diff --git "a/Data Collected/Kannada/MIT Manipal/Kannada-Scrapped-dta/\340\262\225\340\263\212\340\262\262\340\263\215\340\262\262\340\262\254\340\263\207\340\262\241_\340\262\205\340\262\202\340\262\244_\340\262\271\340\263\207\340\262\263\340\263\201_.txt" "b/Data Collected/Kannada/MIT Manipal/Kannada-Scrapped-dta/\340\262\225\340\263\212\340\262\262\340\263\215\340\262\262\340\262\254\340\263\207\340\262\241_\340\262\205\340\262\202\340\262\244_\340\262\271\340\263\207\340\262\263\340\263\201_.txt" new file mode 100644 index 0000000000000000000000000000000000000000..643e070685d7b558de115574868c08e540359d16 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\225\340\263\212\340\262\262\340\263\215\340\262\262\340\262\254\340\263\207\340\262\241_\340\262\205\340\262\202\340\262\244_\340\262\271\340\263\207\340\262\263\340\263\201_.txt" @@ -0,0 +1,210 @@ +ನನ್ನ ಕೊಲ್ಲಬೇಡ ಅಂತ ಹೇಳು. +ಜಸ್ಟಿನೋ!ಹೋಗಿ ಹೇಳು ಅವರಿಗೆ, ದಮ್ಮಯ್ಯ! +ಹೇಳು ಅವರಿಗೆ ಪ್ಲೀಸ್, ಹೇಳು. +‘ನನ್ನ ಕೈಯಲ್ಲಿ ಆಗಲ್ಲ. +ಅಲ್ಲಿರುವ ಸಾರ್ಜೆಂಟ್ ನಿನ್ನ ವಿಚಾರ ಏನೂ ಕೇಳಳಲ್ಲ.’ +‘ಕೇಳುವ ಹಾಗೆ ಮಾಡು. +ಬುದ್ಧಿ ಉಪಯೋಗಿಸು . +ನನ್ನ ಹೆದರಿಸಿದ್ದು ಸಾಕು ಅನ್ನು. +ದೇವರು ಒಳ್ಳೆಯದು ಮಾಡತಾನೆ, ಫ್ಲೀಸ್ ಅಂತ ಕೇಳಿಕೋ.’ +‘ಬರೀ ಹೆದರಿಸುವುದಲ್ಲ, ನಿನ್ನ ನಿಜವಾಗಲೂ ಕೊಲ್ಲಬೇಕು ಅಂತಿದ್ದಾರೆ. +ಮತ್ತೆ ಅವರ ಹತ್ತಿರ ಹೋಗುವುದಕ್ಕೆ ಇಷ್ಪ ಇಲ್ಲಾ.’ +‘ಇನ್ನೊಂದು ಸಾರಿ ಹೋಗು. +ಇನ್ನೊಂದೇ ಸಾರಿ, ಏಮ ಮಾಡಬಹುದೋ ನೋಡು. ’ +‘ಉಹುಂ. ಇಷ್ಟ ಇಲ್ಲ. +ಹೋದರೆ ನಾನು ನಿನ್ನ ಮಗ ಅಂತ ಅವರಿಗೆ ಗೊತ್ತಾಗತದೆ. +ನಿನ್ನ ವಿಚಾರವಾಗಿ ಅವರನ್ನ ಪೀಡಿಸುತ್ತಾ ಇದ್ದರೆ ಅವರಿಗೆ ನಿಜವಾಗಿ ನಾನು ಯಾರು ಅಂತ ತಿಳೀತದೆ, ನನ್ನನ್ನೂ ಶೂಟ್ ಮಾಡತಾರೆ. +ಈಗ ಹೇಗಿದೆಯೋ ಹಾಗೇ ಇದ್ದುಬಿಡು.’ +‘ಹೋಗು, ಜಸ್ಟಿನೋ ನನ್ನ ಮೇಲೆ ಸ್ವಲ್ಪ ಕರುಣೆ ತೋರಿಸಿ ಅಂತ ಹೇಳು. +ಅಷ್ಟು ಹೇಳು ಸಾಕು.’ +ಜಸ್ಟಿನೋ ಹಲ್ಲು ಕಡಿದ, ಇಲ್ಲಾ ಅನ್ನುತ್ತ ತಲೆ ಆಡಿಸಿದ. +ಬಹಳ ಹೊತ್ತು ತಲೆ ಆಡಿಸುತ್ತಲೇ ಇದ್ದ. +‘ಕರ್‍ನಲ್‌ನ ನೋಡುವುದಕ್ಕೆ ಬಿಡು ಅಂತ ಸಾರ್ಜೆಂಟ್‌ಗೆ ಹೇಳು. +ನಾನು ಎಷ್ಟು ಮುದುಕ ಅಂತ ಹೇಳು. +ನನ್ನ ಕೊಂದರೆ ಅವರಿಗೆ ಏನು ಸಿಗುತದೆ? +ಏನೂ ಇಲ್ಲ ಬೆಲೆ ಇಲ್ಲದ ಜೀವ ಅನ್ನು. +ಅವನಿಗೂ ಆತ್ಮ ಅನ್ನುವುದು ಇರಬೇಕು. +ದೇವರು ಅವನ ಆತ್ಮವನ್ನ ಹರಸಲಿ ಅಂತ ಹೇಳು.’ +ಕಲ್ಲು ರಾಶಿಯ ಮೇಲೆ ಕೂತಿದ್ದ ಜಸ್ಟಿನೋ ಎದ್ದ. +ಕೊಟ್ಟಿಗೆಯ ಬಾಗಿಲ ಹತ್ತಿರ ಹೋಗಿ, ಮತ್ತೆ ತಿರುಗಿ, ‘ಸರಿ, ಹೋಗತೇನೆ. +ನನ್ನನ್ನೂ ಶೂಟ್ ಮಾಡಬೇಕು ಅಂತ ಅವರು ವಿರ್ಧಾರ ಮಾಡಿದರೆ ನನ್ನ ಹೆಂಡತಿ ಮಕ್ಕಳ ಗತಿ ಏನು?’ ಅಂದ. +‘ದೇವರು ನೋಡಿಕೊಳ್ಳತಾನೆ, ಜಸ್ಟಿನೋ. +ಈಗ ಅಲ್ಲಿಗೆ ಹೋಗು, ನನಗೆ ಏನು ಅನುಕೂಲ ಮಾಡಬಹುದೋ ನೋಡು. +ಅದು ಮುಖ್ಯ ಈಗ.’ಅವನನ್ನ ಬೆಳಗಿನ ಜಾವ ಕರಕೊಂಡು ಬಂದಿದ್ದರು. +ಈಗ ಹೊತ್ತು ಏರಿತ್ತು. +ಅವನು ಇನ್ನೂ ಅಲ್ಲೇ ಇದ್ದ, ಕಂಬಕ್ಕೆ ಬಿಗಿಸಿಕೊಂಡು ಕಾಯುತ್ತಾ ಇದ್ದ. +ಸುಮ್ಮನೆ ಇರುವುದಕ್ಕೆ ಆಗುತ್ತಿರಲಿಲ್ಲ. +ಚೂರು ನಿದ್ರೆ ಮಾಡಿ ಸಮಾಧಾನ ಮಾಡಿಕೊಳ್ಳುವುದಕ್ಕೆ ನೋಡಿದ್ದ ಆಗಿರಲಿಲ್ಲ. +ಹಸಿವು ಕೂಡ ಇರಲಿಲ್ಲ. +ಬದುಕಬೇಕು ಅನ್ನುವುದಷ್ಟೇ ಅವನ ಆಸೆ. +ತನ್ನನ್ನು ಕೊಲ್ಲತ್ತಾರೆ ಅನ್ನುವುದು ಅವನಿಗೀಗ ಗೊತ್ತಾಗಿತ್ತು. +ಇತ್ತೀಚೆಗೆ ಮರುಜೀವ ಪಡೆದವನಿಗೆ ಇರುವ ಹಾಗೆ ಬದುಕಬೇಕು ಅನ್ನುವ ಮಹದಾಸೆಯನ್ನು ಮಾತ್ರ ಇಟ್ಟುಕೊಂಡಿದ್ದ. +ಯಾವುದೋ ಕಾಲದಲ್ಲಿ ಆಗಿ ಮುಗಿದು ಹೂತು ಹಾಕಿ ಮುಗಿಸಿದೆ ಅಂತ ಅವನಂದುಕೊಂಡಿದ್ದ ವ್ಯವಹಾರ ಹೀಗೆ ಮತ್ತೆ ತಲೆ ಎತ್ತುತದೆ ಅನ್ನುವುದು ಯಾರಿಗೆ ಗೊತ್ತಿತ್ತು? +ಡಾನ್ ಲೂಪಿಯನ್ನು ಕೊಲ್ಲಬೇಕಾಗಿ ಬಂದದ್ದು ಆ ವ್ಯವಹಾರ. +ಅದೂ ಸುಮ್ಮಸುಮ್ಮನೆ ಕೊಂದದ್ದಲ್ಲ. +ಸುಮ್ಮನೆ ಕೊಂದಿದ್ದು ಅಂತ ಅಲಿಮಾ ಊರಿನವರು ಸಾಧಿಸುವುದಕ್ಕೆ ಪ್ರಯತ್ನಪಟ್ಟಿದ್ದರೂ ಕೊಲ್ಲುವುದಕ್ಕೆ ಕಾರಣಗಳಿದ್ದವು. +ಜ್ಞಾಪಿಸಿಕೊಂಡ: ಡಾನ್ ಲೂಪಿ ಟೆರೆರೋ, ಪ್ಯುಯೆರ್ಟಾ ಡಿ ಪಿಯೆದ್ರಾದ ಒಡೆಯ, ಅಲ್ಲದೆ ಅವನ ದಾಯಾದೀ ಭಾಗೀದಾರ. +ಪ್ಯುಯೆರ್ಟಾ ಡಿ ಪಿಯೆದ್ರಾದ ಭಾಗೀದಾರನಾಗಿದ್ದರೂ ಅಲ್ಲಿ ದನ ಕುರಿ ಮೇಯಿಸುವುದಕ್ಕೆ ಅವನಿಗೆ ಬಿಟ್ಟಿರಲಿಲ್ಲ. +ಮೊದಮೊದಲು ಅವನು ಏನೂ ಮಾಡಿರಲಿಲ್ಲ. +ಆಮೇಲೆ, ಬರ ಬಂದಾಗ, ದನ, ಕರು, ಕುರಿ ಎಲ್ಲ ಹೊಟ್ಟೆಗಿಲ್ಲದೆ ಒಂದೊಂದೇ ಸಾಯುವಾಗ ಪ್ಯುಯೆರ್ಟಾದಲ್ಲಿ ಮೇಯಿಸುವುದಕ್ಕೆ ದಾಯಾದೀ ಭಾಗೀದಾರ ಲೂಪಿ ಅವಕಾಶವನ್ನೇ ಕೊಡದೆ ಇದ್ದಾಗ ಜುವೆನ್ಸಿಯೋ ನಾವ ಬೇಲಿಯಲ್ಲಿ ಕಿಂಡಿ ಮಾಡಿ, ಮೂಳೆ ಚಕ್ಕಳವಾಗಿದ್ದ ತನ್ನ ಪಶುಪ್ರಾಣಿಗಳನ್ನು ಅಲ್ಲಿ ಬೆಳೆದಿದ್ದ ಹುಲ್ಲು ಹೊಟ್ಟೆತುಂಬ ಮೇಯುಲೆಂದು ಬಿಟ್ಟಿದ್ದ. +ಡಾನ್ ಲೂಪಿಗೆ ಇದು ಇಷ್ಟವಿರಲಿಲ್ಲ, ಬೇಲಿ ರಿಪೇರಿ ಮಾಡಿಸಿದ್ದ. +ಜುವೆನ್ಸಿಯೋ ನಾವಾ ಬೇಲಿಯಲ್ಲಿ ಮತ್ತೆ ಕಿಂಡಿ ಮಾಡಬೇಕಾಗಿ ಬಂದಿತ್ತು. +ಹಗಲಿನಲ್ಲಿ ರಿಪೇರಿಯಾದ ಕಿಂಡಿ ರಾತ್ರಿ ಮತ್ತೆ ತೆರೆದುಕೊಳ್ಳುತ್ತ ಪ್ರಾಣಿಗಳು ದಿನವಿಡೀ ಬೇಲಿಯ ಪಕ್ಕದಲ್ಲೇ ಕಾಯುತ್ತ ನಿಂತಿರುತಿದ್ದವು. +ಹುಲ್ಲಿನ ರುಚಿ ನೋಡಲಾಗದೆ ಸುಮ್ಮನೆ ವಾಸನೆ ಹೀರಿಕೊಂಡು ಇರುತಿದ್ದವು. +ಅವನಿಗೂ ಡಾನ್ ಲೂಪಿಗೂ ವಾದ ನಡೆದೇ ನಡೆಯಿತು, ತೀರ್ಮಾನ ಮಾತ್ರ ಆಗಲಿಲ್ಲ. +‘ನೋಡು ಜುವೆನ್ಸಿಯೋ, ನಿನ್ನ ದನವೋ ಕುರಿಯೋ ಇನ್ನೊಂದು ಸಾರಿ ನನ್ನು ಜಮೀನಿಗೆ ಕಾಲಿಟ್ಟರೆ ಕೊಂದು ಹಾಕುತ್ತೇನೆ,’ ಅಂತ ಕೊನೆಗೆ ಒಂದು ದಿನ ಡಾನ್ ಲೂಪಿ ಅಂದ. +‘ನೋಡು ಡಾನ್ ಲೂಪಿ, ಪ್ರಾಣಿಗಳು ತಮ್ಮ ಪಾಡು ತಾವು ನೋಡಿಕೊಂಡರೆ ಅದು ನನ್ನ ತಪ್ಪಲ್ಲ. +ಅರಿಯದ ಜೀವಗಳು. +ಅವನ್ನ ಕೊಂದರೆ ನಿನ್ನ ಸುಮ್ಮನೆ ಬಿಡಲ್ಲ,’ ಅಂತ ಜುವೆನ್ಸಿಯಾ ಉತ್ತರ ಕೊಟ್ಟಿದ್ದ. +ಒಂದು ವರ್ಷದ ಮರಿಯನ್ನು ಹೊಡೆದು ಹಾಕಿದ. +‘ಇದು ಆಗಿದ್ದು ಮೂವತ್ತೈದು ವರ್ಷದ ಹಿಂದೆ, ಮಾರ್ಚ್ ತಿಂಗಳಳ್ಲಿ, ಯಾಕೆ ಅಂದರೆ ಏಪ್ರಿಲ್ ಹೊತ್ತಿಗೆ ನಾನು ಆಗಲೇ ಬೆಟ್ಟ ಸೇರಿದ್ದೆ, ಸಮನ್ಸ್ ತಪ್ಪಿಸಿಕೊಂಡು ಓಡುತಿದ್ದೆ. +ಜಡ್ಜಿಗೆ ಹತ್ತು ಹಸು ಕೊಟ್ಟರೂ ಉಪಯೋಗವಾಗಲಿಲ್ಲ, ಮನೆ ಅಡ ಇಟ್ಟರೂ ಜೇಲು ತಪ್ಪಿಸಿಕೊಳ್ಳಲು ಆಗಲಿಲ್ಲ. +ನನ್ನ ತಂಟೆಗೆ ಬರದೆ ಇರುವುದಕ್ಕೆ ನನ್ನ ಹತ್ತಿರ ಉಳಿದಿದ್ದನ್ನೆಲ್ಲ ತಗೊಂಡರು, ಆದರೂ ಮತ್ತೆ ಬೆನ್ನು ಬೀಳುತಿದ್ದರು. +ಅದಕ್ಕೇ ಮಗನನ್ನು ಕರೆದುಕೊಂಡು ಪಾಲೊ ಡಿ ವೆನಾಡೊದಲಿದ್ದ ನನ್ನ ಇನ್ನೊಂದು ತುಂಡು ಭೂಮಿಗೆ ಬಂದುಬಿಟ್ಟೆ. +ಮಗ ಬೆಳೆದು ದೊಡ್ಡವನಾದ, ಇಗ್ನಾಸಿಯಳನ್ನು ಮದುವೆಯಾದ. +ನನ್ನ ಮನೆಗೆ ಸೊಸೆ ಬಂದಳು. +ಮಗನಿಗೆ ಈಗ ಎಂಟು ಮಕ್ಕಳಿದ್ದಾರೆ. +ಹೀಗೆ ಎಲ್ಲಾ ಆಗಿ ಎಷ್ಟೋ ಕಾಲವಾಯಿತು. +ಇಷ್ಟು ಹೊತ್ತಿಗೆ ಇದನ್ನ ಮರೆತೇಬಿಡಬೇಕಾಗಿತ್ತು. +ಮರೆತಿಲ್ಲ ಅನ್ನುವುದು ಸ್ಪಷ್ಟವಾಗಿಯೇ ಇದೆ. +‘ನೂರು ಪೆಸೋ ಖರ್ಚು ಮಾಡಿದರೆ ಎಲ್ಲ ಸರಿಹೋಗುತದೆ ಅಂದುಕೊಂಡೆ. +ಸತ್ತು ಹೋದ ಡಾನ್ ಲೂಪಿಯ ಹೆಂಡತಿ ಇದ್ದಳು. + ಇನ್ನೂ ಅಂಬೆಗಾಲಿಡುತಿದ್ದ ಎರಡು ಮಕ್ಕಳು ಇದ್ದವು. +ಆ ಹೆಂಗಸೂ ಸತ್ತು ಹೋದಳು -ದುಃಖ ತಾಳಲಾರದೆ ಅನುತ್ತಾರಪ್ಪ. +ಮಕ್ಕಳನ್ನ ಯಾರೋ ನಂಟರು ಕರಕೊಂಡು ಹೋದರು. +ಅವರಿಂದ ಇನ್ನು ಭಯ ಇರಲಿಲ್ಲ. +‘ಆದರೆ ಮಿಕ್ಕ ಜನ ನನ್ನ ಮೇಲೆ ಇನ್ನೂ ವಾರಂಟು ಇದೆ, ನನ್ನ ವಿಚಾರಣೆ ಬಾಕಿ ಇದೆ ಅನ್ನುವುದನ್ನು ಬಳಸಿಕೊಂಡರು. +ಊರಿಗೆ ಯಾರೇ ಹೊಸಬರು ಬಂದರೂ ‘ಯಾರೋ ಗೊತ್ತಿಲ್ಲದ ಜನ ಬಂದಿದಾರೆ ಜುವೆನ್ಸಿಯೋ,’ ಅಂತ ನನಗೆ ಬಂದು ಹೇಳುತಿದ್ದರು. +‘ನಾನು ತಕ್ಷಣ ಬೆಟ್ಟದ ದಿಕ್ಕಿಗೆ ಓಡುತಿದ್ದೆ. +ಒತ್ತಾಗಿ ಬೆಳೆದ ಮರ್ಡೋನೆ ಮರಗಳ ಮಧ್ಯ ಅವಿತಿಟ್ಟುಕೊಳ್ಳುತಿದ್ದೆ ಎಷ್ಟೋ ದಿನ ಮರದ ಕಾಯಿ, ಹಣು ತಿಂದುಕೊಂಡು ಇರುತ್ತಿದ್ದೆ. +ಒಂದೊಂದು ಸಾರಿ ಮಧ್ಯರಾತ್ರಿಯಲ್ಲೇ ಓಡಿ ಹೋಗಬೇಕಾಗಿತು. +ನಾಯಿಗಳು ಅಟ್ಟಸಿಕೊಂಡು ಬಂದರೆ ಓಡುವ ಹಾಗೆ. +ಬದುಕೆಲ್ಲ ಹೀಗೇ ಕಳೆದೆ. +ಒಂದು ವರ್ಷ, ಎರಡು ವರ್ಷವಲ್ಲ, ಇಡೀ ಬದುಕು ಹೀಗೇ.’ +ಈಗ ಅವರು ಬಂದಿದ್ದರು. +ಇನ್ನು ಯಾರೂ ಬರುವುದಿಲ್ಲ, ಜನ ಎಲ್ಲವನ್ನೂ ಮರೆತಿದ್ದಾರೆ, ನಾನಿನ್ನು ಆಯುಷ್ಯದ ಉಳಿದ ದಿನಗಳನ್ನ ನೆಮ್ಮದಿಯಾಗಿ ಕಳೆಯಬಹುದು ಅಂತ ಅವನು ವಿಶ್ವಾಸದಿಂದ ಇರುವಾಗ ಬಂದಿದ್ದರು. +‘ಕೊನೆಯ ಪಕ್ಷ ನನ್ನ ಮುದಿ ವಯಸ್ಸಲ್ಲಾದರು ನೆಮ್ಮದಿ ಇರುತದೆ, ನನ್ನ ಪಾಡಿಗೆ ನನ್ನ ಬಿಡುತ್ತಾರೆ,’ ಅಂದುಕೊಂಡಿದ್ದ. +ಇದೇ ಆಸೆಗೆ ಪೂರಾ ತೆತ್ತುಕೊಂಡಿದ್ದ. +ಅದಕ್ಕೇ ಈಗ ಹೀಗೆ ಸಾಯಬೇಕಲ್ಲ, ಇದ್ದಕಿದ್ದ ಹಾಗೆ, ಈ ಮುದಿ ವಯಸ್ಸಲ್ಲಿ, ಸಾವನ್ನು ದೂರ ಇಡುವುದಕ್ಕೆ ಇಷ್ಟೆಲ್ಲ ಹೆಣಗಾಡಿ ಆದಮೇಲೆ, ಭಯವು ನನ್ನನ್ನು ಊರಿಂದೂರಿಗೆ ಅಟ್ಟಾಡಿಸುತ್ತ, ಈ ಮೈಯಿ ಎಳಕೊಂಡು ಊರೂರು ಸುತ್ತುತ್ತ ಈಗ ಹೆಣದ ಮೂಳೆ ಚಕ್ಕಳವಾಗಿ, ಬದುಕೆಲ್ಲ ಮಿಕ್ಕವರಿಂದ ತಲೆ ತಪ್ಪಿಸಿಕೊಳ್ಳುವದರಲ್ಲೇ ಕಳೆದು ಈಗ ಹೀಗೆ ಸಾಯಬೇಕಲ್ಲ ಅನ್ನಿಸಿ ಕಷ್ಟಪಡುತಿದ್ದ. +ಹೆಂಡತಿ ಕೂಡ ಅವನನ್ನು ತೊರೆದು ಹೋಗುವುದಕ್ಕೆ ಬಿಟ್ಟಿರಲಿಲ್ಲವೇ? +ಹೆಂಡತಿ ತನ್ನ ಬಿಟ್ಟು ಹೋದಳು ಅನ್ನುವುದು ಗೊತ್ತಾದ ದಿವಸ ಅವಳನ್ನು ಹುಡುಕಿಕೊಂಡು ಹೋಗಬೇಕು ಅನ್ನುವ ಯೋಚನೆ ಕೂಡ ಅವನ ಮನಸ್ಸಿನಲ್ಲಿ ಸುಳಿದಿರಲಿಲ್ಲ. +ಯಾರ ಜೊತೆ ಹೋದಳು, ಎಲ್ಲಿಗೆ ಹೋದಳು ಅಂತ ಕೂಡ ವಿಚಾರಿಸಿರಲಿಲ್ಲ. +ಹಾಗೆ ವಿಚಾರಿಸಲು ಊರಿಗೆ ಕಾಲಿಡುವುದನ್ನೇ ತಪ್ಪಿಸಿಕೊಂಡಿದ್ದು, ಎಲ್ಲವನ್ನೂ ಬಿಟ್ಟ ಹಾಗೆ ಅವಳನ್ನೂ ಬಿಟ್ಟಿದ್ದ. +ಒಂದಿಷ್ಟೂ ಕೊಸರಾಡದೆ ಏನೇ ಬರಲಿ, ಜೀವ ಉಳಿಸಿಕೊಳ್ಳಬೇಕು ಉಳಿಸಿಕೊಂಡಿದ್ದ. +ತನ್ನನ್ನು ಕೊಲ್ಲುವುದಕ್ಕೆ ಅವಕಾಶ ಕೊಟ್ಟಿರಲಿಲ್ಲ. +ಈಗಂತೂ ಬಿಲ್ಕುಲ್ ಅವಕಾಶ ಕೊಡಲ್ಲ. +ಅವನನ್ನು ಕೊಲ್ಲುವುದಕ್ಕೇನೇ ಪಾಲೊ ಡಿ ವೆನಾಡೊದಿಂದ ಅವನನ್ನು ಇಲ್ಲಿಗೆ ಕರಕೊಂಡು ಬಂದಿದ್ದರು. +ತಮ್ಮ ಹಿಂದೆಯೇ ಬರುವ ಹಾಗೆ ಅವನಿಗೆ ಬೇಡಿ ಹಾಕುವ ಅಗತ್ಯವಿರಲಿಲ್ಲ. +ಭಯದ ಬೇಡಿಯನ್ನಷ್ಟೇ ತೊಡಿಸಿಕೊಂಡು ಅವರ ಹಿಂದೆ ಹೆಜ್ಜೆ ಹಾಕಿದ್ದ. +ಲಡ್ಡು ಹಿಡಿದ ಹಗ್ಗದಂಥ ಕಾಲು ಸಾವಿನ ಭಯಕ್ಕೆ ಕುಗ್ಗಿದ್ದ ಆ ಮುದಿಮೈಯನ್ನು ಹೊತ್ತುಕೊಂಡು ಓಡಿಹೋಗಲಾರದು ಅನ್ನುವುದು ಅವರಿಗೆ ಗೊತ್ತಾಗಿತ್ತು. +ಹೆಜ್ಜೆ ಹಾಕುತಿದ್ದ ಸಾಯವುದಕ್ಕೆ ಹಾಗಂತ ಹೇಳಿದ್ದರು. +ಆವಾಗ ಅವನಿಗೆ ಗೊತ್ತಾಗಿತ್ತು. +ಸಾವು ಹತ್ತಿರದಲ್ಲೇ ಕಂಡಾಗೆಲ್ಲ ಆಗುತಿದ್ದ ಹಾಗೆ ಹೊಟ್ಟೆ ತೊಳಸಿ, ಕಣ್ಣಲ್ಲಿ ಭಯ ಹೊಮ್ಮಿ, ಕಷ್ಟಪಟ್ಟು ನುಂಗಬೇಕಾದ ಹುಳಿ ನೀರು ಬಾಯಲ್ಲಿ ತುಂಬಿತು. +ಪದ ಕುಸಿಯುತ್ತ, ತಲೆ ಧಿಮಿಗುಡುತ್ತ, ಎದೆ ಪಕ್ಕೆಲುಬಿಗೆ ಒತ್ತುತ್ತ, ಇಲ್ಲ, ಅವರು ಕೊಲ್ಲುತ್ತಾರೆ ಅನ್ನುವುದನ್ನ ಮನಸ್ಸು ಒಪ್ಪುತ್ತಲೇ ಇಲ್ಲ. +ಏನಾದರೂ ಭರವಸೆ ಇದ್ದೀತು. +ಒಂದಿಷ್ಟು ಆಸೆಗೆ ಎಲ್ಲಾದರೂ ಜಾಗ ಇದ್ದೀತು. +ಅವರು ತಪ್ಪು ಮಾಡಿದ್ದಾರು. +ಅವನಲ್ಲದೆ ಬೇರೆ ಯಾರೋ ಜುವೆನ್ಸಿಯೋ ನಾವಾನನ್ನು ಹುಡುಕುತ್ತ ಇದ್ದಾರು. +ಕೈ ಜೋತುಬಿಟ್ಟುಕೊಂಡು ಅವರ ಜೊತೆಯಲ್ಲಿ ಸುಮ್ಮನೆ ಹೆಜ್ಜೆ ಹಾಕಿದ. +ಬೆಳಗಿನ ಜಾವದ ಕತ್ತಲಿತ್ತು ನಕ್ಷತ್ರಗಳಿರಲಿಲ್ಲ. +ಗಾಳಿ ನಿಧಾನವಾಗಿ ಬೀಸುತಿತ್ತು. +ರಸ್ತೆಯ ಧೂಳನ್ನು ಆಡಿಸುತ್ತಿತ್ತು. +ಮಣ್ಣಿನ ರಸ್ತೆಗಳಲ್ಲಿರುವಂಥ ಉಚ್ಚೆಯಂಥ ವಾಸನೆ ಮೂಗಿಗೆ ಅಡರುತಿತ್ತು. +ವಯಸಾಗಿದ್ದ ಅವನ ಮೆಳ್ಳೆಗಣ್ಣಿನ ನೋಟ ಕತ್ತಲಿದ್ದರೂ ಪಾದದ ಕೆಳಗಿನ ನೆಲವನ್ನೇ ದಿಟ್ಟಿಸುತಿತ್ತು. +ಆ ಮಣ್ಣಿನಲ್ಲಿ ಅವನ ಇಡೀ ಬದುಕು ಇತ್ತು. +ಅರುವತ್ತು ವರ್ಷದ ಇಡೀ ಬದುಕು. +ಅರುವತ್ತು ವರ್ಷದಿಂದ ಮುಷ್ಠಿಯಲ್ಲಿ ಬಿಗಿಯಾಗಿ ಹಿಡಿದಿದ್ದ. +ತುತ್ತು ಮಾಂಸವೇನೋ ಅನ್ನುವ ಹಾಗೆ ಕಣ್ಣಲ್ಲೇ ತುತ್ತು ಮುರಿಯುತ್ತ ಇದೇ ಬದುಕಿನ ಕೊನೆಯ ತುತ್ತು ಅನ್ನುವ ಹಾಗೆ ಒಂದೊಂದೂ ಗಳಿಗೆಯನ್ನು ರುಚಿ ನೋಡುತ್ತ ನಡೆದಿದ್ದ. +ಏನೋ ಹೇಳಬೇಕು ಅನ್ನುವ ಹಾಗೆ ಪಕ್ಕದಲ್ಲಿ ನಡೆಯುತಿದ್ದವರನ್ನು ನೋಡಿದ. +ನನ್ನನ್ನು ಬಿಟ್ಟುಬಿಡಿ ಅನ್ನುವವನಿದ್ದ. +‘ಅಣ್ಣಾ, ಯಾರಿಗೂ ನೋವು ಮಾಡಿಲ್ಲಣ್ಣಾ ನಾನು’, ಅನ್ನಬೇಕು ಅಂದುಕೊಂಡಿದ್ದ. +ಆದರೆ ಸುಮ್ಮನೆ ಇದ್ದ. +‘ಸ್ವಲ್ಪ ದೂರ ಹೋದಮೇಲೆ ಹೇಳುತೇನೆ,’ ಅಂದುಕೊಂಡ. +ಸುಮ್ಮನೆ ಅವರನ್ನು ನೋಡಿದ. +ಇವರೆಲ್ಲ ಸ್ನೇಹಿತರು ಅಂದುಕೊಳ್ಳಬಹದೇನೋ ಅಂದುಕೊಳ್ಳಲಿಲ್ಲ, ಸ್ಕೇಹಿತರಲ್ಲ ಅವರು. +ಅವರು ಯಾರೋ ಗೊತ್ತೇ ಇಲ್ಲ. +ಪಕ್ಕದಲ್ಲೇ ಹೆಜ್ಜೆ ಹಾಕುತ್ತ ರಸ್ತೆ ಹೇಗೆ ತಿರುಗಿದೆ ಅಂತ ಆಗಾಗ ಬಗ್ಗಿ ನೋಡುತಿದ್ದರು. +ಮುಸ್ಸಂಜೆ ಮುಗಿದು ರಾತ್ರಿ ಶುರುವಾಗುವ ಸಂಧಿಯಲ್ಲಿ, ಎಲ್ಲವೂ ಸೀದು ಹೋದಹಾಗೆ ಕಾಣುವ ಹೊತ್ತಿನಲ್ಲಿ ಅವರನ್ನು ಮೊದಲು ನೋಡಿದ್ದ, ಉತ್ತ ನೆಲದ ಮೇಲೆ, ಎಳೆಯ ಮೊಳಕೆಗಳನ್ನು ತುಳಿದುಕೊಂಡು ಬಂದಿದ್ದರು ಅದಕ್ಕೇ ಅವನು ಕೆಳಕ್ಕಿಳಿದು ಬಂದಿದ್ದ. +ಬೆಳೆ ಹಾಳಾಗುತ್ತದೆ, ತುಳಿಯಬೇಡಿ ಅನ್ನುವುದಕ್ಕೆ ಬಂದಿದ್ದ. +ಅವರು ನಿಂತಿರಲಿಲ್ಲ. +ಸರಿಯಾದ ಹೊತ್ತಿಗೆ ಅವರನ್ನು ನೋಡಿದ್ದ. +ಯಾವಾಗಲೂ ಎಲ್ಲವನ್ನೂ ಸರಿಯಾದ ಹೊತ್ತಿಗೇ ನೋಡುತಿದ್ದ ಅದೃಷ್ಟವಂತ ಅವನು. +ಅವನು ಬಚ್ಚಿಟ್ಟುಕೊಂಡೇ ಇರಬಹುದಾಗಿತ್ತು. +ಬೆಟ್ಟದಲ್ಲಿ ಇನ್ನೊಂದಷ್ಟು ಮೇಲೆ ಹೋಗಿ ಅವರೆಲ್ಲ ಹೋಗುವವರೆಗೆ ಒಂದೆರಡು ಗಂಟೆ ಕಾದಿದ್ದು ಆಮೇಲೆ ಕೆಳಕ್ಕಿಳಿದು ಬರಬಹುದಾಗಿತ್ತು. +ಹೇಗಿದ್ದರೂ ಬೆಳೆ ಕೈಗೆ ಹತ್ತುತಿರಲಿಲ್ಲ. +ಇಷ್ಟು ಹೊತ್ತಿಗೆ ಮಳೆ ಬರಬೇಕಾಗಿತ್ತು ಬಂದಿರಲಿಲ್ಲ. + ಬೆಳೆ ಒಣಗುತಿತ್ತು ಇವತ್ತಲ್ಲದಿದ್ದರೆ ನಾಳೆ ಪೂರಾ ಸಾಯುತಿತ್ತು. +ಅದಕ್ಕೇ ಅವನು ಕೆಳಕ್ಕೆಳಿದುಬಂದು ಮತ್ತೆ ಯಾವತ್ತೂ ತಪ್ಪಿಸಿಕೊಳ್ಳಲು ಆಗದ ಹಾಗೆ ಅವರ ಕೈಗೆ ಸಿಕ್ಕಿಬೀಳಬೇಕಾಗಿರಲಿಲ್ಲ. +ನನ್ನನ್ನ ಬಿಟ್ಟುಬಿಡಿ ಅಂತ ಹೇಳಬೇಕಾದ ಮಾತನ್ನು ತಡೆದುಕೊಂಡು ಈಗ ಅವರ ಪಕ್ಕದಲ್ಲಿ ಹೆಜ್ಜೆ ಹಾಕುತಿದ್ದ. +ಅವರ ಮುಖ ಕಾಣುತ್ತಿರಲಿಲ್ಲ. +ಮೈಗಳು ಮಾತ್ರ ಕಾಣುತಿದ್ದವು. +ಅತ್ತ ಇತ್ತ ವಾಲಾಡಿಕೊಂಡು ನಡೆಯುತಿದ್ದರು. +ಅದಕ್ಕೇ ಅವನು ಮಾತಾಡಿದಾಗ ಅವರು ಕೇಳಿಸಿಕೊಂಡರೋ ಇಲ್ಲವೋ ಅವನಿಗೆ ತಿಳಿಯಲೇ ಇಲ್ಲ. +‘ಯಾವತ್ತೂ ಯಾರನ್ನೂ ನೋಯಿಸಿಲ್ಲ,’ ಅಂದ. +ಏನೂ ಬದಲಾವಣೆ ಇಲ್ಲ. +ಯಾವ ಮನುಷ್ಯಾಕಾರವೂ ಗಮನಕೊಟ್ಟ ಹಾಗೆ ಕಾಣಲಿಲ್ಲ. +ಮುಖ ತಿರುಗಿಸಿ ಅವನತ್ತ ನೋಡಲಿಲ್ಲ. +ಅವರ ಮುಖ ನಿದ್ದೆ ಮಾಡುವವರ ಮುಖದ ಹಾಗೆ ಬದಲಾಗದೆ ಹಾಗೇ ಇದ್ದವು. +ಆಮೇಲೆ ತಾನು ಹೇಳಬೇಕಾದದ್ದು ಇನ್ನೇನೂ ಇಲ್ಲ, ಬೇರೆ ಇನ್ನೆಲ್ಲಾದರೂ ಆಸೆಯನ್ನು ಹುಟ್ಟಿಸಿಕೊಳ್ಳಬೇಕು ಅಂದುಕೊಂಡ. +ರಾತ್ರಿಯ ಕತ್ತಲಲ್ಲಿ ಕಪ್ಪಾಗಿ ಕಾಣುತಿದ್ದ ನಾಲ್ಕು ಜನರ ಮಧ್ಯೆ ಅವನು ಕೈ ಜೋತು ಬಿಟ್ಟುಕೊಂಡು ನಡೆಯುತ್ತ ಹಳ್ಳಿಯ ಮನೆಗಳ ಮೊದಲ ಸಾಲು ದಾಟಿದ. +‘ಕರ್ನಲ್, ಆಸಾಮಿ ಇಲ್ಲಿದಾನೆ.’ಮುಚ್ಚಿದ್ದ ಬಾಗಿಲ ಮುಂದೆ ನಿಂತರು. +ಅವನು ಗೌರವಕ್ಕೆಂದು ಹ್ಯಾಟು ತೆಗೆದು ಕೈಯಲ್ಲಿ ಹಿಡಿದುಕೊಂಡು ಯಾರಾದರೂ ಹೊರಗೆ ಬರುತ್ತಾರೆಂದು ಕಾಯುತಿದ್ದ. +ಧ್ವನಿ ಮಾತ್ರ ಹೊರಗೆ ಬಂದಿತು. +‘ಯಾವ ಆಸಾಮಿ?’ ಅಂದಿತು. +‘ಪಾಲೊ ಡಿ ವೆನಾಡೊದವನು, ಕರ್ನಲ್. +ನೀವು ಆಜ್ಞೆ ಮಾಡಿದ್ದಿರಲ್ಲ ಅವನು.’ +‘ಅವನು ಯಾವತ್ತಾದರೂ ಅಲಿಮಾದಲ್ಲಿ ಇದ್ದನೋ, ಕೇಳಿ,’ ಒಳಗಿನಿಂದ ಮತ್ತೆ ಧ್ವನಿ ಕೇಳಿಸಿತು. +ಅವನೆದುರು ನಿಂತಿದ್ದ ಸಾರ್ಜೆಂಟು, ‘ಏಯ್, ನೀನು ಯಾವತ್ತಾದರೂ ಅಲಿಮಾದಲ್ಲಿ ಇದ್ದೆಯೇನೋ?’ ಪ್ರಶ್ನೆಯನ್ನು ಮತ್ತೆ ಕೇಳಿದ. +‘ಹೂಂ. ನಾನು ಅಲ್ಲಿನವನೇ ಅಂತ ಕರ್ನಲ್‌ಗೆ ಹೇಳಿ. +ಮೊನ್ನೆ ಮೊನ್ನೆವರಗೂ ಅಲ್ಲೇ ಇದ್ದೆ.’ +‘ಅವನಿಗೆ ಗ್ವಡಲೂಪೆ ಟೆರೆರೋ ಗೊತ್ತಾ ಅಂತ ಕೇಳಿ.’ +‘ನಿನಗೆ ಗ್ವಡಲೂಪೆ ಟೆರೆರೋ ಗೊತ್ತಾ ಅಂತ ಕೇಳುತ್ತಿದಾರೆ.’ +‘ಡಾನ್ ಲೂಪೆ? +ಹೂಂ, ನನಗೆ ಗೊತ್ತು ಅಂತ ಹೇಳಿ ತೀರಿಕೊಂಡಿದಾನೆ. ’ +ಒಳಗಿದ್ದ ಧ್ವನಿಯ ಲಕ್ಷಣ ಬದಲಾಯಿತು. +ಜೊಂಡಿನ ಗೋಡೆಯ ಆಚೆ ಇರುವ ಇನ್ಯಾರ ಜೊತೆಗೋ ಮಾತಾಡುತ್ತಿರುವ ಹಾಗೆ ಇತ್ತು. +‘ಅವನು ಸತ್ತ ಅಂತ ಗೊತ್ತು ನನಗೆ. +ಗ್ವಡಲೂಪೆ ಟೆರೆರೋ ನಮ್ಮಪ್ಪ. +ದೊಡ್ಡವನಾದಮೇಲೆ ಅಪ್ಪನ್ನ ಹುಡುಕಿಕೊಂಡು ಹೋದೆ. +ಸತ್ತು ಹೋದ ಅಂದರು.’ +ಯಾರ ಆಸರೆಯಲ್ಲಿ ಬೇರು ಬಿಟ್ಟು ಬೆಳೆಯಬೇಕೋ ಅವರೇ ಸತು ಹೋಗಿದಾರೆ ಅನ್ನುವುದನ್ನು ಗೊತ್ತುಮಾಡಿಕೊಂಡು ಬೆಳೆಯುವುದು ತೀರ ಕಷ್ಟ. +ನಮಗೆಲ್ಲ ಆಗಿದ್ದು ಅದೇನೇ. +‘ನಮಪ್ಪನನ್ನು ಮೊದಲು ಮಚ್ಚು ಕತ್ತಿಯಲ್ಲಿ ಕೊಚ್ಚಿ ಆಮೇಲೆ ದನ ತಿವಿಯುವ ಕೋಲನ್ನು ಹೊಟ್ಟೆಗೆ ಚುಚ್ಚಿ ಸಾಯಿಸಿದ್ದರು ಅನ್ನುವುದು ಆಮೇಲೆ ಗೊತ್ತಾಯಿತು. +ಒಣಗಿ ಹೋದ ಕಾಲುವೆಯಲ್ಲಿ ಬಿದ್ದಿದ್ದ, ಎರಡು ದಿನ ನೋವು ತಿನ್ನುತ್ತ ನರಳಿದ, ನಮ್ಮ ಮನೆ, ಮಕ್ನಳನ್ನ ನೋಡಿಕೊಳ್ಳಿ ಅನ್ನುತಿದ್ದ ಅಂದರು ಜನ. +‘ಕಾಲ ಕಳೆದ ಹಾಗೆ ಮರೆತು ಹೋಯಿತು ಅನ್ನಿಸುತದೆ. +ಮರೆಯುವುದಕ್ಕೆ ಪ್ರಯತ್ನ ಪಡುತ್ತೇವೆ. +ಇದನ್ನೆಲ್ಲ ಮಾಡಿದ ಮನುಷ್ಯ ಇನ್ನೂ ಜೀವಂತವಾಗಿದಾನೆ, ತಾನು ಮಾತ್ರ ಶಾಶ್ವತವಾಗಿ ಇರುತ್ತೇನೆ ಅನ್ನುವ ಆಸೆಯಲ್ಲಿ ತನ್ನ ಆತ್ಮ ಕೊಬ್ಬಿಸುತ್ತ ಇರುತ್ತಾನ ಅನ್ನುವುದನ್ನ ಮಾತ್ರ ಮರೆಯುವುದಕ್ಕೆ ಆಗದು. +ಆ ಮನುಷ್ಯ ಯಾರು ಅನ್ನುವುದು ಗೊತ್ತಿಲ್ಲ. +ಅವನನ್ನ ಕ್ಷಮಿಸಲಾರೆ. +ಅವನು ಇಲ್ಲೇ ಎಲ್ಲೋ ಇದಾನೆ ಅನ್ನುವುದು ಗೊತ್ತಿದೆಯಲ್ಲ, ಅದಕ್ಕೇ ಅವನನ್ನ ಮುಗಿಸಬೇಕು ಅನ್ನುವ ಆಸೆ. +ಅವನು ಇನ್ನೂ ಬದುಕಿರುವುದನ್ನು ಕ್ಷಮಿಸಲಾರೆ. +ಅವನು ಹುಟ್ಟಲೇಬಾರದಾಗಿತ್ತು.’ +ಅವನು ಹೇಳಿದ್ದೆಲ್ಲ ಇಲ್ಲಿ ಹೊರಗೆ ಹುಲ್ಲಿನ ಗೋಡೆಯಾಚೆ ಕೇಳುತಿತ್ತು. +‘ಅವನನ್ನು ಸ್ವಲ್ಪ ಹೊತ್ತು ಕಟ್ಟಿ ಹಾಕಿ ಒದ್ದಾಡಲಿ. ಆಮೇಲೆ ಶೂಟ್ ಮಾಡಿ,’ ಅಂದ. +‘ನನ್ನ ನೋಡು ಕರ್ನಲ್ ವಯಸ್ಸಾದ ಮುದುಕ. +ಯೋಗ್ಯತೆ ಇಲ್ಲದವನು ಇವತ್ತೋ ನಾಳೆಯೋ ನನ್ನಷ್ಟಕ್ಕೇ ಸಾಯುತ್ತೇನೆ. +ನನ್ನ ಕೊಲ್ಲಬೇಡ.’ +‘ಎಳಕೊಂಡು ಹೋಗಿ,’ ಒಳಗಿನ ಧ್ವನಿ ಮತ್ತೆ ಕೇಳಿಸಿತು. +‘ಮಾಡಿದ ಕೆಲಸಕ್ಕೆ ತೆರಬೇಕಾದ ದಂಡ ತೆತ್ತಿದೇನೆ ಕರ್ನಲ್. +ಮತ್ತೆ ಮತ್ತೆ ತೆತ್ತಿದೇನೆ. +ನನ್ನಿಂದ ಎಲ್ಲಾನೂ ಕಿತ್ತುಕೊಂಡರು. +ಎಷ್ಟೋ ಥರ ಶಿಕ್ಷೆ ಕೊಟ್ಟರು. +ಕುಷ್ಠ ರೋಗಿಯ ಹಾಗೆ ನಲವತ್ತು ವರ್ಷ ಬಚ್ಚಿಟ್ಟುಕೊಂಡೇ, ಯಾವ ಕ್ಷಣದಲ್ಲಿ ನನ್ನ ಕೊಲ್ಲುತ್ತಾರೋ ಅನ್ನುವ ಭಯದಲ್ಲೇ ಕಳೆದಿದ್ದೇನೆ. +ಇಂಥ ಸಾವು ನನಗೆ ಬರಬಾರದು ಕರ್ನಲ್. +ದೇವರು ನನ್ನ ಕ್ಷಮಿಸಲಿ. +ಅವರಿಗೆ ನನ್ನ ಕೊಲ್ಲಬೇಡಿ ಅಂತ ಹೇಳು.’ಹೊಡೆಯುತ್ತಿದ್ದಾರೋ ಅನ್ನುವ ಹಾಗೆ ಅಲ್ಲಿ ಬಿದ್ದಿದ್ದ. +ಹ್ಯಾಟನ್ನು ನೆಲಕ್ಕೆ ಬಡಿಯುತಿದ್ದ ಚೀರುತಿದ್ದ. +ತಕ್ಷಣ ಒಳಗಿನಿಂದ ಧ್ವನಿ ಹೇಳಿತು, ‘ಅವನು ಎಚ್ಚರ ತಪ್ಪುವ ಹಾಗೆ ಕುಡಿಸಿ. +ಆಮೇಲೆ ಶೂಟ್ ಮಾಡಿ. +ಅವನಿಗೆ ಗುಂಡಿನೇಟು ತಿಳಿಯುವುದಿಲ್ಲ.’ +ಈಗ, ಕೊನೆಗೆ ಅವನು ಶಾಂತ. +ಕಂಬದ ಬುಡದಲ್ಲಿ ಕುಸಿದು ಮುದುರಿ ಬಿದ್ದಿದ್ದ. +ಅವನ ಮಗ ಜಸ್ಟಿನೋ ಬಂದಿದ್ದ, ಆಮೇಲೆ ಅವನ ಮಗ ಜಸ್ಟಿನೋ ಹೋಗಿದ್ದ, ಈಗ ಮತ್ತೆ ಬರುತ್ತಾ ಇದ್ದ. +ಹೆಣವನ್ನು ಕತೆಯ ಮೇಲೇರಿಸಿದ. +ದಾರಿಯಲ್ಲಿ ಜಾರಿ ಬೀಳದೆ ಇರಲೆಂದು ಹಗ್ಗದಲ್ಲಿ ಬಿಗಿದು ಕಟ್ಟಿದ. +ಪೆಟ್ಟು ಬಿದ್ದ ತಲೆ ಕಾಣದಿರಲೆಂದು ಚೇಲ ಕವುಚಿದ. +ಜೋರು ಮಾಡಿ ಕತ್ತೆಯನ್ನು ಓಡಿಸಿಕೊಂಡು ಹೋದ. +ಬೇಗ ಪಾಲೊ ಡಿ ವೆನಾಡೋಗೆ ತಲುಪಬೇಕು, ಸತ್ತವನಿಗೆ ಜಾಗರಣೆ ಏರ್ಪಾಡು ಮಾಡಬೇಕು ಅನ್ನುವ ಆತುರವಿತ್ತು. +‘ನೀನಿಲ್ಲ ಅನ್ನುವ ದುಃಖ ನಿನ್ನ ಸೊಸೆಗೆ, ನಿನ್ನ ಮೊಮ್ಮಕ್ಕಳಿಗೆ. +ನಿನ್ನ ಮುಖ ನೋಡಿದರೆ ಗುರುತು ಹಿಡಿಯುತ್ತಾರೋ ಇಲ್ಲವೋ. +ಕಾಡು ನಾಯಿ ಕಚ್ಚಿವೆ ಅಂದುಕೊಳುತ್ತಾರೆ, ನಿನ್ನ ಮುಖದ ತುಂಬ ಇರುವ ಗುಂಡೇಟಿನ ಗುರುತು ನೋಡಿ’ ಅಂದ.