇಟ್ಟುಕೊಂಡಿದ್ದ ವಿಷ! +ಆಲೋಚನೆಯ ನಡುವೆ ಚಿನ್ನಮ್ಮ ಎದ್ದು ನಿಂತಳು. +ನಾಗಂದಿಗೆಯ ಮೇಲೆ ಕೈಯಾಡಿಸಿ ಒಂದು ಸಣ್ನ ಕರಡಿಗೆಯನ್ನು ತೆಗೆದು, ಅದರಲ್ಲಿದ್ದ ಪೊಟ್ಟಣವನ್ನು ಬಿಚ್ಚಿ ನೋಡಿ, ವಿಷದ ಪದಾರ್ಥ ಇರುವುದನ್ನು ಮತ್ತೊಮ್ಮೆ ನಿಶ್ಚಯಪಡಿಸಿಕೊಂಡು ಕರಡಿಗೆಯನ್ನು ಅಲ್ಲಿಯೇ ಭದ್ರಪಡಿಸಿಟ್ಟು, ಮತ್ತೆ ಚಾಪೆಯ ಮೇಲೆ ಸುಯ್ಯುತ್ತಾ ಕೂತುಕೊಂಡಳು. + ‘ನನ್ನ ಅವ್ವ ಇದ್ದಿದ್ದರೆ? …. ’ ಚಿನ್ನಮ್ಮನ ಅಲೋಚನೆ ತನ್ನ ತಾಯಿಯನ್ನು ನೆನಪಿಗೆ ತಂದೊಡನೆಯ ಕಣ್ಣೀರು ಸುರಿಯತೊಡಗಿ ನೀರವವಾಗಿ ಬಿಕ್ಕಿಬಿಕ್ಕಿ ಅಳತೊಡಗಿದಳು. +ಅವಳ ತಾಯಿಯ ಅಕಾರವಾಗಲಿ ಮುಖವಾಗಲಿ ಅವಳ ನೆನಪಿಗೆ ಸ್ವಲ್ಪವಾದರೂ ಸ್ಪಷ್ಟವಾಗಿ ಬರುವಂತಿರಲಿಲ್ಲ. +ಅಷ್ಟು ಚಿಕ್ಕ ವಯಸ್ಸಿನಲ್ಲಿಯೆ ತಾಯಿ ತೀರಿಹೋಗಿದ್ದಳು. +ಬಹಳ ಕಾಲದವರೆಗೆ ಅವಳು ಅಜ್ಜಿಯನ್ನೆ ತನ್ನ ತಾಯಿಯೆಂದೂ ತಿಳಿದುಕೊಂಡಿದ್ದಳು. +ಅವಳ ಅಜ್ಜಿ ಅವಳನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರಿತಿಸುತ್ತಿದ್ದರೂ ಅವಳ ಹೃದಯದ ಹೊಸ ಆಶೆಗಳನ್ನು ಅರಿಯಲಾರದ ಸಂಪ್ರದಾಯದ ಮುದುಕಿಯಾಗಿದ್ದಳು. +ಕೋಣೂರು ಮುಕುಂದನಿಗೆ ತನ್ನ  ಮೊಮ್ಮಗಳನ್ನು ಕೊಡಲು ಅವಳಿಗೆ ಇಷ್ಟವಿಲ್ಲದಿರಲಿಲ್ಲ. +ಆದರೆ ಸಿಂಬಾವಿ ಭರಮೈಹೆಗ್ಗಡೆಯವರ ದೊಡ್ದಸ್ತಿಗೆ, ಐಶ್ಚರ್ಯ, ಅವರ ಮೊದಲನೆಯ ಹೆಂಡತಿಗೆ ಮಕ್ಕಳಾಗದೆ ಬಂಜೆಯಾಗಿದ್ದುದರಿಂದ ತನ್ನ ಮೊಮ್ಮಗಳ ಮಕ್ಕಳಿಗೇ ಸಿಂಬಾವಿಯ ದೊಡ್ಡ ಆಸ್ತಿಯೆಲ್ಲ ದೊರೆಯುತ್ತದೆ ಎಂಬ ದೂರದ ಮಹದಾಶೆ, ಅವರು ನೀಡಿದ್ದ ಧನ ಕನಕ- ಇವುಗಳಿಂದ ಪ್ರೇರಿತಳಾಗಿ, ಲೌಕಿಕವಾಗಿ ವಿವೇಕಪೂರ್ವಕವಾದುದು ಎಂದು ತಾನು ನಂಬಿದ ತನ್ನ ಅಳಿಯನ ಸಲಹೆಗೆ ಸಮ್ಮತಿಸಿದ್ದಳು. +ತನ್ನ ಮಗಳಂತೂ ಬಡವನ ಕೈ ಹಿಡಿದು ಸುಖವನ್ನೆ ಕಾಣದೆ ಬಾಳದೆ ಹೋದಳು; +ಮೊಮ್ಮಗಳಾದರೂ ಸಿರಿವಂತರ ಮನೆ ಸೇರಿ ಸುಖಿಯಾಗಿರಲಿ ಎಂಬುದೊಂದೆ ಮುದುಕಿಯ ಹಾರೈಕೆಯಾಗಿತ್ತು. +ಇನ್ನು ಅವಳ ತಂದೆ, ವೆಂಕಪ್ಪನಾಯಕರ ಅಕಾರ, ಗಾತ್ರ, ಮಹಾಮೀಸೆ, ಮಾತು ನಡತೆ ಎಲ್ಲದರಲ್ಲಿಯೂ ಇರುತ್ತಿದ್ದ ಒಂದು ಗ್ರಾಮೀಣರೂಕ್ಷತೆ-ಇವುಗಳಿಂದಾಗಿ ಚಿನ್ನಮ್ಮಗೆ ಎಳೆತನದಿಂದಲೂ ತಂದೆಯಲ್ಲಿ ಭಯ ಭಕ್ತಿಯೆ ಉದ್ದೀಪನವಾಗಿತ್ತು. +ತಂದೆಯನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ಗೌರವಿಸುತ್ತಿದ್ದಳು. +ಆ ಗೌರವದಲ್ಲಿ ಹೆದರಿಕೆಯೆ ಹೃದಯವಾಗಿರುತ್ತಿತ್ತು. +ದೊಡ್ಡವಳಾದ ಮೇಲಂತೂ ಅವಳು ಹೆಚ್ಚು ಕಡಮೆ ದೂರವಾಗಿಯೆ ಇರುತ್ತಿದ್ದಳು. +ತಂದೆಗೆ ಇದಿರಾಡುವ ಧೈರ್ಯವಾಗಲಿ, ಎದರು ಬೀಳುವ ಉದ್ಧಟತನವಾಗಲಿ ಅವಳಿಗೆ ಕನಸಿನಲ್ಲಿಯೂ ಸಾಧ್ಯವಿರಲಿಲ್ಲ. +ಆದ್ದರಿಂದಲೆ ನಾಗಕ್ಕನ ಪರಿಚಯವಾದ ಮೇಲೆ ಅವಳನ್ನೆ ನೆಮ್ಮಿ ಬಿಟ್ಟಿದ್ದಳು. +ನಾಗಕ್ಕ ಒಂದು ರೀತಿಯಲ್ಲಿ ಚಿಕ್ಕಮ್ಮನಾಗಿ ಮನೆಯಲ್ಲಿ ನಿಂತಮೇಲಂತೂ ಆಕೆಯ ತನ್ನ ಹೆತ್ತ ತಾಯಿಯ ಸ್ಥಾನದಲ್ಲಿಯೂ ನಿಂತಿದ್ದಳು. +ಪ್ರಣಯ ಮತ್ತು ವಿಷಯ ದಾಂಪತ್ಯ ಜೀವನಗಳ ಕರಾಳ ಮುಖಗಳ ನರಕಮಯ ಪರಿಚಯವಿದ್ದ ನಾಗಕ್ಕಗೆ ಚಿನ್ನಮ್ಮನ ಹೃದಯ ಸಂಪೂರ್ಣವಾಗಿ ಅರ್ಥವಾಗಿದ್ದು, ಅವಳನ್ನು ಸ್ವಂತ ಮಗಳೆಂಬಂತೆ ಪ್ರೀತಿಸುತ್ತಿದ್ದುದರಿಂದ, ಅವಳಿಗಾಗಿ ತನಗೆ ಏನು ಕಷ್ಟ ನಷ್ಟ ಕೇಡುಬಂದರೂ ಸಹಿಸಲು ಸಿದ್ಧಳಾಗಿ, ಅವಳನ್ನು ಈ ವಿಷಯ ವಿವಾಹದಿಂದ ಪಾರುಮಾಡಲು ದೃಢಸಂಕಲ್ಪ ಮಾಡಿದ್ದಳು. +ಅವಳನ್ನು ಈ ಹೂವಳ್ಳಿಗೆ ಬಂದದ್ದೂ ಕೂಡಿಕೆಯ ಒಂದು ರೀತಿಯ ಸಮ್ಮತಿಯಿತ್ತದ್ದೂ ಚಿನ್ನಮ್ಮನ ಅಕ್ಕರೆಗಾಗಿಯೆ; +ಈಗ ಅವಳ ಸ್ವಂತದ್ದು ಎನ್ನಬಹುದಾದ ಸುಖಸಂತೋಷ ಏನಿದ್ದರೂ ಅದೆಲ್ಲ ಚಿನ್ನಮ್ಮನ ಸುಖಸಂತೋಷದಲ್ಲಿ ಅಭೇದವಾಗಿತ್ತು. +ತಾಯಿಯನ್ನು ನೆನೆದ ಚಿನ್ನಮ್ಮ ಆ ಮಾತೃಮುಖದ ನೆನಪೇನಾದರೂ ಮನಸ್ಸಿನ ಕಣ್ಣಿಗೆ ಕಾಣುತ್ತದೆಯೆ ಎಂದು ಪ್ರಯತ್ನಿಸಿದಳು,ಪ್ರಯೋಜನವಾಗಲಿಲ್ಲ. +ತನ್ನ ಅಜ್ಜಿ ಮತ್ತು ಇತರ ಹತ್ತಿರದ ಬಂಧುಗಳು ತನ್ನ ತಾಯಿಯ ಸ್ಫುರದ್ರೂಪ ಅಕಾರ ಸೌಂದರ್ಯಗಳನ್ನು ನೆನದು ಮೆಚ್ಚಿ ಮಾತಾಡುವಾಗಲೆಲ್ಲ ಹೇಳುತ್ತಿದ್ದದ್ದು ಅವಳ ಜ್ಞಾಪಕಕ್ಕೆ ಬಂತು. +ತಾನು ಹುಡುಗಿಯಾಗಿದ್ದಾಗಲೆ, ತನ್ನನ್ನು ನೋಡಿದವರೆಲ್ಲ, ತನ್ನ ಮುಖ ತನ್ನ ತಾಯಿಯ ಮುಖಕ್ಕೆ ಹೋಲುತ್ತದೆ ಎನ್ನುತ್ತಿದ್ದರು. +ದೊಡ್ಡವಳಾಗಿ ತರುಣಿಯಾದ ಮೇಲಂತೂ ತನ್ನನ್ನು ನೋಡಿ ತನ್ನ ತಾಯಿಯನ್ನು ನೋಡುವುದೇ ಬೇಡ ಎನ್ನುವಷ್ಟು ತನ್ನ ಮುಖ ತಾಯಿಯ ಮುಖಕ್ಕೆ ‘ತದ್ರೂಪ’ ಆಗಿದೆ ಎನ್ನುತ್ತಿದ್ದರು. +ಚಿನ್ನಮ್ಮ ಬಾಚಣಿಕೆಯ ಪಕ್ಕದಲ್ಲಿ ಗೋಡೆಗೆ ಆನಿಸಿಟ್ಟಿದ್ದ ಸಣ್ಣ ಕನ್ನಡಿಯನ್ನು ಕೈಗೆ ತೆಗೆದುಕೊಂಡಳು. +ಅದನ್ನು ಕೊಂಡುಕೊಟ್ಟಿದ್ದೂ ಮುಕುಂದಬಾವನೆ, ಇತರ  ನೆಂತರೊಡನೆ ತಾನೂ ಅವರ ಸಂಗಡ ತೇರಿಗೆ ಹೋಗಿದ್ದಂದು; +ಅದಕ್ಕೆ ಮೊದಲು ಅವಳು ಬೋಗುಣಿಯಲ್ಲಿಯೊ ಹಂಡೆಯಲ್ಲಿಯೊ ಇರುತ್ತಿದ್ದ ನೀರಿನಲ್ಲಿ ನೋಡಿಕೊಂಡೆ ಹಣೆಗೆ ಕುಂಕುಮ ಇಟ್ಟುಕೊಳ್ಳುತ್ತಿದ್ದದ್ದು ರೂಢಿ. +ಹೆಣ್ಣುಮಕ್ಕಳು ಕನ್ನಡಿ ನೋಡಿಕೊಂಡು ತಲೆಬಾಚಿಕೊಳ್ಳುವುದೆಂದರೆ ಅದೊಂದು ಅನೀತಿ ವ್ಯಾಪಾರವೆಂದೇ ಆಗಿನ ಭಾವನೆಯಾಗಿತ್ತ. +‘ಕನ್ನಡಿ ನೋಡಿಕೊಳ್ಳುವುದು ಸೂಳೆಯರು ಮಾತ್ರ!’ ಎಂದೂ ಕೆಲವರು ವಯಸ್ಸಾದ ಹೆಗ್ಗಡಿತಮ್ಮಗಳು ಹೇಳುತ್ತಿದ್ದುದನ್ನೂ ಕೇಳಿದ್ದಳು. +ಆದ್ದರಿಂದಲೆ ಮುಕುಂದಬಾವನಿಂದ ಕನ್ನಡಿಯನ್ನು ಈಸಿಕೊಳ್ಳುವಾಗಲೆ ಏನೋ ಕಳ್ಳತನದ ಹುಳಿಯನ್ನು ಅನುಭವಿಸಿತ್ತು ಅವಳ ಮನಸ್ಸು. +ತರುವಾಯವೂ ಕನ್ನಡಿಯನ್ನು ಮುಚ್ಚು ಮರೆಯಾಗಿಯೆ ಬಳಸುವುದು ಅವಳಿಗೆ ಅಭ್ಯಾಸವಾಗಿ ಹೋಗಿತ್ತು. +ಅದ್ದರಿಂದಲೆ ಈಗಲೂ ಅವಳ ಕಣ್ಣು ಬಾಗಿಲತ್ತ ಓಡಿದ್ದು! +ತಾಳಹಾಕಿದ್ದೇನೆಂದು ಪ್ರತ್ಯಕ್ಷ ಜ್ಞಾನದಿಂದ ನಿಶ್ಚಯಮಾಡಿಕೊಂಡ ಮೇಲೆಯೆ ಅವಳು ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲು ತೊಡಗಿದಳು!… +‘ಆಃ ಎಷ್ಟು ಚಂದಾಗದೆ ನನ್ನವ್ವ!’…ಚಿನ್ನಮ್ಮನ ಹೃದಯದಿಂದ ಹಿಗ್ಗಿನ  ಸುಯ್ಲೊಂದು ಹೊಮ್ಮಿತ್ತು…. +‘ನೋಡಕ್ಕೆ ಎರಡು ಕಣ್ಣೂ ಸಾಲ್ದು! +ಕೈ ತೊಳೆದುಕೊಂಡು ಮೈ ಮುಟ್ಟಬೇಕು!… ಇಂಥವಳನ್ನು ಹೊಡೀತಿದ್ದನಂತಲ್ಲಾ ನನ್ನಪ್ಪಯ್ಯ?… ಹೆಂಗಾರು ಕೈಬರ್ತಿತ್ತೊ ಅವನಿಗೆ?…’ + ಅವಳ ಅರಿವಿಲ್ಲದೆಯೆ ಚಿನ್ನಮ್ಮನ ಕಣ್ಣು ನೀರುಕ್ಕಿ ಮಂಜಾಗಿ  ಹರಿಯತೊಡಗಿತ್ತು… + ‘ತೂ!ಇದೆಂಥ ಹಾಳುಮಳೆ? +ಈ ಮುಗಿಲ ಮಬ್ಬಿನಾಗೆ ಕನ್ನಡೀನೂ ಸರಿಯಾಗಿ ಕಾಣಾದಿಲ್ಲ….’ +ಚಿನ್ನಮ್ಮ ಕನ್ನಡಿಯನ್ನು ಹೆಚ್ಚು ಬೆಳಕಿಗೆ ಹಿಡಿದರೆ ಹೆಚ್ಚು ಚೆನ್ನಾಗಿ ಕಾಣುತ್ತದೆ ಎಂದುಕೊಂಡು ಬೆಳಕಂಡಿಯ ಕಡೆಗೆ ತುಸು ಸರಿದಳು. +ಕನ್ನಡಿಯ ಮೇಲೇನೊ ಹೆಚ್ಚು ಬೆಳಕು ಬಿತ್ತು. +ಆದರೆ?ಅವಳಿಗೆ ಫಕ್ಕನೆ ಅರಿವಾಗಿ ಮೆಲ್ಲಗೆ ನಕ್ಕಳು. +ಕನ್ನಡಿಯನ್ನಲ್ಲ ಬೆಳಕಿಗೆ ತರಬೇಕಾದ್ದು, ತನ್ನ ಮುಖವನ್ನು! +ಕಣ್ಣೊರಸಿಕೊಂಡು, ತನ್ನ ಮುಖವನ್ನೆ ಬೆಳಕಿಗೊಡ್ಡುವಂತೆ ತಿರುಗಿ ಕುಳಿತು, ಕನ್ನಡಿಯಲ್ಲಿ ತುಸು ಚೆನ್ನಾಗಿ ಕಾಣತೊಡಗಿದ ಸೌಂದರ್ಯರಾಶಿಯ ಕಡೆಗೆ  ನೋಡತೊಡಗಿದಳು, ದೃಷ್ಟಿನಟ್ಟು. +ಆ ಕನ್ನಡಿಯ ವಿಸ್ತೀರ್ಣವೂ, ತುಸು ದೂರ ಹಿಡಿದುಕೊಂಡರೆ, ಮುಖ ಮಾತ್ರ ಕಾಣುವಷ್ಟಿತ್ತು! +ಆದ್ದರಿಂದ ತನ್ನ ತಾಯಿಯ ಮುಖದ ಚಂದವನ್ನು ಒಮ್ಮೆಗೇ ಸಮಗ್ರವಾಗಿ ಕಾಣಲಾರದೆ ಭಾಗಭಾಗವಾಗಿಯೆ ಕಂಡು ಅಕ್ಕರೆಯುಕ್ಕಿದಳು. + ಬೈತಲೆ ತೆಗದಿದ್ದ ಮಿಂಚುಗಪ್ಪಿನ ತಲೆಕೂದಲು ಅಗಲವಾದ  ಹೊಂಬಣ್ಣದ ಹಣೆ, ಹಣೆಯ ಮಾಂಗಲ್ಯವನ್ನೂ ಚೆಲುವನ್ನೂ ನೂರುಮಡಿಗೈವ ಕುಂಕುಮದ ಬೊಟ್ಟು, ಕಾಡಿಗೆಗಪ್ಪಿನ ಹುಬ್ಬು ಹೊಳೆಯುತ್ತಿರುವ ಕಣ್ಣಿನ ಮೇಲೆ ಬಾಗಿರುವ ಸೊಗಸು, ಕನ್ನೆಯ ಮಿರುಗುವ ಕೋಮಲತೆ, ತುಟಿಯ ಮನೋಹರತೆ, ಗಲ್ಲದ ದುಂಡನೆಯ ಮುದ್ದು, ಮೂಗುತಿ ಮಿರುಗುವ ನೀಳಮೂಗು, ಸಾಭರಣ ಸುಂದರವಾದ ಕಿವಿ-ಒಂದೊಂದನ್ನೂ ಮತ್ತೆ ಮತ್ತೆ ನೋಡಿ ‘ಅಃ ನನ್ನವ್ವ ಎಷ್ಟು ಚಂದಾಗದೆ!’ ಎಂದುಕೊಂಡಳು ಚಿನ್ನಮ್ಮ, ಅನೇಕ ಸಾರಿ! +ಗಲ್ಲದ ಕೆಳಭಾಗದಲ್ಲಿ ಆಗಿ  ನಿಂತುಬಿಟ್ಟಿದ್ದ ಗಾಯದ ಸಣ್ಣ ಕಲೆಯನ್ನು ನೋಡಿದಾಗ, ತಾನು ಹುಡುಗಿಯಾಗಿದ್ದಾಗ ಬಚ್ಚಲು ಕಲ್ಲಿನ ಮೇಲೆ ಜಾರಿಬಿದ್ದು, ಕೊಣದ ಕಲ್ಲು ಗಲ್ಲಕ್ಕೆ ತಗುಲಿ, ನೆತ್ತರು ಸೋರಿ, ಅಜ್ಜಿಯ ಜೀವವೆ ಹಾರಿಹೋಗುವಂತಾಗಿದ್ದನ್ನು ನೆನೆದಳು. +ತನ್ನ ಮುಖದಲ್ಲಿದ್ದ ಆ ಒಂದೆ ಕಳಂಕ ತನ್ನ ತಾಯಿಯ ಮುಖದ್ದಲ್ಲ ಎಂದು ನೆನೆದಾಗಲೆ ಅವಳಿಗೆ ತಾನೂ ಬಣ್ಣಿಸುತ್ತಿದ್ದ ಮುಖ ತನ್ನದು ಎಂಬ ಪ್ರಜ್ಞೆ ಸುಸ್ಪಷ್ಟ ಜಾಗ್ರತವಾದದ್ದು. +ಅಷ್ಟು ಹೊತ್ತಿಗೆ ಸರಿಯಾಗಿ ಯಾರೊ ಕತೆದ ಕೂಗು ಕೇಳಿಸಿದಂತಾಗಿ ಕನ್ನಡಿಯನ್ನು ಬೇಗ ಬೇಗನೆ ಅಡಗಿಸಿದಳು. +ಆದರೆ ಯಾರೂ ಕರೆದಿರಲಿಲ್ಲ. +ಅವಳ ಬೀರಿ, ಮುದ್ದು ಬೆಕ್ಕು, ಮಿಯಾವ್ ಮಿಯಾವ್ ಎನ್ನುತ್ತಾ ಅವಳ ಬಳಿಗೆ ಬಾಲವೆತ್ತಿ ಬಂದು ಮೈಗೆ ಮೈ ತಿಕ್ಕತೊಡಗಿತು. +ಬಹುಶಃ ಅವಳನ್ನು ಎಲ್ಲೆಲ್ಲಿಯೂ ಅರಸಿ ಕಾಣದೆ, ಕೋಣೆಯಲ್ಲಿ ಹುಡುಕಿ ನೋಡುವ ಸಲುವಾಗಿ ಬಾಗಿಲಿಗೆ ಬಂದು, ಅದೂ ಮುಚ್ಚಿದ್ದುದನ್ನು ಕಂಡು, ಬೆಳಕಂಡಿಯಿಂದ ನುಸುಳಿ ಬಂದಿತ್ತೆಂದು ತೋರುತ್ತದೆ ಆ  ಬೀರಿಬೆಕ್ಕು. +ಅದನ್ನು ಕಂಡು ಚಿನ್ನಮ್ಮನ ಹೃದಯದಲ್ಲಿ ಎಂತಹ ಅತ್ಮೀಯತೆ  ಉಕ್ಕಿತೆಂದರೆ, ತನ್ನ ಅವ್ವನೆ ಬೆಕಿನ ನೆವದಲ್ಲಿ ತನ್ನನ್ನು ಸಂತೈಸಲು ಬಂದಿದ್ದಾಳೆಯೊ ಏನೊ ಎಂಬ ಅನುಭವ ಉಂಟಾಗಿ, ಮೈಮೇಲಣ ರೋಮ ಮುಳ್ಳುನಿಲ್ಲುವಂತಾಯ್ತು! +ಬೀರಿಯ ತಲೆಯನ್ನು ಸವರುತ್ತಾ ಅದರ ಬಹು ಮೃದುವಾದ ಮೀಯಾವ್ ಮೀಯಾವ್  ಕರೆಯ ಸದ್ದನ್ನು ಸವಿದಳು. +ಬೆಕ್ಕಾದರೂ ದಿಕ್ಕಾಯ್ತಲ್ಲಾ ಈ ಅನಾಥೆಗೆ ಎಂದುಕೊಂಡಿತು ಅವಳ ಮನಸ್ಸು. +ಅವಳಿಗೆ ಹೇಗೆ ಗೊತ್ತಾಗಬೇಕು, ಯಾರೆ ಆಗಲಿ, ಯಾವುದೆ ಆಗಲಿ ಸೃಷ್ಟಿವ್ಯೂಹದಲ್ಲಿ ದಿಕ್ಕಿಲ್ಲದೆ ಇರುವುದಿಲ್ಲ ಎಂದು? +ಆ ಬೆಕ್ಕಿನ ಮೀಯಾವ್ ಮೀಯಾವ್ ಕಾಕತಾಳೀಯವಾಗಿ ತೋರಿದರೂ ಅವಳಿಗೆ ಸಂತೈಕೆ ನೀಡಿತ್ತು, ಅಶ್ವಾಸನೆಯನ್ನೂ ನೀಡಿತ್ತು-ಎಂಬುದು ಮಾತ್ರ ಅವಳ ಅರಿವಿಗೆ ಮೀರಿದ್ದಾಗಿತ್ತು. +ಅವಳ ಮದುವೆ ಸಿಂಬಾವಿ ಭರಮೈ ಹೆಗ್ಗಡೆಯವರೊಡನೆ ನಡೆಯುವುದಾಗಲಿ  ನಡೆಯದಿರುವುದಾಗಲಿ ಅವಳಿಗೆ ಮಾತ್ರ ಮಹದ್ವಿಷಯವಾಗಿರಲಿಲ್ಲ ಅವಳು ಮತ್ತು ಅವಳ ಭವಿಷ್ಯ. +ಬಹುಶಃ ಅವಳ ಮಕ್ಕಳಲ್ಲಿ ಇಬ್ಬನೊ ಅಥವಾ ಮೊಮ್ಮಕ್ಕಳಲ್ಲಿ ಒಬ್ಬನೊ ಐತಿಹಾಸಿಕವಾಗಿಯೊ ಅಧ್ಯಾತ್ಮಿಕವಾದ ಅಧಾರ ಪಾತ್ರವಾಗಿರಬಾರದೇಕೆ? +ಭೂತಕಾಲದ ಪ್ರಚೋದನೆ ಮಾತ್ರವಲ್ಲದೆ ಭವಿಷ್ಯತ್ಕಾಲದ ಆಕರ್ಷಣೆಯೂ ವರ್ತಮಾನದ ಚಲನವಲನಗಳನ್ನು ನಿರ್ಣಯಿಸುವ ಪ್ರಬಲ ಶಕ್ತಿಯಾಗಿರುತ್ತದೆ ಅಲ್ಲವೆ?… +ಯಾರೊ ದಡದಡನೆ ಬಾಗಿಲು ತಟ್ಟಿದರು! +ಆ ತಟ್ಟುವ ರೀತಿಯಲ್ಲಿ ಅವಸರವೊ ಉದ್ವೇಗವೊ ವ್ಯಕ್ತವಾಗುವಂತಿತ್ತು. +ಹಾಗಲ್ಲದಿದ್ದರೆ ತಟ್ಟುವವರು ಹುಡುಗರು ಮಾತ್ರವೆ ಆಗಿರಬೇಕು; +ದೊಡ್ಡವರಾದರೆ ಮೆಲ್ಲಗೆ ತಟ್ಟುತ್ತಿದ್ದರು, ಇಲ್ಲದೆ ಕರೆಯುತ್ತಿದ್ದರು…. +ಚಿನ್ನಮ್ಮ ಕುಳಿತಲ್ಲಿಂದ ಏಳದೆಯೆ ಆಲಿಸಿದಳು. +ದಡದಡದಡ ತಟ್ಟುವುದು ನಿಂತು ಒಂದು ಬಾಲಕವಾಣಿ ಕೇಳಿಸಿತು. +“ ಅಕ್ಕಯ್ಯ,ಅಕ್ಕಯ್ಯ, ಬಾಗಿಲು ತೆಗಿ!”   ಚಿನ್ನಮ್ಮ ಮುಖ ಒರಸಿಕೊಂಡು, ಸೀರೆ ಬಟ್ಟೆ ಸರಿಮಾಡಿಕೊಂಡು ಎದ್ದು ಹೋಗಿ ತಾಳ ತೆಗೆದಳು. +“ಅಕ್ಕಯ್ಯ!ಅಕ್ಕಯ್ಯ!ಕೇಳ್ದೇನು?” ಎಂದು ಮೇಲುಸಿರೆಳೆಯುತ್ತಲೆ  ಒಳನುಗ್ಗಿದನು ಧರ್ಮು. +ಚಿನ್ನಮ್ಮ ಮತ್ತೆ ಬಾಗಿಲು ಹಾಕಿ, ತಾಳವಿಕ್ಕಿ ಚಾಪೆಗೆ ನಡೆದಳು. +ಹುಡುಗನ ಉದ್ವೇಗ ಅವಳಿಗೂ ತಗುಲತೊಡಗಿತ್ತು. +ಕೇಳಿದಳು“ಏನೋ?ಏನೋ? … ಯಾಕೋ ಏದುತ್ತಿಯಲ್ಲಾ?” +“ನಮ್ಮ ತಿಮ್ಚಿಗಪ್ಪಯ್ಯ ಸಿಂಬಾವಿ ಗಂಡಿನ ಕಡೆ ಮದುವೆಗೆ ಹೋಗಿದ್ದವ  ಬಂದಾನೆ….” +“ಯಾರೋ?ಹಳೆಮನೆ ತಿಮ್ಮಪ್ಪಣೈನೇನೊ?” +“ಹ್ಞೂ ಅವನೇ.” +“ಏನಂತ್ಯೋ?” +“ಸಿಂಬಾವಿ ಕಡೆ ಏನು ಮಳೆ ಅಂದ್ರೆ ಮಳೆಯಂತೆ! +ಇಲ್ಲೀ ಮಳೆಗೆ ಹತ್ತರಷ್ಟೊ ನೂರತಷ್ಟೊ ಬರ್ತಾ ಇದೆಯಂತೆ! …. +ಹಳ್ಳಾ ಎಲ್ಲಾ ತುಂಬಿ ಹರೀತವಂತೆ…. +‘ಇವತ್ತೇನು ದಿಬ್ಬಣ ಧಾರೆಮೂಹೂರ್ತಕ್ಕೆ ಬರಾ ತರಾ ಇಲ್ಲ!’ ಅಂತಾ ಇದ್ದ ಜಗಲೀಲಿ ನೆಂತರ ಹತ್ರ….” +“ಬರದೇ ಇದ್ದರೆ ಅಷ್ಟೇ ಹೋಯ್ತು! +ಹಾಳಾಗಲಿ ಬಿಡು!ಋಣ ಕಡೀತು! …. ”ಧರ್ಮು ಬೆರಗಾದವನಂತೆ ತನ್ನ ಚಿನ್ನಕ್ಕಯ್ಯನ ಕಡೆ ನೋಡಿದನು. +ತಾನು ತರುವ ವಿಷಾದಕರ ವಾರ್ತೆಯಿಂದ ಇನ್ನೇನಾಗದಿದ್ದರೂ ಖಿನ್ನಳಂತೂ ಆಗಿಯೆ ಆಗುತ್ತಾಳೆ ಎಂದು  ಹಾರೈಸಿದ್ದ ಅವನಿಗೆ ಚಿನ್ನಮ್ಮನ ಸಿಡುಕಿನ ಶಾಪಸದೃಶವಾದ ಬಿರುನುಡಿಗಳನ್ನು ಕೇಳಿ ಸೋಜಿಗವಾಯಿತು. +ಅಕ್ಕಯ್ಯ ಏಕೋ ಮುನಿಸಿಕೊಂಡಿದ್ದಾಳೆ ಎಂದು ಭಾವಿಸಿದನು. +ಮರುಕ್ಷಣದಲ್ಲಿಯೆ ಅವನ ಮನಸ್ಸಿಗೆ ಇನ್ನೊಂದು ವಿಷಯದ ಬೆಳಕು ಹೊಳೆದಂತಾಯಿತು. +ಆ ವಿಷಯ ಅವನಿಗೆ ಹೆಚ್ಚೇನೂ ತಿಳಿದಿರಲಿಲ್ಲ; +ಅವನ ವಯಸ್ಸಿಗೆ  ವಿಶೇಷವಾಗಿ ಅರ್ಥವಾಗುವಂತೆಯೂ ಇರಲಿಲ್ಲ. +ಆದರೂ ತನ್ನ ಕೋಣೂರು ಮುಕುಂದಮಾವನಿಗೆ ಹೂವಳ್ಳಿ ಚಿನ್ನಕ್ಕಯ್ಯನನ್ನು ಕೊಟ್ಟು ಮದುವೆಯಾಗುತ್ತದಂತೆ ಎಂಬರ್ಥದ ಸಂಬಂಧವನ್ನು ಅವರಿಬ್ಬರಲ್ಲಿಯೂ ಕಲ್ಪಿಸಿಕೊಂಡಿತ್ತು ಅವನ ಮನಸ್ಸು. +ಆದರೆ ಅಂತಹ ಹೆಣ್ಣು ಗಂಡಿನ ಮದುವೆ ಮಾತುಗಳು ಎಷ್ಟೋ ಆಗಿ, ಹೋಗಿ, ಕಡೆಗೆ  ಯಾರೋ ಯಾರನ್ನೋ ಮದುವೆಯಾಗುತ್ತಿದ್ದುದು ಆ ನಾಡಿನ ಸಹಜ ಜೀವನ ವ್ಯಾಪಾರಗಳಲ್ಲಿ ಒಂದಾಗಿದ್ದುದರಿಂದ ಅಂಥಾದ್ದನ್ನು ಯಾರೂ ವಿಶೇಷವಾಗಿ ಮನಸ್ಸಿಗೆ  ಹಾಕಿಕೊಳ್ಳುತ್ತಿರಲಿಲ್ಲ. +ಇನ್ನು ಸಣ್ಣ ಹುಡುಗರಿಗೆ ಅದರಲ್ಲಿರಬಹುದಾದ ವಿಶೇಷಾರ್ಥ ಹೇರೆತಾನೆ ಅರಿವಿಗೆ ಬಂದೀತು? +ಯಾವಾಗ ಮುಕುಂದಮಾವನ ಆಲೋಚನೆ ಮನಸ್ಸಿಗೆ ಬಂದಿತೋ ಹುಡುಗ ಸಹಜವಾಗಿಯೆ ಕೇಳಿದನು. +“ಅಕ್ಕಯ್ಯ, ಮುಕುಂದ ಮಾವ ಯಾಕೆ ಮದೇಮನೆಗೆ ಬಂದೇ ಇಲ್ಲಾ? …. ”ಪ್ರಶ್ನೆಯೇನೊ ತುಂಬಾ ಸರಳವಾಗಿಯೆ ಇತ್ತು. +ಆದರೆ ಎಂತಹ ಭಯಂಕರ  ಜಟಿಲತೆಯನ್ನು ಕೆರಳಿಸೆಬ್ಬಿಸಿತ್ತು ಚಿನ್ನಮ್ಮನ ಹೃದಯದಲ್ಲಿ! +ಅವಳ ಮುಖ ಸಣ್ಣದಾಯಿತು. +ಕೋಣೆಯಲ್ಲಿ ಅಷ್ಟು ಮಬ್ಬು ಬೆಳಕಿರದಿದ್ದರೆ, ಬಣ್ಣ ಬದಲಾಯಿಸಿದ್ದನ್ನೂ ಗಮನಿಸುತ್ತಿದ್ದನೊ ಏನೊ, ಧರ್ಮು. +ತುಟಿ ಅಳತೊಡಗುವ ಮಕ್ಕಳ ತುಟಿಗಳಂತೆ ತುಸು ನಡುಗುತ್ತಾ ಮುಂಚಾಚಿದಂತಾದುವು. +ಕಣ್ಣು ಹನಿಗೂಡಿದುವು. +ತನ್ನಿಂದ ತಡೆಯಲಾಗದ ಭಾವಗೋಪನಕ್ಕಾಗಿ ಮಾತಿಲ್ಲದೆ ಮುಖ ತಿರುಗಿಸಿಕೊಂಡಳು. +ಅಕ್ಕಯ್ಯಗೆ ಮಹಾಸಂಕಟಕರವಾಗುವ ಅಪರಾಧವನ್ನೆಸಗಿದಂತವನಾಗಿ ಧರ್ಮು, ಕಂಪದ ಗದ್ದೆ ಎಂಬುದು ಗೊತ್ತಿಲ್ಲದೆ ಅದರ ಅಂಚಿನ ಮೇಲೆ ನಡೆಯುವವನು ಕೆಳಗೆ  ಒಂದು ಕಾಲು ಹಾಕಿ ಫಕ್ಕನೆ ಅದನ್ನೆತ್ತಿಕೊಳ್ಳುವಂತೆ, ತಟಕ್ಕನೆ ವಿಷಯದ ದಿಕ್ಕನೆ  ಬದಲಾಯಿಸಿದನು. +“ಅಕ್ಕಯ್ಯ, ಕಾಡಣ್ಣಯ್ಯಗೆ ಕಾಲಿಗೆ ಮುಳ್ಳು ಚುಚ್ಚಿಕೊಂಡಿತ್ತಲ್ಲಾ? +ಅದೀಗ ಕೀತು ಸಿಡೀತಾ ಅದೆಯಂತೆ, ಜರ ಬಂದು ನಡುಗ್ತಾಕೂತಾನೆ ಜಗಲೀಲ.” +ಚಿನ್ನಮ್ಮ ತನ್ನ ದುಃಖವನ್ನೆಲ್ಲ ಬದಿಗೊತ್ತಿದಂತೆ ಸೆರಗಿನಿಂದ ಕಣ್ಣೊರಸಿಕೊಂಡು ಹೇಳಿದಳು, ಸಾಧಾರಣ ಧ್ವನಿಯಲ್ಲಿ. +“ ಹೋಗೋ, ಕರಕೊಂಡು ಬಾರೋ ಅವನ್ನ. +ಒಂದು ಚೂರು ಕಾಡು ಜೀರಿಗೆ ತಿನ್ನಿಸಿ, ಬಿಸಿ ನೀರು ಕುಡಿಸಿ, ಬೆಚ್ಚಗೆ ಹೊದಿಸಿ, ಮಲಿಗಿಸ್ಯಾರು ಮಲಗಿಸ್ತೀನಿ, ಪಾಪ! …. + ಹೆಂಗಾರು ಮಾಡಿ ಕಾಲಿನ ಮುಳ್ಳು ತೆಗೆದು, ಕೀವು ಬಿಡಿಸದೆ ಇದ್ದರೆ….ಛೇ ಪಾಪ! …. + ಅಕ್ಕನಲ್ಲಾದ ಬದಲಾವಣೆಗೆ ಹರ್ಷಚಿತ್ತನಾಗಿ ಧರ್ಮು ಕಾಡುವನ್ನು ಕರೆತರಲು ಜಗಲಿಗೆ ಓಡಿದನು…. +ಕಾಡುಗೆ ಕಾಡುಜೀರಿಗೆ ತಿನ್ನಿಸಿ, ಬಿಸಿ ನೀರು ಕುಡಿಸಿ, ಚೆನ್ನಾಗಿ ಹೊದಿಸಿ ಮಲಗಿಸಿ, ನಾನಾ ರೀತಿಯ ಸಮಾಧಾನವನ್ನು ಹೇಳಿ ಉಪಾಯದಿಂದ ಕಾಲಿನ ಕೀವು ಬಿಡಿಸಿ, ಒಳಗೆ ಮುರಿದುಕೊಂಡಿದ್ದ ಅಂಕೋಲೆ ಮುಳ್ಳಿನ ಅರ್ಧ ಚೂರನ್ನು ಹೊರತೆಗೆದು ಮುಗಿಸುವಷ್ಟರಲ್ಲಿ ಬೈಗು ಕಪ್ಪಾಗಿತ್ತು. +ಯಾರೋ ಹೊತ್ತಿಸಿದ್ದ ಒಂದು ಹಣತೆಯ  ಬೆಳಕೂ ಕೋಣೆಯನ್ನು ತುಸು ಬೆಳಗತೊಡಗಿತ್ತು. +ಕಾಡುಗೆ ಚಿಕಿತ್ಸೆ ನಡೆಯುತ್ತಿದ್ದಾಗ ಒಳಗೂ ಹೊರಗೂ ಬಂದೂ ಹೋಗಿ, ಹೋಗೀ ಬಂದು ಮಾಡುತ್ತಲೆ ಇದ್ದ ಚಟುವಟಿಕೆಯ ತಿಮ್ಮು ಏನೇನೊ ವಾರ್ತೆಗಳನ್ನು ತಂದೂ ತಂದೂ ಅಕ್ಕಯ್ಯಗೆ ಹೇಳುತ್ತಲೆ ಇದ್ದನು. +ಗುರು ಲಘು ಬೇದವಿಲ್ಲದ ಆ ಸುದ್ದಿಗಳಲ್ಲಿ ಬಹುಪಾಲು ನಗೆಯ ವಿಷಯಗಳೆ ಆಗಿರುತ್ತಿದ್ದುವು. +ಆದರೆ ಕತ್ತಲಾಗಿ ದೀಪ ಹೊತ್ತಿಸಿದ ಮೇಲೊಮ್ಮೆ ಕೋಣೆಯಿಂದ ಹೊರಬಿದ್ದವನು ಬಹಳ ಹೊತ್ತಿನವರೆಗೂ ಒಳಗೆ ಬರಲಿಲ್ಲ. +ಆಮೇಲೆ ದಡದಡನೆ ಒಳಗೆ ಓಡಿ ಬಂದವನು ಹೇಳಿದನು. +“ಅಕ್ಕಯ್ಯ, ಮಳೆ ಜೋರಾಗಿ ಹೊಡೀತಿತ್ತಂತೆ. +ಇಳಿಜಾರಿನಲ್ಲಿ ದಂಡಿಗೆ  ಹೊತ್ತವರು ಕಾಲುಜಾರಿ ಬಿದ್ದು, ದಂಡಿಗೆ ಒಳಗೆ ಕೂತಿದ್ದ ಮದುವನಗಗೆ ಸೊಂಟ  ಉಳುಕಿಹೋಗದೆಯಂತೆ! …. ” +ಅವನು ಇನ್ನೂ ಮುಂದುವರಿಸುತ್ತಿದ್ದನೊ ಏನೊ? +ಆದರೆ ಚಿನ್ನಮ್ಮ ಕಿಸಕ್ಕನೆ  ನಕ್ಕು ಬಿಟ್ಟಿದ್ದನ್ನು ಕಂಡು ಅವಾಕಾದನು. +ತನಗೆ ಗಂಡನಾಗುವವನ ಸೊಂಟ ಮುರಿದದ್ದನ್ನು ಕೇಳಿ ಹೆಂಡತಿಯಾಗುವವಳು ತಡೆಯಲಾರದೆ ನಕ್ಕಿದ್ದನ್ನು ಕಂಡು ಹುಡುಗನಿಗೆ  ಸೋಜಿಗವಾಯಿತು ಆದರೆ ಮರುಕ್ಷಣದಲ್ಲಿಯೆ ಏಕೋ ಏನೋ ಅವನೂ ಗಹಗಹಿಸಿ ನಗತೊಡಗಿದನು. +ಮತ್ತೆ ಹೇಳಿದನು ತುಸು ಮೂದಲಿಕೆಯ ದನಿಯಿಂದ. “ಹಂಗಾಗಬೇಕಲ್ಲೇನಕ್ಕಯ್ಯಾ ಅವರಿಗೆ?ಹಿಹ್ಹಿಹ್ಹಿಹಿಹಿ!” +ಇಬ್ಬರೂ ಒಟ್ಟಿಗೆ ಚೆನ್ನಾಗಿ ನಗುವುದನ್ನು ಕೇಳಿ ಜ್ವರತಪ್ತನಾಗಿ ಮಲಗಿದ್ದ  ಕಾಡುವೂ ನಗತೊಡಗಿದನು. +ಧರ್ಮು ಅಲ್ಲಿ ಇದ್ದಿದ್ದರೆ ಅವನೂ ಸೇರುತ್ತಿದ್ದನೊ ಆ  ನಗುವಿನ ಹೊನಲಿಗೆ. +ಅಷ್ಟು ಹಾಸ್ಯಾಸ್ಪದವಾಗಿತ್ತು ದಂಡಿಗೆಯವರು ಜಾರಿ ಬೀಳುವ  ಮತ್ತು ಮದುಮಗನ ಸಾಲಂಕೃತ ಸೊಂಟಮುರಿಯುವ ದೃಶ್ಯ! +ಅಷ್ಟರಲ್ಲಿ ಗರತಿಯರು ಕೆಲವರು ಬಂದು ಮದುಮಗಳನ್ನು ಶಾಸ್ತ್ರ ಮಾಡಿಸಲು, ಶೃಂಗಾರಗೈದು, ಧಾರೆಯ ಮಂಟಪಕ್ಕೆ ಸಿದ್ಧಗೊಳಿಸುವುದಕ್ಕಾಗಿ ಕರೆದೊಯ್ದರು. +ಕೋಣೆಯೆಲ್ಲ ನಿಃಶಬ್ದವಾದ ಮೇಲೆ, ಕಾಡು ಒದ್ದನೆಯ ಆಗ ಬಾರದೆಂದು  ಜೊತೆ ಕುಳಿತಿದ್ದ ತಿಮ್ಮು “ಹಿಹ್ಹಿಹ್ಹಿಹ್ಹಿ!ಕಾಡಣ್ಣಯ್ಯ, ಆ ಮತ್ತಿಗೇರಿ ಅತ್ತೆಮ್ಮನ  ಬಾಲೆ…. +ಥೂ ಥೂ ಥೂ! …. ” ಅದನ್ನು ನೆನೆನೆನೆದು ಹುಡುಗರಿಬ್ಬರೂ ನಗತೊಡಗಿದರು, ಒಬ್ಬರಿಗೊಬ್ಬರು ಕಚಗುಳಿ ಇಟ್ಟುಕೊಂಡರೊ ಎಂಬಂತೆ. +ಬೈಗಾಯ್ತು; ಕಪಾಯ್ತು; ಕತ್ತಲಾಯ್ತು; ರಾತ್ರಿಯೂ ಸುದೂರ ಸಾಗಿತ್ತು. +ಹಣತೆಗಳು, ಚಿಮಿಣಿಗಳು, ದೊಂದಿಗಳು, ಬೆಟ್ಟಳ್ಳಿಯಿಂದ ತಂದಿದ್ದು ನವನಾಗರಿಕತೆಯ ಲಾಂಛನಗಳಾಗಿದ್ದ ಲಾಟೀನು ಲ್ಯಾಂಪುಗಳು ಅಲ್ಲಲ್ಲಿ, ಅವು ಅವುಗಳಿಗೆ ಉಚಿತವಾಗಿದ್ದ  ಸ್ಥಾನಗಳಲ್ಲಿ ಉರಿಯತೊಡಗಿದ್ದುವು. +ಮದುವೆಗೆ ನೆರೆದಿದ್ದವರು ಸ್ವಲ್ಪವೆ ಸಂಖ್ಯೆಯ  ಜನಗಳಾದರೂ ಅಲ್ಲಲ್ಲಿ ಗುಂಪುಗುಂಪಾಗಿ ಕುಳಿತು ಗುಜು ಗುಜು ಮಾತನಾಡಿಕೊಳ್ಳುತ್ತಿದ್ದುದು ಆ ಪುರಾತನ ಕಾಲದ ದೊಡ್ಡ ಮನೆಯ ತುಂಬ ಒಂದು ಜೇನುಗೂಡಿನ ಝೇಂಕಾರದಂತಹ ಮೊರೆ ತುಂಬಿತ್ತು. +ಕಲ್ಲೂರು ಗಣಪತಿ ಸಾವಿರಕಾಯಿ ಒಡೆಸುವುದಾಗಿ ಹಾಸಿಗೆ ಹಿಡಿದಿದ್ದ ವೆಂಕಪ್ಪನಾಯಕರು ಹರಕೆ ಹೊತ್ತಿದ್ದರೂ ಮಳೆ ನಿಂತಿರಲಿಲ್ಲ; ಕಡಮೆಯಾಗಿರಲೂ ಇಲ್ಲ. +ಸಿಂಬಾವಿಯಿಂದ ಬರಬೇಕಾಗಿದ್ದ ದಿಬ್ಬಣವನ್ನು ನಾನಾ ಭಾವಭಂಗಿ ಗಳಿಂದ ನಿರೀಕ್ಷಿಸುತ್ತಾ ವಿವಿಧ ಸ್ವರೂಪದ ವ್ಯಾಖ್ಯಾನ ಟೀಕೆಗಳನ್ನು ಮಾಡುತ್ತಾ, ಇಡಿಯ ಮನೆಯ, ಗರತಿಯರೂ ಗಿರಾಸ್ತರೂ ಅಡುಗೆಯವರೂ ಆಳುಗಳೂ ಎಲ್ಲ ಕಾಯುತ್ತಿದ್ದರು. +“ಹೋಯ್, ಕಡೆಗೂ ಗಂಡಿನ ಕಡೆ ದಿಬ್ಬಣ ಬರ್ತದೆಯೋ ಇಲ್ಲೋ? …. ” +“ಆವಾಗ ಒಂದು ಸಾರಿ, ಎಲ್ಲೋ ದೂರದಾಗೆ, ಕೊಂಬಿನ ಕೂಗು ಕೇಳಿಸಿಧಾಂಗೆ ಆಯ್ತಪ್ಪಾ….” +“ಯಾವಾಗ್ಲೋ?” +“ದೋಯಿಸ್ರು ಬಂದ್ರಲ್ಲಾ ಆವಾಗ…” +“ಏ !ಅದಿಲ್ಲೇ ನಮ್ಮ ಹಳೆಮನೆ ಹೊಲೇರು ಊದಿದ್ದಿರ್ಬೇಕು.” +“ದೋಯಿಸ್ರೇ ಹೇಳಿದರಂತೊ ‘ಅಲ್ಲೆಲ್ಲೋ ದೂರದಲ್ಲಿ ದಿಬ್ಬಣದ ಸದ್ದು ಕೇಳಿದ್ಹಾಂಗೆ ಆಗ್ತಿತ್ತು.’ ಅಂತಾ….” +“ದಂಡಿಗೀನ ಹೊತ್ಕೊಂಡು ಬಿದ್ರಂತಲ್ಲಾ ಬೋವೇರು ಜಾರಿ! …. +ಮದುವನಗಗೆ ಸೊಂಟಾನೆ ಉಳುಕ್ತು ಅಂತಾ ಹೇಳ್ತಿದ್ರಂತೆ? …. ” +“ಅದೆಲ್ಲಾ ಸುಳ್ಳಂತೋ… ಜಾರಿ ಬಿದ್ದಿದ್ದೇನೊ ಹೌದಂತೆ, ಆದರೆ ಸೊಂಟಗಿಂಟ ಮುರಿದಿದ್ದು ಸುಳ್ಳಂತೆ….” +“ಹೆಗ್ಗಡೇರ ಹಿರೇ ಹೆಂಡ್ತಿ, ಅದೇ ಮೊದಲನೆ ಹೆಂಡ್ತಿ ಜಟ್ಟಮ್ಮ ಹೆಗ್ಗಡ್ತೇರು, ‘ಅಪಶಕುನ ಆಯ್ತು. +ದಿಬ್ಬಣ ಮುಂದೆ ಹೋಗಾದೆಬ್ಯಾಡ, ಅಂತಾ ಕೂತುಬಿಟ್ಟಿದ್ರಂತೆ?” +“ಆದ್ರೆ, ಹೆಗ್ಗಡೇರು ಬಿಡ್ತಾರೇನೋ? +ಇಂಥಾ ಹೆಣ್ಣು ಕಿರೀ ಹೆಂಡ್ತಿ ಆಗಿ ಬರುವಾಗ? …. ” +“ಅಲ್ಲಿ ನೋಡಲ್ಲಿ!ಯಾರೋ ದಿಬ್ಬಣದ ಕಡೇರು ಬಂಧಾಂಗೆ  ಕಾಣ್ತದೆ…. +ಏನಂತೆ ಹೋಗಿ ಕೇಳಿಕೊಂಡಾದ್ರೂ ಬರ್ತೀನಿ….”ಮಾತಾಡುತ್ತಿದ್ದವನು ಎದ್ದುಹೋಗಿ,ಹೊಸದಾಗಿ ಮಳೆಯಲ್ಲಿ ನೆನೆದು ಬಂದಿದ್ದ  ಒಬ್ಬನೊಡನೆ, ಸುತ್ತಲೂ ಮುತ್ತಿಕೊಂಡು ಪ್ರಶ್ನೆಗಳ ಸುರಿಮಳೆ ಸುರಿಸಿ ಮಾತಾಡುತ್ತಿದ್ದ ಗುಂಪಿನಲ್ಲಿ ಸೇರಿದನು. +ದಿಬ್ಬಣದವರೇನೊ ಕೋಡ್ಲುಹಳದ ದಂಡೆವರೆಗೂ ‘ಹಾಂಗೂ ಹೀಂಗೂ ಮಾಡಿ’ ಬಂದಿದ್ದಾರೆಂದೂ, ಹಳ್ಳ ತುಂಬಿ ಹರಿಯುತ್ತಿರುವುದರಿಂದ, ಮಳೆ ಸ್ವಲ್ಪ ಕಡಿಮೆಯಾಗಿ, ಹಳ್ಳದ ನೀರು ಇಳಿಯುವುದನ್ನೆ ಕಾಯುತ್ತಿದ್ದಾರೆಂದೂ ಗೊತ್ತಾಯಿತು. +ಹಳ್ಳದ ಮತ್ತು ಅದರ ಆಳವಿರುವ ಮತ್ತು ಆಳವಿರದಿರುವ ಜಾಗಗಳ ಪರಿಚಯವಿರುವ ಊರು ಮನೆಯವರನ್ನು ಕಳಿಸಿ ದಿಬ್ಬಣದವರನ್ನೂ ದಂಡಿಗೆಯಮ್ಮೂ ದಾಟಿಸುವ ಕೆಲಸಕ್ಕೆ  ಹಚ್ಚಿದರು. +ಅವರು ದಿಬ್ಬಣದವರು ಕಾಯುತ್ತಿದ್ದೆಡೆಗೆ ಹೋಗಿ ಈಚೆಯ ದಂಡೆಯಿಂದಲೆ ಕೂಗಿ ಹೇಳಿ, ಅರ್ಧಮೈಲಿಯ ಮೇಲುಭಾಗದಲ್ಲಿ ಹಳ್ಳ ಅಗಲವಾಗಿ ನೀರು ಅಳವಿಲ್ಲದೆ ಹರಿಯುತ್ತಿದ್ದ ಕಲ್ಲು ಕಲ್ಲು ಜಾಗದಲ್ಲಿ ದಿಬ್ಬಣದವರನ್ನೂ ದಂಡಿಗೆಯವರನ್ನೂ ಎಚ್ಚರಿಕೆಯಿಂದ ದಾಟಿಸಿದರು. +ಅಂತೂ ದಿಬ್ಬಣದವರೂ ದಂಡಿಗೆಯೂ, ಹೂವಳ್ಳಿಯ ಮನೆಯ ಮುಂದಣ  ಗದ್ದೆ ಬಯಲಿನ ಹಕ್ಕಲ ಬಳಿಗೆ ಬಂದುವನ್ನು ಸಾರಲು ಕೊಂಬು ಕೂಗಿದುವು, ಕದಿನಿ ಹಾರಿದುವು, ತಂಬಟೆ  ಬಾರಿಸಿದುವು. +“ದಿಬ್ಬಣ ಬಂತು!ದಿಬ್ಬಣ ಬಂತು!” ಎಂದು  ಎಲ್ಲೆಲ್ಲಿಯೂ ಗದ್ದಲ ಸಂಭ್ರಮ ತೆರೆಯುಕ್ಕಿತು! +ಎರಡು ಕಡೆಯ ವಾಲಗ ವಾದ್ಯಗಳೂ ಭೋರ್ಗರೆಯಿತು.ಸರ್ವಾಲಂಕಾರ ಭೂಷಿತೆಯಾಗಿ, ಗರತಿಯರು ಸುತ್ತುಗಟ್ಟಿರಲು ಗೋಡೆಗೆ  ಬೆನ್ನೊರಗಿ ತಲೆಬಾಗಿ ಕುಳಿತಿದ್ದ ಮದುಮಗಳು, ಚಿನ್ನಮ್ಮ, ಗಂಭೀರ ಚಿಂತಾಮಗ್ನೆಯಾಗಿ ತನ್ನ ದೈವವನ್ನು ನೆನೆಯುತ್ತಾ ಅಗಾಗ್ಗೆ ಕಣ್ಣೊರಸಿಕೊಳ್ಳುತ್ತಿದ್ದಳು. +ಸುತ್ತ ಹತ್ತಿರವಿದ್ದ  ಮುತೈದೆಯರು ಅವಳ ಕಣ್ಣೀರಿಗೆ ತಮ್ಮದೆ ಆದ ರೀತಿಯಲ್ಲಿ ವ್ಯಾಖ್ಯಾನಮಾಡಿಕೊಂಡು ಅವಳನ್ನು ಸಮಾಧಾನಪಡಿಸಲೆಂದು ಉಸಿರಿದ ಮಾತುಗಳೆ ಅವಳ ದುಃಖಕ್ಕೆ ಕಾರಣವಾಗಿ ಚಿನ್ನಮ್ಮ ಮತ್ತಷ್ಟು ಹತಾಶೆಯಾಗಿ ವಿಹ್ವಲಗೊಳ್ಳುತ್ತಿದ್ದಳು. +ಧರ್ಮು ತಿಮ್ಮು ಹೇಳಿದ್ದ ಸುದ್ದಿಗಳಿಂದಲೂ ಮತ್ತು ಸುತ್ತಮುತ್ತಲಿದ್ದ ವಯಸ್ಸಾದ ಹೆಗ್ಗಡಿತಿಯವರು ತಮ್ಮ ತಮ್ಮೊಳಗೆ ಆಡಿಕೊಳ್ಳುತ್ತಿದ್ದ ಮಾತುಗಳಿಂದಲೂ, ಮಳೆಬಿಡದೆ ಹೊಡೆಯುತ್ತಿದ್ದುದರಿಂದಲೂ, ದಿಬ್ಬಣದವರು ರಾತ್ರಿ ಬಹಳ ಹೊತ್ತಾದರೂ ಬಾರದೆ ಇದ್ದುದರಿಂದಲೂ ಆ ದಿನ  ತನಗೊದಗಲಿರುವ ಮದುವೆಯ ದುರಂತ ತನ್ನ ಪಲಾಯನರೂಪದ ಪ್ರಯತ್ನ  ವಿಲ್ಲದೆಯೆ ದೇವರ ದಯೆಯಿಂದ ನಿಂತರೂ ನಿಲ್ಲ ಬಹುದೆಂದು ಹಾರೈಸಿದ್ದಳು. +ಹಿತ್ತಲು ಕಡೆಯ ಹಂಡೆಯ ಸದ್ದು ಯಾವಾಗಬೇಕಾದರೂ ಕೇಳಿಸ ಬಹುದೆಂದು ಅತ್ತಕಡೆ ಕಿವಿಯಾಗಿಯೆ ಕುಳಿತಿದ್ದಳು. +ನಾಗಕ್ಕನೂ ಅಗಾಗ ಮದುಮಗಳಿಗೆ ಏನನ್ನೊ ಹೇಳುವ ನೆವದಿಂದ ಬಂದು ಅವಳ ಕಿವಿಯಲ್ಲಿ ಧೈರ್ಯದ ಮಾತುಗಳನ್ನು ಹೇಳಿ ಹೋಗುತ್ತಿದ್ದಳು. +ಪಕ್ಕದಲ್ಲಿದ್ದ ಗರತಿಯರು ಯಾಕೆ?ಏನು?ಎಂತು?ಎಂದು ವಿಚಾರಿಸಿದಾಗ ನಾಗಕ್ಕ ‘ಹುಡುಗಿಗೆ ಏನೂ ಸ್ವಲ್ಪ ಹೊಟ್ಟೆ ಸರಿಯಾಗಿಲ್ಲ ’ ಎಂದೂ, ‘ತಲೆನೋವು’ ಎಂದೊ ‘ಅದಕ್ಕೆ ಏನಾದರೂ ಕುಡಿಯುವುದಕ್ಕೆ ಬೇಕೇನೋ ಎಂದು ಕೇಳಿದೆ.’ ಎಂದೊ ನೆವಹೇಳುತ್ತಿದ್ದಳು. +ದಿಬ್ಬಣ ಕೋಡ್ಲುಹಳ್ಳದ ದಂಡೆಗೆ ಮುಟ್ಟಿ, ನೀರು ಇಳಿಯುವುದನ್ನೆ ಕಾಯುತ್ತಿದೆ ಎಂಬ ಸುದ್ದಿ ಬಂದಾಗ, ಮದುವೆಗೆ ಬಂದಿದ್ದ ನೆಂಟರಮ್ಮರೆಲ್ಲ ತಾವು ಬಂದದ್ದು ವ್ಯರ್ಥವಾಗಲಿಲ್ಲವಲ್ಲಾ ಎಂಬ ತೃಪ್ತಿಯಿಂದ ನಿಡುಸುಯ್ದು ಸಂತಸ ಗೊಂಡಿದ್ದರು. +ಅದೇ ಸುದ್ದಿ ಚಿನ್ನಮ್ಮನ ಹೃದಯಕ್ಕೆ ಸಿಡಿಲಾಗಿ ಎರಗಿತ್ತು. +‘ಏಕಿನ್ನೂ ಹಂಡೆಯ ಸದ್ದಾಗಲಿಲ್ಲ? +ನನ್ನನ್ನು ಇಲ್ಲಿಂದ ಮೊದಲೇ ಏಕೆ ಪಾರು ಮಾಡಬಾರದಾಗಿತ್ತು? +ಮುಕುಂದಬಾವಗೆ ನಾನು ಬೇಡವಾದೆನೆ?’-ಚಿನ್ನಮ್ಮನ ಶಂಕೆ ಉದ್ವೇಗ ಗರಗಸವಾಗಿ ಹೃದಯದ ಮೇಲೆ ಹರಿಯತೊಡಗಿತ್ತು. +ಮಡಿಲಿನಲ್ಲಿ ಆ ವಿಷದ ಪೊಟ್ಟಣವಾದರೂ ಇದೆಯೆ? +ನೋಡಿಕೊಂಡಳು ಕೈತಡವಿ,ಅದೂ ಇರಲಿಲ್ಲ. +‘ಅಯ್ಯೋ, ನಾಗಂದಿಗೆಯ ಮೇಲೆ ಇಟ್ಟವಳು ಮರತೇ ಬಂದುಬಿಟ್ಟೆನಲ್ಲಾ!’ ಎಂದುಕೊಂಡು ಅತ್ತ ಇತ್ತ ಗಾಬರಿಗೊಂಡವಳಂತೆ ಕಣ್ಣು ಹಾಯಿಸತೊಡಗಿದಳು. +“ಯಾಕೇ?ಮದೋಳ್ಗಿಗೆ ಹೊಟ್ಟೆಗಿಟ್ಟೆ ನೋಯ್ತದೇನೆ?” ಹತ್ತಿರವಿದ್ದು ಗಮನಿಸಿದ ನೆಂಟರಮ್ಮ ಒಬ್ಬರು ಕೇಳಿದರು. +“ನಾಗಕ್ಕನ ಬರಾಕೆ ಹೇಳಬೇಕಂತೆ.” ಸಖಿಯತನವನ್ನು ವಹಿಸಿಕೊಂಡು ಮೆರೆಯುತ್ತಿದ್ದ ಹುಡುಗಿಯೊಬ್ಬಳು ಹೇಳಿದಳು. +ಯಾರೊ ಹೋಗಿ ನಾಗಕ್ಕಗೆ ಹೇಳಿದರು. +ಅವಳು ಬಂದು ವಿಚಾರಿಸಿದಾಗ ಅವಳ ಕಿವಿಯಲ್ಲಿ ಚಿನ್ನಮ್ಮ ಪಿಸುಗುಟ್ಟಿದಳು. +ನಾಗಕ್ಕ ಮದುಮಗಳನ್ನು ಎಬ್ಬಿಸಿ ಕರೆದೊಯ್ದಳು. +ಚಿನ್ನಮ್ಮ ತನ್ನ ಕೋಣೆಗೆ ಹೋಗಿ, ನಾಗಕ್ಕಗೆ ಬಾಗಿಲು ತಾಳ ಹಾಕುವಂತೆ ಹೇಳಿ ವಿಷವಿದ್ದ ಕರಡಿಗೆಗೆ ಕೈಹಾಕಿ, ಅದರಲ್ಲಿದ್ದ ಪೊಟ್ಟಣವನ್ನು ತೆಗೆದು ಮಡಿಲಿಗೆ ಹಾಕಿಕೊಳ್ಳುತ್ತಿದ್ದಾಗ, ನಾಗಕ್ಕಗೆ ಎಲ್ಲವೂ ತಟಕ್ಕನೆ ಅರ್ಥವಾಗಿ, ಅದನ್ನು ಕಸಿದುಕೊಂಡಳು. +ಆಗಲೆ ಕೇಳಿಸಿದ್ದು, ಹಿತ್ತಲುಕಡೆಯ ಹಂಡೆಯನ್ನು ಬಡಿದ ಸದ್ದು! +ಆ ಸದ್ದಿನಷ್ಟು ಸಾಧಾರಣವಾದದ್ದು, ಯಕ್ಕಚ್ಚಿತವಾದದ್ದು, ಗಮನಾನರ್ಹವಾದದ್ದು, ಆ ಮದುವೆಮನೆಯ ಗಲಾಟೆಯಲ್ಲಿ ಅತ್ಯಂತ ನಿರ್ಲಕ್ಷಿತವಾದದ್ದು ಅಂದು ಆ ಹೂವಳ್ಳಿಯ ಜಗತ್ತಿನಲ್ಲಿ ಮತ್ತೊಂದಿರಲಿಲ್ಲ. +ಆದರೆ ಚಿನ್ನಮ್ಮಗೂ ಅವಳ ಕ್ಷೇಮಕಾತರೆಯಾಗಿದ್ದ ನಾಗಕ್ಕಗೂ ಆ ನಾದಸಂಕೇತ ಮೋಕ್ಷದ್ವಾರಕ್ಕೂ ಮಿಗಿಲಾಗಿತ್ತು! +ಇಬ್ಬರಿಗೂ ಮಿಂಚು ಮುಟ್ಟಿದಂತಾಗಿ ನಿಮಿರಿ ನಿಂತು ಆಲಿಸಿದರು. +ಮೈ ಬಿಸಿಯೇರಿ ಉಸಿರಾಟ ಸೋದ್ವಿಗ್ನವಾಯಿತು. +ಬಾಯಿಗಿಂತಲೂ ಹೆಚ್ಚಾಗಿ ಕಣ್ಣುಗಳೆ ಮಾತಾಡಿಕೊಂಡವು. +ಚಿನ್ನಮ್ಮ ಬೇಗಬೇಗನೆ ಸುಲಭವಾಗಿ ಕಳಚಿಬಿಡಬಹುದಾಗಿದ್ದ ಒಡವೆಗಳನ್ನು, ಅದರಲ್ಲಿಯೂ ಭಾರವಾಗಿದ್ದು ಚಲನೆಗೆ ತೊಡಕು ಮಾಡುವ ಕಟ್ಟಾಣಿ ಮತ್ತು ಜಡೆಬಿಲ್ಲೆಯ ಸರಮಾಲೆಗಳಂತಹ ಆಭರಣಗಳನ್ನು, ತೆಗೆ ತೆಗೆದು ನಾಗಕ್ಕನ ಕೈಗೆ ಕೊಟ್ಟಳು. +ಅವಳು ಪಕ್ಕದಲ್ಲಿದ್ದ ಸಂದುಕಕ್ಕೆ ಅವನ್ನು ಹಾಕಿ “ಹೊತ್ತಾಯ್ತು!ಬ್ಯಾಗ!” ಎಂದು ಎಚ್ಚರಿಸಿದಳು. +ಹೊರಕ್ಕೆ ಹೊರಡೆಲೆಂದು ನಾಗಕ್ಕ ಬಾಗಿಲ ತಾಳಕ್ಕೆ ಕೈ ಹಾಕುತ್ತಿರಲು, ಚಿನ್ನಮ್ಮ ಅಳುದನಿಯಲ್ಲಿ ಬಿಕ್ಕುತ್ತಾ “ ಅಜ್ಜಿಗೆ ಹೇಳಿಹೋಗ್ತೀನಿ, ನಾಗಕ್ಕಾ!” ಎಂದಳು. +“ಏನು ನೆಂಟರ ಮನೆಗೆ ಹೊರಟಿದ್ದೀನಿ ಅಂತಾ ಮಾಡೀಯೆನು? +ನಿನ್ನ ಉಪಚಾರ ಮಾಡಿ ಕಳಿಸಿಕೊಡಾಕೆ? +ಅಜ್ಜಿಗೆ ಗೊತ್ತಾದ್ರೆ ನಿನ್ನಗತಿ ಮುಗೀತು ಅಂತಾ ಇಟ್ಟುಗೊ….!” +“ನಾನಿಲ್ಲ ಅಂತಾ ಗೊತ್ತಾದ ಕೂಡ್ಲೆ ಅಜ್ಜಿ ಎದೆ ಒಡೆದು ಸಾಯ್ತದೆ!… ನಾಗಕ್ಕಾ ನಾ ಹೋಗಾದಿಲ್ಲ; ನಾ ಒಲ್ಲೆ! +ನಾ ಹಾಳಾದ್ರೆ ಅಷ್ಟೇ ಹೋಯ್ತು; +ನೇಣು ಹಾಕ್ಕೊಳ್ತೀನಿ; ಇಲ್ದಿದ್ರೆ ಕೆರೇ ಬಾವಿ ಹಾರ್ತೀನಿ! +ಏನಾದ್ರೂ ಮಾಡ್ಕೊಳ್ತೀನಿ! …. +ಅಜ್ಜಿ ಅತ್ತೂ ಅತ್ತೂ ಎದೆ ಒಡೆದೇ ಸಾಯ್ತದಲ್ಲಾ, ನಾ ಸತ್ತುಹೋದೆ ಅಂತಾ!”ನಾಗಕ್ಕ ಒಂದು ಕ್ಷಣ ದಿಕ್ಕು ಕೆಟ್ಟಂತಾಗಿ ತತ್ತರಿಸಿದಳು. +ಎಷ್ಟು ದಿನಗಳಿಂದ, ಎಷ್ಟು ಪ್ರಯತ್ನದಿಂದ ಮುಕುಂದಣ್ನ ಚಿನ್ನಮ್ಮನಿಗಾಗಿಯೆ, ತನಗಾಗಿ ಮಾತ್ರವೆ ಅಲ್ಲ, ಕಷ್ಟಪಟ್ಟು ಕಟ್ಟಿದ್ದ ವ್ಯೂಹದ ಕೋಟೆ ಇದ್ದಕ್ಕಿದ್ದ ಹಾಗೆ ಧಸಕ್ಕೆಂದು ಬಿದ್ದು ಹೋಗುವುದರಲ್ಲಿದೆಯಲ್ಲಾ ಎಂಬ ಸಂಕಟದ ಚಪ್ಪಡಿಯಡಿ ಸಿಕ್ಕಿ ಜೀವವೆ ಅಪ್ಪಚ್ಚಿಯಾದಂತಾದಳು! +“ಅಯ್ಯೋ, ಚಿನ್ನೂ, ಯಾಕೆ ಹೀಂಗೆ ಮಾಡ್ತೀಯಾ? +ನಿನ್ನ ಕುತ್ತಿಗೇನ ನೀನೇ ಕತ್ತರ್ಸಿಕೊಳ್ಳೋದಲ್ಲದೆ ನಮ್ಮೆಲ್ಲರ ಕುತ್ತಿಗೇಗೂ ತಂದಿಡ್ತಾ ಇದ್ದೀಯಲ್ಲಾ? +ಮುಕುಂದಣ್ಣ ಏನಂತಾರೇ? +ಈ ಮಳೇಲಿ, ಅಲ್ಲೆಲ್ಲೂ ಕಾಡಿನಲ್ಲಿ, ನೀನು ಬರ್ತೀಯ ಅಂತಾ ಕಾಯ್ತಾ ಇದ್ದಾರಲ್ಲಾ! …. + ಅಲ್ಲಿ ಕೇಳ್ದೇನು?ಹಂಡೇ ಸದ್ದು! +ಪೀಂಚಲು ಮತ್ತೆ ಬಡೀತಿದಾಳೆ! …. + ನಿನ್ನ ದಮ್ಮಯ್ಯ ಅಂತೀನೇ! +ನಿನ್ನ ಬಾಳ್ನೆಲ್ಲಾ ಬೂದಿ ಹುಯ್ಕೋಬ್ಯಾಡೇ! +ನಿನ್ನ ದಮ್ಮಯ್ಯ ಅಂತೀನೇ! +ನಿನ್ನ ಅಜ್ಜಿಗೆ ಏನು ಹೇಳಬೇಕೋ ಅದ್ನೆಲ್ಲಾ ನಾನೆ ಹೇಳ್ತೀನೇ, ಪುಣ್ಯಾತಗಿತ್ತೀ! …. + ಹೊತ್ತಾಯ್ತು!ಬಾ, ಕಣ್ಣೊರ್ಸಿಕೊ! +ಯಾರಿಗೂ ಗೊತ್ತಾಗಬಾರದು; ಹೊರಕಡೀಗೆ ಹೋಗ್ತೀಯಾ ಅಂತಾ ಹೇಳ್ತೀನಿ, ಯಾರಾದ್ರೂ ಕೇಳಿದ್ರೆ. +ಬಾ ನನ್ನ ಹಿಂದೆ!”ಚಿನ್ನಮ್ಮಗೆ ಮಾತಾಡಲೂ ಅವಕಾಶವಾಗದ ರೀತಿಯಲ್ಲಿ ಅವಳ ಕೈ ಹಿಡಿದೆಳೆದುಕೊಂಡೆ ಬಾಗಿಲು ದಾಟಿದಳು ನಾಗಕ್ಕ. +ಜನಸಂದಣಿಯ ನಡುವೆ ನಡೆದು, ಹಂಡೆಯ ಕಡೆಯಿಂದ ಓಡಿ ಬಳಿಗೆ ಬಂದ, ಗಟ್ಟದ ಮೇಲಣ ಉಡುಗೆ ಉಟ್ಟಿದ್ದ ಪೀಂಚಲುವಿಗೆ ಏನನ್ನೊ ಹೇಳಿ, ನೀರಿನ ತಂಬಿಗೆಯನ್ನು ಅವಳ ಕೈಗೆ ಕೊಟ್ಟು, ಹಿತ್ತಲು ಕಡೆಯ ಹಿಂಬಾಗಿಲು ತೆಗೆದು, ಮಾಡ ಸಂದಿಯ ಕಡೆಗೆ ಕೈದೋರಿದಂತೆ ಮಾಡಿದಳು. +ಪೀಂಚಲು ತಾನೊಂದು ಕಂಬಳಿಕೊಪ್ಪೆ ಹಾಕಿಕೊಂಡು, ಮತ್ತೊಂದನ್ನು ಮದುಮಗಳಿಗೆ ಹಾಕಿ, ಚಿನ್ನಮ್ಮ ಸಹಿತ ಕಗ್ಗತ್ತಲೆಯಲ್ಲಿ ಕರಗಿಹೋದಳು. +ಮಳೆ ಬೀಳುತ್ತಲೆ ಇತ್ತು. +ಆದರೆ ಅದರ ಜೋರು ತುಸು ಇಳಿದಂತೆ ತೋರುತ್ತಿತ್ತು. +ಪೀಂಚಲು ಮಾರ್ಗದರ್ಶಿಯಾಗಿ ಮುಂಬರಿಯುತ್ತಿದ್ದರೂ ಅವಳಿಗಿಂತಲೂ ಚಿನ್ನಮ್ಮಗೇ ಆ ದನಓಣಿಯ ಗುಡ್ಡದ ದಾರಿ ಹೆಚ್ಚು ಪರಿಚಿತವಾದುದಾಗಿತ್ತು. +ಆದರೂ ಪೀಂಚಲುಗಿಂತಲೂ ಚಿನ್ನಮ್ಮಗೇ ಹಾದಿ ನಡೆಯುವುದು ಕಷ್ಟತರವಾಗಿತ್ತು. +ಎಷ್ಟಂದರೂ ಪೀಚಲು ಕೆಲಸದ ಆಳು; +ಅವಳು ದಿನದಿನವೂ ಮಳೆಯಲ್ಲಿ ಚಳಿಯಲ್ಲಿ ಬಿಸಿಲಲ್ಲಿ ಗದ್ದೆಯಲ್ಲಿ ತೋಟದಲ್ಲಿ ಕಾಡಿನಲ್ಲಿ ನಡೆದೂ ದುಡಿದೂ ಅಭ್ಯಾಸವಾದವಳು. +ಚಿನ್ನಮ್ಮ ಚಿಕ್ಕವಳಾಗಿದ್ದಾಗ ಆ ಹಾಡ್ಯ, ಕಾಡು, ಗದ್ದೆಗಳಲ್ಲಿ ಅಡ್ದಾಡಿದ್ದರೂ ದೊಡ್ಡವಳಾದ ಮೇಲೆ ಇತ್ತೀಚಿನ ವರ್ಷಗಳಲ್ಲಿ ಅವಳು ಶ್ರೀಮಂತರ ಗೃಹಿಣಿಯರಂತೆ ಹೆಚ್ಚು ಕಾಲವನ್ನು ಮನೆಯೊಳಗಣ ಮೃದುಲತಾ ವಲಯದಲ್ಲಿಯೆ ಕಳೆಯುತ್ತಿದ್ದಳು. +ಹಳು ಕೀಳುವುದಕ್ಕೂ ಸಸಿ ನೆಡುವುದಕ್ಕೊ ಇತರ ಶ್ರಮಜೀವಿ ಸ್ತ್ರೀಯರೊಡನೆ ಸ್ವಸಂತೋಷದಿಂದ ವಿಲಾಸಾರ್ಥವಾಗಿಯೆ ಗೊರಬು ಸೂಡಿಅಕೊಂಡು ಅಗೊಮ್ಮೆ ಈಗೊಮ್ಮೆ ಗದ್ದೆ ತೋಟಗಳಿಗೆ ಹೋಗುತ್ತಿದ್ದುದುಂಟು. +ಆದರೆ ಅದೆಲ್ಲ ಕಲಾರೂಪದ್ದಾಗಿರುತ್ತಿತ್ತೆ ಹೊರತು ಅವಸ್ಯ ದುಡಿಮೆಯ ಶ್ರಮರೂಪದ್ದಾಗಿರುತ್ತಿರಲಿಲ್ಲ. +“ಪೀಂಚಲೂ, ಅಷ್ಟು ಜೋರಾಗಿ ಹೋಗಬೇಡೇ.ಸ್ವಲ್ಪ ನಿಲ್ಲೇ.” ಚಿನ್ನಮ್ಮ ಮುಳ್ಳಿನ ಪೊದೆಗೆ ಸಿಕ್ಕಿದ್ದ ಸೀರೆಯ ತುದಿಯನ್ನು ಬಿಡಿಸಿಕೊಂಡು, ಪಿಚಕ್ ಪಿಚಕ್ಕೆಂದು ಸುತ್ತುಗಾಲುಂಗುರ ಹಾಕಿದ್ದ ಕಾಲುಬೆರಳುಗಳ ಸಂದಿಯಿಂದ ಮೇಗಾಲನ್ನು ಆವರಿಸಿ ಸೀರೆಗೂ ಹಾರುತ್ತಿದ್ದ ಕೆಸರಿನಲ್ಲಿ, ಎಚ್ಚರಿಕೆಯಿಂದ, ಆದರೂ ಆದಷ್ಟು ಬೇಗಬೇಗನೇ, ಕಾಲು ಹಾಕಿದಳು, ನಡುನಡುವೆ ಜಾರುತ್ತಾ, ಮುಗ್ಗರಿಸುತ್ತಾ. +ಮಳೆಗಾಲ ಕೂತಿತ್ತಾದ್ದರಿಂದ ಅದರ ಪ್ರಾರಂಭಸ್ಥಿತಿಯ ಗುಡುಗು-ಸಿಡಿಲುಗಳ ಆರ್ಭಟ ಇರಲಿಲ್ಲ. +ಗಾಳಿಯೂ ತನ್ನ ಉಗ್ರ ಚಂಚಲತೆಯನ್ನು ತ್ಯಜಿಸಿ ಒಂದು ಸ್ಥಿರ ವೇಗದಿಂದಲೇ ಬೀಸುತ್ತಿತ್ತು. +ಮೇಘ ಸಂದಿಗಳಲ್ಲಿ ಮಿಂಚು ಮತ್ತೆ ಮತ್ತೆ ಥಳಿಸುತ್ತಿದ್ದರೂ ಅದು ಸದ್ದಿನಿಂದ ಹೆದರಿಸುತ್ತಿರಲಿಲ್ಲ. +ಬಹುಮಟ್ಟಿಗೆ ಮೂಕವಾಗಿತ್ತು. +ನಿಮಿಷ ನಿಮಿಷಕ್ಕೂ ಒಂದಲ್ಲ ಒಂದು ದಿಕ್ಕಿನಿಂದ ಮಿಂಚು ಇಣುಕಾಡುತ್ತಿದ್ದಾದ್ದರಿಂದ ಪೀಂಚಲು ಚಿನ್ನಮ್ಮರಿಗೆ ಆಕಾಶದಿಂದಲೇ ಹಾದಿದೀಪ ಒದಗಿದಂತಿತ್ತು. +ಮಿಂಚಿದಾಗಲೆಲ್ಲಾ ಕಾಡೂ ಪೊದೆಗಳೂ ಬಾಣು ಮೋಡಗಳೂ ಮಳೆಯೂ ದನೋಣಿಯ ಕಲ್ಲು ಕೊರಕಲಿನ ದಾರಿಯೂ ಹಗಲಿಣುಕಿದಂತೆ ಸುಸ್ಪಷ್ಟವಾಗಿ ತೋರಿ ಮತ್ತೇ ಕವಿಯುತ್ತಿದ್ದ ಕಾರ್ಗತ್ತಲೆಯಲ್ಲಿ ಮಷೀಯಮಯವಾಗಿ ಶೂನ್ಯವಾಘುತ್ತಿದ್ದುವು; +ಆಗಲೇ ಮಿಣುಕು ಹುಳುಗಳು ಕೋಟಿ ಕೋಟಿ ಸಂಖ್ಯೆಯಲ್ಲಿ ಪೊದೆ ಮರ, ಬಳ್ಳಿ ಗಿಡಗಳನ್ನೆಲ್ಲ ಆಕ್ರಮಿಸಿದಂತೆ ಆವರಿಸಿ ಮಿರುಗುತ್ತಿದ್ದವು.! +ಚೊಚ್ಚಲ ಬಸಿರಿಯೂ ಮತ್ತು ಒಲ್ಲದ ಮದುವೆಯಿಂದ ಪಾರಾದ ಮದುಮಗಳೂ, ಕಂಬಳಿಕೊಪ್ಪೆಗಳನ್ನು ಬಲವಾಗಿ ಸುತ್ತಿಕೊಂಡು ಮಳೆಗಾಳಿ ಚಳಿಗಳಿಂದ ರಕ್ಷಣೆ ಪಡೆಯಲು ಪ್ರಯತ್ನಿಸುತ್ತಾ ಸ್ವಲ್ಪ ದೂರ ಕಾಡುದಾರಿಯಲ್ಲಿ  ಸಾಗಿದ್ದರು. +ಮನೆಯಿಂದ ಹೊರಬದ್ದ ಉತ್ಸಾಹದ ಪ್ರಥಮ ಮನಃಸ್ಥಿತಿ ಬರುಬರುತ್ತಾ ನೈಸರ್ಗಿಕ ಅರಣ್ಯ ಕಠೋರತೆಗೆ ಸಿಕ್ಕಿ ಕುಗ್ಗಿದಂತಾಗಲು ಚಿನ್ನಮ್ಮ ಕೇಳಿದಳೂ. +ಇನ್ನೆಷ್ಟು ದೂರ ಅದೆಯೆ, ಅವರು ಸಿಕ್ಕಕೆ?” +“ಹಾಡ್ಯದ ಮಾರಮ್ಮನ ಗುಡಿ ಹತ್ರ ಇರ್ತಿನಿ ಅಂತಾ ಹೇಳಿದ್ರು.” +ಚಿನ್ನಮ್ಮಗೆ  ಗೊತ್ತಿದ್ದಂತೆ ಸಾಮಾನ್ಯವಾಗಿ  ಪೀಂಚಲು ತನ್ನ ಗಂಡನನ್ನು ಕುರಿತು ಮಾತನಾಡುವಾಗಲೆಲ್ಲ ಏಕವಚನವನ್ನೇ ಪ್ರಯೋಗಿಸುತ್ತಿದ್ದದ್ದು ಮುಕುಂದಬಾವನನ್ನೇ ಕುರಿತು ಆಡುತ್ತಿದ್ದಾಳೆ ಎಂದು ಭಾವಿಸಿ ಕೇಳಿದಳು. + “ಯಾರೆ ಹೇಳಿದ್ದು” + “ನನ್ನ ಗಂಡ ಕಣ್ರೋ, ಐತ.” ನಿರ್ಭಾವ ಧ್ವನಿಯಿಂದ ಉತ್ತರಿಸುತ್ತಾ ಬೇಗಬೇಗನೆ ಸಾಗಿದ್ದಳು, ಪೀಂಚಲು. +ಇದ್ದಕ್ಕಿದ್ದ ಹಾಗೆ ಒಂದು ಮಿಂಚು ಫಳ್ಳೆಂದಿತು. +ಒಂದು ಕ್ಷಣಕಾಲ ಹಗಲಾದಂತಾಗಿ ಗಿಡ, ಮರ, ದಂಡೆಯ ಬಿದಿರ ಹಿಂಡಿಲು, ಕೆರೆಯ ಏರಿ, ಕೆರೆ ತುಂಬ ತುಂಬಿದ ನೀರಿನ ಹರವು, ಪ್ರತಿಬಿಂಬದ ಆಕಾಶ ಎಲ್ಲ ತಟಕ್ಕನೆ ಕಾಣಿಸಿ, ಮತ್ತೆ ಕಣ್ಣಿಗೆ ಕಪ್ಪು ಮೆತ್ತಿದಂತಾಯ್ತು. +ಮಳೆ ಗಾಳಿಯ ಸದ್ದಿನ ಕೂಡೆ ವಟಗುಟ್ಟುವ ಕಪ್ಪೆ ಮತ್ತು ಕ್ರಿಮಿ ಕೀಟಾದಿಗಳ ಕರ್ಕಶ ಧ್ವನಿ ಕಿವಿಗೆ ಘೋರವಾಗಿತ್ತು. + ದಿಬ್ಬಣದ ಅಬ್ಬರವೂ ದೂರ ಕೇಳಿಸಿತ್ತು. +ಎದೆ ಜಗ್ ಎಂದಿತು ಪೀಂಚಲುಗೆ. +ಹಿಂದೆ  ಬರುತ್ತಿದ್ದ ಚಿನ್ನಮ್ಮಗೆ ಡಿಕ್ಕಿ ಹೊಡೆಯುವಂತೆ ಹಿಂನೆಗೆದು ಸರಿದು “ಅಯ್ಯಮ್ಮಾ!” ಎಂದು ನಿಂತಳು. +“ಕೆರೆಗೇ ಬೀಳ್ತಿದ್ದೆವಲ್ಲಾ, ಚಿನ್ನಕ್ಕಾ, ಮಿಂಚದೆ ಇದ್ದಿದ್ರೆ! …. ” +“ಮಾರಮ್ಮನ ಗುಡಿ ಹತ್ರ ಅಂದಿ, ಇಲ್ಲಿಗ್ಯಾಕೆ ಬಂದ್ಯೇ?” +“ನಂಗೆ ದಾರಿ ತಪ್ತು ಕಣ್ರೋ, ದಾರೀನೇ ಗೊತ್ತಾಗದಿಲ್ಲ.” ಐತನ ಹೆಂಡತಿಯ ದನಿಯಲ್ಲಿ ಏನೋ ಅಧೀರತೆಯ ಸುಳಿವಿತ್ತು. +“ಹಿಂದಕ್ಕೆ ಹೋಗಾನೆ, ಮತ್ತೆ….” +“ಎಲ್ಲಿಗ್ರೋ?ಮನಿಗೇನ್ರೋ?” +“ನೀ ಹೋಗು ಮನೀಗೆ, ಬೇಕಾದ್ರೆ….” ಚಿನ್ನಮ್ಮನ ದನಿಯಲ್ಲಿ ಸಿಡುಕಿತ್ತು. +“ನೀವು?”“ನಾನಿಲ್ಲೇ ಕೆರೆಗೆ ಹಾರ್ತಿನಿ! …. ” +“ನಿಮ್ಮ ದಮ್ಮಯ್ಯ, ಚಿನ್ನಕ್ಕಾ, ಹಂಗೆಲ್ಲಾ ಹೇಳಬ್ಯಾಡಿ?” +“ಮತ್ತೇ? ’…. ಮನೀಗೆ ಹೋಗಾನ ಅಂದ್ರೆಲ್ಲಾ ಅದ್ಕೇ ಕೇಳ್ದೆ…” +“ಹಿಂದಕ್ಕೆ ಹೋಗಿ, ಆ ದೊಡ್ಡ ಬಸಿರ ಮರದ ಹತ್ರಕ್ಕ ಹೋದ್ರೆ, ಅಲ್ಲಿಂದ ನಂಗೊತ್ತು ಮಾರಮ್ಮನ ಗುಡೀಗೆ ಹಾದಿ….” +ಕಲ್ಕತ್ತದ ವರಾಹ ನಗರದಲ್ಲಿದ್ದ ಹಾಳುಮನೆಯ ಮಠದ ಇಬ್ಬರು ತರುಣ ಸಂನ್ಯಾಸಿಗಳು ಆವೊತ್ತಿನ ರಾತ್ರಿಯನ್ನು ದಕ್ಷಿಣೇಶ್ವರದಲ್ಲಿ ಧ್ಯಾನ ಜಪ-ತಪಗಳಲ್ಲಿ ಕಳೆಯಲೆಂದು ಭವತಾರಿಣಿಯ ಸನ್ನಿಧಿಗೆ ಬಂದಿದ್ದರು. +ಉಜ್ವಲ ದೀಪಸ್ತೋಮದ ಕಾಂತಿಯಲ್ಲಿ ಪುಷ್ಪಮಾಲಾ ಗಂಧಾದಿಗಳಿಂದ ಅಲಂಕೃತಳಾಗಿದ್ದ ದೇವಿಯ ಪೂಜೆ ಪೂರೈಸಿದ ತರುವಾಯ ಎದುರಿಗಿದ್ದ ನಾಟ್ಯಮಂಟಪದಲ್ಲಿ ಕುಳಿತಿದ್ದರು. +ಸಾಧಾರಣವಾಗಿ ಬರುತ್ತಿದ್ದ ಮಳೆ ಇದ್ದಕ್ಕಿದ್ದಂತೆ ಜೋರಾಗಿ ಸುರಿಯತೊಡಗಿತ್ತು. +ದೀಪಗಳೂ ಕ್ಷಯಿಸುತ್ತಾ ಬಂದು ಕೊನೆಗೆ ಒಂದೊ ಎರಡೋ ಮಾತ್ರ ಉರಿಯುತ್ತಿದ್ದವು. +ಭವತಾರಿಣಿಯ ಸುತ್ತ ಮುತ್ತಲೂ ಮಂದಕಾಂತಿ ಹಬ್ಬಿ ಏನೋ ಒಂದು ವಿಧವಾದ ಯೌಗಿಕಸ್ವಾಪ್ನಿಕತೆ ಆವರಿಸಿದಂತಿತ್ತು. +ತರುಣ ಸಂನ್ಯಾಸಿಗಳಿಬ್ಬರೂ ಕುಳಿತಿದ್ದ ನಾಟ್ಯಮಂಟಪದಲ್ಲಿ ಕತ್ತಲೆ ಕವಿದಿತ್ತು. +ರಾತ್ರಿ ಮುಂದುವರೆದು ಬಹಳ ಹೊತ್ತಾದರೂ ಗಾಳಿಯೊಡನೆ ಕೂಡಿದ್ದ ಬಿರುಮಳೆ ಬಿಡದೆ ಮುಸಲಧಾರೆಯಾಗಿ ಹೊಯ್ಯುತ್ತಲೆ ಇದ್ದುದರಿಂದ, ಕೆಲವೆ ವರ್ಷಗಳ ಹಿಂದೆ ಕಾಶೀಪುರದ ತೋಟದ  ಮನೆಯಲ್ಲಿ ಮಹಾಸಮಾಧಿಯನ್ನೈದಿದ ತಮ್ಮ ಗುರುಮಹಾರಾಜರು ವಾಸಿಸುತ್ತಿದ್ದು ತಮ್ಮ ಜೀವಿತದ ಮುಖ್ಯ ಭಾಗಗಳನ್ನೆಲ್ಲ ಯಾವ ದಿವ್ಯ ಕೊಠಡಿಯಲ್ಲಿ ಕಳೆದಿದ್ದರೋ ಆ ಪುಣ್ಯ ಸ್ಮರಣೆಯ ಸ್ಥಳಕ್ಕೆ, ತಾವು ಪೂರ್ವಭಾವಿಯಾಗಿ ಸಂಕಲ್ಪಿಸಿದಂತೆ, ಹೋಗಿ ಧ್ಯಾನಕ್ಕೆ ಕುಳಿತುಕೊಳ್ಳುವುದನ್ನು ಅನಿವಾರ್ಯತೆಯಿಂದ ಕೈಬಿಟ್ಟು, ಸದ್ಯಕ್ಕೆ ನಾಟ್ಯಮಂಟಪದಲ್ಲಿಯೆ ಧ್ಯಾನ ಮಾಡಲು ತೊಡಗಿದ್ದರು. +ಗಂಭೀರ ಧ್ಯಾನಮಗ್ನನಾಗಿದ್ದ ಒಬ್ಬಾತನಿಗೆ ತಾನು ಯಾವುದೋ ಒಂದು ಸುದೂರದ ಅರಣ್ಯಾದ್ರಿಕಂದರ ಪ್ರದೇಶದಲ್ಲಿದ್ದಂತೆಯೂ, ಸುರಿಯುತ್ತಿದ್ದ ಭೀಕರ ವರ್ಷದಲ್ಲಿ ತಾನು ತೊಯ್ದು ತೇಲುತ್ತಿರುವಂತೆಯೂ ಒಂದು ಅನಿರ್ವಚನೀಯವಾದ ವಿಚಿತ್ರಾನುಭವವಾಗ ತೊಡಗಿತು. +ಆ ಸ್ವಪ್ನ ಸದೃಶ್ಯ ಅನುಭವದಿಂದ ಎಚ್ಚರುವ ಸಲುವಾಗಿಆತನು ಕಣ್ದೆರೆದು ಸುತ್ತಲೂ ನೋಡಿದನು. ಡನ್ಚರಿ! +ನಿಜವಾಗಿಯೂ ತನ್ನ ಸುತ್ತಲೂ ಭಯಂಕರ ಅರಣ್ಯ! +ಮಳೆ ಬೀಳುತ್ತಿದೆ!ಗಾಳಿ ಬೀಸುತ್ತಿದೆ! +ಭವತಾರಿಣಿಯ ಪೂಜಾಮೂರ್ತಿಯಿದ್ದೆಡೆ ಮಣ್ಣಿನ ಅರ್ಧ ಗೋಡೆಯ, ಓಡು ಹಂಚು ಹೊದಿಸಿದ. +ಒಂದು ಗಾಡಿ ಕಾಣುಸುತ್ತಿದೆ! +ಒಂದು ಹಣತೆಯ ಸೊಡರು, ಬೆಳಕಲ್ಲದ ಬೆಳಕು ಬೀರಿ, ಗಾಳಿಗೆ ನಡುಗುತ್ತಿದೆ! +ಹುಡುಗಿಯ ಆಕಾರವೊಂದು ವಿಗ್ರಹದ ಕಲ್ಲಿಗೆ ಅಡ್ಡ ಬಿದ್ದಿದೆ.! +ಪಕ್ಕದಲ್ಲಿ ಇನ್ನೊಂದು ಹುಡುಗಿಯ ಆಕಾರ ನಿಂತಿದೆ.! +ಕಣ್ದೆರೆದ ಮೇಲೆಯೂ ತಾನಿದ್ದ ಸ್ವಪ್ನಲೋಕವು ತನ್ನ ಅಸ್ತಿತ್ವವನ್ನು ಒಂದರ್ಧ ದಕ್ಷಿಣೇಶ್ವರದ ಭವತಾರಿಣಿಯ ವಿಗ್ರಹ, ಮಂದಿರ ಎಲ್ಲವೂ ಮುನ್ನಿನಂತೆ ಕಾಣಿಸಿಕೊಂಡುವು! +ಸಂನ್ಯಾಸಿ ಸೋಜಿಗಪಟ್ಟರು ಆತನಿಗೆ ಅಂತಹ ಆಶ್ಚರ್ಯವೇನೂ ಆಗಲಿಲ್ಲ. +ಏಕೆಂದರೆ ಅಂತಹ ಮತ್ತು ಅದಕ್ಕಿಂತಲೂ ಮಹದಾಶ್ಚರ್ಯಕರವಾದ ಎನಿತೆನಿತೊ ಅತೀಮದ್ರಿಯ ದರ್ಶನಗಳನ್ನು ಜಗನ್ಮಾತೆ ಶ್ರೀಗುರುಕೃಪೆಯಿಂದ  ಆತನಿಗೆ ದಯಪಾಲಿಸಿದ್ದಳು. +ಎಲ್ಲಿಯೋ ಯಾರೋ ಆರ್ತರು ತಾಯಿಗೆ ಭಕ್ತಿಯಿಂದ ಮಣಿದು ತಮ್ಮ ಸಂಕಟವನ್ನು ನಿವೇದಿಸುತ್ತಿರಬೇಕು. +ಅದು ಇಲ್ಲಿ ಭವತಾರಿಣಿಯಲ್ಲಿ ಪ್ರತಿಫಲಿತವಾಗಿ ತನಗೆ ಧ್ಯಾನ ಸಮಯದಲ್ಲಿ ಆ ದರ್ಶನವಾಗಿರಬೇಕು ಎಂದುಕೊಂಡು ಮತ್ತೆ ಆ ಸಂನ್ಯಾಸಿ ಧ್ಯಾನಸ್ಥನಾದನು. +ತಾನು ಕಂಡ ಆ ಹೆಣ್ಣುಮಗಳ ಸಂಕಟ ಏನಿದ್ದರೂ ಪರಿಹಾರವಾಗಿ, ಆಕೆಗೆ ತಾಯಿ ಕೃಪೆಮಾಡಲಿ!ಎಂದು ಮನದಲ್ಲಿಯೇ ಹರಸಿ ತಾನು ಕಂಡ ಆ ಹೆಣ್ಣುಮಗಳ ಮೊಮ್ಮಕ್ಕಳಲ್ಲಿ, ಅಂದರೆ ಮಗಳ ಮಕ್ಕಳಲ್ಲಿ ಒಬ್ಬಾತನು, ಅನೇಕ ವರ್ಷಗಳ ತರುವಾಯ, ತಾನು ಶ್ರೀ ರಾಮಕೃಷ್ಣ ಮಹಾಸಂಘದ ಮಹಾಧ್ಕ್ಷನಾಗಿರುವಾಗ, ತನ್ನಿಂದಲೇ ದೀಕ್ಷೆ ಪಡೆದು ಮಹಾಸಂಘದ ಸಂನ್ಯಾಸಿ ಇಂದೇಕೆ ಕಾಣುವ ಗೋಜಿಗೆ ಹೋಗುತ್ತಾನೆ? +ಹೂವಳ್ಳಿ ವೆಂಕಪ್ಪನಾಯಕರು ಉಚ್ಛ್ರಾಯ ದಶೆಯಲ್ಲಿದ್ದಾಗ ಅದನ್ನು ’ಹಾಡ್ಯ’ ಎಂದು ಕರೆಯಬಹುದಾಗಿದ್ದರೂ ಈಗ ಅದು ಬರಿಯ ಕಗ್ಗಾಡೆ ಆಗಿತ್ತು. +ಹಿಂದೆ ತರಗು ಗುಡಿಸಿ, ಕೆಂಜಿಗೆ ಹಿಂಡಲು, ಕಾರೆ ಮಟ್ಟುಗಳನ್ನೆಲ್ಲ ಕಡಿದು ಹಾಕಿ, ಅದನ್ನು ’ದರಗಿನ ಹಾಡ್ಯ’ವನ್ನಾಗಿ ಚೊಕ್ಕಟವಾಗಿ ಇಟ್ಟಿದ್ದಾಗ, ಆ ಹಾಡ್ಯದ ತುದಿಯಲ್ಲಿದ್ದ ಮಾರಮ್ಮನ ಗುಡಿಯನ್ನು ಪ್ರತಿ ವರ್ಷವೂ ಓಡುಹೆಂಚು ಕಿತ್ತುಹೊದಿಸಿ, ಗೋಡೆಗೆ ಕೆಂಪು ಬಿಳಿಯ ಕೆಮ್ಮಣ್ಣು ಜೇಡಿಗಳ ಪಟ್ಟೆ ಹಾಕಿ ಅಲಂಕರಿಸುತ್ತಿದ್ದರು. +ಈಗಲೂ ಮಾರಮ್ಮಗೆ ಕೋಳಿ ಕುರಿ ಹಂದಿಗಳ ಬಲಿಪೂಜೆ ಪ್ರತಿವರ್ಷವೂ ನಡೆಯುತ್ತಿತ್ತಾದರೂ ಗುಡಿ ಮಾತ್ರ ದುರಸ್ತಿಯಿಲ್ಲದೆ ಪಾಳುಬಿದ್ದಂತಿತ್ತು. +ಮಣ್ಣಿನ ಅದರ ಮುಕ್ಕಾಲು ಗೋಡೆಗಳೂ ಮನೆನೀರು ಸೋರಿ ಕರಗಿ ಬಿದ್ದು ಅಲ್ಲಲ್ಲಿ ಅರೆಗೋಡೆಗಳಾಗಿದ್ದುವು. +ಎಲೆ ಕಡ್ಡಿ ಕಸ ತುಂಬಿಹೋಗಿತ್ತು. +ಅದಕ್ಕೆ ಬಾಗಿಲೂ ಇರಲಲ್ಲಿ. +ಬದಲಾಗಿ ಉಣುಗೋಲು ಇತ್ತು. +ಉಣುಗೋಲಿನ ಗಳುಗಳೂ ಜಜ್ಜರಿತವಾಗಿ ಬಿದ್ದುಹೋಗಿದ್ದವು. +ಮಳೆ ಜೋರಾಗಿ ಹಿಡಿದಾಗ ಹಾವುಗಳೂ ಹುಲಿ ಹಂದೆ ಕಡ ಮಿಗ ಮೊದಲಾದ ಪ್ರಾಣಿಗಳೂ ಮಳೆಯ ಬಿರುಸಿನಿಂದ ರಕ್ಷೆ ಪಡಯಲು ಮಾರಮ್ಮನ ಗುಡಿಯಲ್ಲಿ ತಂಗುತ್ತಿದ್ದವು ಎಂದೂ ಪ್ರತೀತಿಯಿತ್ತು. +ಇಂದೂ ಕೂಡ ಕತ್ತಲೆಯಾದ ಮೇಲೆ, ದೀಪದ ಕುಡಿಯನ್ನು ತುಂಬ ಕೆಳಗಿಳಿಸಿ ಸಣ್ಣದು ಮಾಡಿಕೊಂಡಿದ್ದ ಲಾಟೀನನ್ನು ಕೈಯಲ್ಲಿ ಹಿಡಿದು, ಕಂಬಳಿಕೊಪ್ಪೆ ಹಾಕಿಕೊಂಡಿದ್ದ ವ್ಯಕ್ತಿಯೊಂದು ಆ ಕಾಡಿನ ನಡುವಣ ಮಾರಮ್ಮನ ಗುಡಿಯ ಸಮೀಪಕ್ಕೆ ಬಂದಾಗ, ಮಳೆಯಿಂದ ರಕ್ಷಣೆ ಪಡೆದು ಒಳಗೆ ನಿಂತಿದ್ದ ಯಾವುದೋ ದೊಡ್ಡ ಪ್ರಾಣಿಯೊಂದು ಹೊರಕ್ಕೆ ನೆಗೆದು ಹಳುವಿನಲ್ಲಿ ದಡದಡನೆ ಸದ್ದುಮಾಡುತ್ತಾ ಓಡಿಹೋಗಿತ್ತು! +ಲಾಟೀನು ಹಿಡಿದಿದ್ದ ವ್ಯಕ್ತಿ ಗುಡಿಯೊಳಗೆ ಹೋಗಿ, ಮೊದಲೆ ಅಣಿಮಾಡಿ ಇಟ್ಟಿದ್ದ ಹಣತೆಗೆ ದೀಪ ಹೊತ್ತಿಸಿ, ಅದನ್ನು ಮಾರಿಯ ಪ್ರತಿಮೆಯಾಗಿದ್ದು ಎಣ್ಣೆ ಹಿಡಿದು ಕರ್ರಗಾಗಿದ್ದ ಕಲ್ಲುಗುಂಡಿನ ಮುಂದೆ ಗಾಳಿಗೆ ಆರಿಹೋಗದಂತೆ ಗೂಡಿನಲ್ಲಿ ಮರೆಯಾಗಿಟ್ಟು, ಅಮ್ಮಗೆ ಅಡ್ಡಬಿದ್ದು, ಮಾತಿಲ್ಲದ ತನ್ನ ಪ್ರಾರ್ಥನೆಯನ್ನು ಸಲ್ಲಿಸಿತು. +ಮತ್ತೆ ಎದ್ದು ನಿಂತು ಕೈಮುಗಿಯಿತು. +ಮತ್ತೆ ಗುಡಿಯ ಬಾಗಿಲಿನ ಉಣುಗೋಲಿನ ಬಳಿ ನಿಂತು ಹೂವಳ್ಳಿಮನೆಯ ದಿಕ್ಕಿನಲ್ಲಿ ಕಾಡಿನ ಕಡೆ ನೋಡುತ್ತಾ ಯಾರನ್ನೋ ನಿರೀಕ್ಷಿಸುವಂತೆ ತೋರಿತು. +ಸ್ವಲ್ಪ ಹೊತ್ತಿನಲ್ಲಿಯೆ ಕಂಬಳಿಕೊಪ್ಪೆಹಾಕಿಕೊಂಡಿದ್ದ ಮತ್ತೊಂದು ವ್ಯಕ್ತಿ ಹೂವಳ್ಳಿ ಮನೆಯ ದಿಕ್ಕಿನಿಂದ ಅವಸರ ಅವಸರವಾಗಿ ಬಂದು ಗುಡಿಯೊಳಗೆ ಹೊಕ್ಕಿತು. +ಕಾಯುತ್ತಿದ್ದ ವ್ಯಕ್ತಿ ಕೇಳಿತು “ಏನೋ, ಐತ? +ಯಾಕೊ ಇಷ್ಟು ಹೊತ್ತು ಮಾಡಿದೆ?”ಪೀಂಚಲುಗೆ ಎಲ್ಲ ಹೇಳಿ ಬಂದಿದ್ದೇನೆ, ಅಯ್ಯಾ. +ಅವಳಿಗೂ ದಾರಿ ಗೊತ್ತಂತೆ. +ಚಿನ್ನಕ್ಕನ ಕರಕೊಂಡು ಬಂದು ಬಿಡುತ್ತಾಳೆ.” +“ಹಾಂಗಾದ್ರೆ ನೀ ಇಲ್ಲೇ ಕಾದುಕೊಂಡಿರು. +ಅವರು ಬಂದ ಕೂಡ್ಲೆ ಕರಕೊಂಡು ಬಂದುಬಿಡು. +ನಾನು ಹಳೆಪೈಕದ ಯೆಂಕಿಮನೆಯ ಹತ್ರದ ಕೊಟ್ಟಿಗೇಲಿ ಕಾದಿರ್ತೀನಿ…. +ಗುತ್ತೀಗೂ, ನಾವು ಬರಾದು ಹೊತ್ತಾದ್ರೆ, ಬಾ ಅಂತಾ ಹೇಳೀನಿ…” ಮುಕುಂದಯ್ಯ ಐತನಿಗೆ ಅವನು ಮಾಡಬೇಕಾದುದನ್ನು ಹೇಳುತ್ತಾ, ಲಾಟೀನಿನೊಡ ಕೆಳಗಿಳಿದು ಹಳುವಿನಲ್ಲಿ ಮರೆಯಾಗುವ ಮುನ್ನ ಮತ್ತೆ ಕೂಗಿ ಹೇಳಿದನು. +“ಬೇಗ ಬನ್ನಿ, ಹೊತ್ತು ಮಾಡಬೇಡಿ! …. ” ’ಹುಲಿಕಲ್ಲು ನೆತ್ತಿಗೆ ಹತ್ತದೇನೂ ಬಿಟ್ಟಿ ಅಲ್ಲ, ಹೆಂಗಸರಿಗೆ! +ಅದರಲ್ಲೂ ನಿನ್ನ ಹೆಂಡ್ತಿ ಬಸಿರಿ’ ಎಂದೂ, ಐತನಿಗೆ ಕೇಳಿಸಲೆಂದಲ್ಲ, ತನಗೆ ತಾನೆಂಬಂತೆ, ಹೇಳಿಕೊಂಡನು. +ಲಾಟೀನಿನ ಬೆಳಕು ಮುಕುಂದಯ್ಯನ ಆಕೃತಿಯೊಡನೆ ಮಳೆ ಬೀಳುತ್ತಿದ್ದ ಹಳುವಿನಲ್ಲಿ ಮರೆಯಾದ ಮೇಲೆ, ಕವಿದ ಕತ್ತಲೆಯಲ್ಲಿ ಐತನಿಗೆ ಕಾದು ಕುಳಿತನು. +ಮಾರಮ್ಮನ ಮುಂದಿದ್ದ ಹಣತೆಯ ಬೆಳಕು ಕತ್ತಲೆಯ ಒಂದೆರಡಡಿಯನ್ನೂ ಬೆಳಗುತ್ತಿರಲಿಲ್ಲ. +ಈಗ ಬರುತ್ತಾರೆ, ಆಗ ಬರುತ್ತಾರೆ; ಈಗ ಬಂದಾರು, ಇನ್ನೇನು ಬಂದಾರು;- ಐತನಿಗೆ ಕಾದು ಕಾದು ಬಳಲಿಕೆಯಾಗತೊಡಗಿತು. +ಕಡೆ ಕಡೆಗೆ ಅವರು ಬರದೆ ಇದ್ದುದಕ್ಕೆ ಅವನ ಕಲ್ಪನೆ ಏನೇನೋ ಕಾರಣಗಳನ್ನು ಕಲ್ಪಿಸಿಕೊಂಡು ದಿಗಿಲುಪಡತೊಡಗಿತು. +ಏನಾದರೂ ಆಗಲಿ, ನಾನೆ ಹೋಗಿ ನೋಡಿಯಾದರೂ ನೋಡಿಕೊಂಡು ಬರುತ್ತೇನೆ. +ಅವರು ಹೊರಟಿದ್ದರೆ ದಾರಿಯಲ್ಲಿ ಸಿಕ್ಕಿಯೆ ಸಿಕ್ಕುತ್ತಾರೆ. +ಹೀಗೆ ನಿಶ್ಚಯಿಸಿ ಐತ ಮಾರಮ್ಮನ ಗುಡಿಯಿಂದ ಹೂವಳ್ಳಿ ಮನೆಯ ಕಡೆಗೆ ಹಳುವಿನಲ್ಲಿ ಗುಡ್ಡವಿಳಿತು ಹೋದನು. +ಅವನು ಹೋಗಿ ಸ್ವಲ್ಪ ಹೊತ್ತಿನಲ್ಲಿಯೇ ಚಿನ್ನಮ್ಮ ಪೀಂಚಲು ಇಬ್ಬರೂ ಮಾರಮ್ಮನ ಗುಡಿಯ ಹತ್ತಿರಕ್ಕೆ ಬಂದರು. +ದಾರಿ ತಪ್ಪಿದ್ದ ಅವರು, ಮತ್ತೆ ಹಿಂದಕ್ಕೆ ಬಂದು, ಸರಿ ದಾರಿಗೆ ಸೇರುವಷ್ಟರಲ್ಲಿ, ಐತ ಅದನ್ನು ದಾಟಿ ಹೂವಳ್ಳಿಮನೆಕಡೆಗೆ ಹೋಗಿಬಿಟ್ಟದ್ದನಾದ್ದರಿಂದ ಇವರು ಅವನಿಗೆ ಸಿಕ್ಕಿರಲಿಲ್ಲ. +ಗುಡಿಯ ಬಾಗಿಲಿಗೆ ಬಂದು ಪೀಂಚಲು ತನ್ನ ಗಂಡನ ಹೆಸರು ಹಿಡಿದು ಕರೆದಾಗ ಯಾರೂ ಓಕೊಳ್ಳಲಿಲ್ಲ. +ಅವಳಿಗೆ ಗಾಬರಿಯಾಯಿತು. +ಐತನೇನಾದರೂ ಸಿಕ್ಕದಿದ್ದರೆ ಮುಂದೇನು ಮಾಡಬೇಕು? +ಮತ್ತೆ ಮನೆಗೆ ಹಿಂದಿರುಗುವುದೇ? +ಅದು ಸಾಧ್ಯವಿಲ್ಲ ಎಂಬುದನ್ನು ಚಿನ್ನಮ್ಮ ಆಗಲೆ ಆ ಕೆರೆಯ ಹತ್ತಿರ ಹೇಳಿಬಿಟ್ಟಿದ್ದಾಳೆ! +ತಾನೆ ಸ್ವತಂತ್ರಿಸಿ ಚಿನ್ನಮ್ಮನನ್ನು ಹುಲಿಕಲ್ಲು ನೆತ್ತಿಗೆ ಈ ಮಳೆಗಾಳಿಯ ರಾತ್ರಿಯಲ್ಲಿ ಹೇಗೆ ಕರೆದುಕೊಂಡು ಹೋಗುವುದು? +ಪೀಂಚಲು ದಿಟ್ಟ ಹೆಣ್ಣಾಗಿದ್ದರೂ ಅವಳ ಎದೆ ತಲ್ಲಣಿಸಿತು. +ತನ್ನ ಹೆದರಿಕೆಯನ್ನು ತೋರಗೊಟ್ಟರೆ ಮೊದಲೇ ಕಾಲು ಸೋಲುತ್ತಿದೆ ಎನ್ನುತ್ತಿದ್ದ ಚಿನ್ನಮ್ಮಗೆ ಕಾಲೇ ಬರದೇ ಹೋಗಬಹುದಲ್ಲಾ? +ಮತ್ತೆ ಸ್ವಲ್ಪ ಗಟ್ಟಿಯಾಗಿ ಕೂಗಿದಳು. “ಐತಾ!”ಆಗಲೆ ಇಬ್ಬರೂ ಗುಡಿಯೊಳಗೆ ಹೋಗಿದ್ದರಿಂದ ಅವಳ ಕೂಗು ಅವಳಿಗೇ ವಿಕಾರ ಮೂದಲಿಕೆಯಾಗಿ ಕೇಳಿಸಿತು. +ಇಬ್ಬರೂ ಕಂಬಳಿ ಕೊಪ್ಪೆಗಳನ್ನು ತೆಗೆದಿಟ್ಟು ನೋಡುತ್ತಾರೆ. +ಅಮ್ಮನ ಮುಂದೆ ಗೂಡಿನಲ್ಲಿ ಗಾಳಿಗೆ ಮರೆಯಾಗಿದ್ದ ಹಣತೆ ಮಿಣಿಮಿಣಿಮಿಣಿ ಸಣ್ಣಗೆ ಉರಿಯುತ್ತಿದೆ! +ಅದನ್ನು ಕಂಡು ಇಬ್ಬರಿಗೂ ಸ್ವಲ್ಪ ಧೈರ್ಯವಾಯಿತು. + ಬಹಶಃ ಐತನೇ ಅದನ್ನು ಹಚ್ಚಿಟ್ಟು ಇಲ್ಲೆ ಎಲ್ಲಿಯೊ ಹೋಗಿರಬಹುದು. +ಸ್ವಲ್ಪ ಹೊತ್ತು ಕಾದರು. +ಕಾಯುವವರಿಗೆ ಆ ಕಾಲ ದೀರ್ಘವಾಗಿಯೆ ತೋರತೊಡಗಿತು. +“ಎಲ್ಲಿ ಹೋದನೆ ನಿನ್ನ ಗಂಡ? +ಇಲ್ಲೆ ಕಾಯುತ್ತಿರುತ್ತಾನೆ ಅಂತಾ ಹೇಳ್ದೆಲ್ಲಾ?” ಆಯಾಸಧ್ವನಿಯಲ್ಲಿ ಕೇಳಿದಳು ಚಿನ್ನಮ್ಮ. +ಚಿನ್ನಮ್ಮ ಗಟ್ಟಿಮುಟ್ಟಾದ ಹುಡುಗಿಯಾಗಿದ್ದರೂ ಆ ದಿನ ಅವಳು ಊಟದ ಶಾಸ್ತ್ರ ಮಾಡಿದ್ದಳೆ ಹೊರತು ನಿಜವಾಗಿಯೂ ಹೊಟ್ಟೆ ತುಂಬ ಉಂಡಿರಲಿಲ್ಲ. +ಜೊತೆಗೆ ದಿನವೆನ್ನೆಲ್ಲ ಚಿಂತೆ ಉದ್ವೇಗಗಳಲ್ಲಿಯೇ ಕಳೆದಿದ್ದಳು. +ಧರ್ಮು ತಿಮ್ಮು ಇಬ್ಬರೂ ಸೇರಿ ಮದುವೆಯ ಚಪ್ಪರ ಕಟ್ಟಿದ್ದ ಕರಿಬಾಳೆ ಹಣ್ಣಿನ ಗೊನೆಯಿಂದ ಕದ್ದು ಮುರಿ‌ದು ತಂದು ತಾವು ತಿನ್ನುವಾಗ ಅವಳಿಗೂ ಬಲಾತ್ಕಾರವಾಗಿ ಕೊಟ್ಟಿದ್ದ ಹಣ್ಣುಗಳನ್ನು ತಿಂದಿದ್ದೆಷ್ಟೊ ಅಷ್ಟೆ ಅವಳ ಹೊಟ್ಟೆಗೆ ಆಸರೆಯಾಗಿತ್ತು. +ಆ ಪ್ರಚ್ಛನ್ನ ಉಪವಾಸದ ಪರಿಣಾಮ ಅವಳಲ್ಲಿ ಆಗಲೆ ಪ್ರಕಟವಾಗತೊಡಗಿತ್ತು. +“ಪೀಂಚಲೂ, ಇಲ್ಲಿರೋ ದರಗು ಕಸಾನೆಲ್ಲ ಒಂದುಚೂರು ಕಾಲಿನಲ್ಲೆ ಒತ್ತರಿಸ್ತೀಯಾ?” ಹಣತೆಯ ಬೆಳಕಿನ ಬಳಿ ನಿಂತು ಹೇಳಿದಳು ಚಿನ್ನಮ್ಮ. +ಪೀಂಚಲು ಹಾಗೆಯೆ ಮಾಡಿದ ಮೇಲೆ, ಚಿನ್ನಮ್ಮ ದಣಿದವಳಂತೆ ಅಮ್ಮನ ಮುಂದೆ, ಅವಳ ಕಡೆ ಮುಖ ಹಾಕಿ, ಮಂಡಿಯೂರಿ, ಕೈಮುಗಿದು ಕುಳಿತಳು. +ಪೀಂಚಲು ಪಕ್ಕದಲ್ಲಿ ನಿಂತು ನೋಡುತ್ತಿದ್ದಂತೆಯೆ, ಯಾವುದೋ ದುಃಖಾತಿರೇಕದಿಂದ ಬಿಕ್ಕಿಬಿಕ್ಕಿ ಅಳುತ್ತಾ, ಕೈಮುಗಿದುಕೊಂಡೆ ಸಾಷ್ಟಾಂಗ ನಮಸ್ಕಾರದ ಭಂಗಿಯಲ್ಲಿ ನೆಲದಮೇಲೆ ಉದ್ದುದ್ದ ಅಡ್ಡಬಿದ್ದಳು! +ಭಕ್ತಿ ತುಂಬ ಶ್ರದ್ಧೆಯಿಂದ ಹೊಮ್ಮಿದ ಆರ್ತ ಜೀವದ ಪ್ರಾರ್ಥನೆಗೆ ಜಗನ್ಮಾತೆ ಅವಳು ಆಖ್ಯಾತ ಹೂವಳ್ಳಿ ಹಾಡ್ಯದ ಮಾರಿಯಮ್ಮನ ರೂಪದಿಂದಿರಲಿ ಅಥವಾ ದಕ್ಷಿಣೇಶ್ವರದ ಜಗದ್ ವಿಖ್ಯಾತ ಭವತಾರಿಣಿಯ ರೂಪದಿಂದಿರಲಿ ಓಕೊಳ್ಳದಿರುತ್ತಾಳೆಯೆ? +ಪೀಂಚಲು ಸ್ವಲ್ಪ ಹೊತ್ತು ನಿಂತು ನೋಡುತ್ತಿದ್ದಳು. +ಚಿನ್ನಕ್ಕ ದೇವರಿಗೆ ಅಡ್ಡಬಿದ್ದು ಈಗ ಏಳುತ್ತಾರೆ, ಆಗ ಏಳುತ್ತಾರೆ ಎಂದು ನಿರೀಕ್ಷಿಸಿದುದು ವ್ಯರ್ಥವಾಯಿತು. +ಯಾರಾದರೂ ಇಷ್ಟು ದೀರ್ಘಕಾಲ ಅಡ್ಡಬೀಳುತ್ತಾರೆಯೇ? +ಇದ್ದಕ್ಕದ್ದ ಹಾಗೆ ಅವಳಿಗೆ ಇಂತಹುದೆ ಇನ್ನೊಂದರ ನೆನಪಾಗಿ ನಡುಗಿದಳು. +ಹೌದು; ಅಡ್ಡಬಿದ್ದವರು ಬಹಳ ಹೊತ್ತಾದರೂ ಎದ್ದೇ ಇರಲಿಲ್ಲ! +ಸುಡುಗಾಡಿನಲ್ಲಿ ಗಂಡನ ಕಳೇಬರದ ಪಾದ ಹಿಡಿದು ಅಡ್ಡಬಿದ್ದ ಹಳೆಮನೆ ಹೆಗ್ಗಡತಮ್ಮೋರು ಎಷ್ಟು ಹೊತ್ತಾದರೂ ಎದ್ದೇ ಇರಲಿಲ್ಲ. +ಪೀಂಚಲು ಅದನ್ನೆಲ್ಲ ಪ್ರತ್ಯಕ್ಷದರ್ಶಿಯಾಗಿ ನೋಡಿದ್ದಳು. +ಆ ನೆನಪು ಹೊಳೆದೊಡನೆಯೆ ಪೀಂಚಲುಗೆ ಕೈ ಕಾಲು ತಣ್ಣಗಾದಂತಾಗಿ, ನಿಂತಲ್ಲೆ ನೆಲಕ್ಕೆ ಕುಸಿಯುವಂತೆ ಕಾಲು ತತ್ತರಿಸತೊಡಗಿದವು. +ಅಯ್ಯೋ ದೇವರೆ!ಚಿನ್ನಕ್ಕಗೂ ಹಾಗೇ ಆಗಿಬಿಟ್ಟರೆ? +ಕುಸಿದು ಕುಳಿತು “ಚಿನ್ನಕ್ಕಾ ಚಿನ್ನಕ್ಕಾ” ಎಂದು ಮೈ ಮುಟ್ಟಿ ಕರೆದಳು; +ಚಿನ್ನಕ್ಕನ ಮೈ ಅಲುಗಾಡಿತು; ಉಸಿರೆದುಕೊಳ್ಳುವ ಸದ್ದೂ ಕೇಳಿಸಿತು. +‘ಬದುಕಿದೆ!’ ಎಂದುಕೊಂಡಿತು ಪೀಂಚಲುವಿನ ಜೀವ! +ಆದರೆ ಚಿನ್ನಮ್ಮ ಮಾತಾಡಲೂ ಇಲ್ಲ; ಏಳಲೂ ಇಲ್ಲ. +ಅವಳಿಗೆ ಇತ್ತಣ ಪ್ರಜ್ಞೆ ಇರುವಂತೆಯೂ ತೋರಲಿಲ್ಲ. +ಅವಳಿಗೆ ಏನಾಗುತ್ತಿತ್ತು ಎಂಬುದನ್ನು ಪೀಂಚಲು ಪಾಪ, ಹೇಗೆ ಅರಿತಾಳು! +ಇತ್ತಣ ಪ್ರಜ್ಞೆಗೆ ಮರಳಿದ ಮೇಲಾದರು ಚಿನ್ನಮ್ಮಗೂ ಅದು ಬುದ್ಧಿವೇದ್ಯವಾಗಲು ಸಾದ್ಯವೆ? +ಅಷ್ಟರಲ್ಲಿ ಹಳುವಿನಲ್ಲಿ ಹೊರಗಡೆ ಯಾವುದೊ ಪ್ರಾಣಿ ಓಡುವ ಸದ್ದಾಗಿ ಪೀಂಚಲು ಮೈಬಿಸಿಯಾಗಿ ಎದ್ದು ನಿಂತಳು. +ಯಾವುದಾದರೂ ದುಷ್ಟ ಜಂತು ಮಳೆಯಿಂದ ರಕ್ಷೆ ಪಡೆಯಲು ಗುಡಿಯೊಳಗೆ ನುಗ್ಗಿದರೆ ಏನು ಗತಿ? +ಗುಡಿಯ ಬಾಗಿಲಿರುವ ಕತ್ತಲೆಯ ಕಡೆ ಪೀಂಚಲು ನೋಡುತ್ತಿದ್ದಂತೆಯೆ ಹತ್ತಿರದ ಹಳು ಅಲುಗಿ, ಹತ್ತಿರ ಹತ್ತಿರ ಇನ್ನೂ ಹತ್ತಿರಕ್ಕೆ ಆ ಪ್ರಾಣಿ ಧಾವಿಸುತ್ತಾ ಬಳಿಸಾರಿ ಕಡೆಗೆ ಗುಡಿಯೊಳಕ್ಕೇ ನುಗ್ಗಿಬಿಟ್ಟಿತು! +“ಹಡ್ಡಿಡ್ಡಿಡ್ಡಿಡ್ಡೀ!” “ಅದನ್ನೋಡಿಸುವ ಸಲುವಾಗಿ ಕೂಗಿದಳು ಪೀಂಚಲು. +“ಏ!ನಾನಲ್ದಾ? +ಇವಳಿಗೇನು ಬಂದಿತ್ತೊ ಕೂಗುವುದಕ್ಕೆ? +ನಾನೇನು ಹಂದಿಯೋ ಹುಲಿಯೋ? …. ಕೇಳಿತು ಐತನ ತುಸು ಅಣಕದ ದನಿ. +“ಹಂದಿ ಅಲ್ಲದಿದ್ದರೆ ಕೋಣ? +…ಎಲ್ಲಿಗೆ ಹೋಗಿದ್ದೆ ನೀನು? +ಇಲ್ಲಿಯೆ ಇರುತ್ತೇನೆ ಅಂದಿದ್ದಂವಾ? …. ”ಸಿಡುಕಿದಳು ಪೀಂಚಲು. +ಐತ ಓಡುತ್ತಲೆ ಬಂದಿದ್ದ. +ನಡೆದದ್ದನ್ನು ಸಂಕ್ಷೇಪವಾಗಿ ಹೇಳಿ, ಅವಸರಪಡಿಸಿದ. +ಚಿನ್ನಕ್ಕನ್ನ ಹುಡುಕುತ್ತಿದ್ದಾರೆ! +ಆಗಲೆ ಗಾಬರಿಯಾಗಿದೆ! +ಚಿನ್ನಕ್ಕನ ಕರಕೊಂಡು ಬೇಗ ಹೋಗಬೇಕು. +ಮುಕುಂದಣ್ಣ ಯೆಂಕಮ್ಮನ ಕೊಟ್ಟಿಗೆ ಹತ್ರ ಕಾಯ್ತೀನಿ ಅಂತಾ ಹೇಳಿದ್ದಾರೆ.” +ಪೀಂಚಲು ಅಲ್ಲಿ ನಡೆದದ್ದನ್ನು ಗಂಡನಿಗೆ ತಿಳಿಸಿ, ಚಿನ್ನಮ್ಮ ಏಳಲೊಲ್ಲದೆಯೋ ಏಳನಾರದೆಯೋ ಅಡ್ಡಬಿದ್ದಿರುವುದನ್ನು ತೋರಿಸಿದಳು. +ಐತನೂ ಹೆದರಿಕೊಂಡೆ “ಚಿನ್ನಕ್ಕಾ!ಚಿನ್ನಕ್ಕಾ!” ಎಂದು ಕಿವಿಯ ಹತ್ತಿರ ಕರೆದರು ಪ್ರಯೋಜನವಾಗಲಿಲ್ಲ. +ದಿಕ್ಕು ತೋರದಂತಾಗಿ ಅವನು ಮುಕುಂದಯ್ಯನನ್ನು ಕರೆತರುತ್ತೇನೆಂದು ಅತ್ತ ಕಡೆಗೆ ಗುಡ್ಡ ಏರಿ ಓಡಿದನು. +ಅಷ್ಟರಲ್ಲಿ, ಬಹಳ ಹೊತ್ತಾದರೂ ಇವರು ಬರದಿರುವುದನ್ನು ಶಂಕಿಸಿ, ಲಾಟೀನನ್ನು ತಾನು ಗುಡಿಯಲ್ಲಿಯೆ ಬಿಟ್ಟು ಬರದೆ ತನ್ನ ಜೊತೆಯಲ್ಲಿ ತಂದುದಕ್ಕಾಗಿ ಪರಿತಪಿಸುತ್ತಾ, ಕತ್ತಲಲ್ಲಿ ದಾರಿಯಲ್ಲದ ಹಳುವಿನಲ್ಲಿ ಹಾದಿ ತಪ್ಪಿದರೋ ಏನೋ ಎಂದು ಕಳವಳಿಸುತ್ತಾ ಲಾಟೀನಿನ ಬೆಳಕಿನೊಡನೆ ಓಡೋಡಿ ಬರುತ್ತಿದ್ದ ಮುಕುಂದಯ್ಯನನ್ನು ಸಂಧಿಸಿದ ಐತ ಅವನಿಗೆ ನಡೆದುದನ್ನೆಲ್ಲ ಹೇಳತ್ತಲೆ ಗುಡಿಗೆ ಕರೆತಂದನು. +ದೊಡ್ಡದು ಮಾಡಿದ ಲಾಟೀನಿನ ಬೆಳಕಿನಲ್ಲಿ ಗುಡಿಯ ಒಳಗು ಬೆಳಗಿತು. +ದೇವರ ಮುಂದೆ ಅಡ್ಡಬಿದ್ದಿಂತಿದ್ದ ಚಿನ್ನಮ್ಮನ ಆಕಾರ, ಆಕೆ ಉಟ್ಟಿದ್ದ ಧಾರೆಯ ಸೀರೆ ಮತ್ತು ಹೊರಡುವ ಅವಸರದಲ್ಲಿ ಕಳಚಿಡಲು ಸಾಧ್ಯವಾಗದಿದ್ದು ತೊಟ್ಟಂತೆಯೇ ಇಟ್ಟುಕೊಂಡಿದ್ದ ಹೊಳೆವ ಹೊನ್ನಿನ ತೊಡವುಗಳು ಇವುಗಳಿಂದ ಶೋಭಿಸಿ, ಮುಕುಂದಯ್ಯನ ಮನಸ್ಸಿಗೆ ತಾನು ಕಾವ್ಯದಲ್ಲಿ ಓದಿದ್ದ ಅಪ್ಸರಾ ದೇವಿಯರ ನೆನಪು ತಂದಿತ್ತು. +ಆದರೆ ಅದರ ಆಸ್ವಾದನೆಗೆ ಅನುಕೂಲವಾಗಿರದಿದ್ದ ಆ ಸನ್ನಿವೇಶ ಅವನ ಹೃದಯದ ಖೇದೋದ್ವೇಗಗಳನ್ನು ದ್ವಿಗುಣಿತ ಮಾಡಿತೆ ಹೊರತೂ ಅವನನ್ನು ಸುಖಿಯನ್ನಾಗಿ ಮಾಡಲಿಲ್ಲ. +“ಏಳಿ ಚಿನ್ನಕ್ಕಾ!ಮುಕ್ಕುಂದಯ್ಯ ಬಂದರು, ಮುಕುಂದಯ್ಯ!”ಪೀಂಚಲು ಕಿವಿಯಲ್ಲಿ ಉಚ್ಛರಿಸಿದ ಮುಕ್ಕುಂದಯ್ಯನ ಹೆಸರು ಮಂತ್ರವಾಯಿತೆಂಬಂತೆ ಚಿನ್ನಮ್ಮ “ಆಃ ಬಂದರೇ? +ಅವರು ಬಂದರೇ?” ಎಂದು, ’ಅವರು’ ಎಂಬ ಪದವನ್ನು ಧ್ವನಿಸ್ಫುರಿಸುವಂತೆ ಒತ್ತಿ ಉಸುರಿ, ದಡಬಡನೆ ಎದ್ದು ನಿಂತಳು. +ತನ್ನ ಕಡೆಗೆ ಮುಖಮಾಡಿ ನಿಂತಿದ್ದ ಚಿನ್ನಮ್ಮನನ್ನು ಲಾಟೀನಿನ ಬೆಳಕಿನಲ್ಲಿ ನೋಡಿ, ಮೊದಲ ನೋಟಕ್ಕೆ, ಮುಕ್ಕುಂದಯ್ಯ ಮರುಳಾಗಿ ಹೋದನು. +ಬಾಲ್ಯದಿಂದಲೂ ತಾನು ನೋಡುತ್ತಲೆ ಬಂದಿದ್ದ ಅವಳು ಇಂದು ಯಾರೊ ಅನ್ಯಳೆಂಬಂತೆ ಅದ್ಭುತವಾಗಿ ತೋರಿದಳು. +ಅವಳು ಮಾರಿಯಮ್ಮನ ಮುಂದೆ ಅಡ್ಡಬಿದ್ದಿದ್ದಾಗ ಹಿಂಭಾಗದಿಂದ ನೋಡಿಯೆ ಭಾವವಶನಾಗಿದ್ದನು. +ಈಗ ಆ ದಿವ್ಯ ಮುಗ್ಧ ಮುಖದ ತೇಜಃಪೂರ್ಣವಾದ ಸೌಂದರ್ಯರಾಶಿಯನ್ನು ಈಕ್ಷಿಸಿ ವಿಸ್ಮಿತನಾದನು. +ಅದರಲ್ಲಿಯೂ ಮದುಮಗಳ ಉಡುಗೆ ತೊಡುಗೆಗಳಲ್ಲಿ ಆಕೆ ಸಾಕ್ಷಾತ್ ಲಕ್ಷ್ಮೀಯಾಗಿ ವಿರಾಜಿಸಿದ್ದಳು. +ಹಿಂದೆ ಇಲ್ಲದಿದ್ದ ಏನೋ ಎಂದು ಪೀಂಚಲುವು ಬೆರಗಾಗಿ ನೊಡಿದಳು. +“ಚಿನ್ನಕ್ಕ ಎಷ್ಟು ಚಂದಾಗಿ ಆಗಿಬಿಟ್ಟಿದ್ದಾರೆ?” ಎಂದುಕೊಂಡಳು ಅವಳೂ! +ಚಿನ್ನಮ್ಮ ಎದ್ದು ನಿಂತಿದ್ದರೂ ಇನ್ನೂ ಸಂಪೂರ್ಣ ಎಚ್ಚರ ಗೊಂಡಂತೆ ಕಾಣುತ್ತಿರಲಿಲ್ಲ. +ಯಾವುದೋ ದಿವ್ಯ ಅತೀತ ಶಕ್ತಿಯ ಅಧೀನದಲ್ಲಿಯೆ ವರ್ತಿಸುತ್ತಿದ್ದಂತೆ ಭಾಸವಾಯಿತು. +ಅವಳು ಮುಕ್ಕುಂದಯ್ಯನನ್ನು ನೇರವಾಗಿ ನೋಡಿ, ಮೊಗದಲ್ಲಿ ಮುಗುಳುನಗೆಯೊಂದನ್ನು ಸುಳಿಸಿದಳು. +ತನ್ನ ಮುಕ್ಕುಂದಬಾವ ಬಂದಿದ್ದಾರೆ; +ತನ್ನ ಸರ್ವಸ್ವವೂ ಇನ್ನು ಅವರಿಗೆ ಎಲ್ಲವನ್ನೂ ನೈವೇದ್ಯಮಾಡಿ, ತನ್ನತನವೆನ್ನೆಲ್ಲ ಅವರಿಗೆ  ಸಂಪೂರ್ಣವಾಗಿ ಶರಣುಗೊಳಿಸಿದ ಶರಣಾಗತಿಭಾವದಲ್ಲಿ ಅವಳ ದೃಷ್ಟಿ ಮುಕ್ಕುಂದಯ್ಯನ ದೃಷ್ಟಿಯನ್ನು ಸಂಧಿಸಿತ್ತು. +ಅವನಂತೂ ಸುಪ್ರಸನ್ನೆಯಾದ ಧನಲಕ್ಷ್ಮಿಯ ಮುಂದೆ ನಿಂತಿರುವ ದರಿದ್ರನಂತೆ ದೈನ್ಯವನ್ನೂ ಐಶ್ವರ್ಯವನ್ನೂ ಒಮ್ಮೆಗೇ ಅನುಭವಿಸುತ್ತಿದ್ದನು. +ತನಗಾಗಿ ಏನನ್ನೆಲ್ಲ ತ್ಯಜಿಸಿ ಬಂದಿದ್ದಾಳೆ ತನ್ನ ಚಿನ್ನಿ! +ಶಠ ಸಂಪ್ರದಾಯಬದ್ಧವಾದ ಅಂದಿನ ಆ ಕುಲೀನ ಸಮಾಜದಲ್ಲಿ, ನಾಗರಿಕ ಅಕ್ಷರವಿದ್ಯೆಯ ಗಂಧವೂ ಇಲ್ಲದ ಲಜ್ಜಾಶೀಲವತಿಯಾದ ಸಣ್ಣ ಹುಡುಗಿಯೊಬ್ಬಳು ಧೈರ್ಯಮಾಡಿ ಮಾನ ಮರ್ಯಾದೆ ಕ್ಷೇಮ ಬಂಧುಬಾಂಧವರು ಯಾರನ್ನೂ ಯಾವುದನ್ನೂ ಪರಿಗಣಿಸದೆ, ಲಕ್ಷಿಸದೆ, ಮದುವೆಯ ದಿನವೆ ತಾನೊಲಿದವನಿಗಾಗಿ ಹೀಗೆ ಸಾಹಸಿಯಾದದ್ದು ಏನು ಸಾಮಾನ್ಯವೆ? +ದೈವ ನಿಯಾಮಕವೆ ಇರಬೇಕು! +ಅದರಲ್ಲಿಯೂ ತನ್ನಂತಹ ಸಾಮಾನ್ಯನಿಗಾಗಿ? +ಇಲ್ಲಿ ತನ್ನ ಮುಂದೆಯೇ ದೇವರಾಜ್ಞೆಯಂತೆ ನಿಂತು ಹೊಳೆಯುತ್ತಿದ್ದ ಅವಳಿಗೂ ಕಂಬಳಿಕೊಪ್ಪೆ ಹಾಕಿಕೊಂಡು ಸಾಮಾನ್ಯ ಉಡುಪಿನಲ್ಲಿ ರೂಕ್ಷವಾಗಿ ನಿಂತಿದ್ದ ತನಗೂ ಇದ್ದ ತಾರತಮ್ಮ ಮುಕ್ಕುಂದಯ್ಯನಿಗೆ ಪ್ರತ್ಯಕ್ಷಗೋಚರವಾದಂತಿತ್ತು! +ಅಲ್ಪನಿಗಾಗಿ?ಯಾವ ವಿಶೇಷವೂ ಇಲ್ಲದ ಕ್ಷುದ್ರನಿಗಾಗಿ? +ಮುಕುಂದಯ್ಯನಿಗೆ ಕಲ್ಲೂರು ಗಡ್ಡದಯ್ಯನ ನೆನಪಾಯಿತು. +ಚಿನ್ನಮ್ಮನ ಪರವಾಗಿ ಹೃದಯದಲ್ಲಿ ಅನಂತ ಕೃತಜ್ಞತೆ ಉಕ್ಕಿ ಕಣ್ಣುಗಳಲ್ಲಿ ಹೊಮ್ಮಿತು ನೀರಾಗಿ! +“ಐತಾ, ಲಾಟೀನು ತೆಗೆದುಕೊ; +ಬತ್ತಿ ಇಳಿಸಿ, ದೀಪ ಸಣ್ಣದು ಮಾಡಿಕೊ ಮುಂದೆ ಹೊರಡು…. +ಪೀಂಚಲೂ, ನೀನು ಆ ಕಂಬಳಿಕೊಪ್ಪೆ ಹಾಕಿಕೊ. +ಇವಳದ್ದನ್ನೂ ಎತ್ತಿಕೊ…. +ಎಷ್ಟು ತಟಕ್ಕನೆ ನಿಶ್ಚಯಿಸಿ ಮುಕುಂದಯ್ಯ ಹೇಳಿದ್ದನೆಂದರೆ, ಅವನ ಧ್ವನಿಯಲ್ಲಿ ಚಲನವಲನಗಳಲ್ಲಿ ಶೀಘ್ರತ್ವದ ಬಾವಭಂಗಿಗಳು ಸುಸ್ಫಟವಾಗಿದ್ದುವು. +ಐತ ಲಾಟೀನು ಸಹಿತ ಗುಡಿಯಿಂದ ಕೆಳಗಿಳಿದನು. +ಮತ್ತೆ ಮೊದಲಿನಂತೆಯೆ ಕವಿದು ಬಂದ ಮಿಣಿಮಿಣಿ ಹಣತೆ ಬೆಳಕಿನ ಮಬ್ಬುಗತ್ತಲೆಯಲ್ಲಿ ನಿಂತಿದ್ದ ಚಿನ್ನಮ್ಮನೆಡೆಗೆ ಮುಕುಂದಯ್ಯ ಸರಸರನೆ ನಡೆದು, ಅವಳನ್ನು ತನ್ನ ಹೆಗ್ಗಂಬಳಿಕೊಪ್ಪೆಯೊಳಗೆ ಸುತ್ತಿ, ತನ್ನ ಬಲ ತೋಳಿಂದ ಅವುಚಿಕೊಂಡು ಮಗು ತನ್ನನ್ನು ಅವುಚಿಕೊಳ್ಳುವ ತಾಯಿಗೆ ವಶವಾಗುವಂತೆ ಅವಳು ತನ್ನ ಹಿಂದಿನ ಸಂಕೋಚವನ್ನೆಲ್ಲ ಬಿಸುಟು, ಆ ಬಲಿಷ್ಟ ಆಶ್ರಯವನ್ನು ಬಿಗಿಯಾಗಿ ಅಪ್ಪಿಕೊಂಡಳು. +ಅದುವರೆಗೂ ಅವರು ಎಂದೂ ಒಬ್ಬರನ್ನೊಬ್ಬರು ಹಾಗೆ ಮುಟ್ಟಿರಲಿಲ್ಲ. +ಹುಲಿಕಲ್ಲು ನೆತ್ತೆಗೆ ಹೋಗುವ ಕಡಿದಲ್ಲದ ಬಳಸುಮಾರ್ಗದಲ್ಲಿ ಅವರು ಹಳೆಪೈಕದ ಯಂಕಿಯ ಮನೆಯ ಹತ್ತಿರದ ಕೊಟ್ಟಿಗೆಯ ಬಳಿಗೆ ಬಂದಾಗ, ಚಿನ್ನಮ್ಮ ತನಗೆ ಬಾಯಿ ಒಣಗಿ ಬರುತ್ತಿದೆ ಎಂದು ಮುಕುಂದ ಬಾವನ ಕಿವಿಯಲ್ಲಿ ಉಸುರಿದಳು. +ಎಲ್ಲರೂ ಕೊಟ್ಟಿಗೆಯ ಕಡಿಮಾಡಿನ ಆಶ್ರಯದಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳಲು ನಿಶ್ಚಯಿಸಿ ನಿಂತರು. +ಮಳೆ ತುಸು ನಿಂತಿತ್ತು. +ಆದರೆ ಗಾಳಿ ಶೀತಲವಾಗಿ ಬೀಸುತ್ತಲೆ ಇತ್ತು. +ಕೊಟ್ಟಿಗೆಯ ಒಳಗಿಂದ ದನ ಎತ್ತುಗಳ ಕೋಡಿನ ಸದ್ದು, ಸೀನಿನ ಸತ್ತು, ಉಸಿರಾಟದ ಸದ್ದು, ಹಲುಬಿನ ಗಿಡ್ಡಗಳ ಓಡಾಟದ ಸದ್ದು ಕೇಳಿ ಬರುತ್ತಿತ್ತು. +ಗಂಜಲ ಸಗಣಿಯ ಕಟು ವಾಸನೆಯೂ ತುಂಬಿತ್ತು. +ಕಾಡಿನ ಜಿಗಣೆಕಾಟವನ್ನು ಮೀರಿತ್ತು ನುಸಿಯ ಕಾಟ. +ಮುಕುಂದಯ್ಯನ ಸೂಚನೆಯಂತೆ ಐತ ಹಾಲು ತರಲು ಯೆಂಕಿಯ ಮನೆಗೆ ಹೋದನು. +ಯೆಂಕಿಯ ಮನೆ, ಅದು ಹೊಲೆಯರದ್ದೋ ಗಟ್ಟದ ತಗ್ಗಿನವರದ್ದೋ ಆಗಿದ್ದರೆ ಬಿಡಾರವೆಂದೇ ಕರೆಯಲ್ಪಡುತ್ತಿತ್ತು. +ಅದು ಹುಲ್ಲಿನ ಗುಡಿಸಲಾಗಿದ್ದರೂ ದೀವರ ಜಾತಿಯರದ್ದಾದ್ದರಿಂದ ಅದನ್ನು ’ಮನೆ’ ಎಂದು ಕರೆಯುತ್ತಿದ್ದರು ಅಷ್ಟೆ. +ಆ ಹೆಸರಿಗೆ ಅದಕ್ಕಿದ್ದ ಹಕ್ಕು ಎಂದರೆ ತಡಿಕೆ ಗೋಡೆಗೆ ಬದಲಾಗಿ ಅದಕ್ಕಿದ್ದ ಮಣ್ಣಿನ ಗೋಡೆಗಳು ಮತ್ತು ಅದರ ಸ್ಥವರತೆ. +ವಯಸ್ಸಾದ ವಿಧವೆ ಯೆಂಕಿ ಒಬ್ಬೊಂಟಿಗಳು. +ಅವಳು ಹೆರಿಗೆ ಮಾಡಿಸುವುದು, ಸಣ್ಣ ಪುಟ್ಟ ಕಾಯಿಲೆಗಳಿಗೆ ಮದ್ದು ಕೊಡುವುದು, ದನ ಕರುಗಳಿಗೆ ಕಾಯಿಲೆಯಾದರೆ ಮುಷ್ಟ ಮಾಡುವುದು, ಹಾಲು ಕಡಿಮೆಯಾದರೆ ಹೆಚ್ಚಾಗುವುದಕ್ಕೆ ಬೂದಿ ಮಂತ್ರಿಸಿಕೊಡುವುದು, ಮುಂಡೆ ಬಸುರಿಯಾದರೆ ಅಥವಾ ಕನ್ನೆ ಕಳ್ಳಬಸುರಿಯಾದರೆ ಮದ್ದು ಹಾಕಿ ಸಾಮಾಜಿಕವಾದ ಅವಮಾನ ಬಹಿಷ್ಕಾರಾದಿ ಕ್ಲೇಶಕಷ್ಟಗಳಿಂದ ಆರ್ತರನ್ನು ರಕ್ಷಿಸುವುದು-ಇತ್ಯಾದಿಗಳಲ್ಲಿ ತೊಡಗಿ ಜೀವನಯಾಪನೆ ಮಾಡುತ್ತಿದ್ದಳು. +ಆದ್ದರಿಂದ ಅವಳಿಗೆ ಪರಿಚಯವಿಲ್ಲದ ಮತ್ತು ಅವಳ ಪರಿಚಯವಿಲ್ಲದ ಜನರು ಆ ಸೀಮೆಯಲ್ಲಿ ಯಾರೊಬ್ಬರೂ ಇರುತ್ತಿರಲಿಲ್ಲ. +ಅವಳಿಗೆ ತಿಳಿಯದಿರುವ ಯಾವ ಗುಟ್ಟಿನ ಸುದ್ದಿಯೂ ಇರಲೂ ಸಾಧ್ಯವಿರಲಿಲ್ಲ. +ರಾತ್ರಿ ಬಹಳ ಹೊತ್ತಾದರೂ ಯೆಂಕಿಯ ಮನೆಯೊಳಗೆ ದೀಪವಿತ್ತು. +ಐತ ತಟ್ಟಿದೊಡನೆ ಬಾಗಿಲು ತೆರೆದದ್ದು ಯೆಂಕಿಯಲ್ಲ, ನಾಗತ್ತೆ! +ಐತ ನಾಗತ್ತೆಯನ್ನು ಕಂಡು ಕಕ್ಕಾವಿಕ್ಕಿಯಾದ. +ಅವನಿಗೆ ಮಾತೇ ಹೊರಡಲಿಲ್ಲ. +ಅಂತಹ ಅಸ್ಥಾನದಲ್ಲಿ ಅವೇಳೆಯಲ್ಲಿ ಅನಿರೀಕ್ಷಿತವಾಗಿ ನಾಗತ್ತೆಯನ್ನು ಸಂಧಿಸಲು ಅವನ ಪ್ರಜ್ಞೆ ಸ್ವಲ್ಪವೂ ಸಿದ್ಧವಾಗಿರಲಿಲ್ಲ. +ಅಲ್ಲಿಂದ ಇಲ್ಲಿಂದ ಅವಳ ವಿಚಾರವಾಗಿ ಸ್ವಲ್ಪ ಸ್ವಲ್ಪ ಸುದ್ದಿ ಅವನ ಕಿವಿಗೆ ಬಿದ್ದಿತ್ತು. +ಆದರೆ ತನ್ನ ಹೆಂಡತಿಯಿಂದಲೇ ಕೇಳಿದ್ದ ಅತ್ಯಂತ ಅಸಹ್ಯವಾದ ರಹಸ್ಯವಾರ್ತೆಯಿಂದ ನಾಗತ್ತೆಯ ವಿಚಾರವಾಗಿ ಅವನ ಮನಸ್ಸು ಪೂರಾ ಕೆಟ್ಟಿತ್ತು. +ಅವಳನ್ನು ಹೂವಳ್ಳಿ ನಾಯಕರು ತಮ್ಮ ಮೇಲೆ ಬರಬಹುದಾದ ಅಪವಾದದಿಂದ ಪಾರಾಗುವುದಕ್ಕಾಗಿಯೂ ತಮ್ಮ ಮಗಳ ಮದುವೆಯ ಸಂದರ್ಭದಲ್ಲಿ ಪಾಲು ಮುಖಂಡರಿಂದ ಬಹಿಷ್ಕಾರ ಗಿಹಿಷ್ಕಾರದ ಅವಮಾನದ ಗೊಂದಲಕ್ಕೆ ಅವಕಾಶ ಒದಗದಿರುವುದಕ್ಕಾಗಿಯೂ ಹೂವಳ್ಳಿ ಮನೆಯಿಂದ ಹೊರಡಿಸಿದ ಮೇಲೆ, ನಾಗತ್ತೆ ಮೇಗರವಳ್ಳಿಯಲ್ಲಿ ಯಾರೊ ಕೀಳುಜಾತಿಯವರ ಮನೆಯಲ್ಲಿ,-ಸಾಬರ ಮನೆಯಲ್ಲಿ ಎಂದೂ ಹೇಳುತ್ತಿದ್ದವರು ಕೆಲವರು,-ಗುಪ್ತ ಆಶ್ರಯ ಪಡೆದು, ಹಳೆಪೈಕದ ಯೆಂಕಿಯಿಂದ ಮದ್ದು ತೆಗೆದುಕೊಳ್ಳುತ್ತಿದ್ದಾಳೆ ಎಂದು ಕೇಳಿದ್ದನು. +ಆದರೆ ಇಂತಹ ಸಂಕಟದ ಸಂದರ್ಭದಲ್ಲಿ ಯೆಂಕಮ್ಮನ ಮನೆಯಲ್ಲಿ ನಾಗತ್ತೆಗೆ ಇದಿರಾಗುವ ಅನನ್ವಯಕ್ಕೆ ಅವನ ಪ್ರಜ್ಞೆ ಸಿದ್ಧವಾಗಿರಲಿಲ್ಲ. +“ಏನೋ, ಐತಾ? +ಈ ಮಳೇಲಿ?ಇಷ್ಟ್ಹೊತ್ತಿನಲ್ಲಿ?ಇಲ್ಲಿ?”ನಾಗತ್ತೆಯ ಪ್ರಶ್ನೆಗಳಿಗೆ ಉತ್ತರವೆ ಹೊರಡದೆ, ಮುಕುಂದಣ್ಣ ಚಿನ್ನಕ್ಕರ ಗುಟ್ಟಿನ ಸಾಹಸ ಬಯಲಾಗದಂತೆ ಏನು ಹೇಳುವುದು ಎಂದು ಚಿಂತಿಸುತ್ತಾ ನಿಂತಿದ್ದ ಐತ ಒಳಗಣಿಂದ ಯೆಂಕಿ ಬರುತ್ತಿದ್ದುದನ್ನು ಕಂಡು “ಏನಿಲ್ಲ. +ಯೆಂಕಮ್ಮನ ಹತ್ರ ಮದ್ದಿಗೆ ಬಂದೆ!” ಎಂದುಬಿಟ್ಟನು. +“ಯಾರಿಗೋ? …. ನಿನ್ನ ಹೆಂಡ್ತಿಗೇನೋ? …. + ಅವಳಿಗೆ ಆಗಲೆ ತಿಂಗಳು ತುಂಬಿದೆಯೇನೊ? …. + ಬ್ಯಾನೆ ಸಂಕಟ ತೊಡಗಿ ಯೆಂಕಿ ಕರೆಯೋಕ್ಕೆ ಬಂದಿಯೇನೋ? …. ” ನಾಗತ್ತೆ ಪ್ರಶ್ನೆಗರೆದಳು. +ತನಗೆ ಹೊಳೆಯದಿದ್ದ ಉತ್ತರವನ್ನು ನಾಗತ್ತೆಯೆ ಸೂಚಿಸಿದ್ದರಿಂದ ಅದನ್ನೆ ಗಬಕ್ಕನೆ ಒಪ್ಪಿಕೊಂಡು “ಹೌದು, ಮಾರಾಯ್ರ, ಅದಕ್ಕೇ ಓಡಿ ಬಂದೆ” ಎಂದುಬಿಟ್ಟನು ಐತ. +ಆದರೆ ಅವರ ಸಂಭಾಷಣೆಯನ್ನು ಆಲಿಸುತ್ತಿದ್ದ ಯೆಂಕಿ ಐತ ಹೇಳಿದುದನ್ನು ನಂಬಿರಲಿಲ್ಲ. +ಅವಳಿಗೆ ಆ ರಾತ್ರಿ ನಡೆಯಲು ಸಿದ್ಧವಾಗಿದ್ದ ನಾಟಕದ ಪೂರ್ವಪರಿಚಯವಿದ್ದುದರಿಂದಲೂ ಅವಳ ಸಹಾನುಭೂತಿಯೆಲ್ಲ ಮುಕುಂದಯ್ಯನ ಪರವಾಗಿದ್ದುದರಿಂದಲೂ ಐತನನ್ನು ಏಕಾಂತಕ್ಕೆ ಕರೆದು ಕಿವಿಮಾತಾಡಿದಳು. +ಮುಕುಂದಯ್ಯ ಹಾಲಿಗೆ ಹೇಳಿ ಕಳುಹಿಸಿದ್ದಾರೆ ಎಂಬುದನ್ನು ಕೇಳಿದೊಡನೆ ಆ ಅನುಭವಶಾಲಿಯಾಗಿದ್ದ ಮುದುಕಿಗೆ ಎಲ್ಲ ಗೊತ್ತಾಗಿ ಹೋಯಿತು. +“ಓಡಿಹೋಗಿ ಹೇಳು ಮುಕುಂದಯ್ಯೋರಿಗೆ, ಚಿನ್ನಕ್ಕನ್ನ ಇಲ್ಲಿಗೆ ಕರಕೊಂಡು ಬರಾಕೆ…. +ಅಯ್ಯೋ, ಈ ಕತ್ತಲೇಲಿ ಈ ಮಳೇಲಿ, ಪಾಪ! +ಅಷ್ಟು ಸುಖದಲ್ಲಿ ಬೆಳೆದ ಆ ಅರಿಯದ ಮಗು, ಹುಲಿಕಲ್ಲು ನೆತ್ತಿಗೆ ಹೆಂಗೋ ಹತ್ತಾದು?… ’ಅಲ್ಲಿ ಯಾರೂ ಇಲ್ಲ; +ಅವರನ್ನ ಕರಕೊಂಡು ಬರಬೇಕಂತೆ’ ಅಂತಾ ಹೇಳು…” ಐತ ದೂರದಲ್ಲಿ ನಿಂತಿದ್ದ ನಾಗತ್ತೆಯ ಕಡೆಗೆ ಕಣ್ಣು ಹಾಯಿಸಿದುದನ್ನು ಗಮನಿಸಿ ಮುದುಕಿ ಮುಂದುವರಿಸಿದಳು. +“ಆ ಬಾಂವಿಕೊಪ್ಪದ ಹೆಗ್ಗಡ್ತೇರನ್ನ ಯಾರ ಕಣ್ಣಿಗೂ ಬೀಳದ ಹಾಂಗೆ ಮುಚ್ಚಿಡ್ತೀನೋ. +ನೀ ಮಾತ್ರ ಆ ಇಚಾರ ಮಾತೆತ್ತಬ್ಯಾಡ, ಗೊತ್ತಾಯ್ತಾ? +ಓಡು, ಮತ್ತೆ, ಬ್ಯಾಗ.”ಐತ ಓಡುತ್ತಲೆ ಕತ್ತಲೆಯಲ್ಲಿ ಕಣ್ಮರೆಯಾದನು. +ಯೆಂಕಿ ನಾಗತ್ತೆಯನ್ನು ಮನೆಯ ಹಿಂದುಗಡೆಯ ಒಂದು ಕೋಣೆಯಲ್ಲಿ ಕುಳಿತಿರುವಂತೆ ಹೇಳಿ, ಬಾಗಿಲು ಎಳೆದುಕೊಂಡು ಚಿಲಕ ಹಾಕಿದಳು. +ಜಗಲಿಯಲ್ಲಿ ಅತಿಥಿಗಳು ಕುಳಿತುಕೊಳ್ಳಲು ಅನುಕೂಲವಾಗುವಂತೆ ಒಂದು ಚಾಪೆ ಬಿಚ್ಚಿ ಹರಡಿದಳು. +ಸ್ವಲ್ಪ ಹೊತ್ತಿನಲ್ಲಿಯೆ ಮದುಮಗಳ ವೇಷಭೂಷಣದಿಂದ ಮುದುಕಿಯ ಕಣ್ಣಿಗೆ ಅಮೃತಸೇಚನ ಮಾಡುತ್ತಿದ್ದ ಚಿನ್ನಮ್ಮನನ್ನು ಮುಂದುಮಾಡಿಕೊಂಡು ಮುಕುಂದಯ್ಯ, ಪೀಂಚಲು ಮತ್ತು ಐತ ಮನೆಯನ್ನು ಪ್ರವೇಶಿಸಿದರು. +ಮುದುಕಿ ಮುಕುಂದಯ್ಯಗೆ ಕಾಲು ತೊಳೆದುಕೊಳ್ಳಲು ನೀರುಕೊಟ್ಟು, ಬೇಡಬೇಡವೆಂದರೂ ಕೇಳದೆ ಸುತ್ತುಗಾಲುಂಗುರಗಳನ್ನು ಶುಚಿಮಾಡಿ ಮತ್ತೆ ಮೊದಲಿನಂತೆಯೆ ತುಂಬ ಮುದ್ದಿನಿಂದ ತೊಡಿಸಿದಳು. +ನಿಸ್ಸಂತಾನಳಾಗಿ ಒಂಟಿಬಾಳು ಬಾಳುತ್ತಿದ್ದ ಆ ವೃದ್ಧೆಯ ಕಣ್ಣು ಒದ್ದೆಯಾಗಿದ್ದುದನ್ನು ಅವಳು ಯಾರಿಗೂ ತೋರಗೊಡಲಿಲ್ಲ. +ಸೊಬಗು ತುಂಬಿ, ಹೊಂಬಳಗ ಮುದ್ದು ಸೂಸಿ, ಮಿರುಗುತ್ತಿದ್ದ ಚಿನ್ನಮ್ಮನ ಕೋಮಲ ಪಾದಯುಗ್ಮಗಳನ್ನು, ನಾನಾ ನೆವದಿಂದ ಸುಕ್ಕಿದ ತನ್ನ ಒರಟು ಕೈಯಿಂದ ಮುಟ್ಟಿ, ಸೋಂಕಿ, ನೀರೊರೆಸಿ, ಸೊಗಯಿಸುತ್ತಾ ಕಣ್ಣಿನಿಂದಲ್ ಮುದ್ದಿಸಿದಳು, ಆ ಮುದುಕಿ. +ಹಳೆಪೈಕದವಳ ಅಡುಗೆಮನೆ ಹೂವಳ್ಳಿ ವೆಂಕಪ್ಪನಾಯಕರ ಮಗಳಿಗೆ ಪ್ರವೇಶಿಸಲು ನಿಷಿದ್ಧ ಪ್ರದೇಶವಾಗಿದ್ದರೂ, ಅದರ ಮಿಶ್ರವಾಸನೆ ಅಸಹನೀಯವಾಗಿದ್ದರೂ ಯೆಂಕಿ ಚಿನ್ನಮ್ಮನನ್ನು ಒಳಗೆ ಕರೆದೊಯ್ದು ಒಲೆಯ ಬೆಂಕಿಯಲ್ಲಿ ಒದ್ದೆಯಾರಿಸಿಕೊಳ್ಳುವಂತೆ ಮಾಡಿದಳು. +ಮಳೆ ಗಾಳಿಯ ಚಳಿಗೆ ಇನ್ನೇನು ಉಡುರು ಹತ್ತುವುದರಲ್ಲಿದ್ದ ಅವಳ ಮೈಗೆ ಯೆಂಕಿಯ ಒಲೆಯ ಬೆಂಕಿ ಮುದುಕಿಯ ತಾಯ್ತನದ ಅಕ್ಕರೆಯಷ್ಟೆ ಬೆಚ್ಚಗೆ ನೊಚ್ಚಗಿತ್ತು! +ಯೆಂಕಿ ಕೊಟ್ಟ ಬಾಳೆಹಣ್ಣುಗಳನ್ನು ತಿಂದು, ಹಾಲು ಕುಡಿದು, ನಿಜವಾಗಿಯೂ ಹಸಿವೆಯಿಂದಲೆ ದಣಿದಿದ್ದ ಚಿನ್ನಮ್ಮ ಚೇತರಿಸಿಕೊಂಡಳು. +ಜೊತೆಗೆ ಎಷ್ಟು ಬೇಡವೆಂದರೂ ಒಲ್ಲೆನೆಂದರೂ ಕೇಳದೆ ಮುದುಕಿ ಕುಚ್ಚಿಕೊಟ್ಟ ಒಂದು ಮೊಟ್ಟೆಯನ್ನೂ ತಿನ್ನಬೇಕಾಯಿತು. +ಅವಳು ಕಣ್ಣುಸನ್ನೆ ಕೈಸನ್ನೆಗಳಿಂದಲೆ ಸೂಚಿಸಿದ ಇನ್ನೊಂದು ಕುಡಿಯುವ ಪದಾರ್ಥವನ್ನು ಮಾತ್ರ ಚಿನ್ನಮ್ಮ ಬಲವಾಗಿ ತಲೆಯಲ್ಲಾಡಿಸಿಯೆ ತಿರಸ್ಕರಿಸಿದ್ದಳು. +ಅವಳು ಅಡುಗೆಯ ಮನೆಗೆ ಕಾಲಿಡುವಾಗಲೆ ಮೂಗಿಗೆ ರುಮ್ಮನೆ ಬಡಿದಿತ್ತು ಕಳ್ಳುಗಂಪು! +“ಬೆಳಗಿನ ಜಾಂವ ಕಸ್ತಲೆಕಸ್ತಲೆ ಇರುವಾಗಲೆ ಎದ್ದು ಹೋಗಬೈದು. +ಈ ಕತ್ತಲೇಲಿ ಈ ಮಳೇಲಿ (ಆಗ ಮಳೆ ನಿಂತಿತ್ತು; ಆದರೂ ಮುದುಕಿ ತನ್ನ ವಾದದ ಪುಷ್ಟಿಗಾಗಿ ಅದನ್ನು ಲಕ್ಷಿಸದೆ ಮಾತಾಡುತ್ತಿದ್ದಳು.) + ಚಿನ್ನಕ್ಕನ್ನ ಯಾಕೆ ದಣಿಸ್ತೀರಿ?” ಎಂದು ನಾನಾ ವಿಧವಾಗಿ ಯೆಂಕಿ ವಾದಿಸಿದರೂ ಮುಕುಂದಯ್ಯ ಅದಕ್ಕೆ ಒಪ್ಪಲಿಲ್ಲ. +ಅಲ್ಲದೆ ಚೇತರಿಸಿಕೊಂಡಿದ್ದ ಚಿನ್ನಮ್ಮನೂ, ತನಗೀಗ ಯಾವ ದಣಿವೂ ಇಲ್ಲ, ಎಂದು ಮುಕುಂದಬಾವನ ಇತ್ಯರ್ಥವನ್ನೇ ಸಮರ್ಥಿಸಿದಳು. +ಮುದುಕಿ ನವವಧೂವೇಷದಲ್ಲಿದ್ದ ನವ ತಾರುಣ್ಯದ ಹುಡುಗಿಯನ್ನು ಅರ್ಥಪೂರ್ಣವಾಗಿ ನೋಡಿ, ನಿಡುಸುಯ್ದು, ಮುಗುಳು ನಗೆ ನಕ್ಕಳಷ್ಟೆ! +ತನ್ನ ತಾರುಣ್ಯದಲ್ಲಿ ತನ್ನ ಪ್ರಿಯನೊಡನೆ ಕಾಡು ಬೆಟ್ಟ ಹತ್ತಿ ಇಳಿದು ದಣಿವು ಕಾಣದೆ ನಡೆದಾಡಿದ್ದ  ನೆನಪು ಅವಳಿಗೆ ಮರುಕೊಳಿಸಿರಬಹುದೇನೊ! +ಆದರೆ ಪೀಂಚಲು ತನ್ನ ಗಂಡನ ಕಿವಿಯಲ್ಲಿ, ಯೆಂಕಮ್ಮ ಹೇಳಿದ ಹಾಗೆ ಮಾಡಿದ್ದರೇ ಅನುಕೂಲವಾಗುತ್ತಿತ್ತು, ಎಂಬರ್ಥದ ಮಾತಾಡಿದಳು. +ತನ್ನ ಹೆಂಡತಿ ಚೊಚ್ಚಲು ಎಳ ಬಸುರಿ ಎಂಬುದನ್ನು ನೆನಪಿಗೆ ತಂದುಕೊಂಡು ಐತ ಮುಕುಂದಯ್ಯನಿಗೆ ಅದನ್ನು ಹೇಳಲು, ಅವನು ಯೆಂಕಿಗೆ-’ಪೀಂಚಲು ಮಾತ್ರ ಉಳಿಯುತ್ತಾಳೆ. +ಮರುದಿನ ಬೆಳಿಗ್ಗೆ ಅವಳನ್ನು ಕೋಣೂರಿಗೆ ಅವಳ ಬಿಡಾರಕ್ಕೆ ಕಳಿಸಿಕೊಡಿ’-ಎಂದು ಹೇಳಿ, ಚಿನ್ನಮ್ಮ ಮತ್ತು ಐತರೊಡನೆ ಹೊರಡಲನುವಾದನು. +ಮುಕುಂದಯ್ಯ ತನ್ನವನೆ ಆಗಿದ್ದರೂ, ಮುಂದೆ ತಾನು ಅವನವಳೆ ಆಗುವುದಿದ್ದರೂ, ತನ್ನ ಜೊತೆ ಮತ್ತೊಂದು ಹೆಣ್ಣುಜೀವ ಇಲ್ಲದೆ ತಾನೊಬ್ಬಳೆ ಗಂಡಸರಿಬ್ಬರ ಸಂಗಡ ಹೋಗುವುದಕ್ಕೆ ತುಂಬ ನಾಚಿಕೆಪಟ್ಟುಕೊಂಡ ಚಿನ್ನಮ್ಮ ಪೀಂಚಲು ಮುಖದ ಕಡೆ ಯಾಚನಾ ದೃಷ್ಟಿ ಬೀರಿ ನೋಡಲು, ಆ ಇಂಗಿತಜ್ಞೆ ಹಿಂದು ಮುಂದು ನೋಡದೆ ಅವನೊಡನೆ ಹೊರಟೆಬಿಟ್ಟಳು! +ಆ ನಾಲ್ಕು ನೆರಳುಗಳೂ ಐತ ಹಿಡಿದಿದ್ದ ಲಾಟೀನಿನ ಬೆಳಕೂ ಹಳುವಿನಲ್ಲಿ ಅಡಗಿದ ಮೇಲೆ ಯೆಂಕಿ ಬಾಗಿಲು ಮುಚ್ಚಿಕೊಂಡು ಸೆರಗಿನಿಂದ ಕಣ್ಣು ಮೂಗು ಒರಸಿಕೊಂಡಳು. +ಹಿಂಬದಿಗೆ ಗಿಡ ಮರ ಹಳು ಬೆಳೆದು ಕಿಕ್ಕಿರಿದು ಅದನ್ನು ಸಂಪೂರ್ಣವಾಗಿ ಅಡಗಿಸಿಟ್ಟಂತೆ ಮರೆಮಾಡಿದ್ದರೂ, ಮುಂಗಡೆಗೆ ಹಬ್ಬಿದ್ದ ಹಾಸುಬಂಡೆಯ ದೆಸೆಯಿಂದ,- ಅಲ್ಲಲ್ಲಿ ದೂರದೂರ ಮುರುಟಿದಂತೆ ತಲ ಯೆತ್ತಿದ್ದ ಕುಳ್ಳು ಮಟ್ಟುಗಳಿದ್ದರೂ-ಬಯಲು ಬಯಲಾಗಿ ತೋರುತ್ತಿದ್ದ ಹುಲಿಕಲ್ಲು ನೆತ್ತಿಯ ಕಲ್ಲುಮಂಟಪದ ಒಂದು ಮೂಲೆಯಲ್ಲಿ ದೊಡ್ಡ ದೊಡ್ಡ ಕುಂಟೆಗಳನ್ನೆ ಅಡಕಿ ಹೊತ್ತಿಸಿದ್ದ ಬೆಂಕಿ ಉರಿಯುತ್ತಿತ್ತು. +ಆ ಬೆಂಕಿ ನಿನ್ನೆ ಮೊನ್ನೆಯದಾಗಿರಲಿಲ್ಲ; +ಅನೇಕ ದಿನಗಳಿಂದ ಇಪ್ಪತ್ತುನಾಲ್ಕು ಗಂಟೆಯೂ ಆರದೆ ಸಜೀವವಾಗಿದ್ದ ’ನಂದಾ ಬೆಂಕಿಯಾಗಿತ್ತು.’ + ಹೊರಗೆ ಒಂದೇ ಸಮನೆ ಸುರಿಯುತ್ತಿದ್ದ ಮಳೆಯಿಂದಲೂ ಸುಂಯ್ಯೆಂದು ಭೋರಿಡುತ್ತ ಬೀಸುತ್ತಿದ್ದ ಗಾಳಿಯಿಂದಲೂ ಎಷ್ಟೇ ಶೈತ್ಯವಿದ್ದರೂ ಮಂಟಪದೊಳಭಾಗವು ಆ ಬೆಂಕಿಯ ಪ್ರಭಾವದಿಂದ ಸದಾ ಬೆಚ್ಚಗಿದ್ದು ಮನೆಯಂತೆ ಹಿತಕರವಾಗಿತ್ತು. +ಆ ಬೆಂಕಿಯ ಪಕ್ಕದಲ್ಲಿ ಅಡುಗೆ ಮಾಡಲು ಒಲೆಯನ್ನಾಗಿ ಬಹಳ ಕಾಲದಿಂದ ಉಪಯೋಗಿಸಿದ್ದ ಮೂರು ಕರಿಹಿಡಿದ ಕಲ್ಲುಗುಂಡುಗಳೂ, ಆ ಬಳಿಯೆ ಕೆಲವು ಮಡಕೆ ಕುಡಿಕೆಯ ಸಾಮಾನುಗಳೂ ಇದ್ದುವು. +ಮಂಟಪದ ಎದುರಿನ ಹಾಸುಬಂಡೆಯೊಂದರ ಮೇಲೆ ತಟ್ಟಿಗಳನ್ನು ಮಾಡಲು ಸಲುಕು ತೆಗೆದಿದ್ದ ವಾಟೆಯ ಮತ್ತು ಬಿದಿರಿನ ತಿಳ್ಳದ ಬಿಳಿಯ ರಾಶಿ ಅಲ್ಲಿ ಕಾಮಗಾರಿಯ ಅತ್ಯಂತ ಅರ್ವಾಚೀನತೆಯನ್ನು ಸೂಚಿಸುತ್ತಿತ್ತು. +ಮಂಟಪದ ಒಂದು ಭಾಗ, ಬಿದಿರು ಗೂಟಗಳನ್ನು ನೆಟ್ಟು ವಾಟೆಯ ತಟ್ಟಿಗಳನ್ನು ಮರೆ ಕಟ್ಟಿದುದರಿಂದ, ನಿವಾಸ ಯೋಗ್ಯವಾದ ಕೋಣೆಯಾಗಿ ಪರಿವರ್ತಿತವಾಗಿತ್ತು. +ಬೆಂಕಿಯ ಪಕ್ಕದಲ್ಲಿ ತರುಣಿಯೊಬ್ಬಳು ಕುಳಿತು, ಯಾವ ಉದ್ದೇಶವೂ ಇಲ್ಲದ ಯಾಂತ್ರಿಕ ಕರ್ಮದಲ್ಲಿ ತೊಡಗಿದ್ದಂತೆ, ಆ ಬೆಂಕಿಗೆ ನಿಧಾನವಾಗಿ ಎರಡೋ ಮುರೋ ನಿಮಿಷಗಳಿಗೊಮ್ಮೆ ಕಸವನ್ನೊ, ಕಡ್ಡಿಯನ್ನೊ, ಹಲಸಿನ ಬೀಜವನ್ನೊ, ಅಲ್ಲೆಲ್ಲ ಗಾಳಿಯಲ್ಲಿ ಚೆದರಿದಂತಿದ್ದ  ಕಾಡುಕೋಳಿಯ ಪುಕ್ಕವನ್ನೊ ಎಸೆಯುತ್ತಿದ್ದಳು. +ಒಮ್ಮೊಮ್ಮೆ ಆ ಯಾಂತ್ರಿಕ ಕರ್ಮವು ನಿಂತು ಅವಳು ಕುಗುರುವಂತೆಯೂ ತೋರುತ್ತಿತ್ತು. +ಅವಳ ಎದುರಿಗೆ ತುಸುದೂರದಲ್ಲಿ, ಬಹು ದಿನಗಳಿಂದ ಹಾಕಿ ಹಾಕಿ ರಾಶಿಯಾಗಿದ್ದ ಬೂದಿಗುಡ್ಡೆಯ ಮೇಲೆ, ಪಕ್ಕದಲ್ಲಿ ಹೊಡೆದಿದ್ದ ಬಿದಿರುಗೂಟಕ್ಕೆ ಬಳ್ಳಿಯ ನುಲಿಯಿಂದ ಕಟ್ಟುಗೊಂಡು ಟೊಣಪಗಾತ್ರದ ಕರಿಯ ನಾಯಿಯೊಂದು ಮುದುರಿ ಸುತ್ತಿಕೊಂಡು ಮಲಗಿ ನಿದ್ರಿಸುವಂತಿತ್ತು. +ಅದರ ನಿದ್ರೆಯೂ ಅವಶ್ಯ ನಿದ್ರೆಯಾಗಿರಲಿಲ್ಲ. +ಬೇಜಾರಿನ ನಿದ್ದೆಯಾಗಿತ್ತು. +ಆಗತಾನೆ ಬೈಗಾಗುತ್ತಿತ್ತು. +ಆದರೂ ದಟ್ಟಯಿಸಿದ್ದ ಮೋಡಗಪ್ಪು ಕತ್ತಲಿಳಿದಷ್ಟು ಕಪ್ಪಾಗಿ, ಹಗಲುಬೆಳಕಿನಲ್ಲಿ ಸಪ್ಪೆಗೆಂಪಾಗಿದ್ದ ’ನಂದಾ ಬೆಂಕಿ’ ಆಗಲೆ ಕೆಂಗೆಂಪಾಗಿ ಹೊಳೆಯತೊಡಗಿತ್ತು. +ಎದುರಿಗೆ ದಿಗಂತ ವಿಶ್ರಾಂತವಾಗಿ ತರಂಗ ತರಂಗವಾಗಿ ಹಬ್ಬಿದ್ದ ಪರ್ವತಾರಣ್ಯಶ್ರೇಣಿ ವರ್ಷಧಾರಾ ಸಾಂದ್ರತೆಯಿಂದಲೂ ಮೆಲ್ಲಗೆ ಇಳಿದು ಕವಿಯುತ್ತಿದ್ದ  ಕತ್ತಲೆಯಿಂದಲೂ ತನ್ನ ಸ್ಪಷ್ಟತೆಯನ್ನೆಲ್ಲ ಕಳೆದುಕೊಂಡು ಹಸುರು ಹಸುರು ಛಾಯೆಯ ಮಹಾಮುದ್ದೆಗಳಾಗುತ್ತಿದ್ದವು. +ಕಣಿವೆಯ ದೂರದಿಂದ ಈಗೊಮ್ಮೆ ಆಗೊಮ್ಮೆ, ಮಳೆ ಇಳಿಗೊಂಡು ಗಾಳಿಯ ಸದ್ದು ಕಡಿಮೆಯಾದಾಗ, ವಾಲಗದ ಸದ್ದು ಕೇಳಿಸಿ, ತಿಮ್ಮಿಗೆ ಹೂವಳ್ಳಿ ಮದುವೆಯ ನೆನಪುಕೊಟ್ಟು, ಅಲ್ಲಿ ಇಂದು ನಡೆಯಲಿರುವ ಮಹಾಘಟನೆಯಲ್ಲಿ ತಾನೂ ಮತ್ತು ತನ್ನ ಗಂಡ ಗುತ್ತಿಯೂ ವಹಿಸುತ್ತಿದ್ದ ಪಾತ್ರದ ಅರಿವಾಗುತ್ತಿತ್ತು.’ +ಇವತ್ತೆ ರಾತ್ರಿ ಮದುವಣಗಿತ್ತಿ ಚಿನ್ನಮ್ಮೋರು ಇಲ್ಲಿಗೆ ಬರುತ್ತಾರೆ!ತಾನಿಲ್ಲಿರುವಲ್ಲಿಗೆ! +ಈ ಹುಲಿಕಲ್ಲು ನೆತ್ತಿಯ ಕಲ್ಲುಮಂಟಪಕ್ಕೆ! …. +ಪಾಪ, ಹೆಂಗೆ ಈ ಕಾಡು ಗುಡ್ಡ ಹತ್ತಿ ಬರುತ್ತಾರೊ? …. +ಧಾರೆಸೀರೆ ಉಟ್ಟುಕೊಂಡು, ಕಟ್ಟಾಣಿ ಗೆಜ್ಜಡಿಕೆ ವಾಲೆ ಬಾಸಿಂಗ ಎಲ್ಲ ಇರೋಹಾಂಗೆ ಬಂದು ಬಿಡ್ತಾರೊ? …. ’ +ತಿಮ್ಮಿ ಮನದಲ್ಲಿಯೆ ಸ್ವರ್ಣಾಲಂಕಾರ ಭೂಷಿತೆಯಾದ ಮದುಮಗಳನ್ನು ಕಲ್ಪಿಸಿಕೊಂಡು ಆ ನೋಟದ ಸಂತೋಷಕ್ಕೆ ಹಿಗ್ಗಿದಳು. +ಚಿನ್ನಮ್ಮ ಬಂದಾಗ ತಾನು ಅವರನ್ನು ಹೇಗೆ ಸ್ವಾಗತಿಸಬೇಕು, ಏನೇನು ಸೇವೆ ಮಾಡಬೇಕು ಎಂದೂ ಆಲೋಚಿಸಿದಳು. +ತಾತ್ಕಾಲದಲ್ಲಿ ತಿಮ್ಮಿಗೆ ತಾನು ಹೊಲತಿ ಎಂಬುದೂ, ಆದ್ದರಿಂದ ತನ್ನ ಸೇವೆ ಏನಿದ್ದರೂ ಹತ್ತಿರದ್ದಾಗಿರದೆ ದೂರದ್ದಾಗಿರಬೇಕೆಂಬುದು ಮರೆತುಹೋಗಿತ್ತು. +ಆಲೋಚನೆಯಿಂದ ಮಧ್ಯೆ ತಿಮ್ಮ ಆಗಾಗ್ಗೆ ಆಕಳಿಸಿ ಕಣ್ಣೊರೆಸಿಕೊಂಡಿದ್ದಳು, ಆಕಳಿಕೆಯಿಂದ ಬರುವ ಕಣ್ಣೀರನ್ನು! +ಒಯ್ಯೊಯ್ಯನೆ ಅವಳ ಪ್ರಜ್ಞೆ ಜಾಗ್ರತ್ ಸತ್ತೆಯಿಂದ ಜಾರಿ ಸ್ವಪ್ನಸತ್ತೆಯ ಅಂಚಿಗೆ ಹೋಗಿ ಹೋಗಿ ಹಿಂದಿರುಗುತ್ತಿತ್ತು. +“ಯಾಕೆ ಹೀಂಗೆ ಆಕಳಿಕೆ ಬರ್ತವೆಯೋ? +ಯಾರೋ ನನ್ನ ನೆನೀತಾ ಇರಬೈದು….ಮತ್ತ್ಯಾರು ನೆನೀತಾರೆ? +ನನ್ನವ್ವನೆ ನೆನೀತ ಇರಬೈದು…. +ಥೂ ಇವರು ಯಾಕೆ ಇಷ್ಟೊತ್ತು ಮಾಡ್ತಾರಪ್ಪಾ? +ಕತ್ತಲಾತಾ ಬಂತು ಇನ್ನೂ ಬರಲಿಲ್ಲ. +ಮುಕುಂದಯ್ಯೋರನ್ನ ಯೆಂಕಮ್ಮನ ಮನೆ ತಂಕಾ ಕಳಿಸಿ, ಹೊಸದಾಗಿ ಮಾಡಿದ ದಾರಿ ತೋರಿಸಿ, ಬಂದುಬಿಡ್ತೀನಿ ಅಂತಾ ಹೋದ್ರಲ್ಲಾ! …. ” +ಬೂದಿ ಗುಡ್ಡೆಯಲ್ಲಿ ಮುದುರಿಕೊಂಡು ಬೆಚ್ಚಗೆ ಮಲಗಿದ್ದ ಹುಲಿಯನ ಕಡೆ ನೋಡುತ್ತಾ “ನನ್ನ ಧೈರ್ಯಕ್ಕೆ ಬಿಟ್ಟೂಹೋಗ್ತೀನಿ ಅಂತಾ ಅದನ್ನು ಬ್ಯಾರೆ ಇಲ್ಲಿ ಕಟ್ಟಿಹಾಕಿ….” ತಿಮ್ಮಿ ಬೆರಗಾಗಿ ನೋಡುತ್ತಾಳೆ. +ಕಲ್ಲುಮಂಟಪದ ಇದಿರಿನಲ್ಲಿದ್ದ ಹಾಸುಬಂಡೆಯ ಮೇಲೆ ಒಂದು ಕುದುರೆ ನಿಂತಿದೆ! +ಸೈನಿಕ ವೇಷದಲ್ಲಿರುವ ಒಬ್ಬ ಸವಾರ ಅದರ ಮೇಲೆ ಕೂತು ಲಗಾಮು ಹಿಡಿದಿದ್ದಾನೆ. +ಯಾರನ್ನೋ ನಿರೀಕ್ಷಿಸುವಂತೆ ಎಡಕ್ಕೂ ಬಲಕ್ಕೂ ನೋಡುತ್ತಿದ್ದಾನೆ. +ಅಷ್ಟರಲ್ಲಿ ತರುಣಿಯೊಬ್ಬಳು ಕುದುಯೆಡೆಗೆ ಓಡಿ ಬಂದು ಕೈನೀಡುತ್ತಾಳೆ. +ಅವಳು ಬಾಸಿಂಗ ಕಟ್ಟಿ, ಒಡವೆ ತೊಟ್ಟು, ಮದುಮಗಳ ವೇಷದಲ್ಲಿದ್ದಾಳೆ. +ಸವಾರನು ಬಾಗಿ ಅವಳನ್ನೆತ್ತಿ ತನ್ನ ಮುಂದೆ ಕುದುರೆಯ ಮೇಲೆ ಕೂರಿಸಿಕೊಂಡೊಡನೆ ಕುದುರೆ ಹಾಸುಬಂಡೆಯ ಮೇಲೆ ಖುರಪುಟ ಧ್ವನಿಯೇಳುವಂತೆ ಚಿಮ್ಮಿ ನೆಗೆದು ಓಡಿ ಕಣ್ಮರೆಯಾಗುತ್ತದೆ. +ಅದುವರೆಗೆ ಸುಮ್ಮನೆ ಮಲಗಿದ್ದ ಹುಲಿಯ ಕಟ್ಟಿದ್ದ ಬಳ್ಳಿ ಹರಿದು ಹೋಯಿತೆಂಬಂತೆ ಜಗ್ಗಿಸೆಳೆಯುತ್ತಾ ಭಯಂಕರವಾಗಿ ಕುದುರೆ ಓಡಿದತ್ತ ಮೋರೆಯಾಗಿ ಬೊಗಳುತ್ತಿದೆ. +ಒಂದು ಕ್ಷಣಾರ್ಧದಲ್ಲಿ ಎಂಬಂತೆ ನಡೆದುದೆಲ್ಲವನ್ನೂ ಕಣ್ಣು ಬಿಟ್ಟೂಕೊಂಡೆ ಕಂಡಿದ್ದ ತಿಮ್ಮಿ ದಿಙ್ಮೂಢಳಾಗಿ ಗತಗತ ನಡುಗುತ್ತಾ ಕುಳಿತಿದ್ದಾಳೆ! +ಹಿಂದೆ ಈ ಹುಲಿಕಲ್ಲು ನೆತ್ತಿಯ ಕಲ್ಲುಮಂಟಪವು ನಗರ ಸಂಸ್ಥಾನದ ಸೈನ್ಯದ ಕಾವಲ್ದಾಣವಾಗಿದ್ದಾಗ ನಡೆದಿದ್ದ ಯಾವುದಾದರೂ ಒಂದು ಘಟನೆ ಆ ಗಿರಿಮಸ್ತಕದ ಪ್ರಾಣಮಯ ಸೂಕ್ಷ್ಮಪೃಥ್ವೀತತ್ವದಲ್ಲಿ, ಅದಕ್ಕೆ ಸಂವಾದಿಯಾಗುತ್ತಿದ್ದ ಪ್ರಾಣಿ ಸದೃಶಸಂಸ್ಕಾರದ ಅಬುದ್ಧಿಜೀವಿ ತಿಮ್ಮಿಯ ಪ್ರಾಣಮಯ ಸ್ವಪ್ನಪ್ರಜ್ಞೆಯ ಪ್ರಭಾವದಿಂದ, ಪುನಃಸ್ಮೃತಿಯಾಗಿ ಆವಿರ್ಭವಿಸಿ ಅವಳಿಗೆ ದೃಗ್ಗೋಚರವಾಯಿತೋ? +ಅಥವಾ ಚಿನ್ನಮ್ಮ ಮುಕುಂದಯ್ಯರ ಜನ್ಮಾಂತರ ಸಂಬಂಧದ ಘಟನೆಯೊಂದು ಅವರನ್ನು ಕುರಿತೆ ನೆನೆಯುತ್ತಿದ್ದ ತಿಮ್ಮಿಯ ಅರ್ಧಜಾಗ್ರತ್ ಪ್ರಜ್ಞೆಯಲ್ಲಿ ಪ್ರತಿಮಿತವಾಗಿ ಕಾಣಿಸಿಕೊಂಡಿತೋ? +ಅಥವಾ ಕಳೆದ ರಾತ್ರಿ ಅವಳ ಗಂಡ, ಒಡೆಯರ ಮನೆಯಲ್ಲಿ ಅಡಕೆ ಸುಲಿತದ ಸಮಯದಲ್ಲಿ ರಾತ್ರಿಯೆಲ್ಲಾ ಕೆಲಸಮಾಡಬೇಕಾಗಿ ಬಂದಾಗ ಬೇಸರ ಪರಿಹಾರಕ್ಕಾಗಿ ಯಾರಾದರೊಬ್ಬರು ಸರದಿಯ ಮೇಲೆ ಹೇಳುತ್ತಿದ್ದ ಸರಗತೆಯನ್ನು ತಾನು ಕೇಳಿದ್ದು, ಅದನ್ನು ಅವಳಿಗೆ ಹೇಳಿದ್ದುದರ ಪರಿಣಾಮವೋ? +ಅಂತೂ ತಾನು ಕಣ್ಣು ತೆರೆದಿದ್ದಾಗಲೆ ಕಾಣಿಸಿಕೊಂಡಿದ್ದ ಆ ರಣತೇಜಿಯನ್ನೂ ಆ ಸಮರಸಜ್ಜಿತ ಧೀರಭಂಗಿಯ ಅಶ್ವಾರೋಹಿಯನ್ನೂ ಅವನೆಡೆಗೆ ಧಾವಿಸಿ ಬಂದು ಅವನ ಕೈ ಹಿಡಿದು ಚಂಗನೆ ಕುದುರೆಯೇರಿದ್ದ ಆ ಸಾಲಂಕೃತ ವಧೂವೇಷದ ತರುಣಿಯನ್ನೂ ನೆನೆನೆನೆದು ತಿಮ್ಮಿ ಭಯಭ್ರಾಂತೆಯಾಗಿ ವಿಕಂಪಿಸುತ್ತಿದ್ದರೂ ಮರ ವಟ್ಟಂತೆ ಕುಳಿತಿದ್ದಳು! +ಕತ್ತಲೆಯಲ್ಲಿ ಕಲ್ಲುಮಂಟಪದೊಳಕ್ಕೆ ಬರುತ್ತಿದ್ದವನು ತನ್ನ ಒಡೆಯ ಎಂಬುದನ್ನರಿಯುವ ಮುನ್ನ ಹುಲಿಯ ಒಂದೆರಡು ಸೊಲ್ಲು ಬೊಗುಳಿತು. +“ಏಈಈ!ಇದಕ್ಕೇನು ಇದ್ದೊಂದು ಒಕ್ಕಣ್ಣೂ ಇಂಗಿ ಹೋಗ್ಯಾದೇನ್ರೋ? +ಹಛೀ!” ಎನ್ನುತ್ತಾ ಗುತ್ತಿ ಒಳಗೆ ಬರಲು, ಹುಲಿಯ ಹಾರಿಹಾರಿ ಬಾಲವಳ್ಳಾಡಿ ಕುಂಯಿಗುಡುತ್ತಾ ಸ್ವಾಗತಿಸಿತು. +“ಏಈಈಈ!ಯಾಕೆ? +ಹಿಂಗೆ ಕೂತೀಯಾ?ಏನಾಗದೆಯೆ ನಿಂಗೆ?” ಗುತ್ತಿ ಮಂಕು ಬಡಿದವಳಂತೆ ಕೂತಿದ್ದ ತಿಮ್ಮಿಯ ಕಡೆಗ ಹೇಳುತ್ತಾ, ತನ್ನ ಕಂಬಳಿ ಕೊಪ್ಪೆಯನ್ನು ತೆಗೆದು ಕೊಡಹಿ, ಕಟ್ಟಿದ್ದ ತಟ್ಟಿಯ ಮೇಲೆ ಒಣಗಲು ಹರಡಿದನು. +ಗಾಳಿ ಮಳೆಗಳಲ್ಲಿ, ಹಳುವಿನ ಹನಿಯಲ್ಲಿ, ಒದ್ದೆಯಾಗಿ ಚಳಿ ಹತ್ತಿದ್ದ ಮೈಯನ್ನು ಬೆಚ್ಚಗೆ ಮಾಡಿಕೊಳ್ಳಲು, ಉರಿಯುತ್ತಿದ್ದ ಕುಂಟೆಯ ಕೆಂಡವನ್ನು ಕೆದಕಿ, ಇನ್ನಷ್ಟು ಜಿಗ್ಗು ಅಡಕಿ, ಬೆಂಕಿ ಕಾಯಿಸಿಕೊಳ್ಳಲು ನೆಲಕೆ ಅಂಡೂರಿ ಕುಳಿತ ಗುತ್ತಿ ಮತ್ತೊಮ್ಮೆ ಹೆಂಡತಿಯ ಕಡೆ ನೋಡಿದನು. +ತಿಮ್ಮಿ ನೀರವವಾಗಿ ಅಳುತ್ತಿದ್ದಳು. +“ಏಈಈ!ಏನಾಗದೆಯೆ ನಿಂಗೆ? +ಅಳಾಕೆ?” ಈ ಸಾರಿ ಗುತ್ತಿಯ ಪ್ರಶ್ನೆ ಅಲಘು ಧ್ವನಿಯಿಂದಲೆ ಹೊಮ್ಮಿತ್ತು. +“ನಾ ಹೇಳ್ಳಿಲ್ಲೇನು, ನನ್ನೊಬ್ಬಳ್ನೇ ಬಿಟ್ಟುಹೋಗಬ್ಯಾಡಾ ಅಂತಾ?” ಅಳುದನಿಯಿಂದಲೆ ಹೇಳುತ್ತಾ ತಿಮ್ಮಿ ಗುತ್ತಿಯ ಕಡೆ ನಿಷ್ಠುರದೃಷ್ಟಿ ಬೀರಿದಳು. +“ಈಗೇನಾಯ್ತು ಬಿಟ್ಟುಹೋದ್ರೆ? …. +ಒಬ್ಬಳೆ ಆಗ್ತೀಯಾ ಅಂತಾ ಹುಲಿಯನ್ನ ಬ್ಯಾರೆ ಕಟ್ಟಿಹಾಕಿ ಹೋಗೀನೀ!? …. ” +“ಈ ಗುಡ್ಡದ ನೆತ್ತೀಲಿ ನಾವಿನ್ನಿರೋದು ಬ್ಯಾಡ! +ಏನೇನೋ ತಿರುಗ್ತವೆ! …. ” +“ಕಾಡಿನ ಪರಾಣಿ ಕಾಡಿನಲ್ಲಿ ತಿರುಗಬಾರ್ದೇನು? +ಹುಲಿ, ಹಂದಿ, ಕಡ, ಮಿಗ, ಹಾವು, ಚೇಣು? +ನಮಗೇನು ಮಾಡ್ತವೆ ಅವು? …. +ಚಿನ್ನಕ್ಕನ್ನ ಬ್ಯಾರೆ ಕರಕೊಂಡು ಬರ್ತಾರೆ, ಇವೊತ್ತೆ ಇಳ್ಳು!” +“ಕಾಡಿನ ಪರಾಣಿ ಅಲ್ಲ, ನಾ ಕಂಡಿದ್ದು….” +“ಮತ್ತೆ? …. ” ಗುತ್ತಿಯ ದನಿಯಲ್ಲಿ ಅಚ್ಚರಿಯಿತ್ತು. +ಉರಿಗೆ ಜಿಗ್ಗು ಹಾಕುತ್ತಿದ್ದುದನ್ನು ನಿಲ್ಲಿಸಿ, ಹೆಂಡತಿಯ ಕಡೆ ನೋಡತೊಡಗಿದನು. +ತಿಮ್ಮಿ ತಾನು ಕಂಡದ್ದನ್ನು ತನಗೆ ಸಾಧ್ಯವಾದ ರೀತಿಯಿಂದ ಬಣ್ಣಿಸಿದಳು. +ಗುತ್ತಿಯ ಎದೆಯಲ್ಲಿ ಏನೋ ಒಂದು ತರಹ ಆಗುತ್ತಿದ್ದರೂ ಅದನ್ನು ತೋರಗೊಡದ ಗಂಡುಭಂಗಿಯಲ್ಲಿ ಕೇಳಿದನು. + “ಕುಗುರ್ತಿದ್ಯೋ?ಕಣ್ಣು ಬಿಟ್ಕೊಂಡಿದ್ಯೋ? +ಕನಸಿನಾಗೆ ಕಂಡಿದ್ದನ್ನ ಕಣ್ಣುಬಿಟ್ಟುಕೊಂಡು ಕಂಡೆ ಅಂತಾ ಮಾಡಿಕೊಂಡೀಯ! …. ” +“ಹಾಂಗಾರೆ ಹುಲಿಯನೂ ಕನಸಿನಾಗೇ ಕಂಡ್ತೇನು? +ಹ್ಯಾಂಗೆ ಬೊಗಳ್ತು, ಅರೆಕಲ್ಲಿನ ಮ್ಯಾಲೆ ಕುದ್ರೆ ಕಟಕಟಗುಡೀತಾ ಓಡ್ದಾಗ? …. ” +“ನಮಗೆ ಯಾರಿಗೂ ಇಷ್ಟು ದಿನ ಕಾಣಿಸಿಕೊಳ್ಳದೆ, ರಾಜಕುಮಾರ ನಿಂಗೊಬ್ಬಳಿಗೇ ಕಾಣಿಸಿಕೊಂಡನೋ? +ಚೆಂದುಳ್ಳಿ ಹೆಣ್ಣು ಅಂತಾ? +ಬಿಡು ಬಿಡು, ಬರೀ ಬಿರಾಂತು ಕಣೇ, ನಿನ್ದು! …. ”ಬಾಯಲ್ಲಿ ತಿರಸ್ಕಾರವಿದ್ದರೂ ಗುತ್ತಿಗೆ ಮನಸ್ಸಿನಲ್ಲಿ ತಿರಸ್ಕರಿಸಲಾಗಲಿಲ್ಲ. +ಹುಲಿಕಲ್ಲು ನೆತ್ತಿಯಲ್ಲಿ ರಾತ್ರಿ ತಂಗಿದ್ದಾಗಲೆಲ್ಲ ಅವನಿಗೆ ಏನೇನೊ ವಿಚಿತ್ರ ಶಬ್ದಗಳು ಕೇಳಿಸುತ್ತಿದ್ದುದುಂಟು! +ಮನುಷ್ಯಾತೀತಿ ಶಕ್ತಿಗಳು ಇಂತಹ ಗುಡ್ಡದ ನೆತ್ತಿಗಳಲ್ಲಿ ಸಂಚರಿಸುತ್ತವೆ ಎಂಬುದನ್ನೂ ಅವನು ಅನೇಕರಿಂದ ಕೇಳಿ ನಂಬಿದ್ದನು. +ಅಲ್ಲಿಂದ ಹೊರಟುಬಿಡಬೇಕು ಎಂಬ ತಿಮ್ಮಿಯ ಭಯಪ್ರೇರಿತವಾದ ಸೂಚನೆಗೆ ಗುತ್ತಿಯ ಮನದಲ್ಲಿ ಮೆಲ್ಲನೆ ಸಹಾನುಭೂತಿ ಸಂಚರಿಸಿತೊಡಗಿತು. +ಆದರೆ ತಟ್ಟಕ್ಕನೆ ಹೋಗುವುದಾದರೂ ಹೇಗೆ? +ಭಯಂಕರ ಮಳೆಗಾಲದಲ್ಲಿ ಹೋಗುವುದಾದರೂ ಎಲ್ಲಿಗೆ? +ಸಿಂಬಾವಿ ಕೇರಿಗೆ ಎರಡು ವರ್ಷ ಬರಬಾರದು; +ತಲೆಮರೆಸಿಕೊಂಡಿರು ಎಂದು ಒಡೆಯರು ಎಚ್ಚರಿಕೆ ಇತ್ತಿದ್ದಾರೆ! +ಬೆಟ್ಟಳ್ಳಿ ಕೇರಿಯಂತೂ ತಿಮ್ಮಿಯನ್ನು ಹಾರಿಸಿಕೊಂಡು ಬಂದಿರುವ ತನಗೆ ವಿಷಪ್ರಾಯ! +ತಿಮ್ಮಿ ಅಲ್ಲಿಗೆ ಇನ್ನೆಂದೂ ಕಾಲಿಡುವುದಿಲ್ಲವೆಂದೂ, ಅದಕ್ಕೆ ಬದಲಾಗಿ ’ಪರಾಣ ತೆಗೆದುಕೊಂಡು ಬಿಡುತ್ತೇನೆ’ ಎಂದೂ ನಿಶ್ಚಯಿಸಿದ್ದಾಳೆ! +ಅಲ್ಲದೆ ಮುಕುಂದಯ್ಯ ಗೌಡರು ಧೈರ್ಯ ಕೊಟ್ಟಿದ್ದರಿಂದಲೆ ತಾನು ತನ್ನ ಹೆಂಡತಿಯೊಡನೆ, ಅವರಿಗೆ ಆವಶ್ಯಕವಾಗುವಷ್ಟು ಕಾಲ, ಹುಲಿಕಲ್ಲು ನೆತ್ತಿಯ ಕಲ್ಲುಮಂಟಪದಲ್ಲಿದ್ದುಕೊಂಡು, ಅದನ್ನು ತುಸು ನಿವಾಸಯೋಗ್ಯವನ್ನಾಗಿ ಮಾಡಿ, ಹೂವಳ್ಳಿ ಚಿನ್ನಕ್ಕನನ್ನು ಕೆಲವುಕಾಲ ಅಡಗಿಸಿಡಲು ನೆರವಾಗುವುದಾಗಿ ಮಾತುಕೊಟ್ಟಿದ್ದಾನೆ! +ಅವರನ್ನು ಅಲ್ಲಿಗೆ ಕರೆದುಕೊಂಡು ಬರುವ ದಿನವೇ ಇವನು ಹೊರಡುವ ಯೋಚನೆ ಮಾಡಿದರೆ ಉಂಡಮನೆಗೆ ಎರಡು ಬಗೆದ ಕಡುಪಾಪಿಯಾಗುತ್ತಾನೆ! +ಛೆ ಎಲ್ಲಾದರೂ ಉಂಟೆ? +ಆ ಆಲೋಚನೆಯ ದಾರಿಯನ್ನೇ ಅಳಿಸಿಬಿಡುವ ರೀತಿಯಲ್ಲಿ ಗುತ್ತಿ ತಿಮ್ಮಿಯ ಕಡೆಗೆ ಮುಖ ತಿರುಗಿಸಿ. +“ಯಾಕೇ?ಮಾತಾಡ್ದೆ ಸುಮ್ನೆ ಕೂತುಬಿಟ್ಯೆಲ್ಲಾ? …. ” +“ನೀವು ಯಾಕೆ ಸುಮ್ನೆ ಕೂತಿದ್ದು? +ಅದ್ಕೆ ನಾನೂ ಕೂತಿದ್ದು!” +“ಹಾಂಗಲ್ಲ; ಮೂರು ಹೊತ್ತೂ ಬಾಯಿ ಹನಾಹನಾ ವಟಗುಟ್ಟೋಳು ಸುಮ್ನೆ ಕೂತ್ಯೆಲ್ಲಾ ಅಂತಾ ಕೇಳ್ದೆ….” +ಗಂಡನ ವಿಡಂಬನೆಯ ಚುಚ್ಚನ್ನು ಗಮನಿಸದೆ ತಿಮ್ಮಿ ವಿಷಣ್ಣ ಭಾವದಿಂದ ಉತ್ತರಿಸಿದಳು. + “ಮಳೆ ಹುಯ್ತಿತ್ತಲ್ಲಾ, ಗಾಳೀ ಭೋರಾಟ ಆಲೈಸ್ತಾ ಕೂತಿದ್ದೆ….” + “ಇದೆಲ್ಲ ಪೂರೈಸಿದ ಮ್ಯಾಲೆ ಮುಂದೇನು ಮಾಡೋದು? +ಯೋಚ್ನೆ ಮಾಡೀಯೇನು? …. ” +“ಸಿಂಬಾವಿ ಕೇರಿಗೆ ಹೋಗಾದು, ಮಾವನ ಮನೀಗೆ.” +“ಹೆಗ್ಗಡೇರು ಹೇಳ್ಯಾರೆ, ಈಗ ಬರಬ್ಯಾಡ ಕೇರೀಗೆ ಅಂತಾ…. +ಈ ಪೋಲೀಸಿನೋರ್ದೆಲ್ಲ ತಣ್ಣಗೆ ಆದಮ್ಯಾಲೆ ಬಾ ಅಂದ್ರು.” +“ಕೋಣೂರು ಸಣ್ಣಯ್ಯ ಮನ್ನೆ ಹೇಳಿದ್ರಲ್ಲಾ? +ಅದೆಲ್ಲಾ ತಣ್ಣಗೆ ಆದ್ಹಾಂಗೆ ಅಂತಾ. +ಈ ಇಜಾರದ ಸಾಬಿಗೆ ಗುಣಾಗಿ ಅವನೂರಿಗೆ ಹೋದ ನಂತೆ! …. ” +“ನೋಡು, ಅದೆಲ್ಲ ಪೋಲೀಸಿನವರು ಹುಟ್ಟಿಸಿರುವ ಉಪಾಯ. +ನಾನು ಕೇರಿಗೆ ಹೋದಕೂಡ್ಲೆ ಮತ್ತೆ ಹಿಡುಕೊಳ್ಳಾಕೇ ಈ ಕತೆ ಹುಟ್ಟಿಸ್ಯಾರೆ….” +“ಮತ್ತೇನು ಮಾಡಾನ? …. ” +“ಮುತ್ತೂರು ಸೀಮೆ ಕಡೆ ಹೋಗಾನ…. +ಯಾರಿಗೂ ಗುರುತು ಗೊತ್ತಾಗದ ಹಾಂಗೆ ಆರು ತಿಂಗಳೋ ವರ್ಷಾನೋ ಇದ್ದು ಬಿಡಾನ…. +ಆಮ್ಯಾಲೆ ಏನು ಎತ್ತ ಅಂತ ಸಂಗ್ತಿ ಇಚಾರ್ಸಿ, ಸಿಂಬಾವಿ ಕೇರಿಗೇ ಬಂದರಾಯ್ತು…. +ನೀ ಏನು ಹೇಳ್ತೀಯಾ? …. +ನಾನೇನೋ ಒಂದು ಹರು ನೆನೆದ್ದೀನಿ. +ಮೇಗ್ರೊಳ್ಳಿ ಕಡೆಯಿಂದ ತೀರ್ಥಳ್ಳಿ ಮೇಲಾಸಿ ಹೊಳೆದಾಟಿ ಹೋಗುವ ಗಟ್ಟದ ತಗ್ಗಿನವರು ಸಿಗ್ತಾರೆ. +ಅವರ ಸಂಗಡ ನಾವು ಗಟ್ಟದ ತಗ್ಗಿನವರ ಹಾಂಗೆ ಮಾಡಿಕೊಂಡು, ತೀರ್ಥಳ್ಳಿ ದೋಣಿಗಂಡೀಲಿ ಹೊಳೆದಾಟಿ ಬಿಟ್ರೆ, ನಮ್ಮನ್ಯಾರೂ ಮೂಸಿ ನೋಡೂದಿಲ್ಲ ಆ ಮ್ಯಾಲೆ….” +“ಥೂ!ನನ್ನಿಂದ ಆಗಾದಿಲ್ಲ, ಆ ಹಸಲೋರು ಕರಾದೇರು ಬಿಲ್ಲೋರು ಉಟ್ಹಂಗೆ ಸೀರೆ ಉಡಾಕೆ! …. ” +“ಒಂದೆರಡು ದಿನ ಹಾಂಗೆ ಉಟ್ಟುಕೊಂಡ್ರೆ ನಿಂಗೇನು ಜಾತಿ ಹೋಗ್ತದಾ? …. ’“ಊಞ್ ಹ್ಞು! +ನೀವೇನು ಮಾಡಾಕೆ  ಹೇಳುದ್ರೂ ಮಾಡ್ತೀನಿ, ಅದೊಂದು ಮಾತ್ರ ನನ್ನಿಂದ ಆಗಾದಿಲ್ಲ. +ನಾ ಯಾವಾಗ್ಲೂ ಗೊಬ್ಬೆ ಸೆರಗು ಹಾಕ್ಯೀ ಸೀರೆ ಉಡಾದು! …. ” +“ಅದ್ಕೇ ಹೇಳಾದು, ನೀನು ’ಮಂಡೀ’ ಅಂತಾ…. +ನಾ ಹೇಳ್ದ ಹಂಗೆ ನೀ ಕೇಳೂದಾದ್ರೇ ನನ್ನ ಸಂಗಡ ಬಾ…. +ಇಲ್ದಿದ್ರೆ ಎಲ್ಲಿಗೆ ಹೋಗೀಯೊ ಹೋಗು, ನಿನ್ನ ಅಪ್ಪನ ಮನೀಗೆ! …. ” +“ನನ್ನೆಲ್ಲಾದ್ರೂ ಕೆರೀಗೋ ಬಾಂವಿಗೋ ಹಾಕಿ ಹೋಗಿ! +ನನ್ನ ಕಂಡ್ರೆ ನಿಮಗೆ ಯಾವಾಗ್ಲೂ ಸಸಾರ! …. +ಬೇಕಾದಾಗ ಮಾತ್ರ ಹೆಂಗೆ ಬಾಲ  ಅಲ್ಲಾಡಿಸ್ಕೊಂಡು ಉಪಚಾರ ಮಾಡ್ತಾ ಬರ್ತಾರೆ! …. ” ತಿಮ್ಮಿ ತಟಕ್ಕನೆ ಬಿಕ್ಕಿ ಬಿಕ್ಕಿ ಅಳತೊಡಗಿದಳು. +“ಮತ್ತೆ ಸುರು ಮಾಡ್ದೆಲ್ಲಾ ನಿನ್ನಾಟಕ್ಕೆ!ಹ್ಞ? +ನಾನೇನು ನಿನ್ನ ಬಿಟ್ಟೇಹೋಗ್ತೀನಿ ಅಂತಾ ಹೇಳಿದನೇನೆ? …. ” + ಗುತ್ತಿ ಮಂಟಪದ ಒಂದು ಮೂಲೆಯ ಕಡೆಗೆ ಕಣ್ಣಾಗಿ ಬೊಗಳತೊಡಗಿದ್ದ ಹುಲಿಯನ ಕಡೆಗೂ ನೋಡಿದವನೆ ಚಂಗನೆ ಎದ್ದು ಒಂದು ಬಿದಿರಿನ ದೊಣ್ಣೆಯನ್ನು ಹುಡುಕಿ ನುಗ್ಗಿದನು. +ತಿಮ್ಮಿ ಅಳುಗಿಳುವನ್ನೆಲ್ಲ ನಿಲ್ಲಿಸಿ, ನೆಗೆದೆದ್ದು ದೂರ ಓಡಿ ನಿಂತು ನೋಡಿದಳು, ಗುತ್ತಿ ಹೊಡೆಯುತ್ತಿದ್ದ ಒಂದು ಸರ್ಪನ ಹಾವನ್ನು! +ಸತ್ತ ಹಾವನ್ನು ದೊಣ್ಣೆಯ ತುದಿಯಲ್ಲಿ ಎತ್ತಿಕೊಂಡು ಹೋಗಿ ಹೊರಗೆ ಹಳುವಿನತ್ತ ಬೀಸಿ ಒಗೆದು ಬಂದು ಮತ್ತೆ ಮೊದಲಿನಂತೆ ಚಳಿಕಾಯಿಸುತ್ತಾ  ಕುಳಿತನು. +ತಿಮ್ಮಿಯೂ ಹತ್ತಿರವೆ ಬಂದು ಕುಳಿತಳು. +ಮಳೆ ಜೋರಾಗಿ ಚಳಿ ಹೆಚ್ಚಿದಂತೆಲ್ಲ ಬೆಚ್ಚನೆ ಜಾಗವನ್ನು ಹುಡುಕಿಕೊಂಡು ಬರುತ್ತಿದ್ದ ಹಾವುಗಳನ್ನು ಹೊಡೆದು ಹೊಡೆದು ಅಭ್ಯಾಸವಾಗಿ ಹೋಗಿದ್ದ ಅವರಿಗೆ ಆ ಘಟನೆ ಒಂದು ವಿಶೇಷವಾಗಿರಲಿಲ್ಲ. +ಅದನ್ನು ಕುರಿತು ಅವರು ಪ್ರಸ್ತಾಪಿಸಲೂ ಇಲ್ಲ. +ರಾತ್ರಿ ಸ್ವಲ್ಪ ಹೊತ್ತಾದ ಮೇಲೆ ಇಬ್ಬರೂ ತಂಗಳುಂಡು, ಕೊರಳು ಬಿಚ್ಚಿದ ಹುಲಿಯನಿಗೂ ಒಂದಷ್ಟು ಹಾಕಿ, ’ನಂದಾಬೆಂಕಿ’ ಕಾವಿನ ವಲಯದಲ್ಲಿಯೆ ಕಂಬಳಿ ಸುತ್ತಿಕೊಂಡು ಉರುಡಿದರು. +ತಿಮ್ಮಿ ಗೊರಕೆ ಹೊಡೆಯತೊಡಗಿದಳು. +ಗುತ್ತಿಗೂ ಆ ದಿನವೆಲ್ಲ ಗುಡ್ಡವೇರಿ ಇಳಿದು ಕೆಲಸಮಾಡಿದ್ದ ದಣಿವಿನಿಂದ ರೆಪ್ಪೆ ಭಾರವಾಗಿ ನಿದ್ದೆ ಬರತೊಡಗಿತ್ತು. +ಈಗಲೊ ಆಗಲೊ ಚಿನ್ನಕ್ಕನನ್ನು ಕರೆದುಕೊಂಡು ಬಂದುಬಿಡಬಹುದು ಎಂದು ಎಚ್ಚರವಾಗಿಯೆ ಇರಲು ಬಹಳ ಪ್ರಯತ್ನ ಪಡುತ್ತಿದ್ದನು. +ಅಲ್ಲದೆ ತಾವು ಬರುವುದು ಬಹಳ ತಡವಾದರೆ ಯೆಂಕಿಯ ಮನೆಯ ಬಳಿಗೆ ಬರುವಂತೆ ಸೂಚಿಸಿದ್ದನು ಮುಕುಂದಯ್ಯ. +ಏನು ಮಾಡಿದರೂ ಅವನ ಕೈಯಲ್ಲಾಗದೆ ಅಂತೂ ಕಡೆಗೆ, ಕಣ್ಣು  ಸೋತು, ರೆಪ್ಪೆ ಮುಚ್ಚಿ, ಗುತ್ತಿಯೂ ನಿದ್ದೆ ಮಾಡಿಬಿಟ್ಟನು. +ಕೆಟ್ಟ ಕನಸೊಂದರಿಂದ ನಿದ್ದೆಯ ಗುಳ್ಳೆಯೊಡೆದಂತಾಗಿ ತೆಕ್ಕನೆ ಎಚ್ಚರಗೊಂಡ ಗುತ್ತಿ ಎದ್ದು ಕುಳಿತು, ಕಣ್ಣುಜ್ಜಿಕೊಂಡು, ಸುತ್ತಲೂ ನೋಡಿದನು. +ಮಳೆ ಹೊಳವಾಗಿತ್ತು, ಹೊರಗೆ ಕಗ್ಗತ್ತಲು ಕವಿದಿತ್ತು. +ಬೆಂಕಿಯ ಉರಿ ಆರಿದ್ದರೂ ಹೆಗ್ಗುಂಟೆಗಳಲ್ಲಿ ಕೆಂಡ ನಿಗಿನಿಗಿ ಝಗಿಸುತ್ತಿತ್ತು. +ಗಾಳಿ ಭೋರೆಂದು ಬೀಸುತ್ತಿದ್ದು, ಮಂಟಪದ ಕಲ್ಲುಗೋಡೆಯ ಬಿರುಕುಗಳಲ್ಲಿ ಸಿಳ್ಳು ಹಾಕುತ್ತಿತ್ತು. +ಹೊರಗೆ ಕಣ್ಣು ಹಾಯಿಸಿದಾಗ ಅಲ್ಲಲ್ಲಿ ಮಿಣುಕು ಹುಳುಗಳ ಚಿಕ್ಕ ಚಿಕ್ಕ  ಹಿಂಡು ಮಿಂಚಿ ಮರೆಯಾಗುತ್ತಿದ್ದು, ಕತ್ತಲೆಯನ್ನು ಇನ್ನೂ ಕಡುಗತ್ತಲೆಯನ್ನಾಗಿ ಮಾಡಿ ತೋರಿಸುವಂತಿತ್ತು. +ಬೂದಿಗುಡ್ಡೆಯಲ್ಲಿ ಎದ್ದು ಕುಳಿತಿದ್ದ  ಹುಲಿಯ ಮುಂಗಾಲೂರಿ ಹಿಂಗಾಲಿನಿಂದ ಕಿವಿಯ ಬುಡದ ಕುತ್ತಿಗೆಯನ್ನು ಕೆರೆದುಕೊಳ್ಳುತ್ತಿತ್ತು. +ತಿಮ್ಮಿ ಗಾಢನಿದ್ರೆಯಲ್ಲಿದ್ದು ಮುಗ್ಧಭಂಗಿಯಲ್ಲಿ ಮಲಗಿದ್ದಳು. +ತುಸು ಕೆಳಕ್ಕೆ ಓಸರಿಸಿದ್ದ ಕಂಬಳಿಯನ್ನು ಅವಳಿಗೆ ಸರಿಯಾಗಿ ಹೊದಿಸಿ, ಇಣುಕುವಂತಿದ್ದ ನಾಣಿನ ವಲಯವನ್ನು ಮುಚ್ಚಿದನು. +ರಾತ್ರಿ ಎಷ್ಟು ಹೊತ್ತಾಗಿದೆಯೋ, ತಾನು ಎಷ್ಟು ಹೊತ್ತು ಮಲಗಿದ್ದನೋ ಗುತ್ತಿಗೆ ಸ್ವಲ್ಪವೂ ಅಂದಾಜಾಗಲಿಲ್ಲ. +ಇಷ್ಟು ಹೊತ್ತಿಗಾಗಲೆ ಚಿನ್ನಕ್ಕನನ್ನು ಕರೆದುಕೊಂಡು ಬರಬೇಕಾಗಿತ್ತಲ್ಲ? +ಯಾಕೆ ಇನ್ನೂ ಬರಲಿಲ್ಲ? +ಮದುವೆ ನಡೆದೇಹೋಯಿತೋ ಏನೋ? +ತನ್ನ ಒಡೆಯರ ಆಸೆ ನೆರವೇರಿದುದಕ್ಕಾಗಿ ಗುತ್ತಿಯ ಮನದಲ್ಲಿ ಗೆಲುವಿನ ಸೂಚನೆ ತಲೆಯೆತ್ತಿತ್ತಾದರೂ ಮರುಕ್ಷಣದಲ್ಲಿಯೆ ಅವನ ಸಮಸ್ತ ಆಕಾಂಕ್ಷೆಯೂ ಮುಕುಂದಯ್ಯ ಚಿನ್ನಮ್ಮರ ಪರವಾಗಿ ಸಾವಿರ ಹೆಡೆಗಳನ್ನೆತ್ತಿ ನಿಂತಿತು. +ತನ್ನ ಮತ್ತು ತಿಮ್ಮಿಯ ಗೆಲುವಿನಷ್ಟೆ ಆವಶ್ಯಕವೂ ಮುಖ್ಯವೂ ಆಗಿ ಕಂಡಿತು, ಮುಕುಂದಯ್ಯ ಚಿನ್ನಮ್ಮರ ಗೆಲುವು. +ತಾವು ಬರುವುದು ಹೊತ್ತಾದರೆ, ತನ್ನನ್ನು ಯೆಂಕಮ್ಮನ ಮನೆಯ ಹತ್ತಿರಕ್ಕೆ ಬರುವಂತೆ ಹೇಳಿದ್ದುದು ನೆನೆಪಿಗೆ ಬಂದು, ಗುತ್ತಿ ಕರ್ತವ್ಯಕಾತರನಾದವನಂತೆ ಝಗ್ಗನೆ ಎದ್ದು ನಿಂತನು. +ಮಲಗಿ ನಿದ್ರಿಸುತ್ತಿದ್ದ ಹೆಂಡತಿಯ ಕಡೆ ನೋಡಿದನು. +ಹುಲಿಯನನ್ನು ಗೂಟಕ್ಕೆ ಕಟ್ಟಿ ಹಾಕಿ, ತಿಮ್ಮಿಯನ್ನು ಎಚ್ಚರಗೊಳಿಸುವ ಗೋಜಿಗೆ ಹೋಗದೆ…. +ಛೆ ಛೆ ಎಲ್ಲಿಯಾದರೂ ತಾನು ಹೋದಮೇಲೆ ಅವಳಿಗೆ ಎಚ್ಚರವಾಗಿ, ಪಕ್ಕದಲ್ಲಿ ನನಿಲ್ಲದುದನ್ನು ಕಂಡು ಕೂಗಿಕೊಂಡರೆ? +ಅವಳನ್ನು ಎಚ್ಚರ ಮಾಡಿಯೆ ಹೋಗುತ್ತೇನೆ…. +ಎದ್ದಮೇಲೆ ನನ್ನನ್ನು ಹೋಗಲು ಬಿಡುತ್ತಾಳೆಯೆ? +ಏನಾದರಾಗಲಿ, ನೋಡುತ್ತೇನೆ. +ಪ್ರಯತ್ನವೆ ಆಯಿತು, ತಿಮ್ಮಿಯನ್ನು ಜಾಗ್ರತ್ ಪ್ರಪಂಚಕ್ಕೆ ತರುವುದು! +“ಸಣ್ಣಯ್ಯೋರು ಬರಲಿಲ್ಲ, ಚಿನ್ನಕ್ಕನ್ನ ಕರಕೊಂಡು.’ಹೊತ್ತಾದ್ರೆ ಬಾ ಯೆಂಕಿ ಮನೆ ಹತ್ರಕ್ಕೆ.’ ಅಂತಾ ಹೇಳಿದ್ರು. +ನಾನೂ ನಿದ್ದೆ ಮಾಡಿಬಿಟ್ಟೆ! +ಈಗ ಎಷ್ಟ್ಹೊತ್ತಾಗದೆಯೋ ಏನೋ ಇಳ್ಳು? +ಒಂದೀಟು ಹೋಗಿ ನೋಡಿ ಬಂದು ಬಿಡ್ತೀನಿ…. +ನೀ ಏನೂ ಹೆದರಬ್ಯಾಡ, ಹುಲಿಯ ಇರ್ತದೆ.” +“ನಾ ಒಬ್ಬಳೆ ಇಲ್ಲಿರಾಕೆ ಖಂಡಿತಾ ನಾ ಒಲ್ಲೆ. +ನಾನೂ ಬತ್ತೀನಿ….” +“ಏನು ತಮಾಸೆ ಅಂತಾ ಮಾಡ್ದೇನೆ, ಕತ್ತಲಲ್ಲಿ ಕಾಡಿನಾಗೆ ಹೋಗಾದು? …. ” +“ಅವೊತ್ತು ಮಾತ್ರ ನಮ್ಮ ಕೇರಿಯಿಂದ ನನ್ನ ಹಾರಿಸಿಕೊಂಡು ಬರಾಕೆ ನಿಮಗೆ ಕತ್ತಲೇನೂ ಇರಲಿಲ್ಲ, ಕಾಡೂ ಇರಲಿಲ್ಲ! …. ”ಗುತ್ತಿ ಬೇಸ್ತು ಬಿದ್ದವನಂತೆ ಬಾಯ್ದೆರೆದು ನಿಂತು, ಏನು ಉತ್ತರಕೊಡಲಿ ಎಂದು ಯೋಚಿಸುತ್ತಿದ್ದವನಂತೆ ತೋರಿತು. +ಕೆಳಕ್ಕೆ ಬಿದ್ದು ಸಂಪೂರ್ಣವಾಗಿ ಸೋತಿದ್ದರೂ ಇನ್ನೂ ಕುಸ್ತಿಮಾಡುತ್ತಿದ್ದೇನೆಂದು ತೋರಿಸಿಕೊಳ್ಳಲು ಬರಿದೆ ಕೈಕಾಲು ಆಡಿಸುವ ಹುಡುಗನಂತೆ ಹೇಳಿದನು. +“ಏಈಈಈ!ನಿಂಗೇನು ತಮಾಸೆ ಆಗಿದಿಯಾ? +ಅವೊತ್ತೇನು ಇವೊತ್ತಿನ ಹಾಂಗ್ ಮಳೆಗಾಲ ಆಗಿತ್ತಾ? +ಏನು ಜಾರ್ತದೆ! …. ಇಂಬಳ! …. ಹಳ್ಳಬ್ಯಾರೆ ಬಂದಿರ್ತದೆ! +ಅವೊತ್ತಿನ ಹಾಂಗೆ ದೊಂದಿ ಹಿಡುಕೊಂಡು ಹೋಗಾಕಾದ್ರೂ ಆಗ್ತದೆಯಾ? …. ” +“ಅದೇನು ಬೆಣಕು ಕಾಣ್ತದೆ? +ಅಲ್ಲಿ ನೋಡಿ! +ಅವರೇ ಬಂದ್ರೊ ಏನೊ? …. ”ತಿಮ್ಮಿ ನೋಡುತ್ತಿದ್ದ ಕಾಡಿನ ದಿಕ್ಕಿಗೆ ಗುತ್ತಿಯೂ ನೋಡಿದನು. +ಹೌದು!ಬೆಳಕು!ಲಾಟೀನಿನ ಬೆಳಕೇ! +ಆದರೆ ಇಬ್ಬರೂ ನೋಡುತ್ತಿದ್ದಂತೆಯೆ ಬೆಳಕು ಸಂಪೂರ್ಣ ಮರೆಯಾಗಿ ಮೊದಲಿನಂತೆ ಕಗ್ಗತ್ತಲೆ ಕವಿಯಿತು. +ದಾರಿಯ ದಿಕ್ಕು ಬದಲಾಯಿಸಿದಾಗ ಹಳುವಿನಲ್ಲಿ ಲಾಟೀನು ಮರೆಯಾಯಿತೋ ಏನೋ ಎಂದು ಭಾವಿಸಿ ಗುತ್ತಿ ಮಂಟಪದ ಮುಂದೆ ಓರೆಯಾಗಿ ಇಳಿದಿದ್ದ ಕಲ್ಲರೆಯ ಮೇಲೆ ನಾಲ್ಕುಮಾರು ನಡೆದುಹೋಗಿ ಕಾಡಿನ ಕಡೆ ನೋಡಿದನು. +ಒಂದೆರಡು ನಿಮಿಷವಾದ ಮೇಲೆ, ಕವಿದಿದ್ದ ಕತ್ತಲೆಯ  ಹಳುವಿನಲ್ಲಿ ಮತ್ತೆ ಭಗ್ಗನೆ ಬೆಳಕು ಹೊತ್ತಿಕೊಂಡಂತಾಯಿತು! +ನೋಡುತ್ತಾನೆ. ಹಿಂಡುಗೊಂಡ ಸಾವಿರ, ಲಕ್ಷ, ಕೋಟಿ, ಕೋಟಿ ಮಿಣುಕು ಹುಳುಗಳು ಒಮ್ಮೆಯೆ ಮಿಂಚಿ, ಯಾವ ಲಾಟೀನೂ ಬೆಳಗಲಾರದಷ್ಟು ಪ್ರಕಾಶಮಾನವಾಗಿ, ಗಿಡ, ಮರ ಪೊದೆಯ ದಟ್ಟ ಹಳುವನ್ನು ಬೆಳಗುತ್ತಿವೆ! +ಹಾಂಗೆ ಗುಂಪು ಗುಂಪು ಮಿಣುಕು ಹುಳುಗಳು ಬೆಳಗುವುದನ್ನು ಗುತ್ತಿ ಎಷ್ಟೋ ಸಾರಿ ಕಂಡಿದ್ದನು. +ಆದರೆ ಆ ರಾತ್ರಿ ಅವನು ಕಂಡದ್ದನ್ನು ಅವನೇ ಕಾಣದಿದ್ದರೆ ಎಂದಿಗೂ ನಂಬಲು ಸಾಧ್ಯವಾಗುತ್ತಿರಲಿಲ್ಲ. +ಅಂತಹ ಪ್ರಮಾಣದಲ್ಲಿ ಅಷ್ಟು ಪ್ರಕಾಶಮಾನವಾಗಿತ್ತು ಅದು! +ಗುತ್ತಿ ಹಿಂದಕ್ಕೆ ಬಂದು ಬೆಂಕಿಯ ಬಳಿ ತಿಮ್ಮಿಗೆ ಸಮೀಪದಲ್ಲಿ ಕುಳಿತುಕೊಳ್ಳುತ್ತಾ ಹೇಳಿದನು, ತಾನು ಕಂಡಿದ್ದ  ಭವ್ಯಾದ್ಭುತ ದೃಶ್ಯದಿಂದ ಒಂದಿನಿತೂ ಪ್ರಭಾವಿತವಾಗದ ಪ್ರಜ್ಞೆಯಿಂದ, ನಿರಾಶಾಧ್ವನಿಯಲ್ಲಿ “ಏಈ ಲಾಟೀನು ಬೆಳಕಲ್ಲ ಏನೂ ಅಲ್ಲ; +ಹೊನ್ನೆ ಹುಳದ ಹಿಂಡ್ಹಿಂಡೇ ದೊಂದಿ ಬೀಸ್ತಿದ್ವು.”ತನ್ನ ಗಂಡ ತನ್ನನ್ನು ಒಬ್ಬಳನ್ನೆ ಬಿಟ್ಟು ಹೋಗುವುದಿಲ್ಲವೆಂದು ದೃಢಮಾಡಿಕೊಂಡ ತಿಮ್ಮಿ ಮೊದಲಿನಂತೆ ಉರುಡಿಕೊಂಡು, ಚೆನ್ನಾಗಿ ಕಣ್ಣು ಬಿಟ್ಟುಕೊಂಡೆ ಕಂಬಳಿ ಹೊದ್ದುಕೊಂಡಳು. +ಗುತ್ತಿ ಒಬ್ಬನೆ ಆ ಕತ್ತಲೆಯಲ್ಲಿ ಆ ಕಗ್ಗಾಡಿನಲ್ಲಿ ಆ ಮಳೆಯಲ್ಲಿ ಹೋಗದಿರುವಂತೆ ಮಾಡಲು, ನಿಜವಾಗಿಯೂ ತನಗಾಗಿಯೆ ತನಗಿದ್ದ ತನ್ನ ಹೆದರಿಕೆಯನ್ನು ತಿಮ್ಮಿ ಮುಂದುಮಾಡಿದ್ದಳಾದರೂ, ಅವಳ ಆ ಪ್ರಯತ್ನದಲ್ಲಿ ತನ್ನ ಗಂಡನಿಗೆ ಎಲ್ಲಿಯಾದರೂ ಅಪಾಯ ಒದಗೀತು ಎಂಬ ಮುನ್ನೆಚ್ಚರಿಕೆಯೂ ಪ್ರಚ್ಛನ್ನವಾಗಿತ್ತು. +ಗುತ್ತಿ ಬೆಂಕಿಯ ಹತ್ತಿರ ಕುಳಿತು ಯಾಂತ್ರಿಕವಾಗಿ ಕಟ್ಟಿಗೆಯ ತುಂಡುಗಳನ್ನು ಅದಕ್ಕೆ ಎಸೆಯುತ್ತಲೊ ಅಥವಾ ಕುಂಟೆಯ ಕೆಂಗೆಂಡಗಳನ್ನು ಕೆದುಕುತ್ತಲೊ ಇದ್ದನಾದರೂ ಅವನ ಮನಸ್ಸು ಏನೇನೊ ಭೀತಿಗಳನ್ನು ನೆನೆಯತೊಡಗಿತ್ತು. +“ಯಾಕೆ ಅವರಿನ್ನೂ ಬರಲಿಲ್ಲ? +ಕಾಡಿನಲ್ಲಿ ದಾರಿ ತಪ್ಪಿದರೇ? +ಅಷ್ಟು ಚೆನ್ನಾಗಿ ಹಳು ಸವರಿ ದಾರಿ ಮಾಡೀನಿ, ಹ್ಯಾಂಗೆ ತಪ್ತದೆ ದಾರಿ? +ಅವರೇ ಎಷ್ಟೋ ಸಾರಿ ಅದೇ ದಾರೀಲಿ ಓಡ್ಯಾಡಿಲ್ಲೇನು, ಚಾಪೆ, ಹಾಸಿಗೆ, ಸೀರೆ, ಕಂಬಳಿ, ಸಾಮಾನು ಎಲ್ಲ ತರಾಕೆ? …. ಅತೋರೆ,-” ಇದ್ದಕ್ಕಿದ್ದ ಗುತ್ತಿ ಬೆಚ್ಚಿಬಿದ್ದಂತಾದನು. + ಉಸಿರಾಟ ಜೋರಾಯಿತು. + ಕಣ್ಣು ಎವೆಯಿಕ್ಕುವುವುದನ್ನೂ ಮರೆತವೂ! + “ಅತೋರೆ,…. ಆ ವಾಟೆ ಹಕ್ಕಕ್ಕೆ ನೆರೆ ಬಂದು, ದಾಟುವಾಗ ಎಲ್ಲಿಯಾದರೂ….” ಆ ಭಯಂಕರವನ್ನು ನೆನೆಯಲಾರದೆ ಗುತ್ತಿ ತನ್ನ ಹೆಂಡತಿಯ ಕಡೆ ನೋಡಿ “ತಿಮ್ಮಿ, ತಿಮ್ಮಿ,” ಎಂದನು. +ತಿಮ್ಮಿಗೆ ಎಚ್ಚರವಾಗಲಿಲ್ಲ. +“ಎರಲಾರದು!” ಮುಂದುವರಿಯಿತು ಗುಂತಿಯ ಚಿಂತಾ ತರಂಗಿಣಿ. +“ಅಂತೋರೆ, ಆ ಹೂವಳ್ಳಿ ನಾಯಕರೇನು ಯಾವುದಕ್ಕೂ ಹೇಸೋರಲ್ಲ…. +ಆದರೆ ಅವರಿಗೆ ಕಾಯಿಲೆಯಾಗಿ ಏಳೋಕೆ ಆಗದೆ ಬಿದ್ದು ಕೊಂಡಾರಂತೆ! …. +ಛೇ, ಎಷ್ಟು ಹೊತ್ತಾಯ್ತೂ! +ಥೂ, ಹೊತ್ತೇ ಹೋಗೋದಿಲ್ಲ ಲ್ಲಪ್ಪಾ! …. ಈಗೇನು ಮಾಡ್ಲಿ? …. ” ಮತ್ತೆ ಗುತ್ತಿ ಕರೆದನು. +ತಿಮ್ಮಿ ಏ ತಿಮ್ಮಿ! +“ಕೈಚಾಚಿ ಮೆಲ್ಲನೆ ದೂಡಿ ಎಬ್ಬಿಸಿ ಅಂಗಲಾಚುವನಂತೆ ಹೇಳಿದನು. + “ಇಷ್ಟೊತ್ತಾದ್ರೂ ಬರ್ಲಿಲ್ಲಲ್ಲೇ! +ಹೋಗಿ ನೋಡಿಕೊಂಡಾರೂ ಬತ್ತೀನೆ! …. ” +ತಿಮ್ಮಿ ಎದ್ದು ಕೂತು ಗಂಡನೆಂದುದನ್ನು ಗ್ರಹಿಸಲು ಸ್ವಲ್ಪ ಸಮಯ ತೆಗೆದುಕೊಂಡಳು. +ಅವಳಿಗೂ ಸನ್ನಿವೇಶದ ಗುರುತ್ವ ಮನಸ್ಸಿಗೆ ತಟ್ಟಿತು. +“ನಾನೂ ಬತ್ತೀನಿ, ಹೋಗಾನ! +ಏನಾದ್ರೋ ಏನೋ? +ಯಾಕೆ ಬರಲಿಲ್ಲೋ? …. ”ಇಬ್ಬರೂ ಕಂಬಳಿಕೊಪ್ಪೆ ಹಾಕಿಕೊಂಡರು. +ಮಳೆ ಹೊಳವಾದುದನ್ನು ಕಂಡು ಒಂದು ದೊಂದಿಯನ್ನೂ ಹಚ್ಚಿಕೊಂಡರು. +ಬೆಂಕಿಗೆ ಇನ್ನಷ್ಟು ಸೌದೆ ಅಡಕಿದರು. +ತಟ್ಟಿ ಬಾಗಿಲನ್ನು ಓರೆಯಾಗಿಬಿಟ್ಟು ಮುಚ್ಚಿ ಕಲ್ಲುಮಂಟಪದಿಂದ ಹೊರಗೆ ಬಂದರು, ಹುಲಿಯನೂ ಕೂಡಿ. +“ಅದೇನು ಬೆಣಕು ಕಾಣ್ತದೆ ನೋಡಿ!” ತಿಮ್ಮಿ ದೂರದ ಹಳುವಿನ ಕಡೆ ನೋಡುತ್ತಾ ಹೇಳಿದಳು. +“ಹೊನ್ನೆ ಹುಳದ್ದೇ ಬೆಣಕಿರಬೈದು” ಉದಾಸೀನದಿಂದಾಡಿದನು ಗುತ್ತಿ. +ಆದರೆ ಹುಲಿಯ ಯಾವುದಾದರೂ ಪ್ರಾಣಿಯ ಸುಳಿವು ಗೋಚರವಾದಾಗ ಬೊಗಳುವ ರೀತಿಯಲ್ಲಿ ಕಟುವಾಗಿ ಬೊಗಳಿತು. +ಅಷ್ಟರಲ್ಲಿಯೆ ಕಾಡಿನ ಅಂಚಿನ ಪೊದೆಗಳ ನಡುವೆ ಕಲ್ಲರೆಯನ್ನು ಪ್ರವೇಶಿಸುತ್ತಿದ್ದ ಲಾಟೀನಿನ ಬೆಳಕು ಸ್ಪಷ್ಟವಾಗಿ ಕಾಣಿಸಿತು! +ನೋಡುತ್ತಿದ್ದಂತೆ ಮುಕುಂದಯ್ಯ ಚಿನ್ನಮ್ಮ ಪೀಂಚಲು ಐತ ನಾಲ್ವರ ಆಕಾರಗಳೂ ಕಾಲ್ನೆರಳುಗಳೂ ಕಲ್ಲುಮಂಟಪದತ್ತ ಏರಿ ಬಂದುವು. +ಗುತ್ತಿ ತಿಮ್ಮಿಯರಿಗೆ ಜೀವ ಬಂದಂತಾಯ್ತು! +ಬಂದ ನಾಲ್ವರೂ ಕಾಡಿನಲ್ಲಿ ಜಿಗಣೆ, ಮುಳ್ಳು, ಕೆಸರು ಮೊದಲಾದ ಅನಿವಾರ್ಯ ತೊಂದರೆಗಳಿಗೆ ಸಿಕ್ಕಿದ್ದರೂ ಹೆಚ್ಚಿನ ಅಪಾಯಕ್ಕೆ ಒಳಗಾಗಿರಲಿಲ್ಲ. +ಸರಲು ದಾಟುವಾಗ ಸ್ವಲ್ಪ ನೀರು ಹೆಚ್ಚಿದ್ದರಿಂದ ತೊಂದರೆಯಾಗಿದ್ದೇನೋ ಹೌದಂತೆ! +ಆದರೆ ಮುಕುಂದಯ್ಯ ಮದುಮಗಳ ಉಡುಗೆ ತೊಡುಗೆಗಳಲ್ಲಿದ್ದ ಚಿನ್ನಮ್ಮನನ್ನು ಕೆಸರಾಗದಂತೆ ಎತ್ತಿಕೊಂಡೇ ದಾಟಿದ್ದು ಮಾತ್ರ ಒಂದು ಸ್ವಾರಸ್ಯದ ಸಂಗತಿಯಾಗಿತ್ತು! +ಪೀಂಚಲು ಮಾತ್ರ ಉಲಿದೆಲ್ಲರಿಗಿಂತಲೂ ದಣಿದಿದ್ದರೂ, ಐತನ ನೆರವನ್ನು ನಿರಾಕರಿಸಿಯೆ ಸರಲು ದಾಟಿದ್ದಳಂತೆ! +ಒಂದು ಕಡೆ ಮಾತ್ರ, ಗುತ್ತಿ ಕಡಿದಿದ್ದ ಹಳು ಅಷ್ಟೇನೂ ದಾರಿಯ ಜಾಡಿನಂತೆ ತೋರದೆ, ಪ್ರಯಾಣಿಕರನ್ನು ಅಡ್ಡದಾರಿಯಲ್ಲಿ ತುಸು ಅಲೆಯುವಂತೆ ಮಾಡಿತ್ತಷ್ಟೆ! +ತಟ್ಟಿ ಕಟ್ಟಿ ಮರೆಮಾಡಿದ್ದ ಜಾಗದಲ್ಲಿ ಅಡುಗೆಗಾಗಿ ಹಾಕಿದ್ದ ಒಲೆಗೆ ಬೆಂಕಿಹೊತ್ತಿಸಿದರು. +ಧಾರೆಯ ಸೀರೆ ಡಾಗೀನುಗಳನ್ನೆಲ್ಲ ತೆಗೆದಿಟ್ಟು, ಮುಕುಂದಯ್ಯ ತಂದಿಟ್ಟಿದ್ದ ಅವನ ಅತ್ತಿಗೆಯ ಸೀರೆಯೊಂದನ್ನುಟ್ಟು, ಚಿನ್ನಮ್ಮ ಬೆಂಕಿಕಾಯಿಸಿಕೊಂಡಳು. +ಪೀಂಚಲು ತನ್ನ ಸೀರೆಯ ಒದ್ದೆ ಭಾಗಗಳನ್ನೆಲ್ಲ ಹಿಂಡಿ, ದೊಡ್ಡ ಬೆಂಕಿಯ ಬಳಿ ನಿಂತು, ಆರಿಸಿಕೊಂಡಳು. +ಕುದುರೆಯ ಸವಾರನಾಗಿ ಕಾಣಿಸಿಕೊಂಡಿದ್ದ ರಾಜಕುಮಾರನ ಕೈಹಿಡಿದು ಅವನ ಮುಂದೆ ಕುದುರೆಯ ಬೆನ್ನಿಗೆ ನೆಗೆದೇರಿದ್ದ ರಾಜಕುಮಾರಿಗಿಂತಲೂ ಅದ್ಭುತವಾಗಿ ಕಾಣಿಸುತ್ತಿದ್ದ ಚಿನ್ನಕ್ಕನನ್ನು ನೋಡಿ ನೋಡಿ ಹಿಗ್ಗಿ ಹೋಗಿದ್ದ ತಿಮ್ಮಿ ಸಸಂಭ್ರಮವಾಗಿ ದೂರದೂರದಿಂದಲೆ ತಾನು ಸಲ್ಲಿಸಬಹುದಾಗಿದ್ದ ಎಲ್ಲ ತರಹದ ಸೇವೆಯನ್ನೂ ಸಲ್ಲಿಸುವುದರಲ್ಲಿ ಸಾಕಾರ ಗಡಿಬಿಡಿಯಾಗಿಬಿಟ್ಟಿದ್ದಳು. +ಮೊಡಂಕಿಲನ ಹೆಂಡತಿ, ಬಾಗಿ, ಪಿಜಿಣನ ಬಿಡಾರಕ್ಕೆ ಬಂದು, ಹೂವಳ್ಳಿ ಮದುವೆ ಮನೆಗೆ ಹೋಗಿ ಧಾರೆ ನೋಡಿಕೊಂಡು ಬರೋಣ ಬಾ ಎಂದು ಅಕ್ಕಣಿಯನ್ನು ಆಹ್ವಾನಿಸಿದಾಗ, ಅವಳು ಹಾಸಗೆಯ ಮೇಲೆ ಹೊರಳುತ್ತಾ ನರಳುತ್ತಿದ್ದ ತನ್ನ ಗಂಡನ ಕಡೆಗೆ ನೋಡಿ, ತಾನು ತನ್ನ ಗಂಡನನ್ನು ಆ ದುಃಸ್ಥಿತಿಯಲ್ಲಿ ಬಿಟ್ಟು ಬರಲು ಸಾಧ್ಯವಿಲ್ಲವೆಂದು ತಿಳಿಸಿದಳು. +ಆದರೆ ಪಿಜಿಣನೇ ಪ್ರೋತ್ಸಾಹಿಸಿದನು. +’ಹೋಗಿ ಬಾ; ಅವಳು ಅಷ್ಟಲ್ಲದೆ ಕರೆಯುತ್ತಾಳೆ. +ನಿನಗೂ ಬೇಜಾರು ಪರಿಹಾರವಾದ ಹಾಂಗೆ ಆಗುತ್ತದೆ. +ನನ್ನ ರೋತೆ ಇದ್ದೇ ಇರುತ್ತದೆ! +ಅದು ಜೀವಹೋದ ಮೇಲೆಯೇ ಮುಗಿಯುವುದು! +ಧಾರೆಯಾದರೂ ಎಷ್ಟು ಹೊತ್ತು ಆಗುತ್ತದೆ? +ಮುಗಿದಕೂಡಲೆ ಬಂದುಬಿಡಬಹುದಲ್ಲಾ?’ಚೀಂಕ್ರನ ಮಕ್ಕಳನ್ನು ಬಾಗಿಯ ಬಿಡಾರದಲ್ಲಿ ಮಲಗಿಸಿ, ಚೀಂಕ್ರ ತಂದುಕೊಟ್ಟಿದ್ದ ಹೊಸ ಸೀರೆಯನ್ನಟ್ಟು, ಒಂದೆರಡು ಆಭರಣಗಳನ್ನೂ ತೊಟ್ಟು, ಅಕ್ಕಣಿ ’ಹೋಗಿ ಬರುತ್ತೇನೆ’ ಹೇಳಲು ಗಂಡನೆಡೆಗೆ ಹೋದಳು. +ಅವಳ ಹಿಗ್ಗನ್ನೂ, ಹೊಸ ಸೀರೆಯುಟ್ಟ ಸಂಭ್ರಮವನ್ನೂ, ಕಳಕಳಿಸುತ್ತಿದ್ದ ಮೋರೆಯನ್ನು ತುಸು ಎವೆಯಿಕ್ಕದೆ ನೋಡಿ, ಸುಯ್ದು, ’ಹೋಗಿ ಬಾ’ ಎಂದನು ಪಿಜಿಣ, ನರಳುವ ದನಿಯಲ್ಲಿ. +ಅವನ ಹೃದಯದಲ್ಲಿ ಶಮನವಾಗಲಿ ಪ್ರತೀಕಾರವಾಗಲಿ ಸಾಧ್ಯವಿಲ್ಲದ ಮತ್ಸರಾಗ್ನಿ ಆ ರುಗ್ಣಾವಸ್ಥೆಯಲ್ಲಿಯೂ ಹೊಗೆಯಾಡತೊಡಗಿತ್ತು. +ಅಕ್ಕಣಿ ಹೋದಮೇಲೆ ಪಿಜಿಣನ ಮನಸ್ಸು ತನ್ನ ಭಯಂಕರ ನಿರ್ಧಾರದತ್ತ ಹಲ್ಲುಕಚ್ಚಿಕೊಂಡು ಬದ್ಧಭ್ರುಕುಟಿಯಾಗಿ ಸಾಗಲಾರಂಭಿಸಿತು! +ತನ್ನ ಶುಶ್ರೂಷೆಯ ವಿಚಾರದಲ್ಲಿ ಅತ್ಯಂತ ಆಸಕ್ತೆಯಾಗಿದ್ದರೂ ಚೀಂಕ್ರನೊಡನೆ ಸಂಬಂಧ ಬೆಳೆಸಿದ್ದಾಳೆ ಎಂಬ ಗುಟ್ಟು ಪಿಜಿಣನ ಪ್ರಜ್ಞೆಗೆ ಹೊಕ್ಕಮೇಲೆ ತನ್ನ ಹೆಂಡತಿಯ ಪರವಾದ ಅವನ ಮನಸ್ಸು ಮೆಲ್ಲಮೆಲ್ಲನೆ ವಿರಕ್ತವಾಗತೊಡಗಿತ್ತು. +ಅವಳಿಂದ ತಾನು ಇನ್ನು ಸುಖಪಡೆಯಲು ಸಮರ್ಥನಾಗಬಲ್ಲೆನೆಂಬ ಆಸೆಯನ್ನು ಸಂಪೂರ್ಣವಾಗಿ ಬಿಟ್ಟ ಅವನಿಗೆ, ಅವಳಿಗೂ ತನ್ನಿಂದ ಸುಖ ಇಲ್ಲ ಎಂಬುದು ಮನದಟ್ಟಾಯಿತು. +ತಾನು ತೊಲಗಿದರೆ, ಅವಳ ಆಶೆಯೂ ಕೈಗೂಡಿ, ಅವಳು ಚೀಂಕ್ರನೊಡನೆ ನೆಮ್ಮದಿಯಾಗಿ ಇರಬಹುದು ಎಂಬ ಅವನ ಆಲೋಚನೆಗೆ ದಿನದಿನವೂ ಅಧಿಕಗೊಳ್ಳುತ್ತಿದ್ದ ಅವನ ಹೊಟ್ಟೆಯ ಬೇನೆಯೂ ಸಮರ್ಥನೆ ಇತ್ತಿತ್ತು! +ಎಷ್ಟೋ ಸಾರಿ ಆ ಯಮಯಾತನೆ ಸಹಿಸಲಾರದೆ ’ಏನಾದರೂ ಅಫೀಮುಗಿಫೀಮು ತಂದುಕೊಟ್ಟು, ತನ್ನ ಪರಾಣ ಹೋಗುವಂತೆ ಮಾಡಿ, ನನ್ನನ್ನು ಬದುಕಿಸುತ್ತೀಯಾ?’ ಎಂದು ಅಕ್ಕಣಿಗೆ ಕೈಮುಗಿದದ್ದೂ ಉಂಟು! +ಚೀಂಕ್ರ ಕೊನೆಮಟ್ಟೆಯ ರಾಶಿಯಲ್ಲಿ ಮುಚ್ಚಿಟ್ಟಿದ್ದ ಶೀಸೆಗಳ ಕಡೆ ಪಿಜಿಣ ಸತೃಷ್ಣ ದೃಷ್ಟಿ ಬೀರಿದ್ದನು. +ಆದರೆ ಅಕ್ಕಣಿ ಅದಕ್ಕೆ ಅವಕಾಶಕೊಡದಂತೆ ಎಚ್ಚರಿಕೆ ವಹಿಸಿದ್ದಳು. +ಈಗ ಯಾರ ಅಂಕೆಯೂ ಇಲ್ಲದ ಅವನು ಹಾಸಿಗೆಯಿಂದೆದ್ದು ಆ ಶೀಸೆಗಳಿಂದ ಸಾರಾಯಿಯನ್ನು ಕರಟಕ್ಕೆ ಬೊಗ್ಗಿಸಿ ಬೊಗ್ಗಿಸಿ ಕುಡಿದನು. +ಕುಡಿದಂತೆಲ್ಲ ಹುಮ್ಮಸ್ಸು ಏರಿತು. +ಚಟ್ಟಿಯಲ್ಲಿ ಬಚ್ಚಿಟ್ಟಿದ್ದ ಮೀನುಪಲ್ಯವನ್ನು ಚೆನ್ನಾಗಿ ನಂಚಿಕೊಂಡು ಮತ್ತಷ್ಟು ಕುಡಿದನು. +ತುಂಬ ಶಕ್ತಿ ಬಂದಂತಾಗಿ, ಒಂದು ತೆರನಾದ ಸಂತೋಷೋನ್ಮಾದ ಆವರಿಸಿತು. +ಹೋಗಿ ಹಾಸಗೆಯ ಮೇಲೆ ಉಸ್ಸೆಂದು ಉರುಳಿಕೊಂಡನು. +ಸ್ವಲ್ಪ ಹೊತ್ತಿನಲ್ಲಿಯೆ ಭಯಂಕರ ಪ್ರತಿಕ್ರಿಯೆ ಪ್ರಾರಂಭವಾಯಿತು. +ಹೊಟ್ಟೆಯ ಬೇನೆ ಸಾವಿರಾರು ಚೇಳು ಕಚ್ಚಿದಂತೆ ಕಠೋರವಾಯಿತು. +ರಕ್ತ ರಕ್ತವೆ ಭೇದಿಯಾಯಿತು. +ಅಯ್ಯೋ ಎಂದು ಕೂಗಿಕೊಂಡು ಮೇಲೆದ್ದು ನಿಲ್ಲಲಾರದೆ ಮಡಕೆಗಳ ಮೇಲೆ ಬಿದ್ದನು. +ಉರಿಯನ್ನು ತಾಳಲಾರದೆ ಪಾತ್ರೆಯಲ್ಲಿದ್ದ ತಣ್ಣೀರನ್ನು ಗೊಟಗೊಟನೆ ಕುಡಿದನು. +ಏನು ಮಾಡಿದರೂ ಆ ತಾಪ, ಆ ಯಾತನೆ, ಹೆಚ್ಚುತ್ತಾ ಹೋಯಿತು. +ಕೂಗಿದರೂ ಗಂಟಲಿನಿಂದ ಸ್ವರ ಹೊರಡಲಿಲ್ಲ. +’ಅಕ್ಕಣೀ!ಅಕ್ಕಣೀ!ಅಯ್ಯೋ!ಅಯ್ಯೋ!’ ಎಂದು ಒರಲಿ ಕರೆಯುತ್ತಿದ್ದೇನೆ ಎಂದು ತಿಳಿದುಕೊಂಡನಷ್ಟೇ! +ಕೊರಳಿಂದ ದನಿ ಹೊರಟರೆ ತಾನೆ? +ಕಡೆಗೆ ಬೇಗೆ ಬೇನೆ ತಡೆಯಲಾರದೆ ಒಂದು ನೇಣನ್ನು ತುಡುಕಿ, ಬೋಗುಣಿಯೊಂದನ್ನು ಬೋರಲು ಹಾಕಿ, ಅದರ ಮೇಲೆ ಹತ್ತಿ, ಸೂರಿನ ಬಿದಿರಿಗೆ ಉರುಳು ಕಟ್ಟಿದನು…. +ಅವನು ಸಾಯಬೇಕು ಎಂದೇನೊ ನಿಶ್ಚಯಿಸಿದ್ದನು. +ಆದರೆ ಆ ರೀತಿಯದ್ದಾಗಿರಲಿಲ್ಲ. +ತಾನು ಆತ್ಮಹತ್ಯೆಮಾಡಿಕೊಂಡೆ ಎಂಬುದು ಯಾರಿಗೂ ಗೊತ್ತಾಗದಂತೆ ಅದನ್ನು ಸಾಧಿಸಲು ಯೋಚಿಸಿದ್ದನು. +ಸ್ವಲ್ಪ ಮೈಗೆ ಬಲ ಬಂದರೆ, ಗೌಡರ ಅಡಕೆತೋಟಕ್ಕೆ ಕೊಟ್ಟೆಕಟ್ಟಲು ಹೋಗಿ, ಕೊಟ್ಟೆಮಣೆ ಕೊಟ್ಟೆಹೊರೆ ಸಹಿತವಾಗಿ ಎತ್ತರದ ಅಡಕೆ ಮರದ ನೆತ್ತಿಗೇರಿ, ಅಲ್ಲಿಂದ ಫಕ್ಕನೆ ಕೊಟ್ಟೆ ಮಣೆಯಿಂದ ಜಾರಿ ಬಿದ್ದಂತೆ, ಆಕಸ್ಮಿಕದಲ್ಲಿ ಮರಣ ಹೊಂದಿದಂತೆ, ತೋರಿಸಿಕೊಳ್ಳಬೇಕು ಎಂದು ಸಂಕಲ್ಪಿಸಿದ್ದನು. +ಆದರೆ… ಆ ರಾತ್ರಿ ಬಾಗಿ ಮೊಡಂಕಿಲರೊಡನೆ ಹೂವಳ್ಳಿ ಮದುವೆಮನೆಗೆ ಹೋದ ಅಕ್ಕಣಿ ಆ ಜನ, ಆ ಗಲಭೆ, ಆ ವಾದ್ಯ, ಆ ಸಂದಣಿಯಲ್ಲಿ, ಆ ಬಣ್ಣ, ಆ ಕಂಪು, ಆ ಸೀರೆಗಳು, ಆ ಆಭರಣಗಳು ಇವುಗಳಲ್ಲಿ ಕಣ್ಮುಳುಗಿ ಮನಮುಳುಗಿ ಹೋದಳು. +ತಾನೇ ತಂದು ಕೊಟ್ಟಿದ್ದ ಹೊಸ ಸೀರೆ ಉಟ್ಟು ಮನೋಹರಿಯಾಗಿದ್ದ ಅವಳನ್ನು ಚೀಂಕ್ರ ಸೇರೆಗಾರ ಮತ್ತೆಮತ್ತೆ ಏನಾದರೂ ನೆವ ಮಾಡಿಕೊಂಡು ಬಂದು ಮಾತಾಡಿಸುತ್ತಿದ್ದುದು ಅಕ್ಕಣಿಗೇನು ಅಹಿತವಾಗಿರಲಿಲ್ಲ! +ಎಲೆ ಅಡಕೆ ಹಾಕಿದ್ದ ರಂಗುತುಟಿಗಳಿಂದ ನಕ್ಕು ಸೇರೆಗಾರನಿಗೆ ಮನರಂಜಕವಾಗಿಯೂ ವರ್ತಿಸಿದ್ದಳು! +“ಈವೊತ್ತೇನು ಊಟ ನಮಗೆ ಬೆಳಗಿನ ಜಾವ ಸಿಕ್ಕಿದ್ರೆ ನಮ್ಮ ಪುಣ್ಯ! +ಈ ಬಾಳೆ ಹಣ್ಣಾದ್ರೂ ತಿಂದರು.” ಎಂದು ಅಕ್ರಮವಾಗಿ ಮುರಿದು ತಂದಿದ್ದ ಮದುವೆ ಚಪ್ಪರದ ಬಾಳೆಹಣ್ಣನ್ನು ಕೂಟ್ಟು ಹೋದವನು, ಮತ್ತೆ ಸ್ವಲ್ಪ ಹೊತ್ತಿನಲ್ಲಿಯೆ ತಿರುಗಿಬಂದು ಹೇಳಿದ್ದನು. “ಇವತ್ತೇನು ಗುಂಡಿನ ಮನೆ ದಿಬ್ಬಣ್ ಸಿಂಬಾವಿಯಿಂದ ಬರೋದಿಲ್ಲ ಅಂಬ್ರು! +ಭಾರಿ ಮಳೆ ಅಂತೆ ಆ ಕಡೆ! +…ಮತ್ತೊಮ್ಮೆ ರಾತ್ರಿ ಮುಂದುವರಿದ ಮೇಲೆ ಬಂದವನು ಹೇಳಿದ್ದನು,ಬಾಗಿ ಅಕ್ಕಣಿ ಇನ್ನೂ ಒಂದಿಬ್ಬರೂ ಗಟ್ಟಿದ ತಗ್ಗಿನ ಹೆಣ್ಣಾಳುಗಳನ್ನು ಒಟ್ಟಿಗೆ ಉದ್ದೇಶಿಸಿ. “ಹೋಯ್, ಇವೊತ್ತು ಲಗ್ನ ನಡೆಯುವ ತರಾ ಕಾಣುವುದಿಲ್ಲ, ಹೆಣ್ಣುಗಳಿರಾ. +ನಾಯಕರಿಗೆ ಸಕತ್ತು ಖಾಯಿಲೆಯಾಗಿ, ಬಾಯಿಗೆ ನೀರುಬಿಡುವ ಹಾಂಗೆ ಆಗಿದೆಯಂತೆ….” +ಇನ್ನೂ ಸ್ವಲ್ಪಹೊತ್ತು ಬಿಟ್ಟುಕೊಂಡು ಅವಸರ ಅವಸರವಾಗಿ ಓಡುತ್ತಾ ಬಂದವನು “ಏಳಿನಿ, ಏಳಿನಿ ಬೇಗ! +ದಿಬ್ಬಣ ಇನ್ನೂ ಬರುವುದು ಬಾಳ ಹೊತ್ತಾಗ್ತದಂತೆ, ಧಾರೆಗೆ ಮುಂಚೇನೆ ಊಟ ಮುಗಿಸಲಕ್ಕು ಅಂಬ್ರು.” ಎಂದು ಅವರನ್ನೆಲ್ಲ ಕರೆದುಕೊಂಡು ಹೋಗಿ ಹೊರಗಿನ ಕೀಳುಜಾತಿಯ ಜನರು ಕೂತಿದ್ದ ಪಂಕ್ತಿಯಲ್ಲಿ ಹೆಂಗಸರ ನಡುವೆ ಕೂರಿಸಿದನು. +ಅಷ್ಟರಲ್ಲಿ ಯಾರೋ ಕೂಗಿದರು “ ಹಸಲೋರು ಅಲ್ಲಿ ಕೂರಬೇಕು; ಇಲ್ಲಲ್ಲಾ! +ಏಳಿ ಹೆಂಗಸ್ರೆಲ್ಲಾ!…” +“ಹಸಲೋರೇನು ಬಿಲ್ಲೋರಿಗಿಂತ ಕೀಳಲ್ಲ ಜಾತೀಲಿ. +ನೀನೆ ಬೇಕಾದರೆ ಎದ್ದು ಹೋಗು!” ಚೀಂಕ್ರ ಪ್ರತಿಭಟಿಸಿದನು. +“ಹಾದರದ ಸೂಳೆಮಗನಿಗೆ ಏನು ದೌಲತ್ತು?” ಕೂಗಿತು ಎದುರುತ್ತರ! +“ಯಾವನೋ ಸೂಳೇಮಗ?ನಿನ್ನ ಹೆಂಡ್ತಿನಾ….ಯ!” +“ಹೆಡ್ತಿ ತಿಂದುಕೊಂಡ ಲೌಡೀಮಗನೆ, ಕಂಡೋರ ಹೆಂಡಿರನ್ನೆಲ್ಲಾ ಕೆಡಿಸಿ, ಬಾಯಿಗೆ ಬಂದಹಾಂಗೆ ಮಾತಾಡ್ತಿಯಾ? +ದವಡೇಲಿ ಹಲ್ಲೊಂದು ಇಲ್ಲದ್ಹಾಂಗೆ ಮಾಡೇನು? +ಹುಸಾರ್, ಷಂಡಮುಂಡೇಗಂಡ!”ಗಲಾಟೆ ದೊಂಬಿಗೆ ತಿರುಗುವ ಮುನ್ನ ನಾಲ್ಕಾರು ಜನ ಸೇರಿ, ವಿವೇಕ ಹೇಳಿ, ಸಮಜಾಯಿಸಿ ಮಾಡಿದರು. +ಅಕ್ಕಣಿ ತುಂಡು ಕಡುವು ಪರಮಾನ್ನ ಎಲ್ಲವನ್ನೂ ಸವಿದು ಚಪ್ಪರಿಸಿದಳು, ಇತರ ಹೆಂಗಸರೊಡನೆ ಅದೂ ಇದೂ ಹರಟೆ ಹೊಡೆಯುತ್ತಾ. +ಊಟ ಪೂರೈಸಿದ ಮೇಲೆ ಮತ್ತೆ ಅವರೆಲ್ಲರೂ ಕೆಳಗರಡಿಯ ಕತ್ತಲು ಕವಿದ ಮೂಲೆಯಲ್ಲಿ ಸೇರಿ, ಗುಜುಗುಜು ಮಾತಾಡುತ್ತಾ. +ಎಲೆ ಅಡಿಕೆ ಹಾಕಿಕೊಳ್ಳುತ್ತಾ, ಅಂದಿನ ನಾಟಕದ ಮುಖ್ಯದೃಶ್ಯಾವಲೋಕನಕ್ಕಾಗಿ ಕಾಯುತ್ತಾ ಕುಳಿತರು, ಧಾರೆಯ ಮಂಟಪದ ದಿಕ್ಕಿಗೆ ಆಗಾಗ ಕಣ್ಣು ಹಾಯಿಸುತ್ತಾ. +ರಾತ್ರಿ ಬಹಳ ಹೊತ್ತು ಮುಂಬರಿದ ಮೇಲೆ, ದಿಬ್ಬಣ ಅಂತೂ ಇಂತೂ ಹಳ್ಳದ ದಂಡೆಯವರೆಗೆ ಬಂದು ನೀರು ಇಳಿಯುವುದನ್ನೆ ಕಾಯುತ್ತಿದೆ ಎಂಬ ಸುದ್ದಿ ಹಬ್ಬಿತು. +ಬಾಗಿ ಅಕ್ಕಣಿಯರ ಗುಂಪಿನಲ್ಲಿ ಸಂತೋಷದ ತರಂಗವಾಡಿತು, ಧಾರೆ ‘ಕಾಂಬ’ ಪುಣ್ಯ ಲಭಿಸಿತಲ್ಲಾ ಎಂದು. +ಆದರೆ ಸ್ವಲ್ಪ ಹೊತ್ತಾದ ಮೇಲೆ, ನೆರೆದಿದ್ದ ಜನಗಳಲ್ಲಿ ಒಂದು ನಂಬಲಾರದ ದುರ್ವಾರ್ತೆ ಗುಜುಗುಜು ಹರಡತೊಡಗಿತು. +ಮೊದಮೊದಲು ಒಬ್ಬರ ಕಿವಿಯಲೊಬ್ಬರು ಪಿಸುಮಾತನ್ನಾಗಿ ಮಾತ್ರ ಹೇಳುತ್ತಿದ್ದುದು ಸ್ವಲ್ಪ ಹೊತ್ತಿನಲ್ಲಿ ಗಟ್ಟಿಯಾಗಿಯೆ ಆಡುತ್ತಿದ್ದ ಬಹಿರಂಗ ಚರ್ಚಾವಿಷಯವಾಗಿ ಪರಿಣಮಿಸಿತ್ತು. +ಬಾಗಿ ಅಕ್ಕಣಿಯರಿಗೆ ಅದನ್ನು ಸ್ಪಷ್ಟವಾಗಿ ತಿಳಿಸಿದವರಲ್ಲಿ ಮೊತ್ತಮೊದಲುಗನೆಂದರೆ ಮೊಡಂಕಿಲ. +ಏನೋ ಅನಾಹುತವಾದದ್ದನ್ನು ಕಂಡು ಹೇಳಬಂದವನಂತೆ ಗುಜುಗುಜು ಗುಂಪಿನ ನಡುವೆ ನುಗ್ಗಿ ಓಡೋತ್ತಲೆ ಬಂದು ಒದರಿದನು. + “ಹೋಯ್, ಕೇಳಿದಿರಾ? +ಹೆಣ್ಣೆ ಪತ್ತೆ ಇಲ್ಲ್ ಅಂಬ್ರು!”ಬಾಗಿ ಅಕ್ಕಣಿಯರು ದಿಗಿಲುಬಿದ್ದು ಕೇಳಿದರು. + “ಎಲ್ಲಿಗೆ ಹೋಪರಪ್ಪ ಈ ಕತ್ತಲೇಲಿ? +ಅಯ್ಯೋ ದ್ಯಾವರೆ!”ಪಕ್ಕದಲ್ಲಿದ್ದು ಇವರ ಸಂಭಾಷಣೆಗೆ ಕಿವಿಗೊಟ್ಟಿದ್ದ ಒಬ್ಬಳು ಸಮಾಧಾನ ಹೇಳಿದಳು. +“ಎಲ್ಲಿಗೊ ಹೋಪರಲ್ಲ. +‘ಹೊರಕಡೆ’ಗೆ ಹೋಗಿರಲಕ್ಕುಅಂಬ್ರು. +ನಮ್ಮ ಪೀಂಚಲು ಅವರ ಸಂಗಡ ಇದ್ದಳಂಬ್ರು…. +ಅವರಿಗೆ ಹೊತ್ತಾರೆಯಿಂದ ಹೊಟ್ಟೆನೋವಿತ್ತು ಅಂಬ್ರು…”ಅಷ್ಟರಲ್ಲಿ ಗಂಡಿನ ದಿಬ್ಬಣ ಮನೆ ಮುಟ್ಟಿತ್ತು. +ಎಲ್ಲಿ ನೋಡಿದರೂ ಸಂಭ್ರಮ, ಗಲಾಟೆ, ಗುಜುಗುಜು, ದೀಪಗಳ ಓಡಾಟ, ಒಬ್ಬರನ್ನೊಬ್ಬರು ಸ್ವಾಗತಿಸುವುದು, ಸಂಬೋದಿಸುವುದು…ಅಕ್ಕಣಿ ಬಾಗಿಯರಂತಹ ಕೀಳುಜಾತಿಯವರು ಅದರಲ್ಲಿ ಬರಿಯ ಪ್ರೇಕ್ಷಕರಾಗಿ ದೂರದಿಂದ ಮಾತ್ರ ಭಾಗವಹಿಸುವುದು ಸಾಧ್ಯವಾಗಿತ್ತು. +ಗಂಡಿನ ಕಡೆಯ ದಿಬ್ಬಣದವರೆಲ್ಲ ಮದುಮಗನಿಗಾಗಿ ಗೊತ್ತುಮಾಡಿದ್ದ ಮೇಲಿನ ಜಗಲಿಯ ಎತ್ತರದ ಜಾಗದಲ್ಲಿ ಆಸೀನರಾದರು. +ದಿಬ್ಬಣದವರ ಕಡೆ ಮೆಚ್ಚಿ ನೋಡುತ್ತಾ, ಅವರನ್ನೂ ಅವರ ಬಟ್ಟೆಬರೆಗಳನ್ನೂ, ಪರಿಚಯವಿದ್ದಲ್ಲಿ ಅವರ ಪರಿಚಯ ವಿಚಾರವನ್ನೂ ಕುರಿತು ಲೋಕಾಭಿರಾಮವಾಗಿ ಮಾತನಾಡುತ್ತಿದ್ದ ಅಕ್ಕಣಿ ತನ್ನ ಕಡೆಗೆ ಬರುತ್ತಿದ್ದ ಚೀಂಕ್ರಿ ಸೇರೆಗಾರನನ್ನು ಕಂಡು ಮುಗುಳುನಕ್ಕಳು. +ಸೇರೆಗಾರ ಮಾತ್ರ ಮುಳುಗು ನಗಲಿಲ್ಲ. +ಅವನ ಮುಖದ ಮೇಲೆ ಏನೋ ಗಂಭೀರ ಛಾಯೆ ಇದ್ದ ಹಾಗಿತ್ತು. +ಉಟ್ಟಬಟ್ಟೆ ಒದ್ದೆಯಾಗಿದ್ದಂತೆಯೂ ತೋರಿತು. +ತಲೆಗೆ ಸುತ್ತಿದ್ದ ಕೆಂಪು ವಸ್ತ್ರವೂ ಒದ್ದೆಯಾಗಿ ಕರಿಯ ಛಾಯೆಯನ್ನು ಪಡೆದಿತ್ತು. +“ಓ ಏನು ಚೀಂಕ್ರ ಸೇರೆಗಾರ್ರು ಮಳೇಲಿ ನೆಂದ ಹಾಂಗಿದೆಯಲ್ಲಾ? +ಗಂಡಿನ ಕಡೆ ದಿಬ್ಬಣದೋರನ್ನ ಹಳ್ಳ ದಾಂಟಿಸಲಿಕ್ಕೆ ಹೋಗಿ ರಲಕ್ಕು! +…ಮೊಡಂಕಿಲ ಮೇಲಿನ ಪ್ರಶ್ನೆಗೆ ಯಾವ ಉತ್ತರವನ್ನೂ ಕೊಡದೆ ಚೀಂಕ್ರ ಸಮೀಪಕ್ಕೆ ಬಂದು ನಡುವೆ ಕುಳಿತು, ಒಂದು ರೀತಿಯ ರಹಸ್ಯಧ್ವನಿಯಲ್ಲಿ ಸುಯ್ದನು. + “ಇನ್ನು ಯಾಕೆ ಕಾಯುತ್ತೀರಿ ಸುಮ್ಮನೆ? +ಈವೊತ್ತು ಧಾರೆ ಮುಖ ನಾವು ಕಾಣಲಿಕ್ಕಿಲ್ಲ! +ಲಗ್ನ ನಿಂತ ಹಾಂಗೆ ಸೈ! +ಮದುವೆಯ ಹೆಣ್ಣೆ ಮನೆಯಲ್ಲಿಲ್ಲ!” +“ಹೊರಕಡೆಗೆ ಹೋಗಿರಲಕ್ಕು ಅಂಬ್ರು?” ಅಕ್ಕಣಿಯ ಮಾತು. +“ನಮ್ಮ ಪೀಂಚಲೂ ಸಂಗಡ ಹ್ವೋಯ್ಕಂಬ್ರು!” ಬಾಗಿಯ ದನಿ. +“ನಾನೆ ಕಂಡಿದ್ದಲ್ಲಾ? +ಮತ್ತೇನು ಸುಮ್ಮನೆ ನಾನು ಮಳೇಲಿ ನೆನ್ದದ್ದೆ?” ಎಂದು ಚೀಂಕ್ರ ನಿರ್ಣಾಯಕವಾಗಿ ನಕ್ಕನಷ್ಟೆ. +ಆ ರಾತ್ರಿ ಚೀಂಕ್ರನು ಐತನಲ್ಲದೆ ಪೀಂಚಲು ಒಬ್ಬಳೆ ಗಟ್ಟಿದ ಮೇಲಿನವರ ಉಡುಗೆಯಲ್ಲಿದ್ದುದನ್ನು ನೋಡಿದಾಗಣಿಂದಲೂ ಅತ್ತಕಡೆ ಒಂದು ಕಣ್ಣಿಟ್ಟಿದ್ದನು. +ಚಿನ್ನಮ್ಮನನ್ನು ‘ಹೊರಕಡೆ’ಗೆ ಕರೆದುಕೊಂಡು ಹೋಗುವ ನೆವದಿಂದ ಪೀಂಚಲು ಅವಳ ಸಂಗಡ ಹೋದುದನ್ನೂ ದೂರದಿಂದ ಗಮನಿಸಿದ್ದನು. +ಆದರೆ ಅವರಿಬ್ಬರೇ ಆ ಮಳೆಯಲ್ಲಿ ಆ ಕತ್ತಲೆಯಲ್ಲಿ ಆ ಕಾಡಿನಲ್ಲಿ ಹೋಗುತ್ತಾರೆ ಎಂದು ಅವನು ಊಹಿಸಿರಲಿಲ್ಲ. +ಆದರೆ ಅವರು ಹೋದ ಸ್ವಲ್ಪ ದೀರ್ಘ ಸಮಯದ ಮೇಲೆ ಐತನೊಬ್ಬನೆ ಬಂದು ಅಲ್ಲಿ ಇಲ್ಲಿ ಇಣುಕುತ್ತಿದ್ದುದನ್ನು ಅವನು ಗಮನಿಸಿ, ಅವನನ್ನು ಮಾತಾಡುಸುವ ನೆವದಲ್ಲಿ ಅವನ ಹಿಂದೆ ಮುಂದೆಯೇ ತಿರುಗಾಡುತ್ತಿದ್ದನು. +ಆದರೂ ತುಸು ಹೊತ್ತಿನೊಳಗೆ, ಆ ಜನಗಳ ನಡುವೆ ಅಲ್ಲಿ ಇಲ್ಲಿ ಕತ್ತಲಲ್ಲಿ ನುಗ್ಗಿ ಓಡಾಡುವಂತೆ ನಟಿಸುತ್ತಿದ ಐತ, ಹೇಗೋ ಚೀಂಕ್ರನ ಕಣ್ಣು ತಪ್ಪಿಸಿ ಪರಾರಿಯಾಗಿದ್ದನು. +ಜನರು ಮದುಮಗಳು ಕಾಣೆಯಾದುದನ್ನು ಗೊತ್ತುಹಚ್ಚಿ, ಹುಡುಕಲು ತೊಡಗಿದಾಗಲೆ ಚೀಂಕ್ರನಿಗೆ ನಡೆದಿದ್ದ ಸಂಗತಿಯ ಗುಟ್ಟು ಹೊಳೆದಿತ್ತು. + ಮದುಮಗಳು ಚಿನ್ನಮ್ಮನನ್ನು ಪೀಂಚಲು ಐತರ ನೆರೆವಿನಿಂದ ಕೋಣುರು ಮುಕುಂದಯ್ಯಗೌಡರು ಕಣ್ಣು ತಪ್ಪಿಸಿ ಕರೆದೊಯ್ದಿದ್ದಾರೆ ಎಂದು. + ಯಾವುದು ಅವನ ಕಿವಿಗೆ ಅದುವರೆಗೆ ಬರಿಯ ಗಾಳಿಸುದ್ದಿಯಾಗಿ ಬಿದ್ದಿತ್ತೋ ಅದು ಈಗ ಖಾತ್ರಿಯಾಗಿ ನಡೆದ ಘಟನೆಯಾಗಿ ಹೋಗಿತ್ತು! . + ಮದುಮಗಳು ಕಾಣಿಯಾದುದಕ್ಕೆ ಅನೇಕರ ಊಹೆ ಅನೇಕ ರೀತಿಗಳಲ್ಲಿ ಆಟವಾಡಿತ್ತು. +ಆದರೆ ಬಹುಜನರು ನಂಬಿದ್ದೆಂದರೆ, ಒಲ್ಲದ ಗಂಡನನ್ನು ಕೈ ಹಿಡಿಯಲು ಹೇಸಿ, ಅವಳು ಕರೆಗೋ ಹಳ್ಳಕ್ಕೋ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬುದು. +ಆದ್ದರಿಂದ ಅನ್ವೇಷಣೆಯೂ ಆ ಜಾಡನ್ನೆ ಹಿಡಿದಿತ್ತು. +ಅಂತೂ ಆ ರಾತ್ರಿ ಮದುವೆ ನಡೆಯುವುದಿಲ್ಲ ಎಂಬುದು ನಿಶ್ಚಯವಾಗಿ ಅಕ್ಕಣಿ ಬಾಗಿಯರು ಕೋಣೂರಿನ ತಮ್ಮ ಬಿಡಾರಗಳಿಗೆ ಹಿಂದಿರುಗುವಷ್ಟರಲ್ಲಿ,ಮತ್ತೊಂದು ಭಯಂಕರ ವಾರ್ತೆಯನ್ನು ತಂದಿದ್ದನು ಚೀಂಕ್ರ. +ಹೂವಳ್ಳಿ ವೆಂಕಪ್ಪನಾಯಕರು ತೀರಿಕೊಂಡ ಸುದ್ದಿ! +ಇಡೀ ಮನೆಯನ್ನೆಲ್ಲ ವ್ಯಾಪಿಸಿದ್ದ ಉತ್ಸವದ ವಾತವರಣ ಮಾಯವಾಗಿ, ಮಸಣದ ದುಃಖಮಯ ಮ್ಲಾನತೆ ತುಂಬಿಹೋದಂತಾಗಿತ್ತು. +ಚಿನ್ನಮ್ಮ ಕಾಣೆಯಾದ ವಿಚಾರವಾಗಿಯೂ ಅವಳ ತಂದೆ ತೀರಿಕೊಂಡ ವಿಚಾರವಾಗಿಯೂ ನಾನಾ ತರಹದ ಸುದ್ದಿಗಳು ಹುಟ್ಟಿಕೊಂಡು ಕಿವಿಯಿಂದ ಕಿವಿಗೆ ಬಾಯಿಂದ ಬಾಯಿಗೆ ಹರಡತೊಡಗಿದ್ದುವು. +ಗಟ್ಟಿಯಾಗಿ ರೋದಿಸುವರೊಂದು ಕಡೆ, ನಿಃಶಬ್ದವಾಗಿ ಬಿಕ್ಕಿ ಬಿಕ್ಕಿ ಅಳುವರೊಂದು ಕಡೆ, ಕೋಪದಿಂದ ಸಿಂಬಾವಿಯ ಕಡೆಯವರನ್ನು ಟೀಕಿಸುವರೊಂದು ಕಡೆ, ತಪ್ಪನ್ನೆಲ್ಲ ಹೂವಳ್ಳಿಯವರ ಮೇಲೆಯೆ ಹೊರಿಸಿ ನಿಂದಿಸುವರೊಂದು ಕಡೆ. +ಸೋತು, ಶತ್ರುವಿನ ಧಾಳಿಗೆ ಸಿಕ್ಕು, ದಿಕ್ಕಾಪಾಲಾಗಿ ಓಡುವ ಸೈನ್ಯದ ಗಲಿಬಿಲಿ, ಭಯ, ಅಸ್ತವ್ಯಸ್ತತೆ ಮತ್ತು ದಿಗ್ಭ್ರಾಂತಿ ಎಲ್ಲೆಲ್ಲಿಯೂ ಹಬ್ಬಿ, ಹೂವಳ್ಳಿ ಮನೆ ರಾಣಾರಂಗವಾಗಿ ಹೋಗಿತ್ತು. +“ಪಾಪ!ಒಬ್ಬಳೇ ಮಗಳು! +ಧಾರೆಯ ದಿನವೇ ಹಳ್ಳಕ್ಕೆ ಹಾರಿ ಪ್ರಾಣ ತೆಗೆದುಕೊಂಡ ಸುದ್ದಿ ಕಿವಿಗೆ ಬಿದ್ದಿದ್ದೇ ತಡ ‘ಆಞ್!’ ಅಂತಾ ಕೂಗಿ, ಪ್ರಜ್ಞತಪ್ಪಿ, ಕಣ್ಣು ಮುಚ್ಚಿದವರು ಮತ್ತೆ ಕಣ್ಣು ತೆರೆಯಲೇ ಇಲ್ಲವಂಗೆ!” +“ಮೊದಲೇ ಸುಮಾರು ವರ್ಷದಿಂದ, ಕಾಲಿನಲ್ಲಿ ಆಗಿದ್ದ ಕುಂಟಿನ ಹುಣ್ಣಿನ ದೆಸೆಯಿಂದ ನಂಜು ಏರಿ, ಜ್ವರ ಜೋರಾಗಿ, ಮಾತು ನಿಂತೇ ಹೋಗಿತ್ತಂತೆ. +ಹೆಂಗಾದ್ರೂ ಲಗ್ನ ಒಂದು ಪೂರೈಸಿದರೆ ಸಾಕಲ್ಲಾ ಅಂತಿದ್ರಂತೆ…. +ಮದುವಣಗಿತ್ತಿ ಎಲ್ಲೂ ಇಲ್ಲ, ಏನಾದಳೋ ಗೊತ್ತಿಲ್ಲ-ಅಂತಾ ಕೇಳಿದ್ದೆ ಒಂದು ನೆಪ ಆಗಿ ಪರಾಣ ಹಾರೇ ಹೋಯ್ತಂತೆ!” +“ಅಯ್ಯೋ!ಆ ಮುದುಕೀಗೋಳು ನೋಡಬಾರದಂತೆ! +ಮೊಮ್ಮಗಳು ಅಂದ್ರೆ ಅಷ್ಟು ಅಕ್ಕರೆಯಿಂದ ಸಾಕಿತ್ತಂತೆ ಆ ಅಜ್ಜಿ. +ಅತ್ತೂ ಅತ್ತೂ ಸೊಂಟಾನೆ ಬಿದ್ದು ಹೋದ್ದಂಗಾಗ್ಯದೆಯಂತೆ! +ಅದೂ ಏನ ನಾಳೆ ಹೊತ್ತಾರೆ ಒಳಗೇ ಅತ್ತ ಮಕ ಹೋಗೋ ಹಾಂಗೇ ಅದೆಯಂತೆ!” +“ಆ ನಾಗಕ್ಕಂದೇ ಎಲ್ಲಾ ಕಿತಾಪತಿ. +ಅಂತಾನೂ ಹೇಳ್ತಾರಪ್ಪಾ! +ಸುಳ್ಳೋ ಬದ್ದೋ?ಆ ಭಗವಂಗನೇ ಬಲ್ಲ! …. ” +ಇಂತಹ ಅನೇಕ ತರಹದ ಸಂವಾದದ ಕೆಂಜಿಗೆ ಹಿಂಡಲಿನಲ್ಲಿ ನುಸುಳಿ ತೂರಿ ಅಕ್ಕಣಿ, ಬಾಗಿ ಮತ್ತು ಮೊಡಂಕಿಲರು ಹೂವಳ್ಳಿಯಿಂದ ಕೋಣೂರಿಗೆ ಹಿಂತಿರುಗಿ ಹೊರಟರು. +ನಟ್ಟಿರುಳು ಕಳೆದು ಬಹೂದೂರ ಸಾಗಿತ್ತು. +ಮಳೆ ಮೂದಲಿನಂತೆ ಜೋರಾಗಿ ಸುರಿಯದಿದ್ದರೂ ನಿಂತು ನಿಂತು ಸುರಿಯುತ್ತ ರಾತ್ರಿಯನ್ನು ದುರ್ನಿಶೆಯನ್ನಾಗಿ ಮಾಡಿತ್ತು. +ಕೋಣೂರು ಮನೆಯನ್ನು ದಾಟಿ ತಮ್ಮ ಬಿಡಾರಗಳಿದ್ದ ಜಾಗಕ್ಕೆ ಸಮಿಪಿಸುತ್ತಿದ್ದ ಅಕ್ಕಣಿಗೆ ಏಕೋ ದುಃಖ ಉಕ್ಕಿಬಂದಂತಾಗಿ, ಎಷ್ಟೊ ಪ್ರಯತ್ನಪಟ್ಟರೂ ತಡೆಯಲಿಕ್ಕಾಗದೆ, ಬಿಕ್ಕಿಬಿಕ್ಕಿ ಅಳತೊಡಗಿದಳು. +ಪಕ್ಕದಲ್ಲಿದ್ದ ಬಾಗಿ, ರೋಗಿಯಾಗಿದ್ದ ತನ್ನ ಗಂಡನ ದುಸ್ಥಿತಿಯ ನೆನಪಾಗಿ ಅಕ್ಕಣಿ ಅಳುತ್ತಿರಬೇಕು ಎಂದು ಭಾವಿಸಿ, ನಾನಾ ರೀತಿಯಿಂದ ಸಮಾಧಾನ ಹೇಳಿದಳು. +ಆದರೆ ಅಕ್ಕಣಿಗೆ ಚೆನ್ನಾಗಿ ಗೊತ್ತಿತ್ತು. +ಬಾಗಿ ಹೇಳಿದ ಯಾವ ಸಮಾಧಾನವನಕ್ಕೂ ಬುಡ ಭದ್ರವಿಲ್ಲ ಎಂದು. +ತನ್ನ ಗಂಡನ ರೋಗ ಗುಣವಾಗುವುದಿಲ್ಲ ಎಂಬುದು ಅಕ್ಕಣಿಗೆ ಖಾತ್ರಿಯಾಗಿ ಹೋಗಿತ್ತು. +ಅವನಿಂದ ಯಾವ ವಿಧವಾದ ಸುಖವೂ ತನಗೆ ಇನ್ನು ಮುಂದು ದೊರೆಯುವುದಿಲ್ಲ ಎಂಬುದರಲ್ಲಿಯೂ ಅವಳಿಗೆ ಸಂದೇಹವಿರಲಿಲ್ಲ. +ಅವನು ಬದುಕಿರುವಷ್ಟು ಕಾಲವೂ ತಾನೇ ಅವನಿಗಿ ದುಡಿದು ಹಾಕಬೇಕು ಎನ್ನುವುದೂ ಅವಳಿಗೆ ಸ್ವಷ್ಟವಾಗಿತ್ತು. +ಆದರೂ ಅವನು ಸತ್ತರೆ ತಾನು ಮುಂಡೆಯಾಗುತ್ತೇನಲ್ಲ ಎಂಬ ಅಮಂಗಳದ ಭೀತಿ ಅವಳ ಹೃದಯನ್ನಾವರಿಸಿತ್ತು. +ಅವರ ಕೀಳುಜಾತಿಯ ರಿವಾಜಿನಂತೆ ಪಿಜಿಣ ಸತ್ತರೆ ಅಕ್ಕಣಿಯ ಮುಂಡೆತನ ಅನಿವಾರ್ಯವಾದುದೇನಾಗಿರಲಿಲ್ಲ! +ಕೆಲವೇ ದಿನಗಳಲ್ಲಿ, ಸತ್ತವನಿಗೆ ಮಾಡಿ ಮುಗಿಸಬೇಕಾತಿದ್ದ ಕ್ರಿಯೆಗಳೆಲ್ಲ ಪೂರೈಸಿದೊಡನೆ, ಅವಳು ತನ್ನ ವೈಧವ್ಯ ದುಃಖದಿಂದ ಪಾರಾಗಿ, ನವವಧುವೂ ಆಗಬಹುದಾಗಿತ್ತು! +ಚೀಂಕ್ರಿನ ಕೃಪೆಯಿಂದ ಆ ಅವಕಾಶವೂ ಶೀಘ್ರವಾಗಿ ಅಶ್ರಮವಾಗಿಯೆ ಲಭಿಸುವಂತೆಯೂ ಇತ್ತು! . +ಅಕ್ಕಣಿಯ ಒಳಮನಸ್ಸಿಗೆ ಒಮ್ಮೂಮ್ಮೆ ಆ ಕನಸೂ ಮಿಂಚುತ್ತಿದ್ದುದುಂಟು. +ಹಾಗೆ ಮಿಂಚಿದಾಗಲೆಲ್ಲ ಅವಳು ತನ್ನನ್ನು ತಾನೆ ಪಾಪಿ ಎಂದು ಬಯ್ದುಕೊಂಡು, ತನಗೆ ತಾನೆ ನೂರು ಶಾಪ ಹಾಕಿಕೊಳ್ಳುತ್ತಿದ್ದಳು. . +ಅವಳ ಅಂತರಾಳದ ಧರ್ಮಪ್ರಜ್ಞೆ ’ಚಿಃ ನೀನು ಎಂತಹ ಹಾದರಗಿತ್ತಿ ಆಗಿಹೋದೆ? +ಗಂಡನ ಸಾವನ್ನು ಬಯಸಿ, ಮಿಂಡನನ್ನು ಕೂಡಿಕೆಯಾಗುವ ಸಂಚು ಮಾಡುತ್ತಿದ್ದಿಯಾ?’ ಎಂದು ಮೂದಲಿಸಿದಂತಾಗುತ್ತಿತ್ತು. +ಆದರೂ ಪಿಜಿಣ ಈ ಭಯಂಕರ ರೋಗದಿಂದ ನರಳುತ್ತಾ ಇನ್ನೂ ಬಹು ದೀರ್ಘಕಾಲ ಬದುಕಿರುವ ಸಂಭವವನ್ನು ನೆನೆದಾಗಲೆಲ್ಲ ಅಕ್ಕಣಿಯ ಜೀವ ದಿಕ್ಕುಗೆಟ್ಟು ಸಂಕಟದಿಂದ ನಿಡುಸುಯ್ಯುತ್ತಿತ್ತು. +ಹೀಗೆ ಇಬ್ಬಗೆಯ ಇಕ್ಕುಳದಲ್ಲಿ ಸಿಕ್ಕಾಗಲೆಲ್ಲ ಅಕ್ಕಣಿ ಬಿಕ್ಕಿಬಿಕ್ಕಿ ಅತ್ತೂ ಅತ್ತೂ, ಅದರಿಂದುಂಟಾಗುತ್ತಿದ್ದ ದಣಿವನ್ನೆ, ಒಂದು ತೆರನ ಪ್ರಜ್ಞಾ ಮೂರ್ಛೆಯನ್ನೆ, ಸಮಾಧಾನವನ್ನಾಗಿ ಪರಿಗಣಿಸುತ್ತಿದ್ದದ್ದು ಅವಳಿಗೆ ರೂಢಿ ಬಿದ್ದಿತ್ತು. +ಅಳುತ್ತಳುತ್ತಲೆ ಅಕ್ಕಣಿ ಅವಳ ಬಿಡಾರದ ಬಾಗಿಲಿಗೆ ಬಂದಳು. +ಸರಿ, ಇನ್ನೇನು?ತಟ್ಟಿಯ ಬಾಗಿಲ ನೂಕಿ ಒಳಹೊಕ್ಕರೆ ಅವಳಿಗಾಗಿ ಕಾಯುತ್ತಲೆ ಇರುತ್ತದೆ ದಿನನಿತ್ಯದ ರೋತೆ! +ಬಾಗಿ ಮೊಡಂಕಿಲರು ಅಕ್ಕಣಿ ಬಾಗಿಲು ತೆರೆಯುವುದನ್ನೆ ನೋಡುತ್ತಾ ಅವಳ ಹಿಂದೆ ನಿಂತರು. +ಅವರು ತಮ್ಮ ಬಿಡಾರಕ್ಕೆ ನಾಲ್ಕುಮಾರು ಹಿಂದೆಯ ಅಗಚಿ ಹೋಗಬೇಕಾಗಿತ್ತು. +ಆದರೆ ಅಕ್ಕಣಿಯ ದುಃಖಸ್ಥಿತಿಯನ್ನೂ ಅವಳ ಗಂಡನ ರೋಗದ ಉಲ್ಬಣತೆಯನ್ನೂ ನೆನೆದು, ಬಿಡಾರದೊಳಕ್ಕೆ ಹೋಗಿ ವಿಚಾರಿಸಿಕೊಂಡೆ ಹೋಗುವ ಎಂದು ಬಂದಿದ್ದರು. +ಕತ್ತಲೆ ಕವಿದಿದ್ದ ಬಿಡಾರ ಅಷ್ಟು ನೀರವವಾಗಿದ್ದುದು ಅಕ್ಕಣಿಗೆ ಅಚ್ಚರಿಗಿಂತಲೂ ಹೆಚ್ಚಾಗಿ ಅನುಮಾನ ಉಂಟುಮಾಡಿತ್ತು. +ಸಾಮಾನ್ಯವಾಗಿ ಪಿಜಿಣನಿಗೆ ಇತ್ತೀಚೆಗೆ ನಿದ್ದೆಯೆ ಬರುತ್ತಿರಲಿಲ್ಲ. +ಮೂರು ಹೊತ್ತೂ ಅಯ್ಯಪ್ಪಾ ಉಸ್ಸಪ್ಪ ಎನ್ನುತ್ತಲೋ ನರಳುತಲೋ ಇನ್ನೇನನ್ನಾದರೂ ಹಲವರಿಯುತ್ತಲೋ ಇರುತ್ತಿದ್ದ.’ +ಇಂದೇನು ಇಷ್ಟು ನಿಃಶಬ್ಧವಾಗಿ ನಿದ್ದೆ ಮಾಡುತ್ತಿದ್ದರಲ್ಲಾ!ಎಂದು ಕೊಂಡಿತು ಅವಳ ಮನಸ್ಸು. +ಕಡೆಗೆ ಉಸಿರಾಡುವುದಾದರೂ ಕೇಳಿಸಬೇಕಾಗಿತ್ತಲ್ಲ?ಏನು ವಾಸನೆ? +ಒಡನೆಯೆ ಚೀಂಕ್ರ ಕೊನೆಮೆಟ್ಟೆಯ ರಾಶಿಯಡಿ ಅಡಗಿಸಿಟ್ಟಿದ್ದ ಸಾರಾಯಿ ಶೀಸೆಗಳ ನೆನಪಾಗಿ ಅವಳೆದೆ ಏನೋ ಆಶಂಕಿಯಿಂದ ಹೌಹಾರಿತು. +ಕಾಲೆಲ್ಲ ಸೋತು ಬಂದಂತಾಯಿತು. +ಗಂಟಲು ಆರಿತು. +ಬೇಗಬೇಗನೆ ಬಾಗಿಲು ತಳ್ಳಿ ಒಳಗೆ ಕಗ್ಗತ್ತಲೆಗೆ ದಾಟಿದಳು. +ಬಿಡಾರದ ಮೂಲೆಯಲ್ಲಿದ್ದ ಒಲೆಯಲ್ಲಿ ಕೆಂಡ ಬೂದಿಮುಚ್ಚಿಕೊಂಡಿತ್ತು. +ನೆಟ್ಟಗೆ ಅಲ್ಲಿಗೆ ಕೆಸರು ಗಾಲಿನಲ್ಲಿಯೆ ನಡೆದು, ಕೂತು, ಊದಿ, ಜಿಗ್ಗು, ಒಟ್ಟಿದಳು. +ಬೆಂಕಿ ಹೊತ್ತಿಕೊಂಡು ಜ್ವಾಲೆ ಉರಿಯಿತು. +ಬಿಡಾರ ಬೆಳಕಾಯಿತು. +ಆದರೆ ಅಕ್ಕಣಿಯ ಕಣ್ಣಿಗೆ ಬಿದ್ದ ಘೋರ ದೃಶ್ಯಕ್ಕೆ, ಅವಳ ಪ್ರಾಣಕ್ಕೆ ಕಗ್ಗತ್ತಲೆಯ ಸಿಡಿಲು ಹೊಡೆದಂತಾಗಿ, ಕಣ್ಣು ಕತ್ತಲೆಗಟ್ಟಿ, ಪ್ರಜ್ಞೆ ಸೋತು, ಚಿಟಾರನೆ ಚೀರಿಕೊಂಡು, ಧಾತು ಹಾರಿ ನೆಲಕ್ಕೆ ಉರುಳಿಬಿಟ್ಟಳು! +ತತ್ತರಿಸಿ ಹೋದ ಬಾಗಿ ಮೊಡಂಕಿಲರು ಒಳಗೆ ನುಗ್ಗಿ ನೋಡುತ್ತಾರೆ. +ಒಲೆಯ ಉರಿಯ ಮಂದಕಾಂತಿಯಲ್ಲಿ ನಸುಮಬ್ಬಾಗಿ ಕಾಣಿಸುತ್ತಿದೆ, ಬಿಡಾರದ ಬೆಂಗಟೆಯಿಂದ ನೇತಾಡುತ್ತಿದ್ದ ಪಿಜಿಣನ ನಿಶ್ಚಲ-ಕೃಶ-ಕಳೇಬರ…. +ರಾತ್ರಿ ಹೂವಳ್ಳಿಯ ಮದುವೆಮನೆಯಲ್ಲಾದ ದುರಂತದ ಗಲಿಬಿಲಿಯಲ್ಲಿ ಸಧ್ಯವಾದಷ್ಟು ತನ್ನ ಸಂಪಾದನೆಯನ್ನು ಕೈಗೂಡಿಸಿಕೊಂಡು ಮರುದಿನ ಬೆಳಗ್ಗೆ ಚೀಂಕ್ರ ಸೇರೆಗಾರನು ಕೋಣೂರಿಗೆ ಹಿಂತಿರುಗಿದಾಗ ಅವನ ಆಶೆ, ಅವನ ಹೃದಯದ ನಿಗೂಢ ದುರಭಿಸಂಧಿ, ಅಷ್ಟು ಶೀಘ್ರವಾಗಿ ಕೈಗೂಡುತ್ತದೆ ಎಂದು ಅವನು ಭಾವಿಸಿರಲಿಲ್ಲ. + ತಾನು ಕೊನೆ ಮುಟ್ಟೆಯಡಿ ಮುಚ್ಚಿಟ್ಟಿದ್ದ ಸಾರಾಯಿ ಶೀಸೆಗಳಿಗೆ ಒದಗಿದ್ದ ಗತಿಗೆ ಅವನು ಬಹಳ ವ್ಯಸನಪಟ್ಟಂತೆ ತೋರಿಸಿಕೊಂಡಿದ್ದರೂ ಒಳಗೊಳಗೆ ಸಾರ್ಥಕವಾಯಿತೆಂದು ಹಿಗ್ಗಿದನು. +ಅಕ್ಕಣಿಯ ದುಃಖದಲ್ಲಿ ಸಮಭಾಗಿಯಾದಂತೆ ಶೋಕಿಸಿದ್ದನು. +ಇತರರ ಸಂಗಡ ತಾನೂ ನಿರಾಸಕ್ತನೆಂಬಂತೆ ಅಕ್ಕಣಿಗೆ ಸಮಾಧಾನ ಹೇಳಿದ್ದನು. +ಪಿಜಿಣನ ಶವ ಸಂಸ್ಕಾರದಲ್ಲಿ ಅತ್ಯಂತ ಮುತುವರ್ಜಿಯಿಂದ ಪರಮಬಂಧುವಿನಂತೆ ಸೇವೆ ಸಲ್ಲಿಸಿದನು. +ಅಕ್ಕಣಿ ಮಾತ್ರ ಅವನ ಕಡೆ ದೃಷ್ಟಿ ಹಾಯಿಸಲಿಲ್ಲ. +ಅತ್ಯಂತ ನಿರ್ಲಕ್ಷತೆಯಿಂದ ಚೀಂಕ್ರನ ಅಸ್ತಿತ್ವವನ್ನೆ ತಿರಸ್ಕರಿಸುವಂತೆ ವರ್ತಿಸಿದಳು. +ತನ್ನ ಗಂಡನ ಸಾವೊಂದೇ ಅವಳ ಮನಸ್ಸರ್ವವನ್ನೂ ವ್ಯಾಪಿಸಿ, ಅವಳ ಬದುಕನ್ನು ಬೇಯಿಸುತ್ತಿದ್ದಂತೆ ಕಾಣುತ್ತಿತ್ತು. +ತನ್ನ ಗಂಡನ ಅಕಾಲ ಮರಣಕ್ಕೆ ಚೀಂಕ್ರನೇ ಕಾರಣ ಎಂಬ ಧ್ವನಿ ಬರುವಂತಹ ಮಾತನ್ನೂ ಆಡಿದ್ದಳು! +“ಸೇರೆಗಾರ್ರನ್ನು ಯಾಕೆ ಬಯ್ಯುತ್ತೀಯಾ? +ನಿನಗೂ ನಿನ್ನ ಗಂಡಗೂ ಅವರು ಎಷ್ಟೆಲ್ಲ ಉಪಕಾರ ಮಾಡಿದ್ದಾರೆ?” ಎಂದು ಕಿವಿಮಾತು ಹೇಳಿದ ಬಾಗಿಗಿ, ಮೂದಲಿಸುವಂತೆ ನುಡಿದಿದ್ದಳು, ಸುಯ್ದು. +“ಮಾಡಿದಾರೆ!ಉಪಕಾರ ಮಾಡಿದ್ದಾರೆ! +ಉಪಕಾರದ ಒಳಗಿದ್ದ ಅಪಕಾರ ನಿನಗೆ ಹೆಂಗೆ ಗೊತ್ತಾಗಲಕ್ಕೂ, ಬಾಗಕ್ಕಾ?” +ದಟ್ಟಗಾಡಿನ ಮಲೆಗಳ ನಡುವೆ ಹುಟ್ಟಿ ಬೆಳೆದ ಮಲೆನಾಡಿನ ಮಲೆಗಳ ಮಗಳಾಗಿದ್ದರೂ ಚಿನ್ನಮ್ಮ ಎಂದೂ ಅಂತಹ ಮೇಘಚುಂಬಿ ಘೋರಾರಣ್ಯದ ಶಿಖರ ಪ್ರದೇಶದಲ್ಲಿ, ಅದರಲ್ಲಿಯೂ ಅಂತಹ ಗಾಳಿಮಳೆಗಳ ಬಿರುಬಿನ ಸನ್ನಿವೇಶದಲ್ಲಿ, ಇರುಳನ್ನು ಕಳೆದವಳಾಗಿರಲಿಲ್ಲ. +ಅಜ್ಜಿಯ ಅಕ್ಕರೆಯ ಬೆಚ್ಚನೆಯ ಮಗ್ಗುಲಲ್ಲಿಯೆ ಅವಳ ಬದುಕು ಬೆಳೆದಿತ್ತು, ಬಾಳು ಸಾಗಿತ್ತು. +ತನಗೆ ವಿಷಮಯವಾಗಿದ್ದ ವಿಷಮ ವಿವಾಹದಿಂಗ ಪಾರಾಗಿ,ಅಮೃತಮಯವಾಗಿದ್ದು ತಾನೊಲಿದವನನ್ನೆ ತನ್ನ ಬದುಕಿನ ಸಂಗಿಯನ್ನಾಗಿ ಪಡೆಯುವ ಹೃದಯದ ಹಂಬಲವೋಂದೆ ಅವಳನ್ನು ಆ ರಾತ್ರಿ ಅಂತಹ ಅಪೂರ್ವ ಸಾಹಸಕ್ಕೆ ಪ್ರಚೋದಿಸಿತ್ತು. +ಅವಳ ಚೇತನದ ಸಹಜ ಸ್ವರೂಪವಾಗಿದ್ದ ಕುಸುಮಕೋಮಲತೆ ಕೆಲವು ಮುಹೂರ್ತಕಾಲದ ಮಟ್ಟಿಗೆ ವಜ್ರಕಠೋರವಾಗಿ ಪರಿವರ್ತಿತವಾಗಿತ್ತು. +ಅಂತಹ ಪರಿವರ್ತನೆ ಏಕದೇಶನಿಷ್ಠವಾದ ಅಂಶದೃಷ್ಟಿಗೆ ಆಕಸ್ಮಿಕ, ಅಸಾಧ್ಯ, ಅತ್ಯಂತ ಅಪೂರ್ವ, ಅಸ್ವಾಭಾವಿಕ ಎಂಬಂತೆ ಭಾಸವಾದರೂ, ಚಿನ್ನಮ್ಮನ ಹೊಟ್ಟೆಯಲ್ಲಿ ಮಗಳಾಗಿ ಹುಟ್ಟುವವಳ ಅಥವಾ ಆ ಮಗಳ ಹೊಟ್ಟೆಯಲ್ಲಿ ಮಗನಾಗಿ ಹುಟ್ಟಿ ಮುಂದೆ ಜಗಜ್ಜೀವನ ವಿಕಾಸಕ್ಕೆ ತನ್ನ ಕಾಣಿಕೆಯನ್ನು ಸಲ್ಲಿಸುವ ಅದಾವುದೊ ಒಂದು ಗುರುಚೇತನದ ಚಿತ್ತಪಸ್ಸಿನ ಪ್ರಭಾವವನ್ನರಿಯುವ ತ್ರಿಕಾಲಜ್ಞವಾದ ಪೂರ್ಣದೃಷ್ಟಿಗೆ ಅದು ಅತ್ಯಂತ ಅನಿವಾರ್ಯ ಧರ್ಮವಾಗಿಯೆ ಕಾಣಿಸುವುದರಲ್ಲಿ ಸಂದೇಹವಿಲ್ಲ. +ಹುಲಿಕಲ್ಲು ನೆತ್ತಿಯ ಕಲ್ಲುಮಂಟಪಕ್ಕೆ ಬಂದು, ಬಟ್ಟೆ ಬದಲಾಯಿಸಿ, ಬೆಂಕಿ ಕಾಯಿಸಿಕೊಂಡು, ಬುತ್ತಿಯೂಟ ಉಣ್ಣುವ ಶಾಸ್ತ್ರ ಮಾಡಿ, ಮುಕುಂದಯ್ಯನ ಮುಂಗಾಣ್ಕೆ ಒದಗಿಸಿದ್ದ ಬೆಚ್ಚನೆಯ ಕಂಬಳಿಯ ಮೇಲೆ ಬೆಚ್ಚಗೆ ಹೊದೆದುಕೊಂಡು ಮಲಗಿದ ಮೇಲೆಯೆ ಆ ಚಿತ್ತಪ್ಪಸ್ಸಿನ ಪ್ರಭಾವ ತಿರೋಹಿತಮಾದಂತಾದಿ ಚಿನ್ನಮ್ಮನ ಹೃದಯ ಅಳುಕತೊಡಗಿದ್ದು! +ತನ್ನಂತಹ ಪುಕ್ಕಲೆದೆಯ ಹಳ್ಳಿಯ ಹುಡುಗಿ, ಅತ್ತಕಡೆಯ ಜನರು ಕಥೆಗಳಲ್ಲಲ್ಲದೆ ಕಂಡು ಕೇಳರಿಯದ, ಅಂತಹ ಮಹಾ ಅಪವಾದಕರವಾದ ಅಪರಾಧ ಸದೃಶವಾದ ಭಯಂಕರ ಸಾಹಸಕ್ಕೆ ಕೈಹಾಕಿದ್ದಾದರೂ ಹೇಗೆ ಎನ್ನುವುದು ಅವಳಿಗೆ ಅರ್ಥವಾಗಲಿಲ್ಲ. +ನೆನೆದಂತೆಲ್ಲ ಹೆದರಿಕೆಯಾಗತೊಡಗಿತು. +ಇನ್ನೂ ಬುದ್ಧಿರೂಪಕ್ಕಿಳಿಯದೆ ಭಾವರೂಪ ಮಾತ್ರವಾಗಿದ್ದ  ಆ ಚಿಂತನೆ ಚಿನ್ನಮ್ಮನ ಚೇತನದಲ್ಲಿ ತನ್ನ ಅಜ್ಜಿಯ ಪರವಾದ ಯೋಚನೆಯಾಗಿ ಪರಿಣಮಿಸಿ, ಅಜ್ಜಿಯನ್ನು ನೆನೆನೆನೆದು ಮುಸುಗಿನೊಳಗೆ ಸದ್ದಿಲ್ಲದೆ ಅಳತೊಡಗಿದಳು. +ಚಿನ್ನಮ್ಮ ಮಲಗಿದ್ದ ಜಾಗಕ್ಕೆ ಸಮೀಪದಲ್ಲಿದ್ದ ಕಲ್ಲುಗೋಡೆಯ ಬಿರುಕಿನಲ್ಲಿ ಕೀಟವೊಂದು ಟಿಪಿಟ್ಟಿಪಿಟ್ಟಿಪಿಟ್ಟಿ ಎಂದು ಬಿಡದೆ ಕೂಗಿಕೊಳ್ಳುತ್ತಿತ್ತು. +ಅದು ಮೂದಮೂದಲು ಕಿನಿಸಿಗೆ ಉಂಟುಮಾಡಿದರೂ ಬರಬರುತ್ತಾ ಒಂದು ತೆರನಾದ ಜೋಗುಳದುಲಿಯಂತಾಗಿ, ಅಳುತ್ತಳುತ್ತಲೆ, ಹಿಂದೆಂದೂ ದಣಿಯದಷ್ಟು ದಣಿದಿದ್ದ ಕುಮಾರಿ ನಿದ್ದೆಹೋದಳು. +ಮನೆಯಲ್ಲಿ ಗದ್ದಲವೋ ಗದ್ದಲ! +ಮದುವೆಗೆ ಬಂದಿದ್ದ ನಂಟರು, ದಿಬ್ಬಣದವರು, ಊಟಕ್ಕಾಗಿಯೆ ಬಂದಿದ್ದ ಕೀಳುಜಾತಿಯ ಆಳುಕಾಳುಗಳು, ಧಾರೆಯ ನೋಟಕ್ಕಾಗಿಯೂ ಬಂದಿದ್ದವರೂ ಎಲ್ಲರೂ ಓಡಾಡುತ್ತಿದ್ದಾರೆ. + ಹುಡುಕುತ್ತಿದ್ದಾರೆ!ಕರೆಯುತ್ತಿದ್ದಾರೆ! …. + ಇದೇನಿದು?ಕುಂಟನ ಹುಣ್ಣು ವಿಷಮಿಸಿ ಏಳಲಾರದೆ, ಮಾತು ಕೂಡ ನಿಂತುಹೋಗುವಷ್ಟು ಜ್ವರದಿಂದ ನರಳುತ್ತಿದ ಅಪ್ಪಯ್ಯ ಕೋಣೆಯಿಂದೆದ್ದು ಬಂದು, ಮದುವೆಗೆ ನೆರೆದಿದ್ದ ಗರತಿಯರ ನಡುವೆ ನುಗ್ಗಿ, ಯಾರನ್ನೊ ಹೊಡೆಯುತ್ತಿದ್ದಾನೆ! +ಚಿನ್ನಮ್ಮ ನಡುಗುತ್ತ ಮೈ ಬೆವರಿ ನೋಡುತ್ತಾಳೆ. + ರೌದ್ರಾವೇಶದ ತನ್ನ ಅಪ್ಪಯ್ಯ ನಾಗಕ್ಕನ ಜಡೆ ಹಿಡಿದು, ಗುದ್ದಿ ಗುದ್ದಿ ಎತ್ತಿಯೆತ್ತಿ ಕುಕ್ಕಿ, ಒದೆಯುತ್ತಿದ್ದಾನೆ. +ನಾಗಕ್ಕ ಕೆಳಗೆ ಬಿದ್ದು, ಏಳಲು ಪ್ರಯತ್ನಿಸುತ್ತಾ, ಒಂದೊಂದು ಒದೆಗೂ ತತ್ತರಿಸಿ ಮತ್ತೆಮತ್ತೆ ನೆಲಕ್ಕೆ ಬೀಳುತ್ತಿದ್ದಾಳೆ! +ಚಿನ್ನಮ್ಮ ತಡೆಯಲಾರದೆ “ದಮ್ಮಯ್ಯ ಅಪ್ಪಯ್ಯಾ!ಹೊಡೀಬ್ಯಾಡ, ಬಿಡು!ಎಂದು ಕೂಗಿ ಮುನ್ನುಗ್ಗಿದವಳು, ಅಪ್ಪಯ್ಯ ತನ್ನ ಹೊಟ್ಟೆಗೇ ಝಾಡಿಸಿ ಒದ್ದ ಹೊಡೆತಕ್ಕೆ ಅರಚಿಕೊಂಡು ನೆಲಕ್ಕೊರಗುತ್ತಾಳೆ! +ಗಡಗಡನೆ ನಡುಗುತ್ತಾ, ಮೈ ಬೆವರಿ, ಕುಮುಟಿ ಬಿದ್ದು, ಚಿನ್ನಮ್ಮ ತಟಕ್ಕನೆ ಕಣ್ಣು ತೆರೆಯುವುದಕ್ಕೂ, ಹತ್ತಿರವೆ ಬೇರೆ ಚಾಪೆಯ ಮೇಲೆ, ಅತಿ ಆಯಾಸದಿಂದಾಗಿದ್ದ ತನ್ನ ಬಸಿರಿನ ನೋವನ್ನು ಯಾರಿಗೂ  ಹೇಳದೆ, ನಿದ್ದೆಯಿಲ್ಲದೆ, ಬಿದ್ದುಕೊಂಡಿದ್ದ ಪೀಂಚಲು ಚಿನ್ನಮ್ಮ ಕೂಗಿಕೊಂಡದ್ದನ್ನು ಕೇಳಿ, “ ಚಿನ್ನಕ್ಕಾ, ಬಲಮಗ್ಗುಲಿಗೆ ತಿರುಗಿಕೊಳ್ಳಿ!ಅಂಗಾತನೆ ಮಲಗಿದ್ರೆ ಒತ್ತುಗ ಅಗ್ರದೆ!” ಎಂದು ಕರೆಯುವುದಕ್ಕೂ ಸರಿಹೋಯಿತು. +ಚಿನ್ನಮ್ಮ ಪೀಂಚಲು ಹೇಳಿದಂತೆ ಮಾಡಿ, ಮೆಲುದನಿಯಲ್ಲಿ ಕೇಳಿದನು. + “ನಾನು ಕೂಗಿಕೊಂಡೆನೇನೇ? ” + “ಹೌದು…. ಅಂಗಾತನೆ ಮನಗಿದ್ರೇ ಹಾಂಗಾಗಾದು.” + ಮಗ್ಗುಲಿಗೆ ತಿರುಗಿ ಮಲಗಿಕೊಂಡ ಚಿನ್ನಮ್ಮ ಕಣ್ಣುಬಿಟ್ಟುಕೊಂಡೆ ಇದ್ದಳು, ಬಹಳ ಹೊತ್ತು, ತಾನು ಕಂಡ ಕನಸನ್ನು ನೆನೆಯುತ್ತಾ. +ಅವಳೂ ಪೀಂಚಲೂ ಇಬ್ಬರೂ ತಟ್ಟಿಕಟ್ಟಿ ಮರೆಮಾಡಿದ್ದ ಕೋಣೆಯಂತಹ ಜಾಗದಲ್ಲಿ ಮಲಗಿದ್ದರು, ಒಬ್ಬರಿಂದೊಬ್ಬರು ಸುಮಾರು ಒಂದು ಮಾರು ದೂರವಾಗಿ. +ಆಚೆಗೆ ಹತ್ತಾರು ಮಾರು ದೂರದಲ್ಲಿ ‘ನಂದಾಬೆಂಕಿ’ಯ ಸುತ್ತಲೂ ಕುಳಿತು ಮಾತಾಡುತ್ತಿದ್ದ ಮುಕುಂದಯ್ಯ ಐತ ಗುತ್ತಿಯರ ಆಕೃತಿಗಳು ಕೆಂಡಗಾಂತಿಯಲ್ಲಿ ಮಬ್ಬಾಗಿ ಕಾಣಿಸುತ್ತಿದ್ದುವು. +ತಾನು ಕನಸಿನಲ್ಲಿ ಕಂಡಂತೆಯೆ ಆಗಿಬಿಟ್ಟಿರಬಹುದೆ ಮನೆಯಲ್ಲಿ? +ತನಗಾಗಿ ನಾಗಕ್ಕಗೆ ಏನೇನು ಕಷ್ಟವೋ? +ಅಪ್ಪಯ್ಯನಿಗೆ ಕಾಯಿಲೆ ಜೋರಾಗಿ, ಅವನು ಏಳದಿರುವಂತೆ ಆಗಿದ್ದರೆ ಎಂದು ತನ್ನ ಒಳಮನಸ್ಸು ಹಾರೈಸುತ್ತಿರುವುದನ್ನು ಗೊತ್ತುಹಚ್ಚಿದ ಅವಳ ಮಗಳುತನದ ಪಿತೃಪ್ರೀತಿ ಜುಗುಪ್ಸೆಯಿಂದ ಇಸ್ಸಿ ಎಂದುಕೊಂಡಿತು. +ಆಲೋಚಿಸುತ್ತಿದ್ದ ಹಾಗೆಯೆ ದಣಿದ ಓಡಲು ಮತ್ತೆ ಕಣ್ಣುಮುಚ್ಚಿತ್ತು. +ಚಿನ್ನಮ್ಮ ತಮ್ಮ ಮನೆಯ ತುಳಸಿಕಟ್ಟೆಯ ದೇವರಿಗೆ ಮನದಲ್ಲಿಯೆ ಅಡ್ದಬಿದ್ದು ನಿದ್ದೆ ಮಾಡಿದವಳು ಚೆನ್ನಾಗಿಯೆ ನಿದ್ರಿಸಿದ್ದಳು. +ಅವಿಚಾರ ಭಕ್ತಿಯ ಅಂಧಶ್ರದ್ಧೆಯಿಂದ ಅವಳಿಗೆ ಭಗವಂತನಲ್ಲಿ ಶರಣಾಗತಿ ಸುಲಭವಾಗಿಯೆ ಸಿದ್ದಿಸಿತ್ತು. +ಮದುವೆ ಗೊತ್ತಾದ ದಿನವೇ ಅವಳು ಮುಕುಂದಯ್ಯನೊಡನೆ ಓಡಿ ಬಂದು, ಎಂತಹ ಕಂಟಕಮಯ ಜಟಿಲ ಸಮಸ್ಯೆಗಳ ಶತಶತ ಜಾಲವನ್ನೆ ನೆಯ್ದು, ಭಗವಂತನ ಮುಂದೆ ಪರಿಹಾರಕ್ಕಾಗಿ ಒಡ್ಡಿದ್ದಾಳೆ ಎಂಬುದರ ಅರಿವು ಅವಳಿಗೆ ಇನಿತೂ ಇರಲಿಲ್ಲ! +ಅದನ್ನೆಲ್ಲ ಕಟ್ಟಿಕೊಂಡು ಅವಳಿಗೇನು? +ಸರ್ವ ಶಕ್ತನೂ ಸರ್ವಜ್ಞಾನಿಯೂ ಪರಮಕೃಪಾನಿಧಿಯೂ ಆಗಿರುವ ಅವನಿಗೆ ಅದೊಂದು ದೊಡ್ಡ ವಿಷಯವೇನು? +ಅದನ್ನೆಲ್ಲಾ ಚಿಂತಿಸಿ ಭಕ್ತೆ ಅವಳೇಕೆ ತಲೆ ಕೆಡಿಸಿಕೊಳ್ಳಬೇಕು! +ಹೂವಳ್ಳಿ ಮನೆಯ ಬದುಕಿನಲ್ಲಿ, ಸಿಂಬಾವಿ ಮನೆಯ ಬದುಕಿನಲ್ಲಿ, ಹಳೆಮನೆ ಕೋಣೂರುಗಳ ಮನೆ ಬದುಕಿನಲ್ಲಿ, ಭರಮೈಹೆಗ್ಗಡೆ ವೆಂಕಪ್ಪನಾಯಕ ರಾದಿಯಾಗಿ ಹಲವಾರು ವ್ಯಕ್ತಿಗಳ ಮತ್ತು ಸಾಮಾಜಿಕ ಜೀವನದಲ್ಲಿ ಏನೇನು ಭೂಕಂಪಗಳಾಗುತ್ತವೆ? +ಏನೇನು ಜ್ವಾಲಾಮುಖಿಗಳೇಳುತ್ತವೆ? +ಏನೇನು ವಿಪ್ಲವ ಪ್ರವಾಹಗಳು ನುಗ್ಗಿ ಯಾರು ಯಾರು ಮುಳುಗುತ್ತಾರೆ? +ಯಾರು ಯಾರು ಕೊಚ್ಚಿಹೋಗುತ್ತಾರೆ? +ಅದನ್ನೆಲ್ಲ ಕಟ್ಟಿಕೊಂಡು ಅವಳಿಗೇನು? +ಅದೆಲ್ಲ ಅವಳು ಯಾರಿಗೆ ಅಡ್ಡಬಿದ್ದು ಶರಣಾಗತಳಾದಳೊ ಆ ಭಗವಂತನ ಭಾರ! +ಚಿನ್ನಮ್ಮ ತಕ್ಕಮಟ್ಟಿಗೆ ಚೆನ್ನಾಗಿಯೆ ನಿದ್ದೆಮಾಡಿದ್ದಳು. +ಆದರೆ ಬೆಳಗಿನ ಮುಂಜಾವಿನಲ್ಲಿ ಅಜ್ಜಿ ಅಳುತ್ತಾ ಕುಳಿತಿದ್ದಾಳೆ. +ನಾಗಕ್ಕ ಅವಳ ಸುತ್ತಲೂ ಕೋಟೆಯ ಗೋಡೆ ಎಬ್ಬಿಸುವಂತೆ ಸೌದೆ ಒಟ್ಟುತ್ತಿದ್ದಾಳೆ. +ಚಿನ್ನಮ್ಮ ನೋಡುತ್ತಿದ್ದಂತೆ ಸೌಧೆಯ ಗೋಡೆ ಅಜ್ಜಿಯ ಶೀರ್ಣಮುಖ ಮಾತ್ರ ಕಾಣುವಂತೆ, ಸುತ್ತಲೂ ಎದ್ದು ಅವಳನ್ನು ಮುಚ್ಚಿತು. +ಚಿನ್ನಮ್ಮನಿಗೆ ಅಜ್ಜಿಯ ನೆರವಿಗೆ ಹೋಗುವ ತುರಾತುರಿ ಆದರೆ ಹೆಜ್ಜೆ ಹಾಕಲಾಗುತ್ತಿಲ್ಲ! +ಕೂಗಿ ನಾಗಕ್ಕನಿಗೆ ಹಾಗೆ ಮಾಡದಿರಲು ಹೇಳುವಾಶೆ. +ಆದರೆ ಬಾಯೇ ಹೊರಡುತ್ತಿಲ್ಲ! +ನಿಸ್ಸಹಾಯಳಾಗಿ ನಿಂತಿದ್ದಾಳೆ. +ಅಯ್ಯೋ ಸೌಧೆಯ ಕೋಟೆ ಅಜ್ಜಿಯನ್ನು ಸಂಪೂರ್ಣವಾಗಿ ಮುಚ್ಚಿಯೆ ಬಿಟ್ಟಿತೆ? +ನಾಗಕ್ಕ ಎಲ್ಲಿಯೂ ಕಾಣಿಸುತ್ತಿಲ್ಲ!… ಆದರೆ ಅಪ್ಪಯ್ಯ! +‘ಅಯ್ಯೋ, ಬೇಡಾ ಬೇಡಾ, ಅಪ್ಪಯ್ಯ’ ಎಂದು ಒರಲುತ್ತಾಳೆ. +ದನಿ ಹೊರಡದು! +ಹೂವಳ್ಳಿ ವೆಂಕಪ್ಪನಾಯಕರು, ಕುಂಟಿನ ಹುಣ್ಣಿಲ್ಲ, ಕಾಯಿಲೆ ಇಲ್ಲ್, ಸಂಪೂರ್ಣ ಆರೋಗ್ಯದಿಂದಿದ್ದಾರೆ, ಅಜ್ಜಿಯನ್ನು ಮುಚ್ಚಿರುವ ಆ ಸೌದೆ ರಾಶಿಗೆ ಬೆಂಕಿಯಿಟ್ಟರು! +ಜ್ವಾಲೆ ಧಗಧಗನೆ ಉರಿದೇಳುತ್ತಿದೆ!…ಬೆವರಿ, ತತ್ತರಿಸಿ ಕುಮುಟಿಬಿದ್ದೆದ್ದಳು ಚಿನ್ನಮ್ಮ! +ನೋಡುತ್ತಾಳೆ, ಎಲ್ಲರೂ ಮಲಗಿ ನಿದ್ರಿಸುತ್ತಿದ್ದಾರೆ. +ದೂರದಲ್ಲಿ ಕುಂಟೆಯ ಬೆಂಕಿ ಕೆಂಡವಾಗಿ ಮಾತ್ರ ಝಗಝಗಿಸುತ್ತಿದೆ. +ಬಳಿಯ ಬೂದಿಯ ರಾಶಿಯಲ್ಲಿ ಹುಲಿಯ ಅಂಡೂರಿ ಕುಳಿತು ಮೈ ಕೆರೆದುಕೊಳ್ಳುತ್ತಿದೆ. +ಗಾಳಿ ಸುಯ್ಯನೆ ಬೀಸುತ್ತಿದೆ. +ಮಳೆ ಸುರಿಯುತ್ತಿದೆ. +ಪೀಂಚಲು ತನ್ನ ಬಳಿಯೆ ತುಸು ದೂರದಲ್ಲಿ ಮಲಗಿ ನಿದ್ದೆಯಲ್ಲಿದ್ದಾಳೆ. +ತಟ್ಟೆಯ ಕೋಣೆಯ ಆಚೆ ದೂರದಲ್ಲಿ ಮುಕುಂದಯ್ಯ ಐತರು ಮಲಗಿರುವುದು ಚಿನ್ನಮ್ಮನ ಹೃದಯ ಹೇಳಿಕೊಂಡಿತು. + “ ಮುಕುಂದಭಾವನಿಗೆ ಎಷ್ಟು ನಾಚಿಕೆ!ಎಷ್ಟು ಮರ್ಯಾದೆ! +ನನ್ನ ಮಾನ ಮರ್ಯಾದೆ ಅಂದರೆ ಅವರಿಗೆ ಎಷ್ತು ಮುತುವರ್ಜಿ!… ಅಷ್ಟು ದೂರದಲ್ಲಿ ಮಲಗಿದ್ದಾರಲ್ಲಾ! …. +ತರುವಾಯ ಅವಳಿಗೆ ನಿದ್ದೆ ಮಾಡಲಾಗಲಿಲ್ಲ. +ಎಲ್ಲದಕ್ಕಿಂತಲೂ ಹೆಚ್ಚಾಗಿ ಅಜ್ಜಿಯ ಚಿಂತೆಯ ಅವಳ ಹೃದಯವನ್ನು ಆಕ್ರಮಿಸತೊಡಗಿತು! +ನಾಗಕ್ಕ ಅಜ್ಜಿಗೆ ಏನಾದರೂ ಸಮಾಧಾನ ಹೇಳಿದಳೋ ಇಲ್ಲವೋ? +ನನಗೆ ಈ ಮದುವೆಯಲ್ಲಿ ಇಷ್ಟ ಸ್ವಲ್ಪವೂ ಇರಲಿಲ್ಲ ಎಂಬುದು ಅಜ್ಜಿಗೆ ಗೊತ್ತೆ ಇತ್ತು. +ನಾನೆಲ್ಲಿ ಪ್ರಾಣ ಕಳೆದುಕೊಂಡುಬಿಟ್ಟೆನೋ ಎಂದು ಅಜ್ಜಿ ಎಷ್ಟು ಗೋಳಿಡುತ್ತಾಳೋ? ಅಥವಾ…? +ತಾನು ಕಂಡ ಕನಸು ಏನಾದರೂ ನಡೆದಿದ್ದ ನಿಜವನ್ನೆ ಸೂಚಿಸಿತೊ? +ನಾನು ಸತ್ತೇಹೋದೆ ಎಂದು ಹೆದರಿ ಅಜ್ಜಿಯ ಪ್ರಾಣವೆ ಹಾರಿ ಹೋಗಿದ್ದರೆ? +ಚಿನ್ನಮ್ಮಗೆ ಅದನ್ನು ನೆನೆದ ಮಾತ್ರದಿಂದಲೆ ಬದುಕು ಶೂನ್ಯವಾದಂತಾಗಿ ಸುಮ್ಮನೆ ಕಣ್ಣೀರು ಸುರಿಸುತ್ತಾ ಮಲಗಿದ್ದಳು. + ‘ಅಯ್ಯೋ ಅಜ್ಜಿಗೆ ನಾನೇನು ಮಾಡಿಬಿಟ್ಟೆನೋ, ಸ್ವಾಮಿ?ಸರೂ ತಪ್ಪಾಯ್ತು! +ನಿನ್ನ ಪಾದಕ್ಕೆ ಬೀಳ್ತಿನಿ. ಇದೊಂದು ಸಾರಿ ಕಾಪಾಡು!… +ಬೆಳಗ್ಗೆ ಎಚ್ಚರವಾದಾಗ ಯಾರೊ ಗೊಣಗೊಣನೆ ಮಾತಾಡುತ್ತಿದ್ದದು ಚಿನ್ನಮ್ಮನ ಕಿವಿಗೆ ಬಿತ್ತು. +ಕಣ್ಣುಬಿಟ್ಟು ನೋಡಿದಾಗ ‘ನಂದಾಬೆಂಕಿ’ಯ ಹತ್ತಿರ ಮುಕುಂದಯ್ಯನೊಡನೆ ಯಾರೊ ಮಾತಾಡುತ್ತಾ ಇದ್ದದ್ದು ಮಂಜು ಮಂಜಾಗಿ ಕಾಣಿಸಿತು. +ಉಡುಗೆ ತೊಡುಗೆ ರೀತಿಗಳಿಂದ ಗುತ್ತಿ ಐತರಂತಿರಲಿಲ್ಲ. +ಯಾರು ಎಂಬುದು ಸ್ವಷ್ಟವಾಗದಂತಹ ಹೊಗೆ ಮುಸುಗಿತ್ತು. +ಇದೇನು ಹೊಗೆ?ಎಲ್ಲಿಂದ ಬಂತು? +‘ನಂದಾಬೆಂಕಿ’ಯ ಕುಂಟೆಗಳು ಚೆನ್ನಾಗಿ ಉರಿಯುತ್ತಿದ್ದುದರಿಂದ ಅಲ್ಲಿಂದ ಹೊಗೆ ಏಳುವ ಸಂಭವವೆ ಇರಲಿಲ್ಲ. +ಚಿನ್ನಮ್ಮಗೆ ಮೊದಲು ಆಶ್ಚರ್ಯವಾಗಿ, ಕಡೆಗೆ ಹೆದರಿಕೆಯಾಯ್ತು. +ಎಂಥದಕ್ಕಾದರೂ ಬೆಂಕಿ ಬಿದ್ದಿದೆಯೊ? +ಹತ್ತಿರ ಮಲಗಿದ್ದ ಪೀಂಚಲುಗೆ ಹೇಳಿದಳು. +ಅವಳು ನಿಧಾನವಾಗಿ ಎದ್ದು ಕುಳುತು ಸುತ್ತಲೂ ನೋಡಿದಳು. +ಮೇಲಕ್ಕೇಳುವುದಕ್ಕೆ ತುಸು ಸಂಕೋಚಪಟ್ಟುಕೊಂಡಂತೆ ಸೀರೆಯನ್ನೆಲ್ಲ ಸರಿಮಾಡಿಕೊಂಡು ಎದ್ದುನಿಂತಳು. +ಗಟ್ಟಿದ ಮೇಲಿನವರಂತೆ ಗೊಬ್ಬೆ ಸೆರಗು ಕಟ್ಟಿ, ಸೊಂಟಕ್ಕೆ ಸೀರೆ ಬಿಗಿದು ಸುತ್ತಿ, ಕಳೆದ ರಾತ್ರಿ ತನ್ನೊಡನೆ ಬಂದಿದ್ದಳಲ್ಲವೆ? ಗೌಡರ ಹುಡುಗಿಯಂತೆ? +ಈಗೇನು ಗಟ್ಟಿದ ಕೆಳಗಿನವರಂತೆ ಸೀರೆ ಉಟ್ಟಿದ್ದಾಳಲ್ಲ? ಸೆಟ್ಟರ ಹುಡುಗಿಯಂತೆ? +ಏನು ರಾತ್ರಿ ಸೀರೆ ಬದಲಾಯಿಸಿ ಉಟ್ಟುಕೊಂಡಳೆ? +ಒದ್ದೆಯಾಗಿದ್ದುದನ್ನು ಬದಲಾಯಿಸು ಎಂದು ನಾನೇ ಹೇಳಿದರೆ, ಬೇಡಾ ಎಂದು ಉಟ್ಟುದನ್ನೇ ಬೆಂಕಿಕಾಯಿಸಿ ಆರಿಸಿಕೊಂಡಿದ್ದಳಲ್ಲ ಮತ್ತೆ? +“ಯಾವಾಗ್ಲೆ ಸೀರೆ ಬದಲಾಯಿಸಿ ಉಟ್ಟಿದ್ದು?” ಕೇಳಿದಳು ಚಿನ್ನಮ್ಮ. +“ರಾತ್ರೇಲಿ ಹೊರಗೆ ಹೋಗಿ ಬಂದೆ. +ಆವಾಗ…”ಎಂದು ನಿಲ್ಲಿಸಿ, ಹೊಗೆಗೆ ಕಾರಣ ಕಂಡುಹಿಡಿಯಲು ಒಲೆಯ ಹತ್ತಿರಕ್ಕೆ ಹೋಗುತ್ತಿದ್ದ ಪೀಂಚಲು, ತುಸು ಅನುಮಾನಿಸಿ ನಿಂತು, ತಾನು ಹೇಳಿದ್ದ ಉತ್ತರ ಸಾಲದಾಗಬಹುದು ಎಂಬಂತೆ ಮತ್ತೆ ಸೇರಿದಳು. +“ ನನಗೆ ನಾಲ್ಕು ಐದು ತಿಂಗಳಾಗಿದೆ, ಚಿನ್ನಕ್ಕ. +ನಿನ್ನೆ ಗುಡ್ಡ  ಹತ್ತುವಾಗ ಬಹಳ ಕಷ್ಟವಾಯಿತು ಕಾಣಿ. +ರಾತ್ರಿ ನೀವು ಕನವರಿಸಿ ಕೂಗಿಕೊಂಡಾಗಳೂ ನಾನು ಹೊಟ್ಟೆ ಬೇನೆಯಿಂದ ಹೊರಳಾಡುತ್ತಿದ್ದೆ. +ಮತ್ತೆ ಸೊಂಟಕ್ಕೆ ಬಿಗಿದು ಸುತ್ತಿದ್ದ ನಿಮ್ಮ ರೀತಿಯ ಉಡುಗೆ ಬಹಳ ತೊಂದರೆ ಕೊಟ್ಟಿತ್ತು. +ಅದಕ್ಕೇ ಬಿಚ್ಚಿ ನಮ್ಮ ರೀತಿ ಉಟ್ಟುಕೊಂಡು ಮಲಗಿದೆನಲ್ಲಾ?” +“ಛೆ ಪಾಪ!ನನ್ನ ದೆಸೆಯಿಂದ ನಿಂಗೆಷ್ಟು ಕಷ್ಟ?” ಎಂದಳಷ್ಟೆ ಮುಗ್ದೆ ಚಿನ್ನಮ್ಮ. +“ಮೋಡ ಮುಚ್ಚಿತ್ತು, ಚಿನ್ನಕ್ಕ. +ಹೊಗೆ ಅಲ್ಲ. +ಹೊರಗಂತೂ ಏನೊಂದೂ ಕಾಣುವುದಿಲ್ಲ. +ನಾವೂ ಮೋಡದ ಮೂಡದ ಮೂಟ್ಟೆ ಒಳಗೇ ಇದ್ದೇವಲ್ಲಾ?” +“ಅದು ಯಾರೆ ಮುಕುಂದಬಾವನ ಸಂಗಡ ಮಾತಾಡ್ತಿರೋರು?” +“ಹಳೆಮನೆ ತಿಮ್ಮಪ್ಪಯ್ಯೋರು ಅಂತಾ ಕಾಣ್ತದೆ.” +“ಚಿನ್ನಮ್ಮನ ಹೃದಯ ಒಮ್ಮಗೆ ಹರ್ಷಭಯಗಳಿಂದ ತಾಡಿದ ವಾಯಿತು. + ತಿಮ್ಮಪ್ಪಣ್ಣಯ್ಯನಿಂದ ಅಜ್ಜಿಯ ಸುದ್ದಿ ತಿಳಿಯಬಹುದೆಂದು. + ಆ ಸುದ್ದಿ ಮಂಗಳದ್ದೊ? ಅಥವಾ…? +ಕಲ್ಲುಮಂಟಪದ ಗೋಡೆಗಳೆಲ್ಲ ಅನುರಣಿತವಾಗುವಂತೆ ಹುಲಿಯ ಕರ್ಕಶವಾಗಿ ಬೊಗಳಿದುದನ್ನು ಕೇಳಿ, ತಟಕ್ಕನೆ ಎಚ್ಚರಗೊಂಡು ಗುತ್ತಿ, ಪಕ್ಕದಲ್ಲಿ ಮಲಗಿದ್ದ ತಿಮ್ಮಿ ದಿಗಿಲುಗೊಳ್ಳುವಂತೆ ಹೌಹಾರಿ ಎದ್ದು, ತಾನೂ ತನ್ನ ಹೆಂಡತಿಯೂ ಅಲಾಯಿದವಾಗಿ ದೂರ ಮಲಗಿದ್ದ ಮೂಲೆಯಿಂದ ಓಡಿಬಂದು ನೋಡಿದಾಗ ಕಂಬಳಿಕೊಪ್ಪೆ ಹಾಕಿಕೊಂಡು, ಕೈಯಲ್ಲಿ ಲಾಟೀನನೊಂದನ್ನು ಹಿಡಿದುಕೊಂಡು ಬರುತ್ತಿದ್ದ ಒಂದು ಆಕೃತಿ ಕಾಣಿಸಿತು. +ಆ ಆಕೃತಿ ನಾಯಿಗೆ ಸ್ವಲ್ಪವೂ ಹೆದರದೆ ಹಿಂಜರಿಯದೆ ನಿರ್ಲಕ್ಷವಾಗಿ ಮುಂಬರಿಯುತ್ತಿದ್ದು, ಹತ್ತಿರ ಬಂದಮೇಲೆ “ಹಛೀ ನಿನ್ನ ಹುಲಿ ಹಿಡಿಯ! +ಈ ನಾಯಿಗೇನು ಗುರುತೇ ಸಿಕ್ಕಾದೆಲ್ಲೇನು?” ಎಂದು ಗದರಿತು. +ಹುಲಿಯ ಧ್ವನಿಯನ್ನೊ ವಾಸನೆಯನ್ನೊ ಒಡನೆಯೆ ಗುರುತಿಸಿದಂತೆ ಬಾಲವಳ್ಳಾಡಿಸಿತು. +ಗುತ್ತಿಯೂ ಗುರುತಿಸಿದನು, ಹಳೆಮನೆ ತಿಮ್ಮಪ್ಪಹೆಗ್ಗಡೆ! +ಇನ್ನೂ ಬೆಳಕು ಬಿಡುವುದಕ್ಕೆ ಒಂದು ಗಂಟೆಯಾದರೂ ಇರಬಹುದು. +ಇಷ್ಟು ಕಪ್ಪಿನಲ್ಲೇ ಈ ಮಳೆಯಲ್ಲಿ ಗುಡ್ಡಹತ್ತಿ ಯಾಕೆ ಬಂದರೂ? +ಗುತ್ತಿ ಸೋಜಿಗಪಡುವಷ್ಟರಲ್ಲಿ ಎಚ್ಚರಗೊಂಡಿದ್ದ ಮುಕುಂದಯ್ಯ ಮಲಗಿದ್ದಲ್ಲಿಂದಲೆ ಕೇಳಿದನು; + “ ಏನೋ ಅದು ಗುತ್ತೀ?” + “ಹಳೇಮನೆ ಸಣ್ಣ ಅಯ್ಯ ಬಂದಾರೆ….”ಮುಕುಂದಯ್ಯಗೆ ಮೈಮೇಲೆ ಕುದಿನೀರು ಹೊಯ್ದಂತಾಗಿ ಎದ್ದುಕೊತನು! +ಹೂವಳ್ಳಿಯಲ್ಲಿ ಏನೋ ಅನಾಹುತವಾಗಿರಬೇಕು ಎಂಬುದರಲ್ಲಿ ಅವನಿಗೆ ಅನುಮಾನವೇ ಉಳಿಯಲಿಲ್ಲ. +ತಿಮ್ಮಪ್ಪಹೆಗ್ಗಡೆ ನಂದಾಬೆಂಕಿಗೆ ಸಮೀಪವಾಗಿಯೆ ಕುಳಿತು ಮೆಲುದನಿಯಲ್ಲಿ, ರಹಸ್ಯ ಹೇಳುವಂತೆ, ಹೂವಳ್ಳಿಯಲ್ಲಿ ರಾತ್ರಿ ನಡೆದದ್ದನ್ನೆಲ್ಲ ವರದಿ ಮಾಡಿದನು. +ಚಿನ್ನಮ್ಮ ಕಣ್ಮರೆಯಾದ ಮೇಲೆ ನಡೆದ ಹುಡುಕಾಟವನ್ನೂ; ಆ ಸುದ್ದಿ ಕಿವಿಗೆ ಬಿದ್ದೊಡನೆ ಸ್ವರತಪ್ತನಾಗಿ ಅರ್ಧ ಪ್ರಜ್ಞಾವಸ್ಥೆಯಲ್ಲಿ ಬಿದ್ದು ಕೊಂಡಿದ್ದ ವೆಂಕಟಣ್ಣ ನಾಗಕ್ಕನ್ನನ್ನು ದುರ್ಭಾಷೆಗಳಿಂದ ಶಪಿಸುತ್ತ ಅವಳನ್ನು ಹೊಡೆಯಲೆಂದು ಎದ್ದು, ತತ್ತರಿಸಿ ಬಿದ್ದು, ತಲೆಗೆ ಮಂಚದ ಏಣು ತಗುಲಿ, ತೀರಿಕೊಂಡಿದ್ದನ್ನೂ; ಅಪಶಕುನವಾಯಿತೆಂದು ಮದುವೆಯ ಗಂಡು ರಾತ್ರಾರಾತ್ರಿಯೆ ಹೂವಳ್ಳಿಯನ್ನು ತ್ಯಜಿಸಿ, ಹಳೆಮನೆಗೆ ಬಂದು, ತನ್ನ ಭಾವ ಹೆಂಚಿನಮನೆಯ ಶಂಕರಪ್ಪಹೆಗ್ಗಡೆಯ ಮನೆಯಲ್ಲಿ ತನ್ನ ಹೆಂಡತಿಯೊಡನೆ ತಂಗಿರುವುದನ್ನೂ; ಮದುವೆಗೆ ಬಂದವರೂ ದಿಬ್ಬಣದವರೂ ಎಲ್ಲ ಬೆಳಗಿನ ಜಾವದಲ್ಲಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದುದನ್ನೂ ತಿಳಿಸಿ “ಬೆಳಗಾದ ಮ್ಯಾಲೆ ಬೆಟ್ಟಳ್ಳಿ ದ್ಯಾವಣ್ಣಯ್ಯನೇ ಮುಂದೆ ನಿಂತು ಮುಂದಿನ ಕೆಲಸ ಎಲ್ಲ ಮಾಡಿಸ್ತಾನಂತೆ. +ಹೆಣಾ ತೆಗೆದು, ಸುಟ್ಟು, ಎಲ್ಲ ಪೂರೈಸಿದ ಮೇಲೆ, ಇವತ್ತೇ, ಬೈಗಿನ ಹೊತ್ತು, ಚಿನ್ನಕ್ಕನ್ನ ಮನೆಗೆ ಕರಕೊಂಡು ಬರಲಿ ಅಂತಾ ಹೇಳಿ ಕಳಿಸ್ಯಾನೆ.” ಎಂದು ಹೇಳಿ, ಮುಕುಂದಯ್ಯ ಏನು ಹೇಳುತ್ತಾನೆಯೊ ಎಂಬುದನ್ನು ನಿರೀಕ್ಷಿಸುವಂತೆ, ಅವನ ಮುಖದ ಕಡೆ ನೋಡುತ್ತಾ ಕುಳಿತನು, ತಿಮ್ಮಪ್ಪಹೆಗ್ಗಡೆ. +ಆದರೆ ಮುಕುಂದಯ್ಯ ಬೆಂಕಿಯ ಕಡೆ ನೋಡುತ್ತಿದ್ದನೆ ಹೊರತು ಮಾತಾಡಲೂ ಇಲ್ಲ, ಮುಖವೆತ್ತಲೂ ಇಲ್ಲ. +ಅವನು ಕಟ್ಟಿಕೊಂಡಿದ್ದ ವ್ಯೂಹವೆಲ್ಲ ತಲಕೆಳಗಾಗಿತ್ತು. +ಅವನ ಮನಸ್ಸು  ಈ ಅನಿರೀಕ್ಷಿತಕ್ಕೆ ಅಣಿಯಾಗಿರಲಿಲ್ಲ. +ಮುಂದೇನು ಮಾಡಬೇಕೋ? +ಯಾವ ರೀತಿ ನಡೆದರೆ ತನ್ನ ಮತ್ತು ಚಿನ್ನಮ್ಮನ ಇಷ್ಟಾರ್ಥ ಕೈಗೂಡುತ್ತದೆಯೋ ಒಂದೂ ಅವನಿಗೆ ತೋರಲಿಲ್ಲ. +ಅವನ ಬುದ್ಧಿಗೆ ಕತ್ತಲುಗಟ್ಟಿದಂತಾಗಿತ್ತು. +ಸ್ವಲ್ಪ ಹೊತ್ತು ಉತ್ತರಕ್ಕಾಗಿ ಕಾದು, ಉತ್ತರ ಏನು ಹೊರಡುವಂತೆ ತೋರದಿರಲು, ತಿಮ್ಮಪ್ಪ ಹೆಗ್ಗಡೆ. “ಚಿನ್ನಕ್ಕನ್ನೆ ಕೇಳಿ ನೋಡಾನೇನು?” ಎಂದನು. +“ಅದಕ್ಕೇನು ಗೊತ್ತಾಗ್ತದೆ? +ಅದಾದ್ರೂ ಏನು ಹೇಳ್ತದೆ?” +“ಏನಾದ್ರಾಗಲಿ ಕೇಳಿ ನೋಡ್ತಿನಿ.” +“ನೋಡಾದಾದ್ರೆ ನೋಡು!”ಮುಕುಂದಯ್ಯನ ನಿರುತ್ಸಾಹಕರವಾದ ಔದಾಸೀನ್ಯದ ಒಪ್ಪಿಗೆ ದೊರೆಯಲು, ತಿಮ್ಮಪ್ಪಹೆಗ್ಗಡೆ ತಟ್ಟಿಗೋಡೆಯ ಒಳಗೆ ಹೋಗಿ, ಸ್ವಲ್ಪ ಹೊತ್ತು ಚಿನ್ನಮ್ಮನೊಡನೆ ಮಾತಾದುತ್ತಿದ್ದು, ಹೊರಗೆ ಬಂದು ಹೇಳಿದನು. + “ ಅವಳು ಹೇಳ್ತಾಳೆ,‘ಈಗ್ಲೇ ಮನೀಗೆ ಹೋಗ್ತೀನಿ! . ’ಅಂತಾ. + ಅಪ್ಪಯ್ಯ ಹೋಗಿದ್ದಕ್ಕಿಂತಲೂ ಅಜ್ಜೀ ಚಿಂತೇನೆ ಬಾಳಾ ಆಗ್ಯದೆ ಅಂತಾ ಕಾಣ್ತದೆ.” + “ಅಪ್ಪ ಇದ್ದು ಮಾಡದೂ ಅಷ್ಟರೊಳಗೇ ಇತ್ತು!” ಮುಕುಂದಯ್ಯನ ಉದಾಸಭಾವ ಮತ್ತೆ ಕ್ರಿಯಾಶೀಲತೆಗೆ ತಿರುಗಿತ್ತು. +ಅವನು ಆಡಿದ ಮಾತಿನ ಒಳ ಅರ್ಥ ‘ಅಪ್ಪ ಸತ್ತಿದ್ದು ಒಳ್ಳೆಯದೆ ಆಯ್ತು, ಮಗಳ ಕ್ಷೇಮಕ್ಕೆ!’ ಎಂಬಂತಿತ್ತು. +ತುಸು ಹೊತ್ತು ಯೋಚಿಸುತ್ತಾ ಕುಳಿತಿದ್ದು, ಏನನ್ನೂ ಮನದಲ್ಲಿ ನಿರ್ಣಯಿಸಿ,,ಮುಕುಂದಯ್ಯ ಮೇಲೆದ್ದು ಚಿನ್ನಮ್ಮ ಇದ್ದಲ್ಲಿಗೆ ತಟ್ಟೆಮರೆಯ ಒಳಗೆ ಹೋದನು. +ಅವಳೊಡನೆ ಸ್ವಲ್ಪ ಕಾಲವೆ ಮಾತನಾಡುತ್ತಿದ್ದು, ಹೊರಗೆ ಬಂದು ಹೇಳಿದನು ತಿಮ್ಮಪ್ಪಹೆಗ್ಗಡೆಗೆ. “ಬೆಟ್ಟಳ್ಳಿ ಬಾವಗೆ ಹೇಳು, ಬೈಗಿನ ಹೊತ್ತಿಗೆ ಕರಕೊಂಡು ಬರ್ತಾನೆ ಅಂತಾ, ಅಜ್ಜಿಗೂ ಹೇಳು,ಹೂವಳ್ಳೀಲೇ ಇರೋ ಹಾಂಗೆ…ನೀನೂ ಇರು…ಮುಂದಿಂದೆಲ್ಲಾ ಒಂದು ಇತ್ಯರ್ಥ ಆಗೇಬಿಡ್ಲಿ… +ನಮ್ಮ ರಂಗಪ್ಪಣ್ಣಯ್ಯ ಏನೇನೊ ಹೇಳ್ತಿದ್ದನಂತೆ. +ಅವನ ಪಾಲು ಅವನು ತಗೊಂಡು ಏನಾರೂ ಮಾಡಲಿ, ಎಲ್ಲಿಗಾರೂ ಹೋಗಲಿ, ಅಂತಾ. +ಪಾಲುಮುಖಂಡರೆಲ್ಲ ಸೇರಿ ನಮಗೆ ಬಹಿಷ್ಕಾರ ಹಾಕ್ತಾರಂತೆ!” +“ಅವರ ಮುಂಡಾಮೋಚ್ತು!ಯಾರಿಗೋ? +ಬಹಿಷ್ಕಾರ ಹಾಕೋದು?ಯಾರೊ?ಯಾಕಂತೋ?… +“ ತಿಮ್ಮಪ್ಪ ಹೆಗ್ಗಡೆಯ ಮಾತಿನಲ್ಲಿ ಹೊಣೆಗಾರಿಕೆ ಸಾಲದ ಹುಡುಗತನದ ಧೂರ್ತತೆ ಎದ್ದು ಕಾಣುತ್ತಿತ್ತು. +“ ಹಾಂಗಾರೆ ಈಗ ನಾ ಹೋಗ್ತೀನಿ. +ಸಾಯಂಕಾಲ ಇರ್ತಿನಿ ಹೂವಳ್ಳೀಲಿ. +ದ್ಯಾವಣ್ಣಯ್ಯಗೂ ಹೇಳ್ತಿನಿ, ನೀ ಹೇಳಿದ್ನೆಲ್ಲಾ. +ಬಾ, ಅಮ್ಯಾಲೆ ಮಾತಾಡಾನ….”ಕಡೆಯಪಕ್ಷ ಒಂದೆರಡು ವಾರಗಳಾದರೂ ಚಿನ್ನಮ್ಮ ಅಡಗಿರಬೇಕಾಗಬಹುದು ಎಂದು ಮುಕುಂದಯ್ಯ ಅದಕ್ಕೆ ತಕ್ಕ ಸಿದ್ಧತೆ ಮಾಡಿದ್ದನು, ಹುಲಿಕಲ್ಲು ನೆತ್ತಿಯ ಕಲ್ಲುಮಂಟಪದಲ್ಲಿ. +ಆದರೆ ಈಗ ಅವಳು ಅಲ್ಲಿ ಒಂದು ದಿನವನ್ನೂ ಪೂರ್ತಿ ಕಳೆಯಲಾಗಲಿಲ್ಲ. +ಅವಳ ತಂದೆ ವೆಂಕಣ್ಣನ ನಿಧನದಿಂದ ಘಟನಾವ್ಯೂಹದ ದಿಕ್ಕೆ ಬದಲಾಯಿಸಿ ಹೋಗಿತ್ತು. +ಮುಕುಂದಯ್ಯ ಗುತ್ತಿಗೂ ಐತನಿಗೂ ಹೂವಳ್ಳಿಯಲ್ಲಿ ನಡೆದ ಸಮಾಚಾರವನ್ನೆಲ್ಲ ತಿಳಿಸಿ, ತಾನು ಚಿನ್ನಮ್ಮನನ್ನು ಬೈಗಿನ ಹೊತ್ತಿನಲ್ಲಿ ಕರೆದುಕೊಂಡು ಹೋಗಿ ಹೂವಳ್ಳಿಗೆ ಬಿಡುವುದಾಗಿಯೂ; ಪೀಂಚಲು ಗುಡ್ಡ ಇಳಿಯಲು ಸಧ್ಯಕ್ಕೆ ಅಸಮರ್ಥೆಯಾಗಿರುವುದರಿಂದ ಅವಳಿಗೆ ಮೈ ಸರಿಯಾಗುವ ತನಕ ಅಲ್ಲಿಯೆ ವಿಶ್ರಾಂತಿಯಿಂದಿದ್ದು, ಐತ ಅವಳನ್ನು ಕೋಣೂರಿನ ಅವರ ಬಿಡಾರಕ್ಕೆ ಕರೆದುಕೊಂಡು ಹೋಗುವಂತೆಯೂ ಹಿಂದಕ್ಕೆ ಸಾಗಿಸಬೇಕಾದ ಕೆಲವು ಸಾಮಾನುಗಳನ್ನು ಸಾಗಿಸಿದ ಮೇಲೆ, ಗುತ್ತಿ ಸಿಂಬಾವಿಗೆ ಹಿಂತಿರುಗುವಂತೆಯೂ ಸಲಹೆ ಮಾಡಿದನು. +ತಾನೂ ತನ್ನ ಹೆಂಡತಿಯೂ ಸಿಂಬಾವಿಗೆ ಹಿಂದಿರುಗುವ ವಿಚಾರದಲ್ಲಿ ಗುತ್ತಿ ತನ್ನ ಒಡೆಯರ ಆಜ್ಞೆಯನ್ನೂ ತನ್ನ ಮಾವನ ಕಡೆಯವರಿಂದ ಒದಗಬಹುದಾದ ಕಿರುಕುಳವನ್ನೂ ಮತ್ತು ಪೋಲಿಸರ ಭಯವನ್ನೂ ಸೂಚಿಸಲು, ಮುಕುಂದಯ್ಯ ಅವನಿಗೆ ತಾನು ಹಿಂದೆ ತಿಳಿಸಿದಂತೆಯೆ ಧೈರ್ಯ ಹೇಳಿದನು. +ಎಲ್ಲವನ್ನೂ ಆಲಿಸಿದ ಮೇಲೆ ಗುತ್ತಿ ಅನುಮಾನಿಸಿ ಹೇಳಿದನು ನಿಧಾನವಾಗಿ “ಏನೋ ನೋಡ್ತಿನಿ, ಅಯ್ಯಾ…. +ನಂಗೇನಾದ್ರೂ ನೀವು ಒಂದಿಟು ದುಡ್ದು ಕೊಟ್ಟಿದ್ರೆ, ಆಪತ್ತಿಗೆ ಅನುವಾಗ್ತಿತ್ತೇನೋ? +ದೇಸಾಂತ್ರ ಹೋಗಿ ಬಂದ ಮ್ಯಾಲಾದ್ರು ನಿಮ್ಮ ರುಣ ತೀರಿಸದೆ ಇಟ್ಟುಕೊಳ್ಳಾದಿಲ್ಲ. +ನಾನೂ ನನ್ನ ಹೆಂಡ್ತೀನೂ ಇಬ್ರೂ ಗೆಯ್ದಾದ್ರೂ ತೀರಿಸ್ತೀಂವೆ! . ” +“ದುಡ್ಡೇನೋ ಕೊಡಾನ. +ಆದರೆ ನೀ ದೇಶಾಂತರೆ ಹೋಗಾದ್ಯಾಕೆ?” +“ದೂರಾ ಏನು ಹೋಗಾದಿಲ್ಲಯ್ಯಾ….!” + ಮುಂದುವರಿದನು ಗುತ್ತಿ ಇಂಗಿತವಾಗಿ ನಗುತ್ತಾ “ನಿಮ್ಮಾ-ಚಿನ್ನಕ್ಕೋರಾ ಲಗ್ನಕ್ಕೆ ಹಾಜರಿದ್ದು, ಮದುವೆ ಚಪ್ಪರ ಹಾಕೋ ಸೇವೆನಾದ್ರೂ ಮಾಡೇಮಾಡ್ತೀನಿ ಬಿಡಿ!…”ನಡೆದೆಲ್ಲ ಘಟನೆಗಳಿಂದ ಅದುವರೆಗೂ ಮ್ಲಾವವಾಗಿದ್ದ ಮುಕುಂದಯ್ಯನ ಮುಖದ ಮಬ್ಬು ತೊಲಗಿದಂತಾಯ್ತು. +ಗುತ್ತಿಯ ಲೋಕಾಭಿರಾಮದ ಮಾತು ಅವನಲ್ಲಿ ಹುದುಗಿದ್ದ ಆಶಾಕಿರಣಗಳನ್ನು ಮೂಡಿಸಿ ಬೆಳೆಸಿತು. +ನಗುತ್ತಲೆ ವಿನೋದದಿಂದೆಂಬಂತೆ ಹೇಳಿದನು. +“ಹಾಂಗೆ ಆಗಲಿ ಬಿಡು, ನಿನಗೆ ನಮ್ಮ ಸೇವೆ ಮಾಡುವ ಯೋಗ ಇರೋದರಿಂದಾದ್ರೂ ಹಾಂಗಾದ್ರೆ ಸಂತೋಷಾನೆ!”ಉಲ್ಲಸಿತವಾದ ಮುಕುಂದಯ್ಯನ ಮನಸ್ಸು ತನ್ನ ಸಂಕಲ್ಪನಾ ವಿಲಾಸವನ್ನು ಮುಂದುವರಿಸಿತು. +ಯಃಕಶ್ಚಿತರಾದ ಗುತ್ತಿ ಐತರಲ್ಲದಿದ್ದರೆ ಯಾವ ವಿಚಾರವನ್ನು ಇತರರೊಡನೆ ಬಾಯಿಬಿಡಲು ಹಿಂಜರಿಯುತ್ತಿತ್ತೋ ಆ ಗೋಪ್ಯ ವಿಷಯವನ್ನು, ತನಗೆ ತಾನೆ ಗಟ್ಟಿಯಾಗಿ ಹೇಳಿಕೊಳ್ಳುವಂತೆ, ಮುಕುಂದಯ್ಯನ ಜಿಹ್ವೆ ಅವನ ಹೃದಯದ್ವಾರವನ್ನು ತೆರೆದಿತ್ತು. +ಮತ್ತೆ ಲಘುವಾಗಿಯೇ ಹೇಳಿದನು, ಅರ್ಧ ವಿನೋದಕ್ಕೆಂಬಂತೆ. + “ಹೂವಳ್ಳಿ ಮಾವನೂ ತೀರಿಕೊಂಡಾಯ್ತು. +ಇನ್ನು ಆ ಮನೆ ನಡಸೋ ಭಾರವನ್ನೆಲ್ಲಾ ನಾನೆ ಹೊರಬೇಕಾಗ್ತದೆಯೋ ಏನೋ? +ನಮ್ಮ ರಂಗಪ್ಪಣ್ಣಯ್ಯನೂ ಹಿಸ್ಸೆ ಕೊಟ್ಟು, ನನ್ನ ಬ್ಯಾರೆ ಹಾಕೋ ಹುನಾರಿನಲ್ಲಿದಾನೆ… ಅಲ್ಲೋ ಗುತ್ತಿ?”ತನ್ನೊಳಗೆ ತಾನೆ ಮಾತಾಡಿಕೊಳ್ಳುತ್ತಿದ್ದಂತೆ ಹೇಳುತ್ತಿದ್ದ ಮುಕುಂದಯ್ಯ ಇದ್ದಕ್ಕಿದ್ದಂತೆ ತನ್ನನ್ನು ಸಂಬೋಧಿಸಲು, ಗುತ್ತಿ ಎಚ್ಚತ್ತವನಂತೆ ಹರ್ಷಗೊಂಡು “ಆಞ” ಎಂದು ಸಮೀಪಸ್ಥನಾಗುವವನಂತೆ ಮುಖವನ್ನು ಮುಂದಕ್ಕೆ ಚಾಚಿ ವಿಶೇಷಾಸಕ್ತಿಯಿಂದ ಕಿವಿಗೊಟ್ಟನು. +“ಅಲ್ಲಾ?ಒಂದು ವೇಳೆ ಹೂವಳ್ಳೀಲಿ ಮಸಲಾ ನಾನೆ ನಿಂತು ಗದ್ದೆ ತೋಟಕ ಕೆಲಸ ಎಲ್ಲಾ ಮುಗಿಸಬೇಕಾಗಿ ಬಂದರೆ…. +ಅಲ್ಲೀಗೆ ಬರ್ತಿರೇನೊ ನೀನೂ ನಿನ್ನ ಹೆಂಡ್ತಿ?” +“ಭಗವಂತ ನಡೆಸಿದ್ರೆ ಖಂಡಿತಾ ಬತ್ತೀನಿ, ನನ್ನೊಡೆಯಾ? +ನಿಮ್ಮ ಪಾದದಾಗೆ ಗೆಯ್ದುಕೊಂಡು ಬಿದ್ದಿರ್ತಿನಿ…” ಇನ್ನೇನು ಆ ಸನ್ನಿವೇಶವೂ ಸಾಕ್ಷಾತ್ಕಾತಕ್ಕೆ ಸನ್ನಿಕಟವಾಗಿಯೇ ಬಿಟ್ಟಿತೆಂಬಂತೆ ಮುಕುಂಕಯ್ಯನ ಪ್ರಶ್ನೆಗೆ ಹಿಗ್ಗಿನಿಂದ ಉತ್ತರ ಕೊಟ್ಟಿದ್ದನು ಗುತ್ತಿ! +ಅವರ ಸಂವಾದವನ್ನು ಆಲಿಸುತ್ತಾ ಕಿರುನಗೆವೆರೆಸಿ ಕುಳಿತಿದ್ದ ಐತ ಪರಿಹಾಸ್ಯಕೆಂಬಂತೆ. + “ಮುಕುಂದಣ್ಣಗೆ ಗುತ್ತೀನ ಕಂಡರೇ ಅಷ್ಟು ಇಷ್ಟ. +ನಾವು?ನಾನೂ ಪೀಂಚಲು?…” +“ನೀವಾ?… ನೀನು ಯಾದೆ? +ಖಳ್ಳ!ಬರೀ ಕೂಳು ಖರ್ಚಿಗೆ!… ಪೀಂಚಲು ಒಬ್ಬಳೇ ಸಾಕು!…” ಗಹಗಹಿಸಿ ನಕ್ಕನು ಮುಕುಂದಯ್ಯ. +ಪೀಂಚಲು ಒಬ್ಬಳೇ ನಮ್ಮಿಬ್ಬರ ಪಾಲು ಕೆಲಸಕ್ಕೂ ಸಾಕಲ್ದಾ? +ನಿಮಗೇನು ನಷ್ಟ ಆಗಲಿಕ್ಕಿಲ್ಲ, ನಾನೂ ಅವಳ ಜೊತೆ ಬಂದಿದ್ದರೆ!” ನಗುನಗುತ್ತಲೆ ಹೇಳಿದನು ಐತ. +ಮೂವರೂ ಒಟ್ಟಿಗೆ ನಕ್ಕರು! +ತಟ್ಟಿಕೋಣೆಯ ಒಳಗಡೆ ತಮ್ಮ ತಮ್ಮ ಕೆಲಸದಲ್ಲಿದ್ದ ಮೂವರು ಹೆಣ್ಣುಗಳೂ ಅಂತಹ ದುಃಖಭಾರದ ವಿಷಮಸನ್ನಿವೇಶದಲ್ಲಿಯೂ ಆ ರೀತಿ ಲಘುಹೃದಯರಾಗಿ ನಗುತ್ತಿದ್ದ ಗಂಡುಗಳನ್ನು ಕಂಡು ಅಚ್ಚರಿಗೊಂಡಿದ್ದರು! +ಆಗುಂಬೆಯಿಂದ ಮೇಗರವಳ್ಳಿಯ ಮುಖಾಂತರ ತೀರ್ಥಹಳ್ಳಿಗೆ ಬಂದು, ದೋಣಿಗಂಡಿಯಲ್ಲಿ ಹೊಳೆದಾಟಿ ಮುತ್ತಳ್ಳಿ, ಸೀತೆಮನೆ, ಕಾನೂರುಗಳಿಗೆ ಹೋಗುವ ಗಟ್ಟಿದ ತಗ್ಗಿನವರ ಗುಂಪಿನಲ್ಲಿ ಸೇರಿ, ಗುತ್ತಿ ತಿಮ್ಮಿಯೊಡನೆ ತುಂಗಾನದಿಯ ಎಡದ ದಡದಲ್ಲಿರುವ ದೈತ್ಯಾಕಾರದ ಅರಳಿಮರದ ಕಟ್ಟಿಗೆ ತುಸುದೂರದಲ್ಲಿ, ಹೊಳೆ ದಾಟಲು ದೋಣಿಯಲ್ಲಿ ತನಗೆ ಲಭಿಸಿರುವ ಸರದಿಗಾಗಿ ಕಾಯುತ್ತಾ ಕುಳಿತಿದ್ದನು. +ನೆರೆ ಏರಿ ಭೋರ್ಗರೆದು ವಿಸ್ತಾರವಾಗಿ ವೇಗವಾಗಿ ಹರಿಯುತ್ತಿದ್ದ  ಕೆಮ್ಮಣ್ಣು ಬಣ್ಣದ ಮಹಾಪ್ರವಾಹವನ್ನೇ ನೋಡುತ್ತಿದೆಯೊ ಎಂಬಂತೆ ಅವನ ನಾಯಿ ಹುಲಿಯನೂ ತನ್ನ ಕರ್ರನೆಯ ಬೃಹದಾಕಾರದಿಂದ ಹೊಸಬರಾರೂ ಬಳಿಗೆ ಬರದಂತೆ ಹೆದರಿಕೆ ಹುಟ್ಟಿಸುವ ಭಯಾನಕ ಭಂಗಿಯಿಂದ ಕುಳಿತಿತ್ತು, ಮುಂಗಾಲೂರಿ ಉನ್ನತವಾಗಿ, ತಿಮ್ಮಿ ಚಿಂತಾಕ್ರಾಂತೆ ಯಾದಂತೆ ತುಸು ದೂರವೆ ಕುಳಿತಿದ್ದಳು, ಅಂಗೈಗೆ ಗಲ್ಲವೂರಿ, ಗಟ್ಟಿದ ತಗ್ಗಿನ ಆಳುಗಳು, ಗಂಡಸರು, ಹೆಂಗಸರು, ಮಕ್ಕಳು ತಮ್ಮ ತಮ್ಮ  ಸರದಿಗಾಗಿ ದೋಣಿಗೆ ಕಾಯುತ್ತಾ, ಕುಳಿತೋ ನಿಂತೋ ಬೇಸರಪರಿಹಾರಕ್ಕಾಗಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಸುಮ್ಮನೆ ಓಡಾಡುತ್ತಲೋ ಇದ್ದರು. +ಅರಳಿಕಟ್ಟೆಯ ಮೇಲೆ ಸ್ವಲ್ಪ ಚೆನ್ನಾಗಿ ಬಟ್ಟೆ ಹಾಕಿಕೊಂಡಿದ್ದ ಯಾರೋ ಇಬ್ಬರು ಗೌಡರು ಕುಳಿತಿದ್ದುದನ್ನೂ ನೋಡಬಹುದಾಗಿತ್ತು. +“ಈ ದೋಣಿಗೆ ಕಾಯುವುದು ಸಾಕಪ್ಪಾ! …. +ಒಂದು ಹದಿನೈದು ಇಪ್ಪತ್ತು ದಿನ ಮುಂಚಿತವಾಗಿಯೆ ಬಂದಿದ್ದರೆ ನಮಗೆ ಇದರ ಹಂಗು ಯಾಕೆ ಬೇಕಿತ್ತು? +ಸಲೀಸಾಗಿ ಕಲ್ಲು ಸಾರದ ಮೇಲೆಯೆ ದಾಟಿ ಹೋಗುತ್ತಿದ್ದೆವಲ್ದಾ? …. ” ಕುಡಿಮೀಸೆ ಬಿಟ್ಟು, ತಲೆಗೆ ಕೆಂಪು ಎಲೆವಸ್ತ್ರ ಸುತ್ತಿ ಮುಖಂಡನಾಗಿ ಕಾಣುತ್ತಿದ್ದ ಒಬ್ಬ ಕನ್ನಡ ಜಿಲ್ಲೆಯವನು ಹೇಳುತ್ತಿದ್ದುದನ್ನು ಆಲಿಸಿ ಗುತ್ತಿ ಅವನ ಕಡೆಗೆ ನೋಡತೊಡಗಿದನು. +ಗುತ್ತಿಗೆ ಆಶ್ಚರ್ಯವಾಯಿತು. +ಅಷ್ಟು ದೊಡ್ಡ ಹೊಳೆಗೆ ಸಾರ ಹಾಕಲಿಕ್ಕೆ ಅದೇನು ಹಳ್ಳವೇ? +ಅವನ ಕಣ್ಣಿಗೆ ಆ ವಿಸ್ತಾರವಾಗಿದ್ದ ಸುಚಂಚಲ ಜಲರಾಶಿಯ ನಡುವೆ ಕಾಣುತ್ತಿದ್ದ ಒಂದೇ ಸ್ಥಿರವಸ್ತು ಎಂದರೆ, ದೋಣಿಗಂಡಿಗೆ ಬಹುದೂರ ಮೇಲು ಭಾಗದಲ್ಲಿ ಕಾಣಿಸುತ್ತಿದ್ದ ಒಂದು ಕಲ್ಲು ಮಂಟಪದ ಅಗ್ರಭಾಗ. +ಅದೂ ಏನು ಈಗಲೋ ಆಗಲೋ ಮುಳುಗಿ ಮುಚ್ಚಿಹೋಗುವಂತೆ ತೋರುತ್ತಿತ್ತು. +ಕೆಂಪು ಎಲೆವಸ್ತ್ರದವನೊಡನೆ ಮಾತಾಡುತ್ತಿದ್ದ ಹಾಳೆಟೋಪಿಯ ಗಟ್ಟಿದಾಳು ಸಮ್ಮತಿಸಿದನು. +“ಹೌದಂಬ್ರು ಕಾಣೆ, ನಮ್ಮ ಕಾನೂನು ಸೇರಿಗಾರ್ರು ಒಂದು ತಿಂಗಳ ಹಿಂದೆಯೆ ಆಳುಗಳನ್ನೆಲ್ಲ ಕರೆದುಕೊಂಡು ಹೋದ್ರಂಬ್ರಲ್ಲಾ, ಆ ಕಲ್ಲುಸಾರದ ಮೇಲೆಯೇ!”ಮುತ್ತೂರು ಸೀಮೆಯೂ ಕೂಡ ‘ದೇಸಾಂತ್ರ’ವಾಗಿದ್ದ ಗುತ್ತಿಯ ಬದುಕೆಲ್ಲ ಇದುವರೆಗೆ ಸಿಂಬಾವಿ, ಮೇಗರವಳ್ಳಿ, ಹಳೆಮನೆ, ಹೂವಳ್ಳಿ, ಕೋಣೂರು, ಬೆಟ್ಟಳ್ಳಿಗಳಿಗೇ ಸೀಮಿತವಾಗಿದ್ದುದರಿಂದ ಅವನೆಂದೂ ಬೇಸಗೆಯಲ್ಲಿ ತೀರ್ಥಹಳ್ಳಿಯ ರಾಮತೀರ್ಥದ ದೃಶ್ಯವನ್ನು ನೋಡಿರಲಿಲ್ಲ. +ಕಡೆಗೆ ಅವನ ಸಂಕುಚಿತ ಜೀವನದ ಹದಿನೆಂಟೋ ಇಪ್ಪತ್ತೋ ವರ್ಷಗಳಲ್ಲಿ, ಒಮ್ಮೆಯಾದರೂ ಅವನು ‘ಎಳ್ಳಾಮಾಸೆ’ಯ ಜಾತ್ರೆಗಾದರೂ ತೀರ್ಥಹಳ್ಳಿಯಂತಹ ‘ದೂರದೇಶಕ್ಕೆ’ ಬಂದವನಲ್ಲ. +ಹೊಲೆಯನಾಗಿದ್ದ ಅವನಿಗೆ ಈ ಜನ್ಮದಲ್ಲಿ ಪರಶುರಾಮತೀರ್ಥದ ಸ್ನಾನವಂತೂ ಸರ್ವಥಾ ಅಲಭ್ಯವಾದುದರಿಂದ ಅಂತಹ ಅಗಮ್ಯಸ್ಥಾನಕ್ಕೆ ಏರಲು ಅವನೆಂದೂ ಆಶಿಸಿರಲಿಲ್ಲ. +“ಮತ್ತೆ, ನೀವೆಲ್ಲ ಎತ್ತ ಹೋಗುವವರು ಹೊಳೆ ದಾಂಟಿ?” ಕೆಂಪು ಎಲೆವಸ್ತ್ರದವನು ಕೇಳಿದನು. +“ನಾವು ಮುತ್ತಳ್ಳಿಗೆ ಹ್ವೋಯ್ಕು…ನೀವೋ?” ಹಾಳೆ ಟೋಪಿಯ ಉತ್ತರ ಮತ್ತು ಪ್ರಶ್ನೆ. +“ನಾನೋ?ಸೀತೆಮನೆಯಲ್ಲಿ ಸೇರೆಗಾರಿಕೆ ಮಾಡಿಕೊಂಡಿರ್ತೆ” ಎಂದ ಕೆಂಪುವಸ್ತ್ರದವನು ಅರಳಿಕಟ್ಟೆಯ ತಿರುಗಿನೋಡಿ “ಅಲ್ಲಿ ಕೂತವರು ನಿಮ್ಮ ಗೌಡ್ರಲ್ಲವೋ ಕಾಣು” ಎಂದನು. +ಹಾಳೆತೋಪಿಯವನು ಅತ್ತ ನೋಡಿ ಗುರುತಿಸಿ “ಹೌದು ಮಾರಾಯ್ರ, ಅವರೇ! +ನಮ್ಮ ಒಡೆಯರಲ್ದಾ ಶಾಮಯ್ಯಗೌಡರು! ”ಎಂದನು. +“ಅವರು ಯಾರೋ?ಇನ್ನೊಬ್ಬರು? +ಅವರ ಸಂಗಡ ಮಾತಾಡುವವರು? +ಒಳ್ಳೆ ಮದುಮಗನ ಹಾಗೆ ಅಂಗಿ ಹಾಕಿ, ರುಮಾಲು ಕಟ್ಟಿದ್ದಾರಲ್ಲಾ?” +“ಹುರಿಮೀಸೆ ಬಿಟ್ಟಿದ್ದಾರಲ್ಲಾ ಅವರಾ? +ಅಯ್ಯೋ ನಿನ್ನ?ಅವರು ಗೊತ್ತಿಲ್ಲವೆ ನಿನಗೆ? +ಕಾನೂರು ಸಣ್ಣಗೌಡರಲ್ದಾ?…” +“ಅಯ್ಯೋ, ನನ್ನ ಕಣ್ಣು ಹೊಟ್ಟಿಹಾರ! +ಹೌದೆ ಹೌದು, ಚಂದ್ರಯ್ಯಗೌಡರು! +ಆ ವೇಷೆದಲ್ಲಿ ನನಗೆ ಗುರುತೆ ಆಗಲಿಲ್ಲ! +ಮೊನ್ನೆ ಮೊನ್ನೆ ಅವರ ಹೆಂಡತಿ ತೀರಿಹೋದರಂಬ್ರು, ಪಾಪ ! …. + “ಅದಕ್ಕೇ ಕಾಣ್ತು, ಮರುಮುದುವೆಗೆ ಹೆಣ್ಣು ನೋಡಲಿಕ್ಕೆ ಹೋಗಿದ್ದರಂಬ್ರು, ಮಳೂರು ಮಂಡಗದ್ದೆ ಕಡೆಗೆ, ಅವರ ಬಾವನ ಸಂಗಡ….” + ‘ಕಾನೂರು’ ‘ಮುತ್ತಳ್ಳಿ’ ಎಂಬ ಹೆಸರು ಕೇಳಿ ಗುತ್ತಿ ಕಿವಿ ನಿಮಿರಿದ್ದನು. +ತನ್ನ ಒಡೆಯರು ಸಿಂಬಾವಿ ಭರಮೈ ಹೆಗ್ಗಡೆಯವರೂ ಆ ಹೆಸರುಗಳನ್ನೆ ಹೇಳಿದ್ದ ನೆನಪಾಗಿ, ಅರಳಿಕಟ್ಟೆಯ ಮೇಲೆ ಕುಳಿತಿದ್ದವರನ್ನು ಕುತೂಹಲದಿಂದ ನೋಡತೊಡಗಿದ್ದನು. +ಆ ಇಬ್ಬರು ಗೌಡರೂ ಇನ್ನೂ ತನ್ನಂತೆಯೆ ಹುಡುಗಪ್ರಾಯದವರಾಗಿ ಕಂಡರು. +ಅವರಲ್ಲಿ ಯಾರಾದರೊಬ್ಬರನ್ನು ತನ್ನ ‘ಅಜ್ಞಾತವಾಸದ’ ಕಾಲದ ಒಡೆಯರನ್ನಾಗಿ ಆರಿಸಿಕೊಳ್ಳಲೇಬೇಕಾಗಿತ್ತು. +ಮುತ್ತಳ್ಳಿಯ ಶಾಮಯ್ಯಗೌಡರು ನೋಡುವುದಕ್ಕೆ ಸಾತ್ವಿಕರಾಗಿ ಸೌಮ್ಯರಾಗಿ ಕಂಡರೂ ಗುತ್ತಿಯ ಆಕರ್ಷಣೆಯೆಲ್ಲ ಹಾಳೆತೋಪಿಯವನು ಕಾನೂರಿನ ಸಣ್ಣಗೌಡರು ಎಂದು ವರ್ಣಿಸಿದ್ದ ವ್ಯಕ್ತಿಯ ರಾಜಠೀವಿಯ ಕಡೆಗೇ ವಾಲಿತ್ತು. +ಅಷ್ಟರಲ್ಲಿ ಆಚೆಯ ದಡದಿಂದ ಜನರನ್ನು ಕರೆದು ತಂದಿದ್ದ ದೋಣಿ ಈಚೆಯ ದಡಕ್ಕೆ ಸಮೀಪಿಸುತ್ತಿತ್ತು. +ದೋಣಿಯಲ್ಲಿ ಆದಷ್ಟು ಬೇಗನೆ ಜಾಗ ಸಂಪಾದಿಸುವ ಅಥವಾ ಆಕ್ರಮಿಸಿಕೊಳ್ಳುವ ತರಾತುರಿಯಿಂದ ಕಾಯುತ್ತಿದ್ದ ಜನ ಸೋಪಾನ ಪಂಕ್ತಿಯನ್ನಿಳಿದು ಧಾವಿತು. +ಗುತ್ತಿಯೂ ಅನೈಚ್ಛಿಕವಾಗಿಯೆ ಎದ್ದು ನಿಂತನು! +ಆದರೆ ಅವನಿಗೆ ಇತರರಂತೆ ನೂಕುನುಗ್ಗಲಿನಲ್ಲಿ ಹೋಗುವ ಕೆಚ್ಚಾಗಲಿಲ್ಲ. +ಜನರು ದೋಣಿಯಿಂದಿಳಿಯುವ ಮತ್ತು  ದೋಣಿ ಹತ್ತುವ ಸಾಹಸಗಳೆರಡನ್ನೂ ನೋಡುತ್ತಾ ಅಂಬಿಗರ ಭರ್ತ್ಸನೆ ಆಜ್ಞೆ ವಿಜ್ಞಾಪನೆ ನಿಂದೆ ಶಾಪ ಮೊದಲಾದುವುಗಳನ್ನು ಆಲಿಸುತ್ತಾ, ತುಸು ದಿಗಿಲುಗೊಂಡಂತೆ ಕುಳಿತಿದ್ದಲ್ಲಿಯೇ ನಟ್ಟು ನಿಂತಿದ್ದನು. +ತನ್ನೂರಿನಲ್ಲಿ ಯಾರ ಮುಲಾಜೂ ಇಲ್ಲದವನಂತೆ ಸಿಂಹಧೈರ್ಯದಿಂದ ವರ್ತಿಸುತ್ತಿದ್ದವನು ಇಲ್ಲಿ ಪರ ಊರಿನಲ್ಲಿ (ಅವನ ರೀತಿಯಲ್ಲಿ ಹೇಳುವುದಾದರೆ ‘ಪರದೇಶದಲ್ಲಿ’) ಹೊಲಬುಗೆಟ್ಟ ನಾಯಿಯಂತೆ ಅಂಜುಬುರುಕುತನವನ್ನು ಅನುಭವಿಸುತ್ತಿದ್ದನು. +ಅದಕ್ಕೆ ಕಾರಣ, ಬರಿಯ ಅಪರಿಚಿತ ಪ್ರದೇಶ ಮತ್ತು ಅಪರಿಚಿತ ಜನ ಮಾತ್ರವೆ ಆಗಿರಲಿಲ್ಲ. +ಅವನಿಗೆ ತೊಳ್ಳೆ ನಡಗುವಂತಾಗುತ್ತಿದ್ದದ್ದು ಪೋಲೀಸಿನವರ ಭೀತಿಯಿಂದ. +ಮೇಗರವಳ್ಳಿಯಿಂದ ಹೊರಟವನು ದಾರಿಯುದ್ದಕ್ಕೂ ಎಲ್ಲಿ ಯಾರು ತನ್ನನ್ನು ಗುರುತಿಸಿ ಹಿಡಿದುಬಿಡುತ್ತಾರೋ ಎಂದು ಹೆದರಿಕೊಂಡೇ ಬಂದಿದ್ದನು. +ಅದಕ್ಕಾಗಿಯೆ ಹುಲಿಯನನ್ನೂ ಹಿಂದಕ್ಕೆ ಹೊಡೆದೋಡಿಸಿ, ಅದು ಸಿಂಬಾವಿ ಕೇರಿಗೆ ಸೇರುವಂತೆ ಮಾಡಲು ಬಹಳ ಪ್ರಯತ್ನಿಸಿದ್ದನು. +ಏಕೆಂದರೆ ಅವನಿಗೆ ಗೊತ್ತಿತ್ತು, ಆ ನಾಯಿಯನ್ನು ತನ್ನೊಡೆನೆ ಒಮ್ಮೆ ಕಂಡವರು ಅದನ್ನು ಮರೆಯಲಾರರು ಎಂದು. +ಜೊತೆಗೆ ತನ್ನ ಅಸಾಧಾರಣ ಕುಳ್ಳತನ ಬೇರೆ ಅವನನ್ನು ಎಂತಹ ಗುಂಪಿನಲ್ಲಿಯೂ ಪ್ರತ್ಯೇಕಿಸಿ ಗುರುತಿಸಿ ಹಿಡಿದುಕೊಡುವಂತಿತ್ತು. +ಅವನು ಸ್ವಲ್ಪವಾದರೂ ಗುರುತು ಮರೆಸಿಕೊಳ್ಳಲೆಂದು ಗಡ್ಡಮೀಸೆಗಳನ್ನು ಬಹಳ ದಿನಗಳಿಂದ ಬೋಳಿಸಿರಲಿಲ್ಲ. +ಆದರೂ ಗಟ್ಟಿದ ತಗ್ಗಿನವರಂತೆ ಸೀರೆ ಉಟ್ಟುಕೊಳ್ಳಲು ನಿರಾಕರಿಸಿದ ತಿಮ್ಮಿಯೂ, ಎಲ್ಲರ ಗಮನಕ್ಕೂ ಬಿದ್ದೇ ಬೀಳುವ ಹುಲಿಯನೂ ತನ್ನ ಜೊತೆಯೇ ನಡೆದುಬರುತ್ತಿದ್ದರೆ, ತನ್ನನ್ನು ಕಂಡಿದ್ದ ಪೋಲೀಸರ ಮಾತಿರಲಿ, ತನ್ನ ಚಹರೆ ಮತ್ತು ತನ್ನ ಶುಕನಸಂಗಿಯ ವಿಚಾರವಾಗಿ ಕೇಳಿದ್ದರೂ ಸಾಕು, ಯಾವನಾದರೂ ತನ್ನನ್ನು ಗುರುತಿಸುವ ಸಂಭವವುಂಟೆಂದು ಹೆದರಿ, ಹುಲಿಯನ ಕೊರಳಿಗೆ ಹಗ್ಗಹಾಕಿ, ತಿಮ್ಮಿ ಅದನ್ನು ಹಿಡಿದುಕೊಂಡು ತನಗೆ ಬಹುದೂರವಾಗಿ, ತನಗೂ ಅವರಿಗೂ ಸಂಬಂಧವಿಲ್ಲವೆಂಬುದನ್ನು ಸಾರುವಂತೆ, ಗಟ್ಟದತಗ್ಗಿನ ಆಳುಗಳೊಟನೆ ನಡೆದುಬರುವಂತೆ ಏರ್ಪಾಡು ಮಾಡಿದ್ದನು! +ತೀರ್ಥಹಳ್ಳಿಯ ಪೇಟೆಯ ಮಧ್ಯೆ ಹೊಳೆದಂಡೆಗೆ ನಡೆದುಬರುವ ರಸ್ತೆಯಲ್ಲಿ, ಅವನ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ಗಟ್ಟದಾಳುಗಳು ‘ಅದೇ ಪೋಲೀಸು ಕಛೇರಿ, ಇದೇ ಲಾಕಪ್ಪು!’ ಎಂದು ತಮ್ಮ ಎಡಬಲ ಎತ್ತರದಲ್ಲಿದ್ದ ಕಲ್ಲುಕಟ್ಟಡಗಳನ್ನು ನಿರ್ದೇಶಿಸಿ ಮಾತನಾಡಿಕೊಂಡಾಗ ಗುತ್ತಿಗೆ ಜಂಘಾಬಲವೆ ಸಡಿಲವಾಗಿತ್ತು! +ಯಾರಾದರೂ ಕರೀಪೇಟದವರು, ಆ ಗಿರ್ಲುಮೀಸೆಯವನೋ?ಆ ಮೀಸೆಬೋಳನೋ? +ತನ್ನನ್ನು ಗುರುತಿಸಿ ಕಂಡು ಹಿಡಿದರೆ ಏನುಗತಿ?ಎಂದು ಕಳವಳಿಸಿ, ಮೋರೆ ಕೆಳಗೆ ಮಾಡಿಕೊಂಡೇ ಬಿರಬಿರನೆ ಸಾಗಿದ್ದನು! +ಆದರೆ ಆ ಮಳೆಗಾಲದ ಕೆಸರುರಸ್ತೆಯಾಗಲಿ, ಬೀಳುತ್ತಿದ್ದ ಸೋನೆಮಳೆಯಿಂದ ಮಂಜು ಮುಸುಗಿದಂತೆ ಕಾಣುತ್ತಿದ್ದು ಹಾಸುಂಬೆ ಹಬ್ಬಿದ ಕಲ್ಲುಗೋಡೆಯ ಈ ಕಟ್ಟಡಗಳಲ್ಲಾಗಲಿ, ಇವನನ್ನು ಗುರುತಿಸುವುದಕ್ಕಿರಲಿ ನೋಡುವುದಕ್ಕೂ ಒಂದು ನರಪಿಳ್ಳೆಯಾದರೂ ಕಾಣುತ್ತಿರಲಿಲ್ಲ…. +“ಏಯ್ ಹಸಲೋರವನೆ, ಯಾರದ್ದೋ  ಇದು, ಈ ಕೋಳೀ ಬುಟ್ಟಿ? +ನಿನ್ನ ಕೋಳೀ ಕುನ್ನೀನೆಲ್ಲ ಸಾಗಿಸಕ್ಕೆ ಜಾಗ ಎಲ್ಲಿದ್ಯೋ ದೋಣೀಲಿ? +ತೆಗೀತೀಯೋ ಇಲ್ಲೋ, ಲೌಡೀ ಮಗನೆ? …. ”ಅಂಬಿಗನ ಆರ್ಭಟಗೆ ಗುತ್ತಿ ಕಣ್ಣುಬಾಯಿ ಬಿಟ್ಟುಕೊಂಡು ನಿಂತಿದ್ದವನು ತನ್ನ ನಾಯಿಯ ಕಡೆ ನೋಡಿದನು. +ಅವನ ಮನದಲ್ಲಿ ಚಿಂತೆ ಸಂಚರಿಸಿತು. +‘ಹಾಂಗಾದ್ರೆ ಹುಲಿಯನ್ನು ದೋಣಿ ಹತ್ತಾಕ್ಕೆ ಬಿಡಾದಿಲ್ಲ? +ಈ ನೆರೇಲಿ ಹೆಂಗೆ ಈಜಿ ಆಚೆದಡ ಸೇರ್ತದೆಯೋ ಶಿವನೇ ಬಲ್ಲ! +ಹೊಳೇಪಾಲೇ ಸೈ ಅಂತಾ ಕಾಣ್ತದೆ!’ ಪಕ್ಕದಲ್ಲಿ ನಿಂತು, ಭೋರ್ಗರೆದು ರೌದ್ರ ವೇಗದಿಂದ ಬಿದಿರುಹಿಂಡಲುಗಳನ್ನೂ ಹೆಮ್ಮರಗಳನ್ನೂ ಸೊಪ್ಪು ಸದೆಗಳನ್ನೂ ಕೊಚ್ಚಿಕೊಂಡು ಹರಿಯುತ್ತಿದ್ದ ತುಂಗೆಯ ನೆರೆವೊನಲನ್ನೂ ದೋಣಿಯ ನೂಕು ನುಗ್ಗಲು ಗಲಭಯನ್ನೂ ನೋಡುತ್ತಾ ನಿಂತಿದ್ದ ಹುಲಿಯನ ಕಡೆ ಸಿಟ್ಟಿನಿಂದ ಕಣ್ಣುಹಾಯಿಸಿ ಶಪಿಸಿದನು. + “ಹಾಳು ಮುಂಡೇದು, ಹಡಬೆಗೆ ಹುಟ್ಟಿದ್ದು! +ಇದರ ರುಣ ಕಡಿಯಾಕೆ! +ಎಷ್ಟು ಹೊಡೆದಟ್ಟಿದ್ರೂ ಹಿಂದಕ್ಕೆ ಹೋಗ್ದೆಹೋಯ್ತು, ಕೇರೀಗೆ! +ಈಗ ದಾಟು ಹೊಳೇನ!ಮುಳುಗಿ ಸಾಯಿ! …. +“ಅಷ್ಟರಲ್ಲಿ ಅಂಬಿಗನು ಹೇಟೆ ಮರಿಗಳಿದ್ದು ಪೀಂಗುಡುತ್ತಿದ್ದ ಬುಟ್ಟಿಯ ಪಂಜರವನ್ನೆತ್ತಿ, ತನ್ನಜ್ಞೆಯನ್ನು ಪರಿಪಾಲಿಸದೆ ಬರಿದೆ ಹಲ್ಲುಬಿಡುತ್ತಾ ದಡದ ಮರಳಿನಮೇಲೆ ನಿಂತಿದ್ದ ಗಟ್ಟದವನ ಕಾಲುಬುಡಕ್ಕೆ, ದೋಣಿಯಿಂದ ಎಸೆದನು. +ಆ ಭೂಕಂಪಕ್ಕೆ ದಿಗಿಲುಗೊಂಡು ಕೂಗಾಡುತ್ತಿದ್ದ ಹೇಟೆ ಮರಿಗಳನ್ನು ಬುಟ್ಟಿಯೊಳಗೇ ಸಂತೈಸಿ, ಆ ಗಟ್ಟಿದಾಳು ಸಾವಧಾನವಾಗಿ, ಅಂಬಿಗನ ತಪ್ಪನ್ನು ತಿದ್ದಿದನಷ್ಟೆ. “ನಾನು ಹಸಲೋರವನಲ್ಲ, ಒಡೆಯ, ಬಿಲ್ಲೋರವನು!”ದೋಣಿಗೆ ಗಟ್ಟಿದಾಳುಗಳೆಲ್ಲ ಹತ್ತಿದ್ದರು. +ಅಷ್ಟರಲ್ಲಿ ಮೂರು ನಾಲ್ಕು ಜನ ಹಾರುವರು ದೋಣಿಗಂಡಿಗೆ ಬಂದವರು ಕೈಯೆತ್ತಿ ಅಂಬಿಗನನ್ನು ಕುರಿತು “ಓ ತಮ್ಮಯ್ಯಣ್ಣಾ, ತಮ್ಮಯ್ಯಣ್ಣಾ, ದೋಣಿ ಬಿಡಬೇಡ ಬಿಡಬೇಡ” ಎಂದು ಕೂಗುತ್ತಾ ದೋಣಿಯ ಬುಡಕ್ಕೆ ಓಡಿ ಬಂದರು, “ಮಾರಾಯ, ಮಠದಲ್ಲಿ ಸತ್ಯನಾರಾಯಣ ವ್ರತ. +ಬೇಗ ಹೋಗಬೇಕಾದಗಿದೆ ಸಮಾರಾಧನೆಗೆ, ನಮ್ಮನ್ನು ಮೊದಲು ದಾಟಿಸಿಬಿಡು; ಅಷ್ಟು ಉಪಕಾರವಾದೀತು.” +“ಜನಿವಾರದವರು ಹತ್ತತ್ತಾರೋ, ಇಳಿರೋ ಎಲ್ಲ!” ಅಂಬಿಗ ತಮ್ಮಯ್ಯಣ್ಣ ಆಜ್ಞೆಮಾಡಿದ. +ಏನೋ ಅಪರಾಧ ಮಾಡಿದ್ದವರಂತೆ ದಿಗಿಲುಗೊಂಡು, ಮರುಮಾತಾಡದೆ, ಎಲ್ಲರೂ ಅವರವರ ಸಾಮಾನುಗಳೊಡನೆ ಇಳಿದು ದೂರಸರಿದರು. +ದೋಣಿಪೂರ್ತಿ ಖಾಲಿಯಾಯಿತು. +ಆ ಮೂರು ನಾಲ್ಕು ಮಂದಿ ಊಟಕ್ಕೆ ಅವಸರವಾದ ಮಡಿ ಬ್ರಾಹ್ಮಣರು ದೋಣಿ ಹತ್ತಿ ನಿಂತರು, ಕಚ್ಚಿಗಳನ್ನು ಮಡಿದು ಸೊಂಟಕ್ಕೆ ಸಿಕ್ಕಿಸಿಕೊಂಡು. +ತಕ್ಕಮಟ್ಟಿಗೆ ದೊಡ್ಡದಾಗಿಯೆ ಇದ್ದ ಆ ದೋಣಿಯಲ್ಲಿ ಇಪ್ಪತ್ತು ಇಪ್ಪತ್ತೈದು ಜನರು ಧಾರಳವಾಗಿ ಹತ್ತಬಹುದಾಗಿತ್ತು. +ಆದರೆ ಇತರ ಮುಟ್ಟಾಳುಗಳು ಹತ್ತಿದರೆ ಬ್ರಾಹ್ಮಣರಿಗೆ ಮೈಲಿಗೆಯಾಗುತ್ತದೆ. +ಅಂತಹ ಅಪಚಾರವೇನಾದರೂ ನಡೆದರೆ ತನಗೂ ತನ್ನ ದೋಣಿಗೂ ತನ್ನ ಅಂಬಿಗನ ಕಸುಬಿಗೂ ಕೇಡಾಗುತ್ತದೆ ಎಂದು ನಂಬಿದ್ದ  ಆ ತಮ್ಮಯ್ಯಣ್ಣ, ಬೇರೆ ಉಪಾಯ ಕಾಣದೆ, ಆ ನಾಲ್ವರನ್ನೇ ಆಚೆ ದಡಕ್ಕೆ ಕೊಂಡೊಯ್ಯಲು ಸಿದ್ಧನಾಗಿದ್ದ. +ಅಷ್ಟರಲ್ಲಿ ಹಾರುವರಲ್ಲಿ ಒಬ್ಬ “ಅಲ್ಲಿ ಯಾರೋ ಇಬ್ಬರು ಗೌಡರು ಕೂತಿದ್ದಾರೆ ನೋಡು, ಅರಳಿಕಟ್ಟೇಲಿ. +ಅವರೂ ಹೊಳೆ ದಾಟುವವರಿರಬೇಕು. +ಜನ ಸಾಲದಿದ್ದರೆ ಅವರನ್ನು ಕರೆಯಬಹುದಲ್ಲಾ?” ಎಂದು ಸಲಹೆ ಮಾಡಿದನು. +“ಅವರೋ? …. ಅವರು ನಮ್ಮ ಧಣೇರು ಕಣ್ರಯ್ಯಾ! +ಕಾನೂರು ಚಂದ್ರೇಗೌಡ್ರು, ಮುತ್ತಳ್ಳಿ ಶ್ಯಾಮೇಗೌಡ್ರು. +ಆಗಲೆ ಕರೆದಿದ್ದೆ ಅವರನ್ನು…. +ಅವರನ್ನ ಹಾಂಗೆಲ್ಲ ಕಾಯ್ಸೋಕೆ ಆಗ್ತದೆಯೇ? +ವರ್ಷಾ ವರ್ಷಾ ಭತ್ತ ಕೊಟ್ಟು ನಮ್ಮ ಹೊಟ್ಟೆ ಹೊರೆಯೋರೆ ಅವರು…. +ಇಲ್ಲದಿದ್ರೆ ಈ ದೋಣಿ ದಾಟೋರು ಕೊಡೋ  ಒಂದೊಂದೇ ಬಿಲ್ಲೆ ಯಾತಕ್ಕೆ ಸಾಕಾಗ್ತಿತ್ತು ನಮಗೆ? …. +ಬೈಗನ ಹೊತ್ತು ಒಂದು ತೊಟ್ಟು ಕುಡಿಯಾಕೂ ಸಾಕಾಗ್ತಿರಲಿಲ್ಲ! +ಹಿಹ್ಹಿಹ್ಹಿ!ಬೇಜಾರು ಮಾಡಿಕೊಳ್ಳಬೇಡಿ, ಅಯ್ಯಾ, ಬಿರಾಂಬ್ರ ಹತ್ರ ಹಾಂಗೆಲ್ಲ ಹೇಳ್ದೆ ಅಂತಾ! +ಹಿಹ್ಹಿಹ್ಹಿ! …ಅವರೂ…. ಹ್ಞುಹ್ಞುಹ್ಞು; + ಸೀತೆಮನೆ ಸಿಂಗಪ್ಪಗೌಡರಿಗಾಗಿ ಕಾಯ್ತಿದಾರೆ…. +ಅವರಿಲ್ಲೇ ಪ್ಯಾಟಿಗೆ ಹೋಗ್ಯಾರಂತೆ….”ಎನ್ನುತ್ತಾ ತಮ್ಮಯ್ಯಣ್ಣ ನಾಲ್ಕೇ ಬ್ರಾಹ್ಮಣರನ್ನು ಕೂರಿಸಿಕೊಂಡು, ದಡದಲ್ಲಿ ನಿಂತು ಗಂಟೆಗಟ್ಟಲೆ ಕಾಯುತ್ತಿದ್ದ ಜನರು ಗುಂಪು ನಿಸ್ಸಹಾಯಕರಾಗಿ ನೋಡುತ್ತಿರಲು, ಹುಟ್ಟಿನಿಂದ ದಡವನ್ನೊತ್ತಿ ದೋಣಿಯ ಹೊನಲಿಗೆ ತಳ್ಳಿಕೊಂಡು, ತನ್ನ ಜಾಗದಲ್ಲಿ ಕೂತು ಹುಟ್ಟುಹಾಕತೊಡಗಿದನು. +ದೋಣಿಯ ಮತ್ತೊಂದು ತುದಿಯಲ್ಲಿದ್ದ ತನ್ನ ಸಹಾಯಕ ಅಂಬಿಗನಿಗೆ, ಉಳಿದವರಿಗೆ ಅಷ್ಟೇನೂ ಅರ್ಥವಾಗದ ಪರಿಭಾಷೆಯಲ್ಲಿ, ಪ್ರವಾಹ ರಭಸವನ್ನೂ ಅದರಲ್ಲಿ ತೇಲುತ್ತಾ ಬರುತ್ತಿದ್ದ ಹೆಮ್ಮರಗಳನ್ನೂ ಹೇಗೆ ತಪ್ಪಿಸಬೇಕೆಂಬುದಾಗಿ ಸಲಹೆ ಸೂಚನೆಗಳನ್ನು ಕೊಡುತ್ತಾ. +ಗುತ್ತಿ ನೋಡುತ್ತಾ ನಿಂತಿದ್ದಂತೆಯೆ ದೋಣಿ ದೂರ ದೂರ ದೂರವಾಗಿ ಚಿಕ್ಕ ಚಿಕ್ಕ ಚಿಕ್ಕದಾಗಿ, ಹೋಗಿ ಹೋಗಿ ಹೋಗಿ, ಸುಮಾರು ಐದಾರು ಫರ್ಲಾಂಗು ವಿಸ್ತಾರವಾಗಿದ್ದ ನೆರೆಹೊನಲಿನಲ್ಲಿ ಮೇಲಕ್ಕೊಮ್ಮೆ ಕೆಳಕ್ಕೊಮ್ಮೆ ಕೊಚ್ಚಿ ತೇಲಿ, ಅಲೆಗಳಲ್ಲಿ ಎದ್ದು ಬಿದ್ದು ಹಾರಿ ಆಚೆಯ ದಡಕ್ಕೆ ಸೇರಿತು. +ಮತ್ತೆ, ನೋಡುತ್ತಿದ್ದಂತೆಯೇ, ಜನರನ್ನು ತುಂಬಿಕೊಂಡು ಈಚೆಯ ದಡಕ್ಕೂ ಬಂತು. +ಬರುವಾಗ ಮಾತ್ರ ಪ್ರವಾಹರಭಸದಲ್ಲಿ ನುಗ್ಗಿ ಬರುತ್ತಿದ್ದ ಒಂದು ಹೆಮ್ಮರಕ್ಕೆ ಇನ್ನೇನು ತಗುಲಿ ಮುಳುಗಿತು ಎನ್ನುವಷ್ಟರಲ್ಲಿ ಅಂಬಿಗರು ಸಾಹಸದಿಂದ ಹುಟ್ಟುಹಾಕಿ ದೋಣಿಯ ಮುಖವನ್ನೆ ಬೇರೆ ದಿಕ್ಕಿಗೆ ತಿರುಗಿಸಿ ರಕ್ಷಿಸಿದ್ದರು. +ಅಂತೂ ಮೂರು ನಾಲ್ಕು ಸಾರಿ ದೋಣಿ ಹೋಗಿ ಬರುವಷ್ಟರಲ್ಲಿ ಸೇರೆಹಾರರ ಗಟ್ಟದಾಳುಗಳೆಲ್ಲ ಆಚೆದಡ ಸೇರಿದ್ದರು. +ಮಳೆಗಾಲವಾಗಿದ್ದರಿಂದ ಗುತ್ತಿಗೆ ಹೊತ್ತೂ ಗೊತ್ತಾಗುವಂತಿರಲಿಲ್ಲ. +ತಿಮ್ಮಿ ಆಕಳಿಸಿ, ಆಕಳಿಸಿ, ಕಂಬಳಿಕೊಪ್ಪೆಯನ್ನು ಮಳೆಗಾಳಿ ಬೀಸಿದಂತೆಲ್ಲ ಬಲವಾಗಿ ಸುತ್ತಿಕೊಳ್ಳುತ್ತಿದ್ದಳಷ್ಟೆ. +ಸೀತೆಮನೆ ಸಿಂಗಪ್ಪಗೌಡರೂ ಪೇಟೆಯಿಂದ ಹಿಂತಿರುಗಿ ಬಂದು, ಕಾನೂರು ಚಂದ್ರಯ್ಯಗೌಡರು ಮತ್ತು ಮುತ್ತಳ್ಳಿ ಶಾಮಯ್ಯಗೌಡರನ್ನು ಕೂಡಿಕೊಂಡು ಮೆಟ್ಟಿಲುಗಳನ್ನು ಇಳಿದು ಹೊಳೆಯ ದಂಡೆಗೆ ದೋಣಿ ಹತ್ತಲು ಬಂದು ನಿಂತಾಗಲೆ ಗುತ್ತಿಯೂ ಅವರ ಹಿಂದೆಯೆ ಇಳಿದುಬಂದು ತುಸುದೂರದಲ್ಲಿ ನಿಂತನು. +ಒರಚುಗಣ್ಣಿವ ಸಿಂಗಪ್ಪಗೌಡರು ತಮ್ಮ ತಾರುಣ್ಯಸಹಜವಾಗಿದ್ದ ಸಂತೋಷದ ಮುಖ ಭಂಗಿಯಿಂದ ಗುತ್ತಿಯ ಕಡೆ ಓರೆನೋಟ ಬೀರಿ, ಕಂಚಿನ ಸದ್ದನ್ನು  ನೆನಪಿಗೆ ತರಬಹುದಾದ ಕಂಠಧ್ವನಿಯಿಂದ ಕೇಳಿದರು “ಯಾರೋ ನೀನು? +ಎಲ್ಲಿ ಆಯಿತೋ ನಿನಗೆ?”ಎರಡೂ ಕೈಗಳನ್ನು ಜೋಡಿಸಿ ಎತ್ತಿ ಮುಗಿಯುತ್ತಾ, ಸೊಂಟ ಬಾಗಿಸಿ ನೆಲಮುಟ್ಟಿ ನಮಸ್ಕಾರ ಮಾಡಿ, ತುಂಬ ಭಯ ಭಕ್ತಿ ವಿನಯದಿಂದ ಗುತ್ತಿ “ನಾನು ಒಡೆಯ, ನಾನು” ಎಂದು ಸ್ವಲ್ಪ ತಡೆದು ತಡೆದು “ನಾನು ಕುಳ್ಳಸಣ್ಣ!” ಎಂದನು. +ಗದುಗಿನ ಭಾರತ ತೊರವೆ ರಾಮಾಯಣಾದಿ ಓಲೆಗ್ರಂಥಗಳನ್ನು ರಾಗವಾಗಿ ಓದಿ ಮನರಂಜಿಸುವುದರಲ್ಲಿ ಪ್ರಸಿದ್ಧರಾಗಿದ್ದ ಪರಿಹಾಸ ಪ್ರವೃತ್ತಿಯ ಸಿಂಗಪ್ಪಗೌಡರು ನಗುತ್ತಾ “ಕಂಡರೆ ಗೊತ್ತಾಗ್ತದೋ ಅದು!ನೀನು ಕುಳ್ಳಾ ಸಣ್ಣಾ ಅಂತ! …. +ನಿನ್ನ ಹೆಸರೇನೊ?” ಎಂದರು. +ಉಳಿದ ಇಬ್ಬರು ಗೌಡರೂ ಗುತ್ತಿಯ ಕಡೆ ತಿರುಗಿ ನಿಂತದ್ದವರು ನಗತೊಡಗಿದ್ದರು. +“ನನ್ನ ಹೆಸರೇ ‘ಕುಳ್ಸಣ್ಣ’ ಅಂತಾ, ಒಡೆಯ!” ಮೂವರು ಗೌಡರೂ ಪರಿಹಾಸ್ಯದ ಲಘುಮನೋಧರ್ಮವನ್ನು ಪ್ರಕಟಿಸಿದ್ದರಿಂದ ಗುತ್ತಿಗೆ ಸುಳ್ಳನ್ನೂ ಧೈರ್ಯವಾಗಿ ಹೇಳಲು ಧ್ಯರ್ಯ ಬಂದಿತ್ತು. +ತನ್ನ ನಿಜವಾದ ಹೆಸರು ಗೊತ್ತಾದರೆ ‘ಅಜ್ಞಾತವಾಸ’ ವಿಫಲವಾಗಿ ಪೋಲೀಸರ ಕೈಗೆ ಬೀಳಬಹುದು ಎಂಬ ಭಯದಿಂದಲೆ ಅವನು ತನ್ನ ಊರು ಹೆಸರು ಎಲ್ಲವನ್ನೂ ಮುಚ್ಚಿಡಲು ಮನಸ್ಸು ಮಾಡಿದ್ದನು. +“ಎಲ್ಲಿ ಆಯಿತೋ ನಿನಗೆ?” ಗಡಸು ದನಿಯಲ್ಲಿ ಕೇಳಿದರು ಚಂದ್ರಯ್ಯಗೌಡರು. +“ಮೇಗರೊಳ್ಳಿ ಕಡೆ, ಒಡೆಯ.” ಮತ್ತೆ ಬಗ್ಗಿದನು ಗುತ್ತಿ. +“ಮೇಗರಳ್ಳಿ ಕಡೆ ಅಂದರೆ? +ಯಾರ ಮನೆಯವನೋ?” ಕೇಳಿದರು ಸಿಂಗಪ್ಪಗೌಡರು,“ಕೊಳಿಗೆ, ಒಡೆಯ ಕೊಳಿಗಿ ಕೇರಿಯವನು.” -ಗುತ್ತಿ ಕೈಮುಗಿದನು. +“ಬೇಲರವನೇನೋ?’ ಚಂದ್ರಯ್ಯಗೌಡರ ಪ್ರಶ್ನೆ. +“ಅಲ್ಲ, ಒಡೆಯ, ಹೊಲೇರವನು?” +“ಇತ್ತಲಾಗಿ ಎಲ್ಲಿ ಹೊರಟೆಯೋ ಮತ್ತೆ?” ಮುತ್ತಳ್ಳಿ ಕಾನೂರು ಅತ್ತಕಡೆ ಇರುವವರೆಲ್ಲ ಹೆಚ್ಚಾಗಿ ಬೇಲರೆ ಆಗಿದ್ದುದರಿಂದ ಗುತ್ತಿಗೆ ಆ ಕಡೆ ನೆಂಟರಿರಲಾರರಾಗಿ ಅತ್ತ ಕಡೆ ಏಕೆ ಹೋಗುತ್ತಿದ್ದಾನೆ ಎಂಬುದು ಚಂದ್ರಯ್ಯಗೌಡರ ಇಂಗಿತವಾಗಿತ್ತು. +“ಯಾರಾದರೂ ನಿನಗೆ ನೆಂಟರಿದ್ದಾರೇನೋ?” +“ಇಲ್ಲ, ಒಡೆಯ…” +“ಮತ್ತೆ?ಹೆಂಡ್ತಿ ಕರಕೊಂಡು ಹೊರಟಿದ್ದೀಯಾ?” ಚಂದ್ರಯ್ಯಗೌಡರು ತಿಮ್ಮಿಯ ಕಡೆ ನೋಡಿ ಕೇಳಿದರು “ಅವಳು ಯಾರೊ? +ನಿನ್ನ ಹೆಂಡ್ತೀನೊ?ತಂಗೀನೋ? …. ” +“ಹೆಡ್ತಿ, ಒಡೆಯಾ!” ಹಲ್ಲುಗಳೆಲ್ಲವನ್ನೂ ಪ್ರದರ್ಶಿಸುತ್ತಾ ಹೇಳಿದನು ಗುತ್ತಿ. +ಚಂದ್ರಯ್ಯಗೌಡರು ತಾರುಣ್ಯೋತ್ತರ ಲಕ್ಷಣದ ಶೃಂಗಾರ ಮಂದಹಾಸದಿಂದ ತನ್ನ ಕಡೆ ನೋಡುತ್ತಿದ್ದುದನ್ನು ಹೆಣ್ಣು ಹೃದಯ ಮಾತ್ರವೆ ಗ್ರಹಿಸಬಹುದಾಗಿದ್ದ ಸೂಕ್ಷ್ಮತೆಯಿಂದ ಅರಿತ ತಿಮ್ಮಿ ನಾಚಿಕೊಂಡು ಮುಖ ತಿರುಗಿಸಿ ನಿಂತಳು. +ಚಂದ್ರಯ್ಯಗೌಡರಿಗೂ ಮೊದಲನೆ ಹೆಂಡತಿ ತೀರಿಹೋಗಿ ಸ್ವಲ್ಪ ಕಾಲವಾಗಿತ್ತು. +ಎರಡೆನೆಯದಕ್ಕಾಗಿ ಸಂಧಾನ ಅನುಸಂಧಾನ ನಡೆಯುತ್ತಿತ್ತು. +ಆದ್ದರಿಂದ ಲಕ್ಷಣವಾಗಿದ್ದ ಯಾವ ಹೆಣ್ಣನ್ನಾದರೂ ಸಂತೋಷದಿಂದ ನೋಡುವ ಸ್ಥಿತಿಯಲ್ಲಿದ್ದರು. +ಮತ್ತೆಯೂ ಕೆಣುಕುವಂತೆ ನಗುತ್ತಾ ಕೇಳಿದರು; +“ನಿನ್ನ ಹೆಂಡ್ತೀನೋ?ಇಲ್ಲಾ…?”ಗೌಡರು ಅರ್ಧದಲ್ಲಿಯೆ ನಿಲ್ಲಿಸಿದ ವ್ಯಂಗ್ಯೋಕ್ತಿಗೆ ಗುತ್ತಿ ಕಕ್ಕಾವಿಕ್ಕಿಯಾಗಿ, ಬಚ್ಚನಿಗೆ ಹೆಂಡತಿಯಾಗುವವಳನ್ನು ತಾನು ಹಾರಿಸಿಕೊಂಡುಬಂದ ಸಂಗತಿ ಇವರಿಗೆ ಎಲ್ಲಿಯಾದರೂ ಗೊತ್ತಾಗಿದೆಯೇ? +ಎಂಬ ಶಂಕೆಯೂ ತಟಕ್ಕನೆ ಮನಸ್ಸಿಗೆ ಬರಲು, ತನ್ನನ್ನು ತಾನು ಸಮರ್ಥಿಸಿಕೊಳ್ಳಲು, ಸ್ವಲ್ಪ ಹೆಚ್ಚು ಎನ್ನಬಹುದಾದ ಅಂಗಭಂಗಿಯಿಂದಲೆ “ನನ್ನ ಹೆಡ್ತೀನೇ, ಒಡೆಯಾ!ದೇವರಾಣೆಗೂ! +ತಮ್ಮ ಪಾದದಾಣೆಗೂ! +ನಾನು ಸುಳ್ಳು ಹೇಳಿದ್ರೆ ನನ್ನ ನಾಲಿಗೆ ಬಿದ್ದೇಹೋಗ್ಲಿ! +ಬೇಕಾದರೆ ಅದನ್ನೇ ಕೇಳಿ!ಎಂದು ಮುಖ ತಿರುಗಿಸಿ ನಿಂತಿದ್ದ ತಿಮ್ಮಿಯ ಕಡೆ ನೋಡಿದನು. +“ಸರಿ ಬಿಡು! +ಬೇಲಿಗೆ ಓತಿಕ್ಯಾತ ಸಾಕ್ಷಿ ಹೇಳಿದ್ಹಾಂಗೆ!ಅವಳನ್ನೇನು ಕೇಳಾದು!” ಎಂದು ಚಂದ್ರಯ್ಯಗೌಡರು ಗುತ್ತಿಯಿಂದ ಶಾಮಯ್ಯಗೌಡರ ಕಡೆ ತಿರುಗಿ, ಕಾನೂರು ಬಾವನ ಕಾಮಾಭಿರುಚಿಯನ್ನೂ ಶೃಂಗಾರ ಚೇಷ್ಟೆಯ ಸ್ವಭಾವವನ್ನೂ ಅರಿತಿದ್ದ ಅವರು ತಮ್ಮನ್ನೆ ವ್ಯಂಗ್ಯವಾಗಿ ಅವಲೋಕಿಸುತ್ತಿದ್ದುದನ್ನು ಗಮನಿಸಿ, ತಮ್ಮ ವಾಕ್ಕಿಗೂ ವರ್ತನೆಗೂ ಸಮಾಧಾನ ಹೇಳುವ ರೀತಿಯಲ್ಲಿ ಹೇಳಿದರು. + “ಅಲ್ಲಾ ಬಾವ, ಹಂಗ್ಯಾಕೆ ಕೇಳ್ದೆ ಅಂತೀರೋ? +ಆ ಮೇಗ್ರೊಳ್ಳಿ ಸೀಮೆ ಹಣೇಬರಾನೇ ಹಾಂಗೆ; +ಹುಡುಗಿ ಹಾರಿಸೋದು, ಕಂಡೋರ ಹೆಂಡಿರನ್ನ ಕೆಡಿಸಾದು, ಅದೇ ಕಸಬು. +ಅದ್ಕೇ ಕೇಳ್ದೆ, ಲೌಡಿಮಗ ಯಾರನ್ನಾದ್ರೂ ಹಾರಿಸಿಕೊಂಡು ಓಡಿಬಂದಿದಾನೋ ಏನೋ ಅಂತಾ…. +ಮೊನ್ನೆ ಮೊನ್ನೆ ಅಲ್ಲಿ ಯಾರೋ ಒಬ್ಬರು ನಾಯಕರ ಮಗಳನ್ನೆ ಯಾರೋ ಗೌಡರ ಹುಡುಗ ಲಗ್ನದ ದಿನವೇ, ಧಾರೆಗೆ ಇನ್ನೇನು ಒಂದು ಗಳಿಗೆ ಇದೆ ಅನ್ನಬೇಕಾದರೆ, ಹಾರಿಸಿಕೊಂಡು ಹೋಗ್ಯಾನಂತೆ! …. +ಹೌದಲ್ಲೇನೋ, ಸಿಂಗಪ್ಪ?”ಪ್ರಶ್ನೆ ತಮ್ಮ ಕಡೆ ತಿರುಗಲು ಸಿಂಗಪ್ಪಗೌಡರು “ಉಪದೇಶಿ ಜೀವರತ್ನಯ್ಯ ಹೇಳ್ತಿದ್ರಪ್ಪಾ. +ಅದೊಂದು ದೊಡ್ಡ ಪುಕಾರೇ ಆಗಿದೆಯಂತೆ. +ಪಾಲುಮುಖಂಡರ ಬಹಿಷ್ಕಾರದ ಕಾಗದ ನಮ್ಮ ಕಡೆಗೂ ಬಂದರೂ ಬರಬಹುದು…. +ಸಿಂಬಾವಿ ಭರಮೈ ಹೆಗ್ಗಡೇರಿಗೇ ಅಂತೆ ಮದುವೆ ಆಗಬೇಕಾಗಿದ್ದು, ಎರಡನೆ ಮದುವೆಯಂತೆ. +ಮೊದಲನೇ ಹೆಂಡ್ತೀಲಿ ಮಕ್ಕಳಿಲ್ಲಂತೆ. +ಹೆಣ್ಣು ಹೂವಳ್ಳಿನಾಯಕರ ಮಗಳಂತೆ. +ಹಾರಿಸಿಕೊಂಡು ಹೋದವನು ಕೋಣೂರುಗೌಡರ ತಮ್ಮನಂತೆ.” ಎಂದು, ಗುತ್ತಿಯ ಕಡೆಗೆ ತಿರುಗಿ “ಇವನಿಗೇನಾದ್ರೂ ಗೊತ್ತಿದ್ರೂ ಗೊತ್ತಿರಬಹುದು” ಎಂದರು. +ಗುತ್ತಗೆ ಆಗಲೆ ಎದೆ ಡವಡವಗುಟ್ಟುತ್ತಿತ್ತು. +ಆ ಕಥಾವಿಷಯ ಗೊತ್ತಿರುವುದು ಮಾತ್ರವಲ್ಲ, ಅದರಲ್ಲಿ ಬಹುಪಾಲು ಸಕ್ರಿಯಾ ಪಾತ್ರಧಾರಿಯೂ ಆಗಿದ್ದ ಅವನಿಗೆ ಆ ಮಳೆಗಾಲದಲ್ಲಿಯೂ ಮೈ ಬೆವರತೊಡಗಿತ್ತು. +ಅಷ್ಟರಲ್ಲಿ ಚಂದ್ರಯ್ಯಗೌಡರ ಗಡಸು ದನಿಯೂ ಪ್ರಶ್ನೆ ಹಾಕಿತು. +“ಏಯ್…ಹೆಸರು ಹಿಡಿದು ಕರೆಯಲು ಪ್ರಯತ್ನಿಸಿ ಫಕ್ಕನೆ ನೆನಪಿಗೆ ಬಾರದಿರಲು “ಎಂಥದೋ ನಿನ್ನ ಹಾಳು ಹೆಸರು? …. +ಕುಳ್ಳಣ್ಣನೋ…. ? +“ಕುಳ್ಳಸಣ್ಣ, ಒಡೆಯಾ?” ಸೂಚಿಸಿದನು ಗುತ್ತಿ. +“ನಿಂಗೇನಾದ್ರೂ ಗೊತ್ತೇನೋ ಆ ವಿಷ್ಯಾ?” ಚಂದ್ರಯ್ಯಗೌಡರು ಪ್ರಶ್ನಿಸಿದರು. +“ಇಲ್ಲ, ನನ್ನೊಡೆಯಾ, ನಂಗೇನೂ ತಿಳೀದು ಆ ಇಚಾರ!” ತಾನು ಬೆಪ್ಪರಲ್ಲಿ ಬೆಪ್ಪ ಎಂಬ ಮುಖಭಂಗಿಯನ್ನು ಪ್ರದರ್ಶಿಸುತ್ತಾ ಮೈಯನ್ನೆಲ್ಲ ಮೊಳಕಾಲಿಗೆ ಕುನುಗಿಸಿ ಕೈಮುಗಿದನು ಗುತ್ತಿ. +“ಅಯ್ಯೋ ಆ ಗೊಬ್ಬರ ಹೊರಾ ಹೊಲೆಯಗೆ ಹೆಂಗೆ ಗೊತ್ತಾಗಬೇಕು ಅದೆಲ್ಲಾ? …. ” ಎನ್ನುತ್ತಾ ಶಾಮಯ್ಯಗೌಡರು ಆ ವಿಚಾರವನ್ನು ಅಲ್ಲಿಗೇ ನಿಲ್ಲಿಸುವ ಉದ್ದೇಶದಿಂದಲೂ, ದೋಣಿ ಆಗಲೆ ಹೊಳೆಯ ನಡುವೆ ಅರ್ಧ ದೂರ ಬಂದುದರಿಂದಲೂ ಆ ದಿಕ್ಕಗೆ ತಿರುಗಿ “ನೀನೀಗ ಹೋಳೆ ದಾಟಿ ಎಲ್ಲಿಗೆ ಹೋಗವ್ನೋ?” ಎಂದರು. +“ಎಲ್ಲಿಗಾದ್ರೂ ಆತು, ಒಡೆಯಾ. +ಒಂದು ತುತ್ತು ಅನ್ನ ಸಿಕ್ಕರಾಯ್ತು, ನಿಮ್ಮ ಪಾದಸೇವೆ ಮಾಡಿಕೊಂಡು ಬಿದ್ದಿರ್ತಿನಿ…” ಎಂದನು ಗುತ್ತಿ. +“ನಿಮ್ಮ ಕೇರೀನ, ನಿಮ್ಮ ಒಡೇರ್ನ, ಯಾಕೋ ಮತ್ತೆ ಬಿಟ್ಟು ಬಂದಿದ್ದು?” ಸಿಂಗಪ್ಪಗೌಡರು ಕೇಳಿದರು. +“ಏನೋ ಸಕುನ ಬರ್ಲಿಲ್ಲಾ, ಒಡೆಯ. +ಗಣಮಗನೂ ಹೇಳ್ತು, ನಾಕು ಕಾಲ ಬ್ಯಾರೆ ಎಲ್ಲಾದ್ರೂ ಹೋಗಿ ಇದ್ದು ಬಾ, ಅಷ್ಟರಾಗೆ ಸನಿ ಬಿಡ್ತದೆ ಅಂತಾ. +“ಹಂಗಾದ್ರೆ ಕಾನೂರಿನಾಗೆ ಇರ್ತಾನೆ ಬಿಡಿ, ಕೆಲ್ಸ ಮಾಡಿ ಕೊಂಡು” ಚಂದ್ರಯ್ಯಗೌಡರು ಇತ್ಯರ್ಥವಾಗಿಯೆ ಹೇಳಿಬಿಟ್ಟರು. +ಅವರಿಗೆ ದುಡಿಯುವ ಗುತ್ತಿಯ, ಅಂದರೆ ಕುಳ್ಳಸಣ್ಣನ, ಬಲಿಷ್ಠವಾದ ದೇಹಸೌಷ್ಠವ ದಷ್ಟೇ ಆಕರ್ಷಣೀಯವಾಗಿತ್ತು ಅವನಿಗಿಂತಲೂ ಎತ್ತರವಾಗಿ ಲಕ್ಷಣವಾಗಿದ್ದ ಅವನ ಹೆಂಡತಿಯ ಅಂಗಭಂಗಿ. +ಹಾಗೆಯೆ ಗುತ್ತಿಯನ್ನು ಕೇಳಿದರು. + “ನೀ ಹೊಲೇರವನೋ?ಬೇಲರವನೋ?” + “ಹೊಲೇರವನು, ಒಡೆಯಾ.” ಗುತ್ತಿಗೂ ಸಂತೋಷವೇ ಆಗಿತ್ತು. +ಚಂದ್ರಯ್ಯಗೌಡರ ಆಳಾಗಿ ಅವರ ರಕ್ಷಣೆಯಲ್ಲಿರಲು ಎಂತಹ ಪೋಲೀಸರೂ ಚಂದ್ರಯ್ಯಗೌಡರನ್ನು ಮೀರಿ ತನ್ನನ್ನು ಮುಟ್ಟಲಾರರು ಎಂಬ ನೆಚ್ಚು ಮೂಡಿತ್ತ ಅವನಿಗೆ, ಅವರ ಜಬರ್ದಸ್ತಿನ ಮಾತು, ವೇಷ ಭೂಷಣ ಮತ್ತು ಠೀವಿಗಳನ್ನು ಕಂಡು. +“ಹಾಂಗಾದ್ರೆ ನೀನು ಬ್ಯಾರೆ ಬಿಡಾರಾನೆ ಮಾಡಿಕೊಂಡು, ಬ್ಯಾರೆ ಕಡೇನೆ ಇರಬೇಕಾಗ್ತದೆ, ಗೊತ್ತಾಯ್ತೇನು? +ನಮ್ಮಲ್ಲಿ ಇರೋರೆಲ್ಲ  ಬೇಲರೆ. +ಅವರ ಕೇರೀಲಿ ನಿಂಗೆ ಜಾಗ ಕೊಡ್ತಾರೇನು?” +‘ಕುಳ್ಳಸಣ್ಣ’ ಆಗಲೇ ತಮ್ಮ ಆಳಾಗಿದ್ದಾನೆ ಎಂಬ ಅಭಿಮಾನದ ಧ್ವನಿಯಲ್ಲಿ ಮಾತಾಡಿಸತೊಡಿಗಿದ್ದರು ಚಂದ್ರಯ್ಯಗೌಡರು. +“ಅದಕ್ಕೇನು, ಒಡೆಯಾ? ಆಗಲಿ. ” +ತನ್ನ ಮೇಲಿದ್ದ ಏನೋ ಜವಾಬ್ದಾರಿಯ ಭಾರವೆಲ್ಲ ಇಳಿದಂತಾಗಿ ಸಮ್ಮತಿಸಿದನು ಗುತ್ತಿ. +ದೋಣಿ ಬಂತು, ಬನ್ನಿ ಬನ್ನಿ….” ಎನ್ನುತ್ತಾ ಸಿಂಗಪ್ಪಗೌಡರು ಕಚ್ಚೆ ಪಂಚೆಯನ್ನು ಎತ್ತಿ ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾ, ಕೊಡೆಯನ್ನು ಮಡಿಸಿ ಬಗಲಲ್ಲಿ ಇಟ್ಟುಕೊಂಡು ಬೇಗ ಬೇಗ ನಡೆದರು. +ಉಳಿದ ಇಬ್ಬರು ಗೌಡರೂ ಹಿಂಬಾಲಿಸಿದರು. +ಅಂಬಿಗ ತಮ್ಮಯ್ಯಣ್ಣ ಧಣಿಗಳನ್ನು ಸ್ವಾಗತಿಸುತ್ತಾ “ಅಯ್ಯಾ, ಬೇಗ ಬೇಗ ಹತ್ತಿ…. +ಮಾಡ ಕರ್ರಗಾಗಿದೆ…. +ಮಳೆ ದನಗೋಳು ಬರಾಹಾಂಗೆ ಕಾಣ್ತದೆ…. +ನಿಮ್ಮನ್ನೊಂದು ಹೆಂಗಾದ್ರೂ ಆಚೆ ದಡ ಸೇರಿಸಿ ಬಂದು, ದೋಣಿ ಕಟ್ಟಿಬಿಡ್ತೀನಿ. +ಈವೊತ್ತಿಗೆ ಮತ್ತೆ ದೋಣಿ ಹಾಕಾದಿಲ್ಲ ಹೋಳೀಗೆ. +ನೆರೇನೂ ಗಂಟೆಗಂಟೆಗೆ ಏರ್ತಾ ಅದೆ… +ಆಚೆ ದಡದ ಹತ್ರ ಒಂದೂ ಹೆಣಾನೂ ತೇಲಿ ಹೋಗ್ತಾ ಇತ್ತು. +ಒಂದು ಬಿಡಾರದ ಮಾಡೂ ತೇಲಿ ಬತ್ರಾ ಇತ್ತು, ನಡೂ ಹೊಳೇಲಿ! +ಭಾರಿ ಮೇಲ್ಮಳೆ ಇರದೈದು….” ಎಂದು, ಅವರು ದೋಣಿ ಹತ್ತಲು ಅನುಕೂಲವಾಗುವಂತೆ ಅದೆ ಪಕ್ಕದ ಭಾಗವನ್ನು ಮರಳಿನ ದಡಕ್ಕೆ ಎಳೆದು ಹಿಡಿದುಕೊಂಡನು. +ಗುತ್ತಿ ತಿಮ್ಮಿಯೊಡನೆ ದೋಣಿಗೆ ಏರಲು ಬಂದಾಗ ತಮ್ಮಯ್ಯಣ್ಣ “ಎಲ್ಲಿಯವನೋ? +ಯಾರ ಕಡೆಯವನೋ ನೀನು? +ಹೊಳೇ ಕಾಣಿಕೆ ಬಿಲ್ಲೆ ಕೊಟ್ಟು ಹತ್ತು” ಎಂದನು. +‘ನಾನು ಅಯ್ಯೋರ ಕಡೆ ಆಳು’ ಎಂದನು ಗುತ್ತಿ. +“ಯಾವ ಅಯ್ಯೋರೋ? +ನಾ ಎಂದೂ ನೋಡದ್ಹಾಂಗ ನೆಪ್ಪಿಲ್ಲ ನಿನ್ನ?” +“ಅಲ್ಲಿ ಕೂತಾರಲ್ಲಾ?ಆ ಅಯ್ಯೋರು.”ಅಷ್ಟರಲ್ಲಿ ಚಂದ್ರಯ್ಯಗೌಡರು “ಅವರಿಬ್ಬರನ್ನೂ ಹತ್ತಿಸಿಕೊಳ್ಳೊ, ತಮ್ಮಯ್ಯಣ್ಣ, ನಮ್ಮ ಕಡೇರು.” ಎಂದು ಗಟ್ಟಿಯಾಗಿ ಕೂಗಿ ಹೇಳಿದರು, ಆಗತಾನೆ ಜೋರಾಗಿ ಪ್ರಾರಂಭವಾಗುತ್ತಿದ್ದ ಮಳೆಗಾಳಿಯಲ್ಲೂ ಕೇಳಿಸುವಂತೆ. +ಅಂಬಿಗನು ಗುತ್ತಿ ತಿಮ್ಮಿಯರು ಹತ್ತಿ ಕೂತೊಡನೆ, ದೋಣಿಗೆ ತನು ಹತ್ತಿ, ಹುಟ್ಟಿನಿಂದ ಅದವನ್ನು ತಳ್ಳುವಷ್ಟರಲ್ಲಿ, ಹುಲಿಯನೂ ದೋಣಿ ಹತ್ತಲು ಪರದಾಡುತ್ತಿದ್ದುದನ್ನು ನೋಡಿ “ಏಯ್, ಯಾರದ್ದೋ ಆ ನಾಯಿ?ನಿನ್ದೇನೋ?ಅಟ್ಟೋ ಅದನ್ನ.ಮನುಷ್ಯರಿಗೆ ತಾವಿಲ್ಲ; ನಯಿನ ಹತ್ತಿಸ್ತಿದಾನೆ!” ಎಂದು ಗದರಿಸಿ, ಹುಲಿಯನ್ನು ಹುಟ್ಟಿನ ತುದಿಯಿಂದ ತಳ್ಳಿದನು. +“ಅದಕ್ಕೇನು ಧಾಡಿ? +ಈಜಿಕೊಂಡೇ ಬರ್ತದೆ.” ದೋಣಿಯೊಳಗೆ ಕೂತಿದ್ದೊಬ್ಬನು ಹೇಳಿದನು. +“ಈ ನೆರೇಲಿ ಎಲ್ಲಿ ಆಗ್ತದೆ ಈಜಕ್ಕೆ? +ನನ್ನ ಹತ್ರಾನೆ ಒಂದು ಚೂರು ಜಾಗ ಕೊಡ್ತೀನಿ….” ಗುತ್ತಿ ಮೆಲ್ಲಗೆ ಹೇಳಿದನು ಅಂಜಿ ಅಂಜಿ. +“ನಾವೆಲ್ಲ ಗಂಗಮ್ಮನ ಪಾಲು ಆಗಬೇಕಾಗ್ತದೆ, ಗೊತ್ತಯ್ತೇನು? +ಅವೊತ್ತು ಹೀಂಗೆ ಒಂದು ನಾಯೀನ ಹತ್ತಿಸಿಕೊಂಡು, ನಡೂ ಹೊಳೇಲಿ ಅದು ಹೆದರಿ ಎಲ್ಲರ ಮೇಲೂ ಹಾರಾಕೆ ಸುರುಮಾಡಿ, ಜನ ಒಂದು ಕಡೆಗೆ ವಾಲಿ, ದೋಣಿ ಮುಗುಚಿಕೊಳ್ಳಾಕೆ ಆಗಿತ್ತು.” ಹೇಳುತ್ತಲೆ ತಮ್ಮಯ್ಯಣ್ಣ ದೋಣಿಯನ್ನು ತಳ್ಳಿಕೊಂಡು ಹುಟ್ಟುಹೊಡೆಯಲು ತೊಡಗಿದನು. +ಗುತ್ತಿಗೆ ಕಣ್ಣು ಹನಿಮಂಜಾಗಿ, ದಡದಲ್ಲಿ ಅತ್ತ ಇತ್ತ ಪರದಾಡುತ್ತಾ, ಕುಂಯಿಗುಟ್ಟುತ್ತಾ, ನೀರಿಗೆ ಕಲಿಟ್ಟು ಮತ್ತೆ ಹೊಳೆಗೆ ಹೆದರಿ ಹಿಂಜರಿದು ದಡಕ್ಕೆ ಹತ್ತಿ ಓಡಾಡುತ್ತಿದ್ದ, ತನ್ನ ಬಹುಕಾಲದ ಸಂಗಾತಿಯಾಗಿ ಸೇವೆ ಸಲ್ಲಿಸಿ, ಜೊತೆ ಬಿಡದೆ ಅಕ್ಕರೆಯ ವಸ್ತುವಾಗಿದ್ದ ನಾಯಿಯನ್ನು ನಿಸ್ಸಹಾಯಕವಾಗಿ ನೋಡುತ್ತಾ ಕುಳಿತನು. +“ಅದೆಲ್ಲಿ ಬತ್ತದೆ ಈ ನರೇಲಿ?ಹಿಂದಕ್ಕೆ ಹೋಗ್ತದೆ, ಮನೀಗೆ. +ಅದನ್ಯಾಕೆ ಕರಕೊಂಡು ಬರಬೇಕಾಗಿತ್ತೊ ಈ ದನಗೋಳು ಮಳೇಲಿ?” ಯಾರೋ ಹೇಳಿದ್ದು ಕೇಳಿಸಿತು ಗುತ್ತಿಗೆ. +ದೋಣಿ ದೂರ ದೂರ ಹೋದಂತೆ ಹುಲಿಯನ ಪರದಾಟ ಹೆಚ್ಚಾಗಿ, ಕಡೆಗೆ ದೋಣಿಯ ಕಡೆಗೆ ಮೋರೆಯೆತ್ತಿ ಬಳ್ಳಿಕ್ಕತೊಡಗಿತು. +“ಥೂ ಅನಿಷ್ಟದ್ದೆ? +ಅಪಶಕುನ ಒರಲ್ತದಲ್ಲೋ!” ಎಂದರು ಯಾರೋ. +“ಹೋಗು, ಹುಲಿಯಾ, ಕೇರಿಗೆ ಹೋಗು!” ಗುತ್ತಿ ಕೊರಳೆತ್ತಿ ಗಟ್ಟಿಯಾಗಿ ಕೂಗಿದನು. +ನಾಯಿಗೆ ಕೇಳಿಸಲಿ ಎಂದು. +ಆಗಲೆ ದೋಣಿ ಪ್ರವಾಹದಲ್ಲಿ ಸ್ವಲ್ಪ ದೂರ ಸಾಗಿತ್ತು. +“ಅಕ್ಕಳ್ರೋ!ನಾಯಿಗೆ ಹುಲಿ ಅಂತಾ ಹೆಸರಿಟ್ಟಾನಲ್ಲಾ ಈ ಹೊಲೆಯ?” ಯಾರೋ ಹೇಳಿ ನಕ್ಕರು. +ಅನೇಕರು ನಕ್ಕಿದ್ದೂ ಕೇಳಿಸಿತು ಗುತ್ತಿಗೆ. +ಒಂದು ಕಡೆ ಪ್ರಾಣಭಯ, ಒಂದು ಕಡೆ ಸ್ವಾಮಿ ಪ್ರೀತಿ, ಹುಲಿಯನ ಜೀವ ಉಭಯಸಂಕಟಕ್ಕೆ ಸಿಕ್ಕಿ ದಡದಲ್ಲಿ ಓಲಾಡುತ್ತಿತ್ತು. +ಅದು ಎಂದೂ ಇಂತಹ ಜಲಪ್ರವಾಹವನ್ನು ನೋಡಿರಲಿಲ್ಲ. +ಹೆಚ್ಚು ಎಂದರೆ ಸಣ್ಣ ಕೆರೆ ಹಳ್ಳಗಳಲ್ಲಿ ಈಜಿ ದಾಟಿದ ಅನುಭವವಿತ್ತು. +ಅದು ಮನಸ್ಸು ಮಾಡಿದ್ದರೆ, ಗುತ್ತಿ ಕೂಗಿ ಹೇಳಿದಂತೆ, ಸಿಂಬಾವಿ ಹೊಲೆಗೇರಿಗೆ ಹಿಂದಿರುಗಲೂ ಸುಲಭಸಾಧ್ಯವಾಗುತ್ತಿತ್ತು. +ಆದರೆ ಗುತ್ತಿ ಯಾವ ಉದ್ದೇಶದಿಂದ ಕೂಗಿದ್ದನೋ ಅದಕ್ಕೆ ವಿರುದ್ಧವಾದ ಪರಿಣಾಮ ಉಂಟಾಯಿತು ನಾಯಿಯಲ್ಲಿ. +ಹೊಳೆಗೆ ಹಾರಲು ಹಿಂದೆ ಮುಂದೆ ನೋಡುತ್ತಿದ್ದ ನಾಯಿ, ತನ್ನ ಯಜಮಾನನ ಧ್ವನಿಯನ್ನು ಕೇಳಿದೊಡನೆ, ತನ್ನನ್ನು ಕರೆಯುತ್ತಿದ್ದಾನೆಂದೇ ಭಾವಿಸಿ, ನೀರಿಗೆ ಧುಮುಕಿಯೆ ಬಿಟ್ಟಿತು! +“ಅಕ್ಕಳ್ರೋ ಹಾರೇ ಬಿಡ್ತಲ್ಲಾ ಹೋಳೀಗೆ!” +“ಈಜಿದ್ರೂ ಈಜಾತು! +ಅದೇನು ಸಾಮಾನ್ಯದ್ದಲ್ಲ ಆ ನಾಯಿ!” +“ಅದ್ಯಕೋ ಅತ್ತತ್ಲಾಗೆ ಹೋಗ್ತದಲ್ಲಾ?” +“ಅದ್ಕೆ ಇತ್ಲಾ ಕಡೇ ಕಣ್ಣು ಕುಲ್ಡಾಗ್ಯದೆ.” ತನ್ನ ನಾಯಿಯ ಕಷ್ಟಕ್ಕೆ ವಿವರಣೆ ಕೊಟ್ಟನು ಗುತ್ತಿ. +“ಹಂಗಾರೆ ಒಕ್ಕಣ್ಣು ಶುಕ್ಲಾಚಾರಿ!” ಯಾರೋ ಒಬ್ಬರು ವಿನೋದ ವಾಡಲು, ಎಲ್ಲರೂ ನಕ್ಕರು. +“ಏನಾಯ್ತೋ ಕಣ್ಣಿಗೆ?” ಇನ್ನೊಬ್ಬನ ಪ್ರಶ್ನೆ, ಅಷ್ಟೇನೂ ಪ್ರಕೃತವಲ್ಲದ್ದು. +“ಕುರ್ಕನ ಕೈಲಿ ಜಟಾಪಟಿ ಆದಾಗ ಹಂಗಾಯ್ತು!” ಮತ್ತೆ ಗುತ್ತಿಯ ಹೆಮ್ಮೆಯ ಉತ್ತರ. +ಅಷ್ಟರಲ್ಲಿ ದೋಣಿ ಹೊಳೆಯಲ್ಲಿ ದಡಕ್ಕೆ ಹತ್ತಿರ ಹತ್ತಿರವಾಗಿಯೆ ಮೇಲೆಮೇಲಕ್ಕೆ ಹೋಗುತ್ತಿದ್ದುದನ್ನು ಗಮನಿಸಿ ಸಿಂಗಪ್ಪಗೌಡರು “ಏನೋ, ತಮ್ಮಯ್ಯಣ್ಣ, ಬುತ್ತಿಕಲ್ಲು ಬಂಡೆ ಕಡೆಗೆ ಹೋಗ್ತಾ ಇದೆಯಲ್ಲೋ ದೋಣಿ?” ಎಂದು ಟೀಕಿಸಿದರು. +ಬೀಮ ಬುತ್ತಿ ಉಣ್ಣುವಾಗ ಅನ್ನದಲ್ಲಿ ಸಿಕ್ಕಿದ್ದ ಕಲ್ಲಂತೆ ಅದು, ಸುಮಾರು ಎರಡೂ ಮೂರು ಆನೆ ಗಾತ್ರದ್ದು! +ಬೇಸಗೆಯಲ್ಲಿ ಮರಳಿನ ಮೇಲೆ ಪ್ರತ್ಯೇಕವಾಗಿ ಎಲ್ಲರ ಗೌರವಾಶ್ಚರ್ಯವನ್ನೂ ಸೆಳೆಯುತ್ತಾ ನಿಂತಿರುತ್ತದೆ, ಈಗ ಪ್ರವಾಹದಲ್ಲಿ ಮುಚ್ಚಿಹೋಗಿತ್ತು. +ದೋಣಿ ಎಲ್ಲಿಯಾದರೂ ನೀರಲ್ಲಿ ಅಡಗಿರುವ ಅದರ ನೆತ್ತಿಗೆ ತಗುಲಿಬಿಟ್ಟೀತು ಎಂಬ ಹೆದರಿಕೆಯಿಂದಲೆ ಸಿಂಗಪ್ಪಗೌಡರು ಅಂಬಿಗನಿಗೆ ಎಚ್ಚರಿಕೆ ಕೊಟ್ಟಿದ್ದರು. +ಬೇರೆ ಯಾರಾದರೂ ಆಗಿದ್ದರೆ ತಮ್ಮಯ್ಯಣ್ಣ “ಕೂತುಕೊಳ್ಳೋ ನಿನ್ನ ಮುಂಡಾಮೋಚ್ತು! +ನಿನ್ನ ಅಪ್ಪ ಅಜ್ಜನ ಕಲದಿಂದಲೂ ನಾನು ಇಲ್ಲಿ ದೋಣಿ ಬಿಡ್ತಿದ್ದೀನೋ. +ನನಗೆ ಗೊತ್ತಿಲ್ಲಾ ಅಂತಾ ಹೇಳ್ತಾನೆ!” ಎಂದು ಮೂದಲಿಸಿ ಬಿಡುತ್ತಿದ್ದ. +ಆದರೆ ಸಿಂಗಪ್ಪಗೌಡರಿಗೆ ಹೇಳಿದ್ದು “ಇಲ್ಲಾ, ಒಡೆಯಾ, ಹೊಳೆ ಏರ್ತಾ ಇದೆ, ಬಹಳ ಸೆಳವು. +ಕೆಳಗೆ ಹೋದರೆ ಪೂರಾ ಕೆಳಗೇ ಎಳೆದುಬಿಡ್ತದೆ. +ಅದಕ್ಕೆ ಸ್ವಲ್ಪ ಮೇಲುಮೇಲಕ್ಕೆ ಹೋಗಿ ತಿರುಗಿಸ್ತೀನಿ. +ದೋಣಿ ನದಿಯ ಮಧ್ಯಪ್ರವಾಹದ ಕಡೆಗೆ ಹೋದಷ್ಟೂ, ಅರಳಿಕಟ್ಟೆ ರಾಮೇಶ್ವರ ದೇವಸ್ಥಾನದ ಶಿಖರಾಗ್ರ ಮೊದಲಾದ ತೀರ್ಥಹಳ್ಳಿಯ ಕಡೆಯ ದಡದ ವಸ್ತುಗಳು ದೂರವಾಗಿ ಸಣ್ಣಗಾದಷ್ಟೂ ದೋಣಿಯಲ್ಲಿದ್ದ ಪ್ರಯಾಣಿಕರಿಗೆ ಪುಕ್ಕಲು ಹೆಚ್ಚತೊಡಗಿತ್ತು. +ಅಷ್ಟು ಭೀಷಣ ಕ್ಷುಬ್ಧವಾಗಿತ್ತು ತುಂಗಾ ಪ್ರವಾಹ. +ಮಳೆಯೂ ಇದ್ದಕ್ಕಿದ್ದಂತೆ ಮುಸಲಧಾರೆಯಾಗಿ ಸುರಿಯ ತೊಡಗಿತ್ತು. +ಗಾಳಿ ಭಯಂಕರ ವೇಗದಿಂದ ಬೀಸಿತ್ತು. +ಕೆಮ್ಮಣ್ಣು ಬಣ್ಣದ ಅಲೆಗಳು ದೋಣಿಯ ಪಕ್ಕಕ್ಕೆ ರೌದ್ರವಾಗಿ ಅಪ್ಪಳಿಸಿದ್ದುವು. +ಮರಮಟ್ಟು ಸೊಪ್ಪುಸದೆ ಬಿದಿರಹಿಂಡಿಲು ಲತೆಂಗಿನಹೆಡಲು ಅಡಕೆಸೋಗೆ ಮೊದಲಾದುವು ನೊರೆಗೆರೆಯುತ್ತಿದ್ದ ನೀರಿನಲ್ಲಿ ಭಯಂಕರ ವೇಗದಿಂದ ಓಡುತ್ತಿರುವ ನೋಟ ಹೆದರಿಕೆ ಹುಟ್ಟಿಸಿತ್ತು. +ಅದರಲ್ಲಿಯೂ ಹಾಗೆ ಓಡುತ್ತಿದ್ದ ದೊಡ್ಡ ದಿಮ್ಮಿಯ ಮರಗಳೂ ಕೂಡ ಹೊಳೆಯ ನಡುವೆ ಸುಂಟರು ಸುಳಿಗೆ ಸಿಕ್ಕಿ ಗಿರ್ರನೆ ತಿರುಗಿ ತಿರುಗಿ ಕಂತಿಹೋಗುತ್ತಿದ್ದ ದೃಶ್ಯವಂತೂ ಭೈಆನಕವಾಗಿತ್ತು. +ಆ ಆವರ್ತಗರ್ತಕ್ಕೆ ದೋಣಿ ಸಿಕ್ಕರೆ ಏನು ಗತಿ ಎಂದು ಕೆಲವರು ದೇವರನ್ನು ನೆನೆಯುತ್ತಿದ್ದರು. +ಹೇಗಾದರು ದಡ ಸೇರಿಸಪ್ಪಾ ಎಂದು! +ಹೆಚ್ಚಿತ್ತಿದ್ದ ಪುಕ್ಕಲಿಗೆ ದೋಣಿಯ ಪ್ರಯಾಣಿಕರ ಪ್ರತಿಕ್ರಿಯೆ ವಿವಿಧವಾಗಿತ್ತು. +ಕೆಲವರಲ್ಲಿ ಮಾತು ನಿಂತು ಹೋಯಿತು; + ಕೆಲವರು ಹೃದಯದ ಹೆದರಿಕೆಯನ್ನು ಮುಚ್ಚಿಕೊಳ್ಳುವುದಕ್ಕೋ ಮರೆಯುವುದಕ್ಕೋ ಸುಮ್ಮನೆ ಅದೂ ಇದೂ ಗಳಪತೊಡಗಿದರು. +ಒಬ್ಬಿಬ್ಬರು ಹೊಳೆಯ ಕಡೆ ನೋಡುವುದನ್ನೆ ಬಿಟ್ಟು, ತಲೆ ಬಗ್ಗಿಸಿ ದೋಣಿಯ ತಳದ ತಮ್ಮ ಪಾದಗಳನ್ನೆ ನೋಡುತ್ತಾ ಕುಳಿತುಬಿಟ್ಟರು! +ಗಂಡನ ಪಕ್ಕದಲ್ಲಿ ಅವನಿಗೆ ಎದುರಾಗಿ ಕುಳಿತಿದ್ದ ತಿಮ್ಮಿ ದೋಣಿಯ ಇಕ್ಕೆಲಗಳನ್ನು ತನ್ನೆರಡು ಕೈಗಳಿಂದಲೂ ಬಲವಾಗಿ ಅದುಮಿಹಿಡಿದು, ಕಣ್ಣುಮುಚ್ಚಿಕೊಂಡೆ ತಲೆಯನ್ನು ಬಗ್ಗಿಸಿ ಕುಳಿತುಬಿಟ್ಟಿದ್ದಳು! +ಗುತ್ತಿ ಮತ್ತಾವುದನ್ನೂ ಒಂದಿನಿತೂ ಗಮನಿಸದೆ ಸರ್ವೇಂದ್ರಿಯ ಪ್ರಾಣಗಳೂ ಏಕದೃಷ್ಟಿಯಾಗಿ ತನ್ನ ನಾಯಿಯ ಕಡೆಗೇ, ಬಿಟ್ಟ ಕಣ್ಣು ಮುಚ್ಚದೆ, ತನ್ನಾ ನೋಡುವಿಕೆಯೆ ಹುಲಿಯನಿಗೆ ಬಲವೂ ಬೆಂಬಲವೂ ಆಗಿ ಅದನ್ನು ರಕ್ಷಿಸುವುದೋ ಎಂಬಂತೆ, ನೋಡುತ್ತಾ ಉದ್ವಿಗ್ನ ಚಿಂತಾಕ್ರಾಂತನಾಗಿ ತುದಿಗಾಲಿನ ಮೇಲೆಯೆ ಕುಳಿತಿದ್ದನು. +ಯಾವ ಸಮಯಕ್ಕೆ ನಾಯಿಗೆ ಸಹಾಯ ಬೇಕಾದರೂ ಒಡನೆಯೆ ಅದನ್ನು ನೀಡಲು ಹಾತೊರೆಯುತ್ತಿರುವ ಭಂಗಿಯಲ್ಲಿ! +ದೋಣಿ ಹೊಳೆಯ ದಂಡೆಗೆ ಸಮೀಪವಾಗಿ ಹೊನಲಿನಲ್ಲಿ ಪಶ್ಚಿಮ ದಿಙ್ಮುಖವಾಗಿ ಮೇಲಕ್ಕೆ ಹೋಗುತ್ತಿದ್ದಷ್ಟೂ ಕಾಲವೂ ಹುಲಿಯ ಅದನ್ನು ಹಿಂಬಾಲಿಸಿ ನೀರಿಗೆ ಎದುರಾಗಿಯೇ ತನ್ನ ಬಲವನ್ನೆಲ್ಲ ಉಪಯೋಗಿಸಿ ಈಜಿತ್ತು. +ಆದರೆ ಯಾವಾಗ ದೋಣಿಯ ಮುಖವನ್ನು ಅಂಬಿಗರು, ಆಚೆಯ ದಡಕ್ಕೆ ಒಯ್ಯುವ ಉದ್ದೇಶದಿಂದ, ದಕ್ಷಿಣದಿಕ್ಕಿಗೆ ತಿರುಗಿಸಿ, ಹೊನಲಿನ ರಭಸಕ್ಕೆ ಸಮಗೈಯಾಗಲೆಂದು, ಜೋರಾಗಿ ಹುಟ್ಟು ಹಾಕಲು ಷುರುಮಾಡಿದರೊ ಆಗ ಹುಲಿಯನ ಶಕ್ತಿ ಪ್ರವಾಹದ ವೇಗಕ್ಕೆ ಶರಣಾಗಬೇಕಾಯಿತು. +ಗುತ್ತಿ ಮತ್ತು ಇತರ ಆಸಕ್ತರಾಗಿದ್ದ ಕೆಲವರು ನೋಡುತ್ತಿದ್ದಂತೆಯೆ ಹುಲಿಯ ದೋಣಿಯಿಂದ ದೂರದೂರವಾಗತೊಡಗಿತು. + “ಛೆ ಪಾಪ!ನೀರಿನ ರಭಸ ಪೂರಾ ಇದೆ. +ಹೆಂಗೆ ಈಜ್ತದೆಯೋ ಬಡಪಾಯಿ? …. ” +“ಅಯ್ಯಯ್ಯೋ ಸುಳಿಗೆ ಸಿಕ್ಕಿ ಮುಳುಗಿ ಬಿಡ್ತಲ್ಲಾ ನಾಯಿ! ”…. +“ಇಲ್ಲ, ಇಲ್ಲಾ, ತಲೆ ಎತ್ತಿತ್ತು ಕಾಣಿ, ಅತ್ತಕಡೆ, ಬಲಗಡೇಲಿ! ….” + “ಅಯ್ಯಯ್ಯೋ ಕೊಚ್ಚಿ ಹೋಗುವ ಬಿದಿರ ಹಿಂಡಿಲಿಗೇ ಹತ್ತಕ್ಕೆ ನೋಡ್ತಾದಲ್ಲಾ! +ಬಿದಿರಿಗೆ ಸಿಕ್ಕರೆ ಆಯ್ತು ಅದರ ಗತಿ!” ಅಲೆಗಳ ಹೊಡೆತಕ್ಕೆ ಸಿಕ್ಕಿ ಒಮ್ಮೆ ಮುಳುಗಿ, ಒಮ್ಮೆ ತಲೆ ಎತ್ತಿ, ಕೊಚ್ಚಿ ಹೋಗುತ್ತಿದ್ದ ತನ್ನ ನಾಯಿ ಬಿದಿರ ಹಿಂಡಿಲಿಗೆ ಸಿಕ್ಕಿ ಸಾಯುತ್ತದೆ ಎಂದು ನಿಶ್ಚಯಿಸಿ ನೋಡುತ್ತಿದ್ದ ಗುತ್ತಿ “ಅಯ್ಯಪ್ಪಾ, ಸಾಕು!” ಎಂದು ನಿಟ್ಟುಸಿರೆಳೆದನು, ಬಿದಿರ ಹಿಂಡಿಲು ನಯಿಗೆ ಎಟುಕದ ವೇಗದಲ್ಲಿ ಅದನ್ನು ದಾಟಿ ಹೋದಾಗ! +ಉತ್ತೇಜನ ಕೊಡುವ ಹಂಬಲದಿಂದ ಗುತ್ತಿ ಕೂಗಿದನು. +“ಈಜು!ಈಜು, ಹುಲಿಯಾ!” ನಾಯಿಗೆ ಅದು ಕೇಳಿಸಿತೊ ಇಲ್ಲವೊ? +ಅಂತೂ ಅವನು ಕೂಗಿದುದಕ್ಕೊ ಎಂಬಂತೆ ಹುಲಿಯ ಮತ್ತೆ ದೋಣಿಯ ಕಡೆ ಬರುತ್ತಿದ್ದಂತೆ ತೋರಿ, ಗುತ್ತಿಯ ಹೃದಯ ಹಿಗ್ಗಿತು! +ಆದರೆ ನಡೆದಿದ್ದ ಸಂಗತಿ ಬೇರೆಯಾಗಿತ್ತು. +ದೊಡ್ಡದೊಂದು ಹೆಮ್ಮರ ನಡುಹೊಳೆಯ ಪ್ರವಾಹದಲ್ಲಿ ಮೇಲುಗಡೆಯಿಂದ ತೇಲಿ ಬರುತ್ತಿದ್ದುದನ್ನು ಕಂಡು ಅಂಬಿಗರುಮ ಅದಕ್ಕೆ ಅಡ್ಡಲಾಗುವ ಬದಲು ಆ ಮರ ಕೊಚ್ಚಿ ಕೆಳಗೆ ಹೋದಮೇಲೆಯೆ ಅತ್ತ ದೋಣಿ ಬಿಡುವುದು ಕ್ಷೇಮಕರ ಎಂದು, ಸ್ವಲ್ಪ ಕ್ಷಣ ಹುಟ್ಟುಹಾಕುವುದನ್ನು ನಿಲ್ಲಿಸಿದ್ದರಿಂದ ದೋಣಿ ಕೆಳಗೆ ಕೊಚ್ಚಿ ಹೋಗಿ ನಾಯಿಯನ್ನು ಸಮೀಪಿಸುತ್ತಿತ್ತು. +ಗುತ್ತಿ ನೋಡುತ್ತಿದ್ದಂತೆಯೆ ಹುಲಿಯನ ತಲೆ ಅಲೆಗಳ ನಡುವೆ ಹೊಯ್ದಾಡುತ್ತಿದ್ದದ್ದು ಸ್ಪಷ್ಟವಾಗಿ ಕಾಣಿಸಿತು. +“ಬಾ, ಹುಲಿಯಾ, ಬಾ!” ಎಂದು ಗಂಟಲು ಸೀಳಿ ಹೋಗುವಂತೆ ಗಟ್ಟಿಯಾಗಿ ಕೂಗಿದನು. +ನಾಯಿ ಇನ್ನೂ ಬಳಿಸಾರಿತು ದೋಣಿಗೆ ಕ್ಷೀಣವಾಗುತ್ತಿದ್ದರೂ ತನ್ನ ಉಳಿದ ಅಲ್ಪ ಸ್ವಲ್ಪ ಬಲವನ್ನೆಲ್ಲ ಉಪಯೋಗಿಸಿ ಅದು ಪ್ರಾಣಭಯದಿಂದ ಮಾತ್ರ ಹೋರಾಡುತ್ತಿದ್ದಂತೆ ತೋರಿತು. +ಗುತ್ತಿಗೆ ತಟಕ್ಕನೆ ಒಂದು ಉಪಾಯ ಹೊಳೆಯಿತು. +ತನ್ನ ತಲೆವಸ್ತ್ರದ ತುದಿಯನ್ನು, ನಾಯಿ ಇನ್ನೂ ಸಮೀಪಕ್ಕೆ ಬಂದಾಗ, ಅದರ ಮುಖದ ಹತ್ತಿರಕ್ಕೆ ಬೀಳುವಂತೆ ಎಸೆದರೆ ಅದನ್ನು ಕಚ್ಚಿಕೊಂಡರೂ ಕಚ್ಚಿಕೊಳ್ಳಬಹುದು. +ಆಗ ಅದನ್ನು ಎಳೆದು ದೋಣಿಗೆ ಎತ್ತಿಕೊಂಡರೆ! +ಅಂಬಿಗ ತಮ್ಮಯ್ಯಣ್ಣನಿರಲಿ, ಧಣಿ ಚಂದ್ರಯ್ಯಗೌಡರು ಬೈದರೂ ಬೈಯಲಿ! +ನನ್ನ ಪುರಾಣ ಹೋದರೂ ಚಿಂತಿಲ್ಲ! +ಹತ್ತಿರ ಹತ್ತಿ, ಹತ್ತಿರ, ಹತ್ತಿರ ಬಂದಿತು ನಾಯಿ. +ಎಷ್ಟು ಹತ್ತಿರವಾಯಿತು ಎಂದರೆ, ದೋಣಿ ನಾಯಿಯ ಮೇಲೆಯೆ ಹೋಗಿ, ಅದು ಅಡಿ ಸಿಕ್ಕಿಬಿಡುತ್ತದೆ ಎಂದು ಶಂಕಿಸಿದರು ಕೆಲವರು. +“ಹುಲಿಯಾ!ಹುಲಿಯಾ!ಹುಲಿಯಾ!” ಎಂದು ಕರೆಯುತ್ತಲೆ ಇದ್ದನು ಗುತ್ತಿ. +ಹುಲಿಯನಿಗೂ ಪ್ರೀತಿಯ ಯಜಮಾನನ ಧ್ವನಿ ಕೇಳಿಸಿತು. +ಅಲೆಗಳಲ್ಲಿ ಹೋರಾಡುತ್ತಲೆ ದೋಣಿಯ ಕಡೆ ಕಣ್ಣೆತ್ತಿ ನೋಡಿ ಗುತ್ತಿಯನ್ನು ಗುರುತಿಸಿತು. +ಅವನು ವಸ್ತ್ರಸಹಿತ ನೀಡಿದ್ದ ಆ ಮೈತ್ರಿಯ ಕೈಗೆ ಸೇರುವಾಸೆಯಿಂದ, ತನ್ನ್ನು ನಿಷ್ಕರುಣೆಯಿಂದ ನೂಕುತ್ತಿದ್ದ ಅಲೆಗಳನ್ನು ನೂಕಿ ನೂಕಿ, ತನ್ನ ಕೊನೆಯ ಬಲವನ್ನೆಲ್ಲ ಪ್ರಯೋಗಿಸಿ ಹೋರಾಡಿತು. +ಗುತ್ತಿ ದೋಣಿಯ ಒಂದು ಪಕ್ಕದ ಮೇಲೆ ಎಡಗೈಯ್ಯೂರಿ ವಸ್ತ್ರದ ಒಂದು ತುದಿ ಹಿಡಿದುಕೊಂಡು ಇನ್ನೊಂದು ತುದಿಯನ್ನು ಹುಲಿಯನ ಮುಖದ ಕಡೆಗೆ ಬೀಸಿದನು…. +ಹತ್ತಾರು ಭೀತವಾಣಿಗಳು ಕೂಗಿಕೊಂಡುವು. +ದೋಣಿ ಅವನ ಭಾರಕ್ಕೂ ಚಿಮ್ಮಿದ ರಭಸಕ್ಕೂ ತುಯ್ದುಬಿಟ್ಟಿತು. +“ತೆಗೆದಿದ್ದಲ್ಲೋ, ಲೌಡಿ ಮಗನೆ, ಕೂತುಗೂತೀಯೋ ಇಲ್ಲೋ ಸುಮ್ನೆ!” + “ನಮ್ಮನ್ನೆಲ್ಲಾ ಹೊಳೀಗೆ ಹಾಕ್ತಾನಲ್ರೋ! +ಹೊಡೆದು ಕೂರಿಸ್ರೋ ಹೊಲೆಸೂಳೆಮಗನ್ನ!” +“ಏ ಹುಡುಗೀ ಅವನ ಹೆಡ್ತೀ, ಹಿಡಿದು ಕೂರ‍್ಸೇ ನಿನ್ನ ಗಂಡನ್ನಾ!” +“ಅಯಸ್ಸು ಕಾಡಿದೋರ ಸಂಗಡ ದೋಣೀಗೆ ಹತ್ತಿದ್ರೆ ಆಳಿಗೊಂದು ಗುಟುಗು ನೀರಂತೆ! +ಈ ಬೋಳಿಮಗನ್ನ ದೋಣಿ ಹತ್ತಿಸಿದ್ದೆ ತಪ್ಪಾಯ್ತು!” +“ಅವನ ನಾಯೀ ಜೊತೇಗೇ ಅವನ್ನೂ ಕಳಿಸ್ರೋ!” +“ಮುಂದೇಮಗನಿಗೆ ಹೆಂಡ್ತೀನೂ ಬ್ಯಾಡಾಗದೆ ಅಂತಾ ಕಾಣ್ತದೆ! +ಬಿದ್ದು ಸಾಯ್ತಾನೆ, ನೀರಿಗೆ!”ಆ ತುಮುಲ ಬೈಗುಳದ ಕೂಗಿಗೂ ದೋಣಿ ತುಯ್ದುದಕ್ಕೂ ಗುತ್ತಿ ಕಂಗಾಲಾದನು. +ನಾಯಿ ವಸ್ತ್ರದ ತುದಿಯನ್ನು ನಿಜವಾಗಿಯೂ ಕಚ್ಚಿತೊ ಇಲ್ಲವೊ? +ಆದರೆ ಗುತ್ತಿಗೆ ಅದು ವಸ್ತ್ರದ ತುದಿಯನ್ನು ಕಚ್ಚಿಕೊಂಡಂತೆ ಭಾಸವಾಗಿ ಅದನ್ನು ಎಳೆದುಕೊಂಡನು. +ಆದರೆ ತಟಕ್ಕನೆ ಹುಲಿಯ ವಸ್ತ್ರದ ತುದಿಯನ್ನು ಬಿಟ್ಟಂತಾಗಿ ಗುತ್ತಿ ದೋಣಿಯೊಳಕ್ಕೆ ತಿಮ್ಮಿಯ ತೊಡೆಯ ಮೇಲೆ ಬಿದ್ದನು. +ಬೇರೆ ಸಮಯವಾಗಿದ್ದರೆ ನಗೆಯ ಬುಗ್ಗೆ ಗೊಳ್ಳೆಂದು ಉಕ್ಕದೆ ಇರುತ್ತಿರಲಿಲ್ಲ. +ಆದರೆ ಆಗ ದೋಣಿ ನದೀಪ್ರವಾಹದ ರಭಸದ ಕೇಂದ್ರದಲ್ಲಿ ಹೋರಾಡುತ್ತಿತ್ತು. +ಕೊಚ್ಚಿ ಬರುತ್ತಿದ್ದ ಹೆಮ್ಮರ ಕೆಳಗೆ ತೇಲಿಹೋಗಿದ್ದರಿಂದ ಅಂಬಿಗರಿಬ್ಬರೂ ಉಗ್ರೋಗ್ರ ಸಾಹಸದಿಂದ ಹುಟ್ಟುಹಾಕತೊಡಗಿದ್ದರು. +ಗಾಳಿ ಜೋರಾಗಿ ಬೀಸಿತ್ತು. +ಮಳೆಯೂ ಮುಗಿಲೇ ಹಿಸಿದು ಬೀಳುವಂತೆ ಸುರಿಯುತ್ತಿತ್ತು. +ದೋಣಿಯನ್ನು ಪ್ರವಾಹಕ್ಕೆದುರಾಗಿ ಸ್ವಲ್ಪ ಮೇಲಕ್ಕೊಯ್ಯುವ ಅಂಬಿಗರ ಪ್ರಯತ್ನ ವಿಫಲವಾಗಿ ದೋಣಿ ಕೆಳಕ್ಕೇ ಹೋಗತೊಡಗಿತು. +ತಮ್ಮಯ್ಯಣ್ಣ ನೋಡುತ್ತಾನೆ ಗೌಡರುಗಳು ಕುಳಿತಲ್ಲಿ ಕೊಡೆಗಳು ಸೂಡಿವೆ! +ಅವನಿಗೆ ಗೊತ್ತಾಯ್ತು, ಕೊಡೆ ಸೂಡಿಕೊಂಡವರು ಗೌಡರುಗಳೆ ಎಂದು. +ಆದರೆ ಸನ್ನಿವೇಶ ಉಗ್ರವಾಗಿತ್ತು. +ಗಟ್ಟಿಯಾಗಿ ಅಬ್ಬರಿಸಿ ಗದರಿಸಿದನು. “ಯಾರ್ರೋ ಅದೂ? +ಕೊಡೆ ಸೂಡಿದೋರು? +ಸೀಡಿಸ್ತೀರೋ ಇಲ್ಲೋ! +ಕಾಣಾದಿಲ್ಲೇ ಗಾಳಿ ಬೀಸಾದು?”ಕೊಡೆಗಳೆಲ್ಲ ಮುಚ್ಚಿದ ಮೇಲೆ ದೋಣಿ ಮೇಲಕ್ಕೆ ಹೋಗಲಾರಂಭಿಸಿ ತಕ್ಕಮಟ್ಟಿಗೆ ಅಂಬಿಗರ ಹತೋಟಿಗೆ ಒಳಗಾಯಿತು. +ಸಪ್ಪೆ ಮೋರೆ ಹಾಕಿಕಕೊಂಡು ನದಿಯ ತುಮುಲ ತರಂಗಮಯ ಪ್ರವಾಹ ವಿಸ್ತಾರವನ್ನೆ ನೋಡುತ್ತಿದ್ದ ಗುತ್ತಿಗೆ, ದೋಣಿ ದಡ ಮುಟ್ಟುವ ವಿಚಾರದಲ್ಲಿ ಸ್ವಲ್ಪ ನಂಬಿಕೆ ಬಂದು ಧೈರ್ಯಗೊಂಡ ಒಬ್ಬ ವ್ಯಕ್ತಿ. + “ಏನೋ, ಹೊಲೆಯಾ, ಯಾಕೆ ಸತ್ತೋರ ಮನೇಲಿ ಕೂತ್ಹಾಂಗೆ ತಲೆ ಮ್ಯಾಲೆ ಕೈ ಹೊತ್ತುಕೊಂಡು ಕೂತೀಯಾ? +ನಿನ್ನ ನಾಯಿ ಹಿಂದಕ್ಕೆ ಹೋಗಿರಬೇಕೋ ಆಚೆ ದಡಕ್ಕೆ, ಮಕಾ ಅತ್ತಮಕಾನೆ ಹಾಕ್ಕೊಂಡು ಮೀಸ್ತಿತ್ತು ನಾ ನೋಡಿದಾಗ” ಎಂದನು ಸಮಾಧಾನ ಹೇಳುವವನಂತೆ. +“ನಂಗೂ ಹಾಂಗೆ ಕಂಡ್ತಪ್ಪಾ. ದೂರದಾಗೆ ತಲೆ ಕಂಡ್ಹಂಗೆ ಆಗ್ತಿತ್ತು! +ಅದಕ್ಕೇನು ಧಾಡಿ?ದಿಂಡೆ ದುಣ್ಣದಾಂಡಿಗ ನಾಯಿ! +ಈಜಿಕೊಂಡು ಹೋಯಿತು ಅಂತಾ ಕಾಣ್ತದೆ ಹಿಂದಕ್ಕೆ ಮನೀಗೆ!” ಸೇರಿತು ಮತ್ತೊಬ್ಬನ ಸಾಂತ್ವನ ವಾಣಿ. +“ನಿಂಗೇನು ಹುಚ್ಚೋ?ಬೆಪ್ಪೋ? +ಈ ನೆರೇಲಿ ಅದು ಈಜಿ ದಡ ಸೇರಿಬಿಟ್ರೆ ನಾ ಮೂಗು ಕೊಯ್ಸಿಕೊತೀನಿ!” ಇನ್ನೊಬ್ಬ ತರುಣನ ಪಂಥಪಾಡು. +“ಕುಯ್ಸಿಕೋತೀಯೇನೋ ಬದ್ದೇಗೂ? …. +ಸುಳ್ಳಾ!” ಮತ್ತೊಬ್ಬ ಹುಡುಗನ ಸವಾಲು. +“ನಿನ್ನಪ್ಪಗೆ ಹೇಳು, ಸುಳ್ಳಾ ಅಂತಾ, ನಂಗೆ ಅಂದರೆ ಹಲ್ಲು ಉದುರ್ಸೇನು!” +ಆ ಹುಡುಗ ಆ ತರುಣನಿಗೆ ಉತ್ತರ ಕೊಡುವ ತಂಟೆಗೆ ಹೋಗಲಿಲ್ಲ. +ಬದಲಾಗಿ ಗುತ್ತಿಯನ್ನು ಕುರಿತು, ಅವನ ನಾಯಿ ಆಚೆ ದಡ ಸೇರಿ ಬದುಕಿರುವುದರಲ್ಲಿ ಯಾವ ಸಂದೇಹವೂ ಬೇಡ ಎಂದುಕ ಆಶ್ವಾಸನೆ ನೀಡಿದನು. + “ಅಂಥಾ ನಾಯಿ ಎಂದಾದ್ರೂ ಹೊಳೇಲಿ ಮುಳುಗಿ ಸಾಯ್ತದೇನೋ? ”…. + ದೋಣಿ ದಡ ಮುಟ್ಟಿ ನಿಂತಿತು. +ಅಂಬಿಗ ತಮ್ಮಯ್ಯಣ್ಣ ಯಾವುದೋ ಸನ್ನಿಹಿತವಾಗಲಿದ್ದ ಮಹಾ ಅನಾಹುತದಿಂದ ಪಾರಾದವನಂತೆ ಉಸ್ಸಪ್ಪಾ ಎನ್ನುತ್ತಾ ಮರಳಿಗೆ ಹಾರಿ, ದೋಣಿಯ ಪಕ್ಕವನ್ನು ಹಿಡಿದೆಳೆದನು, ದಂಡೆಗೆ ಚಾಚಲೆಂದು, ಇಳಿಯುವ ಗೌಡರಿಗೆ ಅನುಕೂಲವಾಗುವಂತೆ ಪ್ರಯಾಣಿಕರೆಲ್ಲ ಇಳಿದರು. +ಹಾಗೆಯೆ ತೀರ್ಥಹಳ್ಳಿಯ ಕಡೆ ಹೋಗಲು ಕಾಯುತ್ತಿದ್ದವರು ಹತ್ತತೊಡಗಿದರು. +ಅವರಿಗೆ ತಮ್ಮಯ್ಯಣ್ಣ ಹೇಳಿದನು ದಣಿದ ದನಿಯಲ್ಲಿ. +“ಸೊಲೂಪ ತಡೀರಣ್ಣ ಮಳೆ, ಗಾಳಿ ಒಂದೀಟು ಕಡಿಮೆಯಾದ ಮ್ಯಾಲೆ ಹೊಲ್ಡಾನ!” +ಗುತ್ತಿಯೂ ಹೊಯಿಗೆ ದಂಡೆಗೆ ಇಳಿದು ನಿಂತು, ತಿಮ್ಮಿಯನ್ನೂ ಕೈಹಿಡಿದು ಮೆಲ್ಲನೆ ಇಳಿಸಿದನು. +ತಮ್ಮ ಸಾಮಾನಿನ ಗಂಟನ್ನು ಎತ್ತಿ ಕೊಟ್ಟನು ಅವಳ ಕೈಗೆ. +ತನ್ನ ನಿರುದ್ವಿಗ್ನವಾದ ನಿತ್ಯಯಾತ್ರೆಯಲ್ಲಿ ಮಗ್ವವಾಗಿ ಮಹಾ ರಭಸದಿಂದ ಮುಂಬರಿಯುತ್ತಿದ್ದ ವರ್ಷಾಕಾಲದ ವಿಶಾಲ ನದೀಪ್ರವಾಹದತ್ತ ನಿರ್ನಿಮೇಷನಾಗಿ ದೃಷ್ಟಿ ಹಾಯಿಸಿದನು. +ಎಲ್ಲಿಯೂ ಅವನ ಹುಲಿಯನ ಸುಳಿವಿರಲಿಲ್ಲ. +“ಏಯ್ ಕುಳ್ಳಸಣ್ಣ, ಈ ಸಮಾನು ಹೊತ್ತುಕೊಳ್ಳೊ.” ಚಂದ್ರಯ್ಯಗೌಡರು ಕರೆದಾಗಲೆ ಎಚ್ಚರಗೊಂಡಂತಾಗಿ ಅವರತ್ರ ತಿರುಗಿದನು ಗುತ್ತಿ. +“ಅಯ್ಯಾ, ಆ ನಾಯಿ ಇಲ್ಲೆಲ್ಲಾದ್ರೂ ಕೆಳಗೆ ದಡ ಹತ್ತಿದೆಯೇನು ನೋಡಿಕೊಂಡು ಬತ್ತೀನಿ….” ಎಂದನು ದುಃಖ ಧ್ವನಿಯಲ್ಲಿ. +“ನಿಂಗೇನು ಹುಚ್ಚೋ?ಬೆಪ್ಪೋ? +ಈ ನೆರೇಲಿ ಅದು ದಡ ಸೇರೋದು ಹೌದೇನೊ? +ಹೊಳೇಬುಡ ಸೇರಿದ್ದರೆ ಸೇರಿರಬೇಕು” ಎಂದರು ಸಿಂಗಪ್ಪಗೌಡರು. +ಅವರ ಚಿತ್ತ ಸಂಗಲಿಪ್ತವಾಗಿರಲಿಲ್ಲ ಗುತ್ತಿಯ ಹೃದಯದಂತೆ. +“ಹೋಗಲಿ ಬಿಡಿ, ನೋಡಿಕೊಂಡೇ ಬರಲಿ” ಎಂದ ಶಾಮಯ್ಯಗೌಡರು, ಗುತ್ತಿ ಹೊಳೆಯ ದಂಡೆಯ ಗಿಡ ಮರ ಪೊದೆಗಳಲ್ಲಿ ನುಗ್ಗಿ ಕಣ್ಮರೆಯಾದ ಮೇಲೆ ಹೇಳಿದರು “ಪಾಪ!ಲೌಡಿಮಗ ಕಣ್ಣಲ್ಲಿ ನೀರು ಹಾಕ್ತಿದಾನೆ! +ಬಹಳ ಪ್ರೀತಿಯಿಂದ ಸಾಕಿದ್ದ ಅಂತಾ ಕಾಣ್ತದೆ?” +ಚಂದ್ರಯ್ಯಗೌಡರು ದೂರದಲ್ಲಿ ತನ್ನ ಗಂಡ ಹೋದ ಅತ್ತಕಡೆ ಮುಖ ತಿರುಗಿಸಿಕೊಂಡು ನಿಂತಿದ್ದ ತಿಮ್ಮಿಗೆ “ಹೌದೇನೆ, ಹುಡುಗೀ? +ಎಷ್ಟು ಕಾಲ ಆಗಿತ್ತೇ ಆ ನಾಯಿ ಅವನ ಹತ್ರ ಇರ್ತಾ?” ಎಂದರು. +ಅವಳು ಮಾತನಾಡಲೂ ಇಲ್ಲ; +ಮುಖ ತಿರುಗಿಸಲೂ ಇಲ್ಲ. +ಸ್ವಲ್ಪ ಹೊತ್ತಾದ ಮೇಲೆ ಗುತ್ತಿ ಹಿಂತಿರುಗಿದನು, ಒಬ್ಬನೆಯೆ! +ತೀರ್ಥಹಳ್ಳಿಯ ದೋಣಿಗಂಡಿಯಲ್ಲಿ ತುಂಗಾನದಿಯ ನೆರೆಯ ರಭಸಕ್ಕೆ ಸಿಕ್ಕಿ ಹುಲಿಯ ಕೊಚ್ಚಿಹೋದಂತೆ, ಮೇಗರವಳ್ಳಿ ಸೀಮೆಯ ಜನಮನದ ಹರಿಹೊನಲಿನಲ್ಲಿ ಕಂತಿ, ಗುತ್ತಿ ತಿಮ್ಮಿಯರ ನೆನಪೂ ಕೊಚ್ಚಿಹೋಯಿತು. +ಯಾವುದು ನಡೆದಾಗ ತತ್ಸಮಯದಲ್ಲಿ ಬಹುಮುಖ್ಯವಾಗಿ ತೋರುತ್ತದೆಯೋ ಅದು ಸ್ವಲ್ಪಕಾಲ ಕಳೆಯುವುದರೊಳಗೆ ಅಮುಖ್ಯವಾಗಿ ತೋರತೊಡಗಿ ಕಡೆಗೆ ಮನದಿಂದಲೆ ಮಾಸಿಹೋಗುತ್ತದೆ. +ಹಳೆಯ ನೀರು ಕೊಚ್ಚಿಹೋಗುವಂತೆ ಹೊಸ ನೀರು ನುಗ್ಗುತ್ತದೆ. +ಇತರ ಘಟನೆಗಳು, ತತ್ಕಾಲದಲ್ಲಿ ಬಹಳ ಮುಖ್ಯವಾಗಿ ತೋರುವ ಸಂಗತಿಗಳು, ಹಳೆಯ ನೆನಪುಗಳನ್ನು ತಳ್ಳಿ ಅವು ಬಿಟ್ಟ ಜಾಗವನ್ನು ಆಕ್ರಮಿಸುತ್ತವೆ. +ಹಾಗೆಯೆ ಗುತ್ತಿ ತಿಮ್ಮಿಯರ ಪರಾರಿಯ ಸಂಗತಿಯನ್ನು ತಳ್ಳಿ, ಹೂವಳ್ಳಿಯ ಮದುವೆಯಲ್ಲಿ ಹೆಣ್ಣು ಕಾಣೆಯಾದದ್ದು, ಮತ್ತು ಸಿಂಬಾವಿ ಭರಮೈಹೆಗ್ಗಡೆಯವರು ತಮ್ಮ ಬಾವ ಹಳೆಮನೆಯ ಹೆಂಚಿನಮನೆಯ ಶಂಕರ ಹೆಗ್ಗಡೆಯವರ ಮನೆಗೆ ಆ ರಾತ್ರಿಯೆ ಮದುಮಗನ ವೇಷದಲ್ಲಿಯೇ ಹೆಂಡತಿ ಜಟ್ಟಮ್ಮನೊಡನೆ ಹೋಗಿದ್ದು ಮತ್ತು ಮರುದಿನವೆ ಹಾಸಗೆ ಹಿಡಿದಿದ್ದ ಮುದುಕ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರೊಡನೆ ಪ್ರಸ್ತಾಪಿಸಿ, ತಿಮ್ಮಪ್ಪಹೆಗಗ್ಗಡೆಗೆ ತಮ್ಮ ತಂಗಿ ಲಕ್ಕಮ್ಮನನ್ನು ಕೊಡುವಂತೆಯೂ, ತಾವು ಅವನ ತಂಗಿ ಮಂಜಮ್ಮನನ್ನು ತಂದುಕೊಳ್ಳುವಂತೆಯೂ ನಿಶ್ಚಯ ಮಾಡಿದ್ದು, ಮೊದಲಾದ ಸಂಗತಿಗಳು ಜನಮನವನ್ನು ಕೆಲವು ಕಾಲ ಆಕ್ರಮಿಸಿದ್ದುವು. +ಪಿಜಿಣನ ಆತ್ಮಹತ್ಯೆಯಂತಹ ಯಃಕಶ್ಚಿತ ವಿಷಯ ಸಣ್ಣ ಪುಟ್ಟ ಜನಗಳ ಮನಃಪ್ರಪಂಚದಲ್ಲಿ ಸ್ವಲ್ಪ ಕಲ್ಲೋಲಗಳನ್ನೆಬ್ಬಿಸಿದ್ದರೂ ದೊಡ್ಡವರಾರೂ ಅದನ್ನು ಅಷ್ಟಾಗಿ ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲ. +ಕೋಣೂರು ರಂಗಪ್ಪಗೌಡರಿಗೆ ಮಾತ್ರವೆ ಪಿಜಿಣನ ಸಾವು ಸ್ವಲ್ಪ ಆತಂಕಕರವಾಗಿತ್ತು. +ಆದರೆ ಅವರು ಅವನ ಹೆಂಡತಿ ಅಕ್ಕಣಿಯನ್ನು ಮನೆಗೆ ಕರೆಯಿಸಿ, ಪಿಜಿಣನ ಸಾಲದ ಲೆಖ್ಖವನ್ನು ಹೇಳಿ, ಅದನ್ನು ದುಡಿದು ತೀರಿಸುವಂತೆ ತಾಕೀತು ಮಾಡಿ, ದೀನ ದುಃಖಿನಿಯಾಗಿದ್ದ ಅವಳಿಂದ ಧರ‍್ಮಸ್ಥಳದ ದೇವರ ಮೇಲೆ ಆಣೆ ಹಾಕಿಸಿಕೊಂಡು, ತಮ್ಮ ಹಣ ಮುಳುಗಿ ಹೋಗುವ ಭಯದಿಂದ ತಕ್ಕಮಟ್ಟಿಗೆ ಪಾರಾಗಿದ್ದರು. +ಮಳೆಗಾಲ ಹಿಡಿದಿದ್ದುದರಿಂದ ಬೇಸಾಯಗಾರರ ಗಮನವೆಲ್ಲ ಅಗೋಡಿಯ ಮೇಲೆಯೂ, ಉಳುವುದು ಬಿತ್ತುವುದು ಅಂಚು ಕಡಿಯುವುದು ಗೊಬ್ಬರ ಹರಗುವುದು ಬೇಲಿ ಕಟ್ಟುವುದು ಒಡ್ಡು ಹಾಕುವುದು ಇತ್ಯಾದಿ ರೈತ ಕರ್ತವ್ಯಗಳ ಮೇಲೆಯೂ, ಕೂಣಿ ತಯಾರಿಸುವುದು, ಕೂಣಿ ಹಾಕುವುದು, ಹಳ್ಳಕ್ಕೆ ಯಾಪೆ ಕಟ್ಟುವುದು, ಹತ್ತು ಮೀನು ಕಡಿಯುವುದು ಮೊದಲಾದ ಮೀನು ಬೇಟೆಯ ಮೃಗಯಾವ್ಯಸನದಲ್ಲಿಯೂ ಆಸಕ್ತವಾಗಿತ್ತು. +ಮೈಬೆವರಿ ದುಡಿವ ಗೆಯ್ಮೆಯ ನಡುನಡುವೆ ತುಸು ವಿರಾಮ ದೊರೆತಾಗ ಮಾತ್ರ, ಊಟಕ್ಕೆ ಉಪ್ಪಿನಕಾಯಿ ಬಾಳೆಲೆಯ ಮೂಲೆಯಲ್ಲಿ ಇರುವ ಹಾಗೆ, ಪರಚರ್ಚೆ ಪರನಿಂದೆಗಳು ಇರುತ್ತಿದ್ದುವಷ್ಟೆ! +ಕಿತಾಪತಿಯ ವ್ಯಾಪ್ತಿಗೆ ಜಿಹ್ವಾಚಪಲತೆಯ ವಲಯವನ್ನು ದಾಟಿ ಕರ್ಮರಂಗಕ್ಕಿಳಿಯುವಷ್ಟು ಪುರಸತ್ತೂ ಇರುತ್ತಿರಲಿಲ್ಲ! +ಹೂವಳ್ಳಿ ವೆಂಕಟಣ್ಣ ಮದುವೆಯಂತಹ ಮಂಗಳ ಕಾರ್ಯದ ಸಮಯದಲ್ಲಿ ಆಕಸ್ಮಿಕವೆಂಬಂತೆ ತೀರಿಕೊಂಡದ್ದು ವ್ಯಸನದ ವಿಷಯವಾಗಿದ್ದರೂ ಅವನ ಸಾವೆ ಅನೇಕ ಸಮಸ್ಯೆಗಳನ್ನು ಪರಿಹರಿಸಿತ್ತು; + ಅಥವಾ ಅವನು ಬದುಕಿದ್ದರೆ ಉದ್ಭವಿಸುತ್ತಿದ್ದ ಅನೇಕ ಕಠಿನ ಸಮಸ್ಯೆಗಳ ಕಠೋರ ತೀಕ್ಷ್ಣತೆಯನ್ನು ಸೌಮ್ಯಗೊಳಿಸಿತ್ತು. +ಅವನು ಸಾಯದಿದ್ದರೆ ಅವನೇ ಕಾರಣವಾಗಿ ಅವನಿಂದಲೆ ಹೊಮ್ಮುತ್ತಿದ್ದ ತೊಂದರೆಗಳು ಪರಿಹಾರವಾದದ್ದು ಸುವಿದಿತವಷ್ಟ! +ಅವನು ಬದುಕಿದ್ದರೆ ಅವನಿಗೆ ಸಾಲ ಕೊಟ್ಟವರು, ಅವನಿಂದ ಜಮೀನು ಬರೆಸಿಕೊಂಡವರು, ಅವನು ಜಾಮೀನು ನಿಂತವರು, ಅವನಿಗೆ ಜಾಮೀನಾದವರು, ಆಚಾರ ಜಾತಿ ಕುಲ ಮತ ಮೊದಲಾದ ನಂಬಿಕೆಗಳ ಕಾರಣವಾಗಿ ಹುಟ್ಟಿಕೊಳ್ಳುತ್ತಿದ್ದ ಪೀಡನೆಗಳು- ಇವೆಲ್ಲ ಅವನ ಸುತ್ತ ಹೆಡರಯೆತ್ತಿ, ಅವನ ಮತ್ತು ಅವನ ಅಧೀನದಲ್ಲಿದ್ದು ಅವನನ್ನೆ ನಂಬಿದವರ ಬದುಕನ್ನು ಹಿಂಡದೆ ಬಿಡುತ್ತಿರಲಿಲ್ಲ. +ಈಗ ಅದಕ್ಕೆಲ್ಲ ಒಂದು ರೀತಿಯಲ್ಲಿ ತಡೆ ಕಟ್ಟಿತ್ತು. +ಸಿಂಬಾವಿ ಭರಮೈಹೆಗ್ಗಡೆಯವರ ಹೆಂಡತಿ, ಜಟ್ಟಮ್ಮ, ಈ ಮದುವೆ ಹೇಗಾದರೂ ನಿಂತು, ತಾನು ಮುಂಡೆಯಾಗುವುದು ತಪ್ಪಿದರೆ ಸಾಕಲ್ಲಾ ಎಂದು ಹಾರೈಸುತ್ತಿದ್ದಳು; +ಮತ್ತು, ತಿಮ್ಮಪ್ಪ ಹೆಗ್ಗಡೆಯೊಡನೆ, ಹೆಣ್ಣು ತಪ್ಪುವಂತೆ ಮಾಡುವ ಒಳಸಂಚಿಗೂ ಮೌನದ ಸಮ್ಮತಿ ನೀಡಿದ್ದಳು. +ಆದ್ದರಿಂದಲೇ ಅವಳು ಮದುಮಗನಾಗಿದ್ದ ತನ್ನ ಗಂಡನಿಗೆ, ಮದುಮಗಳಾಗುವವಳು ಕಣ್ಮರೆಯಾಗಿದ್ದಾಳೆ ಎಂಬ ಸುದ್ದಿ ತಿಳಿಯುವುದಕ್ಕೆ ಮೊದಲೇ ಹೆಣ್ಣಿನ ತಂದೆಗೆ ವಿಪರೀತ ಕಾಯಿಲೆಯಾಗಿರುವುದರಿಂದ ಆವೊತ್ತಿನ ಮದುವೆ ನಿಲ್ಲಬೇಕಾಗುತ್ತದೆ ಎಂಬ ಶಾಸ್ತ್ರದ ನಿಷೇಧವನ್ನು ಒತ್ತಿ ಹೇಳಿದ್ದಳು. +ಅಷ್ಟರಲ್ಲಿ ವೆಂಕಟಣ್ಣ ತೀರಿಕೊಂಡನೆಂಬ ವಾರ‍್ತೆ ಬಂದೊಡನೆ ಸೂತಕದ ಮನೆಯಲ್ಲಿ ಮದುವಣಿಗ ನಿಲ್ಲಬಾರದೆಂಬ ಅಡ್ಡಿಯೊಡ್ಡಿ, ತನ್ನ ಗಂಡನನ್ನು ಹಳೆಮನೆಗೆ ತನ್ನ ಅಣ್ಣನಲ್ಲಿಗೆ ಸಾಗಿಸಿಕೊಂಡು ಹೋಗಿದ್ದಳು. +ಅಲ್ಲಿ ತನು ಪೂರ್ವಭಾವಿಯಾಗಿ ಯೋಜಿಸಿದಂತೆ, ಹಿಂದಿನ ಕಹಿಯನ್ನೆಲ್ಲ ನುಂಗಿಕೊಂಡು, ಮಂಜಮ್ಮನನ್ನು ತನ್ನ ಗಂಡನಿಗೆ ತಂದುಕೊಂಡು ಲಕ್ಕಮ್ಮನನ್ನು ತಿಮ್ಮಪ್ಪಹೆಗ್ಗಡೆಗೆ ಕೊಡುವ ಏರ್ಪಾಡಿಗೆ ಎಲ್ಲರೂ ಒಪ್ಪುವಂತೆ ಮಾಡಿದ್ದಳು. +ಹಳೆಮನೆ ಮಂಜಮ್ಮನನ್ನು ತನಗೆ ಸವತಿಯಾಗಿ ತಂದುಕೊಳ್ಳಲು ಒಪ್ಪದೆ ಹೂವಳ್ಳಿ ವೆಂಕಪ್ಪನಾಯಕರ ಮಗಳು ಚಿನ್ನಮ್ಮನನ್ನು ಗೊತ್ತು ಮಾಡಿ ಒಪ್ಪಿಸಿ, ಮದುವೆಗೆ ಏರ್ಪಾಟು ಮಾಡಿದ ತನ್ನ ಹೆಂಡತಿಯೆ ತುದಿಯಲ್ಲಿ ಆ ಸಂಬಂಧ ಬೇಡ ಎಂದು ಹಟ ಹಿಡಿದುದರ ಅರ್ಥ ಭರಮೈಹೆಗ್ಗಡೆಯವರಿಗೆ ಮೊದ ಮೊದಲು ಬಗೆಹರಿಯಲಿಲ್ಲ. +ಕೊನೆಗೆ ಗೊತ್ತಾಯಿತು, (ತಿಮ್ಮಪ್ಪ ಹೆಗ್ಗಡೆ ಜಟ್ಟಮ್ಮ ಹೆಗಡಿತಿಯವರ ಕಿವಿಯಲ್ಲಿ ಊದಿದ್ದ ಅಮಂಗಳ!) ಹೆಣ್ಣಿನ ಜಾತಕದಲ್ಲಿ ಅವಳು ಮದುವೆಯಾದ ಸ್ವಲ್ಪ ಕಾಲದಲ್ಲಿಯೆ ವೈಧವ್ಯ ಪ್ರಾಪ್ತಿ ಇದೆಯಂತೆ ಎಂದು. +ಭರಮೈಹೆಗ್ಗಡೆಗೆ ಜೋತಿಷ್ಯ ಜಾತಕಾದಿಗಳಲ್ಲಿ ಜಟ್ಟಮ್ಮ ಹೆಗ್ಗಡಿತಿಗೆ ಇದ್ದಷ್ಟೆ ನಂಬಿಕೆ ಹೆದರಿಕೆ ಎಲ್ಲ ಇತ್ತು. +ಕೆಟ್ಟ ಸುದ್ದಿ ಕಿವಿಗೆ ಬಿದ್ದಾಗ ತುಂಬ ಭಯವೂ ಅಯ್ತು. +ಅದರಲ್ಲಿಯೂ ಮೂರು ಹೊತ್ತೂ ಅದೂ ಇದೂ ಕಾಯಿಲೆ ಕಸಾಲೆಯಿಂದ ನರಳುತ್ತಿದ್ದ ಅವರನ್ನು ಕೊಂಡೊಯ್ಯಲು ಮೃತ್ಯು ಗ್ರಹಗತಿಯನ್ನೇ ನಿರೀಕ್ಷಿಸಬೇಕಾಗಿಯೂ ಇರಲಿಲ್ಲ; +ಪ್ರಕೃತಿ ವ್ಯಾಪಾರದ ವಿಧಾನವೆ ಯಥೇಚ್ಛವಾಗಿ ಸಾಗಿತ್ತು! +ಆದರೆ ಏನು ಮಾಡುವುದು? +ಕಲ್ಲೂರ ಸಾಹುಕಾರ ಮಂಜ ಭಟ್ಟರಲ್ಲಿದ್ದ ವೆಂಕಟಣ್ಣನ ಅಪಾರ ಸಾಲಕ್ಕೆ ತಾನು ಜಾಮೀನಾಗಿ ನಿಂತಾಗಿದೆ. +ಮದುವೆ ಬೇಡ ಎಂದು ತಾನೆ ಹೇಳಿದರೆ ಹಣ್ಣು ತಪ್ಪುತ್ತದೆ, ಗಂಟೂ ಮುಳುಗುತ್ತದೆ ಆದ್ದರಿಂದ ವಿಶೇಷ ದಕ್ಷಿಣೆಯ ಪ್ರಭಾವದಿಂದ ಜೋಯಿಸರ ಆಶೀರ್ವಾದ ಪಡೆದು, ಜಾತಕದಲ್ಲಿರಬಹುದಾದ ಕಂಟಕಕ್ಕೆ ಶಾಂತಿ ಮಾಡಿಸಿ, ಚೆನ್ನಮ್ಮನನ್ನು ಕೈಹಿಡಿಯಲು ಮುಂದುವರಿದಿದ್ದರು. +ಚಿನ್ನಮ್ಮ ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದರೂ, ವೆಂಕಟಣ್ಣ ಬದುಕಿದ್ದರೆ, ಸಿಂಬಾವಿ ಹೆಗ್ಗಡೆಯವರು ಕಾನೂನು ಪ್ರಕಾರ ತಮ್ಮ ಹಣಕ್ಕೆ ಲೋಪ ಬರದಂತೆ ನೋಡಿಕೊಲ್ಳುತ್ತಿದ್ದರು. +ಚಿನ್ನಮ್ಮ ತಮ್ಮನ್ನು ತಿರಸ್ಕರಿಸಿ, ಇನ್ನೊಬ್ಬನಿಗಾಗಿ ಓಡಿ ಹೋಗಿದ್ದರಿಂದಲೆ ಮದುವೆ ತಪ್ಪಿ, ವೆಂಕಟಣ್ಣ ಬದುಕಿದ್ದರಂತೂ ಹೇಳಲೆ ಬೇಕಾಗಿಲ್ಲ, ಹೆಗ್ಗಡೆ ತನ್ನ ಪ್ರತೀಕಾರದ ಪೀಡನಾ ಸಾಮರ್ಥ್ಯವನ್ನೆಲ್ಲ ನಾನಾ ಮುಖಗಳಿಂದ ಪ್ರಯೋಗಿಸದೆ ಬಿಡುತ್ತಿರಲಿಲ್ಲ. +ಆದರೆ ಈಗ ಹೆಗ್ಗಡೆಗೆ ತಿಳಿದಿದ್ದಂತೆ, ಮದುವೆ ನಿಲ್ಲುವುದಕ್ಕೆ ಮುಖ್ಯ ಕಾರಣವಾದದ್ದು ವೆಂಕಟಣ್ಣನ ಮರಣದ ಅಶುಭವೆ! +ಹೆಣ್ಣು ಓಡಿ ಹೋಗಿತ್ತು ಎಂಬ ಗುಸು ಗುಸು ಸುದ್ದಿಯೂ ಅವರ ಕಿವಿಗೆ ತರುವಾಯ ಮುಟ್ಟಿತ್ತು. +ಆದರೆ ಅದೇ ಕಾರಣವಾಗಿ ಮದುವೆ ನಿಂತಿತು ಎಂದರೆ, ತಮ್ಮ ಗೌರವಕ್ಕೂ ಪ್ರತಿಷ್ಠೆಗೂ ಅತ್ಯಂತ ಹಾನಿ ಮತ್ತು ಅವಮಾನ ಒದಗಿದಂತಾಗಿ ತೇಜೋವಧೆಯಾಗುತ್ತದೆ ಎಂಬ ಅಂತಃಕಾರಣದಿಂದ ಆ ಸುದ್ದಿಗೆ ಅವರು ಬಹಿರಂಗ ಮಾನ್ಯತೆ ಕೊಡಲಿಲ್ಲ. +ಅದನ್ನು ಗಮನಿಸದಂತೆಯೆ ಇರುವವರಂತೆ ನಟಿಸಿ, ಅದಕ್ಕೆ ತಿರಸ್ಕಾರದ ಸೋಗು ಹಾಕಿದ್ದರು. +ಅಶುಭ ಘಟನೆ ಪ್ರಾಪ್ತವಾದುದರಿಂದ ತಾವೇ ಲಗ್ನವನ್ನು ಮುಂದುವರಿಸಲು ಒಪ್ಪದೆ, ಮುರಿದು, ಬೇರೆ ಸಂಬಂಧದ ಕಡೆ ತಿರುಗಿದ್ದೇವೆ ಎನ್ನುವಂತೆ ವರ್ತಿಸಿದ್ದರು. +ಆದ್ದರಿಂದಲೆ ಚಿನ್ನಮ್ಮ ಓಡಿಹೋಗಿದ್ದ ಸಂಗತಿಯನ್ನಾಗಲಿ ಮುಕುಂದಯ್ಯನೆ ಆ ಎಲ್ಲ ವ್ಯೂಹದ ಹಿಂದಿದ್ದ ಸಂಚಾಲಕ ಶಕ್ತಿ ಎಂಬ ವಿಚಾರವನ್ನಾಗಲಿ ಅವರು ಪ್ರಸ್ತಾಪಿಸುವ ಗೋಜಿಗೆ ಹೋಗಿರಲಿಲ್ಲ; ಮಾತಿನಲ್ಲಿ ಮಾತ್ರವಲ್ಲದೆ ಮನಸ್ಸಿನಲ್ಲಿಯೂ ಅವರು ಆ ವಾರ್ತೆಗೆ ಮುಟ್ಟುಗೋಲು ಹಾಕಿಕೊಂಡಿದ್ದರು. +ಇನ್ನು ಅವರನ್ನು ಬಹುವಾಗಿ ಪೀಡಿಸುತ್ತಿದ್ದ ವಿಷಯವೆಂದರೆ, ವೆಂಕಟಣ್ಣನಿಂದ ತಮಗೆ ಬರಬೇಕಾಗಿದ್ದ ಸಾಲದ ಹಣ. +ಹೆಣ್ಣು ಹೆಂಗಸರೆ ವಾರಸುದಾರರಾಗಿ ಉಳಿದುಕೊಂಡಿರುವ ಹೂವಳ್ಳಿಯ ಗದ್ದೆ ತೋಟ ಮನೆಗಳನ್ನೆಲ್ಲ ತಮಗೆ ಬರಬೇಕಾಗಿದ್ದ ಸಾಲಕ್ಕಾಗಿ ವಶಪಡಿಸಿಕೊಳ್ಳುವುದು ಸಾಧ್ಯವಿದ್ದರೂ ಹಾಗೆ ಮಾಡಲು ಹೊರಟರೆ ತಾವು ಮೂರು ಹೊತ್ತೂ ಹೊಕ್ಕು ಬಳಸಬೇಕಾಗಿದ್ದ ಹತ್ತಿರದ ನೆಂಟರಿಷ್ಟರ ವಿರೋಧ-ದ್ವೇಷ-ತಿರಸ್ಕಾರಗಳಿಗೆ ಒಳಗಾಗಬೇಕಾಗುತ್ತದೆ. +ಆ ಮುಸುಗಿನ ಮುಜಗರ ಬಾಳನ್ನೆಲ್ಲ ಕಹಿಗೊಳಿಸದೆ ಬಿಡುವುದಿಲ್ಲ. +ಇದನ್ನೆಲ್ಲ ದೀರ್ಘವಾಗಿ ಆಲೋಚಿಸಿದ ಭರಮೈಹೆಗ್ಗಡೆಗೆ ಹೊಳೆದಿದ್ದುದೆಂದರೆ-ಒಂದೇ ಉಪಾಯ. +ಹೇಗಾದರೂ ಮಾಡಿ ತಮ್ಮ ಜಾಮೀನಿನಿಂದ ಬಿಡಿಸಿಕೊಂಡು, ಪುನಃ ಮಂಜಭಟ್ಟರೇ ಆ ಭಾರ ಹೊರುವಂತೆ ಮಾಡುವುದು! +ಬ್ರಾಹ್ಮಣರಾದ ಅವರಿಗೆ ಒಕ್ಕಲಿಗರ ನೆಂಟರಿಷ್ಟರ ಹಂಗು ಇರುವುದಿಲ್ಲವಾದ್ದರಿಂದ ಅವರು ಹೂವಳ್ಳಿಯವರಿಂದ ಸಾಲ ವಸೂಲು ಲಮಾಡಲು ಯಾವ ಕ್ರಮವನ್ನು ಬೇಕಾದರೂ ತೆಗೆದುಕೊಳ್ಳಬಹುದಲ್ಲವೆ? +ಬೇರೆ ಜಾತಿಯವರಾದ ಅವರಿಗೆ ಇವರ ಸಮಾಜದ ಹೊಣೆಗಾರಿಕೆ ಯಾವುದೂ ಇರುವುದಿಲ್ಲವಷ್ಟೆ! +ಅಲ್ಲದೆ ಸಿರಿವಂತ ಹಾರುವರು ಮಾಡಿದ್ದನ್ನು ತಪ್ಪು ಎನ್ನುವ ಕೆಚ್ಚು ಉಳಿದವರಿಗೆಲ್ಲಿ? +ಆದರೆ ಭರಮೈಹೆಗ್ಗಡೆಗೆ ಗೊತ್ತಿರದೆ ಇದ್ದು, ಹೂವಳ್ಳಿ ವೆಂಕಟಪ್ಪನಾಯಕರು ಒಳಗೊಳಗೆ ಹಾಕಿಟ್ಟಿದ್ದ ಗಂಟಲು ಗಾಳವೊಂದು ಕಲ್ಲೂರು ಮಂಜಭಟ್ಟರಿಗೆ ಗೊತ್ತಾಗಿದ್ದುದರಿಂದೆಲೆ ಅವರು ಅಷ್ಟು ಸುಲಭವಾಗಿ, ತಮ್ಮ ಸಾಲಕ್ಕಿಂತಲೂ ಕಡಿಮೆ ಮೊತ್ತಕ್ಕೇ ಭರಮೈಹೆಗ್ಗಡೆಯವರ ಕೈಲಿ ಜಾಮೀನು ಪತ್ರ ಬರೆಯಿಸಿಕೊಂಡು, ತಮ್ಮ ಕೈ ತೊಳೆದುಕೊಂಡಿದ್ದರು ಎಂಬುದಿನ್ನೂ ಇವರಿಗೆ ತಿಳಿದಿರಲಿಲ್ಲ! +ಅಂದು ಅಪರಾಹ್ನದ ಹೊತ್ತಿಗೆ ವೆಂಕಟಣ್ಣನ ಕಳೇಬರದ ಅಗ್ನಿಸಂಸ್ಕಾರವನ್ನೆಲ್ಲ ಮುಗಿಸಿ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೊರಟು ಹೋಗಿದ್ದರು. +ಹೂವಳ್ಳಿ ಮನೆ ‘ಗಾಳ್’ ಎಂದು ಸುಡುಗಾಡಿನಂತೆ ಸದ್ದಿಲಿಯಾಗಿತ್ತು. +ಸೋನೆಮಳೆ ಹಿಡಿದು ಹೊಡೆಯುತ್ತಿತ್ತು. +ಬೆಟ್ಟಳ್ಳಿ ದೇವಯ್ಯಗೌಡರು ಮಾತ್ರ ತಿಮ್ಮಪ್ಪಹೆಗ್ಗಡೆಯ ಕೈಲಿ ಮುಕುಂದಯ್ಯ ಹೇಳಿಕಳುಹಿಸಿದ್ದರಿಂದ ದಾರಿ ಕಾಯುತ್ತಾ ಉಳಿದುಕೊಂಡಿದ್ದರು. +ತಿಮ್ಮಪ್ಪಹೆಗ್ಗಡೆ ತಾನು ಬೈಗಿನ ಹೊತ್ತಿಗೆ, ಮುಕುಂದಯ್ಯ ಚಿನ್ನಮ್ಮನನ್ನು ಕರೆದುಕೊಂಡು ಬರುವಷ್ಟರಲ್ಲಿ, ಬಂದುಬಿಡುತ್ತೇನೆ ಎಂದು ಹೇಳಿ ಹಳೆಮನೆಗೆ ಹೋಗಿದ್ದನು, ತನ್ನ ಮತ್ತು ಜಟ್ಟಕ್ಕನ ಸಂಚು ಫಲಕಾರಿಯಾಗುವಂತೆ ಪಾತ್ರ ವಹಿಸಲಿಕ್ಕೆ. +ಬೈಗು ಚೆನ್ನಾಗಿಯೆ ಕಪ್ಪಾಗಿತ್ತು. +ಇದುವರೆಗೂ ವೆಂಕಟಣ್ಣ ಕುಳಿತುಕೊಳ್ಳುತ್ತಿದ್ದೆಡೆ ಹೂವಳ್ಳಿಯ ಜಗಲಿಯಲ್ಲಿ ಕುಳಿತು ಮತ್ತೆ ಮತ್ತೆ ನಶ್ಯ ಹಾಕಿಕೊಳ್ಳುತ್ತಿದ್ದ ದೇವಯ್ಯನಿಗೆ ಕಾಣಿಸಿತು, ಕಂಬಳಿಕೊಪ್ಪೆ ಹಾಕಿಕೊಂಡಿದ್ದ ಇಬ್ಬರು ಬಸಿರಿಮರದ ಪಕ್ಕದ ದನ ಓಣಿಯ ಕೆಸರು ಹಾದಿಯಲ್ಲಿ ಮನೆಯ ಕಡೆ ಗುಡ್ಡದಿಂದ ಇಳಿದುಬರುತ್ತಿದ್ದುದು, ಅವನಿಗೆ ಗೊತ್ತಾಯಿತು ಮುಕುಂದಯ್ಯ ಚಿನ್ನಮ್ಮನನ್ನು ಕರೆತರುತ್ತಿರುವುದು. +ಬೇಗನೆ ಕುಳಿತಲ್ಲಿಂದ ಎದ್ದು ಒಳಗೆ ಹೋದನು, ಚಿನ್ನಮ್ಮನ ಅಜ್ಜಿ ಮಲಗಿದ್ದ ಕೋಣೆಗೆ. +ಚಿನ್ನಮ್ಮ ಮುಕುಂದಯ್ಯನ ಹಿಂದೆ ಅಂಗಳವನ್ನು ದಾಟಿ, ಜಗಲಿಗೆ ಹತ್ತಲುಹಾಕಿದ್ದ ಕಲ್ಲು ಮೆಟ್ಟಿಲ ಮೇಲೆ ಅವನ ಹಿಂದೆಯೆ ನಿಂತಳು. +ಮುಕುಂದಯ್ಯ ಕೆಸರು ಹಲಗೆಯ ಮೇಲೆ ತಮ್ರದ ಹಂಡೆಯಲ್ಲಿದ್ದ ನೀರನ್ನು ಹಿತ್ತಾಳೆಯ ತಂಬಿಗೆಯಲ್ಲಿ ಮೊಗೆದು ಮೊಗೆದು ಕಾಲು ತೊಳೆದುಕೊಳ್ಳುತ್ತಿರಲು, ಚಿನ್ನಮ್ಮ ತನಗೆ ಪರಿಚಿತವಾಗಿದ್ದ ಮನೆಯ ನಾಲ್ಕೂ ದಿಕ್ಕಿಗೆ ಆಗಂತುಕಳಂತೆ  ಕಣ್ಣುಹಾಯಿಸಿದಳು, ಅಪರಿಚಿತವೊ ಎಂಬಂತೆ. +ಮನೆ ನಿಃಶಬ್ದವಾಗಿತ್ತು. +ಏನೋ ಹೆದರಿಕೆ ಹುಟ್ಟಿಸುವಂತೆ ನಿಃಶಬ್ದವಾಗಿತ್ತು. +ಇನ್ನೂ ಜಗಲಿಗೆ ದೀಪ ಹಚ್ಚಿರಲಿಲ್ಲವಾದ್ದರಿಂದ ಮನೆಯನ್ನೆಲ್ಲ ದಟ್ಟಮಬ್ಬು ಕವಿದಿತ್ತು. +ಮದುವೆಗೆಂದು ಕಟ್ಟಿದ್ದ ಚಪ್ಪರ, ಧಾರೆಯ ಮಂಟಪ ಮೊದಲಾದುವೆಲ್ಲ ಬಿಕೋ ಎನ್ನುತ್ತಿದ್ದುವು, ಅಲಂಕೃತವಾಗಿದ್ದ ಶವದಂತೆ. +ನಿನ್ನೆ ತಾನೆ ನೂರಾರು ಜನದ ಸಂದಣಿಯಿಂದ ಗಿಜಿಬಿಜಿ ಎನ್ನುತ್ತಿದ್ದ ಮನೆ ಇಂದುಕ ಹಾಳು ಬಿದ್ದ ದೇಗುಲದಂತೆ ಭೀಷಣಭ್ರುಕುಟಿಯಾಗಿತ್ತು. +ಅಂಗಳದ ನಡುವೆಯಿದ್ದ ತುಳಸಿಕಟ್ಟೆಯ ದೇವರೂ, ಚಿನ್ನಮ್ಮ ಮನೆಯನ್ನು ಪ್ರವೇಶಿಸುವಾಗ ಅಭ್ಯಾಸ ಬಲದಿಂದೆಂಬಂತೆ ಅದಕ್ಕೆ ಕೈ ಮುಗಿದಿದ್ದರೂ, ಕರುಣಪಾತ್ರವಾಗಿ ತೋರಿ ಚಿನ್ನಮ್ಮನಿಗೆ ದುಃಖವುಕ್ಕಿ ಬಂದು, ಅದುವರೆಗೂ ತಡೆಹಿಡಿದಿದ್ದ ಕಣ್ಣೀರು ಧಾರಾಕಾರವಾಗಿ ಹರಿಯತೊಡಗಿತ್ತು. +ಮುಕುಂದಯ್ಯ ಕಾಲು ತೊಳೆದುಕೊಂಡು ಜಗಲಿಗೆ ಹೋಗಿ, ಕಂಬಳಿಕೊಪ್ಪೆಯನ್ನು ಕೊಡವಿ ಬದಿಗಿಟ್ಟು, ಕೆಸರುಹಲಗೆಯ ಮೇಲೆ ಹಾಕಿದ್ದ ಜಮಖಾನದ ಮೇಲೆ ಕುಳಿತನು. +ಚಿನ್ನಮ್ಮನೂ ಕೆಸರು ಹೋಗುವಂತೆ ಚೆನ್ನಾಗಿ ಕೈಕಾಲು ಮುಖ ತೊಳೆದುಕೊಂಡು, ಮೈ ಭಾರವಾದಂತೆ ಮೆಲ್ಲನೆ ನಡೆದು ಒಳಗೆ ಹೋದಳು, ಕಂಬಳಿಕೊಪ್ಪೆಯನ್ನು ಅಂಗಳಕ್ಕೆ ಮಳೆ ನೀರಿಳಿಯುವಂತೆ ಕೊಡಹಿ, ಕೈಯಲ್ಲಿಯೆ ಹಿಡಿದುಕೊಂಡು. +ಅವಳಿಗೆ ಕಾಲು ಸಣ್ಣಗೆ ನಡುಗ ತೊಡಗಿತ್ತು. +ಕಲು ತೊಳೆದುಕೊಳ್ಳುತ್ತಿದ್ದಾಗ ಮದುಮಗಳಾಗಿ ಹಾಕಿಕೊಂಡಿದ್ದ ಸುತ್ತುಕಾಲುಂಗುರಗಳನ್ನು ಕಂಡು ಅವಳ ಹೃದಯಕ್ಕೆ ದುಃಖಸ್ಮೃತಿಯ ಮಿಂಚು ಮುಟ್ಟಿದಂತಾಗಿತ್ತು. +ಚಿನ್ನಮ್ಮ ಮನೆಯನ್ನು ಸಮೀಪಿಸುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ತಂದೆಯ ಭಯದಿಂದ ನಡೆ ಕುಗ್ಗಿತ್ತು. +ತನ್ನ ತಂದೆ ತೀರಿಕೊಂಡ ಸುದ್ದಿಯನ್ನು ಕೇಳಿದ್ದರೂ ಏಕೋ ಅವಳಿಗೆ ಫಕ್ಕನೆ ಆ ಸುದ್ದಿಯಲ್ಲಿ ನಂಬಿಕೆ ತಪ್ಪಿತ್ತು. +ತಾನು ಪ್ರವೇಶಿಸುತ್ತಿದ್ದಂತೆ ಭಯಂಕರಾಕಾರದ ರೌದ್ರರೋಷದ ‘ಅಪ್ಪಯ್ಯ’ ತನ್ನನ್ನೂ ಮುಕುಂದ ಭಾವನನ್ನೂ ಒದ್ದು ಗುದ್ದಿ, ಉಗುಳಿ, ದೊಣ್ಣೆಯಿಂದ ಅಪ್ಪಳಿಸುವ ಚಿತ್ರವನ್ನು ಮುನ್ನೆನೆದು, ಸಣ್ಣಗೆ ಚೀರಿದ್ದಳು! +ಅವಳ ಮುಂದೆ ನಡೆಯುತ್ತಿದ್ದ ಮುಕುಂದಯ್ಯ ನಿಂತು, ತಿರುಗಿ ನೋಡಿ, “ಏನಾಯ್‌ಎ? +‘ಎಡವಿದೇನೆ?ಮುಳ್ಳು ಹೆಟ್ತೇನೆ?” ಎಂದು ಕೇಳಿದ್ದಕ್ಕೆ ಚಿನ್ನಮ್ಮ ಮುಖದ ಸುತ್ತ ಬಿಗಿದು ಹಿಡಿದಿದ್ದ ಕಂಬಳಿಕೊಪ್ಪೆಯೊಳಗಿಂದಲೆ ಸೋತದನಿಯಲ್ಲಿ “ಏನೂ ಇಲ್ಲ” ಎಂದಿದ್ದಳಷ್ಟೆ. +ಮನೆಯನ್ನು ಪ್ರವೇಶಿಸಿದೊಡನೆ ಆ ನಿಃಶಬ್ದತೆ, ಆ ನಿರ್ಜನತೆ, ಆ ನಿಶ್ಚಲತೆಯನ್ನು ಕಂಡು ‘ಅಪ್ಪಯ್ಯ’ ತೀರಿಕೊಂಡಿದ್ದ ವಿಷಯದಲ್ಲಿ ಅವಳಿಗೆ ಏನೂ ಸಂಶಯ ಉಳಿಯಲಿಲ್ಲ. +ತಂದೆಯ ಸಾವಿಗಾಗಿ ನಿಜವಾಗಿಯೂ ದುಃಖ ಉಕ್ಕಿ ಬಂತು. +ಅಪ್ಪಯ್ಯನ ಒರಟುತನ, ನಿಷ್ಟುರತೆ, ಕ್ರೌರ್ಯ, ಹಠಮಾರಿತನ, ದುಡುಕು, ದುಂದುಗಾರಿಕೆ, ಅದೂರದೃಷ್ಟಿ, ಅನೀತಿ ಜೀವನ ಮೊದಲಾದುವೆಲ್ಲ, ಬಹುಶಃ ಇನ್ನೆಂದೂ ಅವುಗಳಿಂದ ತನಗೆ ತೊಂದರೆ ಒದಗದೆಂಬ ಅಂತರ್ಮನಸ್ಸಿನ ಧೈರ್ಯದಿಂದಿರಬಹುದು, ಮರೆತುಹೋದಂತಾಗಿ ಅವನ ಪ್ರೀತಿ, ದಯೆ, ಮುದ್ದು ಇತ್ಯಾದಿ ಪಿತೃವಾತ್ಸಲ್ಯ ಜೀವಿತದ ಶುಕ್ಲಪಕ್ಷವೆ ಅವಳ ಮನಸ್ಸಿಗೆ ಬಂದು, ತನ್ನ ತಾಯಿ ಹೋದಾಗ ಅಂದು ಅನುಭವಿಸಲಾರದಿದ್ದ ಸಂಕಟವನ್ನು ಚಿನ್ನಮ್ಮ ಇಂದು ಅನುಭವಿಸಿದ್ದಳು. +ಒಳಗೆ ಹೋಗಿದ್ದ ದೇವಯ್ಯ ಅರೆಗತ್ತಲೆ ಕವಿದಿದ್ದು ಚಿನ್ನಮ್ಮನ ಅಜ್ಜಿ ಮಲಗಿದ್ದ ಕೋಣೆಯ ಬಾಗಿಲೆಡೆ, ಒಳಹೊಕ್ಕು ನಿಂತು “ಅಜ್ಜೀ!ಅಜ್ಜೀ!” ಎಂದು ಹಲವು ಸಾರಿ ಕರೆದ ಮೇಲೆಯೆ ಅಜ್ಜಿ, ಎಚ್ಚರಗೊಂಡಂತೆ, ನರಳುತ್ತಿದ್ದ ದನಿಯಲ್ಲಿ ಕೇಳಿದಳು “ಯಾರೋ?ದೇವಯ್ಯನೇನೋ?ಮಗು ಬಂತೇನೋ?” +“ಬಂತು, ಅಜ್ಜೀ….” ಅಜ್ಜಿ ಏಳಲು ಪ್ರಯತ್ನಿಸುತ್ತಿದ್ದುದನ್ನು ಸದ್ದಿನಿಂದಲೆ ಊಹಿಸಿ ಮತ್ತೆ ಹೇಳಿದನು. + “ನೀನು ಏಳಬೇಡ, ಇಲ್ಲಿಗೇ ಬರಾಕೆ ಹೇಳ್ತೀನಿ.” + ಕಳೆದ ರಾತ್ರಿಯಿಂದಲೂ ಅಜ್ಜಿ ಅನುಭವಿಸುತ್ತಿದ್ದ ದುಃಖ, ದೈನ್ಯ, ಶೋಕ, ಸಮಖಟ, ಶಂಕೆ, ಭೀತಿ, ಹತಾಶೆ ಮತ್ತು ಪ್ರತ್ಯಾಶೆಗಳ ಉರಿಯ ಶರಶಯ್ಯೆಯ ಶಿಕ್ಷೆಯನ್ನು ಪ್ರತ್ಯಕ್ಷ ನೋಡಿದ್ದ ದೇವಯ್ಯನಿಗೆ ಅಜ್ಜಿಯ ಉದ್ವಿಗ್ನ ಆತುರವು ಹೃದಯಸ್ಯಂದಿಯಾಗಿ ಅರ್ಥವಾಗಿತ್ತು. +ಅಜ್ಜಿಯ ಜೀವ ಮೊಮ್ಮಗಳ ಆಗಮನದಿಂದ ಅಮೃತಮಯವಾಗುವುದನ್ನು ತಾನೇ ಅನುಭವಿಸುತ್ತಿದ್ದ ಆನಂದಕ್ಕೆ ಅಶ್ರುಲೋಚನನಾಗಿದ್ದನು. +ಕೋಣೆಯ ಅರೆಗತ್ತಲೆಯಿಂದ ಮಾಣಿಗೆಯ ಕಗ್ಗತ್ತಲೆಗೆ ಹಿಂದಾಟಿದ ದೇವಯ್ಯಗೆ ಬಳೆಯ ಸದ್ದು ಕೇಳಿಸಿತು. +ಚಿನ್ನಮ್ಮ ಅಡುಗೆಮನೆಯ ಕಡೆಗೆ ಹೋಗುತ್ತಿದ್ದುದನ್ನು ಅರಿತು “ಇತ್ತ ಬಾ, ತಂಗಿ; + ಅಜ್ಜಿ ಕೋಣೇಲಿ ಮಲಗ್ಯದೆ” ಎಂದು ಹೇಳಿ, ಆರ್ದ್ರ ನಯನಗಳನ್ನು ಒರಸಿಕೊಳ್ಳುತ್ತಾ ಜಗಲಿಗೆ ಹೋದನು, ಮುಕುಂದಯ್ಯನಿದ್ದಲ್ಲಿಗೆ. +ಮನೆಯ ಹೊರಗೆ ಬಿಕೋ ಇನ್ನುತ್ತಿದ್ದಂತೆಯೆ ಮನೆಯ ಒಳಗೂ ಗಾಳ್ ಎಂದು ಹಾಳು ಸುರಿಯುತ್ತಿದ್ದುದನ್ನು ಅನುಭವಿಸಿದ ಚಿನ್ನಮ್ಮಗೆ ಸೋಜಿಗವಾಯಿತು. +ನಿನ್ನೆ ತನ್ನ ಮದುವೆಯ ಸಲುವಾಗಿ ನೆರೆದಿದ್ದ ಅಷ್ಟೊಂದು ಜನ ನಂಟರು ಗರತಿಯರಲ್ಲಿ ಒಬ್ಬಿಬ್ಬರಾದರೂ ಅಜ್ಜಿಯ ಸಂತೈಕೆಗಾಗಿ ಉಳಿಯದೆ ಹೊರಟುಹೋಗಿದ್ದಾರಲ್ಲಾ! +ನಾಗಕ್ಕ ಇದ್ದಿದ್ದರೆ ತನ್ನನ್ನು ಅಂಗಳದಲ್ಲಿಯೆ ಎದುರುಗೊಂಡು ಉಪಚರಿಸದೆ ಇರುತ್ತಿದ್ದಳೆ? +ಕಡೆಗೆ ಅವಳನ್ನೂ ಓಡಿಸಿಬಿಟ್ಟರೊ? +‘ಅಯ್ಯೋ ನನ್ನ ದೆಸೆಯಿಂದ ಮೆನೆಯೆ ಮಸಣವಾಗಿದೆಯಲ್ಲಾ ದೇವರೇ!’ ಅಷ್ಟರಲ್ಲಿ ದೇವಯ್ಯನ ದನಿ ಕೇಳಿಸಿತ್ತು. +ಚಿನ್ನಮ್ಮ ನೇರವಾಗಿ ಧಾವಿಸಿದ್ದಳು, ಅಜ್ಜಿ ಮಲಗಿದ್ದ ಹಾಸಗೆಗೆ. +ಹಿಂದಿನ ರಾತ್ರಿ ಮೊಮ್ಮಗಳು ಕಣ್ಮರೆಯಾದ ಸುದ್ದಿ ಕಿವಿಗೆ ಬಿದ್ದಾಗ ಅಜ್ಜಿ ತತ್ತರಿಸಿ ಹೋಗಿದ್ದಳು. +ಮಾತನಾಡುವ ಶಕ್ತಿಯೆ ಉಡುಗಿದಂತಾಗಿತ್ತು. +ಏದ ತೊಡಗಿದ್ದಳು. +ತಟಕ್ಕನೆ ತಲೆ ಕೆಟ್ಟಂತೆ ಹೊಂದಾಣಿಕೆಯಿಲ್ಲದ ಮಾತಿಗೆ ಶುರು ಮಾಡಿದ್ದಳು. +ನಾಗಕ್ಕ ಅವಳನ್ನು ಕೈಹಿಡಿದೆತ್ತಿ ಕೋಣೆಗೆ ಕರೆದೊಯ್ದು ಹಾಸಗೆಯಲ್ಲಿ ಮಲಗುವಂತೆ ಮಾಡಿ, ಚಿನ್ನಮ್ಮ ಅವರು ಭಾವಿಸಿದಂತೆ ಆತ್ಮಹತ್ಯೆ ಮಾಡಿಕೊಂಡಿಲ್ಲವೆಂದೂ, ಮುಕುಂದಣ್ಣನ ಸಂಗಡ ಅಡಗಲು ಹೋಗಿದ್ದಾಳೆಂದೂ, ಇನ್ನೆರಡು ಮೂರು ದಿನಗಳಲ್ಲಿ ಗಲಾಟೆ ನಿಂತ ಮೇಲೆ ಬರುತ್ತಾಳೆಂದೂ, ಅದುವರೆಗೂ ಗುಟ್ಟಾಗಿರಬೇಕೆಂದೂ ಸಮಾಧಾನ ಹೇಳಿದ್ದಳು. +ಅಜ್ಜಿ ಮತ್ತೆ ಹಾಸಿಗೆ ಬಿಟ್ಟು ಎದ್ದಿರಲಿಲ್ಲ. +ವೆಂಕಟಣ್ಣನ ಶವಸಂಸ್ಕಾರಾನಂತರ ಹಿಂದಿರುಗಿದ್ದ ದೇವಯ್ಯನೂ ಅಜ್ಜಿಯ ಬಳಿಗೆ ಹೋಗಿ ಧೈರ್ಯ ಹೇಳಿದ್ದನು. +ಅವನು ತಿಳಿಸಿದ್ದು ಒಟ್ಟಿನಲ್ಲಿ ನಾಗಕ್ಕನ ಹೇಳಿಕೆಯಂತೆ ಇದ್ದಿತಾದರೂ ಒಂದು ಮುಖ್ಯ ವಿಚಾರದಲ್ಲಿ ಅರ್ಥಪೂರ್ಣವಾದ ವ್ಯತ್ಯಾಸವಿತ್ತು. +ಅವನ ವರದಿಯ ಪ್ರಕಾರ ಅಜ್ಜಿಗೆ ತಿಳಿದಿದ್ದುದೆಂದರೆ ಚಿನ್ನಮ್ಮಗೆ ಆ ಸಂಬಂಧ ಒಪ್ಪಿಗೆಯಾಗದೆ ಕೆರೆಗೆ ಹಾರಲು ಹೋಗಿದ್ದಳೆಂದೂ ಆ ದುರಂತದಿಂದ ಮುಕುಂದಯ್ಯ ಅವಳನ್ನು ಪಾರುಮಾಡಿ ರಕ್ಷಿಸಿ, ಒಂದು ರಹಸ್ಯ ಸ್ಥಾನದಲ್ಲಿ ಸುರಕ್ಷಿತವಾಗಿ ಇಟ್ಟಿದ್ದಾನೆಂದೂ ಆಗಿತ್ತು. +ಅದರಿಂದಾಗಿ ಅಜ್ಜಿಯ ಕೃತಜ್ಞತೆ ಮುಕುಂದಯ್ಯನ ಪಾದಾರವಿಂದವನ್ನೆ ಹಿಡಿದುಕೊಂಡಿತ್ತು. +ಅಜ್ಜಿಯ ಪ್ರಜ್ಞೆಗೆ ಚಿನ್ನಮ್ಮನ ಮದುವೆ ನಿಂತುದರಿಂದ ಬರಬಹುದಾದ ಜನಾಪವಾದವಾಗಲಿ, ಅಳಿಯ ವೆಂಕಟಣ್ಣ ತೀರಿಕೊಂಡ ದುರಂತವಾಗಲಿ ಅಷ್ಟಾಗಿ ತಟ್ಟಿದಂತೆ ತೋರುತ್ತಿರಲಿಲ್ಲ. +ಅವಳ ಸಮಸ್ತ ಚೈತನ್ಯವನ್ನೂ ಮರವಡುವಂತೆ ಅಪ್ಪಳಿಸಿಬಿಟ್ಟಿದ್ದುದೆಂದರೆ ಮೊಮ್ಮಗಳು ಕಾಣೆಯಾದದ್ದು! +ಅಪವಾದ, ನಿಂದೆ, ಬಹಿಷ್ಕಾರ, ಸಾಮಾಜಿಕ ಪೀಡನೆ, ಅವಮಾನ ಯಾವುದೂ ಅವಳಿಗೆ ಲೆಕ್ಕಕ್ಕಿರಲಿಲ್ಲ. +ಜಗತ್ತಿನಲ್ಲಿ ಆಗಿದ್ದ ಒಂದೇ ಒಂದು ಅಮಂಗಳ ಎಂದರೆ, ಅವಳ ಮೊಮ್ಮಗಳು ಕಾಣೆಯಾದದ್ದು. +ಆ ಮೊಮ್ಮಗಳು ಮತ್ತೆ ತನಗೆ ಲಭಿಸಿದರೆ ಜಗತ್ತಿಗೆ ಸರ್ವಮಂಗಳವೂ ಹಿಂದಿರುಗುತ್ತದೆ! +ಆ ಮೊಮ್ಮಗಳು ಈಗ ತನ್ನಡೆಯೆ, ಹಾಸಗೆಯ ಮೇಲೆ, ತನ್ನ ಮೈಗೆ ಮೈ ಒತ್ತಿ ತನ್ನ ಕೈ ಆತು ಕುಳಿತಿದ್ದಾಳೆ! +ಇನ್ನು ಈ ಜಗತ್ತಿನಲ್ಲಿ ಚಿಂತೆಗೆ ಏನೂ ಕಾರಣವಿಲ್ಲ! +ಆ ಕೋಣೆಯಲ್ಲಿ ಕವಿದಿದ್ದ ಕಪ್ಪಿನಲ್ಲಿ ಅಜ್ಜಿಗೆ ಚಿನ್ನಮ್ಮನ ಮುಖವಾಗಲಿ ಚಿನ್ನಮ್ಮಗೆ ಅಜ್ಜಿಯ ಮುಖವಾಗಲಿ ಕಾಣುತ್ತಿರಲಿಲ್ಲ. +ಆದರೂ ಅವರಿಬ್ಬರೂ ವರ್ತಿಸುತ್ತಿದ್ದರು, ಒಬ್ಬರನ್ನೊಬ್ಬರು ಸ್ಪಷ್ಟವಾಗಿ ನೋಡುತ್ತಿರುವಂತೆ! +ಶೋಕಾಶ್ರುಗಳೊ?ಆನಂದಬಾಷ್ಪಗಳೊ? +ಇಬ್ಬರೂ ಮೌನವಾಗಿಯೆ ಅತ್ತರು. +ಬಹಳ ಹೊತ್ತು ಅಜ್ಜಿಯ ಕೈ ಮೊಮ್ಮಗಳ ಗಲ್ಲ ಕೆನೆನೆಗಳನ್ನು ಮತ್ತೆ ತಮತ್ತೆ ತಡವುತ್ತಿತ್ತು! +ಬಹಳ ಹೊತ್ತಾದಮೇಲೆ, ದುಃಖ ಸ್ವಲ್ಪ ಸಮನವಾದ ಅನಂತರ, ಚಿನ್ನಮ್ಮ ತೊದಲಿ ತೊದಲಿ ಕೇಳಿದಳು. +“ನಾಗಕ್ಕ ಎಲ್ಲಿ, ಅಜ್ಜೀ?” +“ನಿನ್ನಪ್ಪಯ್ಯ ಒದ್ದುದಕ್ಕೆ ಅದು ಬಿದ್ದು, ಸೊಂಟನೋವಾಗಿ, ಅಲ್ಲೆಲ್ಲೋ ಮಲಗ್ಯದೆ ಅಂತಾ ಕಾಣ್ತದೆ…. +ಅಯ್ಯೋ, ಚಿನ್ನೂ, ಏನೇನಾಗಿ ಹೋಯ್ತೆ ನಮ್ಮ ಗಿರಾಚಾರಕ್ಕೇ?” ಅಜ್ಜಿ ನಿಡುನರಳಿ ಸುಯ್ದಳು. +ಅಷ್ಟರಲ್ಲಿ ಹಣತೆಯ ದೀಪ ಹೊತ್ತಿಸಿಕೊಂಡು ಯಾರೊ ಕೋಣೆಯೊಳಗೆ ಪ್ರವೇಶಿಸುತ್ತಿದ್ದದ್ದು ಕಾಣಿಸಿತು. +ಆ ದೀಪದ ಮಂದಪ್ರಕಾಶದ ವಲಯದಲ್ಲಿ ನಾಗಕ್ಕನ ಮುಖಮಂಡಲವನ್ನು ಗುರುತಿಸಿದಳು ಚಿನ್ನಮ್ಮ! +ಜಗಲಿಗೆ ಹಿಂದಿರುಗಿದ ದೇವಯ್ಯ, ಮುಕುಂದಯ್ಯ ಕುಳಿತಿದ್ದಲ್ಲಿಗೆ ಬಂದು, ಅವನಿಗೆ ತುಂಬ ಸಮೀಪವಾಗಿ ಮುಂಡಿಗೆಗೆ ಒರಗಿ ಕುಳಿತನು. +ಇಬ್ಬರೂ ಗುಸುಗುಸು ಮಾತನಾಡಿದರು, ಬಹಳ ಹೊತ್ತು. +ಒಬ್ಬರ ಮುಖ ಮತ್ತೊಬ್ಬರಿಗೆ ಸ್ವಲ್ಪವೂ ಕಾಣಲಾಗದಷ್ಟು ಕತ್ತಲೆಯಾದ ಮೇಲೆ, ದೇವಯ್ಯನೆ ಎದ್ದು ಮದುವೆ ಮನೆಗಾಗಿ ಬೆಟ್ಟಳ್ಳಿಯಿಂದಲೆ ತಂದಿದ್ದ ಒಂದು ತೂಗುಲ್ಯಾಂಪನ್ನು ಹಚ್ಚಿದನು. +ರಾತ್ರಿ ಇನ್ನೂ ಸ್ವಲ್ಪ ಮುಂದುವರಿದಿತ್ತು. +ಮಾತು ಕೊಟ್ಟಿದ್ದಂತೆ ತಿಮ್ಮಪ್ಪಹೆಗ್ಗಡೆ ಹಳೆಮನೆಯಿಂದ ಬಂದನು. +ಬಂದವನು ಕೈಕಾಲು ತೊಳೆದುಕೊಂಡು, ಜಗಲಿಯಲ್ಲಿ ಕೂರದೆ ನೇರವಾಗಿ ಒಳಗೆ ಹೋಗಿ ಅಜ್ಜಿಯನ್ನೂ ಚಿನ್ನಮ್ಮನನ್ನೂ ಮಾತಾಡಿಸಿಕೊಂಡು ಜಗಲಿಗೆ ಹಿಂತಿರುಗಿ, ದೇವಯ್ಯ ಮುಕುಂದಯ್ಯರು ಕುಳಿತಿದ್ದ ಜಮಖಾನದ ಒಂದು ತುದಿ ಸೆರಗಿನಲ್ಲಿ ಸ್ವಲ್ಪ ಸಂಕೋಚದಿಂದಲೆ ಕುಳಿತುಕೊಂಡನು. +ಅವನಿಗೆ ಚಿಕ್ಕಂದಿನಿಂದಲೂ ತನಗಿಂತಲೂ ಹಿರಿಯನಾಗಿದ್ದ ದೇವಯ್ಯನನ್ನು ಕಂಡರೆ ಭಯಮಿಶ್ರಿತ ಗೌರವ. +ತಿಮ್ಮಪ್ಪನ ಕೊಳಕಲು ನಡೆನುಡಿ ವೇ಼ಭೂಷಣ ಆಚಾರಗಳನ್ನು ಕಂಡಾಗಲೆಲ್ಲ ದೇವಯ್ಯ ಖಂಡಿಸುತ್ತಿದ್ದನು. +ಆದರೆ ಇತ್ತೀಚೆಗೆ ತಿಮ್ಮಪ್ಪ ಹೆಗ್ಗಡೆ ಆ ಅನೇಕ ವಿಚಾರಗಳಲ್ಲಿ ಸುಧಾರಿಸಿದ್ದನು. +ಈಗ ಅವನು ದೇವಯ್ಯನ ಖೀಂಡನೆಗೆ ಗುರಿಯಾಗುವ ಸಂಭವವಿಲ್ಲದಿದ್ದರೂ ಅವನನ್ನು ಕಂಡಾಗಲೆಲ್ಲ ಹಿಂದಿನ ಪ್ರತಿಕ್ರಿಯೆಯಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದಲು ಇವನಿಂದ ಸಾಧ್ಯವಾಗಿರಲಿಲ್ಲ. +“ಏನೋ, ತಿಮ್ಮೂ, ನಿಮ್ಮ ಸಿಂಬಾವಿ ಬಾವ ಇನ್ನೂ ಅಲ್ಲೇ ಇದಾರೇನೋ? …. ” +ದೇವಯ್ಯ ಮುಕುಂದಯ್ಯನೊಡನೆ ಮಾಡುತ್ತಿದ್ದ ಸಂವಾದವನ್ನು ತುಂಡುಗಡಿದು ಕೇಳಿದ್ದನು, ತಿಮ್ಮಪ್ಪನ ಕಡೆ ತಿರುಗಿ. +“ಹ್ಞೂ ಅದಾರೆ…” +“ಸುಮ್ಮನೆ ಇದಾನೆಯೇ? +ಏನಾದರೂ ಕಿತಾಪತಿಗೆ ಸುರುವಾಗಿದೆಯೋ?…” ತಿಮ್ಮಪ್ಪ ಏನೂ ಉತ್ತರಕೊಡದೆ ಬರಿದೆ ಹುಸಿನಗೆ ನಗುತ್ತಿದ್ದುದನ್ನು ನೋಡಿ ದೇವಯ್ಯ ಏಕವಚನದಲ್ಲಿಯೆ ಮುಂದುವರಿಸಿದನು. + “ಅವನೆಲ್ಲಿ ಸುಮ್ಮನೆ ಇರ್ತಾನೆ? +ನಿನ್ನೆ ಇಲ್ಲಿಂದ ಹೊರಡುವಾಗಲೆ ಏನೇನೋ ಹೇಳ್ತಿದ್ದನಂತೆ. ತ +ನಗೆ ಆದ ನಷ್ಟಾನೆಲ್ಲ ತುಂಬಿಕೊಡಬೇಕಂತೆ! …. +ಸಾಲಕ್ಕೆ ಹೂವಳ್ಳಿ ಗದ್ದೆ ತೋಟ ಮನೆ ಎಲ್ಲ ಸ್ವಾಧೀನಕ್ಕೆ ತಗೊಳ್ತಾನಂತೆ! …. +ಇದರಲ್ಲಿ ಸೇರ‍್ದೋರಿಗೆಲ್ಲ ಬಹಿಷ್ಕಾರ ಹಾಕಿಸ್ತಾನಂತೆ! …. +‘ಹುಡುಗೀನೆಲ್ಲೋ ಮುಚ್ಚಿಟ್ಟು, ಕೆರೆ ಹಾರಿದಳು ಅಂತಾ ಕತೆ ಹುಟ್ಟಿಸಿ, ನನ್ನ ಕಣ್ಣಗೇ ಮಣ್ಣೆರಚ್ತಾರೆ’ ಅಂತಿದ್ದನಂತೆ! …. +ಅವನಿಗೆ ಹೇಳೂ, ‘ಹೂವಳ್ಳಿ ಗದ್ದೆ ತೋಟ ಮನೆ ಎಲ್ಲಾ ಆ ಹಾರುವನ ಹೆಸರಿಗೆ ಬರಿಯೋಕೆ ಮೊದಲೆ ಬೆಟ್ಟಳ್ಳಿ ಗೌಡ್ರಿಗೆ ಬರೆದು ಕೊಟ್ಟಿದ್ದನಂತೆ ವೆಂಕಟಣ್ಣ’ ಅಂತಾ….ಗೊತ್ತಾಯ್ತೇನು? +“ನಮಗೂ ಬರಕೊಟ್ಟಾನಂತೆ, ಅಪ್ಪಯ್ಯ ಹೇಳ್ತಿದ್ರು!” ತಿಮ್ಮಪ್ಪ ತಾನು ಕೇಳಿದ್ದ ಸಂಗತಿಯನ್ನು, ಯಾವ ಉದ್ದೇಶವೂ ಇಲ್ಲದೆ, ಸುಮ್ಮನೆ ಹಾಗೆ ಹೇಳಿದ್ದನು. +ಆದರೆ ದೇವಯ್ಯನಿಗೆ ಅದರಲ್ಲಿ ಏನೋ ಬೇರೆಯ ಧ್ವನಿ ದ್ಯೋತಕವಾದಂತಾಗಿ ತುಸು ರೇಗಿದ ದನಿಯಲ್ಲಿ ಕೇಳಿದನು. +“ಓಹೋ ಹಾಂಗಾದ್ರೆ ನೀನೂ ನಿನ್ನ ಬಾವನ ಜೊತೆ ಸೇರಿ ದಾವಾ ಹಾಕ್ತಿಯೇನು?” +“ಅಯ್ಯೋ ಮಾರಾಯ, ನಾನೆಲ್ಲಿ ಹಾಂಗೆ ಹೇಳಿದೆ? …. ” ಅಂಜಿದ ದನಿಯಲ್ಲಿಯೆ ‘ತಪ್ಪಾಯ್ತು’ ಎಂಬಂತೆ ಕೇಳಿದ್ದನು ತಿಮ್ಮಪ್ಪ. +ಆದರೆ ತಿಮ್ಮಪ್ಪ ತನ್ನ ತಂಗಿ ಮಂಜಮ್ಮನನ್ನು ಭರಮೈಹೆಗ್ಗಡೆಗೆ ಕೊಟ್ಟು, ತನಗೆ ಭರಮೈಹೆಗಗ್ಗಡೆಯ ತಂಗಿ ಲಕ್ಕಮ್ಮನನ್ನು ತರುವ ವಿಚಾರವಾಗಿ ‘ಜಟ್ಟಕ್ಕನೆ ಅಪ್ಪಯ್ಯನ ಸಂಗಡ ಮಾತಾಡ್ತಿತ್ತು’ ಎಂದು ತಿಳಿಸಿದಾಗ ದೇವಯ್ಯ ಮುಕುಂದಯ್ಯರಿಗೆ ತಮ್ಮ ತಲೆಯ ಮೇಲಿದ್ದ ದೊಡ್ಡ ಚಪ್ಪಡಿಯೆ ಇಳಿದಂತಾಗಿ ಒಬ್ಬರ ಕಣ್ಣನ್ನೊಬ್ಬರು ಇಂಗಿತವಾಗಿ ನಿಟ್ಟಿಸಿದ್ದರು. +“ಯಾವಾಗ ಇಡ್ತಾರಂತೋ ಮದುವೇನ? +ದೊಡ್ಡಪ್ಪಯ್ಯನಿಗೆ ಹೇಳಿ ಆದಷ್ಟು ಬೇಗ ಪೂರೈಸಿಬಿಟ್ಟರೆ ಒಳ್ಳೇದಲ್ಲೇನೋ?” ದೇವಯ್ಯ ಸ್ವಲ್ಪ ಸರಸ ವಿನೋದ ಭಂಗಿಯಿಂದಲೆ ಮುಂಬರಿದು ಕೇಳಿದನು! +“ಅಂದ್ರೇ…. ನಿನಗಿಷ್ಟ. ಇದೆಯೋ ಇಲ್ಲವೊ? +ಯಾರಿಗೆ ಗೊತ್ತು? …. ಏನೋ, ತಿಮ್ಮೂ, ನಿನ್ನ ಮನಸ್ಸು ಹ್ಯಾಂಗದ್ಯೋ?”ತಿಮ್ಮಪ್ಪಹೆಗ್ಗಡೆಯೂ ಸೇರಿ ಮೂವರೂ ಅರ್ಥಗರ್ಭಿತವಾಗಿ ನಕ್ಕರು. +“ನಮ್ಮ ಅಪ್ಪಯ್ಯನದೆ ತರಾತುರಿ ಆಗ್ಯದೆ. +‘ನಾನು ಈ ಮಳೆಗಾಲ ಕಳೀತೀನೋ ಇಲ್ಲೋ? +ಅಷ್ಟರೊಳಗೇ ಮಂಗಳಕಾರ್ಯ ಆಗಿ ಬಿಡಲಿ!’ ಅಂತಿದಾನಂತೆ.” ಸ್ವಲ್ಪ ಹೊತ್ತು ಆಲೋಚಿಸುವಂತಿದ್ದು ಹೇಳಿದ್ದನು ತಿಮ್ಮಪ್ಪ. +“ಸರಿಹೋಯ್ತು ಬಿಡು. ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಕೊಟ್ಟಿದ್ದೂ ಹಾಲು ಅನ್ನ. +ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ್ಹಾಂಗಾಯ್ತು ನಿಂಗೆ?” ಮುಕುಂದಯ್ಯ ಪರಿಹಾಸ್ಯ ಮಾಡಿದನು ತಿಮ್ಮಪ್ಪಗೆ. +“ನಂಗೊಬ್ಬನಿಗೆ ಅಲ್ಲಾ, ನಿಂಗೂ!” ಸ್ವಲ್ಪ ರಾಗವಾಗಿ ಎಳೆದು ಹೇಳಿದ್ದ ತಿಮ್ಮಪ್ಪನ ಆ ಸಣ್ಣ ಉಕ್ತಿಯಲ್ಲಿ ಬಹು ದೊಡ್ಡ ಅರ್ಥ ಧ್ವನಿತವಾಗಿತ್ತು. +ಇನ್ನು ಮುಕುಂದಯ್ಯ ಚಿನ್ನಮ್ಮನನ್ನು ಯಾವ ಅಡಚಣೆಯಾಗಲಿ ತೊಂದರೆಯಾಗಲಿ ಇಲ್ಲದೆ ಮದುವೆಯಾಗಬಹುದಲ್ಲಾ! +ತಿಮ್ಮಪ್ಪನ ಮನಸ್ಸಿನಲ್ಲಿ ಯಾವ ಕೊಂಕೂ ಇಲ್ಲದಿದ್ದರೂ ಅವನ ಮಾತಿನ ಹಿಂದೆ ಕೊಂಕನ್ನು ಊಹಿಸುವವರು ಊಹಿಸಬಹುದಾಗಿತ್ತು. +ಅಡಚಣೆಗಳನ್ನು ತಂದೊಡ್ಡುತ್ತಿದ್ದ ವ್ಯಕ್ತಿಗಳಲ್ಲಿ ಪ್ರಧಾನವಾಗಿದ್ದ ಮಾವನನ್ನೆ ಮುಗಿಸಿಬಿಟ್ಟಿದ್ದರಿಂದ ಇನ್ನು ಮುಂದೆ ಮುಕುಂದಯ್ಯನಿಗೆ ಚಿನ್ನಮ್ಮನ್ನು ಪಡೆದಯುವ ದಾರಿ ಸುಸೂತ್ರವಾಯಿತೆಂದೂ, ಹೂವಳ್ಳಿ ಮನೆಗೆ ಬೇರೆ ಯಾವ ಗಂಡೂ ದಿಕ್ಕಿಲ್ಲವಾದ್ದರಿಂದ ಮುಕುಂದಯ್ಯನೆ ಮನೆಯಾಳಿಯನಾಗಿ ಯಾಜಮಾನ್ಯ ವಹಿಸಬಹುದೆಂದೂ ವ್ಯಂಗ್ಯವಾಗಿ ವ್ಯಾಖ್ಯಾನ ಮಾಡಬಹುದಾಗಿತ್ತು! +ಹಾಗೆ ಮಾಡಿದ ವ್ಯಾಖ್ಯಾನ ನಿಜಕ್ಕೆ ದೂರವಾಗುತ್ತಲೂ ಇರುವ ಸಂಭವವಿರಲಿಲ್ಲ. +ಅಂತಹ ಕುಹಕ ನಿಂದೆಗೆ ತನು ಪಕ್ಕಾಗಬಹುದೆಂಬ ಚಿಂತನೆ ತಟ್ಟನೆ ಮನಸ್ಸಿಗೆ ಹೊಳೆದುದರಿಂದಲೆ ಮುಕುಂದಯ್ಯ ಇದ್ದಕ್ಕಿದ್ದ ಹಾಗೆ ಚಿಂತಕುಲನಾದಂತೆ ತಲೆ ತಗ್ಗಿಸಿ ಮೌನವಾಗಿದ್ದು ಬಿಟ್ಟನು. +ಅವನ ಆ ಭಾವ ಉಳಿದಿಬ್ಬರ ಮೆಲೆ ಪ್ರಭಾವ ಬೀರಿದಂತಾಗಿ ಅವರೂ ಅವಾಕ್ಕಾಗಿ, ಅಂಗಳದಲ್ಲಿ ಕವಿದಿದ್ದ ಕಗ್ಗತ್ತಲೆಯ ಕಡೆಗೆ ನೋಡುತ್ತಾ, ಭೋರೆಂದು ಬೀಳುತ್ತಿದ್ದ ಮಳೆಯನ್ನು ಆಲೈಸುತ್ತಾ ಕುಳಿತುಬಿಟ್ಟರು. +ಮಳೆ ಬೀಳುತ್ತಿದ್ದ ಸದ್ದನ್ನು ಆಗಾಗ ಭಂಗಿಸುತ್ತಿದ್ದ ಸದ್ದು ಎಂದರೆ ಆ ಮೂವರೂ ತಮ್ಮನ್ನು ಕಚ್ಚುತ್ತಿದ್ದ ನುಸಿಗಳನ್ನು ರಪ್ಪನೆ ಹೊಡೆದುಕೊಳ್ಳುತ್ತಿದ್ದ ಸದ್ದು. +ಹಾಗೆ ಹಡೆದುಕೊಳ್ಳುತ್ತಿದ್ದಾಗ ಒಂದು ಸಾರಿ ದೇವಯ್ಯ ಎಂದಿಗಿಂತಲೂ ರಭಸವಾಗಿ ಹೊಡೆದುಕೊಂಡುದರ ಪರಿಣಾಮವಾಗಿ, ದೊಡ್ಡಗೆ ಚಪ್ಪಾಳೆ ಹೊಡೆದಂತಾಗಿ, ಮೂವರೂ ತಮ್ಮ ತಮ್ಮ ಭಾವಪ್ರಪಂಚಗಳಿಂದ ಎಚ್ಚತ್ತು ಹೊರಗೆ ಬಂದು ಒಟ್ಟಿಗೆ ಗಟ್ಟಿಯಾಗಿ ನಗತೊಡಗಿದರು. +ದೇವಯ್ಯ ಹೇಳಿದನು “ತಿಮ್ಮೂ, ಈ ಹಾಳು ನುಸಿಕಾಟ ಸಹಿಸಕ್ಕೆ ಆಗಾದಿಲ್ಲ. +ಒಂದು ಅಗ್ಗಿಷ್ಟಿಕೆನಾರೂ ಹಚ್ತಿಯೇನೊ?”ತಿಮ್ಮಪ್ಪಹೆಗ್ಗಡೆ ಅಗ್ಗಿಷ್ಟಿಕೆ ಹಚ್ಚಿಕೊಂಡು ಬರಲು ಒಳಗಡೆ ಹೋದನು. +ಉಂಗುರಾನ ಯಾರೀಗಾದ್ರೂ ಕೊಟ್ಟಳೊ? +ಇಲ್ಲಾ ಕಳದೇಹೋಯ್ತೊ? +‘ಅಲ್ಲೆಲ್ಲೊ ಇಟ್ಟೀನಿ, ಇನ್ನೊಂದು ಸಾರಿ ಬರುವಷ್ಟರಲ್ಲಿ ಹುಡುಕಿಡುತ್ತೀನಿ.’ ಅಂದಳಲ್ಲಾ ಕಾವೇರಿ? +ಈ ಸೆಟ್ಟರ ಹುಡುಗೇರ ಹಣೇಬರಾನೆ ಹೀಂಗೆ. +ಒಬ್ಬನ್ನ ನಂಬಿಕೊಂಡು ಇರೋ ಜಾತಿಯಲ್ಲ! …. +ಅದರ ಅವ್ವನೂ ಹುಡುಗಿಯಾಗಿದ್ದಾಗ ಏನೇನೋ ಪುಕಾರಾಗಿತ್ತಂತೆ, ಹೀಂಗೇ!…”ಮುಕುಂದಯ್ಯನೂ ತನ್ನ ಹಗಲುಗನಸನ್ನು ಮುಂದುವರಿಸಿದ್ದನು. +“….ಪಾಲು ತಗೊಂಡು ಹೋಗು ಅಂದರೆ ‘ಹ್ಞೂ ಆಗಲಿ!’ ಅಂದೇ ಬಿಡೋದಪ್ಪಾ! +ಈ ಮನೆ ಗದ್ದೆ ತೋಟ ನೋಡಿಕೊಳ್ಳೊ ಹಾಂಗೇನೆ ಅದನ್ನೂ ನೋಡಿಕೊಂಡರಾಯ್ತು…. +ನನ್ನವ್ವ ಏನು ಹೇಳ್ತದೆಯೊ ಏನೊ ಗೊತ್ತಿಲ್ಲಲ್ಲಾ….?” +ಹಿರಿಯ ಮಗ ಮತ್ತು ಸೊಸೆ ಇಬ್ಬರೂ ತೀರಿಕೊಂಡ ರೀತಿ ಮತ್ತು ಸನ್ನಿವೇಶದಿಂದುಂಟಾಗಿದ್ದ ಹತಾಶೆ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರಲ್ಲಿ ಬದುಕಬೇಕು ಎಂಬ ಆಶೆಯ ಬೇರನ್ನೆ ಚಿವುಟಿಹಾಕಿತ್ತು. +ತಿರುಪತಿಗೆ ಹೋದವನು ಹಿಂದಿರುಗುತ್ತಾನೆ ಎಂಬ ಪ್ರತ್ಯಾಶೆಯೆ ಅವರ ಬಾಳ್ವಿಗೆ ಅನೇಕ ವರ್ಷಗಳಿಂದಲೂ ಪ್ರೋತ್ಸಾಹ ನೀಡಿತ್ತು. +ಅದು ಇನ್ನೇನು ಕೈಗೂಡುತ್ತದೆ ಎಂದು ಅವರ ಜೀವ ಒಂದು ಹಿರಿಯ ಹಿಗ್ಗಿನ ಉನ್ಮಾದ ಸದೃಶ ಶಿಖರವನ್ನೇರಿದ್ದಾಗಲೆ ಸಂಭವಿಸಿದ್ದ ರುದ್ರ ದುರಂತದಿಂದ ಅದು ಹತಾಶೆಯ ಕಮರಿಗೆ ಉರುಳಿಬಿದ್ದಿತ್ತು. +ಕಿರಿಯ ಮಗ ತಿಮ್ಮಪ್ಪಹೆಗ್ಗಡೆಯ ಕ್ಷಣಿಕ ಭಾವೋದ್ರೇಕದಿಂದುಂಟಾಗಿದ್ದ ಅಪಘಾತವೂ ಆ ಹತಾಶೆ ಬೆಳೆದು, ಹಬ್ಬಿ, ಬದುಕನ್ನೆಲ್ಲ ಆಕ್ರಮಿಸಿ, ಅದನ್ನು ಲಯಗೊಳಿಸುವುದಕ್ಕೆ ಒಂದು ಅಡರ್ಪನ್ನೊದಗಿಸಿತ್ತಷ್ಟೆ! +ಅವರಿಗೆ ತನು ಈ ಮಳೆಗಾಲ ಮುಗಿಯುವುದರೊಳಗೆ ಸಾಯುತ್ತೇನೆ ಎಂಬ ನಂಬುಗೆ ಬಂದು ಪ್ರಬಲವಾದ ಆಶೆಯೆ ಆಗುವಷ್ಟರ ಮಟ್ಟಿಗೆ ಬಲವಾಗಿತ್ತು. +ಅದಕ್ಕಾಗಿಯೆ ಅವರು ಮಗಳು ಮಂಜಮ್ಮನ ಮತ್ತು ಮಗ ತಿಮ್ಮಪ್ಪನ ಮದುವೆಗಳೆರಡೂ ಒಟ್ಟಿಗೆ ಬೇಗನೆ ನಡೆಯುವಂತೆ ಮಾಡಿದ್ದರು. +ಆ ಮದುವೆಗೆ ಹೂವಳ್ಳಿಯಿಂದ ಯಾರೂ ಹೋಗಿರಲಿಲ್ಲ, ಸೂತಕದ ಮತ್ತು ಮನೆಯನ್ನೆಲ್ಲ ವ್ಯಾಪಿಸಿದ್ದ ಸಾವಿನ ದುಃಖದ ಕಾರಣಕ್ಕಾಗಿ. +ಮದುಮಗನಾಗುವ ತಿಮ್ಮಪ್ಪನೆ ಬಂದು ಕರೆದು ಹೋಗಿದ್ದನು. +ಆದರೆ ಸಿಂಬಾವಿಯವರು ಪಾಲುಗೊಳ್ಳುವ ಉತ್ಸವಕ್ಕೆ ಚಿನ್ನಮ್ಮ ಹೇಗೆ ಹೋದಾಳು?ಇನ್ನು ನಾಗಕ್ಕ? +ಅವಳು ಕೂಡಿಕೆಯಾಗಿದ್ದ ಹೆಣ್ಣಾದರೂ ಎರಡನೆಯ ಸಾರಿ ವೈಧವ್ಯ ಪ್ರಾಪ್ತಿಯಾದವಳಲ್ಲವೆ? +ದ್ವಿಗುಣಿತ ಅಮಂಗಳೆಯಾಗಿದ್ದ ಅವಳು ಎಲ್ಲಿಯಾದರೂ ಮದುವೆಯಂತಹ ಮಂಗಳದೆಡೆಗೆ ಹೋಗುವುದುಂಟೆ? +ಇನ್ನು ಅಜ್ಜಿ?ಮನೆಯಿಂದ ಹೊರಗೆ ಓಡಿಯಾಡುವುದೂ ಅವಳಿಗೆ ಕಷ್ಟಕರವಾಗಿತ್ತು. +ಮುಕುಂದಯ್ಯ ತಿಮ್ಮಪ್ಪನ ಮದುವೆಗೆ ಗಂಡಿನ ಮನಗೆ ಮಾತ್ರ ಹೋಗಿ ಬಂದಿದ್ದನು. +ಹೆಣ್ಣಿನ ಮದುವೆಗೆ ಹೋಗಿದ್ದವನು ಗಂಡಿನ ಮನೆಯಿಂದ ದಿಬ್ಬಣ ಬರುವಷ್ಟರಲ್ಲಿಯೆ ಹೊರಟುಬಂದಿದ್ದನು. +ಬರುವಾಗ ಮದುಮಗಳು ಮಂಜಮ್ಮಗೂ ಹೇಳಿ, ಕ್ಷಮೆ ಕೇಳುವಂತೆ, ಏನೇನೊ ಸಬೂಬು ಹೇಳಿ ಬಂದಿದ್ದನು. +ಹಾಗೆ ಹಳೆಮನೆಯಿಂದ ಹೊರಟು ಬರುತ್ತಿದ್ದಾಗ ನಡೆದಿದ್ದ, ಬಹಳ ಸಮಾನ್ಯವೆಂದು ತೋರಬಹುದಾದ, ಒಂದು ಘಟನೆ ಮುಕುಂದಯ್ಯನ ಮನಸ್ಸಿನ ಮೇಲೆ ವಿಶೇಷ ಪರಿಣಾಮ ಉಂಟುಮಾಡಿತ್ತು. +ಮನೆಯಿಂದ ಕೆಳಗೆ ಅಡಕೆ ತೋಟದ ಕಲ್ಲು ಕಟ್ಟಣೆಯ ಪಕ್ಕದಲ್ಲಿಯೆ ಇಳಿದು ಗದ್ದೆ ಕೋಗಿನ ಕಡೆಗೆ ಹೋಗುತ್ತಿದ್ದ ಕಾಲುದಾರಿಯಲ್ಲಿ ಸುಮಾರು ಇಪ್ಪತ್ತು ಮೂವತ್ತು ಮಾರು ನಡೆದಿದ್ದನೋ ಇಲ್ಲವೋ ಯಾರೋ ಹಿಂದಿನಿಂದ ಕೂಗಿ ಕರೆದಂತಾಯಿತು. +ತಿರುಗಿ ನೋಡಿದಾಗ ಯಾಗೂ ಗೋಚರಿಸಲಿಲ್ಲ. +ಮತ್ತೆ ಎರಡು ಹೆಜ್ಜೆ ಹಾಕುವಷ್ಟರಲ್ಲಿ ಮತ್ತೆ ಅದೇ ಕೀಚಲು ದನಿ ಕೇಳಿಸಿತು. +‘ಏ ಮುಕುಂದ ಮಾವ!ಏ ಮುಕುಂದ ಮಾವ!’ದನಿಯಿಂದಲೆ ಗೊತ್ತಯಿತು ಕರೆಯುತ್ತಿದ್ದವನು ಧರ್ಮು ಎಂದು. +ಆದರೆ ಸುತ್ತಲೂ ನೋಡಿದಾಗ ಅವನು ಎಲ್ಲಿಯೂ ಕಾಣಿಸಲಿಲ್ಲ. +ಹುಡುಗ ಆಟಕ್ಕೆ ಎಲ್ಲಿಯೊ ಅಡಗಿಕೊಂಡು ಕರೆಯುತ್ತಿದ್ದಾನೆ ಎಂದು ಊಹಿಸಿ ಮುಕುಂದಯ್ಯ ಸರಸಕ್ಕೆ “ಏ ಪಟಿಂಗ್ರಾ, ಅಲ್ಲೇನ ಮಾಡ್ತಿರೋ? +ಈಗ ನಿನ್ನ ಚಿಕ್ಕಪ್ಪಯ್ಯ ಬಂದ್ರೆ ಬೀಳ್ತವೆ ಕನಾತಿ!” ಎಂದು, ತನಗೆ ಏನೂ ಯಾರೂ ಕಾಣಿಸದಿದರೂ, ಧರ್ಮು ಒಬ್ಬನೆ ಇರಲಾರ, ಮದುವೆಗೆ ಬಂದ ನೆಂಟರ ಮಕ್ಕಳೂ ಎರಬಹುದೆಂದು ಸ್ವಾಭಾವಿಕವಾಗಿಯೆ ಊಹಿಸಿ, ಗದ್ದೆಯ ದಿಕ್ಕಿಗಿದ್ದ ಒಂದು ದಟ್ಟವಾಗಿ ಬೆಳೆದಿದ್ದ ಕರ್ಜಿಹಣ್ಣಿನ ಮಟ್ಟಿನ ಕಡೆ ನೋಡುತ್ತಾ ಗದರಿಸುವಂತೆ ನಟಿಸಿದನು. +ಆದರೆ ಹಲವು ಕೊರಳುಗಳು ಒಟ್ಟಿಗೆ ಗಟ್ಟಿಯಾಗಿ ನಕ್ಕ ಸದ್ದು ಬಂದದ್ದು ತನ್ನ ಬೆಂಗಡೆಯಿಂದ! +ತಿರುಗಿ ನೋಡುತ್ತಾನೆ ಕಟ್ಟಣೆಯಾಚೆ, ಅಡಕೆಯ ಬಾಳೆಯ ಮರಗಳ ನಡುವೆ, ತುಸು ಮರೆಯಾಗಿದ್ದ ಒಂದು ಪೇರಲ ಮರದಲ್ಲಿ ಮಂಗಗಳು ಕೂರುವಂಗತೆ ಹತ್ತಿ ಕೂತಿವೆ, ಹುಡುಗರ ಒಂದು ಹಿಂಡೆ! +“ಚಿಟ್ಟಬಿಲ್ಲು ತರಲಿಲ್ಲೇನು, ಮಾವಾ?” ಎಲ್ಲರಿಗಿಂತಲೂ ಮೇಲೆ ನೆತ್ತಿಯ ಹರೆಯಲ್ಲಿದ್ದ ಧರ್ಮು ಕೂಗಿದನು. +“ಹೂನೊ!ನೆಂಟರಮನೆಗೆ ಲಗ್ನಕ್ಕೆ ಬರೋರು ಚಿಟ್ಟಿಲ್ಲು ತರ್ತಾರೇನೋ, ಪಟಿಂಗಾ?” +“ಮತ್ತೇ…?ಲಗ್ನಕ್ಕೆ ಬಂದಾವ ಎತ್ತಲಾಗೋ ಹೋಗ್ತಿದ್ದೀಯಾ?” ಧರ್ಮು ಆಗಲೆ  ಪೇರಲಮರದಿಂದಿಳಿದು ಕಟ್ಟಣೆ ಹತ್ತಿ ನೆಗೆಯುತ್ತಿದ್ದನು. +“ಕೆಲಸ ಇದೆ ಕಣೋ, ಮನೀಗೆ ಹೋಗ್ತೀನಿ.” ಹತ್ತಿರಕ್ಕೆ ಬಂದಿದ್ದ ಹುಡುಗನಿಗೆ ಮುಕುಂದಯ್ಯ ಮೆಲ್ಲಗೆ ಹೇಳಿದನು. +“ಅತ್ತೆಮ್ಮನ ಮನೀಗಾ?” ಧರ್ಮು ಕೋಣೂರನ್ನು ಕರೆಯುತ್ತಿದ್ದ ರೀತಿ ಮುಕುಂದಯ್ಯಗೆ ರೂಢಿಯಾಗಿತ್ತು. +“ಅಲ್ಲೋ…. ಹೂವಳ್ಳಿಗೆ. ” ಬಳಿಗೆ ಬಂದು ಅಕ್ಕರೆಯಿಂದ ತನ್ನ ಬಲಗೈಯನ್ನು ಹಿಡಿದುಕೊಂಡಿದ್ದ ಹುಡುಗನಿಗೆ ಹೇಳಿದನು ಮುಕುಂದಯ್ಯ. + “ಅದನ್ನೇ…. ನಾನು ಹೇಳಿದ್ದೂ….ಮತ್ತೆ! +ಹೂವಳ್ಳಿಗೆ ಹೋಗ್ತಿಯೇನೂ ಅಂತಾ.” +“‘ಅತ್ತೆಮ್ಮನ ಮನೀಗಾ?’ ಅಂತಾ ಕೇಳ್ದೇ? …. ” +“ಹೌದು…. ‘ಹೂವಳ್ಳಿ ಚಿನ್ನಕ್ಕ ಇನ್ನುಮ್ಯಾಲೆ ನಿನ್ನ ಅತ್ತೆಮ್ಮ ಕಣೋ!’ ಅಂತಾ ಹೇಳಿದ್ರು!” +“ಯಾರೋ ಹೇಳಿದ್ದು?” +“ಮಂಜತ್ತೇ! …. ”ಮುಂದೇನು ಸಮಂಜಸವಾಗಿ ಮಾತಾಡಬೇಕೋ ಅದು ಹೊಳೆಯಲಿಲ್ಲ ಮುಕುಂದಯ್ಯಗೆ. +ಅಂತೂ ಧರ್ಮು ತನಗೆ ಪ್ರಿಯವಾದ್ದನ್ನೆ ಹೇಳಿದ್ದನು. +ಆದರೆ ಇನ್ನೂ ಏನೇನು ಬಿದ್ದಿದೆಯೋ ಈ ಮಕ್ಕಳ ಕಿವಿಗೂ? +ಮುಕುಂದಯ್ಯನಿಗೆ ಸೋಜಿಗವಾಯಿತು. +ತನ್ನ ಪೆಚ್ಚನ್ನು ಮುಚ್ಚಿಕೊಳ್ಳುವುದಕ್ಕಾಗಿ, ಮಾತು ಮುಂಮುಂದುವರಿಸಬೇಕಲ್ಲಾ ಎಂದು, ಹೇಳಿದನು. +“ನಿನ್ನ ಮಂಜತ್ತೆ, ಇವೊತ್ತು ರಾತ್ರಿ, ಮದೋಳ್ಗಿ ಆಗ್ತಾಳೋ! +ನಾಳೆ ಗಂಡನ ಮನೆಗೆ ಸಿಂಬಾವಿಗೆ ಹೋದವಳು ಮತ್ತೆ ಬರಾದಿಲ್ಲ, ನಿಂಗೆ ಅಡಿಗೆ ಮಾಡಿ ಹಾಕೋಕೆ! …. ” +“ಲಕ್ಕ್ ಚಿಗಮ್ಮ ಬಂದದಲ್ಲಾ, ಸಿಂಬಾವಿಯಿಂದ ತಿಮ್ಮು ಚಿಗಪ್ಪಯ್ಯನ ಸಂಗಡ? +ಅಡಿಗೆ ಮಾಡಿ ಹಾಕ್ತದೆ!” ಸ್ವಲ್ಪವೂ ಅಪ್ರತಿಭನಾಗದೆ ಉತ್ತರಕೊಟ್ಟಿದ್ದನು ಧರ್ಮು. +“ಹೋಗಲಿ ಬಿಡು. ಒಬ್ಬರು ಹೋದರೆ ಮತ್ತೊಬ್ಬರು ಬರ್ತಾರೆ! …. ನಂಗೆ ಹೊತ್ತಾಗ್ತದೆಯೊ, ನಾ ಹೋಗ್ತಿನೋ.” ಎಂದು ಮುಂದಕ್ಕೆ ಕಾಲು ಹಾಕಲಿದ್ದ ಮುಕುಂದಯ್ಯಗೆ ಧರ್ಮುವ ಪಕ್ಕದಲ್ಲಿ, ಅವನ ಗಾತ್ರದಿಂದಲೆ ತನ್ನ ಗಾತ್ರ ಮರೆಯಾಗುವಷ್ಟರ ಮಟ್ಟಿನ ಕೃಶಗಾತ್ರನಾಗಿದ್ದ ರಾಮು, ತನ್ನ ಧರ್ಮಣ್ಣಯ್ಯನ ಹಸ್ತವನ್ನು ತನ್ನ ಕೃಶಹಸ್ತದಿಂದ ಹಿಡಿದು ನಿಂತಿದ್ದುದು ಕಣ್ಣಿಗೆ ಬಿತ್ತು. +“ಅಯ್ಯೋ,!ಇಂವ ಯಾವಾಗ ಬಂದನೋ ಇಲ್ಲಿಗೆ? +ನಾ ನೋಡಲೇ ಇಲ್ಲ….” ಮುಕುಂದಯ್ಯ ರೂಢಿಯ ಮಟ್ಟದ ಅಚ್ಚರಿಯನ್ನು ಪ್ರದರ್ಶಿಸಿ, ಧರ್ಮು ಕಡೆಗೆ ತಿರುಗಿ, ಎಚ್ಚರಿಕೆ ಹೇಳಿದನು. +“ಇಂವನ್ನ್ಯಾಕೆ ಕರಕೊಂಡು ಬತ್ರಿಯೊ, ಧರ್ಮೂ, ಈ ಮಳೇಲಿ, ಈ ಗಾಳೀಲಿ, ಈ ಕೆಸರಿನಾಗೆ? +ಅವನಪ್ಪಯ್ಯ ಎಲ್ಲಾರೂ ಕಂಡರೆ ನಿಂಗೆ ಸಮಾ ಆಗ್ತದೆ! …. + ಅವನಿಗೆ ಮೊದಲೇ ಒಡಲ ಜರ ಅಂತಿದ್ರು, ನೀನೀ ಮಳೇಲಿ-ಚಳೀಲಿ ಅವನ್ನ ತಿರುಗಿಸಿದ್ರೆ ಗತಿ? +ಮನೀಗೆ ಕರಕೊಂಡು ಹೋಗು ಬೇಗ! …. ” +“ಮನೇಲಿ…. ಅವನೊಬ್ಬ್ನೇ ಅಂತಾ…. +ಅವನವ್ವನೇ ನನ್ನ ಸಂಗಡ ಕಳಿಸ್ತು…. +ಮತ್ತೆ…. ಮತ್ತೆ…. ಮತ್ತೆ…. ಮಾವಾ! …. ” ಹೇಳಲು ಹೆದರಿ ಹೆದರಿ, ಹೇಳಲೋ ಬಿಡಲೋ ಎಂಬಂತೆ ತಡೆದೂ ತಡೆದೂ ಧರ್ಮು ದುಃಖಧ್ವನಿಯಲ್ಲೆ ಶೋಕಮುಖಮುದ್ರೆಯಾಗಿ ಮುಂದುವರಿದನು. +“ರಾಮು ತಮ್ಮ….ಮೊನ್ನೆ…. ಆವೊತ್ತು ಜೋರಾಗಿ ಮಳೆ ಬೀಳ್ತಿತ್ತಲ್ಲಾ ಆವೊತ್ತು…. +ಸತ್ತು ಹೋತಂತೆ! …. ನಾವು ಯಾರೂ ನೋಡಲೇ ಇಲ್ಲ! +ರಾಮೂನು ನೋಡ್ಲಿಲ್ವಂತೆ…. +ಸುಡುಗಾಡಿಗೆ ತಗೊಂಡುಹೋಗಿ ಮಣ್ಣು ಮಾಡಿಬಿಟ್ರಂತೆ!” ನೀರವವಾಗಿ ಅಳತೊಡಗಿದ್ದ ರಾಮುವ ಕಣ್ಣೊರಸುತ್ತಾ “ಛೆ ಪಾಪ! +ರಾಮು ಅಳ್ತಾನೇ ಇರ್ತಾನೆ! +ಅದಕ್ಕೇ ಅವನವ್ವ ‘ಧರ್ಮೂ, ನೀನಾರೂ ಕರಕೊಂಡು ಹೋಗಿ ಸುಮ್ಮನಿರಿಸಪ್ಪಾ’ ಅಂತಾ ಹೇಳಿ ಕಳಿಸ್ತು…. +ಅದಕ್ಕೇ ಕರಕೊಂಡು ಬಂದೆ, ಮಾವಾ! …. ” +ಶಂಕರಹೆಗ್ಗಡೆಯ ಕೈಕೂಸು ತೀರಿಕೊಂಡ ಸುದ್ದಿ ಮುಕುಂದಯ್ಯನಿಗೂ ಮುಟ್ಟಿತ್ತು. +ಆದರೆ ಅದು ಅನಿರೀಕ್ಷಿತವಾಗಿರಲಿಲ್ಲ. +ಹಿಂದೆ ಬೆಟ್ಟಳ್ಳಿ ಗಾಡಿಯ ಜೊತೆಯಲ್ಲಿ ದೇವಯ್ಯನೊಡನೆ ಕಲ್ಲೂರು ಗಣಪತಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ, ಗಂಡನೊಡನೆ ನಡೆದುಕೊಂಡು ಬರುತ್ತಿದ್ದ ಸೀತಮ್ಮಹೆಗ್ಗಡಿತಿಯವರ ಕೌಂಕುಳಲ್ಲಿದ್ದ ಆ ಕೂಸನ್ನು ನೋಡಿದಾಗಲೆ ಅವನಿಗೆ ಗೊತ್ತಾಗಿತ್ತು, ಅದು ಈ ಮಳೆಗಾಲ ಕಳೆಯುವುದಿಲ್ಲ ಎಂದು. +ದೊಡ್ಡವರ ಬದುಕಿನ ದೊಡ್ಡ ದೊಡ್ಡ ಘಟನೆಗಳ ನಡುವೆ ಆ ಚಿಕ್ಕ ಜೀವ ದಿವಂಗತವಾದದ್ದು ಯಃಕಶ್ಚಿತವಾಗಿದ್ದ ಅಪತ್ರಿಕಾವಾರ‍್ತೆಯಾಗಿತ್ತು. +ಇತರರಿಗಿರಲಿ, ತಾಯಿ ತಂದೆಗಳಿಗೂ, ಆ ಜೀವ ತನು ಪಡುತ್ತಿದ್ದ ನಿತ್ಯಕ್ಲೇಶದಿಂದ ಪಾರಾದದ್ದು ಒಂದು ಹಿತಸಂಗತಿಯೆ ಆಗಿತ್ತು. +ಆದರೆ ಆ ಶಿಶುಮರಣ ಘಟನೆಯ ನಿಜಮೌಲ್ಯ ಹೃದಯಸ್ಯಂದಿ ಯಾಗಿದ್ದುದು ಈ ಮಕ್ಕಳಿಗೆ ಮಾತ್ರ-ರಾಮುಗೆ ಮತ್ತು ಧರ್ಮುಗೆ! +‘ನಡೆಯುತ್ತಿರುತ್ತವೆ ಹೀಗೆ ಘಟನಾಪರಂಪರೆ. +ಕೆಲವು ಕಣ್ಣಿಗೆ ಬೀಳುತ್ತವೆ; ಕೆಲವಂತೂ ಗಮನಕ್ಕೂ ಬರುವುದಿಲ್ಲ.’ ತನ್ನೊಳಗೆ ತಾನು ಹೇಳಿಕೊಳ್ಳುತ್ತಿದ್ದ ಮುಕುಂದಯ್ಯ, ಮಳೆ ಸಣ್ಣಗೆ ಶುರುವಾಗುತ್ತಿದ್ದುದನ್ನು ಗಮನಿಸಿ, ಕೈಲಿದ್ದ ಕೊಡೆಯನ್ನು ಬಿಚ್ಚುತ್ತಾ, ಮುದ್ದುಮಾಡುವ ದನಿಯಿಂದ ಹೇಳಿದನು. +“ಮಳೆ ಬರಕ್ಕೆ ಸುರುವಾಯ್ತು…. +ಅಳಬೇಡ, ರಾಮು….ಬೇಗ ಮನೀಗೆ ಹೋಗಿ.”ಧರ್ಮು ರಾಮುವನ್ನು ಕೈಹಿಡಿದುಕೊಂಡೆ ಕುಕ್ಕೋಟದಿಂದ ಮನೆಯ ಕಡೆಗೆ ಓಡಿದನು. +ಸ್ವಲ್ಪಹೊತ್ತು ನಿಂತಿದ್ದ ಮದ್ದಳೆಯ ಮತ್ತು ವಾಲಗದ ಸದ್ದು ಮತ್ತೆ ಉಕ್ಕಿ ಕೇಳಿಬರತೊಡಗಿತ್ತು. +ಮುಕುಂದಯ್ಯ ಸಸಿನೆಟ್ಟಿ ಮಾಡಿದ್ದ ಗದ್ದೆಕೋಗಿನಲ್ಲಿ ಅಂಚಿನಿಂದ ಅಂಚಿಗೆ ನಡೆಯುತ್ತಾ ಹೂವಳ್ಳಿಗೆ ಹೊರಟಿದ್ದನು…. +ಹೂವಳ್ಳಿಯ ಮದುವೆ ನಿಂತುದಕ್ಕೂ ಚಿನ್ನಮ್ಮ ಕಾಣೆಯಾದುದಕ್ಕೂ ತನ್ನ ತಮ್ಮನೆ ಕಾರಣ ಎಂದು ಸ್ಪಷ್ಟವಾಗಿ ಗೊತ್ತಾದ ಮೇಲೆ, ಕೋಣೂರು ರಂಗಪ್ಪಗೌಡರು ಮುಕುಂದಯ್ಯ ತಮ್ಮ ಮನೆತನಕ್ಕೇ ಕೆಟ್ಟ ಹೆಸರು ತಂದಿಟ್ಟನೆಂದು ಕುಪಿತರಾದರು. +ಹಾಗೆ ಹೆಣ್ಣನ್ನು ಹಾರಿಸಿಕೊಂಡು ಹೋಗುವುದು ಹೊಲೆಯರು ಗಟ್ಟದ ತಗ್ಗಿನವರು ಮೊದಲಾದ ಕೀಳು ಜನಕ್ಕೆ ಹೇಳಿಸಿದ್ದಲ್ಲದೆ ತಮ್ಮಂಥ ಉತ್ತಮ ಜಾತಿಯ ಶ್ರೇಷ್ಠ ಕುಲದವರಿಗೆ ಅತ್ಯಂತ ಅವಮಾನಕರವಾದ ಹೇಯಕಾರ್ಯ ಎಂಬುದು ಅವರ ಮತವಾಗಿತ್ತು. +ಅದರಲ್ಲಿಯೂ ಹಾಗೆ ಮದುವೆಯಾಗುವ ಮುನ್ನ, ಮತ್ತೊಬ್ಬ ಗಂಡಸಿನೊಡನೆ ಓಡಿಹೋಗುವ ಹೆಂಗಸಂತೂ ಖಂಡಿತವಾಗಿಯೂ ಗರತಿಯಾಗಿರಲು ಯೋಗ್ಯಳೇ ಅಲ್ಲ. + ಅಂಥವಳೊಡನೆ ಸಂಸಾರ ಮಾಡುವುದೂ ಒಂದೇ, ಸೂಳೆ ಕಟ್ಟಿಕೊಳ್ಳುವುದೂ ಒಂದೇ ಎಂದು ಜಿಗುಪ್ಸೆಪಟ್ಟುಕೊಂಡಿತ್ತು ಅವರ ಮನೆತನಸ್ತಿಕೆ! +‘ತಮ್ಮ ಮನೆಗೆ ಆ ಹೆಣ್ಣನ್ನು ತಂದುಕೊಳ್ಳುವುದು ಎಂದಿಗೂ ಸಾಧ್ಯವಿಲ್ಲ’ ಎಂದುಬಿಟ್ಟರು. +‘ತಮ್ಮನೇನಾದರೂ ಹಟಹಿಡಿದು ಆ ಹೆಣ್ಣನ್ನೆ ಮದುವೆಯಾಗಬೇಕು ಎಂದರೆ, ಅವನು ತನ್ನ ಪಾಲು ತೆಗೆದುಕೊಂಡು ಬೇರೆ ಹೋಗಿ, ಆಮೇಲೆ ಏನೂ ಬೇಕಾದರೂ ಮಾಡಿ ಕೊಳ್ಳಲಿ!” +ಆದರೆ ಅವರ ತಾಯಿ, ಕಾಗಿನಹಳ್ಳಿ ಅಮ್ಮ ಎಂದು ಮಾತ್ರವೆ ಎಲ್ಲರಿಗೂ ಗೊತ್ತಿದ್ದ ದಾನಮ್ಮ ಹೆಗ್ಗಡಿತಿಯವರು, ತಮ್ಮ ಕಿರಿಯ ಮಗನ ಪರವಾಗಿ ಹಿರಿಯ ಮಗನೊಡನೆ ನಾನಾ ರೀತಿಯಿಂದ ವಾದಿಸಿ, ಮನೆ ಪಾಲಾಗುವುದನ್ನೂ ಮುಕುಂದಯ್ಯ ಬೇರೆ ಹೋಗುವುದನ್ನೂ ವಿರೋಧಿಸಿದ್ದರು. +ಐಗಳು ಅನಂತಯ್ಯ ತಮ್ಮ ಮುದಿತಾಯನ್ನು ನೋಡಿಕೊಂಡು ಬರಲು ಗಟ್ಟದ ಕೆಳಗೆ ಹೋದವರು ಹಿಂದಿರುಗಿ ಬರುವವರೆಗೂ ಕೈಗೊಳ್ಳಬೇಕಾದ ಕಾರ್ಯಕ್ರಮಗಳನ್ನು ತಡೆಹಿಡಿಯಬೇಕೆಂದು ಸಂಬಂಧಪಟ್ಟ ಎಲ್ಲರ ನಡುವೆಯೂ ಒಂದು ಒಪ್ಪಂದವಾಯಿತು. +ಏಕೆಂದರೆ, ಐಗಳು ಕೋಣೂರು ಮನೆಯ ಉಪ್ಪು ಅನ್ನ ತಿಂದು ಸಂಬಳ ತೆಗೆದುಕೊಳ್ಳುವ ಒಬ್ಬ ನೌಕರನ ಸ್ಥಾನದಲ್ಲಿದ್ದರೂ, ತಮ್ಮ ವಿರ್ಶವಾಸಪೂರ್ವಕವಾದ ನಡತೆ, ನಿಷ್ಪಕ್ಷಪಾತ ವರ್ತನೆ, ಸರ್ವರ ಹಿತಚಿಂತನೆ, ಉಪಕಾರ ಬುದ್ಧಿ, ತಮ್ಮನ್ನೆ ನಿರ್ಲಕ್ಷಿಸಿಕೊಳ್ಳುವಷ್ಟರಮಟ್ಟಿನ ಪರಹಿತಾಸಕ್ತಿ, ಎಲ್ಲಕ್ಕಿಂತಲೂ ಹೆಚ್ಚಾಗಿ, ಭಾರತ ರಾಮಾಯಣ ಭಾಗವತಗಳನ್ನು ರಾಗವಾಗಿ ಓದಿ ಹೇಳಿ, ಮನರಂಜನೆಯ ವಿಧಾನದಿಂದಲೆ, ಧರ‍್ಮದಲ್ಲಿ ಪೂಜ್ಯಬುದ್ಧಿಯುಂತಾಗುವಂತೆ ಹೃದಯವನ್ನರಳಿಸಿ ಧ್ಯೇಯದತ್ತ ಆಕರ್ಷಿಸುವ ಒಂದು ಗುರೂಪದೇಶ ಸಾಮರ್ಥ್ಯ ಇವುಗಳಿಂದ ಅವರು ಮನೆಯವರೆಲ್ಲರ ಪ್ರೀತಿ, ಗೌರವ, ನಂಬುಗೆಗಳಿಗೆ ಪಾತ್ರರಾಗಿದ್ದರು. +ಆದರೆ ಐಗಳು ಕೋಣೂರಿಗೆ ಹಿಂತಿರುಗಿ ಬರುವ ತನಕ ಹೂವಳ್ಳಿಯ ಗದ್ದೆ ತೋಟಗಳ ಬೇಸಾಯ ತಡೆದಿರುವುದಕ್ಕಾಗುತ್ತದೆಯೇ? +ಆಗಲಿ ಮಳೆಗಾಲ ಪ್ರಾರಂಭವಾಗಿ ಮುಂಬರಿದಿತ್ತು. +ಇತರರ ಎಲ್ಲ ಗದ್ದೆಕೋಗುಗಳೂ ಹೊಸದಾಗಿ ನಟ್ಟಿ ಮಾಡಿದ ಬಿಳಿಚುಹಸುರು ಸಸಿಗಳಿಂದ ಶೋಭಿಸತೊಡಗಿದ್ದುವು; +ನಟ್ಟಿ ಸ್ವಲ್ಪ ತಡವಾದ ಗದ್ದೆಗಳಲ್ಲಿಯೂ ಆ ಕೆಲಸದಲ್ಲಿ ತೊಡಗಿದ್ದ ಕಂಬಳಿಕೊಪ್ಪೆಗಳೂ ಗೊರಬುಗಳೂ ಸಶಬ್ದ ಸಂಭ್ರಮದಿಂದ ಸಚಲವಾಗಿದ್ದುವು. +ಮೊದಲೇ ಸಾಲದ ದವಡೆಯಲ್ಲಿದ್ದ ಹೂವಳ್ಳಿಯ ಆಸ್ತಿ, ಈ ವರ್ಷದ ಗದ್ದೆ ತೋಟಗಳ ಬೇಸಾಯವೂ ನಿಂತು ಹೋಗುವ ಪಕ್ಷದಲ್ಲಿ, ಮುಂದಿನ ವರ್ಷ ಏನೂ ಉಳಿಯದೆ ಕರಗುವುದರಲ್ಲಿ ಸಂದೇಹವಿರಲಿಲ್ಲ. +ಕಡೆಗೆ ಮನೆಯವರಿಗೆ ಉಣ್ಣುವುದಕ್ಕಾದರೂ ಒಂದಷ್ಟು ಬತ್ತ ಬೆಳೆಯದಿದ್ದರೆ ಏನು ಗತಿ? +ಚಿನ್ನಮ್ಮ ನಾಗಕ್ಕ ಇಬ್ಬರೂ ಕೋಲುಗರಟ ಹಿಡಿಯಬೇಕಾಗುತ್ತದೆ, ಇಲ್ಲವೆ ಗಟ್ಟದ ತಗ್ಗಿನವರಂತೆ ಯಾರಾದರೂ ಮನೆಯ ಆಳಾಗಿ ಕೂಲಿ ಮಾಡಿ ಅಜ್ಜಿಗೂ ತಮಗೂ ಹೊಟ್ಟೆಬಟ್ಟೆಗೆ ಬೇಕಾಗುವಷ್ಟನ್ನಾದರೂ ಸಂಪಾದಿಸಬೇಕಾಗುತ್ತದೆ. +ಒಗತನದಲ್ಲಿ ಗಟ್ಟಿಗಿತ್ತಿಯಾಗಿದ್ದ ನಾಗಕ್ಕ ಇದನ್ನೆಲ್ಲ ಅಜ್ಜಿಯೊಡನೆ ಆಲೋಚಿಸಿ, ತಾನೇ ಹೊಣೆ ಹೊರಲು ಗಟ್ಟಿ ಮನಸ್ಸು ಮಾಡಿದಳು. +ಸುಬ್ಬಿ ಬೈರ ಮೊದಲಾದ ಹೂಬಳ್ಳಿಯ ಜೀತದಾಳುಗಳ ಜೊತೆಗೆ ಹಳೆಮನೆ ಕೋಣೂರಿನಂತಹ ಹತ್ತಿರದ ಮನೆಗಳಲ್ಲಿರುವ ಕೂಲಿಯಾಳುಗಳನ್ನೂ ಸಹಾಯಕ್ಕೆ ಕರೆದುಕೊಳ್ಳುವ ಹಂಚಿಕೆ ಮಾಡಿದ್ದಳು. +ಮಲೆಯ ನೆತ್ತಿಯಿಂದ ಮನೆಗೆ ಹಿಂದಿರುಗಿದ್ದ ಮದುಮಗಳು ಚಿನ್ಮಮ್ನ ಸ್ವಭಾವದಲ್ಲಿ ಕ್ರಾಂತಿಸ್ವರೂಪದ ಪರಿವರ್ತನೆಯಾಗಿತ್ತು. +ಮಾತುಕತೆ ನಡತೆಗಳಲ್ಲಿ ಹಿಂದಿನ ಆಟಗುಳಿ ಹುಡುಗಿ ಕಾಣುತ್ತಿರಲಿಲ್ಲ. +ಅಜ್ಜಿಯ ಸೇವಾ ಶುಶ್ರೂಷೆಗಳಲ್ಲಿ ಹಿಂದೆ ಇದ್ದಂತೆಯೆ ಪ್ರೀತ್ಯಾಸಕ್ತಿ ತೋರುತ್ತಿದ್ದಿತಾದರೂ ಅಂದಿನ ಮನೋಲಘುತ್ವ ಇರಲಿಲ್ಲ. +ನಾಗಕ್ಕನ ಮೇಲಣ ಅಕ್ಕರೆ ಮೊದಲಿಗಿಂತಲೂ ಕಡಿಮೆಯಾಗಿರಲಿಲ್ಲ. +ಆದರೆ ವ್ಯವಹಾರದಲ್ಲಿ ಎದ್ದು ಕಾಣತೊಡಗಿತ್ತು, ಚಿಂತಾ ಮಗ್ನತೆ ಮತ್ತು ಗಾಂಭೀರ್ಯ. +ತನ್ನಿಂದಾಗಿ ತಮ್ಮ ಮನೆಗೂ ಮನೆತನಕ್ಕೂ ಒದಗಿದ ಆರ್ಥಿಕ, ಸಮಾಜಿಕ ಮತ್ತು ಲೌಕಿಕವಾದ ಪರಿಸ್ಥಿತಿ ಅವಳಿಗೆ ಪೂರ್ಣವಾಗಿ ಅರ್ಥವಾಗಿತ್ತು. +ತನ್ನ ಸ್ವಂತ ಶೀಲದ ವಿಚಾರವಾಗಿಯೂ ಬಂಧು ಬಾಂಧವರಲ್ಲಿ ಮತ್ತು ಜನಸಾಮಾನ್ಯರಲ್ಲಿ ಎಂತಹ ಅನುದಾರಭಾವನೆಗಳು ಪ್ರಚಲಿತವಾಗಿದ್ದುವೆಂಬುದೂ ಅವಳಿಗೆ ತಿಳಿದಿತ್ತು. +ತನ್ನ ವಿಷಯಕವಾದ ಅಪನಿಂದೆಗೆ ಅವಳು ನೊಂದುಕೊಂಡಿದ್ದುದಕ್ಕಿಂತಲೂ ಹೆಚ್ಚಾಗಿ ತನ್ನೊಡನೆ ಹೇಗೆ ಬೇಕಾದರೂ ಹಾಗೆ ವರ್ತಿಸಬಹುದಾಗಿದ್ದ ಸದವಕಾಶದಲ್ಲಿಯೂ ಅತ್ಯಂತ ಸಭ್ಯ ಸಹಜವಾದ ಲಜ್ಜಾಮರ್ಯಾದೆಗಳಿಂದ ದೂರದೂರವಾಗಿದ್ದುಕೊಂಡೆ ನಡೆದುಕೊಂಡಿದ್ದ ತನ್ನ ಮುಕುಂದಬಾವನ ಮೇಲೆ ಬಂದಿದ್ದ ಅಪವಾದಕ್ಕೆ ಅವಳು ಕುಗ್ಗಿಹೋಗಿದ್ದಳು. +ಕೋಣೂರು ಮನೆಯಲ್ಲಿ ಅಣ್ಣ ತಮ್ಮಂದಿರೊಳಗೆ ನಡೆಯುತ್ತಿದ್ದ ಹಿಸ್ಸೆಯ ಗಲಿಬಿಲಿ, ಸಿಂಬಾವಿ ಭರಮೈಹೆಗ್ಗಡೆಯವರು ಹೇಳುತ್ತಿದ್ದರೆಂದು ಅವರಿವರು ಹೇಳುತ್ತಿದ್ದ ಪ್ರತೀಕಾರದ ಸುದ್ದಿ, ಸಿಂಬಾವಿ ಮತ್ತು ಹಳೆಮನೆಯ ಲಗ್ನಗಳು ಮಿಂಚಿನ ವೇಗದಲ್ಲಿ ನಡೆದಿದ್ದ ರೀತಿ ಮತ್ತು ಅದರಿಂದ ತನಗೂ ಮುಕುಂದ ಬಾವನಿಗೂ ಸಂಭವಿಸಬಹುದಾದ ಪರಿಣಾಮ ಇವುಗಳನ್ನು ನೆನೆದಾಗಲೆಲ್ಲ ಚಿನ್ನಮ್ಮನ ಹೃದಯದಲ್ಲಿ ಏನೋ ನಿರಕಾರವಾದ ದಿಗಿಲು ಸಂಚರಿಸುತ್ತಿತ್ತು. +ಮುಕುಂದಯ್ಯ ಹೂವಳ್ಳಿಗೆ ಮತ್ತೆ ಮತ್ತೆ ಬಂದು ವಿಚಾರಿಸಿಕೊಳ್ಳುತ್ತಿದ್ದುದು ಚಿನ್ನಮ್ಮನಿಗೆ ತುಂಬ ಹಿಗ್ಗಿನ ವಿಷಯವಾಗಿದ್ದರೂ ಯಾರು ಏನು ಅಂದುಕೊಳ್ಳುತ್ತಾರೊ? +ಮತ್ತೆ ಏನನ್ನು ಹುಟ್ಟಿಸಿ ಹೇಳುತ್ತಾರೊ?ಎಂದು ಅವಳಿಗೆ ಅಂಜಿಕೆಯಾಗುತ್ತಿತ್ತು. +ಅವಳ ಮನಸ್ಸಿನ ಫಜೀತಿಯನ್ನರಿತು ಮುಕುಂದಯ್ಯ ಎಲ್ಲಿಯಾದರೂ ಒಂದೆರಡು ದಿನ ಹೂವಳ್ಳಿಗೆ ಬರದೆ ನಿಂತು ಬಿಟ್ಟರಂತೂ ಚಿನ್ನಮ್ಮನ ಅಂಜಿಕೆ ವಿಷಮಸ್ಥಿತಿಗೇರುತ್ತಿತ್ತು, ಬಾವ ತನ್ನನ್ನೆಲ್ಲಿ ಮರೆತುಬಿಡುತ್ತಾರೊ ಎಂದು! +ಮುಕುಂದಯ್ಯ ಗಂಡಸು ಅವನ ಪೂರ್ವಚರಿತ್ರೆ ಏನೆ ಇರಲಿ ಅದನ್ನು ಸಮಾಜ ಲೆಕ್ಕಿಸುವುದಿಲ್ಲ; + ಯಾರು ಬೇಕಾದರೂ ಹೆಣ್ಣು ಕೊಡುತ್ತಾರೆ. +ಆದರೆ ತಾನು ಹೆಣ್ಣು; +ತನ್ನನ್ನು ಮುಕುಂದಯ್ಯ ಕೈಬಿಡುವ ಪಕ್ಷದಲ್ಲಿ ಲೋಕವೆ ಕೈ ಬಿಟ್ಟಂತೆ; +ತನಗಿನ್ನು ಬಾಳ್ವೆ ಎಂಬುದಿಲ್ಲ- ಈ ಭಾವನೆ ಅವಳಲ್ಲಿ ಆಲೋಚನಾ ಸ್ಪಷ್ಟವಾಗಿತ್ತೆಂದಲ್ಲ; + ಅವಳ ಭೀತಿಯ ಅಂತರಾಳದಲ್ಲಿ ಅದಕ್ಕೆ ಆಧಾರಭೂತವಾಗಿತ್ತು! +ಒಂದು ಹಗಲು ಮಳೆ ಹೊಳವಾಗಿದ್ದಾಗ ಚಿನ್ನಮ್ಮ ಹೊರ ಅಂಗಳದ ಬಯಲಿನಲ್ಲಿ ಸುಬ್ಬಿಯೊಡನೆ ಯಾವುದೊ ಕೆಲಸದ ವಿಚಾರವಾಗಿ ಸಲಹೆ ಕೊಡುತ್ತಾ ನಿಂತಿದ್ದಾಗ ಮುಕುಂದಯ್ಯ ಎಂದಿನಂತೆ ಕೋಣೂರಿನಿಂದ ಹೂವಳ್ಳಿಗೆ ಬಂದನು. +ಆ ಅಂಗಳದ ಬಯಲು ಬೆಳಕಿನಲ್ಲಿ ಚಿನ್ನಮ್ಮನನ್ನು ನೋಡಿ ಅವನಿಗೆ ಗಾಬರಿಯಾಯಿತು. +ಹುಲಿಕಲ್ಲಿನ ನೆತ್ತಿಯಲ್ಲಿ ತಾನು ಕಂಡಿದ್ದ ಸುಪುಷ್ಪ, ಸುದೃಢ, ಸುಂದರ ಕಾಯದ ಹುಡುಗಿ ತುಂಬ ಕೃಶಳಾಗಿದ್ದಂತೆ ತೋರಿದಳು. +ಉಟ್ಟಿದ್ದ ಸೀರೆಯ ಮಾಲಿನ್ಯದಂತೆಯೆ ಮುಖದ ಕಳೆಯೂ ಕೆಟ್ಟಿತ್ತು. +ಅವಳನ್ನು ಇತ್ತೀಚೆಗೆ ಯಾವಾಗಲೂ ಮನೆಯ ಒಳಗಣ ಮಬ್ಬು ಬೆಳಕಿನಲ್ಲಿಯೆ ನೋಡುತ್ತಿದ್ದುದರಿಂದ ಅವಳಲ್ಲಿ ಉಂತಾಗಿದ್ದ ಈ ಶಾರೀರಕ ಪರಿವರ್ತನೆ ಮುಕುಂದಯ್ಯನಿಗೆ ದೃಗ್ಗೋಚರವಾಗಲು ಅವಕಾಶ ದೊರಕಿರಲಿಲ್ಲ. +ಈಗ ಅದನ್ನು ಕಂಡು ಅವನಿಗೆ ದಿಗಿಲಾಯಿತು. +ಯಾವುದೊ ಕೊರಗು ಮನಸ್ಸನ್ನು ಕೊರೆಯುತ್ತಿರುವುದರಿಂದಲೆ ಅವಳು ಹಾಗಾಗಿರಬೇಕು ಎಂದು ನಿಶ್ಚಯಿಸಿದ ಮುಕುಂದಯ್ಯ ನೇರವಾಗಿ ಅವಳನ್ನು ಸಮೀಪಿಸಿದನು. +ಅವಳು ಅವನನ್ನು ಕಂಡು ಮುಗುಳುನಗೆಯಿಂದ ಸ್ವಾಗತಿಸಿದ್ದರೂ ಅವನು ಹತ್ತಿರ ಬಂದಾಗ ತಲೆಬಾಗಿ ನಿಂತಳು. +ಅವನನ್ನು ತಲೆಯೆತ್ತಿ ನೋಡುವ ಆಶೆಯಿದ್ದರೂ ಅವಳಿಗೆ ಹಾಗೆ ಮಾಡಲಾಗಲಿಲ್ಲ. +ಅದನ್ನರಿತ ಸುಬ್ಬಿ, ಚಿನ್ನಕ್ಕ ತನಗೆ ಹೇಳಿದ್ದ ಕೆಲಸಕ್ಕೆ ಹೋಗುವಂತೆ, ಬೇಗಬೇಗನೆ ಅಲ್ಲಿಂದ ಹೋದಳು. +“ಯಾಕೆ, ಚಿನ್ನೀ, ಹುಷಾರಿಲ್ಲೇನು? +ಬಹಳ ಇಳಿದು ಹೋಗಿದ್ದೀಯಲ್ಲಾ!” ಪಿಸುಮಾತಿನ ಸಣ್ಣದನಿಯಲ್ಲಿತ್ತು ಆ ಪ್ರಶ್ನೆ. +ಮುಕುಂದಯ್ಯನ ಅಕ್ಕರೆಯ ಪ್ರಶ್ನೆಗೆ ಚಿನ್ನಮ್ಮ ಉತ್ತರ ಹೇಳಲೂ ಇಲ್ಲ; + ತಲೆಯೆತ್ತಲೂ ಇಲ್ಲ. +ಆದರೆ ಅವಳು ಜೋರಾಗಿ ಉಸಿರೆಳೆದುಕೊಳ್ಳುತ್ತಿದ್ದುದೂ ಗೊಬ್ಬೆ ಸೆರಗು ಬಿಗಿಯಾಗಿ ಕಟ್ಟಿದ್ದ ಅವಳ ಎದೆ ಏದುತ್ತಿರುವಂತೆ ಮೇಲಕ್ಕೂ ಕೆಳಕ್ಕೂ ಉಬ್ಬಿ ಇಳಿಯುತ್ತಿದ್ದುದೂ ಅವಳು ಪ್ರಬಲ ಭಾವವಶಳಾದುದನ್ನು ಘೋಷಿಸುವಂತಿತ್ತು. +ಮುಕುಂದಯ್ಯ ನೋಡುತ್ತಿದ್ದ ಹಾಗೆಯೆ ತಲೆ ಬಾಗಿದ್ದ ಅವಳ ಕಣ್ಣುಗಳಿಂದ ಹನಿಗಳು ಬಳಬಳನೆ ನೇರವಾಗಿ ನೆಲಕ್ಕೇ ಬಿದ್ದುವು! +ತಾನೂ ಭಾವವಶನಾಗುತ್ತಿರುವಂತೆ ಅನುಭವವಾಯಿತು ಮುಕುಂದಯ್ಯಗೆ. +ಸಮಭಾವ ಮಹಿಮೆಯಿಂದ ಐಕ್ಯಗೊಂಡ ಆ ಪ್ರಣಯಿ ಹೃದಯಗಳು ತಮ್ಮ ಅಂತಃಕರಣದ ಆಲೋಚನೆಗಳನ್ನೂ ಪರಸ್ಪರ ಅರ್ಥಮಾಡಿಕೊಂಡುವೊ ಏನೋ? +“ಚಿನ್ನೀ, ಒಳಗೆ ಹೋಗಾನ ಬಾ.” ಗದ್ಗದವಾಗುತ್ತಿದ್ದ ಕಂಠದಿಂದಲೆ ಹೇಳಿದನು ಮುಕುಂದಯ್ಯ “ನಿನ್ನೊಬ್ಬಳ ಹತ್ತಿರಾನೆ ಮಾತಾಡಬೇಕಾಗಿದೆ….” +ಸರಸರನೆ ಮನೆಯೊಳಗೆ ನಡೆದ ಮುಕುಂದಬಾವನನ್ನು ಸೂತ್ರಗೊಂಬೆಯಂತೆ ಅನುಸರಿಸಿದಳು ಚಿನ್ನಮ್ಮ. +“ಬಾವ ಏನೋ ಮಾತಾಡಬೇಕಂತೆ ನನ್ನ ಹತ್ರ.” ತನಗೆ ದಿರಾದ ನಾಗಕ್ಕಗೆ ಹೇಳಿ, ಚಿನ್ನಮ್ಮ ಕೋಣೆಯ ಬಾಗಿಲು ತೆರೆದಳು; +ತನ್ನ ಹಿಂದೆ ನಿಂತಿದ್ದ ಮುಕುಂದಯ್ಯನನ್ನು ಕಣ್ಣಿಂದಲೆ ಕರೆಯುವಂತೆ ನೋಡಿ, ಒಳಕ್ಕೆ ದಾಟಿದಳು. +ನಾಗಕ್ಕಗೂ ಅದನ್ನು ಕೇಳಿ ತುಂಬ ಸಂತೋಷವಾಯಿತು; +ಮನಸ್ಸಿಗೆ ಸಮಾಧಾನವಾಯಿತು. +ಯಾವುದೋ ಚಿಂತೆಯಿಂದಲೋ?ಅಭ್ಯಾಸವಿಲ್ಲದ ಸಾಹಸ ಪ್ರಯಾಣವನ್ನು ಕೈಕೊಂಡ ಅತಿ ಅಯಾಸದ ಕಾರಣವಾಗಿಯೋ? +ಅಥವಾ ಆ ಉದ್ಯಮದಲ್ಲಿಯೆ ಆಕೆ ಅನುಭವಿಸಿದ್ದ ಹೃದಯಕ್ಷೋಭೆ ಮತ್ತು ಚಿತ್ತೋದ್ವೇಗಗಳ ದೆಸೆಯಿಂದಲೋ?ಚಿನ್ನಮ್ಮ, ಅವಳ ತಂದೆಯ ಮರಣಾನಂತರ, ಹುಲಿಕಲ್ಲು ನೆತ್ತಿಗೆ ಏರಿದ ಮರುದಿನವೆ ಮತ್ತೆ ಇಳಿದು ಮನೆಗೆ ಮರಳಿದ ಮೇಲೆ, ದಿನ ಕ್ರಮೇಣ ಇಳಿದುಹೋಗುತ್ತಿದ್ದುದನ್ನೂ ಹೆಚ್ಚು ಹೆಚ್ಚು ಮೌನಿಯಾಗುತ್ತಿದ್ದುದನ್ನೂ ತಾನೊಬ್ಬಳೆ ಕುಳಿತು ಬಹಳ ಹೊತ್ತು ಧೇನಿಸುತ್ತಿದ್ದುನ್ನೂ ಗಮನಿಸಿ ನಾಗಕ್ಕ ಸಂಕಟಪಟ್ಟುಕೊಂಡಿದ್ದಳು. +ಅದಕ್ಕೆ ಕಾರಣವನ್ನು ತಿಳಿಯಲೂ ಅದನ್ನು ಶಮನಗೊಳಿಸಲೂ ಅವಳು ಮಾಡಿದ್ದ ಪ್ರಯತ್ನ ಫಲಕಾರಿಯಾಗಲಿಲ್ಲ. +ಅದನ್ನು ಕುರಿತು ಮುಕುಂದಯ್ಯ ನೊಡನೆಯೂ ಇಂಗಿತವಾಗಿ ಪ್ರಸ್ತಾಪಿಸಿ, ತನ್ನಂತಹ ಹೆಂಗಸು ಮರ್ಯಾದೆಯ ಮಟ್ಟದಲ್ಲಿ ಮಾನವಾಗಿ ಸೂಚಿಸಬಹುದಾದಷ್ಟನ್ನು ಪರಿಹಾರೋಪಾಯವಾಗಿ ಸೂಚಿಸಿದ್ದಳು. +ಆದರೆ ಮುಕುಂದಯ್ಯನ ಸಂಪ್ರದಾಯ ನೀತಿಪ್ರಜ್ಞೆ ಅದನ್ನು ಒಪ್ಪಿಕೊಳ್ಳಲಿಲ್ಲವೋ? +ಅಥವಾ ಅವನ ಗ್ರಾಮೀಣ ಸರಳಸ್ವಭಾವದ ಯೌವನಕ್ಕೆ ಅದು ಅರ್ಥವಾಗಲಿಲ್ಲವೋ? +ಅಥವಾ ನಿರಾಧಾರವೂ ಅನ್ಯಾಯವೂ ಆಗಿದ್ದ, ತಮ್ಮಿಬ್ಬರ ಸಂಬಂಧ ವಿಚಾರವಾದ, ಕುತ್ಸಿತ ಜನಾಪವಾದಕ್ಕೆ ತಮ್ಮ ಶುಚಿ ವರ್ತನೆಯನ್ನೆ ತಿರಸ್ಕಾರದ ಸಮ್ಮಾರ್ಜನಿಯನ್ನಾಗಿ ಪ್ರಯೋಗಿಸಿ ತೋರಿಸಬೇಕೆಂಬ ಅವನ ಛಲಕ್ಕೆ ಹಿಡಿಸಲಿಲ್ಲವೋ? +ಅಂತೂ ಅವಳ ಸೂಚನೆ ಅದುವರೆಗೂ ಸಫಲವಾಗಿರಲಿಲ್ಲ. +ಈಗ ಚಿನ್ನಮ್ಮನೊಡನೆ ಮುಕುಂದಯ್ಯ ಏಕಾಂತವಾಗಿ ಮಾತನಾಡುವ ಸಂದರ್ಭದಲ್ಲಿಯಾದರೂ ತನ್ನ ಆ ಮನೋರಥ ಕೈಗೂಡಬಹುದೆಂದು ನಾಗಕ್ಕನ ಹೃದಯ ಹರ್ಷಿತವಾಯಿತು. +ಆದ್ದರಿಂದಲೆ ಚಿನ್ನಮ್ಮನನ್ನು ಹಿಂಬಾಲಿಸಿದ್ದ ಮುಕುಂದಯ್ಯನ ಬೆನ್ನುಮರೆಯಾಗಿ, ಕೋಣೆಯ ಬಾಗಿಲು ಸಂಪೂರ್ಣವಾಗಿ ಮುಚ್ಚಿಕೊಂಡುದನ್ನು ಕಂಡು ಅವಳು, ಎದೆಸವಿಗೆ ಮಂದಸ್ಮಿತೆಯಾಗಿ ಅಡುಗೆಮನೆಗೆ ಹೋದಳು, ಏನಾದರೂ ಸಿಹಿ ತಯಾರಿಸಬೇಕೆಂದು ಸಂಕಲ್ಪಿಸಿ. +ನಾಗಕ್ಕನ ಮನೋರಥವೇನೋ ಕೈಗೂಡಿತು; +ಆದರೆ ಅವಳು ಊಹಿಸಿದ ಅಥವಾ ಅಪೇಕ್ಷಿಸಿದ ರೀತಿಯಿಂದ ಅದು ನಡೆಯಲಿಲ್ಲ. +ಮುಕುಂದಯ್ಯ ಮಂಚದ ಮೇಲೆ ಅವನ ರೂಢಿಯಂತೆ ತನಗೆ ದೂರವಾಗಿಯೆ ಕುಳಿತುಕೊಳ್ಳುತ್ತಾನೆಂದು ನಿರೀಕ್ಷಿಸಿ ಚಿನ್ನಮ್ಮ ಅದರ ತಲೆದಿಸಿ ಪಕ್ಕದಲ್ಲಿದ್ದ ಪಿಟಾರಿಯ ಬಳಿ ನಿಂತಳು. +ಆದರೆ, ಎಂದಿನಂತಲ್ಲದೆ ಇಂದು, ಅವನು ಅವಳ ಬಳಿಗೇ ಬಂದು ಪಿಟಾರಿಯ ಮೇಲೆಯೇ ಕುಳಿತುಕೊಂಡುದನ್ನು ಕಂಡು, ಅವಳಿಗೆ ಅಚ್ಚರಿಯೊಡನೆ ಆನಂದವೂ ಆಯಿತು. +ಆದರೂ ಸ್ವಾಭಾವಿಕ ಸಂಕೋಚದಿಂದ ದೂರ ಸರಿಯಲು ಪ್ರಯತ್ನಿಸಿದಾಗ ಅವಳಿಗೆ ಗೊತ್ತಾಯಿತು, ಹಾಗೆ ಸರಿಯಲು ಅಲ್ಲಿ ಜಾಗವೇ ಇರಲಿಲ್ಲ. +“ಎಲ್ಲಿಗೆ ಹೋಗ್ತಿಯ, ಚಿನ್ನಿ, ಇಲ್ಲೇ ಬಾ, ಕೂತುಕೋ.” ಮುಕುಂದಯ್ಯ ಪಿಟಾರಿಯ ಮೇಲೆ ತನ್ನ ಪಕ್ಕದಲ್ಲಿದ್ದ ಸ್ಥಳಕ್ಕೆ ಆಹ್ವಾನಿಸಿದನು. +ಚಿನ್ನಮ್ಮ ಬಾವನ ಆ ಆಹ್ವಾನಕ್ಕೆ ಅಪೂರ್ವ ಲಜ್ಜೆಯನ್ನು ಅನುಭವಿಸುತ್ತಾ, ನಿಂತಲ್ಲಿಂದ ಕದಲಲಿಲ್ಲ. +ಅವಳಿಗೆ ಅದು ಸಂತೋಷಪ್ರದವಾಗಿದ್ದರೂ ನಂಬಲಾರದಷ್ಟು ವಿನೂತನವಾಗಿ ತೋರಿತ್ತು. +“ನೀನು ಯಾಕೆ ಇಷ್ಟು ಇಳಿದುಹೋಗಿದ್ದೀಯಲ್ಲಾ? +ಏನೋ ಕೊರಗು ಹಚ್ಚಿಕೊಂಡಿದ್ದೀಯ ಮನಸ್ಸಿಗೆ!” ಮುಕುಂದಯ್ಯ ಪ್ರಾರಂಭಿಸಿದನು. +ಅವಳನ್ನು ತನ್ನ ಪಕ್ಕದಲ್ಲಿ ಕೂರಲು ಬಲಾತ್ಕರಿಸಲಿಲ್ಲ. +ಮೊದಮೊದಲು ಚಿನ್ನಮ್ಮನ ಬಾಯಿಂದ ಮಾತೇ ಹೊರಡಲಿಲ್ಲ; +ಬದಲಾಗಿ ಕಣ್ಣಿರುಗರೆಯುತ್ತಾ ಬಿಕ್ಕಿ ಬಿಕ್ಕಿ ಅಳತೊಡಗಿದಳು. +ಆ ಕೋಣೆಯಲ್ಲಿ ಅಷ್ಟೇನೂ ಬೆಳಕಿರಲಿಲ್ಲ. +ಇದ್ದ ಒಂದೇ ಒಂದು ಸಣ್ಣ ಬೆಳಕಂಡಿಯಿಂದ ಬರುತ್ತಿದ್ದ ಬೆಳಕೂ ಒಳಗೆ ಪ್ರವೇಶಿಸಿದೊಡನೆ ಅರಗತ್ತಲೆಯಾಗಿತ್ತು! +ಆ ಮಬ್ಬಿನಲ್ಲಿಯೇ ಚಿನ್ನಮ್ಮನ ಮುಖದ ಮೇಲೆ ಮುದ್ರಿತವಾಗಿದ್ದ ದುಃಖವನ್ನು ಕಂಡು, ಹೃದಯ ಹಿಂಡಿದಂತಾಗಿ, ಮುಕುಂದಯ್ಯ ಪಿಟಾರಿಯಿಂದೆದ್ದನು. +ಚಿನ್ನಮ್ಮನನ್ನು ಬಾಚಿ ತಬ್ಬಿಕೊಂಡು, ಮಂಚದ ಮೇಲೆ ಕುಳಿತು, ಒಂದು ಮಗುವನ್ನೆಂತೊ ಅಂತೆ ಅವಳನ್ನು ತನ್ನ ತೊಡೆಯ ಮೇಲೆಯೆ ಕೂರಿಸಿಕೊಂಡನು. +ಪ್ರತಿಭಟನಾ ಶಕ್ತಿಯನ್ನೆಲ್ಲ ಸಂಪೂರ್ಣವಾಗಿ ಕಳೆದುಕೊಂಡವಳಂತೆ ಚಿನ್ನಮ್ಮ ತನ್ನ ಇನಿಯನ ಬಲಿಷ್ಠತೆಗೆ ಪೂರ್ಣ ಶರಣಾಗತಳಾಗಿ ಮುಕುಂದಯ್ಯನ ಗಾತ್ರವನ್ನು ತನ್ನೆರಡು ತೋಳುಗಳಿಂದಲೂ ತಬ್ಬಿ ಸೋತಳು. +ಮುಕುಂದಯ್ಯ ಅವಳ ಅಶ್ರು ಆರ್ದ್ರ ಬೆಚ್ಚನೆಯ ಮೃದು ಕೆನ್ನೆಗಳಿಗೆ ತನ್ನ ತುಟಿಗಳನ್ನೊತ್ತಿ ಒತ್ತಿ ಸಂತೈಸಿದನು. +ಮತ್ತೆ ಮತ್ತೆ ಅವಳ ಬೆಣ್ಣೆಮಿದು ಚೆಂದುಟಿಗಳಿಗೆ ತುಟಿಯೊತ್ತಿ ಒತ್ತಿ ಮುಂಡಾಡಿದನು. +ಆ ಹೊಚ್ಚ ಹೊಸ ಅನುಭವದ ಸುಖಪ್ರಲಯಕ್ಕೆ ಸಿಕ್ಕಿ ಚಿನ್ನಮ್ಮನ ಚೇತನ ರಸಮೂರ್ಛೆಗದ್ದಿ ಮೈಮರೆಯಿತು. +‘ನನ್ನ ಮುಕುಂದ ಭಾವ ಇಷ್ಟು ಒಳ್ಳೆಯವರೆಂದು ಇದಕ್ಕೆ ಮೊದಲು ನನಗೆಂದೂ ಗೊತ್ತಾಗಿರಲಿಲ್ಲ; +ಕನಸಿನಲ್ಲಿಯೂ ಊಹಿಸಲು ಸಾಧ್ಯವಿರಲಿಲ್ಲ!’ ಎಂಬುದು ತನಗಾದ ಸುಖಕ್ಕೆ ಆ ನಿರ್ವಚನೀಯ ಅನುಭವಕ್ಕೆ ಅವಳ ಗ್ರಾಮ್ಯ ಭಾಷಾಪ್ರಜ್ಞೆ ಮಾಡಿದ್ದ ಮೂಕ ವ್ಯಾಖ್ಯಾನವಾಗಿತ್ತು! +ಚಿನ್ನಮ್ಮಗೆ ಸರ್ವ ಸಂದೇಹಗಳೂ ಸರ್ವ ಸಂಕಟಗಳು ಪರಿಹಾರವಾಗಿ ಹೃದಯ ಹಗುರವಾಯಿತು. +ತನ್ನ ಮುಕುಂದಬಾವ ತನ್ನನ್ನು ಎಂದಿಗೂ ಯಾವ ಕಾರಣಕ್ಕೂ ಕೈಬಿಡುವುದಿಲ್ಲ ಎಂಬ ಭಾವ ಅವಳ ಹೃದಯದಲ್ಲಿ ಬುಡಭದ್ರವಾಗಿ, ಮುನ್ನಿನ ಧೈರ್ಯ ನೆಲೆಸಿತು. +ಎಷ್ಟು ಉಪದೇಶಿಸಿದ್ದರೂ ಎಷ್ಟು ವಾದಿಸಿದ್ದರೂ ಆಗದಿದ್ದ ಕೆಲಸ ನಡೆದು ಹೋಗಿತ್ತು, ಆ ಚುಂಬನಾಲಿಂಗನ ಮಹಿಮೆಯಿಂದ! +ಅವರಿಬ್ಬರೂ ಒಬ್ಬರನ್ನೊಬ್ಬರು ಬಿಗಿದಪ್ಪಿಕೊಂಡು ಹಾಗೆಯೆ ಬಹಳ ಹೊತ್ತು ಕುಳಿತು ಸುಖಸ್ರೋತದಲ್ಲಿ ತೇಲಾಡುತ್ತಿದ್ದರು. +ಇಬ್ಬರ ಮನಸ್ಸೂ ಸಾಮಾನ್ಯ ಸ್ಥಿತಿಗೆ ಬಂದ ಮೇಲೆ ಮುಕುಂದಯ್ಯ “ಚಿನ್ನೀ, ನಾನು ಇವೊತ್ತಿನಿಂದ ನಿನ್ನ ಮನೆಯಲ್ಲಿಯೇ ಇರೋಕೆ ಬಂದೀನಿ! +ಆಗಬಹುದಾ? …. ” +ಹಠಾತ್ತನೆ ಉಕ್ಕಿದ ಆನಂದದ ಸೂಚಕವಾಗಿ, ಗಂಡನಾಗುವವನನ್ನು ಮತ್ತಷ್ಟು ಬಿಗಿದಪ್ಪುತ್ತಾ ಚಿನ್ನಮ್ಮ “ನನ್ನ ಮನೆಯೇನೂ ಅಲ್ಲ; ನಿಮ್ಮದೆ ಮನೆ!” ಎಂದು ಹುಸಿ ಸಿಡುಕಿನಿಂದ ಹೇಳಿ ಮುತ್ತೊತ್ತಿಸಿಕೊಂಡಳು. +“ನಾಳೆ ಬೆಳಿಗ್ಗೆಯಿಂದ ಐತ ಪೀಂಚಲು ಇಬ್ಬರೂ ಇಲ್ಲಿಗೇ ಬಂದು ಕೆಲಸಕ್ಕೆ ನಿಲ್ತಾರೆ. +ಅವರಿಗೆ ಹಿತ್ತಲು ಕಡೆಯ ಸೌದೆ ಕೊಟ್ಟಿಗೇಲಿ ಬಿಡಾರಕ್ಕೆ ಜಾಗ ಕೊಡಿಸ್ತೀಯಾ, ನಿನ್ನಜ್ಜಿ ಹತ್ರ ಕೇಳಿ?”ಮುಕುಂದಯ್ಯನ ಮಾತು ಕೇಳಿ ಸಿಟ್ಟುಗೊಂಡವಳಂತೆ ಅವನ ತೊಡೆಯ ಮೇಲಿಂದ ಇಳಿಯಲು ಪ್ರಯತ್ನಿಸಿ, ಆಗದೆ, “ನನ್ನೇನು ಕೇಳ್ತೀರಿ? +ನಿಮ್ಮ ಮನೆ ಕೆಲಸಾ, ನೀವೇ ಹೇಳಿ ಮಾಡಿಸಿ!” ಎಂದಳು ಚಿನ್ನಮ್ಮ. +“ಏಳು. ಹಾಂಗಾದ್ರೆ, ಕೆಲಸಕ್ಕೆ ಹೊರಡ್ತೀನಿ!” ಮುಕುಂದಯ್ಯ ಅವಳನ್ನು ತೊಡೆಯಿಂದಿಳಿಸುವಂತೆ ನಟಿಸಿದನು. +ಆದರೆ ತನ್ನ ಚಿನ್ನಿ ತನ್ನನ್ನು ಮತ್ತೂ ಬಿಗಿಯಾಗಿ ಅಪ್ಪಿದ್ದುದು ಅರಿವಾಗಿ, ಹಿಗ್ಗಿ ಹೇಳಿದನು. + “ಎಲ್ಲರ ಮನೇಲ್ಲಿಯೂ ಸಸಿನೆಟ್ಟು ಪೂರೈಸ್ತಾ ಬಂದದೆ. +ನಾವೂ ನಾಳೇನೇ ಸುರು ಮಾಡಬೇಕು, ಕೆಲಸಕ್ಕೆ…. +ನೀನೂ ಬರ್ತೀಯಷ್ಟೆ, ನನ್ನ ಜೊತೆ ಗದ್ದೆ ಕೆಲಸಕ್ಕೆ?” +“ನಾವೇನು ಸುಮ್ಮನೆ ಕೂಳು ಕತ್ತರಿಸ್ತಾ ಕೂತೀಂವಿ ಅಂತ ಮಾಡೀರೇನು? +ನಾಗಕ್ಕ ನಾಕು ಜನಕ್ಕೆ ಹೇಳಿ, ಸೊಲ್ಪ ಕೆಲಸ ಸುರುಮಾಡ್ಸದೆ. +ನಾಗಕ್ಕನ ಜೊತೇಲಿ ನನೂ ಹೋಗ್ತಾನೆ ಇದ್ದೀನಿ ಕೆಲ್ಸಕ್ಕೆ.” +“ಹಾಂಗಾದ್ರೆ ‘ನನ್ನ’ ಜೊತೇಲಿ ಬರಾದಿಲ್ಲ? …. ” ವಿನೋದವಾಡಿದನು ಮುಕುಂದಯ್ಯ. +“ನಿಮ್ಮ ಜೊತೇಲಿ ಬಂದು ನಾನೇನು ಅಂಚು ಕಡೀತೀನೇ?ಹೊಡ್ತೀನೇ? …. +ಸಸಿ ನೆಡೋಕೆ, ಕಳೆ ಕೀಳೋಕೆ ನೀವೇನು ಗೊರಬು ಸೂಡಿಕೊಳ್ತೀರೇನೊ ನನ್ನ್ಹಾಂಗೆ? …. +ನನ್ನಿಂದಾಗದಿಲ್ಲಾಪ್ಪಾ, ಕಂಬಳಿಕೊಪ್ಪೆ ಹಾಕ್ಕೊಳ್ಳಾಕೆ. +ಅದು ಗಂಡಸರಿಗೆ ಸೈ ಹೇಳ್ಸಿದ್ದು!” +“ಮತ್ತೆ ಆವೊತ್ತು, ಪೀಂಚಲು ಸಂಗಡ, ಆ ದನಗೋಳು ಮಳೇಲಿ ಹೊರಟಿದ್ದೆಯಲ್ಲಾ, ಹುಲಿಕಲ್ಲು ನೆತ್ತಿಗೆ, ಕಂಬಳಿ ಕೊಪ್ಪೇನೆ ಹಾಕ್ಕೊಂಡು?” +“ಪೀಂಚಲು ಸಂಗಡ ಏನಲ್ಲ; ನಿಮ್ಮ ಸಂಗಡ! …. +ಮತ್ತೇನು ಗೊರಬು ಸೂಡಿಕೊಂಡು ಬರಬೇಕಾಗಿತ್ತೇನೊ, ಆ ಕಾಡಿನ ಗಿಜಿರಾಗೆ? …. ” ಹೇಳುತ್ತಿದ್ದ ಹಾಗೆಯೆ, ಏನೊ ದುಃಖದ ನೆನಪಾದಂತಾಗಿ, ಚಿನ್ನಮ್ಮ ಮುಕುಂದಯ್ಯನನ್ನು ಅಪ್ಪಿಕೊಂಡೆ ಅಳತೊಡಗಿಬಿಟ್ಟಳು. +“ತಮಾಷೆಗೆ ಹೇಳಿದ್ರೆ ಅಳ್ತೀಯಲ್ಲಾ, ಚಿನ್ನೀ? +ನೀನು ಅತ್ತರೆ ನನಗೂ ಅಳೂ ಹಾಂಗೆ ಆಗ್ತದೆ!” ಮುಕುಂದಯ್ಯ ತನ್ನ ತೋಳಪ್ಪುಗೆಯನ್ನು ಮತ್ತಷ್ಟು ಬಲಿದು ಮುತ್ತಿಡುತ್ತಾ, ಸಂತೈಸಿದನು. +ಆ ರಾತ್ರಿ ಹೂವಳ್ಳಿಯ ಅಡುಗೆ ಮನೆಯಲ್ಲಿ ಮುಕುಂದಯ್ಯ ಊಟಕ್ಕೆ ಕುಳಿತಿದ್ದಾಗ ನಾಗಕ್ಕ ಬಡಿಸುತ್ತಿದ್ದಳು. +ಅಜ್ಜಿ ಒಲೆಸರದ ಹತ್ತಿರ ಬೆಂಕಿಗೆ ಬೆನ್ನು ಮಾಡಿ ಸೊಂಟ ಕಾಯಿಸಿಕೊಳ್ಳುತ್ತಿದ್ದಳು, ಮಣೆಯ ಮೇಲೆ ಕೂತುಕೊಂಡು. +ಚಿನ್ನಮ್ಮ ಅಜ್ಜಿಯ ಮರೆಗೆ ಕುಳಿತು, ಕುಟ್ಟೊರಳಿನಲ್ಲಿ ಅಜ್ಜಿಗಾಗಿ ಎಲೆ ಅಡಿಕೆ ಹೊಗೆಸೊಪ್ಪು ಸುಣ್ಣ ಎಲ್ಲ ಒಟ್ಟುಹಾಕಿ ಕುಟ್ಟುತ್ತಿದ್ದಳು. +ಒಲೆಯ ಬಳಿಯ ಬೆಚ್ಚನೆಯ ಮೂಲೆಯಲ್ಲಿ ಮಲಗಿದ್ದ ಚೆನ್ನಮ್ಮನ ಮುದ್ದಿನ ಬೀರಿ ತನ್ನ ಮರಿಗಳಿಗೆ ಮೊಲೆಕೊಡುತ್ತಾ ಮಲಗಿತ್ತು. +ಬಡಿಸಿದ್ದ ಹೋಳಿಗೆಯನ್ನು ಸವಿಯುತ್ತಾ ಮುಕುಂದಯ್ಯ ಸೋಜಿಗಪಟ್ಟು ಕೊಂಡನು ‘ಬಹುಶಃ ಮದುವೆಗೆಂದು ಮಾವ ಸಾಲ ಮಾಡಿ ಸಂಗ್ರಹಿಸಿದ್ದ ಸಾಮಗ್ರಿಯೊ ಏನೋ?’ಮತ್ತೆ ಅಜ್ಜಿಯೊಡನೆ ಮಾತಾಡುತ್ತಾ ಕೋಣೂರು ವ್ಯವಹಾರವನ್ನೂ ಬೆಟ್ಟಳ್ಳಿ ದೇವಯ್ಯ ಮತ್ತು ಹಳೆಮನೆ ತಿಮ್ಮಪ್ಪ ಇವರ ಸಂಧಾನದಿಂದಾಗಿ ಸಿಂಬಾವಿಯವರಿಗೆ ಹೂವಳ್ಳಿಯಿಂದ ಸಲ್ಲಬೇಕಾದ ಹಣಕ್ಕೆ ಕಂತು ಗೊತ್ತಾದುದನ್ನೂ, ಕನ್ನಡ ಜಿಲ್ಲೆಗೆ ಹೋಗಿದ್ದ ಐಗಳು ಅನಂತಯ್ಯ ಹಿಂತಿರುಗಿದ ಅನಂತರ ತಮ್ಮ ಮನೆ ಹಿಸ್ಸೆಯಾಗುವುದನ್ನೂ ಕುರಿತು ವಿವರಿಸಿದನು. +ಆಗಾಗ ಅಜ್ಜಿ ಕೇಳಿದ ಪ್ರಶ್ನೆಗಳಿಗೆ ಸಮಜಾಯಿಸಿ ಹೇಳುತ್ತಾ… ಹಾಗೆಯೆ ಇಂಗಿತವಾಗಿ ಚಿನ್ನಮ್ಮನ ಕಡೆ ನೋಡುತ್ತಾ, ಕಲ್ಲೂರು ಜೋಯಿಸರು ಈ ವರ್ಸದ ಗದ್ದೆಯ ಕೊಯ್ಲು ಪೂರೈಸಿದ ಮೇಲೆ ಲಗ್ನಕ್ಕೆ ಶುಭ ಮುಹೂರ್ತ ಇಟ್ಟುಕೊಡಲು ಒಪ್ಪಿದ್ದಾರೆ ಎಂಬ ಸಂಗತಿಯನ್ನೂ ತಿಳಿಸಲು ಮರೆಯಲಿಲ್ಲ. +ಮುಕುಂದಯ್ಯ ಅದನ್ನು ಹೇಳುತ್ತಿದ್ದಾಗ ಕುಟ್ಟೊರಳಿನ ಸದ್ದು ನಿಂತಿತ್ತು. +ಎಂಟು ಹತ್ತು ದಿನಗಳಿಂದಲೂ ಸೂರ್ಯನ ಮುಖವನ್ನೆ ಯಾರೂ ಕಂಡಿರಲಿಲ್ಲ. +ಆದರೂ ಹೊತ್ತು ಇನ್ನೂ ಮುಳುಗಿರಲಿಲ್ಲ ಎಂಬುದು ಕವಿದಿದ್ದ ಮೋಡದ ಮಬ್ಬಿನ ಹೊಳಪಿನಿಂದಲೆ ಗೊತ್ತಾಗುವಂತಿತ್ತು. +ಏಕೆಂದರೆ ಆ ಹೊಳಪು ಹೂವಳ್ಳಿಯ ಗದ್ದೆಕೋಗಿನಲ್ಲಿ ಇನ್ನೇನು ಪೂರೈಸುತ್ತಾ ಬಂದಿದ್ದ ನೆಟ್ಟಿಯ ಸಸಿಗಳ ಮೇಲೆ ಬಿದ್ದು, ಕಾಡು ಅಂಚು ಕಟ್ಟಿದ್ದ ಗದ್ದೆಯ ಕೋಗನ್ನೆಲ್ಲಾ ವ್ಯಾಪಿಸಿತ್ತು. +ಅಗೆಸಸಿಯ ಎಳೆಹಸರು ನಳನಳಿಸಿ ಸುಮನೋಹರವಾಗಿ ಕಂಗೊಳಿಸುತ್ತಿತ್ತು. +ಸಸಿ ನಟ್ಟಿಯಾಗಿದ್ದ ಗದ್ದೆಗಳಲ್ಲಿ ಮೂರೊ ನಾಲ್ಕೊ ಕಣೆಯ ಒಂದೊಂದು ಬುಡದ ಸಸಿಗಳ ಲಕ್ಷಲಕ್ಷ ಬುಡಗಳನ್ನೆಲ್ಲ ಮುಚ್ಚಿ ಹರಡಿ ನಿಂತಿದ್ದ ನೀರು, ಸಸಿಗಳನ್ನೂ ಮೇಘಮಯವಾಗಿದ್ದ ಆಕಾಶವನ್ನೂ ಪ್ರತಿಬಿಂಬಿಸಿ, ಗಾಳಿ ಬೀಸಿದಂತೆಲ್ಲ ನವಿರು ನವಿರೆದ್ದು ವಿಕಂಪಿಸುತ್ತಿತ್ತು. +ಹಗಲೆಲ್ಲ ಏಡಿ ಮಿನುಗಳನ್ನು ತಿನ್ನಲು ಅಲ್ಲಲ್ಲಿ ಗುಂಪು ಕುಳ್ಳಿರುತ್ತಿದ್ದ ಬೆಳ್ಳಕ್ಕ ಮತ್ತು ನೆರೆಬೆಳ್ಳಕ್ಕಿಗಳಲ್ಲಿ, ಕತ್ತಲಾಗುವ ಮುನ್ನ ಗೊತ್ತುಕೂರಲು ಹಾರಿಹೋಗಿ ಉಳಿದಿದ್ದ, ಕೆಲವು ಮಾತ್ರವೆ ಬೇಟೆಯಲ್ಲಿ ತೊಡಗಿದ್ದವು ಇನ್ನೂ. +ಹೂವಳ್ಳಿ ಮನೆಗೆ ದೂರವಾಗಿದ್ದ ಕೊಟ್ಟಕೊನೆಯ ಮೂಲೆಯ ಕಡೆಯಿಂದ ಸಸಿ ನೆಡಲು ಮೊದಲು ಮಾಡಿ, ಕೆಲವು ದಿನಗಳಲ್ಲಿಯೆ ಮನೆಯ ಹತ್ತಿರದ ಹಲಸಿನ ಮರದ ಮೂಲೆಯ ಗೆಣ್ಣಗಳವರೆಗೂ ಬಂದಿದ್ದರು. +ಇನ್ನು ಬಾಕಿ ಇದ್ದುದೆಂದರೆ ಮನೆಯ ಬಳಿಯ ಅಡಕೆ ತೋಟಕ್ಕೆ ಮುಟ್ಟಿಕೊಂಡಂತಿದ್ದ ಮಕ್ಕೆಗದ್ದೆ. +ಆ ಮಕ್ಕಿಗದ್ದೆಯೂ ಉತ್ತು, ಕೊರಡು ಹೊಡೆದು, ನೀರುಕಟ್ಟಿ ಸಸಿ ನಡೆಸಿಕೊಳ್ಳಲು ಸಿದ್ಧವಾಗಿ ನಿಂತಿತ್ತು. +ಆ ಮಕ್ಕಿಗದ್ದೆಗೆ ಕೆಳಗಿದ್ದು, ಆ ದಿನವೆ, ತುಸು ಹೊತ್ತಿಗೆ ಮುನ್ನ, ಸಸಿ ನೆಟ್ಟು ಪೂರೈಸಿದ್ದ ಒಂದು ಗದ್ದೆಯ ಅಂಚಿನ ಮೇಲೆ ಕಂಬಳಿಕೊಪ್ಪೆ ಹಾಸಿಕೊಂಡು, ಅದರ ಮೇಲೆ ಕುಳಿತಿದ್ದನು ಐತ, ಒಂದು ಕಾಲನ್ನು ಅಂಚಿನ ಕೆಳಗೆ ನೀರು ಮುಟ್ಟುವಂತೆ ಇಳಿ ಬಿಟ್ಟುಕೊಂಡು. +ಅವನ ಸುತ್ತಮುತ್ತ ಇನ್ನೂ ಮೂರುನಾಲ್ಕು ಜನ ಗಂಡಾಳುಗಳು ಅವನಂತೆಯೆ ಕಂಬಳಿಕೊಪ್ಪೆ ಹಾಸಿಕೊಂಡು ಅಂಚಿನ ಮೇಲೆ ಕೂತಿದ್ದರು. +ಅವರ ಗುಂಪಿಗೆ ಎಂಟು ಜತ್ತು ಮಾರು ದೂರದಲ್ಲಿ, ತನ್ನ ಗೊರಬನ್ನು ಪಕ್ಕದಲ್ಲಿ ನಿಲ್ಲಿಸಿಟ್ಟು, ಗದ್ದೆಯ ಅಂಚಿನೊಡನೆ ಐಕ್ಯವಾಗಿದ್ದಂತೆ ಎದ್ದಿದ್ದ ಹಾಸರೆಯ ಮೇಲೆ ಒಬ್ಬಳೆ ಕೂತಿದ್ದಳು ನಾಗಕ್ಕ. +ಅವಳು ಸಸಿನೆಟ್ಟು  ಪೂರೈಸಿ ಕಂಗೊಳಿಸುತ್ತಿದ್ದ ಕೆಳಗಿನ ಗದ್ದೆಗಳ ಕಡೆಗೆ ನೋಡುತ್ತಿದ್ದಳು, ದುಡಿದು ದಣಿದು ಕೆಲಸ ಮುಗಿಸಿದವರ ತೃಪ್ತಿಯಿಂದ. +ಅವಳ ಕಣ್ಣಿಗೆ ಇಡಿಯ ಗದ್ದೆಯ ಕೋಗು ಕಾನಿಸುತ್ತಿದ್ದಿತಾದರೂ ಅವಳ ಗಮನಕ್ಕೆ ಗುರಿಯಾಗಿದ್ದುದು ಬೇರೆ. +ಎರಡು ಮೂರು ಗೆಣ್ಣಗಳ ಕೆಳಗಣ ಗದ್ದೆಯಲ್ಲಿ, ನೆಟ್ಟು ಪೂರೈಸಿದ್ದ ಸಸಿಗಳನ್ನು ಬುಡಮುಚ್ಚಿ ನಿಂತಿದ್ದ ನೀರಿನಲ್ಲಿ, ಮೆಲ್ಲಗೆ, ಬಹು ಮೆಲ್ಲಗೆ, ನಿಂತೆ ಬಿಟ್ಟಿವೆಯೊ ಎಂಬಂತೆ, ಚಲಿಸುತ್ತಿದ್ದ ಎರಡು ಗೊರಬುಗಳ ಕಡೆಗೆ ಕೇಂದ್ರೀಕೃತವಾಗಿತ್ತು ಅವಳ ದೃಷ್ಟಿ. +ಆ ಗೊರಬುಗಳು ನಾಗಕ್ಕ ಕೂತಿದ್ದ ಹಾಸರೆಯಿಂದಲೆ ಹೊರಟಿದ್ದವು, ಬೆಳ್ಳೇಡಿ ಹಿಡಿಯುವದಕ್ಕೆ! +ಮೊದಮೊದಲು ನಾಗಕ್ಕಗೆ ಆ ಗೊರಬು ಸೂಡಿದ್ದ ವ್ಯಕ್ತಿಗಳು ಕೆಸರಾಗದಂತೆ ಆದಷ್ಟು ಮೇಲಕ್ಕೆ ಮೊಳಕಾಲಿನವರೆಗೂ ಎತ್ತಿ ಕಟ್ಟಿಕೊಂಡಿದ್ದ ಸೀರೆಯ ತುದಿಯಂಚೂ, ಅದರ ಕೆಳಭಾಗದಲ್ಲಿ ಕೋಮಲ ಮತ್ತು ಶ್ಯಾಮಲ ವರ್ಣದ ಜಂಘಗಳೂ ಕಾಣಿಸುತ್ತಿದ್ದು, ಯಾವ ಗೊರಬು ಪೀಂಚಲುವನ್ನೊಳಗೊಂಡಿದೆ? +ಮತ್ತಾವುದರಡಿ ಚಿನ್ನಮ್ಮ ಇದ್ದಾಳೆ?ಎಂಬುದು ಗೊತ್ತಾಗುವಂತಿತ್ತು. +ಅವರ ಧ್ವನಿವ್ಯತ್ಯಾಸವೂ ಯಾರು ಏನು ಮಾಡುತ್ತಿದ್ದಾರೆ ಎಂಬುದನ್ನೂ ಸ್ಪಷ್ಟಪಡಿಸುವಂತಿತ್ತು. +ಆದರೆ ಅವರು ಏಡಿ ಹಿಡಿಯುತ್ತಾ ಹಿಡಿಯುತ್ತಾ ಮುಂದು ಮುಂದುವರಿದಂತೆಲ್ಲ, ದೂರ ದೂರ ದೂರವಾಗಿ ಬರಿಯ ಎರಡು ಗೊರಬುಗಳಾಗಿ ಮಾತ್ರ ಕಾಣಿಸುತ್ತಿದ್ದರು. +ಅವರು ಆಡಿಕೊಳ್ಳುತ್ತಿದ್ದ ಮಾತು ಇರಲಿ, ಗಟ್ಟಿಯಾಗಿ ನಕ್ಕಿದ್ದೂ ಕೇಳಿಸುತ್ತಿರಲಿಲ್ಲ; +ಅಷ್ಟು ದೂರ ಹೋಗಿದ್ದರು. +‘ಈ ಹುಡುಗಿಯರಿಗೆ ಇನ್ನೂ ಮನೆಕಡೆಗೆ ಹೊರಡಲು ಹೊತ್ತೇ ಆಗಿಲ್ಲವೇನೋ’ ಎಂದುಕೊಂಡಳು ನಾಗಕ್ಕ, ಆ ಗೊರಬುಗಳ ಕಡೆಗೇ ನೋಡುತ್ತಾ. +ಎಳಬಸಿರಿಯಾಗಿದ್ದ ಪೀಂಚಲು, ಆ ದಿನದ ಸಸಿನೆಟ್ಟಿಯ ಕೆಲಸ ಪೂರೈಸಲು, ಬೆಳ್ಳೇಡಿ ಹಿಡಿಯಲು ಹೊರಟಿದ್ದಳು. +ಬಸಿರಿಯಾಗಿದ್ದ ಅವಳ ನಾಲಗೆಗೆ ರಾತ್ರಿಯ ಗಂಜಿಯೂಟಕ್ಕೆ ನಂಚಿಕೊಳ್ಳಲು ಏಡಿಯ ಚಟ್ನಿ ಬಹಳ ಹಿತವಾಗಿರುತ್ತಿತ್ತು. +ಅದಕ್ಕಾಗಿ ದಿನವೂ ಗದ್ದೆಯ ಕೆಲಸ ಮುಗಿದೊಡನೆ, ತಾನು ತಂದಿಟ್ಟಿರುತ್ತಿದ್ದ ಒಂದು ಸಣ್ಣ ಬಾಯಿಯ ಮೀನು ಬುಟ್ಟಿಯನ್ನು ಹಿಡಿದು ಕೊಂಡು, ಗದ್ದೆಗಿಳಿದು ಬೆಳ್ಳೇಡಿಗಳನ್ನು ಹಿಡಿದು, ಅವು ಬುಟ್ಟಿಯ ತುದಿಗೆ ಹತ್ತಿ ಮತ್ತೆ ಗದ್ದೆಗೆ ಹಾರದಂತೆ ಅವುಗಳ ಕೊಂಬು ಮತ್ತು ಚಕ್ಕಬೆರಳುಗಳನ್ನು ಮುರಿದು ಬುಟ್ಟಿಯೊಳಗೆ ಹಾಕಿಕೊಳ್ಳುತ್ತಿದ್ದಳು. +ಅವಳ ಆ ಬೆಳ್ಳೇಡಿಬೇಟೆಯಲ್ಲಿ ಚಿನ್ನಮ್ಮನೂ, ಮೃಗಯಾವಿನೋದಕ್ಕಾಗಿಯೆ ಪಾಲುಗೊಂಡು, ನೆರವಾಗುತ್ತಿದ್ದಳು. +ಅಂತೆಯೆ ಇಂದೂ ಹುಡುಗಿಯರಿಬ್ಬರೂ ಏಡಿಯ ಬೇಟೆಯಲ್ಲಿ ತೊಡಗಿದ್ದರು. +ಸ್ವಾರಸ್ಯ ಬರಿಯ ಏಡಿ ಹಿಡಿಯುವಷ್ಟರಲ್ಲಿ ಮಾತ್ರವೆ ಇರಲಿಲ್ಲ ಎಂಬ ಗೋಪ್ಯ ಇತರ ಯಾರಿಗೂ ತಿಳಿದಿರಲಿಲ್ಲ. +ವಯಸ್ಸಿನಲ್ಲಿ ಅಂತಹ ಹೆಚ್ಚು ಅಂತರವಿರದಿದ್ದ ಅವರಿಬ್ಬರಲ್ಲಿ, ಚಿನ್ನಮ್ಮ ಯಾಜಮಾನ್ಯ ಸ್ಥಾನದಲ್ಲಿದ್ದು ಪೀಂಚಲು ಸೇವಕಸ್ಥಾನದಲ್ಲಿದ್ದರೂ, ಒಂದು ಸರಳವಾದ ಸಲಿಗೆ ಬೆಳೆದಿತ್ತು. +ಅದರಲ್ಲಿಯೂ ಮದುವೆಯ ದಿನ ಅವರಿಬ್ಬರೂ ಮನೆಯಿಂದ ಒಟ್ಟಿಗೆ ಕಾಡಿಗೆ ಓಡಿಹೋಗಿ, ಐತ ಮುಕುಂದಯ್ಯರನ್ನು ಕೂಡಿಕೊಂಡು, ಹುಲಿಕಲ್ಲು ನೆತ್ತಿಗೆ ಹತ್ತಿ, ಒಂದು ದಿನ ಒಟ್ಟಿಗಿದ್ದು ಹಿಂದಿರುಗಿದ ಮೇಲಂತೂ ಗೆಳೆತನದ ಬೆಸುಗೆ ಅವರಿಬ್ಬರ ಹೃದಯಗಳನ್ನೂ ಒಂದುಗೂಡಿಸಿತ್ತು. +ಮೂರನೆಯ ಯಾರೊಡನೆಯೂ ಆಡದಿದ್ದಂತಹ ಮತ್ತು ಆಡಬಾರದಿದ್ದಂತಹ ಅತ್ಯಂತ ಆಪ್ತ ಮತ್ತು ಗೋಪ್ಯ ವಿಷಯಗಳನ್ನೂ ಒಬ್ಬೊರೊಡನೊಬ್ಬರು ಸ್ವಲ್ಪವೂ ಲಜ್ಜಿಯಿಲ್ಲದೆ ನಿರ್ಭೀತಿಯಿಂದ ಹೇಳಿಕೊಂಡು ಸವಿದು ನಗುತ್ತಿದ್ದರು. +ತನಗಿಂತಲೂ ಪ್ರಣಯ ಮತ್ತು ದಾಂಪತ್ಯ ಜೀವನಗಳಲ್ಲಿ ಬಹುಪಾಲು ಮುಂದುವರೆದು ಅನುಭವಶಾಲಿಯಾಗಿದ್ದ ಪೀಂಚಲು ಹೇಳುತ್ತಿದ್ದ ಗಂಡಹೆಂಡಿರ ರಹಸ್ಯ ವ್ಯಾಪಾರಗಳನ್ನು ಕೇಳಿ ಚಿನ್ನಮ್ಮ ಒಮ್ಮೊಮ್ಮೆ ಅದರ ಸೋಜಿಗಕ್ಕೆ ಅಂಜಿ ಲಜ್ಜೆಪಟ್ಟು ಕೊಳ್ಳುತ್ತಿದ್ದರೂ ಅನೇಕ ವೇಳೆ ಅದರ ಸ್ವಾರಸ್ಯಕ್ಕೆ ಮಾರು ಹೋಗಿ ನಕ್ಕೂನಕ್ಕೂ ಸವಿಯುತ್ತಲೂ ಇದ್ದಳು. +ಅಂತಹ ವಿಚಾರಗಳಲ್ಲಿ ಅವಳಿಗೆ ಅದುವರೆಗೂ ಇದ್ದ ಕನ್ಯಾಮುಗ್ದತೆ ಅಂದು ಮುಕುಂದಯ್ಯ ಕೋಣೆಯಲ್ಲೆಸಗಿದ್ದ ಶೃಂಗಾರ ಶುಶ್ರೂಷೆಯಿಂದ ಕಣ್ದೆರೆದು ಮೊಳಕೆಗೊಂಡು, ಆಗಾಗ್ಗೆ, ಈಗ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದ ಅವರಿಬ್ಬರೊಡನೆ, ಪರಸ್ಪರ ನಡೆಯುತ್ತಿದ್ದ ಕಣ್ ಬೇಟದ ಮನ್ಮಥಚೇಷ್ಟೆಯಿಂದ ವಿದಗ್ಧತೆಯ ವೃಕ್ಷವಾಗಲು ಮೆಲ್ಲಗೆ ಸಸಿಯಾಗಿ ಬೆಳೆಯುತ್ತಿತ್ತು. +ಪ್ರೌಢಾವಸ್ಥೆಗೆ ಕ್ರಮೇಣ ವಿಕಾಸವಾಗುತ್ತಿದ್ದ ಅವಳ ಹೃದಯರಸನೆಗೆ ಅಂತಹ ಮಾತುಕತೆ ಅಪ್ಯಾಯಮಾನವಾಗಿ ತೋರತೊಡಗಿತ್ತು. +ನಾಜೋಕಿನ ಸಂಸ್ಕೃತಿಯ ನಯರುಚಿಗೆ ದೂರವಾಗಿದ್ದ ಗ್ರಾಮಿಣೆ ಪೀಂಚಲು ಏನನ್ನೇ ಹೇಳಿದರೂ ಅದೆಲ್ಲ ತನಗೂ ತನ್ನ ಗಂಡನಿಗೂ ಸಂಬಂಧಪಟ್ಟದ್ದೆ ಆಗಿರುತ್ತಿತ್ತು. +ಚಿನ್ನಮ್ಮ ಏನು ಊಹಿಸಲು ಏನು ಭಾವಿಸಲು ಏನು ಆಶಿಸಲಿ ಅದೆಲ್ಲ ತನಗೂ ಮುಕುಂದಯ್ಯನಿಗೂ ಇನ್ನು ಕೆಲವೆ ತಿಂಗಳುಗಳಲ್ಲಿ ತನಗೆ ಶಾಸ್ತ್ರೋಕ್ತವಾಗಿಯೆ ಗಂಡನಾಗುವ ತನ್ನ ಮುಕುಂದಬಾವನಿಗೊ ಸಂಬಂಧಪಟ್ಟಂತೆಯೆ ಆಗಿರುತ್ತಿತ್ತು. +ಗೊರಬು ಸೂಡಿದ್ದ ಇಬ್ಬರೂ ಬಗ್ಗಿ ಬಗ್ಗಿ, ಸಸಿಯ ಬುಡಗಳಲ್ಲಿ ನೀರಿನಲ್ಲಿ ಅಡಗುತ್ತಿದ್ದ ಬೆಳ್ಳೇಡಿಗಳನ್ನು ಹಿಡಿದು ಹಿಡಿದು, ಪೀಂಚಲು ತನ್ನ ಎಡಗೈಯಲ್ಲಿ ಹಿಡಿದಿದ್ದ ಬುಟ್ಟಿಗೆ ಹಾಕುತ್ತಿದ್ದರು. +ಚಿನ್ನಮ್ಮ ಹಿಡಿಯಲು ಪ್ರಯತ್ನಿಸುತ್ತಿದ್ದ ಒಂದು ಚಟುವಟಿಕೆಯ ಏಡಿ ಅವಳಿಗೆ ಕಣ್ಣುಮುಚ್ಚಾಲೆ ಆಡಿಸುತ್ತಿರಲು. +“ಅಕ್ಕಾ, ಅಕ್ಕಾ, ಅಲ್ಲಿಕಾಣಿ, ಅಲ್ಲಿಕಾಣಿ, ನಿಮ್ಮ ಕಾಲುಬುಡದಲ್ಲೇ ಕೂತಿದೆಯಲ್ದಾ? +ಹಿಹ್ಹಿಹ್ಹಿಹ್ಹಿ!” ಸುಟ್ಟಿದೋರಿದಳು ಪೀಂಚಲು. +ಚಿನ್ನಮ್ಮ ಆ ಏಡಿ ಹುದುಗಿದ್ದ ತಾಣವನ್ನು ಮೆಲ್ಲನೆ ಹುಡುಕಿ ಕಂಡುಹಿಡಿದು, ಎಡಗೈಯಲ್ಲಿ ಸೀರೆಯ ನೆರಿಗೆಯನ್ನು ತುಸು ಮೇಲಕ್ಕೆತ್ತಿ ಕೊಂಡು, ಬಲಗೈಯನ್ನು ಮುಂದಕ್ಕೆ ಚಾಚಿದ್ದಳು ಆಕ್ರಮಣಕ್ಕೆ! +ಅವಳು ಸೀರೆಯನ್ನು ಮೇಲಕ್ಕೆ ಎತ್ತಿದಾಗ, ಅವಳ ಮೈಯ ಹೊಂಬಣ್ಣವನ್ನು ಕಂಡ ಪೀಂಚಲು, ನಟ್ಟಿದ್ದ ಕಣ್ನನ್ನು ಹಿಂದೆಗೆಯಲಾರದೆ ‘ಅಃ ಚಿನ್ನಕ್ಕ ಎಷ್ಟು ಚಂದಾಗಿದ್ದಾರೆ!’ ಎಂದು ತನಗೆ ತಾನೆ ಮನಸ್ಸಿನಲ್ಲಿಯೆ ಅಂದುಕೊಂಡಳು. +ಚಿನ್ನಮ್ಮ ಏಡಿ ಹಿಡಿದು ಬುಟ್ಟಿಗೆ ಹಾಕುತ್ತಿದ್ದಾಗ ಅದು ಅವಳನ್ನು ಕಚ್ಚಿತು. +ಕೈಯನ್ನು ಬುಟ್ಟಿಯೋಳಗೇ ಕೊಡಹಿದ್ದರಿಂದ ಪ್ರಾಣಿ ಹೊರತೆ ಬಿದ್ದು ತಪ್ಪಿಸಿಕೊಳ್ಳಲಾಗಲಿಲ್ಲ. +ಚಿನ್ನಮ್ಮ “ಹಾಳು ಏಡಿ!ಕಚ್ಚಿಬಿಡ್ತಲ್ಲೇ” ಎಂದಳು. +“ಹಾಂಗೆ ತುದಿ ಬೆರಳಲ್ಲಿ ನೀವು ಹಿಡಿದರೆ, ಮತ್ತೆ ಕಚ್ಚದೆ ಬಿಡುತ್ತದೆಯೆ? +ಇಡೀ ಏಡಿಯನ್ನೇ ಹಿಡಿಯಬೇಕು, ಅಮರಿ; +ಆದರ ಕೊಂಬು ಚಕ್ಕಬೆಳ್ಳು ಎಲ್ಲ ನಮ್ಮ ಮುಷ್ಟಿಯೊಳಗೇ ಸಿಕ್ಕಿ, ಅದಕ್ಕೆ ಅಲ್ಲಾಡುವುದಕ್ಕೇ ಆಗದಂತೆ!” ಎಂದವಳು ಚಿನ್ನಮ್ಮನ ಮುಖವನ್ನೇ ನೇರವಾಗಿ ನೋಡಿ ಮುಗುಳು ನಗುತ್ತಾ ಹೇಳಿದಳು “ಚಿನ್ನಕ್ಕಾ, ನೀವು ಎಷ್ಟು ಚೆಂದಾಗಿದ್ದೀರಿ?” +“ನೀನು ಎಷ್ಟು ಚೆಂದಾಗಿ ಆಗ್ತಿದ್ದೀಯೆ, ಇತ್ತಿತ್ತಲಾಗಿ!” ಚಿನ್ನಮ್ಮನೆಂದಳು. +ಸ್ವಲ್ಪ ಕಾಲದ ಹಿಂದೆ ಚಿನ್ಮಮ್ಮ ಬಸುರು ಬೆಳೆದು ಹಿಗ್ಗುತ್ತಿದ್ದ ಪೀಂಚಲು ಹೊಟ್ಟೆಯನ್ನು ಒಂದು ಪಕ್ಕದಿಂದ ಕಂಡಾಗ ಜುಗುಪ್ಸೆಪಟ್ಟುಕೊಂಡು “ಇವಳ್ಯಾಕೆ ಹೀಂಗಾಗ್ತಿದ್ದಾಳೆ, ಮದುವೆಯಾಗೋಕೆ ಮುಂಚೆ ಅಷ್ಟು ಲಕ್ಷಣವಾಗಿದ್ದವಳು?” ಎಂದುಕೊಂಡಿದ್ದಳು. +ಆದರೆ ಆಮೇಲೆ ಒಂದು ದಿನ ಅವಳ ಗಮನ ಹೊಟ್ಟೆಯ ಕಡೆಗೆ ಬೀಳದೆ ವಕ್ಷಸ್ಥಲ ಮುಖಮಂಡಳಗಳ ಮೇಲೆ ಮಾತ್ರ ಬಿದ್ದಾಗ ಅವಳಿಗೆ ಆಶ್ಚರ್ಯವಾಗಿತ್ತು. +ಪೀಂಚಲು ಎಷ್ಟು ಚಂದ ಆಗುತ್ತಿದ್ದಾಳೆ? +ತನ್ನ ಚೆಲುವನ್ನು ಮೆಚ್ಚಿ ನುಡಿದ ಒಡತಿಗೆ ಕೃತಜ್ಞತೆಯಿಂದಲೆ ಶರಣಾಗಿಹೋದ ಪೀಂಚಲು. + “ನಾನೆಂಥಾ ಚೆಂದ, ಚಿನ್ನಕ್ಕ? +ಕರಿ ಮುಸುಳಿ! +ನಿಮ್ಮ ಪಾದದ ಬಣ್ಣ ನನ್ನ ಮುಖಕ್ಕೆ ಬರಬೇಕಾದರೆ ನಾನೆಷ್ಟು ಪುಣ್ಯ ಮಾಡಬೇಕೋ? +ಇನ್ನೆಷ್ಟು ಜಲ್ಮ ಎತ್ತಬೇಕೋ?” ಎಂದವಳು ಚಿನ್ನಮ್ನನ ಕಣ್ನನ್ನೇ ಇಂಗಿತವಾಗಿ ನೋಡುತ್ತಾ ನಗುಮೊಗವಾಗಿ ಸೇರಿಸಿದಳು. + “ಅದಕ್ಕೇ ಮತ್ತೆ…ಮುಕುಂದಣ್ಣ… ನಿಮ್ಮ ಕಾಲಕೆಳಗೆ ಬೀಳಾಕೆ…. +ಅಷ್ಟೊಂದು ದುಂಬಾಲು ಬಿದ್ದು, ಪಾಡು ಪಡ್ತಿರಾದು! ”. + “ಥೂ, ಪೀಂಚಲು!ನೀನೇನೆಲ್ಲ ಹೇಳ್ತಿರ್ತೀಯೇ! +ನಿಂಗೆ ನಾಚಿಗೆ ಮರ್ಯಾದೆ ಒಂದೂ ಇಲ್ಲ! +ಭಂಡೀ ಅಂದ್ರೆ ಭಂಡೀ!” ಚಿನ್ನಮ್ಮನೆಂದಳು, ಪೀಂಚಲು ಹೇಳಿದ್ದನ್ನು ಹೃತ್ಪೂರ್ವಕವಾಗಿ ಸವಿಯುತ್ತಾ. +ಮತ್ತೆ ಕೇಳಿದಳು.“ಐತ ನಿನಗೆ ಯಾವಾಗ್ಲೆ ಗಂಡ ಆಗಿದ್ದು?” +“ಯಾವಾಗ ಅಂದ್ರೆ? +ಲಗ್ನ ಆದಮೇಲೆ!” +“ಅದಕ್ಕೆ ಮುಂಚೆ?” +“ಅದಕ್ಕೆ ಮುಂಚೆ ಗಂಡ ಆಗೋಕೆ? …. ” ತುಸು ತಡೆದು ತಡೆದು ವಿನೋದವಾಡಿದಳು ಪೀಂಚಲು. + “ನಾ ಚಿನ್ನಕ್ಕನೂ ಅಲ್ಲ; ಐತ ಮುಕುಂದಣ್ಣೋರೊ ಅಲ್ಲ.…. +“ನೀನು ಬಾ’ಳ ಕೆಟ್ಟೋಳೆ, ಪೀಂಚ್ಲಿ! +ನಿನ್ನ ಹತ್ರ ನಾ ಮಾತು ಬಿಟ್ಟೆ, ಇವತ್ತಿನಿಂದ! +ಏಡಿನಾದ್ರೂ ಹಿಡಿ; ಏನಾದ್ರೂ ಮಾಡು! +ನಾ ಹೊಗ್ತೀನಿ, ನಾಗಕ್ಕ ಕಾಯ್ತದೆ….”ಸಿಟ್ಟುಗೊಂಡಂತೆ ಗೊರಬಿನ ಬೆನ್ನನ್ನು ತನ್ನ ಕಡೆಗೆ ತಿರುಗಿಸಿದ ಚಿನ್ನಮ್ಮಗೆ ಪೀಂಚಲು. + “ಇಲ್ಲ ಚಿನ್ನಕ್ಕಾ!ತಪ್ಪಾಯ್ತು! +ದಮ್ಮಯ್ಯ ಅಂತೀನಿ! +ನಿಮ್ಮ ಕಾಲಿಗೆ ಬೀಳ್ತೀನಿ? +ಇನ್ನು ಖಂಡಿತಾ ಹಾಂಗೆಲ್ಲ ಮಾತಾಡಾದಿಲ್ಲ….! ”. +ಪೂರ್ತಿ ಕ್ಷಮಿಸಿದವಳಂತೆ ಚಿನ್ನಮ್ಮ ಮತ್ತೆ ತಿರುಗಿದಳು; +ಹೇಳಿದಳು ಮರೆನಗುಮೊಗಳಾಗಿ. “ಖಂಡಿತಾ ಹಾಂಗೆಲ್ಲ ಮಾತಾಡದಿಲ್ಲ ಅಂತ ಎಷ್ಟು ಸಾರಿ ಹೇಳಿಲ್ಲ ನೀನು? …. ”. +ಚಿನ್ನಮ್ಮನ ಮಾತಿಗೆ ಹೆಚ್ಚೇನೂ ಲಕ್ಷಕೊಡದೆ ಪೀಂಚಲು ಎದುರಿಗೇ ಕಾಣಿಸುತ್ತಿದ್ದು ಮೋಡ ಮುಚ್ಚಿಹೋಗಿದ್ದ ಹುಲಿಕಲ್ಲಿ ನೆತ್ತಿಯ ಕಾಡಿನ ಕಡೆಗೆ ಕೈತೋರಿ “ಅದೇ ಕಣ್ರೋ ಆ ಕಲ್ಲು ಮಂಟಪ!” ಎಂದಳು. +ಚಿನ್ನಮ್ಮ ಮಂತ್ರ ಮುಗ್ದೆಯಾದಂತೆ ಅತ್ತ ಕಡೆ ನೋಡಿದಳು. +ದಟ್ಟವಾದ ಕಾಡು ಬೆಳೆದ ಗುಡ್ಡ, ಅಲೆ ಅಲೆ ಅಲೆ ಏರಿ ಏರಿ ಏರಿ, ಹುಲಿಕಲ್ಲು ನೆತ್ತಿಯ ಮೋಡಗಳಲ್ಲಿ ಹಾದು, ಆಕಾಶದಲ್ಲಿ ಮರೆಯಾಗಿತ್ತು. +ಕಲ್ಲು ಮಂಟಪವಿದ್ದ ಕುಲಿಕಲ್ಲು ತೆತ್ತಿಯನ್ನು ಅಪ್ಪಿ ಮುತ್ತಿದ್ದ ಮೋಡದ ಹಿಂಡು, ಕರಿಹೊಗೆಯ ಮುದ್ದೆಯಂತೆ, ಕಾಡಿನ ಕಡು ಹಸುರಿಗೆ ತಾರ ತಮ್ಯವಾಗಿ ಮಾತ್ರ ತನ್ನ ಬಿಳಿಯ ತನವನ್ನು ಪ್ರಕಟಿಸಿತ್ತು. +ಕಾಡು, ಗುಡ್ಡದ ಗೋಡೆಗೆ ಮೆತ್ತಿದ್ದ ಹಸುರಿನ ಮಹಾಮುದ್ದೆಗಳಂತೆ, ಮುಗಿಲಿನವರೆಗೂ ಎದ್ದು ಆ ಭೀಮಔನ್ನತ್ಯದಿಂದ ಚಿನ್ನಮ್ಮ ಪೀಂಚಲು ನಿಂತಿದ್ದ ಹೂವಳ್ಳಿಯ ಗದ್ದೆಯ ಕೋಗನ್ನು ಮೇಲ್ವಾಯುವಂತೆ ಬಾಗಿ ದಿಟ್ಟಿಸುವಂತಿತ್ತು, ವ್ಯಾಘ್ರ ಭೀಷಣವಾಗಿ! +ಅವರು ಸಂವಾದದಲ್ಲಿ ತೊಡಗಿದ್ದಾಗ ಗಮನಿಸದಿದ್ದ ಅನೇಕ ನಿಸರ್ಗ ನಿನಾದಗಳು ಈಗ ತೆಕ್ಕನೆ ಉಕ್ಕಿ ಕೇಳಿಸಿದಂತಾಗಿ ಹೆದರಿಕೆಯ ಮೇಲೆ ಹೆದರಿಕೆ ಹೇರಿದಂತಾಯ್ತು. +ಸಾಯಂಕಾಲವಾಗುತ್ತಿದ್ದುರದಿಂದ ಜೀರುಂಡೆಗಳ ಕೂಗಿನ ಸರಮಾಲೆ, ಒಂದು ನಿಲ್ಲಿಸುವ ಮುನ್ನ ಮತ್ತೊಂದು, ಒಂದು ಬಿಟ್ಟರೆ ಇನ್ನು ಒಂದಲ್ಲ ಎರಡು, ನಿರಂತರವಾಗಿ ಸದ್ದಿನ ಗರಗಸ ಎಳೆದಂತೆ ಕರ್ಕಶವಾಗಿತ್ತು. +ಜೊತೆಗೆ ಗದ್ದೆಯಲ್ಲಿದ್ದ ಕೋಟಿ ಕೋಟಿ ಕಪ್ಪೆ ಕೀಟ ಕ್ರಿಮಿಗಳೂ ಚಿತ್ರ ವಿಚಿತ್ರ ಕಂಠಸ್ವರಗಳಿಂದ ಟ್ರರ್ ಟ್ರರ್? +ವಟಕ್ ವಟಕ್ ವಟಕ್ ವಟಕ್!ಗ್ರೀಂಗ್ರೀಂಗ್ರೀಂಗ್ರೀ!ಡೊಂಯ್ಕ್ ಡೊಯ್ಕ್ ಡೊಂಯ್ಕ್! +ತಲೆಗೆ ಚಿಟ್ಟು ಹಿಡಿಸುವಂತೆ ಸದ್ದಿನ ಬಲೆಯನ್ನೇ ನೆಯ್ದುಬಿಟ್ಟವು, ಕೊನೆಯ ಇಲ್ಲವೆಂಬಂತೆ. +ಹುಲಿಕಲ್ಲು ನೆತ್ತಿಯ ಕಡೆಗೆ ನೋಡುತ್ತಿದ್ದ ಚಿನ್ನಮ್ಮಗೆ – ತಾನು ಎಂದಾದರೂ ಆ ದುರ್ಗಮ ಪ್ರದೇಶಕ್ಕೆ ಹೋಗಿದ್ದುದು ನಿಜವೇ? +ಅದೆಲ್ಲ ನಡೆದಿದ್ದು ನಿಜವೋ ಕನಸೋ? +ನನ್ನಂಥವಳು ಅಂತಹ ಭಯಂಕರ ಕಾಡುಗುಡ್ಡ ಹತ್ತಿ ರಾತ್ರಿ ಹೋಗುವುದೆಂದರೇನು? +ಛೇ!ಎಲ್ಲಿಯ ಮಾತು? +ಹಾಗೆ ನಡೆದಿದ್ದು ನಿಜದಲ್ಲಿ ಅಲ್ಲವೆ ಅಲ್ಲ! +ಸುಳ್ಳು!ಬರೀ ಸುಳ್ಳು! +ಅನ್ನಿಸತೊಡಗಿನಿಡುಸುಯ್ದು ಕೇಳಿದಳು. +“ಹೌದೇನೆ, ಪೀಂಚಲು, ನಾವು ಅಲ್ಲಿಗೆ ಹೋಗಿದ್ದು?” +“ಮುಕುಂದಣ್ಣೋರನ್ನೆ ಕೇಳಿ, ಹೇಳ್ತಾರೆ. +ಚಿನ್ನಕ್ಕ ಅನ್ನೊರನ್ನ ಹೊತ್ತು ಹಳ್ಳ ದಾಟಿಸಿದ್ದು ಹೌದೋ ಅಲ್ಲೋ ಅಂತಾ! ”. +ಆ ಅನುಭವ ಚಿನ್ನಮ್ಮ ಮರೆಯುವಂತಾದ್ದಾಗಿರಲಿಲ್ಲ. +ಅದು ನಡೆದಾಗ ಅವಳು ವಿಶೇಷ ಭಾವೋದ್ವೇಗದ ಸನ್ನಿವೇಶದಲ್ಲಿ ಇದ್ದದ್ದರಿಂದ ಅದನ್ನು ಅಷ್ಟಾಗಿ ಗಮನಿಸುವುದಕ್ಕೆ ಆಗಿರಲಿಲ್ಲ. +ಆದರೆ ಆಮೇಲೆ ಅದನ್ನು ಮತ್ತೆ ಮತ್ತೆ ಸ್ಮರಿಸಿ ಸವಿದಿದ್ದಳು. +ಅಲ್ಲದೆ ಮುಕುಂದಬಾವ ತನ್ನನ್ನು ಹಿಡಿದೆತ್ತಿ ಹೊತ್ತುಕೊಳ್ಳುವಾಗ ಮುಟ್ಟಿದ್ದ ಮತ್ತು ಒತ್ತಿದ್ದ ತನ್ನ ಮೃದುಲ ಅಂಗೋಪಾಂಗಗಳ ಸೋಂಕಿನ ವಿಚಾರದಲ್ಲಿ ಅವರು ಪೂರ್ತಿ ನಿರ್ಲಿಪ್ತರಾಗಿರಲಿಲ್ಲ ಎಂಬುದೂ ಅವಳಿಗೊಂದು ಸುಖಪ್ರದ ಸಂದೇಹವಾಗಿತ್ತು. +“ಹ್ಯಂಗೆ ಮಾತಾಡ್ತೀಯೆ ನೀನು, ಪೀಂಚ್ಲೆ? +ನಿನ್ನ ನಾಲಗೇಲಿ ಕರೀಮಚ್ಚೆ ಇದೆ ಅಂತಾ ಕಾಣ್ತದ್ಯೇ!” ತಾನು ಹುಲಿಕಲ್ಲು ನೆತ್ತಿಗೆ ಕಲ್ಲು ಮಂಟಪಕ್ಕೆ ಹೋಗಿದ್ದ ವಿಷಯದಲ್ಲಿದ್ದ ಸಂದೇಹವೆಲ್ಲ ನಿವೃತ್ತವಾದಂತಾಗಿ ಕೊಂಕು ನುಡಿದಳು ಚಿನ್ನಮ್ಮ. +“ನಾಲಿಗೇಲಿ ಇಲ್ಲ, ಚಿನ್ನಕ್ಕಾ, ಇಲ್ಲಿ ಇತ್ತು ಅಂಬರು!” ತನ್ನ ನಿತಂಬದೆಡೆಗೆ ಕೈದೋರಿ ನಕ್ಕಳು ಪೀಂಚಲು. +“ಅಲ್ಲಿ ಇರಾದು ನಿಂಗೆ ಹೆಂಗೆ ಗೊತ್ತಾತೋ?” ಮೂದಲಿಸಿದಳು ಚಿನ್ನಮ್ಮ. +“ನಂಗೆ ಏನು ಗೊತ್ತು?ಅವರು ಹೇಳಿದ್ದು! ”. + “ಯಾರೇ ಹೇಳಿದ್ದು?” ದಿಗಿಲುಗೊಂಡಂತೆ ಕೇಳಿದಳು ಚಿನ್ನಮ್ಮ. +“ಮತ್ತೆ ಯಾರಾದರೂ ಹೇಳುವದಕ್ಕೆ ನಾನೇನು ಅಂಥವಳಲ್ಲ!” +“ಐತ ಹೇಳಿದ್ದೇನೇ?” ಒತ್ತಿ ಪ್ರಶ್ನಿಸಿದ್ದಳು ಮತ್ತೆ ಚಿನ್ನಮ್ಮ. +ನಾನು ‘ಅವರು’ ಎಂದು ಹೇಳಿದ್ದರಿಂದ ಚಿನ್ನಮ್ಮಗೆ ಸಂಶಯ ಉಂಟಾಯಿತೆಂದು ಊಹಿಸಿದಳು ಪೀಂಚಲು. +ಏಕೆಂದರೆ, ತಾನು ತನ್ನ ಗಂಡನನ್ನು ಕುರಿತು ಹೆಚ್ಚಾಗಿ ಏಕವಚನದಲ್ಲಿಯೆ ಮಾತಾಡುತ್ತಿದ್ದುದು ರೂಢಿಯಾಗಿತ್ತು. +ತನ್ನ ವಿನೋದ ವಿಷಾದಕ್ಕೆಲ್ಲಿ ಎಡೆಗೊಡುತ್ತದೆಯೆ ಎಂದು ಹೆದರಿಕೆಯಾಯ್ತು. +ತನಗೂ ಮುಕುಂದ ಯ್ಯಗೂ ಏನೋ ದುಸ್ಸಂಬಂಧವಿದೆ ಎಂದು ಸುಳ್ಳು ಸುದ್ದಿ ಒಮ್ಮೆ ಹಬ್ಬಿದ್ದುದದರ ನೆನಪು ಬಂದು, ಆದಷ್ಟು ಶೀಘ್ರವಾಗಿ ತನ್ನ ಮಾತನ್ನು ಸರಸದ ಕಡೆಗೆ ತಿರುಗಿಸಬೇಕೆಂದು ಹವಣಿಸಿ ಪೀಂಚಲು. +“ನೀವು ನಿಮ್ಮ ಗಂಡನ ಮಗ್ಗುಲಲ್ಲಿ ಮಲಗುತ್ತೀರಲ್ಲಾ, ಆವಾಗ ಹೇಳುತ್ತಾರೆ, ನಿಮಗೆ ಎಲ್ಲೆಲ್ಲಿ ಚಿಮಕಲು ಮಚ್ಚೆ ಇದೆ ಅಂತಾ! …. ” +“ಸೀರೆ ಉಟ್ಟುಕೊಂಡಿದ್ರೆ ಹೆಂಗೇ ಗೊತ್ತಾಗ್ತದೆ?” ಮುಗ್ಧೆ ಚಿನ್ನಮ್ಮನ ಪ್ರಶ್ನೆ. +ಪೀಂಚಲು ಕಿಸಕ್ಕನೆ ನಕ್ಕಳು. +ಮತ್ತೆ ಹೇಳಿದಳೂ “ಗಂಡನ ಮಗ್ಲಲ್ಲಿ ಮಲಗಿದ ಮ್ಯಾಲೆ ಎಲ್ಲ ಗೊತ್ತಾಗ್ತದೆ ಕಣ್ರೋ!” +“ನೀ ಗಂಡನ್ನ ಮಗ್ಲಲ್ಲೇ ಮಲಗಿಕೊಳ್ತೀಯೇನೇ? +ಥೂ!ನಿನಗೆ ನಾಚಿಕೆ ಆಗೋದಿಲ್ಲೇನೇ? …. ” +“ನಾಚಿಕೆ ಮಾಡಿಕೊಂಡರೆ ಆಗ್ತದೇನು, ಚಿನ್ನಕ್ಕಾ? +ನಾಚಿಕೆ ಮಾಡಿಕೊಂಡರೆ….” ತುಸು ಉಬ್ಬಿದ ತನ್ನ ಕಿಬ್ಬೊಟ್ಟೆಯ ಕಡೆ ಬೆರಳು ಮಾಡಿ ಕೇಳಿದಳು. +“ಇದಾಗ್ತದೇನು?”ಚಿನ್ನಮ್ಮ ಆಗತಾನೆ ಹಿಡಿದಿದ್ದ ಒಂದು ಏಡಿಯನ್ನು ಭದ್ರಮುಷ್ಟಿಯಲ್ಲಿ ಹಿಡಿದು ತಂದು, ಪೀಂಚಲು ಮುಂದಕ್ಕೊಡ್ಡಿದ್ದ ಬುಟ್ಟಿಗೆ ಹಾಕಲೆಂದು, ಅವಳಿಗೆ ತುಂಬ ಸಮೀಪ ಬಂದಿದ್ದಳು. +ಏಡಿಯನ್ನು ಬುಟ್ಟಿಗೆ ಕೊಡಹುತ್ತಾ, ಪೀಂಚಲು ನಿರ್ದೇಶಿಸಿದ್ದ ಉದರ ಪ್ರದೇಶದ ಕಡೆಗೆ ಕಣ್ಣು ಹಾಯಿಸಿದಳು. +ಮತ್ತೆ ಕೇಳಿದಳು. “ಅಲ್ಲಿ ಏನಾಗದೆಯೇ?” +“ಇನ್ನೊಂದು ನಾಲ್ಕೈದು ತಿಂಗಳು ತಡೀರಿ, ಆಮೇಲೆ ತೋರಿಸ್ತೀನೆ ಅಲ್ಲಿರೋದನ್ನ! +“ನಿಂಗೆ ಬಾಲೆ ಆಗ್ತದೇನೇ?” +“ನಾನು ಬಸಿರಿ ಕಣ್ರೋ!” +“ಹೆಂಗಾಯ್ತೇ” +“ಗಂಡನ ಮಗ್ಲಲ್ಲಿ ಬೆತ್ತಲೆ ಮಲಗಿದ್ರೆ….”ಥೂ! +ನೀ ಬೆತ್ತಲೆ ಮಲಗ್ತಿಯೇನೇ….ದುರುದುಂಡೆಗೆ?” +“ಅಲ್ಲಾ, ಚಿನ್ನಕ್ಕಾ, ರಾತ್ರೆ ಗಂಡನ ಮಗ್ಲಲ್ಲಿ ಮಲಗಿಕೊಳ್ಳಾಗ, ಯಾರಾದ್ರೂ ಸೀರೆ ಉಟ್ಟುಕೊಂಡು ಮಲಗ್ತಾರೇನ್ರೋ?” +“ಹಂಗಾದ್ರೆ ನೀ ಸೀರೆ ಬಿಚ್ಚಿ ಹಾಕಿ ಬಿಡ್ತೀಯಾ? …. ದುರದುಂಡಗೆ?” +“ಹ್ಞೂ ಮತ್ತೆ?ಸೀರೆ ಬಿಚ್ಚಿ, ಮಡಚಿ, ತಲೆ ಅಡಿ ಇಟ್ಟು ಕೊಂಡು, ಐತನ ಕಂಬಳಿ ಒಳಗೇ ಹೊಕ್ಕೊಂಡು ಮಲಗ್ತೇನೆ! +ನೀವು ಹೇಳೋ ಹಾಂಗೆ ದುರದುಂಡಗೆ ಹಿಹ್ಹಿಹ್ಹಿಹ್ಹಿ? …. +ಅವನೂ ಹಾಂಗೇ ಮಲಗಾದು! …. ” +“ಅದಕ್ಕೆ ಮತ್ತೆ, ನಿನ್ನ ಮೈಯ್ಯಾಗ ಎಲ್ಲೆಲ್ಲಿದ್ದ ಮಚ್ಚೆ ಎಲ್ಲಾ ಕಾಣ್ಸಾದು! …. +ನೀವು ಗಟ್ಟದ ತಗ್ಗಿನೋರೇ ಹಾಂಗೆ! +ದುರದುಂಡಗೆ ಇರಾದೆ ನಿಮ್ಮ ಚಾಳಿ!” +“ಸುಮ್ಮನೆ ಮಲಗ್ತೀವಿ ಅಂತಾ ಮಾಡಿಕೊಂಡ್ರೇನು?” ಪೀಂಚಲು, ಹತ್ತಿರ ಬಂದಿದ್ದ ಚಿನ್ನಮ್ಮನ ಕಿವಿಯ ಹತ್ತಿರಕ್ಕೆ ಬಾಗಿ, ಇನ್ನೂ ಏನು ಏನನ್ನೋ ಹೇಳಿಬಿಟ್ಟಳು! +ಚಿನ್ನಮ್ಮನ ಕಿವಿ ಕೆನ್ನೆ ಗಲ್ಲ ಮುಖಮಂಡಲ ಎಲ್ಲ ಕೆಂಪಾಗಿ ಅವಳ ಹಣೆಗೆ ಬೆವರಿನ ತೇವವೇರಿತು! +ಮುಖ ತಿರುಗಿಸಿ, ಸ್ವಲ್ಪ ದೂರಕ್ಕೆ ಹಿನ್ನೆಗೆದು ಸರಿದು, ಬೆನ್ನು ಮಾಡಿ ಗಟ್ಟಿಯಾಗಿಯೆ ಕೂಗಿಬಿಟ್ಟಳು. +“ಥೂ!ಥೂ!ಥೂ!ಪೀಂಚ್ಲೇ, ನೀನು ಭಂಡಿ, ಜಗಭಂಡಿ!”ಪೀಂಚಲು ಸ್ವಲ್ಪವೂ ಅಪ್ರತಿಭಳಾಗದೆ, ಚಿನ್ನಮ್ಮ ತಾನು ಹೇಳಿದ್ದನ್ನು ಒಳಗೊಳಗೆ ಸವಿಯುತ್ತಿದ್ದಾಳೆ ಎಂಬುದರಲ್ಲಿ ಲೇಶವೂ ಸಂಶಯವಿಲ್ಲದೆ, ನಗುತ್ತಾ ಹೇಳಿದಳು. + “ಈಗ ಹೀಂಗ ಹೇಳ್ತೀರಿ. +ನಾಳೆ ಮುಕುಂದಯ್ಯೋರೊ ನಿಮಗೂ ಹಾಂಗೇ ಮಾಡಿದಾಗ, ಅವರನ್ನು ಇನ್ನಷ್ಟು ಬಲವಾಗಿ ಅಪ್ಪಿಕೊಳ್ತೀರೋ ಇಲ್ಲೋ ನೋಡ್ತೀನಲ್ಲಾ? +ನಿಮ್ಮ ಪರ್ಸ್ತ ಆದಮ್ಯಾಲಾದ್ರೂ, ನಂಗೆ ಹೇಳ್ತಿರಷ್ಟೆ? …. +ಅವೊತ್ತಂತೂ ಹೊತಾರೆ ಮುಂಚೇನೆ ಬಂದು ಕೇಳೇಕೇಳ್ತೀನಲ್ಲ. +‘ಚಿನ್ನಕ್ಕಾ, ಯಾರು ಭಂಡರು?ಹೇಳಿ ಈಗ!’ ಅಂತಾ!” +ಅಂತಃಕರಣವೆಲ್ಲ ಓಕುಳಿಯಾಗಿ ಹೋಗಿದ್ದ. +ಚಿನ್ನಮ್ಮ ಪೀಂಚಲು ಕಡೆಗೆ ತಿರುಗಲೂ ಇಲ್ಲ, ಮರುಮಾತಾಡಲೂ ಇಲ್ಲ. +ನಾಚಿಕೆಯ ಸುಖರಸ ಅವಳನ್ನು ಮೂಕಗೈದಂತಿತ್ತು. +ಅದಕ್ಕೆ ಸರಿಯಾಗಿ, ಅವಳಿಗೆ ಅನುಕೂಲವಾಗಿಯೆ ಎಂಬಂತೆ, ದೂರದಲ್ಲಿ, ಗದ್ದೆಯ ಕೋಗಿನ ತುತ್ತತುದಿಯ ಅಂಚಿನ ಮೇಲೆ, ಕಾಡಿನ ಕಡೆಯಿಂದ ಯಾರೋ ಕೊಡೆ ಸೂಡಿಕೊಂಡು ಬರುತ್ತಿದ್ದುದು ಕಾಣಿಸಿತು. +ಬರುತ್ತಿದ್ದವರು ಹೆಂಗಸರು ಎಂಬುದೂ ಗೊತ್ತಾಗುವಂತಿತ್ತು. +ಕೊಡೆ ಸೂಡಿದ್ದ ಆ ಸ್ತ್ರೀ ವ್ಯಕ್ತಿಯ ಹಿಂದೆ ತುಸುದೂರದಲ್ಲಿ ಕಂಬಳಿ ಕೊಪ್ಪೆ ಹಾಕಿದ್ದ ಮತ್ತೊಂದು ವ್ಯಕ್ತಿ, ಅದು ಗಂಡಸೆಂಬುದೂ ಸುವ್ಯಕ್ತವಾಗಿತ್ತು, ನಡೆದುಬರುತ್ತಿದ್ದುದೂ ಕಾಣಿಸಿತು. +“ಅದು ಯಾರೇ ಅದು? …. ” +ಚಿನ್ನಮ್ಮ ಕೇಳಿದಳು ಅತ್ತ ಕಡೆಯೇ ಕಣ್ಣಾಗಿ. +“ಕಮ್ಮಾರಸಾಲೆ ಪುಟ್ಟಾಚಾರ ತಂಗಿ ಇರಬೈದು”. +“ಅವಳು ಕಂಬಳಿ ಬಿಟ್ಟು, ಕೊಡೆ ಹಿಡುಕೊಂಡು ಬರುತ್ತಾಳೇನೆ?” +“ಅಯ್ಯೋ, ನಿಮಗೆ ಗೊತ್ತಿಲ್ಲ, ಚಿನ್ನಕ್ಕಾ; +ಅವಳ ಗಂಡ ಸತ್ತ ಮೇಲೆ ಅವಳ ಕತೇನೆ ಬ್ಯಾರೆ ಆಗ್ಯಾದಂತೆ! …. ” +“ಛೆ ಅಲ್ಲ ಕಣೆ, ನಮ್ಮೋರ ಉಡುಗೆ ಉಟ್ಟಹಾಂಗೆ ಕಾಣ್ತದೆ?” +“ನಾನು ಉಡಾದಿಲ್ಲೇನು ನಿಮ್ಮ ಉಡುಗೇನ?” ಎಂದು ಅತ್ತಲೇ ಕಣ್ಣು ಸುಕ್ಕಿಸಿ ನೋಡತೊಡಗಿದ್ದ ಪೀಂಚಲು “ಹೌದು ಕಣ್ರೋ, ನೀವು ಹೇಳಿದ್ದು. +ಯಾರೋ ಹೆಗಡ್ತಮ್ಮೋರನ್ನ ಕಂಡ ಹಾಂಗೇ ಕಾಣ್ತದೆ….” ಎಂದು ಮತ್ತೆಯೂ ಸ್ವಲ್ಪ ಹೊತ್ತು ನೋಡುತ್ತಿದ್ದು, ಆ ವ್ಯಕ್ತಿ ಹೆಚ್ಚು ಹೆಚ್ಚು ಸಮೀಪವಾಗುತ್ತಿರಲು, ತೆಕ್ಕನೆ ನುಡಿದಳು ಗುರುತು ಹಿಡಿದಂತೆ. +“ಬೆಟ್ಟಳ್ಳಿ ದೇವಮ್ಮ ಹೆಗ್ಗಡ್ತೇರು ಕಣ್ರೋ!ಮುಕುಂದಯ್ಯೋರಕ್ಕಯ್ಯ! +ಅವರ ನಡಿಗೆ ನೋಡಿದ್ರೆ, ಎಷ್ಟು ದೂರ ಇರಲಿ, ಗುರುತು ಸಿಕ್ಕೇ ಸಿಗ್ತದೆ! …. ” +“ಹೋಗೆ ಹೋಗೆ!ಈ ಮಳೇಲಿ ಹೀಂಗೆ ಕೊಡೆ ಹಿಡುಕೊಂಡು, ಗತಿಗೆಟ್ಟೋರು ನಡಕೊಂಡು ಬಂದ್ಹಾಂಗೆ ಬರಾಕೆ, ಬೆಟ್ಟಳ್ಳಿ ಅತ್ತಿಗಮ್ಮಗೆ ಅಂಥಾ ಕಡಿಮೆ ಆಗಿದ್ದೇನು? +ಬರಾದಾದ್ರೆ ಗಾಡಿ ಕಟ್ಟಿಸಿಕೊಂಡು ಬರುತ್ತಿದ್ದರು…. +ಮನ್ನೆ ಮನ್ನೆ ಗಾಡಿದಾರಿ ಬ್ಯಾರೆ ಮಾಡಿಸಿದಾರೆ….”ಹಾಗೆ ಹೇಳುತ್ತಿದ್ದ ಹಾಗೆಯೆ ಚಿನ್ನಮ್ಮ ತನ್ನ ಕಣ್ಣನ್ನೆ ನಂಬಲಾರದಾದಳು! +ಹತ್ತಿರಹತ್ತಿರಕ್ಕೆ ಬರುತ್ತಿದ್ದ ಆ ವ್ಯಕ್ತಿಯ ಗುರುತು ಚೆನ್ನಾಗಿಯೆ ಆಯಿತು. +ಕೊಡೆ ಸೊಡಿಕೊಂಡು ಮುಂದೆ ಬರುತ್ತಿದ್ದವಳು – ಬೆಟ್ಟಳ್ಳಿ ದೇವಯ್ಯಗೌಡರ ಹೆಂಡತಿ, ದೇವಮ್ಮ ಹೆಗ್ಗಡತಿ! +ಕಂಬಳಿ ಕೊಪ್ಪೆ ಹಾಕಿಕೊಂಡು ತುಸು ಹಿಂದೆ ಬರುತ್ತಿದ್ದವನು ಅವರ ಗಾಡಿಯಾಳು-ಹೊಲೆಯರ ಬಚ್ಚ. +ಮತ್ತೂ ನೋಡುತ್ತಾಳೆ ಚೆನ್ನಮ್ಮ ದಿಗ್‌ಭ್ರಾಂತೆಯಾದಳು! +ಶ್ರೀಮಂತರ ಮನೆಯ ಆ ಕುಲೀನ ನಾರಿ ನೆಂಟರ ಮನೆಗೆ ಹೋಗುವಾಗ ಉಟ್ಟು ತೊಟ್ಟುಕೊಳ್ಳುವಂತೆ ಉತ್ತಮ ಸೀರೆ ಉಟ್ಟಿರಲಿಲ್ಲ; +ವಲ್ಲಿ ಧರಿಸಿರಲಿಲ್ಲ; ಒಡವೆ ಹಾಕಿರಲಿಲ್ಲ. +ಕಡೆಗೆ ತಲೆಯನ್ನೂ ಬಾಚಿಕೊಂಡಿರಲಿಲ್ಲ! +ಇನ್ನೂ ಗಮನಿಸುತ್ತಾಳೆ. +ಅತ್ತಿಗೆಮ್ಮನವರ ಮುಖದಲ್ಲಿ ಯಾವಾಗಲೂ ಉಕ್ಕಿತೋರುತ್ತಿದ್ದ ಗೆಲವೂ ಇಲ್ಲ. +ಅತ್ತೂ ಅತ್ತೂ ಆಗತಾನೆ ಅಳು ನಿಲ್ಲಿಸಿದವರ ದುಃಖ ಮುಖಮುದ್ರೆ, ಅವರ ದಮನಪ್ರಯತ್ನವನ್ನೂ ಮೀರಿ, ಎದ್ದುತೋರುತ್ತಿದೆ. +“ಅಯ್ಯೋ ದೇವ್ರೇ ಏನು ಕಷ್ಟಾ ಬಂತಪ್ಪಾ ದೇವಣ್ಣಯ್ಯುಗೆ? +ಬಾಲೆ ಚೆಲುವಯ್ಯಗೆ ಏನಾದ್ರೂ….?” ತನ್ನೊಳಗೆ ತಾನೆಂದುಕೊಳ್ಳುತ್ತಿದ್ದ ಚಿನ್ನಮ್ಮಗೆ ಮುಂದೆ ಅಲೋಚನೆಯೆ ಹೊರಡಲಿಲ್ಲ. +ಹೊಳವಾಗಿದ್ದರಿಂದ ಗೊರಬನ್ನು ತೆಗೆದು ತಾವು ಏಡಿ ಹಿಡಿಯುತ್ತಿದ್ದ ಗದ್ದೆಯ ಅಂಚಿನ ಮೇಲಿಟ್ಟು, ಪೂರಾ ಎತ್ತಿ ಕಟ್ಟಿಕೊಂಡಿದ್ದ ಸೀರೆಯನ್ನು ಸಡಿಲಿಸಿ ಕೆಳಗಿಳಿಸಿಕೊಂಡು, ತಳಾಲೆ ಸಹಿತವಾಗಿ ಅತ್ತಿಗಮ್ಮನನ್ನು ಇದಿರುಗೊಳ್ಳಲು ಓಡಿದಳು. +ಗದ್ದೆಯಂಚಿನ ಮೇಲೆ ತನ್ನ ಕಡೆಯೆ ಓಡಿ ಬರುತ್ತಿದ್ದ, ಹರ್ಷೋತ್ಸಾಹಗಳೆ ಮೂರ್ತಿಗೊಂಡಂತಿದ್ದ, ಸುಂದರ ತರುಣಿಯನ್ನು ಕಂಡೊಡನೆ ದೇವಮ್ಮನ ಮುಖದ ಮ್ಲಾನತೆ ನಾಚಿಯೆ ಹಿಂಜರಿಯಿತು. +ಅಭ್ಯಾಸಬಲದ ಅರ್ಧಕೃತಕ ಮಂದಹಾಸವೊಂದು ತುಟಿಗಳಲ್ಲಿ ಮಲರಿತು. + “ಏನೆ, ಚಿನ್ನೂ, ಇನ್ನೂ ಸಸಿ ನೆಟ್ಟು ಪೂರೈಸಲಿಲ್ಲೇನು? …. + ಮನೇಲೆಲ್ಲ ಸುಖವಾಗಿದ್ದಾರಾ? …. + ಅಜ್ಜಿ ಹ್ಯಾಂಗಿದ್ದಾರೆ? …. ತಮ್ಮಯ್ಯ (ಮುಕುಂದಯ್ಯನನ್ನು ಅವನ ಅಕ್ಕ ಕರೆಯುತ್ತಿದ್ದ ರೀತಿ) ಎಲಕ್ಲೂ ಕಾಣಾದಿಲ್ಲಲ್ಲಾ? +ಗದ್ದೆಗೆ ಬರಲಿಲ್ಲೇನು ಇವೊತ್ತು? +ಅವನ್ನೆ ಕಂಡು ಮಾತಾಡಿ, ಈಗಲೆ ಇಲ್ಲಿಂದಲೆ ಹಿಂದಕ್ಕೆ ಮನೀಗೆ ಹೋಗಾನ ಅಂತಾ ಬಂದೆ…. +ಬಾಲೇನ ಅತ್ತೆಮ್ಮನ ಹತ್ರ ಬಿಟ್ಟು ಬಂದೀನಿ ಕಣೇ…. +ಬ್ಯಾ ಗೋಗಬೇಕು….ಅದಕ್ಕೇ ಬಚ್ಚನ್ನ ಕರಕೊಂಡು ಓಡ್ತಲೇ ಬಂದೆ…. +ಯಾಕೆ ಹಿಂಗೆ ನೋಡ್ತೀಯ, ಬೆಚ್ಚಿಬಿದ್ದೋರ ಹಾಂಗೆ? …. ”ತಳಾಲೆ ಹಾಕಿಕೊಂಡೇ ತನಗೆ ಮುಟ್ಟಮುಟ್ಟ ನಿರುತ್ತರವಾಗಿ ನಿಂತಿದ್ದ ಚಿನ್ನಮ್ಮನ ತಲೆಗೆ ಕೈಹಾಕಿ ತಳಾಲೆಯನ್ನು ತೆಗೆಯುತ್ತಾ “ತಳಾಲೆ ತೆಗೆದುಬಿಡೆ; +ನಿನ್ನ ಮುಖದ ಅಂದಾನೇ ಕೆಡಿಸ್ತದೆ….” ಕೆದರಿದ್ದ ಕೂದಲನ್ನು ನೀವಿ ಬೈತಲೆಯನ್ನು ಸರಿಗೊಳಿಸುತ್ತಾ…. +“ನಿನ್ನಷ್ಟು ಚೆನ್ನಾಗಿ ಕಾಣೋರು ನಮ್ಮ ವಂಶದಲ್ಲೆ ಯಾರೂ ಇಲ್ಲ ಕಣೇ! …. +ತಮ್ಮಯ್ಯ ಎಷ್ಟು ಪುಣ್ಯ ಮಾಡಿದ್ದನೋ….”ಇನ್ನೂ ಏನೇನು ಹೇಳುತ್ತಿದ್ದಳೋ? +ಕೇಳುತ್ತಿದ್ದಳೋ?ಆದರೆ ನೋಡುತ್ತಾಳೆ. +ಚಿನ್ನಮ್ನ ಅಳತೊಡಗಿದ್ದಾಳೆ! +ಪ್ರಶ್ನೆಗಳ ಮೇಲೆ ಪ್ರಶ್ನೆ; +ಉತ್ತರದ ನಿರೀಕ್ಷೆಯೆ ಇಲ್ಲ; +ಒಂದು ವಿಷಯದಿಂದ ಮತ್ತೊಂದಕ್ಕೆ, ಅಸಂಬದ್ದ ವಿಷಯಕ್ಕೆ, ಹಾರುತ್ತಿವೆ! +ಗಂಭೀರ ಪ್ರವೃತ್ತಿಯ ಬೆಟ್ಟಳ್ಳಿ ಅತ್ತಿಗೆಮ್ಮೆ ಹಿಂದೆಂದೂ ಹಾಗೆ ವರ್ತಿಸಿದ್ದನ್ನು ಚಿನ್ನಮ್ಮ ಕಂಡಿರಲಿಲ್ಲ. +ಭಾವಪರವಶರಾಗಿ ನಾಲಗೆ ಸಡಿಲಗೊಂಡವರು ಮಾತಾಡುವಂತೆ ಆಡುತ್ತಿದ್ದುದನ್ನು ಕಂಡು ಚಿನ್ನಮ್ಮಗೆ ಮೊದಮೊದಲು ದಿಗಲಾಯ್ತು. +ತನ್ನ ತಲೆಯ ತಳಾಲೆ ತೆಗೆದು, ಕೂದಲು ನೀವಿ, ಕೈ ಮುದ್ದು ಮಾಡಿ, ತನ್ನ ನಿರುಪಮ ಸೌಂದರ್ಯವನ್ನು ಕುರಿತು ಪ್ರಶಂಶಿಸಲು ತೊಡಗಿದೊಡನೆ ಅವಳಿಗೆ ತಡೆಯಲಾಗಲಿಲ್ಲ. +ಏನೋ ಅನುಕಂಪೆಯ ಮರುಕ ಉಕ್ಕಿ ಬಂದಂತಾಗಿ, ತೊಟ್ಟಿಕ್ಕತೊಡಗಿದ್ದುವು ಕಣ್ಣೀರು! +“ಅಯ್ಯೋ ಹುಡುಗೀ, ಯಾಕೆ ಅಳ್ತೀಯೋ? +ಬಾ ಹೋಗಾನ…. +ಅಲ್ಲಿ ಯಾರು ಕೂತೋರು? +ನಾಗಕ್ಕನಾ?” ಎನ್ನುತ್ತಾ ಚಿನ್ನಮ್ಮನೊಡನೆ ಮುಂದುವರಿದಳು ದೇವಮ್ಮ. +ಚಿನ್ನಮ್ಮಗೆ ಧೃತಿ ಬಂದಂತಾಗಿ, ತನ್ನ ತಲೆಗೆ ಆ ಕ್ಷಣದಲ್ಲಿ ಹೊಳೆದ, ದೇವಮ್ಮನ ಹಲವಾರು ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಗೆಂಬಂತೆ ಉತ್ತರಿಸಿದಳು, ಹೆದಹೆದರಿ, ಮೆಲ್ಲಗೆ ಇಳಿದನಿಯಲ್ಲಿ. +“ಅವರೂ…ಗದ್ದೆಗೆ ಬಂದಿದ್ರು…. +ಕೆಲಸ ಮುಗಿದಮ್ಯಾಲೆ, “ಮನೀಗೆ ಹೋಗಿಬರ್ತಿನಿ” ಅಂತಾ ಹೋದ್ರು”. +“ಮನೇಲಿದ್ದಾನಲ್ಲಾ?ಅಲ್ಲಿಗೇ ಹೋಗಾನ ಬಾ….” +“ಮನೇಲಿಲ್ಲ!” +“‘ಮತ್ತೆ ಮನೀಗೆ ಹೋಗಿಬರ್ತಿನಿ ಅಂತಾ ಹೋದ್ರು’ ಅಂದೆ?” +“ನಮ್ಮ ಮನೀಗಲ್ಲ, ಕೋಣೂರಿಗೆ?” +“ಇನ್ನು ಮ್ಯಾಲೆ ಕೋಣುರು ಹ್ಯಾಂಗೆ ಅವನ ಮನೆ ಆಗ್ತದ್ಯೇ? +ಹೂವಳ್ಳೀನೆ ಅವನ ಮನೆ! …. +ಅಲ್ಲೇನೇ?”. ಚಿನ್ನಮ್ಮ ನಾಚಿಕೆಯಿಂದ ತಲೆಯೆತ್ತಲಿಲ್ಲ. +ದೇವಮ್ಮ ಅವಳ ಗಲ್ಲವನ್ನು ಸವರುತ್ತಾ ಅಕ್ಕರೆಯ ದನಿಯಲ್ಲಿ ಹೇಳಿದಳು. +“ಹೌದು!” ಅನ್ನು; ಯಾಕೆ ನಾಚಿಕೆ ಮಾಡಿಕೊಳ್ತೀಯ, ಚಿನ್ನೂ?” +ಅಂಚಿನ ಅರೆಕಲ್ಲಿನ ಮೇಲೆ ಹೊರಡಲನುವಾಗಿ ಎದ್ದುನಿಂತಿದ್ದ ನಾಗಕ್ಕನನ್ನು ಕೂಡಿಕೊಂಡು ಮೂವರೂ ಮನೆಯ ಕಡೆಗೆ ನಡೆದು ಕಣ್ಮರೆಯಾದ ತರುವಾಯವೆ ಪೀಂಚಲು, ಚಿನ್ನಮ್ಮ ಬಿಟ್ಟಿದ್ದ ಗೊರಬಿನ ಬಳಿಗೆ ಹೋಗಿ, ಅದನ್ನೂ ತನ್ನ ಗೊರಬಿನ ಜೊತೆಗೇ ಸೂಡಿಕೊಂಡು ಹೋಗುವ ಯೋಚನೆ ಮಾಡುತ್ತಿದ್ದಳು. +ಅಷ್ಟರಲ್ಲಿ ಹರಟೆ ಹೊಡೆಯುತ್ತಿದ್ದ ಗಂಡಾಳುಗಳ ಗುಂಪೂ ಚೆದರಿ ತಮ್ಮ ತಮ್ಮ ಬಿಡಾರಗಳಿಗೆ ಹೊರಟಿದ್ದರು. +ಐತ ಹೆಂಡತಿಯ ನೆರವಿಗೆ ಓಡಿ ಬಂದು ಚಿನ್ನಮ್ಮನ ಗೊರಬನ್ನು ತಾನೆ, ತನ್ನ ಕಂಬಳಿಕೊಪ್ಪೆಯ ಮೇಲೆಯೆ, ಸೂಡಿಕೊಂಡನು. +“ಬಚ್ಚ ಏನು ಹೇಳ್ತಿದ್ದನಲ್ಲಾ ನಿನ್ನ ಹತ್ರ?” ಪೀಂಚಲು ಕೇಳಿದಳು. +“ಗುತ್ತಿ ಎತ್ತಲಾಗಿ ಹೋದ?” ಅಂತಾ ಕೇಳ್ವ. +“ನಂಗೇನು ಗೊತ್ತು?” ಅಂದೆ. +“ಏನೇನು ಮಾಡ್ತೀರೊ ಮಾಡೀ ಮಾಡೀ. +ನಾವೂ ನೋಡ್ತೀವಿ. +ಬಡ್ಡೀಮಗ ಎಲ್ಲಿಗೆ ಹೋಗ್ತಾನೆ?” ಅಂತಾ ಹೇಳ್ತಾ ಹೋದ. +“ಆಗ ಯಾಕೆ ಅಷ್ಟೊಂದು ನಗ್ತಿದಲ್ಲಾ ನಿಮ್ಮ ಗುಂಪಿನಲ್ಲಿ? +ನಮ್ಮ ಕಡೆನೇ ಕೈ ತೋರಿಸ್ತಿದ್ದ, ಯಾವನೋ ಒಬ್ಬ?” ಮನೆಯ ಕಡೆಗೆ ನಡೆಯುತ್ತಾ ಕೇಳಿದಳು ಪೀಂಚಲು. +“ಆ ಲೌಡೀಮಗ ತಿಮ್ಮ ಹುಡುಗ…. +ತಮಾಸೆ ಅಂತಾ ಹೇಳ್ತಾನೆ. +“ಐತಣ್ಣಗೆ ಇನ್ನೂ ಮೀಸೇನೆ ಬಂದಿಲ್ಲ; +ಹುಡುಗ ಅಂತಾ ಮಾಡಿದ್ರೇ…. +ಪರ್ವಾ ಇಲ್ಲ. +ಕಸರತ್ತು ಮಾಡಿ, ಹುಡುಗೀಹೊಟ್ಟೇನ ಮುಂದಕ್ಕೆ ಬರಿಸೇಬಿಟ್ಟಾನೆ!” ಅಲ್ಲಿದ್ದೋರೆಲ್ಲ ನಗ್ತಾ ಇದ್ರು. +ಮತ್ತೆ, ಇನ್ನೊಬ್ಬನ ಕಿವೀಲಿ ಹೇಳೋಹಾಂಗೆ, ನಂಗೂ ಕೇಳಿಸ್ಲಿ ಅಂತಾ ಹೇಳ್ತಾನೆ. +‘ಅವನೇ ಮಾಡಿದ್ದೋ?” ಇನ್ಯಾರು ಕೈ ಹಾಕಿದ್ರೋ? +ಯಾರಿಗೆ ಗೊತ್ತು? ’…. ” +“ಅವನ ಬಾಯಿಗೆ ನನ್ನ….ಹಾಕ! …. ದೊಡ್ಡರೋಗ ಬಂದೇ ಸಾಯ್ತಾನೆ ನಾಯಿ ಮುಂಡೇದು! …. +ಅವನು ಸಿಕ್ಕಲಿ ನನಗೆ? +ಮುಖಕ್ಕೆ ಉಗಿದು ನೀರಿಳಿಸ್ದೆ ಇದ್ರೆ, ನಾನು ಐತನ ಹೇಂಡ್ತೀನೇ ಅಲ್ಲ! …. ” +“ನಾನೇನು ಸುಮ್ಮನೆ ಬಿಟ್ಟೆ ಅಂತಾ ಮಾಡ್ದೇನು? +ಚೆನ್ನಾಗಿ ಅಂದು ಹೇಳ್ದೆ “ನೀನು ಇನ್ನೊಂದು ಸಾರಿ ಅಂಥಾ ಮಾತು ಆಡು, ನಿನ್ನ ರುಂಡಾ ಕತ್ತರಿಸದಿದ್ರೆ, ನಾನು ಪೀಂಚಲೂ ಅಲ್ಲ! …. ” +ಇಬ್ಬರೂ ಮನೆಗೆ ಸಮೀಪಿಸುತ್ತಿದ್ದಾಗ ಪೀಂಚಲು ಹೇಳಿದಳು ಐತನಿಗೆ “ಬೆಟ್ಟಳ್ಳಿ ಹೆಗ್ಗಡ್ತಮ್ಮೋರು ಯಾಕೋ ಒಂದು ತರಾ ಆಗಿದ್ರು. +ಅವರು ಯಾವಾಗ್ಲೂ ಗಾಡೀಬಿಟ್ಟು ನೆಲಕ್ಕೆ ಕಾಲು ಮುಟ್ಟಿಸ್ದೋರೆ ಅಲ್ಲ, ಇವೊತ್ತು ನಡಕೊಂಡೇ ಬಂದು ಬಿಟ್ಟಾರೆ! +ಒಂದು ಬಡ್ಡು ಸೀರೆ ಉಟ್ಟುಕೊಂಡು! +ವಲ್ಲೀ ಕಟ್ಟಿಲ್ಲ!ತಲೇನೂ ಬಾಚಿಲ್ಲ! +ಛೇ ಏನು ಕಷ್ಟ ಬಂದಿದೆಯೋ ಏನೋ? …. +ನಮಗಂತೂ ಬಡೋರ ಕಷ್ಟ, ಇದ್ದೇ ಇರ್ತದೆ! +ಈ ದೊಡ್ಡೋರಿಗೆ, ಪಾಪ, ಯಾಕೆ ಬರಬೇಕೋ ಕಷ್ಟ? ”. +“ಅ ದೇವಯ್ಯಗೌಡ್ರು ಕಿಲಸ್ತರ ಜಾತಿಗೆ ಸೇರ್ತಾರೆ ಅಂತಿದ್ರು ಕಣೇ, ಅದರದ್ದೇ ಏನೋ ಇರಬೇಕು! …. +ಅವರಿಗೆ ಏನು ಬಂದಿದೆಯೋ ಏನೋ ಆ ಹಾಳು ಜಾತಿಗೆ ಸೇರಾಕೆ? +ಮುತ್ತಿನಂಥ ಹೆಂಡ್ತಿ ಮಕ್ಕಳು ಇರೋವಾಗ? ”. +ಐತನ ಊಹೆ ಅವನು ಭಾವಿಸಿದುದಕ್ಕಿಂತಲೂ ಹೆಚ್ಚು ವಾಸ್ತವವಾಗಿತ್ತು. +ಅಜ್ಜಿಯೊಡನೆ ತನ್ನ ಕಷ್ಟ ಸಂಕಟಗಳೆಲ್ಲವನ್ನೂ ಹೇಳಿಕೊಳ್ಳುತ್ತಿದ್ದ ಬೆಟ್ಟಳ್ಳಿ ಅತ್ತಿಗೆಯ ಧಾರುಣ ದೈನ್ಯದ ಮಾತುಗಳನ್ನು, ಅಜ್ಜಿಯ ಸೆರಗು ಹಿಡಿದು ಅವಳ ಮೈಗೆ ಒತ್ತಿ ಹತ್ತೆ ಕುಳಿತು, ಆಲಿಸುತ್ತಿದ್ದ ಚಿನ್ನಮ್ಮನ ಹೃದಯ ಜಜ್ಜರಿತವಾಯಿತು. +ತನ್ನ ಗಂಡನ ಇತರ ಎಲ್ಲ ಆಕ್ಷೇಪಣೀಯ ವರ್ತನೆಗಳನ್ನೂ, ಆಗಿನ ಕಾಲದ ಅವಿಭಕ್ತ ಕುಟುಂಬದ ಹಿಂದೂ ಸ್ತ್ರೀಗೆ ಸಹಜವಾಗಿದ್ದ ಅನಿವಾರ್ಯ ಮಹೌದಾರ್ಯದಿಂದ, ಕ್ಷಮಿಸಲು ಮಾತ್ರ ಅಲ್ಲದೆ ಒಪ್ಪಿಕೊಳ್ಳಲು ಸಿದ್ದವಾಗಿದ್ದ ದೇವಮ್ಮ ಆತನು ಮತಾಂತರಗೋಳ್ಳುವದನ್ನು ಮಾತ್ರ ಸಹಿಸಲು ಸಿದ್ಧಲಾಗಿರಲಿಲ್ಲ. +ಆರ್ಷೇಯ ಕಾಲದಿಂದಲೂ ಬಂದಿದ್ದ ತನ್ನ ಪೂರ್ವಿಕರ ದೇವರುಗಳನ್ನಾಗಲಿ, ಆಚಾರಗಳನ್ನಾಗಲಿ, ಶ್ರದ್ಧೆಯನ್ನಾಗಲಿ, ಪೂಜೆ ಪುನಸ್ಕಾರ ರೀತಿಗಳನ್ನಾಗಲಿ, ಸಾಮಾಜಿಕ ಬಂಧು ಬಾಂಧವರನ್ನಾಗಲಿ, ಸಂಪ್ರದಾಯ ಸಂಸ್ಕೃತಿಗಳನ್ನಾಗಲಿ ತ್ಯಜಿಸಿ, ಲಂಗರು ಕಡಿದ ಹಡಗಿನಂತೆ ಕಾಣದ ಕಡಲಿಗೆ ಕೊಚ್ಚಿ ಹೋಗುವದು ಅವಳ ಜೀವಕ್ಕೆ ಒಪ್ಪಿಗೆಯಾಗಿರಲಿಲ್ಲ…. +ಸಿಂಧುವಳ್ಳಿಯ ಚಿನ್ನಪ್ಪ ಗೌಡರು ಕಿಲಸ್ತರಾದ ಮೇಲೆ ಅವರ ಹೆಂಡತಿಗೆ ಒದಗಿದ್ದ ದುರಂತಗತಿಯ ವಿಚಾರವನ್ನು ಕೇಳಿದ್ದ ಅವಳಿಗೆ, ಗಂಡನನ್ನು ಮತಾಂತರ ಹೊಂದುವದಕ್ಕೆ ಬಿಡುವ ಮುನ್ನ ತಾನು ತನ್ನ ಶಿಶುವಿನೊಡನೆ ಮೃತ್ಯುವನ್ನಪ್ಪುವುದೆ ಶ್ರೇಯಸ್ಕರ ಎಂದು ತೋರಿತ್ತು. +ತನ್ನ ಹಣೆಯ ಕುಂಕುಮದೊಡನೆ ತನ್ನ ಗಂಭೀರವಾದ ಹಿಂದೂ ಹೆಸರನ್ನೂ ಅಳಿಸಿ, ಕಿವಿಯಿಂದ ಕೇಳಬಾರದು ಅಂತಹ ಕುಲಗೆಟ್ಟ ಅಸಹ್ಯ ಹೆಸರನ್ನಿಡಿಸುವ ಆ ಮತಕ್ಕೆ ಸೇರುವುದರ ಬದಲು ಬೆಂಕಿಗೆ ಹಾರುವದೇ ಎಷ್ಟೋ ಸಹ್ಯವೊ ಸುಖಕರವೊ ಆಗಿ ಕಂಡಿತ್ತು. +ತನ್ನ ಗಂಡನು ಪಾದ್ರಿಯ ಮಗಳೊಡನೆ ಸಂಬಂಧ ಬೆಳಸಿದ್ದಾನೆ ಎಂಬ ಗುಸುಗುಸು ಸುದ್ದಿ ಅವಳ ಕಿವಿಗೆ ಬಿದ್ದಿದ್ದಾಗ, ಗರತಿ ಹೆಣ್ಣು ಸಂಕಟಪಟ್ಟುಕೊಳ್ಳುವಂತೆ ದುಃಖಿಯಾಗಿದ್ದಳು. +ಆದರೆ ‘ಗಂಡಸರ ಹಣೆಯ ಬರಹವೇ ಹಾಗೆ. +ನನ್ನ ಗಂಡ ಒಬ್ಬನನ್ನೆ ಬೇರೆಯ ರೀತಿಯಲ್ಲಿ ನಡೆ ಎಂದರೆ ನಡೆಯುತ್ತಾನೆಯೆ? +ಭಗವಂತೆ ನನ್ನ ತಾಳಿ ಕಡದಂತೆ ಕಾಪಾಡಿದರೆ ಸಾಕು!’ ಎಂದು ಸಮಾಧಾನ ತಂದು ಕೊಂಡಿದ್ದಳು. +‘ಅಂತಕ್ಕನ ಮಗಳು ಕಾವೇರಿಯೊಡನೆ ದೇವಯ್ಯಗೌಡರು ಶೃಂಗಾರ ವ್ಯವಹಾರಕ್ಕೆ ಕೈಹಚ್ಚಿದ್ದಾರೆ! +ನಾನೆ ಕಣ್ಣಾರೆ ಕಂಡೆ!’ ಎಂಬರ್ಥದ ಮಾತನ್ನು ಅವರ ಗಾಡಿಯಾಳು ಬಚ್ಚನೆ ಅವಳಿಗೆ ಗುಟ್ಟಾಗಿ ಹೇಳಿ ಎಚ್ಚರಿಸಿದಾಗಲೂ ದುಃಖತಪ್ತೆ ದೇವಮ್ಮ ದೀನೆಯಾಗಿ “ದೇವರೆ, ಅವರು ತಮ್ಮ ಸಂತೋಷಕ್ಕೆ ಏನನ್ನಾದರೂ ಮಾಡಲಿ, ನನ್ನ ಮುತ್ತೈದೆತನ ಮಾತ್ರ ದೀರ್ಘಾಯುವಾಗುವಂತೆ ಕರುಣಿಸು” ಎಂದು ಗಂಡನ ಆರೋಗ್ಯ ಯೋಗಕ್ಷೇಮಗಳಿಗಾಗಿ ಕಾತರೆಯಾಗಿದ್ದಳಷ್ಟೆ! +ಏಕೆಂದರೆ ಆಗಿನ ಕಾಲದಲ್ಲಿ, ಕನ್ನಡ ಜಿಲ್ಲೆಯಲ್ಲಿಯೂ ಮತ್ತು ಕನ್ನಡ ಜಿಲ್ಲೆಯ ಸಂಪರ್ಕವೆ ಹೆಚ್ಚಾಗಿರುತ್ತಿದ್ದ ಮಲೆನಾಡಿನಲ್ಲಿಯೂ, ಸಿರಿವಂತರಾದವರು ತಮ್ಮ ಪುರುಸೊತ್ತಿನ ಮತ್ತು ಕೊಬ್ಬಿನ ಸೋಮಾರಿತನದ ಬೇಸರವನ್ನು ಪರಿಹರಿಸಿ ಕೊಳ್ಳಲು, ತಾವು ಹೋದಲ್ಲೆಲ್ಲಾ, ರಾತ್ರಿ ತಂಗಬೇಕಾದ ಸ್ಥಳಗಳಲ್ಲಿ, ಅಂತಹ ‘ಹಾಸಿಗೆ ಅನುಕೂಲ’ ಕಲ್ಪಿಸಿಕೊಂಡು, ರಸಿಕ ಜೀವನ ನಡೆಸುತ್ತಿದ್ದದ್ದು ಸಮಾನಸ್ಕಂಧರ ಪ್ರಶಂಸೆಗೂ ಗೌರವಕ್ಕೂ ಪಾತ್ರವಾಗಿತ್ತು. +ಅಷ್ಟೆ ಅಲ್ಲ, ಎಷ್ಟಷ್ಟು ಅಧಿಕ ಸಂಖ್ಯೆಯ ಶಯ್ಯಾನುಕೂಲಗಳನ್ನು ಇಟ್ಟುಕೊಂಡಿದ್ದರೆ ಅಷ್ಟಷ್ಟೂ ದೊಡ್ಡ ಮನುಷ್ಯರು ಎಂದು ಜನರು ಭಾವಿಸುತ್ತಿದ್ದ ಕಾಲವಾಗಿತ್ತು ಅದು! +ಪರಿಸ್ಥಿತಿಯೆ ಹಾಗಿರುವಲ್ಲಿ ತನ್ನ ಗಂಡ, ಮೇಗರವಳ್ಳಿ ಅಂತಕ್ಕನ ಮಗಳು ಕಾವೇರಿಯನ್ನು, ಒಂದು ಹಾಸಗೆಯ ಅನುಕೂಲವಾಗಿ, ಇಟ್ಟುಕೊಂಡರೂ ಇಟ್ಟುಕೊಳ್ಳಲಿ!ಎಂದು ಆ ಕಹಿಸುದ್ದಿಯನ್ನು ನುಂಗಿಕೊಂಡಿದ್ದಳು ದೇವಮ್ಮ ಹೆಗ್ಗಡತಿ. +ಆದರೆ ಈಗ ಪ್ರಸ್ತುತವಾಗಿದ್ದ ತನ್ನ ಗಂಡನ ಮತಾಂತರದ ವಾರ್ತೆ ತನ್ನ ಸಾವು ಬದುಕಿನ ಕಟ್ಟ ಕಡೆಯ ಗಂಡಾಂತರವಾಗಿದ್ದುದರಿಂದ ಅದನ್ನು ತನ್ನ ತಮ್ಮ ಮುಕುಂದಯ್ಯನಿಗೆ ತಿಳಿಸಿ, ತನ್ನ ಗಂಡನ ಅತ್ಯಂತ ಆಪ್ತಮಿತ್ರನಾಗಿದ್ದ ಅವನಿಂದಾದರೂ, ತನಗೆ ಒದಗಲಿದ್ದ ಮಹಾಘೋರ ಹಾನಿಯನ್ನು ತಡೆಗಟ್ಟಲೆಂದು ಹೂವಳ್ಳಿಗೆ ಧಾವಿಸಿ ಬಂದಿದ್ದಳು, ಉಟ್ಟ ಬಟ್ಟೆ ಬಿಟ್ಟ ಮಂಡೆಯಾಗಿ! +ಕತ್ತಲಾದ  ಮೇಲೆ ಚಿನ್ನಮ್ಮ ಮತ್ತೆ ಮತ್ತೆ ಮನೆಯ ಹೆಬ್ಬಾಗಿಲಿನ ಬಳಿಗೆ ಹೋಗಿ ಹಾದಿಯ ಕಡೆ ನೋಡಿ ನೋಡಿ ಬಂದಳು. +ಕೋಣೂರಿಗೆ ಹೋಗಿದ್ದ ಮುಕುಂದಬಾವಗೆ, ಆತನು ಹಿಂತಿರುಗಿದೊಡನೆ ಬೆಟ್ಟಳ್ಳಿ ಅತ್ತಿಗೆಮ್ಮನ ಕಷ್ಟದ ಸುದ್ದಿಯನ್ನು ಆದಷ್ಟು ಬೇಗ ತಿಳಿಸಿ, ಅದಕ್ಕೆ ಪರಿಹಾರ ಒದಗಿಸಬೇಕೆಂಬುದೆ ಅವಳ ಉತ್ಕಟಾಕಾಂಕ್ಷೆಯಾಗಿತ್ತು. +ಅವಳಿಗೆ ಅರ್ಥವೆ ಆಗಿರಲಿಲ್ಲ. +ತಾನು ಕಂಡಿದ್ದ ಮತ್ತು ತಿಳಿದಿದ್ದ ದೇವಣ್ಣಯ್ಯ ಅತ್ತಿಗಮ್ಮನಂತಾ ತನ್ನ ಹೆಂಡತಿಗೆ ಹೇಗೆ ಅಂಥಾ ದುಃಖ ತಂದೊಡ್ಡಿ ಕಷ್ಟಕೊಡಬಲ್ಲನು? +ತುಂಬ ಕತ್ತಲೆಯಾದ ಮೇಲೆಯೂ ಮುಕುಂದಯ್ಯ ಬಾರದಿರಲು, ಅವಳಿಗೆ ಚಿಂತೆ ಹತ್ತಿತ್ತು. + ಕೋಣೂರಿನಲ್ಲಿಯೆ ಉಳಿದುಬಿಡುತ್ತಾರೆಯೋ? +ಇಲ್ಲವೆ, ದಾರಿಯಲ್ಲಿ ಏನಾದರೂ ತೊಂದರೆಗೆ ಸಿಕ್ಕೆ ಹೊತ್ತಾಗಿದೆಯೋ? +ಅಥವಾ ಅಣ್ಣತಮ್ಮಂದಿರಲ್ಲಿ ಹಿಸ್ಸೆಯ ವಿಚಾರವಾಗಿ ಮಾತಿಗೆ ಮಾತು ಘರ್ಷಿಸಿ ಏನಾದರೂ ಆಗಿರಬಹುದೇ? +‘ನಾನು ಹೇಳಿದೆ, ಇಷ್ಟು ಬೈಗಾದ ಮೇಲೆ ಕೋಣೂರಿಗೆ ಹೋಗಾದ ಬ್ಯಾಡಾ; +ಬರಾಗ ಕತ್ತಲಾಗಿಬಿಡ್ತದೆ’ ಅಂತಾ. +‘ಭರ್ದಂಡು ಹೋಗಿ ಬಂದುಬಿಡ್ತೀನಿ, ಒಂದು ಎಲೆ’ ಡೆಕೆ ಹಾಕೋ ಹೊತ್ತಿನಲ್ಲಿ! +ಐಗಳು ಬಂದರೋ ಏನೋ? +ಯಾವಾಗ ಬರ್ತಾರೆ ಅಂತಾ ವಿಚಾರಿಸಿಕೊಂಡು ಬರ್ತಿನಿ…. +ಅಲ್ಲದೆ, ಅವ್ವನ್ನ ನೋಡದೆ ಎರಡು ಮೂರು ದಿನಾನೇ ಆಯ್ತು!’ ಅಂತಾ, ನನ್ನ ಮಾತನ್ನ ತಟ್ಟಿಹಾರಿಡಿ ಹೋದರಲ್ಲಾ? +ಹಿಂಗೆ ದಿನಾ ಏನಾದರೂ ಒಂದು ಮಾಡ್ತಾನೆ ಇರ್ತಾರೆ! +ಯಾರಿಗೆ ಹೇಳ್ಲಿ ನನ್ನ ಗೋಳನ್ನ? +ಹೆಂಗೆ ಹೇಳಾದು, ನಾಚಿಕೆಬಿಟ್ಟು? +ಚಿನ್ನಮ್ಮ ಚಿಂತಿಸುತ್ತಿದ್ದಂತೆಯೆ ದೊಂದಿಯ ಬೆಳಕು ಹಿಂದಕ್ಕೂ ಮುಂದಕ್ಕೂ ಆಡುತ್ತಾ ಮನೆಯ ಕಡೆಗೆ ಬರುತ್ತಿದ್ದುದು ಕಾಣಿಸಿತು. +ಚಿನ್ನಮ್ಮ ಓಡುತ್ತಲೆ ಹೋಗಿ ಬಾವನಿಗೆ ಕೈಕಾಲು ತೊಳೆದುಕೊಳ್ಳಲು ಬಿಸಿನೀರು ತಂದಿಟ್ಟಳು. +ಗದ್ದೆಯ ಕೆಲಸದ ಕೆಸರು ಇನ್ನೂ ಅಲ್ಲಲ್ಲಿ ಮೈಗೆ ಮುಖಕ್ಕೆ ಅಂಟಿ ಕೊಂಡಿದ್ದ ಮುಕುಂದಯ್ಯ, ತನ್ನ ಮೋಹಿನಿಯ ವದನಾರವಿಂದದ ಕಡೆಗೆ ಆಗಾಗ ದೃಷ್ಟಿಪ್ರಸಾರಮಾಡುತ್ತಾ, ಮಳೆಗಾಲಿ ನೀರು ಕೆಸರುಗಳಲ್ಲಿ ದುಡಿದು ದಣಿದಿದ್ದ ಮೈಗೆ ಬಿಸಿನೀರಿನ ಬಿಸುಪು ನೀಡುತ್ತಿದ್ದ ಸುಖವನ್ನು ಆಸ್ವಾದಿಸುತ್ತಾ, ಕೈಕಾಲು ತೊಳೆದುಕೊಂಡು ಜಗಲಿಗೆ ಏರಿದನು. +ಎಂದಿನಂತೆ ಒಳಗೆ ಹೋಗದೆ, ತಾನು ಕೈಕಾಲು ಮುಖ ಒರಸಿಕೊಳ್ಳುತ್ತಿದ್ದುದನ್ನೆ ನೋಡುತ್ತಿರುವಂತೆ, ತನ್ನೆಡೆಯೆ ನಿಂತುಬಿಟ್ಟಿದ್ದ ಚಿನ್ನಮ್ಮನ ಕಡೆಗೆ ಪ್ರೇಮಮಯ ಪ್ರಶ್ನದೃಷ್ಟಿ ಬೀರಿದ ಮುಕುಂದಯ್ಯಗೆ.“ಅತ್ತಿಗೆಮ್ಮ ಬಂದಾರೆ, ಬೆಟ್ಟಳ್ಳಿಯಿಂದ!” ಚಿನ್ನಮ್ಮನೆಂದಳು. +“ಆಞ?ಏನು?ಯಾರು?” ಆಶ್ಚರ್ಯವಿತ್ತು ಬಾವನ ಪ್ರಶ್ನೆಗಳಲ್ಲಿ. +“ಬೆಟ್ಟಳ್ಳಿ ಅತ್ತಿಗೆಮ್ಮ ಬಂದಾರೆ! …. ” ಮತ್ತೆ ಹೇಳಿದಳು ಚಿನ್ನ. +“ಅಕ್ಕಯ್ಯನೇನೇ?” +“ಹ್ಞೂ!”“ಮತ್ತೆ ಗಾಡಿ ಎಲ್ಲಿ? +ಕಾಣಿಸಲಿಲ್ಲ?”“ಗಾಡೀಲಿ ಬರಲಿಲ್ಲ; ನಡಕೊಂಡೇ ಬಂದ್ರು!” +“ಬಾವ ಬಂದಾರೇನು?”“ಇಲ್ಲ!” +“ಮತ್ತೆ ಅಕ್ಕಯ್ಯ ಯಾರ ಸಂಗಡ ಬಂತೇ?”“ಬಚ್ಚನ್ನ ಕರಕೊಂಡು ಬಂದಾರೆ.” +ಚಿನ್ನಮ್ಮನ ಕಣ್ಣಿನಲ್ಲಿದ್ದು ಧ್ವನಿಯಲ್ಲಿಯೂ ವ್ಯಕ್ತವಾಗುತ್ತಿದ್ದ ಏನೋ ದಿಗಿಲನ್ನು ಕಂಡು ಮುಕುಂದಯ್ಯನಿಗೂ ದಿಗಿಲಾಯ್ತು. +ಅವನ ಐಹೆ ನಾನಾ ಭಯಾನಕ ಮಾರ್ಗಗಳಲ್ಲಿ ಮಿಂಚಿನಂತೆ ಸಂಚರಿಸಿತು. +ಕಲ್ಲಯ್ಯ ಮಾವನಿಗೂ, ಅತ್ತೆಮ್ಮಗೊ, ದೇವಯ್ಯಗೊ ಅಥವಾ ಶಿಶು ಚೆಲುವಯ್ಯಗೂ? +ಯಾರಿಗೆ ಏನು ಆಗಿದೆಯೋ? +ಕೇಳಿದನು, ಬೇಗಬೇಗನೆ ಕಾಲೊರಸಿಕೊಂಡು. +“ಎಲ್ಲಿದೆಯೆ ಅಕ್ಕಯ್ಯ?”“ಒಳಗೆ ಅಜ್ಜಿ ಹತ್ರ ಮಾತಾಡ್ತಿದ್ದಾರೆ.” +ಮುಕುಂದಯ್ಯ ಒಳಗೆ ಓಡುತ್ತಲೆ ಹೋದನು, ಚಿನ್ನಮ್ಮನನ್ನು ಹಿಂದೆ ಹಾಕಿ. +ಅಕ್ಕನ ದುಃಖಕಾರಣವನ್ನೆಲ್ಲ ಆಲಿಸಿದ ಮೇಲೆ, ದುಃಖಿಸುವ ಅಕ್ಕನಿಗಾಗಿ ಅನುಕಂಪಿಸಿದರೂ, ಆ ದುಃಖದ ವಿಷಯದಲ್ಲಿ ಲಘು ಹೃದಯಿಯಾಗಿ ಆಕೆಯನ್ನು ಸಂತೈಸಿದನು. +“ನಿನಗೆ ಯಾರು ಈ ಸುಳ್ಳು ಸುಳ್ಳು ಸುದ್ದೀನೆಲ್ಲ ಹೇಳ್ದೋರು? +ನಾವೆಲ್ಲ ಸತ್ತೇ ಹೋದೆವು ಅಂತಾ ಮಾಡಿಕೊಂಡೇನು, ಆ ಪಾದ್ರಿ ನಿನ್ನ ಗಂಡನ್ನ ಅವನ ಜಾತಿಗೆ ಸೇರಿಸಿಕೊಳ್ಳಾಕೆ? …. ” +“ಆ ಬಚ್ಚನ್ನೆ ಕೇಳು; ಎಲ್ಲ ಹೇಳ್ತಾನೆ, ಇಲ್ಲೇ ಇದಾನಲ್ಲಾ.” +“ಅವನ ಮುಂಡಾಮೋಚ್ತು! +ಶನಿ ಸೊಳೇಮಗ! +ಕಿತಾಪತಿ ತಂದು ಹಾಕೋದರಲ್ಲಿ ಎತ್ತಿದ ಕೈ ಅಂವ….” +“ನೀ ಸುಮ್ಮ ಸುಮ್ಮನೆ ಅವನ್ಯಾಕೆ ಅಂತೀಯೆ” ಮೊನ್ನೆ ಅವನ್ನೂ ತೀರ್ಥಹಳ್ಳಿಗೆ ಕರಕೊಂಡು ಹೋಗಿ ಕಿಲಸ್ತರ ಜಾತಿಗೆ ಸೇರಿಸಿದ್ರಂತಲ್ಲ, ತೀರ್ಥಕೊಡಿಸಿ!” +“ಎಲ್ಲಿದ್ದಾನೇ ಅಂವ?” ಮುಕುಂದಯ್ಯ ಚಿನ್ನಮ್ಮನ ಕಡೆ ನೋಡುತ್ತಾ ಕೇಳಿದನು. +ಅವನಿಗೆ ನಿಜವಾಗಿಯೂ ಸುದ್ದಿ ಹೊಸದಾಗಿತ್ತು. +ದೂರದಲ್ಲಿದ್ದ ನಾಗಕ್ಕ “ಐತನ ಹತ್ರ ಮಾತಾಡ್ತಿದ್ದನಪ್ಪಾ, ಆಗ ಸೌದೆ ಕೊಟ್ಟಿಗೇಲಿ ಅವನ ಬಿಡಾರದ ಹತ್ರ….” ಎಂದಳು. +ಬಚ್ಚನಿಗೆ ಜಗಲಿ ಮುಂದಿನ ಕೆಳಗರಡಿಗೆ ಬರುವಂತೆ ಹೇಳಿ ಕಳಿಸಿ, ಮುಕುಂದಯ್ಯ ವಿಚಾರಿಸಿದನು. +“ಹೌದೇನೋ?ನೀನು ಕಿಲಸ್ತರ ಜಾತಿಗೆ ಸೇರಿದ್ದು?” +“ನಂಗೇನು ಗೊತ್ತಯ್ಯಾ, ಬರಾವು ಬರದ ಮೂಳಗೆ?” ತಲೆ ಕೆರೆದುಕೊಳ್ಳುತ್ತಾ ಮೈ ಮುದುಗಿಸಿ ನಿಂತಿದ್ದನು ಬಚ್ಚ. +“ಮತ್ತೆ ಅಕ್ಕಯ್ಯನ ಹತ್ರ ಬೊಗಳಿದಂತ್ಯಲ್ಲೋ?” ಬಚ್ಚನ ಅತಿ ವಿನಯದ ನಟನೆಯನ್ನು ಸಹಿಸಲಾಗದೆ ಸ್ವಲ್ಪ ಕಟುವಾಗಿಯೆ ಕೇಳಿದನು ಮುಕುಂದಯ್ಯ. +“ಆವೊತ್ತು ತೀರ್ಥೋಳ್ಳಿಗೆ ಗಾಡಿ ಹೊಡುಕೊಂಡು ಹೋಗಿದ್ದಾಗ, ಪಾದ್ರಿ ಮನೇಲಿ, ಸಣ್ಣಗೌಡ್ರು ಹೇಳಿದ್ರು, ‘ತೀರ್ಥ ತಗಾ’ ಅಂತಾ…. +ಎಂಥದೋ ಉಂದಿಷ್ಟು ನೀರು ಹುಯದ್ರು ನನ್ನ ಕೈಗೆ ಆ ಪಾದ್ರಿ, ಪಸ್ತಗ ತಗೊಂಡು ಏನೇನೋ ಓದಿದ್ರು. +‘ನೀನಿನ್ನು ಕಿಲಸ್ತ್ರ ಆದೆ’ ಅಂದ್ರು. +‘ನಿನ್ನ ಹೆಸರು ಜಕ್ರಪೈಯ್ಯ’ ಅಂದ್ರು. +‘ನೀನಿನ್ನು ಹೊಲೇರಂವ ಅಲ್ಲ; +ಬಿರಾಂಬ್ರ ಮನಿಗಾಗ್ಲಿ, ಗೌಡ್ರ ಮನಿಗಾಗ್ಲಿ ಹೋದ್ರೆ, ಅಂಗಳದಾಗೆ ನಿತ್ಗೂಬ್ಯಾಡ, ಜಗ್ಲೀಗ ಹೋಗಿ ಕೂತ್ಗಾ’ ಅಂದ್ರು…. +ಸಣ್ಣ ಗೌಡ್ರು ನಾ ತಗೊಂಡ ಮ್ಯಾಲೆ ತೀರ್ಥ ತಗೋತೀನಿ ಅಂದವ್ರೋ, ತಗೊಂಡ್ಲೇ ಇಲ್ಲ! …. + ಅವರಿಗೆ ಮೇಗ್ರೊಳ್ಳಿ ಇಸ್ಕೂಲಿನಾಗೆ ತೀರ್ಥ ಕೊಡ್ತಾರಂತೆ, ದೊಡ್ಡಪಾದ್ರಿ ಅದಾರಲ್ಲಾ, ಆ ಬಿಳೀಪಾದ್ರಿ, ಅವರೇ ಸಿಮೊಗ್ಗಾದಿಂದ ಬಂದು, ಅವರನ್ನು ಜಾತೀಗೆ ಸೇರಿಸ್ಗೊತಾರಂತೆ….” + ಕೇಳಬೇಕಾದ ಪ್ರಶ್ನೆಗಳನ್ನೆಲ್ಲ ಕೇಳಿ ಬಚ್ಚನಿಂದ ಉತ್ತರ ಪಡೆದ ಮೇಲೆ ಮುಕುಂದಯ್ಯ ಆಜ್ಞೆ ಮಾಡಿದನು. + “ನೀನಿಷ್ಟು ಈಗಲೇ ಉಂಡು ಕೊಂಡು, ಕೂಡ್ಲೆ ಬೆಟ್ಟಳ್ಳಿಗೆ ಹೋಗಿ, ನಾ ಹೇಳ್ದ ಅಂತಾ ಹೇಳಿ, ಗಾಡಿ ಕಟ್ಟಿಕೊಂಡು, ರಾತ್ರಾರಾತ್ರಿ ಬಂದು ಬಿಡಬೇಕು. +ಕಮಾನುಗಾಡಿ!ಗೊತ್ತಾಯ್ತಾ ಸಣ್ಣಗೌಡ್ರಿಗೂ ಹೇಳು, ಬರಾಕೆ ಹೇಳಿದ್ರೂ ಅಂತಾ”. +“ಅವರು ಮನೇಲಿ ಇರಲಿಲ್ಲಾ, ನಾವು ಬರಾಗ”. +“ಗದ್ದೆಗೆ ಹೋಗಿದ್ರೇನೋ?” +“ಅಲ್ಲ ಮೇಗ್ರೊಳ್ಳಿಗೆ!” ಎಂದವನು ತಡೆದು ಮುಂದುವರಿದು “ಕಾವೇರಮ್ಮಗೆ….ಆ ಕರ್ಮೀನಸಾಬ್ರು ತಮ್ಮ ಪುಡಿಸಾಬ್ರು, ಚೀಂಕ್ರ….” ಎಂದು ಅರ್ಧಕ್ಕೇ ಮಾತು ನಿಲ್ಲಿಸಿ, ಕೆಮ್ಮಿ, “ಏನೇನೋ ಹೇಳ್ತಿದ್ರಪ್ಪಾ! +ನಂಗೆ ಸರಿಯಾಗಿ ಗೊತ್ತಿಲ್ಲರಯ್ಯಾ!” ಎಂದು ನಿಲ್ಲಿಸಿಯೆ ಬಿಟ್ಟನು. +ಆ ವಿಚಾರ ಅಲ್ಪಸ್ವಲ್ಪ ಮುಕುಂದಯ್ಯನ ಕಿವಿಗೂ ಬಿದ್ದಿತ್ತಾದ್ದರಿಂದ ಮುಂದೆ ಏನನ್ನೂ ಕೇಳು ಹೋಗದೆ, “ಅವರು ಮೇಗರೊಳ್ಳಿಯಿಂದ ಮನೀಗೆ ಬಂದಿದ್ದರೆ, ನಾ ಹೇಳಿದ್ದನ್ನು ಹೇಳು…. +ನಡೀ ಈಗ….” ಎಂದನಷ್ಟೆ. +ತನ್ನ ಅಕ್ಕಯ್ಯನನ್ನು ಆದಷ್ಟು ಬೇಗನೆ ನೆಮ್ಮದಿಯಾಗಿ ಗಾಡಿಯ ಮೇಲೆ ಬೆಟ್ಟಲ್ಲಳಿಗೆ ಕರೆದುಕೊಂಡು ಹೋಗಿ ಬಿಟ್ಟು ಬರುವುದೆ ಮುಕುಂದಯ್ಯನ ಮೊದಲು ಉದ್ದೇಶವಾಗಿತ್ತು. +ತಾಯಿಯನ್ನು ಎಂದೂ ಬಿಟ್ಟಿರಿದ ಶಿಶು ಚೆಲುವಯ್ಯನ ರೋದನ ಅವನ ಒಳಕಿವಿಗೆ ಕೇಳಿಸುತ್ತಿತ್ತೊ ಏನೊ! +ಪಾದ್ರಿಯ ಮಗಳೊಡನೆ ಬೆಟ್ಟಳ್ಳಿ ದೇವಯ್ಯ ಗೌಡರ ಪ್ರಣಯ ವ್ಯವಹಾರ ದೇಹ ಸಂಬಂಧದವರೆಗೂ ಮುಂದುವರಿದಿತ್ತು. +ಅಂತಹ ಅನೇಕ ದೇಹ ಸಂಬಂಧಗಳಿದ್ದ ಸಿರಿವಂತ ಗೌಡರ ಆ ಯುವಕನಿಗೆ ಪಾದ್ರಿಯ ಮಗಳ ಅಂತಹ ಸಂಬಂಧ ಹತ್ತರಲ್ಲಿ ಹನ್ನೊಂದಾಗಿತ್ತು, ಅಷ್ಟೆ. +ಅದನ್ನೊಂದು ಗುರುವಿಷಯವೆಂದು ಅವನು ಮೊದಮೊದಲು ಭಾವಿಸಿರಲಿಲ್ಲ. +ಆದರೆ ಕ್ರೈಸ್ತನಾಗಿದ್ದ ಉಪದೇಶಿ ಜೀವರತ್ನಯ್ಯ ತನ್ನ ಮಗಳ ಕನ್ಯಾತ್ವಹರಣವನ್ನು ಲಘುವಾಗಿ ಭಾವಿಸಲು ಸಿದ್ಧನಿರಲಿಲ್ಲ. +ಜೊತೆಗೆ, ಆ ಘಟನೆ ಒಬ್ಬ ಮನೆ ತನಸ್ಥ ಯುವಕನನ್ನು ಕ್ರೈಸ್ತ ಮತಕ್ಕೆ ಸೆಳೆಯುವ ಅವಕಾಶ ಒದಗಿಸಲು, ಅದನ್ನು ಬಿಟ್ಟುಕೊಡುತ್ತಾನೆಯೆ? +ತನ್ನ ಮತಕ್ಕೂ ವೃತ್ತಿಗೂ ಅಲ್ಲದೆ, ವೈಯಕ್ತಿಕವಾಗಿಯೂ ತನಗೂ ಮತ್ತು ತನ್ನ ಮಗಳಿಗೂ ಲಾಭಕರವಾಗಿರುವಾಗ, ಎರೆ ನುಂಗಿ ಗಾಳಕ್ಕೆ ಸಿಕ್ಕಿದ ಮೀನನ್ನು ದಡಕ್ಕೆಳೆಯದೆ ಬಿಡುವಷ್ಟು ಎಗ್ಗನಾಗಿರಲಿಲ್ಲ ಅವನು. +ಜಾತಿಗೆ ಸೇರಿದರೆ ಮಾತ್ರ ಆ ಸಮಸ್ಯೆ ಹೆಚ್ಚು ತೊಂದರೆಯುಂಟುಮಾಡದೆ ಸುಸೂತ್ರವಾಗಿ ಪರಿಹಾರವಾಗುತ್ತದೆ ಎಂದು ದೇವಯ್ಯನನ್ನು ಬಲಾತ್ಕರಿಸತೊಡಗಿದ್ದನು. +ನುಣ್ಣನೆಯ ಮಾತಿನ ಒಳಗೇ ಬೆದರಿಕೆಯನ್ನೂ ಹಾಕಿದ್ದನು. +ತಾನು ಎಂತಹ ಅಪಾಯಭೂಯಿಷ್ಠವಾದ ಕೆಂಜಿಗೆಯ ಹಿಂಡಲಿನೊಳಗೆ ನುಗ್ಗಿ ಸಿಕ್ಕಿಬೆದ್ದಿದ್ದೇನೆ ಎಂಬ ಅರಿವು ಉಂಟಾದೊಡನೆ ದೇವಯ್ಯ ಚಕಿತನಾದನು. +ಆತ್ಮ ರಕ್ಷಣೆಗಾಗಿ ಸಭ್ಯಾಸಭ್ಯ ಭೇದವಿಲ್ಲದೆ ಸರ್ವೋಪಾಯಗಳನ್ನೂ ಕೈಗೊಳ್ಳಲು ಸಿದ್ಧನಾದನು. +ಎಲ್ಲವನ್ನೂ ಗುಟ್ಟಾಗಿಟ್ಟಿರುವುದೇ ಆ ಕಾರ್ಯಕ್ರಮದ ಮೊದಲ ಹಂತವಾಗಿತ್ತು. +ತನ್ನ ನಿಜವಾದ ಮನಸ್ಸು ಉಪದೇಶಿಗಾಗಲಿ ಅವನ ಮಗಳಿಗಾಲಿ ಒಂದಿನಿತೂ ಗೋಚರವಾಗದಂತೆ ವರ್ತಿಸತೊಡಗಿದನು. +ತಾನು ಇಂದಲ್ಲ ನಾಳೆ ಜಾತಿಗೆ ಸೇರುವದು ನಿಶ್ಚಯ ಎಂಬಂತೆ ತೋರಿಸಿಕೊಂಡನು. +ಅದಕ್ಕೆ ನಂಬಿಕೆಯ ಮುಂಗಡವಾಗಿ ಬಚ್ಚನನ್ನು ಮೊದಲು ಕ್ರೈಸ್ತನನ್ನಾಗಿ ಮಾಡುವ ವಂಚನೆಗೂ ಕೈಹಾಕಿದ್ದನು. + “ನೀನು ನಾನು ಹೇಳಿದ ಹಾಗೆ ಮಾಡು. +ನಿಮ್ಮ ಜಾತಿಯವರು ದಂಡ ಕೇಳಿದರೆ ನಾನೆ ಕೊಟ್ಟು ಶುದ್ಧಿ ಮಾಡಿ, ಹೊಲೆಯರ ಕುಲಕ್ಕೇ ಮತ್ತೆ ಸೇರಿಸಿಕೊಳ್ಳುವಂತೆ ಮಾಡುತ್ತೇನೆ!” +‘ನನ್ನ ಹೆಂಡತಿ ಕ್ರೈಸ್ತಳಾಗಲು ಎಂದಿಗೂ ಒಪ್ಪುವುದಿಲ್ಲ; +ಆದ್ದರಿಂದ ನಾನು ಹೇಗೆ ಕ್ರೈಸ್ತನಾಗಲಿ?’ ಎಂದು ದೇವಯ್ಯ ಹೇಳಿದ್ದಕ್ಕೆ ಪಾದ್ರಿ ‘ಕ್ರೈಸ್ತಮತ ಇಬ್ಬರು ಹೆಂಡಿರನ್ನು ಆಗಲು ಎಂದಿಗೂ ಸಮ್ಮತಿಸುವುದಿಲ್ಲ, ಆದರೆ ಮೊದಲ ಹೆಂಡತಿಯನ್ನು ಕಾನೂನುಬದ್ಧವಾಗಿ ಡೈವೊರ್ಸ ಮಾಡಬಹುದು’ ಎಂದು ಸೂಚಿಸಿದ್ದನು. +ದೇವಯ್ಯ ಕಾಲವಂಚನೆ ಮಾಡಿ ತಪ್ಪಿಸಿಕೊಳ್ಳಬಹುದೆಂದು ಆಲೋಚಿಸಿ ಮೈಸೂರು ಸಂಸ್ಥಾನದಲ್ಲಿ ಆಗ ಇದ್ದ ಕಾನೂನೊಂದನ್ನು ಪಾದ್ರಿಯ ಗಮನಕ್ಕೆ ತಂದಿದ್ದನು. +ಬ್ರಿಟಿಷರ ಆಳ್ವಿಕೆಯ ಪ್ರಾಂತಗಳಲ್ಲಿ ಹಿಂದೂ ಅವಿಭಕ್ತ ಕುಟುಂಬದ ಒಬ್ಬನು ಅನ್ಯ ಮತಾವಲಂಬಿಯಾದರೆ ಅವನಿಗೆ ತನ್ನ ಪಿತ್ರಾರ್ಜಿತ ಆಸ್ತಿಯ ಹಕ್ಕುದಕ್ಕುತ್ತಿದ್ದರೂ, ಮೈಸೂರು ಸಂಸ್ಥಾನದಲ್ಲಿ ಅನ್ಯಮತಾವಲಂಬಿಯಾದವನು ಆ ಹಕ್ಕನ್ನು ಕಳೆದುಕೊಳ್ಳಬೇಕಾಗಿತ್ತು. +ಸಿಂಧುವಳ್ಳಿ ಚಿನ್ನಪ್ಪಗೌಡರು ಮತಾಂತರ ಹೊಂದುವಾಗ ಅವರೊಬ್ಬರೆ ಪಿತ್ರಾರ್ಜಿತ ಆಸ್ತಿಗೆ ಏಕಮಾತ್ರ ಹಕ್ಕುದಾರರಾಗಿದ್ದುದರಿಂದ ಆ ಆಸ್ತಿ ಅವರಿಗೆ ಪೂರ್ತಿಯಾಗಿ ದಕ್ಕಿತ್ತು. +ಆದರೆ ತಂದೆ ಕಲ್ಲಯ್ಯ ಗೌಡರು ಇರುವವರೆಗೆ ಕ್ರೈಸ್ತನಾಗುವ ತನಗೆ ಆಸ್ತಿ ಬರುವುದಿಲ್ಲ. +ಆದ್ದರಿಂದ ಅವರು ಪರಲೋಕಪ್ರಾಪ್ತಿಯನ್ನೈದಿದಮೇಲೆಯೆ ತಾನು ಮತಾಂತರ ಹೊಂದುತ್ತೇನೆ ಎಂದು ವಾದಿಸಿದ್ದನು ದೇವಯ್ಯ. +ಅದಕ್ಕೆ ಪಾದ್ರಿಯ ಸಮಾಧಾನ ಹೀಗಿತ್ತು. +ಬ್ರಿಟಿಷ್ ಚಕ್ರವರ್ತಿನಿಯೂ ಪ್ರೋಟೆಸ್ಟೆಂಟ್ ಕ್ರೈಸ್ತ ಮತದವಳೆ. +ಆದ್ದರಿಂದ ಇಂಡಿಯಾದಲ್ಲಿ ಬ್ರಿಟಿಷ್ ಸರ್ಕಾರವು ಪ್ರೋಟೆಸ್ಟೆಂಟ್ ಮಿಷನರಿಗಳಿಗೆ ನೇಟಿವ್ ಜನರನ್ನು ಮತಾಂತರಗೊಳಿಸುವುದಕ್ಕೆ ಸರ್ವಾಧಿಕಾರವನ್ನೂ ಸರ್ವಸೌಲಭ್ಯಗಳನ್ನೂ ಕೊಡುತ್ತಾ ಇದೆ. +ಮೈಸೂರು ಸಂಸ್ಥಾನವು ನೇಟಿವ್ ಸಂಸ್ಥಾನವಾದರೂ ಅದರ ರಾಜನು ಸಂಪೂರ್ಣವಾಗಿ ಬ್ರಿಟಿಷರ ಅಡಿಯಾಳು. +ಬ್ರಟಿಷರ ಪ್ರತಿನಿಧಿ ರೆಸಿಡೆಂಟ್ ಸಾಹೇಬರು ಹೇಳಿದ ಹಾಗೆ ಅವನು ಕೇಳಬೇಕಾಗುತ್ತದೆ. +ಇಲ್ಲದಿದ್ದರೆ ರಾಜ್ಯವನ್ನೇ ಕಳೆದುಕೊಳ್ಳುತ್ತಾನೆ. +‘ನಮ್ಮ ದೊಡ್ಡ ಪಾದ್ರಿಗಳು ಲೇಕ್ ಹಿಲ್ ದೊರೆಗಳು, ರೆಸಿಡೆಂಟರ ಕಿವಿಯಲ್ಲಿ ಒಂದು ಪಿಸುಮಾತು ಉಸಿರಿದರೆ ಸಾಕು, ನಿಮ್ಮ ಪಿತ್ರಾರ್ಜಿತ ಆಸ್ತಿಗೆ ನಿಮ್ಮ ಅರ್ಧಾಂಗಿ ಆಗುವ ನನ್ನ ಮಗಳು ಹಕ್ಕುದಾರಳಾಗಿ ಬಿಡುತ್ತಾಳೆ! ’. +ಆದ್ದರಿಂದಲೆ ದೇವಯ್ಯಗೌಡರ ಮತಾಂತರವನ್ನು ಸಾಕ್ಷಾತ್ ದೊಡ್ಡಪಾದ್ರಿಗಳಾದ ಲೇಕ್ಹಿಲ್ ದೊರೆಗಳೆ, ಕ್ರಿಸ್‌ಮಸ್‌ನಲ್ಲಿ, ಮೇಗರವಳ್ಳಿಯ ಮಿಶನ್ ಸ್ಕೂಲಿನ ಪ್ರಾರಂಭೋತ್ಸವ ನಡೆಸಲು ಬಂದಾಗ, ತಾವೆ ಖುದ್ದಾಗಿ ನಡೆಸಿಕೊಡುತ್ತಾರೆ ಎಂದು ನಿಶ್ಚಯವಾಗಿತ್ತು. +ಹೀಗಾಗಿ ಧರ್ಮ ಸಂಕಟಕ್ಕೆ ಸಿಕ್ಕಿಬಿದ್ದಿದ್ದ ದೇವಯ್ಯನಿಗೆ ‘ಮ್ಲೇಚ್ಛ ಪಾಷಂಡಿ’ ಗಳ ಆ ಚಕ್ರವ್ಯೂಹದಿಂದ ಪಾರಾಗಲು ಹೊಳೆದದ್ದು ಒಂದೇ ದಾರಿ. +ಮುಕುಂದಯ್ಯನ ಅಭಿಮನ್ಯು ಪ್ರವೇಶ! +ಅವರಿಬ್ಬರೂ ಅದನ್ನು ಸಾಂಗೋಪಾಂಗವಾಗಿ ಚರ್ಚಿಸಿ ನಿರ್ಣಯಿಸಿದ್ದರು. +ಅದೇನೋ ಅಪ್ಪಟ ದಸ್ಯುದಾರಿಯೆ ಆಗಿತ್ತು. +ಆದರೇನು ಮಾಡುವುದು?” ಬೇರೆ ಉಪಾಯವೆ ತೋರಲಿಲ್ಲವಾದ್ದರಿಂದ ಆ ಕಾಡು ಉಪಾಯವನ್ನೇ ಆಶ್ರಯಿಸಿದ್ದರು, ನೆಂಟ ಭಾವ ಇಬ್ಬರೂ! …. +ಚಿನ್ನಮ್ಮ ಅವಳ ಹೊಸ ಸೀರೆಯುಡಿಸಿ, ಬಾಚಿ, ಕುಂಕುಮ ವಿಡಿಸಿ, ಹೂಮುಡಿಸಿದ್ದ ತನ್ನ ಅಕ್ಕಯ್ಯಗೆ ಅದನ್ನೆಲ್ಲ, ಹದಿಬದೆಗೆ ಮನನೋಯುವ ಅಂಶಗಳನ್ನು ಬಿಟ್ಟೋ ತೇಲಿಸಿಯೋ ಸಂಗ್ರಹವಾಗಿ ತಿಳಿಸಿ, ಯಾರೊಡನೆಯೂ ತುಟಿಪಿಟಕ್ಕೆನ್ನ ಬಾರದೆಂದೂ ಬುದ್ಧಿ ಹೇಳಿ, ಆ ರಾತ್ರಿಯೆ ಗಾಡಿ ಹತ್ತಿಸಿ ಬೆಟ್ಟಳ್ಳಿಗೆ ಕರೆದುಕೊಂಡು ಗೋಗಿ ಬಿಟ್ಟು ಬಂದಿದ್ದನು ಮುಕುಂದಯ್ಯ. +ಹಗಲಾದ ಮೇಲೆ ಹೆಚ್ಚು ಗುಲ್ಲಿಗೆ ಅವಕಾಶವಾಗುತ್ತದೆ ಎಂಬ ಕಾರಣಕ್ಕಾಗಿಯೂ. +ಪಿಜಿಣನ ಆತ್ಮಹತ್ಯೆಯ ಅನಂತರ ಚೀಂಕ್ರ ಎಂದಿಗಿಂತಲೂ ಅತಿಶಯವಾಗಿ ಅಕ್ಕಣಿಯ ಯೋಗಕ್ಷೇಮದ ವಿಚಾರದಲ್ಲಿ ಆಸಕ್ತನಾದನು. +ಅಕ್ಕಣಿ ಅವಳ ಗಂಡನ ಕಳೇಬರಕ್ಕೂ ಪ್ರೇತಕ್ಕೂ ಸಲ್ಲಿಸಬೇಕಾಗಿದ್ದ ಕ್ರಿಯೆಗಳಿಗೆಲ್ಲ ಚೀಂಕ್ರನೆ ಹೊಣೆಗಾರನಾಗಿ ನಿಂತು ಕೆಲಸ ಮಾಡಿದನು. +ಅಕ್ಕಣಿಗೂ ಚೀಂಕ್ರ ಸೇರೆಗಾರನಿಗೂ ಇದ್ದಿಬಹುದಾದ ಗುಪ್ತಸಂಬಂಧವನ್ನು ಗುಟ್ಟಾಗಿಯೆ ಅರಿತಿದ್ದ ಅವರ ಜಾತಿಯವರಿಗೂ ಇತರರಿಗೂ ಚೀಂಕ್ರನ ಕರುಣೆಯ, ದಯೆಯ ಮತ್ತು ಸೇವೆಯ ಅರ್ಥ ಸ್ಪಷ್ಟವಾಗಿಯೆ ಆಗಿತ್ತು. +ಇನ್ನು ಅಕ್ಕಣಿ ಚೀಂಕ್ರವನ್ನು ಕೊಡುತ್ತಾಳೆ; ಅದೂ ಸರಿಯೆ; +ಪ್ರಾಯದ ಹೆಂಗಸು ಗಂಡನಿಲ್ಲದೆ ಬದುಕು ಸಾಗಿಸುವುದು ಎಂದಿಗಾದರೂ ಸಾಧ್ಯವೆ? +ಕಂಡ ಕಂಡ ಗಂಡಸರ ಕಾಟಕ್ಕೆ ಒಳಗಾಗಿ, ಮೂರು ಹೊತ್ತೂ ಮುಜುಗರದ ಜೀವನ ನಡೆಸುವುದಕ್ಕಿಂತ ಯಾವನಾದರೊಬ್ಬನನ್ನು ಕೂಡಿಕೆಯಾಗಿ, ಮತ್ತೆ ಗರತಿಬಾಲು ಮಾಡುವುದೇ ಯೋಗ್ಯ; +ಅಲ್ಲದೆ ಹೆಂಡತಿ ಸತ್ತ ಮೇಲೆ ಕೆಟ್ಟು ಅಲೆಯುತ್ತಿರುವ ಚೀಂಕ್ರನಿಗೂ ಒಂದು ನೆಲೆ ಸಿಕ್ಕಿದ ಹಾಗಾಗುತ್ತದೆ; +ಅವನ ಮಕ್ಕಳಿಗೂ ಒಂದು ತಾಯಿ ದಿಕ್ಕು, ಇದುವರೆಗೂ ಅತಂತ್ರವಾಗಿದ್ದುದ್ದು, ಸುತಂತ್ರವಾಗಿಯೂ ದೊರೆತಂತೆ ಆಗುತ್ತದೆ. +ಆದರೆ ಅಕ್ಕಣಿಯ ಮನಸ್ಸೇ ಬೇರೆಯಾಗಿತ್ತು. +ಅವಳು ತನ್ನ ಗಂಡನು ಬದುಕಿದ್ದಾಗಲೆ ಸಮಯ ಸನ್ನಿವೇಶ ದಾಕ್ಷಿಣ್ಯಗಳಿಗೆ ತುತ್ತಾಗಿ ಕಾಲುಜಾರಿದ್ದಳು, ನಿಜ. +ಆದರೆ ಸೇರೆಗಾರನಿಗೆ ಮನಸ್ಸು ಸೋತು ಒಡಲನ್ನು ಒಪ್ಪಿಸಿರಲಿಲ್ಲ. +ತನ್ನ ರೋಗಿಷ್ಠ ತಂಡನ ಶುಶ್ರೂಷೆಗೆ ಸೇರೆಗಾರನಿಂದ ನೆರವಾಗುತ್ತಿದೆ ಎಂಬ ಕೃತಜ್ಞತಾ ಕಾರಣವೂ ಅವಳ ‘ಪತನ’ಕ್ಕೊಂದು ಪ್ರಬಲ ಪ್ರಚೋದನೆಯಾಗಿತ್ತು. +ಪಿಜಿಣನ ದೊಡ್ಡತನದ ಮುಂದೆ ಚೀಂಕ್ರನ ನೀಚತ್ವ ಅವಳ ಕಣ್ಣಿಗೆ ಎದ್ದುಕಾಣುತ್ತಿತ್ತು. +ಪಿಜಿಣನು ರೋಗವಶನಾಗಿ ಇಂದೊ ನಾಳೆಯೊ ಸಾಯುತ್ತಿದ್ದನು. +ಅವನು ಹಾಗೆ ಸ್ವಾಭವಿಕವಾಗಿ ಸತ್ತಿದ್ದರೆ ಏನಾಗುತ್ತಿತ್ತೊ ಏನೋ? +ಈಗ ಗಂಡನ ಆತ್ಮಹತ್ಯೆಗೆ ಚೀಂಕ್ರನ ಪ್ರಧಾನ ಕಾರಣ ಎಂಬ ಭಾವನೆ ಅಕ್ಕಣಿಯಲ್ಲಿ ಬೇರೊರಿತ್ತು. +ಚೀಂಕ್ರ ತಂದು ಕೊಡುತ್ತಿದ್ದ ಔಷಧಗಳೂ, ಹೇಳುತ್ತಿದ್ದ ಪಥ್ಯಗಳೂ, ನೆವವೊಡ್ಡಿ ತಮ್ಮ ಬಿಡಾರದಲ್ಲಿಯ ಪಿಜಿಣನಿಗೆ ಕಾಣುವಂತೆ ಮತ್ತು ಎಟಕುವಂತೆ ತಂದು ಮುಚ್ಚಿಡುತ್ತಿದ್ದ ಸಾರಾಯಿಯಂತಹ ಅಗ್ನತುಲ್ಯ ಪಾನೀಯಗಳೂ ಪಿಜಿಣನ ರೋಗ ಉಲ್ಭಣಗೊಳ್ಳುವುದಕ್ಕೂ ಯಾತನೆ ಸಹಿಸಲಸಾಧ್ಯವಾಗುವಂತೆ ಏರಿ ಆತ್ಮಹತ್ಯೆಗೂ ಅವನನ್ನು ನೂಕಿದುದಕ್ಕೂ ಸಹಾಯವಾದುವಲ್ಲವೆ? +ಜೊತೆಗೆ, ಕೊನೆಕೊನೆಯಲ್ಲಿ ತನ್ನ ಗಂಡನ ಉದಾರ ಹೃದಯದಲ್ಲಿಯೂ ಜುಗುಪ್ಸೆ ಹುಟ್ಟುವಂತೆ ತಾನು ವರ್ತಿಸಿದೆನೆಲ್ಲಾ ಎಂಬ ಆತ್ಮನಿಂದನೆಯ ಭಾವವೂ ಅವಳಲ್ಲಿ ಸದ್ಯಃ ಪಶ್ಚಾತಾಪವನ್ನು ಕೆರಳಿಸಿತ್ತು. +ಯಾವುದಾದರೂ ಒಂದು ರೀತಿಯಲ್ಲಿ, ಹೇಗಾದರೂ, ತಾನು ಕಠೋರ ಪ್ರಾಯಶ್ಚಿತ್ತ  ಮಾಡಿಕೊಳ್ಳಬೇಕು ಎಂಬ ಆತ್ಮ ಶುದ್ಧೀಕರಣದ ಧರ್ಮ ಬುದ್ಧಿ ಚೇತನಗ್ರಸ್ತವಾಗಿತ್ತು. +ಅವಳೀಗ ಚೀಂಕ್ರನ ಮಕ್ಕಳನ್ನು ಎಂದಿನಂತೆ ನೋಡಿಕೊಳ್ಳುತ್ತಿದ್ದರೂ ಅವನೊಡನೆ ಮಾತಿಗೆ ಹೋಗುತ್ತಿರಲಿಲ್ಲ. +ತನ್ನ ಬಿಡಾರದಲ್ಲಿಯೇ ಮಕ್ಕಳನ್ನು ಮಲಗಿಸಿಕೊಂಡು ಮಲಗುತ್ತಿದ್ದಳು. +ತನ್ನ ಬಿಡಾರಕ್ಕೆ ಚೀಂಕ್ರನನ್ನು ಸೇರಿಸುತ್ತಿರಲಿಲ್ಲ. +ಪಿಜಣ ಆತ್ಮಹತ್ಯ ಮಾಡಿಕೊಂಡ ಜಾಗದಲ್ಲಿ ಮಲಗುವುದು ಒಳ್ಳೆಯದಲ್ಲ ಎಂದು ಕೆಲವರು ವಿವೇಕ ಹೇಳಿದಾಗ, ಅವಳು ಖಾಲಿಯಾಗಿದ್ದ ಐತನ ಬಿಡಾರದಲ್ಲಿಯೆ ಅವನ ಹೆಂಡತಿ ಪೀಂಚಲುವಿನ ಒಪ್ಪಿಗೆ ಪಡೆದು ಮಲಗಿಕೊಳ್ಳುತ್ತಿದ್ದಳು. +ಪ್ರವೀಣ ವಿಟಮನೋಧರ್ಮದ ಚೀಂಕ್ರ – ಗಂಡ ಸತ್ತ ಹೊಸದಲ್ಲಿ ಹೆಂಗಸಿಗೆ ಹಾಗೆನ್ನಿಸುತ್ತದೆ; +ಕಾಲವೆ ದುಃಖವನ್ನು ಶಮನಗೊಳಿಸಿ, ಮೈಯನ್ನು ಪಳಗಿಸಿ, ಸುಖಾನುಭವಕ್ಕೆ ಅಳವಡಿಸುತ್ತದೆ; ಹುರಿದುಂಬಿಸುತ್ತದೆ; +ಇವೊತ್ತಲ್ಲ ನಾಳೆ ಅಕ್ಕಣಿ ತನ್ನವಳಾಗಿಯೆ ಆಗುತ್ತಾಳೆ ಎಂದು ಸಮಯ ಕಾದನು. +ತನ್ನನ್ನು ಮದುವೆಯಾಗುವ ಸಲಹೆಯನ್ನು ಅವಳು ನಿರಾಕರಿಸಲು ‘ಮದುವೆಯಾಗದಿದ್ದರೆ ಚಿಂತೆಯಿಲ್ಲ, ಮೊದಲಿನಂತೆಯೆ ಮೈಯ ಸಂಬಂಧವನ್ನು ಮುಂದುವರಿಸಿಕೊಂಡರಾಯಿತು’ ಎಂದು ಸೂಚಿಸಿದನು. +ಅದನ್ನೊ ಅವಳು ತಿರಸ್ಕರಿಸಲು, ಹೆದರಿಸಿಯೊ ನೋಡಿದನು. +ಪಿಜಿಣ ಮೇಗರವಳ್ಳಿ ಕರೀಮ ಸಾಬರ ಹತ್ತಿರ ಸಾಲಮಾಡಿದ್ದನಂತೆ; +ಅದನ್ನು ತೀರಿಸುತ್ತೀಯೋ ಇಲ್ಲವೋ ಎಂದು ಕೇಳಲು ನಿನ್ನನ್ನು ಬರಹೇಳಿದ್ದಾರೆ ಎಂದನು. +‘ಅಯ್ಯೋರ ಹತ್ರ ಗಂಡನ ಸಾಲಾನೆಲ್ಲ ತೀರಿಸ್ತೀನಿ ಅಂತಾ ಹೇಳಿದ್ದೀನಿ. +ಸಾಬರ ಸಾಲ ಏನಿದ್ದರೂ ಅಯ್ಯೋರೆ ಕೊಡ್ತಾರೆ; ಅವರನ್ನೇ ಕೇಳಲಿ’ ಎಂದಳು. ಅಕ್ಕಣಿ. +‘ಆ ಸಾಲನೆಲ್ಲ ಎಂದಾದರೂ ತೀರಿಸುವುದಕ್ಕೆ ಆಗುತ್ತದೆಯೆ? +ವರ್ಷವರ್ಷವೂ ಅದಕ್ಕೆ ಬಡ್ಡಿ ಚಕ್ರಬಡ್ಡಿ ಅಂತಾ ಏನೇನೊ ಸೇರಿಸಿ ಹೆಚ್ಚು ಮಾಡ್ತಾನೆ ಇರುತ್ತಾರೆ. +ಅದನ್ನೆಲ್ಲ ಒಟ್ಟಿಗೆ ತೀರಿಸೋಕೆ ಇರೋದು ಒಂದೋ ಒಂದು ಉಪಾಯ. +ನನ್ನ ಸಂಗಡ ಬಂದು ಬಿಡು; +ಗಟ್ಟದ ಕೆಳಗೆ ಇಳಿದು ಬಿಡೋಣ; + ಆಮೇಲೆ ನಮ್ಮನ್ನು ಯಾರು ಕೇಳ್ತಾರೆ?’ ಎಂದು ಉಪಾಯ ಸೂಚಿಸಿದ ಚೀಂಕ್ರನಿಗೆ ಅಕ್ಕಣಿ ‘ನಾನು ಧರ್ಮಸ್ಥಳದ ದೇವರಾಣೆ ಹಾಕಿ, ಅವರ ಸಾಲಾನೆಲ್ಲ ದುಡಿದು ತೀರಿಸ್ತೀನಿ ಅಂತಾ ಹೇಳಿದ್ದೀನಿ. +ಅದಕ್ಕೆ ತಪ್ಪಿದರೆ ದೇವರು ಸುಮ್ಮನೆ ಬಿಟ್ಟಾನೆ ನನ್ನ?’ ಎಂದು ಬಿಟ್ಟಳು. +‘ತಪ್ಪು ಕಾಣಿಕೆ ಕಟ್ಟಿ ಅದನ್ನೆಲ್ಲ ಪರಿಹರಿಸಿಕೊಳ್ಳಬಹುದು. +ಆ ಹೊಣೆ ನನ್ನದಾಗಿರಲಿ’ ಎಂದು ಧೈರ್ಯ ಹೇಳಿದ ಚೀಂಕ್ರನಿಗೆ ಅಕ್ಕಣಿ ‘ನನ್ನ ಗಂಡ ದಿನಾ ಕನಸಿನಾಗ ಬಂದು ಹೇಳುತ್ತಾರೆ, ಹಾಂಗೆಲ್ಲಾ ಮಾಡಬೇಡಾ ಅಂತಾ’ ಎಂದು. +ತನ್ನ ಗಂಡನ ಹೆಚ್ಚುಗಾರಿಕೆಯನ್ನೂ ಚೀಂಕ್ರನ ಅಲ್ಪತ್ವವನ್ನೂ ಒಟ್ಟಿಗೆ ಸೂಚಿಸಿ, ಕಡ್ಡಿ ಮುರಿದಂತೆ ಉತ್ತರ ಕೊಟ್ಟಿದ್ದಳು. +“ಅಕ್ಕಣಿಯ ಮನಃಸ್ಥೈರ್ಯ ಮುರಿಯಲು ಚೀಂಕ್ರ ಮತ್ತೊಂದು ಕೊನೆಯ ಉಪಾಯ ಹೂಡಿದನು. +ಮಕ್ಕಳಿಲ್ಲದ ಅಕ್ಕಣಿಗೆ ದೇಯಿ ಸತ್ತುಹೋದ ಮೇಲೆ ಚೀಂಕ್ರನ ಮಕ್ಕಳೇ ತನ್ನ ಮಕ್ಕಳಾಗಿ ಹೋಗಿದ್ದರು. +ಒಂದು ಬೈಗು ಆಗತಾನೆ ಕಪ್ಪಾಗಿತ್ತು. +ಗೌಡರ ಮನೆಯ ಗದ್ದೆ ಕೆಲಸಕ್ಕೆ ಹೋಗಿ ಬಂದಿದ್ದ ಅಕ್ಕಣಿ ತನ್ನ ಬಿಡಾರದಲ್ಲಿ ಒಲೆ ಹೊತ್ತಿಸಿ ಗಂಜಿ ಬೇಯಿಸುವ ಕಾರ್ಯದಲ್ಲಿ ತೊಡಗಿದ್ದಳು. +ಹಸಿದಿದ್ದ ಮೂವರು ಮಕ್ಕಳೂ, ಐತನದಾಗಿದ್ದ ಬಿಡಾರದಲ್ಲಿ, ಹಸಿವೆಯಿಂದಲೆ ಸೋತು ದಣಿದು, ಒಂದು ಮುದ್ದೆಗೊಂಡು ಹದುಗಿ ಮಲಗಿದ್ದುವು, ಅಕ್ಕಣಬ್ಬೆ ಗಂಜಿಯುಣ್ಣಲು ಕರೆಯುವುದನ್ನೆ ಇದಿರುನೋಡುತ್ತಾ. +ಇದ್ದಕ್ಕಿದ್ದ ಹಾಗೆ ಬಿಡಾರದ ಬಾಗಿಲಲ್ಲಿ ಚೀಂಕ್ರ ಕೆಮ್ಮುತ್ತಾ ನಿಂತಿದ್ದುದು ಅಕ್ಕಣಿಯ ಗಮನಕ್ಕೆ ಬಂದಿತು. +ಇತ್ತೀಚೆಗೆ ಅವನು ಹಿಂದೆ ಬರುತ್ತಿದ್ದಂತೆ ತನ್ನ ಬಿಡಾರಕ್ಕೂ ಬರುವುದೇ ವಿರಳವಾಗಿತ್ತು. +ಅಕ್ಕಣಿ ಒಮ್ಮೆ ತಿರುಗಿ ಅವನನ್ನು ಗುರುತಿಸಿದಳು. +ಮತ್ತೆ ಆ ಕಡೆ ತಿರುಗಲಿಲ್ಲ. +ಒಲೆಯ ಉರಿ ಆರದಂತೆ ಜಿಗ್ಗನ್ನು ಮುಂದಕ್ಕೆ ನೂಕುವುದರಲ್ಲಿ, ಗರಟದ ಸೌಟಿನಲ್ಲಿ ಗಂಜಿ ತಿರುಗಿಸುವುದರಲ್ಲಿ ಮಗ್ನೆಯಾದಂತೆ ಇದ್ದುಬಿಟ್ಟಳು. +ಆದರೆ ಅವಳ ಹೃದಯ ಮಾತ್ರ ಯಾವುದೋ ಭಯಾಶಂಕೆಯಿಂದ ತಲ್ಲಣಗೊಂಡಿತ್ತು. +ಚೀಂಕ್ರ ತನ್ನ ಮಕ್ಕಳೆಲ್ಲಿವೆ ಎಂದು ಮಾತಿಗೆ ಮೊದಲು ಮಾಡಿದನು. +ಅವನ ಧ್ವನಿಯನ್ನು ಆಲಿಸಿಯೆ ಅಕ್ಕಣಿಗೆ ಗೊತ್ತಾಯಿತು, ಸೇರೆಗಾರ ಎಂದಿಗಿಂತಲೂ ಹೆಚ್ಚಾಗಿಯೆ ಕುಡಿದಿದ್ದಾನೆ ಎಂದು. +ಮತ್ತೊಂದು ಹೋರಾಟಕ್ಕೆ ಅನಿವಾರ್ಯವಾಗಿಯೆ ಸಿದ್ಧಳಾದಳು, ಮನಸ್ಸನ್ನು ಕಲ್ಲು ಮಾಡಿಕೊಂಡು. +“ಐತನ ಬಿಡಾರದಲ್ಲಿ ಮಲಗಿದಾವೆ” ಚೀಂಕ್ರನತ್ತ ಮೊಗದಿರುಗದೆ ಗಂಜಿ ಗಿರುಗಿಸುತ್ತಲೆ ಹೇಳಿದಳು ಅಕ್ಕಣಿ. +“ಸ್ವಲ್ಪ ಬಾ ನನ್ನ ಬಿಡಾರಕ್ಕೆ” ಅಪ್ಪಣೆ ಮಾಡುವಂತಿತ್ತು ಚೀಂಕ್ರನ ದನಿ. +“ಕಾಣಾದಿಲ್ಲೇನು?ಗಂಜಿ ಬೇಯಿಸ್ತಿದ್ದೀನಿ. +ಮಕ್ಕಳು ಹಸಿದು ಕಾಯ್ತಾವೆ.” +“ಅವು ಸಾಯಲಿ!ಅವನ್ನ ಬಾವಿಗೆ ಹಕು! …. +ಬರ್ತಿಯೋ?ಇಲ್ಲೋ?” ಈ ಸಾರಿ ಸೇರೆಗಾರನ ಧ್ವನಿ ಕ್ರೂರವಾಗಿತ್ತು. +ದೈಹಿಕ ಶಕ್ತಿಯಲ್ಲಿ ಸೇರೆಗಾರನಿಗೆ ತಾನೇನೂ ಕಡಿಮೆ ಇಲ್ಲದಿದ್ದರೂ ಅಕ್ಕಣಿಗೆ ಹೆಣ್ಣಿನ ಸಹಜ ಅಂಜಿಕೆಯಾಗಿ, ಒಲೆಯ ಎಡೆ ಕುಳಿತು ಬಾಗಿ ಗಂಜಿ ಬೇಯಿಸುತ್ತಿದ್ದವಳು, ಎದ್ದುನಿಂತು, ಚೀಂಕ್ರನತ್ತ ದಿಟ್ಟಿಸಿದಳು. +ಅವಳ ಬಲಗೈಯಲ್ಲಿ ಮರದ ಹಿಡಿ ಹಾಕಿದ್ದ ಕರಟದ ಚಿಪ್ಪಿನ ಸೌಟು ಇತ್ತು. +“ಏನು ಸೌಟು ತೋರ್ಸಿ ಹೆದರಿಸುತ್ತೀಯಾ, ಹಾದರದವಳೆ? +ನನ್ನನ್ನು ಏನು ಅಂತಾ ತಿಳಿದಿದ್ದೀಯಾ? +ಕೈಲಾಗದ ನಿನ್ನ ಗಂಡ ಪಿಜಿಣ ಅಂತಾ ಮಾಡಿದ್ದೀಯಾ? …. +ಕತ್ತರಿಸಿ ಹಾಕಿಬಿಟ್ಟೇನು!ಗೊತ್ತಾಯ್ತೇನು?”ತನ್ನ ಗಂಡನ ಹೆಸರ ಮೂದಲಿಕೆ ಮಂತ್ರೌಷಧಿಯಂತೆ ಕೆಲಸ ಮಾಡಿತು. +ಆ ಬಿಡಾರದಲ್ಲಿಯೆ, ಸ್ವಲ್ಪ ಹೆಚ್ಚೂ ಕಡಿಮೆ ಈಗ ಅಕ್ಕಣಿ ನಿಂತಡೆಯಲ್ಲಿಯೆ, ನೇಣುಹಾಕಿಕೊಂಡಿದ್ದ ಪಿಜಿಣನ ಪ್ರೇತ ಅಲ್ಲಿಯೆ ಸುತ್ತುತ್ತಿದ್ದು, ಚೀಂಕ್ರನ ಮೂದಲಿಕೆಯನ್ನು ಕೇಳಿ ಕುಪಿತವಾಗಿ, ತನ್ನ ಹೆಂಡತಿಯ ಮೈಮೇಲೆ ಬಂದಿತೋ ಏನ ಎಂಬತಾಯ್ತು. +ನುಗ್ಗಿ ಬಂದು ತನ್ನ ಒಂದು ಎದೆಗೇ ಕೈಹಾಕಲು ಹವಣಿಸುತ್ತಿದ್ದ ಚೀಂಕ್ರನ ಮೋರೆಗೆ ಸೌಟಿನಿಂದಲೆ ಹೊಡೆದು ತಳ್ಳಿಬಿಟ್ಟಳು. +ಅಮಲು ನೆತ್ತಿಗೇರಿದ್ದ ಅವನು ತತ್ತರಿಸುತ್ತಲೆ ಹಿಂದಕ್ಕೆ ಹೋಗಿ ಉರುಳಿಬಿದ್ದನು. +ಅವನ ತಲೆ ಅಲ್ಲಿದ್ದ ಒಂದು ಗಡಿಗೆಗೆ ತಗುಲಿ ಅದು ಒಡೆಯಿತು. +ಬಳಿಯಲ್ಲಿದ್ದ ಒಂದು ಕೆಲಸದ ಕತ್ತಿ ಅವನ ಕಣ್ಣಿಗೆ ಬಿತ್ತು. +ತೆವಳಿಯೆ ಅದನ್ನು ಸಮೀಪಿಸಿ ಕೈಗೆ ತೆಗೆದುಕೊಳ್ಳಲು ಯತ್ನಿಸಿದನು. +ಮೊದಲೇ ಕುಡಿದಿದ್ದ ಅವನಿಗೆ ಈಗ ಬಿದ್ದೂ ಸ್ವಾಧೀನ ತಪ್ಪಿತ್ತಾದ್ದರಿಂದ ಕತ್ತಿಯನ್ನು ಸುಲಭವಾಗಿ ತುಡುಕಲಾಗಲಿಲ್ಲ. +ಅವನಿಗೆ ದೂರವಾಗಿದ್ದ ಅದರ ಹಿಡಿಪನ್ನು ಹಿಡಿಯುವುದಕ್ಕೆ ಬದಲಾಗಿ ಸಮೀಪವಾಗಿದ್ದ ಅದರ ಅಲಗನ್ನೆ ಹಿಡಿದುಕೊಂಡನು. +ಅದನ್ನು ಕಂಡ ಅಕ್ಕಣಿ ಓಡಿ ಹೋಗಿ ಕತ್ತಿಯ ಹಿಡಿಯನ್ನು ತುಡುಕಿದಳು. +ಚೀಂಕ್ರ ಅಲಗನ್ನೆ ಬಲವಾಗಿ ಹಿಡಿದನು. +ಅಕ್ಕಣಿ ಎಳೆದ ಹೊಡೆತಕ್ಕೆ ಅವನ ಬೆರಳು ಅರೆ ಕತ್ತರಿಸಿ ರಕ್ತ ಹರಿಯಿತು. +ಕತ್ತಿ ತನ್ನ ಕೈಗೇ ಬಂದಿದರೂ ನೆತ್ತರನ್ನು ಕಂಡು ಅಕ್ಕಣಿ ಕೂಗಿಕೊಂಡಳು. + “ಅಯ್ಯೋ ಸತ್ತೇ; ಮಕ್ಕಳಿರಾ, ನಿಮ್ಮ ಅಪ್ಪ ಕೊಲ್ಲುತ್ತಿದ್ದಾನೆ!”ಐತನ ಬಿಡಾರದಲ್ಲಿ ಅರೆ ನಿದ್ದೆಯಲ್ಲಿದ್ದ ಮಕ್ಕಳಿಗೆ ಎಚ್ಚರವಾಗಿ, ಅವೂ ಕೂಗಿಕೊಳ್ಳುತ್ತಲೆ ಓಡಿಬಂದವು. +ಅಷ್ಟರಲ್ಲಿಯೆ ಎದ್ದು ನಿಂತಿದ್ದ ಚೀಂಕ್ರ, ತಲೆಗೆದರಿ, ಅಸ್ತವ್ಯಸ್ತವಸನನಾಗಿ, ಮುಂದಿನ ಭೀಷಣಕ್ರಮಕ್ಕೆ ತೂರಾಡುತ್ತಲೆ ಅನುವಾಗುತ್ತಿದ್ದನು. +ಓಡಿಬಂದ ಮಕ್ಕಳಲ್ಲಿ ಹಿರಿಯದು ಅಪ್ಪನ ತೊಡೆಗೆ ತಬ್ಬುಹಾಕಿ “ಬೇಡ ಅಪ್ಪಾ!ಬೇಡ ಅಪ್ಪಾ!” ಎಂದು ರೋದಿಸಿತು. +ಕೊನೆಯ ಚಿಕ್ಕಮಗು ಚೀಂಕ್ರನಿಗೂ ಅಕ್ಕಣಿಗೂ ನಡುವೆ ನಿಂತು ಒರಲುತ್ತಿತ್ತು. +ಚೀಂಕ್ರ ಝಾಡಿಸಿ ಒದ್ದ ರಭಸಕ್ಕೆ ಆ ಮಗು ಬಿಡಾರದ ಗೋಡೆಗೆ ಢಿಕ್ಕಿ ಹೊಡೆದು ಸತ್ತಂತೆ ಬಿದ್ದು ಬಿಟ್ಟಿತು. +ತೊಡೆಯನ್ನು ತಬ್ಬಿದ್ದ ಹುಡುಗನನ್ನು ಕೈ ಎಳೆದು ಬಿಡಿಸಿ ಮೂಲೆಗೆ ತಳ್ಳಿದನು. +ಅಷ್ಟರಲ್ಲಿ ಆ ಅಬ್ಬರ ಕೇಳಿಸಿ ಓಡಿಬಂದಿದ್ದ ಬಾಗಿ, ಮೊಡಂಕಿಲ, ಕುದುಕ ಮೊದಲಾದವರು ಬಿಡಾರದ ಒಳಗೆ ನುಗ್ಗಿ ಚೀಂಕ್ರನನ್ನು ತಡೆದರು. +“ನನ್ನ ಮಕ್ಕಳನ್ನು ಕರೆದುಕೊಂಡು ಹೋಗುತ್ತೇನೆ, ಕಳಿಸಿಕೊಡು ಅಂದರೆ, ರಂಡೆ ನನ್ನನ್ನು ಕಡಿದೇ ಬಿಟ್ಟಳಲ್ಲಾ! +ಬಿಡೀ ನೀವು ನನ್ನನ್ನು; +ಅವಳಿಗೆ ಸಮಾ ಮಾಡುತ್ತೇನೆ….” ಎನ್ನುತ್ತಾ ಚೀಂಕ್ರ ರಕ್ತ ಹರಿಯುತ್ತಿದ್ದ ತನ್ನ ಕೈಯನ್ನು ಸಾಕ್ಷಿಯಾಗಿ ಎಲ್ಲರಿಗೂ ತೋರಿಸಿದನು. +ಚೀಂಕ್ರ ಹೇಳಿದುದಕ್ಕೆ ಸಾಕ್ಷಿಯಾಗಿ ಅಕ್ಕಣಿಯ ಕೈಯಲ್ಲಿ ಕತ್ತಿಯೂ ಇತ್ತು. +ನಿಜವಾದ ನಿಜ ಈ ಸುಳ್ಳಿಗಿಂತಲೂ ಹೆಣ್ಣಿಗೆ ಹೆಚ್ಚು ಅಸಹ್ಯತರವಾಗಿ ತೋರಿದುದರಿಂದ, ನಿಜ ಹೇಳಿ ಸುಳ್ಳನ್ನು ಬಯಲಿಗೆಳೆಯುವುದಕ್ಕೆ ಬದಲಾಗಿ, ಸುಳ್ಳನ್ನು ಮತ್ತೊಂದು ಸುಳ್ಳಿನಿಂದಲೆ ಮೀಟಿ ತೆಗೆದುಹಾಕಿದ್ದಳು ಅಕ್ಕಣಿ. + ಕರ್ಮೀನುಸಾಬರ ಹತ್ತಿರ ಪಿಜಿಣ ಮಾಡಿದ್ದನೆಂದು ಹೇಳಲಾದ ಸಾಲವನ್ನು ತೀರಿಸಲು ತನ್ನ ಬಳಿಯಿರುವ ಚೂರುಪಾರು ಒಡವೆಗಳನ್ನೆಲ್ಲ ಕೊಡು ಎಂದು ಚೀಂಕ್ರ ಪೀಡಿಸಿದನೆಂದೂ, ತಾನು ನಿರಾಕರಿಸಲು ಕತ್ತಿಗೆ ಕೈಹಾಕಿದನೆಂದೂ, ಬಾಳೆಕಾಯಿ ಹೆಚ್ಚಲು ಹಿಡಿದುಕೊಂಡಿದ್ದ ಆ ಕತ್ತಿಯ ಬಾಯನ್ನು ಅವನೇ ಹಿಡಿದೆಳೆದುದರಿಂದ ಗಾಯವಾಯಿತೆಂದೂ ಹೇಳಿದಳು. +ಕಡೆಗೆ, ಮರುದಿನ ಚೀಂಕ್ರನು ತನ್ನ ಮಕ್ಕಳನ್ನು, ಅವನೇ ಹೇಳಿದಂತೆ, ಮೇಗರವಳ್ಳಿಯಲ್ಲಿ ಅವನು ಮಾಡಿದ್ದ ಹೊಸ ಬಿಡಾರಕ್ಕೆ ಕರೆದುಕೊಂಡು ಹೋಗಬಹುದೆಂದು ಇತ್ಯರ್ಥವಾಯಿತು. +ಇತರರೊಡನೆ ಚೀಂಕ್ರನೂ ಹೊರಟು ಹೋದನು. +ಅಕ್ಕಣಿ ಸೀದುಹೋಗಿದ್ದ ಗಂಜಿಗೆ ಇಷ್ಟು ನೀರು ಹೊಯ್ದು ಪುನರ್ಪಾಕಮಾಡಿ ಇಳಿಸಿದಳು. +ಅಳುತ್ತಿದ್ದ ಮಕ್ಕಳಿಗೆ ಉಣ್ಣಿಸಿದಳು. +ಆದರೆ ಚೀಂಕ್ರನು ಒದ್ದು ಕೆಡವಿದ್ದ ಕಿರಿಯ ಮಗು ಉಣಲಾರದೆ ಹೋಯಿತು. +ಅದರ ಬಾಯಲ್ಲಿ ರಕ್ತ ಬರುತ್ತಿತ್ತು. +ತನ್ನ ಬಿಡಾರದ ತಟ್ಟಿಬಾಗಿಲಿಗೆ ಹಗ್ಗ ಬಿಗಿದು ಕಟ್ಟಿ, ಮಕ್ಕಳನ್ನೂ ಕರೆದುಕೊಂಡು ಐತನ ಬಿಡಾರಕ್ಕೆ ಹೋಗಿ ಅವರನ್ನು ಮಲಗಿಸಿದಳು. +ತಾನೂ ನಿದ್ರಿಸಲು ಪ್ರಯತ್ನಿಸಿದಳು. +ಆದರೆ ದುಃಖ ಉಕ್ಕಿ ಬಂದು, ಅಳುತ್ತಾ ಕುಳಿತುಬಿಟ್ಟಳು. +ಗುಡಿಸಲು ಒಳಗೆ ಕಗ್ಗತ್ತಲೆ. +ಹೊರಗಡೆ ಕಪ್ಪೆ ಹುಳುಹುಪ್ಪಟೆಯ ರೇಜಿಗೆಯ ಸದ್ದು. +ಆಗಾಗ್ಗೆ  ಬರ್ರೇಂದು ಹೊಯ್ದು ಹೊಯ್ದು ನಿಲ್ಲುವ ಶ್ರಾವಣಮಾಸದ ಮಳೆ. +ಬೃಹಜ್ಜಗತ್ತಿನಲ್ಲಿ ತಾನೂ ತಾನು ಸಾಕಿದ್ದ ಆ ಮೂರು ಮಕ್ಕಳೂ ದಿಕ್ಕುಕೆಟ್ಟ ಅನಾಥರಾಗಿ ತೋರಿತು. +ನಾಳೆ ಆ ಮೂರು ಮಕ್ಕಳನ್ನೂ ಸೇರೆಗಾರ ಕರೆದೊಯ್ಯುತ್ತಾನೆ! +ತನ್ನ ಬದುಕು ಭಯಂಕರ ಶೂನ್ಯವಾಗುತ್ತದೆ! +ತಾನೊಬ್ಬಳೆ ಆಗುತ್ತೇನೆ! +ತನ್ನ ಬದುಕನ್ನು, ತೊಂದರೆಯಿಂದಲಾದರೂ, ತುಂಬಿ, ಅದು ಬೆಕೋ ಎನ್ನದಂತೆ ಮಾಡಿ, ಸಂತೋಷಗೊಳಿಸುತ್ತಿದ್ದ ಮೂರು ಮಕ್ಕಳನ್ನೂ ಕರೆದೊಯ್ಯುತ್ತಾನೆ! +ಅವನಿಗೆ ನಿಜವಾಗಿ ಮಕ್ಕಳ ಮೇಲೆ ಪ್ರೀತಿಯಿದೆಯೋ? ಇಲ್ಲ. +ನಾಲ್ಕೇ ದಿನಗಳಲ್ಲಿ ಅವನ್ನು ಕೊಲ್ಲುತ್ತಾನೆ. +ಹೊಟ್ಟೆಗಿಲ್ಲದೆ ಸಾಯಿಸುತ್ತಾನೆ. +ಹೊಡೆದೇ ಸಾಯಿಸುತ್ತಾನೆ; +ಆರೈಕೆಯಿಲ್ಲದೆ ಸಾಯಿಸುತ್ತಾನೆ; +ಹಿರಿಯ ಹುಡುಗನನ್ನು ಯಾರೋ ಮನೆಯಲ್ಲಿ ಕೆಲಸಕ್ಕೆ ಬಿಡುತ್ತಾನಂತೆ! +ಆ ಬಡಕಲು ಮಗು ಒಂದೇ ದಿನದಲ್ಲಿ ಸಾಯುತ್ತದೆ! +ಇಲ್ಲ, ಇಲ್ಲ; ಅವನಿಗೆ ಬೇಕಾದುದು ಮಕ್ಕಳಲ್ಲ; ನಾನು! +ನಾನೂ ಅಲ್ಲ, ನನ್ನ ಒಡಲು! +ನಾಯಿಗೆ ಬಾಡು ಬೇಕಾಗುವಂತೆ! +ನನ್ನ ಮೇಲೆ ಮುಯ್ಯಿ ತೀರಿಸಿಕೊಳ್ಳಲೆಂದೇ ಮಕ್ಕಳನ್ನು ಕರೆದೊಯ್ಯುತ್ತಿದ್ದಾನೆ, ಅವನಿಚ್ಛೆಗೆ ನಾನು ಬರಲಿಲ್ಲ ಎಂದು! +ಅಯ್ಯೋ ಏನು ಮಾಡಲಿ? +ಅಕ್ಕಣಿ ನಿಡುಸುಯ್ದಳು. +ಹತಾಶೆ ಬಡಿದು, ಮತ್ತೂ ಅತ್ತಳು. +ಚೀಂಕ್ರ ಒದ್ದು ಕೆಡವಿದ್ದ ಮಗು ನರಳತೊಡಗಿತ್ತು. +ಅಕ್ಕಣಿ ಕತ್ತಲಲ್ಲೆ ಅದರ ಮೈಮೇಲೆ ಕಂಬಳಿ ಹೊದಿಸಿದಳು. +ಕಿರಿಯ ಮಗುವನ್ನಾದರೂ ಬಿಟ್ಟು ಹೋಗು ಎಂದು ಕೇಳಿಕೊಳ್ಳುತ್ತೇನೆ. +ಅದೂ ರಕ್ತ ಬೇರೆ ಕಾರುತ್ತಿದೆ! +ಅದಕ್ಕೂ ಅವನು ಒಪ್ಪದಿದ್ದರೆ? +ಇನ್ನೇನು ಮಾಡುವುದು? +ನಾನೊಬ್ಬಳೆ ಹೀಗೆ ಬದುಕಿದ್ದು ಏನು ಆಗಬೇಕಾಗಿದೆ? +ಮಕ್ಕಳ ಸಂಗಡ ನಾನೂ…. +ಥೂ ಹಾಳು ಅನಿಷ್ಟ! +ಅವನ ಸಹವಾಸ! +ಧರ್ಮಸ್ಥಳದ ದೇವರಾಣೆ ಬೇರೆ ಹಾಕಿದ್ದೇನಲ್ಲಾ? +ಹೌದು, ಗೌಡರಿಗೆ ಹೇಳಿ, ಏನಾದರೂ ಲಮಾಡಿ ಕಾಪಾಡಿ ಎಂದುಕೊಂಡರೆ? +ಚೀಂಕ್ರ ಅವರಿಗೂ ಸಾಲ ಕೊಡುವುದಿದೆಯಂತೆ! +ಅಕ್ಕಣಿಗೆ ಏನೋ ದೂರದ ಆಶಾಕಿರಣ ಹೊಳೆದಂತಾಯಿತು. +ಬೆಳಿಗ್ಗೆ ಮುಂಚೆ ಎದ್ದು ಒಡೆಯರಲ್ಲಿ ಓಡಿ ಹೇಳಿಕೊಳ್ಳುತ್ತೇನೆ ಎಂದು ಮನಸ್ಸಿಗೆ ಧೈರ್ಯ ಮತ್ತು ಸಮಾಧಾನ ತಂದುಕೊಂಡು ಮಲಗಿದಳು. +ಆದರೆ ಬೆಳಿಗ್ಗೆ? +ತಾನು ಊಹಿಸಿದ್ದೆ ಒಂದಾಗಿತ್ತು; +ವಿಧಿ ವ್ಯೂಹಿಸಿದ್ದು ಬೇರೊಂದಾಗಿತ್ತು. +ಅಕ್ಕಣಿ ತನ್ನ ಬಿಡಾರದಲ್ಲಿ ಗಂಜಿ ಬೇಯಿಸುತ್ತಿದ್ದಾಗ ಹಿರಿಯ ಮಕ್ಕಳಿಬ್ಬರೂ ಐತನ ಬಿಡಾರದಿಂದ ಓಡಿ ಬಂದರು. +ಎಷ್ಟು ನೂಕಿದರೂ ಎಬ್ಬಿಸಿದರೂ ಕಿರಿಯ ಮಗು ಏಳುವುದಿಲ್ಲ ಎಂದು ಗಾಬರಿಯಿಂದಲೆ ಹೇಳಿದರು. +ಅಕ್ಕಣಿ ದಿಗಿಲುಬಿದ್ದು ಓಡಿ ನೋಡಿದಾಗ ಅದು ಸತ್ತುಹೋಗಿತ್ತು. +ರೋದನದ ಬೊಬ್ಬೆ ಕೇಳಿ ನೆರೆಯ ಬಿಡಾರಗಳಿಂದ ಜನರು ಓಡಿ ಬಂದರು. +ಚೀಂಕ್ರ ಒದ್ದ ಆಘಾತಕ್ಕೆ ಮಗು ಪ್ರಾಣ ಬಿಟ್ಟಿದೆ ಎಂದು ಅವನನ್ನು ಶಪಿಸಿದರು. +ಕೋಣೂರು ಮನೆಗೆ ಹೋಗಿ ರಂಗಪ್ಪಗೌಡರಿಗೂ ಸುದ್ದಿಕೊಟ್ಟರು. +ಅವರ ಹೇಳಿಕೆಯ ಮೇರೆಗೆ ಮಧ್ಯಾಹ್ನದವರೆಗೂ ಸೇರೆಗಾರನ ಆಗಮನವನ್ನು ನಿರೀಕ್ಷಿಸಿದರು. +ಮರುದಿನ ಬೆಳಿಗ್ಗೆಯೆ ಬಂದು ಮಕ್ಕಳನ್ನು ಒಯ್ಯುತ್ತೇನೆ ಎಂದಿದ್ದ ಅವನು ಸಂಜೆಯವರೆಗೆ ಕಾದರೂ ಕಾಣಿಸಿಕೊಳ್ಳಲಿಲ್ಲ. +ಅಕ್ಕಣಿ, ಬಾಗಿ ಮೊಡಂಕಿಲರ ಸಹಾಯದಿಂದ, ದೇಯಿಯನ್ನು ಹೂಳಿದ್ದ ಜಾಗದ ಪಕ್ಕದಲ್ಲಿಯೆ ಗುಂಡಿ ತೋಡಿ, ಮಗುವನ್ನು ಮಣ್ಣು ಮಾಡಿ ಬಂದಳು. +ಚೀಂಕ್ರನಂತೂ ಕೋಣೂರಿನ ಕಡೆಗೆ ಮುಖ ಹಾಕಲೆ ಇಲ್ಲ. +ಅವನು ಮಕ್ಕಳನ್ನು ಕರೆದುಕೊಂಡು ಹೋಗುತ್ತಾನೆ ಎಂದು ಹೆದರಿದ್ದ ಅಕ್ಕಣಿಗೆ ಸ್ವಲ್ಪ ಧೈರ್ಯವಾಯಿತು. +ಆದರೂ, ಇಂದಲ್ಲದಿದ್ದರೆ ನಾಳೆ, ಯಾವತ್ತಾದರೂ ಅವನಿಂದ ಪೀಡೆ ಒದಗಬಹುದೆಂದು ಆಶಂಕಿಸಿದ ಅಕ್ಕಣಿ, ತನ್ನ ಮೊದಲಿನ ಸಂಕಲ್ಪದಂತೆ, ಮನೆಗೆ ಹೋಗಿ ಕಾಗಿನಹಳ್ಳಿ ಅಮ್ಮನ ಹತ್ತಿರ ತನ್ನ ಗೋಳನ್ನು ತೋಡಿಕೊಂಡು, ಚೀಂಕ್ರನಿಂದ ತನ್ನನ್ನೂ ಮಕ್ಕಳನ್ನೂ ರಕ್ಷಿಸಬೇಕೆಂದು ಬೇಡಿಕೊಂಡಳು. +ದಾನಮ್ಮ ಹೆಗ್ಗಡಿತಿಯವರು ಮಗನಿಗೆ ನಡೆದ ಸಂಗತಿಯನ್ನೆಲ್ಲಾ ತಿಳಿಸಿ, ಅವಳನ್ನು ಮನೆಗೆಲಸಕ್ಕೆ ಹಾಕಿಕೊಂಡು ಸೆಗಣಿ ಬಾಚುವುದು, ಮುರು ಬೇಯಿಸಿ ಕರೆಯುವ ಎಮ್ಮೆ ದನಗಳಿಗೆ ಇಡುವುದು ಮೊದಲಾದ ಕೊಟ್ಟಿಗೆಯ ಮತ್ತು ಬಚ್ಚಲು ಕೊಟ್ಟಿಗೆಯ ಹೊರಗೆಲಸಕ್ಕೆ ನೇಮಿಸಿಕೊಲ್ಳಬಹುದೆಂದು ಸಲಹೆ ಮಾಡಿದರು. +ಬಾಣಂತಿಯಾಗಿದ್ದ ಸೊಸೆ ತವರುಮನೆಗೆ ಹೋಗಿದ್ದು, ಅಲ್ಲಿಯ ಲಗ್ನ ತೀರಿಸಿಕೊಂಡು ಹಿಂತಿರುಗುವುದು ಬಹಳ ಕಾಲವಾಗಬಹುದಾದ್ದರಿಂದ ತನಗೂ ಕೆಲಸ ನಿರ್ವಹಿಸುವುದಕ್ಕೆ ಅನುಕೂಲವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. +ರಂಗಪ್ಪಗೌಡರು ತಾಯಿಯ ಸಲಹೆಯನ್ನು ಒಪ್ಪಿಕೊಳ್ಳಲು ಮೊದಮೊದಲು ಸ್ವಲ್ಪ ಹಿಂದುಮುಂದು ನೋಡಿದರು, ಗದ್ದೆ ಕೆಲಸದ ಆಳುಗಳನ್ನು ಮನೆಗೆಲಸಕ್ಕೆ ಹಾಕಿಕೊಂಡರೆ ಮುಖ್ಯವಾಗಿ ಬೇಗನೆ ನಡೆಯಬೇಕಾಗಿದ್ದ ಆ ಕೆಲಸಕ್ಕೆ ತೊಂದರೆಯಾಗುತ್ತದೆ, ಈಗ ಮುಕುಂದನೂ ಹೂವಳ್ಳಿ ಸೇರಿ ಬಿಟ್ಟಿರುವುದರಿಂದ ಎಂದು. +ಆದರೆ ಅವರು, ಎರಡು ಕೃಶಜೀವಿಗಳಾಗಿದ್ದ ಮಕ್ಕಳೊಡನೆ, ತಮ್ಮ ಮುಂದೆ ಅಂಗಲಾಚುತ್ತಾ ತುಸು ನಾಚುತ್ತಾ ನಿಂತಿದ್ದ ಪ್ರಾಯದ ಹೆಂಗಸನ್ನು ಹತ್ತಿರದಿಂದಲೆ ಕಂಡಮೇಲೆ, ಮನಸ್ಸು ಕರಗಿದಂತಾಗಿ, ಒಪ್ಪಿಕೊಂಡರು. ‘ಹೌದು, ಅವ್ವ ಹೇಳಿದ್ದೂ ನಿಜವೆ. +ನನ್ನ ಹೆಂಡತಿ ಅವಳ ತಮ್ಮ ಹಳೆಮನೆ ತಿಮ್ಮಪ್ಪ ಹೆಗ್ಗಡೆಯ ಮತ್ತು ಅವಳ ತಂಗಿ ಮಂಜಮ್ಮನ ಮದುವೆ ಮುಗಿಸಿಕೊಂಡು ತವರಿನಿಂದ ಹಿಂದಿರುಗುವುದು ಇನ್ನೆಷ್ಟು ತಿಂಗಳೋ? +ಹೆಂಡತಿ ಹೆರುವುದಕ್ಕೆ ಮುಂಚೆಯೂ, ಹಲವು ತಿಂಗಳಿಂದ ದೂರವಾಗಿಯೆ ಇದ್ದಳು. +ಏನೋ ಪಥ್ಯವಂತೆ!ಏನೋ ಕಾಯಿಲೆಯಂತೆ! +ಈ ಹೆಂಗಸರದ್ದು ಯಾವಾಗಲೂ ಇದ್ದೇ ಇರುತ್ತದೆ. +ಗಂಡಸಿನ ತೊಂದರೆ ಅವರಿಗೆ ಗೊತ್ತಾಗುವುದು ಹೇಗೆ? +ಅದರಲ್ಲಿಯೂ ದೃಢಕಾಯನಾಗಿ ಯೌವನದಲ್ಲಿರುವ ನನ್ನಂಥ ಗಂಡಸಿನ ತೊಂದರೆ? …. ’ +ಅಕ್ಕಣಿಯನ್ನು ದಿಟ್ಟಿಸುತ್ತಾ ‘ಇವಳು ಪವಾ ಇಲ್ಲ!’ -ಗೌಡರ ಮನೆಗೆ ಹೆಗ್ಗಡಿ ತಮ್ಮನವರೆಡೆಗೆ ಹೋಗುತ್ತೇನಲ್ಲಾ ಎಂದು ಅಕ್ಕಣಿ ಎಂದು ಒಳ್ಳೆ ಸೀರೆ ಉಟ್ಟಿದ್ದಳು. +ಅದನ್ನು ಗಮನಿಸುತ್ತಾ ‘ಅಂಥ ಕಳಪೆಯಾಗಿ ಕಾಣುತ್ತಿಲ್ಲ! +ಅದರಲ್ಲಿಯೂ ಗಂಡ ಸತ್ತವಳು. +ಮೈ ತುಂಬಿಕೊಂಡು ಲಕ್ಷಣವಾಗಿಯೂ ಇದ್ದಾಳೆ…. +ಆದರೆ…. ಅಂವ ಮೂಳ! …. ನ +ನ್ನ ವಿಚಾರವೇ ಬೇರೆ! +ನಾನು ಕರೆದರೆ ಎಂದಾದರೂ ಒಲ್ಲೆ ಎನ್ನುತ್ತಾಳೆಯೆ? +ದಮ್ಮಯ್ಯ ಅಂತಾನೆ ಬರ್ತಾಳೆ! …. ’ ರಂಗಪ್ಪಗೌಡರ ಮನಸ್ಸು ನಕ್ಷತ್ರವಿಹಾರಿಯಾಗಿತ್ತು. +ಮಗ ಏನೋ ವ್ಯಾವಹಾರಿಕವಾದ ಜಟಿಲವಾದ ದೀರ್ಘ ಆಲೋಚನೆಯಲ್ಲಿದ್ದಾನೆ, ತನ್ನ ನಿರ್ಣಯ ಹೇಳುವ ಮುನ್ನ, ಎಂದು ಭಾವಿಸಿ ಎದುರು ನಿಂತಿದ್ದು, ಅವನ ಮುಖವನ್ನೆ ನೋಡುತ್ತಿದ್ದ ತಾಯಿ ದಾನಮ್ಮ ಹೆಗ್ಗಡಿತಿಯವರಿಗೆ ರಂಗಪ್ಪಗೌಡರೆಂದರು. + “ಆಗಲಿ, ಅವ್ವಾ.ಬಂದಿರಾಕೆ ಹೇಳು, ಮಕ್ಕಳ ಜೊತೇಲಿ…. +ಆ ಉಂಡಾಡಿ ಲೌಡಿಮಗ ಚೀಂಕ್ರ ಬಂದ್ರೆ ನಾ ನೋಡಿಕೊಳ್ತಿನಿ. +ಕೊಡಬೇಕಾದ ಸಾಲಾನೂ ತೀರಿಸದೆ, ಸಿಕ್ಕಿಸಿಕ್ಕಿದ ಹೆಂಗಸರ ಮೇಲೆಲ್ಲ ಕೈಮಾಡ್ತಾ ಸೊಕ್ಕಿ ಮೆರೀತಿದಾನೆ ಆ ಸೂಳೇಮಗ…. +ಮತ್ತೆ ಹಿತ್ತಲ ಕಡೆಗೆಲ್ಲಾದ್ರೂ ಸೇರಿಸೀಯಾ ಈ ಹಸಲೋರ ಹೆಂಗಸ್ರನ್ನ? …. +ಇಲ್ಲೇ ಮುಂಚೆಕಡೆ ಆ ಕೆಳಗರಡಿ ಮೂಲೇಲಿ, ಮುರಿನ ಒಲೆ ಹತ್ರ ಆಚೆ ಕಡೇಲಿ, ಮಲಗಾದೂ ಏಳಾದೂ ಮಾಡಿಕೊಂಡಿರ್ಲಿ. +ಎಷ್ಟು ಸಾಮಾನು ಬೇಕೋ ಅಷ್ಟೇ ತಂದುಕೊಳ್ಳಲಿ. +ಮತ್ತೆ ಬಿಡಾರಾನೆಲ್ಲ ಹೊತ್ತುಕೊಂಡು ಬಂದಾಳು? …. ” +ಗೌಡರು ಎಷ್ಟು ಒಳ್ಳೆಯವರು?ಏನು ದಯೆ? +ಕಷ್ಟದಲ್ಲಿರುವವರನ್ನು ಕಂಡರೆ ಎಂಥಾ ಕರುಣೆ? +ನಾನು ಬದುಕಿದೆ. +ಮಕ್ಕಳೂ ಬದುಕಿದವು-ಎಂದುಕೊಂಡ ಅಕ್ಕಣಿಗೆ ರಂಗಪ್ಪಗೌಡರ ಹೊರ ಆಕಾರವೂ ಪೂಜ್ಯವಾಗಿ ತೋರಿ, ಕೃತಜ್ಞತೆಗೆ ಬಾಗಿಬಿಟ್ಟಳು, ಶರಣು ಹೋಗುವವರಂತೆ. +ಕರ್ಮೀನ್‌ಸಾಬ್ರು ಚೀಂಕ್ರ ತನಗೆ ಸಿಕ್ಕಿದ್ದು ಎಂದು ಹೇಳಿ ತಂದು ಅಡವಿಟ್ಟಿದ್ದ ಹರಳುಂಗುರವನ್ನೇನೊ ಲಬಟಾಯಿಸಿಯೆ ಬಿಟ್ಟರು, ವಂಚನೆಗೆ ಸರಿದೂಗುವ ಚುರುಕು ಬುದ್ಧಿಯಿಲ್ಲದೆ ಬರಿಯ ಜಂಬಗಾರನಾಗಿದ್ದ ಸೇರೆಗಾರನಿಗೆ ಬ್ರಾಂದಿ, ಸ್ವಾರ್ಲುಮೀನು, ಉಪ್ಪು, ಹೊಗೆಸೊಪ್ಪು, ಮೆಣಸಿನಕಾಯಿ, ತೆಂಗಿನಕಾಯಿ, ಪಂಚೆ, ಭಂಗಿ ಇತ್ಯಾದಿ ಸುಳ್ಳು-ಪೊಳ್ಳು ಲೆಖ್ಖ ತೋರಿಸಿ!ತನಗೂ ಲೆಖ್ಖ ಬರುತ್ತದೆ ಎಂದು ತೋರಿಸಿಕೊಳ್ಳಲು ಚೀಂಕ್ರ ಸೇರೆಗಾರ ಕೇಳಿದ ಪ್ರಶ್ನೆಗಳಿಗೆ ಸಾಬ್ರು ಎಂಥೆಂಥ ಜಟಿಲ ಉತ್ತರ ಕೊಡುತ್ತಿದ್ದರು. +ಎಂದರೆ ಅವುಗಳ ವಿದ್ವತ್ತಿಗೇ ಚೀಂಕ್ರ ತಗರುಬಿಗುರಾಗಿ, ಮಾರುಹೋಗಿ, ತನಗೆ ಅವು ಅರ್ಥವಾಗಲಿಲ್ಲ ಎಂದರೆ ತನ್ನ ಬೆಪ್ಪಲ್ಲಿ ಬಯಲಾಗುತ್ತದೆಯೋ ಎಂದು ಅಂಜಿ, ಬೆಪ್ಪು ನಗೆ ನಗುತ್ತಾ “ಬರಾಬರಿ, ಸಾಬ್ರೆ, ಬರಾಬರಿ!” ಎಂದು ತಾನು ಕೇಳಿದ್ದ ಯಾವುದೋ ವ್ಯಾಪಾರಗಾರರ ಮಾತಿನ ತನಗರ್ಥವಾಗದ ಪರಿಭಾಷೆಯನ್ನು ಪ್ರಯೋಗಿಸಿ ಒಪ್ಪಿಗೆ ಕೊಟಿದ್ದನು. + ವಾಣಿಜ್ಯ ವಿಷಯದಲ್ಲಿಯೂ ಸಾಬರಿಗೆ ಬಿಟ್ಟುಕೊಡಲಿಲ್ಲ ಎಂದು ಹೆಮ್ಮೆಪಟ್ಟುಕೊಂಡು! ಆದರೂ, ಕರೀಂ ಸಾಬುಗೆ ಆ ಉಂಗುರ ಸೇರೆಗಾರನಿಂದ ದಕ್ಕಿದ್ದರೂ ಅದನ್ನು ದೈವದಿಂದ ದಕ್ಕಿಸಿಕೊಳ್ಳುವಷ್ಟು ಧೈರ್ಯವಿರಲಿಲ್ಲ. +ಆ ಉಂಗುರ ತಾನೆ ಬೆಟ್ಟಳ್ಳಿ ಕಲ್ಲಯ್ಯಗೌಡರಿಗೆ ಮಾರಿದ್ದು ಎಂದು ಗುರುತಿಸಿದೊಡನೆ ಅವನಿಗೆ ಏನೋ ದುಃಶಕುನ ಭೀತಿಯುಂಟಾಗಿತ್ತು. +ಆ ಉಂಗುರ ಯಾರದ್ದಾಗಿರುತ್ತದೆಯೆ ಅವರಿಗೆ ಕ್ಷೇಮವಿಲ್ಲ ಎಂಬ ಭಾವನೆ ಮೂಡಿತ್ತು. +ಆ ಉಂಗುರವನ್ನು ತೊಟ್ಟಿದ್ದರಿಂದಲ್ಲವೆ ಅದನ್ನಿಟ್ಟು ಕೊಂಡಿದ್ದ ಅಕ್ಕಸಾಲಿ ದಂಪತಿಗಳು, ಒಬ್ಬನು ಖುನಿಯಾಗಿಯೂ ಒಬ್ಬಳು ಅಬ್ಬರಿಗೆ ಹಾರಿಯೂ, ದುರ್ಗತಿಯನ್ನಪ್ಪಿದ್ದು? +ಆ ಉಂಗುರ ತನ್ನ ಕೈಸೇರಿದ್ದಾಗಲೆ ತನಗೂ ತನ್ನ ಸಂಸಾರಕ್ಕೂ ಒಂದಾದ ಮೇಲೊಂದು ಸಾವು ನೋವು ಕಷ್ಟ ಸಂಕಟ ರೋಗ ರುಜೆ ಉಂಟಾದದ್ದು? +ಅದನ್ನು ಬೆಟ್ಟಳ್ಳಿ ಕಲ್ಲಯ್ಯಗೌಡರಿಗೆ ದಾಟಿಸಿದ ಮೇಲೆ ಅವರಿಗೂ ಮುಜುಗರ ಹಿಡಿದದ್ದು? +ಅವರ ಮಗ ಪೋಲಿಬಿದ್ದುದ್ದು? +ಕಿಲಸ್ತರ ಸಹವಾಸಕ್ಕೆ ಸಿಕ್ಕಿ ಜಾತಿ ಕೆಡಲು ಹವಣಿಸಿದ್ದು? +ಅವರ ಸೊಸೆಯ ಅಕ್ಕನಿಗೆ, ಗಂಡ ತಿರುಪತಿಗೆ ಹೋದವನು ಹಿಂದಕ್ಕೆ ಬರದೆ, ಹುಚ್ಚು ಹಿಡಿದದ್ದು? +ಕರೀಮ್ ಸಾಬಿ ಆಲೋಚಿಸಿದಂತೆಲ್ಲ ಅವನ ಸಿದ್ಧಾಂತಕ್ಕೆ ಹೆಚ್ಚು ಹೆಚ್ಚು ಪುಷ್ಟಿ ದೊರಕಿತು. +ಆ ಉಂಗುರವನ್ನು ಬೇಗನೆ ಬೇರೆ ಯಾರಿಗಾದರೂ ಮಾರಿ, ‘ಮಾರಿ-ದಾಟಿಸಿ’ ಬಿಡಬೇಕೆಂದು ನಿಶ್ಚಯಿಸಿದನು. +ಆ ಊಂಗುರ ಮತ್ತೆ ತನ್ನಲ್ಲಿಗೆ ಬಂದ ದಿನವೇ ಅಲ್ಲವೆ, ಸಿಂಬಾವಿಯಲ್ಲಿ ತನಗೆ ಕಷ್ಟ ಪ್ರಾರಂಭವಾದದ್ದು? +ಗುತ್ತ್ತಿಯ ಕೈಲಿ ಇಜಾರದ ಸಾಬಿ ಕಡಿಸಿಕೊಂಡದ್ದು? +ರಾತ್ರಾ ರಾತ್ರಿ ಆ ಮಳೆಯಲ್ಲಿ, ದುರ್ಗಮ, ಬೆಟ್ಟಗುಡ್ಡ ಕಾಡುಗಳಲ್ಲಿ, ರಕ್ತ ಸೋರುತ್ತಿದ್ದ ಇಜಾರದ ಸಾಬಿಯನ್ನು ಬಹುಕಷ್ಟದಿಂದ ಕುದುರೆಯಮೇಲೆ ಸಾಗಿಸಿ ತಂದದ್ದು? +ತೀರ್ಥಹಳ್ಳಿಯ ಆಸ್ಪತ್ರೆಗೆ ಸೇರಿಸಲು ಅವನನ್ನು ಕೊಂಡೊಯ್ಯುವುದೇ ಒಂದು ಹರಮಹಾಕಾಲವಾಯಿತಲ್ಲ? +ಮತ್ತೆ, ಆ ಪೋಲೀಸಿನವರು, ಆ ಅಮಲ್ದಾರರು, ಆ ಇನಿಸ್ಪೆಕ್ಟರ್ ಇವರಿಂದ ಒದಗಿದ್ದ ಗೋಳೋ ಅಷ್ಟಿಷ್ಟಲ್ಲ! +ಅಂತೂ ಆ ಪುಂಡುಮುಂಡೇಗೌಡ ಬದ್ಮಾಷ್ ಹೇಗೋ ಗುಣವಾಗಿ ಹೊನ್ನಾಳಿಗೆ ಅವನೂರಿಗೆ ತೊಲಗಿದ್ದೆ ನಾನು ಬಚವಾದೆ! …. + ಈ ಉಂಗುರ ನನ್ನಲ್ಲಿದ್ದರೆ ನನಗೆ ಕೇಡು ತಪ್ಪಿದ್ದಲ್ಲ…. +ಮಾರುವುದಾದರೂ ಸರಿಯಾದ ಈಗಿನ ಬೆಲೆಗೇ ಮಾರಬೀಕು…. +ಸಾಹುಕಾರ ಕಲ್ಲೂರು ಮಂಜಭಟ್ಟರು, ಹೇಲಿನಲ್ಲಿ ಕಾಸು ಹೆಕ್ಕುವವರು, ಅವರು ಅರ್ಥ ಬೆಲೆಗೂ ಕೊಳ್ಳುವುದಿಲ್ಲ; +ಕೊಂಡರೆ ಕೊಳ್ಳಬೇಕು ಬೆಟ್ಟಳ್ಳಿ ಸಾಹುಕಾರರು. +ಆದರೆ…. ಮತ್ತೆ ನಾನೇ ಈ ಉಂಗುರವನ್ನು ಕಲ್ಲಯ್ಯಗೌಡರ ಹತ್ತಿರ ಕೊಂಡೊಯ್ದರೆ, ಗುರುತು ಸಿಕ್ಕಿ, ಮತ್ತೆ ಹೊಸ ಕಷ್ಟಕ್ಕೆ ಸಿಕ್ಕಿಕೊಳ್ಳುವುದೇ ನಿಜ! +ಈ ಉಂಗುರದಿಂದ ಆಗುವ ಕೇಡನ್ನು ತಪ್ಪಿಸಿಕೊಳ್ಳುವುದಕ್ಕೆ ಹೋಗಿ, ಮತ್ತೊಂದು ತಿಗಲಿಗೆ ಖಂಡಿತಾ ಸಿಕ್ಕಿಕೊಳ್ಳುತ್ತೇನೆ…. +ನಾನು ಹೋಗುವುದಿಲ್ಲ ನನ್ನ ತಮ್ಮ ಇದನ್ನೆಲ್ಲ ನಂಬುವುದಿಲ್ಲ. +ಬಹಳ ಉಡಾಫಿ. +ಅವನನ್ನೆ ಕಳಿಸುತ್ತೇನೆ…. +ಕೆಂಪುಗೀಟಿನ ಲುಂಗಿಯುಟ್ಟು, ನೀಲಿ ಬಣ್ಣದ ಉದ್ದ ಬನೀನು ತೊಟ್ಟು, ತಲೆಗೆ ಬಣ್ಣದ ರೇಷ್ಮೆ ವಸ್ತ್ರ ಸುತ್ತಿದ್ದ ಕುಡಿ ಮೀಸೆಯ ಪುಡಿಸಾಬು ಬೆಟ್ಟಳ್ಳೀಗೆ ಹೋಗಿಕಲ್ಲಯ್ಯಗೌಡರನ್ನು ಕಂಡು ಸಾಲಾಮು ಮಾಡಿದಾಗ ಅವರು ಸ್ವಲ್ಪ ಡಂಗುಬಡಿದವರಾಗಿ, ಪಕ್ಕನೆ ಗುರುತುಹಿಡಿಯಲಾರದೆ, ಬಹುವಚನದಲ್ಲಿ ಗೌರವದಿಂದ ಸ್ವಾಗತಿಸಿದರು; +“ಬನ್ನಿ ಸಾಹೇಬರೆ…. +ಮೇಲಕ್ಕೆ ಬನ್ನಿ, ಪರ್ವಾ ಇಲ್ಲ;…. +ಅಲ್ಲಿ ಯಾಕೆ ತಣೆಯ ಮೇಲೆ ಕೂರುತ್ತೀರಿ? +ಜಗಲಿಗೇ ಬನ್ನಿ; +ಪರ್ವಾ ಇಲ್ಲ.”ಪುಡಿಸಾಬಿಗೆ ತಕ್ಷಣ ಗೊತ್ತಾಯ್ತು ವಯೋಧರ್ಮದಿಂದ ದೃಷ್ಟಿ ಮಂದವಾಗಿದ್ದ ಗೌಡರು ತನ್ನನ್ನು ಈ ಷೋಕಿಯ ವೇಷದಲ್ಲಿ ಗುರುತಿಸಲಾರದೆ ಹೋಗಿದ್ದಾರೆ ಎಂದು. +ಅವರು ಮೇಲಕ್ಕೆ ಬರಹೇಳಿದರೂ ಅವನು ಜಗಲಿಗೆ ಹತ್ತಲಿಲ್ಲ.! +“ನಾನು, ಸ್ವಾಮಿ, ಮೇಗರವಳ್ಳಿ ಕರೀಮ್ ಸಾಬರ ತಮ್ಮ” ದೇಶಾವರದ ನಗೆ ನಕ್ಕನು. +“ಓಹೋ!ಪುಡಿ ಸಾಬನೇನೊ? +ನನಗೆ ಗುರುತೇ ಸಿಗಲಿಲ್ಲ. +ನನ್ನ ಕಣ್ಣು ಬೇರೆ ಇತ್ತಿತ್ತಲಾಗಿ ಮಬ್ಬಾಗ್ತಾ ಅದೆ…. +ಕೂತುಗೋ, ಕೂತುಗೋ. +ಏನು ಬಂದಿದ್ದು?” ಗುರುತಿಸಿದೊಡನೆ ಕರೀಮ್ ಸಾಬಿಯ ತಮ್ಮನಿಗೆ ಅರ್ಹವಾಗುವ ರೀತಿಯಲ್ಲಿ ತಮ್ಮ ಧ್ವನಿ ಬದಲಾಯಿಸಿದ್ದರು ಗೌಡರು…. +ವಿಷಯ ತಿಳಿಸಿ, ಹರಳುಂಗುರವನ್ನು ಜೇಬಿನಿಂದ ತೆಗೆದು ತುಂಬ ಧೂರ್ತಸಹಜ ವಿನಯದಿಂದ ಬಾಗಿ, ತನ್ನ ಎಡಗೈಯನ್ನು ಬಲಗೈಯ ಕುಣಿಕೆಗೆ ಮುಟ್ಟಿಸಿಕೊಂಡು, ಬಲಗೈಯಲ್ಲಿ ಹಿಡಿದಿದ್ದ ಉಂಗುರವನ್ನು ಗೌಡರ ಕೈಗೆ ಇಳಿಬಿಟ್ಟನು. +ಕಲ್ಲಯ್ಯಗೌಡರು ಉಂಗುರವನ್ನು ಅತ್ತ ಇತ್ತ ತಿರುಗಿಸಿ, ಪರೀಕ್ಷಕನ ಗತ್ತಿನಿಂದ, ಸ್ವಲ್ಪ ಹೆಚ್ಚೆ ಎನ್ನಬಹುದಾದಷ್ಟು ಹೊತ್ತು ಪರಿಶೀಲಿಸಿದರು. +ಪುಡಿಸಾಬಿಯ ಅಣ್ಣ ಕರ್ಮೀನ್ ಸಾಬಿ ಕೆಲವು ವರ್ಷಗಳ ಹಿಂದೆ ತಮಗೆ ಮಾರಿದ್ದ ಇಂಥಾದ್ದೆ ಒಂದು ಹರಳುಂಗುರದ ನೆನಪಾಗಿ, ಇದನ್ನೂ ಅದನ್ನೂ ಮನಸ್ಸಿನಲ್ಲಿಯೆ ಹೋಲಿಸುವಂತೆ ಮತ್ತೂ ಸ್ವಲ್ಪ ಕಾಲ ಸಮೀಕ್ಷಿಸಿದರು, ಬೆಲೆ ವಿಚಾರಿಸಿದರು. +ಪುಡಿಸಾಬಿ ಹೇಳುತ್ತಿರುವ ಬೆಲೆ ತುಂಬ ಹೆಚ್ಚಾಯ್ತು ಎಂದುಕೊಂಡರು. +ಪುಡಿಸಾಬಿ ತನ್ನ ಅಣ್ಣ ಮಾರಲು ಹೇಳಿದ್ದ ಕರೀದಿಗಿಂತಲೂ ಒಂದೂವರೆಯಷ್ಟು ಜಾಸ್ತಿ ಹೇಳಿದ್ದನು. +ಅವನು ತನ್ನ ಖಾಸಗಿ ಖರ್ಚಿಗೆ ಹಣ ಸಂಪಾದನೆ ಮಾಡಬೇಡವೇ ಗೌಡರು ಇದ್ದಕ್ಕಿದ್ದ ಹಾಗೆ ತಮ್ಮ ಮಗನ ಹೆಸರು ಹಿಡಿದು ಕೂಡರು. +ಬಳಿಗೆ ಬಂದು ನಿಂತ ದೇವಯ್ಯಗೆ ಒರೆಗಲ್ಲು ತರಲು ಹೇಳಿದರು. +ಒರೆಗಲ್ಲಿಗೆ ಉಂಗುರವನ್ನು ತಿಕ್ಕಿ ಒರೆಹಚ್ಚಿದರು. +“ಬರೀ ಬೆಟ್ಟೆ ಬಂಗಾರ ಕಂಡಂಗೆ ಕಾಣ್ತದೆ!” ಎಂದುಕೊಂಡು ಮಗನತ್ತ ತಿರುಗಿ “ಒಂದು ಕೆಲಸ ಮಾಡ್ತೀಯಾ, ದೇವು? +ಇವನಣ್ಣ ಹಿಂದೆ ಒಂದು ಉಂಗುರ ಕೊಟ್ಟಿದ್ದನಲ್ಲಾ? …. +ಅದೇ, ನಿನಗೆ ಕೊಟ್ಟ ಉಂಗರಾನೋ! …. + ಇಂಥಾದ್ದೇ ಹರಳುಂಗುರ! +ಅದನ್ನ ತಗೊಂಡು ಬಾ, ಒರೆಹಚ್ಚಿ ನೋಡಾನ” ಎಂದರು. +ದೇವಯ್ಯ ಪಿತೃ ಆಜ್ಞಾ ಪರಿಪಾಲನಾ ಆತುರನೆಂಬಂತೆ ತನ್ನ ಮಲಗುವ ಕೋಣೆಯ ಕಡೆಗೆ ಬಿರುಬಿರನೆ ನಡೆದು ಕಣ್ಮರೆಯಾದನು. +ಬಹಳ ಹೊತ್ತಾದರೂ ಹೊರಗೆ ಬರಲಿಲ್ಲ. +“ಎಲ್ಲಿಯೋ ಮರೆತಿಟ್ಟು ಊಂಗುರವನ್ನು ಹುಡುಕುತ್ತಿದ್ದಾನೆ; + ಈಗಿನ ಹುಡಗರ ಹಣೆಬರಹವೇ ಹೀಂಗೆ” ಎಂದುಕೊಂಡು ಗೌಡರು, ಪುಡಿಸಾಬಿಯೊಡನೆ ಇಜಾರದ ಸಾಬಿಯ ವಿಚಾರವಾಗಿಯೂ ಮಿಶನ್ ಇಸ್ಕೂಲಿನ ಕಟ್ಟದದ ವಿಚಾರವಾಗಿಯೂ ಇನ್ನೂ ಮನಸ್ಸಿಗೆ ಹೊಳೆಹೊಳೆದಂತೆ ಅನೇಕ ವಿಷಯಗಳನ್ನೂ ಕುರಿತು ಲೋಕಾಭಿರಾಮವಾಗಿ ಮಾತಾಡತೊಡಗಿದರು. +ತನ್ನ ಅಪ್ಪಯ್ಯ ಉಂಗುರದ ವಿಷಯ ಎತ್ತಿದೊಡನೆ ದೇವಯ್ಯನಿಗೆ ಎದೆ ಡವಗುಟ್ಟತೊಡಗಿತು. +ಅದನ್ನು ತರಹೇಳಿದೊಡನೆ ಅವನಿಗೆ ಮೈಮೇಲೆ ಕುದಿನೀರು ಹೊಯ್ದಂತಾಗಿ, ತನ್ನ ಅಸ್ಥಿರತೆ ಗೋಚರವಾಗುವ ಮುನ್ನವೆ ಅಲ್ಲಿಂದ ಕಾಲು ಕಿತ್ತಿದ್ದನು. +ತನ್ನ ಕೋಣೆಯಲ್ಲಿ ಮಂಚದ ಮೇಲೆ ಕುಳಿತುಕೊಂಡು ಚಿಂತಿಸತೊಡಗಿದನು. +ಹಾಳು ಆ ಉಂಗರ ತನ್ನಲ್ಲಿಯೂ ಇರಲಿಲ್ಲ, ತಾನು ಮೆಚ್ಚುಗೊಟ್ಟಿದ್ದ ಐಲು ಹುಡಗಿಯ ಕೈಯಲ್ಲಿಯೂ ಇದ್ದ ಹಾಗೆ ತೋರಲಿಲ್ಲ! +ಎರಡು ಮೂರು ಸಾರಿ ಕಾವೇರಿಯನ್ನು ಸಂಧಿಸಿ, ಅವಳೊಡನೆ ಸರಸವಾಡಿ, ಉಂಗುರ ಎಲ್ಲಿ ಎಂದು ಕೇಳಿದಾಗಲೆಲ್ಲ ಏನಾದರೂ ಸಬೂಬು ಹೇಳಿ ತಪ್ಪಿಸಿಕೊಂಡಿದ್ದಳೂ. +ಒಮ್ಮೆ ‘ಅಲ್ಲೆಲ್ಲಿಯೋ ಇಟ್ಟಿದ್ದೇನೆ, ಆಮೇಲೆ ತೋರಿಸುತ್ತೇನೆ.’ ಎಂದಿದ್ದಳು . +ಇನ್ನೊಮ್ಮೆ ‘ಅಬ್ಬೆ ಇಟ್ಟುಕೊಂಡಿದ್ದಾಳೆ. +ನಾಳೆ ನಾಡಿದ್ದರ ಹಾಗೆ ಅವಳಿಂದ ಈಸಿಕೊಳ್ಳುತ್ತೇನೆ.’ ಎಂದಿದ್ದಳು ಮತ್ತೊಮ್ಮೆ ‘ಅಯ್ಯೋ ಮರತೇಹೊಯ್ತು. +ಇನ್ನೊಂದು ಸಾರಿ ನೀವು ಬರುವಾಗ ಖಂಡಿತಾ ಹುಡುಕಿಟ್ಟಿರುತ್ತೇನೆ.’ ಎಂದು ಮೋಹಕವಾಗಿ ಕ್ಷಮೆ ಯಾಚಿಸಿದ್ದಳು. +ದೇವಯ್ಯನಿಗೆ ಅವಳ ಮೇಲೆ ಸಂಶಯವೂ ಹುಟ್ಟಿತ್ತು. +ಬೇರೆ ಇನ್ನಾರಿಗಾದರೂ ಕೊಟ್ಟಿರಬಹುದೇ ಎಂಬ ಸಂದೇಹಕ್ಕೆ ಒಳಗಾಗಿ, ಮಾತ್ಸರಕ್ಕೂ ತುತ್ತಾಗಿದ್ದನು. +ಈಗ ಷೋಕಿಯಾಗಿ ಸುಪುಷ್ಟ ದೃಢ ಕಾಯನಾಗಿದ್ದ ಪುಡಿಸಬಿಯ ಕೈಯಲ್ಲಿದ್ದ ಹರಳುಂಗರ ಅದೇ ಆಗಿರಬಹುದೇ ಎಂಬ ಸಂಶಯವೂ ಅವನನ್ನು ಬಾಧಿಸತೊಡಗಿತ್ತು. +ತಂದೆ ಜಗಲಿಯಿಂದ ತನ್ನ ಹೆಸರು ಕೂಗಿದ್ದು ಕೇಳಿಸಿ, ದೇವಯ್ಯ ಸದ್ಯೋಪಾಯವೊಂದನ್ನು ನಿರ್ಣಯಿಸಿ, ತನ್ನ ಭಾವೋದ್ವೇಗದ ಕುರುಹು ಕಾಣಿಸದಂತೆ ಉಡುಗಿಸಲು ಪ್ರಯತ್ನಿಸುತ್ತಾ ಜಗಲಿಯ ನಡೆದನು. +ಎಷ್ಟು ಹುಡುಕಿದರೂ ಸಿಕ್ಕಿರಲಿಲ್ಲವೆಂದೂ ತನ್ನ ಹೆಂಡತಿ ಹಳೆಮನೆಯ ಲಗ್ನಕ್ಕೆ ಹೋಗುವಾಗ ‘ಮೈಯಿಡಲು’ ಆ ಉಂಗುರವನ್ನು ತೆಗೆದುಕೊಂಡು ಹೋಗಿರಬಹುದೆಂದೂ, ಅದಕ್ಕೆ ಬದಲಾಗಿ ಬೇರೆಯೊಂದನ್ನು ಏನಾದರೂ ‘ಮೈಯಿಡಿಸಿ’ ಅದನ್ನು ಹಿಂದಕ್ಕೆ ತರಿಸುತ್ತೇನೆಂದೂ ಹೇಳಿದನು. +ಗೌಡರು “ಈಗಿನ ಕಾಲದ ಹುಡುಗರಿಗೆ ಹಿರಿಯರು, ಮನೆಯ ಯಜಮಾನರು ಅನ್ನುವುದೇನೂ ಇಲ್ಲ…. +ಹೇಳುವುದಿಲ್ಲ, ಕೇಳುವುದಿಲ್ಲ, ಮನಸ್ಸಿಗೆ ಬಂದ ಹಾಗೆ ಮಾಡ್ತಾರೆ…. +ನನಗೊಂದು ಮಾತು ತಿಳಿಸದೆ, ಅದನ್ನು ಮೈಯಿಡಾಕ ಕೊಟ್ಟೆ ಅಂತೀಯಲ್ಲಾ?” ಎಂದು ಗೊಣಗಿ, ಪುಡಿಸಾಬಿಗೆ “ಈಗ ಬ್ಯಾಡಕಣೋ, ತಂಗೊಂಡು ಹೋಗೋ. +ಆ ಉಂಗುರ ಬಂದ ಮ್ಯಾಲೇ ನೋಡಾನ. +ಭಾರಿ ದುಬಾರಿ ಬ್ಯಾರೆ ಕರೀದಿ ಹೇಳ್ತಿಯಾ. +ಒರೇ ಹಚ್ಚಿದರೆ ಬರೀ ಬೆಟ್ಟೇ ಬಂಗಾರಧಾಂಗೆ ಕಾಣ್ತದೆ…. +ಆ ಉಂಗುರ ಬರಲಿ; +ಸರಿಯಾಗಿ ಓರೇ ಹಚ್ಚಿ ನೋಡಿ ಕರೀದಿ ಮಾಡಾದಾದ್ರೆ ಮಾಡನ.” ಎಂದು ಹೇಳಿ ಕಳಿಸಿಬಿಟ್ಟರು. +ಪುಡಿಸಾಬಿ ಬೈಸಿಕಲ್ಲು ಹಕ್ಕಲನ್ನು ದಾಟಿ, (ದೇವಯ್ಯ ಉಪದೇಶಿ ಜೀವ ರತ್ನಯ್ಯನ ಗುರುತ್ವದಲ್ಲಿ ಬೈಸಿಕಲ್ಲಿನ ಅಭ್ಯಾಸಮಾಡಿದ್ದ ಆ ಸ್ಥಳಕ್ಕೆ ಜನ ‘ಬೈಸಿಕಲ್ಲು ಹಕ್ಕಲು’ ಎಂದೇ ನಾಮಕರಣ ಮಾಡಿದ್ದರು.) ಬೆಟ್ಟಳ್ಳಿಯ ಹೊಲೆಗೇರಿಗೆ ಅಗಚುತ್ತಿದ್ದ ಕಾಲು ದಾರಿಯ ಅರೆಕಲ್ಲಿನ ಕಾರೆಮಟ್ಟಿನ ಹತ್ತಿರಕ್ಕೆ ಬಂದಿದ್ದನು. +(ಗುತ್ತಿ ಸಿಂಬಾವಿಯಿಂದ ಬೆಟ್ಟಳ್ಳಿ ಕೇರಿಯ ಅತ್ತೆಮನೆಗೆ ಬರುವಾಗಲೆಲ್ಲ ಅವನ ನಾಯಿ, ಹುಲಿಯ, ಕಾಲೆತ್ತಿ ಅಭಿಷೇಕ ಮಾಡುತ್ತಿದ್ದ ಕಾರೆಯ ಗುಜ್ಜುಪೊದೆ!) ಹಿಂದೆ ಬೈಸಿಕಲ್ಲು ಬೆಲ್ಲಿನ ಸದ್ದಾಯಿತು ಟೀ ಟ್ರೀಂ ಟ್ರೀಂ! +ನಿಂತು ಹಿಂದಕ್ಕೆ ನೋಡುತ್ತಿದ್ದಂತೆ ದೇವಯ್ಯ ಬಳಿಸಾರಿ ಬೈಸಿಕಲ್ಲಿನಿಂದ ಇಳಿದನು. +ದೇವಯ್ಯ ಬೈಸಿಕಲ್ಲನ್ನು ಒಂದು ಮರಕ್ಕೆ ಒರಗಿಸಿಟ್ಟನು. +‘ನಿನ್ನ ಹತ್ರ ಸ್ವಲ್ಪ ಮಾತಾಡುವುದಿದೆ.’ ಎನ್ನುತ್ತಾ ಕಾರೆಮಟ್ಟಿನ ಬುಡದಲ್ಲಿ ಅರೆಕಲ್ಲಿನ ಮೇಲೆ ಕುಳಿತನು. +ಪುಡಿಸಾಬಿಯೂ ತುಸುದೂರದಲ್ಲಿಯೆ ಗೌರವಪೂರ್ವಕವಾಗಿ ಕುಳಿತನು. +“ಎಲ್ಲಿ?ಆ ಉಂಗುರ ತೆಗೆ, ಸ್ವಲ್ಪ ನೋಡ್ತೀನಿ.”ದೇವಯ್ಯಗೌಡರು ತಮ್ಮ ತಂದೆಗೆ ತಿಳಿಯದಂತೆ ತಾವೇ ಉಂಗುರ ವಿಕ್ರಯ ಮಾಡಲು ಬಂದಿರಬೇಕು ಎಂದು ಭಾವಿಸಿ, ಕಳ್ಳವ್ಯಾಪಾರದಲ್ಲಿ ನಿಷ್ಣಾತನಾಗಿದ್ದ ಪುಡಿಸಾಬ ಉಂಗುರವನ್ನು ಹೊರತೆಗೆದು ದೇವಯ್ಯನ ಕೈಲಿಟ್ಟನು. +ನೋಡುವುದೆ ತಡ, ದೇವಯ್ಯಗೆ ಆ ಉಂಗುರ ತಾನು ಕಾವೇರಿಯ ಬೆರಳಿಗೆ ತೊಡಿಸಿದ್ದುದೇ ಎಂಬುದು ಖಾತ್ರಿಯಾಯಿತು. +ಸದ್ಯಕ್ಕೆ ಇದು ನನ್ನ ಹತ್ತಿರ ಇರಲಿ, ಆಮೇಲೆ ಕೊಡುತ್ತೇನೆ. +ದುಡ್ಡಾದರೆ ದುಡ್ಡು, ಉಂಗುರ ಆದರೆ ಉಂಗುರ ದೇವಯ್ಯನೆಂದನು. + ಭಾವತಿಶಯದಿಂದ ಲೆಂಬಂತೆ ಅವನು ಸ್ವಲ್ಪ ಜೋರಾಗಿಯೆ ಉಸಿರು ಎಳೆದು ಬಿಡತೊಡಗಿದ್ದನು. +“ಆಗುವುದಿಲ್ಲ, ಸ್ವಾಮಿ, ನನಗೆ ಕೊಟ್ಟವರು ನನ್ನನ್ನು ಸುಮ್ಮನೆ ಬಿಡುತ್ತಾರೆಯೆ?” ಕೈಮುಗಿದು ಹೇಳಿದನು ಪುಡಿಸಾಬು. +“ಯಾರು ಕೊಟ್ಟಿದ್ದೋ? +ಎಲ್ಲಿತ್ತೋ ಇದು ನಿನಗೆ!” ದೇವಯ್ಯನ ದನಿ ಬಿಗಡಾಯಿಸಿತ್ತು. +“ಯಾರೊ ಕೊಟ್ಟರು. +ಅದು ಯಾಕೆ ನಿಮಗೆ?” ಹುಸಿನಕ್ಕನು ಸಾಬಿ. +“ಗಂಡಸರೊ?ಹೆಂಗಸರೊ?” +“ಹೆಂಗಸರು ಅಂತಾನೆ ಇಟ್ಟುಕೊಳ್ಳಿ!” ಪುಡಿಸಾಬಿಗೆ ಚೀಂಕ್ರ ಅದು ತನಗೆ ಲಭಿಸಿದ್ದ ರೀತಿಯನ್ನು ಇಂಗಿತವಾಗಿ ತಿಳಿಸಿದ್ದನು. +ಪುಸಿಸಾಬಿಗೂ ಗೊತ್ತಿತ್ತು. +ದೇವಯ್ಯಗೌಡರು ಅಂತಕ್ಕನ ಮಗಳೊಡನೆ ಆಡುತ್ತಿದ್ದ ಸರಸದ ಸಂಗತಿ. +“ಇದೂ…ಕದ್ದ ಮಾಲು! +ನೀನು ತೊಂದರೆಗೆ ಸಿಕ್ಕಿಕೊಳ್ಳುತ್ತೀಯ, ಪೋಲೀಸರ  ಕೈಲಿ.” +“ಪೋಲೀಸರು ನಮಗೂ ಗೊತ್ತು, ಸ್ವಾಮಿ, ನಿಮ್ಮೊಬ್ಬರಿಗೇ ಅಲ್ಲ… +ಇದನ್ನು ನಾನೇನು ಕದ್ದು ತಂದದ್ದಲ್ಲ; ಇನಾಮು ಬಂದದ್ದು.” ಹೇಳುತ್ತಾ ಇಂಗಿತವಾಗಿ ಹುಳಿನಗೆ ನಕ್ಕನು ಪುಡಿಸಾಬಿ, ದೇವಯ್ಯನ ಮುಖವನ್ನು ಮೂದಲಿಸುವಂತೆ ನೋಡುತ್ತಾ. +“ಯಾರೋ ನಿನಗೆ ಕೊಟ್ಟದ್ದು ಇನಾಮು? +ಸುಳ್ಳು ಹೇಳ್ತಿಯಾ?” +“ಆಗಲೆ ಹೇಳಿದ್ದೇನಲ್ಲಾ! …. ”ದೇವಯ್ಯ ತಟಕ್ಕನೆ ಮಾತು ನಿಲ್ಲಿಸಿ ಎದುರಿಗಿದ್ದ ಒಂದು ಮರಕ್ಕೆ ಅದರಲ್ಲಿ ಜೋಲಾಡುತ್ತದ್ದ ಹಸಿಕಾಯಿಯ ಬೀಜ ಬಿಡಿಸಿ ತಿನ್ನಲೆಂದು ಉಲಿಯುತ್ತಾ ಹಾರಿಬಂದು ಕುಳಿತು, ಎಲೆಹಸುರಿನಲ್ಲಿ ಮುಳುಗಿಹೋದ ಒಂದು ಗಿಣಿಹಿಂಡಿನ ಕಡೆಗೆ ಹುಡುಕಿನೋಡುವಂತೆ ಸ್ವಲ್ಪ ಹೊತ್ತು ನಿರ್ನಿಮೇಷನಾಗಿದ್ದನು. +ಮತ್ತೆ ಉಂಗುರವನ್ನು ಸಾಬಿಯ ಕೈಗಿತ್ತು, ಸರಕ್ಕನೆ ಮರಕ್ಕೆ ಒರಗಿಸಿದ್ದ ಬೈಸಿಕಲ್ಲನ್ನು ಹಾದಿಗೆ ತಂದು, ಹತ್ತಿ ಹೊರಟೆ ಹೋದನು, ಗಿಡಮರ ಪೊದೆಯ ಕಾಡಿನಲ್ಲಿ ಮರೆಯಾಗಿ. +ಆದರೆ ಸಾಬಿಯಲ್ಲಿ ಪ್ರಸುಪ್ತವಾಗಿದ್ದ ಪಶುರುಚಿಯೊಂದರ ಕೆರಳಿಕೆಗೆ ಕಾರಣವಾಗುವ ಆಲೋಚನಾ ತರಂಗಗಳನ್ನು ಎಬ್ಬಿಸಿ ಹೋಗಿದ್ದನಷ್ಟೆ! +ಪುಡಿಸಾಬಿ ಮೇಗರವಳ್ಳಿಗೆ ಹಿಂತಿರುಗಿದವನು ಆ ಉಂಗುರವನ್ನು ತನ್ನ ಅಣ್ಣನ ಕೈಗೆ ವಾಪಾಸು ಕೊಡಲಿಲ್ಲ. +“ಉಂಗುರವನ್ನು ಕಲ್ಲಯ್ಯ ಗೌಡರು ತೆಗೆದುಕೊಂಡರು; +ನಮಗೆ ಸಲ್ಲಬೇಕಾದ ಹಣವನ್ನು ನಮ್ಮ ಲೆಕ್ಕಕ್ಕೆ ಜಮಾ ಕಟ್ಟಿಕೊಳ್ಳುತ್ತಾರಂತೆ” ಎಂದು ಹೇಳಿದನು. +ಆ ರೀತಿಯಲ್ಲಿಯೆ ಬೆಟ್ಟಳ್ಳಿ ಸಾಹುಕಾರರೊಡನೆ ಎಷ್ಟೋ ಲೇವಾದೇವಿ ನಡೆಸುತ್ತಿದ್ದ ಕರೀಂಸಾಬು ಅದನ್ನೊಂದು ವಿಶೇಷವೆಂದು ಗಮನಿಸಿದೆ ಸುಮ್ಮನಾದನು. +ಒಂದು ಅಪಶಕುನದ ವಸ್ತು ಅಷ್ಟು ಸುಲಭದಲ್ಲಿ ಗಲಾಟೆಯಿಲ್ಲದೆ ಲಾಭಕರವಾಗಿ ತೊಲಗಿದುದೆ ಅವನಿಗೆ ಸಮಾಧಾನಕರವಾಗಿತ್ತು. +ಅಂತಕ್ಕನ ಅಡುಗೂಳುಮನೆ, ಅಥವಾ ಈಗ ಅನೇಕರು ಕರೆಯತೊಡಗಿದ್ದಂತೆ ’ಓಟ್ಲುಮನೆ’, ಆ ಶ್ರಾವಣ ಸಂಧ್ಯೆಯಲ್ಲಿ ನಿಃಶಬ್ದವಾಗಿತ್ತು. +ಕೋಳಿ, ನಾಯಿ, ಗುಬ್ಬಿ, ಹಕ್ಕಿಗಳ ಸದ್ದು ಸಂಚಲನೆಗಳನ್‌ಉ ಬಿಟ್ಟರೆ ಆ ಪ್ರದೇಶ ನಿದ್ರಿಸುವಂತೆಯೆ ಕಾಣುತ್ತಿತ್ತು. +ಮಳೆಗಾಲದಲ್ಲಿ ಕನ್ನಡ ಜಿಲ್ಲೆಗೂ ಮಲೆನಾಡಿಗೂ ನಡುವೆ ಇರುತ್ತಿದ್ದ  ಸಂಚಾರವೆಲ್ಲ ಸ್ತಬ್ಧವಾಗುತ್ತಿದ್ದುದರಿಂದ ಆಗುಂಬೆ, ತೀರ್ಥಹಳ್ಳಿಯ ಹೆದ್ದಾರಿ ಸ್ವಲ್ಪ ಹೆಚ್ಚುಕಡಿಮೆ ಖಾಲಿಯಾಗಿಯೆ ಇರುತ್ತಿತ್ತು, ಸ್ಥಳೀಯರ ವಿರಳ ಸಂಚಾರ ವಿನಾ. +ಆದ್ದರಿಂದ ಅಂತಕ್ಕನ ಊಟದ ಮನೆಗೆ ಆ ಸಮಯದಲ್ಲಿ ಅತಿಥಿಗಳು ಬರುತ್ತಿದ್ದುದು ಅತ್ಯಂತ ಅಪೂರ್ವ; +ಇಲ್ಲವೆ ಇಲ್ಲ ಎಂದರೂ ಸುಳ್ಳಾಗುವುದಿಲ್ಲ, ಅಷ್ಟು ಅತ್ಯಂತ ಅಪೂರ್ವ. +ಮನೆಯ ಹಿಂಭಾಗದಲ್ಲಿ ಕೆಲಸದ ಹುಡುಗ ಕೊರಗನ ಕೈಯಲ್ಲಿ ಮದರಂಗಿ ಅರೆಸಿ, ಅದನ್ನು ತನ್ನ ಬೆರಳುಗುರುಗಳಿಗೆ ಮುಂಡಾಸು ಕಟ್ಟಿಸಿಕೊಳ್ಳುತ್ತಿದ್ದಳು ಕಾವೇರಿ. +ರಾತ್ರಿ ಮಲಗಿ ಏಳುವಷ್ಟರಲ್ಲಿ ಆ ಉಗುರುಗಳೂ ಕೆಂಪಾಗಿ ರಂಜಿಸುತ್ತರುವುದನ್ನೇ ಭಾವಿಸಿ, ಪೂರ್ವಭಾವಿ ರಸಾಸ್ವಾದನೆಯಲ್ಲಿದ್ದಳು ಆ ತರಳೆ. +ಅಂತಕ್ಕ ಏನೋ ಗೃಹಕೃತ್ಯದ ಮೇಲೆ ಅಂಗಡಿಗೊ ಎಲ್ಲಿಗೊ ಹೋಗಿದ್ದಳು. +ಮಾತಿನ ನಡುವೆ ಕೊರಗ ಹುಡುಗ ಹೇಳಿದ. +“ಅಮ್ಮಾ ನಿಮ್ಮ ಉಂಗುರ ಕಳೆದು ಹೋಯ್ತು ಅಂತಾ ಹೇಳುತ್ತಿದ್ದಿರಲ್ಲಾ ಅದು ಎಲ್ಲೋ ಒಂದು ಕಡೆ ಅದೆಯಂತೆ….” +ಬೇಸರ, ತಾಟಸ್ಥ್ಯ, ಔದಾಸೀನಗಳನ್ನೆಲ್ಲ ಒಟ್ಟಿಗೆ ಒಮ್ಮೆಗೆ ಕೊಡವಿ ಬಿಟ್ಟಂತಾಯ್ತು ಕಾವೇರಿಯ ಚೇತನಕ್ಕೆ, ಕುತೂಹಲ ನಿಮಿರಿ ಕೇಳಿದಳು. + “ಎಲ್ಲಿಯೋ?ಯಾರ ಬಳಿಯೋ?ಯಾರು ಹೇಳಿದರೋ? +ಯಾವಾಗ ಗೊತ್ತಾಯಿತೋ ನಿನಗೆ? …. ”ಕಾವೇರಿಯ ಕುತೂಹಲದ ಪ್ರಶ್ನೆಗಳಿಗೆ, ತನ್ನ ತಿಳಿವಳಿಗೆಯ ಅಮೂಲ್ಯತೆಗೆ ತಾನೆ ಎಚ್ಚರಗೊಂಡಂತಾಗಿ ಅಚ್ಚರಿಪಡುತ್ತಾ, ಹಿಗ್ಗಿ ನಗುಮೊಗನಾಗಿ ಕೊರಗ ಹೇಳಿದನು. +“ನನಗೆ ಸೇರೆಗಾರ ಹೇಳಿದ…. +‘ನೀನು ಯಾರಿಗೂ ಹೇಳಬೇಡ’ ಅಂದಿದ್ದಾನೆ. +ತಲೆ ಹೋಗುವ ಯಾಪಾರವಂತೆ! …. +ಅಂವನ್ನ ಉಪಚಾರಮಾಡಿ ಪುಸಲಾಯಿಸಿದರೆ ಸಿಕ್ಕರೂ ಸಿಕ್ಕಬೈದು! …. ” +ಉಂಗುರ ಕಳೆದು ಹೋದಾಗ ಕಾವೇರಿ ಅದನ್ನು ಹುಡುಕುವ ಪ್ರಯತ್ನವನ್ನೇನೂ ಮಾಡಿದ್ದಳು ಆದರೆ ಅದನ್ನು ಆದಷ್ಟು ಅಂತರಂಗವಾಗಿಯೆ ಇಟ್ಟಿದ್ದಳು, ಬಹಿರಂಗವಾಗುವುದರಿಂದ ದೇವಯ್ಯಗೌಡರ ಸಂಸಾರಿಕ ಜೀವನದಲ್ಲಿ ತೊಂದರೆ ಉಂಟಾಗಬಹುದೆಂದು ಹೆದರಿ ಮತ್ತೂ ಅವರ ಸಾಮಾಜಿಕ ಗೌರವಕ್ಕೂ ಊನವಾಗದಿರಲಿ ಎಂದು. +ಆದರೆ ದೇವಯ್ಯಗೌಡರು ಎರಡು ಮೂರು ಸಾರಿ ವಿಚಾರಿಸಿದಾಗಲೂ ಉಂಗುರ ಕಳೆದು ಹೋಯಿತು ಎಂದು ಹೇಳಲು ಅವಳಿಗೆ ಧೈರ್ಯವಾಗಲಿಲ್ಲ. +ಏನೇನೊ ಸಬೂಬು ಹೇಳಿ, ಹುಡುಕುತ್ತಿರುವ ಭಾವನೆ ಕೊಟ್ಟಿದ್ದಳು. +ನಿಜ ಹೇಳಿದರೆ ಗೌಡರು ನಂಬದಿದ್ದರೆ? +ನಂಬದಿದ್ದರೂ ಚಿಂತೆ ಇರಲಿಲ್ಲ; +ಆದರೆ ಇನ್ನೇನನ್ನೋ ನಂಬಿಬಿಟ್ಟರೆ? +ಅದಕ್ಕೂ ಅವಕಾಶ ಇಲ್ಲದಿರಲ್ಲಿಲ್ಲ. +ಏಕೆಂದರೆ ಕಾವೇರಿ ಅಣುಗುಅಣುಗಾಗಿ ಇತರರೊಡನೆ ಹುಡುಗಾಟವಾಡುತ್ತಿದ್ದುದೂ ಉಂಟು! +ಆ ತೆರನಾದ ಸರಳವರ್ತನೆ ಮತ್ತು ಕುರುಡು ನಂಬಿಕೆಯೆ ಅವಳಿಗೆ ತರುವಾಯ ಒದಗಿದ್ದ ಅನಾಹುತಕ್ಕೂ ಕಾರಣವಾಯಿತು. +ಪುಡಿಸಾಬಿಯ ಕೈಯಲ್ಲಿ ಹರಳುಂಗುರವನ್ನು ಕಂಡ ಮಾರನೆಯ ದಿನ ದೇವಯ್ಯಗೌಡರು ಮೇಗರವಳ್ಳಯಲ್ಲಿ ಕಾಣಿಸಿಕೊಂಡಿದ್ದರು. +ಅಲ್ಲಿ ಇಲ್ಲಿ ತಿರುಗಿ, ಅವರಿವರ ಹತ್ತಿರ ಕಿವಿಮಾತು ಆಡಿ, ಬೈಸಿಕಲ್ಲಿನ ಮೇಲೆ ತೀರ್ಥಹಳ್ಳಿಗೆ ನೆಟ್ಟಗೆ ಹೋಗಿದ್ದರು. +ಆದರೆ ಹಿಂದೆಂದೂ ನಡೆಯದಿದ್ದುದು ಅಂದು ನಡೆದಿತ್ತು; +ಅಂತಕ್ಕನ ಓಟ್ಲುಮನೆಗೆ ಅವರು ಊಟಕ್ಕೆ ಬಂದಿರಲಿಲ್ಲ. +ಬೈಸಿಕಲ್ಲಿನ ಗಂಟೆ ಸದ್ದು ಕೇಳಿಸಿ, ಕಾವೇರಿ ಅಂಗಳಕ್ಕೆ ಓಡಿ ಬಂದು, ಉಣುಗೋಲಿನ ಗಳುಗಳನ್ನು ಒತ್ತರಿಸಿ, ಬೈಸಿಕಲ್ಲೇರಿದ್ದ ಗೌಡರನ್ನು ನೇರವಾಗಿ ಅಂಗಳಕ್ಕೆ ಆಹ್ವಾನಿಸಲು ಕಾದಿದ್ದಳು. +ಆದರೆ ಗೌಡರನ್ನು ಹೊತ್ತ ಬೈಸಿಕಲ್ಲು, ಉಣಗೋಲಿನ ಆಚೆಯ ಹೆದ್ದಾರಿಯಲ್ಲಿ ನೇರವಾಗಿ ಮಿಶನ್ ಸ್ಕೂಲಿನ ಕಟ್ಟಡದ ಪಕ್ಕದಲ್ಲಿ ಹಾದು ತೀರ್ಥಹಳ್ಳಿಯ ದಿಕ್ಕೆಗೆ ಧಾವಿಸಿತ್ತು. +ಅವರ ಕಣ್ಣಮೇಲೆಯೆ ಹಾಯುವಂತೆಯೆ ನಿಂತು ಮುಗುಳ ನಗುತ್ತಿದ್ದ ಕಾವೇರಿ ಕಡೆಗೆ ತಿರುಗಿಯೂ ನೋಡಿರಲಿಲ್ಲ. +ಕಾವೇರಿ ಮನೆಯೊಳಗೆ ಹೋಗಿ, ತನ್ನ ಕೋಣೆಯ ಬಾಗಿಲು ಹಾಕಿಕೊಂಡು ಬಹಳ ಹೊತ್ತು ಅತ್ತಿದ್ದಳು. +“ಏನೋ ಅವಸರದ ಸರಕಾರಿ ಕೆಲಸ ಇತ್ತು ಅಂತಾ ಕಾಣುತ್ತದೆ ಅವರಿಗೆ ನೀನು ಸುಕಾಸುಮ್ಮನೆ ಯಾಕೆ ಅಳುತ್ತೀ?” ಎಂದಿದ್ದಳು ಅವಳ ತಾಯಿ ಅಂತಕ್ಕ ಸೆಡ್ತಿ. +ಅಂದಿನಿಂದ ಕಾವೇರಿಗೆ ತನ್ನ ಉಂಗುರ ಕಳೆದುಹೋದ ಅಥವಾ ಕಳವಾದ ವಿಚಾರವನ್ನು ಹಿಂದಿನಂತೆ ರಹಸ್ಯವಾಗಿಡಲು ಸಾಧ್ಯವಾಗಲಿಲ್ಲ. +ಕೊರಗನೊಡನೆ, ಚೀಂಕ್ರನೊಡನೆ, ಅಜ್ಜೀಸಾಬು, ಲುಂಗೀಸಾಬು ಅಂತಹರು ತನ್ನ ತಾಯಿಯೊಡನೆ ಗೃಹಕೃತ್ಯದ ಬೇಹಾರ ಸಾಗಿಸಲು ಬಂದಾಗ ಸಮಯ ಸಿಕ್ಕರೆ ಅವರೊಡನೆ, ಕಡೆಗೆ ಮದ್ದು ಕೊಡಲು ಮನೆಗೆ ಬಂದ ಕಣ್ಣಾಪಂಡಿತರೊಡನೆಯೂ ಪ್ರಸ್ತಾಪಿಸತೊಡಗಿದಳು. +ಅಂತೂ ಸುದ್ದಿ ಗುಸುಗುಸು ಹಬ್ಬಿತ್ತು. +ಕೊರಗ ಹುಡುಗ ‘ಚೀಂಕ್ರ ಸೇರಿಗಾರನಿಗೆ ಉಂಗುರ ಎಲ್ಲಿದೆ ಅಂಬುದು ಗೊತ್ತಿದೆಯಂತೆ’ ಎಂದು ಸೂಚಿಸಿ, ‘ಅಂವನ್ನ ಉಪಚಾರಮಾಡಿ ಪುಸಲಾಯಿಸಿದರೆ ಸಿಕ್ಕರೂ ಸಿಗಬೈದು’ ಎಂದು ಹೇಳಿದ ಮೇಲೆ, ಕಾವೇರಿ ಸೇರೆಗಾರನೊಡನೆ ಸ್ವಲ್ಪ ಸಲಿಗೆಯಿಂದ ವರ್ತಿಸತೊಡಗಿದ್ದಳು. +ಆಗೊಮ್ಮೆ ಈಗೊಮ್ಮೆ ಕಳ್ಳು ಹೆಂಡ ಸ್ವಾರ್ಲುಮೀನು ಕೊಟ್ಟು ಸವಿಮಾತಾಡಿ ಪುಸಲಾಯಿಸಿದಳು. +ಆದರೆ ಚೀಂಕ್ರ ಅದಕ್ಕೆ ವಿಪರೀತಾರ್ಥ ಕಲ್ಪನೆ ಮಾಡಿಕೊಂಡನಷ್ಟೆ! +ಕಾವೇರಿಯ ವರ್ತನೆಗೆ ಒಂದು ಸರಳ ಧೈರ್ಯವಿತ್ತು. +ಚೀಂಕ್ರ ಕೀಳು ಜಾತಿಯವನು. +ಹೆಚ್ಚುಕಡಮೆ ದಕ್ಷಿಣ ಕನ್ನಡ ಜಿಲ್ಲೆಯ ಹೊಲೆಯ; ಹಸಲರವನು. +ಅವನು ತಮ್ಮ ಮನೆಯೊಳಗೆ ಕಾಲಿಡುವುದಿರಲಿ, ಜಗಲಿಯ ತೆಣೆಗೂ ಹತ್ತುತ್ತಿರಲಿಲ್ಲ. +ಹಿಂದೆ ಗುತ್ತಿಯ ಮೈಕಟ್ಟನ್ನೂ ಬಣ್ಣವನ್ನೂ ರೂಪವನ್ನೂ ತಾನೆಂದು ಮೆಚ್ಚಿನೋಡಿದ್ದಳೊ ಅಂತೆಯೆ ಚೀಂಕ್ರನನ್ನೂ ಒಂದು ಸ್ವಪ್ರಯೋಜನ ಸಾಧನೆಗಾಗಿ ಪುಸಲಾಯಿಸಿದ್ದಳು. +ಅದರಲ್ಲಿ ಅಪಾರ್ಥಕ್ಕೆ ಯಾವ ಕಾರಣವೂ ಇರಲು ಸಾಧ್ಯವಿರಲಿಲ್ಲ. +ಆದರೆ ಚೀಂಕ್ರನ ಜಾರ ಹೃದಯದಲ್ಲಿ ಮೊದಲಿನಿಂದಲೂ ಕಾವೇರಿಯ ಪರವಾದ ಭಾವನೆ ಬೇರೆಯಾಗಿತ್ತು. +ಅವನು ದೇಯ ಸತ್ತಮೇಲೆ, ಕೋಣೂರಿನಿಂದ ಮೇಗರೊಳ್ಳಿಗೆ ಮಿಶನ್ ಇಸ್ಕೂಲು ಕಟ್ಟುವ ಕೆಲಸಕ್ಕೆ ಬಂದಾಗಲೂ ಪ್ರಾಯಕ್ಕೆ ಬರುತ್ತಿದ್ದ ಆ ಮುಗ್ಧ ಹುಡುಗಿಯನ್ನು ನಾಯಿಗಣ್ಣಿನಿಂದಲೆ ನೋಡಿದ್ದನು. +ಆದರೆ ಸಾಮಾಜಿಕವಾಗಿ ಬಹುದೂರದಲ್ಲಿ ಮತ್ತು ಎತ್ತರದ ಅಂತಸ್ತಿನಲ್ಲಿದ್ದ ಆ ಹೆಣ್ಣನ್ನು ಅವನ ನರಿಮನಸ್ಸು ನೋಡುತಿತ್ತೆ ಹೊರತು ಇನ್ನೇನು ಮಾಡಲೂ ಸಮರ್ಥವಾಗಿರಲಿಲ್ಲ. +ಈಗ ಉಂಗುರದ ಪ್ರಸಂಗದಲ್ಲಿ ಅವನಿಗೊಂದು ಸಂದರ್ಭ ಒದಗಿತ್ತು. +ಕಾವೇರಿಯ ಉಪಚಾರಕ್ಕೆ ಅಪಾರ್ಥ ಕಲ್ಪನೆ ಮಾಡುವುದು ಅವನಿಗೆ ಸುಸ್ವಾದುವಾಗಿದ್ದುದಲ್ಲದೆ, ಬಯಸಿದ ಹೆಣ್ಣಿನ ಬಯಕೆಯನ್ನು ಈಡೇರಿಸುವನೆಂಬ ದುರ್ಬುದ್ಧಿ ಸಮರ್ಥನೀಯ ಭಾವನೆಯಿಂದ ಅದು ಸಾಧುವಾಗಿಯೂ ತೋರಿತು. +ಆ ಸಾಹಸಕ್ಕೆ ತಾನೊಬ್ಬನೆ ಮುಂದುವರಿಯಲು ಅಂಜದ ಅವನ ಹೇಡಿಜೀವಕ್ಕೆ ಪುಡಿಸಾಬಿಯ ನೀಚಸೂಚನೆ ಹಾರುವ ಮಂಗಕ್ಕೆ ಏಣಿಹಾಕಿತ್ತು. +ಬೆಟ್ಟಳ್ಳಿಯಿಂದ ಉಂಗುರದೊಡನೆ ಹಿಂದಿರುಗುತ್ತಿದ್ದ ಪುಡಿಸಾಬಿಯನ್ನು ಬೈಸಿಕಲ್ಲು ಹಕ್ಕಲಿನ ಆಚೆಯ ಅರೆಕಲ್ಲಿನ ಕಾರಮಟ್ಟಿನೆಡೆ ದೇವಯ್ಯ ಸಂಧಿಸಿ, ಉಂಗುರದ ವಿಚಾರವಾಗಿ ಪ್ರಸ್ತಾಪಿಸಿ, ಪ್ರಶ್ನೆಕೇಳಿ, ಕಳವುಮಾಲು ಪೋಲೀಸುಗೀಲೀಸು ಎಂದೆಲ್ಲ ಕೆರಳು ಮಾತಾಡಿ, ಸಾಬಿಯ ಮನದ ಹುತ್ತದಲ್ಲಿ ಪ್ರಸುಪ್ತವಾಗಿದ್ದ ನೀಚರುಚಿಯ ದೌಷ್ಟ್ಯ ಸರ್ಪವನ್ನು ಮಟ್ಟಿ ಏಳಿಸದೆ ಇದ್ದಿದ್ದರೆ ಅದನ್ನು ಅವನು ತನ್ನ ಅಣ್ಣನಿಗೆ ಹಿಂತಿರುಗಿಸಿ ಸುಮ್ಮನಾಗುತ್ತಿದ್ದನು. +ಆದರೆ ಯಾವಾಗ ಆ ಉಂಗುರವು ಶೃಂಗಾರ ಜೀವಿತಕ್ಕೆ ಸಂಬಂಧಪಟ್ಟಿದ್ದು ಎಂಬುದು ಗೊತ್ತಾಯಿಗೋ ಸಾಬಿಯ ಕಾಮವಿಕಾರವೂ ಶೃಂಗಾರಾಪೇಕ್ಷಿಯಾಗಿ ಸಾಹಸಲೀಲೆಗೆ ಹಾತೊರೆಯತೊಡಗಿತು. +ಅವನಲ್ಲಿ ಕೆರಳಿದ್ದ ಪಶುರುಚಿಗೂ ಪ್ರಣಯ ಪ್ರೇಮ ಮೊದಲಾದ ಪದಗಳಿಗೂ ಯಾವ ಅರ್ಥಸಂಬಂಧವೂ ಇರಲಿಲ್ಲ. +ಮನೆಯಲ್ಲಿ ಕಾಫಿಕುಡಿದು ಹೊರಟಿದ್ದರೂ ಕಂಡ ಕಂಡ ಕೆಫೆಗಳಲ್ಲಿ ಕುಳಿತು ಕಾಫಿ ಕುಡಿಯುವ ಕೆಲವು ಅಲಸ ಶ್ರೀಮಂತ ಯುವಕರ ಆಧುನಿಕ ಚಟದಂತಹ ಒಂದು ಚಟ ಮಾತ್ರವಾಗಿತ್ತು ಅದು. +ಆ ಚಟಕ್ಕೆ ದೇವಯ್ಯ ಕೆರಳಿಸಿದ್ದ ಹಟದ ಸಾಣೆಯಿತ್ತಷ್ಟೆ! +ಸಾಬಿ ಚೀಂಕ್ರನೊಡನೆ ಆ ಮಾತೆತ್ತಿದೊಡನೆ, ಅವನಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಹಾಗಾಯ್ತು. +“ಕಾಣನಿ, ಕಾವೇರಮ್ಮ, ಇದನ್ನು ಮಾತ್ರ ನೀವು ಯಾರೊಬ್ರ ಸಂಗಡಾನೂ ಬಾಯಿ ಬಿಟ್ಟೀರಿ? +ಉಂಗುರ ನಿಮ್ಮ ಕೈಗೆ ಬಂದಮ್ಯಾಲೆ ಬೇಕಾದರೆ ನಿಮ್ಮ ಅಬ್ಬೆ ಹತ್ರ ಹೇಳಿನಿ, ಅದಕ್ಕೆ ಮುಂಚೆ ತುಟಿ ಪಿಟಕ್ ಅನ್ನ ಬಾರದು….” +ಇಲ್ಲ ಮಾರಾಯನೆ, ನಾನು ಯಾಕೆ ಹೇಳಲಿಕ್ಕೆ ಹೋಗಲಿ, ನನಗೆ ಉಂಗುರ ಸಿಕ್ಕರೆ ಸಾಕು….” +“ಉಂಗುರ ಪುಡಿಸಾಬರ ಕೈಗೆ ಸಿಕ್ಕದೆ ನಿಮಗೆ ದೇವಯ್ಯ ಗೌಡರು ಕೊಟ್ಟದ್ದು ಅಂತಾ ನೀವು ಪಡ್ತಿರೋ ಪಾಡು ಕೇಳಿ ಅವರಿಗೆ “ಛೇ!ಪಾಪ! ಅನ್ನಿಸಿದೆ. + ಅದನ್ನು…ನಿಮಗೇ ಕೊಡ್ತೀನಿ ಅಂತಾನೂ ನನ್ನ ಹತ್ರ ಹೇಳಿದಾರೆ…. +ಆದರೆ ಅದೆಲ್ಲ ಯಾರಿಗೂ ಗೊತ್ತಾಗ್ದೆ ಇದ್ಹಾಂಗೆ ಆಗಬೇಕಂತೆ…. +ಯಾಕೆ ಅಂತೀರೋ? +ದೇವಯ್ಯಗೌಡರು ಮೊನ್ನೆ ತೀರ್ಥಳ್ಳಿಗೆ ಹೋಗಿ ಪೋಲೀಸರಿಗೆ ಫಿರ್ಯಾದು ಕೊಟ್ಟಾರೆ ಅಂತಾ ಸುದ್ದಿ… +ಅದಕ್ಕೇ ಆದಷ್ಟು ಬ್ಯಾಗನೆ, ಪೋಲೀಸುಗೀಲೀಸು ಗಲಾಟೆ ಬರೋದರ ಒಳಗೆ, ಉಂಗುರ ದಾಟಿಸಿ ಬಿಡಾನ ಅಂತಾ ಅವರ ಮನಸ್ಸು…. +ಬಹಳ ಒಳ್ಳೇರು ಕಣ್ರೋ ಆ ಪುಡಿಸಾಬ್ರು! +ನಿಮಗೇನು ಹೊಸಬರಲ್ಲ. +ನೀವು ಎಷ್ಟೋ ಕಾಲದಿಂದ ನೋಡ್ತಾನೆ ಇದ್ದೀರಿ ಅಲ್ಲೇನು ಹೇಳಿ?”ಚೀಂಕ್ರನ ಪ್ರಶ್ನೆಗೆ ‘ಹೌದು’ ಎಂದಳು ಕಾವೇರಿ. +ಅವಳು ಪುಡಿಸಾಬುವನ್ನು ಇತರರನ್ನು ನೋಡುತ್ತಿದ್ದಂತೆಯೆ ನೋಡಿದ್ದಳು. +ಅವನು ರೂಪದಲ್ಲಿ ಬಣ್ಣದಲ್ಲಿ ಬಟ್ಟೆ ಷೋಕಿಯಲ್ಲಿ ಇತರರಿಗಿಂತಲೂ ಜೋರಾಗಿರುತ್ತಿದ್ದುದರಿಂದ ಕಾವೇರಿ ಮನದಲ್ಲಿಯೆ ಪ್ರಶಂಸಿಸಿಯೂ ಇದ್ದಳು. +ಆ ಪ್ರಶಂಸೆ ಬಾಲ್ಯಸಹಜ ಮುಗ್ಧತೆ ಮಾತ್ರ ಆಗಿತ್ತು. +ಅದರಲ್ಲಿಯೂ ತುರುಕನಾಗಿದ್ದ ಅವನು ಜಾತಿಯ ದೃಷ್ಟಿಯಿಂದ ಹಸಲವರಿಗಿಂತಲೂ ಕೀಳಾಗಿದ್ದನಲ್ಲವೆ? +ಊರು ಮನೆಯವನಾಗಿದ್ದುದರಿಂದ ಕಾವೇರಿ ಅಂಗಡಿಗೆ ಹೋದಾಗಾಗಲಿ, ಅವನೇ ಕೆಲಸದ ನಿಮಿತ್ತ ಅಂತಕ್ಕನ ಮನೆಗೆ ಬಂದಾಗಲಾಗಲಿ, ಕಾವೇರಿಯನ್ನು ಸಲಿಗೆಯಿಂದ ವಿನೋದವಾಗಿಯೂ ಮಾತನಾಡಿಸಿಯೂ ಇದ್ದುದರಿಂದ ಕಾವೇರಿ ಅವನಲ್ಲಿ ಅಪನಂಬಿಕೆ ಪಡುವುದಕ್ಕೂ ಕಾರಣವಿರಲಿಲ್ಲ. +ಅವಳೇನೋ ಗಾಳಿಸುದ್ದಿ ಕೇಳಿದ್ದಳು, ಸಾಬರುಗಳಲ್ಲಿ ಆಗುಂಬೆಘಾಟಿಯ ದಾರಿಯಲ್ಲಿ ತಲೆಯೊಡೆಯುವುದು ದೋಚುವುದು ಮಾಡುತ್ತಾರೆ ಎಂದು. +ಆದರೆ ಅದು ಬಹುದೂರದ ಕಾಡಗಿಚ್ಚಿನಂತಿದ್ದು ಅದರ ಬಸಿ ಅವಳಿಗೆ ಮುಟ್ಟಿರಲಿಲ್ಲ. +“ಯಾರ ಕೈಲಿ ಕೊಡುಕ್ಕೂ ಅವರಿಗೆ ಮನಸ್ಸಿಲ್ಲ…. +ನಿಮ್ಮ ಕೈಲೇ ಕೊಡ್ತೀನಿ ಅಂತಾರೆ. +ನಿಮ್ಮನ್ನ ಕಂಡರೆ ಅವರಿಗೆ ಎಷ್ಟು ಪಿರೀತಿ ಅಂತೀರ! +ನನ್ನ ಕೈಲಿ ಮೊನ್ನೆ ಹೇಳ್ತಾರೆ. ‘ಅಷ್ಟು ಚೆಂದಾಗಿರೋರ್ನ ನಾ ಎಲ್ಲೂ ನೋಡಿಲ್ಲೋ, ಚೀಂಕ್ರ!’ ಅಂತಾ….” +ಮುಖದಲ್ಲಿ ಸಂಕೋಚ ಭಾವನೆ ಸೂಚಿಸಿದ ಕಾವೇರಿಯನ್ನು ನೋಡಿ ಚೀಂಕ್ರ ಪ್ರೋತ್ಸಾಹಕನಾಗಿ ಮುಂದುವರಿದನು. +“ನಿಜ ಹೇಳಿದರೆ ಯಾಕೆ ನಾಚಿಕೆ ಮಾಡಿಕೊಳ್ತೀರಿ? +ಪುಡಿ ಸಾಬ್ರು ನಿಜಾನೆ ಹೇಳಿದ್ರು. +ನಿಮಗಿಂತ ಚೆಂದಾಗಿರೋರ್ನ ನಾನೂ ಎಲ್ಲೂ ನೋಡಿಲ್ಲಾ ಅಂತಾ ಯಾರ ಕೈಲಿ ಬೇಕಾದ್ರೂ ಬಾಜೂ ಕಟ್ತೀನಿ ನಾನು! …. ” +ತನ್ನ ಸೌಂದರ್ಯ ಪ್ರಶಂಸೆಗಿಂತಲೂ ಹೆಚ್ಚಿನ ಪ್ರಲೋಭನೆಯಾಗಲಿ ದೌರ್ಬಲ್ಯವಾಗಲಿ ಹೆಂಗಸಿಗೆ ಮತ್ತೊಂದು ಇರಲಾರದು. +ಅದರಲ್ಲಿಯೂ ತಾರುಣ್ಯ ಪ್ರಾರಂಭದಲ್ಲಿರುವ ಕಾವೇರಿಯಂತಹ ಹುಡುಗಿಯರಿಗೆ ಅಂತಹ ಶ್ಲಾಘನೆ ಭಂಗಿ ತಿನ್ನಿಸಿದಂತಾಗುತ್ತದೆ. +ಎಚ್ಚರಿಕೆ, ವಿವೇಕ, ಭೀರುತ್ವಗಳೆಲ್ಲ ಹಿಂಜರಿದು ಹಿಗ್ಗೊಂದೆ ಮುನ್ನುಗ್ಗುತ್ತದೆ. +ಪೂರ್ವಭಾವಿಯಾಗಿ ಗೊತ್ತುಮಾಡಿದ ಒಂದು ದಿನ, ಕತ್ತಲಾದಮೇಲೆ, ಕಾವೇರಿ ಯಾರಿಗೂ ತಿಳಿಯದಂತೆ ಚೀಂಕ್ರನೊಡನೆ ಹೋಗಿ ಪುಡಿಸಾಬಿಯಿಂದ ಉಂಗುರ ಪಡೆಯುವುದೆಂದು ಸಂಚು ಸಿದ್ಧವಾಯಿತು. +ಎಲ್ಲಿ ಸಾಬಿಯನ್ನು ಸಂಧಿಸುವುದೆಂದು ಸ್ಥಳದ ವಿಚಾರ ಬಂದಾಗ, ಕಾವೇರಿ ತಾನು ಮನೆಯಿಂದ ಬಹಳಹೊತ್ತು ಹೊರಗಿರಲು ಸಾಧ್ಯವಿಲ್ಲವೆಂದೂ, ಸಿಕ್ಕಿಕೊಳ್ಳಬಹುದೆಂದೂ, ಸಂಶಯಕ್ಕೆ ಅವಕಾಶವಾಗುತ್ತದೆ ಎಂದೂ ಹೇಳಿದುದರಿಂದ ಅಂತಕ್ಕನ ಮನೆಗೆ ಸ್ವಲ್ಪ ಹೆಚ್ಚು ಕಡಿಮೆ ಕಾಣುವಂತೆಯೆ ಇದ್ದು ಅನತಿ ದೂರದಲ್ಲಿರುವ ಮಿಶನ್ ಸ್ಕೂಲಿನಲ್ಲಿ ಸೇರಬಹುದೆಂದು ಸದ್ಯಕ್ಕೆ ನಿರ್ಣಯವಾಯಿತು. + ಮಿಶನ್ ಸ್ಕೂಲ್ ಕಟ್ಟಡ ಸಿದ್ಧವಾಗಿತ್ತೆ ಹೊರತು ಇನ್ನೂ ಇಸ್ಕೂಲು ಪ್ರಾರಂಭವಾಗಿರಲಿಲ್ಲ. +ಚಳಿಗಾಲದಲ್ಲಿ ಕ್ರೈಸ್ತರ ಹಬ್ಬದ ಕಾಲಕ್ಕೆ ಬಿಳಿಪಾದ್ರಿ ರೆವರೆಂಡರಿಂದ ಅದರ ಪ್ರಾರಂಭೋತ್ಸವ ನಡೆಯುವಂತೆಯೂ, ಅದರ ಹಿಂದಿನ ದಿನವೊ ಅಥವಾ ಆ ದಿನವೆ ಪ್ರಾತಃಕಾಲವೊ ದೇವಯ್ಯಗೌಡರ ಮತಾಂತರ ಧರ್ಮಕ್ರಿಯೆಯೂ ಅಲ್ಲಿಯೆ ಗಲಾಟೆಯಿಲ್ಲದೆ ನಡೆಯುವಂತೆಯೂ ಏರ್ಪಾಡಾಗಿತ್ತು. +ಗೌರಿ ಹಬ್ಬಕ್ಕೆ ಇನ್ನೂ ಮೂರು ದಿವಸವಿದೆ ಎನ್ನುವಾಗ, ಒಂದು ಸಂಜೆ ಮೇಗರವಳ್ಳಿಯ ಹೆದ್ದಾರಿಯಲ್ಲಿ ಆಗುಂಬೆಯ ಕಡೆಯಿಂದ ತೀರ್ಥಹಳ್ಳಿಯ ದಿಕ್ಕೆಗೆ ನಾಲ್ವರು ಪ್ರಯಾಣಿಕರು, ಅವರನ್ನು ನೋಡಿದರೆ ಬಹುದೂರದಿಂದ ಬಂದವರಂತೆ ಕಾಣುತ್ತಿದ್ದರು. + ಸೋತು ಕಾಲುಹಾಕುತ್ತಿರುವಂತೆ ನಡೆದು ಬರುತ್ತಿದ್ದರು. +ಮುಂದೆ ಬರುತ್ತಿದ್ದ ಇಬ್ಬರು ಕೊಡೆ ಹಿಡಿದಿದ್ದರು. +ಹಿಂದೆ ಬರುತ್ತಿದ್ದವರು ಕಂಬಳಿ ಕೊಪ್ಪೆ ಹಾಕಿಕೊಂಡಿದ್ದರು. +ಮಳೆಗೂ ಕೆಸರಿಗೂ ರಕ್ಷೆಯಾಗಿ ತಮ್ಮ ಕಚ್ಚೆ ಪಂಚೆಗಳನ್ನು ಮೊಳಕಾಲಿನವರೆಗೂ ಎತ್ತಿ ಕಟ್ಟಿಕೊಂಡಿದ್ದು ಮೈಮುಚ್ಚುವಂತೆ ಬಟ್ಟೆ ಹಾಕಿಕೊಂಡಿದ್ದ ಆಗ್ರೇಸರಿಬ್ಬರನ್ನು ಯಜಮಾನರೆಂದೂ, ಹಿಂದೆ ತಲೆಯಮೇಲೆ ಗಂಟು ಮೂಟೆ ಹೊತ್ತು ಅರಮೈ ಬಿಟ್ಟುಕೊಂಡಿದ್ದ ಇಬ್ಬರನ್ನು ಅವರು ಆಳುಗಳೆಂದೂ ಯಾರಾದರೂ ಗುರುತಿಸಬಹುದಿತ್ತು. +ಮಳೆ ಸೋನೆಯಾಗಿ ಬೀಳುತ್ತಿದ್ದುದರಿಂದ ಮೇಗರೊಳ್ಳಿ ಪೇಟೆಯ ಬೀದಿ ನಿರ್ಜನವಾಗಿತ್ತು. +ಆದರೆ ತುಂಬ ವಿರಳವಾಗಿ ಆ ಕಡೆ ಈ ಕಡೆ ಹುದುಗಿದಂತಿದ್ದ ಹುಲ್ಲಿನ ಮತ್ತು ಓಡುಹೆಂಚಿನ ಮಣೆಗಳ ಮತ್ತು ಅಂಗಡಿ ಮಳಿಗೆಗಳ ಮುಂಭಾಗದ ತೆಣೆಗಳಲ್ಲಿ ಒಬ್ಬರು ಇಬ್ಬಸ್ರು ಮೂವರು ಕಲೆತು ಮಾತಾಡಿಕೊಳ್ಳುತ್ತಿದ್ದುದು ಕಣ್ಣಿಗೆ ಬೀಳಬಹುದಾಗಿತ್ತು. +ಕೆಲವರು ಎಲೆಯಡಿಕೆ ಜಗಿಯುತ್ತಿದ್ದರೆ ಇನ್ನು ಕೆಲವರು-ಅವರು ಸಾಬರು ಎಂದು ಅನಿವಾರ್ಯವಾಗಿ ಹೇಳಬಹುದಿತ್ತು-ಬೀಡಿ ಸೇಯುತ್ತಿದ್ದರು. +ಮತ್ತೆ ಕೆಲವರು ಮಂಗಳೂರು ನಶ್ಯ ಸೇಯುವುದೊ ಮಡ್ಡಿ ನಶ್ಯ ತಿಕ್ಕುವುದೋ ಅಂತಹ ವಿರಾಮಶೀಲ ಕಾರ್ಯಗಳಲ್ಲಿ ತೊಡಗಿದ್ದರುಕಣ್ಣಾ ಪಂಡಿತರ ಮನೆಯ ಮುಂದೆ ಕಂಬಳಿಕೊಪ್ಪೆ ಹಾಕಿಕೊಂಡು ನಿಂತಿದ್ದ ಒಬ್ಬನು ಹಾದಿಯಲ್ಲಿ ಮುಂದೆ ಬರುತ್ತಿದ್ದ ಪಯಣಿಗರಲ್ಲಿ ಒಬ್ಬರನ್ನು ಗುರುತಿಸಿ, ಬಗ್ಗಿ, ಎರಡೂ ಕೈ ಜೋಡಿಸಿ “ಅಡ್ಡಬಿದ್ದ, ಐಗಳಿಗೆ, ಸಿಂಬಾವಿ ಕರಸಿದ್ದ” ಎಂದನು. +“ಎಲ್ಲ ಸುಖವಾಗಿದ್ದಾರೇನೋ? …. ಗುತ್ತಿ ಮನೇಲಿ ಇದಾನಷ್ಟೆ?” ಎಂದು ಹೊಲೆಯನ ಯೋಗಕ್ಷೇಮ ವಿಚಾರಿಸಿದರು ಅನಂತಯ್ಯ. +ಗುತ್ತಿಯ ಅಪ್ಪ ಸಿಂಬಾವಿ ಕರಸಿದ್ದ ಮೋರೆ ಸಣ್ಣಗೆ ಮಾಡಿಕೊಂಡು, ಮಗ ಸೊಸೆಯನ್ನು ಕಟ್ಟಿಕೊಂಡು ದೇಶಾಂತರ ಹೋದುದನ್ನು ಸಾವಧಾನವಾಗಿ ಹೇಳುತ್ತಾ ಸುಖ ದುಃಖ ತೋಡಿಕೊಂಡನು. +ಅವನಿಗೆ ಎರಡು ಸಮಾಧಾನದ ಮಾತು ಹೇಳಿ, ಕನ್ನಡ ಜಿಲ್ಲೆಯಿಂದ ಅದೇ ತಾನೆ ಹಿಂತಿರುಗುತ್ತಿದ್ದ ಐಗಳು ಅನಂತಯ್ಯ ನಾಲ್ಕು ಹೆಜ್ಜೆ ಕನ್ನಡ ಜಿಲ್ಲೆಯಿಂದ ಅದೇ ತಾನೆ ಹಿಂತಿರುಗುತ್ತಿದ್ದ ಐಗಳು ಅನಂತಯ್ಯ ನಾಲ್ಕು ಹೆಜ್ಜೆ ಮುಂದುವರಿದಿದ್ದರು. +ಕರೀಂಸಾಬರ ಮಳಿಗೆಯಲ್ಲಿದ್ದ ಗುಂಪು ಸಸಂಭ್ರಮವಾಗಿ ಕೂಗಿತು. +“ಓಹೋಹೋ!ಊರಿಗೆ ಹೋಗಿದ್ದ ಐಗಳ ಸವಾರಿ ಈಗ ಬರ್ತಾ ಇರೋ ಹಾಂಗೆ ಕಾಣ್ತದಲ್ದಾ?”ಅನಂತಯ್ಯ ನೋಡಿದರು. +ಬೀಡಿ ಸೇಯುತ್ತಿದ್ದ ಗುಂಪಿನಲ್ಲಿ ಪುಡಿಸಾಬಿ, ಲುಂಗಿಸಾಬಿ, ಅಜ್ಜೀಸಾಬಿ ಎಲ್ಲ ಇದ್ದರು. +ತುಸು ಎತ್ತರದಲ್ಲಿ ವ್ಯಾಪಾರ ಕೊಡುವವನ ಕೂರುವ ಮಣೆಪೀಠದ ಮೇಲೆ ಕರ್ಮೀನ್ ಸಾಬರೂ ಮಂಡಿಸಿದ್ದರು. +ಸರಿಸಮಾನ ಸ್ಕಂಧನಂತೆ ಚೀಂಕ್ರ ಸೇರೆಗಾರನೂ ಅಲ್ಲಿಯೆ ಬಳಿ ಕೂತಿದ್ದುದೂ ಕಾಣಿಸಿತು. +“ಎಲ್ಲಾ ಏನೋ ಒಂದು ಮಸಲತ್ತಿಗೆ ಸೇರಿಕೊಂಡಹಾಗೆ ಕಾಣ್ತದೆ, ನೋಡು” ಎಂದು ತಮ್ಮ ಪಕ್ಕದಲ್ಲಿ ಬರುತ್ತಿದ್ದ ಕಿಟ್ಟಯ್ಯ ಸೆಟ್ಟರಿಗೆ ಹೇಳಿ, ಮಳಿಗೆಯವರ ಸ್ವಾಗತಕ್ಕೆ ಮಂದಸ್ಮಿತ ಮಾತ್ರ ಉತ್ತರವನ್ನೀಯುತ್ತಾ ಮುಂದುವರಿದರು ಅನಂತಯ್ಯ. +ಅವರು ಅಂತಕ್ಕನ ಮನೆಯ ಹತ್ತಿರಕ್ಕೆ ಬರುವಷ್ಟರಲ್ಲಿ ಶ್ರಾವಣಬೈಗು ಮೋಡಗಪ್ಪಾಗತೊಡಗಿತ್ತು. +ಸುಪರಿಚಿತ ಪ್ರದೇಶಕ್ಕೆ ಪ್ರವೇಶಿಸುವಂತೆ, ಉಣುಗೋಲಿನ ಪಕ್ಕದಲ್ಲಿದ್ದ ತಡಬೆಯನ್ನು ಹತ್ತಿ ದಾಟಿ, ಅನಂತಯ್ಯ ತಮ್ಮ ಹಿಂದೆಯೆ ತಡಬೆಯನ್ನು ಕಿಟ್ಟಯ್ಯ…. +ತಡಬೆಮೇಲೆ ಜಾರಿ ಬಿದ್ದೀಯಾ? …. +ಮಳೇಲಿ ಮರದ ದಿಂಡಿನ ತುಂಬಾ ಹಾಸುಂಬೆ ಕಟ್ಟಿದೆ, ಹುಷಾರಾಗಿಳಿ….” +ಅವರ ಹಿಂದೆ ಸಾಮಾನು ಹೊತ್ತು ಬರುತ್ತಿದ್ದ ಗಟ್ಟದ ತಗ್ಗಿನ ಆಳುಗಳಿಬ್ಬರು ತಡಬೆ ಹತ್ತಿ ಇಳಿಯುವ ಗೋಜಿಗೆ ಹೋಗದೆ, ಉಣುಗೋಲಿನ ಗಳುಗಳನ್ನು ಸರಿಸಿ ನಾಯಿ ಬೊಗಳಿತು. +ಕೊರಗನು ಬಂದ ಆಗಂತುಕರನ್ನು ಗುರುತಿಸುವ ಮೊದಲೆ ಒಳಗೆ ಓಡಿ ಸುದ್ದಿ ಕೊಟ್ಟನು. +ಹೊರಗೆ ಜಗಲಿಗೆ ಬಂದ ಅಂತಕ್ಕ “ಅಂತೂ ಕಡೆಗೂ ಬಂದಿರಲ್ಲ?”ಕಿಟ್ಟಯ್ಯ ವಯಸ್ಸಿನಲ್ಲಿ ಇನ್ನೂ ಇಪ್ಪತೈದನ್ನೂ ದಾಟಿರಲಿಲ್ಲ. +ಅಷ್ಟರಲ್ಲಿಯೆ ಅವನಿಗೆ ಎರಡು ಮದುವೆಗಳಾಗಿ ಇಬ್ಬರು ಹೆಂಡಿರೂ ತೀರಿಕೊಂಡಿದ್ದರು. +ಮೊದಲನೆಯ ಹೆರೆಗೆಯ ಅನಂತರವೆ ತೀರಿಕೊಂಡಿದ್ದಳು. +ಎರಡನೆಯವಳಿಗೆ ಒಂದು ಹೆಣ್ಣೂ ಹುಟ್ಟಿದ ಒಂದೂವರೆ ವರ್ಷದೊಳಗಾಗಿ ಮತ್ತೊಂದು ಗಂಡು ಹುಟ್ಟಿ, ಬಾಲೆ ಬಾಣಂತಿಯರು ಅದನ್ನೆಲ್ಲ ತಿಳಿದಿದ್ದ ಅಂತಕ್ಕ, ಅನಂತಯ್ಯ ಊರಿಗೆ ಹೋಗುವಾಗ್ಸ, ಅವರೊಡನೆ ಹೇಳಿಕಳಿಸಿದ್ದಳು, ಕಿಟ್ಟಯ್ಯನನ್ನೂ ತಮ್ಮ ಜೊತೆಯಲ್ಲಿ ಕರೆತರಲು. +ತಕ್ಕ ಮಟ್ಟಿಗೆ ಹೊಟ್ಟೆಬಟ್ಟೆಗೆ ಏನೂ ಕಡಿಮೆಯಿಲ್ಲದಷ್ಟು ಆಸ್ತಿವಂತನಾಗಿದ್ದ ಸೋದರಳಿಯನಿಗೆ ಕಾವೇರಿಯನ್ನು ಕೊಟ್ಟು ಮದುವೆಮಾಡಿ, ಜನರ ಬಾಯಿಗೆ ಬೀಳುವುದನ್ನು ತಪ್ಪಿಸಿಕೊಳ್ಳುವ ಉದ್ದೇಶ ಅಂತಕ್ಕಗೆ. +“ಅವಳೇನು ಸಣ್ಣ ಹುಡುಗಿಯೆ? +ಮದುವೆ ಮಾಡಿದ್ದರೆ ಮೂರು ಮಕ್ಕಳ ತಾಯಿ ಆಗುತ್ತಿದ್ದಳು! +ಆದರೂ ಸುಮ್ಮನೆ ಚೆಲ್ಲು ಹರಿಯುತ್ತಿರುತ್ತಾಳೆ…. +ಪರಿಕಾರ ಹಾಕುತ್ತಿದ್ದಾಗ ಹೇಗೆ ಆಡುತ್ತಿದ್ದಳೊ ಹಾಗೆಯೆ ಆಡುತ್ತಿರುತ್ತಾಳೆ ಕಂಡಕಂಡವರೊಡನೆ… ತೆಳ್ಳಗೆ ಬೆಳ್ಳಗೆ ಚೆನ್ನಾಗಿ ಇದ್ದಾಳೆ ಎಂದು ಎಲ್ಲರೂ ಅವಳನ್ನು ಮುದ್ದುಮಾಡುವವರೆ ಆಗಿದ್ದಾರೆ…. +ಏನ್ನಾದರೂ ಒಂದಾದರೆ ಕಿಸಾಕೊಳ್ಳಿ ಆವಾಗ ಗೊತ್ತಾಗುತ್ತದೆ, ಅಂತಕ್ಕಗೆ ಋತುವಾದ ಮೇಲೆ ಹೆಣ್ಣು ಮಕ್ಕಳನ್ನು ಮದುವೆ ಮಾಡದೆ ಇಷ್ಟು ದಿನ ಯಾರಾದರೂ ಮನೆಯಲ್ಲಿ ಇಟ್ಟುಕೊಳ್ಳೂತ್ತಾರೆಯೇ? …. ”ಹೀಗೆಲ್ಲ ಜನರು ಆಡಿಕೊಳ್ಳತೊಡಗಿದ್ದರು, ಕಾವೇರಿಯ ವಿಚಾರವಾಗಿ ಆ ವಿಷಯದಲ್ಲಿ ತಾಯಿ ಮಗಳಿಗೆ ಸೂಕ್ಷ್ಮವಾಗಿ ಎಚ್ಚರಿಕೆ ಕೊಟ್ಟಿದ್ದಳು, ನಿಜ. +ಆದರೆ ಒಡೆಯರೂ ಅನ್ನದಾತರೂ ಕಷ್ಟಕ್ಕೆ ಬೇಕಾದವರೂ ಆಗಿ, ಹಿಂದಿನಿಂದಲೂ ತನಗೂ ತನ್ನ ಬಾಳದೆ ಹೋದ ಗಂಡ ಸುಬ್ಬಣ್ಣ ಸೆಟ್ಟರಿಗೂ ಆಪ್ತರಾಗಿದ್ದ ಶ್ರೀಮಂತ ಮನೆತನದ ಗೌರವಸ್ಥ ಯುವಕರು, ಬೆಟ್ಟಳ್ಳಿ ಕಲ್ಲಯ್ಯಗೌಡರ ಮಗ ದೇವಯ್ಯನಂಥವರು, ಮನೆಗೆ ಬಂದರೆ ಬೇಡ ಅನ್ನುವುದಕ್ಕಾಗುತ್ತದೆಯೆ? +ಬಹುಕಾಲದ ಪರಿಚಯದಿಂದ ಸ್ನೇಹಪೂರ್ವಕವಾಗಿ ಮಾತಾಡಿಸಿದರೆ, ವರ್ತಿಸಿದರೆ, ಏನನ್ನಾದರೂ ಸ್ನೇಹಪೂರ್ವಕವಾಗಿ ಉಡುಗೋರೆ ತಂದಿದ್ದರೆ, ಬೇಡ ಎಂದು ನಿಷ್ಟುರವಾಗಿ ಹೇಳುವುದಕ್ಕಾಗುತ್ತದೆಯೇ? +ಮಗಳ ಮೇಲೆ ಮೂರು ಹೊತ್ತು ಕಾವಲು ಕೂರುವುದಕ್ಕಾಗುತ್ತದೆಯೇ? +ಎಷ್ಟಂದರೂ ಅವಳೂ ಪ್ರಾಯಕ್ಕೆ ಬರುತ್ತಿರುವ ಹುಡುಗಿ. +ಪ್ರಾಯದ ಹುಡುಗರೊಡನೆ, ಒಂದೆರಡು ವಿನೋದದ ಮಾತಾಡಿ, ಕುಶಾಲು ಮಾಡುವುದು ಬೇಡ ಎಂದರೆ, ಮೇಲುಮೇಲಕ್ಕೆ ಹೂ ಅಂದರೂ, ನಿಜವಾಗಿಯೂ ಸುಮ್ಮನಿರುತ್ತಾಳೆಯೇ? …. +ತನ್ನ ಪ್ರಾಯದ ಕಾಲದಲ್ಲಿ ಅಂತಹ ಅನುಭವಗಳಿಗೆ ಒಳಗಾಗಿದ್ದ ಅಂತಕ್ಕನ ಅಂತರಂಗ ಇನ್ನೂ ಮುಂದುವರಿದು ಹೇಳಿಕೊಂಡಿತ್ತು. +ಸುಮ್ಮನಿರಲು ಖಾರ, ಉಪ್ಪು, ಹುಳಿ ತಿನ್ನುವ ಮನುಷ್ಯ ಮಾತ್ರದವರಿಗೆ ಸಾಧ್ಯವೇ?” +ಆವೊತ್ತು ರಾತ್ರಿ ಅಳಿಯನ ಉಪಚಾರಾರ್ಥವಾಗಿ ಔತಣದ ಊಟ ಸಿದ್ದವಾಗುವುದೇ ಹೊತ್ತಾಯಿತು. +ಅದರಲ್ಲಿ ಕಾವೇರಿ ತಾಯಿಗೂ ಕೊರಗನಿಗೂ ನೆರವಾದಳು. +ಆದರೆ ಅದು ಮನಃಪೂರ್ವಕವಾಗಿ ಆಗಿರಲಿಲ್ಲ. +ಮೊದಲನೆಯದಾಗಿ, ಅಂದಿನ ರಾತ್ರಿಯೆ ಮಿಶನ್ ಸ್ಕೂಲಿನಲ್ಲಿ ತನಗೆ ಪುಡಿಸಾಬರು ಉಂಗುರ ಕೊಡುವುದೆಂದು ಗೊತ್ತಾಗಿದೆ ಎಂಬುದನ್ನು ಚೀಂಕ್ರ ಮಧ್ಯಾಹ್ನವೆ ತಿಳಿಸಿಹೋಗಿದ್ದನು. +ಅನಿರೀಕ್ಷಿತವಾಗಿ ಬಂದಿದ್ದ ಅತಿಥಿಗಳಿಂದ ಅದಕ್ಕೆಲ್ಲಿ ಭಂಗವುಂಟಾಗುತ್ತದೆಯೋ ಎಂಬ ಅಶಂಕೆ ಕಾಡತೊಡಗಿತ್ತು ಕಾವೇರಿಯನ್ನು. +ಎರಡನೆಯದಾಗಿ, ತನಗೆ ಸ್ವಲ್ಪವೂ ಇಷ್ಟವಿಲ್ಲದ ಕಿಟ್ಟಯ್ಯಸೆಟ್ಟಿಯನ್ನು ತನ್ನ ಗಂಡನಾಗುವಂತೆ ಮಾಡಲು ಸಂಚು ಮಾಡಿದ್ದಾರಲ್ಲಾ ಎಂಬುದು. +ಕಿಟ್ಟಯ್ಯನನ್ನು, ಅವನು ಮದುವೆಯಾಗುವ ಮುನ್ನ ಹುಡುಗನಾಗಿದ್ದಾಗ ನೋಡಿದ್ದಳು. +ಅವನ ಉಬ್ಬು ಹಲ್ಲು, ಕೋಳಿಯ ಕುತ್ತಿಗೆಯಂತೆ ಉದ್ದವಾಗಿದ್ದ ಕುತ್ತಿಗೆ, ಗಳುವಿನಂತಿದ್ದ ಸಪುರ ಕಾಲು-ಇವೆಲ್ಲ ಅವಳಿಗೆ ಹಿಡಿಸಿರಲಿಲ್ಲ. +ಅದರಲ್ಲಿಯೂ ದೇವಯ್ಯನಂಥವರ ಭದ್ರಾಕಾರ ಮತ್ತು ಸ್ಪುರದ್ರೂಪಗಳನ್ನು ನೋಡಿ ಮೆಚ್ಚಿದ ಅವಳಿಗೆ ಕಿಟ್ಟಯ್ಯ ಜಿಗುಪ್ಸೆಗೆ ಕಾರಣನಾಗಿದ್ದನು. +ಆಗೊಮ್ಮೆ ವಿನೋದಕ್ಕಾಗಿ ಅವಳ ತಾಯಿ “ನಮ್ಮ ಕಿಟ್ಟಯ್ಯನನ್ನು ಮದುವೆಯಾಗ್ತಿಯೇನೆ?” ಎಂದು ಕೇಳಿದ್ದಕ್ಕೆ, “ಅವನ್ನ ಮದುವೆಯಾಗುವುದಕ್ಕಿಂತ ಹಾಳುಬಾವಿಗಾದ್ರೂ ಹಾರುತ್ತೀನಿ!” ಆಮೇಲೆ ಕಿಟ್ಟಯ್ಯ ಕನ್ನಡ ಜಿಲ್ಲೆಯಲ್ಲಿಯೆ ಮದುವೆಯಾಗುವ ಸುದ್ದಿ ಕೇಳಿ, ತನಗೆ ಶನಿ ತೊಲಗಿತಲ್ಲಾ ಎಂದು ಸಂತೋಷಪಟ್ಟಿದ್ದಳು. +ಅವನ ಮೊದಲನೆ ಹೆಂಡತಿ ಹೆತ್ತು ಸತ್ತಾಗಲೂ ಕಾವೇರಿಗೆ ಹೆದರಿಕೆಯಾಗಿತ್ತು, ಮತ್ತೆ ಎಲ್ಲಿ ತನಗೆ ಶನಿ ತಗಲಿಕೊಳ್ಳುತ್ತದೆಯೆ ಎಂದು. +ಆದರೆ ಶನಿ ಗಟ್ಟದ ಮೇಲಕ್ಕೆ ಹತ್ತದೆ, ಗಟ್ಟದ ಕೆಳಗೇ ಅವನಿಗೆ ಮತ್ತೊಂದು ಮದುವೆ ಮಾಡಿಸಿತ್ತು ಆ ಎರಡನೆಯ ಹೆಂಡತಿ ಸತ್ತು ಎರಡು ಮೂರು ವರ್ಷಗಳಾಗಿದ್ದರೂ ಅವನಿಗೆ ಹೆಣ್ಣು ಸಿಕ್ಕಿಲಿಲ್ಲ ಎಂಬ ಸುದ್ದಿ ಕಾವೇರಿಗೆ ಅನಿಷ್ಟಕರವಾಗಿತ್ತು. +ಏಕೆಂದರೆ ಈಗ ಎಲ್ಲರೂ ತನ್ನನ್ನು ಮದುವೆಗೆ ಬಂದ ಹೆಣ್ಣು ಎಂಬ ಅರ್ಥದಲ್ಲಿಯೆ ಕಾಣತೊಡಗಿದ್ದರು. +ಅದೂ ಒಂದು ಒಳಕಾರಣವಾಗಿತ್ತು, ಕಾವೇರಿ ಶ್ರೀಮಂತ ಪ್ರತಿಷ್ಠಾವಂತರ ಮನೆತನದವನಾಗಿದ್ದ ದೇವಯ್ಯನಿಗೆ ಹತ್ತಿರ ಹತ್ತಿರ ಸರಿಯುವುದಕ್ಕೆ, ತನ್ನ ಬದಕನ್ನು ಅವನ ಬದುಕಿನೊಡನೆ ಸಾವಿರಪಾಲು ಹರ್ಷದಾಯಕವಾಗಿತ್ತು ಅವಳಿಗೆ-ದೇವಯ್ಯಗೌಡರು ಇಟ್ಟುಕೊಂಡವಳಾಗಿರುವುದು! +ಅದರಲ್ಲಿಯೂ ಬಂದ ನೆಂಟರಿಗಾಗಿ ಹರಿವಾಣದಲ್ಲಿ ಇಟ್ಟಿದ್ದ ಎಲೆಡಕೆ ಹಾಕಿಕೊಂಡು ಜಗಿಯುತ್ತಿದ್ದ ಕಿಟ್ಟಯ್ಯಸೆಟ್ಟಿಯ ಹುಳುಹಿಡಿದು ವಿಕಾರವಾಗಿ ಅಸ್ತವ್ಯಸ್ತ ಕಾವೇರಿಗೆ ಅಮೇಧ್ಯ ಮೆಟ್ಟಿದ್ದಕ್ಕಿಂತಲೂ ಅಸಹ್ಯಕರವಾಗಿ ತೋರಿತ್ತು ತಾಯಿಯ ಆ ಸೋದರಳಿಯನೊಡನೆ ಒಡಬಾಳು. +ರಾತ್ರಿ ಊಟವಾಗುವುದಕ್ಕೆ ಮೊದಲೂ ಆಮೇಲೆಯೂ ಅಂತಕ್ಕ ಅನಂತಯ್ಯ ಕಿಟ್ಟಯ್ಯರು ಲೋಕಜೀವನ, ಗೃಹಕೃತ್ಯ ಮತ್ತು ಬಂಧು ಬಾಂಧವರು, ಭೂತ ಮತ್ತು ಭವಿಷ್ಯತ್ತು-ಅನೇಕ ವಿಷಯ ಮಾತಾಡುತ್ತಿದ್ದರು. +ತಾವು ತಮ್ಮ ಮುದಿತಾಯಿಯನ್ನು ನೋಡಲು ಊರಿಗೆ ಹೋದಮೇಲೆ ಕೋಣುರು, ಹೂವಳ್ಳಿ, ಹಳೆಮನೆ, ಸಿಂಭಾವಿ, ಬೆಟ್ಟಳ್ಳೀ ಮತ್ತು ಮೇಗರವಳ್ಳಿಗಳಲ್ಲಿ ಜರುಗಿದ ಸಂಗತಿಗಳನ್ನೆಲ್ಲ ಕೇಳಿ ಕೇಳಿ, ಮತ್ತೆ ಮತ್ತೆ ಪ್ರಶ್ನೆಹಾಕಿ, ತಿಳಿದುಕೊಂಡರು. +ಮುಕುಂದಯ್ಯ ಹೂವಳ್ಳಿಗೆ ಮನೆಅಳಿಯನಾಗಿ ಹೋಗಿ ನೆಲಸಿರುವುದನ್ನೂ, ಕೋಣುರು ಮನೆ ಜಮೀನುಗಳ ಹಿಸ್ಸೆ ತಮ್ಮ ಆಗಮನಕ್ಕಾಗಿಯೆ ಇದಿರು ನೋಡುತ್ತಿರುವ ವಿಚಾರವನ್ನು ಕೇಳಿದಾಗ ಅವರು ದೀರ್ಘಕಾಲ ಚಿಂತಾಮಗ್ನರಾಗಿದ್ದರು. +ಅಂತಕ್ಕ ಅವರ ಮುದಿ ಅಬ್ಬೆಯ ಯೋಗಕ್ಷೇಮವನ್ನು ವಿಚಾರಿಸಿದಾಗ ಅವರು ಹೇಳಿದರು ಹನಿಗಣ್ಣಾಗಿ. +‘ಅಂತೂ ಅದು ನಾನು ಹೋಗುವವರೆಗೆ ಕಾದಿದ್ದುದೇ ನನ್ನ ಪುಣ್ಯ. +ನಾನು ಬರುವುದನ್ನೆ  ಕಾಯುತ್ತಿತ್ತೆಂದು ತೋರುತ್ತದೆ ಅದರ ಜೀವ. +ನಾನು ಹೋದ ಮರುದಿವಸವಲ್ಲ ಅದರ ಮರುದಿವಸವೆ ಅದರ ಪ್ರಾಣ ದೇವರ ಪಾದ ಸೇರಿತು! +ಅದರದ್ದೇ ದಿನಾಗಿನ ಬಜ್ಜಗಿಜ್ಜ ಎಲ್ಲಾ ಪೂರೈಸಿ ಬರುವುದೇ ಇಷ್ಟು ತಡವಾಯಿತು. +ರಂಗಪ್ಪಗೌಡರು ಏನು ತಿಳಿದುಕೊಂಡಿದಾರೆಯೋ?…” +ಅನಂತಯ್ಯ ಕುಂಡೆಗೆ ಕಾಲು ಮುಟ್ಟಿಸಿಯೆ ಬಿಟ್ಟ!” ಎಂದು ಎಷ್ಟು ಜನರ ಕೈಲಿ ಆಗಲೆ ಹೇಳಿಬಿಟ್ಟಿದ್ದಾರೆಯೋ?” +ಆ ಮಾತುಕತೆಗಳಲ್ಲಿ ಬಹುಬಾಲು ಕಾವೇರಿಗೆ ನೀರಸವಾಗಿತ್ತು. +ಕೆಲವು ಪಾಲು ಆಯಾ ಸಂದರ್ಭದ ಅಜ್ಞಾನದಿಂದಾಗಿ ಅರ್ಥವಾಗಿರಲಿಲ್ಲ. +ಆದರೆ ಕಿಟ್ಟಯ್ಯಸೆಟ್ಟರನ್ನು ಮೇಗರವಳ್ಳಿಗೆ ಕರೆತಂದಿದ್ದ ಮುಖ್ಯಕಾರಣದ ವಿಷಯದಲ್ಲಿ ಮಾತ್ರ ಕಾವೇರಿ ಅನಾಸಕ್ತೆಯಾಗಿರಲು ಸಾಧ್ಯವಿರಲಿಲ್ಲ. +ತನ್ನನ್ನು ಅವನಿಗೆ ಕೊಟ್ಟು ಲಗ್ನಮಾಡುವ ವಿಚಾರ, ಸ್ವಲ್ಪವೂ ಸಂದೇಹಕ್ಕೆ ಅವಕಾಶವಿಲ್ಲದೆ, ದೃಡವಾಗಿ ನಿರ್ಧರಿಸಲ್ಪಟ್ಟಿದೆ. +ಎಂಬುದು ಅವಳಿಗೆ ಮರಣದಂಡನೆ ವಿಧಿಸಿದಷ್ಟು ಸುಸ್ಪಷ್ಟವಾಗಿತ್ತು. +ಅವಳಿಗೆ ಏನು ಮಾಡುವುದು ತೋರಲಿಲ್ಲ. +ಬೋನಿನೊಳಗೆ ಸಿಕ್ಕಿಬಿದ್ದ ಇಲಿಯಂತೆ ಅವಳ ಮನಸ್ಸು ಸುಮ್ಮನೆ ಅತ್ತಿಂದಿತ್ತ ಇತ್ತಿಂದತ್ತ ಪರಿದಾಡತೊಡಗಿತ್ತು. +ಇದ್ದಕ್ಕಿದ್ದ ಹಾಗೆ ಅವಳಿಗೆ ಹೂವಳ್ಳಿ ಚಿನ್ನಕ್ಕನ ನೆನಪಾಯಿತು. +ತನ್ನದಕ್ಕಿಂತಲೂ ಹೆಚ್ಚಿನ ಸಂಪ್ರದಾಯಬದ್ದವಾದ ಬೋನಿನಲ್ಲಿ ಸಿಕ್ಕಿಕೊಂಡಿದ್ದ ಅವರು ಮದುವೆ ನಿಶ್ಚಯವಾಗಿ ಇನ್ನೇನು ಲಗ್ನದ ಮುಹೂರ್ತವೂ ಹತ್ತಿರ ಬಂತು ಎನ್ನುವಾಗಲೂ, ಹೇಗೆ ಧೈರ್ಯಮಾಡಿ ಆ ಅನಾಹುತದಿಂದ ತಪ್ಪಿಸಿಕೊಂಡಿದ್ದರು ಎಂಬುದನ್ನು ನೆನೆದಳು. +ಅವರಿಗಿಂತಲೂ ಹೆಚ್ಚು ಸ್ವತಂತ್ರ ವಾತಾವರಣದಲ್ಲಿ ಬೆಳೆದಿರುವ ತನಗೆ, ಒದಗಲಿರುವ, ಆದರೆ ಇನ್ನೂ ಸ್ವಲ್ಪ ದೂರವಾಗಿರುವ, ಅನಾಹುತದಿಂದ ಪಾರಾಗಲು ಏಕೆ ಸಾಧ್ಯವಿಲ್ಲ? . +ಹಿಂದೊಮ್ಮೆ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರು ಐಗಳು ಅನಂತಯ್ಯನವರೊಡನೆ ಹುಲಿಕಲ್ಲು ಗುಡ್ಡ ಹತ್ತಿ, ಪ್ರಜ್ಞೆತಪ್ಪಿ, ದೋಲಿಯಲ್ಲಿ ತಮ್ಮ ಮನೆಗೆ ಬಂದಿದ್ದಾಗ, ತನ್ನ ತಾಯಿಯೊಡನೆ ಮಾತಾಡುತ್ತಾ, ಚಿನ್ನಕ್ಕನ್ನನ್ನು ಸಿಂಬಾವಿ ಭರಮೈಹೆಗ್ಗಡೆಯವರಿಗೆ ಕೊಟ್ಟು ಲಗ್ನವಾಗುವ ವಿಷಯದ ಪ್ರಸ್ತಾಪ ಬಂದಾಗ, ಅಂತಕ್ಕ ಹೂವಳ್ಳಿ ಚಿನ್ನಮ್ಮಗೂ ಕೋಣುರು ಮುಕುಂದಯ್ಯನಿಗೂ ಬಾಲ್ಯದಿಂದಲೂ ಇರುವ ಪ್ರಣಯ ಸಂಬಂಧದ ನೆನಪು ಮಾಡಿದಾಗ, ಮುದುಕ ಹೆಗ್ಗಡೆಯವರು ಹೇಳಿದ್ದ ಮಾತೂ ಮಾತಿನ ರೀತಿಯೂ ನೆನಪೂ ಮಾಡಿದಾಗ, ಮುದಕ ಹೆಗ್ಗಡೆಯವರು ಹೇಳಿದ್ದ ಮಾತೂ ಮಾತಿನ ರೀತಿಯೂ ಕಾವೇರಿಯ ಮುಂದೆ ನಿನ್ನೆಯೊ ಮೊನ್ನೆಯೊ ನಡೆದಂತೆ ಬಂದಿತು! +“ಈ ಹುಡುಗರ ಆಟಾನೆಲ್ಲ ಲೆಕ್ಕಕ್ಕೆ ತಂಗೊಂಡ್ರೆ ಅಂದಹಾಗೆ ಆಯ್ತು ಬಿಡು. +ಏನು ಮನೇಲಿ ಹೇಳೋರು ಕೇಳೋರು ಹಿರೇರು ದೊಡ್ಡೋರು ಯಾರು ಇಲ್ಲೇನು? +ಇವರಿವರೇ ಗೊತ್ತು ಮಾಡಿಕೊಳ್ಳಾಕೆ? +ನಾವೇನು ಕಿಲಸ್ತರೆ?… +ಆಗ ಸುಬ್ಬಣ್ಣ ಹೆಗ್ಗಡೆಯವರು ತಾಯಿಯ ಬೆನ್ನ ಹಿಂದೆ ನಿಂತಿದ್ದ ತನ್ನನ್ನೆ ಆ ವಿಚಾರದಲ್ಲಿ ತನ್ನ ಅಭಿಪ್ರಾಯ ಏನು ಎಂದು ಬರಿಯ ವಿನೋದಕ್ಕಾಗಿಯೆ ಕೇಳಿದ್ದರು. +ತಾನು ಏನೂ ಉತ್ತರ ಕೊಡದೆ ಮುಂಡಿಗೆಯ ಹಿಂದೆ ಅವಿತುಕೊಂಡಿದ್ದಳು. +ಈಗ?ತನಗೇ ಅಂತಹ ಸಂಕಟ ಪ್ರಾಪ್ತಿಯಾದಾಗ? +ಕಾವೇರಿ ಚಿಂತಿಸಿದಳು. +ಯಾವ ಮುಂಡಿಗೆ ಹಿಂದೆ ಅವಿತುಕೊಳ್ಳುವುದು? +ತನ್ನನ್ನು ಮರೆಹೊಗಿಸಿಕೊಳ್ಳುವ ಮುಂಡಿಗೆ ಎಲ್ಲಿದೆ? +ಚಿನ್ನಕ್ಕಗಾದರೂ ಮುಕುಂದಯ್ಯ ಇದ್ದರು. +ತನಗೆ?ದೇವಯ್ಯಗೌಡರೂ ಉಂಗುರದ ಅನುಮಾನದಿಂದ ವಿಮುಖರಾಗಿಬಿಟ್ಟಿದ್ದಾರೆ! …. +ಚೀಂಕ್ರ ಎಲ್ಲರೂ ಮಲಗಿದ ಮೇಲೆ ಹಿತ್ತಲುಕಡೆ ದನದ ಕೊಟ್ಟಿಗೆಯ ಹತ್ತಿರಬಂದು, ದನದ ಕೋಡು ಕಂಬಕ್ಕೆ ಬಡಿದಂತೆ ಸದ್ದು ಮಾಡುತ್ತಾನಂತೆ…. +ಇವೊತ್ತು ಇವರೆಲ್ಲಾ ಎಷ್ಟು ಹೊತ್ತಿನ ಮೇಲೆ ಮಲಗುತ್ತಾರೋ? +ನಾನೂ ಹೊತ್ತಾಗಿ ಮಲಗಿದರೆ? +ಎಲ್ಲಿಯಾದರೂ ಚೀಂಕ್ರ ಬರುವ ಸಮಯಕ್ಕೆ ಸರಿಯಾಗಿ ನನಗೆ ಜೋರಾಗಿ ನಿದ್ದೆ ಬಂದುಬಿಟ್ಟರೆ? +ಇಲ್ಲ, ಇವೊತ್ತು ಏನಾದರೂ ನಿದ್ದೆ ಮಾಡುವುದೆ ಇಲ್ಲ; +ಎಚ್ಚರವಾಗಿಯೆ ಇರುತ್ತೇನೆ… +ಆ ಸಾಬು ಏನಾದರೂ ಕೆಟ್ಟ ಮನಸ್ಸು ಇಟ್ಟಿದ್ದಾನೆಯೊ? +ಏನಾದರೂ ಮಾಡಿಬಿಟ್ಟರೆ? +ಏನು ಮಾಡಿಯಾನು ಮಹಾ? +ಚೀಂಕ್ರ ಜೊತೆಗಿರುವುದಿಲ್ಲವೆ? +ಹಾಗೇನಾದರೂ ಮಾಡಿದರೆ, ಕತ್ತಿಯಲ್ಲಿ ಕಡಿದೆ ಬಿಡುತ್ತಾನೆ ಸಾಬಿಯನ್ನು! +ಒಂದು ವೇಳೆ ಸ್ವಲ್ಪ ಮೈಮುಟ್ತಿ ಮುದ್ದಾಡಿದರೂ ಚಿಂತೆಯಿಲ್ಲ…. +ಇತರರರೂ ಕೆಲವರು ಹಾಗೆ ನನ್ನನ್ನು ಪ್ರೀತಿಗಾಗಿ ಮುದ್ದಾಡಿಲ್ಲವೆ? …. +ಏನಾದರೂ ಆಗಲಿ! +ನನ್ನ ಬದಕು ಹಸನಾಗಬೇಕಾದರೆ ಆ ಉಂಗುರ ಮತ್ತೆ ನನ್ನ ಕೈ ಸೇರಬೇಕು. +ಇಲ್ಲದಿದ್ದರೆ ಸಾಬಿ ಮಾಡಬಹುದಾದ ಕೇಡಿಗಿಂತಲೂ ಸಾಸಿರಮಡಿ ಕೇಡು ನನಗೆ ಕಟ್ಟಿಟ್ಟ ಬುತ್ತಿ…. +ರಾತ್ರಿ ಅವರೆಲ್ಲ ಮಾತು ಮುಗಿಸಿ ಮಲಗುವುದು ತುಸು ಹೊತ್ತೇ ಆಗಿತ್ತು. +ಇನ್ನೂ ಹೊತ್ತಾಗುತ್ತಿತ್ತೊ ಏನೊ? +ಆದರೆ ಕಿಟ್ಟಯ್ಯಸೆಟ್ಟರು ಪದೇ ಪದೇ ಆಕಳಿಸತೊಡಗಿದ್ದರು. +ಎಲಡಕೆ ಹಾಕಿದ್ದ ಕೆನ್ನಾಲಿಗೆಯನ್ನೂ ಹುಳುತಿಂದು ಅಸಹ್ಯವಾಗಿದ್ದ ದಂತಪಂಕ್ತಿಯನ್ನೂ ಪ್ರದರ್ಶಿಸುತ್ತ ಆಕಳಿಕೆಯಿಂದಲೆ ಉಕ್ಕಿದ್ದ ಕಣ್ಣನೀರನ್ನು ಮತ್ತೆ ಮತ್ತೆ ಪಂಚಿಯ ಸೆರಗಿನಿಂದ ಒರೆಸಿಕೊಳ್ಳುತ್ತಿದ್ದರು. +ರೋಮಮಯವಾಗಿದ್ದ ತಮ್ಮ ತೊಡೆ ಬುಡದವರೆಗೂ ಕಾಣುವುದನ್ನು ಒಂದಿನಿತೂ ಲೆಕ್ಕಿಸದೆ. +ಅದನ್ನು ಕಂಡು ಅನಂತಯ್ಯ ಹೇಳಿದ್ದರು. +“ಕಿಟ್ಟಯ್ಯಗೆ ಪೂರ್ತಿ ಸಾಕಾಗಿದೆ, ಹಾದಿ ನಡೆದು. +ಅದರಲ್ಲಿಯೂ ಕೊನೆಕೊನೆಗೆ ಸ್ವಲ್ಪ ಓಡಿಓಡಿಯೆ ದೌಡು ಬರಬೇಕಾಯ್ತು, ಕತ್ತಲಾಗೋಕೆ ಮೊದಲೇ ಮನೆ ಸೇರುವ ಅಂತಾ. +ಇವೊತ್ತು ಅಮಾಸೆ, ಕದ್ದಿಂಗಳು. +ಪೂರಾ ಕೆಟ್ಟಕಾಲವಂತೆ! +ರಾತ್ರಿ ಭೂತ ಪಿಶಾಚಿದೆಯ್ಯ ತಿರಗ್ತವೆ ಅಂತಾ ನಮ್ಮ ಕಿಟ್ಟಯ್ಯಗೆ ಪೂರಾ ಹೆದರಿಕೆ! …. +ನನಗೆ ಕಳ್ಳರ ಹೆದರಿಕೆ; +ಇವನಿಗೆ ದೆವ್ವದ ಭಯ…. +ಮೇಗರೊಳ್ಳಿಗೆ ಕಾಲಿಟ್ಟಮೇಲೆಯೇ ನಾವು ಮೆಲ್ಲಗೆ ಕಾಲು ಹಾಕಿದ್ದು….” +ಮನೆಯಲ್ಲಿ ನಿಶಬ್ದವಾಗಿತ್ತು; +ಕಗ್ಗತ್ತಲೆ ಕವಿದಿತ್ತು. +ಮಳೆಗಾಲದ ಅಮವಾಸ್ಯೆಯಾಗಿದ್ದರಿಂದ ಮನೆಯ ಹೊರಗೆ ಯಾವ ವಸ್ತುವನ್ನೂ ಗುರುತಿಸಲು ಅಸಾಧ್ಯವಾಗುವಂತೆ ಕಗ್ಗತ್ತಲೆ ಕವಿದಿರುವಾಗ ಇನ್ನು ಮನೆಯ ಒಳಗೆ ಕೇಳಬೇಕೆ? +ಮಲಗಿದ್ದವರು ಉಸಿರೆಳೆದುಕೊಳ್ಳುವ ಸದ್ದೂ ಆ ನಿಃಶಬ್ದ ಕತ್ತಲೆಯ ಬುಸುಗುಟ್ಟುವಿಕೆಯೆಂಬಂತೆ ಭಯಾನಕವಾಗಿತ್ತು. +ಕಗ್ಗತ್ತಲೆಯನ್ನೆ ನೋಡುತ್ತಾ ನಿಃಶಬ್ದತೆಯನ್ನೆ ಆಲಿಸುತ್ತಾ ಕಾವೇರಿ ನಿಶ್ಚಲವಾಗಿ ಮಲಗಿದ್ದಳು, ಹಿತ್ತಲುಕಡೆಯ ದನದ ಕೊಟ್ಟಿಗೆಯ ದಿಕ್ಕಿಗೆ ಕಿವಿಯಾಗಿ. +ಒಮ್ಮೊಮ್ಮೆ ದನವೂ ಎಮ್ಮೆಯೋ ಸೀನಿದರೆ, ಅಥವಾ ಕೊಳಗಿನ ಸದ್ದು ಮಾಡಿದರೆ ಕಾವೇರಿಗೆ ಮೈಯೆಲ್ಲ ಬಿಸಿಯಾದಂತಾಗಿ, ಹೊದೆದಿದ್ದ ಶಾಲನ್ನು ಸರಿಸುತ್ತಿದ್ದಳು, ಮೈ ತಣ್ಣಗಾಗಲಿಕ್ಕೆ. +ನಿದ್ದೆ ಮಾಡದಿದ್ದರೆ ಅಥವಾ ನಿದ್ದೆ ಬರದಿದ್ದರೆ ಇರಳು ಅದೆಷ್ಟು ದೀರ್ಘವೋ? +ಕಾಯುವ ನಿಮಿಷನಿಮಿಷವೂ ಕಾವೇರಿಗೆ ಯುಗದೀರ್ಘವಾಗಿತ್ತು! +ಬರಬರುತ್ತಾ ಮನಸ್ಸಿನ ನೆಲದಲ್ಲಿ ನಡೆದಾಡುತ್ತಿದ್ದ ಅಲೋಚನೆಗಳು ಕನಸಿನ ನೀರಿನಲ್ಲಿ ತೇಲತೊಡಗಿದವು. +ಭವಗಳಿಗಿದ್ದ ಸ್ಥೂಲತೆ ತೊಲಗಿ, ಗರಿ ಹಗುರವಾಗಿ ಕ್ರಮ ತೃಪ್ತಿ ಹಾರಾಡತೊಡಗಿದುವು, ಗುರುಲಘು ಭೇದವಿಲ್ಲದೆ ಅಸ್ತವ್ಯಸ್ತವಾಗಿ ಅಡ್ಡಾಡುವಂತೆ +.ಒಡ್ದಿಯಲ್ಲಿ ಕೋಳಿಯ ಹೇಟೆಯನ್ನು ಹಿಡಿದೆತ್ತಿಕೊಂಡು, ಆ ದಿನವೆ ಇಕ್ಕಲು ಮೊಟ್ಟೆ ಇದೆಯೋ ಇಲ್ಲವೋ ಎಂದು ಕಿರುಬೆರಳು ಹೆಟ್ಟಿ ನೋಡುತ್ತಿದ್ದಾಳೆ…. +ಕೊರಗ ಹೇಳುತ್ತಿದ್ದಾನೆ “ಸುಳ್ಳು ಹೇಳೋ, ಸುಕ್ರ, ಅಂದರೆ “ವಾಟೆ ಕೊಳವೀಲಿ ಒಂಬತ್ತು ಆನೆ ಹೋಗಿ, ಮರಿ ಆನೆ ಬಾಲ ಸಿಕ್ಕೊಂಡ್ತು” ಅಂದನಂತೆ!” ಹಿ ಹ್ಹಿ ಹ್ಹಿ ಎಂದು ಫಕ್ಕನೆ ಕಣ್ಣು ಬಿಟ್ಟಳು ಕಾವೇರಿ. +‘ಅಯ್ಯೋ!ನಿದ್ದೆಮಾಡಿಬಿಟ್ಟಿದ್ದೆನಲ್ಲಾ?’ ಎಂದುಕೊಂಡು ಪಕ್ಕದಲ್ಲಿ ಅದೇ ಉದ್ದೇಶದಿಂದ ಇಟ್ಟುಕೊಂಡಿದ್ದ ತಾಮ್ರದ ಚೆಂಬಿನಿಂದ ನೀರು ತೆಗೆದು ಕಣ್ಣುಗಳನ್ನು ಒದ್ದೆ ಮಾಡಿಕೊಂಡಳು ಮತ್ತೆ ಆಲೋಚನೆ. +ಮೊದಮೊದಲು ಸಕ್ರಮ, ತರುವಾಯ ಅಕ್ರಮ. +ನಾಳೆ ಅಲ್ಲ, ನಾಡಿದ್ದಲ್ಲ, ಆಚೆ ನಾಡಿದ್ದು ಗೌರಿಹಬ್ಬಕ್ಕೆ ಮುಂಚೆ ದೇವಯ್ಯಗೌಡರು ಬಂದಾಗ ನನ್ನ ಕೈಲಿ ಉಂಗುರ ಕಂಡು ಬೆರಗಾಗ್ಬೇಕು!… +ಬರದೆ ಇರ್ತಾರೆಯೆ? +ಹೋದ ವರುಷವು ಗೌರಿ ಹಬ್ಬಕ್ಕೆ ಎರಡು ದಿನ ಇದೆ ಅನ್ನುವಾಗ ಬಂದು, ಈಗ ನಾನು ಹೊದ್ದುಕೊಂಡು ಇರೋ ಶಾಲನ್ನೆ ಕೊಟ್ಟು…. +ಏನೆಲ್ಲ ಮಾಡಿ ಹೋಗಿದ್ದರಲ್ಲಾ? +(ಕಾವೇರಿ ಅದನ್ನು ನೆನೆದು ಪ್ರತ್ಯಕ್ಷವೆಂಬಂತೆ ಚಿತ್ರಿಸಿಕೊಂಡು ಸೊಗಸಿದಳು)…. +ದೇವಯ್ಯಗೌಡರು ಕಿಲಸ್ತರ ಜಾತಿಗೆ ಸೇರಿದರೆ ನಾನೂ ಸೇರುತ್ತೇನೆ. +ಆ ಜಾತಿಯಲ್ಲಿ ಉಂಗುರ ತೊಡಿಸಿದ ಮೇಲೆ ಮದುವೆಯಾದಂತೆಯೆ ಲೆಕ್ಕವಂತೆ! +ಪಾದ್ರಿ ಹೇಳಿದ್ದರಲ್ಲವೆ? …. + ಪಾಪ, ಚೀಂಕ್ರನ ಮೇಲೆ ಏನೆಲ್ಲ ಹೇಳುತ್ತಿದ್ದರು? +ಎಷ್ಟು ಒಳ್ಳೆಯವನು ಅಂವ? +ಅವನ ಹೆಂಡತಿಯನ್ನು ಕುತ್ತಿಗೆ ಹಿಸುಕಿ ಕೊಂದ ಎಂದು ಸುದ್ದಿ ಹುಟ್ಟಿಸಿದ್ದರಲ್ಲಾ? …. +ಮೊನ್ನೆ ಅವನ ಕೈಬೆರಳನ್ನೆ ಕಡಿದಿದ್ದಳಲ್ಲಾ ಯಾವಳೋ ಹಿಡಿಂಬಿ? +ಬೆರಳಿಗೆ ಬಟ್ಟೆ ಸುತ್ತಿಕೊಂಡು, ಅಳುತ್ತಾ ನನ್ನ ಹತ್ತಿರ ದುಃಖ ತೋಡಿಕೊಂಡನಲ್ಲಾ? +ಪಾಪ, ಅವನ ಮಕ್ಕಳ ಗೋಳು ಬೇಡವಂತೆ! …. +ನನ್ನ ಹತ್ತಿರ ದೇವಯ್ಯ ಗೌಡರು ಕೊಟ್ಟ ದುಡ್ಡು ಇದೆಯಲ್ಲಾ ಅದನ್ನೆಲ್ಲ ಚೀಂಕ್ರನಿಗೆ ಕೊಟ್ಟುಬಿಡುತ್ತೇನೆ, ಅವನ ಅವನ ಉಪಕಾರಕ್ಕಾಗಿ…. +ಏ ಈ ನಾಯಿಗೆ ಏನು ಕಲಿಯೆ? +ಹೇಂಟೆ ಮೇಲೆ ಹತ್ತಕ್ಕೆ ಹೊಗ್ತದಲ್ಲಾ! …. +ಯೇಸುಸ್ವಾಮಿ ಒಂದೇ ಮೀನನ್ನು ಐದು ಸಾವಿರ ಜನಕ್ಕೆ ಹೊಟ್ಟೆ ತುಂಬ ಹಂಚಿಕೊಟ್ಟನಂತಲ್ಲಾ! …. +ತ್ಚೂ!ಬ್ಯಾಡ ಸುಮ್ಮನಿರಿ! +ಅಲ್ಲಿಗೆಲ್ಲ ಕೈ ಹಾಕಬ್ಯಾಡಿ! …. +ಅಲ್ಲಿಗೆ ಮುತ್ತುಕೊಡಾದು ಬ್ಯಾಡ; +ನೀವು ಕಚ್ಚಿಬಿಡ್ತೀರಿ! …. +ಕೋಣೆಯ ಮೂಲೆಯಲ್ಲಿ ಕೊಬ್ಬರಿ ಸುಟ್ಟು ಕಟ್ಟಿ ಇಟ್ಟಿದ್ದ ಇಲಿಕತ್ತರಿ ಸಿಡಿದ ಸದ್ದಾಗಿ ಕಾವೇರಿ ಕುಮುಟಿ ಎಚ್ಚೆತ್ತಳು. +ಸಿಕ್ಕಿಕೊಂಡಿದ್ದ ಇಲಿ ಚ್ಞಿ ಚ್ಞಿ ಚ್ಞಿ ಎಂದು ಕೂಗಿತು. +ಅಭ್ಯಾಸ ಬಲದಿಂದ ಛೇ ಪಾಪ!ಎಂದುಕೊಂಡಳು ಕಾವೇರಿ. +ಆದರೆ ಅಷ್ಟರಲ್ಲೆ ಅದರ ಸದ್ದು ನಿಂತಿತ್ತು. +ಅದು ಸತ್ತುಹೋಯಿತೆಂದು ಸುಮ್ಮನಾದಳು…. +ಯಾಕೆ ಇನ್ನೂ ಚೀಂಕ್ರ ಬರಲಿಲ್ಲ? +ಮಳೆ ಬಂದಿತೆಂದು ಸುಮ್ಮನಾಗಿ ಬಿಡುತ್ತಾನೊ? +ಆಗ ಮಳೆ ಬಂದಿದ್ದರೇನಾಯ್ತು? +ಈಗ ನಿಂತಿದೆಯಲ್ಲ! …. +ಮೆಲ್ಲಗೆ ಎದ್ದು ಹೋಗಿ ಹಿತ್ತಲು ಕಡೆಯ ಬಾಗಿಲು ತೆರೆದು ನೋಡಲೇ?… +ಕಾವೇರಿಗೆ ಅನಂತಯ್ಯ ಹೇಳಿದ್ದು ನೆನಪಾಯಿತು. +ಇವೊತ್ತು ಅಮವಾಸ್ಯೆ, ಕೆಟ್ಟಕಾಲ. +ಭೂತ ಪಿಶಾಚಿ ತಿರುಗುತ್ತವೆ? +ಒಬ್ಬಳೆ ಎದ್ದು ಹೋಗಿ ಬಾಗಿಲು ತೆರೆದಾಗ ಭೂತಗೀತ ಕಾಣಿಸಿಕೊಂಡರೆ? …. +ಈಗ ಬೇಡ, ಚೀಂಕ್ರ ಬಂದಮೇಲೆ ಹೋಗ್ತೀನಿ. +ಆಗ ಧೈರ್ಯಕ್ಕೆ ಅಂವ ಇರ್ತಾನೆ! …. +ದನದ ಕೋಡು ಕಂಬಕ್ಕೆ, ಅದು ಕುತ್ತಿಗೆ ತೀಡುವಾಗ ತಗುಲಿ, ಹೊಡೆದಂತೆ ಸದ್ದು ಕೇಳಿಸಿತು! +ಕಾವೇರಿ ಸರಕ್ಕನೆ ಹಾಸಗೆಯಲ್ಲಿ ಎದ್ದು ಕುಳಿತಳು. +ಆಲಿಸಿದಳು ಹೌದು, ಚೀಂಕ್ರನೆ ಇರಬೇಕು. +ಎದೆ ಢವಢವನೆ ಹೊಡೆದುಕೊಂಡಿತು. +ಉಸಿರಾಟ ಹೆಚ್ಚಿತು…. +ನಿಜವಾಗಿಯೂ ಬಂದೇ ಬಿಟ್ಟನೆ? +ನಿಜವಾಗಿಯೂ ನಾನು ಅವನ ಸಂಗಡ ಒಬ್ಬಳೆ ಈ ರಾತ್ರಿ ಕಗ್ಗತ್ತಲೆಯಲ್ಲಿ ಹೋಗಿ ಸಾಬಿಯ ಕೈಲಿ ಉಂಗುರ ಹಾಕಿಸಿಕೊಂಡು ಬರಬೇಕೆ? …. +ಇದುವರೆಗೂ ಭಾವಮಾತ್ರವಾಗಿದ್ದು ಕಲ್ಪನಾ ಸ್ವಾರಸ್ಯದ ಸಾಹಸದಂತೆ ಆಕರ್ಷಣೀಯವಾಗಿದ್ದುದು ಈಗ ವಾಸ್ತವವಾಗಿ ನಡೆಯಲಿರುವ ಲೋಕಚರಿತವಾಗಿ ಇದಿರುನಿಂತಾಗ ತರಳೆ ಕಾವೇರಿಗೆ ಹೆದರಿಕೆಯಾಗತೊಡಗಿತು. +ಪಕ್ಕದ ಕೋಣೆಯಲ್ಲಿ ಮಲಗಿದ್ದ ತಾಯಿಯನ್ನು ಎಬ್ಬಿಸಿದರೆ? +ಏನು ಮಾಡುತ್ತಿದ್ದರೂ ತಾಯಿಯನ್ನೆ ಕೇಳಿ, ಕಾರ್ಯಾಚರಣೆ ಕೈಕೊಳ್ಳುವ ಸಮಯ ಬಂದಾಗ ದಿಕ್ಕು ತೋರದಂತಾಗಿ ಹಾಸಗೆಯ ಮೇಲೆ ಕುಳಿತೆ ಇದ್ದಳು, ಕಾಲು ಏಕೊ ಸೋತುಬಂದಂತಾಗಿತ್ತು…. +ಆದರೆ?ತುಸು ನಿಂತಿದ್ದ ಆ ಕೋಡುಬಡಿಯುವ ಸದ್ದು ಮತ್ತೆ ಕೇಳಿಸಿತು…. +ಉಂಗುರ… ದೇವಯ್ಯಗೌಡರು… ಕಿಟ್ಟಯ್ಯಸೆಟ್ಟಿ… ಮದುವೆ… ಹೂವಳ್ಳಿ ಚಿನ್ನಕ್ಕ…. +ತಲೆಯೊಳಗೆ ಏನೇನೋ ಸುತ್ತತೊಡಗಿತು…. +ಈಗ ಹಿಂಜರಿದರೆ ನಾನು ಕೆಟ್ಟೆ. +ನನ್ನ ಬಾಳೆಲ್ಲ ಹಾಳಾಗುತ್ತದೆ! …. +ಕಾವೇರಿ ದಿಟ್ಟಮನಸ್ಸಿನಿಂದ ಆವೇಶ ಬಂದವರಂತೆ ಹಾಸಗೆಯ ಮೇಲೆ ಎದ್ದುನಿಂತು, ಶಾಲನ್ನೆತ್ತಿ ಸುತ್ತಿ ಹೊದೆದುಕೊಂಡಳೂ. +ಅವಳು ಮಲಗುವಾಗ ದಿನನಿತ್ಯದ ರೂಢಿಯಂತೆ ಗಟ್ಟದ ತಗ್ಗಿನವರ ಉಡುಗೆಯಲ್ಲಿರಲಿಲ್ಲ; +ಗಟ್ಟದ ಮೇಲಿನವರಂತೆ ಸೊಂಟಕ್ಕೆ ಸೀರೆ ಬಿಗಿದು ಸುತ್ತಿ, ಗೊಬ್ಬೆ ಸೆರಗು ಕಟ್ಟಿ, ಭದ್ರವಾಗಿ ಉಡುಗೆ ಉಟ್ಟಿದ್ದಳು. +ಗಟ್ಟದ ತಗ್ಗಿನ ಉಡುಗೆ ತುಂಬ ಸಡಿಲ ಉಡುಗೆ ಎಂಬುದು ಅವಳ ನಂಬುಗೆ. +ಯಾರಾದರೂ ತುಸು ಜಗ್ಗಿಸಿ ಎಳೆದರೂ ಬಿಚ್ಚಿಯೆ ಹೋಗುವ ಸಂಭವ ಹೆಚ್ಚು. +ಗಟ್ಟದ ಮೇಲಿನದಾದರೋ, ದಂಡುಕಡಿಯಲು ಹೋಗುವವರ ಸಮವಸ್ತ್ರದಂತೆ, ಬಿಗಿಯಾಗಿ ಭದ್ರವಾಗಿದ್ದು, ಎಂತಹ ಹೋರಾಟದಲ್ಲಿಯೂ ಸಡಿಲವಾಗುವ ಸಂಭವ ಬಹಳ ಕಡಿಮೆ. + ಬಿಚ್ಚಿಹೋಗುವುದಂತೂ ಸಾಧ್ಯವೆ ಇಲ್ಲ! …. + ಕಾವೇರಿ ಸದ್ದುಮಾಡದೆ ತುದಿಗಾಲಿನಲ್ಲಿ ಮೆಲ್ಲನೆ ತಡವಿ ನಡೆದು, ತಾಳವನ್ನು ಅದಷ್ಟು ಎಚ್ಚರಿಕೆಯಿಂದ ಹಿಂದಕ್ಕೆ ಸರಿಸಿ, ಬಾಗಿಲನ್ನು ಕೀಲು ಸದ್ದಾಗದಂತೆ ತೆರೆದಳು. +ಮಳೆಗಾಲದ ಚಳಿಗಾಳಿ ಸುಯ್ಯನೆ ಬೀಸಿತು. +ಮತ್ತೆ ಬೇಗನೆ ಬಾಗಿಲು ಹಾಕಿಕೊಂಡು ಹೊರಗಣ ಚಿಲಕವಿಕ್ಕಿದಳು, ಬೀಸುವ ಚಳಿಗಾಳಿಯಿಂದ ಒಳಗೆ ಮಲಗಿರುವವರಿಗೆ ಎಚ್ಚರವಾಗದಿರಲಿಕ್ಕೆ…. +ಮುತ್ತಿ ದಟ್ಟಯಿಸಿದ್ದ ಕತ್ತಲೆಯಲ್ಲಿ ವಸ್ತುಪ್ರತ್ಯೇಕತೆ ಕಾಣಿಸುತ್ತಿರಲಿಲ್ಲ. +ಆದರೆ ಬಳಿಸಾರಿ ಪಿಸುದನಿಯಲ್ಲಿ ಮಾತನಾಡಿದ ಚೀಂಕ್ರನ ಗುರುತು ಹಿಡಿದು ಅವನ ಹಿಂದೆ ಹೊರಟಳು. +ಸುಪರಿಚಿತ ಪ್ರದೇಶದಲ್ಲಿ ಮರ ಗಿಡ ಹುಳುವಿನ ನಡುವೆ, ಕಣ್ಣಿಗೇನೂ ಹಿಂದೆ ಬೇಗಬೇಗನೆ ನಡೆದು, ಅಡ್ಡಬಂದ ಆಗುಂಬೆ ತೀರ್ಥಹಳ್ಳೀ ಹೆದ್ದಾರಿಯನ್ನು ದಾಟಿ, ಮಿಷನ್ ಇಸ್ಕೂಲಿನ ಬಾವಿಯ ಹತ್ತಿರದಿಂದಾಗಿ ಅದರ ಕಟ್ಟಡದ ಮುಂಭಾಗದ ಬಾಗಿಲನ್ನು ಚೌಕಟ್ಟಿಗೆ ಕೈ ಆನಿಸಿ ಹೊಸ್ತಿಲ ಮೇಲೆ ನಿಂತು, ಒಳಗೆ ನೋಡಿದಳು. +ಕಗ್ಗತ್ತಲೇ!ಯಾರೂ ಏನೂ ಕಾಣಿಸುವಂತಿರಲಿಲ್ಲ. +ಆದರೆ ಬೀಡಿಯ ವಾಸನೆ ಮತ್ತು ಹೊಗೆ ತುಂಬಿತ್ತು. +ನೋಡುತ್ತಿದ್ದಂತೆ, ಸೇದುತ್ತಿದ್ದ ಬೀಡಿಯ ತುದಿಯ ಬೆಂಕಿಯ ಹುಂಡುಗಳು ಕೆಂಪಗೆ ಮಿರುಗಿದವು. +ಒಂದಲ್ಲ, ಎರಡಲ್ಲ, ಮೂರು! +ಕಾವೇರಿಗೆ ಕೈ ಕಾಲು ನಡುಗಿದಂತಾಗಿ ತುಂಬ ಹೆದರಿಕೆಯಾಯಿತು. +ಕುಸಿದು ಬೀಳುತ್ತೇನೆಯೊ ಎಂಬಷ್ಟು ಭೀತಿ! +ಅಷ್ಟರಲ್ಲಿ ಯಾರೊ ತನ್ನನ್ನು ಎಳೆದುಕೊಂಡರು. +‘ಉಂಗುರ ಬೇಡವೆ? ಬಾ. + ಯಾಕೆ ಹೆದರಿಕೆ?’ ಎಂದು ಹೇಳಿದಷ್ಟು ಮಾತ್ರ ಕೇಳಿಸಿತ್ತು. +ಮುಂದೆ ಅವಳ ಕಿವಿಗೆ ಕೇಳಿಸುವ ಸಾಮರ್ಥ್ಯವೆ ಉಡುಗಿಹೋಗಿತ್ತು. +ಮನಸ್ಸೂ ಮಂಜುಗಟ್ಟಿತ್ತು. +ಚೀಂಕ್ರನನ್ನು ಕೂಗಿಕೊಂಡಳು. +ಆದರೆ ಬಾಗಿಲು ಹಾಕಿತು. +ಯಾವುದೋ ಬಲಿಷ್ಠ ಬಾಹು ತನ್ನನ್ನು ತೊಡೆಯ ನಡುವೆ ಅಪ್ಪಿ ಹಿಡಿದು, ಬೆರಳಿಗೆ ಉಂಗುರ ತೊಡಿಸುತ್ತಿದ್ದಂತೆಯೆ ಅವಳಿಗೆ ಪ್ರಜ್ಞೆ ತಪ್ಪಿತ್ತು. + ಹಿಂದೆ ದೇವಯ್ಯ ತೊಡಿಸಿದ್ದಾಗ ಅದು ಸಡಿಲವಾಗಿದ್ದು ನುಣುಚಿ ಬಿದ್ದುಹೋಗಿತ್ತು; + ಈವೊತ್ತು ಅದು ಭದ್ರವಾಗಿ ಬೆರಳನ್ನಪ್ಪಿ ಕೂತುಬಿಟ್ಟಿತು; + ಜನರು ಆಡಿಕೊಳ್ಳುತ್ತಿದ್ದುದ್ದು ಸುಳ್ಳಲ್ಲ. + ಹುಡುಗಿ ಈಚಿಚೇಗೆ ಎಷ್ಟು ಹುಲುಸಾಗಿ ಬಾಳೆದಿಂಡಿನಂತೆ ಬೆಳೆದು ನಿಂತಿದ್ದಾಳೆ! ”…. + ಬೆಳಗಿನ ಜಾವದ ಚಳಿಗಾಳಿ ಬೀಸಿ ಕಾವೇರಿಗೆ ಮೆಲ್ಲಗೆ ಪ್ರಜ್ಞೆ ಮರಳತೊಡಗಿತು. +ಆದರೆ ಇನ್ನೂ ಎಚ್ಚರಾಗಿರಲಿಲ್ಲ. +ಮೆಲ್ಲನೆ ನರಳಿದಳು. +ಹೊರಳಲು ಯತ್ನಿಸಿದಾಗ ತುಂಬ ನೋವಾಗಿ ಎಚ್ಚರವೂ ಆಯಿತು. +“ಅಬ್ಬೇ!ಅಬ್ಬೇ!” ಕರೆದಳು. +ಆದರೆ ದನಿ ಶಬ್ದರೂಪಕ್ಕೆ ತಿರುಗಲು ಸಮರ್ಥವಾಗಿರಲಿಲ್ಲ. +ತಾನು ಮನೆಯಲ್ಲಿಯೆ ಮಲಗಿದ್ದೇನೆ ಎಂದೇ ಭಾವಿಸಿ, ಕಣ್ಣು ತೆರೆದು ಸಪ್ರಜ್ಞವಾಗಿ ಈಕ್ಷಿಸಿದಳು. +ಬಾಗಿಲು ಪೂರ್ಣವಾಗಿ ತೆರೆದು ಬಿದ್ದಿದ್ದುದರಿಂದ ಬೆಳಗಿನ ಜಾವದ ಪೂರ್ವದ ಬೆಳಕಿನ ಛಾಯೆ ಒಂದಿನಿತು ನುಗ್ಗಿತ್ತು. +ತಾನು ಮನೆಯಲ್ಲಿ ಮಲಗಲಿಲ್ಲ ಎಂಬ ಅರಿವು ಮರಳಿತು. +ಒಡನೆಯೆ ನಡೆದ ಸತ್ಯಸಂಗತಿ ಸಿಡಿಲಿನಂತೆ ಮನದ ಮೇಲೆರಗಿತು. +ಚೀಂಕ್ರನೊಡನೆ ಬಂದದ್ದು…. +ಉಂಗುರದ ನೆವದಿಂದ ತನ್ನನ್ನು ಸೆಳೆದು ಅಮಾನುಷವಾಗಿ ಪಶುಕ್ರೂರವಾಗಿ……ಮತ್ತೆ ಸ್ವಲ್ಪಹೊತ್ತು ಸೋತಂತೆ ಬಿದ್ದಿದ್ದಳು, ಕನ್ಯೆ! …. +ಮತ್ತೆ ಎಚ್ಚತ್ತು ಕಷ್ಟಪಟ್ಟು ಎದ್ದು ಕುಳಿತಾಗ ಇಸ್ಕೂಲಿನೊಳಕ್ಕೆ ಇನ್ನಷ್ಟು ಬೆಳಕು ನುಗ್ಗಿತ್ತು…ಇಸ್ಕೂಲು…. +ಅದೇ ಬೆಂಚಿನ ಮೇಲೆ ಕೂತಿದ್ದರಲ್ಲವೆ ಬೀಡಿ ಸೇದುತ್ತಿದ್ದವರು…. +ನೋಡುತ್ತಾಳೆ, ಕೊರಗ ಹುಡುಗನು ತಮ್ಮ ದನ ಎಮ್ಮೆಗಳಿಗಾಗಿ ಹುಲ್ಲು ದಾಸ್ತಾನು ಮಾಡಿದ್ದ ಸ್ಥಳದಲ್ಲಿಯೆ ತನ್ನನ್ನು ಕೆಡವಿ ಅತ್ಯಾಚಾರ ನಡೆಸಿದ್ದಾರೆ! +ಆ ಹುಲ್ಲನ್ನೆ ಹಾಸುಗೆಯಾಗಿ ಹಾಸಿಬಿಟ್ಟಿದ್ದಾರೆ. +ಸೀರೆ ಹರಿದು ಹೋಗಿದೆ. +ರಕ್ತದ ಕಲೆ ಹುಲ್ಲಿನ ಮೇಲೆ, ಬಟ್ಟೆಯ ಮೇಲೆ-ತೊಡೆಯಲ್ಲಾ ನೆತ್ತರು. +ತುಟಿ ಹರಿದು ಊದಿವೆ. +ಕೆನ್ನೆ ಗಾಯಗೊಂಡು ರಕ್ತಮಯ, ಸೆರಗೆಲ್ಲಾ ಚೂರು. +ಅಯ್ಯೋ ಎದೆಗಳೂ….! ಅಯ್ಯೋ…. ಅಯ್ಯೋ…. ಅಯ್ಯೋ!…. +ಕಾವೇರಿಗೆ ತನ್ನ ಶರೀರ ತನ್ನ ಜೀವಕ್ಕೆ ಮೆತ್ತಿಕೊಂಡಿರುವ ಅಮೇಧ್ಯದಷ್ಟು ಅಸಹ್ಯಕರವಾಯಿತು. +ಆ ಎಂಚಲನ್ನು ಹ್ಯಾಕ್ ಥೂ ಉಗುಳಿಬೆಡಬೇಕೆಂದು ಮನಸ್ಸು ಉರಿಯತೊಡಗಿತು. +ಪಕ್ಕದಲ್ಲಿ ಬಿದ್ದಿದ್ದ ಶಾಲನ್ನು ಎತ್ತಿಕೊಂಡಳು. +ಬಾಗಿಲಿಂದ ಹೊರಬಿದ್ದಳು; +ಗಾಯ, ನೋವು, ಅವಮಾನ, ಆಯಾಸ ಒಂದೂ ಅವಳಿಗೆ ತಡೆಯಾಗಲಿಲ್ಲ…. +ಮನೆಯ ಕೋಳಿಹುಂಜದ ಕಡೆಯ ಜಾವದ ಕೂಗು ಕೇಳುತ್ತಿತ್ತು…. +ಇನ್ನು ಅವಳು ಯಾರಿಗೂ ಸಿಕ್ಕುವುದಿಲ್ಲ. +ದೇವಯ್ಯಗೌಡರಿಗೂ ದೂರ; +ಕಿಟ್ಟಯ್ಯನಿಗೂ ದೂರ…. +ಸ್ಕೂಲಿನ ಬಾವಿಯ ಬಳಿಗೆ ಬಂದಳು… +ಅನಂತಯ್ಯ ಹಸುರು ಕೋಲು ಹಿಡಿದು ತೋಡಿಸಿದ್ದ ಬಾವಿ! +ಎಷ್ಟೋ ಸಾರಿ ಸಿಟ್ಟು ಬಂದಾಗ ತಾಯಿಗೆ ಹೆದರಿಸಿದ್ದಳು, “ನಾನು ಇಸ್ಕೂಲು ಬಾವಿಗೆ ಹಾರಿ ಬಿಡ್ತಿನೆ” ಎಂದು…. +ಶಾಲನ್ನು ಬಾವಿಯ ಬಳಿ ಬಿಚ್ಚಿ ಬಿಸುಟು…. +ತನ್ನ ಮೈಯನ್ನು ಕೆಡಿಸಿದ್ದ ಕಡುಪಾಪಿಗಳಲ್ಲಿ ಚೀಂಕ್ರನೂ ಸೇರಿದ್ದನೆಂಬುದು ಕಾವೇರಿಗೆ ಗೊತ್ತಾಗದಿದ್ದುದು ಒಂದು ಭಗವತ್ ಕೃಪೆಯೆ ಆಗಿತ್ತು. +ಆದೇನಾದರೂ ಗೊತ್ತಾಗಿದ್ದರೆ ಭಗವಂತನೆ ಸತ್ತು ಹೋಗುತ್ತಿದ್ದನು! +ಆತ್ಮಹತ್ಯೆಗೂ ಪ್ರಯೋಜನವಿರುತ್ತಿರಲಿಲ್ಲ. +ಸಕಲ ಮೌಲ್ಯ ವಿನಾಶವಾದಮೇಲೆ ಸತ್ತಾದರೂ ಸೇರಿಕೊಳ್ಳಲು ಯಾವ ಪುರುಷಾರ್ಥರೂಪದ ಯಾವ ದೇವರು ತಾನೆ ಇರುತ್ತಿತ್ತು? +ಅಂತಕ್ಕನ ಮನೆ ನಿರುದ್ವಿಗ್ನವಾಗಿ ನಿಃಶಬ್ದವಾಗಿತ್ತು. +ಬೆಳಕು ಬಿಡುತ್ತಿದ್ದ ಹಾಗೆ ಒಡ್ಡಿಯ ಕೋಳಿಗಳು ಹೊರಗೆ ಬರಲು ಒಂದರ ಮೇಲೊಂದು ಒಡ್ದಿಯ ಬಾಗಿಲ ಬಳಿಗೆ ನುಗ್ಗಿ ಸದ್ದುಗೈಯತೊಅಡಗಿದ್ದವು. +ಮುರುವನ್ನು ನಿರೀಕ್ಷಿಸಿ, ಹಸಿದ ದನವೊಂದು, ಕೊಟ್ಟಿಗೆಯಲ್ಲಿ ಅಂಬಾ ಎನ್ನುತ್ತಿತ್ತು. +ಕೊರಗ ಹುಡುಗ ಎತ್ತು ಹಿತ್ತಲುಕಡೆಯ ಬಾಗಿಲನ್ನು ತೆರೆಯಲು ತಾಳಕ್ಕೆ ಕೈಹಾಕಿ ಹಿಂದಕ್ಕೆಳೆದನು. +ತಾಳ ಸರಿಯಲ್ಲಿಲ್ಲ. +ನೋಡುತ್ತಾನೆ ತಾಳ ಸರಿದೇ ಇತ್ತು. +“ಅಯ್ಯೋ ದೇವರೆ, ರಾತ್ರಿ ತಾಳ ಹಾಕಿಯೆ ಇರಲಿಲ್ಲ?”ಎಂದುಕೊಂಡು ಬಾಗಿಲನ್ನು ಎಳೆದನು. +ಬಾಗಿಲು ತೆರೆಯಲಿಲ್ಲ; +ಹೊರಗಡೆಯಿಂದ ಚಿಲಕ ಹಾಕಿಬಿಟ್ಟಿದ್ದಾರಲ್ಲ?” ಎಂದುಕೊಂಡು ಮುಂಚೆಕಡೆಯ ಬಾಗಿಲಿಂದ ಹೊರಗೆ ಹೋಗಿ, ಹಿತ್ತಲುಕಡೆಯ ಬಾಗಿಲ ಚಿಲಕ ತೆಗೆದು, ತನ್ನ ದಿನನಿತ್ಯದ ಕೆಲಸಗಳಿ ಶುರು ಮಾಡಿದನು. +ಅಂತಕ್ಕ ಎದ್ದವಳು ಪದ್ಧತಿಯಂತೆ “ಕಾವೇರೀ” ಎಂದು ಕರೆದು ತನ್ನ ಕೆಲಸಕ್ಕೆ ಹೋದಳು. +ಸ್ವಲ್ಪ ಹೊತ್ತಾದ ಮೇಲೆ ತಾಯಿ ಅಡುಗೆಮನೆಯಿಂದಲೆ ಮಗಳನ್ನು ಮತ್ತೆ ಕೂಗಿ ಕರೆದಳು. + ‘ಕಾವೇರಿ!ಕಾವೇರೀ!’ಉತ್ತರ ಬರದಿರಲು ‘ಗಂಡನಾಗುವವನು ಬಂದಿದ್ದರೂ ಸ್ವಲ್ಪವೂ ಉತ್ಸಾಹ ತೋರಿಸದೆ ಉದಾಸೀನವಾಗಿ ಮಲಗಿಬ್ಬಿಟ್ಟಿದ್ದಾಳಲ್ಲಾ! +ಏನು ಹಟದ ಹುಡುಗಿಯೋ ಇವಳು?’ ತನ್ನಲ್ಲಿಯೆ ತಾನೆಂದುಕೊಂಡು ಅಂತಕ್ಕ ಮಗಳು ಮಲಗಿದ್ದ ಕೋಣೆಗೆ ಹೋದಳು. +ಬರಿದಾಗಿದ್ದ ಹಾಸಗೆಯನ್ನು ಕಂಡು ಮುಖ ತೊಳೆಯುವದಕ್ಕೋ ಬಯಲು ಕಡೆಗೋ ಹೋಗಿರಬೇಕೆಂದು ಭಾವಿಸಿ ಮತ್ತೆ ಅಡುಗೆ ಮನೆಗೆ ಹೋದಳು, ನೆಂಟರಿಗೆ ಬೆಳಗಿನ ಉಪಹಾರ ತಯಾರಿಸಲು. +ಕೊರಗ ಎಮ್ಮೆ ದನಗಳಿಗೆ ಮುರು ಇಡಲು ಸರಿಮಾಡಿ, ಹುಲ್ಲು ತರಲೆಂದು ಇಸ್ಕೂಲಿಗೆ ಓಡಿದನು. +ಸ್ಕೂಲು ಕಟ್ಟಡದೊಳಗೆ ಎಮ್ಮೆ ದನ ಬಿಡಬೇಡ ಹುಲ್ಲು ಕೂಡಿಡಬೇಡ ಎಂದು ಪಾದ್ರಿ ಮೇಗರವಳ್ಳಿಗೆ ಬಂದಾಗಲೆಲ್ಲ ಹೇಳಿದ್ದರೂ ಕೊರಗ ಅತಿಕ್ರಮಿಸಿ ಹಾಗೆ ಮಾಡುತ್ತಲೆ ಬಂದಿದ್ದನು. +ಜೀವರತ್ನಯ್ಯ ಬಾಗಿಲಿಗೆ ಬೀಗ ತಂದು ಹಾಕುವವರೆಗೂ ಇಸ್ಕೂಲನ್ನು ಹುಲ್ಲು ಕೊಡುವ ಜಾಗವನ್ನಾಗಿ ಬಳಸಲು ನಿಶ್ಚಯಿಸಿ ಬಿಟ್ಟಿದ್ದನು ಅವನು. +ಬಾವಿಯ ಬಳಿಗೆ ಬಂದಾಗ ಗುಲಾಬಿ ಬಣ್ಣದ ಶಾಲು ಬಿದ್ದಿದ್ದುದು ಕಾಣಿಸಿತು. +ಕಾವೇರಿಯ ಹತ್ತಿರ ಅಂತಹ ಬಣ್ಣದ ಶಾಲು ಇದ್ದುದನ್ನು ಕಂಡಿದ್ದ, ಮತ್ತು ಮೆಚ್ಚಿ ಆಸೆಪಟ್ಟಿದ್ದ. +ಅವನಿಗೆ ‘ಇಲ್ಲಿಗೆ ಯಾಕೆ ಬಂದಿದ್ದಾರೆ ಅವರು?ಇಷ್ಟು ಬೆಳಿಗ್ಗೆ?’ ಅನ್ನಿಸಿತು. +‘ಬಹುಶಃ ಹೊಟ್ಟೆ ಸರಿಯಾಗಿಲ್ಲವೆನೋ?… +ಅವರೇ ಇರಬೇಕು ಹೊರಕಡೆಗೆ ಹೋಗಲಿಕ್ಕಾಗಿ ಹಿತ್ತಲುಕಡೆಯ ಬಾಗಿಲು ತೆರೆದು, ಹೊರಚಿಲಕ ಹಾಕಿಕೊಂಡಿದ್ದು’ ಎಂದುಕೊಂಡು ಸುತ್ತಲೂ ನೋಡಿದನು. +ಯಾರೂ ಎಲ್ಲಿಯೂ ಇದ್ದ ಚಿಹ್ನೆ ಕಾಣಿಸಲಿಲ್ಲ. +ಅವನಿಗೇ ತುಸು ಇಸ್ಸಿ ಅನ್ನಿಸಿತು, ಹಾಗೆ ನೋಡಿದುದ್ದಕ್ಕೆ. ‘ಅವರು ಇಲ್ಲೆ ಎಲ್ಲಿಯಾದರೂ ಮಟ್ಟಿನ ಮರೆಯಲ್ಲಿ ಹೊರಕಡೆಗೆ ಕೂತಿದ್ದರೆ?’ ಅಷ್ಟರಲ್ಲಿ ಕಾಡಿನಿಂದ ಒಂದು ಮೀಂಗುಲಿಗನ ಹಕ್ಕಿ ಕೂಗಿತು. +ಮ್ಞೀ!ಮ್ಞೀ!ಮ್ಞೀ!ಮ್ಞೀ!‘ಹಾಳು ಅಪಶಕುನದಹಕ್ಕಿ! +ಎನು ಕೇಡು ಕರೆಯಲು ಒರಲುತ್ತಿದಿಯೋ?’ ಎಂದುಕೊಂಡ ಕೊರಗ ಹೊರಗೆ ಹುಲ್ಲು ತರಲು ಇಸ್ಕೂಲಿನ ಬಾಗಿಲಿಗೆ ಬಂದನು. +ನೋಡುತ್ತಾನೆ, ಬಾಗಿಲು ಆಈ ಎಂದು ಬಾಯಿ ತೆರೆದುಕೊಂಡಿದೆ ‘ಹಾಳು ಸೂಳೆಮಕ್ಕಳು! +ಹಾಕಿದ್ದ ಚಿಲಕ ತೆಗೆದು, ಬಾಗಿಲು ಹಾರು ಹೊಡೆದಿಟ್ಟಿದ್ದಾರಲ್ಲಾ? +ಕಂಡವರ ದನ ನುಗ್ಗಿಸಿ ಹುಲ್ಲು ತಿನ್ನಿಸಿರಬೇಕು’ ಎಂದು ಶಪಿಸುತ್ತಾ ಒಳಗೆ ದಾಟಿ ನೋಡುತ್ತಾನೆ. +ಹುಲ್ಲು ಕೆದರಿ ಬಿದ್ದಿದೆ. +ಏನೇನೊ ವಾಸನೆ... ಬೀಡಿಯ ವಾಸನೆ, ಸಾರಾಯಿ ವಾಸನೆ, ಮಾಂಸದ ಮೇಲೋಗರದ ಕಂಪು! +ನೋಡುತ್ತಾನೆ, ಒಂದು ಮೂಲೆಯಲ್ಲಿ ಲಾಟೀನು! +ದೀಪ ಕಾಣಬಾರದಷ್ಟು ಸಣ್ಣಗೆ ಮಾಡಿದೆ! +ಇನ್ನೂ ನೋಡುತ್ತಾನೆ, ಬಳೆ ಒಡೆದ ಓಡಿನ ಚೂರುಗಳು ಬಿದ್ದಿವೆ! +ಮತ್ತೂ ನೋಡುತ್ತಾನೆ, ನೆತ್ತರು, ನೆಲದಮೇಲೆ ಮತ್ತು ಹಾಸಿದ್ದ ಹುಲ್ಲಿನ ಮೇಲೆ! +ಕೊರಗನಿಗೆ ಪೂರಾ ದಿಗಿಲಾಯಿತು. +ಏನೂ ಅರ್ಥವಾಗಲಿಲ್ಲ. +ಹೊರಗೆ ಓಡಿ ಬಂದು, ಶಾಲನ್ನು ಸಮೀಪಿಸಿ, ಸುತ್ತಲೂ ನೋಡಿ ‘ಕಾವೇರಮ್ಮಾ!ಕಾವೇರಮ್ಮಾ!’ ಎಂದು ಕರೆದನು. +ಸುತ್ತಣ ಕಾಡು, ಮಳೆಗಾಲದ ಕಡುಹಸರು ಕಾಡು, ಬದ್ಧಭ್ರುಕುಟಿ ಭೀಷಣ ನೀರವವಾಗಿತ್ತು. +ದೆವ್ವಕಂಡವನಂತೆ ಶಾಲನ್ನು ಎತ್ತಿಕೊಂಡು ಮನೆಗೆ ಓಡಿ ಓಡಿ ಬಂದನು. +ಕೊರಗ ಹುಡುಗನು ಹೇಳಿದ್ದನ್ನು ಕೇಳಿ, ಅವನು ಕೊಟ್ಟ ಗುಲಾಬಿ ಬಣ್ಣದ ಶಾಲನ್ನು ನೋಡಿ, ಅಂತಕ್ಕಗೆ ದಿಗಿಲು ಬಡಿಯಿತು. +ಹೌಹಾರಿ ಕಾವೇರಿಯ ಕೋಣೆಗೆ ಓಡಿದಳು. +ಮಗಳ ಹೆಸರು ಹಿಡಿದು ಕೂಗುತ್ತಾ ಕರೆಯುತ್ತ ಮನೆಯಲ್ಲೆಲ್ಲ ಓಡಾಡಿದಳು ಹಿತ್ತಲು ಕಡೆಗೆ ಓಡಿ ಕೊಟ್ಟಿಗೆಯ ಹತ್ತಿರ ಕಾಡಿನ ಬಳಿ ನಿಂತು ಕರೆದಳು, ಮಗಳು ದಿನವೂ ಬಯಲ ಕಡೆಗೆ ಹೋಗುತ್ತಿದ್ದತ್ತ ಮುಖಮಾಡಿ. +ಅಂತಕ್ಕನ ರೋದನವನ್ನು ಕೇಳಿ ಅನಂತಯ್ಯ ಕಿಟ್ಟಯ್ಯರೂ ಗಾಬರಿಯಿಂದ ಓಡಿಬಂದರು. +ಕೊರಗನಿಂದ ವಿಷಯವನ್ನೆಲ್ಲ ಕೇಳಿ ತಿಳಿದು ಬಾವಿಯ ಬಳಿಗೆ ಶಾಲು ಸಿಕ್ಕಿದ್ದ ಸ್ಥಳಕ್ಕೆ ಓಡಿದರು. +ಮಗಳ ಹೆಣವನ್ನು ಬಾವಿಯಿಂದೆತ್ತಿ ತಂದು ಮನೆಯಲ್ಲಿ ಮಲಗಿಸಿದಾಗ ಅಂತಕ್ಕನ ಗೋಳು ಹೇಳತೀರದಾಗಿತ್ತು. +ದುಃಖ ಉನ್ಮಾದದ ಮಟ್ಟಕ್ಕೇರಿತ್ತು. +ಮಗಳು ಕಿಟ್ಟಯ್ಯ ಸೆಟ್ಟಿಯನ್ನು ಮದುವೆಯಾಗಲು ಇಷ್ಟವಿಲ್ಲದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳೆಂದೇ ಅವಳು ನಿರ್ಣಯಿಸಿ ನಂಬಿಬಿಟ್ತಿದ್ದಳೂ. +ಆ ಸಂಕಟದ ಉರಿಯಲ್ಲಿ ಅವಳಿಗೆ ಉಚಿತ ಅನುಚಿತದ ಪರಿವೆಯಿರಲಿಲ್ಲ. +ಮಗಳ ಸಾವಿಗೆ ಕಿಟ್ಟಯ್ಯಸೆಟ್ಟಿಯೆ ಕಾರಣವಾದನೆಂದು ಅವನನ್ನೂ ಶಪಿಸಿದಳು. +ಆ ಶನಿಯನ್ನು ಮನೆಗೆ ಕರೆತಂದರು ಎಂದು ಅನಂತಯ್ಯನನ್ನು ಶಪಿಸಿದಳು. +ಮಗಳ ಆ ಘೋರ ನಿರ್ಧಾರಕ್ಕೆ ಮೂಲಕಾರಣವಾದವನು ದೇವಯ್ಯನೇ ಎಂದು ಅತ್ತಕಡೆ ಬಹುದಿನಗಳಿಂದ ಸುಳಿಯದಿದ್ದ ಅವನನ್ನೂ ಹೀನಾಯವಾಗಿ ಬೈದಳು. +ಅವರಿಗೆ ಯಾರು ಉಂಗುರ ತೊಡಿಸಲು ಅಪ್ಪಣೆ ಕೊಟ್ಟಿದ್ದರು? +ಉಂಗುರ ಕಳೆದುಹೋಯಿತೆಂದು ಮಗಳ ಮನಸ್ಸನ್ನು ಆ ರೀತಿ ನೋಯಿಸಿ ಈ ಅಪಘಾತಕ್ಕೆ ಅವಳನ್ನೇಕೆ ನೂಕಬೇಕಿತ್ತು?ಎಂದೂ ಬಹಿರಂಗವಾಗಿಯೆ ಬೈದೂ ತಲೆ ಚಚ್ಚಿಕೊಂಡಳು. +ಹೆಣದ ಕೈಬೆರಳಲ್ಲಿ ಹರಳುಂಗುರ ಇದ್ದದ್ದನ್ನು ಗಮನಿಸಿದ್ದ ಅನಂತಯ್ಯ, ಕೊರಗನನ್ನು ವಿಚಾರಿಸಿ ನಡೆದ ಸಂಗತಿ ಏನು ಎಂಬುದನ್ನು ಅರಿತ ತರುವಾಯ, ಅಂತಕ್ಕ ರೋದಿಸಿ, ದುಃಖಿಸಿ, ಶಪಿಸಿ, ಎದೆ ಬಡಿದುಕೊಂಡೂ ತಲೆ ಚಚ್ಚಿಕೊಂಡೂ, ಅತ್ತೂ ಅತ್ತೂ ಸೋತುಸುಸ್ತಾಗಿ ತುಸು ತಣ್ಣಗಾದಮೇಲೆ, ಕಾವೇರಿಯ ಕಳೇಬರದ ಕೈಬೆರಳಿನಿಂದ ಹರಳುಂಗುರವನ್ನು ಕಳಚಿ ಅವಳಿಗೆ ನೀಡಿದರು. +ಆಗ ಅವಳಿಗುಂಟಾಗಿದ್ದ ಬೆರಗಿಗೆ ಮೇರೆ ಇರಲಿಲ್ಲ. +ಮಗಳ ಕೈಗೆ ಉಂಗುರ ಹೇಗೆ ಬಂತು ಎಂದು! +ಉಂಗುರ ಕಳೆದುಹೋಗಿ, ಎಲ್ಲಿ ಹುಡುಕಿದರೂ ಯಾರನ್ನು ಕೇಳಿದರೂ ಅದು ಪತ್ತೆಯಾಗದಿದ್ದಾಗ, ಅಂತಕ್ಕ ಧರ್ಮಸ್ಥಳಕ್ಕೆ ಆಣೆಯಿಟ್ಟುಕೊಂಡಿದ್ದಳು. +‘ಅಣ್ಣಪ್ಪದೇವರಿಗೆ ಶಕ್ತಿ ಇದ್ದಲ್ಲಿ ಉಂಗುರ ಎಲ್ಲಿಗೆ ಹೋಗುತ್ತದೆ ನೋಡುವ!’ ಎಂದು. +ಅಣ್ಣಪ್ಪ ಭೂತರಾಯ ಇಂತಹ ಭಯಂಕರ ರೀತಿಯಲ್ಲಿ ಆ ಊಂಗುರವನ್ನು ತನಗೆ ಹಿಂತಿರುಗಿಸುತ್ತಾನೆ ಎಂದು ಆ ಭಕ್ತೆ ಸ್ವಪ್ನದಲ್ಲಿಯೂ ಭಾವಿಸಿರಲಿಲ್ಲ! . +ಅಂತಕ್ಕನ ಮಗಳು ಬಾವಿಗೆ ಬಿದ್ದು ಸತ್ತ ಸುದ್ದಿ ಹಬ್ಬಲು ತಡವಾಗಲಿಲ್ಲ. +ಸಹಾನುಭೂತಿ ತೋರಿಸುವ ದುಃಖದಲ್ಲಿ ಭಾಗಿಗಳಾಗುವ, ಸಮಾಧಾನ ಹೇಳಿ ಸಂತೈಸುವ ಸಲುವಾಗಿ ಮೇಗರವಳ್ಳಿಯ ಪರಿಚಿತರಲ್ಲಿ ಅನೇಕರು ಅಂತಕ್ಕನ ಮನೆಯಲ್ಲಿ ನೆರದಿದ್ದರು. +ಅವರಲ್ಲಿ ಒಬ್ಬರಾಗಿದ್ದರು, ಕರೀಂಸಾಬರು. +ಅನಂತಯ್ಯ ಹೆಣದ ಬೆರಳಿಂದ ಕಳಚಿದ ಹರಳುಂಗುರವನ್ನು ನೋಡಿ, ಗುರುತಿಸಿ, ಅವರು ಬೆಚ್ಚಿಬಿದ್ದಿದ್ದರು. +ಆ ಅನಿಷ್ಟ ಉಂಗುರವನ್ನು ತನ್ನ ತಮ್ಮನ ಮುಖಾಂತರ ಬೆಟ್ಟಳ್ಳಿ ಕಲ್ಲಯ್ಯಗೌಡರಿಗೆ ಮಾರಿಬಿಟ್ಟೆನೆಂದು ತಿಳಿದಿದ್ದರು ಅವರು. +ಮತ್ತೆ ಅದು ಕಾವೇರಿಯ ಬೆರಳಿಗೆ ಬಂದದ್ದು ಹೇಗೆ? +ಅದು ಹೇಗೆಯೆ ಬಂದದ್ದಾಗಿರಲಿ, ಅದರ ಕೆಡಕು ಮಾಡುವ ಶಕ್ತಿಯ ಅವರ ಸಿದ್ಧಾಂತಕ್ಕೆ ಮತ್ತೊಂದು ನಿದರ್ಶನ ದೊರಕಿದಂತಾಗಿತ್ತು. +ಅವರು ಅನಂತಯ್ಯನ ಕಿವಿಗೆ ಪಿಸುಗುಟ್ಟಿದ್ದರು. + “ಐಗಳೆ, ಆ ಶನಿ ಉಂಗುರ ಇದ್ದಲ್ಲಿ ಕೇಡು ತಪ್ಪುವುದಿಲ್ಲ. +ಪಾಪ, ಅದು ಹೇಗೆ ಬಂದಿತೊ ಆ ಮಗುವಿನ ಕೈಗೆ? +ಎಳೆದುಕೊಂಡು ಹೋಗಿ ಅವಳನ್ನು ಬಾವಿಯೊಳಗೆ ಹಾಕಿಬಿಟ್ಟಿತಲ್ಲಾ!” +ಅದನ್ನು ಆಲಿಸಿದ್ದ ಒಬ್ಬನು ಮತ್ತೊಬ್ಬನ ಕಿವಿಯಲ್ಲಿ “ಆ ಹುಡುಗಿಯ ಕೆಟ್ಟಚಾಳಿಯೆ ಮೊದಲಿನಿಂದಲೂ ಹಾಂಗಿರುವಾಗಳು, ಹೌದಾ, ಆ ಉಂಗುರ ಏನು ಮಾಡೀತು?” ಎಂದು ತನ್ನ ನೀತಿಪ್ರಜ್ಞೆಯನ್ನು ಮೆರೆದಿದ್ದನು. +ಕೊರಗ ಹುಡುಗನ ಹೇಳಿಕೆಗಳಿಂದಲೂ, ಇಸ್ಕೂಲಿನ ಒಳಗೆ ತಾವು ಕಂಡಿದ್ದ ದೃಶ್ಯದ ವಿವರಜ್ಞಾನದ ನೆರವಿನಿಂದಲೂ, ಅಲ್ಲಿಯೆ ಸಿಕ್ಕಿದ್ದು, ಬತ್ತಿ ಇಳಿಸಿ ದೀಪ ಸಣ್ಣಗೆ ಮಾಡಿದ್ದ ಲಾಟೀನಿನ ಸಾಕ್ಷಿಯಿಂದಲೂ ಅನಂತಯ್ಯ ಕಾವೇರಿಯ ಸಾವು ಆತ್ಮಹತ್ಯೆಯಲ್ಲ, ಅತ್ಯಾಚಾರದ ತರುವಾಯ ನಡೆದ ಘಟನೆ ಎಂದು ಶಂಕಿಸಿದರು. +ಅತ್ಯಾಚಾರದ ಪರಿಣಾಮವಾಗಿ ಹುಡುಗಿ ಪ್ರಜ್ಞೆತಪ್ಪಲು ಅವಳು ಸತ್ತಳೆಂದು ಭಾವಿಸಿಯೋ, ಅಥವಾ ಅವಳು ವಾಸ್ತವವಾಗಿ ತತಪ್ರಾಣೆಯ ಆಗಿದ್ದರಿಂದಲೋ, ಅವಳು ಆತ್ಮಹತ್ಯೆ ಮಾಡಿಕೊಂಡಳು ಎಂಬ ಭಾವನೆ ಹುಟ್ಟಿಸಲು ಶರೀರವನ್ನು ಹೊತ್ತು ತಂದು ಬಾವಿಗೆ ಹಾಕಿರಬೇಕು ಎಂದು ನಿರ್ಧರಿಸಿದರು. +ಅವರ ನಿರ್ಧಾರಕ್ಕೆ ಪೋಷಕವಾಗಿ ಮತ್ತೊಂದು ಸಾಕ್ಷಿಯೂ ದೊರೆಯಿತು. +ಅಲ್ಲಿ ಸಿಕ್ಕಿದ್ದ ಲಾಟೀನು ಕರ್ಮೀನ್ ಸಾಬರದ್ದು ಎಂದು ಕೊರಗ ಹುಡುಗ ಗುರುತಿಸಿದ್ದು! +ಆದರೆ ಕರೀಂಸಾಬರು ತಮ್ಮ ಭಾವೋದ್ವೇಗವನ್ನು ಒಂದಿನಿತು ಹೊರಗೆಡಹದೆ ತಣ್ಣಗೆ ಹೇಳಿದರು. + “ಆ ಲಾಟೀನು ನನ್ನದೇನೋ ಹೌದು. +ಆದರೆ ಅದನ್ನು ಚೀಂಕ್ರ ಸೇರೆಗಾರ ತೆಗೆದುಕೊಂಡು ಹೋಗಿದ್ದ.” +ಆದರೆ ಅಲ್ಲಿ ನೆರದಿದ್ದ ಗುಂಪಿನಲ್ಲಾಗಲಿ, ಮೇಗರವಳ್ಳಿಯಲ್ಲೆ ಆಗಲಿ ಚೀಂಕ್ರಸೇರೆಗಾರನ ಸುಳಿವು ಎಲ್ಲಿ ಹುಡಕಿದರೂ ಕಾಣಲಿಲ್ಲ. +ಅಂತಕ್ಕ ಮಾತ್ರ, ಐಗಳು ಎಷ್ಟು ಸಕಾರಣವಾಗಿ ವಾದಿಸಿದರೂ, ತನ್ನ ಮಗಳು ಅತ್ಯಾಚಾರಕ್ಕೆ ಒಳಗಾದಳು ಎಂಬ ಅವಮಾನಕರವಾದ ಆಪಾದನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿಬಿಟ್ಟಳು. +ಮಗಳ ಮೈಮೇಲೆ ಆಗಿದ್ದ ಗಾಯಗಳನ್ನೂ ಕೆನ್ನೆ ತುಟಿ ಕುಚಗಳಾದಿಯಾಗಿ ಅಂಗೋಪಾಂಗಗಳಲ್ಲಿದ್ದ ಕ್ಷತವಿಕ್ಷತಗಳನ್ನೂ, ಮಗಳು ಬಾವಿಗೆ ಹಾರಿದಾಗ ಬಾವಿಯ ಬುಡದವರೆಗೂ ಇದ್ದ ಸುತ್ತಣ ಕಲ್ಲು ಕಟ್ಟಣೆ ಬಡಿದೂ ಬಡಿದೂ ಆಗಿದ್ದ ಗಾಯಗಳೆಂದೇ ಸಮರ್ಥಿಸಿದಳು. +ಮಗಳು ಎಂತಿದ್ದರೂ ಸತ್ತುಹೋಗಿದ್ದಾಳೆ. +ಮತ್ತೆ ಬರುವುದಿಲ್ಲ. +ಸತ್ತವಳ ಹೆಸರಿಗೆ ಕಳಂಕಾರೋಪಣೆ ಮಾಡಿ ಅವಮಾನಗೊಳಿಸುವುದನ್ನು ತಾಯಿಯ ಕರುಳು ಎಂದಾದರೂ ಸಹಿಸುತ್ತದೆಯೇ? +ಆದರೂ ಐಗಳು ಅನಂತಯ್ಯನವರು ತಮ್ಮ ಕರ್ತವ್ಯವನ್ನು ನೇರವೇರಿಸಿದರು +ಅತ್ಯಾಚಾರದ ಮತ್ತು ಕೊಲೆಯ ಸಂಗತಿಗಳನ್ನು ಕಾನೂನಿನ ಸನ್ನಿಧಿಗೆ ಒಯ್ಯುವ ಕ್ರಮ ಜರುಗಿಸಿದರು. +ಕಾನೂನಿನ ದೂತರು, ಬೆಟ್ಟಳ್ಳಿ ದೇವಯ್ಯಗೌಡರು ಈ ಮೊದಲೆ ಮೇಗರವಳ್ಳಿ ಸಾಬರಮೇಲೆ ಫಿರ್ಯಾದಿ ಕೊಟ್ಟಿದ್ದನ್ನು ಗಮನಿಸಿ, ತಮ್ಮ ಕರ್ತ್ಯವ್ಯ ನಿರ್ವಹಣೆಯ ಅಂಗವಾಗಿ ಬಂದು ತನಿಖೆ ನಡೆಸಿದಾಗ ಮುಖ್ಯ ಅಪಾದಿತನಾಗಿದ್ದ. +ಚೀಂಕ್ರ ಎಲ್ಲಿಯೂ ಪತ್ತೆಯಾಗಲಿಲ್ಲ. +ಘಟ್ಟದ ಕೆಳಕ್ಕೆ ಪರಾರಿಯಾಗಿದ್ದಾನೆಂದು ಬರೆದುಕೊಂಡರು. +ಆ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಅಪರಾಧವೆಸಗಿ ತಲೆ ತಪ್ಪಿಸಿಕೊಳ್ಳುವವರು ಬ್ರಿಟಿಷರ ಆಡಳಿತಕ್ಕೆ ಸೇರಿದ್ದ ಕನ್ನಡ ಜಿಲ್ಲೆಗೆ ಓಡಿಹೋಗುವುದು ಒಂದು ರಾಜತಂತ್ರದ ರೂಢಿಯಾಗಿತ್ತು! +ಪುಡಿಸಾಬಿಯನ್ನು ದಸ್ತಗಿರಿ ಮಾಡಲು ಹುಡುಕಿದಾಗ, ಕರೀಂಸಾಬರು ಹೇಳಿದರು “ನನ್ನ ತಮ್ಮನಿಗೂ ಅಂತಕ್ಕನ ಮಗಳ ಆತ್ಮಹತ್ಯೆಗೂ ಏನೂ ಸಂಬಂಧವಿಲ್ಲ. +ಕಾವೇರಿ ಬಾವಿಗೆ ಹಾರಿಕೊಳ್ಳುವುದಕ್ಕೆ ಒಂದು ವಾರದ ಹಿಂದೆಯೇ ಅವನು ವ್ಯಾಪಾರದ ಕೆಲಸದ ನಿಮಿತ್ತವಾಗಿ ಕಾಸರಗೋಡಿನ ಕಡೆಗೆ ಹೋದವನು ಇನ್ನು ಬಂದಿಲ್ಲ.” +ತಮ್ಮ ಹೇಳಿಕೆಯ ಸತ್ಯತಾ ಸ್ಥಾಪನೆಗೆ ಬೆಂಬಲವಾಗಿ ಕಾನೂನಿನ ದೂತರ ಕೈ ಬೆಚ್ಚಗಾಗುವಂತೆ ತಕ್ಕ ವ್ಯವಸ್ಥೆಮಾಡಲು ಅವರು ಮರೆಯಲಿಲ್ಲ! +ಅಂತಕ್ಕನಂತೂ ತನ್ನ ಮಗಳ ಪರಿಶುದ್ಧ ನಡತೆಯ ವಿರುದ್ಧವಾಗಿರುವ ಎಲ್ಲ ಆರೋಪಣೆಗಳನ್ನೂ ಅಲ್ಲಗಳೆದು ಅವಳ ಅತ್ಮಹತ್ಯೆಯನ್ನೆ ಸಮರ್ಥಿಸಿದಳು. +ಪ್ರಬಲ ಸಾಕ್ಷಿಯ ವಸ್ತುವಾಗಿದ್ದ ಹರಳುಂಗರವನ್ನು ವಿಚಾರಿಸಲು, ಆ ಅನಿಷ್ಟ ವಸ್ತುವನ್ನು ಧರ್ಮಸ್ಥಳದ ದೇವರ ಪೆಟ್ಟಿಗೆಗೆ ಹಾಕಿಬಿಡಲು ಕಿಟ್ಟಯ್ಯಸೆಟ್ಟರ ಕೈಲಿ ಕಳುಹಿಸಿದನೆಂದು ಹೇಳಿದಳು. +ಕಾನೂನಿನ ಕೈಯಿಂದ ತಲೆ ತಪ್ಪಿಸಿಕೊಳ್ಳಲು ಉಂಗುರವೂ ಘಟ್ಟದ ಕೆಳಕ್ಕೆ ಹಾರಿತ್ತು! +ಧರ್ಮಸ್ಥಳದ ದೇವರ ಸನ್ನಿಧಿಯ ರಕ್ಷೆಗೆ! +ಕಡೆಗೆ ಪೋಲೀಸರು ಬರಿ ಕೈಯಲ್ಲಿ ಹೇಗೆ ಹೋಗುವುದು ಎಂದು, ಕೇಡಿಗಳೆಂದು ಪ್ರಸಿದ್ಧರಾಗಿದ್ದ ಸಾಬಿಗಳ ಪಟ್ಟಿಯಲ್ಲಿದ್ದ ಅಜ್ಜೀಸಾಬಿ ಮತ್ತು ಲುಂಗೀಸಾಬಿ ಇಬ್ಬರನ್ನು ಕೋಳಹಾಕಿ ತೀರ್ಥಹಳ್ಳಿ ಲಾಕಪ್ಪಿಗೆ ಕರೆದುಕೊಂಡು ಹೋದರು. +ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಸೀಮೆಯ ಮಲೆನಾಡಿನ ಈ ಕ್ಷುದ್ರೋಕ್ಷುದ್ರವಾಗಿ ತೋರುವ, ಮತ್ತು ನಾಗರೀಕತೆಯ ಐತಿಹಾಸಿಕ ಪ್ರವಾಹದ ವೈಭವಪೂರ್ಣವಾದ ಮಧ್ಯಸ್ರೋತಕ್ಕೆ ಬಹುದೂರವಾಗಿ ಅದರ ಅಂಚಿನ ಅಜ್ಞಾತೋಪಮವಲಯದಲ್ಲಿ ಯಃಕಶ್ಚಿತವಾಗಿರುವ ಈ ಅರಣ್ಯಕ ಪ್ರಪಂಚದ ಶ್ರೀಸಾಮಾನ್ಯರ ಬದುಕು-ಕ್ಷುದ್ರ ಅಲ್ಪ ಜಟಿಲ ರಾಗದ್ವೇಷಮಯ ಜೀವನ ಜಾಲ-ಇಂತಿಂತಿಂತು ಸಾಗುತ್ತಿದ್ದ ಸಮಯದಲ್ಲಿಯೆ ಅತ್ತ ಸುವಿಶಾಲ ಜಗತ್ತಿನಲ್ಲಿ ಚಾರಿತ್ರಕ ಮಹದ್ ಘಟನೆಗಳೆಂದು ಪರಿಗಣಿತವಾಗಲಿರುವ ಲೋಕವಿಖ್ಯಾತ ವ್ಯಾಪಾರಗಳೂ ನಡೆಯುತ್ತಿದ್ದವಷ್ಟೆ; + ಯುದ್ಧ, ಕೌಲು, ಕ್ಷಾಮ, ಕಲಾ ಸಾಹಿತ್ಯ ಸೃಷ್ಟಿ, ಮಹಾ ಕಾವ್ಯರಚನೆ, ತಪಸ್ಯೆ, ಸಾಕ್ಷಾತ್ಕಾರ, ವೈಜ್ಞಾನಿಕ  ಸಂಶೋಧನೆ, ಇತಾದಿ ಇತ್ಯಾದಿ, ಇತ್ಯಾದಿ! +ಆಗ, ತತ್ಕಾಲದಲ್ಲಿ ಅಂತಹ ಮಹದ್ಘಟನೆ ಎಂದು ಭಾವಿತವಾಗದಿದ್ದರೂ ಲೋಕದಲ್ಲಿ ಆ ಕಾಲದಲ್ಲಿ ನಡೆಯುತ್ತಿದ್ದ ಯಾವ ಮಹದ್ ಘಟನೆಗೂ ದ್ವಿತೀಯವಲ್ಲದೆ ತತ್ಕಾಲ ಮಾತ್ರ ಅಖ್ಯಾತವಾಗಿದ್ದ ಒಂದು ವಿಭೂತಿ ಘಟನೆ ಜರುಗುತ್ತಿತ್ತು. +ಅಮೇರಿಕ ಸಂಯುಕ್ತ ಸಂಸ್ಥಾನದ ಸೆಂಟ್ ಲಾರೆನ್ಸ್ ಮಹಾನದಿಯ ನಡುವೆಯಿರುವ ಸಹಸ್ರ ದ್ವೀಪೋದ್ಯಾನದಲ್ಲಿ ಕ್ರಿ.ಶ.೧೮೯೩ ರಲ್ಲಿ ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಮ್ಮೇಲನದಲ್ಲಿ ತಟಕ್ಕನೆ ಯಶೋಗೋಪುರದ ಶಿಖರಕ್ಕೇರಿ ಆಧ್ಯಾತ್ಮಿಕ ಜಗನ್ನಯನ ಕೇಂದ್ರ ಮೂರ್ತಿಯಾಗಿದ್ದ ಸ್ವಾಮಿ ವಿವೇಕಾನಂದರು ಎರಡು ವರ್ಷಗಳ ಕಾಲ ಅಮೇರಿಕಾದ ಅನೇಕ ನಗರಗಳಲ್ಲಿ ಸಂಚರಿಸಿ, ಕ್ರೈಸ್ತಮತ ಸಂಕುಚಿತ ವಲಯದಲ್ಲಿಯೆ ಬೆಳೆದು ಕುಬ್ಜದೃಷ್ಟಿಗಳಾಗಿದ್ದ ಪಾಶ್ಚಾತ್ಯರಿಗೆ ಅಭೂತಪೂರ್ವ ಧೀರೋದಾರ ದೃಷ್ಟ್ಯ ವೇದಾಂತದ ಸಂದೇಶವಿತ್ತು ಜಯಡಿಂಡಿಮವನ್ನು ಮೊಳಗಿಸಿದ್ದರಷ್ಟೆ. +ತರುವಾಯ ಅವರು ವೇದಾಂತದ ಅಧ್ಯಾತ್ಮಿಕ ಯೋಗಸಾದನೆಯನ್ನು ಕೈಗೊಳ್ಳಲು ಹಂಬಲಿಸುತ್ತಿದ್ದ ಕೆಲವು ಶಿಷ್ಯ ಶಿಷ್ಯೆಯರೊಡನೆ ಸೆಂಟ್ ಲಾರೆನ್ಸ್ ಮಹಾನದಿಯ ಸುವಿಸ್ತೃತ ಜಲರಾಶಿಯ ಮಧ್ಯೆ ಅರಣ್ಯಾವೃತವಾಗಿದ್ದು ನಿಭೃತವಾಗಿದ್ದ ಸಹಸ್ರದ್ವೀಪೋದ್ಯಾನದ ಒಂದು ಕುಟೀರಕ್ಕೆ ಬಂದು ನಿಂತರು. +ಸ್ವಾಮೀಜಿ ಒಂದು ದಿನ ತಮ್ಮ ಶಿಷ್ಯರಲ್ಲಿ ಕೆಲವರಿಗೆ ಮಂತ್ರದೀಕ್ಷೆ ಕೊಡಲು ನಿರ್ಧರಿಸಿದ್ದರು. +ಅವರು ಸಹೋದರಿ ಕ್ರಿಸ್ಟೈನ್ ಎಂಬ ಮಹಿಳೆಯನ್ನು ಎಕ್ಕಟಿ ಕರೆದು ಹೇಳಿದರು. +“ನೀನು ದೀಕ್ಷೆ ತೆಗೆದುಕೊಳ್ಳಲು ಎಷ್ಟರಮಟ್ಟಿಗೆ ಅರ್ಹಳಾಗಿದ್ದೀಯೇ ಎಂಬುದನ್ನು ಅರಿಯಲು ಸಾಕಾಗುವಷ್ಟು ನಿನ್ನ ಪರಿಚಯ ನನಗಿನ್ನೂ ಆಗಿಲ್ಲ…. +ಆದರೆ ನನಗೆ ಒಂದು ಶಕ್ತಿ ಇದೆ. +ಪರಮನಃಪ್ರವೇಶನ ಶಕ್ತಿ. +ಅನ್ಯರ ಮನಸ್ಸನ್ನು ಹೂಕ್ಕು ಅದರ ರಹಸ್ಯಗಳನ್ನೆಲ್ಲ ಅರಿಯುವ ಶಕ್ತಿ. +ನಾನು ಅದನ್ನು ಸಾಧಾರಣವಾಗಿ ಉಪಯೋಗಿಸುವದಿಲ್ಲ. +ಅತ್ಯಂತ ಅಪೂರ್ವವಾಗಿ ಅವಶ್ಯ ಬಿದ್ದಾಗ ಮಾತ್ರ ಉಪಯೋಗಿಸಿಕೊಳ್ಳುತ್ತೇನೆ… +ನೀನು ಅನುಮತಿತ್ತರೆ, ನಿನ್ನ ಮನಸ್ಸನ್ನು ಪ್ರವೇಶಿಸಿ ಅದನ್ನು ಓದಿಕೊಳ್ಳುವ ಇಚ್ಛೆ ಇದೆ; +ಏಕೆಂದರೆ ಇತರರೊಂದಿಗೆ ನಿನಗೂ ನಾಳೆ ದೀಕ್ಷೆ ಕೊಡಬೇಕೆಂದಿದ್ದೇನೆ.”ಆಕೆ ಸಂತೋಷದಿಂದಲೆ ಒಪ್ಪಿಗೆಕೊಟ್ಟಳು. +ಮರುದಿನ ಶಿಷ್ಯರೆಲ್ಲ ಮಂತ್ರದೀಕ್ಷಿತರಾದ ಮೇಲೆ ಸ್ವಾಮೀಜಿ, ಅದೂ ಇದೂ ಮಾತನಾಡುತ್ತಾ, ಸೂಕ್ಷ್ಮವಾಗಿ, ಶಿಷ್ಯರಲ್ಲಿ ಕೆಲವರ ಪೂರ್ವ ಜೀವನದ ಸಂಗತಿಗಳನ್ನು ಭವಿಷ್ಯಜೀವನದಲ್ಲಿ ಸಂಭವಿಸಲಿರುವ ಘಟನೆಗಳನ್ನೂ ಅವರವರಿಗೆ ಪ್ರತ್ಯೇಕವಾಗಿ ತಿಳಿಸಿದರು. +ಕೆಲವಂತೂ ಅವರವರಿಗೇ ಮಾತ್ರ ಗೊತ್ತಿದ್ದ ಕಟ್ಟೇಕಾಂತ ವಿಷಯಗಳಾಗಿದ್ದವು. +ಶಿಷ್ಯರ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ. +ಆದರೆ ಸ್ವಾಮೀಜಿ ಆ ಶಕ್ತಿ ಅಂತಹ ಅದ್ಭುತ ಶಕ್ತಿಗಳ ಅಪೇಕ್ಷೆ ಹಾನಿಕರವೆಂದೂ ಎಚ್ಚರಿಸಿದರು. +ಸೋದರಿ ಕ್ರಿಸ್ಟೈನ್ ಸಂಗಡ ಮಾತನಾಡುತ್ತಾ, ಆಕೆಯ ಭೂತಭವಿಷ್ಯತ್ ಜೀವನದ ಮತ್ತು ಪೂರ್ವಸಂಸ್ಕಾರಗಳ ಸಂಸ್ಕ್ರಣದ ವಿಚಾರವಾಗಿ ತಿಳಿಸಿ ಹಿತೋಪದೇಶ ನೀಡುತ್ತಿದ್ದಾಗ, ಸ್ವಾಮೀಜಿ ಇದ್ದಕಿದ್ದ ಹಾಗೆ ಹೊಟ್ಟೆ ಹುಣ್ಣಾಗುವಂತೆ ನಗತೊಡಗಿದರು. +ಏನನ್ನೊ ಕಂಡೂ ಕಂಡೂ ಮತ್ತೆ ನಕ್ಕರು. +ಅಳ್ಳೆಹಿಡಿದುಕೊಂಡು ನಕ್ಕರು ಉಸಿರು ಕಟ್ಟಿ ಕಣ್ಣಲ್ಲಿ ನೀರುಕ್ಕುವಂತೆ ನಕ್ಕರು. +ಸಹೋದರಿಗೆ ಮೊದಮೊದಲು ಪರಿಹಾಸವಾಗಿದ್ದುದು ಬರಬರುತ್ತಾ ಸೋಜಿಗವಾಯಿತು. +ಕಡೆಕಡೆಗೆ ಸ್ವಾಮಿಗಳಿಗೆ ಏನಾದರೂ ಮಾನಸಿಕ ವ್ಯಪರೀತ್ಯ ಉಂಟಾಯಿತೊ ಎಂದು ಶಂಕಿಸಿದಳು. +ಆಕೆ ಭೀತೆಯಾದುದನ್ನು ನೋಡಿದ ಸ್ವಾಮೀಜಿ ತಮ್ಮ ನಗೆಯನ್ನು ಹತೋಟಿಗೆ ತಂದುಕೊಂಡು, ನಗುಮೊಗರಾಗಿಯೆ ಮೌನವಾಗಿ ಕುಳಿತುಬಿಟ್ಟರು. +ಕುತೂಹಲಾವಿಷ್ಟೆಯಾದ ಕ್ರಿಸ್ಟೈನ್ ಎಷ್ಟು ಪ್ರಶ್ನೆ ಕೇಳಿದರೂ ಅವರು ಬಾಯಿಬಿಡಲಿಲ್ಲ. +ಹಿಂದಿನ ರಾತ್ರಿ, ದೀಕ್ಷೆ ತೆಗೆದುಕೊಳ್ಳಲಿರುವ ಶಿಷ್ಯರ ಈ ಜನ್ಮದ ಮತ್ತು ಪೂರ್ವಾಪರ ಜನ್ಮಗಳ ಸೂಕ್ಷ್ಮಭೂಮಿಕೆಗಳಲ್ಲಿ ಸಂಚರಿಸಿ, ಅವರ ಚೈತ್ಯದ ವಿಕಾಸನ ಸ್ಥಿತಿಯನ್ನು ಅರಿಯುವ ಕಾರ್ಯದಲ್ಲಿದ್ದಾಗ, ಸ್ವಾಮೀಜಿಯ ಸರ್ವಕಾಲ ಸರ್ವದೇಶ ವ್ಯಾಪ್ತಿಯಾಗಿಯೂ ಅತೀತವಾಗಿದ್ದ ಅತಿಮಾನಸಕ್ಕೆ ಗೋಚರವಾಗಿದ್ದ ಅಸಂಖ್ಯ ದೃಷ್ಯ ಪರಂಪರೆಗಳಲ್ಲಿ ಒಂದು ದೃಶ್ಯದ ನೆನಪು ಅವರ ಈ ವಿಕಟಾಟ್ಟಹಾಸಕ್ಕೆ ಕಾರಣವಾಗಿತ್ತು. +ಕಡೆಗೂ ಸ್ವಾಮೀಜಿ ಅದರ ವಿಚಾರವಾಗಿ ಸಹೋದರಿ ಕ್ರಿಸ್ಟೈನ್ ಗೆ ಯಾವ ವಿವರವನ್ನೂ ಕೊಡಲಿಲ್ಲ. +ಆದರೆ ಇಷ್ಟನ್ನು ಮಾತ್ರ ಸೂಚ್ಯವಾಗಿ ಹೇಳಿದ್ದರು. +“ನೋಡು, ಸೋದರೀ, ನಾನು ಇಂಡಿಯಾದಿಂದ ಇಲ್ಲಿಗೆ ಬಂದು ನಿಮಗೆ ವೇದಾಂತ ಭೋಧನೆ ಮಾಡಿ, ಸರ್ವಧರ್ಮ ಸಮನ್ವಯ ದೃಷ್ಟಿಯನ್ನು ನೀಡಿ, ನಿಮ್ಮನ್ನು ಮತಾಂತರಗೊಳಿಸುವ ರೂಕ್ಷಬರ್ಬರವಾದ ಕಿರಾತನೀತಿಗೆ ಕೈಹಾಕದೆ, ಕ್ರೈಸ್ತರಿಗೆ, ಯೆಹೂದ್ಯರಿಗೆ, ಮೆಥಡಿಸ್ಟರಿಗೆ, ಪ್ಯೂರಿಟನ್ನರಿಗೆ, ಕ್ಯಾಥೋಲಿಕ್ಕರಿಗೆ, ಅವರವರ ಭಾವದಲ್ಲಿಯೆ, ಅವರವರ ಶ್ರದ್ದೆಯಲ್ಲಿಯೆ, ಅವರವರು ಮುಂದುವರಿಯುವಂತೆ ಹೇಳಿ ದೀಕ್ಷೆಕೊಡುವ ಕೆಲಸದಲ್ಲಿದ್ದೇನೆ. +ಸ್ವಲ್ಪ ಹೆಚ್ಚು ಕಡಮೆ, ಅದೇ ದಿನದಲ್ಲಿ, ಅದೇ ಸಮಯದಲ್ಲಿ, ನನ್ನ ಮಾತೃಭೂಮಿಯ ಒಂದು ಪರ್ವತಾರಣ್ಯ ಪ್ರದೇಶದ ಮೂಲೆಯಲ್ಲಿ, ಕ್ರೈಸ್ತಮತ ಪ್ರಚಾರಕರು ಬ್ರಿಟಿಷ್ ಸರ್ಕಾರದ ರಾಜಕೀಯ ಬಲ ಮತ್ತು ಪ್ರತಿಷ್ಠೆ ಮತ್ತು ಸೌಕರ್ಯ ಸೌಲಭ್ಯಗಳನ್ನು ಪಡೆದು, ವಿದ್ಯಾಭ್ಯಾಸದ ಮತ್ತು ವೈದ್ಯಕೀಯದ ನೆರವೀಯುವ ಬಲೆಯೊಡ್ದಿ, ಅರಿಯದ ಅಜ್ಞಾನಿಗಳನ್ನು ತಮ್ಮ ಜಾತಿಗೆ ಸೇರಿಸಿಕೊಂಡು, ತಮ್ಮ ಸಂಖ್ಯಾ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ವ್ಯಾಪಾರೀ ಉದ್ಯಮದಲ್ಲಿದ್ದಾರೆ. +ಆದರೆ ಆ ಅಜ್ಞಾನೀ ಜನರಲ್ಲಿಯೂ ಒಂದು ಅಂಥವಾದ ಸ್ವಮತನಿಷ್ಠೆ ಇರುವುದರಿಂದ ಅವರೂ ಮಿಶನರಿಗಳ ಮತಾಂತರ ಕಾರ್ಯವನ್ನು ತಮ್ಮದೇ ಆದ ದಸ್ಯುವಿಧಾನದಿಂದ ವಿಫಲಗೊಳಿಸುತ್ತಿದ್ದಾರೆ. +ಅಂತಹ ಒಂದು ದೃಶ್ಯವನ್ನು ಕಂಡಿದ್ದೆ, ನಿನ್ನೆಯ ಅತೀಂದ್ರಿಯ ಮನಃಪರ್ಯಟನದಲ್ಲಿ. +ಅದರ ನೆನಪಾಗಿ, ಆ ಚಿತ್ರ ಕಣ್ಣಿಗೆ ಕಟ್ಟಿದಂತಾಗಿ ತಡೆಯಲಾರದೆ ನಕ್ಕುಬಿಟ್ಟೆ…. +ನಾನು ಕಂಡ ಅನೇಕ ದರ್ಶನ ಚಿತ್ರಗಳಲ್ಲಿ ಅದೇ ಏಕೆ ನೆನಪಿಗೆ ಬರಬೇಕೊ? …. ಯಾರಿಗೆ ಗೊತ್ತು? +ಬಹುಶಃ ನನಗೂ ನಾನು ಕೈಗೊಂಡಿರುವ ಶ್ರೀ ರಾಮಕೃಷ್ಣ ಲೋಕಸಂಗ್ರಹ ಕಾರ್ಯಕ್ಕೂ, ಅಲ್ಲಿ ನಾನು ಕಂಡ ದ್ರಶ್ಯದಲ್ಲಿ ಪಾತ್ರದಾರಿಗಳಾಗಿದ್ದವರಿಗೋ ಅಥವಾ ಅವರ ಮಕ್ಕಳಾಗಿ ಹುಟ್ಟಲಿರುವವರಿಗೋ ಅಥವಾ ಅವರ ಮೊಮ್ಮಕ್ಕಳು ಮರಿಮಕ್ಕಳಿಗೋ, ಏನಾದರೂ ಸಂಬಂಧ ಇರಬಾರದೇಕೆ? …. +ಇಲ್ಲವೆ, ಇಂದು ನನ್ನಿಂದ ದೀಕ್ಷಿತರಾದವರು ಮರಣಾನಂತರ ಮತ್ತೊಂದು ಜನ್ಮದಲ್ಲಿ ಅಲ್ಲಿಯೆ ಹುಟ್ಟಿಬಂದು ನನ್ನ ಕಾರ್ಯವನ್ನು ಮುಂದುವರಿಸುವ ಸೇವೆಗೆ ಪಾತ್ರಗಳಾಗಬಾರದೇಕೆ? ….” +ಅಂದು ಬೆಳಿಗ್ಗೆ ಮುಂಚೆ, ಹೂವಳ್ಳಿ ಮನೆಯಲ್ಲಿ, ಕೋವಿಚೀಲವನ್ನು ಬಗಲಿಗೆ ಸಿಕ್ಕಿಸಿಕೊಂಡು, ಕೋವಿಗೆ ಈಡು ತುಂಬದೆ ಬರಿಯ ಕೇಪನ್ನು ಮಾತ್ರ ಹಾಕಿಕೊಂಡು ಹೊರಗೆ ಹೊರಡಲನುವಾಗುತ್ತಿದ್ದ ಮುಕುಂದಯ್ಯನಿಗೆ ತಾನು, ಸ್ವಾಮಿ ವಿವೇಕಾನಂದ್ರು ಅಮೇರಿಕಾದಲ್ಲಿ ಸಹೋದರಿ ಕ್ರಿಸ್ಟೈನ್ ಗೆ ಹೇಳಿದ್ದ. +ಆ ಶ್ರೀರಾಮಕೃಷ್ಣ ಲೋಕ ಸಂಗ್ರಹ ಕಾರ್ಯದ ಸಫಲತೆಗಾಗಿ ವಿಧಿಯ ಕೈಯಲ್ಲಿ ಒಂದು ಉಪಾಂಗೋಪಕರಣವಾಗುತ್ತಿದ್ದೇನೆ ಎಂಬುದು ಹೇಗೆ ತಾನೆ ಗೊತ್ತಾಗಬೇಕು. +ಅವನು ತನ್ನ ಅಕ್ಕನಿಗೆ ಮಾತು ಕೊಟ್ಟಿದ್ದಂತೆಯೂ ತನ್ನ ಬೆಟ್ಟಳ್ಳಿ ದೇವಯ್ಯ ಬಾವನನ್ನು, ಅವನ ಅಪೇಕ್ಷೆಯಂತೆಯೆ, ಕಿಲಸ್ತರ ಜಾತಿಗೆ ಸೇರುವುದನ್ನು ತಪ್ಪಿಸುವ ಸಲುವಾಗಿಯೂ ಮೇಗರವಳ್ಳಿಯ ಮಿಶನ್ ಇಸ್ಕೂಲಿಗೆ ಹೊರಟಿದ್ದನು. +ಅವನು ಕೋವಿ ಮತ್ತು ಕೋವಿಚಿಲಗಳನ್ನು ತೆಗೆದುಕೊಂಡಿದ್ದರೂ, ಬೇಟೆಯ ಉಡುಪಿನಲ್ಲಿರದೆ, ನೆಂಟರ ಮನೆಗೆ ಹೋಗುವಾಗ ಹಾಕಿಕೊಳ್ಳುವಂತೆ ತೋಪಿ, ಅಂಗಿ, ಕಚ್ಚೆಪಂಚೆಗಳನ್ನು ತೊಟ್ಟುಕೊಂಡಿದ್ದನ್ನು ಕಂಡ ನಾಗಕ್ಕಗೆ ಏನೊ ಅನುಮಾನ ಬಂದು, ಅದನ್ನು ಚಿನ್ನಮ್ಮಗೆ ತಿಳಿಸಿದಳು. +ಭೀತಿ ಬಡಿದಂತಾಗಿ ಚಿನ್ನಮ್ಮ ಏದಿದಳು. + “ನಾಗಕ್ಕಾ, ಅಜ್ಜೀಗಾದರೂ ಹೇಳೆ, ಅವರು ಹೋಗದಾಂಗೆ ಮಾಡೆ…. +ಅವರು ಷಿಕಾರಿಗೆ ಹೋಗ್ತಾ ಇಲ್ಲ ಕಣೇ. +ಮೇಗ್ರೊಳ್ಳಿಗೆ ಹೋಗ್ತಾರಂತೆ, ಪಾದ್ರೀನ ಹೊಡೆದಾಕಾಕೆ! +ನಂಗೆ ಮೊನ್ನೇನೆ ಹೇಳಿದ್ಲು ಪೀಂಚ್ಲು. +ಸುಳ್ಳು ಅಂತಾ ಮಾಡಿದ್ದೆ. +ಐತ ಹೇಳಿದ್ದನಂತೆ ಅವಳಿಗೆ. +ಅಂವನ್ನೂ ಕರಕೊಂಡು ಹೋಗ್ತಾರಂತೆ! …. +ಅಯ್ಯಯ್ಯೋ, ಬ್ಯಾಗ ಹೋಗೋ! …. +ನಾಗಕ್ಕ ಗಟ್ಟಿಯಾಗಿ ಕೂಗಿ ಹೇಳಿದ ಮೇಲೆ ಅಜ್ಜಿಗೆ ವಿಷಯವೇನೊ ಗೊತ್ತಾಯಿತು. +ಆದರೆ ಅರ್ಥವಾಗಲಿಲ್ಲ. +ಯಾರಾದರೂ ಮನುಷ್ಯರನ್ನು ಹೊಡೆಯುತ್ತಾರೆಯೆ ಕೋವಿಯಲ್ಲಿ? +ಕೋವಿ ಇರುವುದು ಹಂದಿ, ಮಿಗ, ಕಾಡುಕುರಿ, ಕಾಡುಕೋಳಿ, ಹುಲಿ ಮೊದಲಾದ ಕಾಡುಪ್ರಾಣಿಗಳನ್ನು ಹೊಡೆಯುವುದಕ್ಕೆ. +“ಏ ಹೋಗೆ!ಅವನಿಗೇನು ಹುಚ್ಚೇನೆ, ಮನುಷ್ಯನ್ನ ಹೊಡೆಯಾಕೆ?” ಎಂದು ನಾಗಕ್ಕನನ್ನು ಗದರಿಸಿದರೂ, ಸೊಂಟದ ಮೇಲೆ ಕೈಯಿಟ್ಟು ನಸುಬಾಗಿ ಬಾಗಿಲಿಗೆ ನಡೆದು ಬಂದು ಮುಕುಂದಯ್ಯನನ್ನು ವಿಚಾರಿಸಿದಳು. +“ಇವೊತ್ತು ಮೇಗ್ರೊಳ್ಳಿ ಮಿಶನ್ ಇಸ್ಕೂಲಿನ ಪ್ರಾರಂಭೋತ್ಸವವಂತೆ, ಅಜ್ಜೀ ಅದಕ್ಕೆ ಹೋಗ್ತಿದ್ದೀನಿ…. +ಬರ್ತಾ ಎಂತಿದ್ರೂ ಕಂಡರೆ ಒಂದು ಈಡು ಹೊಡೆಯಾನ ಅಂತಾ ಕೋವಿ ತಗೊಂಡೀನಿ.” ಎಂದು ಅಜ್ಜಿಗೆ ಸಮಾಧಾನ ಹೇಳಿ ಹೋರಟೇಬಿಟ್ಟನು. +ಅಜ್ಜಿಗೆ ಕೇಳಿಯೆ ಮುಕುಂದಯ್ಯನ ಮೇಲೆ ಪ್ರೀತಿಪೂರ್ವಕವಾದ ಗೌರವವುಂಟಾಯಿತು. +ಒಳಗೆ ಹೋಗಿ ನಾಗಕ್ಕ ಚಿನ್ನಮ್ಮ ಇಬ್ಬರಿಗೂ ಛೀಮಾರಿ ಮಾಡಿದಳು. +“ಗಂಡಸರು ಏನಾದರೂ ದೊಡ್ಡ ಕೆಲಸಕ್ಕೆ ಹೊರಟು ನಿಂತಾಗ ಹೀಂಗೆಲ್ಲ ಅನಿಬಿರುಗು ಆಡಬಾರದು ಕಣೇ. +ಅಪಶಕುನ ಆಗ್ತದೆ!”ಮುಕುಂದಯ್ಯ ಮನೆಯಿಂದ ಸ್ವಲ್ಪದೂರ ಹೋಗುವುದರೊಳಗೆ, ಅವನ ಹಿಂದೆ ಸಂಗಡ ಹೊರಟಿದ್ದ ಐತ “ಅಯ್ಯಾ, ಚಿನ್ನಕ್ಕೋರು ಯಾಕೊ ಬಿರುಬಿರನೆ ಬರಾಹಾಂಗೆ ಕಾಣ್ತದೆ.” ಎಂದು ಪಿಸುದನಿಯಲ್ಲಿ ಗುಟ್ಟಾಡುವಂತೆ ಹೇಳಿದನು. +ಐತನಿಗೆ ಮುಂದೆ ಹೋಗುತ್ತಿರುವಂತೆ ಹೇಳಿ. +ಮುಕುಂದಯ್ಯ ನಿಂತನು. +ಚಿನ್ನಮ್ಮ ಏದುತ್ತಾ ಬಂದು ಹತ್ತಿರ ನಿಂತಳು. +ಚಳಿಗಾಲದ ಬೆಳಗಿನ ಎಳಬಿಸಿಲಿನಲ್ಲಿ ಅವಳ ಬಾಯುಸಿರು ಹೊಗೆಹೊಗೆಯಾಗಿ ಮೇಲೇರುತ್ತಿತ್ತು. +ಏನೋ ಕೆಲಸ ಮಾಡುತ್ತಿದ್ದವಳು ಹಾಗೆಯೆ ಎದ್ದು ಓಡಿ ಬಂದಿದ್ದಳಾದ್ದರಿಂದ ನೇಲುಬಿದ್ದಿದ್ದ ಗೊಬ್ಬೆಯ ಸೆರಗನ್ನೂ ಎತ್ತಿ ಕಟ್ಟಿರಲಿಲ್ಲ. +ಸಾಮಾನ್ಯವಾಗಿ ರವಕೆ ಕುಪ್ಪಸ ಯಾವುದನ್ನೂ, ಅದರಲ್ಲಿಯೂ ಮನೆಯಲ್ಲಿರುವಾಗ, ತೊಟ್ಟುಕೊಳ್ಳುತ್ತಿರಲಿಲ್ಲವಾದ್ದರಿಂದ ಸೀರೆಯ ಮರೆಯಲ್ಲಿ ಅದನ್ನೊತ್ತಿಎತ್ತಿ ತಳ್ಳುವಂತಿದ್ದ ಅವಳ ವಿಕಾಸಮಾನ ಕುಟ್ಮಲಜುಚಗಳು ಮೇಲಕ್ಕೂ ಕೆಳಕ್ಕೂ ಉಸಿರಾಡಿದಂತೆಲ್ಲ ಎದ್ದು ಬೀಳುತ್ತಿದ್ದವು. +ಅವಳ ಆ ಉದ್ವೇಗದ ಪರಿಸ್ಥಿತಿಯಲ್ಲಿ ಅವಳಿಗೆ ಸರ್ವದಾ ಸಹಜವಾಗಿರುತ್ತಿದ್ದ ಲಜ್ಜೆಯೂ ಹಿಂಜೈದಂತಿತ್ತು. +ಕಣ್ಣೀರು ಸುರಿಯುತ್ತಿತ್ತು. +ಬಿಕ್ಕುತ್ತಿದ್ದುದರಿಂದ ಮೂಗುತಿ ಮತ್ತು ಎಸಳು ಬುಗುಡಿಗಳು ಲಯಬದ್ಧವಾಗಿ ಅಳ್ಳಾಡುತ್ತಿದ್ದಂತಿತ್ತು. +ಅವಳು ತನ್ನೆದೆಯನ್ನು ಸಂತೈಸಲೆಂಬಂತೆ ಒತ್ತಿಕೊಂಡಿದ್ದು, ಮುಂಗೈಮೇಲೆ ಹಚ್ಚೆ ಜುಚ್ಚಿದ್ದ ಜೋಗಿ ಜಡೆಯ ಕರ್ನೀಲಿ ಬಣ್ಣವು ತಾರತಮ್ಯದಿಂದ ಅವಳ ಮೈ ಬಣ್ಣವನ್ನು ಮನೋಹರವಾಗಿ ಎತ್ತಿ ತೋರಿಸುತ್ತಿತ್ತು. +ಮನೆಯೊಳಗಿನ ಬೆಳಕಿನಲ್ಲಿ ಕಾಣಿಸದೆ ಮರೆಯಾಗಿರುತ್ತಿದ್ದ ಅವಳ ಆ ಅಪ್ಸರ ಸೌಂದರ್ಯದ ಪ್ರಭಾವದಿಂದ ರುದ್ರಕಾರ್ಯಕ್ಕೆ ದೃಢಚಿತ್ತನಾಗಿ ಹೊರಟಿದ್ದ ಮುಕುಂದಯ್ಯಾ ಹೃದಯ ಆರ್ದ್ರವಾಯಿತು. +ಇನ್ನು ಕೆಲವೇ ದಿನಗಳಲ್ಲಿ ತನ್ನ ಧರ್ಮಪತ್ನಿಯಾಗಲಿರುವ ಅವಳನ್ನು ಮನಸ್ಸಿನಿಂದಲೆ ಬಿಗಿದಪ್ಪಿ ಮುದ್ದಾಡಿತು ಅವನ ಚೇತನ ಸಮಸ್ತವೂ! +ಅವಳಿಗೆ ಹೇಳದೆ ಬಂದದ್ದು ತಪ್ಪಾಯಿತು ಎನ್ನಿಸಿತವನಿಗೆ. +“ಯಾಕೆ, ಚಿನ್ನಿ?”ಚಿನ್ನಮ್ಮ ಓಡಿ ಬಂದದ್ದು ಸಣ್ಣ ಕೆಲಸಕ್ಕಾಗಿರಲಿಲ್ಲ; +ತನ್ನ ಐದೆತನವನ್ನು ಕಾಪಾಡಿಕೊಳ್ಳುವ, ಮಾಂಗಲ್ಯವನ್ನು ರಕ್ಷಿಸಿಕೊಳ್ಳುವ ಮಹತ್ಕಾರ್ಯಕ್ಕಾಗಿ ಧಾವಿಸಿ ಬಂದಿದ್ದಳು ಆ ಮಲೆಯ ಕನ್ಯೆ. +ಅವಳಿನ್ನೂ ಅವನನ್ನು ಶಾಸ್ತ್ರೋಕ್ತವಾಗಿ ಮದುವೆಯಾಗಿರಲಿಲ್ಲ, ತಾಳಿ ಕಟ್ಟಿಸಿಕೊಂಡಿರಲಿಲ್ಲ, ನಿಜ. +ಆದರೆ ಉಳಿದೆಲ್ಲ ರೀತಿಗಳಿಂದಲೂ ಅವಳು ಅವನ ಹೆಂಡತಿಯಾಗಿಬಿಟ್ಟಿದ್ದಳು. +ತನ್ನ ಕನ್ನೆತನವೂ ಅವನಿಗೆ ಸಮರ್ಪಿತವಾಗಿ ಬಿಟ್ಟಿತ್ತು. +ಅವನಿಗಾಗಿ ಮಲೆನಾಡಿನ ಮನೆತನದ ಹೆಣ್ಣು ಮಾಡಬಾರದ್ದನ್ನೆಲ್ಲ ಮಾಡಿದ್ದಳು. +ಅವನನ್ನು ಬಿಟ್ಟು ತನಗಿನ್ನು ಇಹಜೀವನವಿರಲಿಲ್ಲ. +ಅವನಿಗೇನಾದರೂ ಆಗಬಾರದ್ದು ಆದರೆ? +ಅಯ್ಯೋ, ಅದನ್ನು ನೆನೆದರೇ ಅವಳಿಗೆ ಪ್ರಜ್ಞೆ ತಪ್ಪುವಂತಾಗುತ್ತಿತ್ತು! +ಅವನೇನಾದರೂ ಅವಶನಾಗಿ ಗುಂಡು ಹಾರಿಸಿದರೆ, ನರಹತ್ಯೆ ನಡೆದರೆ, ನೆವ ಸಿಕ್ಕಿದರೆ ಸಾಕು ನೇಣು ಹಾಕುತ್ತಿದ್ದ ಆ ಕಾಲದಲ್ಲಿ,-ಅವನಿಗೆ ಗಲ್ಲಾಗುವುದೆ ಖಂಡಿತ! +ಅಯ್ಯೋ ಆಮೇಲೆ?ನನ್ನ ಗತಿ? +ಚೆನ್ನಮ್ಮ ನೆಲಕ್ಕೆ ದಿಂಡುರುಳಿ, ಮುಕುಂದಯ್ಯನ ಪಾದಗಳನ್ನು ಬಲವಾಗಿ ಹಿಡಿದುಕೊಂಡು, ಅವನ್ನು ಕಣ್ಣೀರಿನಿಂದ ತೋಯಿಸುತ್ತಾ ಬಿಕ್ಕಿ ಬಿಕ್ಕಿ ಅತ್ತಳು. +ಮುಕುಂದಯ್ಯ ಕೋವಿಯನ್ನು ನೆಲಕಿಟ್ಟು, ಬಗ್ಗಿ, ಎರಡೂ ಕೈಗಳಿಂದ ಅವಳನ್ನು ಎತ್ತುತ್ತಾ “ಯಾಕೆ, ಚಿನ್ನೀ?” ಎಂದನು ಮತ್ತೆ, ಸ್ತಂಭಿತನಾಗಿ. +“ನಂಗೊತ್ತು, ನೀವು ಯಾಕೆ ಹೋಗ್ತಿದ್ದೀರಿ ಅಂತಾ. +ಬೆಟ್ಟಳ್ಳಿ ಅತ್ತಿಗೆಮ್ಮಗೆ ಕೊಟ್ಟಿದ್ದ ಮಾತನ್ನು ನಡೆಸಿಕೊಡುವುದಕ್ಕೆ! +ಐತ ಹೇಳಿದನಂತೆ; ಪೀಂಚ್ಲು ಹೇಳಿತು ನಂಗೆ…. +ಖಂಡಿತಾ ಬೇಡ, ನೀವು ಕೋವಿ ತಗೊಂಡು ಹೋಗೋದು. +ನಂಗೆ ಜೀವಾನೆ  ಹಾರ್ತಿದೆ! +ನೀವು ಯಾರನ್ನಾದ್ರೂ ಕೊಂದರೆ? …. +ನಾನು ಕೋಣೆಗೆ ಬರ್ಲಿಲ್ಲಾ ಅಂತಾ ನಿಮಗೆ ಸಿಟ್ಟಾಗಿದ್ರೆ, ನನ್ನ ಸರೂ ತಪ್ಪಾಯ್ತು! +ಕಾಲಿಗೆ ಬೀಳ್ತೀನಿ…. +ಇವೊತ್ತು ಬಂದೇ ಬರ್ತಿನಿ…. +ಇನ್ನೊಂದು ತಿಂಗಳು ತಡೆದರೆ…. +ಆಗೇ ಅಗ್ತದಲ್ಲಾ…. ಅಂತಾ…. ಬರ್ಲಿಲ್ಲ!”ನಡುನಡುವೆ ಬಿಕ್ಕಿಬಿಕ್ಕಿ, ನಿಲ್ಲಿಸಿ ನಿಲ್ಲಿಸಿ, ಅಳತ್ತಳುತ್ತಾ ಹೇಳುತ್ತಿದ್ದ ಚಿನ್ನಮ್ಮನ ಮಾತುಗಳನ್ನು ಕೇಳುತ್ತಿದ್ದ ಮುಕುಂದಯ್ಯಗೆ ಅವಳ ದುಃಖವನ್ನು ನೋಡಿ ಮನಸ್ಸು ನೊಂದಿತಾದರೂ ತುದಿತುದಿಗೆ ಅವಳಾಡಿದ ಮಾತುಗಳಿಗೆ ತಡೆಯಲಾರದೆ ನಕ್ಕುಬಿಟ್ಟನು. +“ಸುಮ್ಮಸುಮ್ಮನೆ ಏನೇನೋ ಉಹಿಸಿಕೊಂಡು ಹೀಂಗೆ ಅಳ್ತಿಯಲ್ಲಾ? +ನಿಂಗೆ ಯಾರು ಹೇಳ್ದೋರು? +ಆ ಹರಕಲು ಬಾಯಿ ಐತಾ ಹೇಳ್ದಾ ಅಂತಾ ಅದನ್ನೆಲ್ಲಾ ನಂಬ್ತೀಯಾ? +…ನೋಡು, ಚಿನ್ನೀ, ನಾನೇನು ನೀನು ತಿಳಿದಕೊಂಡಷ್ಟು ಧೈರ್ಯಶಾಲೀನೂ ಅಲ್ಲ, ಮೂರ್ಖನೂ ಅಲ್ಲ. +ನನಗೂ ನಿನ್ನಷ್ಟೇ ಆಸೆ ಇದೆ, ನಿನ್ನ ಮದುವೆಯಾಗಬೇಕೂ ಸುಖವಾಗಿ ಬಾಳಬೇಕೂ ಅಂತಾ. +ಇಷ್ಟೆಲ್ಲ ಪಾಡುಪಟ್ಕೊಂದು, ನಿನ್ನೂ ದಣಿಸಿ, ನೆಂಟರು ಇಷ್ಟರು ಊರೋರ ಬಾಯಿಗೆಲ್ಲ ಬಂದು, ಈಗ ನಿನಗೆ ಅನ್ಯಾಯ ಆಗೋ ಹಾಂಗೆ ಮಾಡ್ತಿನಿ ಅಂತಾ ಖಂಡಿತ ತಿಳಿಕೊಳ್ಳಬ್ಯಾಡ…. +ನಾನು ಕೋವಿ ತಗೋಂಡು ಹೋಗ್ತೀನಿ ಅಂತಾ ನಿಂಗೆ ಹೆದರಿಕೇನೇ?” ಮುಕುಂದಯ್ಯ ಬಗ್ಗಿ ಕೆಳಗಿಟ್ಟಿದ್ದ ಕೋವಿಯನ್ನು ಕೈಗೆ ತೆಗೆದುಕೊಂಡನು. +“ಇಲ್ಲಿ ನೋಡು, ಈ ಕೋವೀಲಿ ಏನು ಅದೆ ಅಂತಾ.” ಚಿನ್ನಮ್ಮ ಬೆಚ್ಚುವಂತೆ ಅವಳ ಕಡೆಗೆ ಕೋವಿನಳಿಗೆ ತಿರುಗಿಸಿ ಹಿಡಿದು, ಕುದುರೆ ಎತ್ತಿ, ಬಿಲ್ಲೆಳೆದುಬಿಟ್ಟನು! +ಛಾಟ್ ಎಂದು ಕೇಪು ಹೊಟ್ಟಿ ಹಾರಿತು. +ಢಾಂ ಎಂದು ಈಡಾಗಲಿಲ್ಲ. +ಹೆದರಿ ಬಿಳಿಚಿಕೊಂಡಿದ್ದ ಚಿನ್ನಮ್ಮ ಮುಕುಂದಯ್ಯನ ನಗೆಗೆ ಕಕ್ಕಾಬಿಕ್ಕಿಯಾದಳು. +“ನೋಡಿದೆಯಾ?ಕೋವಿಗೆ ಬರೀ ಕೇಪು ಹಾಕಿದ್ದೆ. +ಈಡು ತುಂಬಿರಲಿಲ್ಲ. +ಆದರಿಂದ ಯಾರಿಗೂ ಅಪಾಯಾಅಗುವುದಿಲ್ಲ…. +ನಿನ್ನ ‘ಗಂಡ’ ಇವೊತ್ತು ರಾತ್ರಿ ಸುರಕ್ಷಿತವಾಗಿ ಬಂದೇ ಬರ್ತಾನೆ.ಗೊತ್ತಾಯ್ತೆ? …. ” +ಗಂಡ ಅಂದದ್ದಕ್ಕೆ ಸಿಟ್ಟು ಮಾಡಿಕೊಳ್ಳೋದಿಲ್ಲಷ್ಟೆ? +“ವರ” ಅಂತ ಬದಲಾಯಿಸಿಕೋ ಬೇಕಾದ್ರೆ….” +ಚಿನ್ನಮ್ಮ ಲಜ್ಜಾಭಂಗಿಯಿಂದ ನಿಂತಿದ್ದನ್ನು ನೋಡಿ “ಇವೊತ್ತು ರಾತ್ರಿ ‘ಬಂದೇ ಬರ್ತೀನಿ’ ಅಂತಾ ನೀನು ಹೇಳಿದ್ದು ಜ್ಞಾಪಕ ಇರಲಿ! +ಮತ್ತೆಲ್ಲಾದರೂ ಮರೆತು ಬಿಟ್ಟೀಯಾ? …. +ಏನು? …. ನೆಲ ನೋಡ್ತಾ ನಿಂತುಬಿಟ್ಟೇಲ್ಲಾ, ಚಿನ್ನೀ? …. +ನೀನು ಬಂದ್ರೆ ಅಲ್ಲಿ ನಡೆಯೋ ಕತೇನೆಲ್ಲಾ ಸ್ವಾರಸ್ಯವಾಗಿ ಹೇಳ್ತೀನಿ, ಆಯ್ತಾ?” ಎಂದು ವಿನೋದವಾಡಿ, ತನ್ನ ಕಡೆಗೆ ಮುದ್ದು ನೋಟ ಬೀರಿ ಎವೆಯಿಕ್ಕದೆ ನೋಡುತ್ತಾ ನಿಂತಿದ್ದ ತನ್ನ ಪ್ರಾಣೇಶ್ವರನನ್ನು ನೇರವಾಗಿ ನೋಡುವುದರಿಂದಲೆ ಕಣ್ಣುತ್ತರವಿತ್ತು ಮನೆಯ ಕಡೆಗೆ ತಿರುಗಿದಳು “ವಧೂ” ಚಿನ್ನಮ್ಮ. +ಮೇಗರವಳ್ಳಿಯ ಮಿಶನ್ ಇಸ್ಕೂಲಿನ ಹೊಸ ಕಟ್ಟಡವು ಪ್ರಾರಂಭೋತ್ಸವಕ್ಕೆ ಸಜ್ಜಾಗಿತ್ತು ಒಳಗೂ ಹೊರಗೂ. +ಒಳಗೆ ಬೆಂಚು, ಕುರ್ಚಿ, ಪಟಗಳು. ಹೊರಗೆ ಮಾವು ಹಲಸಿನ ತೋರಣ, ಬಗನಿ ಬಾಳೆಯ ಗಿಡಗಳನ್ನು ಕಟ್ಟಿ ಸಿಂಗರಿಸಿದ್ದ ಅಡಕೆ ಮರದ ಚಪ್ಪರ. +ಪ್ರಾರಂಭೋತ್ಸವದ ಸಮಯ ಸಾಯಂಕಾಲವೆಂದು ಗೊತ್ತಾಗಿದ್ದರೂ ಆ ದಿನ ಪ್ರಾತಃಕಾಲವೆ ಒಂದು ಸಣ್ಣ ಗುಂಪು ಅಲ್ಲಿ ಸೇರಿತ್ತು. +ಬೆಳಿಗ್ಗೆ ಅಲ್ಲಿ ನಡೆಯುವುದೆಂದು ಗೊತ್ತಾಗಿದ್ದ ಸಮಾರಂಭವು ಸಾರ್ವಜನಿಕ ಸ್ವರೂಪದ್ದಾಗಿರಲಿಲ್ಲ, ಖಾಸಗಿಯಾದಾಗಿತ್ತು. +ಒಂದು ರೀತಿಯಲ್ಲಿ ಗೋಪ್ಯವಾದದ್ದೂ ಆಗಿತ್ತು. +ಬೆಟ್ಟಳ್ಳಿ ದೇವಯ್ಯಗೌಡರ ಮತಾಂತರ ಸಮಾರಂಭ! +ಅಂತಹ ಮತಾಂತರಕಾರ್ಯ ಗುಟ್ಟಾಗಿ ನಡೆಯಬೇಕಾಗಿರಲಿಲ್ಲ. +ಚರ್ಚಿನಂತಹ ಅಥವಾ ಚರ್ಚು ಇಲ್ಲದೆಡೆಗಳಲ್ಲಿ ಪ್ರಾರ್ಥನಾ ಮಂದಿರದಂತಹ ಪವಿತ್ರ ಸ್ಥಳಗಳಲ್ಲಿ ಸುಪ್ರಕಟವಾಗಿಯೆ ನಡೆಯುತ್ತಿದ್ದುದು ವಾಡಿಕೆಯಾಗಿತ್ತು. +ಅಲ್ಲದೆ ಮಿಶನರಿಗಳಿಗೆ ಅಂತಹ ಪ್ರಕಟನೆ ಮತ್ತು ಪ್ರಚಾರದ ಅವಶ್ಯಕತೆಯೂ ಇತ್ತು. +ಆದರೆ ದೇವಯ್ಯಗೌಡರ ಸಕಾರಣವಾದ ಅಪೇಕ್ಷೆಯಂತೆ ಅವರ ಮತಾಂತರವನ್ನು ಸಧ್ಯಕ್ಕೆ ಅಂತರಂಗವಾಗಿಯೆ ನಡೆಯಿಸಲು ಒಪ್ಪಿಕೊಂಡಿದ್ದರು ರೆಬರೆಂಡ್ ಲೇಕ್ ಹಿಲ್ ಪಾದ್ರಿಗಳು.” +ದೇವಯ್ಯನವರ ಬಂಧುಬಾಂಧವರೆಲ್ಲ ಅವರ ಮತಾಂತರಕ್ಕೆ ವಿರೋಧವಾಗಿದ್ದಾರೆ. +ದೇವಯ್ಯನವರು ಮಾತ್ರ ಪವಿತ್ರ ಬೈಬಲ್ಲಿನ ಉಪದೇಶಗಳಿಗೂ ದೇವರ ಕುಮಾರ ಯೇಸುಕ್ರಿಸ್ತನ ವ್ಯಕ್ತಿತ್ವಕ್ಕೂ ಮಾರುಹೋಗಿ, ಬ್ರಾಹ್ಮಣರ ಹಿಂದೂ ಧರ್ಮದ ಮೌಢ್ಯ ವಲಯದಿಂದ ಹೊರಬರಲು ಕಾತರರಾಗಿದ್ದಾರೆ. +ಬ್ರಾಹ್ಮಣರ ಜಗದ್ ಗುರುಗಳೂ ಆವರ ಮಠಗಳೂ ಅವರ ಪುರೋಹಿತರು ನಾಮಧಾರಿ ಗೌಡರ ಜನಾಂಗವನ್ನು ಕೀಳುಭಾವನೆಯಿಂದ ಕಾಣುತ್ತಿರುವುದನ್ನೂ, ಅವರು ವಿದ್ಯೆ ಕಲಿತು ಮುಂದಕ್ಕೆ ಬರದಂತೆ ಮಾಡಲು ವರ್ಣಾಶ್ರಮಧರ್ಮ ಸ್ವಧರ್ಮಪರಿಪಾಲನೆ ಮೊದಲಾದ ತತ್ವಗಳನ್ನು ತಂದೊಡ್ಡಿ, ತಾವೇ ಬರೆದಿಟ್ಟಿರುವ ಸಂಸ್ಕೃತ ಶ್ಲೋಕಗಳನ್ನು ಉದ್ಧರಿಸಿ, ಆ ಶಾಸ್ತ್ರೋಕ್ತಿಯನ್ನು ಉಲ್ಲಂಘಿಸಿದರೆ ದೇವರ ಕೋಪಕ್ಕೂ ಬ್ರಾಹ್ಮಣರ ಶಾಪಕ್ಕೂ ಗುರಿಯಾಗಿ ನರಕಕ್ಕೆ ಹೋಗುತ್ತಾರೆಂದು ಹೆದರಿಸುವುದನ್ನೂ ಸಹಿಸಿ ಸಹಿಸಿ, ಅವರಿಗೆ ಸಾಕಾಗಿದೆ. +ಆದ್ದರಿಂದ ಈ ಬ್ರಾಹ್ಮಣರ ಹಿಡಿತದಿಂದ ಹೊರಬಂದು ತಮ್ಮ ಜನಾಂಗದ ಉದ್ದಾರವನ್ನು ಸಾಧಿಸಬೇಕೆಂಬುದೇ ಅವರ ಅಭಿಲಾಷೆ…. +ಆದರೆ ಸದ್ಯದ ಸಾಮಾಜಿಕ ಪ್ರಸ್ಥಿತಿಯಲ್ಲಿ, ಸದ್ಯಕ್ಕಾದರೂ, ತಾವು ಬಹಿರಂಗವಾಗಿ ಕ್ರೈಸ್ತ ಮತಕ್ಕೆ ಸೇರುವುದರಿಂದ ತಮ್ಮ ಉದ್ದೇಶ ಸಾಧನೆಗೆ ಅನುಕೂಲವಾಗುವುದರ ಬದಲು ಪ್ರತಿಕೂಲವೆ ಹೆಚ್ಚಾಗ ಬಹುದಾದ್ದರಿಂದ ಅವರು ತಮ್ಮ ಮಾತಾಂತರವನ್ನು ಸದ್ಯಕ್ಕೆ ಗೋಪ್ಯವಾಗಿಡಲು ಬಯಸಿದ್ದಾರೆ.” +ಉಪದೇಶಿ ಜೀವರತ್ನಯ್ಯನ ಈ ವಾದ ರೆವರೆಂಡ್ ಅವರಿಗೆ ಸಾಧುವಾಗಿಯೂ ಸತರ್ಕವಾಗಿಯೂ ತೋರಿತ್ತು. +ದೇವಯ್ಯಗೌಡರನ್ನು ಗಲಾಟೆಯಿಲ್ಲದೆ, ಗಲಾಟೆಗೆ ಅವಕಾಶವಾಗದಂತೆ, ಗುಟ್ಟಾಗಿ ಮತ್ತು ಸರಳವಾಗಿ ಖುದ್ದು ತಾವೆ ಮತಾಂತರಗೊಳಿಸಲು ಒಪ್ಪಿದ್ದರು. +ಸಧ್ಯಕ್ಕೆ ಗೌಡರ ಹಿಂದೂ ಹೆಸರನು ಕ್ರೈಸ್ತ ಹೆಸರಿಗೆ ಬದಲಾಯಿಸಬಾರದೆಂದೂ ವಸನವೇಷಭೂಷಣಗಳಲ್ಲಿ ಬಾಹ್ಯಕವಾದ ಯಾವ ವ್ಯತ್ಯಾಸವೂ ಗೋಚರವಾಗದಂತಿರಬೇಕೆಂದೂ ತೀರ್ಮಾಣವಾಗಿತ್ತು. +ತೀರ್ಮಾನದ ಎರಡನೆಯ ಭಾಗಕ್ಕೆ ನಿಜವಾಗಿಯೂ ಅವಶ್ಯಕತೆ ಇರಲಿಲ್ಲ. +ಆಗಬೇಕಾದ ಪರಿವರ್ತನೆಯಲ್ಲ ಮೊದಲೆ ಆಗಿಯೆ ಹೋಗಿತ್ತು. +ಕ್ಯಾಥೋಲಿಕ್ಕರಂತೆ ಯಾವ ವಿಧವಾದ ಶಿಲುಬೆಯ ಲಾಂಛನವನ್ನೂ ಕೊರಳಲ್ಲಿ ಧರಿಸದ ಪ್ರೋಟೆಸ್ಟೆಂಟ್ ರಿಗೂ ನಾಮಧಾರಿಗಳಿಗೂ, ಜುಟ್ಟು ತ್ತೆಗೆದು ಕ್ರಾಪು ಬಿಡುವುದೊಂದನ್ನು ಬಿಟ್ಟರೆ, ಹೆಚ್ಚು ಬಾಹ್ಯಕವಾದ ಆಂಗಿಕ ವ್ಯತ್ಯಾಸ ಯಾವುದು ಇರಲಿಲ್ಲ. +ದೇವಯ್ಯ ಎಂದೋ ಜುಟ್ಟು ಬೋಳಿಸಿ ಕ್ರಾಪು ಬಿಟ್ಟಾಗಿತ್ತು! +ಇನ್ನು ಹಣೆಯ ಮೇಲೆ ನಾಮಗೀಮ ಧರಿಸುವುದು? +ಅದನ್ನು ಅವನು ತಿರಸ್ಕರಿಸಿ ಎಷ್ಟೋ ಕಾಲವಾಗಿತ್ತು! +ಸಾಮಾನ್ಯ ಜನದ ಮಟ್ಟಿಗೆ ಹೇಳುವುದಾದರೆ, ಅವರ ದೃಷ್ಟಿಯಲ್ಲಿ ದೇವಯ್ಯ ಥೇಟು ಕಿಲಸ್ತರವನೆ ಆಗಿದ್ದನು! +ಬಿಳಿಪಾದ್ರಿ ಕರಿಪಾದ್ರಿ ಇಬ್ಬರೂ ಬೈಸಿಕಲ್ಲುಗಳ ಮೇಲೆ ಬಂದಿದ್ದರು. +ಇಷ್ಟಪಟ್ಟಿದ್ದರೆ ಲೇಕ್ ಹಿಲ್ ದೋರೆಸಾನಿಯೊಡನೆ ಕೋಚಿನಲ್ಲಿಯೆ ತೀರ್ಥಹಳ್ಳಿಯಿಂದ ಮೇಗರವಳ್ಳಿಗೆ ಬರಬಹುದಾಗಿತ್ತು. +ಅವನು ಇಷ್ಟಪಟ್ಟಿದ್ದರೆ ತೀರ್ಥಹಳ್ಳಿಯ ಅಮಲ್ದಾರರೂ ಪೋಲೀಸು ಇನ್ಸಪೇಕ್ಟರೂ ರೆವರೆಂಡ್ ಸಾಹೇಬರಿಗೆ ಮೈಗಾವಲಾಗಿ ಪರಿವಾರ ಬರುತ್ತಿದ್ದರು. +ಏಕೆಂದರೆ, ಆಳುವ ಬ್ರಿಟಿಷರ ಕ್ರೈಸ್ತಮತಕ್ಕೆ ಸೇರಿದ್ದು, ಕ್ರೈಸ್ತಮತ ಪ್ರಚಾರಕ ಗುರುವಾಗಿದ್ದ ಆತನಿಗೆ ಸರಕಾರದ ಆಡಳಿತ ಯಂತ್ರವೆಲ್ಲ ಕಂ ಕಿಂ ಎನ್ನದೆ ಕೈಂಕರ್ಯ ಸಲ್ಲಿಸಬೇಕೆಂದು ಮೇಲಿಂದ ಕಟ್ಟಾಜ್ಞೆಯಿದ್ದಿತು. +ಅಲಿಖಿತವಾಗಿ, ಆದರೂ ಕಟ್ಟು ನಿಟ್ಟಾಗಿ. +ಆದರೆ ಇಂದು ಮತಾಂತರ ಕಾರ್ಯವು ಸಂಪ್ರದಾಯ ಸಮಾಜದ ಅಂಧರೋಷವನ್ನು ಕೆರಳಿಸದ ರೀತಿಯಲ್ಲಿ ಗಲಾಟೆಯಿಲ್ಲದೆ ನಡೆಯುವುದು ಬಹುಮುಖ್ಯವಾಗಿತ್ತು; +ಜೊತೆಗೆ ಆಗತಾನೆ ತುದಿಮುಟ್ಟುತ್ತಿದ್ದ ಮಳೆಗಾಲದ ರಸ್ತೆಯೂ ತುಂಬ ಕೆಟ್ಟುಹೋಗಿತ್ತು? +ಸಧ್ಯಕ್ಕೆ ಐಗಳು ಅನಂತಯ್ಯನವರನ್ನೆ ಹೆಡ್ ಮಾಸ್ಟರ್ ಆಗಿ ನೇಮಿಸಿ ಕೊಂಡಿದ್ದರು. +ಉಪದೇಶಿ ಜೀವರತ್ನಯ್ಯನ ಸಿಫಾರಸಿನ ಮೇಲೆ. +ಅದಕ್ಕೆ ಅನಿವಾರ್ಯವಾದ ಕೆಲವು ಕಾರಣಗಳಿದ್ದವು. +ಊರುಮನೆಯವರನ್ನೆ ನೇಮಿಸುವುದರಿಂದ ಸುತ್ತಮುತ್ತಣ ಹಳ್ಳಿಯ ಜನರು ತಮ್ಮ ಮಕ್ಕಳನ್ನು ಕಿಲಸ್ತರ ‘ಇಸ್ಕೋಲ್ಮನೆ’ಗೆ ಸೇರಿಸಿದರೆ ಜಾತಿ ಕೆಡಸಿಬಿಡುತ್ತಾರೆ ಎಂಬ ಸಂಶಯದಿಂದ ಪಾರಾಗಿ ಸ್ಕೂಲಿನ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತದೆ ಎಂಬುದು ಒಂದು. +ಎರಡನೆಯದಾಗಿ, ಕ್ರೈಸ್ತರಾಗಿದ್ದು ಅರ್ಹರಾಗಿರುವ ಉಪಧ್ಯಾಯರು ಯಾರೂ ಆ ಕೊಂಪೆಗೆ ಬರುವಂತಿರಲಿಲ್ಲ. +ಮೂರನೆಯದು, ಮಿಶನರಿಗಳು ಕೊಡುತ್ತಿದ್ದ ಆ ಅತ್ಯಲ್ಪ ಸಂಬಳವು ಐಗಳಂಥವರಿಗೆ ಭಾರಿ ತಲುಬಾಗಿ ತೋರಿ ಆಕರ್ಷಣೀಯವಾಗಿರುತ್ತಿದ್ದದು. +ನಾಲ್ಕನೆಯದಾಗಿ ಅಥವಾ ಮೂರನೆಯ ಒಂದು ಉಪಕಾರಣವಾಗಿ, ಕೋಣುರು ಮನೆಯ ಹಿಸ್ಸೆಯ ಅನಂತರ ಅನಂತಯ್ಯನವರಿಗೆ ಅಲ್ಲಿರಲು ಮನಸ್ಸು ಬರಲಿಲ್ಲ. +ಅಕ್ಕಣಿಗೂ ಸೋತಿದ್ದ ರಂಗಪ್ಪಗೌಡರ ಸಡಿಲಕಚ್ಚೆ ಅವರಿಗೆ ಅತೀವ ಅಸಹ್ಯವಾಗಿತ್ತು! +ಹೂವಳ್ಳಿಗೆ ಬಂದು ಇರುತ್ತೇನೆ ಎಂದು ಅವರು ಮುಕುಂದಯ್ಯನಿಗೆ ತಿಳಿಸಿದ್ದರು. +ಮುಕುಂದಯ್ಯನಿಗೂ ಐಗಳಲ್ಲಿ, ತಾನು ಹುಡುಗನಾಗಿದ್ದಾಗಿನಿಂದಲೂ ಗೌರವ ಬುದ್ಧಿಯಿದ್ದು, ಅವರಿಂದ ಭಾರತ ರಾಮಾಯಣಾದಿಗಳನ್ನು ಓದಿ ಅರ್ಥಮಾಡಿಕೊಳ್ಳುವುದನ್ನು ಕಲಿತಿದ್ದನಾದ್ದರಿಂದ, ಒಂದು ಗುರು ಶಿಷ್ಯ ಸಂಬಂಧ ಬೆಳೆದುಬಿಟ್ಟಿತ್ತು; +ಆದರೆ ಐಗಳನ್ನು ಮುಕುಂದಯ್ಯನೇ ಕೋಣುರಿನಿಂದ ಬಿಡಿಸಿ ಹೂವಳ್ಳಿಗೆ ಕರೆದೊಯ್ದು ತಾನು ಹುಟ್ಟಿ ಬೆಳೆದು ದೊಡ್ಡವನಾದ ಮನೆಯ ಕೆಲಸಕಾರ್ಯಗಳಿಗೆ ಅಡ್ಡಿ ತಮ್ದನೆಂದು ಅಪಖ್ಯಾತಿ ಬರುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ, ಸದ್ಯಕ್ಕೆ ಐಗಳು ಬೇರೆ ಇನ್ನೆಲ್ಲಿಯಾದರೂ ಕೆಲಸಕ್ಕೆ ಸೇರಿಕೊಳ್ಳುವುದು ಉತ್ತಮವೆಂದು ಸೂಚಿಸಿದ್ದನು. +ಅಲ್ಲದೆ, ಎಲ್ಲಕ್ಕಿಂತಲೂ ಹೆಚ್ಚಾಗಿ, ಆಗ ತತ್ಕಾಲದಲ್ಲಿ ಅತಿ ಮುಖ್ಯವೆಂಬಂತೆ  ತೋರುತಿದ್ದರೂ, ಮೇಗರವಳ್ಳುಯ ಮತ್ತು ಮಲೆನಾಡಿನ ಮತ್ತು ಕನ್ನಡನಾಡಿನ ಮತ್ತು ಭರತ ಭೂಮಿಯ ಭಾವೀ ಪ್ರಗತಿಯ ಮತ್ತು ಜಾಗ್ರತಿಯ ದೃಷ್ಠಿಯಿಂದ ನಿಜವಾಗಿಯೂ ಬಹು ಮುಖ್ಯವಾದದ್ದೆಂದು ಮುಂದೆ ಗೊತ್ತಾಗುವಂತಹ ಮತ್ತೊಂದು ದೈವಿಕ ಉದ್ದೇಶದ ಕಾರಣವೂ ಒಂದು ಇತ್ತು. + ಅಗೋಈಚರವಾಗಿ ಅಂತರ್ಗತವಾಗಿ, ಗೂಢವಾಗಿ, ಹಳೆಮನೆ, ಕೋಣುರು, ಹೂವಳ್ಳೀ, ಬೆಟ್ಟಳ್ಳಿ, ಕಲ್ಲೂರು ಸಿಂಬಾವಿ ಮೊದಲಾದ ಸುತ್ತಮುತ್ತಣ ಹಳ್ಳಿಗಳಲ್ಲಿದ್ದು, ಓದು ಬರಹ ಕಲಿಯಲು ಇಷ್ಟಪಡುವ ಹುಡುಗರೆಲ್ಲ, ಅಂತಕ್ಕನ ಮನೆಯಲ್ಲಿದ್ದುಕೊಂಡು ಮಿಶನ್ ಇಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡುವುದೆಂದು ನಿರ್ಣಯವಾಗಿತ್ತು. +ಅದುವರೆಗೂ ‘ಓಟ್ಲುಮನೆ’ಯಾಗಿದ್ದ ಅಂತಕ್ಕನ ಮನೆ ‘ವಿದ್ಯಾರ್ಥಿ ನಿಲಯ’ವಾಗಿ ಪರಿವರ್ತನೆಗೊಳ್ಳುವದನ್ನೆ ಇದಿರು ನೋಡುತ್ತಿತ್ತು. +ಕೆಲವೆ ತಿಂಗಳ ಹಿಂದೆ ಮಗಳನ್ನು ದುರಂತವಾಗಿ ಕಳೆದುಕೊಂಡಿದ್ದು ಮುದುಕಿಯಾಗುತ್ತಿದ್ದ ಅಂತಕ್ಕನ ಬದುಕಿಗೂ, ಮಕ್ಕಳ ಸಹವಾಸದ ಮತ್ತು ಸೇವೆಯ ಅಕ್ಕರೆಯ ಆಪು ಸಿಕ್ಕಿ, ಪುನಶ್ಚೇತನಗೊಳ್ಳುವ ಸುಯೋಗ ಸಮೀಪಿಸಿತ್ತು…. +ಕೋವಿ ಹಿಡಿದಿದ್ದ ಮುಕುಂದಯ್ಯ, ಹಿಂಬಾಲಿಸಿದ್ದ ಐತನೊಡನೆ, ಅಂತಕ್ಕನ ಮನೆಯನ್ನು ದಾಟಿ ಇಸ್ಕೂಲಿನ ಹತ್ತಿರಕ್ಕೆ ಬಂದಾಗ, ಸ್ವಲ್ಪ ದೂರದಲ್ಲಿ ಕಾಡಿನ ಅಂಚಿನಲ್ಲಿ ಬಿದ್ದಿದ್ದ ಒಂದು ಮರದ ಮೇಲೆ ಕುಳಿತು ಸಂಭಾಷಣೆಯಲ್ಲಿ ತೊಡಗಿದ್ದ ಐಗಳು ಅನಂತಯ್ಯನವರನ್ನೂ ಕಣ್ಣಾ ಪಂಡಿತರನ್ನೂ ಕಂಡನು. +ಅವರಿಬ್ಬರೂ ಮುಕುಂದಯ್ಯನ ಕಡೆ ನೋಡಿ ಮುಗುಳು ನಕ್ಕರು, ಭಾಗವತರಾಟ ಪ್ರಾರಂಭವಾಗುವುದಕ್ಕೆ ರಂಗಸ್ಥಳ ಸಿದ್ದವಾಗಿದೆ ಎಂಬಂತೆ! +ತನಗೆ ಸಂಬಳ ಕೊಡುವ ಅಧಿಕಾರಿಯ ಆಜ್ಞೆಯಂತೆ ಬೆಳಿಗ್ಗೆಯ ಜರುಗಲಿದ್ದ ಮತಾಂತರ ಪವಿತ್ರ ಕ್ರಿಯೆಗೂ ಮತ್ತು ಸಂಜೆಗೆ ನಡೆಯುವುದೆಂದು ಗೊತ್ತಾಗಿದ್ದ ಸ್ಕೂಲಿನ ಪ್ರಾರಂಭೋತ್ಸವಕ್ಕೂ ಬೇಕಾದುದನ್ನೆಲ್ಲ ಅಣಿಗೊಳಿಸಿ, ಕಿಲಸ್ತರ ಜಾತಿ ವಿಷಯಕವಾದ ಕಾರ್ಯದಲ್ಲಿ ತಾನು ಪಾಲುಗೊಳ್ಳುವುದು ತನಗೆ ನಿಷಿದ್ದವೆಂದು ಕ್ಷಮೆ ಕೇಳಿ, ಹೆಡ್ ಮಾಸ್ಟರ್ ಅನಂತಯ್ಯನವರು ಆ ಪ್ರಾತಃ ಕಾಲದ ಗೋಪ್ಯ ಸಮಾರಂಭದಿಂದ ದೂರ ಸರಿದಿದ್ದರು. +ಆದರೆ ಅವರಿಗೆ ಗೊತ್ತಿತ್ತು, ಮುಂದೆ ಏನಾಗುತ್ತದೆ ಎಂಬುದು. +ಅದನ್ನೆ ಕುರಿತು ಅವರು ಕಣ್ಣಾ ಪಂಡಿತರೊಡನೆ ಮಾತಾಡುತ್ತಿದ್ದುದು. +ಕೋವಿಯೊಡನೆ ಬಂದಿದ್ದ ಮುಕುಂದಯ್ಯನನ್ನು ಕಂಡು, ಅವನ ಧಾರ್ಮಿಕ ಸಾಹಸಕ್ಕೆ ತಮ್ಮ ಸಂಪೂರ್ಣ ಸಮ್ಮತಿ ಮತ್ತು ಬೆಂಬಲವನ್ನು ಸೂಚಿಸುವಂತೆ ಅವರಿಬ್ಬರೂ ಮುಗುಳುನಗೆಯಿಂದ ಅವನನ್ನು ಸ್ವಾಗತಿಸಿ ಹುರಿದುಂಬಿಸಿದ್ದರು…. +ಮುಕುಂದಯ್ಯ ಐತನ ಕಿವಿಯಲ್ಲಿ ಏನನ್ನೊ ಪಿಸುಗುಟ್ಟಿ ಕಳಿಸಿದನು…. +ಪೀಟಿಲು ಕೊಯ್ದು ಪ್ರಾರ್ಥನೆ ನಡೆಸುತ್ತಿದ್ದ ಉಪದೇಶಿ ಜೀವರತ್ನಯ್ಯನವರು ಬೆಳಕಂಡಿಯ ಕಡೆಗೆ ನೋಡುತ್ತಾರೆ. +ಒಂದು ಕೋವಿಯ ನಳಿಗೆಯ ಬಾಯಿ ತಮ್ಮ ಕಡೆಗೇ ಗುರಿಯಿಟ್ಟು ಕಿಟಕಿಯ ಮರದ ಸರಳುಗಳ ಮಧ್ಯೆ ತೂರುತ್ತಿದೆ! +ಯೇಸುಕ್ರಿಸ್ತ, ಬೈಬಲ್ಲು, ಕ್ರೈಸ್ತಮತ, ಧರ್ಮಪ್ರಚಾರ, ಉಪದೇಶಿತ್ವ, ಪಾದ್ರಿತ್ವ ಇತ್ಯಾದಿಯಾದೆಲ್ಲ ಮನುಷ್ಯತ್ವದ ಉಪಾಧಿಗಳೂ ತಟಕ್ಕನೆ ಕಳಚಿಬಿದ್ದು, ಅವರ ಜೀವ ತನ್ನ ಪ್ರಾಣಿತ್ವದ ಮೂಲೋಪಾದಿಯೊಂದನ್ನು ಮಾತ್ರ ಅವಲಂಬಿಸಿದೆ. +ಬತ್ತಲೆ ನಿಂತಂತಾಯಿತು! +ಬದುಕಿದರೆ ಬೆಲ್ಲ ತಿಂದೇನು ಎಂಬಂತೆ ಹೌಹಾರಿ, ಪೀಟಿಲನ್ನೂ ಸುವಾರ್ತೆಯನ್ನೂ ಹೊತ್ತುಹಾಕಿ, ಮರೆಯಾಗಿ ಅವಿತುಕೊಳ್ಳಲು ಒಂದು ಮೂಲೆಯ ಕಡೆಗೆ ಓಡಿದರು. +ಅವರಿಗೆ ಏನು?ಯಾರು?ಏಕೆ? +ಎಂಬುದೊಂದೂ ಅರ್ಥವಾಗದಿದ್ದರೂ ತನ್ನನ್ನು ಗುಂಡಿಕ್ಕಿ ಕೊಲೆಮಾಡಲು ಹವಣಿಸುತ್ತಿದ್ದಾರೆ ಎಂಬುದಂತೂ ಚೆನ್ನಾಗಿ ಅರ್ಥವಾಗಿತ್ತು. +ಮೊನ್ನೆ ತಾನೆ ಬುಯಲುಸೀಮೆಯ ಒಂದು ಹಳ್ಳಿಯಲ್ಲಿ, ಕಿಲಸ್ತರ ಜಾತಿಗೆ ತನ್ನ ಮಗನನ್ನು ಸೇರಿಸಲು ಹವಣಿಸುತ್ತಿದ್ದ ಒಬ್ಬ ಪಾದ್ರಿಯನ್ನು ರೈತನೊಬ್ಬನು ದೊಣ್ಣೆಯಿಂದ ಹೊಡೆದು ಕೊಂದಿದ್ದ ಸುದ್ದಿ ಬಂದಿದ್ದು, ಅದರ ನೆನಪಿನ್ನೂ ಹಸಿಗಾಯವಾಗಿಯೆ ಇತ್ತು, ಜೀವರತ್ನಯ್ಯನ ಮನಸ್ಸಿನಲ್ಲಿ. +ಆ ಮತಾಂತರದ ಯಜ್ಞದಲ್ಲಿ ಯೂಪಸ್ತಂಭಕ್ಕೆ ಕಟ್ಟುಗೊಂಡು ಬಲಿಪಶು ವಾಗಿದ್ದ ದೇವಯ್ಯ, ತನ್ನ ರಕ್ಷಣೆಗೆ ಬರುತ್ತೇನೆಂದು ಭಾಷೆಯಿತ್ತು ಮೋಸಮಾಡಿ ಬಿಟ್ಟನೇನೋ ಎಂದು ಕಳವಳಿಸುತ್ತಾ, ಮುಕುಂದಯ್ಯನ ಆಗಮನವನ್ನೇ ನಿರೀಕ್ಷಿಸುತ್ತಿದ್ದವನು, ಮರದ ಸರಳುಗಳ ನಡುವೆ ಬೆಳಕಂಡಿಯಲ್ಲಿ ತೂರಿದ ಕೋವಿಯ ನಳಿಗೆಯನ್ನು ಕಂಡು, ಸದ್ಯಕ್ಕೆ ಬದುಕಿದೆ!ಎಂದು ಕೊಂಡನು. +ತಟಕ್ಕನೆ ತನ್ನ ನಾಟಕಾಭಿನಯವನ್ನು ಪ್ರಾರಂಭಿಸಿ ಬಿಳಿ ಪಾದ್ರಿ ರೆವರೆಂಡ್ ಲೇಕ್ ಹಿಲ್ಲರನ್ನು, ಪ್ರಾಣಾಪಾಯದಿಂದ ತಪ್ಪಿಸಲೆಂಬಂತೆ ತೋಳ್ವಿಡಿದು ಎಳೆದುಕೊಂಡೆ ಓಡಿದನು, ಕರಿ ಪಾದ್ರಿ ಅವಿತುಕೊಂಡಿದ್ದ ಮೂಲೆಗೆ! +ಅಷ್ಟರಲ್ಲಿ ಕಿಟಕಿಯ ಆಚೆಯಿಂದ ಮೊಳಗಿತು ಮುಕುಂದಯ್ಯನ ರುದ್ರವಾಣಿ. +“ಪಾದ್ರಿಗಳೆ, ನನ್ನ ಬಾವನಿಗೆ ಜಾತಿ ಕೆಡಿಸುವ ಕೆಲಸ ಮಾಡುತ್ತಿದ್ದೀರಿ. +ಬಾವಿಗೆ ಹಾರಲಿದ್ದ ನನ್ನ ಅಕ್ಕನನ್ನು ತಡೆದು ನಿಲ್ಲಿಸಿ ಬಂದಿದ್ದೇನೆ. +ಒಳ್ಳೆಯ ಮಾತಿಗೆ, ನನ್ನ ಭಾವವನ್ನು ಕಿಲಸ್ತರ ಜಾತಿಗೆ ಸೇರಿಸುವವುದಿಲ್ಲ ಎಂದು ನಿಮ್ಮ ದೇವರ ಮೇಲೆ ಆಣೆಯಿಟ್ಟು ಅವನನ್ನು ಬಿಟ್ಟುಕೊಡದಿದ್ದರೆ ನಿಮ್ಮನ್ನೆಲ್ಲ ಸುಟ್ಟುಬಿಡುತ್ತೇನೆ!” +“ದೇವಯ್ಯಗೌಡರೆ, ನಿಮ್ಮ ಭಾವನಿಗೆ ಬುದ್ಧಿ ಹೇಳಿ. +ಅವರು ಮಾಡುತ್ತಿರುವುದು ಕ್ರಿಮಿನಲ್ ಕಾರ್ಯ. +ಅದಕ್ಕೆ ತಕ್ಕ ಶಿಕ್ಷೆಯಾಗುತ್ತದೆ!” ಎಂದರು ರೆವರೆಂಡ್ ಲೇಕ್ ಹಿಲ್. +ಅವರು ಉಪದೇಶಿ ಜೀವರತ್ನಯ್ಯನಂತೆ ದಿಗಿಲುಗೊಂಡಿರಲಿಲ್ಲ. +ಇಷ್ಟರಲ್ಲಿ ಉಪದೇಶಿ ಜೀವರತ್ನಯ್ಯನವರು ಸ್ಕೂಲಿಗೆ ಇದ್ದ ಏಕೈಕ ಬಾಗಿಲ ಬಳಿಗೆ ಧಾವಿಸಿ, ಅದನ್ನು ತೆರೆಯಲೆಂದು ಎಳೆದರು, ಬಾಗಿಲಿಗೆ ಹೊರಗಡೆಯಿದ್ದ ಸರಪಣಿಯ ಚಿಲಕವನ್ನು ಐತ, ಮುಕುಂದಯ್ಯನ ಅಪ್ಪಣೆಯಂತೆ, ಹಾಕಿಕೊಂಡು, ಅದರ ರಕ್ಷಣೆಗೆ ಕತ್ತಹಿಡಿದು ನಿಂತಿದ್ದನಾದ್ದರಿಂದ ಅದು ತೆರೆಯಲೊಲ್ಲದೆಹೋಯ್ತು! +ಮೇಲುಸಿರು ಕೀಳುಸಿರು ಬಿಡುತ್ತಾ ಉಪದೇಶಿ ಕೂಗಿದರು. +“ದೇವಯ್ಯಗೌಡರೆ, ನೀವೇ ಹೊಣೆಯಾಗುತ್ತೀರಿ, ರೆವರೆಂಡ್ ಅವರಿಗೆ ಏನಾದರೂ ಆದರೆ! +ಇಡೀ ಬ್ರಿಟಿಷ್ ಚಕ್ರಾಧಿಪತ್ಯವೆ ನಿಮ್ಮ ಮನೆಮಾರುಗಳನ್ನೆಲ್ಲಾ ಧ್ವಂಸಮಾಡಿಬಿಡುತ್ತದೆ! +ನಮ್ಮನ್ನು ರಕ್ಷಿಸುವ ಭಾರ ನಿಮ್ಮದು!” +“ಹೆದರಬೇಡಿ, ಉಪದೇಶಿಗಳೇ! +ನಾನು ಹೇಗಾದರೂ ಮಾಡಿ ನಿಮ್ಮನ್ನು ಉಳಿಸುತ್ತೇನೆ!” ನಾಟಕದ ಮಾತನಾಡಿ ದೇವಯ್ಯಗೌಡರು ಕಿಟಕಿಯ ಕಡೆಗೆ ನೋಡಿದಾಗ ಅಲ್ಲಿ ಕೋವಿಯ ನಳಿಗೆ ಕಾಣಿಸಲಿಲ್ಲ. +ಆದರೆ ಅದು ಆ ಕಿಟಕಿಯ ಎದುರಿಗಿದ್ದ ಗೋಡೆಯ ಕಿಟಕಿಯಿಂದ ತೂರುತ್ತಿತ್ತು! +ಈ ಕಿಟಕಿಗೆ ಮರೆಯಾಗಿ ಮೂಲೆಹಿಡಿದು ನಿಂತಿದ್ದವರೆಲ್ಲ ಆ ಕಿಟಕಿಗೆ ತೆರೆದಿಟ್ಟಂತೆ ಕಾಣಿಸುತ್ತಿದ್ದರು! +ಯಾವಾಗ ಕೋವಿಯ ನಳಿಗೆ ತಮ್ಮ ಕಡೆಗೆ ಮುಖವಾಡಿತೋ ಅವಾಗ ಉಪದೇಶಿ ಅಲ್ಲಿದ್ದವರನ್ನೆಲ್ಲ ತಳ್ಳಿಕೊಂಡುಹೋಗಿ ಎದುರಿಗಿದ್ದ ಮತ್ತೊಂದು ಮೂಲೆಯಲ್ಲಿ ರಕ್ಷಣೆ ಪಡೆದು ನಿಂತರು! +ದೇವಯ್ಯ ಮಾತ್ರ ಕೈಮುಗಿದುಕೊಂಡು, ನೇರವಾಗಿ ಬೆಳಕಂಡಿಯ ಬಳಿಸಾರಿ, ಕೋವಿಯ ನಳಿಗೆಗೆ ಅಡ್ಡನಿಂತು ಬಿನ್ನಯ್ಸಿದನು. + “ಭಾವ, ಮುಕುಂದಬಾವ, ಬೇಡ, ಖಂಡಿತಾ ಬೇಡ! +ನನ್ನನ್ನವರು ಜಾತಿಗೆ ಸೇರಿಸಿಕೊಳ್ಳುವುದಿಲ್ಲ. +ಬಾಗಿಲ ಚಿಲಕ ತೆಗಿ!” +“ಹಾಗೆಂದು ಉಪದೇಶಸಿಗಳೆ ಹೇಳಲಿ. +ಇಲ್ಲದಿದ್ದರೆ ನಾನು ಬಿಡುವುದಿಲ್ಲ!” ಎಂದಿತು ಮುಕುಂದಯ್ಯನ ದೃಢಧ್ವನಿ. +ದೇವಯ್ಯ ಮೂಲೆಗೆ ಹಿಂತಿರುಗಿ, ತನ್ನ ಬಾವನಿಗೆ ಒಮ್ಮೊಮ್ಮೆ ಒಂದು ತರಹದ ಹುಚ್ಚು ಕೆರಳುತ್ತದೆಂದೂ, ಸದ್ಯಕ್ಕೆ ಅಪಾಯದಿಂದ ಪಾರಾಗಬೇಕಾದರೆ ಅವನು ಹೇಳಿದಂತೆ ಮಾಡುವುದೇ ಲೇಸೆಂದೂ ತಿಳಿಸಿದನು. +ರೆವರೆಂಡ್ ಲೇಕ್ ಹಿಲ್ ಹೇಳಿದರು. +“ನಾವೇನೂ ನಿಮ್ಮನ್ನು ಬಲತ್ಕಾರವಾಗಿ ಕ್ರೈಸ್ತಮತಕ್ಕೆ ಸೇರಿಸುತ್ತಿಲ್ಲ. +ನಿಮ್ಮ ಇಷ್ಟದ ಮೇರೆಗೆ ಹಾಗೆ ಮಾಡುತ್ತಿದ್ದೇವೆ. +ನಿಮ್ಮ ಹೆಂಡತಿಯನ್ನು ನೀವು ಒಪ್ಪಿಸದಿದ್ದರೆ ಅದು ನಿಮ್ಮ ತಪ್ಪು. +ಅದು ನನಗೆ ಮೊದಲೆ ಗೊತ್ತಾಗಿದ್ದರೆ ನಿಮ್ಮನ್ನು ಮತಾಂತರಗೊಳಿಸಲು ನಾನೇ ಒಪ್ಪುತ್ತಿರಲಿಲ್ಲ. +ಕ್ರೈಸ್ತರಿಗೆ ನಿಮ್ಮ ಕುಟುಂಬವನ್ನು ನಾಶಗೊಳಿಸುವ ಉದ್ದೇಶ ಎಂದೂ ಇರುವುದಿಲ್ಲ” ಎಂದು ಕರಿಯ ಪಾದ್ರಿಯ ಕಡೆಗೆ ತಿರುಗಿ ಮುಂದುವರಿದರು. +“ಉಪದೇಶಿಗಳೇ, ನೀವು ಅದನ್ನೆಲ್ಲ ಮೊದಲೆ ಚೆನ್ನಾಗಿ ಅರಿಯಬೇಕಿತ್ತು. +ಹೋಗಿ, ದೇವಯ್ಯ ಗೌಡರ ಬಾವನಿಗೆ ತಿಳಿಸಿ, ನಾವು ಯಾರನ್ನೂ ಬಲತ್ಕಾರವಾಗಿ ಕ್ರೈಸ್ತಮತಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬುದಾಗಿ!” +ಪಾಪ, ರೆವರೆಂಡ್ ಸಾಹೇಬರಿಗೆ ಹೇಗೆ ತಾನೆ ಗೊತ್ತಾಗಬೇಕು, ಯೇಸುಕ್ರಿಸ್ತ, ಮತ, ಧರ್ಮ, ಪರಲೋಕ, ದೇವರು ಇವು ಯಾವುದಕ್ಕೂ ಸಂಬಂಧಪಡದ ಪಾದ್ರಿಯ, ಪಾದ್ರಿಯ ಮಗಳ ಮತ್ತು ದೇವಯ್ಯಗೌಡರ ಆಂತರಂಗಿಕವೂ ಶುದ್ಧ ಲೌಕಿಕವೂ ಆಗಿದ್ದ ಗುಪ್ತ ವ್ಯಾವಹಾರಿಕ ಜಟಿಲತೆ? +ಯಾವುದು ಬಹಿರಂಗವಾಗಬಾರದೋ ಅದು ಎಲ್ಲಿ ಹೊರಬಿದ್ದು, ತನಗೆ ಉನ್ನತತರಸ್ಥಾನ ಲಭಿಸುವುದಕ್ಕೆ ಬಲವಾಗಿ ಸ್ಥಾನಾವನತಿಯೆ ಉಂಟಾಗಿಬಿಡುತ್ತದೆಯೋ ಎಂದು ಹೆದರಿ, ಪಾದ್ರಿ ಜೀವರತ್ನಯ್ಯ ಮುಕುಂದಯ್ಯನಿಗೆ ಅವನ ಇಷ್ಟದಂತೆ ಆಶ್ವಾಸನೆಯಿತ್ತು. +ಬಾಗಿಲು ಚಿಲಕ ತೆಗೆಸಿದನು. +“ನಿಮ್ಮ ಭಾವನವರೊಡನೆ ನಾನು ಮಾತನಾಡಬೇಕಾಗಿದೆ, ದಯವಿಟ್ಟು ಅವರನ್ನು ಒಳಗೆ ಕರೆದುಕೊಂಡು ಬನ್ನಿ,” ರೆವರೆಂಡ್ ಅವರು ಕೇಳಿಕೊಳ್ಳಲು, ಮುಕುಂದಯ್ಯನನ್ನು ಕರೆತರಲು ದೇವಯ್ಯ ಹೊರಗೆ ಹೋದನು. +ಪಾದ್ರಿ ಜೀವರತ್ನಯ್ಯನವರು ಇಂಗ್ಲೀಷಿನಲ್ಲಿ ಮಾತನಾಡಲಾರಂಭಿಸಿ, ಲೇಕ್ ಹಿಲ್ ಅವರಿಗೆ ಸ್ಥಳೀಯ ವಿದ್ಯಮಾನಗಳ ವಿಚಾರವಾಗಿ ತಿಳಿವಳಿಕೆ ಉಂಟು ಮಾಡುವ ಉದ್ದೇಶದ ನೆವದಲ್ಲಿ ಅವರಿಗೆ ಮುನ್ನೆಚ್ಚರಿಕೆ ನೀಡಿದರು. +“ಸ್ವಾಮಿ, ತಮಗೆ ಇಲ್ಲಿಯ ಜನರ ನೀತಿ, ರೀತಿ, ನಡೆ, ನುಡಿ ಯಾವುದರ ಪರಿಚಯವೂ ಇಲ್ಲ. +ಇವರೊಡನೆ ನಾವು ತುಂಬ ಎಚ್ಚರಿಕೆಯಿಂದಿರಬೇಕು. +ಈ ದೇವಯ್ಯಗೌಡರ ಬಾವ ಕೋಣೂರಿನವನು. +ಮುಕುಂದಗೌಡ ಎಂದು ಹೆಸರು. +ಅವನು ಕೇಡೆ ನಂಬರ ಒನ್. +ಗುತ್ತಿ ಎಂಬ ಹೆಸರಿನ ಒಬ್ಬ ಹೊಲೆಯನ ಸಂಗಡ ಸೇರಿಕೊಂಡು, ಹುಡುಗಿಯನ್ನು ಅಪಹರಿಸುವುದು, ಮಾರಾಮಾರಿ ಮಾಡಿಸುವುದು, ಪುಂಡುಪೋಕರಿ ಮುಸಲ್ಮಾನರನ್ನು ಕೂಡಿಸಿ ಅತ್ಯಾಚಾರ, ಕೊಲೆ ಮಾಡಿಸುವುದು. +ಹೀಗೆ ಈ ನಾಡಿಗೇ ಒಬ್ಬ ಭೀಕರ ವ್ಯಕ್ತಿಯಾಗಿದ್ದಾನೆ. +ಒಂದೆರಡು ತಿಂಗಳ ಹಿಂದೆ, ಸಿಂಬಾವಿಯ ಒಬ್ಬ ಗೌರವಸ್ಥ ಹೆಗ್ಗಡೆಯವರ ಮದುವೆ ಗೊತ್ತಾಗಿದ್ದು, ಇನ್ನೇನು ಲಗ್ನದ ಮೂಹೂರ್ತ ಬಂದಿತು ಎನ್ನುವಷ್ಟರಲ್ಲಿ, ಈ ಮುಕುದಂಗೌಡ ಮದುಮಗಳಾಗುವ ಆ ಹುಡುಗಿಯನ್ನು ಅಪಹರಿಸಿ,ಯಾವುದೊ ಕಾಡಿನಬಲ್ಲಿ ಹುದುಗಿಸಿಟ್ಟನಂತೆ. +ಅವಳ ತಂದೆಯನ್ನೂ ಅವನೆ ಕೊಲ್ಲಿಸಿದ ಎಂದು ಹೇಳುತ್ತಾರೆ. +ಈಗ ಆ ಹುಡುಗಿಯ ಮನೆ ಆಸ್ತಿ-ಪಾಸ್ತಿಯನ್ನೆಲ್ಲ ಲಪಾಟಾಯಿಸಿ ಕೊಂಡು ಅವಳ ತಂದೆಗೆ ಆ ಹುಡುಗಿ ಒಬ್ಬಳೆ ಮಗಳಂತೆ ಅವಳ ಮನೆಯಲ್ಲಿಯೆ ಇದ್ದುಬಿಟ್ಟಿದ್ದಾನಂತೆ. +ಇನ್ನೂ ಅವಳನ್ನು ಮದುವೆ ಮಾಡಿಕೊಂಡೂ ಇಲ್ಲ; +ಮಾಡಿಕೊಳ್ಳುತ್ತೇನೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾನಂತೆ. +ಅಷ್ಟರಲ್ಲಿ, ಅವಳು ಗರ್ಭಿಣಿ ಆಗಿಬಿಟ್ಟಿದ್ದಾಳೆ ಎಂದೂ ವದಂತಿ! +ಇನ್ನು, ಅವರ ಜಾತಿಯ ನೀತಿಯ ಪ್ರಕಾರ ಅವಳನ್ನು ಅಕ್ರಮ ಗರ್ಭಿಣಿ ಎಂದು ಸಾರಿ, ಬಹಿಷ್ಕಾರ ಹಾಕಿಸಿ ಹೊರಗಟ್ಟಿ, ಆಕೆಯ ಮನೆಮಾರನ್ನೆಲ್ಲ ತಮ್ಮ ಹೆಸರಿಗೆ ಮಾಡಿಸಿಕೊಳ್ಳಬೇಕೆಂದು, ಬಹುಶಃ ಅವನ ಒಳ ಇರಾದೆ ಇರಬೇಕು! +ಬೆಟ್ಟಳ್ಳಿಯ ಹೊಲೆಯ ಬಚ್ಚ ಎಂಬಾತನನ್ನು ಕ್ರೈಸ್ತಮತಕ್ಕೆ ಸೇರಿಸಿಕೊಳ್ಳುತ್ತಾರೆಂದು ಸುದ್ದಿ ಹಬ್ಬಿಸಿ, ಅವನಿಗೆ ಗೊತ್ತಾಗಿದ್ದ ಹುಡುಗಿಯನ್ನು ಸಿಂಬಾವಿಯ ಹೊಲೆಯ ಗುತ್ತಿ ಎಂಬ ಹೆಸರಿನ ಕೇಡಿಯ ಮುಖಾಂತರ ಅಪಹರಿಸಿ, “ನಾವು ಅಂದೆಮ್ಮೊ ತೀರ್ಥಹಲ್ಳಿಯ ಹೊಳೆಯನ್ನು ದೋಣಿಯಲ್ಲಿ ದಾಟಿ ಹೋಗಿದ್ದೆವಲ್ಲಾ? +ಸುಬ್ಬಯ್ಯಗೌಡರು ಚಂದ್ರಯ್ಯಗೌಡರು ಎಂಬ ಹೆಸರಿನ ನಾಮಧಾರಿ ಯುವಕರ ಮನೆಗೆ? +ಆ ಕಾನೂರು ಕಡೆಗೆ ಕಳಿಸಿದ್ದಾನಂತೆ ತಲೆತಪ್ಪಿಸಿಕೊಳ್ಳಲು, ಈ ಮುಕುಂದಗೌಡ! …. +ಆ ಇಜಾರದ ಸಾಬಿ ಎಂಬ ಧೂರ್ತ ಪುಂಡ ಮುಸಲ್ಮಾನನ್ನು ಗುತ್ತಿಯ ಕೈಲಿ ಕಡಿಸಿದ್ದೂ ಇವನೇ ಅಂತೆ!…  +ಆ ಪುಂಡರೆ ಎಲ್ಲ ಸೇರಿ ಇದೆ ಸ್ಕೂಲಿನಲ್ಲಿ ಕಾವೇರಿ ಎಂಬ ಹುಡುಗಿಯ ಮೇಲೆ ಅತ್ಯಾಚಾರ ಮಾಡಿ ಅವಳನ್ನು ನಮ್ಮ ಇದೇ ಬಾವಿಗೆ ಹಾಕಿದ್ದರಂತೆ!…  +ಅವರಲ್ಲಿ ಒಬ್ಬ ಮುಸಲ್ಮಾನ ತಲೆತಪ್ಪಿಸಿಕೊಂಡು ಕನ್ನಡ ಜಿಲ್ಲೆಗೆ ಓಡಿದ್ದಾನಂತೆ. +ಇನ್ನಿಬ್ಬರನ್ನೂ ದಸ್ತಗಿರಿ ಮಾಡಿ ವಿಚಾರಣೆಗಾಗಿ ಲಾಕಪ್ಪಿನಲ್ಲಿ ಇಟ್ಟಿದ್ದಾರೆ…. +ನನ್ನ ಅಭಿಪ್ರಾಯ ಕೇಳುವುದಾದರೆ, ನಿಮ್ಮನ್ನು ಗುಂಡಿಕ್ಕಿ ಕೊಲ್ಲಲು ಪ್ರಯತ್ನಿಸಿರುವ ಇವನನ್ನು ಬಂಧಿಸಿ ಕಾನೂನು ರೀತ್ಯಾ ಶಿಕ್ಷೆಗೆ ಒಳಪಡಿಸುವುದೆ ಉತ್ತಮ. +ಹಾಗೆ ಮಾಡಿದರೆ ಈ ಜನಕ್ಕೆ ಸ್ವಲ್ಪ ಹೆದರಿಕೆ ಹುಟ್ಟಿ, ನಮ್ಮ ಪವಿತ್ರ ಕ್ರಿಸ್ತನ ಸುವಾರ್ತೆಯನ್ನು ನಾವು ನಿರಾತಂಕವಾಗಿ ಬೋಧಿಸಲು ಅನುಕೂಲ ಸನ್ನಿವೇಶ ಕಲ್ಪಿತವಾಗುತ್ತದೆ, ಈ ಕಾಡು ಜನರನ್ನೂ ಪಳಗಿಸಿದಂತಾಗುತ್ತದೆ….!” +“ಉಪದೇಶಿಗಳೆ, ಕ್ರಿಸ್ತಸ್ವಾಮಿಯ ಸಂದೇಶವನ್ನು ಕ್ರೈಸ್ತೋಚಿತವಲ್ಲದ ವಿಧಾನಗಳಿಂದ ಪ್ರಚಾರಮಾಡಲು ನೀವು ಹೊರಟಿರಾದರೆ, ಜನರನ್ನು ಮೈಮೇಲೆ ಹಾಕಿಕೊಂಡು, ತದ್ವಿರುದ್ಧ ಪರಿಣಾಮಕ್ಕೆ ಭಾಜನರಾಗುತ್ತೀರಿ. +ನಾವು ನಮ್ಮ ಸ್ವಾರ್ಥ ಉದ್ದೇಶಗಳನ್ನೆಲ್ಲ ತ್ಯಜಿಸಿ, ಸತ್ತ್ವಮಾರ್ಗದಿಂದಲೆ ಮುಂದುವರಿದು, ಜನರ ನಂಬಿಕೆಗೆ ಪಾತ್ರರಾಗಬೇಕು. +ಅವರ ವಿಶ್ವಾಸ ಲಭಿಸಿದ ತರುವಾಯವೆ ಅವರು ನಮ್ಮ ಉಪದೇಶಕ್ಕೆ ಕಿವಿಗೊಡುತ್ತಾರೆ. +ಔಷಧೋಪಚಾರ, ವಿದ್ಯಾಭ್ಯಾಸ ಮೊದಲಾದ ಸಹಾಯಗಳ ಮೂಲಕ ಅವರ ಹೃದಯವನ್ನು ನಾವು ಗೆಲ್ಲಬೇಕು. +ಅವರ ಮತೀಯ ಮೌಢ್ಯಗಳಿಂದ ಅವರಿಗಾಗುತ್ತಿರುವ ಅಪಾಯಗಳನ್ನು ಉಪಾಯವಾಗಿ ಅವರಿಗೆ ಮನದಟ್ಟಾಗುವಂತೆ ಮಾಡಬೇಕು… +“ಅಷ್ಟರಲ್ಲಿ ಮುಕುಂದಯ್ಯನೊಡನೆ ಪ್ರವೇಶಿಸಿದ ದೇವಯ್ಯಗೌಡರನ್ನು ಕಂಡು ರೆವರೆಂಡ್ ಲೇಕ್ ಹಿಲ್ ಅವರು ಪಾದ್ರಿಯಿಂದ ಅತ್ತ ತಿರುಗಿದರು. +ಕೈಯಲ್ಲಿ ಕೋವಿ ಹಿಡಿದಿದ್ದ ಮುಕುಂದಯ್ಯ ಮುಗುಳು ನಗುತ್ತಾ “ನಮಸ್ಕಾರ, ಪಾದ್ರಿಗಳಿಗೆ” ಎಂದನು. +ರೆವರೆಂಡ್ ಅವರು ಪ್ರತಿನಮಸ್ಕಾರ ಮಾಡಿ, ಬೆಂಚಿನ ಕಡೆಗೆ ಕೈತೋರಿ ಅವರನ್ನೆಲ್ಲ ಕೂರಿಸಿ, ತಾವೂ ಒಂದು ಕುರ್ಚಿಯ ಮೇಲೆ ಎದುರಾಗಿ ಕುಳಿತುಕೊಂಡರು. +ಒಂದೆರಡು ನಿಮಿಷಗಳ ಕಾಲ ಮುಕುಂದಯ್ಯನನ್ನೇ ಗಮನಿಸುತ್ತಿದ್ದರು, ತಾವು ಏನು ಮಾತಾಡಬೇಡು ಎಂಬುದನ್ನು ಆಲೋಚಿಸುತ್ತಿದ್ದಂತೆ ತೋರಿದರು ಲೇಕ್ ಹಿಲ್. +ಆದರೆ ಅವರು ಏನನ್ನೂ ಆಲೋಚಿಸುತ್ತಿರಲಿಲ್ಲ. +ಮುಕುಂದಯ್ಯನ ವ್ಯಕ್ತಿತ್ವದ ಸ್ವರೂಪವನ್ನು ಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದರು. +ಮುಕುಂದಯ್ಯ ದೇವಯ್ಯನಂತೆ ಕ್ರಾಪು ಬಿಟ್ಟಿರಲಿಲ್ಲ; +ಟೋಪಿಯ ಹಿಂದೆ ಕಟ್ಟಿದ್ದ ಜುಟ್ಟು ಕಾಣಿಸುತ್ತಿತ್ತು. +ಹಣೆಯ ಮೇಲೆ ನಾಮವೂ ಇತ್ತು. +ಕಿವಿಯಲ್ಲಿ ಒಂಟಿಗಳೂ ಇದ್ದುವು. +ಆದರೆ ಅವನ ಮುಖದಲ್ಲಿ ಅಲ್ಲಿದ್ದವರಾರಲ್ಲಿಯೂ ಇಲ್ಲದಿದ್ದ ಒಂದು ಸತ್ವಪೂರ್ಣ ತೇಜಸ್ಸನ್ನೂ ಸರಳ ಸುಂದರ ಪ್ರಸನ್ನತೆಯನ್ನೂ ದರ್ಶಿಸಿದ ಲೇಕ್ ಹಿಲ್ ರಿಗೆ  ಅವನ ವಿಷಯದಲ್ಲಿ ಒಂದು ಗೌರವಪೂರ್ವಕವಾದ ವಿಶ್ವಾಸ ಹುಟ್ಟಿ, ಅವರ ಮುಖದ ಮೇಲೆಯೂ ಸುಪ್ರಸನ್ನತೆ ಸುಳಿದಾಡಿದುದನ್ನು ಕಂಡು ಜೀವರತ್ನಯ್ಯಗೆ ಬೆರಗಾಯಿತು. +ತಾನು ಮುಕುಂದಯ್ಯನ ಮೇಲೆ ಹೇಳಿದ್ದುದೆಲ್ಲ ವ್ಯರ್ಥವಾಯಿಯೋ ಏನೋ ಎಂದು ಕರಿಪಾದ್ರಿಗೆ ಮುಖಭಂಗವೂ ಆಯಿತು. +ಆದರೆ ಒಂದು ವಿಷಯ ಮಾತ್ರ ಆ ಘಟನೆಯ ರೂಪಣೆಯಲ್ಲಿ ಭಾಗಿಗಳಾಗಿದ್ದವರೆಲ್ಲರ ಪ್ರಜ್ಞಾಭೂಮಿಕೆಗೂ ಅತೀತವಾಗಿದ್ದು, ಅಗೋಚರವಾಗಿತ್ತು; +ರೆವರೆಂಡ್ ಲೇಕ್ ಹಿಲ್ ಆಗಲಿ, ಉಪದೇಶಿ ಜೀವರತ್ನಯ್ಯನಾಗಲಿ, ಮುಕುಂದಯ್ಯನಾಗಲಿ, ಯಾವ ಇತ್ಯರ್ಥಗಳನ್ನು ತಾವೇ ಸ್ವತಂತ್ರವಾಗಿ ನಿರ್ಣಯಿಸುತ್ತಿದ್ದೇವೆ ಎಂದು ಭಾವಿಸಿ ವರ್ತಿಸುತ್ತಿದ್ದರೋ ಆ ಇತ್ಯರ್ಥಗಳಿಗೆಲ್ಲ ಅಂತರ್ಯಾಮಿ ಸೂತ್ರಧಾರಿಯಾಗಿತ್ತು. +ಭಗವಂತನ ಅಡಿದಾವರೆವರೆಗೂ ನಿಡುಚಾಚಿ ಅದನ್ನು ತನ್ನ ಹೂವೆದೆಗೆ ಬಿಗಿದಪ್ಪಿದ ಒಬ್ಬಳು ಪ್ರಣಯಾರ್ಥಿ ತರುಣಿಯ ಪ್ರೇಮಮಯ ಮುಗ್ಧ ಹೃದಯದ ಆರ್ತ ಅಭೀಪ್ಸೆಯ ಪ್ರಾರ್ಥನಾಬಾಹು~“ಮುಕುಂದಯ್ಯ ಗೌಡರೆ, ನೀವು ಎಂಥ ಭಯಂಕೆರ ಅಪರಾಧ ಕಾರ್ಯದಲ್ಲಿ ತೊಡಗಿದ್ದೀರಿ ಎಂಬುದು ನಿಮಗೆ ಅರ್ಥವಾಗಿದೆಯೇ?” ಗಂಭೀರ ಧ್ವನಿಯಲ್ಲಿ ಪ್ರಶ್ನಿಸಿದ್ದರು ರೆವರೆಂಡ್ ಲೇಕ್ ಹಿಲ್, “ಗುಂಡಿಕ್ಕಿ ಕೊಂದು ಕೊಲೆಮಾಡಿದವರಿಗೆ ಏನು ಶಿಕ್ಷೆ ಗೊತ್ತೆ?” +“ಗೊತ್ತು, ಸ್ವಾಮೀ, ನಾನೇನು ಕೊಲೆಮಾಡುವುದಕ್ಕೆ ಬಂದಿರಲಿಲ್ಲ. +ನನ್ನ ಅಕ್ಕನಿಗೆ ಗಂಡನನ್ನು ಉಳಿಸಿಕೊಟ್ಟು, ಅವಳ ಪ್ರಾಣವನ್ನೂ ಮಾಂಗಲ್ಯವನ್ನೂ ರಕ್ಷಿಸಲು ಬಂದಿದ್ದೆ.” ಸಾಹಿತ್ಯ ಭಾಷೆಯಲ್ಲಿ ಮಾತನಾಡುತ್ತಿದ್ದ ರೆವರೆಂಡರಿಗೆ ಆ ರೀತಿಯ ಭಾಷೆಯಲ್ಲಿಯೆ ಉತ್ತರವಿತ್ತನು ಮುಕುಂದಯ್ಯ. +“ಹಾಗಾದರೆ ಬಂದೂಕು ಏಕೆ ತಂದಿದ್ದೀರಿ?”ಮುಕುಂದಯ್ಯ ಕೋವಿಯೆಡನೆ ಎದ್ದ, ಮುಂದಕ್ಕೆ ಬಾಗಿ ಅದನ್ನು ರೆವರೆಂಡರ ಮುಂದೆ ಮೇಜಿನ ಮೇಲೆ ಇಟ್ಟು, ನಗುತ್ತಲೆ ಹೇಳಿದನು. +“ಇದು ಖಾಲಿ ಕೋವಿ, ಸ್ವಾಮಿ, ಅದರಿಂದ ಯಾರ ಕೊಲೆಯೂ ಸಾಧ್ಯವಿಲ್ಲ. +ಅದಕ್ಕೆ ಈಡು ತುಂಬಿಲ್ಲ,ಕೇಪು ಇಟ್ಟಿಲ್ಲ. +ತಾವೇ ಪರಾಂಬರಿಸಬಹುದು. +ಬರಿಯ ತೋರಿಕೆಯ ಬೆದರಿಕೆಗೆ ತಂದಿದ್ದೆ ಅಷ್ಟೇ…” +ಕ್ರೈಸ್ತ ಮಿಶನರಿಗಳ ವೈದ್ಯಕೀಯ ಸಹಾಯ, ವಿದ್ಯಾಭ್ಯಾಸ ಪ್ರಚಾರ ಇತ್ಯಾದಿ ಲೋಕೋಪಕಾರ ಕಾರ್ಯಗಳನ್ನು ಬಾಯಿತುಂಬ ಶ್ಲಾಘಿಸಿದ ಮುಕುಂದಯ್ಯ ಅವರ ಮತಾಂತರ ಚಟುವಟಿಕೆಗಳನ್ನು ಸಮಾಜದ ಅಡಿಪಾಯವನ್ನೇ ಬುಡಮೇಲು ಮಾಡುವ ಕೆಲಸ ಎಂದು ವರ್ಣಿಸಿ, ಕೆಲವು ನಿದರ್ಶನಗಳನ್ನು ಕೊಟ್ಟು, ಮಿಶನ್ ಸ್ಕೂಲು ಚೆನ್ನಾಗಿ ನಡೆಯುವಂತೆ ತಾನು ಸಹಕರಿಸುವುದಾಗಿಯೂ, ಇತರರನ್ನೂ ಸಹಕರಿಸುವಂತೆ ಮಾಡುವುದಾಗಿಯೂ ಭರವಸೆಯಿತ್ತನು. +“ನಿಮ್ಮ ಸಹಕಾರಕ್ಕಾಗಿ ನಿಮಗೆ ಅನೇಕ ವಂದನೆಗಳು” ಲೇಕ್ ಹಿಲ್ ಮುಂದುವರಿದರು. +“ನಮ್ಮ ಮತಾಂತರ ಚಟುವಟಿಕೆಗಳನ್ನೇನೊ ನೀವು ಸಾಮಾಜಿಕ ಜೀವನವನ್ನು ಬುಡಮೇಲು ಮಾಡುವ ಕಾರ್ಯ ಎಂದು ವರ್ಣಿಸುತ್ತಿದ್ದೀರಿ. +ಯಾರನ್ನೂ ಬಲಾತ್ಕಾರವಾಗಿ ಕ್ರೈಸ್ತರನ್ನಾಗಿ ಮಾಡುವ ಇಚ್ಛೆ ನಮಗಿಲ್ಲ. +ನೀವು ನಮ್ಮ ಜಾತಿಗೆ ಸೇರದಿರಬಹುದು; +ಸೇರದಿದ್ದರೆ ಚಿಂತೆಯಿಲ್ಲ… ಆದರೆ, ಗೌಡರೆ, ನಾನು ಹೇಳುವುದನ್ನು ದಯವಿಟ್ಟು ಗಮನಿಸಿ ಕೇಳಿ…  ನಿಮ್ಮ ಜಾತಿಯವರು ಎಲ್ಲಿಯವರೆಗೆ ಬ್ರಾಹ್ಮಣರ ಪಾದ ತೊಳೆದು, ಅದನ್ನು ತೀರ್ಥವೆಂದು ಕುಡಿಯುವುದನ್ನೇ ತಮ್ಮ ಧರ್ಮಜೀವನ ಸರ್ವಸ್ವ ಎಂದು ಭಾವಿಸುವರೊ ಅಲ್ಲಿಯವರೆಗೆ ನಿಮಗೆ, ನಾಮಧಾರಿ ಗೌಡರಿಗೆ ಮತ್ತು ಇತರ ಬ್ರಾಹ್ಮಣೇತರ ವರ್ಗದವರಿಗೆ, ಉದ್ಧಾರವಿಲ್ಲ; ಉಳಿಗತಿಯಿಲ್ಲ. +ನಿಮ್ಮ ಮೂಢಾಚಾರಗಳು ಬ್ರಾಹ್ಮಣರ ಜೀವನೋಪಾಯಕ್ಕೆ, ಸಂಪಾದನೆಗೆ, ಬಂಡವಾಳ ಸ್ವರೂಪವಾಗಿವೆ. +ನಿಮ್ಮನ್ನು ಅವರು ನಾಯಿಗಳನ್ನು ಕಂಡಹಾಗೆ ಕಾಣುತ್ತಾರೆ. +ಮುಟ್ಟುವುದಿರಲಿ ಹತ್ತಿರ ಬಂದರೂ ಅವರಿಗೆ ಮೈಲಿಗೆ. +ಬ್ರಾಹ್ಮಣರೆಲ್ಲ ಬ್ರಹ್ಮನ ಮುಖದಿಂದ ಬಂದವರೆಂದೂ ಶೂದ್ರು ಅವನ ಕಾಲಡಿಯಿಂದ ಬಿದ್ದವರೆಂದೂ ಕಟ್ಟುಕಥೆ ಕಟ್ಟಿದ್ದಾರೆ. +ಅವರೇ ಅವರ ಅನುಕೂಲಕ್ಕಾಗಿ ಬರೆದುಕೊಂಡಿರುವ ಪುರಾಣ ಕಥೆಗಳನ್ನು, ನಿಜವಾಗಿ ನಡೆದವೆಂಬಂತೆ ನಿಮಗೆ ಹೇಳಿ, ನಿಮ್ಮನ್ನು ಮರುಳು ಮಾಡಿದ್ದಾರೆ. +ಶೂದ್ರರು ವೇದ ಓದಬಾರದಂತೆ! +ಓದುವುದಿರಲಿ, ಯಾರಾದರೂ ಓದುವುದನ್ನು ಆಲಿಸಿದರೂ ನರಕದಲ್ಲಿ ಶೂದ್ರನ ಕಿವಿಗೆ ಕಾಯಿಸಿದ ಕಬ್ಬಿಣವನ್ನು ಹೊಯ್ಯುತ್ತಾರಂತೆ! +ಶತಶತಮಾನಗಳಿಂದಲೂ ನಿಮ್ಮನ್ನು ಈ ಮೂಢಸ್ಥಿತಿಯಲ್ಲಿ ಇಟ್ಟು, ನಿಮ್ಮಿಂದ ಸೇವೆ ಸಲ್ಲಿಸಿಕೊಂಡು, ಸುಖಜೀವನ ನಡೆಸುತ್ತಿದ್ದಾರೆ…. +ಕ್ರೈಸ್ತ ಧರ್ಮದಲ್ಲಿ ಜಾತಿಭೇದವಿಲ್ಲ; +ಎಲ್ಲರೂ ದೇವರ ಇದಿರಿನಲ್ಲಿ ಸಮಾನರು. +ನಾನು ಕೇಳಿಕೊಲ್ಳುವುದಿಷ್ಟೇ ನೀವು ಕ್ರಿಸ್ತಮತಕ್ಕೆ ಸೇರಿ, ಬಿಡಿ, ಅದು ಅಷ್ಟು ಮುಖ್ಯವಲ್ಲ; +ಆದರೆ ಕ್ರೈಸ್ತ ಧರ್ಮದ ಉದಾರ ತತ್ತ್ವಗಳನ್ನೂ ಸೇವಾ ಮನೋಧರ್ಮವನ್ನೂ ಸರ್ವ ಸಮಾನತಾ ದೃಷ್ಟಿಯನ್ನೂ ಉನ್ನತ ಆದರ್ಶಗಳನ್ನೂ ನಿಮ್ಮ ಮಾರ್ಗದರ್ಶನ ಜ್ಯೋತಿಯನ್ನಾಗಿ ಮಾಡಿಕೊಂಡು, ಬ್ರಾಹ್ಮಣ್ಯದ ದುರ್ಮುಷ್ಟಿಯಿಂದ ಬಿಡಿಸಿಕೊಳ್ಳುವುದು ಮಾತ್ರ ನಿಮ್ಮ ಜನಾಂಗದ ಪ್ರಗತಿಗೆ ಅತ್ಯಂತ ಅವಶ್ಯಕವಾದ ಆತ್ಯ ಕರ್ತವ್ಯ ಕರ್ಮ! +ಆ ದಾರಿಯಲ್ಲಿ ಮುಂದುವರಿಯುವುದಕ್ಕೆ ನಿಮ್ಮ ಜನಾಂಗದವರಿಗೆ ನಾವು ಸರ್ವ ಸಹಾಯ ನೀಡಲು ಸಿದ್ಧರಿದ್ದೇವೆ…. +ಈ ಸಾಯಂಕಾಲ ನಡೆಯಲಿರುವ ಈ ಸ್ಕೂಲಿನ ಪ್ರಾರಂಭೋತ್ಸವ ಆ ದಿಕ್ಕಿನಲ್ಲಿ ನಿಮ್ಮ ಮಿಶನ್ ಇಟ್ಟಿರುವ ಮೊದಲ ಹೆಜ್ಜೆ. +ನಿಮ್ಮ ಜನರೆಲ್ಲ, ಅದರಲ್ಲಿಯೂ ನಿಮ್ಮಂಥ ಮತ್ತು ದೇವಯ್ಯಗೌಡ ರಂಥ ಮುಂದಾಳುತನದ ಯುವಕರು, ಮುಂದೆ ಬಂದು ನಮ್ಮೊಡನೆ ಸಹಕರಿಸುತ್ತೀರೆಂದು ನಾನು ದೃಢವಾಗಿ ನಂಬಿದ್ದೇನೆ. +ಸರಕಾರದಿಂದಾಗಲಿ, ವಿದ್ಯಾಭ್ಯಾಸದ ಇಲಾಖೆಯಿಂದಾಗಲಿ, ನಮ್ಮ ಮಿಶನ್ನಿನ ಕಡೆಯಿಂದಾಗಲಿ ನಿಮಗೆ ಬೇಕಾಗುವ ಎಲ್ಲ ನೆರವೂ ಒದಗುವಂತೆ ಮಾಡಲು ನಾನು ಪವಿತ್ರಾತ್ಮ ಯೇಸುಕ್ರಿಸ್ತನ ಹೆಸರಿನಲ್ಲಿ ಕಂಕಣ ಬದ್ಧನಾಗಿದ್ದೇನೆ…. +ತಮಗೆಲ್ಲರಿಗೂ ನಮಸ್ಕಾರ…. . ” +ರೆವರೆಂಡರು ಕುರ್ಚಿಯಿಂದೆದ್ದು ನಿಂತು ಮುಕುಂದಯ್ಯನ ಕಡೆಗೆ ಕೈಚಾಚಿದರು. +ಮುಕುಂದಯ್ಯ ಒಂದು ಅರೆನಿಮಿಷ ಹಳ್ಳಿಬೆಪ್ಪಾಗಿ ನಿಂತಿದ್ದನು. +ಆದರೆ ಪಕ್ಕದಲ್ಲಿದ್ದ ದೇವಯ್ಯನ ಇಂಗಿತ ತಿವಿತದಿಂದ ಎಚ್ಚತ್ತುಕೊಂಡು, ಹಸ್ತಲಾಘವದ ಅರಿವು ತೋರಿ, ಹಲ್ಲುಬಿಡುತ್ತಾ ಕೈ ನೀಡಿದನು. +ಲೇಕ್ ಹಿಲ್ ಅವರು ಮುಕುಂದಯ್ಯನಿಗಂತೂ ಅಂತೆಯೆ ಎಲ್ಲರಿಗೂ ಹಸ್ತಲಾಘವವಿತ್ತು, ಸಾಯಂಕಾಲದ ಪ್ರಾರಂಭೋತ್ಸವಕ್ಕೆ ಎಲ್ಲರನ್ನೂ ಆಹ್ವಾನಿಸಿ, ಜೀವರತ್ನಯ್ಯನಿಗೆ ಹಿಂಬಾಲಿಸಿ ಹೊರಡುವ ಸನ್ನೆ ಮಾಡಿ, ಬಾಗಿಲು ದಾಟಿದರು. +“ಕರೀ ಪಾದ್ರಿಯಂತಲ್ಲೊ; ನಿಜವಾಗಿಯೂ ದೊಡ್ಡ ಮನುಷ್ಯನೆ ಕಣೋ, ಈ ಬಿಳೀ ಪಾದ್ರಿ!” ಮುಕುಂದಯ್ಯ ದೇವಯ್ಯನ ಕಡೆ ತಿರುಗಿ ಶ್ಲಾಘಿಸಿದನು. +“ನಮ್ಮ ಕಾಡು, ನಿಮ್ಮ ತಿಮ್ಮು, ಹಳೆಮನೆ ಧರ್ಮು, ಹೆಂಚಿನಮನೆ ರಾಮು ಎಲ್ಲರನ್ನೂ, ಇಸ್ಕೂಲು ಸುರುವಾದ ಕೂಡ್ಲೆ, ಮೊದಲೂ ತಂದು ಸೇರಿಸಿಬಿಡಬೇಕು, ಓದಕ್ಕೆ!…  ಏನಂತೀಯ?” ದೇವಯ್ಯ ಕೇಳಿದನು, ರೆವರೆಂಡರ ಭಾಷಣಕ್ಕೆ ತನ್ನ ಪ್ರಥಮ ಪ್ರತಿಕ್ರಿಯೆ ಎಂಬಂತೆ. +“ಸೇರಿಸದೆ ಮತ್ತೆ!” ಮುಕುಂದಯ್ಯ ಅನಂತಯ್ಯನ ಕಡೆ ತಿರುಗಿದನು. +ಎಂತಿದ್ದರೂ ನಮ್ಮ ಐಗಳೆ ಹೆಡ್ ಮಾಸ್ಟರ್ ಆಗ್ಯಾರಲ್ಲಾ! …. +ನೀವೇನ್ ಹೇಳ್ತೀರಿದ ಅನಂತೈಗಳೆ?” +“ಆಗಲೆ ಹುಡುಗರಿಗೆಲ್ಲಾ ಹೇಳಿಬಿಟ್ಟೀನಿ, ಬಟ್ಟೆ ಗಿಟ್ಟೆ ಒಕ್ಕೊಂಡು ಸಿದ್ಧವಾಗಿರಿ ಅಂತಾ…. . +ಅವರಿಗೂ ಖುಷಿಯೋ ಖುಷಿ! +ಮಕ್ಕಳು ಬರ್ತಾರಲ್ಲಾ ಅಂತಾ ಅಂತಕ್ಕಗೂ ಪೂರಾ ಗೆಲುವಾಗಿ ಬಿಟ್ಟಿದೆ!” ಎಂದರು ಅನಂತಯ್ಯ. +“ನಾನು ಹೇಳಿದ್ದು ಹೌದೋ ಅಲ್ಲವೊ? +ಕಾಡಿನಲ್ಲಿ ಹೋಗುವಾಗ ಕೋವಿ ಖಾಲಿ ಇರಬಾರದಂತೆ! …. +ಈಡು  ತುಂಬಿಕೊಂಡು ಬಂದಿದ್ದರಿಂದ ಅಲ್ಲವೊ ಈ ಕೋಳಿ ಸಿಕ್ಕಿದ್ದು, ತಾನೆ ತನ್ನ ಕೈಯಲ್ಲಿ ಮ್ಯಾಣೆ ಹಿಡಿದುಕೊಂಡಿದ್ದ ಕಾಡುಕೋಳಿಯ ಕಡೆ ನೋಡುತ್ತಾ ಗಟ್ಟದ ತಗ್ಗಿನವರ ಕಾಕುದನಿಯಲ್ಲಿ ಐತ ಮುಂದುವರಿದನು ಹುಂಜ ಏನು ತೂಕ ಇದೆ ಅಂತೀರಿ? …. +ಅಯ್ಯಾ, ನೀವೆ ನೋಡಿ!”ಕೋವಿಗೆ ಮತ್ತೆ ಈಡು ತುಂಬುತ್ತಿದ್ದ ಮುಕುಂದಯ್ಯ ಐತನಿಗೆಂದನು, ಅವನು ನೀಡುತ್ತಿದ್ದ ಹುಂಜದ ಕಡೆ ಕಣ್ಣು ಹಾಯಿಸಿದೆ. + “ನಿನ್ನ ಕೂಳು ಹೊತ್ತಿತ್ತು! +ಒಂದು ಗಂಟೇನೆ ಆಯ್ತಲ್ಲಾ ಇಲ್ಲಿ, ಅದನ್ನು ಹುಡುಕಕ್ಕೆ! +ಬೆಳಕು ಇರಾ ಹಾಂಗೆ ಮನೆ ಸೇರಾನ ಅಂತಿದ್ರೆ, ಮೇಗ್ರಳ್ಳಿ ಬುಡದಲ್ಲೇ ಕತ್ತಲೆ ಆಗಾ ಹಾಂಗೆ ಮಾಡ್ದೆಲ್ಲ, ನೀನು?” +ಮಿಶನ್ ಸ್ಕೂಲಿನ ಪ್ರಾರಂಭೋತ್ಸವ ಮುಗಿಯುವಷ್ಟರಲ್ಲೆ ಬೈಗು ಕಪ್ಪಾಗಿ ಬಿಟ್ಟಿತ್ತು. +ಇನ್ನೂ ಹೊತ್ತು ಮಾಡುತ್ತಿದ್ದರೋ ಏನೋ? +ಆದರೆ ದೀಪಕ್ಕೆ ಏರ್ಪಾಡು ಮಾಡಿರಲಿಲ್ಲವಾದ್ದರಿಂದ ಬೆಳಕಿರುವಂತೆಯೆ ಆದಷ್ಟು ಬೇಗನೆ ಮುಗಿಸಿದ್ದರು. +ಅಂತಕ್ಕನ ಮನೆಗೆ ಅನಂತಯ್ಯನವರೊಡನೆ ಹೋಗಿ, ಸ್ಕೂಲಿಗೆ ಓದಲು ಬರುವ ತಮ್ಮ ಹುಡುಗರನ್ನು ಅಲ್ಲಿ ಊಟ ವಸತಿಗೆ ಬಿಡುವ ವಿಚಾರ ಮಾತನಾಡಿ, ಮುಕುಂದಯ್ಯ ಹೊರಡುವುದೆ ಕತ್ತಲುಕತ್ತಲಾಗಿತ್ತು. +ಹೆದ್ದಾರಿಯಿಂದ ಹುಲಿಕಲ್ಲು ನೆತ್ತಿಯ ಕಡೆಗೆ ಅಗಚುವ ಕಾಲುದಾರಿ ಸಿಕ್ಕಲ್ಲಿಯೆ ಐತ ಕೋವಿಗೆ ಈಡು ತುಂಬಿಕೊಳ್ಳುವಂತೆ ಮುಕುಂದಯ್ಯನನ್ನು ಪ್ರೇರೇಪಿಸಿದ್ದು, ಅದರ ಪರಿಣಾಮವಾಗಿಯೆ, ಹತ್ತು ಮಾರು ಕಾಡಿನಲ್ಲಿ ಹೋಗುವುದರೊಳಗಾಗಿ ಹಿಂದೆ ಗುತ್ತಿ ಸಿಂಬಾವಿ ಭರಮೈಹೆಗ್ಗಡೆಯವರು ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರಿಗೆ ಕೊಟ್ಟಿದ್ದ ಕಾಗದವನ್ನು ಹೊತ್ತು ತರುತ್ತಿದ್ದಾಗ ಹುಲಿಯ ಬೊಗಳಿ ಮೇಲೆ ಬಿದ್ದು ಎಬ್ಬಿಸಿದ್ದ ಹೆಚ್ಚಾವಿನ “ಬೆತ್ತದ ಸರ”ಕ್ಕೆ ಸಮೀಪದಲ್ಲಿ ಒಂದು ಕಾಡುಕೋಳಿ ಹುಂಜ, ಗೊತ್ತು ಕೂರಲೆಂದು, ನೆಲದ ಹಳುವಿನಿಂದ ಹಾರಿ ಒಂದು ದೊಡ್ಡ ಮರದ ಮೇಲೆ ಕೂತಿತು. +ಅದು ಅಡಗಿದ್ದ ಕೊಂಬೆ ಎತ್ತರವಾಗಿದ್ದು ಸಂಧ್ಯಾ ಗಗನಕ್ಕೆ ಇದಿರಾಗಿದ್ದುದರಿಂದ ಬೈಗಿನ ಬಾನಿನ ಬಣ್ಣದ ಹಿನ್ನೆಲೆಯಲ್ಲಿ ಮಷೀಚಿತ್ರದಂತೆ ಎದ್ದು ಕಾಣುತ್ತಿದ್ದು, ಸುಲಭವಾಗಿ ಸಿಕ್ಕಿತ್ತು ಮುಕುಂದಯ್ಯನ ಗುರಿಗೆ. +ಆದರೆ ಕೋಳಿ, ಹೊಡೆದಲ್ಲಿಯೆ ಕೆಳಕ್ಕೆ ಬೀಳದೆ, ಸ್ವಲ್ಪ ದೂರ ಇಳಿಜಾರಾಗಿ ಹಾರಿ ಹೋಗುತ್ತಾ ನೆಲಕ್ಕೆರಗಿತ್ತು. +ಅದು ದೊಪ್ಪನೆ ಬಿದ್ದ ಸದ್ದೂ ಆ ಸಂಧ್ಯಾ ನಿಃಶಬ್ದತೆಯಲ್ಲಿ ಚೆನ್ನಾಗಿ ಕೇಳಿಸಿತ್ತು. +ಆದರೆ ಆಗಾಗಲೆ ಕತ್ತಲೆ ಕವಿಯುತ್ತಿದ್ದ ಹಳುವಿನಲ್ಲಿ ಅದನ್ನು ಹುಡುಕುವುದೆ ಕಷ್ಟವಾಯಿತು. +ಸುಮಾರು ಹೊತ್ತು ಅವರಿಬ್ಬರೂ ಹಳುವಿನಲ್ಲಿ ಅದನ್ನು ತಡಕಿ ಹುಡುಕಿದ ಮೇಲೆಯೆ ಅದು ಪತ್ತೆಯಾಗಿತ್ತು. +ಚಿನ್ನಮ್ಮಗೆ “ಕತ್ತಲಾಗುವುದರೊಳಗೆ ಮನೆಯಲ್ಲಿರುತ್ತೇನೆ” ಎಂದು ಧೈರ್ಯ ಹೇಳಿ, ಆಶ್ವಾಸನೆ ಕೊಟ್ಟು ಬಂದಿದ್ದ ಮುಕುಮದಯ್ಯಗೆ, ಮೇಗರವಳ್ಳಿ ಹತ್ತಿರದ “ಬೆತ್ತದ ಸರ”ದಲ್ಲಿಯೆ ಅಷ್ಟು ಕತ್ತಲೆಯಾಗಿದ್ದನ್ನು ಕಂಡು, ತುಂಬ ಅಸಮಾಧಾನವಾಗಿತ್ತು. +ಅದಕ್ಕೇ ಅವನು ಹುಂಜವನ್ನು ಕೈಯಲ್ಲಿ ಹಿಡಿದಿದ್ದ ಐತನ ಮೃಗಯಾ ಉತ್ಸಾಹಕ್ಕೆ ತಣ್ಣೀರೆರಚುವಂತೆ ಮಾತನಾಡಿದ್ದು! +ಇಬ್ಬರೂ ಬೇಗಬೇಗನೆ ಕಾಲುಹಾಕಿ ಹುಲಿಕಲ್ಲುನೆತ್ತಿಗೆ ಏರಿ ಇಳಿದು ಕೋಣೂರಿನ ಗಟ್ಟದ ತಗ್ಗಿನವರ ಬಿಡಾರದ ಸಮೀಪಕ್ಕೆ ಬಂದಾಗ ಐತ “ಅಯ್ಯಾ, ಒಂದು ಚಣ ಹಿಡಿದುಕೊಂಡಿರಿ, ಈಗ ಬಂದೆ” ಎಂದು ಕಾಡುಕೋಳಿಯನ್ನು ಮುಕುಂದಯ್ಯನ ಕೈಗಿತ್ತು ಕತ್ತಲೆಯಲ್ಲಿ ಕಾಣದಾದನು. +ದೇಹಬಾಧೆಗೆ ಅವಸರವಾಗಿರಬೇಕು ಎಂದು ಭಾವಿಸಿ, ಮುಕುಂದಯ್ಯ ಕೋಳಿ ಹಿಡಿದು ಕಾದನು. +ಜಲಬಾಧೆಗಿರಲಿ, ಮಲಬಾಧೆಗಾದರೂ ಇಷ್ಟು ಹೊತ್ತು ಬೇಕೇ? +ಎಲ್ಲೆಲ್ಲಿಯೂ ನೀರು ಹರಿಯುತ್ತಿರುವ ಈ ಕಾಲದಲ್ಲಿ ನೀರು ಹುಡುಕಿಕೊಂಡಾದರೂ ಎಲ್ಲಿಗೆ ಹೋದನು ಇವನು?…  ಅಥವಾ? +ಹಾಳಾದವನು ಕುಡಿಯೋಕೆ ಗಿಡಿಯೋಕೆ ಸಿಗುತ್ತದೆ ಅಂತಾ ಯಾರ ಬಿಡಾರಕ್ಕಾದರೂ ನುಗ್ಗಿದನೋ? …. +ಅವಳಿಗೆ ಬೇರೆ ಹೇಳಿ ಬಂದೀನಿ! +ತುದಿಗಾಲ ಮೇಲೆ ಕಾಯ್ತಾ ಇರ್ತಾಳೆ, ಸೂಜಿ ಮೇಲೆ ನಿಂತ ಹಾಗೆ! …. . +ಕಡೆಗೆ, ನನಗೇನಾದುರೂ ಆಯ್ತೋ ಏನೋ ಅಂತಾ ಎದೆಗೆಟ್ಟು, ಏನಾದರೂ ಮಾಡಿಕೊಂಡರೂ ಮಾಡಿಕೊಂಡಳೆ! +ಅದಕ್ಕೂ ಹೇಸುವವಳಲ್ಲ! …. +ಇವತ್ತು ರಾತ್ರಿ ಬೇರೆ “ಬಂದೇ ಬರ್ತಿನಿ” ಅಂತಾ ಒಪ್ಪಿಯೂ ಬಿಟ್ಟಾಳೆ! +ಮುಕುಂದಯ್ಯಗೆ ಮುಗುಳುನಗೆ ತಡೆಯಲಾಗಲಿಲ್ಲ. +ಥೂ ಎಷ್ಟು ಹೊತ್ತಾಯ್ತು? +ಎತ್ತ ಸತ್ತ ಈ ಬೋಳೀಮಗ? …. +ನಾ ಹೋಗ್ತಾ ಇರ್ತೀನಿ. +ಬರಲಿ ಹಾಳಾದವನು ಆಮೇಲೆ! …. +ಮುಕುಂದಯ್ಯ ಕೋಳಿ ಕೋವಿ ಎರಡನ್ನೂ ಹೊತ್ತುಕೊಂಡು ಹೂವಳ್ಳಿಯ ಕಡೆಗೆ ಕತ್ತಲಲ್ಲಿಯೆ ಆದಷ್ಟು ಜೋರಾಗಿ ಕಾಲು ಹಾಕಿದನು. +ಸ್ವಲ್ಪ ದೂರ ಹೋಗುವುದರಲ್ಲಿ ಹಿಂದುಗಡೆಯಿಂದ ಯಾರೊ ಓಡೋಡಿ ಬರುವ ಸದ್ದು ಕೇಳಿಸಿ ನಿಂತನು. +ಏದುತ್ತಾ ಹತ್ತಿರಕ್ಕೆ ದೌಡಾಯಿಸಿ ಬಂದು, ಕವಿದಿದ್ದ ಕುರುಡುಗತ್ತಲೆಯಲ್ಲಿ ಇನ್ನೇನು ಡಿಕ್ಕಿ ಹೊಡೆಯಬೇಕು ಅನ್ನುವಷ್ಟರಲ್ಲಿ ಮುಕುಂದಯ್ಯ ಕೂಗಿ ನಿಲ್ಲಿಸಿದನು. +“ಎತ್ತಲಾಗಿ ಸತ್ತಿದೆಯೊ, ಹಾಲಾದವನೆ?” +“ಅಕ್ಕಣಿ ಬಿಡಾರಕ್ಕೆ ಹೋಗಿ ಬಂದೆ.” +“ಯಾರ ಉಚ್ಚೆ ಕುಡಿಯಾಕೋ?” ಸಿಟ್ಟುರಿದಿತ್ತು ಮುಕುಂದಯ್ಯಗೆ. +“ಇಲ್ಲಾ, ಅಯ್ಯಾ, ಪೀಂಚಲು ಏನೋ ಹೇಳಿದ್ಲು, ಬಸಿರೀಗೆ ಮದ್ದು ತರಾಕ್ಕೆ ಹೋಗಿದ್ದೆ” ಎಂದಿತು ಐತನ ದೀನವಾಣಿ. +ಮುಕುಂದಯ್ಯನ ಮನಸ್ಸು ಮೃದುವಾಯಿತು. +ಕಾಡುಕೋಳಿಯನ್ನು ಮುಂಚಾಚಿ, ಕೇಳಿದನು. +“ಅಕ್ಕಣಿ ಮನೇಲಿಲ್ಲೇನೊ ಈಗ?”ಮುಕುಂದಯ್ಯ ಮುಂದಕ್ಕೆ ನೀಡಿದ್ದ ಕೋಳಿಯನ್ನು ಕೈಗೆ ತೆಗೆದುಕೊಳ್ಳುತ್ತಾ ಐತನೆಂದನು. +“ಇಲ್ಲಾ, ಅಯ್ಯಾ!ಮೊನ್ನೆಯಿಂದ ಮತ್ತೆ ಬಿಡಾರಕ್ಕೇ ಬಂದಾಳೆ” ತುಸು ತಡೆದು ಮತ್ತೆ ಸ್ವಾರಸ್ಯ ಚಾಪಲ್ಯಕ್ಕೆ ವಶವಾಗಿ ಮುಂದುವರಿಸಿದನು. +“ಹಳೆಮನೆ ಅಮ್ಮ ಮನೆಗೆ ಬಂದಮ್ಯಾಲೆ ರಂಗಪ್ಪಯ್ಯೋರು “ಬಿಡಾರಕ್ಕೇ ಹೋಗು, ಚೀಂಕ್ರನಿಂದ ನಿಂಗೇನೂ ಆಗದೆ ಇದ್ದಾಂಗೆ ನಾ ನೋಡ್ಕೋತೀನಿ” ಅಂದರಂತೆ!” +“ಇನ್ನೆಲ್ಲಿ ಚೀಂಕ್ರ ಬರ್ತಾನೆ, ಗಟ್ಟದಮೇಲೆ? +ಅವನ ಕಥೆ ಪೂರೈಸದ್ಹಾಂಗೆ!” ಮನೆಕಡೆಗೆ ಬಿರುಬಿರನೆ ಕಾಲು ಹಾಕುತ್ತಲೆ ಗಂಟಲಲ್ಲಿಯೆ ನಕ್ಕು ಹೇಳಿದನು ಮುಕುಂದಯ್ಯ. +ಇಬ್ಬರೂ ಸ್ವಲ್ಪ ದೂರ ನೀರವವಾಗಿ ಮುಂದುವರಿದಿದ್ದರು. +ಹಿಂದುಗಡೆ ಬರುತ್ತಿದ್ದ ಐತ ಇದ್ದಕ್ಕಿದ್ದ ಹಾಗೆ ಕಿಸಕ್ಕನೆ ನಕ್ಕಿದ್ದು ಕೇಳಿಸಿ, ಮುಕುಂದಯ್ಯ ಕಾಲುಹಾಕುತ್ತಲೆ ಕೇಳಿದನು. + “ಯಾಕೋ ಪೂರಾ ನಗ್ತೀಯಲ್ಲಾ? ” + “ಯಾಕಿಲ್ಲಯ್ಯಾ…. “ ಎಂದನು ಐತ. +ಮತ್ತೆ ಇಬ್ಬರೂ ತಮ್ಮ ತಮ್ಮ ಆಲೋಚನೆಗಳಲ್ಲಿ ಮಗ್ನರಾಗಿಯೊ ಅಥವಾ ಕವಿದಿದ್ದ ಕತ್ತಲೆಯಲ್ಲಿ ಎಡವದಂತೆ ದಾರಿಗಾಣುವುದರಲ್ಲಿ ತಲ್ಲೀನರಾಗಿಯೊ ತುಸುದೂರ ಸಾಗಿದ್ದರು. +“ಅಯ್ಯಾ!” ಕರೆದನು ಐತ ಮತ್ತೆ. +“ಏನೋ?”“ಅಕ್ಕಣಿ ಈಗ ಹೆಗ್ಗಡ್ತಮ್ಮ ಆಗಿಬಿಟ್ಟಾಳೆ! +ನಿಮ್ಮೋರು ಉಟ್ಟಹಾಂಗೆ ಸೀರೆ ಉಟ್ಟುಕೊಂಡು ಗಡದ್ದಾಗಿದ್ದಾಳೆ! …. +ಅವಳ ಬಿಡಾರಾನೂ…. +ನನ್ನ ಬಿಡಾರ ಆಗಿತ್ತಲ್ಲಾ ಅದನ್ನೂ ಸೇರಿಸಿಯೆಬಿಟ್ಟಾರೆ! …. +ಈಗ “ಮನೆ” ಆಗಿಬಿಟ್ಟದೆ…. +“ಅದೆಲ್ಲಾ ನಿನಗ್ಯಾಕೋ? +ಬಿಡಾರ ಬೀಳಿಸಿ “ಮನೇ”ನಾದ್ರೂ ಕಟ್ಟಲಿ,  ಅರಮನೇನಾದ್ರೂ ಕಟ್ಟಲಿ! …. +ನೀನೇನು ಹೋಗ್ತೀಯಾ ನಿನ್ನ ಬಿಡಾರಕ್ಕೆ ಮತ್ತೆ? …. . ” +“ನನ್ನ ಜೀಂವ ಹೋದ್ರೂ ನಾನು ಹೋಗುದಿಲ್ಲ, ಒಡೆಯಾ” ಎಂದು ಪ್ರತಿಜ್ಞೆ ಮಾಡಿದ ಐತ, ಏನೋ ರಹಸ್ಯ ಹೇಳುವ ಧ್ವನಿಯಲ್ಲಿ ಮುಂದುವರಿದನು ಮತ್ತೆ. +“ಇವೊತ್ತೊಂದು ತಮಾಸೇನ ಆಯ್ತಲ್ಲಾ, ಒಡೆಯಾ? + ನಾನು… ಅಕ್ಕಣಿ ಬಿಡಾರದ ಹತ್ತೆ ಹೋದಾಗ,…. + ಒಳಗೆ… ಮಾತಾಡೋದು ಕೇಳಿಸ್ತು…. +ಮನೇ ದೊಡ್ಡಯ್ಯೋರು ಒಳಗಿದ್ರು! …. ” +“ಹರಕು ಬಾಯಿ ಮುಟ್ಠಾಳ, ಬಾಯಿ ಮುಚ್ಚಿಕೊಂಡು ಸುಮ್ಮನಿರಬಾರದೇನೋ? +ನಿನ್ನ ನಾಲಗೆ ಪೂರಾ ಉದ್ದ ಆಗ್ತಾ ಇದೆಯೋ, ಇತ್ತಿತ್ತಲಾಗಿ…. +ಒಂದು ದಿನ ನೀನು ಯಾರ ಕೈಲಾದ್ರೂ ಹಲ್ಲು ಉದುರಿಸಿಕೊಳ್ತೀಯಾ, ನೋಡ್ತಿರು! +ನಿನಗ್ಯಾಕೊ ದೊಡ್ಡೋರ ವಿಚಾರ?”ಐತ ಮುಂದೆ ಮಾತೆತ್ತಲಿಲ್ಲ, ಹೂವಳ್ಳಿ ಮನೆ ಮುಟ್ಟುವವರೆಗೂ. +ಆಗಿನ ಕಾಲದ ಮಲೆನಾಡಿನಲ್ಲಿ, ಸಾಮಾನ್ಯ ದಿನಗಳಲ್ಲಿ, ಆ ಒಂದೊಂದೆ ದೊಡ್ಡ ಮನೆಯ ಹಳ್ಳಿಗಳಲ್ಲಿ, ದುಡಿದು ದಣಿದು ಜನರು ಕತ್ತಲಾಗಿ ದೀಪ ಹಚ್ಚಿದೊಡನೆ ಉಂಡು ಮುಗಿಸಿ, ಕೋಣೆ ಸೇರುತ್ತಿದ್ದುದು ಮಾಡಿಕೆ. +ಆದರೆ ಅಂದು ಹೂವಳ್ಳಿ ಮನೆಯಲ್ಲಿ ರಾತ್ರಿ ಬಹಳ ಹೊತ್ತಾಗಿದ್ದರೂ ಜಗಲಿಯ ದೀಪ ಉರಿಯುತ್ತಲೆ ಇತ್ತು. +ಜಗಲಿಯ ಕೆಸರುಹಲಗೆಯ ಮೇಲೆ ಮುಂಡಿಗೆಗೆ ಒರಗಿ ಒಬ್ಬಳೆ ಕುಳಿತಿದ್ದ ನಾಗಕ್ಕ, ಎದುರಿಗೆ ಅಂಗಳದಲ್ಲಿದ್ದ ತುಳಸಿಕಟ್ಟೆಯ ಮೇಲೆ ದೇವರಿಗೆ ಹಚ್ಚಿಟ್ಟಿದ್ದ ನೀಲಾಂಜನಗಳ ನಾಟ್ಯಮಾನ ಸೊಡರುಗಳ ಕಡೆಗೆ ನೋಡುತ್ತಾ, ಗಂಭೀರ ಚಿಂತಾಮಗ್ನಳಾಗಿ ಕುಳಿತಿದ್ದಳು. +ಅವಳು ತನ್ನ ವಿಫಲ ಜೀವನವನ್ನಾಗಲಿ ಅದರ ದುಃಖ ಮಯ ದುರಂತತೆಯನ್ನಾಗಲಿ ಕುರಿತು ಯೋಚಿಸುತ್ತಿರಲಿಲ್ಲ. +ಚಿನ್ನಮ್ಮನ ಭವಿಷ್ಯ ಜ್ಜೀವನದ ಯೋಗಕ್ಷೇಮವೆ ಅವಳ ಧ್ಯಾನದ ವಿಷಯವಾಗಿತ್ತು. +ತನ್ನ ಸ್ವಂತ ಸುಖ ಸಂತೋಷ ಎಂಬುದೆಲ್ಲ ಮಣ್ಣು ಪಾಲಾಗಿದ್ದ ಈ ಜನ್ಮದ ಬಾಳುವೆಯಲ್ಲಿ ಇನ್ನು ಅವಳಿಗೆ ಉಳಿದಿದ್ದ ಏಕಮಾತ್ರ ಪ್ರತ್ಯಾಶೆ ಎಂದರೆ ಚಿನ್ನಮ್ಮ ಸುಖಸಂತೋಷಗಳಿಂದ ಬದುಕಿ ಬಾಳುವುದೆ ಆಗಿತ್ತು. +ಮುಕುಂದಯ್ಯನೊಡನೆ ಚಿನ್ನಮ್ಮನ ಲಗ್ನವೂ ಇನ್ನೊಂದು ತಿಂಗಳಿಗೆ ನಿಶ್ಚಯವಾಗಿಯೂ ಇತ್ತು. +ಅದಕ್ಕೆ ಮನುಷ್ಯ ದೃಷ್ಟಿಗೆ ಗೋಚರವಾಗುವ ಯಾವ ವಿಘ್ನವೂ ಇರಲಿಲ್ಲ ನಿಜ. +ಆ ಮಂಗಳಕರವಾದ ಸುದಿನವನ್ನೆ ಇದಿರು ನೋಡುತ್ತಾ ನಾಗಕ್ಕ, ಹರ್ಷಚಿತ್ತೆಯಾಗಿ ಆ ಪುಣ್ಯಮುಹೂರ್ತವನ್ನೆ ಉತ್ಕಟಾಭಿಲಾಷೆಯಿಂದ ನಿರೀಕ್ಷಿಸುವ ಉಲ್ಲಾಸೋತ್ಸಾಹಗಳಲ್ಲಿ ತೇಲಿ ಸಾಗುತ್ತಿದ್ದ ತರಳೆ ಚಿನ್ನಮ್ಮನ ದ್ವಿಗುಣಿತ – ತ್ರಿಗುಣಿತ – ಶತಗುಣಿತ ಆನಂದಸ್ರೋತದಲ್ಲಿ ಲೀನೆಯಾಗಿದ್ದಳು. +ಆದರೆ ಆವೊತ್ತು ಬೆಳಿಗ್ಗೆ ಚಿನ್ನಮ್ಮ ಮನೆಯಿಂದ ತುಸುದೂರವಿದ್ದ ಕಾಡುದಾರಿಯಲ್ಲಿ ಕೋವಿಯೊಡನೆ ಮೇಗರವಳ್ಳಿಗೆ ಹೋಗುತ್ತಿದ್ದ ಮುಕುಂದಯ್ಯನನ್ನು ಬೀಳುಕೊಟ್ಟು, ಮನೆಗೆ ಹಿಂತಿರುಗಿ, ಅಂಗಳದ ತುಳಸೀ ದೇವರಿಗೆ ಸುತ್ತು ಬಂದು, ನಾಗಕ್ಕಗೆ ನಡೆದ ವಿಷಯವನ್ನೆಲ್ಲ ತಿಳಿಸಿದ ಮೇಲೆ, ಮನೆಯಲ್ಲಿ ಎಲ್ಲರ ಮನಸ್ಸಿಗೂ ಮುಗಿಲು ಕವಿದಂತಾಗಿತ್ತು. +ಈಡು ತುಂಬದಿದ್ದ ಕೋವಿಯನ್ನು ತೆಗೆದುಕೊಂಡು ಹೋಗುತ್ತಿದ್ದುದಕ್ಕೆ ಯಾವ ದುರುದ್ದೇಶವೂ ಇಲ್ಲವೆಂದೂ, ನಿರಪಾಯವಾಗಿ ತಾನು ಸಾಯಂಕಾಲವೆ ಸುರಕ್ಷಿತವಾಗಿ ಹಿಂದಕ್ಕೆ ಬರುತ್ತೇನೆ ಎಂದೂ ಮುಕುಂದಯ್ಯ ಧೈರ್ಯ ಹೇಳಿದ್ದರೂ, ಹೆಂಗಸರ ಹೃದಯಗಳು ದಿನವೆಲ್ಲ ತಳಮಳಗೊಳ್ಳುತ್ತಲೆ ಇದ್ದುವು; +ಇಷ್ಟವ್ಯಕ್ತಿಯ ಸುರಕ್ಷಿತಾಗಮನಕ್ಕೆ ಪ್ರಾರ್ಥನಾಭಂಗಿಯಲ್ಲಿ ಆನತವಾಗಿಯೆ ಇದ್ದುವು, ತಮ್ಮ ತಮ್ಮ ಭಾವಾನುರೂಪದ ಭಗವಚ್ಚರಣತಲದಲ್ಲಿ! +ಮನೆಯಲ್ಲಿಯೆ ಇದ್ದರೆ ಕೆಲಸವಿಲ್ಲದ ಮನಸ್ಸು ಕಳವಳವನ್ನೆ ಮೆಲುಕು ಹಾಕುತ್ತಾ ಇರುವುದನ್ನು ತಪ್ಪಿಸುವುದಕ್ಕಾಗಿಯೆ ನಾಗಕ್ಕ ಚಿನ್ನಮ್ಮನನ್ನೂ ಪೀಂಚಲು ವೊಡನೆ ಕರೆದುಕೊಂಡು ಮಧ್ಯಾಹ್ನ ಊಟವಾದ ಮೇಲೆ ತೋಟದ ಕೆಲಸಕ್ಕೆ ಹೋಗಿದ್ದಳು. +ಚಿನ್ನಮ್ಮನೊಡನೆ ತಾನೊಬ್ಬಳೆ ಇರುವಾಗಲೆಲ್ಲ ಸಾಧಾರಣವಾಗಿ ಆಶ್ಲೀಲಾಂಚಿತವೂ ಆಗಿರುವ ಹಾಸ್ಯ ಪರಿಹಾಸ್ಯದ ಮಾತುಕತೆಯಲ್ಲಿ ತಡಗಿ ಮನೋರಂಜನೆ ಮಾಡುತ್ತಿದ್ದ ಪೀಂಚಲುವೂ ಆ ದಿನ ಸಂಮ್ಲಾನೆಯೂ ಗಂಭೀರೆಯೂ ಆಗಿಬಿಟ್ಟಿದ್ದಳು. +ಇನ್ನು ಕೆಲವೇ ತಿಂಗಳಲ್ಲಿ ಕಂದನೊಬ್ಬನನ್ನು ಪಡೆಯುವ ಹೇರಾಸೆಯಿಂದಿದ್ದ ಆ ಚೊಚ್ಚಲು ಬಸಿರಿಗೆ, ತನ್ನ ಗಂಡನಿಗೂ ಏನಾದರೂ ಆದರೆ ತನ್ನ ಗತಿಯೇನು?ಎಂಬ ಚಿಂತೆ ಹತ್ತಿತ್ತು. +ಅವಳಿಗೆ ಹುಟ್ಟುವ ಮಗು ಹೆಣ್ಣೊ?ಗಂಡೋ?ಎಂಬ ವಿಷಯದಲ್ಲಿ ಚಿನ್ನಮ್ಮಗೂ ಪೀಂಚಲುವಿಗೂ ಎಷ್ಟೋ ಸಾರಿ ತರತರವಾದ ಪಂಥ ಪಾಡು ನಡೆಯುತ್ತಿತ್ತು. +ಇವೊತ್ತು ಕೆಲಸದ ಮಧ್ಯೆ ವಿಶ್ರಾಂತಿಗಾಗಿ ನೆರಳಲ್ಲಿ ಮೂವರೂ ಕುಳಿತಿದ್ದಾಗ, ಅಡಕೆಯ ಮರದ ಪೊಟರೆಯಲ್ಲಿ ಗೂಡುಕಟ್ಟಿ ಮರಿಮಾಡಿದ್ದ ಕಾಮಳ್ಳಿ ದಂಪತಿ ತಮ್ಮ ಎರಡು ಮರಿಗಳನ್ನು ಆಗತಾನೆ ಹೊರಕ್ಕೆ ಹಾರಿಸಿ, ಅವಕ್ಕೆ ಗುಟುಕು ಕೊಡುತ್ತಿದ್ದುವು. +ಆ ಮರಿಗಳಲ್ಲಿ ಒಂದು ಗಂಡು ಒಂದು ಹೆಣ್ಣೆಂದೂ, ಎರಡೂ ಹೆಣ್ಣಾಗಿರಬೇಕೆ ಎಂದೂ, ಎರಡೂ ಗಂಡೇ ಆಗಿರಬಾರದೆಕೆ ಎಂದೂ ವಾದವಿವಾದ ಪ್ರಾರಂಭವಾಗಿತ್ತು. +ಆಗ ವಿನೋದಶೀಲೆ ಚಿನ್ನಮ್ಮ ತನ್ನ ಎರಡು ಕೈಬೆರಳುಗಳನ್ನು ಮುಂದಕ್ಕೆ ಚಾಚಿ, ಒಂದನ್ನು ಮುಟ್ಟುವಂತೆ ಪೀಂಚಲುಗೆ ಹೇಳಿದಳು. +ಪೀಂಚಲು ಏನು?ಎಂತು?ಏತಕ್ಕೆ? +ಒಂದೂ ಗೊತ್ತಾಗದೆ ಸುಮ್ಮನೆ ಒಂದು ಬೆರಳನ್ನು ಮುಟ್ಟಿದಳು. +“ನೀನೆ ಪುಣ್ಯವಂತೆ ಕಣೇ” ಎಂದು ಚಿನ್ನಮ್ಮ. +“ಯಾಕ್ರೋ?” ಹಿಗ್ಗಿ ರಾಗವಾಗಿ ಕೇಳಿದಳು ಪೀಂಚಲು. +ಸುಳ್ಳಾಗಲಿ, ನಿಜವಾಗಲಿ, ಮಂಗಳ ಹೇಳಿದರೆ ಮಾರುಹೋಗದವರಾರು? +“ದೊಡ್ಡಬೆರ್ಳ್ಳು ಮುಟ್ಟಿದೆಲ್ಲಾ?ಅದಕ್ಕೇ!” +“ದೊಡ್ಡಬೆರ್ಳ್ಳು ಮುಟ್ಟದ್ರೆ?ಏನು?” +“ದೊಡ್ಡಬೆರ್ಳ್ಳು,- ಗಂಡು. ಸಣ್ಣ ಬೆರ್ಳ್ಳು,- ಹೆಣ್ಣು! …. +ನಿಂಗೆ ಹುಟ್ಟೋ ಬಾಲೆ ಗಂಡೋ ಹೆಣ್ಣೋ ಅಂತಾ ಸಕುನ ನೋಡ್ದೆ ಕಣೇ.” +“ತೋ ನಿಮ್ಮ!” ಚಿನ್ನಮ್ಮ ಮಾಡಿದುದಕ್ಕೂ ಹೇಳಿದುದಕ್ಕೂ ಒಳಗೊಳಗೆ ತುಂಬ ಹಿಗ್ಗಿದ್ದರೂ ಪೀಂಚಲು ಲಜ್ಜಿಗೊಂಡಂತೆ ನಗುನಗುತ್ತಾ ಹೇಳಿದಳು “ನಿಮಗೆ ಮಾಡೋಕೆ ಕಸುಬಿಲ್ಲ, ಚಿನ್ನಕ್ಕಾ.” +ದೂರ ಕುಳಿತು ಅನಾಸಕ್ತಿಯಂತೆ ತೋಟದ ಕಡೆಗೆ ನೋಡುತ್ತಿದ್ದರೂ ಅತ್ಯಂತ ಆಸಕ್ತಿಯಿಂದ ಕಿವಿಗೊಟ್ಟು ಆಗಲಿಸುತ್ತಿದ್ದಳು ನಾಗಕ್ಕ. +ಆ ಇಬ್ಬರು ಹುಡುಗಿಯರ ಅಣುಗು – ಬಿರುಗು ಸಂಭಾಷಣೆಯನ್ನು ಅವಳು ತನ್ನ ಬದುಕಿನ ಶೂನ್ಯತೆಯನ್ನೂ ಅನ್ಯರ ಬಾಳುವೆಯ ಸುಖಸಂತೋಷ ತೃಪ್ತಿಗಳಿಂದಲೆ ತುಂಬಿಕೊಳ್ಳಬೇಕಾಗಿತ್ತು. +ಹುಡುಗಿಯರಿಬ್ಬರ ಮುಗ್ಧ ಅಟ್ಟಹಾಸ ಸಹ್ಯಾದ್ರಿಯ ಮೂಲೆಯ ಆ ಅಡಕೆಯ ತೋಟಕ್ಕೆ ಚಕ್ಕಳಗುಳಿ ಇಡುತ್ತಿತ್ತು! +ಕಾಮಳ್ಳಿಯ ಮರಿಗಳು ಗಂಡೋ ಹೆಣ್ಣೋ ಎಂಬುದರಲ್ಲಿ ಪ್ರಾರಂಭವಾದ ಚಿತ್ರ ವೃತ್ತಿ, ಪೀಂಚಲುಗೆ ಹುಟ್ಟುವ ಮಗು ಗಂಡೋ ಹೆಣ್ಣೋ ಎಂದು ಶಕುನ ನೋಡುವುದರಲ್ಲಿ ವ್ಯವಹರಿಸಿತ್ತು. +ಆದರೆ ಚಿನ್ನಮ್ಮನ ಚಿತ್ತವೃತ್ತಿಯ ತರಂಗ ಚಲನೆ ಅಲ್ಲಿಗೇ ನಿಲ್ಲಲಿಲ್ಲ. +ಬೆಳಗಿನಿಂದಲೂ ಅವಳನ್ನು ಕಾಡುತ್ತಿದ್ದ ಒಂದು ಚಿಂತೆಯ ಕಡೆಗೆ ಒಲೆಯಿತು. +ಮತ್ತೆ ಎರಡು ಬೆರಳು ಎತ್ತಿ ಹಿಡಿದಳು, ಪೀಂಚಲುವ ಮುಖದ ಮುಂದೆ ಹೇಳಿದಳು. +“ಮುಟ್ಟೆ, ಇದರಲ್ಲಿ ಯಾವುದಾದ್ರೂ ಒಂದು ಬೆರ್ಳ್ಳನ್ನ….”ಈ ಸಾರಿ ಪೀಂಚಲು ಹಿಂದಿನ ಸಲದಂತೆ ಲಘುವಾಗಿಯಾಗಲಿ ಯಾಂತ್ರಿಕವಾಗಿಯಾಗಲಿ ವರ್ತಿಸಲಿಲ್ಲ. +ತನ್ನ ಕಣ್ಣ ಮುಂದೆ ಕವಲಾಗಿ ನಿಂತಿದ್ದ ಚಿನ್ನಕ್ಕನ ಎರಡು ಬೆರಳುಗಳನ್ನೂ ತದೇಕಚಿತ್ತಳಾಗಿ ನೋಡತೊಡಗಿದಳು. +ಯಾವ ಬೆರಳನ್ನು ಮುಟ್ಟಿದರೆ ಏನು ಶಕುನ ಬಂದುಬಿಡುತ್ತದೆಯೋ?ಕಂಡವರಾರು? +ಪೀಂಚಲು ಭಾವಿಸಿದ್ದಳು, ಚಿನ್ನಮ್ಮ ತನ್ನ ಸಲುವಾಗಿಯೆ ಕಣಿ ಹೇಳಲು ಬೆರಳೊಡ್ಡಿದ್ದಾಳೆ ಎಂದು. +ಆದ್ದರಿಂದ ತನಗೆ ಶುಭವಾಗುವಂತೆ ಹೇಳುವ ಬೆರಳನ್ನೆ ಪತ್ತೆಹಚ್ಚಿ ಮುಟ್ಟಬೇಕೆಂದು ಅವಳ ಆಕಾಂಕ್ಷೆ. +ತಪ್ಪಿ ಬೇರೆ ಮುಟ್ಟಿಬಿಟ್ಟರೆ ಏನು ಗತಿ? …. +ಆವೊತ್ತು ತನ್ನ ಗಂಡ ಐತ, ನೆನೆದರೆ ಇವೊತ್ತಿಗೂ ಏನು ನಾಚಿಗೆಯೇರುತ್ತದೆ! +ತನ್ನ ಬತ್ತಲೆಯೊಡನೆ ಅವನ ಬತ್ತಲೆಯನ್ನೂ ಸೇರಿಸಿ ಆಟವಾಡುತ್ತಿದ್ದಾಗ, ಹಾಲು ತುಂಬಿ ಉಬ್ಬುತ್ತಿರುವ ತನ್ನ ಪೆರ್ಮೊಲೆಗಳಿಗೆ ಮುತ್ತಿಟ್ಟು, “ಎಡವೊ? +ಬಲವೊ?ಹೇಳು!” ಅಂದಾಗ ತಾನು ಫಕ್ಕನೆ “ಬಲ” ಅನ್ನಲು ಹಾಂಗಾದ್ರೆ ನೀನು ಹೆಣ್ಣು ಹಡೆಯುವುದೇ ನಿಶ್ಚಯ!ಎಂದು ಅಪಶಕುನ ಹೇಳಿದ್ದನಲ್ಲವೆ? +ಹಾಂಗಾಗಬಾರದಲ್ಲಾ ಇಂದು? +ಚಿನ್ನಮ್ಮನ ಬೆರಳುಗಳನ್ನು ನೋಡುತ್ತಿದ್ದ ಪೀಂಚಲು ತನ್ನೊಳಗೇ “ಅಃ ಚಿನ್ನಕ್ಕನ ಕೈಬೆರಳು ಎಷ್ಟು ಬಿಳಿ! +ಎಷ್ಟು ಸಪುರ!ಏನು ಚೆಂದ!ಮುದ್ದು ಮಾಡಬೇಕು ಅನ್ನಿಸುತ್ತದೆ! …. +ನನಗೇ ಹೀಂಗಾದರೆ, ಇನ್ನು ಆ ಮುಕುಂದಯ್ಯೋರಿಗೆ ಹೆಂಗಾಗ ಬೇಕು?… +ಅದಕ್ಕೇ ಮತ್ತೆ, ಆವೊತ್ತು ಸೊಪ್ಪು ತರಲು ಹಾಡ್ಯಕ್ಕೆ ಹೋಗಿದ್ದಾಗ…  ಅವರು…ಚಿನ್ನಕ್ಕನಿಗೆ…  ಹಾಂಗೆ ಮಾಡಿಬಿಟ್ಟದ್ದು?” ಎಂದುಕೊಂಡು ಸಚಿತ್ರವಾಗಿ ನೆನೆಯುತ್ತಿದ್ದಂತೆಯೆ, ಅವಳ ಮುಖಮಂಡಲ ಭಾವಮಯವಾಗಿ ಕಾಂತಿಯುಕ್ತವಾಯಿತು. +ಅದನ್ನು ಗಮನಿಸಿ ಚಿನ್ನಮ್ಮ “ಏ ಯಾಕೇ, ಇಷ್ಟು ನಾಚಿಕೆ ನಿಂಗೆ? +ಬೆರಳು ಮುಟ್ಟು ಅಂದ್ರೆ?” ಎಂದು ಅವಸರಪಡಿಸಿದಳು. +ಆಗ ಮಾಡಿದಂತೆ ಈಗಲೂ, ದೊಡ್ಡ ಬೆರಳೇ ಶುಭದ ನಿಧಿಯಾಗಿರಬೇಕು ಎಂದು ಭಾವಿಸಿ, ಪೀಂಚಲು ನೀಳವಾಗಿ ನಿಂತಿದ್ದ ಅದನ್ನೆ ಮುಟ್ಟಿದಳು. +ಪಾಪ, ಅವಳಿಗೆ ಹೇಗೆ ಗೊತ್ತಾಗಬೇಕು, ಅದರ ಪರಿಣಾಮ ಅಷ್ಟೊಂದು ಭೀಕರವಾಗುತ್ತದೆ ಎಂದು? +ಶರತ್ಕಾಲದ ಸರೋವರದಂತೆ ಪ್ರಶಾಂತ ಸುಂದರವಾಗಿದ್ದ ಚಿನ್ನಮ್ಮನ ವದನರಂಗದಲ್ಲಿ ಇದ್ದಕ್ಕಿದ್ದಂತೆಯೆ ಭಯವಿಕಾರದ ತರಂಗಗಳೆದ್ದುವು. +ಚಳಿಗಾಳವಾಗಿದ್ದೂ, ನೆರಳಿನಲ್ಲಿ ಕುಳಿತಿದ್ದೂ, ಕುಳಿರುಗಾಳಿ ಬೀಸುತ್ತಿದ್ದರೂ ಅವಳ ಹಣೆಯಲ್ಲಿ ಬೆವರಿನ ಹನಿ ಮೂಡಿದವು. +ಉಸಿರು ಸುಯ್ಯುಸಿರಾಯಿತು, ಕಣ್ಣಲ್ಲಿ ಬಳಬಳನೆ ನೀರು ಉಕ್ಕಿ ಕೆನ್ನೆಗಳ ಮೇಲೆ ಹರಿದವು. +ಹೆದರಿ ಕೂಗಿಕೊಂಡರೂ ದನಿ ಏಳಲಿಲ್ಲ. +ಇನ್ನೇನು ಪ್ರಜ್ಞೆ ತಪ್ಪಿ ಬೀಳುತ್ತಾಳೆಯೊ ಏನೋ ಎಂಬಂತೆ ತತ್ತರಿಸುತ್ತಿದ್ದ ಅವಳನ್ನು ಕಂಡು, ಬೆಬ್ಬಳಿಸಿ “ಅಯ್ಯೋ ಚಿನ್ನಕ್ಕಾ, ಏನಾಯ್ತು? +ಏನಾಯ್ತು?” ಎಂದು ಚೇತ್ಕರಿಸಿ, ದಿಗಿಲು ಬಡಿದಿದ್ದ ಪೀಂಚಲು ತನ್ನ ಗರ್ಭಸ್ಥೂಲತೆಯನ್ನೂ ಮರೆತು ಚಂಗನೆ ನೆಗೆದದ್ದು ಚಿನ್ನಮ್ಮನನ್ನು ಆತುಕೊಂಡಳು. +ನಾಗಕ್ಕನೂ ಓಡಿಬಂದು ಹಿಡಿದುಕೊಂಡಳು. +ಪೀಂಚಲು ಪಕ್ಕದಲ್ಲಿಯೆ ಹರಿಯುತ್ತಿದ್ದ ತೋಟದ ಕಪ್ಪಿನ ನೀರನ್ನು ಬೊಗಸೆಯೆತ್ತಿ ತಂದು, ನಾಗಕ್ಕ ಹೇಳಿದಂತೆ ನೆತ್ತಿಗೂ ಹಣೆಗೂ ಚಿಮುಕಿಸಿದಳು. +ಸೆರಗಿನಿಂದ ಗಾಳಿ ಬೀಸಿದಳು. +ಅವರು ಕುಳಿತಿದ್ದ ಜಾಗದಲ್ಲಿ ಕಸಕಡ್ಡಿ ಜಿಗ್ಗು ಹಳು ತುಂಬಿದ್ದರಿಂದ ಆ ಸದೆಯಲ್ಲಿ ಎಲ್ಲಿಯಾದರೂ ಅಡಗಿದ್ದ ಹಾವು ಗೀವು ಕಚ್ಚಿತೋ ಎಂದು ಹುಡುಕಿ ನೋಡಿದರು. +ಸ್ವಲ್ಪ ಹೊತ್ತಿನ ಮೇಲೆ ಚಿನ್ನಮ್ಮ ಚೇತರಿಸಿಕೊಂಡಳು! +ಆದರೆ ಯಾವ ಪ್ರಶ್ನೆಗೂ ಉತ್ತರ ಕೊಡಲಿಲ್ಲ. +ಅಗಲವಾಗಿ ತೆರೆದಿದ್ದ ಕಣ್ಣುಗಳಲ್ಲಿಯೂ ಮುಖಭಂಗಿಯಲ್ಲಿಯೂ ತುಸು ಹೊತ್ತಿನ ಹಿಂದೆ ತಾಡಿತವಾಗಿದ್ದ ಭೀತಿಯ ಭಾವ ತನ್ನ ಮುದ್ರೆಯನ್ನೊತ್ತಿ ಬಿಟ್ಟಿತ್ತು. +ಕಣ್ಣೀರು ಉಕ್ಕಿದಂತೆಲ್ಲ ಸೆರಗಿನಿಂದ ಒರಸಿಕೊಳ್ಳುತ್ತಿದ್ದಳು. +“ಐತ ಹೇಳುತ್ತಿದ್ದ, ಅಮ್ಮಾ. +ಇಲ್ಲಿ ಹಗಲು ಹೊತ್ತಿನಲ್ಲಿ ಏನೋ ಒಂದು ತಿರುಗುತ್ತದೆಯಂತೆ! …. ” ಪ್ರಾರಂಭಿಸಿದಳು ಪೀಂಚಲು. +ರೇಗಿ ಅವಳ ಬಾಯಿ ಮುಚ್ಚಿಸಿದಳು ನಾಗಕ್ಕ. +“ಸಾಕು ಸುಮ್ಮನಿರೆ!…  ಎಷ್ಟು ಸಾರಿ ಹೇಳಬೇಕೆ ನಿನಗೆ ನಾನು? +ಬೆರಳೂ ಗಿರಳೂ ಮುಟ್ಟಿ, ಸಕುನ ಗಿಕುನ ನೋಡೋ ಆಟ ಆಡಬಾರದು ಅಂತಾ? …. +ಏಳಿ, ಹೋಗಾನ ಮನೆಗೆ…. +ಸಾಕು ನೀವು ಕಡಿದಿದ್ದು, ಕೆಲಸ!” +“ಏನು?ಎಂತು?” ಎಂಬುದು ಹೊಳೆಯದಿದ್ದರೂ “ಏಕೆ?” ಎಂಬುದನ್ನು ಊಹಿಸಿದ್ದಳು ನಾಗಕ್ಕ. +ತನ್ನ ಇನಿಯನಿಗೆ ಸಂಬಂಧಪಟ್ಟಹಾಗೆ ಏನನ್ನೊ ಸಂಕಲ್ಪಿಸಿ, ಬೆರಳು ಮುಟ್ಟಿಸಿದ್ದಳು ಚಿನ್ನಮ್ಮ. +ಅದು ಶುಭಕ್ಕೆ ವ್ಯತಿರಿಕ್ತವಾಗಿ, ಕೇಡಿನ ಕಡೆಗೇ ಇತ್ಯರ್ಥ ಹೇಳಿದ್ದರಿಂದ ಅವಳ ಮೃದು ಮುಗ್ಧ ಆಶಾಪೂರ್ಣ ಚೇತನ ತತ್ತರಿಸಿ ಹೋಗಿತ್ತು. +ಮನೆಗೆ ಹಿಂತಿರುಗುತ್ತಾ ದಾರಿಯಲ್ಲಿ ನಾಗಕ್ಕ ಚಿನ್ನಮ್ಮಗೆ ಧೈರ್ಯ ಹೇಳಿದಳು. + “ತಂಗೀ, ನಾ ಹೇಳೋ ಮಾತನ್ನ ಸೆರಗಿನಲ್ಲಿ ಗಂಟುಹಾಕಿ ಕೊಂಡಿರು. + ಇವೊತ್ತಲ್ಲ ನಾಳೆ, ನಾಳೆ ಅಲ್ಲ ಮುಂದೆ. + ನಿನ್ನ ಒಳ್ಳೆಯದಕ್ಕೇ ನಾ ಹೇಳ್ತಿದ್ದೀನಿ. + ನಿನ್ನ ಗಂಡನೇ ಆಗಲಿ, ನಂಟರಿಷ್ಟರು ಯಾರೇ ಆಗಲಿ, ಮನೆ ಬಿಟ್ಟು ಕೆಲಸಕ್ಕೆ ಹೊರಗೆ ಹೋದಾಗ, ನೀನು “ಕೆಟ್ಟದ್ದಾಗಿಬಿಟ್ಟರೆ ಏನು ಗತಿ?” ಅಂತಾ ಅಮಂಗಳಾನೇ ನೆನೆದು ಹೆದರ್ತಾ ಕೂತರೆ ಖಂಡಿತಾ ಒಳ್ಳೆದಲ್ಲ. +ಅದಕ್ಕೆ ಬದಲಾಗಿ ಅವರಿಗೆ ಒಳ್ಳೇದಾಗ್ತದೆ; +ಅವರು ಸುಖವಾಗಿ ಮನೆಗೆ ಬರ್ತಾರೆ” ಅಂತಾ ದೇವರನ್ನು ನೆನೀತಿದ್ರೆ, ಒಳ್ಳೇದು ಆಗೇಆಗ್ತದೆ. +ನಾಗಕ್ಕನ ಹಿತವಚನ ಚಿನ್ನಮ್ಮಗೆ ತನ್ನ ಮುಕುಂದ ಬಾವ ಜೈಮಿನಿ ಭಾರತ ಓದಿ ಕಥೆ ಹೇಳುತ್ತಿದ್ದಾಗ ಹೇಳಿದ್ದನ್ನೆ ನೆನಪಿಗೆ ತಂದಿತ್ತು. +ತಾನು ಎಂಥಾ ತಪ್ಪು ಮಾಡುತ್ತಿದ್ದೆ ಎಂದು ತನ್ನನ್ನು ತಾನೆ ಬೈದುಕೊಂಡಳು. +ಈ ಅಮಂಗಳಾಶಂಕೆ ಆಕೆಯ ಬದುಕನ್ನೆ ಕೊರೆಯುತ್ತಿದ್ದ ಒಂದು ಕೆಟ್ಟ ಕೀಟಚಾಳಿಯಾಗಿತ್ತು. +ಅವಳು ಹಗಲೆಲ್ಲ ತಾನು ಬಲ್ಲಂತೆ ಭಗವಂತನನ್ನು ನೆನೆಯುತ್ತಾ, ಮುಕುಂದ ಭಾವ ಯಾವ ಆಮಂಗಳ ಕಾರ್ಯವನ್ನೂ ಮಾಡದೆ, ಯಾವ ಅಮಂಗಳಕ್ಕೂ ಒಳಗಾಗದೆ, ಬೈಗಿಗೆ ಸುರಕ್ಷಿತವಾಗಿ ಮನೆಗೆ ಬರಲಿ ಎಂದು ಹಾರೈಸುತ್ತಾ ಇದ್ದು, ಮುಚ್ಚಂಜೆ ಕಪ್ಪಾಗಲು ಅಂಗಳದ ತುಳಸೀ ದೇವರಿಗೆ ದೀಪ ಹಚ್ಚಿಟ್ಟು, ಕೈಮುಗಿದು ಎರಡು ಸುತ್ತು ಬಂದು, ಅಡ್ಡಬಿದ್ದಳು. +ಅಡ್ಡಬಿದ್ದವಳು ಬಹಳ ಹೊತ್ತು ಮೇಲೇಳಲಿಲ್ಲ. +ಅವಳ ಮನಸ್ಸಿಗೆ ತನ್ನ ಮೈಯಲ್ಲಿ ಎನೋ ಆಗುತ್ತಿರುವಂತೆ ಅನುಭವವಾಗಿ, ದೇವರ ಬಳಿಯ ತುಳಸಿಯ ಮುಂದೆ ಅದಾಗಿಬಿಟ್ಟರೆ ಮೈಲಿಗೆ ಆಗುತ್ತದೆಂದು ಹೆದರಿ, ಬೇಗಬೇಗನೆ ಜಗಲಿಗೇರಿ ಒಳಕ್ಕೆ ಹೋಗುವುದಕ್ಕೆ ಬದಲಾಗಿ, ಕೆಳಗರಡಿಯಲ್ಲಿದ್ದ ಮುರುವಿನ ಒಲೆಯ ಪಕ್ಕದಲ್ಲಿಟ್ಟಿದ್ದ ಅಕ್ಕಿಕಲಬಿಯ ಮರೆಗೆ ಹೋದಳು. +ಜಗಲಿಯ ಮೇಲಿದ್ದು, ಮೊಮ್ಮಗಳು ದೇವರಿಗೆ ಬಲಗೊಂಡು ಅಡ್ಡ ಬೀಳುತ್ತಿದ್ದ ದಿವ್ಯದೃಶ್ಯವನ್ನು ಆಶೀರ್ವಾದ ತುಂಬಿದ ಹೃದಯದಿಂದ ಕಣ್ಣುತೊಯ್ದು ನೋಡುತ್ತಿದ್ದ ಚಿನ್ನಮ್ಮನ ಅಜ್ಜಿ, ತನ್ನ ಪಕ್ಕದಲ್ಲಿ ನಿಂತಿದ್ದ ನಾಗಕ್ಕಗೆ “ಯಾಕೆ?… ಹುಡುಗಿ ಅತ್ತಲಾಕಡೆ ಹೋದ್ಲು?…” ಎಂದು ಸೋಜಿಗವೊರೆದಳು. +ನಾಗಕ್ಕ ಕರೆದಳು, ಚಿನ್ನಮ್ಮ ಓಕೊಂಡರೂ, ಜಗಲಿಗೆ ಬರಲಿಲ್ಲ. +ನಾಗಕ್ಕ ಕಲಬಿಯಿದ್ದ ಜಾಗಕ್ಕೆ ಇಳಿದುಹೋಗಿ, ತುಸು ಹೊತ್ತು ಪಿಸಿಪಿಸಿ ಮಾತನಾಡಿ ಹಿಂದಕ್ಕೆ ಬಂದವಳು ಅಜ್ಜಿಗೆ “ಏನೂ ಇಲ್ಲಂತೆ, ಅಜ್ಜಮ್ಮ…. +ಚೆಂಬು, ಚಾಪೆ, ಕಂಬಳಿ ತಂದುಕೊಡಾಕೆ ಹೇಳ್ತು” ಎನ್ನುತ್ತಾ ಚಿನ್ನಮ್ಮ ಮಲಗುತ್ತಿದ್ದ ಅಜ್ಜಿಯ ಕೋಣೆಗೆ ನಡೆದಳು. +ಅಜ್ಜಿಗೆ ಅರ್ಥವಾಯ್ತು. +ಆ ಮುರುವಿನ ಒಲೆಯ ಪಕ್ಕದಲ್ಲಿ, ಎತ್ತರವೂ ದೊಡ್ಡದೂ ಆಗಿದ್ದ ಅಕ್ಕಿಕಲಬಿಯಿಂದ ಮರೆಕಟ್ಟಿದಂತಿದ್ದ, ಕೆಳಗರಡಿಯ ಆ ಜಾಗದಲ್ಲಿ ಇಂದು ಚೆನ್ನಮ್ಮ ಮುಟ್ಟಾಗಿ, ಮೂರು ದಿನಗಳೂ, ಹಗಲೂ ರಾತ್ರಿಯೂ, ಕುಳಿತೂ ಎದ್ದೂ ಮಲಗಿಯೂ ಹರಟೆ ಹೊಡೆದೂ ಆಕಳಿಸಿಯೂ ನಿದ್ದೆಮಾಡಿಯೂ ಕಳೆಯಲಿರುವಂತೆ, ಚಿನ್ನಮ್ಮನ ತಾಯಿಯೂ ಚಿನ್ನಮ್ಮನ ಅಜ್ಜಿಯೂ ಚಿನ್ನಮ್ಮನ ಮುತ್ತಜ್ಜಿಯೂ, ಅವಳಜ್ಜಿಯ ಅಜ್ಜಿಯ ಅಜ್ಜಿಯೂ ನೂರಾರು ವರ್ಷಗಳಿಂದಲೂ, ಅವರು ಹೊರಗಾಗಿದ್ದಾಗಲೆಲ್ಲ, ಸಲಕ್ಕೆ ಮೂರು ಮೂರು ದಿನಗಳಂತೆ, ಬೀಡುಬಿಟ್ಟು ಕಳೆದಿದ್ದರು! +ಈಗಲೂ ವಯೋಧರ್ಮದಿಂದ ಅಜ್ಜಿಗೆ ಆ ತೊಂದರೆ ತಪ್ಪಿದ್ದರೂ ನಾಗಕ್ಕಗೆ ಇನ್ನೂ ತಪ್ಪಿರಲಿಲ್ಲವಷ್ಟೇ? …. +ಕತ್ತಲಾಗುವವರೆಗೆ ತಕ್ಕಮಟ್ಟಿಗೆ ಧೈರ್ಯದಿಂದಲೆ ಇತ್ತು, ಚಿನ್ನಮ್ಮನ ಚೈತನ್ಯ. +ಬೈಗುಕಪ್ಪಾಗುತ್ತಾ ಬಂದಂತೆಲ್ಲ ಅವಳ ಪ್ರತೀಕ್ಷೆ ತೀಕ್ಷ್ಣವಾಗತೊಡಗಿತು. +ಮತ್ತೆ ಮತ್ತೆ ಹೆಬ್ಬಾಗಿಲಾಚೆಗೆ ಹೋಗಿ ಹಾದಿಯ ಕಡೆಗೆ ನೋಡುತ್ತಿದ್ದಳು. +ಪೂರ್ತಿ ಕತ್ತಲು ಕವಿದ ಮೇಲೂ ಮುಕುಂದಯ್ಯ ಹಿಂತಿರುಗದಿದ್ದುದನ್ನು ನೋಡಿ, ಅವಳ ಅಮಂಗಳಾಶಂಕೆ ಬಿಸಿಯಾಗುತ್ತ ಬಂದು ಕುದಿಯತೊಡಗಿತು. +ಮನೆಗೆ ಅಂಟಿಕೊಂಡಂತಿದ್ದ ಕೊಟ್ಟಿಗೆಯ ಮೂಲೆಯ ತನ್ನ ಬಿಡಾರದಲ್ಲಿ ಅಡುಗೆಮಾಡಿಟ್ಟು, ತನ್ನ ಗಂಡ ಬಂದ ಮೇಲೆ ಅವನೊಡನೆಯೆ ಉಣ್ಣುವ ಆಶೇಯಿಂದ, ಬಿಡಾರದ ಬಾಗಿಲು ಮುಚ್ಚಿಕೊಂಡು ಪೀಂಚಲು ಮನೆಗೆ ಬಂದಿದ್ದಳು. +ಐತನಿಲ್ಲದ ರಾತ್ರಿಗಳಲ್ಲಿ ಪೀಂಚಲು ತನ್ನ ಬಿಡಾರದಲ್ಲಿ ಒಬ್ಬಳೆ ಮಲಗಲು ಅಂಜಿಕೆಯಾಗಿ ಮನೆಗೇ ಬಂದು, ಮನೆಗೆಲಸದ ಮುದುಕಿ ಸುಬ್ಬಿ ಯಾವಾಗಲೂ ಮಲಗುತ್ತಿದ್ದ ಅಕ್ಕಿ ಕಲಬಿಯ ಮೂಲೆಯಲ್ಲಿಯೆ ಮಲಗುತ್ತಿದ್ದುದು ರೂಢಿ. +ಇವತ್ತು ಚಿನ್ನಕ್ಕನೂ ಅಲ್ಲಿಯೆ ಮಲಗುವಂತಾಗಿದ್ದುದನ್ನು ಕೇಳಿ ಅವಳಿಗೆ ತುಂಬಾ ಸಂತೋಷವಾಯ್ತು, ವಿನೋದಕ್ಕೂ ಮಾತಿಗೂ ಹೆಚ್ಚು ಕಡಿಮೆ ಸಮಸಮ ವಯಸ್ಸಿನ ಸಂಗಾತಿಯ ಸಖೀಸಂಗ ದೊರೆತಿದ್ದಕ್ಕಾಗಿ. +ಆದರೆ ಇವೊತ್ತಿನ ಪರಿಸ್ಥಿತಿ ಬೇರೆಯಾಗಿತ್ತು. +ಚೆನ್ನಮ್ಮನ ಮನಃಸ್ಥಿತಿ ವಿನೋದಕ್ಕಾಗಲಿ ಪಟ್ಟಂಗಕ್ಕಾಗಲಿ ಸ್ವಲ್ಪವೂ ಸಿದ್ಧವಾಗಿರಲಿಲ್ಲ. +ಒಂದೆರಡು ಸಾರಿ ಪೀಂಚಲು ಮಾಡಿದ ಪ್ರಯತ್ನವೂ ವಿಫಲವಾಗಿತ್ತು. +ಅದು ಅಷ್ಟಕ್ಕೇ ನಿಂತಿರಲೂ ಇಲ್ಲ. +ಚಿನ್ನಮ್ಮ ತನ್ನ ಪ್ರಿಯತಮನ ಆಗಮನ ನಿರೀಕ್ಷೆಯಿಂದಲೂ ಅಮಂಗಳಾಶಂಕೆಯಿಂದಲೂ ಕುದಿಯುತ್ತಿದ್ದಾಳೆ ಎಂಬುದನ್ನು ಗ್ರಹಿಸಿದ ಅನಂತರ ಆ ಉದ್ವೇಗ ಪೀಂಚಲಿಗೂ ತಟ್ಟಲಾರಂಭಿಸಿತು. +ಒಮ್ಮೆ ಚಿನ್ನಮ್ಮ ಹೆಬ್ಬಾಗಿಲಾಚೆ ಹೋಗಿ ಬಂದು ನಿಟ್ಟುಸಿರು ಬಿಟ್ಟು, ತನಗೆ ತಾನೆ ಎಂಬಂತೆ “ತಮಗೆ ಬರಾಕೆ ತಡಾಗ್ತದೆ ಅಂತಾ ಗೊತ್ತಾದಮೇಲೆ ಐತನ್ನಾದ್ರೂ ಕಳಿಸಬಾರ್ದಿತ್ತೇ? +ಸುಖಾ ಸುಮ್ಮನೆ ನಮ್ಮ ಹೊಟ್ಟೆ ಉರಿಸಾಕೆ?” ಎಂದು ಸಿಡುಕಿಕೊಂಡದ್ದನ್ನು ಆಲಿಸಿದ ಪೀಂಚಲಿಗೂ ಯಾಕೋ ಹೆದರಿಕೆಯಾದಂತಾಗಿ, ಸುಯ್ದೇರಿ, ಕಣ್ಣು ಒದ್ದೆಯಾಗಿತ್ತು. + ಅವಳ ಹೊಟ್ಟೆಯಲ್ಲಿದ್ದು ಆಗಲೆ ಅಲ್ಪಸ್ವಲ್ಪ ಚಲನೆಗೂ ಷುರು ಮಾಡಿದ್ದ ಐತನ ಕಂದಮ್ಮ ತನ್ನ ಅಸ್ತಿತ್ವವನ್ನು ಅಬ್ಬೆಗೆ ಸುಪ್ರಕಟವಾಗಿಯೆ ತಿಳಿಸುವಂತೆ ಒದ್ದಾಡಿಕೊಂಡಿತ್ತು, ಕುಮುಟಿತ್ತೆಂಬಂತೆ! …. + ರಾತ್ರಿ ಊಟದ ಹೊತ್ತಾಗಲು ನಾಗಕ್ಕ ಹಿತ್ತಲುಕಡೆಗೆ ಬಾ ಎಂದು ಊಟಕ್ಕೆ ಎಬ್ಬಿಸಿದಾಗ ಚಿನ್ನಮ್ಮ ತನಗೆ ಹಸಿವಾಗುತ್ತಿಲ್ಲ ಎಂದು ಹೇಳಿ ಮುಸುಗುಹಾಕಿಕೊಂಡು ಮಲಗಿಬಿಟ್ಟಿದ್ದಳು. +ಅವಳಿಗೆ ತುಸು ದೂರದಲ್ಲಿ ಮಲಗಿದ್ದ ಪೀಂಚಲು, ತನಗೆ ಹಸಿವಾಗಿದ್ದರೂ, ಚಿನ್ನಮ್ಮ “ಬಿಡಾರಕ್ಕೆ ಹೋಗಿ ಉಂಡುಕೊಂಡು ಬಾರೆ” ಎಂದು ಒಂದೆರಡು ಸಾರಿ ಹೇಳಿದ್ದರೂ, “ಅವರು ಬಂದಮ್ಯಾಲೇ ಹೋಗ್ತೀನಿ” ಎಂದು ಮಲಗಿದ್ದಳು. +ಚೆನ್ನಮ್ಮಗೆ ಗೊತ್ತಿತ್ತು, ಚೊಚ್ಚಲು ಬಸಿರಿ ಪೀಂಚಲು ತನ್ನ ಹಾಗೆ ಹಸಿದುಕೊಂಡಿರಲಾರಳು ಮತ್ತು ಹಸಿದಿರಲೂ ಬಾರದು ಎಂದು. +ಆದರೆ, ಯಾವಾಗಲೂ ಲಘುವಾಗಿ ವಿನೋದಶೀಲೆಯಾಗಿರುತ್ತಿದ್ದ ಪೀಂಚಲಿಗೂ ಚಿನ್ನಮ್ಮನ ಅಮಂಗಳಾ ಶಂಕೆಯ ಆವೇಗ ತಟ್ಟಿಬಿಟ್ಟಿತ್ತು. +ಅಜ್ಜಿ ಕಾದೂ ಕಾದೂ, ಉಣ್ಣುವ ಶಾಸ್ತ್ರ ಮುಗಿಸಿ, ಮಲಗುವ ಕೋಣೆಗೆ ಹೋಗಿದ್ದಳು. +ನಾಗಕ್ಕಗೆ ಹಸಿವೆಯಾಗಿದ್ದರೂ ದುಡಿದು ದಣಿದಿದ್ದರೂ ಉಣ್ಣುವ ಮನಸ್ಸಾಗದೆ ಜಗಲಿಗೆ ಬಂದು, ಕೆಸರು ಹಲಗೆಯ ಮೇಲೆ ಮಂಡಿಗೆಗೆ ಒರಗಿ ಕುಳಿತು, ಅಂಗಳದ ತುಳಸಿಯ ದೇವರಿಗೆ ಹಚ್ಚಿಟ್ಟಿದ್ದ ನೀಲಾಂಜನಗಳಲ್ಲಿ ಡೋಲಾಯಮಾನವಾಗಿ ಉರಿಯುತ್ತಿದ್ದ ಕೆಂಜೊಡರುಗಳ ಕಡೆಗೆ ನೋಡುತ್ತಾ, ಆ ದಿನ ನಡೆದ ಸಂಗತಿಗಳನ್ನು ಮೆಲಕುಹಾಕುತ್ತಾ, ಮುಕುಂದಯ್ಯನ ಆಗಮನವನ್ನೇ ಕಾತರತೆಯಿಂದ ಪ್ರತೀಕ್ಷಿಸುತ್ತಾ ಕುಳಿತಿದ್ದಳು. +ಹಗಲು ಅಡಕೆ ತೋಟದಲ್ಲಿ ಅವಳು ಚಿನ್ನಮ್ಮಗೆ ಬುದ್ಧಿ ಹೇಳಿ, ಕೊಟ್ಟಿದ್ದ ಧೈರ್ಯ ಈಗ ಅವಳಿಗೇ ಅಷ್ಟಾಗಿರಲಿಲ್ಲ. +ಏನಾದರೂ ನಡೆಯಬಾರದ್ದು ನಡೆದಿದ್ದರೆ? +ಆಗಬಾರದ್ದು ಆಗಿದ್ದರೆ?ಏನು ಗತಿ? +ಯಾಕೆ ಇಷ್ಟು ರಾತ್ರಿಯಾದರೂ ಇನ್ನೂ ಬರಲಿಲ್ಲ…. +ಅಷ್ಟರಲ್ಲಿ ಹೊರಗಡೆ ನಾಯಿ ಬೊಗಳಿದವು. +ನಾಗಕ್ಕ “ಅಂತೂ ಬಂದರಲ್ಲಾ?” ಎಂದು ದೀರ್ಘವಾಗಿ ಉಸಿರೆಳೆದು ಎದ್ದು ನಿಂತಳು. +ಹೆಬ್ಬಾಗಿಲು ತಟ್ಟಿದ ಸದ್ದಾಯಿತು. +ಐತನ ದನಿ ಕೇಳಿಸಿತು. + “ಸುಬ್ಬೀ. ಬಾಗಿಲು ತೆಗಿಯೆ” ಕೂಗಿ ಹೇಳಿದಳು ನಾಗಕ್ಕ. +ಮುದುಕಿ ಸುಬ್ಬಿ ಉರಿಯುತ್ತಿದ್ದ ಮುರುವಿನೊಲೆಯ ಪಕ್ಕದಲ್ಲಿ ಹೆಬ್ಬಾಗಿಲಿಗೆ ಸಮೀಪವೆ ಮಲಗಿದ್ದಳು. +ಅನುದ್ವಿಗ್ನ ಭಂಗಿಯಲ್ಲಿ, ನಿಧಾನವಾಗಿ ಎದ್ದು, ತಾಳ ತೆಗೆದು, ಬಾಗಿಲು ಎಳೆಯತೊಡಗಿದಳು. +ಆದರೆ ದಿಮ್ಮಿಗಳಂತಹ ಹಲಗೆಗಳಿಗೆ ಕಬ್ಬಿಣದ ದಪ್ಪ ಪಟ್ಟಿಗಳನ್ನು ಜೋಡಿಸಿ ಮಾಡಿದ್ದ ಆ ಹೆಬ್ಬಾಗಿಲು ಮುದುಕಿಗೆ ಜಗ್ಗಲಿಲ್ಲ, ಅತ್ತ ಕಡೆಯಿಂದ ಐತ ನೂಕುತ್ತಿದ್ದರೂ! +ಮುಕುಂದಯ್ಯನೂ ಐತನಿಗೆ ನೆರವಾಗಿ ಅತ್ತ ಕಡೆಯಿಂದ ನೂಕಿದ ಮೇಲೆಯೆ ಹೆಬ್ಬಾಗಿಲು ಕಿರೇಂದು ತೆರೆಯಿತು…  +ನಾಗಕ್ಕ ಅಡುಗೆ ಮನೆಗೆ ನಡೆದಳು. +“ಐತಾ, ಆ ಕೋಳೀನ ಅಕ್ಕಿ ಕಲಬಿಗೆ ಹಾಕಿಡೋ; +ನಾಳೆ ಬೆಳಿಗ್ಗೆ ಸರಿಮಾಡಿ ಕೊಡಬಹುದು” ಎನ್ನುತ್ತಾ ಮುಕುಂದಯ್ಯ ಒಳಗೆ ಬಂದು, ಕೋವಿಯನ್ನು ಜಗಲಿಯ ಒಂದು ಮೂಲೆಗೆ ಒರಗಿಸಿಟ್ಟು, ಬಟ್ಟೆ ಬಿಚ್ಚಿಡತೊಡಗಿದನು. +ಮುಳ್ಳಿನ ಹಾಸಗೆಯ ಮೇಲೆ ಮಲಗಿದ್ದ ಚಿನ್ನಮ್ಮಗೆ ಸಂಪೂರ್ಣ ಎಚ್ಚರಿತ್ತು. +ಅಳುತ್ತಿದ್ದ ಕಣ್ಣು ಒಂದು ಚಣವೂ ಮುಚ್ಚಿರಲಿಲ್ಲ. +ನಾಯ ಕೂಗಿ, ಬಾಗಿಲು ತಟ್ಟಿ, ಐತನ ದನಿ ಕೇಳಿಸಿದಾಗಲೆ ಅವಳ ಎದೆಯ ಮೇಲಿದ್ದ ಭಾರವೆಲ್ಲ ತೊಲಗಿದಂತಾಗಿತ್ತು. +ಮುಕುಂದಯ್ಯ ಒಳಗೆ ಬಂದು, ಐತನಿಗೆ ಕೋಳಿಯನ್ನು ಅಕ್ಕಿ ಕಲಬಿಯೊಳಗೆ ಇಡಲು ಹೇಳಿದ ಅವನ ಇಷ್ಟಪ್ರಿಯ ಕಂಠಧ್ವನಿ ಕಿವಿಗೆ ಬಿದ್ದೊಡನೆ ಚಿನ್ನಮ್ಮನ ಚೇತನ ಗರಿಹಗುರವಾಗಿ, ಹೆದೆ ತುಂಡಾದ ಬಿಲ್ಲಿನ ಸೆಟೆತವೆಲ್ಲ ತೊಲಗಿ ಅದರ ದಂಡವು ನೆಟ್ಟಗಾಗಿ ವಿರಾಮಭಂಗಿಯಲ್ಲಿ ಮಲಗುವಂತೆ, ಒಂದೆರಡು ನಿಮಿಷಗಳಲ್ಲಿಯೆ ಆನಂದ ಮೂರ್ಛೆಯೊ ಎಂಬಂತಹ ಗಾಢನಿದ್ರೆಗೆ ಮುಳುಗಿಬಿಟ್ಟಳು! +ನರಕ ನಾಕಗಳಿಗೆ ಅದೆಷ್ಟು ಅಲ್ಪಾಂತರವೊ ವಿರಹ ಮಿಲನ ನಾಟಕದಲ್ಲಿ? +ಮುಕುಂದಯ್ಯ ಕೈಕಾಲು ತೊಳೆದುಕೊಂಡು, ತುಳಸಿಕಟ್ಟೆಗೆ ಬಲವಂದು ಅಡ್ಡಬಿದ್ದು, ಅಡುಗೆ ಮನೆಗೆ ಹೋಗಿ ಮಣೆಯ ಮೇಲೆ ಅಂಡೂರಿ ಕುಕ್ಕುರುಗಾಲಲ್ಲಿ ರೂಢಿಯಂತೆ ಊಟಕ್ಕೆ ಕುಳಿತನು. +ನಾಗಕ್ಕ ಬಾಳೆ ಎಲೆ ಹಾಕಿ ಬಡಿಸಿದಳು. +ಉಣ್ಣುತ್ತಾ ನಾಗಕ್ಕನೊಡನೆ ಮನೆ ಗೆದ್ದ ತೋಟಗಳಲ್ಲಿ ನಡೆದ ಆ ದಿನದ ಕೆಲಸಗಳ ವಿಚಾರವಾಗಿ ಆಗೊಂದು ಈಗೊಂದು ಪ್ರಶ್ನೆ ಹಾಕಿ ಮಾತನಾಡಿದನು. +ಆದರೆ ಅವನು ಅತ್ತ ಇತ್ತ ಕಣ್ಣು ಹಾಯಿಸುತ್ತಿದ್ದ ರೀತಿಯಿಂದಲೂ, ಮಾತಿನ ಮಧ್ಯೆ ನಿಲ್ಲಿಸಿ ನಿಲ್ಲಿಸಿ ಏನನ್ನೊ ಆಲಿಸಲೆಳಸಿ ಸುಮ್ಮನಾಗುತ್ತಿದ್ದ ಭಂಗಿಯಿಂದಲೂ, ಒಟ್ಟಿನಲ್ಲಿ ಅವನಲ್ಲಿ ತೋರುತ್ತಿದ್ದ ಅಸಮಾಧಾನ ಭಾವದಿಂದಲೂ, ಅವನು ಚಿನ್ನಮ್ಮ ಕಾಣಿಸದಿದ್ದುದಕ್ಕಾಗಿಯೆ ಚಡಪಡಿಸುತ್ತಿದ್ದಾನೆ ಎಂಬುದು ಇಂಗಿತಜ್ಞೆ ನಾಗಕ್ಕಗೆ ಹೊಳೆಯಿತು. +ಅವಳಿಗೆ ಹೊರಗಾಗಿದೆ ಎಂದು ನಾಗಕ್ಕ ಹೇಗೆ ಹೇಳುತ್ತಾಳೆ? +ಅವನೇ ವಿಚಾರಿಸಿದರೆ ಹೇಳುತ್ತೇನೆ ಎಂದು ಕೊಂಡು ಸುಮ್ಮನಾದಳು. +ಆದರೆ ಮುಕುಂದಯ್ಯಗೆ ನಿಮಿಷ ನಿಮಿಷಕ್ಕೂ ಅಸಮಾಧಾನ ಹೆಚ್ಚಾಗುತ್ತಾ ಹೋಯಿತು. +ಸಾಧಾರಣವಾಗಿ ಮುಕುಂದಯ್ಯ ಎಷ್ಟೇ ಹೊತ್ತಾಗಿ ಮನೆಗೆ ಬಂದರೂ ಚಿನ್ನಮ್ಮನ ಸ್ವಾಗತ ಸೇವೆ ಶುಶ್ರೂಷೆ ಸಲ್ಲಾಪಗಳು ತಪ್ಪುತ್ತಿರಲಿಲ್ಲ. +ಅದರಲ್ಲಿಯೂ ಇವೊತ್ತು, ಮುಕುಂದಯ್ಯ ಏನೋ ಒಂದು ಅಪಾಯವಾಗಬಹುದಾಗಿದ್ದ ಸನ್ನಿವೇಶದಲ್ಲಿ ಸಿಕ್ಕಿಯೂ ಉಪಾಯದಿಂದ ಗೆದ್ದುಬಂದಿರುವಾಗ, ಚಿನ್ನಮ್ಮ ತನ್ನ ಆಗಮನವನ್ನು ಪ್ರತೀಕ್ಷಿಸದೆ, ನಿರ್ಲಕ್ಷಿಸಿ ನಿದ್ದೆ ಮಾಡಿಬಿಡ ಬಹುದೇ? +ಬಹುಶಃ ತಾನು ಕತ್ತಲಾಗುವುದರೊಳಗೆ ಬರಲಿಲ್ಲ ಎಂದು ಮುನಿಸಿಕೊಂಡು, ತನ್ನನ್ನು ಶಿಕ್ಷಿಸುವ ಸಲುವಾಗಿ ಹೀಗೆ ಮಾಡಿರಬೇಕು! +ಮಾಡಿದರೆ ಮಾಡಲಿ!ನಾನೂ ಮುನಿಸಿಕೊಳ್ಳಬಲ್ಲೆ…. +ಇನ್ನು ಒಂದು ತಿಂಗಳೂ, ನಮ್ಮ ಮದುವೆ ಆಗುವವರೆಗೂ, ನಾನೂ ಅವಳೊಡನೆ ಮಾತುಬಿಡುತ್ತೇನೆ! +ಆಗ ಗೊತ್ತಾಗುತ್ತದೆ ಅವಳಿಗೆ! +ಅವಳಿಗೆ ಯಾವಾಗಲೂ ದಿಮಾಕು! +ನಾನೇ ಯಾವಾಗಲೂ ಸೋಲಬೇಕೇನು? +ತೋರಿಸ್ತೀನಿ ಅವಳಿಗೆ! +ನಂಗೂ ಗೊತ್ತು ಸಿಟ್ಟುಮಾಡಿಕೊಳ್ಳೋಕೆ! …. +ಮುಕುಂದಯ್ಯ ತನ್ನ ಸಿಟ್ಟನ್ನು ಆದಷ್ಟು ಮಟ್ಟಿಗೆ ಮುಚ್ಚಿಟ್ಟು ಕೊಳ್ಳಲು ಪ್ರಯತ್ನಿಸುತ್ತಾ ಊಟ ಮುಗಿಸಿ, ಎಂದಿನ ಪದ್ಧತಿಯಂತೆ ಜಗಲಿಯಲ್ಲಿ ಕುಳಿತು ಸ್ವಲ್ಪ ಹೊತ್ತು ರಾಗವಾಗಿ ಕಾವ್ಯ ಓದುವುದನ್ನೂ ತಿರಸ್ಕರಿಸಿ, ನೆಟ್ಟಗೆ ಮಲಗುವ ಕೋಣೆಗೆ ಹೋಗಿ ಬಾಗಿಲು ಮುಚ್ಚಿ ತಾಳಹಾಕಿಕೊಂಡನು. +ಅವನು ತನ್ನ ನಿತ್ಯದ ಅಭ್ಯಾಸದಂತೆ ಸ್ವಲ್ಪ ಹೊತ್ತಾದರೂ ಜಗಲಿಯಲ್ಲಿ ಕೂತಿದ್ದರೆ, ತನ್ನ ಗಂಡ ಐತನ ಸಂಗಡ ಬಿಡಾರಕ್ಕೆ ಹೋಗಿ ಅವನೊಡನೆ ಉಂಡು ಪೂರೈಸಿ, ಅವನನ್ನೂ ಸಂಗಡ ಕರೆದುಕೊಂಡು ಮನೆಗೆ ಹಿಂತಿರುಗಿದ್ದ ಪೀಂಚಲು, ಹೊರಗಾದವರು ಮಲಗುತ್ತಿದ್ದ ಕಲಬಿಯ ಪಕ್ಕದ ಜಾಗದಲ್ಲಿ ಮಲಗುತ್ತಿದ್ದುದನ್ನಾಗಲಿ, ಆ ಜಾಗದಿಂದ ಬಹುದೂರವಿದ್ದ ಜಗಲಿಯ ತೆಣೆಯ ಮೇಲೆ ಐತನೊಬ್ಬನ ಮಲಗುವ ಚಾಪೆ ಬಿಚ್ಚಿಕೊಳ್ಳುತ್ತಿದ್ದುದನ್ನಾಗಲಿ ಗಮನಿಸದೆ ಇರಲಾಗುತ್ತಿರಲಿಲ್ಲ. +ಬಿಡಾರದಲ್ಲಿ ಮಲಗಿಕೊಳ್ಳದೆ ಮನೆಯಲ್ಲಿ ಏಕೆ ಮಲಗುತ್ತಿದ್ದಾನೆ?ಎಂಬ ಮುಕುಂದಯ್ಯನ ಪ್ರಶ್ನೆಗೆ ಐತ ಹೇಳಬಹುದಾಗಿದ್ದ ಉತ್ತರದಲ್ಲಿ ಮುಕುಂದಯ್ಯನ ಎದೆಯ ಕುದಿದಾಟವೆಲ್ಲ ತಣ್ಣಗಾಗುತ್ತಿತ್ತು. +ಚಿನ್ನಮ್ಮನ ಮೇಲಣ ಮುನಿಸೆಲ್ಲ ಮಾಯವಾಗಿ, ಸಮಾಧಾನದಿಂದ ಉಂಟಾಗುವ ಪ್ರಶಾಂತ ಮನಃಸ್ಥಿತಿಯಲ್ಲಿ ರಾತ್ರಿ ಅವನು ಚೆನ್ನಾಗಿ ನಿದ್ದೆಮಾಡಬಹುದಿತ್ತು. +ಆದರೆ?ಆವೊತ್ತು ಬೆಳಗಿನಿಂದಲೂ ಮುಕುಂದಯ್ಯ ಮಾನಸಿಕ ಮತ್ತು ದೈಹಿಕ ಶ್ರಮಗಳಿಂದ ದಣಿದಿದ್ದನು. +ಆದರೂ ದುಗುಡಕ್ಕೆ ಸಿಲಿಕಿದ ಚೇತನಕ್ಕೆ ನಿದ್ದೆ ಬರುತ್ತದೆಯೆ? +ಬಾಗಿಲು ಮುಚ್ಚಿ, ತಾಳವಿಕ್ಕಿ, ಮಲಗಿಕೊಂಡವನು ಸ್ವಲ್ಪ ಹೊತ್ತಿನಲ್ಲಿಯೆ ಎದ್ದು ತಾಳ ತೆಗೆದು, ಮತ್ತೆ ಮಲಗಿದನು. + ಪಾಪ!ಹುಡುಗಿ ನಾನು ಬಂದಮೇಲೆ ಏಳೋಣ ಎಂದು ಮಲಗಿದ್ದವಳು ಹಾಗೆಯೆ ನಿದ್ದೆ ಹೋಗಿರಬಹುದು. +ಫಕ್ಕನೆ ಎಚ್ಚರವಾಗಿ, ನಾನು ಬಂದು ಮಲಗಿರಬಹುದೆಂದು ಎಲ್ಲಿಯಾದರೂ ಬಂದರೆ? +ಬಾಗಿಲು ತಳ್ಳಿ, ತಾಳ ಹಾಕಿರುವುದನ್ನು ನೋಡಿ, ಹಿಂದಕ್ಕೆ ಹೋಗಬೇಕಾಗಿ ಬಂದರೆ? +ಎಷ್ಟು ದುಃಖಪಟ್ಟುಕೊಳ್ಳುತ್ತಾಳೊ? +ಪ್ರಿಯೆಯ ಪರವಾಗಿ ತುಂಬ ಮೃದುವಾಯಿತು ಮುಕುಂದಯ್ಯನ ಮನಸ್ಸು…. +ತಾನು ತುಂಬ ದಣಿದಿದ್ದುದರಿಂದಲೆ ಮುಂಗೋಪದಿಂದ ವರ್ತಿಸಿಬಿಟ್ಟೆ. +ವಿಚಾರಿಸಿದ್ದರೆ ನಾಗಕ್ಕ ನಿಜಸ್ಥಿತಿ ಹೇಳುತ್ತಿದ್ದಳು…. +ಆಃ ನನ್ನ ಚಿನ್ನಿ ಎಂಥ ಹುಡುಗಿ? +ಏನು ಚೆಲುವೆ?ಎಷ್ಟು ಬುದ್ಧಿವಂತೆ? +ನನಗಾಗಿ ಎಂಥೆಂಥ ಸಾಹಸ ಮಾಡಿಬಿಟ್ಟಿದ್ದಾಳೆ? +ನಾನೆಂಥ ಕೃತಘ್ನ! +ಮುಕುಂದಯ್ಯ ಚಿನ್ನಿಯೊಡನೆ ಮನೆಯಲ್ಲಿ, ಗದ್ದೆಯಲ್ಲಿ, ತೋಟದಲ್ಲಿ, ಹಾಡ್ಯದಲ್ಲಿ, ಹಾಡ್ಯದ ಮಾರಿಗುಡಿಯಲ್ಲಿ ಆಡಿದ ಆಟಗಳನ್ನೆಲ್ಲ ಮೆಲುಕುಹಾಕುತ್ತಾ ಸವಿದನು…. +ರಾತ್ರಿ ಬಹಳ ಮುಂದುವರಿದರೂ ಬಾಗಿಲು ತೆರೆಯಲಿಲ್ಲ. +ಬಾಗಿಲು ಮುಚ್ಚಿದ್ದನ್ನು ನೋಡಿ ಹಿಂದಕ್ಕೆ ಹೋಗಿಬಿಟ್ಟಳೊ? +ಛೇ?ಎಂಥ ಕೆಲಸ ಮಾಡಿಬಿಟ್ಟೆ? +ಮುಕುಂದಯ್ಯ ಮತ್ತೊಮ್ಮೆ ಎದ್ದು, ಬಾಗಿಲನ್ನು ಅರ್ಧ ತೆಗೆದಿಟ್ಟು, ಮಲಗಿಕೊಂಡನು. +ಹೊರಗಡೆಯ ಗಾಳಿ ನುಗ್ಗಿ ಕೋಣೆ ತುಸು ತಣ್ಣಗಾಯಿತು. +ಇವೊತ್ತೆ ಅಮಾಸೆ, ಮುಂದಿನ ಅಮಾಸೆ ಕಳೆದು ಎರಡೊ ಮೂರೊ ದಿನಗಳಲ್ಲಿ ನಮ್ಮ ಮದುವೆ! +ಜೋಯಿಸರು ಅಮೃತ ಮೂಹೂರ್ತ ಇಟ್ಟುಕೊಟ್ಟಿದ್ದೀನಿ ಅಂತಾ ಹೇಳಿದ್ದಾರೆ. +ಬ್ರಾಹ್ಮಣರಲ್ಲದವರಿಗೆ ಸಾಧಾರಣವಾಗಿ ನಿಶಾಲಗ್ನವನ್ನೆ ಇಟ್ಟುಕೊಡುವುದು ವಾಡಿಕೆಯಾಗಿದ್ದರೂ ನಮ್ಮ ಮದುವೆಗೆ ದಿವಾಲಗ್ನವನ್ನೆ ಇಟ್ಟುಕೊಟ್ಟಿದ್ದಾರೆ…  +ಅವರೂ ಜನಾಜನ ನೋಡಿ ಪಂಚಾಂಗ ನೋಡ್ತಾರೆ! …. +ಥೂ ಇವೊತ್ತು ಅವಳು ಬರುವ ತರಾ ಕಾಣಾದಿಲ್ಲ…  +ಬಂದಿದ್ದರೆ ಏನಾಗುತ್ತಿತ್ತೊ? …. +ಏನಾದರೂ ಆಗಿದ್ದರೂ ಏನು ಮಹಾ? +ಇನ್ನೊಂದು ತಿಂಗಳಲ್ಲಿ ನಾನು ಗಂಡ, ಅವಳು ಹೆಂಡತಿ! +ಆಮೇಲೆ ನಮಗೆ ಯಾರ ಮುಲಾಜು?… +ಮತ್ತೆ ಮುಕುಂದಯ್ಯನ ಮನಸ್ಸಿನಲ್ಲಿ ಸಿಗ್ಗು ಹೊಗೆಯಾಡತೊಡಗಿತು…. +ಇರಲಿ, ನಾನೂ ತೋರಿಸ್ತೀನಿ ಅವಳಿಗೆ! +ಇನ್ನು ಒಂದು ತಿಂಗಳು ನಾನು ಅವಳ ಹತ್ತಿರ ಮಾತನಾಡಿದರೆ ನಾನು ಗಂಡಸೇ ಅಲ್ಲ! +ಅವಳ ಗಂಡನಾದ ಮೇಲೆಯೇ ನಾನು ಅವಳ ಸಂಗಡ ಮಾತಾಡುವುದು! +ಅದಕ್ಕೆ ಮೊದಲು ತುಟಿ ಪಿಟಿಕ್ಕೆನ್ನುವುದಿಲ್ಲ! …. +ಅಂತೂ ಮುಕುಂದಯ್ಯನಿಗೆ ನಿದ್ದೆ ಹತ್ತುವುದರಲ್ಲಿ ಮುಕ್ಕಾಲು ಇರುಳು ಮುಗಿದಿತ್ತು. +ಹಾಸಗೆಯ ಮೇಲೆ ಹೊರಳೀ ಹೊರಳೀ ಸಾಕಾಗಿ, ಆಕಳಿಸೀ ಆಕಳಿಸೀ ನಿದ್ದೆ ಹೋಗಿದ್ದನು. +ಬೆಳ್ಳಿಗ್ಗೆ ಮುಕುಂದಯ್ಯ ಎದ್ದು, ಅರ್ಧ ತೆರೆದೆ ಇದ್ದ ಕೋಣೆಯ ಬಾಗಿಲಲ್ಲಿ ನಿಂತು, ಅಂಗಳದ ತುಳಸಿದೇವರಿಗೆ ಕೈಮುಗಿದು, ಜಗಲಿಗೆ ಬಂದಾಗ ತೆಣೆಯಲ್ಲಿ ಮಲಗಿದ್ದ ಐತನನ್ನು ಕಂಡು ಅಚ್ಚರಿಗೊಂಡು ವಿಚಾರಿಸಿದನು. +“ಇದೇನೋ?ಇಲ್ಲಿ ಮಲಗೀಯ?” +“ಅವಳು ಬಿಡಾರದಲ್ಲಿ ಮಲಗಲಿಲ್ಲ; ಇಲ್ಲಿಗೇ ಬಂದಳು; ಅದಕ್ಕೇ ನಾನೂ ಇಲ್ಲಿಗೇ ಬಂದುಬಿಟ್ಟೆ” ಎದ್ದು ಕುಳಿತು ಚಾಪೆ ಸುತ್ತುತ್ತಾ ಹೇಳಿದನು ಐತ. +“ಯಾಕೋ?ನಿನ್ನ ಹೆಂಡ್ತಿಗೆ ಹುಷಾರಿಲ್ಲೇನೋ?” ಮಾಗಿಯ ಚಳಿಗೆ ಶಾಲನ್ನು ಬಿಗಿಯಾಗಿ ಹೊದ್ದುಕೊಳ್ಳುತ್ತಾ ಕೇಳಿದನು ಮುಕುಂದಯ್ಯ. +“ಹುಷಾರಿದ್ದಾಳೆ…  ಹು ಹು ಹು! +ಏನು ಚಳಿ!” +“ಮತ್ತೆ?”“ನಾವು ಬರುವ ಮುನ್ನ ಚಿನ್ನಕ್ಕನ ಹತ್ತಿರವೆ ಮಲಗಿದ್ದಳು. +“ನಾನು ಚಿನ್ನಕ್ಕನ ಕೂಡೆ ಮಲಗುತ್ತೇನೆ, ನೀನು ಬೇಕಾದರೆ ಜಗಲಿಯ ತೆಣೆಯಮೇಲೆ ಮಲಗಿಕೊ!” ಎಂದು ಬಿಟ್ಟಳಲ್ದಾ?” +ಕೆಳಗರಡಿಯಲ್ಲಿದ್ದ ಅಕ್ಕಿಕಲಬಿಯ ಪಕ್ಕದಲ್ಲಿ, ಕವಿದಿದ್ದ ಅರೆಗತ್ತಲಲ್ಲಿ ಚಿನ್ನಮ್ಮ ಪೀಂಚಲು ಮಾತಾಡುತ್ತಿದ್ದದ್ದೂ ಕೇಳಿಸಿತು. +ಹೆಬ್ಬಾಗಿಲನ್ನು ತೆರೆದಿಡುವ ನೆವಮಾಡಿಕೊಂಡು ಮುಕುಂದಯ್ಯ ಅಲ್ಲಿಗೆ ಹೋಗಿ, ಹರಟೆ ಹೊಡೆಯುತ್ತಿದ್ದ ಅವರಿಬ್ಬರೂ ಬಲವಾಗಿ ಹೊದ್ದುಕೊಂಡು ತಂತಮ್ಮ ಹಾಸಗೆಯಲ್ಲಿದ್ದುದನ್ನು ಕದ್ದುನೋಡಿ, ನಡೆದಿದ್ದ ಸಂಗತಿ ಏನು ಎಂಬುದನ್ನು ಪ್ರತ್ಯಕ್ಷ ಮನದಟ್ಟು ಮಾಡಿಕೊಂಡನು. +ಅವನ ಅಂತಃಕರಣದ ಆಕಾಶದಲ್ಲಿ ಕವಿದಿದ್ದ ಕಾರ್ಮೋಡವೆಲ್ಲ ಇದ್ದಕ್ಕಿದ್ದ ಹಾಗೆ ತೂರಿಹೋಗಿ, ಚೇತನಸಮಸ್ತವೂ ಸುಪ್ರಸನ್ನವಾದಂತಾಯಿತು. +“ಅಯ್ಯೋ ದೇವರೆ, ಮೊದಲೇ ಗೊತ್ತಾಗಿದ್ದರೆ ಇಷ್ಟೆಲ್ಲಾ ಪಾಡುಪಡುವುದು ತಪ್ಪುತ್ತಿತ್ತಲ್ಲಾ!” ಎಂದುಕೊಂಡನು. +ಅಷ್ಟರಲ್ಲಿ ಮುಕುಂದಯ್ಯ ತೆರೆದಿಟ್ಟಿದ್ದ ಹೆಬ್ಬಾಗಿಲಾಚೆಗೆ (ಬಹುಶಃ ಸಣ್ಣ ಕೆಲಸಕ್ಕಿರಬೇಕು?) ಹೋಗಿದ್ದ ಐತ ಹು ಹು ಹು ಹು ಹು ಎನ್ನುತ್ತಾ ಒಳಗೆ ನುಗ್ಗಿ ಬಂದು ಮುರುವಿನೊಲೆಯ ಬಳಿಗೆ ಓಡಿ, ಚಳಿಕಾಯಿಸುತ್ತಾ ಕುಳಿತುಃ “ಹು ಹು ಹು! +ಏನು ಚಳಿ, ಅಯ್ಯಾ?ಹು ಹು ಹು! +ಕವಣ ಹೆಂಗೆ ಕರೀತಾ ಅದೆ? +ಸೊಲ್ಪ ನೋಡಿ!ಹು ಹು ಹು!” ಎನ್ನುತ್ತಾ ಬೆಂಕಿಯ ಉರಿಯ ಹತ್ತಿರಕ್ಕೆ ಕೈ ಚಾಚಿದನು. +ಮುಕುಂದಯ್ಯ ಹೆಬ್ಬಾಗಿಲಾಚೆಗೆ ಕಣ್ಣುಹಾಯಿಸಿದಾಗ, ದಟ್ಟವಾಗಿ ಬೀಳುತ್ತಿದ್ದ ಮಾಗಿಯ ಮಂಜು ಹೊರಗಡೆಯ ಲೋಕಸಮಸ್ತವನ್ನೂ ಆವರಿಸಿ ಆಚ್ಛಾದಿಸಿ ಆಕ್ರಮಿಸಿ ನುಂಗಿಬಿಟ್ಟಿತ್ತು! +ಗಿಡ, ಮರ, ಗುಡ್ಡ, ಬೆಟ್ಟ, ಮಲೆ, ಕಾಡು, ಗದ್ದೆ, ತೋಟ, ನೆಲ, ಬಾನು ಒಂದೂ ಇರಲಿಲ್ಲ. +ದಟ್ಟೈಸಿ ಸುರಿಯುತ್ತಿದ್ದ ಕಾವಣದ ಮಹಾಶ್ವೇತ ಜಲಪ್ರಲಯದಲ್ಲಿ ಜಗಲ್ಲಯವಾದಂತಿತ್ತು! +“ಐತಾ, ಕೊನೆ ತೆಗಿಯಾಕೆ ಯಾರನ್ನಾದರೂ ಕರಕೊಂಡು ಬರಬೇಕಲ್ಲೋ” ಎನ್ನುತ್ತಾ ಮುಕುಂದಯ್ಯನೂ ಮುರುವಿನ ಒಲೆಯ ಬಳಿಗೆ ಬಂದು ಚಳಿ ಕಾಯಿಸುತ್ತಾ ನಿಂತನು. +ಸುಮಾರು ಸೊಂಟೆತ್ತರ ಇದ್ದ ‘ಮುರಿನೊಲೆ’ಗೆ ಕಚ್ಚಿದ್ದ ಆನೆಗಲು ದಪ್ಪದ ಹೆಗ್ಗುಂಟೆಗಳೂ ದಿಮ್ಮಿಗಳೂ ನಿಗಿನಿಗಿ ಕೆಂಗೆಂಡವಾಗಿ ಧಗಧಗಿಸಿ ಉರಿಯುತ್ತಿದ್ದುವು. +ಹೇರೊಲೆಗೆ ಶಾಶ್ವತವಾಗಿ ಹೂಳಿಬಿಟ್ಟಿದ್ದ ಭಾರಿಯ ಹಂಡೆಯಲ್ಲಿ, ಬೆಳಿಗ್ಗೆ ಹಾಲು ಕರೆಯುವಾಗ ಎಮ್ಮೆ ಹಸುಗಳಿಗೆ ತಿಂಡಿಯಾಗಲಿರುವ ಮುರು, ತೊಕ ತೊಕ ತೊಕ ಸದ್ದು ಮಾಡಿ, ಆವಿಗಂಪು ಬೀರಿ ಕುದಿಯುತ್ತಿತ್ತು! +“ಪಿಜಿಣ ಇದ್ದಿದ್ರೆ ನಮಗೆ ಎಷ್ಟು ಅನುಕೂಲ ಆಗ್ತಿತ್ತು ಈಗ? …. +ಅಡಕೆ ಮರ ಹತ್ತೋದ್ರಲ್ಲಿ ಅವನ್ನ ಬಿಟ್ಟರೆ ಇರಲಿಲ್ಲ, ಕೊಟ್ಟೆ ಕಟ್ಟೋಕ್ಕಾಗಲಿ, ಕೊನೆ ತೆಗೆಯೋಕ್ಕಾಗಲಿ! …. +ಕುದುಕನ ಕಡೆಯೋರಿಗೆ ಹೇಳಿ, ಯಾರನ್ನಾದರೂ ಕರಕೊಂಡು ಬರ್ತೀನಯ್ಯಾ.” ಎನ್ನುತ್ತಾ ಐತ ತುಸು ಅತ್ತತ್ತ ಸರಿದುಕೊಂಡನು, ಮುಕುಂದಯ್ಯನಿಗೆ ಕುಳಿತುಕೊಳ್ಳಲು ಜಾಗ ಬಿಡುವಂತೆ. +“ಗದ್ದೆ ಕೊಯ್ಲಿಗೂ ಜನಾ ಗೊತ್ತು ಮಾಡಬೇಕೋ…. +ಸುಮ್ಮನೆ ಕೂತರೆ ಆಗಾದಿಲ್ಲ….” ಎನ್ನುತ್ತಾ ಮುಕುಂದಯ್ಯ ಬೆಂಕಿಗೆ ಬೆನ್ನು ಕಾಯಿಸುವಂತೆ ಕುಳಿತುಕೊಂಡನು. +ತನ್ನ ದನಿಕೇಳಿ ಸುಖಿಸುವವಳು ತನ್ನ ಮಾತನ್ನು ಆಲಿಸುತ್ತಿದ್ದಾಳೆ ಎಂಬ ಸುಖಾನುಭವಕ್ಕಾಗಿಯೆ ಅವನು ಮಾತಾಡುತ್ತಿದ್ದಂತಿತ್ತು. +ಚಿನ್ನಮ್ಮ ಪೀಂಚಲು ಇಬ್ಬರೂ ಮಾತು ನಿಲ್ಲಿಸಿ, ನಿದ್ದೆ ಮಾಡುವವರಂತೆ ನಟಿಸುತ್ತಾ, ಗಡದ್ದಾಗಿ ಹೊದ್ದುಕೊಂಡು ಬೆಚ್ಚಗೆ ಮಲಗಿದ್ದರು. +ಮುಟ್ಟಾದ ಮೂರು ದಿನವಾದರೂ ಮಲೆನಾಡಿನ ಮಹಿಳೆಯರಿಗೆ ನಿವೃತ್ತಿಜೀವನದ ವಿರಾಮದ ಹಕ್ಕು ಇರುತ್ತಿತ್ತಷ್ಟೇ!