diff --git "a/Data Collected/Kannada/MIT Manipal/\340\262\220\340\262\260\340\263\213\340\262\252\340\263\215\340\262\257_\340\262\270\340\262\262\340\263\215\340\262\262\340\262\277\340\262\225\340\263\206_\340\262\225\340\263\202\340\262\237.txt" "b/Data Collected/Kannada/MIT Manipal/\340\262\220\340\262\260\340\263\213\340\262\252\340\263\215\340\262\257_\340\262\270\340\262\262\340\263\215\340\262\262\340\262\277\340\262\225\340\263\206_\340\262\225\340\263\202\340\262\237.txt" new file mode 100644 index 0000000000000000000000000000000000000000..ff69fd7b0ad79c9bb9f3d719c3102cac6ebc477e --- /dev/null +++ "b/Data Collected/Kannada/MIT Manipal/\340\262\220\340\262\260\340\263\213\340\262\252\340\263\215\340\262\257_\340\262\270\340\262\262\340\263\215\340\262\262\340\262\277\340\262\225\340\263\206_\340\262\225\340\263\202\340\262\237.txt" @@ -0,0 +1,55 @@ +ಐರೋಪ್ಯ ಸಲ್ಲಿಕೆ ಕೂಟ : ಐರೋಪ್ಯ ರಾಷ್ಟ್ರಗಳ ನಡುವೆ ಪರಸ್ಪರ ಹಣ ವಿನಿಮಯವನ್ನು ಸುಸೂತ್ರಗೊಳಿಸುವ ಉದ್ದೇಶದಿಂದ 1950 ರಲ್ಲಿ ಜಾರಿಗೆ ಬಂದ ಸಂಸ್ಥೆ ( ಯುರೋಪಿಯನ್ ) . +ಎರಡನೆಯ ಮಹಾಯುದ್ಧಾನಂತರದಲ್ಲಿ ಆರ್ಥಿಕ ಪುನರ್ರಚನೆಗಾಗಿ ಸ್ಥಾಪಿತವಾಗಿದ್ದ ಐರೋಪ್ಯ ಆರ್ಥಿಕ ಸಹಕಾರ ಸಂಸ್ಥೆಯ (ಆರ್ಗನೈಸೇಷನ್ ಫಾರ್ ಯುರೋಪಿಯನ್ ಇಕೊನಾಮಿಕ್ ಕೋ - ಆಪರೇಷನ್ ) 17 ಪಾಶ್ಚಾತ್ಯ ಐರೋಪ್ಯ ಸದಸ್ಯ ರಾಷ್ಟ್ರಗಳು ಸೇರಿ ಇದನ್ನು ಸ್ಥಾಪಿಸಿಕೊಂಡುವು . +ಆಗ ಪರಸ್ಪರವಾಗಿಯೂ ಅಮೆರಿಕ ಸಂಯುಕ್ತ ಸಂಸ್ಥಾನದೊಡನೆಯೂ ಪ್ರಾಪ್ತವಾಗಿದ್ದ ವಿದೇಶೀ ಹಣ ಕೊರತೆ ಐರೋಪ್ಯ ರಾಷ್ಟ್ರಗಳ ಮುಖ್ಯ ಸಮಸ್ಯೆಗಳಲ್ಲಿ ಒಂದಾಗಿತ್ತು . +ರಫ್ತು ಮಾಡುವ ಶಕ್ತಿ ಕುಗ್ಗಿ ಆಮದು ಮಾಡಿಕೊಳ್ಳುವ ಅವಶ್ಯಕತೆ ಹೆಚ್ಚಾಗಿದ್ದುದೇ ಈ ವಿಧದ ಸಮಸ್ಯೆಗೆ ಕಾರಣ . +ಹದಗೆಟ್ಟ ಅಂದಿನ ಪರಿಸ್ಥಿತಿಯಲ್ಲಿ ಒಂದೊಂದು ರಾಷ್ಟ್ರವೂ ತನ್ನದೇ ಆದ ಅನೇಕ ವಿನಿಮಯ ಹತೋಟಿ ಕ್ರಮಗಳನ್ನು ಅನುಸರಿಸುತ್ತಿತ್ತು . +ಇದರಿಂದ ವ್ಯಾಪಾರ ವ್ಯವಹಾರಗಳಿಗೆ ಅಡ್ಡಿಯಾಗಿತ್ತು . +ನೆರೆಯ ರಾಷ್ಟ್ರದಿಂದ ಪಡೆಯಬಹುದಾದ ಪದಾರ್ಥವನ್ನು ವಿದೇಶೀ ವಿನಿಮಯ ತೊಂದರೆಗಳಿಂದಾಗಿ ಅಲ್ಲಿಂದ ಪಡೆಯಲಾಗದೆ ,ಸಾಲ ಒದಗಿಸಲು ಸಿದ್ಧವಾಗಿದ್ದ ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಪಡೆಯಬೇಕಾದ ಸಂದರ್ಭಗಳಿದ್ದುವು . +ಆರ್ಥಿಕ ಪುನರ್ರಚನೆ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದ ಐರೋಪ್ಯ ರಾಷ್ಟ್ರಗಳು ಇಂಥ ಪರಿಸ್ಥಿತಿಯಲ್ಲಿ ಪರಸ್ಪರ ವಿನಿಮಯ ಸೌಲಭ್ಯಗಳನ್ನು ಏರ್ಪಡಿಸಿಕೊಳ್ಳಬೇಕಾದ ಅವಶ್ಯಕತೆ ಹೆಚ್ಚಾಗಿತ್ತು . +ಅಂತೆಯೇ ಐರೋಪ್ಯ ಆರ್ಥಿಕ ಸಹಕಾರ ಸಂಸ್ಥೆಯಿಂದ ಐರೋಪ್ಯ ಸಲ್ಲಿಕೆ ಕೂಟ ಸ್ಥಾಪಿತವಾಯಿತು . +ತಾತ್ಕಾಲಿಕ ವ್ಯವಸ್ಥೆಯಾಗಿ ಮೊದಲು ಎರಡು ವರ್ಷಗಳಿಗೆಂದು ರೂಪಿತವಾಗಿದ್ದ ಕೂಟ ತರುವಾಯ ವರ್ಷವರ್ಷವೂ ಹೊಸ ಒಪ್ಪಂದಗಳ ಆಧಾರದ ಮೇಲೆ ಮುಂದುವರಿದು 1958ರವರ ೆಗೆ ನಡೆದು ಬಂತು. +1.ಸದಸ್ಯರಾಷ್ಟ್ರಗಳ ಪರಸ್ಪರ ಲೇವಾದೇವಿ ಲೆಕ್ಕಗಳ ಬಹುಮುಖ ತೀರುವೆ (ಮಲ್ಟಿಲ್ಯಾಟರಲ್ ಕ್ಲಿಯರಿಂಗ್ ) ವ್ಯವಸ್ಥೆಯ ಏರ್ಪಾಡು . +ಎರಡೆರಡು ರಾಷ್ಟ್ರಗಳು ತಮ್ಮ ಪರಸ್ಪರ ವ್ಯಾಪಾರವನ್ನು ಪ್ರತ್ಯೇಕವಾಗಿಸಬೇಕಾದುದರ ಮತ್ತು ದ್ವಿರಾಷ್ಟ್ರ ಒಪ್ಪಂದಗಳನ್ನು ಏರ್ಪಡಿಸಿಕೊಳ್ಳುವುದರ ಅವಶ್ಯಕತೆಯನ್ನು ಇದು ತಪ್ಪಿಸುತ್ತದೆ . +2.ಸದಸ್ಯರಾಷ್ಟ್ರಗಳ ಲೇಣಿ - ದೇಣಿಯಲ್ಲಿ ಪ್ರಾಪ್ತವಾಗುವ ತಾತ್ಕಾಲಿಕ ಕೊರತೆ ನೀಗಿಸಲು ಸಹಾಯವಾಗುವಂತೆ ಉದ್ದರಿ ಸರಬರಾಯಿ . +ಈ ಮೂಲಕ ಪರಸ್ಪರ ವ್ಯಾಪಾರ ಮತ್ತು ಸಲ್ಲಿಕೆ ವ್ಯವಹಾರಗಳಿಗೆ ಅಡ್ಡಿಯಾಗಿರುವ ನಿರ್ಬಂಧಗಳನ್ನು ತೆಗೆಯುವಂತೆ ರಾಷ್ಟ್ರಗಳನ್ನು ಪ್ರೇರೇಪಿಸಬಹುದು . +3.ಸದಸ್ಯ ರಾಷ್ಟ್ರವೊಂದಕ್ಕೆ ತಾತ್ಕಾಲಿಕವಾಗಿ ಸಂಭವಿಸುವ ಸಲ್ಲಿಕೆ ಕೊರತೆ ( ಪೀಮೆಂಟ್ಸ್‌ ಡಿಫಿಸಿಟ್ಸ್‌ ) ದೀರ್ಘಕಾಲದ ಸಮಸ್ಯೆಯಾಗದಂತೆ ನೋಡಿಕೊಳ್ಳಲು ರಾಷ್ಟ್ರ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಉತ್ತೇಜನ ನೀಡುವುದು ಕೂಟದ ಮೂರನೆಯ ಉದ್ದೇಶ. +ಒಟ್ಟಿನಲ್ಲಿ ಐರೋಪ್ಯ ಸಲ್ಲಿಕೆ ಕೂಟ ಸದಸ್ಯರಾಷ್ಟ್ರಗಳ ವಿದೇಶೀ ವಿನಿಮಯ ವ್ಯವಹಾರಗಳು ಸುಸೂತ್ರವಾಗಿ ನಡೆಯುವಂತೆ ಅನುಕೂಲ ಮಾಡುವ ವ್ಯವಸ್ಥೆಯಾಗಿತ್ತು . +ಈ ಕೂಟ ಐರೋಪ್ಯ ಆರ್ಥಿಕ ಸಹಕಾರ ಸಂಸ್ಥೆಯ ಭಾಗವಾಗಿ ಕಾರ್ಯಾಚರಣೆ ನಡೆಯಿಸುತ್ತಿದ್ದುದರಿಂದ ಆ ಸಂಸ್ಥೆಯ ಸಮಿತಿಯ ಅಧಿಕಾರವ್ಯಾಪ್ತಿಗೆ ಇದು ಒಳಪಟ್ಟಿತ್ತು . +ಆಡಳಿತ ಸೌಕರ್ಯಕ್ಕಾಗಿ ಸಮಿತಿ ಪ್ರತಿ ವರ್ಷ ಏಳು ಸದಸ್ಯರನ್ನುಳ್ಳ ಒಂದು ಆಡಳಿತ ಮಂಡಲಿಯನ್ನು ಚುನಾಯಿಸುತ್ತಿತ್ತು . +ಕೂಟ ವ್ಯವಸ್ಥೆಯ ಕಾರ್ಯನಿರ್ವಹಣೆ , ಋಣಿ ರಾಷ್ಟ್ರಗಳು ಕೊಡಬೇಕಾದ ಮತ್ತು ಧನಿ ರಾಷ್ಟ್ರಗಳಿಗೆ ನೀಡಬೇಕಾದ ಬಡ್ಡಿದರಗಳ ನಿರ್ಣಯ , ಸದಸ್ಯರಾಷ್ಟ್ರಗಳ ಆರ್ಥಿಕ ಸ್ಥಿತಿಗತಿಗಳ ಅವಲೋಕನ ಇವು ಬೋರ್ಡಿನ ಮುಖ್ಯ ಕರ್ತವ್ಯಗಳು . +ಲೇಣಿ - ದೇಣಿ ಕೊರತೆ ಅಥವಾ ಹೆಚ್ಚಳ ಹೊಂದಿರುವ ರಾಷ್ಟ್ರಗಳು ಕೈಗೊಳ್ಳಬೇಕಾದ ನೀತಿಗಳ ಮತ್ತು ಕ್ರಮಗಳ ಬಗ್ಗೆ ಸಲಹೆ ಮಾಡುವ ಅಧಿಕಾರವನ್ನು ಕೂಟ ಪಡೆದಿತ್ತು . +ಐರೋಪ್ಯ ಸಲ್ಲಿಕೆ ಕೂಟದ ವ್ಯವಹಾರಗಳೂ ಲೆಕ್ಕಾಚಾರಗಳೂ 1921 ರಲ್ಲಿ ಸ್ಥಾಪನೆಯಾದ ಅಂತಾರಾಷ್ಟ್ರೀಯ ತೀರುವೆ ಬ್ಯಾಂಕಿನ ಮೂಲಕ ನಡೆಯುತ್ತಿದ್ದುವು . +ಪ್ರತಿ ಸದಸ್ಯ - ರಾಷ್ಟ್ರವೂ ಇತರ ಒಂದೊಂದು ಸದಸ್ಯ ರಾಷ್ಟ್ರದ ಲೆಕ್ಕದಲ್ಲಿಯೂ ಇಟ್ಟ ಮೊಬಲಗನ್ನು ತಿಂಗಳಿಗೊಮ್ಮೆ ಬ್ಯಾಂಕಿಗೆ ತಿಳಿಸುವುದು ; ಈ ಲೆಕ್ಕಗಳ ಆಧಾರದ ಮೇಲೆ ಒಂದೊಂದು ಸದಸ್ಯರಾಷ್ಟ್ರದೊಡನೆಯೂ ಹೊಂದಿದ್ದ ಹೆಚ್ಚಳ ಕೊರತೆ ಸ್ಥಿತಿಯನ್ನು ಬ್ಯಾಂಕು ಲೆಕ್ಕ ಮಾಡಿ , ಇದರ ಆಧಾರದ ಮೇಲೆ ಹೆಚ್ಚಳ ಅಥವಾ ಕೊರತೆಯನ್ನು ಸಂಬಂಧಪಟ್ಟ ಸದಸ್ಯರಾಷ್ಟ್ರ ಬ್ಯಾಂಕಿನೊಡನೆ ಒಂದೇ ವ್ಯವಹಾರದ ಮೂಲಕ ಸರಿತೂಗಿಸುವುದು . +ಇದೇ ಸಲ್ಲಿಕೆ ಕೂಟದ ಕಾರ್ಯವಿಧಾನ . +ವಿದೇಶೀ ಸಲ್ಲಿಕೆ ಕೊರತೆ ಹೊಂದಿದ್ದ ಸದಸ್ಯರಾಷ್ಟ್ರಗಳಿಗೆ ಒಂದು ಮಿತಿಯವರೆಗೆ ಕೂಡ ಉದ್ದರಿ ನೀಡುತ್ತಿತ್ತು . +ಪ್ರತಿಯೊಂದು ಸದಸ್ಯ ರಾಷ್ಟ್ರವೂ ನಿಗದಿಯಾದ ಪ್ರಮಾಣಕ್ಕೂ ಮೀರಿದ ಕೊರತೆ ಉಂಟಾಗದಂತೆ ಸೂಕ್ತ ಕ್ರಮ ಕೈಕೊಳ್ಳಬೇಕಾಗಿತ್ತು . +ಏಕೆಂದರೆ ಕೂಟದ ನಿಯಮಾನುಸಾರ ನಿಗದಿಯಾದ ಒಂದು ಪ್ರಮಾಣಕ್ಕೂ ಮೀರಿದ ಕೊರತೆಯನ್ನು ಚಿನ್ನ ಅಥವಾ ಡಾಲರು ಕೊಟ್ಟು ಸರಿತೂಗಿಸಬೇಕಿತ್ತು . +ಇದು ಸಾಮಾನ್ಯವಾಗಿ ಕಷ್ಟವಾಗಿದ್ದುದರಿಂದ ಸದಸ್ಯರಾಷ್ಟ್ರಗಳು ಎಚ್ಚರಿಕೆಯಿಂದ ಕೊರತೆಯ ಪ್ರಮಾಣ ಮಿತಿ ಮೀರದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದುವು . +ಕೆಲವು ವಿಶೇಷ ಸಂದರ್ಭಗಳಲ್ಲಿ ಕೂಟ ಹೆಚ್ಚು ಉದ್ದರಿಯ ವ್ಯವಸ್ಥೆ ಮಾಡಿಕೊಟ್ಟಿತು. +ಲೇಣಿ - ದೇಣಿಗಳಲ್ಲಿ ಹೆಚ್ಚಳ ಹೊಂದುವ ಸದಸ್ಯರಾಷ್ಟ್ರಗಳು ಕೂಟದ ಮೇಲೆ ಹೆಚ್ಚು ಹೆಚ್ಚು ಪಾವತಿ ಹಕ್ಕು ( ಕ್ಲೇಂಸ್ ) ಕೂಡಿಸುತ್ತ ಹೋಗದಂತೆಯೂ ಮಿತಿಗಳನ್ನು ವಿಧಿಸಲಾಗಿತ್ತು . +ಮಿತಿಮೀರಿದ ಹಕ್ಕುಗಳನ್ನು ಹೊಂದಿದ ರಾಷ್ಟ್ರಗಳೊಡನೆ ಕೂಟ ವಿಶೇಷ ಏರ್ಪಾಡುಗಳನ್ನು ಮಾಡಿಕೊಳ್ಳುತ್ತಿತ್ತು . +ಮುಖ್ಯವಾಗಿ ಕೂಟರಾಷ್ಟ್ರಗಳೊಳಗೆ ಸಂಭವಿಸುತ್ತಿದ್ದ ಲೇಣೆ - ದೇಣೆಗಳ ಅಸಮತೆ ಸರಿಪಡಿಸಲು ಇದು ನೇರ ನೆರವು ನೀಡುತ್ತಿತ್ತು . +ಅಲ್ಲದೆ ಕೊರತೆ ಹೊಂದಿದ್ದ ರಾಷ್ಟ್ರಕ್ಕೆ ಇದು ವಿಶೇಷ ಸಲಹೆ ನೀಡುವ ಅಧಿಕಾರ ಪಡೆದಿದ್ದುದರಿಂದ ಆ ರಾಷ್ಟ್ರವಿದೇಶೀ ಹಣ ಮತ್ತು ವ್ಯಾಪಾರ ನೀತಿಗಳ ಮೇಲೂ ಪ್ರಭಾವ ಹೊಂದಿತ್ತು . +ಕೂಟದ ಆಡಳಿತ ಮಂಡಳಿ ಪ್ರತಿಯೊಂದು ಸದಸ್ಯರಾಷ್ಟ್ರದ ವಿದೇಶೀ ವ್ಯವಹಾರಗಳನ್ನೂ ಅದರ ಸಾಮಾನ್ಯ ಆರ್ಥಿಕ ಪರಿಸ್ಥಿತಿಯನ್ನೂ ಆಗಿಂದಾಗ್ಗೆ ಕೂಲಂಕಷವಾಗಿ ಪರಿಶೀಲಿಸಿ , ಏರುಪೇರುಗಳನ್ನು ಸರಿಪಡಿಸಲು ಸೂಕ್ತಕ್ರಮಗಳನ್ನು ಸೂಚಿಸುತ್ತಿತ್ತು . +ಮಿತಿಮೀರಿದ ಕೊರತೆ ಅಥವಾ ಹೆಚ್ಚಳಗಳೇ ಈ ಸಂಸ್ಥೆ ಎದುರಿಸಬೇಕಾಗಿದ್ದ ಮುಖ್ಯ ಸಮಸ್ಯೆಯಾಗಿತ್ತು . +ಈ ಸಮಸ್ಯೆಯನ್ನು ನಿವಾರಿಸುವುದರಲ್ಲಿ ಸಂದರ್ಭೋಚಿತ ಕ್ರಮ ಕೈಗೊಂಡು ವಿನಿಮಯದಲ್ಲಿ ರಾಷ್ಟ್ರಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದೇ ಕೂಟದ ಮುಖ್ಯ ಗುರಿಯಾಗಿತ್ತು. +ಕೂಟ ಸ್ಥಾಪನೆಯಾದ ತಿಂಗಳಲ್ಲೇ ಕೊರಿಯದ ಯುದ್ಧ ಸಂಭವಿಸಿದ್ದರಿಂದ ಇದು ಕಷ್ಟಪರಿಸ್ಥಿತಿ ಎದುರಿಸಬೇಕಾಯಿತು . +ಕೆಲವು ಸದಸ್ಯರಾಷ್ಟ್ರಗಳ ಅಂತಾರಾಷ್ಟ್ರೀಯ ಲೇಣೆ - ದೇಣೆಗಳಲ್ಲಿ ಅಸಾಧಾರಣ ಕೊರತೆ ಪ್ರಾಪ್ತವಾಯಿತು ; ಇತರ ಕೆಲವು ರಾಷ್ಟ್ರಗಳ ಲೇಣೆ - ದೇಣೆಗಳಲ್ಲಿ ಮಿತಿಮೀರಿದ ಹೆಚ್ಚಳ ಉಂಟಾಯಿತು . +ಈ ಎರಡು ರೀತಿಯ ಸಂದರ್ಭಗಳು ವಿಶೇಷ ಸಮಸ್ಯೆಗಳನ್ನೇ ಸೃಷ್ಟಿಸಿದವು . +1950 - 51ರಲ್ಲಿ ಜರ್ಮನಿಯ ವಿದೇಶೀ ಲೇಣೆ - ದೇಣೆಯಲ್ಲಿ ತೀವ್ರ ಪ್ರಮಾಣದ ಕೊರತೆ ಸಂಭವಿಸಿತು . +ಕೂಟ ನೆರವಿಗೆ ಬಾರದಿದ್ದಲ್ಲಿ ಜರ್ಮನಿ ಆಮದು ನಿರ್ಬಂಧ ಕ್ರಮ ಇದರಿಂದಾಗಿ ಬಂದು ತತ್ಪರಿಣಾಮವಾಗಿ ನೆದರ್ಲೆಂಡ್ಸ್‌ , ಡೆನ್ಮಾರ್ಕ್ ಮುಂತಾದ ರಾಷ್ಟ್ರಗಳ ಮೇಲೆ ದುಷ್ಪರಿಣಾಮವಾಗುತ್ತಿದ್ದುದೇ ಅಲ್ಲದೆ ಕ್ರಮೇಣ ಐರೋಪ್ಯ ಆರ್ಥಿಕ ವ್ಯವಸ್ಥೆಯ ವ್ಯಾಪಾರ ನಿರ್ಬಂಧ ನಿರ್ಮೂಲ ಕಾರ್ಯಕ್ರಮಗಳೆಲ್ಲವೂ ಮುರಿದು ಬೀಳುವಂತಾಗುತ್ತಿತ್ತು . +ಕೂಟ ಜರ್ಮನಿಗೆ ಆ ವರ್ಷ ( 1950-51 ) ಒದಗಿಸಿದ ಸು .12 ಕೋಟಿ ಡಾಲರುಗಳ ಉದ್ದರಿಯಿಂದ ಜರ್ಮನಿಯ ಆರ್ಥಿಕ ಪುನರುಜ್ಜೀವನಕ್ಕೆ ಸಹಾಯವಾಯಿತು . +ತುರ್ಕಿ , ಗ್ರೀಸ್ , ಆಸ್ಟ್ರಿಯ ಮತ್ತು ಐಸ್ಲೆಂಡ್ಗಳು ಅನುಭವಿಸಿದ ಲೇಣೆ - ದೇಣೆ ಕೊರತೆ ಪರಿಸ್ಥಿತಿ ಎದುರಿಸಲೂ ಐರೋಪ್ಯ ಸಲ್ಲಿಕೆ ಕೂಟ ನೆರವು ನೀಡಿತು. +ಕೂಟ ಸ್ಥಾಪನೆಯಾದ ವರ್ಷ ಬ್ರಿಟನ್ , ಫ್ರಾನ್ಸ್‌ , ಪೋರ್ಚುಗಲ್ ಮತ್ತು ಬೆಲ್ಜಿಯಂ ರಾಷ್ಟ್ರಗಳ ಲೇಣೆ - ದೇಣೆಗಳಲ್ಲಿ ಮಿತಿಮೀರಿದ ಹೆಚ್ಚಳಗಳು ಸಂಭವಿಸಿದ್ದಾಗ ವಾಣಿಜ್ಯ ಹಾಗೂ ವಿನಿಮಯ ನಿರ್ಬಂಧಗಳನ್ನು ಸಡಲಿಸಬೇಕೆಂದು ಆ ರಾಷ್ಟ್ರಗಳಿಗೆ ಕೂಟ ಸಲಹೆ ಮಾಡಿತು . +ಈ ಸಲಹೆಯ ಪ್ರಕಾರ ಕೈಕೊಂಡ ಕ್ರಮಗಳಿಂದ ಪರಿಸ್ಥಿತಿ ಸುಧಾರಿಸಲು ಅನುಕೂಲವಾಯಿತು . +1954 ರಲ್ಲಿ ಕೂಟದ ಒಪ್ಪಂದ ಪುನರ್ ಪರಿಶೀಲನೆಗೆ ಬಂದಾಗ 1950ರಲ್ಲಿ ಸದಸ್ಯ ರಾಷ್ಟ್ರಗಳು ಒಪ್ಪದೆ ಇದ್ದ ಒಂದು ಮುಖ್ಯ ತತ್ತ್ವವನ್ನು ಆಗ ಅಂಗೀಕರಿಸಲಾಯಿತು . +ಸದಸ್ಯರಾಷ್ಟ್ರಗಳು ಕೂಟದ ಸಾಲಗಳ ಬಗ್ಗೆ ಸಾಲ ತೀರುವೆ ನಿಧಿಯ ಏರ್ಪಾಡು ( ಅಮಾರ್ಟೈಸೇಷನ್) ಕೈಕೊಳ್ಳಬೇಕೆಂಬುದೇ ಈ ಹೊಸ ಕ್ರಮ . +ಅಂದಿನಿಂದ 1958ರ ತನಕ ಮಾಡಿದ ಇಂಥ ಸಾಲತೀರುವೆ ನಿಧಿಗಳು ಒಟ್ಟಿನಲ್ಲಿ 112 ಕೋಟಿ ಡಾಲರುಗಳಷ್ಟು ತೀರುವೆಗೆ ಏರ್ಪಾಟು ಮಾಡಿದುವು. +ಒಟ್ಟಿನಲ್ಲಿ 1950 - 56ರ ಅವಧಿಯಲ್ಲಿ ಸಂಭವಿಸಿದ 3,200 ಕೋಟಿ ಡಾಲರುಗಳಷ್ಟು ಒಟ್ಟು ಹೆಚ್ಚಳ ಮತ್ತು ಕೊರತೆಗಳಲ್ಲಿ ಮುಕ್ಕಾಲು ಭಾಗದಷ್ಟನ್ನು ಪುಸ್ತಕದಲ್ಲೇ ಪರಸ್ಪರ ಜೋಡಣೆಯಿಂದಲೇ ಸರಿತೂಗಿಸಲು ಸಾಧ್ಯವಾಯಿತು ; ಉಳಿದ ಕಾಲು ಭಾಗವನ್ನು ಮಾತ್ರ ಚಿನ್ನ ಮತ್ತು ಡಾಲರುಗಳ ಲೇಣೆ - ದೇಣೆ ಮೂಲಕ ಸರಿತೂಗಿಸಲಾಯಿತು . +ಈ ವ್ಯವಹಾರದಲ್ಲಿ ಅಮೆರಿಕದ ಸಹಾಯ ಮೊದಮೊದಲು ಹೆಚ್ಚಾಗಿದ್ದು ಕ್ರಮೇಣ ಕಡಿಮೆಯಾಯಿತು . +ಅಂತರ - ಐರೋಪ್ಯ ಲೇವಾದೇವಿಯಲ್ಲಿ ಚಿನ್ನ ಹಾಗೂ ಪರಿವರ್ತನೀಯ ಹಣಗಳ ಹೆಚ್ಚುವರಿಯ ಉಪಯೋಗದಿಂದ ಅಂತಾರಾಷ್ಟ್ರೀಯ ವ್ಯಾಪಾರ ಸರ್ವತೋಮುಖವಾಗಿ ಬೆಳೆಯಲು ಮಾರ್ಗ ಏರ್ಪಟ್ಟಿತು . +ದ್ವಿಪಕ್ಷೀಯ ವ್ಯಾಪಾರ ಏರ್ಪಾಡುಗಳ ಮೂಲಕ ಕೆಲವು ದುಬಾರಿ ರಫ್ತುದಾರರು ಹಿಂದೆ ಪಡೆಯುತ್ತಿದ್ದ ರಕ್ಷಣೆಯನ್ನು ಒಕ್ಕೂಟದ ಏರ್ಪಾಡುಗಳು ತೆಗೆದುಹಾಕಿದುದರಿಂದ ವ್ಯಾಪಾರಮಾರ್ಗ ಆರ್ಥಿಕ ಬಲಗಳ ನಿರ್ದೇಶನಕ್ಕೆ ಒಳಗಾದಂತಾಯಿತು . +ವ್ಯಾಪಾರ ಪ್ರಮಾಣದ ಬಗ್ಗೆ ಇದ್ದ ಷರತ್ತುಗಳನ್ನು ಸಡಿಲಗೊಳಿಸಿದ್ದರಿಂದ ಅಂತರ ಐರೋಪ್ಯ ವ್ಯಾಪಾರ ನಿರಾತಂಕ ವ್ಯಾಪಾರದತ್ತ ಸಾಗಿತು . +ಇವುಗಳಿಂದ ವಿವಿಧ ಐರೋಪ್ಯ ರಾಷ್ಟ್ರಗಳ ಬೆಲೆಮಟ್ಟಗಳಲ್ಲಿ ಹೊಂದಾಣಿಕೆಯುಂಟಾಗುತ್ತ ಬಂತು . +ಕೃತಕ ಆರ್ಥಿಕ ಪ್ರತ್ಯೇಕತಾ ಶಕ್ತಿಗಳು ಮಾಯವಾದುವು . +ಈ ಕೂಟದಿಂದ ಐರೋಪ್ಯ ಅರ್ಥವ್ಯವಸ್ಥೆಯಲ್ಲಿ ಸ್ವಾಭಾವಿಕ ಸ್ಪರ್ಧಾ ಪ್ರವೃತ್ತಿಗಳನ್ನು ಪುನಃ ಸ್ಥಾಪಿಸಲು ಸಹಾಯವಾಯಿತೆನ್ನಬಹುದು .