diff --git "a/Data Collected/Kannada/MIT Manipal/Kannada-Scrapped-dta/\340\262\217\340\262\225\340\262\276\340\262\202\340\262\244\340\262\246_\340\262\206\340\262\262\340\262\276\340\262\252.txt" "b/Data Collected/Kannada/MIT Manipal/Kannada-Scrapped-dta/\340\262\217\340\262\225\340\262\276\340\262\202\340\262\244\340\262\246_\340\262\206\340\262\262\340\262\276\340\262\252.txt" new file mode 100644 index 0000000000000000000000000000000000000000..078b05c34a0e501f7f45514560f548e1dbee81c8 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\217\340\262\225\340\262\276\340\262\202\340\262\244\340\262\246_\340\262\206\340\262\262\340\262\276\340\262\252.txt" @@ -0,0 +1,230 @@ +ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. +ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. +ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ. +ಮತ್ತೆ ನಿಯಂತ್ರಣಕ್ಕೆ ಬಾರದ ಸಕ್ಕರೆ ಅಂಶ. +ಅವಳು ಅರಿಯದ ಆ ಊರಿನಲ್ಲಿ ತಮ್ಮ ಬಿಡಾರ ಮಾಡಿಕೊಂಡಿದ್ದ. +ಕಾತ್ಯಾಯನಿಗೆ ಫಿಜಿಸಿಯನ್ ಮಾತ್ರೆಗಳ ದೊಡ್ಡ ಗಂಟನ್ನೇ ರವಾನಿಸಿದ್ದರು. +ಅವಳ ನಡುಗೆಯ ಗತಿ ನಿಧಾನವಾಗಿತ್ತು. +ಈ ಅರಿಯದ ಊರಿನಲ್ಲಿ ಕಣ್ಣುಗಳು ಆಪರೇಶನ್ ಅಷ್ಟು ಸುಲಭವಲ್ಲ ಅಂತ ಅವಳಿಗೆ ಒಂದೆರಡು ವಾರಗಳಲ್ಲಿ ಮನದಟ್ಟಾಗಿತ್ತು. +ಆ ಆಸ್ಪತ್ರೆಯ ಒಂದೊಂದೇ ಮೆಟ್ಟಿಲುಗಳನ್ನು ಏರಲು ಅವಳು ಬೆವರು ಸುರಿಸುತ್ತ ಎದುರಿಸುರು ಬಿಡುತ್ತಾ ಏರುತ್ತಿದ್ದಳು. +ಜನರೆಲ್ಲಾ ದಸರಾ ತಯ್ಯಾರಿ ನಡೆಸಿದ್ದರು. +ಮೈಸೂರಿನಲ್ಲಿ ನಾಳೆಗೆ ನಡೆಯುವ ಜಂಬೂ ಸವಾರಿಯ ಮುಗಿಲೇರಿತ್ತು. +ಎಲ್ಲರ ಮನೆಯ ಮುಂದುಗಡೆ ಬಣ್ಣ ಬಣ್ಣದ ರಂಗೋಲಿಗಳು, ತಳಿರು ತೋರಣಗಳು ಸಿದ್ಧವಾಗಿದ್ದವು. +ಕಾತ್ಯಾಯನಿಗೆ ಸಂಭ್ರಮ ಎದೆಗೆ ಇಳಿಯಲಿಲ್ಲ. +ತಂಗಿ ಬಂದವಳು ಆಪರೇಶನದ ದಿನ ಮುಂದೆ ಇರುವುದನ್ನು ತಿಳಿದು ರಜೆಯಿಲ್ಲ ಎಂದು ಹಾಗೇ ವಾಪಸ್ಸು ಹೋಗಿದ್ದಳು. +ಕಾತ್ಯಾಯನಿಗೆ ತಮ್ಮ ತಮ್ಮನ ಹೆಂಡತಿಯೊಂದಿಗೆ ಅಷ್ಟೊಂದು ಬಳಿಕೆ- ಸಲುಗೆ ಇರಲಿಲ್ಲ. +ಅವರ ಮದುವೆಯಾಗಿ ಹನ್ನೆರಡು ವರ್ಷಗಳಾದರೂ, ಅವಳು ಒಮ್ಮೆ ಒಂದು ದಿವಸದ ಮಟ್ಟಿಗೆ ಆ ಮನೆಗೆ ಹೋಗಿದ್ದಳು. +ಮೇಲಾಗಿ ತಾನು ಮದುವೆ ಆಗದವಳು ಅವರೇನು ತಿಳಿದುಕೊಳ್ಳುತ್ತಾರೋ ಎಂಬ ಅಳಕು ಸೂಕ್ಷ್ಮ ಮನಸ್ಸಿನವಳಾದ ಕಾತ್ಯಾಯಿನಿಗೆ ಆ ಮನೆಯಲ್ಲಿ ಇನ್ನೂ ಒಂದು ವಾರ ಇರಬೇಕಲ್ಲ ಎಂಬ ಆತಂಕ. +ಮೇಲಾಗಿ ಕಣ್ಣು ಸೂಕ್ಷ್ಮ ಆಪರೇಶನ್ ಆದ್ರೆ ನೋವು ಸಹಿಸೋದು ಹೇಗೆ ಎಂಬ ಕಳಕಳಿ, ಹೊರಗೆ ಹಬ್ಬದ ವಾತಾವರಣ ಒಳಗೊಳಗೆ ಎಂತಹದೋ ಕುದಿತ. +ದಸರೆಯ ಮುನ್ನಾದಿನ ಕಾತ್ಯಾಯನಿ ಆಸ್ಪತ್ರೆ ಸೇರಿದ್ದಳು. +ತಮ್ಮ ಜೊತೆಯಲ್ಲಿ ಇದ್ದ ಅವಳು ಹೆಚ್ಚು ಮಾತನಾಡುತ್ತಿರಲಿಲ್ಲ. +ಮೊದಲಿನಿಂದಲೂ ಅವಳು ಅಂತರಮುಖಿ. +ಮಿತಬಾಷಿ, ಇಡೀ ಆಸ್ಪತ್ರೆಯಲ್ಲಿ ಕಣ್ಣಿಗೆ ಪಟ್ಟಿಕಟ್ಟಿಕೊಂಡವರ ಒಂದು ವಿಚಿತ್ರ ಕತ್ತಲೆ ಲೋಕವೇ ದಾಖಲಾಗಿತ್ತು. +ಕಾತ್ಯಾಯನಿ ಆತಂಕಗೊಂಡು ಆಪರೇಶನ್ ಆದವರ ಅನುಭವ ಕೇಳಿಕೊಳ್ಳತೊಡಗಿದಳು. +ಅವಳಿಗೆ ತಿಳಿಯದ ಹಾಗೆ ಒಂದು ಕತ್ತಲೆ ಅವಳನ್ನು ಸುತ್ತವರಿದು ಬಿಟ್ಟಿತು. +ಆಸ್ಪತ್ರೆಯಲ್ಲಿ ನರ್ಸ ಒಂದು ಇಂಜಕ್ಷನ್ ಎರಡೂ ಕಣ್ಣುಗಳಿಗೆ ಔಷಧಿಯ ಹನಿಗಳನ್ನು ಅವಳಿಗೆ ಹಾಕಿದ್ದಳು. +ಎರಡೂ ಕಣ್ಣಗಳ ತುಂಬ ನೆವೆ. +ಒಂದು ರೂಮಿನಲ್ಲಿ ಮಲಗಿಸಿ ಉಬ್ಬಿದ ಕಣ್ಣುಗಳಲಿ, ಆಪರೇಶನ್ ಮಾಡುವ ಒಂದು ಹುಬ್ಬಿನ ಕೂದಲುಗಳನ್ನು ನಾಜೂಕಾಗಿ ಕತ್ತರಿಸಿದ್ದಳು, ಕಾತ್ಯಾಯನಿಗೆ ಉಬ್ಬಿದ ಬೋಳು ಕಣ್ಣು ಅಲ್ಲಿದ್ದ ಕನ್ನಡಿಯಲ್ಲಿ ವಿಕಾರವಾಗಿ ಕಂಡಿತು. +ಇನ್ನು ನಾಲ್ಕು ಗಂಟೆ ಬಿಟ್ಟು ನಿಮಗೆ ಫೆಕೋ ಮಾಡುತ್ತಾರೆ ಅಂತ ಅವಳು ಹೇಳಿ ಹೋದಳು. +ಕಾತ್ಯಾಯನಿಗೆ ಎರಡೂ ಕಣ್ಣುಗಳು ಭಗ ಭಗ ಉರಿಯುತ್ತಿದ್ದವು. +ಕರಳು ಕ್ಯಾನ್ಸರಿನಿಂದ ಬಳಲುತ್ತಿದ್ದ ಅಕ್ಕನ ನೆನಪಾಗಿ ಕಣ್ಣುಗಳು ತುಂಬಿ ಬಂದವು. +ಪಕ್ಕದ ಮಂಚದ ಮೇಲೆ ಆಪರೇಶನ್‌ಗಾಗಿ ಕಾದು ಕುಳಿತ ಮಹಿಳೆ ನೀವು ಕಣ್ಣೀರು ಹಾಕಬಾರದು, ಆಪರೇಶನ್ ಕಷ್ಟವಾಗುತ್ತದೆ ಅಂತ ಹೇಳಿದಾಗ, ಕಾತ್ಯಾಯನಿ ಅಳುವದನ್ನು ನಿಲ್ಲಿಸಿದಳು. +ಒಂಥರಾ ಮಂಕು ದುಗುಡ, ಅಂಜಿಕೆ ಅವಳಿಗೆ ಕಳವಳವನ್ನುಂಟು ಮಾಡಿತ್ತು. +ದೇವರೇ ಕಣ್ಣಿಗೆ ಬೆಳಕ ಕೊಡು ಎಂದು ಅವಳು ಮನದಲ್ಲಿ ಪ್ರಾರ್ಥಿಸಿದಳು. +ಅಕ್ಟೋಬರ ತಿಂಗಳ ಬಿಸಿಲು ಹೊರಗೆ ಚುರುಕಾಗಿತ್ತು. +ಆಸ್ಪತ್ರೆಯ ವಾರ್ಡುಗಳಲ್ಲಿ ಒಂಥರಾ ಮಬ್ಬು ಕತ್ತಲೆ ಆವರಿಸಿತ್ತು. +ಆಪರೇಶನ್ ಆಗುವವರ, ಆದವರ ಒಳ ಕಣ್ಣುಗಳು ಬದುಕಿನ ಯೋಚನೆಗಳಿಂದ ಯಾತನೆಗಳಿಂದ ಬಿಡುಗಡೆ ಹೊಂದಲು ಬೆಳಕಿನ ಕಿರಣಗಳನ್ನು ಆರಿಸುತ್ತಿದ್ದವು. +ನೇತ್ರದಾನ ಸರ್ವಶ್ರೇಷ್ಠದಾನ ಎಂಬ ದೊಡ್ಡ ಫಲಕು ಆಸ್ಪತ್ರೆಯ ಗೋಡೆಗಳ ಮೇಲೆ ರಾರಾಜಿಸುತ್ತಿತ್ತು. +ಹುಟ್ಟಿದ ಮಗು ಇನ್ನೂ ಎಳೆ ಎಂಬತ್ತರ ಮುದುಕಿಯರು, ಈಗ ತಾನೇ ಕಾಲೇಜು ಮೆಟ್ಟಿಲು ಹತ್ತಿರುವವರು, ಮಧ್ಯ ವಯಸ್ಸಿನವರು ಎಲ್ಲರಿಗೂ ಕಣ್ಣಿನ ತೊಂದರೆ, ಕೆಂಪಾದ ಎಲ್ಲರ ಕಣ್ಣಗಳು ಕಾತ್ಯಾಯನಿಗೆ ರಾಕ್ಷಸರ ಕಣ್ಣುಗಳು ಕಂಡ ಹಾಗೆ ಅನಿಸತೊಡಗಿತ್ತು. +ಸರಿಯಾಗಿ ಹನ್ನೆರಡುವರೆಗೆ ಅವಳಿಗೆ ಹಸಿರು ಗೌನು ತೊಡಗಿಸಿ ಓ.ಟಿ ಗೆ ಕರೆದುಕೊಂಡು ಹೋದರು. +ಭಗಭಗ ಉರಿಯುವ ಅವಳ ಕಣ್ಣುಗಳು ಓ.ಟಿ.ಯ ದೊಡ್ಡ ದೊಡ್ಡ ಬಿಳಿ ಬಣ್ಣದ ಮಶೀನಗಳನ್ನು ಕಂಡು ಇನ್ನಷ್ಟು ಉರಿಯತೊಡಗಿತು. +ಅವಳ ದೇಹಕ್ಕೆ ಇದು ನಾಲ್ಕನೆಯ ಆಪರೇಶನ್. +ಹಿಂದಿನ ಆಪರೇಶನ್‌ಗಳಲ್ಲಿ ಅವಳಿಗೆ ಸ್ಮೃತಿ ತಪ್ಪಿಸಲು ಅರವಳಿಕೆ ಕೊಡಲಾಗಿತ್ತು. +ದೇಹದ ಯಾವ ಭಾಗದಲ್ಲಿ ಏನಾಗುತ್ತಿದೆ ಎಂಬ ಅರಿವು ಆಗುತ್ತಿರಲಿಲ್ಲ. +ಈ ಸಲ ಹಾಗಲ್ಲ. +ಒಂದೂ ಇಂಜಕ್ಷನ್ ಅರವಳಿಕೆ ಇಲ್ಲದೇ ಕಣ್ಣಿನ ಸೂಕ್ಷ್ಮ ಪೊರೆಯನ್ನು ತೆರೆಯುವುದು ಅವಳಲ್ಲಿ ತೀವ್ರ ಆತಂಕ ಹುಟ್ಟಿ ಹಾಕಿತ್ತು. +ಮೊದಲು ಎದೆಗೆ ಇ.ಸಿ.ಜಿ. ಎಳೆಗಳು ಸಿಗಿಸಲ್ಪಟವು. +ಮಾನಿಟರ್ ಕುಂಯ್ ಕುಂಯ್ ಎಂಬ ಶಬ್ದ ಪ್ರಾರಂಭಿಸಿದವು. +ಎರಡೂ ಕಣ್ಣಿನ ಸುತ್ತಲೂ ಪ್ಯಾಕೇಜ ಹಾಕಿ ಬಂದು ಮಾಡಿದರು. +ಅವಳಿಗೆ ಉಸಿರು ಕಟ್ಟಿಕೊಳ್ಳತೊಡಗಿತು. +ಕೈ ಕಾಲುಗಳಿಗೆ ಬೆಲ್ಟ್ ಹಾಕಿ ಬಿಗಿದು ಕಟ್ಟಿದರು. +ಅವಳಿಗೆ ಉಸಿರಾಟಕ್ಕೆ ತೊಂದರೆ ಆದಂತೆ ಅನಿಸತೊಡಗಿತು. +ಅವಳು ಮುಲುಕಾಡಿದಳು. +"ನೋ ನೋ ಡೋಂಟ ಮುವ ಅನ್‌ಟಿಲ್ಲ್ ಆಯ್ ಸೇ. +ಕೀಪ್ ಕ್ವಯಟ್ "ಸರ್ಜನ್ ಏರಿದ ಸ್ವರದಲ್ಲಿ ಹೇಳಿದ್ದು ಅವಳಿಗೆ ಪೂರ್ತಿ ಗುಹೆಯ ಕತ್ತಲಲ್ಲಿ ಹೇಳಿದಂತೆ ಕೇಳಿಸಿತು. +ಬಲಗಣ್ಣಿನ ಮೇಲೆ ಒಂದು ಪ್ಲಾಸ್ಟಿಕ್ ಹೊದಿಕೆಯನ್ನು ಹಾಕಿದ್ದರು. +ಮೆಲ್ಲಗೆ ತಲೆಯ ಮೇಲಿಂದ ಮಿಶನ್ನಿನ ಸೋಂಯ್" ಎಂಬ ಶಬ್ದದೊಂದಿಗೆ ಬೆಳಕಿನ ಲೇಸರ ಕಿರಣಗಳು ಅಕ್ಷಿಪಟಲದ ಮೇಲೆ ಹಾಯ್ದವು. +ಅವಳಿಗೆ ಒಮ್ಮೆಲೇ ಆಕಾಶದಲ್ಲಿ ಮಧ್ಯಾನ್ಹ ಉರಿಯುವ ಸೂರ್ಯ ಕಣ್ಣಲ್ಲಿ ಬಂದು ಹಾಗೆ ಆಯಿತು. +ಅದರ ಪ್ರಖರತೆಗೆ ಅವಳ ಹೊಟ್ಟೆ ತೊಳೆಸಿದಂತೆ ಆಯಿತು. +ಕಾತ್ಯಾಯನಿ ಸೂರ್ಯನ ಪ್ರಖರ ಕಿರಣಗಳು ನೀಲಿಯಾಗಿ ಉಂಡಿಯಾಗಿ ಕಣ್ಣೊಳಗೆ ಹಾಯ್ದು ಹೋದಾಗಲೆಲ್ಲಾ ಕಮಟಿ ಬೀಳುತ್ತಿದ್ದಳು. +ಉರಿಯುವ ಸೂರ್ಯನನ್ನು ಕಣ್ಣೂಳಗೆ ತುರುಕಿ ಗರಗರ ತಿರುಗಿಸಿದಾಗ ಅವಳ ಕಣ್ಣಿನ ಪೊರೆಗಳು ಈರುಳ್ಳಿ ಸಿಪ್ಪೆ ಸುಲಿದ ಹಾಗೆ ಬಳಬಳ ಅಂತ ಕಣ್ಣಂಚಿನ ತುದಿಗೆ ಜಾರಿ ಬಂದವು. +ನರ್ಸ ಅವುಗಳನ್ನು ಮೆಲ್ಲಗೆ ಹತ್ತಿಯಿಂದ ಒರಿಸಿ ತೆಗೆಯುತ್ತಿದ್ದಳು. +ಹೀಗೆ ಇಪ್ಪತ್ತು ನಿಮಿಷಗಳ ಕಾಲ ಕಿರಣಗಳನ್ನು ಒಂದಾದ ಮೇಲೆ ಒಂದನ್ನು ಹಾಯಿಸಿದಾಗ ಕಾತ್ಯಾಯನಿಗೆ ಪ್ರಖರತೆಗೆ ಫೇಂಟ್ ಬಂದಂತೆ ಆಯಿತು. +ಒಂದೆರಡು ಸಲ ಮಾನೀಟರ್ ಕುಂಯ್ ಗೊಡಲಿಲ್ಲ. +ಯಾಕೋ ಅವಳಿಗೆ ಈ ಹೊತ್ತು ತನಗೆ ಯಾರೂ ಇಲ್ಲ ಎಂಬ ಅನಾಥ ಭಾವ ಎದೆಯೊಳಗೆ ಇಳಿದು ಬಿಟ್ಟಿತು. +ಆ ಗಳಿಗೆಯಲ್ಲಿ ಆ ಶಾಂತ ಹಾಗೂ ಆತ್ಮೀಯ ಗೆಳೆಯನಾದರೂ ಹತ್ತಿರ ಬರಬಾರದೇ ಅಂತ ಅವಳಿಗೆ ಅನಿಸಿತು. +"ಸ್ವಲ್ಪ ತಡೆದುಕೊಳ್ಳಿ ಬೀ ಬ್ರೇವ್ ನಥಿಂಗ್ ಟು ವರಿ, ಎವರಿಥಿಂಗ್ ವಿಲ್ ಬಿ ಆಲ್ ರೈಟ್" ಸರ್ಜನರ ಮಾತು ಅವಳ ಕಿವಿಯಲ್ಲಿ ಕೇಳಿಸುತ್ತಿದ್ದವು. +ಬದುಕಿನಲ್ಲಿ ಎಂತೆಂತಹ ಪ್ರಖರತೆ, ಸುಡುಬಿಸಿಲು, ಉರಿಯುವ ಸೂರ್ಯ, ಅಪಮಾನ ಕಣ್ಣುರಿ ಸಹಿಸಿಲ್ಲ. +ಯಾವಾಗಲೂ ಬರೀ ಪರೀಕ್ಷೆ ಬರೆಯುವುದೇ ಆಯ್ತು. +ಈ ಜೀವನಕ್ಕೆ ಸರಿಯಾದ ಫಲಿತಾಂಶ ಸಿಗಲೇ ಇಲ್ಲದೊಂದು ಸಂಕಟ ಸಹಿಸಲು ಅಸಾಧ್ಯವಾದರೂ ಸಹಿಸಬೇಕು. +ಉರಿಯುವ ಸೂರ್ಯ ಅವಳ ಕಣ್ಣುಗಳಲ್ಲಿ ಗಿರಿಗಾಡುತ್ತಿದ್ದ. +ಕಣ್ಣಿನಿಂದ ಪೊರೆಯ ಸಿಪ್ಪೆಗಳು ಬಿಚ್ಚಿದ ನಂತರ ತುಂಬ ತೆಳುವಾದ ಲೆನ್ಸನ್ನು ಕರಿಗುಡ್ಡಿಗೆ ಮಿಶನ್ನಿನ ಮೂಲಕ ಫಿಕ್ಸ್ ಮಾಡಿದರು. +ಎಂದೂ ಕಾಣದಂತಹ ಬೆಳಕು ಬಹಳ ಶುಭ್ರವಾದ ಬೆಳಕು ಅವಳ ಕಣ್ಣಲ್ಲಿ ತುಂಬಿದ ಹಾಗಾಯ್ತು, ಹೊಟ್ಟೆಯ ತೊಳುಸುವಿಕೆ, ಸಣ್ಣಗೆ ತಲೆ ಸುತ್ತುವಿಕೆಗೆ ಅವಳ ಶರೀರ ತುಸು ಬೆಚ್ಚಗಾಯ್ತು. +ಕಣ್ಣು ರಿಪೇರಿಯಾದರೆ ಮತ್ತೆ ತಾನು ಬರೆಯಬಹುದು, ಓದಬಹುದು, ಅಂತ ಕಾತ್ಯಾಯನಿಗೆ ಒಳಗೊಳಗೆ ಖುಷಿಯಾಯ್ತು. + ಅಕ್ಷರಲೋಕ ಅವಳಿಗೆ ಎಲ್ಲಾ ವಿಸ್ಮಯಗಳನ್ನು ತೆರೆದು ತೋರಿಸಿತ್ತು. +ಅವಳಿಗೆ ಯಾಕೋ ತನ್ನಕ್ಕನ ನೆನಪು ನುಗ್ಗಿ ಬಂದು ದುಃಖ ಒತ್ತರಿಸಿ ಬಂತು. +ಓಣಿಯಲ್ಲಿ ಎಲ್ಲರೂ ಹೇಳಿ ಕಳುಹಿಸಿದ್ದರು ಯಾವ ವಿಷಯಕ್ಕೂ ಕಣ್ಣೀರು ಹಾಕಬಾರದು. +ಬಾಣಂತಕ್ಕಿಂತ ಹೆಚ್ಚು ಕಾಳಜಿ ಮಾಡಿಕೊಳ್ಳಬೇಕು. +ಅವಳು ಪೂರಕವಾಗಿ ಕಣ್ಣೀರು ತಡೆದುಕೊಂಡಳು. +ಮೆಲ್ಲಗೆ ಆಪರೇಶನ್ ಥಿಯಟರ್‌ನಿಂದ ಕಣ್ಣಿಗೆ ಕಪ್ಪು ಕನ್ನಡಕ ಹಾಕಿ ನರ್ಸಗಳಿಬ್ಬರು ಅವಳ ಕೈ ಹಿಡಿದುಕೊಂಡು ಬಂದು ವಾರ್ಡಿನ ಮಂಚದ ಮೇಲೆ ಮಲಗಿಸಿ ಹೋದರು. +ಆಪರೇಶನ್ ಕಣ್ಣಿಂದ ದಳದಳ ನೀರು ಇಳಿದು ಭಗಭಗ ಕಣ್ಣುರಿಯುತ್ತಿತ್ತು. +ತಮ್ಮ ಸುಮ್ಮನೆ ಮುಂದಿನ ಮಂಚದ ಮೇಲೆ ಕುಳಿತಿದ್ದ. +ಚಳಿಗಾಲದ ಆ ಸಂಜೆ ಅವಳ ಕಣ್ಣಿನಂತೆ ಯಾಕೋ ತುಂಬಾ ಮದ್ದಾಗಿತ್ತು. +ಕರುಣಾನಿಧಿಯಂತೆ ಕನ್ನಡಕ ಧರಿಸಿ ಮಲಗಿದ್ದ ಕಾತ್ಯಾಯನಿಗೆ ಇಡೀ ಲೋಕ ತುಂಬ ಕತ್ತಲೆಯಿಂದ ತುಂಬಿದೆ ಅಂತ ಅನಿಸಿತು. +ಕತ್ತಲೆ ಎಂಬುದು ಮನುಷ್ಯ ಪ್ರಜ್ಞೆಯ ಮೊದಲು ಅರಿವು ಅದರಿಂದ ಬೆಳಕನ್ನು ಗುರಿತಿಸಬಹುದು. +ಕತ್ತಲಿಂದ ಬೆಳಕು ಅರಿವು ಪಡೆದು ಹೊಸದಾಯಿತು. +ಈ ಲೋಕದ ಎಲ್ಲಾ ಬೆಳಕಿಗೆ ಕಾಳಜಿ ಇದೆ. +ಇದು ಒಂದು ಹೊಸ ಹುಟ್ಟು, ಹುಡುಕಾಟ, ಹುಡುಕಾಟ ಎಂಬುದು ಕತ್ತಲೆಯ ಸ್ಪಂದನ. +ನಾನೇನು ಹುಡುಕುತ್ತಿದ್ದೇನೆ ಈ ಕತ್ತಲೆಯ ಲೋಕದಲಿ? +ಒಂದು ಹಿಡಿ ನಿಷ್ಕಳಂಕ ಪ್ರೀತಿಯೇ, ಇಲ್ಲ ಈ ದಾರಿ ಸವೆಯಲು ಒಂದು ಕಂದೀಲೇ? +ಬೆಳಕಿನಲ್ಲಿ ಹೊಳೆಯುವುದಕ್ಕೆ ಒಂದು ಕತ್ತಲೆಯ ಆವರಣ ಬೇಕೇ ಬೇಕು. +ನೆರಳೂ-ಬೆಳಕು ಇವು ಸಂಗಾತಿಗಳು, ನಿದ್ರೆ ಎಚ್ಚರದಂತೆ ಅದು ಸಂತೆ ಮತ್ತೆ ಸಂತನಾಗುವ ಅಭಿಕ್ಷೆ. +ನನ್ನ ಕಣ್ಣೊಳಗೆ ಕತ್ತಲೆಯಾಗಿದೆ ಸಂಜೆಯಾಗಿದೆ. +ಅದು ಶಾಂಭವೀ, ಈ ನೋಟಕ್ಕೆ ಕತ್ತಲೆಯನ್ನು ಗುರುತಿಸಿದ ಬೆಳಕಿನ ಹಾದಿ ಕಾಣುತ್ತದೆ. +ಈ ಕತ್ತಲೆಗಾಗಿಯೇ ಲೋಕದ ತುಂಬ ಹರಡಿದೆ. +ನಾನು ನನ್ನ ನಿಶ್ಚಳ ದಾರಿಯನ್ನು ಹುಡುಕಬೇಕು ಅಂತ ಕಾತ್ಯಾಯನಿಗೆ ಅನಿಸತೊಡಗಿತು. +ಆ ಸಂಜೆ ಅವಳಿಗೆ ಸರಳವಾಗಿರಲಿಲ್ಲ. +ಆಪರೇಶನ್ ಆದ ಸಂಜೆಯೇ ಡಿಸ್‌ಚಾರ್ಜ್ ಮಾಡಿದ್ದರು. +ಅದು ಕತ್ತಲೆಯ ಮೂರು ಸಂಜೆಯ ಹೊತ್ತು ಕಣ್ಣು ಭಗ ಭಗ ಉರಿಯುತ್ತಿತ್ತು. +ತಮ್ಮ ಆಟೋದಲ್ಲಿ ಮನೆಗೆ ಕರೆದು ತಂದ ವರಾಂಡದಲ್ಲಿ ಕೈ ಹಿಡಿದು ಕೂಡಿಸಿದ. +ಬೆಳಿಗ್ಗೆಯಿಂದಲೇ ಹೊಟ್ಟೆಗೆ ಸರಿಯಾಗಿ ಆಹಾರ ತಿನ್ನದಿದ್ದರಿಂದ, ಕಾತ್ಯಾಯನಿಗೆ ಹಸಿವು ಭಗ್ ಎಂದಿತು. +ತಮ್ಮನ ಹೆಂಡತಿ ಮುಖ ಊದಿಸಿಕೊಂಡಿದ್ದಳು. +ಅವಳನ್ನು ಚಹಾ ಬಿಸ್ಕೆಟ್ಸ್ ಕೇಳಲು ಕಾತ್ಯಾಯನಿಗೆ ಮುಜಗರವಾಯ್ತು. +ಪುಟ್ಟ ಮನೆ ಮೊದಲು ಆದ ಆಪರೇಶನ್ನಿಂದ ಅವಳಿಗೆ ನೆಲದಲ್ಲಿ ಮಲಗಲು ಆಗುತ್ತಿರಲಿಲ್ಲ. +ತಮ್ಮ ಇದ್ದ ದಿವಾನ, ಕಾಟವನ್ನು ಆ ಪುಟ್ಟ ಖೋಲಿಯಲ್ಲಿ ಹಾಕಿ ಕೊಡುವೆ ಅಂದ. + ಅವಳಿಗೆ ಹೊಟ್ಟೆಗೆ ಒಂದುಚೂರ ಆಹಾರ ಮತ್ತು ಅಡ್ಡಾಗಬೇಕೆನಿಸಿತು. +ತಮ್ಮ ದಿವಾನ ಕಾಟನ್ನು ಕೋಣಿಯಲ್ಲಿ ಹಾಕುವಂತೆ ಪತ್ನಿಗೆ ತಿಳಿಸಿ ಕೈ ಜೋಡಿಸು ಎಂದು ಎಲ್ಲಾ ಸಾಮಾನುಗಳು ಅತ್ತಿಂದ ಇತ್ತ ಸರಿಸಿಟ್ಟ. +ಒಮ್ಮೆಲೇ ಆತನ ಪತ್ನಿ ಬಾಂಬ್ ಸಿಡಿಸಲು ಶುರುವಿಟ್ಟುಕೊಂಡಳು. +"ಎಲ್ಲಿ ಜೋಡಾದವೋ ದರಿದ್ರಗಳು ಮಗುವಿಗೆ ಟಿ.ವಿ. ನೋಡಲು ತೊಂದರೆ ಆಗುತ್ತದೆ. +ಮಕ್ಕಳಿಲ್ಲ ಮರಿ ಇಲ್ಲ ಬೇರ್ವಸಿಗಳು. +ಬೇರೆಯವರಿಗೆ ಉಪದ್ರ ಕೊಡುತ್ತವೆ. +ಇವಕ್ಕೆ ಕಣ್ಣು ಆಪರೇಶನ್ಸ್ ಮಾಡಿಸಿಕೊಳ್ಳದಿದ್ದರೆ ಯಾರು ಅಳುತಿದ್ದರು. +ಒಂದೂ ಸರಿ ಇಲ್ಲದ ಬಾಳೆ, ಮದುವೆ ಆಗಿಲ್ಲ ಹ್ಯಾಂಗೇ ಇತರರಿಗೆ ಉಪದ್ರ ಯಾಕಾದ್ರೂ ನಿಮ್ಮಂತಹ ಮನೆತನದವರನ್ನು ಮದುವೆ ಆದನೋ, ನಾನು ಈ ಮನೆಯಲ್ಲಿ ಇರೋದಿಲ್ಲ. +ಮಗನನ್ನು ಕಟ್ಟಿಕೊಂಡು ಎಲ್ಲಾದರೂ ಹೋಗ್ತೇನೆ. +ಒಂದ ಚೂರ ಉಪಕಾರ ಇಲ್ಲ ಇವರಿಂದ ಎಲ್ಲಾ ಪಡಿಪೋಶಿಗಳು". +ತಮ್ಮನಿಗೆ ಸಿಟ್ಟು ಬಂದು ಅವನು ಬಾಯಿ ತೆಗೆದು ಜಗಳಕ್ಕೆ ನಿಂತ. +"ನಿನಗೇನಾಗಿದೆ ಧಾಡಿ ಅಪರೂಪಕ್ಕೆ ಅಕ್ಕ ಬಂದಿದ್ದಾಳೆ. +ನೀನು ಮೊದಲು ಬೇಡ ಅಂದಿದ್ದರೆ ಅವಳು ಇಲ್ಲಿಗೆ ಬರುತ್ತಿರಲಿಲ್ಲ. +ನಿನಗೇನು ತೊಂದರೆ ಮಾಡಿದ್ದೇವೆ. +ಒಂದಚೂರು ಕಾಟ್ ಸರಿಸಲು ಸಹಾಯ ಮಾಡೆಂದರೆ ಎಷ್ಟೊಂದು ಹಾರಾಡ್ತಿ ಇದು ಸರಿಯಲ್ಲ. +ಸುಮ್ನೆ ಬಾಯಿ ಮುಚ್ಚಿಕೋ." +"ನನಗೆ ಬಾಯಿ ಮುಚ್ಚಿಕೊಳ್ಳು ಅಂತ ಹೇಳಲು ನೀವ್ಯಾರು ನಾನು ಎಲ್ಲಾ ಹೇಳುವವಳೇ ಇವರಿಂದ ಒಂದು ಬಿಡಿ ಕಾಸು ಉಪಯೋಗವಿಲ್ಲ, ದರಿದ್ರಗಳು ಬರೀ ಉಪದ್ರಕಾರಿಗಳು" ಅಂತ ಜೋರಾಗಿ ಒದರು ಪ್ರಾರಂಭಿಸಿ, ಕೈ ಕೈ ಹಚ್ಚಿ ಜಗಳ ಶುರುವಿಟ್ಟುಕೊಂಡು ತಮ್ಮನ ಹೆಂಡತಿ ಕುರ್ಚಿ ಬೀಸಿ ಒಗೆದಳು. +ಡಾಕ್ಟ್ರು ಕಣ್ಣೀರ ಸುರಿಸಬಾರದೆಂದು ಹೇಳಿದ್ದರು. +ಆದರೆ ಕಾತ್ಯಾಯನಿಗೆ ತಮ್ಮ ತಮ್ಮನ ಹೆಂಡತಿ ಬರೀ ಒಂದು ಮಂಚ ಹಾಕಲು ಇಷ್ಟೊಂದು ಜಗಳವಾಡುವುದು ಮತ್ತೆ ತಮ್ಮನ ಹೆಂಡತಿ ಹಾಯಿಸಿ ಹಂಗಿಸಿ ಮಾತನಾಡುತ್ತಿದ್ದದು ಅವಳಿಗೆ ದುಃಖದ ಮಹಾಪೂರವೇ ಎದೆಗೆ ಹರಿದು ಬಂದು ಅವಳು ಗಳಗಳನೇ ಅಳುವುದಕ್ಕೆ ಶುರುವಿಟ್ಟುಕೊಂಡಳು. +ಅವಳಿಗೆ ಆ ಕ್ಷಣದಲ್ಲಿ ಬದುಕಿನ ಎಲ್ಲಾ ಮಜಲುಗಳು, ನೋವುಗಳು, ಒಂಟಿತನ, ಅಸಾಯಕತೆ ಮನಸ್ಸಿನೊಳಗೆ ನುಗ್ಗಿ ಹುಣ್ಣುಗಾಯಿ ಮಾಡಿದಂತೆ ಅನಿಸಿತು. +ಅವಳು ತನ್ನಷ್ಟಕ್ಕೆ ತಾನೇ ಅಂದುಕೊಂಡಳು ಅಯ್ಯೋ ಬಂಢ ಜನ್ಮವೇ ಯಾರೂ ಬಗೆಹರಿಸದ ತಪ್ಪು ಕಲ್ಪನೆಗಳಿವೆ. +ಇದು ಮನಸ್ಸಿನ ದುರ್ಬಲತೆ, ನಾನು ಬಂದದ್ದು, ತಮ್ಮನ ಹೆಂಡತಿಯನ್ನು ಕೆರಳಿಸಬಹುದು. +ಅವಳಿಂದ ಈ ತರಹದ ಭರ್ತ್ಸನೆ ಮಾತುಗಳನ್ನು ಕಾತ್ಯಾಯನಿ ಎಂದೂ ನಿರೀಕ್ಷಿಸಿರಲಿಲ್ಲ. +ಕಾತ್ಯಾಯನಿ ಅಳುತ್ತ ಮಲಗಿ ಬಿಟ್ಟಳು. +ಒಳ ಕೋಣೆಯಲ್ಲಿ ಗಂಡ-ಹೆಂಡತಿಯ ಜಗಳ ಹಾಗೆಯೇ ಮುಂದುವರಿದಿತ್ತು. +ಮಾರನೇಯ ದಿನ ಮೈಸೂರಿನಲ್ಲಿ ಜಂಬೂ ಸವಾರಿಯ ಗದ್ದಲ, ಓಣಿಯ ಎಲ್ಲಾ ಮನೆಗಳ ಮುಂದೆ ತಳಿರು ತೋರಣ ರಂಗೋಲಿ ಸಿಂಗರಿಸಿದ್ದರು. +ತಮ್ಮನ ಹೆಂಡತಿ ಮುಖ ಬಿಗಿದು ಮೌನದಿಂದ ಇದ್ದಳು. +ಕಾತ್ಯಾಯನಿ ಮಲಗಿದ ಕೋಣೆಯ ತಮ್ಮನ ಮಗ ಓಣಿಯ ತನ್ನ ಸ್ನೇಹಿತರೊಡಗೂಡಿ ಕಲ್ಲು ಮಣ್ಣಿನ ಆಟ ಆಡುತ್ತಿದ್ದನು. +ನಿನ್ನೆಯಿಂದ ದುಗುಡಗೊಂಡಿದ್ದ ಕಾತ್ಯಾಯನಿಗೆ ಮಕ್ಕಳ ಬಾಯಿ ಆಟದ ಲಹರಿ ತಂಪು ತಂಗಾಳಿ ಬೀಸಿದಂತೆ ಆಯ್ತು. +ಅವಳು ಮಲಗಿದ್ದಲ್ಲಿಯೇ ಕಿಟಕಿಯ ಹೊರಗೆ ಆಡುತ್ತಿದ್ದ ಮಕ್ಕಳ ಮಾತುಗಳನ್ನು ಆಲಿಸುತ್ತಿದ್ದಳು, ಹೊಸದೊಂದು ಲೋಕ ಕಪ್ಪು ಕಣ್ಣೂಳಗೆ ಪ್ರವೇಶ ಪಡೆಯಿತು. +ನೋಯುವ, ಉರಿಯುವ ಕಣ್ಣುಗಳನ್ನು ಅವಳು ಅ ಕ್ಷಣದಲ್ಲಿ ಮರೆತುಬಿಟ್ಟಳು. +ಆ ಗಳಿಗೆಗಳು ಅವಳಿಗೆ ಮುಂಜಾನೆ ಎದ್ದ ಗಳಿಗೆ ಅನಿಸಿತು. +ಹಕ್ಕಿಗಳ ಕಲರವದಂತೆ ಮಕ್ಕಳು ಮಾತನಾಡುತ್ತಿದ್ದವು. +ಪ್ರತೀಕ, ಏಕಾಂತ, ಗೌರಿ, ಸಿದ್ದು ಎಂಬ ಹೆಸರುಗಳು ಅವುಗಳ ಮಾತಿನಿಂದ ಹೊರ ಹೊಮ್ಮುತ್ತಿದ್ದವು. +ಇವೆಲ್ಲರ ಆಟವೂ ಇರುವೆಗಳು ಮೈಸೂರು ದಸರಾಕ್ಕೆ ಹೊರಟ ಸಾಲುಗಳು, ಅವುಗಳ ದಾರಿ ದಣಿವ ಆರಿಸಿಕೊಳ್ಳಲು ಮಕ್ಕಳೆಲ್ಲಾ ಸೇರಿ ತಂಗುಮನೆ ಮಾಡುವ ಯೋಜನೆ ಹೊಂದಿದ್ದರು. +ಇವುಗಳ ಮಧ್ಯೆ ಏಕಾಂತ ಮೇಲಿಂದ ಮೇಲೆ ಹಾಡುತ್ತಿದ್ದ ಅಮುಲ್ ಛೋಟಿ ಉಸ್ತಾದ, ಅಮುಲ್ ಛೋಟಿ ಉಸ್ತಾದ" ಕಾತ್ಯಾಯನಿಗೆ ಟಿವಿಯಲ್ಲಿ ಪ್ರತಿವಾರ ಬರುವ ಮಕ್ಕಳ ಹಾಡಿನ ಸ್ಪರ್ಧೆ ಅದರಲ್ಲೂ ಭಾರತ-ಪಾಕಿಸ್ತಾನದ ಮಕ್ಕಳು ಒಂದಾಗಿ ಹಾಡುವ ಕಾರ್ಯಕ್ರಮ ನೆನಪಿಗೆ ಬಂತು. +ತಂಗಿ ತಾನು ತಪ್ಪದೇ ನೋಡುವ ಆ ಒಂದು ಕಾರ್ಯಕ್ರಮ, ಅಕ್ಕ ತಂಗಿಯರ ಹೃದಯದಲ್ಲಿ ಮಕ್ಕಳು ಹಿತವಾದ ತಂಪಾದ ಹಾಡಿನ ಬೆಳದಿಂಗಳನ್ನು ಎದೆಯಲ್ಲಿ ಹರಡಿದ್ದವು. +ಮರುದಿವಸ ಕೆಲಸಕ್ಕೆ ಬೇಗ ಎದ್ದು ಹೋಗುವದನ್ನು ಕಾತ್ಯಾಯನಿ ಅವಳ ತಂಗಿ ನೆನಪಿಸಿಕೊಳ್ಳುತ್ತಲೇ ಇರಲಿಲ್ಲ. +ಅಕ್ಕನ ಕ್ಯಾನ್ಸರಿನ ಬಳಲಿಕೆ ಅವರಿಬ್ಬರಿಗೂ ಏಳಲಾಗದ ಮಂಕುತನವನ್ನು ಹೇರಿದ್ದವು. +ಅವರಿಬ್ಬರಿಗೂ ಛೋಟೆ ಉಸ್ತಾದ ಮುಲಾಮಿನಂತೆ ಎದೆಗೆ ಸವರುತ್ತಿದ್ದವು. +ಕಾತ್ಯಾಯನಿ ತನ್ನಲ್ಲೇ ತಾನೇ ಅಂದುಕೊಳ್ಳುತ್ತಿದ್ದಳು. +ಈ ಮಕ್ಕಳ ಲೋಕ ಎಷ್ಟೊಂದು ಸುಂದರ. +ಎಂತಹ ಹಿತವಾದ ಧ್ವನಿಗಳು. +ಎಂತಹ ಪ್ರೀತಿಯ ಕಣ್ಣೋಟಗಳು. +ಏಕಾಂತನ ಆಲಾಪ ಮತ್ತೆ ಶುರುವಾಯ್ತು. +ಅಮುಲ್ ಛೋಟೆ ಉಸ್ತಾದ ಪ್ರತೀಕ ಮತ್ತೆ ಅವನಿಗೆ ಧ್ವನಿಗೂಡಿಸುತ್ತಿದ್ದ, ಗೌರಿ ಮಾತಿನಲ್ಲಿ ಮುಳುಗಿದ್ದಳು. +ಸಿದ್ದು ಗೌರಿಗೆ ಹೇಳುತ್ತಿದ್ದರೆ ನಿನ್ನ ಕೈಯಲ್ಲಿ ಹಿಡಿದ ಕೋಲು ಗೋಡೆಗೆ ಆಧಾರವಾಗುತ್ತದೆ. +ಇರುವೆಗಳೆಲ್ಲಾ ದಸರಾ ಮೆರವಣಿಗೆ ಹೊರಟಿವೆ, ದಾರಿಯಲ್ಲಿ ಅವುಗಳಿಗೆ ಬಿಸಿಲಿನಿಂದ ಪಾರಾಗಲು ಈ ರಟ್ಟಿನ ಮನೆಯನ್ನು ಕಟ್ಟೋಣ" ಗೌರಿ ಹೇಳುತ್ತಿದ್ದಳು. +"ಕೋಲನ್ನು ಮುರಿಯುವ ಹಾಂಗಿಲ್ಲ ಮತ್ತೆ ಜೋಡಿಸಲು ಬರಾಂಗಿಲ್ಲ" ಕಾತ್ಯಾಯನಿಗೆ ಮಲಗಿದ್ದಲ್ಲೇ ಅನಿಸತೊಡಗಿತು. +ಪುಟ್ಟ ಗೌರಿ ಎಷ್ಟೊಂದು ಸತ್ಯ ಮಾತನಾಡಿತ್ತು ಕೋಲೇನು, ಯಾವುದು ಮುರಿದರೂ, ಮನಸ್ಸು ಮುರಿದರೂ ಮತ್ತೆ ಜೋಡಿಸಲು ಬರುವುದಿಲ್ಲವಲ್ಲ. +ಒಳಗೆ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ತಮ್ಮನ ಹೆಂಡತಿ ಮೇಲಿಂದ ಮೇಲೆ ಮಗ ಪ್ರತೀಕನಿಗೆ ಆಟ ನಿಲ್ಲಿಸಿ ಒಳ ಬರಲು ಹೇಳುತ್ತಿದ್ದಳು. +ಮಕ್ಕಳು ಇದಾವುದನ್ನು ಗಮನಕೊಡದೇ ಇರುವೆಗಳ ದಸರಾ ಮೆರವಣಿಗೆಯ ತಯಾರಿಯಲ್ಲಿದ್ದವು. +ನಡುನಡುವೆ ಏಕಾಂತದ ಆಲಾಪಕ್ಕೆ ಕೋರಸ್ಸ ಹಾಡುತ್ತಿದ್ದವು. +ಅಮುಲ್ ಛೋಟೆ ಉಸ್ತಾದ ಯಾವ ಬದಲಾವಣೆಯೂ ಕಾಣದ ತನ್ನ ಬದುಕಿನ ಪರಿ ಒಮ್ಮೊಮ್ಮೆ ಕಾತ್ಯಾಯನಿಗೆ ಅಚ್ಚರಿ ಹುಟ್ಟಿಸುತ್ತದೆ. +ತಾನೇಕೆ ತನ್ನ ನಡೆಯುವ ದಾರಿಯಲ್ಲಿ ಒಬ್ಬ ಸಹ ಪಥಿಕನನ್ನು ಒಳಗೊಳ್ಳಲಿಲ್ಲ. +ತನ್ನ ಬದುಕಿನ ಸಂವೇದನೆಗಳು ಈ ವ್ಯಾವಹಾರಿಕ ಬದುಕನ್ನು ತಬ್ಬಲು ಅಂಜಿದವೇ ನಿಮ್ಮ ಬದುಕನ್ನು ನೀವೇ ಕಟ್ಟಿಕೊಳ್ಳಿ ಅಂತ ತಮ್ಮಂದಿರು ತಮ್ಮ ಪಾಡಿಗೆ ತಾವೇ ನಡೆದು ಹೋದರಲ್ಲ. +ಅಪ್ಪನ ಜವಾಬ್ದಾರಿಯಲ್ಲಿ ಕನಸುಗಳೆಲ್ಲಾ ವ್ಯರ್ಥವಾಗಿ ಹರಿದು ಹೋಗಿವೆಯಲ್ಲ. +ಎಲ್ಲರಂತೆ ಇರಲಿಲ್ಲ ಬಾಲ್ಯ ಮತ್ತು ಯೌವನದ ಕನಸುಗಳು. +ಹೆಬ್ಬಾವು ಸುತ್ತಿದಂತೆ ಸದಾ ಎದೆಗೆ ಅಮರಿಕೊಂಡ ಬಡತನ ಒಂಟಿತನ. +ಯಾರೂ ತೆಕ್ಕೆ ಬಡಿಯದ ಹೋರಾಟದ ಒಂಟಿ ನಡುಗೆ ಬದುಕುವ ದಾಹ ತಣಿಯಲಿಲ್ಲ. +ಸುಮ್ಮನೆ ಪ್ರವಾಹದಲ್ಲಿ ಈಜಿದ್ದೇ ಬಂತು. +ಎಲ್ಲವೂ ನೇಪಥ್ಯದ ಮಿತಿ ಪ್ರತಿಭೆ ಪ್ರತಿಮೆಗಳ ಹೊಡೆದಾಟ, ಎಲ್ಲಾ ಸುಳ್ಳು ಗಾಳಿಸುದ್ದಿಗಳನ್ನು ಸರಿಸಿ ದಾರಿಗುಂಟ ನೆಡೆದು ಬಂದಾಗ ಅರ್ಧ ಶತಮಾನವಾಗಿತ್ತು. +ಕೂದಲೆಲ್ಲಾ ಹಣ್ಣಾಗಿತ್ತು. +ಗರ್ಭ ಕಾಳಜಿ ಹೋಗಿತ್ತು. +ಮೂರ್ಖ ಹೆಂಗಸು ಮದುವೆ ಆಗದಿದ್ದದ್ದು ಹಂಗಿಸುತ್ತದೆಯಲ್ಲಾ? +ಕಾತ್ಯಾಯನಿ ಮಲಗಿದಲ್ಲಿಯೇ ಮುಲಕಿದಳು. +ಪ್ರಶ್ನೆಗಳ ಬೇತಾಳ ಹೊತ್ತು ನಡೆದವಳಿಗೆ ಮತ್ತೊಮ್ಮೆ ಮಕ್ಕಳ ಕೋರಸ್ ಅಮುಲ್ ಛೋಟಿ ಉಸ್ತಾದ ಕೇಳಿಸಿತು. +ಕಾತ್ಯಾಯನಿ ಜೀವಮಾನದಲ್ಲಿ ಒಮ್ಮೆಯೂ ಅಮುಲ್ ಚಾಕಲೇಟು ತಿನ್ನಲಿಲ್ಲ. +ಈಗ ಸಕ್ಕರೆ ರೋಗ, ಮಕ್ಕಳು ಮತ್ತೆ ಆಟದ ಪ್ರಕ್ರಿಯೆ ಮುಂದುವರಿಸಿದ್ದವು. +ಕಾತ್ಯಾಯನಿಗೆ ತಾನು ಅಜ್ಜಯ್ಯನ ಮನೆಯ ಅಗ್ರಹಾರದಲ್ಲಿ ಎಲ್ಲಾ ಮನೆಯ ಮಕ್ಕಳು ಹಾಡಿಯಿಂದ ಹಣ್ಣು ಹಂಪಲ ತಂದು ಅಡುಗೆ ಮಾಡುವ ಆಟ, ಮತ್ತೆ ಹೂಗಳನ್ನು ಲೆಕ್ಕಿ ಕೈಬಣ್ಣ ಮಾಡಿಕೊಳ್ಳುವ ಆಟ ಗೇರು ಹಣ್ಣನ್ನು ಲಂಗದಲ್ಲಿ ಸುತ್ತಿ ಕಲೆ ಮಾಡಿಕೊಂಡು ಮತ್ತೆ ಚಿಕ್ಕಿಯರಿಂದ ಬೈಯಿಸಿಕೊಂಡದ್ದು ಎಲ್ಲವೂ ನೆನಪಿಗೆ ಬಂದವು. +ಗೌರಿ ಸಿದಸ್ದು ತಮ್ಮೊಳಗೆ ತಾವೇ ಜಗಳ ಮಾಡಿಕೊಳ್ಳುತ್ತಿದ್ದವು. +ಈಗ ಗಂಟೆ ಹನ್ನೆರಡುವರೆ ಆಗಿದೆ. +ಮೆರವಣಿಗೆ ಹೊರಟಿದೆ, ಬೇಗ ಬೇಗ ಮಂಟಪ ಕಟ್ಟಿ, ಇರುವೆಗಳ ಸಾಲುಗಳು ಹೊರಟಾಗಿದೆ. +ಗೌರಿ ನೀನು ರಟ್ಟನ್ನು ಸರಿಯಾಗಿ ತುಂಡು ಮಾಡು, ಮತ್ತೆ ಕೋಲನ್ನು ಎತ್ತರಕ್ಕೆ ಹಿಡಿ, ಪ್ರತೀಕ ನೀನು ಗಮ್ ಅಂಟಿಸು, ಏಕಾಂತ ಗೆಳೆಯರಿಗೆ ಆರ್ಡರ ಮಾಡುತ್ತ ಮಾಡುತ್ತ ಮತ್ತೊಮ್ಮೆ ಜೋರಾಗಿ ಹಾಡಿದ ಅಮುಲ್ ಛೋಟೆ ಉಸ್ತಾದ. +ಕಾತ್ಯಾಯನಿಗೆ ಏಕಾಂತದ ಆಲಾಪ ಕೇಳಿದಾಗ ಮತ್ತೆ ಎದೆಯಲ್ಲಿ ನದಿಹರಿದು ತಂಪು ತಂಪು ಎನಿಸಿತು. +ಕಣ್ಣು ಮುಚ್ಚಿದ ಎದೆಯೊಳಗೆ ತಂಗಿ ತಾನು ಆ ಕಾರ್ಯಕ್ರಮವನ್ನು ಸಂಭ್ರಮಿಸುವ ಪರಿ ಪಿಕ್ಚರ್ ರೀಲಿನಂತೆ ಎದೆಯ ಪರದೆಯ ಮೇಲೆ ಮೂಡತೊಡಗಿತು. +ಪಾಕಿಸ್ತಾನದ ಮಕ್ಕಳಾದ ಇಮ್ತಿಯಾಜ್, ರೋಜ್, ಶಿಯಾನ್, ಶೋಯಬ್ ಎಲ್ಲಾ ಮಕ್ಕಳು ಸುತ್ತಿನಿಂದ ಸುತ್ತಿಗೆ ಹಾಡುತ್ತ ಸಂಭ್ರಮಿಸುವುದು ಒಂದು ದೊಡ್ಡ ಸಿನೇಮಾದಂತೆ ಕಂಡುಬಂದಿತು. +ಪುಟ್ಟ ಮಕ್ಕಳ ಹೃದಯದಿಂದ ಸೂಫೀ ಸಂತರ ಹಾಡು, ಗಝಲ್ಗಳು, ಶಾಸ್ತ್ರೀಯ, ಶಾಸ್ತ್ರೀಯ ಸಂಗೀತದ ಆಲಾಪಗಳು, ರಷ್ಟು ಹಿಡಿದ ಅವರಿಬ್ಬರ ಬದುಕಿನಲ್ಲಿ ಒಂದು ಚೈತನ್ಯದ ಚಿಲುಮೆಯಾಗಿ ಹರಿದಿತ್ತು. +ತಂಗಿ ಪ್ರಯಾಣ ಮಾಡಿ ದುಡಿದು ಬಂದ ದಣಿವಿನಲ್ಲೂ, ಕಣ್ಣಿವೆಗಳು ಮುಚ್ಚುತ್ತಿದ್ದರೂ ಭಾನು ಪ್ರಕಾಶ ಹಾಡುವವರೆಗೆ ಹೇಗೋ ನಿದ್ರೆಯನ್ನು ತಡೆದುಕೊಳ್ಳುತ್ತಿದ್ದಳು. +ಭಾನುಪ್ರಕಾಶ ತುಂಬಾ ಮುದ್ದಾಗಿದ್ದ, ಮಕ್ಕಳಲ್ಲಿ ಇರಬೇಕಾಗಿದ್ದ ಸಹಜ ಅವನ ಮುಖದಲ್ಲಿ ಇತ್ತು. +ಅವನ ಅಮ್ಮ ಸುಂದರಿಯಾಗಿದ್ದಳು. +ಮಕ್ಕಳು ಹಾಡಿದಾಗಲೆಲ್ಲಾ ಆ ಸುಂದರ ತಾಯಂದಿರು ಸಂಭ್ರಮದಿಂದ ಕಣ್ಣೀರು ಹಾಕುತ್ತಿದ್ದರು. +ಆ ಕಾರ್ಯಕ್ರಮ ನೋಡುವಾಗಲೊಮ್ಮೆ ಕಾತ್ಯಾಯನಿ ತನಗೂ ಒಂದು ಅಂತಹ ಹಾಡುವ ಮಗುವಿದ್ದರೆ ಅಂತ ಕಳವಳಗೊಳ್ಳುತ್ತಿದ್ದಳು. +ತಮ್ಮನ ಹೆಂಡತಿ ಅಡುಗೆ ಮನೆಯಿಂದಲೇ ಒಂದು ಗಂಟೆ ಆಯ್ತು ಪ್ರತೀಕ ಆಟ ನಿಲ್ಲಿಸಿ ಒಳಗೆ ಬಾ ಅಂತ ಫರ್ಮಾನು ಹೊರಡಿಸಿದಳು. +ಮಕ್ಕಳು ತಮ್ಮ ಮಂಟಪ ಕಟ್ಟುವ ಆಟದಲ್ಲಿ ಎಷ್ಟೊಂದು ಮುಳುಗಿದ್ದರೆಂದರೆ ಅವರಿಗೆ ಆಂಟಿಯ ಮಾತುಗಳೇ ಕಿವಿಯೊಳಗೆ ಹೋಗಲಿಲ್ಲ. +ಏಕಾಂತನ ಆಲಾಪ ಹಾಗೆಯೇ ಮುಂದುವರಿದಿತ್ತು. +ತಂಗಿಯ ಮತ್ತು ತನ್ನ ಪ್ರೀತಿಯ ಆ ಸಣ್ಣ ಮಕ್ಕಳ ಕಾರ್ಯಕ್ರಮ ತಮ್ಮ ಗೂಡಲ್ಲಿ ತಾವಿಬ್ಬರೇ ಆ ಮಕ್ಕಳ ಮಧುರ ಗಾನದೊಳಗೆ ಒಂದಾಗಿ ಹಿತವಾದ ತಂಪಿನ ಬೆಳದಿಂಗಳು ಎದೆಯಲ್ಲಿ ಪಸರಿಸಿಕೊಂಡದ್ದು, ಕಣ್ಣು ಕಾಣದಿದ್ದರೂ ತಾನು ರಾತ್ರಿ ಹನ್ನೊಂದುವರೆಯವರೆಗೆ ಕಾರ್ಯಕ್ರಮದಲ್ಲಿ ಒಂದಾಗಿದ್ದುದು ಎಲ್ಲವೂ ಚಿತ್ರಪಟದಂತೆ ಆ ಮಧ್ಯಾಹ್ನ ಕೋಣೆಯಲ್ಲಿ ಮಲಗಿದ ಕಾತ್ಯಾಯನಿಯ ಕಪ್ಪು ಕನ್ನಡದೊಳಗೆ ಪ್ರತಿಫಲಿಸಿದವು. +ಯಾಕೋ ಹೊರಗೆ ಅಂಗಳದಲ್ಲಿ ಆಡುವ ಮಕ್ಕಳ ಆಟದಲ್ಲಿ ತಾನೂ ಹೋಗಿ ಕುಳಿತುಕೊಳ್ಳಬೇಕೆನಿಸಿತು. +ಹೊಳೆ ಹಳ್ಳ ತೊರೆಗಳಲಿ ಮೀಯುವ ಮೀನಿನಂತೆ ನೆಲ ಮುಗಿಲುಗಳ ಮಧ್ಯದ ಮೌನದಂತೆ, ಗುಡ್ಡ ಬೆಟ್ಟಗಳ ಪ್ರತಿಧ್ವನಿಯಂತೆ ಕಾಡು ಕಣಿವೆಯಲ್ಲಿ ಹೊಯ್ಯುವ ಮಳೆಯಂತೆ ಸಹಜ ಪ್ರೀತಿಯಲಿ ಮಕ್ಕಳ ಆಟ ಏಕಾಂತನ ಆಲಾಪ ಹನಿ ಹನಿಯಾಗಿ ಅವಳ ಎದೆಯ ಆಳಕ್ಕೆ ಇಳಿದವು. +ನೆಲದ ಮೌನದಲ್ಲಿ ಮಕ್ಕಳು ಮೆಲ್ಲಗೆ ಉರಿಯುವಂತೆ ಅವರ ಮಾತುಗಳು ಅವಳಿಗೆ ಅರೆಬರೆ ನಿದ್ರೆಯಲ್ಲಿ ಕೇಳಿಸಿತು. +ನಿನ್ನೆ ತಮ್ಮ ಸುಖಾಸುಮ್ಮನೆ ರೇಗಿದಾಗ ತಾನು ಒಡೆದು ಹೋದ ಕನ್ನಡಿ ಎಂದು ಕಾತ್ಯಾಯನಿ ಭಾವಿಸಿದ್ದಳು. + ಸಿಟ್ಟಿನಿಂದ ಉರಿಯುತ್ತಿದ್ದ ತಮ್ಮನ ಹೆಂಡತಿಯ ಮುಖದ ರೌದಾವತಾರ ಕಂಡು ಅವಳು ಒಳಗೊಳಗೇ ಕಂಪಿಸಿದ್ದಳು. +ಅವಳು ಜೋರಾಗಿ ಮಾತಿನ ಯುದ್ಧ ಶುರು ಮಾಡಿದಾಗ ತಾನು ಮೌನದ ಬುದ್ಧನೊಳಗೆ ಮುಖ ಮುಚ್ಚಿಕೊಂಡಿದ್ದಳು ಕಾತ್ಯಯನಿ. +ಅದು ಅವಳ ವೀಕನೆಸ್ ಇಲ್ಲಾ ಸ್ಟ್ರೇಂಗ್ತ್ ಅಂತ ಎಷ್ಟೋ ಸಲ ಅವಳಿಗೆ ತಿಳಿಯುತ್ತಿರಲಿಲ್ಲ. +ಯಾರು ಜೋರಾಗಿ ಮಾತನಾಡಿದರೂ ಅವಳಿಗೆ ಎದುರು ಉತ್ತರ ಕೊಡಲು ಬರುತ್ತಿರಲಿಲ್ಲ. +ತಮ್ಮನ ಹೆಂಡತಿ ತನಗೆ ಮದುವೆ ಆಗದಿದ್ದದ್ದು ಮಕ್ಕಳಾಗದಿದ್ದದ್ದು, ಅರೆಬರೆ ಫ್ಯಾಶನ್‌ನಲ್ಲಿ ಉಡುತ್ತಿದ್ದ ಬಟ್ಟೆಗಳ ಬಗ್ಗೆ, ಬದುಕಿನಲ್ಲಿ ಏನನ್ನೂ ಗಳಿಸದ ತನ್ನ ವೃತ್ತಿ ವೈಫಲ್ಯದ ಬಗ್ಗೆ ಮಾತನಾಡಿದಾಗ ಕಾತ್ಯಾಯನಿ ಹೈರಾಣ ಹೊಂದಿದಳು. +ಯಾಕಾದ್ರೂ ಕಣ್ ಆಪರೇಶನ್‌ಗೆ ತಮ್ಮನ ಮನೆಗೆ ಬಂದೆನೋ ಎಂದು ಸಾವಿರ ಬಾರಿ ಅವಲತ್ತುಕೊಂಡಳು. +ಆಪರೇಶನ್ ಆದ ದಿವಸದಿಂದ ಈ ಒಂದು ವಾರದಲ್ಲಿ ಈ ಮೂರು ಕೋಣೆಯೊಳಗೆ ಗಳಾಗಂಟಿ ಭಾರಿಸಿದ ಹಾಗೆ ಹೆಂಡತಿಯ ಮಾತುಗಳು ಅವಳನ್ನು ಹಣಿದವು. +ತಾನು ಲೆಕ್ಕ ಇಡಬೇಕಾದಲ್ಲಿ ಸರಿಯಾದ ಲೆಕ್ಕ ಇಡಲಿಲ್ಲ. +ತಾನು ಓದಿನ ಓಟದಲ್ಲಿ ಎರಡು ಹೊತ್ತು ಊಟ ಮಾಡುವುದನ್ನು ಹೇಗೆ ಮರೆತೆ ಹೆಚ್ಚು ಸಂತೋಷ ನೀಡುವ ಸಂಗತಿಯ ಮನಸ್ಸನ್ನು ತಟ್ಟಲೆ ಇಲ್ಲ. +ಬರೀ ಬೌದ್ಧಿಕ ತಾಕಲಾಟದಲ್ಲಿಯೇ ಹಣ್ಣಾದೆನಲ್ಲ ಎಂದೂ ನಿಧಾನವಾಗಿ ವ್ಯವಹಾರಿಕ ಬದುಕಿನ ಬಗ್ಗೆ ಚಿಂತಿಸಲೇ ಇಲ್ಲವಲ್ಲ. +ಕಾತ್ಯಾಯನಿಯ ಹೃದಯದ ತುಂಬ ದುಃಖದ ಮೊಳಕೆಗಳು ಎದ್ದವು. +ಹೊರಗೆ ಅಂಗಳದಲಿ ಮಕ್ಕಳ ಆಟ ಮರದಿನವೂ ಮುಂದುವರಿದಿತ್ತು. +ಏಕಾಂತದ ಮತ್ತೆ ಧ್ವನಿಯತ್ತಿ ಹಾಡುತ್ತಿದ್ದ ಅಮುಲ್ ಛೋಟೆ ಉಸ್ತಾದ, ಘಳಿನೀರಿನ ಕಂಪನಗಳ ಅಲೆಗಳೆದ್ದವು. +ಅಂಗಳದಲ್ಲಿ ಗೌರಿ ತನ್ನ ಮುರಿದ ಕೋಲಿನ ಬಗ್ಗೆ ಒಂದೆರಡು ಬಾರಿ ಅವಲತ್ತುಕೊಂಡಿತು. +ಸಿದ್ದು ಮಧ್ಯೆ ಮಧ್ಯೆ ಶೀಲಾ ಕಿ ಜವಾನಿ, ಶೀಲಾ ಕಿ ಜವಾನಿ ಅನ್ನುತ್ತಿದ್ದ. +ಆವಾಗಲೆಲ್ಲಾ ಏಕಾಂತ ಅದನ್ನು ನಾವು ಹಾಡಬಾರದು ಕಣೋ ಅಮುಲ್ ಛೋಟೆ ಉಸ್ತಾದ ಅಂತ ಹಾಡೋ ಅಂತ ಹೇಳಿದಾಗ ಪ್ರತೀಕ ನಮ್ಮಮ್ಮ ಸಿನೇಮಾ ಹಾಡಿದರೆ ಬಯ್ಯುತ್ತಾಳೋ ಅಂತ ಅಂದ. +ಕಾತ್ಯಾಯನಿಯ ಕಪ್ಪು ಕನ್ನಡಕದೊಳಗಿನ ಮಕ್ಕಳ ಮಂದ್ರಷಡ್ಜದ ಶೃತಿಯಲ್ಲಿ ಹೊಸದನ್ನು ಏನೋ ಹುಡುಕುತ್ತಿತ್ತು. +ಒಡಲೊಳಗಿನಿಂದ ನೀರಿನ ಊಟೆಗಳು ಎದ್ದ ಹಾಗೆ ಆಯಿತು. +ಮಕ್ಕಳ ಮೆರವಣಿಗೆ ಆಟ ಆ ದಿನವೂ ಮುಂದುವರಿದಿತ್ತು. +ಕಣ್ಣು ಮುಚ್ಚಿದ ಕಾತ್ಯಾಯನಿಗೆ ತಮ್ಮನ ಹೆಂಡತಿ ಊಟ ಮಾಡಲು ಕರೆದಳು. +ಕಾತ್ಯಾಯನಿಗೆ ಮಕ್ಕಳ ಆಟದಲ್ಲಿ ಇನ್ನಷ್ಟು ಮುಳುಗಬೇಕೆನಿಸಿತು. +ತನ್ನ ಅಕ್ಕನ ಭೀಕರಗೊಂಡ ಕ್ಯಾನ್ಸರಿನ ನರಳಾಟ ಬೇಡ ಬೇಡವೆಂದರೂ ಕಣ್ಣಲ್ಲಿ ನೀರು ತುಂಬಿಸಿಕೊಳ್ಳುತ್ತಿತ್ತು. +ಜಗಳದ ಮಧ್ಯೆ ತಮ್ಮನ ಹೆಂಡತಿ, ಆ ಹೆಂಗಸಿನ ಬುದ್ಧಿಗೆ ತಕ್ಕಂತೆ ಅವಳಿಗೆ ಆ ಖಾಯಿಲೆ ಬಂದೆ ಅಂತ ಅಕ್ರಮಣ ಮಾಡಿದ್ದಳು. +ಆ ಮಾತು ಕೇಳಿದ ಮೇಲಂತೂ ಕಾತ್ಯಾಯನಿಗೆ ಆ ಮನೆಯಲ್ಲಿ ಹನಿ ನೀರು ಕೂಡಾ ಕುಡಿಯಬಾರದೆಂದು ಅನಿಸಿತ್ತು. +ಆದರೆ ಬಾತ ಕಣ್ಣುಗಳನ್ನು ಹೊತ್ತುಕೊಂಡು ಊರಿಗೆ ಹೋಗುವುದಾದರೂ ಹೇಗೆ? +ಕಾತ್ಯಾಯನಿ ತುಂಬ ನರಳಿದಳು, ಅತ್ತಳು. +ಕಣ್ಣುಗಳು ಹಾಳಾಗಿ ಹೋಗಲಿ ಎಂಬಂತೆ ರೋಧಿಸಿದಳು. +ಆ ಮಧ್ಯಾನ್ಹ ಅವಳು ಊಟದ ಶಾಸ್ತ್ರ ಮಾತ್ರ ಮಾಡಿದಳು. +ತಮ್ಮನ ಹೆಂಡತಿ ಬಿಟ್ಟ ನಂಜಿನ ಬಾಣ ನೇರವಾಗಿ ಎದೆಗೇ ನೆಟ್ಟು ವಾಸ್ತವದ ವಿಷಾಧದ ಕರಿನೆರಳು ಕಣ್ಣುಗಳನ್ನು ಪೂರ್ತಿ ಕತ್ತಲಾಗಿಸಿದವು. +ಮತ್ತೆ ಆ ಸಂಜೆಯ ಆಟದಲ್ಲೂ ಏಕಾಂತದ ಆಲಾಪ ಹಾಗೇ ಮುಂದುವರಿದಿತ್ತು. +ಟಿ.ವಿ.ಯಲ್ಲಿ ಮಕ್ಕಳು ರಾಗವಾಗಿ ಹಾಡಿದಂತೆ ತಾನು ತನ್ನ ತಂಗಿ ಆ ಆಲಾಪದಲ್ಲಿ ಮುಳುಗಿದಂತೆ ಮತ್ತೆ ತಮ್ಮ ಆ ತಣ್ಣಗಿನ ಲೋಕದಲ್ಲಿ ಬರೀ ಮಕ್ಕಳು ಹಾಡಿದಂತೆ ಆಟವಾಡಿದಂತೆ ಕಾತ್ಯಾಯನಿಗೆ ಅನಿಸತೊಡಗಿತು. +ಅವಳು ನಿಧಾನವಾಗಿ ಏಕಾಂತನ ಆಲಾಪದ ಹಾದಿಯಲ್ಲಿ ಮಕ್ಕಳ ರಾಗಗಳನ್ನು ನಿಧಾನವಾಗಿ ಕುದಿವ ತನ್ನೆದೆಗೆ ಇಳಿಸತೊಡಗಿದಳು. +ಎಲ್ಲೆಲ್ಲೂ ತಂಪು ಹಾಯಿಸಿಕೊಂಡಳು. +ಏಕಾಂತನ ಆಲಾಪದ ಕಿರಣಗಳು ಬೆಳಕಿನ ಕಿರಣಗಳು ಅವಳ ಕಪ್ಪು ಕನ್ನಡಕದೊಳಗೆ ಹಾಯ್ದು ಅವಳ ಮುಂದಿನ ದಾರಿತುಂಬ ಬೆಳಕೇ ಬೆಳಕು ತುಂಬಿಕೊಂಡಹಾಗಾಯಿತು. +ಅವಳು ಮಲಗಿದಲ್ಲಿಯೇ ಏಕಾಂತವನನ್ನು ತಬ್ಬಿದಳು.