diff --git "a/Data Collected/Kannada/MIT Manipal/Kannada-Scrapped-dta/\340\262\216\340\262\260\340\262\241\340\263\201_\340\262\232\340\262\277\340\262\244\340\263\215\340\262\260\340\262\227\340\262\263\340\263\201.txt" "b/Data Collected/Kannada/MIT Manipal/Kannada-Scrapped-dta/\340\262\216\340\262\260\340\262\241\340\263\201_\340\262\232\340\262\277\340\262\244\340\263\215\340\262\260\340\262\227\340\262\263\340\263\201.txt" new file mode 100644 index 0000000000000000000000000000000000000000..e7367abbbf27dae31aff80cdf71f72f0b0ecb1f5 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\216\340\262\260\340\262\241\340\263\201_\340\262\232\340\262\277\340\262\244\340\263\215\340\262\260\340\262\227\340\262\263\340\263\201.txt" @@ -0,0 +1,123 @@ +ಆ ಎರಡು ಚಿತ್ರಗಳಲ್ಲಿ ಹೆಚ್ಚು ಆಕರ್ಷಕವಾದದ್ದು ಯಾವದು ಎಂಬುದನ್ನು ಹೇಳಲಿಕ್ಕೆ ಎಷ್ಟೋ ರಸಿಕರಿಗೆ ಕೂಡ ಆಗಲಿಲ್ಲ. +ಅಂದ ಬಳಿಕ ಸಾಮಾನ್ಯ ಪ್ರೇಕ್ಷಕಗಣದ ಗತಿಯೇನು? +ಒಬ್ಬ ರಸಿಕ ತರುಣನಂತೂ ಆ ಎರಡೂ ಚಿತ್ರಗಳನ್ನು ನೋಡಿ ಉದ್ಘಾರ ತೆಗೆದ "ಪ್ರೇಯಸಿಯ ಕಪೋಲಗಳಲ್ಲಿ ಎಡಬಲ ಹೇಳುವದಾದರೂ ಹೇಗೆ?" ಎಂದು. +ಹಾಗೆ ನೋಡಿದರೆ ಆ ಚಿತ್ರಗಳಲ್ಲಿ ಸಾಮ್ಯಕ್ಕಿಂತಲೂ ವಿರೋಧವೇ ಹೆಚ್ಚಾಗಿತ್ತು. +ಒಂದರ ಹೆಸರು 'ಸ್ವಪ್ನ' ವಾದರೆ ಇನ್ನೊಂದರ ಹೆಸರು 'ಜಾಗೃತಿ'! +'ಸ್ವಪ್ನ' ದಲ್ಲಿ ಒಬ್ಬ ೧೭-೧೮ ವರುಷದ ತರುಣಿಯೊಬ್ಬಳು ಚಿತ್ರಿಸಲ್ಪಟ್ಟಿದ್ದಳು. +ನಿದ್ರೆಯಲ್ಲಿ ಅವಳ ಸೆರಗು ಬದಿಗೆ ಸರಿದದ್ದನ್ನು ಚಿತ್ರಕಾರನು ತೋರಿಸಿದ್ದ. +ಸ್ವಪ್ನದಲ್ಲಿ ಕಂಡ ಪ್ರಿಯಕರನನ್ನು ಕಾಣುವ ಕುರಿತು ಅವಳು ಕಣ್ಣು ತೆರೆಯುವಷ್ಟರಲ್ಲಿ ಅವಳಿಗೆ ಎದುರಿನಲ್ಲಿ ಯಾರೂ ಕಾಣುವದಿಲ್ಲ. +ಸ್ವಪ್ನದಲ್ಲಿಯ ಪ್ರಿಯಕರನ ಮಸುಕಾದ ಮೂರ್ತಿಯನ್ನು ಮೋಹಕವಾಗಿ ಚಿತ್ರಿಸುವದರಲ್ಲಿ ಚಿತ್ರಕಾರನು ತೋರಿಸಿದ ಕೌಶಲ್ಯವುಅವಳ ಸರಿದ ಸೆರಗನ್ನು ಚಿತ್ರಿಸುವದರಲ್ಲಿಯೂ ಕಂಡು ಬರುತ್ತಿತ್ತು. +‘ಜಾಗೃತಿ’ ಯಲ್ಲಿಯ ಸ್ತ್ರೀಯ ಸೆರಗಾದರೂ ಸರಿದದ್ದೇ ಇತ್ತು. +ಆದರೆ ಅವಳು ವಯಸ್ಸಿನಿಂದ ಪ್ರೌಢ, ಅಂದರೆ ಸುಮಾರು ೨೨ ವರುಷ ದವಳಿರಬಹುದು. +ಅವಳ ೭-೮ ತಿಂಗಳ ಮುದ್ದು ಮಗುವು ಅದೇ ಎಚ್ಚರಾಗಿ ಆನಂದದಿಂದ ತಾಯಿಯ ಸೆರಗಿನ ಕೂಡ ಆಡುತ್ತ, ನಡುನಡುವೆ ಅವಳ ಕಡೆಗೆ ಪ್ರೀತಿಯಿಂದ ನೋಡುತ್ತ, ಆ ಮುದ್ದು ಮಗುವಿನ ಸ್ತನಪಾನ ನಡೆದಂತೆ ಅದರ ದೃಶ್ಯವಿತ್ತು. +ಬಾಲಕನ ಮೂರ್ತಿಯೂ ಮತ್ತು ಅವನು ಬದಿಗೆ ಸರಿಸಿದ ತಾಯಿಯ ಸೆರಗಿನ ಚಿತ್ರಿಸುವಿಕೆಯೂ ಆ ಕತೆಗಾರನ ಕೌಶಲ್ಯದ ಸಾಕ್ಷಿಯೂ ಆಗಿದ್ದವು. +ಪ್ರದರ್ಶನದಲ್ಲಿಯ ಚಿತ್ರಗಳಿಗೆ ಸಣ್ಣ ದೊಡ್ಡ ಪಾರಿತೋಷಕಗಳು ಇಡಲ್ಪಟ್ಟಿದ್ದವು. +ಆದರೆ ಸುವರ್ಣ ಪದಕಗಳು ಎರಡೇ ಇದ್ದವು. +ಇಡೀ ಪ್ರದರ್ಶನವನ್ನು ಏರ್ಪಡಿಸಿದ ಆರ್ಯಭೂಷಣ ಸರದಾರ ಇಂಗಳೇಯವರು ಇಟ್ಟದ್ದು ಒಂದು, ಇನ್ನೊಂದು ಜನರಿಂದ ಕೊಡಲ್ಪಟ್ಟ ಹಣದೊಳಗಿಂದ ಇಟ್ಟದ್ದು, ಪ್ರತಿಯೊಬ್ಬ ಚಿತ್ರಕಾರನು ತನ್ನ ಹೆಸರನ್ನು ಮೊಹರು ಮಾಡಿದ ಪಾಕೀಟಿನಲ್ಲಿ ಬರೆದು, ಅದರ ಮೇಲೆ ತನ್ನ ಚಿತ್ರದ ಹೆಸರು ಬರೆದಿದ್ದ. + ಆದ್ದರಿಂದ ನಿರ್ಣಯದ ವಿಷಯದಲ್ಲಿ ಪಕ್ಷಪಾತವಾಗುವ ಸಂಭವವೇನೂ ಇರಲಿಲ್ಲ. +"ಜಿಟಾಪಿಶಿಯಮ, ಬೋಲಶೇವಿಜಮ್‌ಗಳ ವರೆಗೂ ಎಲ್ಲ ವಿಷಯಗಳ ಜ್ಞಾನವು ವೃದ್ಧ ಸರದಾರ ಸಾಹೇಬರಿಗೆ ಇದ್ದ ಮೂಲಕ ಅವರು ತಮ್ಮ ಪದಕದ ಸಲುವಾಗಿ ಯಾವ ಚಿತ್ರವನ್ನು ಆರಿಸುವರೆಂಬ ವಿಷಯದಲ್ಲಿ ಜನರಿಗೆ ಕುತೂಹಲವಾದಂತೆ, ಜನ ಸಾಮಾನ್ಯದ ಅಭಿರುಚಿಯು ತಮ್ಮ ಅಭಿರುಚಿಯೊಡನೆ ಎಷ್ಟರಮಟ್ಟಿಗೆ ಸರಿಹೋಗುವದೆಂಬದನ್ನು ನೋಡುವ ವಿಷಯದಲ್ಲಿ ಇಂಗಳೆ ಸರದಾರ ಸಾಹೇಬರಿಗಾದರೂ ಕುತೂಹಲವೆನಿಸುತ್ತಿತ್ತು. +ನಿರ್ಣಯದ ದಿವಸ ಪ್ರೇಕ್ಷಕ ಗಣವು ಉಪಸ್ಥಿತವಾಯಿತು. +ಪ್ರದರ್ಶನಕ್ಕೆ ಚಿತ್ರಗಳನ್ನು ಕೊಟ್ಟ ಕಲಾವಂತರಾದರೂ ಬಂದಿದ್ದರು. +ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವದು ಸರದಾರ ಸಾಹೇಬರ ಜನ್ಮಸಿದ್ಧ ಹಕ್ಕೇ ಆಗಿತ್ತು. +ಆ ತಮ್ಮ ಹಕ್ಕಿನ ವಿಷಯದಲ್ಲಿ ಪ್ರತಿಪಾದನೆಮಾಡಿ, ಅವರು ಚಿತ್ರಕಲೆಯ ವಿಷಯದಲ್ಲಿ ಪ್ರಾಸ್ತಾವಿಕ ಭಾಷಣವನ್ನು ಮುಗಿಸಿದರು. +ಪ್ರಾಚೀನ ಕಾಲದಲ್ಲಿ ಚಿತ್ರಕಲೆಯ ಉತ್ಕರ್ಷದ ವಿಷಯವಾಗಿ ಹೇಳುವಾಗ ಅವರು, ರಮಣಿಯರ ಸ್ತನಾಗ್ರದ ಮೇಲೆ ಉಗುರುಗಳಿಂದ ಚಿತ್ರಗಳನ್ನು ತೆಗೆಯುವ ಸಂಸ್ಕೃತ ಕವಿಗಳ ಕಲ್ಪನೆಯ ಉಲ್ಲೇಖವನ್ನಾದರೂ ಮಾಡಿದರು. +ಶೋತೃವರ್ಗವು ಚಪ್ಪಾಳೆಯ ಕಡಕಡಾಟದಿಂದ ಈ ಸೂಕ್ಷ್ಮ ಸಂಶೋಧನೆಯ ಸ್ವಾಗತ ಮಾಡಿತು. +ಆ ಮೇಲೆ ಸರದಾರ ಸಾಹೇಬರು ತಮ್ಮ ನಿರ್ಣಯವನ್ನು ಜಾಹೀರ ಪಡಿಸಿದರು. +ಅವರ ಮತದಲ್ಲಿ ‘ಜಾಗೃತಿ’ ಚಿತ್ರವು ಸ್ಪಷ್ಟವಾಗಿ ಉತ್ಕೃಷ್ಟವಾಗಿತ್ತು. +ತಮ್ಮ ಸುವರ್ಣ ಪದಕದಂತೆ, ಜನತೆಯ ಸುವರ್ಣಪದಕವಾದರೂ ಅದೇ ಚಿತ್ರಕ್ಕೆ ಸಿಗಬೇಕು ಎಂದು ಅವರು ಒಳ್ಳೆ ಆತ್ಮವಿಶ್ವಾಸದಿಂದ ಹೇಳಿದರು. +ಪ್ರದರ್ಶನದ ವೇಳೆಯಲ್ಲಿ ಪ್ರೇಕ್ಷಕ ತಮ್ಮ ಮತಗಳನ್ನು ಪ್ರದರ್ಶಿಸುವ ವ್ಯವಸ್ಥೆಯೂ ಮಾಡಲ್ಪಟ್ಟಿತ್ತು. +ಮತಗಳ ಎಣಿಸುವಿಕೆಯೂ ಆಯಿತು. +ಜನರ ದೃಷ್ಟಿಯಿಂದ ‘ಸ್ವ’ ಚಿತ್ರವು ‘ಜಾಗೃತಿ’ ಗಿಂತಲೂ ಸರಸವೆಂದು ನಿರ್ಣಯಿಸಲ್ಪಟ್ಟಿತು. +ಸರದಾರ ಇಂಗಳೆಯವರು ಕ್ಷಣಹೊತ್ತು ಬೆಚ್ಚಿದರು. +ಆದರೆ ಪಾನಿಪತ ರಣಕ್ಷೇತ್ರದ ಮೇಲೆ ಮಾಡಿದ ವೀರರ ವಂಶಜರೇ ಆಗಿದ್ದರಿಂದ, ಅವರು ಒಮ್ಮೆಲೇ ಪದಕದಾನದ ಸಮಾರಂಭಕ್ಕೆ ಸುರುಮಾಡಿದರು. +ಗೀತೆಯಲ್ಲಿಯದೊ ಗರುಡಪುರಾಣದಲ್ಲಿಯದೋ ಯಾವದೋ ಒಂದು ಸಂಸ್ಕೃತ ಶ್ಲೋಕವನ್ನು ಅಂದು, ಅದರ ಅನ್ವಯಾರ್ಥ ಹೇಳಿ, ಅವರು ಮುಂದಕ್ಕೆ ಭಾಷಣ ಸಾಗಿಸಿದರು. +"ಎರಡೂ ಪದಕಗಳು ಒಂದೇ ಚಿತ್ರಕ್ಕೆ ಸಿಕ್ಕಿದರೆ ಹಾಲಿನಲ್ಲಿ ಸಕ್ಕರೆ ಹಾಕಿದಂತಾಗುತ್ತಿತ್ತು. +ಆದರೆ ಸಕ್ಕರೆ ಚಹದಲ್ಲಿಯೇ ಬೀಳಬೇಕೆಂದು ಪ್ರಭು ರಾಮಚಂದ್ರನ ಇಚ್ಚೆ ಇತ್ತು. +ಈಶ್ವರೇಚ್ಛೆಯ ಮುಂದೆ ಯಾರದೇನು ನಡಿಯಬೇಕು? +ಜನಸಾಮಾನ್ಯವು ಬಹುತರವಾಗಿ ತಪ್ಪುತ್ತಿರುವದೆಂದು ಯಾವನೋ ಒಬ್ಬ ಪಾಶ್ಚಾತ್ಯ ಲೇಖಕನು ಹೇಳಿದ್ದಾನೆ. +'ಸೆನ್' ಹೀಗೇನೋ ಹೆಸರು ಅದೆ ಅವನದು. +ಗಣನಾಥ ಸೆನ್ ಅಥವಾ (ಕೂಡಿದ ಜನರೊಳಗಿಂದ ಯಾರೋ ಹೇಳಿದರು "ಇಬ್ಸೆನ್") ಇರಬಹದು, ಅದೂ ಇರಬಹದು. +ಪಾಶ್ಚಾತ್ಯ ಲೇಖಕರೊಂದಿಗೆ ಹೆಸರಿಗೆ ಕೂಡ ಸಂಬಂಧವಿಡುವದೂ ಕೂಡ ಘಾತುಕವಾಗಿದೆ. +ಒಬ್ಬನು ಹೇಳುವ-ಬೇಕಾದವಳು ಬೇಕಾದವನ ಕೈ ಹಿಡಿದು ಬೇಕಾದ್ದನ್ನು ಮಾಡಬಹುದು. +ಮತ್ತೊಬ್ಬನು ನುಡಿವ- ದೇವರು ದಿಂಡರು ಎಲ್ಲವೂ ಸುಳ್ಳು. +ಯುರೋಪದಲ್ಲಿ ಪೇಶವೆಯರು ಇದ್ದರೆ ಇಂಥ ಲೇಖಕರನ್ನು ಆನೆಯ ಕಾಲಿನ ಬುಡದಲ್ಲಿ ಹಾಕಿ ಬಿಡುತ್ತಿದ್ದರು. +ಇಲ್ಲದಿದ್ದರೆ, ಕತ್ತೆಗಳ ಮೇಲೆ ಮೆರವಣಿಗೆಯನ್ನಾದರೂ ತೆಗೆದೇಬಿಡುತ್ತಿದ್ದರು. +ಆದರೆ-"ಸರದಾರ ಸಾಹೇಬರ ಕೂಡ ಶೋತೃವರ್ಗವಾದರೂ ನಿಟ್ಟುಸಿರು ಬಿಟ್ಟಿತು. +ದಾರಿ ತಪ್ಪಿ ಎರಡನೇ ರೂಳಿನ ಮೇಲೆ ಹೋಗುವ ಅವರ ವಕ್ತೃತ್ವದ ಹೊಗೆಬಂಡಿಯು "ಆದರೆ…" ಎಂಬ ಸ್ಟೇಶನ್ನಿಗೆ ಒಮ್ಮೆಲೆ ನಿಂತು ಬಿಡುವದು ಎಂಬ ಮಾತು ಶೋತೃಗಣಕ್ಕೆ ಅನುಭವಸಿದ್ಧವಾಗಿತ್ತು. +ತನ್ನು ಶುಭ್ರವಾದ ಮೀಸೆಗಳ ಮೇಲೆ ಕೈಯಾಡಿಸುತ್ತ ಸರದಾರ ಸಾಹೇಬರು ಗರ್ಜಿಸಹತ್ತಿದರು. +"ಜಾಗೃತಿ ಚಿತ್ರವು ಸ್ವಪ್ನದ ಚಿತ್ರಕ್ಕಿಂತಲೂ ಒಳ್ಳೆಯದೆಂಬುದನ್ನು ಒಬ್ಬ ಕುರುಬನು ಕೂಡ ಹೇಳಬಹುದಾದ ಮಾತು. +ಇಂದು ನಮ್ಮ ದೇಶಕ್ಕೆ ಬೇಕಾದದ್ದೇನು? +ಸ್ವಪ್ನವೇ?ಛೇ!ಛೇ! +ಸ್ವಪ್ನದಲ್ಲಿಯೂ ಕೂಡ ಹೀಗೆ ಯಾರೂ ಹೇಳಲಿಕ್ಕಿಲ್ಲ. +ದೇಶಕ್ಕೆ ಈಗ ಬೇಕಾದದ್ದು ಜಾಗೃತಿ! +ಸ್ವಪ್ನಗಳು ಸಾಕಾಗಿ ಹೋದವು. +ಇತ್ತೀಚೆಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಸ್ವಪ್ನದ ಆಡಂಬರ ಬಹಳ ಬೆಳೆಯಹತ್ತಿದೆ. +ಲಾಯಿಡ ಜಾರ್ಜನೋ, ಲಾಯಿಡ ಹ್ಯಾರೋಳ್ಡನೋ-(ಶೋತೃಗಳೊಳಗಿಂದ ಮತ್ತೆ ಧ್ವನಿ ಬಂದಿತು-ಫ್ರಾಯಿಡ್ ) ಇರಬಹುದು, ಇರಬಹುದು, ಯಾರಾದರೂ ಇದ್ದಿರಬಹು. +ಈ ನವಮತವಾದಿಗಳ ಹೆಸರು ತೆಗೆದು ಕೊಳ್ಳುವದು ಕೂಡ ಮಹಾಪಾಪವಾಗಿದೆ. +ತಮ್ಮ ಅಭಿನಯದಿಂದ ಹ್ಯಾಮೈಟನ ಎಲ್ಲ ಭೂಮಿಕೆಗಳನ್ನು ಸೂಚಿಸುವಂತೆ ಸರದಾರ ಸಾಹೇಬರು ಮುಂದೆ ಸಾಗಿದರು. +"ಈ ಚಿತ್ರನೋಡಿರಿ, ಈ ಚಿತ್ರ ನೋಡಿರಿ. +ಇಬ್ಬರು ಚಿತ್ರಕಾರರ ಕೌಶಲ್ಯವನ್ನು ಯಾರಾದರೂ ಒಪ್ಪುವಂತಿದೆ. +ಆದರೆ ಒಬ್ಬನದು ಆರ್ಯ ಹೃದಯ ಮತ್ತು ಒಬ್ಬನದು ಪಾಶ್ಚಿಮಾತ್ಯರ ಜಡವಾದಕ್ಕೆ ಬಲಿಬಿದ್ದವನ ಹೃದಯ. +'ಜಾಗೃತಿ'ಯು ಆರ್ಯಸಂಸ್ಕೃತಿಯ ಮೂರ್ತಿಮಂತ ಚಿತ್ರವಾಗಿದೆ. +ಬಾಲಕನ ಸಲುವಾಗಿ ತಾಯಿಯು ಮಾಡುವ ಸ್ವಾರ್ಥತ್ಯಾಗವನ್ನು ಕಂಡು ಸಗದ್ಗದಿತವಾಗದೆ ಇರುವವರಾರು? +ಈ ಚಿತ್ರ ನೋಡಿ ನನಗೆ ಕೂಡ ಸಣ್ಣ ಮಗುವಾಗಬೇಕೆಂದೆನಿಸಿತು. +ಇನ್ನು ಈ ‘ಸ್ವಪ್ನ’ ನೋಡಿರಿ ಇದರಲ್ಲಿ ಏನಾದರೂ ತ್ಯಾಗ ವಿದೆಯೋ, ಕಲೆಯ ಕ್ಷೇತ್ರದಲ್ಲಿ ಸಲ್ಲದ ಮಡಿಮೈಲಿಗೆ ಮಾಡುವ ಮನುಷ್ಯನಲ್ಲ ನಾನು. +ಆದರೆ ಈ ಸ್ವಪ್ನ ಚಿತ್ರದಲ್ಲಿಯ ತರುಣಿಯ ಸೆರಗನ್ನು ಚಿತ್ರಕಾರನು ಸ್ವಲ್ಪ ವ್ಯವಸ್ಥಿತವಾಗಿ ಇರಿಸಿದ್ದರೆ ಏನು ಕೆಡುತ್ತಿತ್ತು? +ಜಾಗೃತಿಯೊಳಗಿನ ಸ್ತ್ರೀಯ ಸೆರಗಾದರೂ ಸರಿದದ್ದೇನೋ ನಿಜ, ಆದರೆ ಅದು ಅವಳ ಮುದ್ದು ಮಗುವು ಸ್ತನಪಾನದ ವೇಳೆಯಲ್ಲಿ ಸರಿಸಿದ ಮೂಲಕ ಸ್ವಪ್ನದಲ್ಲಿ ಅಂಥಾದ್ದೇನೂ ಇಲ್ಲ. +ಸೆರಗು ಬದಿಗೆ ಸರಿಯಬೇಕಾದರೆ ಕಾರ್ಯಕಾರಣ ಭಾವವೇನಾದರೂ ಬೇಕಲ್ಲವೇ? +ನಿಮ್ಮಂಥ ಸೂಜ್ಞರಿಗೆ ಇದಕ್ಕಿಂತಲೂ ಹೆಚ್ಚಿಗೆ ಹೇಳತಕ್ಕದ್ದಾದರೂ ಏನು? +ಬಹುಜನ ಸಮಾಜದ ಅಭಿರುಚಿಯು ಇನ್ನೂ ಸುಸಂಸ್ಕೃತವಾಗಿಲ್ಲವೆಂದೇ ಈ ಸ್ವಪ್ನ ಚಿತ್ರಕ್ಕೆ ಇಂದು ಸುವರ್ಣ ಪದಕದೊರೆತಿದೆ. +ಆ ಚಿತ್ರಕ್ಕೆ ಕೊಟ್ಟ ಮತಗಳೆಲ್ಲವೂ ತಿಳಿಗೇಡಿ ತರುಣ ತರುಣಿಯರವೇ ಇರಬೇಕು! +ಹಾಗೇನೂ ನಾನು ಶೃಂಗಾರಕ್ಕೆ ವಿರೋಧಿಯಾಗಿರುವೆನೆಂತಲ್ಲ. +ನನಗೆ ನಾಲ್ಕು ಮದುವೆಗಳಾಗಿದ್ದು, ನನಗೆ ಹದಿನೇಳು ಹುಡುಗರೂ, ಒಂಭತ್ತು ಮೊಮ್ಮಕ್ಕಳು ಇದ್ದ ಸಂಗತಿ ಜಗಜ್ಜಾಹೀರವಿದೆ. +ಶೃಂಗಾರನಿದ್ದರೂ ಆರ್ಯಶೃಂಗಾರವಿರಬೇಕು. +ಋಷಿ ಮುನಿಗಳ ಈ ಪುಣ್ಯಭೂಮಿಗೆ ಶೋಭಿಸುವಂಥ ಶೃಂಗಾರ ಬೇಕು! +ಹುಚ್ಚು ಹುಚ್ಚಿನ ಪಾಶ್ಚಾತ್ಯ ಶೃಂಗಾರವು ನಮಗೆ ಬೇಡ, ಈಗ ವೇಳೆಯೂ ಬಹಳವಾಗುತ್ತ ಬಂದಿತು. +ಎಲ್ಲ ಕಲಾವಂತರಿಗೆ ನಮ್ಮ ಆಗ್ರಹದ ಆಹ್ವಾನವೆಂದರೆ, ಅವರೆಲ್ಲರೂ ಈ ಜಾಗೃತಿಚಿತ್ರ ತೆಗೆದ ಚಿತ್ರಕಾರನ ಅನುಕರಣ ಮಾಡಬೇಕು. +ಸ್ವಪ್ನವನ್ನು ಚಿತ್ರಿಸಿದವನ ಹೆಜ್ಜೆಯಲ್ಲಿ ಹೆಜ್ಜೆಯನ್ನಿಟ್ಟು ಸಮಾಜವನ್ನು ಅಧೋಗತಿಗೆ ಒಯ್ಯತಕ್ಕದ್ದಲ್ಲ. +"ಭಾಷಣವು ರುಚಿಸಿತೆಂತಾಗಲಿ, ಮುಗಿಯಿತೆಂತಾಗಲಿ ಚಪ್ಪಾಳಿಯ ಪ್ರಚಂಡ ಕಡಕಡಾಟವಾಯಿತು. +ಜಾಗೃತಿ ಚಿತ್ರದ ಪಾಕೀಟು ಒಡೆದು ಚಿತ್ರಕಾರನ ಹೆಸರನ್ನು ಪ್ರಕಟಿಸಲಾಯ್ತು. +ಯಶಸ್ವಿಯಾದ ಚಿತ್ರಕಾರನು ಮುಂದೆ ಬಂದ. +ವಯಸ್ಸು ಇದೆ ಮೂವತ್ತು ಮೀರಿರಬಹುದು, ಗೌರ ವರ್ಣದ, ತೆಳ್ಳನ ಮೈ ಕಟ್ಟು, ಮುಖದಲ್ಲಿ ಮಧುರಸ್ಮಿತ, ವೃದ್ದ ಸರದಾರ ಸಾಹೇಬರಿಗೆ ಆತನನ್ನು ಕಂಡು ಆನಂದವಾಯಿತು. +ಪದಕವನ್ನು ಸ್ವೀಕರಿಸಿ ನಮಸ್ಕಾರ ಮಾಡುವ ಮುಂದೆ ಆತನ ಕಣ್ಣುಗಳು ಹೊಳೆದವು. +ಜಗತ್ತಿನಲ್ಲಿಯ ತರತರದ ಚಂಚಲ ಸೌಂದರ್ಯದ ಪ್ರತಿಬಿಂಬವನ್ನು ತಟ್ಟನೆ ತೆಗೆದುಕೊಳ್ಳುವ ಓಜಸ್ಸು ಅವುಗಳಲ್ಲಿ ಹೊಳೆಯುತ್ತಿತ್ತು. +ಸರದಾರ ಸಾಹೇಬರ ಕಡೆಯಿಂದ ಪದಕವನ್ನು ಸ್ವೀಕರಿಸುವದಕ್ಕಾಗಿ ಸ್ವಪ್ನ ಚಿತ್ರ ತೆಗೆದವನು ಮುಂದಕ್ಕೆ ಬರುವನೋ ಇಲ್ಲವೆಂಬುದರ ವಿಷಯದಲ್ಲಿ ಎಲ್ಲರಿಗೂ ಸಂಶಯವಾಗಿತ್ತು. +ಆದರೆ ಆ ಸಂಶಯಕ್ಕಿಂತಲೂ ಆ ಚಿತ್ರಕಾರನ ಹೆಸರು ತಿಳಿದುಕೊಳ್ಳುವ ವಿಷಯದಲ್ಲಿ ಇಡೀ ಜನಸಮುದಾಯದಲ್ಲಿ ತೀವ್ರವಾದ ಕುತೂಹಲ ಉಂಟಾಗಿತ್ತು. +ಕಾರ್ಯದರ್ಶಿಗಳು ಪಾಕೀಟು ತೆರೆದು ನೋಡಿದರು. +ಅವರ ಬಾಯಿಂದ ಶಬ್ದಗಳೇ ಹೊರಬೀಳಲೊಲ್ಲವು. +ಸರದಾರ ಸಾಹೇಬರು ಅವರ ಮುಖದ ಕಡೆಗೆ ನೋಡುತ್ತಲೇ ನಿಂತುಬಿಟ್ಟರು. +ಏನಾದರೂ ಕಾರ್ಯದರ್ಶಿಗಳು ಒಂದು ಶಬ್ದವನ್ನಾದರೂ ಉಚ್ಚರಿಸುವ ಲಕ್ಷಣ ತೋರಲಿಲ್ಲ. +ಸರದಾರ ಸಾಹೇಬರು ಅವರ ಕೈಯಲ್ಲಿಯ ಕಾಗದವನ್ನು ಕಸಿದುಕೊಂಡು ನೋಡಿದರು. +ಕಾರ್ಯದರ್ಶಿಗಳಿಗೆ ಆದ ರೋಗವು ಸಾಂಸರ್ಗಿಕವೆಂದು ಪ್ರೇಕ್ಷಕರಿಗೆ ತಿಳಿದುಬಂದಿತು. +ಸರದಾರ ಸಾಹೇಬರವರೂ ಬೊಂಬೆಯಂತೆ ಸ್ತಬ್ಬರಾಗಿ ನಿಂತುಬಿಟ್ಟರು. +ಕಡೆಗೆ, ‘ಜಾಗೃತಿ’ ಚಿತ್ರ ತೆಗೆದ ಚಿತ್ರಕಾರನೇ ‘ಸ್ವಪ್ನ’ವನ್ನು ತೆಗೆದಿದ್ದನೆಂದು ಎಲ್ಲರಿಗೂ ತಿಳಿಯಿತು. +ಸರದಾರ ಸಾಹೇಬರ ಮನಸ್ಸಿನ ಮೇಲೆ ಇದರ ಆಘಾತವಾಗದೆ ಇರಲಿಲ್ಲ. +ಆದರೆ ಅದರಲ್ಲಿ ಆನಂದದ ಅಂಶವೇ ಅಧಿಕವಾಗಿತ್ತು. +ಸರದಾರ ಸಾಹೇಬರು ಶಕ್ಯವಿದ್ದಷ್ಟು ಪ್ರಸಂಗಾವಧಾನವನ್ನು ಕಲೆಹಾಕಿ ಪಾನಿಪತ್ತದ ಮೇಲಿನ ತಮ್ಮ ಶೂರ ಪೂರ್ವಜರ ಸ್ಮರಣಮಾಡಿ, ಆ ಚಿತ್ರಕಾರನಿಗೆ ದ್ವಂದ್ವಯುದ್ಧಕ್ಕಾಗಿ ಆಹ್ವಾನಕೊಟ್ಟರು. +"ಈ ಎರಡನೇ ಚಿತ್ರವಾದರೂ ನಿಮ್ಮದೇ ಏನು?" +"ಹೌದು!""ಬಹಳ ದಿವಸಗಳ ಹಿಂದೆ ನೀವು ಶಾಲೆಯಲ್ಲಿದ್ದಾಗ ತೆಗೆದಿರಬಹುದು ಅದನ್ನು!" +"ಛೇ!ಎರಡೂ ಚಿತ್ರಗಳನ್ನು ಒಂದೇ ವೇಳೆಗೆ ತೆಗೆದೆ. +ಪ್ರದರ್ಶನದ ಏರ್ಪಾಡು ಜಾಹೀರವಾದನಂತರ ತೆಗೆದದ್ದು." +"ಈ ನಿಮ್ಮ ಎರಡನೇ ಚಿತ್ರ, ಬಹುತರವಾಗಿ ಒಂದು ಇಂಗ್ರೇಜಿ ಚಿತ್ರದ ಮೇಲಿಂದ ತೆಗೆದಿರಬಹುದಲ್ಲವೇ?" +ಚಿತ್ರಕಾರನ ಕಂಣುಗಳಲ್ಲಿ ತಿರಸ್ಕಾರವು ಕ್ಷಣಮಾತ್ರ ಮಿನುಗಿ ಹೋಯಿತಲ್ಲ. +"ಎರಡೂ ಚಿತ್ರಗಳು ನಮ್ಮ ಸಮಾಜದಲ್ಲಿಯವೇ ಅವೆ?" ಅವನು ಶಕ್ಯವಿದ್ದಷ್ಟು ಶಾಂತವಾಗಿ ಹೇಳಿದ. +"ನಮ್ಮ ಸಮಾಜದಲ್ಲಿಯವೇ?" +"ಹೌದು ನಮ್ಮ ನಿಮ್ಮಂಥವರ ಮನೆಯಲ್ಲಿ ಕಾಣತಕ್ಕವುಗಳು ಈ ಎರಡೂ ಚಿತ್ರಗಳಲ್ಲಿಯ ಅನುಭವಗಳು ನನ್ನವೇ ಆಗಿವೆ. +ಆಯುಷ್ಯದಲ್ಲಿಯ ಉತ್ಕಟ ಕ್ಷಣಗಳ ಸೌಂದರ್ಯವು ಕಲಾವಂತನ ಹೃದಯದಲ್ಲಿ ಯಾವಾಗಲೂ ಜಾಗ್ರತವಾಗಿರುತ್ತದೆ. +ಮೊದಲನೇ ಚಿತ್ರದಲ್ಲಿಯ ಸುಖದ ಕ್ಷಣವನ್ನು ನಾನು ಇತ್ತೀಚೆಗೆ ಅನುಭವಿಸಿದೆ. +"ಸ್ವಪ್ನ "ದಲ್ಲಿಯ ಸುಖದ ಕ್ಷಣವು ೫-೬ ವರ್ಷದ ಪೂರ್ವದಲ್ಲಿಯದು. +ಅವೆರಡುಗಳಲ್ಲಿ ಅಂತರವು ಇಷ್ಟೇ! +"ಸರದಾರ ಸಾಹೇಬರು ಮನಸ್ಸಿನಲ್ಲಿಯೇ ರಾಮರಕ್ಷಾ ಮಂತ್ರವನ್ನು ಹೇಳತೊಡಗಿದರು. +‘ಸ್ವಪ್ನ’ ಚಿತ್ರವನ್ನು ಕೊಂಡುಕೊಳ್ಳುವವರ ಸಲುವಾಗಿ ಕೆಲವು ಜನ ರಸಿಕರು, ಆ ಚಿತ್ರಕಾರನ ಬಳಿಗೆ ಹೋದರು. +ಚಿತ್ರವು ಮೊದಲೇ ಮಾರಿಹೋಗಿತ್ತು. +ಒಂದು ದೃಷ್ಟಿಯಿಂದ ನೋಡಿದರೆ ಅದರಲ್ಲಿ ಆಶ್ಚರ್ಯ ಪಡುವಂಥಾದ್ದೇನೂ ಇಲ್ಲ. +ಅವರು ಸಹಜವಾಗಿಯೂ ಅದನ್ನು ತೆಗೆದು ಕೊಂಡವನ ಹೆಸರನ್ನು ವಿಚಾರಿಸಿದರು. +ಚಿತ್ರಕಾರನು ಗೊಂದಲದಲ್ಲಿ ಬಿದ್ದು ಕಡೆಗೆ ಹೇಳಿದ. +ಆ ಚಿತ್ರವನ್ನು ಸರದಾರ ಇಂಗಳೆ ಸಾಹೇಬರು ಒಯಿದರು." +ಈ ಗೊಂದಲದಲ್ಲಿ ಸರದಾರ ಸಾಹೇಬರ ಹೆಸರಿನ ಪೂರ್ವದಲ್ಲಿ, ಶ್ರೀ ಶಂಕರಾಚಾರ್ಯರು ಕೊಟ್ಟ "ಆರ್ಯಧರ್ಮ ಸಂರಕ್ಷಕ" ಎಂಬ ಬಿರುದನ್ನು ಉಪಯೋಗಿಸಬೇಕೆಂಬ ವಿಚಾರಕೂಡ ಆ ಚಿತ್ರಕಾರನಿಗೆ ಉಳಿಯಲಿಲ್ಲ. +ಇಂಥ ಚಿತ್ರಗಳು ಯಾವಾಗಲೂ ಜನರ ದೃಷ್ಟಿಗೆ ಬಿದ್ದು ಆರ್ಯ ಸಂಸ್ಕೃತಿಗೆ ಪೆಟ್ಟು ತಗಲಬಾರದೆಂದೇ ಅವರು ಅದನ್ನು ತೆಗೆದುಕೊಂಡು ಹೋಗಿರಬಹುದು! +ತಮ್ಮ ಬಂಗಲೆದಲ್ಲಿಯ ದಿವಾಣಖಾನೆಯಲ್ಲಿಯಾದರೂ ಅದನ್ನು ಹೆಚ್ಚುವಂತಿದ್ದಿಲ್ಲ. +ಹೋಗು ಬರುವ ಜನರೆಲ್ಲರೂ ಅಲ್ಲಿಯೇ ಕೂಡುತ್ತಿದ್ದರು. +ಅವರ ಆರ್ಯಸಂಸ್ಕೃತಿ –ಆ ಪ್ರಶ್ನೆ ಬಿಟ್ಟು ಬಿಟ್ಟರೂ ಕೂಡ, ಮನೆಯಲ್ಲಿಯ ೧ಂ-೧೨ ಜನ ಹೆಂಡರೂ, ಹದಿನೇಳು ಮಕ್ಕಳೂ, ಒಂಭತ್ತು ಮೊಮ್ಮಕ್ಕಳೂ ಇವರ ದೃಷ್ಟಿಗಾದರೂ ಬೀಳುವಂತೆ ಆ ಚಿತ್ರವನ್ನು ಹಚ್ಚುವಷ್ಟೇನೂ ಸರದಾರ ಸಾಹೇಬರು ವ್ಯವಹಾರ ಶೂನ್ಯರಾಗಿದಿಲ್ಲ . +ನಿರುಪಾಯರಾಗಿ ಕಡೆಗೆ ಅವರಿಗೆ ಆ ಚಿತ್ರವನ್ನು ತಮ್ಮ ರಂಗಮಹಲಿನಲ್ಲಿಯೇ ಇಡಬೇಕಾಯಿತು! +