diff --git "a/Data Collected/Kannada/MIT Manipal/Kannada-Scrapped-dta/\340\262\205\340\262\265\340\262\263_\340\262\225\340\262\243\340\263\215\340\262\243\340\263\201\340\262\227\340\262\263\340\263\201.txt" "b/Data Collected/Kannada/MIT Manipal/Kannada-Scrapped-dta/\340\262\205\340\262\265\340\262\263_\340\262\225\340\262\243\340\263\215\340\262\243\340\263\201\340\262\227\340\262\263\340\263\201.txt" new file mode 100644 index 0000000000000000000000000000000000000000..6f9439f80fa6fe6dfc359c477e6dc967067c71d4 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\205\340\262\265\340\262\263_\340\262\225\340\262\243\340\263\215\340\262\243\340\263\201\340\262\227\340\262\263\340\263\201.txt" @@ -0,0 +1,151 @@ +ಹುಡಿಗೆಯು ಮುಖವನ್ನು ಮೇಲಕ್ಕೆತ್ತಿ ನೋಡಿದಳು. +ಕೈಯ್ಯನ್ನು ತೆಗೆದ ಕೂಡಲೆ ಹೊರಮುಚ್ಚಕದ ಗಿಡವು ಮತ್ತೆ ಮೊದಲಿನಂತೆ ಹಚ್ಚನೆ ನಿಲ್ಲುವದಿಲ್ಲವೆ? +ನೋಡಲಿಕ್ಕೆ ಬಂದವರೆಲ್ಲರೂ ಚಹ ತೆಗೆದುಕೊಳ್ಳಲಿಕ್ಕೆ ಹತ್ತಿದರು. +ಆಗ ಅವಳಿಗೆ ಎಷ್ಟೋ ಬಿಡುಗಡೆ ಎನಿಸಿತು. +ಕೋರ್ಟಿ ನಲ್ಲಿ "ಉಲಟ ತಪಾಸಣಿ" ಮುಗಿದ ನಂತರ ಮನುಷ್ಯನಿಗೆ ಹೀಗೇ ಅನಿಸುತ್ತಿರಬಹುದೆಂಬ ಮಸುಕು ವಿಚಾರವೂ ಅವಳ ಮನಸ್ಸಿನಲ್ಲಿ ಬಂದುಹೋಯಿತು. +ಇಡೀ ಆಯುಷ್ಯದ ಪ್ರವಾಸವನ್ನು ಯಾವ ವ್ಯಕ್ತಿಯ ಜೊತೆಯಲ್ಲಿ ಒಂದುವೇಳೆ ಮಾಡಬೇಕಾಗಬಹುದೋ ಅವನನ್ನು ಒಮ್ಮೆ ಯಾದರೂ ಚೆನ್ನಾಗಿ ನೋಡಬೇಕೆಂಬ ಇಚ್ಛೆಯು ಅವಳಲ್ಲಿ ಸ್ವಾಭಾವಿಕವಾಗಿ ಉತ್ಪನ್ನ ವಾಯಿತು. +ಸಂಸಾರ ಸಾಗರದಲ್ಲಿ ತೇಲಿಹೋಗುತ್ತಿರುವಾಗ ಉಂಟಾಗಬಹುದಾದ ಕಷ್ಟ-ನಿಷ್ಟುರಗಳನ್ನು ಕೇವಲ ಒಂದು ಸ್ಮಿತಮಾತ್ರದಿಂದ ಕಳೆಯುವ ಮಾಯ ಆತನಲ್ಲಿರಬಹುದೇ? +ತನ್ನ ಕಡೆಗೆ ಯಾರೂ ನೋಡುತ್ತಿರಲಿಕ್ಕಿಲ್ಲೆಂಬ ಮನವರಿಕೆಯಿಂದಲೇ ಅವಳು ಮುಖವನ್ನು ಮೇಲಕ್ಕೆತ್ತುವ ಧೈರ್ಯ ಮಾಡಿದ್ದಳು. +ಆದರೆ ಅವಳದೂ ಅನಂತನ ನೋಟ ಕೂಡಿದೊಡನೆಯೇ ಅವಳಿಗೆ ನಾಚಿಕೆಯಿಂದ ಚೂರು ಚೂರಾದಂತಾಯಿತು. +ಉಳಿದ ಜನರೆಲ್ಲರೂ ಫಲಾಹಾರಗಳಲ್ಲಿ ಮಗ್ನರಾಗಿದ್ದರು. +ಆದರೆ ಅನಂತನಿಗೆ ಮಾತ್ರ ತಾನು ಬಸಿಯಲ್ಲಿ ಸುರುವಿಕೊಂಡ ಚಹದ ಅರಿವು ಸಹ ಇರಲಿಲ್ಲ. +ಆತನ ಮನಸ್ಸು ಯಾವದೋ ಒಂದು ಯಕ್ಷಸೃಷ್ಟಿಯಲ್ಲಿ ಭ್ರಮಣ ಮಾಡುತ್ತಿರಬೇಕು ಆ ಯಕ್ಷಸೃಷ್ಟಿಯಲ್ಲಿ ಭ್ರಮಣ ಮಾಡುತ್ತಿರುವಾಗಲೇ ಆಕೆಯ ಸುಂದರವಾದ ಕಣ್ಣುಗಳು ಅವನ ದೃಷ್ಟಿಗೆ ಬಿದ್ದವು. +ಇಷ್ಟೊತ್ತಿನವರೆಗೆ ನಡೆದ ಎಲ್ಲ ಕಾರ್ಯಕ್ರಮದ ವಿಷಯದಲ್ಲಿ ಅವನಿಗೆ ಮನಸ್ವಿಯಾಗಿ ಸಿಟ್ಟು ಬಂದಿತು. +ಹೆಸರು ಕೇಳುವದು, ಓದಿಸಿಕೊಳ್ಳುವದು, ಹಾಡಿಸಿ ನೋಡುವದು ಇತ್ಯಾದಿಗಳಿಗಿಂತ "ನನ್ನ ಹುಡಿಗೆಯ ಕಣ್ಣುಗಳನ್ನು ನೋಡಿರಿ ಎಂದು ಇವಳ ತಂದೆ ತನಗೆ ಹೇಳಬಾರದಾಗಿತ್ತೇ? +ಸಣ್ಣವನಿರುವಾಗಿನಿಂದಲೇ ಅನಂತನಿಗೆ ಎಲ್ಲ ತರದ ಸೌಂದರ್ಯದ ಲೋಭ, ಐದು ವರ್ಷದವನಿರುವಾಗಲೇ, ತನ್ನ ಕೊಂಕಣದಲ್ಲಿಯ ಮುತ್ತಜ್ಜನ ಮನೆಗೆ ಹೋದಾಗ ಸಾವಿರಾರು ತರದ ಸಿಂಪುಗಳನ್ನು ಕೂಡು ಹಾಕಿದ್ದ. +ಆ ಸುಂದರವಾದ ಸಿಂಪುಗಳನ್ನು ನೋಡಿದರೆ ಯಾವ ಹುಡಿಗೆಗಾದರೂ ತನ್ನ ಗೊಂಬೆಯ ಲಗ್ನ ಸಮಯದಲ್ಲಿ ಅವುಗಳನ್ನು ತಾಟುಗಳಾಗಿ ಉಪಯೋಗಿಸಬೇಕೆಂಬ ಮೋಹ ಉಂಟಾಗದೆ ಇರುವದು ಶಕ್ಯವಿರಲಿಲ್ಲ! +ಆತನ ಪ್ರತಿಯೊಂದು ಪುಸ್ತಕದಲ್ಲಿಯೂ ನವಿಲುಗರಿ ಇದ್ದೆ ಇರುತ್ತಿತ್ತು. +ಅವನ ಮನೆಯಿಂದ ಎಷ್ಟೋ ದೂರದಲ್ಲಿದ್ದ ಪಾರಿಜಾತದ ಹೂವುಗಳನ್ನು ಚಿಕ್ಕಂದಿನಿಂದ ಪ್ರತಿನಿತ್ಯವೂ ತರುತ್ತಿದ್ದ. +ಆತನ ಅಜ್ಜಿಗೆ ತನ್ನ ಮೊಮ್ಮಗ ದೊಡ್ಡ ದೇವಭಕ್ತನಾಗುವನೆಂದು ಅನಿಸುತ್ತಿತ್ತು. +ಆದರೆ ನಸುಗೆಂಪು ದೇಟಿನ ಆ ಶುಭ್ರವಾದ ಸುಕುಮಾರ ಹೂವುಗಳ ಥಳಿಯನ್ನು ನೋಡಿದ ಕೂಡಲೆ ಆಕಾಶದಲ್ಲಿಯ ಚಿಕ್ಕೆಗಳೇ ಆರಿಸಿಕೊಂಡು ಹೋಗಲಿಕ್ಕೆ ಸಿಕ್ಕಂತೆ ಅನಂತನಿಗೆ ಆಗುವ ಆನಂದದ ಕಲ್ಪನೆಯೇ ಆತನ ಮುತ್ತಜ್ಜಿಗೆ ಇರಲಿಲ್ಲ. +ಕಾಲೇಜಿನಲ್ಲಿರುವಾಗ ಒಂದು ಸ್ವಲ್ಪ ಬೆಲೆಯ ಸಾಧಾರಣವಾಗಿ ಕಟ್ಟಲ್ಪಟ್ಟ ಪುಸ್ತಕವನ್ನು ಬಿಟ್ಟು, ಹೆಚ್ಚಿನ ಬೆಲೆಯ ಮುದ್ದಾಗಿ ಕಟ್ಟಲ್ಪಟ್ಟ ಪುಸ್ತಕವನ್ನು ಕೊಳ್ಳುವದರ ಸಲುವಾಗಿ ಅವನು ಒಮ್ಮೆ ಉಪವಾಸ ಮಾಡಿದ್ದ. +ಅ ದಿವಸವೇ ತನ್ನ ಏಕಾದಶಿ ಬಂದಿದೆ ಎಂದು ಹೇಳಿದ್ದಕ್ಕೆ ಎಲ್ಲರೂ ಅವನನ್ನು "ಪುಂಡಲೀಕ ವರದ ಹರಿ ವಿಠಲ" ಎಂದು ಸ್ವಾಗತಿಸುತ್ತಿದ್ದರು. +ಈ ಮೂಲಕವಾಗಿಯೇ ಆಕೆಯ ಕಣ್ಣುಗಳನ್ನು ನೋಡಿದ ಕೂಡಲೆ ತಾನು ತಿರುಗಾಡುತ್ತಿರುವ ಯಕ್ಷಸೃಷ್ಟಿಯಲ್ಲಿಯ ಅಧಿದೇವತೆಯಾಗಿದ್ದ ಅಪ್ಸರೆಯನ್ನು ಕಂಡಂತೆ ಆತನಿಗೆ ಅನಿಸಿತು. +ಅವಳ ಒಂದು ಕಣ್ಣಲ್ಲಿ ಆಕಾಶದಲ್ಲಿಯ ನೀಲವರ್ಣವು ತಾರೆಗಳ ತೇಜವನ್ನು ತಕ್ಕೊಂಡು ನರ್ತಿಸುವಂತೆ ತೋರುತ್ತಿತ್ತಾದರೆ ಎರಡನೆಯ ಕಣ್ಣಲ್ಲಿ ಸಾಗರದ ನೀಲವರ್ಣವು ರತ್ನಗಳ ತೇಜಸ್ಸಿನಿಂದ ಹೊಳೆಯುತ್ತಿತ್ತು. +ಆ ರಮಣೀಯ ಸೌಂದರ್‍ಯದ ಆನಂದವು ಅವನ ಮುಖಮುದ್ರೆಯ ಮೇಲೆ ಮೂಡದೆ ಇರಲಿಲ್ಲ. +ಆಕೆಯು ಎದ್ದು ಒಳಕ್ಕೆ ಹೋದಳು. +ಆಕೆಯ ತಂದೆ ಪ್ರಶ್ನಾರ್‍ಥಕ ದೃಷ್ಟಿಯಿಂದ ಅನಂತನ ಕಡೆಗೆ ನೋಡಿದ. +ಅನಂತನ ಮುಖ ಮುದ್ರೆಯನ್ನು ನೋಡಿದರೆ ಅವನೇನು ನಕಾರಾರ್ಥವಾದ ಉತ್ತರವನ್ನು ಕೊಡುವಂತೆ ತೋರಲಿಲ್ಲ. +ಆದರೂ "ವಿಚಾರಮಾಡಿ ತಿಳಿಸುವೆ" ಎಂಬ ಶಬ್ದಗಳು ಅವನ ಬಾಯಿಂದ ಹೊರಬಿದ್ದವು. +ಪಾಪ!ವರಾನ್ವೇಷಿಯಾದ ತಂದೆ! +ಆಯುಷ್ಯದ ವರ್ತಮಾನಪತ್ರದಲ್ಲಿ ಇಂಥ ಮಜಕೂರನ್ನು ಓದಿ ಓದಿ ಇಂಥ ಉತ್ತರವೇನೂ ಅವನಿಗೆ ಹೊಸದಾಗಿರಲಿಲ್ಲ! +ಆ ದಿವಸ ರಾತ್ರಿ ಅನಂತನಿಗೆ ಮಾತ್ರ ಏನೂ ಮಾಡಿದರೂ ನಿದ್ರೆ ಬರಲೊಲ್ಲದು. +ಮಳೆಗಾಲ ಬರುವ ಸಮಯದಲ್ಲಿ ದೊಡ್ಡ ದೊಡ್ಡ ತೋಪುಗಳಲ್ಲಿ ಗೋಡಂಬೆಯ ಗೊಂಚಲಗಳು ಹೊಳೆಯುವಂತೆ, ಆತನ ಬೇರೆ ಬೇರೆ ವಿಚಾರಗಳಲ್ಲಿಯೂ ಆಕೆಯ ಕಣ್ಣುಗಳು ಒಂದೇ ಸವನೆ, ನಕ್ಕು ನಲಿದು ನರ್ತಿಸುತ್ತಿದ್ದವು. +ಒಮ್ಮೆಲೆ, ಅವರಿಗೆ ಲಗ್ನ ಮಾಡಿಕೊಳ್ಳುವೆನೆಂದು ತಾನು ಯಾಕೆ ಹೇಳಿಬರಬಾರದಾಗಿತ್ತು ಎಂದು ಅವನಿಗೆ ಅನಿಸಿತು. +ಸುಂದರವಾದ ಕಣ್ಣುಗಳನ್ನು ಕೇವಲ ನೋಡಲಿಕ್ಕೆ ಏನು ಬೇಕಾದ್ದನ್ನು ಮಾಡಬಹುದಾದ ತಾನು, ಆ ಕಣ್ಣುಗಳು ತನ್ನವೇ ಆಗಲಿಕ್ಕೆ ಬಂದ ಸುಸಂಧಿಯನ್ನು –ಕಬ್ಬಿಣವನ್ನು ಮುಟ್ಟಿಸಿದ ಕೂಡಲೇ ಚಿನ್ನವಾಗುವಂಥ ಕಲ್ಲು ಜಗತ್ತಿನಲ್ಲಿದ್ದರೆ ಚಿನ್ನವನ್ನು ಮುಟ್ಟಿಸಿದರೆ ಕಬ್ಬಿಣವಾಗಬಹುದಾದಂಥ ಕಲ್ಲಾದರೂ ಜಗತ್ತಿನಲ್ಲಿ ಇದ್ದೇ ಇರಬೇಕಲ್ಲವೇ? +ಎಲ್ಲಿಯೂ ಇರದಿದ್ದರೆ ಅನಂತನ ಮನಸ್ಸಿನಲ್ಲಿಯಾದರೂ ಇತ್ತು. +ಸುಂದರವಾದ ವಸ್ತುಗಳ ವಿಷಯದಲ್ಲಿ ಅವನಲ್ಲಿದ್ದ ವಿಲಕ್ಷಣ ಪ್ರೀತಿಯಂತೆ, ಆ ಸೌಂದರ್ಯ ನಾಶದ ವಿಚಾರದಿಂದಲೂ ಅವನು ವಿವ್ಹಲನಾಗುತ್ತಿದ್ದ. +ಚಿಕ್ಕಂದಿನಲ್ಲಿ ತಾನು ತನ್ನ ಮುತ್ತಜ್ಜಿಯ ಸಲುವಾಗಿ ತಂದ ಪಾರಿಜಾತದ ಹೂವುಗಳನ್ನು ವಾಸನೆಯ ಸಲುವಾಗಿ ಕೈಯಲ್ಲಿ ತೆಗೆದುಕೊಂಡು, ಮುಂದೆ ಮಾತಿನ ಭರದಲ್ಲಿ ಹಾಗೆಯೇ ಅವುಗಳನ್ನು ಮುಷ್ಟಿಯಲ್ಲಿ ಬಿಗಿಯಾಗಿ ಹಿಡಿದು ಮರೆತು ಬಿಟ್ಟು ಮುಂದೆ ಒಮ್ಮೆಲೆ ನೆನಪಾಗಿ ಮುಷ್ಟಿ ಬಿಚ್ಚಿ ನೋಡಿದರೆ ಅಲ್ಲೇನು ಇರಬೇಕು? +ಹೂವುಗಳು ಬಾಡಿ ಕಪ್ಪಿಟ್ಟು ಹೋಗಿದ್ದವು. +ಅದನ್ನು ಕಂಡು ತನ್ನ ಕಣ್ಣಲ್ಲಿ ತುಂಬಿದ ನೀರು ಇನ್ನೂವರೆಗೆ ಅವನಿಗೆ ನೆನಪಾಗುತ್ತಿತ್ತು. +ಆ ಪಾರಿಜಾತದ ಹೂವುಗಳಂತೆಯೇ ಅವನು ಇನ್ನೊಂದು ಸಂಗತಿಯನ್ನು ಮರೆತಿರಲಿಲ್ಲ. +ಆತನ ಲಂಗೋಟಿಯ ಗೆಳೆಯನೊಬ್ಬ ಒಂದು ದೊಡ ಮೋಜು ತೋರಿಸುವೆನೆಂದು ಆತನನ್ನು ತನ್ನ ಮನೆಗೆ ಕರೆದು ಕೊಂಡು ಹೋದ. +ಒಳಗಿನಿಂದ ೨೫-೩ಂ ಕಡ್ಡಿಯ ಪೆಟ್ಟಿಗೆಗಳನ್ನು ತೆಗೆದು ಕೊಂಡು ಬಂದ. +ಅವನು ಬಹುತರವಾಗಿ ಒಂದು ಬಹಳ ಉದ್ದವಾದ ಮಾಲುಗಾಡಿಯನ್ನು ಮಾಡಿ ತೋರಿಸುವನೆಂದು ಅನಂತ ತಿಳಿದುಕೊಂಡ. +ಆದರೆ, ಅವನ ಮಿತ್ರನಿಗೆ ಮಾಲುಗಾಡಿಯ ವಿಸ್ತಾರವನ್ನು ತೋರಿಸುವದಕ್ಕಿಂತಲೂ ಪೆಟ್ಟಿಗೆಯೊಳಗಿನ ಮಾಲಿನ ಪ್ರದರ್ಶನ ಮಾಡುವದಕ್ಕಾಗಿ ಹೆಚ್ಚು ಉತ್ಸುಕತೆಯಾಗಿತ್ತು. +ಅವನು ಒಂದೊಂದೇ ಪೆಟ್ಟಿಗೆಯನ್ನು ತೆಗೆಯಲಾರಂಭಿಸಿದ ಮಾತ್ರ! +ಅನಂತನ ಮೈ ಜುಮ್ಮೆಂದಿತು. +ಮೊದಲನೆಯ ಪೆಟ್ಟಿಗೆಯಲ್ಲಿ ಒಂದು ಕರ್ರಗಿನ ಸುಂದರವಾದ ಪಾತರಗಿತ್ತಿ ಅನಂತ ಅದಕ್ಕೆ ಗಣಪತಿ ಎಂದು ಹೆಸರು ಕೊಟ್ಟಿದ್ದು – ದಾರದಿಂದ ಕಟ್ಟಲ್ಪಟ್ಟಿದ್ದರಿಂದ ಸೂಮ್ಮನೆ ಬಿದ್ದು ಕೊಂಡಿತ್ತು. +ಎರಡನೇ ಪೆಟ್ಟಿಗೆ ಯಲ್ಲಿ ಒಂದು ಹಳದೀ ಬಣ್ಣದ ಪಾತರಗಿತ್ತಿ . +ಅದರ ಮೈಮೇಲಿನ ಸಣ್ಣ ಸಣ್ಣ ಚಿಕ್ಕೆಗಳು ಎಷ್ಟೊಂದು ಮೋಹಕವಾಗಿದ್ದವು. +ಅದಾದರೂ ಹೆಸರಿಗೆ ಮಾತ್ರ ಜೀವಂತವಾಗಿದ್ದಿತು. +ಆ ಎಲ್ಲ ಪೆಟ್ಟಿಗೆಗಳ ಪರೀಕ್ಷಣ ಮುಗಿಯುವದರಲ್ಲಿಯೇ ಅನಂತನು ಒಂದು ಪಾತರಗಿತ್ತಿಯನ್ನು ಬಂಧ ಮುಕ್ತವನ್ನಾಗಿ ಮಾಡಿಬಿಟ್ಟ. +ಆ ಮೂಲಕ ಇಬ್ಬರು ಮಿತ್ರರಲ್ಲಿ ಜಗಳವಾಗಿ ಮುಂದೆ ಆರು ತಿಂಗಳವರೆಗೆ ಒಂದೇ ಬೀದಿಯಲ್ಲಿ ಇಬ್ಬರೂ ಹಾಯಿದುಹೋದರೂ ಒಬ್ಬರನ್ನೊಬ್ಬರು ನೋಡುತ್ತಿರಲಿಲ್ಲ. +ಚಿಕ್ಕಂದಿನಲ್ಲಿಯೇ ಬಿದ್ದ ದೈವದ ಆಘಾತದ ಮೂಲಕ ಅನಂತನ ಅಳ್ಮನದ ಸ್ವಭಾವವು ಪರಾಕಾಷ್ಟೆಗೆ ಹೋಗಿ ಮುಟ್ಟಿತ್ತು. +ಆತನಿಗೆ ತಂದೆಯ ಮೇಲೆ ಅತ್ಯಂತ ಪ್ರೇಮ ಆದರೆ ಅವರು ಬಂಡಿಯಿಂದ ಬಿದ ನಿಮಿತ್ತದಿಂದ ಹಾಸಿಗೆ ಹಿಡಿದವರು ತಿರುಗಿ ಏಳಲಿಲ್ಲ! +ಆತನ ಪ್ರೀತಿಯ ತಂಗಿ ಚಳಿಗಾಲದಲ್ಲಿ ಒಂದು ದಿನ ಒಲೆಯ ಮುಂದೆ ಕೂತಾಗ ಸೀರೆಗೆ ಉರಿ ತಗಲಿ ಹತ್ತಿದ ಬೆಂಕಿಯು ಅವಳಿಗೆ ಚಿತೆಯಾಗಿಯೇ ಪರಿಣಮಿಸಿತು. +ಅನಂತನಿಗೆ ಅವಳ ಭಾವಚಿತ್ರ (ಫೋಟೋ)ದ ಕಡೆಗಾದರೂ ನೋಡುವದಕ್ಕೆ ಧೈರ್ಯ ಸಾಲುತ್ತಿರಲಿಲ್ಲ. +ಭಾವಚಿತ್ರ (ಫೋಟೋ)ವನ್ನು ನೋಡಿದ ಕೂಡಲೆ ಅವಳು ಸುಟ್ಟುಕೊಂಡಾಗಿನ ನರಳುವಿಕೆ ಅವನ ಕಿವಿಯಲ್ಲಿ ದುಮುಕಿದಂತಾಗುತ್ತಿತ್ತು. +ಜೀವನದಲ್ಲಿಯ ಕೆಡಕೇ ಯಾವಾಗಲೂ ಅವನಿಗೆ ಎದ್ದು ತೋರುವದು. +ಈ ಆಳ್ಮನದ ಪರಿಣಾಮವು ಆತನ ಆಯುಷ್ಯದ ಮೇಲೆ ಆಗದೆ ಇರಲಿಲ್ಲ. +ಆತನ ಕಾಲೇಜಿಗೆ ಖರ್ಚು ಪೂರೈಸುವ ಸೋದರಮಾವ, ಅನಂತ ಡಾಕ್ಟರನಾಗಲೀ ಇಂಜಿನಿಯರನಾಗಲೀ, ಕಡೆಗೆ ಒಬ್ಬ ವಕೀಲ ನಾಗಲೀ, ಆಗಬೇಕೆಂದು ಬಯಸುತ್ತಿದ್ದ. +ಆದರೆ, ಡಾಕ್ಟರನಾದರೆ ಅಜ್ಞಾನದ ಮೂಲಕ ತನ್ನ ಕೈಯಿಂದ ಯಾವನಾದರೊಬ್ಬನ ಪ್ರಾಣಘಾತ ವಾಗಬಹುದು, ಇಂಜಿನಿಯರನಾದರೆ ಕೆಲಸ ಮಾಡುವಾಗ ಹೆದರಿಕೆಯ ಸ್ಥಳಗಳಲ್ಲಿ ಕೂಲಿಕಾರರನ್ನು ಏರಿಸುವದೂ ಇಳಿಸುವದೂ ಮಾಡಬೇಕಾಗಬಹುದು. +ವಕೀಲನಾದರೆ, ಖೂನಿಯನ್ನು ಮಾಡಿದ್ದರೂ ಮಾಡಿಲ್ಲವೆಂದು ಸುಳ್ಳು ಪ್ರತಿಪಾದನೆ ಮಾಡಬೇಕಾಗಬಹುದೆಂಬ ಕಲ್ಪನೆಗಳಿಂದ ವ್ಯಾಕುಲನಾಗಿ ಆ ಎಲ್ಲ ಮಾರ್ಗಗಳನ್ನು ಬಿಟ್ಟು ಕೊಟ್ಟು, ಎಂ.ಏ. ಪರೀಕ್ಷೆಯಾದ ಕೂಡಲೇ, ಶಿಕ್ಷಕನಾಗಿಬಿಟ್ಟ. +ಬುದ್ದನಂತೆ ಅವನದೂ ಇದೊಂದು ಪ್ರಕಾರದ ಸನ್ಯಾಸವೇ ಆಗಿತ್ತು. +ಈ ತೆರದ ಅಳ್ಮನವು (Sensitiveness) ಒಳ್ಳೆಯದಲ್ಲವೆಂದೂ ಅವನಿಗೆ ನಡುನಡುವೆ ಅನಿಸುತ್ತಿತ್ತು. +ಆದರೆ ಏನು ಮಾಡಿದರೂ ಅವನಿಗೆ ಅದನ್ನು ಹೋಗಲಾಡಿಸುವ ಉಪಾಯ ತೋಚಲಿಲ್ಲ. +ಬುದ್ಧಿವಾದವೆಂದರೆ ಸ್ಪಷ್ಟವಾದ ಮಾರ್ಗವನ್ನು ತೋರಿಸುವ ಮಿಂಚುದೀಪವೇನೋ ನಿಜ! +ಆದರೆ ಕುರುಡ ಭಾವನೆಗಳಿಗೆ ಅದರಿಂದೇನು ಪ್ರಯೋಜನ? +ವಸ್ತುವು ಎಷ್ಟು ಸಣ್ಣದಾಗಿದ್ದರೂ ಪೃಥ್ವಿಯ ಆಕರ್ಷಣವನ್ನು ತಪ್ಪಿಸಲಾರದು. +ಆಕೆಯ ಸುಂದರವಾದ ಕಣ್ಣುಗಳ ಭವಿತವ್ಯದ ಭೀತಿಯಿಂದ ವಿಚಾರ ಮಾಡುವ ಆತನ ಭಾವನಾಮಯ ಹೃದಯವಾದರೂ ಕಟ್ಟ ಕಡೆಗೆ ಕಟಾಕ್ಷಜಾಲದಲ್ಲಿ ಸಿಲುಕಿಯೇ ಬಿಟ್ಟಿತು! +ಎಷ್ಟೋ ಸಾರೆ ತನ್ನ ಕಣ್ಣುಗಳ ಕಡೆಗೆ ನೋಡುತ್ತಿರುವಾಗ ಅನಂತ ಅವಳ ಕೈಗೆ ಸಿಕ್ಕಿದ್ದ. +ಆಗ ಅವಳು ನಸುನಗುತ್ತ ಕೇಳುತ್ತಿದ್ದಳು. +"ಇತ್ತೀಚೆಗೆ ಹುಚ್ಚು ಹಿಡಿದದೆ ಕಾಣುತ್ತದೆ?" +"ಇಲ್ಲವೆಂದು ಯಾರು ಹೇಳುವರು?" +"ಯಾತರದು ಅದು ಹುಚ್ಚು?ನನ್ನದೆ?" +"ನಿನ್ನದಲ್ಲ""ಹೀಗೇನು? +ಎರಡನೇಯವಳ ಕೂಡ ನನ್ನನ್ನು ಹೋಲಿಸಿ ನೋಡುವ ಸಲುವಾಗಿಯೇ ಇಷ್ಟು ದಿಟ್ಟಿಸಿ ನೋಡುವಿರಿ ಅಲ್ಲವೆ? +ಹೌದಲ್ಲಽ?""ಹಾಗಲ್ಲಽ!" +"ಹಾಗಾದರ ಹ್ಯಾಗರೀ"ಆಕೆಯ ಈ ತಾಲಬದ್ದ ಪ್ರಶ್ನೆಯಾದ ನಂತರ ಇಬ್ಬರೂ ಮನ ಸೋಕ್ತವಾಗಿ ನಗುತ್ತಿದ್ದರು. +ಅನಂತ ಹೇಳುತ್ತಿದ್ದ. +"ನನಗೆ ಹುಚ್ಚು ಹಿಡಿದದ್ದು ನಿನ್ನ ಕಣ್ಣುಗಳದು!" +"ಅಂಥಾದ್ದೇನು ತುಂಬಿಕೊಂಡಿದೆ ಅದರಲ್ಲಿ? +ಬಹಳವಾದರೆ ಒಂದಿಷ್ಟು ನೀರು ಇದ್ದಿರಬಹುದು. +ಅಷ್ಟೆ!?""ಬರೆ, ನೀರು ತುಂಬಿದ್ದಾದರೆ ಮನುಷ್ಯನಿಗೆ ಅಷ್ಟೇನೂ ಹುಚ್ಚು ಹಿಡಿಯುತ್ತಿರಲಿಲ್ಲ! +"ಆಕೆಗೆ ಇನ್ನು ಮುಂದೆ ನಗುತಡೆಯಲಿಕ್ಕಾಗುತ್ತಿದ್ದಿಲ್ಲ. +ಅನಂತನು ಗಂಭೀರವಾಗಿ ಹೇಳುತ್ತಿದ್ದ "ಆಕೆ, ನೀನೊಂದು ಹೂವು, ನಿನ್ನ ಈ ಕಣ್ಣುಗಳೆಂದರೆ ಆ ಹೂವಿನ ಸುವಾಸ." +ಮಧ್ಯರಾತ್ರಿಯ ಸಮಯದಲ್ಲಿ ಆಕೆಗೆ ನಿದ್ರೆಹತ್ತಿದಾಗ, ಅವಳ ಮುಚ್ಚಿಕೊಂಡ ಕಣ್ಣುಗಳನ್ನು ನೋಡಿ ಅನಂತನ ಮನಸ್ಸಿನಲ್ಲಿ ಇಲ್ಲದ ವಿಚಾರಗಳು ಬರುತ್ತಿದ್ದವು. +ಸಂಧ್ಯಾ ಸಮಯದಲ್ಲಿ ಮುಚ್ಚಿಕೊಂಡ ಹೂವುಗಳೆಲ್ಲವೂ ಪ್ರಭಾತದಲ್ಲಿ ಮತ್ತೆ ಅರಳುವವಷ್ಟೇ! +ನಿಸರ್ಗದಲ್ಲಿ ಈ ನಿಯಮಕ್ಕೆ ಏನಾದರೂ ಅಪವಾದಗಳಿರಬಹುದೋ? +ಆತನ ಇಂಥ ವಿಚಿತ್ರ. +ವಿಕೃತ ವಿಚಾರಗಳು ಒಂದು ದಿನ ಅವನು ಶಾಲೆಯಲ್ಲಿ ಪಾಠ ಹೇಳುತ್ತಿರುವಾಗಲೇ ತಲೆದೋರಿದವು. +ಇಂಗ್ರೇಜಿಯಲ್ಲಿ ನಿಬಂಧದ ಸಲುವಾಗಿ ಅವನು ಹುಡುಗರಿಗೆ ಬುದ್ಧನ ಚರಿತ್ರೆ ಹೇಳುತ್ತಿದ್ದ. +ರೋಗಿಯನ್ನೂ ಹೆಣವನ್ನೂ ನೋಡಿ ಬುದ್ಧನಿಗೆ ಬಂದ ವೈರಾಗ್ಯ- ಮಾಸ್ತರರು ಒಮ್ಮೆಲೆ ಸ್ತಬ್ಬರಾಗಿ ಶೂನ್ಯದೃಷ್ಟಿಯಿಂದ ಏನು ನೋಡುತ್ತಿರಬಹುದೆಂಬದು ವರ್ಗದಲ್ಲಿಯ ಹುಡುಗರಿಗೆ ಎಂದೂ ತಿಳಿಯಲಿಲ್ಲ. +ಆದರೆ ಬುದ್ಧನ ವೈರಾಗ್ಯದ ಜೊತೆಯಲ್ಲಿ ಅನಂತನಿಗೆ ಆಕೆಯ ಕಣ್ಣುಗಳ ನೆನಪಾಗಿತ್ತು! +ಆ ದಿವಸ ಆತನಿಗೆ ಮನೆಗೆ ಬರಲಿಕ್ಕೆ ಕೂಡ ಸ್ವಲ್ಪ ಭಯವೆನಿಸಹತ್ತಿತು! +ಆಕೆಯ ಮೋಹಕವಾದ ಕಣ್ಣುಗಳು, ಮತ್ತು ಬುದ್ಧನ ವೈರಾಗ್ಯದ ಕಥೆ! +ಶಾಲೆ ಬಿಟ್ಟ ಕೂಡಲೆ ಮನೆಗೆ ಬರದೆಯೇ ತಿರುಗಾಡಲಿಕ್ಕೆ ಹೋದ. +ತಿರುಗಿ ಬರುವಾಗ ದಾರಿಯಮೇಲಿನ ದೇವಾಲಯವನ್ನು ಸಹಜವಾಗಿಯೇ ಸೇರಿದ! +ದೇವಾಲಯದ ಸಭಾಮಂಟಪದ ಮುಂದಿನ ಕಟ್ಟೆಯಮೇಲೆ ನಲಿಯುವ ಪಾರಿವಾಳಗಳನ್ನು ನೋಡಿ ಅವನು ಯಾವಾಗಲೂ ಆನಂದಬಡುತ್ತಿದ್ದ. +ತರತರದ ಬಣ್ಣಗಳ "ಕುಹು ಕುಹು" ಸಪ್ಪಳ ಮಾಡುತ್ತಿದ್ದ ಆ ಪಾರಿವಾಳಗಳನ್ನು ಅವನು ನೋಡುತ್ತಿರುವಾಗಲೇ ಒಬ್ಬ ಹುಡುಗ ಮೆಲ್ಲನೆ ಬಂದು ಒಂದು ಪಾರಿವಾಳವನ್ನು ಹಿಡಿದುಕೊಂಡು ಕೆಳಗೆ ಇಳಿದು ಬಂದ. +ಅನಂತನು ತಿರುಗಿ ನೋಡಿದ. +ಆಚೆಯ ಕಡೆಗೆ ನಿಂತಿರುವ ಮುದುಕಿಯೊಬ್ಬಳು ಅದನ್ನು ಗಟ್ಟಿಯಾಗಿ ಹಿಡಿದುಕೊಂಡಳು. +ಆ ಪಾರಿವಾಳದ ಮಂದವಾದ ಆಕ್ರಂದನವೂ ರೆಕ್ಕೆಗಳ ಫಡಫಡಾಟವೂ ಅವನಿಂದ ಕೇಳಲಾಗದಾಯಿತು. +ಅವನು ಸ್ವಲ್ಪ ಸಿಟ್ಟಿನಿಂದಲೇ ಅಂದ-"ಬಿಡಬಾರದೇ, ತಾಯಿ, ಆ ಬಡ ಹಕ್ಕಿನ್ನಽ"ದುರದುರನೆ ಆತನನ್ನು ನೋಡುತ್ತ ಮುದುಕಿ ಅಂದಳು "ಹಾಂಗಾರ ನನ್ನ ಹುಡುಗನ್ನೇನ ನೀ, ಬದಕಸತೀದ್ಯಾ?" + ಆ ಮುದುಕಿಯ ಒಬ್ಬನೇ ಮಗ, ಗಳಿಸಿ ಹೊಟ್ಟೆಗೆ ಹಾಕುವವ, ಸಂಧಿವಾತದಿಂದ ಹಾಸಿಗೆ ಹಿಡಿದ್ದರಿಂದ ಈ ಪಾರಿವಾಳವನ್ನು ಮುದುಕಿ ಒಯ್ಯುತ್ತಿದ್ದಳೆಂದು ಅನಂತನಿಗೆ ತಿಳಿದುಬಂದಿತು. +ಆ ಪಾರಿವಾಳದ ಧಡಪಡಿಕೆಯು, ತನ್ನ ಹೃದಯದ ಪ್ರತಿಧ್ವನಿಯೇ ಎಂದು ಅವನಿಗೆ ಕ್ಷಣಮಾತ್ರ ಭಾಸವಾಯಿತು. +ಆದರೆ ಮರುಕ್ಷಣವೇ ಆತನ ಔದಾಸ್ಯಮಯವಾದ ಮನಸ್ಸಿಗೆ ಆನಂದವಾಯಿತು. +ಆಯುಷ್ಯದಲ್ಲಿ ಪ್ರತಿಯೊಬ್ಬನಿಗೂ ಕಠಿಣವಾದ ಪ್ರಶ್ನೆಗಳನ್ನು ಬಿಡಿಸಬೇಕಾಗುತ್ತದೆ. +ಪ್ರಶ್ನೆ ಬಿಡಿಸುವವ ರಾಜಪುತ್ರ ಸಿದ್ಧಾರ್ಥನೂ ಇರಬಹುದು ಅಥವಾ ಕೂಲಿಕುಂಬಳಿಗಳಿಂದ ಹೊಟ್ಟೆ ಹೊರೆಯುವ ಮುದುಕಿಯೂ ಇರಬಹುದು. +ಮುದುಕಿಯ ಉತ್ತರವು ಬುದ್ದನದಕ್ಕಿಂತ ತೀರ ಬೇರೆಯಾಗಿತ್ತು. +ಅವಳದೇ ನಿಜವಾಗಿರಬಹುದು. +ಇದನ್ನು ಹೇಳುವವರು ಯಾರು? +ತನ್ನ ಇಂಥ ವಿಚಿತ್ರ ಭಾವನೆಗಳೆಲ್ಲ ಪುಟಿದು ಮೇಲಕ್ಕೆ ಬಂದಾಗೆಲ್ಲ ಅವನು ಆ ಮುದುಕಿಯ ವಿಷಯದಲ್ಲಿ ಮನಸ್ಸಿನಲ್ಲಿಯೇ ವಿಚಾರ ಮಾಡುವ. +ಕೆಲ ದಿನ ಈ ಉಪಾಯವು ಒಳ್ಳೆಯದಾಗಿ ನಡೆದರೂ ಕಡೆಗೆ ಮಂತ್ರದಕ್ಕಿಂತಲೂ ಭೂತವೇ ಬಲವತ್ತರವಾಗಿದೆ ಎಂದು ಅನಂತನಿಗೆ ಕಂಡು ಬಂದಿತು. +ಆಕೆಯು ಗರ್ಭವತಿಯಾಗಿದ್ದಾಳೆಂದು ತಿಳಿದ ಕೂಡಲೆ ಆತನಿಗೆ ಆನಂದವಾಗಿತ್ತೆಂಬುದರಲ್ಲಿ ಸಂಶಯವಿಲ್ಲ. +ಆದರೆ ಮುಂದೆ ಅವಳಿಗೆ ವಾಂತಿಯಾಗುವದು ಅವನಿಗೆ ನೋಡಲಸಹ್ಯವಾಯಿತು. +ಅವಳಿಗೆ ಅನ್ನದ ರುಚಿಯಿಲ್ಲದ ವೇಳೆಯಲ್ಲಿ ತಾನು ಮಾತ್ರ ಮೊದಲಿನಂತೆ ಯಥೇಚ್ಛವಾಗಿ ಊಟ ಹೊಡೆಯಹತ್ತಿರಬೇಕೆಂಬ ವಿಚಾರವು ಬಂದ ಕೂಡಲೆ ಅವನಿಗೆ ಹೇಗೋ ಎನಿಸಿಬಿಡುತ್ತಿತ್ತು. +ನಡುನಡುವೆ ಆಕೆಗೆ ಮೈಯ್ಯಲ್ಲಿ ಸ್ವಾಸ್ಥ್ಯವಿಲ್ಲದಂತಾದ ಕೂಡಲೇಯಂತೂ ಅನಂತನ ಮುಖ ಮುದ್ರೆಯು ಏನೋ ಒಂದು ದೊಡ್ಡ ದೋಷನಾವರಿಸಿದಂತೆ ದೀನವಾಗಿ ಕಾಣುತ್ತಿತ್ತು. +ಆತನ ಈ ದುಃಖಕ್ಕೆ ಆಕೆಯ ಕಣ್ಣುಗಳು ಕಳಸವನ್ನೇರಿಸಿಬಿಟ್ಟವು. +ಸ್ವಚ್ಛವಾದ ಸೆಲೆಯ ನೀರು ಕಲುಕಿ ಹೋದಂತೆ ಅವು ಅವನಿಗೆ ಕಾಣಿಸತೊಡಗಿದವು. +ಅವಳ ಕಣ್ಣುಗಳ ಸುತ್ತಲೂ ಕರಗಿನ ವರ್ತುಲಗಳು ಕಾಣಿಸಹತ್ತಿದ ಕೂಡಲೆ ತನ್ನ ಪ್ರೀತಿಯ ಸೌಂದರ್ಯದ ನಾಶವು ಸಮೀಪಿಸಿತೆಂದೇ ಅವನು ಮನವರಿಕೆ ಮಾಡಿಕೊಂಡು ಬಿಟ್ಟ. +ಆಕೆಯು ಸುಖರೂಪವಾಗಿ ಪಾರಾದಳು. +ಅನಂತನು ಹುಡಿಗೆಯನ್ನು ಕೈಯಲ್ಲಿ ಎತ್ತಿಕೊಂಡಾಗ, ಅನಪೇಕ್ಷಿತವಾಗಿ ಆಟಿಗೆ ಸಿಕ್ಕ ಕೂಡಲೆ, ಚಿಕ್ಕ ಮಕ್ಕಳ ಮುಖದ ಮೇಲೆ ಮಿಂಚುವ ಆನಂದ, ಅತನ ಮುಖದ ಮೇಲೆ ಕುಣಿಯುತ್ತಿತ್ತು. +ಆದರೆ ಕೂಸನ್ನು ತಿರುಗಿ ಆಕೆಯ ಕೈಯ್ಯಲ್ಲಿ ಕೊಡುವಾಗ ಅವಳ ಕಣ್ಣುಗಳನ್ನು ನೋಡಿದ. +ಅವು ನಿಸ್ತೇಜವಾಗಿದ್ದವು. +ಯಾಕೋ, ಯಾರು ಹೇಳಬೇಕು, ಆತನಿಗೆ ಒಮ್ಮೆಲೆ ತನ್ನ ಮಗನ ಸಲುವಾಗಿ ಆ ಮುದುಕಿಯು ಒಯ್ದ ಪಾರಿವಾಳದ ನೆನಪಾಯಿತು. +ಹತ್ತು ದಿವಸ ಪ್ರತಿನಿತ್ಯವೂ ಅವನು ಆಕೆಯ ಬಳಿಯಲ್ಲಿ ಹೋಗುತ್ತಿದ್ದ, ಕೂಸು ಎತ್ತಿ ಕೊಳ್ಳುತ್ತಿದ್ದ, ಅಲ್ಲಿಯ ಇಲ್ಲಿಯ ಹರಟೆ ಹೊಡೆಯುತ್ತಿದ್ದ, ಆದರೆ ಇದೆಲ್ಲವೂ, ಕಾಲಲ್ಲಿ ಮುಳ್ಳು ಮುರಿದಿದ್ದರೂ, ಕವಾಯತಿಯ ಕಾಲದಲ್ಲಿ ಶಿಪಾಯಿಯ ವ್ಯವಸ್ಥಿತವಾದ ಓಡುವಿಕೆಯಂತೆಯೇ ಇತ್ತು. +ಆಕೆಯು ಮನೆಗೆ ಬಂದಳು ಹನ್ನೆರಡನೆಯ ದಿನ ತೊಟ್ಟಿಲಲ್ಲಿ ಹಾಕಿ ಹೆಸರಿಡುವ ಸಿದ್ಧತೆಯೂ ಆಯಿತು. +ಗಂಡಹೆಂಡರಿಬ್ಬರೂ ಹುಡಿಗೆಗೆ ಇಡಬೇಕಾದ ಹೆಸರಿಗಾಗಿ ಅಧುನಿಕ ನಾಟಕ ಕಾದಂಬರಿಗಳಲ್ಲಿಯ- ನಾಯಿಕೆಯರ ಹೆಸರುಗಳನ್ನೆಲ್ಲ ಶೋಧಿಸಿ ನೋಡಿದರು. +ಏನು ಮಾಡಿದರೂ ಇಬ್ಬರದೂ ಏಕಮತವಾಗಲೊಲ್ಲದು. +ಕಡೆಗೆ ಇಬ್ಬರೂ ತಮ್ಮ ತಮ್ಮ ಹೆಸರಿನ ಚೀಟಿಹಾಕಿ, ಅದರಲ್ಲಿ ಬಂದದ್ದನ್ನು ಇಡಬೇಕೆಂದು ಗೊತ್ತಾಯಿತು. +ಆಕೆಯು ಚೀಟಿ ಬರೆಯ ಹತ್ತಿದಳು. +ಅನಂತ ಹುಡುಗಿಯನ್ನು ಎತ್ತಿಕೊಂಡ. +ಆ ಮಗುವಿನ ಕಣ್ಣುಗಳ ಕಡೆಗೆ ದಿಟ್ಟಿಸಿ ನೋಡಿದ ಮಾತ್ರ! +ಪ್ರತಿ ಕ್ಷಣವೂ ಆತನ ಆಶ್ಚರ್ಯ ಹೆಚ್ಚಾಗಹತ್ತಿತು. +ಅವನು ಆಕೆಯ ಹತ್ತಿರ ಬಂದು ಕೇಳಿದ "ನೀನು ಹನ್ನೆರಡು ದಿವಸದವಳಿರುವಾಗ ಹೇಗೆ ಕಾಣುತ್ತಿರಬಹುದು?" +"ಹೋಗಿರೀ; ಏನಾದರೊಂದು ನಿಮ್ಮದು!" +"ಇದು ನೋಡು ಹೀಗೆ! +ನೋಡಿದಿಯಾ ಈ ಮುದ್ದಿನ ಕಣ್ಣುಗಳನ್ನ?" ಅನಂತನು ಆನಂದದಿಂದ ಉದ್ಗಾರ ತೆಗೆದ. +ಆ ಕ್ಷಣಕ್ಕೆ ಬುದ್ಧನು ಜೀವಿಸಿದ್ದರೆ, ಆತನ ತತ್ವಜ್ಞಾನವನ್ನು ಖಂಡಿಸುವ ಆ ಎರಡು ಮಾಟಾದ ಮುದ್ದು ಕಣ್ಣುಗಳನ್ನು ನೋಡಲಿಕ್ಕೆ ತಾನು ಅವಶ್ಯವಾಗಿ ಆತನನ್ನು ಕರೆದುಕೊಂಡು ಬರಬಹುದಾಗಿತ್ತೆಂಬ ವಿಚಾರವು ಅವನ ಮನಸ್ಸಿನಲ್ಲಿ ಬರದೇ ಇರಲಿಲ್ಲ. +ಅನಂತನು ಕೈಯ್ಯಲ್ಲಿಯ ಕೂಸಿಗೆ ಪಟ ಪಟನೆ ಮುದ್ದಿಟ್ಟ. +ಆತನ ಕೈಯೊಳಗಿಂದ ಮಗುವನ್ನು ಇಸಿದುಕೊಳ್ಳಲಿಕ್ಕೆ ಕೈ ಮುಂದಕ್ಕೆ ಮಾಡುತ್ತ ಆಕೆಯು ಕೇಳಿದಳು. +"ಈಗ ಇದು ಎರಡನೆ ಹುಚ್ಚು ಹಿಡಿಯಿತು ಕಾಣಸತದ" +"ಛ!ಇದು ಮೊದಲಿನದೆ! +ಇವಳ ಕಣ್ಣುಗಳು ನಿಜವಾಗಿಯೂ ನಿನ್ನಂತೆಯೇ ಅವೆಯಲ್ಲ!" +"ನನ್ನಂತೆಯೇನೆ?"ಹೌದೆನ್ನಬೇಕೆಂದು ಅನಂತನು ಆಕೆಯ ಕಡೆಗೆ ನೋಡಿದ. +ಆದರೆ ಅವಳ ಕಣ್ಣುಗಳಲ್ಲಿ ಯಾವದೋ ಒಂದು ಬೇರೆ ತರದ ಮೋಹಕತೆ ಕಂಡುಬಂದಿತು. +ಕೈಯಲ್ಲಿಯ ಕೂಸಿನ ಕಡೆಗೆ ಅವಳು ವಾತ್ಸಲ್ಯದಿಂದ ನೋಡುತ್ತಿದ್ದಳು. +ಸಮುದ್ರದಲ್ಲಿಯ ರತ್ನಗಳೆಲ್ಲವೂ ಇಲ್ಲದಂತಾಗಿ ಅಲ್ಲಿ ಲಕ್ಷ್ಮಿಯನ್ನೇ ಕಂಡಂತೆ ಅಥವಾ ಆಕಾಶದಲ್ಲಿಯ ತಾರೆಗಳ ತೇಜವೆಲ್ಲವೂ ಲೋಪವಾಗಿ ಅಲ್ಲಿ ಬೆಳದಿಂಗಳೇ ಅರಳಿದಂತೆ ಅವನಿಗೆ ಭಾಸವಾಯಿತು. +ಆಕೆಯನ್ನು ಮೊದಲನೆಯ ಸಾರೆಯೇ ನೋಡುತ್ತಿರುವಂತೆ ಅನಂತ ಆನಂದದಲ್ಲಿ ಉದ್ಗಾರ ತೆಗೆದ. +"ಕಣ್ಣುಗಳಲ್ಲಿ ಅನಂತ ಪ್ರಕಾರಗಳಿವೆ ಎಂಬುದೇ ನಿಜ?"