diff --git "a/Data Collected/Kannada/MIT Manipal/\340\262\227\340\263\207\340\262\260\340\262\277_\340\262\266\340\262\277\340\262\225\340\263\215\340\262\267\340\262\243\340\262\252\340\262\246\340\263\215\340\262\247\340\262\244\340\262\277.txt" "b/Data Collected/Kannada/MIT Manipal/\340\262\227\340\263\207\340\262\260\340\262\277_\340\262\266\340\262\277\340\262\225\340\263\215\340\262\267\340\262\243\340\262\252\340\262\246\340\263\215\340\262\247\340\262\244\340\262\277.txt" new file mode 100644 index 0000000000000000000000000000000000000000..5b90b92efcb56a318bf1dcf62ba9f2a9244ad5cc --- /dev/null +++ "b/Data Collected/Kannada/MIT Manipal/\340\262\227\340\263\207\340\262\260\340\262\277_\340\262\266\340\262\277\340\262\225\340\263\215\340\262\267\340\262\243\340\262\252\340\262\246\340\263\215\340\262\247\340\262\244\340\262\277.txt" @@ -0,0 +1,20 @@ +ಅಮೆರಿಕದ ಸಂಯುಕ್ತ ಸಂಸ್ಥಾನಗಳ ಇಂಡಿಯಾನದ ಗೇರಿ ಎಂಬಲ್ಲಿನ ಶಾಲೆಯೊಂದರಲ್ಲಿ ಶಾಲಾ ಮುಖ್ಯಾಧಿಕಾರಿಯಾಗಿದ್ದ ವಿಲಿಯಂ ಎ .ವರ್ಟ್ ಎಂಬಾತ 1908ರಲ್ಲಿ ಮೊಟ್ಟಮೊದಲು ಆಚರಣೆಗೆ ತಂದ ಒಂದು ಶಿಕ್ಷಣಪದ್ಧತಿ . +ಶಾಲೆಯ ಮಕ್ಕಳಿಗೆ ಬೌದ್ಧಿಕ ಶಿಕ್ಷಣದ ಜೊತೆಗೆ ದೈಹಿಕ , ಕಲಾತ್ಮಕ ಮತ್ತು ವೈಜ್ಞಾನಿಕ ಶಿಕ್ಷಣವನ್ನೂ ನೀಡಬೇಕೆಂದು ವರ್ಟ್ ಭಾವಿಸಿದ . +ಅದಕ್ಕಾಗಿ ತನ್ನ ಶಾಲೆಗೆ ಆಟದ ಮೈದಾನ , ಈಜುಕೊಳ , ತೋಟ , ವಿಜ್ಞಾನ ಪ್ರಯೋಗಾಲಯ , ಯಂತ್ರಕಾರ್ಯಾಗಾರ , ಗಾನ ಮತ್ತು ನೃತ್ಯಮಂದಿರ - ಇವನ್ನೆಲ್ಲ ನಿರ್ಮಿಸಿಕೊಂಡ . +ಆಟ , ಪ್ರಯೋಗಾಲಯ ಮತ್ತು ಕಾರ್ಯಾಗಾರದ ಕೆಲಸ , ಸಾಮಾಜಿಕ ಮತ್ತು ಕ್ರಿಯಾತ್ಮಕ ಕಾರ್ಯ , ಸಾಂಪ್ರದಾಯಿಕ ವಿಷಯಗಳ ವ್ಯಾಸಂಗ - ಇವನ್ನು ಶಾಲೆಯ ಕಾರ್ಯಕ್ರಮಗಳಲ್ಲಿ ಸೇರಿಸಿದ್ದ . +ಮಕ್ಕಳ ಕಾಲವನ್ನು ಫಲದಾಯಕವಾಗಿ ಬಳಸಿಕೊಳ್ಳುವುದಕ್ಕೂ ವಿರಾಮದಲ್ಲಿ ಹೊರಗೆ ಅವರು ವ್ಯರ್ಥ ಕಾಲಹರಣ ಮಾಡುವುದನ್ನು ತಪ್ಪಿಸುವುದಕ್ಕೂ ವ್ಯಾಸಂಗದ ಅನಂತರ ಆಟವನ್ನೂ ಆಟದ ಅನಂತರ ವ್ಯಾಸಂಗವನ್ನೂ ಪರ್ಯಾಯವಾಗಿ ವೇಳಾಪಟ್ಟಿಯಲ್ಲಿ ಸೇರಿಸಿದ . +ಇದಕ್ಕನುಕೂಲಿಸುವಂತೆ ಇಡೀ ಶಾಲೆಯ ವಿದ್ಯಾರ್ಥಿಗಳನ್ನು ಎರಡು ಪಂಗಡಗಳಾಗಿ (ಪ್ಲಟೂನ್ )ವಿಂಗಡಿಸಿದ - ತರಗತಿಯ ಪಂಗಡ ಮತ್ತು ಆಟ ಇಲ್ಲವೆ ಕೆಲಸದ ಪಂಗಡ ಎಂದು . +ಮೊದಲ ಪಂಗಡ ತರಗತಿಯ ವ್ಯಾಸಂಗದಲ್ಲಿದ್ದರೆ ಎರಡನೆಯ ಪಂಗಡ ಆಟದ ಮೈದಾನದಲ್ಲೋ ಇತರ ಕಾರ್ಯಾಲಯದಲ್ಲೋ ಇರುವಂತೆ ವೇಳಾಪಟ್ಟಿಯನ್ನು ರಚಿಸಿದ . +ಇದರಿಂದ ಇಡೀ ಶಾಲೆಯ ಸೌಲಭ್ಯವನ್ನು ದಿನದ ಎಲ್ಲ ವೇಳೆಯಲ್ಲೂ ಬಳಸಿಕೊಳ್ಳುವ ಅವಕಾಶವಾಗಿ , ಅಲ್ಲಿನ ಶಿಕ್ಷಣಾಧಿಕಾರಿಗಳು ಕಟ್ಟಡದ ನಿರ್ಮಾಣಕ್ಕೆ ಸಾಮಾನ್ಯಶಾಲೆಗೆ ಬೇಕಾಗುತ್ತಿದ್ದ ಹಣದಲ್ಲಿ ಅರ್ಧವನ್ನು ಮಾತ್ರ ವ್ಯಯಮಾಡಬೇಕಾಗುತ್ತಿತ್ತು . +ಅಲ್ಲಿ ವಿದ್ಯಾರ್ಥಿಗಳು ಇತರರಿಗಿಂತ ಹೆಚ್ಚುಕಾಲ ಶಾಲೆಯಲ್ಲಿದ್ದು ಕಡಿಮೆ ವೆಚ್ಚದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಲಿಕೆಯನ್ನು ಸಾಧಿಸುತ್ತಿದ್ದರು . +ಗೇರಿ ಶಾಲೆಯಲ್ಲಿ ಕಿಂಡರ್‍ಗಾರ್ಟನ್‍ನಿಂದ ಪ್ರೌಢಶಾಲೆಯವರೆಗಿನ ತರಗತಿ ಗಳಿರುತ್ತಿದ್ದು, ಹಿರಿಯರನ್ನು ನೋಡಿ ಕಿರಿಯರು ಕಲಿಯುವುದಕ್ಕೂ ಕಿರಿಯರ ಬಗ್ಗೆ ಹಿರಿಯರು ತಮ್ಮ ಹೊಣೆಯನ್ನು ನಿರ್ವಹಿಸುವುದನ್ನು ರೂಢಿಸಿಕೊಳ್ಳುವುದಕ್ಕೂ ಅವಕಾಶವಿತ್ತು . +ವಿದ್ಯಾರ್ಥಿಗಳು ಕಲಿಯುವ ವಿಷಯಗಳನ್ನೂ ಮಾಡುವ ಕೆಲಸಗಳನ್ನೂ ಸಮಾಜ ಜೀವನದೊಡನೆ ಸಂಬಂಧಿಸಿಕೊಳ್ಳಲಾಗುತ್ತಿತ್ತು . +ರಸಾಯನಶಾಸ್ತ್ರದಲ್ಲಿ ಬರುವ ನೀರು ಸರಬರಾಜು ಪಾಠವನ್ನು ಆ ಊರಿನ ಪೌರಸಭೆಯ ನೀರಿನ ಇಲಾಖೆಯ ಎಂಜಿನಿಯರೂ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದ ಪಾಠವನ್ನು ಅಲ್ಲಿನ ಆರೋಗ್ಯಾಧಿಕಾರಿಯೂ ಬೋಧಿಸುವ ವ್ಯವಸ್ಥೆಯಿತ್ತು . +ಹೀಗೆಯೆ ಇತರ ಪಾಠಗಳಲ್ಲಿ ಕೂಡ .ಕಾರ್ಯಾಗಾರಗಳಲ್ಲಿ ಶಾಲೆಗೆ ಬೇಕಾಗುವ ವಸ್ತುಗಳನ್ನು ಮಾಡಿಸುತ್ತಿದ್ದರು . +ಗೃಹವಿಜ್ಞಾನದ ತರಗತಿಯಲ್ಲಿ ಮಧ್ಯಾಹ್ನದ ಉಪಾಹಾರ ತಯಾರಿಸಿ ಬಡಿಸುತ್ತಿದ್ದರು . +ಯಂತ್ರಕಾರ್ಯಾಗಾರ,ಉಪನ್ಯಾಸ ಮಂದಿರ, ಆಟದ ಮೈದಾನ - ಇತ್ಯಾದಿಗಳಲ್ಲಿರುವಾಗ ಮಕ್ಕಳು ಊರಿನ ಹಿರಿಯರ ಸಂಪರ್ಕವನ್ನೂ ಪಡೆಯಬಹುದಾಗಿದ್ದು ಅವರ ಸಾಮಾಜಿಕ ಜೀವನ ವೃದ್ಧಿಯಾಗಲು ಅವಕಾಶವಾಗುತ್ತಿತ್ತು . +ದಿನಾಚರಣೆ,ಚರ್ಚೆ,ನಾಟಕಾಭಿನಯ , ನೃತ್ಯ - ಇವುಗಳಿಗೆ ಸಿದ್ಧತೆ ಪಡೆಯುವಾಗ ಅವರ ಕಲಾಜೀವನ ವರ್ಧಿಸುತ್ತಿತ್ತು . +ಒಟ್ಟಿನಲ್ಲಿ ಈ ಶಿಕ್ಷಣಪದ್ಧತಿ ಸಾಂಪ್ರದಾಯಿಕ ಶಿಕ್ಷಣವೀಯುವುದರ ಜೊತೆಗೆ ವಿದ್ಯಾರ್ಥಿಗಳ ಪುರ್ಣ ಬೆಳೆವಣಿಗೆಗೂ ಅವಕಾಶವೀಯುತ್ತಿತ್ತು ; ವಿದ್ಯಾರ್ಥಿಗಳಿಗೆ ಅಲ್ಲಿನ ಜೀವನ ಅರ್ಥಪುರ್ಣವಾಗಿರುತ್ತಿತ್ತು . +ಈ ಪದ್ಧತಿ ಮೂಲರೂಪದಲ್ಲಿ ಈಗ ಅಷ್ಟಾಗಿ ಪ್ರಚಾರದಲ್ಲಿಲ್ಲದಿದ್ದರೂ ಅದರ ಉತ್ತಮಾಂಶಗಳು ಕ್ರಮಕ್ರಮವಾಗಿ ಶಿಕ್ಷಣವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿವೆ . +ವಿದ್ಯಾರ್ಥಿಸಂಖ್ಯೆ ಅಧಿಕವಾಗಿರುವ ಭಾರತದಂಥ ದೇಶಗಳಲ್ಲಿ ಸ್ಥಳಾವಕಾಶ ದೊರಕಿಸಿಕೊಳ್ಳಲು ಇರುವ ಕಟ್ಟಡಾದಿ ಅಲ್ಪ ಸೌಲಭ್ಯಗಳನ್ನು ಸರದಿಯ ಪ್ರಕಾರ ಬಳಸಿಕೊಳ್ಳಲು ಈ ಪದ್ಧತಿ ಬೆಳಕು ನೀಡಬಲ್ಲುದು . +ಇದನ್ನು ಪ್ಲಟೂನ್ ಶಾಲೆ, ಕೆಲಸ - ವ್ಯಾಸಂಗ - ಆಟದ ಶಾಲೆ , ಪರ್ಯಾಯ ಯೋಜನೆಯ ಪಾಠಶಾಲೆ ಇತ್ಯಾದಿ ಹೆಸರುಗಳಿಂದಲೂ ಕರೆಯುವುದುಂಟು .