diff --git "a/Data Collected/Kannada/MIT Manipal/Kannada-Scrapped-dta/\340\262\222\340\262\202\340\262\237\340\262\277_\340\262\244\340\263\206\340\262\252\340\263\215\340\262\252.txt" "b/Data Collected/Kannada/MIT Manipal/Kannada-Scrapped-dta/\340\262\222\340\262\202\340\262\237\340\262\277_\340\262\244\340\263\206\340\262\252\340\263\215\340\262\252.txt" new file mode 100644 index 0000000000000000000000000000000000000000..491ef627396569962a4760c3811a64c5f3b2e2cd --- /dev/null +++ "b/Data Collected/Kannada/MIT Manipal/Kannada-Scrapped-dta/\340\262\222\340\262\202\340\262\237\340\262\277_\340\262\244\340\263\206\340\262\252\340\263\215\340\262\252.txt" @@ -0,0 +1,259 @@ +ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. +ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ ಅವುಗಳಲ್ಲಿ ಹುರುಳಿಲ್ಲ ಎಂದು ನನಗೆ ಖಾತ್ರಿಯಾಗಿ ಗೊತ್ತಿತ್ತು. +ಕ್ಲೇರಾ ಮುಂಬಯಿಯಲ್ಲಿ ರೂಪದರ್ಶಿಯಾಗಿದ್ದು ಅಲ್ಲಿ ಜನ-ಜೀವನದಿಂದ ಬೇಸತ್ತು ಇಲ್ಲಿ ಉದ್ಯೋಗಕ್ಕೆ ಸೇರಿದ್ದಾಳೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಕಂಪನಿಯ ಮನೇಜಿಂಗ್ ಡೈರೆಕ್ಟರ್‌ರ ಉಪಪತ್ನಿ ಎಂಬ ಆಪಾದನೆಯನ್ನೂ ಅವಳ ಮೇಲೆ ಹೊರಿಸಿದ್ದರು. +ಇದಾವುದರ ಪರಿವೆಯಿಲ್ಲದೆ ಕ್ಲೇರಾ ತನ್ನ ಕೆಲಸವನ್ನು ಕರ್ತವ್ಯವೆಂಬಂತೆ ನಿರ್ವಹಿಸುತ್ತಿದ್ದಳು. +ಕ್ಲೇರಾಳ ಸನಿಹದಲ್ಲೇ ಕುಳಿತು ಕೆಲಸ ಮಾಡುತ್ತಿರುವ ನನಗೆ ಅವಳಿಗೆ ಕೆಲಸದ ಬಗ್ಗೆ ಆಗಾಗ್ಗೆ ಮಾರ್ಗದರ್ಶನ ನೀಡುವ ಜವಾಬ್ದಾರಿಯೂ ಇತ್ತು. +ಈ ಸಂದರ್ಭದಲ್ಲಿ ನಮ್ಮಿಬ್ಬರ ಮಧ್ಯೆ ಯಾವುದೇ ವೈಯಕ್ತಿಕ ವಿಷಯಗಳು ಚರ್ಚೆಗೆ ಬರುತ್ತಿರಲಿಲ್ಲ. +ಯಾವಾಗಲೂ ಗಂಭೀರ ಮುಖ ಮಾಡಿಕೊಂಡು ತನ್ನ ಪಾಡಿಗೆ ತನ್ನ ಕೆಲಸ ಮುಗಿಸಿ ಹೊರಟು ಹೋಗುತ್ತಿದ್ದಳು. +ಬೆಳಗ್ಗೆ ಎಲ್ಲರಿಗಿಂತ ಮೊದಲು ಬಂದು ಕಂಪ್ಯೂಟರಿನ ಎದುರು ಆಸೀನಳಾದರೆ ಮತ್ತೆ ಎದ್ದು ಹೋಗುವುದು ಸಂಜೆ ಎಲ್ಲರೂ ಹೋದ ಮೇಲೆಯೇ. +ಮಧ್ಯಾಹ್ನದ ಊಟವನ್ನು ಬ್ಯಾಗಿನಲ್ಲಿಟ್ಟ ಟಿಪಿನ್ ಕ್ಯಾರಿಯರ್ ಬಿಚ್ಚಿ ಕುಳಿತಲ್ಲಿಯೇ ಮುಗಿಸಿ ಬಿಡುತ್ತಿದ್ದಳು. +ಯಾರೊಂದಿಗೂ ಮಾತಿಲ್ಲ, ಹರಟೆಯಿಲ್ಲ, ನಗುವಿಲ್ಲ, ಏನಾದರೂ ಮಾಡಿ ಅವಳ ವೈಯಕ್ತಿಕ ವಿಷಯವನ್ನು ಕೆದಕ ಬೇಕೆಂದು ನನ್ನ ಮನಸ್ಸು ಬಯಸಿದರೂ ಅವಳ ನಿರ್ಲಿಪ್ತ ಗಂಭೀರ ಮುಖ ನೋಡಿದೊಡನೆ ನನ್ನ ಧೈರ್ಯವೆಲ್ಲಾ ಕರಗಿ ಹೋಗುತ್ತಿತ್ತು. + ಅವಳು ತನ್ನಷ್ಟಕ್ಕೆ ನನ್ನಲ್ಲಿ ಆಸಕ್ತಿ ಹೊಂದಲಿ ಎಂದು ನಾನು ಮಾಡಿದ ಹಲವು ಪರೋಕ್ಷ ಪ್ರಯೋಗಗಳು ಕೂಡಾ ಫಲ ನೀಡಲಿಲ್ಲ. +ಬಹುಶಃ ನನ್ನ ಈ ಹುಚ್ಚಾಟಿಕೆ ಅವಳಿಗೆ ತಿಳಿದಿದೆಯೋ ಇಲ್ಲವೋ ಎಂದು ನನಗೆ ಧೈರ್ಯವಾಗಿ ಹೇಳಲಿಕ್ಕಾಗದು. +ನನ್ನ ಈ ಪ್ರಯೋಗಕ್ಕೆ ಮುಖ್ಯ ಕಾರಣ ನಾನು ಅವಳನ್ನು ಮೆಚ್ಚಿಕೊಂಡದ್ದು. +ಅವಳ ಎತ್ತರ, ಬಣ್ಣ, ರೂಪ ಯಾವ ಸಿನಿಮಾ ನಟಿಯರಿಗಿಂತಲೂ ಕಮ್ಮಿ ಇರಲಿಲ್ಲ. +ಆದರೆ ನನ್ನ ಏಕಮುಖ ಪ್ರೀತಿಯನ್ನು ಅರುಹಲು ನನಗೆ ಅವಕಾಶವನ್ನೇ ಅವಳು ನೀಡಿರಲಿಲ್ಲ. +ಅವಳು ಯಾವ ಊರಿನವಳು, ಎಲ್ಲಿ ವಾಸ, ಕುಟುಂಬದ ಮಾಹಿತಿ ಎಲ್ಲಾ ತಿಳಿದುಕೊಳ್ಳಬೇಕೆಂದು ಹಲವು ಬಾರಿ ಪ್ರಯತ್ನಿಸಿ ವಿಫಲನಾಗಿದ್ದೆ. +ಅಕಸ್ಮತ್ತಾಗಿ ತನ್ನ ವೈಯಕ್ತಿಕ ವಿಷಯ ಮಾತಿನಲ್ಲಿ ಬಂದಾಗಲೆಲ್ಲಾ ಗಂಭೀರವಾಗಿ ಬಿಡುತ್ತಿದ್ದಳು. +ಅವಳ ನಗುವಿಲ್ಲದ ಮುಖ ಛಾಯೆಯಿಂದಾಗಿ ನನ್ನ ಮುಂದಿನ ಪ್ರಶ್ನೆ ತನ್ನಿಂದ ತಾನೇ ಮರೆತು ಹೋಗುತ್ತಿತ್ತು. +ಒಂದು ದಿನ ಬೆಳಿಗ್ಗೆ ಅವಳು ಎಂದಿನಂತೆ ಕಂಪ್ಯೂಟರ್ ಎದುರು ಕುಳಿತಿದ್ದಳು. +ನಾನು ಬಂದವನೇ ನನ್ನ ಕೆಲಸದಲ್ಲಿ ಮಗ್ನನಾಗಿದ್ದೆ. +ಅವಳು ನನ್ನ ಬಲಬದಿಗೆ ಬಾಗಿ ಮೆಲು ಸ್ವರದಲ್ಲಿ ಅಂದಳು. +“ನಾಳೆ ಊರಿಗೆ ಹೋಗುತ್ತಿದ್ದೇನೆ, ಸಮಯವಕಾಶ ಇದ್ದರೆ ಬರುವಿರೇನು?” ನನಗೆ ಆಶ್ಚರ್ಯವಾಯಿತು. +ಮೂರು ವರ್ಷದ ಕಚೇರಿ ಒಡನಾಟದಲ್ಲಿ ಅವಳು ಕೇಳಿದ ಮೊದಲ ವೈಯಕ್ತಿಕ ಪ್ರಶ್ನೆ ಅದಾಗಿತ್ತು. +ಅಚಾನಕ್ ಬಿದ್ದ ಪ್ರಶ್ನೆಯಿಂದ ನಾನು ಒಮ್ಮೆ ದಿಗಿಲುಗೊಂಡರೂ ಕೂಡಲೆ ಸಾವರಿಸಿಕೊಂಡೆ. +ಆದರೆ ನನಗಾದ ಸಂತೋಷವನ್ನು ನನ್ನ ಮುಖದಲ್ಲಿ ವ್ಯಕ್ತಪಡಿಸಲಿಲ್ಲ. +ನನ್ನ ಮನಸ್ಸಿನ ಇಂಗಿತವನ್ನು ಅವಳಿಗೆ ಸುಲಭವಾಗಿ ತಿಳಿಸಬಾರದು. +ನಾನು ಏನು ಎಂಬಂತೆ ಅವಳ ಮುಖ ನೋಡಿದೆ. +ನಗುವಿಲ್ಲ, ಅದೇ ನಿರ್ಲಿಪ್ತ ಮುಖ. +ಅವಳಂದಳು “ಸ್ತ್ರೀ ಪುರುಷ ಸಂಬಂಧಗಳಲ್ಲಿ ಸ್ವಪ್ರೇರಿತ ಪ್ರಾಮಾಣಿಕತೆಯೇ ನಿಜವಾದ ಆದರ್ಶ, ಎಡರು ತೊಡರುಗಳು, ದುಃಖ ದುಮ್ಮಾನಗಳು ಮನುಷ್ಯನನ್ನು ಪರಿಶುದ್ಧನನ್ನಾಗಿಸುತ್ತದೆ. +ನೀವು ನನ್ನೊಂದಿಗೆ ಖಂಡಿತ ಬರುತ್ತೀರಿ ತಾನೇ?” ನಾನು ತಲೆಯಲ್ಲಾಡಿಸಿ ಸಮ್ಮತಿ ಸೂಚಿಸಿದೆ. +ಮತ್ತೆ ಮಾತಿಲ್ಲ, ಮೌನ, ನಾವು ಕಚೇರಿ ಕೆಲಸದಲ್ಲಿ ಲೀನವಾದೆವು. +ಮರುದಿನ ಸುಮಾರು ಒಂದು ಗಂಟೆಯ ಬಸ್ಸು ಪ್ರಯಾಣ ಮುಗಿಸಿ ನಾನು ಮತ್ತು ಕ್ಲೇರಾ ಯಾವುದೋ ಕುಗ್ರಾಮದಲ್ಲಿ ಇಳಿದೆವು. +ಸುತ್ತಲೂ ಕಾಡು, ಸೂರ್ಯನ ಬಿಸಿಲನ್ನುತಡೆ ಹಿಡಿದು ಪ್ರಯಾಣಿಕನಿಗೆ ತಂಪೆರೆಯುವ ಆ ಬ್ರಹತ್ ಗಾತ್ರದ ಮರ-ಬಳ್ಳಿಗಳ ನಡುವಿನ ಕಾಲು ದಾರಿಯಲ್ಲಿ ನಡೆಯುತ್ತಿದ್ದೆವು. +ಸುಮಾರು ಒಂದು ಫರ್ಲಾಂಗು ನಡೆದ ಮೇಲೆ ಒಂದು ಸಣ್ಣ ತೊರೆ ಅಡ್ಡ ಬಂತು. +ಬಿದಿರಿನ ತೆಪ್ಪದಲ್ಲಿ ಪ್ರಯಾಣ “ಭಯವಾಗುತ್ತಿದೆ” ನಾನಂದೆ. +ಕ್ಲೇರಾ ಉತ್ತರಿಸಲಿಲ್ಲ. +“ಹೂ” ಅಂದಳು. +ತೆಪ್ಪವನ್ನು ಅವಳೇ ನಡೆಸುತ್ತಿದ್ದಳು. +ಅವಳ ಮುಖದಲ್ಲಿ ಏನೋ ಆಲೋಚನೆಯಿತ್ತು. +ನಾನು ಸುತ್ತಲೂ ನೋಡಿದೆ. +ಶಾಂತವಾದ ನೀರನ್ನು ಸೀಳಿಕೊಂಡು ತೆಪ್ಪ ಮುಂದೆ ಹೋಗುತ್ತಿತ್ತು. +ನೀಲ ಆಕಾಶ, ಸುತ್ತಲೂ ಬೆಟ್ಟ ಹಾಗೂ ಬಯಲುಗಳು, ನೀಲ ಆಕಾಶಕ್ಕೆ ಹಸಿರಿನ ಹೊದಿಕೆ. +ಮಧ್ಯದಲ್ಲಿ ತಣ್ಣಗೆ ಹರಿವ ತೊರೆ, ತಪ್ಪದಲ್ಲಿ ನಾವಿಬ್ಬರು ಮೌನದಲ್ಲಿ ಒಂದು ರೀತಿಯ ಸಂತೋಷ, ಕ್ಲೇರಾಳನ್ನು ಕೇಳಿಯೇ ಬಿಡೋಣ ಎಂದೆನಿಸಿದರೂ ಯಾವ ರೀತಿಯ ಪ್ರತಿಕ್ರಿಯೆ ಬರಬಹುದೆಂಬ ಗೊಂದಲದಲ್ಲಿ ಬಿದ್ದೆ. +ತೆಪ್ಪ ದಡ ತಲುಪಿತು. +ಇಳಿದು ಮುಂದೆ ನಡೆದೆವು, ಹಸಿರು ಜಮಾಖಾನ ಹರಡಿದಂತೆ ಕಾಣುವ ಭತ್ತದ ಗದ್ದೆಗಳು, ತೆನೆಗಳು ಗಾಳಿಗೆ ತೂಗುತ್ತಿದ್ದವು. +ಗದ್ದೆಯ ಹುಣಿಯಲ್ಲಿ ಸಾಗುತ್ತಿದ್ದೆವು. +ಕ್ಲೇರಾ ಮುಂದೆ, ನಾನು ಹಿಂದೆ, ಹುಣಿಯ ಮೇಲಿದ್ದ ಕಪ್ಪೆಗಳು ಆಗಂತುಕರ ಕಾಲ ಸಪ್ಪಳಕ್ಕೆ ಹೆದರಿ ಗದ್ದೆಯೊಳಗೆ ಒಂದೊಂದೇ ‘ಫಲಕ್…ಫಲಕ್’ ಎಂದು ನೆಗೆಯುತ್ತಿದ್ದವು. +ಈ ಮೌನವನ್ನು ದೀರ್ಘಕಾಲದವರೆಗೆ ಮುಂದುವರಿಸಲು ನನ್ನಿಂದ ಸಾಧ್ಯವಾಗಲಿಲ್ಲ. +“ಕ್ಲೇರಾ” ಅಂದೆ. +ಅವಳು ಒಮ್ಮೆಲೆ ನಿಂತು ತಿರುಗಿ ನೋಡಿದಳು. +ಏನು ಎಂಬಂತೆ ಅವಳ ಮುಖ ಭಾವವಿತ್ತು. +ಗಂಡಸು ನೂರು ಮಾತಿನಲ್ಲಿ ಹೇಳಿದುದನ್ನು ಸ್ತ್ರೀ ಒಂದೇ ನೋಟದಿಂದ ಹೇಳುತ್ತಾಳೆ. +“ನಾನೊಂದು ಪ್ರಶ್ನೆ ಕೇಳಲೇ?” ನಾನಂದೆ. +“ಬೇಡ. ನೀವು ಏನು ಕೇಳುವಿರಿ ಎಂದು ನನಗೆ ಗೊತ್ತಿದೆ” ಅವಳಂದಳು. +ಅವಳ ಮುಖ ಗಂಭೀರವಾಯಿತು. +ಸ್ವಲ್ಪ ಹೊತ್ತು ಮೌನ. +ನಂತರ ಅವಳು ನಿಧಾನವಾಗಿ ನಡೆಯ ತೊಡಗಿದಳು. +ಈ ನಡಿಗೆಯಲ್ಲಿ ಯೋಚನೆಗಳಿದ್ದುವು. +ಕ್ಷಣ ತಡೆದು ಕ್ಲೇರಾ ಕೇಳಿದಳು. +“ನೀವು ನನ್ನನ್ನು ಯಾಕೆ ಪ್ರೀತಿಸುತ್ತೀರಿ?”ನನಗೆ ಆಶ್ಚರ್ಯವಾಯಿತು. +ಇದುವರೆಗೂ ನಮ್ಮಲ್ಲಿ ವೈಯಕ್ತಿಕ ವಿಷಯದ ಬಗ್ಗೆ ಚರ್ಚೆ ನಡೆದಿರಲಿಲ್ಲ. +ಬರೇ ನನ್ನ ಹಾವ-ಭಾವ, ಮುಖ ಚರ್ಯೆಯಿಂದಲೇ ನನ್ನ ಮನದಾಳಕ್ಕೆ ಕ್ಲೇರಾ ಲಗ್ಗೆ ಹಾಕಿದ್ದಳು. +ಆಕಸ್ಮಿಕವಾಗಿ ಬಿದ್ದ ಪ್ರಶ್ನೆಯ ಹೊಡೆತದಿಂದ ಚೇತರಿಸಲು ನಾನು ಒದ್ದಾಡುತ್ತಿದ್ದೆ. +ಅವಳು ಸ್ವಲ್ಪ ಏರಿದ ಧ್ವನಿಯಲ್ಲಿ ಮತ್ತೆ ಕೇಳಿದಳು. + “ಹೇಳಿ. ನೀವು ನನ್ನನ್ನು ಯಾಕೆ ಪ್ರೀತಿಸುತ್ತೀರಿ?” + “ಕ್ಲೇರಾ, ನಿಜ ಹೇಳುತಿದ್ದೇನೆ. +ನಿಮ್ಮ ವ್ಯಕ್ತಿತ್ವ, ಗುಣ ನನಗೆ ಇಷ್ಟವಾಯಿತು ಅದಕ್ಕೆ. ” +“ಸುಳ್ಳು. ನಾನಿದನ್ನು ನಂಬುವುದಿಲ್ಲ. +ಬೇರೆಯವರ ಭಾವನೆಯ ಜೊತೆ ನೀವು ಆಟವಾಡುವುದು ಸರಿಯಲ್ಲ. +ಆಟವನ್ನು ನೀವು ಗೆಲ್ಲಬಹುದು. +ಆದರೆ ಆ ವ್ಯಕ್ತಿಯನ್ನು ಮಾತ್ರ ಕಳೆದುಕೊಳ್ಳಬೇಕಾಗುತ್ತದೆ. +ನಿಮ್ಮ ಉದ್ದೇಶ ಸಾಧನೆಗೆ ಇತರರನ್ನು ಬಲಿಗೊಡದಿರುವುದು ಮಾನವೀಯತೆ, ಹಣದಿಂದ ಎಲ್ಲವನ್ನೂ ಪಡೆಯಬಹುದು. +ಆದರೆ ಸ್ನೇಹ, ವಿಶ್ವಾಸ, ಮಮತೆಗಳನ್ನು ಪಡೆಯಲಾಗದು.” ಕ್ಲೇರಾ ನಡಿಗೆ ನಿಲ್ಲಿಸಿ ದೂರಕ್ಕೆ ಬೆರಳು ತೋರಿಸುತ್ತಾ ಅಂದಳು. +“ಅದು ನನ್ನ ಮನೆ.” +ನಾನು ದೂರಕ್ಕೆ ಕಣ್ಣು ಹಾಯಿಸಿದೆ. +ಒಂದು ಮಣ್ಣಿನ ಗೋಡೆಯ ಹಳೆಯ ಕಾಲದ ಹಂಚಿನ ಮನೆ. +ಅದಕ್ಕೊಂದು ಪುಟ್ಟ ಅಂಗಳ, ಸಣ್ಣ ಮರದ ಕಿಟಕಿಗಳು. +ತಲೆತಗ್ಗಿಸಿ ಒಳ ಹೊಕ್ಕಬೇಕಾದ ಬಾಗಿಲು, ಬೆಳಕಿನ ಅಭಾವ ಇಡೀ ಮನೆಯಲ್ಲಿ ಕಾಣುತ್ತಿತ್ತು. +ನಾನು ಅಂಗಳದಲ್ಲಿ ನಿಂತೆ. +ಅನತಿ ದೂರದಲ್ಲಿ ತರುಣಿಯೊಬ್ಬಳು ನೆಲದ ಮೇಲೆ ಕುಳಿತಿದ್ದಳು. +ಅವಳ ತಲೆ ಹಾಗೂ ಕುತ್ತಿಗೆ ಮಾಮೂಲಿ ಗಾತ್ರಕ್ಕಿಂತ ದೊಡ್ಡದಿತ್ತು. +ಕಣ್ಣುಗಳು ಈಗಲೋ ಆಗಲೋ ಹೊರ ಬೀಳುವಂತೆ ಕಾಣುತ್ತಿತ್ತು. +ನಾಲಗೆಯನ್ನು ಅರ್ಧ ಹೊರಗೆ ಹಾಕಿದ್ದಳು. +ಅವಳು ತೊಡೆಯ ಮೇಲೆ ಒಂದು ಬೊಂಬೆಯನ್ನು ಮಲಗಿಸಿ ಅದಕ್ಕೆ ನೀರು ಹೊಯ್ಯುತ್ತಿದ್ದಳು. +ಸೋಪನ್ನು ಹಾಕಿ, ಉಜ್ಜಿ ತೊಳೆದು ನೀರು ಹೊಯ್ಯುತ್ತಿದ್ದಂತೆ ಏನೋ ಪದ್ಯ ಗುಣುಗುಟ್ಟುತ್ತಿದ್ದಳು. +ಅವಳ ಹೊಟ್ಟೆ ತುಂಬು ಗರ್ಭಿಣಿಯರ ಹೊಟ್ಟೆಯಂತಿದ್ದು, ಎದೆಯು ಮಿತಿಗಿಂತ ಜಾಸ್ತಿ ಬೆಳೆದಿತ್ತು. +ಅವಳು ನೀರು ಹೊಯ್ಯುತ್ತಿದ್ದುದನ್ನು ನಿಲ್ಲಿಸಿ, ನನ್ನತ್ತ ನೋಡಿದಳು. +ಅವಳ ವಿಕಾರ ಮುಖ ನೋಡಿ ನನಗೆ ಭಯವಾಯಿತು. +ನಾನು ಕ್ಲೇರಾಳ ಮುಖ ನೋಡಿದೆ. +“ಇವಳು ನನ್ನ ತಂಗಿ, ಇಪ್ಪತ್ತು ವರ್ಷ ತುಂಬಿದೆ. +ಬುದ್ಧಿಮಾಂದ್ಯೆ, ನೀವು ಒಳಗೆ ಬನ್ನಿ” ಕ್ಲೇರಾ ನನ್ನನ್ನು ಮನೆಯೊಳಗೆ ಕರೆದಳು. +ಬಾಗಿಲಲ್ಲಿ ನಿಂತು ನಾನು ಒಳಗೆ ಇಣುಕಿದೆ. +ಬೆಳಕಿನಿಂದ ಬಂದ ನನಗೆ ಮನೆಯೊಳಗೆ ಬರೇ ಕತ್ತಲು ಕಾಣುತ್ತಿತ್ತು. +ಅಡಗೆಕೋಣೆಯಿಂದ ಹೊಗೆ ಹೊರಗೆ ಬರುತ್ತಿದ್ದು ಅದು ಮನೆಯನ್ನೆಲ್ಲಾ ಆವರಿಸಿತ್ತು. +ಕ್ಲೇರಾ ಮನೆಯೊಳಗೆಲ್ಲಾ ಓಡಾಡಿ ಒಂದು ಮುರುಕ ಸ್ಟೂಲು ತಂದು ನನ್ನನ್ನು ಕುಳ್ಳಿರಿಸಿದಳು. +ಸ್ವಲ್ಪ ಹೊತ್ತು ಮೌನ, ನಾನು ಮನೆಯ ಗೋಡೆಯನ್ನು ದೃಷ್ಟಿಸಿದೆ. +ಸುಣ್ಣ ಕಾಣದ ಹಳೆಯ ಮಣ್ಣಿನ ಗೋಡೆಗಳು, ಅಲ್ಲಲ್ಲಿ ತೂಗು ಹಾಕಿದ ಹಳೆಯ ಕ್ಯಾಲೆಂಡರ್‌ಗಳು. +ಒಂದು ಸಣ್ಣ ಸ್ಟಾಂಡಿನ ಮೇಲೆ ಶಿಲುಬೆಗೆ ಹಾಕಿದ ಏಸುಕ್ರಿಸ್ತರ ಸಣ್ಣ ಮೂರ್ತಿ. +ಮೊಳೆ ಹೊಡೆದು ಗೋಡೆಗೆ ತೂಗು ಹಾಕಿದ ಜೋಗಯ್ಯನ ಹಲವು ಜೋಳಿಗೆಗಳು. +ನನಗೆ ಕ್ಲೇರಾಳ ಹಿನ್ನಲೆ ಆಶ್ಚರ್ಯವಾಗುತ್ತಿದ್ದಂತೆ ಯಾರೋ ಕೆಮ್ಮಿದಂತಾಯಿತು. +ಅಡುಗೆ ಕೋಣೆಯಿಂದ ತೀರಾ ವಯಸ್ಸಾದ ಮುದುಕಿಯೊಬ್ಬಳು ಕೋಲಿನ ಆಧಾರದಲ್ಲಿ ಕುಂಟುತ್ತಾ ಕೆಮ್ಮುತ್ತಾ ಬಾಗಿಕೊಂಡು ಗೋಡೆಯನ್ನು ಆಧರಿಸಿ ಹೊರ ಬಂದಳು. +ಅವಳು ನೇರವಾಗಿ ನಿಲ್ಲಲಾರದೆ ಅರ್ಧ ಬಾಗಿದ್ದಳು. +ಅಲ್ಲಲ್ಲಿ ಹರಿದ ತೇಪೆ ಹಾಕಿದ ಸೀರೆಯನ್ನು ಉಟ್ಟುಕೊಂಡಿದ್ದು ಮಾತಾಡಲು ಬಹಳ ಪ್ರಯಾಸಪಡುತ್ತಿದ್ದಳು. +“ಇವರು ನನ್ನ ಅಮ್ಮ ಅಸ್ತಮ ರೋಗಿ, ಶ್ವಾಸಕೋಶದ ತೊಂದರೆಯಿದೆ. +ಜಾಸ್ತಿ ಮಾತಾಡಿದರೆ ಸುಸ್ತಾಗುತ್ತದೆ.” ನಾನು ವಾಡಿಕೆಯಂತೆ ಅವಳ ಬಳಿ ಹೋದೆ. +ವಯಸ್ಸಿಗೆ ಮೀರಿ ಮುದುಕಿಯಾಗಿದ್ದಳು. +“ಏನಮ್ಮಾ?” ಎಂದು ಕೇಳಿದೆ. +ಅವಳು ಮಾತಾಡಲು ಪ್ರಯತ್ನಿಸಿದಳು. +ನನಗೆ ಅರ್ಥವಾಗಲಿಲ್ಲ. +ಏನು ಎಂಬಂತೆ ಕ್ಲೇರಾಳನ್ನು ನೋಡಿದೆ. +“ಊಟ ಮಾಡಿ ಹೋಗಲಿ” ಎಂದು ಹೇಳುತ್ತಿದ್ದಾಳೆ ಅಂದಳು. +ಕ್ಲೇರಾ ತಾಯಿಯ ಕೈ ಹಿಡಿದು ಇನ್ನೊಂದು ಕೋಣೆಯತ್ತ ಸಾಗಿದಳು. +ಮತ್ತೆ ಮನೆಯಿಡೀ ಮೌನ. +ಅಡುಗೆ ಕೋಣೆಯಿಂದ ಬರುವ ಹೊಗೆಯನ್ನು ನನ್ನಿಂದ ತಡೆಯಲಾಗಲಿಲ್ಲ. +ಕಣ್ಣುರಿ ಶುರುವಾಗಿ ನಾನು ಹೊರಗೆ ಅಂಗಳಕ್ಕೆ ಬಂದೆ. +ಕ್ಲೇರಾಳ ತಂಗಿ ಬೊಂಬೆಯ ಸ್ನಾನ ಮುಗಿಸಿ ಅದಕ್ಕೆ ಟವಲ್ ಹೊದಿಸಿ ಎತ್ತಿಕೊಂಡು ಮನೆಯೊಳಗೆ ನಡೆದಳು. +ಅವಳ ಮುಖವನ್ನು ಮತ್ತೊಮ್ಮೆ ನೋಡುವ ಧೈರ್ಯ ನನಗೆ ಬರಲಿಲ್ಲ. +ಕ್ಲೇರಾ ಸ್ಟೂಲನ್ನು ಹೊರಗೆ ತಂದು ಅಂಗಳದಲ್ಲಿ ಇಟ್ಟು ಹೋದಳು. +ಸ್ವಲ್ಪ ಹೊತ್ತಿನ ನಂತರ ಲಿಂಬೆಹಣ್ಣಿನ ಪಾನಕ ತಂದು ಕೊಟ್ಟಳು. +ಸ್ವಲ್ಪ ಆರಾಮವೆನಿಸಿತು. +ನಾನು ಸುತ್ತಲೂ ವೀಕ್ಷಿಸಿದೆ. +ಎಲ್ಲಿ ನೋಡಿದರೂ ಭತ್ತದ ಗದ್ದೆಗಳು. +ಸುಮಾರು ಎರಡು ಫರ್ಲಾಂಗಿಗೆ ಒಂದರಂತೆ. +ಸಣ್ಣ ಸಣ್ಣ ಗುಡಿಸಲುಗಳು ಕಾಣುತ್ತಿದ್ದುವು. +“ನಿಮಗೆ ಗದ್ದೆಗಳಿಲ್ಲವೇ?” ನಾನು ಕ್ಲೇರಾಳನ್ನು ಕೇಳಿದೆ. +“ಇತ್ತು. ಆದರೆ ನನ್ನ ಹಾಗೂ ತಮ್ಮನ ವಿದ್ಯಾಭ್ಯಾಸ ಮತ್ತು ನಮ್ಮೆಲ್ಲರ ಮದ್ದಿಗಾಗಿ ಇದ್ದ ಉಳುವರಿ ಭೂಮಿಯನ್ನು ಮಾರಿದೆವು. +ಈಗ ಈ ಗುಡಿಸಲು ಮಾತ್ರ ಉಳಿದಿದೆ.” +ಕ್ಲೇರಾ ಹೊರಗೆ ಬೆರಳು ತೋರಿಸುತ್ತಾ ಅಂದಳು. +“ಅವೆಲ್ಲಾ ನಮ್ಮ ಗದ್ದೆಗಳಾಗಿದ್ದವು. +ಈಗ ಎಲ್ಲಾ ಕಳಕೊಂಡಿದ್ದೇವೆ.” ನಾನು ವಿಷಾದದಿಂದ ಕ್ಲೇರಾಳ ಮುಖ ನೋಡಿದೆ. +ಆದರೆ ಅವಳ ಮುಖದಲ್ಲಿ ಯಾವುದೇ ಬೇಸರದ ಛಾಯೆ ಇರಲಿಲ್ಲ. +ಸ್ವಲ್ಪ ಹೊತ್ತು ಹೊರಗೆ ಹಾಗೆಯೇ ಕುಳಿತಿದ್ದೆ. +ಕ್ಲೇರಾ ಬೈಬಲಿನ ಪ್ರತಿಯೊಂದನ್ನು ನನ್ನ ಕೈಗಿತ್ತಳು. +“ಓದುತ್ತಾ ಇರಿ. +ನಾನು ಅಡುಗೆಗೆ ಅಮ್ಮನಿಗೆ ಸಹಾಯ ಮಾಡುತ್ತೇನೆ.” ಮನಸ್ಸಿಲ್ಲದ ಮನಸ್ಸಿನಿಂದ ನಾನು ಬೈಬಲನ್ನು ತಿರುವಿ ಹಾಕುತ್ತಿದ್ದೆ. +ಒಳಗಿಂದ ಜೋಗುಳದ ಹಾಡು ಅಸ್ಪಷ್ಟವಾಗಿ ಕೇಳುತ್ತಿತ್ತು. +ಬಹುಶಃ ಕ್ಲೇರಾಳ ತಂಗಿ ತನ್ನ ಬೊಂಬೆಯನ್ನು ತೊಟ್ಟಿಲಲ್ಲಿ ಹಾಕಿ ತೂಗುತ್ತಿರಬೇಕು. +ಕ್ಲೇರಾ ಆಗಾಗ್ಗೆ ಬಂದು ಮಾತಾಡಿಸಿ ಹೋಗುತ್ತಿದ್ದಳು. +ಒಮ್ಮೊಮ್ಮೆ ಕೆಮ್ಮಿನ ಶಬ್ದ ಜೋರಾಗಿ ಕೇಳುತ್ತಿತ್ತು. +ಈ ಭಯಾನಕ ವಾತಾವರಣವನ್ನು ಮರೆಯಲು ನಾನು ಬೈಬಲಿನ ದೇವ ವಾಕ್ಯಗಳನ್ನು ಓದುತ್ತಿದ್ದೆ. +ಕೆಲವು ಗಂಟೆಯ ನಂತರ ಕ್ಲೇರಾ ನನ್ನನ್ನು ಒಳಗೆ ಕರೆದಳು. +ಅವಳು ನನ್ನನ್ನು ಇನ್ನೊಂದು ಕೋಣೆಗೆ ಕರಕೊಂಡು ಹೋದಳು. +ಅಲ್ಲಿ ನನಗೆ ಆಶ್ಚರ್ಯ ಕಾದಿತ್ತು. +ತೀರಾ ವಯಸ್ಸಾದ ಕೃಶ ದೇಹದ ಮುದುಕರೊಬ್ಬರು ನೆಲದಲ್ಲಿ ಹಾಕಿದ ಚಾಪೆಯಲ್ಲಿ ಕುತ್ತಿಗೆವರೆಗೂ ಬಟ್ಟೆ ಹೊದೆದು ಮಲಗಿದ್ದರು. +ಕಣ್ಣುಗಳು ಒಳ ಸೇರಿದ್ದು, ಕನ್ನೆಗಳು ಗುಳಿಬಿದ್ದಿದ್ದುವು. +ಮುಖ ತುಂಬಾ ಗಡ್ಡ ಮೀಸೆ, ತಲೆಯಲ್ಲಿ ಅಳಿದುಳಿದ ಕೂದಲು ಉದ್ದಕ್ಕೆ ಹರಡಿದ್ದುವು. +ಬದುಕಿದ್ದಾರೆಯೋ, ಸತ್ತಿದ್ದಾರೆಯೋ ಏನೂ ಗೊತ್ತಾಗದೆ ನಾನು ಗಲಿಬಿಲಿಗೊಂಡೆ. +ಬಾಗಿ ಹತ್ತಿರದಲ್ಲಿ ಅವರ ಮುಖ ನೋಡಿದೆ. +ಕುತ್ತಿಗೆಯ ಕೆಳಗೆ ಶ್ವಾಸ ಮೇಲೆ ಕೆಳಗೆ ಹೋಗುತ್ತಿತ್ತು. +ಕುತ್ತಿಗೆಗೆ ಹಾಕಿದ ಜಪಸರದ ಬುಡದಲ್ಲಿ ಶಿಲುಬೆ ನೇತಾಡುತ್ತಿತ್ತು. +“ನನ್ನ ತಂದೆ. +ಡಾಕ್ಟರರ ಲೆಕ್ಕದಲ್ಲಿ ಆಯುಷ್ಯ ಮುಗಿದಿದೆ. +ಆಗ-ಈಗ ಶ್ವಾಸ ಮಾತ್ರ ಅಲ್ಲಾಡುತ್ತಿದೆ. +ಬರೇ ಗ್ಲುಕೋಸಿನ ನೀರು ಮಾತ್ರ ಆಹಾರ.” ಕ್ಲೇರಾ ಅಂದಳು. +ನನಗೆ ಭಯವಾಗತೊಡಗಿತು. +ಊರಿನ ಸಮಸ್ಯೆಯೆಲ್ಲಾ ಈ ಒಂದು ಮನೆಯಲ್ಲಿ ತುಂಬಿದೆಯಲ್ಲಾ ಎಂದು ನೆನೆಸಿ ನನ್ನ ಕಣ್ಣು ಮಂಜಾಯಿತು. +ಬಹುಶಃ ಕ್ಲೇರಾ ಇದನ್ನು ಗಮನಿಸಿರಬೇಕು. +“ಬನ್ನಿ, ಊಟ ಮಾಡುವ” ಕ್ಲೇರಾ ಅಂದಳು. +ಗಂಜಿ ಊಟ, ನೆಚ್ಚಿಕೊಳ್ಳಲು ಚಟ್ಟಿ, ಬಹುಶಃ ಬಾಲ್ಯದಲ್ಲಿ ಉಂಡ ಗಂಜಿ ಊಟದ ನೆನಪಾಯಿತು. +ಶಾಸ್ತ್ರಕ್ಕೆ ಊಟ ಮುಗಿಸಿ ಅಂಗಳದಲ್ಲಿ ಬಂದು ಕುಳಿತೆ. +ತಲೆಯ ತುಂಬಾ ಆಲೋಚನೆಗಳು. +ನಾವು ನಿತ್ಯ ಕಾಣುವ ಚಿತ್ರಣಕ್ಕೂ ನಿಜ ಜೀವನಕ್ಕೂ ಎಷ್ಟೊಂದು ವ್ಯತ್ಯಾಸ. +ಸುಖ ಅಪರೂಪಕ್ಕೆ ಬರುವ ನೆಂಟನಾದರೆ ದುಃಖ ಎಂದೂ ನಮ್ಮನ್ನು ಬಿಡುವುದಿಲ್ಲ. +ಜೀವನದಲ್ಲಿ ಸಮಸ್ಯೆ ಇಲ್ಲದವರು ಇದ್ದಾರೆಯೇ? ಇದ್ದಾರೆ. +ಇಬ್ಬರಿಗೆ ಸಮಸ್ಯೆಯೇ ಇಲ್ಲ. +ಒಂದು ಇನ್ನೂ ಹುಟ್ಟದವರು. +ಇನ್ನೊಂದು ಈಗಾಗಲೇ ಸತ್ತವರು. +ಸಂಜೆಯಾಗತೊಡಗಿತು...ನಾನು ಎದ್ದು ನಿಂತೆ. +ಮನೆಯ ಒಳಗಿನ ಕೋಣೆಗೆ ಹೋಗಿ ಮಲಗಿದ ಮುದುಕನ ಕಾಲು ಮುಟ್ಟಿ ನಮಸ್ಕರಿಸಿದೆ. +ಕ್ಲೇರಾಳ ತಾಯಿಯ ಕೈ ಎತ್ತಿಕೊಂಡು ತಲೆಗಿಟ್ಟುಕೊಂಡೆ. +ಅವಳು ಶಿಲುಬೆಯನ್ನು ನನ್ನ ತಲೆಗೆ ತಾಗಿಸಿದಳು. +ಕಣ್ಣು ಪುನಃ ಮಂಜಾಯಿತು. +ಇನ್ನೊಂದು ಕೋಣೆಯತ್ತ ದೃಷ್ಟಿ ಹಾಯಿಸಿದೆ. +ಕ್ಲೇರಾಳ ತಂಗಿ ಬೊಂಬೆಯನ್ನು ಬಲವಾಗಿ ಅಪ್ಪಿಕೊಂಡು ನೆಲದಲ್ಲೇ ನಿದ್ದೆ ಹೋಗಿದ್ದಳು. +ಅವಳ ಬಾಯಿಯಿಂದ ಜೊಲ್ಲು ಸುರಿಯುತ್ತಿತ್ತು. +ನಾನು ಅಂಗಳಕ್ಕೆ ಬಂದೆ. +ಅನತಿ ದೂರದಲ್ಲಿ ಸುಮಾರು ಹನ್ನೆರಡು-ಹದಿಮೂರು ವರ್ಷದ ಹುಡುಗ ಕುಂಟುತ್ತಾ ಮನೆ ಕಡೆ ಬಂದ. +ಹೆಗಲಲ್ಲಿ ಸ್ಕೂಲ್ ಬ್ಯಾಗ್, ಎಡಕಾಲಿಗೆ ಕೃತಕ ಕಾಲನ್ನು ಜೋಡಿಸಲಾಗಿತ್ತು. +“ಇವನು ನನ್ನ ತಮ್ಮ. +ಸಣ್ಣದಿರುವಾಗಲೇ ಪೋಲಿಯೋ ಕಾಯಿಲೆಗೆ ತುತ್ತಾಗಿ ಎಡಕಾಲಿನ ಸ್ವಾಧೀನತೆ ಕಳಕೊಂಡಿದ್ದಾನೆ.” ಅನ್ನುತ್ತಾ ಕ್ಲೇರಾ ಅವನತ್ತ ತಿರುಗಿ ಹೇಳಿದಳು. +“ನಾನು ಕೆಲಸಕ್ಕೆ ಹೋಗುತ್ತೇನೆ. +ಮಾತ್ರೆಗಳ ಕಟ್ಟು, ಹಣ ಅಮ್ಮನಲ್ಲಿ ಕೊಟ್ಟಿದ್ದೇನೆ” ಅವನ ಉತ್ತರವನ್ನು ಕಾಯದೆ ಅವಳು ನಡೆದುಬಿಟ್ಟಳು. +ನಾನು ಹಿಂಬಾಲಿಸಿದೆ. +ಗದ್ದೆ ದಾಟಿ ತೆಪ್ಪದಲ್ಲಿ ಕುಳಿತೆವು. +ತೆಪ್ಪವನ್ನು ನಾನೇ ಮುನ್ನಡೆಸಿದೆ. +ಕ್ಲೇರಾ ಆಗಾಗ್ಗೆ ತೆಪ್ಪ ಮುನ್ನಡೆಸುವ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಳು. +ಆದರೂ ನನಗೆ ಸಮಾಧಾನ ಇರಲಿಲ್ಲ. +ತೆಪ್ಪದಿಂದ ಹಾರಿ ಈ ಹರಿವ ನೀರಿನೊಂದಿಗೆ ಸೇರಿ ಹೋಗಬಾರದೇಕೆ ಎಂದೆನಿಸಿತು. +ಇಬ್ಬರಲ್ಲೂ ಮಾತಿಲ್ಲ. +ಮೌನ, ನನಗೂ ಮೌನವೇ ಹಿತವೆನಿಸಿತು. +ಆದರೆ ಕ್ಲೇರಾ ಈ ಗಾಢ ಮೌನಕ್ಕೆ ಇತಿಶ್ರೀ ಹಾಡಿದಳು. +“ಈಗ ಹೇಳಿ, ನೀವು ನನ್ನನ್ನು ಪ್ರೀತಿಸುತ್ತಿರೇನು? +ನನ್ನನ್ನು, ನನ್ನ ಕಾಯಿಲೆ ಇರುವ ತಂದೆಯನ್ನು, ಅಸ್ತಮ ರೋಗಿ ತಾಯಿಯನ್ನು, ಬುದ್ಧಿಮಾಂದ್ಯ ತಂಗಿಯನ್ನು ಹಾಗೂ ಅಂಗ ವೈಕಲ್ಯ ಹೊಂದಿದ ನನ್ನ ತಮ್ಮನನ್ನು ಪ್ರೀತಿಸುತ್ತಿರೇನು? +ಹೇಳಿ, ನಮ್ಮೆಲ್ಲರನ್ನೂ ನೀವು ಪ್ರೀತಿಸುತ್ತಿರೇನು? +ಹೇಳಿ?”ಅವಳ ಪ್ರತೀಯೊಂದು ಶಬ್ದವೂ ನನ್ನ ಎದೆಗೆ ಸುತ್ತಿಗೆಯಲ್ಲಿ ಬಡಿದಂತೆ ಭಾಸವಾಗುತ್ತಿತ್ತು. +ನಾನು ಉತ್ತರಿಸಬೇಕಾದ ಅನಿವಾರ್ಯತೆ. +ನಾನು ನನ್ನ ಹೃದಯದಿಂದ ಉತ್ತರಿಸಬೇಕು. +ನಾಟಕೀಯ ಉತ್ತರ ಕ್ಲೇರಾ ಖಂಡಿತ ಇಷ್ಟಪಡಲಾರಳು. +ಪ್ರೀತಿ, ಪ್ರೇಮ, ಕಾಮದ ಈ ಹುಚ್ಚು ಆವೇಶದಲ್ಲಿ ಸತ್ಯ ಹೊರ ಬರಲೇಬೇಕಾಗಿದೆ. +“ಕ್ಲೇರಾ, ನಾನು ನಿನ್ನನ್ನು ಹಾಗೂ ನಿನ್ನ ಕುಟುಂಬವನ್ನು ಖಂಡಿತ ಪ್ರೀತಿಸುತ್ತೇನೆ. +ನನ್ನನ್ನು ನಂಬು” ನಾನಂದೆ. +“ಸುಳ್ಳು, ಇದು ಖಂಡಿತ ಸುಳ್ಳು. +ನೀವು ನನ್ನನ್ನು ಪ್ರೀತಿಸಿದಂತೆ ನನ್ನ ಕುಟುಂಬವನ್ನು ಖಂಡಿತ ಪ್ರೀತಿಸಲಾರಿರಿ, ಕಾಮ ಮತ್ತು ಹಸಿವಿನಿಂದ ಮನುಷ್ಯ ಎಲ್ಲವನ್ನೂ ಸೃಷ್ಟಿಸಿಕೊಂಡ. +ಹೇಳಿ, ಕಾಮದ ಕಳಂಕವಿಲ್ಲದ ಪ್ರೀತಿ ಇದೆಯೇ? +ಅಂತಹ ದಾಂಪತ್ಯವನ್ನು, ಪ್ರೀತಿಯನ್ನು ನೀವು ಸ್ವೀಕರಿಸುವಿರಾ? ಹೇಳಿ. +ನಿಜ ಹೇಳಿ.” ಕ್ಲೇರಾ ಆವೇಶದಿಂದ ಪ್ರಶ್ನೆಯ ಮೇಲೆ ಪ್ರಶ್ನೆ ಹಾಕಿದಾಗ ನನ್ನ ಮಾತು ನಿಂತು ನಾನು ಮೌನಿಯಾದೆ. +ಮರುದಿನ ಎಂದಿನಂತೆ ನಾವು ಕೆಲಸದಲ್ಲಿ ನಿರತರಾಗಿದ್ದೆವು. +ಹಿಂದೆ ಯಾವುದೇ ಘಟನೆ ನಡೆಯದಂತೆ ನಾವು ನಮ್ಮಷ್ಟಕ್ಕೆ ಇದ್ದೆವು. +ಆದರೆ ಕೆಲವು ವಾರ ಕಳೆದ ಮೇಲೆ ಕ್ಲೇರಾ ಕಚೇರಿಗೆ ಮೂರು ದಿನ ರಜೆ ಹಾಕಿ ಹೋದವಳು ಮತ್ತೆ ಬರಲೇ ಇಲ್ಲ. +ಮತ್ತೆ ಕೆಲವು ದಿನದ ನಂತರ ಅವಳಿಂದ ಬಂದ ಇ-ಮೇಲ್ ನನಗೆ ಶಾಕ್ ನೀಡಿತು. +ಕ್ಲೇರಾ ಕೆಲಸಕ್ಕೆ ರಾಜೀನಾಮೆ ನೀಡಿದ್ದಳು. +ನನ್ನ ಮನಸ್ಸು ಅಲ್ಲೋಲ ಕಲ್ಲೋಲವಾಯಿತು. +ನನ್ನ ಮಾತು ಕ್ಲೇರಾಳ ಮನಸ್ಸಿಗೆ ನೋವಾಗಿ ರಾಜೀನಾಮೆ ನೀಡಿದಳೇ? +ಅವಳು ರಾಜೀನಾಮೆ ನೀಡಲು ಕಾರಣವೇನು ಎಂದು ತಿಳಿಯದೆ ಎಲ್ಲರಿಗೂ ಅಘಾತವಾಯಿತು. +ನನಗೆ ಕಛೇರಿಯಲ್ಲಿ ಸಮಯ ಕಳೆಯುವುದೇ ಅಸಾಧ್ಯವಾಯಿತು. +ಒಂದೊಂದು ಗಂಟೆಯೂ ಒಂದೊಂದು ದಿನದಂತೆ ಕಂಡಿತು. +ದಿನ ಕಳೆದಂತೆ ಕ್ಲೇರಾಳ ಬಗ್ಗೆ ಎಲ್ಲರೂ ಮರೆತು ಬಿಟ್ಟರು. +ಆದರೆ ನನಗೆ ಕ್ಲೇರಾಳಿಂದ ದೂರವಿರಲು, ಮರೆತು ಬಿಡಲು ಸಾಧ್ಯವಾಗಲಿಲ್ಲ. +ಏನೇ ಆಗಲಿ ಅವಳ ರಾಜೀನಾಮೆಯ ಹಿಂದಿನಸತ್ಯವನ್ನು ತಿಳಿದುಕೊಳ್ಳಬೇಕೆಂದು ನಿರ್ಣಯಿಸಿ ರಜಾದಿನದಂದು ಅವಳ ಮನೆಗೆ ತೆರಳಿದೆ. +ಅಂಗಳದಲ್ಲಿ ಕ್ಲೇರಾಳ ತಂಗಿ ಬೊಂಬೆಯೊಂದಿಗೆ ಆಡುತ್ತಿದ್ದಳು. +ಕ್ಲೇರಾಳ ತಮ್ಮ ತನ್ನ ಎಡಕಾಲಿನ ಕೃತಕ ಕಾಲನ್ನು ಕಳಚಿ, ಅದರ ಬೆಲ್ಟನ್ನು ಸರಿಪಡಿಸುತ್ತಿದ್ದ. +ಕ್ಲೇರಾಳ ತಾಯಿ ಅಂಗಳದಲ್ಲಿನ ದಂಡೆಯ ಮೇಲೆ ಕುಳಿತಿದ್ದರು. +ಹುಡುಗನೊಬ್ಬನೇ ನನ್ನನ್ನು ತಕ್ಷಣ ಗುರುತು ಹಿಡಿದ. +ನಾನು ಅವನ ತಾಯಿಯ ಪಕ್ಕದಲ್ಲಿ ನೆಲದಲ್ಲಿ ಕುಳಿತುಕೊಂಡೆ. +ಹುಡುಗ ತಾಯಿಯ ಕಿವಿಯಲ್ಲಿ ನನ್ನ ಪರಿಚಯ ಹೇಳಿದ. +ಮುದುಕಿಯ ಕಣ್ಣಲ್ಲಿ ಕಣ್ಣೀರು ಮಡುಗಟ್ಟಿತು. +ಅವಳು ಏನೇನೋ ಹೇಳತೊಡಗಿದಳು. +ನನಗೆ ಅರ್ಥವಾಗದೆ ಹುಡುಗನ ಮುಖ ನೋಡಿದೆ. +“ತಂದೆ ತೀರಿ ಹೋಗಿ ವಾರವಾಯಿತು” ಅವನಂದ. +ನಾನು ಸ್ವಲ್ಪ ಅಧೀರನಾದೆ. +ಹುಡುಗನ ತಲೆ ನೇವರಿಸಿದೆ “ಎಲ್ಲಾ ಸರಿಯಾಗುತ್ತದೆ. +ಧೈರ್ಯ ತಂದು ಕೋ” ಅಂದೆ. +ಅವನು ತಲೆ ಕೆಳಗೆ ಹಾಕಿದ. +ನಾನು ಸುತ್ತಲೂ ಕಣ್ಣಾಡಿಸಿದೆ. +ಕ್ಲೇರಾಳ ಇರವೇ ಇಲ್ಲ. +ನನಗೆ ಹೆಚ್ಚು ಹೊತ್ತು ಇರಲಾಗಲಿಲ್ಲ. +ಮನೆಯಲ್ಲಿ ಇನ್ನೂ ಸ್ಮಶಾನ ಮೌನ ಉಳಿದಿತ್ತು. +ನಾನು ಹುಡುಗನನ್ನು ಕೇಳಿದೆ “ಅಕ್ಕ ಎಲ್ಲಿ?” ಅವನು ತಡವರಿಸುತ್ತಾ ಹೇಳಿದ. +“ಅಕ್ಕ ‘ನನ್’ ಆಗಿ, ಚರ್ಚಿನ ಅನಾಥಾಶ್ರಮದಲ್ಲಿ ಕೆಲಸ ಮಾಡುತ್ತಿದ್ದಾಳೆ.”ನಾನು ಎದ್ದು ನಿಂತೆ. +ಮುದುಕಿಯ ಪಾದ ಮುಟ್ಟಿ ‘ಬರುತ್ತೇನೆ’ ಅಂದಾಗ ನನ್ನ ಕಣ್ಣೀರು ಅವಳ ಪಾದವನ್ನು ಒದ್ದೆ ಮಾಡಿತು. +ಗದ್ದೆಯ ಬದಿಯಲ್ಲಿ ನಡೆದು ಹೋಗುವಾಗ ಬತ್ತದ ತೆನೆಗಳೆಲ್ಲಾ ಬೆಂಕಿಯ ಕೆನ್ನಾಲಗೆಯಂತೆ ನನ್ನನ್ನು ಮುತ್ತಿಕೊಳ್ಳುತ್ತಿತ್ತು. +ಅಷ್ಟು ಹೊತ್ತಿಗೆ “ಅಂಕಲ್” ಎಂದು ಕರೆದಂತಾಗಿ ತಿರುಗಿ ನೋಡಿದೆ. +ಹುಡುಗ ಕುಂಟುತ್ತಾ ನನ್ನನ್ನು ಸಮೀಪಿಸಿದ. +“ನೀವು ಬಂದರೆ ಈ ಪೊಟ್ಟಣವನ್ನು ನಿಮಗೆ ಕೊಡಲು ಅಕ್ಕ ಹೇಳಿದ್ದಾಳೆ” ಅಂದ. +ನಾನು ಅವನಿಂದ ಪೊಟ್ಟಣ ಪಡೆದು ಮುಂದೆ ನಡೆದೆ. +ತೆಪ್ಪದಲ್ಲಿ ಕುಳಿತೆ. +ಶಾಂತವಾಗಿ ಹರಿಯುವ ನೀರಿನ ಮಧ್ಯೆ ಒಂಟಿ ತೆಪ್ಪ ಒಂದರ ಮೇಲೆ ನಾನು ಒಂಟಿಯಾಗಿ ಸಾಗುತ್ತಿದ್ದೆ. +ತೆಪ್ಪವು ಹೆಣ ಸುಡುವ ಕಟ್ಟಿಗೆ ರಾಶಿಯಾಗಿ ಅದರ ಮೇಲೆ ಮಲಗಿದ ಶವದಂತೆ ಭಾಸವಾಗಿ ನಾನು ತಲ್ಲಣಿಸಿದೆ. +ಅಳು ತಡೆಯಲಾಗಲಿಲ್ಲ. +ನಾನು ಅಳ ತೊಡಗಿದೆ. +ಮನಸ್ಸು ಶಾಂತವಾಗುವವರೆಗೂ ಅತ್ತೆ, ಕ್ಲೇರಾ ಇಲ್ಲದ ಮೇಲೆ ಈ ಪೊಟ್ಟಣ ಯಾಕೆ ಎಂದು ನೀರಿಗೆ ಬಿಸಾಡಲು ಕೈ‌ಎತ್ತಿದೆ. +ಯಾಕೋ, ಮನಸ್ಸಾಗಲಿಲ್ಲ. +ಪೊಟ್ಟಣವನ್ನು ಬಿಚ್ಚಿದೆ. +ಶಿಲುಬೆಗೇರಿದ ಏಸುವಿನ ಮೂರ್ತಿ, ಕೈ, ಕಾಲು, ಎದೆಯಿಂದ ನೆತ್ತರು ಚಿಮ್ಮುತ್ತಿದ್ದರೂ ಅದೇ ಸೌಮ್ಯ ನಿರ್ಲಿಪ್ತ ಮುಖ. +ಅಲ್ಲೊಂದು ಸಣ್ಣ ಚೀಟಿ. +ನಡುಗುವ ಕೈಯಿಂದ ಚೀಟಿಯನ್ನು ಬಿಡಿಸಿದೆ. +ಕ್ಲೇರಾಳ ಅಕ್ಷರಗಳು. +“ಜೀವನದಲ್ಲಿ ನಮಗೆ ಬೇಕಾದುದು ಎಷ್ಟು “ಅಲ್ಪ” ಎಂಬುದನ್ನು ಅದು ಕಳೆದು ಹೋಗುವ ತನಕ ನಾವು ತಿಳಿಯುವುದಿಲ್ಲ. +ಆದುದರಿಂದ ಜೀವನ ಏನು ಎಂಬುದರ ನಿರ್ಧಾರ ಅವರವರ ಮನೋಭಾವವನ್ನು ಅವಲಂಬಿಸಿರುತ್ತದೆ.”