diff --git a/Data Collected/Kannada/MIT Manipal/Kannada-Scrapped-dta/devudu-narasimha-shastri.txt b/Data Collected/Kannada/MIT Manipal/Kannada-Scrapped-dta/devudu-narasimha-shastri.txt new file mode 100644 index 0000000000000000000000000000000000000000..c382ffa3675ce8414c20563802ab1022b086f6ba --- /dev/null +++ b/Data Collected/Kannada/MIT Manipal/Kannada-Scrapped-dta/devudu-narasimha-shastri.txt @@ -0,0 +1,694 @@ +ಕೇವಲ ಅರವತ್ತೈದು ವರ್ಷದ ಒಳಗಿನ ಜೀವಿತ ಅವಧಿಯಲ್ಲಿ ಕರ್ನಾಟಕದ ಸಾರಸ್ವತ ಲೋಕದ ಜೊತೆಗೆ ಹಲವಾರು ಕ್ಷೇತ್ರಗಳಿಗೆ ಅಪರಿಮಿತ ಕೊಡುಗೆ ನೀಡಿದ ದೇವುಡು ನರಸಿಂಹ ಶಾಸ್ತ್ರಿಯವರ ಬದುಕೇ ಒಂದು ವಿಸ್ಮಯ ಎನ್ನುವಂತೆ ಪ್ರೊ.ಜಿ.ಅಶ್ವತ್ಯ ನಾರಾಯಣ ಈ ಪುಟ್ಟ ಕೃತಿಯಲ್ಲಿ ಪರಿಚಯಿಸಿದ್ದಾರೆ. +ಕನ್ನಡೇತರ ಭಾಷಾ ಮನೆತನದಲ್ಲಿ ಹುಟ್ಟಿದ ಹಲವಾರು ಮಹನೀಯರು ಬಹುದೊಡ್ಡ ಕೊಡುಗೆಯನ್ನು ಕನ್ನಡ ಭಾಷೆ ಮತ್ತು ನೆಲಕ್ಕೆ ನೀಡಿದ್ದಾರೆ. +ಹಾಗೆಯೇ ದೇವುಡು ಅವರ ಮಾತೃಭಾಷೆ ತೆಲುಗಿದ್ದರೂಕನ್ನಡ ಭಾಷೆ ಮೇಲೆ ಎಷ್ಟೊಂದು ಪ್ರಭುತ್ವ ಹೊಂದಿದ್ದರು ಎಂಬುದನ್ನುಅವರ ಕೃತಿಗಳನ್ನು ನೋಡಿದರೆ ಗೊತ್ತಾಗುತ್ತದೆ. +ದೇವುಡು ಅವರು ಧಾರವಾಡದ ಜೊತೆಗೆ ಗಾಢವಾದ ನಂಟು ಹೊಂದಿದ್ದರು. +ಉತ್ತಂಗಿ ಚನ್ನಪ್ಪ, ದ.ರಾ.ಬೇಂದ್ರೆ ಕೀರ್ತಿನಾಥ ಕುರ್ತಕೋಟಿ,ಜಿ.ಜೋಶಿ, ಸ.ಸ.ಮಾಳವಾಡ, ಶಂಬಾ ಜೋಶಿ, ಡಾ.ನಂದಿಮಠ,ಡಾ. ಭೂಸನೂರಮಠ, ಬೆಟಗೇರಿ ಕೃಷ್ಣಶರ್ಮ ಹೀಗೆ ಹಲವಾರು ಸಾಹಿತಿಗಳ,ಚಿಂತಕರ ಜೊತೆ ನಿರಂತರ ಸಂಪರ್ಕ ಹೊಂದಿದ್ದು ಅವರೊಬ್ಬ ಅಪ್ಪಟ ಸ್ನೇಹ ಜೀವಿಯಾಗಿದ್ದರು ಎಂಬುದು ಗೊತ್ತಾಗುತ್ತದೆ. +ತುಂಬಾ ಆಶ್ಚರ್ಯ ಮತ್ತು ಅಭಿಮಾನ ತರುವ ಸಂಗತಿ ಎಂದರೆ ಒಬ್ಬ ವ್ಯಕ್ತಿ ಏನೆಲ್ಲಾ ಮಾಡಬಲ್ಲ ಎಂದು, ಕವಿ, ಸಾಹಿತಿ, ಕಲಾವಿದ,ಧರ್ಮಪ್ರಚಾರಕ, ಪತ್ರಿಕೋಧ್ಯಮಿ, ನಟ, ಶಿಕ್ಷಕ, ವಾಗ್ಮಿ ಸಂಘಟಿಕ, ಪ್ರಕಾಂಡಪಂಡಿತ, ಶಿಕ್ಷಣ ತಜ್ಞ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. +ಇಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹುಟ್ಟಲಿಕ್ಕೆ ಮತ್ತು ಸಾಕ್ಷರತಾ ಕಾರ್ಯಕ್ರಮಕ್ಕೆ ರೂಪ ಕೊಟ್ಟವರು ದೇವುಡು ನರಸಿಂಹ ಶಾಸ್ತ್ರಿಗಳು ಎಂಬುದು ಅಭಿಮಾನದ ಮಾತು. +ಕಾದಂಬರಿ, ಸಣ್ಣಕಥೆ, ನಾಟಕ, ಮಕ್ಕಳ ನಾಟಕ, ಮಕ್ಕಳ ಕಥೆ,ಜಾನಪದದ ಇತಿಹಾಸ, ವಿಮರ್ಶೆ, ಗ್ರಂಥ ಸಂಶೋದನ, ಗ್ರಂಥ ಅನುವಾದ,ಪತ್ರಿಕೆ ಇಷ್ಟೆಲ್ಲ ಸಾಹಿತ್ಯ ಪ್ರಕಾರಗಳಲ್ಲಿ ನೂರಕ್ಕೆ ಹೆಚ್ಚು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದು ನೋಡಿದರೆ ದೇವುಡು ಅವರ ಬರವಣಿಗೆಯ ಶಕ್ತಿ ದೇವುಡು ನರಸಿಂಹಶಾಸ್ತ್ರಿ ಎಷ್ಟಿತ್ತು ಎಂಬುದು ಗೊತ್ತಾಗುತ್ತದೆ. +ಇಂಥ ಒಬ್ಬ ಶ್ರೇಷ್ಠ ಚಿಂತಕರ ಹೆಸರಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಅವರ ಪುತ್ರ ಗಂಗಾಧರ ದೇವುಡುದತ್ತಿ ಇಟ್ಟು ಪ್ರತಿ ವರ್ಷ ಅವರನ್ನು ಅರ್ಥಪೂರ್ಣವಾಗಿ ಸ್ಮರಿಸಿಕೊಳ್ಳುವಂತೆ ಮಾಡಿದ್ದಾರೆ. +ಸಂಘದ ಕಾರ್ಯಾಧ್ಯಕ್ಷ ಪ್ರೊ.ಬಿ.ವ್ಹಿ. ಗುಂಜೆಟ್ಟಿ ದೇವುಡು ನರಸಿಂಹಶಾಸ್ತ್ರಿಗಳ ಕಳೆದ ವರ್ಷದ ದತ್ತಿ ಕಾರ್ಯಕ್ರಮದ ಕಾಲಕ್ಕೆ ಅವರನ್ನುಪರಿಚಯಿಸುವ ಈ ಕಿರುಹೊತ್ತಿಗೆ ಮರು ಮುದ್ರಣದ ಜವಾಬ್ದಾರಿಯನ್ನುಸಂಘವು ತೆಗೆದುಕೊಂಡು ಮುಂದಿನ ವರ್ಷದ ಇದೇ ದಿನದಂದು ದತ್ತಿ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡುವಂತೆ ನೋಡಿಕೊಳ್ಳಲಾಗುವುದು ಎಂದುಹೇಳಿದಂತೆ ಈ ಕೃತಿ ಮರು ಮುದ್ರಣಗೊಂಡು ನಿಮ್ಮ ಕೈಗೆ ಇಡುತ್ತಿದ್ದೇವೆ. +ಈ ಪುಟ್ಟ ಕೃತಿ ಮರು ಮುದ್ರಣಕ್ಕೆ ಒಪ್ಪಿಗೆ ನೀಡಿದ ದೇವುಡು ಪ್ರತಿಷ್ಠಾನದವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತ ಮುಂಬರುವ ದಿನಗಳಲ್ಲಿ ದೇವಡುರವರ ಸಮಸ್ತ ಸಾಹಿತ್ಯದ ಮೇಲೆ ಬೆಳಕು ಚೆಲ್ಲಿ ವಿಮರ್ಶೆಗೆ ಒಳಪಡುವ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯನಡೆಯುವಂತಾಗಬೇಕು ಎಂದು ಆಶಿಸುತ್ತೇನೆ. +ದೇವುಡು ನರಸಿಂಹಶಾಸ್ತ್ರಿ ಉರುಳಿಹೋದ ಯುಗಗಳನ್ನು ಕಣ್ಣ ಮುಂದೆ ಮರಳಿಸಿ ಮರೆತುಹೋದ ಆಶ್ರಮಗಳನು ಮತ್ತೆ ಇಲ್ಲಿ ಸೃಷ್ಟಿಸಿ ದೇವಲೋಕ ಮರ್ತ್ಯಲೋಕ ಬೆಸೆದು ಒಂದು ಗೂಡಲು ದೈವತ್ವಕೆ ಒಯ್ದುರಂದು ಮನುರಜನ್ನು ದೇವುಡು. -ಎಂ.ಎನ್‌. ವ್ಯಾಸರಾವ್‌ . + ಅಗ್ಗಳಿಕೆಯ ಮನೆತನದ ವ್ಯಕ್ತಿ . +ಕನ್ನಡ ನಾಡು ನುಡಿಗಳಿಗೆ ಅನುಪಮ ಸೇವೆ ಸಲ್ಲಿಸಿದವರಲ್ಲಿ ಕನ್ನಡೇತರ ಮಾತೃಭಾಷೆಯಾಗುಳ್ಳ ಮಹನೀಯರ ಸೇವೆ ಗಣನೀಯವಾದುದು. +ವಿದೇಶೀ ವಿದ್ವಾಂಸರಂತೆಯೇ ತೆಲುಗು, ತಮಿಳು, ಮಲೆಯಾಳಂ ಮೊದಲಾದ ದ್ರಾವಿಡ ಭಾಷೆಗಳನ್ನು ಮಾತೃಭಾಷೆಯಾಗುಳ್ಳ ಕನ್ನಡ ವಿದ್ವಾಂಸರು ಸಹ ಕನ್ನಡಕ್ಕೆ ಚಿರಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. +ಆ ಪೈಕಿ ದೇವುಡು ನರಸಿಂಹ ಶಾಸ್ತ್ರಿಗಳು ಅಗ್ರಗಣ್ಯರಾಗಿದ್ದಾರೆ. +ಪರಂಪರೆಯಿಂದ ಮನೆಮಾತು ತೆಲುಗಾದರೂ, “ಕನ್ನಡದೇಶವೇನನ್ನ ಮನೆ; ಕನ್ನಡಭಾಷೆಯೇ ನನ್ನ ಜೀವಭಾಷೆ" ಎಂದು ತಿಳಿದವರು ದೇವುಡು ಅವರು. +ದೇವುಡು ಅವರ ಕನ್ನಡ ಭಾಷಾ ಪ್ರೌಢಿಮೆ, ಸಂಸ್ಕೃತ ಪಾಂಡಿತ್ಯ,ಇಂಗ್ಲೀಷ್‌ ಪರಿಣತಿಗಳಿಗಿ೦ತ ಅದ್ವಿತೀಯವಾದ ವ್ಯಕ್ತಿತ್ವವೆಂದರೆ ಅವರ ಸರ್ವಸೋದರ ಭಾವ, ಹೃದಯವೈಶಾಲ್ಯ,ದೇಶಾಚಾರ, ಕುಲಾಚಾರಗಳನ್ನು ಮೀರಿದ ಮಾನವೀಯ ಸ್ವಭಾವ. +ಇದಕ್ಕೆ ಒಂದು ಶ್ರೇಷ್ಠ ನಿದರ್ಶನವೆಂದರೆ ಅವರ ಬದುಕಿನಲ್ಲಿ ನಡೆದ ಉತ್ತಂಗಿ ಭೋಜನ ಪ್ರಸಂಗ. +ಒಮ್ಮೆ ರೆವರೆಂಡ್‌ ಉತ್ತಂಗಿ ಚೆನ್ನಪ್ಪನವರನ್ನು ತಮ್ಮ ಮನೆಗೆ ಭೋಜನಕ್ಕೆ ದೇವುಡು ಆಹ್ವಾನಿಸಿದ್ದರು. +ಆಗ ಸುತ್ತಮುತ್ತಲಿನ ಜನವೆಲ್ಲ “ಶುದ್ಧ ವೈದಿಕ ಸಂಪ್ರದಾಯದ ಶಾಸ್ತ್ರಿಗಳು ಅನ್ಯಮತೀಯರನ್ನು ಕರೆದು ಮನೆಯೊಳಗೆ ಊಟಹಾಕಬಹುದೇ?” ಎಂದು ಆಕ್ಷೇಪಿಸಿದರು. +ಈ ಆಕ್ಷೇಪಣೆ ಕರ್ಣಾಕರ್ಣಿಕೆಯಾಗಿ ದೇವುಡು ಅವರ ಕಿವಿಗೆ ಬಿತ್ತು. + ಆಗ ಅವರು ತಮಗೆ ಮೀಮಾಂಸಾ ಶಾಸ್ತ್ರಬೋಧಿಸುತ್ತಿದ್ದ ಪ್ರಕಾಂಡಪಂಡಿತ, ಶುದ್ಧ ಸಂಪ್ರದಾಯವಾದಿ, ಮಾನವ ದೇವುಡು ನರಸಿಂಹಶಾಸ್ತ್ರಿ ಧರ್ಮಾಚಾರ್ಯ, ಮೀಮಾಂಸಾರತ್ನ ವೈದ್ಯನಾಥ ಶಾಸ್ತ್ರಿಗಳನ್ನು ಈ ಬಗ್ಗೆ ಏನು ಮಾಡಬೇಕೆಂದು ಕೇಳಿದರು. +ಅದಕ್ಕೆ ಅವರು ಹೇಳಿದರು : “ಕ್ರಿಸ್ತನು ಬಂದಿದ್ದರೆ(ನಿನ್ನ ಮನೆಗೆ) ಹೇಗೆ ಗೌರವಿಸಿ ಸ್ವಾಗತಿಸುತ್ತಿದ್ದೆಯೋ ಹಾಗೆಯೇ ಮಾಡು”ಎಂದರು. +ಅನಂತರ ದೇವುಡು ಅವರು ಉತ್ತಂಗಿಯವರನ್ನು ಅತಿಥಿ ದೇವರೆಂದು ಭಾವಿಸಿ ಸತ್ಕರಿಸಿದರು. +ದೇವರನ್ನು ಪೂರ್ವಾಭಿಮುಖವಾಗಿ ಕೂಡಿಸುವಂತೆ ಅವರನ್ನು ಊಟಕ್ಕೆ ಪೂರ್ವಾಭಿಮುಖವಾಗಿ ಕೂಡಿಸಿದರು. +“ನಮ್ಮ ಮನೆಗೆ ಇಂದು ಸಾಕ್ಷಾತ್‌ ಏಸುಕ್ರಿಸ್ತನೇ ಬಂದಿದ್ದಾನೆ, ನಿಮ್ಮ ರೂಪದಲ್ಲಿ” ಎಂದಾಗ ಉತ್ತಂಗಿ ಅವರು “ನಾನು ಏಸು ಭಕ್ತ ಅಷ್ಟೆ; ಏಸು ಪ್ರತಿನಿಧಿ ಅಲ್ಲ” ಎಂದರು. +ಅದಕ್ಕೆ ದೇವುಡು ಅವರು “ನಮ್ಮಲ್ಲಿ ಭಗವಂತ ಭಕ್ತಪರಾಧೀನ; +ಭಕ್ತನ ಮೂಲಕ ಭಗವಂತನ ಸಾನ್ನಿಧ್ಯ ಹೊಂದುವುದು ನಮ್ಮ ಪದ್ಧತಿ. +ಅದಕ್ಕೆ ದೇವಸ್ಥಾನಗಳಲ್ಲಿ ಗರುಡಗಂಭ ಅಥವಾ ನಂದಿಯನ್ನು ದರ್ಶಿಸಿದ ನಂತರವೇ ವಿಷ್ಣು ಅಥವಾ ಶಿವನ ದರ್ಶನ” ಎಂದರು. +ದೇವುಡು ಅವರು ಕ್ರಿಸ್ತ ಸಾಹಿತ್ಯವನ್ನೂ ಚೆನ್ನಾಗಿ ಅಭ್ಯಸಿಸಿದವರೇ ಕ್ರಿಸ್ತನನ್ನು ಕುರಿತ ನಾಟಕಗಳನ್ನು ರಚಿಸಿದ್ದಾರೆ ಹಾಗೂ ಅನುವಾದಿಸಿದ್ದಾರೆ. +ದೇವುಡು ಅವರ ಬಾಲ್ಯ, ಯೌವನ, ವಿದ್ಯಾಭ್ಯಾಸಗಳ ಬಗ್ಗೆ ಸಾಕಷ್ಟು ವಿವರಗಳು ತಿಳಿದುಬಂದಿಲ್ಲ. +ಅವರೇ ಬರೆದ ಆತ್ಮಕಥನ ಲೇಖನದಿಂದ ಹಾಗೂ ಅವರ ಸಮಕಾಲೀನರು ಚಿತ್ರಿಸಿದ ಬರಹಗಳಿಂದ ಕೆಲವು ಸಂಗತಿಗಳು ತಿಳಿಯುತ್ತವೆ. +ದೇವುಡು ಅವರ ಮನೆತನ ವೇದಶಾಸ್ತ್ರ ಸಂಪನ್ನರಿಂದ ಕೂಡಿದ ರಾಜಪುರೋಹಿತರ ಮನೆತನ. +ಇವರ ಮನೆತನದ ಹಿರಿಯರು ಆಂಧ್ರಪ್ರದೇಶದ ಕಂಬಾಲೂರಿನಿಂದ ವಲಸೆ ಬಂದವರು. +ತಾಯಿಯ ಮನೆತನದ ಹಿರಿಯರು ಕೋಲಾರದ ಮಣಿಕುಂಡಲ ವಂಶದವರು. +"ದೇವುಡು" ಎಂಬುದು ಒಂದು ಮನೆತನದ ಹೆಸರು. +ಈ ವಂಶದ ಪೂರ್ವೀಕರಲ್ಲಿ ಯಾರಿಗೋ ಒಬ್ಬರಿಗೆ ದೇವರು ಪ್ರತ್ಯಕ್ಷನಾಗಿದ್ದನಂತೆ. +ಅದೇನೇ ಇರಲಿ, ಈ ವಂಶದ ಅನೇಕ ಹಿರಿಯರು ವಿದ್ವಾಂಸರು, ಪೂಜ್ಯರು, ದೇವರಂಥ ಮನುಷ್ಯರು ಆಗಿದ್ದರು ಎಂಬುದು ನಿಜ. +ಇಂಥ ಭವ್ಯ ಪರಂಪರೆಯ ಮನೆತನದಲ್ಲಿ ಸ್ಮಾರ್ತಬ್ರಾಹ್ಮಣ ಮುಲಕ ನಾಡು ಪಂಗಡಕ್ಕೆ ಸೇರಿದ ತೆಲುಗು ಮನೆಮಾತಿನ ದೇವುಡು ನರಸಿಂಹ ಶಾಸ್ತಿಗಳು ೨೯ ಡಿಸೆಂಬರ್‌೧೮೯೬ ರಲ್ಲಿ (ದುರ್ಮುಖಿ ಸಂವತ್ಸರ ಮಾರ್ಗಶಿರ ಬಹುಳ ದಶಮಿ ಮಂಗಳವಾರ) ಸುಬ್ಬಮ್ಮ-ಕೃಷ್ಣಶಾಸ್ತ್ರಿ ದಂಪತಿಗಳಿಗೆ ಎರಡನೆಯವರಾಗಿ ಜನಿಸಿದರು. +ದೇವುಡು ಅವರ ಹೆಂಡತಿ ಗೌರಮ್ಮ ಗಂಡುಮಕ್ಕಳು ೩ ಜನ(ದೊಡ್ಡವಗ ರಾಮು ದಿವಂಗತ). +ಗಂಗಾಧರ ಸದಾಶಿವ ಇನ್ನಿಬ್ಬರು. +ಹೆಣ್ಣುಮಕ್ಕಳು ಆರು ಜನ. +ಪುಟ್ಟಮ್ಮ ಶಾರದ, ಲಲಿತ, ಉಮಾ, ಶಾಂತಾ, ಶ್ರೀಮತಿ. +ಇಂಥ ತುಂಬು ಸಂಸಾರದ ಸದ್ಗ್ಮಹಸ್ಥ ದೇವುಡು ಸಂಸಾರದಲ್ಲಿ ಇದ್ದುಕೊಂಡೇ ಆಧ್ಯಾತ್ಮ ಸಾಧನೆಯಲ್ಲಿ ಸಿದ್ಧಿಪಡೆದ ಪುರುಷರಾಗಿದ್ದರು. +ಪ್ರಚಂಡವಿದ್ಯಾರ್ಥಿತಮ್ಮ ೫ನೆಯ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡದೇವುಡು ಅವರು ಆಟಗಳಲ್ಲಿ ಚುರುಕಾಗಿದ್ದಷ್ಟೇ ಪಾಠದಲ್ಲೂ ಗ್ರಂಥಾಭ್ಯಾಸದಲ್ಲೂ ಇತರರಿಗಿಂತ ಮುಂದಿದ್ದರು. +ಮನೆಯಲ್ಲಿ ಮತ್ತು ಹೊರಗಡೆ ಸಾಹಿತ್ಯಿಕ ವಾತಾವರಣವಿದ್ದುದರಿಂದ ದೇವುಡು ಸಾಹಿತಿ ಆಗಲು ಬಹಳ ನೆರವು ದೊರೆಯಿತು. +ಮೈಸೂರಿನಲ್ಲಿ ಅವರಿದ್ದ ಬೀದಿಯಲ್ಲಿದ್ದ ಸಂಧ್ಯಾಸಂಘದಲ್ಲಿ ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ಮಹಿಳೆಯರು ಸೇರಿ ನಡೆಸುತ್ತಿದ್ದ ಚಟುವಟಿಕೆಗಳಲ್ಲಿ ಇವರು ಪಾಲ್ಗೊಳ್ಳುತ್ತಿದ್ದರು. +ಆ ಸಂಘದ ಮಹಿಳೆಯರು ಬಾಲಕನಾದರೂ ಕುಶಾಗ್ರಮತಿಯಾದ ದೇವುಡು ಅವರಿಗೆ ತಿಂಡಿಕೊಟ್ಟು,ಹಾಡುಗಳನ್ನು ಹೇಳಿ ಬರೆಯಿಸುತ್ತಿದ್ದರು. +ಒಮ್ಮೆ ಆ ಸಂಘದಲ್ಲಿ ಒಂದು ಚರ್ಚೆ ನಡೆಯುತ್ತಿತ್ತು. +ವಿಷಯವೇನೆಂದರೆ, ಪಾದ್ರಿಯೊಬ್ಬ ಹಾಕಿದ ಸವಾಲು; +“ಕೃಷ್ಣನು ಕೊಳಲು ಊದಿದಾಗ ಒಣಗಿದ ಗಿಡಮರಗಳೆಲ್ಲ ಚಿಗುರಿದವಲ್ಲ; +ಕೈಯಲ್ಲಿದ್ದ ಕೊಳಲೇಕೆ ಚಿಗುರಲಿಲ್ಲ?” +ಆಗ ಬಾಲಕ ದೇವುಡು ಕೊಟ್ಟ ಸಮಯ ಸ್ಫೂರ್ತಿಯ ಉತ್ತರ ಇದಾಗಿತ್ತು: ಚಿಗುರಿದರೆ ತನ್ನನ್ನು ಎಸೆದುಬಿಡುವನು ಎಂದು ಕೃಷ್ಣನ ಕೈಲಿದ್ದ ಕೊಳಲು ಹೆದರಿಕೊಂಡು ಚಿಗುರಲಿಲ್ಲ.” +ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದಾಗಲೇ ದೇವುಡುರಾಮಾಯಣ, ಮಹಾಭಾರತ, ಭಾಗವತ, ಬ್ರಹ್ಮಾಂಡ ಪುರಾಣ ಮೊದಲಾದವನ್ನೆಲ್ಲಓದಿದ್ದರು. +ಆದರೆ ಕೇವಲ “ಪುಸ್ತಕದ ಹುಳು” ಆಗಿರಲಿಲ್ಲ. +ಗೋಲಿ, ಚಿನ್ನಿಕೋಲು,ಫುಟ್‌ಬಾಲ್‌ ಮೊದಲಾದ ಆಟಗಳಲ್ಲೂ ನಿಷ್ಣಾತರಾಗಿದ್ದರು. +ಮನೆಯಲ್ಲಿ ತಂದೆಯವರ ಪ್ರಭಾವದಿಂದ ಸಂಸ್ಕೃತ ಅಧ್ಯಯನ ಮತ್ತು ಕವಿತ್ವ ರಚನೆಯಲ್ಲಿ ಒಲವು ಉಂಟಾಯಿತು. +ಹೈಸ್ಕೂಲಿನ ವಿದ್ಯಾರ್ಥಿ ಆಗುವ ವೇಳೆಗೆ ಕನ್ನಡ ಪರಿಣತಿಯನ್ನು ಸಾಕಷ್ಟು ಹೊಂದಿದ್ದರು. +ಬಿ.ಎ. ಕಾಲೇಜು ವಿದ್ಯಾರ್ಥಿಗಳಿಗೆ ತಾವು ಶಾಲಾ ವಿದ್ಯಾರ್ಥಿಯಾಗಿದ್ದರೂ ಪಾಠ ಹೇಳುತ್ತಿದ್ದರು. +ದೇವುಡು ನರಸಿಂಹಶಾಸ್ತ್ರಿ "ಸಾಹಸವರ್ಮಾ" (೧೯೧೨) ಎಂಬ ಕಾದಂಬರಿಯನ್ನು ಬರೆದು ಲೇಖಕರೂ ಆಗಿದ್ದರು. +ಹೀಗೆ ಪರಿಣತರಾದ ದೇವುಡು ಅವರು ರತ್ನಾವಳೀ ಕಂಪನಿಯ ರಾಜಕವಿ ಶ್ರೀನಿವಾಸ ಅಯ್ಯಂಗಾರ್‌ ಅವರಿಂದ ನಾಟಕ ರಚನೆ ಪದ್ಯ ರಚನೆಗಳನ್ನು ಕಲಿತು ಹುಡುಗರ ಕಂಪನಿ ನಾಟಕವೊಂದನ್ನು ಬರೆದು ಆಡಿಸಿದ್ದರು. +ಹೀಗೆ ಹೈಸ್ಕೂಲ್‌ ವಿದ್ಯಾಭ್ಯಾಸದ ವೇಳೆಗೇ ಪ್ರತಿಭಾವಂತ ಬಾಲಸಾಹಿತಿ ಆಗಿದ್ದರು ದೇವುಡು. +೧೯೧೭ ರಿಂದ ೧೯೨೨ ರ ವರೆಗೆ ಕಾಲೇಜು ವಿದ್ಯಾರ್ಥಿ ಆಗಿದ್ದ ದೇವುಡು ಅವರು ಸಂಸ್ಕೃತ, ಭಾರತೀಯ ತತ್ತ್ವಶಾಸ್ತ್ರಗಳನ್ನು ವಿಶೇಷವಾಗಿ ಅಧ್ಯಯನ ಮಾಡಿದರು. + ವ್ಹಿ.ಸೀ. ಅವರು ಸಹಪಾಠಿಗಳಾಗಿದ್ದರು. + ಸರ್‌.ಎಸ್‌.ರಾಧಾಕೃಷ್ಣನ್‌ ಅಂಥ ಮೇಧಾವಿಗಳು ಗುರುಗಳಾಗಿದ್ದರು. +ಸಾಹಿತ್ಯ, ವೇದಾಂತಗಳಲ್ಲಿ ಕನ್ನಡ-ತೆಲುಗು, ಸಂಸ್ಕೃತ-ಇಂಗ್ಲೀಷ್‌ ಭಾಷೆಗಳಲ್ಲಿ ಪರಿಣತರಾದ ದೇವುಡು ಅವರು ಕಾಲೇಜಿನ ವಿದ್ಯಾಭ್ಯಾಸದ ಕಾಲದಲ್ಲಿ ಅದ್ಭುತ ವಾಗ್ದಧಿಯ ವಿದ್ಯಾರ್ಥಿ ಆಗಿದ್ದರು. +ದೇವುಡು ಅವರ ಹಿರಿಯರು ಅರಮನೆ-ಗುರುಮನೆಗಳ ಮನ್ನಣೆ ಪಡೆದರಾದರೂ ಸಾಕಷ್ಟು ಶ್ರೀಮಂತಿಕೆಯ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆಯಲಿಲ್ಲ. +ದೇವುಡು ಅವರ ಕಾಲಕ್ಕೆ ಸಾಕಷ್ಟು ಬಡತನ ಆವರಿಸಿತ್ತು. +ಆದರೆ ಸಾಂಸ್ಕೃತಿಕವಾಗಿ ವಿದ್ಯೆ, ಪ್ರತಿಭೆ, ಆಚಾರ-ವಿಚಾರಗಳಲ್ಲಿ ಸಾರ್ವಜನಿಕ ಮನ್ನಣೆಯಲ್ಲಿ ಶ್ರೀಮಂತ ಗೌರವ ಕುಟುಂಬಕ್ಕೆ ಇತ್ತು. +ಆದರ್ಶ ಶಿಕ್ಷಕ ಪ್ರತಿಭಾವಂತ ವಿದ್ಯಾರ್ಥಿಯಾಗಿ ಶಿಕ್ಷಣ ಪಡೆದ ದೇವುಡು ಅವರು ಎಂ.ಎ. ಪದವೀಧರರಾದ ಮೇಲೆ ಶಿಕ್ಷಕರಾಗಲು ಇಚ್ಛಿಸಿ, ೧೯೨೫ ರ ವೇಳೆಗೆ ಮೈಸೂರಿನ ಸದ್ದಿದ್ಯಾ ಪಾಠಶಾಲೆಯಲ್ಲಿ ಮುಖ್ಯೋಪಾಧ್ಯಯರಾದರು. +ದೇವುಡು ಕೇವಲ ಹೊಟ್ಟೆಪಾಡಿನ ಗಿಳಿಪಾಠದ ಶಿಕ್ಷಕರಾಗಿರಲಿಲ್ಲ. +ವಿಶಿಷ್ಟ ಆದರ್ಶಗಳಿಂದ ಕೂಡಿ ದೈವದತ್ತ ಸಂಸ್ಕಾರ, ಪ್ರತಿಭೆ ಹೊಂದಿದ್ದ ಅಪೂರ್ವ ಶಿಕ್ಷಕರಾಗಿದ್ದರು. +ಅವರ ಪ್ರತಿಭೆ ಪಾಂಡಿತ್ಯಗಳಿಗೆ, ಆಸೆ ಆದರ್ಶಗಳಿಗೆ ಮೈಸೂರಿನ ಶಾಲೆಯ ಕೆಲಸ ಸಾಲದಾಯಿತು. +ಆ ವೇಳೆಗೆ ದೇವುಡು ಅವರಿಗೆ ತಿರುಮಲೆ ತಾತಾಚಾರ್ಯ ಶರ್ಮ, ಸಿದ್ಧವನಹಳಿ ಕೃಷ್ಣಶರ್ಮಾ ಮೊದಲಾದ ನಾಡು-ನುಡಿಗಳ ಸೇವಕರಿಂದ ಬೆಂಗಳೂರಿಗೆ ಬಂದು ಕಾರ್ಯಪ್ರವತ್ತರಾಗಲು ಒತ್ತಾಯ ಪ್ರೇರಣೆಗಳು ಬಂದವು. +ದೇವುಡು ಬೆಂಗಳೂರಿಗೆ ಬಂದರು. +ಅಂದಿನವರೆಗೆ ಮೈಸೂರು ಸಾಧನರಂಗವಾಗಿತ್ತು; +ಈಗ ಬೆಂಗಳೂರು ಕಾರ್ಯರಂಗವಾಯಿತು. +ಮೈಸೂರಿನ ಶಾಲೆಯಲ್ಲಾದ ಅನುಭವ ಹಾಗೂ ೧೯೨೩-೨೪ ರಲ್ಲಿ ಸ್ವಲ್ಪ ಕಾಲ ಶೃಂಗೇರಿ ಮಠದ ಸೇವೆಯಲ್ಲಿದ್ದಾಗ ಸ್ವತಂತ್ರ ಪ್ರವೃತ್ತಿಯ ಸ್ವಾಭಿಮಾನಿ ದೇವುಡು ಅವರು ಕಲಿತ ಪಾಠವೆಂದರೆ, "ಯಾರ ಕೈಕೆಳಗೂ ಕೆಲಸ ಮಾಡಬಾರದು; +ಹಾಗೆ ಮಾಡುವುದು ನನ್ನ ಜಾಯಮಾನವಲ್ಲ"ಎಂಬುದು ಈ ಅನುಭವದಿಂದ ಮುಂದೆ ಎಂಥೆಂಥ ಉನ್ನತಾವಕಾಶಗಳು ದೊರೆತರೂ ಸರ್ಕಾರಿ ಕೆಲಸಕ್ಕೆ ದೇವುಡು ಅವರು ಸೇರಲಿಲ್ಲ. +ಬೆಂಗಳೂರಿಗೆ ಬಂದಾಗ ಅವರ ಸ್ವತಂತ್ರ ಪ್ರವೃತ್ತಿಗೆ ತಕ್ಕಂತೆ ಕಾರ್ಯ ನಿರ್ವಹಿಸಲು ಪ್ರತಿಭಾ ಪ್ರದರ್ಶನ ಮಾಡಲು ಅವಕಾಶವಾಗುವಂತೆ ಬೆಂಗಳೂರು ಆರ್ಯ ಲೋಯರ್‌ ಸೆಕೆಂಡರಿ ಶಾಲೆಯ ಹೆಡ್‌ಮಾಸ್ಟರ್‌ ಹುದ್ದೆ ದೇವುಡು ಅವರಿಗೆ ದೊರಕಿತು. + ಪ್ರೊ.ಕೆ.ಸಂಪದ್ಗಿರಿ ರಾಯರು ಬಳೇಪೇಟೆಯಲ್ಲಿ ಗೋಪಾಲಾಚಾರ್‌ ಎಂಬುವರು ನಡೆಸುತ್ತಿದ್ದ ಆರ್ಯ ವಿದ್ಯಾಶಾಲೆ ಅವರ ಅನಂತರ ದುಃಸ್ಧಿತಿಗೆ ಒಳಗಾಗಿದ್ದಾಗ ಜೀರ್ಣೋದ್ಧಾರಕ್ಕಾಗಿ ದೇವುಡು ಅವರನ್ನು ಹೆಡ್‌ಮಾಸ್ಟರನ್ನಾಗಿ ಆಹ್ವಾನಿಸಿದ್ದರು. +ವಿಶಿಷ್ಟ ರೀತಿಯಲ್ಲಿ ಈ ಶಾಲೆಯನ್ನು ನಡೆಸಿ ಆದರ್ಶ ಶಾಲೆಯನ್ನಾಗಿ ಮಾಡಿ ಕಾರಣಾಂತರಗಳಿಂದ ಈ ಶಾಲೆಯಿಂದ ದೂರವಾದರು. +ಕನ್ನಡದ ಪ್ರಸಿದ್ಧ ಸಾಹಿತಿ ಬೆಟಗೇರಿ ಕೃಷ್ಣಶರ್ಮರು ಕೆಲವು ಕಾಲ ಈ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. +ಶಾಲೆಯ ಅಧ್ಯಾಪಕರು ಸಮರ್ಥ ಹಿರಿಯರ ಕೈಕೆಳಗೆ ಕೆಲಸ ಮಾಡಿದರೆ ಎಂಥ ಅದ್ಭುತಗಳನ್ನು ಸಾಧಿಸಬಹುದು ಎಂಬುದನ್ನು ದೇವುಡು ಅವರು ಈ ಶಾಲೆಯ ಹೆಡ್ಮಾಸ್ಟಾಗಿ ಸಾಬೀತು ಮಾಡಿದರು. +ದೇವುಡು ಅವರು ಶಿಕ್ಷಕ ವೃತ್ತಿಯಲ್ಲಿ ಕಂಡುಬರುತ್ತಿದ್ದ ವೈಶಿಷ್ಟ್ಯಗಳು ಎರಡು. +ಒಂದು, ಹೊಸರೀತಿಯ ಶಿಕ್ಷಣ ವ್ಯವಸ್ಥೆ ಮತ್ತು ಇನ್ನೊಂದು, ಅಪಾರ ವಿದ್ಯಾರ್ಥಿಪ್ರೇಮ. +ಇದಕ್ಕೆ ಒಂದು ನಿದರ್ಶನವನ್ನು ಸಂಪದ್ಗೀರಿರಾಯರೇ ಉದಾಹರಿಸಿದ್ದಾರೆ. +ಬೆಂಗಳೂರಿನ ನ್ಯಾಶನಲ್‌ ಸ್ಕೂಲ್‌ ೧೯೨೧-೨೯ ರ ವರೆಗೆ ಹೊಸತರಗುಪೇಟೆಯಲ್ಲಿ ಬಾಡಿಗೆ ಕಟ್ಟಡದಲ್ಲಿದ್ದು, ಅನಂತರ ಈಗಿನ ಸ್ವಂತ ಕನ್ನಡಕ್ಕೆ ೧೯೩ಂ ರಲ್ಲಿ ಬದಲಾಯಿಸಿತು. +ಆಗ ಶಾಲೆಯ ವಿದ್ಯಾರ್ಥಿಗಳೆಲ್ಲ ಸರಸ್ಪತೀ ಪಟಸಮೇತ ಮಂಗಳ ವಾದ್ಯಗಳೊಡನೆ ಮೆರವಣಿಗೆಯಲ್ಲಿ ಸ್ವಂತ ಕಟ್ಟಡಕ್ಕೆ ಹೋಗುತ್ತಿದ್ದರು. +ದಾರಿಯಲ್ಲಿ ಮೆರವಣಿಗೆ ನೋಡಿದ ದೇವುಡು ಅವರು ವಿದ್ಯಾರ್ಥಿಗಳಿಗೆ ಸ್ವಂತ ಕಟ್ಟಡ ಸಿಕ್ಕಿತಲ್ಲಾ ಎಂದು ಸಂತೋಷದಿಂದ ಭಾವಾ ವಿಶಿಷ್ಟರಾಗಿ, ಅಲ್ಲೇ ರಸ್ತೆ ಬದಿಯ ಗಾಡಿಯಲ್ಲಿ ವ್ಯಾಪಾರಕ್ಕಿದ್ದ ಅಷ್ಟೂ ದ್ರಾಕ್ಷಿಯನ್ನು ಕೊಂಡು ವಿದ್ಯಾರ್ಥಿಗಳಿಗೆಲ್ಲ ಹಂಚಿ ಆನಂದಿಸಿದರು. +ಇಂಥ ಶಿಕ್ಷಣಪ್ರೇಮಿ, ವಿದ್ಯಾರ್ಥಿಪ್ರಿಯ ದೇವುಡು ಇನ್ನಾವ ಕ್ಷೇತ್ರಕ್ಕೆ ಒಲಿದಾರು? +೧೯೪೨ ರಲ್ಲಿ ತಾವು ಆರ್ಯ ವಿದ್ಯಾ ಶಾಲೆಯಲ್ಲಿ ಸಾಧಿಸಲಾಗದೇ ಉಳಿದಿದ್ದ ಆದರ್ಶಗಳನ್ನು ಸಾಧಿಸಲು ಗಾಂಧೀನಗರ ಪ್ರೌಢಶಾಲೆಯನ್ನು ಸ್ಥಾಪಿಸಿ ಅಚ್ಚುಕಟ್ಟಾಗಿ ನಡೆಸಿದರು. +೫ ವರ್ಷಗಳ ಕಾಲ ಇವರು ನೀಡಿದ ಶಿಕ್ಷಣ ಇಂದಿಗೂ ಮಾದರಿ ವಿಧಾನ ಆಗಿದೆ. +ಈ ಶಾಲೆಯಲ್ಲಿ ದೇವುಡು ಅವರೊಂದಿಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿದವರೂ ಸಾಮಾನ್ಯರೇನಲ್ಲ. +ಆಕಾಶವಾಣಿಯ ಎಂ.ಶಂಕರ್‌, ಪ್ರಸಿದ್ಧ ಕವಿ ಗೋಪಾಲಕೃಷ್ಣ ಅಡಿಗ, ಸರ್ವೋದಯದ ಎಚ್‌.ಎಸ್‌.ದೊರೆಸ್ವಾಮಿ, ಶಿಕ್ಷಣವೆತ್ತ ಎಂ.ಪಿ.ಎಲ್‌.ಶಾಸ್ತ್ರಿ ಮೊದಲಾದವರು ಇಲ್ಲಿ ಅಧ್ಯಾಪಕರಾಗಿದ್ದರು. +ದೇವುಡು ಅವರು ಆದರ್ಶ ಶಿಕ್ಷಕರಾಗಿದ್ದಂತೆ ಶಿಕ್ಷಣ ತಜ್ಞರೂ, ಶಿಕ್ಷಣ ಸುಧಾರಕರೂ ಆಗಿದ್ದರು. +ಇವರ ಪ್ರತಿಭೆ, ಅನುಭವ, ಪಾಂಡಿತ್ಯಗಳನ್ನು ಕಂಡು ವಿಶ್ವವಿದ್ಯಾನಿಲಯಗಳು ಹತ್ತಾರು ಸಮಿತಿಗಳಲ್ಲಿ ಇವರ ಸೇವೆಯನ್ನು ಪಡೆದವು. +ಪಂಡಿತ ಪರೀಕ್ಷೆಯ ಸಂಸ್ಕೃತ ಬೋರ್ಡಿನ ಛೇರ್ಮನ್‌, ಎಸ್‌.ಎಸ್‌.ಎಲ್‌.ಸಿ. ಕನ್ನಡ ಪರೀಕ್ಷೆಯ ಪ್ರಧಾನ ಪರೀಕ್ಷಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಪಠ್ಯಸಮಿತಿಗಳಲ್ಲಿ ಸದಸ್ಯರು, ಮೈಸೂರು ವಿಶ್ವವಿದ್ಯಾನಿಲಯದ ಸಂಸ್ಕೃತ ಅಧ್ಯಯನ ಸಮಿತಿ ಸದಸ್ಯರು ಮತ್ತು ಪರೀಕ್ಷಾ ಸಮಿತಿಗಳ ಸದಸ್ಯರು, ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಗ್ರಂಥ ಪ್ರಕಟನಾ ಸಮಿತಿಯ ಸದಸ್ಯರು ಹೀಗೆ ಹತ್ತಾರು ಶಿಕ್ಷಣ ಸಮಿತಿಗಳ ಸದಸ್ಯರಾಗಿ, ಅಧ್ಯಕ್ಷರಾಗಿ ದೇವುಡು ಸಮರ್ಥ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. +ಸಮರ್ಥ ಆಡಳಿತಗಾರ ಹಾಗೂ ಆದರ್ಶ ಶಿಕ್ಷಕರೆನಿಸಿಕೊಂಡಿದ್ದಾರೆ. +ಪತ್ರಿಕಾ ಸಂಪಾದಕ ದೇವುಡು ಅವರು ಕನ್ನಡ ಪತ್ರಿಕಾರಂಗದಲ್ಲಿ ವಿಶಿಷ್ಟ ಸಾಧನೆಯಿಂದ ಇತಿಹಾಸವನ್ನು ನಿರ್ಮಿಸಿದವರಲ್ಲಿ ಒಬ್ಬರು. +ಪತ್ರಿಕಾವೃತ್ತಿ ಅವರ ಪ್ರಿಯವಾದ ಪ್ರವೃತ್ತಿಗಳಲ್ಲಿ ಒಂದು. +ಹೊಟ್ಟೆಪಾಡಿಗಾಗಿ ಪ್ರಾರಂಭದಲ್ಲಿ ಪತ್ರಿಕಾರಂಗಕ್ಕೆ ಪ್ರವೇಶಿಸಿದರೂ, ಬಹಳ ಬೇಗನೆ ಆದರ್ಶ ರೀತಿಯಲ್ಲಿ ಪತ್ರಿಕೆ ಹೊರಡಿಸಿ ನಾಡಿಗೆ ಸೇವೆ ಸಲ್ಲಿಸುವ ಪತ್ರಿಕಾ ಸಂಪಾದಕರಾದರು. +೧೯೨೭ ರಿಂದ ಸ್ವಲ್ಪಕಾಲ ನವಜೀವನದಿನ/ವಾರ ಪತ್ರಿಕೆ ಸಂಪಾದಕರಾದರು. +ಅನಂತರ ೧೯೩೨-೩೬ ರ ಅವಧಿಯಲ್ಲಿ "ಮಕ್ಕಳ ಪುಸ್ತಕ' ಮಾಸಪತ್ರಿಕೆಯಲ್ಲಿ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. +"ರಂಗಭೂಮಿ" ಪತ್ರಿಕೆಯಲ್ಲಿ (೧೯೩೬-೧೯೩೮) ಲೇಖಕರಾಗಿಯೂ ಗೌರವ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ ಮೇಲೆ ೧೯೩೬ ರಿಂದ ತಮ್ಮದೇ ಆದ ನಮ್ಮ ಪುಸ್ತಕ ಪತ್ರಿಕೆಯನ್ನು ಮಕ್ಕಳಿಗಾಗಿ ಹೊರಡಿಸಿ, ಸುಮಾರು೨೧ ವರ್ಷಗಳ ಕಾಲ ನಡೆಸಿ, "ಇಂಥ ಮಕ್ಕಳ ಪತ್ರಿಕೆ ಈವತ್ತಿಗೂ ಇನ್ನೊಂದಿಲ್ಲ" ಎಂಬಂತೆ ಹಲವಾರು ದಾಖಲೆಗಳನ್ನು ಸ್ಥಾಪಿಸಿದರು. +ಈ ನಡುವೆ ೧೯೩೫-೩೬ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯ ಸಂಪಾದಕರೂ ಆಗಿದ್ದರು. +ತಿ.ತಾ.ಶರ್ಮರ ಗರಡಿಯಲ್ಲಿ ದೇವುಡು ಅವರು ಪಳಗಿದ್ದರಿಂದ ದೇವುಡು ಅವರು ಏಕಲವ್ಯನಾಗಿ ಪತ್ರಿಕಾ ರಂಗದಲ್ಲಿ ವಿರಾಜಿಸುವರು. +ದೇವುಡು ಅವರು ಕನ್ನಡ ಪತ್ರಿಕಾರಂಗಕ್ಕೆ ಕಾಲಿಟ್ಟ ಕಾಲ ಎಂದರೆ, ಕನ್ನಡಿಗರು ಕನ್ನಡದಲ್ಲಿ ಮಾತಾಡಿದರೆ ನಾಲಿಗೆ ತೊಳೆದುಕೊಳ್ಳಬೇಕು ಎನ್ನುತ್ತಿದ್ದ ಕಾಲ. +ದೇವುಡು ಅವರು ನಾಡಿನ ನಾನಾ ಬಗೆಯ ಪತ್ರಿಕೆಗಳಿಗೆ ವಿವಿಧ ವಿಷಯಗಳ ಬಗ್ಗೆ ಅವ್ಯಾಹತವಾಗಿ ಲೇಖನಗಳನ್ನು ಬರೆಯುತ್ತಿದ್ದರು. +ಅವರ ನಿಧನಕ್ಕೆ ಒಂದೆರಡು ವಾರದ ಹಿಂದೆ ಸಹ ಪತ್ರಿಕೆಗೆ ಅವರು ಲೇಖನ ಬರೆದಿದ್ದರು. +ದೇವುಡು ಅವರು ಪತ್ರಿಕೆಗಳನ್ನು ಹೆಸರಿಗೆ ನಡೆಸಲಿಲ್ಲ. +ನೂತನ ಪ್ರಯೋಗಗಳಿಗಾಗಿ ನಡೆಸಿದರು. +ಅದಕ್ಕೆ ಶ್ರೇಷ್ಠನಿದರ್ಶನವೆಂದರೆ ಅವರ "ನಮ್ಮ ಪುಸ್ತಕ' ಎಂಬ ಮಕ್ಕಳ ಮಾಸಪತ್ರಿಕೆ. +ಸಾಕ್ಷರತಾ ಪ್ರಚಾರಕ್ಕೆ ಕೈಗೊಂಡ ಹತ್ತಾರು ಪ್ರಯೋಗಗಳು ಆ ಪತ್ರಿಕೆಯಲ್ಲಿ ನಡೆದಿವೆ. +ದೇವುಡು ಪ್ರಯೋಗ ಶೀಲರಾಗಿದ್ದಂತೆಯೇ ನಾನಾಶಾಸ್ತವಿಶಾರದರೂ ಆಗಿದ್ದರು. +ಮಕ್ಕಳ ಸಾಹಿತ್ಯದಿಂದ ಹಿಡಿದು ಅಧ್ಯಾತ್ಮ ಶಾಸ್ತ್ರದವರೆಗೆ ಕಲೆಯಿಂದ ಹಿಡಿದು ವಿಜ್ಞಾನದವರೆಗೆ ನೂರಾರು ವಿಷಯಗಳ ಬಗ್ಗೆ ಲೇಖನಗಳನ್ನುಬರೆದಿದ್ದಾರೆ. +ಅವೆಲ್ಲವನ್ನೂ ಸಂಗ್ರಹಿಸಿದರೆ, ಸಾವಿರಾರು ಪುಟಗಳಾಗಿ ಹಲವಾರು ಸಂಪುಟಗಳಾಗುತ್ತವೆ. +ಅವರು ದಿನಪತ್ರಿಕೆಗಳಲ್ಲಿ ಧಾರವಾಹಿಯನ್ನೂ ವಿಜ್ಞಾನದ ಲೇಖನಗಳನ್ನೂ ಪ್ರಕಟಿಸಲು ಪ್ರಾರಂಭಿಸಿದರು. +"ನವಜೀವನ"ದ ಮೂಲಕ ಕನ್ನಡ ಪತ್ರಿಕಾ ಕ್ಷೇತ್ರದಲ್ಲಿ ನೂತನ ಅಧ್ಯಾಯ ತೆರೆದುದರಲ್ಲಿ ದೇವುಡು ಒಬ್ಬರು. +ಮಕ್ಕಳ ಪತ್ರಿಕೆಯ ಭೀಷ್ಮ ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡದಲ್ಲಿ ಮಕ್ಕಳ ಸರ್ವಾಂಗೀಣ ಉನ್ನತಿಗೆ ಶ್ರಮಿಸಿದವರಲ್ಲಿ ಪತ್ರಿಕೆ ನಡೆಸಿ ಮತ್ತು ಮಕ್ಕಳೊಡನೆ ಬೆರೆತು ಸಾಹಿತ್ಯ ರಚಿಸಿ ಜನಪ್ರಿಯರಾದವರಲ್ಲಿ ಆರ್‌.ಕಲ್ಯಾಣಮ್ಮ ದೇವುಡು ಇಬ್ಬರೂ ಅಗ್ರಗಣ್ಯರು. +ದೇವುಡು ನಡೆಸಿದ "ನಮ್ಮ ಪುಸ್ತಕ" ಹೆಸರಿಗೆ ಮಕ್ಕಳ ಪುಸ್ತಕ ಆಗಿದ್ದರೂ ಕಂಡವರೆಲ್ಲಾ "ನಮ್ಮ ಪುಸ್ತಕ" ಎಂದುಕೊಳ್ಳುವ ಮಾಸಪತ್ರಿಕೆ ಆಗಿತ್ತು. +ಇದಕ್ಕೆ ಕಾರಣ ದೇವುಡು ಅವರ ಜ್ಞಾನ ವೈಶಾಲ್ಯ, ಪ್ರಯೋಗಶೀಲತೆ, "ನಮ್ಮ ಪುಸ್ತಕ" ಮಕ್ಕಳ ಮಾಸ ಪತ್ರಿಕೆಯ ಸ್ವರೂಪ ಮಹತ್ವಪೂರ್ಣವಾದುದು. +ಪ್ರತಿ ತಿಂಗಳ ಪತ್ರಿಕೆಯಲ್ಲೂ ಮೂರು ಭಾಗಗಳಿರುತ್ತಿದ್ದವು. +ವಯೋಮಾನ ಮತ್ತು ಬುದ್ಧಿಮಾನಗಳಿಗೆ ಅನುಸಾರವಾಗಿ ಬಾಲಕರ ವಿಭಾಗ, ವಿದ್ಯಾರ್ಥಿವಿಭಾಗ,ತಾಯಿ ತಂದೆಗಳ ವಿಭಾಗ ಎಂದು. +ಚಿಕ್ಕಮಕ್ಕಳಿಗೆ (ಪ್ರಾಥಮಿಕ ಶಾಲಾವರ್ಗದವರಿಗೆ ಮತ್ತು ನರ್ಸರಿ ಅವರಿಗೆ) ಚಿತ್ರಕಥೆ, ಅಕ್ಷರಪರಿಚಯ, ಚಿತ್ರಲಿಪಿ ದಾರಿಹುಡುಕು, ಪಟ್ಟಕಥೆ, ಪದ್ಯ ಇತ್ಯಾದಿ ಇರುತ್ತಿದ್ದವು. +ಪ್ರೌಢಶಾಲಾ ಹಂತದವರಿಗೆ ಸೂಕ್ತವಾದ ಕಥೆ ಪದ್ಯ ನಾಟಕ ಪ್ರಬಂಧ ದಾರಿಹುಡುಕು ಇತ್ಯಾದಿ ನಾನಾ ಭಾಗಗಳಿರುತ್ತಿದ್ದವು. +ಲೋಕಮಾಹಿತಿ, ವಿಜ್ಞಾನ, ಶಿಕ್ಷಣ ಸಮಸ್ಯೆಗಳು ಮುಂತಾದ ವಿಷಯಗಳ ಬಗ್ಗೆ ಮಕ್ಕಳ ದೃಷ್ಟಿಯಿಂದ ಹಿರಿಯರಿಗಾಗಿ ಲೇಖನಗಳಿರುತ್ತಿದ್ದವು ೩ನೆಯ ಭಾಗದಲ್ಲಿ. +ಹೀಗಾಗಿ "ನಮ್ಮ ಪುಸ್ತಕ" ಮಕ್ಕಳ ಮಾಸಪತ್ರಿಕೆ ಆದರ್ಶಪತ್ರಿಕೆಯಾಗಿ ಇತಿಹಾಸ ನಿರ್ಮಿಸಿದೆ. +ಮಕ್ಕಳ ಸಾಹಿತಿ ಕನ್ನಡದಲ್ಲಿ ಇಂದಿಗೂ ಬೆಳೆಯಬೇಕಾದ ಸಾಹಿತ್ಯ ಪ್ರಕಾರಗಳಲ್ಲಿ ಮಕ್ಕಳ ಸಾಹಿತ್ಯವೂ ಒಂದು. +ಈ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಕವಿಗಳಾಗಿ, ಕತೆಗಾರರಾಗಿ ಅಪೂರ್ವ ರಚನೆಗಳನ್ನು ಮಾಡಿ, ಇತಿಹಾಸ ನಿರ್ಮಿಸಿದವರಲ್ಲಿ ದೇವುಡು ಅವರು ಅಗ್ರಗಣ್ಯರು. +ಮಕ್ಕಳ ಸಾಹಿತ್ಯವನ್ನು ರಚಿಸಿದವರಲ್ಲಿ ಎರಡು ವರ್ಗದವರಿದ್ದಾರೆ. +ಕೇವಲ ಬುದ್ಧಿಬಲ, ಸಾಹಿತ್ಯಾಭ್ಯಾಸ, ಕಲ್ಪನಾ ಶಕ್ತಿಯಿಂದ ಕೂತಲ್ಲಿಯೇ ಮಕ್ಕಳ ಸಹವಾಸ, ಅನುಭವವಿಲ್ಲದೆ ಮಕ್ಕಳಿಗಾಗಿ ಸಾಹಿತ್ಯ ರಚಿಸಿದವರು ಹತ್ತಾರು ಮಂದಿ ಇದ್ದಾರೆ. +ಆದರೆ ಇನ್ನೊಂದು ವರ್ಗದ ಜನರು ಪ್ರತಿಭೆ, ಪಾಂಡಿತ್ಯ ಅನುಭವಗಳ ಜತೆಗೆ ಮಕ್ಕಳೊಡನೆ ಆಡಿ ಹಾಡಿ ಬೆರೆತು ನಲಿದು ಅವರ ಮನಸ್ಸನ್ನೂ ಭಾಷೆಯನ್ನೂ ಅರ್ಥಮಾಡಿಕೊಂಡು ಕಥೆ, ಪದ್ಯನಾಟಕ ರಚಿಸಿದವರು ಹತ್ತಾರುಮಂದಿ ಇದ್ದಾರೆ. +ಆದರೆ ಇನ್ನೊಂದು ವರ್ಗದ ಜನರುಪ್ರತಿಭೆ ಪಾಂಡಿತ್ಯ ಅನುಭವಗಳ ಜತೆಗೆ ಮಕ್ಕಳೊಡನೆ ಆಡಿ, ಹಾಡಿ, ಬೆರೆತು,ನಲಿದು ಅವರ ಮನಸ್ಸನ್ನೂ ಭಾಷೆಯನ್ನೂ ಅರ್ಥಮಾಡಿಕೊಂಡು ಕಥೆಪದ್ಯ ನಾಟಕ ರಚಿಸಿದವರು ನಿಜವಾದ ಮಕ್ಕಳ ಸಾಹಿತಿಗಳು. +ರಾಜರತ್ನಂ, ಟಿ.ಎಂ.ಆರ್‌.ಸ್ವಾಮಿ ಮೊದಲಾದವರು ಈ ವರ್ಗದವರು. +ದೇವುಡು ಅವರೂ ಈ ವರ್ಗದವರೇ. +ಮಕ್ಕಳಿಗೆ ಕಥೆ ರಚಿಸುವಲ್ಲಿ, ಹೇಳುವಲ್ಲಿ,ಬರೆಯುವಲ್ಲಿ ದೇವುಡು ಅವರನ್ನು ಸರಿಗಟ್ಟುವವರು ನಮ್ಮ ನಾಡಿನಲ್ಲಿ ಕೈ ಬೆರಳೆಣಿಕೆಯಷ್ಟು ಸಿಕ್ಕಾರು. +ಸ್ವಾತಂತ್ರ್ಯ ಪೂರ್ವದಲ್ಲಿ ದೇವುಡು ಅವರ ಮಕ್ಕಳ ಕಥೆಗಳು ಜನಪ್ರಿಯವಾಗಿದ್ದವು. +ದೇಶಾಂತರ ಕಥೆಗಳು, ಮಂಗಪ್ಪಾಜಿ ಪುರಾಣ, ಬುದ್ಧಿಯ ಕಥೆಗಳು,ತಂತ್ರಗಾರ ನರಿ ಮತ್ತು ಇತರ ಕಥೆಗಳು, ಯವನ ಪುರಾಣ ಮುಂತಾದ ಕಥಾಸಂಗ್ರಹಗಳು ಶಾಲಾಮಕ್ಕಳ ಮೆಚ್ಚುಗೆಯ ಕಥೆಗಳಾಗಿದ್ದವು. +ದೇವುಡು ಕಥೆಗಳ ಬಗ್ಗೆ ಪಂಜೆ ಅವರು ಹೇಳಿದ ಮಾತುಗಳ ಮನನೀಯವಾಗಿವೆ . + ದೇವುಡು ಬರೆದ ಬುದ್ಧಿಯ ಕಥೆಗಳನ್ನು ಓದಿದಾಗ, ಆದ ಸಂತೋಷದಲ್ಲಿ ದೇವುಡು ಸಿಕ್ಕಾಗ ಅವರನ್ನು ತಬ್ಬಿಕೊಂಡು ಹೇಳಿದ ಮಾತಿದು; +"ಕರ್ನಾಟಕದಲ್ಲಿ ಮಕ್ಕಳಿಗೆ ಬರೆಯುವವರು ಇಲ್ಲವಲ್ಲಾ ಎಂದು ಯೋಚಿಸುತ್ತಿದ್ದೆ." +ನಿಮ್ಮ ಬುದ್ಧಿಯ ಕಥೆಗಳನ್ನು ಕಂಡು, "ಹುಸ್ಸಪ್ಪಾ ಇನ್ನು ನಾನು ನಿರಾತಂಕವಾಗಿ ಸಾಯಬಹುದು ಎಂದುಕೊಂಡೆ" ಇದಕ್ಕಿಂತ ಬೇರೆ ಪ್ರಶಸ್ತಿ ಯಾಕೆ? +ಒಂದು ನೂರಕ್ಕೆ ಕಡಿಮೆಯಿಲ್ಲದೆ ದೇವುಡು ಬರೆದ ಮಕ್ಕಳ ಕಥೆಗಳನ್ನು ಓದಿ ಹಿಂದಿನ ತಲೆಮಾರು ಪಡೆದ ಸಂತೋಷ ಇಂದಿನ ಮಕ್ಕಳಿಗೆ ದೊರೆಯದಿರುವುದು ನಾಡಿನ ದೌರ್ಭಾಗ್ಯ . +ಈಗಲಾದರೂ ಸರ್ಕಾರ, ಪ್ರಕಾಶಕರು ದೇವುಡು ಅವರ ಮಕ್ಕಳ ಕಥೆಗಳನ್ನು ಪುನಃ ಪ್ರಕಟಿಸಿದರೆ ಮಕ್ಕಳಿಗೆ ಆನಂದ ನಿಧಿಯೇ ಸಿಕ್ಕುತ್ತದೆ. +ಮಹಾನ್‌ ಕಾದಂಬರಿಕಾರ ದೇವುಡು ನಾಡಿನಲ್ಲೆಲ್ಲಾ ಹೆಚ್ಚಾಗಿ ಪ್ರಸಿದ್ಧಿ ಹೊಂದಿರುವುದು ಕಾದಂಬರಿಕಾರರೆಂದೇ. +ಶ್ರೇಷ್ಠ ಸಾಮಾಜಿಕ ಕಾದಂಬರಿಗಳನ್ನೂ, ಸಾಹಸ ಕಾದಂಬರಿಗಳನ್ನೂ ರಚಿಸಿದ್ದರೂ, "ಮಹಾಬ್ರಾಹ್ಮಣ', "ಮಹಾಕ್ಚತ್ರಿಯ', "ಮಹಾದರ್ಶನ' ಕಾದಂಬರಿತ್ರಯಗಳಿಂದ ಪೌರಾಣಿಕ ಕಾದಂಬರಿಕಾರರೆಂದೇ ಪ್ರಸಿದ್ಧರಾಗಿದ್ದಾರೆ. +ಆದರೂ ಅಂತರಂಗ, ಮಲ್ಲಿ, ಡಾ.ವೀಣಾ ಅಂಥ ಸಾಮಾಜಿಕ ಕಾದಂಬರಿಗಳೂ ಮಯೂರ, ಚಿನ್ನಾ ಮುಂತಾದ ಐತಿಹಾಸಿಕ ಕಾದಂಬರಿಗಳೂ ಸಾಹಸವರ್ಮ,ಕಳ್ಳರ ಕೂಟ ಇಂಥ ಸಾಹಸ ಕಾದಂಬರಿಗಳೂ ಕನ್ನಡ ಕಾದಂಬರಿ ಸಾಹಿತ್ಯ ಚರಿತ್ರೆಯಲ್ಲಿ ತಮ್ಮವೇ ಆದ ಸ್ಥಾನಗಳಿಸಿವೆ. +ಪೌರಾಣಿಕ ಕಾದಂಬರಿ ರಚನೆಯಲ್ಲಿ ಹೆದ್ದಾರೆ ತೆರೆದವರು ದೇವುಡು. +ತ.ರಾ.ಸು. ಅಂಥ ಪ್ರತಿಭಾವಂತ ಕಾದಂಬರಿಕಾರರು ಬೆಳಕು ತಂದ ಬಾಲಕ ಅಂಥ ಪೌರಾಣಿಕ ಕಾದಂಬರಿಗಳನ್ನು ಬರೆಯಲು ದೇವುಡು ಅವರಿಂದ ಮಾರ್ಗದರ್ಶನ, ಸ್ಫೂರ್ತಿ ಪಡೆದಿದ್ದಾರೆ. +ತಮ್ಮದೇ ಆದ ಶೈಲಿ, ಕಾದಂಬರಿ ರಚನೆಯ ಉದ್ದೇಶ ಇಟ್ಟುಕೊಂಡು ಕಾದಂಬರಿಗಳನ್ನು ರಚಿಸಿರುವ ದೇವುಡು ಅವರು ಅದಕ್ಕಾಗಿ ೨ಂ ವರ್ಷಕಾಲ ಮಾಡಿದ ಅಭ್ಯಾಸ, ಸಾಧನೆ ಅಪೂರ್ವವಾದುದು. +ಉದಾಹರಣೆಗೆ, "ಮಹಾಬ್ರಾಹ್ಮಣ" ಕಾದಂಬರಿ ರಚನೆಗೆ ತೆಗೆದುಕೊಂಡ ಅವಧಿ, ಮಾಡಿದ ವಿಷಯ ಸಂಗ್ರಹ, ಅಭ್ಯಾಸ ಕುರಿತು ಬರೆದರೆ ಅದೇ ಒಂದು ಗ್ರಂಥವಾಗುತ್ತದೆ. +ಈ ಗ್ರಂಥವನ್ನು ಕುರಿತು ಅವರು ಹೇಳಿದ ಮಾತಿದು: +“ಈ ಗ್ರಂಥ ಕಥೆಯೆಂದವರಿಗೆ ಕಥೆ, ಶಾಸ್ತ್ರವೆಂದವರಿಗೆ ಶಾಸ್ತ್ರ ವಿದ್ಯೆಯೆಂದವರಿಗೆ ವಿದ್ಯೆ?" +ಕಾದಂಬರಿಯ ಸಂಕ್ಷಿಪ್ತರೂಪ ಕಥೆ, ಕಥೆಯ ವಿಸ್ತತರೂಪ ಕಾದಂಬರಿ. +ನಮ್ಮಲ್ಲಿ ಎಷ್ಟೋ ಜನ ಸಾಹಿತಿಗಳು ಕಾದಂಬರಿಕಾರರೂ ಹೌದು ಕತೆಗಾರರೂಹೌದು, ದೇವುಡು ಸಹ ಕಾದಂಬರಿಕಾರರೂ, ಕತೆಗಾರರೂ ಆಗಿದ್ದರು. +ಅವರ ವೈಣಿಕ ಕಥೆ ಕನ್ನಡದ ಶ್ರೇಷ್ಠ ಕಥೆಗಳಲ್ಲಿ ಒಂದು. +ಅವರ ಸಣ್ಣ ಕಥಾಸಂಗ್ರಹಗಳಲ್ಲಿ ಕನ್ನಡದ ವಿಶಿಷ್ಟ ಕಥೆಗಳ ಗುಂಪಿಗೆ ಸೇರುವ ಹಲವಾರು ಕಥೆಗಳಿವೆ. +ದೇವುಡು ಬಾಲ್ಯಕಾಲದಿಂದ ನಟರೂ ನಾಟಕ ಸಾಹಿತ್ಯಕರ್ತರೂ ದಿಗ್ಬರ್ಶಕರೂ ಆಗಿದ್ದುದರಿ೦ದ ಅವರ ನಾಟಕಗಳು ರಂಗದ ಮೇಲೆ ಯಶಸ್ಸು ಕಂಡಿವೆ. +ವಿಶೇಷವಾಗಿ ಮಕ್ಕಳ ನಾಟಕಗಳು ಕನ್ನಡಕ್ಕೆ ಕೊಡುಗೆ ಆಗಿವೆ. +ದೇವುಡು ಅವರು ನಾಟಕಗಳ ರಚನೆ ಅನುವಾದಗಳಿಗಿಂತ ಹೆಚ್ಚಾಗಿ ಕನ್ನಡ ರಂಗಭೂಮಿಗೆ ತಮ್ಮ ನಟನೆ ಮೂಲಕ ನೀಡಿದ ಅಭಿನಯದ ಕೊಡುಗೆಯೇ ಅಪೂರ್ವ. +ಚಲನಚಿತ್ರ ರಂಗಕ್ಕೂ ಈ ಮಾತು ಅನ್ವಯಿಸುತ್ತದೆ. +ದೇವುಡು ಅವರು ಸಾಹಿತ್ಯ ರಚನೆಯಲ್ಲಿ ಬಹುಮುಖ ಪ್ರತಿಭಾಶಾಲಿ. +ಯಾವ ಬಗೆಯ ಸಾಹಿತ್ಯ ಬೇಕಾದರೂ ರಚಿಸಬಲ್ಲ ಪ್ರತಿಭೆ ಅವರದಾಗಿತ್ತು. +ಅನಕೃ ಅವರಿಂದ "ನಗ್ನಸತ್ಯ" ಕೃತಿ ರಚಿತವಾದ ಕಾಲದಲ್ಲಿ ದೇವುಡು ಅವರ ಪರಿಚಿತ ಪ್ರಕಾಶಕರೊಬ್ಬರು. +ಆ ವಿಷಯವನ್ನು ಪ್ರಸ್ತಾಪಿಸಿ, ಆ ರೀತಿಯ ಕಾದಂಬರಿಯನ್ನು ಇತರರು ರಚಿಸಲು ಸಾಧ್ಯವಿಲ್ಲವೆಂದು ಹೇಳಿದಾಗ ಅದನ್ನು ಸವಾಲಾಗಿ ಸ್ವೀಕರಿಸಿ, ಕೇವಲ ಒಂದು ವಾರದಲ್ಲೇ ಅದರ ಒಂದು ಭಾಗವನ್ನು ದೇವುಡು ಬರೆದು ಒಪ್ಪಿಸಿದರು. +ಆ ಪ್ರಕಾಶಕರು ತಮ್ಮ ಸೋಲನ್ನು ಒಪ್ಪಿಕೊಂಡು,ದೇವುಡು ಅಂಥವರ ಹೆಸರಿನಲ್ಲಿ ಇಂಥ ಕೃತಿ ಬರಬಾರದೆಂದು, ತಮ್ಮ ಪ್ರಕಾಶನದಲ್ಲಿ ಈ ಬಗೆಯ ಕೃತಿ ಪ್ರಕಟವಾಗಬಾರದೆಂದು ಹರಿದು ಹಾಕಿದರು. +ದೇವುಡು ನಕ್ಕು ಸುಮ್ಮನಾದರು. +ಆ ಕೃತಿಯ ಹೆಸರು "ಪೋಲೀ ಪಟಾಲಂ". +ದೇವುಡು ಅವರು ಉತ್ತಮ ಗ್ರಂಥಸಂಪಾದಕರೂ ಆಗಿದ್ದರು. +ಇದಕ್ಕೆ ಸರ್ಕಾರ ಪ್ರಕಟಿಸಿದ “ಕನ್ನಡ ಜೈಮಿನಿ ಭಾರತ" ಒಂದು ನಿದರ್ಶನ. +ಶ್ರೇಷ್ಠ ಮಕ್ಕಳ ಸಾಹಿತಿ ಮತ್ತು ಆದರ್ಶ ಶಿಕ್ಷಕರಾಗಿದ್ದ ಅವರು ಪಠ್ಯಪುಸ್ತಕ ನಿರ್ಮಾಣದಲ್ಲಿ ಎತ್ತಿದ ಕೈ. +ಅವರು ರಚಿಸಿದ "ದಿ ಮೈಸೂರು ಟ್ರಾನ್ಸ್‌ಲೇಷನ್‌ ಸೀರೀಸ್‌ ೩ ಭಾಗಗಳು (೧೯೫೩) ಮತ್ತು “ಕನ್ನಡ ನಾಲ್ಕನೆಯ ಪುಸ್ತಕ" ಇವು ಒಂದೆರಡು ಉದಾಹರಣೆ ಅಷ್ಟೆ. +ಜಾನಪದ ಕ್ಷೇತ್ರದಲ್ಲಿ ವೈದಿಕ ಸಂಸ್ಕೃತಿಯೇ ಗ್ರಾಮೀಣ ಜಾನಪದ ಸಾಹಿತ್ಯದ ಆಕರವೆಂದು ಪ್ರತಿಪಾದಿಸಿದ ಅವರ ಕೃತಿ “ಕರ್ಣಾಟಕ ಸಂಸ್ಕೃತಿ" ಇಂದಿಗೂ ಜಾನಪದ ಅಧ್ಯಯನದ ಆಸಕ್ತರು ಅಭ್ಯಾಸ ಮಾಡಲೇ ಬೇಕಾದ ಕೃತಿ ಆಗಿದೆ. +"ನನ್ನ ಕೃತಿಗಳ ಬಗ್ಗೆ ಸರಿಯಾದ ಮತ್ತು ಸಾಕಷ್ಟು ವಿಮರ್ಶೆ ಬಂದಿಲ್ಲ, ವಿಮರ್ಶಕರು ನನ್ನ ಕೃತಿಗಳನ್ನು ಸರಿಯಾಗಿ ಅಧ್ಯಯನ ಮಾಡಿಲ್ಲ"ಎನ್ನುತ್ತಿದ್ದ ದೇವುಡು ಅವರು, ಸ್ವತಃ ಒಳ್ಳೆಯ ವಿಮರ್ಶಕರಾಗಿದ್ದರು. +ಪತ್ರಿಕೆಗಳಲ್ಲಿ ಅವರು ಬರೆದಿರುವ ಗ್ರಂಥ ವಿಮರ್ಶೆಗಳೂ, ಗ್ರಂಥಗಳ ಪೀಠಿಕೆಗಳೂ ರಾಮಾಯಣ,ಗೀತೆ, ಉಪನಿಷತ್ತು ಮೊದಲಾದ ಧಾರ್ಮಿಕ ಗ್ರಂಥಗಳನ್ನು ಕುರಿತು ವ್ಯಾಖ್ಯಾನ ವಿಮರ್ಶೆಗಳೂ ಕನ್ನಡಕ್ಕೆ ಹೊಸರೀತಿಯ ಕೊಡುಗೆಗಳಾಗಿವೆ. +ಶಾಸ್ತ್ರ ಗಂಥಗಳ ರಚನೆಯಲ್ಲಿ ಮತ್ತು ಅದ್ವೈತ ಸಿದ್ಧಾಂತ ಪ್ರತಿಪಾದನೆಯ ಬರಹಗಳಲ್ಲಿ ದೇವುಡು ಅವರು ಅದ್ವಿತೀಯರಾಗಿದ್ದರು. +ಅವರ “ಮೀಮಾಂಸಾದರ್ಪಣ" ಸ್ವತಂತ್ರವಾಗಿ ರಚಿತವಾದ ಗ್ರಂಥ. +ಕನ್ನಡದಲ್ಲಿಯಂತೂ ಅಂಥ ಗ್ರಂಥ ಇನ್ನೊಂದಿಲ್ಲ. +ತೀನಂಶ್ರೀ ಅವರ “ಭಾರತೀಯ ಕಾವ್ಯಮೀಮಾಂಸೆ"ಯಂತೆ ಈ ಗ್ರಂಥವೂ ಏಕೈಕ ನಿದರ್ಶನ. +ಒಟ್ಟು ಸಾಹಿತ್ಯ ಸೇವೆಯನ್ನು ಅವರ ಮಾತಿನಲ್ಲೇ ಹೀಗೆ ಹೇಳಿದೆ: +"ನನ್ನ ಸಾಹಿತ್ಯ ಸೇವೆ ನಡೆದಿರುವುದು ರಂಗಭೂಮಿ, ಶಾಲೆ,ಪತ್ರಿಕೆ, ಭಾಷಣ, ಲೇಖನ ಗ್ರಂಥ ರಚನೆಗಳಲ್ಲಿ. +ಒಂದೊಂದು ಕಡೆಯೂ ಒಂದೊಂದು ವೈಶಿಷ್ಟ್ಯವಿರುವ ಕೆಲಸ ನಡೆದಿದೆ. +ಸಾಕ್ಷರತಾ ಪ್ರಸಾರಕ ದೇವುಡು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಿಗಿಂತ ಮಹತ್ವಪೂರ್ಣವಾದ ಕೊಡುಗೆ ಎಂದರೆ, ಕನ್ನಡ ಜನತೆ ಅಕ್ಷರಸ್ಥರಾಗಲು ಮಾಡಿದ ಸಾಹಸ ಅರ್ಥಾತ್‌ ಮೈಸೂರು ಅಕ್ಷರ ಪ್ರಚಾರ ಯೋಜನೆಯ ಸೃಷ್ಟಿ, ಸುಲಭದಲ್ಲಿ ಅಬಾಲವೃದ್ಧರಾದಿಯಾಗಿ ಎಲ್ಲರೂ ಕನ್ನಡ ಓದು ಬರಹ ಕಲಿಯುವ ವಿಧಾನದ ಆವಿಷ್ಕಾರ ಮಾಡಿದ್ದು. +ಇದರ ಮಹತ್ವ ಅಂದಿಗಿಂತ ಇಂದು ಹೆಚ್ಚು ಗೋಚರವಾಗುತ್ತಿದೆ. +ಕನ್ನಡಲಿಪಿ ಜಗತ್ತಿನ ಲಿಪಿಗಳಲ್ಲಿಯೇ ಅತಿಸುಂದರ ಲಿಪಿಗಳಲ್ಲಿ ಒಂದಾದರೂ ಕನ್ನಡದಲ್ಲಿ ಓದುಬರಹ ಕಲಿಯುವುದು ಹಾಗೂ ಕಲಿಸುವುದು ಸುಲಭದ ಕೆಲಸವೇನಲ್ಲ. +ಇದಕ್ಕಾಗಿ ಅನೇಕರು ಸುಲಭವಾಗಿ ಕನ್ನಡ ಕಲಿಸುವ ನೂತನ ವಿಧಾನಗಳನ್ನು ಆವಿಷ್ಕರಿಸಿದವರಿದ್ದಾರೆ. +ಅವರ ಪೈಕಿ ಎಂ.ಆರ್‌.ಶ್ರೀ. ಮತ್ತು ದೇವುಡು ಅವರು ಅಗ್ರಗಣ್ಯರು. +ಒಬ್ಬರು ಸ್ವಾತಂತ್ರ್ಯ ಪೂರ್ವದಲ್ಲಿ ಇನ್ನೊಬ್ಬರು ಸ್ವಾತಂತ್ರ್ಯಾನಂತರ ಮಕ್ಕಳಿಗೆ ವರವಾದರು. +ದೇವುಡು ಅವರು "ಮಕ್ಕಳ ಪುಸ್ತಕ"ದ ಸಂಪಾದಕ ವರ್ಗಕ್ಕೆ ಸೇರಿದ ಮೇಲೆ ಈ ಅಕ್ಷರ ಕಲಿಸುವ ಯೋಜನೆ ಮಾಡಿದ್ದಾರೆ ಎನಿಸುತ್ತದೆ. +ಏಕೆಂದರೆ ಅವರು ಆ ಪತ್ರಿಕೆಗೆ ಬಂದ ಮೇಲೆ ಅದರಲ್ಲಿ ಬಹುಶಃ ಅಕ್ಷರ ಕಲಿಸುವ ಸಚಿತ್ರ ಪಾಠಗಳು ಪ್ರಾರಂಭವಾಗಿವೆ. +ಪತ್ರಿಕೆಗೆ ಸಿ.ಅಶ್ವತ್ಯನಾರಾಯಣರಾವ್‌ ಸಂಪಾದಕರಾಗಿದ್ದರೂ ಮಕ್ಕಳ ಸಾಹಿತ್ಯ ರಚನೆಯ ಕೈವಾಡವೆಲ್ಲ ದೇವುಡು ಅವರದು ಎಂಬುದರಲ್ಲಿ ಸಂದೇಹವಿಲ್ಲ. +ಈ ಪಾಠಗಳು ೧೯೩೮ ಫೆಬ್ರುವರಿಯ ಮಕ್ಕಳ ಪುಸ್ತಕದ ಸಂಚಿಕೆಯಿಂದ ಅ (ಅಳಿಲುಚಿತ್ರು )ಆ (ಆನೆಚಿತ್ರ)ಇ (ಇಲಿ ಚಿತ್ರ )ಈ (ಈಟಿ ಚಿತ್ರ0 ಉ (ಹಾವಿನ ಚಿತ್ರ)ಊ (ಊದುತ್ತಿರುವಕೊಳವೆ ಹುಡುಗನ ಚಿತ್ರ) ಅಕ್ಷರಗಳನ್ನು ಗುರುತಿಸಿ ಓದಲು ಸಿದ್ಧಪಡಿಸಿದ ಅಕ್ಷರಮಾಲೆ ಪರಿಚಯದ ಪಾಠಗಳಿವು. +ಇವು ಹಾಗೇ ಸ್ವರ ವ್ಯಂಜನ ಕಾಗುಣಿತ ಒತ್ತಕ್ಷರಗಳವರೆಗೆ ಪಾಠಗಳು ಮುಂದಿನ ಸಂಚಿಕೆಗಳಲ್ಲಿ ಮುಂದುವರಿದಿವೆ. +ಪದಗಳ ಜತೆಗೆ ಆಯಾ ಪದಗಳನ್ನು ಬಳಸಿದ ವಾಕ್ಯಗಳನ್ನು ಪಾಠಗಳಲ್ಲಿ ಅಳವಡಿಸಲಾಗಿದೆ. +ಉದಾಹರಣೆಗೆ, "ನ" ಅಕ್ಷರವನ್ನು ಪದ-ಚಿತ್ರಗಳೊಂದಿಗೆ ಪರಿಚಯಿಸಿದ ಮೇಲೆ ಕೊಟ್ಟಿರುವ ವಾಕ್ಯಗಳು "ನಗಾರಿ ದೇವರ ಮುಂದೆ ಬಾರಿಸುವರು","ನಮಸ್ಕಾರ ದೇವರಿಗೆ ಮಾಡು" ಇತ್ಯಾದಿ. +ಇದರ ಜತೆಗೆ ಆಸಕ್ತಿ ಬೆಳೆಸಲು ಚುಕ್ಕೆ ಸೇರಿಸಿ ಚಿತ್ರ ಪೂರ್ತಿಮಾಡು, ಚಿತ್ರಲಿಪಿ ಚಿತ್ರಕಥೆ, ದಾರಿ ಹುಡುಕು,ಪದಬಂಧ, ಬಣ್ಣಹಾಕು ಚಿತ್ರಕ್ಕೆ, ಪುಟ್ಟಪುಟ್ಟ ಪದಗಳ ಪದ್ಯಗಳು, ಪುಟ್ಟಕತೆಗಳುಇವೆ. +ದೇವುಡು ಅವರು ಪ್ರಯೋಗದ ಮೇಲೆ ಪ್ರಯೋಗ ಮಾಡುತ್ತ ತಮ್ಮದೇ ಆದ ಮಕ್ಕಳ ಮಾಸಪತ್ರಿಕೆ "ನಮ್ಮ ಪುಸ್ತಕ" ಪ್ರಾರಂಭ ಮಾಡಿದ ಕಾಲಕ್ಕೆ ಹೊಸದೊಂದು ಅಕ್ಷರ ಕಲಿವ ವಿಧಾನವನ್ನೇ ಕೂಡಿಸಿದರು. +ಒಂದು ರೀತಿಯಲ್ಲಿ ರಠಈಕ ಪದ್ಧತಿಯನ್ನು ಹೋಲುತ್ತಿದ್ದರೂ ಅದರಿಂದ ಭಿನ್ನವಾದ ಪದ್ಧತಿ ಆಗಿತ್ತು. +ಅದೆಂದರೆ ಎಒದರಲ ಎಂಬ ೫ ಅಕ್ಷರಗಳ ಮೂಲಕ ಕನ್ನಡ ಲಿಪಿ ಕಲಿಸುವ ವಿಧಾನ ಅದು. +(ಉದಾಹರಣೆಗೆ, ದ ಇಂದ ಥ ಧ ವ ಪ ಇತ್ಯಾದಿರೂಪಿಸುವುದು). +ಸುಮಾರು ೨ ವಾರಗಳಲ್ಲಿ ಅಕ್ಷರಾಭ್ಯಾಸ ಸಾಧ್ಯ ಎಂದು ತೋರಿಸಿದರು. +ಮಕ್ಕಳಿಗೆ ಮತ್ತು ವಯಸ್ಕರಿಗೆ ತಾವೇ ಶಿಬಿರ ನಡೆಸಿ, ಕಲಿಸಿತಮ್ಮ ವಿಧಾನ ಸುಲಭ, ವ್ಯಾವಹಾರಿಕ, ಶೀಘ್ರ, ವೈಜ್ಞಾನಿಕ ಎಂದು ಸಾಬೀತುಮಾಡಿದರು. +ಈ ಸಂದರ್ಭದಲ್ಲಿ "ನಮ್ಮ ಪುಸ್ತಕ' (೧೯೩೯ ರ ಅಕ್ಟೋಬರ್‌ ನವೆಂಬರ್‌ ತಿಂಗಳ ಸಂಪುಟ ೩ ಸಂಚಿಕೆ ೮-೯) "ನಮ್ಮ ಮಾತು" ದೇವುಡು ಅವರ ಸಂಪಾದಕೀಯ ವಿಭಾಗದಲ್ಲಿ ಪ್ರಕಟವಾದ ವರದಿಯ ಭಾಗವನ್ನು ಗಮನಿಸುವುದು ಅಗತ್ಯವಿದೆ. +ವರದಿಯ ಭಾಗ ಇದು:“ನಮ್ಮ ಮೈಸೂರು ಅಕ್ಷರ ಪ್ರಚಾರ ಪದ್ಧತಿಯನ್ನು ಘನ ಸರ್ಕಾರದವರು ಪರೀಕ್ಷೆಗಾಗಿ ಅಂಗೀಕರಿಸಿದ್ದಾರೆಂದು ಆಗಲೇ ಹೇಳಿದ್ದೇವು. +ಕ್ಲೋಸ್ಟೇಟೆ (ಈಗಿನ ರಾಮನಗರ) ಚನ್ನಪಟ್ಟಣ ಮತ್ತಿಕೆರೆ ಗ್ರಾಮಗಳಲ್ಲಿ ಪ್ರಯೋಗವು ನಡೆಯಿತು. +ನವೆಂಬರ್‌ ೨೭ನೆಯ ತಾರೀಖು (೧೯೩೯) ಕ್ಲೋಸ್ಟೇಟೆಯ ಸಬ್‌ ಡಿವಿಜನ್‌ ಆಫೀಸರರೂ ಬೆಂಗಳೂರಿನ ಡಿಸ್ಟಿಕ್ಟ್‌ ಎಜುಕೇಷನಲ್‌ ಆಫೀಸರರೂ ದಯಮಾಡಿಸಿ ಕ್ಲಾಸುಗಳನ್ನು ಪರೀಕ್ಷಿಸಿದರು. +ಕ್ಲೋಸ್ಟೇಟೆಯಲ್ಲಿ ಕ್ಲಾಸುಗಳು ನಡೆದುದು ೧೯೩೯ ರ ಸೆಪ್ಟೆಂಬರ್‌ಆದಿಭಾಗದಲ್ಲಿ, ೧೫ ದಿನಗಳು ಮಾತ್ರ ಅಲ್ಲಿ ಇಬ್ಬರು ಮೈಸೂರು ಪದ್ಧತಿಯ ರೀಡರುಗಳನ್ನು ಬಲು ಚೆನ್ನಾಗಿ ಓದಿದರು. +ಚನ್ನಪಟ್ಟಣದಲ್ಲಿ ಒಬ್ಬನು ಅದುವರೆಗೆ ನೋಡದೆ ಇದ್ದ ಪುಸ್ತಕವನ್ನು ಓದಿದನು. +ಮತ್ತಿಕೆರೆಯಲ್ಲಂತೂ ಒಬ್ಬನು ಒಂದೂವರೆಗೆ ತಿಂಗಳು ಪಾಠವನ್ನು ಮಾಡಿದವನು ಡಿಪಾರ್ಟ್‌ಮೆಂಟನ ನಾಲ್ಕನೇ ರೀಡರನ್ನು ಧಾರಾಳವಾಗಿ ಓದಿದನು. +೧೦ ದಿನಗಳು ಮಾತ್ರ ಕ್ಲಾಸಿಗೆ ಬಂದಿದ್ದವನು ಮೈಸೂರು ಪದ್ಧತಿಯ ರೀಡರನ್ನು ದಡದಡನೆ ಓದಿದನು. +ಆರು ದಿನ ಮಾತ್ರ ಬಂದಿದ್ದ ಹರಿಜನ ಬಾಲಕನೊಬ್ಬನು (೧೪ ವರ್ಷ) ಬಾಲ ಬೋಧೆಯ ದಪ್ಪದಪ್ಪ ಅಕ್ಷರದ ಪಾಠಗಳನ್ನು ಓದಿದನು. +ಪರೀಕ್ಷೆಗಾಗಿ ದಯಮಾಡಿಸಿದ್ದ ಇಬ್ಬರು ಆಫೀಸರುಗಳೂ ಬಹು ಸಂತೋಷಪಟ್ಟರು. +ನಮ್ಮ ಪದ್ಧತಿಯಲ್ಲಿ ಈಗ ಸುಮಾರು ೩೫ ಜನ ಉಪಾಧ್ಯಯರು ತರಬೇತಾಗಿದ್ದಾರೆ. +ಮೈಸೂರು ಅಕ್ಷರ ಪ್ರಚಾರ ಪದ್ದತಿಯನ್ನು ಸಂಸ್ಥಾನಕ್ಕೆಲ್ಲ ಅನ್ವಯಿಸುವಂತೆ ಮಾಡುವುದಾಗಿ ನೇರ ಸುದ್ದಿ ಬಂದಿದೆ. +ಅನಂತರ ದೇವುಡು ಅವರನ್ನು ಸರ್ಕಾರ ನಾಡಿನ ನಾನಾಭಾಗಗಳಿಗೆ(ಚಿಕ್ಕಮಗಳೂರು, ಹಾಸನ, ಕೊಳ್ಳೇಗಾಲ, ಚನ್ನರಾಯಪಟ್ಟಣ ಇತ್ಯಾದಿ) ಕಳಿಸಿಕೊಟ್ಟು ಉಪಾಧ್ಯಾಯರಿಗೆ ತರಬೇತು ಕೊಡಿಸಿದರು. +ಇದಾದ ಮೇಲೆ ಇದರ ಮಹತ್ವ ಕಂಡು ಇದಕ್ಕೊಂದು ಖಾಯಂ ವ್ಯವಸ್ಥೆ ಬೇಕೆಂದು ಸರ್ಕಾರ ವಯಸ್ಕರ ಶಿಕ್ಷಣ ಸಮಿತಿಯನ್ನು ಸ್ಥಾಪನೆ ಮಾಡಿತು. +ಅದಕ್ಕೆ ಅಧ್ಯಕ್ಷರಾಗಲು ಒಪ್ಪದಿದ್ದ ಶಾಸ್ತ್ರಿಗಳನ್ನು ಖಾಯಂ ಅಜೀವ ಆಹ್ವಾನಿತ ಸದಸ್ಯರನ್ನಾಗಿ ಮಾಡಿ ಅವರ ಜ್ಞಾನಾನುಭವದ ಲಾಭ ಪಡೆಯಿತು. +ಇಂದು ಕೋಟ್ಯಂತರ ರೂ.ಗಳನ್ನು ಸಾಕ್ಷರತೆಗೆ ಸರ್ಕಾರ ಖರ್ಚುಮಾಡುತ್ತಿದೆ. +ದೇವುಡು ಅವರ ಪದ್ಧತಿಯನ್ನು ಅನುಸರಿಸದೆ ಹಣ ವ್ಯರ್ಥವಾಗುತ್ತಿದೆ. +"ಸಿನಿಮಾ ನಾಟಕ ಸಂಗೀತಗಳಿಗೆ ಜನ ಹಣ ಸುರಿಯಲು ಮುಂದೆ ಬರುತ್ತಾರೆ. +ಆದರೆ ಪುಸ್ತಕಕೊಳ್ಳಲು ಏಕೆ ಮುಂದೆ ಬರೊಲ್ಲ" ಎಂದು ದೇವುಡು ಚಿಂತಿಸಿ ಅಕ್ಷರ ಜ್ಞಾನ ಜನರಿಗೆ ಇಲ್ಲದಿರುವುದೇ ಕಾರಣ ಎಂದು ತಿಳಿದು ಈ ಶತಮಾನದ ೪ರ ದಶಕದಲ್ಲಿ ದೇವುಡು ಕೈಗೊಂಡು ಅಕ್ಷರ ಕಲಿಸುವ ವಿಧಾನ ಕನ್ನಡಕ್ಕೆ ಅದ್ಭುತ ಕೊಡುಗೆ. +ಅಕ್ಷರ ಪ್ರಚಾರ ಮುಂದಿನ ಸಾಹಿತಿಗಳ "ಕಾಮಧೇನು" ಎಂದ ಮಾತು ಇಂದು ನಿಜವಾಗಿದೆ. +ಯಾವ ಪ್ರಶಸ್ತಿ ಪುರಸ್ಕಾರಗಳನ್ನೂ ನಿರೀಕ್ಷಿಸದೆ ನಮ್ಮ ನಾಡ ಜನತೆ ವಿದ್ಯಾವಂತರಾಗಬೇಕೆಂದು ಶ್ರಮಿಸಿದವರು ದೇವುಡು. +ಆಗಿನ ವಿದ್ಯಾ ಸಚಿವರಾದ ಜಗಳೂರು ಇಮಾಂ ಅವರು ದೇವುಡು ಅವರಿಗೆ "ಸರ್ಕಾರದಿಂದ ಪ್ರಶಸ್ತಿ ಬಹುಮಾನ ಕೊಡಿಸುತ್ತೇನೆ, ನೀವು ಮಾಡಿದ ಸಾಕ್ಷರತಾ ಕಾರ್ಯಕ್ಕೆ" ಎಂದಾಗ ದೇವುಡು ಹೇಳಿದರು: “ಸ್ವಾಮಿ ನಾನು ಈ ಕೆಲಸವನ್ನು ಹಣಕ್ಕಾಗಿ, ಪ್ರಶಸ್ತಿಗಾಗಿ ಮಾಡಲಿಲ್ಲ. +ನಮ್ಮ ದೇಶದಲ್ಲಿ ಕನ್ನಡಿಗರು ಮಕ್ಕಳಾದಿಯಾಗಿ ಹಿರಿಯರವರೆಗೆ ಎಲ್ಲರೂ ಅಕ್ಷರಸ್ಥರಾಗಿ ಪತ್ರಿಕೆ ಪುಸ್ತಕ ಓದುವವರಾಗಲಿ, ಸ್ವಂತವಾಗಿ ವ್ಯವಹಾರ ನಡೆಸುವರಾಗಲಿ, ತಿಳಿವಳಿಕಸ್ಥರಾಗಲಿ ಎಂದು ಪ್ರಯತ್ನಿಸಿದೆ, ಅಷ್ಟೆ" ಎಂದರು. +ಮೂಲಸಂಸ್ಕೃತ ಸಂಶೋಧಕ ಸಂಸ್ಕೃತ ಮತ್ತು ಕನ್ನಡ ದೇವುಡು ಅವರ ಎರಡು ಸಾಹಿತ್ಯಚಕ್ಷುಗಳು. +ಅವರ ಕೃತಿಗಳಲ್ಲಿ ಬಹುಪಾಲು ಸಂಸ್ಕೃತ ಸಾಹಿತ್ಯದಿಂದ ಆಧಾರಿತ ಇಲ್ಲವೆಅನುವಾದಿತ ಕೃತಿಗಳಾಗಿವೆ. +ಸಂಸ್ಕೃತದಲ್ಲಿ ಶ್ರೇಷ್ಠವಾದದ್ದೆಲ್ಲ ಕನ್ನಡದಲ್ಲಿ ಬರಬೇಕುಎಂಬುದು ಅವರ ಧ್ಯೇಯವಾಗಿತ್ತು. +ಕನ್ನಡಿಗರು ಸುಲಭವಾಗಿ ಕನ್ನಡವನ್ನು ಕಲಿಯುವಂತೆಯೇ ಸಂಸ್ಕೃತವನ್ನು ಕಲಿಯಬೇಕೆಂಬುದು ಅವರ ಹಂಬಲವಾಗಿತ್ತು. +ಕುಟುಂಬದಲ್ಲಿ ಹಿರಿಯರಿಂದ ದೊರೆತ ಶಿಕ್ಷಣ, ಕಾಲೇಜಿನಲ್ಲಿ ಪ್ರಸಿದ್ಧ ವಿದ್ವಾಂಸರಿಂದ ಸಂಸ್ಕೃತ ಶಾಸ್ತ್ರಗ್ರಂಥಗಳ ಅಧ್ಯಯನ, ಸ್ವತಃ ತಾವೇ ಗುರುಗಳಲ್ಲಿ ಗುರುಕುಲ ಪದ್ಧತಿಯಿಂದ ಕಲಿತ ಮೀಮಾಂಸಾ ಇತ್ಯಾದಿ ಅಧ್ಯಯನ ಇವು ದೇವುಡು ಅವರನ್ನು ಸಂಸ್ಕೃತ ದಿಗ್ಗಜರನ್ನಾಗಿಸಿತ್ತು. +ಕಾಶಿಯಲ್ಲಿ ೨೯೫೨ರಲ್ಲಿ ಭಾರತದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದರು ಪ್ರಾಚೀನ ಸಂಪ್ರದಾಯದಂತೆ ನಮ್ಮ ರಾಷ್ಟ್ರದ ನೂರು ಮಂದಿ ಶ್ರೇಷ್ಠ ವೈದಿಕ ಸಂಸ್ಕೃತ ವಿದ್ವಾಂಸರನ್ನು ಕರೆಸಿಕೊಂಡು ಅವರನ್ನು ವಿದ್ವತ್‌ಪೂಜೆಯಿಂದ ಗೌರವಿಸಿದರು. +ಅವರ ಪೈಕಿ ಒಬ್ಬರು, ದೇವುಡು ಅವರು. +ಸಂಸ್ಕೃತದ ಪ್ರಚಂಡ ಅನುವಾದಕರಲ್ಲಿ ದೇವುಡು ಅವರು ಅಗ್ರಗಣ್ಯರು. +ಹತ್ತಾರು ಜನ ಸಾಧ್ಯವಿಲ್ಲ ಎಂದಿದ್ದ ಯೋಗ ವಾಶಿಷ್ಠವನ್ನು, ಜಯಚಾಮರಾಜೇಂದ್ರ ಗ್ರಂಥರತ್ನ ಮಾಲೆಗೆ ೨೧ ಸಂಪುಟಗಳಲ್ಲಿ ಅನುವಾದಿಸಿದ್ದಾರೆ. +ಅಷ್ಟೋಪನಿಷತ್ತುಗಳನ್ನು ಜನಸಾಮಾನ್ಯರಿಗಾಗಿ ಅನುವಾದಿಸಿದ್ದಾರೆ. +ರಾಮಾಯಣ ಭಾರತ ಭಾಗವತ ಕಥಾಸರಿತ್ಸಾಗರಗಳ ಸಾರವನ್ನು ಕನ್ನಡದಲ್ಲಿ ಅಚ್ಚುಕಟ್ಟಾಗಿ ಭಟ್ಟಿ ಇಳಿಸಿದ್ದಾರೆ. +ಕಾಳಿದಾಸನ ಕೃತಿಗಳನ್ನು ಕುರಿತು, ಗೀತೆಯ ಬಗ್ಗೆ ಅವರ ಹಾಗೆ ಉಪನ್ಯಾಸಗಳನ್ನು ನೀಡುತ್ತಿದ್ದವರು ಆ ಕಾಲಕ್ಕೆ ಇನ್ನೊಬ್ಬರು ಇರಲಿಲ್ಲ ಎಂದರೆ ಅತಿಶಯೋಕ್ತಿ ಅಲ್ಲ. +ಕನ್ನಡಕ್ಕೆ ಸಂಸ್ಕೃತ ಸಾಹಿತ್ಯ ಗಂಗೆಯನ್ನು ಹರಿಸಿದ ಭಗೀರಥದಲ್ಲಿ ದೇವುಡು ಮರೆಯಲಾಗದವರು. +ಹೀಗೆ ಕನ್ನಡಕ್ಕೆ ಸಂಸ್ಕೃತ ಸಾಹಿತ್ಯ ಮತ್ತು ಶಾಸ್ತ್ರಗ್ರಂಥಗಳನ್ನು ತಂದ ದೇವುಡು ಅವರು ಕೊಟ್ಟ ಇನ್ನೊಂದು ಕೊಡುಗೆ ಎಂದರೆ ಮೂಲ ಸಂಸ್ಕೃತ ಕಲಿಕೆ ವಿಧಾನದ ಸಂಶೋಧನೆ ಮತ್ತು ಪ್ರಚಾರ ಕಾರ್ಯ. +ಸಂಪ್ರದಾಯದ ರೀತಿಯಲ್ಲಿ ಸಂಸ್ಕೃತವನ್ನು ಕಲಿತ, ಕಲಿಸಿದ ಪಂಡಿತರ ಪರಂಪರೆಯನ್ನೇ ನಮ್ಮಲ್ಲಿ ಕಾಣುತ್ತೇವೆ. +ಎಷ್ಟೋ ಜನರು ಸಂಸ್ಕೃತ ಕಲಿಯುವುದು ಕಷ್ಟ ಎಂದಾಗ ಅದು ದೇವಭಾಷೆ, ವೈಜ್ಞಾನಿಕಭಾಷೆ, ಕಲಿಯಲು ಕಷ್ಟಪಡಬೇಕು ಎಂದವರೇ ಹೊರತು ಅದನ್ನು ಸುಲಭಗೊಳಿಸಲು ಯಾರೂ ಚಿಂತಿಸಲಿಲ್ಲ. +ದೇವುಡು ಅವರು ಕನ್ನಡ ನಾಡಿನಲ್ಲಿ ಮೊದಲ ಬಾರಿಗೆ ಈ ಬಗ್ಗೆ ಚಿಂತಿಸಿದರು. +ಕನ್ನಡವನ್ನು ಕೆಲವೇ ವಾರಗಳಲ್ಲಿ ಕಲಿಯಲು "ಅಕ್ಷರ ಯೋಜನೆ" ಸಂಶೋಧಿಸಿದ ದೇವುಡು ಅವರು ಸಂಸ್ಕೃತವನ್ನು ಸುಲಭವಾಗಿ ಜನಸಾಮಾನ್ಯರು ಕಲಿಯುವಂತೆ ಮಾಡಬೇಕೆಂದು ಹಲವಾರು ವರ್ಷ ಸಂಶೋಧನೆ ಮಾಡಿದರು. +ಸುಮಾರು ೭ ವರ್ಷಗಳ ಅವಿರತ ಶ್ರಮದಿಂದ ಸುಲಭವಾಗಿ ಜನಸಾಮಾನ್ಯರು ಕಲಿಯುವಂತೆ ಮಾಡಬೇಕೆಂದು ಹಲವಾರು ವರ್ಷ ಸಂಶೋಧನೆ ಮಾಡಿದರು. +ಸುಮಾರು ೭ ವರ್ಷಗಳ ಅವಿರತ ಶ್ರಮದಿಂದ ಸುಲಭವಾಗಿ, ಶೀಘ್ರವಾಗಿ ಸಂಸ್ಕೃತವನ್ನು ಕಲಿಯುವ ನೂತನ ವಿಧಾನವೊಂದನ್ನು ಆವಿಷ್ಕಾರ ಮಾಡಿದರು. +ಆಯೋಜನೆಯು ಸಂಕ್ಷಿಪ್ತ ರೂಪವನ್ನು ಹೀಗೆ ತಿಳಿಸಬಹುದು:೬೦ ದಿನಗಳಲ್ಲಿ, ೬೦ ಪಾಠಗಳಲ್ಲಿ ಭಗವದ್ಗೀತೆಯನ್ನು ಸ್ವತಂತ್ರವಾಗಿ ಮೂಲದಲ್ಲಿಯೇ ಓದಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಪಡೆಯುವಂತೆ ಪಾಠಗಳನ್ನು ಸಿದ್ಧಗೊಳಿಸಿದರು. +೫ ಭಾಗಗಳಲ್ಲಿ ಈ ೬೦ ಪಾಠಗಳನ್ನು,ಸಿದ್ಧಪಡಿಸಿದರು: ಭಾಗ ೧ ಸುಭಾಷಿತಗಳು. +ಭಾಗ ೨ ರಾಮಾಯಣ, ಭಾಗ೩ ಮಹಾಭಾರತ, ೪ ಕಾಳಿದಾಸ, ಭಾಗ ೫ ನಾಟಕಗಳು ಎಂದು ೫ ಪುಸ್ತಕಗಳನ್ನಾಗಿ ವಿಂಗಡಿಸಿದರು. +೧೯೪೨, ರಿಂದ ೧೯೪೯ ರ ವರೆಗೆ ಈ ೬೦ ಪಾಠಗಳನ್ನು ನಾನಾ ಬಾರಿ ತಿದ್ದಿ ಪರಿಷ್ಕರಿಸಿದರು. +ಪ್ರಯೋಗಾತ್ಮಕವಾಗಿ ಫ್ರೆಂಚ್‌ ಮಹಿಳೆಯೊಬ್ಬರಿಗೆ ಕೆಲವೇ ವಾರಗಳಲ್ಲಿ ಈ ನೂತನ ಪದ್ಭತಿಯಿಂದ ಸಂಸ್ಕೃತ ಕಲಿಸಿದರಂತೆ. +ಈ ೬೦ ಪಾಠಗಳಲ್ಲಿ ಮೊದಲ ಭಾಗ ೧೨ ಪಾಠಗಳ ಮೂಲ ಸಂಸ್ಕೃತ ಭಾಗ ೧ ಮಾತ್ರ ಪ್ರಕಟವಾಗಿದೆ (೧೯೪೯). +೬೦ ಪಾಠಗಳ ವಿನ್ಯಾಸ ಗಮನಿಸುವಂಥದು: ಮೊದಲ ೩೦ಪಾಠಗಳನ್ನು ಸುಲಭದಿಂದ ಕಷ್ಟಕ್ಕೆ ಎಂಬ ವಿಧಾನದಲ್ಲಿ ಶಾಸ್ತ್ರೀಯವಾಗಿ ಸೋಪಾನ ಪಂಕ್ತಿ ಕ್ರಮದಲ್ಲಿ ರಚಿಸಿದೆ. +ಪ್ರತಿಯೊಂದು ಪಾಠದಲ್ಲೂ ೪ ಭಾಗಗಳಿದ್ದು,ಮೊದಲ ಭಾಗದಲ್ಲಿ ವಿಸ್ತಾರವಾಗಿ ವಾಕ್ಯಗಳಲ್ಲಿ ಪ್ರಯೋಗವಾಗಿ, ಆ ಪದಗಳ ವ್ಯಾಕರಣ ವಿಶೇಷಗಳನ್ನೆಲ್ಲ ಹೇಳಲಾಗಿದೆ. +ಎರಡನೇ ಭಾಗದಲ್ಲಿ ಶಿಕ್ಷಾವ್ಯಾಕರಣಾಂಶಗಳನ್ನೂ ಮೂರನೇ ಭಾಗದಲ್ಲಿ ವ್ಯವಹಾರೋಪಯುಕ್ತ ಶಬ್ದಗಳು,ಧಾತುಗಳ ಪರಿಚಯವನ್ನೂ ನಾಲ್ಕನೇ ಭಾಗದಲ್ಲಿ ಭಾಷಾಂತರ ಪಾಠಗಳ ಮೂಲಕ ಸಂಸ್ಕೃತಿ ಪರಿಚಯವನ್ನೂ ಮಾಡಿಕೊಡಲಾಗಿದೆ. +ಮೊದಲೆರಡು ಪುಸ್ತಕಗಳಲ್ಲಿ ೪೮೦೦ ಪದಗಳನ್ನೂ ೫೦೦ ಕ್ಕೂ ಹೆಚ್ಚಿನ ಧಾತುಗಳನ್ನೂ ಪರಿಚಯಿಸಲಾಗಿದೆ. +ಮೂರನೇ ಭಾಗದಲ್ಲಿ "ಶತಶ್ಲೋಕೇನ ಪಂಡಿತಃ" ಎಂಬ ಮಾತನ್ನು ಆಧರಿಸಿ. +ಕಾಳಿದಾಸನ ಕೃತಿಗಳಿಂದ ೧೦೦ ಶ್ಲೋಕಗಳನ್ನು ಆರಿಸಿ ಆ ಮೂಲಕ ಕಾವ್ಯಸೌಂದರ್ಯ, ವಿಮರ್ಶೆ ಕೊಡಲಾಗಿದೆ. +ನಾಲ್ಕನೇ ಭಾಗದಲ್ಲಿ ೬ ಸಂಸ್ಕೃತ ನಾಟಕಗಳನ್ನೂ ಐದನೇ ಭಾಗದಲ್ಲಿ ವಿಕೌಮೋರ್ವಶೀಯ ನಾಟಕವನ್ನೂ ಪೂರ್ಣ ಅನುವಾದ ವಿಮರ್ಶೆ ಪೀಠಿಕೆಗಳೊಡನೆ ಕೊಟ್ಟದೆ. +ಗೀತಾ ಪ್ರವಚನ ಪ್ರವೀಣ ಮೂಲ ಸಂಸ್ಕೃತ ರಚನೆಯ ಸಂದರ್ಭದಲ್ಲಿ ಹೇಳಬೇಕಾದ ಇನ್ನೊಂದು ಸಂಗತಿ ಎಂದರೆ, ದೇವುಡು ಅವರ ಗೀತಾಪ್ರೇಮ ಮತ್ತು ಗೀತಾ ಪ್ರವಚನ ವೈಖರಿಯ ಸಂಗತಿ. +ದೇವುಡು ಗೀತಾ ಪ್ರಚಾರಕ್ಕೆ ಬೃಹದ್ಯೋಜನೆಗಳನ್ನೇ ಹಾಕಿಕೊಂಡಿದ್ದರು. +ಕೊನೆ ಕೊನೆಗೆ ಮಕ್ಕಳಿಗಾಗಿ ತಾವು ಪ್ರಕಟಿಸುತ್ತಿದ್ದ "ನಮ್ಮ ಪುಸ್ತಕ" ಮಾಸಪತ್ರಿಕೆಯನ್ನು "ಗೀತಾ" ಎಂಬ ಹೆಸರಿನಲ್ಲಿ ಪ್ರಕಟಿಸತೊಡಗಿದರು. +ಅಷ್ಟೇ ಅಲ್ಲ "ಗೀತಾವಿಜ್ಞಾನಮಂಡಳಿ"ಯನ್ನೇ (೧೯೫೦) ಸ್ಥಾಪಿಸಿದರು. +ಆಚಾರ್ಯತ್ರಯರ ಭಾಷ್ಯವುಳ್ಳ ಪ್ರತಿಯೊಂದನ್ನು ಪ್ರತಿಯೊಬ್ಬ ವಿಶ್ವವಿದ್ಯಾನಿಲಯದ ಪದವೀಧರನಿಗೂ ಉಚಿತವಾಗಿ ಮತ್ತು ಉಡುಗೊರೆಯಾಗಿ ಕೊಡಬೇಕು ಎಂದು ಬಯಸಿದ್ದರು. +ಮಕ್ಕಳಿಂದ ಹಿಡಿದು ಬೇರೆ ಬೇರೆಯವರಿಗೆ ಬೇರೆ ಬೇರೆ ರೀತಿಯ ಗೀತಾ ಗ್ರಂಥಗಳನ್ನು ರಚಿಸಬೇಕೆಂದಿದ್ದರು. +ಒಂದು ಸರಳಾನುವಾದದ ಗೀತೆ ಮಾತ್ರ ಪ್ರಕಟವಾಯಿತು. +ಗೀತೆಯ ಒಂದೊಂದೇ ಶ್ಲೋಕಕ್ಕೆ ಘಂಟೆಗಟ್ಟಲೆ ರಸವತ್ತಾಗಿ ವ್ಯಾಖ್ಯಾನಿಸುವುದು ದೇವುಡು ಅವರ ವೈಶಿಷ್ಟ್ಯವಾಗಿತ್ತು. +ಸಂಸ್ಕೃತಿ ಪ್ರಸಾರ ಯೋಜನೆ ಅಂಗವಾಗಿ ಪ್ರಕಟವಾದ ಅವರ ಗೀತಾಲೇಖನ ಕಂಡರೆ, ಶಾಸ್ತ್ರಿಗಳು ಗೀತೆಯನ್ನು ಕುರಿತು ಎಷ್ಟು ಚೆನ್ನಾಗಿ ಬರೆಯಬಲ್ಲರು ಎಂಬುದು ತಿಳಿಯುತ್ತದೆ. +ಗೀತೆಯ ತತ್ವಗಳನ್ನು ತಮ್ಮ ಬಾಳಿನಲ್ಲಿ ಅನುಷ್ಠಾನಕ್ಕೆ ತಂದುಕೊಂಡ ಧೀಮಂತರು ಅವರಾಗಿದ್ದರು. +ಅದಕ್ಕೆ ನಿದರ್ಶನ ಎಂದರೆ, ಉಡುಪಿಯಲ್ಲಿ ಗೀತೆಯ ಬಗ್ಗೆ ಉಪನ್ಯಾಸ ಮಾಡಲು ದೇವುಡು ಆಹ್ವಾನಿತರಾದ ಸಂದರ್ಭ. +ಉಡುಪಿ ಪರ್ಯಾಯದಲ್ಲಿ ಗೀತೋಪನ್ಯಾಸವನ್ನು ನೀಡಲು ಆಹ್ವಾನಿತರಾಗಿದ್ದ ದೇವುಡು ವೇದಿಕೆ ಏರಿದ ಕೂಡಲೇ, ಇನ್ನೇನು ಉಪನ್ಯಾಸ ಪ್ರಾರಂಭಿಸಬೇಕು ಎಂದಿದ್ದಾಗ, ಅವರ ಮಗ ರಾಮು ನಿಧನರಾದ ಸುದ್ಧಿಪತ್ರ ಕೈಸೇರಿತು. +ಅದನ್ನು ಓದಿ ಒಂದು ಕ್ಷಣದ ಮೌನದ ನಂತರ ಸಾವರಿಸಿಕೊಂಡು, ಅದೇನೆಂದು ಕೇಳಿದವರಿಗೆ, "ಯಾವುದೋ ಪುಸ್ತಕ ಪ್ರಕಟನೆಗೆ ಸಂಬಂಧಿಸಿದ್ದು" ಎಂದು ಹೇಳಿ ನಿರ್ವಿಕಾರ ಚಿತ್ತರಾಗಿ ಪ್ರವಚನ ನಡೆಸಿದರು. +ಉಪನ್ಯಾಸದ ನಂತರ ವಿಷಯತಿಳಿದಾಗ ಅವರ ಆತ್ಮೀಯ ಮಿತ್ರರೊಬ್ಬರು "ಈ ಸಂಯಮ ಹೇಗೆಸಾಧ್ಯವಾಯಿತು?" +ಎಂದು ಕೇಳಿದಾಗ ದೇವುಡು ಹೇಳಿದ ಮಾತಿದು:"ನಾನು ಸಭೆಯಲ್ಲಿ ಗೀತೆಯ ಬಗ್ಗೆ ಭಾಷಣ ಮಾಡಲಿಲ್ಲ. +ನನಗೆ ನಾನೇ ಗೀತೋಪದೇಶ ಮಾಡಿಕೊಂಡೆ. +ಸ್ಥಿತ ಪ್ರಜ್ಞನ ಲಕ್ಷಣಗಳನ್ನು ನನಗೆ ನಾನೇ ಬೋಧಿಸಿಕೊಂಡೆ." +ಅದರಿಂದ ಮಾತನಾಡಲು ಸಾಧ್ಯವಾಯಿತು ಎಂದರು. +ಕೇವಲ ಗೀತೆಯಷ್ಟೇ ಅಲ್ಲ ರಾಮಾಯಣ ಮಹಾಭಾರತಗಳ ಸಪ್ತಾಹಗಳನ್ನು ನಡೆಸಿ ಪ್ರವಚನ-ಲೇಖನಗಳಿಂದ ಜನ-ಮನ ಗೆದ್ದವರು, ದೇವುಡು ಅವರು. +ಅವರ ಧಾರ್ಮಿಕ ಗ್ರಂಥಗಳ ಪಟ್ಟಿ ಇದಕ್ಕೆ ನಿದರ್ಶನವಾಗಿದೆ. +ದೇವುಡು ಅವರ ವೈಶಿಷ್ಟ್ಯವೆಂದರೆ, ವಿಶಾಲ ಮನೋಭಾವ ಮತ್ತು ಆಯಾ ಧರ್ಮಗಳ ಗ್ರಂಥ ಗಳನ್ನು, ಜನರನ್ನು, ಸಿದ್ಧಾಂತಗಳನ್ನು ಸಮಾನ ಗೌರವದಿಂದ ನೋಡುವ ಸ್ವಭಾವ. +ಅದ್ವೈತ ತತ್ವಕ್ಕೆ ಒಲಿದವರೂ ಅಧ್ಯಯನ ಮಾಡಿದವರೂ ಆಚಾರ ವಿಚಾರಗಳಲ್ಲಿ ಅದ್ವೈತ ಸಂಪ್ರದಾಯಿಗಳು ಆಗಿದ್ದರೂ ದ್ವೈತ ವಿಶಿಷ್ಟಾದ್ವೈತಾದಿ ಸಿದ್ಧಾಂತಗಳನ್ನು ಆಳವಾಗಿ ದೇವುಡು ಅಭ್ಯಸಿಸಿದ್ದರು. +ದ್ವೈತ ಪತ್ರಿಕೆಗಳಿಗೆ ಸಾಯುವವರೆಗೂ ಒಂದೇ ಸಮನೆ ಲೇಖನಗಳನ್ನು ಬರೆಯುತ್ತಿದ್ದರು; + ದ್ವೈತಪೀಠಗಳಲ್ಲಿ ಉಪನ್ಯಾಸವನ್ನು ನೀಡುತ್ತಿದ್ದರು; + ದ್ವೈತ ವಿದ್ವಾಂಸರಿಗೆ ಆತ್ಮೀಯರಾಗಿದ್ದರು. +ಶ್ರೈಸ್ತ ಸಾಹಿತ್ಯ ಆಳವಾಗಿ ಅಧ್ಯಯನ ಮಾಡಿದ್ದರು. +ದೇವುಡು ಅವರ ಹರಿಜನಪ್ರೇಮ ಅನ್ಯಾದೃಶವಾದುದು. +ಮೈಸೂರಿನಲ್ಲಿ ಒಬ್ಬ ಜಲಗಾರ ಜುಳ್‌ ನಾರಾಯಣ ಎಂದು ನದಿ ನೀರನ್ನು ಅರ್ಫ್ಯದಂತೆ ತಳ್ಳುತ್ತಿದ್ದವನನ್ನು "ಯೋಗಿ"ಯೆಂದು ಗುರುತಿಸಿದ್ದರು. +ತಮ್ಮದೇ ಆದ ಅಕ್ಷರ ಕಲಿಕಾ ಪದ್ಧತಿಯನ್ನು ಪ್ರಯೋಗ ಮಾಡಿದಾಗ ಹರಿಜನ ವಿದ್ಯಾರ್ಥಿಗಳನ್ನು ಶಿಬಿರಕ್ಕೆ ಸೇರಿಸಿಕೊಂಡಿದ್ದರು. +ದೇವುಡು ಅವರಿಗೆ ಗೀತೆ ಪಾಂಡಿತ್ಯದ ಪ್ರತೀಕ ಆಗಿರಲಿಲ್ಲ. +ಅನುಷ್ಠಾನ ವೇದಾಂತವಾಗಿತ್ತು. +ಚತುರ ವಾಗ್ಮಿದೇವುಡು ಬರಹದಲ್ಲಿ, ಆಧ್ಯಾತ್ಮ ಸಾಧನೆಯಲ್ಲಿ ಎಷ್ಟು ಗಟ್ಟಿಗರೋ ಮಾತಿನಲ್ಲಿ, ಸಂಭಾಷಣೆಯಲ್ಲಿ ಅಷ್ಟೆ ಗಟ್ಟಿಗರು. +ವಾಗ್‌ಪ್ರೌಢಿಮೆಯಲ್ಲಿ ಅನಕೃಶೈಲಿ, ತಿತಾಶರ್ಮಶೈಲಿ, ಬೇಂದ್ರೆಶೈಲಿ ಇದ್ದಂತೆ ದೇವುಡುಶೈಲಿ ಸಹ ವಿಶಿಷ್ಟವಾದುದು. +ದೇವುಡು ಮಾತಿನ ಶೈಲಿ ಆವೇಶದ್ದಲ್ಲ, ಹಠದ್ದಲ್ಲ, ಜ್ಞಾನ ಪ್ರಪೂರ್ಣವಾದ ವಿಚಾರತರ್ಕಗಳಿಂದ ಕೂಡಿದ, ಸರಳವಾದ ಅಂತರಂಗದಕ ದ ತೆರೆಯುವ ಶೈಲಿ. +ಸಭಿಕರನ್ನು ಅತ್ತಿತ್ತ ಚಲಿಸದಂತೆ ಮನಸ್ಸನ್ನು ಸೆರೆ ಹಿಡಿಯುವಂಥ ಮಾತಿನ ಶೈಲಿ. +ಹೀಗಾಗಿ ಅವರ ಭಾಷಣ-ಪ್ರವಚನ ಕೇಳಿ ಹತ್ತಾರು ವರ್ಷ ಆದರೂ ಈಗಲೂ ಜ್ಞಾಪಿಸಿಕೊಂಡು ಸಂತೋಷಿಸುವವರು ಇದ್ದಾರೆ. +ಸಾಹಿತ್ಯಿಕ, ಪೌರಾಣಿಕ, ಧಾರ್ಮಿಕ ಉಪನ್ಯಾಸಗಳಲ್ಲಿ ಅವರದು ಎತ್ತಿದ ಕೈ. +ಎಂಥವರೂ ಸಮ್ಮೋಹನಕ್ಕೆ ಒಳಗಾಗಬೇಕು. +ಒಮ್ಮೆ ಓಣಿ ಆಂಜನೇಯ ದೇವಸ್ಥಾನದಲ್ಲಿ ದೇವುಡು ಅವರು ಉಪನ್ಯಾಸ ಮಾಡುತ್ತಿದ್ದಾಗ, ಆಗಿನ ಮುಖ್ಯಮಂತ್ರಿಗಳೂ ಹಲವು ಮಂದಿ ಸಚಿವರೂ ಸಭೆಗೆ ಬಂದು ಮಂತ್ರಮುಗ್ಧರಾದರು. + ಕೆ.ಹನುಮಂತಯ್ಯನವರು ಒಬ್ಬ ಶಾಸ್ತ್ರಿಗಳು ಮಾತಾಡುತ್ತಾರೆ ಎಂಬ ತಿರಸ್ಕಾರ ದೃಷ್ಟಿಯಿಂದ ಬಂದಿದ್ದರಂತೆ. +ದೇವುಡು ಭಾಷಣ ಕೇಳಿದ ಮೇಲೆ ದಿಗ್ಬಾಂತರಾಗಿ, ಪೂಜ್ಯ ಭಾವ ತಳೆದರು. +ಆಗ "ನಿಮಗೇನು ಬೇಕು" ಎಂದು ಕೇಳಿದ್ದಕ್ಕೆ, ದೇವುಡು ಅವರು “ನನಗೇನೂಬೇಡ; +ದೇವಸ್ಥಾನಕ್ಕೆ ಒಂದಷ್ಟು ಜಾಗ ಕೊಡಿ, ಜನ ಪ್ರವಚನ ಕೇಳಲು ಅನುಕೂಲವಾಗುತ್ತದೆ " ಎಂದಾಗ, ದೊರಕಿದ ಜಾಗ ಈಗಿರುವ ದೇವಸ್ಥಾನದ ಕಟ್ಟಡ ಪ್ರದೇಶ. +ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ವಿದ್ವಾಂಸರೆಲ್ಲ ಸೇರಿದ ಸಜೆಗೆ ಯಾವುದೇ ತಯಾರಿ ಇಲ್ಲದೆ ಬಂದು ಕಾಳಿದಾಸನ ಬಗ್ಗೆ ಅಮೋಘ ಉಪನ್ಯಾಸ ನೀಡಿದರು. +ಅದನ್ನು ಕೇಳಿದ ವಿದ್ವಾಂಸರೊಬ್ಬರು "ಈ ಉಪನ್ಯಾಸ ಸಿದ್ಧಪಡಿಸಲು ಎಷ್ಟು ವರ್ಷ ಶ್ರಮಪಟ್ಟಿರಿ" ಎಂದು ಕೇಳಿದರಂತೆ. +ಅದಕ್ಕೆ ದೇವುಡು ನಕ್ಕು,"ಭಾಷಣ ಪ್ರಾರಂಭ ಮಾಡುವ ಮುಂಚೆ ಕೆಲವು ನಿಮಿಷಗಳು" ಎಂದರಂತೆ. +ದೇವುಡು ಅವರು ಸಮಯ ಸ್ಫೂರ್ತಿಯ ಅನುವಾದಕರೂ ಆಗಿದ್ದರು. +ಅವರಿಗೆ ಕನ್ನಡ ಸಂಸ್ಕೃತಗಳ ಮೇಲಿದ್ದಂತೆ ಇಂಗ್ಲೀಷಿನಲ್ಲೂ ಪ್ರಭುತ್ವವಿತ್ತು. +೧೯೩೬ರಲ್ಲಿ ಗಾಂಧಿಯವರು ಬೆಂಗಳೂರಿಗೆ ಬಂದಿದ್ದಾಗ, ರಾಜಾಜಿ ಅವರು ಇಂಗ್ಲೀಷಿನಲ್ಲಿ ಮಾಡುತ್ತಿದ್ದ ಉಪನ್ಯಾಸಗಳನ್ನು, ತಕ್ಷಣದಲ್ಲಿಯೇ ಸೊಗಸಾಗಿ ಅನುವಾದಿಸುತ್ತಿದ್ದರು. +ಆಗ ರಾಜಾಜಿ "ನನ್ನ ಇಂಗ್ಲೀಷಿಗಿಂತ ದೇವುಡು ಅವರ ಕನ್ನಡಾನುವಾದವೇ ಚೆನ್ನಾಗಿದೆ" ಎಂದು ಸಭೆಯಲ್ಲೇ ಜನಕ್ಕೆ ತಿಳಿಸಿದ್ದರು. +ಧಾರ್ಮಿಕ ಉಪನ್ಯಾಸಗಳಲ್ಲಿ ಸಿದ್ಧಾಂತಗಳನ್ನು ಸರಳವಾಗಿ, ಸುಲಭವಾಗಿ, ಆದರೆ ಮೂಲ ಸಿದ್ಧಾಂತ ಸರಿಯಾಗಿ ತಿಳಿಯುವಂತೆ, ವಾದ ಮಂಡನೆ ಮಾಡುವ ಚಾತುರ್ಯ ಶಾಸ್ತ್ರಿಗಳಿಗೆ ಮೀಸಲಾದ ವೈಶಿಷ್ಟ್ಯವಾಗಿತ್ತು. +ಅವರ ಮಾತಿನ ಮೋಡಿ ಸಾಮಾನ್ಯರಿರಲಿ, ಪ್ರಕಾಂಡ ಪಂಡಿತರನ್ನೂ ತಲೆದೂಗಿಸುತ್ತಿತ್ತು. +ಉಡುಪಿಯಲ್ಲಿ ತಾವು ಅದ್ವೈತಿಗಳಾದರೂ ದ್ವೈತದ ಬಗ್ಗೆ ಉಡುಪಿಯಲ್ಲಿ ಒಮ್ಮೆ ಭಾಷಣ ಮಾಡಿದಾಗ ಅದನ್ನು ಕೇಳಿದ ಸ್ವಾಮಿಗಳು ತಲೆದೂಗಿ, "ನೀವು ದ್ವೈತ ಸಂಪ್ರದಾಯಕ್ಕೆ ಬಂದು ಬಿಡಿ” ಎಂದು ಆಹ್ಹಾನವಿತ್ತರು. +ಅದಕ್ಕೆ ದೇವುಡು ಸ್ವಧರ್ಮನಿಷ್ಠರಾಗಿ ಉತ್ತರಿಸಿದರು. +"ಶೃಂಗೇರಿ ಜಗದ್ಗುರುಗಳು ಚಂದ್ರಶೇಖರ ಭಾರತೀ ಸ್ವಾಮಿಗಳು ನನ್ನ ಗುರುಗಳು; ಅವರು ನನಗೆ ಅದ್ವೈತ ಬೋಧಿಸಿದ್ದಾರೆ. +ಅವರು ಬೋಧಿಸಿದ ಅದ್ವೈತದಿಂದ ನಾನು ಅದ್ವೈತಿಯಾಗಿದ್ದೇ ದ್ವೈತಿಯಾಗಿರಬಲ್ಲೆ" ಎ೦ದರಂತೆ. +ಲೌಕಿಕ ರಂಗಗಳಲ್ಲೂ ಪ್ರಭಾವಕಾರಿ ಭಾಷಣಕಾರರಾಗಿದ್ದರು. +ರಾಜಕೀಯ ಸಾಮಾಜಿಕ ವಿಷಯಗಳಲ್ಲಿ ಜನರು ಒಲಿಯುವ ಭಾಷಣಗಳನ್ನು ನೀಡುತ್ತಿದ್ದರು. +ಮುನಿಸಿಪಾಲಿಟಿ ಚುನಾವಣೆಗಳಲ್ಲಿ, ಪ್ರಜಾ ಪ್ರತಿನಿಧಿ ಸಭೆಗಳಲ್ಲಿ, ರಾಷ್ಟ್ರೀಯ ಚುನಾವಣೆಗಳಲ್ಲಿ ಸ್ಪರ್ಧಿಗಳಾಗಿ ದೇವುಡು ಮಾಡುತ್ತಿದ್ದ ಭಾಷಣಗಳು ಜನರಿಗೆ ಜಾಗೃತದಂಡಗಳಾಗಿ ಮೋಹನಾಸ್ತಗಳಾಗಿರುತ್ತಿದ್ದವು. +ದೂರದೃಷ್ಟಿ, ಆಳವಾದ ಚಿಂತನೆ ಅವರ ಉಪನ್ಯಾಸಗಳಲ್ಲಿ ಇರುತ್ತಿತ್ತು. +ಕೇವಲ ಪ್ರಚಾರದ ಆಡಂಬರ ಇರುತ್ತಿರಲಿಲ್ಲ. +ತರ್ಕ ವಾದಗಳಲ್ಲಿ ಶಾಸ್ತ್ರಿಗಳು ಪ್ರಚಂಡರಾಗಿದ್ದರು. +ಬೆಂಗಳೂರಿನಲ್ಲಿ ಋತುಮತೀ ವಿವಾಹದ ಬಗ್ಗೆ ಅರ್ಧ ಶತಮಾನದ ಹಿಂದೆ ಭಾರೀ ಚರ್ಚೆ ಪಂಡಿತ ಮಂಡಳಿಗಳಲ್ಲಿ ನಡೆದವು. +ಅಂಥ ಒಂದು ಸಭೆಯಲ್ಲಿ ಆರ್ಯ ಸಮಾಜದ ಪಂಡಿತ ಧರ್ಮದೇವ ವಿದ್ಯಾವಾಚಸ್ಪತಿಯವರು ಬಾಲ್ಯವಿವಾಹದ ವಿರುದ್ಧ ಮಾತಾಡಿದಾಗ ಅನೇಕರು ಅವರನ್ನು ಪ್ರತಿಭಟಿಸಿದರು. +ಆಗ ವಿದ್ಯಾ ವಾಚಸ್ಪತಿಗಳವಾದ ಸಮಂಜಸವಾಗಿ ಕಂಡಿದ್ದರಿಂದ ಶಾಸ್ತ್ರಾಧಾರಗಳಿಂದ ಶಾಸ್ತ್ರಿಗಳು ಅಮೋಘವಾಗಿ ವಾದ ಮಾಡಿ ಪ್ರತಿವಾದಿಗಳ ಬಾಯಿ ಮುಚ್ಚಿಸಿದರು. +ಮಿತ್ರರೊಡನೆ ಮಾತನಾಡುವಾಗಲೂ ದೇವುಡು ಅವರು ವಿನೋದದಿಂದಾಗಿ ಮಾತನಾಡುತ್ತಿದ್ದರು. +ಒಮ್ಮೆ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಭೇಟಿ ಆದಾಗ ಮಾಸ್ತಿ ಅವರು “ಶಾಸ್ತ್ರಿಗಳೇ ನಮ್ಮ ಜೀವನಕ್ಕೆ (ಮಾಸ್ತಿ ಆಗ 'ಜೀವನ' ಪತ್ರಿಕೆ) ಏನಾದರೂ (ಲೇಖನ) ಕೊಡಿ" ಎಂದರು. +ಆಗ ಅದೇ ಮಾತನ್ನು ತಿರುಗಿಸುತ್ತಾ ದೇವುಡು, "ಮಾಸ್ತಿ ಅವರೇ ನಮ್ಮ ಜೀವನಕ್ಕೆ ಏನಾದರೂ ಕೊಡಿ" ಎಂದರಂತೆ. +ಆಗ ಮಾಸ್ತಿ, "ಓಹೋ, ಅದಕ್ಕೇನಂತೆ, ನಮ್ಮ ಜೀವನದಿಂದ ನಿಮ್ಮ ಜೀವನ, ನಿಮ್ಮ ಜೀವನದಿಂದ ನಮ್ಮ ಜೀವನ; ಅದಕ್ಕೇನಂತೆ ಕೊಡೋಣ" ಎಂದು ನಕ್ಕರಂತೆ. +ದೇಶಪ್ರೇಮಿ ನಮ್ಮ ಕನ್ನಡ ಸಾಹಿತಿಗಳಲ್ಲಿ ದೇಶ ಪ್ರೇಮಿಗಳಾಗಿ ನಾಡಿನ ಸೇವೆ ಸಲ್ಲಿಸಿದವರು ಕೆಲವರೇ. +ಅದರಲ್ಲೂ ವಿಶಿಷ್ಟ ಸೇವೆ ಸಲ್ಲಿಸಿದವರು ಕೆಲವರೇ. +ತಿ.ತಾ.ಶರ್ಮ, ಸಿದ್ಧವನಹಳ್ಳಿ ಕೃಷ್ಣಶರ್ಮ, ಆಲೂರು ವೆಂಕಟರಾಯರು ಇತ್ಯಾದಿ. +ಆ ಸಾಲಿಗೆ ಸೇರತಕ್ಕವರು, ದೇವುಡು ಅವರು. +ದೇವುಡು ಅವರು ಮೊದಲಿನಿಂದಲೂ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರು. +ಅದಕ್ಕೆ ಮುಖ್ಯವಾಗಿ ಎರಡು ಕಾರಣಗಳು: ಮೊದಲನೆಯದಾಗಿ, ಶರ್ಮರಂಥ ಮಿತ್ರವೃಂದ; +ಎರಡನೆಯದಾಗಿ, ಗಾಂಧಿ ಪ್ರಭಾವ ಹಾಗೂ ದೇವುಡು ಅವರ ಪತ್ರಿಕೋದ್ಯಮ ಆಸಕ್ತಿ. +ದೇವುಡು ಒಂದು ಕಾಲಕ್ಕೆ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿದ್ದರು. +೧೯೩೬ ರಲ್ಲಿಗಾಂಧಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರ ಆಹ್ವಾನದ ಮೇಲೆ ಬೆಂಗಳೂರಿಗೆ ಬಂದಾಗ ಗಾಂಧಿ ಬಿಡಾರದಲ್ಲಿ ಸ್ವಯಂಸೇವಕರ ಮೇಲ್ವಿಚಾರಣೆ ಕಾರ್ಯನಿರ್ವಹಿಸಿದರು. +ಅವರ ಕೈ ಕೆಳಗಿನ ಸ್ವಯಂ ಸೇವಕರಲ್ಲಿ ನ್ಯಾಷನಲ್‌ ಕಾಲೇಜಿನ ಡಾ.ಎಚ್‌.ನರಸಿಂಹಯ್ಯನವರೂ ಒಬ್ಬರು. +ರಾಜಕೀಯ ಚಳುವಳಿಗಳ ಸಭೆಗಳಲ್ಲಿ ಗುಂಡೇಟಿಗೂ ಜಗ್ಗದೆ ಭಾಗವಹಿಸುತ್ತಿದ್ದವರು, ದೇವುಡು ಅವರು. +೧೯೩೭ ರಲ್ಲಿ ನಾರಿಮನ್‌ ಗಲಾಟೆಯ ಚಳುವಳಿ ನಡೆದಾಗ, ಮೈಸೂರು ಬ್ಯಾಂಕಿನ ಚೌಕದ ಬಳಿ ಉಜ್ವಲ ಭಾಷಣ ನಡೆದು ಗೋಲಿಬಾರ್‌ ಆಯಿತು. +ಆಗ ಗಾಯಗೊಂಡವರಲ್ಲಿ ದೇವುಡು ಒಬ್ಬರು. +ಬೆಂಗಳೂರು ಸುಲ್ತಾನ್‌ಪೇಟೆ ಗಣಪತಿ ಗಲಭೆಯ (೧೯೨೮) ಸಭೆಯೊಂದರಲ್ಲಿ ಬಳೇಪೇಟೆ ಚೌಕದಲ್ಲಿ ಗುಂಡಿನ ಸುರಿಮಳೆ ಆದಾಗ ಅದರ ನಡುವೆ ಹಣ್ಣುಮುದುಕನನ್ನು ರಕ್ಷಿಸಿದವರು, ದೇವುಡು. +೧೯೪೨ ರ ಕ್ವಿಟ್‌ ಇಂಡಿಯಾ ಚಳುವಳಿಯ ಮೆರವಣಿಗೆಯಲ್ಲಿ ಪೋಲಿಸರನ್ನು ಪ್ರತಿಭಟಿಸಿ ಮುನ್ನುಗ್ಗಿ ಲಾಠಿ ಏಟು ತಿಂದು ಒಂದು ತಿಂಗಳು ನೋವಿನಲ್ಲಿ ನರಳಿದರು. +ವಿದ್ಯಾರ್ಥಿಗಳ ಚಳುಳಿಯಲ್ಲಿ ಅವರ ಪರವಾಗಿ ದೇವುಡು ಅವರು ಭಾಗವಹಿಸಿದ್ದುಂಟು. +ವಿದ್ಯಾರ್ಥಿಗಳ ಮೇಲೆ ಪೊಲೀಸರು ಗುಂಡು ಹಾರಿಸಲು ಹೊರಟಾಗ, 'ಅವರನ್ನು ಹೊಡೆಯುವ ಮೊದಲು ನನ್ನನ್ನು ಗುಂಡಿಟ್ಟು ಕೊಲ್ಲಿ'ಎಂದು ಆಗ ಗರ್ಜಿಸಿದವರು, ದೇವುಡು. +ದೇಶ ಸೇವೆಯೊಂದನ್ನೇ ಧ್ಯೇಯ ವಾಗಿಟ್ಟುಕೊಂಡು ಅದೊಂದು ಪವಿತ್ರ ಕರ್ತವ್ಯವೆಂದು ಭಾವಿಸಿದ್ದ ದೇವುಡು ಅವರು ಸಾರ್ವಜನಿಕ ಸೇವೆಗೆ ಅವಕಾಶಕ್ಕಾಗಿ ಬಯಸಿ ಹಲವಾರು ಬಾರಿ ಚನಾವಣೆಗಳಲ್ಲಿ ಸ್ಪರ್ಧಿಗಳಾಗಿ ನಿಂತರು. +ಕೆಲವೊಮ್ಮೆ ಗೆದ್ದರು, ಕೆಲವೊಮ್ಮೆ ಸೋತರು. +ಆದರೆ ಯಾವಾಗಲೂ ಹಿಗ್ಗಲೂ ಇಲ್ಲ, ಕುಗ್ಗಲೂ ಇಲ್ಲ. +ಚುನಾವಣೆಗಳಲ್ಲಿ ಜನರಿಗೆ ದೂರದೃಷ್ಟಿಯ ಯೋಜನೆಗಳನ್ನು ತಿಳಿಸುತ್ತಿದ್ದರು. +ಒಮ್ಮೆ ಅವರು ಚುನಾವಣಾ ಭಾಷಣ ಮಾಡುತ್ತಾ, "ನಾನೇನಾದರೂ ತಮ್ಮ ಬೆಂಬಲದಿಂದ ಚುನಾವಣೆಯಲ್ಲಿ ಆರಿಸಿ ಬಂದರೆ, ಬಡ ರೈತರಿಗಾಗಿ ಕ್ರಾಪ್‌ಇನ್ಸೂರೆನ್ಸ್‌, ಗ್ರುಪ್‌ ಇನ್ಸೂರನ್ಸ್‌ ಮುಂತಾದ ನಾನಾ ಬಗೆಯ ಜೀವ ವಿಮಾ ಯೋಜನೆಗಳನ್ನು ಜಾರಿಗೆ ತರುತ್ತೇನೆ" ಎಂದಿದ್ದರು. +ಆಗ ಕೆಲವರು ಅವರನ್ನು"ಕ್ರಾಪ್‌ ಇಲ್ಲದ ಈತನಿಗೆ ಕ್ರಾಪ್‌ ಇನ್ದೂರನ್ಸ್‌ ಯೋಜನೆ" ಎಂದು ಗೇಲಿಮಾಡಿದ್ದರು. +ಆದರೆ ಇಂದು ದೇವುಡು ಅವರ ದೂರದೃಷ್ಟಿ ವಾಸ್ತವವೆನ್ನಿಸಿದೆ. +ಬೆಳೆ ವಿಮೆ ಜಾರಿಗೆ ಬಂದಿದೆ. +ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೆ ಪಾಲ್ಗೊಂಡವರಲ್ಲಿ ದೇವುಡು ಅವರು ಅಗ್ರಗಣ್ಯರು. +ನಮ್ಮಲ್ಲಿ ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅನೇಕ ಸವಲತ್ತುಗಳನ್ನು ಗಿಟ್ಟಿಸಿಕೊಂಡಿದ್ದಾರೆ. +ಆದರೆ ದೇವುಡು ಈ ಬಗೆಯ ಯಾವುದೇ ಪ್ರತಿಫಲ ಸ್ವೀಕರಿಸದೆ ನಿಃಸ್ವಾರ್ಥ ದೇಶಸೇವೆ ಮಾಡಿದರು. +ಇದಕ್ಕೆ ಅನೇಕ ನಿದರ್ಶನಗಳಿವೆ. +ಒಮ್ಮೆ ಕೆಂಗಲ್‌ ಹನುಮಂತಯ್ಯನವರು, "ನೀವು ದೇಶಕ್ಕಾಗಿ ಸಲ್ಲಿಸಿದ ಸೇವೆಗಾಗಿ ಸರ್ಕಾರದಿಂದ ಪೆನ್ಷನ್‌ ಹಾಗೂ ಒಂದು ಸೈಟ್‌ ಕೊಡಿಸ್ತೀನಿ" ಎಂದರಂತೆ. +ಅದಕ್ಕೆ ದೇವುಡು ಉತ್ತರಿಸಿದ್ದು ಹೀಗೆ: “ಗಾ೦ಧೀ ಅವರ ನೇರ ಸ್ಫೂರ್ತಿಯಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ನನ್ನ ಅಳಿಲು ಸೇವೆ ಸಲ್ಲಿಸಿದೆ. +ಪೆನ್ಷನ್‌,ಸೈಟು ಪ್ರಶಸ್ತಿಗಳು ಸಿಗಲಿ ಅಂತಲ್ಲ. +ಅವು ಯಾವವೂ ನನಗೆ ಬೇಕಿಲ್ಲ”. +ಹಿಂದೊಮ್ಮೆ ಸ್ವಾತಂತ್ರ್ಯ ಪೂರ್ವದಲ್ಲಿ ದಿವಾನರಾಗಿದ್ದ ಸರ್‌.ಮಿರ್ಜಾ ಇಸ್ಮಾಯಿಲ್‌ ಅವರು ದೇವುಡು ಅವರ ಪ್ರಭಾವ, ಪ್ರತಿಭಟನೆ ತಾಳಲಾರದೆ "ನೀವು ರಾಜಕಾರಣದಿಂದ ನಿವೃತ್ತರಾಗುವುದಾದರೆ ಸರ್ಕಾರದಿಂದ ಪ್ರತಿ ತಿಂಗಳೂ ನೂರು ರೂಪಾಯಿ ನಿವೃತ್ತಿ ವೇತನ ಮಂಜೂರು ಮಾಡುತ್ತೇನೆ" ಎಂದರಂತೆ. +ಆಗ ದೇವುಡು ಹೇಳಿದರು: "ಕ್ಷಮಿಸಿ, ನೀವು ನನ್ನ ಬೆಲೆ ಎಷ್ಟೆಂದು ತಿಳಿದುಕೊಳ್ಳಲಿಲ್ಲ" ಎಂದು ಉತ್ತರಿಸಿದರಂತೆ. +ನಟ, ನಿರ್ಮಾಪಕ ಸಾಮಾನ್ಯವಾಗಿ ಸಾಹಿತಿಗಳಾದವರು ಕಲಾವಿದರಾಗಿರುವುದೂ ಕಲಾವಿದರು ಸಾಹಿತಿಗಳಾಗಿರುವುದೂ ಅಪರೂಪ. +ಅದರಲ್ಲೂ ಸಾಹಿತಿಗಳು ಪ್ರದರ್ಶನ ಕಲೆಯಲ್ಲಿ ನಿಷ್ಠಾತರಾಗಿರುವುದು ಬಲು ಕಷ್ಟ ಆದರೆ ಈ ರೀತಿ ಉಭಯಸಿದ್ಧ ಪಡೆದವರಲ್ಲಿ ದೇವುಡು ಒಬ್ಬರು; ಕೈಲಾಸಂ ಗುಂಪಿಗೆ ಸೇರಿದವರು. +ನಾಟಕ ರಂಗಕ್ಕೂ ದೇವುಡು ಅವರಿಗೂ ಬಾಲ್ಯದಲ್ಲಿಯೇ ನಂಟು. +ಇದು ಒಂದು ರೀತಿ ವಂಶ ಪಾರಂಪರ್ಯವಾಗಿ ಬಂದ ಬಳುವಳಿ ಅನ್ನಿಸುತ್ತದೆ. +ದೇವುಡು ಅವರ ಮಕ್ಕಳೂ ಒಳ್ಳೆಯ ನಟರಾಗಿ ಹತ್ತಾರು ನಾಟಕಗಳಲ್ಲಿ ಚಿಕ್ಕಂದಿನಿಂದಲೇ ಭಾಗವಹಿಸಿದ ಕಲಾವಿದರಾಗಿದ್ದಾರೆ. +ದೇವುಡು ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ಪದ್ಯ ಬರೆಯುವುದರಿಂದ ಪಾರ್ಟು ಮಾಡುವವರೆಗೆ ಭಾಗವಹಿಸಿದ್ದಾರೆ. +೧೯೧೬ ರಲ್ಲಿ ವಿದ್ಯಾರ್ಥಿ ದೇವುಡು ತಾವೇ ಸ್ವತಂತ್ರವಾಗಿ ನಾಟಕ ಬರೆದು ಆಡಿಸಿದ್ದಾರೆ, ಪಾತ್ರವಹಿಸಿದ್ದಾರೆ. +ನಾಟಕ ಶಿರೋಮಣಿ ವರದಾಚಾರ್‌, ರಾಘವಾಚಾರ್‌ ಮೊದಲಾದವರೊಂದಿಗೆ ಅಭಿನಯಿಸಿದ್ದರೂ "ನಾನು ರಂಗಭೂಮಿಯಲ್ಲಿ ವರದಾಚಾರ್ಯರ ಶಿಷ್ಯ" ಎಂದು ಹೇಳಿಕೊಂಡಿದ್ದಾರೆ. +ಬೆಂಗಳೂರಿಗೆ ಬಂದ ಮೇಲೆ ದೇವುಡು ಅವರ ನಾಟಕ ರಂಗದ ಚಟುವಟಿಕೆಗಳು ಬಹು ರೀತಿ ಹೆಚ್ಚಿದವು. +ನಟ, ನಾಟಕಕಾರ, ನಿರ್ದೇಶಕ,ನಿರ್ಮಾಪಕ ಎಲ್ಲಾ ಆದರು. +ಬೆಂಗಳೂರಿನ ಎಡಿಎ ಸದಸ್ಯರಾಗಿ ಗಮನಾರ್ಹಸೇವೆ ಸಲ್ಲಿಸಿದರು. +"ರಂಗಭೂಮಿ" ಸಂಪಾದಕರಾಗಿ, ಲೇಖಕರಾಗಿ, ನಾಟಕ ಕಲೆಯ ನಾನಾ ಮುಖಗಳನ್ನು ಕುರಿತು ಬರೆದರು. +೧೯೩೬ ರಲ್ಲಿ ಕನ್ನಡ ಸಾಹಿತ್ಯ ಸಮಾಜ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಅನೇಕ ನಾಟಕಗಳನ್ನಾಡಿ, ಕನ್ನಡ ರಂಗಭೂಮಿಗೆ ಹೊಸ ತಿರುವನ್ನು ನೀಡಿದರು. +ರತ್ನಾವಳೀ ನಾಟಕ ಕಂಪೆನಿಯಲ್ಲಿ ಚಾಮುಂಡೇಶ್ವರೀ ನಾಟಕ ಕಂಪೆನಿ ಮುಂತಾದ ಕಡೆಗಳಲ್ಲಿ ನಟರಾಗಿ ನಿರ್ದೇಶಕರಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದರೂ ದೇವುಡು ವೃತ್ತಿ ನಟರಾಗಲಿಲ್ಲ ಹವ್ಯಾಸೀ ನಟರಾಗಿದ್ದರು. +ದೇವುಡು ಅವರು ಸಾಹಿತ್ಯ ಕೃತಿಗಳನ್ನು ರಂಗಕ್ಕೆ ತಂದು, ಅವುಗಳಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿ, ಆ ನಾಟಕಗಳಿಗೆ ಹೊಸಕಳೆ ತಂದುಕೊಟ್ಟರು. + ಸಿ. ಕೆ. ವೆಂಕಟರಾಮಯ್ಯನವರ "ನಚಿಕೇತ', “ಮಂಡೋದರಿ',"ತೆನಾಲಿ ರಾಮಕೃಷ್ಣ' ನಾಟಕಗಳಲ್ಲಿ ವಾಜಶ್ರವಸ ಮುನಿ, ರಾವಣ, ತೆನಾಲಿ ರಾಮಕೃಷ್ಣ ಮುಂತಾದ ಪಾತ್ರಗಳನ್ನೂ ಮಾಸ್ತಿ ಅವರ "ಯಶೋಧರಾ', “ತಿರುಪಾಣಿ'ಮೊದಲಾದ ನಾಟಕಗಳಲ್ಲಿ ಬುದ್ಧ ಇತ್ಯಾದಿ ಪಾತ್ರಗಳನ್ನು ವಹಿಸಿದ್ದರು. +ದೇವುಡು ಪಾತ್ರವಹಿಸಿದ ನಾಟಕಗಳು ಆ ಕಾಲಕ್ಕೇ ಶತದಿನೋತ್ಸವ ಆಚರಿಸಿದ್ದವು. +ಅಭಿನಯದಲ್ಲಿ ಆಯಾ ಪಾತ್ರಗಳಿಗೆ ತಕ್ಕಂತೆ ತನ್ಮಯರಾಗಿ ದೇವುಡು ಅಭಿನಯಿಸುತ್ತಿದ್ದರು. +ಅವರ ಮಾತಿನ ರೀತಿ, ಮೈಕಟ್ಟು, ಅಭಿನಯ ಕೌಶಲ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುತ್ತಿತ್ತು. +ಸಾಮಾಜಿಕ ಪೌರಾಣಿಕ ನಾಟಕಗಳಂತೆಯೇ ಮಕ್ಕಳ ನಾಟಕಗಳನ್ನೂ ರೇಡಿಯೋ ನಾಟಕಗಳನ್ನೂ ರಚಿಸಿ ಮಕ್ಕಳಿಂದ ಪ್ರದರ್ಶಿಸಿದ್ದಾರೆ. +"ದುರ್ಮಂತ್ರಿ', ಸಾವಿತ್ರಿ', "ಏಚಿತ್ರಶಿಕ್ಷೆ, "ಮಯೂರ',“ಯಾಜ್ಞವಲ್ಯ್ಯ', "ಯೇಸು' ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. +ನಾಟಕ ರಂಗದಷ್ಟೇ ಚಲನಚಿತ್ರರಂಗದಲ್ಲೂ ದೇವುಡು ಆಸಕ್ತರಾಗಿದ್ದರು. +ಮೈಸೂರಿನಿಂದ ದಿನಕ್ಕೆ ೪೦೦೦೦ ರೂ.ಸಿನಿಮಾ ಮೂಲಕ ಹೊರಕ್ಕೆ ಹೋಗುತ್ತಿದೆ ಎಂಬ ಪತ್ರಿಕೆಯ ಮಾತು ದೇವುಡು ಅವರನ್ನು ಚಲನಚಿತ್ರರಂಗಕ್ಕೆ ಎಳೆದೊಯ್ದಿತು. +"ಚಿರಂಜೀವಿ' (ಮಾರ್ಕಂಡೇಯ) ಸಿನಿಮಾದಲ್ಲಿ ಅದ್ಭುತಾಭಿನಯ ತೋರಿದರು. +"ಕಳ್ಳರಕೂಟ', "ಧ್ರುವಕುಮಾರ' ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ ದೇವುಡು ಚಿತ್ರ ತಯಾರಿಕರಾಗಿ ಗುಬ್ಬಿವೀರಣ್ಣ ಮತ್ತಿತರರನ್ನು ಕೂಡಿಕೊಂಡು, ತಾನೇ ಬರೆದ “ಕಳ್ಳರಕೂಟ', ಕಾದಂಬರಿಯನ್ನು ತೆರೆಗೆ "ಜಸ್‌ ಲವ್‌ ಆಫೇರ್‌' ಎಂದು ತಯಾರಿಸಲು ತೊಡಗಿದರು. +ಕಾರಣಾಂತರಗಳಿ೦ದ ಅದು ಪೂರ್ಣಗೊಳ್ಳಲಿಲ್ಲ. +"ಚಿರಂಜೀವಿ' ಚಿತ್ರದಲ್ಲಿ ಮೃಕಂಡುನಾಗಿ ಅಭಿನಯಿಸುವುದರ ಜತೆಗೆ ಕಥೆ ಸಂಭಾಷಣೆ ಹಾಡುಗಳನ್ನು ಬರೆದರು. +"ಚಿರಂಜೀವಿ' ಚಿತ್ರ೧೯೩೭ ರ ಸುಮಾರಿನಲ್ಲಿ ಬೆಂಗಳೂರು ಮೆಜೆಸ್ಟಿಕ್‌ ಚಿತ್ರಮಂದಿರದಲ್ಲಿ ಪ್ರದರ್ಶಿತವಾಯಿತು. +ಸರ್‌.ಸಿ.ವಿ.ರಾಮನ್‌, ಸರ್‌ ಪುಟ್ಟಣ್ಣಶೆಟ್ಟಿ, ಪ್ರೊ.ಬಿ.ಎಂ.ಶ್ರೀ.ಲೇಡಿ ಮಿರ್ಜಾ ಇಸ್ಮಾಯಿಲ್‌ ಮೊದಲಾದ ಗಣ್ಯರು ಹಾಜರಿದ್ದರು. +ಜಯಮ್ಮ ಜೆ.ಸಿ.ಪವಾರ್‌,ಎಂ.ವಿ.ಸುಬ್ಬಯ್ಯನಾಯ್ಡು, ಗುಬ್ಬಿ ವೀರಣ್ಣ, ಹಿರಣ್ಯಯ್ಯ ಮುಂತಾದವರು ಭಾಗವಹಿಸಿದ್ದರು. +ಮಲ್ಲೇಶ್ವರದ ಮನೆಯೊಂದರಲ್ಲಿ ಕಚೇರಿ, ಸ್ಟುಡಿಯೋ ಇದ್ದು ಅಲ್ಲೇ ಷೂಟಿಂಗ್‌ ನಡೆಯಿತು. +ಕನ್ನಡ ನಾಡಿನ ಆರಂಭದ ಸ್ಟುಡಿಯೋಗಳಲ್ಲಿ ಇದೊಂದಾಗಿತ್ತು. +ದೇವುಡು ಅವರು ಕೇವಲ ೨-೩೩ ಚಿತ್ರಗಳಲ್ಲಿ ಅಭಿನಯಿಸಿ ೧-೨ ಚಿತ್ರ ತಯಾರಿಕೆಗೆ ಶ್ರಮಿಸಿದ್ದರೂ ಚಿತ್ರರಂಗದ ಎಲ್ಲ ಬಗೆಯ ಅನುಭವ ಪಡೆದ ಏಕೈಕ ಸಾಹಿತಿ ಆಗಿದ್ದರು. +ಹೀಗೆ ದೇವುಡು ಅವರು ಕನ್ನಡ ಚಲನಚಿತ್ರ ರಂಗದಲ್ಲಿ ಅದರ ಅಸ್ತಿಭಾರವನ್ನು ಕನ್ನಡ ನಾಡಿನಲ್ಲಿ ಸ್ಥಾಪಿಸಲು ಶ್ರಮಿಸಿದವರಲ್ಲಿ ಒಬ್ಬರಾಗಿದ್ದಾರೆ ಎಂಬುದು ಮರೆಯತಕ್ಕದ್ದಲ್ಲ. +ಪ್ರಕಾಂಡ ಪಂಡಿತನಮ್ಮಲ್ಲಿ ಸಾಹಿತಿ-ಕಲಾವಿದ-ಧರ್ಮಪ್ರಚಾರಕ-ಪತ್ರಿಕೋದ್ಯೋಗಿ ನಟ-ಶಿಕ್ಷಕ-ವಾಗ್ಮಿ ಹೀಗೆ ಬಹುಮುಖ ಪ್ರತಿಭೆ ಒಬ್ಬ ವ್ಯಕ್ತಿಯಲ್ಲಿ ಮೈಗೂಡಿರುವುದು ಅತ್ಯಪೂರ್ವವಾದ ಸಂಗತಿ. +ಅದಕ್ಕೆ ಅಪರೂಪದ ನಿದರ್ಶನವೆಂದರೆ ದೇವುಡು. +ಇವೆಲ್ಲಾ ಪ್ರತಿಭೆಯ ಮುಖಗಳಾದರೆ, ಪಾಂಡಿತ್ಯ ಇನ್ನೊಂದು ಮುಖ. +ಇವೆರಡರ ಅಪೂರ್ವ ಸಂಗಮ ದೇವುಡು. +ಅವರ ಆತ್ಮೀಯ ಮಿತ್ರರೊಬ್ಬರು ಹೇಳುವಂತೆ"ಅವರಲ್ಲಿ ಮಾನವೀಯತೆ ಎಷ್ಟಿತ್ತೋ ಅದಕ್ಕೂ ಹೆಚ್ಚಿನ ಪಾಂಡಿತ್ಯ ಅಜೀರ್ಣವಾಗುವಷ್ಟು ಇತ್ತು". +ಸಂಸ್ಕೃತ ಭಾಷೆಯಲ್ಲಿ ಪ್ರವೀಣರಾದ ಅವರ ಒಲವು ಅದ್ವೈತದತ್ತ. +ಶಾಂಕರ ಸಿದ್ಧಾಂತ ಅವರಿಗೆ ಕರತಲಾಮಲಕ. +ಶಂಕರ ಮತ್ತು ಅದ್ವೈತದ ಬಗ್ಗೆ ಅವರು ಮಾಡಿದ ಅಭ್ಯಾಸ ಸಾಧನೆಗಳ ಫಲ ಸಾಕಷ್ಟು ನಮ್ಮ ಜನಕ್ಕೆ ಸಿಕ್ಕಲಿಲ್ಲ. +ಆದಿಶಂಕರರನ್ನು ಕುರಿತು ಅತ್ಯುತ್ಕಷ್ಟ ಕಾದಂಬರಿ ರೂಪ ರೇಖೆಯಲ್ಲಿಯೇ ಉಳಿಯಿತು. +ಶಾಂಕರ ಸಿದ್ಧಾಂತದ ಬಗ್ಗೆ ಅವರು ಬರೆದ ಗ್ರಂಥವೊಂದು ಹಸ್ತ ಪ್ರತಿಯಲ್ಲಿಯೇ ಇದೆ. +ವೇದಗಳಿಗೆ ನವೀನ ಭಾಷ್ಯವೊಂದು ಶಂಕರ ಭಾಷ್ಯದ ಹಿನ್ನೆಲೆಯಲ್ಲಿ ಮೂಡಿ ಬರಬೇಕಿತ್ತು. +ಷಡ್ದರ್ಶನಗಳ ಅಭ್ಯಾಸ ಅವರ ಇನ್ನೊಂದು ಕ್ಷೇತ್ರ. +ಅದರಲ್ಲೂ ಮೀಮಾಂಸೆ ಅವರ ಆಸಕ್ತಿ ಕ್ಷೇತ್ರ. +ಅವರ ಪಾಂಡಿತ್ಯ ಪ್ರತಿಭೆಗಳ ಶ್ರೇಷ್ಠ ನಿದರ್ಶನ,೧೯೩೮ರಲ್ಲಿ ಪ್ರಕಟವಾದ ಮೀಮಾಂಸಾದರ್ಪಣ ಗ್ರಂಥ. +ಮೀಮಾಂಸಾ ಶಾಸ್ತ್ರದಲ್ಲಿ ಇಂಥ ಗ್ರಂಥ ಇನ್ನೊಂದು ಕನ್ನಡದಲ್ಲಿ ಬಂದಿಲ್ಲ. +ಯೋಗವಾಶಿಷ್ಠದ೨೧ ಸಂಪುಟಗಳ ಅನುವಾದ ದೇವುಡು ಅವರ ಬೃಹತ್ತಾದ ಮತ್ತು ಮಹತ್ತಾದ ಸಾಹಸಗಳಲ್ಲಿ ಒಂದು. +ಜನಸಾಮಾನ್ಯರಿಗೆ ಗಹನವೇದಾಂತ ಗ್ರಂಥಗಳನ್ನು ಸರಳವಾಗಿ ಕನ್ನಡದಲ್ಲಿ ನೀಡಬೇಕೆಂಬ ಧ್ಯೇಯದಿಂದ ದೇವುಡು ಅನುವಾದಿಸಿರುವ ಅಷ್ಟೋಪನಿಷತ್ತುಗಳ "ಉಪನಿಷತ್ತು" ಗ್ರಂಥ ಒಂದು ವಿನೂತನ ಪ್ರಯತ್ನ. +ಸೊಗಸಾದ ಪೀಠಿಕೆ, ಸರಳವಾದ ಸ್ವತಂತ್ರಾನುವಾದ, ಉಪಯುಕ್ತ ಟಿಪ್ಪಣಿಗಳು ಈ ಗ್ರಂಥದ ವೈಶಿಷ್ಟ್ಯ. +ದೇವುಡು ಸಂಸ್ಕೃತದ ಶಾಸ್ತ್ರ ಗ್ರಂಥಗಳನ್ನು ಕನ್ನಡಕ್ಕೆ ತರುವಲ್ಲಿ ಅನುಸರಿಸಿರುವ ವಿಧಾನ ಇಂದಿಗೂ ಅನುವಾದಕರಿಗೆ ಮಾದರಿ ಆಗಿದೆ. +"ಕುಮಾರ ಕಾಳಿದಾಸ" ದೇವುಡು ಸಂಸ್ಕೃತದ ವೈದಿಕ ಸಾಹಿತ್ಯದಷ್ಟೇ ಲೌಕಿಕ ಸಾಹಿತ್ಯವನ್ನೂ ಪ್ರೀತಿಸಿದವರು,ದೇವುಡು. +ರಾಮಾಯಣ, ಭಾರತ ಭಾಗವತಗಳನ್ನು ಕಂಡರೆ ಅವರಿಗೆ ಪಂಚಪ್ರಾಣ. +ಗೀತೆಯಂತೂ ಅವರ ಉಸಿರು. +ರಾಮಾಯಣ ಭಾರತ ಭಾಗವತಗಳನ್ನು ಸೊಗಸಾಗಿ ಭಟ್ಟಿಯಿಳಿಸಿ ಕನ್ನಡಿಗರಿಗೆ ನೀಡಿದ್ದಾರೆ. +ಅವರಿಗೆ ಅತ್ಯಂತ ಆತ್ಮೀಯ ಕವಿ ಎಂದರೆ, ಕಾಳಿದಾಸ. +ಕಾಳಿದಾಸನ ಬಗ್ಗೆ ಅವರು ಓದದಿರುವ ಗ್ರಂಥವೇ ಇರುತ್ತಿರಲಿಲ್ಲ. +ಕಾಳಿದಾಸನನ್ನೂ ಅವನ ಕೃತಿಗಳನ್ನೂ ಕುರಿತು ಯಾವ ಪೂರ್ವ ಸಿದ್ಧತೆಯೂ ಇಲ್ಲದೆ ಅದ್ಭುತವಾಗಿ ಉಪನ್ಯಾಸ ನೀಡುತ್ತಿದ್ದರು. +ಕೇವಲ ಗ್ರಂಥವಾಚನವಷ್ಟೇ ದೇವುಡು ಅವರ ಹವ್ಯಾಸ ಆಗಿರಲಿಲ್ಲ; +ಮನನ ಪ್ರವಚನ ಚಿಂತನ ಅಧ್ಯಯನ ಸಹ ಸಾಗಿತ್ತು. +ಬೇಕಾದ ಭಾಗಗಳನ್ನು ಟಿಪ್ಪಣಿ ಮಾಡಿಕೊಳ್ಳುವುದು. + ಆ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ಗುರುತುಹಾಕುವುದು. +ಸಂಶಯಗಳಿದ್ದಾಗ ಪಂಡಿತರೊಡನೆ ವ್ಯವಹರಿಸುವುದು. + ಅನಂತರ ಆ ಬಗ್ಗೆ ಗ್ರಂಥ ಬರೆಯಬೇಕಾದ ರೂಪರೇಖೆಗಳನ್ನು ಗುರುತಿಸಿಕೊಳ್ಳುವುದು ಅವರ ಪದ್ಧತಿ. +ಇದನ್ನು ಅವರ ಟಿಪ್ಪಣಿ ಗ್ರಂಥಗಳಲ್ಲಿ ನೋಡಬಹುದು. +ಕಾಳಿದಸಾನ ಬಗ್ಗೆ ಗ್ರಂಥ ರಚನೆಗೆ ಅವರು ಹಾಕಿಕೊಂಡಿದ್ದ ರೂಪರೇಖೆ ಇದು. +೧.ಮಹಾಕವಿ (ಅವನ ಕೃತಿಗಳನ್ನು ಆಧರಿಸಿ), ೨. ಮಹಾಕವಿಯಕಾಲ, ೩ ಮಹಾಕವಿಯ ಕೃತಿಗಳು, ೪. ಪೌರ್ವಾಪರ್ಯ, ೫. ಗುರುಗಳು,ಹ ಪರಮೋತ್ಕ್ಟಕೃತಿ, ೭. ಇತರ ಕವಿಗಳು, ೮. ಆತನ ಶಿಷ್ಕರು, ೯. ಆತನಸಂದೇಶ, ೧೦. ಆತನ ಉಪಮೆಗಳು. +ಸ್ವಂತ ಅಭಿಪ್ರಾಯ: ರಘುವಂಶವು ಧರ್ಮ, ಕುಮಾರಸಂಭವು ಮೋಕ್ಷ,ಮೇಘ ಸಂದೇಶವು ಕಾಮ. +ಆದರೆ ಒಂದನ್ನೊಂದು ಬಿಟ್ಟಿಲ್ಲ. +ಪತ್ರವ್ಯವಹಾರ : ದೇವರು, ನಕ್ಷತ್ರ, ಪುರಾಣ, ಸೃಷ್ಟಿ ಈ ವಿಚಾರವಾಗಿಈ ಕೆಳಕಂಡ ಮಹನೀಯರಿಗೆ ಕಾಗದಗಳನ್ನು ಬರೆಯಬೇಕು: + ಡಾ.ವೆಂಕಟೇಶಅಯ್ಯಂಗಾರ್‌, ಡಾ.ಪಂಚಮುಖಿ, ಡಾ.ಪಾಂಡುರಂಗ ದೇಸಾಯಿ, ಡಾ.ಸಾಲತೊರೆ, ಡಾ.ಕೃಷ್ಣಶಾಸ್ತ್ರಿ, ಡಾ.ಮುಗಳಿ, ಶ್ರೀಗಳಾದ ತೀ. ನಂ. ಶ್ರೀಕಂಠಯ್ಯ,ಡಿ. ಎಲ್‌. ನರಸಿಂಹಾಚಾರ್‌, ಮಾಳವಾಡ, ರಾಜರತ್ನಂ, ಶ್ರೀರಂಗ, ಶಂಬಾ ಜೋಶಿ,ಎಲ್‌.ಗುಂಡಪ್ಪ, ಶಿವಮೂರ್ತಿಶಾಸ್ತ್ರಿ, ಡಾ.ನಂದಿಮಠ, ಕರಾಕೃ,ಯಾಮುನಾಚಾರ್‌, ಕೌ.ಶೇಷಾಚಾರ್‌, ಪಂಡಿತ ಭುಜ ಬಲಿ ಶಾಸ್ತ್ರಿ ಡಾ.ಭೂಸನೂರಮಠ, ಗೊರೂರು. +ದೇವುಡು ಅವರ ವ್ಯಾಸಂಗದ ರೀತಿ ಅನೇಕ ದೃಷ್ಟಿಗಳಿಂದ ಕೂಡಿತ್ತು ಎಂಬುದನ್ನು ಮೇಲಿನ ಟಿಪ್ಪಣಿಗಳು ತೋರಿಸುತ್ತವೆ. +ಇದಲ್ಲದೆ ಬರೆದುದನ್ನೂ ಅಚ್ಚಾದುದನ್ನೂ ಇತರರಿಗೆ ತೋರಿಸಿ ಅಭಿಪ್ರಾಯ ಪಡೆಯುತ್ತಿದ್ದರು. +"ಮೇಘದೂತ"ದ ವ್ಯಾಖ್ಯೆಯನ್ನು ಅಚ್ಚಿನಲ್ಲಿದ್ದಾಗಲೇ ಮೋಟಗಾನಹಳ್ಳಿ ಸುಬ್ರಹ್ಮಣ್ಯ ಶಾಸ್ತ್ರಿಗಳಿಗೆ ಕಳಿಸಿ ಟೀಕೆಯನ್ನು ಅಪೇಕ್ಷಿಸಿದ್ದರು. +ಪ್ರಕಾಂಡ ಪಂಡಿತನಾದ ವ್ಯಕ್ತಿಯಲ್ಲಿ ನಿಜವಾದ ಜ್ಞಾನತೃಷೆ ಇದ್ದಾಗ, ವಿನಯಶಾಲಿ ಸಹೃದಯ ಆದಾಗ,ಆತನ ಉಲ್ಲಾಸ ಹೇಗಿರುತ್ತದೆ ಎನ್ನಲು ದೇವುಡು ಒಂದು ಆದರ್ಶ. +ದೇವುಡು ಅವರ ವ್ಯಕ್ತಿತ್ವನ್ನು ಕುರಿತು ತಮ್ಮ ಕವಿತೆಯಲ್ಲಿ ಸೋಗಸಾಗಿ ವರ್ಣಿಸಿದ್ದಾರೆ. +ಉನ್ಮತ್ತನಂಥ ದೇವುಡು ಸೊಗಸ ಹುಚ್ಚು - ಮರುಳು ದೇವುಡು ಈ ಗ್ರಂಥದ ವೈಶ್ಯ ಜೀವನವೇ ನಾಟಕ । +ತಾನೂ ಒಬ್ಬ ನೋಟಕ ಆಟವೋ ಬೂಟಾಟವೋ । +ನೋಟವೆಂದ ದೇವುಡು. . . . . ಎದ್ದು ಬಿದ್ದ ಒದ್ದಾಡಿದ । +ಗುದ್ದಾಡಿದ ದೇವುಡುಸುತ್ತಾಡಿದ ಲೆತ್ತಾಡಿದ । +ಕಿತ್ತಾಡಿದ ದೇವುಡು ಮೊದಲ ಆರು ಸಾಲು ದೇವುಡು ವ್ಯಕ್ತಿತ್ವದ ತ್ರಿಮುಖಗಳನ್ನು ಸಮರ್ಥವಾಗಿ ಚಿತ್ರಿಸುತ್ತವೆ. +ಕೊನೆಯ ಎರಡು ಸಾಲು ಬಹಿರಂಗ ಜೀವನದ, ಮಧ್ಯದ ಎರಡು ಸಾಲು ಅಂತರಂಗದೃಷ್ಟಿಯ ದೇವುಡು ಚಿತ್ರಣವಾಗಿದೆ. +ಇವೆರಡನ್ನೂ ಮೀರಿದ ದೇವುಡು ಅವರ ಅಧ್ಯಾತ್ಮಿಕ ಅವಧೂತತನವನ್ನು ಮೊದಲೆರಡು ಸಾಲು ತಿಳಿಸುತ್ತದೆ. +ದೇವುಡು ಚಿಕ್ಕಂದಿನಿಂದಲೂ ದೈವೀಕೃಪೆಗೆ ಒಳಗದವರು. +ಬಾಲ್ಯದಲ್ಲಿಯೇ ಅವ್ಯಕ್ತಶಕ್ತಿಯ ಕೈವಾಡ ದೇವುಡು ಅವರ ಜೀವನದಲ್ಲಿ ಪ್ರಭಾವ ಬೀರಿತ್ತು. +ಅವರ ಬಾಲ್ಯದ ಆತ್ಮಕಥನದ ಪ್ರಸಂಗವೊಂದು ಇದಕ್ಕೆ ಸಾಕ್ಷಿ ಆಗಿದೆ. +ಮೈಸೂರಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಬಾಲಕ ದೇವುಡು ಅವರನ್ನು ಅವರಮ್ಮ ಮನೆಯಲ್ಲಿ ದೀಪಕ್ಕೆ ಸೀಮೆಎಣ್ಣೆ ಚಿಮಣಿಯನ್ನು ಎರಡಾಣೆಕೊಟ್ಟು ತರಿಸಲು ಕಳಿಸಿದರು. +ಚಿಕ್ಕ ಹುಡುಗನಾದ್ದರಿಂದ ಜತೆಗೆ ಮನೆಯಲ್ಲಿದ್ದ ರಾಮು ಎಂಬ ದಡ್ಡ ಶಿಖಾಮಣಿಯನ್ನು ಕಳಿಸಿದರು. +ಗೋಡೆ ಲ್ಯಾಂಪಿನ ಚಿಮಣಿ ಬೆಲೆ ಒಂದಾಣೆ ಒಂಬತ್ತು ಕಾಸನ್ನು ಕೊಟ್ಟು ಕೊಂಡು ಉಳಿದ ಮೂರುಕಾಸಿಗೆ ಕಡಲೆಪುರಿ ಕೊಂಡು ತಿನ್ನುತ್ತಾ ಕುಣಿದಾಡಿಕೊಂಡು ಬಂದರು. +ದೇವುಡು ಜಾರಿಬಿದ್ದು ಚಿಮಣಿ ಒಡೆಯಿತು, ರಸ್ತೆಯಲ್ಲಿ. +ತಕ್ಷಣ ಅವರ ಮನಸ್ಸಿನ ಕಣ್ಣಮುಂದೆ “ಕೈಯಿಂದ ಸಿಕ್ಕಿದುದರಲ್ಲಿ ಹೊಡೆಯುವ ತಾಯಿ ಕಣ್ಣಿಗೆ ಕಾಣಿಸಿದಳು. +ದಿಗಿಲು ಪ್ರಾರಂಭವಾಗಿ ಅಳು ಶುರುವಾಯಿತು. +ರೋದನ ಹೆಚ್ಚಾಗಲು ಸುತ್ತಲೂ ಜನ ಸೇರಿದರು. +ನೋಡುತ್ತಾ ನಿಂತರು. +ಆಗ ಮೈಸೂರಿನ ಟೌನಹಾಲ್‌ ಕಡೆಯಿಂದ ಯಾವಳೋ ಒಬ್ಬ ಶೂದ್ರ ಹೆಂಗಸು ಬಂದಳು. +ಹಣೆ ತುಂಬ ಕುಂಕುಮ; ತಲೆ ತುಂಬ ಮುಸುಕು; ಬಾಯಿತುಂಬ ಎಲೆ ಅಡಿಕೆ; ಸುತ್ತಲಿನ ಜನರನ್ನೆಲ್ಲಾ ತಳ್ಳಿಕೊಂಡು ಬಂದು ಬಾಲಕ ದೇವುಡು ಅವರನ್ನು "ಯಾಕಪ್ಪಾ ಅಳುತ್ತೀ। +ಏನಪ್ಪಾ ಆಯಿತು?" +ಎಂದು ಕೇಳಿ, ನಡೆದ ಸಂಗತಿ ತಿಳಿದು, "ಇಷ್ಟೇನಾ?" ಎಂದು ತನ್ನ ಎಲೆ ಅಡಿಕೆ ಚೀಲದಿಂದ ಎರಡಾಣೆ ತೆಗೆದುಕೊಟ್ಟು, ನಿವಾಳಿ ತೆಗೆದು ನಟಿಕೆ ಮುರಿದು, ತನ್ನ ಪಾಡಿಗೆ ತಾನು ಹೋದಳು. +ದೇವುಡು ಈ ಅನುಭವವನ್ನು ವಿವರಿಸುತ್ತಲೇ, ಮತ್ತೊಂದು ಮಾತನ್ನುಹೇಳಿದ್ದಾರೆ: + "ಯಾವಾಗಲಾದರೂ ಈ ನನ್ನ ಕೈ ಸುರಿವ ಕಂಬನಿಯನ್ನು ಒರೆಸಿ,ಅಳುವನ್ನು ಅಳಿಸಿ ನಗೆಗೆ ಕಾರಣವಾಗಿದ್ದರೆ ಅದೆಲ್ಲ ಅಂದಿನ ನೆನಪು ಮಾಡಿದ ಕೆಲಸ. +ಆಕೆಯ ನೆನಪು ಇಂದಿಗೂ ನನ್ನನ್ನು ದಯೆಯತ್ತ ನಡೆಸುವ ಕೈದೀವಿಗೆ". +ವಿದ್ಯಾಭ್ಯಾಸ ಕಾಲದಲ್ಲೋ ಅನಂತರದಲ್ಲೋ ಮೈಸೂರಿನಲ್ಲಿ ಚಾಮುಂಡಿ ಬೆಟ್ಟದ ಬಳಿ ಇದ್ದ ಹಠಯೋಗಿ ಯೊಬ್ಬರಿಂದ ಹಠಯೋಗ ಕಲಿತಿದ್ದರಂತೆ, ಅದಕ್ಕೆ ಪ್ರತಿಫಲವಾಗಿ ಬತ್ತದ ಬೆಲೆ ಬಂದಾಗ ಮೊದಲು ಅವರ ಮನೆಗೆ ಒಂದಿಷ್ಟು ಬತ್ತದ ಗುರುಕಾಣಿಕೆ ಸಲ್ಲಿಸುತ್ತಿದ್ದರಂತೆ,ಬೆಂಗಳೂರಿಗೆ ಬಂದಾಗ ಚಾಮರಾಜಪೇಟೆಯಲ್ಲಿದ್ದ ಗುಪ್ತ ಸಾಧಕರಾದ ಗುರುರಾವ್‌ ಅವರ ಬಳಿ ಸಾಕಷ್ಟು ಯೋಗವಿದ್ಯೆ ಕಲಿತಿದ್ದರು. +ಮೈಸೂರಿನ ಲಕ್ಷ್ಮೀನರಸಿಂಹಯ್ಯನವರು "ದೇವುಡೂಗೆ ಅವಧೂತನಾಗುವ ಯೋಗವಿದೆ" ಎಂದಿದ್ದರು. +ಶೃಂಗೇರಿ ಜಗದ್ಗುರುಗಳು ೧೯೨೮ ರಲ್ಲಿ ಧಾರವಾಡದಿಂದ ಹಿಂತಿರುಗಿ ಬರುವಾಗ ಭೇಟಿ ಮಾಡಿ "ಹೊಟ್ಟೆ ಬಟ್ಟೆಗೆ ಅಳುವುದಿಲ್ಲ. +ಆದರೆ ನನಗೆ ಶಾಸ್ತ್ರ ಓದಿದರೂ ಅರ್ಥವಾಗುವುದಿಲ್ಲ. +ಅರ್ಥವಾಗುವ ಹಾಗೆ ತಾವು ಮಾಡಿಕೊಡದಿದ್ದರೆ ನಾನು ದೇಹವನ್ನು ನೀಗುತ್ತೇನೆ" ಎಂದು ಮೊರೆಯಿಟ್ಟರು. +ಜಗದ್ಗುರುಗಳು "ಓಂ ದತ್ತ ಓಂ ದತ್ತ ದತ್ತಾತ್ರೇಯ, ಶ್ರೀದೇವದತ್ತ" ಎಂದು ದತ್ತೋಪದೇಶ ಮಾಡಿ ಅನುಗ್ರಹಿಸಿದರು. +ನಲವತ್ತು ದಿನಗಳಲ್ಲಿ ಸಿದ್ಧಿ ಉಂಟಾಗುವುದು ಎಂದರು. +ನಲವೊತ್ತೊಂದನೆಯ ದಿನ ಶ್ರೀರಂಗಪಟ್ಟಣದಲ್ಲಿ ಕಾವೇರಿ ಸ್ನಾನ ಮಾಡಿ ಸಹಸ್ರಜಪ ಮಾಡಿ, ಸುಮಾರು ೧೧ ಗಂಟೆಯ ವೇಳೆಗೆ ಮೈ ಕೈ ನೋವು ಬಹಳವಾಗಿ ಹೋಗಿ ಮಲಗಿಕೊಂಡಾಗ, "ಕೊಬ್ಬರಿಯ ಗಿಟುಕು ತೆಂಗಿನ ಚಿಪ್ಪಿನಲ್ಲಿ ಅಲ್ಲಾಡುವಂತೆ ಆಗಿ, ದೇಹದೊಳಗಣ ಚೇತನ ಬೇರೆಯೆಂದು ತಿಳಿಯಿತು" ದೇವುಡು ಅವರಿಗೆ. +ಒಮ್ಮೆ ಕನಸಿನಲ್ಲಿ ಗುರುಗಳು ಕಾಣಿಸಿಕೊಂಡು ಉಪದೇಶ ನೀಡಿದರು ಎಂದೂ ಇನ್ನೊಮ್ಮೆ ತಮಗೆ ಅವರಿಗೆ ಗಾಯತ್ರಿ ದರ್ಶನವಾಯಿತೆಂದೂ ದಿನಚರಿಯಲ್ಲಿ ಬರೆದಿಟ್ಟಿದ್ದಾರೆ. +"ಮಂದಪ್ರಭೆಯಲ್ಲಿ ವಿಶಾಲವಾದ ಸಮುದ್ರದ ಮೇಲೆ ಒಂದು ಕಮಲವು ಮೊಗ್ಗಾಗಿ ಮೂಡಿ ಅರಳಿತು. +ಗಾಯತ್ರಿಯ ಬಲಗಾಲು ನೀರಿಗೆ ತಗಲುವಂತೆ ಇಳಿಯ ಬಿಟ್ಟಿದ್ದಳು. +ಎಡಗಾಲು ಮಡಿಸಿತ್ತು. . . " ಎಂದು ಗಾಯತ್ರಿಯನ್ನು ಕಂಡಂತೆ ವರ್ಣಿಸಿದ್ದರು. +ದೇವುಡು ಅವರು ತಮ್ಮ ಅಧ್ಯಾತ್ಮಿಕ ಸಾಧನೆಯ ಫಲವನ್ನು ಇತರರಿಗೂ ನೀಡಿದ್ದರು. +ಅರಮನೆಯ ಶ್ರೀ ಚೆಲುವ ರಾಜಮ್ಮಕ್ಣಿ ಅವರಿಗೆ ಗೌರೀಪಂಚಾಕ್ಷರಿಯ ಉಪದೇಶವನ್ನು ನೀಡಿದರು. +ಕುಟುಂಬದಲ್ಲಿ ಹೆಂಡತಿ ಮಕ್ಕಳಿಗೆ ಗಾಯತ್ರಿ ಉಪದೇಶ ಮಾಡಿದ್ದರು. +೧೯೪೫ ರಲ್ಲಿ ಹಿರಿಯೂರಿನಲ್ಲಿ ನಡೆದ ರಾಮೋತ್ಸವ ಸಂದರ್ಭದಲ್ಲಿ ಉಪನ್ಯಾಸಕ್ಕೆ ಹೋಗಿದ್ದರು. +ಆಗ ವ್ಯವಸ್ಥಾಪಕರಾದ ಶಾಲೆಯ ಮುಖ್ಯೋಪಾಧ್ಯಾಯರಾದ ವೆಂಕಟೇಶಯ್ಯ ಹಾಸಿಗೆ ಹಿಡಿದು ಮಲಗಿದ್ದಾಗ ಅವರ ಕೈ ಹಿಡಿದು ಹತ್ತಿಪ್ಪತ್ತು ನಿಮಿಷ ಧ್ಯಾನ ಮಾಡಿ ಅವರ ಸುಸ್ತು, ಜ್ವರವನ್ನು ದೇವುಡು ಹೋಗಲಾಡಿಸಿದರು. +"ಲೋಕದಲ್ಲಿ ಜಡ ಚೇತನ ಎಂದು ಎರಡು ವಿಧವಾಗಿದ್ದರೂ,ಚಲಿಸಿದಾಗ ಚೇತನವಾಗುತ್ತದೆ. +ಸ್ಥಿರನಾದಾದ ಜಡವಾಗುತ್ತದೆ. +ಈ ಅನುಭವ ನೋಡುವ ವಿಧಾನದ ಮೇಲೆ ನಿಂತಿದೆ." + ಎಂದು ಅತೀತನಾಭವವನ್ನು ಕುರಿತು ದೇವುಡು ಒಂದೆಡೆ ವಿವರಣೆ ನೀಡಿದ್ದಾರೆ. +ದತ್ತಾತ್ರೇಯನ ಉಪಾಸಕರಾದ ದೇವುಡು ಅವರು ೧೯೧೯ ರಜುಲೈ ಸುಮಾರಿನಲ್ಲಿ ಶಿರಸಿಯಿಂದ ಹಾವೇರಿಗೆ ಹೋಗುವ ದಾರಿಯಲ್ಲಿ ದತ್ತಾತ್ರೇಯನ ದರ್ಶನ ಪಡೆದಿದ್ದರು. +ಬೆಂಗಳೂರಿನಲ್ಲಿ ದತ್ತಾತ್ರೇಯ ಆಶ್ರಮ ಸ್ಥಾಪನೆಗೆ ಹೊಸ್ಕೆರೆ ಹಳ್ಳಿಯಲ್ಲಿ ಸ್ಥಳವೊಂದನ್ನು ಪಡೆಯಲು ಯತ್ನಿಸಿದ್ದರು. +ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. +ಅವರ ಮಹಾಕಾದಂಬರಿತ್ರಯ (ಮಹಾಬ್ರಾಹ್ಮಣ, ಮಹಾಕ್ಷತ್ರಿಯ, ಮಹಾದರ್ಶನ) ದಲ್ಲಿ ಬರುವ ಅನೇಕ ಸಂಗತಿಗಳಿಗೆ ದೇವುಡು ಅವರ ಅಧ್ಯಾತ್ಮ ಸಾಧನೆಯ ಸಂಗತಿಗಳು ಆಕರವಾಗಿವೆ. +ದೇವುಡು ಮಂತ್ರಸಿದ್ಧಿ ಪಡೆದವರು. +ಕೀರ್ತಿ ವ್ಯಾಮೋಹಕ್ಕಾಗಿ ಧನ ಸಂಪಾದನೆಗಾಗಿ ಎಂದೂ ಅವರು ತಮ್ಮ ಸಿದ್ಧಿಗಳನ್ನು ಬಳಸಲಿಲ್ಲ. +ಸಾಹಿತ್ಯ ನಿರ್ಮಾಣಕ್ಕೆ ಆ ಶಕ್ತಿಯನ್ನು ಬಳಸಿ ಕನ್ನಡಕ್ಕೆ ಅದ್ಭುತ ಕೃತಿಗಳನ್ನು ನೀಡಿದರು; +ಉಳಿದವರಿಗೆ ಅಧ್ಯಾತ್ಮಿಕ ವಸ್ತುವಿನ ಕೃತಿಗಳನ್ನು ರಚಿಸಲು ಮಾರ್ಗದರ್ಶಕರಾದರು. +ಕೇವಲ ಅಂತರಂಗ ಸಾಧನೆಗೆ, ಆತ್ಮೋದ್ಭಾರಕ್ಕೆ ಸಾಧನೆ ಮಾಡಿದ್ದರಿಂದ ದೇವುಡು ಅವರ ಅಧ್ಯಾತ್ಮಸಿದ್ಧಿ ಹೊರಜಗತ್ತಿಗೆ ಅಷ್ಟಾಗಿ ತಿಳಿಯಲಿಲ್ಲ. +ಅತಿಥಿ ಸತ್ಕಾರ ದೇವುಡು ಅವರು "ತಿರಿದು ತಂದಾದರೂ ಕರೆದು ಉಣ್ಣಲುಬೇಕು" ಎಂಬ ಸರ್ವಜ್ಞನ ಪಂಥಕ್ಕೆ ಸೇರಿದವರು. +"ಅತಿಥಿದೇವೋ ಭವ" ಎಂಬ ಸಪ್ತಾಕ್ಷರಿ ಮಂತ್ರವನ್ನು ಸದಾ ಜಪಿಸಿದವರು. +ತನಗಿಲ್ಲದಿದ್ದರೂ ಕಷ್ಟದಲ್ಲಿರುವವರನ್ನು ಕಂಡಾಗ ಔಚಿತ್ಯ ಮೀರಿ ದಾನ ಮಾಡುತ್ತಿದ್ದರು. +ಸಿರಿತನ-ಬಡತನ ಮುಖ್ಯವಲ್ಲ ಇದ್ದಷ್ಟನ್ನೇ ಮಾಡುವ ಬುದ್ಧಿ ಮುಖ್ಯ ಎಂಬುದು ದೇವುಡು ಅವರ ಜೀವನ ಸೂತ್ರ ಸಂಪದ್ಗೀರಿರಾಯರು ಹೇಳುವಂತೆ, ಬಡವರನ್ನು ಕಂಡರೆ ತಮಗೇ ಸಾಲದಿದ್ದಾಗಲೂ, ಬೇಕಾಗಿದ್ದಲೂ ತಮ್ಮ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದರು. +ಅವರ ಎರಡು ಕಣ್ಣುಗಳು ಎರಡು ನೀರಿನ ಟ್ಯಾಂಕುಗಳಾಗಿದ್ದವು. +ಕಷ್ಟ ಕಾರ್ಪಣ್ಯದಲ್ಲಿರುವವರನ್ನು ಕಂಡರೆ ಸಾಕು, ಅವು ಧುಮ್ಮಿಕ್ಕುತ್ತಿದ್ದವು. +ಒಮ್ಮೆ ದೇವುಡು ಮನೆಯಲ್ಲಿ ಅಡಿಗೆ ಮನೆ ಪೂರ್ತಿ ಖಾಲಿ ಆಗಿತ್ತು. +ದೇವುಡು ಪತ್ನಿ ಗೌರಮ್ಮನವರು ವಿಧಿಯಿಲ್ಲದೆ ದೇವುಡು ಅವರಿಗೆ ಹೇಳಿದರು: +"ಇಂದು ಮನೆಯಲ್ಲಿ ಒಂದಕ್ಕಿ ಕಾಳೂ ಇಲ್ಲ. +ಬರೋವರಿಗೆ ಇರಲಿ, ಇರೋವರಿಗೇ ಊಟವಿಲ್ಲ" ಎಂದರು. +ಆಗ ದೇವುಡು ಅವರು ಪ್ರಕಾಶಕರೊಬ್ಬರ ಬಳಿ ಹೋಗಿ ಪುಸ್ತಕವೊಂದು ಬರೆದು ಕೊಡುವ ಭರವಸೆ ನೀಡಿ ಸಾಕಷ್ಟು ಹಣ ತಂದರು. +ಆ ವೇಳೆಗೆ ಮನೆಗೆ ದೇವುಡು ಅವರ ಮಿತ್ರರೊಬ್ಬರು ಬಂದು ತಮ್ಮ ಸಂಕಷ್ಟ ಸ್ಥಿತಿಯನ್ನು ಹೇಳಿಕೊಂಡು ಗೋಳಿಟ್ಟರು. +ಆಗ ದೇವುಡು ತಾವು ತಂದ ಹಣದಲ್ಲಿ ಕೇವಲ೫ ರೂ.ಗಳನ್ನು ಮಾತ್ರ ಊಟದ ಖರ್ಚಿಗೆ ಉಳಿಸಿಕೊಂಡು, ಉಳಿದೆಲ್ಲಾ ಹಣಕೊಟ್ಟು ಹೇಳಿದರು: + "ನೋಡಪ್ಪಾ, ಈ ಹೊತ್ತು ಮನೆಗೆ ಊಟಕ್ಕೆ ಅಕ್ಕಿ ಬೇಳೆಗೆ ೫ ರೂ.ಇಟ್ಟುಕೊಂಡು ಉಳಿದಿದ್ದೆಲ್ಲಾ ಕೊಟ್ಟಿದ್ದೇನೆ. +ನಿನಗೆ ದೇವರು ಒಳ್ಳೆಯದು ಮಾಡಲಿ ಹೋಗಿ ಬಾ"ಎಂದರು. +ಆ ಹಣವನ್ನು ಹಿಂದಿರುಗಿಸದ ಬಗ್ಗೆ ಆವ್ಯಕ್ತಿಯನ್ನು ಕೇಳುವ ಯೋಚನೆಯೇ ದೇವುಡು ಅವರಿಗೆ ಬರಲಿಲ್ಲ. +ಆ ವ್ಯಕ್ತಿಹಣ ಹಿಂದಕ್ಕೆ ಕೊಡಲೂ ಇಲ್ಲ. +ದೇವುಡು ಅವರ ಧಾರಾಳತನಕ್ಕೆ ತಕ್ಕ ಸತೀಮಣಿ ಗೌರಮ್ಮನವರು. +ಆರ್ಥಿಕ ಭಾವನೆ ಮನೆಯಲ್ಲಿ ತಾಂಡವವಾಡುತ್ತಿದ್ದರೂ ಎಂಥಾ ಸಂದರ್ಭದಲ್ಲೂ ಬೇಸರಿಸದೆ, ಗೊಣಗುಟ್ಟದೆ, ಮನೆಗೆ ಬಂದವರನ್ನೆಲ್ಲಾ ನಗುನಗುತ್ತಾ ಸತ್ಕರಿಸುತ್ತಿದ್ದ ಮಹಾತಾಯಿ, ಆಕೆ. +ಗೌರಮ್ಮನವರು ಆದರ್ಶ ಗೃಹಿಣಿ ಆಗಿದ್ದರು. +ದೇವುಡು ಅವರ ಜತೆ ಕಾರ್ಯಕ್ರಮಗಳಿಗೆ ಹೋಗಿ ಬರುತ್ತಿದ್ದರು. +ಅವರ ಉಪನ್ಯಾಸಗಳನ್ನು ಕೇಳಿ ಮೆಚ್ಚುಗೆ ಸೂಚಿಸುತ್ತಿದ್ದರು, ವಿಮರ್ಶಿಸುತ್ತಿದ್ದರು. +ಸಾಕಷ್ಟು ವೇದಾಂತ ಗ್ರಂಥಗಳನ್ನು ಆಕೆ ಓದಿಕೊಂಡಿದ್ದರು. +ಕಾಲಹರಣ ಮಾಡುತ್ತಿರಲಿಲ್ಲ. +ಕಷ್ಟದಲ್ಲೇ ಮಕ್ಕಳನ್ನು ಸಾಕಿದರು. +ಬಂದವರಿಗೆ ಏನಾದರೂ ಕೊಡುವುದು, ಸತ್ಕರಿಸುವುದು ದೇವುಡು ದಂಪತಿಗಳ ಜೀವನ ವ್ರತವೇ ಆಗಿತ್ತು. +ಎಷ್ಟರಮಟ್ಟಿಗೆ ಎಂದರೆ, ಒಮ್ಮೆ ಬೆಳಗೆರೆ ಕೃಷ್ಣಶಾಸ್ತ್ರಿಗಳು ದೇವುಡು ಅವರ ಮನೆಗೆ ಬಂದಾಗ, ಮನೆಯಲ್ಲಿ ತಿಂಡಿ ಏನೂ ಇಲ್ಲದೆ, ಡಬ್ಬಗಳನ್ನೆಲ್ಲಾ ಹುಡುಕಾಡಿ ಕೊನೆಗೆ ಯಾವುದೋ ಡಬ್ಬದಲ್ಲಿ ಉಳಿದುಕೊಂಡಿದ್ದ ಎರಡು ಕೋಡುಬಳೆಗಳನ್ನು ತಂದು ಅವರ ಮುಂದಿಟ್ಟರು. +ದೇವುಡು ಗಟ್ಟಿಯಾಗಿ ನಗುತ್ತಾ "ಬೆಳೆಗೆರೆಯ ಬಾಯಿ ನೋಡಲಿಲ್ಲವೇ? ಕೋಡುಬಳೆ ತಂದಿಟ್ಟಿದ್ದೀಯಲ್ಲಾ?"ಎಂದರು. +ಪರಿಸ್ಥಿತಿ ಅರ್ಥವಾಯಿತು. +"ಹೋಗಲಿ ಬಿಡು, ಮನೆಯಲ್ಲಿ ಇನ್ನೇನೂ ಇಲ್ಲ ಎಂದು ಹೇಳಲು ಸಂಕೋಚಪಡಬೇಕಾಗಿಲ್ಲ. +ಒಂದು ಲೋಟ ಮಜ್ಜಿಗೆ ಕೊಡು" ಎಂದರು. +ಮನೆಯಲ್ಲಷ್ಟೇ ಅಲ್ಲ, ಹೊರಗಡೆ ಸ್ನೇಹಿತರು ಸಿಕ್ಕರೆ ಅವರಿಗೆ ತಿಂಡಿ ತೀರ್ಥಗಳ ಸಮಾರಾಧನೆ ಮಾಡಿಸುತ್ತಿದ್ದರು. +ಸ್ನೇಹಿತರಿಗಾಗಿ ಖರ್ಚು ಮಾಡಿ ಬರಿಗೈಯಲ್ಲಿ ಮನೆಗೆ ಬರುವುದು ಅವರ ಜಾಯಮಾನವೇ ಆಗಿತ್ತು. +ದೇವುಡು ಅವರು ಮನಸ್ಸು ಮಾಡಿದ್ದರೆ ಸುಖದ ಸುಪ್ಪತ್ತಿಗೆಯಲ್ಲಿ ಹೊರಳಾಡಬಹುದಿತ್ತು ಅವರಿಗಿದ್ದ ಜನಬಲ, ಬುದ್ಧಿಬಲ, ಉನ್ನತ ಅಧಿಕಾರಿಗಳ ಸ್ನೇಹಬಲ ಇವುಗಳಿಂದ ಏನು ಬೇಕಾದರೂ ಪಡೆಯಬಹುದಿತ್ತು. +ಆದರೆ ಸರಳಜೀವಿ, ಸ್ವಾಭಿಮಾನಿ, ಸ್ಪತಂತ್ರ ವ್ಯಕ್ತಿ ದೇವುಡು ಅವಾವುದಕ್ಕೂ ಆಸೆಪಡಲಿಲ್ಲ. +ಸರಳಜೀವನ, ಉನ್ನತಚಿಂತನ ಅವರ ಬದುಕಿನ ಧ್ಯೇಯವಾಗಿತ್ತು. +ಇದಕ್ಕಾಗಿ ಬಾಳಿನಲ್ಲಿ ಮನೆ ಬಾಗಿಲಿಗೇ ಬಂದ ಎಷ್ಟೋ ಅಧಿಕಾರಾವಕಾಶಗಳನ್ನು ತಾವಾಗಿಯೇ ದೂರ ಮಾಡಿದರು. +ಇದಕ್ಕೆ ಒಂದು ನಿದರ್ಶನ ನೀಡಬಹುದು: +ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ,ದೇವುಡು ಅವರ ಸೂಚನೆ ಮತ್ತು ಮಾರ್ಗದರ್ಶನದಿಂದ ಪ್ರಾರಂಭವಾಯಿತು. +ಆಗ ಮುಖ್ಯಮಂತ್ರಿಗಳು "ನಿಮ್ಮ ಕಲ್ಪನೆಯ ಕೂಸಿದು, ನೀವೇ ಇದಕ್ಕೆ ನಿರ್ದೇಶಕರಾಗಿ ಎಂದಾಗ, “ನಾನು ಯಾವ ಅಧಿಕಾರಿ, ಪ್ರತಿಫಲ ಬಯಸಿದನ್ನು ಮಾಡಲು ಹೇಳಲಿಲ್ಲ. +ಕನ್ನಡ ಅಭಿವೃದ್ಧಿಗೆ ಪ್ರತ್ಯೇಕ ಇಲಾಖೆ ಬೇಕು ಎಂದು ಆಸಕ್ತಿ ತಳೆದು ಮಾರ್ಗದರ್ಶನ ಮಾಡಿದೆ ಅಷ್ಟೆ" ಎಂದರು. +"ಹಾಗಾದರೆ ಯಾರಿದ್ದಾರೆ ಈ ಜಾಗಕ್ಕೆ? +ನೀವೇ ಸೂಚಿಸಿ" ಎಂದಾಗ, ಸಿ. ಕೆ. ವೆಂಕಟರಾಮಯ್ಯನವರನ್ನು ಸೂಚಿಸಿದರು. + ಸಿ.ಕೆ.ವೆಂ.ನೇಮಕವಾದಾಗ, ಅವರು, ಜತೆಗೆ ಒಬ್ಬ ಉಪನಿರ್ದೇಶಕರ ಅಗತ್ಯವಿದೆ ಎಂದರಂತೆ. +ಸರ್ಕಾರ ಅವರ ಅಪೇಕ್ಷೆಯನ್ನು ಮನ್ನಿಸಿ. +"ನಿಮಗೆ ಸೂಕ್ತರಾದವರನ್ನು ನೇಮಿಸಿಕೊಳ್ಳಿ' ಎಂದಾಗ, ಸಿ.ಕೆ.ವೆಂ.ದೇವುಡು ಅವರ ಬಳಿ ಬಂದು, "ನೀವೇಕೆ ನನಗೆ ಸಹಾಯಕರಾಗಿ ಉಪನಿರ್ದೇಶಕರಾಗಬಾರದು?" ಎಂದರಂತೆ. +ಆಗ ದೇವುಡು ನಕ್ಕು ಹೇಳಿದರು. +"ಈ ಇಲಾಖೆಯನ್ನು ಪ್ರಾರಂಭ ಮಾಡಲು ಹೇಳಿದವನೂ ನಾನೇ; ಈ ಜಾಗಕ್ಕೆ ನಿಮ್ಮನ್ನು ಸೂಚಿಸಿದವನೂ ನಾನೇ, ನನ್ನನ್ನೇ ನಿರ್ದೇಶಕನಾಗು ಎಂದು ಕೇಳಿದ್ದರು;ತಿಳಿಯಿತೇ?"ಎಂದರು. ಸಿ. ಕೆ. ವೆಂ. ಕಕ್ಕಾಬಿಕ್ಕಿ ಆದರು. +ದೇವುಡು ವಯಸ್ಕರ ಶಿಕ್ಷಣ ಸಂಸ್ಥೆ ಪ್ರಾರಂಭಕ್ಕೂ ಕಾರಣಕರ್ತರಾಗಿದ್ದು ಅದರ ನಿರ್ದೇಶಕರಾಗುವ ಅವಕಾಶವನ್ನು ಸಹ ನಿರಾಕರಿಸಿ ಕೊನೆಗೆ ಸರ್ಕಾರದ ಬಲವಂತಕ್ಕೆ ಅದರ ಖಾಯಂ ಅಜೀವ ಸದಸ್ಯರಾಗಿ ಸೇವೆ ಸಲ್ಲಿಸಿದರು. +೧೯೪೩-೪೫ ರಲ್ಲಿ ಪ್ರಜಾಪ್ರತಿನಿಧಿ ಸಭೆಗೆ ಸದಸ್ಯರಾಗಿ, ಹಲವಾರು ಬಾರಿ ಪಠ್ಯಪುಸ್ತಕಗಳ ಸಮಿತಿಯ ಅಧ್ಯಕ್ಷರಾಗಿ, ಸದಸ್ಯರಾಗಿ, ಕಾರ್ಯನಿರ್ವಹಿಸಿದ್ದಾರೆ. +೧೯೫೬-೫೯ ರಲ್ಲಿ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. +ಸಂಘ ಸಂಸ್ಥೆಗಳ ಮೂಲಕ ಸಾರ್ವಜನಿಕ ಸೇವೆ ಸಲ್ಲಿಸುವುದು ಅವರಿಗೆ ಇಷ್ಟವಾಗಿದ್ದರೂ, ಸಂಬಳ ತೆಗೆದುಕೊ೦ಡು ಸರ್ಕಾರಿ ನೌಕರರಾಗಿ ಕೆಲಸ ಮಾಡಲು ಎಂದೂ ಇಚ್ಛಿಸಲಿಲ್ಲ. +ಅವರ ಸ್ವಭಾವ ಸ್ವತಂತ್ರ ಮನೋಭಾವದಿಂದ ಕೂಡಿತ್ತು ತಮ್ಮ ಮಾತು ನಡೆಯದ ಕಡೆ ಅವರು ಇರುತ್ತಿರಲಿಲ್ಲ. +ಅವರದು ನಾಯಕ ಗುಣ, ಹಿಂಬಾಲಕ ಗುಣವಲ್ಲ. +ಆದ್ದರಿಂದಲೇ ಅವರು ಅಧಿಕಾರಕ್ಕೆ ಹಣಕ್ಕೆ ಎಂದೂ ಬಾಯಿ ಬಿಡಲಿಲ್ಲ. +ಸಾವಿನಲ್ಲಿ ನಕ್ಕ ಧೀರ ದೇವುಡು ಬಹಿರಂಗದಲ್ಲಿ ಸಾಮಾನ್ಯರಾಗಿ ಕಂಡರೂ, ಅಂತರಂಗದಲ್ಲಿ ಸ್ಥಿತಪ್ರಜ್ಞರೂ ಧೀರರೂ ಆಗಿದ್ದರು. +ಹೊರನೋಟಕ್ಕೆ ಆಕರ್ಷಕ ವ್ಯಕ್ತಿ ಆಗಿದ್ದರು. +ಅವರ ಮಾತಿಗೆ ಸೋಲದವರೇ ಇರುತ್ತಿರಲಿಲ್ಲ. +ಭಾಷಣ, ಸಂಭಾಷಣೆ ಎರಡರಲ್ಲೂ ಮೋಹಕತೆ ಇತ್ತು. +ವೇಷಭೂಷಣದಲ್ಲಿ ಒಬ್ಬೊಬ್ಬರ ಕಣ್ಣಿಗೆ ಒಂದೊಂದು ತೆರಕಂಡಿದ್ದಾರೆ, ದೇವುಡು. +ದೇವುಡು ಅವರಿಗೆ ಬಟ್ಟೆ ಬರೆಗಳು ಅಲಂಕಾರ ಇತ್ಯಾದಿಗಳ ಬಗೆಗೆ ವಿಶೇಷ ಆಸ್ಥೆ ಇದ್ದಂತೆ ಕಾಣುತ್ತಿರಲಿಲ್ಲ. +ಸಾಧಾರಣವಾಗಿ ದಟ್ಟಿ ಪಂಜೆ, ಹೊರಗಡೆ ಹೋಗುವಾಗ ಕಚ್ಚೆ ಪಂಜೆ, ಷರಟು, ಕ್ಲೋಸ್‌ಕಾಲರ್‌ಕೋಟು, ತಲೆ ಮೇಲೊಂದು ಟೋಪಿ ಎಂದು ಇ.ಆರ್‌.ಸೇತೂರಾಂ ವರ್ಣಿಸಿದರೆ, ನೋಡಲು ಆಕರ್ಷಕ ನಿಲುವು ಹೊಂದಿದ್ದರು. +ಅಜಾನುಬಾಹು, ಸುಂದರವಾದ ಗುಂಡುಮುಖ, ಸ್ವಚ್ಛವಾದ ಬಿಳಿಬಣ್ಣ, ತೇಜಸ್ಸಿನಿಂದ ಕೂಡಿದ ಕಣ್ಣುಗಳು,ಯಾರು ನೋಡಿದರೂ ಮತ್ತೊಮ್ಮೆ ನೋಡಬೇಕು ಎಂಬಂಥ ಕುತೂಹಲ ಹುಟ್ಟಿಸುವ ಆಕರ್ಷಕ ವ್ಯಕ್ತಿ ಎನ್ನುತ್ತಾರೆ ಮಗ ಡಿ.ಎನ್‌.ಗಂಗಾಧರ್‌. +ಸಾಹಿತಿ ದ.ಬಾ.ಕುಲಕರ್ಣಿ ಕಂಡಿರುವ ನೋಟವೇ ಬೇರೆ. +ಅಜಾನುಬಾಹುವಾದ ದೇಹ; ಇಷ್ಟಗಲದ ತುಂಬು ಮುಖ, ಗೌರಕಾಂತಿ; ಒಂದು ಕಣ್ಣನ್ನುಸಂಕುಚಿಸಿ ನೋಡುವ ನಾಟಕೀಯ ದೃಷ್ಟಿ, ಅಸ್ತವ್ಯಸ್ತ ಉಡಿಗೆ ತೊಡಿಗೆ, ಬೊಕ್ಕತಲೆ. +ಇದು ಅವರ ದೇಹ ಪರಿಚಯ. +ದೇವುಡು ಉಪಚಾರವನ್ನರಿಯರು; ಡಾಂಭಿಕತೆಯನ್ನರಿಯರು; ಹಿರಿಯರನ್ನು ಕಂಡರೆ ದಂಡವತ್‌ ಪ್ರಣಾಮ; ಸರೀಕರನ್ನು, ಕಿರಿಯರನ್ನು ಕಂಡರೆ ಬಾಚಿ ತಬ್ಬಿಕೊಂಡೇ ಮಾತಾಡಿಸುವರು. +ವೇದಿಕೆಯ ಮೇಲೆ ಉಪನ್ಯಾಸ ಮಾಡುವಾಗ ಅನೇಕ ವೇಳೆ "ತಾವು ತೊಟ್ಟಿದ್ದ ಜುಬ್ಬಾ ತೆಗೆದು ಮೇಲೊಂದು ಉತ್ತರೀಯ ಹೊದೆದು ಇರುತ್ತಿದ್ದರು. +ಮಕ್ಕಳ ಪಾಲಿಗೆ ಪ್ರೀತಿಯ ಅಜ್ಜ, ಆತ್ಮೀಯ ಅಣ್ಣ, ಕಥೆ ಹೇಳೋ ತಾತ; ಮನೆಮಕ್ಕಳಿಗೆ "ಮಾಮ" ಆಗಿದ್ದರು. +ಒಮ್ಮೊಮ್ಮೆ ಆವೇಶದಲ್ಲಿ ಮಾತಾಡಿದರೂ ಮರುಕ್ಷಣದಲ್ಲೇ ಹಸುಗೂಸಿನಂತೆ ತಮ್ಮ ಆವೇಶಕ್ಕಾಗಿ ಮರುಗುತ್ತಿದ್ದರು. +ಒಮ್ಮೆ ಅವರ ಆತ್ಮೀಯ ಮಿತ್ರರೊಬ್ಬರ ಮೇಲೆ ರೇಗಿದಾಗ, ಅವರು “ಇನ್ನೆಂದೂ ನಿಮ್ಮ ಮನೆಗೆ ಬರುವುದಿಲ್ಲ” ಎಂದು ಹೇಳಿದವರು, ಮಾರನೇ ದಿನ ಬಂದಾಗ, ಇಂದು ನಿಮ್ಮ ಮನೆಗೇ ಹೊರಟಿದ್ದೆ,ನೀವೇ ಬಂದಿರಿ ಒಳ್ಳೆಯದಾಯಿತು. +ನಿನ್ನೆ ನಾನು ದುಡುಕಿದೆ ಎಂದಾಗ” ಬಂದವರು ತಣ್ಣಗಾದರು. +ಎಂದೂ ಯಾರನ್ನೂ ನೋಯಿಸದ ಮತ್ತು ಯಾರಿಗೂ ಕೆಡುಕು ಮಾಡದ, ಕಂಡವರ ಕಷ್ಟಕ್ಕೆ ಮರುಗು ಜೀವ, ದೇವುಡು ಅವರದು. + ವಿ.ಸೀ. ಹೇಳುವಂತೆ “ಎಲ್ಲಿಯೇ ಆಗಲಿ ಯಾರಿಗೂ ತಲೆತಗ್ಗಿಸದ ನಿಂತ ನಿಲುವು ಅವರದು. + ಹೊಗಳಿಸಿಕೊಳ್ಳುವ ಆಸೆ ಅವರಿಗಿರಲಿಲ್ಲ. +ತಮಗೆ ತಕ್ಕ ಮನ್ನಣೆ ಸಿಗಲಿಲ್ಲವೆಂಬ ಕೊರಗೂ ಇರಲಿಲ್ಲ. +ಬಂದದ್ದೆಲ್ಲಾ ಬರಲಿ ಎಂದು ಯಾವುದಕ್ಕೂ ಕೈಯೊಡ್ಡುವ ಮನಸ್ಸು ಅವರದಾಗಿರಲಿಲ್ಲ.” +ದೇವುಡು ಅವರ ಹಿರಿಯ ಮಗ ಕಾಲೇಜಿನಲ್ಲಿ ಅಭ್ಯಾಸ ಮಾಡಿತ್ತಿದ್ದಾಗ,“ನಿಮ್ಮ ಹುಡುಗನಿಗೆ ಅರ್ಧ ಫ್ರೀಷಿಪ್‌ ಸಿಗುತ್ತದೆ; ಪೂರ್ತಿ ಫ್ರೀಷಿಪ್‌ ಸಿಗುವುದಿಲ್ಲ. +ಅದೂ ನಿಮಗಾಗಿ ಅವನಿಗೆ ಕೊಡುತ್ತಿದ್ದೇವೆ? +ಎಂದು ಅಧಿಕಾರಿಗಳು ಹೇಳಿದರಂತೆ. +“ನಿಮ್ಮ ದಯೆಯೇನು ಬೇಡ; ದಯವಿಟ್ಟು ಫ್ರೀಷಿಪ್‌ ಲಿಸ್ಟನಲ್ಲಿ ಅವನ ಹೆಸರನ್ನು ಸೇರಿಸಬೇಡಿ ಅವನ ಫೀಸಿಗೆ ನಾನು ವ್ಯವಸ್ಥೆ ಮಾಡುತ್ತೇನೆ” ಎಂದು ಹೇಳಿದವರು ದೇವುಡು. +ಅವರ ಮಗ ಸದಾಶಿವ ಹೇಳಿದ ಮಾತಿದು: "ನಮ್ಮ ತಂದೆಯನ್ನು ಒಮ್ಮೆ ಅಮೆರಿಕಾದ ಸ್ಕಾಲರ್‌ಷಿಪ್‌ಗಾಗಿ ಅಧಿಕಾರಿಗಳೊಬ್ಬರ ಶಿಫಾರಸಿಗಾಗಿ ಕೇಳಿದೆ." +ಆಗ ಅವರು ಅಂದರು, "ನಿನಗಾಗಿ ನಾನು ಕೇಳಲಾರೆ, ಇಷ್ಟಕ್ಕೂ ಅಮೆರಿಕಾಗೆ ಹೋಗಿ ನಾವು ಕಲಿಯುವುದೇನಿದೆ? +ಅವರು ಬಂದು ನಮ್ಮಲ್ಲಿ ಕಲಿಯಬೇಕು" ಎಂದುಬಿಟ್ಟರು. +ಲೋಕದಲ್ಲಿ ಮಕ್ಕಳಿಗೆ ಅಪ್ಪಂದಿರು ಏನು ಬೇಕಾದರೂ ಮಾಡುತ್ತಾರ. +ದೇವುಡು ಪರರಿಗೆ ಏನು ಬೇಕಾದರೂ ಮಾಡುತ್ತಾರೆ ಆ ಗುಣದ ಮಹತ್ವ ಇಂದು ನಮಗೆ ಅರ್ಥವಾಗುತ್ತಿದೆ. +ದೇವುಡು ಅವರಿಗೆ ತಿಂಡಿ ತೀರ್ಥಗಳ ಚಪಲ ಸಾಕಷ್ಟಿತ್ತು. +ರುಚಿರುಚಿಯಾದ ತಿಂಡಿಗಳ ಸ್ವಾದ ಕಂಡ ರಸಿಕರು ಅವರು. +ಒಮ್ಮೆ ಬೆಂಗಳೂರಿನ ವಿಜಯಲಕ್ಷ್ಮಿ ಟಾಕೀಸಿನ ಬಳಿ ಒಬ್ಬ ಗುಜರಾತಿ ಬರೀ ಜಿಲೇಬಿ, ಪೂರಿ ಪಲ್ಯ ತಯಾರಿಸಿ ಮಾರುತ್ತಿದ್ದ. +ಅದು ಬಹಳ ಪ್ರಸಿದ್ಧವಾಗಿತ್ತು. +ದೇವುಡು ಅದನ್ನು ತಿಳಿದು ಅವನ ಬಳಿ ಹೋಗಿ ಮಾಡಿದ್ದೆಲ್ಲ ಪೂರಿಗಳನ್ನು ಒಬ್ಬರೇ ತಿಂದರಂತೆ. +ಅವನು ಸಂತೋಷ ಪಟ್ಟು ಒಂದು ಪೊಟ್ಟಣ ಜಿಲೇಬಿಯನ್ನು ಉಡುಗೊರೆಯಾಗಿ ಕೊಟ್ಟನಂತೆ. +ವಿ.ಸೀ. ಹೇಳುವಂತೆ, “ಅವರಿಗೆ ಯಾರ ಲಕ್ಷ್ಯವೂ ಇರಲಿಲ್ಲ. +ತಮ್ಮ ದೇಹಾರೋಗ್ಯವನ್ನು ಕುರಿತು ಇನ್ನಷ್ಟು ಎಚ್ಚರಿಕೆ ವಹಿಸಿದ್ದರೆ ಕಡೆಯ ದಿನಗಳಲ್ಲಿ ಇನ್ನಷ್ಟುನೆಮ್ಮದಿಯಾಗಿ ಇರಬಹುದಿತ್ತು. +ಸಕ್ಕರೆ ವ್ಯಾಧಿ ಇರುವಾಗ ಬೇಡೆಂದರೂ ಸಿಹಿಗಳನ್ನು ತಿಂದು ಅದು ವಿಷಮಿಸಿತು. +೧೯೫೮ರ ಸುಮಾರಿನಲ್ಲಿ ದೇವುಡು ನಂಜನಗೂಡಿನ ಕಾರ್ಯಕ್ರಮವೊಂದಕ್ಕೆ ಹೋದರು. +ಆಗ ಶಾಸ್ತ್ರಿಗಳ ಭಾಷಣ ಮುಗಿದ ಮೇಲೆ ಸ್ವಲ್ಪ ಹಣವನ್ನು ಗೌರವ ಸಂಭಾವನೆಯಾಗಿ ಕೊಟ್ಟರು. +ಅದರಲ್ಲಿ ಒಂದು ಜೊತೆ ಚಪ್ಪಲಿಯನ್ನು ಕೊಂಡು ಹಾಕಿಕೊಂಡರು. +ದುರದೃಷ್ಟವಶಾತ್‌ ಆ ಹೊಸ ಚಪ್ಪಲಿ ಅವರ ಕಾಲನ್ನು ಕಚ್ಚಿತು. +ಕೆಲವು ಕಾಲ ಅವರು ಅದರ ಕಡೆ ಗಮನ ಕೊಡಲಿಲ್ಲ. +ಆಗಾಯ ದೊಡ್ಡದಾಗಿ ಕಡೆಗೆ ಅವರ ಕಾಲನ್ನು ಕತ್ತರಿಸಬೇಕಾಯಿತು. +೧೯೫೯ ರಲ್ಲಿ ಆಸ್ಪತ್ರೆಯಿಂದ ಮನೆಗೆ ಬಂದ ಮೇಲೆ ಅವರ ಸಾರ್ವಜನಿಕ ಚಟುವಟಿಕೆಗಳು ಮೊಟಕಾದವು. +ಆದರೆ ಅವರ ಉತ್ಸಾಹ ಕುಗ್ಗಲಿಲ್ಲ. +ಅವರು ಖಿನ್ನರಾಗಲಿಲ್ಲ. +ನಗುನಗುತ್ತಲೇ ಆ ದುಃಖವನ್ನು ಸಹಿಸಿದರು. +ಅವರ ಸಂಬಂಧಿಕರೊಬ್ಬರು ಒಮ್ಮೆ ದೇವುಡು ಅವರನ್ನು ಕಂಡು, ಅವರು ಕಾಲು ಹೋಗಿದ್ದಕ್ಕೆ ಪಶ್ಚಾತ್ತಾಪ ವ್ಯಕ್ತಮಾಡುತ್ತಾ, “ಅಯ್ಯೋ ದೇವುಡು, ನಿನಗೆ ಹೀಗಾಗಬಾರದಿತ್ತು” ಎಂದು ಬಹಳವಾಗಿ ಅತ್ತರಂತೆ. +ಆಗ ದೇವುಡು ಹೇಳಿದಮಾತು: "ಲೋ ಹೋಗೋ! +ನಾನು ನಂಬಿದ ದೇವರಿಗೆ ನನ್ನ ಕಾಲೊಂದು ಬೇಕಿತ್ತು. +ತೆಗೆದುಕೊಂಡ ನಾನು ಇರುತ್ತೇನೆ; ಎಲ್ಲಿ ಹೋಗುತೇನೆ?" +ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರು ಕಾಲಿನ ಆಪರೇಷನ್‌ ಆಗಿ ವಾರ್ಡಿಗೆ ಹಾಕಿದ ಸಂದರ್ಭದಲ್ಲಿ ಕನ್ನಡದ ಪ್ರಸಿದ್ಧ ಸಾಹಿತಿಗಳಾದ ಕುರ್ತುಕೋಟಿಯವರು ಪ್ರಕಾಶಕರಾದ ಜಿ.ಬಿ.ಜೋಶಿ ಅವರೊಡನೆ ದೇವುಡು ಅವರನ್ನು ಕಾಣಲು ಬಂದರು. +ದೇವುಡು ಅವರನ್ನು ಕಂಡಾಗ "ಛೇ ನಿಮಗೆ ಹೀಗಾಗಬಾರದಿತ್ತು" ಎ೦ದು ಮರುಗಿದಾಗ, ದೇವುಡು ಅವರು “ನನಗೇನಾಗಿದೆ? +ಒಂದು ಕಾಲು ಹೋದರೇನಾಯಿತು? +ಇನ್ನೊಂದಿಲ್ಲವೇ? +ಎಂದು ಇನ್ನೊಂದು ಕಾಲಿನ ಭಾಗದ ತೊಡೆ ತಟ್ಟಿದರಂತೆ. +ಕಾಲು ಹೋದ ಮೇಲೆ ಕಾರ್ಯಕ್ರಮವೊಂದರಲ್ಲಿ ದೇವುಡು ಭಾಗವಹಿಸಿದಾಗ ಅವರನ್ನು ಎತ್ತಿ ಕಾರಿನಲ್ಲಿ ಕೂಡಿಸಲು ನಾಲ್ವರು ಅವರನ್ನು ಎತ್ತಿ ಹಿಡಿದರು. +ಬಳಿಯಲ್ಲಿದ್ದ ಪರಿಚಿತರೊಬ್ಬರಿಗೆ ಅವರು, “ನೋಡಯ್ಯಾ ಉಳಿದವರಿಗೆ ಸತ್ತಾಗ, ನನಗೀಗ ಬದುಕಿರುವಾಗ ಪಲ್ಲಕ್ಕಿ, ಹೇಗಿದೆ”? ಎಂದು ನಕ್ಕರಂತೆ. + ದೇವುಡು ಸಾವಿನಲ್ಲಿ ನಕ್ಕ ಧೀರ. +ಗೀತೆಯನ್ನು ಓದಿ ಸ್ಥಿತಪ್ರಜ್ಜರಾಗಿ ಬಾಳಿದ ದೇವುಡು. +ಉಪನಿಷತ್ತುಗಳನ್ನು ಅಧ್ಯಯನ ಮಾಡಿ ಆತ್ಮಸ್ವರೂಪ ತಿಳಿದ ದೇವುಡು, ಸಾಹಿತ್ಯದ ಅಭ್ಯಾಸ ಮಾಡಿ ಲೋಕಜ್ಞಾನ ಪಡೆದ ದೇವುಡು, ವೇದಾಂತ ಅರಿತು ಮಾನವೀಯತೆಯಿಂದ ಬದುಕಿ ಬಾಳಿದ ದೇವುಡು, ಇತರರ ಬಾಳಿಗೆ ಬೆಳಕಿನ ದಾರಿ ತೋರಿಸಿ, ಕನ್ನಡಮ್ಮನ ಸುಪುತ್ರರಾಗಿ ಕನ್ನಡಸೇವೆ ಮಾಡಿ, ಧನ್ಯರಾಗಿ ೬೬ ವರುಷಗಳ ಸಾರ್ಥಕ ಜೀವನಾನಂತರ ೨೭-೧೦-೧೯೬೨ ರಲ್ಲಿ ಪರಂಧಾಮವನ್ನು ಸೇರಿದರು. +ನೂರು ಕನಸುಗಾರ ದೇವುಡು ಅವರ ವ್ಯಕ್ತಿತ್ವದ ಹಾಗೆಯೇ ಅವರ ಆದರ್ಶಗಳೆಲ್ಲ,ಯೋಜನೆಗಳೆಲ್ಲ ಭವ್ಯವೇ ಆಗಿದ್ದವು. +ಸಂಕುಚಿತ ದೃಷ್ಟಿ ಅವರಲ್ಲಿ ಎಂದೂ ಮನದಲ್ಲಿ ಸುಳಿಯಲಿಲ್ಲ. +“ಇಂದಲ್ಲದಿದ್ದರೆ ನಾಳೆ ಸಾಧಿಸಬಲ್ಲೆ” ಎಂಬ ಆಶಾಭಾವನೆಯಿಂದ ನೂರಾರು ಯೋಜನೆಗಳನ್ನು ಅವರು ಹಾಕಿಕೊಂಡಿದ್ದರು. +ಅವುಗಳಲ್ಲಿ ಬಹುಪಾಲು ನೆರವೇರಲಿಲ್ಲ. +ಅವರ ಯೋಜನೆಗಳೆಲ್ಲ ನಮ್ಮ ನಾಡಿನ ನುಡಿ ಸಂಸ್ಕೃತಿಗಳ ಪ್ರಗತಿಗೆ ನೆರವಾಗುವಂಥವು ಕೆಲವನ್ನು ಇಲ್ಲಿ ಪ್ರಸ್ತಾಪಿಸಿದೆ. + ಕನ್ನಡ ಪುಸ್ತಕಗಳು ಖರ್ಚಾಗಬೇಕಾದರೆ ನಮ್ಮ ನಾಡಿನ ಜನ ಅಕ್ಷರಸ್ಥರಾಗಬೇಕೆಂದು ತಿಳಿದು ಅದಕ್ಕಾಗಿ ಸುಲಭದ ಯೋಜನೆಯ ಅಕ್ಷರಕಲಿಕೆ ಪದ್ದತಿ ರೂಪಿಸಿದರು. +ಆದರೆ ಆ ಯೋಜನೆ ಪೂರ್ಣವಾಗಿ ಜಾರಿಗೆ ಬರಲಿಲ್ಲ. +ಸಂಸ್ಕೃತ ಭಾರತೀಯ ಸಂಸ್ಕೃತಿ ಭಾಷೆ. +ಅದನ್ನು ಎಲ್ಲರೂ ಸುಲಭವಾಗಿ ಕಲಿಯಬೇಕು. +ನಾಡಿನ ಸಾರಸ್ವತ ನಿಧಿಗಳಾದ ರಾಮಾಯಣ,ಮಹಾಭಾರತ ಗೀತೆಯಂಥ ಗ್ರಂಥಗಳನ್ನು ನಾಡಿನ ಎಲ್ಲ ಜನರೂ ಓದುವಂತಾಗಬೇಕು ಎಂದು ನೂತನ ಸಂಸ್ಕೃತ ಕಲಿಕೆಯ ಪದ್ಧತಿಯನ್ನು ಪ್ರಾರಂಭಿಸಿದರು. +ಆದರೆ ಎಲ್ಲರೂ ಸಂಸ್ಕೃತ ಕಲಿಯಲಿಲ್ಲ. +೧೯೪೫ರ ಸುಮಾರಿನಲ್ಲಿ ಕನ್ನಡದಲ್ಲಿ ವಿಶ್ವಕೋಶ ಸಿದ್ಧಪಡಿಸುವ ಯೋಜನೆ ಹಾಕಿದರು. +೧೯೫೦ರ ವೇಳೆಗೆ ಕಾರ್ಯಾರಂಭ ಮಾಡಲು ಬಯಸಿದ್ದರು. +ಆದರೆ ಕಾರಣಾಂತರಗಳಿಂದ ನೆರವೇರಲಿಲ್ಲ. +ವೇದಗಳಿಗೆ ಹೊಸರೀತಿಯ ಭಾಷ್ಯ ಬರೆಯುವ ಆಸೆ ಅವರಿಗಿತ್ತು. +ಕಾಳಿದಾಸನ ಕೃತಿಗಳಲ್ಲಿ ಮೇಘದೂತ ಮತ್ತು ವಿಕ್ರಮೋರ್ವಶೀಯಗಳಿಗೆ ವ್ಯಾಖ್ಯಾನ ಬರೆಯಬೇಕೆಂದಿದ್ದರು. +"ಮೇಘದೂತ"ದ ಪೂರ್ವ ಭಾಗಕ್ಕೆ ಟೀಕೆ ಬರೆದರು,ಅಷ್ಟೆ. +ಗೀತೆಯ ಬಗ್ಗೆ ವಿವಿಧ ಪ್ರಕಟಣೆಗಳನ್ನು ತರುವ ಮತ್ತು ಅದನ್ನು ವಿಶೇಷವಾಗಿ ಪ್ರಚಾರ ಮಾಡಲು ಮಂಡಳಿ ಸ್ಥಾಪಿಸುವ,ಪತ್ರಿಕೆ ಹೊರಡಿಸುವ ಯೋಜನೆ ಅವರಿಗಿತ್ತು. +ಇದು ಸ್ಪಲ್ಪ ಮಟ್ಟಿಗೆ ನೆರವೇರಿತು. +ಆದರೆ ಎರಡೂ ಸ್ವಲ್ಪ ಕಾಲದಲ್ಲಿಯೇ ನಿಂತವು. +ತಮ್ಮ ಕಥೆ ಕಾದಂಬರಿ ಮತ್ತು ಇತರ ಗ್ರಂಥಗಳ ವಿಮರ್ಶೆಯನ್ನು ನಾಡಿನ ವಿದ್ವಾಂಸರಿಂದ ನಿರೀಕ್ಷಿಸಿದ್ದರು. +ಅದು ಬರಲಿಲ್ಲ. +"ಮಹಾಬ್ರಾಹ್ಮಣ"ಕಾದಂಬರಿಯನ್ನು ಇಂಗ್ಲೀಷಿನಲ್ಲಿ ಪ್ರಕಟಿಸಲು ಹಸ್ತಪ್ರತಿ ಸಿದ್ಧಪಡಿಸಿದ್ದರು,ಪ್ರಕಟವಾಗಲಿಲ್ಲ. +ಶಂಕರರನ್ನು ಕುರಿತು ಕಾದ೦ಬರಿ ರಚಿಸಲು,ಸಮಗ್ರ ಜೀವನ ಕುರಿತು,ಅದ್ವೈತ ಸಿದ್ಧಾಂತ ಕುರಿತು ಬರೆಯಲು ಯೋಜಿಸಿದ್ದರು. +ಭಾಗಶಃ ಕಾದಂಬರಿ ರಚಿಸಿದ್ದರು;ಜೀವನ ಚರಿತ್ರೆಗೆ ರೂಪರೇಖೆ ಹಾಕಿದ್ದರು. +ಅದ್ವೈತ ಸಿದ್ಧಾಂತ ಕುರಿತು ಹಸ್ತಪ್ರತಿಯೊಂದನ್ನು ಅಚ್ಚಿಗೆ ಸಿದ್ಧಪಡಿಸಿದ್ದರು,ಅಚ್ಚಾಗಲಿಲ್ಲ. +೧೦.ಮಕ್ಕಳ ಕಥೆಗಳನ್ನೆಲ್ಲಾ ಹಲವು ಸಂಪುಟಗಳಲ್ಲಿ ತರುವ ಬಯಕೆಯನ್ನು ಹೊಂದಿದ್ದು,ಆ ಬಗ್ಗೆ ಒಂದು ಪಟ್ಟಿ ಸಿದ್ಧಪಡಿಸಿದ್ದರು. +೧೧.ದತ್ತಾಶ್ರಮವೊಂದನ್ನು ಬೆಂಗಳೂರಿನ ಹೊಸಕೆರೆ ಬಳಿಯಲ್ಲಿ ಸ್ಥಾಪಿಸಲು ಯತ್ನಿಸಿದ್ದರು;ಆದರೆ ಆಗಲಿಲ್ಲ. +೧೨.ದೇಶಾಂತರ ಕಥೆಗಳು ಭಾಗ-೨,ಬುದ್ಧಿಯ ಕತೆಗಳು ಭಾಗ ೨,"ಪ್ರಾಚೀನ ಯಷಿ ಮುನಿಗಳು" ಧಾರಾವಾಹಿ ಬರೆಯಲು ಯೋಜಿಸಿದ್ದರು,ಆದರೆ ಆಗಲಿಲ್ಲ. +೧೩.ಶ್ಲೋಕಕ್ಕೆ ಒಂದು ವಿಸ್ತಾರ ವ್ಯಾಖ್ಯಾನದಂತೆ ಒMದು ಗೀತಾ ವ್ಯಾಖ್ಯಾನಮಾಲೆಯನ್ನು ಪ್ರಕಟಿಸಲು ಉದ್ದೇಶಿಸಿದ್ದರು. +ಪ್ರಯತ್ನ ನಡೆಯಿತು,ಪೂರ್ತಿ ಆಗಲಿಲ್ಲ. +೧೪.ಮಕ್ಕಳಿಗಾಗಿ ಪುಟ್ಟ ಪುಟ್ಟ ಕಥೆಗಳು,ಖಾಸ್‌ ಬಂಗ್ದೆ -ನಮ್ಮ ತೋಟ,ಸಮುದ್ರದಲ್ಲಿ -ಭೂಮಿಯಲ್ಲಿ ಬಾಪೂಜಿಯವರು,ನಮ್ಮ ಮೈಸೂರು ಮುಂತದ ಪುಸ್ತಕಗಳನ್ನು ಸಿದ್ಧಪಡಿಸಲು ರೂಪರೇಖೆ ಹಾಕಿದ್ದರು. +ದೇವುಡು ಪ್ರತಿಷ್ಠಾನ (೧೯೯೩)ದೇವುಡು ಅವರ ಕನಸುಗಳನ್ನು ನನಸು ಮಾಡಲು ಮತ್ತು ಅವರ ಸಾಹಿತ್ಯ ಸಾಧನೆಗಳು ನಿರಂತರವಾಗಿ ಕನ್ನಡ ಜನತೆಗೆ ದೊರಕಬೇಕೆಂಬ ಸದಾಶಯದಿಂದ ೧೯೯೩ರಲ್ಲಿ ದೇವುಡು ಪ್ರತಿಷ್ಠಾನ ಬೆ೦ಗಳೂರಿನಲ್ಲಿ ಜೆ.ಪಿ.ನಗರದಲ್ಲಿ ಸ್ಥಾಪನೆ ಆಯಿತು. +ದೇವುಡು ಕುಟುಂಬದವರು,ಆಪ್ತರು ಆಸಕ್ತರಾಗಿ ರೂಪುಗೊಂಡ ಈ ಪ್ರತಿಷ್ಠಾನದ ಉದ್ದೇಶಗಳಲ್ಲಿ ಕೆಲವು ಹೀಗಿವೆ. +ದತ್ತಿನಿಧಿಗಳ ಸ್ಥಾಪನೆ:ಈ ಮೂಲಕ ದೇವುಡು ಕೃತಿ,ಸಾಧನೆ ವ್ಯಕ್ತಿತ್ವಗಳನ್ನು ಪ್ರತಿವರ್ಷವೂ ನಾಡಿನ ಜನತೆಗೆ ನೆನಪಿಗೆ ತರುವುದು. +ಸಂಸ್ಮರಣ ಗ್ರಂಥ ಪ್ರಕಟಣೆ :ದೇವುಡು ಬದುಕು ಬರಹವನ್ನು ಕುರಿತು ಅವರನ್ನು ಬಲ್ಲವರಿಂದ,ನಾಡಿನ ವಿದ್ವಾಂಸರಿಂದ ಬರೆಸಿದ ಲೇಖನ-ಚಿತ್ರಗಳ ಗ್ರಂಥ ಪ್ರಕಟಣೆ. +ಸಮಗ್ರ ಸಾಹಿತ್ಯ ಪ್ರಕಟಣೆ :ದೇವುಡು ಅವರ ಬಹುಪಾಲು ಗ್ರಂಥಗಳಲ್ಲಿ ಮುದ್ರಣದ ಪ್ರತಿಗಳು ಮುಗಿದು ಹೋಗಿವೆ. +ಪುನರ್ಮುದ್ರಣ ಮಾಡುವುದು. +ದೇವುಡು ಸಾಹಿತ್ಯ ಸಂಗ್ರಹ :ದೇವುಡು ಅವರ ಹಸ್ತಪ್ರತಿ,ಪತ್ರಗಳು,ಚಿತ್ರಗಳು,ಲೇಖನಗಳು ಇತ್ಯಾದಿಗಳ ಸಂಗ್ರಹಾಲಯ ನಿರ್ಮಿಸುವುದು,ದೇವುಡು ಅಭ್ಯಾಸಿಗಳಿಗೆ ಅವುಗಳನ್ನು ಒದಗಿಸುವುದು. +ದೇವುಡು ಸಾಹಿತ್ಯ ಅಧ್ಯಯನ :ದೇವುಡು ಸಾಹಿತ್ಯದ ವಿವಿಧ ಮುಖಗಳನ್ನು ಅಧ್ಯಯನ ಮಾಡಲು ತೊಡಗುವವರಿಗೆ ನೆರವು ನೀಡುವುದು ಮತ್ತು ಪ್ರೋತ್ಸಾಹಿಸುವುದು. +ಕನ್ನಡ ಅಕ್ಷರ ಪ್ರಚಾರ ಯೋಜನೆ :ನಾಡಿನ ಜನತೆಯನ್ನು ಸಾಕ್ಷರರನ್ನಾಗಿ ಮಾಡಲು ದೇವುಡು ರೂಪಿಸಿದ ಮೈಸೂರು ಅಕ್ಷರ ಪ್ರಚಾರ ಯೋಜನೆಯನ್ನು ಬಳಕೆಗೆ ತರುವುದು. +ಮೂಲ ಸಂಸ್ಕತ ಪ್ರಸಾರ :ದೇವುಡು ರೂಪಿಸಿದ ಸುಲಭವಾಗಿ ಸಂಸ್ಕೃತ ಕಲಿಯುವ ಮೂಲ ಸಂಸ್ಕೃತ ಪದ್ಧತಿಯ ಸಾಹಿತ್ಯವನ್ನು ಪೂರ್ಣವಾಗಿ ಪ್ರಕಟಿಸಿ ಬಳಕೆಗೆ ತರುವುದು. +ದೇವುಡು ಶತಮಾನೋತ್ಸವ ಕಾರ್ಯಕ್ರಮ :ಈ ಬಗೆಗೆ ಯೋಜನೆಯನ್ನು ರೂಪಿಸುವುದು. +ಹೀಗೆ ಹತ್ತಾರು ಯೋಜನೆಗಳನ್ನು ಪ್ರತಿಷ್ಠಾನ ಹಮ್ಮಿಕೊಂಡಿದೆ. +ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ೧೯೯೫-೯೬ನೇ ಸಾಲಿನಲ್ಲಿ ಪ್ರತಿ ತಿಂಗಳೂ ದೇವುಡು ಜೀವನ-ಸಾಹಿತ್ಯ ಪರಿಚಯದ ಕಾರ್ಯಕ್ರಮಗಳನ್ನು ನಾಡಿನ ನಾನಾ ಭಾಗಗಳಲ್ಲಿ ಏರ್ಪಡಿಸಲಾಯಿತು. +"ದೇವುಡು ದರ್ಶನ'ಎಂಬ ಅವರ ಸಮಗ್ರ ವ್ಯಕ್ತಿತ್ವ ದರ್ಶನ ನೀಡುವ ಮತ್ತು ಕೃತಿ ಪರಿಚಯ ಮಾಡಿಸುವ ಸಂಸ್ಮರಣ ಗ್ರಂಥವನ್ನು ಹೊರತರಲಾಯಿತು. +ಜ್ಞಾನಸುಧಾ ಪತ್ರಿಕೆ ಮೂಲಕ ದೇವುಡು ವಿಶೇಷ ಸಂಚಿಕೆಗಳು ಪ್ರಕಟವಾದವು. +ಮಕ್ಕಳ ಕೂಟದಲ್ಲಿ ದೇವುಡು ಮಕ್ಕಳ ಕಥಾ ಸ್ಪರ್ಧೆಯ ದತ್ತಿನಿಧಿಯನ್ನು ಮಕ್ಕಳಿಗಾಗಿ ಸ್ಥಾಪಿಸಲಾಯಿತು. +ಇದೇ ಸಂದರ್ಭದಲ್ಲಿ ದೇವುಡು ವ್ಯಕ್ತಿ ಚಿತ್ರವೊಂದು ದೂರದರ್ಶನದಲ್ಲಿ ಪ್ರಸಾರವಾಯಿತು. +ಹೀಗೆ ಪುಟ್ಟ ದಿಟ್ಟ ಹೆಜ್ಜೆಗಳನ್ನಿಟ್ಟ ಪ್ರತಿಷ್ಠಾನದ ಪ್ರಯತ್ನದಿಂದ ಈಗಾಗಲೇ ಅವರ ಮಹಾನ್‌ ಕಾದಂಬರಿ ತ್ರಯಗಳು,ಯೇಸು ವಿಚಾರಣೆ ನಾಟಕ,ಮಹಾಭಾರತ ಸಂಗ್ರಹ,ರಾಮಾಯಣ,ಪಂಚತಂತ್ರ ಜನಪ್ರಿಯ ಕೃತಿಗಳು ಮರು ಮುದ್ರಣವಾಗಿವೆ. +ಅನುಬಂಧ -೧.ದೇವುಡು ಜೀವನಸಂಗತಿಗಳು +೧.ಜನನ :೨೯-೧೨-೧೮೯೬ (ದುರ್ಮುಖಿ ನಾಮಸಂವತ್ಸರ,ಮಾರ್ಗಶಿರ ಬಹುಳ ದಶಮಿ ಮಂಗಳವಾರ) +೨.ಮರಣ :೨೭-೧೦-೧೯೬೨ ಬೆಂಗಳೂರು. +ಜೀವಿತಾವಧಿ :೬೫ ವರ್ಷ ೯ ತಿಂಗಳು ೨೮ ದಿನಗಳು. +ಕುಟುಂಬ: ತಂದೆ -ಕೃಷ್ಣಶಾಸ್ತ್ರಿ,ತಾಯಿ -ಸುಬ್ಬಮ್ಮ,ಹೆಂಡತಿ-ಗೌರಮ್ಮ,ಗಂಡುಮಕ್ಕಳು ೩; +೧.ಡಿ.ಎನ್‌.ರಾಮು (ದಿವಂಗತ),೨.ಗಂಗಾಧರ್‌, ೩.ಸದಾಶಿವ. +ಹೆಣ್ಣುಮಕ್ಕಳು: ೬ ಪುಟ್ಟಮ್ಮ ಶಾರದ,ಲಲಿತ,ಉಮಾ,ಶಾಂತಾ,ಶ್ರೀಮತಿ. +೧೯೦೮ ಮಾಧ್ಯಮಿಕ ಶಾಲೆ ,೧೯೧೪-೧೭ ಹೈಸ್ಕೂಲ್‌ ವಿದ್ಯಾಭ್ಯಾಸ,೧೯೧೭-೨೩ ಬಿ.ಎ.ಮತ್ತು ಎಂ.ಎ.ಮೈಸೂರಿನಲ್ಲಿ. +೧೯೨೩-೨೪ ಮೈಸೂರು ಸದ್ವಿದ್ಯಾ ಪಾಠಶಾಲೆಯ ಹೆಡ್ಮಾಸ್ಟರ್,೧೯೨೪ ಶೃಂಗೇರಿ ಮಠದಲ್ಲಿ ಪೇಷ್ಕಾರ್‌ ಕೆಲಸ,೧೯೨೪-೨೯ ಆರ್ಯ ವಿದ್ಯಾಶಾಲಾ ಹೆಡ್ಮಾಸ್ಟರ್,೧೯೨೫ ಬೆಂಗಳೂರಿಗೆ ಆಗಮನ,೧೯೨೬ ಅಮೆಚೂರ್‌ ಕಂಪನಿಯ ಸದಸ್ಯ,೧೯೨೧ ಚಾಮುಂಡೇಶ್ವರಿ ಕಂಪೆನಿಯಲ್ಲಿ ನಟ,೧೯೨೮ ಕರ್ನಾಟಕ ಫಿಲ್ಮ ಕಾರ್ಪೋರೇಷನ್‌ ಸ್ಥಾಪನೆ,೧೯೨೯ ಸಂಪಾದಕರು,"ಮಕ್ಕಳ ಪುಸ್ತಕ",೧೯೩೦ ಸಿನಿಮಾ ಕಂಪೆನಿ ಸ್ಥಾಪನೆ,೧೯೩೦ ಮೈಸೂರು ಹಿಂದಿ ಪ್ರಚಾರಸಭೆ ಸ್ಥಾಪಕರಲ್ಲಿ ಒಬ್ಬರು. +೧೯೩೦"ರಂಗಭೂಮಿ" ಸಂಪಾದಕತ್ವ. +ಕನ್ನಡ ಸಾಹಿತ್ಯ ಸಮಾಜದ ಸ್ಥಾಪನೆ. +ಶ್ರೀಮನ್ಮಹಾರಾಜರಿಂದ "ಮೀಮಾಂಸಾ ದರ್ಪಣ"ಕ್ಕೆ ವಿಶೇಷ ಪ್ರಶಸ್ತಿ. +ಭಕ್ತ ಧ್ರುವ ಚಲನಚಿತ್ರ ಸಾಹಿತ್ಯ ರಚನೆ ,"ಚಿರಂಜೀವಿ"ಚಲನಚಿತ್ರದ ಸಾಹಿತ್ಯ ರಚನೆ ಮತ್ತು ನಟನೆ. +ಮೈಸೂರು ಅಕ್ಷರ ಪ್ರಚಾರ ಯೋಜನೆ :ವಯಸ್ಕರಿಗೆ ಕನ್ನಡ ಕಲಿಸಲು ಅಕ್ಷರ ಪ್ರಚಾರ ಯೋಜನೆ ಗಾಂಧೀನಗರ ಪ್ರೌಢಶಾಲೆಯ ಸ್ಮಾಪಕ ಕಾರ್ಯದರ್ಶಿ,ಪ್ರಾಂಶುಪಾಲ ಪ್ರಜಾಪ್ರತಿನಿಧಿ ಸಭೆಗೆ ನೇಮಕ. +ಬೆಂಗಳೂರು ಸಿಟಿ ಕೋ-ಆಪರೇಟಿವ್‌ ಬ್ಯಾಂಕಿಗೆ ಡೈರೆಕ್ಟರ್‌,ಬೆಂಗಳೂರು ಸಿಟಿ ಕಾರ್ಪೋರೇಟರ್‌,ಬೆಂಗಳೂರು ಶಂಕರಪುರದಲ್ಲಿ ಗೀರ್ವಾಣ ವಿದ್ಯಾಪೀಠ ಸ್ಥಾಪನೆ,ಭಾರತದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ,ಕನ್ನಡ ಕಾದಂಬರಿಕಾರರ ಸಮ್ಮೇಳನದ ಅಧ್ಯಕ್ಷತೆ,ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯತ್ವ. +ಮಧುಮೇಹ ರೋಗದಿಂದ ಕಾಲನ್ನು ತೆಗೆದದ್ದು,ಸಾರ್ವಜನಿಕ ಜೀವನದಿಂದ ನಿವೃತ್ತಿ. +ಅಕ್ಟೋಬರ್‌ ೨೭ ನಿಧನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ("ಮಹಾಕ್ಷತ್ರಿಯ'ಕಾದಂಬರಿ). +೬೬ ವರ್ಷಗಳ ಕಾಲ ಬದುಕಿ ಅವಿಸ್ಮರಣೀಯ ಮಹನೀಯರ ಸಾಲಿಗೆ ಸೇರಿದವರು. +೨೯-೧೨-೧೮೯೬ರಲ್ಲಿ ಕೃಷ್ಣಶಾಸ್ತ್ರಿ ಹಾಗೂ ಸುಬ್ಬಮ್ಮರವರ ಮಗನಾಗಿ ಜನಿಸಿದರು. +ಬಾಲ್ಯದಲ್ಲಿಯೇ ಪ್ರತಿಭಾವಂತರಾಗಿದ್ದ ನರಸಿಂಹ ಶಾಸ್ತ್ರಿ,ಮಾತೃಭಾಷೆ ತಮಿಳು ಆಗಿದ್ದರೂ ಕನ್ನಡ ಭಾಷೆಯನ್ನು ತಮ್ಮ ಉಸಿರಾಗಿಸಿಕೊಂಡಿದ್ದರು. +ಇವರು ಬರೀ ಸಾಹಿತ್ಯ ರಚಿಸಲಿಲ್ಲ. +ಬಾಲ್ಯದಲ್ಲಿಯೇ ನಾಟಕದ ಗೀಳು ಹಚ್ಚಿಕೊಂಡು ಹಲವಾರು ನಾಟಕ ಕಂಪನಿಗಳಲ್ಲಿ ಪಾತ್ರ ನಿರ್ವಹಿಸಿದರು. +ಚಲನಚಿತ್ರಗಳಲ್ಲಿ ಕೈಯಾಡಿಸಿ ಸೈ ಎನಿಸಿಕೊಂಡವರು. +ಮಕ್ಕಳ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅದ್ವಿತೀಯ. +ಮಕ್ಕಳ ಪತ್ರಿಕೆ,ಮಕ್ಕಳ ನಾಟಕ,ಮಕ್ಕಳ ಕಥೆಗಳ ಗುಚ್ಚಗಳನ್ನೇ ನೀಡುವುದರ ಮೂಲಕ ಮಕ್ಕಳ ಸಾಹಿತ್ಯಕ್ಕೆ ಮೌಲ್ಯ ತಂದುಕೊಟ್ಟವರು. +ದೇವುಡು ನರಸಿಂಹ ಶಾಸ್ತ್ರಿಯವರು ಅತ್ಯಂತ ಅಲ್ಪ ಅವಧಿಯಲ್ಲಿ ನೂರಕ್ಕೂ ಹೆಚ್ಚು ಶ್ರೇಷ್ಠ ಕೃತಿಗಳನ್ನು ನೀಡಿದ್ದಲ್ಲದೇ ಹಲವಾರು ಸಂಘಟನೆಗಳ ಹುಟ್ಟಿಗೆ ಕಾರಣರಾದವರು. +ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಸಾಕ್ಷರತಾ ಕಾರ್ಯಕ್ರಮಗಳಿಗೆ ಮೂರ್ತರೂಪ ಕೊಟ್ಟವರು. +ಬಹುಭಾಷಾ ಪಂಡಿತರಾಗಿದ್ದ ಇವರು ೨೭-೧೦-೧೯೬೨ರಂದು ನಿಧನರಾದರು.