diff --git "a/Data Collected/Kannada/MIT Manipal/\340\262\260\340\262\276\340\262\267\340\263\215\340\262\237\340\263\215\340\262\260\340\263\200\340\262\257_\340\262\266\340\262\277\340\262\225\340\263\215\340\262\267\340\262\243_\340\262\256\340\262\244\340\263\215\340\262\244\340\263\201_\340\262\270\340\262\260\340\263\215\340\262\265\340\263\213\340\262\246\340\262\257.txt" "b/Data Collected/Kannada/MIT Manipal/\340\262\260\340\262\276\340\262\267\340\263\215\340\262\237\340\263\215\340\262\260\340\263\200\340\262\257_\340\262\266\340\262\277\340\262\225\340\263\215\340\262\267\340\262\243_\340\262\256\340\262\244\340\263\215\340\262\244\340\263\201_\340\262\270\340\262\260\340\263\215\340\262\265\340\263\213\340\262\246\340\262\257.txt" new file mode 100644 index 0000000000000000000000000000000000000000..014047e4b8a20591f18cb6d8ecf5f1af5cc943d2 --- /dev/null +++ "b/Data Collected/Kannada/MIT Manipal/\340\262\260\340\262\276\340\262\267\340\263\215\340\262\237\340\263\215\340\262\260\340\263\200\340\262\257_\340\262\266\340\262\277\340\262\225\340\263\215\340\262\267\340\262\243_\340\262\256\340\262\244\340\263\215\340\262\244\340\263\201_\340\262\270\340\262\260\340\263\215\340\262\265\340\263\213\340\262\246\340\262\257.txt" @@ -0,0 +1,156 @@ +ಒಂದೂ ಕಾಲು ಶತಮಾನಕ್ಕೂ ಹೆಚ್ಚು ಕಾಲ ಪಾಶ್ಚಾತ್ಯ ಶಿಕ್ಷಣಪದ್ಧತಿ ಭಾರತದ ಆದ್ಯಂತವೂ ಅಸ್ತಿತ್ವದಲ್ಲಿದ್ದರೂ ಅದು ಇಲ್ಲಿನವರ ಅಗತ್ಯಗಳನ್ನು ಪುರೈಸಿರಲಿಲ್ಲ ; +ಆಶೋತ್ತರಗಳನ್ನು ಈಡೇರಿಸಿರಲಿಲ್ಲ . +ಉನ್ನತ ಶಿಕ್ಷಣದಲ್ಲಿ ಇಂಗ್ಲಿಷ್ ಬೋಧನಮಾಧ್ಯಮವಾದ್ದರ ಫಲವಾಗಿ ಜನಸಾಮಾನ್ಯಕ್ಕೂ ಶಿಕ್ಷಣಪಡೆದವರಿಗೂ ಅಂತರ ಏರ್ಪಟ್ಟು ಜ್ಞಾನದ ಸಾರ್ವತ್ರಿಕ ಪ್ರಸಾರಕ್ಕೆ ಅವಕಾಶವಿಲ್ಲವಾಗಿತ್ತು . +ಅನ್ಯಭಾಷೆಯಾದ ಇಂಗ್ಲಿಷಿಗೆ ಕೊಟ್ಟಿದ್ದ ಅನುಚಿತ ಪ್ರಾಧಾನ್ಯದ ಫಲವಾಗಿ , ಅದು ವಿದ್ಯಾವಂತರ ಮೇಲೆ ಒಂದು ಹೊರೆಯಾಗಿ ಪರಿಣಮಿಸಿ ಅವರ ಮನಶ್ಶಕ್ತಿಯನ್ನು ಕುಂದಿಸಿ ತಮ್ಮ ನಾಡಿನಲ್ಲೆ ಅವರು ಅಪರಿಚಿತರಂತಾಗುವಂತೆ ಮಾಡಿತ್ತು . +ವೃತ್ತಿಶಿಕ್ಷಣಕ್ಕೆ ಅಷ್ಟಾಗಿ ಅವಕಾಶವಿಲ್ಲದಿದ್ದ ಆ ಪದ್ಧತಿ ವಿದ್ಯಾವಂತರನ್ನು ಉನ್ನತಕಾರ್ಯಗಳಿಗೆ ಯೋಗ್ಯರಲ್ಲದವರನ್ನಾಗಿ ಮಾಡಿ ಅವರ ದೈಹಿಕ ಶಕ್ತಿಯನ್ನು ಕುಂದಿಸುತ್ತಿತ್ತು . +ಪ್ರಾಥಮಿಕ ಶಿಕ್ಷಣದಿಂದ ಕಲಿತ ಅಷ್ಟಿಷ್ಟೂ ಮರೆತುಹೋಗಿ , ಅದರ ನಗರ ಅಥವಾ ಗ್ರಾಮಜೀವನದಲ್ಲಿ ಅನುಪಯುಕ್ತವೆನಿಸುತ್ತಿತ್ತು . +ಆ ಮಟ್ಟಿಗೆ ಅದರ ಮೇಲೆ ಹೂಡಿದ ಹಣ ವ್ಯರ್ಥ ವ್ಯಯವಾಗುತ್ತಿತ್ತು . +ಅಲ್ಲದೆ ಆ ಪದ್ಧತಿಯಿಂದ ತೆರಿಗೆ ತೆರುವವನಿಗಾಗಲಿ ಅವನ ಮಕ್ಕಳಿಗಾಗಲಿ ಅನುಕೂಲ ಆಗುತ್ತಿರಲಿಲ್ಲ . +ಎಲ್ಲೊ ಕೆಲವರಿಗೆ ಸರ್ಕಾರದ ಉದ್ಯೋಗ ದೊರಕುತ್ತಿತ್ತೇ ಹೊರತು ಬಹುತೇಕ ಜನತೆ ನಿರುದ್ಯೋಗ , ಅಜ್ಞಾನ , ದಾರಿದ್ರ್ಯ ಇವುಗಳಲ್ಲಿ ತೊಳಲುವಂತೆ ಮಾಡಿತ್ತಲ್ಲದೆ ಅಸಮಾನತೆ , ಅನುಚಿತಸ್ಪರ್ಧೆ , ಅಸೂಯೆ , ಹಿಂಸೆ ಇವುಗಳಿಗೆ ಪ್ರೋತ್ಸಾಹವೀಯುವಂತೆ ಮಾಡಿತ್ತು . +ಆದರೆ ಗಾಂಧೀಜಿಯವರ ಕಲ್ಪನೆಯ ಸರ್ವೋದಯ ಸಮಾಜರಚನೆಗೆ ಸಮಾನತೆ , ಸಹಕಾರ , ಪ್ರೇಮ , ಅಹಿಂಸೆ ಈ ಅಂಶಗಳು ಆಧಾರವಾಗಬೇಕಿತ್ತು . +ಅದಕ್ಕೆ ಜನತೆಯಲ್ಲಿ ಜ್ಞಾನ , ಉದ್ಯೋಗ , ಪ್ರಸಾರ , ದಾರಿದ್ರ್ಯ ನಿವಾರಣೆ ಇವು ಅಗತ್ಯವಾಗಿ ಆಗಬೇಕಾಗಿತ್ತು . +ಅದಕ್ಕೆ ಶಿಕ್ಷಣ ಸೂಕ್ತ ರೀತಿಯಲ್ಲಿ ಮಾರ್ಪಾಡಾಗಬೇಕಾಗಿತ್ತು . +ಏಕೆಂದರೆ ಸಮಾಜ ಪರಿವರ್ತನೆಗೆ ಅದು ಉಪಕರಣವೆಂಬುದನ್ನು ಅವರು ಗ್ರಹಿಸಿದ್ದರು . +ಅಂಥ ಶಿಕ್ಷಣಪದ್ಧತಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಏಳು ವರ್ಷಗಳ ಕಾಲಾವಧಿಗಾದರೂ ಹೆಚ್ಚಿಸಿ , ಅದರಿಂದ ಮೆಟ್ರಿಕ್ಯುಲೇಷನ್ ಹಂತದಲ್ಲಿ ದೊರೆಯುವಷ್ಟು ಸಾಮಾನ್ಯ ಜ್ಞಾನವೂ ( ಇಂಗ್ಲಿಷನ್ನುಳಿದು ) ವೃತ್ತಿಯೊಂದರಲ್ಲಿ ಶಿಕ್ಷಣವೂ ದೊರಕುವಂತೆ ಅವಕಾಶಕಲ್ಪನೆಯಾಗಬೇಕೆಂದು ತೀರ್ಮಾನಿಸಿಕೊಂಡರು . +ಈ ಬದಲಾವಣೆಗಳನ್ನು ಅಂದು ಇದ್ದ ಶಿಕ್ಷಣ ಪದ್ಧತಿಗೆ ತೇಪೆಹಾಕಿ ನೇರಮಾಡುವುದು ಅಸಾಧ್ಯವೆಂದುಕೊಂಡು ಪ್ರತ್ಯೇಕ ಶಿಕ್ಷಣಪದ್ಧತಿಯೊಂದರ ಅನುಷ್ಠಾನಕ್ಕೆ ಯತ್ನಿಸಿದರು . +ರಾಷ್ಟ್ರದ ಅಂದಿನ ತೀವ್ರ ಸಮಸ್ಯೆಗಳನ್ನೂ ನಿವಾರಿಸಿ ತಮ್ಮ ಕನಸಿನ ಸರ್ವೋದಯ ಸಮಾಜವನ್ನು ರಚಿಸಬಲ್ಲ ಆ ಪದ್ಧತಿಯಲ್ಲಿ ಗ್ರಾಮೋದ್ಯೋಗಗಳಿಗೆ ಪ್ರಾಧಾನ್ಯವಿರಬೇಕೆಂದು ಭಾವಿಸಿದರು . +ಏಕೆಂದರೆ , ಇಲ್ಲಿನ ಶೇ.80 ರಷ್ಟು ಜನತೆ ಗ್ರಾಮವಾಸಿ ಗಳಾಗಿದ್ದರು . +ರಾಷ್ಟ್ರದ ಪ್ರಧಾನ ಸಮಸ್ಯೆಗಳನ್ನೂ ಪರಿಹರಿಸಿ ಸಮಾಜದಲ್ಲಿ ಪರಿವರ್ತನೆ ಮಾಡಬಲ್ಲ ಆ ಶಿಕ್ಷಣವನ್ನು ಅವರು ‘ ಗ್ರಾಮೀಣ ರಾಷ್ಟ್ರೀಯ ಶಿಕ್ಷಣ ’ ಎಂದು ಕರೆದರು . +ಸಮಕಾಲೀನ ಶಿಕ್ಷಣವೇತ್ತರು ರಾಷ್ಟ್ರೀಯ ಶಿಕ್ಷಣ ಎಂಬುದಕ್ಕೆ ಬೇರೆ ಬೇರೆ ಅರ್ಥ ವ್ಯಾಪ್ತಿಯನ್ನು ಕಲ್ಪಿಸಿದ್ದರು . +ಗಾಂಧಿಜಿಯವರ ಮೇಲಿನ ಅರ್ಥಕಲ್ಪನೆ ಅದೆಲ್ಲಕ್ಕಿಂತ ಭಿನ್ನವಾಗಿದೆ . +ಅವರ ಮಾತಿನಲ್ಲೆ ಹೇಳುವುದಾದರೆ ‘ ಇದು ಗ್ರಾಮೀಣ . +ಏಕೆಂದರೆ ಉನ್ನತ ಅಥವಾ ಇಂಗ್ಲಿಷ್ ಶಿಕ್ಷಣವನ್ನು ತ್ಯಜಿಸಿರುತ್ತದೆ ; ರಾಷ್ಟ್ರೀಯ . +ಏಕೆಂದರೆ ಸತ್ಯ , ಅಹಿಂಸೆ , ಗ್ರಾಮೋದ್ಯೋಗಗಳ ಮೂಲಕ ( ಎಂದರೆ ಅದನ್ನು ಕಲಿಸುವ ಅಧ್ಯಾಪಕರು ಮಕ್ಕಳಿಗೆ ತಾವು ಆರಿಸಿಕೊಂಡ ಕಸಬಿನ ಮೂಲಕ ) ಯಾವ ನಿರ್ಬಂಧ ಹಸ್ತಕ್ಷೇಪಗಳೂ ಇಲ್ಲದೆ ಅವರ ಸರ್ವಸಾಮರ್ಥ್ಯಗಳೂ ವಿಕಸಿಸುವಂತೆ ಮಾಡುವರು , ಇದು ಯಾವ ದೃಷ್ಟಿಯಲ್ಲೂ ಪಾಶ್ಚಾತ್ಯ ವಿಧಾನದಿಂದ ಪ್ರಭಾವಿತವಾದುದಲ್ಲವೆಂಬುದು ಇದರಿಂದ ಸ್ಪಷ್ಟಪಡುತ್ತದೆ . +ವ್ಯಕ್ತಿಯ ಸರ್ವತೋಮುಖವಾದ ಬೆಳೆವಣಿಗೆಯಾಗಲು ಸಾಧ್ಯವಾದಮಟ್ಟಿಗೆ ಎಲ್ಲ ಶಿಕ್ಷಣವನ್ನೂ ಒಂದು ಲಾಭದಾಯಕ ಕಸಬಿನ ಮೂಲಕ ಒದಗಿಸಬಹುದೆಂದು ಗಾಂಧೀಜಿ ತಮ್ಮ ಪ್ರಯೋಗಗಳಿಂದ ಸ್ಪಷ್ಟವಾಗಿ ಅರಿತು ಕೊಂಡಿದ್ದರು . +ಶಿಕ್ಷಣದ ಕೇಂದ್ರವನ್ನಾಗಿ ಮಾಡಿಕೊಳ್ಳಲು ಆರಿಸಿಕೊಳ್ಳುವ ಕಸಬು ವಿದ್ಯಾರ್ಥಿಯ ದೃಷ್ಟಿಯಲ್ಲಿ ಮೂರು ಉದ್ದೇಶಗಳನ್ನು ಸಾಧಿಸಬೇಕು : +ಮೊದಲನೆಯದಾಗಿ , ತನ್ನ ಶಿಕ್ಷಣದ ವೆಚ್ಚವನ್ನು ತನ್ನ ದುಡಿಮೆಯ ಫಲವಾದ ಉತ್ಪನ್ನದಿಂದ ಗಳಿಸಿಕೊಳ್ಳುವಂತಾಗಬೇಕು ; +ಎರಡನೆಯದಾಗಿ , ತನ್ನ ವ್ಯಕ್ತಿತ್ವದ ಎಲ್ಲ ಮುಖಗಳನ್ನು ಬೆಳೆಸಲು ಅದು ನೆರವಾಗಬೇಕು ; +ಮೂರನೆಯದಾಗಿ , ಮುಂದೆ ಅದು ತನ್ನ ಜೀವನೋಪಾಯಕ್ಕಾಗಿ ಅನುಸರಿಸಬಹುದಾದ ಉದ್ಯೋಗವೂ ಆಗಬೇಕು . +ಹತ್ತಿ , ಉಣ್ಣೆ , ರೇಷ್ಮೆ - ಇವುಗಳ ಬಳಕೆಗೆ ಸಂಬಂಧಿಸಿದಂತೆ ಸಂಗ್ರಹ , ಶುದ್ಧೀಕರಣ , ಬೀಜ ತೆಗೆಯುವುದು (ಹತ್ತಿಯ ವಿಷಯದಲ್ಲಿ ಮಾತ್ರ ) , ಎಕ್ಕುವುದು , ನೂಲುವುದು , ಬಣ್ಣಕಟ್ಟುವುದು , ಗಂಜಿಕಟ್ಟುವುದು , ಹಾಸುಮಾಡುವುದು , ಇಮ್ಮಡಿ ನುಲಿಕೆ , ಮಾದರಿ ರಚನೆ , ಮತ್ತು ನೇಯ್ಗೆ - ಇತ್ಯಾದಿಯಾದ ಎಲ್ಲ ಕೆಲಸಗಳೂ ಕಸೂತಿ , ಹೊಲಿಗೆ , ಕಾಗದ ತಯಾರಿಕೆ , ಪುಸ್ತಕಕ್ಕೆ ರಟ್ಟು ಕಟ್ಟುವುದು , ಮರಗೆಲಸ , ಆಟಿಕೆಗಳ ತಯಾರಿಕೆ , ಮನೆಕಟ್ಟುವುದು - ಇವೆಲ್ಲ ಸರಾಗವಾಗಿ ಕಲಿಯಬಹುದಾದ ಹಾಗೂ ಅಷ್ಟಾಗಿ ಬಂಡವಾಳ ಬೇಡದ ಕಸಬುಗಳು . +ಪ್ರಾಥಮಿಕ ಕಲಿಕೆ ಬಾಲಕಬಾಲಕಿಯರಿಗೆ ಜೀವನೋಪಾಯಕ್ಕೆ ನೆರವಾಗಬಲ್ಲ ಶಿಕ್ಷಣ ಒದಗಿಸಬೇಕು . +ಅವರು ಕಲಿತಿರುವ ಕಸಬಿಗೆ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಸರ್ಕಾರ ಆಶ್ವಾಸನೆ ನೀಡಬೇಕು . +ಅಥವಾ ಅವರು ತಯಾರಿಸುವ ಉತ್ಪನ್ನಗಳನ್ನು ಸೂಕ್ತ ಬೆಲೆಗೆ ಕೊಂಡುಕೊಳ್ಳಬೇಕು . +ಆಗ ಶಿಕ್ಷಣ ವ್ಯಕ್ತಿಗೂ ಸಮಾಜಕ್ಕೂ ಅನುಕೂಲವಾಗುವುದಲ್ಲದೆ ಆರ್ಥಿಕವಾಗಿ ಸ್ವಾವಲಂಬಿಯೂ ಆಗಿರಬಲ್ಲದು . +ಇವು ಗಾಂಧೀಜಿಯವರ ಮನಸ್ಸಿನಲ್ಲಿ 20ನ ೆಯ ಶತಮಾನದ ಆದಿಯಿಂದಲೂ ಶಿಕ್ಷಣದ ಬಗ್ಗೆ ಪುಟಗೊಳ್ಳುತ್ತಿದ್ದ ಭಾವನೆಗಳು . +1902 ರಲ್ಲೆ ಟಾಲ್ಸ್ಟಾಯ್ ಫಾರಮ್ಮಿನಲ್ಲಿ ಅಂಥ ಶಿಕ್ಷಣ ಸ್ವಾವಲಂಬಿಯಾಗಬಲ್ಲದೆಂದು ದೃಢಪಡಿಸಿಕೊಂಡಿದ್ದರೂ ಆ ಬಗ್ಗೆ ನಿರ್ದಿಷ್ಟವಾಗಿ ಪ್ರಕಟಿಸಿದ್ದು 1921 ರಲ್ಲಿ . +ಹರಿಜನ ಪತ್ರಿಕೆಯಲ್ಲಿ ಮೊಟ್ಟಮೊದಲನೆಯದಾಗಿ ತಮ್ಮ ಶಿಕ್ಷಣದ ಸ್ಥೂಲ ರೂಪರೇಷೆಗಳನ್ನು ವಿವರಿಸಿದರು . +ಆದರೆ ಅದನ್ನು ಸಾರ್ವತ್ರಿಕವಾಗಿ ಆಚರಣೆಗೆ ತರಲು ಅಂದು ದೇಶದಲ್ಲಿ ಪರಕೀಯ ಆಡಳಿತ ಅಸ್ತಿತ್ವದಲ್ಲಿದ್ದುದರಿಂದ ಅವಕಾಶವಾಗಲಿಲ್ಲ . +ಮೇಲಾಗಿ ಅವರು ಇಂಗ್ಲಿಷರ ಆಡಳಿತದ ವಿರುದ್ಧ ಚಳವಳಿ ಹೂಡಿ ಸ್ವಾತಂತ್ರ್ಯ ಸಂಗ್ರಾಮ ನಡೆಸುತ್ತಿದ್ದುದರಿಂದ ಸರ್ಕಾರ ಅವರ ಪದ್ಧತಿಗೆ ಪುರಸ್ಕಾರ ನೀಡುವುದಾದರೂ ಸಾಧ್ಯವೇ ? +ಆದರೂ ಅವರು ವರ್ಧಾದಲ್ಲಿ ಅದನ್ನು ಪ್ರಾಯೋಗಿಕವಾಗಿ ಆಚರಣೆಗೆ ತಂದೇ ಇದ್ದರು . +ತಮ್ಮ ನೆಚ್ಚಿನ ಆ ಶಿಕ್ಷಣಪದ್ಧತಿಯನ್ನು ದೇಶಾದ್ಯಂತ ಆಚರಣೆಗೆ ತರಲು ಸೂಕ್ತ ಸನ್ನಿವೇಶಗಳಿಗಾಗಿ ಕಾದಿದ್ದರು . +1937 ರಲ್ಲಿ ಪ್ರಾಂತೀಯ ಸ್ವಾತಂತ್ರ್ಯ ಆಚರಣೆಗೆ ಬಂತು . +ಪ್ರಾಂತ್ಯಗಳಲ್ಲಿ ಜನನಾಯಕರು ಶಿಕ್ಷಣ ಸಚಿವರಾಗಿ ಜನತೆಯ ಆಶೋತ್ತರಗಳನ್ನು ಈಡೇರಿಸುವಂತೆ ಶಿಕ್ಷಣ ವ್ಯವಸ್ಥೆ ಮಾಡಲು ಸಿದ್ಧರಾದರು . +ಅಂದಿಗಾಗಲೆ ಕಡ್ಡಾಯ ಶಿಕ್ಷಣವನ್ನು ದೇಶಾದ್ಯಂತ ಆಚರಣೆಗೆ ತರಬೇಕೆಂಬ ಕೂಗು ಎಲ್ಲೆಲ್ಲೂ ಆರಂಭವಾಗಿತ್ತು . +ಹಣದ ಅಭಾವದ ಕಾರಣವನ್ನು ಮುಂದೊಡ್ಡಿ ಸರ್ಕಾರ ಅದನ್ನು ನಿರ್ಲಕ್ಷಿಸುತ್ತ ಬಂದಿತ್ತು . +ಈಗ ಜನನಾಯಕರು ಆಡಳಿತಕ್ಕೆ ಬಂದಿದ್ದುದರಿಂದ ಅವರು ಅದನ್ನು ಇನ್ನೂ ಮುಂದೂಡುವುದು ಅಸಾಧ್ಯವಾಯಿತು . +ಆದರೆ ಅದಕ್ಕೆ ಬೇಕಾದ ಹಣಕ್ಕೆ ಮಾತ್ರ ಅಭಾವವಿತ್ತು . +ಜೊತೆಗೆ ಕಾಂಗ್ರೆಸ್ ಸರ್ಕಾರಗಳು ಪಾನನಿರೋಧವನ್ನು ಆಚರಣೆಗೆ ತರಲು ತೀರ್ಮಾನಿಸಿದ್ದರಿಂದ ಅದರಿಂದ ಬರುತ್ತಿದ್ದ ಆದಾಯವೂ ನಿಂತುಹೋಗಿತ್ತು . +ಆದ್ದರಿಂದ ಸರ್ಕಾರ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿತ್ತು . +ಆ ಸಮಯದಲ್ಲಿ ಗಾಂಧೀಜಿ ಅಷ್ಟಾಗಿ ಹಣದ ವೆಚ್ಚವಿಲ್ಲದೆ ರಾಷ್ಟ್ರವ್ಯಾಪಕವಾಗಿ ಆಚರಣೆಗೆ ತರಬಹುದಾದ ತಮ್ಮ ಪ್ರಾಥಮಿಕ ಶಿಕ್ಷಣ ಯೋಜನೆಯನ್ನು ಜನತೆಯ ಮುಂದಿಟ್ಟರು . +ಅಂದಿಗಾಗಲೇ ಅವರ ಶಿಕ್ಷಣ ಪದ್ಧತಿಗೆ ತಕ್ಕಷ್ಟು ಪ್ರಚಾರ ದೊರೆತಿದ್ದು , ಬೇಕಾದ ಹಾಗೆ ಖಂಡನೆ ಮಂಡನೆಗಳು ಪ್ರಕಟವಾಗಿದ್ದುವು ಹಾಗೂ ಆ ಶಿಕ್ಷಣ ಪದ್ಧತಿಯ ಸ್ವಾವಲಂಬನೆಯ ಬಗ್ಗೆ ತೀವ್ರತರ ಟೀಕೆಗಳು ಬಂದಿದ್ದುವು . +ಆದ್ದರಿಂದ ಅದನ್ನು ಆಚರಣೆಗೆ ತರುವ ಮುನ್ನ ತಜ್ಞರು ಅದನ್ನು ಪರಿಶೀಲಿಸಬೇಕೆಂದು ಅವರ ಅಭಿಪ್ರಾಯವಾಗಿತ್ತು . +1937 ರ ಅಕ್ಟೋಬರ್ 23 ರಂದು ವರ್ಧಾದಲ್ಲಿ ರಾಷ್ಟ್ರೀಯ ಶಿಕ್ಷಣ ಸಮ್ಮೇಳನ ನಡೆಯಿತು . +ಗಾಂಧೀಜಿ ಹರಿಜನ ಪತ್ರಿಕೆಯ ಮೂಲಕ ಪ್ರಕಟಿಸಿದ್ದ ಶಿಕ್ಷಣ ಪದ್ಧತಿಯ ಬಗ್ಗೆ ಟೀಕೆಗಳು ಬರಹತ್ತಿದ್ದುವು . +ಆ ಪದ್ಧತಿಯನ್ನು ಸಮ್ಮೇಳನ ಚೆನ್ನಾಗಿ ಪರಿಶೀಲಿಸಿತು . +ಸಮ್ಮೇಳನದಲ್ಲಿ ಅಂದು ಕಾಂಗ್ರೆಸ್ ಅಧಿಕಾರದಲ್ಲಿದ್ದ ಏಳು ಪ್ರಾಂತ್ಯಗಳ ಶಿಕ್ಷಣ ಸಚಿವರೂ ರಾಷ್ಟ್ರೀಯ ಶಿಕ್ಷಣದಲ್ಲಿ ಆಸಕ್ತಿಯಿದ್ದ ಶಿಕ್ಷಣ ತಜ್ಞರೂ ಇತರರೂ ಇದ್ದರು . +ಗಾಂಧೀಜಿಯ ಶಿಕ್ಷಣಯೋಜನೆಯ ಮೇಲೆ ತೀವ್ರರೀತಿಯಲ್ಲಿ ಚರ್ಚೆ ನಡೆಯಿತು . +ಕಡೆಗೆ ಸಮ್ಮೇಳನ ಈ ಕೆಲವು ತೀರ್ಮಾನಗಳನ್ನು ಕೈಕೊಂಡಿತು : 1 ರಾಷ್ಟ್ರವ್ಯಾಪಕವಾಗಿ ಏಳು ವರ್ಷಗಳ ಉಚಿತ ಕಡ್ಡಾಯ ಶಿಕ್ಷಣವನ್ನು ದೊರಕಿಸಬೇಕು ; + 2 ಬೋಧನಮಾಧ್ಯಮ ಮಾತೃಭಾಷೆಯಾಗಿರಬೇಕು ; + 3 ಈ ಕಾಲಾವಧಿಯ ಶಿಕ್ಷಣ ಗಾಂಧೀಜಿ ಸಲಹೆ ಮಾಡಿರುವಂತೆ , ಒಂದು ಉತ್ಪನ್ನದಾಯಕ ಕೈಕಸಬನ್ನು ಕೇಂದ್ರಮಾಡಿಕೊಂಡಿರಬೇಕು . +ಮಕ್ಕಳಲ್ಲಿ ಮೂಡಿಸಬೇಕಾದ ಮಿಕ್ಕೆಲ್ಲ ಸಾಮಥ್ರ್ಯ ಗಳೂ ಕೊಡಬೇಕಾದ ತರಬೇತೂ ಸಾಧ್ಯವಾದ ಮಟ್ಟಿಗೆ ಮಗುವಿನ ಸನ್ನಿವೇಶದಿಂದ ಆರಿಸಿಕೊಂಡ ಆ ಕೈಕಸಬಿನೊಡನೆ ಸಂಬಂಧಿಸಿರಬೇಕು ; +4 ಈ ಶಿಕ್ಷಣ ಪದ್ಧತಿ ಕ್ರಮಕ್ರಮವಾಗಿ ಅಧ್ಯಾಪಕರ ಸಂಭಾವನೆಯ ಬಗ್ಗೆ ಸ್ವಯಂಪೂರ್ಣವಾಗಬೇಕು ಎಂದು ಸಮ್ಮೇಳನ ಆಶಿಸುವುದು . +ಈ ತೀರ್ಮಾನಗಳನ್ನು ಆಧಾರ ಮಾಡಿಕೊಂಡು ಗಾಂಧೀಜಿ ಶಿಕ್ಷಣ ಯೋಜನೆಗೆ ಒಂದು ಶಾಸ್ತ್ರೀಯ ಚೌಕಟ್ಟನ್ನು ಕೊಡಬೇಕಾಗಿತ್ತು . +ಅದಕ್ಕಾಗಿ ಸಮ್ಮೇಳನ ಜಾಕೀರ್ ಹುಸೇನ್ರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಿತು . +ಸಮಿತಿ ಎರಡು ತಿಂಗಳೊಳಗಾಗಿ ಈ ಕಾರ್ಯವನ್ನು ಪುರೈಸಿ ವರ್ಧಾ ಶಿಕ್ಷಣ ಯೋಜನೆ ಎಂಬ ಹೆಸರಿನ ವರದಿಯನ್ನು ಸಲ್ಲಿಸಿತು . +ಭಾರತೀಯ ಶಿಕ್ಷಣದ ಇತಿಹಾಸದಲ್ಲಿ ಇದೊಂದು ಪ್ರಧಾನ ದಾಖಲೆ . +ಆನಂತರ 1938 ರಲ್ಲಿ ಹರಿಪುರದಲ್ಲಿ ಸಮಾವೇಶಗೊಂಡಿದ್ದ ಕಾಂಗ್ರೆಸ್ ಅಧಿವೇಶನ ಅದಕ್ಕೆ ತನ್ನ ಒಪ್ಪಿಗೆ ನೀಡಿತು . +ಕಾಂಗ್ರೆಸ್ ಅಧಿಕಾರದಲ್ಲಿದ್ದ ಏಳು ಪ್ರಾಂತ್ಯಗಳಲ್ಲೂ ಯೋಜನೆ ಮೂಲಶಿಕ್ಷಣ (ಬೇಸಿಕ್ ಎಜುಕೇಷನ್ ) ಎಂಬ ಹೆಸರಿನಲ್ಲಿ ಅನುಷ್ಠಾನಕ್ಕೆ ಬಂತು . +ಮೂಲಶಿಕ್ಷಣವನ್ನು ರೂಪಿಸಿದ ಗಾಂಧೀಜಿ ಮೂಲತಃ ಶಿಕ್ಷಣವೇತ್ತರಲ್ಲ . +ಅವರು ಅದನ್ನು ಶಿಕ್ಷಣಶಾಸ್ತ್ರದ ಬೆಳಕಿನಲ್ಲಿ ರೂಪಿಸುವ ಯತ್ನವನ್ನೂ ಮಾಡಿದವರಲ್ಲ . +ಆದರೂ ಅವರ ಯೋಜನೆಯಲ್ಲಿ ಶಿಕ್ಷಣಶಾಸ್ತ್ರ ಎತ್ತಿಹಿಡಿಯುವ ಹಲವು ಸಲ್ಲಕ್ಷಣಗಳನ್ನು ಗುರುತಿಸಬಹುದು . +ಉತ್ಪನ್ನದಾಯಕ ಚಟುವಟಕೆಯೊಂದರ ಮೂಲಕ ಮಕ್ಕಳಿಗೆ ಶಿಕ್ಷಣವೀಯಲು ನಿಯೋಜಿಸಿರುವ ಅವರ ಯೋಜನೆ ಎಲ್ಲ ಆಧುನಿಕ ತತ್ತ್ವಗಳಿಗೂ ಒಪ್ಪುವಂತಿದೆ . +ಮಕ್ಕಳ ಸಮಗ್ರವೂ ಸರ್ವತೋಮುಖವೂ ಆದ ವಿಕಾಸಕ್ಕೆ ಅದು ಪರಿಣಾಮಕಾರಿ ವಿಧಾನವೆಂಬುದನ್ನು ಎಲ್ಲ ಶಿಕ್ಷಣತತ್ತ್ವಗಳೂ ಒಪ್ಪುತ್ತವೆ . +ಅರ್ಥವಾಗದ ಸೈದ್ಧಾಂತಿಕರೂಪದ ಜ್ಞಾನವನ್ನು ಕಲಿಯಲು ಮಕ್ಕಳ ಮನಸ್ಸು ಬೇಸರಗೊಳ್ಳುವುದರಿಂದ ಅದು ವಿಹಿತವೆನಿಸದ ವಿಧಾನವಾಗುತ್ತದೆ . +ಮೂಲಶಿಕ್ಷಣದಲ್ಲಿ ಬೌದ್ಧಿಕ ಮತ್ತು ಅಭ್ಯಾಸಾತ್ಮಕ ( ಕ್ರಿಯಾಪ್ರದ ) ಅಂಶಗಳೆರಡೂ ಸೇರಿರುವುದರಿಂದ ಅವರ ದೈಹಿಕ ಮತ್ತು ಮಾನಸಿಕ ಬೆಳೆವಣಿಗೆ ಗಳೆರಡೂ ಸಮನ್ವಯಗೊಂಡು ಅಭಿವೃದ್ಧಿಯಾಗುತ್ತವೆ ; +ಮಕ್ಕಳು ಬರಿಯ ಗಿಳಿ ಓದಿನ ಅಕ್ಷರ ವಿದ್ಯೆಯನ್ನು ಸಾಧಿಸದೆ ರಚನಾತ್ಮಕ ಉದ್ದೇಶಗಳಿಗಾಗಿ ಬುದ್ಧಿ ಮತ್ತು ಕೈಗಳನ್ನು ಬಳಸಿಕೊಂಡು ಶಿಕ್ಷಣ ಪಡೆಯುತ್ತಾರೆ ; +ಸುಮ್ಮನೆ ಕೇಳಿ ಅಥವಾ ಓದಿ ಕಲಿಯುವುದರ ಬದಲು ಮಾಡಿ ಕಲಿಯುವ ಅವಕಾಶವಿರುವುದರಿಂದ ಈ ಪದ್ಧತಿಯಿಂದ ಕಲಿತ ಶಿಕ್ಷಣ ದೃಢವಾಗಿ ನಿಲ್ಲುವುದರ ಜೊತೆಗೆ ಅವರ ಜೀವನದಲ್ಲಿ ಹೆಚ್ಚು ಪರಿಣಾಮಕಾರಿಯೂ ಆಗಬಲ್ಲದು . +ಯಾವುದೇ ಜ್ಞಾನವನ್ನು ಅವರಿಗೆ ಕಲಿಸಬೇಕಾದರೂ ಕಸಬನ್ನು ಮಾಡಲು ಅನಿವಾರ್ಯವೆನಿಸಿದಾಗ ಆ ಕಾರ್ಯಕ್ಕೆ ಯತ್ನಿಸುವುದರಿಂದ ಕಲಿತದ್ದು ಅರ್ಥವತ್ತಾಗಿರುವುದಲ್ಲದೆ ಅದನ್ನು ಕಲಿಯಲು ಮನಸ್ಸಿನಲ್ಲಿ ಆಸಕ್ತಿ , ಸಿದ್ಧತೆ ಮತ್ತು ಉದ್ದೇಶಗಳು ರೂಪುಗೊಂಡಿರುತ್ತವೆ . +ಇವೆಲ್ಲ ಮನಶ್ಯಾಸ್ತ್ರಕ್ಕೆ ಸಮ್ಮತವೆನಿಸಿರುವ ಅಂಶಗಳು . +ಶೈಕ್ಷಣಿಕ ಸಮಾಜಶಾಸ್ತ್ರದ ದೃಷ್ಟಿಯಲ್ಲೂ ಮೂಲಶಿಕ್ಷಣ ಹಲವು ಉತ್ತಮ ಗುಣಗಳಿಂದ ಕೂಡಿರುವುದನ್ನು ಕಾಣಬಹುದು . +ಸರ್ವೋದಯ ತತ್ತ್ವವ್ಯಕ್ತಿಯ ಜೀವನದಲ್ಲಿ ಅಂಕುರಿಸಿ ಸಮಾಜ ಜೀವನದಲ್ಲಿ ಆವಿಷ್ಕಾರವಾಗಬೇಕೆಂಬುದು ಗಾಂಧೀಜಿಯ ಅಭಿಲಾಷೆಯಾಗಿತ್ತು . +ಅಂಥ ಪರಿವರ್ತನೆ ಅಹಿಂಸೆ ಅಥವಾ ಪ್ರೇಮದಿಂದ ಉದ್ಭವಿಸಬೇಕು . +ಅದು ಎಲ್ಲ ಮಾನವರ (ಸಮಾಜದ ) ಪರಮ ಒಳಿತಿನಲ್ಲಿ ಅಡಗಿದೆ . +ಸಮಾಜ ಈಶ್ವರನ ವ್ಯಕ್ತಸ್ವರೂಪ . +ಇದು ಜೀವಂತ ಚೈತನ್ಯದಲ್ಲಿನ (ದೇವ ) ಅವರ ನೈಜವಾದ ನಂಬಿಕೆ . +ವ್ಯಕ್ತಿಯ ಸಾಧನೆ ( ಶಿಕ್ಷಣ ), ಸಂಪತ್ತು, ಕಾಣಕೆಯ ರೂಪದಲ್ಲಿ ಸಮಾಜಕ್ಕೆ ಸಲ್ಲಬೇಕು . +ಸಮಾಜ ಸಂಗ್ರಹಿಸಿಕೊಂಡು ರಕ್ಷಿಸಿಕೊಂಡು ಬಂದಿರುವ ಮಾನವಜನಾಂಗದ ಸಂಸ್ಕೃತಿ ಸಂಪತ್ತನ್ನು ವ್ಯಕ್ತಿ ಬಳಸಿಕೊಂಡು ತನ್ನ ಹಿತವನ್ನು ಸಾಧಿಸಿಕೊಂಡು ಸಮಾಜ ಹಿತಕ್ಕೆ ತನ್ನ ಸೇವೆಯನ್ನು ಸಲ್ಲಿಸಲು ಶಕ್ತನಾಗಬೇಕು . +ಈ ದೃಷ್ಟಿಯಲ್ಲಿ ಅವರ ಸರ್ವೋದಯ ಸಮಾಜದ ತತ್ತ್ವ ಸಾಮಾಜಿಕದೊಡನೆ ಆಧ್ಯಾತ್ಮಿಕವನ್ನು ಅಳವಡಿಸಿಕೊಂಡು ಅದನ್ನು ಕಾರ್ಯರೂಪಕ್ಕೆ ತರಲು ಶಿಕ್ಷಣವನ್ನೊಂದು ಉಪಕರಣವನ್ನಾಗಿ ಮಾಡಿಕೊಂಡಿತೆನ್ನಬಹುದು . +ಅಂಥ ಶಿಕ್ಷಣದಿಂದ ದೇಶದ ಮಕ್ಕಳೆಲ್ಲ ಕೈಗಾರಿಕೆಯಲ್ಲಿ ತೊಡಗುವುದರಿಂದ ಬುದ್ಧಿಜೀವನಕ್ಕೂ ಶ್ರಮಜೀವನಕ್ಕೂ ಹಿಂದಿನಿಂದಲೂ ಬೆಳೆದುಕೊಂಡು ಬಂದಿದ್ದ ವ್ಯತ್ಯಾಸ ಕಡಿಮೆಯಾಗುವುದರ ಜೊತೆಗೆ ಬೇರೆ ಬೇರೆ ಕಸಬುಗಳಿಗಿರುವ ಭಿನ್ನತೆಯನ್ನೂ ಅಂತರವನ್ನೂ ನಿವಾರಿಸಿದಂತಾಗುತ್ತದೆ . +ಸಮಾಜಕ್ಕೆ ಎಲ್ಲ ಕಸಬುಗಳೂ ಅಗತ್ಯವೆಂಬ ಅಂಶ ವ್ಯಕ್ತಪಟ್ಟು ಎಲ್ಲ ವೃತ್ತಿಗಳಿಗೂ ಸಮಾನ ಗೌರವ ಲಭಿಸುತ್ತದೆ . +ಮೂಲಶಿಕ್ಷಣ ಈ ಎಲ್ಲ ಸಾಮಾಜಿಕ ಮೌಲ್ಯಗಳನ್ನೂ ವೃದ್ಧಿಪಡಿಸಿ ಸಮಾಜದ ಪ್ರಗತಿಗೆ ರಕ್ತರಹಿತ ಕ್ರಾಂತಿಯ ಮೂಲಕ ನೆರವಾಗಬೇಕು . +ಆರ್ಥಿಕ ದೃಷ್ಟಿಯಿಂದ ಪರಿಗಣಿಸಿದರೂ ಮೂಲಶಿಕ್ಷಣದಲ್ಲಿ ಪ್ರಗತಿಪರ ಅಂಶಗಳು ಕಾಣುತ್ತವೆ . +ಪ್ರತಿಯೊಬ್ಬನೂ ಶಿಕ್ಷಣ ಮುಗಿಸಿಕೊಂಡು ಜೀವನೋಪಾಯವನ್ನು ಸಾಧಿಸಿಕೊಳ್ಳಲು ಶಕ್ತಿ ಪಡೆದಿರುತ್ತಾನೆ . +ಅಲ್ಲದೆ ಅವನು ತನ್ನ ವೃತ್ತಿಯಲ್ಲಿ ಕುರುಡುಕರ್ಮ ಮಾಡದೆ ಬುದ್ಧಿಯನ್ನೂ ಬಳಸುವುದರಿಂದ ವೃತ್ತಿಯಲ್ಲೂ ಪ್ರಗತಿ ಸಾಧನೆಯಾಗಿ ರಾಷ್ಟ್ರದ ಆರ್ಥಿಕ ಪ್ರಗತಿಗೂ ಅವಕಾಶವಾಗುತ್ತದೆ . +ಶುದ್ಧ ಶಿಕ್ಷಣಶಾಸ್ತ್ರದ ದೃಷ್ಟಿಯಿಂದ ನೋಡಿದರೂ ಜೀವನದಲ್ಲಿ ಅನುಸರಿಸುವ ಒಂದು ಕಸಬು ಶಾಲೆಯಲ್ಲಿ ಬೋಧನೆಯ ಕೇಂದ್ರವಿಷಯವಾಗಿರುವುದರಿಂದ ಜೀವನಕ್ಕೂ ಶಿಕ್ಷಣಕ್ಕೂ ನಿಕಟಸಂಬಂಧವಿರುವುದು ವ್ಯಕ್ತವಾಗಿ ಜೀವನವೇ ಬೇರೆ ಶಿಕ್ಷಣವೇ ಬೇರೆ ಎನ್ನುವ ಕೃತಕ ಅಹಿತದೃಷ್ಟಿ ಮಾಯವಾಗುತ್ತದೆ . +ಯಾವ ಶಿಕ್ಷಣಪದ್ಧತಿಯೇ ಆಗಲಿ ವ್ಯಕ್ತಿಗೆ ಸತ್ಪೌರನಾಗಿ ಬಾಳಲು ಸಿದ್ಧತೆ ನೀಡಬೇಕು . +ತಾವು ವೃತ್ತಿಯೊಂದರಲ್ಲಿ ಸಿದ್ಧತೆ ಪಡೆದಿರುವುದರಿಂದ ವ್ಯಕ್ತಿ ತನ್ನ ಜೀವನೋಪಾಯದ ಜೊತೆಗೆ ಸಮಾಜಕ್ಕೆ ಅಗತ್ಯವೆನಿಸುವ ಸೇವಾಕಾರ್ಯವನ್ನೂ ನಿರ್ವಹಿಸಬಲ್ಲನು . +ಸಹಕಾರದ ಸನ್ನಿವೇಶದಲ್ಲಿ ಕಲಿತ ಆ ವೃತ್ತಿಮನೋಭಾವ ಸಮಾಜ ಜೀವನಕ್ಕೂ ಹರಿದುಬಂದು ವ್ಯಕ್ತಿಯಲ್ಲಿ ಸೇವಾದೃಷ್ಟಿಯನ್ನು ಬೆಳೆಸುವುದಲ್ಲದೆ , ವೈಯಕ್ತಿಕ ಮೌಲ್ಯ , ಆತ್ಮಗೌರವ , ವೃತ್ತಿದಕ್ಷತೆ ಮುಂತಾದ ಸದ್ಗುಣಗಳನ್ನೂ ಮೂಡಿಸುತ್ತದೆ . +ಗಾಂಧೀಜಿ ಗ್ರಾಂಥಿಕ ಶಿಕ್ಷಣವನ್ನೇನೂ ವಿರೋಧಿಸಲಿಲ್ಲ . +ಆದರೆ ಪುಸ್ತಕದ ಓದು ಕಲಿಸುವುದಕ್ಕಾಗಿಯೇ ಕೋಟಿಗಟ್ಟಲೆ ಹಣ ತಿನ್ನುವ ಪ್ರಾಥಮಿಕ ಶಿಕ್ಷಣ ಮಕ್ಕಳ ಮನಶ್ಯಕ್ತಿಯನ್ನು ಶೋಷಿಸದಿರಬೇಕೆಂದು ಅವರ ಆಶಯವಾಗಿತ್ತು . +ತಕಲಿ ಮುಂತಾದ ಉಪಕರಣಗಳಿಂದ ಕೆಲಸ ಮಾಡುವುದು ಮಕ್ಕಳಿಗೊಂದು ಆಟದ ರೂಪದಲ್ಲಿದ್ದು ಅಂಥ ಶೋಷಣೆಯಿಂದ ಅವರನ್ನು ವಿಮುಕ್ತಿ ಮಾಡುವುದೆಂದು ಅವರು ಪ್ರತಿಪಾದಿಸುತ್ತಿದ್ದರು . +ಮೂಲಶಿಕ್ಷಣ ಕೇವಲ ಕಸಬೊಂದನ್ನು ಕಲಿಸುವ ಮಧ್ಯಯುಗಗಳ ಉಮೇದುವಾರಿ ತರಬೇತಿನಂತಿರಲಿಲ್ಲ ; +ಸಾಮಾನ್ಯ ಶಿಕ್ಷಣದ ಜೊತೆಗೆ ಕೈಗಾರಿಕೆಯೊಂದನ್ನು ಕಲಿಸುವ ಶಿಕ್ಷಣವೂ ಆಗಿರಲಿಲ್ಲ ; +ಅದು ನಿಜವಾಗಿ , ಯಾವುದಾದರೂ ಕೈಗಾರಿಕೆಯ ಮಾಧ್ಯಮದ ಮೂಲಕ ಇಡೀ ಶಿಕ್ಷಣವನ್ನು ದೊರಕಿಸಿ , ವೃತ್ತಿಶಿಕ್ಷಣದ ಮೂಲಕ ಮಕ್ಕಳ ವ್ಯಕ್ತಿತ್ವವನ್ನೇ ರೂಪಿಸುವ ಒಂದು ಯೋಜನೆ . +ಉನ್ನತ ಶಿಕ್ಷಣದ ಬಗ್ಗೆ ಗಾಂಧೀಜಿಯ ದೃಷ್ಟಿ : 20ನೇಯ ಶತಮಾನದ ಪುರ್ವಾರ್ಧ ದಲ್ಲಿ ಭಾರತದಲ್ಲಿದ್ದ ವಿಶೇಷ ರಾಜಕೀಯ , ಸಾಮಾಜಿಕ , ಆರ್ಥಿಕ ಸ್ಥಿತಿಗತಿಗಳಿಂದಾಗಿ ಗಾಂಧೀಜಿ ಪ್ರಾಥಮಿಕ ಶಿಕ್ಷಣದ ಕಡೆಯೇ ಹೆಚ್ಚು ಗಮನ ಹರಿಸಿದ್ದರೂ ಶಿಕ್ಷಣದ ಇತರ ಹಂತಗಳ ಬಗ್ಗೆಯೂ ಚಿಂತನೆ ನಡೆಸಿದ್ದರು . +ಪ್ರಾಥಮಿಕ ಪುರ್ವದ ಮಕ್ಕಳ ಶಿಕ್ಷಣದ ಪ್ರಾಮುಖ್ಯವನ್ನೂ ಅಗತ್ಯವನ್ನೂ ಅವರು ಮನಗಂಡಿದ್ದರು . +ರಾಷ್ಟ್ರದ ಮುನ್ನಡೆಗೆ ಉನ್ನತ ಶಿಕ್ಷಣದ ಅಗತ್ಯವನ್ನೂ ಅದರ ಪುನರ್ವ್ಯವಸ್ಥೆಯ ಅಗತ್ಯವನ್ನೂ ವ್ಯಕ್ತಪಡಿಸಿದ್ದಾರೆ . +ಆದರೆ ಅಂದು ಪ್ರಾಥಮಿಕಶಿಕ್ಷಣ ಎಲ್ಲ ದೇಶಗಳಂತೆ ಭಾರತದಲ್ಲೂ ತೀರ ಅಗತ್ಯವೆನಿಸಿದ್ದುದರಿಂದ ಅವರು ತಮ್ಮ ಗಮನವನ್ನು ಮುಖ್ಯವಾಗಿ ಆ ಕಡೆ ವಿನಿಯೋಗಿಸಿದರು . +ಗಾಂಧೀಜಿಯ ದೃಷ್ಟಿಯಲ್ಲಿ ಮೂಲಶಿಕ್ಷಣ ದೃಷ್ಟಿಯನ್ನೇ ಉನ್ನತಶಿಕ್ಷಣಕ್ಕೂ ವಿಸ್ತರಿಸಬಹುದಾಗಿತ್ತು . +ಹರಿಜನ ಪತ್ರಿಕೆಯಲ್ಲಿ ಆ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ . +ಅದರ ರೂಪುರೇಖೆಯೂ ಮೂಲಶಿಕ್ಷಣಕ್ಕೆ ಆಧಾರವಾದ ಸ್ವಯಂ ಉದ್ಯೋಗ , ಸ್ವಾವಲಂಬನೆ , ಶ್ರಮಜೀವನ - ಇವುಗಳನ್ನೇ ಅವಲಂಬಿಸಿದ್ದು , ಪ್ರಾಥಮಿಕ ಶಿಕ್ಷಣದಂತೆ ಆ ಮೂಲಕ ಉನ್ನತ ಶಿಕ್ಷಣದಲ್ಲೂ ಕ್ರಾಂತಿಕಾರಕ ಬದಲಾವಣೆಗಳಾಗ ಬೇಕೆಂಬುದು ಅವರ ಅಭಿಪ್ರಾಯವಾಗಿತ್ತು . +‘ ಅದು ರಾಷ್ಟ್ರೀಯ ಆವಶ್ಯಕತೆಗಳನ್ನು ಆಧಾರಮಾಡಿಕೊಂಡು ವ್ಯವಸ್ಥೆಗೊಳ್ಳಬೇಕು ; +ಯಂತ್ರ ಪರಿಣಿತರು , ತಾಂತ್ರಿಕ ತಜ್ಞರು , ವಿವಿಧ ವೃತ್ತಿನಿಪುಣರು - ಇತ್ಯಾದಿಯವರನ್ನು ಸಿದ್ಧಪಡಿಸಲು ವೃತ್ತಿಶಿಕ್ಷಣ ವ್ಯವಸ್ಥೆಯೂ ಇದ್ದೇ ಇರಬೇಕು ’ ಎಂದು ಅವರು ಭಾವಿಸಿದ್ದರು . +ಆದರೆ ಔದ್ಯೋಗಿಕ ಶಿಕ್ಷಣ ಆಯಾ ಉದ್ಯೋಗಕ್ಕೆ ಹೊಂದಿಕೊಂಡಂತಿದ್ದು ಅಲ್ಲಿಗೆ ಅಗತ್ಯವಾಗುವ ಪದವೀಧರರ ಶಿಕ್ಷಣವನ್ನು ಆ ಉದ್ಯೋಗ ಕ್ಷೇತ್ರವೇ ನಿರ್ವಹಿಸಬೇಕೆಂದು ಅವರು ಪ್ರತಿಪಾದಿಸಿರುವರು . +ಅದರ ಪ್ರಕಾರ ತಾತಾ ಔದ್ಯೋಗಿಕ ಸಂಸ್ಥೆಗಳಂಥವು ರಾಷ್ಟ್ರದ ಮೇಲ್ವಿಚಾರಣೆಯಲ್ಲಿ ಇಂಜಿನಿಯರಿಂಗ್ ಕಾಲೇಜೊಂದನ್ನು ನಡೆಸಬಹುದು . +ಗಿರಣಿ ಕೆಲಸಗಾರರು ತಮ್ಮ ಉದ್ಯೋಗಗಳಿಗೆ ಬೇಕಾಗುವ ತಾಂತ್ರಿಕ ಪದವೀಧರರಿಗೆ ಶಿಕ್ಷಣವೀಯಲು ಕಾಲೇಜು ಗಳನ್ನು ನಡೆಸಬಹುದು ; + ವಾಣಿಜ್ಯಕ್ಷೇತ್ರ ವಾಣಿಜ್ಯಕಾಲೇಜುಗಳನ್ನೂ ನಡೆಸಬಹುದು ; + ವೈದ್ಯವೃತ್ತಿ ಧನಿಕರ ಆಸಕ್ತಿಯನ್ನು ಗಳಿಸಿರುವುದರಿಂದ ಖಾಸಗಿ ಅಂಗೀಕೃತ ಕಾಲೇಜುಗಳಲ್ಲಿ ಆ ಶಿಕ್ಷಣವನ್ನು ವ್ಯವಸ್ಥೆಗೊಳಿಸಬಹುದು . +ಇವೆಲ್ಲ ಸರ್ಕಾರದ ಧನಸಹಾಯವಿಲ್ಲದಿದ್ದರೂ ಆರ್ಥಿಕವಾಗಿ ಸ್ವಾವಲಂಬಿಯಾಗಿ ಕೆಲಸಮಾಡಬಲ್ಲವು . +ಎಷ್ಟೋ ಕಲಾಶಾಸ್ತ್ರ ಮತ್ತು ವಿಜ್ಞಾನಶಾಸ್ತ್ರದ ಖಾಸಗಿ ಕಾಲೇಜುಗಳೂ ಆ ರೀತಿಯಲ್ಲಿ ನಡೆಯಲು ಸಾಧ್ಯವೆಂಬುದು ಆಗಲೆ ವ್ಯಕ್ತವಾಗಿತ್ತು . +ಹಾಗೆಯೇ ಕೃಷಿ ಕಾಲೇಜುಗಳೂ ಸ್ವಾವಲಂಬಿಯಾಗಿ ನಡೆಯಬೇಕೆಂದು ಅವರು ಭಾವಿಸಿದ್ದರು . +ಕೃಷಿಕ್ಷೇತ್ರದಲ್ಲೇ ಅವರಿಗೆ ಶಿಕ್ಷಣವೀಯುವುದಾದರೆ ಅದು ಸಾಧ್ಯವಾಗುವುದೆಂದೂ ಅಲ್ಲಿನ ವಿದ್ಯಾರ್ಥಿಗಳು ಪದವೀಧರರಾದ ಮೇಲೆ ವ್ಯವಸಾಯ ಕ್ಷೇತ್ರಕ್ಕೆ ಗಣನೀಯಸೇವೆ ಸಲ್ಲಿಸುವರೆಂದೂ ಅವರು ಸೂಚಿಸಿರುವರು ; + ಹೀಗೆಯೇ ಇತರ ವೃತ್ತಿಶಿಕ್ಷಣಗಳೂ ಸ್ವಾವಲಂಬಿಯಾಗಿ ಕೆಲಸ ಮಾಡುವುದು ಸಾಧ್ಯವೆಂದು ತೋರಿಸಿರುವರು . +ಈ ದೃಷ್ಟಿ ವೈಪರೀತ್ಯವನ್ನು ಮುಟ್ಟಿರುವಂತೆ ತೋರಿದರೂ ಸಾಧ್ಯವೆಂಬುದನ್ನು ಅವರು ಮನಗಂಡಿದ್ದರು . +ಮೇಲಾಗಿ ಅವರ ಆಸಕ್ತಿ ಮುಖ್ಯವಾಗಿ ಪ್ರಾಥಮಿಕ ಶಿಕ್ಷಣದ ಕಡೆಗೆ ಇದ್ದುದರಿಂದ ಉನ್ನತ ಶಿಕ್ಷಣವನ್ನೆಲ್ಲ ಖಾಸಗೀ ಸಂಸ್ಥೆಗಳೇ ನಡೆಸುವಂತಾದರೆ ಸರ್ಕಾರ ತನ್ನ ಪೂರ್ಣಗಮನವನ್ನು ಪ್ರಾಥಮಿಕ ಶಿಕ್ಷಣದ ಕಡೆಗೆ ಮೀಸಲಿಡಲು ಸಾಧ್ಯವಾಗುವುದೆಂದು ಅವರು ಆಲೋಚಿಸಿದರು . +ಭಾರತ ಸರ್ಕಾರ ಮೂಲಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ಪದ್ಧತಿಯೆಂದು ಅಂಗೀಕರಿಸಿ ಅದರ ಪ್ರಗತಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ಒದಗಿಸಿತು . +ಅದರೊಡನೆ ಅಂಟಿಕೊಂಡಿದ್ದ ‘ ವಿದ್ಯಾರ್ಥಿ ದುಡಿಮೆಯಿಂದ ಅಧ್ಯಾಪಕರ ವೇತನವನ್ನು ದೊರಕಿಸಿಕೊಳ್ಳಬೇಕೆಂಬ ’ ಅಂಶವನ್ನು ಕೈಬಿಡಲಾಯಿತು . +ಆದರೂ ಅದು ದೇಶಾದ್ಯಂತ ಆಚರಣೆಗೆ ಬರಲಿಲ್ಲ . +ಜನತೆಗೆ ಇಂದು ಅದರಲ್ಲಿ ಆಸಕ್ತಿಯಿಲ್ಲವಾಗಿದೆ . +ಅದು ಉತ್ತಮ ತತ್ತ್ವಗಳ ಬುನಾದಿಯ ಮೇಲೆ ರಚನೆಯಾಗಿರುವುದೆಂದು ದೇಶವಿದೇಶಗಳ ಪಂಡಿತರನೇಕರು ಒಪ್ಪಿದ್ದರೂ ಅದು ತನ್ನ ಜನ್ಮಭೂಮಿಯಲ್ಲೇ ಪ್ರಚಾರಕ್ಕೆ ಬರಲಾರದಾದುದು ಆಶ್ಚರ್ಯದ ಸಂಗತಿ . +ಆ ಪದ್ಧತಿಯ ಮೇಲೆ ಟೀಕೆಗಳೇನೋ ಹೇರಳವಾಗಿ ಬಂದುವು . +ಅವುಗಳಲ್ಲಿ ವಾಸ್ತವಿಕವೆನ್ನಬಹುದಾದ ಕೆಲವನ್ನು ಇಲ್ಲಿ ಸೂಚಿಸಿದೆ . +1 ತೀರ ಚಿಕ್ಕ ವಯಸ್ಸಿನಲ್ಲಿ ಅವರ ಸ್ವಾಭಾವಿಕ ಆಸಕ್ತಿಗಳಿಗೆ ವಿರುದ್ಧವಾದ ವೃತ್ತಿಶಿಕ್ಷಣದ ವಾತಾವರಣವನ್ನು ಕಲ್ಪಿಸುತ್ತದಾಗಿ ಈ ಪದ್ಧತಿ ಮಕ್ಕಳಿಗೆ ಶಿಕ್ಷಣವೆಂದರೆ ಜಿಗುಪ್ಸೆ ಹುಟ್ಟಿಸುತ್ತದೆ . +2 ತಲೆಗೆಲ್ಲ ಒಂದೇ ಮಂತ್ರವೆಂದು ನೂಲುವುದನ್ನು ಎಲ್ಲರಿಗೂ ಕಲಿಸಹೋದರೆ ಯಾವ ಪುರುಷಾರ್ಥ ತಾನೆ ಸಾಧನೆಯಾದೀತು ? +ಮುಂದಿನ ಜನಾಂಗವೆಲ್ಲ ಅದೇ ಕೈಗಾರಿಕೆಯನ್ನು ಅನುಸರಿಸಿದರೆ ಮುಂದೆ ಗತಿಯೇನು ? +3 ದಿನದ ಅರ್ಧಭಾಗದಲ್ಲಿ ತಮ್ಮ ಸ್ವಾಭಾವಿಕ ಆಸಕ್ತಿಗೆ ವಿರುದ್ಧವಾಗಿ ಇತರರು ಹೇರಿದ ಉದ್ಯೋಗದಲ್ಲಿ ತೊಡಗಿ ಆ ಸ್ವಾಭಾವಿಕ ಆಸಕ್ತಿಗಳ ಪ್ರಕಾಶನಕ್ಕೆ ಅಡಚಣೆಯಾಗಿ ಅವರ ವ್ಯಕ್ತಿತ್ವದಲ್ಲಿ ತೊಡಕುಗಳು ಮೂಡಿಕೊಳ್ಳುವುದಿಲ್ಲವೆ ? +4 ಕಸಬೇ ಪ್ರಧಾನವಾಗಿರುವ ಈ ಪದ್ಧತಿ ಮಗುವನ್ನೇ ಮರೆತಿರುವುದಲ್ಲದೆ ದೈಹಿಕ ಶಿಕ್ಷಣ , ನೈತಿಕ ಶಿಕ್ಷಣಗಳಿಗೆ ಅವಕಾಶ ಕಲ್ಪಸಿಲ್ಲ . +5 ಕಸಬಿಗೆ ಸಂಬಂಧಿಸಿದಂತೆ ವಿಷಯವನ್ನು ಬೋಧಿಸುವ ಯತ್ನದಲ್ಲಿ ಗೊಂದಲಕ್ಕೂ ಕೃತಕತೆಗೂ ಅವಕಾಶವಾಗಿ ಶಾಲೆಗೂ ಜೀವನಕ್ಕೂ ಅಂತರ ಹುಟ್ಟಿಕೊಳ್ಳುತ್ತದೆ . +6 ಪಠ್ಯಪುಸ್ತಕಗಳಿಗೆ ಪುರಸ್ಕಾರವೀಯದ ಈ ಶಿಕ್ಷಣ ಹೇಗೆ ತಾನೆ ಜನಪ್ರಿಯವಾದೀತು - ದೇವರಿಲ್ಲದ ಗುಡಿಯಂತೆ ? +7 ಮೇಲ್ಮಟ್ಟದ ಶಿಕ್ಷಣಕ್ಕೆ ಈ ಪದ್ಧತಿಯ ಅನ್ವಯ ಯೋಗ್ಯವಲ್ಲ . +ಈಚೆಗೆ ಈ ದಿಕ್ಕಿನಲ್ಲಿ ಮೂಲಶಿಕ್ಷಣವನ್ನು ಸುಧಾರಿಸುವ ಯತ್ನ ನಡೆದಿದೆ . +ಆದರೂ ಮೂಲಶಿಕ್ಷಣಕ್ಕೆ ಸ್ವಾತಂತ್ರ್ಯದ ಆರಂಭದಲ್ಲಿ ಲಭಿಸಿದ್ದ ಜನಪ್ರಿಯತೆ ಈಗ ಇಲ್ಲವಾಗಿದೆ . +ಅದನ್ನು ಆ ರೂಪದಲ್ಲಿ ದೇಶಾದ್ಯಂತ ಪ್ರಚಾರಕ್ಕೆ ತರುವ ಯತ್ನವೂ ಹಿಂಬದಿಗೆ ಬಿದ್ದಂತೆ ಕಾಣುತ್ತದೆ . +ಹೊಸದಾಗಿ ಪ್ರಚಾರಕ್ಕೆ ಬಂದ ಎಲ್ಲ ಶಿಕ್ಷಣಪದ್ಧತಿಗಳಿಗೂ ಇದೇ ಪಾಡು ಒದಗಿದೆ . +ಅವು ಮೊದಲು ಪರಮೋತ್ಕೃಷ್ಟವೆಂದು ಹೊಗಳಿಸಿಕೊಳ್ಳುತ್ತವೆ ; +ಅನಂತರ ಅವುಗಳ ಕುಂದುಕೊರತೆಗಳನ್ನು ಕಂಡು ಜನತೆ ಅವನ್ನು ಕಟುವಾಗಿ ಟೀಕಿಸುತ್ತದೆ . +ಆಮೇಲೆ ಅದರಲ್ಲಿರುವ ಉತ್ತಮಾಂಶಗಳನ್ನು ಮಾತ್ರ ಇಂದಿನ ಪದ್ಧತಿಯಲ್ಲಿ ಅಳವಡಿಸಿಕೊಳ್ಳಲು ಯತ್ನಿಸುತ್ತದೆ . +ಮೂಲಶಿಕ್ಷಣದ ಬಗ್ಗೆಯೂ ಈ ಮಾತು ಒಪ್ಪುತ್ತದೆ . +ಈಗ ಅದು ತನ್ನ ಆ ಮೂರನೆಯ ಅಂತಸ್ತನ್ನು ಮುಟ್ಟಿದೆ . +ಅದರಲ್ಲಿರುವ ಉತ್ತಮಾಂಶಗಳು ನಮ್ಮ ಪ್ರಾಥಮಿಕ ಶಿಕ್ಷಣಕ್ಷೇತ್ರವನ್ನು ಈಗಾಗಲೇ ಪರಿಣಾಮಗೊಳಿಸಿವೆ . +ಕಸಬು , ಕಲೆ , ಕೈಕೆಲಸ ಮುಂತಾದ ಕಾಯಕಾನುಭವಗಳನ್ನೊದಗಿಸುವ ಚಟುವಟಿಕೆಗಳು ಅಲ್ಲಿನ ಪಠ್ಯಕ್ರಮದಲ್ಲಿ ಹೊಸದಾಗಿ ಸೇರಿಕೊಂಡಿವೆ . +ಜೀವನಕ್ಕೆ ಹೊಂದಿಸಿಕೊಂಡು ವಿಷಯಗಳನ್ನು ಸಮೀಕರಿಸಿಕೊಂಡು ಪಾಠ ಬೋಧಿಸುವ ನೂತನ ಬೋಧನಕ್ರಮ ಬಳಕೆಗೆ ಬರುತ್ತಿದೆ . +ತಮ್ಮ ಶಾಲೆಯನ್ನು ತಾವೇ ಚೊಕ್ಕಟವಾಗಿಟ್ಟುಕೊಳ್ಳುವ ಸ್ವಾವಲಂಬನೆಯ ದೃಷ್ಟಿ ಆಚರಣೆಗೆ ಬರುತ್ತಿದೆ . +ಕೈಕೆಲಸಗಳ ಮೂಲಕ ಮಕ್ಕಳ ಕ್ರಿಯಾತ್ಮಕ ಶಕ್ತಿಗೆ ಪೋಷಣೆ ದೊರೆಯುವುದರ ಜೊತೆಗೆ ಅವರ ಮನಸ್ಸಿನಲ್ಲಿ ಶ್ರಮಜೀವನದ ಬಗ್ಗೆ ಗೌರವ ಬೆಳೆಯಲು ಅವಕಾಶವಾಗಿದೆ . +ಶಾಲೆಯೊಡನೆ ಸುತ್ತಣ ಸಮಾಜದ ಜೀವನವನ್ನು ಹೊಂದಿಸಿಕೊಂಡು ಕೆಲಸಮಾಡುತ್ತ ಶಾಲೆ , ಸಮಾಜದ ಕ್ಷೇಮಚಿಂತನೆಗೂ ಅಭಿವೃದ್ಧಿಸಾಧನೆಗೂ ಕೆಲಸ ಮಾಡಬೇಕಾದ ಸಂಸ್ಥೆಯಾಗಿ ರೂಪುಗೊಳ್ಳುತ್ತಿದೆ . +ಇಷ್ಟೆಲ್ಲ ಮೂಲಶಿಕ್ಷಣ ಪ್ರಾಥಮಿಕ ಶಿಕ್ಷಣದ ಮೇಲೆ ಇತ್ತೀಚಿನ ದಿನಗಳಲ್ಲಿ ಬೀರಿರುವ ಪ್ರಭಾವವೆನ್ನಬಹುದು . +ಆದರೂ ಅದು ತನ್ನ ಶುದ್ಧರೂಪದಲ್ಲಿ ದೇಶಾದ್ಯಂತ ಆಚರಣೆಗೆ ಬರಲೇಬೇಕೆಂದು ವಾದಿಸತಕ್ಕವರು ಇಂದಿಗೂ ಉಳಿದುಕೊಂಡೇ ಇರುವರು .