From e7ad355b41f850d318665b11082af4ac97207e25 Mon Sep 17 00:00:00 2001 From: Narendra VG Date: Mon, 17 Apr 2023 15:41:13 +0530 Subject: [PATCH] Upload New File --- ...2\340\262\241\340\262\270\340\263\206.txt" | 5882 +++++++++++++++++ 1 file changed, 5882 insertions(+) create mode 100644 "Data Collected/Kannada/MIT Manipal/Kannada-Scrapped-dta/\340\262\206\340\262\270\340\262\260\340\263\206-\340\262\262\340\262\225\340\263\215\340\262\267\340\262\243_\340\262\225\340\263\212\340\262\241\340\262\270\340\263\206.txt" diff --git "a/Data Collected/Kannada/MIT Manipal/Kannada-Scrapped-dta/\340\262\206\340\262\270\340\262\260\340\263\206-\340\262\262\340\262\225\340\263\215\340\262\267\340\262\243_\340\262\225\340\263\212\340\262\241\340\262\270\340\263\206.txt" "b/Data Collected/Kannada/MIT Manipal/Kannada-Scrapped-dta/\340\262\206\340\262\270\340\262\260\340\263\206-\340\262\262\340\262\225\340\263\215\340\262\267\340\262\243_\340\262\225\340\263\212\340\262\241\340\262\270\340\263\206.txt" new file mode 100644 index 0000000..379a598 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\206\340\262\270\340\262\260\340\263\206-\340\262\262\340\262\225\340\263\215\340\262\267\340\262\243_\340\262\225\340\263\212\340\262\241\340\262\270\340\263\206.txt" @@ -0,0 +1,5882 @@ +ಲಕ್ಷ್ಮಣ ಕೊಡಸೆ ಶಿವಮೊಗ್ಗ ಜಿಲ್ಲೆಯಿಂದ ಬಂದ ಮಲೆನಾಡಿನ ಬರೆಹಗಾರ. +ಪತ್ರಿಕೋದ್ಯಮ ಮತ್ತು ಸಾಹಿತ್ಯಕೃಷಿಯಲ್ಲಿ ತಮ್ಮದೇ ಛಾಪನ್ನು ಮೂಡಿಸಿದ ಸಂಸ್ಕೃತಿ ಚಿಂತಕರು. +ಐದು ಕಥಾ ಸಂಕಲನ, ಒಂಬತ್ತು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. +ವ್ಯಕ್ತಿಚಿತ್ರ,ಅಂಕಣ ಬರಹ,ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಕೃಷಿ ಮಾಡಿದ್ದಾರೆ. +ಪ್ರಜಾವಾಣಿ ಪತ್ರಿಕೆಯಲ್ಲಿ 1978ರಲ್ಲಿ ಉಪಸಂಪಾದಕರಾಗಿ ಸೇರಿ ನಾಡಿನ ನಾನಾ ಭಾಗಗಳಲ್ಲಿ ಕೆಲಸ ಮಾಡಿ 2012ರಲ್ಲಿ ನಿವೃತ್ತಿ ಆದರು. +ಪತ್ರಿಕೆಯ ಸಹಾಯಕ ಸಂಪಾದಕರಾಗಿ ಹಲವು ವರ್ಷಗಳ ಕಾಲಸಾಪ್ತಾಹಿಕ ವಿಭಾಗದ ಮುಖ್ಯಸ್ಥರಾಗಿ ನೂರಾರು ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತಂದವರು. +ಹತ್ತಾರು ಅಭಿನಂದನಾ ಕೃತಿಗಳನ್ನು ಸಂಪಾದಿಸಿದವರು. +'ಕೊಡಸೆ ಅವರ ಕಥೆಗಳು ಮತ್ತು ಪತ್ರಿಕಾ ಬರೆಹಗಳ'ಕುರಿತಾಗಿ ಸಂಶೋಧನೆ ನಡೆಸಿದ ಬಿ.ಕೆ.ಪಂಡಿತ್‌ ಗುಲಬರ್ಗ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದಿದ್ದಾರೆ. +ಕಂದಾಯ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಎನ್‌.ಕೆ.ಶಾರದಾಂಬ ಅವರು "ಕೊಡಸೆ ಅವರ ಕಾದಂಬರಿಗಳು ಮತ್ತು ಅಂಕಣ ಬರೆಹಗಳ ಅಧ್ಯಯನ" ನಡೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪಡೆದಿದ್ದಾರೆ. +ಲಕ್ಷ್ಮಣ ಕೊಡಸೆ ಅವರಿಗೆ ಮಂಗಳೂರಿನ ಸಂದೇಶ ಪ್ರತಿಷ್ಠಾನದಿಂದ ಸಂದೇಶ ಮಾಧ್ಯಮ ಪ್ರಶಸ್ತಿ,ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಮಾಧ್ಯಮ ಗೌರವ ಪ್ರಶಸ್ತಿ ಮತ್ತು ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. +ನಾಲ್ಕು ದಶಕಗಳಿಂದ ಪತ್ರಕರ್ತನಾಗಿ ಕೆಲಸ ಮಾಡುತ್ತಿರುವ ನನಗೆ ಕಥೆ, ಕಾದಂಬರಿ,ವ್ಯಕ್ತಿಚಿತ್ರ, ವಿಮರ್ಶೆಯಕ್ಷೇತ್ರದಲ್ಲಿ ಕೆಲಸ ಮಾಡಿರುವುದು ಸೋಜಿಗದ ಸಂಗತಿ. +ಇದೆಲ್ಲ ಸಾಧ್ಯವಾಯಿತೇ ಎಂಬ ಬೆರಗು. +ಸಾಹಿತ್ಯದ ಅಭಿರುಚಿಯೇನೋ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿ ಆಗಿದ್ದಾಗಲೇ ಆರಂಭವಾಗಿತ್ತು. +ಬರವಣಿಗೆಯ ಮೂಲಕ ಅಭಿವ್ಯಕ್ತಿ ಕಂಡುಕೊಳ್ಳುವ ಯತ್ನ ಹೈಸ್ಕೂಲು ದಿನಗಳಲ್ಲಿಯೇ ಆರಂಭವಾಗಿತ್ತು. +ಒಂಬತ್ತನೇ ತರಗತಿಯಲ್ಲಿದ್ದಾಗ ಹದಿಹರಯದ ಸಹಪಾಠಿಯೊಬ್ಬನ ಪ್ರೇಮಪತ್ರ ಹಗರಣವನ್ನು ಆಧರಿಸಿ ಎಕ್ಸರ್‌ಸೈಜ್‌ಹಾಳೆಯಲ್ಲಿ ಒಂದು ಪತ್ತೇದಾರಿ ಕಥೆಯನ್ನು ಬರೆದಿದ್ದೆ. +ನಿಡುಗಾಲದಿಂದ ಸ್ನೇಹವನ್ನು ಉಳಿಸಿಕೊಂಡು ಬಂದಿರುವ ಬರುವೆ ತಿಮ್ಮಪ್ಪ ಆ ಕತೆಯನ್ನು ಓದಿ ಉತ್ತೇಜನ ನೀಡಿದ್ದ. +ನಂತರ ನನ್ನ ಬರವಣಿಗೆ ಮುಂದುವರಿಯಲು ಬೆಂಗಳೂರು ವಿಶ್ವವಿದ್ಯಾಲಯದ ಆನರ್ಸ್‌ ಪದವಿ ಕೋರ್ಸ್‌ಗೆ ಸೇರಿಕೊಳ್ಳುವವರೆಗೆ ಕಾಯಬೇಕಾಯಿತು. +ಸಾಹಿತ್ಯಾಸಕ್ತಿಯ ಕಾರಣದಿಂದ ಆಯ್ಕೆ ಮಾಡಿಕೊಂಡ ಕನ್ನಡ ಆನರ್ಸ್‌ ಪದವಿ ಅಧ್ಯಯನದ ಎರಡನೇ ವರ್ಷದಲ್ಲಿ ಬರೆದ ಮೊಟ್ಟ ಮೊದಲ ಕತೆಗೆ ಬೆಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಕಥಾಸ್ಪರ್ಧೆಯಲ್ಲಿ ಮೊದಲ ಸ್ಥಾನ ಬಂದಿತು. +ಬಹುಮಾನ ಬಂದಿರುವುದನ್ನು ಉಲ್ಲೇಖಿಸಿ ಕಳುಹಿಸಿದ ಕತೆಯನ್ನು ಆಗ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯ ಉಸ್ತುವಾರಿಯಲ್ಲಿದ್ದ ಬಿ.ವಿ.ವೈಕುಂಠರಾಜು ಪ್ರಕಟಿಸಿದರು. +ಬರವಣಿಗೆಯಲ್ಲಿ ಭರವಸೆ ಮೂಡಿದ್ದು ಆ ಉತ್ತೇಜನ. +“ಬರೆಯಬಲ್ಲಿರಿ' ಎಂದು ಪ್ರೋತ್ಸಾಹ ನೀಡಿದವರು ಈಗ ಸಾಹಿತ್ಯ ವಿಮರ್ಶಕರಾದ ನರಹಳ್ಳಿ ಬಾಲಸುಬ್ರಹ್ಮಣ್ಯ, ಆನರ್ಸ್‌ ಅಧ್ಯಯನದ ದಿನಗಳಲ್ಲಿ ಉತ್ತೇಜನ ನೀಡಿದವರ ದೊಡ್ಡ ಸಾಲೇ ಇದೆ. +ಅವರಲ್ಲಿ ಶ್ರೀನಿವಾಸರಾಜು, ಡಿ.ವಿ.ರಾಜಶೇಖರ ಅವರು ಪ್ರಮುಖರು. +ಆನರ್ಸ್‌ ಮುಗಿಸುವವರೆಗೆ ಬರೆದ ಕತೆಗಳು ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. +ಅದೊಂದು ಸಾಧನೆ ಎಂಬ ಭಾವಮೊಳೆಯುತ್ತಿದ್ದಾಗ ಆನರ್ಸ್‌ ಮುಗಿದು ಸ್ನಾತಕೋತ್ತರ ಪದವಿಗೆ ಪ್ರವೇಶಿಸಿ ಆಗಿತ್ತು. +ಹಂಪನಾ,ಕೆ.ಮರುಳಸಿದ್ದಪ್ಪ ಚಂದ್ರಶೇಖರ ಕಂಬಾರ, ಕೆ.ವಿ.ನಾರಾಯಣ ಮಾತ್ರವಲ್ಲದೆ,ನಿಸಾರ್ ಅಹಮದ್‌, ಈಶ್ವರಚಂದ್ರ, ದೊಡ್ಡರಂಗೇಗೌಡ, ಕೆ.ಎಂ.ಕೋದಂಡರಾಮ್‌, ಎಚ್‌.ಎಸ್‌.ರಾಘವೇಂದ್ರರಾವ್‌, ಎಚ್‌.ಎಸ್‌.ಶಿವಪ್ರಕಾಶ್‌ ಮೊದಲಾದವರು ಕತೆಗಾರನೆಂದು ಗುರುತಿಸಿದ್ದರು. +ಶಿವಮೊಗ್ಗ ಜಿಲ್ಲೆಯ ಎಂ.ಎನ್‌.ಜೈಪ್ರಕಾಶ್‌, ಎಂ.ಬಿ.ನಟರಾಜ್‌, ಶೇಷಾದ್ರಿ ಕಿನಾರ, ಎಂ.ಚಂದ್ರಶೇಖರಯ್ಯ,ಬಿ.ರಾಜಣ್ಣ, ಕೃಷ್ಣ ಮಾಸಡಿ, ಚಿತ್ರದುರ್ಗದ ಟಿ.ಆರ್‌.ರಾಧಾಕೃಷ್ಣ ಅವರೆಲ್ಲರ ಸ್ನೇಹವಲಯವೂ ನನ್ನ ವಿದ್ಯಾರ್ಥಿದೆಸೆಯಲ್ಲಿಯೇ ಪ್ರಾಪ್ತವಾಗಿತ್ತು. +ನಟರಾಜ್‌ ಸಂಪಾದಿಸಿದ "ಮಲೆನಾಡಿನ ಕತೆಗಳು'ಸಂಕಲನದಲ್ಲಿ ಕುವೆಂಪು, ಯು.ಆರ್‌.ಅನಂತಮೂರ್ತಿ, ಲಂಕೇಶ್‌, ತೇಜಸ್ವಿ ಅವರ ಕತೆಗಳ ಜೊತೆಗೆನನ್ನದೊಂದು ಕತೆಯನ್ನೂ ಸೇರಿಸಿದ್ದು ಇನ್ನಿಲ್ಲದ ಹಮ್ಮು ಬೆಳೆಯಲು ಕಾರಣವಾಯಿತು. +ಎಂ ಎ ಮುಗಿದು ಕೆಲಸಕ್ಕಾಗಿ ಮೂರು ವರ್ಷ ಪಾಡುಪಟ್ಟ ನಂತರ ಸಾಹಿತ್ಯಕ್ಕಿಂತಲೂ ಬದುಕು ದೊಡ್ಡದೆನಿಸಿತು. +ಬರವಣಿಗೆ ಪತ್ರಿಕೆಯ ಕಾಲಂಗಳನ್ನು ತುಂಬಿಸುವುದಕ್ಕೆ ಇಂಗ್ಲಿಷ್‌ನಲ್ಲಿ ಬರುತ್ತಿದ್ದ ಸುದ್ದಿಸಂಸ್ಥೆಗಳ ಸುದ್ದಿಗಳನ್ನು ಕನ್ನಡಕ್ಕೆ ರೂಪಾಂತರಿಸುವುದಕ್ಕೆ ಸೀಮಿತವಾಯಿತು. +ಆದರೂ ಬರವಣಿಗೆಯ ತುಡಿತ ಒಳಗೆಲ್ಲೋ ಇತ್ತು. +ಅಪರೂಪಕ್ಕೆ ಭೇಟಿಯಾದ ಹಳೆಯ ಮಿತ್ರರು "ಈಚೆಗೆ ಏನೂ ಬರೆದಂತೆ ತೋರುವುದಿಲ್ಲ; +ಪತ್ರಿಕಾವೃತ್ತಿ ನಿಮ್ಮಲ್ಲಿನ ಬರಹಗಾರನನ್ನು ಮುಗಿಸಿದೆಯೇ" ಎಂದೆಲ್ಲ ಕೇಳುತ್ತಿದ್ದಾಗ ಪ್ರತಿಯಾಗಿ ಹೇಳಲಾಗುತ್ತಿರಲಿಲ್ಲ. +ಬೆಂಗಳೂರಿನಲ್ಲಿ ಹತ್ತು ವರ್ಷ ಸೇವೆ ಮುಗಿಸಿ ಹುಬ್ಬಳ್ಳಿಗೆ ವರ್ಗವಾದಾಗಲೂ ಸಾಹಿತ್ಯದ ಸೆಲೆ ಜಾಗೃತವಾಗಿರಲಿಲ್ಲ. +ಅಷ್ಟಕ್ಕೂ ಆಗ ಪ್ರಜಾವಾಣಿಯಲ್ಲಿ ವೈಕುಂಠರಾಜುಇರಲಿಲ್ಲ. ಜಿ. ಎನ್‌. ರಂಗನಾಥರಾವ್‌ ಅವರ ಮಾತು ನಡೆಯುತ್ತಿದ್ದ ಸಂದರ್ಭ. +ತಾವಲ್ಲದೆ ಬೇರೆ ಯಾರೂಬರೆಯಲಾರರು (ಬರೆಯಬಾರದು) ಎಂದೇ ಅವರು ಭಾವಿಸಿ ನಿರ್ಮಿಸಿದ್ದ ಪರಿಸರ. +ಸಿಬ್ಬಂದಿಯ ಯಾವಸೃಜನಾತ್ಮಕ ಕೊಡುಗೆಯೂ ಪತ್ರಿಕೆಯಲ್ಲಿ ಪ್ರಕಟಿಸುವಂಥದ್ದಲ್ಲ ಎಂಬ ವಾತಾವರಣವನ್ನು ಅವರು ಸೃಷ್ಟಿಸಿದ್ದರು. +ಆದರೆ ಕಾಲ ಸರಿದಂತೆ ರಂಗನಾಥರಾವ್‌ ನಿವೃತ್ತರಾದರು. +ಮೂವತ್ತೈದಕ್ಕೂ ಹೆಚ್ಚು ವರ್ಷಗಳ ಕಾಲ ಪ್ರಜಾವಾಣಿಯಲ್ಲಿ ಕೆಲಸ ಮಾಡಿದ್ದವರು ಯಾರಿಗೂ ಹೇಳದೆ,ಔಪಚಾರಿಕ ಬೀಳ್ಕೊಡುಗೆಯನ್ನೂ ಪಡೆಯದೆ ನಿವೃತ್ತರಾದರು. +ಅವರ ನಂತರ ಕೆ.ಶ್ರೀಧರ ಆಚಾರ್‌ ಬಂದರಾದರೂ, ಅವರ ಕಾಲದಲ್ಲಿಯೂ ಸೃಜನಶೀಲತೆಗೆ ಅವಕಾಶ ಇರಲಿಲ್ಲ. +ಆ ನಂತರದ ದಿನಗಳಲ್ಲಿ 2000ನೇ ಇಸವಿಯ ಸುಮಾರಿಗೆ ಸಿಬ್ಬಂದಿಗೆ ಬರೆಯುವ ಅವಕಾಶ ಸಿಕ್ಕಿತು. +ಅದಕ್ಕೆ ಕಾರಣರಾದವರು ಸಂಪಾದಕರಾಗಿ ಬಂದ ಶ್ರೀಕೆ.ಎನ್‌.ಶಾಂತಕುಮಾರ್‌ ಅವರು. + ಪರಿಸ್ಥಿತಿ ಅನುಕೂಲಕರವಾಗಿದೆ ಎನಿಸಿದಾಗ ಸುಮಾರು ಇಪ್ಪತ್ತು ವರ್ಷಗಳ ಬಿಡುವಿನ ನಂತರ ಬರೆದ ಕತೆಗೆ ಪ್ರಕಟಣೆಯ ಅವಕಾಶ ಕಲ್ಪಿಸಿದವರು ಆಗ ಸಾಪ್ತಾಹಿಕ ಪುರವಣಿಯ ಉಸ್ತುವಾರಿ ಹೊತ್ತಿದ್ದ ಡಿ.ವಿ.ರಾಜಶೇಖರ್‌. + ಒಂದು ಕತೆ ಪ್ರಕಟವಾಗುತ್ತಲೂ ವಿಶ್ವಾಸ ಮರುಕಳಿಸಿತು. +ಬರವಣಿಗೆ ಮುಂದುವರಿಸುವ ಧೈರ್ಯ ಬಂದಿತು. +ಪ್ರೇಮ್‌ಕುಮಾರ್‌, ಸಿ.ಜಿ.ಮಂಜುಳಾ ಅವರು ನನ್ನ ಕತೆಗಳನ್ನು ಪ್ರಕಟಿಸಿ ವಿಶ್ವಾಸ ಹೆಚ್ಚಿಸಿದರು. +ಇವರೆಲ್ಲರಿಗೆ ನನ್ನ ಕೃತಜ್ಞತೆಗಳು. +ಗದ್ಯ ಬರಹ ನನಗೆ ಇಷ್ಟವಾದದ್ದು. +ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಬರವಣಿಗೆ ಆರಂಭಿಸಿದೆ. +ಆಗ ನವ್ಯ ಪ್ರಕಾರ ಅವಸಾನದ ಅಂಚಿಗೆ ಬಂದು ನಿಂತಿತ್ತು. +ಆದರೆ ಹೊಸದಾಗಿ ಬರೆಯುವವರಿಗೆ ಅದೇ ಮಾದರಿಯಾಗಿತ್ತು. +ಅಂತಹ ಕೆಲವು ಪ್ರಯತ್ನಗಳು ಇಲ್ಲಿವೆ. +ನವ್ಯ ಪ್ರಕಾರ ಮುಟ್ಟಿದ ಕೆಲವು ಅತಿರೇಕಗಳ ಸುಳಿವನ್ನೂ ಇಲ್ಲಿ ಕಾಣಬಹುದು. +ಕೆಲವು ಕತೆಗಳಿಗೆ ನನ್ನ ಮಲೆನಾಡಿನ ಅನುಭವಗಳ ಹಿನ್ನೆಲೆ ಇದೆ. +ಹಳ್ಳಿ ಮತ್ತು ನಗರ ಬದುಕಿನ ಹಿನ್ನೆಲೆಯಲ್ಲಿ ನನ್ನ ಕಥೆಗಳ ವ್ಯಾಪ್ತಿ ಇದೆ. +ನನ್ನ ಮಲೆನಾಡಿನ ಅನುಭವ ಕೆಲವೇ ವರ್ಷಗಳಿಗೆ ಸೀಮಿತವಾದದ್ದು. +ಹುಟ್ಟೂರಿನಲ್ಲಿ ಬಾಲ್ಯದ ಕೇವಲ ಹತ್ತು ವರ್ಷಗಳನ್ನಷ್ಟೆ ಕಳೆದವನು ನಾನು. +ನಾಲ್ಕನೇ ತರಗತಿ ಮುಗಿಯುತ್ತಲೂ ಮುಂದಿನ ಎದ್ಯಾಭ್ಯಾಸದ ನೆಪದಲ್ಲಿ ಸೋದರ ಮಾವನ ಮನೆಗೆ ತೆರಳಿದವನಿಗೆ ಇನ್ನೂ ಹುಟ್ಟೂರಿಗೆ ವಾಪಸಾಗಲು ಸಾಧ್ಯವಾಗಿಲ್ಲ. +ಪಶ್ಚಿಮಕ್ಕೆ ಬಾಗಿಲು ಇರುವ ನಮ್ಮ ಮನೆ ಅತ್ಯಂತ ಪ್ರಶಾಂತವಾಗಿರುವ ತಾಣ. +ಮನೆಯ ಪೂರ್ವಕ್ಕೆ ದಿಬ್ಬದಂತಹ ಬ್ಯಾಣ. +ಅದಕ್ಕೆ ಒತ್ತಿನಿಂತ ಕಾಡು. +ಮನೆ ಬಾಗಿಲ ಎದುರಲ್ಲಿ ಒಕ್ಕುವ ಕಣ. +ಅದಕ್ಕೆ ಹೊಂದಿಕೊಂಡ ಅಡಿಕೆ ತೋಟ. +ಒಂದು ಪಕ್ಕದಲ್ಲಿ ಗದ್ದೆ ಹರ. +ಗದ್ದೆಯ ಅಂಚಿನಿಂದಲೇ ಆರಂಭವಾಗುವ ಕಾಡು. +ಕಾಡೆಲ್ಲ ಒತ್ತುವರಿಯಾಗಿ ಸಂಕುಚಿತವಾಗಿದ್ದರೂ ಅದರ ಗಾಂಭೀರ್ಯ ಕುಂದಿಲ್ಲ. +ವರ್ಷದಲ್ಲಿ ಯಾವಾಗಲೋ ಅತಿಥಿಯಂತೆ ಒಂದೆರಡು ದಿನಗಳ ಮಟ್ಟಿಗೆ ಮನೆಯಲ್ಲಿ ಉಳಿದುಕೊಳ್ಳಲು ಮಾತ್ರ ಈವರೆಗೆ ಸಾಧ್ಯವಾಗಿದೆ. +ವರ್ಷದ ಎಲ್ಲ ಋತುಗಳಲ್ಲಿ ಅಲ್ಲಿನ ಪ್ರಶಾಂತ ಪರಿಸರದಲ್ಲಿ ಕಳೆಯುವ ಕನಸು ಇನ್ನೂ ನನಸಾಗಿಲ್ಲ. +ಮಳೆಗಾಲದ ಜಿಟಿ ಜಿಟಿ ಮಳೆ, ಚಳಿಗಾಲದ ಕೊರೆಯುವ ಚಳಿ, ಬೇಸಿಗೆಯ ಧಗೆಯನ್ನು ನಮ್ಮ ಮನೆಯಲ್ಲಿ ಕಳೆಯಬೇಕೆಂಬ ಆಸೆ ಇನ್ನೂ ಈಡೇರಿಲ್ಲ. +ನನಗೆ ಈಗಲೂ ಸಾಹಿತ್ಯಕ್ಕಿಂತಲೂ ಬದುಕು ದೊಡ್ಡದು. +ನನ್ನ ಮಟ್ಟಿಗೆ ಬರವಣಿಗೆ ಒಳಗಿನ ಒತ್ತಡವನ್ನು ಹೊರಹಾಕುವ ಪ್ರಯತ್ನ. +ಈಚಿನ ವರ್ಷಗಳಲ್ಲಿ ಬರೆದ ಕಾದಂಬರಿಗಳು, "ಪಯಣ', “ಭೂಮಿ ಹುಣ್ಣಿಮೆ”,'ನೆರಳು', "ಪಾಡು', “ಕಾಮಾಕ್ಷಿ ಸಂಸಾರನೌಕೆ', "ಪಾಲು', "ಹಾಲಪ್ಪ, “ಸಕಾಲ', “ಶ್ರೀಚೌಡೇಶ್ವರಿ ಪ್ರಸನ್ನ'ಮೊದಲಾದವು ನನ್ನ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಮಾಡಿದ ಪ್ರಯತ್ನಗಳು. +ಅಂಥ ಪ್ರಯತ್ನ ಕೆಲವು ಕತೆಗಳ ವಿಷಯದಲ್ಲಿಯೂ ಆಗಿದೆ. +ಅವುಗಳಲ್ಲಿನ ಪಾತ್ರಗಳು ಸಹಜವಾಗಿ ಎದ್ದು ಬಂದ ಆಕೃತಿಗಳು. +ಮಲೆನಾಡಿನ ಹಳ್ಳಿಯಲ್ಲಿ ಬಾಲ್ಯವನ್ನು ಕಳೆದ ನನಗೆ ಅಕ್ಷರ ಕಲಿಕೆ ಹಿರಿಯರ ಔದಾರ್ಯದಿಂದ ಲಭಿಸಿದ ಸುವರ್ಣ ಅವಕಾಶ. +"ಅಷ್ಟೋ ಇಷ್ಟೋ ಓದಿಕೊಂಡು ಪ್ರಾಥಮಿಕ ಶಾಲೆಯ ಮೇಷ್ಟರು ಆದರೆ ತನ್ನಕಾಲ ಮೇಲೆ ನಿಂತುಕೊಳ್ಳುತ್ತಾನೆ. +ಇಲ್ಲಿ ದುಡಿಯಲು ಬೇರೆ ಹೆಚ್ಚು ಜಮೀನು ಇಲ್ಲ" ಎಂದು ಅಪ್ಪ ತಿಳಿದಿದ್ದರಿಂದ ನನಗೆ ಓದಲು ಅವಕಾಶವಾಗಿತ್ತು. +ಅಪ್ಪನಿಗೆ ಸಿಕ್ಕಿದ್ದು ಅಂದಿನ ಗಾಂವಠಿ ಶಾಲೆಯಲ್ಲಿ ಎರಡನೇ ತರಗತಿವರೆಗಿನ ವಿದ್ಯಾಭ್ಯಾಸ ಮಾತ್ರ. +ಆರು ತಿಂಗಳ ಮಗುವಾಗಿದ್ದಾಗಲೇ ತನ್ನ ತಂದೆಯನ್ನು ಕಳೆದುಕೊಂಡಿದ್ದಅಪ್ಪ (ಜನನ 1905) ಕೂಡುಕುಟುಂಬದ ನಿರ್ಲಕ್ಷಿತ ಕೂಸಾಗಿ ಬೆಳೆದವನು. +ಕಠಿಣ ಪರಿಶ್ರಮಿ. +ಅವನು ಪ್ರಾಯಕ್ಕೆ ಬಂದು ಆಗಿನ ಲೋಕವ್ಯವಹಾರಗಳನ್ನು ಕಣ್ಣಾರೆ ಕಾಣುವ ಅವಕಾಶ ಬಂದಾಗ ಮಕ್ಕಳಿಗೆ ವಿದ್ಯೆ ಕೊಡಿಸಬೇಕು, ಇಲ್ಲದಿದ್ದರೆ ಅವರು ತನ್ನಂತೆಯೇ ಹಗಲು ರಾತ್ರಿಗಳ ಪರಿವೆ ಇಲ್ಲದೆ ಕಂಡವರ ಗದ್ದೆತೋಟಗಳಲ್ಲಿ ಜೀತದಾಳುಗಳಂತೆ ದುಡಿಯಬೇಕಾಗುತ್ತದೆ ಎಂದು ಊಹಿಸಿದ್ದ. +ಆದ್ದರಿಂದ ತನ್ನೆಲ್ಲ ಮಕ್ಕಳಿಗೂ ವಿದ್ಯೆ ಕೊಡಿಸಲು ಪ್ರಯತ್ನಿಸಿದ್ದ. +ಅವನ ಒಂದು ನಿರ್ಧಾರವೆಂದರೆ ಪಾಸಾಗುವವರೆಗೂ ಮುಂದೆ ಮುಂದೆ ಹೋಗುತ್ತಿರಬೇಕು, ಫೇಲಾದರೆ ಅವನಿಗೆ ವಿದ್ಯೆ ದಕ್ಕುವುದಿಲ್ಲ ಎಂದೇ ತಿಳಿಯಬೇಕು. +ಅವನು ಕೃಷಿ ಕೆಲಸಕ್ಕೆ ಹಿಂತಿರುಗಬೇಕು- ಇದು ಅಪ್ಪ ನಂಬಿಕೊಂಡಿದ್ದ ಸಿದ್ಧಾಂತ. +ಅಪ್ಪನ ಆರು ಜನ ಗಂಡುಮಕ್ಕಳು ಹೈಸ್ಕೂಲು ಪಬ್ಲಿಕ್‌ ಪರೀಕ್ಷೆಯಲ್ಲಿ ಮಾತ್ರವಲ್ಲ, ಯಾವ ಪರೀಕ್ಷೆಗಳಲ್ಲೂ ಫೇಲ್‌ ಆಗಲೇ ಇಲ್ಲ. +ನನ್ನ ನಾಲ್ವರು ಅಣ್ಣಂದಿರಲ್ಲಿ ಹಿರಿಯ ಮೂವರು ಬೇರೆ ಬೇರೆ ಕಾರಣಗಳಿಗಾಗಿ ಮುಂದೆ ಓದಲು ಸಾಧ್ಯವಾಗಲಿಲ್ಲ. +ಒತ್ತಿನ ಅಣ್ಣ ಕೃಷಿಯಲ್ಲಿ ಪದವೀಧರನಾಗಿ ಬ್ಯಾಂಕ್‌ ಅಧಿಕಾರಿಯಾಗಿ ನೇಮಕಗೊಂಡ. +ತಮ್ಮ ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕಾಲೇಜು ಉಪನ್ಯಾಸಕನಾದ. +ಸಾಹಿತ್ಯದ ಅಭಿರುಚಿ ಹತ್ತಿಸಿಕೊಂಡ ನಾನು ಕನ್ನಡ ಎಂ ಎ ಮಾಡಿದರೂ ಆಗ ತಕ್ಷಣಕ್ಕೆ ಉದ್ಯೋಗ ಸಿಗದೆ, ಪರದಾಟ ನಡೆಸಿ ಪತ್ರಕರ್ತನಾಗಬೇಕಾಯಿತು. +ಸ್ವಂತ ಕಾಲಮೇಲೆ ನಿಲ್ಲುವಂಥ ನೌಕರಿ ಹಿಡಿಯುವುದಷ್ಟೇ ಪರಮ ಗಮ್ಯವಾಗಿದ್ದ ನನಗೆ ಈ ಬರವಣಿಗೆಯ ಕ್ಷೇತ್ರ ತುಂಬ ಅಪರಿಚಿತವಾದದ್ದು. +ಅನಿರೀಕ್ಷಿತವೂ ಆದದ್ದು. +ಆದ್ದರಿಂದಲೇ ನನ್ನ ಬರವಣಿಗೆಗೆ ಅಪ್ಪ ಅವ್ವ ಅವರ ಬದುಕು ಎಷ್ಟರಮಟ್ಟಿಗೆ ಒತ್ತಾಸೆಯಾಗಿದೆ ಎಂಬುದರ ಒಂದು ಚಿತ್ರಣವನ್ನು ಪ್ರವೇಶಿಕೆಯಾಗಿ ನೀಡಿದ್ದೇನೆ. +ಇಲ್ಲಿನ ಕತೆಗಳು ನನ್ನ ಆಯಾ ವಯೋಮಾನದ ಮನಸ್ಥಿತಿಯ ಅಭಿವ್ಯಕ್ತಿಗಳು. +ಓದುವ ಖುಷಿಗಾಗಿ ಕಟ್ಟಿದ ಕಥಾನಕಗಳು. +ಇವುಗಳಿಂದ ಓದುಗರಿಗೆ ಸಂತೋಷವಾದರೆ ನನಗೂ ಸಂತೋಷ. +ನನ್ನ ಇದುವರೆಗಿನ ಬರಹಗಳಿಗೆ (ಕತೆ, ಕಾದಂಬರಿ, ವ್ಯಕ್ತಿಚಿತ್ರ ಇತ್ಯಾದಿ) ಬಂದಿರುವ ಕೆಲವು ಗಣ್ಯ ಬರಹಗಾರರ ಪ್ರತಿಕ್ರಿಯೆಗಳನ್ನೂ ಅನುಬಂಧದಲ್ಲಿ ಆಯ್ದು ಕೊಟ್ಟಿದ್ದೇನೆ. +ನನ್ನ ಬರವಣಿಗೆಗೆ ಅವಕಾಶ ಮಾಡಿಕೊಟ್ಟಿರುವ ಬಾಳ ಸಂಗಾತಿ ಸ್ವರ್ಣಾಂಬ, ಮಕ್ಕಳಾದ ಶರತ್‌, ಭರತ್‌,ಸ್ಥಿತಾ, ಸಿರಿ, ದೀಪು ಅವರ ಸಹಕಾರಕ್ಕೆ ಹಣಿ. +ಪ್ರಸಿದ್ಧ ಪ್ರಕಾಶಕರಾದ ರವಿ ಅವರು ನನ್ನ ಕತೆಗಳ ಸಂಗ್ರಹವನ್ನು ಪ್ರಕಟಿಸುತ್ತಿದ್ದಾರೆ. +ಹೆತ್ತವರ ಜೀವನೋತ್ಸಾಹ. +ಮಣ್ಣಿನ ಗೋಡೆ. +ಸಗಣಿ ಸಾರಿಸಿ ನಯಗೊಳಿಸಿದ ನೆಲ. +ಜಗುಲಿ, ಒಳಗಿನ ಅಡುಗೆ ಮನೆ, ಹಿಂಭಾಗದ ಹಿತ್ತಲು ಬಾಗಿಲ ಹಿಂದಿನ ಚಡಿ ಒಂದು ಮಟ್ಟದಲ್ಲಿದ್ದರೆ, ಜಗುಲಿಯಿಂದ ಮೊಣಕಾಲು ಅಂತರ ಕೆಳಗೆ ಕಡಿಮಾಡು, ಪಕ್ಕಕ್ಕೆ ಹೊರಳಿ ವಿಸ್ತರಿಸಿದ ಚೌಕಿಯ ಭಾಗ ಇನ್ನೊಂದು ಮಟ್ಟದಲ್ಲಿ. +ಜಗುಲಿಯಿಂದ ಒಳಮನೆಗೆ ಒಂದು ಬಾಗಿಲು, ಹಿಂದೆ ಒಂದು ಬಾಗಿಲು. +ಇಷ್ಟೇ ಭದ್ರತೆ. +ಮರದ ಪೆಟ್ಟಿಗೆಗೆ ಒಳಮನೆಯಲ್ಲಿ ಜಾಗ. +ಐದುಅಡಿ ಉದ್ದ ಒಂದು ಅಡಿ ಅಗಲದ ಮರದ ಪೆಟ್ಟಿಗೆಯಲ್ಲಿ ಚಿಕ್ಕದೊಂದು ಸಂದೂಕ. +ಅದು ಮನೆಯ ತಿಜೋರಿ. +ಮರದ ಪೆಟ್ಟಿಗೆಯ ಬಾಗಿಲು ತೆಗೆಯುವಾಗ ದೊಡ್ಡದಾಗಿ ಕೀರಲು ಸದ್ದು ಬರುತ್ತಿದ್ದ ಕಾರಣ ಸಪ್ಪಳ ಮಾಡದೆ ಮನೆಯ ತಿಜೋರಿಯನ್ನು ಯಾರಿಗೂ ಮುಟ್ಟಲು ಸಾಧ್ಯವಿರುತ್ತಿರಲಿಲ್ಲ. +ಜಗುಲಿಗೂ, ಕೆಳಕ್ಕೆ ವಿಸ್ತರಿಸಿದ್ದ ಚೌಕಿ ಮನೆಗೂ ಮೂರು ಕಡೆ ಮಣ್ಣಿನ ಗೋಡೆಯ ಆಸರೆ. +ಜಗುಲಿ ಕೆಳಗಿನ ಪಾತಾಳಂಕಣವೂ ಚೌಕಿಯ ವಿಸ್ತರಿಸಿದ ಭಾಗವೂ ಅಂಗಳದ ಕಡೆಗೆ ತೆರೆದುಕೊಂಡಿದ್ದವು. +ಜಗುಲಿ, ಕೆಳಗಿನ ಪಾತಾಳಂಕಣ,ಚೌಕಿಯಲ್ಲಿ ಮಲಗಿದವರಿಗೆ ತಲೆಯ ಮೇಲೆ ಸೂರು ಇದೆಯೆಂಬಷ್ಟೇ ಸಮಾಧಾನ. +ಅಂಗಳಕ್ಕೂ ಚೌಕಗೂ ಮಧ್ಯೆ ಯಾವ ಅಡೆತಡೆಯೂ ಇರಲಿಲ್ಲ. +ಅಡುಗೆ ಮನೆಗೆ ಹೊಂದಿಕೊಂಡ ಒಳಮನೆಯಲ್ಲಿ ಮಲಗಿದವರಿಗೆ ಮಾತ್ರ ಸುತ್ತ ಗೋಡೆಯ ರಕ್ಷಣೆ ಇರುವ ಭಾವ. +ಮನೆಯ ಸೂರು ಹುಲ್ಲಿನದು. +ಒಂದನೆಯ ತರಗತಿಗೆ ಸೇರುವಷ್ಟು ದೊಡ್ಡವನಾಗಿದ್ದಾಗ ನನಗೆ ನೆನಪಿಗೆ ಬರುವ ನಮ್ಮ ಮನೆಯ ಚಿತ್ರ ಇದು. +ಆರು ಗಂಡು ಎರಡು ಹೆಣ್ಣು ಮಕ್ಕಳ ದೊಡ್ಡ ಸಂಸಾರ ಅಪ್ಪನದು. +ನಾನು ಐದನೆಯ ಮಗ. +ನಾಲ್ಕು ಜನ ಅಣ್ಣಂದಿರು, ಇಬ್ಬರು ಅಕ್ಕಂದಿರು. +ಒಬ್ಬ ತಮ್ಮ ಐದು ತುಂಬಿ ಆರು ನಡೆಯುತ್ತಿರುವಾಗ ಮನೆಯಿಂದ ಮೂರು ಕಿಲೋಮೀಟರ್‌ ದೂರದ ಶಾಲೆಗೆ ಒಂದನೆಯ ತರಗತಿಗೆ ಸೇರಿಕೊಂಡಾಗ ನೆನಪಿರುವಂತೆ ಅಣ್ಣಂದಿರಿಬ್ಬರ ಮದುವೆಯಾಗಿತ್ತು. +ದೊಡ್ಡ ಅಕ್ಕನೂ ಮದುವೆಯಾಗಿ ಗಂಡನ ಮನೆಯಲ್ಲಿದ್ದಳು. +ಆ ದಿನಗಳಲ್ಲಿ ಇಬ್ಬರು ಅತ್ತಿಗೆಯರು ಅವ್ವನೊಟ್ಟಗೆ ಅಡುಗೆ ಮತ್ತು ಗದ್ದೆಯ ಕೆಲಸಗಳಲ್ಲಿ ಕೈ ಜೋಡಿಸುತ್ತಿದ್ದರು. +ಮದುವೆಯಾದ ಇಬ್ಬರು ಅಣ್ಣಂದಿರ ಒತ್ತಿನ ಇನ್ನೊಬ್ಬ ಅಣ್ಣ ಶಾಲೆಗೆ ಶರಣು ಹೊಡೆದು ರೈತಾಪಿ ಕೆಲಸಕ್ಕೆ ಮರಳಿದ್ದ. +ದೊಡ್ಡ ಅಣ್ಣ ನಾನು ಹುಟ್ಟಿದ ವರ್ಷ (1953) ಮೆಟ್ರಿಕ್‌ನಲ್ಲಿ ಪಾಸಾಗಿದ್ದು ಮುಂದೆ ಓದುವ ಅನುಕೂಲ ಇಲ್ಲದ ಕಾರಣ ಮನೆಗೆ ವಾಪಸಾಗಿ ಅಪ್ಪನ ಜತೆ ಬೇಸಾಯದ ಕೆಲಸದಲ್ಲಿ ಕೈ ಜೋಡಿಸಿದ್ದ. +ಎರಡನೇ ಅಣ್ಣ ಮಿಡ್ಸ್‌ಸ್ಕೂಲಿಗೆ ಶರಣು ಹೊಡೆದಿದ್ದ. +ಶಾಲೆಯ ಮೇಷ್ಟರುಗಳು ಹಳ್ಳಿ ಹುಡುಗರು ಮನೆ ಪಾಠಮಾಡಿಕೊಂಡು ಬರುತ್ತಿಲ್ಲ ಎಂದು ವಿಧಿಸುತ್ತಿದ್ದ ಉಗ್ರ ಶಿಕ್ಷೆಗಳಿಗೆ ಹೆದರಿ ಅವನು ಶಾಲೆಗೆ ತಪ್ಪಿಸಿಕೊಳ್ಳುತ್ತಿದ್ದ ಮತ್ತು ಶಾಲೆಯಲ್ಲಿ ಗಣಿತ, ಇಂಗ್ಲಿಷಿನ ಕಠಿಣ ಅಭ್ಯಾಸಕ್ಕಿಂತ ಮನೆ ಬದಿಯಲ್ಲಿ ಸ್ವಂತ ಗದ್ದೆ ತೋಟಗಳಲ್ಲಿ ಮೈಬಗ್ಗಿಸಿ ಕೆಲಸ ಮಾಡುವುದೇ ಸುಲಭವೆಂದು ಪರಿಗಣಿಸಿದ್ದನೆಂದು ಮುಂದೆ ಎಷ್ಟೋ ವರ್ಷಗಳ ನಂತರ ನನಗೆ ಗೊತ್ತಾಗಿತ್ತು. +ನನ್ನ ಎರಡನೇ ಅಕ್ಕನ ಒತ್ತಿನ ಇನ್ನೊಬ್ಬ ಅಣ್ಣ ಹಳ್ಳಿ ಶಾಲೆಯಿಂದ ತೇರ್ಗಡೆಯಾಗಿ ಮಾಧ್ಯಮಿಕ ಶಾಲೆಯಲ್ಲಿ ಓದು ಮುಂದುವರಿಸಲು ಆಗ ರಿಪ್ಪನ್‌ಪೇಟೆಯ ಸಮೀಪ ಇದ್ದ ಸೋದರ ಮಾವನ ಮನೆಯಲ್ಲಿದ್ದ. +ಸಾಗರ- ತೀರ್ಥಹಳ್ಳಿ ಸರ್ಕಾರಿ ರಸ್ತೆಯಲ್ಲಿ ರಿಪ್ಪನ್‌ಪೇಟೆ - ಹೊಂಬುಜದ ಮಧ್ಯೆ ಇರುವ ಹೆದ್ದಾರಿಪುರ ಎಂಬ ಊರಿಗೆ ಒಂದೂವರೆ ಕಿಲೋಮೀಟರ್‌ ಒಳಗಡೆ ಇರುವ ನಮ್ಮೂರು ಕೊಡಸೆಗೆ ಆಗ ಹತ್ತಿರದ ಶಾಲೆ ಎಂದರೆ ಅಲ್ಲಿಂದ ಮೂರು ಕಿಲೋಮೀಟರ್‌ ದೂರದ ಕಣಬಂದೂರು ಶಾಲೆ. +ಅಲ್ಲಿ ಒಂದರಿಂದ ನಾಲ್ಕನೆಯ ತರಗತಿಯವರೆಗೆ ಕಲಿಸುವ ವ್ಯವಸ್ಥೆ ಇತ್ತು. +ನಾನು ಒಂದನೆಯ ತರಗತಿಗೆ ಸೇರಿದ್ದಾಗ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದವರು ಗಿರಿಯಪ್ಪ ಎಂಬುವರು. +ಸಣ್ಣದೊಂದು ಚುಳುಕಿನ ಬೆತ್ತವನ್ನು ಮೇಜಿನ ಮೇಲೆ ಸದಾ ಇಟ್ಟುಕೊಂಡಿರುತ್ತಿದ್ದ ಗಿರಿಯಪ್ಪ ಮೇಷ್ಟರು ಬೆತ್ತವನ್ನು ಝಳಪಿಸಿದ ಮಾತ್ರದಿಂದಲೇ ಅಳ್ಳೆದೆಯ ಹುಡುಗ- ಹುಡುಗಿಯರಲ್ಲಿ ತುರ್ತು ಮೂತ್ರವಿಸರ್ಜನೆಗೆ ಕಾರಣರಾಗುತ್ತಿದ್ದರೆಂಬ ಖ್ಯಾತಿ ಗಳಿಸಿದ್ದರು. +ಮಲೆನಾಡಿನ ಹಳ್ಳಿಗಳಂತೆ ನಮ್ಮದೂ ಒಂಟಿ ಮನೆಯ ಊರು. +ಆದರೆ ನಾನು ಹುಟ್ಟಿದ ವರ್ಷವೇ ನಮ್ಮ ಮೂಲಮನೆ ಹಿಸ್ಸೆಯಾಗಿತ್ತು. +ಚಿಕ್ಕಪ್ಪ ದೊಡ್ಡಪ್ಪಂದಿರ ಮಕ್ಕಳೆಲ್ಲ ತಮಗೆ ಬಂದ ಗದ್ದೆ ಹೊಲಗಳ ಬದಿ ಮನೆ ಮಾಡಿಕೊಂಡಿದ್ದರು. +ಮೂಲಮನೆಯನ್ನು ತ್ಯಜಿಸಿ ಬಂದಿದ್ದ ಅಪ್ಪ ನಮ್ಮ ಪಾಲಿಗೆ ಬಂದಿದ್ದ ಗದ್ದೆ ತೋಟದ ಸನಿಹದಲ್ಲಿ ಆಗ ದುರ್ಗಮವಾಗಿದ್ದ ಕಾಡನ್ನು ಕಡಿದು ಹುಲ್ಲುಮನೆ ಹಾಕಿಕೊಂಡಿದ್ದ. +ಒಟ್ಟು ಕುಟುಂಬದ ಯಜಮಾನಿಕೆ ನಡೆಸುತ್ತಿದ್ದ ಅಪ್ಪ ಆ ಧೈರ್ಯದಿಂದಲೇ ಮಕ್ಕಳಿಗೆ ಶಿಕ್ಷಣ ಕೊಡಿಸಲು ವ್ಯವಸ್ಥೆ ಮಾಡಿದ್ದ. +ಮನೆಪಾಲಾದ ಮೇಲೆ ಹೆಚ್ಚಿನ ಆರ್ಥಿಕ ಹೊಣೆಯನ್ನು ಹೊರಲು ಅಸಮರ್ಥನಾದ ಕಾರಣ ದೊಡ್ಡಣ್ಣ ಮುಂದೆ ಓದಲು ಆಗಿರಲಿಲ್ಲ. +ಆದರೆ ಎಲ್ಲ ಮಕ್ಕಳೂ ತಾವು ತೇರ್ಗಡೆ ಆಗುತ್ತಿರುವವರೆಗೆ ಓದುತ್ತಲೇ ಇರಬೇಕು, ಓದಿ ಏನಾದರೂ ನೌಕರಿ ಹಿಡಿಯಬೇಕು ಎಂಬುದು ಅಪ್ಪನ ಪ್ರಬಲ ಇಚ್ಛೆಯಾಗಿತ್ತು. +ಆದ್ದರಿಂದಲೇ ನಮ್ಮ ಶಾಲಾ ಹಾಜರಾತಿಯ ಮೇಲೆ ಅವನ ಕಣ್ಣು ಇರುತ್ತಿತ್ತು. +ಮೇಷ್ಟರ ಭಯದಿಂದ ಶಾಲೆ ತಪ್ಪಿಸಿಕೊಂಡರೆ ಗಿರಿಯಪ್ಪ ಮೇಷ್ಟರ ಬೆತ್ತದ ರುಚಿಯೇ ವಾಸಿ ಎನಿಸುವಷ್ಟು ಉಗ್ರವಾಗಿರುತ್ತಿತ್ತು ಅಪ್ಪನ ಕೋಪ ಮತ್ತು ಕೈ ಪೆಟ್ಟು . +ಊಟಕ್ಕೆ ಬತ್ತ ಆಗುವಷ್ಟು ಗದ್ದೆ ಮತ್ತು ಮೇಲು ಖರ್ಚಿಗೆ ಒದಗುವಷ್ಟು ಅಡಿಕೆ ತೋಟವಿದ್ದ ಕುಟುಂಬ ನಮ್ಮದು. +ಬೆಳೆಯುತ್ತಿದ್ದ ಸಂಸಾರದ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಸಂಪಾದನೆಗೆ ಅಪ್ಪ ಒಂದಲ್ಲ ಒಂದು ಪ್ರಯತ್ನ ನಡೆಸುತ್ತಲೇ ಇದ್ದ. +ಗದ್ದೆ-ತೋಟದ ಒತ್ತುವರಿ ಜಾಗದ ವಿಸ್ತರಣೆಯೇ ಆಗ ಉಳಿದಿದ್ದ ಮಾರ್ಗ. +ದೊಡ್ಡಕುಟುಂಬದ ಯಜಮಾನಿಕೆ ನಡೆಸಿದ್ದ ಅಪ್ಪನಿಗೆ ಎರಡನೇ ತರಗತಿಯವರೆಗೆ ಮಾತ್ರ ಇದ್ದ ಓದು. +1905ರಲ್ಲಿ ಜನಿಸಿದ್ದ ಅಪ್ಪ ಅಷ್ಟೇ ಓದಿನ ಬೆಂಬಲದಿಂದ ಮುಂದೆ ಶಿವಮೊಗ್ಗದಲ್ಲಿ ಅಡಿಕೆ ಮಂಡಿಗಳಲ್ಲಿ ಮನೆಯ ಯಾವತ್ತೂ ವ್ಯವಹಾರಗಳನ್ನು ನಡೆಸಬಲ್ಲವನಾಗಿದ್ದ. +ತನಗಿದ್ದ ಅಲ್ಪ ಅಕ್ಷರಾಭ್ಯಾಸದ ಬಲದಿಂದ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಸಿಗುತ್ತಿದ್ದ ಪುಸ್ತಕಗಳನ್ನು ತಂದು ನಿಧಾನವಾಗಿ ಓದುತ್ತಿದ್ದ. +ಹಿತೋಪದೇಶದ ಕಥೆಗಳು, ರಾಮಾಯಣದ ಕಥೆಗಳು ಅಪ್ಪನ ಆಸಕ್ತಿಯಿಂದ ನಮಗೆ ಪ್ರಾಥಮಿಕ ಶಾಲೆಯ ಕಾಲದಲ್ಲಿಯೇ ಕಿವಿಗೆ ಬೀಳುತ್ತಿದ್ದವು. +ನಮ್ಮ ಗದ್ದೆ ತೋಟದಲ್ಲಿ ಮನೆಯವರೆಲ್ಲರೂ ದುಡಿಯಲೇ ಬೇಕಿತ್ತು. +ನಮಗೆ ಶಾಲೆಯ ಅವಧಿ ಬಿಟ್ಟರೆ ಮನೆಯ ಎಲ್ಲ ಕೆಲಸಗಳಲ್ಲಿಯೂ ಕೈ ಹಾಕುವ ಅನಿವಾರ್ಯತೆ ಇತ್ತು. +ಅಡಿಕೆ ಕೊಯ್ಲು ಮನೆಯವರೇ ಮಾಡುವ ಕೆಲಸ. +ಅದರಲ್ಲಿಯೂ ಅಡಿಕೆಯನ್ನು ಸುಲಿದು, ಬೇಯಿಸಿ ಹದವಾದ ಬಿಸಿಲಲ್ಲಿ ಒಣಗಿಸಿ ಆರಿಸಿ ವ್ಯಾಪಾರಕ್ಕೆ ಅಣಿಗೊಳಿಸುವ ಕುಶಲ ಕೆಲಸವೆಲ್ಲ ಅಪ್ಪನ ವಿಶೇಷತೆ. +ಅಡಿಕೆ ಸುಲಿತ ರಾತ್ರಿ ಬಹುಹೊತ್ತಿನವರೆಗೆ ಸಾಗುತ್ತಿದ್ದ ನೀರಸ ಕಾರ್ಯ. +ಅಪ್ಪನ ಜೊತೆ ಅಣ್ಣಂದಿರು ಮೆಟ್ಟುಗತ್ತಿ ಎದುರಿಗೆ ಇಟ್ಟುಕೊಂಡು ಸುಲಿಯುತ್ತಿದ್ದಾಗ ಹೊರಬರುತ್ತಿದ್ದ ಕರಕರ ಶಬ್ದ ಈಗಲೂ ಆಪ್ಯಾಯಮಾನವಾಗಿ ಅನುರಣಿಸುವಂತಿದೆ. +ಅಡಿಕೆ ಸುಲಿತದ ಏಕತಾನತೆಯನ್ನು ನಿವಾರಿಸಲು ಶಾಲೆಗೆ ಹೋಗುತ್ತಿದ್ದ ಹಾಗೂ ಕನ್ನಡವನ್ನು ಓದುವಷ್ಟು ಬೆಳೆದಿದ್ದ ನನಗೆ ಅವರಿಗಾಗಿ ಏನನ್ನಾದರೂ ಓದಿ ಹೇಳುವ ಕೆಲಸವನ್ನು ಅಪ್ಪ ಕೊಡುತ್ತಿದ್ದ. +'ಕಾನೂರು ಸುಬ್ಬಮ್ಮ ಹೆಗ್ಗಡಿತಿ'ಕಾದಂಬರಿ ಅಡಿಕೆ ಸುಲಿತದ ಸಂದರ್ಭದಲ್ಲಿ ಓದಿ ಹೇಳಿದ್ದು ನನಗೆ ಬಾಲ್ಯದಲ್ಲಿಯೇ ಸಿಕ್ಕಿದ ಸಾಹಿತ್ಯದ ಸಂಸ್ಕಾರ. +“ಹೆಗ್ಗಡಿತಿ” ಕಾದಂಬರಿ ಆಗ ಬಿಡಿ ಸಂಪುಟಗಳಾಗಿ ಪ್ರಕಟವಾಗಿತ್ತು. +ಚೌಕಿಯ ಮನೆಯಲ್ಲಿ ಚಿಮಿಣಿ ದೀಪದ ಮಂದ ಬೆಳಕಿನಲ್ಲಿ ಅಪ್ಪ, ಅಣ್ಣಂದಿರು, ಅಡುಗೆ ಮನೆಯ ಕೆಲಸಗಳನ್ನು ಮುಗಿಸಿ ಜತೆ ಸೇರುತ್ತಿದ್ದ ಅತ್ತಿಗೆಯರು ಸುತ್ತ ಕುಳಿತಿದ್ದಾಗ ನಾನು ಇಲ್ಲವೇ ಎರಡನೇ ಅಕ್ಕ "ಕಾನೂರು ಹೆಗ್ಗಡಿತಿ"ಯ ಪುಟಗಳನ್ನು ಓದುತ್ತಿದ್ದೆವು. +ಹೆಚ್ಚು ಕಡಿಮೆ ನಮ್ಮೂರಿನ ಪರಿಸರದ ಕತೆಯನ್ನೇ ಕೇಳುತ್ತಿದ್ದ ಅವರಿಗೆ ಮನೆಯ ಸುತ್ತಮುತ್ತಲ ಕಾಡು, ಕೆರೆ, ಚೌಡಿ ಹರಕೆ, ಕಳ್ಳಿನ ಸೇವನೆ, ಶಿಕಾರಿ, ಸುಬ್ಬಮ್ಮನ ಬಾಯಲ್ಲಿ ಬರುತ್ತಿದ್ದ ದೇಸೀ ಬೈಗುಳದ ಮಾತುಗಳೆಲ್ಲ ಇಷ್ಟವಾದಂತಿದ್ದವು. +ನಮ್ಮ ಸುತ್ತಮುತ್ತಲ ಸಣ್ಣ ಸಣ್ಣ ಕ್ಷುದ್ರ ಸಂಗತಿಗಳೆಲ್ಲ ಸಾಹಿತ್ಯಾಭಿವ್ಯಕ್ತಿಯ ವಸ್ತುಗಳಾಗಿ ಪರಿಣಮಿಸುತ್ತಿದ್ದ ಕಾರಣವೋ ಅವರು ಓದನ್ನು ಅಲ್ಲಲ್ಲಿ ನಿಲ್ಲಿಸುವಂತೆ ಹೇಳಿ ಆ ಘಟನೆಗಳಿಗೆ ತಮ್ಮದೇ ವ್ಯಾಖ್ಯಾನ ನೀಡುತ್ತಿದ್ದರು. +ಶಿಕಾರಿಯ ಪ್ರಸ್ತಾಪ ಬಂದಾಗ ತಮ್ಮ ಅನುಭವಗಳನ್ನು ತಾಳೆ ನೋಡುತ್ತಿದ್ದರು. +ಅಡಿಕೆ ಸುಲಿತದ ಸಂದರ್ಭದಲ್ಲಿ ನಮಗೆ ಹೀಗೆ ಓದಿಗೆ ಹಚ್ಚುತ್ತಿದ್ದ ಅಪ್ಪನ ಉದ್ದೇಶ ತಡರಾತ್ರಿಯ ನಿದ್ದೆಗಣ್ಣಿನಿಂದ ಅಡಿಕೆ ಸುಲಿಯುತ್ತಿರುವವರನ್ನು ಎಚ್ಚರದಿಂದ ಇರಿಸುವುದಾಗಿತ್ತು. +ನಮ್ಮ ಓದಿನ ಸಾಮರ್ಥ್ಯವನ್ನು ಪರಿಶೀಲಿಸುವುದೂ ಆಗಿತ್ತು. +ಒತ್ತಕ್ಷರ, ಸಂಯುಕ್ತಾಕ್ಷರದ ಪದಗಳಲ್ಲಿ ನಾಲಿಗೆ ತಡವರಿಸಿದಾಗ ಅಪ್ಪ ಅಡಿಕೆ ಸಿಪ್ಪೆಯಿಂದಲೇ ಗುರಿಯಿಟ್ಟು ತಲೆಗೆ ಹೊಡೆದು ನಮ್ಮನ್ನು ಸರಿದಾರಿಗೆ ತರುತ್ತಿದ್ದ. +ಅಡಿಕೆ ಸುಲಿತ ದಸರೆಯ ನಂತರ ಬರುತ್ತಿತ್ತು . +ಆದರೆ ಅದಕ್ಕೂ ಮೊದಲಿನ ಶ್ರಾವಣ ಮಾಸ ನಮ್ಮ ಬಾಲ್ಯದ ಓದಿಗೆ ಮೊದಲ ವೇದಿಕೆ ಒದಗಿಸುತ್ತಿತ್ತು. +ಅಪ್ಪನದು ಶನಿವಾರದ ವ್ರತ. +ಅಂದು ಒಪ್ಪೊತ್ತಿನ ಊಟ. +ಬೆಳಿಗ್ಗೆಯಿಂದ ಹಸಿದಿದ್ದು ಮಧ್ಯಾಹ್ನದ ವೇಳೆಗೆ ಮಿಂದು ಶುಚಿಯಾಗಿ ದೇವರ ಪೂಜೆ ಮಾಡಿ ಮಡಿಯಲ್ಲಿ ಸಿದ್ಧಪಡಿಸಿದ ಊಟವನ್ನು ಅಗ್ನಿಗೆ ನೈವೇದ್ಯ ಮಾಡಿದ ನಂತರವೇ ಊಟ ಮಾಡುವುದು ಶನಿವಾರ ವ್ರತದವೈಶಿಷ್ಟ . +ಶನಿವಾರ ಅಪ್ಪನ ವ್ರತದ ದಿನವಾದ್ದರಿಂದ ಅಂದು ನಮ್ಮ ಮನೆಯಲ್ಲಿ ವಿಶೇಷ ಅಡುಗೆ ಇಲ್ಲ. +ವಿಶೇಷವೆಂದರೆ ಮೀನು ಮಾಂಸದ ಖಾದ್ಯಗಳಿಲ್ಲ. +ಶನಿವಾರ ಮನೆಗೆ ಅಪರೂಪದ ಅತಿಥಿಗಳು ಬಂದರೂ ಅವರಿಗೆ ಕೋಳಿ ಔತಣದ ಆತಿಥ್ಯ ಇರುತ್ತಿರಲಿಲ್ಲ. +ಶನಿವಾರದ ವ್ರತ ಹಿಡಿದಿದ್ದ ಕಾರಣ ಅಪ್ಪ ನಿತ್ಯವೂ ನಾಮ ಹಾಕಿಕೊಳ್ಳದೆ ಏನನ್ನೂ ಸೇವಿಸುತ್ತಿರಲಿಲ್ಲ. +ಬೆಳಗಿನ ತಿಂಡಿ ಇಲ್ಲವೇ ಊಟಕ್ಕೆ ಅಡಿಗೆ ಮನೆಗೆ ಹೋಗುವ ಮೊದಲು ಅಂಗಳದ ಮಧ್ಯೆ ಇದ್ದ ತುಳಸಿ ಗಿಡದಿಂದ ಕುಡಿಯೊಂದನ್ನು ತಂದು, ಹುಣಸೇಹಸ್ಣಿನಿಂದ ಚೆನ್ನಾಗಿ ತಿಕ್ಕಿ ಥಳಥಳ ಹೊಳೆಯುವಂತೆ ಪರಿಶುದ್ಧಗೊಳಿಸಿದ ತೀರ್ಥದ ಗಿಂಡಿಯಲ್ಲಿ ಹಾಕಿಕೊಂಡು ಹಣೆಗೆ ನಾಮ ಹಚ್ಚಿಕೊಳ್ಳುವುದು ಪದ್ಧತಿ. +ಅದಕ್ಕೊಂದು ಮರದ ನಾಮದ ಪೆಟ್ಟಿಗೆ. +ಒಳಜಗುಲಿಯ ನಾಗಂದಿಗೆ ಮೇಲೆ ಇರಿಸಿದ್ದ ನಾಮದ ಪೆಟ್ಟಿಗೆಯನ್ನು ಎತ್ತಿಕೊಂಡು ತಮಗೆ ಬಾಲ್ಯದಿಂದ ಪಾಠವಾಗಿದ್ದ ದೇವರ ನಾಮಗಳನ್ನು ಗುನುಗುತ್ತಾ ನಾಮ ಹಚ್ಚಿಕೊಳ್ಳಲು ಕುಳಿತುಕೊಳ್ಳುತ್ತಿದ್ದ. +ಕೆಂಪು ನಾಮವನ್ನು ಎಡ ಅಂಗೈಮೇಲೆ ಉದುರಿಸಿ ತೀರ್ಥದ ಬಟ್ಟಲಿನಿಂದ ಸ್ವಲ್ಪ ನೀರನ್ನು ಹಾಕಿ ನಯವಾಗಿ ಕಲಿಸಿ ಅದಕ್ಕೆಂದೇ ಇರಿಸಿದ್ದ ಬಿದಿರಿನ ನಾಮದ ಕಡ್ಡಿಯನ್ನು ಬಲಗೈಯಲ್ಲಿ ಹಿಡಿದು ನಾಮದಲ್ಲಿ ಅದ್ದಿಭ್ರೂಮಧ್ಯದಿಂದ ನೆತ್ತಿಯ ಕಡೆಗೆ ಒಂದು ಗೆರೆಯನ್ನು ಎಳೆದುಕೊಂಡರೆ ಹಣೆಯ ಅಲಂಕಾರ ಮುಗಿದಂತೆ. +ಉಳಿದ ನಾಮವನ್ನು ಎದೆಯ ಎರಡೂ ಭಾಗಕ್ಕೆ ಮೂರು ಮೂರು ಗೆರೆಯಂತೆ ಎಳೆದುಕೊಳ್ಳುತ್ತಿದ್ದ. +ಉದರ ಭಾಗದಲ್ಲಿ ಹೊಕ್ಕುಳಿನ ಆಜುಬಾಜು ಇನ್ನೂ ಮೂರು ಗೆರೆಗಳು. +ಅಂಗೈಯಲ್ಲಿ ಉಳಿದಿರುವ ನಾಮದಉಳಿಕೆಯನ್ನು ತೀರ್ಥದ ಗಿಂಡಿಯಿಂದ ಇನ್ನಷ್ಟು ನೀರನ್ನು ಚಿಮುಕಿಸಿ ಎರಡೂ ಅಂಗೈಗಳಲ್ಲಿ ಲೇಪಿಸಿ ಎರಡೂ ಭುಜಗಳಿಗೆ ಒತ್ತಿ ನಾಮ ಲೇಪನವನ್ನು ಪರಿಸಮಾಪ್ತಿಗೊಳಿಸುತ್ತಿದ್ದ. +ತುಳಸಿ ಕುಡಿಯನ್ನು ಅಂಗೈಯಲ್ಲಿ ಇಟ್ಟು ಅದಕ್ಕೆ ತೀರ್ಥದ ಗಿಂಡಿಯಿಂದ ಸ್ವಲ್ಪ ನೀರನ್ನು ಹಾಕಿ ಅದನ್ನು ತೀರ್ಥದಂತೆ ಕುಡಿಯುತ್ತಿದ್ದ. +ತುಳಸಿಯ ಕುಡಿಯನ್ನು ಪರಮ ಶ್ರದ್ಧೆಯಿಂದ ಬಲ ಕಿವಿಗೆ ಸಿಕ್ಕಿಸಿಕೊಳ್ಳುತ್ತಿದ್ದ. +ಬೇಸಾಯದ ಕೆಲಸ ಇಲ್ಲದ ದಿನಗಳಲ್ಲಿ ಬೆಳಗಿನ ಹೊತ್ತು ಊಟ ಮಾಡುವಾಗ ನಾಮ ಹಚ್ಚಿಕೊಳ್ಳುವ ನೇಮ ಇರಿಸಿಕೊಂಡಿದ್ದ ಕಾರಣ ಈ ವಿಧಿಗಳೆಲ್ಲ ಯಾಂತ್ರಿಕವಾಗಿ ನಡೆಯುತ್ತಿದ್ದವು. +ಬಾಯಲ್ಲಿ “ರಾಮಚಂದ್ರ,ವೆಂಕಟೇಶ, ಮಂಜುನಾಥ..ಅಖಿಲಾಂಡಕೋಟ. . ಬ್ರಹ್ಮಾಂಡ ನಾಯಕ. . ' ಇತ್ಯಾದಿ ನೆನಪಿಗೆ ಬಂದ ಸ್ತುತಿಪದ್ಯಗಳು. +ನಾಮ ಹಚ್ಚಕೊಳ್ಳುತ್ತಿದ್ದ ಸಂದರ್ಭದಲ್ಲಿ ಮರಿಗಳನ್ನು ಕಟ್ಟಿಕೊಂಡು ಜಗುಲಿ ಹತ್ತಿ ಬಂದು ಕ್ಲಕ್‌ಕ್ಲಕ್‌ ಸದ್ದಿನೊಂದಿಗೆ ಕಾಳು ಅರಸುತ್ತಿದ್ದ ಹೇಂಟೆಯನ್ನು ವಿಶಿಷ್ಟ ಸ್ವರ ಎಬ್ಬಿಸಿ ಓಡಿಸುವುದಕ್ಕೆ ಅವನಿಗೆ ಅಡ್ಡಿಯಾಗುತ್ತಿರಲಿಲ್ಲ. +ಕೊಟ್ಟಿಗೆಯಿಂದ ಹೊರಬಿದ್ದ ಹಸುಗಳು ಮನೆ ಅಂಗಳಕ್ಕೆ ನುಗ್ಗಿದರೂ ಅವನ್ನು ಕೂಗಿಯೇ ಓಡಿಸುವುದಕ್ಕೂ ನಾಮ ಹಚ್ಚಿಕೊಳ್ಳುವಾಗಿನ ಸಂದರ್ಭ ಅಡ್ಡಿ ಬರುತ್ತಿರಲಿಲ್ಲ. +ಶ್ರಾವಣ ಮಾಸದಲ್ಲಿ ರಾಮಾಯಣ ಪಾರಾಯಣ ನಮ್ಮ ಬಾಲ್ಯದ ಓದಿನ ಕಾಲದಲ್ಲಿ ಜಾರಿಯಲ್ಲಿತ್ತು. +ಅಪ್ಪ ತನ್ನ ತಿರುಗಾಟದ ಸಂದರ್ಭದಲ್ಲಿ ಕೊಂಡುತಂದಿದ್ದ ಮಹಾಭಾರತ, ಸಚಿತ್ರ ರಾಮಾಯಣ ಕೃತಿಗಳು ಜಗುಲಿಯ ಅಟ್ಟಕ್ಕೆ ಬಟ್ಟೆಯೊಂದರ ರಕ್ಷಣೆಯಲ್ಲಿ ನೇತಾಡುತ್ತಿದ್ದವು. +ಅವನ್ನು ಶ್ರಾವಣ ಮಾಸದ ಕಾಲದಲ್ಲಿ ಹೊರಕ್ಕೆ ತೆಗೆದು ದೂಳು ಹೊಡೆದು ಓದಿಗೆ ಅಣಿಗೊಳಿಸುವುದು ನಮ್ಮ ಕೆಲಸವಾಗಿತ್ತು. +ಶ್ರಾವಣಮಾಸದ ಆರಂಭದಿಂದ ಅದು ಮುಗಿಯುವವರೆಗೆ ಪ್ರತಿ ರಾತ್ರಿ ಒಂದು ಒಂದೂವರೆ ಗಂಟೆ ರಾಮಾಯಣವನ್ನು ಓದಲಾಗುತ್ತಿತ್ತು. +ಶಾಲೆ ಬಿಟ್ಟು ಮನೆ ಕೆಲಸಕ್ಕೆ ಬಂದಿದ್ದ ಮೂರನೇ ಅಣ್ಣ ಅದನ್ನು ಶ್ರದ್ಧಾಭಕ್ತಿಯಿಂದ ಆರಂಭಿಸುತ್ತಿದ್ದ. +ಜಗುಲಿಯಲ್ಲಿ ಒಂದು ಕಾಲುಮಣೆಯನ್ನು ಇರಿಸಿ ಅದರ ಮೇಲೆ ಹಣತೆ ಇಟ್ಟು ಸೀತಾ,ರಾಮ, ಲಕ್ಷಣ, ಹನುಮಂತ ಇರುವ ಫೋಟೋ ಇಟ್ಟುಕೊಂಡು ಹಣತೆಯ ಬೆಳಕಲ್ಲಿ ರಾಮಾಯಣ ಓದುವುದು ಪದ್ಧತಿ. +ಅಣ್ಣ ಸ್ವಲ್ಪ ಹೊತ್ತು ಓದಿ ನನಗೆ ಬಿಟ್ಟು ಕೊಡುತ್ತಿದ್ದ. +ಅಷ್ಟರ ವೇಳೆಗೆ ಗದ್ದೆ ಕೆಲಸ ಮುಗಿಸಿ ಬಚ್ಚಲಿನಲ್ಲಿ ಸ್ನಾನ ಮುಗಿಸಿ ಬಂದಿರುತ್ತಿದ್ದ ಅಣ್ಣಂದಿರು ಅಪ್ಪನ ಜೊತೆ ಜಗುಲಿಯಲ್ಲಿ ಕುಳಿತು ನನ್ನ ರಾಮಾಯಣದ ಓದನ್ನು ಗಮನಿಸುತ್ತಿದ್ದರು. +ಕಥೆಯ ಮೇಲೆ ಅವರ ಗಮನ ಇರುತ್ತಿದ್ದರಿಂದ ಓದಿನ ತಪ್ಪನ್ನು ಅಲ್ಲಿಯೇ ತಿದ್ದಲು ಹೋಗುತ್ತಿರಲಿಲ್ಲ. +ಆದ್ದರಿಂದ ರಾಮಾಯಣದ ಪಾರಾಯಣದ ಸಂದರ್ಭದಲ್ಲಿ ಅಡಿಕೆ ಸಿಪ್ಪೆಯ ಏಟಿನಿಂದ ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ನನಗೆ ಬರುತ್ತಿರಲಿಲ್ಲ. +ಮಾಧ್ಯಮಿಕ ಶಾಲೆಗೆ ರಿಪ್ಪನ್‌ಪೇಟೆಗೆ ಹೋಗುವವರೆಗಿನ ನಾಲ್ಕು ವರ್ಷ ಅಪ್ಪ ಅಣ್ಣಂದಿರ ನೇರ ಉಸ್ತುವಾರಿಯಲ್ಲಿ ಕನ್ನಡ ಓದನ್ನು ಅಭ್ಯಾಸ ಮಾಡಿದ ನನಗೆ ಮುಂದೆ ಅವರ ಮಾರ್ಗದರ್ಶನ ಇಲ್ಲದೆ ಹೋಯಿತು. +ಸೋದರ ಮಾವನ ಮನೆಯಲ್ಲಿದ್ದು ಹೈಸ್ಕೂಲು ಶಿಕ್ಷಣವನ್ನು ಪೂರೈಸಿದ ನನಗೆ ವಾರ, ಎರಡುವಾರಕ್ಕೊಮ್ಮೆ ಊರಿಗೆ ಹೋಗುತ್ತಿದ್ದ ಕಾರಣ ಅಪ್ಪನ ಶಿಕ್ಷಾ ವಲಯದಿಂದ ದೂರವೇ ಉಳಿದಿದ್ದೆ. +ಪ್ರತಿವರ್ಷವೂ ಪಾಸಾಗುತ್ತಲೇ ಇದ್ದ ಕಾರಣ ಅಪ್ಪನಿಂದ ಓದಿನ ವಿಷಯದಲ್ಲಿ ಬೈಗುಳವನ್ನಾಗಲೀ ಏಟನ್ನಾಗಲೀ ಪಡೆಯುವ ಅವಕಾಶದಿಂದ ವಂಚಿತನಾಗಿದ್ದೆ. +ಆದರೆ, 'ಬೈದು ಹೇಳುವವ ಬದುಕಲು ಹೇಳಿದ',"ಒಳ್ಳೆಯವರೊಡನಾಡಿ ಕಳ್ಳನೊಳ್ಳಿದನಕ್ಕು, ಒಳ್ಳೆಯವ ಕಳ್ಳನೊಡನಾಡೆ ಅವ ಶುದ್ಧ ಕಳ್ಳನೇ ಅಕ್ಕು."ಎಂಬಂಥ ಮಾತುಗಳನ್ನು ಆಯಾ ಸಂದರ್ಭದಲ್ಲಿ ಹೇಳುತ್ತ ನನ್ನಲ್ಲಿ ನೈತಿಕ ಪ್ರಜ್ಞೆಯನ್ನು ಜಾಗ್ರತಗೊಳಿಸುತ್ತಿದ್ದ ಅಪ್ಪ ನನ್ನ ಸ್ವತಂತ್ರ ನಿರ್ಧಾರಗಳನ್ನು ಯಾವತ್ತೂ ನಿರ್ಲಕ್ಷಿಸಿರಲಿಲ್ಲ. + ಮುಂದೆ ಶಿಕ್ಷಣದ ನಿಮಿತ್ತ ಉಚಿತ ವಿದ್ಯಾರ್ಥಿನಿಲಯದ ಸೌಲಭ್ಯ ಅರಸಿಕೊಂಡು ನಾನು ಬೆಂಗಳೂರಿಗೆ ಬಂದಾಗ, ನನಗೆ ಇಷ್ಟವೆಂದು ಕನ್ನಡಆನರ್ಸ್‌, ಎಂ ಎ ಕೋರ್ಸುಗಳಿಗೆ ಸೇರಿಕೊಂಡಾಗ ಅಪ್ಪ ಅವುಗಳ ಬಗ್ಗೆ ಅಭಿಪ್ರಾಯ ಕೊಡುವಂತಿರಲಿಲ್ಲ. +'ಏನಾದರೂ ಓದು, ಆದರೆ ಇನ್ನೊಬ್ಬರಿಗೆ ಹೊರೆಯಾಗಬೇಡ. +ಓದಿ ನೌಕರಿ ಹಿಡಿದು ನಿನ್ನ ಕಾಲ ಮೇಲೆ ನಿಲ್ಲು' ಎಂದಷ್ಟೆ ಹೇಳುತ್ತಿದ್ದ. +ಎಂ ಎ ಪದವಿ ಗಳಿಸಿದ ಮೇಲೆ ಅಲ್ಪ ವೇತನದ ಸಣ್ಣ ಕೆಲಸವೊಂದು ಸಿಕ್ಕಿದಾಗ"ಸದ್ಯ ಅಷ್ಟಾದರೂ ಸಿಕ್ಕಿದೆಯಲ್ಲ" ಎಂದು ಸಮಾಧಾನಪಡಿಸಿದ್ದ. +'ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ' ಎಂಬ ಕವಿವಾಣಿಯನ್ನು ಬಲವಾಗಿ ನಂಬಿಕೊಂಡು ಅದರಂತೆ "ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು" ಎಂದುಕೊಂಡವನಿಗೆ ಅಪ್ಪನಿಂದಲೂ ಆಕ್ಷೇಪ ಬರಲಿಲ್ಲ. +ಮೂಲದಿಂದ ಗೇಣಿದಾರರಾಗಿ ಲಿಂಗಾಯತ ಒಡೆಯರ ದೌರ್ಜನ್ಯಕ್ಕೆ ಒಳಗಾಗಿದ್ದ ಅಪ್ಪನಿಗೆ ನಾನು ಸರಿಯಾದ ನೌಕರಿಯೂ ಇಲ್ಲದಿದ್ದಾಗ ಲಿಂಗಾಯತ ಹುಡುಗಿಯನ್ನು ಪ್ರೀತಿಯ ಕಾರಣ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಹೊರಟಾಗ ನನ್ನ ಹುಂಬತನವನ್ನು ಸಂಪೂರ್ಣ ಕ್ಷಮಿಸಿದ್ದಲ್ಲದೆ,'ಹುಡುಗಿಯ ಕಡೆಯವರು ಪ್ರಾಣಕ್ಕೆ ಅಪಾಯ ತಂದುಬಿಟ್ಟಾರೋ ಮಾರಾಯ' ಎಂದು ಎಚ್ಚರಿಸಿದ್ದ. +ಸಂಗಾತಿಯನ್ನು ಗೆಳೆಯರಾದ ಬರುವೆ ತಿಮ್ಮಪ್ಪ ಮತ್ತು ನಾರಾಯಣ ಮೊಯ್ಲಿ ಅವರ ನೆರವಿನಿಂದ ಮೈಸೂರಿನಲ್ಲಿ ಆರ್ಯ ಸಮಾಜ ಪದ್ಧತಿಯನ್ವಯ ಮದುವೆಯಾಗಿ ಮರುದಿನವೇ ಪತ್ನಿ ಸಹಿತ ಊರಲ್ಲಿ ಅಪ್ಪ ಅವ್ವನ ಸಮ್ಮುಖ ಹಾಜರಾದಾಗ ಗದ್ದೆಕೊಯ್ಲಿನ ಹಂಗಾಮಿನಲ್ಲೂ ಅಂದು ಸಂಜೆ ನೂತನ ವಧೂವರರಿಗೆ ಸರಳವಾದ ಆರತಕ್ಷತೆಯನ್ನು ಏರ್ಪಡಿಸಿ ಸಂತೋಷಪಟ್ಟವನು ಅಪ್ಪ . +ಮನೆ ಗಂಡ ಮಕ್ಕಳ ಹಿತಚಿಂತನೆಯನ್ನೇ ಉಸಿರಾಗಿಸಿಕೊಂಡ ಅವ್ವ ಓದಿನ ಪ್ರಪಂಚದಿಂದ ತುಂಬ ದೂರ. +ವಿದ್ಯಾಭ್ಯಾಸ, ಉದ್ಯೋಗದ ನೆಪದಲ್ಲಿ ಅಣ್ಣ, ನಾನು, ನನ್ನ ತಮ್ಮ ಮೂವರು ಏಕಕಾಲದಲ್ಲಿ ಬೇರೆ ಬೇರೆ ಊರುಗಳಲ್ಲಿದ್ದು ರಜೆ ಇದ್ದಾಗ ಇಲ್ಲವೇ ಹಬ್ಬದ ಸಂದರ್ಭಗಳಲ್ಲಿ ಊರಲ್ಲಿ ಒಟ್ಟಿಗೆ ಸೇರಿದಾಗ ಅವ್ವ ಪಡುತ್ತಿದ್ದ ಸಂಭ್ರಮ ಮಾತಿಗೆ ನಿಲುಕುವಂಥದ್ದಲ್ಲ. +ಒಬ್ಬೊಬ್ಬ ಮಗನೂ ಹೆಂಡತಿ ಮಕ್ಕಳೊಂದಿಗೆ ಊರಿನಿಂದ ನಿರ್ಗಮಿಸುವಾಗ ಮನೆಯಿಂದ ಸ್ವಲ್ಪ ದೂರದವರೆಗೆ ಬಂದು ಹನಿಗಣ್ಣಾಗಿ ಬೀಳ್ಕೊಡುತ್ತಿದ್ದ ದೃಶ್ಯ ನನ್ನನ್ನು ಬಹುಕಾಲ ಕಾಡಿಸುತ್ತಿತ್ತು. +ಕಿರಿಯ ಮೂವರೂ ಮಕ್ಕಳು ನೌಕರಿ ಹಿಡಿದು ಬೇರೆ ಬೇರೆ ಊರುಗಳಲ್ಲಿ ತಮ್ಮ ತಮ್ಮ ಸಂಸಾರಗಳನ್ನು ನಿರ್ವಹಿಸುತ್ತಿದ್ದಾಗ ಅಪ್ಪ ಅವ್ವ ಇಬ್ಬರೂ ಬಂದು ಕೆಲವು ದಿನ ಇದ್ದು ಬದಲಾದ ಸನ್ನಿವೇಶಗಳಲ್ಲಿ ಹೆಚ್ಚು ಕಾಲ ಇರಲಾದರೆ ಊರಿಗೆ ವಾಪಸಾಗಿ ಬಿಡುತ್ತಿದ್ದರು. +ಅಪ್ಪನ ಕೊನೆಯ ದಿನಗಳಲ್ಲಿ ಅವ್ವ ಅವನಿಗೆ ಮಾಡಿದ ಸೇವೆ, ಅಪ್ಪನ ನೇರ ನಿಷ್ಠುರ ನಡವಳಿಕೆ ನನ್ನ ಬರವಣಿಗೆಗೆ ಹೇಗೆಯೋ ಬದುಕಿಗೂ ಭದ್ರ ಅಡಿಪಾಯ ಹಾಕಿಕೊಟ್ಟಿರಬಹುದೇನೋ ಎಂಬ ಗುಮಾನಿ ನನ್ನದು. +ನಾನು ಎಂ ಎ ಮುಗಿಸಿ ಮೂರು ವರ್ಷ ವನವಾಸ- ಉಪವಾಸದ ನಂತರ ಬೆಂಗಳೂರಿನಲ್ಲಿ ಒಂದು ಕೆಲಸ ಹಿಡಿದು ನೆಲೆಗೊಂಡ ಹತ್ತು ವರ್ಷಗಳ ನಂತರ ಊರಲ್ಲಿದ್ದ ಅಪ್ಪನಿಗೆ ಪಾರ್ಶ್ವವಾಯು ಹಿಡಿದ ಸುದ್ದಿ ಬಂದಿತು. +ಅದು ತಗುಲಿದ ಮೂರು ತಿಂಗಳ ಅವಧಿಯಲ್ಲಿ ಮಾತ್ರ ಅಪ್ಪನಿಗೆ ಬಂದು ಹೋಗುವವರ ಗುರುತು ಸಿಗುತ್ತಿತ್ತು. +ನಂತರ ನೆನಪಿನ ಶಕ್ತಿ ಕುಂದಿತು. +ಅವ್ವನ ನೆರವಿನಲ್ಲಿ ನಿಧಾನವಾಗಿ ಎದ್ದು ಓಡಾಡುತ್ತಿದ್ದವನು ಒಂದು ಬೆಳಿಗ್ಗೆ ಏಳಲೇ ಇಲ್ಲ. +ಅಸಹಾಯಕತೆಯಿಂದ ಕಣ್ಣು ಬಿಡುತ್ತಿದ್ದ. +ಆದರೆ ನಿತ್ಯಕರ್ಮಗಳು ಜರುಗುತ್ತಿದ್ದವು. +ಗೊತ್ತಿಲ್ಲದಂತೆಯೇ ಹಾಸಿಗೆ ಒದ್ದೆಯಾಗುತ್ತಿತ್ತು. +ಎಲ್ಲವೂ ಅಲ್ಲಿಯೇ ಆಗುತ್ತಿತ್ತು. +ಬಾಯಿಗೆ ಅನ್ನ ಕಲೆಸಿ ಇಟ್ಟರೆ ಜಗಿದು ನುಂಗುತ್ತಿದ್ದ. +ಆದ್ದರಿಂದ ಅವ್ವ ಹೊತ್ತಿಂದ ಹೊತ್ತಿಗೆ ಅನ್ನ ಸಾರು, ಮಜ್ಜಿಗೆ ಅನ್ನಇತ್ಯಾದಿ ಕಲೆಸಿ ಬಾಯಿಗಿಡುತ್ತಿದ್ದರು. +ಅದನ್ನು ಬೇಕಾಗುವಷ್ಟು ತಿನ್ನುತ್ತಿದ್ದ. +ಬೇಡವೆನ್ನಿಸಿದಾಗ ನಿಲ್ಲಿಸುತ್ತಿದ್ದ. +ಹೊರಗಿನ ಪ್ರಜ್ಞೆ ಮರೆಯಾಗಿ ಹೋಗಿತ್ತು. +ಹಾಸಿಗೆಯನ್ನು ನಿತ್ಯವೂ ಬದಲಿಸಬೇಕಿತ್ತು. +ವಯಸ್ಕರ ಮೂತ್ರದವಾಸನೆ ಕಟು, ಸ್ವಲ್ಪ ಹೊತ್ತು ಬಿಟ್ಟರೆ ಇಡೀ ಜಗುಲಿ ವ್ಯಾಪಿಸುತ್ತಿತ್ತು. +ಅದನ್ನು ತಕ್ಷಣವೇ ಸ್ವಚ್ಛಗೊಳಿಸಬೇಕಿತ್ತು. +ಎಲ್ಲವನ್ನೂ ಅಪ್ಪನಿಗಿಂತ ನಾಲ್ಕೆದು ವರ್ಷವಷ್ಟೆ ವಯಸ್ಸಿನಲ್ಲಿ ಕಿರಿಯಳಾಗಿದ್ದ ಅವ್ವ ಯಾರೊಬ್ಬರ ನೆರವೂ ಇಲ್ಲದೆ ನಿರ್ವಹಿಸುತ್ತಿದ್ದರು. +ಸ್ನಾನಕ್ಕೆ ಕರೆದೊಯ್ಯುವಾಗ ಮಾತ್ರ ಅಣ್ಣನ ಇಲ್ಲವೇ ಅಣ್ಣನ ಮಕ್ಕಳ ನೆರವನ್ನು ಪಡೆಯುತ್ತಿದ್ದರು. +ಸ್ವಲ್ಪ ಕಾಲದಲ್ಲಿ ಅಪ್ಪನಿಗೆ ಮಾತು ನಿಂತು ಹೋಯಿತು. +ಯಾವ ಚಿಕಿತ್ತೆಗೂ ಸ್ಪಂದಿಸುವಂತಿರಲಿಲ್ಲ. +ಮಲಗಿದ ಭಂಗಿಯಲ್ಲಿಯೇ ಸ್ನಾನಕ್ಕೆ ಹೊತ್ತೊಯ್ಯುವುದು ಅನಿವಾರ್ಯವಾಗಿತ್ತು. +ಅಲ್ಲಿ ಕುರ್ಚಿಯ ಮೇಲೆ ಪ್ರಯಾಸದಿಂದ ಕೂಡಿಸಿ ಹದವಾದ ಬಿಸಿನೀರಿನಿಂದ ಸ್ನಾನ ಮಾಡಿಸುತ್ತಿದ್ದರು ಅವ್ವ, ಸ್ನಾನದ ನಂತರ ಹಾಗೆಯೇ ಹೊತ್ತುಕೊಂಡು ಬರುವುದು. +ಸಿದ್ಧಪಡಿಸಿದ ಹಾಸಿಗೆ ಮೇಲೆ ಮಲಗಿಸುವುದು. +ಸದಾ ಮಲಗಿದ್ದರೆ ಬೆನ್ನುತರಚಿ ಗಾಯವಾದರೆ ಮಾಯುವುದು ಕಷ್ಟ ಎಂದು ಅವ್ವ ಎಚ್ಚರಿಕೆಯಿಂದ ಅಪ್ಪನ ಮಗ್ಗಲು ಬದಲಿಸುತ್ತಾ ಬೆನ್ನಲ್ಲಿ ಹುಣ್ಣು ಆಗದಂತೆ ನೋಡಿಕೊಂಡಿದ್ದರು ಸ್ನಾನ ಮಾಡಿಸಿದ ನಂತರ ಮೈ ಸಂದುಗಳಿಗೆಲ್ಲ ಪೌಡರು ಬಳಿಯುತ್ತಿದ್ದರೆ ಹಸುಗೂಸನ್ನು ನೋಡಿಕೊಳ್ಳುತ್ತಿದ್ದ ದಿನಗಳು ನೆನಪಿಗೆ ಬರುತ್ತಿದ್ದವು. +ಹೀಗೆ ನಾಲ್ಕು ವರ್ಷಗಳ ಕಾಲ ಅಪ್ಪ ಶರಶಯ್ಯೆಯಲ್ಲಿದ್ದ ಭೀಷ್ಮನಂತೆ ಮಲಗಿದ್ದ. +ಅವನನ್ನು ಉಳಿಸಿಕೊಳ್ಳಲು ಅವ್ವ ಪಡುತ್ತಿದ್ದ ಪಾಡು ಯಾವ ಸಾದ್ವಿ ಸಾವಿತ್ರಿಗೂ ಕಡಿಮೆ ಇದ್ದಂತೆ ತೋರಲಿಲ್ಲ. +ಅಪ್ಪ ಚೇತರಿಸಿಕೊಂಡು ಎಲ್ಲರಂತೆ ಬದುಕುತ್ತಾನೆ ಎಂಬ ಭ್ರಮೆಯೇನೂ ಅವ್ವನಿಗೆ ಇರುತ್ತಿರಲಿಲ್ಲ. +ಆದರೆ ರುಗ್ಣಶಯ್ಯೆಯಲ್ಲಿದ್ದ ಗಂಡನ ಸೇವೆಯನ್ನು ಮಾಡಲೇಬೇಕೆಂಬ ಹೆಂಡತಿಯ ಧರ್ಮವನ್ನು ಅವ್ವ ಪಾಲಿಸುತ್ತಿದ್ದರು. +ಒಂದು ಮಧ್ಯರಾತ್ರಿ ಅಪ್ಪನ ಕಡೆಯಿಂದ ಗೊರ ಗೊರ ಸದ್ದು ಕೇಳಿ ಬಂದು ಹಾಗೆಯೇ ಕ್ಷೀಣವಾಗಿ ಹೋದಾಗ ಅವ್ವ ಗಾಬರಿಯಾಗಿ ಎದ್ದು ದೀಪ ಹಾಕಿ ನಿರೀಕ್ಷಿತವಾಗಿದ್ದರೂ ಅಪ್ಪನ ಕೊನೆಯ ಕ್ಷಣಗಳನ್ನು ಅನಿರೀಕ್ಷಿತವೆಂಬಂತೆ ಎದುರಿಸಿ ಹಾಲನ್ನು ಗಂಟಲಿಗೆ ಗುಟುಕು ಗುಟುಕಾಗಿ ಬಿಟ್ಟರಂತೆ. +ಅಪ್ಪನನ್ನು ಏಕಾಂಗಿಯಾಗಿ ಕೊನೆಯ ಕ್ಷಣದವರೆಗೆ ನೋಡಿಕೊಂಡವರು ಅವ್ವ . +ಅಪ್ಪ ಗತಿಸಿದಾಗ ಅವ್ವನಿಗೆ 80ವರ್ಷ. +ಬಹುಕಾಲದ ಸಂಗಾತಿಯನ್ನು ಕಳೆದುಕೊಂಡ ಶೋಕದಲ್ಲಿ ಮೂರು ವಾರ ಬಳೆಗಳನ್ನು ಹಾಕಿಕೊಳ್ಳಲು ಆಸಕ್ತಿ ತೋರಲಿಲ್ಲ. +ಆದರೆ, ನಾವು ಮಕ್ಕಳು, ಒತ್ತಾಯ ಹಾಕಿದ ಮೇಲೆ ಬಳೆಗಳನ್ನು ಹಾಕಿಕೊಳ್ಳಲು ಹೂವುಗಳನ್ನು ಮುಡಿದುಕೊಳ್ಳಲು ಉತ್ಸಾಹ ತೋರಿದರು. +ಹಸುರು ಬಳೆಗಳೆಂದರೆ ಅವ್ವನಿಗೆ ತುಂಬ ಇಷ್ಟ. +ಅವುಗಳನ್ನು ನಾವು ತಂದು ತೊಡಿಸಿದಾಗ ಅವರ ಕಣ್ಣಲ್ಲಿ ಮಿಂಚಿನಂತೆ ಹನಿಗಳು ಉದುರುತ್ತಿದ್ದುದನ್ನು ನೋಡಿ ನಮಗೂ ಕಣ್ಣೀರು ತಡೆದುಕೊಳ್ಳಲಾಗುತ್ತಿರಲಿಲ್ಲ. +ನನ್ನ ಮಗ ಸ್ಯಾಮ್‌ಸಂಗ್‌ನಲ್ಲಿ ಇಂಜಿನಿಯರ್‌ ಆಗಿ ಸೇರಿಕೊಂಡ ಸಂದರ್ಭಕ್ಕೆ ಮಾಡಿಸಿದ ಚಿನ್ನದ ಬಳೆಗಳನ್ನು ಅವ್ವ ತುಂಬ ಸಂತೋಷದಿಂದ ಹಾಕಿಕೊಂಡರು. +ನನ್ನ ಮೊಮ್ಮಗ ಮಾಡಿಸಿದ್ದೆಂದು ಹೇಳಿ ಸಂಭ್ರಮ ಪಡುತ್ತಿದ್ದರು. +ಅಪ್ಪ ಗತಿಸಿದ 18 ವರ್ಷಗಳ ನಂತರವೂ ಅಪರಿಮಿತ ಜೀವನೋತ್ಸಾಹ ಪ್ರದರ್ಶಿಸುತ್ತಿದ್ದ ಅವ್ವ ನಮ್ಮ ಬಂಧುಗಳ ಯಾವೊಂದು ಸಮಾರಂಭಕ್ಕೂ ಶೋಭೆ ತಂದು ಕೊಡುತ್ತಿದ್ದವರು. +ವೈಯಕ್ತಿಕ ಸ್ವಚ್ಛತೆಗೆ ತುಂಬ ಗಮನ ಕೊಡುತ್ತಿದ್ದ ಅವ್ವ. +98ರ ವಯಸ್ಸಿನಲ್ಲಿಯೂ ತಮ್ಮ ಬಾಲ್ಯ ಕಾಲದ ಘಟನೆಗಳನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದರು. +ಮಕ್ಕಳು ಮೊಮ್ಮಕ್ಕಳು ಅಜ್ಜಿಯ ಬಾಲ್ಯದ ನೆನಪುಗಳನ್ನು ಕೇಳುವ ಉತ್ಸಾಹ ತೋರಿದಾಗ ತಮ್ಮದೇ ಧಾಟಿಯಲ್ಲಿ ನಿರೂಪಿಸುತ್ತಿದ್ದರು. +ಆದರೆ ಅವರ ಸುದೀರ್ಫ ಬದುಕು ಮತ್ತು ಜೀವನೋತ್ಸಾಹ 99ರ ಪೂರ್ಣ ಬಾಳಿನ ನಂತರ ಮೊಟಕುಗೊಂಡಾಗ ನಮ್ಮಲ್ಲಿ ಉಳಿದದ್ದು ಶೂನ್ಯ ಭಾವ. +ಹೊಟ್ಟೆಪಾಡಿಗಾಗಿ ಊರು ಬಿಟ್ಟು ಬೆಂಗಳೂರಿನಲ್ಲಿ ಸ್ವಂತ ನೆಲೆಯನ್ನು ಕಂಡುಕೊಂಡಿದ್ದರೂ ನನಗೆ ಮೊದಲಿನಿಂದಲೂ ಹೊರಗಡೆಯ ಬದುಕು ತಾತ್ಕಾಲಿಕ ನೆಲೆಯದೆಂದೇ ನಂಬಿಕೆಯಾಗಿತ್ತು. +ಆದರೆ ಅವ್ವನಿಲ್ಲದ ಊರು ನಮಗೆ ತವರಿಲ್ಲದ ಬರಡುತನವನ್ನು ನೆನಪಿಗೆ ತರುತ್ತದೆ. +ಅವ್ವನ ಕೊನೆಯ ದಿನಗಳನ್ನು ನೆನೆಸಿಕೊಂಡರೆ ಅಪರಾಧಿ ಭಾವ ಕಾಡುತ್ತದೆ. +99 ವರ್ಷ ಪೂರೈಸಿ ತಮ್ಮ ನೂರನೆಯ ವಯಸ್ಸಿನಲ್ಲಿ ಅವ್ವ ಇಹಯಾತ್ರೆಯನ್ನು ಮುಗಿಸಿದರು. +ಅವರ ಅಂತ್ಯ ಅಷ್ಟೇನು ಸುಖಮಯವಾಗಿರಲಿಲ್ಲ. +ಅವರನ್ನು ಇನ್ನಷ್ಟು ಮುಚ್ಚಟೆಯಿಂದ ನೋಡಿಕೊಂಡಿದ್ದರೆ ಅವರ ಅಂತಿಮ ಪ್ರಯಾಣ ಸುಖದಾಯಕವಾಗಿತ್ತೆಂದು ಈಗ ಅನ್ನಿಸುತ್ತದೆ. +ಅವ್ವನ 98ನೆಯ ವಯಸ್ಸಿನಲ್ಲಿ ಅವರಿಗೆ ಸಣ್ಣ ಪ್ರಮಾಣದಲ್ಲಿ ಹಲ್ಲು ನೋವು ಕಾಣಿಸಿಕೊಂಡಿದ್ದು ನೆಪವಾಯಿತು. +ಅಲ್ಲಿಯವರೆಗೂ ಅವರಿಗೆ ನಿತ್ಯವೂ ಮೀನು ಇಲ್ಲವೇ ಕೋಳಿಯ ಸಾರು ಇಷ್ಟವಾಗುತ್ತಿತ್ತು. +ಅವೆಲ್ಲ ಹೊಟ್ಟೆ ತುಂಬುವಷ್ಟು ಬೇಕು ಎಂದಿರಲಿಲ್ಲ. +ಸ್ವಲ್ಪಮಟ್ಟಿಗೆ ಇದ್ದಿದ್ದರೆ ಸಾಕಾಗಿತ್ತು. +ಅದನ್ನು ಒದಗಿಸಲು ನಮ್ಮಲ್ಲಿ, ಕೊರತೆ ಇರಲಿಲ್ಲ. +ಕೊರತೆ ಇದ್ದುದು ಅವರನ್ನು ನೋಡಿಕೊಳ್ಳುವವರದು. +ಅಪ್ಪ ತನ್ನ ನಂತರ ಅವ್ವನಿಗೆ ಅತಂತ್ರ ಸ್ಥಿತಿ ಬರಬಾರದು ಎಂದು ತನ್ನ ಪಾಲಿಗೆ ಬಂದಿದ್ದ ಪಿತ್ರಾರ್ಜಿತ ಆಸ್ತಿಯನ್ನು ಅವ್ವನನ್ನು ನೋಡಿಕೊಂಡವರಿಗೆ ಮಾತ್ರ ಸಲ್ಲತಕ್ಕದ್ದೆಂದು ಉಯಿಲು ಬರೆದಿದ್ದ. +ಅವ್ವನ ನಡವಳಿಕೆ, ಮಕ್ಕಳು ಮೊಮ್ಮಕ್ಕಳನ್ನು ಭಾವಿಸುತ್ತಿದ್ದ ರೀತಿಗೆ ಆಸ್ತಿಯ ವಿಚಾರ ಪರಿಗಣನೆಗೆ ಬರಬೇಕಾಗಿರಲಿಲ್ಲ. +ಅವ್ವ ತಮ್ಮ ಕೊನೆಯ ದಿನಗಳಲ್ಲಿ ತೊಂದರೆ ಆಗಬಾರದು ಎಂದು ತನ್ನ ಸ್ವಂತ ತಮ್ಮನ ಮಗಳನ್ನು ತಮ್ಮ ಮೂರನೆಯ ಮಗನಿಗೆ ತಂದುಕೊಂಡಿದ್ದರು. +ಅಪ್ಪ ಅವ್ವನ ಬಯಕೆಯಂತೆ ಸೋದರ ಮಾವನ ಮಗಳನ್ನೇ ಮದುವೆಯಾಗಿದ್ದ ನನ್ನ ಮೂರನೆಯ ಅಣ್ಣನ ಬಳಿಯೇ ಅಪ್ಪ ಅವ್ವ ಉಳಿದುಕೊಂಡಿದ್ದರು. +ಅಪ್ಪನ ಸುದೀರ್ಥ ಕಾಲದ ಅಸ್ವಸ್ಥತೆ, ಅವನ ಚಿಕಿತ್ಸೆ ಇತ್ಯಾದಿ ಹೊರೆಯನ್ನು ಅಣ್ಣನೊಬ್ಬನೇ ಹೊರಲು ನಾವು ಬಿಟ್ಟಿರಲಿಲ್ಲ. +ಅಪ್ಪನಿಗೆ ಪಾರ್ಶ್ವವಾಯು ತಗುಲಿದ ಕ್ಷಣದಿಂದ ಅವನ ಅಂತ್ಯದವರೆಗೆ ಪ್ರತಿ ತಿಂಗಳೂ ನಿರ್ದಿಷ್ಟ ಮೊತ್ತದ ಹಣವನ್ನು ನಾವು ಕಳುಹಿಸುತ್ತಿದ್ದೆವು. +ಅಪ್ಪನ ಅಂತ್ಯಕ್ರಿಯೆಯ ನಂತರದ ವೆಚ್ಚವನ್ನೂ ನಾವು ಭರಿಸಿದ್ದೆವು. +ಅಪ್ಪ ಅವ್ವನಿಗೆ ಖರ್ಚು ಮಾಡುವುದು ನಾವು ಹೊರಗಡೆ ಇದ್ದ ಮೂವರೂ ಗಂಡುಮಕ್ಕಳಿಗೆ ಹೊರೆ ಎನಿಸಿರಲಿಲ್ಲ. +ಅಪ್ಪ ನಿರ್ಗಮಿಸಿದ ಮೇಲೆ ಹೊರಗಡೆ ಇದ್ದ ನಾವು ಮೂವರು ಗಂಡುಮಕ್ಕಳು ಕೆಲವು ತಿಂಗಳು ಅವ್ವನನ್ನು ಇರಿಸಿಕೊಂಡು ಉಪಚರಿಸಿ ಕಳುಹಿಸುತ್ತಿದ್ದೆವು. +ಹಾಗೆ ನೋಡಿದರೆ ಅವ್ವ ನಮ್ಮ ಮನೆಯಲ್ಲಿ ಇದ್ದ ಅವಧಿ ಕಡಿಮೆ. +ನನ್ನ ಪತ್ನಿ ಅವ್ವ ನಿತ್ಯವೂ ಇಷ್ಟಪಡುವ ಮೀನು- ಕೋಳಿಯ ಊಟಕ್ಕೆ ವ್ಯವಸ್ಥೆ ಮಾಡಲು ಸಾಧ್ಯವಿಲ್ಲದ ಕಾರಣ ಮೈಸೂರಿನಲ್ಲಿದ್ದ ನನ್ನ ತಮ್ಮನ ಮನೆಯಲ್ಲೋ, ಬೆಂಗಳೂರಿನ ನೆಲಮಂಗಲ ಸಮೀಪ ಇದ್ದ ಇನ್ನೊಬ್ಬ ಅಣ್ಣನ ಮನೆಯಲ್ಲೋ ಹೆಚ್ಚು ಕಾಲ ಕಳೆಯುತ್ತಿದ್ದರು. +ಕೊಡಸೆಯಿಂದ ಹೊರಗಡೆ ಇರುವಾಗ ಅವ್ವನಿಗೆ ಎಷ್ಟು ಅನುಕೂಲಗಳನ್ನು ಒದಗಿಸಿದರೂ ಒಂದೆರಡು ವಾರಗಳಲ್ಲಿ ಊರಿನ ಸೆಳೆತ ಹೆಚ್ಚಾಗಿ ತಿಂಗಳಲ್ಲಿಯೇ ವಾಪಸಾಗಿ ಬಿಡುತ್ತಿದ್ದರು. +ಅಷ್ಟರಲ್ಲಿಯೇ ಅವ್ವ ಇಷ್ಟಪಟ್ಟು ತಂದುಕೊಂಡಿದ್ದ ಅವರ ತಮ್ಮನ ಮಗಳು- ನನ್ನ ಮೂರನೇ ಅಣ್ಣನ ಪತ್ನಿ- ಗರ್ಭಕೋಶದ ಸಮಸ್ಯೆಯ ನೆಪದಲ್ಲಿ ಇಹಲೋಕ ತ್ಯಜಿಸಿದರು. +ಅದರ ಪರಿಣಾಮವಾಗಿ ಅವ್ವನನ್ನು ನೋಡಿಕೊಳ್ಳುವ ಹೊಣೆ ಮೂರನೇ ಅಣ್ಣನ ಮೇಲೆ ಬಿದ್ದಿತು. +ಅವ್ವನಿಗೆ 97ರ ವಯಸ್ಸಿನ ನಂತರ ಹಲ್ಲು ನೋವು ಬಂದಾಗ ಊರಲ್ಲಿದ್ದ ಮಕ್ಕಳೂ, ಮೊಮ್ಮಕ್ಕಳೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. +ನಮ್ಮ ಗಮನಕ್ಕೆ ಬಂದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಿದಾಗ ಊರಲ್ಲಿದ್ದ ಅಣ್ಣ ಅವ್ವನನ್ನು ಕರೆದೊಯ್ದ. +ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ ಅವರ ಹೃದಯವಂತಿಕೆಯಿಂದ ಅವ್ವನಿಗೆ ಆ ವಯಸ್ಸಿನಲ್ಲಿ ಹಲ್ಲು ನೋವಿಗೆ ಶಸ್ತ್ರಚಿಕಿತ್ಸೆಯಾಯಿತು. +ಹುಳುಕುಹಲ್ಲನ್ನು ತೆಗೆಯುವುದಾಗಿ ಕೋಣಂದೂರಿನ ದಂತವೈದ್ಯನೊಬ್ಬ ದವಡೆಯಲ್ಲಿ ಗಾಯ ಮಾಡಿ ಅದು ಪೂರ್ತಿವಾಸಿಯಾಗುವ ಮೊದಲೇ ಚಿಕಿತ್ಸೆಯಿಂದ ಹಿಂದೆ ಸರಿದ ಕಾರಣ ಅವ್ವನ ಗಲ್ಲದ ಭಾಗದಲ್ಲಿ ಕೀವು ತುಂಬಿ ಯಮಹಿಂಸೆ ಉಂಟಾಗಿತ್ತು. +ಅದನ್ನು ಪರಿಶೀಲಿಸಿದ ನಾರಾಯಣಪ್ಪ ಅವರು ಶಸ್ತ್ರಚಿಕಿತ್ಸೆ ನಡೆಸಿ ಅವ್ವನ ಜೀವ ಉಳಿಸಿದರು. +ಅದರಿಂದಾಗಿ ಅವ್ವ ಇನ್ನೂ ಒಂದೂವರೆ ವರ್ಷ ಬದುಕಿದ್ದರು. +ಇಷ್ಟು ಹಿರಿಯ ಜೀವಕ್ಕೆ ಸೇವೆ ಸಲ್ಲಿಸುವುದೇ ಮಹಾಭಾಗ್ಯ ಎಂದು ಹೇಳಿದ ನಾರಾಯಣಪ್ಪ ತಮ್ಮ ಶಸ್ತ್ರಚಿಕಿತ್ಸೆಗೆ ಹಣವನ್ನೇ ತೆಗೆದುಕೊಳ್ಳಲಿಲ್ಲ. +ಶಿವಮೊಗ್ಗದಿಂದ ವಾಪಸಾದ ಮೇಲೆ ಅವ್ವನ ಬದುಕು ಸುಸೂತ್ರವಾಗಲಿಲ್ಲ. +ಹಾಸುಗೆಯಲ್ಲಿಯೇ ಎಂಟು ತಿಂಗಳು ಕಳೆಯಬೇಕಾಯಿತು. +ಘನ ಆಹಾರದ ಸೇವನೆ ಕಷ್ಟವಾಯಿತು. +ಹಣ್ಣು, ಹಾಲು, ಜೊತೆಗೆ ಅನ್ನ-ಮೊಸರು, ಹಾಲು ಇತ್ಯಾದಿಯನ್ನು ಸಮಪ್ರಮಾಣದಲ್ಲಿ ಮಿಕ್ಷರ್‌ನಲ್ಲಿ ಪಾನಕದಂತೆ ಮಾಡಿ ಕುಡಿಸುವುದು ಅನಿವಾರ್ಯವೆನಿಸಿತು. +ಊರಲ್ಲಿದ್ದ ಅಣ್ಣ ಮತ್ತು ಆತನ ಎರಡನೇ ಹೆಂಡತಿ ರತ್ನ ಹಗಲೂ ರಾತ್ರಿ ಮಾಡುತ್ತಿದ್ದ ಸೇವೆಯನ್ನು ಗುರುತಿಸಲು ಅವ್ವನಿಗೆ ಸಾಧ್ಯವಾಗುತ್ತಿರಲಿಲ್ಲ. +ಅದೊಂದು ಮಧ್ಯರಾತ್ರಿ ಒಂದು ಗಂಟೆ ಹತ್ತು ನಿಮಿಷಕ್ಕೆ ಅವ್ವನಿಗೆ ಹಾಲು ಕುಡಿಸಿದ್ದೇ ಕೊನೆ. +ಸ್ವಲ್ಪಹೊತ್ತಿಗೆ ಅವ್ವನ ಉಸಿರಾಟ ನಿಂತ ಸುಳಿವು ಸಿಕ್ಕಿದೆ. +ಅಣ್ಣ ತಕ್ಷಣವೇ ಬೆಂಗಳೂರಿನಲ್ಲಿದ್ದ ನಮಗೆ ದೂರವಾಣಿಯಲ್ಲಿ ಅವ್ವನ ಮಹಾಪ್ರಸ್ಥಾನ ಸಂಗತಿಯನ್ನು ತಿಳಿಸಿ ಅಪರಿಮಿತ ಜೀವನೋತ್ಸಾಹ ಮತ್ತು ಕಷ್ಟವನ್ನು ದೃಢವಾಗಿ ಸಹಿಸುವ ಶಕ್ತಿಯನ್ನು ಬದುಕಿನ ಕ್ಷಣದವರೆಗೆ ಉಳಿಸಿಕೊಂಡಿದ್ದ ಅವ್ವ ನನ್ನ ಬದುಕಿಗೂ ಬರವಣಿಗೆಗೂ ಬಹುದೊಡ್ಡ ಪ್ರೇರಕ ಶಕ್ತಿ. +ಬೆಳಗಿನ ಸುತ್ತಾಟ ಮುಗಿಸಿ ಬರುವಷ್ಟರಲ್ಲಿ ಶಿವರಾಮು ಮೂರು ಸಲ ಕರೆ ಮಾಡಿದ್ದ. +ಬೆಳಗಿನ ಸುತ್ತಾಟಕ್ಕೆ ಹೊರಟಾಗ ಮೊಬೈಲ್‌ ಒಯ್ಯದಿರುವುದು ನನ್ನ ಅಭ್ಯಾಸ. +ಮೂರು ಸಲ ಕರೆ ಮಾಡಿದ್ದರಿಂದ ಬೇಗನೇ ನಿತ್ಯವಿಧಿಗಳನ್ನು ಮುಗಿಸಿ ಅವನನ್ನು ಸಂಪರ್ಕಿಸಿದೆ. +'ಇವತ್ತೇನಯ್ಯ ಪ್ರೋಗ್ರಾಮು. . "ಆ ಕಡೆಯಿಂದ ಲೋಕಾಭಿರಾಮದ ಪ್ರತಿಕ್ರಿಯೆ ಬಂತು. + 'ಅಲ್ಲಯ್ಯ ಬೆಳಿಗ್ಗೆಯಿಂದ ಮೂರು ಸಲ ಕಾಲ್‌ ಮಾಡಿದ್ದೆ. +ತುರ್ತು ಇರಬೇಕು ಅಂದುಕೊಂಡೆ. +ಈಗ ನೋಡಿದರೆ ಏನೂ ಅರ್ಜೆಂಟು ಇಲ್ಲದವನ ತರ ಪ್ರೊಗ್ರಾಮ್‌ ಬಗ್ಗೆ ಕೇಳ್ತಾ ಇದೀಯಲ್ಲ."ಎಂದು ಅಸಮಾಧಾನ ತೋರಿಸಿದೆ. +"ಶಾಂತಿ. . . ಶಾಂತಿ ನಾನು ಯಾವ ಮನಃಸ್ಥಿತಿಯಲ್ಲಿ ಇದ್ದೀನಿ ಅಂತ ನಿನಗೇ ಗೊತ್ತಿದೆ. +ನಿನ್‌ ಹತ್ರ ತುಂಬ ಅರ್ಜೆಂಟಾಗೇ ಮಾತಾಡೋದಿದೆ. +ಆದರೆ, ವಾಕಿಂಗ್‌ ಹೋದಾಗ ಮೊಬೈಲ್‌ ಇಟ್ಟುಕೊಳ್ಳಬಾರದೇನಯ್ಯ.?"ಎಂದು ಚಡಪಡಿಸಿದ. +"ಸಾರಿ ಶಿವು, ಏನು ವಿಷಯ. . . ಈಗಲೇ ಹೊರಟು ಬರ್ತೀನಿ" ಎಂದೆ. +ಅಣ್ಣನೀನು ಬರೋದು ಬೇಡ. +ಬೇಗ ರೆಡಿ ಆಗಿರು. +ನಾನೇ ಬಂದು ಪಿಕಪ್‌ ಮಾಡ್ತೇನೆ. +ನಿಮ್ಮ ಕ್ಲಬ್‌ ಕಡೆ ಹೋಗೋಣ. +ಅಲ್ಲೇ ಮಾತಾಡೋಣ ಎಂದ." +"ಆಯ್ತು ಬೇಗ ಬಾ"ಎಂದು ಸಂಪರ್ಕ ಕಡಿದು ಬೇಗನೆ ಹೊರಡಲು ಸಿದ್ಧತೆ ನಡೆಸಿದೆ. +ನಾನು ನಿರೀಕ್ಷೆ ಮಾಡಿದ್ದಕ್ಕೆಂತಲೂ ಬೇಗನೇ ಬಂದ. +ಕಾರಲ್ಲಿಯೇ ಕುಳಿತಿದ್ದವನನ್ನು "ಒಳಗಡೆ ಬಾರಯ್ಯ,ಅರ್ಧ ಕಪ್‌ ಚಾ ಕುಡಿದು ಹೋಗೋಣ"ಎಂದೆ. +"ಎಲ್ಲ ಮುಗಿಸಿ ಬಂದಿದ್ದೇನೆ. +ಈಗ ನನಗೆ ಚಾ ಕುಡಿಯುವ ಹೊತ್ತಲ್ಲ"ಎಂದು ನಿರಾಕರಿಸಿದ. +ಬೆಳಗಿನ ಹೊತ್ತು ಕಾಲೇಜಿಗೆ, ಕಚೇರಿಗೆ, ವ್ಯವಹಾರಕ್ಕೆ ಹೋಗುವವರ ಧಾವಂತದ ನಡುವೆ ನಾವು ಬನಶಂಕರಿಯಿಂದ ಕಾರ್ಪೊರೇಷನ್‌ ವೃತ್ತ ತಲುಪುವ ವೇಳೆಗೆ ಒಂದೂವರೆ ಗಂಟೆ ಹಿಡಿದಿತ್ತು. +ಮಾರ್ಗ ಮಧ್ಯೆ ನಡೆಸಿದ್ದೆಲ್ಲ ಲೋಕಾಭಿರಾಮದ ಮಾತು. +ಭ್ರಷ್ಟಾಚಾರ, ಬೆಲೆ ಏರಿಕೆ, ಸಂಚಾರ ದಟ್ಟಣೆಯ ಬಗೆಹರಿಯದ ಸಮಸ್ಯೆ, ಮೆಟ್ರೋ ಕಾಮಗಾರಿಯ ಆಮೆ ನಡಿಗೆ ಇತ್ಯಾದಿ ಸಂಗತಿಗಳು ಉಭಯತ್ರ್ತರಲ್ಲಿ ಸುಳಿದಾಡಿದವು. +ಸೆಂಟ್ರಲ್‌ ಕಾಲೇಜಿನಲ್ಲಿ ಆನರ್ಸ್‌ ಓದುತ್ತಿದ್ದಾಗ ಜೊತೆಗೂಡಿದ್ದ ಶಿವಮೊಗ್ಗ ಕಡೆಯ ಶಿವರಾಮು ವಿಶ್ವವಿದ್ಯಾಲಯದ ವಾಲಿಬಾಲ್‌ ತಂಡಕ್ಕೆ ಆಯ್ಕೆಯಾಗಿದ್ದ ಕ್ರೀಡಾಪಟು. +ಒಂದೇ ಬೆಂಚಿನಲ್ಲಿ ಕೂರುತ್ತಿದ್ದ ಸಲಿಗೆ ಇಬ್ಬರಲ್ಲೂ ಏಕವಚನದ ಗೆಳೆತನವನ್ನು ಉಳಿಸಿತ್ತು. +ಕ್ರೀಡಾಪಟುವಾಗಿದ್ದ ಅರ್ಹತೆಯ ಮೇಲೆ ಅವನು ಕೇಂದ್ರಸರ್ಕಾರದ ಸುಂಕದ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. +ವೃತ್ತಿಯ ಬಹುಭಾಗವನ್ನು ರಾಜ್ಯದ ಹೊರಗಡೆಯೇ ಕಳೆದಿದ್ದರೂ ನನ್ನ ಸಂಪರ್ಕವನ್ನು ಕಳೆದುಕೊಂಡಿರಲಿಲ್ಲ. +ಸಂಪರ್ಕ ವಿಧಾನಗಳು ಪತ್ರಗಳಿಂದ ಇ.ಮೇಲ್‌ ಮತ್ತು ಮೊಬೈಲ್‌ ತಂತ್ರಜ್ಞಾನಕ್ಕೆ ತಿರುಗಿದ್ದವು. +"ಕೇಂದ್ರ ಸರ್ಕಾರದ ನೌಕರಿ ಗಳಿಸಿದ್ದಕ್ಕೆ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗಲಿಲ್ಲ ನೋಡು. +ಕೇಂದ್ರೀಯ ವಿದ್ಯಾಲಯಗಳಲ್ಲಿ ಓದಿದರು. +ಒಳ್ಳೇ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸೀಟು ಪಡೆದರು. +ಮೆರಿಟ್‌ನಲ್ಲಿ ಹೊರಗಡೆ ಬಂದರು. +ಅವರಿಗೆ ಒಳ್ಳೇ ಕಡೆ ನೌಕರಿಗಳೂ ಸಿಕ್ಕಿವೆ ಕಣಯ್ಯ."ಎಂದು ಐದಾರು ವರ್ಷಗಳ ಹಿಂದೆ ಸಿಕ್ಕಿದಾಗ ಹೇಳಿ ಸಂಭ್ರಮಿಸಿದ್ದ. +'ಇನ್ನು ಎರಡು ವರ್ಷದಲ್ಲಿ ನಿವೃತ್ತಿ ಆಗ್ತೇನೆ. +ಊರು ಕಡೆ ನನ್ನದೂ ಅಂತ ಏನೂ ಇಲ್ಲ. +ಬೆಂಗಳೂರಿನಲ್ಲಿ ಹೆಚ್ಚು ಗಲಾಟೆ ಇಲ್ಲದೆ ಇರೋ ಕಡೆ ಒಂದು ಅಪಾರ್ಟ್‌ಮೆಂಟ್‌ ಕೊಂಡುಕೊಳ್ಳೋ ಯೋಚನೆ ಇದೆ' ಎಂದು ಮೂರು ವರ್ಷಗಳ ಹಿಂದೆ ಸಿಕ್ಕಿದಾಗ ತಿಳಿಸಿದ್ದ. +ವರ್ಷದ ಹಿಂದೆ ಸಿಕ್ಕಿದವನು "ನಿಮ್ಮ ಕಡೆನೇ ಒಂದು ಅಪಾರ್ಟ್‌ಮೆಂಟ್‌ ಕೊಂಡುಕೊಂಡೆ. +ಮಕ್ಕಳಿಬ್ಬರೂ ಅಮೆರಿಕ ಸೇರಿ ಬಿಟ್ಟಿದ್ದಾರೆ. +ಒಳ್ಳೇ ಕಂಪೆನಿಗಳಂತೆ. +ಆರ್ಥಿಕ ಹಿಂಜರಿತ ಇದ್ದರೂ ಇವರ ನೌಕರಿಗೆ ಏನೂ ತೊಂದರೆ ಇಲ್ಲವಂತೆ. . . +ಇನ್ನೇನಯ್ಯ ಬೆಳೆದ ಹಕ್ಕಿಗಳು ಗೂಡುಬಿಟ್ಟು ಹಾರಿ ಹೋದ ಹಾಗೆ. +ಅದಕ್ಕೆ ನಾವು ಇಬ್ಬರೇ ವಾಪಸು ಬಂದಿದ್ದೇವೆ ಹ್ಯಾಗೂ ನಾನು ರಿಟೈರ್‌ಆಗಿದ್ದೇನಲ್ಲ.' ಎಂದು ಹೇಳಿದ್ದ. +ನಮ್ಮ ಮನೆಗೆ ಮೂರು ನಾಲ್ಕು ಕಿಲೋಮೀಟರ್‌ ದೂರದಲ್ಲಿಯೇ ಅವನುಕೊಂಡಿದ್ದ ಅಪಾರ್ಟ್‌ಮೆಂಟ್‌ ಇದ್ದಿದ್ದರಿಂದ ನನ್ನನ್ನು ಆಹ್ವಾನಿಸಿದ್ದ. +ನಾನು ಹನ್ನೊಂದು ಗಂಟೆ ಸುಮಾರಿಗೆ ಅಲ್ಲಿಗೆ ಹೋದೆ. +ಮೂರು ಕೋಣೆಗಳ ಅನುಕೂಲಕರ ಮನೆ. +ಎರಡನೆಯ ಮಹಡಿಯಲ್ಲಿತ್ತು ಆಗಲೇ ಅವನ ಹೆಂಡತಿಯನ್ನು ನೋಡಿದ್ದು. +ಗಂಡ ಮಕ್ಕಳನ್ನು ಜೆನ್ನಾಗಿ ನೋಡಿಕೊಂಡ ಸಂತೃಪ್ತ ಭಾವ ಅವರ ಮುಖದಲ್ಲಿದ್ದಂತೆ ತೋರಿತ್ತು. +ಅಡುಗೆ ಕೆಲಸಕ್ಕೆ ನಡುವಯಸ್ಸಿನ ಸಹಾಯಕಿಯೂ ಒಬ್ಬಳಿದ್ದಳು. +ಮಧ್ಯಾಹ್ನದ ಊಟಕ್ಕೆ ಕೋಳಿ ತರಿಸಿದ್ದರು. +"ವಿಶಾಖ ಪಟ್ಟಣದಲ್ಲಿ ಮೂರು ವರ್ಷ ಇದ್ದೆವಲ್ಲ, ಆಂಧ್ರ ಸ್ಟೈಲಿನಲ್ಲಿ ಕೋಳಿ ಫೈಮಾಡ್ತೀನಿ" ಎಂದು ಆಕೆ ಹೇಳಿದ್ದರು. +ಬೆಂಗಳೂರಿನ ಆಂಧ್ರ ಮಾದರಿ ಹೋಟಲುಗಳಲ್ಲಿ ಯಮಖಾರದ ಕೋಳಿಯ ರುಚಿ ನೋಡಿದ್ದವನು "ದಯವಿಟ್ಟು ನಿಮ್ಮೂರಿನ ಮಾದರಿಯನ್ನು ಮಾಡಿ. +ನನಗೆ ಖಾರ ತಿನ್ನಬಾರದು ಅಂತ ಡಾಕ್ಟರು ಹೇಳಿದ್ದಾರೆ.” ಎಂದು ಗಾಬರಿಯನ್ನು ಪ್ರದರ್ಶಿಸಿದ್ದೆ. +“ಇಲ್ಲ. . . ಇಲ್ಲ, ಅಷ್ಟೊಂದು ಖಾರ ಇರಲ್ಲ, ನಾನು ಬೇರೇ ತರನೇ ಮಾಡ್ತೀನಿ. +ನೋಡ್ತಿರಿ' ಎಂದು ಆಕೆ ನಗುತ್ತಾ ಹೇಳಿದ್ದರು. +ಅವರು ಅಡಿಗೆ ಮನೆಯ ಕಡೆ ತಿರುಗಿದಾಗ ಇವನು ಮಕ್ಕಳಿಬ್ಬರ ಮದುವೆ ಆಲ್ಬಂಗಳನ್ನು ಹೊರಕ್ಕೆ ತೆಗೆದ. +ಜೊತೆಗೆ ಫ್ರಿಜ್‌ನಿಂದ ಎರಡು ಚಿಲ್ಡ್‌ ಬಿಯರ್‌ ಬಾಟಲುಗಳನ್ನು ಹೊರತೆಗೆದು ಅಂದಿನ ಊಟವನ್ನು ರಸವತ್ತಾಗಿಸಿದ್ದ. +ಆ ನಂತರ ಆಗಾಗ ಮೊಬೈಲ್‌ನಲ್ಲಿ ಸಂಪರ್ಕಿಸುತ್ತಿದ್ದ ಅದೂ ಇದೂ ಲೋಕಾಭಿರಾಮದ ಮಾತು. +“ಅಮೆರಿಕದಲ್ಲಿರುವ ಮಕ್ಕಳು ಕರೀತಾ ಇದ್ದಾರಯ್ಯ, ನಾನು ಇನ್ನೂ ಪಾಸ್‌ಪೋರ್ಟ್‌ ಮಾಡಿಸಿಲ್ಲ ಅಂದರೆ ನೀನು ನಂಬಬೇಕು. +ಯಾಕೋ ನನಗೆ ಈ ಪ್ರವಾಸ ಅಂದರೆ ಆಗ್ತಾ ಇಲ್ಲ. +ಸರ್ವಿಸ್‌ನಲ್ಲಿ ಇದ್ದಾಗ ನಾಯೀತರ ಅಲೆದಿದ್ದೀನಿ, ಅದಕ್ಕೇ ಇರಬೇಕೇನೋ. . ' ಎಂದು ಒಮ್ಮೆ ಹೇಳಿದ್ದ. +"ಮಾಡಿಸಯ್ಯ, ಮಕ್ಕಳು ಕರೀತಾ ಇರೋದರಿಂದ ಒಂದು ಸಲ ಹೋಗಿ ಬನ್ನಿ. +ಎಷ್ಟೋ ಜನ ಪಾಸ್‌ಪೋರ್ಟ್‌ ಮಾಡಿಸಿ ಕೊಂಡಿರ್ತಾರೆ. +ತಮ್ಮನ್ನು ಮಕ್ಕಳು ಕರೀತಾ ಇಲ್ವಲ್ಲ ಅಂತ ಪೇಚಾಡ್ತಾ ಇರ್ತಾರೆ. +ನೀನು ಅದೃಷ್ಟವಂತ. +ಮೊದಲು ಪಾಸ್‌ಪೋರ್ಟ್‌ ಮಾಡಿಸು. +ಅವರು ಕರೆದಾಗ ಹೋಗದೇ ಇದ್ರೆ ಮುಂದೆ ಅವರು ಕರೀದೇನೇ ಹೋಗಬಹುದು. . ಎಂದೇನೋ ನಾನು ಹೇಳಿದ್ದೆ. +ಮೂರು ತಿಂಗಳ ಹಿಂದೆ ಬೆಳಗಿನ ಐದು ಗಂಟೆ ಸುಮಾರಿಗೆ ಅವನಿಂದ ತುರ್ತು ಕರೆ ಬಂತು. +"ಏನೂ ಅಂತ ತೋಚ್ತಾ ಇಲ್ಲ. +ನನ್ನ ಹೆಂಡ್ತಿ ಉಸಿರಾಡ್ತಾ ಇಲ್ಲ. +ಸತ್ತು ಹೋಗಿರಬಹುದು ಅಂತ ಅನ್ನಿಸುತ್ತೆ ಬೇಗಬರ್ತೀಯಾ. ?' ಎಂದು ಹೇಳಿ ಸಂಪರ್ಕ ಸ್ತಬ್ಬಗೊಳಿಸಿದ್ದ. +ಗಡಿಬಿಡಿಯಿಂದ ಎದ್ದು ಸ್ಕೂಟರ್‌ನಲ್ಲಿ ಅಲ್ಲಿಗೆ ಹೋದೆ. +ದಿಕ್ಕು ತೋಚದಂತೆ ಕುಳಿತಿದ್ದ. +ನಾನು ಹೋಗುತ್ತಲೂ ಧೈರ್ಯ ತೆಗೆದುಕೊಂಡ. +'ರಾತ್ರಿ ಚೆನ್ನಾಗಿಯೇ ಇದ್ದರು. +ವಾಡಿಕೆಯಂತೆ ಒಂಬತ್ತೂವರೆಗೆಲ್ಲ ಊಟ ಮುಗಿಸಿ ಹತ್ತು ಗಂಟೆಯ ಟೀವಿ ಕಾರ್ಯಕ್ರಮ ನೋಡಿ ಮಲಗಲು ಬಂದರು. +ಎದೆ ನೋವು ಅದೂ ಇದೂ ಅಂತ ಏನೂ ಹೇಳಲಿಲ್ಲ. +ಬೆಳಗಿನ ಜಾವ ಎಚ್ಚರವಾಗಿ ಮೈ ಮೇಲೆ ಕೈ ಹಾಕಿದರೆ ತಣ್ಣಗೆ ಅನಿಸಿತು. +ತಕ್ಷಣ ಗಾಬರಿಯಾಗಿ ಎದ್ದು ನೋಡಿದರೆ ಉಸಿರೇ ನಿಂತು ಹೋಗಿತ್ತು.” ಎಂದು ಹೇಳುತ್ತಿದ್ದಾಗ ಅವನ ಧ್ವನಿ ನಡುಗುತ್ತಿತ್ತು ಹೃದಯ ಸ್ಥಂಭನ ಆಗಿರಬೇಕು ಎನಿಸಿತು. +ಅಡುಗೆ ಸಹಾಯಕಿಯ ನೆರವಿನಿಂದ ಅವರನ್ನು ಕಾರಲ್ಲಿ ಹಾಕಿಕೊಂಡು ಮುಖ್ಯ ರಸ್ತೆಯಲ್ಲಿನ ಖಾಸಗಿ ಆಸ್ಪತ್ರೆಗೆ ತಂದೆವು. +"ತರುವಾಗಲೇ ಜೀವ ಹೋಗಿತ್ತು" ಎಂಬರ್ಥದ ಪತ್ರವನ್ನು ಆಸ್ಪತ್ರೆಯಿಂದ ತಂದು ಮನೆಯತ್ತ ಕಾರು ತಿರುಗಿಸಿದೆವು. +ಹತ್ತಿರದ ಸಂಬಂಧಿಗಳ ನಂಬರ್‌ ಇದ್ದ ಚಿಕ್ಕ ಪುಸ್ತಕವೊಂದನ್ನು ನೀಡಿದ. +ನನ್ನ ಮೊಬೈಲ್‌ನಲ್ಲಿ ಕೆಲವರಿಗೆ ಮಾಹಿತಿ ತಿಳಿಸಿದೆ. +ಅವನ ಹೆಂಡತಿ ಮಂಡ್ಯ ಕಡೆಯವರು. +ಅವರ ಸಂಬಂಧಿಕರಿಗೂ ತಿಳಿಸಿಯಾಯಿತು. +ಮಕ್ಕಳಿಬ್ಬರನ್ನೂ ಸಂಪರ್ಕಿಸಲಾಯಿತು. +ಅವರಿಬ್ಬರೂ ತಮ್ಮ ತಮ್ಮ ಕಂಪೆನಿಗಳ ಕೆಲಸದಲ್ಲಿ ಯೂರೋಪ್‌ ಪ್ರವಾಸದಲ್ಲಿದ್ದಾರೆಂದು ತಿಳಿಯಿತು. +ಅವರಿಂದ ಏನಾದರೂ ಸುದ್ದಿಬರಲೆಂದು ಮಧ್ಯಾಹ್ನದವರೆಗೆ ಕಾಯುತ್ತಿದ್ದಾಗ ಇವನಿಗೆ ಮಕ್ಕಳಿಂದ ದೂರವಾಣಿ ಕರೆ ಬಂತು. +"ಸಾರಿ,ಡ್ಯಾಡ್‌. . . ನಾವು ತಕ್ಷಣ ಹೊರಟರೂ 24 ಗಂಟೆ ಒಳಗೆ ತಲುಪಲು ಸಾಧ್ಯವಿಲ್ಲ. +ಬಿ ಪ್ಯಾಕ್ಟಿಕಲ್ ಮುಂದಿನ ಕೆಲಸ ಮಾಡಿಬಿಡಿ'. +ಅದೇ ದಿನ ಸಂಜೆ ವೇಳೆಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. +ಮಾರನೇ ದಿನ ಕೂಡ ನಾನು ಅವನ ಅಪಾರ್ಟ್‌ಮೆಂಟ್‌ಗೆ ಭೇಟಿ ಕೊಟ್ಟಿದ್ದೆ. +ಅವನ ಸಂಬಂಧಿಕರೆಲ್ಲ ನೆರೆದಿದ್ದರು. +ಸ್ವಲ್ಪ ಹೊತ್ತು ಇದ್ದು ನನ್ನ ಅವಶ್ಯಕತೆ ಬೀಳಲಾರದೆಂದು ವಾಪಸಾಗಿದ್ದೆ. +ಮರುದಿನ ಅವನೇ ಸಂಪರ್ಕಿಸಿ ಇಬ್ಬರೂ ಮಕ್ಕಳು ಬಂದಿರುವ ವಿಷಯ ತಿಳಿಸಿದ್ದ. +ಐದನೇ ದಿನಕ್ಕೆ ಹಾಲುತುಪ್ಪ ಇದೆ ಎಂದು ಅವನು ಹೇಳಿದ. +ಅವೆಲ್ಲ ಹತ್ತಿರದ ಬಂಧುಗಳು ಪಾಲ್ಗೊಳ್ಳುವ ಕ್ರಿಯೆಗಳೆಂದು ಸುಮ್ಮನಾದೆ. +ಮುಂದಿನ ಎರಡು ಮೂರು ವಾರ ಕಳೆದರೂ ಆತನಿಂದ ಕರೆ ಬರಲಿಲ್ಲ. +ನಾನೂ ಸಂಪರ್ಕಿಸಲು ಹೋಗಲಿಲ್ಲ. +ನಿವೃತ್ತಿ ನಂತರದ ಬದುಕನ್ನು ರೂಪಿಸಿಕೊಳ್ಳಲು ಬಂದವನು ಹೀಗೆ ಒಂಟಿಯಾಗಿ ಬಿಟ್ಟನಲ್ಲ ಎನಿಸಿತ್ತು. +ನೌಕರಿಯಲ್ಲಿದ್ದಾಗ್ನ ನೂರಾರು ಜನರನ್ನು ನೋಡಿದ್ದವನು. +ಹಣಕಾಸಿನ ತೊಂದರೆಯೇನೂ ಇಲ್ಲ. +ಜೇತರಿಸಿಕೊಳ್ಳುತ್ತಾನೆ ಎಂದುಕೊಂಡೆ. +ನನ್ನ ಕೆಲಸಗಳಲ್ಲಿ ತೊಡಗಿಕೊಂಡೆ. +ಕಾರು ಕಾರ್ಪೊರೇಷನ್‌ ಎದುರು ಸಾಗುತ್ತಿದ್ದಾಗ ಅವನು "ಕಬ್ಬನ್‌ ಪಾರ್ಕ್‌ ಒಳಗಡೆಯಿಂದ ಹೋಗಬಹುದೇನಯ್ಯ?" ಎಂದ. +"ಏನೋ ಗೊತ್ತಿಲ್ಲ. +ಮೆಟ್ರೋ ಕಾಮಗಾರಿ ಬೇರೆ ನಡೀತಿದೆಯಲ್ಲ. +ಎಲ್ಲೆಲ್ಲಿ ಸಂಚಾರ ನಿಲ್ಲಿಸಿದ್ದಾರೋ, ಎಲ್ಲೆಲ್ಲಿ ತಿರುಗಿಸಿದ್ದಾರೋ ಗೊತ್ತಿಲ್ಲ. +ನಾನೂ ಈ ಕಡೆ ಬರದೆ ತುಂಬ ದಿನವೇ ಆದವು" ಎಂದೆ. +"ಮುಂದೆ ಎಲ್ಲಾದರೂ ಸಂಚಾರಕ್ಕೆ ನಿಷೇಧ ಹಾಕಿದ್ದರೆ ವಾಪಸು ಬರೋಣ. +ಆದರೆ, ಅಲ್ಲಿ ಎಲ್ಲಾದರೂ ನಿಲ್ಲಿಸಿಕೊಂಡು ಇರಬಹುದಲ್ಲವಾ" ಎಂದ. +ಅವನು ತುರ್ತಾಗಿ ಮಾತಾಡುವುದಿದೆ ಎಂದೇ ಕರೆದುಕೊಂಡು ಬಂದಿದ್ದರಿಂದ ಪಾರ್ಕಿನ ಒಳಗಡೆಯೇ ಕಾರಲ್ಲಿ ಕುಳಿತು ಮಾತಾಡಬಹುದು ಎನ್ನಿಸಿತು. +"ಸರಿ ಹಾಗೆಯೇ ಪಾರ್ಕ್‌ ಒಳಗಡೆಯೇ ಹೋಗೋಣ " ಎಂದೆ. +ಸಾರ್ವಜನಿಕ ಗ್ರಂಥಾಲಯದ ಎದುರು ಇದ್ದ ಜಾಗದಲ್ಲಿ ಕಾರು ನಿಲ್ಲಿಸಿದ. +ಮಕ್ಕಳಿಬ್ಬರು ಬಂದ ಮೇಲೆ ಏನೇನಾಯಿತು. +ಎಂಬುದೇನೂ ನನಗೆ ಗೊತ್ತಿರಲಿಲ್ಲ. . . +ಇವನು ಪತ್ನಿ ವಿಯೋಗದ ಆಘಾತದಿಂದ ಹೊರಬಂದಿರುವಂತೆ ತೋರುತ್ತಿತ್ತು. +ಆದರೂ ಅವನಾಗಿಯೇ ಬಾಯಿ ಬಿಡಲಿ ಎಂದು ಸುಮ್ಮನೆ ಕುಳಿತೆ. +'ನಿಮ್ಮ ಕ್ಲಬ್‌ನಲ್ಲಿ ನನಗೂ ಸದಸ್ಯತ್ವ ಸಿಗುತ್ತೇನೋ. . +ಸುಮ್ಮನೆ ಹೊತ್ತು ಕಳೆಯುವುದಕ್ಕೆ..ಮಾತನ್ನುಆರಂಭಿಸಿದ. +ಅದು ಸುಮ್ಮನೆ ಆಡಿದ ಮಾತು ಎಂದು ಗೊತ್ತಾದರೂ "ಅದು ವೃತ್ತಿಪರರಿಗೆ ಅಂತ ಮಾಡಿರೋ ಕ್ಲಬ್ಬು. +ವೃತ್ತಿಗೆ ಸಂಬಂಧಪಟ್ಟವರಿಗೆ ಮಾತ್ರ ಸದಸ್ಯತ್ವ ಅಂತ ಇದೆ. +ಆದರೆ, ನಿನಗೆ ಹೋಗಬೇಕೂ ಅಂದಾಗ ನಾನು ಅದರ ಆಜೀವ ಸದಸ್ಯ- ಇದ್ದೀನಲ್ಲ. +ನಾನು ನಿತ್ಯ ಮೂವರು ಅತಿಥಿಗಳನ್ನು ಕ್ಲಬಿಗೆ ಕರೆದೊಯ್ಯಬಹುದು' ಅಂದೆ. +ಅವನು ವಿಷಯಕ್ಕೆ ಬರಲು ತಡವರಿಸುತ್ತಿರುವುದು ಸ್ಪಷ್ಟವಿತ್ತು ಆದರೂ ಅವನೇ ಮುಂದುವರಿಸಲೆಂದು ಸುಮ್ಮನಾದೆ. +'ಒಂಟಿಯಾಗಿರೋದು ತುಂಬ ಕಷ್ಟ ಕಣೋ. . ' +ಇದು ಪೀಠಿಕೆ ಇರಬಹುದು ಅನ್ನಿಸಿತು. +ನನಗೂ ಅದರ ಅನುಭವ ಆಗುತ್ತಾ ಇರುವುದರಿಂದ “ಹೌದು ಮಾರಾಯ, ನಾನೇ ಈಗ ಅನುಭವಿಸ್ತಾ ಇದೀನಲ್ಲ,ಸರ್ವಿಸ್‌ನಲ್ಲಿ ಇದ್ದಾಗ ಕಚೇರಿ ಕೆಲಸ, ಟಾರ್ಗೆಟ್ಟು ವಾರ್ಷಿಕ ಪ್ರಗತಿ ಅಂತ ಅದೇ ತಲೆಯಲ್ಲಿ ತುಂಬಿಕೊಂಡಿರೋದು. +ಈಗ ನಿವೃತ್ತಿ ಆಗಿದೀನಲ್ಲ. +ಎಲ್ಲ ಖಾಲಿ ಖಾಲಿ. +ಓದೋ ಅಭ್ಯಾಸ ಇದೆ ಹೌದು. +ಆದರೆ ಎಷ್ಟು ಅಂತ ಓದ್ತಾ ಇರೋದು? + ಒಂದು ಪರೀಕ್ಷೆಗೆ ಸಿದ್ಧತೆ ಮಾಡೋದಲ್ಲ, ಒಂದು ಲೇಖನ ಬರೆಯುವುದಕ್ಕಲ್ಲ. +ಒಂದು ನಿರ್ದಿಷ್ಟ ಗುರಿ ಅಂತ ಇಟ್ಟುಕೊಳ್ಳದೆ ಇದ್ದರೆ ನಿವೃತ್ತ ಜೀವನ ಕೂಡ ಬೇಜಾರಾಗಿ ಬಿಡುತ್ತೆ. +ಅದರಲ್ಲೂ ನಿನಗೆ ಈಗ ಈ ವಯಸ್ಸಲ್ಲಿ ಬದುಕಲ್ಲೂ ಒಂಟಿಯಾಗಿರುವ ಸ್ಥಿತಿ. +ನನಗೆ ನಿಜಕ್ಕೂ ನಿನ್ನ ಬಗ್ಗೆ ವ್ಯಥೆ ಆಗ್ತಿದೆ. . . ” ಎಂದೆ. +"ನನಗೆ ಇಂಥ ಪರಿಸ್ಥಿತಿ ಬರುತ್ತೆ ಅಂತ ಯಾವತ್ತೂ ಅಂದ್ಕೊಂಡಿರಲಿಲ್ಲ. +ನನ್ನ ಮಿಸೆಸ್ಸಿಗೆ ಹೆಚ್ಚು ವಿದ್ಯೆ ಇರಲಿಲ್ಲ. +ಆದರೆ, ಮನೆಯನ್ನು ಎಷ್ಟು ಚೆನ್ನಾಗಿ ನಿರ್ವಹಿಸ್ತಾ ಇದ್ಲು ಅಂದರೆ ಈಗ ನನಗೆ ಅರ್ಥ ಆಗ್ತಾ ಇದೆ. +ಅವಳಿದ್ದಾಗ ಅವಳ ಮಹತ್ವ ಏನೂ ಅಂತ ಅರ್ಥವಾಗಿರಲಿಲ್ಲ. +ಅವಳಿಗೆ ಯಾಕೆ ಹಾಗೆ ಸಡನ್ನಾಗಿ ಆಯ್ತು ಅನ್ನೋದು ನನಗೆ ಈವರೆಗೂ ಅರ್ಥ ಆಗ್ತಿಲ್ಲ. +ಮಕ್ಕಳು ಬಂದಿದ್ರಲ್ಲ. +"ಎನ್ರೋ ಮಾಡೋದು ಈಗ" ಅಂತ ಕೇಳಿದೆ. +"ನಮ್ಮೊಟ್ಟಿಗೆ ಬಂದು ಬಿಡಿ, ಕೆಲವು ದಿನ ಸ್ಥಳ ಬದಲಾವಣೆ ಆಗುತ್ತೆ" ಅಂತ ಅಂದ್ರು. +ಸ್ವಲ್ಪ ದಿನ ಅಲ್ಲಿಗೆ ಹೋಗಿ ಇರಬಹುದು. +ಅಲ್ಲಿ ಅವರು, ಅವರ ಹೆಂಡತಿ-ಮಕ್ಕಳು, ಕೆಲಸ ಅಂತ ಅವರು ಮುಳುಗಿದ್ದರೆ ಅಲ್ಲಿ ಕೂಡ ನಾನು ಒಂಟಿ ತಾನೇ. . ಅದಕ್ಕೆ "ಸ್ವಲ್ಪ ದಿನ ಅಭ್ಯಾಸ ಮಾಡ್ಕೊಳ್ತೀನಿ" ಅಂತ ಹೇಳಿ ಅವರನ್ನು ಕಳಿಸಿಬಿಟ್ಟೆ. +ನನ್ನ ಪಾಸ್‌ಪೋರ್ಟ್‌ ಬೇರೆ ಆಗಿರಲಿಲ್ಲ."ಎಂದು ಮುಂದೆ ಹೇಳಲಾಗದೆ ನಿಲ್ಲಿಸಿದ. +"ಪಾಸ್‌ಪೋರ್ಟಿಗೆ ಇಬ್ಬರೂ ಅರ್ಜಿ ಸಲ್ಲಿಸಿದ್ದಿರಲ್ಲವಾ?" ಅವನು ಚೇತರಿಸಿಕೊಳ್ಳಲು ಅವಕಾಶವಾಗುವಂತೆ ವಿಷಯ ಬದಲಿಸಿದೆ. +"ಕೊಟ್ಟಿದ್ದೆವಲ್ಲ, ನಿನ್ನನ್ನು ಕೇಳಿ ಅಡ್ರೆಸ್‌ ತಗೊಂಡಿದ್ದೆನಲ್ಲ, ಅವಳು ಸಾಯುವ ಹಿಂದಿನ ದಿನ ಪೊಲೀಸ್‌ ಸ್ಟೇಷನ್‌ನಿಂದ ಫೋನು ಬಂದಿತ್ತು. +ನಾವು ಮಾರನೇ ದಿನ ಸ್ಟೇಷನ್ನಿಗೆ ಹೋಗಬೇಕು ಅಂತ ಮಾತಾಡಿಕೊಂಡಿದ್ದೆವು. . . " ಎಂದು ಮತ್ತೆ ನಿಲ್ಲಿಸಿದ. +"ಹಾಗಾದರೆ ಇನ್ನೂ ನೀನು ಪೊಲೀಸ್‌ ಸ್ಟೇಷನ್ನಿಗೆ ಹೋಗಿಲ್ಲ. . ?" + ಕೆಲಸ ಮತ್ತೆ ಅರ್ಧಕ್ಕೆ ನಿಂತಿದೆಯಲ್ಲ ಎಂಬ ಆತಂಕದಿಂದ ಕೇಳಿದೆ. + "ಇಲ್ಲ. ಹೋದವಾರ ಹೋಗಿ ಹೇಳಿಕೆ ಕೊಟ್ಟು ಬಂದೆ. +ಅದು ಇನ್ನು ಎರಡು ಮೂರು ವಾರಗಳಲ್ಲಿ ಬರಬಹುದು ಅಂದರು. . +ಈಗೆಲ್ಲ ಬೇಗ ವಿಲೇವಾರಿ ಆಗುವಂತೆ ವ್ಯವಸ್ಥೆ ಮಾಡಿದ್ದಾರಂತಲ್ಲ"ಅಂದ. +"ಪಾಸ್‌ಪೋರ್ಟ್‌ ಬಂದ ಮೇಲೆ ಒಂದು ಸಲ ಮಕ್ಕಳಲ್ಲಿ ಹೋಗಿ ಬಾ. +ಬದಲಾವಣೆ ಅಂತ ಆಗುತ್ತೆ. +ಹೊಸದೇಶ, ಹೊಸ ಜನ ನೋಡಿ ಉತ್ಸಾಹವೂ ಬರಬಹುದು" ಎಂದೆ. +"ನಾನು ಮೊದಲೇ ಹೇಳಿದ್ದೆನಲ್ಲ, ನನಗೆ ಪ್ರವಾಸ ಅಂದರೆ ಅಷ್ಟಕ್ಕಷ್ಟೆ ಅಂತ. +ಎಲ್ಲಿಗೂ ಹೋಗೋದು ಬೇಡ ಅನ್ನಿಸಿದೆ. +ಎಲ್ಲ ಕ್ರಿಯಾ ಕರ್ಮ ಮುಗಿದ ಮೇಲೆ ನಮ್ಮತ್ತೆ ಉಳಿದುಕೊಂಡಿದ್ದರು. +ನಮ್ಮಲ್ಲಿ ಅಡುಗೆಗೆ ಸಹಾಯಕ್ಕೆ ಅಂತ ಇದಾಳಲ್ಲ, "ಅವಳನ್ನು ಕಳಿಸಿ ಬಿಡಿ" ಅಂತ ಹೇಳಿದರು. +"ನನ್ನ ಮಿಸೆಸ್‌ ಇದ್ದಾಗ ಇವಳೇ ಅಡುಗೆ ಕೆಲಸ ಮಾಡ್ತಾ ಇದ್ದದ್ದು, ಈಗ ಮಿಸೆಸ್‌ ಇಲ್ಲದೇ ಇರೋವಾಗ ಇವಳನ್ನೂ ಕಳಿಸಿದರೆ ನಾನೇನು ಮಾಡಲಿ" ಅಂದೆ. +"ಅದೂ ಸರಿಯೇ" ಅಂದರು. +ಎಂದು ಯಾವುದೋ ವಿಷಯವನ್ನು ವಿಸ್ತರಿಸುವ ಧಾಟಿಯಲ್ಲಿ ಹೇಳಿ ನಿಲ್ಲಿಸಿದ. +"ನಿನ್ನ ಅತ್ತೆ ಅಂದರೆ, ನಿಮ್ಮ ಹೆಂಡತಿಯ ತಾಯಿ ಅಲ್ಲವಾ, ಅವರ ಊರು ಯಾವುದು? +ನಾನು ಅವತ್ತು ಬಂದಾಗ ನಿನ್ನ ಹೆಂಡತಿ ಕಡೆಯವರ ವಿಚಾರ ಕೇಳಲೇ ಇಲ್ಲ. +ಬರೀ ಚಿಲ್ಡ್‌ ಬಿಯರ್‌ ಹೀರುವುದರಲ್ಲಿ ಹೊತ್ತು ಕಳೀತು. . " ಎಂದೆ ಮಾತಿಗೆ ಲಘುತ್ವ ತರುವುದಕ್ಕೆ. +"ಅವರು ಮಂಡ್ಯ ಕಡೆಯವರು. +ಅವರದು ದೊಡ್ಡ ಕುಟುಂಬವಂತೆ. +ನಮ್ಮ ಅತ್ತೆ ಅವರ ಅಕ್ಕನ ಮಗಳೊಬ್ಬಳು. . "ಎಂದು ಅಲ್ಲಿಗೆ ನಿಲ್ಲಿಸಿ, "ಅವತ್ತು ತಗೊಂಡಿದ್ದೇ ಕೊನೆ ಕಣೊ. +ಮತ್ತೆ ಬಿಯರ್‌ತಗೊಳ್ಳೋದಕ್ಕೆ ಅವಕಾಶವೇ ಬರಲಿಲ್ಲ"ಎಂದ. +"ಇವತ್ತು ತಗೊಳ್ಳುವಂತೆ ನಮ್ಮ ಕ್ಲಬ್ಬಿನಲ್ಲಿ. . . ಎಂದೆ. +ಮತ್ತೆ ಮುಂದುವರಿಸಿ, "ಅದೇನೋ ಅಭ್ಯಾಸ ಮಾಡಿಕೊಳ್ಳಬೇಕು ಅಂದ್ಯಲ್ಲ. +ನಾನು ಕೆಲಸದಲ್ಲಿದ್ದಾಗ ನಿವೃತ್ತಿ ಆಗ್ತಿದ್ದ ನನ್ನ ಸಹೋದ್ಯೋಗಿಗಳಿಗೆ "ಏನಾದರೂ ಹವ್ಯಾಸ ಬೆಳೆಸಿಕೊಳ್ಳಿ. +ಯಾವುದಾದರೂ ಸಂಘ ಸಂಸ್ಥೆಗಳೊಂದಿಗೆ ಸೇರಿಕೊಂಡು ಸೇವೆ ಸಲ್ಲಿಸಿ"ಅಂತೆಲ್ಲ ಉಪದೇಶ ಕೊಡ್ತಾ ಇದ್ದೆ. +ಅದೆಲ್ಲ ಎಷ್ಟು ಕಷ್ಟ ಅಂತ ನನಗೆ ಈಗ ಅರ್ಥ ಆಗ್ತಾ ಇದೆ. +ಹವ್ಯಾಸ ಕಲಿಯುವುದಕ್ಕೆ ವಯಸ್ಸು ಸಹಕಾರ ನೀಡೋದಿಲ್ಲ. +ಸಂಘ ಸಂಸ್ಥೆಗಳಲ್ಲಿ ಪರಿಚಾರಕರಾಗಿ ಕೆಲಸ ಮಾಡೋದಕ್ಕೆ ಹೋದರೆ, ಮೊದಲೇ ಅಲ್ಲಿ ಸೆಟ್ಸ್‌ ಆಗಿರೋ ಪಟ್ಟಭದ್ರರು ನಿಮ್ಮನ್ನು ಹತ್ರಕ್ಕೂ ಸೇರಿಸಿಕೊಳ್ಳೋದಿಲ್ಲ. +ನಿಮ್ಮ ಪ್ರಾಮಾಣಿಕತೆಯನ್ನು ಅನುಮಾನಿಸ್ತಾರೆ. +ಸರಿಯಾಗಿ ಯೋಜನೆ ಹಾಕಿಕೊಳ್ಳದೆ ಇದ್ದರೆ ನಿಮಗೆ ಲಕ್ಷಗಟ್ಟಲೆ ಹಣ ಬ್ಯಾಂಕಲ್ಲಿ ಇದ್ದರೂ ನಿವೃತ್ತಿ ಜೀವನ, ಮಾಡುವುದಕ್ಕೆ ಯಾವ ಕೆಲಸವೂ ಇಲ್ಲದೆ ನರಕ ಆಗಬಹುದು. . 'ಎಂದೆ. + "ಅದರಲ್ಲೂ ಹೆಂಡತಿ ಇಲ್ಲದಿದ್ದರೆ ಇನ್ನೂ ನರಕ ಆಗಿ ಬಿಡುತ್ತೆ. +ನಾನು ಹಗಲು ಹೊತ್ತು ಧೈರ್ಯದಿಂದ ಇರುವಂತೆ ಎಷ್ಟೇ ಮುಖವಾಡ ಹಾಕಿಕೊಂಡರೂ ರಾತ್ರಿ ಮಲಗಿದಾಗ ಪಕ್ಕದಲ್ಲಿನ ಖಾಲಿ ಜಾಗ ಬದುಕಿನ ಶೂನ್ಯತೆಯನ್ನೇ ತೆರೆದುಬಿಡುತ್ತೆ. +ಹೆಂಡತಿ ಪಕ್ಕದಲ್ಲಿ ಮಲಗುವುದೆಂದರೆ ಸೆಕ್ಸು ಅಂತ ಅಲ್ಲ, ಹಾಗೆ ದಿನವೂ ಸೆಕ್ಸು ಸಾಧ್ಯವೂ ಇಲ್ಲ. +ಆದರೆ ಪಕ್ಕದಲ್ಲಿರೋ ಖಾಲಿ ಜಾಗ ಸದಾ ಖಾಲಿಯೇ ಇರುತ್ತೆ ಅನ್ನುವ ಭಾವದಿಂದ ಜೀವನವೇ ಖಾಲಿ ಖಾಲಿ ಅನ್ನಿಸಿಬಿಡುತ್ತೆ. +ಅದನ್ನು ನಾನು ಈ ಎರಡು ತಿಂಗಳಲ್ಲಿ ಅನುಭವಿಸಿಬಿಟ್ಟದೀನಿ. . 'ಎಂದು ತನ್ನ ಮಾತನ್ನು ಮುಂದುವರಿಸಿ ನಿಲ್ಲಿಸಿದ. +ಅದಕ್ಕೆ ಪ್ರತಿಕ್ರಿಯಿಸಲು ಹೋಗಲಿಲ್ಲ. +ಅವನೂ ಸ್ಟಲ್ಪ ಹೊತ್ತು ಸುಮ್ಮನಾದ. +ಅವನು ನನ್ನಲ್ಲಿ ಮಾತನಾಡಬೇಕು ಎಂದಿದ್ದ ವಿಷಯಕ್ಕೆ ಇನ್ನೂ ಬಂದಿಲ್ಲ ಎನ್ನಿಸಿತು. +ಅವನಿಗೆ ಒತ್ತಾಸೆಯಾಗಬಹುದೇನೋ ಅನ್ನಿಸಿ. +"ನಿನ್ನಮಕ್ಕಳು ಇಂಡಿಯಾಕ್ಕೆ ಸದ್ಯಕ್ಕೆ ಬರೋ ಸೂಚನೆ ಇಲ್ಲವಾ? +ಇದ್ದರೆ ಅವರ ಜೊತೆ ಇದ್ದುಕೊಂಡು ಮೊಮ್ಮಕ್ಕಳನ್ನು ಆಡಿಸ್ತಾ ಇರಬಹುದಲ್ಲವಾ? +ಅವರಿಗೂ ಮನೆಯಲ್ಲಿ ಹಿರೀಕನೊಬ್ಬ ಇದ್ದ ಹಾಗೆ ಆಗ್ತದಲ್ಲ"ಅಂದೆ. +"ಇಲ್ಲ, ಅದನ್ನೂ ಕೇಳಿ ನೋಡಿದೆ. +ಇನ್ನೂ ಹತ್ತು ವರ್ಷ ಆ ಚಾನ್ಸೇ ಇಲ್ಲ ಅಂದರು ಇಬ್ಬರೂ"ಎಂದ ಹತಾಶೆಯಿಂದ ಕ್ಶೈ ಚೆಲ್ಲಿದವನಂತೆ. + "ಅಂದರೆ. . . ನಿನ್ನ ಪಾಡನ್ನು ನೀನೇ ನೋಡ್ಕಬೇಕು ಅಂದ ಹಾಗೆ ಆಯಿತು. +ನಿನ್ನ ಒಂಟಿತನ ನಿವಾರಣೆಗೆ ಮಕ್ಕಳು ಏನಾದರೂ ಪರಿಹಾರ ಸೂಚಿಸಿದರಾ? +ನಿನ್ನ ಸೊಸೆ ಒಬ್ಬಳು ಎಂಬಿಎ ಗ್ರಾಜ್ಯುಯೇಟ್‌ ಅಂತ ನಿಮ್ಮ ಮನೆಗೆ ಬಂದಿದ್ದಾಗ ಹೇಳಿದ್ದೆಯಲ್ಲ" ಎಂದೆ. +"ಅವರೇನು ಹೇಳ್ತಾರೆ. +ಒಬ್ಬ 'ಧ್ಯಾನ -ಯೋಗ ಮಾಡು' ಅಂದ. +ಇನ್ನೊಬ್ಬ "ಯಾವುದಾದರೂ ಹೈಟೆಕ್‌ಆಶ್ರಮ ಸೇರ್ ತೀರ್ಯ ಎಲ್ಲ ಸೌಲಭ್ಯವೂ ಇರುತ್ತೆ. +ಒಂಟಿತನವೂ ಹೋಗುತ್ತೆ" ಅಂದ. +ಅವರ ಮಾತು ಕೇಳಿದರೆ ಆಯ್ತು. +ಇನ್ನು ಸೊಸೆಯರು 'ಸದ್ಯ ಪೀಡೆ ಹೇಗಾದರೂ ತೊಲಗಲಿ' ಎಂದಾರು. . +ಅಷ್ಟಕ್ಕೂ ಅವರೊಂದಿಗೆನಾವು ಹೆಚ್ಚು ಕಾಲ ಕಳೆದವರೇ ಅಲ್ಲ, ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡ್ಕೋಬೇಕು. . ' ಅಂದ. +"ನಿಮ್ಮ ಮನೆಯಲ್ಲಿ ಕೆಲಸಕ್ಕಿದ್ದ ಹೆಂಗಸನ್ನು ಬಿಡಿಸಿ ಅಂತ ನಿಮ್ಮತ್ತೆ ಹೇಳಿದರು ಅಂದ್ಯಲ್ಲ, ಅವರು ನಿನ್ನ ಸಮಸ್ಯೆಗೆ ಏನಾದರೂ ಪರಿಹಾರ ಹೇಳಿರಬೇಕಲ್ಲವಾ? +ಏನು ಮಾಡಲಿ ಅಂತ ನೀನು ಕೇಳಬೇಕಿತ್ತು" ಎಂದೆ. +ಮಾತಿಗೆ ಖಚಿತವಾದ ಎಳೆ ಸಿಕ್ಕಂತಾಗಿ "ಅದನ್ನೇ ಕೇಳಬೇಕು ಅಂತಲೇ ನಾನು ನಿನ್ನ ಹತ್ರ ಬಂದಿದ್ದು. +ನಮ್ಮತ್ತೆ ನನ್ನ ಮಕ್ಕಳು ಹೇಳಿದ್ದನ್ನು ಕೇಳಿಕೊಂಡರು. +"ನಿಮಗೆಷ್ಟು ವಯಸ್ಸು" ಅಂತಲೂ ಕೇಳಿದರು. +61 ಅಂದೆ. +ಅವರ ಸ್ವಂತ ಅಕ್ಕನ ಮಗಳೊಬ್ಬಳು ಇದ್ದಾಳಂತೆ. +ಆಕೆಗೆ 58 ವರ್ಷವಂತೆ. +ಗಂಡ ತೀರಿ ಹೋಗಿ ಹತ್ತು ವರ್ಷಆಯ್ತಂತೆ. +ಇದ್ದ ಇಬ್ಬರು ಹೆಣ್ಣುಮಕ್ಕಳು ಮದುವೆಯಾಗಿ ಸೆಟ್ಲ್ ಆಗಿದ್ದಾರೆ. +"ಒಂಟಿ ಬಾಳು ಬಾಳತಾ ಇದ್ದಾಳೆ,ಆ ಕಾಲದಲ್ಲಿ ನನ್ನ ಮಗಳಿಗಿಂತಲೂ ಹೆಚ್ಚು ಓದಿದ್ದಳು. +ಒಳ್ಳೇ ಸಂಸ್ಕಾರ ಇರೋಳು. +ಈಗ ಹೇಗೂ ನೀವು ಒಂಟಿಯಾಗಿದೀರಿ. +ಅವಳನ್ನು ಮದುವೆ ಆಗಿಬಿಡಿ. +ಈ ವಯಸ್ಸಲ್ಲಿ ಅವಳಿಗಂತೂ ಮಕ್ಕಳಾಗೋದಿಲ್ಲ. +ನಿಮಗೂ ಕೊನೆಗಾಲದಲ್ಲಿ ಒಂದು ಆಸರೆ ಇದ್ದ ಹಾಗೆ ಆಗುತ್ತೆ ಅಂತ ಹೇಳಿದರು. +ಅದನ್ನೇ ನಿನ್ನ ಹತ್ರ ಮಾತಾಡಾಣ ಅಂತ ಬಂದೆ.” ಅಂದ. +"ಇದರ ಬಗ್ಗೆ ನಾನು ಹೇಳುವುದಕ್ಕಿಂತ ನಿನ್ನ ಮಕ್ಕಳು ಏನು ಹೇಳ್ತಾರೆ ಅನ್ನೋದು ಮುಖ್ಯ ಅಲ್ಲವಾ? +ಅವರ ವಿರೋಧ ಇದ್ದರೆ ಮುಂದೆ ಕಷ್ಟ ಆಗಲ್ಲವಾ?' ಅಂದೆ. +"ಅವರಾ. . . ಇಲ್ಲಿ ಅಮೆರಿಕದಲ್ಲಿ ಇಂಥವೆಲ್ಲ ನಡೀತಾನೆ ಇರ್ತವೆ. +ಒಳ್ಳೆ ಸಂಬಂಧ ಸಿಕ್ಕರೆ ಆಗಿ ಬಿಡಿ ಅಂತ ಹೇಳಿ ಕೈ ತೊಳೆದುಕೊಂಡರು. . " ಎಂದು ಸಿಡುಕಿದ. +"ಆದರೆ ನಿಮ್ಮತ್ತೆ ಹೇಳಿದ ಹೆಂಗಸನ್ನೂ ಕೇಳಬೇಕಲ್ಲವಾ. . ಅವರ ಒಪ್ಪಿಗೆಯೂ ಇದೆಯೋ. +ಆಗಲೇ ಇಬ್ಬರು ಹೆಣ್ಣುಮಕ್ಕಳು ಮದುವೆಯಾಗಿ ಸೆಟ್ಲ್ ಆಗಿದ್ದಾರೆ ಅಂತೀಯಾ, ಅವರ ವಿರೋಧ ಇದ್ದರೆ. +ಅದರಲ್ಲೂ 58ವರ್ಷದ ತಾಯಿ ಮದುವೆ ಆಗೋದನ್ನು ಮಕ್ಕಳು ಒಪ್ಪಿಕೊಳ್ಳೋದು ಅಷ್ಟು ಸುಲಭವಲ್ಲ" ಎಂದು ನನ್ನ ಅನುಮಾನವನ್ನು ವ್ಯಕ್ತಪಡಿಸಿದೆ. +"ನಮ್ಮತ್ತೆ ಅದನ್ನೆಲ್ಲ ವಿಚಾರಿಸಿ ಖಚಿತಪಡಿಸಿದ್ದಾರೆ. +ಅವರೇ ಮುಂದೆ ನಿಂತು ಮಾಡ್ತಾ ಇರೋದರಿಂದ ಸಮಸ್ಯೆ ಇದ್ದ ಹಾಗಿಲ್ಲ. +ಆದರೆ, ಈ ವಯಸ್ಸಲ್ಲಿ ನಾನು ಮದುವೆ ಆಗೋದು ಸರಿಯೋ ತಪ್ಪೋ ಅಂತ ನಿನ್ನನ್ನು ಕೇಳಬೇಕಿತ್ತು. +ನಾನು ಮಾಡ್ತಿರೋದು ತಪ್ಪಲ್ಲ ತಾನೇ?' ಎಂದು ನನ್ನ ಕಣ್ಣಲ್ಲಿ ಕಣ್ಣಿಟ್ಟ. +ಒಂದು ಕ್ಷಣ ನನಗೆ ಏನು ಹೇಳುವುದಕ್ಕೂ ತೋಚದಾಯಿತು. +ಕ್ಷುಲ್ಲಕ ಕಾರಣಗಳಿಗಾಗಿ ಮದುವೆಯನ್ನು ಮುರಿದುಕೊಂಡು ವಿವಾಹದ ಚೌಕಟ್ಟನ್ನು ದುರ್ಬಲಗೊಳಿಸುತ್ತಿರುವ ಪ್ರವೃತ್ತಿ ಯುವ ಜನಾಂಗದಲ್ಲಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸಾಂಗತ್ಯದ ಅವಶ್ಯಕತೆಗಾಗಿ ಮದುವೆಯ ಚೌಕಟ್ಟನ್ನು ಬಲಪಡಿಸಲು ಮುಂದೆ ಬಂದ ಗೆಳೆಯನ ಜೀವನೋತ್ಸಾಹಕ್ಕೆ ಮೆಚ್ಚುಗೆಯಾಗಿ, "ಖಂಡಿತಾ ತಪ್ಪಲ್ಲ ಶಿವರಾಮು. +ಇದು ಖುಷಿಯಿಂದ ಸಂಭ್ರಮಿಸುವ ನಿರ್ಧಾರ. +ಕಾರು ಸ್ಟಾರ್ಟ್‌ ಮಾಡು, ನಮ್ಮ ಕ್ಷಬ್ಬನಲ್ಲಿ ಇದನ್ನು ಸೆಲೆಬ್ರೇಟ್‌ ಮಾಡೋಣ "ಎಂದು ಅವನು ಬಲಗೈಯನ್ನು ಬಿಗಿಯಾಗಿ ಹಿಡಿದು ಕುಲುಕಿದೆ. +"ಸಾರ್‌. . . ಸಾರ್ ಎಂದು ಕರೆಯುತ್ತಾ ಒಂದೇ ಸಮನೆ ಆಸ್ಪತ್ರೆ ಪಕ್ಕದ ವೈದ್ಯರ ನಿವಾಸದ ಬಾಗಿಲು ಬಡಿಯುತ್ತಿದ್ದಾಗ ಒಳಗಡೆ ಊಟಕ್ಕೆ ಕುಳಿತಿದ್ದ ರಮೇಶನಿಗೆ ಕಸಿವಿಸಿಯಾಯಿತು. +ಊಟ ಬಡಿಸುತ್ತಿದ್ದ ಯತೀಶ"ಯಾರ್ರಿ ಅದು. . ಇರಿ ಸ್ವಲ್ಪ."ಎಂದು ಅಸಹನೆಯಿಂದ ಕೂಗಿದ. +ಎರಡು ಚಪಾತಿ ತಿಂದು ಮುಗಿಸಿದ ರಮೇಶನ ತಟ್ಟೆಗೆ ಯತೀಶ ಅನ್ನ ಬಡಿಸುತ್ತಿದ್ದಾಗ ಇನ್ನೊಮ್ಮೆ ಹೊರಬಾಗಿಲಿನಿಂದ "ಸಾರ್‌. . ಡಾಕ್ಟ್ರೇ. . . ಎಂಬ ಆರ್ತ ಮೊರೆ ಕೇಳಿಸಿತು. +"ಹೋಗಿ ನೋಡು, ಯಾರೂಂತ. . . ನಾನು ಸಾರು ಬಡಿಸಿಕೊಳ್ತೇನೆ' ಎಂದು ರಮೇಶ ಎಡಗೈಯಿಂದ ಸಾರಿನ ಪಾತ್ರೆಯಲ್ಲಿದ್ದ ಸೌಟನ್ನು ಎತ್ತಿಕೊಂಡ. +ಸೌಟನ್ನು ಪಾತ್ರೆಯಲ್ಲಿ ತಿರುವುತ್ತಾ ಬಡಿಸಿಕೊಳ್ಳುತ್ತಿದ್ದಾಗ ಯತೀಶ 'ಯಾರಯ್ಯ ಅದು, ನಿಮಗೇನು ಹೊತ್ತು ಗೊತ್ತು ಇಲ್ಲೇನು? +ಡಾಕ್ಟ್ರು ಊಟಮಾಡಬಾರದಾ? +ಏನಯ್ಯ ಅಷ್ಟು ಅರ್ಜಂಟು?' ಎಂದು ದಬಾಯಿಸುತ್ತ ಹೋದವನು ಬಾಗಿಲ ಅಗುಳಿ ತೆರೆದವನೇ "ಓಹ್‌ ನೀನೇನಯ್ಯ. . ಈಗ್ಯಾಕೆ ಮತ್ತೆ ಇಲ್ಲಿಗೆ ಬಂದೆ?"ಎಂದು ಜೋರಾಗಿ ಪ್ರಶ್ನಿಸುವುದು ಕೇಳಿಸಿತು. +ಹೊರಬಾಗಿಲ ಬಳಿ ನಿಂತಿದ್ದ ವ್ಯಕ್ತಿ ತಕ್ಷಣವೇ ಧ್ವನಿ ತಗ್ಗಿಸಿ ಮೆಲುದನಿಯಲ್ಲಿ ಗೋಗರೆಯುವುದು ಒಳಗಿದ್ದ ರಮೇಶನಿಗೆ ಅಸ್ಪಷ್ಟವಾಗಿ ಕೇಳಿಸಿತು. +ಯತೀಶ ಬಾಗಿಲನ್ನು ಮುಚ್ಚಿ ಅಗುಳಿ ಹಾಕಿದ. +ಗುಟ್ಟನ್ನು ಹೇಳುವವನಂತೆ ರಮೇಶನ ಹತ್ತಿರ ಬಂದು ಕಿವಿಯಲ್ಲಿ ಹೇಳುವಷ್ಟು ಕೆಳದನಿಯಲ್ಲಿ "ಮೈಲಾರಪ್ಪನ ತಮ್ಮ ಯಂಕಟೇಶಪ್ಪ ಸಾರ್‌. +ಮೈಲಾರಪ್ಪನ ಮಗ ಮಾಡಿ ಮೇಲಿಂದ ಬಿದ್ದು ಪೆಟ್ಟು ಮಾಡಿಕೊಂಡಿದಾನಂತೆ. . ಆಸ್ಪತ್ರೆಗೆ ಎತ್ತಿಕೊಂಡು ಬಂದಿದಾರಂತೆ. . ' ಎಂದ. +ಊಟದ ಕೊನೆಯ ಹಂತದಲ್ಲಿದ್ದ ರಮೇಶನಿಗೆ ಮೈಲಾರಪ್ಪನ ಹೆಸರು ಹೇಳುತ್ತಲೂ ಮೈಮೇಲೆ ಬಿಸಿ ನೀರುಚೆಲ್ಲಿದಂತಾಯಿತು. +ತಕ್ಷಣಕ್ಕೆ ಏನನ್ನೂ ಹೇಳಲಾಗಲಿಲ್ಲ. +"ಮಾಡಿ ಮೇಲೆ ನಿಂತ್ಕಂಡು ಯಾರಿಗೆ ಕಣ್ಣುಹೊಡೀತಿದ್ನೋ. . ಕೊಬ್ಬಿನ ಸೂಳೆಮಗ. +ಬಿದ್ದಂತೆ ಸಾಯಲಿ. "ಎಂದು ಯತೀಶ ಮೆಲ್ಲಗೆ ಶಪಿಸಿದ. +ರಮೇಶನಿಗೆ ಯತೀಶನ ಪ್ರತಿಕ್ರಿಯೆ ಅಚ್ಚರಿ ಎನಿಸಲಿಲ್ಲ. +"ಛೇ ಛೇ. . " ಎಂದಷ್ಟೆ ಹೇಳಿ ತಟ್ಟೆಯಲ್ಲಿ ಅವಸರದಿಂದ ಕೈತೊಳೆದ. +ಟವಲ್‌ನಿಂದ ಕ್ಶೈ ಒರೆಸಿಕೊಳ್ಳುತ್ತ ಹೊರಬಾಗಲ ಅಗಳಿ ತೆಗೆದ. +ಬಾಗಿಲ ಹೊರಗೆ ನಿಂತಿದ್ದ ಯಂಕಟೇಶಪ್ಪ ಎರಡೂ ಕ್ಶೈ ಮುಗಿದುಕೊಂಡು ಗೋಗರೆಯುವಂಥ ಭಂಗಿಯಲ್ಲಿ ನಿಂತಿದ್ದನ್ನು ಯತೀಶ ಗಮನಿಸಿದ. +ಅವನೊಂದಿಗೆ ರಮೇಶ ಪಕ್ಕದಲ್ಲೇ ಇದ್ದ ಆಸ್ಪತ್ರೆಯ ಕಡೆ ಬಿರುಸಿನಿಂದ ಸಾಗಿದ್ದನ್ನು ನೋಡಿ,ಅವನು ಬಿಟ್ಟಿದ್ದ ತಟ್ಟೆಯನ್ನು ಎತ್ತಿಕೊಂಡು ತೊಳೆಯಲು ಬಚ್ಚಲ ಕಡೆ ನಡೆದ. +ಆಸ್ಪತ್ರೆಯ ಕಡೆ ಸಾಗುತ್ತಿದ್ದಾಗ ರಮೇಶನಿಗೆ ಪಕ್ಕದಲ್ಲಿ ಬರುತ್ತಿದ್ದ ಯಂಕಟೇಶಪ್ಪ ಘಟನೆಗೆ ಸಂಬಂಧಪಟ್ಟು ನೀಡುತ್ತಿದ್ದ ವಿವರಗಳು ಕಿವಿಯ ಮೇಲೆ ಬೀಳುತ್ತಿದ್ದವು. +"ಮನೆ ಮಹಡಿಯ ಮೇಲೆ ನಿಂತು ಗಾಳಿಪಟ ಹಾರಿಸುತ್ತಿದ್ದಾಗ ಬಗ್ಗಿ ಆಯತಪ್ಪಿ ಬಿದ್ದು ಬಿಟ್ಟಿದ್ದಾನೆ. +ಕಾಂಪೋಂಡು ಹತ್ರ ಕುಸಿದು ಬಿದ್ದಿದ್ದ. +ಅವನ್ನ ಅಂಗಾತ ಮಲಗಿಸಿಕೊಂಡೇ ಕರ್ಕಂಡು ಬಂದ್ವಿ. +ನೋವು ಉರಿ ಅಂತ ಬಡಕೊಳ್ತಾ ಇದ್ದಾನೆ. +ಏನಾಗೈತೋ ನೋಡಿಸಾರ್‌, ಅಣ್ಣಯ್ಯ ಬೇರೆ ಊರಾಗಿಲ್ಲ." ಎಂದೂ ಅವನು ಹೇಳಿದ. +ಮಹಡಿ ಮೇಲಿಂದ ಯಾವುದರ ಮೇಲೆ ಬಿದ್ದನೋ. . ತಲೆ ಅಡಿಯಾಗಿ ಬಿದ್ದಿದ್ದರೆ ಗೋವಿಂದ. . ಕಾಲು ಮುರಿದಿರಬಹುದು. +ದೇಹದ ಒಳಗೆ ಏಟಾಗಿದ್ದು ಅಲ್ಲೇ ರಕ್ತಸ್ರಾವವಾದರೆ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪತ್ತೆ ಮಾಡುವುದಕ್ಕೆ ವ್ಯವಸ್ಥೆ ಇಲ್ಲ. . . +ಪ್ರಥಮ ಚಿಕಿತ್ಸೆ ಮಾಡಿ ದೊಡ್ಡಾಸ್ಪತ್ರೆಗೆ ಒಯ್ಯಲು ಹೇಳಬಹುದೇನೋ. . . ಎಂದು ಲೆಕ್ಕ ಹಾಕುತ್ತ ಬಂದ. +ತುರ್ತುಅವಸ್ಥೆಯಲ್ಲಿ ರೋಗಿಯನ್ನು ನೋಡುವ ಅವಸರ ಇದ್ದರೂ ಹತ್ತು ದಿನಗಳ ಹಿಂದೆ ನಡೆದ ಘಟನೆಗಳು ಅವನ ಕಣ್ಮುಂದೆ ಸುಳಿದವು. +ಅವತ್ತು ಮಧ್ಯಾಹ್ನ ಊಟ ಮುಗಿಸಿದ ನಂತರ ಪೇಟೆಗೆ ಅಂದಾಜು ಮೂರು ಕಿಲೋಮೀಟರ್‌ ದೂರದಲ್ಲಿ ಹೆದ್ದಾರಿಯ ಪಕ್ಕದಲ್ಲಿಯೇ ಇರುವ ಸದಾನಂದ ಕಾಮತರ ಮನೆಯ ಕಡೆ ಹೊರಟಿದ್ದ. +ಹೊರಗಡೆ ಹೋಗುವಾಗಲೆಲ್ಲ ಜೊತೆಯಲ್ಲಿ ಬರುವ ಆಸ್ಪತ್ರೆಯ ನಾಲ್ಕನೇ ದರ್ಜೆ ನೌಕರ ಯತೀಶ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ. +ನಿಧಾನ ಸಾಗುತ್ತಿದ್ದಾಗ ಬ್ಯಾಂಕಿನ ಹೊರಗಡೆಯೇ ನಿಂತಿದ್ದ ಸದಾನಂದ ಕಾಮತರು ಕಂಡಿದ್ದರಿಂದ ಅಲ್ಲಿ ಕಾರು ನಿಲ್ಲಿಸಿದ. +ಕಾಮತರು ಬ್ಯಾಂಕ್‌ ಒಳಗಡೆ ಹೋದುದನ್ನು ನೋಡಿ ತಾನೂ ಇಳಿದು ಅವರನ್ನು ಹಿಂಬಾಲಿಸಿದ್ದ. +ರಮೇಶನನ್ನು ಕಂಡ ಬ್ಯಾಂಕ್‌ ಮೇನೇಜರ್‌ ಎದ್ದು ಬಂದು ಬರಮಾಡಿಕೊಂಡ ಮೇಲೆ ಸ್ವಲ್ಪ ಹೊತ್ತು ಅವರ ಕೋಣೆಯಲ್ಲಿ ಕುಳಿತಿದ್ದು ಅವರು ತರಿಸಿಕೊಟ್ಟ ಚಹಾ ಕುಡಿದು ನಿರ್ಗಮಿಸಿದ್ದ. +ಪೇಟೆಯಲ್ಲಿ ಸ್ವಲ್ಪ ಕೆಲಸ ಇರುವುದರಿಂದ ಅದನ್ನು ಮುಗಿಸಿ ತಕ್ಷಣ ಬರುವುದಾಗಿ ಕಾಮತರು ಹೇಳಿದ್ದರಿಂದ ಇವನು ಹೊರಬಂದು ಅವರ ಮನೆಯ ದಿಕ್ಕಿನಲ್ಲಿ ಕಾರನ್ನು ನಡೆಸಿದ. +ಪೇಟೆಯ ಸರಹದ್ದನ್ನು ದಾಟಿ ಸ್ವಲ್ಪ ದೂರ ಬಂದದ್ದಷ್ಟೆ, ಭಾರಿ ವೇಗದಿಂದ ಪಕ್ಕದಲ್ಲಿ ಸಾಗಿದ ನಾಲ್ಕುಮೋಟಾರ್‌ ಸೈಕಲ್‌ಗಳು ಮುಂದಿದ್ದ ಸಣ್ಣ ತಿರುವಿನಲ್ಲಿ ಅಡ್ಡಹಾಕಿದ್ದವು. +ಜನತೆಗೆ ಅಹರ್ನಿಶಿ ಸೇವೆ ಸಲ್ಲಿಸಲು ನಿಯೋಜಿತನಾಗಿರುವ ವೈದ್ಯ ತಾನು ಅಂದುಕೊಂಡಿದ್ದ ರಮೇಶ ಯಾವುದೋ ತುರ್ತು ಚಿಕಿತ್ಸೆಯ ಕರೆಇರಬೇಕು. . +ಯಾರಿಗಾದರೂ ಹಾವು ಕಚ್ಚಿರಬಹುದೇ ಎಂದುಕೊಳ್ಳುತ್ತ ಕಾರನ್ನು ರಸ್ಕೆ ಬದಿ ನಿಲ್ಲಿಸಿ ಇಂಜಿನ್‌ಸ್ತಬ್ಧಗೊಳಿಸದೆ ಕಿಟಕಿ ಗಾಜು ಇಳಿಸಿದ. +ವಿಚಾರಿಸಲೆಂದು ಕತ್ತು ಹೊರಗೆ ಹಾಕಿದರೆ ಮೋಟರ್‌ ಬೈಕ್‌ನಿಂದ ಇಳಿದ ನಾಲ್ವರಲ್ಲಿ ಇಬ್ಬರು ಯುವಕರು ಕತ್ತಿನ ಬಳಿ ಕೈಯಿಟ್ಟು ಒರಟು ದನಿಯಲ್ಲಿ "ಕಾರಿನ ಕೀ, ಮೊಬೈಲು,ಪರ್ಸ್‌ ಕೊಡಿ" ಎಂದು ಆದೇಶಿಸಿದರು. +ಅನಿರೀಕ್ಷಿತವಾಗಿ ಕೇಳಿಬಂದ ಮಾತಿಗೆ ಗಲಿಬಿಲಿಯಾಗಿ "ಯಾಕೆ. . ?"ಎಂದು ಕೇಳುತ್ತಿದ್ದಂತೆ ಅವರಲ್ಲೊಬ್ಬ ಕುತ್ತಿಗೆಯ ಮೇಲೆ ಮುಷ್ಟಿ ಮಾಡಿ ಗುದ್ದಿದ. +ಹಿಂದೆ ಕುಳಿತಿದ್ದ ಯತೀಶ "ಸಾರ್‌ ಸಾರ್‌. . . ಕಳ್ಳರು. ದರೋಡೆ. . . ಕಾರು ಓಡಿಸಿ." ಎಂದು ಹಠಾತ್‌ ಆಕ್ರಮಣದಿಂದ ಗಾಬರಿಯಲ್ಲಿ ಹೇಳಿದ್ದರಿಂದ ತಕ್ಷಣ ಕಾರನ್ನು ಓಡಿಸಿದ್ದ. +ಮುಂದೆ ರಸ್ತೆಯೂ ನೇರವಾಗಿದ್ದರಿಂದ ಮೋಟಾರ್‌ ಬೈಕ್‌ಗಳು ಬೆನ್ನಟ್ಟಿ ಬರಲಿಲ್ಲ. +ಸದಾನಂದ ಕಾಮತರ ಮನೆಯ ಕಡೆ ಅಗಚುವ ದಾರಿಯಲ್ಲಿಯೂ ಕಾರನ್ನು ನಿಲ್ಲಿಸದೆ ಇನ್ನೂ ಒಂದೆರಡು ಕಿಲೋಮೀಟರ್‌ ದೂರ ಸಾಗಿದ ಮೇಲೆ ತನ್ನನ್ನು ದರೋಡೆ ಮಾಡಲು ನಡೆಸಿದ ಯತ್ನ ಎಂಬುದು ಅರಿವಿಗೆ ಬಂದಿತ್ತು. +ತಕ್ಷಣವೇ ಕಾರನ್ನು ತಿರುಗಿಸಿ ಪೇಟೆಗೆ ವಾಪಸಾಗಿ ನೇರ ಪೊಲೀಸ್‌ ಠಾಣೆಗೆ ಬಂದ. +ಯತೀಶನೂ ಜೊತೆಯಲ್ಲಿ ಇದ್ದಿದ್ದರಿಂದ ನಾಲ್ಕು ಮೋಟಾರ್‌ ಬೈಕ್‌ಗಳಲ್ಲಿ ಬಂದ ಇಪ್ಪತ್ತು- ಇಪ್ಪತ್ತೆರಡರ ಹರಯದ ನಾಲ್ವರು ಯುವಕರು ಕಾರನ್ನು ತಡೆದು ಪರ್ಸು, ಮೊಬೈಲ್‌ ಮತ್ತು ಕಾರಿನ ಕೀ ಒಪ್ಪಿಸಲು ಬೆದರಿಕೆ ಹಾಕಿದ್ದಲ್ಲದೆ ಕತ್ತಿನ ಮೇಲೆ ಗುದ್ದಿದ್ದನ್ನು ವಿವರವಾಗಿ ಬರೆದು ಠಾಣೆಗೆ ದೂರು ಕೊಟ್ಟ. +"ಏನ್‌ ಸಾರ್‌,ವರ್ಷದಿಂದ ನೋಡ್ತಾ ಇದೀವಿ. +ನೀವು ಬಂದ ಮೇಲೆ ಇಲ್ಲಿ ಸರ್ಕಾರಿ ಆಸ್ಪತ್ರೆ ಇದೆ ಅಂತ ಅದರ ಬಗ್ಗೆ ಸುತ್ತಮುತ್ತ ಇರೋ ಜನರಿಗೆ ಗೊತ್ತಾಗಿದೆ. +ಹಗಲೂ ರಾತ್ರಿ ಆಸ್ಪತ್ರೆಯಲ್ಲಿ ಸಿಗ್ದೀರಿ ಅಂತ ಈ ಸುತ್ತಮುತ್ತಲಿನವರು ಮಾತ್ರ ಅಲ್ಲ, ದೂರದ ಊರಿನವರೂ, ಅಕ್ಕಪಕ್ಕದ ತಾಲೂಕಿನವರೂ ಈ ಆಸ್ಪತ್ರೆಗೆ ಬರೋದಕ್ಕೆ ಶುರು ಮಾಡಿದಾರೆ. + ಅಂಥ ನಿಮ್ಮನ್ನು ದೋಜೋದಕ್ಕೆ ಬಂದರಾ. . . ಸಿಗಲಿ ಬಾನ್‌ಜೋತ್‌ನನಮಕ್ಕಳು. . ' ಎನ್ನುತ್ತ ಎಸ್‌ಐ ಸಾಹೇಬರು ತಕ್ಷಣವೇ ಸುತ್ತಮುತ್ತಲಿನ ಠಾಣೆಗಳಿಗೆ ವೈರ್‌ಲೆಸ್‌ ಸಂದೇಶ ಕಳಿಸಿದ್ದರು. +ಠಾಣೆಯಲ್ಲಿದ್ದ ಪೊಲೀಸರನ್ನೂ ಸಣ್ಣ ತಂಡಗಳಲ್ಲಿ ಕಳ್ಳರ ಪತ್ತೆಗೆ ನಿಯೋಜಿಸಿದರು. +ಅದು ಶರಾವತಿ ಹಿನ್ನೀರಿನ ಪ್ರದೇಶ. +ತಾಲ್ಲೂಕು ಕೇಂದ್ರಕ್ಕೆ ಮೂವತ್ತು ಕಿಲೋಮೀಟರ್‌ ದೂರದಲ್ಲಿದ್ದ ಹೋಬಳಿ ಕೇಂದ್ರ. +ರಾಜ್ಯ ಹೆದ್ದಾರಿ ಸಾಗಿರುವುದರಿಂದ ಊರಿಗೆ ಪೇಟೆಯ ಕಳೆ. +ಸುತ್ತಮುತ್ತಲ ಹಲವು ಗ್ರಾಮಗಳಿಗೆ ಕೇಂದ್ರ ಸ್ಥಳವೂ ಆಗಿರುವುದರಿಂದ ರಸ್ತೆಯ ಎರಡೂ ಬದಿ ಅಂಗಡಿ ಮುಂಗಟ್ಟುಗಳು ತಲೆಎತ್ತಿವೆ. +ಹೆದ್ದಾರಿಯಲ್ಲಿಯೇ ಸುಮಾರು ಒಂದು ಕಿಲೋಮೀಟರ್‌ ದೂರ ಪೇಟೆಯ ವ್ಯಾಪ್ತಿ. +ಪೇಟೆಯ ಒಂದು ತುದಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಇನ್ನೊಂದು ತುದಿಯಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು. +ಮಧ್ಯಭಾಗದಲ್ಲಿ ಪೊಲೀಸ್‌ ಠಾಣೆ. +ಕಾರನ್ನು ಅಡ್ಡಗಟ್ಟ ದರೋಡೆಗೆ ಯತ್ನ ನಡೆಸಿದ ಘಟನೆ ತಾಲ್ಲೂಕಿನಲ್ಲಿಯೇ ಅಪರೂಪ. +ಶಿವಮೊಗ್ಗ-ಭದ್ರಾವತಿಯಂಥ ಕಡೆ ಕೂಡ ಅಪರೂಪವಾಗಿ ನಡೆಯುವಂಥ ಘಟನೆಯನ್ನು ಸವಾಲಾಗಿ ತಾಲ್ಲೂಕಿನ ಪೊಲೀಸರು ಸ್ವೀಕರಿಸಿದ್ದರಿಂದ ಮುಕ್ಕಾಲು ಗಂಟೆಯ ಒಳಗೆಲ್ಲ ನಾಲ್ಕೂ ಮೋಟಾರ್‌ ಸೈಕಲ್‌ ಸಮೇತ ಹುಡುಗರು ಸಿಕ್ಕಿ ಬಿದ್ದರು. +ಅವರೆಲ್ಲರನ್ನೂ ಎಳೆದು ತಂದ ಪೊಲೀಸರು ಅಪರೂಪಕ್ಕೆ ಸಿಗುವ ಅವಕಾಶವನ್ನುಕೈ ಜಾರುವುದಕ್ಕೆ ಬಿಡಬಾರದೆಂದು ಯಾರು ಏನು ಎಂಬುದನ್ನು ವಿಚಾರಿಸುವ ಮೊದಲೇ ಎಲ್ಲರಿಗೂ ಎಲುಬುಗಳನ್ನು ಲೆಕ್ಕ ಹಾಕುವಂತೆ ಅರ್ಧ ಗಂಟೆಯಲ್ಲಿ ಮಾಡಿಬಿಟ್ಟರು. +"ರಮೇಶ ಡಾಕ್ಟರನ್ನು ದೋಚೋದಕ್ಕೆ ಹೊರಟದ್ರಂತೆ" ಎನ್ನುವ ಸುದ್ದಿ ತಾಲ್ಲೂಕು ಕೇಂದ್ರಕ್ಕೆ ತಲುಪುವುದಕ್ಕೆ ಹೆಚ್ಚು ಹೊತ್ತು ಹಿಡಿಯಲಿಲ್ಲ. +ಸಂಜೆಯ ಕೈಂ ಬೀಟ್‌ನಲ್ಲಿ ಸಣ್ಣದಾಗಿ "ಸುಲಿಗೆ ಯತ್ನ" ಎಂದು ಹರಿದಾಡಿದ ಸುದ್ದಿ ಜಿಲ್ಲೆಯಾದ್ಯಂತ ಪ್ರಸಾರ ಆಗತೊಡಗಿತು. +ಉತ್ಸಾಹಿ ವರದಿಗಾರನೊಬ್ಬ ರಾಜ್ಯಮಟ್ಟದ ಸುದ್ದಿವಾಹಿನಿಗೂ ತಲುಪಿಸಿ ಅದು ಬ್ರೇಕಿಂಗ್‌ ನ್ಯೂಸ್‌ ಎಂದು ಪದೇ ಪದೇ ಬಿತ್ತರವಾಗಿದ್ದಲ್ಲದೆ ಸಿಕ್ಕಿಬಿದ್ದ ನಾಲ್ವರು ಯುವಕರನ್ನು ಠಾಣೆಯಲ್ಲಿ ಕೈಕಟ್ಟಿ ನಿಂತ ಭಂಗಿಯಲ್ಲಿ ಪ್ರಸಾರ ಮಾಡಿಬಿಟ್ಟಿತು. +ಪೊಲೀಸ್‌ ಠಾಣೆಗೆ ದೂರು ಕೊಟ್ಟು ಆಸ್ಪತ್ರೆಗೆ ಹಿಂತಿರುಗಿದ್ದ ರಮೇಶ ವಾರ್ಡ್‌ನಲ್ಲಿ ಉಳಿದಿದ್ದ ಇಬ್ಬರುಬಾಣಂತಿಯರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ತನಗೆ ಕತ್ತಿನ ಮೇಲೆ ಗುದ್ದಿದ ಏಟಿನ ನೋವು ನಿವಾರಣೆಗೆ ಗುಳಿಗೆಯೊಂದನ್ನು ಬಿಸಿ ಕಾಫಿಯೊಂದಿಗೆ ಸೇವಿಸಲು ಪಕ್ಕದಲ್ಲಿದ್ದ ನಿವಾಸಕ್ಕೆ ಬಂದು ಐದು ನಿಮಿಷವೂ ಆಗಿರಲಿಲ್ಲ, ಠಾಣೆಯಿಂದ ಎಸ್‌ಐ ಸಾಹೇಬರು ಇವನ ಮೊಬೈಲ್‌ಗೆ ಕರೆ ಮಾಡಿದ್ದರು. + 'ಡಾಕ್ಟೇ. . . ನಿಮ್ಮ ಕಾರನ್ನು ತಡೆದವರಲ್ಲಿ ಇಲ್ಲಿನ ಜಿಲ್ಲಾ ಪಂಚಾಯತ್‌ ಮೆಂಬರ್‌ ಮೈಲಾರಪ್ಪನವರ ಕುಮಾರನೂ ಒಬ್ಬನಂತೆ. + ನೋಡಿ ಇಲ್ಲೇ ಒಳದಾರಿಯಲ್ಲಿ ಎರಡು ಮೂರು ಕಿಲೋಮೀಟರ್‌ ಒಳಗಡೆ ಅವರ ಹಳ್ಳಿ. +ಟೀವೀಲಿ ಬರ್ತಿರೋದನ್ನು ನೋಡಿ ಗಾಬರಿಯಾಗಿ ಫೋನು ಮಾಡಿದ್ರು. +"ನನ್ನ ಮಗ ಫ್ರೆಂಡ್ಸ್‌ ಜೊತೆ ತಿರುಗಾಡಕ್ಕೆ ಹೋದವ್ನು ನಿಮಗೆ ದರೋಡೆಕೋರನಂತೆ ಕಂಡನೇನಯ್ಯ" ಅಂತ ತುಂಬ ಗಲಾಟೆ ಮಾಡಿದ್ರು ಎಂಬ ಮಾಹಿತಿ ರವಾನಿಸಿದ್ದರು. +"ಎಂತಾ ಮಗನನ್ನು ಹೆತ್ತಿದೀಯಯ್ಯ ಅಂತ ಕೇಳೋದಲ್ವ" ಎಂಬ ಮಾತು ರಮೇಶನ ಮನಸ್ಸಿನಲ್ಲಿ ರೂಪುತಾಳಿತ್ತು. +ಅದನ್ನು ಹೊರ ಹಾಕಲಾಗಲಿಲ್ಲ. +ಆದರೆ ಅವರಿಗೆ ಪ್ರತಿಯಾಗಿ ಹೇಳದೆ ಸುಮ್ಮನಿರಬಾರದು ಎಂದುಕೊಂಡವನು "ಉಳಿದವರೆಲ್ಲ ಯಾರಂತೆ?" ಎಂದ ತಿಳಿದುಕೊಳ್ಳುವ ಉದ್ದೇಶದಿಂದ. +"ಅವೆಲ್ಲ ಇಲ್ಲಿಯ ಅಕ್ಕಪಕ್ಕದ ಹಳ್ಳಿಯವೇ ಡಾಕ್ಟ್ರೇ. +ಒಬ್ಬ ಪಿಯುಸಿ ಫೇಲ್‌. +ಇನ್ನೊಬ್ಬ ಎಸ್ಸೆಸ್ಸೆಲ್ಸಿ. +ಮತ್ತೊಬ್ಬ ಶಿವಮೊಗ್ಗದಲ್ಲಿ ಇಂಜಿನಿಯರಿಂಗ್‌ಗೆ ಸೇರ್ಕಂಡಿದಾನೆ. +ಎಲ್ಲರೂ ಆಡಳಿತ ಪಕ್ಷದ ಬೆಂಬಲಿಗರು. +"ಒಳ್ಳೇ ಕಾರು ಕಣ್ರೋ. +ಸಿಕ್ಕಿದರೆ ಜಾಲಿಯಾಗಿ ಎರಡು ದಿನ ಸುತ್ತಾಡಬಹುದು. +ಆ ಯಪ್ಪ ಬ್ಯಾಂಕಿಂದ ಹೊರಗಡೆ ಬಂದ ನೋಡಿ. +ದುಡ್ಡೂ ಇರುತ್ತೆ. +ಅವನು ಯಾರಿಗೂ ಫೋನ್‌ ಮಾಡದೆ ಇರಲಿ ಅಂತ ಮೊಬೈಲೂ ಕಿತ್ಥಳಾಣ' ಅಂತ ಅದೇ ಪಿಯುಸಿ ಫೇಲು ಐಡಿಯಾ ಕೊಟ್ಟದ್ದಂತೆ. +ಸೂವರ್‌ ಸೂಳೆಮಕ್ಕಳು ನೋಡಿ." ಎಂದು ಎಸ್‌ಐ ಇನ್ನಷ್ಟು ಮಾಹಿತಿ ನೀಡಿದರು. +ಆದರೆ ಮೊಬೈಲ್‌ ಸಂಪರ್ಕ ನಿಲ್ಲಿಸಲಿಲ್ಲ. +"ಅದೇ ಮೈಲಾರಪ್ಪನವರ ತಮ್ಮ ಯಂಕಟೇಶಪ್ಪ ಅಂತ ಇದಾರೆ. +ಅವರು ಇಲ್ಲಿಗೇ ಬಂದಿದ್ದಾರೆ. +ಸ್ಟೇಷನ್‌ಹೊರಗಡೆ ಜನರನ್ನೂ ಸೇರಿಸಿಬಿಟ್ಟಿದಾರೆ. . " ಎಂದು ರಾಗ ಎಳೆದರು ಸಾಹೇಬರು. +ರಮೇಶ "ಅಲ್ಲಸಾಹೇಬರೇ. . ಅವರು ನನ್ನನ್ನು ತಡೆದು ದುಡ್ಡು ಕೇಳಿದಾರೆ. +ಕಾರು ಕಿತ್ಗೊಳ್ಳೋ ರೀತಿ ವರ್ತಿಸಿದ್ದಾರೆ. +ಕತ್ತಿನ ಮೇಲೆ ಗುದ್ದಿದ್ದಾರೆ. +ಇದೆಲ್ಲ ದರೋಡೆ ಯತ್ನ ಅಂತ ನಿಮಗೆ ಅನ್ನಿಸೋಲ್ಲವಾ. . ನಾನೂ ನಿಮ್ಮ ಹಾಗೇನೇ ಸರ್ಕಾರಿ ನೌಕರ. +ಸದಾನಂದ ಕಾಮತರ ಮನೇಗೆ, ಅವರ ತಾಯಿ ಪೇಶೆಂಟು, ಅವರನ್ನು ನೋಡೋಕೆ ಹೋಗ್ತಾ ಇದ್ದೆ. +ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸೋದು ಅಂದರೆ ಸುಮ್ಮನೆ ಬಿಟ್‌ ಬಿಡೋದಾ. . ?" ಎಂದ ಎಸ್‌ಐ ಮಾತಿನ ಇಂಗಿತಾರ್ಥವನ್ನು ಊಹಿಸಿ. +'ಹಾಗೆ ಸುಮ್ಮನೆ ಎಲ್ಲಿ ಬಿಟ್ಟಿದ್ದೀವಿ. +ಅವರೆಲ್ಲ ಸಿಕ್ಕಿದ ಕೂಡ್ಲೇ ಡಾಕ್ಟನ್ನ ತಡೆದವರು ನೀವೇನ್ರೋ ಅನ್ನೋದನ್ನೂ ಖಚಿತಪಡಿಸಿಕೊಂಡು ಚೆನ್ನಾಗಿ ರಿಪೇರಿ ಮಾಡಿಬಿಟ್ಟಿ ಅವರ ಮನೆಯವರು ಯಾರೂ ಅಂತ ತಿಳುಕೊಳ್ಳೋ ಮೊದಲೇ ರಿಪೇರಿ ಕೆಲಸ ಆಗಿಬಿಟ್ಟಿದೆ. +ಈಗ ನಿಮ್ಮ ಕಂಪ್ಲೆಂಟ್‌ ಪ್ರಕಾರ ಎಫ್‌ಐಆರ್‌ ಹಾಕಿದರೆ ನಾಲ್ಕೂ ಹುಡುಗರೂ ಇವತ್ತೇ ಜೈಲು ಪಾಲಾಗ್ತಾರೆ. +ನೀವು ಒಂದು ಸಲ ಇಲ್ಲಿಗೆ ಬಂದಿದ್ದರೆ ನಿಮಗೇ ಗೊತ್ತಾಗ್ತಿತ್ತು. +ಸ್ಟೇಷನ್‌ ಮುಂದೆ ಎಷ್ಟು ಜನ ಸೇರಿದಾರೆ ಇಲ್ಲಿ ಅಂತ. +ಮತ್ತೆ ಲಾ ಅಂಡ್‌ ಆರ್ಡರ್‌ ಸಮಸ್ಯೆ ಆಗಬಾರದುನೋಡಿ. . . ಇಲ್ಲಿ. +ಅದಕ್ಕೆ. . . ಎಂದು ಹೇಳಿ ಅರ್ಧಕ್ಕೆ ನಿಲ್ಲಿಸಿದರು. +ಎಸ್‌ ಐ ಜೊತೆ ನಡೆಯುತ್ತಿದ್ದ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಲೇ ಇದ್ದ ಯತೀಶ ಪೊಲೀಸ್‌ ಠಾಣೆಹತ್ತಿರ ಹೋಗುವುದೇ ಬೇಡ ಎನ್ನುವಂತೆ ಸನ್ನೆ ಮಾಡಿ ಒತ್ತಾಯಿಸಿದ್ದನ್ನು ಗಮನಿಸಿದ ರಮೇಶ ಪರಿಹಾರವನ್ನು ಸೂಚಿಸುವಂತೆ ಎಸ್‌ ಐ ಅವರನ್ನೇ ಕೋರಿದ." +ನೀವು ಒಂದು ಹೆಜ್ಜೆ ಬಂದು ಹೋಗಿ ಡಾಕ್ಟ್ರ ಎಂದು ಒತ್ತಾಯಿಸಿದಾಗ ಇವನು "ಸಾಹೇಬ್ರೇ ಇಲ್ಲಿ ಅರ್ಜಂಟ್‌ ಒಂದು ಹೆರಿಗೆ ಕೇಸ್‌ ಇದೆ. +ಈ ಪರಿಸ್ಥಿತಿಯಲ್ಲಿ ನಾನು ಬಿಟ್ಟು ಬರೋದಕ್ಕೆ ಸಾಧ್ಯವೇ ಇಲ್ಲ. +ಬೆಳಿಗ್ಗೆ ಬಂದರೆ ಹೇಗೆ?" ಎಂದ. +ಇರಲಿ ಬಿಡಿ, ನಾನೇ ಒಂದು ಹೆಜ್ಜೆ ನಿಮ್ಮ ಕಡೆ ಬರ್ತೇನೆ" ಎಂದು ಮೊಬೈಲ್‌ ಸಂಪರ್ಕ ನಿಲ್ಲಿಸಿದರು. +ಹೇಳಿದಂತೆ ಹತ್ತೇ ನಿಮಿಷದಲ್ಲಿ ಬೈಕಲ್ಲಿ ಬಂದೂ ಬಿಟ್ಟರು. +ವೈದ್ಯರ ನಿವಾಸದಲ್ಲಿನ ಸ್ಥಿತಿ ನೋಡಿ "ಇದೇನು ಡಾಕ್ಟೇ, ಒಬ್ಬರೇ ಇದೀರಾ? +ಅಮ್ಮಾವರು ಇದ್ದಾರೆ ಅಂದುಕೊಂಡಿದ್ದೆನಲ್ಲ." ಎಂದು ದೇಶಾವರಿ ನಗುವಿನಲ್ಲಿ ವಿಚಾರಿಸಿಕೊಂಡರು. +'ನಾನಿನ್ನೂ ಬ್ಯಾಚಲರ್‌' ಎಂದು ಹೇಳಿದ ರಮೇಶ 'ಅಪ್ಪ ಅಮ್ಮ ಶಿವಮೊಗ್ಗದಲ್ಲಿದ್ದಾರೆ. +ನಾನು ಆಗಾಗ ಹೋಗಿ ಬರ್ತಾ ಇರ್ತೇನೆ 'ಅಂದ. +ಎಸ್‌ಐ ಸಾಹೇಬರು ರಮೇಶನ ಜೊತೆಯೇ ಇದ್ದ ಯತೀಶನತ್ತ ಇಂಗಿತವಾಗಿ ನೋಡಿದರು. +ಅದನ್ನು ಗಮನಿಸಿದ ರಮೇಶ "ಅವನು ನಮ್ಮ ಆಸ್ಪತ್ರೆ ಸಿಬ್ಬಂದಿ'. +'ನನಗೂ ಇಲ್ಲಿ ಸಹಾಯಕ' ಎಂದು ತಿಳಿಸಿದ್ದಲ್ಲದೆ. +"ನೀನು ಸ್ಟಲ್ಪ ಹೊರಗಡೆ ಇರು" ಎಂದು ಯತೀಶನನ್ನು ಕಳುಹಿಸಿದ. +ವಸತಿಗೃಹದ ಹೊರಬಾಗಿಲನ್ನು ಮುಚ್ಚಿಕೊಂಡ ಯತೀಶ ಬಾಗಿಲಿಗೆ ಅಂಟಿಕೊಂಡೇ ಕುಳಿತಿದ್ದ. +ನೇರ ವಿಷಯಕ್ಕೆ ಬಂದ ಎಸ್‌ಐ ಸಾಹೇಬ, 'ಡಾಕ್ವೇ. . ಇರೋ ವಿಷ ಹೇಳಿಬಿಡ್ತೀನಿ. +ನಾನು ಇಲ್ಲಿಗೆ ಬರೋದಕ್ಕೆ ಈ ಮೈಲಾರಪ್ಪನವರೇ ಕಾರಣ. +ಅವರೇ ಶಾಸಕರಿಗೆ ಹೇಳಿ ನನ್ನನ್ನು ಇಲ್ಲಿಗೆ ಹಾಕಿಸಿಕೊಂಡಿದ್ದಾರೆ. +ಅವರು ಹೇಳಿದ್ದನ್ನು ನನಗೆ ಮಾಡದೇ ಇರೋದಕ್ಕೆ ಆಗಲ್ಲ. +ಆದರೂ ನೀವು ಇಲ್ಲಿಗೆ ಬಂದ ಮೇಲೆ ತುಂಬ ಸುಧಾರಣೆ ಮಾಡಿದ್ದೀರಿ ಅಂತ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೀನಿ. +ನೀವು ಮಾಡಿರೋದೆಲ್ಲ ಅವರ ಮತದಾರರಿಗೆ ಅಂತಲೂ ಹೇಳಿದ್ದೀನಿ. +ಈ ಕೇಸಿನಲ್ಲಿ ಅವರ ಹುಡುಗನಿಗೆ ಏನೂ ಆಗದಂತೆ ನೋಡಿಕೊಳ್ಳಲೇಬೇಕು ನಾನು. +ನಿಮಗೇ ಗೊತ್ತಲ್ಲ ಸರ್ಕಾರಿ ನೌಕರೀಲಿ ಎಂತ ಇಕ್ಕಟ್ಟು ಇರುತ್ತೆ ಅಂತ. +ಅವರ ತಮ್ಮ ಯಂಕಟೇಶಪ್ಪನ ಹತ್ರ ಹೇಳಿ ಕಳ್ಸಿದಾರೆ ಅವರು. +ಡಾಕ್ಟ್ರು ಒಪ್ಪದೇ ಇದ್ದರೆ ಯುಟಿ ಕೇಸು ಹಾಕಿಬಿಡು. +ಒಂದು ರಾತ್ರಿ ಲಾಕಪ್ಪಿನಲ್ಲಿ ಕೊಳೆಯಲಿ ಅಂತ. . . +ದಯವಿಟ್ಟು ನನ್ನ ಧರ್ಮ ಸಂಕಟದಲ್ಲಿ ಸಿಗಿಸಬೇಡಿ ಡಾಕ್ವೇ. . ' +ಸಬ್‌ ಇನ್ಸ್‌ಪೆಕ್ಟರ್‌ ಮಾತಿನಲ್ಲಿದ್ದ ತಣ್ಣನೆಯ ಬೆದರಿಕೆಗೆ ಅಂಥ ಸಂದರ್ಭವನ್ನು ಬದುಕಿನಲ್ಲೆಂದೂ ಎದುರಿಸದೆ ಇದ್ದ ರಮೇಶನಿಗೆ ಮೈ ಬೆವರುವಂತಾಯಿತು. +ದರೋಡೆಗೆ ಗುರಿಯಾಗಲಿದ್ದ ತಾನು ಅದನ್ನು ಪೊಲೀಸರಿಗೆ ದೂರು ಕೊಟ್ಟ ಕಾರಣಕ್ಕೆ ಯಾವುದೋ ಕಲ್ಪಿತ ಅಪರಾಧಕ್ಕಾಗಿ ಪೊಲೀಸ್‌ ಲಾಕಷ್ನಲ್ಲಿ ಒಂದು ರಾತ್ರಿ ಇರಬೇಕಾದ ಸನ್ನಿವೇಶದ ಸೃಷ್ಟಿ. +ಒಂದು ಕ್ಷಣ ಕಣ್ಣಿಗೆ ಕತ್ತಲು ಕವಿದಂತಾಯಿತು. +ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದ ಎಸ್‌ಐ ಸಾಹೇಬನಿಗೆ "ಆಯ್ತು ಬಿಡಿ. +ಆದರೆ ಈ ಹುಡುಗರಿಂದ ನನಗೆ ಮತ್ತೆ ತೊಂದರೆ ಆಗುವುದಿಲ್ಲ ಅಂತ ಏನು ಗ್ಯಾರಂಟಿ?"ಎಂದು ಆತಂಕ ವ್ಯಕ್ತಪಡಿಸಿದ. +"ಈ ಹುಡುಗರ ನಿಮ್ಮ ಬಗ್ಗೆ ಅಲ್ಲ,ಇನ್ನು ಯಾರ ಬಗ್ಗೆನೂ ಅವರು ಇಂಥ ದುಸ್ಸಾಹಸಕ್ಕೆ ಯೋಚನೆ ಮಾಡೋಕೆ ಸಾಧ್ಯ ಇಲ್ಲ. +ಅಷ್ಟು ರಿಪೇರಿ ಮಾಡಿಬಿಟ್ಟಿದ್ದಾರೆ ನಮ್ಮವರು. +ನಿಮ್ಮ ಕಡೆ ತಲೆ ಹಾಕಿ ಮಲಗಿದರೆ ಕೇಳಿ." ಎಂದು ಭರವಸೆ ನೀಡಿ ಎದ್ದುಹೋಗಿದ್ದರು. +ಆಸ್ಪತ್ರೆಯ ತಪಾಸಣಾ ಕೋಣೆಯಲ್ಲಿ ಮಲಗಿಕೊಂಡ ಸ್ಥಿತಿಯಲ್ಲಿ ನೋವಿನಿಂದ ಮುಲುಕುತ್ತಿದ್ದ ಹುಡುಗನಿಗೆ ತಕ್ಷಣವೇ ಜೀವರಕ್ಷಕ ದ್ರವಕ್ಕೆ ವ್ಯವಸ್ಥೆ ಮಾಡಿದ. +ಅದರಲ್ಲಿ ನೋವು ನಿವಾರಕ ಔಷಧಿಗಳನ್ನೂ ಸೇರಿಸಿದ. +ಕೋಣೆಯ ಬಾಗಿಲನ್ನು ಮುಚ್ಚಿ ಬಟ್ಟೆಗಳನ್ನು ಕಳಚಿಸಿದ. . +ಕಾಲುಗಳಲ್ಲಿ ಅಲ್ಲಲ್ಲಿ ತರಚಿ ರಕ್ತಗಾಯಗಳಾಗಿದ್ದುದನ್ನು ಸ್ವಚ್ಛಗೊಳಿಸಲು ಸಿಬ್ಬಂದಿಗೆ ಹೇಳಿದ. +ಎರಡೂ ಪಾದಗಳನ್ನು ನಿಧಾನವಾಗಿ ನೀಡಿಸಿದ. +ಎಲ್ಲಿಯೂ ಮೂಳೆ ಮುರಿತದ ಲಕ್ಷಣ ಕಾಣಲಿಲ್ಲ. +ಮಹಡಿ ಮೇಲಿಂದ ಬಿದ್ದ ಗಾಬರಿಯಿಂದ ಧೃತಿಗೆಟ್ಟಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಂಡ. +ಆ ಹುಡುಗನೋ ಅದೇ ಗಾಬರಿಯಿಂದಲೇ ಮುಟ್ಟದಾಗಲೆಲ್ಲ“ಅಯ್ಯಯ್ಯೋ. . . ಅಯ್ಯಯ್ಯೋ. . . ನೋವು ಉರಿ' ಎಂದು ಅರಚುತ್ತಿದ್ದ. + ಕಿವಿಯಿಂದಲಾಗಲೀ ಬಾಯಿಂದಲಾಗಲೀ ರಕ್ತ ಒಸರುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ರಮೇಶ ಯಾವ ಅಪಾಯವೂ ಆಗದಿರುವುದನ್ನು ಮನಗಂಡ. +ಹತ್ತು ದಿನಗಳ ಹಿಂದೆ ತನ್ನ ಮೇಲೆ ದರೋಡೆಗೆ ಯತ್ನಿಸಿದ್ದ ಹುಡುಗ. +ಪೊಲೀಸರಿಂದ ತಿಂದ ಮೂಗೇಟಿನಿಂದ ಚೇತರಿಸಿಕೊಂಡಿದ್ದನೋ ಇಲ್ಲವೋ. . . +ಈಗ ಮನೆ ಮಹಡಿಯಿಂದ ಬಿದ್ದು ಗಾಯಮಾಡಿಕೊಂಡಿದ್ದಾನೆ. +ದೇಹದ ಒಳಗಡೆ ಏನಾಗಿದೆ ಎಂಬುದೇನೂ ಗೊತ್ತಿಲ್ಲದಿರುವಾಗ ಚಿಕಿತ್ಸೆ ಆರಂಭಿಸುವುದು ಹೊಸ ಸವಾಲನ್ನು ಆಹ್ವಾನಿಸಿದಂತೆ ಎಂದುಕೊಂಡ ರಮೇಶನಿಗೆ ಆಸ್ಪತ್ರೆಯಲ್ಲಿ ಎಕ್ಸ್‌ರೇ ಮತ್ತು ಇತರ ಸಂಕೀರ್ಣ ತಪಾಸಣಾ ಸೌಕರ್ಯಗಳು ಇಲ್ಲದಿರುವುದು ಸದ್ಯದ ಸ್ಥಿತಿಯಲ್ಲಿ ವರದಾನವಾಗಿ ಕಂಡವು. + ಹುಡುಗನನ್ನು ಜಿಲ್ಲಾಕೇಂದ್ರಕ್ಕೆ ಸಾಗಿಸುವಷ್ಟು ಕಾಲ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ ಎಂಬುದು ನಿಶ್ಚಿತವಾಗಿತ್ತು. +ಹುಡುಗನ ಕಾಲುಗಳಲ್ಲಿ ಆಗಿದ್ದ ತರಚು ಗಾಯಗಳನ್ನು ತೊಳೆದು ಮುಲಾಮು ಹಚ್ಚಿದ್ದರಿಂದ "ಅದು ಪ್ರಥಮ ಚಿಕಿತ್ಸೆಯೂ ಆಗಿತ್ತು. +ಡ್ರಿಪ್ಸ್‌ ಹಾಕಿದ್ದ ಸ್ಥಿತಿಯಲ್ಲಿಯೇ ಜಿಲ್ಲಾಸ್ಪತ್ರೆಗೆ ವರ್ಗಾಯಿಸುವುದು ಎಲ್ಲ ದೃಷ್ಟಿಯಿಂದಲೂ ಕ್ಷೇಮಕರ ಎನ್ನಿಸಿತು. +ಆದ್ದರಿಂದ ತಪಾಸಣೆ ಕೋಣೆಯಿಂದ ನಿಧಾನವಾಗಿ ಹೊರಬಂದ. +ಅವನನ್ನು ಆತಂಕದಿಂದ ಕಾಯುತ್ತಿದ್ದ ಯಂಕಟೇಶಪ್ಪನನ್ನು ಒಳಕ್ಕೆ ಕರೆದು "ನೋಡಿ, ಸದ್ಯಕ್ಕೆ ಪ್ರಥಮ ಚಿಕಿತ್ಸೆ ಮಾಡಿದ್ದೇನೆ. +ಇದು ಪ್ರಾಥಮಿಕ ಆರೋಗ್ಯ ಕೇಂದ್ರ. +ಎಕ್ಸ್‌ರೇ ಮತ್ತು ಹೆಚ್ಚಿನ ಪರೀಕ್ಷೆಗಳಿಗೆ ಇಲ್ಲಿ ಸೌಕರ್ಯಗಳೇ ಇಲ್ಲ. +ದೇಹದ ಒಳಗಡೆ ಪೆಟ್ಟಾಗಿದ್ದರೆ ಅದನ್ನು ಇಲ್ಲಿ ತಿಳಿದುಕೊಳ್ಳುವುದು ಸಾಧ್ಯವಿಲ್ಲ. +ನೀವು ಜಿಲ್ಲಾಸ್ಪತ್ರೆಗೆ ಒಯ್ದರೆ ಹೆಚ್ಚಿನ ಪರೀಕ್ಷೆಗೂ ಚಿಕಿತ್ಸೆಗೂ ಅನುಕೂಲ. . " ಎಂದ. +ಮಗ ಮನೆ ಮಹಡಿಯಿಂದ ಬಿದ್ದ ಸುದ್ದಿಯನ್ನು ಶಿವಮೊಗ್ಗದಿಂದಲೇ ಮೊಬೈಲ್‌ನಲ್ಲಿ ವಿಚಾರಿಸಿ ತಿಳಿದ ಮೈಲಾರಪ್ಪ ಅವನನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ಕರೆತರುವಂತೆ ಯಂಕಟೇಶಪ್ಪನಿಗೆ ನೀಡಿದ ಆದೇಶ ಅವನುಆಸ್ಪತ್ರೆಯಲ್ಲಿದ್ದಾಗಲೇ ಬಂತು. +ಹಾಗಿದ್ದರೆ ಸಾಗಿಸಿಬಿಡಿ. +ಆದರೆ ಹಾಕಿದ್ದ ಡ್ರಿಪ್ಸ್‌ ತೆಗೆಯಬೇಡಿ" ಎಂದು ಹೇಳಿ ಅಗತ್ಯ ವರದಿಯನ್ನು ಸಿದ್ಧಪಡಿಸಿ ರಮೇಶ ನಿರಾಳವಾದ. +ಇದೇನ್‌ ಸಾರ್‌ ಅನ್ಯಾಯ.? +ನಾವು ಕಷ್ಟಪಟ್ಟು ದುಡಿದ ದುಡ್ಡಲ್ಲಿ ತಲೆ ಮೇಲೊಂದು ಸೂರುಮಾಡಿಕೊಳ್ಳೋಣ ಅಂದ್ರೂ ಎಷ್ಟೊಂದು ವಿಘ್ನ.” ಎನ್ನುತ್ತ ದುಗುಡ ಹೊತ್ತ ಮುಖದಲ್ಲಿ ಎದುರಾದರು ತಿಮ್ಮಪ್ಪ. +ಬೆಳಗಿನ ವಾಯುವಿಹಾರದ ಸಂದರ್ಭದಲ್ಲಿ ಪರಿಚಯವಾದ ನಡು ವಯಸ್ಸಿನ ವ್ಯಕ್ತಿ, ಮನೆ ಹತ್ತಿರದ ಉದ್ಯಾನದಲ್ಲಿ ನಿತ್ಯವೂ ಎದುರಾಗುತ್ತಿದ್ದರು. +ಅದೊಂದು ದಿನ ನನ್ನ ಚಪ್ಪಲಿ ಉಂಗುಷ್ಠ ಕಿತ್ತು ಹೋಯಿತು. +ನಡೆದಾಡುವ ಪಥದ ಬದಿಗೆ ಕುಳಿತು ಅದರ ಜೀರ್ಣೋದ್ಧಾರ ಸಾಧ್ಯವೇ ಎಂದು ಪರಿಶೀಲಿಸುತ್ತಿದ್ದಾಗ ಬಿರುಸಿನ ನಡಿಗೆಯನ್ನು ನಿಲ್ಲಿಸಿ ಹತ್ತಿರ ಬಂದು ವಿಚಾರಿಸಿಕೊಂಡಿದ್ದರು. +"ಎಲ್ಲ ಕಡೆಯೂ ನಕಲಿ ಮಾಲುಗಳದೇ ಅಬ್ಬರ. +ಅದರಿಂದ ಚಪ್ಪಲಿಗಳು ಬೇರೆ ಆಗಿರೋದಕ್ಕೆ ಹೇಗೆ ಸಾಧ್ಯ" ಎಂದು ಹೇಳುತ್ತ ಅನುಕಂಪ ಸೂಚಿಸಿದ್ದರು. +ಹಾಗೆ ಹೇಳಿ ಅವರು ಮುಂದೆ ಸಾಗಲಿಲ್ಲ. +"ನನ್ನ ಸ್ಕೂಟರ್‌ನಲ್ಲಿ ಒಂದು ಜೊತೆ ಹವಾಯಿ ಇಟ್ಟಿದೇನೆ. +ಸದ್ಯಕ್ಕೆ ನೀವು ಅದನ್ನು ತಗೊಂಡು ಹೋಗಿ, ನಾಳೆ ಬೆಳಿಗ್ಗೆ ತಂದರಾಯಿತು. . "ಎಂದು ನನ್ನ ಸಮಸ್ಯೆಗೆ ಪರಿಹಾರವನ್ನೂ ಸೂಚಿಸಿದ್ದಲ್ಲದೆ ನಾನು ಕುಳಿತಿದ್ದ ಸ್ಥಳಕ್ಕೆ ಹವಾಯಿ ಚಪ್ಪಲಿಯನ್ನು ತಂದುಕೊಟ್ಟಿದ್ದರು. +ಆ ನೆಪದಲ್ಲಿ ಪರಿಚಯವಾದವರು. +ಸರ್ಕಾರ ಇಲಾಖೆಯೊಂದರಲ್ಲಿ ಅಧಿಕಾರಿ. +ಆದರೆ,ಅಧಿಕಾರದ ದರ್ಪವನ್ನು ನಡವಳಿಕೆಯಲ್ಲಿ ತೋರಿಸಿರಲಿಲ್ಲ. +ನಾನಿದ್ದ ಬಡಾವಣೆಯಲ್ಲಿಯೇ ಬಾಡಿಗೆ ಮನೆ ಹಿಡಿದಿದ್ದರು. +ಚಪ್ಪಲಿ ನೆರವನ್ನು ನೀಡಿದ ದಿನದಿಂದ ಎದುರಾದಾಗಲೆಲ್ಲ ಒಂದು ಮುಗುಳ್ನಗು. +ನಿವೃತ್ತ ಎಂದುಗೊತ್ತಾದ ಮೇಲೆ "ಹೇಗೆ ಸಮಯ ಕಳೆಯುತ್ತೀರಿ" ಎಂಬ ವಿಚಾರಣೆ. +ವಿಹಾರ ಮುಗಿಸಿ ಒಮ್ಮೆ ಇಬ್ಬರೂ ಏಕಕಾಲದಲ್ಲಿ ಹೊರಟಾಗ ಅವರು ಎಂದಿನಂತೆ ಸ್ಕೂಟರ್‌ ಬಳಿ ಹೋಗಲಿಲ್ಲ. +ನಾನು ಕೇಳುವ ಮೊದಲೇ"ಸರ್ವಿಸ್‌ಗೆ ಕೊಟ್ಟಿದ್ದೆ, ಇನ್ನೂ ಕೊಟ್ಟಿಲ್ಲ. +ಇವತ್ತು ಸಂಜೆ ಕೊಡ್ತಾನಂತೆ"ಎಂದು ನನ್ನ ಜೊತೆಯೇ ಬಂದರು. +ಮನೆಯ ಮುಂದೆಯೇ ಅವರು ಬಂದಿದ್ದರಿಂದ ಆಹ್ವಾನಿಸಿದ್ದೆ. +ಬಂದವರು ಸುತ್ತೆಲ್ಲ ಕಣ್ಣಾಡಿಸಿ ಮನೆಯ ವಿನ್ಯಾಸವನ್ನು ಮೆಚ್ಚಿಕೊಂಡಿದ್ದರು. +"ಎಷ್ಟು ಒಳ್ಳೇ ವಿನ್ಯಾಸ ಮಾಡಿಕೊಟ್ಟಿದಾರೆ ಸಾರ್‌, ಕಲಾವಿದ ಇರಬೇಕು"ಎಂದು ಹೇಳಿ ವಿವರ ಪಡೆದಿದ್ದರು. +ಆಗಲೇ ಗೊತ್ತಾಗಿದ್ದು ಹೆಚ್ಚು ವರ್ಷ ಜಿಲ್ಲೆಗಳಲ್ಲಿಯೇ ಸೇವೆ ಸಲ್ಲಿಸಿದ್ದ ಅವರು ಇದೇ ಮೊದಲ ಬಾರಿಗೆ ಬೆಂಗಳೂರಿಗೆ ವರ್ಗವಾದ ಸಂಗತಿ. +"ನಿಮ್ಮ ಈ ಬಡಾವಣೆಗೆ ಹೊಂದಿಕೊಂಡ ಜಾಗದಲ್ಲೇ ಒಂದು ಸೈಟು ಕೊಂಡುಕೊಂಡೆ. +ಸೊಸೈಟಿ ಸೈಟು. +ಸರ್ವಿಸ್‌ ಇದ್ದಾಗಲೇ ಮನೆ ಕಟ್ಟಿಸಿ ಬಿಡಬೇಕು ಅಂತ ಕಚೇರಿಗೆ ದೂರ ಆದರೂ ಇಲ್ಲೇ ಬಾಡಿಗೆ ಮನೆ ಹಿಡಿದಿದ್ದೀನಿ" ಎಂದು ತಾವಾಗಿಯೇ ಸ್ವಂತದ ವಿವರ ಹೇಳಿಕೊಂಡರು. +ಮತ್ತೊಮ್ಮೆ ಮಾತಿಗೆ ಸಿಕ್ಕಿದಾಗ ಮನೆ ಕಟ್ಟಿಸಲು ಸಿದ್ಧತೆ ನಡೆಸುತ್ತಿರುವ ಮಾಹಿತಿ ನೀಡಿದ್ದರು. +ಅದೆಲ್ಲ ಬೆಳಗಿನ ವಿಹಾರದ ಸಂದರ್ಭದಲ್ಲಿನ ಚುಟುಕು ಸಂಭಾಷಣೆ. +"ನಿಮ್ಮ ಮನೆಯ ವಿನ್ಯಾಸ ರೂಪಿಸಿದವರ ಹತ್ತಿರ ಹೋಗಿದ್ದೆ. +ತುಂಬ ದುಬಾರಿ ಅಂತ ಕಂಡರು. +ಒಟ್ಟು ವೆಚ್ಚದಲ್ಲಿ ಶೇಕಡಾವಾರು ಕೇಳ್ತಾರಲ್ಲ ಸಾರ್‌" ಎಂದು ಹೊಸ ಸಮಸ್ಯೆ ಎಂಬಂತೆ ಹೇಳಿದ್ದರು. +"ಈಗ ಎಲ್ಲ ಕಡೆಯೂ ಅದೇ ಇದೆಯಲ್ಲ. +ಲಾಭ ಬಂದರೆ ಮಾತ್ರ ಶೇಕಡಾ ಲೆಕ್ಕದಲ್ಲಿ ನಮಗೂ ಕೊಡಿ ಅಂತ ನಗರದ ಪ್ರಥಮ ಪ್ರಜೆಯೇ ಒತ್ತಾಯ ಮಾಡೋ ದಿನಗಳಲ್ವ ಇವು" ಎಂದು ನನಗೆ ತೋಜಿದಂತೆ ಅವರಿಗೆ ಸ್ಟಂದಿಸಿದ್ದೆ. +ಪ್ರತಿ ಸಲ ಎದುರಾದಾಗಲೆಲ್ಲ ಗೌರವ ಪೂರ್ವಕವಾಗಿ ವರ್ತಿಸುತ್ತಿದ್ದ ಅವರ ನಡವಳಿಕೆ ಮೆಚ್ಚುಗೆಯಾಗಿತ್ತು. +ಸರ್ಕಾರಿ ಅಧಿಕಾರಿಯಾಗಿದ್ದೂ ಇಷ್ಟು ಅಮಾಯಕತೆ ಸಾಧ್ಯವೇ ಎಂಬ ಗುಮಾನಿಯೂ ಬಂದಿತ್ತು. +ಆ ದಿನ ನನ್ನನ್ನೇ ನಿರೀಕ್ಷೆ ಮಾಡುತ್ತಿದ್ದರೆಂದು ತೋರುತ್ತದೆ. +ಉದ್ಯಾನದ ಒಳಗೆ ಹೋಗುತ್ತಲೂ ಪ್ರವೇಶದ್ವಾರದ ಬಳಿಯೇ ಕಾದು ನಿಂತಿದ್ದ ಅವರು "ಸಾರ್‌, ನಿಮ್ಮ ಹತ್ರ ಮಾತಾಡೋದಿದೆ. +ವಾಕಿಂಗ್‌ಮುಗಿದ ಮೇಲೆ ದಯವಿಟ್ಟು ಟೈಂ ಕೊಡಿ" ಎಂದು ಅಂಗಲಾಚಿದರು. + "ಛೇ. . ಅಷ್ಟು ದೊಡ್ಡ ಮಾತೇಕೆ? +ನನಗೆ ನಿಮ್ಮಂತೆ ಕಚೇರಿಗೆ ಹೊರಡುವಂಥ ಯಾವ ಒತ್ತಡವೂ ಇಲ್ಲ. +ನಾನು ಈಗ ಯಾವ ಫನಂದಾರಿ ಕೆಲಸವನ್ನೂ ಮಾಡ್ತಾ ಇಲ್ಲ. +ಟೈಂ ಪಾಸ್‌ ಮಾಡೋದಕ್ಕೆ ಕಾರಣ ಹುಡುಕ್ತಾ ಇರ್ತೀನಿ. +ಬನ್ನಿ ನಡೆಯುತ್ತಾ ಮಾತಾಡೋಣ" ಅಂದು ಜೊತೆ ಸೇರಲು ಆಹ್ಹಾನಿಸಿದೆ. +"ಬೇಡ ಸಾರ್‌, ವಾಕಿಂಗ್‌ ಮಾಡುವಾಗ ಆಡೋ ಮಾತಲ್ಲ. +ನಿಧಾನ ಕುಳಿತು ಹೇಳಬೇಕು."ಎಂದು ನನ್ನ ಆಹ್ವಾನವನ್ನು ನಯವಾಗಿ ನಿರಾಕರಿಸಿದರು. +ನನ್ನ ನಡಿಗೆಯ ವಾಡಿಕೆಯ ಸುತ್ತು ಮುಗಿದ ನಂತರ ಎಂದಿನಂತೆ ಮೂಲೆಯ ಸಿಮೆಂಟ್‌ ಬೆಂಚಿನ ಮೇಲೆ ಕುಳಿತೆ. +ಅದನ್ನೇ ಕಾಯುತ್ತ ಇದ್ದವರಂತೆ ಹತ್ತಿರ ಬಂದ ತಿಮ್ಮಪ್ಪ ಗೌರವ ಪ್ರದರ್ಶಿಸುತ್ತ ಬೆಂಚಿನ ಮೂಲೆಗೆ ಕುಳಿತರು. +"ಏನೋ ಅನ್ಯಾಯ ಅಂತ ಹೇಳ್ತಾ ಇದ್ರಿ" ಎಂದು ಅವರು ವಿಷಯ ಪ್ರಸ್ತಾಪಿಸಲು ಅನುವು ಮಾಡಿಕೊಟ್ಟೆ. +ಅವರು ಮನೆ ಕಟ್ಟುವುದಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದನ್ನು ಚುಟುಕು ಚುಟುಕಾಗಿ ಆಗಾಗ ಹೇಳುತ್ತಲೇ ಇದ್ದರು. +ನಮ್ಮ ಮನೆಯ ವಿನ್ಯಾಸ ರೂಪಿಸಿದ ವ್ಯಕ್ತಿ ದುಬಾರಿ ಎಂದು ಬೇರೊಬ್ಬರ ಮೂಲಕ ವಿನ್ಯಾಸ ಮಾಡಿಸಿಕೊಂಡಿದ್ದರು. +ಮನೆಯ ನಕ್ಷೆಗೆ ಮಹಾನಗರ ಪಾಲಿಕೆಯಿಂದ ಮಂಜೂರಾತಿ ಪಡೆದುಕೊಂಡಿದ್ದರು. +ಒಳ್ಳೆಯ ಗುತ್ತಿಗೆದಾರನನ್ನೂ ಹಿಡಿದಿದ್ದರು. +"ಮನೆ ಸಾಮಗ್ರಿಯ ಗುಣಮಟ್ಟ ನೋಡ್ತಾ ಇರಬೇಕು, ಕಾಮಗಾರಿ ನಡೆಯುತ್ತಿದ್ದಾಗ ಮಾಲೀಕರು ಹೋಗ್ತಾ ಇದ್ದರೆ ಕಟ್ಟಡ ನಿರ್ಮಾಣ ಚೆನ್ನಾಗಿ ಆಗುತ್ತದೆ"ಎಂದು ಸಹೋದ್ಯೋಗಿಗಳು ಹೇಳಿದ ಕಿವಿಮಾತು ನೆನಪಿನಲ್ಲಿ ಇಟ್ಟುಕೊಂಡಿದ್ದರು. +"ಗುದ್ದಲಿ ಪೂಜೆಗೆ ಅಂತ ಒಳ್ಳೇ ಮುಹೂರ್ತ ನೋಡಿ ನಿವೇಶನ ಇದ್ದ ಜಾಗಕ್ಕೆ ಹೋದೆವು . +ನೋಡಿ ಪೂಜೆಮುಗಿಸಿ ಪಾಯಕ್ಕೆ ಮಣ್ಣು ತೋಡುತ್ತಿದ್ದಾಗ ಜುಬ್ಬಾ ಪೈಜಾಮ ಹಾಕಿದ್ದ ವ್ಯಕ್ತಿಯೊಬ್ಬ ಇನ್ನಿಬ್ಬರು ಸಹಾಯಕರೊಂದಿಗೆ ಬಂದು "ಯಾರ್ರೀ ಇಲ್ಲಿ ಪಾಯ ತೋಡಿಸ್ತಾ ಇರೋರು" ಅಂತ ಆವಾಜ್‌ ಹಾಕಿದ. +ಪೂಜೆ ಮಾಡಿದ ನಂತರ ಆ ಸಾಮಾನುಗಳನ್ನೆಲ್ಲ ಜೋಡಿಸಿಕೊಳ್ತಿದ್ದ ನಾನು ಅದನ್ನೆಲ್ಲ ಅಲ್ಲಿಗೆ ನಿಲ್ಲಿಸಿ"ಯಾರಪ್ಪ ನೀನು" ಅಂತ ವಿಚಾರಿಸಿದೆ. +ಅವನು ಆ ಪ್ರದೇಶದ ಮುಖಂಡನಂತೆ. +"ಸೈಟ್‌ ಮಾಡಿದ ಜಾಗ ದಲಿತರಿಗೆ ಸೇರಿದ್ದು. +ಸೊಸೈಟಿಯವರು ದಲಿತರಿಗೆ ಮೋಸ ಮಾಡಿ ಬರೆಸಿಕೊಂಡು ಸೈಟು ಮಾರಿ ದುಡ್ಡು ಮಾಡಿಕೊಂಡಿದಾರೆ. +ಇದನ್ನು ಪರಭಾರೆ ಮಾಡುವಂತಿಲ್ಲ ಅಂತ ಕೋರ್ಟ್‌ ಆದೇಶ ಇದ್ದ." ಎಂದೆಲ್ಲ ಹೇಳಿದ. +"ಸೈಟು ರಿಜಿಸ್ಟ್ರೇಷನ್‌ ಕೂಡ ಆಗಿದೆ. +ಸೊಸೈಟಿಯವರು ಎಲ್ಲ ದಾಖಲೆಗಳನ್ನೂ ವಕೀಲರ ಮೂಲಕವೇ ಪಕ್ಕಾಮಾಡಿಸಿ ಕೊಟ್ಟಿದ್ದಾರೆ. +ಜಾಗ ತಕರಾರಿನಲ್ಲಿದೆ ಅಂತ ಯಾರೂ ಹೇಳಿಲ್ಲ. +ಅಷ್ಟೇ ಏಕೆ. . . ನಮ್ಮ ಸೈಟು ಬಿಟ್ಟುಅಕ್ಕಪಕ್ಕದ ಎಲ್ಲ ಸೈಟುಗಳಲ್ಲೂ ಮನೆ ಕಟ್ಟಿಕೊಂಡಿದ್ದಾರೆ. +ಅವರು ಕಟ್ಟಿಕೊಳ್ಳುವಾಗ ಇಲ್ಲದ ತಕರಾರು ಈಗ ಏಕೆ? +ಅಂತ ನಾನು ನನ್ನಲ್ಲಿದ್ದ ದಾಖಲೆ ಪತ್ರ ತೋರಿಸಿ ಜೋರು ಮಾಡಿದಾಗ, ಅವನು "ನೋಡಿ, ಇದು ದಲಿತರ ಸೊತ್ತು. +ಪರಭಾರೆ ಆಗಿದೆ. +ಮನೆ ಕಟ್ಟಿದರೆ ಮುಂದೆ ತೊಂದರೆಗೆ ಸಿಕ್ಕಿಕೊಳ್ತೀರಿ. . " ಅಂತೇನೋ ಹೆದರಿಸಿದ. +ಬರಲಿ, ಆಗ ನೋಡಿಕೊಳ್ಳೋಣ, ಈಗ ಕೆಲಸ ಮುಂದುವರಿಸಿ ಅಂತ ಕಂಟ್ರಾಕ್ಟರ್‌ಗೆ ಹೇಳಿದೆ." +ಇದ್ಯಾಕೋ ತಲೆನೋವು ಅಂತ ಅವತ್ತೇ ನಮ್ಮ ಜಾಗಕ್ಕೆ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ಹೋಗಿ ದೂರುಕೊಟ್ಟೆ. +ನಾನು ಸರ್ಕಾರದ ಇಲಾಖೆಯಲ್ಲಿ ಇರೋ ವಿಷ್ಯ ಕೂಡ ಹೇಳಿದೆ. +ಅಲ್ಲಿನ ಸಬ್‌ ಇನ್ಸ್‌ಪೆಕ್ಟರ್‌ ತುಂಬ ಸಂಭಾವಿತರಂತೆ ಮಾತಾಡಿಸಿ ಕಳಿಸಿದ. +"ಮತ್ತೆ ಗಲಾಟೆ ಮಾಡಿದರೆ ನನಗೆ ಫೋನ್‌ ಮಾಡಿ ಸಾಕು, ಬಂದು ಬೆಂಡೆತ್ತುತೀನಿ" ಅಂತ ಹೇಳಿದರು. +"ಅಕ್ಕಪಕ್ಕದಲ್ಲಿ ಮನೆ ಕಟ್ಟಕೊಂಡವರನ್ನು ಕೇಳಿದರೆ, ಅವರು ಕಟ್ಟುವಾಗಲೂ ಅದೇ ವ್ಯಕ್ತಿ ಬಂದು ಹಾಗೆ ಕ್ಯಾತೆ ತೆಗೆದಿದ್ದ ಅಂತ ಹೇಳಿದರು. +"ಇಂಥವರು ಎಲ್ಲ ಕಡೆ ಇರ್ತಾರೆ. +ನೀವು ಕೆಲಸ ಮುಂದುವರಿಸಿ" ಅಂತಲೂ ಹೇಳಿದರು. +ಅದರಂತೆ ಪಾಯ ಮುಗಿಸಿದೆ. +ಗೋಡೆ ಕಟ್ಟುವುದಕ್ಕೆ ಶುರು ಮಾಡಿದ್ದೂ ಆಯಿತು. +ಗೋಡೆ ಕಿಟಕಿ ಎತ್ತರಕ್ಕೆ ಬಂದು ಅಲ್ಲಿಗೆ ಕಾಂಕ್ರೀಟ್‌ ಹಾಕೋ ಕೆಲಸ ನಡೆದಿದ್ದಾಗ ಇನ್ನೊಂದು ಗುಂಪು ಬಂತು. +ಅವರು ಆ ಭಾಗದ ಇನ್ನೊಂದು ಗುಂಪಿನ ಮುಖಂಡರಂತೆ. +"ನಿಮ್ಮ ಕಟ್ಟಡಕ್ಕೆ ಬೇರೆಯವರಿಂದ ತೊಂದರೆ ಆಗದಂತೆ ರಕ್ಷಣೆ ಕೊಡ್ತೀವಿ. +ನಿಮ್ಮ ಮನೆ ಮಾಲೀಕರನ್ನು ಬಂದು ನೋಡೋದಕ್ಕೆ ಹೇಳಿ" ಅಂತ ನಮ್ಮ ಕಂಟ್ರಾಕ್ಟರಿಗೆ ಹೇಳಿ ಹೋಗಿದ್ದಾರೆ. +ನಮ್ಮ ಕಂಟ್ರಾಕ್ಟರ್‌ ಅಲ್ಲಿ ಒಬ್ಬ ವಾಚ್‌ಮನ್‌ ಸಂಸಾರ ಇರಿಸಿದಾರೆ. +ಇನ್ನು ಅವರು ಏನು ಬಂದು ನಮ್ಮ ಕಟ್ಟಡಕ್ಕೆ ರಕ್ಷಣೆ ಕೊಡೋದು. . ?"`ನಾನು ಅವರನ್ನು ನೋಡೋದಕ್ಕೆ ಹೋಗಲಿಲ್ಲ. +ಕಂಟ್ರಾಕ್ಟರ್‌ ಹತ್ರ ಮತ್ತೆ ಬಂದು ಹೆದರಿಸಿ ಹೋದಂತೆ. +ನಿನ್ನೆ ರಾತ್ರಿ ಕೆಲವು ದುಷ್ಟರು ಬಂದು ಅಲ್ಲಿದ್ದ ನಮ್ಮ ವಾಚ್‌ಮನ್‌ಗೆ ಹೆದರಿಸಿ ಟೆಂಪೋ ತಂದು ಒಂದಿಷ್ಟು ಕಬ್ಬಿಣ,ಐದು ಮೂಟೆ ಸಿಮೆಂಟ್‌ ಒಯ್ದಿದಾರೆ. +"ಅವತ್ತು ಬಂದು ಹೆದರಿಸಿ ಹೋದವರೇ ರಾತ್ರಿ ಬಂದೋರು" ಅಂತ ವಾಚ್‌ಮನ್‌ ಹೇಳಿಕೆ. +ಅವರು ಯಾರು ಅಂತ ನಾನು ವಿಚಾರಿಸಿದೆ. +ಅವರ ಮುಖಂಡ ನಮ್ಮ ಈ ವಾರ್ಡಿನ ಕಾರ್ಪೊರೇಟರ್‌ ಜೊತೆ ಇರ್ತಾನಂತೆ. +ಇಲ್ಲಿನ ಕಾರ್ಪೊರೇಟರ್‌ ಮನೆ ನಿಮಗೆ ಗೊತ್ತಲ್ಲ, ಅವರ ಮನೆಗೆ ಒಂದು ಹೆಜ್ಜೆ ಹೋಗಿ ಬರೋಣವಾ. . ?" ಎಂದರು ತಿಮ್ಮಪ್ಪ. +ಅವರೊಂದಿಗೆ ಹೋಗುವುದರಿಂದ ಅನುಕೂಲವಾಗುವುದಾದರೆ ಆಗಲಿ ಎಂದುಕೊಂಡೆ. +ಮನೆಗೆ ಬಂದು ನಿತ್ಯವಿಧಿಗಳನ್ನು ತೀರಿಸುತ್ತಿರುವಾಗ ತಿಮ್ಮಪ್ಪ ಬಂದರು. +ಕೈಯಲ್ಲಿ ಹಿಡಿದ ಕಡತದಲ್ಲಿ ಸೈಟು ಕೊಂಡ ದಾಖಲೆಗಳೆಲ್ಲ ಇದ್ದವು. +ನಕ್ಷೆ, ಅದಕ್ಕೆ ಮಹಾನಗರಪಾಲಿಕೆ ಅಧಿಕೃತವಾಗಿ ನೀಡಿದ ಮಂಜೂರಾತಿ ಇತ್ಯಾದಿಗಳೆಲ್ಲ ಮೂಲಪ್ರತಿಯ ರೂಪದಲ್ಲಿದ್ದವು. +ಅವೆಲ್ಲವುಗಳ ನಕಲು ಪ್ರತಿಗಳ ಒಂದು ಸೆಟ್‌ ಕೂಡ ಇತ್ತು. +ಜೊತೆಗೊಂದು ಮನವಿ ಪತ್ರ. +ಸರ್ಕಾರದ ಇಲಾಖೆಯಲ್ಲಿ ಅಧಿಕಾರಿ ಸ್ಥಾನದಲ್ಲಿದ್ದ ವ್ಯಕ್ತಿ ಎಲ್ಲವೂ ಕ್ರಮಬದ್ಧವಾಗಿರಬೇಕೆಂಬ ಎಚ್ಚರಿಕೆ ವಹಿಸಿದ್ದರು. +ಕೈಯಲ್ಲಿರಲಿ ಎಂದುಕೊಂಡು ನನ್ನದೊಂದು ವಿಸಿಟಿಂಗ್‌ ಕಾರ್ಡ್‌ಅನ್ನೂ ಇಟ್ಟುಕೊಂಡೆ. +ತಿಮ್ಮಪ್ಪ ಬರುವಾಗ ಕಾರ್ಪೊರೇಟರ್‌ ಮನೆಗೆ ಹೋಗುವ ಮಾರ್ಗದ ಬಗ್ಗೆ ಖಚಿತವಾಗಿಯೇ ವಿಚಾರಿಸಿಕೊಂಡು ಬಂದಿದ್ದರು. +ನನ್ನ ಮಾರ್ಗದರ್ಶನದ ಅಗತ್ಯವೇ ಬರದಂತೆ ಸ್ಕೂಟರ್‌ನಲ್ಲಿ ನನ್ನನ್ನು ಹಿಂದೆ ಕೂರಿಸಿಕೊಂಡು ಅಲ್ಲಿಗೆ ತಲುಪಿದರು. +ಅದೊಂದು ದೊಡ್ಡ ಮನೆ. +ಭರ್ಜರಿ ಗೇಟಿನ ಪಕ್ಕದಲ್ಲಿ ಖಾಸಗಿ ಭದ್ರತಾ ಪಡೆಯ ಒಬ್ಬ ಸಿಬ್ಬಂದಿ ದೊಣ್ಣೆ ಹಿಡಿದು ನಿಂತಿದ್ದ. +ಗೇಟ್‌ ತೆರೆದಿತ್ತು. +ಆಗಲೇ ಒಂದಿಷ್ಟು ಜನ ಹೊರಗಡೆ ಸೇರಿದ್ದರು. +ಕೆಲವರು ಒಳಗೆ ಹೋಗುತ್ತಿದ್ದರು. +ಇನ್ನೂ ಹಲವರು ಒಳಗಿನಿಂದ ಹೊರಕ್ಕೆ ಬರುತ್ತಿದ್ದರು. +ಭದ್ರತಾ ಸಿಬ್ಬಂದಿ ನಮ್ಮನ್ನು ತಡೆಯಲಿಲ್ಲ. +ಏನನ್ನೂ ವಿಚಾರಿಸಲೂ ಇಲ್ಲ. +ಮನೆಯ ಪ್ರವೇಶ ದ್ವಾರದ ಬಳಿ ಬಂದೆವು. +ಚಪ್ಪಲಿಯನ್ನು ಎಲ್ಲರೂ ಹೊರಗಡೆಯೇ ಬಿಟ್ಟಿದ್ದರಿಂದ ನಾವೂ ಚಪ್ಪಲಿ ಕಳಚಿ ವರಾಂಡ ಪ್ರವೇಶಿಸಿದೆವು. +ನಮ್ಮನ್ನು ಯಾರೂ ವಿಚಾರಿಸಲಿಲ್ಲವಾದ್ದರಿಂದ ನಾವೇ ವಿಚಾರಿಸುವುದು ಅನಿವಾರ್ಯವಾಯಿತು. +ಬಾಗಿಲ ಬಳಿ ನಿಂತುಕೊಂಡಿದ್ದ ವ್ಯಕ್ತಿಯೊಬ್ಬನನ್ನು ತಡೆದು. . . "ಕಾರ್ಪೊರೇಟರ್‌ ಸಾಹೇಬರನ್ನು ನೋಡಬೇಕಿತ್ತು ಎಂದು ತಿಮ್ಮಪ್ಪ ಮೆಲುದನಿಯಲ್ಲಿ ಹೇಳಿದರು. +ಆತ ಮನೆಯ ಒಳಗಿನಿಂದ ಹೊರಬಂದು ಮತ್ತೆ ಒಳಗೆ ಹೋಗುತ್ತಿದ್ದ ಇನ್ನೊಬ್ಬ ವ್ಯಕ್ತಿಯನ್ನು ತೋರಿಸಿ, 'ಇವರನ್ನು ಕೇಳಿ' ಎಂದು ಸೂಚಿಸಿದ. +ಅವನ ಬಳಿ ಸಾರಿ ತಿಮ್ಮಪ್ಪ ಇನ್ನೊಮ್ಮೆ ಭೇಟಿಯ ಅಹವಾಲು ಹೇಳಿಕೊಂಡರು. +'ಇರಿ, ವಳಗೆ ಯಾರೋ ಅವೆ, ಅವರು ಬಂದಮೇಲೆ ನೀವು ಹೋಗೀರಂತೆ. . ಇಲ್ಲಿ ಕುತ್ಥಳಿ' ಎಂದವನೇ ವರಾಂಡಕ್ಕೆ ಹೊಂದಿಕೊಂಡ ಇನ್ನೊಂದು ಕೋಣೆಯಲ್ಲಿ ಸಾಲಾಗಿ ಹಾಕಿದ್ದ ಸೋಫಾವೊಂದರತ್ತ ಕೈತೋರಿಸಿದ. +ವರಾಂಡದಲ್ಲಿ ಮಾತ್ರವಲ್ಲದೆ, ಒಳಗೆ ನಮಗೆ ಕೂರಲು ತೋರಿಸಿದ ಕೋಣೆಯಲ್ಲಿಯೂ ಜನ ತುಂಬಿಕೊಂಡಿದ್ದರು. +ಅದಕ್ಕೆ ಹೊಂದಿಕೊಂಡ ಇನ್ನೊಂದು ಕೋಣೆಯಲ್ಲಿ ಕಾರ್ಪೊರೇಟರ್‌ ಅವರು ಕುಳಿತಿರಬಹುದು ಎಂದುಕೊಂಡೆ. +ತಿಮ್ಮಪ್ಪ ಸುತ್ತಲಿದ್ದ ಜನಸಂದಣಿಯನ್ನು ನೋಡಿ ಬೆರಗಾಗಿದ್ದಂತೆ ತೋರಿತು. +'ಏನ್ರೀ ಇದು, ಒಬ್ಬ ಕಾರ್ಪೊರೇಟರ್‌ ಮನೆಗೆ ಇಷ್ಟೊಂದು ಜನಗಳಾ?' ಎಂದು ಕಿವಿಯಲ್ಲಿ ಪಿಸುಗುಟ್ಟಿದರು. +ವೃತ್ತಿಯ ದಿನಗಳಲ್ಲಿ ಶಾಸಕರು, ಸಚಿವರ ಮನೆಗಳಲ್ಲಿನ ಪರಿಸ್ಥಿತಿಯನ್ನು ಗಮನಿಸಿದ್ದೆ. +ಅದಕ್ಕಿಂತಲೂ ಭಿನ್ನವಾದ ಚಿತ್ರ ಇಲ್ಲಿ ತೋರುತ್ತಿತ್ತು. +ನಾವು ಕುಳಿತಿದ್ದ ಕೋಣೆಯ ಇನ್ನೊಂದು ಬದಿಯಲ್ಲಿ ವಿಶಾಲವಾದ ಹಜಾರವಿತ್ತು. +ಅದರ ಒಂದು ಬದಿಗೆ ಹೊಂದಿಕೊಂಡಂತೆ ಬೆಳಗಿನ ತಿಂಡಿ ಪೂರೈಸುವ ವ್ಯವಸ್ಥೆ. +ಅದು ತಮ್ಮನ್ನು ಭೇಟಿ ಮಾಡಿದ ಸಾರ್ವಜನಿಕರಿಗೋ, ಮನೆಯವರಿಗೋ, ಸ್ವಂತ ಸಿಬ್ಬಂದಿಗೋ ಎಂಬುದು ಸ್ಪಷ್ಟವಾಗಲಿಲ್ಲ. +ಕಾರ್ಪೊರೇಟರ್‌ ಅವರನ್ನು ನೋಡಬಂದವರಂತೆ ತೋರುತ್ತಿದ್ದ ಸಾರ್ವಜನಿಕರೆಲ್ಲ ತಮ್ಮದೇ ಸಮಸ್ಯೆಗಳ ಗುಂಗಿನಲ್ಲಿ ಇದ್ದವರಂತೆ ತೋರುತ್ತಿದ್ದರು. +ನಾವು ಕುಳಿತಿದ್ದ ಸೋಫಾದಲ್ಲಿ ಇನ್ನೂ ಕೆಲವರು ಆಸೀನರಾಗಿದ್ದರು. +ಯಾರ ಪರಿಚಯವೂ ನನಗಿರಲಿಲ್ಲ. +ತಿಮ್ಮಪ್ಪನವರಿಗೂ ಗೊತ್ತಿರುವಂತೆ ತೋರಲಿಲ್ಲ. +ಹತ್ತು ಹದಿನೈದು ನಿಮಿಷಗಳಾಗುವಷ್ಟು ಕಾದರೂ ಕಾರ್ಪೊರೇಟರ್‌ ಅವರು ಇದ್ದ ಕೋಣೆಯಿಂದ ಯಾರೊಬ್ಬರೂ ಹೊರಕ್ಕೆ ಬರಲಿಲ್ಲ. +ನಮ್ಮನ್ನು ಕೂರಿಸಿದ್ದ ವ್ಯಕ್ತಿಯನ್ನು ಹುಡುಕಿ ನಮ್ಮ ಅಸ್ತಿತ್ವವನ್ನು ಅವನ ಗಮನಕ್ಕೆ ತಂದೆವು. +"ಇರಿ. ಸಾರ್‌. . . ಯಾರೂ ಅಂತ ಹೇಳಲಿ?" ಎಂದು ಅವನು ಕೇಳಿದ. +ನನಗೆ ತಕ್ಷಣವೇ ಮಿಂಚಿನಂತೆ ಹೊಳೆದು ಜೇಬಿನಲ್ಲಿ ಇಟ್ಟುಕೊಂಡಿದ್ದ ವಿಸಿಟಿಂಗ್‌ ಕಾರ್ಡ್‌ ಕೊಟ್ಟೆ. +ನನ್ನ ನಿವೃತ್ತಿ ಮೊದಲಿನ ಕೆಲಸದ ಪದನಾಮವಿದ್ದ ಪರಿಚಯದ ಕಾರ್ಡ್‌. +ಅದನ್ನು ಒಯ್ದು ಒಳಗೆ ಕೊಟ್ಟ ಆತ ಕೂಡಲೇ ಹೊರಬಂದು "ಬನ್ನಿ ಸಾರ್‌. . " ಎಂದು ಗಡಿಬಿಡಿ ತೋರಿದ. +ನನ್ನ ಪೂರ್ವಾಶ್ರಮದ ವೃತ್ತಿಗೆ ಕಾರ್ಪೊರೇಟರ್‌ಮನ್ನಣೆ ನೀಡಿದ್ದು ಸ್ಪಷ್ಟವಿತ್ತು "ಅದಕ್ಕೆ ಅಲ್ಲವಾ ಸಾರ್‌, ನಿಮ್ಮನ್ನು ಕರೆದುಕೊಂಡು ಬಂದದ್ದು." ಎಂದು ತಿಮ್ಮಪ್ಪನವರು ಪಿಸುಗುಟ್ಟಿ ನನ್ನ ಬೆನ್ನ ಹಿಂದೆಯೇ ಬಂದರು. +ಕಾರ್ಪೊರೇಟರ್‌ ಖಾಸಗಿ ಕೋಣೆಯ ಚಿತ್ರವನ್ನು ಕಣ್ತುಂಬಿಕೊಂಡೆ. +ಐಷಾರಾಮಿ ಸೋಫಾದಲ್ಲಿ ಸುಮಾರು ನಲವತ್ತರ ಆಜುಬಾಜಿನಲ್ಲಿದ್ದ ವ್ಯಕ್ತಿ ಹೂತು ಹೋದಂತೆ ಕುಳಿತಿದ್ದ. +ಎದುರಿಗೆ ಮೂವರು ಕೂರುವಷ್ಟು ವಿಶಾಲವಾದ ಸೋಫಾ. +ಅದೂ ಕೂಡ ಐಷಾರಾಮಿ ಸ್ವರೂಪದ್ಬಾಗಿತ್ತು. +ಆಪ್ತ ಕಾರ್ಯದರ್ಶಿಯಂತೆ ತೋರುತ್ತಿದ್ದ ವ್ಯಕ್ತಿಯೊಬ್ಬ ಆತನ ಹಿಂದೆ ಅರೆ ಬಾಗಿ ಕಡತವೊಂದನ್ನು ಕಂಕುಳಲ್ಲಿ ಇರುಕಿಕೊಂಡಿದ್ದ. +ನಮ್ಮನ್ನು ಬರಮಾಡಿಕೊಳ್ಳುವ ಮೊದಲು ಆ ಕೋಣೆಯಲ್ಲಿದ್ದ ಮೂವರು ನಮಗೆ ಬಾಗಿಲಲ್ಲೇ ಎದುರಾಗಿದ್ದರು. +ನಮ್ಮನ್ನು ನೋಡುತ್ತಲೇ ಸೋಫಾದಿಂದ ಎದ್ದ ಕಾರ್ಪೊರೇಟರ್‌ "ಬರಬೇಕು. . . ಸಾರ್‌. . ಫೋನ್‌ ಮಾಡಿದ್ದರೆ ಆಗಿತ್ತಲ್ಲ." ಎಂದು ಬರಮಾಡಿಕೊಂಡರು. +ಇದೆಲ್ಲ ನಾನಿದ್ದ ವೃತ್ತಿಯ ಪರಿಣಾಮ ಎಂಬುದು ನನಗೆ ಸ್ಪಷ್ಟವಿತ್ತು. +ಎದುರಾಗುತ್ತಲೇ ನಮಸ್ಕಾರ ಹೇಳಿದ್ದರಿಂದ ಮತ್ತೆ ಔಪಚಾರಿಕತೆಯ ಪ್ರಶ್ನೆ ಇರಲಿಲ್ಲ. +ನಮ್ಮನ್ನು ಎದುರು ಸೋಫಾದಲ್ಲಿ ಕೂರುವವರೆಗೆ ನಿಂತಿದ್ದ ಆತ "ಹೇಳಿ ಸಾರ್‌. . ಇಷ್ಟು ದೂರ. . " ಎಂದು ನೇರ ವಿಷಯಕ್ಕೆ ಬಂದರು. +ನನ್ನ ಪರಿಚಯ ಪತ್ರದ ಕಾರಣದಿಂದಲೇ ಭೇಟಿ ಏರ್ಪಟ್ಟ ಕಾರಣ ಇಡೀ ಪ್ರಕರಣವನ್ನು ಆತನಿಗೆ ವಿವರಿಸುವ ಹೊಣೆ ನನ್ನದಾಯಿತು. +ಆದ್ದರಿಂದಲೇ ತಿಮ್ಮಪ್ಪನನ್ನು ನನ್ನ ಸ್ನೇಹಿತರೆಂದು ಪರಿಚಯಿಸಿದೆ. +ನಾನು ಬಡಾವಣೆಯಲ್ಲಿ ವಾಸಕ್ಕೆ ಬಂದ ಹಿನ್ನೆಲೆ ಮತ್ತು ಅವಧಿಯನ್ನೂ ಸಂಕ್ಷಿಪ್ತವಾಗಿ ಹೇಳಿದೆ. +"ಬಂದು ಭೇಟಿಯಾಗಬೇಕು ಅಂತ ಇದ್ದೆ. +ಸಮಯ ಬಂದಿರಲಿಲ್ಲ" ಎಂದು ಇನ್ನೊಮ್ಮೆ ಪೀಠಿಕೆ ಹಾಕಿ ತಿಮ್ಮಪ್ಪನವರ ಮನೆ ಕಟ್ಟುವ ಸಮಸ್ಯೆಯನ್ನು ವಿವರಿಸಿದೆ. +ಅದಕ್ಕೆ ಪೂರಕ ಮಾಹಿತಿಗಳನ್ನು ನೀಡಲು ತಿಮ್ಮಪ್ಪನವರು ಮಧ್ಯೆ ಬಾಯಿ ಹಾಕಿದರು. +ಅದನ್ನು ಆತ ಇಷ್ಟಪಟ್ಟಂತೆ ಕಾಣಲಿಲ್ಲ. +"ಅವರು ಹೇಳ್ತಾ ಇದಾರಲ್ಲ. . . ನೀವು ಸುಮ್ಮನಿರಿ." ಎಂದು ತಡೆದರು. +"ಇಲ್ಲ ಇಲ್ಲ. +ಅವರೇ ಹೇಳಲಿ, ನನಗಿಂತಲೂ ಅವರಿಗೇ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇದೆ" ಎಂದು ಹೇಳಿ ಸುಮ್ಮನಾದೆ. +ತಿಮ್ಮಪ್ಪನವರು ತಮ್ಮ ಪರಿಚಯವನ್ನು ಇನ್ನೊಮ್ಮೆ ಮಾಡಿಕೊಂಡರು. +ತಮ್ಮ ಇಲಾಖೆ, ಹುದ್ದೆಯ ವಿವರವನ್ನೂ ನೀಡಿದರು. +"ನಿಮ್ದು ಸ್ಟೇಟ್‌ ಡಿಪಾರ್ಟ್‌ಮೆಂಟ್‌ ಬಿಡಿ, ನಮ್ಮದೆಲ್ಲ ಕಾರ್ಪೊರೇಷನ್ನು. . ನಿಮ್ಮದರಲ್ಲಿ ನಮಗೆ ಕೈಹಾಕೋದಕ್ಕೆ ಅವಕಾಶವೇ ಇಲ್ಲ" ಎಂದು ಆತ ತೀರ್ಮಾನ ಹೇಳಿದಂತೆ ಘೋಷಿಸಿ ಬಿಟ್ಟರು. +ಮನೆ ಕಟ್ಟುವಾಗ ತಾವು ಎದುರಿಸುತ್ತಿರುವ ಸಮಸ್ಯೆಯನ್ನು ಅವನಿಗೆ ತಿಳಿಸಿಕೊಡುವಲ್ಲಿ ತಿಮ್ಮಪ್ಪನವರಿಗೆ ಆಗುತ್ತಿಲ್ಲ ಎನಿಸಿ ನನಗೆ ಕೊಂಚ ಗಾಬರಿಯಾಯಿತು. +ತಕ್ಷಣ ಮಧ್ಯೆ ಬಾಯಿ ಹಾಕಿದೆ. +"ಇವರ ಇಲಾಖೆಗೆ ಸಂಬಂಧಪಟ್ಟಿದ್ದಲ್ಲ ಇವರೇ. . . ಇದು ಇವರು ಇಲ್ಲಿ ಕಟ್ಟಿಸ್ತಾ ಇರೋ ಮನೆಗೆ ಸಂಬಂಧ ಪಟ್ಟ ವಿಷ್ಯ." ಎಂದುನಾನು ಸ್ಪಷ್ಟಪಡಿಸಿದಾಗ, "ಅದನ್ನ ಹೇಳೋದು ಬಿಟ್ಟು ಈ ವಯ್ಯ ತಾನು ಅಂಥ ಇಲಾಖೇಲಿ ಆಫೀಸರ್ರು ಅಂದರೆ ಹೇಗ್ರೀ?" ಎಂದು ಸಿಡುಕಿ ಮತ್ತೆ ಕೇಳಿಸಿಕೊಳ್ಳುವ ಸಹನೆ ಪ್ರಕಟಿಸಿದರು. +ತಿಮ್ಮಪ್ಪನವರ ಸಮಸ್ಯೆಯನ್ನು ನಾನು ಮತ್ತೆ ಸ್ಪಷ್ಟಪಡಿಸಬೇಕಾಯಿತು. +ಮನೆ ಕಟ್ಟುವ ಸ್ಥಳಕ್ಕೆ ಕೆಲವರು ಬಂದು ಪುಂಡಾಟಿಕೆ ನಡೆಸುತ್ತಿರುವುದನ್ನು ಘಟನೆಯ ಸಹಿತ ವಿವರಿಸಿದೆ. +"ನೋಡಿ, ಆ ವ್ಯಕ್ತಿ ನಿಮ್ಮ ಹೆಸರು ಬೇರೆಹೇಳಿ ಹೋದನಂತೆ. . . ಯಾರೋ. . . ಏನೋ, ನಿಮ್ಮ ಹೆಸರಿಗೆ ಮಸಿ ಹಜ್ಜೋದಕ್ಕೆ ಹೀಗೆ ಮಾಡಿದ್ರೆ ಹೇಗೆ.. ?"ಎಂದೆ. + "ಏಯ್‌, ಅದಕ್ಕೆಲ್ಲ ನಾನಿಲ್ಲಿ ಅವಕಾಶ ಕೊಡಲ್ಲ ಸಾರ್‌. . ನೀವು ಡೀಟೇಲ್ಸ್‌ ಎಲ್ಲಾ ಇಲ್ಲಿ ಇವನ ತಾವಕೊಟ್ಟಿರಿ . + ನಾನು ವಿಚಾರಿಸಿಕೊಳ್ತೀನಿ." ಎಂದು ತಿಮ್ಮಪ್ಪನವರಿಗೆ ತಮ್ಮ ಕಾರ್ಯದರ್ಶಿಯಂತೆ ತೋರುತ್ತಿದ್ದ ವ್ಯಕ್ತಿಯತ್ತ ಕೈ ತೋರಿಸಿದರು. +ತಿಮ್ಮಪ್ಪನವರು ಮೊದಲೇ ಸಿದ್ಧಪಡಿಸಿಕೊಂಡು ಬಂದಿದ್ದ ಟಿಪ್ಪಣಿಯನ್ನು ತಕ್ಷಣವೇ ಆತನ ಕೈಗಿತ್ತರು. +"ಏನೂ ಯೋಚನೆ ಮಾಡಬೇಡಿ ಸಾರ್‌. . " ಎಂದು ನನ್ನೆಡೆಗೆ ನೋಡಿ ಕೈ ನೀಡಿದರು. +ಅದು ಎದ್ದು ಹೋಗಲುಕೊಟ್ಟ ಸೂಚನೆ ಎಂದು ಗ್ರಹಿಸಿ ಆತನಿಗೆ ಹಸ್ತಲಾಘವ ನೀಡಿದೆ. +ತಿಮ್ಮಪ್ಪನವರು ಎರಡೂ ಕೈಜೋಡಿಸಿದರು. +ಇಬ್ಬರೂ ಹೊರಬಂದಾಗ ಯಾವುದೋ ಗೆಲುವನ್ನು ಸಾಧಿಸಿದ ತೃಪ್ತಿ ಮೂಡಿತು. +ಇಬ್ಬರೂ ಮನೆಯಿಂದ ಈಚೆಗೆ ಬರುತ್ತಿದ್ದಾಗ ಕಾರ್ಪೊರೇಟರ್‌ ಅವರ ಸಹಾಯಕನೊಬ್ಬ ಹಿಂಬಾಲಿಸಿ ಬಂದು ತಿಮ್ಮಪ್ಪನವರನ್ನು ಒಳಕ್ಕೆ ಕರೆದ. +ತಿಮ್ಮಪ್ಪನವರು ಒಳಕ್ಕೆ ಹೋಗಿ ಐದು ನಿಮಿಷಗಳಲ್ಲಿಯೇ ವಾಪಸು ಬಂದರು. +ನಾನು ಕೇಳುವುದಕ್ಕೆ ಮೊದಲೇ "ಎರಡು ದಿನ ಬಿಟ್ಟು ಬರೋದಕ್ಕೆ ಹೇಳಿದಾರೆ" ಎಂದರು. +"ಎರಡು ದಿನತಾನೆ. . ಆಗಲೇನಂತೆ. . ನಿಮ್ಮ ಕೆಲಸ ಆದರೆ ಸಾಕು, ಸದ್ಯ, ಅವರಿಗೆ ನಾನು ಈಗ ನಿವೃತ್ತ ಅಂತ ಗೊತ್ತಾಗಲಿಲ್ಲಅಂತ ಕಾಣುತ್ತೆ" ಎಂದೆ. +"ಅದರಲ್ಲೇನು ಸಾರ್‌. . . ನೀವು ನಿವೃತ್ತರಾದರೂ ನಿಮ್ಮ ಬೆಲೆ ಇದ್ದೇ ಇರುತ್ತೆ. +ನೀವೇನು ನಮ್ಮ ಹಾಗೆ ಅಲ್ಲವಲ್ಲ.ಎನ್ನುತ್ತಾ ತಿಮ್ಮಪ್ಪನವರು ಸ್ಕೂಟರ್‌ನಲ್ಲಿ ಮನೆಯವರೆಗೂ ಬಿಟ್ಟು ಇನ್ನೊಮ್ಮೆ ಕೃತಜ್ಞತೆ ಹೇಳಿ ನಿರ್ಗಮಿಸಿದರು. +ಮುಂದಿನ ಎರಡು ದಿನ ತಿಮ್ಮಪ್ಪನವರು ಉದ್ಯಾನದಲ್ಲಿ ಕಾಣಿಸಲಿಲ್ಲ. +ಮೂರನೆಯ ದಿನ ಅವರನ್ನು ನಿರೀಕ್ಷಿಸಿದ್ದೆ. +ಕಾರ್ಪೊರೇಟರ್‌ ಅವರು ಬರಲು ಹೇಳಿದ್ದು ನೆನಪಿನಲ್ಲಿತ್ತು. +ಅಲ್ಲಿಗೆ ಹೋಗಿ ಬಂದಿದ್ದರ ಪರಿಣಾಮ ತಿಳಿದುಕೊಳ್ಳುವ ಕುತೂಹಲ ಇತ್ತು. +ಅವರು ನಾಲ್ಕನೆಯ ದಿನವೂ ಕಾಣಿಸಿಕೊಳ್ಳಲಿಲ್ಲ. +ಎಲ್ಲೋ ಹೋಗಿರಬಹುದು ಎಂದುಕೊಂಡು ಸುಮ್ಮನಾದೆ. +ಮತ್ತೆ ತಿಮ್ಮಪ್ಪನವರ ದರ್ಶನವಾದದ್ದು ಹತ್ತು ದಿನಗಳ ನಂತರ. +ಉದ್ಯಾನದಲ್ಲಿ ಪ್ರವೇಶಿಸಿದ ಅವರು ದೂರದಿಂದಲೇ ನನ್ನನ್ನು ನೋಡಿ ಕೈ ಎತ್ತಿದರು. +ವಿಶೇಷ ಇದ್ದರೆ ಅವರೇ ಬಂದು ಮಾತಾಡುತ್ತಾರೆ ಎಂದುಕೊಂಡು ಉದ್ಯಾನದ ಪಾದಚಾರಿ ಪಥದಲ್ಲಿ ಎಂದಿನಂತೆ ನಡೆಯತೊಡಗಿದೆ. +ಅವರೂ ತಮ್ಮದೇ ನಡಿಗೆಯ ಗತಿಯಲ್ಲಿ ನನ್ನನ್ನು ಹಿಂಬಾಲಿಸಿದರು. +ನನ್ನ ವಾಡಿಕೆಯ ಸುತ್ತುಗಳು ಮುಗಿದ ನಂತರ ಮೂಲೆಯ ಸಿಮೆಂಟ್‌ ಬೆಂಚಿನಲ್ಲಿ ಕುಳಿತೆ. +ಸ್ವಲ್ಪ ಹೊತ್ತಿಗೆ ತಮ್ಮ ನಡಿಗೆಯನ್ನು ಮುಗಿಸಿ ಹತ್ತಿರ ಬಂದರು. +ಬೆಂಚಿನ ಮೂಲೆಗೆ ಸರಿದು ಕುಳಿತರು. +ಹಿಂದೆಲ್ಲ ಅವರು ಹತ್ತಿರ ಬಂದಾಗ ನಾನೇ ಮುಂದಾಗಿ ಮಾತು ಆರಂಭಿಸುತ್ತಿದ್ದೆ. +ಹತ್ತು ದಿನಗಳ ನಂತರ ಭೇಟಿಯಾದ ಅವರೇ ಆರಂಭಿಸಲಿ ಎಂದುಕೊಂಡು ಉದ್ಯಾನದ ಹೂವು ಗಿಡಗಳತ್ತ ದೃಷ್ಟಿ ಹರಿಸಿದೆ. +ನನ್ನ ಧೋರಣೆ ಅವರಿಗೆ ಅರ್ಥವಾಯಿತೆಂದು ತೋರುತ್ತದೆ, "ಕಷ್ಟ ಸಾರ್‌,ಬೆಂಗಳೂರು ವಾಸ ಕಷ್ಟ." ಎಂದು ಸ್ವಗತದಂತೆ ಹೇಳಿಕೊಂಡರು. +ಇನ್ನು ನೇರವಾಗಿ ವಿಷಯಕ್ಕೆ ಬರಬೇಕು ಎನಿಸಿತು. +"ಏನಾಯ್ತು ಸಾರ್‌. . ಎರಡು ದಿನ ಬಿಟ್ಟು ಭೇಟಿಮಾಡೋದಕ್ಕೆ ಹೇಳಿದ್ದರಲ್ಲ ಅವರು, ಹೋಗಿದ್ದಿರಾ?ಏನಾಯ್ತು ಹೋದ ಕೆಲಸ?" ಎಂದೆ ನೇರವಾಗಿ. +"ಅದನ್ನೇ ಹೇಳಿದ್ದೆಲ್ಲ ಈಗ. . . ಕಷ್ಟ ಅಂತ" ಎಂದರು ಒಗಟಿನಂತೆ. +ಅವರೇ ಮುಂದುವರಿಸುತ್ತಾರೆ ಎಂಬುದು ನನಗೆ ನಿಶ್ಚಿತವಿತ್ತು. +ಪ್ರತಿಯಾಗಿ ಏನನ್ನೂ ಹೇಳದೆ ಅರ್ಥವಾಗದವನಂತೆ ಅವರತ್ತ ನೋಡಿದೆ. +"ಸರ್ಕಾರಿ ಅಧಿಕಾರಿ ಅಂತೀರಿ, ಅಂಥವರನ್ನು ಕರ್ಕೊಂಡು ಬಂದು ನನ್ನ ಹತ್ರ ಒತ್ತಡ ಹೇರ್ತೀರೇನ್ರೀ ಅಂತ ದಬಾಯಿಸಿ ಬಿಟ್ಟರು ಅವತ್ತು ನಾನು ಹೋದಾಗ." ಎಂದು ವಿಷಯ ಆರಂಭಿಸಿದರು. +ಸದ್ಯ ನಮ್ಮ ವೃತ್ತಿಯ ಬಗ್ಗೆ ಅಷ್ಟಾದರೂ ಭಯ ಇಟ್ಟುಕೊಂಡಿದ್ದಾರಲ್ಲ ಅನ್ನುವ ಸಮಾಧಾನ ಆಯಿತಾದರೂ ಅವರು ದಬಾವಣೆಗೆ ಒಳಗಾಗಿದ್ದರ ಬಗ್ಗೆ ಬೇಸರವಾಯಿತು. +ಅವರು ಮುಂದುವರಿಸುವಂತೆ "ಯಾಕೆ, ನನ್ನನ್ನು ನೀವು ಕರ್ಕೊಂಡು ಹೋಗಿದ್ದು ಅವರಿಗೆ ಇಷ್ಟವಾಗಲಿಲ್ಲ ಅಂತ ಕಾಣುತ್ತಲ್ವ."ಎಂದೆ. +"ಇಲ್ಲಿ ಯಾರನ್ನು ಕರ್ಕೊಂಡು ಹೋಗಿದ್ದು ಅನ್ನೋದು ಪ್ರಶ್ನೆಯಲ್ಲ ಸಾರ್‌. +ಇರೋದು ಏನಾದ್ರೂ ಒಂದು ನೆಪ ಅಷ್ಟೆ. +ನನಗೆ ಅವರು ಹೇಳಿದ್ದೇನು ಗೊತ್ತಾ? +"ನಿಮ್ಮ ಕೇಸು ಎಷ್ಟೋ ವಾಸಿ ಕಣ್ರೀ. +ಅದೇ ಸೊಸೈಟಿಯಿಂದ ಸೈಟು ಪಡೆದವರು ಮನೆ ಕಟ್ಟೋದಕ್ಕೆ ಹೋದರೆ ಅವರು ಇಟ್ಟುಕೊಂಡಿರೋ ದಾಖಲೆಪತ್ರಗಳ ತರಹದ್ದೇ ಇನ್ನೊಂದು ಸೆಟ್‌ ಇಟ್ಕೊಂಡು ಅದು ತಮ್ಮದೇ ಸೈಟು ಅಂತ ದಬಾಯಿಸಿದ ಪ್ರಕರಣಗಳು ಅವರ ಹತ್ರ ಬಂದಿವೆಯಂತೆ. +"ನಿಮ್ಮ ಕಟ್ಟಡಕ್ಕೆ ರಕ್ಷಣೆ ಕೊಡ್ತೀವಿ"ಅಂತ ಬಂದೋರು ಅಷ್ಟೋ ಇಷ್ಟೋಕೊಟ್ಟರೆ ಸುಮ್ಮನಾಗೋವಂತೋರು. +ಹೀಗೆ ನೀವು ಇಟ್ಕೊಂಡಿರೋ ಕ್ರಯಪತ್ರ, ಮ್ಯುಟೇಷನ್‌ ಪತ್ರ,ಎನ್‌ಕಂಬರೆನ್ಸ್‌ ಪತ್ರ ಇತ್ಯಾದಿ ಇಟ್ಕೊಂಡಿದ್ರೆ ಏನು ಮಾಡ್ತಿದ್ರಿ?" ಅಂತ ನನ್ನಲ್ಲಿ ನೀರು ಇಳಿಸಿಬಿಟ್ರು ಎಂದು ಹಣೆಯಲ್ಲಿ ಮೂಡಿದ ಬೆವರು ಹನಿಗಳನ್ನು ಒರೆಸಿಕೊಂಡರು. +"ನಿಮ್ಮ ಹತ್ರ ಸೈಟು ಕೊಂಡ ಎಲ್ಲ ದಾಖಲೆ ಪತ್ರ ಇದ್ರೂ ನಾಳೆ ಅದನ್ನು ಪ್ರಶ್ನೆ ಮಾಡಿ ಯಾವನಾದ್ರೂ ಕೋರ್ಟಿಗೆ ಹೋದ್ರೆ ಅದಕ್ಕೆ ನೀವು ವಕೀಲರನ್ನು ಇಟ್ಕೊಂಡು ಹೋರಾಟ ನಡೆಸಬೇಕಲ್ಲ. +ವಕೀಲರಿಗೆ ಫೀಸು,ನಿಮಗೆ ಸಮಯ ಹಾಳು. +ಎಲ್ಲ ಸರಿಹೋಗಿ ಮನೆ ಕಟ್ಟೋ ಹೊತ್ತಿಗೆ ಖರ್ಚು ಹತ್ತರಷ್ಟು ಏರಿರುತ್ತೆ. +ಸದ್ಯ ನಿಮಗೆ ಅಂಥ ಸಮಸ್ಯೆ ಏನೂ ಎದುರಾಗಿಲ್ಲ. +ಹೀಗೆ ರಕ್ಷಣೆ ಕೊಡ್ತೀವಿ ಅಂತ ಬರೋರನ್ನು ನೋಡ್ಕೋಬಹುದು. +ಆದರೆ ಬೇರೆ ದಾಖಲೆ ಪತ್ರ ತಂದೋರನ್ನು ಸುಲಭದಲ್ಲಿ ಎದುರಿಸೋದಕ್ಕೆ ಆಗೋದಿಲ್ಲಅಂತ ಹೇಳಿ ನನ್ನ ಧೈರ್ಯ ಉಡುಗಿಸಿಬಿಟ್ರು ನೋಡಿ ಅವರು. . "ಎನ್ನುತ್ತಾ ಒಣಗಿದ ತುಟಿಗಳನ್ನು ಒದ್ದೆಮಾಡಿಕೊಳ್ಳಲು ನಾಲಿಗೆಯನ್ನು ಹೊರಚಾಚಿದರು. +"ಸ್ವಾಮಿ, ನಾನಿರೋದು ಜನ ಸುಳಿದಾಡದೇ ಇರೋ ಇಲಾಖೆ. +ಸಂಬಳ ಬಿಟ್ಟು ಬೇರೆ ಒಂದು ಪೈಸೆ ಕೂಡ ಆದಾಯ ಬರೋ ಇಲಾಖೆಯಲ್ಲ" ಅಂತ ಅವರ ಹತ್ರ ಬಿಡಿಸಿ ಬಿಡಿಸಿ ಹೇಳಿದೆ. +ಮತ್ತೆ ಒಂದು ದಿನ ಬಿಟ್ಟುಬರೋಕೆ ಹೇಳಿದರು. +ಅವತ್ತು ಹೇಳಿದ್ದೆಂದರೆ "ಮನೆ ಕಟ್ಟಡಕ್ಕೆ ಒಟ್ಟು ಎಷ್ಟು ಖರ್ಚು ಆಗ್ತದೋ ಅದರಲ್ಲಿ ಶೇಕಡಾ ಎರಡರಷ್ಟು ದುಡ್ಡನ್ನು ಹೀಗೆ ಉಸ್ತುವಾರಿಗೆ ಅಂತ ಬಿಲ್ದರ್‌ಗಳು ಲೆಕ್ಕ ಹಾಕ್ತಾರೆ. +ನಿಮ್ಮ ಮನೆ ಹತ್ರ ಬಂದು ಗಲಾಟೆ ಮಾಡಿದ ಹುಡುಗರು ನನಗೆ ಗೊತ್ತಿದ್ದೋರು. +ಅವರಿಗೆ ನಾನು ಹೇಳಿದೀನಿ. +ಏನೋ ಅಷ್ಟುಕೊಡಿ. +ಮನೆ ಲೆಕ್ಕದಲ್ಲೇ ಅದನ್ನು ಸೇರಿಸಿಕೊಳ್ಳಿ. +ಏನು ಮಾಡ್ತೀರಿ. +ಸಮಾಜದಲ್ಲಿ ನಿರುದ್ಯೋಗ. . . ಕೆಲಸ ಇಲ್ಲ. +ದುಡಿಮೆ ಇಲ್ಲ, ಅವರನ್ನು ಹಾಗೆ ಬಿಟ್ರೆ ದರೋಡೆಕೋರರೋ, ಡಕಾಯಿತರೋ ಆಗ್ತಾರೆ. . . +ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು. . " ಎಂದು ಉಪದೇಶ ಮಾಡಿದರು. +ತಿಮ್ಮಪ್ಪ ಮತ್ತೊಮ್ಮೆ ನಾಲಿಗೆ ಹೊರಚಾಚಿ ತುಟಿಗಳನ್ನು ಒದ್ದೆ ಮಾಡಿಕೊಂಡರು. +"ಹೋಗಲಿ ಬಿಡಿ. +ಏನೋ ಅಷ್ಟನ್ನು ಇವರ ಮಧ್ಯಸ್ಥಿಕೆಯಲ್ಲೇ ಕೊಟ್ಟು ಸದ್ಯದ ಸಂಕಟ ನಿವಾರಿಸಿಕೊಳ್ಳಬೇಕು ಅಂತ ಆಯ್ತು. +ಅಲ್ವಾ" ಎಂದೆ. +"ಇದೆಂಥ ನ್ಯಾಯ ಸಾರ್‌. +ದರೋಡೆ ಮಾಡೋದಕ್ಕೆ ಬರ್ತಾ ಇದಾರೆ, ರಕ್ಷಣೆ ಕೊಡಿ ಅಂತ ಪೊಲೀಸರ ಹತ್ರಹೋದರೆ, ಸಾಮಾಜಿಕ ನ್ಯಾಯದ ಉಪದೇಶ ಕೇಳಿಕೊಂಡು ಬರಬೇಕಾಯ್ತಲ್ಲ ಅಂತ ಬೇಜಾರಾಗ್ತಾ ಇದೆ. +ಮನೆಯಲ್ಲಿ ಏನೋ ಒಂದು ಖರ್ಚು ಅಂತ ಅಷ್ಟೋ ಇಷ್ಟೋ ಕೊಟ್ಟು ಕೈ ತೊಳಕೊಳ್ಳಿ ಅಂತಾರೆ. +ಮಧ್ಯಸ್ಥಿಕೆ ವಹಿಸೋದಕ್ಕೆ ಬಂದ ಈ ಯಪ್ಪ ಪರ್ಸೆಂಟೇಜ್‌ ಲೆಕ್ಕದಲ್ಲಿ ಲಂಚದ ಹಣ ಕೇಳ್ತಾ ಇದಾರೆ. +ಏನು ಮಾಡೋದಕ್ಕೂ ತೋಚ್ತಾ ಇಲ್ಲ." ಎಂದರು. +"ಸ್ವಂತ ಮನೆ ಆಗಬೇಕು ಅಂದರೆ ಏನಾದರೂ ಮಾಡಬೇಕಲ್ಲ." ಎಂದು ಸಮಾಧಾನ ಹೇಳಿದೆ. +ಅದು ಒಣ ಉಪಚಾರ ಎನಿಸಿತು. +ಏನನ್ನಿಸಿತೋ ತಿಮ್ಮಪ್ಪ ದಿಗ್ಗನೆ ಎದ್ದು "ಸಾರಿ ಸಾರ್‌, ನಾನು ಬರ್ತೀನಿ" ಎಂದುದುರ್ದಾನ ತೆಗೆದುಕೊಂಡವರಂತೆ ನಿರ್ಗಮಿಸಿದರು. +"ಅದ್ಯಾಕೆ ನಿಮ್ಮಕ್ಕ ಹಾಗೆ ಗದರಿಕೊಂಡು ಫೋನು ಮಾಡಿದರು. +ಅದನ್ನು ನಯವಾಗಿಯೇ ಹೇಳಬಹುದಿತ್ತಲ್ಲ"ಎಂದು ಪ್ರಮೋದ್‌ ಕೇಳಿದಾಗ ಮೈತ್ರಿಗೆ ಅದರ ತಲೆಬುಡ ಅರ್ಥವಾಗಲಿಲ್ಲ. +ಅವಳ ಮುಖದಲ್ಲಿ ಮೂಡಿದ ಬೆರಗನ್ನು ಗಮನಿಸಿದ ಆತ "ಅಂಥ ಸೀರಿಯಸ್ಸಾದ ವಿಷಯವೇನೂ ಅಲ್ಲ, ಇವತ್ತು ಸೊಸೈಟಿಗೆ ಹೋಗಿದ್ದೆನಲ್ಲ. +ಅಲ್ಲಿ ತಿಮ್ಮಪ್ಪನವರು ದುಡ್ಡು ಕಳಿಸಿದಾರಂತಲ್ಲ, ಅದರ ರಶೀದಿ ಇದ್ರೆ ಕೊಡಿ ಅಂತ ಕೇಳಿ ಇಸ್ಕೊಂಡು ಬಂದೆ. +ನಾನು ಸೊಸೈಟಿ ಆಫೀಸು ದಾಟಿ ಸ್ವಲ್ಪ ದೂರ ಬಂದಿದ್ದೆನಷ್ಟೆ, ಅಷ್ಟರಲ್ಲಿ ನಿಮ್ಮಕ್ಕನ ಫೋನು. +"ತಿಮ್ಮಪ್ಪನವರ ರಸೀದಿ ತಗೊಂಡರಾ" ಎಂದು ಕೇಳಿದ್ದಲ್ಲದೆ, "ಅವರ ಸೈಟಿನ ಉಸ್ತುವಾರಿನ ನೀವೆ ನೋಡಿಕೊಳ್ತಾ ಇದೀರಾ"ಎಂದೂ ಕೇಳಿದರು. +ಅವರ ಧ್ವನಿಯಲ್ಲಿ ಒಂದು ತರಾ ಗದರಿಕೆ ಇತ್ತು. +ನಾವು ತಿಮ್ಮಪ್ಪನವರ ಸೈಟಿನ ರಶೀದಿ ಕೇಳಿದರೆ ಅದರ ಉಸ್ತುವಾರಿ ನೋಡಬೇಕು ಅಂತ ಇದೆಯಾ?" ಎಂದು ಪ್ರಮೋದ್‌ ಅಸಹನೆಯಿಂದ ಹೇಳಿದಾಗ ಮೈತ್ರಿಗೆ ಮೈ ಉರಿಯುವಂತಾಯಿತು. +ಅಕ್ಕನ ನಡವಳಿಕೆಗೆ ಕಿರಿಕಿರಿಯಾದರೂ ಅದನ್ನುತೋರಿಸಿಕೊಳ್ಳದೆ "ಅದಕ್ಕೆ ನೀವು ಏನಂದಿರಿ?" ಎಂದು ಸಹಜವೆಂಬಂತೆ ಕೇಳಿದಳು. +"ಅದಕ್ಕೇನು ಹೇಳಲಿ? +ಮೊನ್ನೆ ಮದುವೇಲಿ ಸಿಕ್ಕಿದ್ದರಲ್ಲ, ತಿಮ್ಮಪ್ಪನವರು, ಸೊಸೈಟಿ ಕಡೆ ಹೋದರೆ ನಾನು ಚೆಕ್‌ ಕಳಿಸಿದ್ದು ಬಂದಿದೆಯೇ ಅಂತ ವಿಚಾರಿಸಲು ಆಗುತ್ತಾ ಅಂತ ಕೇಳಿದ್ದರು. +ಅದಕ್ಕೆ ಕೇಳಿ ರಶೀದಿ ತಗೊಂಡೆ ಅಂತ ಹೇಳಿ ಲೈನು ಕಟ್‌ ಮಾಡಿದೆ" ಎಂದ ಪ್ರಮೋದ್‌ ಕೋಪದಿಂದ. +"ಸೊಸೈಟಿ ಗುಮಾಸ್ತ ಉಡುಪ ಇವರು ತಿಮ್ಮಪ್ಪನವರ ಸೈಟಿನ ಬಗ್ಗೆ ಮಾತಾಡಿದ್ದನ್ನು ತಕ್ಷಣ ಮೊಬೈಲ್‌ನಲ್ಲಿ ತಿಳಿಸಿರಬೇಕು, ಇಲ್ಲದಿದ್ದರೆ ಅವಳಿಗೆ ವಿಷಯ ಹೇಗೆ ಗೊತ್ತಾಗಬೇಕು?" ಎಂದುಕೊಂಡಳು. +ಆದರೆ ಅದನ್ನು ಹೇಳಲಿಲ್ಲ. +"ಹೋಗ್ಲಿಬಿಡಿ, ತಿಮ್ಮಪ್ಪನವರು ಅವಳಿಗೂ ಹೇಳಿದ್ದರೇನೋ, ಅವಳೂ ಉಡುಪರ ಹತ್ರ ಮಾತಾಡಿದ್ದಳೂ ಅಂತ ಕಾಣುತ್ತೆ" ಎಂದು ಸಹಜಧಾಟಿಯಲ್ಲಿ ಹೇಳಿದಾಗ ಪ್ರಮೋದ್‌ ಮತ್ತೆ ಮಾತು ಮುಂದುವರಿಸಲಿಲ್ಲ. +'ಸಿಟಿ ಕಡೆ ಹೋಗೋನು ಅಲ್ಲೇ ಯಾವುದಾದರೂ ಕೊರಿಯರ್‌ ಆಫೀಸು ಕಂಡರೆ ರಸೀದಿ ಕಳಿಸ್ತೇನೆ ಅವರಿಗೆ' ಎಂದು ಹೇಳುತ್ತಾ ಚಪ್ಪಲಿ ಮೆಟ್ಟಿಕೊಂಡು ಹೊರಬಿದ್ದ. +ಮಕ್ಕಳಿಬ್ಬರೂ ಕಾಲೇಜಿಗೆ ಹೋಗಿದ್ದರು. +ಮನೆಯಲ್ಲಿ ಒಬ್ಬಳೇ ಉಳಿದ ಮೈತ್ರಿಗೆ ಅಕ್ಕ ಚೈತ್ರಳ ವರ್ತನೆ ಮೈ ಪರಚಿಕೊಳ್ಳುವಂತಾಯಿತು. +ಇವಳದು ಯಾಕೋ ಅತಿಯಾಯಿತು ಎಂದೂ ಅನಿಸಿತು. +ಹೈಸ್ಕೂಲು ಹೆಡ್ಮಾಸ್ಟರ್‌ ಆಗಿದ್ದ ತಂದೆಗೆ ತಾನೂ ಸೇರಿದಂತೆ ನಾಲ್ವರು ಹೆಣ್ಣುಮಕ್ಕಳು. +ಇಬ್ಬರು ಅಣ್ಣಂದಿರು. +ಎಲ್ಲರೂ ಮದುವೆಯಾಗಿ ತಮ್ಮ ತಮ್ಮ ಸಂಸಾರಗಳಲ್ಲಿ ತೊಡಗಿದ್ದಾರೆ. +ಬೆಂಗಳೂರಿನ ಬೇರೆ ಬೇರೆ ಬಡಾವಣೆಗಳಲ್ಲಿ ಸ್ವ್ಹಂತದ್ದೋ ಬಾಡಿಗೆಯದೋ ಮನೆಗಳಲ್ಲಿ ನೆಲೆಸಿ ನೆಮ್ಮದಿಯಾಗಿದ್ದಾರೆ. +ಪ್ರತಿ ಗೌರಿಹಬ್ಬದಲ್ಲಿ ದೀಪಾವಳಿಯಲ್ಲಿ ಯಾರಾದರೊಬ್ಬರ ಮನೆಗಳಲ್ಲಿ ಸೇರಿ ಸಂತಸ ಹಂಚಿಕೊಳ್ಳುತ್ತಾರೆ. +ಯಾರಿಗಾದರೂ ಏನಾದರೂ ತೊಂದರೆ ಆದರೆ ಎಲ್ಲರೂ ಒಂದಾಗಿ ಹಣಕಾಸಿನ ನೆರವು ನೀಡುವುದಿದೆ. +ಈಚೆಗಷ್ಟೆ ದೊಡ್ಡ ಅಕ್ಕನ ಮಗನ ಮದುವೆ ನಡೆದಿದೆ. +ಎಲ್ಲರೂ ನೆಮ್ಮದಿಯಲ್ಲಿ ಇರುವಾಗ ಇಪ್ಪತ್ತು ವರ್ಷ ಹಿಂದೆ ಅನಗತ್ಯವಾಗಿ ಮೂಡಿದ್ದ ಸಂಶಯವನ್ನು ಇನ್ನೂ ಜೀವಂತ ಉಳಿಸಿಕೊಂಡು ಕಿರಿಕಿರಿ ನೀಡುತ್ತಿರುವ ಎರಡನೇ ಅಕ್ಕನ ವರ್ತನೆಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎನ್ನುವುದು ಮೈತ್ರಿಗೆ ಸಮಸ್ಯೆಯಾಯಿತು. +ಪ್ರಮೋದ್‌ ಜತೆ ಮದುವೆ ಆಗುವ ಮೊದಲು ಮೈತ್ರಿ ಸ್ವಲ್ಪ ಕಾಲ ತಿಮ್ಮಪ್ಪನವರು ಇದ್ದ ಕಚೇರಿಯಲ್ಲಿ ಹಂಗಾಮಿ ನೆಲೆಯಲ್ಲಿ ಕೆಲಸ ಮಾಡಿದ್ದಳು. +ಹಾಗೆ ನೋಡಿದರೆ ತಿಮ್ಮಪ್ಪನವರ ಪರಿಚಯವನ್ನು ಮಾಡಿಸಿದವಳೇ ಚೈತ್ರ. +ಅದೇ ನೆಪದಲ್ಲಿ ಅವರ ಕಚೇರಿಯಲ್ಲೇ ಮೈತ್ರಿಗೆ ಕೆಲಸ ಸಿಕ್ಕಿತ್ತು. +ಯಾವುದೋ ಸಂದರ್ಭದಲ್ಲಿ ತಿಮ್ಮಪ್ಪ ಮನೆಗೂ ಬಂದಿದ್ದರು. +ಅವರನ್ನು ತಾನೇ ಆಟೋದಲ್ಲಿ ಕರೆದುಕೊಂಡು ಬಂದದ್ದು. +"ಮನೆ ಹತ್ತಿರ ಯಾಕೆ ಆಟೋ ನಿಲ್ಲಿಸಲಿಲ್ಲ? +ಮನೆಯಿಂದ ದೂರದಲ್ಲಿ ಆಟೋ ನಿಲ್ಲಿಸಿ ಇಬ್ಬರೂ ಜತೆಯಾಗಿ ನಡೆದುಕೊಂಡು ಬಂದದ್ದು ಏಕೆ?' ಎಂದು, ತಿಮ್ಮಪ್ಪ ಮನೆಯಿಂದ ಹೊರಗೆ ಹೋಗುತ್ತಲೇ, ಚೈತ್ರ ರಂಪ ಮಾಡಿದ್ದಳು. +"ಅದರಲ್ಲೇನು?ಆಟೋದವನು ಸಂದಿಗೊಂದಿಯಲ್ಲಿ ಬರೋಲ್ಲ ಅಂತ ತಕರಾರು ಮಾಡಿದ,ಅದಕ್ಕೆ ಸ್ವಲ್ಪ ದೂರದಲ್ಲೇ ಇಳಿದೆವು" ಎಂದು ಎಷ್ಟು ಹೇಳಿದರೂ ಅವಳು ಒಪ್ಪಲು ತಯಾರಿರಲಿಲ್ಲ. +ಅದೇ ಘಟನೆಯನ್ನು ನೆಪವಾಗಿಟ್ಟುಕೊಂಡು ಎಷ್ಟೋ ಸಲ ಬೈದಿದ್ದಳು. +ಆಗಲೇ ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿದ್ದ ತಿಮ್ಮಪ್ಪನವರು ನಂತರ ಎಲ್ಲೆಲ್ಲಿಗೋ ವರ್ಗವಾಗಿ ಹೋಗಿದ್ದರು. +ಮಲೆನಾಡಿನ ಕಡೆಯವರಂತೆ. +ಮನೆದೇವರ ಹೆಸರು ಇಟ್ಟುಕೊಂಡಿದ್ದರು. +ತಮಗೆ ಪರಿಚಯವಾಗಿದ್ದವರ ಜತೆ ಸಾಧ್ಯವಾದಷ್ಟೂ ಸೌಹಾರ್ದ ಸಂಬಂಧ ಇಟ್ಟುಕೊಳ್ಳುತ್ತಿದ್ದ ಅವರ ಬಗ್ಗೆ ಚೈತ್ರ ಯಾಕೆ ಇಷ್ಟು ಅಸಹನೆ ವ್ಯಕ್ತಪಡಿಸುತ್ತಿದ್ದಾಳೆ ಎಂಬುದೇ ಮೈತ್ರಿಗೆ ಒಗಟಾಗಿತ್ತು. +ಮದುವೆಯಾದ ಮೇಲೂ ಅವಳ ಅಸಹನೆ ನಿಂತಿರಲಿಲ್ಲ. +ಮದುವೆಯಾದ ಕೆಲವೇ ದಿನಗಳಲ್ಲಿ ಪ್ರಮೋದ್‌ಎದುರಿಗೆ ಇದ್ದಾಗಲೇ "ಅದ್ಯಾಕೆ ತಿಮ್ಮಪ್ಪ ನಿನಗೆ ಹಬ್ಬದ ಗ್ರೀಟಿಂಗ್‌ ಕಳಿಸಿದಾರೆ?" ಎಂದು ದೊಡ್ಡದಾಗಿ ಪ್ರಶ್ನಿಸಿದ್ದಳು. +"ನಿನಗೂ ಕಳಿಸಿದ್ದಾರಲ್ಲ" ಎಂದು ಹೇಳಲು ಆಸ್ಪದವಾಗದಂತೆ ದಬಾಯಿಸಿದ್ದಳು. +ಪ್ರಮೋದ್‌ ಸಣ್ಣಮನಸ್ಸಿನವನಾಗಿದ್ದರೆ ಅವಳ ಮಾತು ಎಷ್ಟು ಗಂಭೀರ ಪರಿಣಾಮ ಬೀರಬಹುದಿತ್ತಲ್ಲ. +ತನ್ನ ಬದುಕೇ ಅತಂತ್ರವಾಗಿ ಬಿಡುವ ಸಾಧ್ಯತೆ ಇತ್ತಲ್ಲ ಎಂಬ ಅಳುಕಿನಲ್ಲಿದ್ದಾಗ ಅಂದು ರಾತ್ರಿಯ ಆಪ್ತ ಸಂದರ್ಭದಲ್ಲಿಯೂ ಪ್ರಮೋದ್‌ ಅದರ ಬಗ್ಗೆ ಏನನ್ನೂ ಕೇಳಿರಲಿಲ್ಲ. +ಆದರೂ ತನ್ನ ಬಗ್ಗೆ ಯಾವುದೇ ತಪ್ಪು ಅಭಿಪ್ರಾಯ ಮೂಡಬಾರದು ಎಂದುಕೊಂಡ ಇವಳೇ ವಿರಾಮಕಾಲದಲ್ಲಿ ತಿಮ್ಮಪ್ಪನವರ ಬಗ್ಗೆ ವಿವರವಾಗಿ ಹೇಳಿದ್ದಳು. +"ಏಯ್‌ ಅದರಲ್ಲೇನಿದೆಯೇ? +ನನಗೂ ಸುಮಾರು ಜನ ಗ್ರೀಟಿಂಗ್ ಕಳಿಸ್ತಾರೆ. +ಅದೇನು ವಿಶೇಷವೇ" ಎಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದ. +ಬ್ಯಾಂಕಿನಲ್ಲಿದ್ದ ಪ್ರಮೋದ್‌, ತಿಮ್ಮಪ್ಪನವರಂತೆಯೇ ಕೆಲವು ಊರು ಸುತ್ತಿ ಬೆಂಗಳೂರಿಗೆ ಬರುವ ವೇಳೆಗೆ ಇಬ್ಬರು ಮಕ್ಕಳು ಕಾಲೇಜಿಗೆ ಹೋಗುವ ವಯಸ್ಸಿಗೆ ಬಂದಿದ್ದರು. +ಮೈತ್ರಿ ಪದವಿ ಓದುತ್ತಿದ್ದಾಗಲೇ ಬ್ಯಾಂಕಿಗೆ ಸೇರಿಕೊಂಡಿದ್ದ ಚೈತ್ರ ಬೆಂಗಳೂರಿನ ಆಯಕಟ್ಟಿನ ಜಾಗದಲ್ಲಿ ಸ್ವಂತ ನಿವೇಶನ ಇದ್ದ ಹುಡುಗನನ್ನೇ ಮದುವೆಯಾಗಿದ್ದಳು. +ಬ್ಯಾಂಕಿನಿಂದ ಸಾಲ ಪಡೆದು ಒಳ್ಳೆಯ ಮನೆಯನ್ನೂ ಕಟ್ಟಿಸಿದ್ದಳು. +ಬ್ಯಾಂಕಿನ ಕೆಲಸ ಹೊರೆಯಾಗುತ್ತಿದೆ ಎನಿಸಿದಾಗ, ಭಾವನನ್ನು ಒಪ್ಪಿಸಿ ಸ್ವಯಂ ವೃತ್ತಿ ಪಡೆದು ಏನೇನೋ ಚಟುವಟಿಕೆಗಳಲ್ಲಿ ತೊಡಗಿಕೊಂಡವಳು. +ಅಕ್ಕ ತಂಗಿಯರನ್ನು ತುಂಬ ಭಾವಿಸುತ್ತಿದ್ದ ಅವಳಿಗೆ ಎಲ್ಲರೂ ಒಂದೇ ಕಡೆ ನೆಲೆಸುವಂತಾಗಲಿ ಎಂಬ ವಾತ್ಸಲ್ಯ. + ಅದಕ್ಕಾಗಿಯೇ ನಾಗರಭಾವಿ ಸಮೀಪದ ರೆವಿನ್ಯೂ ಬಡಾವಣೆಯಲ್ಲಿ ತಮ್ಮವರೆಲ್ಲರಿಗೆ ಸೈಟು ಕೊಡಿಸಿದ್ದಳು. +ಅವಳು ಕೊಡಿಸಿದ ಸೈಟಿನಲ್ಲೇ ತಾನೀಗ ಮನೆ ಕಟ್ಟಿಕೊಂಡು ವಾಸವಿರುವುದು. +ನಿವೃತ್ತಿಯ ಸಮೀಪ ಬಂದಿರುವ ತಿಮ್ಮಪ್ಪನವರೂ ಅವಳ ಒತ್ತಾಯದಿಂದಲೇ ಒಂದು ಸೈಟುಕೊಂಡಿದ್ದಾರೆ. +ಬಡಾವಣೆಯನ್ನು ಅಭಿವೃದ್ಧಿಪಡಿಸಿದ ಸೊಸೈಟಿಯವರು ಖಾಲಿ ನಿವೇಶನಗಳು ಅತಿಕ್ರಮಣವಾಗದಂತೆ ನೋಡಿಕೊಳ್ಳಲು ಕಾವಲು ವ್ಯವಸ್ಥೆ ಮಾಡಿದ್ದಾರೆ. +ಅದಕ್ಕೆ ನಿವೇಶನದಾರರು ತಿಂಗಳಿಗೆ ಇಂತಿಷ್ಟು ನಿರ್ವಹಣಾ ವೆಚ್ಚ ನೀಡಬೇಕು. +ಎರಡು ವರ್ಷದಿಂದ ನಿರ್ವಹಣಾ ವೆಚ್ಚ ಕಟ್ಟಿಲ್ಲ ಎಂದು ಈಚೆಗೆ ಮದುವೆ ಮನೆಯಲ್ಲಿ ಸಿಕ್ಕಿದ್ದ ತಿಮ್ಮಪ್ಪನವರು ಹೇಳಿದ್ದರು. +ಪುಟ್ಟೇನಹಳ್ಳಿಯಾಜೆ ಯಾವುದೋ ಬಡಾವಣೆಯಲ್ಲಿ ಮನೆ ಹಿಡಿದಿರುವ ತಿಮ್ಮಪ್ಪನವರಿಗೆ ನಾಗರಭಾವಿಯ ಸೊಸೈಟಿ ಕಚೇರಿಗೆ ಹೋಗಿ ಬರುವುದಕ್ಕೆ ಒಂದು ದಿನವೇ ಹಿಡಿಯುತ್ತದೆ ಎಂದೇ ತನಗೆ ವಿಚಾರಿಸಲು ಹೇಳಿದ್ದರು. +ಅದನ್ನೇ ಚೈತ್ರ ರಬ್ಬರಿನಂತೆ ಈಗ ಜಗ್ಗಾಡುತ್ತಿದ್ದಾಳಲ್ಲ ಎಂದು ಮೈತ್ರಿ ಕಸಿವಿಸಿಗೊಂಡಳು. +ಹಬ್ಬಗಳಲ್ಲಿ ಎಲ್ಲರೂ ಒಟ್ಟಿಗೆ ಸೇರಿದಾಗಲೆಲ್ಲ ಅವಳು ಹೇಳಿದ ಅಡುಗೆಗಳೇ ಆಗಬೇಕು. +ಅಪರೂಪಕ್ಕೆ ಸೇರುತ್ತಿದ್ದೇವಲ್ಲ ಎಂದು ಉಳಿದವರು ಸುಮ್ಮನೆ ಅವಳು ಹೇಳಿದ್ದನ್ನು ಮಾಡುತ್ತಿದ್ದರೆ ತಾನೇ ಒಂದೆರಡು ಸಲ ಅವಳ ಮೆನುವನ್ನು ಬದಲಿಸಿದ್ದುಂಟು. +ಆಗೆಲ್ಲ ಅವಳ ಕಣ್ಣುಗಳಿಗೆ ರೌದ್ರರೂಪ ಬರುತ್ತಿದ್ದುದು ಈಗ ನೆನಪಿಗೆ ಬರುತ್ತಿದೆ. +ನಮ್ಮಲ್ಲಿ ಯಾರಿಗೆ ತೊಂದರೆ ಆದರೂ ನೆರವಿಗೆ ಧಾವಿಸುವ ಅವಳಿಗೆ ಈ ಗೀಳು ಯಾಕೆ ಹತ್ತಿಕೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮೈತ್ರಿಗೆ ಸಾಧ್ಯವಾಗಲಿಲ್ಲ. +ಆದರೆ ತನಗೆ ಅವಳು ಹೇಳಿದ್ದನ್ನೆಲ್ಲ ಸಹಿಸಿಕೊಳ್ಳುವ ಅಗತ್ಯವಾದರೂ ಏದೆ? +ಅಷ್ಟಕ್ಕೂ ತಿಮ್ಮಪ್ಪನವರ ಜತೆ ನಾವು ಮಾತಾಡಿದರೂ ಅವಳು ಸಹಿಸಿಕೊಳ್ಳುತ್ತಿಲ್ಲ ಎಂದರೆ ಅದು ಯಾಕೆ ಎಂದು ತನಗೆ ಗೊತ್ತಾಗಬೇಡವೇ? +ಅವರು ಮದುವೆ ಮನೆಯಲ್ಲಿ ಸಿಕ್ಕಾಗ ಎಷ್ಟು ಮುತುವರ್ಜಿಯಿಂದ ನಮ್ಮವರೆಲ್ಲರ ಪರಿಚಯ ಮಾಡಿಸಿ ಮಾತಾಡಿದಳು? +ಅವರದೊಂದು ಕೆಲಸ ಮಾಡಿದರೆ ಅದನ್ನು ಸಹಿಸಿಕೊಳ್ಳಲಾರದವಳಂತೆ ಯಾಕೆ ಮಾತಾಡಿದಳು ಎಂದೆಲ್ಲಪ್ರಶ್ನೆಗಳೆದ್ದು ತಲೆ ಸುತ್ತು ಬರುವಂತಾಯಿತು. +ಸಿಟಿ ಕಡೆ ಹೋಗಿದ್ದ ಪ್ರಮೋದ್‌ ವಾಪಸು ಬಂದಾಗಲೂ ಮೈತ್ರಿ ಬೆಳಗಿನ ಉದಾಸ ಭಾವದಲ್ಲಿಯೇ ಇದ್ದಳು. +ಮನಸ್ಸನ್ನು ಕೊರೆಯುತ್ತಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. +ಅಂದಾಜು ಇಪ್ಪತ್ತು ವರ್ಷದಿಂದ ಅವಳನ್ನು ಹತ್ತಿರದಿಂದ ನೋಡುತ್ತಿದ್ದ ಪ್ರಮೋದ "ಅದನ್ಯಾಕೆ ತಲೆಯಲ್ಲಿ ಇಟ್ಟುಕೊಂಡು ಕೊರಗುತ್ತಿದ್ದೀಯ? +ನಾಳೆ ಹೇಗೂ ನಿಮ್ಮ ದೊಡ್ಡಕ್ಕನ ಮನೆ ಫಂಕ್ಷನ್‌ಗೆ ಬರ್ತಾರಲ್ಲ. +ಆಗ ಯಾಕೆ ಹೀಗೆ ಮಾಡ್ತಾ ಇದೀಯ ಅಂತ ಕೇಳು. +ನಿಮ್ಮ ಅಕ್ಕ -ತಂಗಿಯರ ಮಧ್ಯೆ ನಾನು ಬರೋದಿಲ್ಲ. +ನಾಳೆ ನನಗೆ ಟ್ರೈನಿಂಗ್‌ ಇರೋದು ನಿನಗೆ ಗೊತ್ತೇ ಇದೆಯಲ್ಲ ಎಂದು ಸಮಾಧಾನಪಡಿಸಿದ. +ಸಂಜೆ ಮಕ್ಕಳು ಬಂದಾಗಲೂ ಮೈತ್ರಿ ಗೆಲುವಾಗಲಿಲ್ಲ. +ರಾತ್ರಿಯ ಅಡುಗೆ, ಊಟ, ಉಳಿದ ಕಸ ಮುಸುರೆ ಕೆಲಸ ಮುಗಿಸಿ ಹಾಸಿಗೆಗೆ ಬರುವಷ್ಟರಲ್ಲಿ ಮನಸ್ಸಲ್ಲಿ ನಾಳೆ ಚೈತ್ರಳನ್ನು ಎದುರಿಸಿ ಪ್ರಶ್ನಿಸುವ ಹೊಳವು ರೂಪುಗೊಂಡಿತ್ತು. +ಅಪ್ಪ ಓದಿಸಿದ್ದಾರೆ. +ಮದುವೆ ಮಾಡಿದ್ದಾರೆ. +ಮನೆ ಕಟ್ಟುವಾಗ ಅವಳು ಸ್ವಲ್ಪ ಹಣಕೊಟ್ಟಿದ್ದರೂ ಅದನ್ನು ಬ್ಯಾಂಕ್‌ ಸಾಲದ ಕೊನೆಯ ಕಂತು ಬಂದಾಗಲೇ ತೀರಿಸಿದ್ದಾಗಿದೆ. +ತನ್ನ ಸ್ವಂತ ಬದುಕನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳುತ್ತಿರುವಾಗ ಅದು ಮುರಿದುಹೋಗುವಂತೆ ವರ್ತಿಸುತ್ತಿರುವ ಅಕ್ಕನಿಗೆ ಸರಿಯಾಗಿಯೇ ಚುರುಕು ಮುಟ್ಟಿಸಬೇಕು. +ಹೇಗೆ ಹೇಳಬೇಕೆಂದರೆ ಅವಳು ತಿರುಗಿ ಮಾತಾಡಲು ಸಾಧ್ಯವೇ ಆಗಬಾರದು ಎಂದೆಲ್ಲ ಗುಣಾಕಾರ ಹಾಕಿಕೊಂಡಳು. +ಪ್ರಮೋದ್‌ಗೆ ಅದರ ಸುಳಿವು ನೀಡಲಿಲ್ಲ. +ಬೆಳಗಿನಿಂದ ಆಗಿದ್ದ ಮಾನಸಿಕ ಆಯಾಸದಿಂದ ದಿಂಬಿಗೆ ತಲೆಕೊಟ್ಟಾಗಲೇ ನಿದ್ದೆ ಆವರಿಸಿತ್ತು. +ಬೆಳಿಗ್ಗೆ ಉಲ್ಲಾಸದಿಂದ ಎದ್ದು ಬೇಗ ಬೇಗ ಕೆಲಸ ಮುಗಿಸಿದಳು. +ಮಕ್ಕಳಿಬ್ಬರು ಕಾಲೇಜಿಗೆ, ಪ್ರಮೋದ ಟ್ರೈನಿಂಗ್‌ಗೆ ಹೊರಡುತ್ತಲೇ ಚೆನ್ನಾಗಿ ಅಲಂಕರಿಸಿಕೊಂಡಳು. +ಮನೆಗೆ ಬೀಗ ಹಾಕಿ ಆಟೋ ಹಿಡಿದು ಹನ್ನೊಂದರ ಸುಮಾರಿಗೆ ದೊಡ್ಡಕ್ಕನ ಮನೆಗೆ ಬಂದಳು. +ಚೈತ್ರ ಆಗಲೇ ಬಂದಿರುವುದು ಹೊರಗೆ ನಿಂತಿದ್ದ ಸ್ಕೂಟಿಯಿಂದ ಗೊತ್ತಾಯಿತು. +ಮನೆಯಲ್ಲಿ ಯಾರೇ ಇರಲಿ, ಅವಳು ಸ್ವಲ್ಪ ಕೊಂಕು ತೆಗೆದರೂ ಸರಿಯಾಗಿಯೇ ಉತ್ತರ ಕೊಡುತ್ತೇನೆ. +ನನ್ನ ಗಂಡನೇ ಸ್ವಲ್ಪ ಕೂಡ ಸಂಶಯ ಪಡುವುದಿಲ್ಲ. +ಕಾರಣವೇ ಇಲ್ಲದೆ ಸಂಶಯ ಬರುವಂತೆ ಮಾಡಿ ಸಂಸಾರಕ್ಕೆ ಹುಳಿ ಹಿಂಡುತ್ತಿದ್ದೀಯಾ ಅಂತ ಕೇಳಬೇಕು. +ಮತ್ತೂ ತನ್ನದೇ ಮೊಂಡು ಹಠ ಹಿಡಿದು ಮೊದಲಿನಂತೆ ಬೈದಾಡಿದರೆ ಕೊನೆಯ ಅಸ್ತ್ರವಾಗಿ "ಹೌದು ಕಣೆ, ನಾನು ತಿಮ್ಮಪ್ಪನವರ ಜತೆ ಹೋಗಿ ಇದ್ದು ಬಿಡ್ತೇನೆ, ಏನೇ ಮಾಡ್ತೀಯಾ" ಎಂದು ಸ್ಪಷ್ಟವಾಗಿ ಹೇಳಿಬಿಡಬೇಕು. . . +ಎಲ್ಲ ರಿಹರ್ಸಲ್‌ ಮಾಡಿಕೊಂಡು ಆಕ್ರಮಣಕ್ಕೆ ಸಜ್ಜಾಗಿ ತೆರೆದಿದ್ದ ಮುಂಬಾಗಿಲು ತಳ್ಳಿ ಒಳಬಂದಳು ಮೈತ್ರಿ. +ದೊಡ್ಡಕ್ಕನ ಬೀಗಿತ್ತಿಯ ಜತೆ ಮಾತಾಡುತ್ತ ಕುಳಿತಿದ್ದ ಚೈತ್ರ ಮೈತ್ರಿಯನ್ನು ನೋಡುತ್ತಲೇ ಸಡಗರದಿಂದ ಎದ್ದುಬಂದು "ಎಷ್ಟು ಚೆನ್ನಾಗಿ ಅಲಂಕಾರ ಮಾಡಿಕೊಂಡಿದ್ದೀಯೇ. . . +ಎಷ್ಟು ಚೆನ್ನಾಗಿ ಈ ಸೀರೆ ನಿನಗೆ ಒಪ್ಪತ್ತದೆ ಕಣೆ. +ಪ್ರಮೋದ್‌ಗೆ ಟೈನಿಂಗ್‌ ಮುಗಿಯುತ್ತಲೇ ಇಲ್ಲಿಗೇ ಬರಲು ಹೇಳಿದ್ದೀ ತಾನೇ?" ಎಂದು ತಜ್ಜಿಕೊಂಡಂತೆ ಬರಮಾಡಿಕೊಂಡಳು. +ನಿನ್ನೆಯ ಇಡೀ ದಿನವನ್ನು ಹಾಳು ಮಾಡಿದವಳು ಇವಳೇನೇ ಎಂದು ಮೃೃತ್ರಿ ವಿಸ್ಮಯಪಟ್ಟಳು. . . . +ಅಪಘಾತ: + ಶುಕ್ರವಾರದ ಸಂಜೆ. +ಸರ್ವಿಸ್‌ ಸ್ಟೇಷನ್‌ನಿಂದ ಮೆಕ್ಯಾನಿಕ್‌ ಮಂಜು ಕಾರನ್ನು ತಂದ ಶರತ್‌ನೊಂದಿಗೆ ಹೊರಟೆ. +ಕಾಫಿ ಕುಡಿದಾದ ಮೇಲೆ ಸರ್ವಿಸ್‌ ಆದ ಮೇಲೆ ಕಾರು ಹೇಗಿದೆ ಎಂದು ನೋಡಲು ಒಂದು ರೌಂಡ್‌ ಹೋಗಿ ಬರಲು ಮಗ +ಮುಂದೆ ಮಂಜು, ಶರತ್‌ ಕುಳಿತರು. +"ಚೆನ್ನಾಗಿ ಓಡಿಸುತ್ತಾನೆ. +ಆದರೆ ಕಾರು ಹೆಚ್ಚು ಬಾಳಿಕೆ ಬರುವಂತೆ ಕೆಲವೊಂದು ಟಿಪ್ಸ್‌ ಕೊಟ್ಟರೆ ಅವನ ಡ್ರೈವ್‌ ಇಂಪ್ಯೂ ಆಗಬಹುದು" ಎಂದು ಮಂಜುಗೆ ಹೇಳುತ್ತಾ ಹಿಂದೆ ಕುಳಿತೆ. +ಮನೆಯಿಂದ ಹೊರಟ ಕಾರು ರಸ್ತೆಯ ಗುಂಡಿಗಳನ್ನು ತಪ್ಪಿಸಿಕೊಳ್ಳುತ್ತಾ ಕನಕಪುರ ರಸ್ತೆಗೆ ಬಂತು. +'ಹೊಂಡ ಇದ್ದ ಕಡೆ, ಉಬ್ಬು ಇದ್ದ ಕಡೆ ಮೂರನೇ ಗೇರ್‌ಅನ್ನೇ ಬಳಸಿ ಆಕ್ಸಿಲರೇಟರ್‌ಒತ್ತುವುದರಿಂದ ಪೆಟ್ರೋಲ್‌ ಹೆಚ್ಚು ಖರ್ಚಾಗುತ್ತದೆ. +ಎಂಜಿನ್‌ ಮೇಲೆ ಹೆಚ್ಚಿನ ಒತ್ತಡವೂ ಬೀಳುತ್ತದೆ. +ಆದ್ದರಿಂದ ಉಬ್ಬು ಹತ್ತಿಸಲು ಮೊದಲ ಗೇರ್‌ಗೆ ಬರಬೇಕು. +ರಸ್ತೆ ಉಬ್ಬು ದಾಟುವಾಗ ನ್ಯೂಟ್ರಲ್‌ ಬಂದೇ ಮುಂದೆ ಸರಿಯಬೇಕು. . ' ಎಂದೆಲ್ಲ ಮಂಜು ಹೇಳುತ್ತಿದ್ದ. +ಅವನ ಸಲಹೆಯಂತೆ ಶರತ್‌ ಕಾರು ಓಡಿಸುತ್ತಿದ್ದ. +ಕನಕಪುರ ರಸ್ತೆಯಲ್ಲಿ ಸ್ವಲ್ಪ ದೂರ ಸಾಗಿ ರಿಂಗ್‌ ರಸ್ತೆಗೆ ತಿರುಗಿದೆವು. +ಜೋಡಿ ರಸ್ತೆಯಲ್ಲಿ ಕೊಂಚ ದೂರ ಸಾಗಿದ್ದಷ್ಟೆ, ಸಣ್ಣಗೆ ಮಳೆ ಹನಿಯತೊಡಗಿತು. +ಮಳೆಯಲ್ಲಿ ಎಷ್ಟು ಎಚ್ಚರಿಕೆ ವಹಿಸಬೇಕು ಎಂದು ಹೇಳುತ್ತಿರುವಾಗಲೇ ಮತ್ತೊಂದು ರಸ್ತೆ ಉಬ್ಬು ಎದುರಾಯಿತು. +ಶರತ್‌ ನ್ಯೂಟ್ರಲ್‌ಗೆ ತಂದು ಮೊದಲ ಗೇರ್‌ಗೆ ಬದಲಾಯಿಸಿದ. +ಕಾರು ರಸ್ತೆ ಉಬ್ಬನ್ನು ದಾಟಿದ್ದಪ್ಟೆ, ದಢ್‌ ಎಂಬ ಭಾರಿ ಸದ್ದಿನೊಂದಿಗೆ ಸಿಟಿ ಟ್ಯಾಕ್ಸಿಯೊಂದು ನಮ್ಮ ಕಾರಿನ ಹಿಂಬದಿಗೆ ಗುದ್ದಿತು. +ಶರತ್‌ ಗಾಬರಿಗೊಂಡನಾದರೂ ಹಿಡಿತ ಕಳೆದುಕೊಳ್ಳಲಿಲ್ಲ. +ಒಳಗಿದ್ದ ನಮಗೆ ಯಾವ ಏಟೂ ಬೀಳಲಿಲ್ಲ. +ಆದರೆ ಗಾಬರಿಯಾಯಿತು. +ಕಾರನ್ನು ನಿಲ್ಲಿಸಿ ಕೆಳಕ್ಕೆ ಇಳಿದೆವು. +ಇಂಥ ಸನ್ನಿವೇಶಗಳನ್ನು ಎದುರಿಸಿದ್ದ ಮಂಜು ತನಗೆ ಸುಲಭವಾಗಿ ಬರುವ ಬೈಗುಳ ಭಂಡಾರವನ್ನು ಸ್ನಲ್ಪ ಸ್ವಲ್ಪ ಖಾಲಿ ಮಾಡಿ ಸಿಟಿ ಟ್ಯಾಕ್ಟಿಯ ಚಾಲಕನ ಬಳಿ ಬಂದ. +"ನಿಧಾನ ಹೋಗ್ತಿದ್ದ ಕಾರಿಗೆ ಏಕಾಏಕಿ ಗುದ್ದಿದೆಯಲ್ಲ ನೀನು ಎಂಥ ಡೈವರ್‌? +ಒಳಗಡೆ ಪ್ಯಾಸೆಂಜರ್‌ ಬೇರೆ ಕೂರಿಸಿಕೊಂಡಿದ್ದೀಯಾ? +ಇಷ್ಟು ರ್ಯಾಷ್‌ ಆಗಿ ಗಾಡಿ ಓಡಿಸ್ತೀಯಲ್ಲ, ನೀನು ಮನುಷ್ಯನಾ?" ಎಂದು ಜೋರು ಮಾಡಿದ. +ಗಾಬರಿಯಾಗಿದ್ದರೂ ಅದನ್ನು ಮುಚ್ಚಿಕೊಳ್ಳಲು ಧೈರ್ಯವನ್ನು ಪ್ರದರ್ಶಿಸಿದ ಸಿಟಿ ಟ್ಯಾಕ್ಸಿಯ ಡ್ರೈವರ್‌ ಗುರೂ,ಆಕ್ಸಿಡೆಂಟ್‌ ಆಗೋದು ಸಾಮಾನ್ಯ. +ನಾನೇನು ಬೇಕೂಂತ ಹೊಡೆದಿಲ್ಲ. +ಬ್ರೇಕ್‌ ಹಾಕಿದರೂ ಗಾಡಿ ನಿಲ್ಲಲಿಲ್ಲ. +ಏನು ಮಾಡ್ದಿಕ್ಕೆ ಆಗ್ತದೆ. +ಆಕ್ಸಿಡೆಂಟ್‌ ಆಗೋದು ಕಾಮನ್" ಎಂದು ಸಹಜತೆಯನ್ನು ನಟಿಸಿದ. +ವಾಹನ ಸಂಚಾರಕ್ಕೆ ಅಡ್ಡಿಯಾಗಬಾರದೆಂದು ಶರತ್‌ ಕಾರನ್ನು ರಸ್ತೆ ಬದಿಗೆ ತಂದ. +ಮಂಜು ಟ್ಯಾಕ್ಸಿಯನ್ನೂ ನಮ್ಮ ಹಿಂದೆ ಬರುವಂತೆ ಮಾಡಿ ಅದರ ಕೀಲಿಗಳನ್ನು ತೆಗೆದುಕೊಂಡ. +ಸ್ವಲ್ಪ ಹೊತ್ತಿಗೆ ಮೊದಲು ಕಾರಿನ ಸರ್ವಿಸ್‌ಗಾಗಿ ಚೆಕ್‌ ನೀಡಿದ್ದೆ. +ಹೊಸದಾಗಿ ಮಿರಮಿರನೆ ಮಿಂಚುತ್ತಿದ್ದ ಬಿಳಿಯ ಮಾರುತಿ ಜೆನ್‌ ಕಾರಿನ ಹಿಂಭಾಗ ಜಜ್ಜಿದ ಅಲ್ಯುಮಿನಿಯಂ ತಟ್ಟೆಯಂತೆ ನುಜ್ಜುಗುಜ್ಜಾಗಿತ್ತು. +"ಮಾರುತಿಯ ಬಿಡಿ ಭಾಗಗಳು ದುಬಾರಿ,ಎಷ್ಟು ಸಾವಿರ ಆಗುತ್ತದೆಯೋ?"ಎಂಬ ಅಳುಕು ತಲೆದೋರಿತು. +ಶರತ್‌ ತನ್ನ ಲೈಸೆನ್ಸ್‌ ಇರುವುದನ್ನು ದೃಢಪಡಿಸಿಕೊಂಡ. +ಟ್ಯಾಕ್ಸಿಯ ಡೈವರ್‌ಗೆ ತನ್ನ ಮಾಲಿಕನನ್ನು ಸಂಪರ್ಕಿಸುವಂತೆ ಮಂಜು ತಾಕೀತು ಮಾಡುತ್ತಲೇ ನಮ್ಮ ಕಾರಿಗೆ ಆದ ಹಾನಿಯ ಅಂದಾಜು ಮಾಡತೊಡಗಿದ. +ಬೆಂಗಳೂರಿನಲ್ಲಿ ಸಾಮಾನ್ಯವಾಗಿರುವಂತೆ ಸುತ್ತ ಹತ್ತಾರು ಜನ ಸೇರಿದರು. +ಟ್ಯಾಕ್ಟಿ ಚಾಲಕನಿಗೆ ಒಂದಿಷ್ಟು ಉಪದೇಶ. +ನಮಗೆ "ಅದೃಷ್ಟ ಚೆನ್ನಾಗಿತ್ತು. +ಟ್ಯಾಕ್ಟಿಯಲ್ಲದೆ ಲಾರಿ ಗುದ್ದಿದ್ದರೆ ಇಷ್ಟು ಹೊತ್ತಿಗೆ ಒಳಗಿದ್ದ ಮೂವರೂ ಪರಲೋಕ ಪ್ರಯಾಣ ಮಾಡಿಬಿಡುತ್ತಿದ್ದಿರ" ಎಂದು ಅನುಕಂಪ ತೋರಿಸುತ್ತಿದ್ದರು. +ಜನಸೇರಿದ್ದರಿಂದರೋ ಏನೋ, ಅಪಘಾತ ಮಾಡಿದ್ದ ಟ್ಯಾಕ್ಸಿ ಚಾಲಕ ಯಾವ ಪ್ರಜೋದನೆಗೂ ಪ್ರತಿಕ್ರಿಯಿಸದೆ ಜನರಿಂದ ಬೈಸಿಕೊಳ್ಳುತ್ತಲೇ ಮೊಬೈಲ್‌ನಿಂದ ತನ್ನ ಮಾಲೀಕರನ್ನು ಸಂಪರ್ಕಿಸಿ ಮಂಜುವನ್ನು ಕರೆದು "ಬಾಸ್‌, ಓನರ್‌ ಹತ್ರ ಮಾತಾಡಿ" ಎಂದು ಮೊಬೈಲ್‌ ಕೊಟ್ಟ. +"ನೋಡಿ, ನೀವು ಸ್ಟಾಟಿಗೆ ಬಂದು ನೋಡದೇ ಇದ್ದರೆ ಇಲ್ಲಿ ಎಷ್ಟು ಡ್ಯಾಮೇಜ್‌ ಆಗಿದೆ ಅಂತ ಗೊತ್ತಾಗಲ್ಲ. +ದಯವಿಟ್ಟು ನೀವು ಇಲ್ಲಿಗೆ ಬನ್ನಿ. +ಆಮೇಲೆ ಮಾತಾಡೋಣ. +ಇಲ್ಲಿ ನಮ್ಮ ಕಾರಿಗೆ ಸುಮಾರು 12 ಸಾವಿರ ರೂಪಾಯಿಯಷ್ಟು ಡ್ಯಾಮೇಜ್‌ ಆಗಿದೆ. +ಅದನ್ನು ನಾನು ಫೋನ್‌ನಲ್ಲಿ ಎಷ್ಟು ಹೇಳಿದರೂ ನಿಮಗೆ ಗೊತ್ತಾಗುವುದಿಲ್ಲ. +ನೀವು ಸ್ಟಾಟಿಗೆ ಬಂದ ಮೇಲೇನೇ ನಿಮ್ಮ ಗಾಡಿಯನ್ನು ಬಿಡ್ತೇನೆ ಎಂದು ಖಂಡಿತವಾಗಿ ಹೇಳಿ ಮಂಜು ಮೊಬೈಲ್‌ಅನ್ನು ಡೈವರ್‌ ಕೈಗೆ ಕೊಟ್ಟ"ಅಲ್ಲ ಮಂಜು, ಸಿಟಿ ಟ್ಯಾಕ್ಸಿಯವರು ಅಂದರೆ ಒರಟರಲ್ವ. +ಅವರ ಹತ್ರ ಗುದ್ದಾಡಿ ಕಾರಿನ ರಿಪೇರಿಮಾಡಿಸಿಕೊಳ್ಳುವುದು ಸಾಧ್ಯನಾ?" ಎಂದು ಆತಂಕದಿಂದ ಪಿಸುದನಿಯಲ್ಲಿ ಪ್ರಶ್ನಿಸಿದೆ. +ನಮಗೆ ಯಾರಿಗೂ ಏಟಾಗಿರಲಿಲ್ಲ. +ಅಪಾಯದಿಂದ ಪಾರಾದ ಸಮಾಧಾನವಿತ್ತಾದರೂ ರಿಪೇರಿಗೆ ಹಣ ತೆರಬೇಕಲ್ಲ ಎಂಬ ಸಂಕಟವೂ ಶುರುವಾಗಿತ್ತು. +ಅದಕ್ಕೆ ಮಂಜು "ಹಾಗಂತ ಬಿಟ್ಟು ಬಿಡೋದಕ್ಕೆ ಆಗ್ತದೆಯಾ? +ಇಷ್ಟು ರಿಪೇರಿ ಖರ್ಚು ಕೊಟ್ಟು ಹೋಗಲಿ. +ನಾನೇ ವಾರದಲ್ಲಿ ರಿಪೇರಿ ಮಾಡಿ ಕೊಡ್ತೇನೆ" ಎಂದು ಸಮಾಧಾನಪಡಿಸಿದ. +ಯಾವುದಕ್ಕೂ ಇರಲಿ ಎಂದು ಪರಿಚಯವಿದ್ದ ಇನ್ಸ್‌ಪೆಕ್ಟರ್‌ ಒಬ್ಬರಿಗೆ ಮೊಬೈಲ್‌ನಿಂದ ಸಂಪರ್ಕಿಸಿದೆ. +ಅವರು ನಾವಿದ್ದ ಪ್ರದೇಶದ ವ್ಯಾಪ್ತಿಗೆ ಬರುತ್ತಿರಲಿಲ್ಲವಾದರೂ ಏನಾದರೂ ಸಹಾಯ ಆಗಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. +ಏನು ಎತ್ತ ವಿಚಾರಿಸಿಕೊಂಡ ಅವರು ಎಷ್ಟು ಡ್ಯಾಮೇಜ್‌ ಆಗಿದೆ ಎಂಬ ಮಾಹಿತಿ ಕೇಳಿದರು. +"ಹನ್ನೆರಡು ಸಾವಿರದಷ್ಟು ಆಗಬಹುದು" ಎಂದುದಕ್ಕೆ "ಆ ನನ್ನಮಕ್ಕಳು ಅಷ್ಟೊಂದು ದಂಡಕೊಡೋದಿಲ್ಲ. +ಹೆಚ್ಚೆಂದರೆ ಎರಡು ಸಾವಿರ ಕೊಡಬಹುದು. +ಉಳಿದದ್ದಕ್ಕೆ ಇನ್ಶೂರೆನ್ಸ್‌ನಿಂದ ಪಡೆಯಬಹುದು. . . +ಹೇಗೋ ಸೆಟ್ಸ್‌ ಮಾಡಿಕೊಂಡು ಬಿಡಿ" ಎಂದು ಹೇಳಿ ಮೊಬೈಲ್‌ ಸಂಪರ್ಕ ಕಡಿದುಕೊಂಡರು. +ಎರಡೂ ವಾಹನಗಳು ರಸ್ತೆ ಬದಿ ಒಂದರ ಹಿಂದೆ ಒಂದರಂತೆ ನಿಂತಿದ್ದವು. +ನಾವು ಮೂವರು, ಟ್ಯಾಕ್ಸಿಚಾಲಕನೊಟ್ಟಿಗೆ ಅವನ ಮಾಲೀಕನ ನಿರೀಕ್ಷೆಯಲ್ಲಿ ಕಾಯತೊಡಗಿದೆವು. +ಅಪಘಾತವಾದ ತಕ್ಷಣ ಬಂದು ಸುತ್ತುವರಿದಿದ್ದ ಜನ ಏನೂ ವಿಶೇಷ ಘಟಿಸದೆ ಇದ್ದ ಕಾರಣ ಬೇಜಾರಾಗಿ ಒಬ್ಬೊಬ್ಬರೇ ಕರಗಿದರು. +ಒಂದಿಬ್ಬರು ಮಾತ್ರ ನಮ್ಮ ಕಾರಿಗೆ ಆದ ಡ್ಯಾಮೇಜು, ಟ್ಯಾಕ್ಸಿಗೆ ಆದ ಹಾನಿ, ಅದೇ ದಿನ ಪಕ್ಕದ ರಸ್ತೆಯಲ್ಲಿ ಆಗಿದ್ದ ಇಂಥದ್ದೇ ಇನ್ನೊಂದು ಅಪಘಾತ ಇತ್ಯಾದಿ ಮಾತನಾಡುತ್ತಾ ಉಳಿದುಕೊಂಡರು. +ಸಂಜೆ ಕಳೆದು ರಾತ್ರಿ ಮುಂದುವರಿಯುತ್ತಿತ್ತು. +ಮಧ್ಯದಲ್ಲಿ ಟ್ಯಾಕ್ಸಿ ಮಾಲೀಕನ ಮೊಬೈಲ್‌ ಬಂದು “ಈಗಷ್ಟೆಹೊರಟಿದ್ದೇನೆ” ಎಂಬ ಸಂದೇಶ ಚಾಲಕನಿಗೆ ಬಂತು. +ಅದನ್ನು ಅವನು ನಮಗೆ ಹೇಳಿದ. +"ದೊಡ್ಡ ಟ್ಯಾಕ್ಸಿ ಮಾಲೀಕ. +ಐವತ್ತು ಸಿಟಿ ಟ್ಯಾಕ್ಸಿ ಮಡಗಿದ್ದಾನೆ. +ಎಷ್ಟೋ ಎಂಎನ್‌ಸಿಗಳಿಗೆ ಅವನದೇ ಸರ್ವೀಸು. +ದೊಡ್ಡದೊಡ್ಡ ಪೊಲೀಸ್‌ ಅಧಿಕಾರಿಗಳಿಗೆಲ್ಲ ಆಗಾಗ ಪಾರ್ಟಿ ಕೊಡಿಸುತ್ತಾನೆ."ಎಂಬ ಮಾಹಿತಿಯನ್ನು ನಮಗೆಕೇಳಿಸುವಂತೆ ಚಾಲಕ ತನ್ನ ಬಳಿ ನಿಂತಿದ್ದವರೊಂದಿಗೆ ಹೇಳುತ್ತಿದ್ದ. +ನಮ್ಮ ಆತಂಕ ಹೆಚ್ಜಾಯಿತು. +"ದರಿದ್ರದವನು, ಬೇಗ ಬಂದು ಇತ್ಯರ್ಥ ಮಾಡಿ ಹೋಗಬಾರದೇ?" ಎನಿಸುತ್ತಿತ್ತು ಸಮಯ ಸರಿದಂತೆ ನಮ್ಮದುಗುಡ ಹೆಚ್ಚಾಗತೊಡಗಿತು. +ಕಾರನ್ನು ರೌಂಡ್‌ಗೆ ಒಯ್ದವರು ಇಷ್ಟು ಹೊತ್ತು ಏನು ಮಾಡುತ್ತಾರೆ ಎಂದು ಮನೆಯಿಂದ ಮೊಬೈಲ್‌ಗೆ ಕರೆ ಬರತೊಡಗಿತು. +ಮನೆಗೆ ಸಮಜಾಯಿಶಿ ಕೊಟ್ಟು ಮಾಲೀಕನ ನಿರೀಕ್ಷೆ ಮುಂದುವರಿಸುತ್ತಲೇ ಧೈರ್ಯಕ್ಕಾಗಿ ಅದೇ ಇನ್ಸ್‌ಪೆಕ್ಟರ್‌ಗೆ ಮತ್ತೆ ಕರೆ ಮಾಡಿ “ಇನ್ನೂ ಅವನು ಬಂದಿಲ್ಲ. +ನಾವು ಎಷ್ಟು ಹೊತ್ತು ಕಾಯುವುದು?"ಎಂದು ಅವರ ಸಲಹೆ ಕೇಳಿದೆ. +'ಇಲ್ಲ ಇಲ್ಲ ಅವನು ಬಂದೇ ಬರುತ್ತಾನೆ. +ಇಲ್ಲದಿದ್ದರೆ ಅವನಿಗೆ ತೊಂದರೆ ಆಗುತ್ತೆ. +ಅವನ ಗಾಡಿ ನಂಬರ್‌ ಬರ್ಕೊಂಡಿರಿ' ಎಂದರು. +ಸುಮಾರು ಎರಡು ಗಂಟೆ ಕಳೆದ ನಂತರ ಮಾಲೀಕನಿದ್ದ ಟ್ಯಾಕ್ಸಿ ಬಂತು. +ನಾಲ್ಕು ಮಂದಿ ಇಳಿದು ನಮ್ಮತ್ತ ಬಂದರು. +ನಮ್ಮ ಕಾರಿನ ಹಿಂಬದಿ ನೋಡಿದರು. +"ಸೂಳೆಮಗ ತಪ್ಪು ಮಾಡಿದಾನೆ. +ಇಡೀ ಡ್ಯಾಮೇಜನ್ನು 24ಗಂಟೆಯಲ್ಲಿ ರಿಪೇರಿ ಮಾಡಿಸಿ ಕೊಡುತ್ತೇನೆ. +ನನ್ನ ಗಾಡಿಗೂ ತುಂಬ ಏಟಾಗಿದೆ. +ಅದಕ್ಕೂ ಇನ್ಶೂರೆನ್ಸ್‌ ಕ್ಲೈಮ್‌ಮಾಡಬೇಕು. +ನನ್ನ ಗಾಡಿ ಇನ್ಯೂರೆನ್ಸ್‌ನಲ್ಲಿ ನಿಮ್ಮದನ್ನೂ ಮಾಡಿಸ್ನೇನೆ, ಆಯ್ತಲ್ಲ" ಎಂದು ನಿರ್ಣಯ ತೆಗೆದುಕೊಂಡವನಂತೆ ಹೇಳಿದ, ಮಾಲೀಕನಂತಿದ್ದ ವ್ಯಕ್ತಿ. +"ಆಗಲಿ, ಆದರೆ ನಾವು ಎಲ್ಲೆಲ್ಲೋ ರಿಪೇರಿಗೆ ಗಾಡಿ ಬಿಡಲ್ಲ. +ಕಂಪನಿ ಗ್ಯಾರೇಜ್‌ನಲ್ಲಿ ರಿಪೇರಿ ಮಾಡಿಸಿ ಕೊಡಿ"ಎಂದು ಮಂಜು ಖಡಾಖಂಡಿತವಾಗಿ ಹೇಳಿದ. +ಜತೆಯಲ್ಲಿ ಬಂದವರು ನಮ್ಮನ್ನು ಸುತ್ತುವರಿದೇ ಅವರ ಡ್ರೈವರನಿಗೆ ಚೆನ್ನಾಗಿ ಉಗಿಯುತ್ತಿದ್ದರು. +"ಕಂಪನಿ ಗ್ಯಾರೇಜಿನಲ್ಲಿ ಬಿಟ್ಟರೆ ನಮಗೆ ಎರಡೂ ಗಾಡಿ ಇನ್ಮೂರೆನ್ಸ್‌ ತಗೊಳ್ಳಕಾಗಲ್ಲ. +ಆರ್‌ಟಿ ನಗರದಲ್ಲಿ ನಮ್ಮ ಎಲ್ಲ ಗಾಡಿಗಳನ್ನೂ ಮಾಡ್ಲೋ ಗ್ಯಾರೇಜ್‌ ಇದೆ. +ಅಲ್ಲಿಯೇ ಮಾಡಿಸ್ತೇನೆ ಇಲ್ಲ ಅಂದರೆ.” ಎಂದು ಅರ್ಧಕ್ಕೆ ನಿಲ್ಲಿಸಿ ಪ್ರತಿಕ್ರಿಯೆಗೆ ಕಾದ ಇನ್ನೊಬ್ಬ. +ಅವನು ಮಾಲೀಕನ ಕಚೇರಿ ಮ್ಯಾನೇಜರನಂತೆ. +ಅವನ ಮಾತಿನ ಧಾಟಿಗೆ ಒಮ್ಮೆಗೇ ಸಿಡಿದ ಮಂಜು "ಏನಯ್ಯಾ ಇಲ್ಲ ಅಂದರೆ, ಏನು ಮಾಡ್ತೀಯಾ. +ಸುಮ್ಮನೆ ನಿಧಾನ ಹೋಗ್ತಿದ್ದ ಗಾಡಿಗೆ ಗುದ್ದಿ ಈಗ ಧಮಕಿ ಹಾಕ್ತಿದ್ದೀಯಾ?" ಎಂದು ಜೋರು ಮಾಡಿದ. +"ನೀನು ಏನಯ್ಯಾ ಮಾಡ್ತೀಯಾ, ಇಲ್ಲ ಅಂದರೆ ಪೊಲೀಸಿಗೆ ಕಂಪ್ಲೇಂಟ್‌ ಕೊಡು, ನಮಗೂ ಜನ ಗೊತ್ತು" ಎಂದು ಅವನೂ ಏಕವಚನಕ್ಕೆ ಇಳಿದ. +ಜತೆಗೆ ಬಂದಿದ್ದ ಇನ್ನಿಬ್ಬರು ಏಕವಚನ ಪ್ರಯೋಗ ಆರಂಭಿಸಿದ್ದಕ್ಕೆ "ನೆಟ್ಟಗೆ ಮಾತಾಡಾದು ಕಲ್ತುಕೊಳ್ಳಯ್ಯ" ಎಂದು ನಿಜಕ್ಕೂ ಬೆದರಿಕೆ ಒಡ್ಡುವಂತೆ ಜೋರು ಮಾಡಿದರು. +ಬೆಂಗಳೂರಿನ ಬೀದಿ ಜಗಳಗಳ ಅರಿವು ನನಗಿತ್ತು. +ಶರತ್‌ಗೆ ಇರಲಿಲ್ಲ. +ನಾಲ್ಕು ವರ್ಷ ಅಮೆರಿಕದಲ್ಲಿದ್ದು ಒಳ್ಳೆಯ ಕೆಲಸಪಡೆದಿದ್ದರೂ ಅದನ್ನು ಬಿಟ್ಟು ಈ ದೇಶವೇ ಚಂದ ಎಂದು ಬೆಂಗಳೂರಿನಲ್ಲಿ ಕೆಲಸ ಹಿಡಿದು ವಾಪಸಾದವನು. +ಬೆಂಗಳೂರಿನ ಬೀದಿ ಜಗಳ ನೋಡಿದ್ದನಾದರೂ ಹೀಗೆ ತಪ್ಪು ಮಾಡಿದವರೇ ಜೋರು ಮಾಡುತ್ತಿರುವುದು ಅವನನ್ನು ಕೆರಳಿಸಿರಬೇಕು. +"ಏನ್ರೀ ಹಾಗೆ ಜೋರು ಮಾಡ್ತೀರಿ" ಎಂದು ಉದ್ದಿಗ್ನನಾಗಿ ಕೇಳಿದ. +ಅವನನ್ನು ತಕ್ಷಣವೇ ಸುಮ್ಮನಿರಿಸಿ, ಟ್ಯಾಕ್ಸಿ ಮಾಲೀಕನತ್ತ ತಿರುಗಿದೆ. +"ನೋಡಿ ನಮಗೆ ನಿಮ್ಮ ಗ್ಯಾರೇಜಿನಲ್ಲಿ ಗಾಡಿ ಬಿಟ್ಟು ನಿಮ್ಮ ಹಿಂದೆ ಅಲೆಯಲು ಸಾಧ್ಯವಿಲ್ಲ. +ನಾವು ಕಂಪನಿ ಗ್ಯಾರೇಜಿನಲ್ಲಿಯೇ ಬಿಡುವುದು. +ಅಲ್ಲಿ ರಿಪೇರಿ ಮಾಡಿಸಿಕೊಡಿ. +ಇಲ್ಲದೆ ಇದ್ರೆ ನಾವು ಪೊಲೀಸಿಗೆ ಕಂಫ್ಲೆಂಟ್‌ ಕೊಡ್ತೇವೆ" ಎಂದೆ. +"ಹಾಗಾದರೆ ಹಾಗೆ ಮಾಡಿ. +ಕಂಪ್ಲೇಂಟ್‌ ಮಾಡಿಯೇ ರಿಪೇರಿ ಮಾಡಿಸಿಕೊಳ್ಳಿ" ಎಂದು ಅವನು ತಣ್ಣಗೆ ಹೇಳಿದ. +ಇದು ಯಾಕೋ ವಿಪರೀತಕ್ಕೆ ಹೋಗ್ತಿದೆ. +ಡಿಕ್ಕಿ ಹೊಡೆದವನೇ ಇಷ್ಟು ಜೋರಾಗಿ ಮಾತಾಡ್ತಾನೆ ಅಂದರೆ ಪೊಲೀಸು, ಕಾನೂನು ಅಂತ ಇಲ್ವಾ ಎಂದು ಚಿಂತೆಯಾಯಿತು. +ಮತ್ತೆ ಪರಿಚಿತ ಇನ್ಸ್‌ಪೆಕ್ಟರ್‌ಗೆ ಇನ್ನೊಮ್ಮೆ ಮೊಬೈಲ್‌ನಲ್ಲಿ ಸಂಪರ್ಕಿಸಿದೆ. +ಯಾವ ಅವಸ್ಥೆಯಲ್ಲಿದ್ದರೋ ಮೊಬೈಲ್‌ ಎತ್ತಿಕೊಂಡರು. +ಸಾಧ್ಯವಾದಷ್ಟೂ ವಿನೀತನಾಗಿ ಇಲ್ಲಿನ ಪರಿಸ್ಥಿತಿ ವಿವರಿಸಿ "ನನಗೆ ಪೊಲೀಸ್‌ ಕಂಪ್ಲೆಂಟ್‌ ಕೊಡೋದೆ ಸೂಕ್ತ ಅನ್ನಿಸ್ತಿದೆ. +ಯಾರಿಗಾದರೂ ಹೇಳ್ತೀರಾ?"ಎಂದೆ. +"ಇಷ್ಟು ಹೊತ್ತಿನಲ್ಲಿ ಅದೇನೂ ಪ್ರಯೋಜನ ಆಗಲಾರದು. +ಅವನು ಎಷ್ಟು ಕೊಟ್ಟರೂ ತೆಗೆದುಕೊಳ್ಳಿ. +ಇನ್ನೂರೆನ್ಸ್‌ ಹಣ ಪಡೆದು ರಿಪೇರಿ ಮಾಡಿಸಿಕೊಳ್ಳಬಹುದು" ಎಂದೇ ಹೇಳಿದರು. +ನಾನು ಮೊಬೈಲ್‌ನಲ್ಲಿ ಮಾತನಾಡುವಾಗ ಎಲ್ಲರಿಗೂ ಕೇಳಲೆಂದೇ 'ಡಿಸಿಪಿ ಸಾಹೇಬರೇ' ಎಂದು ಮಾತಾಡಿದ್ದೆ. +ಮಾತು ಮುಗಿಸಿ ಅವರತ್ತ ಮತ್ತೆ ಸಂಧಾನಕ್ಕೆ ತಿರುಗುವಷ್ಟರಲ್ಲಿ ಸ್ಕೂಟರ್‌ನಲ್ಲಿ ಇಬ್ಬರು ಪೊಲೀಸರು ನಮ್ಮ ಹತ್ತಿರವೇ ಬಂದು ನಿಂತರು. +ಅವರಿಗೆ ಶರತ್‌ ಸೌಮ್ಯವಾಗಿ ನಡೆದದ್ದನ್ನು ಹೇಳಿ ನಮ್ಮ ಕಾರಿಗೆ ಆದ ಹಾನಿಯನ್ನು ತೋರಿಸಿದ. +ಸೇತುಕುಳಿ ಗೋವಿಂದ ಮತ್ತು ಮಾದೇಶನಂತೆ ಕಂಡ ಅವರು ನಮ್ಮ ಕಾರಿನ ಸುತ್ತು ಬಂದು 'ಎಲ್ಲಿ ಡಿಕ್ಕಿಯಾಗಿದ್ದು' ಎಂದು ವಿಚಾರಣೆ ಆರಂಭಿಸಿದರು. +ಅದೇ ಕತೆ ಪುನರಾವರ್ತನೆ ಮಾಡಿದ್ದಾಯಿತು. +ಸೇತುಕುಳಿಯಂತಿದ್ದ ಪೇದೆ "ನೀವು ಸ್ಟಾಟಲ್ಲಿ ಗಾಡಿ ನಿಲ್ಲಿಸಿಲ್ಲವಲ್ಲ. +ಇಷ್ಟು ದೂರ ತಂದುಬಿಟ್ಟಿದ್ದೀರಿ" ಎಂದು ಆಕ್ಷೇಪಿಸಿದ. +"ಲೈಸೆನ್ಸ್‌ ಇದೆಯಾ" ಎಂದು ಶರತ್‌ ಬಳಿ ನಿಂತ. +ಶರತ್‌ ಲೈಸೆನ್ಸ್‌ಪುಸ್ತಕವನ್ನು ತೆಗೆದು ತೋರಿಸಿದರೆ "ಇದರಲ್ಲಿ ಮೋಟಾರ್‌ ಸೈಕಲ್‌ ಅಂತ ಇದೆಯಲ್ಲ, ಕಾರು ಓಡಿಸ್ತಾ ಇದೀರಾ?"ಎಂದು ಪ್ರಶ್ನಿಸಲು ಆರಂಭಿಸಿದ. +"ಅದು ಇನ್ನೊಂದು ಪೇಜಿನಲ್ಲಿರುತ್ತೆ ನೋಡಿ" ಎಂದು ನಾನು ವಿವರಣೆ ನೀಡಿದೆ. +ಅದನ್ನು ತಿರುಗಿಸಿ ನೋಡಿದವನು 'ಎರಡು ಪುಟದಲ್ಲಿ ಬೇರೆ ಬೇರೆ ಬರೆಯುತ್ತಾರೋ'ಎಂದು ಆಕ್ಷೇಪಿಸಿದ. +ಡಿಕ್ಕಿ ಹೊಡೆದ ಡ್ರೈವರ್‌ ಎದುರಿಗೆ ಇದ್ದರೂ ಡಿಕ್ಕಿ ಹೊಡೆಸಿಕೊಂಡ ನಮ್ಮನ್ನೇ ವಿಚಾರಣೆ ಮಾಡುತ್ತಿದ್ದ ಪೊಲೀಸರನ್ನು ನೋಡಿ ನಮಗೆ ಗಾಬರಿ. +ಟ್ಯಾಕ್ಸಿಯ ಮಾಲೀಕ ಹಾಗೂ ಆತನ ಸಹಚರರ ಜತೆಗೂ ಮಾತನಾಡಿದ ಸೇತುಕುಳಿ ಮತ್ತು ಮಾದೇಶ 'ನೀವು ನೀವೆ ಇತ್ಯರ್ಥ ಮಾಡಿಕೊಳ್ಳಬಹುದು, ಇಲ್ಲದೆ ಇದ್ರೆ ಜಯನಗರ ಟ್ರಾಫಿಕ್‌ ಟೇಸನ್ನಿಗೆ ಎರಡೂ ಗಾಡಿ ತಂದು ಕಂಪ್ಲೇಂಟ್‌ ಕೊಡಿ' ಎಂದು ಹೇಳಿ ಸ್ಕೂಟರ್‌ ಹತ್ತಿಹೊರಟರು. +'ಸರಿ ಬಿಡಿ, ಹಾಗೇ ಮಾಡೋಣ' ಎಂದು ಕಾರು ಹತ್ತಿದೆವು. +ಟ್ಯಾಕ್ಸಿ ಮಾಲೀಕನ ಕಡೆಯ ಮತ್ತೊಬ್ಬ ಹತ್ತಿರಬಂದು 'ಏನೋ ಒಂದು ಅಡ್ಜೆಸ್ಟ್‌ ಮಾಡಿಕೊಂಡು ಬಿಡಿ ಸಾರ್‌. +ಸುಮ್ಮನೆ ಪೊಲೀಸು, ಕೋರ್ಟು ಕಚೇರಿ ಅಂತ ಅಲೆಯುವುದು ಯಾಕೆ?' ಎಂದು ಪಿಸುಗುಟ್ಟದ. +"ದಾರಿಗೆ ಬರ್ತಾ ಇದ್ದಾರೆ ಮಕ್ಕಳು" ಎಂದು ಮೆಲ್ಲಗೆ ಹೇಳಿದ ಮಂಜು "ಇಲ್ಲಿ ಬಾರಯ್ಯ, ಎಷ್ಟು ಕೊಡ್ತಾನೋ ಕೇಳು. +ಹನ್ನೆರಡು ಸಾವಿರ ಆಗುತ್ತೆ ಖರ್ಚು. +ಹೇಗೂ ನಾವು ಕೈಯಿಂದ ಸ್ವಲ್ಪ ಹಾಕ್ತೇವೆ. +ಎಂಟು ಸಾವಿರ ಕೊಡಿ"ಅಂದ. +'ಏನು?ಎಂಟು ಸಾವಿರವಾ? +ಅದರಲ್ಲಿ ಕಾಲು ಭಾಗ ಪೊಲೀಸರಿಗೆ ಕೊಟ್ರೆ ನಾವು ಹೇಳಿದ ಹಾಗೆ ಕಂಪ್ಲೆಂಟ್‌ ಬರ್ಕೊಳ್ತಾರೆ. +ನಿಮಗೆ ಯಾಕೆ ಕೊಡಬೇಕು?' ಎಂದು ಮಾಲೀಕ ಕ್ಯಾತೆ ತೆಗೆದ. +"ಆಗ್ಲಿ ಬಿಡಿ. +ನಿಮ್ಮ ಗಾಡಿ ಡಿಕ್ಕಿ ಹೊಡೀತು ಅಂತ ಹಿಟ್‌ಅಂಡ್‌ ರನ್‌ ಕೇಸು ಕೊಟ್ಟು ಹೋಗ್ತೀವಿ' ಎಂದು ನಾವು ಕಾರಿನಲ್ಲಿ ಕುಳಿತೆವು. +ಕಾರಿನ ಎಂಜಿನ್‌ಆರಂಭಿಸುತ್ತಿದ್ದಂತೆ ಇನ್ನೊಬ್ಬ "ಸ್ವಲ್ಪ ನಿಲ್ಲಿ ಸಾರ್‌. +ಯೋಜನೆ ಮಾಡಿ" ಎಂದು ಹತ್ತಿರಕ್ಕೆ ಬಂದ. +ಮತ್ತೆ ಕಾರಿನಿಂದ ಇಳಿದೆವು. +ಆ ಇನ್ನೊಬ್ಬ "ನೋಡಿ ಸಾರ್‌. +ಅವನು ಒಂದು ಸಾವಿರ ಕೊಡೋಕೆ ಬಂದಿದಾನೆ. +ಹೇಗೂ ನಿಮ್ಗು ಇನ್ಯೂರೆನ್ಸ್‌ ಇದೆಯಲ್ಲ. +ಅದರಲ್ಲಿ ರಿಪೇರಿ ಮಾಡಿಸ್ಕೊಳ್ಳಿ. . +ಸುಮ್ನೆ ಪೊಲೀಸುಕೋರ್ಟು ಅಂತ ಯಾಕೆ?' ಎಂದು ಕೈ ಹೊಸೆಯತೊಡಗಿದ. +“ಏನು ಒಂದು ಸಾವಿರವಾ? +ಏನಂತ ಮಾಡಿದ್ದೀಯಯ್ಯ ಹನ್ನೆರಡು ಸಾವಿರದಷ್ಟು ಡ್ಯಾಮೇಜ್‌ ಮಾಡಿ ಒಂದು ಸಾವಿರ ಅಂತೀಯಲ್ಲ. . ” ಎಂದು ಮಂಜು ಮತ್ತೆ ಜೋರು ಮಾಡಿದ. +"ಇನ್ನು ಇವ್ರ ಹತ್ರ ಮಾತಾಡಿ ಪ್ರಯೋಜನ ಇಲ್ಲ. +ನಾವು ಕಂಘ್ಲೆಂಟ್‌ಕೊಡೋಣ" ಎಂದು ಹೇಳಿ ಕಾರನ್ನು ಅವನೇ ಸ್ಟಾರ್ಟ್‌ ಮಾಡಿದ. +ಅವನನ್ನು ತಡೆದು “ನೋಡಪ್ಪ, ಈ ತರ ವ್ಯವಹಾರ ಮಾಡ್ಬೇಡ. +ಆಗಿರೋ ಡ್ಯಾಮೇಜ್‌ ನೋಡು. +ಏನು ಪರಿಹಾರ ಕೊಡಬೇಕು ಅನ್ನೋದನ್ನು ನಿರ್ಧಾರ ಮಾಡು" ಎಂದು ಸಮಾಧಾನದಿಂದ ಹೇಳಿದೆ. +ಆದಷ್ಟು ಬೇಗ ಈ ರಗಳೆ ಮುಗಿಯಲಿ ಅನ್ನಿಸಿತ್ತು. +ಟ್ಯಾಕ್ಸಿಯನ್ನು ಸುತ್ತುವರಿದಿದ್ದ ಅವರೆಲ್ಲ ತಮ್ಮತಮ್ಮಲ್ಲಿಯೇ ಗುಸುಗುಸು ಮಾತಾಡಿಕೊಳ್ಳುತ್ತಿದ್ದರು. +ರಾತ್ರಿ ಮೀರುತ್ತಿತ್ತು. +ಸೊಳ್ಳೆಗಳು ಬೇರೆ ಕಾಲು ಕಡಿಯುತ್ತಿದ್ದವು. +ಈ ನಡುವೆ ಮನೆಯಿಂದ ಗಾಬರಿಯಲ್ಲಿ ಮೊಬೈಲ್‌ಕರೆಗಳು. +ಸ್ವಲ್ಪ ದೂರದಲ್ಲಿಯೇ ಸೇತುಕುಳಿ ಮತ್ತು ಮಾದೇಶ ನಮ್ಮತ್ತಲೇ ನೋಡುತ್ತಿರುವಂತೆ ತೋರುತ್ತಿತ್ತು. +ಎಲ್ಲ ರಗಳೆ ಬೇಗ ಮುಗಿಯಲೆಂದು ಮಂಜು ಕಡೆ ತಿರುಗಿ "ಅದು ಎಷ್ಟು ಕೊಡ್ತಾನೋ. +ಫೈನಲ್‌ ಆಗಿ ಸೆಟ್ಸ್‌ ಮಾಡಿಕೊಳ್ಳೋಣ ಮಂಜು' ಎಂದೆ. +ಅವನು ಇಳಿದು ಹೋಗಿ "ಫೈನಲ್‌ ಆಗಿ ಎಷ್ಟು ಕೊಡ್ತೀರಿ?"ಎಂದುಮೊದಲಿನ ಗತ್ತಿನಲ್ಲಿ ಕೇಳಿದ. +ಅದಕ್ಕೆ ಮಾಲೀಕ ಯಾವ ಪ್ರತಿಕ್ರಿಯೆಯನ್ನೂ ತೋರಿಸಲಿಲ್ಲ. +ಜತೆ ಇದ್ದವರು"ಒಂದ್ದಿಮಿಷ ಇರು ಗುರು' ಎಂದು ವಿಚಿತ್ರ ಸಲುಗೆ ಪ್ರಕಟಿಸಿದರು. +ಮಾಲೀಕನನ್ನು ಸುತ್ತುವರಿದು ಮತ್ತೇನೋ ಗುಸುಗುಸು ನಡೆಸತೊಡಗಿದರು. +ಬೆಂಗಳೂರಿನ ಬೀದಿ ಜಗಳಗಳ ಪರಿಚಯವಿದ್ದ ನಾನು ಅವರ ಬಳಿ ಹತ್ತಿರಹೋಗದಂತೆ ಮಂಜುವನ್ನು ತಡೆದೆ. +ಅಷ್ಟರಲ್ಲಿ ಎಲ್ಲಿಯೋ ಸುತ್ತು ಹಾಕಿ ವಾಪಸು ಬಂದ ಸೇತುಕುಳಿ, ಮಾದೇಶ ಇಬ್ಬರೂ ನಮ್ಮ ಬಳಿ ಇಳಿದರು. +ಸೇತುಕುಳಿ "ಯಾಕೆ ಇನ್ನೂ ಇಲ್ಲೇ ನಿಲ್ಲಿದೀರಿ. +ಗಾಡಿಗಳನ್ನ ಆಕ್ಸಿಡೆಂಟ್‌ ಸ್ಟಾಟಲ್ಲೂ ನಿಲ್ಲಿಸಿಲ್ಲ. +ನಡೀರಿ ಟೇಸನ್‌ತಾವ' ಎಂದು ಆಜ್ಞಾಪಿಸಿದ. +'ಆಯ್ತು ಹೋಗೋಣ ಮಂಜು' ಎಂದು ನಾನು ಕಾರಿನ ಒಳಗೆ ಕುಳಿತೆ. +ಮತ್ತೆ ಜ್ಞಾಪಿಸಿಕೊಂಡು ಕೆಳಗಿಳಿದು ನಮ್ಮತ್ತ ನೋಡುತ್ತಿದ್ದ ಮಾದೇಶನ ಬಳಿ ಸಾರಿದೆ. +"ನಾವು ಈಗ ಕಂಪ್ಲೆಂಟ್‌ಕೊಟ್ಟು ಹಾಗೆಯೇ ಮನೆಗೆ ಹೋಗಬಹುದಾ?" ಎಂದು ಸಾಧ್ಯವಾದಷ್ಟು ವಿನಯದಿಂದ ಕೇಳಿದೆ. +"ಅದುಹೇಗ್ತೀ ಸಾಧ್ಯ?" +ಎರಡೂ ಗಾಡಿ ಟೇಸನ್‌ ಮುಂದೆ ನಿಲ್ಲಿಸ್ಬೇಕು. +ನಾಳೆ ಆರ್‌ಟಿಒ ಆಫೀಸಿಂದ ಇನ್ಸ್‌ಪೆಕ್ಟರ್‌ಬಂದು ರಿಪೋರ್ಟ್‌ ಕೊಟ್ಟ ಮೇಲೆ ನಿಮ್ಮ ಗಾಡಿ ಒಯ್ಯಬಹುದು" ಎಂದ. +ಅಷ್ಟರಲ್ಲಿ ಹತ್ತಿರ ಬಂದ ಮಂಜು“ನಾಳೆ ಎರಡನೇ ಶನಿವಾರ ಬೇರೆ. +ಆರ್‌ಟಿಒ ಕಚೇರಿಯಿಂದ ಯಾರೂ ಬರೋದಿಲ್ಲ. +ಇನ್ನು ಸೋಮವಾರವೇ ಆಗುತ್ತೆ. +ಅಲ್ಲಿಯವರೆಗೂ ಪೊಲೀಸರ 'ರಕ್ಷಣೆ'ಯಲ್ಲಿಯೇ ನಮ್ಮ ಗಾಡಿ ನಿಂತಿರಬೇಕಾಗುತ್ತೆ” ಎಂದು ನನಗೊಬ್ಬನಿಗೆ ಕೇಳುವಂತೆ ಪಿಸುಗುಟ್ಟಿದ. +ನಾವಿಬ್ಬರು ಮಾತಾಡುತ್ತಿರುವುದನ್ನು ಗಮನಿಸಿದ ಸೇತುಕುಳಿ 'ಎಷ್ಟು ಹೊತ್ತು ಇಲ್ಲಿ ನಿಲ್ಲಿಸ್ತೀರಿ. +ಬೇಗ ಇತ್ಯರ್ಥ ಮಾಡಿಕೊಳ್ಳಿ. +ಇಲ್ಲ, ಟೇಸನ್‌ ತಾವ ನಡೀರಿ' ಅಂದ. +ನಾವು ಗಮನಿಸುತ್ತಿದ್ದಂತೆ ಪೊಲೀಸರಿಬ್ಬರೂ ನಮ್ಮನ್ನು ಮಾತ್ರವೇ ಗದರಿಸುತ್ತಿದ್ದರೇ ಹೊರತು ಅಪಘಾತ ಮಾಡಿದ್ದ ಡ್ರೈವರ್‌ ಇಲ್ಲವೇ ಟ್ಯಾಕ್ಸಿಯ ಮಾಲೀಕನನ್ನು ವಿಚಾರಿಸಿಯೇ ಇರಲಿಲ್ಲ. +'ಇವರೆಲ್ಲ ಒಂದೇ ಇರಬೇಕು. +ಮಂಜು, ನಾವು ಹೋಗಿ ಬಿಡೋಣ' ಎಂದು ನಿರ್ಣಾಯಕವಾಗಿ ಹೇಳಿದೆ. +'ಸರಿ ಹೋಗೋಣ ನಡೀರಿ' ಎಂದು ಮೂವರೂ ಹೊರಟಿವು. +ಶರತ್‌ ಟ್ಯಾಕ್ಸಿಯ ನಂಬರನ್ನು ಇನ್ನೊಮ್ಮೆ ಖಚಿತ ಮಾಡಿಕೊಳ್ಳಲು ಹತ್ತಿರ ಹೋಗಿ ಬಂದ. +ನಮ್ಮ ಕಾರು ನಿಧಾನವಾಗಿ ಜಯನಗರದ ಕಡೆತಿರುಗಿಸುತ್ತಿದ್ದಂತೆ ಟ್ಯಾಕ್ಸಿ ಮಾಲೀಕನ ಕಡೆಯ ಧಡಿಯನೊಬ್ಬ 'ಸಾರ್‌ ಸಾರ್‌' ಎಂದು ಕೂಗುತ್ತ ಓಡಿ ಬಂದ. +"ನಿಲ್ಲಿ ಸಾರ್‌. +ನೀವು ಕಂಪ್ಲೆಂಟ್‌ ಕೊಟ್ಟರೆ ಇವತ್ತಲ್ಲ ನಾಳೆ ಪೊಲೀಸರು ಗಾಡಿ ನಿಲ್ಲಿಸಿ ದುಡ್ಡು ಕೀಳ್ತಾರೆ. +ದುಡಿಯೋ ಗಾಡಿ. +ಒಂದು ದಿನ ನಿಂತರೆ ಎಷ್ಟೊಂದು ಲಾಸ್‌ ಆಗುತ್ತೆ ಸುಮ್ಮನೆ ಪೊಲೀಸರಿಗೂ ತಿನಿಸಬೇಕಾಗುತ್ತೆ. +ಎರಡು ಸಾವಿರಕ್ಕೆ ಒಪ್ಪಿಕೊಳ್ಳಿ. +ಹೇಗೋ ನೀವು ಇನ್ಯೂರೆನ್ಸ್‌ ಕ್ಲೈಮ್‌ ಮಾಡಲೇಬೇಕು. +ಅದರಲ್ಲಿ ರಿಪೇರಿ ಮಾಡಿಸ್ಕಳ್ಳಿ' ಎಂದ ವಿನೀತನಾಗಿ. +'ಅವನೇ ಬಂದಿಲ್ಲ, ನೀವೇಕೆ ಬಂದಿದೀರಿ' ಎಂದುಮಾಲೀಕನತ್ತ ಕೈತೋರಿಸಿ ಕೇಳಿದ್ದಕ್ಕೆ "ಈ ಗಾಡಿ ನಂದೆ ಸಾರ್‌. +ಅವನ ಹತ್ರ ಬಾಡಿಗೆಗೆ ಬಿಟ್ಟಿದ್ದೀನಿ. +ಗಾಡಿ ನಿಂತ್ರೆ ನನಗೇ ಅಲ್ವ ಸಾರ್‌ ಲಾಸು" ಎಂದ. +ಏನೋ ಒಂದು, ಹೇಗೋ ಇತ್ಯರ್ಥವಾದರೆ ಆಗಲಿ ಎಂದುಕೊಂಡಿದ್ದ ನಮಗೆ ಇನ್ಸ್‌ಪೆಕ್ಟರ್‌ ಹೇಳಿದ್ದು ಕೂಡ ನೆನಪಿಗೆ ಬಂತು. +"ಆಗಲಿ ಬಿಡಪ್ಪ ದುಡ್ಡು ಕೊಡು. +ನಾವು ಹೋಗಬೇಕು" ಎಂದೆ. +ಅವನು ಹಿಂತಿರುಗಿ ಟ್ಯಾಕ್ಸಿಮಾಲೀಕ ಹಾಗೂ ಅವನ ಕಡೆಯವರಿದ್ದ ಕಡೆ ಹೋದ. +ಅಲ್ಲಿ ಸ್ಟಲ್ಪ ಹೊತ್ತು ಏನೇನೋ ಗುಸುಗುಸು ನಡೆಸಿ ಹತ್ತಿರ ಬಂದ. +'ಸಾರ್‌, ಪೊಲೀಸಿಗೆ ಕಂಪ್ಲೆಂಟ್‌ ಕೊಡಲ್ಲ ಅಂತ ಒಂದು ಲೈನು ಬರೆದುಕೊಡಿ' ಎಂದು ಬಿಳಿಹಾಳೆಯನ್ನೂ ಪೆನ್ನನ್ನೂ ನೀಡಿದ. +ಏನಾದರೂ ಸಾಯಲಿ ಎಂದುಕೊಂಡು 'ಆಯ್ರಪ್ಪ ಕೊಡು ಇಲ್ಲಿ' ಎಂದು ಅವನು ನೀಡಿದ್ದ ಹಾಳೆಯಲ್ಲಿ ನಡೆದ ಘಟನೆಯನ್ನು ನಮೂದಿಸಿ ಗಾಡಿಯ ರಿಪೇರಿಗೆ ವ್ಯವಸ್ಥೆ ಮಾಡಿದ್ದರಿಂದ ಪ್ರಕರಣ ಮುಗಿಸಿದ್ದಾಗಿ ಬರೆದು ಸಹಿ ಹಾಕಿ ಕೊಟ್ಟೆ ಹಣವನ್ನು ಎಣಿಸಿ ಜೇಬಿಗೆ ಹಾಕಿಕೊಂಡೆ. +ಗಾಡಿಯನ್ನು ಮನೆಯತ್ತ ತಿರುಗಿಸಿದೆವು. +ಟ್ಯಾಕ್ಸಿ ಮಾಲೀಕನೂ ಅವನ ತಂಡವೂ ಹಿಂದೆ ಸರಿದು ಕಣ್ಮರೆಯಾದ ಮೇಲೆ ಯಾವುದೋ ಅಪಾಯದಿಂದ ಪಾರಾದಂತೆ ನಿರಾಳವಾಯಿತು. +ಡಿಕ್ಕಿ ಹೊಡೆದವನು ಹತ್ತಿರವೇ ಇದ್ದರೂ ನಮ್ಮನೇ ವಿಚಾರಿಸಿಕೊಳ್ಳುತ್ತಿದ್ದ ಪೊಲೀಸ್‌ ಪೇದೆಗಳ ವರ್ತನೆ ನಗರದಲ್ಲಿ ಕಾನೂನು ವ್ಯವಸ್ಥೆಯೇ ಇಲ್ಲವಾ ಎನಿಸಿತು. +ಅದನ್ನೇ ಶರತ್‌ ಜತೆ ಹೇಳಿಕೊಳ್ಳುತ್ತಿದ್ದಂತೆ ಮೊಬೈಲ್‌ ರಿಂಗ್‌ ಆಯಿತು. +"ಸಾರಿ, ನಾನು ಆಗ ಬ್ಯುಸಿಯಾಗಿದ್ದೆ. +ಸರಿಯಾಗಿ ಮಾತಾಡಲು ಆಗಲಿಲ್ಲ. +ಈಗ ಏನಾಯಿತು" ಎಂದು ವಿಶ್ವಾಸದಿಂದ ಕೇಳಿದರು ಪರಿಚಿತ ಇನ್ಸ್‌ಪೆಕ್ಟರ್‌. +ಎಲ್ಲವನ್ನೂ ವಿವರಿಸಿದೆ. +ತಡೆಯಲಾಗದೆ “ಅಲ್ಲರೀ, ಇಡೀ ಪೊಲೀಸರನ್ನೆ ಕೊಂಡುಕೊಂಡ ಹಾಗೆ ಅವನು ಮಾತಾಡ್ತಿದ್ದ. +ಡಿಕ್ಕಿ ಹೊಡೆದು ಪರಾರಿಯಾದ ಅಂತ ಕಂಪ್ಲೆಂಟ್‌ ಕೊಟ್ಟಿದ್ದರೆ ಅವನಿಗೆ ತೊಂದರೆ ಆಗ್ತಿರಲಿಲ್ವಾ. +ಅವನ ಮೇಲೆ ಕೇಸು ಮಾಡ್ತಿರಲಿಲ್ವ" ಎಂದೆ. +"ಕೇಸೇನೋ ಮಾಡ್ತಿದ್ದರು. +ಅದು ಯಾವಾಗಲೋ ಆಗ್ತಿತ್ತು ಆಕ್ಷಿಡೆಂಟ್‌ನಿಂದ ಯಾರಿಗಾದ್ರೂ ಜಾಸ್ತಿ ಗಾಯ ಆಗಿ ಎಮರ್ಜೆನ್ಸಿಯಾದ ಸನ್ನಿವೇಶ ಇದ್ರೆ ಮಾತ್ರ ಅವನಿಗೆ ತೊಂದರೆ ಆಗಿರೋದು. +ಸುಮ್ಮನೆ ಹಿಟ್‌ಮಾಡಿದ್ದಲ್ವ ಬಚಾವ್‌ ಆಗಿ ಬಿಡ್ತಿದ್ದ ಸೂಳೆಮಗ" ಎಂದರು. +"ಹಾಗಿದ್ರೆ ಹಿಟ್‌ ಅಂಡ್‌ ರನ್‌ ಕೇಸ್‌ ಅಂದರೆ ಸುಮ್ನೆ ಬಿಟ್‌ ಬಿಡ್ತೀರಾ" ಎಂದೆ. +"ಅದಕ್ಕೆ ಅವನಿಗೆ ಮುನ್ನೂರು ರೂಪಾಯಿ ದಂಡ ಹಾಕ್ತಿದ್ದರು ಅಷ್ಟೆ. +ಅವನು ಯಾಕೆ ಕೇಸ್‌ ಹಾಕದೆ ಇರೋದಕ್ಕೆ ದುಂಬಾಲು ಬಿದ್ದ ಅಂದರೆ ಇವತ್ತು ಕಂಪ್ಲೆಂಟ್‌ ಕೊಟ್ಟಿದ್ದರೆ ಅವನು ನಾಲ್ಕು ದಿನ ಗಾಡಿ ನಿಲ್ಲಿಸಬೇಕಿತ್ತು. +ಅದಕ್ಕೆ ಅವನು ಇತ್ಯರ್ಥಮಾಡಿಕೊಂಡ ಅಷ್ಟೆ ಸದ್ಯ ಬೇಗ ಇತ್ಯರ್ಥ ಮಾಡಿಕೊಂಡಿರಲ್ಲ. +ಒಳ್ಳೇದಾಯ್ತು ನಿಮ್ಮ ಗಾಡಿ ರಿಪೇರಿಗೆ ನಿಮ್ಮ ಕೈಯಿಂದ ಏನೂ ಖರ್ಚಾಗದ ಹಾಗೆ ಬೇಕಾದ ರಿಕಾರ್ಡ್ಸ್‌ನ ನಾಳೇನೆ ಮಾಡಿಸಿ ಕೊಡ್ತೀನಿ ಎಂದು ಅವರು ಸಮಾಧಾನಪಡಿಸಿ ಸ್ನೇಹಕ್ಕೆ ಬೆಲೆ ಕೊಟ್ಟರು. +ಸಪ್ತಪದಿ: +"ಏನಂತ ಮಾಡಿದೀಯಾ? . . . ನನ್ನ ಏನೋ ಮಾಡ್ತೀಯಾ . . ನೀನು?'ಮಂಜುಳಾ ಧ್ವನಿ ಎತ್ತರಿಸಿದಳು. +ಸದಾ ಬಹುವಚನದಲ್ಲಿಯೇ ಕರೆಯುತ್ತಿದ್ದ ಹೆಂಡತಿ ಹಠಾತ್ತನೆ ಏಕವಚನಕ್ಕೆ ಇಳಿದರೆ ಗಂಡನ ಪೊಗರು ಪಾತಾಳಕ್ಕೆ ಇಳಿಯುತ್ತದೆ ಎಂಬುದನ್ನು ಅವಳು ಅನುಭವದಿಂದ ತಿಳಿದವಳು. +ಅದುವರೆಗೆ ಮುಖವೆಲ್ಲ ಕೆಂಪಾಗಿಸಿಕೊಂಡು ವಾದ ಮಾಡುತ್ತಿದ್ದ ಮಂಜುನಾಥ ಎದುರಿಗೆ ಮುದುರಿ ಕುಳಿತಿದ್ದ ಮಂಗಳೆಯನ್ನು ಅಸಹಾಯಕತೆಯಿಂದ ನೋಡಿದ. +ಬೆದರಿದ ಹರಿಣಿಯಂತೆ ಮಂಗಳಾ ಸಣ್ಣಗೆ ನಡುಗುತ್ತಿದ್ದಳು. +ಅವಳಿಗೆ ಆ ಕ್ಷಣಕ್ಕೆ ಮಂಜುನಾಥನ ಸಾಂತ್ವನ ಸಿಗುವಂತಿರಲಿಲ್ಲ. +ಗಂಡನನ್ನು ನಿರ್ಲಕ್ಷಿಸಿ ಮಂಜುಳಾ ಮಂಗಳೆಯತ್ತ ತಿರುಗಿದಳು. +"ಇವರ ಬಗ್ಗೆ ನಿನಗೆ ಏನೂ ಗೊತ್ತಿಲ್ಲ. . "ಎನ್ನುತ್ತಾ ಗಂಡನ ಬಗ್ಗೆ ಬಹುವಚನಕ್ಕೆ ಬಂದಳು. +'ನಿನ್ನದು ಇನ್ನೂ ಎಳೆ ವಯಸ್ಸು ಇಪ್ಪತ್ಮೂರು ವರ್ಷದಿಂದ ಇವರನ್ನು ನೋಡಿದೀನಿ. +ಆಳು ಏನೂ ಇಲ್ಲ. +ಬರೀ ಚಪಲಕ್ಕೆ ಆಡ್ತಾರೆ. +ಚೆನ್ನಾಗಿ ಮಾತಾಡ್ತಾರೆ ಅಂತ ಬಲೆಗೆ ಬಿದ್ದರೆ ಮತ್ತೆ ನಿನಗೆ ಏಳೋಕೆ ಆಗಲ್ಲ. +ಅರ್ಧ ಗಂಟೆ ಟೈಮು ಕೊಡ್ತೀನಿ. +ಯೋಚನೆ ಮಾಡಿ ತಿಳಿಸು.'ಎಂದು ಅವಳ ಪ್ರತಿಕ್ರಿಯೆಗೆ ಕಾಯದೆ ಪಕ್ಕದ ರೂಮಿಗೆ ತಿರುಗಿದಳು. +ಮಂಕಾಗಿದ್ದ ಮಂಜುನಾಥ ಹೆಂಡತಿಯನ್ನು ಹಿಂಬಾಲಿಸಲಾಗದೆ, ಹಾಲಿನಲ್ಲಿ ಕುಳಿತ ಮಂಗಳೆಯನ್ನು ಸಮಾಧಾನಪಡಿಸಲಾಗದೆ ಚಡಪಡಿಸತೊಡಗಿದ. . . +ರಾಷ್ಟೀಕೃತ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಸೇರಿಕೊಂಡಿದ್ದ ಮಂಜುನಾಥ ಮಂಜುಳೆಯ ಕ್ಶೈ ಹಿಡಿದಾಗ ಅವರನ್ನು ಬಂಧುಗಳು ಆದರ್ಶ ಜೋಡಿ ಎಂದೇ ಹೊಗಳುತ್ತಿದ್ದರು. +ಅವನದು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ. +ಬ್ಯಾಂಕ್‌ ಅಧಿಕಾರಿಯಾಗಿ ಆಯ್ಕೆಯಾಗುವ ಮೊದಲು ಬೆಂಗಳೂರಿನ ಕಾಲೇಜೊಂದರಲ್ಲಿ ಅರೆಕಾಲಿಕ ಉಪನ್ಯಾಸಕನಾಗಿದ್ದ. +ಅವನದು ಆಕರ್ಷಕವಾಗಿ ಮಾತನಾಡುವ ಕಲೆ. +ಅತ್ಯಲ್ಪ ಕಾಲದಲ್ಲಿಯೇ ಜನಪ್ರಿಯ ಉಪನ್ಯಾಸಕನಾಗಿದ್ದ. +ಉತ್ತಮ ವೇತನ, ಭವಿಷ್ಯದ ಭದ್ರತೆಯ ಕಾರಣ ಬ್ಯಾಂಕ್‌ ಉದ್ಯೋಗಕ್ಕೆ ಸೇರಿಕೊಂಡನಾದರೂ ತನಗೆ ಉಪನ್ಯಾಸಕ ವೃತ್ತಿಯೇ ಸೂಕ್ತ ಎಂಬ ಭಾವನೆ ಅವನಿಗಿತ್ತು. +ಚೆನ್ನಾಗಿ ಪಾಠಮಾಡಿದ ದಿನ ಚೆಂದನೆಯ ವಿದ್ಯಾರ್ಥಿನಿಯರ ಮೆಚ್ಚುಗೆಯ ನೋಟ ತನ್ನೆಡೆಗೆ ಹರಿಯುತ್ತಿದ್ದುದನ್ನು ನೆನೆಸಿಕೊಂಡಾಗಲೆಲ್ಲ ಬ್ಯಾಂಕಿನ ಅಂಕಿ ಸಂಖ್ಯೆಗಳ ಲೆಕ್ಕಾಚಾರ ನೀರಸ ಎನಿಸಿ ಬಿಡುತ್ತಿತ್ತು. +ಬ್ಯಾಂಕಿಗೆ ಬರುತ್ತಿದ್ದ ಎಳೆಯ ಗೃಹಿಣಿಯರು, ಕಾಲೇಜು ವಿದ್ಯಾರ್ಥಿನಿಯರಿಗೆ ವಿಶೇಷ ಸೇವೆ ಸಲ್ಲಿಸುತ್ತ ಅವರ ನಗುಮುಖದ ಕೃತಜ್ಞತೆಯನ್ನು ಸ್ಪೀಕರಿಸುತ್ತಿದ್ದರೆ ಹೃದಯ ತುಂಬಿದಂತಾಗಿ ನರನಾಡಿಗಳಲ್ಲಿ ಬಿಸಿರಕ್ತ ಚಿಮ್ಮುತ್ತಿತ್ತು. +ಹೆಣ್ಣಿನಆಕರ್ಷಣೆ ಅವನನ್ನು ಎಲ್ಲೆಲ್ಲಿಗೋ ಕೊಂಡೊಯ್ಯುವ ಮೊದಲು ಮದುವೆಯಾಯಿತು. +ಪದವಿ ಮುಗಿಸಿದ್ದ ಮಂಜುಳಾ ಬ್ಯಾಂಕ್‌ ಅಧಿಕಾರಿಯಾದ ಗಂಡನ ಆದರ್ಶ ಸತಿಯಾಗುವ ಕನಸಿನೊಂದಿಗೆ ಬೆಂಗಳೂರಿನಲ್ಲಿ ಬ್ಯಾಂಕ್‌ ಅಧಿಕಾರಿಗಳ ಕ್ವಾರ್ಟರ್ಸ್‌ಗೆ ಹೆಜ್ಜೆ ಇಟ್ಟಳು. +ಸಾಮಾನ್ಯ ಕುಟುಂಬದಿಂದ ಬಂದ ಮಂಜುಳಾ ಮಂಜುನಾಥನ ಬಳಗಕ್ಕೆ ಹೊಂದಿಕೊಂಡಳು. +ಮಂಜುನಾಥನದು ಮಲೆನಾಡಿನ ಹಳ್ಳಿ. +ಅವಳದು ಮೈಸೂರು ಜಿಲ್ಲೆಯ ಇನ್ನೊಂದು ಹಳ್ಳಿ. +ಮಲೆನಾಡು-ಮೈಸೂರು ಮಧ್ಯೆ ಸಾಂಸ್ಕೃತಿಕ ಅಂತರ ಇದ್ದರೂ ಸುಶಿಕ್ಷಿತ ದಂಪತಿಯಲ್ಲಿ ಅದು ಸಮಸ್ಯೆಯಾಗಲಿಲ್ಲ. +ಎರಡೂ ಕಡೆ ಆಗಾಗ ಹೋಗಿ ಹಬ್ಬ ಹರಿದಿನಗಳಲ್ಲಿ ಪಾಲುಗೊಳ್ಳುತ್ತಿದ್ದರು. +ಬ್ಯಾಂಕಿನ ಕೆಲಸದಲ್ಲಿ ಹೆಚ್ಚಿನ ರಜೆಗೆ ಅವಕಾಶ ಇಲ್ಲದ ಕಾರಣ ಅನಿವಾರ್ಯ ಪ್ರಸಂಗದ ವಿನಾ ಊರು ಕಡೆಗೆ ಹೋಗಲಾಗುತ್ತಿರಲಿಲ್ಲ. +ಬ್ಯಾಂಕ್‌ಒದಗಿಸಿದ ಎರಡು ಕೊಠಡಿಯ ಸುಸಜ್ಜಿತ ಮನೆಯಲ್ಲಿ ಅವರಿಗೆ ಕೊರತೆ ಕಾಣಿಸಲಿಲ್ಲ. +ಬಂದವರನ್ನು ಸತ್ಕರಿಸುತ್ತ, ಬಂಧುಗಳ ಮನೆಗೆ ಹೋಗಿ ಬರುತ್ತ ತಾನು ಎಂಥ ಭಾಗ್ಯಶಾಲಿ ಎಂದ ತೃಪ್ತಿಪಡುತ್ತಿದ್ದಾಗ ಮಂಜುಳಾ ಗರ್ಭಿಣಿಯಾದಳು. +ಮೊದಲ ಬಸಿರಿನಲ್ಲಿಯೇ ಅವನ ಪ್ರೀತಿಯ ಪರಿಚಯ ಅವಳಿಗಾಯಿತು. +ನಿತ್ಯ ಬ್ಯಾಂಕಿನಿಂದ ಬರುವುದು ತಡವಾಗುತ್ತಿದ್ದರೂ ಅವನೆಂದೂ ಬರಿಗೈಯಲ್ಲಿ ಬರುತ್ತಿರಲಿಲ್ಲ. +ಹೂವು, ಜೊತೆಗೆ ತಿನ್ನಲು ಏನಾದರೂ ಕಟ್ಟಿಸಿಕೊಂಡು ಬರುತ್ತಿದ್ದ. +ಬೆಳಗಿನ ಹೊತ್ತು ಆಲಸ್ಯದಿಂದ ತಿಂಡಿ ಮಾಡಲು ಸಾಧ್ಯವಾಗದಿದ್ದಾಗ ಹತ್ತಿರದ ಹೋಟೆಲಿನಿಂದ ಬಿಸಿಯಾದ ತಿಂಡಿ ಕಟ್ಟಿಸಿಕೊಂಡು ತರುತ್ತಿದ್ದ. +ಮಧ್ಯಾಹ್ನದ ಊಟಕ್ಕೆ ಅಡುಗೆಯನ್ನು ಅವಳು ಮಾಡಿಕೊಳ್ಳುತ್ತಿದ್ದಳು. +ಅವಳಿಗೆ ಶ್ರಮವಾಗದಂತೆ ಪ್ರೀತಿಯ ಮಾತನಾಡುತ್ತ ಆರೈಕೆ ಮಾಡುತ್ತ ಅವಳಲ್ಲಿ ಧನ್ಯತೆಯ ಭಾವನೆ ಮೂಡಿಸುತ್ತಿದ್ದ. +ಹೆರಿಗೆಗೆ ಅವಳು ಹೋಗುವಾಗ ತುಂಬ ನೊಂದುಕೊಂಡಳು. +ಅಷ್ಟೊಂದು ಪ್ರೀತಿ ಮಾಡುವ ಗಂಡನನ್ನು ಐದಾರು ತಿಂಗಳು ಬಿಟ್ಟಿರಬೇಕಲ್ಲ ಎಂದು ಅವಳು ತುಂಬ ಅತ್ತುಕೊಂಡಳು. +ಅಮ್ಮನನ್ನು ಕರೆಸಿ ಬೆಂಗಳೂರಿನಲ್ಲಿಯೇ ಮೊದಲ ಹೆರಿಗೆಯನ್ನು ಮಾಡಿಸಿಕೊಂಡರೆ ಆಗದೇ ಎಂದೂ ಯೋಚಿಸಿದ್ದಳು. +ಆದರೆ ಮಂಜುನಾಥ ತುಂಬ ಒಲವಿನಿಂದ ತವರಿನ ಮಹತ್ವವನ್ನು ವಿವರಿಸಿ ಹೆರಿಗೆಯಂತಹ ಪ್ರಕ್ರಿಯೆ ತಾಯಿ ಮನೆಯಲ್ಲಿಯೇ ಆಗುವುದು ತುಂಬ ಆಪ್ಯಾಯಮಾನ ಎಂದಿದ್ದ. +ಹೆರಿಗೆಯ ಸಂದರ್ಭದಲ್ಲಿ ಅದು ಮಂಜುಳಾಗೆ ಅನುಭವಕ್ಕೆ ಬಂದಿತ್ತು. +ಹೆರಿಗೆಯಾಗುವ ಹೊತ್ತಿಗೆ ಮಂಜುನಾಥನಿಗೆ ಹುಬ್ಬಳ್ಳಿಗೆ ವರ್ಗವಾಯಿತು. +ಹೊಸ ಊರನ್ನು ನೋಡಲು ಅವನಿಗೂ ಉತ್ಸಾಹವಿತ್ತು. +ಆದರೆ ಹೆಂಡತಿ ಬಾಣಂತಿಯಾಗಿರುವಾಗ ಬಿಟ್ಟು ಹೋಗುವುದು ಹೇಗೆ ಎಂಬ ಭಾವ ಅಪರಾಧ ಪ್ರಜ್ಞೆಯಾಗಿ ಕಾಡುತ್ತಿದೆ ಎಂದು ಪತ್ರ ಬರೆದು ತೋಡಿಕೊಂಡಾಗ ಇಂಥ ಗಂಡನನ್ನು ಪಡೆದ ತಾನೇ ಪುಣ್ಯವಂತೆ ಎಂದುಕೊಂಡಳು ಮಂಜುಳಾ. +ಅದಕ್ಕೆ ಸುದೀರ್ಫ ಪತ್ರ ಬರೆದು ಕೆಲವೇ ತಿಂಗಳಲ್ಲಿ ತಾನು ಮಗುವಿನೊಟ್ಟಿಗೆ ಸೇರಿಕೊಳ್ಳುವುದಾಗಿ ಧೈರ್ಯ ತುಂಬಿದ್ದಳು. +ಅವಳು ಹುಬ್ಬಳ್ಳಿಗೆ ನಾಲ್ಕು ತಿಂಗಳ ಹೆಣ್ಣು ಮಗುವನ್ನು ಕರೆದೊಯ್ಯುವಾಗ ಬ್ಯಾಂಕ್‌ ಒದಗಿಸಿದ್ದ ಮನೆಯಲ್ಲಿ ಮಂಜುನಾಥ ಹಳಬನಾಗಿದ್ದ. +ಬ್ಯಾಂಕ್‌ಅಧಿಕಾರಿಗಳಿಗೆ ಬೆಂಗಳೂರಿನಲ್ಲಿ ಇರುವಂತೆ ಹುಬ್ಬಳ್ಳಿಯಲ್ಲಿ ಒಂದೇ ಕಡೆ ಕ್ವಾರ್ಟರ್‌ ಇರಲಿಲ್ಲ. +ಗುತ್ತಿಗೆ ಪಡೆದ ಪ್ರತ್ಯೇಕ ಮನೆಯೊಂದನ್ನು ಮಂಜುನಾಥನಿಗೆ ಕೊಡಲಾಗಿತ್ತು. +ಅಧಿಕಾರಿಗಳ ಶ್ರೇಣಿಯನ್ನು ಅನುಲಕ್ಷಿಸಿ ಅವರ ಮನೆಯ ವಿಸ್ತೀರ್ಣ ನಿಗದಿಯಾಗಿರುತ್ತದೆಯಾದರೂ ಹುಬ್ಬಳ್ಳಿಯ ಬೆಂಗೇರಿ ಬಡಾವಣೆಯಲ್ಲಿ ಸಿಕ್ಕಿದ್ದ ಮನೆ ತುಂಬ ದೊಡ್ಡದಾಗಿತ್ತು ಮೂರು ದೊಡ್ಡ ಕೊಠಡಿಗಳ ಮನೆ. +ಮಗಳ ಮನೆಯನ್ನು ನೇರ್ಪುಗೊಳಿಸಲು ಮಂಜುಳಾಳ ತಾಯಿ ಕೆಲವು ದಿನಗಳ ಮಟ್ಟಿಗೆ ಬಂದಿದ್ದರು. +ಅವರು ಹಿಂತಿರುಗಿದ ಮೇಲೆ ಇಡೀ ಮನೆಯಲ್ಲಿ ಪುಟ್ಟ ಮಗುವಿನೊಂದಿಗೆ ಇಬ್ಬರೇ ಇರುವಂತಾಗಿತ್ತು. +ದಿನಗಳು ಕಳೆದು ತಿಂಗಳು ಉರುಳಿ ಅಂಬೆಗಾಲಿಕ್ಕುತ್ತಿದ್ದ ಮಗಳು ಪ್ರೀತಿ ನಡೆದಾಡಲು ತೊಡಗಿ ಕೇಶ್ವಾಪುರದ ಕಾನ್ವೆಂಟ್‌ ಮೆಟ್ಟಿಲು ಹತ್ತುವವರೆಗೆ ಮಂಜುಳಾ ಗಂಡನ ನಡವಳಿಕೆಗಳನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ. +ಗಂಡ ಮತ್ತು ಮಗಳ ಆರೈಕೆ, ಮನೆಯನ್ನು ಸುಸ್ಥಿತಿಯಲ್ಲಿಡುವ ಕೆಲಸಗಳಲ್ಲಿ ಅವಳಿಗೆ ಅಷ್ಟು ಪುರುಸೊತ್ತೂ ಇರಲಿಲ್ಲ. +ಮಂಜುನಾಥನಾದರೋ ಬೆಂಗಳೂರಿನಲ್ಲಿ ಹೇಳುತ್ತಿದ್ದಂತೆ ಪ್ರತಿನಿತ್ಯ ಬ್ಯಾಂಕಿನ ಅನುಭವಗಳನ್ನು ಹೇಳುತ್ತಿದ್ದ. +ಹೊಸದಾಗಿ ಬಂದ ಎಳೆಯ ವಯಸ್ಸಿನ ಸಹೋದ್ಯೋಗಿ ಮಹಿಳೆಯರ ಬಗ್ಗೆ ಕಕ್ಕುಲತೆಯಿಂದ ಮಾತಾಡುತ್ತಿದ್ದ. +ಹಿರಿಯ ಸಹೋದ್ಯೋಗಿಗಳಂತೆ ಕೆಲವೊಮ್ಮೆ ಮಹಿಳಾ ಸಹೋದ್ಯೋಗಿಗಳನ್ನೂ ಮನೆಗೆ ಕರೆತರುತ್ತಿದ್ದ. +ಒಮ್ಮೆ ಅವನೊಟ್ಟಿಗೆ ಸ್ಕೂಟರಿನಲ್ಲಿ ಬಂದಿದ್ದ ಬೆಂಗಳೂರಿನ ತರುಣಿ ರೇಣುಕಾ ಎಂಬುವಳು ಒಂದು ಭಾನುವಾರ ಪೂರ್ತಿ ಅವರ ಮನೆಯಲ್ಲಿಯೇ ಕಳೆದು ಸೋಮವಾರ ಬ್ಯಾಂಕಿಗೆ ಅವನ ಜತೆಯೇ ಹೋಗಿದ್ದಳು. +“ಪಾಪ, ಮನೆಯನ್ನು ಬಿಟ್ಟು ಇದೇ ಮೊದಲ ಸಲವಂತೆ ಹೊರಗೆ ಬಂದಿರುವುದು. +ಹಾಸ್ಟೆಲಿನಲ್ಲಿದ್ದಾಳೆ ಬೆಂಗಳೂರಿನಿಂದ ವರ್ಗವಾಗಿ ಬಂದು ವಾರವಾಯಿತಷ್ಟೆ ಈ ಕಡೆಯ ಜನರ ನಡವಳಿಕೆ ಸ್ವಲ್ಪ ಒರಟು. +ಅದಕ್ಕೇ ಅವಳು ಕೆಲಸ ಬಿಟ್ಟು ಬೆಂಗಳೂರಿಗೆ ವಾಪಸಾಗುತ್ತೇನೆ ಅಂತ ಹೇಳುತ್ತಿದ್ದಳು. +ಹಾಗೆಲ್ಲ ಅವಸರದ ನಿರ್ಧಾರ ಮಾಡಬೇಡಿ. +ಬೆಂಗಳೂರು ಕಡೆಯವರಾಗಿ ನಾವೂ ಇದ್ದೇವೆ ಅಂತ ಸಮಾಧಾನ ಹೇಳುವುದಕ್ಕಾಗಿ ಮನೆಗೆ ಕರೆದೆ” ಎಂದು ಅವನು ಹೇಳಿಕೊಂಡಾಗ ಅದರಲ್ಲಿ ತಪ್ಪೇನೂ ಕಂಡಿರಲಿಲ್ಲ. +ಗಂಡ-ಮಗಳ ಪುಟ್ಟ ಜಗತ್ತಿನಲ್ಲಿ ಒಬ್ಬಳೇ ಇದ್ದು ಒಂದು ರೀತಿಯ ಒಂಟಿತನ ಅನುಭವಿಸುತ್ತಿದ್ದವಳಿಗೆ ರೇಣುಕಾ ಮನೆಗೆ ಬಂದು ಒಂದು ರಾತ್ರಿ ಉಳಿದು ಹೋಗಿದ್ದು ಸಮಾಧಾನದ ಸಂಗತಿಯೇ ಆಗಿತ್ತು. +ಅದಾದ ನಂತರ ತಿಂಗಳಿಗೆ ಒಮ್ಮೆಯಾದರೂ ರೇಣುಕಾ ಬರುತ್ತಿದ್ದಳು. +ಐದಾರು ತಿಂಗಳ ನಂತರ ಅವಳು ಬೆಂಗಳೂರಿಗೆ ವರ್ಗ ಮಾಡಿಸಿಕೊಂಡು ಹೋದ ಸುದ್ದಿಯನ್ನು ಮಂಜುನಾಥ ಹೇಳಿದ. +'ಮನೆಗೆ ಕರೆಯಬಾರದಿತ್ತಾ' ಎಂದು ಅವಳೇ ಆಕ್ಷೇಪಿಸಿದ್ದಳು. +ಎರಡು ತಿಂಗಳ ನಂತರ ಜಯಮಂಗಳಾ ಎಂಬ ಮೈಸೂರು ಕಡೆಯ ಸಹೋದ್ಯೋಗಿಯನ್ನು ಮನೆಗೆ ಕರೆತಂದ. +ಅವಳನ್ನೂ ಅದೇ ವಿಶ್ವಾಸದಿಂದ ಉಪಚರಿಸಿದಳು. +ಆದರೆ ಜಯಮಂಗಳಾ ತನ್ನ ಗಂಡನನ್ನು ನೋಡುತ್ತಿದ್ದ ರೀತಿಗೆ ಇವಳಿಗೆ ಮುಜುಗರ ಎನಿಸುತ್ತಿತ್ತು . +ಅವಳು ಹೋದ ಮೇಲೆ ಗಂಡನನ್ನು ಈ ಬಗ್ಗೆ ಕೇಳಿದರೆ, “ಅವರು ಹೇಗೆಯೇ ನೋಡಲಿ,ನಾವು ನೋಡುವ ದೃಷ್ಟಿಯಲ್ಲಿ ಪಾರದರ್ಶಕತೆ ಇರಬೇಕು' ಎಂದು ಸಮಜಾಯಿಶಿ ಕೊಟ್ಟ. + ಅದನ್ನುಒಪ್ಪಿಕೊಂಡಳು. +ಸಹೋದ್ಯೋಗಿ ಮಹಿಳೆಯರು ಮಾತ್ರವಲ್ಲದೆ ಬ್ಯಾಂಕಿನಲ್ಲಿ ಸಾಲಕ್ಕೆ ಬರುವ ಕೆಲವು ಸ್ತುರದ್ರೂಪಿ ಮಹಿಳೆಯರೂ ತಮ್ಮ ಮನೆಗೆ ಭೇಟಿ ನೀಡುವುದು ನಡೆದೇ ಇತ್ತು. +ಅವರಲ್ಲಿ ಹೆಚ್ಚಿನವರು ಕೆಲವೇ ತಿಂಗಳ ನಂತರ ನಾಪತ್ತೆಯಾದವರಂತೆ ಮರೆಯಾಗಿ ಬಿಡುತ್ತಿದ್ದರು. +ಮಂಜುನಾಥನ ವ್ಯತ್ತಿ ಬದುಕಿನಲ್ಲಿಯೂ ಬ್ಯಾಂಕಿನ ಹೊಣೆಗಾರಿಕೆ ಹೆಚ್ಚಾಗುತ್ತಿದ್ದು ಅವನು ರಾತ್ರಿ ಬರುವ ಸಮಯವೂ ಏರುಪೇರಾಗುತ್ತಿತ್ತು. +ಗಂಡನಿಗಾಗಿ ಕಾಯುತ್ತಾ ಎಷ್ಟೋ ದಿನ ಸಹನೆ ಕಳೆದುಕೊಂಡು ಕಿರಿಕಿರಿ ಅನುಭವಿಸುತ್ತಿದ್ದರೂ ಅಂತಹ ದಿನಗಳ ವಾರಂತ್ಯದಲ್ಲಿ ಸಂಜೆ ವಿಹಾರಕ್ಕೆ ಕರೆದೊಯ್ದು ಒಳ್ಳೆಯ ಸೀರೆ ಇಲ್ಲವೇ ಒಡವೆಗಳನ್ನು ಕೊಡಿಸುತ್ತಿದ್ದ ಅವನ ಮೇಲೆ ಹೆಚ್ಚು ಕಾಲ ಅಸಹನೆ ಉಳಿಯುತ್ತಿರಲಿಲ್ಲ. +ಬದಲಾಗಿ ತಾನು ಅದೃಷ್ಟವಂತೆ ಎಂಬ ಭಾವನೆ ಬರುತ್ತಿತ್ತು. +ಮಂಜುನಾಥ ಹುಬ್ಬಳ್ಳಿಯ ವಿಭಾಗೀಯ ಕಚೇರಿಯಲ್ಲಿ ಕೆಲವು ವರ್ಷ ಇದ್ದ. +ಒಂದು ಅವಧಿಗೆ ಅಲ್ಲಿಂದ ನಿತ್ಯಹೋಗಿ ಬರಬಹುದಾದ ಒಂದು ಗ್ರಾಮೀಣ ಶಾಖೆಗೂ ವರ್ಗವಾಗಿದ್ದ. +ಆ ವೇಳೆಗೆ ಮಂಜುಳಾ ಗಂಡು ಮಗುವಿನ ತಾಯಿಯೂ ಆಗಿದ್ದಳು. +ಮಗಳು ಹೈಸ್ಕೂಲು ಓದುವಷ್ಟಿದ್ದು, ಮಗ ಮೂರನೇ ತರಗತಿಗೆ ಕಾಲಿಟ್ಟ ವರ್ಷ ಅವನಿಗೆ ಉತ್ತರ ಭಾರತ ಸೇವೆಯ ಅಂಗವಾಗಿ ದೆಹಲಿಗೆ ವರ್ಗವಾಯಿತು. +ಗಂಡ ಹೆಂಡತಿ ಇಬ್ಬರೂ ಚರ್ಚೆ ಮಾಡಿ ಮಕ್ಕಳ ಶಿಕ್ಷಣಕ್ಕಾಗಿ ಸಂಸಾರವನ್ನು ದೆಹಲಿಗೆ ಹೋಗುವುದನ್ನು ಕೈಬಿಟ್ಟು ಮೂರು ವರ್ಷವನ್ನು ಹೇಗಾದರೂ ಸಹಿಸಿಕೊಳ್ಳುವ ಕಠಿಣ ನಿರ್ಧಾರ ಕೈಗೊಂಡರು. +ಮಂಜುಳಾ ಹೆಚ್ಚು ತಕರಾರು ಮಾಡದೆ ಬೆಂಗಳೂರಿನಲ್ಲಿ ಮನೆ ಮಾಡಿ ಉಳಿದುಕೊಳ್ಳುವುದಕ್ಕೆ ಒಪ್ಪಿಕೊಂಡಿರುವುದನ್ನು ಅವನು ಮನತುಂಬಿ ಪ್ರಶಂಸಿಸಿದ. +ಇಂಥ ಹೆಂಡತಿ ಸಿಕ್ಕಿದ್ದು ತನ್ನ ಪೂರ್ವ ಜನ್ಮದ ಸುಕೃತ ಎಂದು ಅವಳನ್ನು ಹೊಗಳಿದ್ದ. +ಬೆಂಗಳೂರಿನಲ್ಲಿ ಮಧ್ಯಮ ವರ್ಗದ ವಠಾರವೊಂದರಲ್ಲಿ ಸಾಧಾರಣ ಮನೆಯೊಂದನ್ನು ಹಿಡಿದು ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿ ಅವನು ದೆಹಲಿಗೆ ಹೋದ. +ಗಂಡ ಮೂರು ನಾಲ್ಕು ತಿಂಗಳಿಗೆ ಒಮ್ಮೆಯಂತೆ ಬಂದು ಹೋಗುತ್ತಿದ್ದುದರಿಂದ ಮಂಜುಳಾ ಮಕ್ಕಳ ವಿದ್ಯಾಭ್ಯಾಸದತ್ತ ಗಮನ ಹರಿಸಿದಳು. +ಬಿಡುವಿನ ಸಮಯ ಹೆಚ್ಚು ಸಿಗುತ್ತಿದ್ದ ಕಾರಣ ಕೈಗೆ ಸಿಕ್ಕಿದ ಪುಸ್ತಕಗಳನ್ನು ಓದುತ್ತಿದ್ದಳು. +ಗಂಡನ ಸಾಹಿತ್ಯ ಪ್ರೇಮದ ಸಂಕೇತವಾಗಿ ದೊಡ್ಡಸಂಖ್ಯೆಯಲ್ಲಿದ್ದ ಗ್ರಂಥರಾಶಿಯಲ್ಲಿ ಆಯ್ದ ಕಥೆ ಕಾದಂಬರಿಗಳನ್ನು ಓದತೊಡಗಿದಳು. +ಸಮಯ ಸರಿದದ್ದೇ ಗೊತ್ತಾಗುತ್ತಿರಲಿಲ್ಲ. +ಮೂರು ವರ್ಷದ ಉತ್ತರ ಭಾರತದ ಸೇವೆ ಮುಗಿಸಿ ಮಂಜುನಾಥ ಬೆಂಗಳೂರಿನ ಶಾಖೆಯೊಂದಕ್ಕೆ ವರ್ಗವಾಗಿ ಬಂದ. +ಅವನ ವರ್ಗಾವಣೆ ಬಡತಿಯೊಂದಿಗೆ ಆಗಿತ್ತು. +ಅವನು ಎರಡನೇ ಸಾಲಿನ ಮೇನೇಜರ್‌ ಆಗಿ ವರ್ಗವಾಗಿ ಬಂದಾಗ ತನ್ನ ಮೂರು ವರ್ಷಗಳ ತಪಸ್ಸಿಗೆ ತಕ್ಕ ಪ್ರತಿಫಲಸಿಕ್ಕಿತೆಂದು ಮಂಜುಳಾ ಹರ್ಷಿಸಿದ್ದಳು. +ಗಂಡನ ನಿರರ್ಗಳ ಮಾತುಗಾರಿಕೆಯನ್ನು ಮೊದಲಿನಿಂದ ಮೆಚ್ಚಿಕೊಳ್ಳುತ್ತಲೇ ಇದ್ದ ಅವಳಿಗೆ ಅದನ್ನು ಅವನ ಮಹಿಳಾ ಸಹೋದ್ಯೋಗಿಗಳು ಕೂಡ ಮೆಚ್ಚುತ್ತಿದ್ದಾರೆ ಎಂಬುದು ಅವನು ದೆಹಲಿಯಿಂದ ವರ್ಗವಾಗಿ ಬಂದಮೇಲೆ ಅರಿವಿಗೆ ಬಂದಿತು. +ಆಪ್ತ ಸಂದರ್ಭಗಳಲ್ಲಿ ಅವನ ನಿರಾಸಕ್ತಿಯನ್ನು ಗಮನಿಸುವಷ್ಟು ಸೂಕ್ಷತೆಯನ್ನು ತನ್ನ ಬಿಡುವಿನ ಕಾಲದ ಓದಿನಲ್ಲಿಗಳಿಸಿದ್ದಳು. +ಪ್ರತ್ಯೇಕ ಕೊಠಡಿಗಳಲ್ಲಿ ಮಕ್ಕಳು ಮಲಗಿ ನಿರಾತಂಕ ಪರಿಸ್ಥಿತಿ ಇದ್ದರೂ ಅವನು ಕಾರಣವಿಲ್ಲದೆ ನಿರಾಸಕ್ತಿಯನ್ನು ಪ್ರಕಟಿಸುತ್ತಿರುವುದನ್ನು ಅವಳು ನೋವಿನಿಂದ ಗಮನಿಸಿದ್ದಳು. +ಒಮ್ಮೆ ವರ್ಷಾಂತ್ಯದ ಲೆಕ್ಕಪತ್ರ ಮುಗಿಸಿ ಬ್ಯಾಂಕ್‌ ಸಿಬ್ಬಂದಿಯೆಲ್ಲ ಒಂದಾಗಿ ನಗರದ ಹೋಟೆಲೊಂದರಲ್ಲಿ ಸಹಭೋಜನಕ್ಕೆ ಸೇರಿದ ದಿನ ಉಳಿದವರು ಅವಳೊಟ್ಟಿಗೆ ನಡೆದುಕೊಳ್ಳುತ್ತಿದ್ದ ರೀತಿ ಅವಳಲ್ಲಿ ಕಿರಿ ಕಿರಿ ಮಾಡಿತು. +ಮಂಜುನಾಥ ಅದೇ ಮೊದಲ ಸಲ ಅಂಥ ಸಮಾರಂಭಕ್ಕೆ ಅವಳನ್ನು ಕರೆದೊಯ್ದಿದ್ದ. +ಗಂಡನ ಪುರುಷ ಸಹೋದ್ಯೋಗಿಗಳು ತನ್ನೆಡೆಗೆ ಅನುಕಂಪದ ದೃಷ್ಟಿ ಬೀರುತ್ತಿದ್ದಾರೆಂಬ ಗುಮಾನಿ ಬರತೊಡಗಿತು. +ಹಿರಿಯ ಮೇನೇಜರ್‌ರ ಪತ್ನಿಯೆಂದು ಪರಿಚಯಿಸಿಕೊಂಡ ನಡುವಯಸ್ಸಿನ ಮಹಿಳೆ ಅನ್ನಪೂರ್ಣ ಎಂಬುವರು ತುಂಬ ಕಕ್ಕುಲತೆಯಿಂದ ಮಾತನಾಡಿಸಿ ಉಪಚರಿಸಿದರು. +"ನಿಮ್ಮನ್ನು ಹೇಗೆ ಹೇಗೆಯೋ ಅಂದುಕೊಂಡಿದ್ದೆವಲ್ಲರೀ, ಎಷ್ಟು ಚೆನ್ನಾಗಿದ್ದೀರಿ" ಎಂದು ಮೆಚ್ಚುಗೆಯಿಂದ ಹೇಳಿದಾಗ ಅದಕ್ಕೆ ಪ್ರತಿಯಾಗಿ ಏನು ಹೇಳಲೂ ತೋಚಲಿಲ್ಲ. +ಎಲ್ಲೋ ಏನೋ ತಪ್ಪಿದೆ ಎಂಬುದನ್ನು ಸ್ಥೂಲವಾಗಿ ಗ್ರಹಿಸಿದ ಮಂಜುಳಾ "ನಿಮ್ಮೊಟ್ಟಿಗೆ ಆಪ್ತವಾಗಿ ಮಾತನಾಡುವುದಿದೆ. +ಬಿಡುವಾಗಿ ಸಿಗುತ್ತೀರಾ?"ಎಂದು ಕೇಳಿ ಮರುದಿನವೇ ಅವರ ಮನೆಗೆ ಭೇಟಿ ನೀಡುವ ಕಾರ್ಯಕ್ರಮವನ್ನು ನಿಗದಿಪಡಿಸಿಕೊಂಡಳು. +ತನ್ನ ತಳಮಳವನ್ನು ಪ್ರಯತ್ನಪೂರ್ವಕ ಹತ್ತಿಕ್ಕಿಕೊಂಡು ಅಂದು ರಾತ್ರಿ ಗಂಡನೊಟ್ಟಿಗೆ ಸಹಜವಾಗಿ ವ್ಯವಹರಿಸಿದಳು. +ಮಕ್ಕಳು ಶಾಲೆಗಳಿಗೆ, ಗಂಡ ಬ್ಯಾಂಕಿಗೆ ಹೋದ ಮೇಲೆ ಮನೆಕೆಲಸಗಳನ್ನು ಬೇಗ ಮುಗಿಸಿದ ಮಂಜುಳಾ ಶೃಂಗರಿಸಿಕೊಂಡು ಹೊರಟಳು. +ಅನ್ನಪೂರ್ಣ ಇದ್ದ ಬ್ಯಾಂಕಿನ ಮೇನೇಜರ್‌ಗಳ ವಸತಿಗೃಹ ಇವಳಿದ್ದ ಮನೆಗೆ ಹೆಚ್ಚು ದೂರವೇನೂ ಇರಲಿಲ್ಲ. +ಇವಳನ್ನು ನಿರೀಕ್ಷಿಸಿಯೇ ಇದ್ದ ಅನ್ನಪೂರ್ಣ ಬಾಗಿಲು ತೆರೆದು ಆಪ್ತವಾಗಿ ಬರ ಮಾಡಿಕೊಂಡರು. +ಪರಸ್ಪರ ಖಾಸಗಿ ವಿಷಯಗಳ ವಿನಿಮಯಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ. +ಅನ್ನಪೂರ್ಣ ಅವರೂ ಹುಬ್ಬಳ್ಳಿಯಲ್ಲಿ ಸ್ವಲ್ಪ ಕಾಲ ಇದ್ದು ಬಂದವರೇ. +ಮಂಜುನಾಥ ಕಿರಿಯ ಶ್ರೇಣಿಯ ಅಧಿಕಾರಿಯಾಗಿದ್ದಾಗ ಅವರ ಯಜಮಾನರು ಎರಡನೇ ಶ್ರೇಣಿಯ ಮೇನೇಜರ್‌ ಆಗಿ ಅಲ್ಲಿಯೇ ಇದ್ದವರಂತೆ. +'ನೋಡಿ ನಿಮ್ಮ ಮಗಳು ಅಂತ ತಿಳಿದುಕೊಂಡು ದಯವಿಟ್ಟು ನನಗೆ ನಿಮಗೆ ಗೊತ್ತಿರುವುದನ್ನು ಹೇಳಿ. +ನನ್ನ ಗಂಡ ತುಂಬ ಚೆನ್ನಾಗಿ ಮಾತನಾಡಿ ಮರುಳು ಮಾಡಬಲ್ಲವರು ಅಂತ ನನಗೆ ಗೊತ್ತು. +ಅವರು ಪ್ರತಿ ಸಲ ನನಗೆ ಏನಾದರೂ ಕೊಡಿಸುತ್ತಾರೆ ಎಂದರೆ ನನಗೆ ಗುಮಾನಿ ಬರಲಿಕ್ಕೆ ಶುರುವಾಗ್ತದೆ. +ಈಚೆಗಂತೂ ಅವರ ವರ್ತನೆಯನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿದೆ. +ನಾನೂ ಪದವಿ ಪಡೆದವಳು. +ಮನಸ್ಸು ಮಾಡಿದ್ದರೆ ಮದುವೆ ಆದ ಮೇಲೂ ಕೆಲಸಕ್ಕೆ ಸೇರಿಕೊಳ್ಳಬಹುದಿತ್ತು. +ಆದರೆ ಗೃಹಿಣಿಯಾಗಿ ಅವರೊಟ್ಟಿಗೆ ಬದುಕು ನಡೆಸುವುದನ್ನು ಆಯ್ಕೆ ಮಾಡಿಕೊಂಡೆ. +ನನಗೆ ಅನ್ಯಾಯ ಆಗಿದ್ದರೆ ಅದನ್ನು ನಿಮ್ಮಂಥವರು ನನಗೆ ತಿಳಿಸದೆ ಇದ್ದರೆ ಅದನ್ನು ಬೆಂಬಲಿಸಿದಂತೆಯೇ ಆಗ್ರದೆ ಅಲ್ಲವಾ?' ಎಂದು ಭಾವುಕತೆಯಿಂದ ಮಂಜುಳಾ ಹೇಳುತ್ತಿದ್ದಾಗ ಅನ್ನಪೂರ್ಣ ಕಣ್ಣಲ್ಲಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿದ್ದ ರೇಣುಕಾ, ಜಯಮಂಗಳಾ ಅವರ ಚಿತ್ರಮಸುಕಾಗಿ ಕಂಡಿತ್ತು. +"ನಾವು ಹುಬ್ಬಳ್ಳಿಯಲ್ಲಿದ್ದಾಗ ರೇಣುಕಾ ಅಂತ ಒಬ್ಬಳು ನಮ್ಮ ಮನೆಗೆ ಬಂದಿದ್ದಳು" ಎಂದು ಮಂಜುಳಾ ಹೇಳಿದಾಗ ಅನ್ನಪೂರ್ಣ 'ಅವಳು ನಿಮ್ಮ ಗಂಡನ ಕ್ಲಾಸ್‌ಮೇಟ್‌ ಅಂತಲ್ಲ, ಇಬ್ಬರೂ ಮದುವೆ ಆಗಬೇಕು ಅಂದುಕೊಂಡಿದ್ದರಂತೆ. . ' ಎಂದು ಹೊಸ ಸಂಗತಿಯನ್ನು ಬಯಲು ಮಾಡಿದರು. +"ಆದರೆ ನನ್ನೊಟ್ಟಿಗೆ ಬೇರೆಯೇ ಕಥೆ ಹೇಳಿದ್ದರಲ್ಲ." ಎಂದು ತನ್ನಷ್ಟಕ್ಕೆ ಹೇಳಿಕೊಂಡ ಮಂಜುಳಾ ಕಣ್ಣ ಮುಂದೆ ಮನೆಗೆ ಬಂದುಹೋಗುತ್ತಿದ್ದ ಅನೇಕ ಹೆಂಗಸರ ಚಿತ್ರಗಳು ಸುಳಿದವು. +ಇಷ್ಟು ವರ್ಷ ಕಾಲದ ತನ್ನ ಪೆದ್ದುತನಕ್ಕೆ ಸಿಟ್ಟು ಬಂದು ಕಣ್ಣಾಲಿಗಳು ತುಂಬಿಕೊಂಡವು. +ತನ್ನನ್ನು ಗಂಡ ಎಷ್ಟು ನಾಜೂಕಾಗಿ ಮೋಸ ಪಡಿಸುತ್ತಿದ್ದನೇ ಎಂಬುದನ್ನು ನಂಬಲು ಅವಳಿಗೆ ಸಾಧ್ಯವಾಗಲಿಲ್ಲ. +ಅವನ ಮೂರು ವರ್ಷಗಳ ದೆಹಲಿ ವಾಸದಲ್ಲಿ ಬೆಂಗಳೂರಿನಲ್ಲಿ ಒಂಟಿಯಾಗಿ ಉಳಿದು ಮಕ್ಕಳನ್ನು ನೋಡಿಕೊಂಡ ಬವಣೆ ನೆನಪಿಗೆ ಬಂದು ಗಂಟಲು ಕಟ್ಟಿದಂತಾಯಿತು. +ಗಂಡನ ಮೆಚ್ಚುಗೆಯ ಮಾತುಗಳ ಹಿನ್ನೆಲೆಗೆ ರೇಣುಕಾಳಂತಹ ಎಷ್ಟೊಂದು ಹೆಂಗಸರು ಇದ್ದಿರಬಹುದು ಎಂಬುದನ್ನು ಅವಳು ಊಹಿಸದಾದಳು. +ಸ್ಟಲ್ಪ ಹೊತ್ತಿನಲ್ಲಿ ಕಟ್ಟೆಯೊಡೆದಂತೆ ಧುಮ್ಮಿಕ್ಕಿ ಬಂದ ದುಃಖದ ಆವೇಗ ಅವಳ ಅಳುದ್ದನಿಯನ್ನು ತಾರಕಕ್ಕೆ ಏರಿಸಿತು. +ಶಿಷ್ಟಾಚಾರವನ್ನು ಲಕ್ಷಿಸದೆ, ತಾನು ಬೇರೆಯವರ ಮನೆಯಲ್ಲಿದ್ದೇನೆ ಎಂಬುದನ್ನೂ ಮರೆತು ಜೋರಾಗಿ ಅತ್ತುಬಿಟ್ಟಳು. +ಮಂಜುಳೆಯನ್ನು ಹಿಂದಿನ ದಿನವಷ್ಟೇ ನೋಡಿದ್ದರೂ ಅನ್ನಪೂರ್ಣ ಅವರಿಗೆ ಮಂಜುನಾಥನ ಬಗ್ಗೆ ಮೊದಲೇ ತಿಳಿದಿತ್ತು. +ಹುಬ್ಬಳ್ಳಿಯಲ್ಲಿದ್ದಾಗ ತನ್ನ ಗಂಡನೇ ವರದಿ ನೀಡಿದ್ದರಲ್ಲ. +ಬೇರೆ ಬೇರೆ ನಗರಗಳಲ್ಲಿ ವರ್ಗವಾಗಿ ಹೋಗುತ್ತಿದ್ದಾಗ ಹಿಂಬಾಲಿಸಿಕೊಂಡು ಬರುವ ನೆನಪುಗಳಲ್ಲಿ ಮಂಜುನಾಥನ ಹೊರಗಿನ ವ್ಯವಹಾರಗಳ ಕಥೆಗಳು ಸೇರಿದ್ದವು. +ಅವನು ದೆಹಲಿಗೆ ವರ್ಗವಾಗಿ ಹೋಗಿದ್ದಾಗ ಅವನ ಕ್ಲಾಸ್‌ಮೇಟ್‌ ರೇಣುಕಾ ಅಧಿಕಾರಿಯಾಗಿ ಬಡತಿ ಪಡೆದು ದೆಹಲಿಯನ್ನೇ ಆಯ್ಕೆ ಮಾಡಿಕೊಂಡದ್ದು ಆಕಸ್ಮಿಕ ಇರಲಾರದೆಂದು ತಾವು ಗಂಡ ಹೆಂಡತಿ ಮಾತಾಡಿಕೊಂಡದ್ದು ಕೂಡ ನೆನಪಿಗೆ ಬಂತು. +ಹೆಂಡತಿ ಕುರೂಪಿಯಾಗಿದ್ದರೆ, ಇಲ್ಲವೇ ಹೆಚ್ಚುಕಲಿಯದ ಮೊದ್ದಾಗಿದ್ದು ಮನೆಯವರ ಬಲವಂತಕ್ಕೆ ಮದುವೆಯಾದ ಪ್ರಸಂಗಗಳಲ್ಲಿ ಹುಡುಗರು ಬೇರೆ ಕಡೆಕಣ್ಣು ಹಾಕುವುದನ್ನು ಅವರು ಕಂಡವರಾಗಿದ್ದರು. +ಆದರೆ ಮಂಜುಳೆಯನ್ನು ನೋಡಿದಾಗ ಅವರಿಗೆ ಮಂಜುನಾಥ ಸುಳ್ಳು ಸುಳ್ಳೇ ಹೇಳಿದ್ದು ಅರಿವಿಗೆ ಬಂದಿತು. +ಅವಳು ತಡೆಯಿಲ್ಲದೆ ಅಳುತ್ತಿದ್ದಾಗ ಕರುಣೆ ಉಕ್ಕಿತು. +ಸಮಾಧಾನ ಆಗುವವರೆಗೆ ಮುಕ್ತವಾಗಿ ಅಳಲು ಬಿಟ್ಟು ಅಡುಗೆ ಮನೆಯತ್ತ ತೆರಳಿ ತಣ್ಣಗೆ ಕುಡಿಯಲು ಕೈಗೆ ಸಿಕ್ಕಿದ ಹಣ್ಣನ್ನು ನೀರಿನಲ್ಲಿ ಕಿವಿಚಿ ಏಲಕ್ಕಿಯನ್ನು ಕುಟ್ಟಿಹಾಕಿ ಪಾನಕ ಮಾಡಿ ತಂದರು. +"ಇರಲಿ, ಸಮಾಧಾನ ಮಾಡ್ಕೊಳಮ್ಮ ಈಗ ಸ್ವಲ್ಪ ಪಾನಕ ಕುಡಿ. +ಇಂಥವನ್ನೆಲ್ಲ ಸಮಾಧಾನದಿಂದ ನೋಡಿ ಬಗೆಹರಿಸಿಕೊಳ್ಳಬೇಕು. +ನಿನ್ನ ಗಂಡ ನಮ್ಮೊಟ್ಟಿಗೆ ಮಾತಾಡುವಾಗ ನೀನು ಇಷ್ಟು ಚೆನ್ನಾಗಿದ್ದೀ ಎಂಬ ಕಲ್ಪನೆಯೇ ಬರುತ್ತಿರಲಿಲ್ಲ. +ಕೆಲವು ಗಂಡಸರಿಗೆ ಮನೆಯಲ್ಲಿ ರಂಭೆಯಂಥ ಹೆಂಡತಿ ಇದ್ದರೂ ಇಂಥ ಚಾಳಿ ಇರುತ್ತೆ. +ಅದು ಕ್ರಮೇಣ ಸರಿ ಹೋಗಿ ಬಿಡುತ್ತೆ ಆದರೆ ನಿನ್ನ ಯಜಮಾನರಿಗೆ ಹೋದಲ್ಲೆಲ್ಲ ಯಾರಾದರೊಬ್ಬರು ಇದ್ದೇ ಇರುತ್ತಾರಂತೆ. +ಈಗಲೂ ಅವರ ಬ್ಯಾಂಕಿನಲ್ಲಿ ಮಂಗಳಾ ಅಂತ ಹುಡುಗಿಯೊಬ್ಬಳು ಇದ್ದಾಳಂತೆ. +ಇವರು ಸೆಕೆಂಡ್‌ಲೈನ್‌ ಮೇನೇಜರ್‌ ಅಲ್ವ, ತುಂಬ ಸಲಿಗೆಯಿಂದ ಇದ್ದಾರೆ ಅಂತ ಸುದ್ದಿ. +ನಿಮ್ಮವರ ಹಿಂದಿನ ಕತೆಗಳನ್ನು ಕೇಳ್ತಿದ್ದರೆ ಅದು ಸುಳ್ಳಿರಲಾರದು ಅಂತ ಅನ್ನಿಸುತ್ತೆ. +ನೀನು ಹುಷಾರಾಗಿ ಇದನ್ನು ಮೇನೇಜ್‌ ಮಾಡು. . . " ಎಂದು ತುಂಬ ಕಕ್ಕುಲತೆಯಿಂದ ಮಾತನಾಡಿ ಅವಳ ದುಗುಡವನ್ನು ಸ್ವಲ್ಪಮಟ್ಟಿಗೆ ಉಪಶಮನಗೊಳಿಸಿದರು. +ಸ್ವಲ್ಪಹೊತ್ತಿಗೆ ಚೇತರಿಸಿಕೊಂಡ ಮಂಜುಳಾ 'ನಾನು ಬರ್ತೀನಿ ಆಂಟಿ' ಎಂದು ಎದ್ದಳು. +ಅದು ಸಹಜವಾಗಿ ಬಂದ ಮಾತಾಗಿತ್ತು ಅದಕ್ಕೆ ತುಂಬ ಸಂತೃಪ್ತರಾದ ಅನ್ನಪೂರ್ಣ "ಹುಷಾರಾಗಿ ಮೇನೇಜ್‌ ಮಾಡು. +ಮಕ್ಕಳ ಎದುರಿಗೆ ಏನೂ ಮಾತಾಡಬೇಡ. +ದುಡುಕಲೂ ಬೇಡ" ಎಂದು ಹೇಳಿ ತೆಂಗಿನಕಾಯಿಟ್ಟು ಕುಂಕುಮ ನೀಡಿದರು. +ಮಕ್ಕಳು ಬರುವ ವೇಳೆಗೆಲ್ಲ ಮನೆ ಸೇರಿದ್ದ ಮಂಜುಳಾ ಯಾವುದೇ ಸುಳಿವು ಬರದಂತೆ ಮಕ್ಕಳ ಜತೆ ವರ್ತಿಸಿದಳು. +ಮನೆಯನ್ನು ಓರಣವಾಗಿಟ್ಟಳು. +ಮಂಜುನಾಥ ಎಂಟು ಗಂಟೆಯ ಮೊದಲು ಬರುತ್ತಿರಲಿಲ್ಲ. +ಆದರೂ ಏಳುಗಂಟೆಯ ವೇಳೆಗೆಲ್ಲ ಚೆನ್ನಾಗಿ ಅಲಂಕರಿಸಿಕೊಂಡಳು. +ಅವನು ಬರುತ್ತಲೇ ಬಿಸಿ ಬಿಸಿ ಕಾಫಿಕೊಟ್ಟು ಉಪಚರಿಸಿ 'ದೇವಸ್ಥಾನಕ್ಕೆ ಹೋಗಿ ಬರೋಣ ರೀ, ಬರುವಾಗ ತರಕಾರಿ ತಂದರಾಯಿತು' ಎಂದು ನಗುತ್ತಲೇ ಎಬ್ಬಿಸಿ ಹೊರಟಳು. +ನಿಧಾನವಾಗಿ ನಡೆಯುತ್ತ, ಹಿಂದಿನ ನೆನಪುಗಳನ್ನು ಕೆದಕುತ್ತ ದೆಹಲಿ ಅನುಭವಗಳನ್ನು ಮೆಲುಕು ಹಾಕುವಂತೆ ಮಾಡಿದಳು. +ಅಂದು ರಾತ್ರಿಯಂತೂ ಮಂಜುನಾಥ ಕೀಳರಿಮೆಗೆಪಕ್ಕಾಗದಂತೆ ಎಚ್ಚರಿಕೆ ವಹಿಸಿ ತುಂಬ ಸಂತೃಪ್ತಿಯ ಭಾವವನ್ನು ಪ್ರಕಟಿಸಿದಳು. +ಮಗ್ಗಲು ಬದಲಿಸುವಾಗ ಅವನನ್ನು ಅನುನಯದಿಂದ ಸವರುತ್ತ "ನನಗೂ ಒಬ್ಬಳೇ ಇದ್ದು ತುಂಬ ಬೇಜಾರು. +ಇಲ್ಲಿ ಯಾರನ್ನೂ ಹಚ್ಚಿಕೊಂಡಿರಲಿಲ್ಲ. +ನೀವೀಗ ಬಂದಿದ್ದೀರಲ್ಲ. +ನಿಮ್ಮ ಕೊಲೀಗ್ಸ್‌ ಯಾರಾದರೂ ಪರ ಊರಿನವರಿದ್ದರೆ ಮನೆಗೆ ಕರೆತನ್ನಿ. +ನನಗೂ ಬೇಜಾರು ಕಳೆಯುತ್ತೆ" ಎಂದು ಹೇಳಿದಳು. +ಅವಳ ಸ್ನೇಹಪರ ವರ್ತನೆಗೆ ದಂಗಾಗಿ ಹೋದ ಮಂಜುನಾಥ ಇನ್ನಿಲ್ಲದ ಮುದ್ದಿನಿಂದ "ನಿಮ್ಮ ಜಿಲ್ಲೆಯವರೇ ಒಬ್ಬರು ಬಂದಿದಾರೆ ಕಣೆ,ಹೆಗ್ಗಡದೇವನಕೋಟೆ ತಾಲೂಕಿನವರಂತೆ. +ಮಂಗಳಾ ಅಂತ. +ಸದ್ಯಕ್ಕೆ ಹಾಸ್ಟೆಲಿನಲ್ಲಿದ್ದಾರೆ. . +ಒಂದು ಸಲಮನೆಗೆ ಕರೆಯಬೇಕು ಅಂದುಕೊಂಡಿದ್ದೆ' ಎಂದ." +'ಹೌದ?ಹಾಗಿದ್ರೆ ನಾಳೆ ನಿಮ್ಮ ಯಾವುದೋ ಯೂನಿಯನ್ನು ಸ್ಟ್ರೈಕ್‌ ಇದೆಯಂತಲ್ಲ. +ಬ್ಯಾಂಕ್‌ ನಡೆಯದಿದ್ದರೆ ಅವರನ್ನೂ ಕರೆದುಕೊಂಡು ಬನ್ನಿ. +ಸಂಜೆ ವೇಳೆಗೆ ಅವರನ್ನು ಬಿಟ್ಟು ಬಂದರಾಯಿತು' ಎಂದು ಹೇಳಿದಳು. +ಅವಳ ಕಣ್ಣ ಮುಂದೆ ಹದಿನೈದು ವರ್ಷಗಳ ಹಿಂದೆ ಹುಬ್ಬಳ್ಳಿಯ ಮನೆಗೆ ಇಂಥ ಸಂದರ್ಭದಲ್ಲಿಯೇ ಬಂದಿದ್ದ ರೇಣುಕಳ ಚಿತ್ರ ಮಸುಕಾಗಿ ಮೂಡಿತ್ತು. +ಮರುದಿನ ಎಂದಿನಂತೆ ಬೇಗನೆ ಬ್ಯಾಂಕಿಗೆ ಹೋದ ಮಂಜುನಾಥ ಹನ್ನೊಂದರ ಹೊತ್ತಿಗೆ ಮಂಗಳೆಯೊಂದಿಗೆ ವಾಪಸಾದಾಗ ಮಕ್ಕಳಿಬ್ಬರೂ ಶಾಲೆಗಳಿಗೆ ಹೋಗಿದ್ದರು. +ಮಂಜುಳಾ ನಗುಮುಖದಿಂದ ಮಂಗಳೆಯನ್ನು ಬರಮಾಡಿಕೊಂಡಳು. +ಅವಳನ್ನು ಅಡುಗೆ ಮನೆಗೆ ಕರೆದೊಯ್ದು ಕೂಡಿಸಿಕೊಂಡಳು. +ಅವಳ ಸ್ವಂತ ವಿವರಗಳನ್ನು ಕೇಳುತ್ತ ಕಾಫಿ ಡಿಕಾಕ್ಷನ್‌ ಮಾಡಿದಳು. +ಮಂಜುನಾಥನಿಗೆ ಸಕ್ಕರೆ ಇಲ್ಲದ ಕಾಫಿ ಹಾಕಿ ತನಗೆ ಮತ್ತು ಮಂಗಳೆಗಾಗಿ ಇನ್ನೊಂದು ಸಲ ಕಾಫಿ ಬೆರೆಸಿ ಸಮಾನ ಗಾತ್ರದ ಮೂರು ಲೋಟಗಳಿಗೆ ಬಗ್ಗಿಸಿಕೊಂಡಳು. +'ಬಾ ಹಾಲಿಗೆ, ಹೋಗಿ ಮೂವರೂ ಒಟ್ಟಿಗೆ ಕುಡಿಯೋಣ' ಎಂದಳು. +ಅದುವರೆಗೆ ಬಹುವಚನದಿಂದ ಮಾತಾಡಿಸುತ್ತಿದ್ದ ಮಂಜುಳಾ ಏಕಾಏಕಿ ಏಕವಚನಕ್ಕೆ ಇಳಿದದ್ದು ಮಂಗಳೆಗೆ ಕಸಿವಿಸಿ ಉಂಟುಮಾಡಿತಾದರೂ ಅದನ್ನು ತೋರಿಸಿಕೊಳ್ಳದೆ ಹಿಂಬಾಲಿಸಿದಳು. +ಕಾಫಿ ಲೋಟಗಳಿದ್ದ ಟ್ರೇಯನ್ನು ಟೀಪಾಯ್‌ ಮೇಲಿಟ್ಟ ಮಂಜುಳಾ ಮುಂದಿನ ಬಾಗಿಲು ಮುಚ್ಚಿ ಬಂದಳು. +ಮಂಗಳೆಯ ಪಕ್ಕ ಕುಳಿತು ತನ್ನ ಲೋಟವನ್ನು ಕೈಗೆತ್ತಿಕೊಂಡವಳಿಗೆ ಗಂಡ ಅಮಾಯಕ ಮುಖಭಾವದಲ್ಲಿ ಕಾಫಿ ಕುಡಿಯುತ್ತಿದ್ದುದನ್ನು ಕಂಡು ರೇಗಿಹೋಯಿತು. +'ಓದಿದ್ದೀಯಾ, ಕೆಲಸವೂ ಸಿಕ್ಕಿದೆ. +ಯಾರಾದರೂ ಒಳ್ಳೆಯ ಹುಡುಗನನ್ನು ನೋಡಿ ಮದುವೇ ಮಾಡಿಕೊಳ್ಳಬಾರದೇನೇ?' ಎಂದು ಮಂಜುಳಾ ಯಾವ ಸುಳಿವೂ ಇಲ್ಲದೆ ನೇರವಾಗಿ ಕೇಳಿದಾಗ "ಅದೇನು ಅಷ್ಟು ಒರಟಾಗಿ ಕೇಳುತ್ತೀ ಅಷ್ಟಕ್ಕೂ ಅಂಥ ಮಾತು ಈಗ ಅಗತ್ಯವಾ?" ಎಂದು ಸಿಡುಕಿದ ಮಂಜುನಾಥ. +"ಏನು?ಒರಟಾಯಿತಾ? ಪ್ರಾಯಕ್ಕೆ ಬಂದ ಹುಡುಗಿ ಮದುವೆ ಮಾಡಿಕೋ ಅಂದರೆ ಒರಟಾಗಿ ಕೇಳಿದಂತಾಯಿತಾ?"ಎಂದು ಮಂಜುನಾಥನತ್ತ ತಿರುಗಿದಳು. +'ಹಾಗಲ್ಲ. ಅಂಥ ಪಶ್ನೆಗೆ ಇದು ಸಂದರ್ಭ ಅಲ್ಲ ಅಂದೆ' ಎಂದು ಅವನು ಅಸಮಾಧಾನದ ಧ್ವನಿಯಿಂದ ಹೇಳಿದ. +"ಇನ್ನೆಂಥ ಸಂದರ್ಭ ಬೇಕುರೀ. +ಇಂಥ ಹುಡುಗಿಯರಿಗೆ ನಿಮ್ಮಂಥ ಮದುವೆಯಾದ ಗಂಡಸರೇ ಬೇಕಾ?" ಎಂದು ಅವಳು ಕೇಳಿದಾಗ ಮಂಗಳಾಳಂತೆ ಅವನು ಕೂಡ ಬೆಚ್ಚಿದ. +"ಏನು?ಏನಂಥ ಮಾತಾಡ್ಮೀಯಾ? +ನಾಲಿಗೆ ಬಿಗಿ ಹಿಡಿದು ಮಾತನಾಡು. . ಮನೆಗೆ ಬಂದವರಿಗೆ ಹೀಗೆ ಅಪಮಾನ ಮಾಡ್ತೀಯಾ. . ' ಎಂದು ಕೈ ಮುಷ್ಠಿ ಹಿಡಿದು ಅಬ್ಬರಿಸಿದ. +"ಸುಮ್ನೆ ಇರಯ್ಯ ಕಂಡಿದ್ದೀನಿ. +ಮಹಾ ಗಂಡಸಂತೆ ಗಂಡಸು. +ನಿನ್ನ ಹೊರಳಾಟಕ್ಕೆ ಪ್ರತಿವರ್ಷ ಒಬ್ಬೊಬ್ಬಳು ಬೇಕು. +ನಿನ್ನ ಯೋಗ್ಯತೆ ನನಗೆ ಗೊತ್ತಿಲ್ಲವಾ? +ಹುಬ್ಬಳ್ಳಿಯಲ್ಲಿ ಬಂದಿದ್ದ ರೇಣುಕಾ ನಿನ್ನ ಕ್ಲಾಸ್‌ಮೇಟಂತೆ,ಅವಳನ್ನೇ ಅಲ್ವಾ ನೀನು ಡೆಲ್ಲಿವರೆಗೂ ಬೆನ್ನತ್ತಿ ಹೋಗಿದ್ದು?" ಎಂದು ಅವಳು ಒಮ್ಮೆಗೇ ಏಕವಚನಕ್ಕೆ ಇಳಿದಾಗ ಅದಕ್ಕೆ ದಂಗಾಗಿ ಹೋದ. +ಹಠಾತ್ತನೆ ಸಿಡಿದ ಅವಳ ಆಕ್ರೋಶಕ್ಕೆ ಎದುರಿಗೆ ಕುಳಿತ ಮಂಗಳಾ ಏನೂ ಪ್ರತಿಕ್ರಿಯಿಸಲು ಸಾಧ್ಯವಾಗದೆ ತೊಳಲಾಡಿದಳು. . . +ಒಮ್ಮೆಗೆ ಗುಡುಗು ಸಿಡಿಲಿನ ರಭಸದಿಂದ ಮಳೆ ಸುರಿದು ನಿಂತಂತಾಯಿತು. +ಮನೆಯ ಹಾಲ್‌ನಲ್ಲಿದ್ದ ಎಲೆಕ್ಟ್ರಾನಿಕ್‌ ಗಡಿಯಾರದ ಸೆಕೆಂಡ್‌ ಮುಳ್ಳಿನ ಚಲನೆ ಕೂಡ ಕೇಳಿಸುವಷ್ಟು ನೀರವತೆ. +ಮಂಜುಳಾ ಕೊಟ್ಟ ಅರ್ಧ ಗಂಟೆಯ ಗಡುವನ್ನು ತಡೆದುಕೊಳ್ಳುವ ಶಕ್ತಿ ಇಲ್ಲದವಳಂತೆ ಮಂಜುನಾಥನತ್ತ ಅಸಹಾಯಕ ನೋಟಬೀರಿದ ಮಂಗಳಾ ನಿಧಾನವಾಗಿ ಎದ್ದು ನಿಂತಳು. +ಅವಳು ಬಾಗಿಲ ಬಳಿ ಬಿಟ್ಟ ಚಪ್ಪಲಿಯತ್ತ ಹೆಜ್ಜೆಹಾಕುತ್ತಿದ್ದಂತೆ ರೂಮಿನಿಂದ ಹೊರಬಂದ ಮಂಜುಳಾ "ನಾನು ಸಪ್ತಪದಿ ತುಳಿದು ನಿಮ್ಮ ಕೈಹಿಡಿದವಳು. +ನಿಮ್ಮ ಜೊತೆ ಬದುಕೋದಿಕ್ಕೆ ಬಂದಿದೀನಿ. +ಎಲ್ಲರ ಮುಂದೆ ನೀವೂ ಸಪ್ತಪದಿ ತುಳಿದೇ ನನ್ನ ಜೊತೆ ಬಾಳ್ತೀನಿ ಅಂತ ಹೇಳಿಕೊಂಡೋರು. +ಇಷ್ಟು ವರ್ಷ ನೀವು ನನಗೆ ಅನ್ಯಾಯ ಮಾಡಿದೀರಿ. +ಇನ್ನೂ ಅನ್ಯಾಯ ಮಾಡೋದಕ್ಕೆ ನಾನು ಬಿಡೋದಿಲ್ಲ.” ಎಂದು ಸ್ಪಷ್ಟ ಧ್ವನಿಯಲ್ಲಿ ಹೇಳಿದಾಗ ಅದಕ್ಕೆ ಪ್ರತಿ ಹೇಳುವ ಚೈತನ್ಯಅವನಲ್ಲಿ ಉಳಿದಿರಲಿಲ್ಲ. +ಮಂಕಾದ ಮಂಗಳಾ ಚಪ್ಪಲಿ ಮೆಟ್ಟಿ ಹೊರಡಲು ಅನುವಾದಳು. +"ಸ್ವಲ್ಪ ನಿಲ್ಲಮ್ಮ ಕುಂಕುಮ ತಗೊಂಡು ಹೋಗು" ಎಂದು ಮಂಜುಳಾ ಹೇಳುತ್ತಿದ್ದರೂ ಒದೆ ತಿಂದ ಸಾಕುಪ್ರಾಣಿಯಂತೆ ಮೆಲ್ಲಗೆ ಬಾಗಿಲು ತೆರೆದು, ಭೂಮಿ ಬಾಯ್ತೆರೆದು ನುಂಗಬಾರದೇ ಎಂಬ ಭಾವ ಹೊತ್ತು ರಸ್ತೆಗೆ ಇಳಿದಳು. +ಒಬ್ಬಳೇ ಮಗಳೆಂದು. . . +ಅದೊಂದು ಸಂಜೆ ಸುಮಾರು ಏಳು ಗಂಟೆಯ ಹೊತ್ತಿಗೆ ಪಂಚೆಯುಟ್ಟು, ಬನಿಯನ್‌ ತೊಟ್ಟುಕೊಂಡು ಹಜಾರದಲ್ಲಿ ಕುಳಿತ ರಾಮಕೃಷ್ಣ ತನ್ನ ಹೆಂಡತಿ ಶಿವಾಣಿ ತಂದುಕೊಟ್ಟ ಕಾಫಿ ಹೀರುತ್ತಾ ಮಗಳ ಓದಿನ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾಗ "ಒಳಗೆ ಬರಬಹುದೇ ಸಾರ್‌" ಎಂಬ ಅಪರಿಚಿತ ಧ್ವನಿ ಕೇಳಿಸಿತು. +ಸುಮಾರು ಎಪ್ಪತ್ತು ವರ್ಷದ ಮುದುಕರೊಬ್ಬರು ಹಜಾರವನ್ನು ಪ್ರವೇಶಿಸಿದರು. +ಅಷ್ಟರಲ್ಲಿ ಒಳಗಿನಿಂದ ಬಂದ ಶಿವಾಣಿ "ನೆನ್ನೆನಾನು ಹೇಳ್ತಾ ಇದ್ದೆನಲ್ಲ ರಾಮೂ, ಔಟ್‌ಹೌಸಿಗೆ ಬಂದಿದಾರೆ ಅಂತ, ಇವರೇ ಅವರು" ಎಂದಳು. +"ನಾನು ಸೀತಾರಾಮಯ್ಯ ಅಂತ" ಎಂದು ಆ ಮುದುಕರು ತಮ್ಮ ಪರಿಚಯ ಮಾಡಿಕೊಳ್ಳುತ್ತಿದ್ದಂತೆ ಅರ್ಧದಲ್ಲಿಯೇ ಅವರನ್ನು ತಡೆದ ರಾಮಕೃಷ್ಣ "ಓ, ಬನ್ನಿ ಸಾರ್‌, ನೀವು ಬಂದಿರೋದು ಗೊತ್ತಾಯಿತು" ಎಂದು ಎದುರಿನ ಸೋಫಾ ತೋರಿಸಿ ಅವರನ್ನು ಉಪಚರಿಸಿದ. +ಇಬ್ಬರೂ ಕಾಫಿ ಕುಡಿಯುತ್ತ ಅದೂ ಇದೂ ಮಾತಾಡುತ್ತಿರುವಾಗ ಒಳಗಿನಿಂದ ತನ್ನ ಮಗಳನ್ನು ಹಿಂಬಾಲಿಸಿಕೊಂಡು ಬಂದ ಶಿವಾಣಿ ಕೈಯಲ್ಲಿದ್ದ ಹಾರ್ಲಿಕ್ಸ್‌ ಲೋಟವನ್ನು ಮುಂದೆ ಚಾಚಿ "ಇದೊಂದು ಸಲ ಕುಡಿದುಬಿಡೋ, ಮತ್ತೆ ರಾತ್ರಿ ಮಲಗೋವರೆಗೂ ನಿನ್ನ ತಂಟೆಗೆ ಬರಲ್ಲ" ಎಂದು ಪೂಸಿ ಮಾಡಿದಳು. +"ನಿನಗೆ ಎಷ್ಟು ಸಲ ಹೇಳೋದು, ಈಗ ಬೇಡ ಅಂತ. +ಒಳ್ಳೆ ಪ್ರಾಣ ತಿಂತೀರಪ್ಪ" ಎಂದೆಲ್ಲ ಸಿಡುಕುತ್ತಲೇ ಮಗಳು ತುಟಿ ಮುಂದೆ ಮಾಡಿದಳು. +ಅದುವರೆಗೂ ಈ ಸುಖೀ ಸಂಸಾರವನ್ನು ಕಣ್ಣಲ್ಲಿ ತುಂಬಿಕೊಂಡಿದ್ದ ಸೀತಾರಾಮಯ್ಯ "ಹಾಗೇಕೆ ಒತ್ತಾಯ ಮಾಡ್ತೀರಿ? +ಮಗೂಗೆ ಕುಡಿಯೋಕೆ ಬರೋಲ್ಲವಾ?" ಎಂದು ಕಕ್ಕುಲತೆಯಿಂದ ಕೇಳಿದರು. +ಅದಕ್ಕೆ ರಾಮಕೃಷ್ಣ"ಇಲ್ಲ ಇಲ್ಲ, ನಾವೇ ಕುಡಿಸುತ್ತೇವೆ ಅಷ್ಟೆ ಒಬ್ಬಳೇ ಮಗಳು ನೋಡಿ. +ಇಷ್ಟಕ್ಕೂ ನಮಗೆ ಬೇರೆ ಏನು ಕೆಲಸಇದೆ ಮನೇಲಿ?" ಎಂದ ಹೆಮ್ಮೆಯಿಂದ. +"ಹೌದಾ. . . ನನಗೇನೋ ಹೀಗೆ ಮಕ್ಕಳನ್ನು ತುಂಬಾ ಮುದ್ದು ಮಾಡೋದು ಒಳ್ಳೇದಲ್ಲ ಅನ್ನಿಸ್ತು. +ಸಾರಿ, ಹೀಗೆ ಹೇಳಿದೆ ಅಂತ ಬೇಜಾರು ಮಾಡ್ಕೋಬೇಡಿ. +ನಾನಿನ್ನು ಬರ್ತೀನಿ" ಎಂದು ಹೊರ ನಡೆದುಬಿಟ್ಟರು ಅವರು. +ಔಟ್‌ಹೌಸಿನ ಬಾಗಿಲು ಮುಚ್ಚಿದ್ದು ಕೇಳಿಸಿದ್ದೇ ರಾಮಕೃಷ್ಣ "ನಮ್ಮ ಮಗಳಿಗೆ ನಾವು ಊಟ ಮಾಡಿಸಿ, ಹಾಲುಕುಡಿಸಿದರೆ ಇವನಿಗೇನಂತೆ ಮುದಿಯನಿಗೆ. . " ಎಂದು ಸಿಡಿಮಿಡಿಗುಟ್ಟಿದ. +"ಕೆಲವರು ಹಾಗೇನೇ. +ಅದೇನೋ ಜನರೇಷನ್‌ ಗ್ಯಾಪ್‌ ಅಂತಾರಲ್ಲ" ಎಂದು ದನಿಗೂಡಿಸಿದಳು ಶಿವಾಣಿ. +ಆಮೇಲೆ ಇಬ್ಬರದೂ ಊಟವಾಗಿದ್ದೇ ಶಿವಾಣಿ ಇನ್ನೊಂದು ಸಲ ರೂಪನಿಗೆ ಹಾಲು ಕುಡಿಸಿ ಮಲಗಲು ಹಾಸಿಗೆ ಸಿದ್ಧಪಡಿಸುತ್ತಿದ್ದಾಗ ಔಟ್‌ಹೌಸಿನ ಅದೇ ಸೀತಾರಾಮಯ್ಯ ಮತ್ತೊಮ್ಮೆ ಬಾಗಿಲು ಬಡಿದು ಒಳಗೆ ಬಂದವರು "ಏನಿಲ್ಲ ಸಾರ್‌, ನಮ್ಮವಳಿಗೆ ಸ್ವಲ್ಪತಲೆ ಸುತ್ತು ನಿಂಬೆಹಣ್ಣು ಏನಾದರೂ ಇಟ್ಟಿದ್ದೀರಾ ಅಂತ ಬಂದೆ” ಎಂದಾಗ ಶಿವಾಣಿ ಸಿಡುಕಿನಿಂದಲೇ ಫ್ರಿಜ್‌ಬಾಗಿಲು ತೆಗೆದು ನಿಂಬೆ ಹಣ್ಣೊಂದನ್ನು ಹುಡುಕಿ ಕೊಟ್ಟಳು. +ಅವರು ಇನ್ನೇನು ಹೊರಗೆ ಹೆಜ್ಜೆಯಿಡಬೇಕು,ಆಗ ಬೇಕೆಂದೇ “ಇನ್ನೇನಾದರೂ ಬೇಕಿತ್ತೇ?" ಎಂದೂ ಕೇಳಿಬಿಟ್ಟಳು. +"ಸಾರಿ, ಅ ವೇಳೆಯಲ್ಲಿ ತೊಂದರೆ ಕೊಟ್ಟೆ"ಎಂದು ಹೊರಬಿದ್ದರು ಸೀತಾರಾಮಯ್ಯ. +ರಾಮಕೃಷ್ಣ ಅಂದು ಆಫೀಸಿನಿಂದ ಮನೆಗೆ ಬರುವ ಹೊತ್ತಿಗೆ ಅವನ ಹೆಂಡತಿ ಊಟದ ಮೇಜಿನ ಮೇಲೆ ಹರಡಿಕೊಂಡಿದ್ದ ಪುಸ್ತಕಗಳ ಮಧ್ಯೆ ತನ್ನ ಮುದ್ದಿನ ಮಗಳಿಗೆ ಏನೇನೋ ವ್ಯಂಜನಗಳಲ್ಲಿ ಕಲೆಸಿದ ಅನ್ನವನ್ನು ತುತ್ತು ಮಾಡಿ ತಿನ್ನಿಸುತ್ತಿದ್ದಳು. +ಮಗಳು ರೂಪ "ಅದ್ಯಾಕೆ ಹಾಗೆ ತುರುಕ್ತೀಯಾ? +ಸ್ವಲ್ಪ ನಿಧಾನ ಮಾಡಕ್ಕಾಗಲ್ವ,ನನ್ನ ಕರ್ಮ."ಎಂದು ತಲೆ ಚಚ್ಚಿಕೊಳ್ಳುತ್ತಾ ತಾಯಿಗೆ ಜೋರು ಮಾಡಿ, ಮೇಜಿನ ಮೇಲೆ ಪುಸ್ತಕಹರವಿಕೊಂಡು ಹೋಂ ವರ್ಕ್‌ ಶುರು ಮಾಡಿದವಳು ತನ್ನ ತಂದೆಯನ್ನು ನೋಡಿದ್ದೇ. +"ಸರಿ, ಈಗ ನೀನೂಬಂದೆ. +ಇನ್ನು ನನ್ನ ಹೋಂ ವರ್ಕ್‌ ಮುಗಿದ ಹಾಗೇನೇ" ಎಂದು ನಿಡಿದಾಗಿ ಉಸಿರೆಳೆದುಕೊಂಡಳು. +"ಹಾಗೇಕೆ ಆಡ್ರೀಯೋ ನಾನು ಬಂದ್ರೆ, ನೋಡು ಎಂಥ ಸೇಬು ತಂದಿದೀನಿ. +ಇಂಪೋರ್ಟೆಡ್ಡು" ಎನ್ನುತ್ತ ಇನ್ನಷ್ಟು ಲಲ್ಲೆಗರೆದು ಮಗಳ ಬೆನ್ನು ಸವರಿದ ರಾಮಕೃಷ್ಣ . +"ಸದ್ಯ.ನೀನು ಬಚ್ಚಲಿಗೆ ಹೋಗಿ ಮುಖಾತೊಳೆದುಕೊಂಡು ಬಾರಪ್ಪ" ಎಂದು ಅವನತ್ತ ತಿರುಗಿಯೂ ನೋಡದೆ ತನ್ನ ಕೆಲಸದಲ್ಲಿ ಮುಳುಗಿದಳು ರೂಪ. +ಸರ್ಕಾರಿ ಇಲಾಖೆಯಲ್ಲಿ ಒಳ್ಳೆಯ ಕೆಲಸದಲ್ಲಿದ್ದ ರಾಮಕೃಷ್ಣ ಮದುವೆಯಾದ ಎರಡೇ ವರ್ಷಗಳಲ್ಲಿ ಹುಟ್ಟಿದವಳು ರೂಪ. +ಶಿವಾಣಿ ಪದವೀಧರೆಯಾದರೂ ಕೆಲಸಕ್ಕೆ ಯತ್ನಿಸದೆ ಮನೆಯಲ್ಲಿಯೇ ಉಳಿದವಳು. +ಬೆಂಗಳೂರಿನ ಜೀವನ, ಒಬ್ಬನ ಸಂಬಳದಲ್ಲಿ ಎಲ್ಲ ಸಾಗಬೇಕಲ್ಲವೇ? +ಒಂದೇ ಮಗು ಸಾಕು ಎಂದು ಇಬ್ಬರೂ ತೀರ್ಮಾನಿಸಿದ್ದರು. +ಒಬ್ಬಳೇ ಮಗಳಿಗೆ ತಮ್ಮಿಬ್ಬರ ಹೆಸರುಗಳ ಮೊದಲಕ್ಷರಗಳನ್ನು ಸೇರಿಸಿ ಒಂದು ಹೊಸಹೆಸರಿಟ್ಟರು. +ಅದರಂತೆ ಶಾಲೆಯಲ್ಲಿ ಮಗಳ ಹೆಸರು "ರಾಶಿ ರೂಪ". +ಹೆಸರನ್ನು ಹಿಂದುಮುಂದಾಗಿ ಓದಿದರೆ ರೂಪರಾಶಿ. +ಎಷ್ಟು ಅರ್ಥಪೂರ್ಣವಾದ ಹೆಸರು ಎಂದು ಇಬ್ಬರಿಗೂ ಸಂತೋಷ. +ಅಲ್ಲದೆ ಈ ಮಗಳನ್ನು ಮಗನ ಹಾಗೆ ಬೆಳೆಸಬೇಕೆಂಬುದು ಅವರಿಬ್ಬರ ಒಮ್ಮತದ ನಿರ್ಧಾರ. +ರೂಪ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುವಷ್ಟು ದೊಡ್ಡವಳಾಗಿದ್ದರೂ ಶಿವಾಣಿ ಈಗಲೂ ಅವಳಿಗೆ ಊಟ ಮಾಡಿಸುತ್ತಾಳೆ. +ಮಗನನ್ನು ಕರೆಯುವಂತೆಯೇ ತಂದೆ ತಾಯಿ ಇಬ್ಬರೂ ಅವಳನ್ನು "ಏನೋ", "ಹೋಗೋ", "ಬಾರೋ"ಎಂದೇ ಕರೆಯುತ್ತಾರೆ. +ಇಬ್ಬರದೂ ಸಮಾನತೆಯ ದೃಷ್ಟಿ. +ಶಿವಾಣಿ ಕೂಡ ಗಂಡನನ್ನು "ರಾಮು" ಎಂದೇ ಏಕವಚನದಲ್ಲಿ ಕರೆಯುತ್ತಾಳೆ. +ಮನೆಯಲ್ಲಿ ಸ್ನೇಹಮಯ ವಾತಾವರಣ. +ಪರಸ್ಪರ ಸಮಾನತೆಯ ಸಂಸಾರ. +ರಾತ್ರಿಯ ಹೊತ್ತು ಅವರು ಮಗಳನ್ನು ತಮ್ಮಿಬ್ಬರ ಮಧ್ಯೆ ಮಲಗಿಸಿಕೊಳ್ಳುವುದು ವಾಡಿಕೆ. +ಅವೊತ್ತೂ ಅದೇವ್ಯವಸ್ಥೆ ಮಾಡುತ್ತಿದ್ದಾಗ ರೂಪ “ಇಬ್ಬರೂ ಒಳ್ಳೆ ಎಮ್ಮೆಗಳ ತರ ಇದೀರ. +ನಿಮ್ಮ ಮಧ್ಯೆ ನಂಗೆ ಜಾಗಾನೇ ಇರಲ್ಲ. +ತುಂಬ ಇಕ್ಕಟ್ಟಾಗುತ್ತೆ. +ಬೇರೇನೆ ಹಾಸಿಗೆ ಮಾಡಿಕೊಡಿ" ಎಂದಳು. +ಮಗಳ ಬೇಡಿಕೆಗೆ ಚಕಿತಗೊಂಡ ಶಿವಾಣಿ "ಏನೋ ಇದು. +ಈಗಲೇ ಬೇರೆ ಹೋಗ್ತೀನಿ ಅಂತೀಯೇನೋ" ಎಂದು ಛೇಡಿಸಿದಳು. +"ಹೋಗಲಿಬಿಡೇ, ಅವನಿಗೂ ಇಕ್ಕಟ್ಟಾಗುತ್ತಂತೆ. +ಬೇರೆ ಹಾಸಿಗೇನೇ ಹಾಸಿಕೊಟ್ಟರಾಯಿತು" ಎಂದು ರಾಮಕೃಷ್ಣ ಮನೆಯಲ್ಲಿ ಅತಿಥಿಗಳಿಗಾಗಿ ಇಟ್ಟಿದ್ದ ಹಾಸಿಗೆಯನ್ನು ಹೊರ ತೆಗೆದ. +ಅವನು ಮಗಳನ್ನು ಬೇರೆ ಮಲಗಿಸಿ ಹಾಸಿಗೆಗೆ ಬರುವಷ್ಟರಲ್ಲಿ ಎಂದಿನ ಮಲಗುವ ಸಮಯ ಮೀರಿತ್ತು. +ನಿದ್ದೆಯೂ ಸುಳಿಯುವಂತಿರಲಿಲ್ಲ. +ಶಿವಾಣಿ ಜತೆ ಸಂಜೆ ಹೆಚ್ಚೇನೂ ಮಾತಾಡಿರಲಿಲ್ಲ. +ಸದ್ಯಕ್ಕೆ ಬೇರೇನೂ ವಿಷಯವಿಲ್ಲದೆ ಔಟ್‌ಹೌಸ್‌ಗೆ ಬಂದಿದ್ದ ಹೊಸ ಕುಟುಂಬವನ್ನು ಕುರಿತ ಕುತೂಹಲ ತಣಿಸಿಕೊಳ್ಳಲು “ಏನಂತೆ ವೃದ್ಧ ದಂಪತಿ ಸಂಗತಿ' ಎಂದು ಪೀಠಿಕೆ ಹಾಕಿದ. +"ಅವರೇನೂ ವೃದ್ಧ ದಂಪತಿ ಅಲ್ಲ ಕಣೊ ರಾಮು. +ಅವನಷ್ಟೆ ವೃದ್ಧ. +ಅವನ ಹೆಂಡತಿ ನನಗಿಂತ ಐದಾರುವರ್ಷವಷ್ಟೆ ದೊಡ್ಡವಳಂತೆ ಕಾಣುತ್ತಾಳೆ. +ತುಂಬ ವಯಸ್ಸಾದ ಮೇಲೆ ಮದುವೆ ಆದದ್ಬಂತೆ. +ಒಬ್ಬಳೇ ಮಗಳಂತೆ. +ಅವಳನ್ನು ಇಂಜಿನಿಯರ್‌ ಮಾಡಿಸಿ ಮದುವೆ ಮಾಡಿಕೊಟ್ಟಿದ್ದಾರಂತೆ" ಎಂದು ತನಗೆ ಗೊತ್ತಿದ್ದನ್ನು ಹೇಳಿ ಆಕಳಿಸಿದಳು ಶಿವಾಣಿ. +ಅವಳು ನಿದ್ದೆಗೆ ಜಾರುತ್ತಿರುವುದನ್ನು ಕಂಡು 'ಆಗಲಿ ಬೆಳಿಗ್ಗೆಯಿಂದ ಕೆಲಸ ಮಾಡಿ ದಣಿದಿದ್ದೀಯಾ, ಮಲಗು' ಎಂದು ಮೃದುವಾಗಿ ಅವಳ ತಲೆಕೂದಲನ್ನು ಸವರಿದ. +ಮಗಳನ್ನು ಆದರ್ಶ ರೀತಿಯಲ್ಲಿ ಬೆಳೆಸುತ್ತಿರುವ ತಮ್ಮ ಬಗ್ಗೆ ಆ ಮುದುಕ ಅದೇನೋ ಕೊಂಕು ನುಡಿದನಲ್ಲ ಎಂದು ಪೆಚ್ಚಾಗಿತ್ತು ರಾಮಕೃಷ್ಣನಿಗೆ. +ಶಿವಾಣಿಗೆ ಆಗಲೇ ನಿದ್ದೆ ಬಂದುಬಿಟ್ಟಿತ್ತು. +ಲೈಟ್‌ ಆರಿಸುವ ಮುನ್ನ ಮಗಳ ಹಾಸಿಗೆ ಬಳಿ ಸರಿದು ಹೊದಿಕೆಯನ್ನು ಸರಿಪಡಿಸಿದ. +ಸೊಳ್ಳೆ ಪರದೆ ಸಿಕ್ಕಿಸಿದ. +ವಾಪಸು ಬಂದವನು ಪತ್ನಿಗೆ ಸರಿಯಾಗಿ ಹೊದಿಸಿ, ಅವಳ ಮುಂಗುರುಳನ್ನು ಮೃದುವಾಗಿ ಸವರಿದ. +ಕಣ್ಣು ಮುಚ್ಚಿದರೆ ಸೀತಾರಾಮಯ್ಯ ಹೇಳಿದ ಮಾತು ಅನುರಣಿಸಿದಂತಾಗುತ್ತಿತ್ತು. +ಎಂಥ ಶನಿ ಪೀಡೆ ನನ್ನ ರಾತ್ರಿಯ ಮೂಡನ್ನೇ ಹಾಳುಮಾಡಿಬಿಟ್ಟ. . ' ಎಂದು ಶಪಿಸುತ್ತಾ ಹೊರಳಾಡಿದ. +ಎಷ್ಟೋ ಹೊತ್ತಿಗೆ ನಿದ್ದೆ ಬರುವಂತಾದರೂ ಮಂಪರಿನಲ್ಲಿಮನೆ ಹಿಂಬದಿಯೇ ಇದ್ದ ಔಟ್‌ಹೌಸ್‌ನಿಂದ ಏನೇನೋ ಗುಸು ಗುಸು ಅಸ್ಪಷ್ಟವಾಗಿ ಕೇಳಿಸುತ್ತಿತ್ತು. +ಬೆಳಿಗ್ಗೆ ಎದ್ದಾಗ ಶಿವಾಣಿ ಮಗಳನ್ನು ಶಾಲೆಗೆ ತಯಾರು ಮಾಡುತ್ತಿದ್ದಳು. +ಸ್ನಾನ ಮಾಡಿಕೊಂಡು ಬಂದ ರೂಪ ಬಟ್ಟೆ ಇಸ್ತ್ರಿ ಮಾಡಿಲ್ಲ ಎಂದು ತಕರಾರು ಮಾಡಿದಳು. +ತಕ್ಷಣ ಎದ್ದ ರಾಮಕೃಷ್ಣ "ಸಾರಿ ಕಣೊ, ನಿನ್ನೆ ರಾತ್ರೀನೇ ಮಾಡಬೇಕಿತ್ತು ಈಗ ಎರಡೇ ನಿಮಿಷದಲ್ಲಿ ಮಾಡಿ ಕೊಡ್ತೇನೆ" ಎಂದು ಟೇಬಲ್‌ ಜೋಡಿಸಿ ಇಸ್ತಿಪೆಟ್ಟಿಗೆಯನ್ನು ಸ್ಟಿಚ್‌ಗೆ ಸಿಕ್ಕಿಸಿದ. +ಸ್ವಲ್ಪ ಹೊತ್ತಿಗೆಲ್ಲ ಅವಳ ಸ್ಕರ್ಟ್‌ ಮತ್ತು ಟಾಪ್‌ ಇಸ್ತ್ರಿ ಆಯಿತು. +ಆಟೋಬರುತ್ತಲೇ ವಾಡಿಕೆಯಂತೆ ಇಬ್ಬರೂ ಹೊರಗಡೆ ನಿಂತು ಮಗಳಿಗೆ ಟಾಟಾ ಮಾಡಿದರು. +ಗೇಟ್‌ ಮುಚ್ಚಿವಾಪಸು ಬರುತ್ತಿರುವಾಗ ಮತ್ತೆ ಸೀತಾರಾಮಯ್ಯನವರ ಮುಖ ದರ್ಶನ. +'ತುಂಬ ಥ್ಯಾಂಕ್ಸ್‌ ಸಾರ್‌, ನಿನ್ನೆ ರಾತ್ರಿ ಕೊಟ್ಟ ನಿಂಬೆ ಹಣ್ಣಿನಿಂದ ಅವಳ ತಲೆ ಸುತ್ತು ವಾಸಿಯಾಯಿತು. +ರಸ ಹಿಂಡಿ ಸ್ದಲ್ಪ ಉಪ್ಪು ಹಾಕಿಕೊಟ್ಟದ್ದಷ್ಟೆ. +ರಾಮಬಾಣದಂತೆ ಕೆಲಸ ಮಾಡಿತು. +ಎಲ್ಲ ನಿಂಬೆ ಹಣ್ಣೂ ಹಾಗಿರಲ್ಲ ಸಾರ್‌, ಕೆಲವರ ಕೈಗುಣ ಅದಕ್ಕೆ ಸೇರುತ್ತೆ' ಎಂದು ಅಗತ್ಯಕ್ಕಿಂತ ಹೆಚ್ಚು ವಿನೀತರಾಗಿ ಹೇಳಿದರು ಅವರು. +“ಒಳ್ಳೆ ಶರ್ಮ, ಬೆಳಿಗ್ಗೆಬೆಳಿಗ್ಗೆ' ಎಂದು ಮನಸ್ಸಿನಲ್ಲಿಯೇ ಅಂದುಕೊಂಡ ರಾಮಕೃಷ್ಣ “ಅದರಲ್ಲೇನು ಬಿಡಿ' ಎಂದು ಚುಟುಕಾಗಿಅಂದು ಒಳಗೆ ಸರಿದ. +ಶಿವಾಣಿ ತನಗೇನೂ ಕೇಳಿಸಲೇ ಇಲ್ಲವೆಂಬಂತೆ ಬಾಗಿಲು ಮುಚ್ಚಿದಳು. +ಸ್ವಲ್ಪ ಹೊತ್ತಿನ ನಂತರ ರಾಮಕೃಷ್ಣ ಕಚೇರಿಗೆ ಹೊರಟು ನಿಂತಾಗ ಶಿವಾಣಿ ವಾಡಿಕೆಯಂತೆ ಬಾಗಿಲ ಬಳಿನಿಂತಳು. +ಮಗಳಿಗೆ ಹನ್ನೊಂದು ನಡೆಯುತ್ತಿದ್ದರೂ ದಾಂಪತ್ಯದಲ್ಲಿನ್ನೂ ಹೊಸತನ ಉಳಿಸಿಕೊಂಡವರು. +ಬಾಗಿಲನ್ನು ಮರೆ ಮಾಡಿ ಅವಳನ್ನು ಹತ್ತಿರ ಎಳೆದುಕೊಂಡ. +ಎರಡೂ ಕೆನ್ನೆಗಳಿಗೆ ಮುತ್ತಿಟ್ಟು 'ಬರಲೇನೋ'ಎಂದ. +ಬಾಗಿಲು ತೆರೆಯುವಷ್ಟರಲ್ಲಿ ಹೆಜ್ಜೆ ಸಪ್ಪಳ ಕೇಳಿಸಿತು. +ಇವನು "ಒಳ್ಳೆ ಕಾಟ" ಎಂದುಕೊಳ್ಳುತ್ತಿದ್ದಂತೆ “ಇನ್ನು ಶುರುವಾಗಬೇಕಲ್ಲ ಸಾರ್‌, ಫ್ಯಾಕ್ಟರಿ ದುಡಿಮೆ.” ಎಂದು ಇವನ ಪ್ರತಿಕ್ರಿಯೆಗೂ ಕಾಯದೆ ಸೀತಾರಾಮಯ್ಯ ಗೇಟಿನತ್ತ ನಿಧಾನವಾಗಿ ಹೆಜ್ಜೆ ಹಾಕಿದರು. +ಅವನು ಕಣ್ಮರೆಯಾಗುವವರೆಗೂ ಬಾಗಿಲಲ್ಲಿ ನಿಂತ ರಾಮಕೃಷ್ಣ "ಸರ್ಕಾರಿ ಕಚೇರಿಲಿದೀನಿ, ಫ್ಯಾಕ್ಟರಿ ಅಂತೆ ಫ್ಯಾಕ್ಟರಿ" ಎಂದು ಅಸಹನೆಯಿಂದ ಮುಖಮಾಡಿದವನು ಪತ್ನಿಯತ್ತ ತಿರುಗಿ "ಚಿನ್ನಾ, ಈ ದಂಪತಿಗಳ ಬಗ್ಗೆ ಇನ್ನಷ್ಟು ವಿಷಯ ಪತ್ತೆ ಮಾಡ್ತೀಯಾ,ಮುದುಕ ಭಲೇ ಇರಿಟೇಟ್‌ ಮಾಡ್ತಾನೆ" ಎಂದು ಹೇಳಿ ಕಚೇರಿಯತ್ತ ಹೊರಟ. +ಕಚೇರಿಯಲ್ಲಿ ಕೆಲಸದಲ್ಲಿ ತೊಡಗಿದ್ದರೂ ಸೀತಾರಾಮಯ್ಯ ಆಡಿದ ಮಾತು ಆಗಾಗ ಬಾಧಿಸುತ್ತಲೇ ಇತ್ತು. +ಹಾಗೇಕೆ ಹೇಳಿದ ಮುದುಕ? +ಮುದ್ದಿನಿಂದ ಬೆಳೆಸಿದರೆ ಮಕ್ಕಳು ಯಾಕೆ ಹಾಳಾಗಬೇಕು? + ಅಷ್ಟಕ್ಕೂ ಒಬ್ಬಳೇ ಮಗಳನ್ನು ಚೆನ್ನಾಗಿ ಬೆಳೆಸುವುದೂ ತಪ್ಪೇ? +ಯಾರೋ ಹೊಟ್ಟೆಕಿಚ್ಚಿಗೆ ಹೇಳಿದರೆಂದು ತಾನೇಕೆ ಇಷ್ಟು ತಲೆಕೆಡಿಸಿಕೊಳ್ಳಬೇಕು ಎಂದು ಸಮಾಧಾನ ಮಾಡಿಕೊಳ್ಳಲು ಪ್ರಯತ್ನಿಸಿದ. +ಕಚೇರಿಯ ಕೆಲಸ ಸಾಗಿದಂತೆ ಆ ವಿಷಯ ಮರೆತೂ ಹೋಯಿತು. +ಕಚೇರಿ ಮುಗಿದ ಮೇಲೆ ಬಸ್ಸು ಹಿಡಿದು ಮನೆ ಸೇರಿದ. +ಹೆಂಡತಿ, ಮಗಳೊಂದಿಗೆ ಲಲ್ಲೆಗರೆಯುತ್ತಾ ಸಮಯ ಕಳೆದು ರಾತ್ರಿ ಮಗಳಿಗೆ ಪ್ರತ್ಯೇಕ ಹಾಸಿಗೆಯ ವ್ಯವಸ್ಥೆ ಮಾಡಿ ಮಲಗಲು ಬಂದ. +ಮಗಳು ನಿದ್ದೆಗೆ ಜಾರಿದ್ದು ಖಚಿತವಾದ ಮೇಲೆ ಸಂಸಾರ ರಸಾಸ್ವಾದನೆಯಲ್ಲಿ ತೊಡಗಿದ ಅವರಿಗೆ ಜಗತ್ತಿನಲ್ಲಿ ತಮ್ಮಿಬ್ಬರ ವಿನಾ ಅನ್ಯಜೀವಿಗಳೇ ಇಲ್ಲವೆನ್ನುವಷ್ಟು ತನ್ಮಯತೆ ಮೂಡಿತು. +ಕಚೇರಿಯ ಜಂಜಡಗಳು ರಾಮಕೃಷ್ಣನನ್ನು ಬಾಧಿಸಲಿಲ್ಲ. +ಮಧ್ಯಾಹ್ನದ ಹರಟೆಯ ಸಂದರ್ಭದಲ್ಲಿ ಸೀತಾರಾಮಯ್ಯನವರ ಕಿರಿಯ ವಯಸ್ಸಿನ ಪತ್ನಿ ಪ್ರೇಮಾ ತನಗೆ ಎರಡು ಮನೆಗಳಲ್ಲಿ ಅಡುಗೆ ಮಾಡುವ ಕೆಲಸ ಸಿಕ್ಕಿದೆಯೆಂದು ಹೇಳಿದ್ದು ಶಿವಾಣಿಯನ್ನು ಕಾಡಲಿಲ್ಲ. +ನೈಸರ್ಗಿಕವಾಗಿ ಬೆಳೆದ ಕಿರು ಉದ್ಯಾನದಲ್ಲಿ ಸ್ವಚ್ಛಂದವಾಗಿ ಏದುಸಿರು ಬಿಡುವಷ್ಟು ವಿಹರಿಸಿ ತಂಗಾಳಿಯ ತಂಪಿನಲ್ಲಿ ವಿಶ್ರಮಿಸಿಕೊಂಡ ಸಹಜಸ್ಥಿತಿಗೆ ಬಂದ ಮೇಲೆ "ಏನಾದರೂ ಮಾಹಿತಿ ಸಿಕ್ತೇನೋ"ಎಂದು ವಿಷಯಕ್ಕೆ ಪೀಠಿಕೆ ಹಾಕಿದ. +"ಏಯ್‌, ಅವರದೊಂದು ದೊಡ್ಡ ಕತೇನೆ ಇದೆ ಕಣೊ' ಎಂದಳು ಶಿವಾಣಿ. +"ತೀರ ದೊಡ್ಡದಾಗಿದ್ದರೂ ಚಿಕ್ಕದಾಗಿ ಹೇಳು. +ಅವನು ನಿನ್ನೆ ಮಾಡಿದ್ದ ಕಿರಿಕ್‌ ಇನ್ನೂ ಮರೆತು ಹೋಗಿಲ್ಲ ನೋಡು" ಎಂದು ಕತೆಕೇಳಲು ಅನುಕೂಲವಾಗುವಂತೆ ಅವಳೆಡೆಗೆ ಮಗ್ಗಲು ಬದಲಿಸಿದ. +ಮಳೆ ನಿಂತರೂ ನಿಲ್ಲದ ಮಳೆ ಹನಿಯಂತೆ ಅವಳ ಬೆರಳಲ್ಲಿ ಬೆರಳು ಸೇರಿಸಿ ಸವರಲು ಆರಂಭಿಸಿದ. +"ಸೀತಾರಾಮಯ್ಯ ಯಾವುದೋ ಖಾಸಗೀ ಕಚೇರಿಯಲ್ಲಿ ಇದ್ದವರಂತೆ. . ಮಧ್ಯವಯಸ್ಸಿನಲ್ಲಿ ಮದುವೆಯಾಯ್ತಂತೆ. + ಮದುವೆಯಾದಾಗ ಪ್ರೇಮಾ ಹತ್ತೊಂಬತ್ತೋ ಇಪ್ಪತ್ತರಲ್ಲೋ ಇದ್ದರಂತೆ. +ಎರಡೇ ವರ್ಷದಲ್ಲಿ ಮಗಳು. +ತನಗೆ ವಯಸ್ಸಾಗಿದೆ, ಇನ್ನು ಮಕ್ಕಳು ಬೇಡ ಅಂತ ಅಜ್ಜ ಇವಳಿಗೆ ಆಪರೇಷನ್‌ಮಾಡಿಸಿದ ನೋಡು. . . ' +“ಘಾಟಿ, ಮುದುಕ' ಎಂದ ರಾಮಕೃಷ್ಣ. +“ಮಗಳನ್ನು ಇಂಜಿನಿಯರ್‌ ಮಾಡಿಸಿದರು. +ಅವಳಿಗೂ ಕೆಲಸ. +ಸಂಬಂಧದಲ್ಲೇ ಹುಡುಗ-ಅವನೂ ಇಂಜಿನಿಯರ್‌ ಅಂತೆ. +ಇದ್ದ ಒಂದು ರೆವಿನ್ಯೂ ಸೈಟನ್ನು ಮಗಳ ಹೆಸರಿಗೆ ಮಾಡಿದ ಮೇಲೆ ಹುಡುಗ ಮದುವೆಗೆ ಒಪ್ಪಿಕೊಂಡನಂತೆ. +ಇವನ ಪಿಎಫ್‌, ಗ್ರಾಚ್ಯುಟಿ ಎಲ್ಲ ಖರ್ಚು ಮಾಡಿ ಮದುವೆ ಮುಗಿಸಿ ಮಗಳಮನೆ ಸೇರಿಕೊಂಡರಂತೆ. . ' +"ಮತ್ಯಾಕೆ, ಇಲ್ಲಿ ಔಟ್‌ಹೌಸ್‌ಗೆ ಬಂತು ಸವಾರಿ?" +"ಐದಾರು ತಿಂಗಳು ಹೇಗೂ ಇದ್ದರಂತೆ. +ಬೆಳಿಗ್ಗೆ ಎದ್ದು ಮಗಳು ಅಳಿಯ ಕೆಲಸಕ್ಕೆ ಹೋಗೋರು. +ರಾತ್ರಿ ಎಷ್ಟೋ ಹೊತ್ತಿಗೆ ಬರೋರು. +ಇಬ್ರೂ ಸಾಫ್ಟ್‌ವೇರಂತೆ. +ಮನೆಯಲ್ಲಿ ಹುಡುಗನ ತಾಯಿ. +ಬೆಳಿಗ್ಗೆ ತಿಂಡಿಮಾಡಿದ್ರೆ ಮಾಡಿದ್ರು. +ಇಲ್ಲದಿದ್ರೆ ಇಲ್ಲ. +ಎಷ್ಟೋ ದಿನ ಮಗಳು ಮಧ್ಯರಾತ್ರಿಗೆ ಬರ್ತಿದ್ದಳಂತೆ. +ವಾರದಲ್ಲಿ ಶನಿವಾರ ಭಾನುವಾರ ಮಾತಿಗೆ ಸಿಗೋರು. +ಹೀಗೆ ಹೀಗೆ ಕಣಮ್ಮ ನಮಗೆ ತುಂಬ ಇಕ್ಕಟ್ಟಾಗೃದೆ ಅಂತ ಮಗಳ ಹತ್ರಗಟ್ಟಿಯಾಗಿ ಹೇಳಂಗಿಲ್ಲ. +ಇವರಿಗೊಂದು ರೂಮು ಅಂತ ಕೊಟ್ಟಿದ್ರೂ ಅವರ ಕಡೆಯವರು ಬಂದ್ರೆ ಇವರು ಹಾಲಿನಲ್ಲಿ ಮಲಗಬೇಕು. . " +"ಅಷ್ಟಕ್ಕೂ ಈ ಮುದುಕ ಅಳಿಯನ ಮನೆಗೆ ಯಾಕೆ ಹೋಗಿ ಸೇರ್ಕೊಂಡ?' +ಅಳಿಯನ ಮನೆ ಅಂತ ಸೇರ್ಕೊಂಡಿದ್ದಲ್ಲ. +ಒಬ್ಬಳೇ ಮಗಳಲ್ವ ಅವಳ್ನ ಬಿಟ್ಟು ಇರೋದು ಹ್ಯಾಗೆ ಅಂತ ಯೋಚಿಸಿದ್ರಂತೆ. +ಹೋದ ತಿಂಗಳು ಎರಡು ದಿನ ಒಟ್ಟಿಗೆ ರಜೆ ಬಂತಲ್ಲ. +ಅವಾಗ ಮಗಳು ಮನೆಯಲ್ಲೇ ಇದ್ದವಳು. +ಯಾಕೆ ಇಬ್ರೂ ಮನೆಯಲ್ಲೇ ಬಿದ್ದಿರ್ತೀರಿ. +ಎಲ್ಲಾದ್ರೂ ಕೆಲಸ ಮಾಡೋದಲ್ವ ಅಂತ ಕೇಳಿದ್ದಂತೆ. +ಅದಕ್ಕೆ ಇಬ್ರು ಇಲ್ಲಿಗೆ ಬಂದಿದಾರೆ. +'ಅಳಿಯ ಏನೂ ಹೇಳಲಿಲ್ವಂತಾ?' +'ಅವನೇನೂ ಮಾತೇ ಆಡ್ಡಿಲ್ವಂತೆ. +ಮಗಳೇ ಕೆಲಸ ಇಲ್ದೆ ಹ್ಯಾಗೆ ಇರ್ತೀರಿ, ಯಾರಾದ್ರೂ ಎಷ್ಟು ದಿನ ಅಂತ ನೋಡ್ಕತಾರೆ ಅಂತ ಹೇಳಿದ ಮೇಲೆ ಅಳಿಯಾನಾದ್ರೂ ಏನು ಮಾಡ್ತಾನೆ?' +"ಅದು ಸರಿ, ಈಗ ಊಟಕ್ಕೆ, ಮನೆ ಬಾಡಿಗೆಗೆ ಏನು ಮಾಡ್ತಾರೆ?" +ತನ್ನ ನಂತರ ಹೆಂಡತಿ ತೊಂದ್ರೇಲಿ ಸಿಗಬಾರದು ಅಂತ ಸ್ನಲ್ಪ ದುಡ್ಡನ್ನು ಬ್ಯಾಂಕಲ್ಲಿ ಇಟ್ಟಿದ್ರಂತೆ. +ಅದನ್ನು ಬಿಡಿಸಿ ಈ ಔಟ್‌ಹೌಸ್‌ನ ಲೀಸಿಗೆ ತಗೊಂಡಿದಾರೆ. +ಅಜ್ಜ ಯಾವ್ಚೋ ಅಂಗಡೀಲಿ ಲೆಕ್ಕ ಬರೆಯೋ ಕೆಲಸಕ್ಕೆ ಸೇರ್ಕಂಡಿದಾರೆ. +ಪ್ರೇಮಾ ಹಿಂದಿನ ರಸ್ತೇಲಿ ಇಬ್ಬರು ಸಾಫ್ಟ್‌ವೇರ್‌ ಇಂಜಿನಿಯರ್‌ಗಳ ಮನೆಯಲ್ಲಿ ಅಡಿಗೆ ಮಾಡೋದಕ್ಕೆ ಒಪ್ಕೊಂಡಿದಾರೆ. +ಇವತ್ತು ಮಧ್ಯಾಹ್ನ ಆಕೆಯೇ ಹೇಳಿದರು. . . +"ಇಬ್ಬರ ಜೀವನಕ್ಕೆ ಸಾಕಾಗುವಷ್ಟು ಸಂಪಾದನೆ ಆಗುತ್ತಂತಾ?" +"ಅದನ್ನೇನೂ, ಹೇಳಲಿಲ್ಲ. +ಅಡುಗೆ ಮಾಡ್ತಾರಲ್ಲ, ಅಲ್ಲೇ ಪ್ರೇಮ ಊಟ ಮಾಡ್ತಿರಬಹುದು. +ಅಜ್ಜ ತಾನು ಕೆಲಸಮಾಡ್ತಿದ್ದ ಕಡೆ ಏನೋ ತಿಂತಿರಬಹುದು. +ಅವರ ಸಂಪಾದನೆ ಇಬ್ಬರಿಗೆ ಸಾಕಾಗಬಹುದೇನೋ. . "ಎಂದು ಶಿವಾಣಿ ಸುಮ್ಮನಾದಳು. +ತಿಳಿದ ವಿಷಯಗಳನ್ನು ಪೂರ್ತಿ ಒಪ್ಪಿಸಿದ ಧನ್ಯತೆಯನ್ನು ಮುಖಕ್ಕೆ ತಂದುಕೊಂಡ ಅವಳು 'ಇನ್ನು ಮಲಗ್ತೀನೋ. +ನಿದ್ದೆ ಬರ್ತಿದೆ' ಎಂದು ಮಗ್ಗಲು ಬದಲಾಯಿಸಿದಳು. +ಸೀತಾರಾಮಯ್ಯನವರ ಸಂಸಾರದ ಚಿತ್ರ ಸ್ವಲ್ಪಮಟ್ಟಿಗೆ ಸ್ಪಷ್ಟವಾದಂತಾಯಿತು. +ಆದರೆ ಯಾಕೆ ಹೀಗೆ ಮಗಳೇ ಹೊರಗೆ ಕಳಿಸಿದಳು ಎಂಬುದು ಅರ್ಥವಾಗಲಿಲ್ಲ. +ನಿನ್ನೆ ತನಗೆ ಮಾಡಿದ ಹಾಗೆ ಅವಳಿಗೂ ಇರಿಟೇಟ್‌ಮಾಡಿರಬೇಕು ಎಂದು ಸಮಾಧಾನಪಟ್ಟುಕೊಳ್ಳುತ್ತಾ ನಿದ್ದೆ ಮಾಡಲು ಯತ್ನಿಸಿದ. +ಸಂಸಾರ ಸುಖದ ನಂತರವೂ ನಿದ್ದೆ ಸುಳಿಯಲಿಲ್ಲ. +ಹೊರಳಾಡುತ್ತ ಮಧ್ಯರಾತ್ರಿಯ ಸದ್ದುಗಳನ್ನು ಕೇಳಿಸಿಕೊಳ್ಳುತ್ತಾ ಬೆಳಗಿನ ಜಾವದ ಹೊತ್ತಿಗೆ ನಿದ್ದೆಗೆ ಜಾರಿದ. +'ಬಟ್ಟೇನೇ ಐರನ್‌ ಆಗಿಲ್ಲ, ನೀನು ನೋಡಿದರೆ ಇನ್ನೂ ಬಿದ್ಕೊಂಡೇ ಇದೀಯಾ.'ಎಂದು ರೂಪಹೊದಿಕೆಯನ್ನು ಎಳೆದು ಹಾಕುವಾಗ ಎಚ್ಚರವಾಯಿತು. +ಕಣ್ಣಲ್ಲಿ ಇನ್ನೂ ನಿದ್ದೆ ಉಳಿದಿತ್ತು. +ನಿಧಾನವಾಗಿ ಕಣ್ಣುಬಿಟ್ಟಾಗ ಒಳ ಉಡುಪಿನ ಮೇಲೆ ದೊಡ್ಡದೊಂದು ಟವೆಲ್‌ ಸುತ್ತಿಕೊಂಡ ಮಗಳು ". . ಇನ್ನೂ ಬಿದ್ಕೊಂಡೇಇದೀಯಾ"ಎಂದು ಜೋರು ಮಾಡುತ್ತಿದ್ದಳು. +ಶಿವಾಣಿ ಕೂಡ ತಡವಾಗಿ ಎದ್ದಿರಬೇಕು. +ಅಡುಗೆ ಮನೆಯಲ್ಲಿ ಗಡಿಬಿಡಿ ಮಾಡುತ್ತಿದ್ದಳು. +ಕೂಡಲೇ ಎದ್ದು ಬಟ್ಟೆ ಇಸ್ತ್ರಿ ಮಾಡಲು ಅಣಿಯಾದರೆ ಆ ವೇಳೆಗೆ ಆಟೋಬಂದಿದ್ದರಿಂದ ಮಗಳು ಇಸ್ತ್ರಿ ಆಗದ ಬಟ್ಟೆಗಳನ್ನೇ ಬೇಗ ಸಿಕ್ಕಿಸಿಕೊಂಡು ಓಡಿದಳು. +ಗೇಟ್‌ ಬಳಿ ಹೋಗಿ ಮಗಳನ್ನು ಹಾರ್ದಿಕವಾಗಿ ಬೀಳ್ಕೊಡುವ ಕಾರ್ಯಕ್ರಮ ರದ್ದಾಗಿತ್ತು. +ಸಿಡುಕುತ್ತಲೇ ಶಾಲೆಗೆ ಹೋದ ಮಗಳ ಬಗ್ಗೆ ತನ್ನಲ್ಲಿಯೇ ಅಪರಾಧಿ ಭಾವನೆ ಮೂಡಿತು. +ತಡವಾಗಿ ಎದ್ದ ಶಿವಾಣಿ ಕೂಡ ತಪ್ಪು ಮಾಡಿದಂತೆ ಮುಖ ಮಾಡಿಕೊಂಡಿದ್ದಳು. +ಸ್ವಲ್ಪ ಹೊತ್ತು ಇಬ್ಬರೂ ಮಾತನಾಡಲಿಲ್ಲ. +ಮುಖ ಮುಖ ನೋಡಿಕೊಂಡರು. +ಒಳಗೆ ಬಂದು ಅಂದಿನ ಪತ್ರಿಕೆ ಬಿಡಿಸಿದ. +ಆದರೆ ಕಣ್ಣಾಡಿಸಲು ಮನಸ್ಸಾಗಲಿಲ್ಲ. +ಹೊರಬಂದ ಔಟ್‌ಹೌಸ್‌ ಕಡೆಗೆ ಹೋಗುವ ಕಿರುದಾರಿಯತ್ತ ನೋಡಿದ. +ಸೀತಾರಾಮಯ್ಯ ಎಷ್ಟು ಹೊತ್ತಿಗೆ ಹೊರಡುತ್ತಾರೋ ಎಂಬ ಕುತೂಹಲ. +ತಾವು ಬಾಡಿಗೆಗೆ ಬಂದಂದಿನಿಂದಲೂ ಖಾಲಿ ಇದ್ದ ಔಟ್‌ಹೌಸ್ ಒಳ್ಳೆಯವರು ಬಂದರೆ ಮಾತ್ರ ಕೊಡುತ್ತೇವೆ ಎನ್ನುತ್ತಿದ್ದರು ಮನೆ ಒಡತಿ. +ಕಚೇರಿಗೆ ಹೊರಡಲು ಇನ್ನೂ ಸಮಯವಿತ್ತು. +ಎದ್ದ ಗಳಿಗೆಯೇ ಸರಿಯಾಗಿರಲಿಲ್ಲ. . +ಮಗಳು ಅಸಮಾಧಾನದಿಂದ ಶಾಲೆಗೆ ಹೋಗಿದ್ದಳು. +ಅರ್ಧ ದಿನ, ಯಾಕೆ ಇಡೀ ದಿನ ರಜೆ ಹಾಕಿದರೆ ಹೇಗೆ? +ಅದನ್ನು ಶಿವಾಣಿಗೆ ಹೇಳಬೇಕೆಂದುಕೊಂಡ. +ಅವಳು ಅಡಿಗೆ ಮನೆಯಲ್ಲಿದ್ದಳು. +ಹಜಾರದಲ್ಲಿ ಶತಪಥ ಹಾಕುತ್ ತಕಚೇರಿಗೆ ಹೋಗುವುದೋ ರಜೆ ಹಾಕುವುದೋ ಎಂದು ಯೋಚಿಸಿದ. +ಸೀತಾರಾಮಯ್ಯ ತನ್ನ ಕೆಲಸಕ್ಕಿನ್ನೂ ಹೊರಟಂತಿರಲಿಲ್ಲ. +ವಿಚಿತ್ರ ಕುತೂಹಲ. +ಔಟ್‌ಹೌಸ್‌ ಬಳಿ ಹೋದರೆ ಹೇಗೆ? +ಆದರೂ ಕಾರಣವಿಲ್ಲದೆ ಹೋಗುವುದು ಸರಿಯಲ್ಲ. +ಹೇಗೂ ಔಟ್‌ಹೌಸ್‌ ಪಕ್ಕದಲ್ಲಿಯೇ ಬಟ್ಟೆ ಒಗೆಯುವ ಕಲ್ಲಿದೆ. +ಒಗೆಯುವ ಬಟ್ಟೆಗಳನ್ನು ಇಡುವ ನೆಪದಲ್ಲಿ ಅಲ್ಲಿಗೆ ಹೋಗುವುದು, ಸೀತಾರಾಮಯ್ಯ ಕಂಡರೆ ಔಪಚಾರಿಕವಾಗಿ ಮಾತನಾಡುವುದು, ಇಲ್ಲದಿದ್ದರೆ ವಾಪಸು ಬರುವುದು ಎಂದು ನಿರ್ಧರಿಸಿ ಒಂದಿಷ್ಟೂ ಸದ್ದಾಗದಂತೆ ಹೆಜ್ಜೆ ಔಟ್‌ಹೌಸ್‌ ಬಾಗಿಲು ಅರ್ಧ ತೆರೆದಿತ್ತು. +ಸೀತಾರಾಮಯ್ಯ ಒಳಗಡೆಯೇ ಇದ್ದರು. +ಪ್ರೇಮಾ ಗಟ್ಟಿ ಧ್ವನಿಯಲ್ಲಿ ಮಾತಾಡುತ್ತಿರುವುದು ಕೇಳಿಸಿತು: +"ಯಾರೂ ಸಾಕದ ಹಾಗೆ ಸಾಕ್ತೀನಿ ಅಂದಿದ್ರಲ್ಲಾ, ಅನುಭವಿಸಿ ಈಗ. +ಅದ್ಕಾರೋ ರಾಜ, ಮಗ ಸನ್ಯಾಸಿ ಆಗಿಬಿಡ್ತಾನೆ ಅಂತ ಹೆದರಿ, ಜೋಯಿಸರ ಮಾತು ಕೇಳಿ ಅರಮನೆಯೊಳಗೇ ಕಟ್ಟಿ ಹಾಕದ್ನಂತಲ್ಲ, ಹಾಗೇ ಆಯ್ತು ಇದು. +ಮಗಳನ್ನ ಗಿಣಿ ಹಾಗೆ ಸಾಕಿದ್ದಾಯ್ತು. +ಯಾರ ಮನೆಗೂ ಕಳಿಸಿಲ್ಲ. +ನೆಂಟರು ಇಷ್ಟರು ಅಂತ ಗೊತ್ತೂ ಮಾಡ್ಲಿಲ್ಲ. +ಅವಳಿಗೆ ಕಷ್ಟದ ಅರಿವೇ ಆಗಬಾರದು ಅಂತ ಎಲ್ಲಾದಕ್ಕೂ ನೀವೇ ಮುಂದೆ ಹೋಗ್ತಿದ್ರಲ್ಲ. . . ಏನಾಯ್ತು ಈಗ.. . ? +'ತುಂಬ ಮುದ್ದು ಮಾಡಿದೆ ಹೌದು. +ಆದರೆ ಇಷ್ಟು ವಿಪರೀತಕ್ಕೆ ಹೋಗುತ್ತೆ ಅಂತ ಯಾರಿಗೆ ಗೊತ್ತಿತ್ತು? +ಇಷ್ಟಕ್ಕೂ ನಾವು ಮಗಳಿಂದ ಏನನ್ನಾದರೂ ಯಾಕೆ ನಿರೀಕ್ಷಿಸಬೇಕಿತ್ತು. . . ?' ಸೀತಾರಾಮಯ್ಯನವರ ಸೋತಪ್ರತಿಕ್ರಿಯೆ. +ಆ ಗಂಡಹೆಂಡಿರ ಮಾತುಗಳನ್ನು ಅವರಿಗೆ ಗೊತ್ತಾಗದಂತೆ ಕೇಳಿಸಿಕೊಳ್ಳುತ್ತಿರುವ ಅಪರಾಧಿ ಭಾವನೆಯುಂಟಾಗಿ ತಕ್ಷಣ ವಾಪಸಾಗಲು ತಿರುಗಿದ. +ಅಷ್ಟರಲ್ಲಿ ಅರೆತೆರೆದ ಬಾಗಿಲನ್ನು ಪೂರ್ತಿ ತೆರೆದ ಪ್ರೇಮಾ ಇವನನ್ನು ನೋಡಿ 'ಬನ್ನಿ ಅಣ್ಣ, ಒಳಗೆ' ಎಂದು ತನ್ನ ಮುಖದಲ್ಲಿದ್ದ ವಿಷಾದ ಭಾವವನ್ನು ಬದಲಿಸಿಕೊಳ್ಳಲು ಯತ್ನಿಸಿದಳು. +'ಬನ್ನಿ ಸಾರ್‌, ಒಳಗೆ' ಎಂದು ಸೀತಾರಾಮಯ್ಯ ಸ್ವಾಗತಿಸಿದರು. +ಗಲಿಬಿಲಿಗೊಂಡವನು ದಾಕ್ಷಿಣ್ಯಕ್ಕೆಂಬಂತೆ ಒಳಗೆ ಪ್ರವೇಶಿಸಿ ಸೀತಾರಾಮಯ್ಯ ತೋರಿಸಿದ ಮಡಚುವ ಕಬ್ಬಿಣದ ಕುರ್ಚಿಯಲ್ಲಿ ಕುಳಿತುಕೊಂಡ. +ಪ್ರೇಮಾ ಮಗ್ಗುಲಿಗಿದ್ದ ಅಡಿಗೆ ಮನೆಗೆ ನುಗ್ಗಿ "ಕಾಫಿ ಆಗ್ತದಲ್ಲ. +ಸ್ವಲ್ಪನಾದ್ರೂ ತಗೊಳ್ಳಲೇಬೇಕು"ಎಂದು ಆಗ್ರಹಿಸಿದಳು. +ಹಜಾರದ ಪಕ್ಕ ಅಡುಗೆಗೆ ಚಿಕ್ಕ ಕೊಠಡಿ. +ಅದಕ್ಕೆ ಹೊಂದಿಕೊಂಡ ಬಚ್ಚಲು. +ಒಂದೇ ಬಾಗಿಲಿನ ಔಟ್‌ಹೌಸ್‌. +ಮುಂದಿನ ಮನೆ ಕಟ್ಟಿದ ನಂತರ ಉಳಿದ ಸಾಮಾನು ಇರಿಸಲು ಮಾಡಿದ್ದ ಉಗ್ರಾಣದಂತಿದ್ದ ಮನೆಗೆ ಹೊರಗೊಂದು ಶೌಚಾಲಯ ತಟ್ಟಿಸಿ ಬಾಡಿಗೆಗೆ ಕೊಟ್ಟಿದ್ದರು. +ಶಿಷ್ಟಾಚಾರದ ಮಾತುಕತೆ ನಡೆಯುತ್ತಿದ್ದಂತೆ ಪ್ರೇಮಾ ಎರಡು ಲೋಟಗಳಲ್ಲಿ ಕಾಫಿ ತಂದು ಇಬ್ಬರಿಗೂ ಕೊಟ್ಟವಳು "ನೀವು ಏನೇ ಹೇಳಿ ಅಣ್ಣ, ಇವರದು ಎಲ್ಲದರಲ್ಲೂ ಅತಿಯೇ. . " ಎಂದು ಮಾತಿಗೆ ಪೀಠಿಕೆ ಹಾಕಿದಳು. +ರಾಮಕೃಷ್ಣ ಅದಕ್ಕೆ ಹೇಗೆ ಪ್ರತಿಕ್ರಿಯೆ ತೋರಿಸುವುದೆಂದು ತಿಳಿಯದೆ ಗೊಂದಲದಲ್ಲಿರುವಾಗ ಅವಳೇ ಮುಂದುವರಿದು "ಈಗಷ್ಟೆ ನಮ್ಮಲ್ಲಿ ಮಾತಾಗುತ್ತಿತ್ತು. . . + ಮಕ್ಕಳಲ್ಲಿ ಪ್ರೀತಿ ತೋರಿಸಬೇಕು. +ಆದರೆ ಅತೀಬೇಡ ಅಂತ ಎಂದಳು. +ಅದಕ್ಕೆ ಅವನು ಏನನ್ನಾದರೂ ಪ್ರತಿಯಾಗಿ ಹೇಳಬೇಕೆನಿಸಲಿಲ್ಲ. +ಕಾಫಿ ಕುಡಿಯುತ್ತಿದ್ದಾಗ ಪ್ರೇಮಾ ಮತ್ತೆ ಮುಂದುವರಿಸಿ "ಅಲ್ಲ ಅಣ್ಣ, ಎಷ್ಟೇ ಮುದ್ದು ಮಾಡಿದರೂ ಮಕ್ಕಳಲ್ಲಿ ತಂದೆ ತಾಯಿ ಅಂತ ಯಾವ ಭಾವನೆಯೂ ಬಾರದಷ್ಟು ಆದರೆ ಹೇಗೆ? +ಎಲ್ಲವೂ ಹಕ್ಕಿನಂತೆ ಸಿಗುತ್ತಿದ್ದರೆ ಅವರು ಪ್ರೀತಿ ವಿಶ್ವಾಸಬೆಳೆಸಿಕೊಳ್ಳೋದು ಹೇಗೆ ಅಂತ." ಎಂದು ಇನ್ನಷ್ಟು ಮಾತಾಡುವ ಬಯಕೆ ತೋರಿಸಿದಳು. +ಆದರೆ ಸೀತಾರಾಮಯ್ಯ 'ಇವೆಲ್ಲ ಅವರಿಗೆ ಯಾಕೆ ಹೇಳುತ್ತೀ. +ನಮ್ಮ ಹಣೇಬರಹಕ್ಕೆ ಯಾರು ಹೊಣೆಯಾಗ್ತಾರೆ'ಎಂದು ಮಾತಿಗೆ ವಿರಾಮ ಹಾಕಿದರು. +ರಾಮಕೃಷ್ಣ ಅಲ್ಲಿ ಹೆಜ್ಜು ಹೊತ್ತು ಕುಳಿತಿರಲಾಗದೆ ಹೊರಬಂದ. +ಅಂದು ಸೀತಾರಾಮಯ್ಯನವರ ಆ ಮನೆಯ ಚಿತ್ರವೇ ಕಚೇರಿಯಲ್ಲಿದ್ದಾಗ ಕೂಡ ಅವನನ್ನು ಬಾಧಿಸುತ್ತಿತ್ತು. +ಮರೆಯಲು ಯತ್ನಿಸಿದಂತೆಲ್ಲ ಅದು ಬೇರೆ ಬೇರೆ ರೂಪದಲ್ಲಿ ಕಾಣಿಸಿದಂತಾಗುತ್ತಿತ್ತು. +ಎಂದಿನಂತೆ ಸಂಜೆ ಕಚೇರಿಯಿಂದ ವಾಪಸಾದ. +ಶಿವಾಣಿ ಅಡುಗೆ ಮನೆಯಲ್ಲಿ ಮಗಳಿಗಾಗಿ ಏನನ್ನೋ ಮಾಡುವುದರಲ್ಲಿ ತೊಡಗಿದ್ದಳು. +ರೂಪ ತನ್ನ ಪ್ರತ್ಯೇಕವಾದ ಓದಿನ ಮೇಜಿಗೆ ಒರಗಿ ಕುಳಿತಿದ್ದಳು. +ಮನೆಯಲ್ಲಿ ವಿಶೇಷ ರೀತಿಯ ಮೌನ. +ರಾಮಕೃಷ್ಣ "ಯಾಕೋ ಇವತ್ತು ಏನೂ ಗಲಾಟೆ ಮಾಡದೆ ಸುಮ್ಮನೆ ಕುಳಿತಿದ್ದೀ?"ಎಂದು ಮುದ್ದಿನಿಂದ ಮಗಳನ್ನು ರಮಿಸುವಂತೆ ಕೇಳಿದ್ದೇ ರೂಪ "ಎಂತ ಕೆಟ್ಟ ಹೆಸರು ಇಟ್ಟಿದ್ದೀರಾ ನನಗೆ?'ಎಂದು ಒಮ್ಮೆಗೇ ಕಿರಿಚಿದಳು. +"ಯಾಕೋ, ಏನಾಯ್ತೋ. . "ಎಂದು ರಾಮಕೃಷ್ಣ ಬೆಚ್ಚಿಬಿದ್ದು ಕೇಳುವ ಹೊತ್ತಿಗೆ ಅಡುಗೆ ಮನೆಯಿಂದ ಶಿವಾಣಿಯೂ ಬಂದಿದ್ದಳು. +"ನನ್ನ ಫೆಂಡ್ಸ್‌ ಹೆಸರಿಗೆಲ್ಲ ಇನಿಶಿಯಲ್‌ ಇವೆ. +ನನಗೆ ರಾಶಿ ಅಂತ ಇಟ್ಟಿದ್ದೀರಲ್ಲ. +ಇವತ್ತು ಎಷ್ಟು ಅವಮಾನ ಆಯ್ತು ಗೊತ್ತ? +ನಿನ್ನೆ ಮಾಡಿದ್ದ ಹೋಂ ವರ್ಕ್‌ ತಪ್ಪಾಗಿತ್ತು ಗಣಿತದ ಮಿಸ್‌ಜೋರು ಮಾಡಿ 'ರೂಪರಾಶಿ' ಅಂತ ಇಟ್ಕೊಂಡರೆ ಸಾಲದು, ಅದಕ್ಕೆ ತಕ್ಕ ಹಾಗೆ ಇರಬೇಕು. . ಅಂದರು. +ನನಗೆ ಎಷ್ಟು ಸಿಟ್ಟು ಬಂತು ಗೊತ್ತಾ?" ಎಂದಳು. +"ಅದರಲ್ಲೇನಿದೆಯೋ ಸಿಟ್ಟು ಬರೋದಕ್ಕೆ?" ಎಂದು ರಾಮಕೃಷ್ಣ ಮಗಳನ್ನು ರಮಿಸಲು ಮುಂದಾಗುತ್ತಿದ್ದಂತೆ'ಯಾವ ಛಪ್ಪರ್‌ ನನ್ಮಗ ನನಗೆ ಈ ಇನಿಶಿಯಲ್‌ ಕೊಟ್ಟ' ಎಂದಳು ಮುದ್ದಿನ ಮಗಳು. +ಕಾನ್ವೆಂಟ್‌ನಲ್ಲಿ ಕಲಿಯುತ್ತಿರುವ ಹನ್ನೊಂದು ವರ್ಷದ ಮಗಳು ಸಿಡಿದ ಧಾಟಿಗೆ ಇಬ್ಬರೂ ಬೆಚ್ಚಿಬಿದ್ದರು. +ರಾಮಕೃಷ್ಣನಿಗೆ ಬಾಗಿಲಲ್ಲಿ ಸೀತಾರಾಮಯ್ಯ ಸುಳಿದಂತಾಯಿತು. +ಮೈತ್ರಿ: +"ನೋಡು ಪುಟ್ಟ ನಾವು ಬಹಳ ದೂರ ಬಂದು ಬಿಟ್ಟಿದ್ದೀವಿ. +ಇನ್ನು ವಾಪಸು ಹೋಗೋದು ಸಾಧ್ಯವೇ ಇಲ್ಲ. +ಈಗ ಏನು ಮಾಡಬಹುದೂ ಅಂದರೆ. . . ಎಂದು ಅವನು ರಾಗ ಎಳೆಯುತ್ತಿದ್ದಾಗ ಅವಳಿಗೆ ಮೈಪರಚಿಕೊಳ್ಳುವಂತಾಯಿತು. +ತಲೆಕೆಡಿಸಿ ಈಗ ವೇದಾಂತ ಹೇಳುತ್ತಾನೆ ಅಂದುಕೊಂಡಳು. +ಆದರೆ ಬಾಯಲ್ಲಿ ಮಾತು ಹೊರಡಲಿಲ್ಲ. +ತುಟಿ ಅದುರುತ್ತಿದ್ದವು. +ಮೊದಲು ಮಾತಲ್ಲಿ ಜೇನು ಸುರಿಸುತ್ತಿದ್ದ. +ಈಗಲೂ ಜೇನುಸುರಿಸುತ್ತಾನೆ. +ಚೂರಿಯ ಅಲಗಿಗೆ ಮೆತ್ತಿಕೊಂಡಿದ್ದನ್ನು ಮೃದುವಾಗಿ ಸವರುವ ಹಾಗೆ, ಎಲ್ಲಿ ತಿವಿಯುತ್ತಾನೋ ಎನ್ನುವ ಭಯ ಹುಟ್ಟುವಂತೆ. +"ನೋಡಿ, ನೀವು ಹೀಗೆ ನನ್ನ ತಲೆ ಕೆಡಿಸುತ್ತಿದ್ದರೆ. +ನಾನು ಸಂಸಾರ ಮಾಡುವುದು ಹೇಗೆ? +ನಿಮಗೆ ತಡೆದುಕೊಳ್ಳುವ ಶಕ್ತಿ ಇರಬಹುದು. +ಆದರೆ ನನಗೆ ಅಂಥ ಶಕ್ತಿ ಇಲ್ಲ. +ಗೊತ್ತಾ?" ಎಂದು ತುಂಬ ಪ್ರಯಾಸಪಟ್ಟು ಹೇಳಿದಳು. +ಅದಕ್ಕೆ ಅವನದು ಮೋಹಕ ನಗೆಯೇ ಉತ್ತರ. +ಎಷ್ಟು ಚೆನ್ನಾಗಿ ನಗುತ್ತಾನೆ. +ಯಾಕೆ ಇವನು ಪರಿಚಯವಾದ? +ಮೈತ್ರಿಯಂತೆ ಅವನಿಗೂ ಅದೇ ಪ್ರಶ್ನೆ ಹದಿನೈದು ವರ್ಷಗಳ ಹಿಂದೆಯೇ ಎದುರಾಗಿತ್ತು. +ಅವನು ಆಗ ಮಹಾತ್ಮ ಗಾಂಧಿ ರಸ್ತೆಯ ಖಾಸಗಿ ಕಚೇರಿಯಲ್ಲಿ ಗುಮಾಸ್ತ. +ಅವಳು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಗುಮಾಸ್ತೆ. +ಅವಳದು ಕಸ್ತೂರ ಬಾ ರಸ್ತೆಯಲ್ಲಿ ಕಚೇರಿ. +ಮಲ್ಲೇಶ್ವರ 18ನೇ ಕ್ರಾಸಿನಿಂದ ವಿಧಾನಸೌಧಕ್ಕೆ ಒಂದೇ ಬಸ್ಸಿನಲ್ಲಿ ಇಬ್ಬರ ಪ್ರಯಾಣ. +ಒಟ್ಟಿಗೆ ಇಳಿದು ಕಬ್ಬನ್‌ಪಾರ್ಕಿನಲ್ಲಿ ಒಂದೊಂದು ರಸ್ತೆಯಲ್ಲಿ ಸಾಗಿ ಕಚೇರಿ ಸೇರುತ್ತಿದ್ದರು. +ಬೆಳಿಗ್ಗೆ ಎಲ್ಲಾ ಧಾವಂತವೇ. +ಕೆಲವೊಮ್ಮೆ ಬಸ್ಸು ತಡವಾಗುವುದು. +ಜಾಗ ಸಾಮಾನ್ಯವಾಗಿ ಇರುತ್ತಿರಲಿಲ್ಲ. +ನಿಂತುಕೊಂಡು, ನೂಕುನುಗ್ಗಲಿನಲ್ಲಿ ಒಬ್ಬರಿಗೆ ಒಬ್ಬರು ಬಲವಂತವಾಗಿ ತಾಗಿಕೊಂಡು ನಡೆಸುವ ಹಿಂಸೆಯ ಪ್ರಯಾಣ. +ಎಷ್ಟು ದಿನ ಹೀಗೆ ಸಾಗಿದ್ದರೋ, ಒಮ್ಮೆ ಇವನ ಸ್ನೇಹಿತ ಅದೇ ಬಸ್ಸಿನಲ್ಲಿ ಸಿಕ್ಕಿದ. +ಅವನು ಮೈತ್ರಿಯ ಜತೆ ಕುಳಿತಿದ್ದ,ಮಾತಾಡುತ್ತಿದ್ದ. + ಬಸ್ಸು ಇಳಿದಾಗ ಹಲೋ ಹಲೋ ಆಯಿತು. +ಅವನು ಅವಳಿಗೆ ದೂರದ ಸಂಬಂಧಿಯಂತೆ. +ಸ್ನೇಹದ ಭರದಲ್ಲಿ ಪರಿಚಯ ಮಾಡಿಸಿಕೊಟ್ಟ. +ಎಲ್ಲಿ ಕೆಲಸ, ಏನು ಕೆಲಸ ಇತ್ಯಾದಿ ಉಪಚಾರವಾಯಿತು. +ತಮ್ಮ ಪರಿಚಯದಿಂದ ತುಂಬ ಸಂತೋಷವಾಯಿತು ಎಂಬ ಇಂಗ್ಲಿಷ್‌ ಮಾತಿನ ನಾಟಕೀಯ ಪುನರುಕ್ತಿಯೂ ಆಯಿತು. +ಮೂವರೂ ನಡೆದು ಮಹಾತ್ಮ ಗಾಂಧಿ ಪ್ರತಿಮೆಯವರೆಗೆ ಸಾಗಿನಂತರ ಅಗಚಿದರು. +ಮರುದಿನ ಬೆಳಿಗ್ಗೆ ಅವನು ಮಲ್ಲೇಶ್ವರದ ಬಸ್‌ ನಿಲ್ದಾಣಕ್ಕೆ ಬಂದವನು ಸುತ್ತಕಣ್ಣಾಡಿಸಿದ. +ಅವಳೂ ಸಾಲಿನಲ್ಲಿ ನಿಂತಿದ್ದಳು. +ಪರಿಚಯದ ನಗೆಯ ವಿನಿಮಯವಾಯಿತು. +ಒಮ್ಮೆ ಹೀಗೆ,ಒಮ್ಮೆ ಹಾಗೆ ಅಂತ ಸಾಗಿ ಒಂದು ಸಂಜೆ ಕಚೇರಿ ಮುಗಿಸಿ ಅವಳು ಮಹಾತ್ಮ ಗಾಂಧಿ ರಸ್ತೆಯ ಇವನ ಕಚೇರಿ ಬಳಿ ಸುಳಿದಳು. +ಅವನೂ ಸಂಭ್ರಮದಿಂದಲೇ ಹೊರಬಂದು ಚಿಟ್‌ಚಾಟ್‌ನಲ್ಲಿ ಐಸ್‌ಕ್ರೀಂ ಕೊಡಿಸಿದ. +ಅವನು ಕೊಡಿಸಿದ ಮೇಲೆ ಇವಳಿಗೆ ಆತ್ಮಾಭಿಮಾನ ಕೆರಳಿತು. +ಇನ್ನೊಮ್ಮೆ ಇವಳೂ ಅವನ ಕಚೇರಿಯಿಂದ ಜತೆಯಾಗಿ ಹೋಗಿ ನೀಲಗಿರಿಯಲ್ಲಿ ಐಸ್‌ಕ್ರೀಂ ಕೊಡಿಸಿದಳು. +'ನಾನು ಇಂಥ ಹೋಟೆಲಿಗೆ ಹೋಗಿಲ್ಲ'ಎಂದು ನಯವಾಗಿ ನಿವೇದಿಸಿಕೊಂಡ. +ಅವಳಿಗೂ ಅದು ಹೊಸದು. +ಜತೆಯಲ್ಲಿ ನಡೆಯುವಾಗ ಸ್ವಂತ ವಿಚಾರಗಳನ್ನು ಹೇಳಿಕೊಂಡಿದ್ದರು. +ಇವನು ಪ್ರಾಮಾಣಿಕತೆಯಿಂದ ತನಗೆ ಮದುವೆ ಆಗಿದೆ ಅಂದ. +ಅದನ್ನು ಅವಳು ಪ್ರಮಾದ ಎಂಬಂತೆ ಕಾಣಲಿಲ್ಲ. +ಅವಳು ಬ್ಯಾಂಕಿನ ವಿಚಾರ ಹೇಳುತ್ತಿದ್ದಳು. +ಇವನು ತನ್ನ ಕಚೇರಿ ಅನುಭವ ಹೇಳುತ್ತಿದ್ದ. +ಅವಳ ಮನೆಯಲ್ಲಿ ಯಾರಿದ್ದಾರೆ ಯಾರಿಲ್ಲ. +ಎಷ್ಟು ಜನಕ್ಕೆ ಮದುವೆ ಆಗಿದೆ, ಇನ್ನೂ ಎಷ್ಟು ಜನಕ್ಕೆ ಆಗಬೇಕಾಗಿದೆ ಎಂಬೆಲ್ಲಾ ಅಧಿಕ ಪ್ರಸಂಗದ ಮಾತುಗಳಿಗೆ ತಾನು ದೂರ ಎಂದು ಇವನು ತೋರಿಸಿಕೊಂಡ. +ಇದು ಅವಳಿಗೆ ಇಷ್ಟವಾಯಿತು. +ಹೋಟೆಲಿನಿಂದ ಹೊರ ಬರುವಾಗ ಭುಜಗಳುತ ಗಲುವುದು ಬ್ರೀಗೇಡ್‌ ರಸ್ತೆಯಲ್ಲಿ ಹೊಸದೇನೂ ಅಲ್ಲ. +ಅಲ್ಲಿಂದಲೇ ಮೇಯೋ ಹಾಲ್‌ವರೆಗೆ ನಡೆದುಹೋಗಿ ಬಸ್ಸು ಹಿಡಿದರು. +ಅಕ್ಕಪಕ್ಕ ಕುಳಿತರು. +ಮಾತು ಕೂಡ ಸಾಗಿತು. +ಅಲ್ಲಿಂದ ಎರಡು ಮೂರು ತಿಂಗಳಲ್ಲಿ ಇವನು ಅವಳ ಮನೆಗೆ ಹೋಗಿ ಬಂದ. +ಅವಳು ಕೂಡ ಮನೆಗೆ ಬಂದಿದ್ದಾಗ ಇವನ ಹೆಂಡತಿ ತನ್ನ ಇಬ್ಬರು ಮಕ್ಕಳ ಜತೆ ಎಲ್ಲಿಗೋ ಹೋಗಿದ್ದಳು. +ಇವನೇ ಕಾಫಿ ಮಾಡಿಕೊಟ್ಟ ಕುಡಿಯುತ್ತಿದ್ದಾಗ ಹೆಂಡತಿ ಮಕ್ಕಳು ಬಂದರು. +ತುಂಬ ಒಳ್ಳೆಯ ಮಾತು ಹೇಳಿ ಹೆಂಡತಿಗೆ ಪರಿಚಯ ಮಾಡಿಕೊಟ್ಟ. +ಅವಳ ಮನೆಯಲ್ಲಿ ಇವಳು ಕೊನೆಯವಳು. +ಹಿರಿಯ ಅಣ್ಣಂದಿರಿಬ್ಬರು ಕಾರ್ಖಾನೆ ಕೆಲಸಗಳಲ್ಲಿದ್ದು ಬೇರೆಯೇ ಇದ್ದಾರೆ. +ತಂದೆಗೆ ನಿವೃತ್ತಿಯಾಗಿದೆ. +ಅಕ್ಕನಿಗೆ ಮಲ್ಲೇಶ್ವರದಲ್ಲೇ ಒಂದು ಕಾಲೇಜಿನಲ್ಲಿ ಕೆಲಸ. +ಆಕೆಗೆ ಗಂಡು ಹುಡುಕುತ್ತಿದ್ದಾರೆ. +ತಮ್ಮ ಹೈಸ್ಕೂಲಿನಲ್ಲಿ ಓದುತ್ತಿದ್ದಾನೆ. +ಇವಳು ಡಿಗ್ರಿ ಓದುತ್ತಿದ್ದಾಗಲೇ ಬ್ಯಾಂಕಿನ ಕೆಲಸ ಆದಕಾರಣ ಓದು ಬಿಟ್ಟಿದ್ದಾಳೆ. +ಖಾಸಗಿಯಾಗಿ ಕಟ್ಟಿ ಪದವಿ ಪಡೆಯುವ ಉದ್ದೇಶ ಇದೆ. +ಅವಳು ತಂದೆಗೆ ಪರಿಚಯಿಸುವಾಗ ಹಿಂದೆ ವಿಧಾನಸೌಧದ ಬಳಿ ಪರಿಚಯ ಮಾಡಿಕೊಟ್ಟಿದ್ದ ಸಂಬಂಧಿಯ ಎಳೆಯನ್ನು ಆಶ್ರಯಿಸಿದ್ದಳು. +ಇವನೂ ತನಗೆ ಆತ ಅತ್ಯಂತ ಪರಮಾಪ್ತ ಸ್ನೇಹಿತ, ಬಂಧು, ಮಾರ್ಗದರ್ಶಿ ಎಂದು ತೋರಿಸಿಕೊಂಡಿದ್ದ. +ನಿವೃತ್ತಿ ಹೊಂದಿದ ತಂದೆ ಇವನ ಕಚೇರಿಯ ವಿವರ ಕೇಳಿದರು. +ಸಂಬಳ ಇತ್ಯಾದಿ ಲೌಕಿಕ ವಿಚಾರಗಳ ನಡುವೆ ತಮ್ಮ ದೊಡ್ಡ ಮಗಳಿಗೆ ಅನುರೂಪ ವರಗಳಿದ್ದರೆ ತಿಳಿಸುವಂತೆ ಕೋರಿದರು. +ಅಲ್ಲಿಂದೀಚೆಗೆ ಇವನು ಕುಟುಂಬ ಸಹಿತ ಅವರ ಮನೆಗೆ ಹೋಗಿ ಬಂದಿದ್ದ. +ಅವರ ಮನೆಯ ಅರಶಿನ ಕುಂಕುಮಕ್ಕೆ ಇವನ ಮನೆಗೂ ಕರೆ ಬರುತ್ತಿತ್ತು. +ಇವನು ಊರಿಗೆ ಒಬ್ಬನೇ ಹೋಗಬೇಕಾಗಿ ಬಂದಾಗ ಅಲ್ಲಿಹೇಳಿ ಹೋಗುವ ಪರಿಪಾಟ ಇಟ್ಟುಕೊಂಡ. +ಅವಳ ಅಕ್ಕನಿಗಾಗಿ ತಮ್ಮ ಕಚೇರಿಗೆ ಹೊಸದಾಗಿ ಅಧಿಕಾರಿಯಾಗಿ ಬಂದಿದ್ದ ಹುಡುಗನನ್ನು ತೋರಿಸಿ ಅವಳ ತಂದೆ ತಾಯಿಯರ ಮೆಚ್ಚುಗೆಯನ್ನು ಗಳಿಸಿದ್ದ. +ಆ ಸಂಬಂಧ ಕೂಡಿ ಬರಲಿಲ್ಲ. +ಆದರೆ, ಯಾವ ಜನ್ಮದ ಋಣಾನುಬಂಧವೋ ಎಂದು ಅವಳ ತಾಯಿ ಕೂಡ ಬಿಚ್ಚುಮನಸ್ಸಿನಿಂದ ಇವನ ಬಳಿ ಕುಟುಂಬದ ಸಮಸ್ಯೆಗಳನ್ನು ಹೇಳಿಕೊಳ್ಳುವಂತಾಯಿತು. +ಮೈತ್ರಿ ಆ ನಂತರ ಮಧ್ಯಾಹ್ನದ ಮೇಲೆ ಬ್ಯಾಂಕಿನಲ್ಲಿ ಬಿಡುವಾಗಿದ್ದಾಗ ಫೋನ್‌ ಮಾಡಲು ಆರಂಭಿಸಿದ್ದಳು. +ಅದರಿಂದ ಚಕಿತಗೊಂಡ ಅವನು ಅವಳು ಒಮ್ಮೆ ಮಾಡಿದರೆ ಪ್ರತಿಯಾಗಿ ತಾನು ಇನ್ನೊಮ್ಮೆ ಮಾಡತೊಡಗಿದ. +ಮೊದ ಮೊದಲು ಏನಾದರೂ ವಿಷಯ ಇರುತ್ತಿತ್ತು. +ಇವನು ಹೆಂಡತಿಯ ವಿಷಯ ಹೇಳುವನು. +ಮಗನ ವಿಷಯ ಹೇಳುವನು. +ಮಗಳ ತಂಟೆಗಳನ್ನು ಬಣ್ಣಿಸುವನು. +ಅವಳು ಅದಕ್ಕೆ ದನಿಗೂಡಿಸುವಳು. +ಇವನು "ಏನೇ ಅನ್ನಿ ಮೈತ್ರಿ ಅವರೇ, ಮನೆ ಅಂದರೆ ಹೆಣ್ಣು ಮಗು ಇರಬೇಕು ನೋಡಿ. +ಹೆಣ್ಣಿರುವ ಮನೆ ತಣ್ಣಗೆ ಇರುತ್ತದಂತೆ" ಎಂದು ಹೃದಯತುಂಬಿ ಹೇಳುವನು. +ದಿನಗಳು ಕಳೆದಂತೆ ಅವನ ಹುಟ್ಟಿದ ದಿನಾಂಕ, ಅವನ ಮಕ್ಕಳ ಹುಟ್ಟುಹಬ್ಬದ ದಿನಾಂಕ ಮತ್ತು ಅವನ ಮದುವೆ ವಾರ್ಷಿಕದ ದಿನಗಳು ಅವಳಿಗೆ ಬಾಯಿಪಾಠ ಆದವು. +ಅವನ ಹುಟ್ಟುಹಬ್ಬಕ್ಕೆ ಸರಿಯಾಗಿ ಶುಭಾಶಯ ಪತ್ರವನ್ನು ಕಚೇರಿ ವಿಳಾಸಕ್ಕೆ ಕಳುಹಿಸಿದಾಗ ಅವನು ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಾ ಎರಡು ಸಾಲಿನ ಪತ್ರವನ್ನು ಬ್ಯಾಂಕಿಗೆ ಬರೆದನು. +ಅವಳು ಅದಕ್ಕೆ ಪ್ರತಿಯಾಗಿ ಉತ್ತರ ಬರೆಯಬೇಕಾಯಿತು. +ಉತ್ತರಕ್ಕೆ ಪ್ರತಿಯಾಗಿ ಬರೆಯದೆ ಅವನಿಗೆ ಸಮಾಧಾನ ಆಗಲಿಲ್ಲ. +ಪರಿಣಾಮ ಅವಳ ಕಾಗದಗಳು ದೀರ್ಫವಾಗತೊಡಗಿದವು. +ಅವನು ಸೌಜನ್ಯಕ್ಕೆ ಬೇಕಷ್ಟು ಎಲ್ಲಿಯೂ ಭಾವನೆಗಳಿಗೆ ವಶವಾಗದಂತೆ ಚುರುಕಾಗಿ, ಯಾರು ಓದಿದರೂ ಅಪಾರ್ಥಕ್ಕೆ ಅವಕಾಶವಾಗದಂತೆ ಬರೆದನು. +ಅವನು ಕಚೇರಿಗೆ ಬರುವ ಪತ್ರಗಳನ್ನು ಮನೆಗೆ ತರುತ್ತಿರಲಿಲ್ಲ. +ಮನೆಯ ವ್ಯವಹಾರವನ್ನು ಕಚೇರಿಗೆ ಒಯ್ಯುವುದು ಏಕೆ ಎಂಬ ಪ್ರಶ್ನೆಯನ್ನು ಅವನು ಅವಳೊಂದಿಗೆ ಅನೇಕಸಲ ಕೇಳಿದ್ದನು. +ಅವಳಿಗೆ ಕಚೇರಿಯಲ್ಲಿ ಮೊದಲು ಬಿಡುವಾಗಿದ್ದಾಗ ಅವನ ಬಗ್ಗೆ ಚಿಂತಿಸುತ್ತಿದ್ದಳು. +ಈಚೀಚೆಗೆ ಕೆಲಸ ಇದ್ದಾಗಲೂ ಅವರು ಈಗ ಏನು ಮಾಡುತ್ತಿರಬಹುದು? +ಕಾಫಿಗೆ ಹೋಗಿರುತ್ತಾರೆಯೇ? +ಕೆಲಸ ತುಂಬ ಇರುತ್ತದೆಯೇ?ಎಂದೆಲ್ಲಾ ಚಿಂತಿಸುತ್ತಿದ್ದಳು. +ಒಂದು ದಿನ ನೋಡದಿದ್ದರೆ ಚಡಪಡಿಕೆಯಾಗುತ್ತಿತ್ತು. +ಅವನು ಒಮ್ಮೆ ಹೇಳದೆ ಊರಿಗೆ ಹೋಗಿ ನಾಲ್ಕು ದಿನದ ನಂತರ ಬಸ್‌ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ ಮಾತಾಡಿಸದೆ ಬಿಗುಮಾನ ತೋರಿಸಿದಳು. +ಆದರೆ ಅದೇ ದಿನ ಅವನು ಫೋನ್‌ ಮಾಡಿ ತಾನು ಊರಿಗೆ ತಕ್ಷಣಕ್ಕೆ ಹೊರಟು ಹೋಗಬೇಕಾದ ಅನಿವಾರ್ಯತೆಯನ್ನು ಹೇಳಿ ಸಂಜೆ ಕಚೇರಿ ಬಿಡುವ ವೇಳೆಗೆ ಬಂದರೆ ಹೇಳದೆ ಹೋದ ತಪ್ಪಿಗೆ ಕ್ಷಮೆ ಕೋರುವ ಮಾತು ಆಡಿದನು. +ಅವಳಿಗೆ ಬಿಗುಮಾನ ಇಳಿಯಿತು. +ಆದರೆ ಆದಿನ ಅವಳ ಗಡಿಯಾರ ತುಂಬ ನಿಧಾನವಾಗಿ ನಡೆಯುತ್ತಿತ್ತು. +ಸಂಜೆ ಮೋಡಗಳು ದಟ್ಟವಾಗುತ್ತಿರುವುದು ಇಬ್ಬರ ಗಮನಕ್ಕೆ ಬರಲಿಲ್ಲ. +ಮಹಾತ್ಮ ಗಾಂಧಿ ರಸ್ತೆಯ ತುಂಬ ಎರಡು ಸಲ ತಿರುಗಾಡಿದರು. +ಬ್ರಿಗೇಡ್‌ರಸ್ತೆಯಲ್ಲಿ ಮೊದಲು ಹೋಗುತ್ತಿದ್ದ ಹೋಟೆಲಿಗೆ ಹೋಗಿ ಕುಳಿತರು. +ಇವನು ಊರಿನ ವಿದ್ಯಮಾನಗಳನ್ನು ರಸವತ್ತಾಗಿ ಬಣ್ಣಿಸುತ್ತಿದ್ದಾಗ ಅವಳು ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದಳು. +ತಿಂಡಿ ತಿಂದು ಕಾಫಿ ಕುಡಿದುಹೊರ ಬರುವ ಹೊತ್ತಿಗೆ ಮೋಡಗಳು ದಟ್ಟೆಸಿದ್ದವು. +ಮುಗಿಲು ಕಪ್ಪಿಟ್ಟಿತ್ತು . +ಇವರು ಮೇಯೋಹಾಲ್‌ ಕಡೆ ಧಾವಿಸುತ್ತಿದ್ದಂತೆ ಮಳೆಯ ತೋರಹನಿಗಳು ತಲೆಯ ಮೇಲೆ ರಪ್ಪರಪ್ಪನೆ ಬಡಿಯತೊಡಗಿದವು. +ರೆಕ್ಟ್‌ಚಿತ್ರಮಂದಿರದ ಬಳಿ ಇನ್ನೂ ಕಡಿಯದೆ ಬಿಟ್ಟ ಮರದ ನೆರಳಲ್ಲಿ ಸ್ವಲ್ಪ ಕಾಲ ನಿಂತರು. +ಆದರೆ ಮಳೆಯ ಇರಿಚಲು ಅವರನ್ನು ತೋಯಿಸಿತು. +ಮಳೆ ನಿಲ್ಲುವ ಸೂಚನೆಯೂ ತೋರಲಿಲ್ಲ. +ಮಳೆ ಮೋಡಗಳ ಮುಸುಕಿನಲ್ಲಿ ಕತ್ತಲು ಕೂಡ ದಟ್ಟವಾಯಿತು. +ಚಳಿ ಬಾಧಿಸತೊಡಗಿತು. +ಇರಿಚಲು ತಪ್ಪಿಸಿಕೊಳ್ಳಲು ಇಬ್ಬರೂ ಒತ್ತಿಕೊಂಡಂತೆ ನಿಂತಿದ್ದರು. +"ಮಳೆ ನಿಲ್ಲುವಂತೆ ತೋರುವುದಿಲ್ಲ; +ಆಟೋದಲ್ಲಿ ಹೋಗೋಣ" ಎಂದು ಅವನು ಮಾಡಿದ ಸಲಹೆಯನ್ನು ಅವಳು ಚಳಿಯಲ್ಲಿ ನಡುಗುತ್ತಾ ಒಪ್ಪಿಕೊಂಡಳು. +ಆಟೋ ಹಿಡಿದು ಕುಳಿತರು. +ಆಟೋ ಒಳಗಡೆ ಒತ್ತಿ ಕುಳಿತುಕೊಳ್ಳದೆ ಚಳಿ ಹೋಗುವಂತೆ ತೋರಲಿಲ್ಲ. +ಇವನೂ ಅವಳ ಚಳಿಯನ್ನು ನಿವಾರಿಸಲು ಬೆನ್ನ ಮೇಲೆ ಅದೇ ಮೊದಲ ಬಾರಿಗೆ ಕೈ ಹಾಕಿ ಭುಜ ಅದುಮಿ ಹಿಡಿದನು. +ಅವಳು ಸುತ್ತಮುತ್ತ ನೋಡಿದಳು. +ಒಮ್ಮೆ ಬೆಚ್ಚಿದಳು. +ಆದರೆ ಕೈ ತೆಗೆಸುವ ಮನಸ್ಸಾಗಲಿಲ್ಲ. +ಆಟೋ ತೂಗಾಡುತ್ತಾ ಸಾಗುತ್ತಿದ್ದಾಗ ಅವನತ್ತ ಒತ್ತಿಕುಳಿತಂತೆ ಅನಿಸಿತು. +ಚಳಿ ಇಳಿದು ಬೆವರುವಂತಾಯಿತು. +ಮೇಯೋ ಹಾಲ್‌ಬಳಿಯಿಂದ ಮಲ್ಲೇಶ್ವರದವರೆಗೆ ಎಷ್ಟು ಬೇಗ ಆಟೋ ಬಂತು ಎಂಬುದು ಅವಳಿಗೆ ಆಶ್ಚರ್ಯವಾಯಿತು. +ಅವನನ್ನು ಇಳಿಸಿ ಅವಳು ಮುಂದೆ ಹೋದಳು. +ಹೆಣ್ಣಿನ ನುಣುಪು ಅಪರಿಚಿತವಲ್ಲದಿದ್ದರೂ ಇವನಿಗೆ ಅವಳ ಮೃದು ತಲೆಕೂದಲು, ಬೆನ್ನಿನ ನುಣುಪು ಹಸ್ತದಲ್ಲಿ ಸ್ಥಾಯಿಯಾಗಿ ಉಳಿದು ಮೇಲೇರಿ ದೇಹದ ಎಲ್ಲ ಕಡೆ ನವಿರೆಬ್ಬಿಸಿತು. +ಮರುದಿನ ಬಸ್‌ ನಿಲ್ದಾಣದಲ್ಲಿ ಇಬ್ಬರಿಗೂ ಹೊಸ ವಾತಾವರಣವೇ ಕಂಡಿತ್ತು. +ನೇರವಾಗಿ ಕಣ್ಣುಗಳು ಸಂಧಿಸಲಾರದೆ ಹೋದವು. +ಅವನ ಕಣ್ಣಿನಲ್ಲಿ ಏನೂ ಆಗಿಲ್ಲ ಎಂಬ ನಿರಾಳ ಭಾವನೆ. +ಅವಳಲ್ಲಿ ಏನೋ ತಪ್ಪು ಮಾಡಿದ ಕಿಸಿನಗೆ. +ವಿಧಾನಸೌಧದ ಬಳಿ ಬಸ್ಸು ಇಳಿಯುವವರೆಗೆ ಮಾತಾಡುವ ಅವಕಾಶ ಸಿಕ್ಕಿರಲಿಲ್ಲ. +ಅವನು ಗಾಯಕ್ಕೆ ಕೋಲು ಹೆಟ್ಟಿದ ಹಾಗೆ "ಏನು ರಾತ್ರಿಯೆಲ್ಲಾ ಎಚ್ಚರವಾಗೇ ಇದ್ರಾ, ನಿದ್ದೆ ಮಾಡಿದ ಹಾಗಿಲ್ಲ. . 'ಎಂದು ಮಾತಿಗೆ ಆರಂಭಿಸಿದನು. +ಅವಳು "ಹಾಗೇನೂ ಇಲ್ಲಪ್ಪ, ನನಗೆ ತಲೆ ಇಟ್ಟ ತಕ್ಷಣ ನಿದ್ದೆ ಬರುತ್ತೆಗೊತ್ತಾ" ಎಂದು ತೀವ್ರತೆಯನ್ನು ಕಡಿಮೆ ಮಾಡಿದಳು. +ಆ ಸಂಜೆ ಮತ್ತೆ ಸೇರಿದರು. +ಅವಳು ನಿನ್ನೆ ಇದ್ದ ಲಹರಿಯಲ್ಲಿ ಇರಲಿಲ್ಲ. +ಹೋಟೆಲಿನಲ್ಲಿ ಕುಳಿತುಕೊಳ್ಳುತ್ತಲೇ "ಮನೆಗೆ ನಿನ್ನೆ ಮಾತ್ರ ತಡವಾಗಿ ಹೋಗಿರಲಿಲ್ಲ. +ಈ ಹಿಂದೆ ತುಂಬಾ ಸಲ ಹೋಗಿದ್ದೀನಿ. +ಆದರೆ ನಿನ್ನೆ ಮೊದಲಿನಂತೆ ಧೈರ್ಯವಾಗಿ ತಡವಾಗಿದ್ದಕ್ಕೆ ಕಾರಣ ಹೇಳಲು ಸಾಧ್ಯವಾಗಲಿಲ್ಲ. +ಗಟ್ಟಿಯಾಗಿ ಮಾತಾಡುವ ನೈತಿಕ ಸ್ಥೈರ್ಯ ಉಡುಗಿ ಹೋದ ಹಾಗೆ ಅನಿಸಿತು"ಎಂದಳು. +ಇವನು ಸ್ವಲ್ಪ ಹೊತ್ತು ಯೋಜಿಸಿ "ಅದೇಕೆ ಹಾಗೆ ಅಂದುಕೊಳ್ಳಬೇಕು. +ತಪ್ಪು ಮಾಡಿದರೆ ಸರಿ,ನೀವು ತಪ್ಪು ಮಾಡಿದ ಭಾವನೆ ಇಟ್ಟುಕೊಂಡರೆ ಒಬ್ಬರ ಜತೆ ಮಾತಾಡುವುದು ಕೂಡ ಅಪರಾಧವಾಗುತ್ತೆ. +ಹೀಗಾದರೆ ದ್ವೀಪವಾಗಿ ಉಳಿಯಬೇಕಾಗುತ್ತೆ. +ಅಪರಾಧೀ ಭಾವನೆ ಇಟ್ಟುಕೊಳ್ಳದಿದ್ದರೆ ಎಲ್ಲ ಸಂದರ್ಭದಲ್ಲೂ ಧೈರ್ಯವಾಗಿಯೇ ಉಳಿಯಬಹುದು. . '"ಎಂದು ವಿವರಣೆ ನೀಡತೊಡಗಿದ. +ಅವಳಿಗೆ ತಲೆಯ ಮೇಲೆ ಹಿಂಬೆರಳಿನಿಂದ ಕುಟ್ಟಿದಂತಾಯಿತು. +ಅವನ ಕಣ್ಣಲ್ಲಿ ಕಣ್ಣಿಟ್ಟಳು. +ಅವನು ಪೆಚ್ಚಾಗಿ ನಕ್ಕ. +ಅವಳಿಗೆ ರೇಗಿತು. +"ಏನ್ರೀ ನೀವು? +ಯಾವುದೇ ಹೊಣೆಗಾರಿಕೆ ಇಲ್ಲದ ಹಾಗೆ ಹೇಳುತ್ತೀರಿ? +ನೀವು ಮಾಡಿದ್ದು ಸರೀನಾ? "ಎಂದಳು. +“ನಾನೆಲ್ಲಿ ಹಾಗೆ ಹೇಳಿದೆ. +ಆದರೆ, ಅದು ತಪ್ಪು ಅಂತ ನೀವು ಇಷ್ಟು ಬೇಗ ಯಾಕೆ ತೀರ್ಮಾನ ಮಾಡಿದಿರಿ, ಪರಿಸ್ಥಿತಿ ಹಾಗಿತ್ತು. +ಮಳೆ, ಚಳಿ, ಒಟ್ಟಿಗೆ ಹೋಗಬೇಕಿತ್ತು. +ಅಷ್ಟೆ ಅದಕ್ಕಿಂತ ಹೆಚ್ಚೇನೂ ಆಗಲಿಲ್ಲ. +ನಾನಂತೂ ನಿನ್ನೆಯೇ ಮರೆತು ಬಿಟ್ಟೆ. +ನೀವು ಮಾತ್ರ ಅದನ್ನೇ ಹಚ್ಚಿಕೊಂಡು ರಾತ್ರಿಯೆಲ್ಲಾ ನಿದ್ದೆಗೆಟ್ಟರಿ. . 'ಎಂದು ರಾಮಕೃಷ್ಣ ಪರಮಹಂಸರ ದೃಷ್ಟಾಂತ ಕಥೆಯೊಂದನ್ನು ಆರಂಭಿಸಿದ, ಕಥೆ ಕೇಳುತ್ತಾ ಅವಳು ಮೊದಲಿನ ಬಿಗುವನ್ನು ಮರೆತಳು. +ಅನಗತ್ಯ ಮಹತ್ವ ನೀಡಿದೆನೇ ಎಂಬ ಅಳುಕು ಕೂಡ ಅವಳನ್ನು ಬಾಧಿಸಿತು. +ಆ ದಿನ ಮಳೆ ಕೂಡ ಇರಲಿಲ್ಲ. +ಆಟೋ ಹಿಡಿಯುವ ಪ್ರಸಂಗ ಬರಲಿಲ್ಲ. +ಮುಂದಿನ ವಾರಗಳಲ್ಲಿ ಅವರು ಮತ್ತೆ ಮತ್ತೆ ಆಟೋದಲ್ಲಿ ಪ್ರಯಾಣ ಮಾಡಿದರು. +ಕಳ್ಳತನದಲ್ಲಿ ಆಟೋಪ್ರಯಾಣದ ಸವಿಯನ್ನು ಮರೆಯಲು ಸಾಧ್ಯವಾಗಲಿಲ್ಲ. +ಅವಳಿಗೆ ಮೊದಲಿನ ಅಳುಕು ಇರಲಿಲ್ಲ. +ಅವನೇ ಒಮ್ಮೆ ಕೇಳಿದ್ದ- 'ಹೀಗೆ ಹಚ್ಚಿಕೊಂಡರೆ ಹೇಗೆ?' ಅದಕ್ಕೆ ಅವಳು “ನಾನು ಎಷ್ಟೋ ಅಂದುಕೊಳ್ಳುತ್ತೇನೆ. +ಇವತ್ತು ನೋಡಲೇಬಾರದು, ಮಾತಾಡಿಸಬಾರದು ಅಂತ. + ಆದರೆ ನೋಡಿದ ತಕ್ಷಣ ನನ್ನ ನಿರ್ಧಾರ ಎಲ್ಲ ಕರಗಿ ಹೋಗುತ್ತೆ. + ಗೊತ್ತು ಈ ಜನ್ಮದಲ್ಲಿ ಸಾಧ್ಯವಿಲ್ಲ ಅಂತ. +ಆದರೆ ನೋಡೋಣ, ಇರುವಷ್ಟು ಕಾಲ. . ' ಎಂದಳು. +ಅವನಿಗೆ ಅವಳ ಧೈರ್ಯಕ್ಕೆ ಬೆರಗಾಯಿತು. +ಭಯವೂ ಆಯಿತು. +ಅವಳಿಂದ ತಪ್ಪಿಸಿಕೊಳ್ಳುವ ಯೋಚನೆ ಮೂಡಿತಾದರೂ ಅದು ಬೆಳೆಯಲಿಲ್ಲ. +ಏಕೆಂದರೆ ಅವಳು ಅವನಿಗೆ ಅರ್ಥಿಕವಾಗಿ ಹೊರೆಯಾಗಿರಲಿಲ್ಲ. +ಒಮ್ಮೆ ಈತ ಕೊಟ್ಟರೆ ಅವಳು ಇನ್ನೊಮ್ಮೆ ಆಟೋ ಚಾರ್ಜು ಕೊಡುತ್ತಿದ್ದಳು. +ಹೋಟೆಲಿನ ಬಿಲ್ಲುಗಳ ವಿಚಾರದಲ್ಲಿಯೂ ಅವಳು ಜಾಸ್ತಿಯೇ ಪಾಲು ತೆಗೆದುಕೊಳ್ಳುತ್ತಿದ್ದಳು. +'ಇರಲಿ, ನೀವು ಸಂಸಾರ ನಡೆಸಬೇಕಲ್ಲ'ಎಂದು ಛೇಡಿಸುವಂತೆ ಬಿಲ್ಲು ಕೊಡುತ್ತಿದ್ದಳು. +ಅವಳೊಂದಿಗೆ ಮಾತಾಡುವಾಗ ಇವನ ಬಾಯಲ್ಲಿ ಏಕವಚನವೇ ಬರುತ್ತಿತ್ತು. +'ಆತ್ಮೀಯತೆಗೆ ಅದೇ ಸರಿ' ಎಂದು ಇವನು ಓಲೈಸಿ 'ನೀನೂ ಹಾಗೆಯೇ ಕರಿ'ಎಂದಿದ್ದ. +ಅದಕ್ಕೆ ಅವಳು ಆಕ್ಷೇಪಿಸಲಿಲ್ಲ. +ಇವನನ್ನು ಏಕವಚನದಲ್ಲಿ ಕರೆಯಲು ಒಮ್ಮೆ ಪ್ರಯತ್ನಿಸಿದ್ದಳು. +ಆದರೆ ಮುಂದುವರಿಸಿರಲಿಲ್ಲ. +ಒಮ್ಮೆ ರಜೆ ಹಾಕಿ ಬೆಳಗಿನ ಚಿತ್ರ ಪ್ರದರ್ಶನಕ್ಕೆ ಹೋಗಿದ್ದರು. +ಆಗ ಅವಳಂತೂ ಚಿತ್ರ ನೋಡಲು ಬಿಟ್ಟಿರಲಿಲ್ಲ. +ಟಾಕೀಸಿನಿಂದ ಹೊರ ಬಂದಾಗ ಆಟೋದಲ್ಲಿ ಅಲ್ಲಿ ಇಲ್ಲಿ ಸುತ್ತಿ ಕಚೇರಿ ಮುಗಿಯುವ ವೇಳೆಗೆ ವಿಧಾನಸೌಧದ ಬಳಿ ವಾಪಸಾಗಿ ಮನೆಗೆ ಮರಳಿದ್ದರು. +ಹೀಗೆ ಇರುವಾಗ ಅವಳ ಅಕ್ಕನಿಗೆ ಗಂಡು ಗೊತ್ತಾಯಿತು. +ತಂದೆ ಇವಳಿಗೂ ಪ್ರಯತ್ನ ನಡೆಸಿದ್ದರು. +ಸರ್ಕಾರಿ ಕಚೇರಿಯಲ್ಲಿ ಗುಮಾಸ್ತೆಯಾಗಿದ್ದ ಉತ್ತರ ಕರ್ನಾಟಕ ಕಡೆಯ ಹುಡುಗನೊಬ್ಬ ಇವಳಿಗೆ ಗೊತ್ತಾದ. +ಅವನು ಬಂದು ನೋಡಿ ಒಪ್ಪಿದ. +"ಮದುವೆಗೆ ನೀನೇ ಓಡಾಡಬೇಕಪ್ಪ" ಎಂದು ಅವಳ ತಂದೆ ಇವನನ್ನು ಕೋರಿದರು. +ಇವನು ಸಂತೋಷದಿಂದಲೇ ಒಪ್ಪಿಗೆ ನೀಡಿದ. +ಮದುವೆಗಾಗಿ ರಜೆ ಹಾಕಿದ. +ಮದುವೆಯ ಸಿದ್ಧತೆಗಳು ನಡೆಯುತ್ತಿರುವಾಗ ಅವಳು ಮಾಡಿಸಲು ಕೊಟ್ಟಿದ್ದ ಬಳೆಗಳನ್ನು ತರಲು ಇವನೊಟ್ಟಿಗೆ ಬಂದಳು. +ಮನೆಯವರ ಎದುರು ಧೈರ್ಯವಾಗಿ ಒಟ್ಟಿಗೆ ಆಟೋ ಹತ್ತಿದರು. +ಆಟೋದಲ್ಲಿ ಲಾಲ್‌ಬಾಗ್‌ ಗೇಟ್‌ವರೆಗೆ ಬಂದರು. +ಉದ್ಯಾನ ಪ್ರವೇಶಿಸಿದರು. +ಒಂದೆಡೆ ಕುಳಿತರು. +ಅವಳಿಗೆ ಅಗಲಿಕೆಯ ದುಃಖ ಉಮ್ಮಳಿಸಿ "ನಾನು ಈ ಮದುವೆಗೆ ಒಪ್ಪಿಕೊಳ್ಳಲೇ ಬೇಕೆ?" ಎಂದು ಹೆಗಲಿಗೆ ಜೋತು ಬಿದ್ದಳು. +ಇವನು ಅವಳ ಬೆನ್ನ ಮೇಲೆ ಕೈ ಆಡಿಸಿದ. +ಮೃದುವಾಗಿ ಕೂದಲನ್ನು ನೇವರಿಸಿದ. +'ಇರುವಷ್ಟು ಕಾಲ, ಅಂದಿದ್ದೆಯಲ್ಲ. +ಆ ಕಾಲ ಈಗ ಬಂತು, ಅಷ್ಟೆ. +ಈಗ ನೋಡು ಮದುವೆ ಬೇಡ ಅಂದೆ, ನಂತರ ಏನು ಎಂಬುದನ್ನು ಯೋಚಿಸು. +ನಾವಿಬ್ಬರೂ ಮದುವೆ ಆಗುವುದು ಸಾಧ್ಯವೇ? +ನಿನಗೇ ಗೊತ್ತು. +ನಾನು ಹೆಂಡತಿ ಮಕ್ಕಳನ್ನು ಎಷ್ಟು ಹಚ್ಚಿಕೊಂಡಿದ್ದೇನೆ ಅಂತ. +ಅವರನ್ನು ಬಿಟ್ಟು ಬರುವುದು ಸಾಧ್ಯವೇ ಇಲ್ಲ. +ನೀನು ಆರ್ಥಿಕವಾಗಿ ನನಗೆ ಹೊರೆ ಅಲ್ಲ. +ಒಟ್ಟಿಗೆ ಒಂದೇ ಸೂರಿನಲ್ಲಿ ನಮ್ಮೊಟ್ಟಿಗೆ ಇರುತ್ತೀಯಾ? +ನನ್ನ ಹೆಂಡತಿಯನ್ನು ಒಪ್ಪಿಸುವ ಹೊಣೆ ನನ್ನದು. +ಅವಳೊಟ್ಟಿಗೆ ಹೊಂದಿಕೊಳ್ಳುವ ಜವಾಬ್ದಾರಿ ನಿನ್ನದು. +ಹೇಳು, ಈಗಲೂ ಕಾಲ ಮಿಂಚಿಲ್ಲ. +ಪತ್ರಿಕೆಗಳನ್ನು ಮಾಡಿಸಿದ್ದಾರೆ. +ಆದರೆ ಆ ಗಂಡಿಗೆ ನೇರವಾಗಿ ಹೇಳಿದರಾಯಿತು. +ಇಬ್ಬರಿಗೂ ಕೆಲಸ ಇರುವುದರಿಂದ ಯಾರಿಗೂ ಹೆದರುವ ಅಗತ್ಯ ಇಲ್ಲ.' ಎಂದ. +ಅವಳು ಮಾತಾಡಲಿಲ್ಲ. +ಹುಲ್ಲು ಗರಿಕೆಯೊಂದನ್ನು ಹಿಡಿದು ತುಂಬ ಹೊತ್ತು ತಿರಿಚಿದಳು. +ನೋಡುತ್ತಾ ಹಲ್ಲಿನಿಂದ ಕಚ್ಚಿ ಉಗಿದಳು. +'ಡೈವೋರ್ಸ್‌ ಕೊಡಿ, ನಾನು ಯಾರೊಟ್ಟಿಗೂ ಹಂಚಿಕೊಳ್ಳಲಾರೆ. . ' ಎಂದಳು. +ಅವನು ಪೆಚ್ಚಾಗಿ ನಗುತ್ತಾ 'ಏನು ಕಾರಣ ಕೊಡಲಿ. +ಮಕ್ಕಳು ಏನು ಪಾಪ ಮಾಡಿವೆ. +ಅವನ್ನೇನು ಮಾಡಲಿ??' ಎಂದು ಕೇಳಿದ. +ಅವಳು ಅತ್ತಳು. +ಇವನನ್ನು ಬಿಗಿಯಾಗಿ ಹಿಡಿದಳು. +ಕಣ್ಣೀರಿನಿಂದ ಭುಜ ತೋಯಿಸಿದಳು. +ಇವನೂ ಸಮಾಧಾನ ಮಾಡುವವನಂತೆ ಬೆನ್ನ ಮೇಲೆ ಮೃದುವಾಗಿಟ್ಟುತ್ತಿದ್ದ. +ತುಂಬ ಹೊತ್ತಿನ ನಂತರ ಚೇತರಿಸಿಕೊಂಡಳು. +ಅಳು ಮತ್ತು ನಗುವಿನ ನಡುವಣ ಭಂಗಿಯಲ್ಲಿ'ಹೋಗೋಣವಾ' ಎಂದು ಎದ್ದಳು. +ಅವಳ ಮದುವೆ ಮುಗಿಯುವ ವೇಳೆಗೆ ಇವನಿಗೆ ಶಿವಮೊಗ್ಗಕ್ಕೆ ವರ್ಗವಾಯಿತು. +ಮದುವೆಯಾಗಿದ್ದಕ್ಕೆ ಬಿಡುಗಡೆಯ ಭಾವನೆಯಿಂದ ನಿರಾಳವಾಗಿದ್ದ ಅವನು ಅದೇ ಭಾವದಲ್ಲಿ ಅವಳ ಮನೆಗೆ ಹೋಗಿ ತನ್ನ ವರ್ಗಾವಣೆಯ ವಿಷಯ ತಿಳಿಸಿದ. +'ಅಂತೂ ಮದುವೆ ಮುಗಿಯುವವರೆಗೆ ಇಲ್ಲೇ ಇದ್ದಿರಲ್ಲ' ಎಂದು ಮನೆಯವರು ಹೇಳಿ ಮದುವೆಗೆ ಓಡಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. +ಇವನೂ ಅವಳ ಗಂಡನ ಜತೆ ಆತ್ಮೀಯವಾಗಿ ಮಾತನಾಡಿ "ಶಿವಮೊಗ್ಗಕ್ಕೆ ಬಂದಾಗ ದಂಪತಿಗಳು ಬನ್ನಿ" ಎಂದು ಆಹ್ವಾನಿಸಿದ. +'ಓಹೋ,ಶಿವಮೊಗ್ಗಾಕ್ಕೆ ಬಂದಾಗಲೇ ಏಕೆ, ನಿಮ್ಮ ಮನೆಗೆ ಅಂತಲೇ ಬರುತ್ತೇವೆ' ಎಂದು ಅವಳ ಗಂಡ ಒಪ್ಪಿಗೆ ಸೂಚಿಸಿದ. +ಅಲ್ಲಿಂದೀಚೆಗೆ ಸುಮಾರು ವರ್ಷಗಳ ಕಾಲ ಅವಳ ಭೇಟಿ ಆಗಲಿಲ್ಲ. +ಮದುವೆಯಾದ ಮೊದಲ ವರ್ಷಗಳಲ್ಲಿ ಅವಳು ಎಂದಿನಂತೆ ಇವನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸುತ್ತಿದ್ದಳು. +ಮದುವೆ ವಾರ್ಷಿಕೋತ್ಸವಕ್ಕೂ ಶುಭಾಶಯ ಪತ್ರ ಬರುತ್ತಿತ್ತು ಇವನು ಎಚ್ಚರಿಕೆಯಿಂದ ಹೆಂಡತಿಯ ಹೆಸರನ್ನು ಮೊದಲು ಹಾಕಿ ಶುಭಾಶಯ ಪತ್ರಗಳನ್ನು ಕಳುಹಿಸುತ್ತಿದ್ದ. +ಅವಳಿಗೆ ಹೆಣ್ಣು ಮಗುವಾದಾಗ ಅದಕ್ಕಾಗಿ ಚಿಂತಿಸುವುದು ಬೇಡ ಎಂದು ಹೆಂಡತಿಯ ಮೂಲಕ ಕಾಗದ ಬರೆಸಿದ್ದ. +ಬರುಬರುತ್ತಾ ಕಾಗದ ಪತ್ರವ್ಯವಹಾರ ಕಡಿಮೆಯಾಯಿತು. +ಕೊನೆಗೆ ನಿಂತೇ ಹೋಯಿತು. +ಇವನಿಗೂ ಕಚೇರಿಯಲ್ಲಿ ಹೊಂದಿಕೊಳ್ಳುವ ಕಸರತ್ತು. +ಅಲ್ಲಿನ ಮಳೆ, ಬೇಸಿಗೆಯ ಬಿಸಿ, ನಾಗರಿಕ ಸೌಲಭ್ಯಗಳ ಕೊರತೆಯ ಅನುಭವಕ್ಕೆ ಒಗ್ಗಿಕೊಳ್ಳುವ ಹೊತ್ತಿಗೆ ಬಡತಿಯಾಗಿ ಬೆಂಗಳೂರಿಗೆ ಮತ್ತೆ ವರ್ಗವಾಯಿತು. +ರಾಜಾಜಿನಗರದಲ್ಲಿ ಬಾಡಿಗೆಗೆ ಮನೆ ಸಿಕ್ಕಿತು. +ಮಗ ಕಾಲೇಜು ಹತ್ತಿದ್ದ. +ಮಗಳು ಹೈಸ್ಕೂಲಿನಲ್ಲಿದ್ದಳು. +ಸಂಸಾರ ಮೊದಲಿಗಿಂತ ಸುಭದ್ರವಾಗಿತ್ತು. +ಒಂದು ಸೊಸೈಟಿಯ ಸದಸ್ಯನಾಗಿ ನಿವೇಶನವನ್ನೂ ಪಡೆದುಕೊಂಡಿದ್ದ. +ಮನೆ ಕಟ್ಟಬೇಕು ಎಂದು ಗಂಡ ಹೆಂಡತಿ ಸಮಾಲೋಚನೆ ನಡೆಸುತ್ತಿದ್ದರು. +ಬಡತಿಯಾಗಿ ಬೆಂಗಳೂರಿಗೆ ಬಂದ ಮೇಲೆ ಹಳೆಯ ಸ್ನೇಹಿತರೊಂದಿಗೆ ಹೊಸಬರು ಬದಲಾದ ಹೊಣೆಗಾರಿಕೆ ಸ್ವಲ್ಪ ದಿನ ಹೊಂದಿಕೊಳ್ಳಲು ಹಿಡಿಯಿತು. +ಸಂಜೆ ಕಚೇರಿ ಬಿಟ್ಟ ಮೇಲೆ ಮನೆ ಸೇರಲು ಸ್ಕೂಟರ್‌ ತೆಗೆದುಕೊಂಡಿದ್ದ. +ಒಮ್ಮೆ ಕಾಮರ್ಸ್‌ ಕಾಲೇಜು ಬಳಿ ಪೆಟ್ರೋಲ್‌ ಮುಗಿದಾಗ ಬಸ್‌ ನಿಲ್ದಾಣದ ಬಳಿಯೇ ನಿಲ್ಲಿಸಬೇಕಾಯಿತು. +ಪೆಟ್ರೋಲನ್ನು ರಿಸರ್ವ್‌ಗೆ ತಿರುಗಿಸಿ ಹೆಲ್ಮೆಟ್‌ ತೆಗೆದು ಸ್ವಲ್ಪ ಹೊತ್ತು ಸುತ್ತಮುತ್ತ ನೋಡಿ ಹೊರಡಲು ಅನುವಾಗಿದ್ದಾಗ ಬಸ್‌ ನಿಲ್ದಾಣದಿಂದ ಇವನತ್ತ ಬಂದ ವ್ಯಕ್ತಿಯೊಬ್ಬ ಹತ್ತಿರ ಬಂದು ಪರಿಚಿತನಂತೆ ನಕ್ಕ. +ಎಲ್ಲಿಯೋ ನೋಡಿದ್ದೇನೆ ಎಂಬ ಭಾವನೆ ಇವನ ಮುಖದಲ್ಲಿಯೂ ಸುಳಿಯಿತು. +ಅವನು "ಏನು ಮರೆತೇಬಿಟ್ಟಿರಾ ನಾನು. ಮೈತ್ರಿ ಗಂಡ' ಎಂದು ಹೇಳಿದಾಗ ಇವನಿಗೆ ಮೈತ್ರಿ ಹೆಸರು ಮನಸ್ಸಿಗೆ ಹೊಳೆಯಲಿಲ್ಲ. +ಸ್ವಲ್ಪಹೊತ್ತು ನೆನಪಿನ ಆಳಕ್ಕೆ ಹೋದಾಗ ತಟಕ್ಕನೆ ಮಿಂಚಿದಂತಾಗಿ ನೆನಪು ನವಿರೆದ್ದು ಸಂಭ್ರಮಗೊಂಡ. +“ಎಷ್ಟು ವರ್ಷವಾಯಿತು, ನಿಮ್ಮನ್ನು ನೋಡಿ. +ಮಗಳು ಚೆನ್ನಾಗಿದ್ದಾಳಾ. +ಮೈತ್ರಿ ಹೇಗಿದ್ದಾರೆ. +ಅವರ ಅಮ್ಮಹೇಗಿದ್ದಾರೆ, ನೀವು ಹೇಗಿದ್ದೀರಿ, ಈಗ ಎಲ್ಲಿಗೆ ವರ್ಗವಾಗಿದೆ?” ಎಂದು ಒಂದೇ ಸಮನೆ ಪ್ರಶ್ನೆಗಳನ್ನುಸುರಿಸಿದ. +ಅದಕ್ಕೆ ಅವನು 'ಅದಕ್ಕೆಲ್ಲಾ ನಿಧಾನ ಉತ್ತರ ಹೇಳುತ್ತೇನೆ, ಮೊದಲು ಮನೆಗೆ ಹೋಗೋಣ ನಡೆಯಿರಿ' ಎಂದು ಇವನ ಒಪ್ಪಿಗೆಗೂ ಕಾಯದೆ ಸ್ಕೂಟರಿನ ಹಿಂಬದಿಯಲ್ಲಿ ಕುಳಿತ. +ಮೈತ್ರಿ ಮನೆಗೆ ಹೋಗುವವರೆಗೆ ಹಿಂಬದಿ ಕುಳಿತಿದ್ದ ಅವಳ ಗಂಡ ಬಡಬಡಿಸುತ್ತಲೇ ಇದ್ದ. +ಹೆಲ್ಮೆಟ್‌ ಹಾಕಿದ್ದ ಕಾರಣ ಮಾತುಗಳು ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ. +ಮಲ್ಲೇಶ್ವರದಲ್ಲಿ ಅವಳ ಮನೆ. +ಅಕ್ಕ ಮದುವೆಯಾದ ಮೇಲೆ ಬೇರೆ ಮನೆ ಮಾಡಿದಳಂತೆ. +ತಂದೆ ತೀರಿ ಹೋಗಿದ್ದಾರೆ. +ತಮ್ಮ ಪದವಿ ಮುಗಿಸಿ ಹುಬ್ಬಳ್ಳಿಯಲ್ಲಿ ಕೆಲಸದಲ್ಲಿದ್ದಾನೆ. +ಮದುವೆಯಾಗಿದ್ದಾನೆ ಅಣ್ಣಂದಿರು ನೆಂಟರಂತೆ ಬಂದು ಹೋಗುತ್ತಾರೆ. +ಗೌರಿ ಹಬ್ಬಕ್ಕೆ ಬಾಗಿನ ಅಂತ ಸ್ವಲ್ಪ ಹಣ ಕೊಡುತ್ತಾರೆ. +ಮಗಳು ಶಾಲೆಗೆ ಹೋಗುತ್ತಿದ್ದಾಳೆ- ಎಂಬ ವಿವರಗಳು ಮನೆ ಸೇರುವ ವೇಳೆಗೆ ತಿಳಿದವು. +ಅನಿರೀಕ್ಷಿತವಾಗಿ ಬಂದವನನ್ನು ಮೈತ್ರಿ ಬೆರಗಾಗಿ ನೋಡಿದಳು. +ಸಂಭ್ರಮವೋ, ಹಠಾತ್ತಾಗಿ ಎದುರಾದ ಸ್ಥಿತಿಗೆ ಒಗ್ಗುವ ಸಂದಿಗ್ಧವೋ ಸ್ಟಲ್ಪ ಹೊತ್ತು ಮಾತಿಗೆ ತಡಕಾಡಿದಳು. +ಗಂಡನ ಎದುರು ಮೊದಲ ಬಾರಿಗೆ ಇಕ್ಕಟ್ಟಿನಲ್ಲಿ ಸಿಲುಕಿದಂತೆ ಬಿಳಿಚಿಕೊಂಡಳು. +ಗಂಡ ಉಪಚಾರ ಮಾಡುತ್ತಿದ್ದರೂ ಅದೆಲ್ಲ ಬೇಡ ಎಂಬಂತೆ ಉದಾಸೀನ ತೋರಲು ಪ್ರಯತ್ನಿಸಿದಳು. +ಅಪರಿಚಿತ ಭಾವನೆ ಆರೋಪಿಸಿಕೊಳ್ಳಲು ಅವಳು ಪ್ರಯತ್ನ ಮಾಡಿದಷ್ಟೂ ಅವನು ಅವಳ ಮನೆಯ ಒಳಗೆ ಬಲವಾಗಿ ಪ್ರವೇಶಿಸಿದಂತೆ ಅವಳ ಅಕ್ಕ ಅಣ್ಣಂದಿರ ವಿಚಾರ ಕೇಳತೊಡಗಿದ. +ಅವಳಿಗೆ ಕಷ್ಟ ಎನಿಸುತ್ತಿದ್ದರೂ ಗಂಡನ ಎದುರು ಸೌಜನ್ಯಕ್ಕೆ ಶ್ರಮಪಟ್ಟಳು. +ಅವನು ಹೊರಬೀಳುತ್ತಲೇ ಔಪಚಾರಿಕವಾಗಿ ಕೂಡ ಇನ್ನೊಮ್ಮೆ ಆಹ್ವಾನಿಸಲಿಲ್ಲ. +ಆ ರಾತ್ರಿಯೆಲ್ಲಾ ಅವಳಿಗೆ ತೊಳಲಾಟ. +ನಿದ್ದೆ ಬಾರದ ಹೊರಳಾಟ. +ಬೆಳಿಗ್ಗೆ ಕಣ್ಣು ಕೆಂಪಾಗಿ ಕೆಲಸದಲ್ಲಿ ಉತ್ಸಾಹ ಕುಂದಿದ್ದರೂ ಗಂಡನನ್ನು ಕಚೇರಿಗೆ, ಮಗಳನ್ನು ಶಾಲೆಗೆ ಕಳುಹಿಸಿ ಬ್ಯಾಂಕಿಗೆ ರಜೆ ಹಾಕುವುದಾಗಿ ಹೇಳಿ ನೇರ ಅವನ ಕಚೇರಿಗೆ ಬಂದಳು. +ಅವಳನ್ನು ಆತ ನಿರೀಕ್ಷಿಸಿರಲಿಲ್ಲ. +ಅವಳ ದುಗುಡ ಹೊತ್ತ ಮುಖನೋಡಿ ಪರಿಸ್ಥಿತಿಯನ್ನು ಅರಿತುಕೊಂಡ ಅವನು ಕೂಡಲೇ ಕಚೇರಿಯಿಂದ ಹೊರ ಬಂದ. +ಆಟೋರಿಕ್ಷಾ ಕರೆದು ಇಬ್ಬರೂ ಹತ್ತಿದ ಮೇಲೆ ಅವಳು ಲಾಲ್‌ಬಾಗ್‌ನತ್ತ ಹೋಗುವಂತೆ ಹೇಳಿದಳು. +ಉದ್ಯಾನದ ಕಲ್ಲು ಬೆಂಚಿನ ಮೇಲೆ ಕುಳಿತ ಮೇಲೆ ಸ್ವಲ್ಪ ಹೊತ್ತು ಮೌನ ಆವರಿಸಿತು. +'ಯಾಕೆ ಸುಮ್ಮನೆ ಕುಳಿತು ಬಿಟ್ಟಿರಿ' ಎಂದು ಅವನು ಪೀಠಿಕೆ ಹಾಕಿದ. +ಅವಳು ತಡೆದು ಹಿಡಿದಿದ್ದ ಪ್ರವಾಹವನ್ನು ಬಿಟ್ಟಂತೆ ಅಳತೊಡಗಿದಳು. +ಅಳು ಬಿಕ್ಕುವ ಹಂತ ಮುಟ್ಟಿತು. +ಅತ್ತಷ್ಟೂ ಒಳ್ಳೆಯದು, ಮನಸ್ಸಿನ ಒತ್ತಡವೆಲ್ಲ ಕೊಚ್ಚಿಹೋಗಿ ಪರಿಸ್ಥಿತಿ ತಿಳಿಯಾಗುತ್ತದೆ ಎಂದು ಆತ ಸಮಾಧಾನಪಡಿಸಲು ಯತ್ನಿಸಲಿಲ್ಲ. +ಸುಧಾರಿಸಿಕೊಂಡವಳು 'ನೀವೇಕೆ ಬೆಂಗಳೂರಿಗೆ ವಾಪಸು ಬಂದಿರಿ?' ಎಂದು ಕೇಳಿದಳು. +ಅವನ ಬೆನ್ನ ಮೇಲೆ ಮೃದುವಾಗಿ ಗುದ್ದುತ್ತಾ ನಗುವನ್ನು ತಂದುಕೊಂಡಳು. +"ಓಂದು ಅಂಗಲ್‌ನಲ್ಲಿ ಅವರು ನಿಮ್ಮಂತೆಯೇ ಕಾಣುತ್ತಾರೆ. +ನಾನು ಇನ್ನೂ ಸಂಸಾರದಲ್ಲಿ ಇರುವುದಕ್ಕೆ ಅದೂ ಪ್ರಾಯಶಃ ಕಾರಣ, ಗೊತ್ತಾ" ಎಂದಳು. +ಅವನು ಮಾತಾಡಲಿಲ್ಲ. +ಅವಳ ಚಾಚಿದ ಕೈ ಅದುಮಲು ಪ್ರಯತ್ನಿಸಿದಾಗ ಅವಳು ಕೊಸರಿಕೊಂಡಳು. +ಇವನಿಗೆ ಮುಖಭಂಗವಾಯಿತು. +ಅದನ್ನು ತೋರಿಸಿಕೊಳ್ಳಲಿಲ್ಲ. +ತಾಳ್ಮೆ ಕಳೆದುಕೊಳ್ಳಬಾರದು ಎಂದು ಮನಸ್ಸುಗಟ್ಟಿ ಮಾಡಿಕೊಂಡ. +'ನೋಡು ಪುಟ್ಟ, ನಾವು ಬಹಳ ದೂರ ಬಂದು ಬಿಟ್ಟಿದ್ದೀವಿ. +ಇನ್ನು ವಾಪಸು ಹೋಗೋದು ಸಾಧ್ಯವೇ ಇಲ್ಲ. +ಈಗ ಏನು ಮಾಡಬಹುದೂ ಅಂದರೆ. . . ಹೊಂದಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳುವುದು.. ' ಎಂದವನು ಮುಂದೆ ಹೇಳಲಾಗದೆ ಪೆಚ್ಚಾದ. +ಅದನ್ನು ಕೇಳಿದರೂ ಗಮನಿಸದವಳಂತೆ ಅವಳು ಮುಂದುವರಿಸಿದಳು: +"ನಿನ್ನೆ ರಾತ್ರಿ ಎಲ್ಲಾ ನಿದ್ದೆ ಬರಲಿಲ್ಲ. +ತುಂಬ ಹೊರಳಾಡಿದೆ. +ನಿಜ ಹೇಳಬೇಕೆಂದರೆ ಮದುವೆಯಾದ ಮೇಲೆ ಅನೇಕ ವರ್ಷ ನಿಮ್ಮದೇ ಚಿತ್ರ ಕಾಣುತ್ತಿತ್ತು. +ಪ್ರತಿಸಲ ಸೇರುವಾಗಲೂ ನಿಮ್ಮ ಆ ಒಂದು ಭಂಗಿಯೇ ನನ್ನ ಕಣ್ಮುಂದೆ ಸುಳಿಯುತ್ತಿತ್ತು ಈಗ. . "ಎಂದು ಸ್ವಲ್ಪ ಹೊತ್ತು ಮಾತು ನಿಲ್ಲಿಸಿದಳು. +ಅವನು ಬೆರಗಿನಿಂದ ನೋಡುತ್ತಿದ್ದ. +ಅವಳು ಮುಂದುವರಿಸಿದಳು: +"ಈಗ ನನಗೂ ವಯಸ್ಸಾಗಿದೆ. +ಮಗಳು ದೊಡ್ಡವಳಾಗಿದ್ದಾಳೆ. +ನೀವು ಹೇಳಿದಂತೆ ಭಾವಿಸಿಕೊಳ್ಳುವುದು ಹೇಳಿದಷ್ಟು ಸುಲಭ ಅಲ್ಲ. +ತುಂಬ ಕಷ್ಟ ಎಂಬುದು ನನ್ನ ಅನುಭವ. +ಎಲ್ಲ ಮರೆತು ಹೊಂದಿಕೊಳ್ಳುವ ಹಂತಕ್ಕೆ ಬಂದಿದ್ದಾಗ ನೀವು ಮತ್ತೆ ಬಂದಿದ್ದೀರಿ. . "ಎಂದಳು. +"ಆದರೆ, ಮನಸ್ಸಿಗೆ ಹಿಡಿಸಿದಂತೆ ಪ್ರಾಮಾಣಿಕವಾಗಿ ಇರಬಹುದಲ್ಲ, ಸ್ನೇಹದಿಂದ ಇರುವುದು ಕಷ್ಟವೇನೂ ಅಲ್ಲ"ಎಂದು ನಿಧಾನವಾಗಿ ಬಿಡಿಸಿ ಹೇಳಿದ. +ಅವಳು ಸ್ವಲ್ಪ ಹೊತ್ತು ಮೌನಿಯಾದಳು. +ಇವನನ್ನು ಕಣ್ಣಲ್ಲಿ ದೃಷ್ಟಿಸಿದಳು. +ಇಬ್ಬರ ಮಧ್ಯೆ ಅಡಿಯಷ್ಟು ಜಾಗ ಇರುವಂತೆ ಸರಿದು ಕುಳಿತಳು. +ಸೆರಗನ್ನು ಎಳೆದುಕೊಂಡುನೀಟಾಗಿ ಸುತ್ತಿಕೊಂಡು. . ಎದ್ದಳು. +"ಇಲ್ಲ. . . ನನಗೆ ನೀವು ಹೇಳಿದಂತೆ ಇರುವುದು ಸಾಧ್ಯವಿಲ್ಲ. +ನಾನು ಮಾತಾಡುತ್ತಾ ಹೋದಂತೆ ನಿಮ್ಮೆದುರು ಸೋತು ಹೋಗುತ್ತೇನೆ. +ವಾದ ಅಥವಾ ಚರ್ಚೆ ಮಾಡುವುದಕ್ಕೆ ನನ್ನ ಹತ್ತಿರ ಶಕ್ತಿ ಇಲ್ಲ. +ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಡಿ. +ಇನ್ನು ಭೇಟಿಯಾಗುವುದೂ ಬೇಡಿ. . . ಎನ್ನುತ್ತಾ ಉದ್ಯಾನದ ಬಾಗಿಲತ್ತ ರಭಸದಿಂದ ಧಾವಿಸಿದಳು. +ಅವನಿಗೆ ಅವಳ ನಿರ್ಧಾರ ಅನಿರೀಕ್ಷಿತವಾಗಿತ್ತು. +ಅದರಿಂದ ಚೇತರಿಸಿಕೊಂಡು ಅವಳನ್ನು ನಿಲ್ಲಿಸಲು "ಮೈತ್ರಿ. ಮೈತ್ರಿ. . "ಎಂದು ಕರೆಯುತ್ತಾ ಹಿಂಬಾಲಿಸಿದ. +ಅವನು ಚಿಕ್ಕ ಗೇಟು ದಾಟಿ ಬರುವುದರಲ್ಲಿ ಅವಳು ರಸ್ತೆಯಲ್ಲಿ ಹತ್ತಿರ ಬಂದ ಆಟೋರಿಕ್ಷಾ ನಿಲ್ಲಿಸಿ ತಿರುಗಿ ನೋಡದೆ ಒಳಗೆ ಕುಳಿತುಕೊಂಡಳು. +ಸೇವಕ: +"ಗೋವಿಂದಪ್ಪ ಕೇಡಿ, ಹಾಕಿ ಅವನಿಗೆ ಬೇಡಿ". +"ಗೋವಿಂದ ಗೋವಿಂದಾ. . . ಗೋವಿಂದಪ್ಪ ಗೋವಿಂದಾ"ಮೊದಲಾಗಿ ಅಬ್ಬರದ ಘೋಷಣೆಗಳು ಮೊಳಗುತ್ತಿದ್ದವು. +ಗೋವಿಂದಪ್ಪನವರ ಕೆಂಪು ಬಣ್ಣದ ಟಾಟಾ ಸಿಯಾರಾ ಕಾರು ಘೋಷಣೆ ಕೂಗುತ್ತಿದ್ದವರ ಮುಖಕ್ಕೆ ರಾಚುವಂತೆ ದೂಳೆಬ್ಬಿಸಿ ಮುಂಬರಿಯಿತು. +ಮುಂದೆ ಹಾಗೂ ಹಿಂದೆ ಶಸ್ತ್ರಸಜ್ಜಿತ ಪೊಲೀಸ್‌ ಕಾವಲು ಪಡೆಯ ವಾಹನಗಳಿದ್ದ ಕಾರಣ ಅವರ ಕಾರನ್ನು ತಡೆಯಲು ಪ್ರದರ್ಶನಕಾರರಿಗೆ ಸಾಧ್ಯವಾಗಲಿಲ್ಲ. +ಕಾರಿನಲ್ಲಿ ಗೋವಿಂದಪ್ಪ ಸರ್ಕಾರಿ ಪರಿವೀಕ್ಷಣಾ ಮಂದಿರಕ್ಕೆ ಹೋದ ಸಂಗತಿಯೂ ಬಹಳಷ್ಟು ಜನರಿಗೆ ಗೊತ್ತಾಗಲಿಲ್ಲ. +ಅಂತೆಯೇ ಅವರು ಘೋಷಣೆಯನ್ನು ಮುಂದುವರಿಸಿದ್ದರು. . . +ಕೇವಲ ನಾಲ್ಕು ವರ್ಷಗಳ ಹಿಂದೆ ತಾಲೂಕು ಕೇಂದ್ರದ ಇದೇ ಸ್ಥಳದಲ್ಲಿ ಗೋವಿಂದಪ್ಪನವರಿಗೆ ವೈಭವದ ಮೆರವಣಿಗೆ ನಡೆದಿತ್ತು. +ಚುನಾವಣೆ ಫಲಿತಾಂಶ ಹೊರಬಿದ್ದ ತಕ್ಷಣ ಅವರ ಗೆಲುವನ್ನು ಸಂಭ್ರಮದಿಂದ ಆಚರಿಸಲು ಸಾವಿರಾರು ಜನ ಸೇರಿದ್ದರು. +ಆದರೆ ಈಗ ತಾಲೂಕಿನ ಎಲ್ಲ ಕಡೆ ಪ್ರತಿಭಟನೆ, ಪ್ರದರ್ಶನಗಳು. +ಕಾರಣ ಅವರ ಊರಿನ ಪಕ್ಕದ ಹಳ್ಳಿಯ ಒಬ್ಬ ಯುವಕ ರಸ್ತೆ ಅಪಘಾತದಲ್ಲಿ ಸತ್ತಿದ್ದ. +ಅದು ಅಪಘಾತವಲ್ಲ, ಅಪಘಾತದಂತೆ ತೋರಿದ ಕೊಲೆ ಎಂಬ ಮಾತು ಕೇಳಿಬಂದಿತ್ತು. +ಆ ದಿನ ಗೋವಿಂದಪ್ಪ ಊರಲ್ಲಿದ್ದರು. +ಪೊಲೀಸರಿಗೆ ಅಪಘಾತ ಮಾಡಿದ ವಾಹನದ ಸುಳಿವು ಕೂಡ ಸಿಕ್ಕಿರಲಿಲ್ಲ. +ಗೋವಿಂದಪ್ಪನವರ ಕಡೆಯವರೇ ಅಪಘಾತ ಮಾಡಲು ಕಾರಣ ಎಂಬ ಗುಮಾನಿ ಹಬ್ಬಿತ್ತು. +ಅದಕ್ಕಾಗಿ ಒಂದು ಕ್ರಿಯಾ ಸಮಿತಿ ಅಸ್ತಿತ್ವಕ್ಕೆ ಬಂದು ತಾಲೂಕಿನಾದ್ಯಂತ ಚಳವಳಿಯನ್ನು ಹಮ್ಮಿಕೊಂಡಿತ್ತು. +ಗೋವಿಂದಪ್ಪ ಹೋದಲ್ಲಿ ಬಂದಲ್ಲಿ ಚಳವಳಿ. +"ಗೋವಿಂದಪ್ಪನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ" ಎಂಬ ಒತ್ತಾಯ ಕೇಳಿ ಬರುತ್ತಿತ್ತು. +ಸತ್ತ ಯುವಕ ಕೆಲವೇ ದಿನಗಳ ಹಿಂದೆ ಗೋವಿಂದಪ್ಪನವರನ್ನು ಸಭೆಯೊಂದರಲ್ಲಿ ಪ್ರಶ್ನೆ ಮಾಡಿದ್ದ. +ಮೂರು ವರ್ಷಗಳ ಹಿಂದೆ ಅವನ ಊರಿಗೆ ಬಂದಿದ್ದಾಗ ನೀಡಿದ್ದ ಭರವಸೆಯಂತೆ ಗ್ರಾಮೀಣ ರಸ್ತೆಯ ಕೆಲಸ ಇನ್ನೂ ಆಗಿಲ್ಲ ಎಂದು ದೂರಿದ್ದ. +ಜನ ಅದಕ್ಕೂ ಅಪಘಾತಕ್ಕೂ ಸಂಬಂಧ ಕಲ್ಪಿಸಿದ್ದರು. +ಸೂಕ್ತ ಉದ್ಯೋಗ ಇಲ್ಲದೆ ಅಲ್ಲಿ ಇಲ್ಲಿ ಪತ್ರಿಕೆಗಳ ವಾಚಕರ ವಾಣಿ ಬರೆಯುತ್ತಾ ಸಾರ್ವಜನಿಕರ ದೂರು ದುಮ್ಮಾನಗಳಿಗೆ ಧ್ವನಿ ಕೊಡುತ್ತಿದ್ದ ಯುವಕ ಅಪಘಾತದಲ್ಲಿ ಸತ್ತಿದ್ದ ಸಂಗತಿಯೆ ಸಾರ್ವಜನಿಕ ಚರ್ಚೆಗೆ ಒಳಗಾಗಿತ್ತು. +ಅದಕ್ಕೆ ಪೂರಕವಾಗಿ ಪತ್ರಿಕೆಗಳಲ್ಲಿ ಗೋವಿಂದಪ್ಪನವರ ವಿರುದ್ಧ ವರದಿಗಳು ಹೆಚ್ಚು ಕಡಿಮೆ ಪ್ರತಿನಿತ್ಯ ಬರುತ್ತಿದ್ದವು. +ರಾಜ್ಯಮಟ್ಟದ ಪತ್ರಿಕೆಗಳಿಗೆ ಸಮಜಾಯಿಶಿ ನೀಡಿರಲಿಲ್ಲ. +ವಿಧಾನಮಂಡಲದ ಅಧಿವೇಶನ ನಡೆಯುವಾಗ ಮೊಗಸಾಲೆಯಲ್ಲಿ ಸಿಗುವ ಕೆಲವು ವರದಿಗಾರರ ಜತೆ ಅವರಿಗೆ ವೈಯಕ್ತಿಕ ಪರಿಚಯವಿತ್ತು. +ಆದರೆ ಜಿಲ್ಲಾಮಟ್ಟದಲ್ಲಿ ಪತ್ರಿಕೆಗಳ ವರದಿಗಾರರು ಪ್ರತಿಭಟನೆಯಲ್ಲಿ ಪಾಲುಗೊಳ್ಳುವಷ್ಟು ಪರಿಸ್ಥಿತಿ ವಿಕೋಪಕ್ಕೆ ಹೋಗಿಬಿಟ್ಟಿತ್ತು. +ಈ ವಿವಾದ ಹಬ್ಬಿದ ಮೇಲೆ ಗೋವಿಂದಪ್ಪನವರು ಸ್ವಂತ ಊರಿಗೆ ಬರುತ್ತಿಲ್ಲ. +ಅವರ ಮನೆಯ ಬಳಿ ಪೊಲೀಸರ ಕಾವಲಿಗೆ ಗೃಹ ಸಚಿವರು ವ್ಯವಸ್ಥೆ ಮಾಡಿದ್ದಾರೆ. +ಗೋವಿಂದಪ್ಪನವರು ಸರ್ಕಾರಿ ಪರಿವೀಕ್ಷಣಾ ಮಂದಿರ ಇಲ್ಲವೇ ವಿಶ್ರಾಂತಿ ಗೃಹಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. . . +ಪೊಲೀಸರ ಬೆಂಗಾವಲು ಅನಿವಾರ್ಯವಾಗಿದೆ. +ಯುವಕನ ಸಾವು ಅವರು ರಾಜಕೀಯಕ್ಕೆ ಬಂದ ನಂತರ ಎದುರಾದ ದೊಡ್ಡ ಸವಾಲಾಗಿ ಹೋಗಿದೆ. +ನಾಲ್ಕೂವರೆ ವರ್ಷಗಳು ಹೇಗೋ ಸಾಗಿವೆ. +ಇನ್ನು ಕೆಲವೇ ತಿಂಗಳಲ್ಲಿ ಮತ್ತೆ ಚುನಾವಣೆ ಎದುರಿಸುವ ಸಂದರ್ಭದಲ್ಲಿ ಈ ಹಗರಣ ಅವರನ್ನು ಧೃತಿಗೆಡಿಸಿದೆ. +ಆದ್ದರಿಂದಲೇ ತಮ್ಮ ಮನವಿಯನ್ನು ನಿವೇದಿಸಲೆಂದು ರಾಜಧಾನಿಯಿಂದ ಪತ್ರಿಕಾ ಮಿತ್ರರನ್ನು ಕರೆಸಿದ್ದರು. +ಸರ್ಕಾರಿ ಪರಿವೀಕ್ಷಣಾ ಮಂದಿರದಲ್ಲಿ ಬೆಂಗಳೂರಿನಿಂದ ಬಂದ ಪತ್ರಿಕೆಯವರು ಅವರಿಗಾಗಿ ಕಾಯುತ್ತಿದ್ದರು. +ಗೋವಿಂದಪ್ಪನವರು ಚುನಾವಣೆಗೆ ಸ್ಪರ್ಧಿಸುವುದೇ ಖಚಿತವಾಗಿರಲಿಲ್ಲ. +ಮೊದಲು ಕ್ಷೇತ್ರವನ್ನು ಪ್ರತಿನಿಧಿಸಿದ್ದ ಧುರೀಣರು ಮುಂಗಾರು ಆರಂಭವಾಗುತ್ತಲೇ ಕಾಣಿಸಿಕೊಳ್ಳುವ ಕಪ್ಪೆಯಂತೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. +ಆ ಸಲವೂ ಅವರಿಗೆ ಪಕ್ಷ ಟಿಕೇಟ್‌ ನೀಡಿತ್ತು . +ಗೋವಿಂದಪ್ಪ ಅಲ್ಲಿಯವರೆಗೆ ಸಮಾಜಸೇವೆ ಎಂದುಕೊಂಡು ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದವರು. +ಸ್ಪತಂತ್ರ ಅಭ್ಯರ್ಥಿಯಾಗಿ ಕೆಲವೇ ಮಿತ್ರರ ಒತ್ತಾಯದಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. +ಅವರಿಗೆ ಅದುವರೆಗೆ ಇದ್ದ ವೈಯಕ್ತಿಕ ವರ್ಚಸ್ಸು ಹಾಗೂ ಅಲ್ಲಿಯವರೆಗೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವ್ಯಕ್ತಿಯ ವಿರುದ್ಧ ಗುಪ್ತವಾಗಿ ಬೆಳೆದಿದ್ದ ವಿರೋಧಗಳಕಾರಣದಿಂದ ಸ್ಪರ್ಧೆ ಬಿರುಸಾಗಿಯೇ ನಡೆಯಿತು. +ಚುನಾವಣೆಗೆ ನಿಲ್ಲುವಾಗ ಅವರಿಗೆ ಗೆಲ್ಲುವ ನಂಬಿಕೆಯೇ ಇರಲಿಲ್ಲ. +ಆದರೆ ಜನ ಗೋವಿಂದಪ್ಪನವರನ್ನು ಆಯ್ಕೆ ಮಾಡಿದರು. +ಗೆಲುವು ಅವರಿಗೆ ಅನಿರೀಕ್ಷಿತವಾಗಿತ್ತು. +ಆದ್ದರಿಂದ ಹೆಚ್ಚಿನ ವಿನಯ, ವಿನೀತ ಭಾವನೆ ಕಾಣಿಸಿಕೊಂಡಿತ್ತು. +ಗೆದ್ದ ತಕ್ಷಣ ಗೋವಿಂದಪ್ಪನವರು ಊರಿನ ಎಲ್ಲ ಜನರನ್ನೂ ಖುದ್ದಾಗಿ ಭೇಟಿ ಮಾಡಿದರು. +ಹಿರಿಯರ ಕಾಲುಹಿಡಿದು ಆಶೀರ್ವಾದ ಬೇಡಿದರು. +ಕಿರಿಯರ ಬೆನ್ನು ತಟ್ಟಿದರು. +ಯಾವುದೇ ಕೆಲಸಕ್ಕಾದರೂ ಬನ್ನಿ ಎಂದು ಮುಕ್ತ ಆಹ್ವಾನ ನೀಡಿದರು. +ವಿಧಾನ ಮಂಡಲದ ಮೊದಲ ಅಧಿವೇಶನದಲ್ಲಿ ಪ್ರಮಾಣವಚನ ಸ್ವೀಕರಿಸಿ ಊರಿಗೆ ಹಿಂತಿರುಗಿದವರು ಮತದಾರರ ಮುಖತಃ ಭೇಟಿಯನ್ನು ಹಮ್ಮಿಕೊಂಡರು. +ಮೂರು ಹೋಬಳಿ,ಇಪ್ಪತ್ತೊಂಬತ್ತು ಗ್ರಾಮ ಪಂಚಾಯಿತಿಗಳ ವಿಧಾನ ಸಭಾ ಕ್ಷೇತ್ರ ತಮ್ಮ ಚುನಾವಣೆ ಪ್ರಚಾರದ ಕಾಲದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದ ಮಿತ್ರರೊಂದಿಗೆ ಸಮಾಲೋಚಿಸಿ ಪ್ರವಾಸ ಕಾರ್ಯಕ್ರಮ ಹಾಕಿದರು. +ದಿನಕ್ಕೆ ಎರಡು ಗ್ರಾಮ ಪಂಚಾಯಿತಿಗಳಿಗೆ ಭೇಟಿ. +ಚುನಾವಣೆಯಲ್ಲಿ ಮತ ನೀಡಿದವರು, ವಿರೋಧಿಸಿದವರು ಫಲಿತಾಂಶದ ನಂತರ ಸಮಾನರು. +ತಾನು ಈಗ ಕ್ಷೇತ್ರಕ್ಕೇ ಪ್ರತಿನಿಧಿ. +ಪಕ್ಷದ ಶಿಸ್ತು,ಹೈಕಮಾಂಡಿನ ಅಣತಿ ಮೊದಲಾದ ಕಟ್ಟುಪಾಡು ತಮಗಿಲ್ಲ- ಎಂದು ಕಾರ್ಯಕ್ರಮ ಸಂಯೋಜಿಸಿದರು. +ಮೂರು ಮಂದಿ ಮಿತ್ರರ ಜತೆ ಸ್ನೇಹಿತರೊಬ್ಬರ ಕಾರಿನಲ್ಲಿ ಕ್ಷೇತ್ರ ಪ್ರವಾಸ ಆರಂಭಿಸಿದರು. +ಸಮಾಜ ಸೇವಕರಾಗಿದ್ದು ಬೈಸಿಕಲ್‌ ಕೂಡ ಇಟ್ಟುಕೊಳ್ಳಲಾಗದ ಅವರಿಗೆ ಸ್ವಂತ ಕಾರು ಕನಸಾಗಿತ್ತು. +ಒಂದೊಂದಾಗಿ ಗ್ರಾಮಗಳಿಗೆ ಶಾಸಕರ ಭೇಟಿ. +ಪ್ರತಿ ಗ್ರಾಮದಲ್ಲಿ ಸಭೆ. +ಗೋವಿಂದಪ್ಪನವರ ಭಾಷಣ. +ಮತಹಾಕಿ ಗೆಲ್ಲಿಸಿದ್ದಕ್ಕೆ ವಂದನೆ. +ಯಾವುದೇ ಸಂದರ್ಭದಲ್ಲಿ ಮನೆಗೆ ಬಂದು ಭೇಟಿಯಾಗುವ ಆಹ್ವಾನ. +ಕೆಲಸಗಳಿಗೆ ಸಂದರ್ಶನಕ್ಕೆ ಬಂದರೆ ಬನ್ನಿ, ಗೊತ್ತಿದ್ದವರಿಗೆ ಹೇಳುತ್ತೇನೆ ಎಂದು ವಿದ್ಯಾವಂತ ನಿರುದ್ಯೋಗಿಗಳಿಗೆ ಭರವಸೆ. +ಶಾಸಕರ ಭೇಟಿಯ ಕಾರ್ಯಕ್ರಮ ಮುಂದುವರಿದಂತೆ ಮನವಿ ಪತ್ರಗಳ ರಾಶಿ. +ಊರಿಗೆ ರಸ್ತೆ ಸರಿಯಾಗಿಲ್ಲ. +ಪಂಚಾಯಿತಿಯವರು ಮಾಡಿಸದೆ ಎಷ್ಟೋ ವರ್ಷಗಳಾಗಿವೆ. +ಶಾಲೆ ಕಟ್ಟಡ ಕುಸಿದಿದೆ. +ಈ ಮಳೆಗಾಲದಲ್ಲಿ ಬೀಳುವುದು ಖಚಿತ. +ಶಾಲೆ ಇದೆ, ಕೊಠಡಿಗಳಿವೆ, ಶಿಕ್ಷಕರಿಲ್ಲ, ಹುಡುಗರ ಸಂಖ್ಯೆ ಹೆಚ್ಚು,ಇನ್ನೊಂದು ಕೊಠಡಿ ಬೇಕು. +ಇಲ್ಲಿ ಶಿಕ್ಷಕರಿದ್ದಾರೆ, ಆದರೆ ಸರಿಯಾಗಿ ಶಾಲೆಗೇ ಬರುತ್ತಿಲ್ಲ. +ನ್ಯಾಯಬೆಲೆ ಅಂಗಡಿಯಲ್ಲಿ ಏನೂ ನ್ಯಾಯವಾಗಿ ಸಿಗುತ್ತಿಲ್ಲ. +ಎರಡು ತಿಂಗಳಿಗೆ ಒಮ್ಮೆ ಮಾಸಾಶನ ಬರುತ್ತದೆ. +ಊರಿನಲ್ಲಿ ಇಬ್ಬರು ವಿಧವೆಯರಿದ್ದಾರೆ, ಅವರಿಗೆ ಮಾಸಾಶನ ಕೊಡಿಸಬೇಕು. +ಇಲ್ಲೊಬ್ಬ ಕುಂಟ ಯಾರೂ ಗತಿಯಿಲ್ಲ. +ವಯಸ್ಸು ಮೂವತ್ತು. +ಮಾಸಾಶನ ಕೊಡಿಸಿ. +ಹುಡುಗ ಎಂ ಎ ಮಾಡಿದ್ದಾನೆ. +ಎಲ್ಲೂ ಕೆಲಸ ಆಗಿಲ್ಲ. +ಬೇರೆಕಡೆ ಕೆಲಸ ಸಿಗುವವರೆಗೆ ನಿಮ್ಮಲ್ಲಿಯೇ ಕೆಲಸ ಮಾಡಿಕೊಂಡಿರಲಿ. +ನಮ್ಮೂರಿಗೆ ಅಂಗನವಾಡಿ ಬೇಕು - ಈ ಬಗೆಯ ಮನವಿಗಳು. +ಮಳೆಗಾಲದಲ್ಲಿ ಸೇತುವೆ ಇಲ್ಲದಿದ್ದರೆ ಆ ಕಡೆಯ ಎಂಟು ಹಳ್ಳಿಗಳಿಗೆ ಸಂಪರ್ಕ ಇಲ್ಲ, ಮನವಿ ಕೊಟ್ಟೂಕೊಟ್ಟೂ ಸುಸ್ತಾಗಿದ್ದೇವೆ. +ನಿಮ್ಮ ಕಾಲದಲ್ಲಿ ಇದನ್ನು ಮಾಡಿಸಿ ಪುಣ್ಯ ಕಟ್ಟಿಕೊಳ್ಳಿ. +ಊರಿಗೆ ಕರೆಂಟು ಬಂದಿಲ್ಲ. +ಪಂಪ್‌ಸೆಟ್‌ ಹಾಕಿಸಿದರೆ ಕೊಡುವುದಾಗಿ ಹೇಳುತ್ತಾರೆ. +ಮನೆ ದೀಪಕ್ಕಾಗಿ ಪಂಪು ಹಾಕಿಸಬೇಕೇ? +ಕುಡಿಯುವ ನೀರಿಗಾಗಿ ಫರ್ಲಾಂಗ್‌ ದೂರ ನಡೆಯಬೇಕು. +ಹತ್ತಿರದಲ್ಲಿ ಬಾವಿ ತೋಡಿಸಿದರೆ ಪುಣ್ಯ ಬರುತ್ತದೆ. +ಕೆಲಸ ಇಲ್ಲದಿದ್ದಾಗ ಹುಡುಗರು ಆಟ ಆಡಿಕೊಳ್ಳಲು ಸಮುದಾಯ ಭವನ ಕಟ್ಟಸಿ ಕೊಡಿ, ನಿಮ್ಮಂಥವರು ಬಂದಾಗ ಉಳಿದುಕೊಳ್ಳಲು ಆಗುತ್ತದೆ. . . +ಯುವಕ ಮಂಡಲಕ್ಕೆ ಖರೀದಿ ಮಾಡಿದ ಸಾಮಾನು ದೊಡ್ಡಗೌಡರಮನೆಯಲ್ಲಿವೆ, ಅದನ್ನು ಕೊಡಿಸಿ. +ಆಸ್ಪತ್ರೆಗಾಗಿ ಹತ್ತು ಕಿಲೋಮೀಟರ್‌ ನಡೆಯಬೇಕು. +ಹತ್ತಿರದಲ್ಲಿ ವ್ಯವಸ್ಥೆ ಮಾಡಿಸಿ. +ದೊಡ್ಡಾಸ್ಪತ್ರೆಗೆ ಹೋಗಲು ನೇರ ಬಸ್‌ ಸಂಪರ್ಕ ಇಲ್ಲ. +ಊರಿನ ಆಸ್ಪತ್ರೆಗೆ ಡಾಕ್ಟರು ಇಲ್ಲ. +ಹೆರಿಗೆ ಮಾಡಿಸುವ ಸೂಲಗಿತ್ತಿಯರ ಕೊರತೆ ಇದೆ. +ಕೂಡಲೇ ನೇಮಕ ಮಾಡಬೇಕು. +ಮಹಿಳಾ ವೈದ್ಯರು ಆಸ್ಪತ್ರೆಯಲ್ಲಿಯೇ ಇರುವುದಿಲ್ಲ. +ಮನೆಯಲ್ಲೂ ಸಿಗುವುದಿಲ್ಲ. . . +ತುರ್ತು ಸಂದರ್ಭದಲ್ಲಿ ಯಾರನ್ನುಹಿಡಿಯುವುದು? +ಇಲ್ಲಿಗೆ ಪೊಲೀಸ್‌ ಸ್ಟೇಶನ್‌ ಬೇಕು. +ಊರಲ್ಲಿ ಪುಂಡರು ಜಾಸ್ತಿಯಾಗಿದ್ದಾರೆ. +ಕಳ್ಳತನ ಜಾಸ್ತಿಯಾಗುತ್ತಿವೆ. +ಪೊಲೀಸರು ಬೇಕು. +ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ. +ಹತ್ತಿರದ ಹೊಳೆಯಿಂದ ಕೊಳವೆ ಹಾಕಿಸಿ ನೀರು ತರಬೇಕು. +ಗ್ರಾಮಲೆಕ್ಕಿಗ ವಿಪರೀತ ಲಂಚ ಕೇಳುತ್ತಾನೆ. +ದನದ ಡಾಕ್ಟರು ಯಾವತ್ತೂ ಸಿಗುವುದಿಲ್ಲ. +ಭೂ ಸಾರ ಸಂರಕ್ಷಣೆ ಅಂತ ಇದೆ ದಂಡಕ್ಕೆ. +ಅದನ್ನು ಇಲ್ಲಿಂದ ತೆಗೆದು ಹಾಕಿಸಿ, ನಮ್ಮ ಹೆಸರು ಹೇಳಿ ಅವರು ದುಡ್ಡು ತಿನ್ನುವುದು ತಪ್ಪುತ್ತದೆ - ಇನ್ನೊಂದು ರೀತಿಯ ಅಹವಾಲುಗಳು. +ಗೋಮಾಳ ಕಡಿದು ಬಯಲು ಮಾಡಿದ್ದಾರೆ. +ನಾವು ಮೇವಿಗೆ ಎಲ್ಲಿಗೆ ಹೋಗೋಣ. +ಮನೆ ಕೊಡುತ್ತೇವೆ ಅಂತ ಅರ್ಜಿ ಬರೆಸಿಕೊಂಡು ಅನೇಕ ವರ್ಷಗಳಾಗಿವೆ. +ಮನೆಯೂ ಇಲ್ಲ, ಅದಕ್ಕಾಗಿ ಕೊಟ್ಟ ದುಡ್ಡಿನ ಸುದ್ದಿಯೂ ಇಲ್ಲ. +ಪಂಪ್‌ಸೆಟ್‌ ಹಾಕುವಾಗ ಕರೆಂಟ್‌ ಇರುವುದಿಲ್ಲ. +ನೀರು ಬೇಕಾದಾಗ ಕರೆಂಟ್‌ ಕೈಕೊಟ್ಟರೆ ಬೇಸಾಯ ಮಾಡುವುದು ಹೇಗೆ? +ಊರಿಗೆ ಸರ್ಕಾರಿ ಬಸ್ಸು ಬರುತ್ತಿಲ್ಲ. +ಹಾಕಿಸಿಕೊಡಿ ಆ ಬಸ್ಸು ಇಲ್ಲಿ ನಿಲ್ಲುತ್ತಿಲ್ಲ, ನಿಲ್ಲಿಸಿ. +ಇಲ್ಲಿಂದ ಬೆಂಗಳೂರಿಗೆ ನೇರ ಎಕ್ಸ್‌ಪ್ರೆಸ್‌ ಬೇಕು ಹಾಕಿಸಿ. +ರಸ್ತೆಯ ಮೋರಿ ಕೆಟ್ಟುಹೋಗಿದೆ. +ಮಳೆಗಾಲದಲ್ಲಿ ಸೇತುವೆ ಇಲ್ಲದಿದ್ದರೆ ಬಸ್‌ ಸಂಚಾರವೇ ಸಾಧ್ಯವಿಲ್ಲ - ಇಂಥ ಮತ್ತೊಂದು ಬಗೆಯ ಬೇಡಿಕೆಗಳು. +ಗೋವಿಂದಪ್ಪನವರ ಪ್ರವಾಸ ಹದಿನೈದು ದಿನಗಳಿಗೂ ಮೀರಿತು. +ಸ್ನೇಹಿತರ ಕಾರು ಸಾಕಷ್ಟು ಜಖಂ ಆಯಿತು. +ಕಾರನ್ನು ಚೆನ್ನಾಗಿ ದುರಸ್ತಿ ಮಾಡಿಸಿಕೊಡಬೇಕು ಎಂದುಕೊಳ್ಳುತ್ತಾ ತಮಗೆ ಬಂದ ಅಹವಾಲುಗಳನ್ನು ಇಲಾಖಾವಾರು ವಿಂಗಡಿಸಲು ಕೆಲಸ ಕೇಳಿ ಬಂದಿದ್ದ ಇಬ್ಬರು ನಿರುದ್ಯೋಗಿ ಪದವೀಧರರನ್ನು ನಿಯೋಜಿಸಿದರು. +ಬೇಡಿಕೆಗಳ ಪಟ್ಟಿ ಸಜ್ಜಾಗಲು ಒಂದು ವಾರ ಬೇಕಾಯಿತು. +ಶಿಕ್ಷಣ ಇಲಾಖೆ,ಲೋಕೋಪಯೋಗಿ ಇಲಾಖೆ, ಭೂಸಾರ ಸಂರಕ್ಷಣಾ ಇಲಾಖೆ, ನೀರಾವರಿ, ಅರಣ್ಯ ಮೊದಲಾಗಿ ನಾನಾ ಇಲಾಖೆಗಳ ತಾಲೂಕು ಮುಖ್ಯಸ್ಥರಿಗೆ ಮೊದಲು ಪತ್ರ ಬರೆಯುವುದು. +ನಂತರ ಖುದ್ದಾಗಿ ಭೇಟಿಯಾಗಿ ಕ್ಷೇತ್ರದ ಜನ ಸಲ್ಲಿಸಿರುವ ಮನವಿಗಳನ್ನು ಸೂಕ್ತ ಶಿಫಾರಸಿನೊಂದಿಗೆ ನೀಡುವುದು ಎಂದು ವ್ಯವಸ್ಥಿತವಾಗಿ ಜನಕಲ್ಯಾಣವನ್ನು ಆರಂಭಿಸಿದರು. +ಹದಿನೈದು ದಿನಗಳ ಪ್ರವಾಸ ಕಾಲದಲ್ಲಿ ತಮ್ಮ ಕಾರಿನ ಇಂಧನಕ್ಕೆ ಆಗಿರುವ ಖರ್ಚು ಅವರನ್ನು ದಂಗುಬಡಿಸಿತು. +ಚುನಾವಣೆ ಪ್ರಚಾರಕ್ಕೆ ಅವರು ಸಾಕಷ್ಟು ಖರ್ಚು ಮಾಡಿದ್ದರು. +ಆದರೆ ಅದನ್ನು ಗೆಳೆಯರು,ಬಂಧುಗಳಲ್ಲಿ ಕೆಲವರು ನೀಡಿದ್ದರು. +ಆಗ ಅದು ಹೊರೆ ಎನಿಸಿರಲಿಲ್ಲ. +ಅಷ್ಟಾಗಿ ಚುನಾವಣೆ ಕಾಲದಲ್ಲಿ ಸಂಗ್ರಹಿಸಿದ್ದ ಹಣದಲ್ಲಿ ಸ್ವಲ್ಪ ಮಿಕ್ಕಿತ್ತು ಈಗ ಕಾರಿಗೆ ಪೆಟ್ರೋಲ್‌ ಹಾಕಿಸುವಾಗ ಅದನ್ನು ಬಳಸಿಕೊಳ್ಳುವುದು ಅನಿವಾರ್ಯವಾಯಿತು. +ಪ್ರವಾಸ ಕಾಲದ ಖರ್ಚುಗಳು ನಿರೀಕ್ಷೆ ಮೀರಿದ್ದವು. +ಆದರಲ್ಲಿ ತಮ್ಮೊಂದಿಗೆ ಬಂದಿದ್ದ ಸ್ನೇಹಿತರ ಮಾರ್ಗ ಮಧ್ಯದ ವೆಚ್ಚವನ್ನು ಅವರೇ ನೋಡಿಕೊಳ್ಳಬೇಕಾಗಿತ್ತು. +ಅವರ ಸ್ನೇಹಿತರಲ್ಲಿ ಇಬ್ಬರು ಚುನಾವಣೆ ಗೆಲುವಿನ ನಂತರ ರಾತ್ರಿ ವೇಳೆ ಮದ್ಯಪಾನವನ್ನು ಕಡ್ಡಾಯ ಮಾಡಿಕೊಂಡಿದ್ದರು. +ತಾಲೂಕಿನಲ್ಲಿ ಸಿಗುವ ಬ್ರಾಂಡಿ - ವಿಸ್ಕಿಗಳನ್ನು ಅಭ್ಯಾಸ ಮಾಡಿಕೊಂಡರು. +ಅದಕ್ಕೂ ಗೋವಿಂದಪ್ಪನವರು ಹಣ ಹೊಂದಿಸಬೇಕಾಯಿತು. +ಶಾಸಕರ ಮೊದಲ ತಿಂಗಳ ಸಂಬಳ ಬಂದಾಗ ಹೆಚ್ಚು ನಿರಾಸೆಯಾಗಿದ್ದು ಅವರ ಜತೆ ಇರುತ್ತಿದ್ದ ಸ್ನೇಹಿತರಿಗೆ. +"ಏನು ಸಾಹೇಬರೆ, ಇಷ್ಟರಲ್ಲಿ ಏನು ಕಡಿಯುತ್ತೀರಿ?" ಎಂದು ಚುಡಾಯಿಸಿದರು. +ಗೋವಿಂದಪ್ಪನವರಿಗೆ ಕೂಡ ನಿರಾಸೆಯಾಗಿತ್ತು. +ತಮ್ಮ ಪ್ರವಾಸ ಕಾಲದ ಖರ್ಚಿಗಾಗಿ ಸ್ನೇಹಿತರಿಂದ ಸಾಲ ಎಂದು ಸ್ವಲ್ಪ ಹಣ ಪಡೆದಿದ್ದರು. +ಮನೆಯಲ್ಲಿ _ ಕೂಡ ಖರ್ಚು ಹೆಚ್ಚಾಗಿತ್ತು. +ಹೆಂಡತಿ. . . ಹಾಗೂ ಮಕ್ಕಳು ಹೆಚ್ಚಿನ ಅಂತಸ್ತನ್ನು ರೂಢಿಸಿಕೊಳ್ಳುತ್ತಿದ್ದರು. +ಊಟ ಉಪಚಾರಗಳಲ್ಲಿ ಗಾತ್ರ ಹಾಗೂ ಗುಣಕ್ಕೆ ಆದ್ಯತೆ ಕಂಡುಬರುತ್ತಿತ್ತು. +ಸಹಜವಾಗಿಯೇ ಹೆಚ್ಚು ಹಣ ಬೇಕಾಗಿತ್ತು . +ಗಂಡ ಹಣಕ್ಕಾಗಿ ಪರದಾಡುವುದು ಹೆಂಡತಿಗೆ ಸರಿ ಬೀಳುತ್ತಿರಲಿಲ್ಲ. +ಯಾವುಯಾವುದೋ ಕೆಲಸಕ್ಕಾಗಿ ಮನೆ ತುಂಬಾ ಸೇರುತ್ತಾರಲ್ಲ. +ಅವರಿಂದ ಇಂತಿಷ್ಟು ಅಂತ ವಸೂಲು ಮಾಡಬಾರದೇ ಎಂದು ಸರಳವಾಗಿ ಸಲಹೆ ಮಾಡಿದ್ದರು. +ಸಮಾಜ ಸೇವೆಯ ಆದರ್ಶದಿಂದಲೇ ಜನಬಳಕೆ ಮಾಡಿಕೊಂಡಿದ್ದ ಗೋವಿಂದಪ್ಪನವರಿಗೆ ಅದು ಕಲ್ಪನೆಗೆ ಮೀರಿದ್ದಾಗಿತ್ತು. +ಜತೆಗೆ ಹಿಂದೆ ಇದ್ದವರ ಇಂಥ ವರ್ತನೆಯನ್ನು ಅವರು ಖಂಡಿಸಿದ್ದರು. +ಜನರನ್ನು ದುಡ್ಡು ಕೇಳುವುದು ಹೇಗೆ? +ಮತಕೊಟ್ಟು ಆಯ್ಕೆ ಮಾಡಿದವರನ್ನು ಖರ್ಚಿಗೆ ಕೊಡಿ ಎಂದು ಕೇಳುವುದೇ? +ಗೋವಿಂದಪ್ಪನವರು ಹಣದ ಪರದಾಟದಲ್ಲಿದ್ದಾಗ ತಾಲೂಕಿನ ಹೋಬಳಿ ಕೇಂದ್ರದಲ್ಲಿ ಚುನಾವಣೆಗೆ ಮೊದಲುವರ್ಗವಾಗಿದ್ದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರು ನೂತನ ಶಾಸಕರಿಗೆ ಗೌರವ ಸಲ್ಲಿಸಲು ಬಂದರು. +ಉತ್ತರ ಕರ್ನಾಟಕದ ನಗರವೊಂದರಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದಲ್ಲಿದ್ದ ಸಂದರ್ಭದಲ್ಲಿ ವಿಚಾರಣಾಧೀನ ಕೈದಿಯೊಬ್ಬ ಠಾಣೆಯಲ್ಲಿ ಸತ್ತ ಪ್ರಕರಣ ಕಾರಣ ದೂರದ ಗ್ರಾಮಾಂತರ ಠಾಣೆಗೆ ವರ್ಗವಾಗಿದ್ದ ಅವರು ಹೊಸ ಜಾಗದಲ್ಲಿ ಹೇಗೋ ಹೊಂದಿಕೊಂಡಿದ್ದರು. +ಗೋವಿಂದಪ್ಪನವರ ಮನೆಗೆ ಬಂದು ಗೌರವ ವಂದನೆ ಸಲ್ಲಿಸಿದರು. +ಏನಾದರೂ ಆದೇಶ ಇದೆಯೇ ಎಂದು ವಿನೀತರಾಗಿ ಕೇಳಿದರು. +ಅದುವರೆಗೆ ಜನ ಸಾಮಾನ್ಯರಂತೆ ಇದ್ದು ಸಭೆ ಸಮಾರಂಭಗಳ ನೂಕು ನುಗ್ಗಲಿನಲ್ಲಿ ಪೊಲೀಸರಿಂದ ತಳ್ಳಿಸಿಕೊಂಡಿದ್ದ ಗೋವಿಂದಪ್ಪನವರಿಗೆ ಪೊಲೀಸ್‌ ಅಧಿಕಾರಿಯೊಬ್ಬ ಆ ಬಗೆಯ ವಿನಮ್ರತೆಯನ್ನು ತೋರುತ್ತಿರುವುದು ಸಂಭ್ರಮದ ಅನುಭವವಾಯಿತು. +ಅವರು ವಿಧೇಯತೆಯಿಂದ ಅನುಮತಿ ಪಡೆದುಹೋಗುವಾಗ ಕಾಗದದಲ್ಲಿ ಕಟ್ಟಿದ್ದ ನೋಟುಗಳ ಒಂದು ಕಂತೆಯನ್ನು ಗೋವಿಂದನವರ ಎದುರಿನಲ್ಲಿಯೇ ಅವರ ಆಪ್ತ ಕಾರ್ಯದರ್ಶಿಯಂತೆ ಕೆಲಸ ಮಾಡುತ್ತಿದ್ದ ಮಿತ್ರರ ಕೈಯಲ್ಲಿ ಇಟ್ಟು "ಚುನಾವಣೆ ಸಂದರ್ಭದಲ್ಲಿ ಒದಗಿಸಲು ಸಾಧ್ಯವಾಗಲಿಲ್ಲ; +ಆಗತ್ಯ ಬಿದ್ದರೆ ಬಳಸಿಕೊಳ್ಳಬೇಕು ಮತ್ತು ಮುಂದೆ ತಮಗೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಅವಕಾಶ ಕೊಡಬೇಕು" ಎಂದು ಪ್ರಾರ್ಥಿಸಿದರು. +ಅಧಿಕಾರಿಯೊಬ್ಬ ಜನ ಪ್ರತಿನಿಧಿಯಾದ ತಮಗೆ ಈ ರೀತಿ ಗೌರವ ತೋರಿಸುತ್ತಿರುವುದನ್ನು ಒಪ್ಪಿಕೊಳ್ಳುವುದೋ ತಿರಸ್ಕರಿಸುವುದೋ ಎಂಬ ಗೊಂದಲದಲ್ಲಿ ಗೋವಿಂದಪ್ಪನವರು ಇದ್ದಾಗ ಅವರ ಮಿತ್ರ ತನಗಾದ ಆಶ್ಚರ್ಯವನ್ನು ಹತ್ತಿಕ್ಕಲಾಗದೆ ಒದ್ದಾಡುತ್ತಿದ್ದ. +ಕಣ್ಣಿನಲ್ಲಿ ಹೊಳಪು ಮೂಡಿ ಹಣದ ಕಂತೆಯನ್ನು ಬಿಚ್ಚುವ ಉತ್ಸಾಹ ತೋರುತ್ತಿದ್ದ. +ನೂತನ ಶಾಸಕರನ್ನು ಗೌರವಿಸುವ ರೀತಿ ಇರಬೇಕು ಎಂದುಕೊಂಡ ಗೋವಿಂದಪ್ಪ ಪೊಲೀಸ್‌ ಅಧಿಕಾರಿಯನ್ನು ಸ್ವಲ್ಪ ಕಾಲ ನಿಲ್ಲಲು ಹೇಳಿದರು. +ಆದರೆ ತಕ್ಷಣಕ್ಕೆ ಏನು ಹೇಳಬೇಕು ಎಂದು ತೋಚಲಿಲ್ಲ. +"ಜನರನ್ನು ಕಾಡಿಸಬೇಡಿ, ಏನಾದರೂ ಆಗಬೇಕಿದ್ದರೆ ಹೇಳಿ" ಎಂದು ಹೇಳಲು ಮಾತ್ರ ಅವರಿಗೆ ಸಾಧ್ಯವಾಯಿತು. +ಅನಿರೀಕ್ಷಿತವಾಗಿ ಬಂದ ಹಣ ಅವರ ತತ್ಕಾಲದ ಖರ್ಚುಗಳನ್ನು ನಿಭಾಯಿಸಿತು. +ತಾಲೂಕಿನಲ್ಲಿ ಎಷ್ಟು ಮಂದಿ ಪೊಲೀಸ್‌ ಅಧಿಕಾರಿಗಳು ಇದ್ದಾರೆ ಎಂದು ಅವರ ಮಿತ್ರರು ಲೆಕ್ಕ ಹಾಕತೊಡಗಿದರು. +ಗೋವಿಂದಪ್ಪನವರಿಗೆ ಪೊಲೀಸರ ಹಣ ಸ್ವೀಕರಿಸುವುದು ಸಾಧು ಎಂದು ತೋರಲಿಲ್ಲ. +ಯಾರನ್ನೂ ಕೇಳಬಾರದು, ಪ್ರತಿನಿಧಿಗಳ ಮೇಲೆ ಗೌರವ ಹೋಗುತ್ತದೆ ಎಂದು ವಾದಿಸಿದರು. +ಅವರ ಮಿತ್ರರು ಅದನ್ನು ಒಪ್ಪಲಿಲ್ಲ. +ಬದಲಾಗಿ "ನೀವು ಕೇಳಬೇಡಿ, ಆದರೆ ಅವರಾಗಿಯೇ ಗೌರವ ತೋರಿಸಿದರೆ ಒಲ್ಲೆ ಎನ್ನಬೇಡಿ" ಎಂಬ ಸುವರ್ಣ ಮಾರ್ಗವನ್ನು ಸೂಚಿಸಿದರು. +ಗೋವಿಂದಪ್ಪ ಹೂಂ ಅನ್ನಲಿಲ್ಲ. +ಪರಿಸ್ಥಿತಿ ಬದಲಾವಣೆ ಆಯಿತು. +ರಾಜಧಾನಿಯ ರಾಜಕೀಯ ನಿಧಾನವಾಗಿ ಗೋವಿಂದಪ್ಪನವರಿಗೆ ಪರಿಚಯವಾಗತೊಡಗಿತು. +ತಮ್ಮ ಕ್ಷೇತ್ರಕ್ಕೆ ಬೇಕಾದ ಅಧಿಕಾರಿಗಳು, ಅದರಲ್ಲೂ ಕಂದಾಯ, ಪೊಲೀಸ್‌ ಮತ್ತು ಅರಣ್ಯ ಇಲಾಖೆಯವರನ್ನು ಆರಿಸಿಕೊಳ್ಳುವ ಅವಕಾಶ ಬಂದಾಗ ಅವರ ಮಿತ್ರರು ಸೂಕ್ತ ವ್ಯಕ್ತಿಗಳನ್ನು ಆರಿಸಿದರು. +"ಕೇಳಬಾರದು ಕೊಟ್ಟರೆ ಒಲ್ಲೆ ಎನ್ನಬಾರದು" ಎಂಬ ಸುವರ್ಣ ಮಾರ್ಗ ಅವರ ಮಿತ್ರರ ವ್ಯಾಖ್ಯಾನದಲ್ಲಿ ವಿಭಿನ್ನ ಅರ್ಥವಂತಿಕೆಯನ್ನು ಪಡೆಯಿತು. +"ಅವರು ಕೇಳುವುದಿಲ್ಲ ಎಂಬ ಮಾತ್ರಕ್ಕೆ ಕೊಡುವುದಿಲ್ಲ ಎಂದರೇನು?" ಎಂದು ದಬಾಯಿಸುವ ಮಟ್ಟಕ್ಕೆ ಹೋಯಿತು. +ಅವರ ಮಿತ್ರರು ಅವರಿಗೆ ಗೊತ್ತಿಲ್ಲದಂತೆ ಶುಲ್ಕ ವಿಧಿಸಿ ಸ್ವಂತಕ್ಕೆ ಹಾಗೂ ಉಳಿದರೆ ಗೋವಿಂದಪ್ಪನವರ ಮನೆವಾಳ್ತೆಗಾಗಿ ನೀಡುವುದು ಮಾಮೂಲಾಯಿತು. +ಇಂತಹ ಸನ್ನಿವೇಶದಲ್ಲಿ ಗೋವಿಂದಪ್ಪನವರ ಶಿಫಾರಸು ಪಡೆದ ಪೊಲೀಸ್‌ ಅಧಿಕಾರಿ ರಾಜಧಾನಿಯ ಸಮೃದ್ಧ ಠಾಣೆಗೆ ವರ್ಗ ಮಾಡಿಸಿಕೊಂಡು ಹೋದರು, ಅವರ ಮಿತ್ರರು ನಿಗದಿ ಮಾಡಿದ್ದಕ್ಕಿಂತ ಹೆಚ್ಚು ದರ ನೀಡಿ. +ಈ ನಡುವೆ ರಾಜಧಾನಿಯಲ್ಲಿ ಆಡಳಿತ ಪಕ್ಷದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿತ್ತು. +ಅಧಿಕಾರ ಹಿಡಿಯಲು ಆಡಳಿತ ಪಕ್ಷದಲ್ಲಿ ಗುಂಪುಗಳಾಗಿ ಪ್ರತಿ ಶಾಸಕರ ಬೆಂಬಲವೂ ಮಹತ್ವದ್ದಾಯಿತು. +ಗೋವಿಂದಪ್ಪನವರಂಥ ಸ್ಪತಂತ್ರ ಶಾಸಕರು ಯಾವ ಒಂದು ಗುಂಪಿಗೆ ಬೆಂಬಲ ವ್ಯಕ್ತಪಡಿಸಿದರೂ ಅದಕ್ಕೆ ಬೆಲೆ ಬರುವಂತಾಯಿತು. +ಒಂದು ರೀತಿಯ ಏಳು ಬೀಳಿನ ಚದುರಂಗದಾಟದಲ್ಲಿ ಗೋವಿಂದಪ್ಪನವರು ಬಹುಕಾಲ ರಾಜಧಾನಿಯಲ್ಲಿ ಉಳಿಯಬೇಕಾಯಿತು. +ಒಂದೊಂದು ಗುಂಪಿಗೆ ಬೆಂಬಲದ ತಕ್ಕಡಿ ತೂಗಿದಾಗಲೂ ಅದು ಅರ್ಥಪೂರ್ಣವಾಗಿ ಬಿಡುತ್ತಿತ್ತು. +ಆದ್ದರಿಂದ ಕ್ಷೇತ್ರದ ಜನ ತಮಗೆ ಸಲ್ಲಿಸಿದ್ದ ಬೇಡಿಕೆಗಳ ಕಡೆಗೆ ಅವರು ಗಮನ ಕೊಡಲು ಮೂರುವರ್ಷಗಳ ನಂತರವೂ ಬಿಡುವೇ ಸಿಕ್ಕಿರಲಿಲ್ಲ. +ಆದರೆ ಕೆಲವು ಯುವಕರು ಅವರನ್ನು ಹುಡುಕಿಕೊಂಡು ರಾಜಧಾನಿಗೂ ಬರತೊಡಗಿದರು. +ಅವರ ಎದುರು ಏನಾದರೂ ಪ್ರಗತಿ ತೋರಿಸದಿದ್ದರೆ ಸ್ವಂತ ಕ್ಷೇತ್ರದಲ್ಲಿ ಕಷ್ಟವಾಗುತ್ತದೆ ಎಂದು ಸ್ನೇಹಿತರು ಮಾಡಿದ್ದ ಸಲಹೆಯಂತೆ ಕೆಲವು ಕಚೇರಿಗಳಿಗೆ ಖುದ್ದಾಗಿ ಹೋಗಿ ಬಂದರು. +ಅದೇನೂ ಉತ್ತೇಜನಕಾರಿಯಾಗಿ ಕಾಣಲಿಲ್ಲ. +ಅದು ಪ್ರಗತಿ ಪರಿಶೀಲನೆಯ ಸಭೆಗಳು ಇನ್ನೂ ವ್ಯವಸ್ಥಿತವಾಗಿ ಆರಂಭವಾಗಿರದ ಕಾಲ. +ಒಮ್ಮೆ ತಾಲೂಕುಮಟ್ಟದಲ್ಲಿ ಅಧಿಕಾರಿಗಳ ಸಭೆ ಕರೆದರು. +ತಾವು ಮೊದಲು ಕಳುಹಿಸಿದ್ದ ಸಾರ್ವಜನಿಕ ಬೇಡಿಕೆಗಳ ಕತೆ ಏನಾಗಿದೆ ಎಂದು ತಿಳಿಯಬಯಸಿದರು. +ಅವರೇ ಕರೆಸಿದ್ದ ಅಧಿಕಾರಿಗಳು ಕೊಟ್ಟ ಸಮಜಾಯಿಶಿಗಳು ಗೋವಿಂದಪ್ಪನವರಿಗೆ ಸರಿ ಎನಿಸುವಂತಿದ್ದವು. +ಹಣಾವಕಾಶ ಇಲ್ಲ. +ಬಜೆಟ್‌ನಲ್ಲಿ ಸೇರಬೇಕಾಗಿತ್ತು. +ಅದು ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. +ಇದನ್ನು ಗ್ರಾಮ ಪಂಚಾಯಿತಿಯವರೇ ಮಾಡಬಹುದಿತ್ತು. +ಇದು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆಯೋ, ತಾಲೂಕು ಪಂಚಾಯಿತಿಗೆ ಸೇರುತ್ತದೆಯೋ ಸ್ಪಷ್ಟವಾಗಿಲ್ಲ. +ಸರಕಾರಕ್ಕೆ ಬರೆದಿದ್ದೇವೆ, ಅಲ್ಲಿಂದ ಬಂದ ಮೇಲೆ ಕ್ರಮ ಕೈಗೊಳ್ಳಬಹುದು. +ಆ ಊರಿಗೆ ಸೇತುವೆ ಮಂಜೂರಾಗಿತ್ತು ಅದನ್ನು ಎಲ್ಲಿ ಕಟ್ಟಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. +ಏಕೆಂದರೆ ಅಲ್ಲಿ ಒಂದುಹೊಳೆ ಇದೆ ಎಂದು ಹೇಳಬೇಕಾಗಿತ್ತು. +ಅದು ಪತ್ತೆಯಾಗಿಲ್ಲ. +ಇದಕ್ಕೆ ಗುತ್ತಿಗೆದಾರರನ್ನು ನಿಯೋಜಿಸಲಾಗಿದೆ. +ಮಳೆಗಾಲಕ್ಕೆ ಮೊದಲು ಕೆಲಸ ಮುಗಿಯುತ್ತದೆ. +ಮುಂಗಡ ಹಣ ಪಡೆದ ಗುತ್ತಿಗೆದಾರ ನಾಪತ್ತೆಯಾಗಿದ್ದಾನೆ. +ಪೊಲೀಸಿಗೆ ದೂರು ಕೊಟ್ಟಿದ್ದೇವೆ. +ಅದು ಸರ್ಕಾರದ ನೀತಿನಿರೂಪಣೆಯ ವಿಚಾರ, ರಾಜ್ಯದ ಸಂಪುಟ ನಿರ್ಧಾರ ಕೈಗೊಳ್ಳಬೇಕು. +ಆ ಕೆಲಸ ಆಡಳಿತಾತ್ಮಕ ಮಂಜೂರಾತಿಗೆ ಹೋಗಿದೆ. +ಅದು ಬಂದ ಮೇಲೆ ಹೊಸದಾಗಿ ಕ್ರಿಯಾ ಯೋಜನೆ ರೂಪಿಸಿ ಏಜೆನ್ಸಿಗಳನ್ನು ಗುರುತಿಸಬೇಕು. +ಈ ಬಾಜಬ್ಬಿಗೆ ಕೊಟ್ಟಿರುವ ಹಣಸಾಲದು. +ಬರುವ ಅನುದಾನವೆಲ್ಲಾ ಸಿಬ್ಬಂದಿಯ ಸಂಬಳಕ್ಕೆ ಹೋಗುತ್ತದೆ, ಕೆಲಸಕ್ಕೆ ಹೋಗಲಿ, ಅಧಿಕಾರಿಯ ಪ್ರವಾಸಕ್ಕೂ ಹಣ ಇಲ್ಲ. +ಕ್ಷೇತ್ರವನ್ನು ವಿಶೇಷ ಕ್ಷೇತ್ರದ ವ್ಯಾಪ್ತಿಗೆ ಒಳಪಡಿಸಿ, ಹೆಚ್ಚು ಅನುದಾನ ಸಿಗುತ್ತದೆ-ಇತ್ಯಾದಿ ಸಬೂಬು ಮತ್ತು ಸಲಹೆಗಳನ್ನು ಅಧಿಕಾರಿಗಳು ತಾವು ಸಲ್ಲಿಸಿದ ಪ್ರತಿಯೊಂದು ಬೇಡಿಕೆಗಳಿಗೂ ನೀಡುತ್ತಿದ್ದಾಗ ಅದು ತಪ್ಪು ಎನ್ನುವುದು ಅವರಿಗೆ ಸಾಧ್ಯವಾಗಲಿಲ್ಲ. +ಆದರೆ ಜನ ಮೆಚ್ಚುವಂತೆ ಏನಾದರೂ ಮಾಡಬೇಕಲ್ಲ. . . +ಅದಕ್ಕೆ ಒಬ್ಬ ಅಧಿಕಾರಿ ಹತ್ತಿರ ಬಂದು ಕಿವಿಮಾತು ಹೇಳಿದರು. +"ಸರ್‌, ನೀವು ಜನ ಪ್ರತಿನಿಧಿಗಳು. +ಜನರನ್ನು ಬಿಡುವುದು ಸಾಧ್ಯವಿಲ್ಲ. +ಬಹಿರಂಗ ಸಭೆಗಳಲ್ಲಿ ಅಧಿಕಾರಿಗಳನ್ನು ನಿಂದಿಸಿ ತ ಎಚ್ಚರಿಕೆ ನೀಡಿದರೆ ಜನ ಮೆಚ್ಚುತ್ತಾರೆ. +ನಿಮ್ಮನ್ನು ದೂರುವುದಿಲ್ಲ. +ಕೆಲಸಗಳು ಮಾತ್ರ ಹಾಗೂ ಹೀಗೂ ಸಾಗುತ್ತವೆ. +ನಾವು ವಾರ್ಷಿಕ ಗುರಿಯನ್ನು ಹೇಗೋ ತೋರಿಸುತ್ತೇವೆ. +ಅಧಿಕಾರಿಯ ಸಲಹೆಯಂತೆ ಗೋವಿಂಪ್ಪನವರು ಬೆಂಬಲಿಗರ ಮೂಲಕ ಕ್ಷೇತ್ರದ ಹೋಬಳಿ ಕೇಂದ್ರಗಳಲ್ಲಿ ಸಂತೆಗಳ ದಿನ ಸಾರ್ವಜನಿಕ ಸಭೆಗಳನ್ನು ಕರೆದರು. +ಭಾಷಣ ಮಾಡಿದರು. +ಅಧಿಕಾರಿಗಳನ್ನು ದೂರಿದರು. +ಎಚ್ಚರಿಕೆ ನೀಡಿದರು. +ಆದರೆ ಜನ ನಂಬಿದಂತೆ ತೋರಲಿಲ್ಲ. +ಯಾರ ಯಾರ ವರ್ಗಾವಣೆಗೆ ಎಷ್ಟು ಹಣ ಬಂದಿದೆ ಎಂಬುದನ್ನು ಬಹಿರಂಗ ಸಭೆಯಲ್ಲಿ ಸೇರಿದ್ದ ಯುವಕರು ಅವರಿಗೆ ಕೇಳಿಸುವಂತೆಯೇ ಹೇಳುತ್ತಿದ್ದರು. +ಒಬ್ಬ ಯುವಕನಂತೂ "ನಮ್ಮೂರಿನ ರಸ್ತೆ ಕೆಲಸ ಎಲ್ಲೀವರೆಗೆ ಬಂತ್ರೀ ಸಾಹೇಬ್ರ. . . ಇನ್ನೂ ಕಮೀಶನ್‌ ಒಡಂಬಡಿಕೆ ಆಗಿಲ್ಲೇನು?"ಎಂದು ರಾಗ ಎಳೆದು ಚುಡಾಯಿಸಿದ್ದ. + ಗೋವಿಂದಪ್ಪನವರಿಗೆ ಮುಖ ಭಂಗವಾಯಿತು. + ಭಾಷಣಕ್ಕೆ ಅಡ್ಡಿಪಡಿಸುವವರನ್ನು ಬೈದರು. +ಸಾರ್ವಜನಿಕವಾಗಿ ಅಂಥ ಮಾತುಗಳನ್ನು ಅವರು ಆ ಮೊದಲು ಬಳಸಿರಲಿಲ್ಲ. +ಅದಾದ ಮೂರು ದಿನ ಸ್ವಂತ ಊರಲ್ಲಿಯೇ ಗೋವಿಂದಪ್ಪ ಉಳಿದಿದ್ದರು. +ಅವರು ಊರಲ್ಲಿದ್ದಾಗ ಅವರ ಊರಿನ ಪಕ್ಕದಲ್ಲಿ ದುರಸ್ತಿ ಕಾಣದ ಕೊರಕಲು ರಸ್ತೆಯಲ್ಲಿ ಯಾವುದೋ ವಾಹನ ಅವರನ್ನು ಸಾರ್ವಜನಿಕ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದ ಯುವಕನಿಗೆ ಡಿಕ್ಕಿಹೊಡೆದಿತ್ತು. +ಗೋವಿಂದಪ್ಪನವರು ವ್ಯವಸ್ಥೆ ಮಾಡಿದ್ದ ಲಕ್ಷುರಿ ಕಾರಿನಲ್ಲಿ ರಾಜಧಾನಿಯಿಂದ ನಾಲ್ವರು ಪತ್ರಕರ್ತರು ಬಂದಿದ್ದರು. +ಅವರೊಂದಿಗೆ ಆತ್ಮೀಯವಾಗಿ ಕುಶಲ ವಿಚಾರಿಸಿದರು. +ತುಂಬ ದೂರದಿಂದ ಬಂದಿದ್ದೀರಿ,ಮೊದಲು ವಿಶ್ರಮಿಸಿ ಎಂಬ ಉಪಚಾರದ ಮಾತುಗಳನ್ನು ಹೇಳುತ್ತಾ ಅವರಿಗೆ ಯಾವೊಂದು ಕೊರತೆಯೂ ಆಗದಂತೆ ನೋಡಿಕೊಂಡರು. +ಸರ್ಕಾರಿ ಪರಿವೀಕ್ಷಣಾ ಮಂದಿರ ಅವರ ಪರಿಶ್ರಮದಿಂದ ಈಚೆಗಷ್ಟೇ ಆರಂಭವಾಗಿತ್ತು. +ಹೊಸಬಣ್ಣದ ವಾಸನೆ ಹೋಗಿರಲಿಲ್ಲ. +ಸದಾಕಾಲ ಹರಿಯುವ ನೀರು. +ಕೆನೆ ಹಾಲಿನಿಂದ ಗಂಟೆ, ಅರ್ಧ ಗಂಟೆಗೆ ಕಾಫಿಯಾದರೆ ಕಾಫಿ, ಟೀಯಾದರೆ ಟೀ ಪೂರೈಸುತ್ತಿದ್ದ ಮೇಟಿ. +ಊಟ ಮುಗಿಸಿಯೇ ಮಾತನಾಡೋಣ ಎಂಬ ಶಾಸಕರ ಸಲಹೆಗೆ ಮೂರು ಗಂಟೆಯ ಪ್ರಯಾಣದಿಂದ ಬಳಲಿದ್ದ ರಾಜಧಾನಿಯ ಪತ್ರಕರ್ತರು ಪ್ರತಿ ಹೇಳಲಿಲ್ಲ. +ಹೊಸದಾಗಿ ವೃತ್ತಿ ಸೇರಿದ್ದ ಯುವಕ ಪತ್ರಕರ್ತ "ಮೊದಲ ಮಾತಾಡಿಬಿಡೋಣ, ಆಮೇಲೆ ವಿಶ್ರಾಂತಿ. ."ಎಂದು ಗೊಣಗಿದ್ದನ್ನು ಉಳಿದವರು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. +ಊಟಕ್ಕೆ ಅಣಿಯಾಗುವುದರಲ್ಲಿ ಹಿರಿಯ ಇಬ್ಬರು ಪತ್ರಕರ್ತರು ರೈಲ್ವೆ ಎಂಜಿನ್ನಿನಂತೆ ಹೊಗೆ ಬಿಡುತ್ತಾ ತಮಗಾಗಿ ಕೊಟ್ಟಿದ್ದ ಕೊಠಡಿಯಲ್ಲಿ ಮಧ್ಯಾಹ್ನದ ವೇಳೆಗೇ ಬಿಯರ್‌ ಹಾಕುತ್ತಿದ್ದರು. +ಗೋವಿಂದಪ್ಪನವರನ್ನು ಎದುರಿಗೆ ಕೂರಿಸಿಕೊಂಡು ರಾಜಕೀಯ ವಿಶ್ಲೇಷಣೆಗೆ ತೊಡಗಿದ್ದರು. +ಜತೆಗೆ ಗೋವಿಂದಪ್ಪನವರಿಗೆ ಸೂಕ್ತ ಸಲಹೆಗಳನ್ನು ಕೊಡುತ್ತಿದ್ದರು. +"ಈಗಿನ ಹಗರಣ ಬಗೆಹರಿಸಲು ನೀವೇ ಮುಂದೆ ಬಂದು ಸಿಓಡಿಗೆ ಒಪ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ನಿಮಗೆ ಗೊತ್ತಿರುವ ಪೊಲೀಸ್‌ ಅಧಿಕಾರಿಗಳಿರಬೇಕಲ್ಲ ಸಿಓಡಿಯಲ್ಲಿ.?" ಎಂದಾಗ ಗೋವಿಂದಪ್ಪ "ಪಾಟೀಲ ಅಂತ ಒಬ್ಬ ಇದ್ದ. +ಅವನಿಗೆ ನಾನೇ ಬೆಂಗಳೂರಿಗೆ ವರ್ಗ ಮಾಡಿಸಿದ್ದೆ. +ಮತ್ತೇನೋ ಭಾನಗಡಿ ಮಾಡಿಕೊಂಡು ಈಗ ಸಿಓಡಿಗೆ ಹೋಗಿದ್ದಾನೆ"ಎಂದರು. +'ಹಾಗಿದ್ರೆಒಳ್ಳೇದೇ ಆಯ್ತು ಬಿಡಿ' ಎಂದರು ಹಿರಿಯ ಪತ್ರಕರ್ತರು. +ಹಗಲು ಹೊತ್ತು ಗುಂಡು ಹಾಕಿ ಅಭ್ಯಾಸ ಇಲ್ಲದ ಇನ್ನೊಬ್ಬ ಯುವಕನನ್ನ ಕೂರಿಸಿಕೊಂಡು ವೇತನ ಮಂಡಲಿಯ ರಜನೆ, ನಿವೃತ್ತಿ ವೇತನದ ಸಾಧ್ಯತೆ ಮೊದಲಾದ ವಿಚಾರಗಳನ್ನು ಕೊರೆಯುತ್ತಿದ್ದರು. +ಯುವಕ ಮಾತ್ರ ಮೂವರೂ ಹಿರಿಯರನ್ನು ಗಮನಿಸುತ್ತಾ ಅವರು ಹೇಳುತ್ತಿದ್ದುದನ್ನು ಆಸಕ್ತಿಯಿಂದ ಕೇಳುತ್ತಾ ವಾಪಸು ಹೋಗುವ ಚಿಂತೆಯಲ್ಲಿ ಮುಳುಗಿದ್ದನು. +ಭರ್ಜರಿ ಭೋಜನವಾಯಿತು. +ಹಿರಿಯ ಪತ್ರಕರ್ತರಿಬ್ಬರು ಹೇಳಿದಂತೆ ಗೋವಿಂದಪ್ಪನವರ ಒಬ್ಬ ಸಹಾಯಕ ಪತ್ರಿಕಾ ಹೇಳಿಕೆಯನ್ನು ಸಿದ್ಧಪಡಿಸಿದನು. +ಸಿಓಡಿ ತನಿಖೆಗೆ ಒತ್ತಾಯಿಸಿ ಗೋವಿಂದಪ್ಪ ಗೃಹ ಸಚಿವರೂ ಆದ ಮುಖ್ಯಮಂತ್ರಿಗೆ ಬರೆದಿರುವ ಪತ್ರಕ್ಕೆ ಹಿರಿಯರೇ ಉಕ್ತಲೇಖನ ಕೊಟ್ಟರು. +"ಸಿಎಂ ಗೆ ಹೋಗುವ ಮೊದಲು ಪತ್ರಿಕೆಗಳಲ್ಲಿ ಪ್ರಕಟವಾಗಲಿ" ಎಂದು ಅವರ ಪ್ರತಿಗಳನ್ನು ಮಾಡಿಸಿದರು. +ಸ್ವಲ್ಪ ಕಾಲ ಮಲಗಿದರು. +ಎದ್ದು ಶೌಚಾಲಯಕ್ಕೆ ಹೋದರು. +ಮುಖ ತೊಳೆದು ಮಡಿಯಾದರು. +ಗೋವಿಂದಪ್ಪನವರ ಬಳಿ ಹಿರಿಯ ಮೂವರೂ ಪ್ರತ್ಯೇಕವಾಗಿ ಸ್ವಲ್ಪ ಸ್ವಲ್ಪ ಕಾಲ ಮಾತನಾಡಿ ಜೇಬು ತಡವಿಕೊಳ್ಳುತ್ತಾ ಕೊಠಡಿಯಿಂದ ಹೊರಬಂದರು. +"ಏನೂ ಯೋಚನೆ ಮಾಡಬೇಡಿ" ಎಂದು ಒಂದೇ ಮೇಳದ ರಾಗದಲ್ಲಿ ಭರವಸೆ ನೀಡಿ ಯುವಕ ಪತ್ರಕರ್ತರನ್ನು ಕರೆದುಕೊಂಡು ತಾವು ಬಂದಿದ್ದ ಲಕ್ಷುರಿ ಕಾರಿನಲ್ಲಿ ರಾಜಧಾನಿಯತ್ತ ಮರುಪ್ರಯಾಣ ಬೆಳೆಸಿದರು. +ಕೆಲವೇ ದಿನಗಳಲ್ಲಿ ಗೋವಿಂದಪ್ಪನವರ ವಿಚಾರದಲ್ಲಿ ಪತ್ರಿಕೆಗಳಲ್ಲಿ ಪರಸ್ಪರ ವಿರುದ್ಧವಾದ ವರದಿಗಳು ಪ್ರಕಟವಾದವು. +ಅವರ ಬಗ್ಗೆ ಸಾರ್ವಜನಿಕರಲ್ಲಿಯೇ ಗೊಂದಲ ಉಂಟಾಗತೊಡಗಿತು. +ಅಪರಾಧಿಯಾಗಿದ್ದರೆ ತಾನೇ ಖುದ್ದಾಗಿ ಸಿಓಡಿ ತನಿಖೆಯನ್ನು ಏಕೆ ಕೇಳುತ್ತಿದ್ದ? +ಅದರಲ್ಲೂ ಇಲ್ಲೇ ಕೆಲಸ ಮಾಡುತ್ತಿದ್ದ ಪಾಟೀಲನೇ ತನಿಖಾಧಿಕಾರಿಯಾಗಿ ಬಂದ ಮೇಲೆ ಅದನ್ನು ಏಕೆ ಒಪ್ಪುತ್ತಿದ್ದ?ಎಂಬ ಪ್ರತಿಕ್ರಿಯೆಗಳು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. +ತನಿಖೆಯ ಪ್ರಕಟಣೆಯೊಂದಿಗೆ ಸಾರ್ವಜನಿಕ ಪ್ರತಿಭಟನೆ ಕ್ಷೀಣಿಸಿತು. +ಸ್ವಲ್ಪ ದಿನಗಳಲ್ಲಿ ಗೋವಿಂದಪ್ಪನವರ ವಿರುದ್ಧದ ಸಿಓಡಿ ವರದಿಯನ್ನು ಸರಕಾರ ಪಡೆಯಿತು. +ವರದಿಯಲ್ಲಿ ಗೋವಿಂದಪ್ಪನವರ ವಿರುದ್ಧ ಯಾವ ಆಪಾದನೆಯೂ ಸಾಬೀತಾಗಿಲ್ಲ ಎಂದು ಹೇಳಲಾಗಿದೆ ಎಂದು ರಾಜಧಾನಿಯಿಂದ ಹೊರಡುವ ಪತ್ರಿಕೆಗಳಲ್ಲಿ ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ವರದಿಗಳು ಪ್ರಕಟವಾದವು. +ಪತ್ರಿಕಾ ವರದಿಗಳ ಜೆರಾಕ್ಸ್‌ ಪ್ರತಿಗಳನ್ನು ಮಾಡಿಸಿದ ಗೋವಿಂದಪ್ಪನವರು ರಾಜಧಾನಿಯಲ್ಲಿ ಪ್ರಪ್ರಥಮ ಪತ್ರಿಕಾಗೋಷ್ಠಿ ನಡೆಸಿ ಅವುಗಳನ್ನು ಹಂಚಿದರು. +ತಾವು ನಿರಪರಾಧಿ ಎಂದು ಸ್ಪಷ್ಟನೆ ನೀಡಿದರು. +ಕಿರಿಯ ಹಾಗೂ ಹಿರಿಯ ಪತ್ರಕರ್ತರ ಪ್ರಶ್ನೆಗಳ ಸುರಿಮಳೆಗೆ ವಿನೀತರಾಗಿ ಉತ್ತರಿಸಿದರು. +"ಜನಸೇವೆಗಾಗಿ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡವನು ನಾನು, ಜನ ಬೇಡ ಎನ್ನುವವರೆಗೆ ಈ ಕ್ಷೇತ್ರದಲ್ಲಿ ಇರುತ್ತೇನೆ"ಎಂದರು. +"ಮುಂದಿನ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುತ್ತೀರಾ" ಎಂದು ಕೇಳಿದಾಗ ಸಮ್ಮತಿ ಸೂಚಕವಾಗಿ ತಲೆಯಾಡಿಸಿದರು. +"ನಾನು ಸ್ವತಂತ್ರ ಅಭ್ಯರ್ಥಿಯಾಗಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. +ಜನತೆಯ ನಿರೀಕ್ಷೆಗೆ ತಕ್ಕ ಹಾಗೆ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂಬ ವಿಷಾದ ನನಗಿದೆ. +ಆದರೆ, ಜನತೆಯ ಸೇವೆಗಾಗಿ ಇನ್ನೊಂದು ಅವಕಾಶ ನೀಡುವಂತೆ ಮತ್ತೆ ಜನರನ್ನು ಪ್ರಾರ್ಥಿಸುತ್ತೇನೆ"ಎಂದು ತಮ್ಮ ಉಮೇದುವಾರಿಕೆಯನ್ನು ಪ್ರಕಟಿಸಿದರು. +ಹೆಣಗಳ ನಡುವೆ: +ಬಾವಿಕಟ್ಟೆಯ ಮೇಲೆ ಕುಳಿತಿದ್ದೆ. +ಬೆಳಗಿನ ಬಿಸಿಲು ಮೈ ಚುರುಗುಟ್ಟಿಸುತ್ತಿತ್ತು. +ಎಲ್ಲ ಕಡೆಯೂ ಹಸಿರು. +ಬಾವಿಕಟ್ಟೆ ಸುತ್ತ ಒತ್ತಾಗಿ ಬೆಳೆದಿದ್ದ ಗೌರಿ ಗಿಡಗಳು. +ಕೇಸರಿ, ಹಳದಿ, ಬಿಳಿ ಬಣ್ಣದ ಗೌರಿ ಹೂಗಳ ಮೇಲೆಬಿದ್ದ ಇಬ್ಬನಿಯಿಂದ ಒದ್ದೆಯಾದರೂ ಹೂವಿನಿಂದ ಹೂವಿಗೆ ಹಾರುವ ಜೇನು ನೊಣಗಳ ಗುಂಯ್‌ಗುಂಯ್‌ ನಾದದ ಹೊರತು ಬೇರೆ ಸಪ್ಪಳವೇ ಇರಲಿಲ್ಲ. +ಹೂವಿನ ಮೇಲೆ ನಿಧಾನವಾಗಿ ಕುಳಿತು ಮೆಲ್ಲಗೆ ಹರಿದಾಡಿ ಮತ್ತೆ ಇನ್ನೊಂದು ಹೂವಿಗೆ ಹಾರುವ ಅವುಗಳ ಚಟುವಟಿಕೆಯನ್ನು ಗಮನಿಸುತ್ತಿದ್ದೆ. +ಬಿಸಿಲಿನ ಪ್ರಖರತೆ ಹೆಚ್ಚಾಗತೊಡಗಿ ಮನೆಕಡೆ ತಿರುಗಿದಾಗ ಎದುರಿಗೆ ಪೋಸ್ಟ್‌ ವಿರೂಪಾಕ್ಷಿ ಸೈಕಲ್‌ನಲ್ಲಿ ಬಂದ. +ಎಂದಿನಂತೆ ನಗುತ್ತ "ನಿನ್ನೇನೇ ಬಂತು. +ನಿಮ್ಮೂರಿನವರು ಯಾರೂ ಸಿಗಲಿಲ್ಲ ನೋಡಿ. +ಅದಕ್ಕೇ ಯಾವುದೋ ಅರ್ಜೆಂಟಿಂದೇ ಇರಬೇಕು ಅಂತ ನಾನೇ ಬಂದೆ" ಅಂದ. +ಹೆದ್ದಾರಿಪುರದಿಂದ ಒಂದು ಕಿಲೋಮೀಟರ್‌ದೂರ ಬಂದು ಮುತುವರ್ಜಿ ತೋರಿಸಿದ್ದನ್ನು ನೋಡಿ ಅವನನ್ನು ಕರೆದು ಕಾಫಿ ಕೊಡದೆ ಹಾಗೇ ಕಳಿಸುವುದು ಸರಿಯೆನಿಸಲಿಲ್ಲ. +ಮನೆಯಲ್ಲಿ ಕಾಫಿ ಕುಡಿದು ಊರಿನ ಸಮಸ್ತ ವಿದ್ಯಮಾನಗಳನ್ನು ಮುಗಿಸಿ ಅವನು ಹೊರಡುವವರೆಗೂ ನನಗೆ ಬಂದಿರುವ ಕಾಗದವನ್ನು ಸರಿಯಾಗಿ ಪರಿಶೀಲಿಸಲು ಸಾಧ್ಯವಾಗಿರಲಿಲ್ಲ. +ಅವನನ್ನು ಕಳಿಸಿ ಕಾಗದ ಬಿಡಿಸಿದೆ. +ಬೆಂಗಳೂರಿನ ಕಾಲೇಜೊಂದರಲ್ಲಿ ಅಧ್ಯಾಪಕ ಹುದ್ದೆಗೆ ನಡೆಯುವ ಸಂದರ್ಶನದ ಕರೆಯಾಗಿತ್ತು. +ಈಚೀನ ತಿಂಗಳಲ್ಲಿ - ಯಾವ ಸಂದರ್ಶನ ಕರೆಗಳೂ ಬಂದಿರಲಿಲ್ಲ. +ಆದ್ದರಿಂದ ಇದು ಬಂದಾಗ ಕೆಲಸದ ಆರ್ಡರು ಬಂದಷ್ಟೇ ಖುಷಿಯಾಯಿತು. +ನಾಲ್ಕು ದಿನ ಸಮಯ ಇದ್ದುದರಿಂದ ಕೂಡಲೇ ಹೊರಟು ಹುದ್ದೆಯ ಬಗ್ಗೆ ಮಾಹಿತಿ ತಿಳಿದು ಪ್ರಯತ್ನಿಸುವುದೆಂದು ತಕ್ಷಣ ಮನಸ್ಸಿಗೆ ಬಂತು. +ಆದರೆ ಬೆಂಗಳೂರಿನಲ್ಲಿ ಇಳಿದುಕೊಳ್ಳುವ ವ್ಯವಸ್ಥೆ, ತಿರುಗಾಟದ ಖರ್ಚು, ಊಟ ತಿಂಡಿಯ ಬಾಬತ್ತುಗಳನ್ನೆಲ್ಲ ಯೋಚಿಸಿದ ತಕ್ಷಣ ಬರಿಯ ಕಣ್ಣೊರೆಸುವ ತಂತ್ರವಾಗಬಹುದಾದ ಸಂದರ್ಶನಕ್ಕೆ ಇನ್ನೂರೈವತ್ತು ಮೈಲಿ ಪ್ರಯಾಸದ ಯಾತ್ರೆಯನ್ನು ಏಕೆ ಮಾಡಬೇಕೆಂಬ ಸಂದೇಹ ಮೂಡಿತು. +ಅಲ್ಲದೆ ಯತೀಶನ ನೆನಪೂ ಬಂತು. +ಏನಾದರಾಗಲಿ ಎಂದುಕೊಂಡು ಇದ್ದ ಬಟ್ಟೆಗಳನ್ನು ತೊಳೆಯಲು ಸಾಬೂನು ಹುಡುಕುತ್ತಿದ್ದಾಗ ಕೆಳಗಿನೂರು ಕಡೆಯಿಂದ ಗುಂಡು ಹಾರಿಸಿದ ಶಬ್ಬ ಕೇಳಿತು. +ಯಾರಾದರೂ ಶಿಕಾರಿಗೆ ಹೊರಟರಬಹುದೆ? ಎಂದುಯೋಚಿಸಿದೆ. +ಅದಕ್ಕೆ ಹಿನ್ನೆಲೆಯಾಗಿ ಸೋವಿನವರ ಕೂಗಾಗಲಿ ನಾಯಿಗಳ ಆರ್ಭಟವಾಗಲಿ ಕೇಳಿಸಿರಲಿಲ್ಲ. +ಆದ್ದರಿಂದ ಯಾರಾದರೂ ಪಟಾಕಿ ಹೊಡೆದಿರಬೇಕೆಂಬ ತೀರ್ಮಾನಕ್ಕೆ ಬರಬೇಕಾಯಿತು. +ನಾಳೆಯೋ ನಾಡಿದ್ದೋ ಊರಿನ ಪ್ರಾಥಮಿಕ ಶಾಲೆಯಲ್ಲಿ ಗಣಪತಿ ಇಡುತ್ತಾರಂತೆ, ಯಾರಾದರೂ ಹುಡುಗರು ಪಟಾಕಿ ಹಾರಿಸಿರಬಹುದು ಎಂದುಕೊಂಡೆ. +ಬಟ್ಟೆಗಳನ್ನು ಹಿಂಡಿ ಒಣಗಿಸುತ್ತಿದ್ದಾಗ ಕೆಳಗಿನೂರಿನಿಂದ ಸೋಮಣ್ಣ ಬಂದ. +ನಾನು ಮಾತನಾಡುವ ಮೊದಲೇ"ಯಡೂರು ಪುಟ್ಟಯ್ಯ ಹೋಗಿಬಿಟ್ಟ ಎಂದ. +"ಏನಾಗಿತ್ತು?" ಎಂದೆ. +"ತಿಂಗಳಿಂದ ಮಲಗಿದ್ದ. +ಯಾವುದೋ ರಣ ಹೊಡೀತು" ಅಂದ. +"ಮಂತ್ರವಾದಿ ಕರೆಸಿ ಭಾರಿ ಗುಲ್ಲು ಮಾಡಿದು" ಅಂದ. +ಈಚೆಗೆ ಊರಿನ ಯಾರ ಮನೆಗೂ ಹೋಗುತ್ತ ಇರಲಿಲ್ಲವಾದ್ದರಿಂದ ಯಾವ ವಿಷಯಗಳೂ ಗೊತ್ತಾಗುತ್ತಿರಲಿಲ್ಲ. +ಹಾಗೆ ಹೇಳಿದೆ. +"ನೀನು ಬಿಡು ಮಾರಾಯ, ಮೂರು ಹೊತ್ತೂ ಪುಸ್ತಕ ಹಿಡಿದು ಕುಂತ್ರೆ ಹೆಂಗೆ ಗೊತ್ತಾದಾತು"ಎಂದು ಅವಸರದಿಂದ ಹೊರಟ. +ಹೋಗುವ ಮೊದಲು "ಹೆಣ ಎತ್ತಾದು ಮಧ್ಯಾಹ್ನ ಆಗಬಹುದು" ಎಂದ. +ಯಡೂರು ಪುಟ್ಟಯ್ಯ ನಮ್ಮೂರಿಗೆ ಸೇರಿದವನಲ್ಲ. +ಊರಲ್ಲಿ ಈಗ ಇರುವ ಎಂಟು ಮನೆಗಳೂ ಒಂದಲ್ಲ ಒಂದು ಕಾಲಕ್ಕೆ ಒಂದೇ ಕುಟುಂಬದಿಂದ ಹೊರಬಂದವು. +ಆಸ್ತಿ ಮನೆ ಇತ್ಯಾದಿ ವಿಷಯಗಳಿಗಾಗಿ ಪರಸ್ಪರದಾಯಾದಿಗಳಾಗಿ ಪಂಚಾಯತಿ ನಡೆಸುತ್ತಿರುವಾಗ ಯಾವುದೋ ಸೀಮೆಯಿಂದ ಬಂದು ನೆರೆ ಊರಿನ ಜಮೀನ್ದಾರರಿಗೆ ಕಳ್ಳು ಇಳಿಸಿಕೊಡುವ ಕಾಯಕ ಆರಂಭಿಸಿ ನಮ್ಮೂರಿನಲ್ಲಿ ಬೀಡುಬಿಟ್ಟ ಪುಟ್ಟಯ್ಯನಿಗೆ ತನ್ನ ಊರಿನ ಹೆಸರೂ ಜತೆಯಲ್ಲೇ ಬಂದಿತ್ತು. + ಅವನ ಹುಲ್ಲು ಮನೆಗೆ"ಯಡೂರರ ಮನೆ" ಎಂದೇ ಹೆಸರಾಗಿತ್ತು . + +ಬೆಳೆದು ನಿಂತ ಅವನ ಇಬ್ಬರು ಹೆಣ್ಣು ಮಕ್ಕಳು ಊರಿನ ಇತರ ಹೆಣ್ಣುಮಕ್ಕಳ ಜತೆ ನಮ್ಮ ಚಿಕ್ಕ ಅಡಿಕೆ ತೋಟಕ್ಕೆ ಬಂದಾಗ ನೋಡಿದ್ದೆ. +ಹೊಂಬಾಳೆ, ಸಾಂಬ್ರಾಣಿ ಮೆಣಸಿನಕಾಯಿ, ದೀಪಾವಳಿ ಸಮಯದಲ್ಲಿ ಅಂಬಾಡಿ ಎಲೆ, ಪಚ್ಚೆತೆನೆ ಇತ್ಯಾದಿಗಳಿಗಾಗಿ ಬರುತ್ತಿದ್ದಾಗಲೂ ಗಮನಿಸಿದ್ದೆ. +ಯಾರೂ ಹತ್ತಿರದ ಸಂಬಂಧಿಕರಿಲ್ಲದೆ ಇರುವ ಒಬ್ಬನೇ ವ್ಯಕ್ತಿಯೆಂದರೆ ಪುಟ್ಟಯ್ಯ ಎಂದೂ ತಿಳಿದಿತ್ತು. + ಹೀಗಾಗಿ ಕೊನೆಯ ಸಲ ನೋಡಿ ಬರುವುದೆಂದು ಹೊರಟೆ. +ಗದ್ದೆ ಬದುವಿನ ಕೆಸರುಹಾದಿಯಲ್ಲಿ ಎಚ್ಚರಿಕೆಯಿಂದ ಯಡೂರರ ಮನೆ ತಲುಪಿದಾಗ ದೂರದಿಂದಲೇ ಆಳುವುದು ಕೇಳಿಸುತ್ತಿತ್ತು. +ಇಬ್ಬರು ಹೆಣ್ಣುಮಕ್ಕಳು ಹೆಣದ ತಲೆಯ ಕಡೆ ಕುಳಿತು ಆಳುತ್ತಿದ್ದರು. +ಪುಟ್ಟಯ್ಯನ ಹೆಂಡತಿ ಕಾಲುಬುಡದಲ್ಲಿ ಬಿದ್ದುಕೊಂಡು ತಲೆ ಚಚ್ಚಿಕೊಂಡು ರಂಪ ಮಾಡುತ್ತಿದ್ದಳು. +ಚಿಕ್ಕ ಹುಡುಗನೊಬ್ಬ ಅಕ್ಕಂದಿರನ್ನೂ ಅವ್ವನನ್ನೂ ನೋಡುತ್ತ ಅಳುತ್ತಿದ್ದ. +ಊರಿನ ಮುತ್ತೈದೆಯರು ಅವನ್ನು ಪುಟ್ಟಯ್ಯನ ಹೆಂಡತಿಯನ್ನೂ ಸಮಾಧಾನಪಡಿಸುತ್ತಿದ್ದರು. +ಪುಟ್ಟಯ್ಯನ ಹಿರಿಯಮಗ ಶೇಖರ ಬಾಗಿಲ ಹತ್ತಿರ ಮಂಕಾಗಿನಿಂತಿದ್ದವನು ಊರಿನ ಹಿರಿಯರು ಹೇಳಿದಂತೆ ಕುಡುಗೋಲು, ಚೆಂಬು, ಮಡಕೆ ಇತ್ಯಾದಿಯನ್ನು ತರುತ್ತಿದ್ದ. +ಸ್ವಲ್ಪ ಹೊತ್ತಿಗೆ ಊರಿನ ಎಲ್ಲ ಮನೆಗಳಿಂದಲೂ ಜನ ಬಂದರು. +ಅಪ್ಪ ಮೊದಲೇ ಹೋಗಿದ್ದ. +ನಾನು ಹೋದಾಗ ಕೆಲವರ ದೃಷ್ಟಿ ನನ್ನ ಮೇಲೆ ಬಿತ್ತು. +ಪ್ರೈಮರಿ ಶಾಲೆಯಲ್ಲಿ ಜತೆಯಲ್ಲೇ ಓದಿದ್ದು ಈಗ ಊರಿನ ಯಕ್ಷಗಾನ ತಂಡದ ಮುಖಂಡರಾದ ಇಬ್ಬರು ಬಾಲ್ಯಸ್ನೇಹಿತರು ಹತ್ತಿರ ಬಂದು 'ಏನು ಬಾಳ ಅಪರೂಪ? 'ಎಂದರು. +ಅವರ ಜತೆ ಸ್ನೇಹದ ಮಾತಿಗೆ ತೊಡಗಲು ಮನಸ್ಸಿರಲಿಲ್ಲ. +ಪುಟ್ಟಯ್ಯನ ಕಾಯಿಲೆ ಬಗ್ಗೆ ಬಹಳ ಮೆಲ್ಲಗೆ ಒಂದಿಷ್ಟು ಮಾತುಕತೆ ನಡೆಯಿತು. +ಅಂಗಳದಲ್ಲಿ ಕೆಲವರು ಬಿದಿರಿನ ಬೊಂಬುಗಳನ್ನು ಜೋಡಿಸಿ ಬಿಗಿದರು. +ಅಂತ್ಯಸಂಸ್ಕಾರದ ಒಂದೊಂದು ಸಿದ್ಧತೆಯೂ ನಡೆದಂತೆ ಜಗುಲಿಯಲ್ಲಿ ಕುಳಿತ ಪುಟ್ಟಯ್ಯನ ಕುಟುಂಬದವರಲ್ಲದೆ ನೋಡಲೆಂದು,ಸಮಾಧಾನಪಡಿಸಲೆಂದು ಇಲ್ಲವೇ ಮಾತಾಡಿಸಲೆಂದು ಬಂದ ಊರ ಹೆಂಗಸರ ಅಳುವೂ ಕ್ರಮೇಣ ತಾರಕಕ್ಕೇರುತ್ತಿತ್ತು. +ತಲೆ ಹಣ್ಣಾದ ಕೆಲವು ಯಜಮಾನರು ಕೆಲವೊಮ್ಮೆ ಸಮಾಧಾನಪಡಿಸುತ್ತ, ಕೆಲವೊಮ್ಮೆ ಗದರಿಸುತ್ತ, ಮುಂದಿನ ಕಾರ್ಯ ನಡೆಸುತ್ತಿದ್ದರು. +ಹೆಣವನ್ನು ಚಟ್ಟಕ್ಕೆ ಬಿಗಿದು ಮನೆಯಿಂದ ಹೊರಗೆ ತಂದಾಗ ಹೆಂಗಸರು, ಮಕ್ಕಳ ಜೊತೆ ಕೆಲವು ಗಂಡಸರೂ ಜೋರಾಗಿ ಆಳತೊಡಗಿದರು. +ಅಂತ್ಯ ಸಂಸ್ಕಾರ ಮುಗಿದ ಮೇಲೆ ಸ್ಕೂಲಿನಲ್ಲಿ ಗಣಪತಿ ಇಡಲು ಮಾವಿನೆಲೆಯ ತೋರಣ ಕಟ್ಟಿ, ಬಣ್ಣದ ಕಾಗದಗಳಿಂದ ಮಂಟಪ ನಿರ್ಮಿಸಿ ಹಗಲು ರಾತ್ರಿ ಒದ್ದಾಡಿದ ಸ್ಕೂಲು ಹುಡುಗರಿಗೆ ಗಣಪತಿ ಇಡುವುದು ಬೇಡವೆಂದು ಹೇಳಿದಾಗ ಒಂದಿಬ್ಬರು ಹುಡುಗರು 'ಅವನಿಗೆ ಇನ್ನೊಂದೆರಡು ದಿನ ಬಿಟ್ಟು ಸತ್ತಿದ್ರೆ ಏನಾಗ್‌ತಿತ್ತೋ' ಎಂದು ಮೆಲ್ಲಗೆ ಹೇಳಿ ದೊಡ್ಡವರೊಬ್ಬರಿಂದ ತಲೆಗೆ ತಟ್ಟಸಿಕೊಂಡರು. +ಸಂಜೆ ಸುಸ್ತಾಗಿ ಮನೆಗೆ ಬಂದೆ. +ಅಪ್ಪ ಬಂದು ಸ್ನಾನ ಮುಗಿಸಿದ ಮೇಲೆ ಪುಟ್ಟಯ್ಯನ ಹಿರಿಯ ಮಗ ಶೇಖರ ಬಂದ. +ಊಟಕ್ಕೆ ಇರಲು ಒತ್ತಾಯಿಸಿದ ಮೇಲೆ ಒಪ್ಪಿಕೊಂಡ. +ಊಟ ಮಾಡುತ್ತಿದ್ದಾಗ ನಮ್ಮ ಮನೆಯಲ್ಲೂ ಆವರಿಸಿದ್ದ ಮೌನ ಮುರಿದು ಸಂದರ್ಶನಕ್ಕೆ ಬಂದಿರುವುದನ್ನು ಹೇಳಿದೆ. +ಅಪ್ಪ ಮಾತಾಡದೆ ಊಟ ಮುಗಿದ ಮೇಲೆ ಖರ್ಚೆಲ್ಲ ಲೆಕ್ಕ ಹಾಕಿದ. +ನನ್ನ ಬಸ್‌ ಚಾರ್ಜು ಮತ್ತು ಎರಡು ದಿನದ ಊಟದ ಖರ್ಚನ್ನು ಕೇಳಿ ದುಡ್ಡು ಕೊಟ್ಟ ನಂತರ ಶೇಖರನನ್ನು ಕರೆದು "ನೋಡು, ಮೊನ್ನೆ ಎತ್ತು ಮಾರಿದ್ದು ಇದು. +ನನ್ನ ಹತ್ರ ಇರೋದು ಇಷ್ಟೆ. +ನಮ್ಮ ಹುಡುಗನ್ನ ಬೆಂಗಳೂರಿಗೆ ಕಳಿಸಾಕೆ ಬಾಳ ತೊಂದ್ರೆ ಆದ್ರೂ ನಿಂಗೆ ಕೊಡ್ತಾ ಇದೀನಿ"ಅಂದು ಸ್ವಲ್ಪ ಹಣ ಕೊಟ್ಟ. +ಹಣ ಪಡೆದು ಶೇಖರ ರಾತ್ರಿಯ ಕತ್ತಲೆಯಲ್ಲಿ ಕರಗಿಹೋದ. +ಇನ್ನೂರೈವತ್ತು ಮೈಲಿಯ ಬಸ್ಸು ಪ್ರಯಾಣದಿಂದ ಮೈಯೆಲ್ಲ ಬಿದ್ದುಹೋಗುವಷ್ಟು ಆಯಾಸವಾಗಿತ್ತು. +ಬಸ್ಸಿನಲ್ಲಿ ಕುಳಿತ ಸ್ವಲ್ಪ ಹೊತ್ತಿಗೆ ಯತೀಶನ ರೂಮಿಗೆ ಹೋಗಿ ಇಳಿದುಕೊಳ್ಳುವುದೆಂದು ತೀರ್ಮಾನಿಸಿದ್ದೆ. +ಐದುವರ್ಷದ ಸಹವಾಸದಲ್ಲಿ ಈಗಲೂ ಪತ್ರ ವ್ಯವಹಾರ ಇರಿಸಿಕೊಂಡವನೆಂದರೆ ಅವನೊಬ್ಬನೇ. +ಬೆಂಗಳೂರಿನಲ್ಲಿ ಕಾಲೇಜು ಅಧ್ಯಾಪಕನಾಗಿ ಆಗಾಗ ತನ್ನ ಅನುಭವಗಳನ್ನು ಕಾಗದದಲ್ಲಿ ತಿಳಿಸುತ್ತ ನನ್ನ ಮುಂದುವರಿದ ಅನಿಶ್ಚಿತ ಪರಿಸ್ಥಿತಿಗೆ ಮರುಕ ತೋರಿಸುತ್ತಿದ್ದವನು. +ಆದಷ್ಟು ಬೇಗ ಬೆಂಗಳೂರಿಗೆ ಬಂದು ಒಂದು ಒಳ್ಳೆಯಕೆಲಸ ಹುಡುಕಬಾರದೇಕೆ ಎಂದೂ ಬರೆಯುತ್ತಿದ್ದ . +ಊರಿನ ನಿರಂತರ ಬಡತನದಲ್ಲಿ ನಾನು ಬೆಂಗಳೂರಿನಲ್ಲಿ ಐದುವರ್ಷ ಓದು ಮುಂದುವರಿಸಿದ್ದೇ ದೊಡ್ಡ ಪವಾಡ ಎಂದು ಅವನಿಗೆ ತಿಳಿಸಲು ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಗಿದ್ದವು. +ಅವನ ರೂಮು ಈಗ ಹೇಗಿರಬಹುದು, ಎಷ್ಟು ಅಚ್ಚುಕಟ್ಟಾಗಿ ಅವನ ಗ್ರಂಥಭಂಡಾರ ಬೆಳೆದಿರಬಹುದು ಎಂದೆಲ್ಲ ನೋಡುವ ಕುತೂಹಲ ಜಾಸ್ತಿಯಾಗಿತ್ತು. +ಬೆಂಗಳೂರು ಹತ್ತಿರವಾದಂತೆಲ್ಲ ಆತಂಕ ಹೆಚ್ಚಾಗತೊಡಗಿತು. +ಬೆಳಿಗ್ಗೆ ಮನೆಯಿಂದ ಹೊರಡುವಾಗ ಮಜ್ಜಿಗೆಯಲ್ಲಿ ಸ್ವಲ್ಪ ತಿಂದಿದ್ದೆ. +ಹಸಿವು ವಿಪರೀತವಾಗಿತ್ತು. +ಬಸ್ನಿಳಿದು ಕಾಲೆಳೆದುಕೊಂಡು ಯತೀಶನ ರೂಮಿಗೆ ಬಂದಾಗ ಸಂಜೆ ಕಳೆದು ರಾತ್ರಿಯಾಗಿತ್ತು. +ಎಲ್ಲಿ ನೋಡಿದರೂ ಪುಸ್ತಕಗಳ ರಾಶಿ. +ಅಚ್ಚುಕಟ್ಟಾದ ಮೇಲುಹೊದಿಕೆಯ ಮಲೆ ಸುಂದರವಾದ ಚಿತ್ರಗಳು. +ರೂಮು ನೋಡಿ ಒಂದು ಕ್ಷಣ ಅಸೂಯೆಯಾಯಿತು. +ರೂಮಿನ ಒಂದು ಬದಿಗೆ ನೇತುಹಾಕಿದ್ದ ದೊಡ್ಡ ಕನ್ನಡಿಯಲ್ಲಿ ಮುಖ ನೋಡಿಕೊಂಡೆ. +ನನಗೇ ನಾಚಿಕೆ ಆಗುವಷ್ಟು ಅಸಹ್ಯವಾಯಿತು. +ಗಡ್ಡ ತೆಗೆದಿದ್ದೆ. +ಆದರೂ ಕೆನ್ನೆಯ ಗುಳಿಯ ಆಳ, ಕಣ್ಣು ಸುತ್ತಲಿನ ಕಪ್ಪನ್ನು ಅದು ನಿವಾರಿಸಿರಲಿಲ್ಲ. +ಯತೀಶ ಇನ್ನೂ ಬಂದಿರಲಿಲ್ಲ. +ಅವನ ತಮ್ಮ ನೀಟಾಗಿ ಹಾಸಿದ್ದ ಹಾಸಿಗೆಯಲ್ಲಿ ಮಲಗಿದ್ದ. +ತುಂಬ ಹೊತ್ತಿನ ನಂತರ ಯತೀಶ ಬಂದ. +ಗಲ್ಲದ ಕೆಳಗೆ ಜೋಲುಬೀಳುವಷ್ಟು ದಪ್ಪಗಾಗಿದ್ದ. +ಮೂರುವರ್ಷದ ಹಿಂದೆ ನೋಡಿದಾಗ ಚಿಗುರು ಮೀಸೆಯಿತ್ತು. +ಈಗ ದಪ್ಪಗಾಗಿ ಹುರಿಗೊಂಡಿದ್ದವು. +ಕೆನ್ನೆ ನುಣುಪಾಗಿ ಯಾವುದಾದರೂ ಜಾಹೀರಾತಿಗೆ ನೀಡುವಷ್ಟು ಮೃದುವಾಗಿತ್ತು ಬಂದವನೇ "ಏಯ್‌ ವ್ಯಕ್ತಿ, ಯಾವಾಗ ಬಂದದ್ದು?" ಅಂದ. +ಕುಳಿತಿದ್ದವನು ಎದ್ದೆ. +ಊರಿಂದ ನೇರ ಬಂದದ್ದನ್ನೂ, ಬಂದ ಕಾರಣವನ್ನೂ ವಿವರಿಸಿದೆ. +ನನ್ನ ಹರಿದುಹೋದ ಚರ್ಮದ ಚೀಲವನ್ನು ಅವನು ಕಿರುಗಣ್ಣಿನಿಂದ ನೋಡುತ್ತ "ಆ ಕಾಲೇಜಿನಲ್ಲಿ ಪೋಸ್ಟ್‌ಖಾಲಿ ಇದೆಯಂತಾ? +ಹಾಗಾದರೆ ಒಂದು ಮಾತು ಅವರಿಗೆ ಹೇಳುತ್ತೇನೆ ಬಿಡಿ. +ಯಾವಾಗ, ನಾಡಿದ್ದಲ್ಲವಾ ಇರೋದು? +ನಾಳೇನೇ ಹೇಳ್ತೀನಿ" ಅಂದ. +ಆ ಕಾಲೇಜಿನ ಪ್ರಿನ್ಲಿಪಾಲರಲ್ಲದೆ ಅದರ ವ್ಯವಸ್ಥಾಪಕ ಮಂಡಲಿ ಅಧ್ಯಕ್ಷರೂ ತನಗೆ ಗೊತ್ತು ಎಂದ. +ನನ್ನ ಚಪ್ಪಲಿಗಳನ್ನು ನೋಡುತ್ತ 'ಅಂತೂ ಮಲೆನಾಡಿನ ಕಾಡುಮೇಡುಗಳಲ್ಲಿ ವಿಹಾರ ನಡೆಸುತ್ತಾ ಗಡದ್ದಾಗಿ ಇದ್ದೀರಿ' ಅಂದ. +ಬಟ್ಟೆ ಬದಲಿಸಿದ. +ಅವನ ತಮ್ಮ ಸ್ಪವ್‌ನಲ್ಲಿ ಅನ್ನ ಮಾಡಿದ್ದ. +ಹೋಟಲಿನಿಂದ ಸಾಂಬಾರು ತಂದು ಇರಿಸಿದ್ದ. +ಯತೀಶ ಪಂಚೆಯುಟ್ಟು ಊಟಕ್ಕೆ ಕುಳಿತ ಅರ್ಧ ಊಟ ಆದ ಮೇಲೆ 'ನಿಮ್ಮದು ಊಟ ಆಗಿರಬೇಕಲ್ಲ'ಎಂದ. +ಬೇರೇನೂ ಹೇಳಲು ಸಾಧ್ಯವಾಗದೆ 'ಬರ್ತಾನೇ ಮಾಡಿಕೊಂಡು ಬಂದೆ' ಎನ್ನುವಾಗ ಗಂಟಲು ಆರಿತ್ತು. +ಅವನು ಊಟ ಮುಗಿಸಿದಾಗ ಯಾರೋ ಅವನ ಸ್ನೇಹಿತರು ಬಂದರು. +ರೂಮಿನ ಹೊರಗಡೆ ಅವರನ್ನು ಕರೆದುಕೊಂಡು ಸ್ವಲ್ಪ ಹೊತ್ತಿನ ನಂತರ ವಾಪಸು ಬಂದಾಗ ಅವನ ಮುಖದ ಕಳೆ ಬದಲಾಗಿತ್ತು. +"ನನ್ನ ಕ್ಲೋಸ್‌ ರಿಲೇಟಿವ್‌ ಒಬ್ಬರ ಫಾದರ್‌ ತೀರಿಕೊಂಡ್ರಂತೆ. +ಈಗ ಹೋಗಬೇಕಾಗುತ್ತಲ್ಲ?" ಅಂದ. +"ನಾನೂ ಬರಲಾ?"ಅಂದೆ. +"ಮತ್ತೆ ನಾನೊಬ್ಬನೇ ಅಷ್ಟು ದೂರ. . . "ಎಂದು ರಾಗ ಎಳೆದಾಗ ನಾನೂ ಹೊರಟೆ. +ಆಗಲೇ ರಾತ್ರಿ ಹನ್ನೊಂದು ಗಂಟೆ ಮಿಕ್ಕಿತ್ತು. + ಯತೀಶನ ರೂಮಿನಿಂದ ಕನಿಷ್ಠ ಐದಾರು ಮೈಲಾದರೂ ದೂರವಿದ್ದ ಬಡಾವಣೆಯ ಮನೆಯೊಂದರ ಬಳಿ ನಮ್ಮ ರಿಕ್ಷಾ ನಿಂತಿತು. +ಮನೆಯ ಎಲ್ಲಾ ಕಡೆ ಲೈಟು ಹಾಕಿದ್ದರು. +ರಿಕ್ಷಾ ಇಳಿದು ಮನೆಯ ಒಳಗೆ ಕಾಲಿರಿಸಿದೆವು. +ಆಗಲೇ ಸಾಕಷ್ಟು ಜನ ಸೇರಿದ್ದರು. +ಮೂಲೆಯಲ್ಲಿ ಕುಳಿತ ಒಂದಿಬ್ಬರು ಹೆಂಗಸರು ನಿಶ್ತಬ್ಧವಾಗಿ ಅಳುತ್ತಿದ್ದರು. +ಹಾಸಿದ್ದ ಜಮಖಾನದ ಮೇಲೆ ಕುಳಿತಿದ್ದ ಏಳೆಂಟು ಜನ ಗಂಡಸರು ಮೆಲ್ಲಗೆ ಮಾತಾಡುತ್ತಿದ್ದರು. +ಯತೀಶನಿಗೆ ಪರಿಚಯ ಇದ್ದ ಒಬ್ಬ ಎದ್ದು ಬಂದ. +"ಹಲೋ"ಎಂದು ಮತ್ತೆ ಹೊರಗಡೆಯೇ ಕರೆತಂದ. +"ಬಾಡೀ ಎಲ್ಲಿಟ್ಟಿದಾರೆ?"ಎಂದು ಯತೀಶ ಕೇಳಿದ್ದಕ್ಕೆ ಒಳಗಡೆಕೈತೋರಿಸುತ್ತ 'ರೂಮಿನಲ್ಲಿದೆ ನೋಡೋರಂತೆ.' +'ಅದನ್ನೇನು ನೋಡೋದು. +ಹೆಣ ಯಾವಾಗಲೂ ಹೆಣವೇ'ಅಂದ, ಗೊಣಗುತ್ತ. +ಆದರೂ ಯತೀಶ ಬಲವಂತ ಮಾಡಿದ. +ಮೂವರೂ ಹೆಣ ಇರಿಸಿದ ರೂಮಿಗೆ ಹೋದೆವು. +ಹಾಸಿಗೆಯ ಮೇಲೆ ಇರಿಸಿದ್ದ ಹೆಣ - ಒಂದು ರೀತಿಯ ವಿಕಾರ ಸ್ವರೂಪ ತಾಳಿತ್ತು. +ಯತೀಶನ ಸಂಬಂಧಿ ಮಂಚದ ಬುಡದಲ್ಲಿ ತಲೆತಗ್ಗಿಸಿ ಕುಳಿತಿದ್ದವನು ನೋಡುತ್ತಲೂ ಎದ್ದು ಬಂದು ಕೈಹಿಡಿದುಕೊಂಡು ಜೋರಾಗಿ ಬಿಕ್ಕಿದ. +ಯತೀಶ "ಈಗ ಸಮಾಧಾನಮಾಡಿಕೋ ರಾಜು. +ಮುಂದೆ ಎಲ್ಲಾ ಸರಿಹೋಗುತ್ತೆ" ಎಂದ. +ರೂಮಿನಲ್ಲಿ ವಿಲಕ್ಷಣ ವಾಸನೆ ಬರುತ್ತಿತ್ತು. +"ಇಲ್ಲಿ ನಿಲ್ಲೋಕಾಗಲ್ಲ" ಎಂದು ಮೆಲ್ಲಗೆ ಹೇಳುತ್ತ ಯತೀಶ ಹೊರಬಂದ. +ನಾವೂ ಹಿಂಬಾಲಿಸಿದೆವು. +ಮನೆಯ ಹೊರಗಿನ ಕಾಂಪೌಂಡಿಗೆ ಒರಗಿ ನಿಂತಾಗ ಯತೀಶ 'ಇವರು ನನ್ನ ಸ್ನೇಹಿತರು, ಇವತ್ತು ಊರಿನಿಂದ ಬಂದರು. +ಇವರು ರಾಮಮೂರ್ತಿ, ನಾವು ಕರೆಯೋದು ಮೂರ್ತಿ ಅಂತ' ಎಂದು ಪರಿಚಯಿಸಿದ. +ಮೂರ್ತಿ ಯಾವುದೋ ಕಾಲೇಜಿನಲ್ಲಿ ವಿಭಾಗದ ಮುಖ್ಯಸ್ಥ ಎಂದು ಹೇಳಿಕೊಂಡ. +ನನ್ನ ಕೆಲಸ ವಿಚಾರಿಸಿದ. +ನಿಜಸ್ಥಿತಿ ಹೇಳಿದ ಮೇಲೆ ಅವರಿಬ್ಬರೂ ಕಾಲೇಜು ವಿಷಯಗಳಲ್ಲಿ ಮಾತಾಡಲು ತೊಡಗಿದರು. +ಸ್ವಲ್ಪ ಹೊತ್ತಿನ ನಂತರ ಮೂರ್ತಿ "ರಾತ್ರಿಯೆಲ್ಲ ಜಾಗರಣೆನಾ?" ಎಂದ. +ಆಗಲೇ ಹನ್ನೆರಡು ಗಂಟೆಯ ಹತ್ತಿರವಾಗಿತ್ತು. +ಸ್ಕೂಟರು, ಕಾರುಗಳಲ್ಲಿ ಹೆಣ ನೋಡಲು ಬಂದ ಸಂಬಂಧಿಕರು ಸಾವಿನ ಕಾರಣ ವಿಚಾರಿಸಿ ನಾಳೆ ಬೆಳಿಗ್ಗೆ ಬರುವುದಾಗಿ ಹೇಳಿ ಹೊರಟು ಹೋಗುತ್ತಿದ್ದರು. +ತೀರ ಹತ್ತಿರದ ಸಂಬಂಧಿಕರಿರಬೇಕು, ಅವರೆಲ್ಲ ಮನೆ ರೂಮುಗಳಲ್ಲಿ ತುಂಬಿಕೊಂಡಿದ್ದರು. +ನಾವು ನಿಂತ ಜಾಗಕ್ಕೆ ಕೊಂಚ ದೂರದಲ್ಲಿ ಇಬ್ಬರು ವಯಸ್ಸಾದವರು ಮಾತಾಡುತ್ತಿದ್ದರು. +"ಚಿಕ್ಕ ವಯಸ್ಸು, ಅಂಥದ್ದೇನು ಬಂದಿತ್ತೊ" ಎಂದು ಒಬ್ಬರು ಹೇಳಿದರು. +ಇನ್ನೊಬ್ಬರು ಎರಡೂ ಕೈಮೇಲೆ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದರು. +ಈ ಇಬ್ಬರು ತಮ್ಮ ಮಾತುಕತೆಯಲ್ಲಿ ನನ್ನನ್ನು ಮರೆತ ಹಾಗಿತ್ತು. +ಕಾಲೇಜುಗಳ ರಾಜಕೀಯ ಗಹನವಾದ ಚರ್ಚೆಯಲ್ಲಿ ತೊಡಗಿದ್ದಂತೆ ನಾನು ಮೂಕಪ್ರೇಕ್ಷಕನಾಗಿದ್ದೆ. +ಹಸಿವಿನಿಂದ ಹೊಟ್ಟೆ ಚುರುಗುಟ್ಟುತ್ತಿತ್ತು. + ಯತೀಶ ನಾಲ್ಕೈದು ಸಲ ಆಕಳಿಸಿದ. +ಮೂರ್ತಿ ಪದೇ ಪದೇ ವಾಚು ನೋಡುತ್ತ 'ಇಲ್ಲೇ ಎಲ್ಲಾದರೂ ಕಾಕಾಹೋಟೆಲುಗಳಿದ್ದರೆ ಒಂದು ಗುಟುಕು ಟೀ ಕುಡಿಯೋಣ' ಅಂದ. +ಮನೆಯ ಕಾಂಪೌಂಡು ದಾಟಿ ರಸೆಗಿಳಿಯುತ್ತಿದ್ದಾಗ ರಾಮಮೂರ್ತಿಗೂ ಸತ್ತವರಿಗೂ ಸಂಬಂಧ ಕೇಳಿದೆ. +"ಅಂಥ ಹತ್ತಿರದ್ದೇನೂ ಇಲ್ಲರೀ,ನಮ್ಮ ಚಿಕ್ಕಪ್ಪನೋ ಏನೋ ಆಗಬೇಕು?" ಅಂದ. +ಮನೆಯಿಂದ ಒಂದು ಫರ್ಲಾಂಗು ದೂರ ಬಂದೆವು. +ಯಾವ ಕಾಕಾ ಹೋಟೆಲುಗಳೂ ಕಣ್ಣಿಗೆ ಬೀಳಲಿಲ್ಲ. +"ಇಷ್ಟು ಹೊತ್ತಿನಲ್ಲಿ ಯಾರು ಎದ್ದಿರುತ್ತಾರೆ?"ಎಂದೆ. +"ನೀವು ಬೆಂಗಳೂರಿಗೆ ಹೊಸಬರೇನ್ರಿ?"ಎಂದು ಮೂರ್ತಿ ಸುಮ್ಮನಿರಿಸಿದ. +ಯತೀಶ ತನ್ನ ಕಾಲೇಜಿನಲ್ಲಿ ಇತ್ತೀಚೆಗೆ ಆರಂಭಿಸಿದ ಯಾವುದೋ ಕಾರ್ಯಕ್ರಮದ ವಿವರಣೆ ಕೊಡುತ್ತಿದ್ದಾಗ ಒಂದು ಬಾರಿನ ಸಮೀಪ ಬಂದೆವು. +"ಹೇಗೂ ಇಷ್ಟು ದೂರ ಬಂದಿದ್ದೇವೆ. +ಈ ಏರಿಯಾದಲ್ಲಿ ಈ ಹೋಟೆಲು ಬೆಳಗಿನ ಜಾವದವರೆಗೆ ತೆರೆದಿರುತ್ತೆ?"ಎನ್ನುತ್ತ ಮೂರ್ತಿ ಮುಂದೆ ನಡೆದ. +ಬಾರಿನ ಮಂದಬೆಳಕಿನಲ್ಲಿ ಮೂಲೆಯ ಟೇಬಲಿನ ಸುತ್ತ ಮೂವರೂ ಕುಳಿತೆವು. +ಬೇರರ್‌ ಬಂದಾಗ ಮೂರ್ತಿಯೇ ಆರ್ಡರ್‌ ಮಾಡಿದ. +"ಈ ಹೊತ್ತಿನಲ್ಲಿ ಕುಡೀಬಾರದು. +ಆದರೆ ದುಃಖಸಹಿಸಿಕೊಳ್ಳೋದಕ್ಕೆ ಕುಡಿದರೆ ತಪ್ಪಲ್ಲ" ಎಂದ. +"ಅದಕ್ಕೇ ಅಲ್ವೆ, ಆಪದ್ಭರ್ಮ ಅಂತ ಇರೋದು" ಎಂದು ಯತೀಶ ದನಿಗೂಡಿಸಿದ. +ನಾನು ಉಸಿರೆತ್ತದೆ ಇಬ್ಬರ ಮುಖಗಳನ್ನೂ ನೋಡುತ್ತಿದ್ದಾಗ ಯತೀಶ "ನೋಡು ಮೂರ್ತಿ, ಇವರಿಗೆ ಕೆಲಸ ಕೊಡಿಸ್ತೀನಿ ಅಂತ ಹೇಳಿದೀನಿ. +ಅದರ ಬಾಬತ್ತು. . . ಹೇಗೂ ಊರಿನಿಂದ ಬಂದಿದಾರೆ"ಅಂದ. +"ಹೌದಾ, ಹಾಗಾದರೆ ಇನ್ನೂ ಒಳ್ಳೇದೇ ಆಯ್ತು" ಎನ್ನುತ್ತ ಮೂರ್ತಿ ಬೇರರ್‌ ತಂದಿಟ್ಟ ಬಾಟಲುಗಳಿಂದ ತಾನೇ ಬಗ್ಗಿಸಿದ. +ನಾನು ಕುಡಿಯುವುದಿಲ್ಲವೆಂದು ಖಂಡಿತವಾಗಿ ಹೇಳಿದ್ದರಿಂದ ಕೆಲವೇ ನಿಮಿಷಗಳಲ್ಲಿ ಮೂರು ಬಾಟಲು ಬೀರನ್ನೂ ಮುಗಿಸಿದರು. +ಯತೀಶ ಇನ್ನೂ ಒಂದು ರೌಂಡಿಗೆ ಆರ್ಡರು ಮಾಡುತ್ತ 'ಬದುಕಿನಂತೆ ಸಾವು ಒಂದು ಅನುಭವ ಆಗಬೇಕು' ಅಂದ. +ಅದಕ್ಕೆ ಮೂರ್ತಿ ಕೆಲವು ಗ್ರಂಥಗಳ ಹೆಸರು ಹೇಳುತ್ತ ವಿವರಣೆ ನೀಡಿ ಸಿಗರೇಟು ಹೊತ್ತಿಸಿದ. +ನಾನು ಜಿಪ್ಪ್‌ ಮೆಲ್ಲುತ್ತ ಇಬ್ಬರ ಮಾತುಕತೆಯನ್ನು ಆಲಿಸುತ್ತಿದ್ದೆ. +ಬೇರರ್‌ ಬಂದು ಎಚ್ಚರಿಸಿದ ಮೇಲೆ ಮೂರ್ತಿ ಬಿಲ್‌ ಕೇಳಿದ. +"ನೀವು ಅರ್ಧ ಕೊಡಿ. +ಉಳಿದದ್ದು ನಾನು ಕೊಡುತ್ತೇನೆ" ಎಂದು ನನ್ನೆಡೆ ಕೈಚಾಚಿದ. +ಎಷ್ಟಾಗಿದೆಯೆಂದು ಬಿಲ್ಲು ನೋಡಿದ ಯತೀಶ "ಇದೇನು ಬಿಡ್ರಿ ಪೂರ್ತಿ ಅವರೇ ಕೊಡ್ತಾರೆ"ಎಂದ. +ಅಷ್ಟರಲ್ಲಿ ನಾನು ಇನ್ನೂರು ಎಣಿಸಿ ಕೊಟ್ಟಾಗಿತ್ತು. +ಉಳಿದ ಹಣದಿಂದ ಹೇಗೆ ಊರು ಸೇರಲಿ ಎಂಬ ಚಿಂತೆ . +ಬೇರೇನೂ ಯೋಚಿಸಲಾಗದಷ್ಟು ದಟ್ಟವಾಗಿತ್ತು ಬಾರಿನಿಂದ ಹೊರಬಂದಾಗ ಇಬ್ಬರೂ ಸ್ಥಿಮಿತ ಕಳೆದುಕೊಂಡಂತಿದ್ದರು. +ಯತೀಶ ವಾಲಾಡುತ್ತಿದ್ದ. +ಆದರೆ ತಾನು ಸರಿಯಾಗಿರುವುದಾಗಿಯೂ ಕಾಲೇಜಿನ ರಾಜಕೀಯದ ಬಗ್ಗೆ ಇನ್ನೂ ಹೇಳುವುದಿದೆ ಅಂತಲೂ ತೊದಲುತ್ತಿದ್ದ. +ರಸ್ತೆಯುದ್ದಕ್ಕೂ ಅಡ್ಡಾಡುತ್ತಿದ್ದ ಅವರನ್ನು ಮನೆಗೆ ಕರೆ ತರುವುದೇ ಕಷ್ಟವಾಯಿತು. +ರಾತ್ರಿಯ ಗಂಭೀರ ನಿಶ್ಶಬ್ಧತೆಯಲ್ಲಿ ಮನೆಯ ಹತ್ತಿರ ಬಂದಾಗ ಮನೆಯಲ್ಲೆಲ್ಲ ಗಲಾಟೆಯಿತ್ತು. +"ಮಹಡಿಯಲ್ಲಿ ಒಂದು ರೂಮಿದೆ. +ಅಲ್ಲಿಗೆ ಹೋಗೋಣ ಎಂದು ಮೂರ್ತಿ ಕಾಂಪೌಂಡಿನ ಬಾಗಿಲು ತೆರೆದ." +ಮಹಡಿಗೆ ಹೋಗುವ ಮೆಟ್ಟಲುಗಳು ಮನೆಯ ಹೊರಗಡೆ ಇದ್ದುದರಿಂದ ಯಾರೂ ಅವರನ್ನು ಅಷ್ಟಾಗಿ ಗಮನಿಸುವುದಿಲ್ಲವೆಂದು ನನಗೆ ಸಮಾಧಾನವಾಯಿತು. +ಮೂರ್ತಿ ಕಾಲುಗಳನ್ನು ಎತ್ತೆತ್ತಲೋ ಇಡುತ್ತ ಮಹಡಿ ಏರಿದ. +ಯತೀಶನನ್ನು ಮೆಲ್ಲಗೆ ಹಿಡಿದುಕೊಂಡು ಒಂದೊಂದೇ ಮೆಟ್ಟಲು ಹತ್ತಿಸಿದೆ. +ಕಿಟಕಿಯ ಮೂಲಕ ಹೆಣ ಇರಿಸಿದ್ದ ರೂಮಿನ ಕಡೆ ನೋಡಿದೆ. +ಸ್ವಾಮಿಯ ಸಂಬಂಧಿ ತಲೆತಗ್ಗಿಸಿಕೊಂಡಿದ್ದ. +ಇನ್ನೂ ಒಂದಿಬ್ಬರು ಗೋಡೆಗೆ ಒರಗಿಕೊಂಡಿದ್ದರು. +ಮೆಟ್ಟಿಲುಗಳ ಮೇಲಿನಿಂದ ಇನ್ನೊಂದು ರೂಮೂ ಕಿಟಕಿಯ ಮೂಲಕ ಕಾಣಿಸುತ್ತಿತ್ತು. +ಹೆಂಗಸರೆಲ್ಲ ಅಲ್ಲಲ್ಲಿ ಅಡ್ಡಾಗಿದ್ದರು. +ನಾಲ್ಕೈದು ಜನ ಗಂಡಸರ ಗುಂಪು ಇಸ್ಪೀಟು ಆಟದಲ್ಲಿ ಮುಳುಗಿತು. +ಮಹಡಿಯ ರೂಮಿನಲ್ಲಿ ಕೆಲವರು ಹುಡುಗರು ಸೇರಿದ್ದರು. +ನಮ್ಮನ್ನು ನೋಡುತ್ತಲೂ ಅವರೆಲ್ಲ ಜಾಗ ಬಿಟ್ಟು ಕೆಳಗಿಳಿದರು. +ಮೂರ್ತಿ ಹಾಸಿಗೆಯ ಮೇಲೆ ಕುಸಿದ. +ಯತೀಶನನ್ನು ಹುಷಾರಾಗಿ ಕೂರಿಸಿದೆ. +ಸ್ವಲ್ಪಹೊತ್ತಿನವರೆಗೆ ಹುಳ್ಳಗೆ ನಗುತ್ತಿದ್ದ ಅವರು ನನ್ನನ್ನು ನೋಡುತ್ತಾ "ಯೂ ಆರ್‌ ಯೂಸ್‌ಲೆ" ಅಂದು ತೊದಲುತ್ತ ಒಟ್ಟಾಗಿ ಬೈಯ್ದರು. +ಅವರನ್ನು ಅಲ್ಲಿಯೇ ಬಿಟ್ಟು ಹೊರಬಂದೆ. +ಮಹಡಿಯ ಮೇಲಿನಿಂದ ಸುತ್ತಲೂ ನೋಡಿದೆ. +ಆಗಾಗ ಕೇಳುವ ಬೀಟ್‌ ಪೊಲೀಸರ ಸಿಳ್ಳೆ, ದೊಣ್ಣೆ ಬಡಿಯುವ ಸದ್ದು ಬಿಟ್ಟರೆ ಬೇರೆ ಸಪ್ಪಳವಿರಲಿಲ್ಲ. +ದೂರದ ಕಾರ್ಖಾನೆಯೊಂದರ ಸೈರನ್ನು ಬಾರಿಸಿದಾಗ ವಾಚು ನೋಡಿದೆ. +ನಾಲ್ಕು ಗಂಟೆಯಾಗುತ್ತಿತ್ತು. +ರೂಮಿಗೆ ಹಿಂತಿರುಗಿದೆ. +ಅವರಿಬ್ಬರೂ ಹಾಸಿಗೆಯಲ್ಲಿ ನೀಟಾಗಿ ಜೋಡಿಸಿದ್ದಂತೆ ಮಲಗಿದ್ದರು. +ಉಸಿರಾಟ ಗೊರಕೆಯ ಹಂತಕ್ಕೆ ಏರುತ್ತಿತ್ತು . +ನೋಡುತ್ತ ನಿಂತಂತೆ ಒಂದು ಕ್ಷಣ ಇಬ್ಬರ ಉಸಿರೂ ನಿಂತು ಹೋದಂತೆ ಅನ್ನಿಸಿತು. +ಗೊರಕೆ ತಕ್ಷಣ ನಿಂತು ಎರಡೂ ಹೆಣಗಳನ್ನು ಒಟ್ಟಿಗೆ ಮಲಗಿಸಿದ್ದಂತೆ ಭಾಸವಾಯಿತು. +ಸ್ನೇಹ: +ಸ್ನೇಹಳಿಗೆ ಈ ಸಲದ ಜೂನ್‌ ಹತ್ತಕ್ಕೆ ಇಪ್ಪತ್ತಾರು ತುಂಜಿತು. +ಪ್ರಕಾಶ ಕಳೆದ ಎಂಟುವರ್ಷದಿಂದ ಕಳಿಸಿದಹಾಗೆಯೇ ಈ ಸಲವೂ ಚಿಕ್ಕ ಪದ್ಯ ಹೊಸೆದು "ನಮ್ಮಿಬ್ಬರ ಸ್ನೇಹ ಇನ್ನಷ್ಟು ಬೆಳೆಯುತ್ತಿರಲಿ" ಎಂಬ ಶುಭಾಶಯ ಕಳಿಸಿದ್ದಾನೆ. +ಅವನ ಜನ್ಮದಿನವೂ ಜೂನ್‌ ತಿಂಗಳಲ್ಲಿಯೇ ಬರುತ್ತದೆ. +ಸ್ನೇಹಳ ಪರಿಚಯವಾಗುವವರೆಗೆ ಕಾಲೇಜಿನ ಫ್ರೀಶಿಪ್‌ ಫಾರಂ, ಪರೀಕ್ಷೆ ಫಾರಂ ಭರ್ತಿ ಮಾಡುವಾಗ ಹೊರತು ಹುಟ್ಟಿದ ತಾರೀಖು ನೆನಪಾಗುತ್ತಿರಲಿಲ್ಲ. +ಈಗಾದರೆ ಜೂನ್‌ ತಿಂಗಳು ಬಂತೆಂದರೆ ಆಷಾಢದ ಮುಗಿಲು ಘೇರಾಯಿಸಿದಂತೆ ಎಲ್ಲಿಂದಲೋ ಜನ್ಮದಿನದ ನೆನಪು ತುಂಬುತ್ತದೆ. +ಸ್ನೇಹ ಹೇಳಿದಂತೆ ಮೊದಲು ಬನೀನು ಚೆಡ್ಡಿಯನ್ನಾದರೂ ಕೊಳ್ಳುತ್ತಿದ್ದವನು ಈಗ ಕಾಲೇಜು ಅಧ್ಯಾಪಕನಾದ ಮೇಲೆ ಒಂದು ಜೊತೆ ಬಟ್ಟೆ ಹೊಲಿಸುತ್ತಾನೆ. +ಸ್ನೇಹಳಿಗೆ ಹೊಸಬಟ್ಟೆ ಕಡ್ಡಾಯ. +ಚಿಕ್ಕವಳಿದ್ದಾಗ ಕಣ್ಣಿಗೆ ಚಂದ ಕಂಡ ಬಟ್ಟೆಗಳನ್ನು ಆರಿ ಸಿಲಂಗ, ಮ್ಯಾಕ್ಸಿ ಕಮೀಜುಗಳನ್ನು ಹೊಲಿಸುತ್ತಿದ್ದವಳು. +ಕ್ರಮೇಣ ಬರೀ ಸೀರೆಗಳಿಗೆ ತನ್ನ ಆಯ್ಕೆಯನ್ನು ಸೀಮಿತಗೊಳಿಸಿಕೊಂಡಿದ್ದಾಳೆ. +ಹೋದಸಲದ ಜನ್ಮದಿನಕ್ಕೆ ಪ್ರಕಾಶ ಕೊಡಿಸಿದ್ದ ಆಕರ್ಷಕ ಬೆಡ್‌ಲ್ಯಾಂಪು ತನ್ನ ಕೋಣೆಯಲ್ಲಿ ರಾರಾಜಿಸುತ್ತದೆ. +ಈ ಸಲ ಅವನ ಶುಭಾಶಯ ಮಾತ್ರ ಬಂದಿದೆ. +ಯಾವಾಗಲೂ ತಪ್ಪಿಸಿಕೊಂಡವರಲ್ಲ. +ಈ ಸಲ ಯಾಕೆ ಹೀಗೆ ಏನನ್ನಾದರೂ ಕಳಿಸದೆ ಶುಭಾಶಯ ಪತ್ರವನ್ನಷ್ಟೇ ಪೋಸ್ಟ್‌ ಮಾಡಿದರು?ಎಂಬ ಗುಮಾನಿಯೂ ಅವಳಿಗೆ ಬಂದಿದೆ. +ಆದರೆ ಎಂದೂ ಅವಳು ಪ್ರಕಾಶನ ವಿಷಯದಲ್ಲಿ ಸಂಶಯಪಟ್ಟವಳಲ್ಲ. +ಕಾಲೇಜಿನಲ್ಲಿದ್ದಾಗ ಜೊತೆಯಲ್ಲೇ ಮೊಸರನ್ನ ತಿನ್ನಲು ಬರುತ್ತಿದ್ದಗೆಳತಿ ಚಿತ್ರಾ, ತನ್ನ ಚುಡಾಯಿಸಿದ ಹುಡುಗರ ಗುಂಪಿನಲ್ಲಿ ಪ್ರಕಾಶ ಇದ್ದರು ಎಂದಾಗಲೂ ಸ್ನೇಹಳಿಗೆ ನಂಬಿಕೆಯಾಗಿರಲಿಲ್ಲ. +ಎಸ್ಸಾರೆಸ್‌ ಒಂದು ಸಲ ಕ್ಲಾಸಿನಲ್ಲಿ ಪ್ರಕಾಶನಿಗೆ ಸಿಕ್ಕಾಬಟ್ಟೆ ಅಂದಾಗ ಅವರ ಮೇಲೆ ಅಸಾಧ್ಯ ಕೋಪ ಬಂದು ಹಾಳೆಯಲ್ಲಿ ಚಿತ್ರ ಬರೆದು ಬಾಲ ಸಿಕ್ಕಿಸಿ ಸೇಡು ತೀರಿಸಿಕೊಂಡಿದ್ದಳು. +ಹಾಗೆ ನೋಡಿದರೆ ಪ್ರಕಾಶನ ಹಲ್ಲು, ಮೂಗು, ತುಟಿಗಳ ಬಗ್ಗೆ ಸಹಪಾಠಿ ಹುಡುಗಿಯರು ಒಂದೊಂದೇ ಕೊಂಕು ಎತ್ತಿದ್ದರೂ, ಅವನ ಆಕರ್ಷಕ ಮಾತುಗಾರಿಕೆ, ಗುಂಗುರು ಕೂದಲು, ನೀಳಮೂಗು, ಬಿಡಿಸಿ ಕಟ್ಟಿದಂತಿರುವ ಬಿಳಿಹಲ್ಲುಗಳ ಸಾಲು ಯಾರಿಗಾದರೂ ಏಕೆ, ಹುಡುಗರೂ ಸೋಲುವಂತಾಗಬೇಕು ಎಂದು ಅವಳಿಗೆ ದೃಢವಾಗಿದೆ. +ಅದಕ್ಕೇ ಅವಳು ಅವನು ಕಳಿಸಿದ ಶುಭಾಶಯ ಪತ್ರವನ್ನು ಕೈಯಲ್ಲಿ ಹಿಡಿದುಕೊಂಡೇ, "ಅವರು ಈ ತಿಂಗಳ ಕೊನೆಗೆ ಬರ್ತಾರಂತೆ ಕಣೇ" ಎಂದು ಪಕ್ಕದಲ್ಲಿ ಕುಳಿತ ಆಪ್ತ ಗೆಳತಿ ಸಹೋದ್ಯೋಗಿಗೆ ಹೇಳಿದಾಗ ದೀರ್ಘಾವಾದ ಅಂಕಿಗಳನ್ನು ಉಸಿರುಕಟ್ಟಿ ಕೊಡುತ್ತಿದ್ದ ಅವಳು ಕೊಂಚ ಸುಧಾರಿಸಿಕೊಂಡು "ಯಾರೇ?"ಎಂದಳು. +"ಅವರೇ ಕಣೇ ಗೊತ್ತಿಲ್ವ" ಎಂದು ಟ್ಯೂಬ್‌ಲೈಟ್‌ ಕಡೆ ನೋಡಿದಾಗ "ಒಳ್ಳೆ ಹುಡುಗಿ ಕಣೆ ನೀನು. +ಕತೆ ಕಾದಂಬರಿ ಓದಿದ್ದಕ್ಕೂ ಸಾರ್ಥಕ. +ಪ್ರಕಾಶ ಅನ್ನೋ ಹೆಸರು ಹೇಳೋಕೆ ನಾಚಿ ಲೈಟು ತೋರಿಸ್ತೀಯಲ್ಲ"ಎಂದಾಗ ಸ್ನೇಹಳ ಎಣ್ಣೆಗಪ್ಪು ಬಣ್ಣವೂ ಕೊಂಚ ರಂಗೇರಿತು. +"ಆಹಾ| ನಾಚಿಕೆ" ಎಂದು ಮತ್ತೆ ಚುಡಾಯಿಸಿದಾಗ ಯಾಕಾದರೂ ಈಗ ಇವಳ ಹತ್ತಿರ ಮಾತಾಡಿದೆನೋ ಅನ್ನಿಸಿತು. +ಆದರೆ, "ಅವರ ಲೇಖನ ನೋಡಿದೆ ಕಣೆ. +ತುಂಬಾ ಪ್ರಚೋದನೆ ಮಾಡುತ್ತೆ. +ಸಾಹಿತ್ಯ ಸಾಹಿತ್ಯ ಅಂತ ಬಡಕೊಳ್ಳೋದು ಬಿಟ್ಟು ಸುತ್ತಮುತ್ತ ಇರೋ ಪರಿಸರ ಬದುಕಿನಲ್ಲಿ ತಲ್ಲೀನರಾಗೋದು ಮುಖ್ಯ ಅಂತ ಅವರು ಹೇಳಿರೋ ಮಾತು ಚೆನ್ನಾಗಿ ಪೇಪರಲ್ಲಿ ಬಂದಿದೆ" - ಎಂದು ಅವಳು ಹೇಳಿದಾಗ ಮೈಯೆಲ್ಲ ಕಚಗುಳಿ ಇಟ್ಟು ಕುಣಿಯುವಂತಾಗುತ್ತದೆ. +ಈ ಸಲ ಮಾತ್ರ ಖಂಡಿತಾ ಮಾತಾಡಲೇಬೇಕು. +ಅವರಿಗೆ ಆಗಿರೋದಾದರೂ ಏನು? +ಯಾಕೆ ಸಂಕೋಚ? +ಇಷ್ಟರೊಳಗೆ ಅವರೇ ಸೂಚಿಸಬಹುದಿತ್ತು ಹೋದ ಸಲ ತಂದೆ ತೀರಿಕೊಂಡರು ಅನ್ನೋ ಚಿಂತೆ ಇದ್ದರೂ,ಈ ಸಲ ಇನ್ನೂ ಯಾಕೆ ಸೂಚಿಸಿಲ್ಲ. +ಛೆ!ಪ್ರತಿ ಸಲ ಕಾಗದ ಬರೆಯುವಾಗಲೂ "ನನ್ನನ್ನು ನೋಡಿಕೊಳ್ಳೋರು ಬೇಕು" ಅಂತ ಬರೀತಿರ್ತಾರಲ್ಲ. +ಅದನ್ನೇ ಸೂಚನೆ ಅಂತ ನಾನು ಇನ್ನೂ ಯಾಕೆ ತಿಳಿದುಕೊಳ್ಳಲಿಲ್ಲ. . " ಎಂದೆಲ್ಲ ಯೋಚಿಸುತ್ತ ಗಡಿಯಾರ ನೋಡಿ ರೋಮಾಂಚಿತಳಾದಳು, ಸ್ನೇಹ. +ಸ್ನೇಹಳಿಗೆ ಪ್ರಕಾಶನ ಪರಿಚಯ ಸರಿಯಾಗಿ ಆದದ್ದೇ ಆಕಸ್ಮಿಕವಾಗಿ. +ಕಾಲೇಜು ಸೇರಿದ ಹೊಸತರಲ್ಲಿ ಒಂದು ದಿನ ಯಾವುದೋ ನಾಟಕಕ್ಕೆ ಹೋಗಬೇಕಾಯಿತು. +ಮನೆ ದೂರದ ಬಡಾವಣೆಯಲ್ಲಿ. +ಈಗಿನ ಮನೆಯಾಗಿದ್ದರೆ ಐದು ನಿಮಿಷಕ್ಕೊಂದು ಬಸ್ಸಾದರೂ ಇರುತ್ತಿತ್ತು. +ಆಗ ಡ್ಯಾಡಿ ಕಾರು ಕೂಡ ಕಳಿಸಿರಲಿಲ್ಲ. +ಹೇಗೆ ಹೋಗುವುದೆಂದು ಯೋಚಿಸುತ್ತಿರುವಾಗಲೇ ಗೆಳೆಯರ ಗುಂಪಿನಲ್ಲಿ ಏರಿಸಿದ ಧ್ವನಿಯಲ್ಲಿ ನಾಟಕ ವಿಮರ್ಶೆ ಮಾಡುತ್ತ ಹೋಗುತ್ತಿದ್ದ ಪ್ರಕಾಶ ನೋಡಿ "ಎಲ್ಲಿಗೆ, ಯಾವ ಬಸ್ಸಿಗೆ ನೀವು ಹೋಗುವುದು?" ಎಂದು ವಿಚಾರಿಸಿ, ನಂತರ ಸ್ನೇಹಿತರನ್ನೆಲ್ಲ ಕಳುಹಿಸಿ ತನ್ನೊಂದಿಗೆ ರಿಕ್ಷಾದಲ್ಲಿ ಮನೆಯವರೆಗೆ ತಲುಪಿಸಿ ಅಲ್ಲಿಂದ ಹಾಸ್ಪೆಲಿಗೆ ನಡೆದು ಹೋದ ಘಟನೆಯಿಂದ ಪರಿಚಯ ಆದದ್ದು. +ಡ್ಯಾಡಿಯ ಸಾಹಿತ್ಯಾಕಾಂಕ್ಷೆ ಪ್ರಕಾಶನ ವಿಮರ್ಶಾಪ್ರಜ್ಞೆ ಒಂದು ಒಳ್ಳೆಯ ಪರಿಸರವನ್ನು ಮನೆಯಲ್ಲಿ ನಿರ್ಮಿಸತೊಡಗಿ ಪರಿಚಯ ಗಾಢವಾಗತೊಡಗಿತು. +ಪ್ರಕಾಶನ ಬೇಕುಬೇಡಗಳ ಅರಿವೂ ತನಗೆ ಆಗುತ್ತ ಅವನ ಇಂಗಿತಕ್ಕೆ ತಕ್ಕಂತೆ ವರ್ತಿಸಲು ಆರಂಭಿಸಿದಾಗ ಅವನಿಗೂ ಆಸಕ್ತಿ ಮೂಡುವಂತಾದುದು ಇನ್ನೂ ನೆನಪಿದೆ. +ಮೊದಮೊದಲು ಆತ್ಮೀಯ ಸಂಭಾಷಣೆಯಲ್ಲಿ ಸೌಂದರ್ಯ ಕಲ್ಪನೆಯನ್ನು ಭವ್ಯವಾಗಿ ವಿವರಿಸುತ್ತಿದ್ದ ಅವನು ಕ್ರಮೇಣ "ಅರ್ಥಮಾಡಿಕೊಳ್ಳುವ ಗುಣಕ್ಕಿಂತ ಬೇರೆ ಸೌಂದರ್ಯ ಬೇಕಿಲ್ಲ" ಎಂದು ಹೇಳುತ್ತಿದ್ದಾಗ ಪುಳಕವಾಗುತ್ತಿತ್ತು. +ಪ್ರಕಾಶ ದೊಡ್ಡವನಾಗುತ್ತ ದೊಡ್ಡ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸುವಂತಾದಾಗ ಮೈಯೆಲ್ಲ ಅರಳಿದ ಅನುಭವವಾಗತೊಡಗಿತು. +ಡ್ಯಾಡಿ ಕೂಡ ಅವರ ಬಗ್ಗೆ ವಾತ್ಸಲ್ಯ ತೋರಿಸುತ್ತಾರೆ. +ಮಮ್ಮಿ ಮೊದಲಿನಿಂದಲೂ ಇಷ್ಟಪಟ್ಟವರೇ. +ಮನೆಯಲ್ಲಿ ತನಗಿಂತ ಹಿರಿಯರು ಬೇರೆ ಯಾರೂ ಇಲ್ಲವೆಂದು ಗಮನಕ್ಕೆ ಬಂದಾಗ ಮೈಯೆಲ್ಲ ಇನ್ನಷ್ಟು ಸಡಿಲವಾಗುವುದು. +ಪರಿಚಯವಾದ ದಿನದಿಂದ ಕಾಲೇಜು ಮುಗಿಯುವವರೆಗೆ ಬಿಡುವಿನ ಕಾಲ ಪೂರ್ತಿ ಒಟ್ಟಿಗೆ ಇದ್ದರೂ ಒಂದುದಿನ ಕೂಡ ಎಚ್ಚರತಪ್ಪಿ ಮಾತಾಡದ ಪ್ರಕಾಶ ಚೆಲ್ಲಾಟ ಕಂಡರೆ ಅಸಹ್ಯಪಡುತ್ತ ಥೂ ಅಂದರೆ ಜುಗುಪ್ಸೆಯೆಲ್ಲ ಮುಖದಲ್ಲೇ ವ್ಯಕ್ತವಾಗಬೇಕು. +ಈ ಭಾವಪ್ರದರ್ಶನ ಸ್ನೇಹಳ ಮನಸ್ಸಿನಿಂದ ಎಂದೂ ಮರೆಯಾಗಿಲ್ಲ. +ಅದನ್ನು ಮಾತಿನಲ್ಲಿ ಹೇಳಿಯೂ ಇದ್ದಾಳೆ. +ಯಾವಾಗಲೂ, ಎಲ್ಲೂ ಸೋಲದ ಪ್ರಕಾಶ ಅದೃಷ್ಟವಂತ ಅಂತ ಅವಳಿಗೆ ಅನ್ನಿಸಿದೆ. +ಕಾಲೇಜು ದಿನಗಳಲ್ಲಿ ತಮ್ಮಷ್ಟೂ ಒಟ್ಟಿಗೆ ಓಡಾಡದ,ಮಾತಾಡದ ಸಹಪಾಠಿ ಮೀನಾ - ಬಸವರಾಜ ಇಬ್ಬರೂ ಮದುವೆಯಾಗಿ ಮುಖಕ್ಕೆ ಹೊಡೆಯುವಂತೆ 'ನಮ್ಮದು ಅಂತರಜಾತೀಯ ಮದುವೆ'ಯೆಂದು ಸಿಕ್ಕಿದಾಗಲೆಲ್ಲ ಹೇಳುತ್ತಿರುವುದು ಈಗಾಗಲೇ ಪ್ರಕಾಶನಿಗೆ ವಿವರವಾಗಿ ಬರೆದದ್ದಾಗಿದೆ. +ಅವರಾದರೂ ಎಷ್ಟು ಸಂಯಮದಿಂದ ಉತ್ತರಿಸಿ, ಅಂತರಜಾತೀಯ ಮದುವೆಗಳಾಗುವ ಅಗತ್ಯವನ್ನು ಒತ್ತಿಹೇಳಿದ್ದಾರೆಂದು ಖುಷಿಯೂ ಆಗಿದೆ. +ಅದೇ ಗುಂಗಿನಲ್ಲಿ ಬ್ಯಾಂಕು ಮುಗಿಸಿ ಮನೆಗೆ ಬಂದಾಗ ಡ್ಯಾಡಿ ಹೊರಗೆ ನಿಂತು ಡ್ರೈವರ್‌ ಕಾರು ಒರೆಸುತ್ತಿರುವುದನ್ನು ಗಮನಿಸುತ್ತಿದ್ದರು. +ಮಮ್ಮಿ ಇನ್ನೂ ದೇವರ ಕೋಣೆಯಲ್ಲಿ ಸಂಜೆಯ ಪೂಜೆಯಲ್ಲಿ ನಿರತರಾಗಿದ್ದರು. +ಕಾಫಿ ಕುಡಿದಾದ ಮೇಲೆ ರೂಮು ಸೇರಿದವಳು ಪ್ರಕಾಶ ಕೊಡಿಸಿದ್ದ ಬೆಡ್‌ಲ್ಯಾಂಪಿನ ಮಂದಬೆಳಕಿನಲ್ಲಿ ಬಟ್ಟೆ ಬದಲಿಸುತ್ತ ತನ್ನ ದೇಹದ ಇಳಿಬಿದ್ದ ಗುಳಿಬಿದ್ದ ಅಂಗೋಪಾಂಗಗಳನ್ನು ನೋಡಿಹೊಸ ಡಿಸೈನ್‌ ಇನ್ನಷ್ಟು ಒಳಉಡುಪುಗಳನ್ನು ಕೊಳ್ಳಬೇಕೆಂದು ಯೋಚಿಸುತ್ತ ಪ್ರಕಾಶನ ಹಲವು ಭಂಗಿಗಳ ಫೋಟೋಗಳನ್ನು ನೋಡಿ, ತೃಪ್ತಿಯಾಗದೆ ಅವನು ಬರೆದ ಕಾಗದಗಳ ಕಟ್ಟಿಗೆ ಕೈಹಾಕಿದಳು. +ಕಾಲೇಜು ಅಧ್ಯಾಪಕನಾದ ಮೇಲೆ ಬರೆದ ಆರು ತಿಂಗಳ ಹಿಂದಿನ ಕಾಗದ ತುಂಬಾ ದೀರ್ಫ್ಥವಾಗಿತ್ತು. +ತಾನೇನೋ ಪ್ರಶ್ನೆ ಕೇಳಿದ್ದೆನೆಂದು ತೋರುತ್ತದೆ. +ಅದಕ್ಕೆ ಉತ್ತರವೆಂಬಂತೆ ಬರೆದಿದ್ದಾರೆ. +ಸಾಹಿತ್ಯಗೋಷ್ಠಿಯೊಂದರ ವಿಚಾರ ವಿವರಿಸುತ್ತ ಗೋಷ್ಠಿಯನ್ನು ಏರ್ಪಡಿಸಿರುವುದು ಜಾತೀಯ ಸಂಸ್ಥೆಯೆಂದು ತಿಳಿದು, ಅನೇಕ ವಿದ್ವಾಂಸರು ಭಾಗವಹಿಸದೆ ಪ್ರತಿಭಟನೆ ವ್ಯಕ್ತಪಡಿಸಿದ್ದರೂ ತಾನೇಕೆ ಭಾಗವಹಿಸಿದೆ ಎಂಬುದನ್ನು ದೀರ್ಘವಾಗಿ ಬರೆದಿದ್ದರು. +ಈಗಿನ ಪರಿಸರದಲ್ಲಿ ಪಟ್ಟಭದ್ರರ ಹಿಡಿತದಲ್ಲಿ ಹೊಸಬರಿಗೆ ಅವಕಾಶವೇ ಇಲ್ಲವಾದರೂ ಅಪರೂಪಕ್ಕೆ ಲಭಿಸಿದ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತನ್ನ ಸಾಮರ್ಥ್ಯ ಪ್ರಕಟಿಸದೇ ಇದ್ದರೆ ಇಷ್ಟೆಲ್ಲ ಓದಿಕೊಂಡು ಏನು ಪ್ರಯೋಜನವೆಂದು ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದರು. +ಇನ್ನೊಂದು ಚಿಕ್ಕ ಪತ್ರ ಕೈಗೆತ್ತಿಕೊಂಡಾಗ ಇನ್ನೊಂದು ಗೋಷ್ಠಿಯ ಪ್ರಸ್ತಾಪ ಅದರಲ್ಲಿ ಇತ್ತು. +ಗೋಷ್ಠಿಯ ಅಧ್ಯಕ್ಷತೆ ವಹಿಸುವವರಿಗೂ ತನಗೂ ವಿರಸವಾಗಿದ್ದರೂ, ವ್ಯವಸ್ಥಾಪಕರು ಅದ್ಧೂರಿಯಿಂದ ಸತ್ಕರಿಸುವರೆಂದು ಮೊದಲೇ ತಿಳಿದಿದ್ದರಿಂದ ಹೋಗಬೇಕಾಯಿತೆಂದು ಬರೆದಿದ್ದರು. +ಏನೇ ಮಾಡಿದರೂ ಸಮರ್ಥಿಸಿ ಕೊಳ್ಳುತ್ತಾರಲ್ಲಾ ಎಂದು ಅವಳಿಗೆ ಮೆಚ್ಚಿಗೆಯಾಯಿತು. +ಮತ್ತೊಂದು ಪತ್ರ ಕೈಗೆತ್ತಿಕೊಳ್ಳುವಾಗ ಹೊರಗಡೆಯಿಂದ ಬಾಗಿಲು ಬಡಿದ ಸದ್ದಾಗಿ ರೂಮಿನಿಂದ ಹೊರಬಂದಳು. +ಪೂಜೆ ಮುಗಿಸಿ ಬಂದ ಮಮ್ಮಿ ರಾತ್ರಿ ಊಟಕ್ಕೆ ಕರೆಯಲು ಬಂದಿದ್ದರು. +ನಿರೀಕ್ಷೆಯಂತೆ ತಿಂಗಳ ಕೊನೆಗೆ ಪ್ರಕಾಶ ಬಂದ. +ತನ್ನ ಕೆಲಸಗಳನ್ನು ಬದಿಗೊತ್ತಿ ಬ್ಯಾಂಕಿಗೆ ಫೋನು ಮಾಡಿದ. +"ಡ್ಯಾಡಿಗೆ ಫೋನು ಮಾಡಿದ್ದೆ, ಯಾವುದೊ ಕೆಲಸ ಮಾಡಿಸಿಕೊಳ್ಳಬೇಕಿತ್ತು" ಎಂದು ಹೇಳಿದ. +ಸಂಜೆ ಸಿಗುವುದಾಗಿ ತಿಳಿಸಿದ. +ಕೆಲಸ ಮುಗಿಸಿ ಹೊರಟಾಗ ಬ್ಯಾಂಕಿನ ಹೊರಗಡೆ ಕಾದಿದ್ದ ಅವನು ಅದೇ ನಿಲುವಿನಲ್ಲಿ, ರೀತಿಯಲ್ಲಿ, ಭಂಗಿಯಲ್ಲಿ ಮಾತಾಡಿದ. +ಹೋಟೆಲಿಗೆ ಹೋಗಿದ್ದಾಯಿತು. +ಪಾರ್ಕಿಗೆ ಬಂದೂ ಆಯಿತು. +ಮಾತಿನ ನಡುವೆ ಮೀನಾ ಪ್ರಸ್ತಾಪ ಬಂದಾಗ ಎಂದಿನಂತೆಯೇ ಹೊಗಳಿದ. +ಊರಿನ ಸಮಾಚಾರ ಹೇಳಲು ತೊಡಗಿದಾಗ ಅವನ ಮಾತುಗಾರಿಕೆಯಲ್ಲಿ ತನ್ನ ಸ್ಥೈರ್ಯ ಕಳೆದುಕೊಳ್ಳುವೆನೇನೋ ಎನಿಸತೊಡಗಿತು. +ಅವನು ಮಾತು ಮುಗಿಯುವ ಹೊತ್ತಿಗೆ ಸುಧಾರಿಸಿಕೊಂಡು ಯಾವ ವಿಷಯವನ್ನಾದರೂ ಮಾತಾಡುವ ಆತ್ಮೀಯ ಸ್ಥಿತಿಗೆ ಮುಟ್ಟಿದ ಸಲಿಗೆಯಿಂದ ತಾನೂ ಎರಡು ಮೂರು ವರ್ಷಗಳಿಂದ ಅಳೆದು ಸುರಿದು ಗಟ್ಟಿ ಮಾಡಿಕೊಂಡಿದ್ದ ಸೂಚನೆಯನ್ನು ನಾಚಿಕೆಯಿಂದ ರಂಗೇರಿ ತೊದಲುತ್ತ ಮಂಡಿಸಿದಾಗ,ವಿಚಾರಗೋಷ್ಠಿಗಳಲ್ಲಿ ವಾದವೊಂದನ್ನು ಮಂಡಿಸುವಂತೆ, ಸಮಾಜ ವ್ಯವಸ್ಥೆಯ ಏರುಪೇರುಗಳನ್ನು ಕಟುವಾಗಿ ಖಂಡಿಸಿ, ಯುವಜನರ ಜವಾಬ್ದಾರಿಯನ್ನು ವಿಶ್ಲೇಷಿಸುತ್ತ ಅವರ ಸ್ವೇಚ್ಛಾವೃತ್ತಿಯಲ್ಲಿ ಸಮಾಜದ ತಳಹದಿಯನ್ನು ಅಲುಗಾಡಿಸಬಾರದೆಂಬ ಉಪದೇಶದೊಡನೆ ವಿಧವೆಯಾದ ತಾಯಿಯ ಅಂತಿಮ ಅಭಿಲಾಷೆಯ " ಪೂರೈಕೆಗಾಗಿ ವಿಜಾತಿಯ ಹೆಣ್ಣನ್ನು ಮದುವೆಯಾಗದಿರುವುದು. +ತನ್ನ ಪವಿತ್ರ ಕರ್ತವ್ಯವಾಗಿದೆಯೆಂದು ಸಮರ್ಥಿಸುತ್ತಾ ಇನ್ನೂ ಮುಂದುವರಿಯುತ್ತಿದ್ದಾಗ -ಅದುವರೆಗೆ ಕೈ ಮುಂದೆ ನೀಡಿದ್ದ ಸ್ನೇಹ ತಲೆಸುತ್ತು ಬಂದಂತಾಗಿ ಪಾರ್ಕಿನ ಹುಲ್ಲಿನ ಮೇಲೆ ಪಕ್ಕಕ್ಕೆ ಹೊರಳಿಬಿದ್ದಳು. +ಅವಳನ್ನು ಕನಿಕರದಿಂದ ನೋಡಿ ಕೂಡಲೇ ರಿಕ್ಷಾದಲ್ಲಿ ಹತ್ತಿರದ ನರ್ಸಿಂಗ್‌ ಹೋಂಗೆ ಕರೆತಂದು ಪ್ರಥಮೋಪಚಾರ ಕೊಡಿಸಿ ನಂತರ ಎಂಟು ವರ್ಷಗಳ ಹಿಂದೆ ಮಾಡಿದ್ದಂತೆ ಇನ್ನೊಂದು ರಿಕ್ಷಾದಲ್ಲಿ ಅವಳನ್ನು ಮನೆಗೆ ಕರೆದೊಯ್ದು ಮುಟ್ಟಿಸಿದ ಪ್ರಕಾಶ. +ಹಂಗು: +ಒಂದೆರಡು ಸಲ ಕ್ಲಾಸಿನಲ್ಲಿ ಮುಖ ನೋಡಿ ಕಣ್ಣು ತಪ್ಪಿಸಲು ಪ್ರಯತ್ನಿಸಿದೆ. +ನೋಡಿದಂತೆಲ್ಲ ಏನೋ ಕಿರಿಕಿರಿಯಾದಂತೆನಿಸುತ್ತಿತ್ತು. +ಗಾಯತ್ರಿಯನ್ನು ಎತ್ತಿಕೊಂಡು ಅತ್ತಿಗೆ ಹೇಳಿದ ಮಾತು. +ಗಾಯತ್ರಿಯ ಹರಿದ ಲಂಗ ನೆನಪಾಗುತ್ತಿತ್ತು. +ಅಣ್ಣ ಕಳಿಸಲು ಸ್ವಲ್ಪ ದೂರ ಬಂದವನು "ಈ ಸಾರಿ ಅಪರೂಪಕ್ಕೆ ಬಂದಿರೋದು ನೋಡು. +ನಿನಗೇ ಗೊತ್ತಾಗುತ್ತೆ" ಅಂದಿದ್ದ. +ಶೈಲಾ ನಾಲ್ಕೈದು ಸಲ ನಗಲು ಪ್ರಯತ್ನಿಸಿ ಸುಮ್ಮನಾದಳು. +ಇನ್ನೂ ಹೀಗೇ ಇದ್ದರೆ ಅವಳಿಗೆ ನೋವಾಗಬಹುದೆನ್ನಿಸಿ ಅವಳೆಡೆಗೆ ತಿರುಗಿದೆ. +ಎಲ್ಲೋ ನೋಡುತ್ತಿದ್ದವಳು ತಿರುಗಿನಗಲೋ ಬೇಡವೋ ಎಂಬ ಅನುಮಾನದಲ್ಲಿದ್ದಂತೆ ಕಂಡಳು. +ಅವಳ ಸ್ಥಿತಿಗೆ ನಗು ಒತ್ತರಿಸಿ ಬಂದು ಬಿಗಿಹಿಡಿದುಕೊಂಡೆ. +ಶೈಲಾ ತಲೆ ತಗ್ಗಿಸಿದಳು. +ಕ್ಲಾಸಿನಿಂದ ಈಚೆಗೆ ಬಂದಾಗ ಹತ್ತಿರ ಬಂದು ಮೆಲ್ಲಗೆ, "ಏನು ತುಂಬ ಸೀರಿಯಸ್‌" ಅಂದಳು. +ಮುಖ ಸಡಿಲ ಮಾಡಿಕೊಳ್ಳಲು ಪ್ರಯತ್ನಿಸಿ, "ಏನಿಲ್ಲ" ಅಂದೆ. +ಕ್ಲಾಸಿನವರೆಲ್ಲ ಚದುರಿದ ಮೇಲೆ "ಊರಿಂದ ಯಾವಾಗ ಬಂದಿ?" ಅಂದಳು. +"ನಿನ್ನೆ ಮಧ್ಯಾಹ್ನ" ಚುಟುಕಾಗಿ ಅಂದೆ. +ಅವಳ ಮುಖವನ್ನು ದಿಟ್ಟಿಸುತ್ತಾ, "ಅಣ್ಣ ಇದ್ದಾರಾ ಊರಲ್ಲಿ?" ಅಂದಾಗ "ಸಂಜೆ ಬನ್ನಿ ಸಿಗ್ತಾರೆ" ಅಂದು ಮನೆ ಕಡೆಗೆ ತಿರುಗಿದಳು. +ಸ್ವಲ್ಪ ದೂರ ಹೋಗಿ "ಕಾಯ್ತಿರ್ನೀನಿ" ಅಂದು ಸ್ವಲ್ಪ ಬಿರುಸಾಗಿ ನಡೆದಳು. +"ಪರವಾಗಿಲ್ಲ ಹಿಂದಿನಿಂದಲೂ ನೋಡಬಹುದು" ಅನ್ನಿಸಿ ನೋಡುತ್ತಾ ನಿಂತೆ. +ಕಣ್ಣು ಮಂಜಾಗುವವರೆಗೂ ನೋಡಿ ರೂಮಿನ ಕಡೆ ತಿರುಗಿದಾಗ, "ನೀಲಿ ಸೀರೆಯಲ್ಲಿ ನೀವು ಚೆನ್ನಾಗಿ ಕಾಣುತ್ತೀರಿ" ಅಂತ ಅವಳಿಗೆ ಹೇಳಿದ್ದು ನೆನಪಾಯಿತು. +ರೂಮು ಸೇರಿ ಬಟ್ಟೆ ಬದಲಾಯಿಸುವ ಹೊತ್ತಿಗೆ ಶೈಲಾ ಮನೆಗೆ ಹೋಗುವುದೆಂದು ನಿರ್ಧರಿಸಿ ಮುಖ ತೊಳೆದು ತಲೆ ಬಾಚುತ್ತಿದ್ದಾಗ ಅಣ್ಣ ಹೇಳಿದ್ದನ್ನು ಶೈಲಾಗೆ ಹೇಗೆ ಬಿಡಿಸಿ ಹೇಳುವುದೆಂದು ಯೋಚನೆಯಾಯಿತು. +ಅವಳ ಮನೆಯತ್ತ ಬಸ್ಸಿನಲ್ಲಿ ಹೊರಟೆ. +ಶೈಲಾ ಬಾಗಿಲಲ್ಲಿ ನಿಂತಿದ್ದಳು. +ನನ್ನ ನಿರೀಕ್ಷೆಯಲ್ಲಿಯೇ ಇದ್ದಳೆಂದು ಅವಳ ಮುಖ ನೋಡಿದಾಗ ಅನ್ನಿಸಿತು. +ನಕ್ಕು ಸ್ವಾಗತಿಸಿದಳು. +"ತುಂಬಾ ಲೇಟಾಯ್ತ?" ಅಂದೆ. +"ಏನಿಲ್ಲ, ಸರಿಯಾಗೇ ಬಂದಿದೀರ" ಅಂದಳು. +ಒಳಗೆ ಸೋಫಾದ ಮೇಲೆ ಕುಳಿತುಕೊಂಡಾಗ, "ಇವತ್ತು ಅಮ್ಮ ಮನೇಲಿಲ್ಲ" ಅಂದಳು. +ಪೇಪರ್‌ ಎತ್ತಿಕೊಳ್ಳುತ್ತಿದ್ದವನು ತಡೆದು, ಮುಖ ನೋಡುತ್ತ ಬೆಚ್ಚಿದಂತೆ "ಮತ್ತೆ ಕಾಲೇಜಿನಲ್ಲಿ ಹೇಳ್ದಿಲ್ಲ. . . . " ಅಂದೆ ಆಕ್ಷೇಪಿಸುವ ಧ್ವನಿಯಲ್ಲಿ. +ಸ್ವಲ್ಪ ಹೊತ್ತಿಗೆ ಯಾಕೋ ಅವಳ ಉತ್ಸಾಹಕ್ಕೆ ತಡೆ ಹಾಕುತ್ತಿದ್ದಂತೆ ಅನ್ನಿಸಿ ಮುಗುಳ್ನಕ್ಕು "ಮತ್ತೇನು ಸಮಾಚಾರ?" ಅಂದೆ. +"ಏನಿಲ್ಲ" ಒಂದು ಥರವಾಗಿ ರಾಗ ಎಳೆದು ಕೆನ್ನೆಯಲ್ಲಿ ಗುಳಿ ಬೀಳಿಸಿದಳು. +ಹಜಾರದ ಪಕ್ಕದಲ್ಲಿಯೇ ಇದ್ದ ಆಫೀಸು ರೂಮಿನ ಕಡೆ ಕೈತೋರಿಸಿ. +"ಎಲ್ಲಿ ಇನ್ನೂ ಬಂದಿಲ್ಲ?" ಅಂದೆ. +ಕೆಳತುಟಿಯನ್ನು ಅಗಲಿಸಿ ತಲೆಯಲ್ಲಾಡಿಸಿ ಎದ್ದಳು. +ಸೀರೆಯ ನೆರಿಗೆಗಳು ಚಿಮ್ಮುವಂತೆ ಒಳಗೆ ನಡೆದಳು. +ಸ್ವಲ್ಪಹೊತ್ತಿಗೆ ತಟ್ಟೆಯಲ್ಲಿ ಏನೇನೋ ತಿಂಡಿ ಹಾಕಿಕೊಂಡು ಬಂದಳು. +ಬಾಗಿ ಕೊಡುತ್ತಿದ್ದಾಗ ಅವಳನ್ನೇ ದಿಟ್ಟಿಸಿ "ಏನು ಸಮಾಚಾರ ಇಷ್ಟೆಲ್ಲ" ಎಂದು ಅನೇಕ ಸಲದಂತೆ ದಾಕ್ಷಿಣ್ಯ ತೋರಿಸಿದೆ. +ಸೆರಗಿನಿಂದ ಕೈ ಒರೆಸಿಕೊಳ್ಳುತ್ತ ಮೋಹಕವಾಗಿ ನಕ್ಕಳು. +ಸಂಜೆಯ ಬಿಸಿಲು ಕಿಟಕಿಯ ಸರಳಿನಿಂದ ತೂರಿ ಅವಳ ಕೆನ್ನೆಯ ಮೇಲೆ ಬಿದ್ದಿತ್ತು. +ಕಾಲೇಜಿನಲ್ಲಿ "ನಿಮಗೆ ಈ ಷರ್ಟು ತುಂಬಾ ಚೆನ್ನಾಗಿ ಒಪ್ಪತ್ತೆ" ಅಂದದ್ದು ನೆನಪಾಯಿತು. +"ನೀವು ಫಿಲ್ಮ್‌ನೋಡಿ ಎಷ್ಟು ದಿನ ಆಯ್ತು. +ಲಿಡೋದಲ್ಲಿ ಒಳ್ಳೆ ಫಿಲ್ಮ್‌ ಬಂದಿದೆಯಂತೆ" ಅಂದಿದ್ದಳು. +"ಕಣ್ಣಲ್ಲಿ ಕಣ್ಣಿಟ್ಟು ನೋಡಲಿಕ್ಕೆ ಸಾಧ್ಯವಾ" ಎಂದು ಯಾವಾಗಲೋ ಅವಳು ಹೇಳಿದ ನೆನಪು. +ಇವತ್ತು ಕಾಡಿಗೆ ಅತಿಯಾಯಿತೆನ್ನಿಸಿತು. +"ಹಣೆಯ ಮುಂದಕ್ಕೆ ನೀವೆಲ್ಲ ಕೂದಲನ್ನು ತಳ್ಳುತ್ತೀರೋ ಅಥವಾ ಕಮಲಗಳಿಗೆ ದುಂಬಿಗಳು ಮುತ್ತೋ ಹಾಗೆ ಅವೇ ಸುರುಳಿಯಾಗಿ ಹರಡಿಕೊಳ್ಳುತ್ತವೋ" ಎಂದು ಒಮ್ಮೆ ರೇಗಿಸಿದಾಗ ಕೆನ್ನೆಯುಬ್ಬಿಸಿ "ಅದೆಲ್ಲ ನಿಮಗೇಕೆ" ಎಂದಿದ್ದಳು. +ಅದೇ ಲಹರಿಯಲ್ಲಿ ತಟ್ಟೆಯಲ್ಲಿದ್ದ ತಿಂಡಿಯೆಲ್ಲ ಬರಿದುಮಾಡಿದೆ." + ಅವಳು ಸುಮ್ಮನೆ ನೋಡುತ್ತಿದ್ದುದು ಕಂಡು, ಬೇರೆ ಏನೂ ತೋಚದೆ, "ಇತ್ತೀಚೆಗೆ ನೀವೂ ಸೋತಿದೀರ" ಅಂದೆ. +"ಯಾವುದರಲ್ಲಿ?" ಅಂದಳು. +ಮೈ ತುಂಬ ಕಣ್ಣು ಹಾಯಿಸಿದೆ. +ಕಸಿವಿಸಿಯಾಯಿತೆಂಬುದನ್ನು ನಟಿಸುತ್ತ ಬರಿದಾದ ತಟ್ಟೆಯನ್ನು ಎತ್ತಿಕೊಂಡು ಒಳಗೆ ನಡೆದಳು. +ಕಾಫಿ ತಂದಾಗ, "ಮನೇಲಿ ಯಾರೂ ಇಲ್ಲೇ?ಅಡಿಗೆಯವನು? + ನಿಮ್ಮಣ್ಣ ಪ್ರಭು ಬರೋದು ಹೇಗೂ ಎಂಟುಗಂಟೆಗೆ ತಾನೇ?" ಅಂದೆ. +ಮಾತಾಡದೆ ಕೈಗೆ ಕಾಫಿಯನ್ನು ಕೊಟ್ಟು ಕುಳಿತಳು. +ಕಾಫಿ ಕುಡಿಯುತ್ತಿದ್ದಾಗ ಮುಖ ನೋಡಿದೆ. +ತಲೆ ತಗ್ಗಿಸಿ ಸೀರೆಯ ನೆರಿಗೆಗಳನ್ನು ತಿದ್ದಿಕೊಳ್ಳುತ್ತಿದ್ದಳು. +ಕುಡಿದು ಮುಗಿಸಿದಾಗ ತಲೆಯೆತ್ತಿದಳು. +ಇಬ್ಬರ ಮಧ್ಯೆ ಮೌನ ಆವರಿಸಿತ್ತು. +ಸುತ್ತ ನೋಡಿದೆ. +ಹಾಲಿನಲ್ಲಿ ಕತ್ತಲಾಗುತ್ತಿರುವುದು ಗಮನಕ್ಕೆ ಬಂತು. +ಹೊರಗಡೆ ಬೀದಿಯ ದೀಪಗಳು ಆಗಲೇ ಉರಿಯುತ್ತಿದ್ದವು. +ಎದ್ದು ಲೈಟು ಹಾಕಿದೆ. +ಮತ್ತೆ ಕೂರಲಾಗದೆ ಹೊರಡಲು ಅನುವಾಗುವಂತೆ ಚಪ್ಪಲಿ ಹಾಕಿದೆ. +ಬಾಗಿಲು ಕಡೆ ಸರಿದು ಬಾಗಿಲು ಹಾಕಿ ಎಳೆಯಲು ಮುಂದಾದಾಗ "ಅಣ್ಣ ಬರೋದು ಲೇಟಾಗುತ್ತೆ, ಪ್ರಭು ಇವತ್ತು ಬರೋಲ್ಲ" ಅಂದದ್ದು ತೀರಾ ಕುಗ್ಗಿದದನಿಯಲ್ಲಿ ಆಳದಿಂದ ಕೇಳಿಸಿದಂತಾಯಿತು. +"ಹಾಗಾದರೆ ನಾನು ಬರ್ತೀನಿ" ಎಂದು ಹೊರಗಡೆ ಬಂದು ಗೇಟಿನಬದಿ ನಿಂತು ಶೈಲಾ ಕಡೆ ತಿರುಗಿದೆ. +ಸೆರಗನ್ನು ಹೊದ್ದುಕೊಳ್ಳುತ್ತ ಹೊರಗೆ ಬಂದವಳು "ನಾಳೆ ಅಣ್ಣನನ್ನು ಆಫೀಸಿನಲ್ಲಿ ಕಾಣ್ತೀರಾ" ಅಂದಳು. +"ನೋಡ್ತೀನಿ" ಅಂದೆ. +ಅಣ್ಣ ಹೇಳಿದ್ದು ನೆನಪಾಯಿತು. +"ಈ ಸಾರಿ ನೀನು ಏನಾದರೂ ಮಾಡಿದರೆ ಆಗುತ್ತೆ. +ಅಲ್ಲ, ನಿನಗೇನು ಗೊತ್ತಿಲ್ವೆ. . . "ಶೈಲಾಗೆ ಯಾವಾಗಲೋ ಹೇಳಿದ್ದೆ: "ನಮ್ಮಣ್ಣ ಹೀಗಿದಾನೆ" ಅಂತ. +ಅವನ ನಿರುದ್ಯೋಗ ಇನ್ನೂ ತೀರಿಲ್ಲ ಎಂಬುದನ್ನು ಈಗ ನೆನಪಿಸಲು ಸಂಕೋಚವಾಯಿತು. +ಗೇಟಿನ ಹತ್ತಿರ ಹತ್ತಿರ ಬಂದವಳು "ಅಲ್ಲ, ಊರಿಗೆಹೋಗಿದ್ರಲ್ಲ, ಏನು ಸಮಾಚಾರ? ಯಾಕೋ ಸಪ್ಪಗಿದೀರ" ಅಂದಳು. +ಮಬ್ಬು ಬೆಳಕಿನಲ್ಲಿ ಅವಳ ಕಣ್ಣುಹೊಳೆದಂತಾಗಿ ಎಲ್ಲವನ್ನೂ ಹೇಳಿಕೊಳ್ಳುವ ಉಮೇದು ಬಂದು "ಅದೇ, ನಮ್ಮಣ್ಣ ನಾಳೆ- ನಾಡಿದ್ದು ಇಲ್ಲಿಗೆ ಬರಬಹುದು" ಅಂದೆ. +"ಓಹ್‌!ಅದಕ್ಕೇ ತಾನೇ, ನಾಳೇನೇ ಹಾಗಾದ್ರೆ ಅಣ್ಣನ್ನ ನೋಡಬೇಕಿ, ನಾನು ರಾತ್ರಿ ಹೇಳಿರ್ತೀನಿ" ಅಂದಳು. +ಅವಳ ಉತ್ಸುಕತೆ ಚೆನ್ನಾಗಿ ಧ್ವನಿಯಲ್ಲಿ ಹೊರಬಂದಿತು. +ಹಿಂದೆ ಒಮ್ಮೆ ಮನೆ ಸಮಾಚಾರ ಅಂತ ಅಣ್ಣನ ವಿಚಾರ ತಿಳಿಸಿದಾಗ ತುಂಬ ಯೋಚಿಸಿದ್ದಳು. +ಊರಿಗೆ ಹೋಗಿದ್ದಾಗ ಅಣ್ಣ"ಅದ್ಯಾರೋ ಶೈಲಜಾ ಅಂತ ಬರ್ಬಿದ್ದೆಯಲ್ಲ. . " ಅಂದಾಗ "ಹೀಗೆ. . . ನನ್ನ ಸಹಪಾಠಿ. +ಅವರ ತಂದೆ ಇಂಥವರು. +ದೊಡ್ಡ ಹುದ್ದೆಯಲ್ಲಿದ್ದಾರೆ ಅಂದಿದ್ದೆ. +ಅವರ ಹೆಸರು ಕೇಳಿ "ನಿನಗೆ ಅವರು ಚೆನ್ನಾಗಿ ಗೊತ್ತ" ಅಂದ. +ಹೆಮ್ಮೆಯಿಂದ ಹೇಳಿಕೊಂಡಾಗ "ಹಾಗಾದ್ರೆ. . . ಅಂದವನು ಅನುಮಾನಿಸಿ, ಮುಖ ದಿಟ್ಟಿಸಿದ." +ನನ್ನ ಈ ಕೆಲಸ ಅವರಿಂದ ಮಾತ್ರ ಸಾಧ್ಯ ಆಗಬಹುದು. +ಆ ಸಂಸ್ಥೆಯ ಎಂ ಡಿ ಅವರಿಗಂತೂ ತುಂಬಾ ಕ್ಲೋಸಂತೆ. +ಅವರು ಒಂದು ಮಾತು ಹೇಳಿದರೆ ನನಗೆ ಕೆಲಸ ಸಿಗುತ್ತೆ." ಅಂತ ಹೇಳಿದ. +ಶೈಲಾಗೆ ಇದನ್ನೆಲ್ಲ ಹೇಳಿದ್ದೆ. +ತೀರಾ ಹತ್ತಿರದಲ್ಲಿ ನಿಂತು ಸೆರಗಿನ ತುದಿಯನ್ನು ಸುತ್ತುತ್ತಿದ್ದಳು. +ಅವಳಿಗೆ ವಿದಾಯ ಹೇಳಿ ಹೊರಟಾಗ "ನಾಳೆ ಅಣ್ಣನನ್ನು ನೋಡಲು ಮರೆಯಬೇಡಿ, ನಾನು ರಾತ್ರಿಯೇ ಹೇಳಿರ್ತೇನೆ" ಎಂದು ಮತ್ತೆ ಹೇಳಲು ಮರೆಯಲಿಲ್ಲ. +ಊಟ ಮುಗಿಸಿ ನಿದ್ದೆ ಬಾರದೆ ಹೊರಳಾಡುತ್ತಿದ್ದಾಗ ನೀಲಿ ಸೀರೆಯನ್ನುಟ್ಟ ಶೈಲಾ ಚಿತ್ರ ಕಣ್ಮುಂದೆ ಕಟ್ಟಿದಂತಾಯಿತು. +ನಾಳೆ ಹೇಗೆ ಮಾಡುವುದೆಂದು ಯೋಚಿಸುತ್ತಿರುವಾಗ ಊರಿನಲ್ಲಿ ಅಪ್ಪ ತೋಟಕ್ಕೆ ಕರೆದೊಯ್ದು ತೋರಿಸಿದ್ದು ನೆನಪಾಯಿತು. +ಬಯಲಾಗುತ್ತಿದ್ದ ಬಾಳೆಯ ಬುಡಗಳು, ಉದಿ, ಕಪ್ಪುಗಳಲ್ಲಿ ಅಸ್ತವ್ಯಸ್ತವಾಗಿ ಬಿದ್ದ ಹಾಳೆಸೋಗೆಗಳು, ಅಡಿಕೆ ಮರಗಳಿಗೆ ಹತ್ತಿಸಿದ್ದ ಮೆಣಸು, ಎಲೆಬಳ್ಳಿಗಳೆಲ್ಲ ಕುಸಿದಿದ್ದವು. +ಬೇಲಿಯಲ್ಲಿ ಕಂಡಿ ಮುರಿದು ತೋಟದ ಒಳನುಗ್ಗಿ ಹಾಯಾಗಿ ಬಾಳೆಯ ಸುಳಿಗಳನ್ನು ಮೆಲ್ಲುತ್ತಿದ್ದ ತುಡುಗು ದನಗಳು. +ಅಪ್ಪ ಎಲ್ಲವನ್ನೂ ತೋರಿಸಿ ಅಣ್ಣನ ಬಗ್ಗೆ ಹೇಳಿದಾಗ ಹೊಟ್ಟೆ ತೊಳಿಸಿ ಬರುತ್ತಿತ್ತು. +"ನೀವು ಇಬ್ಬರು ಮಕ್ಕಳಿದ್ದೂ ತೋಟ ಹೀಗಾಗಬೇಕೇ" ಅನ್ನುವ ರೀತಿಯಲ್ಲಿ ಅಪ್ಪ ಮುಖ ನೋಡಿದ್ದ. +ಊರಲ್ಲಿ ಅತ್ತಿಗೆ ಬರಿ ಕೊರಳನ್ನು ತೋರಿಸಲು ನಾಚಿಕೆಯಾಗಿ ಮಾಂಗಲ್ಯವನ್ನು ಹೊರಗೆ ಬಿಟ್ಟು ಸೆರಗನ್ನು ಸುತ್ತಿಕೊಂಡು ಊಟಕ್ಕೇಳಿಸುತ್ತಿದ್ದರು. +ಅರ್ಜೆಂಟು ಅಂತ ಅಣ್ಣನಿಗೆ ಕಾಗದ ಬರೆದಾಗ ಹಣ ಕಳಿಸಿದ್ದ. +ಅದಕ್ಕಾಗಿ ಅತ್ತಿಗೆಯ ಚೈನು ಬ್ಯಾಂಕಿನಲ್ಲಿ ಸುರಕ್ಷಿತವಾಗಿದೆಯೆಂದು ತಿಳಿದಾಗ ನನಗೆ ಪಾಪಪ್ರಜ್ಜೆ ಕಾಡಿಸತೊಡಗಿತ್ತು. +ಆದರೂ ನಾಳೆ ಆಫೀಸಿನಲ್ಲಿ ಹೇಗೆ ಕಾಣುವುದು? +ಹೇಗೆ ವಿಚಾರ ಹೇಳುವುದು ಎಂದೆಲ್ಲಾ ಯೋಚನೆ. +ಸೆಖೆಗೆ ನಿದ್ದೆ ಬಾರದೆ ಒದ್ದಾಡುತ್ತಾ ಹಾಸಿಗೆಗೆ ನೀರು ಚಿಮುಕಿಸಿಕೊಂಡು ಬೋರಲಾಗಿ ಮಲಗಿದೆ. +ಬೆಳಿಗ್ಗೆ ಎದ್ದಾಗ, "ವಯಸ್ಸಾದ ಮೇಲೆ ದುಡಿಯೋದಕ್ಕೆ ಮೈ ಬಗ್ಗೋದಿಲ್ಲ" ಅಂತ ಅಪ್ಪ ಅಣ್ಣನಿಗೆ ಹೇಳಿದ್ದು ನೆನಪಾಯಿತು. +ಶೈಲಾ ಕಾಲೇಜಿಗೆ ಬಂದರೆ ಅವಳನ್ನು ಕರೆದುಕೊಂಡು ಹೋಗಬೇಕೆಂದು ಯೋಚಿಸಿದೆ. +ಕಾಲೇಜಿಗೆ ಎಂದಿನಂತೆ ಹೋದಾಗ ಶೈಲಾ ಅದೇ ನೀಲಿ ಸೀರೆಯುಟ್ಟು ಬಂದಿದ್ದಳು. + ದೂರದಿಂದಲೇ ನೋಡಿ ನನ್ನೆಡೆಗೆ ಬರತೊಡಗಿದಳು. + ನಿರಿಗೆಗಳು ಚಿಮ್ಮುತ್ತಾ ಇರುವುದನ್ನು ಗಮನಿಸಿದೆ. +ಪದವಿ ಮುಗಿಸಿ ಅಪ್ಪನ ಒತ್ತಾಯಕ್ಕೆ ಮದುವೆಯೂ ಆಗಿ ಮಗುವೂ ಆದ ಮೇಲೆ ಕೆಲಸಕ್ಕೆ ಪ್ರಯತ್ನ ನಡೆಸುತ್ತಿದ್ದ ಅಣ್ಣ ಬೆಂಗಳೂರಿಗೆ ಬರುವಾಗ ಕೊಟ್ಟ ಚೀಟಿಯಲ್ಲಿನ ವಿವರಗಳು ಬಾಯಲ್ಲಿದ್ದವು. +ಶೈಲಾ ಹತ್ತಿರ ಬಂದು "ಇವತ್ತು ಎರಡು ಗಂಟೆಯಿಂದ ಕ್ಲಾಸಸ್‌ ಇವೆಯಲ್ಲ, ಅಷ್ಟರ ಒಳಗೆ ಹೋಗಿ ಬರೋಣಲ್ಲ. . . . " ಅಂದಳು. +ಮಾತಾಡದೆ ಅವಳನ್ನು ಹಿಂಬಾಲಿಸಿದೆ. +ರಿಕ್ಷಾ ನಿಲ್ಲಿಸಿ ಅವರ ಆಫೀಸಿನ ಹತ್ತಿರ ಇಳಿದವು. +"ನಾನೂ ಬರಲಾ" ಅಂದಳು. +"ಯಾಕೆ?ನಾನು ಸಾಲದ. +ನೀವು ಇಲ್ಲೇ ಹೊರಗಡೆ ಸೋಫಾ ಹಾಕಿದಾರಲ್ಲ, ಕುಳಿತಿರಿ" ಅಂದು ಅವರ ಕೊಠಡಿಯನ್ನು ಅರಸಿ ಹೊರಟೆ. +ಒಂದು ಮಹಡಿಯನ್ನು ಏರಿ ಎರಡನೆಯ ಮಹಡಿಯಲ್ಲಿನ ಅವರ ಆಫೀಸನ್ನು ತಲುಪುವಾಗ ಕಾಲುಸಂದುಗಳೆಲ್ಲ ನೋಯುತ್ತಿದ್ದವು. +ಜವಾನನಲ್ಲಿ ಹೆಸರಿನ ಚೀಟಿ ಕಳಿಸಿದೆ. +ಕೂಡಲೇ ಕರೆ ಬಂತು. +ಮೇಜಿನ ಮೇಲೆ ಹರಡಿಕೊಂಡಿದ್ದ ಕಾಗದ ಪತ್ರಗಳನ್ನು ನೋಡುತ್ತಾ ಒಳಗೆ ನಡೆದೆ. +ಆತ್ಮೀಯವಾಗಿ ಮಾತಾಡಿ ಕಾಫಿ ತರಲು ಜವಾನನಿಗೆ ಹೇಳಿದರು. +ಸೆಖೆಯಿಂದ ಬೆವರುತ್ತಿದ್ದುದು ನೋಡಿ ಫ್ಯಾನ್‌ ಹಾಕಿಸಿದರು. +ಟೈಯನ್ನು ಸಡಿಲಿಸಿ "ಶೈಲಾ ಹೇಳ್ತಾ ಇದ್ದು. . . ನಿನ್ನೆ ಅಷ್ಟು ಬೇಗ ಹೋದಂತೆ. . . ಅಂದರು. +ಹುಳ್ಳಗೆ ನಕ್ಕು "ಸ್ವಲ್ಪ ಕೆಲಸ ಇತ್ತು" ಅಂದೆ. +"ಊರಿಗೆ ಹೋಗಿದ್ರಂತೆ. . . ಹೇಗಿದೆ ಪ್ರಕೃತಿ ಸೌಂದರ್ಯ" ಅನ್ನುತ್ತಾ "ತುಂಬಾ ಬೋರ್‌ ಆಗಿತ್ತು. +ನೀವು ಬಂದಿರಿ" ಅಂದರು. +ಕಾಫಿ ಬಂದು ಕುಡಿದಾದ ಮೇಲೆ, ಸ್ವಲ್ಪ ಹೊತ್ತು ಕುಳಿತಿದ್ದು, "ಹಾಗಾದ್ರೆ ನಾನು ಬರ್ಲಾ . . . ಹೀಗೆ ಬಂದಿದ್ದೆ. +ನಿಮ್ಮನ್ನು ನೋಡಿದ ಹಾಗೆ ಆಯ್ತು ಅಂತ. . . " ಅಂದು ನಮಸ್ಕರಿಸಿ ಹೊರಬಂದೆ. +ಮಹಡಿಯಿಳಿಯುವಾಗ ಎರಡೆರಡು ಮೆಟ್ಟಿಲನ್ನು ಇಳಿದು ಶೈಲಾ ಇದ್ದಲ್ಲಿಗೆ ಬಂದೆ. +ಸೋಫಾದಲ್ಲಿ ಕುಳಿತವಳು ಎದ್ದಳು. +"ಇಷ್ಟು ಬೇಗ ಬಂದ್ರಾ? +ಅಂದು ಆಶ್ಚರ್ಯ ವ್ಯಕ್ತಪಡಿಸಿದಳು. +"ಆಯ್ತ ಕೆಲಸ" ಎಂದು ವಿಚಾರಿಸಿದಳು. +"ಹೋಗೋಣಲ್ಲ ಇನ್ನೇನು ಕೆಲಸ" ಅನ್ನುತ್ತಾ ಕಾಲೇಜು ಕಡೆ ತಿರುಗಿದಳು. +ಸ್ವಲ್ಪ ದೂರ ಹಿಂಬಾಲಿಸಿದೆ. +ಅಣ್ಣ ಕೊಟ್ಟ ವಿವರಗಳು ಜೇಬಿನಲ್ಲಿ ಬೆವರಿನಿಂದ ಒದ್ದೆಯಾಗಿರಬೇಕೆಂದು ಊಹಿಸಿ ಮುಖ ಒರೆಸಿಕೊಂಡೆ. +"ಅಂತೂ ನಿಮ್ಮಣ್ಣನಿಗೆ ಕೆಲಸ ಸಿಕ್ಕಿದರೆ ನಿಮ್ಮದೊಂದು ಭಾರ ಕಳೆದ ಹಾಗೆ ಆಯಿತು. . . " ಎಂದು ಆಕೆ ಉತ್ಸಾಹದಿಂದ ಹೇಳುತ್ತಿದ್ದಾಗ ಆ ವಿಷಯವನ್ನು ಅವರ ಹತ್ತಿರ ಪ್ರಸ್ತಾಪಿಸಲು ಆಗದೇ ಇರುವುದನ್ನು ಹೇಳಬೇಕೆನಿಸಿತು. +ಆದರೂ ಹೇಳಲಾಗಲಿಲ್ಲ. +ಅಪರಾಧಿ ಭಾವ. +ಅವರಿಗೆ ಹೇಳಿದ್ದರೆ ಕೆಲಸ ಕೊಡಿಸುತ್ತಿದ್ದರೇ ಎಂಬ ಅನುಮಾನ ತಲೆ ಹಾಕಿತು. +ಸಹಪಾಠಿ ಎಂಬ ಕಾರಣಕ್ಕೆ ಇಷ್ಟು ಸಲಿಗೆ ತೆಗೆದುಕೊಳ್ಳಬಹುದೇ ಎಂಬ ಜಿಜ್ಞಾಸೆಯೂ ಆಯಿತು. +ಅವಳನ್ನು ಹಿಂಬಾಲಿಸಲಾಗಲಿಲ್ಲ. +ರಿಕ್ಷಾ ಒಂದನ್ನು ನಿಲ್ಲಿಸಿದೆ. +ಜತೆಯಲ್ಲಿ ಸ್ವಲ್ಪ ಮುಂದೆ ಹೋಗುತ್ತಿದ್ದವಳು ರಿಕ್ಷಾ ಹತ್ತಿರ ವಾಪಸು ಬರುತ್ತಿದ್ದಾಗ ಹತ್ತಿ ಕುಳಿತು,"ನಾನು ಅರ್ಜಂಟಾಗಿ ರೂಮಿಗೆ ಹೋಗಬೇಕು" ಅಂದೆ. +ಅವಳಿಂದ ದೂರವಾಗುವವರೆಗೂ ತಿರುಗಿ ಅವಳು ನಿಂತದ್ದನ್ನು ನೋಡಿದೆ. +ವ್ಯಸ್ತ: +ಉಚ್ಚರವಾದಾಗ, ಅಡಕೆ ಮರದ ಮಧ್ಯೆ ಕುಳಿತು ತೂಗಾಡುತ್ತಿದ್ದಂತಹ ಭಾವ. +ಒಂದು ಕಡೆಯಿಂದ ಇನ್ನೊಂದು ಕಡೆಗೆ ಖುಷಿಯಿಂದ ಉಯ್ಯಾರೆಯಾಡುತ್ತಾ ಇದ್ದವನಿಗೆ ಅಂಥದ್ದರ ಮಧ್ಯೆ ಕಣ್ಣುಬಿಟ್ಟಿದ್ದು ನಿರಾಸೆ ಮೂಡಿಸಿತು. +ಕಿಟಕಿಯಿಂದ ಹಾಸಿಗೆಯ ಅಂಚಿನವರೆಗೆ ತೂರಿಬಂದ ಬೆಳದಿಂಗಳನ್ನು ನೋಡಿದಿಂಬಿನ ಬದಿಯಿಟ್ಟಿದ್ದ ಟಾರ್ಚನ್ನು ತೆಗೆದುಕೊಂಡು ಹೊತ್ತಿಸಲು ಗುಂಡಿಯನ್ನು ಅದುಮಿದೆ. +ಬೆಳಕು ಬರಲಿಲ್ಲ. +ಬೆಂಕಿಪೊಟ್ಟಣ ಹುಡುಕಿ ಸೀಮೆಯೆಣ್ಣೆ ದೀಪ ಹೊತ್ತಿಸಿದೆ. +ಕೆಳಗಿನ ಕೋಣೆಯಲ್ಲಿ ಮೆಲ್ಲಗೆ ಮಾತಾಡುತ್ತಿದ್ದುದರ ಸದ್ದು ಕೇಳಿಸಿತು. +ಮಧ್ಯಾಹ್ನದ ಹಗರಣ ಕುರಿತು ಅಣ್ಣ ಸಮಾಧಾನ ಪಡಿಸುತ್ತಿರಬಹುದೆಂದುಕೊಂಡು, ಎದ್ದು,ಕಿಟಕಿಯಿಂದ ಹೊರಗಡೆಗೆ ನೋಡಿದೆ. +ಸುತ್ತಲೂ ಬೆಳದಿಂಗಳು ಹರಡಿತ್ತು. +ಮನೆಯ ಮೇಲಿನ ಕಾಡಿನಲ್ಲಿ ಮಿಂಚುವ ಮಿಣುಕು ಹುಳುಗಳು. +ಸ್ವಲ್ಪ ಹೊತ್ತು ನೋಡುತ್ತಿದ್ದಂತೆ ಅಸ್ಪಷ್ಟವಾಗಿ ಕಾಣುತ್ತಿದ್ದ ಕುರುಚಲು ಮರಗಳೆಲ್ಲ ಚಲಿಸಿದಂತಾಗಿ ಕಂಡದ್ದರಿಂದ ದೃಷ್ಟಿಯನ್ನು ಬೇರೆಡೆಗೆ ಹರಿಸಿದೆ. +ಕೈಗೆ ಕಟ್ಟಿಕೊಂಡು ಓದುತ್ತಿದ್ದಾಗ ಬಿಚ್ಚಿಡಲು ಮರೆತು ಹೋಗಿತ್ತು. +ಗಂಟೆ ಎರಡಕ್ಕೆ ಇನ್ನೂ ಐದು ನಿಮಿಷ ಉಳಿದಿತ್ತು. +ಕೆಳಗಿನ ಕೋಣೆಯಲ್ಲಿ ಬಾಗಿಲು ತೆರೆದಂತೆ ಸಪ್ಪಳ ಕೇಳಿ 'ಯಾಕೆ ಇನ್ನೂ ಮಲಗಿಲ್ಲ' ಎಂದುಕೊಳ್ಳುತ್ತಾ ದೀಪ ಆರಿಸಲು ಯೋಚಿಸಿದೆ. +ಬೆಂಕಿಕಡ್ಡಿ ಎರಡೇ ಇದ್ದುದರಿಂದ ಆರಿಸಲು ಮನಸ್ಸಾಗದೆ, ಎದುರಿಗೆ ಮೇಜಿನ ಮೇಲಿಟ್ಟಿದ್ದ ಪುಸ್ತಕವೊಂದನ್ನು ಎತ್ತಿಕೊಂಡು ಓದತೊಡಗಿದೆ. +ಸ್ವಲ್ಪ ಹೊತ್ತಿಗೆ ಓದಿದ್ದು ಬೇಜಾರಾಗಿ ಹಾಗೆಯೇ ಮಲಗಿ ಮುಸುಕೆಳೆದುಕೊಂಡೆ. +ಮಧ್ಯಾಹ್ನ ಅಣ್ಣ ಪಾರ್ವತಿಗೆ ಎರಡು ಬಾರಿಸಿದ್ದ. +ಆಕೆ ನನ್ನತ್ತಲೇ ನೋಡುತ್ತಾ ಸೆರಗಿನಿಂದ ಮುಖಮುಚ್ಚಿಕೊಂಡಳು. +ಅಣ್ಣ ಆ ರೀತಿ ಅವಳಿಗೆ ಹೊಡೆಯಬಾರದಿತ್ತು ಏನೋ ಸಣ್ಣ ತಪ್ಪು ಅಂತ ಬಿಟ್ಟು ಬಿಡಬೇಕಿತ್ತು. +ಬೆಳೆದ ಹೆಣ್ಣು ಕೆಲಸದವಳು ಎಂದು ಹಾಗೆಲ್ಲ ನಡೆಸಿಕೊಳ್ಳಬೇಕೆ? +ಅವಳನ್ನು ಸಮಾಧಾನಪಡಿಸಬೇಕೆನ್ನಿಸಿತು. +ಅಣ್ಣನಿಗೆ ಎರಡು ಮಾತು ಹೇಳಬೇಕಿತ್ತು. +ಆಕೆ ಬೆದರುಗಣ್ಣಿನಿಂದ ನನ್ನೆಡೆಗೆ ನೋಡುತ್ತಿದ್ದಾಗ ನನಗೆ ಅರ್ಥವಾಗಬೇಕಿತ್ತು. +ಯೋಚಿಸುತ್ತಿದ್ದಂತೆ ಅಣ್ಣನ ಮೇಲೆ ಅಸಮಾಧಾನವಾಯಿತು. +ಸಿಟ್ಟು ಬಂದಂತೆ, ಒಳಗುದಿ ಸುರುವಾದಂತೆ, ಮುಸುಕನ್ನು ತೆಗೆದು ಮೇಲಿದ್ದ ಚಾವಣಿಯ ತೊಲೆಯನ್ನು ಸ್ವಲ್ಪಹೊತ್ತು ದಿಟ್ಟಿಸಿದೆ. +ಪಾರ್ವತಿಯ ಬೆದರುಗಣ್ಣು, ಆ ನೋಟ ಕೆಣಕಿದಂತೆ ಅನ್ನಿಸಿ ಮೈಯಲ್ಲೆಲ್ಲ ಚಳಿ ಅನ್ನಿಸಿ ಎದ್ದು ಕುಳಿತೆ. +ಸ್ವಲ್ಪ ಹೊತ್ತು ಸುಮ್ಮನೆ ಕುಳಿತು ದೀಪ ಆರಿಸಲು ಯೋಚಿಸುತ್ತಿದ್ದಾಗ ಎದುರಿಗಿದ್ದ ಕ್ಯಾಲೆಂಡರ್‌ದೀಪದ ಮಬ್ಬು ಬೆಳಕಲ್ಲಿಯೂ ಕಣ್ಣಿಗೆ ಬಿತ್ತು. +ನೆಪಮಾತ್ರಕ್ಕೆ ಬಟ್ಟೆ ಹಾಕಿದ ಹೆಣ್ಣೊಬ್ಬಳು ಕುಂಭವನ್ನು ಕೊಳದ ಬಳಿಯಿಟ್ಟು ಕುಳಿತ ದೃಶ್ಯ ಆ ಗೋಧಿ ಬಣ್ಣದ ಹೆಣ್ಣನ್ನು ನೋಡುತ್ತಿದ್ದಂತೆ ಥೇಟು ಜಯಾಳದೇ ಮೈಕಟ್ಟು ಅನ್ನಿಸಿತು. +ಆಕೆಯ ಕೂದಲಷ್ಟು ಉದ್ದವಲ್ಲದಿದ್ದರೂ, ಸಾಕಷ್ಟು ಚೆನ್ನಾಗಿಯೇ ಇದ್ದ ಕೂದಲು. +ಹಸಿರು ಹುಲ್ಲಿನಮೇಲೆ ಆಕೆ ಕುಳಿತಿದ್ದು ನೋಡಿ ಜಯಾ ಈಗ ಹೇಗಿರಬಹುದೆಂದು ಯೋಚಿಸಿದೆ. +ಕೆಲವೇ ದಿನಗಳ ಹಿಂದೆ ಅವಳ ತಮ್ಮ ಕಾಗದ ಬರೆದಿದ್ದ. +"ಡಿಗ್ರಿ ಮುಗಿಯುತ್ತಲೂ ಕೆಲಸಕ್ಕೆ ಸೇರುತ್ತೀಯ" ಎಂದು ಆಕೆ ಕೊನೆಯದಿನ ಕೇಳಿದ್ದಾಗ, "ಡಿಗ್ರಿ ಮುಗಿಯಬೇಕಲ್ಲ" ಎಂದು ಹೇಳಿದ್ದು ಎಷ್ಟು ಅರ್ಥಗರ್ಭಿತ ಎಂದುಕೊಂಡೆ. +ಜಯಾ ಬರೆದಿದ್ದ ಕಾಗದಗಳನ್ನು ಓದಬೇಕೆಂದುಕೊಂಡಾಗ ಮನಸ್ಸಾಗಿ ಖುಷಿಯಿಂದ ಎದ್ದು ರೂಮಿನ ಬಾಗಿಲುಹಾಕಿದೆ. +ಕೆಳಗಿನ ಕೋಣೆಯಿಂದ ಮಾತು ಕೇಳಿಬರುತ್ತಿವೆ. +ಅಣ್ಣ ಎಚ್ಚರವಾಗಿದ್ದಾನೆ. +ಹೊರಗಡೆ ಬೆಳದಿಂಗಳು ಚೆನ್ನಾಗಿದೆ. +ಒಂದೊಂದು ಕಾಗದಗಳನ್ನು ನೋಡತೊಡಗಿದೆ. +ದೀಪದಲ್ಲಿ ಎಣ್ಣೆ ಹೆಚ್ಚು ಇದ್ದಂತೆ ತೋರಲಿಲ್ಲ. +ಜಯಾಳನ್ನು ಎದುರು ನಿಲ್ಲಿಸಿ ಅಂದಿನಂತೆಯೇ ನೋಡಬೇಕೆನ್ನಿಸಿತು. +ಆಕೆಯ ತುಂಟತನವನ್ನು ಫೋನಿನಲ್ಲಿ ತಿಳಿಸುತ್ತಿದ್ದಾಗ ಆಕೆ ನಕ್ಕು "ಬಾರಿ ಪಕ್ಕಾ, ನೀವು" ಎಂದಾಗ, ಫೋನಿನಲ್ಲಿಯೇ ಆಕೆ ಬೆಚ್ಚುವಂತೆ ತುಟಿಯಾಡಿಸಿದ್ದು ನೆನಪಿಗೆ ಬಂದು ನಗು ಬಂತು. +ಹುಡುಗಿ ತುಂಬ ಒಳ್ಳೆಯವಳು ಎಂದುಕೊಂಡೆ. +ಕಾಗದಗಳನ್ನೆಲ್ಲ ದಿಂಬಿನ ಅಡಿಗೆ ಸೇರಿಸಿದಾಗ, ಕೊನೆಯ ದಿನ ಆಕೆಗೆ ನಾನು ಹಾಗೆ ಕ್ರೂರವಾಗಿ ಹೇಳಬಾರದಿತ್ತೆನಿಸಿತು. +ಆಕೆ ಅಳುವಾಗ ಮುಖವೆಲ್ಲ ಕೆಂಪಾಗಿ ಸೆರಗೆಲ್ಲ ಒದ್ದೆಯಾದಾಗ, ಕಣ್ಣೀರನ್ನೆಲ್ಲ ಒರೆಸಿ ಎದೆಗವಚಿಕೊಳ್ಳಬೇಕೆಂದು ಮುಂದಾಗುತ್ತಿರುವಾಗ ಹಿಮ್ಮೆಟ್ಟಿದ್ದು ಯಾಕೆಂದು ಪ್ರಶ್ನಿಸಿಕೊಂಡೆ. +"ನೀವು ತುಂಬಾ ಒಳ್ಳೆಯವರು" ಎಂದು ಆಗಾಗ್ಗೆ ಹೇಳುತ್ತಿದ್ದಾಗ, ರೂಮಿನಲ್ಲಿ ಜ್ವರದಿಂದ ನರಳುತ್ತಿದ್ದಾಗ ಬಂದು ಹಣೆಯನ್ನು ಮೊದಲ ಸಲ ಮುಟ್ಟಿ ಜ್ವರ ಇಳಿಯುವಂತೆ ಮಾಡಿದಾಗ ಆಕೆಯ ಬಗ್ಗೆ ಗೌರವ ಮೂಡಿದ್ದರೂ, ಯಾಕೆ ನನಗೆ ಹಿತವಾಗಲಿಲ್ಲ ಅನ್ನಿಸಿತು. +"ಹಳ್ಳಿಗೆ ಹೋಗುತ್ತೀರಾ" ಎಂದು ಕೊನೆಯ ಬಾರಿ ಕೇಳಿ ಭಾರವಾದ ಉಸಿರನ್ನು ಬಿಟ್ಟು ಬಲವಂತವಾಗಿ ನಕ್ಕ ಆಕೆ ಈಗಲೂ ಹಾಗೆಯೇ ಇರಬಹುದೇ ಅನ್ನಿಸಿ ದಿಂಬನ್ನು ಎತ್ತಿಕೊಂಡೆ. +ಒಳ್ಳೆಯ ಹುಡುಗಿಯರು ಜಯಾಳಂತೆ ಎಷ್ಟು ಮಂದಿ ಇದ್ದಾರೆಂದು ಯೋಚಿಸುತ್ತಾ ಮಂದವಾಗಿ ಉರಿಯುತ್ತಿದ್ದ ದೀಪದ ಕಡೆಗೆ ನೋಡಿದೆ. +ಕರುಕಲಾಗಿದ್ದ ಬತ್ತಿ, ಕಪ್ಪಗೆ ಸುರುಳಿಯಾಗಿ ಮೇಲೇರುವ ಹೊಗೆ, ಸೊಡರು ತಕ್ಷಣ ಆರಿಹೋದಾಗ ಜಯಾಳ ಮುಖ ಕಣ್ಮುಂದೆ ಸುಳಿಯಬಹುದೇ ಎಂದುಕೊಂಡೆ. +ಕೆಳಗಿನ ಕೋಣೆಯಿಂದ ಅಣ್ಣ ಅತ್ತಿಗೆಯರ ಸಂಭಾಷಣೆ ಇನ್ನೂ ಕೇಳಿಬರುತ್ತಿತ್ತು. +ಅಸ್ಪಷ್ಟವಾಗಿ ಕೇಳಿಬರುತ್ತಿದ್ದ ಅವರ ಮಾತುಗಳು ಸದ್ಯಕ್ಕೆ ಮುಗಿಯುವುದಿಲ್ಲವೆಂದು ಕೊಂಡು, ಪಾರ್ವತಿ ಈಗ ಹೇಗೆ ಮಲಗಿರಬಹುದೆಂದು ಯೋಚಿಸಿದೆ. +ಹಿತ್ತಲುಕಡೆ,ಅಡಿಕೆ ಒಲೆಯ ಬದಿಯಲ್ಲಿ ಕಂಬಳಿಯನ್ನು ಹಾಸಿ, ಸೀರೆಯನ್ನು ಹೊದ್ದು ಬಿಲ್ಲಿನಂತೆ ಬಾಗಿ ಮಲಗಿರಬೇಕು. +ಅತ್ತಿಗೆಗೆ ಯಾಕೆ ಎದುರು ಆಡಿದಳೋ, ಹೊರಗೆ ಚೆನ್ನಾಗಿಯೇ ತೋರುತ್ತಾಳೆ. +ಅತ್ತಿಗೆಯ ಮಾತು ಕೇಳಿ ಅಣ್ಣಹೊಡೆಯಲು ಹೋದಾಗ, ಅತ್ತಿಗೆಯ ಸಿಡುಕು ಮುಖದಲ್ಲಿ ತೃಪ್ತಿಯ ನಗೆ, ನಿಜವಾಗಿಯೂ ಪಾರ್ವತಿ ತಪ್ಪು ಮಾಡಿರಲಿಲ್ಲ ಅನ್ನಿಸಿತು. +ಜಯಾಳ ತಮ್ಮ ಬರೆದ ಕಾಗದ ಓದಬೇಕೆಂಬ ಮನಸ್ಸಾಯಿತು. +ಜಯಾಳನ್ನು ನೋಡಬೇಕೆನ್ನಿಸಿತು. +ಯಾಕೆ ಜಯಾಳ ನೆನಪು ಎಂದುಕೊಂಡು, ಮನಸ್ಸು ಬಿಗಿ ಹಿಡಿಯಲು ಯತ್ನಿಸಿ, ಪಾರ್ವತಿಯ ಕೆನ್ನೆಯ ಮೇಲೆ ಅಣ್ಣನ ಬೆರಳು ಮೂಡಿರಬಹುದೇ ಎಂದು ಯೋಚಿಸಿದೆ. +ಅಣ್ಣ ರಾತ್ರಿ ಮಲಗುವಾಗ "ಬೆಳಿಗ್ಗೆ ಬೇಗ ಬೇಗಬೇಸಾಯ ಕಟ್ಟಬೇಕು" ಅಂದದ್ದು ನೆನಪಾಗಿ ಡಿಗ್ರಿ ಮುಗಿಸುವುದು ಹೇಗೆಂದು ಯೋಚಿಸಿದೆ. +"ಇನ್ನೂ ಮೂರು ತಿಂಗಳಿದೆ" ಎಂದುಕೊಂಡರೂ, ಪಾಸು ಮಾಡುವುದು ಸುಲಭವಾಗಿ ತೋರಲಿಲ್ಲ. +ದೀಪ ಆರುವ ಹಾಗಿತ್ತು. +ಎಣ್ಣೆಗೆ ಮಹಡಿಯ ರೂಮಿನಿಂದ ಕೆಳಗಿಳಿದು ಅಣ್ಣನ ಕೋಣೆಯ ಬದಿಗೆ ಹೋಗಬೇಕಲ್ಲ ಅನ್ನಿಸಿ, ಆರಿಸಿ ಮಲಗುವ ಮನಸ್ಸಾಯಿತು. +ಹೊರಗಡೆ ಮನೆಯೆದುರಿನ ತೆಂಗಿನ ಗರಿಗಳು ಅಲುಗಾಡಿದ ಸಪ್ಪಳ ಜೋರಾಯಿತು. +ಒಮ್ಮೆ ಗಾಳಿಬೀಸಿ ಎಣ್ಣೆತೀರಿದ್ದ ದೀಪ ಆರಿತು. +ಕಿಟಕಿಯ ಸರಳಿಂದ ತೂರಿ ಬರುತ್ತಿದ್ದ ಬೆಳುದಿಂಗಳಿಂದ ಹೊದಿಕೆ ಸರಿಪಡಿಸಿ ಹಿಡಿದಿದ್ದ ಪುಸ್ತಕವನ್ನು ದಿಂಬಿನ ಕೆಳಗೆ ತಳ್ಳಿ ಮುಸುಕುಹಾಕಿಕೊಂಡೆ. +ಬೆಳುದಿಂಗಳಲ್ಲಿ ಹೊರಗೆ ಹೋದರೆ ಹೇಗಿರಬಹುದೆಂದು ಯೋಚಿಸಿದೆ. +ಕೆಳಗಿನ ಕೋಣೆಯಿಂದ ಮಾತಾಡುವುದು ನಿಂತಿತ್ತು . +ಹಿತ್ತಲು ಕಡೆಯಲ್ಲಿಸ ದ್ದಾದಾಗ ಪಾರ್ವತಿ ಎದ್ದಿರಬಹುದೆಂದು ಅನ್ನಿಸಿತು. +ರಾತ್ರಿಯೆಲ್ಲ ಹುಡುಗಿ ಅತ್ತಿರಬೇಕು. +ಅವಳ ಕಂದುಮುಖ ಮತ್ತೂ ಕಪ್ಪಾಗಿ ದೀಪದ ಬೆಳಕಿಗೆ ಹೊಳೆಯುತ್ತದೆಯೇ ಅನ್ನಿಸಿ, ಆಕೆಯನ್ನು ಸಮಾಧಾನಪಡಿಸಬೇಕೆನ್ನಿಸಿತು. +ಅವಳಪ್ಪ ಇನ್ನೂ ಯಾಕೆ ಬಂದಿಲ್ಲ ಎಂದುಕೊಂಡೆ. +ರೂಮಿನ ಕತ್ತಲು ದಟ್ಟವಾಗಿ ಕಂಡುಬಲವಂತವಾಗಿ ಕಣ್ಮುಚ್ಚಿದೆ. +ಜಯಾ ಮೊದಲ ಸಲ ನನ್ನ ರೂಮಿಗೆ ಬಂದಾಗ ಹೀಗೇ ಮಲಗಿದ್ದೆನಲ್ಲ ಎಂದುಕೊಂಡು ಎದೆಯನ್ನು ಸವರಿಕೊಂಡೆ. +ಆಕೆ ಬಾಗಿಲು ತಟ್ಟಿ ಒಳಗೆ ಬಂದಾಗ ಅರ್ಧ ಸರಿದು ಹೋಗಿದ್ದ ಹೊದಿಕೆಯನ್ನು ಮೇಲೆತ್ತಿಕೊಂಡು ಕುರ್ಚಿ ತೋರಿಸಿದ ನೆನಪು. +ಆಕೆಯ ದಟ್ಟವಾದ ಕೂದಲಲ್ಲಿ ಬೆರಳಾಡಿಸುವ ಮನಸ್ಸು ಬಂದು ಹಿತವಾಗಿದ್ದರೂ ಆಕೆಗೆ ತಪ್ಪು ಮಾಡಿದೆ ಅನ್ನಿಸಿತು. +ಆಕೆಗೆ ಸೀಮೆಯೆಣ್ಣೆ ಸ್ಪವ್‌ನಿಂದಹೊಗೆಯ ಕಾಫಿಯನ್ನು ಕೊಟ್ಟಾಗ ನಗುತ್ತಾ ಕುಡಿದು "ಚೆನ್ನಾಗಿದೇರಿ" ಅಂದದ್ದು ಒಂದು ಸವಿನೆನಪು. +"ಅಮ್ಮ ಮನೇಲಿದಾರೆ ನಾನು ಬರ್ತೀನಿ" ಅನ್ನುತ್ತಾ ಆಕೆ ಹೊರಟು ಹೋದಾಗ ಸ್ವಲ್ಪ ಹೊತ್ತು ಇರಬಹುದಿತ್ತು ಎಂದುಕೊಂಡೆ. +ಕೆಆಕೆ ನಾಲ್ಕೈದು ಸಲ ಮೈ ಮುಟ್ಟಲು ಯತ್ನಿಸಿ ನನ್ನ ಕಾಯಿಲೆಯ ನೆವದಿಂದ ಹಣೆಯನ್ನು ಸವರಿದಾಗ, ಜ್ವರವೆಲ್ಲ ಅದರಿಂದಲೇ ಎಂಬಂತೆ ಹೋದಾಗ ಆಕೆಯ ಕಡೆ ನಾನು ವಾಲುತ್ತಿದ್ದೇನೆ ಅನ್ನಿಸುತ್ತಿತ್ತು. +ಆಕೆ ಮನೆಯಿಂದ ತಂದುಕೊಡುತ್ತಿದ್ದ ತಿಂಡಿಯನ್ನು ತಾನೇ ಮಾಡಿದ್ದೆಂದು ಹೇಳುತ್ತಿದ್ದಾಗ ಹೊಗಳಬೇಕೆನಿಸುತ್ತಿತ್ತು. +ಆಕೆಗೆ ಏನಾದರೂ ಕೊಡಬೇಕಿತ್ತು. +ಯಾಕೋ ನನ್ನ ಬಗ್ಗೆಯೇ ಹೇಸಿಗೆಯೆನಿಸಿ ಮುಸುಕು ತೆಗೆದೆ. +ರೂಮಿನಲ್ಲಿ ಕತ್ತಲೆ. +ಅಧಿಕವಾಗಿ ಕಣ್ಣುಗಳು ಮಾತ್ರವೇ ಹೊಳೆಯುತ್ತಿರಬಹುದೆನಿಸಿತು. +ರೂಮೆಲ್ಲ ಕತ್ತಲೆಯಲ್ಲಿ ಅದ್ದಿಹೋದಂತೆ, ಆಳವಾದ ಕತ್ತಲೆಯಲ್ಲಿ ಮುಳುಗಿದಂತೆ ಅನ್ನಿಸಿ ವಾಚು ನೋಡಿಕೊಂಡೆ. +ರೇಡಿಯಮ್ಮಿನ ಡಯಲ್‌ ಮಾತ್ರ ಕಾಣುತ್ತಿತ್ತು. +ರೂಮಿನಲ್ಲಿ ಸೆಖೆ ಹೆಚ್ಚಾಗಿ, ಹೊದಿಕೆಯನ್ನು ಸರಿಸಿ ಎದ್ದು ಕುಳಿತೆ. +ಹೊರಗಡೆಗೆ ಬೆಳುದಿಂಗಳಿರಬಹುದೆಂದುಕೊಂಡು ಮಾಮೂಲಿ ಜಾಗದಲ್ಲಿ ಸ್ವಲ್ಪ ಹೊತ್ತು ಕುಳಿತುಕೊಳ್ಳಬೇಕೆಂದು,ಟಾರ್ಚನ್ನು ಅಲುಗಾಡಿಸಿ, ಬಲ್ಬನ್ನು ಸರಿಮಾಡಿದಾಗ ಕುರುಡು ಬೆಳಕು ಬಂತು. +ಮೆಲ್ಲಗೆ ಮಹಡಿಯಿಂದ ಇಳಿದು ಜಗುಲಿಗೆ ಬಂದೆ. +ಅಣ್ಣನ ಕೋಣೆಯಲ್ಲಿ ಗೊರಕೆಯ ಸಪ್ಪಳ ಕೇಳಿ ಹಿತ್ತಲು ಕಡೆಗೆ ಪಾರ್ವತಿ ಮಲಗಿದ ಕಡೆ ಬೆಳಕು ಹರಿಸಿ, ಜಗುಲಿಯಿಂದ ಇಳಿದು ಅಡಿಕೆ ಚಪ್ಪರದಡಿಗೆ ಬಂದೆ. +ಬೆಳುದಿಂಗಳು ಅಡಿಕೆ ಚಪ್ಪರದ ದಬ್ಬೆಗಳಿಂದ ಕೋಲು ಕೋಲಾಗಿ ಅಂಗಳದಲ್ಲಿ ಹರಡಿತ್ತು. +ಅಂಗಳದಿಂದ ಕಣಕ್ಕೆ ಇಳಿದು ರೋಣುಕಲ್ಲಿನ ಮೇಲೆ ಕುಳಿತೆ. +ತಣ್ಣಗೆ ಗಾಳಿ ಬೀಸುತ್ತಿರುವಾಗ ಬೆಳುದಿಂಗಳಲ್ಲಿ ಕೂರುವುದು ತುಂಬ ಹಿತವಾಗಿ ದಿನವೂ ಸ್ವಲ್ಪ ಹೊತ್ತು ಕೂರಬೇಕೆನ್ನಿಸಿತು. +ಹಿತ್ತಲು ಕಡೆ ಸದ್ದಾದಾಗ ಪಾರ್ವತಿ ಇನ್ನೂ ಎಚ್ಚರವಾಗಿದ್ದಾಳೆಂದುಕೊಂಡು, ರೂಮಿನಲ್ಲಿಎಣ್ಣೆ ತೀರಿದ ದೀಪದ ನೆನಪಾಗಿ, ಪಾರ್ವತಿಯ ಬಳಿ ಇರುವ ದೀಪವನ್ನು ಹೋಗುವಾಗ ಒಯ್ಯಬೇಕೆಂದುಕೊಂಡೆ. +ಎದುರಿಗೆ ಗದ್ದೆಯಂಚಿನಲ್ಲಿ ಕಾಣುವ ಸಾಲು ಮರಗಳನ್ನು ನೋಡಿ ಬಿಸಿಲಿದ್ದಾಗ ಎದುರಿನ ಕಾನು ಚೆನ್ನಾಗಿ ಕಾಣುವುದಿಲ್ಲ ಎಂದುಕೊಂಡು ಅಡಿಕೆ ತೋಟದ ಕಡೆ ನೋಡಿದಾಗ, ಅದೂ ಒಂದು ಕಾನಿನಂತೆ ಕಂಡು ಕತ್ತಲು ಮುಸುಕಿದಂತಿತ್ತು. +ಜಯಾ ಇದನ್ನೆಲ್ಲ ತುಂಬ ಇಷ್ಟಪಡುತ್ತಿದ್ದಳು. +ಯಾವುದೋ ಬಂಗಾಳೀ ಚಿತ್ರದಲ್ಲಿಯ ನದಿ, ನೀರು, ತೋಟಗಳನ್ನು ನೋಡಿ ಖುಷಿಯಿಂದ ಹಾರಾಡಿದ್ದಳು. +ನಮ್ಮ ತೋಟ ಇದೆಯೆಂದು ಕೇಳಿ "ನನ್ನೂ ಕರ್ಕೊಂಡು ಹೋಗ್ತೀರಾ" ಎಂದು ಆಕೆ ಕೇಳಿದಾಗ ಸ್ವಲ್ಪ ಹೊತ್ತುಷಾಕ್‌ ಹೊಡೆಸಿಕೊಂಡು, ಏನೂ ಹೇಳಲಾರದೆ ಸುಮ್ಮನಾಗಿದ್ದೆ. +"ಅಡಿಕೆ ತೋಟದಲ್ಲಿ ಯಾಲಕ್ಕಿ, ಮೆಣಸು ಇದ್ದರೆ ಚೆನ್ನಾಗಿರುತ್ತಾ ಎಂದು ಅವಳು ಕೇಳಿದಾಗ ಹೌದೆಂದು ತಲೆಯಾಡಿಸಿದ್ದೆ. +ಪಾರ್ವತಿ ನಿದ್ದೆ ಹೋಗಬಹುದೆಂದು ಕಣದಿಂದ ಮನೆಕಡೆ ತಿರುಗಿದೆ. +ಅಂಗಳದಿಂದ ಕಣದ ಕಡೆಗೆ ನೋಡಿದಾಗ ಬೆಳದಿಂಗಳು ಮಂದವಾದಂತೆ ಕಂಡು, ಮನೆಯೂ ಕತ್ತಲೆಯಲ್ಲಿ ತುಂಬಿದ್ದು ನೋಡಿಭಯವಾಯಿತು. +ಟಾರ್ಚಿನಿಂದ ಬೆಳಕು ಬರುತ್ತಿರಲಿಲ್ಲ. +ಪಾರ್ವತಿಯನ್ನು ಕೂಗಬೇಕೆನ್ನಿಸಿತು. +ಮೆಲ್ಲಗೆ ತಡವುತ್ತಾ ಹಿತ್ತಲು ಕಡೆಗೆ ನಡೆದೆ. +ಪಾರ್ವತಿ ಹೇಗೆ ಮಲಗಿರಬಹುದೆಂದು ಊಹಿಸುತ್ತಾ ಮೆಲ್ಲಗೆ ಅಡಿಕೆ ಒಲೆಯ ಹತ್ತಿರಬಂದು ದೀಪಕ್ಕಾಗಿ ಹುಡುಕ ತೊಡಗಿದೆ. +ಅಡಿಕೆ ಒಲೆಯ ಬೆಂಕಿಯ ಬೆಳಕಲ್ಲಿ ಪಾರ್ವತಿಕೈಯನ್ನು ಹರಡಿಕೊಂಡು ಅಂಗಾತ ಮಲಗಿಕೊಂಡಿದ್ದಳು. +ಬೆಂಕಿಕಡ್ಡಿ ಗೀರಿ ದೀಪ ಹುಡುಕಿ ಹೊತ್ತಿಸಿದೆ. +ಆಕೆಯನ್ನು ಎಬ್ಬಸಿ ದೀಪ ತೆಗೆದುಕೊಂಡು ಹೋಗಬೇಕೆಂದು ಅಣ್ಣನ ಕೋಣೆಯ ಕಡೆ ನೋಡಿದೆ. +ರೂಮಿನಿಂದ ಗೊರಕೆಯ ಸದ್ದು ಕೇಳಿಸುತ್ತಿತ್ತು. +ದೀಪದ ಬೆಳಕಿನಲ್ಲಿ ಆಕೆಯ ಮುಖ ನೋಡಲು ಬಾಗಿದೆ. +ಕೆನ್ನೆಗೆ ಹತ್ತಿದ್ದ ಅಣ್ಣನ ಬೆರಳು. +ಮೆಲ್ಲನೆ ಸವರಬೇಕೆನ್ನಿಸಿತು. +ಆಕೆ ಮಧ್ಯಾಹ್ನ ನೋಡುತ್ತಿದ್ದ ರೀತಿ ನೆನಪಾಗಿ ಕರುಣೆಯುಕ್ಕಿ ಹಣೆಯನ್ನು ಸವರಲು ಮುಂದಾದೆ. +ಎದೆಯ ಬಡಿತ ಜೋರಾಗಿ ಮೈಯೆಲ್ಲ ಬಿಸಿಯಾಗಿ,ದೀಪದ ಮಂದ ಬೆಳಕಿನಲ್ಲಿ ಕೆಲಸದ ಹುಡುಗಿ ಸುಂದರವಾಗಿ ಕಂಡಳು. +ಪಕ್ಕದಲ್ಲಿದ್ದ ಕೊಟ್ಟಿಗೆಯಲ್ಲಿ ಹೋರಿಯೊಂದು ಗುಟುರು ಹಾಕಿದ್ದು ಕೇಳಿ ಬೆಚ್ಚಿದೆ. +ಕೈಯಲ್ಲಿ ಹಿಡಿದಿದ್ದ ಸೀಮೆಯೆಣ್ಣೆಯ ದೀಪಬಿಸಿಯಾದಂತಾಗಿ ಒಲೆಯ ಬದಿಯಿಟ್ಟು "ಪಾರ್ವತಿ" ಎನ್ನಲು ಬಾಯಿತೆರೆದು ಸ್ವರ ಬಾರದೇ ಇದ್ದುದಕ್ಕೆ ನಾಲಿಗೆಯಿಂದ ಸವರಿಕೊಂಡೆ. +ಮುಂದೇನು ಮಾಡಬೇಕೆಂದು ಒಲೆಯಲ್ಲಿ ಉರಿಯುತ್ತಿದ್ದ ಕೆಂಡಗಳನ್ನು ನೋಡುತ್ತಾ ನಿಂತಿದ್ದಾಗ್ಗ ಅವಳು ಮಗ್ಗಲು ಬದಲಿಸುವಾಗ ಕನವರಿಸಿದಂತೆ ಗೊಣಗಿದ್ದು ಕೇಳಿ, ಮೆಲ್ಲಗೆ ಒಳಗೆ ನಡೆದೆ. +ಸಪ್ಪಳವಾಗದಂತೆ, ಕತ್ತಲೆಯಲ್ಲೇ ತಡವುತ್ತ ಮಹಡಿ ಹತ್ತಿ ಮಲಗಿದೆ. +ಪಾರ್ವತಿ ಹತ್ತಿ ಬರುತ್ತಿದ್ದಾಳೆ ಅನ್ನಿಸಿತು. +ಅಣ್ಣ: +ಊರಿನಿಂದ ಪದೇ ಪದೇ ಫೋನು. +ಬೆಳಿಗ್ಗೆ ಬಂದಾಗ ಸಿಟಿ ಬಸ್ಸಿನಲ್ಲಿದ್ದೆ. +ಮೊಬೈಲ್‌ನಲ್ಲಿ ಮಾತಾಡಿದ್ದೆ. +ಮತ್ತೆ ಮಧ್ಯಾಹ್ನ ಕಚೇರಿಯಲ್ಲಿದ್ದಾಗ ಬಂತು. +"ಏನೇ ಕೆಲಸ ಇದ್ದರೂ ಒಂದು ರಾತ್ರಿಯ ಮಟ್ಟಿಗೆ ಬಂದು ಹೋಗು. +ನಾನು ತುಂಬ ಕಷ್ಟದಲ್ಲಿದ್ದೇನೆ" ಎಂಬುದೊಂದೇ ಮಾತು. +ಅಪರೂಪಕ್ಕೆ ಒಮ್ಮೆ ಊರಿನಿಂದ ಅಣ್ಣ ಫೋನ್‌ಮಾಡುವನಾದರೂ ಹೀಗೆ ಕಷ್ಟದಲ್ಲಿ ಇದ್ದೇನೆ ಎಂದು ಹೇಳಿರಲಿಲ್ಲ. +"ಮಾರಿ ಜಾತ್ರೆ ಇದೆ" ಎಂದೋ, "ಚೌಡಿಹಬ್ಬ ಇದೆ" ಎಂದೋ ಹೇಳಿ ಅದಕ್ಕೆ ಕರೆ ನೀಡುತ್ತಿದ್ದ ಅಣ್ಣ ಹೀಗೆ ತೊಂದರೆಗೆ ಸಿಲುಕಿ ಕರೆ ಮಾಡುತ್ತಿರುವುದು ಯೋಚನೆ ಮಾಡುವಂತಾಯಿತು. +ರಜೆ ಪಡೆದು ಊರಿಗೆ ಹೋಗಲು ನಿರ್ಧರಿಸಿದೆ. +ಅಣ್ಣನ ಸಮಸ್ಯೆ ತಿಳಿಯದ್ದೇನಲ್ಲ. +ಅವನದು ಐದು ಮಕ್ಕಳ ದೊಡ್ಡ ಕುಟುಂಬ. +ಅತ್ತಿಗೆ ಅಕಾಲದಲ್ಲಿ ಮೃತ್ಯುವಶರಾದರು. +ಮಲೆನಾಡಿನ ಮಹಿಳೆಯರಿಗೆ ಅಪರೂಪವಾಗಿದ್ದ ಗರ್ಭಕೋಶದ ಕಾಯಿಲೆ. +ಗದ್ದೆ-ತೋಟದ ಕೆಲಸ ಮಾಡುತ್ತ ದುಡಿಮೆಯಲ್ಲಿ ದೇಹ ದಂಡಿಸಿದ್ದ ಅತ್ತಿಗೆಗೆ ಹೇಗೆ ಬಂತೋ. +ಪತ್ತೆಯಾಗುವ ಹೊತ್ತಿಗೆ ಬೆಳೆದಿತ್ತು. +ಶಿವಮೊಗ್ಗದ ಧನ್ವಂತರಿಗಳು ಮಣಿಪಾಲದತ್ತ ವರ್ಗಾಯಿಸಿದ್ದರು. +ಪುರ ಪ್ರವೇಶದಿಂದಹಿಡಿದು ಪುರ ನಿರ್ಗಮನದವರೆಗೆ ಹಣವೊಂದನ್ನೇ ಪೀಕಿಸುತ್ತಿದ್ದ ಅಲ್ಲಿನ ಧನ್ವಂತರಿಗಳು ಮೂರು ನಾಲ್ಕು ವರ್ಷ ಅಲೆದಾಡಿಸಿದರು. +ಆಪರೇಷನ್‌ ಮಾಡಿ ಗರ್ಭಕೋಶ ತೆಗೆಸಿ ಎಂದು ಹೇಳಿದರೆ ಅದಕ್ಕೆ ಧನ್ವಂತರಿಗಳೇ ಒಪ್ಪಿರಲಿಲ್ಲ. +ಬೆಳೆದ ಮೂವರು ಹೆಣ್ಣು ಮಕ್ಕಳು. +ಮದುವೆ ಮಾಡುವ ಪ್ರಯತ್ನ ನಡೆಯುತ್ತಲೇ ಇತ್ತು. +ಒಂದುಕಡೆ ಉಲ್ಬಣಗೊಳ್ಳುತ್ತಿದ್ದ ಅತ್ತಿಗೆಯ ಕಾಯಿಲೆ. +ಮಕ್ಕಳ ಮದುವೆ ವಯಸ್ಸು ಮೀರುತ್ತಿದ್ದ ಸಂಕಟ. +ಗಂಡುಮಕ್ಕಳಿಬ್ಬರಿಗೆ ಪದವಿ, ಶಿಕ್ಷಕ ತರಬೇತಿ ಮಾಡಿಸಿದ್ದೇ ಬಂತು. +ಇಬ್ಬರಿಗೂ ಸರಿಯಾದ ಕೆಲಸ ಸಿಕ್ಕಿಲ್ಲ. +ಪದೇ ಪದೇ ಮಣಿಪಾಲಕ್ಕೆ ಭೇಟಿ. +ಎಷ್ಟೇ ತೋಟ ಗದ್ದೆ ಇದ್ದರೂ ರೈತಾಪಿ ಬದುಕು ನಡೆಸುತ್ತಿದ್ದ ಅಣ್ಣ ಆರ್ಥಿಕವಾಗಿ ಸೊರಗಿ ಹೋಗಿದ್ದ. +ಅತ್ತಿಗೆಗೆ ಕೊಡಿಸಿದ ಚಿಕಿತ್ಸೆಯೂ ಪ್ರಯೋಜನವಾಗಲಿಲ್ಲ. +ಒಂದು ಮಧ್ಯಾಹ್ನ ನಾನು ಕಚೇರಿಯಲ್ಲಿದ್ದಾಗ ಅತ್ತಿಗೆ ತೀರಿ ಹೋದ ಸುದ್ದಿ ಬಂತು. +ಅಂದು ರಾತ್ರಿ ಹೊರಟು ಬೆಳಿಗ್ಗೆ ಊರು ಸೇರಿ ಶೋಕಸಾಗರದಲ್ಲಿ ಮುಳುಗಿದ್ದ ಮನೆಯಲ್ಲಿ ಕಂಬನಿಗರೆದು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ವಾಪಸಾಗಿದ್ದೆ. +ಮತ್ತೆ ಒಂದೆರಡು ವರ್ಷದಲ್ಲಿ ಇಬ್ಬರು ಹೆಣ್ಣು ಮಕ್ಕಳ ಮದುವೆಯಾಯಿತು. +ದೊಡ್ಡ ಮಗನಿಗೆ ಸರ್ಕಾರಿ ಕೆಲಸವೂ ಆಗಿ ಮದುವೆಯೂ ಆಯಿತು. +ಅವನು ಪತ್ನಿ ಸಹಿತ ಕೆಲಸ ಇದ್ದ ಊರಿಗೆ ಹೋಗಿಯಾಗಿತ್ತು. +ಇನ್ನು ಅಣ್ಣ ನಿರಾಳವಾಗಿರಬಹುದು ಎಂದುಕೊಳ್ಳುವಷ್ಟರಲ್ಲಿ ಈ ಫೋನ್‌ ಕರೆಗಳು. +ಮನೆಯಲ್ಲಿ ಕೊನೆಯ ಮಗಳು, ಎರಡನೇ ಮಗ ಇದ್ದಾರೆ. +ಮಗಳಿಗೂ ಸರ್ಕಾರಿ ಕೆಲಸವಾಗಿದೆ. +ಮನೆಯಿಂದಲೇ ಹೋಗಿ ಬರುವ ಅನುಕೂಲವಿದೆ. +ಅವಳೇ ಅಡುಗೆ ಮಾಡುತ್ತಾಳೆ. +ಮಗನಿಗೂ ಊರುಬದಿಯ ಪೇಟೆಯಲ್ಲಿ ಕೆಲಸ. +ಎಂಎ ಮಾಡಿದ್ದವನು. +ಪೂರ್ಣಾವಧಿ ಉಪನ್ಯಾಸಕನ ಕೆಲಸ ಸಿಕ್ಕಿದೆಯಾದರೂ ಅದು ಗೌರವದ ಹುದ್ದೆ. +ಕೆಲಸ ನೀಡಿದ್ದು ಖಾಸಗಿ ಕಾಲೇಜು. +ಅದರ ಆಡಳಿತ ಮಂಡಲಿಗೆ ಇನ್ನೂ ಸರ್ಕಾರದ ಅನುದಾನ ಸಿಕ್ಕಿಲ್ಲ. +ಅನುದಾನ ಸಿಕ್ಕಿದ ಮೇಲೆ ಹಿಂದಿನ ಬಾಕಿ ಸೇರಿಸಿ ಒಟ್ಟಿಗೆ ಸಂಬಳ ನೀಡುತ್ತೇವೆ ಎಂಬುದು ಆಡಳಿತ ಮಂಡಲಿಯ ಭರವಸೆ. +ಓದಿದ್ದು ಮರೆತು ಹೋಗದಂತೆ, ಬೇರೆ ಕೆಲಸಕ್ಕೆ ಪ್ರಯತ್ನಪಡಲು ಅವಕಾಶವಾದರೂ ಆಗುತ್ತದೆ ಎಂದುಕೊಂಡ ಮಗ ಸಂಬಳದ ನಿರೀಕ್ಷೆ ಇಟ್ಟುಕೊಳ್ಳದೆ ನಿತ್ಯ ಕಾಲೇಜಿಗೆ ಹೋಗಿ ಬರುತ್ತಾನೆ. +ಅಣ್ಣನ ಮಕ್ಕಳ ಮದುವೆಗೆ ಕುಟುಂಬ ಸಹಿತ ಹೋಗಿ ಬಂದಿದ್ದೆ. +ಕೆಲಸದ ನಿಮಿತ್ತ ಊರು ಊರು ತಿರುಗಾಡುತ್ತಿದ್ದಾಗ ಮಕ್ಕಳ ಓದು, ಅವರ ಪರೀಕ್ಷೆ, ಪತ್ನಿಯ ಕೆಲಸದ ಒತ್ತಡ ಮೊದಲಾದ ಕಾರಣಗಳಿಂದ ಪದೇ ಪದೇ ಊರಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. +ಆದರೆ ವರ್ಷಕ್ಕೆ ಒಮ್ಮೆಯಾವುದಾದರೂ ಹಬ್ಬದ ನೆಪದಲ್ಲಿ ರಜೆ ಹಾಕಿ ಊರಿಗೆ ಹೋಗಿ ಬರುತ್ತಿದ್ದೆ. +ಪಿತ್ರಾರ್ಜಿತವಾಗಿ ಬಂದಿದ್ದ ಸ್ವಲ್ಪಗದ್ದೆ. +ನೂರು ಮರಗಳ ಅಡಿಕೆ ತೋಟವನ್ನು ಅಣ್ಣನೇ ಕೆಲವು ಕಾಲದಿಂದ ನೋಡಿಕೊಳ್ಳುತ್ತಿದ್ದ. +ಮಕ್ಕಳ ಮದುವೆ ಆದ ಮೇಲೆ ಅಣ್ಣನಿಗೆ ಎಂಥ ಸಮಸ್ಯೆ ಎಂದುಕೊಂಡೇ ಊರಿಗೆ ಬಸ್ಸು ಹತ್ತಿದೆ. +ರಾತ್ರಿ 10ಗಂಟೆಗೆ ಬೆಂಗಳೂರಿನಿಂದ ಹೊರಟವನು ಬೆಳಗಿನ ಜಾವ ಶಿವಮೊಗ್ಗದಲ್ಲಿದ್ದೆ. +ಸ್ವಲ್ಪ ಹೊತ್ತಿಗೆ ರಿಪ್ಪನ್‌ಪೇಟೆ ಮೂಲಕ ತೀರ್ಥಹಳ್ಳಿ ಕಡೆ ಹೋಗುವ ಖಾಸಗಿ ಬಸ್ಸು ಹೊರಟಿತು. +ರಸ್ತೆಯ ಎರಡೂ ಬದಿ ಕಣ್ಣಿಗೆ ತಂಪು ತರುವಂಥ ವೃಕ್ಷ ಸಮೃದ್ಧಿ. +ಸೂಡೂರು ಹೊಳೆ ದಾಟಿ ಅರಸಾಳು ತಲುಪುವವರೆಗೆ ದಟ್ಟ ಕಾಡಿನ ನೆರಳು. +ರಿಪ್ಪನ್‌ಪೇಟೆಯಿಂದ ಐದು ಕಿಲೋಮೀಟರ್‌ ಸಾಗಿದರೆ ಊರು ಕಡೆ ಅಗಚುವ ಗಾಡಿ ರಸ್ತೆ. +ಅಲ್ಲಿ ಬಸ್ಸಿಳಿದೆ. +ಅಲ್ಲಿಂದ ಸ್ವಲ್ಪ ದೂರ ಒಳ ಹಾದಿಯಲ್ಲಿ ಸಾಗಿದರೆ ನಮ್ಮೂರು. +ಮಲೆನಾಡು ಅಭಿವೃದ್ಧಿ ಮಂಡಲಿ ನೆರವಿನಿಂದ ನಿರ್ಮಿಸಿದ ಜಲ್ಲಿ ರಸ್ತೆಯಲ್ಲಿ ಸುತ್ತಲಿನ ಗಿಡಮರಗಳನ್ನು ವೀಕ್ಷಿಸುತ್ತ ನಡೆಯುತ್ತಿದ್ದರೆ ಊರಲ್ಲಿ ಕಳೆದ ಬಾಲ್ಯದದಿನಗಳ ನೆನಪು. +ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗಾಗಿ ಅರಣ್ಯ ಇಲಾಖೆಯವರು ನಮ್ಮೂರಿನ ಗೋಮಾಳವನ್ನು ಅತಿಕ್ರಮಿಸಿ ಏನೇನೋ ಮರಗಳನ್ನು ಬೆಳೆಸಿದ್ದಾರೆ. +ಬೆಳಗಿನ ಹೊತ್ತಿನಲ್ಲಿ ಆಪ್ಯಾಯಮಾನವಾಗಿದ್ದ ನಾನಾ ಬಗೆಯ ಹಕ್ಕಿಗಳ ಕಲರವ. +ನಿಧಾನವಾಗಿ ನಡೆದು ಮನೆ ಸೇರುವ ಹೊತ್ತಿಗೆ ಎಂಟು ಗಂಟೆ ದಾಟಿತ್ತು. +ಆ ವೇಳೆಗೆ ಅಣ್ಣನ ಮಕ್ಕಳಿಬ್ಬರೂ ಕೆಲಸಕ್ಕೆ ಹೋಗಿಯಾಗಿತ್ತು. +ಇನ್ನೊಂದು ಒಳಹಾದಿಯಲ್ಲಿ ಅವರು ಸರ್ಕಾರಿ ರಸ್ತೆಗೆ ಬಂದು ತಮ್ಮ ತಮ್ಮ ಕೆಲಸಗಳಿಗೆ ಹೋಗಲು ಬಸ್ಸು ಹಿಡಿಯಬೇಕಿತ್ತು. +ಮಗಳು ಅಡುಗೆ ಕೆಲಸ ಮುಗಿಸಿ ಹೋಗಿದ್ದಳು. +ಮಗ ಎಂದಿನಂತೆ ಬೆಳಗಿನ ಕೊಟ್ಟಿಗೆ ಕೆಲಸ ಮುಗಿಸಿ, ಹಾಲು ಕರೆದಿಟ್ಟು ಹೋಗಿದ್ದ. +ಅಣ್ಣ ಒಬ್ಬನೇ ಇದ್ದ. +ಬೆಳಗಿನ ಹೊತ್ತೇ ಬಿಕೋ ಎನ್ನುವಂತಿದ್ದ ಮೌನ. +ಅಣ್ಣ ನನ್ನ ನಿರೀಕ್ಷೆಯಲ್ಲೇ ಇದ್ದ. +ಪ್ರಯಾಣದ ಬಳಲಿಕೆಯನ್ನು ವಿಶ್ವಾಸದಿಂದ ವಿಚಾರಿಸಿದ. +ಮಲೆನಾಡಿನ ವಾಡಿಕೆಯಂತೆ ಕೈಕಾಲು ತೊಳೆಯಲು ಹೇಳಿದ. +ಬಚ್ಚಲಿಗೆ ಹೋಗಿ ಮುಖ ತೊಳೆದುಕೊಂಡು ಜಗುಲಿಗೆ ಬಂದೆ. +ಅಣ್ಣನ ಎಲ್ಲ ಮಕ್ಕಳೂ ಮನೆಯಲ್ಲಿಯೇ ಇದ್ದಾಗ ಅವರ ಅಗತ್ಯಗಳಿಗೆ ತಕ್ಕಂತೆ ವಿಸ್ತರಿಸಿದ್ದ ಮನೆ. +ಜಗುಲಿಯ ಅಕ್ಕಪಕ್ಕದಲ್ಲಿ ಕಡಿಮಾಡು ಮಾಡಿ ಎರಡು ಪ್ರತ್ಯೇಕ ಕೋಣೆಗಳನ್ನು ಕಟ್ಟಲಾಗಿತ್ತು. +ಜಗುಲಿಯಿಂದ ದಾಟಿದರೆ ನಡುಮನೆ,ಅಲ್ಲಿಂದ ಅಡಿಗೆ ಮನೆ. +ಅದರ ಹಿಂದೆ ಬಚ್ಚಲು, ಪಕ್ಕದಲ್ಲಿ ಶೌಚಾಲಯ. +"ಮನೆ ಕೆಲಸಕ್ಕೆ, ಅಡಿಗೆ, ಬಟ್ಟೆ ಒಗಿಯೋದಕ್ಕೆ ಯಾರೂ ಸಿಗಲ್ಲವಾ?" ಅಣ್ಣನೇ ಎರಡು ಲೋಟಗಳಲ್ಲಿ ಕಾಫಿಯನ್ನು ಮಾಡಿಕೊಂಡು ತಟ್ಟೆಯಲ್ಲಿಟ್ಟುಕೊಂಡು ತಂದಾಗ ಕೇಳಿದೆ. +ಕಾಫಿ ಲೋಟವನ್ನು ಕೈಗಿತ್ತು"ಇದೇನು ಬೆಂಗಳೂರು ಪೇಟೆಯಾ? +ಮನೇಲಿ ಎಷ್ಟೇ ತೊಂದರೆ ಇದ್ದರೂ ಹಳ್ಳಿಗಳಲ್ಲಿ ಮನೆಕೆಲಸಕ್ಕೆ ಹೆಂಗಸರು ಸಿಗೋದಿಲ್ಲ. +ಹುಡುಗಿಯರೂ ಸಿಗೋದಿಲ್ಲ. +ಈಗೀಗ ಗದ್ದೆ ಕೆಲಸಕ್ಕೆ ಕೂಡ ಜನ ಸಿಗಲ್ಲ. +ಜನಕೆಲಸ ಮಾಡೋದೆ ಬಿಟ್ಟಿದ್ದಾರೆ. +ಅಡಿಕೆ ಸುಲಿತಕ್ಕೆ ಮಾತ್ರ ಬುಟ್ಟಿಗೆ ಇಷ್ಟು ಅಂತ ಕೊಡ್ತೀವಲ್ಲ. +ಬೆಳಿಗ್ಗೆಯಿಂದ ರಾತ್ರಿವರೆಗೂ ಕೆಲಸ ಮಾಡ್ತಾರೆ. +ಮನೆ ಕೆಲಸಕ್ಕೆ ಮಾತ್ರ ಸಿಗೋದೆ ಇಲ್ಲ. . " ಎಂದು ವಿವರಣೆ ನೀಡಿದ. +ಕಾಫಿ ಕುಡಿದಾದ ಮೇಲೆ "ನಾನು ಎರಡೇ ದಿನ ರಜೆ ಹಾಕಿದ್ದು. +ನಾಳೆ ರಾತ್ರಿ ಹೊರಡ್ತೇನೆ" ಎಂದೆ. +"ಆಯ್ತು. ಈಗ ನೀನು ಸ್ನಾನ ಮಾಡಾದಿದ್ರೆ ಮಾಡು. +ಇಬ್ರೂ ಒಟ್ಟಿಗೆ ತಿಂಡಿ ಮಾಡಾನ" ಎಂದ. +"ನಾನು ಈಗ ಬಂದೆ"ಎನ್ನುತ್ತಾ ತೋಟದ ಕಡೆ ನಡೆದ. +ನಾನು ಹುಟ್ಟಿ ಬೆಳೆದ ಮನೆ. +ಆದರೆ ಒಬ್ಬನೇ ಇದ್ದಾಗ ಹೆದರಿಕೆ ಹುಟ್ಟಿಸುವಷ್ಟು ದೊಡ್ಡದಾಗಿ ಕಂಡಿತು. +ಮಲೆನಾಡಿನ ಹಳ್ಳಿಯಾದ್ದರಿಂದ ನಮ್ಮ ಮನೆ ಪಕ್ಕ ಇನ್ನೊಂದು ನೆರೆಮನೆ ಹತ್ತಿರದಲ್ಲಿ ಇಲ್ಲ. +ನಮ್ಮ ತೋಟಗದ್ದೆ ಗಡಿಯ ಆಚೆಯೇ ಇನ್ನೊಂದು ಮನೆ. +ಕೂಗಿದರೂ ಕೇಳಿಸದಷ್ಟು ದೂರ. +ಹಗಲಿನಲ್ಲಿಯೇ ಒಂಟಿತನ ಎದುರಿಸುವಂತಿದ್ದರೆ ಇನ್ನು ರಾತ್ರಿ ಹೇಗೊ ಎಂದು ಯೋಚಿಸುತ್ತಲೇ ಸ್ನಾನ ಮುಗಿಸಿದೆ. +ಮೈ ಒರೆಸಿಕೊಳ್ಳುತ್ತಾ ಜಗುಲಿಗೆ ಬರುವಷ್ಟರಲ್ಲಿ ಅಣ್ಣ ತೋಟದಿಂದ ವಾಪಸಾಗಿದ್ದ. +ಅಡಿಗೆ ಮನೆಗೆ ಹೋಗಿ ಮಗಳು ಸಿದ್ಧಪಡಿಸಿದ್ದ ಕಡುಬನ್ನು ಬಾಳೆಎಲೆಗೆ ಹಾಕುವುದರಲ್ಲಿ ನಾನೂ ಒಳಗೆ ಪವೇಶಿಸಿದೆ. +ಒಲೆಯ ಪಕ್ಕದಲ್ಲಿ ಬೆಂಕಿಯ ಹಿತಕರ ಶಾಖದ ವಲಯದಲ್ಲಿ ಮಣೆ ಹಾಕಿಕೊಂಡು ಕುಳಿತೆ. +ತಿಂಡಿಯನ್ನು ತಿನ್ನುತ್ತಿರುವಾಗ "ನೋಡು, ನಾನು ಈ ವಯಸ್ಸಿನಲ್ಲಿ ಕೈ ಬಾಯಿ ಸುಟ್ಟುಕೊಂಡು ಜೀವನ ಮಾಡಬೇಕು. +ಈ ಮಕ್ಕಳು ನನ್ನ ಜತೆ ಈಗಲೇ ಮುಖಕೊಟ್ಟು ಮಾತಾಡುವುದಿಲ್ಲ. +"ಅವಳು" ಹೋದ ಮೇಲೆ ನಾನೇ ಬಟ್ಟೆ ಒಗೆದುಕೊಳ್ಳಬೇಕು. +ಇಂಥ ಬಂಡಾಟ ಬ್ಯಾಡ ಮಾರಾಯ. +ಇದಕ್ಕೊಂದು ವ್ಯವಸ್ಥೆ ಮಾಡು"ಎಂದ. +"ಇದು ತಂದೆ ಮಕ್ಕಳ ಮಧ್ಯೆ ಇರೊ ಸಮಸ್ಯೆ. +ಇದರಲ್ಲಿ ಯಾರೇ ಮಧ್ಯೆ ಪ್ರವೇಶಿಸುವುದೂ ಸರಿಯಲ್ಲ. +ನೀವು ಯಾವತ್ತಿದ್ದರೂ ಒಂದೇ ಆಗುತ್ತೀರಿ. +ನಿನ್ನ ಮಕ್ಕಳಿಗೆ ನೀನೇ ಹೇಳಬೇಕು. +ಅಷ್ಟಕ್ಕೂ ನಾನು ಹೇಳಿದರೆ ಅವರು ಕೇಳುತ್ತಾರೆಯೇ?" +"ಅದೇನೋ ಗೊತ್ತಿಲ್ಲ. +ನೀನು ಇದಕ್ಕೆ ಒಂದು ವ್ಯವಸ್ಥೆ ಮಾಡಿಯೇ ಹೋಗಬೇಕು. +ನನ್ನ ಎರಡನೇ ಮಗನಿಗೆ ಮದುವೆ ಮಾಡಿದರೂ ಅವನ ಹೆಂಡತಿ ನನ್ನ ಸೇವೆ ಮಾಡುವುದು ಬೇಡ. +ನನ್ನ ಬಗ್ಗೆ ಈ ಮಗಳಿಗೂ ಒಳ್ಳೆ ಅಭಿಪ್ರಾಯವಿಲ್ಲ. +ಅವಳೀಗ ಮನೆ ಖರ್ಚಿಗೂ ದುಡ್ಡು ಕೊಡುವುದಿಲ್ಲ. +ಅವನಿಂದಲೂ ಮನೆಗೆ ಸಂಪಾದನೆ ಇಲ್ಲ. +ಮದುವೆಯಾಗಿ ಹೋಗಿರುವ ಮಗ "ನನ್ನ ಕಡೆಯಿಂದ ಇನ್ನು ದುಡ್ಡು ಕೊಡಲು ಸಾಧ್ಯವಿಲ್ಲ" ಎಂದೇ ಹೇಳಿದ್ದಾನೆ. +ಎಲ್ಲಿಂದಲೂ ದುಡ್ಡು ಸಿಗದೆ ನಾನು ಹೇಗೆ ಮನೆ ವ್ಯವಹಾರ ಮಾಡಲಿ. +ತೋಟದ ಕೆಲಸಕ್ಕೆ ಬರುವವರಿಗೆ ದುಡ್ಡು ಎಲ್ಲಿಂದ ತರುವುದು? +ಅಡಿಕೆ ಮಂಡಿಯಿಂದ ತಂದ ಸಾಲಕ್ಕೆ ಈ ಸಲದ ಅಡಿಕೆ ಹಾಕಿದರೆ ಆಯಿತು. +ಅದಕ್ಕೆ ಈ ರಗಳೆಯೇ ಬೇಡ. +ಏನಾದರೂ ಹದ್ದುಬಸ್ತು ಮಾಡಿ ಹೋಗು." +ಇದು ಬಗೆಹರಿಸಲಾಗದ್ದೇನೂ ಅಲ್ಲ, ಆದರೆ ಅಪ್ಪ ಮಕ್ಕಳೇ ಇತ್ಯರ್ಥ ಮಾಡಿಕೊಳ್ಳಬೇಕಾದ ಸಮಸ್ಯೆ ಎನಿಸಿತು. +ಅಣ್ಣನ ಮಕ್ಕಳನ್ನು ನಾನು ಮೊದಲಿನಿಂದಲೂ ಕಂಡವನೇ. +ಕೆಲವರನ್ನು ಎತ್ತಿ ಆಡಿಸಿದ್ದೂ ಹೌದು. +ಆದರೆ ಅವರಿಗೆ ಓದಿನ ವಿಷಯದಲ್ಲಾಗಲೀ, ನೌಕರಿ ಪಡೆಯುವ ವಿಷಯದಲ್ಲಾಗಲೀ ಅವರಿಗೆ ಸಹಾಯ ಮಾಡಲು ಸಾಧ್ಯವಾಗಿರಲಿಲ್ಲ. +ಚಿಕ್ಕಪ್ಪನೆಂದು ನನ್ನ ಮಾತನ್ನು ಅವರು ಈಗ ಯಾಕೆ ಕೇಳಬೇಕು? +ಅಷ್ಟಕ್ಕೂ ತಂದೆಯ ಮಾತನ್ನೂ ಕೇಳದವರು ನನ್ನ ಮಾತನ್ನು ಕೇಳುತ್ತಾರೆಯೇ? +ನನ್ನ ಅನುಮಾನವನ್ನು ಅಣ್ಣನಿಗೆ ಹೇಳಿದೆ. +ತಿಂಡಿ ಮುಗಿದಿತ್ತು. +ಎಲೆಯನ್ನು ನಾನೇ ಎತ್ತಿದೆ. +ಅಣ್ಣ ಕಾಫಿಬೆರೆಸಿ ಒಂದು ಲೋಟವನ್ನು ಕೈಗೆ ಕೊಟ್ಟ. +"ಹಾಗೆ, ಮಾತು ಕೇಳುವುದಿಲ್ಲ ಅಂತ ಅಲ್ಲ, ಆದರೆ ಏನಾದರೂ ವ್ಯವಸ್ಥೆ ಮಾಡಬೇಕಲ್ಲ" ಎಂದು ಹಠ ಹಿಡಿದಂತೆ ಹೇಳಿದ. +ಕಾಫಿ ಕುಡಿದಾದ ಮೇಲೆ ಜಗುಲಿಗೆ ಬಂದೆವು. +ನಾನು ಏನಾದರೂ ಮಾತಾಡಲೇ ಬೇಕಿತ್ತು. +"ಈಗ ಇಡೀ ಮನೆಯಲ್ಲಿ ನೀವು ಮೂವರೇ ಇರುತ್ತೀರಿ. +ಏನು ಸಮಸ್ಯೆ ಇದ್ದರೂ ಮಾತಾಡಿಕೊಂಡು ಬಗೆಹರಿಸಬಹುದಲ್ಲ" ಎಂದೆ. +"ಹಾಗೆ ಮಾತಾಡಿ ಎರಡು ವರ್ಷಆಯಿತು. +ಒಂದೇ ಮನೆಯಲ್ಲಿ ಇದೀವಿ ಅಷ್ಟೆ ಅವಳು ಅಡಿಗೆ ಮಾಡಿ "ಊಟಕ್ಕೆ ಬರಬಹುದು" ಅಂತಾಳೆ,ಆಗ ಹೋದರೆ ಮಾತ್ರ ಬಡಿಸುತ್ತಾಳೆ. +ಸ್ವಲ್ಪ ತಡವಾದರೆ ನಾನೇ ಬಡಿಸಿಕೊಂಡು ತಿನ್ನಬೇಕು. +ಮಗನೂ ಕಡಿಮೆ ಇಲ್ಲ. +ಅವನಾಗಿ ಮಾತಾಡುವುದಿಲ್ಲ. +ಏನಾದರೂ ಹೇಳಿದರೆ ಆಯ್ತು ಇಲ್ಲ ಅಂತ ಮಾತ್ರ ಹೇಳ್ತಾನೆ. +ಇವರು ನನ್ನನ್ನು ನೋಡಿಕೊಳ್ತಾರಾ?" ಎಂದ. +"ಅಲ್ಲ ಮಾರಾಯ, ನೀವು ತಂದೆ ಮಕ್ಕಳು. +ಏನೇ ಸಮಸ್ಯೆ ಇದ್ದರೂ ನೀವು ನೀವೇ ಬಗೆಹರಿಸಿಕೊಳ್ಳಬೇಕು. +ಮಾತೇ ಆಡದೆ, ನಿನಗೆ ತೋಜಿದ್ದನ್ನು ನೀನು, ಅವರಿಗೆ ತೋಚಿದ್ದನ್ನು ಅವರು ಮನಸ್ಸಿನಲ್ಲಿಯೇ ಗುಣಾಕಾರ-ಭಾಗಾಕಾರ ಹಾಕ್ತಾ ಇದ್ದರೆ ಇದು ಬಗೆಹರಿಯುವುದು ಹೇಗೆ? +ಮೊದಲು ನೀವು ನೀವು ಮಾತಾಡಿಕೊಳ್ಳಿ. +ಆಗಎ ಲ್ಲ ಸಮಸ್ಯೆಗಳೂ ಬಗೆಹರಿಯುತ್ತವೆ" ಎಂದೆ. +"ಅದೆಲ್ಲ ಆಗಲ್ಲ, ನೀನು ಏನಾದರೂ ವ್ಯವಸ್ಥೆ ಮಾಡು" ಎಂದು ಮತ್ತೆ ಅದೇ ಪ್ರವರ ಹೇಳಿದಾಗ ಅಣ್ಣ ಬೇರೆಯೇ ಕಾರಣಕ್ಕೆ ಹೀಗೆ ಮಾಡುತ್ತಿರಬಹುದೇ ಅನಿಸಿತು. +"ಆಗಲಿ, ನಿನಗೆ ಮಕ್ಕಳೊಟ್ಟಿಗೆ ಇರಲು ಆಗಲ್ಲ ಅಂದರೆ ಇರು ಅಂತ ಒತ್ತಾಯ ಮಾಡಲು ಸಾಧ್ಯವಿಲ್ಲ. +ಆದರೆ ಅವರಿಬ್ಬರ ಮದುವೆ ಮಾಡುವ ನಿನ್ನ ಜವಾಬ್ದಾರಿ ಇನ್ನೂ ತೀರಿಲ್ಲವಲ್ಲ. +ಅದನ್ನು ಮುಗಿಸಿದ ಮೇಲೆ ಅವರನ್ನು ಅವರವರ ಪಾಡಿಗೆ ಬಿಟ್ಟು ಬೇರೆ ವ್ಯವಸ್ಥೆ ಮಾಡಿಕೊಳ್ಳಬಹುದಲ್ಲ. +ಗದ್ದೆ ತೋಟದ ಕೆಲಸ ಮಾಡಿಸುವುದು ನಿನ್ನೊಬ್ಬನ ಸಲುವಾಗಿ ಏನೂ ಅಲ್ಲವಲ್ಲ. +ಮಕ್ಕಳಿಗೂ ಬೇಕು ಅಂತ ನೀನು ಮಾಡ್ತಾ ಇದ್ದರೆ ಅವರು ಅದನ್ನು ನಿರ್ಲಕ್ಷಿಸಿದರೆ ಅವರದನ್ನು ಅವರಿಗೆ ಕೊಟ್ಟು ನೀನು ನಿನ್ನ ಪಾಡು ನೋಡಿಕೊಳ್ಳುವುದೇ ಪರಿಹಾರ ಎಂಬಂತೆ ನನಗೆ ತೋರುತ್ತದೆ. +ಅಷ್ಟಕ್ಕೂ ನಿನ್ನ ಮಕ್ಕಳು ಅಂಥ ಕೆಟ್ಟವರೆಂದು ನನಗೆ ಅನಿಸುವುದಿಲ್ಲ" ಎಂದೆ. +"ಕೆಟ್ಟವರಲ್ಲ ಅಂತ ಹೆಂಗೆ ಹೇಳ್ತೀ. +ಅವರು ಮಾತು ಬಿಟ್ಟು ಎಷ್ಟು ಕಾಲ ಆಯ್ತು ಗೊತ್ತ?" +"ಅಲ್ಲ ಮಾರಾಯ. +ಅವರಿಗೆ ಎಷ್ಟು ಒಳ್ಳೆಯ ಎಜುಕೇಷನ್‌ ಕೊಡಿಸಿದ್ದೀ. +ಸುಖ-ಕಷ್ಟ ನೋಡಿದ್ದಾರೆ. +ನಿನ್ನ ಪರಿಸ್ಥಿತಿಯನ್ನೂ ನೋಡ್ತಿದ್ದಾರೆ. +ಮನೆಯಿಂದಲೇ ಕೆಲಸಕ್ಕೆ ಹೋಗಿ ಬರ್ತಿದ್ದಾರೆ. +ಕೆಟ್ಟವರಾಗಿದ್ದರೆ ಮನೆಗೆ ಬರುತ್ತಲೇ ಇರಲಿಲ್ಲ. +ನಿನ್ನ ಮಗಳಿಗೆ ದಿನಾ ಬೆಳಿಗ್ಗೆ ಇಲ್ಲಿಂದಲೇ ಹೋಗಬೇಕು ಅನ್ನುವುದೇನು? +ಅವಳು ಕೆಲಸ ಮಾಡ್ತಿರೋ ಊರಲ್ಲಿ ಮನೆಗಳು ಬಾಡಿಗೆಗೆ ಸಿಗೋದಿಲ್ವ? +ಅಷ್ಟಕ್ಕೂ ಅವರ ಬಗ್ಗೆ ಹೊರಗಿನ ಜನ ಏನಾದರೂ ದೂರು- ಪುಕಾರು ಮಾಡಿದ್ದಾರ?" ಎಂದು ಕೇಳಿದೆ. +ನನ್ನ ನಿಯಂತ್ರಣ ಮೀರಿ ದ್ದನಿ ಗಟ್ಟಿಯಾಗಿ ನನಗೇ ಬೇಸರವಾಯಿತು. +"ಇಲ್ಲ. . . ಇಲ್ಲ. ಅಂಥದ್ದೇನೂ ದೂರು ಇಲ್ಲ" ಅಂದ. + ಹಾಗಿದ್ದರೆ. ಸಮಸ್ಯೆ ಅವರಲ್ಲಿ ಇಲ್ಲ. +ನೀನೇ ಅವರೊಟ್ಟಿಗೆ ಹೊಂದಿಕೊಂಡು ಹೋಗಬೇಕು. +ಆಗದೇ ಇದ್ದರೆ ಅವರಿಗೆ ಕೊಡಬೇಕಾದುದನ್ನು ಕೊಟ್ಟು ಬೇರೆ ಇರಬೇಕು. +ಅದು ಸಾಧ್ಯವಾ?" ಎಂದವನು "ಈ ವಯಸ್ಸಿನಲ್ಲಿ ಇನ್ನೊಂದು ಮದುವೆ ಆಗ್ತೀಯೋ ನೋಡು"ಎಂದು ನಗುತ್ತಾ ತಮಾಷೆ ಮಾಡಿದೆ. +ಅಣ್ಣ ತಕ್ಷಣ ಮಾತಾಡಲಿಲ್ಲ. +ಸ್ವಲ್ಪ ಹೊತ್ತು ಬಿಟ್ಟು "ಇರಲಿ, ಮಧ್ಯಾಹ್ನ ಮಾತಾಡಣ. +ಈಗ ನೀನು ಮಲಗಾದಿದ್ರೆ ಮಲಗು. +ರಾತ್ರಿ ಪ್ರಯಾಣ ಮಾಡಿ ಬಂದಿದೀಯಾ" ಎಂದು ಉಪಚರಿಸಿ ಗದ್ದೆಯ ಕಡೆ ಹೊರಟ. +ಅಣ್ಣ ಹಠಾತ್ತನೆ ತಣ್ಣಗೆ ಆಗಿದ್ದು ಆಶ್ಚರ್ಯವಾಯಿತು. +ಮಕ್ಕಳ ಜತೆ ಮಾತಾಡಿದರೆ ಬಗೆಹರಿಸಬಹುದಾದ ಸಮಸ್ಯೆ ಅನಿಸಿತು. +ಅವರು ಬರಲಿ, ಪ್ರತ್ಯೇಕವಾಗಿ ಮಾತನಾಡಿ ತಂದೆಯ ಬಗ್ಗೆ ಅನುಕಂಪದಿಂದ ಇರಲು ಹೇಳಬೇಕು ಎಂದುಕೊಂಡೆ. +ಜಗುಲಿಯಲ್ಲಿಯೇ ಮಂಚ ಇರಿಸಿದ್ದರು. +ಅದರ ಮೇಲೊಂದು ಹಾಸಿಗೆ. +ರಾತ್ರಿ ಪ್ರಯಾಣದ ಬಳಲಿಕೆ ಕಾಣಿಸಿಕೊಂಡಿತು. +ಹಾಗೆಯೇ ಕಾಲು ಚಾಚಿದೆ. +ಎಚ್ಚರವಾದಾಗ ಅಣ್ಣ ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡುತ್ತಿದ್ದ. +ಹಿಂದಿನ ರಾತ್ರಿ ಮಗಳು ಮಾಡಿದ್ದ ಮೀನುಸಾರು. +ಹೊಳೆ ಮೀನು ಇರಬೇಕು. +ಉಪ್ಪು ಖಾರ ಚೆನ್ನಾಗಿ ಹಿಡಿದು ಉಪ್ಪಿನಕಾಯಿಯಂತೆ ಚಪ್ಪರಿಸುವಷ್ಟು ರುಚಿಯಾಗಿತ್ತು. +ಊರಿನ ಸಂಗತಿಗಳನ್ನು ಮಾತನಾಡುತ್ತ ಊಟ ಮುಗಿಸಿದೆವು. +ಜಗುಲಿಗೆ ಬಂದು ತಾಂಬೂಲ ಹಾಕಿದೆವು. +ಗದ್ದೆ ಕೆಲಸ, ತೋಟದ ಬೇಸಾಯ, ಕೆಲಸಕ್ಕೆ ಜನ ಸಿಗದ ತೊಂದರೆ ಮೊದಲಾದ ಸಂಗತಿಗಳನ್ನು ಅಣ್ಣ ಲೋಕಾಭಿರಾಮವಾಗಿ ಮಾತನಾಡಿದ. +ಮನೆ ಕೆಲಸಕ್ಕೆ ಜನರನ್ನು ಹುಡುಕಲು ನಡೆಸಿದ ಪ್ರಯತ್ನಗಳನ್ನೂ ವಿವರಿಸಿದ. +ಮನೆ ಕೆಲಸಕ್ಕೆ ಜನ ಏನೋ ಸಿಗ್ತಾರೆ. +ಆದರೆ ಅವರಿಗೆ ಒಂದು ದಾರಿಯಾಗಬೇಕು" ಎಂದು ಮೆಲ್ಲಗೆ ಹೇಳುತ್ತಾ "ನಾನು ಇಲ್ಲೇ ಕೆಳಗಿನೂರಿಗೆ ಹೋಗಿ ಬರ್ತೀನಿ. +ನೀನು ಬೇಕಾದರೆ ಗದ್ದೆ ತೋಟದ ಕಡೆಹೋಗಿ ಬಾ" ಎಂದು ಹೇಳಿ ಹೊರಟ. +ಬಿಸಿಲು ಇಳಿಯುತ್ತಿತ್ತು. +ಹಳ್ಳಿ ಮನೆಗಳಲ್ಲಿ ಬಾಗಿಲು ಮುಚ್ಚಿ ಹೋಗುವ ಪರಿಪಾಠ ಇರುವುದಿಲ್ಲ. +ಈಗಿನ ಸ್ಥಿತಿಬೇರೆ. +ಮನೆಯಲ್ಲಿ ಯಾರಾದರೊಬ್ಬರೂ ಇರಲು ಸಾಧ್ಯವಿಲ್ಲದ ಕಾರಣ ಬಾಗಿಲಿಗೆ ಬೀಗ ಹಾಕಿ ಹೋಗುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. +ಅಣ್ಣ ಕೊಟ್ಟಿದ್ದ ಬೀಗವನ್ನು ಮುಂಬಾಗಿಲಿಗೆ ಹಾಕಿ ಗದ್ದೆ ಕಡೆ ಹೊರಟೆ. +ಗದ್ದೆ-ತೋಟ ಸುತ್ತು ಹಾಕಿ ವಾಪಸು ಬರುವ ಹೊತ್ತಿಗೆ ಕತ್ತಲಾಗಿತ್ತು. +ಮಕ್ಕಳಿಬ್ಬರೂ ಬಂದು ತಮ್ಮಲ್ಲಿದ್ದ ಬೀಗದ ಕೈಯಿಂದ ಬಾಗಿಲು ತೆರೆದು ಒಳಗೆ ಸೇರಿದ್ದರು. +ನನ್ನನ್ನು ನೋಡಿ ಸ್ನೇಹ- ವಿಶ್ವಾಸದಿಂದ ವಿಚಾರಿಸಿದರು. +ಮಗಳು ಕಾಫಿ ಕೊಟ್ಟು ತನ್ನ ಕೆಲಸದ ಬಗ್ಗೆ ಹೇಳಿದಳು. +ಮಗನೂ ತನ್ನ ಕಾಲೇಜು ಕೆಲಸದ ವಿವರ ಕೊಟ್ಟ . +ಎಲ್ಲ ಸರಿ ಅಣ್ಣನ ಜತೆ ನೀವಿಬ್ಬರೂ ಯಾಕೆ ಸರಿಯಾಗಿಲ್ಲ? +ಅವನ ಜತೆ ಮಾತೇ ಆಡುವುದಿಲ್ಲವಂತಲ್ಲ. +ನೀವು ತಂದೆ ಮಕ್ಕಳು ಹೀಗಿದ್ದರೆ ಏನು ಚೆನ್ನಾಗಿರುತ್ತದೆ. +ಅವನು ಒಂಟಿ. +ಮೊದಲೇ ಅಭದ್ರತೆ ಇರುತ್ತದೆ. +ನೀವು ಸರಿಯಾಗಿ ನೋಡಿಕೊಳ್ಳದೆ ಇದ್ದರೆ ಅದು ಹೆಚ್ಚಾಗಿ ಅವನ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. +ಅದಕ್ಕೆ ಯಾಕೆ ಅವಕಾಶ ಕೊಡುತ್ತೀರಿ?" ಎಂದು ಅಧಿಕಾರವಾಣಿಗಿಂತ ಸ್ನೇಹಭಾವದಿಂದ ಕೇಳಿದೆ. +ಮಗಳು ಸುಮ್ಮನೆ ನಕ್ಕಳಷ್ಟೆ +ಮಗ ಮಾತ್ರ ನನ್ನ ಪ್ರಶ್ನೆಗಳನ್ನು ನಿರೀಕ್ಷಿಸಿದವನಂತೆ "ಇದನ್ನೆಲ್ಲ ನೀನು ಅವನಿಗೆ ಹೇಳಬೇಕು. +ಅವನಿಗೆ ನಾವೇ ದೂರ ಮಾಡ್ತಿದ್ದೇವೆ ಅನ್ನುವುದು ಬೇಕು. +ಅವನ ಆರೋಗ್ಯ ಈಗಲೇ ಸರಿಯಾಗಿಲ್ಲ. +ಅವನ ಪ್ಲಾನು ಅಂದರೆ." ಎಂದು ಅರ್ಧಕ್ಕೆ ನಿಲ್ಲಿಸಿದ. +ಮತ್ತೆ ಬೇರೆ ವಿಷಯದತ್ತ ಹೊರಳಿದ. +ಅಣ್ಣ ಇನ್ನೂ ಬಂದಿರಲಿಲ್ಲ. +ಅಡುಗೆ ಮನೆಗೆ ಅವರೊಂದಿಗೆ ಹೋದೆ. +ಅಲ್ಲಿ ಒಲೆಯ ಪಕ್ಕ ಕುಳಿತಿದ್ದಾಗ ರಾತ್ರಿ ಅಡುಗೆ ಮಾಡುತ್ತಲೇ ಮಕ್ಕಳಿಬ್ಬರೂ ಕಕ್ಕುಲತೆಯಿಂದ ತಂದೆಯ ಬಗ್ಗೆ ಮಾತನಾಡಿದರು. + "ವಯಸ್ಸಾಗಿದೆ. ಚೆನ್ನಾಗಿ ನೋಡಿಕೊಳ್ಳಬೇಕು. +ನಿಮಗೆ- ತಿಳಿದವರಿಗೆ-ನಾನು ಹೇಳಬೇಕಾ? +ಅವನಿಗೆ ತನ್ನನ್ನು ಮಕ್ಕಳು ನಿಗಾವಹಿಸಿ ನೋಡುತ್ತಿಲ್ಲ ಅನ್ನುವ ಭಯ ಕಾಡುತ್ತಿರಬೇಕು. +ಇನ್ನು ಮುಂದೆ ಅದಕ್ಕೆ ಅವಕಾಶ ಕೊಡಬೇಡಿ" ಎಂದುಹೇಳಿದೆ. +ಇದೆಲ್ಲ ಸರಿ. +ಅವನ ಪ್ಲಾನು ಏನು ಅಂತ ನಿನಗೇ ಗೊತ್ತಾಗುತ್ತದೆ. +ನಾವು ಮಾತ್ರ ಅವನ ಬಗ್ಗೆ ಉದಾಸೀನ ಮಾಡಿಲ್ಲ" ಎಂದು ಮಗ ಹೇಳುತ್ತಿದ್ದಂತೆ ಜಗುಲಿಯಲ್ಲಿ ಅಣ್ಣ ಬಂದ ಸದ್ದಾಯಿತು. +ನಾನು ಹೊರಗೆ ಬಂದೆ. +ನಾನು ಮಕ್ಕಳೊಂದಿಗೆ ಮಾತನಾಡುತ್ತಿದ್ದುದನ್ನು ಅವನು ಕೇಳಿಸಿಕೊಂಡಿದ್ದಂತೆ ತೋರಿತು. +ಆದರೆ ಏನನ್ನೋ ಮುಚ್ಚಿಡುವಂತೆ ತೋರುತ್ತಿತ್ತು. +ಅಣ್ಣ ಮಧ್ಯಾಹ್ನವೇ ಕೋಳಿಯನ್ನು ಹಸಿಗೆ ಮಾಡಿ ತಂದು ಇಟ್ಟಿದ್ದ. +ಅದನ್ನು ಮಗಳು ಊಟಕ್ಕೆ ಸಿದ್ಧಪಡಿಸಿದ್ದಳು. +ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತಾಗ ಅಣ್ಣ ಹೇಳಿದ ಯಾವ ಸಮಸ್ಯೆಯೂ ಪ್ರಸ್ತಾಪಕ್ಕೆ ಬರಲಿಲ್ಲ. +ಕೆಲವು ವಿಷಯಗಳನ್ನು ಲೋಕಾಭಿರಾಮವಾಗಿ ಮಾತಾಡಿದೆವು. +ಮಗಳು ತನ್ನ ಕಚೇರಿಯ ತಮಾಷೆಗಳನ್ನು ಹೇಳುತ್ತಿದ್ದರೆ ಮಗ ಕಾಲೇಜಿನಲ್ಲಿ ಸಹೋದ್ಯೋಗಿಗಳ ಜತೆ ನಡೆಸುತ್ತಿದ್ದ ಕುಶಾಲಿನ ಸಂಗತಿಗಳನ್ನು ಹೇಳುತ್ತಿದ್ದ. +ಊಟದ ಸಂದರ್ಭದಲ್ಲಿ ಅವರೆಲ್ಲರ ವರ್ತನೆಯನ್ನು ಗಮನಿಸುತ್ತಿದ್ದರೆ ಅವರಲ್ಲಿ ಪರಸ್ಪರ ಮಾತುಕತೆಯೇ ಇಲ್ಲವಾ? +ಅಥವಾ ನಾನು ಬಂದಿರುವುದಕ್ಕಾಗಿ ಇಷ್ಟೆಲ್ಲ ಲಹರಿಯಿಂದ ಮಾತನಾಡುತ್ತಿದ್ದಾರಾ ಎಂಬ ಸಂಶಯ ಬರುವಂತಾಯಿತು. +ಆದರೆ ಮಗಳಾಗಲೀ, ಮಗನಾಗಲೀ ಅಪ್ಪನ ಜತೆಗೆ ನೇರವಾಗಿ ಮಾತಾಡುತ್ತಿರಲಿಲ್ಲ. +ಇಬ್ಬರೂ ನನ್ನನ್ನೇ ಉದ್ದೇಶಿಸಿ ಮಾತಾಡುತ್ತಿದ್ದರು. +ಬೆಳಗಾಗುತ್ತಲೇ ಮಕ್ಕಳಿಬ್ಬರೂ ಬೇಗನೇ ಎದ್ದು ಕೆಲಸಕ್ಕೆ ಹೊರಡಲು ತಯಾರಿ ನಡೆಸಿದರು. +ಬೆಳಗಿನ ತಿಂಡಿ ಮಧ್ಯಾಹ್ನಕ್ಕೆ ಅನ್ನವನ್ನೂ ಮಾಡಿಟ್ಟು ಅವಸರದಿಂದ ಸ್ನಾನ ಮುಗಿಸಿ ಹೊರಡುವ ಮುನ್ನ "ನೀನು ಇನ್ನೊಂದುದಿನ ಉಳಿಯುತ್ತೀಯಲ್ಲ" ಎಂದು ಸಲುಗೆಯಿಂದ ಕೇಳಿದರು. +"ಇಲ್ಲ ತಿಂಡಿ ಮುಗಿಸಿ ಮಧ್ಯಾಹ್ನದ ರೈಲಿಗೆ ಹೋಗಿಬಿಡುತ್ತೇನೆ" ಎಂದೆ. +"ಹಾಗಾದರೆ ನಾವು ಬರ್ತೇವೆ" ಎಂದು ಔಪಚಾರಿಕವಾಗಿ ಬೀಳ್ಕೊಂಡು ಹೊರಟರು. +ಅವರು ಮುಂಬಾಗಿಲು ಇಳಿದು ಹೋಗುತ್ತಲೇ ಒಳಗಿನ ಕೋಣೆಯಲ್ಲಿ ಮಲಗಿದ್ದ ಅಣ್ಣ ಎದ್ದು ಹೊರಬಂದ. +"ನೀನು ನಿನ್ನೆ ಹೇಳಿದ್ದನ್ನು ರಾತ್ರಿ ವಿಚಾರ ಮಾಡಿದೆ. +ಅದೇ ಸರಿ ಅಂತ ನನಗೂ ತೋರುತ್ತದೆ. +ಮನೆ ಕೆಲಸಕ್ಕೆ ಬರುವ ಹೆಂಗಸರೂ ಇದ್ದಾರೆ. +ಅವರೂ ಏನಾದರೂ ದಾರಿ ಮಾಡಿ ಅಂತಲೇ ಕೇಳುತ್ತಾರೆ. . " ಎಂದು ಅಣ್ಣನನ್ನ ಕಣ್ಣು ತಪ್ಪಿಸಿ ಹೇಳಿದಾಗ ನಿನ್ನೆ ನಾನು ಏನು ಹೇಳಿದ್ದೆ ಎಂದು ನೆನಪು ಮಾಡಿಕೊಳ್ಳಲು ತಲೆತುರಿಸಿಕೊಳ್ಳಬೇಕಾಯಿತು. +ತಕ್ಷಣ ಮಗ "ಅವನ ಪ್ಲಾನು ಅಂದರೆ. . " ಎಂದು ಅರ್ಧಕ್ಕೆ ನಿಲ್ಲಿಸಿದ ಮಾತು ನೆನಪಿಗೆ ಬಂತು. +ಅಣ್ಣನ ಪ್ಲಾನು ನನ್ನ ಕಲ್ಪನೆಗೂ ಬಂದಿರದಿದ್ದರೂ ಅದು ತಮಾಷೆಯಾಗಿರಲಿ ಎಂದುಕೊಂಡೇ "ಅಂದರೆ,ನೀನು ಈ ವಯಸ್ಸಿನಲ್ಲಿ ಇನ್ನೊಂದು ಮದುವೆ ಆಗುವ ಯೋಜನೆ ಮಾಡ್ತಾ ಇದೀಯಾ?" ಎಂದು ಅಳುಕಿನಿಂದ ಕೇಳಿದೆ. +"ಅದು ಬಿಟ್ಟು ಬೇರೆ ದಾರಿ ನನಗೆ ಕಾಣುತ್ತಿಲ್ಲ" ಎಂದು ಅಣ್ಣ ತಣ್ಣಗೆ ಎಲ್ಲೋ ನೋಡುತ್ತ ಹೇಳಿದಾಗ ನನಗೆ ಸ್ವಲ್ಪ ಹೊತ್ತು ಮಾತು ಹೊರಡಲಿಲ್ಲ. +ಅವ್ವ ಕಚೇರಿಯಿಂದ ಮನೆಗೆ ಬಂದು ವಿಶ್ರಾಂತಿಗೆ ಕುಳಿತುಕೊಳ್ಳುವಂತೆಯೇ ಚಿಕ್ಕ ಮಗ ಉಸಿರಾಟದ ತೊಂದರೆಯಿಂದ ಬಳಲುತ್ತಿರುವುದು ಗೊತ್ತಾಯಿತು. +ಬೆಂಗಳೂರಿನ ಆಸ್ತಮಾ ಶನಿಯ ಕಾಟ. +ಪತ್ನಿ ಕೆಲಸಕ್ಕೆ ರಜಾ ಹಾಕಿ ಮಗುವಿನ ಪಕ್ಕದಲ್ಲಿಯೇ ಕುಳಿತು ಏನೇನೊ ಕಷಾಯ, ಮಾತ್ರೆ, ಎಳೆದುಕೊಳ್ಳುವ ಫಮಲಿನ ಔಷಧಿಯನ್ನು ಉಣಿಸುತ್ತಿದ್ದಾಗ ಶಿವಮೊಗ್ಗದಿಂದ ದೇವೇಂದ್ರ ದೂರವಾಣಿ ಮಾಡಿ "ಅಜ್ಜ ತುಂಬ ಸೀರಿಯಸ್‌,ಈಗಲೋ ಆಗಲೋ ಅನ್ನುವಂತಿದೆ. +ಬೇಗ ಬಂದು ಬಿಡಿ" ಎಂದು ಹೇಳಿ ಅವಸರದಿಂದ ಫೋನಿಟ್ಟುಬಿಟ್ಟ. +ಬೇರೆ ಕಡೆಗೂ ದೂರವಾಣಿ ಮಾಡಬೇಕಿತ್ತೇನೊ. +ದೇವೇಂದ್ರ ನನ್ನ ಅಣ್ಣನ ಹಿರಿಯ ಮಗಳ ಗಂಡ. +ನನಗೂ ಅಳಿಯ. +ಅಜ್ಜ ಎಂದರೆ 85 ಮೀರಿದ ನನ್ನ ತಂದೆ. +ನಾಲ್ಕು ವರ್ಷಗಳಿಂದ ಪಾರ್ಶ್ವವಾಯು ಪೀಡಿತರಾಗಿ ಹಾಸುಗೆಯ ಮೇಲೆ ಮಲಗಿರುವ ಅಪ್ಪನ ಚಿತ್ರವೇ ಕಣ್ಮುಂದೆ ಸುಳಿಯಿತು. +ಹೊಟ್ಟೆಪಾಡಿಗೆ ಊರೂರು ಸುತ್ತುತ್ತಾ ವರ್ಷಕ್ಕೆ ಒಮ್ಮೆ ಮಾತ್ರ ಹೆಂಡತಿ ಮಕ್ಕಳನ್ನು ಕರೆದುಕೊಂಡು ಊರಿಗೆ ಹೋಗುತ್ತ ಇದ್ದವನಿಗೆ ಅಪ್ಪನ ಅಸಹಾಯಕ ಸ್ಥಿತಿ ನೆನಪಾಗುತ್ತಲೇ ಮಲಗಿದ್ದ ಚಿಕ್ಕ ಮಗು ಪಕ್ಕದಲ್ಲಿ ಶುಶ್ರೂಷೆ ಮಾಡುತ್ತಿದ್ದ ಪತ್ನಿಯನ್ನು ಕರೆದೊಯ್ಯುವ ಚಿಂತೆ ಶುರುವಾಯಿತು. +ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮೊದಲಿನಂತೆ ಬಸ್ಸುಗಳ ಕೊರತೆ ಇಲ್ಲ. +ಮಧ್ಯರಾತ್ರಿಗೂ ಒಂದು ಬಸ್ಸು ಹೊರಡುತ್ತದೆ. +ಮಗುವಿನ ಈ ಸ್ಥಿತಿಯಲ್ಲಿ ಪತ್ನಿಯನ್ನೂ ಜತೆಗೆ ಕರೆದುಕೊಂಡು ಹೋಗುವಂತಿರಲಿಲ್ಲ. +ಕರೆದೊಯ್ಯದಿದ್ದರೆ ಇಂಥ ಸಂದರ್ಭದಲ್ಲಿಯೂ ಬರಲಿಲ್ಲ ಎಂಬ ನಿಷ್ಠುರದ ಮಾತಿಗೆ ಅವಕಾಶ. +ಅಷ್ಟಕ್ಕೂ ನನ್ನ ಪತ್ನಿ ಬಂದು ಹತ್ತಿರ ನಿಂತರೆ ಅಪ್ಪ ಅದನ್ನು ಗುರುತಿಸುವ ಆವಸ್ಥೆಯನ್ನು ದಾಟಿ ವರ್ಷಗಳೇ ಆಗಿದ್ದವು. +ಪಾರ್ಶ್ವವಾಯು ತಗುಲಿದ ಮೂರು ತಿಂಗಳ ಅವಧಿಯಲ್ಲಿ ಮಾತ್ರ ಅಪ್ಪನಿಗೆ ಬಂದು ಹೋಗುವವರ ಗುರುತು ಸಿಗುತ್ತಿತ್ತು. +ನಂತರ ನೆನಪಿನ ಶಕ್ತಿ ಕುಂದಿತು. +ಅವ್ವನ ನೆರವಿನಲ್ಲಿ ನಿಧಾನವಾಗಿ ಎದ್ದು ಓಡಾಡುತ್ತಿದ್ದವನು ಒಂದು ಬೆಳಿಗ್ಗೆ ಏಳಲೇ ಇಲ್ಲ. +ಅಸಹಾಯಕತೆಯಿಂದ ಕಣ್ಣು ಬಿಡುತ್ತಿದ್ದ. +ಒಂದು ನರಳಿಕೆಯೂ ಕೇಳಲಿಲ್ಲ. +ಆದರೆ ನಿತ್ಯಕರ್ಮಗಳು ಜರುಗುತ್ತಿದ್ದವು. +ಗೊತ್ತಾಗದಂತೆಯೇ ಹಾಸಿಗೆ ಒದ್ದೆಯಾಗುತ್ತಿತ್ತು. +ಎಲ್ಲವೂ ಅಲ್ಲಿಯೇ ಆಗುತ್ತಿತ್ತು. +ನೀರು ನಿಂತು ಹಿಂಸೆಯಾಗುತ್ತಿದ್ದರೂ ಅದನ್ನು ಹೇಳುವ ಸ್ಥಿತಿಯಲ್ಲಿರಲಿಲ್ಲ. +ಬಾಯಿಗೆ ಅನ್ನ ಕಲೆಸಿ ಇಟ್ಟರೆ ಜಗಿದು ನುಂಗುತ್ತಿದ್ದ. +ಆದ್ದರಿಂದ ಅವ್ವ ಹೊತ್ತಿಂದ ಹೊತ್ತಿಗೆ ಅನ್ನ ಸಾರು, ಅನ್ನ ಮಜ್ಜಿಗೆ ಇತ್ಯಾದಿ ಕಲೆಸಿ ಬಾಯಿಗಿಡುತ್ತಿದ್ದರು. +ಅದನ್ನು ಬೇಕಾಗುವಷ್ಟು ತಿನ್ನುತ್ತಿದ್ದ. +ಬೇಡವೆನ್ನಿಸಿದಾಗ ನಿಲ್ಲಿಸುತ್ತಿದ್ದ. +ಹೊರಗಿನ ಪ್ರಜ್ಞೆ ಮರೆಯಾಗಿ ಹೋಗಿತ್ತು. +ಹಾಸಿಗೆಯನ್ನು ನಿತ್ಯವೂ ಬದಲಿಸಬೇಕಿತ್ತು. +ವಯಸ್ಕರ ಮೂತ್ರದವಾಸನೆ ಕಟು, ಸ್ಟಲ್ಪ ಹೊತ್ತು ಬಿಟ್ಟರೆ ಇಡೀ ಜಗುಲಿ ವ್ಯಾಪಿಸುತ್ತಿತ್ತು. +ಅದನ್ನು ತಕ್ಷಣವೇ ಸ್ವಚ್ಛಗೊಳಿಸಬೇಕಿತ್ತು. +ಅಪ್ಪನಿಗಿಂತ ವಯಸ್ಸಿನಲ್ಲಿ ನಾಲ್ಕೈದು ವರ್ಷವಷ್ಟೆ ಕಿರಿಯಳಾಗಿದ್ದ ಅವ್ವ ಎಲ್ಲವನ್ನೂ ಯಾರೊಬ್ಬರ ನೆರವೂ ಇಲ್ಲದೆ ನಿರ್ವಹಿಸುತ್ತಿದ್ದರು. +ಸ್ನಾನಕ್ಕೆ ಕರೆದೊಯ್ಯುವಾಗ ಮಾತ್ರ ಅಣ್ಣನ ಇಲ್ಲವೇ ಅಣ್ಣನ ಮಕ್ಕಳ ನೆರವನ್ನು ಪಡೆಯುತ್ತಿದ್ದರು. +ಅಪ್ಪನಿಗೆ ಬಾಯಿ ಬಿದ್ದು ಹೋಗಿದೆ ಎಂದು ತಿಳಿದಾಗ ಹುಬ್ಬಳ್ಳಿಯಲ್ಲಿದ್ದ ನಾನು ಕೂಡಲೇ ಸಂಸಾರ ಸಮೇತಧಾವಿಸಿದ್ದೆ. +ಮೂರು ದಿನ ಇದ್ದು ಅಸಹಾಯಕನಾಗಿ ಅಪ್ಪನ ಸ್ಥಿತಿಯನ್ನು ನೋಡಿದೆ. +ಅಪ್ಪನ ಸ್ಥಿತಿ ಏರಲಿಲ್ಲ,ಇಳಿಯಲಿಲ್ಲ. +ಮಲಗಿದ ಭಂಗಿಯಲ್ಲಿಯೇ ಸ್ನಾನಕ್ಕೆ ಹೊತ್ತೊಯ್ಯುವುದು ಅನಿವಾರ್ಯವಾಗಿತ್ತು. +ಅಲ್ಲಿ ಕುರ್ಚಿಯ ಮೇಲೆ ಪ್ರಯಾಸದಿಂದ ಕೂಡಿಸಿ ಹದವಾದ ಬಿಸಿನೀರಿನಿಂದ ಸ್ನಾನ ಮಾಡಿಸುತ್ತಿದ್ದರು ಅವ್ವ. +ಸ್ನಾನದ ನಂತರ ಹಾಗೆಯೇ ಹೊತ್ತುಕೊಂಡು ಬರುವುದು, ಸಿದ್ಧಪಡಿಸಿದ ಹಾಸಿಗೆ ಮೇಲೆ ಮಲಗಿಸುವುದು. +ಸದಾ ಮಲಗಿದ್ದರೆ ಬೆನ್ನು ತರಚಿ ಗಾಯವಾದರೆ ಮಾಯುವುದು ಕಷ್ಟ ಎಂದು ಅವ್ವ ಎಚ್ಚರಿಕೆಯಿಂದ ಅಪ್ಪನ ಮಗ್ಗಲು ಬದಲಿಸುತ್ತಾ ಬೆನ್ನಲ್ಲಿ ಹುಣ್ಣು ಆಗದಂತೆ ನೋಡಿಕೊಂಡಿದ್ದರು. +ಸ್ನಾನ ಮಾಡಿಸುತ್ತಲೇ ಮೈ ಸಂದುಗಳಿಗೆಲ್ಲಾ ಪೌಡರು ಬಳಿಯುತ್ತಿದ್ದರೆ ಮೊದಲ ಮಗನನ್ನು ನಾವು ನೋಡಿಕೊಳ್ಳುತ್ತಿದ್ದ ದಿನಗಳು ನೆನಪಿಗೆ ಬರುತ್ತಿದ್ದವು. +ಮೂರು ದಿನ ಊರಲ್ಲಿ ಇದ್ದವರು ಅಪ್ಪನ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಕಾಣದಿದ್ದಾಗ ಹುಬ್ಬಳ್ಳಿಗೆ ವಾಪಸಾದೆವು. +ಅಪ್ಪ ಕಣ್ಣೆದುರು ಇರಲಿಲ್ಲ. +ಆದರೆ ಅವನ ಚಿಂತೆಯೇ ತುಂಬಿರುತ್ತಿತ್ತು. +ಅಪ್ಪನ ಉಪಚಾರಕ್ಕಾಗಿ ನಾವು ಕಳಿಸುತ್ತಿದ್ದ ದುಡ್ಡು ಯಾವ ಮೂಲೆಗೆ ಸಾಕಾಗುತ್ತಿತ್ತೊ. +ಅಪ್ಪನ ಉಪಚಾರ, ಪೌಡರು, ಜಗುಲಿಯಲ್ಲಿ ನಿತ್ಯವೂ ಸಿಂಪಡಿಸಲು ಫಿನಾಯಿಲ್‌, ಬಟ್ಟೆ ಒಗೆಯುವ ಪೌಡರುಗಳಿಗೆ ದುಡ್ಡು ಸಾಕಷ್ಟು ಬೇಕಿತ್ತು. + ಅಣ್ಣ ಯಾವತ್ತೂ ಬಾಯಿ ಬಿಟ್ಟು ಕೇಳಲಿಲ್ಲ. +ಮತ್ತೆ ಮೂರು ವರ್ಷದಲ್ಲಿ ನಾವು ಬೆಂಗಳೂರಿಗೆ ವಾಪಸಾದೆವು. +ಊರಿಗೆ ಹೋಗಬೇಕು ಅಂದುಕೊಳ್ಳುತ್ತಿದ್ದೆ. +ಆದರೆ ಆಗಿರಲಿಲ್ಲ. +ದೇವೇಂದ್ರನ ತುರ್ತು ಸಂದೇಶದಲ್ಲಿ ಹೆಚ್ಚಿನ ವಿವರಗಳಿರಲಿಲ್ಲ. +ನಾನೂ ಬರುತ್ತೇನೆ?ಎಂದು ಪತ್ನಿ ಹೇಳಿದರೂ ಮಗುವಿನ ಸ್ಥಿತಿ ಅದಕ್ಕೆ ಆಸ್ಪದ ನೀಡುವಂತಿರಲಿಲ್ಲ. +ಮಕ್ಕಳನ್ನೂ ಪತ್ನಿಯನ್ನೂ ಅನಿವಾರ್ಯವಾಗಿ ಮನೆಯಲ್ಲಿಯೇ ಉಳಿಸಬೇಕಾಯಿತು. +ಒಬ್ಬನೇ ಬಸ್‌ ನಿಲ್ದಾಣಕ್ಕೆ ಬಂದೆ. +ಸಿಕ್ಕಿದ ಬಸ್ಸು ಹಿಡಿದು ಕುಳಿತೆ. +ರಾತ್ರಿಯ ಬಸ್‌ ಪ್ರಯಾಣ. +ನಿದ್ದೆ ಬರುವಂತಿರಲಿಲ್ಲ. +ಊರಿನ ನೆನಪುಗಳು ಬರತೊಡಗಿದವು. +ನಾಲ್ಕು ವರ್ಷಗಳಿಂದ ತರಕಾರಿಯಂತೆ ಹಾಸುಗೆ ಮೇಲೆಯೇ ಬದುಕುತ್ತಿದ್ದ ಅಪ್ಪ ವಾರದ ಹಿಂದೆಯಷ್ಟೇ ಊರಲ್ಲಿದ್ದ ಅಣ್ಣ ಕಾಗದ ಬರೆದಿದ್ದ. +"ಅಪ್ಪ ಈಗ ಗಂಜಿಯನ್ನೂ ತೆಗೆದುಕೊಳ್ಳುತ್ತಿಲ್ಲ ಕೇವಲ ಹಾಲನ್ನು ಮಾತ್ರಬಾಯಲ್ಲಿ ಹಾಕಲು ಸಾಧ್ಯವಾಗುತ್ತಿದೆ. +ಈ ಸ್ಥಿತಿಯಲ್ಲಿ ಅವನು ಎಷ್ಟು ದಿನ ಇರಬಹುದು?"ಎಂದುಭಯಪಟ್ಟದ್ದ. +ರಾತ್ರಿ ಪ್ರಯಾಣದ ಆರೇಳು ಗಂಟೆಗಳ ಕಾಲ ಎಚ್ಚರವಾಗಿದ್ದಾಗ ಎಂತೆಂಥ ಯೋಚನೆಗಳು ಬರುತ್ತವೆ ಎಂದು ಕ್ರಮ ಇಡಲು ಸಾಧ್ಯವಾಗಲಿಲ್ಲ. +ಒಮ್ಮೆ ಒಂದು ಘಟನೆ ನೆನಪಾದರೆ ಅದಕ್ಕೆ ಸಂಬಂಧಿಸಿದ ಎಷ್ಟೋ ಘಟನೆಗಳು ಕಣ್ಣೆದುರಿಗೆ ಬರುತ್ತವೆ. +ಗೊತ್ತುಗುರಿ ಇಲ್ಲದೆ ಯಾವುಯಾವುದೋ ಚಿತ್ರಗಳು ಚಿತ್ತಭಿತ್ತಿಯಲ್ಲಿ ಪಡಿಮೂಡುತ್ತವೆ. +ನನ್ನಲ್ಲಿ ಉದ್ದೇಗ ಇರಲಿಲ್ಲ. +ಆದರೂ ನೆನಪುಗಳು ಹತ್ತಿಪ್ಪತ್ತು ವರ್ಷ ಹಿಂದೆ ಮುಂದೆ ಸರಿದು ನಾಳೆ ಮುಂಜಾನೆ ಊರಿನಲ್ಲಿ ಎಂಥ ಸನ್ನಿವೇಶ ಎದುರಾಗಬಹುದೆಂಬ ಚಿತ್ರವನ್ನು ಕಲ್ಪಿಸಿಕೊಳ್ಳಲು ಮೊದಲಿಟ್ಟಿತು. +ಶಿವಮೊಗ್ಗ ಸೇರಿದಾಗ ಬೆಳಗಿನ ಐದು ಗಂಟೆ, ಅಲ್ಲಿಂದ ಇನ್ನೊಂದು ಬಸ್ಸು ಹಿಡಿದು ಊರು ಹತ್ತಿರದ ಹೆದ್ದಾರಿಪುರದಲ್ಲಿ ಇಳಿದಾಗ ಆರೂವರೆ. +ಚಿಕ್ಕ ಊರು, ಆ ಹೊತ್ತಿಗಾಗಲೇ ರಸ್ತೆ ಬದಿಯ ಮನೆಗಳಿಂದ ನೀಲಿ ಹೊಗೆ ಏಳುತ್ತಿತ್ತು. +ಅಲ್ಲಿಂದ ಸುಮಾರು ಒಂದು ಕಿಲೋಮೀಟರ್‌ ಕಾಡು ಹಾದಿಯಲ್ಲಿ ಸಾಗಿದರೆ ನಮ್ಮ ಮನೆ. +ಹಾದಿ ಬದಿಯಲ್ಲಿ ಶಿವಣ್ಣನ ಮನೆ. +ನನ್ನ ಬರವನ್ನು ಅವರ ಮನೆಯ ನಾಯಿ ಬೊಗಳುತ್ತಾ ಸಾರಿದಾಗ ಶಿವಣ್ಣ ಹೊರಗೆ ಬಂದ. +ನನ್ನೊಟ್ಟಿಗೆ ಹೈಸ್ಕೂಲಿನಲ್ಲಿ ಮೂರು ವರ್ಷ ಕಳೆದಿದ್ದ ಸಹಪಾಠಿ. +"ಅಂತೂ ಬಂದ್ಯಲ್ಲ ಮಾರಾಯ. +ಎಲ್ಲಿ ನಿನಗೆ ಮುಖ ಸಿಗದೆ ಹೋಗುತ್ತೋ ಅಂತ ಹೇಳ್ತಿದ್ದರು. +ಅಜ್ಜಿ ಅಂತೂ ಮೂಲೆ ಸೇರಿ ಬಿಟ್ಟಿದೆ". +ಎಂದು ಅಗತ್ಯವಿದ್ದ ಮಾಹಿತಿಗಳನ್ನು ನೀಡಿದ. +ನಿರೀಕ್ಷಿತವೇ ಆಗಿದ್ದರಿಂದ ಹೆಚ್ಚುಆಘಾತವಾಗಲಿಲ್ಲ. +ಜತೆಗೆ ಅವನೂ ಜತೆಯಾದ. +"ರಾತ್ರಿಯೇ ಹೋಗಿದ್ದೆ. +ಇಲ್ಲಿ ಮನೇಲಿ ಹೆಂಗಸೊಂದೇ. +ಚಿಕ್ಕ ಮಕ್ಕಳು ಬೇರೆ. +ಸ್ವಲ್ಪ ಕೆಲಸವೂ ಇತ್ತು"ಎಂದು ಮನೆಗೆ ವಾಪಸು ಬಂದಿದ್ದಕ್ಕೆ ಕಾರಣ ಹೇಳತೊಡಗಿದ. +ಮನೆ ಹತ್ತಿರ ಬರುತ್ತಿದ್ದಂತೆ ಉದ್ವೇಗ, ಅವ್ವನನ್ನು ಎದುರಿಸುವುದು ಹೇಗೆ? +ಸಮಾಧಾನ ಮಾಡುವುದು ಹೇಗೆ? +ಮಕ್ಕಳು ಬೆಳೆದು ಸ್ವಂತ ಸಂಸಾರ ಮಾಡಿಕೊಂಡಾಗ ಅಪ್ಪನ ಸಾವು ಅಷ್ಟೊಂದು ತೀವ್ರವಾಗಿ ತಟ್ಟದಿರಬಹುದು. +ಆದರೆ ಜೀವಮಾನದುದ್ದಕ್ಕೂ ಜತೆಯಾಗಿ ಇದ್ದ ಗಂಡ ಇಲ್ಲ ಎಂದಾಗ ವೃದ್ಧಜೀವ ಅದನ್ನು ಸಹಿಸಿಕೊಳ್ಳುವುದು ಹೇಗೆ? +ಅಷ್ಟು ಹೊತ್ತು ಕಾಣಿಸಿಕೊಳ್ಳದೇ ಇದ್ದ ದುಃಖದ ಒತ್ತಡ ಕಣ್ಣಲ್ಲಿ ನಿಧಾನವಾಗಿ ಇಳಿಯಲಾರಂಭಿಸಿದ ನೀರು. +ಅವನ್ನು ಒರೆಸಿಕೊಳ್ಳುತ್ತಲೇ ಮನೆಯೊಳಕ್ಕೆ ಕಾಲಿಟ್ಟೆ. +ಜಗುಲಿಯಲ್ಲಿ ದಟ್ಟವಾಗಿ ಮಡುಗಟ್ಟಿದ್ದ ಮೌನ. +ಧೂಪದ ಹೊಗೆ. +ಮಧ್ಯೆ ಅಪ್ಪನನ್ನು ಆಲಂಕರಿಸಿ ಕೂಡಿಸಿದ ಚಿತ್ರ ಅಪ್ಪನ ಪಕ್ಕದಲ್ಲಿ ಬಂಧುಗಳು ಮಿತ್ರರು ಅಂತಿಮ ಗೌರವ ಸೂಚಿಸಲು ತಂದ ತೆಂಗಿನಕಾಯಿ ಹೂವು ಕರ್ಪೂರಗಳ ರಾಶಿ. +ನನ್ನನ್ನು ನೋಡುತ್ತಲೇ ಅಣ್ಣ ಎದ್ದು ಬಂದ. +ಕಣ್ಣೀರು ಇಳಿಯುತ್ತಿದ್ದವು. +ಮೂಗು ಒರೆಸಿಕೊಳ್ಳುತ್ತಾ ಅಪ್ಪನ ಕೊನೆಯ ಕ್ಷಣಗಳನ್ನು ನೆನಪಿಗೆ ತಂದುಕೊಂಡ. +ನಿನ್ನೆ ಮಧ್ಯಾಹ್ನ ಅರ್ಧ ಲೋಟ ಹಾಲಷ್ಟೇ ಹೋಗಿತ್ತು. +ಗಂಟಲಿನಲ್ಲಿ ಗೊರ ಗೊರ ಸದ್ದು ಅವ್ವನಿಗೆ ಗಾಬರಿಯಾಗಿದೆ. +ಸುದ್ದಿ ಕೊಡಲು ಆಗಲೇ ಹೇಳಿದ್ದು. +ರಾತ್ರಿ ಎಷ್ಟು ಪ್ರಯತ್ನಪಟ್ಟರೂ ಬಾಯಿ ತೆಗೆಸಲು ಸಾಧ್ಯವಾಗಲಿಲ್ಲ. +ಅವ್ವ ಮತ್ತೆ ಮತ್ತೆ ಪ್ರಯತ್ನ ನಡೆಸಿದ್ದಾರೆ. +ಸಂಜೆಯಿಂದ ಹಾಸಿಗೆಯೂ ಒದ್ದೆಯಾಗಿಲ್ಲ. +ರಾತ್ರಿ ಹನ್ನೊಂದರ ಹೊತ್ತಿಗೆ ಗಂಟಲಿನಿಂದ ವಿಚಿತ್ರ ಸದ್ದು. +ಉಸಿರು ಎಳೆದುಕೊಳ್ಳುವ ಪ್ರಯಾಸ ಕೇಳಿಸಿದೆ. +ಬಾಯಲ್ಲಿ ಹಾಲು ಹಾಕಲು ನಡೆಸಿದ ಯತ್ನ ಯಶಸ್ವಿಯಾಗಿಲ್ಲ. +ಅವ್ವ ಒಳಗೆ ಕತ್ತಲು ಆವರಿಸಿದ್ದ ಕೋಣೆಯಲ್ಲಿ ಮಂಚದ ಮೇಲೆ ಮಲಗಿದ್ದರು. +ನನ್ನನ್ನು ನೋಡುತ್ತಲೇ ನಿಧಾನವಾಗಿ ಎದ್ದು "ಮಕ್ಕಳು ಚೆನ್ನಾಗಿದ್ದಾರಾ?"ಎಂದು ನನ್ನ ಮಕ್ಕಳ ಕ್ಷೇಮ ವಿಚಾರಿಸಿದರು. +ಏನು ಹೇಳಬೇಕೆಂದು ತೋಚದೆ ತಡವರಿಸುತ್ತಿದ್ದಾಗ "ಇನ್ನೇನು ಎಲ್ಲಾ ಮುಗೀತಲ್ಲಪ್ಪ ನಾನೊಬ್ಬಳು ಹದ್ದಿನಂತೆ ಇನ್ನೂ ಉಳಿದಿದೀನಿ"ಎಂದು ಮುಲುಗುತ್ತಾ ಮತ್ತೆ ಮಲಗಿಕೊಂಡರು. +ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಮನೆ ಹಿಂಬದಿಯೇ ದೊಡ್ಡ ಚಿತೆ ಸಿದ್ಧವಾಯಿತು. +ಅಪ್ಪ ಊರಿನಲ್ಲಿಯೇ ಯಜಮಾನಿಕೆಯ ಗೌರವ ಪಡೆದ ಹಿರಿಯ ತಲೆ. +ಅವನು ಕಾಯಿಲೆ ಬಿದ್ದಾಗ ಇಡೀ ಊರುಮನೆ ಎದುರು ನೆರೆದಿತ್ತು. +ನಮ್ಮ ಮನೆಯವರು ಯಾರು ಎದುರಾದರೂ ಅಪ್ಪನ ಕ್ಷೇಮ ಸಮಾಚಾರದ ಸುದ್ದಿಯಿಂದಲೇ ಮಾತು ಮೊದಲಾಗುತ್ತಿತ್ತು. +ನಿನ್ನೆಯಿಂದಲೂ ಮನೆಯಲ್ಲಿ ಸೇರಿದ್ದ ಹೆಂಗಸರು ಮನೆಯಲ್ಲಿದ್ದ ನಮ್ಮ ಕುಟುಂಬ ಹಾಗೂ ಬಂಧುಗಳ ಊಟೋಪಚಾರದ ವ್ಯವಸ್ಥೆ ನೋಡಿಕೊಂಡಿದ್ದಾರೆ. +ನಮ್ಮೂರಿನ ಪದ್ಧತಿ ಎಂದರೆ ಯಾರದೇ ಮದುವೆ ಇರಲಿ, ಸಾವಿನಂಥ ಸಂದರ್ಭ ಇರಲಿ, ಮನೆಗೊಬ್ಬರಂತೆ ಗಂಡು-ಹೆಣ್ಣಾಳುಗಳು ಬರುತ್ತಾರೆ. +ಎಲ್ಲ ಕೆಲಸಗಳನ್ನೂ ಮಾಡಿ ಹೋಗುತ್ತಾರೆ. +ಅದಕ್ಕೆ ಅವರು ಪಡೆಯುವ ಸಂಭಾವನೆ ಎಂದರೆ ಒಂದು ನಗುಮುಖದ ಉಪಚಾರ. +ಸಾವಿನ ಮನೆಯಾದರೆ ತಾವೇ ಅಡುಗೆ ಮಾಡಿಕೊಂಡು ಬಂದು ದುಃಖತಪ್ತರ ದಣಿವು ಶಮನಗೊಳಿಸುತ್ತಾರೆ. +ಚಿತೆಯನ್ನು ಸಿದ್ಧಪಡಿಸುವ, ಅದಕ್ಕೆ ಬೇಕಾಗುವ ಎಲ್ಲವನ್ನೂ ಗೌರವದಿಂದ, ಶ್ರದ್ಧೆಯಿಂದ ಸಂಗ್ರಹಿಸಿ ಮಾಡಿ ಮುಗಿಸುತ್ತಾರೆ. +ಊರಿನ ಆಜುಬಾಜಿನಲ್ಲಿ ಕಾಡು ಇನ್ನೂ ಇರುವುದರಿಂದ ಕಟ್ಟಿಗೆಗೆ ಸದ್ಯಕ್ಕೆ ಕೊರತೆ ಆಗುತ್ತಿಲ್ಲ. +ಆದ್ದರಿಂದಲೇ ಅಣ್ಣನನ್ನು ಕೇಳಿ ಚಿತೆಯ ಸ್ಥಳವನ್ನು ಗುರುತು ಮಾಡಿದ ಊರಿನ ಹಿರಿಯರು, ಹುಡುಗರೊಂದಿಗೆ ಜತೆ ಸೇರಿ ಮಧ್ಯಾಹ್ನ ಎರಡು ಗಂಟೆಗೆಲ್ಲಾ ಸೂಡು ಸೇರಿಸಿ ಹೊರಗಡೆ ಕಾಯತೊಡಗಿದ್ದರು. +ನಮ್ಮೂರಲ್ಲಿ ಹಿರಿಯರಿಂದ ಬಂದ ವಿಧಾನಗಳೇ ಪ್ರಮಾಣ . +ಬರುವವರೆಲ್ಲಾ ಬಂದು ಅಂತಿಮ ದರ್ಶನ ಪಡೆದ ನಂತರ ಸಿದಿಗೆಯ ಮೇಲೆ ಸಾಗಿಸಿ ಮಧ್ಯದಲ್ಲಿ ಒಂದು ಕಡೆ ಇಳಿಸಿ ಅಂತಿಮ ಉಣಿಸನ್ನು ಹಾಲುಗಂಜಿಯ ರೂಪದಲ್ಲಿ ಹಾಕಿದರೆ ಇನ್ನು ಇಹದ ಸಂಪರ್ಕ ಕಳಚಿದಂತೆ. +ಉಳಿದಿರುವುದು ಕಟ್ಟಿಗೆಯ ಮೇಲೆ ಮಲಗಿಸಿ ಪಂಚಭೂತಗಳಲ್ಲಿ ಲೀನಗೊಳಿಸುವ ಕ್ರಿಯೆ. +ನಾವು ಮಕ್ಕಳು ಅಪ್ಪನ ಸೇವೆಯನ್ನು ಕಣ್ಣೀರಿಡುತ್ತಲೇ ಮಾಡಿ ಮುಗಿಸಿದೆವು. +ನಮ್ಮೂರಲ್ಲಿ ಸ್ಮಶಾನಕ್ಕೆ ಹೆಂಗಸರು ಬರಬಾರದೆಂಬ ವಿಧಿಯೇನೂ ಇಲ್ಲ. +ಹಾಗೆಯೇ ಪುರೋಹಿತರ ಮಧ್ಯಸ್ಥಿಕೆಯೂ ಇಲ್ಲ. +ಎಪ್ಪತ್ತು ಮಿಕ್ಕಿದ್ದರೂ ಕೈ ತುಂಬ ಹಸಿರು ಬಳೆ ಇಟ್ಟುಕೊಳ್ಳುತ್ತಿದ್ದ ಅವ್ವ ಇನ್ನು ಹಸಿರು ಬಳೆ ತೆಗೆದು ಬೆಳ್ಳಿಯಬಳೆ ಹಾಕಿಕೊಳ್ಳಬೇಕೇ ಎಂಬುದನ್ನು ಕಲ್ಪಿಸಿಕೊಳ್ಳುವುದೂ ನಮಗೆ ಕಷ್ಟವಾಯಿತು. +ಮೂರನೇ ದಿನ ಬಳೆತೆಗೆಯುವ ಪದ್ಧತಿಯಂತೆ. +ಮೂರನೇ ದಿನದ ಕ್ರಿಯೆಗಳನ್ನು ಮುಗಿಸಿ ನಾನು ಬೆಂಗಳೂರಿಗೆ ವಾಪಸಾಗಬೇಕು. +ಅವ್ವನನ್ನು ಸಮಾಧಾನ ಪಡಿಸುವುದು ಹೇಗೆ? +ತಾಳಿ, ಬಳೆ ಮೊದಲಾದ ಐದೆತನದ ಲಕ್ಷಣಗಳನ್ನು ತೆಗೆದುಬರಿಗೊರಳಲ್ಲಿ ಇರುವ ಅವ್ವನನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಿತ್ತು. +ಅಪ್ಪನೇ ಯಾವಾಗಲೋ ಒಮ್ಮೆ ಹೇಳಿದ್ದ. +ಅವನು ಓದಿದ್ದೇ ಆಗಿನ ಒಂದೆರಡು ತರಗತಿಗಳು. +ಗಾಂವಠಿ ಶಾಲೆಯಲ್ಲಿ ಮರಳಿನ ಮೇಲೆ ಅಕ್ಷರ ತಿದ್ದಿಕಲಿತಿದ್ದ ವಿದ್ಯೆ, ನಾವು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ತರುತ್ತಿದ್ದ ಗಂಥಾಲಯದ ಕಥೆ ಪುಸ್ತಕಗಳನ್ನು ನಿಧಾನವಾಗಿ ಒಂದೂ ಪುಟ ಬಿಡದಂತೆ ಓದುತ್ತಿದ್ದ. +ಪುಸ್ತಕದಲ್ಲಿ ಅಚ್ಚಾಗಿದ್ದ ಯಾವುದೇ ವಿಚಾರದಲ್ಲಿಯೂ ಅತೀವ ಶ್ರದ್ಧೆ. +ಅದು ನಿಜವೇ ಇರಬೇಕು ಎಂಬ ನಂಬಿಕೆ. +ಆದ್ದರಿಂದಲೇ ಆಗಾಗ ಸಮಯಾನುಸಾರ ಸರ್ವಜ್ಞನ ವಚನಗಳನ್ನು ಹೇಳುವುದಿತ್ತು. +ಯಾವುದೋ ಪುಸ್ತಕದಲ್ಲಿ ಓದಿದ್ದನಂತೆ. +ಅದನ್ನೇ ನಾವೆಲ್ಲಾ ಒಟ್ಟಿಗೆ ಸೇರಿದ್ದಾಗ ಹೇಳಿದ್ದು ನೆನಪಿಗೆ ಬಂತು. +"ಗಂಡ ಸತ್ತ ಮೇಲೆ ಹೆಂಗಸರ ಬಳೆ ಯಾಕೆ ತಗೀತಾರೆ? +ತಲೆ ಯಾಕೆಬೋಳಿಸ್ತಾರೆ? +ಈ ಹುಚ್ಚು ಮುಂಡೇಗಂಡ್ರು ಮನೆ ಹೆಂಗಸರು ಮನೇ ಒಳ್ಗೇ ತಮ್ಮ ಅಂಕೇಲಿ ಬಿದ್ದಿರಲಿ ಅಂತಮಾಡಿಕೊಂಡಿರೊ ಹುನ್ನಾರ" ಎಂದಿದ್ದ. +ಅದನ್ನು ನೆನಪಿಸಿಕೊಂಡೆ. +"ಅಪ್ಪ ಈಗ ಇಲ್ಲ ಎಂದು ಹೇಳುವುದಕ್ಕೆ ನನಗೆ ಧೈರ್ಯವಿಲ್ಲ. +ಈ ಒಂಬತ್ತು ಅಂಕಣದ ಮುಚ್ಚಿಗೆ ಮನೆಯನ್ನು ಅವನೇ ನಿಂತು ಕಟ್ಟಿಸಿದ್ದು. +ಮೇಲಿನ ತೋಟ ಅವನೇ ಸ್ವಂತ ಬೆವರು ಸುರಿಸಿ ಬೆಳೆಸಿದ್ದು. +ಮನೆ ಎದುರಿನ ಸಾಲು ಸಾಲು ತೆಂಗಿನ ಮರಗಳಿಗೆ ಅವನೇ ಬಾವಿಯಿಂದ ನೀರು ಸೇದುಹಾಕಿದ್ದು. +ಈ ಎಲ್ಲದರ ಜತೆಗೂ ಅಪ್ಪನ ಅಸ್ತಿತ್ವ ಇದೆ. +ಅವನು ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ"ಎಂದು ದೀರ್ಘಾವಾಗಿಯೇ-ಅಂದು ಮಾತನಾಡಿದ್ದೆ. +ನನ್ನ ಮಾತನ್ನು ಯಾರೂ ವಿರೋಧಿಸಲಿಲ್ಲ. +ಅವ್ವ ಅದನ್ನು ಕೇಳಿಸಿಕೊಂಡಿದ್ದರೂ "ಇಲ್ಲಪ್ಪ ನನಗೆ ಯಾಕೊ ಬಳೆ ಇಟ್ಟುಕೊಳ್ಳಲು ಮನಸ್ಸೇ ಆಗುತ್ತಿಲ್ಲ "ಎಂದು ನಮ್ಮೆಲ್ಲರ ಕರುಳು ಕಿವಿಚುತ್ತಿರುವಂತೆ ಗಾಜಿನ ಬಳೆ ಒಡೆದು ತೆಗೆದು ಬೆಳ್ಳಿಯ ಬಳೆ ಹಾಕಿಕೊಂಡರು. +ಮೂರನೇ ದಿನದ ಕ್ರಿಯೆಗಳಿಗೆ ಮಕ್ಕಳಲ್ಲಿ ಒಬ್ಬರು ತಲೆಮುಡಿ ಕೊಡಬೇಕು. +ನಾನು ಸಿದ್ಧನಾಗಿದ್ದೆ. +ಆದರೆ ಊರಲ್ಲಿಯೇ ಇದ್ದು ಅಪ್ಪನ ಕೊನೆಯ ವರ್ಷಗಳ ಆರೈಕೆ ನಡೆಸಿದ್ದ ಅಣ್ಣ ತಾನೇ ಕೊಡುತ್ತೇನೆ ಎಂದ. +ಮತ್ತೊಬ್ಬ ಅಣ್ಣ ಮದ್ರಾಸಿನಲ್ಲಿದ್ದವನನು ಯಾವುದೋ ಕೆಲಸದ ಮೇಲೆ ಬಂದಿದ್ದರಿಂದ ಅಪ್ಪನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸಾಧ್ಯವಾಗಿತ್ತು. +ಅನಿವಾರ್ಯವಾದರೆ ನಾನೇ ಕೊಡುತ್ತೇನೆ ಎಂದು ಮುಂದೆ ಬಂದ. +ಮೈಸೂರಿನಲ್ಲಿ ಕಾಲೇಜು ಉಪನ್ಯಾಸಕನಾಗಿ ಇರುವ ತಮ್ಮ ತಾನೂ ಕೊಡುತ್ತೇನೆ ಅಂದ. +ಊರ ಹಿರಿಯರು "ಯಾರಾದರೂ ಒಬ್ಬರು ಕೊಡ್ರೊ ಮಾರಾಯರಾ ಎಲ್ರೂ ತಲೆಬೋಳು ಕೊಡಬೇಕಾಗಿಲ್ಲ"ಎಂದರು. +ಸೋದರ ಮಾವ. +"ಊರಲ್ಲಿದ್ದವನೇ ಕೊಡಲಿ, ಕೊನೆಗಾಲದ ಸೇವೆಯನ್ನು ಅವನೇ ಮಾಡಿದ್ದಾನೆ"ಎಂದು ತೀರ್ಪು ನೀಡಿದ. +ಅದರಂತೆ ಅಣ್ಣ ಚೌರದವನ ಎದುರು ಕುಳಿತುಕೊಂಡ. +ಮೈಸೂರಿನಲ್ಲಿದ್ದ ತಮ್ಮ“ನಾನೂ ಕೊಡುತ್ತೇನೆ. +ಇಲ್ಲದಿದ್ದರೆ ಕಾಲೇಜಿನಲ್ಲಿ ಮತ್ತೆ ಹನ್ನೊಂದನೇ ದಿನಕ್ಕೆ ರಜೆ ಸಿಗಲ್ಲ" ಎಂದು ತಾನೂತಲೆ ಒಡ್ಡಿದ. +ಅವನಿದ್ದುದು ಖಾಸಗಿ ಕಾಲೇಜು. +ಸ್ನಾನ ಮುಗಿಸಿದೆವು. +ಅಪ್ಪ ಬದುಕಿದ್ದಾಗ ಇಷ್ಟಪಡುತ್ತಿದ್ದ ಹಲವು ಬಗೆ ತಿನಿಸುಗಳನ್ನು ಮಡಿಯಾಗಿಮಾಡಿದ್ದರು. +ಅವನ್ನೆಲ್ಲ ಹಿಡಿದುಕೊಂಡು, ಸೂಡಿನ ಕಡೆ ಒಯ್ಯುವ ಮೊದಲು ಇಳಿಸಿ ಬಾಯಿಗೆ ಗಂಜಿಉಣಿಸಿದ್ದ ತಾವಿನ ಬಳಿ ಹೋದೆವು. +ನಾವು ಮಕ್ಕಳು ಅವ್ವನ ಜತೆ ಸೇರಿ ಮಾಡುತ್ತಿದ್ದ ಅಂತಿಮ ಪಿತ್ಕಸೇವೆ. +ಮನೆಯಿಂದ ಹೊರಟು ಸಾಗಿದರೆ ಮೆರವಣಿಗೆಯಂತೆ ಹಿಂಬಾಲಿಸಿದ ಬಂಧು ಬಳಗ. +ನಾನು ವರ್ಷಗಳಕಾಲ ಊರಿನಿಂದ ದೂರ ಇದ್ದು ನಮ್ಮ ಎಲ್ಲ ಸಂಬಂಧಿಕರ ಪರಿಚಯವೂ ಅಷ್ಟಾಗಿ ಇರಲಿಲ್ಲ. +ಈಸಂದರ್ಭದಲ್ಲಿ ನಮ್ಮ ಎಲ್ಲ ಸಂಬಂಧಿಕರನ್ನೂ ನೋಡಲು ಸಾಧ್ಯವಾಯಿತು. +ಮಧ್ಯಾಹ್ನ ಸಾರ್ವಜನಿಕವಾಗಿಏರ್ಪಡಿಸಿದ್ದ ಊಟದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಎಲೆಗಳನ್ನು ಹಾಕಬೇಕಾಯಿತು. +ನಾವು ಇನ್ನೂರು ಜನಬಂದರೆ ಹೆಚ್ಚು ಅಂದುಕೊಂಡಿದ್ದರೂ ಅಪ್ಪನನ್ನು ನೆನಪು ಮಾಡಿಕೊಂಡು ಅಷ್ಟು ಜನ ಬಂದಿದ್ದರು. +ಬಂದಿದ್ದಎಲ್ಲರೂ ಪದ್ಧತಿಯಂತೆ ನಾವು ಅಣ್ಣ ತಮ್ಮಂದಿರಿಗೆ ವೀಳೆಯದೆಲೆ ಅಡಿಕೆ ನೀಡಿ ಕೈಮುಗಿದು ಹೋಗುತ್ತಿದ್ದರು. +ನಮಗಿಂತಲೂ ಕಿರಿಯರಂತೆ ಕಂಡವರು ಎಲೆ ಅಡಿಕೆ ನೀಡಿ ಕಾಲಿಗೆ ಬಿದ್ದು ಹೋಗುತ್ತಿದ್ದರು. +ಅಣ್ಣ ತನಗೆ ಎಲೆ ಅಡಿಕೆ ನೀಡಿದ ಹಿರಿಯರ ಕಾಲಿಗೆ ಬೀಳುತ್ತಿದ್ದುದನ್ನು ನಾವೂ ಅನುಸರಿಸಿದೆವು. +ಅಣ್ಣನ ಮಗನೊಬ್ಬ-ಹೆದ್ದಾರಿಪುರದ ಶಾಲೆಯಲ್ಲಿ ಓದುತ್ತಿದ್ದವನು ನಾವು ಹಿಡಿದ ಕಾಲುಗಳ ಸಂಖ್ಯೆ ನೂರಾ ಹನ್ನೆರಡು ಎಂದು ಎಲ್ಲ ಬಂಧುಗಳೂ ನಿರ್ಗಮಿಸಿದ ನಂತರ ವರದಿ ಒಪ್ಪಿಸಿದ್ದ. +ಅದೇ ಸಂಜೆ ಹೊರಟು ಶಿವಮೊಗ್ಗ ಸೇರಿದವನು ರಾತ್ರಿಯ ಬಸ್ಸಿನಲ್ಲಿ ಬೆಂಗಳೂರಿಗೆ ವಾಪಸಾದೆ. +ಅಪ್ಪನ ಕೊನೆಯ ಕ್ಷಣಗಳ ವರದಿಯನ್ನು ಹೆಂಡತಿ ಮಕ್ಕಳಿಗೆ ನೀಡಿ ಹನ್ನೊಂದನೆಯ ದಿನದ ಕಟ್ಟಳೆಗೆ ನನ್ನ ಕಾಣಿಕೆ ಎಂದು ಅದೇ ದಿನ ಬ್ಯಾಂಕಿಗೆ ಹೋಗಿ ಶಕ್ಯವಾದಷ್ಟು ಹಣವನ್ನು ಡಿ.ಡಿ.ಮಾಡಿಸಿ ತಂದೆ. +ಮಧ್ಯಾಹ್ನವೇ ಅಣ್ಣನ ವಿಳಾಸಕ್ಕೆ ರವಾನಿಸಿ ನಾನು ಯಾವತ್ತು ಬರಬೇಕು ಎಂಬುದನ್ನು ತಿಳಿಸುವಂತೆ ಕೋರಿ ಕಾಗದ ಬರೆದೆ. +ವಾರದಲ್ಲಿಯೇ ಅಣ್ಣನಿಂದ ಕಾಗದ ಬಂತು. +"ಹನ್ನೊಂದನೇ ದಿನಕ್ಕೆ ಅಂತ ಸಮಾರಾಧನೆ ಇಟ್ಟುಕೊಳ್ಳಬೇಕಿಲ್ಲ. +ಒಳ್ಳೇ ದಿನ ಅಂದರೆ ಇಪ್ಪತ್ತೊಂದನೇ ದಿನಕ್ಕೂ ಇಟ್ಟುಕೊಳ್ಳಬಹುದು. +ಅವ್ವನಿಗೆ ಸಮಾಧಾನ ಆಗುವಂತಿದ್ದರೆ ಹಾಗೆಯೇ ಮಾಡಬಹುದು. +ನಿನ್ನ ಅನುಕೂಲ ನೋಡಿ ಹೇಳು"- ಎಂಬಂಥ ವಿವರಗಳನ್ನು ಕೇಳಿದ್ದ. +ನಾನೂ ಕೂಡಲೇ ಬದಲು ಬರೆದು "ಅವ್ವನ ಮನಸ್ಥಿತಿಯನ್ನು ನೋಡಿಕೊಂಡೇ ಸಮಾರಾಧನೆಗೆ ವ್ಯವಸ್ಥೆ ಮಾಡು. +ಅಪ್ಪ ಯಾವುದನ್ನು ಹೆಚ್ಚು ಇಷ್ಟ ಪಡುತ್ತಿದ್ದಬೋ ಅದನ್ನೇ ಸಮಾರಾಧನೆಯಲ್ಲಿ ಮಾಡಿಸು. +ದುಡ್ಡಿಗೆ ಯೋಜಿಸಬೇಡ. +ನಾನು ಇನ್ನಷ್ಟು ಕಳಿಸುತ್ತೇನೆ" ಎಂದು ಸ್ಪಷ್ಟಪಡಿಸಿದೆ. +ಮತ್ತೆ ಒಂದು ವಾರದಲ್ಲಿ ಅವ್ವನ ಹೆಸರಿನಲ್ಲಿ ಒಂದು "ಉತ್ತರಕ್ರಿಯಾದಿ ಭೂ ಶಾಂತಿ ಆಹ್ವಾನ ಪತ್ರಿಕೆ" ಬಂತು. +ಹೆದ್ದಾರಿಪುರಕ್ಕೆ ಹತ್ತಿರವೇ ಇರುವ ರಿಪ್ಪನ್‌ಪೇಟೆಯಲ್ಲಿ ಹೊಸದಾಗಿ ಪ್ರಿಂಟಿಂಗ್‌ ಪ್ರೆಸ್ಸು ಬಂದಿರುವುದು ಅದರಿಂದಲೇ ಗೊತ್ತಾಯಿತು. +ಮೊದಲೆಲ್ಲಾ ತಿಥಿಗೆ ಬಾಯಲ್ಲಿ ಕರೆಯುವುದೇ ವಾಡಿಕೆ. +ಇರಲಿ, ಇದೂ ಒಂದು ಬೆಳವಣಿಗೆ ಎಂದು ನನಗೆ ಬಂದ ಆಹ್ವಾನ ಪತ್ರಿಕೆಯನ್ನು ಮನೆಗೆ ತಂದು ಹೆಂಡತಿ ಮಕ್ಕಳಿಗೆ ತೋರಿಸಿ ನಾವು ಹೋಗಬೇಕಾದ ದಿನವನ್ನು ನಿಗದಿಪಡಿಸಿದೆವು. +ಈ ಸಲ ಅವಸರ ಇರಲಿಲ್ಲ. +ಹೊಸದಾಗಿ ಆರಂಭವಾಗಿರುವ ರೈಲಿನಲ್ಲಿ ರಾತ್ರಿ ಪ್ರಯಾಣ. +ಶಿವಮೊಗ್ಗದಲ್ಲಿ ಇಳಿದು ಮತ್ತೆ ಎಂದಿನಂತೆ ಬಸ್ಸಿನಲ್ಲಿ ಹೆದ್ದಾರಿಪುರಕ್ಕೆ ಹೊರಟೆವು. +ರಸ್ತೆಯ ಎರಡೂ ಬದಿ ಸಾಲುಮರಗಳು. +ಆಯನೂರು ದಾಟುತ್ತಲೇ ಸಿಗುವ ಕಾಡಿನಲ್ಲಿ ಬಸ್‌ ಪ್ರಯಾಣ ಎಂಥ ಬಳಲಿಕೆಯನ್ನೂ ನಿವಾರಿಸುವ ಸಂಜೀವಿನಿ ಸ್ವರೂಪದ್ದು. +ಪ್ರಯಾಣದುದ್ದಕ್ಕೂ ಮಕ್ಕಳಿಗೆ ಅಕ್ಕಪಕ್ಕದ ಊರುಗಳ ಹೆಸರು,ಕಾಡಿನ ಹೆಸರು. +ನಾನು ಓದುತ್ತಿದ್ದಾಗ ತಿರುಗಾಡಿದ ಜಾಗ ಇವೆಲ್ಲ ವಿವರಗಳನ್ನು ನೀಡುತ್ತಾ ಹೆದ್ದಾರಿಪುರದಲ್ಲಿ ಇಳಿದಾಗ ಬೆಳಿಗ್ಗೆ ಒಂಬತ್ತು ಗಂಟೆಯೂ ಅಗಿರಲಿಲ್ಲ. +ಪ್ರಯಾಣದಲ್ಲಿ ಹೆಚ್ಚಿನ ಹೊರೆ ತರುವುದನ್ನು ಮೊದಲೇ ನಿಯಂತ್ರಿಸಿದ್ದ ಕಾರಣ ಒಂದು ಕಿಲೋಮೀಟರ್‌ನಷ್ಟು ನಡೆಯುವುದೂ ಶ್ರಮ ಎನಿಸಲಿಲ್ಲ. +ಮನೆ ಸೇರಿ ಬೆಳಗಿನ ಉಪಾಹಾರವಾಗಿ ಕಡುಬನ್ನು ಬೆಣ್ಣೆ, ಕಾಯಿಚಟ್ನಿಯೊಂದಿಗೆ ಮೆಲ್ಲುವಾಗ ಮಕ್ಕಳು ಹೊಸ ರುಚಿಯನ್ನು ಖುಷಿಯಾಗಿಯೇ ಸವಿದರು. +ಸ್ವಲ್ಪ ಹೊತ್ತಿಗೆ ತಮ್ಮ ವಾರಿಗೆಯ ಇತರ ಮಕ್ಕಳೊಂದಿಗೆ ಸ್ನೇಹ ಬೆಳೆಸಿಕೊಂಡು ಗದ್ದೆ ತೋಟ ಕಾಡು ಬದಿಯನ್ನು ಸುತ್ತಲು ನಮಗೆ ಹೇಳಿ ಹೊರಟರು. +ರಾತ್ರಿಯೇ ಸಮಾರಾಧನೆ. +ವಾಡಿಕೆಯಂತೆ ಮಾಂಸಾಹಾರದ ಊಟ. +ಊರಿನ ಮಂದಿಯ ಉಚಿತ ಸೇವೆ. +ಅಪ್ಪನ ಅಭಿರುಚಿಯಂತೆ ಚೌಕಿಯ ಕೋಣೆಯಲ್ಲಿ ಪುಟ್ಟದೊಂದು ಗಡಂಗು. +ಅಲ್ಲಿ ಅಭ್ಯಾಸ ಇದ್ದವರು ತೀರ್ಥಸೇವಿಸಿ ಕಣದಲ್ಲಿ ಹಾಕಿದ್ದ ದೊಡ್ಡ ಪಂಕ್ತಿಯತ್ತ ಹೋಗುತ್ತಿದ್ದರು. +ಅಲ್ಲಿ ತುಂಡು ಕಡುಬಿನ ಪ್ರಸಾದವನ್ನುನಿಧಾನವಾಗಿ ಸ್ವೀಕರಿಸುತ್ತಿದ್ದರು. +ನಂತರ ತಾಂಬೂಲ ಹಾಕಿಕೊಂಡು ಜಗುಲಿಯಲ್ಲಿ ಮಂಚದ ಮೇಲೆ ಮಲಗಿದ್ದ ಅವ್ವನ ಬಳಿ ಹೋಗುತ್ತಿದ್ದರು. +ಬಂದಿದ್ದ ನೆಂಟರಿಗೆ ಅವ್ಜನಿಗೆ ಸಾಂತ್ವನ ಹೇಳುವುದೇ ದೊಡ್ಡಸಮಸ್ಯೆ. +ಏಕೆಂದರೆ ಅವ್ವನಷ್ಟು ವಯಸ್ಸಾದವರು ಹೆಚ್ಚಿನವರಿರಲಿಲ್ಲ. +ಎಲ್ಲರೂ ಅವ್ವನಿಂದಲೇ ಸಮಾಧಾನದ ಮಾತುಗಳನ್ನು ಕೇಳುತ್ತಾ ಕಾಲಿಗೆ ಬಿದ್ದು ಹೊರಡುತ್ತಿದ್ದರು. +ಸಮಾರಾಧನೆಯ ಉಸ್ತುವಾರಿ ಹೊತ್ತಿದ್ದ ನಮಗೂ ಎಲೆಯಡಿಕೆ ನೀಡಿ ನಿರ್ಗಮಿಸುತ್ತಿದ್ದರು. +ಹತ್ತಿರದ ನೆಂಟರೆಲ್ಲರೂ ಅವ್ವನ ಜತೆ ಆಪ್ತವಾಗಿ ಮಾತಾಡುತ್ತಾ ತಮ್ಮಲ್ಲಿಗೆ ಬರುವಂತೆ ಆಹ್ವಾನ ನೀಡುತ್ತಿದ್ದರು. +"ಬೇಕಾದರೆ ಮಕ್ಕಳ ಮನೆಗೆ ಹೋಗಿ ಸ್ಪಲ್ಪ ದಿನ ಇದ್ದು ಬನ್ನಿ. +ಸ್ಥಳ ಬದಲಾವಣೆಯೂ ಆಗುತ್ತದೆ" ಎಂದೊಬ್ಬರು ಸಲಹೆ ಕೊಟ್ಟರು. +ಮಾರನೆಯ ದಿನವೇ ನಾವು ಹೊರಡುವುದೆಂದು ತೀರ್ಮಾನಿಸಿದ್ದೆವು. +ಅದರಂತೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾಗ ಅವ್ವ ನಮ್ಮಲ್ಲಿಗೆ ಬರುವ ಉತ್ಸಾಹ ಪ್ರಕಟಿಸಿದರು. +ಅಪ್ಪ ಮಲಗಿದಾಗಿನಿಂದ ಒಂದು ರಾತ್ರಿಯೂ ಮನೆ ಬಿಡಲು ಸಾಧ್ಯವಾಗದೆ ಅಪ್ಪನ ಸೇವೆಯಲ್ಲಿ ತೊಡಗಿದ್ದ ಹಿರಿಯ ಜೀವ. +ಬೆಂಗಳೂರಿಗೆ ಬರುವ ಇಂಗಿತ ತೋರಿದಾಗ ತಕ್ಷಣವೇ ರಿಪ್ಪನ್‌ಪೇಟೆಗೆ ಅಣ್ಣನ ಮಗನನ್ನು ಕಳುಹಿಸಿ ಕಾರಿಗೆ ವ್ಯವಸ್ಥೆ ಮಾಡಿದ್ದಾಯಿತು. +"ಶಿವಮೊಗ್ಗದವರೆಗೆ ಕಾರಿನಲ್ಲಿ ಹೋಗೋಣ. +ಅಲ್ಲಿಂದ ರೈಲಿನಲ್ಲಿ ಪ್ರಯಾಣ ಮಾಡಿದರೆ ಆಯಾಸವಾಗುವುದಿಲ್ಲ" ಎಂದು ಅಂದಾಜು ಮಾಡಿದೆವು. +"ಅವ್ವ ಎಷ್ಟು ದಿನವಾದರೂ ನಮ್ಮೊಟ್ಟಗೆ ಇರಲಿ,ಸಾಕು ಮನೆಗೆ ಕಳುಹಿಸು, ಅಂದಾಗ ಕಳುಹಿಸುತ್ತೇನೆ" ಅಂತ ಅಣ್ಣನಿಗೆ ಹೇಳಿದೆ. +ಅದಕ್ಕಾಗಿ ಬಟ್ಟೆ ಬರೆಗಳನ್ನು ಜೋಡಿಸಿಕೊಂಡಿದ್ದಾಯಿತು. +ಕಾರು ಬರುತ್ತಲೇ ಅವ್ವನ ಪ್ರಯಾಣ ಸಿದ್ಧತೆ ಆರಂಭವಾಯಿತು. +ಒಬ್ಬ ಮೊಮ್ಮಗಳ ನೆರವಿನಿಂದ ನೀಟಾಗಿ ಜಡೆಹಾಕಿಸಿಕೊಂಡ ಅವ್ವ, ಕನಕಾಂಬರದ ದಂಡೆ ಮುಡಿದು ಇಪ್ಪತ್ತು ದಿನಗಳ ಹಿಂದೆ ವಿಸರ್ಜಿಸಿದ್ದ ಹಸಿರುಬಳೆಗಳನ್ನು ಎರಡೂ ಕೈಗಳಿಗೆ ಹಾಕಿಕೊಂಡು ದಪ್ಪನೆಯ ಕುಂಕುಮ ಹಣೆಯನ್ನು ಆಲಂಕರಿಸಿದ್ದಂತೆ ಜಗುಲಿಯಿಂದ ನಿಧಾನವಾಗಿ ಕಾರಿನತ್ತ ಕಾಲು ಹಾಕಿದರು. +ಅವ್ವ ಬಳೆ ತೊಟ್ಟು ಹೂ ಮುಡಿದು ಕುಂಕುಮ ಧರಿಸಿದ್ದನ್ನು ಕಾಣುತ್ತಲೇ ಭಾವುಕತೆಯನ್ನು ದೌರ್ಬಲ್ಯ ಎಂದೇ ಹೇಳುತ್ತಿದ್ದವನಿಗೆ ಸಂತೋಷದ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. +ಅಪ್ಪ ಹೇಳುತ್ತಿದ್ದ ಮಾತುಗಳಿಗೆ ಅವ್ವನೇ ಇಷ್ಟು ಬೇಗ ದೊಡ್ಡ ನಿದರ್ಶನ ಒದಗಿಸುತ್ತಾರೆ ಎಂಬುದನ್ನು ನಾನು ಊಹಿಸಿಯೂ ಇರಲಿಲ್ಲ. +ಇಮ್ಮಡಿ ಉತ್ಸಾಹದಿಂದ ಅವ್ವನನ್ನು ಕಾರಿನಲ್ಲಿ ಆರಾಮಾಗಿ ಕುಳ್ಳಿರಿಸಿ "ಬೆಂಗಳೂರಿನವರೆಗೂ ಕಾರಿನಲ್ಲಿಯೇ ಹೋಗೋಣ" ಎಂದು ತೀರ್ಮಾನಿಸಿ ಮಕ್ಕಳನ್ನೂ ಹೆಂಡತಿಯನ್ನೂ ಕೂಡುವಂತೆ ಅವಸರಿಸಿ ಪ್ರಯಾಣ ಆರಂಭಿಸಿದೆ. +ಶಿವಮೊಗ್ಗ ದಾಟಿ ತುಂಬ ದೂರ ಬಂದಮೇಲೆ ಅಪ್ಪನ ಹರೆಯದ ದಿನಗಳ ನೆನಪುಗಳನ್ನು ಅವ್ವನಿಂದ ಕೇಳಿ ದಾಖಲಿಸುವ ಬಯಕೆ ಮೂಡಿತು. . . +ಸ್ವಾಮಿ ದೊಡ್ಡವನಾದ: +ಗಿಣಿಸೆ ಗ್ರಾಮದ ಶಾನುಭೋಗ ವೆಂಕಟೇಶಯ್ಯನವರ ಮೊದಲ ಮಗ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದಿಂದ ಹುಟ್ಟಿದ್ದು ಎಂದು ಅವರು ಮಗುವಿಗೆ ಕುಮಾರ ಸ್ವಾಮಿ ಎಂದು ಹೆಸರಿಟ್ಟರು. +ಮಗುವಾಗಿದ್ದಾಗಲೂ ಸ್ವಾಮಿಗೆ ಮುಂದೆ ನುಗ್ಗುವ ಸ್ವಭಾವ. +ರಿಪ್ಪನ್‌ಪೇಟೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಶಾಲೆಯ ಚುರುಕು ಹುಡುಗರಲ್ಲಿ ಒಬ್ಬನಾಗಿದ್ದ. +ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ. +ನಾಲ್ಕು ಸಲ ಭಾಗವಹಿಸಿದರೆ ಒಂದರಲ್ಲಾದರೂ ಬಹುಮಾನ ತರುತ್ತಿದ್ದ. +ವೆಂಕಟೇಶಯ್ಯನವರಿಗೆ ಊರ ಕೆರೆ ಕೆಳಗೆ ನಾಲ್ಕು ಎಕರೆ ಸಾಗು ಮಾಡಿದ ಜಮೀನು. +ಜಮೀನಿನ ಸುತ್ತಮುತ್ತ ಒತ್ತುವರಿ ಎಂದು ಆರು ಎಕರೆ ಹಕ್ಕಲನ್ನು ಹೊಲವಾಗಿ ಸ್ವಂತಕ್ಕೆ ಮಾಡಿಕೊಂಡಿದ್ದರು. +ಕೆರೆ ಕೆಳಗಿನ ಜಮೀನಿನಲ್ಲಿ ಎರಡು ಎಕರೆಗೆ ಅಡಿಕೆ ತೋಟವನ್ನು ಹಾಕಿಸಿದ್ದರು. +ಹೊಲದ ಸುತ್ತ ಅಗಳು ತೆಗೆಸಿದ್ದರು. +ಅದರಲ್ಲಿ ಮೇವಿಗಾಗಿ ಮೂರು ಎಕರೆ ಜಾಗವನ್ನು ಚೆನ್ನಾಗಿ ಸವರಿಸಿದ್ದರು. +ಉಳಿದ ಜಾಗದಲ್ಲಿ ಶೀಘ್ರವಾಗಿ ಬೆಳೆಯುವ ಅಕೇಸಿಯಾ, ನೀಲಗಿರಿ ಹಾಕಿಸಿ ಮನೆಯ ಸುತ್ತ ಹಸುರು ನಿರ್ಮಿಸಿದ್ದರು. +ಅವರಿಗೆ ವಾಸ್ತವವಾಗಿ ಶಾನುಭೋಗಿಕೆಯ ಸಂಬಳ ಅಗತ್ಯವಿರಲಿಲ್ಲ. +ಅದೂ ಬರುತ್ತಿದ್ದುದೂ ಅಷ್ಟಕ್ಕಷ್ಟೆ. +ಆದರೆ ಇಷ್ಟೆಲ್ಲ ಮಾಡಿಸಲು ಅದು ಬೇಕಾಗಿತ್ತು. +ಶಾನುಭೋಗಿ ಕೆಲಸಕ್ಕೆ ಗ್ರಾಮ ಲೆಕ್ಕಾಧಿಕಾರಿ ಎಂಬ ವರ್ಗದವರು ಬಂದ ಮೇಲೆ ಶಾನುಭೋಗರು ಮಾಜಿಯಾದರು. +ಅವರಿಗೆ ಕೆಲಸ ಇದ್ದಿದ್ದರೂ ಮಾಡುವ ಮನಸ್ಸು ಇರಲಿಲ್ಲ. +ಜನ ಮೊದಲಿನಂತೆ ಗೌರವ ಕೊಡುತ್ತಿರಲಿಲ್ಲ. +ಯಾವ ಯಾವ ಜಾತಿ ಜನಾಂಗದ ಜನರೆಲ್ಲ ಅವರ ಮನೆ ಜಗುಲಿಯ ಮೇಲೆಯೇ ಕೂರಲು ಬಂದಾಗ ಅವರಿಗೆ ಸಂಕಟವಾಗುತ್ತಿತ್ತು. +ಆದರೂ ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಕೆಲವು ಕಾಲತಳ್ಳಿ ಒಂದು ದಿನ "ಹರಾ. . . ಶಿವಾ" ಎನ್ನುತ್ತಾ ಕುಮಾರಸ್ವಾಮಿಯ ಜತೆ ಇನ್ನೂ ಮೂವರು ಕಿರಿಯ ಮಕ್ಕಳನ್ನು ನಡುವಯಸ್ಸಿನ ಪತ್ನಿಯ ವಶಕ್ಕೆ ಬಿಟ್ಟು ಕಣ್ಣುಮುಚ್ಚಿದರು. +ಕುಮಾರ ಸ್ವಾಮಿ ಗದ್ದೆ ತೋಟದ ಕೆಲಸಗಳ ನಿಗಾ ನೋಡುತ್ತಾ ರಿಪ್ಪನ್‌ಪೇಟೆಯಲ್ಲಿ ಹೈಸ್ಕೂಲು ಮುಗಿಸಿದ್ದ. +ಮುಂದೆ ಓದಲು ಶಿವಮೊಗ್ಗಕ್ಕೆ ಹೋಗಿದ್ದ. +ಶಾನುಭೋಗರು ಸತ್ತಾಗ ಅವನು ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಲಯದಲ್ಲಿದ್ದು ಅಂತಿಮ ಪದವಿಯ ಪರೀಕ್ಷೆ ಮುಗಿಸಿದ್ದ. +ಊಟಕ್ಕೆ ತೊಂದರೆ ಇರಲಿಲ್ಲ. +ಗದ್ದೆಯಲ್ಲಿ ಬೆಳೆಯುವ ಬತ್ತ ಸದ್ಯಕ್ಕೆ ಮನೆಗೆ ಸಾಕಾಗುತ್ತಿತ್ತು. +ಇತರ ಖರ್ಚುಗಳನ್ನು ಅಡಿಕೆ ತೋಟದ ಆದಾಯದಿಂದ ನಿಭಾಯಿಸಬೇಕಾಗಿತ್ತು. +ಮನೆಗೆ ಬಂದವನು ತಂದೆಯ ಕ್ರಿಯಾ ಕರ್ಮಗಳನ್ನು ಮುಗಿಸಿದ. +ಗೋಕರ್ಣಕ್ಕೆ ಹೋಗಿ ತರ್ಪಣ ಕೊಟ್ಟ. +ನಂತರ ಮನೆಯ ಗದ್ದೆ ತೋಟಗಳ ಆದಾಯ ಖರ್ಚಿನ ಲೆಕ್ಕ ಹಾಕಿದ. +ತಾಯಿಯೊಡನೆ ಸಮಾಲೋಚಿಸಿದ. +“ಡಿಗ್ರಿ ರಿಸಲ್ಟ್ ಬಂದ ಮೇಲೆ ಎಲ್ಲಾದರೂ ನೌಕರಿ ಹಿಡಿಯುತ್ತೇನೆ. +ಊರಲ್ಲಿ ಇರಲು ವ್ಯವಸ್ಥೆ ಮಾಡಿ ತಂಗಿ ತಮ್ಮಂದಿರನ್ನು ಕರೆದೊಯ್ಯುತ್ತೇನೆ” ಎಂದು ತಾಯಿಗೆ ಹೇಳಿದ. +ವೆಂಕಟೇಶಯ್ಯನವರು ಗದ್ದೆಯನ್ನು ಸ್ವಂತವಾಗಿ ಮಾಡಿಸುತ್ತಿದ್ದರು. +ಅಕ್ಕಪಕ್ಕದ ಗದ್ದೆಗಳ ರೈತರಿಂದ ಕೆಲಸ ಮಾಡಿಸುತ್ತಿದ್ದರು. +ಅದಕ್ಕೆ ವೆಂಕಟೇಶಯ್ಯ ಕೊಟ್ಟದ್ದೇ ಕೂಲಿ. +ಶಾನುಭೋಗಿಗೆ ಹಳೆಯ ಜನ ಕೊಡುತ್ತಿದ್ದ ಗೌರವ. +ಈಚೆಗೆ ಹಳಬರು ಕಡಿಮೆಯಾಗುತ್ತಿದ್ದರು. +ಹೊಸ ಪೀಳಿಗೆಯವರು ಕೆಲಸಕ್ಕೆ ಸಿಗುತ್ತಿರಲಿಲ್ಲ. +ಗದ್ದೆತೋಟಕ್ಕೆ ಕೆಲಸದವರನ್ನು ಪತ್ತೆ ಮಾಡುವ ಪರದಾಟದಲ್ಲಿದ್ದಾಗ ವೆಂಕಟೇಶಯ್ಯ ಸತ್ತಿದ್ದರು. +ದಕ್ಷಿಣ ಕನ್ನಡಜಿಲ್ಲೆಯಿಂದ ಗಂಡು - ಹೆಣ್ಣಾಳುಗಳನ್ನು ತೋಟದ ಕೆಲಸಗಳಿಗೆ ಕರೆತರುತ್ತಿದ್ದ ಸೇರೆಗಾರರು ಈಗ ಅಪರೂಪವಾಗಿದ್ದರು. +ಗಿಣಿಸೆಯ ಪಕ್ಕದ ಹಳ್ಳಿ ಕೊಡಸೆಯಲ್ಲಿ ಹಂಗಾಮಿನಲ್ಲಿ ಮಾತ್ರ ಕೆಲಸಕ್ಕೆ ಜನ ಸಿಗುತ್ತಿದ್ದರು. +ಆದರೆ ಅದಕ್ಕೆ ಪ್ರತಿಯಾಗಿ ಆಳುಗಳನ್ನು ಪೂರೈಸಬೇಕಿತ್ತು. +ಊರಿಗೆ ಪೂರ್ವ ದಿಕ್ಕಿಗಿರುವ ಹೆದ್ದಾರಿಪುರದಲ್ಲಿ ಕೆಲಸದವರು ಸಿಕ್ಕಿದರೂ ಅವರು ಹೇಳಿದ್ದೇ ಕೂಲಿ, ಮಾಡಿದ್ದೇ ಕೆಲಸ. +ಕುಮಾರಸ್ವಾಮಿಗೆ ಕೆಲಸದವರ ಈ ಸಮಸ್ಯೆ ಎದುರಾಯಿತು. +ಗದ್ದೆ ಇದೆ. +ತೋಟ ಇದೆ. +ಸಾಗುಮಾಡಿದ ಹೊಲವೂ ಇದೆ. +ಹೊಲದಲ್ಲಿ ಸ್ವಲ್ಪಭಾಗವನ್ನು ಗುತ್ತಿಗೆಗೆ ಕೊಟ್ಟರೆ ಗದ್ದೆ ಕೆಲಸಕ್ಕೆ ಜನ ಸಿಗುತ್ತಾರೆ ಎಂದುಕೊಂಡಿದ್ದ. +ಅವನು ಮಾಡಿದ ಪ್ರಯತ್ನಕ್ಕೆ ಗಿಣಿಸೆಯಲ್ಲಾಗಲೀ ಕೊಡಸೆಯಲ್ಲಾಗಲೀ ಜನ ಸಿಗುವ ಸೂಚನೆಯೇ ಕಾಣಲಿಲ್ಲ. +ಅಕ್ಕಪಕ್ಕದ ಊರಿನ ಜನ ಕೆಲಸಕ್ಕೆ ಬರುವುದಿರಲಿ, ತಮ್ಮ ಹೊಲ ಗದ್ದೆಗಳ ಕೆಲಸ ಮಾಡಿಸಲು ಜನರನ್ನು ಹುಡುಕುತ್ತಿದ್ದರು. +ವಿಧಿ ಇಲ್ಲದೆ ಕುಮಾರಸ್ವಾಮಿಯೇ ಎತ್ತುಗಳನ್ನು ಗದ್ದೆಗೆ ಹೂಡಿದ. +ಅವನ ಒತ್ತಿನ ತಮ್ಮ ರಿಪ್ಪನ್‌ಪೇಟೆ ಹೈಸ್ಕೂಲಿಗೆ ಹೋಗಿ ಬರುತ್ತಿದ್ದ. +ಅವನು ಶಾಲೆಗೆ ಹೋಗುವಾಗ ಹೆದ್ದಾರಿಪುರದ ಹೋಟೆಲಿಗೆ ನಿತ್ಯ ಹಾಲು ಕೊಡುತ್ತಿದ್ದ. +ಗಿಣಿಸೆಯ ಪ್ರಾಥಮಿಕ ಶಾಲೆಗೆ ತಂಗಿ ಹೋಗುತ್ತಿದ್ದಳು. +ಇನ್ನೊಬ್ಬ ತಮ್ಮ ಹೆದ್ದಾರಿಪುರದ ಮಾಧ್ಯಮಿಕಶಾಲೆಗೆ ಹೋಗುತ್ತಿದ್ದ. +ತಾಯಿ ಮನೆ ಕೆಲಸ ಮಾಡಿ ಕೆಲಸದವರಿಗಾಗಿ ಊಟಕ್ಕೆ ಅಣಿಗೊಳಸುತ್ತಿದ್ದಳು. + ಗದ್ದೆ ಹಕ್ಕಲು ಮತ್ತು ತೋಟದ ಉಸ್ತುವಾರಿಯನ್ನು ಒಬ್ಬಂಟಿಯಾಗಿ ನಿರ್ವಹಿಸುವುದು ಸುಲಭವಲ್ಲ ಎಂಬುದು ಕೆಲವೇ ದಿನಗಳಲ್ಲಿ ಕುಮಾರ ಸ್ವಾಮಿಯ ಅನುಭವಕ್ಕೆ ಬಂದಿತು. +ಅಕ್ಕಪಕ್ಕದ ರೈತರ ಕೈಕಾಲು ಹಿಡಿದು ನಾಟಿ ಮಾಡಿ ಮುಗಿಸಿದರೆ ಕಳೆ ತೆಗೆಸಲು ಜನ ಸಿಗುತ್ತಿರಲಿಲ್ಲ. +ಹಾಳಿಗಳ ಅಂಚುಗಳು ಬೆಳೆದು ಇಲಿ ಹೆಗ್ಗಣಗಳ ಬಿಲಗಳು ರೂಪುಗೊಳ್ಳುತ್ತಿದ್ದವು. +ಅಡಿಕೆ ತೋಟದಲ್ಲಿ ಕಳೆ ಬೆಳೆದು ಒಳಗೆ ಪ್ರವೇಶಿಸಲು ದುರ್ಗಮವಾಗುತ್ತಿತ್ತು. +ಒಳ್ಳೆಯ ಕೆಲಸಗಾರ ಒಕ್ಕಲು ಸಿಕ್ಕಿದರೆ ಅದರ ಉಸ್ತುವಾರಿಯನ್ನು ತಾಯಿಗೆ ಬಿಟ್ಟು ತಾನು ಶಿವಮೊಗ್ಗದಲ್ಲಿ ಯಾವುದಾದರೂ ನೌಕರಿ ಹಿಡಿಯಬಹುದು ಎಂಬ ದೂರದ ಆಸೆಯಲ್ಲಿ ಕುಮಾರಸ್ವಾಮಿ ದಿನ ತಳ್ಳುತ್ತಿದ್ದ. +ಭವಿಷ್ಯದ ಬಗ್ಗೆ ಚಿಂತಿಸುತ್ತಾ ಒಂದು ಮಧ್ಯಾಹ್ನ ತೋಟದಲ್ಲಿ ಸುತ್ತಾಡುತ್ತಿದ್ದ ಅವನಿಗೆ ಸಣ್ಣದಾಗಿ ಗೊಣಗಿಕೊಳ್ಳುವ ಸದ್ದು ಕೇಳಿಸಿತು. +ಕಳ್ಳರು ಎಂದುಕೊಂಡು ಕಂಪಿಸಿದ. +ಸಾಮಾನ್ಯವಾಗಿ ತೋಟದಲ್ಲಿ ಕೆಲಸ ನಡೆಯುವ ಹೊತ್ತಲ್ಲ. +ಎರಡು ಮೂರು ಸಾಲಿನ ಆಚೆ ಕೇಳಿಬರುತ್ತಿದ್ದ ಮಾತುಗಳ ಮೂಲವನ್ನು ತಿಳಿಯಲು ನಡಿಗೆಯನ್ನು ನಿಧಾನ ಮಾಡಿದ. +ಪತ್ತೇದಾರನಂತೆ ಸದ್ದು ಮಾಡದೆ ಹತ್ತಿರ ಸಾಗಿದರೆ ಮೂವರು ಹೆಂಗಸರು ಅಲ್ಲಿ ಕುಳಿತುಕೊಂಡು ಬಿದ್ದ ಅಡಿಕೆ ಹಣ್ಣು, ವೀಳೆಯದೆಲೆ, ಮೆಣಸಿನ ಹಣ್ಣುಗಳನ್ನು ಒಟ್ಟು ಮಾಡಿ ಅಡಿಕೆಹಾಳೆಗಳಲ್ಲಿ ಸುತ್ತಿಕೊಳ್ಳುತ್ತಿದ್ದರು. +ಇವನು ಹಠಾತ್ತಾಗಿ ಎದುರು ನಿಂತಾಗ ಬೆದರಿದಂತೆ ಕಂಡರು. +ತೋಟಕ್ಕೆ ನುಗ್ಗಿ ಕಳವು ಮಾಡುತ್ತಿರುವುದು ಮೈ ಉರಿಯುವಷ್ಟು ಸಿಟ್ಟು ತರಿಸಿತ್ತು. +"ಏನಾದರೂ ಬೇಕಿದ್ದರೆ ಕೇಳಬಹುದಿತ್ತು; +ಹೀಗೆ ಅತಿಕ್ರಮವಾಗಿ ನುಗ್ಗಿದ್ದಾರೆ"ಎಂದು ಕೋಪ ಬಂತು. +ದುರುಗುಟ್ಟಿ ನೋಡಿ "ಯಾರು ನಿಮಗೆ ತೋಟಕ್ಕೆ ಬರೋಕೆ ಹೇಳಿದೋರು?" ಎಂದು ಅಬ್ಬರಿಸಿದ. +ಸ್ವಲ್ಪ ಹೊತ್ತು ಒಬ್ಬರ ಮುಖ ಒಬ್ಬರು ನೋಡಿಕೊಂಡರು. +ಅವರಲ್ಲಿ ನಡುವಯಸ್ಸಿನ ಒಬ್ಬಳು "ಅವ್ವಾರಿಗೆ ಹೇಳೇ ಬಂದೆವು" ಎಂದಳು. +ತೋಟದ ಒಡೆಯನಾಗಿ ಅವರನ್ನು ಇನ್ನಷ್ಟು ತರಾಟೆಗೆ ತೆಗೆದುಕೊಳ್ಳುವ ಮನಸ್ಸಿತ್ತು. +ಅಷ್ಟರಲ್ಲಿ ಇವನ ಕಡೆ ಬೆನ್ನು ಹಾಕಿ ಅಡಿಕೆ ಹಾಳೆಯನ್ನು ನೀಟಾಗಿ ಕತ್ತರಿಸಿ ಗಂಟು ಕಟ್ಟುತ್ತಿದ್ದ ಮಹಿಳೆ ಇವನತ್ತ ತಿರುಗಿದಳು. +ಸೆರಗು ಕೆಳಗೆ ಬಿದ್ದು ಕುಪ್ಪಸದ ಏರು ತಗ್ಗು ಅನಾವರಣಗೊಂಡಿತು. +ಅವಳು ದೊಡ್ಡ ಹೆಂಗಸಾಗಿರಲಿಲ್ಲ. +ಆಗಷ್ಟೇ ಹದಿನೆಂಟು ಹತ್ತೊಂಬತ್ತಕ್ಕೆ ಕಾಲಿಟ್ಟ ತರುಣಿಯಾಗಿದ್ದಳು. +ಕೊರಳಿನಲ್ಲಿ ನೂಲಿನ ಸರ ಕೂಡ ಇರಲಿಲ್ಲ. +ಬರಿ ಕೊರಳ ಮೇಲಿನ ದೃಷ್ಟಿ ಕೊಂಚ ಸರಿದು ಕೆಳಗಿಳಿದಾಗ ಕುಮಾರ ಸ್ವಾಮಿಗೆ ತಾನು ತೋಟದ ಒಡೆಯ ಎಂಬುದು ಮರೆತು ಹೋಯಿತು. +ದ್ದನಿ ಮೆದುವಾಯಿತು. +"ಯಾವೂರು?" ಎಂದು ವಿಚಾರಿಸಿದ. +ಇವನ ಗಲಿಬಿಲಿಯನ್ನು ಅರಿತಂತೆ ಕಂಡ ಆಕೆ ನಿಧಾನವಾಗಿ ಸೆರಗನ್ನು ಮತ್ತೊಮ್ಮೆ ಇಳಿಸಿ ಲಯಬದ್ಧವಾಗಿ ಎತ್ತಿ ಸರಿಪಡಿಸಿಕೊಂಡಳು. +ಉತ್ತರ ನೀಡುವ ಗೋಜಿಗೆ ಹೋಗಲಿಲ್ಲ. +ಇವನು ಉತ್ತರಕ್ಕೆ ಕಾದು ನಿಂತವನಂತೆ ಮಿಕಿ ಮಿಕಿ ಕಣ್ಣುಬಿಡುತ್ತಿದ್ದಾಗ ಮೊದಲು ಬಾಯಿ ಬಿಟ್ಟಿದ್ದ ಮಹಿಳೆ "ಇದೇನು ಹಿಂಗೆ ಕೇಳ್ತೀರಿ, ಊರು ಮನೆಯವರು ಗೊತ್ತಿಲ್ಲಾ ಅಂದ್ರೆ. . " ಎಂದು ಆಕ್ಷೇಪಿಸಿದಳು. +ಗಿಣಿಸೆಯಲ್ಲಿ ತಮ್ಮದೊಂದೇ ಅಡಿಕೆ ತೋಟ. +ಊರಿನ ಜನ ಒಂದಲ್ಲ ಒಂದು ಕಾರಣಕ್ಕೆ ವರ್ಷಕ್ಕೆ ಒಮ್ಮೆಯಾದರೂ ತಮ್ಮ ತೋಟಕ್ಕೆ ಬರುತ್ತಾರೆ. +ದೊಡ್ಡ ಔತಣದ ಕಾರ್ಯವಾದರೆ ಬಾಳೆಎಲೆಗೆ ಬರುತ್ತಾರೆ. +ಮನೆಯ ಸೌದೆ ಮನೆ, ಕೊಟ್ಟಿಗೆಗಳು ಸೋರಿದರೆ ಅಡಿಕೆಸೋಗೆಗಳಿಗೆ ಬರುತ್ತಾರೆ. +ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಂಬಾಡಿ ಎಲೆ, ಅಡಕೆ ಹಿಂಗಾರ, ಪಜ್ಜೆತೆನೆ ಸಂಗ್ರಹಕ್ಕೆ ಬಂದೇ ಬರುತ್ತಾರೆ. +ಈಚೆಗೇನೋ ಕೆಳಗಿನ ಮನೆಯ ಒಂದೆರಡು ಮನೆಗಳವರು ಹೊಸ ತೋಟಗಳನ್ನು ಎಬ್ಬಿಸಿದ್ದಾರೆ. +ಆದರೆ ಅಲ್ಲಿ ಹಳೆತೋಟದಲ್ಲಿ ಸಿಗುವ ಎಲ್ಲ ಸಾಮಗ್ರಿಗಳು ಸಿಗಲು ಇನ್ನೂ ಕೆಲವು ವರ್ಷಗಳು ಬೇಕು. +ಆದ್ದರಿಂದಲೇ ಜನ ತಮ್ಮ ತೋಟಕ್ಕೆ ಮುಗಿಬೀಳುತ್ತಾರೆ. +ಕುಮಾರಸ್ವಾಮಿಗೆ ಪೆಚ್ಚಾಯಿತು. +ಊರಿನ ಹೆಣ್ಣುಮಕ್ಕಳ ಪರಿಚಯ ಕೂಡ ತಿಳಿಯದೆ ಹೋಯಿತಲ್ಲ ಅನ್ನಿಸಿತು. +ಕಳ್ಳರನ್ನು ಹಿಡಿದುಹೋಗಿ ತಾನೇ ಸಿಕ್ಕಿಕೊಂಡ ಸ್ಥಿತಿ. +ಆದರೂ ಯಜಮಾನಿಕೆಯ ಗತ್ತಿನಿಂದ "ಹಣ್ಣಡಿಕೆ,ಮೆಣಸೆಲ್ಲ ಎತ್ತಿ ಕೊಂಡಿದ್ದೀರಿ" ಎಂದು ಆಕ್ಷೇಪಿಸಿದ. +ಅದಕ್ಕೆ ಅವರು ಏನೂ ಹೇಳಲಿಲ್ಲ, ಬದಲಾಗಿ ತಮ್ಮ ಹಾಳೆಯ ಕಟ್ಟುಗಳನ್ನು ಬಿಚ್ಚಿ ಉದುರಿ ಒಣಗಿ ಹೋಗಿದ್ದ ನಾಲ್ಕಾರು ಗೋಟಡಿಕೆಗಳನ್ನು ತೆಗೆದು ಇವನ ಮುಂದೆ ಇರಿಸಿ ಮತ್ತೆ ಗಂಟು ಕಟ್ಟಿಕೊಂಡು ಹೊರಟರು. +ಇವನಿಗೆ ಅಪಮಾನ ಎನಿಸಿತು. +"ಇರಲಿ. . . ಇರಲಿ. ತಗೊಂಡು ಹೋಗಿ" ಎಂದು ಹೇಳುತ್ತಿದ್ದರೂ ಕೇಳಿಸಿಕೊಳ್ಳದವರಂತೆ ಮುಂದುವರಿದರು. +ತೋಟದಿಂದ ಮನೆಗೆ ಬಂದವನಿಗೆ ಕೂರಲು ಸಾಧ್ಯವಾಗಲಿಲ್ಲ. +ಸೆರಗು ಇಳಿದು ವೈಯಾರದಿಂದ ಮೇಲೆ ಏರಿದ ಚಿತ್ರ ಕಣ್ಣಿನಿಂದ ಮರೆಯಾಗಲಿಲ್ಲ. +ಅದುವರೆಗೆ ಅವನು ಬೆಳೆದ ಹೆಣ್ಣುಮಕ್ಕಳನ್ನು ಅಷ್ಟು ನಿಕಟವಾಗಿ ನೋಡಿರಲಿಲ್ಲ. +ಶಿವಮೊಗ್ಗದಲ್ಲಿ ಕಾಲೇಜಿನಲ್ಲಿದ್ದಾಗಾ ನೋಡಿದ ಯುವತಿಯರಲ್ಲಿ ಈ ಬಗೆಯ ಸೆಳೆತ ಕಂಡಿರಲಿಲ್ಲ. +ಆಕೆ ಬೇಕೆಂತಲೇ ಹಾಗೆ ಸೆರಗು ಬೀಳಿಸಿ ಎತ್ತಿಕೊಂಡಳೇ ಎಂದು ತಲೆ ಕೆರೆದುಕೊಂಡ. +ಆಕೆಯನ್ನು ನೋಡಿ ಮಾತಾಡಬೇಕು ಎಂಬ ಮನಸ್ಸಾಯಿತು. +ಹೇಗೆ ಮಾತಾಡಿಸುವುದು ಎಂಬುದು ತೋಚಲಿಲ್ಲ. +ಪ್ರತಿ ಸೋಮವಾರ ರಿಪ್ಪನ್‌ಪೇಟೆಯಲ್ಲಿ ಸಂತೆ. +ಸುತ್ತಮುತ್ತಣ ಊರುಗಳ ಜನ ಹೆದ್ದಾರಿಪುರಕ್ಕೆ ಬಂದು ಅಲ್ಲಿಂದ ಬಸ್ಸಿನಲ್ಲಿ ಪೇಟೆಗೆ ಹೋಗುವುದು ವಾಡಿಕೆ. +ಸಂತೆಯ ವಿಶೇಷ ಎಂದರೆ ವಾರವೆಲ್ಲಾ ಬೇರೆಯವರ ಗದ್ದೆಯಲ್ಲಿ ದುಡಿದ ಹೆಣ್ಣುಮಕ್ಕಳೂ ಸಂತೆಗೆ ಬಂದು ತಮಗೆ ಬೇಕಾದ ಸಾಮಗ್ರಿಯನ್ನು ಕೊಳ್ಳುತ್ತಾರೆ. +ಸಂತೆಗೆ ಬರುವ ಸಂಭ್ರಮದಲ್ಲಿ ಸಹಜ ಸೌಂದರ್ಯಕ್ಕೆ ಮೆರಗು ಕೊಡುವಂತೆ ನೀಟಾಗಿ ತಲೆ ಬಾಚಿ ಮನೆ ಕಿತ್ತಿಲಿನಲ್ಲಿ ಬೆಳೆದ ಗೊರಟೆ, ಸೇವಂತಿಗೆಗಳ ದಂಡೆಯನ್ನು ಮುಡಿದು ಹೊರಟರೆಂದರೆ ಹೆದ್ದಾರಿಪುರದ ಬಸ್‌ ನಿಲ್ದಾಣದ ಕಟ್ಟೆಯ ಮೇಲೆ ಕುಳಿತುಕೊಳ್ಳುವವರೆಲ್ಲಾ ಪಡ್ಡೆ ಹುಡುಗರಂತೆ ಕಣ್ಣರಳಿಸುವಂತಾಗುತ್ತದೆ. +ಒಂದು ಸೋಮವಾರ ಪೇಟೆಗೆ ಹೋಗಲು ಕಾದು ಕುಳಿತಿದ್ದ ಕುಮಾರಸ್ವಾಮಿಗೆ ಹೃದಯ ಬಾಯಿಗೆ ಬಂದಂತೆ ಬಡಿದುಕೊಳ್ಳತೊಡಗಿತು. +ಪಕ್ಕದಲ್ಲಿ ನಿಂತಿದ್ದವನೊಂದಿಗೆ ಏನೋ ಮಾತಾಡುತ್ತಿದ್ದವನು ತಕ್ಷಣ ನಿಲ್ಲಿಸಿದ. +ಅವನು ನಿಂತಿದ್ದ ಕಡೆಗೆ ತೋಟದಲ್ಲಿ ಸಿಕ್ಕಿದ್ದ ತರುಣಿ ಇನ್ನಷ್ಟು ಆಕರ್ಷಕವಾಗಿ ಅಲಂಕರಿಸಿಕೊಂಡು ಬರುತ್ತಿದ್ದಳು, ಜತೆಗೆ ಇನ್ನಿಬ್ಬರು ತರುಣಿಯರು. +ಅವಳತ್ತ ಕಿರುಗಣ್ಣಿನಿಂದ ನೋಡಿದವನು ಬಸ್ಸು ಬರುವವರೆಗೆ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯಾಸಪಟ್ಟ ಬಸ್ಸು ಬಂದಾಗ ಎಲ್ಲರೂ ನೂಕುನುಗ್ಗಲಿನಲ್ಲಿ ಹತ್ತಿದರೂ ಅವನು ಆ ಹುಡುಗಿ ನಿಂತ ಕಡೆ ಪ್ರಯಾಸದಿಂದ ನುಗ್ಗುತ್ತಾ ಸಾಗಿದ. +ಗುರುತಿನ ಜನರೆಲ್ಲಾ ಕುಮಾರಸ್ವಾಮಿಯ ಅಂದಿನ ವರ್ತನೆಯ ಬಗ್ಗೆ ಆಶ್ಚರ್ಯ ತಾಳಿದರು. +ಅದನ್ನು ಗಮನಿಸುವ ಸ್ಥಿತಿಯಲ್ಲಿ ಅವನಿರಲಿಲ್ಲ. +ಬಸ್ಸಿನಲ್ಲೇ ಆಕೆಯ ಹತ್ತಿರಕ್ಕೆ ನುಗ್ಗಿ ಹೋದವನು ಪಕ್ಕದ ಪ್ರಯಾಣಿಕರಿಗೆ ಕೇಳಿಸದಂತೆ ಆಕೆಯನ್ನು "ಸಂತೆಗಾ?" ಎಂದು ವಿಚಾರಿಸಿದ. +ಅವಳು ಪರಿಚಯದಲ್ಲಿ ತುಟಿ ಅಗಲಿಸಿ ನಗೆ ಬೀರಿದಳು. +ಮತ್ತೆ ಇಬ್ಬರೂ ಮಾತಾಡಲಿಲ್ಲ. +ಕುಮಾರಸ್ವಾಮಿ ಯಾವತ್ತೂ ಹಾಗೆ ಬಸ್ಸಿನಲ್ಲಿ ಪ್ರಯಾಣ ಮಾಡಿರಲಿಲ್ಲ. +ಅವಳಿಗೆ ಒತ್ತಿ ನಿಂತವನಿಗೆ ಜ್ವರ ಬಂದ ಹಾಗೆ ಆಗಿತ್ತು. +ಎಷ್ಟು ಬೇಗ ಪೇಟೆ ಬಂತು ಅನಿಸಿತು. +ಪೇಟೆಯಲ್ಲಿ ಇಳಿದ ಮೇಲೆ ಸಂತೆಯ ಗುಂಪಿನಲ್ಲಿ ಅವಳನ್ನೇ ಅರಸುತ್ತಾ ಹೋದ. +ಪತ್ತೆ ಮಾಡಿ ಅವಳ ಗುಂಪಿನ ಹಿಂದೆ ಹಿಂದೆ ಸುತ್ತಿದ. +ಅವಳು ನುಗ್ಗಿದ ಅಂಗಡಿಗೆ ನುಗ್ಗಿ ತಂಗಿಗೆ ಅದೇ ಮೊದಲ ಸಲ ರಿಬ್ಬನು ಕೊಂಡ. +ಬಳೆ ಕೊಂಡ. +ಪಿನ್ನುಗಳನ್ನು ಕೊಂಡ. +ಅಲ್ಲಿಯೇ ಬೀದಿ ಬದಿಯ ಹೋಟೆಲಿನಲ್ಲಿ ಅವಳ ಗುಂಪು ನಿಂತಿದ್ದಾಗ್‌ ಇವನೂ ಮೊದಲ ಸಲ ಅಂಥ ಹೋಟೆಲಿಗೆ ಹೋದ. +ಆಕೆಯ ಜತೆ ನಿರ್ದಿಷ್ಟವಾಗಿ ಏನು ಮಾತಾಡಬೇಕು ಎಂದಿರಲಿಲ್ಲ. +ಆದರೆ ಮಾತಾಡಬೇಕು ಎಂಬ ಭಾವನೆ ಉತ್ಕಟವಾಗಿತ್ತು . +ಹುಚ್ಚು ಹತ್ತಿದಂತೆ ಅವಳ ಹಿಂದೆ ಹಿಂದೆ ಸುತ್ತುತ್ತಾ ಅವಳ ಗುಂಪು ಅಲ್ಲಿನ ಟೂರಿಂಗ್‌ ಟಾಕೀಸ್‌ ಒಳ ಹೊಕ್ಕಾಗ ಇವನೂ ಟಿಕೇಟು ಪಡೆದು ಒಳ ಹೊಕ್ಕ. +ಅವನ ತಪಸ್ಸು ಫಲಿಸಿದಂತೆ ಅವಳ ಗುಂಪು ಕುಳಿತಿದ್ದ ಕಡೆ ಜಾಗ ಖಾಲಿ ಇತ್ತು. +ಇವನು ಹೋಗಿ ಕುಳಿತುಕೊಂಡ. +ಯಾವುದೋ ತಮಿಳು ಚಿತ್ರ. +ಯಾರಿಗೂ ಅರ್ಥವಾದಂತಿರಲಿಲ್ಲ. +ಇವನಿಗಂತೂ ಸಿನಿಮಾ ನೋಡುವ ಉದ್ದೇಶವೂ ಇರಲಿಲ್ಲ. +ಕತ್ತಲಿನಲ್ಲಿ ಒಂದೊಂದೇ ಜಾಗಗಳನ್ನು ಬದಲಿಸುತ್ತಾ ಅವಳ ಪಕ್ಕದ ಜಾಗದಲ್ಲಿ ಕುಳಿತ. +ಸಣ್ಣಗೆ ಕಂಪಿಸುವಂತೆ ಉದ್ದಿಗ್ನನಾಗಿದ್ದ. +ಎಷ್ಟೇ ಎಚ್ಚರಿಕೆ ವಹಿಸಿದರೂ ರಿಪ್ಪನ್‌ಪೇಟೆಯಂಥ ಊರಿನಲ್ಲಿ ಪರಕೀಯನಾಗಿ ಇರಲು ಕುಮಾರಸ್ವಾಮಿಗೆ ಸಾಧ್ಯವಿರಲಿಲ್ಲ. +ಆದರೆ ಅವನು ಆ ದಿನ ಅಸಾಧಾರಣ ಮನಸ್ಥಿತಿಯಲ್ಲಿ ಆ ಹುಡುಗಿಯ ಹಿಂದೆ ಬಿದ್ದಿದ್ದ. +ಚಿತ್ರ ಮುಗಿದಾಗ ಸಂಜೆಯಾಗಿತ್ತು. +ಬೆಳಿಗ್ಗೆ ಬಂದಂತೆಯೇ ಹೆದ್ದಾರಿಪುರಕ್ಕೆ ಬಸ್ಸಿನಲ್ಲಿ ಮರು ಪ್ರಯಾಣವಾಯಿತು. +ಚಿತ್ರನೋಡುವಾಗ ಅವನಿಗೆ ಆಕೆಯೊಡನೆ ಮಾತಾಡುವ ವಿಶ್ವಾಸ ಬಂದಿತ್ತು ಆದರೆ ಮಾತಾಡಲು ಅವಕಾಶ ಸಿಕ್ಕಿರಲಿಲ್ಲ. +ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಬೆಳಗಿನ ಭಂಗಿಯಲ್ಲೇ ನಿಂತಿದ್ದರೂ ಅವನಿಗೆ “ನಾಳೆ ಬೆಳಿಗ್ಗೆ ತಪ್ಪದೆ ತೋಟಕ್ಕೆ ಬಾ. +ನಾನು ಕಾಯುತ್ತಿರುತ್ತೇನೆ” ಎಂಬ ಸಂದೇಶ ನೀಡಲು ಸಾಧ್ಯವಾಯಿತು. +ಬೆಳಗಾಗುವುದು ಎಷ್ಟು ನಿಧಾನ ಎಂಬುದು ಅವನಿಗೆ ಅದೇ ಮೊದಲ ಬಾರಿಗೆ ಅರಿವಿಗೆ ಬಂದಿತು. +ರಾತ್ರಿಯೆಲ್ಲಾ ನಿದ್ದೆ ಇಲ್ಲದೆ ತೊಳಲಾಡಿದ ಸ್ವಾಮಿ ಬೆಳಿಗ್ಗೆ ಎದ್ದಾಗ ಕಣ್ಣೆಲ್ಲಾ ಕೆಂಪಾಗಿ ಮುಖದಲ್ಲಿ ಸಣ್ಣಗೆ ಊತ ಕಾಣಿಸಿಕೊಂಡಿತ್ತು. +ತೋಟಕ್ಕೆ ಎಂಟು ಗಂಟೆಗೇ ಹೋದ. + ಇಡೀ ತೋಟವನ್ನು ಸುತ್ತಾಡಿ ಸುತ್ತಾಡಿ ಸುಸ್ತಾದ. + ಆಕೆ ಬರುವುದಿಲ್ಲ ಎಂಬ ಅನುಮಾನ ಖಚಿತವಾಗಿ ನಿರಾಶನಾಗಿ ಹೊರಡುವಾಗ ತೋಟದ ಮೂಲೆಯಲ್ಲಿ ಸದ್ದಾಯಿತು. +ಚೈತನ್ಯ ಸಮಸ್ತವೂ ಚುರುಕಾಯಿತು. +ಸದ್ದು ಬಂದತ್ತ ಓಡುತ್ತಲೇ ಹೋದ. +ತೋಟಕ್ಕೆ ಆ ದಿನ ಯಾರೂ ಬರದಂತೆ ಎಚ್ಚರ ವಹಿಸಿದ್ದ. +ಆದ್ದರಿಂದ ನಿರಾತಂಕವಾಗಿ ಯಾವುದೇ ವ್ಯವಹಾರ ನಡೆಸಬಹುದಿತ್ತು. +ಆಕೆ ಹೆದರುತ್ತಲೇ ಬಂದಿದ್ದಳು. +ಸಂತೆಯಲ್ಲಿ ಸಿಕ್ಕಿದ ಸೂಚನೆ ಅವಳಿಗೂ ಹೊಸದಾಗಿತ್ತು ಅವಳು ಯಾರ ಮನೆಯವಳು ಎಂಬುದು ಅವನಿಗೆ ಗೊತ್ತಿರಲಿಲ್ಲ. +ಆದ್ದರಿಂದ ಮೊದಲಿಗೆ ಅವಳ ಹತ್ತಿರ ಸರಿದವನು "ಯಾರಮನೆ? ಹೆಸರೇನು?" ಎಂದು ವಿಚಾರಿಸಿದ. +ಊರಿನಲ್ಲಿ ಗೌರವಾನ್ವಿತ ಕುಟುಂಬದವನು, ಮೇಲುಜಾತಿಯವನು ಎಂಬ ಭಯಮಿಶ್ರಿತ ಗೌರವವೂ ಆಕೆಯಲ್ಲಿತ್ತು. +ಆತನ ಮನವಿಯನ್ನು ಆದೇಶ ಎಂಬ ರೀತಿಯಲ್ಲಿ ಪರಿಗಣಿಸಿ ಬಂದಿದ್ದಳು. +ಇವನಿಗೆ ಹೆಚ್ಚು ಉಪಚಾರದ ಮಾತುಗಳು ತಾಳ್ಮೆಯನ್ನು ಕೆಡಿಸುತ್ತಿದ್ದವು. +ಅವಳ ಕೈಯನ್ನು ಹಿಡಿದುಕೊಂಡು ಬೆರಳಲ್ಲಿ ಬೆರಳು ತೂರಿಸಿ ಪ್ರಾಯದ ಬಿಸಿಯಲ್ಲಿ ಕಾವೇರಿ 'ನಾನು ನಿನ್ನ ಕೈ ಬಿಡುವುದಿಲ್ಲ ಸಾವಂತ್ರಿ' ಎಂದು ಭರವಸೆಯ ಮಾತುಗಳನ್ನು ಅವಳ ಕಿವಿಯಲ್ಲಿ ಕಂಪಿಸುವ ಧ್ವನಿಯಲ್ಲಿ ಉಸುರುತ್ತಾ ತೋಟದ ಮೂಲೆಯ ನಿರ್ಜನ ಜಾಗಕ್ಕೆ ಕರೆದೊಯ್ದ. +ಅವಳ ಸೀರೆಯ ಮಿದುವಿನಲ್ಲಿ ಎದೆಯ ಬಿಸಿಯನ್ನು ಹೀರುತ್ತಾ ಸೊಂಟದ ತೆಳುವನ್ನು ಸವರುತ್ತಾ ಅವಳನ್ನು ಹಿಮ್ಮುಖವಾಗ ಬಾಗಿಸಿ ಅವಳು ಸೋತುನಾಚಿಕೆಯಿಂದ ಮುಖ ಮುಚ್ಚಿಕೊಳ್ಳುತ್ತಿದ್ದಾಗ ಬಲವಂತಪಡಿಸಿ ಆಕಾಶ ತೋರಿಸಿದ. +ಗಿಣಿಸೆಯ ಕೆಳಗಿನೂರಿಗೆ ಗಟ್ಟದ ತಗ್ಗಿನಿಂದ ಬಂದು ಬಹುವರ್ಷಗಳಿಂದ ನೆಲೆಸಿದ್ದ ತುಕ್ಕ ಎಂಬಾತನ ಬೆಳೆದ ಮಗಳು ಸಾವಂತ್ರಿ. +ಚಿಕ್ಕಂದಿನಿಂದ ಕೂಲಿ ಮಾಡುತ್ತಿದ್ದು ಸಂಪಾದನೆಯಲ್ಲಿ ಕೈಯಲ್ಲಿ ಸ್ವಲ್ಪ ಹಣ ಉಳಿಸಿಕೊಳ್ಳಲು ಆರಂಭಿಸಿದ ಮೇಲೆ ಸೋಮವಾರದ ಸಂತೆಗೆ ಜತೆಗಾತಿಯರ ಜತೆ ಹೋಗಿ ಬರುತ್ತಿದ್ದಳು. +ಸೋಮವಾರದ ಸಂತೆಯ ದಿನ ಸಿನಿಮಾ ನೋಡುವ ಹುಚ್ಚು ಬೆಳೆಸಿಕೊಂಡಿದ್ದ ಸಾವಂತ್ರಿಗೆ ಕುಮಾರಸ್ವಾಮಿ ತೋರಿದ ಬಾಲಿಶ ರಸಿಕತೆಯೂ ಮೇಲುಮಟ್ಟದ ಅನುಭವವಾಗಿ ತೋರಿತ್ತು. +ಕುಮಾರಸ್ವಾಮಿಗೆ ಹಳ್ಳಿ ಹುಡುಗಿಯರು ಪೇಟೆ ತಿರುಗಿ ಅಸಾಧಾರಣ ಧೈರ್ಯ ಪಡೆದುಕೊಂಡಿರುವುದು ಅವಳ ವರ್ತನೆಯಿಂದ ತಿಳಿದಿತ್ತು. +ಆದ್ದರಿಂದಲೇ ಯಾವುದೇ ಅಪಾಯ ಒದಗದಂತೆ ಅವಳಿಗೆ ಮುನ್ನೆಚ್ಚರಿಕೆಯ ಸಾಧನವನ್ನು ತೋರಿಸಿ ಬಳಸಿದ್ದ. +ಅವಳಿಗೆ ಅಪಾಯ ಒದಗುವುದಕ್ಕಿಂತ ನಾಳೆ ತಾನು ಯಾವುದೇ ಗೋಜಲಿನಲ್ಲಿ ಸಿಲುಕುವುದನ್ನು ತಪ್ಪಿಸಿಕೊಳ್ಳುವುದು ಮುಖ್ಯವಾಗಿತ್ತು. +ಒಮ್ಮೆ ಸಾವಂತ್ರಿಯನ್ನು ಹತ್ತಿರದಿಂದ ತಿಳಿದ ಮೇಲೆ ಕುಮಾರಸ್ವಾಮಿಗೆ ಊರಿನ ಆಕರ್ಷಣೆ ಪ್ರಬಲವಾಯಿತು. +ಅದರಲ್ಲಿಯೂ ತೋಟದ ಕೆಲಸವೆಂದರೆ ಅವನಿಗೆ ಊಟ ತಿಂಡಿಯ ಪರಿವೆಯೂ ಇಲ್ಲದಂತಾಯಿತು. +ತೋಟದ ಕೆಲಸವನ್ನು ಸಾಮಾನ್ಯವಾಗಿ ಗುತ್ತಿಗೆಗೆ ಕೊಡುವ ವಾಡಿಕೆಯನ್ನು ತಪ್ಪಿಸಿದ. +ತಾನೇ ಖುದ್ದಾಗಿ ನಿಂತು ಆಳುಗಳಿಂದ ಮಾಡಿಸುವ ನಿರ್ಧಾರ ಮಾಡಿದ. +ಸಾವಂತ್ರಿ ಹಾಗೂ ಆಕೆಯ ಜತೆಗಾರರನ್ನು ತುಕ್ಕನ ಮೂಲಕ ಕಲೆಹಾಕಿ ಅವರ ಉಸ್ತುವಾರಿಯನ್ನು ತುಕ್ಕನಿಗೆ ವಹಿಸಿದನು. +ತುಕ್ಕನನ್ನು ಮಧ್ಯಾಹ್ನದ ವೇಳೆಗೆ ಹೆದ್ದಾರಿಪುರಕ್ಕೆ ಏನಾದರೂ ಸಾಮಾನು ತರಲು ಕಳುಹಿಸಿ ಉಳಿದವರು ಸಂಜೆ ಕೆಲಸ ಮುಗಿದು ಹೋದ ಮೇಲೆ ಯಾವುದಾದರೂ ನೆಪ ಹೇಳಿ ಸಾವಂತ್ರಿಯನ್ನು ಸ್ಟಲ್ಪ ಹೊತ್ತು ಉಳಿಸಿಕೊಳ್ಳುತ್ತಿದ್ದನು. +ಆಕೆಯ ಜತೆ ಅನೇಕ ಸಲ ತೋಟದಲ್ಲಿಯೇ ಸಮಯ ಕಳೆದಿದ್ದನು. +ಅವಸರದಲ್ಲಿ ನಡೆಯುತ್ತಿದ್ದ ವ್ಯವಹಾರದಲ್ಲಿ ರುಚಿಗಿಂತ ಹಸಿವೆ ಹಿಂಗುತ್ತಿತ್ತು. +ಬರುಬರುತ್ತಾ ಸಾವಂತ್ರಿಯ ಜತೆ ಬರುತ್ತಿದ ರುಕ್ಮಿಣಿ, ದೇವಿ ಎಂಬ ಹುಡುಗಿಯರನ್ನೂ ಸ್ವಾಮಿ ಆಕರ್ಷಕ ಮಾತುಗಳಿಂದ ಕರೆಯುತ್ತಿದ್ದನು. +ಸಂತೆಯ ದಿನ ಅವರಿಗೆ ವಿಶೇಷವಾಗಿ ಭತ್ಯೆ ನೀಡುತ್ತಾ ಊರಿನವರ ಗಮನಕ್ಕೆ ಬಾರದ ಎಚ್ಚರಿಕೆಯ ಮರೆಯಲ್ಲಿ ಮೂವರು ಹುಡುಗಿಯರಿಗೂ ಪ್ರತ್ಯೇಕವಾಗಿ ಆಕಾಶ ತೋರಿಸುತ್ತಿದ್ದನು. +ಗಿಣಿಸೆಯಲ್ಲಿ ಹೆಚ್ಚು ಮನೆಗಳಿರಲಿಲ್ಲ . +ಐದು ಕುಟುಂಬಗಳ ದಾಯಾದಿಗಳು ಬೇರೆಯಾಗಿ ಮನೆಗಳನ್ನು ಕಟ್ಟಿಕೊಂಡಿದ್ದರು. +ಶಾನುಭೋಗರ ಮನೆಯೇ ಊರಿನ ಪ್ರತಿಷ್ಠಿತ ಕುಟುಂಬ. +ಕೆಲಸಕ್ಕೆ ಬರುತ್ತಿದ್ದವರ ಕಾಗೆಕಣ್ಣಿಗೆ ಕುಮಾರಸ್ವಾಮಿಯ ತೋಟದ ವ್ಯವಹಾರಗಳು ಬೀಳಲು ತಡವಾಗಲಿಲ್ಲ. +ಪಿಸಿ ಪಿಸಿ ಮಾತುಗಳು ಗುಸುಗುಸು ಆಗಿ ಕೂಲಿ ಹುಡುಗಿಯರ ಬೆನ್ನ ಹಿಂದೆ ಗಟ್ಟಿಯಾಗಿ ಅಪ್ಪಳಿಸುತ್ತಿದ್ದವು. +ಕಾಲೇಜು ಮೆಟ್ಟಿಲು ಹತ್ತಿದ್ದು ಊರಿನ ಪ್ರತಿಷ್ಠಿತನಾಗಿದ್ದ ಸ್ವಾಮಿಯ ಎದುರಿಗೆ ಯಾರೂ ಆಡುತ್ತಿರಲಿಲ್ಲ. +ಆದರೆ ತನ್ನ ವ್ಯವಹಾರಗಳು ಊರಲ್ಲಿ ಮಾತಿಗೆ ಬಂದಿವೆ ಎಂಬುದು ಒಮ್ಮೆ ತೋಟದ ಮೂಲೆಯಲ್ಲಿ ಅವನಿಗೆ ಸಾವಂತ್ರಿಯಿಂದ ತಿಳಿದುಬಂತು. +ಆ ದಿನ ರಾತ್ರಿಯೆಲ್ಲಾ ಅಳೆದು ಸುರಿದು ಒಂದು ಜತೆ ಬಟ್ಟೆ ಹಾಗೂ ಕೆಲವು ಪುಸ್ತಕಗಳನ್ನು ಹಾಕಿಕೊಂಡು ಬೆಳಗಾಗುತ್ತಲೇ ತನ್ನ ಪರೀಕ್ಷೆ ಫಲಿತಾಂಶ ನೋಡಿ ಬರುವುದಾಗಿ ತಾಯಿಗೆ ಹೇಳಿ ಶಿವಮೊಗ್ಗಕ್ಕೆ ಹೊರಟನು. +ಹೆದ್ದಾರಿಪುರದಲ್ಲಿ ಬಸ್ಸು ಹಿಡಿದು ರಿಪ್ಪನ್‌ಪೇಟೆಯ ಮೂಲಕ ಶಿವಮೊಗ್ಗ ಸೇರಿದನು. +ಊರಿನಲ್ಲಿ ನಡೆಸಿದ ವ್ಯವಹಾರಗಳು ಕುಮಾರಸ್ವಾಮಿಯ ಮನಸ್ಸಿನಲ್ಲಿ ಹಸಿಯಾಗಿದ್ದವು. +ಹಾಸ್ಟೆಲಿನಲ್ಲಿ ನಾಲ್ಕುದಿನ ಉಳಿದುಕೊಂಡನು. +ಪದವಿ ಪರೀಕ್ಷೆ ಫಲಿತಾಂಶ ಬಂದಿತ್ತು. +ಉತ್ತಮ ದರ್ಜೆಯಲ್ಲಿ ಪಾಸಾಗಿದ್ದನು. +ಬರಿಗೈಯಲ್ಲಿ ಉರಿಗೆ ಮರಳುವುದಕ್ಕಿಂತ ಏನಾದರೂ ಉದ್ಯೋಗ ಹಿಡಿದೇ ಹೋಗುವುದು ಎಂದು ತೀರ್ಮಾನಿಸಿದನು. +ಗದ್ದೆ, ತೋಟಗಳ ಉಸ್ತುವಾರಿಯನ್ನು ತಾಯಿ ನೋಡಿಕೊಳ್ಳುವ ವಿಶ್ವಾಸ ಮೂಡಿದ್ದರಿಂದ ಶಿವಮೊಗ್ಗದ ಹಾಸ್ಟೆಲಿನಲ್ಲಿ ಗೆಳೆಯರು ಕೊಟ್ಟಿದ್ದ ಪರಿಚಿತರ ವಿಳಾಸಗಳ ಪಟ್ಟಿಯನ್ನು ಜೋಪಾನವಾಗಿ ಇಟ್ಟುಕೊಂಡು ಬೆಂಗಳೂರಿನ ಕಡೆ ಪ್ರಯಾಣ ಮಾಡಿದನು. +ಕೆಲವು ದಿನಗಳ ವಾಸಕ್ಕೆ ಸ್ನೇಹಿತರ ಕೊಠಡಿಯಲ್ಲಿ ಜಾಗ ಸಿಗುವ ನಂಬಿಕೆ ಇತ್ತು. +ಬೆಂಗಳೂರಿಗೆ ಬಂದವನಿಗೆ ಕೆಲವು ತಿಂಗಳು ಏನು ಆಯಿತು ಏನು ಆಗಲಿಲ್ಲ ಎಂಬುದು ಅವನಿಗೆ ನೆನಪಿನಲ್ಲಿ ಉಳಿದಿಲ್ಲ. +ಕೆಲಸಕ್ಕಾಗಿ ನಡೆಸಿದ ಪ್ರಯತ್ನಗಳು ಈಡೇರುವ ಹಂತದಲ್ಲಿ ವಿಫಲವಾಗುತ್ತಿದ್ದವು. +ಪರಿಚಿತರ ವಿಳಾಸದ ಪಟ್ಟಿ ಯಾವುದಕ್ಕೂ ಪ್ರಯೋಜನಕ್ಕೆ ಬರಲಿಲ್ಲ. +ಎಷ್ಟೋ ರಾತ್ರಿ ಹೊಟ್ಟೆಗೆ ಇಲ್ಲದೆ ನಗರಪಾಲಿಕೆ ನಲ್ಲಿಯ ನೀರು ಕುಡಿದು ಮಲಗುತ್ತಿದ್ದನು. +ಅವನು ಇಳಿದುಕೊಂಡಿದ್ದ ಸ್ನೇಹಿತನ ಕೊಠಡಿಯಲ್ಲಿ ಏನೇನೋ ನಿರ್ಬಂಧಗಳು. +ಎಂಥ ಕೆಲಸವಾದರೂ ಸರಿ, ಕೊಠಡಿಯನ್ನು ಬಿಡುವಂತಾದರೆ ಸಾಕು ಎಂಬ ಭಾವನೆ ಬಂದಿತು. +ತಾನು ಬೆಂಗಳೂರಿಗೆ ಬಂದ ಸಂಗತಿಯನ್ನು ವಿವರವಾಗಿ ತಾಯಿ ಬರೆದಿದ್ದ ಕಾರಣ ಊರಿನಲ್ಲಿ ಆತಂಕ ಇರಲಿಲ್ಲ. +ಯಾರು ಯಾರನ್ನೋ ಹಿಡಿದು ಏನೆಲ್ಲಾ ಮಾಡಿ ಅಂತೂ ಅವನಿಗೆ ಖಾಸಗಿ ಎಂಜಿನಿಯರಿಂಗ್‌ಕಂಪನಿಯೊಂದರಲ್ಲಿ ಗುಮಾಸ್ತೆಯ ಕೆಲಸ ಸಿಕ್ಕಿದಾಗ ತಕ್ಷಣಕ್ಕೆ ಒಂದು ಕೊಠಡಿಯನ್ನು ಹಿಡಿಯುವುದು ಅನಿವಾರ್ಯವಾಯಿತು. +ಮುನ್ನುಗುವ ಸ್ವಭಾವದ ಸ್ವಾಮಿಗೆ ಕೊಠಡಿಯೂ ಸಿಕ್ಕಿತು. +ಪದವಿ ಹಂತದಲ್ಲಿ ಭಾಷಾ ಪತ್ರಿಕೆಗಳಲ್ಲಿ ಉತ್ತಮ ಅಂಕಗಳು ಬಂದಿದ್ದವು. +ಯಾವುದಾದರೂ ಸ್ನಾತಕೋತ್ತರ ಪದವಿಯನ್ನು ಅಂಚೆ ಶಿಕ್ಷಣದ ಮೂಲಕ ಪಡೆಯುವ ಉದ್ದೇಶ ತಲೆದೋರಿತು. +ಕರ್ನಾಟಕ ವಿಶ್ವವಿದ್ಯಾಲಯದ ಬಾಹ್ಯ ವಿದ್ಯಾರ್ಥಿಯಾಗಿ ಸಾಹಿತ್ಯದ ಸ್ನಾತಕೋತ್ತರ ವಿದ್ಯಾರ್ಥಿಯಾಗಿ ಅಧ್ಯಯನ ಆರಂಭಿಸಿದನು. +ಮಲೆನಾಡಿನ ನೈಸರ್ಗಿಕ ವಾತಾವರಣದಲ್ಲಿ ಕಾಡು ಮೇಡು ಸುತ್ತಿದ್ದ ಕುಮಾರಸ್ವಾಮಿಯ ಚೇತನ ಅವನನ್ನು ಸುಮ್ಮನೆ ಇರಲು ಬಿಡಲಿಲ್ಲ. +ಒಮ್ಮೆ ಅವನು ಬರೆದಿದ್ದ ಕವನ ಪ್ರಖ್ಯಾತ ಕಲಾವಿದರ ಚಿತ್ರದೊಡನೆ ದೊಡ್ಡ ಪತ್ರಿಕೆಯಲ್ಲಿ ಅಚ್ಚಾಯಿತು. +ಬರೆಯುವ ಉತ್ಸಾಹ ತಲೆದೋರಿತು. +ಅದಕ್ಕೆ ಶಾಸ್ತ್ರೀಯ ಅಧ್ಯಯನವೂ ನೆರವಿಗೆ ಬಂತು. +ಬರವಣಿಗೆ ಬೆಳೆಯಿತು. +ಎರಡು ವರ್ಷಗಳಲ್ಲಿ ಸ್ನಾತಕೋತ್ತರ ಪದವಿಯೊಡನೆ ಲೇಖಕ ಎಂಬ ಅಭಿದಾನವೂ ಬಂತು. +ಕುಮಾರಸ್ವಾಮಿ ತನ್ನ ಹೆಸರಿನ ಮುಂದೆ ಊರಿನ ಹೆಸರನ್ನೂ ಸೇರಿಸಿಕೊಂಡ ಕಾರಣ ಊರು ಕೂಡ ಪ್ರಖ್ಯಾತವಾಯಿತು. +ಕುಮಾರಸ್ವಾಮಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಲೇ ಮಲೆನಾಡಿನ ಸೊಗಡನ್ನು ಪ್ರತಿಬಿಂಬಿಸುವ ಕವನ, ಹನಿಗವನ, ಕಿರು ಗವನಗಳನ್ನು ಬರೆದು ಪ್ರಖ್ಯಾತನಾದ ಮೇಲೆ ಗೆಳೆಯರ ಬಳಗವೂ ಬೆಳೆಯಿತು. +ಆಗ ತಲೆದೋರಿದ್ದ ಸಾಹಿತ್ಯದ ಚಳವಳಿಗಳಲ್ಲಿ ಕುಮಾರಸ್ವಾಮಿ ಕ್ರಿಯಾಶೀಲನಾಗಿ ಗುರುತಿಸಿಕೊಳ್ಳತೊಡಗಿದನು. +ನೊಂದವರ ದನಿಯಾಗಿ, ಶೋಷಿತರನ್ನು ಜಾಗ್ರತಗೊಳಿಸುವ ಎಚ್ಚರಿಕೆಯ ಗಂಟೆಯಾಗಿ ತನ್ನ ಬರವಣಿಗೆಯನ್ನು ತಿದ್ದಿಕೊಂಡನು. +ಜಾತಿ ನಿರ್ಮೂಲನ, ಸಾಮಾಜಿಕ ನ್ಯಾಯ, ಸರ್ವರಿಗೆ ಸಮಪಾಲು ಸಮಬಾಳು ಮೊದಲಾದ ಆಕರ್ಷಕ ಘೋಷಣೆಗಳನ್ನು ತನ್ನ ಕವನಗಳಲ್ಲಿ ಬಿಂಬಿಸುತ್ತಾ ಪ್ರಗತಿಪರ ಚಿಂತಕನೆಂಬ ಮನ್ನಣೆಗೆ ಪಾತ್ರನಾದನು. +ಅವನ ಗೆಳೆಯರ ಬಳಗ ಬೆಳೆದಿತ್ತು. +ಬಳಗವು ಅವನಲ್ಲಿ ಆದರ್ಶ ಲೇಖಕನ ಮಾದರಿಯನ್ನು ಕಂಡಿತು. +ಸ್ವಾಮಿಯ ಆಪ್ತ ಬಳಗದಲ್ಲಿ ಶಂಕರ ಎಂಬಾತ ಬೆಂಗಳೂರಿನ ಇನ್ನೊಂದು ಖಾಸಗಿ ಕಂಪನಿಯ ಮಾರಾಟ ವಿಭಾಗದಲ್ಲಿ ಗುಮಾಸ್ತನಾಗಿದ್ದ. +ಸ್ವಾಮಿಯ ಬೆಂಗಳೂರು ವಾಸದ ಮೊದಲ ದಿನಗಳಲ್ಲಿ ಒಂದೇ ವಠಾರದಲ್ಲಿ ಇದ್ದವರು. +ನಿತ್ಯ ಸಂಜೆ ಒಟ್ಟಾಗಿ ಸೇರುತ್ತಿದ್ದರು. +ಮಾತುಕತೆ ಸಾಹಿತ್ಯದಿಂದ ಮೊದಲುಗೊಂಡು ಬದುಕಿನ ವಿವಿಧ ಸ್ತರಗಳನ್ನು ಮುಟ್ಟುಕ್ತಿತ್ತು. +ಸಮಾಜದ ವೈಪರೀತ್ಯಗಳನ್ನು ಸಾಹಿತ್ಯ ಚಳವಳಿಯ ಬೆಳಕಿನಲ್ಲಿ ವಿಶ್ಲೇಷಿಸುತ್ತಿದ್ದ ಸ್ವಾಮಿಯನ್ನು ಶಂಕರ "ಗೆಳೆಯ, ದಾರ್ಶನಿಕ, ಮಾರ್ಗದರ್ಶಿ" ಎಂದು ಪರಿಗಣಿಸಿದ್ದ. +ಅವನ ಸ್ವಂತದ ಸಮಸ್ಯೆಗಳನ್ನು ನಿವೇದಿಸಿ ಪರಿಹಾರಗಳನ್ನು ಕೇಳುತ್ತಿದ್ದ. +ಸ್ವಾಮಿ ಹೇಳುವ ಪರಿಹಾರಗಳು ಶಂಕರನಿಗೆ ಆಪ್ಯಾಯಮಾನವಾಗುತ್ತಿದ್ದವು. +ಸಾಹಿತ್ಯ ಕೃತಿಯ ಕುರಿತಾದ ಅಭಿಪ್ರಾಯವಿರಲಿ, ನಗರಕ್ಕೆ ಬಂದ ಹೊಸಚಲನಚಿತ್ರವಿರಲಿ, ಸ್ವಾಮಿಯ ಅಭಿಪ್ರಾಯದ ಬೆಳಕಿನಲ್ಲಿ ಅವನ್ನು ನೋಡುತ್ತಿದ್ದ. +ತನ್ನ ಕಚೇರಿಯ ಸಹೋದ್ಯೋಗಿಗಳ ಜತೆ ಮಾತಾಡುವಾಗ ಶಂಕರನಿಗೆ ತಾನು ಉಳಿದವರಿಗಿಂತ ಎತ್ತರದಲ್ಲಿರುವಂತೆ ಭಾಗವಾಗುತ್ತಿತ್ತು . +ಅದು ಸ್ವಾಮಿಯ ಸಂಗದಿಂದ ಆದ ಲಾಭ ಎಂಬ ಕೃತಜ್ಞತೆ ಅವನಲ್ಲಿ ತುಂಬಿತ್ತು. +ಇಂಥ ಸಾಹಿತ್ಯ ಸಲ್ಲಾಸದ ಸಂದರ್ಭದಲ್ಲಿ ಶಂಕರನ ಕಚೇರಿಯ ಸದೃಢ ಅವಿವಾಹಿತ ತರುಣಿ ಶಾರದೆ ಎಂಬುವರು ಶಂಕರನ ಗಮನವನ್ನು ವಿಶೇಷವಾಗಿ ಸೆಳೆದರು. +ಒಂದೇ ಕಡೆಯಿಂದ ನಗರ ಸಾರಿಗೆ ಬಸ್ಸನ್ನು ಹಿಡಿಯುತ್ತಿದ್ದುದು ಅವರ ಪರಿಚಯ ನಿಕಟವಾಗಲು ಕಾರಣವಾಯಿತು. +ಮುಗುಳ್ನಗು, ಮಾತು, ಸೀರೆ,ರವಿಕೆಯ ಹೊಂದಾಣಿಕೆಯ ಮೆಚ್ಚುಗೆ, ಶರ್ಟು ಪ್ಯಾಂಟಿನ ಬಣ್ಣದ ಬಗ್ಗೆ ವ್ಯಾಖ್ಯಾನ, ಮಧ್ಯಾಹ್ನದ ವಿರಾಮದ ಸಂದರ್ಭದಲ್ಲಿ ಕಚೇರಿ ಕ್ಯಾಂಟೀನಿಗೆ ಭೇಟಿ, ತಂದಿದ್ದ ಊಟವನ್ನು ಹಂಚಿಕೊಳ್ಳುವ ಆಪ್ತತೆ. +ಕೊನೆಗೆ ಇಬ್ಬರು ಬರದಿದ್ದರೆ ಏಕೆ ಬರಲಿಲ್ಲ ಎಂದು ಮರುದಿನ ವಿಚಾರಿಸಿಕೊಳ್ಳುವ ಸಲಿಗೆ. +ಇವೆಲ್ಲಾ "ನೋಡದಿದ್ದರೆ ಏನನ್ನೋ ಕಳೆದುಕೊಂಡ ಭಾವನೆ" ಮೂಡಿಸಿದಾಗ ಸ್ವಾಮಿಯ ಸಂಗದಿಂದ ದೃಢವಾಗಿದ್ದ ಶಂಕರ "ನಮ್ಮ ಸ್ನೇಹಕ್ಕೆ ಕೊನೆ ಹೇಗೆ ಮಾಡೋಣ, ನಿಮ್ಮನ್ನು ಬಿಟ್ಟು ಇರಲು ನನಗೆ ಸಾಧ್ಯವಾಗುತ್ತಿಲ್ಲ, ಮದುವೆ ಯಾಗೋಣ ಎಂಬ ಪ್ರಸ್ತಾಪವನ್ನು ಮುಂದಿಟ್ಟನು. +ಅದಕ್ಕೆ ಮೌನವಾಗಿ ಸಮ್ಮತಿಸಿದ ಆಕೆ "ಈ ಪ್ರಸ್ತಾವನೆಯನ್ನು ನಡೆಸುವ ಧೈರ್ಯಇದೆಯೇ?" ಎಂದು ಪ್ರಶ್ನಿಸಿದಳು. +ಅವಳು ಅವನ ಧೈರ್ಯಕ್ಕೆ ಸವಾಲು ಹಾಕುವಂತೆ ತನ್ನ ಸಾಮಾಜಿಕ ಸ್ಥಿತಿಯನ್ನು ಮೊಟ್ಟ ಮೊದಲ ಬಾರಿಗೆ ಬಹಿರಂಗ ಪಡಿಸಿದಾಗ ಶಂಕರ ಒಂದು ಕ್ಷಣಕ್ಕೆ ಗಲಿಬಿಲಿಗೊಂಡನು. +ಆದರೆ ಮರುಕ್ಷಣವೇ ಸಾವರಿಸಿಕೊಂಡು "ನಾನು ನಿಮ್ಮ ಜಾತಿಯನ್ನು ನೋಡಿ ಪರಿಚಯ ಬೆಳೆಸಲಿಲ್ಲ. +ನಿಮ್ಮನ್ನು ಇಷ್ಟಪಡುವಾಗ ಜಾತಿಯ ಅಡ್ಡಗೋಡೆ ನನ್ನ ಎದುರು ನಿಲ್ಲಲಿಲ್ಲ. +ಈಗ ಅದು ಬರುವುದಿಲ್ಲ. +ನನ್ನ ಸ್ನೇಹಿತರು, ಸ್ವಾಮಿ ಅಂತ ಹೇಳುತ್ತಿರುತ್ತೇನಲ್ಲ. +ಅವರು ನನಗೆ ಬೇಕಾಗುವ ನೈತಿಕ ಸ್ಥೈರ್ಯ ಕೊಡುತ್ತಾರೆ. +ಮುಖ್ಯ ನಿಮ್ಮ ಒಪ್ಪಿಗೆ ಬೇಕು" ಎಂದ. +ಅವನ ಮಾತು ವ್ಯಾಕರಣ ಬದ್ಧವಾಗಿತ್ತು. +ನಿಶ್ಚಯ ದೃಢವಾಗಿತ್ತು. +ಎಷ್ಟು ಬೇಗ ಈ ವಿಷಯವನ್ನು ಕುಮಾರಸ್ವಾಮಿಗೆ ಹೇಳಿ ಅವನ ಮೆಚ್ಚುಗೆಯನ್ನು ಗಳಿಸಿಯೇನು ಎಂಬ ತವಕ ಶಂಕರನಿಗೆ ಹೆಚ್ಚಾಯಿತು. +ವಿಷಯ ತಿಳಿಯುತ್ತಲೇ ಕುಮಾರಸ್ವಾಮಿ ಅವಾಕ್ಕಾದ. +ತಕ್ಷಣ ಸುಧಾರಿಸಿಕೊಂಡ. +ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸುವ ನಿಖರತೆ. +ಅದನ್ನು ಸ್ಪಷ್ಟಪಡಿಸುವ ಖಚಿತತೆ. +ಅರ್ಥವಾಗುವಂತೆ ವ್ಯಾಕರಣ ಬದ್ಧವಾಗಿ ಮಾತಾಡಿದ: + "ಶಂಕರಾ, ಇದುವರೆಗೆ ನಾವು ಚರ್ಚೆ ಮಾಡಿದ್ದೇವೆ. +ಜಗಳ ಆಡಿದ್ದೇವೆ. +ಆದರೆ ಅದೇ ಬದುಕಲ್ಲ. +ಬದುಕಿನ ವಾಸ್ತವತೆಯೇ ಬೇರೆ. +ಅದು ಸರಳ ಅಲ್ಲ. . . +ನಾನು ಊರು ಬಿಟ್ಟುಬಂದವನು. +ಒಂದು ನಿರ್ಧಾರದಿಂದ ಪಟ್ಟು ಹಿಡಿದು ಕೆಲಸ ಮಾಡಿದೆ. +ಈಗ ಎಂಎ ಮುಗಿದಿದೆ. +ಪಿಎಚ್‌ಡಿಗೆ ಪ್ರಯತ್ನ ನಡೆಸುತ್ತಿದ್ದೇನೆ. +ಅದನ್ನೂ ಮಾಡುವ ಛಲ ನನಗಿದೆ. +ಮಾಡುತ್ತೇನೆ ಆದರೆ ನೀನು? +ನಾನು ಬಂದಾಗ ಇದ್ದ ಮಾರಾಟ ವಿಭಾಗದಿಂದ ಬೇರೆ ವಿಭಾಗಕ್ಕೆ ವರ್ಗ ಕೂಡ ಆಗಿಲ್ಲ. +ನಿಂತ ನೀರಾಗಿದ್ದೀಯ. +ಈಗ ಅವಳನ್ನು ಮದುವೆಯಾಗಿ ಕ್ರಾಂತಿಕಾರಿಯಾಗುವ, ಕ್ರಾಂತಿ ಮಾಡುವ ಮಾತು ಹೇಳುತ್ತಿದ್ದೀಯ. +ಆಕೆಯನ್ನು ಮದುವೆಯಾದರೆ ನಮ್ಮ ಮನೆಯಲ್ಲಿ ಕೂಡ ನಿನ್ನನ್ನು ಸೇರಿಸಲು ಸಾಧ್ಯವಿಲ್ಲ. +ಹೊರಗಡೆ ಪ್ರಚಾರಕ್ಕೆ ಏನು ಬೇಕಾದರೂ ಹೇಳಬಹುದು. +ಆದರೆ ಆಚರಣೆಗೆ ನೀನೇ ಬಲಿಪಶು ಆಗಬೇಡ. . . " +ಶಂಕರನಿಗೆ ತಲೆ ಸುತ್ತು ಬಂದಂತಾಯಿತು. +ತಾನು ಸ್ವಾಮಿಯಷ್ಟು ಬೆಳೆದಿಲ್ಲ ಎನಿಸಿತು. +ಆದರೆ ಶಾರದೆ ಹಾಕಿದ ಸವಾಲಿನಂತಹ ಮಾತುಗಳು ಎದುರಾದವು. +ಒಣಗಿದ ತುಟಿಗಳನ್ನು ಒರೆಸಿ ಒದ್ದೆ ಮಾಡಿಕೊಂಡು "ಆಯಿತು ಸ್ವಾಮಿ, ತುಂಬ ಥ್ಯಾಂಕ್ಸ್‌ ನೀನು ಹೇಳಿದ ಮಾತನ್ನು ನಾನು ಯಾವತ್ತೂ ಮರೆಯುವುದಿಲ್ಲ" ಎಂದನು. +ಒಂದು ವಾರದಲ್ಲಿ ಶಂಕರ ಆರ್ಯ ಸಮಾಜದಲ್ಲಿ ಶಾರದೆಯನ್ನು ಮದುವೆಯಾದನು. +ಮದುವೆಗೆ ಬರಲು ಸ್ವಾಮಿ ನಿರಾಕರಿಸಿದನು. +ಮೂಕ ಸಾಕ್ಷಿ: +ಸುಮಾರು ಮೂವತ್ತು ವರ್ಷಗಳ ಹಿಂದೆ ಮೊದಲ ಸಲ ಗರತಿಕೆರೆ ಸೀನಾಚಾರಿಯ ಕಮ್ಮಾರಸಾಲೆಗೆ ಹೋದಾಗ ಕತ್ತಿಗಳಿಗೆ ಹಿಡಿ ಹಾಕುತ್ತಿದ್ದ ದೃಢಕಾಯ ಯುವಕನನ್ನು ಕುತೂಹಲದಿಂದ ನೋಡಿದ್ದೆ. + "ಅವನನ್ನು ದಿಟ್ಟಿಸಿ ನೋಡಬೇಡ. + ಅವನ ಎದುರು ಮೂಗು ಮುಟ್ಟಿಕೊಳ್ಳಬೇಡ" ಎಂದು ನನ್ನನ್ನು ಕರೆದುಕೊಂಡು ಹೋಗಿದ್ದ ಅಣ್ಣ ಎಚ್ಚರಿಕೆ ನೀಡಿದ್ದ. +ಅವನನ್ನು ಭಯಮಿಶ್ರಿತ ಕುತೂಹಲದಿಂದ ನೋಡಿದ್ದೆ. +ಒಂದು ಪಟ್ಟಾಪಟ್ಟೆಚಡ್ಡಿ ಮೇಲೆ ದಗಲೆಯಾಗಿದ್ದ ಬನೀನು ಹಾಕಿದ್ದ. +ಕುಳಿತಿದ್ದಾಗ ಚಡ್ಡಿಯ ಗಂಟು ದಪ್ಪಗೆ ಒಂದೊಂದು ಬದಿಗೆ ವಾಲಿಕೊಂಡು ನಗು ಬರಿಸುತ್ತಿತ್ತು. +ನಾವು ಒಯ್ದಿದ್ದ ಕಡುಗತ್ತಿ, ಹುಲುಗತ್ತಿಗಳಿಗೆ ಹಿಡಿಗಳನ್ನು ಹಾಕುತ್ತಿದ್ದ. +ಕತ್ತಿಗಳ ಹಿಡಿಕೆ ಕಡೆಗೆ ಹಸಿ ಮರದ ತುಂಡನ್ನು ಬಡಿದು ಕೀಲನ್ನು ಬಗ್ಗಿಸಿ ಅದನ್ನು ಹಿಡಿಯಾಕಾರದಲ್ಲಿ ಕೈಬಾಚಿಯಿಂದ ಸವರಿ ಕುಲುಮೆಯ ಬೆಂಕಿಯಲ್ಲಿ ಕಾಯಿಸಿ ಹದಗೊಳಿಸುವ ಅವನ ಕೌಶಲ್ಯವನ್ನು ವಿಸ್ಮಯದಿಂದ ನೋಡುತ್ತಿದ್ದೆ. +ಅವನು ಒಂದು ಸಲವೂ ಮಾತಾಡದೆ ಗಂಟಲಿನಿಂದ ಸದ್ದು ಹೊರಡಿಸುತ್ತಾ ಕುಲುಮೆಯ ಮುಂದೆ ಕುಳಿತುಕೊಂಡಿದ್ದ ದೊಡ್ಡ ಆಚಾರಿಯ ಸೂಚನೆಗಳನ್ನು ಪಾಲಿಸುತ್ತಿದ್ದ. +ನಾವು ಕುಲುಮೆಯಿಂದ ಹೊರಗೆ ಬಂದು ನಮ್ಮ ಮಾತು ಅವರಿಗೆ ಕೇಳಿಸುವುದಿಲ್ಲ ಎಂಬಷ್ಟು ದೂರ ಸಾಗಿದ ಮೇಲೆ ಅಣ್ಣ ಅವನ ವಿಷಯ ತಿಳಿಸಿದ. +ಅವನು ಕುಲುಮೆಯ ಸೀನಾಚಾರಿಯ ಹಿರಿಯ ಮಗ. +ಬಾಯಿ ಬರುತ್ತಿಲ್ಲ. +ಅವನ ತಮ್ಮನಿಗೂ ಬಾಯಿ ಬರುತ್ತಿಲ್ಲ. +ಇಬ್ಬರೂ ಕುಲುಮೆಯ ಕೆಲಸದಲ್ಲಿ ನೆರವಾಗುತ್ತಿದ್ದಾರೆ. +ಇವರಿಬ್ಬರ ಒತ್ತಿನ ಹುಡುಗಿಗೂ ಬಾಯಿ ಬರುತ್ತಿಲ್ಲ. +ಕಿರಿಯ ಮಗನಿದ್ದಾನೆ. +ಅವನಿಗೆ ಮಾತು ಬರುತ್ತದೆ. +ಅವನು ನೆಂಟರ ಮನೆಯಲ್ಲಿ ಬೆಳೆಯುತ್ತಿದ್ದಾನೆ. . . +ಅಣ್ಣ ನೀಡಿದ ವಿವರಗಳನ್ನು ಕೇಳಿ ನನಗೆ ಒಂದೆರಡು ದಿನ ಅದೇ ಗುಂಗು ಉಳಿದಿತ್ತು. +ಅನಂತರ ಕೆಲವು ವರ್ಷಗಳು ಗರತಿಕೆರೆಯ ನೆನಪಿನೊಂದಿಗೆ ಒಗ್ಗಿಕೊಂಡು ಕತ್ತಿಗಳಿಗೆ ಹಿಡಿ ಹಾಕುವ, ದೊಡ್ಡ ಸುತ್ತಿಗೆಯನ್ನುಹಿಡಿದು ಕಾಸಿ ಕೆಂಪಗಾದ ನೇಗಿಲ ಕುಳ ಇಲ್ಲವೇ ಕತ್ತಿಯ ಬಾಯಿಯ ಮೇಲೆ ಸುತ್ತಿಗೆಯಿಂದ ಜಪ್ಪತ್ತಿದ್ದ ದೃಢಕಾಯ ಹುಡುಗರ ಚಿತ್ರ ಕಣ್ಮುಂದೆ ಸುಳಿಯುತ್ತಿತ್ತು. +ಸೀನಾಚಾರಿಯ ಕುಟುಂಬ ನನಗೆ ಮತ್ತೆ ನೆನಪಾಗಿದ್ದು ನಾನು ರಿಪ್ಪನ್‌ಪೇಟೆಯಲ್ಲಿ ಹೈಸ್ಕೂಲು ಸೇರಿದ್ದಾಗ. +ಅವನ ಮೂರನೆಯ ಮಗ ಚಂದ್ರ ಎಂಬಾತ ನನ್ನ ಸಹಪಾಠಿಯಾಗಿ ಸೇರಿಕೊಂಡಿದ್ದ. +ಅವನು ಕೋಡೂರು ಮಾಧ್ಯಮಿಕ ಶಾಲೆಯಲ್ಲಿ ಏಳನೇ ತರಗತಿಯವರೆಗೆ ಓದಿದ್ದ. +ಹೈಸ್ಕೂಲಿಗೆ ರಿಪ್ಪನ್‌ಪೇಟೆಗೆ ಬಂದಿದ್ದ. +ಅವನು ಸೇರಿಕೊಂಡ ಮೊದಲ ದಿನ ಎಲ್ಲ ಹುಡುಗರೂ ಕುತೂಹಲದಿಂದ ಅವನನ್ನು ನೋಡಿದ್ದರು. +ಅವನ ಇಬ್ಬರು ಅಣ್ಣಂದಿರೂ ಮೂಕರಂತೆ. +ಅವನ ಅಕ್ಕನಿಗೂ ಬಾಯಿ ಬರುವುದಿಲ್ಲವಂತೆ ಎಂಬುದೇ ಅವನನ್ನು ನೋಡಿದಾಗ ಶಾಲೆಯಲ್ಲಿ ಎದ್ದ ಗುಸುಗುಸು. +ಚಂದ್ರ ನಮ್ಮಲ್ಲಿ ಒಬ್ಬನಾಗಿ ಎಸ್ಸೆಸ್ಸೆಲ್ಸಿವರೆಗೆ ಮೂರು ವರ್ಷ ಜತೆಗೆ ಬಂದ. +ಅಲ್ಲಿಂದ ನಾವು ಬದುಕಿನ ಹಾದಿ ಹಿಡಿದು ಎಲ್ಲೆಲ್ಲೋ ಸಾಗಿದಾಗ ಚಂದ್ರನ ನೆನಪು ಮರೆಯಾಯಿತು. +ಒಮ್ಮೆ ಹೊಂಬುಜಕ್ಕೆ ಹೋಗಬೇಕಿತ್ತು. +ಸಾಗರದಿಂದ ರಿಪ್ಪನ್‌ಪೇಟೆ, ಗರತಿಕೆರೆ, ಕಟ್ಟೆ, ಹೊಂಬುಜ,ಕೋಣಂದೂರು - ಮಾರ್ಗವಾಗಿ ತೀರ್ಥಹಳ್ಳಿಗೆ ಹೋಗಿ ವಾಪಸು ಬರುವ ಬಸ್ಸನ್ನು ಹೆದ್ದಾರಿಪುರದಲ್ಲಿ ಹತ್ತಿಕುಳಿತೆ. +ಅದು ಗರತಿಕೆರೆಯಲ್ಲಿ ಸ್ವಲ್ಪ ಹೊತ್ತು ನಿಂತು ಹೊರಟಾಗ ನಾನು ಕಮ್ಮಾರಸಾಲೆಯಿದ್ದ ಜಾಗದ ಕಡೆಗೆ ನೋಡಿದೆ. +ಹುಲ್ಲು ಮನೆಯೊಂದು ಅವಶೇಷದಂತೆ ಉಳಿದುಕೊಂಡಿತ್ತು . +ಸುತ್ತ ಕಳೆ, ಗರಿಕೆ ಹುಲ್ಲು ಹಳು ಬೆಳೆದಿತ್ತು. +ಕುಲುಮೆ ಇದ್ದ ಜಾಗ ಹೊಲವಾಗಿತ್ತು. +ಪಕ್ಕದಲ್ಲಿ ಅರ್ಧ ಕಟ್ಟಿದ ಇಟ್ಟಿಗೆ ಗೋಡೆಗಳು ಕಾಣುತ್ತಿದ್ದವು. +ಹೊಂಬುಜದಿಂದ ವಾಪಸಾದೆ. +ಊರಿಗೆ ಹೋಗುವ ಮಾರ್ಗದಲ್ಲಿ ಹೆದ್ದಾರಿಪುರದಲ್ಲಿ ಇಳಿದೆ. +ಅಲ್ಲಿ ಗ್ರಾಮಪಂಚಾಯಿತಿಯ ಅಧ್ಯಕ್ಷರ ಚುನಾವಣೆಯ ತುರುಸು ಎದ್ದಿತ್ತು. +ಕುಮಾರಸ್ವಾಮಿ ಎಂಬಾತ ಸ್ಪರ್ಧಿಸಿದ್ದ. +ಕುಮಾರಸ್ವಾಮಿಯ ಹೆಸರನ್ನು ಎಲ್ಹೋ ಕೇಳಿದ್ದೇನೆ ಎಂದು ಅಂಗಡಿಯ ಸೆಟ್ಟರನ್ನು ವಿಚಾರಿಸಿದಾಗ"ಅವನಲ್ಲವಾ, ಹಾಲಂದೂರಿನ ನಾರಾಯಣ ಸೆಟ್ಟರ ಮಗ. +ರಿಪ್ಪನ್‌ಪೇಟೆಯಲ್ಲಿ ಕಲಿಯಲಿಕ್ಕೆ ಇದ್ದಾಗ ಮೇಷ್ಟರು ಕೃಷ್ಣೇಗೌಡರು ಜೇಬಿನಿಂದ ದುಡ್ಡು ಕದ್ದು ಪರಾರಿಯಾಗಿದ್ದ ಅಂತ ಪುಕಾರು ಎದ್ದಿತ್ತಲ್ಲ. ." ಎಂದು ಅವನ ಜಾತಕದ ಪುಟಗಳನ್ನು ತೆರೆಯತೊಡಗಿದರು. +ನಾನು ಹೈಸ್ಕೂಲು ಸೇರುವ ಮೊದಲು ನಡೆದಿದ್ದ ಘಟನೆ ಅದು. +ನನಗೂ ಕೊಂಚ ನೆನಪಿತ್ತು. +ಆಗಷ್ಟೆ ಹೊಸದಾಗಿ ರಿಪ್ಪನ್‌ಪೇಟೆಯಲ್ಲಿ ತಾಲೂಕು ಅಭಿವೃದ್ಧಿ ಮಂಡಲಿಯಿಂದ ಹೈಸ್ಕೂಲು ಆರಂಭವಾಗಿತ್ತು. +ಮೊದಲಿಗೆ ಇಬ್ಬರು ತರುಣ ಅಧ್ಯಾಪಕರು ಬಂದಿದ್ದರು. +ಅವರಲ್ಹೊಬ್ಬರು ಕೃಷ್ಣೇಗೌಡರು. +ಹಳ್ಳಿಯ ಶಾಲೆ, ಪ್ರತಿ ಹುಡುಗರನ್ನೂ ವಿಶ್ವಾಸದಿಂದ ನೋಡುತ್ತಿದ್ದರು. +ಒಮ್ಮೆ ಕೃಷ್ಣೇಗೌಡರ ಕೊಠಡಿಯಲ್ಲಿ ರಾತ್ರಿ ಕಳೆದಿದ್ದ ಹುಡುಗನೊಬ್ಬ ಬೆಳಿಗ್ಗೆ ಮೇಷ್ಟರು ಏಳುವ ಮೊದಲೇ ಹೊರಟು ಹೋಗಿದ್ದ. + ನಂತರ ಜೇಬು ನೋಡಿಕೊಂಡಾಗ ಆಗಿನ ಕಾಲದಲ್ಲಿ ಹೆಚ್ಚೇ ಎನ್ನಬಹುದಾದ ನೂರು ರೂಪಾಯಿ ನೋಟು ಕಾಣೆಯಾಗಿತ್ತು. + ಮೇಷ್ಟರು ಪೊಲೀಸಿಗೆ ದೂರು ಕೊಡುವುದು ಬೇಡ ಎಂದು ತೀರ್ಮಾನಿಸಿದರಂತೆ. +ಹಣಕ ದ್ದವನೆಂದು ಆಗ ಹಾಲಂದೂರಿನ ಕುಮಾರಸ್ವಾಮಿಯ ಮೇಲೆ ಗುಮಾನಿ ಬಂದಿತ್ತು. +ಮನೆಯ ಕಡೆ ತಿರುಗಿದೆ. +ಕುಮಾರಸ್ವಾಮಿಯ ವಿಷಯವೇ ತಲೆಯಲ್ಲಿ ತುಂಬಿತ್ತು. +ಅವನು ರಾಜಕೀಯದಲ್ಲಿ ಈಚಿನ ಕೆಲವು ವರ್ಷಗಳಿಂದ ಇದ್ದ. +ಕಳೆದ ಮಂಡಲ ಪಂಚಾಯಿತಿಯಲ್ಲಿ ಸದಸ್ಯನೂ ಆಗಿದ್ದ ಎಂಬುದು ನಂತರ ನನಗೆ ಗೊತ್ತಾಯಿತು. +ರಾಜಕೀಯಕ್ಕೆ ಬರುವ ಮೊದಲು ಅವನು ಊರು ಬಿಟ್ಟು ಎಲ್ಲೋ ಹೋಗಿದ್ದ. +ಒಂದು ದಿನ ಹಠಾತ್ತನೆ ಊರಿಗೆ ಬಂದವನು ನಾಲ್ಕು ದಿನ ಅಲ್ಲಿ ಇಲ್ಲಿ ಸುತ್ತಾಡಿ ಜನಬಳಕೆ ಆರಂಭಿಸಿದ. +ಊರಿಗೆ ಬರುವಾಗ ಸಾಕಷ್ಟು ದುಡ್ಡು ಮಾಡಿಕೊಂಡು ಬಂದಿರಬೇಕು. +ಉದಾರವಾಗಿ ಖರ್ಚು ಮಾಡುತ್ತಿದ್ದ. +ಗುರುತು ಹಿಡಿದು ಮಾತಾಡಿಸಿದವರಿಗೆ ಹೆದ್ದಾರಿಪುರದಲ್ಲಿ ಸಾರಾಯಿ ಕುಡಿಸುತ್ತಿದ್ದ. +ಅವನು ಕುಳಿತಿದ್ದಾಗ ಯಾರೇ ಹೊಟೆಲಿಗೆ ಬಂದರೂ ಅವರ ಪರಿಚಯ ಮಾಡಿಕೊಂಡು ಬೈ ಟು ಚಹಾ ಕುಡಿಸಿಯೇ ಕಳುಹಿಸುತ್ತಿದ್ದ. +ಹೀಗೆ ಮಾಡಿಕೊಂಡ ಜನಬಳಕೆ ನಂತರ ರಾಜಕೀಯದಲ್ಲಿ ಕೈಯಾಡಿಸಲು ಕಾರಣವಾಯಿತು ಎಂದು ಹೆದ್ದಾರಿಪುರದಲ್ಲಿ ಮಾತಾಡುತ್ತಿರುವುದನ್ನು ಕೇಳಿದ್ದೆ. +ಕುಮಾರಸ್ವಾಮಿಯ ಚರಿತ್ರೆಯೊಂದಿಗೆ ನನಗೆ ಕುಲುಮೆಯ ಸೀನಾಚಾರಿಯ ಮನೆ ಹಾಳು ಸುರಿಯುತ್ತಿರುವ ಚಿತ್ರವೂ ಕಣ್ಮುಂದೆ ಸುಳಿಯುತ್ತಿತ್ತು ಊರಲ್ಲಿ ಯಾರಿಗೂ ಅದರ ಬಗ್ಗೆ ಆಸಕ್ತಿ ಇದ್ದಂತೆ ತೋರಲಿಲ್ಲ. +ಮೂರುಮಂದಿ ಮಾತು ಬಾರದ ಮಕ್ಕಳನ್ನು ಕಟ್ಟಿಕೊಂಡು ಕುಲುಮೆ ನಡೆಸುತ್ತಿದ್ದ ಸೀನಾಚಾರಿ ಎಲ್ಲಿಗೆ ಹೋದ ಎಂಬುದನ್ನು ತಿಳಿಯಲು ನಾನು ಗರತಿಕೆರೆ, ಹೆದ್ದಾರಿಪುರದ ಅನೇಕ ಹಿರಿಯ ಕಿರಿಯ ಜತೆಲೋಕಾಭಿರಾಮವಾಗಿ ಮಾತಾಡಬೇಕಾಯಿತು. +ಸೀನಾಚಾರಿಯ ಮೂರನೇ ಮಗ ಚಂದ್ರ. +ನನ್ನೊಟ್ಟಿಗೆ ಓದುತ್ತಿದ್ದವನು, ರಿಪ್ಪನ್‌ಪೇಟೆಯಲ್ಲಿ ಎಸ್ಸೆಸ್ಸೆಲ್ಸಿ ಪಾಸಾಗಲಿಲ್ಲ. +ಅವನಿಗೆ ಕಮ್ಮಾರಸಾಲೆಯ ಕೆಲಸದಲ್ಲಿ ಆಸಕ್ತಿ ಇರಲಿಲ್ಲ. +ಬೇರೆ ಕೆಲಸ ಅರಸಿ ದಕ್ಷಿಣ ಕನ್ನಡ ಜಿಲ್ಲೆಯ ಕಡೆ ಹೋದ. +ಕುಂದಾಪುರದ ಬಳಿ ಒಬ್ಬರು ಕೊಗ್ಗಾಜಾರಿ ಎಂಬುವರ ಬಳಿ ಕೆಲಸಕ್ಕೆ ಸೇರಿ ಮರಗೆಲಸ ಕಲಿತ. +ಈಗ ರಿಪ್ಪನ್‌ಪೇಟೆಯಲ್ಲಿ ವಾಸವಾಗಿದ್ದಾನೆ. +ಮನೆ ಕಟ್ಟುವ ಗುತ್ತಿಗೆ ಹಿಡಿಯುತ್ತಾನೆ. +ಜತೆಗೆ ಇಬ್ಬರು ಸಹಾಯಕರನ್ನು ಇಟ್ಟುಕೊಂಡಿದ್ದಾನೆ. +ಒಳ್ಳೆಯ ಸಂಪಾದನೆ ಇದೆ. +ಅವನ ಅಣ್ಣಂದಿರಿಬ್ಬರು ಬಹಳ ವರ್ಷಗಳ ಹಿಂದೆ ಯಾರೊಟ್ಟಿಗೋ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಿದ್ದವರು ವಾಪಸು ಬಂದಿಲ್ಲ. +ನಂತರ ಏನಾಯಿತೆಂಬುದು ಗೊತ್ತಿಲ್ಲ ಎಂಬುದು ಅನೇಕರ ನೆನಪು. +ಹಾಲಂದೂರಿನಿಂದ ಗರತಿಕೆರೆಯ ಮೂಲಕ ತೀರ್ಥಹಳ್ಳಿ ಕಡೆ ಆಗಾಗ ಸಂಬಂಧಿಕರ ಮನೆಗಳಿಗೆ ಹೋಗಿಬರುತ್ತಿದ್ದ ಕುಮಾರಸ್ವಾಮಿ ಆಗ ಗ್ರಾಮಾಂತರ ಬಸ್‌ ನಿಲ್ದಾಣಗಳು ಇಲ್ಲದ ಕಾರಣ ಸೀನಾಚಾರಿಯ ಕುಲುಮೆಯ ಬಳಿ ಬಸ್ಸಿಗೆ ನಿಲ್ಲುತ್ತಿದ್ದ. +ಬಿಸಿಲು, ಮಳೆಯ ಕಾರಣದಿಂದ ಒಂದೆರಡು ಸಲ ಸೀನಾಚಾರಿ ಇದ್ದಾಗ ಕುಲುಮೆಯ ಒಳಗೆ ಬಂದು ಕುಳಿತುಕೊಂಡಿದ್ದ. +ಒಮ್ಮೆ ಅವರು ಇಲ್ಲದ ಸಂದರ್ಭದಲ್ಲಿ ಕುಲುಮೆಯಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದಿದ್ದ ಸೀನಾಚಾರಿಯ ಮಗಳು ಸಾವಂತ್ರಿಯನ್ನು ಇವನು ವಿಶ್ವಾಸದಿಂದ ನೋಡಿದ. +ಆಕೆಗೆ ಮಾತು ಬಾರದೆಂಬುದು ಈತನಿಗೆ ಆಗ ಗೊತ್ತಿರಲಿಲ್ಲ. +ಅವಳನ್ನು ಕಣ್ಣಿನಿಂದಲೇ ಮಾತಾಡಿಸಲು ಪ್ರಯತ್ನಿಸಿದ. +ಮೇಷ್ಟರ ಜೇಬಿನಿಂದ ದುಡ್ಡು ಎಗರಿಸಿ ಬಚಾವಾಗಿದ್ದ ಆತನಿಗೆ ಪ್ರಾಯದ ತರುಣಿಯ ಜತೆ ಆಪಯ್ಯಮಾವಾಗಿ ವರ್ತಿಸುವುದು ಕಷ್ಟವಾಗಲಿಲ್ಲ. +ಮೊದಲು ತೀರ್ಥಹಳ್ಳಿಯ ಕಡೆ ಬಸ್ಸು ಹಿಡಿಯಲು ಬರುತ್ತಿದ್ದ ಅವನು ಗರತಿಕೆರೆಯಲ್ಲಿ ಏನಾದರೂ ಕೆಲಸ ಇಟ್ಟುಕೊಂಡು ಬರತೊಡಗಿದ. +ಸೀನಾಚಾರಿ ಇಲ್ಲದ ಸಮಯ ನೋಡಿ ಬರತೊಡಗಿದ. +ಕುಲುಮೆಯ ಪಕ್ಕದಲ್ಲಿಯೇ ಮನೆ ಇದ್ದ ಕಾರಣ ನೀರು ಕುಡಿಯುವ ನೆಪ, ಆಚಾರರು ಇಲ್ಲವೇ ಎಂದು ಕೇಳುವ ನೆಪ,ಕತ್ತಿಗಳಿಗೆ ಹಿಡಿ ಹಾಕುವಂತೆ ಹೇಳುವ ನೆಪ. +ತಾನು ತಂದ ಕೆಲವು ಸಾಮಾನುಗಳನ್ನು ಅರಿಸುವ ನೆಪ -ಹೀಗೆ ನಾನಾ ಕಾರಣಗಳಿಂದ ಸಾವಂತ್ರಿಯ ಕಣ್ಮುಂದೆ ಸುಳಿದ ಕುಮಾರಸ್ವಾಮಿಗೆ ಆಕೆಗೆ ಮಾತು ಬರುತ್ತಿಲ್ಲ ಎಂಬುದು ತಿಳಿಯಿತು. +ಆದರೂ ತಾರುಣ್ಯದ ಉನ್ಮಾದದಲ್ಲಿ ಅವನಿಗೆ ಬಾಯಿ ಬಾರದ ಆಕೆಯಲ್ಲಿ ತಾರುಣ್ಯದ ಸೆಲೆಯನ್ನು ಚಿಮ್ಮಿಸಲು ಕಷ್ಟವಾಗಲಿಲ್ಲ. +ಆಕೆಗೆ ಮಾತು ಬಾರದಿರುವುದು ಇವನಿಗೆ ಅನುಕೂಲವಾಗಿ ಏನೇ ಆದರೂ ಆಕೆ ತನ್ನನ್ನು ಆರೋಪಿಯನ್ನಾಗಿ ಮಾಡಲಾರಳೆಂಬ ಧೂರ್ತ ಯೋಚನೆಯಲ್ಲಿ ಮುಂದುವರಿಯುತ್ತಿದ್ದ. +ಕ್ಶೈ ಬಾಯಿ ಸಂಜ್ಞೆಗಳ ಮೂಲಕ ಆಕೆಯನ್ನು ಒಂದು ಮುಸ್ಸಂಜೆ ಹಾಲಂದೂರಿನ ದಾರಿ ಬದಿಯ ಹಳುವಿಗೆ ಒಂಟಿಯಾಗಿ ಕರೆಸುವಷ್ಟು ಪ್ರಭಾವ ಬೀರಿದ. +ಬೆಳೆಯುತ್ತಿದ್ದ ಮಗಳ ನಡವಳಿಕೆಯಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗುರುತಿಸುತ್ತಲೇ ಇದ್ದ ಸೀನಾಚಾರಿಗೆ ಕುಮಾರಸ್ವಾಮಿಯ ಆಗಮನ ಆಕೆಯಲ್ಲಿ ಉದ್ವೇಗ ಮೂಡಿಸುತ್ತಿರುವುದು ಗಮನಕ್ಕೆ ಬಂದಿತು. +ಮಗಳಿಗೆ ಹೊಡೆದು ಬಡಿದು ಬುದ್ಧಿ ಕಲಿಸುವ ಯೋಚನೆಯನ್ನು ಅವನು ಮಾಡಲಿಲ್ಲ. +ಬದಲಾಗಿ ತನಗೆ ಸರಿಯಾಗಿ ತೋಚಿದಂತೆ ಒಂದು ಮುಸ್ಸಂಜೆ ಸಾವಂತ್ರಿಯನ್ನು ಹಿಂಬಾಲಿಸಿ ಅವಳು ಕುಮಾರಸ್ವಾಮಿ ಕಾದುಕುಳಿತಿದ್ದ ಗೊತ್ತಿನ ಬಳಿ ಬರುತ್ತಲೇ ಮುಂದಿನ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಅವರಿಬ್ಬರ ಎದುರುನಿಂತು ಬಟ್ಟೆಯಲ್ಲಿ ಸುತ್ತಿ ತಂದಿದ್ದ ಕುಲುಮೆಯ ಸುತ್ತಿಗೆಯಿಂದ ಕುಮಾರಸ್ವಾಮಿಯತ್ತ ಬೀಸಿದ. +ಹಠಾತ್ತಾಗಿ ಎದುರು ನಿಂತ ಸೀನಾಚಾರಿಯ ಸಾತ್ವಿಕ ಕೋಪದ ಎದುರು ಕಂಗಾಲಾದ ಕುಮಾರಸ್ವಾಮಿ ಸುತ್ತಿಗೆಯ ಆಕ್ರಮಣವನ್ನು ನಿರೀಕ್ಷಿಸಿರಲಿಲ್ಲ. +ಆಚಾರಿ ಬೀಸಿದ ಏಟು ಅವನ ಕಾಲಿನ ಮೀನ ಖಂಡಕ್ಕೆ ತಗುಲಿತಾದರೂ ಹೆಚ್ಚಿನ ಏಟು ಬೀಳಲಿಲ್ಲ. +ಆದ್ದರಿಂದಲೇ ಅವನು ಜೀವ ಉಳಿಸಿಕೊಳ್ಳುವ ಸಲುವಾಗಿ ಕಾಡು ಹಾದಿಯ ಹಳುವಿನಲ್ಲಿ ಬಲು ವೇಗದಿಂದ ಪರಾರಿಯಾದ. +ಮತ್ತೆ ಅವನು ಊರಿನಲ್ಲಿ ಕಾಣಿಸಿಕೊಳ್ಳಲಿಲ್ಲ. +ಸೀನಾಚಾರಿಗೆ ಮಗಳ ಕ್ಷೇಮ ಮುಖ್ಯವಾಗಿತ್ತು. +ಬಾಯಿ ಬರದ ಮಕ್ಕಳನ್ನು ಸಾಕುವ ಕಷ್ಟ ಆಚಾರಿಗೆ ಅನುಭವಕ್ಕೆ ಬಂದ ಸಂಗತಿ. +ಅವನು ಮೂರು ಮೂಕ ಮಕ್ಕಳನ್ನು ಸಾಕಬೇಕಾದ ಅನಿವಾರ್ಯತೆಗೆ ತನ್ನ ಗ್ರಹಚಾರವನ್ನೂ ಪೂರ್ವ ಜನ್ಮದ ಪಾಪ ಶೇಷವನ್ನೂ ಹೊಣೆಯಾಗಿಸಿದ್ದ. +ಆದ್ದರಿಂದಲೇ ಮಕ್ಕಳಲ್ಲಿ ಪ್ರೀತಿ ಉಳಿಸಿಕೊಂಡಿದ್ದ. +ಕುಮಾರಸ್ವಾಮಿ ಎಷ್ಟೆಲ್ಲಾ ಪೂಸಿ ಮಾಡಿದ್ದರೂ ಸಾವಂತ್ರಿ ಆತನಿಗೆ ಹೆಚ್ಚು ಅವಕಾಶ ನೀಡಿರಲಿಲ್ಲ. +ಅವಳ ಕೈ ಮಿದುವನ್ನೋ, ಮುಂಗುರುಳ ಸುರುಳಿಯನ್ನೋ, ಹಿಮ್ಮಡಿಯ ರಂಗನ್ನೋಸವರುವುದರಲ್ಲಿ ಅವನಿಗೆ ಕತ್ತಲಾಗುತ್ತಿತ್ತು. +ಅವಳು ಸುರಕ್ಷಿತವಾಗಿ ಉಳಿದಿದ್ದಳು. +ಅದನ್ನು ಖಚಿತಪಡಿಸಿಕೊಂಡ ಆಚಾರಿ ತಕ್ಷಣವೇ ಆಕೆಯ ಮದುವೆ ಮಾಡುವ ಸಂಕಲ್ಪ ಮಾಡಿದ. +ಕೈ ಬಾಯಿ, ಮುಖ ಮೂತಿ ಸರಿ ಇದ್ದಹೆಣ್ಣುಮಕ್ಕಳಿಗೆ ಮದುವೆ ಮಾಡುವುದು ಹರ್ಮಾಗಾಲವಾಗಿರುವಾಗ ಬಾಯಿ ಬಾರದ, ಕಿವಿ ಕೇಳದ ಬಡಹುಡುಗಿಯನ್ನು ಮದುವೆಯಾಗಲು ಯಾರು ಮುಂದೆ ಬರುತ್ತಾರೆ ಎಂಬುದನ್ನು ಸೀನಾಚಾರಿ ಯೋಚಿಸಲಿಲ್ಲ. +ಸ್ವಂತ ಪ್ರಯತ್ನದಲ್ಲಿ ವಿಶೇಷ ನಂಬಿಕೆ ಮತ್ತು ದೈವಬಲದಲ್ಲಿ ವಿಶ್ವಾಸ ಇಟ್ಟುಕೊಂಡ ಅವನು ಕುಲುಮೆಗೆ ಬಂದವರ ಎದುರು ತಮ್ಮ ಮಗಳಿಗೊಂದು ಅನಾಥ ಗಂಡು ಹುಡುಕಿಕೊಡುವಂತೆ ಕೇಳುತ್ತಿದ್ದ. +ಮೂರು ಮೂಕ ಮಕ್ಕಳನ್ನು ಕಟ್ಟಿಕೊಂಡು ಏಗುತ್ತಿದ್ದ ಆಚಾರಿಯ ಸ್ಥಿತಿಗೆ ಮರುಕ ಪಟ್ಟಿದ್ದ ಆಜುಬಾಜಿನ ರೈತರು ಪ್ರಯತ್ನ ಮಾಡುವ ಭರವಸೆ ನೀಡುತ್ತಿದ್ದರು. +ಕೆಲವರು ಪ್ರಾಮಾಣಿಕವಾಗಿ ಪ್ರಯತ್ನವನ್ನೂ ಮಾಡುತ್ತಿದ್ದರು. +ಸೀನಾಚಾರಿಯ ಪ್ರಯತ್ನದಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ಬದುಕು ಅರಸಿ ಬಂದಿದ್ದ ಕಿಟ್ಟಾಚಾರಿ ಎಂಬ ಅನಾಥ ಹುಡುಗನೊಬ್ಬ ಮದುವೆಯಾಗಲು ಒಪ್ಪಿಕೊಂಡ. +ಸರಿಯಾದ ಊಟ ಉಪಚಾರ ಇಲ್ಲದೆ,ಕೆಲಸಇಲ್ಲದೆ, ಬೀಕಲು ಬೀಕಲಾಗಿ ಒಣಗಿ ಹೋಗಿದ್ದ ಆತನನ್ನು ಮದುವೆಯಾಗಲು ಸಾವಂತ್ರಿಯೇ ಒಲ್ಲೆ ಎಂದು ಸಂಜ್ಞೆ ಮಾಡಿದ್ದಳು. +ಮಗಳನ್ನು ಸಾಧ್ಯವಾದಷ್ಟು ರಮಿಸಿ ಅಳಿಯನನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವ ಭರವಸೆಯನ್ನು ಮಗಳಿಗೆ ನೀಡಿದ ಮೇಲೆ ಆಕೆಯ ಮುಖ ರಂಗೇರಿತು. +ಊರವರ ಸಹಕಾರದಿಂದ ಸೀನಾಚಾರಿ ಮಗಳ ಮದುವೆಯನ್ನು ಮಾಡಿ ಮುಗಿಸಿದ. +ಮಾವ ಅಳಿಯ ಒಟ್ಟಿಗೆ ಕಲೆತು ಕುಲುಮೆಯ ಕೆಲಸವನ್ನು ಮಾಡುತ್ತಿದ್ದಾಗ ಹಿರಿಯ ಹುಡುಗ ಭಾವನನ್ನು ಪಕ್ಕ ಕರೆದು ತಾನು ಕೂಡ ತಾಳಿ ಕಟ್ಟುವುದಾಗಿ ಕೈ ವಿನ್ಯಾಸದೊಂದಿಗೆ ತೋರಿಸಿದ. +ಅದನ್ನು ನೋಡಿ ಕಿರಿಯ ಭಾವ ನಾಚಿಕೆ ನಟಿಸಿ ಖಿ ಖಿ ಎಂದು ನಗು ಅದುಮಲು ಪ್ರಯತ್ನಿಸಿದ. +ಗಂಡು ಮಕ್ಕಳು ವಯಸ್ಸಿಗೆ ಬಂದಿರುವುದನ್ನು ಸೀನಾಚಾರಿ ನಿರ್ಲಕ್ಷಿಸುವಂತಿರಲಿಲ್ಲ. +ಆದರೆ ಅವರಿಗೆ ಮದುವೆ ಮಾಡುವುದಾದರ ಹೇಗೆ ಎಂಬುದು ಯಕ್ಷಪಶ್ನೆಯಾಗಿ ತೋರಿತು. +ಇಬ್ಬರಿಗೂ ಬಾಯಿ ಬರುವುದಿಲ್ಲ, ಕಿವಿಕೇಳುವುದಿಲ್ಲ. +ಇವರಿಗೆ ಮದುವೆಯಾಗಲು ಯಾರು ಹೆಣ್ಣು ಕೊಡುತ್ತಾರೆ. +ಯಾರು ಮದುವೆಯಾಗಲು ಮುಂದೆ ಬರುತ್ತಾರೆ ಎಂಬುದು ತಲೆ ತಿನ್ನತೊಡಗಿದಾಗ ಸೀನಾಚಾರಿ ಎರಡು ಮೂರು ದಿನ ನಿದ್ದೆಗೆಟ್ಟು ದೂರದ ಸಂಬಂಧಿಕರೊಬ್ಬರ ಜತೆ ದಕ್ಷಿಣ ಕನ್ನಡ ಜಿಲ್ಲೆಗೆ ಕೆಲಸ ಕಲಿಯಲು ಹಾಗೂ ಸಾಧ್ಯವಾದರೆ ಕನ್ಯೆಯರನ್ನು ಅರಸಲು ಇಬ್ಬರೂ ಮಕ್ಕಳನ್ನು ಕಳುಹಿಸಿದ. +ಮೂರು ದಿನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಧುಗಳಿಂದ ತಕ್ಷಣ ಹೊರಟು ಬರುವಂತೆ ಒಂದು ಟೆಲಿಗ್ರಾಂ ಬಂತು. +ಗಡಿಬಿಡಿಯಿಂದ ಹಣ ಜೋಡಿಸಿ ಮಂಗಳೂರಿಗೆ ಹೋದಾಗ ತಿಳಿದು ಬಂದ ಸಂಗತಿ ಸೀನಾಚಾರಿಯನ್ನು ದಿಕ್ಕುಗೆಡಿಸಿತು. +ಮಕ್ಕಳನ್ನು ಕರೆದೊಯ್ದ ಮರುದಿನವೇ ಎರಡನೆಯ ಮಗ ಮಂಗಳೂರಿನಲ್ಲಿ ರಸ್ತೆ ದಾಟುವಾಗ ಹಿಂದಿನಿಂದ ಬಂದ ಬಸ್ಸಿನ ಸದ್ದು ಕೇಳಿಸದೆ ಅದಕ್ಕೆ ಸಿಕ್ಕು ಮರುದಿನ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದ. +ದೊಡ್ಡ ಮಗ, ತಮ್ಮನಿಗೆ ಆದ ಅಪಘಾತ ನೋಡಿ ತೀವ್ರಘಾಸಿಗೊಂಡು ಆ ರಾತ್ರಿ ಎದ್ದು ಹೋದವನು ಇಂಥ ಕಡೆ ಹೋಗಿದ್ದಾನೆ ಎಂದು ಗೊತ್ತಾಗಲಿಲ್ಲ. +ಅವನ ಜೇಬಲ್ಲಿ ಸ್ವಲ್ಪ ದುಡ್ಡು ಇರಬೇಕು. +ಪ್ರಾಯಶಃ ಊರು ಕಡೆ ಹೋಗಿರಬೇಕು ಎಂದು ಬಂಧುಗಳು ಸಮಾಧಾನ ಮಾಡಿದರು. +ಚಿಕ್ಕವನ ಹೆಣವನ್ನು ಆಸ್ಪತ್ರೆಯಿಂದ ಬಿಡಿಸಿಕೊಂಡು ಬಂದು ಅಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿದ, ಸೀನಾಚಾರಿ. +ಹಿರಿಯ ಮಗ ಊರಿಗೆ ಬಂದಿರಬೇಕು ಎಂಬ ನಂಬಿಕೆಯಿಂದ ಊರಿಗೆ ಬಂದರೆ ಅವನ ಸುಳಿವಿರಲಿಲ್ಲ. +ದೈವವನ್ನು ಹಳಿಯುತ್ತಾ ಬುದ್ಧಿ ಭ್ರಮಣೆಯಾದವನಂತೆ ಗೊಣಗುತ್ತಾ ಇದ್ದವನ ಮನಸ್ಸು ಸ್ಥಿಮಿತಕ್ಕೆ ಬರದೆ ಹೋಯಿತು. +ಹಾಸಿಗೆ ಹಿಡಿದ. +ಕೆಲವು ದಿನ ಅದೇ ಕೊರಗಿನಲ್ಲಿ ಕಳೆದು ಕಿರಿಯಮಗನ ಹಾದಿಯನ್ನು ಹಿಡಿದ. +ಒಬ್ಬ ಭಾವ ಸತ್ತು ಇನ್ನೊಬ್ಬ ಭಾವ ನಾಪತ್ತೆಯಾಗಿ, ಅದೇ ಕೊರಗಿನಲ್ಲಿ ಮಾವ ಸತ್ತ ಮೇಲೆ ಕಿಟ್ಟಾಚಾರಿ ಸಾವಂತ್ರಿಯನ್ನು ನಿರ್ಲಕ್ಷಿಸಲಿಲ್ಲ. +ಊರನ್ನು ಬಿಟ್ಟು ಅಲ್ಲಿ ಇಲ್ಲಿ ಸುತ್ತಿ ಆಯನೂರು ಪೇಟೆ ಸೇರಿದ್ದಾನೆ. +ಕುಲುಮೆಯನ್ನೂ ಹಾಕಿದ್ದಾನೆ. +ಚೆನ್ನಾಗಿ ವಹಿವಾಟು ನಡೆಯುತ್ತಿದೆ. +ಇಬ್ಬರು ಮಕ್ಕಳೂ ಹುಟ್ಟಿವೆ. +ಅವಕ್ಕೆ ಕಿವಿ ಕೇಳಿಸುತ್ತಿದೆ,ಮಾತಾಡುತ್ತವೆ. +ಊರು ಕಡೆಯ ಜನ ಭಾನುವಾರ ಹೋದರೆ ಅವರಿಗೆ ಸಂತೆ ವ್ಯಾಪಾರದಲ್ಲಿ ನೆರವಾಗುತ್ತಾನೆ. +ಚೆನ್ನಾಗಿ ಮಾತಾಡಿಸುತ್ತಾನೆ. +ಸೀನಾಚಾರಿಯ ಮಗಳ ಕೈ ಹಿಡಿದ ಮೇಲೆ ತಾನು ಮನುಷ್ಯನಾದೆ ಎಂದು ಹೇಳುತ್ತಾನಂತೆ. +ಕಿಟ್ಟಾಚಾರಿಯನ್ನು ನೋಡಬೇಕು ಎಂಬ ಮನಸ್ಸಾಯಿತು. +ಆಯನೂರಿಗೆ ಹೋಗುವ ಕೆಲಸವೇನೂ ಇರಲಿಲ್ಲ. +ಭಾನುವಾರ ಸಂತೆಯ ದಿನ ಅವನು ಗಡಿಬಿಡಿಯಲ್ಲಿರುತ್ತಾನೆ ಎಂದುಕೊಂಡು ಸಂತೆಯ ದಿನ ಬಿಟ್ಟು ಹೊರಟೆ. +ಪುಣ್ಯಕ್ಕೆ ಕಮ್ಮಾರ ಸಾಲೆಯಲ್ಲಿಯೇ ಇದ್ದ. +ಚಿಕ್ಕ ಹುಡುಗನೊಬ್ಬ ಅವನಿಗೆ ಸಹಾಯಕನಾಗಿ ಸುತ್ತಿಗೆ, ಇಕ್ಕುಳ ತಂದುಕೊಡುತ್ತಿದ್ದ. +ನಾನು ಅವನಿಗೆ ಪೂರ್ಣ ಅಪರಿಚಿತನೇ ಆಗಿದ್ದೆ. +ಆದರೆ, ಪರಿಚಯ ಮಾಡಿಕೊಳ್ಳಲು ಕಷ್ಟವಾಗಲಿಲ್ಲ. +"ಸೀನಾಚಾರ್ರು ನಮ್ಮ ಮನೆಗೆ ತುಂಬ ಬೇಕಾದವರಾಗಿದ್ದರು" ಎಂದು ಹೇಳಿದ್ದೇ ಪರಿಚಯದ ಮಾತಾಯಿತು. +ಅನೇಕರು ಹೇಳಿದ್ದಂತೆ ತುಂಬ ಮುತುವರ್ಜಿಯಿಂದ ಮಾತಾಡಿಸಿದ. +ಕತ್ತಿ, ಕೊಡಲಿ, ಗಾಡಿಹಳಿಗಳ ದುರಸ್ತಿ, ಗಾಡಿ ಚಕ್ರಗಳ ಕೆಲಸ ಮಾಡುತ್ತಿದ್ದ. +ನನಗೆ ಬೇಕಾಗುವಂತಹ ಸಣ್ಣ ಕತ್ರಿ, ಗುದ್ದಲಿಯನ್ನು ಅವನು ಸ್ವಂತವಾಗಿ ಮಾಡಿ ಮಾರುತ್ತಿರಲಿಲ್ಲ. +ಆದರೆ ಬರಿಗೈಯಲ್ಲಿ ವಾಪಸು ಬರಲಾಗದೆ, "ಏನಾದರೂ ಮಾಡಿ ಕೊಡಿ. +ಕೊಳ್ಳುತ್ತೇನೆ" ಎಂದು ಅವನನ್ನು ಕೇಳಿದೆ. +ನನ್ನ ಬಲವಂತಕ್ಕೆ ಹಳೆಯ ಕಬ್ಬಿಣದ ತುಂಡೊಂದನ್ನು ಸಣ್ಣ ಕತ್ತಿಯಾಕಾರಕ್ಕೆ ಬಗ್ಗಿಸಿ ಉತ್ತಮವಾದ ಮರದ ಹಿಡಿಯನ್ನು ಹಾಕಿಕೊಟ್ಟ. +ಅವನ ಬಳಿಎರಡು ಮೂರು ಗಂಟೆ ಕಾಲ ಕಳೆದು ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಅವನ ಮಗನೊಡನೆ ಮಾತಾಡಿ ಊರಿಗೆ ಹೊರಟು ಬಂದೆ. +ರಿಪ್ಪನ್‌ಪೇಟೆಯಲ್ಲಿ ಸ್ಟಲ್ಪ ಹೊತ್ತು ಬಸ್ಸು ನಿಂತಿದ್ದಾಗ ಚಂದ್ರ ಎಲ್ಲಾದರೂ ಕಾಣಬಹುದೇ ಎಂದು ನೋಡಿದೆ. +ಪ್ರಯೋಜನವಾಗಲಿಲ್ಲ ಹೆದ್ದಾರಿಪುರದಲ್ಲಿ ಇಳಿದಾಗ ತುಂಬ ಜನ ಸೇರಿದ್ದರು. +ಮೆರವಣಿಗೆ ಸೇರಿದಂತೆ ಗದ್ದಲ. +ಬಸ್ಸಿಳಿದು ವಿಚಾರಿಸಿದಾಗ ಗ್ರಾಮಪಂಚಾಯಿತಿಯ ಅಧ್ಯಕ್ಷನಾಗಿ ಕುಮಾರಸ್ವಾಮಿ ಆಯ್ಕೆಯಾಗಿರುವ ಸಂಗತಿ ಗೊತ್ತಾಯಿತು. +ಬೆಂಬಲಿಗರು ಅವನ ಮೆರವಣಿಗೆ ಮಾಡುತ್ತಿದ್ದರು. +ಅವನ ವಿಜಯದ ಸಂಕೇತವಾಗಿ ಅನೇಕರು ತೂರಾಡುತ್ತಾ ತೊದಲು ಮಾತಿನಲ್ಲಿ ಜಯಘೋಷಗಳನ್ನು ಕೂಗುತ್ತಿದ್ದರು. +ಕೆಲವರು ತಲೆಕೆದರಿಕೊಂಡು ಬೆವರು ಸೋರುವಂತೆ ಕುಣಿದು ಕುಪ್ಪಳಿಸುತ್ತಾ ರಸ್ತೆಯಲ್ಲಿ ದೂಳೆಬ್ಜಿಸುತ್ತಿದ್ದರು. +ಮೆರವಣಿಗೆಯಿಂದ ದೂರ ಉಳಿದಿದ್ದ ಜನ ವಿಜಯಯಾತ್ರೆಗೆ ಮೂಕಸಾಕ್ಷಿಯಾಗಿ ಕಣ್ಣು ಪಿಳಿ ಪಿಳಿ ಬಿಡುತ್ತಾ ಮೆರವಣಿಗೆ ಎಬ್ಬಿಸಿದ ದೂಳಿಗೆ ಕಣ್ಣೊರೆಸಿಕೊಳ್ಳುತ್ತಿದ್ದರು. +ಆತ ವಿಚಾರಣೆ ಮುಸ್ಸಂಜೆಯ ಹೊತ್ತಿನಲ್ಲಿ ಮದುವೆಗೆ ಹೊಲಿಸಿದ್ದ ಬಟ್ಟೆಗಳನ್ನು ಹಾಕಿಕೊಂಡು ಕೈಯಲ್ಲಿ ಗ್ರಾಮಸೇವಕರಿಂದ ಇಸಿದುಕೊಂಡ ಹೊಸ ಕಬ್ಬಿಣದ ದಿಂಡಿನ ಕೊಡೆ ಹಿಡಿದು, ಕಸೂತಿ ಹಾಕಿದ ಎಲೆಯಡಿಕೆ ಚೀಲಜೋತಾಡಿಸುತ್ತ ಹೊರಟ ಹಾಲಪ್ಪನಿಗೆ ಎದುರಾದವರು "ಏನು ಮದುಮಕ್ಕಳ ಸವಾರಿ, ಅತ್ತೆ ಮನೆಕಡೆಗೋ?" ಎಂದು ಕೇಳುತ್ತಿದ್ದರು. +ಇವನು ನಾಚಿ ನಿಲ್ಲುವಾಗ "ಹೋಗಿ ಹೋಗಿ, ಆಗಲೇ ಬೈಗಾತ ಬಂತು"ಎನ್ನುತ್ತಿದ್ದರು. +ಮದುವೆ ಕಳೆದು ವಾರವಾದರೂ ಮದುಮಗನಾಗಿಯೇ ಇದ್ದ ಹಾಲಪ್ಪ. +ಹೆಂಡತಿ ಊರಿಗೆ ಪೇಟೆ ಮೂಲಕ ಹಾದು ಹೋಗುವಾಗ ಸುಮ್ಮನೆ ಪೇಟೆ ದಾಟಬಹುದಿತ್ತು. + ಹುಟ್ಟಿದಾರಭ್ಯ ಆರಂಭದ ಕೆಲಸದಲ್ಲೇ ಇದ್ದ ಅವನು ಪೇಟೆ ಸೆಗಣಿ ತುಳಿಯ ಹತ್ತಿದ್ದು ಇತ್ತೀಚೆಗೆ. +ಅಕ್ಕಿ ಮಾಡಿಸಲು ಗಾಡಿ ಕಟ್ಟಿಸಿಕೊಂಡು ಪೇಟೆಗೆ ಬಂದನೆಂದರೆ ಲಕ್ಷ್ಮಣ ಭಟ್ಟನ ಹೋಟೆಲಿನಲ್ಲಿ ಕುಡಿಯುವ ಚಾ ಎಲ್ಲೋ ಅಪರೂಪದ್ದು. +ಈ ಸಲ ಜೇಬಿನಲ್ಲಿದ್ದ ಚಿಲ್ಲರೆ ಸದ್ದಾಗುತ್ತಿದ್ದರಿಂದ ಕಾಲು ಭಟ್ಟನ ಹೋಟೆಲು ಕಡೆ ಎಳೆದವು. +ಹೋಟೆಲಿಗೆ ಹೋಗುವ ಮೊದಲು ಪಕ್ಕದಲ್ಲಿಯೇ ಇದ್ದ ರಾಮಭಟ್ಟನ ಅಂಗಡಿಗೆ ಹೋಗಿ ಬಂದು ಸಿಗರೇಟು ಪ್ಯಾಕು ಕೊಂಡ. +ಒಂದು ಸಿಗರೇಟು ಹೊತ್ತಿಸಿ ಯಾರಾದರೂ ಹಿರಿಯರು ಗಮನಿಸಿಯಾರೆಂದು ಸುತ್ತಮುತ್ತನೋಡುತ್ತ ಅವಸರವಾಗಿ ಹೊಟೇಲಿಗೆ ನುಗ್ಗಿದ. +ಗೋಲಿಬಜೆ ತಿಂದು ಚಾ ಕುಡಿದು ಏಳುವಾಗ ಕೈಯಲ್ಲಿಕೊಡೆ ಇಲ್ಲದ್ದು ಗಮನಕ್ಕೆ ಬಂತು. +ಕೂಡಲೇ ಎದ್ದು ಬಿಲ್ಲು ಕೊಟ್ಟು ಹೊರಗೆಲ್ಲಾ ಕಣ್ಣಾಡಿಸಿದ. +ಸಿಗರೇಟು ಕೊಳ್ಳುವಾಗ ರಾಮಭಟ್ಟನ ಅಂಗಡಿಯಲ್ಲಿ ಕೊಡೆಯನ್ನು ಒರಗಿಸಿಟ್ಟಿದ್ದು ನೆನಪಾಯಿತು. +ಪಕ್ಕದಲ್ಲೇ ಅಂಗಡಿ. +ತಕ್ಷಣ ಅಲ್ಲಿಗೆ ಕಂಗಾಲಾಗಿ ಓಡಿದ. +ಇಟ್ಟ ಜಾಗದಲ್ಲಿ ಕೊಡೆ ಇರಲಿಲ್ಲ. +ಹಾಲಪ್ಪನಿಗೆ ಸೂರು ಹರಿದುಬಿದ್ದಂತಾಯಿತು. +ಗ್ರಾಮಸೇವಕರು "ಮದುಮಗ, ತೆಗೆದುಕೊಂಡು ಹೋಗು" ಎಂದು ಮದುವೆಯ ದಿನವೇ ಕೊಟ್ಟಿದ್ದರು. +ಅದನ್ನು ಬಿಚ್ಚಿ ಕೂಡ ಸರಿಯಾಗಿ ನೋಡಿರಲಿಲ್ಲ. +"ಈಗ ಎಂಥಾ ಗತಿ ಬಂತಪ್ಪ" ಎಂದುಕೊಂಡು ಮಂಕಾಗಿ ನಿಂತಿದ್ದಾಗ ಆಜುಬಾಜಿನ ಹಳ್ಳಿಯ ಪರಿಚಿತರು ಅವನನ್ನು ಮಾತಾಡಿಸಿದ್ದರು. +ಅವನಿಗೆ ಅದೊಂದೂ ಬೇಕಿರಲಿಲ್ಲ. +ಸಂಜೆಯ ಹೊತ್ತಾಗಿದ್ದುದರಿಂದ ಭಟ್ಟನ ಅಂಗಡಿಯಲ್ಲಿ ಸಾಕಷ್ಟು ಜನ ಸೇರಿದ್ದರು. +ಜಾಸ್ತಿ ಜನ ಇದ್ದ ಕಾರಣ ಕೊಡೆಯ ಬಗ್ಗೆ ಕೇಳಲೂ ಭಯ. +ಪೇಟೆ ದಾಟಿ ಅತ್ತೆ ಮನೆ ಸೇರಬೇಕಾದರೆ ಸಾಕಷ್ಟು ದೂರ ನಡೆಯಬೇಕಿತ್ತು. +ಗೊಂದಲ, ಆತಂಕದಲ್ಲಿ ಚಡಪಡಿಸುತ್ತಿದ್ದ ಹಾಲಪ್ಪ ಜನ ಕರಗಿದ ಮೇಲೆ ಹೆದರುತ್ತಾ ಹೆದರುತ್ತಾ "ಭಟ್ರೇ, ಒಂದು ಕೊಡೆ ಇಲ್ಲಿಟ್ಟಿದ್ದೆ. ಎತ್ತಿಟ್ಟಿರಾ. . " ಎಂದು ಕೇಳಿದ. +ರಾಮಭಟ್ಟ ಏನೋ ಹೇಳಲು ಬಾಯಿ ತೆರೆಯುವಷ್ಟರಲ್ಲಿ ಅಂಗಡಿಯಲ್ಲಿ ಸಾಮಾನು ಕಟ್ಟುತ್ತಿದ್ದ ಹುಡುಗ "ಯಾವುದು?ಕೊಡೆಯಾ?ಇಲ್ಲಿದೆಯಲ್ಲ, ನಿಮ್ಮದಾ?" ಎಂದು ಎಣ್ಣೆಡಬ್ಬಗಳ ಸಂದಿಯಲ್ಲಿ ಹುದುಗಿಸಿಟ್ಟ ಕೊಡೆಯೊಂದನ್ನು ತೋರಿಸಲು ಮುಂದಾದ. +ರಾಮಭಟ್ಟ ಹುಡುಗನಿಗೊಂದು ತಪರಾಕಿ ಹಾಕಿ, "ಯಾರದ್ದೋ ಆ ಕೊಡೆ, ನಿಂದೇನೋ?"ಎಂದು ಹಾಲಪ್ಪನಿಗೆ ಜೋರು ಮಾಡಿದ. +ಹಿಡಿಕೆಯಲ್ಲಿ ಬೆಳ್ಳಗೆ ಹೊಳೆಯುವ ಕಬ್ಬಿಣದ ದಿಂಡಿನ ಕೊಡೆ ಕಂಡ ಹಾಲಪ್ಪ "ಹೌದ್ರೀ ನಂದೇ, ಆವಾಗ ಸಿಗರೇಟು ಕೊಂಡಕಾಬೇಕಾರೆ ಇಲ್ಲಿ ಇಟ್ಟು ಹೋಗಿದ್ದೆ. +ನಂದೇ ರೀ. . "ಎಂದ. + "ನಮ್ಮದೂ ಒಂದು ಕೊಡೆ ಇದೇ ಥರ ಇತ್ತು. +ವಾರದ ಹಿಂದೆ ಕಳೆದುಹೋಯ್ತು. +ಅದನ್ನೇ ಹುಡುಕ್ತಾ ಇದ್ದೆ. +ಇವತ್ತು ಸಿಕ್ಕು. +ಪರವಾಯಿಲ್ಲ ನೀನು ಹೋದ ವಾರದ ಸಂತೆಯ ದಿನ ಹೊಡೆದೆಯಾ. . . ?" +ರಾಮಭಟ್ಟನ ನೇರ ಆಪಾದನೆಯಿಂದ ಹಾಲಪ್ಪನ ತೊಳ್ಳೆ ನಡುಗಿ ಮೈಯೆಲ್ಲ ಬೆವತು ಹೋಯಿತು. +ಭಟ್ಟನ ಏರುದನಿಯ ಜೋರಿಗೆ ಆಗಲೇ ಕೊಡೆಯ ಪ್ರಕರಣ ಪಕ್ಕದಲ್ಲಿಯೇ ಇದ್ದ ಲಕ್ಷ್ಮಣ ಭಟ್ಟನ ಹೋಟೆಲಿಗೂ ಹರಡಿತ್ತು. +ಅಲ್ಲಿನ ಗಿರಾಕಿಗಳು ಕೆಲವರು ಇಲ್ಲಿಗೆ ಬಂದರು. +ರಸ್ತೆಯಲ್ಲಿ ಓಡಾಡುತ್ತಿದ್ದವರೂ ಈ ಕಡೆ ತಲೆಹಾಕಿದರು. +ಎಲ್ಲರೂ ಏನು ಏನು ಎಂದು ವಿಚಾರಿಸತೊಡಗಿ ಸಾಕಷ್ಟು ಗೊಂದಲವಾಯಿತು. +ಹಳ್ಳಿಯ ಒಂದಿಬ್ಬರು ಹಾಲಪ್ಪನ ಪರವಾಗಿ ಮಾತಾಡಿದಾಗ ಅವರನ್ನು ನೋಡಿ ಇನ್ನೂ ಹಾರಾಡಿದ ಭಟ್ಟ ಕೊಡೆಯನ್ನು ಹಾಲಪ್ಪನ ಕೈಯಿಂದ ಕಿತ್ತುಕೊಂಡು ಗಲ್ಲಾದ ಹಿಂದೆ ಇಟ್ಟ ಹಾಲಪ್ಪ ಏನು ಮಾಡಲೂ ತೋಚದೆ ಮಿಕಿಮಿಕಿನೋಡುತ್ತಿದ್ದಾಗ ಯಾರೋ ಒಬ್ಬರು "ನಿನ್ನ ಕೊಡೆ ಗುರ್ತು ಐತಾ? +ಸರಿಯಾಗಿ ಗುರ್ತು ಹೇಳಿದರೆ ಸಾವುಕಾರು ಕೊಡ್ತಾರೆ" ಎಂದು ಸಮಾಧಾನಪಡಿಸಲು ಯತ್ನಿಸಿದರು. +ಕೊಡೆ ನಾನೇ ತಂದಿದ್ದೆ. +ಇಲ್ಲೇ ಇಟ್ಟಿದ್ದೆ" ಎಂದು ನಡುಗುವ ಧ್ವನಿಯಲ್ಲಿ ಹಾಲಪ್ಪ ಪದೇ ಪದೇ ಹೇಳತೊಡಗಿದ. +ಜನ ಸೇರುತ್ತಿದ್ದಂತೆ ರಾಮಭಟ್ಟನ ಜೋರು ಜಾಸ್ತಿಯಾಯಿತು. +ಕೊಡೆಯನ್ನು ಬಿಚ್ಚಿ ಚಹರೆ ನೋಡಲು ಅವನಿಗೆ ಮನಸ್ಸಿರಲಿಲ್ಲ. +ಬರೀ ಬಾಯಿ ಜೋರಿನಲ್ಲಿ ಅದು ತನ್ನದೇ ಎಂದು ಸಾಧಿಸತೊಡಗಿದ್ದ. +ಹಾಲಪ್ಪನ ಕಡೆ ಮಾತಾಡಿದ ಕೆಲವರು ಕೊನೆಗೆ ಅವನಿಗೇ ಸಮಾಧಾನ ಹೇಳಲು ಬಂದರು. +"ನೀನು ನಿಜವಾಗಲೂ ಕೊಡೆ ತಂದಿದ್ಕಾ" ಎಂದೊಬ್ಬ ಕೇಳಿದ. +ಎಲ್ಲರ ಬಲವಂತ ಅತಿಯಾಗಿ ಹಾಲಪ್ಪ ಅವಮಾನ ತಡೆಯದೆ ಜೋರಾಗಿ ಅಳತೊಡಗಿದ. +ಸೇರಿದ ಬಹಳಷ್ಟು ಜನಕ್ಕೆ ಕೊಡೆ ಹಾಲಪ್ಪನದೇ ಇದ್ದರೂ ಇರಬಹುದೆನ್ನಿಸಿತ್ತು . +ಪೇಟೆಯ ಕೆಲವರು ರಾಮಭಟ್ಟನ ಕಡೆ ಮಾತಾಡತೊಡಗಿದ್ದು ನೋಡಿದರೆ ಅದು ರಾಮಭಟ್ಟನದೇ ಇರಬಹುದೆನ್ನಿಸಿತ್ತು. +ರಾಮಭಟ್ಟಕೊಡೆ ನೋಡಲು ಯಾರಿಗೂ ಅವಕಾಶ ಕೊಡದೇ ಇದ್ದುದರಿಂದ ಯಾವುದನ್ನೂ ಕೂಡಲೇ ಇತ್ಯರ್ಥಪಡಿಸುವಂತಿರಲಿಲ್ಲ. +ಅಷ್ಟು ಹೊತ್ತಿಗೆ ಆ ಕಡೆ ರಸ್ತೆಯಲ್ಲಿ ಬರುತ್ತಿದ್ದ ಪೊಲೀಸ್‌ ಪೇದೆಯೊಬ್ಬನ್ನಿಗೆ ಯಾರೋ ಗಲಾಟೆಯ ಸುದ್ದಿಮುಟ್ಟಿಸಿದರು. +ಅವನು ಮೊದಲು ಹಿಂದೇಟು ಹಾಕಿದರೂ "ನೀವು ಸುಮ್ಮನೇ ಬನ್ನಿ, ಕೇಸು ತನ್ನಂತಾನೇ ಪೈಸಲ್‌ ಆಗ್ತದೆ" ಎಂದು ಹೇಳಿದ್ದರಿಂದ ಹ್ಯಾಟು ಸರಿಯಾಗಿ ಹಾಕಿಕೊಂಡು ಲಾಠಿ ತಿರುಗಿಸುತ್ತಾ ಅಂಗಡಿ ಕಡೆಬಂದ. +ಸಾಕಷ್ಟು ಜನ ಸೇರಿದ್ದನ್ನು ನೋಡಿದ ಮೇಲೆ ಸಂಬಂಧಪಟ್ಟವರನ್ನು ಮೊದಲು ಸ್ಟೇಷನ್ನಿಗೆ ಕರೆದೊಯ್ಯುವುದು ಮೇಲು ಎನ್ನಿಸಿತು. +ಆದರೆ ಇಲ್ಲೇ ಇತ್ಯರ್ಥವಾದರೆ. . . ಎಂದು ಪೊಲೀಸ್‌ ಬುದ್ಧಿಯೂ ಓಡಿತು. +ಇಷ್ಟಕ್ಕೂ ಮೊದಲು ಜನ ಸೇರಿದ್ದರ ಕಾರಣ ವಿಚಾರಿಸಬೇಕಿತ್ತು. +ಸೇರಿದವರಿಗೆಲ್ಲ ತನಗೆ ಹೆದರುವಂತೆ ಕಂಡುಬಂದುದರಿಂದ ಗುಂಪು ಸೇರಬಾರದೆಂದು ಎಚ್ಚರಿಕೆ ಕೊಟ್ಟ. +ಪೇದೆಯ ಮಾತಿಗೆ ಕೆಲವರು ಬೆಲೆಕೊಟ್ಟರು. +ಕೆಲವರು ಆ ಆಜ್ಞೆ ತಮಗಲ್ಲವೆಂದು ಸುಮ್ಮನೆ ಕತ್ತು ನಿಮಿರಿಸಿದರು. +ರಾಮಭಟ್ಟನನ್ನೂ, ಹಾಲಪ್ಪನನ್ನೂ ಅವರಿಬ್ಬರ ನಡುವೆ ಸಮಸ್ಯೆಯಾಗಿ ಬಂದ ಕೊಡೆಯನ್ನು ಕಣ್ಣಿಂದಲೇ ಅಳತೆ ಮಾಡಿದ ಪೇದೆ ವಿಚಾರಣೆ ಆರಂಭಿಸಿದ. +ರಾಮಭಟ್ಟನ ಜತೆ ಮಾತಾಡುವಾಗ ಬಹುವಚನದಲ್ಲೂ ಹಾಲಪ್ಪನನ್ನು ವಿಚಾರಿಸುವಾಗ ಏಕವಚನದಲ್ಲೂ ಪೊಲೀಸ್‌ ನಾಲಿಗೆ ಹೊರಳುತ್ತಿತ್ತು. +"ಈ ಕೊಡೆ ನಿಮ್ಮದೇನ್ರಿ?" ಕೊಡೆ ಇಸಿದುಕೊಂಡು ಪರಿಶೀಲಿಸುತ್ತಾ ಕೇಳಿದ. +"ಹೌದು ಸಾರ್‌. +ಹೋದವಾರ ಕಳೆದುಹೋಗಿತ್ತು" ಭಟ್ಟನ ವಿನಮ್ರ ಉತ್ತರ. +ಅಲ್ಲಿಗೆ ಭಟ್ಟನ ವಿಚಾರಣೆ ಮುಗಿದು ಲಾಠಿಯ ತುದಿ ಹಾಲಪ್ಪನತ್ತ ತಿರುಗಿತು. +"ನಿಂದೇನಯ್ಯ ಕೊಡೆ?" +"ನಿಜವಾಗ್ಲೂ ನಿಂದೇನಯ್ಯ. . . ಸುಳ್ಳು ಹೇಳಿದ್ರೆ ಚಮಡ ಸುಲಿದುಬಿಡ್ತೀನಿ." +ಪೊಲೀಸ್‌ ಬೆದರಿಕೆಗೆ ತಕ್ಕಂತೆ ಲಾಠಿಯೂ ಒಂದು ಸಲ ನೆಲವನ್ನು ಕುಟ್ಟಿತು. +ಮೊದಲೇ ಕಂಗಾಲಾಗಿದ್ದ ಹಾಲಪ್ಪ ಸುಳ್ಳು ಹೇಳಲಾರದೆ"ನಂದಲ್ಲ ಸ್ವಾಮಿ, ನಮ್ಮೂರು ಗ್ರಾಮ ಸೇವಕರದ್ದು" ಎಂದು ಧೈರ್ಯವಹಿಸಿ ಹೇಳಿದ. +ಇಷ್ಟು ಹೊತ್ತು ನಡೆದಿದ್ದ ಹಗರಣವೆಲ್ಲ ತಿಳಿಯಾಗುವಂತೆ, ಅಲ್ಲಿ ಸೇರಿದ್ದವರೆಲ್ಲ ಜೋರಾಗಿ ನಗತೊಡಗಿದರು. +ಒಂದು ಕ್ಷಣ ಪೇದೆಗೂ ಕಾರಣ ತಿಳಿಯಲಿಲ್ಲ. +"ಈ ಮಾತು ಮೊದಲೇ ಹೇಳಿದ್ದರೆ ಇಷ್ಟೆಲ್ಲ ಆಗ್ತಾನೇ ಇರ್ತಿರಲಿಲ್ಲ. +ಇಷ್ಟು ಹೊತ್ತು ತಂದೇ ಅಂತಿದ್ದ. +ಪೊಲೀಸರನ್ನ ನೋಡಿದ ಕೂಡ್ಲೇ ಗ್ರಾಮಸೇವಕರದ್ದು ಅಂತಾನೆ. +ಇನ್‌ಸ್ಪೆಕ್ಟರನ್ನು ನೋಡಿದರೆ ಇನ್ಯಾರದ್ದು ಅಂತಾನೋ. . . ಗಮಾರ" ಎಂದು ರಾಮಭಟ್ಟ ವಿಜಯದ ನಗೆ ನಕ್ಕುಪೇದೆಯ ಕಡೆ ನೋಡುತ್ತ. + "ಕೇಳಿದ್ರಲ್ಲ. ಸುಮ್ಮನೆ ಇಷ್ಟು ಹೊತ್ತೂ ಉಪದ್ರ ಕೊಟ್ಟ" ಎಂದ. +ಪೇದೆಯಿಂದ ಕೊಡೆ ಇಸಿದುಕೊಂಡು ಕೆಲಸದ ಹುಡುಗನನ್ನು ಪಕ್ಕದ ಹೊಟೆಲಿಗೆ ಕಳಿಸಿ ಪೇದೆಗೆ ಸ್ಟೂಲು ನೀಡಿ ಕೂರಲು ವಿನಂತಿಸಿಕೊಂಡ. +ಅವನು ಪೇದೆಗೆ ಆತಿಥ್ಯ ಆರಂಭಿಸುತ್ತಿರುವುದನ್ನೂ ಕೇಸನ್ನು ಮುಗಿಸಿಯೇ ಬಿಟ್ಟಿರುವುದನ್ನೂ ನೋಡಿದ ಹಾಲಪ್ಪನ ಪರಿಚಯಸ್ಥರೂ ಬೆರಗಾದರು. +ಅವರಿಗೂ ಮುಂದೇನು ಮಾಡಬೇಕೆಂದು ತೋಚಲಿಲ್ಲ. +ಅಷ್ಟರಲ್ಲಿ ರಸ್ತೆಯಲ್ಲಿ ಇಬ್ಬರು ಪೊಲೀಸ್‌ ಪೇದೆಗಳ ಜತೆ ನಿಧಾನವಾಗಿ ಹೆಜ್ಜೆ ಹಾಕುತ್ತ ದೀರ್ಫ ಚರ್ಚೆಯಲ್ಲಿ ಮುಳುಗಿದ್ದ ಟೋಪಿಯ ವ್ಯಕ್ತಿಯೊಬ್ಬರು ಈ ಕಡೆ ನೋಡುತ್ತ ಹೋಗುತ್ತಿರುವುದು ಕಂಡು ಬಂತು. +ಹಾಲಪ್ಪನ ಗುರ್ತಿನವನೊಬ್ಬ ಗುರ್ತು ಹಿಡಿದು "ಹೋ, ನಾರ್ಣಪ್ಪನವರು ಇದಾರೆ, ಅವರನ್ನೇ ಕರಿಯಾಣ" ಎಂದು ರಸ್ತೆಗೆ ಓಡಿದ. +ತನ್ನ ಜಮೀನು ವಿವಾದದ ಬಗ್ಗೆ ಕಂಗಾಲಾಗಿದ್ದ ರೈತನೊಬ್ಬನ ಕೇಸು ಹಿಡಿದು ಬಂದಿದ್ದ ನಾರಣಪ್ಪ, ಗುರ್ತಿನ ಇಬ್ಬರು ಪೇದೆಗಳನ್ನು ಕರೆದುಕೊಂಡು ಭಟ್ಟನ ಹೋಟೆಲಿಗೆ ಎದುರು ಸ್ವಲ್ಪ ಕೆಳಭಾಗದಲ್ಲಿರುವ ಮಿಲಿಟರಿ ಹೋಟೆಲಿಗೆ ಹೋಗಿದ್ದ. +ಹೋಟೆಲಿನಲ್ಲಿ ಊಟ ಮಾಡುತ್ತಾ ತನ್ನ ಕಡೆಯ ರೈತನ ಜಮೀನು ವಿವಾದದ ಬಗ್ಗೆ ವಿವರಿಸಿದ್ದ. +ಸಾಕಷ್ಟು ತಿಂದಾದ ಮೇಲೆ ಹಲ್ಲಿಗೆ ಕಡ್ಡಿಹಾಕುತ್ತ ನಿಧಾನವಾಗಿ ನಡೆದು ಬರುತ್ತಿದ್ದಾಗ ಹಿಂದಿನಿಂದ ಯಾರೋ ಕೂಗಿದಂತಾಯಿತು. +ನೋಡಿದರೆ ಪರಿಚಯಸ್ಥ. +ಅವನಿಂದ ಎಲ್ಲ ಸಮಾಚಾರ ಚುಟುಕಾಗಿ ಕೇಳಿದ ಮೇಲೆ ಜತೆಗಿದ್ದ ಪೊಲೀಸರನ್ನೂ, ಹೋಟೆಲಿನ ಬಿಲ್ಲು ತೆತ್ತು ಹಿಂದೆ ಹಿಂದೆ ಬರುತ್ತಿದ್ದ ರೈತನನ್ನೂ ಒಟ್ಟಿಗೆಸೇರಿಸಿ "ನೋಡಿ, ಅವನು ಬೆಳೆ ಕೊಯಿಸ್ತೀನಿ ಅಂತಾನಂತೆ. +ಅವನು ಗದ್ದೆಗೆ ಕಾಲು ಹಾಕಿದರೆ ಇವನು ಬಂದು ಕಂಪ್ಲೇಂಟು ಕೊಡ್ತಾನೆ. +ನೀವು ಹೋಗಿ ಅವನಿಗೆ ಚೆನ್ನಾಗಿ. . " ಎಂದು ಕೈಯಲ್ಲಿ ಸೂಚಿಸಿ ಪೊಲೀಸರನ್ನು ಬೀಳ್ಕೊಟ್ಟ. +ರೈತನ ಹತ್ತಿರ ಹಿಡಿದುಕೊಳ್ಳಲು ಕೊಟ್ಟಿದ್ದ ತನ್ನ ಹಳೆಯದೊಂದು ಕೊಡೆ ಹಾಗೂ ಚರ್ಮದ ಚೀಲ ಹಿಡಿದು ಠೀವಿಯಿಂದ ರಾಮಭಟ್ಟನ ಅಂಗಡಿ ಕಡೆ ಕಾಲು ಹಾಕಿದ. +ನಾರಣಪ್ಪನನ್ನು ನೋಡುತ್ತಲೇ ಸ್ಟೂಲಿನ ಮೇಲೆ ಕುಳಿತು ರವೆ ಉಂಡೆ ತಿನ್ನುತ್ತಿದ್ದ ಪೊಲೀಸ್‌ ಪೇದೆ ದಡಕ್ಕನೆ ಎದ್ದು ನಮಸ್ಕಾರ ಹಾಕಿದ. +"ಏನಯ್ಯ, ಜೋರು ಪಂಚಾತಿಗೆ ನಡೆಸಿದ್ದಿ, ಸಾಹೇಬರು ಊರಾಗ ಇಲ್ಲೇನು"ಎಂದು ಒಮ್ಮೆ ಗುಟುರು ಹಾಕಿ "ಏನು ಸಮಾಚಾರ" ಎಂದು ರಾಮಭಟ್ಟನನ್ನು ವಿಚಾರಿಸಿದ. +ಯಥಾಪ್ರಕಾರ ಇಬ್ಬರ ವಿಚಾರಣೆಯೂ ನಡೆಯಿತು. +ರಾಮಭಟ್ಟನ ಮಾತನ್ನು ಸಂಪೂರ್ಣ ಕೇಳಿದ ನಾರಣಪ್ಪ"ಕೊಡೆ ಕಳೆದುಹೋಗಿದ್ದು ಯಾವಾಗ? +ಸಿಕ್ಕಿದ್ದೆಲ್ಲ ನಿಂದೇನಯ್ಯ ಕೊಡೆ. +ಹಳ್ಳೀಜನ ಅಂದ್ರೆ ಸಸಾರ ಅಲ್ಲ, ತಾಇಲ್ಲಿ ಕೊಡೇನ" ಎಂದು ಆಜ್ಞಾಪಿಸಿದ. +ರಾಮಭಟ್ಟ ಗೊಣಗುತ್ತ ಕೊಡೆಯನ್ನು ಎತ್ತಿ ಕೊಟ್ಟ ಅದನ್ನು ಬಿಡಿಸಿ ಪರೀಕ್ಷಿಸಿದ ಮೇಲೆ ಹಾಲಪ್ಪನ ವಿಚಾರಣೆ ಆರಂಭಿಸಿದ "ಯಾವ ಮಾರ್ಕಿಂದು ನಿನ್ನ ಕೊಡೆ?" +"ಗೊತ್ತಿಲ್ಲ" +"ಹಾಗಾದ್ರೆ ಕೊಡೆ ಯಾರದು?" +ನಮ್ಮ ಗ್ರಾಮಸೇವಕರದ್ದು ನಾರಣಣ್ಣ. +"ಓಹ್‌!ನಿಮ್ಮೂರು ಗ್ರಾಮಸೇವಕರದ್ದೋ. +ಯಾವಾಗ ಬರ್ತಾರೆ ಉರಿಗೆ." +ರಜಾ ಹೋಗ್ತೀನಿ ಅಂದಿದ್ರು ನಾರಣಣ್ಣ, ಯಾವಾಗ ಬರ್ತಾರೋ ಗೊತ್ತಿಲ್ಲ" +ಅಂತೂ ಈ ಕೊಡೆ ನಿಂದಲ್ಲ ಅಲ್ಲ, ನಾರಣಣ್ಣ"- ಇಲ್ಲಿಗೆ ವಿಚಾರಣೆ ಮುಗಿಸಿದ ನಾರಣಪ್ಪ ಸುತ್ತಲೂ ನೋಡಿ ತೀರ್ಮಾನ ಹೇಳುವವನಂತೆ ಒಂದು ಸಲ ಕೆಮ್ಮಿದ. +"ಈಗ ಕೊಡೆ ಯಾರದ್ದೂ ಅನ್ನೊ ಬಗ್ಗೆ ಎಲ್ಲರಿಗೂ ಸಂಶಯ ಇದೆ. +ಗ್ರಾಮಸೇವಕರದ್ದು ಅಂತ ಇವನು ಹೇಳ್ತಾನೆ. +ನಂದೇ ಕಳೆದುಹೋದ ಕೊಡೆ ಇದು ಅಂತ ರಾಮಭಟ್ಟ ಹೇಳ್ತಾನೆ. +ಆದ್ರೆ, ಸರಿಯಾಗಿ ಹೇಳ್ತಾ ಇಲ್ಲ. +ಆದ್ದರಿಂದ ಇದರ ನಿಜವಾದ ಒಡೆಯ ಯಾರು ಅನ್ನೋದು ಪತ್ತೆಯಾಗೋವರೆಗೂ ಇದು ನನ್ನ ಹತ್ರ ಇರಲಿ. +ಈ ಹಾಲಪ್ಪ ಅಲ್ಲೀವರೆಗೆ ನನ್ನದೇ ಕೊಡೆ ಇಟ್ಟುಕೊಂಡಿರಲಿ. . . ಏನು. . . ?" +ನಾರಣಪ್ಪನ ಮಾತಿಗೆ ತಕ್ಷಣ ಯಾರಿಗೂ ಏನೂ ಹೇಳಲು ತೋಚದ ಕಾರಣ ತನ್ನ ಹಳೆಯ ಲಟೂರಿ ಕೊಡೆಯನ್ನು ಹಾಲಪ್ಪನ ಮುಂದೆ ಎಸೆದು ಹೊಸ ಕೊಡೆಯನ್ನು ಠೀವಿಯಿಂದ ಹಿಡಿದು ರಾಜಗಾಂಭೀರ್ಯದಿಂದ ರಸ್ತೆಗಿಳಿದ. +ಸೇರಿದ್ದ ಜನರೆಲ್ಲ ರಸ್ತೆಯುದ್ದಕ್ಕೂ ವಂದನೆ ಸ್ವೀಕರಿಸುತ್ತ ಮುಂದುವರಿದ ನಾರಣಪ್ಪನನ್ನೇ ನೋಡುತ್ತಿದ್ದರು. +ನನ್ನ ಜೈಲಿಗೆ ಕಳಿಸಿ ಮೂಡಲು ಕೆಂಪಾಗಿ ಚುಮು ಚುಮು ಬೆಳಕು ಹರಿಯುತ್ತಿರುವಾಗಲೇ ನಾಯಿಗಳು ಬೊಗಳಿ ಹೆದ್ದಾರಿಪುರದ ಕಡೆಯಿಂದ ಬರುವ ಯಾರದೋ ಆಗಮನವನ್ನು ಸೂಚಿಸಿದವು. +"ಇಷ್ಟು ಹೊತ್ತಾರೆ ಯಾರಪ್ಪ ಬರೋದು"ಅಂದುಕೊಳ್ಳುತ್ತಾ ಹೆಬ್ಬಾಗಿಲನ್ನು ಓರೆಮಾಡಿ ನೋಡುತ್ತಿದ್ದಾಗ ಗಾಡಿ ಹಾದಿಯ ಉಣುಗೋಲನ್ನು ತೆಗೆದುಕೊಂಡು ಒಬ್ಬ ವ್ಯಕ್ತಿ ಬರುತ್ತಿರುವುದು ಕಂಡಿತು. +ಆತ ಹತ್ತಿರ ಬರುತ್ತಿದ್ದಾಗಲೇ ಗುರುತು ಸಿಕ್ಕಿ "ನಾರಾಣಿ"ಎಂದಷ್ಟು ಮಾತ್ರ ಉಸಿರು ಹೊರ ಬಂತು. +ನಾರಾಣಿಯೂ ಸ್ವಲ್ಪ ಹೊತ್ತು ಸ್ತಂಭಿತನಾಗಿ ನಿಂತಿದ್ದು"ಚೆನ್ನಾಗಿದೀಯ ಅವ್ವ" ಎಂದಷ್ಟೆ ಹೇಳಿ ಮುಂದೆ ಮಾತಾಡದಾದನು. +ಸ್ವಲ್ಪ ಹೊತ್ತಿನವರೆಗೆ ಇಬ್ಬರಿಗೂ ಏನೂ ಮಾತನಾಡಲು ಆಗದೆ ಒಳಗೆ ಬಂದರು. +ಅವ್ವನ ಮನಸ್ಸು ಆರು ತಿಂಗಳ ಹಿಂದೆ ನಡೆದಿತ್ತು. +ನಾರಾಣಿ ಹೆದ್ದಾರಿಪುರಕ್ಕೆಂದು ಹೊರಟವನು ಅವತ್ತು ರಾತ್ರಿ ಬರಲಿಲ್ಲ. +ಒಂದು ಕಿಲೋಮೀಟರ್‌ಗೂ ಕಡಿಮೆ ಇದ್ದ ಹೆದ್ದಾರಿಪುರಕ್ಕೆ ಹೋದವನು ರಾತ್ರಿ ಎಷ್ಟು ಹೊತ್ತಾದರೂ ಮನೆಗಂತೂ ಬರುತ್ತಿದ್ದ. +ಬೆಳಿಗ್ಗೆಯಾದರೂ ಬರಲಿಲ್ಲ. +ಮಾರನೆಯ ದಿನ ಕೆಳಗಿನೂರು ಕುಂಬಾರರ ಮುದುಕಿಯನ್ನು ಸುಲಿದು ಕಳ್ಳತನ ಮಾಡಿದ ವಿಚಾರ ಕೇಳಿ ಬಂದಿತ್ತು ಹೆದ್ದಾರಿಪುರಕ್ಕೆ ಗೌಡರ ಮನೆಗೆ ದುಡ್ಡು ಕೊಟ್ಟು ನಗ ಬಿಡಿಸಿಕೊಳ್ಳಲೆಂದು ಆಕೆ ಮೊಮ್ಮಗನ ಸಂಗಡ ಹೊರಟಿದ್ದಳಂತೆ. +ಯಾರೋ ಹಿಂದಿನಿಂದ ಬಂದು ಆಕೆಯ ಕಣ್ಣಿಗೆ ಮರಳನ್ನು ಚೆಲ್ಲಿ ಆಕೆ ಕಣ್ಣುಒರೆಸಿಕೊಳ್ಳುತ್ತಿದ್ದಾಗ ಮಡಿಲಲ್ಲಿ ಗಂಟು ಹಾಕಿಕೊಂಡಿದ್ದ ಮೂರುಸಾವಿರ ರೂಪಾಯಿಗಳನ್ನು ಎತ್ತಿಕೊಂಡುಓಡಿದರಂತೆ. +ಮುದುಕಿಯ ಜೊತೆಯಲ್ಲಿದ್ದ ಮೊಮ್ಮಗನ ಕಣ್ಣಿಗೂ ಮರಳು ಹಾಕಿದ್ದನಂತೆ ಆ ಕಳ್ಳ. +ಸುದ್ದಿಗಾಳಿಯಾಗಿ ಊರ ತುಂಬ ಹರಡಿ ರಿಪ್ಪನ್‌ಪೇಟೆಯ ಪೊಲೀಸ್‌ ಸ್ಟೇಷನ್‌ಗೂ ಕಂಪ್ಲೆಂಟು ಹೋಯಿತು. +ಇಬ್ಬರು ಪೊಲೀಸರು ಬಂದು ಹೇಳಿಕೆ ಪಡೆದು ತಪಾಸಣೆ ನಡೆಸತೊಡಗಿದರು. +ಆದರೆ ನಾರಾಣಿ ಆ ದಿನವೂ ಬರಲಿಲ್ಲ. +ಮರುದಿನವೂ ಕಳೆಯಿತು. +ಶಿವಮೊಗ್ಗದ ಕಡೆ ಬಸ್ಸು ಹತ್ತಿದ್ದ ಅಂತ ಯಾರೋ ಹೇಳಿದರು. +ಕುಂಬಾರರ ಮುದುಕಿ ದುಡ್ಡು ಕಳೆದುಕೊಂಡ ದಿನವೇ ನಾರಾಣಿ ಶಿವಮೊಗ್ಗಕ್ಕೆ ಹೋದ ಎಂಬುದೇ ವರ್ತಮಾನವಾಯಿತು. +ಹದಿನೈದು ದಿನಗಳು ಕಳೆದವು. +ತಿಂಗಳು ಮುಗಿಯುತ್ತ ಬಂತು. +ಒಂದು ಬೆಳಿಗ್ಗೆ ಹೆದ್ದಾರಿಪುರದ ಹೋಟೆಲಿನಲ್ಲಿ ಬಿಸಿ ಬಿಸಿ ಬಜ್ಜಿ, ಚಾ ಸೇವಿಸುತ್ತಾ ಕುಳಿತ ಊರವರಿಗೆ ತೀರ್ಥಹಳ್ಳಿ ಕಡೆಯ ಬಸ್ಸಿನಿಂದ ನಾರಾಣಿ ತುಂಬ ನೀಟಾಗಿ, ತಲೆ ಚೌರ ಮಾಡಿಸಿಕೊಂಡು ಹೊಸ ಬಟ್ಟೆಹಾಕಿಕೊಂಡು ಇಳಿಯುತ್ತಿರುವುದು ಖಂಡಿತು. +ಮಾರನೆಯ ದಿನ ಪೊಲೀಸ್‌ ಪೇದೆಗಳಿಬ್ಬರು ಬಂದು ವಿಚಾರಣೆಗಾಗಿ ನಾರಾಣಿಯನ್ನು ಸ್ಟೇಷನ್ನಿಗೆ ಕರೆದುಕೊಂಡು ಹೋದರು. +ಎರಡು ಬಾರಿಸುತ್ತಲೇ ದಫೇದಾರ್‌ಚಿದಾನಂದಯ್ಯನ ಎದುರಿಗೆ ಎಲ್ಲವನ್ನೂ ಒಪ್ಪಿಕೊಂಡ. +ಮುದುಕಿಯ ಕಂಪ್ಲೇಂಟು ವಿಚಾರಣೆಗೆ ಕಳಿಸಿದರು. +ಅಣ್ಣ ಖಾಯಿಲೆ ಬಿದ್ದಿದ್ದರಿಂದ, ಅಪ್ಪ ಸತ್ತಿದ್ದರಿಂದ ನಾರಾಣಿ ತಾನೇ ಮುದುಕಿಯ ಕಣ್ಣಿಗೆ ಮರಳು ಹಾಕಿದುಡ್ಡು ದೋಚಿಕೊಂಡು ಹೋಗಿರುವುದಾಗಿ ಒಪ್ಪಿಕೊಂಡ. +ಅದರಿಂದ ಗೋಕರ್ಣಕ್ಕೂ ನಂತರ ಧರ್ಮಸ್ಥಳಕ್ಕೂ ಹೋಗಿ ಬಂದಿರುವುದನ್ನು ಹೇಳಿದ. +ಅವನನ್ನು ಸಾಗರದ ಕೋರ್ಟಿಗೆ ಹಾಜರುಪಡಿಸಿದಾಗ ಮ್ಯಾಜಿಸ್ಟ್ರೇಟರು ಆರು ತಿಂಗಳ ಸಜೆ ವಿಧಿಸಿದ್ದರಿಂದ ಅವನನ್ನು ಶಿವಮೊಗ್ಗದ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. +ನಾರಾಣಿಯನ್ನು ಮೊದಲು ಕಂಡಾಗ ಅವ್ವನ ಮನಸ್ಸಿಗೆ ಹೊಳೆದ ಯಾವತ್ತೂ ಸಂಗತಿಗಳು ಮಗನ ದಷ್ಟಪುಷ್ಟ ಆಕೃತಿ, ಕೆಂಬಣ್ಣವನ್ನು ತಾಳುತ್ತಿದ್ದ ಚಿಗುರು ಮೀಸೆ, ತುಂಬಿದ ಕೆನ್ನೆಗಳು ಇವನ್ನೆಲ್ಲ ನೋಡಿ ಮರೆಯಾಗಿ ಹೋದವು. +ಲಗುಬಗೆಯಿಂದ ನೀರು ತಂದುಕೊಟ್ಟು ಒಳಗೆ ಕರೆದೊಯ್ದಳು. +ಜೈಲಿನಿಂದ ಬಂದ ಮೇಲೆ ಆತಮೊದಲಿಗಿಂತಲೂ ಚೆನ್ನಾಗಿದ್ದಂತೆ ತೋರಿತು. +ಜೈಲು ಪಾಲಾದ ಬಗ್ಗೆ ಸಂಕಟವಾಗಿ ಅಳು ಕೂಡ ಬಂದಿತು. +"ನಿನಗೆ ಏನು ಕಡಿಮೆಯಾಗಿತ್ತು ಅಂತ ಆ ಕುಂಬಾರ ಮುದುಕಿ ಗಂಟಿಗೆ ಕೈ ಹಾಕಿದೋ" ಎಂದು ಸಣ್ಣಗೆ ನರಳುತ್ತಾ ಮಗನ ಉಪಚಾರ ಮಾಡಿದಳು. +'ನಾನಂತೂ ಹೊರಗೆ ತಿರುಗೋಲ್ಲ. +ನಿನ್ನ ಅಣ್ಣನೂ ತಿರುಗದ ಹಾಗೆ ಆಯ್ತು' ಅಂದಳು. +ನಾರಾಣಿ ಹೆಚ್ಚು ಮಾತಾಡಲಿಲ್ಲ. +ಆ ದಿನ ಮೌನವಾಗಿಯೇ ಇದ್ದ. +ಮಾರನೆಯ ದಿನ ಸಂಜೆಗೆ ಹೆದ್ದಾರಿಪುರಕ್ಕೆ ಹೊರಟ. +ಹೆದ್ದಾರಿಪುರಕ್ಕೆ ನಾರಾಣಿ ಎದೆಯುಬ್ಬಿಸಿ ಬರುತ್ತಿರುವುದನ್ನು ದೂರದಿಂದಲೇ ಕಂಡ ಕಾಫಿ ಹೋಟಿಲಿನಲ್ಲಿ ಕುಳಿತವರು ಒಂದೊಂದಾಗಿ ಮಾತಿಗಾರಂಭಿಸಿದರು. +"ಗಂಡ್ಸು ಅಂದ್ರೆ ಹಂಗೆ ಎದೆಯುಬ್ಬಿಸಿಕೊಂಡು ಬರಬೇಕು"ಅಂತ ಒಬ್ಬ ಹೇಳಿದರೆ "ನೋಡು, ಸೂಳೆಮಗನಿಗೆ ಅದರ ಬಗ್ಗೆ ಚಿಂತೆ ಐತಾ" ಎಂದ ಇನ್ನೊಬ್ಬ. +"ಹೇಗೂ ಜೈಲಲ್ಲಿ ಇದ್ದನಲ್ಲ. +ಬಾಳ ಅನುಭವ ಆಗಿರಬೇಕು" ಎಂದು ಮುದುಕರೊಬ್ಬರು ಹೇಳಿದರು. +"ಅಲ್ಲಾ ಧಾಂಡಿಗ ಸೂಳೆಮಗನಿಗೆ ಏನಲೇ ಕಮ್ಮಿಯಾಗಿತ್ತು. +ಆ ಕುಂಬಾರರ ಮುದುಕಿ ದುಡ್ಡು ಸುಲಿಯಕ್ಕೆ" ಎಂದೊಂದು ಮಾತು ಕಂಬಳಿ ಕೊಪ್ಪೆಯಿಂದ ಹೊರ ಬಂತು. +"ಕದ್ದ ಪಾಪನೆಲ್ಲ ಧರ್ಮಸ್ಥಳಕ್ಕೆ ಹೋಗಿ ತೀರಿಸ್ಕೊಂಡು ಬಂದ್ನಂತೆ"ಎಂದು ಇನ್ಯಾರೋ ಹೇಳಿದರು. +ಅವನು ಹತ್ತಿರ ಬರುತ್ತಿದ್ದಂತೆ ಎಲ್ಲರೂ ನಾರಾಣಿಯ ವಿಚಾರ ಬಿಟ್ಟು ಬೇರೆಬೇರೆ ಗುನುಗತೊಡಗಿದರು. +ನಾರಾಣಿ ಹೋಟೆಲಿಗೆ ಬಂದು ಮೆಣಸಿನಕಾಯಿ ಬೋಂಡಾ, ಶಂಕರಷೊಳಿ, ಸ್ಪೆಷಲ್‌ ಟೀ ಕುಡಿದು ಸಿಗರೇಟೊಂದನ್ನು ಕೊಂಡು ಎಲ್ಲರೆದುರಿಗೂ ಹೊತ್ತಿಸಿಕೊಂಡು ಮೌನವಾಗಿಯೇ ಮನೆ ಕಡೆ ಹೊರಟ. +ಮತ್ತೆ ಯಥಾ ಪ್ರಕಾರ ಅವನ ಬೆನ್ನ ಹಿಂದೆ ಮಾತುಗಳು ಆರಂಭವಾಗತೊಡಗಿದವು. +ನಾರಾಣಿ ಬಂದು ಒಂದು ತಿಂಗಳಾಗಿತ್ತು. +ಹೆದ್ದಾರಿಪುರದ ಗೌಡರು ಒಂದು ಸಂಜೆ ಅಲ್ಲಿಯೇ ಸುತ್ತಾಡುತ್ತಿದ್ದ ನಾರಾಣಿಯನ್ನು ಕರೆದು "ಎಲ್ಲಪ್ಪ ನಾರಾಣಿ, ನಿನ್ನ ಅಣ್ಣ ಎರಡು ಸಾವಿರ ರೂಪಾಯಿ ಇಸ್ಕೊಂಡಿದ್ದ. +ಅವನೀಗ ಹುಷಾರಿಲ್ಲ ಅಂತ ಮಲಗಿದಾನೆ. +ನನ್ನ ದುಡ್ಡು ಯಾರು ಕೊಡೋರು" ಅಂದರು. +ನಾರಾಣಿ ಗೌಡರನ್ನು ನೋಡಿದ. +ಕೊಟ್ಟಿದ್ದರೂ ಕೊಟ್ಟಿರಬಹುದು ಅನ್ನಿಸಿತು. +"ಸ್ವಲ್ಪ ದಿನ ತಡೀರಿ ಗೌಡರೇ, ಶುಂಠಿ ಮಾರಿ ಕೊಡ್ತೀನಿ"ಅಂದ. +ಗೌಡರು ಹೋದರು. +ಮರುದಿನವೇ ವಸೂಲಿಗಾಗಿ ಜನ ಕಳುಹಿಸಿದರು. +ನಾರಾಣಿ ಮನೆಯೊಳಗೇ ಕುಳಿತು ಇಲ್ಲವೆಂದು ಹೇಳಿ ಕಳಿಸಿದ. +ನಾರಾಣಿ ಜೈಲಿಗೆ ಹೋದಾಗ ಅವನ ಅಣ್ಣ ಕಾಲಿನಲ್ಲಿ ಹುಣ್ಣಾಗಿದೆ ಎಂದು ಮಲಗಿದ್ದ. +ಅದು ವಿಚಿತ್ರವಾದ ಸ್ವರೂಪವನ್ನು ತಳೆದು ತೀರ ಉಲ್ಬಣವಾಗಿತ್ತು. +ಅಲ್ಲಿ ಇಲ್ಲಿ ಸಾಲ ಮಾಡಿದರೂ ತೀರಿಸುವಷ್ಟು ಆಸ್ತಿ ತೋಟ ಇದ್ದುದರಿಂದ ಸಾಕಷ್ಟು ಚಿಕಿತ್ಸೆಯನ್ನು ನಡೆಸಲಾಗಿತ್ತು. +ಅವ್ವನೇ ಅಣ್ಣನನ್ನು ಆಸ್ಪತ್ರೆಗೆ ಕರೆದುಕೊಂಡು ಬ್ಯಾಂಡೇಜು ಕಟ್ಟಸಿಕೊಂಡು ಬಂದಿದ್ದಳು. +ಯಾರೋ ಪಂಡಿತರು ಔಷಧ ಕೊಡುತ್ತಾರೆಂದು ಕಾರಕ್ಕಿ ಎಂಬ ಊರಿಗೆ ಗಾಡಿ ಹೊಡೆಸಿಕೊಂಡು ಹೋಗಿದ್ದಳು. +ದೆವ್ವ ಕಚ್ಚಿದೆ; +ಅದರ ಹಲ್ಲು ತೆಗೆಸಬೇಕೆಂದು ಯಾರೋ ಹೇಳಿದ್ದರಿಂದ ಒಬ್ಬ ಮಲೆಯಾಳೀ ಪಂಡಿತನನ್ನು ಕರೆಸಿ, ಚಾಕುವಿನಿಂದ ಕಾಲನ್ನು ಕೊಯ್ಯಿಸಿ ಕೀವು ಇಳಿಸಿದ್ದಳು. +ಆ ಪಂಡಿತ ಇದೇ ಹಲ್ಲು ಎಂದು ಹಲ್ಲನ್ನು ತೋರಿಸಿಯೂ ಇದ್ದ. +ಆದರೂ ಕಾಲಿನ ಹುಣ್ಣುವಾಸಿಯಾಗಿರಲಿಲ್ಲ. +ಬದಲಾಗಿ ನಂಜಿನ ವಿಷಮಸ್ಥಿತಿಗೇರಿ ತೀರ ಗಂಭೀರವಾಗಿತ್ತು. +ನಾರಾಣಿಯ ಜೈಲುವಾಸದ ಅವಧಿಯಲ್ಲೇ ಇಷ್ಟೆಲ್ಲಾ ಆಗಿದ್ದರೂ, ಅವನು ಬಂದ ಮೇಲೆಯೂ ಅವ್ವ ಅಣ್ಣನ ಕಾಲಿನ ಹುಣ್ಣಿನ ಬಗ್ಗೆ ಸಾಕಷ್ಟು ಚಿಕಿತ್ಸೆ ನಡೆಸಿದ್ದಳು. +ತೀರ್ಥಹಳ್ಳಿ ಕಡೆಯ ಪಂಡಿತರೊಬ್ಬರು ಎಂಥದೋ ಪುಡಿ ಕೊಟ್ಟು ದಿನಾ ಅದನ್ನು ಎಣ್ಣೆಯಲ್ಲಿ ಕಾಯಿಸಿ ಹಚ್ಚಲು ಹೇಳಿದ್ದರು. +ಅದನ್ನು ಮಾಡುತ್ತಾ ಗಾಯ ಮಾಯುವ ನಿರೀಕ್ಷೆಯಲ್ಲಿದ್ದರು. +ಸಂಸಾರದ ಸಮಸ್ತ ಭಾರವು ತನ್ನ ಮೇಲೆ ಬಿದ್ದಿದೆಯೆಂದು ನಾರಾಣಿಗೆ ಸ್ಪಷ್ಟವಾಗಿ ಅನ್ನಿಸಿದ್ದು ಅಣ್ಣನ ಕಾಲುಸದ್ಯಕ್ಕೆ ವಾಸಿಯಾಗಲಾರದು ಎಂದು ಅನಿಸಿದಾಗ ಕಾಲು ಗುಣವಾದರೂ ಮೊದಲಿನ ಹಾಗೆ ಆತನಿಗೆ ಗದ್ದೆಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂಬುದು ವಿದಿತವಾಗಿತ್ತು. +ಅಣ್ಣನ ಹೆಂಡತಿ, ಇಬ್ಬರು ಮಕ್ಕಳು, ತಾಯಿ ಇವರೆಲ್ಲರನ್ನೂ ಸಾಕುವ ಹೊಣೆಯೂ ತನ್ನದೇ ಎಂದು ನಾರಾಣಿಗೆ ಅರಿವಾಗತೊಡಗಿತು. +ಈ ಮಧ್ಯೆ ಒಳಗಡೆ ಅಣ್ಣನ ನರಳುವಿಕೆ ಕೇಳುತ್ತಿರುವಾಗ ಹೆದ್ದಾರಿಪುರದ ಗೌಡರು ಕಳಿಸಿದ ಎರಡನೆಯ ಆಳು ಬಂದು ದುಡ್ಡು ಮತ್ತು ಅದರ ಬಡ್ಡಿ ಹಣವನ್ನು ಈ ಕೂಡಲೇ ಆಗಬೇಕೆಂತಲೂ ಇಲ್ಲದಿದ್ದರೆ ಏನಾದರೂ ಆಧಾರ ಕೊಡಬೇಕೆಂದು ಗೌಡರು ಹೇಳಿದ್ದಾರೆಂದೂ ಹೇಳಿ ಅವಸರಪಡಿಸಿದನು. +ನಾರಾಣಿಗೆ ಸಮಸ್ಯೆ ಗಂಭೀರವಾಗಿ ಕಾಣಿಸತೊಡಗಿತು. +ತಾನು ಊರಲ್ಲಿ ತಲೆಯೆತ್ತಿ ತಿರುಗುವುದು ಸಾಧ್ಯವಿದ್ದರೂ ತನಗೆ ಈ ಹೊತ್ತಿನಲ್ಲಿ ಸಾಲ ಕೊಡುವವರಿಲ್ಲ. +ಅದ್ಯಾಕೆ ತನಗೆ ಆ ಬುದ್ಧಿ ಬಂತು ಎಂದು ಯೋಚಿಸಿದ. +ಸುಮ್ಮನೆ ಹೆದ್ದಾರಿಪುರಕ್ಕೆ ಹೊರಟಿದ್ದೆ. +ಗಾಡಿ ಹಾದಿಯ ತಿರುವಿನಲ್ಲಿ ಕುಂಬಾರ ಮುದುಕಿ ಹೋಗುವುದು ಕಂಡಿತು. +ಇವತ್ತು ಅವಳ ಹತ್ತಿರ ದುಡ್ಡಿದೆ ಎಂಬ ವಿಚಾರ ನಿನ್ನೆಯೇ ಹೆದ್ದಾರಿಪುರದ ಹೋಟೆಲಿನಲ್ಲಿ ಗೊತ್ತಾಗಿತ್ತು. +ಅಪ್ರಯತ್ನಪೂರ್ವಕವಾಗಿ ಹೋದೆ. +ಹಿಂದೆ ನಿಂತು ಆಕೆ ಹೆದರುವಂತೆ ಹತ್ತಿರಹೋಗಿ ಗಟ್ಟಿಯಾಗಿ ಕೂಗಿದೆ. +ತಿರುಗಿ ನೋಡಿದವಳೇ ಗುರುತು ಹಿಡಿಯುವ ಮೊದಲೇ ಕಳ್ಳಾ ಕಳ್ಳಾ ಎಂದು ಗಟ್ಟಿಯಾಗಿ ಕೂಗಿ ಹುಯ್ಯಲೆಬ್ಬಿಸಲು ಆರಂಭಿಸಿದಳು. +ಗಾಡಿ ಹಾದಿಯಲ್ಲಿ ಮಳೆಗಾಲದಲ್ಲಿ ಬಂದು ನಿಂತ ಮರಳು ಏನೋ ಆಗಿ ಕಣ್ಣಿಗೆ ಮರಳನ್ನೆರಚಿದೆ. +ಮಡಿಲನ್ನು ಹಿಡಿದುಕೊಂಡಿದ್ದವಳು ಕಣ್ಣುಜ್ಜಲು ಆರಂಭಿಸಿದಳು. +ಗಂಟು ಕಿತ್ತುಕೊಂಡು ಕಳ್ಳತನ ಮಾಡಿಯಾಗಿತ್ತು. +ತನಗೆ ಆಗ ದುಡ್ಡಿನ ಅಗತ್ಯವೇ ಇರಲಿಲ್ಲ. +ಆದರೂ ಯಾರೂ ಹಿಡಿಯುವುದಿಲ್ಲವೆಂದು ಶಿವಮೊಗ್ಗದ ಬಸ್ಸಿಗೆ ಹೋಗಿ ಒಂದು ತಿಂಗಳು ತಡೆದು ಬಂದರೂ ಗ್ರಹಚಾರ ಬಿಡಲಿಲ್ಲ. +ಈಗ ಜೈಲಿನಿಂದ ಬಿಡುಗಡೆಯಾಗಿ ಬಂದ ಮೇಲೆ ಕೆಳಗಿನೂರಿಗೆ ಹೋದರೆ ಬಾಗಿಲು ಹಾಕಿಕೊಳ್ಳುತ್ತಾರೆ. +ಯೋಚಿಸುವುದರಿಂದ ಪ್ರಯೋಜನವಿಲ್ಲವೆನಿಸಿತು. +ಅಣ್ಣನ ನರಳಿಕೆಯ ಸದ್ದು ಬಿಟ್ಟು ಬಿಟ್ಟು ಬರುತ್ತಿರುವುದನ್ನು ಕೇಳಿಸಿಕೊಂಡರೂ ಗದ್ದೆಯ ಕಳೆ ಕೀಳಲು ಅತ್ತಿಗೆ ಹೊರಟದ್ದನ್ನು ಅಸಹಾಯಕತೆಯಿಂದ ನೋಡಿದ. +ಅವ್ವ ಜನ ಹಿಡಿದುಕೊಂಡು ನಟ್ಟಿ ಮುಗಿಸಿದ್ದರಿಂದ ಗಂಡಾಳಿಗೆ ಕೆಲಸ ಕಡಿಮೆಯಾಗಿದೆ. +ಕೊಯ್ಲಿನವರೆಗೂ ಇನ್ನು ಕೆಲಸವಿಲ್ಲ. +ಆದರೆ ತೋಟದ ಬೇಲಿ ಆಗಬೇಕು. +ಗೌಡರ ಸಾಲ ಮೊದಲು ತೀರಿಸಲು ವ್ಯವಸ್ಥೆ ಮಾಡಬೇಕು. +ಏನು ಮಾಡುವುದು ತೋಚದೆ ಎದ್ದು ಹೆದ್ದಾರಿಪುರದ ಕಡೆಗೆ ಹೊರಟ. +ಹೋದವನು ಬೆಳಗಿನ ಜಾವದ ಹೊತ್ತಿಗೆ ಬಂದ. +ಮರುದಿನವೂ ಅಷ್ಟೇ ಹೊತ್ತಿಗೆ ಮನೆ ಸೇರಿದ. +ಬರಬರುತ್ತಾ ಅದು ಸಾಮಾನ್ಯವಾಗತೊಡಗಿತು. +ಏಳೆಂಟು ದಿನಗಳು ಕಳೆದ ಮೇಲೆ ಪೊಲೀಸ್‌ ಪೇದೆಯೊಬ್ಬ ನಾರಾಣಿಯನ್ನು ಕರೆದುಕೊಂಡು ಹೋದ. +ಸ್ಟೇಷನ್ನಿನಲ್ಲಿ ಅಂದು ಏಳೆಂಟು ಜನರಾದರೂ ಫಿರ್ಯಾದು ಕೊಟ್ಟು ಅಲ್ಲಿಯೇ ಕಾದಿದ್ದರು. +ಅವರೆಲ್ಲ ಊರಿನವರೇ. +ಪೇದೆಯೊಟ್ಟಿಗೆ ಒಳಗೆ ಹೋದವನನ್ನು ಲಾಕಪ್‌ನಲ್ಲಿ ತಳ್ಳಿದ . +ಫೇದಾರ್‌ ಚಿದಾನಂದಯ್ಯ ಬೆಲ್ಟ್‌ ಬಿಚ್ಚುವ ಮೊದಲೇ ತಾನು ಅವರೆಲ್ಲರ ಮನೆಯಿಂದ ಕೋಳಿಗಳನ್ನೂ,ಸಣ್ಣಪುಟ್ಟ ಸಾಮಾನುಗಳನ್ನೂ ಕದ್ದಿರುವುದನ್ನು ಒಪ್ಪಿಕೊಂಡ. +ಅಲ್ಲದೆ, ಬೆಲ್ಟಿನಿಂದ ಹೊಡೆಯಬಾರದೆಂದು ಬೇಡಿಕೊಂಡ. +ಆದರೂ ಚಿದಾನಂದಯ್ಯ ಬೆಲ್ಬ್‌ನಿಂದ ಒಂದೆರಡು ಬಾರಿ ಬಡಿದು ಎರಡು ದಿನ ಲಾಕಪ್‌ನಲ್ಲಿ ಕೊಳೆ ಹಾಕಿದರು. +ಎರಡು ದಿನಗಳ ನಂತರ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟರು. +ಸ್ಪೇಷನ್‌ನಿಂದ ಹೊರಗೆ ಬಂದ ನಾಲ್ಕು ದಿನಗಳಲ್ಲಿಯೇ ಹೆದ್ದಾರಿಪುರದ ಗೌಡರೇ ಅವನನ್ನು ತರುಬಿಕೊಂಡರು. +"ದುಡ್ಡು ಎಣಿಸು. ಇಲ್ಲ ಹೂಡುವ ಎತ್ತುಗಳ ಕ್ರಯ ಚೀಟಿ ಬರ್ಕೊಡು" ಅಂದರು. +"ನಾಳೆಕೊಡ್ತೀನಿ ಹೆಂಗಾರು ಮಾಡಿ" ಅಂದ. +"ಎಲ್ಲಿಂದ ಕದ್ದು ತರ್ತೀಯಾ?"ಎಂದು ವ್ಯಂಗ್ಯವಾಗಿ ಹೇಳಿ 'ಅದೂ ಆಗೇ ಹೋಗಲಿ, ನಾಳೆ ಕೊಡದೇ ಇದ್ರೆ” ಎಂದು ಎಚ್ಚರಿಸಿದರು. +ಮನೆಗ ಬಂದ ನಾರಾಣಿ ಸಂಜೆಯ ಹೊತ್ತಿಗೆ ಮತ್ತೆ ಹೆದ್ದಾರಿಪುರದ ಕಡೆ ಹೋದ. +ಮರುದಿನ ಬೆಳಿಗ್ಗೆಯಾದರೂ ಮನೆಗೆ ಬರಲಿಲ್ಲ. +ಮಧ್ಯಾಹ್ನದ ಸುಮಾರಿಗೆ ಬಂದು ಊಟ ಮಾಡಿ ಹಗಲು ವಿಶ್ರಾಂತಿಗಾಗಿ ಮಲಗಿರುವಾಗಲೇ ಪೊಲೀಸ್‌ ಪೇದೆಯೊಬ್ಬ ಬಂದು 'ಈ ಸೂಳೆಮಗನಿಂದ ಸುಖ ಇಲ್ಲ' ಎಂದುಕೊಳ್ಳುತ್ತ ಸ್ಟೇಷನ್ನಿಗೆ ಕರೆದೊಯ್ದ. +ಸಬ್‌ಇನ್ಸ್‌ಪೆಕ್ಟರ್‌ ರುದ್ರಯ್ಯನವರು ದಫೇದಾರ್‌ ಚಿದಾನಂದಯ್ಯನನ್ನು ನೋಡಿ 'ಸಿಕ್ಕದನಾ, ಅವನು, ಬತ್ತಕದ್ದೋನು' ಅಂದರು. +"ಒಳಗೆ ಇದಾನೆ ಸಾ" ಎಂದು ದಫೇದಾರ್‌ ಎರಡು ಹಿಮ್ಮಡಿ ಜೋಡಿಸಿದ. +"ಬದ್ಮಾಷ್‌ ಸೂಳೇಮಗ, ಕೋಳಿ ಕದಿಯೋದು, ಬತ್ತ ಕದಿಯೋದು. +ತಾರಲೇ ಇಲ್ಲಿ ಭರಮಪ್ಪನ್ನ" ಎಂದು ಗರ್ಜಿಸುತ್ತ ಲಾಕಪ್‌ ಒಳಗೆ ಪ್ರವೇಶಿಸಿದರು. +ಭರಮಪ್ಪ ಎಂದರೆ ದಪ್ಪನೆಯ ಚರ್ಮದ ಪಟ್ಟೆಯಂತೆ. +ಅದರಿಂದ ಹೊಡೆದರೆ ಆಳವಾಗಿ ಪೆಟ್ಟು ಬೀಳುವುದಲ್ಲದೆ, ಎಲ್ಲಿಯೂ ಗಾಯವಾಗುವುದಿಲ್ಲವಂತೆ. +ಶಿವಮೊಗ್ಗದಲ್ಲಿ ಜೈಲಿನಲ್ಲಿದ್ದಾಗ ಸಹ ಕೈದಿಗಳಿಂದ 'ಭರಮಪ್ಪನ ಉಪಚಾರ'ದ ಬಗ್ಗೆ ಕೇಳಿ ತಿಳಿದಿದ್ದ ನಾರಾಣಿ ರುದ್ರಯ್ಯ ಲಾಕಪ್‌ ಒಳಗೆ ದಾಟುತ್ತಿರುವಾಗಲೇ "ಹೊಡಿ ಬೇಡಿ ಸಾರ್" ಎನ್ನುತ್ತಾ ಕಾಲಿಗೆ ಬಿದ್ದು 'ಬತ್ತ ಕದ್ದದ್ದು ನಾನೇ ಸಾರ್‌' ಎಂದು ಒಪ್ಪಿಕೊಂಡ. +"ಯಾಕಲೇ ಕದ್ದೆ ಮಿಲ್ಲಿಗೆ ನುಗ್ಗಿ ಬತ್ತನಾ?" ಎಂದು ರುದ್ರಯ್ಯ ಇನ್ನೊಮ್ಮೆ ಗರ್ಜಿಸಿದರು. +"ಸಾರ್‌ ನನ್ನ ಜೈಲಿಗೆ ಕಳಿಸಿ ಸಾರ್‌, ಅದಕ್ಕೆ ನಾನು ಹೀಗೆಲ್ಲ ಮಾಡಿದ್ದು." ಎಂದು ರುದ್ರಯ್ಯನವರ ಕಾಲು ಹಿಡಿದುಕೊಂಡೇ ಹೇಳಿದ. +ರುದ್ರಯ್ಯನವರಿಗೆ ಒಂದು ಕ್ಷಣ ವಿಚಿತ್ರವೆನಿಸಿತು. +ನಾರಾಣಿಯನ್ನು ಎಬ್ಬಿಸಿ, ನಿಲ್ಲಿಸಿ ಮುಖ ಸರಿಯಾಗಿ ನೋಡಿದರು. +ನಾರಾಣಿ ಮನೆಯ ಪರಿಸ್ಥಿತಿಯನ್ನು ನಿವೇದಿಸಿಕೊಳ್ಳುತ್ತ ಮತ್ತೆ ಬೇಡಿಕೊಂಡ: +“ನನ್ನ ಜೈಲಿಗೆ ಕಳಿಸಿ ಸಾರ್" +"ಇಷ್ಟಕ್ಕೆಲ್ಲ ಜೈಲಿಗೆ ನಾನು ಕಳುಹಿಸೋದಿಲ್ಲ. +ನಾಲ್ಕು ದಿನ ಲಾಕಪ್ಪನಲ್ಲಿ ಬಿದ್ದಿರು" ಎಂದು ನಿಧಾನವಾಗಿ ರುದ್ರಯ್ಯ ಲಾಕಪ್‌ ರೂಮಿನಿಂದ ಹೊರ ಬಂದರು. +ಆಳುರುದ್ರನನ್ನು ನೋಡಿ ಗಿಡ್ಡಮ್ಮನ ಕರುಳು ಬಾಯಿಗೆ ಬಂದಂತಾಯಿತು. +ಮನೆಯಲ್ಲಿ ಗಂಜಿ ಕುಡಿಯುತ್ತಿದ್ದರೂ ಅವನು ದಷ್ಟಪುಷ್ಪನಾಗಿದ್ದ. +ಗೌಡರ ಮನೆಯಲ್ಲಿ ಸಂಬಳಕ್ಕೆ ಬಿಟ್ಟ ಒಂದೇ ತಿಂಗಳಲ್ಲಿ ಅರ್ಧಕ್ಕರ್ಧ ಇಳಿದುಹೋಗಿದ್ದ. +ಕೈಯಲ್ಲಿ ಒಂದು ದೊಣ್ಣೆ ಹಿಡಿದು ಹೆಗಲ ಮೇಲೆ ಗೋಣಿ ತಾಟು ಹಾಕಿಕೊಂಡು ಬಂದ ಅವನು ತಾಯಿಯನ್ನು ನೋಡುತ್ತಲೇ ಅವ್ವ ಗಿಡ್ಡಮ್ಮ ಅವನನ್ನು ತಬ್ಬಿಕೊಂಡು ಜೋರಾಗಿ ಅತ್ತಳು. +ಕಿರಿಯ ಎರಡೂ ಮಕ್ಕಳು ಇವರನ್ನು ನೋಡಿ ದಿಕ್ಕುತೋಚದೆ ಅಳತೊಡಗಿದವು. +ಆಗ ಮೂರು ತಿಂಗಳ ಹಿಂದೆ ನಡೆದ ಯಾವತ್ತೂ ಘಟನೆಗಳು ಗಿಡ್ಡಮ್ಮನ ಕಣ್ಣ ಮುಂದೆ ಸುಳಿದವು. +ಕೊನೆಗಾರ ಭೈರಣ್ಣ ಜೇರ್ಮನ್‌ ಶೇಖರಪ್ಪಗೌಡರ ತೋಟದಲ್ಲಿ ಕೊನೆ ತೆಗೆಯುವಾಗ ಜಾರಿ ಬಿದ್ದುತೀರಿಕೊಂಡ. +ಎತ್ತರದಿಂದ ಬಿದ್ದು ಮಾಂಸದ ಮುದ್ದೆಯಾಗಿದ್ದ ಅವನನ್ನು ಕಂಬಳಿಯಲ್ಲಿ ಉದ್ದಕ್ಕೆ ಮಲಗಿಸಿ ತಂದು ಗೌಡರ ಮನೆ ಚೌಕಿಯಲ್ಲಿ ಇರಿಸಿದ್ದರು. + ಗಿಡ್ಡಮ್ಮ ಎದೆಬಡಿದುಕೊಂಡು ಅಳುತ್ತಿದ್ದಾಗ ಶೇಖರಪ್ಪನವರೇ ಅಲ್ಲದೆ ಯಾವುದೋ ಊರಿನಲ್ಲಿ ಕೆಲಸ ಮಾಡುತ್ತಿದ್ದ ಅವರ ತಮ್ಮ ಉಮೇಶಪ್ಪನೂ ತನಗೆ ಸಮಾಧಾನ ಮಾಡತೊಡಗಿದರು. + ಗೌಡರ ಹೆಂಡತಿಯೂ ಗಿಡ್ಡಮ್ಮನನ್ನು ತಬ್ಬಿ ಹಿಡಿದು ಸಮಾಧಾನ ಮಾಡಿದ್ದಳು. +"ಅದೆಲ್ಲ ದೈವೇಚ್ಛೆ ಗಿಡ್ಡಮ್ಮಾ ಅವನ ಹಣೇಲಿ ಹಿಂಗೇ ಸಾಯಬೇಕು ಅಂತ ಬರದ್ರೆ ಯಾರು ಏನು ಮಾಡಕಾಗುತ್ತೆ"ಎಂದು ಶೇಖರಪ್ಪ ಸಮಾಧಾನ ಹೇಳಿ ಊರಿನ ಯಾರಿಗೂ ಹೆಚ್ಚು ಗುಲ್ಲಾಗದಂತೆ ರಾತ್ರೋ ರಾತ್ರಿ ಭೈರಣ್ಣನ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದ. +ಮಾರನೇ ದಿನವೇ ಗಿಡ್ಡಮ್ಮನ ಗುಡಿಸಲು ಬಳಿ ಬಂದ ಗೌಡರ ಗಾಡಿಯಲ್ಲಿ ಎರಡು ಚೀಲ ಅಕ್ಕಿ, ಒಂದುಬೆಲ್ಲದ ಡಬ್ಬ, ಉಪ್ಪು, ಮೆಣಸಿನಕಾಯಿ ಅಲ್ಲದೆ ಭೈರಣ್ಣನ ತಿಥಿಗಾಗಿ ಒಂದು ಕೋಳಿ ಹುಂಜವನ್ನೂ ಗೌಡರಮನೆಯ ಜೀತದ ನಂಜ ತಂದು ಹಾಕಿದ. +ಖುದ್ದಾಗಿ ಉಮೇಶಪ್ಪನೇ ಗಾಡಿಯಿಂದ ಇಳಿದು ಗುಡಿಸಲು ಮುಂದೆ ನಿಂತು "ಏನೋ ಮನೆಮಗ ಇದ್ದಂಗಿದ್ದ, ಸತ್ತು ಹೋದ. +ಅವನ ಹಣೆಬರಹ" ಎಂದು ಸಮಾಧಾನ ಮಾಡಿದ. +ಗಿಡ್ಡಮ್ಮ ಅಕ್ಕಿ ಚೀಲಗಳನ್ನು ಬೆರಗಾಗಿ ನೋಡುತ್ತಿದ್ದಾಗ - "ಇದೆಲ್ಲ ಭೈರ ದುಡಿದದ್ದು ಅಂತತಿಳ್ಕಬೇಡ ಗಿಡ್ಡಮ್ಮ . +ಮನೆ ಮಗನಂಗೆ ದುಡಿದ ಅಂತ ಕೊಟ್ಟಿದ್ದೀನಿ. +ಹೆಂಗೂ ಹುಡುಗ ಕೈಗೆ ಬರ್ತಾ ಇದಾನೆ. +ನಮ್ಮ ಮನೇ ಬದಿಲೇ ಎತ್ತು ಕರ ನೋಡ್ಕಂಡು ಇರ್ತಾನೆ. +ಇಸ್ಕೂಲು ಬಿಡಿಸಿ ನಾಳೆ ಬೆಳಿಗ್ಗೆ ಕಳಿಸು" ಎಂದುಹೇಳಿ ಹೊರಟ. +ಗಿಡ್ಡಮ್ಮನ ಕಣ್ಣಮುಂದೆ ಅಕ್ಕಿ ಮೂಟೆಗಳಿದ್ದವು. +ಬೆಲ್ಲದ ಡಬ್ಬ ಇತ್ತು ಕೋಳಿ ಹುಂಜ ಕಾಲು ಬಿಚ್ಚಿದ ತಕ್ಷಣ ಬಂಧನದಿಂದ ಬಿಡುಗಡೆಯಾದಂತೆ ಅಕ್ಕಿ ಮೂಟೆಯನ್ನು ಕುಕ್ಕಿ ಅಕ್ಕಿ ತಿನ್ನುತ್ತಿತ್ತು. +ಅದೆಲ್ಲವನ್ನೂ ಬೆರಗಾಗಿ ನೋಡುತ್ತಿದ್ದ ರುದ್ರ ಶಾಲೆಗೆ ಹೋಗಲು ಗುಡಿಸಲು ತಟ್ಟಿಗೆ ಸಿಕ್ಕಿಸಿದ್ದ "ಸಿಲೇಟು ಪುಸ್ತಕದ" ಚೀಲ ತಡವುತ್ತಿದ್ದಾಗ ಮಗನನ್ನು ಇಸ್ಕೂಲು ಬಿಡಿಸಿ ಸಂಬಳಕ್ಕೆ ಕಳಿಸುವ ಯೋಚನೆ ಅವಳಿಗೆ ಬಂದಿರಲಿಲ್ಲ. +ಗೌಡರು ಹೇಳಿದ್ದು ಆಜ್ಞೆಯಂತೆ ಇತ್ತು. +ಮಗನ ಮುಖ ನೋಡಿದಳು. +ಅವನು ಬೇರೆಲ್ಲೋ ನೋಡುತ್ತಿದ್ದ. +ಅವ್ವನಿಗೆ ಹೇಳಿ ರುದ್ರ ಇಸ್ಕೂಲಿಗೆ ಹೋದ. +ಸಂಜೆ ವಾಪಸು ಬಂದಾಗ ಮನೆಯಲ್ಲಿ ಉಮೇಶಪ್ಪ ಕುಳಿತಿದ್ದ. +ರುದ್ರನನ್ನು ನೋಡುತ್ತಲೇ "ನೀನೇನೋ ಮರಿ. +ಏನು ಓದ್ತ ಇದೀಯ" ಎಂದು ವಿಚಾರಿಸಿದ. +ಯಾವುದೋ ಊರಿನಲ್ಲಿ ಕೆಲಸದಲ್ಲಿದ್ದ ಉಮೇಶಪ್ಪ ಕೆಲಸಬಿಟ್ಟು ಬಂದಿರುವುದಾಗಿ ಹೇಳಿದ. +ಗಿಡ್ಡಮ್ಮನಿಗೆ ಅವನ ಬಗ್ಗೆ ಗೌರವವಿತ್ತು. +ಅವನ ಮಾತಿನ ಮೇಲೆ ನಂಬಿಕೆ ಬರತೊಡಗಿತ್ತು ಆದರೂ ಗೌಡರ ಮನೆಯ ಜೀತದಾಳುಗಳನ್ನು ನೋಡಿದ್ದ ಅವಳಿಗೆ ರುದ್ರನನ್ನು ಕಳಿಸುವುದು ಇಷ್ಟ ಇರಲಿಲ್ಲ. +"ಹೆಂಗೂ ಕೂಲಿ ಮಾಡ್ಕಂಡು ಬದುಕ್ತೀವಿ ಅಯ್ಕಾ" ಎಂದು ಹೇಳಿದಳು. +ಆದರೆ ಉಮೇಶಪ್ಪ ಬೇರೇನೋ ಯೋಜನೆಯಲ್ಲಿದ್ದ. +"ನೀವು ಬದುಕ್ತೀರಿ ಗಿಡ್ಡಮ್ಮಾ ಆದರೆ, ಭೈರನಿಗಾಗಿ ಕೊಡಿಸಿದ ಸಾಲ ಇದೆ ಅಂತಾರಲ್ಲ ಅಣ್ಣಯ್ಯ. +ಅದನ್ನು ಹೆಂಗೆ ತೀರಿಸ್ತೀ. +ನಮಗೂ ಜೀತದವರು ಬಾಳ ಕೈಕೊಟ್ಟು ಓಡಿಹೋಗಿದಾರೆ. +ಇರೋವನು ಒಬ್ಬ ನಂಜ. +ಎತ್ತು ಕರ ನೋಡ್ಕಳ್ಳೋ ಒಬ್ಬ ಹುಡುಗ ಇನ್ನೊಂದೈದಾರು ತಿಂಗಳ ಮಟ್ಟಿಗೆ ಸಿಕ್ಕಿದರೆ ಸಾಕು. +ರುದ್ರನಿಗೆ ನಾನು ಕಲಿಸ್ತೀನಿ. +ಏನೂ ಯೋಜನೆ ಬ್ಯಾಡ, ಕಳಿಸು" ಎಂದ. +ಅದನ್ನು ಕೇಳಿ ಗಿಡ್ಡಮನಿಗೆ ತೊಳ್ಳೆ ನಡುಗತೊಡಗಿತು. +ಗಂಡ ಸಾಲ ಮಾಡಿದ ಬಗ್ಗೆ ಅವಳಿಗೇ ಗೊತ್ತಿರಲಿಲ್ಲ. +ಎಲ್ಲ ಗೊಂದಲ. +ಏನೂ ಹೇಳಲಾಗದೆ ಸುಮ್ಮನೆ ನಿಂತಳು." +ಯೋಚನೆ ಮಾಡು ಗಿಡ್ಡಮ್ಮ ನಾನು ಓದಿದವನು. +ಊರಲ್ಲಿ ಇರೋಕೆ ಬಂದವ. +ಇಲ್ಲಿ ಜನಕ್ಕೆ ನಾಲ್ಕಕ್ಷರ, ತಿಳುವಳಿಕೆ ಕಲಿಸಬೇಕು ಅಂತ ಅಂದುಕೊಂಡಿದೀನಿ. +ನಮ್ಮಲ್ಲಿ ಇದ್ರೆ ರುದ್ರನ್ನ ಏನು ಮಾಡ್ತೀನಿ ನೋಡ್ತಾ ಇರು. +ಇಲ್ಲೇ ಇದ್ರೆ ಗೌಡ್ರು ಎಂಥವರೂ ಅಂತ ನಿನಗೆ ಗೊತ್ತಲ್ಲ"ಎಂದು ಎಚ್ಚರಿಕೆಯ ಧ್ವನಿಯಲ್ಲಿ ಹೇಳಿ ಹೊರಟು ಹೋದ. +ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡಿದ ಗಿಡ್ಡಮ್ಮ ಬೆಳಿಗ್ಗೆ ರುದ್ರನನ್ನು ಗೌಡರ ಮನೆಗೆ ಖುದ್ದಾಗಿ ಕರೆದೊಯ್ದು ಬಿಟ್ಟು ಬಂದಳು. +ಬಂದು ತುಂಬ ಹೊತ್ತಾಯಿತೆಂದು ರುದ್ರನಿಗೆ ಅನ್ನಿಸಿತು. +ಅಳುತ್ತಲೇ ಇದ್ದ ತಾಯಿಯನ್ನು ಬಿಟ್ಟು 'ಇನ್ನು ಹೋತೀನವ್ವ ಗೌಡ್ರು ಕಂಡ್ರೆ ಬೈಯ್ತಾರೆ' ಎಂದು ಹೊರಡಲು ಅಣಿಯಾದ. +ತಮ್ಮಂದಿರಿಬ್ಬರೂ ಅವನಿಗೆ ದುಂಬಾಲು ಬಿದ್ದರು. +ಗಿಡ್ಡಮ್ಮನಿಗೆ ಮಗನಿಗೆ ಏನಾದರೂ ತಿನ್ನಲು ಕೊಡಬೇಕೆಂದು ಆಸೆಯಾಯಿತು. +ಅಡಿಗೆ ಮನೆಗೆ ಹೋಗಿ ತಟ್ಟಿಯ ಕಿಂಡಿ ಬೆಳಕಲ್ಲಿ ತಡಕಾಡಿ ಒಂದಿಷ್ಟು ಬೆಲ್ಲ ಮುರುಕಲು ರೊಟ್ಟಿ ಚೂರು ತಂದಳು. +ತಮ್ಮಂದಿರ ಜತೆ ಅದನ್ನು ಹಂಚಿಕೊಂಡ ರುದ್ರ ಗೋಣಿ ತಾಟು ಹೆಗಲೇರಿಸಿದ. +"ದೊಡ್ಡೋರ ಮನೆ ತಮ್ಮ ಚೂರು ಬಗ್ಗೀ ತಗ್ಗಿ ನಡಿ. +ಇನ್ನೇನು ಐದು ತಿಂಗಳಿಗೆ ಬಂದೇ ಬರ್ತೀಯಲ" ಎಂದು ಸಮಾಧಾನಪಡಿಸುತ್ತಿದ್ದಾಗ ಮತ್ತೆ ಅಳುತ್ತ ರುದ್ರ ಹಿಂತಿರುಗಿದ. +ಅವನು ನಿಧಾನವಾಗಿ ಹೋಗುತ್ತಿದ್ದುದನ್ನು ನೋಡಿ ಗಿಡ್ಡಮ್ಮನಿಗೂ ಅಳು ಬರದೆ ಇರಲಿಲ್ಲ. +ಗೌಡರ ಮನೆಯಲ್ಲಿ ಎತ್ತು ಕಾಯುವುದು ಅಷ್ಟೇನೂ ಕಷ್ಟವಲ್ಲ ಎಂದು ಗಿಡ್ಡಮ್ಮ ತಿಳಿದಿದ್ದಳು. +ಆದರೆ ರುದ್ರನಿಗೆ ಹಾಗೆ ತಿಳಿಯಲು ಸಾಧ್ಯವಾಗಲಿಲ್ಲ. +ಅವನು ಮನೆಯಲ್ಲಿ ಅಂಬಲಿಯನ್ನೋ ಗಂಜಿಯನ್ನೋ ಕುಡಿಯುತ್ತಿದ್ದ. +ಗೌಡರ ಮನೆಗೆ ಬಂದ ಮೇಲೆ ಅದು ಬದಲಾಗಲಿಲ್ಲ. +ರಾತ್ರಿಯ ಊಟಕ್ಕೆ ಮಾತ್ರ ಅವನಿಗೆ ಒಂದಿಷ್ಟು ತಂಗಳು ಅನ್ನ ಹಾಕುತ್ತಿದ್ದರು. +ಬೆಳಿಗ್ಗೆ, ಮಧ್ಯಾಹ್ನ ರಾಗಿ ಅಂಬಲಿಯನ್ನು ಜೀತದ ನಂಜ ಮತ್ತು ರುದ್ರರಿಗಾಗಿಯೇ ಮಾಡುತ್ತಿದ್ದರು. +ಕೆಲಸ ಹೊತ್ತು ಹುಟ್ಟುವುದಕ್ಕೆ ಮೊದಲೇ ಆರಂಭವಾಗಿ ರಾತ್ರಿ ಸುಮಾರು ಹೊತ್ತಿನವರೆಗೂ ಇರುತ್ತಿತ್ತು. +ಎತ್ತುಗಳಿಗೆ ಹುಲ್ಲು ಹಾಕಿ ಮೈ ಉಜ್ಜುವುದರಿಂದ ಹಿಡಿದು ಕರೆಯುವ ಹಸುಗಳಿಗೆ ಮುಸುರೆಕೊಟ್ಟು ಎಮ್ಮೆಗಳ ಮೈತೊಳೆಯುವವರೆಗೂ ರುದ್ರನಿಗೆ ಕೆಲಸವಿತ್ತು. +ಕೊಟ್ಟಿಗೆಯ ಸಗಣಿ ಬಾಚಿ ಅದನ್ನು ಗೊಬ್ಬರದ ಗುಂಡಿಗೆ ಹಾಕಿದ ಮೇಲೆ ಗಾಡಿ ಎತ್ತುಗಳನ್ನು ಹೊಡೆದುಕೊಂಡು ಹಕ್ಕಲಿಗೆ ಹೋಗಬೇಕಿತ್ತು. +ಗುಡ್ಡಕ್ಕೆ ಮೇಯಲು ಹೋದ ಹಸುಗಳು ಹಿಂತಿರುಗುವ ಮೊದಲೇ ಕರುಗಳನ್ನು ಮೇಯಿಸಿ ಕೊಟ್ಟಿಗೆಗೆ ಕಟ್ಟಬೇಕಿತ್ತು. +ಇಷ್ಟಲ್ಲದೆ ಅಡಿಗೆ ಮನೆಯಿಂದ ಹೆಗ್ಗಡಿತಮ್ಮನವರೂ ಸಾಕಷ್ಟು ಕೆಲಸ ಹೇಳುತ್ತಿದ್ದರು. +ತೋಟಕ್ಕೆ ಹೋಗಿ ಬಾಳೆಎಲೆ, ವೀಳೆಯದೆಲೆ ತರುವುದು, ಬಟ್ಟೆ ಒಗೆಯಲು ನೀರು ಸೇದುವುದು, ಸಂಪಿಗೆ ಮರ ಹತ್ತಿ ಹೂವುಕೊಯ್ಯುವುದು, ಬೇವಿನ ಮರ ಹತ್ತಿ ಸೊಪ್ಪು ತರಿಯುವುದು- ಇಂಥವೇ ಕೆಲಸಗಳನ್ನು ರುದ್ರನಿಗೆ ಹೇಳುತ್ತಿದ್ದರು. +ಇಷ್ಟೆಲ್ಲ ಮಾಡಿದರೂ ಅವನಿಗೆ ಅಡಿಗೆ ಮನೆಯಿಂದ ಬರುತ್ತಿದ್ದ ಒಗ್ಗರಣೆ ವಾಸನೆಯ ಸಾರನ್ನು ಹಾಕುತ್ತಿರಲಿಲ್ಲ. +ಬಂದ ಹೊಸದರಲ್ಲಿ ರುದ್ರನಿಗೆ ವಿಪರೀತ ಕಷ್ಟವಾಗುತ್ತಿತ್ತು . +ಗೌಡರ ಮನೆಯ ನಾಯಿಗಳು ಯಾವಾಗಲೂ ಅವನ ಮೇಲೆ ಹರಿಹಾಯುತ್ತಿದ್ದವು. +ಅವನು ಉಪ್ಪರಿಗೆ ಮನೆಯನ್ನು ಹತ್ತಿರದಿಂದಲೂ ನೋಡುವಂತಿರಲಿಲ್ಲ. +ಅವನು ನಾಯಿಗಳೂ ಮತ್ತು ಹಸುಗಳು ಓಡಾಡುವ ಜಾಗದಲ್ಲಿ ಅವನು ತಿರುಗಾಡಬೇಕಿತ್ತು. +ಚೌಕಿಯ ಮೂಲೆಯಲ್ಲಿ ಊಟ ಮಾಡಿದ ಜಾಗವನ್ನು ಸಗಣಿಯಿಂದ ಸಾರಿಸಿ ಎಂಜಲೆಲೆಯನ್ನು ದೂರ ಎಸೆದುಬರಬೇಕಿತ್ತು. +ಗೌಡರ ಮಕ್ಕಳು ವಿಪರೀತ ಬೈಯುತ್ತಿದ್ದವು. +ಇಸ್ಕೂಲಿಗೆ ಹೋಗುತ್ತಿದ್ದಾಗ ಗೌಡರ ಹಿರಿಯ ಮಗ ಪರಮೇಶನೊಂದಿಗೆ ರುದ್ರ ಆಟವಾಡುತ್ತಿದ್ದ. +ಇಸ್ಕೂಲಿನಲ್ಲಿ ತಾನು ಮೊದಲು ಲೆಕ್ಕ ಮಾಡಿದ್ದಕ್ಕೆ ಎಷ್ಟು ಸಲಹೇಳಿದರೂ ಮಾಡದ ಪರಮೇಶನಿಗೆ ಮೇಷ್ಟರು ಮೂಗು ಹಿಡಿಸಿ ಕಪಾಳಕ್ಕೆ ಹೊಡೆಸಿದ್ದರು. +ಈಗ ಅವನು ಅದನ್ನೆಲ್ಲ ತೀರಿಸುವಂತಿತ್ತು. +ಶೇಖರಪ್ಪ ಗೌಡರಂತೆಯೇ ಆಜ್ಞೆ ಮಾಡುತ್ತಿದ್ದ . +ಪರಮೇಶ ಒಂದು ಸಣ್ಣ ತಪ್ಪಾದರೂ ಕೋಲಿನಿಂದ ಹೊಡೆಯುತ್ತಿದ್ದ ತನಗೆ 'ಪರಮೇಶಪ್ಪನವರೇ' ಎಂದು ಕರೆಯಬೇಕೆಂದು ಹೇಳುತ್ತಿದ್ದ. +ಎತ್ತು ಕಾಯುವಾಗ ರುದ್ರ "ನಾಗರಹಾವೇ ಹಾವೊಳು ಹೂವೇ" ಪದ್ಯವನ್ನು ರಾಗವಾಗಿ ಹೇಳುತ್ತಿದ್ದುದನ್ನು ಪರಮೇಶ ಅಣಕಿಸಿಕೊಂಡು ಹೇಳುತ್ತಿದ್ದ. + ಅಡಿಗೆ ಮನೆಯಿಂದ ಪ್ರತಿಸಲ ಹೊರಗಡೆ ಬರುವಾಗ ಏನಾದರೂ ಹಿಡಿದುಕೊಂಡು ಬಂದು ರುದ್ರನಿಗೆ ತೋರಿಸಿ ತೋರಿಸಿ ತಿನ್ನುತ್ತಿದ್ದ. +ಅದನ್ನು ನೋಡಿ ರುದ್ರನಿಗೆ ಬಾಯಲ್ಲಿ ನೀರು ಸುರಿಯುತ್ತಿತ್ತು. +ಆದರೆ ಜೀತದ ನಂಜನಿಗೆ ಹಾಗೇನೂ ಆಗುತ್ತಿರಲಿಲ್ಲ. +ಮೀಸೆಮೂಡುತ್ತಿದ್ದ ನಂಜ ಮನೆಯ ಎಲ್ಲರೊಂದಿಗೂ ಹೊಂದಿಕೊಂಡಿದ್ದ. +ಅವನನ್ನು ನೋಡಿ ನಾಯಿಗಳು ಬೊಗಳುತ್ತಿರಲಿಲ್ಲ. +ಗಾಡಿ ಎತ್ತುಗಳು ಹಾಯುತ್ತಿರಲಿಲ್ಲ. +ಗೌಡರು ಹೊಡೆಯುತ್ತಿರಲಿಲ್ಲ. +ಗಿಡ್ಡಮ್ಮನ ಜತೆ ರುದ್ರನಿಗೆ ಕಲಿಸುತ್ತೇನೆಂದು ಹೇಳಿದ್ದ ಉಮೇಶಪ್ಪ ಮನೆಯಲ್ಲಿ ಅವನನ್ನು ಮರೆತಂತೆಯೇ ಇತ್ತು. +ನಂಜ ಆಗಾಗ 'ಅಣ್ಣ ತಮ್ಮ ಇಬ್ರಿಗೂ ಸರಿಯಿಲ್ಲ ಮಾರಾಯ, ನೀನು ಉಮೇಶಪ್ಪನೋರ ಹತ್ರಮಾತಾಡಿದ್ರೆ ದೊಡ್ಡ ಗೌಡ್ರು ಹಲ್ಲು ಮುರೀತಾರೆ' ಎಂದು ಎಚ್ಚರಿಕೆ ನೀಡಿದ್ದ. +ಉಮೇಶಪ್ಪ ಮನೆಗೆ ಬಂದಲಾಗಾಯ್ತು ರುದ್ರನನ್ನು ಮಾತಾಡಿಸಿರಲಿಲ್ಲ. . +ಅಷ್ಟೇ ಏಕೆ ಒಂದು ರಾತ್ರಿ ಪರಮೇಶನಿಗೆ ಲೆಕ್ಕಹೇಳಿಕೊಡುತ್ತಿರುವಾಗ ಕೇಳಿದ ಪ್ರಶ್ನೆಗೆ ಪರಮೇಶನ ಬದಲಾಗಿ ತಾನು ಉತ್ತರ ಹೇಳಿದಾಗ ಎದ್ದು ಬಂದು ಪರಮೇಶನೇ ಕೋಲಿನಿಂದ ತನಗೆ ಹೊಡೆದಾಗಲೂ ಏನೂ ಹೇಳಿರಲಿಲ್ಲ. +ಪ್ರತಿ ದಿನಾ ಬಟ್ಟೆ ಹಾಕಿಕೊಂಡು ಪೇಟೆ ಕಡೆ ಹೋಗುತ್ತಿದ್ದ ಉಮೇಶಪ್ಪ ಯಾರೊಟ್ಟಿಗಾದರೂ ಮಾತಾಡುವಾಗ ತಾನು ಎದುರಾದರೂ ಕಣ್ಣೆತ್ತಿ ನೋಡುತ್ತಿರಲಿಲ್ಲ. +ಒಂದೇ ಊರಿನಲ್ಲಿಯೇ ಇದ್ದರೂ "ಮನೆ'ಗೆ ಹೋಗಿ ಅವ್ವ - ತಮ್ಮಂದಿರನ್ನು ನೋಡಲು, ಬಂದ ಒಂದು ತಿಂಗಳವರೆಗೂ ರುದ್ರನಿಗೆ ಸಾಧ್ಯವಾಗಲಿಲ್ಲ. +ಆ ದಿನ ಉಮೇಶಪ್ಪ ನಂಜನನ್ನು ಕರೆದುಕೊಂಡು ಅಕ್ಕಿಮಾಡಿಸಲು ಪೇಟೆಗೆ ಹೋದ ಸಂದು ನೋಡಿ ರುದ್ರ ಕರುಗಳನ್ನು ಹಕ್ಕಲಲ್ಲಿ ಬಿಟ್ಟು ಅರ್ಧಮೈಲು ದೂರದ ಮನೆಗೆ ಓಡಿಬಂದ. +ಗೌಡರ ಮನೆ ಕೆಲಸ ಸಾಕು, ಇನ್ನು ಬೇಡ ಎಂದು ಅವ್ವನಿಗೆ ಹೇಳಿಬಿಡಬೇಕು ಎಂದುಕೊಂಡಿದ್ದ. +ಆದರೆ ಅವನನ್ನು ನೋಡುತ್ತಲೇ ಗಿಡ್ಡಮ್ಮ ಕಣ್ಣೀರು ಸುರಿಸಿ "ಸ್ವಲ್ಪ ಕಾಲ ಇರು" ಎಂದುಹೇಳಿದ್ದರಿಂದ ಹಾಗೆ ಹೇಳಲಾಗದೆ ಗೌಡರ ಹಕ್ಕಲಿನ ಕಡೆ ಬರ್ದಂಡು ಓಡಿ ಬಂದ. +ಅವನು ಹಕ್ಕಲಿನ ಹತ್ತಿರ ಬರುವಾಗ ಹೊತ್ತು ಇಳಿಯುತ್ತಿತ್ತು. +ಮೊದಲು ಅವನು ಕರುಗಳನ್ನು ಕಟ್ಟಿಬರಬೇಕಿತ್ತು. +ಹೂಡುವ ಎತ್ತಿನ ಜತೆಗಳೆಲ್ಲ ಚೆನ್ನಾಗಿ ಮೇದು ಅಲ್ಲಲ್ಲಿ ಮಲಗಿ ಮೆಲುಕು ಹಾಕುತ್ತಿದ್ದವು. +ಆದರೆ ಕರೆಯುವ ಹಸುಗಳ ಒಂದು ಕರು ಅಲ್ಲಿ ಕಾಣಿಸಲಿಲ್ಲ. +ಗಾಬರಿಯಾಗಿ ಬೇಲಿಯ ಒಳಗೆಲ್ಲ ಹುಡುಕಾಡಿದ. +ಅವುಗಳಿಗೆ ನಂಜ ಇಟ್ಟಿದ್ದ ಹೆಸರುಗಳನ್ನೆಲ್ಲ ಕೂಗಿ ಕರೆದ. +ಗಂಟಲೊಣಗಿಸಿಕೊಂಡು ಹುಡುಕುತ್ತ ಕೊಟ್ಟಿಗೆಯವರೆಗೂ ಬಂದ. +ಕರುಗಳು ಕೊಟ್ಟಿಗೆಗೆ ಬಂದಿರಲಿಲ್ಲ. +ಒಂದು ಕರು ತಪ್ಪಿಸಿಕೊಂಡು ಹಾಲು ಕುಡಿದದ್ದಕ್ಕೆ ತಾನು ಬಂದ ಹೊಸದರಲ್ಲಿ ದೊಡ್ಡ ಗೌಡರು ನಂಜನಿಗೆ ಎಷ್ಟೆಲ್ಲ ಹೊಡೆದು ಊಟ ಹಾಕಿಸದೆ ಇದ್ದರು ಎಂದು ನೆನೆಪಾಯಿತು. +ಮೈಯೆಲ್ಲ ಸಣ್ಣಗೆ ನಡುಗತೊಡಗಿ ಹಕ್ಕಲಿನಲ್ಲಿಯೇ ಕುಸಿದು ಕುಳಿತ. +ಸ್ವಲ್ಪ ಹೊತ್ತಿಗೆ ಎದ್ದು ಎತ್ತುಗಳನ್ನೆಲ್ಲ ಕೊಟ್ಟಿಗೆ ಕಡೆ ಮುಖ ಮಾಡಿ ಎಬ್ಬಿದ. +ಹೊತ್ತು ಕಂತುವ ಸಮಯವಾದ್ದರಿಂದ ಗುಡ್ಡದಿಂದ ಬರುವ ದನಕರುಗಳ ಕಾಲು ದೂಳು ಕಾಣಿಸತೊಡಗಿತು. +ಪೇಟೆಗೆ ಅಕ್ಕಿಮಾಡಿಸಲು ಹೋದ ಗಾಡಿಯ ಸದ್ದೂ ಕೇಳಿಸಿತು. +ಕರು ತಪ್ಪಿಸಿಕೊಂಡ ಭಯಕ್ಕೆ ಏನು ಮಾಡುವುದಕ್ಕೂ ತೋಚದೆ ಸಣ್ಣಗೆ ನಡುಗುತ್ತ ಗೌಡರ ಮನೆಯ ಕಣದಲ್ಲಿ ಹುಲ್ಲುರಾಶಿಯ ಸಂದಿನಲ್ಲಿ ಗೋಣಿ ಹಾಸಿಮಲಗಿದ. +ದನಕರುಗಳು ಕೊಟ್ಟಿಗೆ ಸೇರಿದ್ದರಿಂದ ಮನೆಯಲ್ಲಿ ಗೌಡರ ಮಕ್ಕಳು ಮತ್ತು ಹೆಗ್ಗಡಿತಮ್ಮ ತನ್ನನ್ನು ನಾನಾ ಬಗೆಯ ಧ್ವನಿಗಳಿಂದ ಕರೆಯುತ್ತಿರುವುದು ಕೇಳಿಸಿತು. +ಆ ಕರೆಗಳಿಗೆ ಓಗೊಟ್ಟು ಅವರ ಎದುರು ನಿಲ್ಲಲು ಧೈರ್ಯವಾಗಲಿಲ್ಲ. +ಸ್ವಲ್ಪ ಹೊತ್ತಿಗೆ ಶೇಖರಪ್ಪಗೌಡರು ಕೊಟ್ಟಿಗೆ ಕಡೆಗೆ ಬಂದ ಹಾಗೆ ಆಯಿತು. +ಹೆಗ್ಗಡಿತಮ್ಮನವರ ಜೊತೆ ಅವರು ಆಡುತ್ತಿದ್ದ ಮಾತುಗಳೂ ಕೇಳುತ್ತಿದ್ದವು. +ಗೌಡರು "ಮಧ್ಯಾಹ್ನ ಕೂಳಿಗೆ ಬಂದಿದ್ನಾ" ಎಂದು ವಿಚಾರಿಸಿರಬೇಕು. +ಆ ಮೊದಲೇ ಅಲ್ಲಿ ಸೇರಿ ತನಗೆ ಚರ್ಮ ಸುಲಿದು ಬರೆ ಹಾಕಬೇಕೆಂದು ಸಲಹೆ ಕೊಡುತ್ತಿದ್ದ ಗೌಡರಮಕ್ಕಳಿಗೆ ಹೆಗ್ಗಡಿತಮ್ಮನವರು ರೇಗುತ್ತಿರುವುದು ಕೇಳಿಸಿತು. +"ದರಿದ್ರದ ಕರು. +ಹಾಲು ಇಲ್ಲದ ಹಾಗೆ ಮಾಡಿತಲೆಮರೆಸಿಕೊಂಡಿದ್ದಾನಲ್ಲ, ಬೆಳಿಗ್ಗೆ ಶಿವಪೂಜೆಯನ್ನೂ ಸರಿಯಾಗಿ ಮಾಡಲಿಲ್ಲ" ಎಂದು ಗೊಣಗುತ್ತಿದ್ದ ಗೌಡರು "ಹುಡುಕ್ರಾ ಇಲ್ಲೇ ಎಲ್ಲೋ ಅಡಗಿದ್ದಾನು" ಎಂದು ಆದೇಶ ನೀಡಿದ್ದು ಕೇಳಿಸಿತು. +ಹುಡುಗರು ನಂಜನ ಜತೆ ಸೇರಿ ನಾಯಿಗಳನ್ನು ಒಟ್ಟುಗೂಡಿಸಿ ರುದ್ರನನ್ನು ಹುಡುಕಲು ಹೊರಟರು. +ಅಷ್ಟು ಹೊತ್ತಿಗಾಗಲೇ ಗೌಡರು ಎರಡು ಮೂರು ಸಲ ರುದ್ರನ ಹೆಸರನ್ನು ಗಟ್ಟಿಯಾಗಿ ಕರೆದು ಮನೆಯ ಒಳಕ್ಕೆ ಹೋದರು. +ಆಗಷ್ಟೆ ಪೇಟೆಯಿಂದ ಬಂದು ಬಟ್ಟೆ ಬದಲಿಸುತ್ತಿದ್ದ ಉಮೇಶಪ್ಪನನ್ನು ನೋಡುತ್ತಲೇ ಗೌಡರಿಗೆ ಇನ್ನಷ್ಟು ರೇಗಿತು. +"ಎಲ್ಲಾ ಕೂಳು ದಂಡಕ್ಕೆ ಎಂದು ಗಟ್ಟಿಯಾಗಿ ಗೊಣಗಿಕೊಂಡದ್ದು ಉಮೇಶಪ್ಪನಿಗೂ ಕೇಳಿಸಿತು. +ಅವನು ಬಾಯಿ ತೆಗೆದು ಏನೇನೋ ಹೇಳುತ್ತಿದ್ದಾಗ ಗೌಡರು ಬ್ಯಾಟರಿ ಹಿಡಿದು ಅಂಗಳಕ್ಕೆ ಇಳಿದರು. +ನಂಜನ ಜತೆ ಸೇರಿ ಹುಡುಗರು ಕೊಟ್ಟಿಗೆ ಅಟ್ಟ ಹತ್ತಿ ಹುಲ್ಲು ರಾಶಿಯಲ್ಲಿ ರುದ್ರನನ್ನು ಹುಡುಕಿದರು. +ಅಲ್ಲಿಂದ ಇಳಿದು ಬಚ್ಚಲಿನಲ್ಲಿ ನೋಡಿದರು. +ನಾಯಿಗಳೂ ಗಾಬರಿಯಿಂದ ನಂಜ ಹೋದ ಕಡೆಯಲ್ಲೆಲ್ಲಾ ಹೋಗುತ್ತ ಬೊಗಳುತ್ತ ಗಲಾಟೆ ಮಾಡುತ್ತಿದ್ದವು. +ಅಷ್ಟರಲ್ಲಿ ಅಂಗಳದಿಂದ ಬ್ಯಾಟರಿ ಬೆಳಕು ಕಂಡದ್ದು ನೋಡಿನಾಯಿಗಳು ಅತ್ತ ಜಿಗಿದವು. +ಗೌಡರು ಕಣದ ಸುತ್ತ ಮತ್ತು ಅಲ್ಲಿಯೇ ಇದ್ದ ಕಸಿಮಾವಿನ ಮೇಲೆಲ್ಲ ಬ್ಯಾಟರಿ ಬೆಳಕು ಹರಿಸಿದರು. +ಎಲ್ಲ ಗಲಾಟೆಯೂ ಕಣಕ್ಕೆ ಇಳಿದದ್ದು ನೋಡಿ ರುದ್ರನಿಗೆ ಮೈಯಲ್ಲಿನ ಹತೋಟಿ ತಪ್ಪಿನಡುಕ ಉಂಟಾಯಿತು. +ಹುಲ್ಲು ಹೊದ್ದು ಅಡಗಿದ್ದ ಅವನು ಜೋರಾಗಿ ನಡುಗುತ್ತಿರುವುದನ್ನು ಕಣದ ಸುತ್ತಬೀಳುತ್ತಿರುವ ಬೆಳಕನ್ನೇ ಗಮನಿಸುತ್ತಿದ್ದ ನಾಯಿಯೊಂದು ನೋಡಿ ಕೂಡಲೇ ಆ ಕಡೆ ಜಿಗಿದು ಪತ್ತೆಮಾಡಿತು. +ಇಡೀ ಮನೆಯವರೆಲ್ಲ ಸುಮಾರು ಹೊತ್ತು ನಡೆಸಿದ ಶೋಧನೆ ಒಮ್ಮೆಲೇ ತಣ್ಣಗಾಯಿತು. +ಅದುವರೆಗೆ ಹಲವು ಸಲ ಜೋರಾಗಿ ಕೂಗಿ ವಿಪರೀತ ಕೋಪದಿಂದಿದ್ದ ಗೌಡರಿಗೆ ರುದ್ರ ಅಲ್ಲಿಯೇ ಅಡಗಿದ್ದು, ತಮ್ಮ ಕೂಗಿಗೆ ಓಗೊಡದೆ ಇದ್ದದ್ದು ಇನ್ನಷ್ಟು ರೇಗಿತು. +ನಂಜ ಮತ್ತು ಪರಮೇಶ ಮುಂದೆ ನುಗ್ಗಿ ತಮ್ಮೆಡೆಗೆ ರುದ್ರನನ್ನು ಕರೆದುಕೊಂಡು ಬರುವವರೆಗೂ ಕಾಯಲು ತಾಳ್ಮೆಯಿಲ್ಲದೆ ಜೋರಾಗಿ ಬೈಯುತ್ತ ಹತ್ತಿರ ಹೋಗಿ ಜಾಡಿಸಿ ಹೊಟ್ಟೆಗೆ ಒದ್ದರು. +ಸರಿಯಾಗಿ ಅನ್ನ ನೀರಿಲ್ಲದೆ ಪೀಚಲಾಗಿದ್ದ ರುದ್ರನಿಗೆ ಶೇಖರಪ್ಪಗೌಡರು ಕೊಟ್ಟ ಏಟು ಆಯಕ್ಕೆ ಬಿದ್ದಿದ್ದರಿಂದ ಉಸಿರು ಹಿಡಿದು ಹಾಗೆಯೇ ಕುಸಿದು ಬಿದ್ದನು. +ಅಷ್ಟರಲ್ಲಿ ಕೊಟ್ಟಿಗೆ ಕಡೆ ಹೋಗಿ ಕಣಕ್ಕೆ ಇಳಿದ. +ಉಮೇಶಪ್ಪ ಬರುತ್ತಿರುವುದು ಕಂಡಿತು. +ಅವನು ಹತ್ತಿರ ಹತ್ತಿರ ಬಂದಂತೆಲ್ಲ ಗೌಡರ ಬೈಗಳ ಹೆಚ್ಜಾಯಿತು. +"ಯಾಕೆ ಹಂಗೆ ಹೊಡೀತಿ, ಸತ್ತು ಗಿತ್ತಾನು" ಎಂದು ಉಮೇಶಪ್ಪ ಮೆಲ್ಲಗೆ ಹೇಳಿದ್ದು ಕೇಳಿಸಿದಮೇಲೆ ಗೌಡರು ಹತೋಟಿ ಕಳೆದುಕೊಂಡು "ಸಾಯ್ತಾನ ಇವನು. +ಎಲ್ಲಾ ನಾಟಕದ ಸೂಳೆಮಕ್ಕಳೇ" ಎಂದು ಎರಡು ಮೂರು ಸಲ ಹೊಟ್ಟೆಯ ಕೆಳಭಾಗಕ್ಕೆ ಒದ್ದರು. +ಕತ್ತಲೆ ಇದ್ದುದರಿಂದ ರುದ್ರ ಬಾಯಿ ಅಗಲಿಸಿಕೊಂಡು ರಕ್ತ ಕಾರಿಕೊಳ್ಳುತ್ತಿದ್ದುದು ಯಾರಿಗೂ ಕಾಣಿಸಲಿಲ್ಲ. +ತುಂಬ ಹೊತ್ತಾದರೂ ರುದ್ರ ಅಳದೆ ಇರುವುದನ್ನು ನೋಡಿ ಗೌಡರಿಗೆ ಗಾಬರಿಯಾಯಿತು. +ಬ್ಯಾಟರಿ ಹಾಕಿನೋಡಿದಾಗ ಬಾಯಿಂದ ರಕ್ತ ಸುರಿದಿತ್ತು. +ಕೈಹಿಡಿದು ಎಬ್ಬಿಸಲು ನಂಜ ಮಾಡಿದ ಪ್ರಯತ್ನದಲ್ಲಿ ರುದ್ರನ ದೇಹಕಡಿದುಬಿತ್ತು. +ಅವನ ಉಸಿರೂ ನಿಂತುಹೋಗಿತ್ತು. +ಎಲ್ಲರೂ ದಿಕ್ಕುತೋಚದೆ ನಿಂತಿರುವುದನ್ನು ನೋಡಿದ ಉಮೇಶಪ್ಪ ಚೇತರಿಸಿಕೊಂಡು ಅಣ್ಣನ ಕೈಯಿಂದ ಬ್ಯಾಟರಿ ಕಸಿದುಕೊಂಡು ಮೊದಲು ರುದ್ರನ ಮೇಲೂ ನಂತರ ಗೌಡರ ಮುಖದ ಮೇಲೂ ಬೆಳಕು ಹರಿಸಿದ. +ಗೌಡರ ಮುಖದಲ್ಲಿ ಗಾಬರಿ ಮೂಡಿತ್ತು. +ತನ್ನನ್ನು ಬೇಡಿಕೊಳ್ಳುವಂತೆ ನೋಡಿದ ಭಾವವಿತ್ತು. +ನಂಜನನ್ನುಕರೆದು ರುದ್ರನ ಬಾಯಿಯಿಂದ ಸುರಿದ ರಕ್ತ ಒರೆಸುವಂತೆ ಹೇಳಿ ದೇಹವನ್ನು ಮಾವಿನ ಮರದ ಬುಡದಲ್ಲಿ ಹಾಕಲು ಹೇಳಿದ. +ಅಣ್ಣನ ಕಡೆಗೆ ತಿರುಗಿ "ನಾನೀಗ ಗಿಡ್ಡಮ್ಮನ ಹತ್ರ ಹೋಗಿ ರುದ್ರ ಮರಹತ್ತಿ ಬಿದ್ದ ಅಂತ ಹೇಳ್ತೀನಿ. +ಕಟ್ಟಿಗೆಗೆ ವ್ಯವಸ್ಥೆ ಮಾಡೋದರ ಜತೆಗೆ ಎರಡು ಮೂಟೆ ಅಕ್ಕೀನೂ ಅವಳ ಮನೆಗೆ ಕಳಿಸೋದಕ್ಕೆ ಏರ್ಪಾಟು ಮಾಡು" ಎಂದು ಆಜ್ಞೆ ನೀಡುವಂತೆ ಹೇಳಿ ಬ್ಯಾಟರಿ ಹಿಡಿದು ಕತ್ತಲಲ್ಲಿ ಮರೆಯಾದ. +ಸೋತುಹೋದಂತೆ ನಿಧಾನವಾಗಿ ಕಾಲೆಳೆಯುತ್ತ ಮನೆ ಕಡೆ ನಡೆದ ಗೌಡರು ಮಕ್ಕಳ ಕಡೆಗೆ ತಿರುಗಿ "ಯಾವನಾದ್ರೂತುಟಿಪಿಟಿಕ್‌ ಅಂದ್ರೆ ಸಿಗಿದು ಬಿಡ್ತೀನಿ" ಅಂದರು. +ಮಾವಿನ ಮರದ ಕೊಂಬೆಗೆ ಲಾಟೀನು ಸಿಕ್ಕಿಸಿ ಜೀತದ ನಂಜ ಹೆಣ ಕಾಯುತ್ತಾ ಕುಳಿತ. +ದಾಳಿ: +ಸೌವಂತ್ರಿಗೆ ಕೊಟ್ಟಿಗೆ ಗುಡಿಸಲು ಹೇಳಿ ಮನೆಗೆ ಬಂದ ಕಮಲಕ್ಕನಿಗೆ ಹತ್ತು ಗಂಟೆ ಬಸ್ಸು ಬಂದುಹೋದುದು ಕೇಳಿಸಿತು. +ಜಗಲಿ ಮೂಲೆಯ ಕಂಬಕ್ಕೆ ಮೊಳೆಹೊಡೆದು ಸಿಕ್ಕಿಸಿದ್ದ ಸ್ಲೇಟು ಪುಸ್ತಕದ ಚೀಲ ಕಣ್ಣಿಗೆ ಬಿತ್ತು. +"ಕಳ್ಳಮುಂಡೇಗಂಡ, ಇವತ್ತೂ ಇಸ್ಕೂಲಿಗೆ ಹೋಗಿಲ್ಲ" ಎಂದುಕೊಂಡಳು. +"ಇವತ್ತು ಮೇಷ್ಟರಿಗೆ ಹೇಳಿ ನಾಕು ಹಾಕಿಸ್ಲೇಬೇಕು" ಎಂದುಕೊಂಡು ಜಗಲಿ ಮೂಲೆಯಲ್ಲಿ ಹೆಣೆದ ಚಾಪೆ ಪಟ್ಟೆಯಿಂದ ಒಂದೊಂದೇ ಹುಲ್ಲನ್ನು ಒಂದು ಕೈಯಲ್ಲಿ ಕೀಳುತ್ತ ಇನ್ನೊಂದು ಕೈಯಲ್ಲಿ ಉಚ್ಚೆಯಿಂದ ಒದ್ದೆಯಾದ ನೆಲವನ್ನು ಗಿಬರಿ ಬಾಯೆಲ್ಲ ಮಣ್ಣು ಮಾಡಿಕೊಂಡ ತನ್ನ ಒಂದೂವರೆ ವರ್ಷದ ಕೂಸನ್ನು ನೋಡಿ ಚಾಪೆ ಪಟ್ಟೆ ಎತ್ತಿಟ್ಟಳು. +ಅಷ್ಟು ಹೊತ್ತಿಗೆ ಕೊಟ್ಟಿಗೆ ಗುಡಿಸಿ ಬಂದ ಸಾವಂತ್ರಿ - "ಯಾವತ್ತವ್ವ ಪ್ಯಾಟೆಗೆ ಹೋಗಾದು?" ಎಂದು ಕೇಳಿದ್ದರಿಂದ ಮನೆಯ ಮುಂದೆ ಕಾಣುವ ಜಮೀನು, ಪಕ್ಕದ ಕಣದಲ್ಲಿ ಬೇವರ್ಸಿಯಂತೆ ಬಿದ್ದ ಒಣಹುಲ್ಲು,ಕಬ್ಬಿನ ಗದ್ದೆಯ ಬದಿ ಒಂದೊಂದೇ ಸುಳಿಗಳನ್ನು ಹಿರಿದು ತಿನ್ನುವ ದನ ಕರುಗಳು ಕಣ್ಮುಂದೆ ಸುಳಿದು "ಆಮುಂಡೇ ಗಂಡ ಸಿಗಾದಿಲ್ಲ. +ಅವನ್ನೂ ಕರ್ಕಂಡು ಹೋಗಾದು ಅಂದ್ರೆ ಮನೇಲೆ ಇರಾದಿಲ್ಲ. +ನಾ ಏನು ಮಾಡ್ಲೇ" ಎಂದು ಅಸಹಾಯಕತೆ ವ್ಯಕ್ತಪಡಿಸಿದಳು. +"ರಾತ್ರೆ ಬಂದಿದ್ದವ್ವ ಬ್ಯಾಟರಿ ಹಿಡ್ಕಂಡು, ಬಿಳೇ ಅಂಗಿಹಾಕ್ಕಂಡು ಬಾಳ ಜೋರಾಗಿದ್ದ" ಎಂದು ಸಾವಂತ್ರಿ ಹೇಳುತ್ತಿದ್ದಾಗ "ಅವನಿಗೆ ಅದೇನು ಬಡಿದೈತೋ ಮೂರು ಆಳಾಗ್ತಾನೆ. +ಮೂರು ಹೊತ್ತೂ ಪ್ಯಾಟೆ. . . ಪ್ಯಾಟೆ. . " ಎಂದು ಗೊಣಗಿಕೊಂಡಳು. +ಕಮಲಕ್ಕನದು ಸರ್ಕಾರಿ ರಸ್ತೆಗೆ ಕೂಗಿನಳತೆ ದೂರದಲ್ಲಿದ್ದರೂ ಹಾದಿ ಬದಿಯ ಮನೆಯಾದ್ದರಿಂದ ಬಂದುಹೋಗುವವರಿಗೆ ನೀರು ಒದಗಿಸುವ ಅರವಟ್ಟಿಗೆಯಾಗಿತ್ತು . +ಕಮಲಕ್ಕನ ಗಂಡ ತಿಮ್ಮಯ್ಯ ಹೋದ ವರ್ಷಎರಡು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳನ್ನು ಬಿಟ್ಟು ತನ್ನ ನಲವತ್ತೈದನೇ ವಯಸ್ಸಿನಲ್ಲಿ ತೀರಿಕೊಂಡಿದ್ದನು. +ಅವನ ಮೇಲೆ ಯಾವುಯಾವುದೋ ಯಕ್ಷಿ, ರಣ, ಚೌಡಿ, ಭೂತಾದಿಗಳು ಬರುತ್ತಿದ್ದರಿಂದ ಆ ಫಾಸಲೆಗೆಲ್ಲದೊಡ ಗಣಮಗಳಾಗಿದ್ದನು. +ಕರೆದಲ್ಲಿಗೆ ಹೋಗಿ ಹದ್ದುಬಸ್ತು ಮಾಡಿ ದೆಯ್ಯ ದೇವರುಗಳ ತೊಂದರೆಗಳನ್ನು ನಿವಾರಿಸಿ ಜನಪ್ರಿಯನಾಗಿದ್ದವು. +ಯಂತ್ರ - ಚೀಟು ಬರೆಯುವುದು, ಚೌಡಿ ಭೂತಾದಿಗಳನ್ನು ನೆಲೆಹಾಕಿಸುವುದು, ಮನೆ ನೆಲಗಟ್ಟು ನೋಡುವುದು, ಬಾಲಗ್ರಹಪೀಡೆ ನಿವಾರಿಸುವುದು, ಕೊನೆಗೆ ಸತ್ತವರ'ಜಕ್ಕಿಣಿ' ಕೂಡಿಸುವುದೂ ಸೇರಿದಂತೆ ಹಲವು ಬಗೆಯ ಸೇವೆಗಳಲ್ಲಿ ಅವನು ತೊಡಗಿದ್ದನು. +ಅವನ ಹೆಸರಿಗೆ ಪಹಣಿ ಇದ್ದ ನಾಲ್ಕೆಕರೆ ಜಮೀನು ಊರಿನ ದೇವಸ್ಥಾನಕ್ಕೆ ಸೇರಿತ್ತು. +ಅವನಿದ್ದಾಗಲೂ ಮಕ್ಕಳನ್ನು ಕಟ್ಟಿಕೊಂಡು ಮಾಡಿಸುತ್ತಿದ್ದ ಕಮಲಕ್ಕನೇ ಈ ಸಲವೂ ಅದನ್ನು ಸಾಗು ಮಾಡಿಸಿದ್ದಳು. +ಹೊಸ ಕಾನೂನುಗಳಂತೆ ದೇವಸ್ಥಾನದ ಜಮೀನು ಅವಳ ಹೆಸರಿಗೆ ಪಹಣಿಯಾಗುವುದೋ. +ಮೆಜಾರ್ಟಗೆ ಬಂದ ಕುಬೀರನ ಹೆಸರಿಗೆ ಆಗುವುದೋ ಎಂದೆಲ್ಲ ಚರ್ಚೆಗಳು ನಡೆದ್ದಿದವು. +ಕುಬೀರ ಹಕ್ಕುದಾರನಾದರೆ ಈಗಲೇ ಮನೆಯ ಯಾವತ್ತೂ ಜವಾಬ್ದಾರಿ ಹೊತ್ತುಕೊಳ್ಳದವನು ನಾಳೆ, ತನ್ನನ್ನೂ ಮದುವೆಗೆ ಬಂದ ಸಾವಂತ್ರಿಯನ್ನೂ ಮರೆತು ಆಸ್ತಿ ಪರಭಾರೆ ಮಾಡಿದರೆ ಎಂದು ಕಮಲಕ್ಕನಿಗೆ ಯೋಜನೆಯಾಗಿತ್ತು. +ಅವಳು ತನ್ನ ಅನುಮಾನವನ್ನು ಹೇಳಿದಾಗ ಯಾವ ನಿರ್ಧಾರಕ್ಕೂ ಬರದಷ್ಟು ಗೊಂದಲಕ್ಕೆ ಅವಳನ್ನು ಸಿಕ್ಕಿಸಿದ್ದರು. +ತನ್ನ ಸಮಸ್ಯೆ ಬಗ್ಗೆ ಗ್ರಾಮಲೆಕ್ಕಿಗನೋ ಕಂದಾಯ ನಿರೀಕ್ಷಕನೋ ಅಂತೂ ಸರ್ಕಾರಿ ಅಧಿಕಾರಿಯನ್ನು ನೋಡಬೇಕೆಂದು ಊರಿನ ಮೇಷ್ಟರು ಮರುಳಯ್ಯನಲ್ಲಿ ಅಂಗಲಾಚಿದ್ದಳು. +ತನ್ನ ಸಮಸ್ಯೆಯನ್ನು ಊರಿನ ಯಜಮಾನ ಪುಟ್ಟಯ್ಯನವರ ಮಗ ನಾಗರಾಜನಿಗೂ ತಿಳಿಸಿದ್ದಳು. +ನಾಗರಾಜ ಶಿವಮೊಗ್ಗದಲ್ಲಿ ಕಾಲೇಜಿನಲ್ಲಿ ಓದುತ್ತಿದ್ದವನು. +ರಜೆಗೆ ಊರಿಗೆ ಬಂದಾಗಲೆಲ್ಲ ಅದೇ ನೆಪದಲ್ಲಿ ಜಮೀನಿನ ಬಗ್ಗೆ ವಿಚಾರಿಸಲು ಕಮಲಕ್ಕನ ಮನೆಗೆ ಬರುತ್ತಿದ್ದನು. +ಕೆಲವೊಮ್ಮೆ ಸಾವಂತ್ರಿಯೊಬ್ಬಳೇ ಇದ್ದ ಸಮಯ ನೋಡಿ ಬರುತ್ತಿದ್ದುದೂ ಉಂಟು. +ಕಮಲಕ್ಕನಿಗೆ ನಾಗರಾಜ ಅಂದರೆ ಬಹಳ ನಂಬಿಕೆಯಿತ್ತು. +"ಹೆಂಗಾರು ಮಾಡಿ ಜಮೀನು ನಮ್ಮ ಹೆಸರಿಗೆ ಮಾಡಿಸಿಕೊಡಿ" ಎಂದು ಅವನಲ್ಲೂ ಹೇಳಿಕೊಂಡಿದ್ದಳು. +"ನಿಮಗೆ ಹೆಂಗೂ ಆಗೇ ಆಗುತ್ತೆ, ಆದರೆ ಕುಬೀರ ವಯಸ್ಕನಾಗಿದಾನಲ್ವ, ಅವನ ಹೆಸರಿಗೂ ಆಗುತ್ತೋ ಏನೋ. +ಆದರೂ ನಿಮಗೆ ಆಗೋ ಹಾಗೆ ಏನಾದರೂ ಮಾಡೋಣ" ಎಂದು ಹೇಳಿಪೇಟೆಯ ಒಬ್ಬರನ್ನು ಕಾಣಲು ತಿಳಿಸಿದ್ದನು. +ಸಾವಂತ್ರಿ 'ಪ್ಯಾಟಿಗೆ ಹೋಗುವುದು ಯಾವಾಗ' ಎಂದು ಕೇಳಿದಾಗ ಕಮಲಕ್ಕನಿಗೆ ನಾಗರಾಜ ಹೇಳಿದ್ದೆಲ್ಲ ನೆನಪಾಗಿತ್ತು. +ಕಮಲಕ್ಕನ ಕಿರಿಯಮಗ ಗಿರಿಯನಿಗೆ ಆಗಲೇ ಹತ್ತು ವರ್ಷ ತುಂಬಿತ್ತು ಊರಿಗೆ ಇಸ್ಕೂಲು ಹೊಸದಾಗಿ ಪ್ರಾರಂಭವಾಗಿ ಮೂರು ವರ್ಷ ಆಗಿದ್ದರೂ ಪ್ರತಿವರ್ಷ ಸೇರಿ, ಹಾಜರಿ ಇಲ್ಲದೆ ವಜಾ ಆಗಿ ಮತ್ತೆ ಸೇರುತ್ತಾ ಒಂದೇ ತರಗತಿಯಲ್ಲಿದ್ದನು. +ಅವನನ್ನು ನೋಡಿ ಮೇಷ್ಟರಿಗೆ ಮಾತ್ರವಲ್ಲ, ಹುಡುಗರಿಗೂ ತಮಾಷೆಯಾಗಿತ್ತು. +ಅಪರೂಪಕ್ಕೊಮ್ಮೆ ಸ್ಕೂಲು ಮನೆ ಕಡೆ ಹೋದರೆ ತರಗತಿಯಂತೆ ಚಿಕ್ಕ ಹುಡುಗರ ಸಾಲಿನಲ್ಲಿ ಕುಳಿತುಕೊಳ್ಳಲು ಮೇಷ್ಟರು ಹೇಳುತ್ತಿದ್ದರು. +ಸಣ್ಣಂದಿನಿಂದಲೂ ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಲೇ ಬೆಳೆದಿದ್ದ ಗಿರಿಯನಿಗೆ ಒಂದೇ ಕಡೆ ಕುಳಿತು ಬಲಿತ ಬೆರಳುಗಳನ್ನು ಸ್ಲೇಟಿನ ಮೇಲೆ ಆಡಿಸುವುದು ಕಷ್ಟವಾಗುತ್ತಿತ್ತು. +ಬೋರ್ಡಿನ ಮೇಲೆ ಸೀಮೆಸುಣ್ಣದಿಂದ ಹೊಸದಾಗಿ ಕಲಿಯುವವರಿಗೆ ಆಗಾಗ ಬರೆಸಿ ಮೇಷ್ಟರು ತರಬೇತಿ ಕೊಡುತ್ತಿದ್ದರು. +ಗಿರಿಯ ಒಂದು ಸಲವೂ ಈ ತರಬೇತಿಯಲ್ಲಿ ಯಶಸ್ವಿಯಾಗಿರಲಿಲ್ಲ. +ಅದಕ್ಕೆ ಮೇಷ್ಟರು ಇತರ ಹುಡುಗರಿಂದ ಮೂಗು ಹಿಡಿಸಿ ಕಪಾಳಕ್ಕೆ ಹೊಡೆಯುವ ಶಿಕ್ಷೆ ಕೊಡುತ್ತಿದ್ದರು. +ಪ್ರತಿಸಲ ಪರೀಕ್ಷೆಗೆ ಒಳಗಾದಾಗಲೂ ಗಿರಿಯ ಕಪಾಳಕ್ಕೆ ಹೊಡೆತ ತಿನ್ನುತ್ತಿದ್ದ. +ಅಕ್ಷರ ಕಲಿಯುವುದೇ ಒಂದು ವರ್ಷವಾಗಿ ಅವನು ಮುಂದಿನ ತರಗತಿಗೆ ಪಾಸಾಗಲಿಲ್ಲ. +ಈ ನಡುವೆ ಬಂದ ಹೊಸ ಮೇಷ್ಟರು ಮಗ್ಗಿ ಕಲಿಸುವುದರಲ್ಲಿ ಪ್ರಯೋಗ ನಡೆಸಿದ್ದರು. +ಗಿರಿಯನಿಗೆ ಮಗ್ಗಿ ಬಾಯಿಪಾಠ ಮಾಡುವುದು ಅತ್ಯಂತ ಕಷ್ಟಕರವಾದ ಶಿಕ್ಷಣವಾಗಿತ್ತು. +ಸ್ಕೂಲಿಗೆ ಬರುತ್ತಿದ್ದ ಎಲ್ಲ ಹುಡುಗರಿಗಿಂತಲೂ ಬಲವಾಗಿದ್ದ ಅವನು ಇನ್ನೂ ಒಂದನೇ ತರಗತಿಯಲ್ಲಿಯೇ ಇದ್ದನು. +ಅವನು ಅಪರೂಪಕ್ಕೆ ಇಸ್ಕೂಲಿಗೆ ಬಂದರೆ 'ಅಮಾಸೆ ಬಂದ' 'ಹುಣ್ಣಿಮೆ ಬಂದ' ಎಂದು ಹುಡುಗರು ಕೂಗುತ್ತಿದ್ದರು. +ಆದ್ದರಿಂದ 'ಇಸ್ಕೂಲಿಗೆ' ಎಂದು ಮನೆಯಲ್ಲಿ ಹೇಳಿ ಹೊರಡುತ್ತಿದ್ದವನು ಇಸ್ಕೂಲಿನ ದಾರಿಬಿಟ್ಟು ನೇರ ಸರ್ಕಾರಿ ರಸ್ತೆಗೆ ಹೊಂದಿಕೊಂಡ ಸೆಟ್ಟರ ಹೋಟಲು ಕಡೆ ಹೋಗುವನು. +ಅಲ್ಲಿ ಸಲ್ಪ ಹೊತ್ತು ಕುಳಿತುಕೊಳ್ಳುವನು. +ಹೋಟೆಲಿಗೆ ಬರುವ ಗಿರಾಕಿಗಳು ಆಗಾಗ ಬೀಡಿ ಬೆಂಕಿಕಡ್ಡಿ ತರಲು ಹೇಳಿದಾಗ ರಸ್ತೆಯ ಇನ್ನೊಂದು ಬದಿ ಇದ್ದ ಶಿವಣ್ಣನ ಅಂಗಡಿ ಕಟ್ಟೆ ಹತ್ತಿ ಅಲ್ಲಿಯೂ ಸ್ವಲ್ಪ ಹೊತ್ತು ಕಳೆಯುವನು. +ಶಿವಣ್ಣನ ಅಂಗಡಿ ಪಕ್ಕದಲ್ಲಿ ಹೊಲಿಗೆ ಮಿಷನ್‌ ಇಟ್ಟುಕೊಂಡು ಆಜುಬಾಜಿನ ಯಾವತ್ತೂ ಹುಡುಗರನ್ನು ಒಟ್ಟುಮಾಡಿಕೊಂಡು ಓಸಿ ಕಲೆಕ್ಷನ್‌ ಮಾಡುತ್ತ ಸೆಟ್ಟರ ಹೋಟೆಲಿನಿಂದ ಆಗಾಗ ಗೋಲಿಬಜೆ, ಟೀ ತರಿಸುತ್ತಿದ್ದ ಬಡಿಯಪ್ಪನ ಬಳಿ ಸ್ವಲ್ಪ ಹೊತ್ತು ಕಳೆಯುವನು. +ಆಮೇಲೆ ಸ್ವಲ್ಪ ದೂರದಲ್ಲಿ ಆ ರಸ್ತೆಯಲ್ಲಿ ಬರುವ ಎಲ್ಲಾ ಲಾರಿಗಳೂ ನಿಂತು ಹೋಗುವ ಜಲಜಮ್ಮನ ಹೋಟೆಲಿಗೂ ಹೋಗುವನು. +ಊರು ಮನೆಯವರು ತಿಂಡಿತಿನ್ನುವಾಗ "ನೀನು ಒಂಚೂರು ತಗಳ್ಳಾ ಗಿರಿಯ" ಎಂದು ಒಂದು ಚೂರು ಕೊಡುತ್ತಿದ್ದಾಗ ಎಣ್ಣೆಯಲ್ಲಿ ಕರಿದತಿಂಡಿಗಳ ರುಚಿಗೆ ಬೆರಗಾಗಿ ಇಸ್ಕೂಲನ್ನು ಮರೆಯುತ್ತಿದ್ದನು. +ಇಸ್ಕೂಲು ಬಿಡುವ ಹೊತ್ತಿಗೆ ಸರಿಯಾಗಿ ಮನೆಗೆ ಹಿಂದಿರುಗಿ ಚೀಲ ಇಟ್ಟು ಮತ್ತೆ ಮೇಲಿನೂರಿನ ಕಡೆ ಹೊರಡುತ್ತಿದನು. +ಗೌಡರ ಮನೆ ಕೋಣಗಳನ್ನು ಕಾಯುತ್ತಿದ್ದ ಭೈರನು ಗಿರಿಯನ ಓರಿಗೆಯವನೇ ಆದುದರಿಂದ ಅವನ ಜತೆ ಸೇರುತ್ತಿದ್ದನು. +ಕೆರೆ ಬದಿಯಲ್ಲಿ ಕೋಣಗಳನ್ನು ಬಿಟ್ಟುಕೊಂಡು ಭೈರ ಗೌಡರ ತೋಟಕ್ಕೆ ನುಗ್ಗಿ ಸಸಿಮರಗಳಿಂದ ಎಳೆನೀರು ಇಳಿಸಿ ಕದ್ದುಕುಡಿಯುವುದು ಗಿರಿಯನಿಗೆ ಮುಖ್ಯ ಆಕರ್ಷಣೆಯಾಗಿತ್ತು. +ಇಬ್ಬರೂ ಒಟ್ಟಿಗೆ ಸೇರಿ ಕೆರೆಗೆ ಗಾಳ ಹಾಕುವುದು,ತೋಟದಲ್ಲಿ ಬಲಿತ ಬಾಳೆಗೊನೆಗಳನ್ನು ಮುಚ್ಚಿಟ್ಟು ಒತ್ತೆ ಹಾಕಿ ಹಣ್ಣು ಮಾಡುವುದು. +ಕಪ್ಪೆಗೋಲು ಹಾಕಿತೋಟದ ಕಪ್ಪಿನಲ್ಲಿ ಕಾರೇಡಿ ಹಿಡಿಯುವುದು ಮಾಡುತ್ತಿದ್ದರು. +ತೋಟದಲ್ಲಿ ಒಂದೆರಡು ನಿಂಬೆಮರಗಳೂ ಇದ್ದುದರಿಂದ ಗಿರಿಯ ಹೋಟೆಲಿನಲ್ಲಿ ಕುಳಿತಿದ್ದಾಗ ಗಿರಾಕಿಗಳಿಲ್ಲದ ಸಮಯ ನೋಡಿ ಜಲಜಮ್ಮ ಒಂದುಫ್ಲೇಟು ಶಂಕರಪಳೆ ಕೊಟ್ಟು ನಿಂಬೆಕಾಯಿ ತರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಳು. +ಗಿರಿಯನನ್ನು ಮನೆಯ ಒಳಕ್ಕೂ ಕರೆದು "ನೀನು ಹಿಂಗೇ ಏನಾದ್ರೂ ತಂದುಕೊಟ್ರೆ ತಿಂಡಿ ಟೀ ಕೊಡ್ತೀನಿ"ಎಂದು ಹೇಳಿದಳು. +ಅಂದಿನಿಂದ ಗಿರಿಯ ತನ್ನ ಚಟುವಟಿಕೆಗಳನ್ನು ಜಲಜಮ್ಮನ ಹೋಟೆಲಿನ ಮೇಲೆ ಕೇಂದ್ರೀಕರಿಸಿಕೊಂಡಿದ್ದನು. +ತೋಟಕ್ಕೆ ಹೋಗಿ ನಿಂಬೆಕಾಯಿ, ಹಣ್ಣಾಗಿ ಉದುರಿದ ಗೋಟಡಿಕೆ, ಮೆಣಸಿನಕಾಳು, ವೀಳೆಯದೆಲೆ ಮೊದಲಾದವನ್ನು ತೋಟ ಕಾಯುವವನಿಗೂ ಗೊತ್ತಾಗದಂತೆ ಲಪಟಾಯಿಸತೊಡಗಿದನು. +ಸೆಟ್ಟರಿಗೂ ಕ್ರಮೇಣ ಗಿರಿಯನ ಉಪಯೋಗ ಗೊತ್ತಾಗತೊಡಗಿತು. +ಬಡಿಯಪ್ಪನಿಗೂ ಗಿರಿಯ ಬೇಕಾದಂತೆ ತೋರಿತು. +ಶಿವಣ್ಣನ ಅಂಗಡಿಯಲ್ಲಿ ಆಗಾಗ ಉದುರಿಸುತ್ತಿದ್ದ ಹುರಿಗಡಲೆಯೂ ಗಿರಿಯನ ನಾಲಿಗೆಗೆ ಪ್ರಿಯವಾಗಿತ್ತು. +ಭೈರ ಅಪರೂಪಕ್ಕೆ ಆಯ್ದು ತರುತ್ತಿದ್ದ ಮುಂಡು ಬೀಡಿಗಳನ್ನು ಗಿರಿಯನಿಗೂ ಕೊಡುತ್ತಿದ್ದರಿಂದ ಆ ಅಭ್ಯಾಸವೂ ಅಂಟಿಕೊಂಡಿತ್ತು. +ಇಸ್ಕೂಲಿನ ಕಡೆ ತಲೆ ಹಾಕುವುದನ್ನೇ ಬಿಟ್ಟು ಅಂಗಡಿಮನೆ, ಹೋಟ್ಲು ಮತ್ತು ತೋಟಗಳಲ್ಲಿ ಅವನು ಸುತ್ತಾಡಿಕೊಂಡಿದ್ದನು. +ಗಿರಿಯನ ಯಾವತ್ತೂ ಚಟುವಟಿಕೆಗಳು ಕಮಲಕ್ಕನಿಗೆ ತಿಳಿಯುವುದಿರಲಿ, ಅವನ ಆಪ್ತ ಸ್ನೇಹಿತನಾದ ಭೈರನಿಗೂ ಗೊತ್ತಾಗದಂತೆ ಎಚ್ಚರಿಕೆ ವಹಿಸಿದ್ದನು. +ಜಲಜಮ್ಮನಿಗೆ ಕಂಡುಬರುತ್ತಿದ್ದ ಗಿರಿಯ ಒಬ್ಬನಾದರೆ,ಸೆಟ್ಟರು ತಮ್ಮ ಹೋಟೆಲಿನ ಹಿಂಬದಿಯಲ್ಲಿ ನೋಡುತ್ತಿದ್ದ ಗಿರಿಯ ಇನ್ನೊಬ್ಬನಾಗಿದ್ದನು. +ಬಡಿಯಪ್ಪನಿಗೆ ಆಪ್ತಸೇವಕನಂತಿದ್ದವನು. + ಶಿವಣ್ಣನಿಗೂ ನೆಚ್ಚಿಗೆಯವನಾಗಿದ್ದನು. +ಆದರೆ ತನ್ನ ಯಾವ ವ್ಯವಹಾರವೂ ಬೇರೆಯವರಿಗೆ ತಿಳಿಯದಂತೆ ಎಚ್ಚರಿಕೆ ವಹಿಸಿ ಎಲ್ಲರಿಗೂ ಬೇಕಾದವನಾಗಿದ್ದನು. +ಇನ್ಸ್‌ಪೆಕ್ಟರು ತನಿಖೆಗೆ ಬರುವ ಸಂಗತಿ ಮರುಳಯ್ಯರಿಗೆ ತಿಳಿದಾಗ ಹಾಜರಿ ಪುಸ್ತಕದಲ್ಲಿ ಹುಡುಗರ ಹಾಜರಾತಿ ಶೇಕಡಾ ಎಪ್ಪತ್ತಕ್ಕೆ ಇಳಿದಿತ್ತು. + ಸಾಮಾನ್ಯವಾಗಿ ಶಾಲೆಯ ಕಡೆ ತಲೆ ಹಾಕದೇ ಇರುವವರಲ್ಲಿ ಗಿರಿಯನೇ ಮೊದಲಿಗನಾಗಿದ್ದನು. +ಊರಿನವರು ಹೋಟೆಲು, ಅಂಗಡಿಗಳಲ್ಲಿ ಸಿಕ್ಕಾಗ ಇನ್ಸ್‌ಪೆಕ್ಟರು ಬರುವ ಸಂಗತಿ ಹೇಳಿಕಾಯಿಲೆ ಕಸಾಲೆಯಿಂದ ಮಲಗಿರುವ, ನೆಂಟರ ಮನೆಗೆ ಹೋಗಿರುವ ಮಕ್ಕಳನ್ನು ಆದಷ್ಟು ಬೇಗ ಕಳುಹಿಸುವಂತೆ ಕೇಳಿಕೊಂಡಿದ್ದನು. +ಹಾಗೆಯೇ ಬಡಿಯಪ್ಪನ ಹತ್ತಿರ ಹರಿದುಹೋದ ಜಾಕೀಟು ಹೊಲಿಸಿಕೊಳ್ಳಲು ಬಂದಿದ್ದ ಕಮಲಕ್ಕನನ್ನು ನೋಡಿ ಗಿರಿಯನ ಬಗ್ಗೆ ಕೇಳಿದ್ದನು. +"ದಿವ್ಸಾ ಇಸ್ಕೂಲಿಗೆ ಹೋಗ್ತಾನಲ್ಲ ಮೇಷ್ಟೇ" ಎಂದು ಕಮಲಕ್ಕ ಹೇಳಿದಳು. +ಆಗ ಮರುಳಯ್ಯ ತಿಂಗಳುಗಳಿಂದ ಗಿರಿಯ ಶಾಲೆಗೆ ಮುಖ ತೋರಿಸುತ್ತಿಲ್ಲ ಎಂದು ಹೇಳಬೇಕಾಯಿತು. +ಕಮಲಕ್ಕ ಆ ರಾತ್ರಿ ರಾಜಾರೋಷಾಗಿ ಕುಳಿತಿದ್ದ ಗಿರಿಯನನ್ನು "ತೀವ್ರತನಿಖೆ"ಗೆ ಒಳಪಡಿಸಿದಾಗ "ಮೇಷ್ಟ್ರು ಹೊಡೀತಾರೆ" ಎಂದು ಆರೋಪಗಳನ್ನು ಮಾಡಿದನು. +ಎರಡು ಬಿಟ್ಟಾಗ "ನಾಳೆಯಿಂದ ಖಂಡಿತಾ ಇಸ್ಕೂಲಿಗೆ ಹೋತೀನಿ" ಎಂದು ದೇವರಾಣೆಯನ್ನೂ ಹಾಕಿದನು. +ಮರುದಿನ ಬೆಳಿಗ್ಗೆ ಎಂದಿನಂತೆ ಭೈರನ ಬಳಿ ಹೋಗುವಾಗ ಸ್ಲೇಟು ಪುಸ್ತಕದ ಚೀಲ ಮರೆತು ಹೋಗಿದ್ದರಿಂದ ಕಮಲಕ್ಕನಿಗೆ ಮೇಷ್ಟರ ಬಳಿ ಹೋಗಿ ಅವನಿಗೆ ಚೆನ್ನಾಗಿ ಹೊಡೆಯಲು ಹೇಳುವ ಮನಸ್ಸಾಯಿತು. +ಕಮಲಕ್ಕ ಸ್ಕೂಲು ಮನೆಗೆ ಹೋದಾಗ ಗಿರಿಯ ಬಂದಿರಲಿಲ್ಲ. +ನಾಲ್ಕನೆಯ ತರಗತಿಯವರೆಗೆ ಇದ್ದ ಏಕೋಪಾಧ್ಯಾಯ ಶಾಲೆ ಅದು. +ಮೇಷ್ಟರು ಸೀಮೆಸುಣ್ಣ ಹಿಡಿದು ಬೋರ್ಡಿನ ಮೇಲೆ ಬರೆಯುತ್ತ ಪಾಠ ಮಾಡುತ್ತಿದ್ದರು. +ಕಮಲಕ್ಕನನ್ನು ನೋಡಿದವರೇ ಪಾಠ ನಿಲ್ಲಿಸಿ, "ಏನು, ಕಮಲಮ್ಮ ಎಲ್ಲಿ ಗಿರಿಯ?" ಎಂದುಕೇಳಿದರು. +ಕಮಲಮ್ಮ "ಹೆಂಗಾರು ಮಾಡಿ ಅವನ್ನ ದಾರಿಗೆ ತರಬೇಕು ಮೇಷ್ಟೇ" ಎಂದು ಗೋಗರೆದಳು. +ಮರುಳಯ್ಯ ಒಂದಿಬ್ಬರು ಹುಡುಗರನ್ನು ವಿಚಾರಿಸಿದ ಮೇಲೆ ಗಿರಿಯನ ಬಗ್ಗೆ ಇನ್ನೂ ಕೆಲವು ಮಾಹಿತಿಗಳು ತಿಳಿದುಬಂದವು. +ಗೌಡರ ತೋಟದಲ್ಲಿ ಭೈರನ ಜೊತೆ ಏಡಿ ಹಿಡಿಯುತ್ತಿದ್ದುದನ್ನು ಪುಟ್ಟಯ್ಯನವರ ಮೊಮ್ಮಗ ಕಣ್ಣಾರೆ ಕಂಡುದಾಗಿ ಹೇಳಿದ. +ಇನ್ನೊಬ್ಬ ಹುಡುಗ ನಿನ್ನೆ ಜಲಜಮ್ಮನ ಹೋಟೆಲಿನಲ್ಲಿ ಕುಂತಿದ್ದ ಎಂದ. +ಮರುಳಯ್ಯ ಸೆಟ್ಟರ ಹೋಟೆಲಿನಲ್ಲಿ ಅನೇಕ ಸಲ ಗಿರಿಯನನ್ನೂ ನೋಡಿ ಹತ್ತಿರ ಹೋಗುವುದರೊಳಗೆ ಅವನು ಪರಾರಿಯಾಗುವುದನ್ನು ಕಲಿತಿದ್ದಾನೆಂದು ಹೇಳಿದ ಮೇಲೆ ಕಮಲಕ್ಕನಿಗೆ ಮಗನ ಮೇಲೆ ಕೋಪಉಕ್ಕಿತು. +ಕೈಗೆ ಸಿಕ್ಕಿದರೆ ಚೆನ್ನಾಗಿ ಚಚ್ಚಿ ಬರೆ ಹಾಕುವಷ್ಟು ಮೈ ಉರಿಯಿತು. +"ಆ ಮುಂಡೇಗಂಡ ಇವತ್ತು ಎಲ್ಲೇಇರ್ಲಿ, ಹಿಡಿದು ನಾಕು ಬರೆ ಹಾಕದೇ ಇದ್ರೆ. . " ಎಂದು ಹಲ್ಲು ಕಚ್ಚಿ ಹೇಳಿಕೊಳ್ಳುತ್ತ ಸ್ಕೂಲು ಕಾಂಪೌಂಡಿನ ಉಣುಗೋಲು ದಾಟಿದಳು. +ಶಾಲೆಯಿಂದ ಎರಡು ಫರ್ಲಾಂಗ್‌ ದೂರವಿದ್ದ ಸೆಟ್ಟರ ಹೋಟೆಲಿಗೆ ಹಿಂಭಾಗದಿಂದ ಕಮಲಕ್ಕ ಒಳಹೊಕ್ಕಾಗ ಸೆಟ್ಟರು ಹೋಟೆಲಿನಲ್ಲಿರಲಿಲ್ಲ. +ಅವರ ಪತ್ನಿ ಮೂರೆಳೆ ಅವಲಕ್ಕಿ ಸರವನ್ನು ಸೆರಗಿನ ಮೇಲೆ ಹಾಕಿಕೊಂಡು ಗಿರಾಕಿಗಳಿಗೆ ತಿಂಡಿ ಕಾಫಿ ಸಫೈ ಮಾಡುತ್ತಿದ್ದಳು. +ಕಮಲಕ್ಕನನ್ನು ಹಿಂಬಾಗಿಲಿನಲ್ಲಿ ನೋಡಿದ ತಕ್ಷಣ ಬೇಗನೆ ಅವಳ ಬಳಿ ಹೋದವಳೇ "ಏನುಂಟು?" ಎಂದು ತಗ್ಗಿದ ದನಿಯಲ್ಲಿ ಕೇಳಿದಾಗ ಕಮಲಕ್ಕನಿಗೆ ಅದರ ತಲೆಬುಡ ಅರ್ಥವಾಗಲಿಲ್ಲ. +"ನಾನು ಕಣ್ರೀ. . " ಎಂದು ಹೇಳಿದ ಮೇಲೆಯೇ "ನೀನಾ ಕಮಲಕ್ಕ" ಎಂದವಳು"ಮಾರಲಿಕ್ಕೆ ಏನಾದರೂ ಉಂಟಾ?" ಎಂದಳು. +ಕಳ್ಳಮಾಲನ್ನು ಹಿಂಬಾಗಿಲಿನಿಂದಲೇ ತೆಗೆದುಕೊಳ್ಳುತ್ತಿದ್ದ ಅಭ್ಯಾಸಬಲದಿಂದ ಸೆಟ್ಟರ ಹೆಂಡತಿ ಹಾಗೆ ಕೇಳಿದ್ದಳು. +ಆದರೆ, ಕಮಲಕ್ಕೆ ಗಿರಿಯನ ಬಗ್ಗೆ ಕೇಳಿದಳು. +"ಯಾರು?ಆ ಚಿಕ್ಕ ಹುಡುಗ ನಿನ್ನ ಮಗನಾ? +ಏನು ಅವನ ಹೆಸರು ಗಿರಿಯನ. . . ಅವನು ಹೋಟ್ಲು ಕಡೆಬರದೆ ಎಷ್ಟೋ ತಿಂಗಳೇ ಆಯ್ತಲ್ಲ" ಎಂದು ವಿರಳವಾಗಿ ಹೇಳಿ ಮತ್ತೆ ತಿಂಡಿ ಕಾಫಿ ಸೈ ಮಾಡಲು ಹಿಂತಿರುಗಿದಳು. +ಸೆಟ್ಟರ ಹೋಟೆಲು ಹಿಂಭಾಗದಿಂದ ಹೊರಟು ಶಿವಣ್ಣನ ಅಂಗಡಿ ಕಡೆ ಕಮಲಕ್ಕ ಬಂದಳು. +ಶಿವಣ್ಣ ಕಮಲಕ್ಕನ ಯೋಗಕ್ಷೇಮ ಚುಟುಕಾಗಿ ವಿಚಾರಿಸಿ "ಏನಾದರೂ ಸಾಮಾನು ಬೇಕಿತ್ತ?" ಎಂದನು. +ಅವಳು ಗಿರಿಯನ ಬಗ್ಗೆಯೇ ನೇರವಾಗಿ ಕೇಳಿದಳು. +ಅದಕ್ಕೆ ಶಿವಣ್ಣ "ಅವನು ಯಾಕೆ ಈ ಕಡೆ ಬರದೆ ಎಷ್ಟೋ ದಿನಾನೇ ಆಯ್ತಲ್ಲ. +ಹುಷಾರಾಗಿದ್ದಾನ?" ಎಂದನು. +ಈಗ ಮರುಳಯ್ಯ ನೀಡಿದ ಮಾಹಿತಿ ಬಗ್ಗೆಯೇ ಕಮಲಕ್ಕನಿಗೆ ಅನುಮಾನ ಉಂಟಾಯಿತು. +ಟೈಲರ್‌ ಬಡಿಯಪ್ಪನೂ ತನ್ನ ಓಸಿ ಕಲೆಕ್ಷನ್ನಿನ ಬಿರುಸಿನಲ್ಲಿ ಸ್ವಲ್ಪ ಹೊತ್ತು ಪುರುಸೊತ್ತು ಮಾಡಿಕೊಂಡು ಗಿರಿಯನ ಬಗ್ಗೆ ಒಳ್ಳೆಯ ಮಾತು ಹೇಳಿದ್ದು ಅವಳಿಗೆ ಇನ್ನಷ್ಟು ನಿರಾಳವಾಯಿತು. +ಇನ್ನು ಜಲಜಮ್ಮನ ಹೋಟ್ಲು ನೋಡಿಕೊಂಡೇ ಹೋದರಾಯ್ತು ಎಂದು ಅಲ್ಲಿಗೂ ಹೋದಳು. +ಜಲಜಮ್ಮನಿಗೆ ತಕ್ಷಣ ಕಮಲಕ್ಕನ ಗುರುತು ಸಿಗುವುದರ ಜತೆಗೆ ಅವಳು ಬಂದುದರ ಉದ್ದೇಶವೂ ಹೊಳೆಯಿತು. +ನೇರ ಹೋಟೆಲಿನ ಒಳಗೇ ಕರೆದು ಕೂರಿಸಿದಳು. +"ಆಲೆಮನೆ ಯಾವಾಗ ಹಾಕ್ತೀರಿ? +ಹಾಕಿದಾಗ ನಮ್ಮನ್ನು ಮರೀಬೇಡಿ" ಎಂದು ಉಪಚಾರ ಮಾಡುತ್ತ "ಬೇಡ" ಎಂದರೂ ಟೀ ಮಾಡಿ ಕೊಟ್ಟಳು. +ಗಿರಿಯನ ವಿಷಯ ಎತ್ತಿದಾಗ "ನಿಮ್ಮ ಹುಡುಗ ಎಷ್ಟು ಸಾಧು ಅಂತೀರಿ, ಕಮಲಮ್ಮ ಮೊನ್ನೆ ನಮ್ಮ ಹುಡುಗಿ ಗುಲಾಬಿಸೌದೆ ತರೋದಕ್ಕೆ ಅಂತ ಇಲ್ಲೇ ಆಚೆ ಕಡೆ ಹೋದಾಗ ಅವಳಿಗೆ ಸೌದೆ ಒಟ್ಟು ಮಾಡಿ ಕಟ್ಟಿ ತಲೆ ಮೇಲೆ ಹೊರಿಸೋದಕ್ಕೆ ಎಷ್ಟು ಸಹಾಯ ಮಾಡಿದ ಅಂತ. +ಯಾವಾಗಾದರೂ ಇಸ್ಕೂಲು ಹುಡುಗರ ಜತೆ ನೀರು ಕುಡಿಯಾಕೆ ಅಂತ ಬರ್ತಾನಲ್ಲ. +ಒಂದು ಮಾತೂ ಆಡಾದಿಲ್ಲ. +ತಾನಾಯ್ತು ತನ್ನ ಸಿಲೇಟು ಪುಸ್ತಕ ಆಯ್ತು"ಎಂದು ದೀರ್ಘಾವಾಗಿ ಹೇಳತೊಡಗಿದಾಗ ಕಮಲಕ್ಕನಿಗೆ ಎಲ್ಲವೂ ಗೊಂದಲಮಯವಾಯಿತು. +ಮರುಳಯ್ಯ ಹೇಳಿದ್ದಕ್ಕೆ ಪ್ರತಿಕ್ರಿಯೆಯೆಂಬಂತೆ ಬಂದ ಜನಾಭಿಪ್ರಾಯ ಅವಳಿಗೆ ಹಿಡಿಸುವಂತಿತ್ತು. +"ಹಂಗಾರೆ ಎತ್ಲಾಗೆ ಹೋದ?" ಎಂದು ಯೋಚಿಸಿದಳು. +"ಇವತ್ತು ಮನೆಗೆ ಬರ್ಲಿ, ಯತ್ಹಾಗೆ ಹೋಗ್ತಾನೆ ಅನ್ನಾದನ್ನ ಪತ್ತೆಮಾಡ್ಲೇಬೇಕು" ಎಂದುಕೊಂಡಳು. +"ಬತ್ತೀನಿ" ಎಂದು ಹೊರಟಾಗ ಜಲಜಮ್ಮ ಕಾಗದದ ಪೊಟ್ಟಣದಲ್ಲಿ ಬಜೆ,ಶಂಕರಪಳೆಯ ಚೂರುಗಳನ್ನು ಕಾಗದದಲ್ಲಿ ಕಟ್ಟಿ ಬಲವಂತದಿಂದ ಮಡಿಲಿಗೆ ತುಂಬ ಕಳುಹಿಸಿದಳು. +ಮನೆ ಸೇರುವಾಗ ಹೊತ್ತು ಇಳಿಮುಖವಾಗಿತ್ತು. +ಸಾವಂತ್ರಿ ಅವ್ವನನ್ನು ಎದುರು ನೋಡುತ್ತಲೇ "ಎಲ್ಲಿಗವ್ವ ಇಷ್ಟುಹೊತ್ತು ಹೋಗಿದ್ದೆ?" ಎಂದು ಕೇಳಿದಳು. +"ಆ ರಂಡೇಗಂಡ ಬರ್ಹಿ. +ನಾಕು ಬರೇ ಎಳೀದೇ ಇದ್ರೆ." ಎಂದು ಗಿರಿಯನ ಬಗ್ಗೆ ಹೇಳುತ್ತಿದ್ದಾಗ "ಅವನು ಈಗಷ್ಟೇ ಊಟ ಮಾಡ್ಕಂಡು ಹೋದ" ಎಂದು ಸಾವಂತ್ರಿ ಹೇಳಿದಳು. +ಯಾವ ಮಾಯಕದಾಗೆ ಬಂದು ಹೋದ ಎಂದು ಕಮಲಕ್ಕನಿಗೆ ವಿಸ್ಮಯವಾಯಿತು. +"ಯತ್ಸಾಗಾದರೂ ಹಾಳಾಗಿ ಹೋಗ್ಲಿ" ಎಂದು ಶಪಿಸುತ್ತ ಮನೆ ಒಳಗೆ ಕಾಲಿರಿಸಿದಳು. +ಬಿಸಿಲಿನಿಂದ ಒಳಬಂದವಳಿಗೆ ಒಂದು ಕ್ಷಣ ಕತ್ತಲೆಗಟ್ಟಿದಂತಾಯಿತು. +ಗಿರಿಯನನ್ನು ಹುಡುಕಿಕೊಂಡು ಕಮಲಕ್ಕ ಸೆಟ್ಟರ ಹೋಟೆಲನ್ನು ಹಿಂಭಾಗದಿಂದ ಹೊಕ್ಕಾಗ ಬಡಿಯಪ್ಪನ ಜತೆಓಸಿ ಕಲೆಕ್ಷನ್ನಿನಲ್ಲಿ ಮುಳುಗಿದ್ದ ಕುಬೀರನಿಗೆ ಅದು ಗೊತ್ತಾಯಿತು. +"ಹಂಗಾರೆ ಅವ್ವ ಬಂದಾಳೋ ಬಡಿಯ,ನಾ. +ಒಂಚೂರು ಗೋವಿಂದಣ್ಣನ ಶಾಪಿನಲ್ಲಿರ್ದೀನಿ" ಎಂದು ಅಂಗಡಿಯ ಹಿಂಭಾಗದಿಂದ ಹೊರಟು ಜಲಜಮ್ಮನ ಮನೆಯನ್ನು ಬಳಸಿ ರಸ್ತೆಯ ಬದಿಯೇ ಇದ್ದ ಗೋವಿಂದಣ್ಣನ ಶಾಪಿಗೆ ಬಂದನು. +ಚೌರ ಮಾಡುತ್ತ ಓಸಿ ಕಲೆಕ್ಷನ್ನೂ ಮಾಡುತ್ತಿದ್ದ ಗೋವಿಂದಣ್ಣನಿಗೆ "ನಿಂಗೇನು ಬಂದಿತ್ತೋ ಗೋವಿಂದಣ್ಣ. +ಚೌರ, ಗಡ್ಡ ಮಾಡಿಸ್ಕೊಳ್ಳೋರು ದಿನಾ ತುಂಬಿರ್ತಾರೆ, ಆದ್ರೂ ಓಸಿ ಬೇರೆ ಕಲೆಕ್ಷನ್‌ ಮಾಡ್ತೀಯಲ್ಲ" ಎಂದು ಯಾರಾದರೂ ಕೇಳಿದರೆ ಅದಕ್ಕೆ ಉತ್ತರಿಸುವ ಗೋಜಿಗೂ ಹೋಗದಷ್ಟು ಬುದ್ಧಿವಂತನಾಗಿದ್ದನು. +ಒಂದಕ್ಕೆ ಎಪ್ಪತ್ತೆರಡರಷ್ಟು ಮಾಂತ್ರಿಕ ಲಾಭ ನೀಡುವ ಓಪನ್‌-ಕ್ಲೋಜ್‌ ವ್ಯವಹಾರ ಗೋವಿಂದಣ್ಣನ ದಿನನಿತ್ಯದ ಉಸಿರು ಎಂಬಂತಾಗಿತ್ತು. +ಒಂದು ಕನಸು, ಯಾರೋ ಗಿರಾಕಿಗಳು ಆಡಿದ ಮಾತು. +ಕೊನೆಗೆ ತನ್ನ ಹತಾರಗಳಲ್ಲಿ ಯಾವುದಾದರೂ ಬಿದ್ದು ಆ ಕ್ಷಣ ಹೊಳೆದ ಅಂಕೆ ಅವನಿಗೆ ಅದೃಷ್ಟವಾಗಿ ಪರಿಣಮಿಸಿದಂತಿತ್ತು. +ಒಂದು ಸಲಕತ್ತರಿ ಕೈಯಿಂದ ಜಾರಿ ನೆಲಕ್ಕೆ ಬಿದ್ದಾಗ ಗೋವಿಂದಣ್ಣನ ಮನಸ್ಸಿಗೆ ಬಂದ ಎಂಬತ್ತೆಂಟರ ಸಂಖ್ಯೆಗೆ ಕಟ್ಟಿದಮೂರು ರೂಪಾಯಿ, ಇನ್ನೂರಾ ಹದಿನಾರು ರೂಪಾಯಿ ತಂದುಕೊಟ್ಟಿತ್ತು. +ಅಂದಿನಿಂದ ಎಚ್ಚರವಾಗಿದ್ದಾಗಲೆಲ್ಲ ಅದೃಷ್ಟ ಸಂಖ್ಯೆಗಳನ್ನು ಹುಡುಕುವುದರಲ್ಲೇ ಗೋವಿಂದಣ್ಣನ ಮನಸ್ಸು ಮುಳುಗಿತ್ತು. +ಕುಬೀರ ಶಾಪಿಗೆ ಬಂದಾಗ ಗೋವಿಂದಣ್ಣ ನಿನ್ನೆ ದಿನ ಕಲೆಕ್ಷನ್ನಾದ ಹಣದ ಮೇಲೆ ಯಾರು ಯಾರಿಗೆ ಎಷ್ಟೆಷ್ಟು ಹಾರಿದೆಯೆಂಬುದನ್ನು ನೋಡುತ್ತಿದ್ದನು. +ಅವನು ಹಿಡಿದುಕೊಂಡಿದ್ದ ಪಟ್ಟಿಯಲ್ಲಿ ಆಗಲೇ ಸಾಕಷ್ಟು ಕಲೆಕ್ಷನ್ನೂ ಆಗಿತ್ತು. +ಕುಬೀರನನ್ನು ನೋಡುತ್ತಲೇ "ಒಂಚೂರು ಟೋಟ್ಲು ಮಾಡಿ ಕೊಡೋ ಮಾರಾಯ" ಎಂದು ಕೈಯಲ್ಲಿದ್ದ ಪಟ್ಟಿಯನ್ನು ಕೊಟ್ಟನು. +ತಿಮ್ಮಯ್ಯ ಇದ್ದಾಗಲೇ ಪೇಟೆ ಕಡೆ ತಿರುಗಾಡುವ ಅಭ್ಯಾಸ ಬೆಳೆಸಿಕೊಂಡಿದ್ದ ಕುಬೀರನಿಗೆ ತಂದೆ ಸತ್ತಮೇಲೆ ಎಲ್ಲ ಸ್ವಾತಂತ್ಯವೂ ಸಿಕ್ಕಿತ್ತು. +ಊರಿಗೆ ಸ್ಕೂಲು ಬಂದಿರದ ಕಾಲದಲ್ಲಿ ಮಗನನ್ನು ಓದಿಸಬೇಕೆಂದು ತಿಮ್ಮಯ್ಯ ಬಹಳ ಪ್ರಯತ್ನ ಪಟ್ಟಿದ್ದನು. +ಒಂದನೇ ತರಗತಿಗಾದರೂ ನಾಲ್ಕು ಮೈಲು ದೂರ ನಡೆದು ಪೇಟೆ ಸ್ಕೂಲಿಗೆ ಹೋಗಬೇಕಾಗಿತ್ತು. +ಊರಿನ ಯಜಮಾನರಾದ ಪುಟ್ಟಯ್ಯನವರ ಮಗ ನಾಗರಾಜ ಪೇಟೆ ಬದಿಯಿದ್ದ ಸೋದರಮಾವನ ಮನೆಯಿಂದ ಸ್ಕೂಲಿಗೆ ಹೋಗುತ್ತಿದ್ದನು. +ಕುಬೀರನಿಗೆ ಹೆಂಗಾದರೂ ನಾಲ್ಕಕ್ಷರ ಕಲಿಸಬೇಕೆಂದುಕೊಂಡಿದ್ದ ತಿಮ್ಮಯ್ಯ ಆಜುಬಾಜಿನ ಊರಿನ ಹುಡುಗರು ಪೇಟೆ ಸ್ಕೂಲಿಗೆ ಹೋಗಿಬರುವುದನ್ನು ನೋಡಿದ ಮೇಲೆ ಕುಬೀರನಿಗೆ ಬಲವಂತ ಮಾಡಿದನು. +'ತುಂಬಾ ಜನ ಹೋಗ್ತಾರೆ, ನೀನು ಜತೇಲೆ ಹೋದ್ರಾಯ್ತಪ್ಪ' ಎಂದು ಪುಸಲಾಯಿಸಿ ತಿಂಡಿ ಕೊಂಡು ತಿನ್ನಲೆಂದು ಚಿಲ್ಲರೆ ಕಾಸನ್ನು ಕೊಡುತ್ತಿದ್ದನು. +ದಿನಾ ಎಂಟು ಮೈಲು ನಡೆಯುವುದು ಕುಬೀರನಿಗೆ ನಿಜಕ್ಕೂ ಕಷ್ಟವಾಗುತ್ತಿತ್ತು. +ಬೆಳಗ್ಗೆ ತಂಗಳನ್ನ ಉಂಟುಹೊರಟರೆ ಮತ್ತೆ ಊಟ ಸಿಗುವುದು ರಾತ್ರಿಯೇ ಆಗುತ್ತಿತ್ತು. +ಹಾಗೂ ಹೀಗೂ ಎರಡು ಮೂರು ವರ್ಷಹೋದ ಮೇಲೆ ಕನ್ನಡ ಓದಲು ಬರುವಂತಾಯಿತು. +ಹತ್ತರವರೆಗೆ ಮಗ್ಗಿಯನ್ನೂ ಕಲಿತನು. +ಈ ಮಧ್ಯೆ,ದೆಯ್ಯ ದೇವರುಗಳ ಹದ್ದುಬಸ್ತಿಗಾಗಿ ಊರೂರು ಅಲೆಯುತ್ತ ಜಮೀನು ಕಡೆ ಮುಖ ಹಾಕಲೂ ತಿಮ್ಮಯ್ಯನಿಗೆ ಪುರುಸೊತ್ತು ಸಿಗದಾಯಿತು. +ಆದ್ದರಿಂದ ಕಮಲಕ್ಕನೇ ಕುಬೀರನ ಸ್ಕೂಲು ಬಿಡಿಸಬೇಕಾಯಿತು. +ಕೊಳಕು ಬಟ್ಟಿಹಾಕಿಕೊಂಡು ಪೇಟೆ ಹುಡುಗರ ನಡುವೆ ಕುಳಿತು ಮೇಷ್ಟರಿಂದಲೂ, ಹುಡುಗರಿಂದಲೂ ಆಗಾಗ ಏಟು ತಿನ್ನುತ್ತಿದ್ದ ಕುಬೀರನಿಗೆ ರೈತಾಪಿ ಕೆಲಸವೇ ಹೆಚ್ಚು ಇಷ್ಟವಾಯಿತು. +ಆದರೆ ಹಂಗಾಮಿನ ಕಾಲದಲ್ಲಿ ಗದ್ದೆ ಕೆಲಸ ವಿಪರೀತವಾಗಿದ್ದಾಗ ಇಸ್ಕೂಲಿಗೆ ಹೋಗಿದ್ದರೆ ಚೆನ್ನಾಗಿತ್ತೆಂದು ಅನ್ನಿಸತೊಡಗಿತು. +ಅವ್ವನ ಮೇಲೆ ವಿಪರೀತ ಸಿಟ್ಟೂ ಬರುತ್ತಿತ್ತು. +ಅಷ್ಟರಲ್ಲಿ ರಸ್ತೆ ಬದಿಯಲ್ಲಿ ತಿಮ್ಮಣ್ಣ ಸೆಟ್ಟರು ಹೋಟೆಲು ಆರಂಭಿಸಿದರು. +ರಸ್ತೆ ಆಜುಬಾಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರ ಮನೆಗಳೂ, ರಸ್ತೆ ಕೆಲಸದಒಡ್ಡರ ಮನೆಗಳೂ ಎದ್ದ ಮೇಲೆ ಆ ರಸ್ತೆಯಲ್ಲಿ ಎರಡು ಬಸ್ಸುಗಳು ಓಡಾಡಲು ಆರಂಭಿಸಿದವು. +ಊರುಮನೆಯ ಶಿವಣ್ಣ, ಅಲ್ಲಿ ಅಂಗಡಿ ಹಾಕಲು ಪ್ಲಾನು ಮಾಡಿ ಮನೆ ಕಟ್ಟಿಸಿದನು. +ದೂರದ ಸಂಬಂಧಿಯೂ ಆದಬಡಿಯಪ್ಪ ಪೇಟೆಯಲ್ಲಿ ಹೊಲಿಗೆ ಕಲಿಯುತ್ತಿದ್ದವನು ಶಿವಣ್ಣನ ಮನೆ ಬದಿಯಲ್ಲಿಯೇ ಚಿಕ್ಕ ಗೂಡು ಕಟ್ಟಿಸಿ ಮಿಷನ್‌ ತಂದಿಟ್ಟನು. +ಆಜುಬಾಜಿನಲ್ಲಿ ಸೆಟ್ಟರದು ಒಂದೇ ಹೋಟಲು ಸದ್ಯಕ್ಕೆ ಇದ್ದುದರಿಂದ ಸುತ್ತಮುತ್ತಲಹಳ್ಳಿಯವರು ಬೇಸಾಯದ ಕೆಲಸ ಮುಗಿಸಿ ಸಾಯಂಕಾಲ ಅಲ್ಲಿಗೆ ಬರತೊಡಗಿದರು. +ಕುಬೀರನಿಗೂ ಅದು ಅಭ್ಯಾಸವಾಯಿತು. +ಶಿವಣ್ಣನ ಅಂಗಡಿ. +ಹೊಸದಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದ ಜಲಜಮ್ಮಹದಿವಯಸ್ಸಿನ ಮಗಳು ಗುಲಾಬಿಯನ್ನು ಬಿಟ್ಟುಕೊಂಡು ಪ್ರಾರಂಭ ಮಾಡಿದ ಇನ್ನೊಂದು ಹೋಟೆಲು,ಭಂಡಾರಿ ಗೋವಿಂದಣ್ಣ ಹಾಕಿದ ಜೌರದ ಶಾಪಿನಿಂದ ಅದೊಂದು 'ಪುಟ್ಟ ಪ್ಯಾಟೆ'ಯೇ ಆಯಿತು. +ಕುಬೀರನಿಗೆ ಎಂಟು ಮೈಲು ಕದ್ದು ನಡೆಯುವುದು ತಪ್ಪಿತು. +ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದಲ್ಲ ಒಂದು ಮನೆಯಲ್ಲಿ ಕುಳಿತು ಸರಿರಾತ್ರಿಯ ಹೊತ್ತಿಗೆ ಮನೆಗೆ ಹೋಗಲು ಪ್ರಾರಂಭ ಮಾಡಿದನು. +ಮನೆಯಲ್ಲಿ ಯಾವ ಕೆಲಸವನ್ನೂ ಮಾಡದೆ ಹೋಟ್ಲು ಮನೆ ಬಾಗಿಲು ಕಾಯುವುದನ್ನು ತಿಮ್ಮಯ್ಯನ ಕಿವಿಗೆ ಅವರಿವರು ಹಾಕಿದ್ದರು. +ಮಗನನ್ನು ಹಾದಿಗೆ ತರಲು ಅವನು ಮಾಡಿದ 'ಪರ್ಯತ್ನ'ಗಳೆಲ್ಲ ವಿಫಲವಾಗಿದ್ದವು. +ಸೆಟ್ಟರ ಹೋಟೆಲಿಗೆ ಪೇಟೆಗೆ ಹೋಗಿ ಕಡ್ಲೆಹಿಟ್ಟು, ಟೀ ಪುಡಿ ತರುವುದು, ಶಿವಣ್ಣನ ಅಂಗಡಿಗೆ ಸೀಮೆಯೆಣ್ಣೆ ಡಬ್ಬ, ಮೆಣಸಿನಕಾಯಿ ಮೂಟೆ ಮೊದಲಾದವನ್ನು ಗಾಡಿಯಲ್ಲಿ ಹೇರಿಕೊಂಡು ಬರುವುದು, ಸಂತೆಯ ದಿನ ಆಜುಬಾಜಿನವರು ಬಸ್ಸಿಗೆ ಹಾಕಲು ತಂದ ಮೂಟೆಗಳನ್ನು ಹೊತ್ತು ಹಾಕುವುದು - ಇವೇ ಮೊದಲಾದ ಕೆಲಸಗಳು ಕುಬೀರನಿಗೆ ಇಷ್ಟವಾಗಿದ್ದವು. +ಮೈ ಬಗ್ಗಿಸಿ ದುಡಿಯಲು ಕ್ರಮೇಣ ಅಸಾಧ್ಯವಾಯಿತು. +ಚಿಕ್ಕಂದಿನಿಂದ ಚಿಲ್ಲರೆ ಕಾಸು ಖರ್ಚು ಮಾಡಲು ಕಲಿತವನಿಗೆ ಬರಿಗೈಯಲ್ಲಿ ಪೇಟೆ ತಿರುಗುವುದು ಕಷ್ಟವಾಯಿತು. +ಕೈಗೆ ಸಿಕ್ಕಿದ್ದರಲ್ಲಿ ಸ್ವಲ್ಪವಾದರೂ ಬಾಚಿಕೊಳ್ಳುವುದು ಅನಿವಾರ್ಯ ಎನ್ನಿಸಿತು. +ಸಾಮಾನು ತರಲು ಶಿವಣ್ಣನೋ ಸೆಟ್ಟರೋ ದುಡ್ಡು ಕೊಟ್ಟು ಕಳಿಸಿದರೆ ಅದರಲ್ಲಿ ಕಂಡೂ ಕಾಣದ ಹಾಗೆ ಹೊಡೆಯುವುದು ಅಭ್ಯಾಸವಾಯಿತು. +ಸೆಟ್ಟರಿಗೆ ಅದು ಗೊತ್ತಾಗುವ ಹೊತ್ತಿಗೆ ಶಿವಣ್ಣನ ಅಂಗಡಿಗೆ ಬಿಡಾರ ಬದಲಾಯಿಸಿದನು. +ಶಿವಣ್ಣನಿಗೂ ಅದರ ಸೂಕ್ಷ್ಮ ತಿಳಿಯುವ ಹೊತ್ತಿಗೆ ಕುಬೀರನ ಪಾಲಿಗೆ ಆಪದ್ದಾಂಧವನಂತೆ ಬಂದವನು ಏಳು ಗಂಟೆ ಬಸ್ಸಿನ ಡೈವರ್‌ಹ ಮೀದಣ್ಣ . +ಅವನು ಹೊಸದೊಂದು ದಂಧೆಯನ್ನು ಸೂಚಿಸಿದನು. +ಅದರಂತೆ ಆಜುಬಾಜಿನ ಹತ್ತಾರುಹಳ್ಳಿಗಳ ಜನರಲ್ಲಿ ಅದೃಷ್ಟ ಸಂಖ್ಯೆಗಳ ಮೇಲೆ ಹಣ ಕಟ್ಟಿ ಲಾಭ ಪಡೆಯುವ ವಿಧಾನವನ್ನು ಕುಬೀರ ಮೊದಲು ಹುಟ್ಟು ಹಾಕಿದನು. +ಕುಬೀರ ಹೊಸ ದಂಧೆ ಆರಂಭಿಸಿದಾಗ ಹೆಚ್ಚಿನ ಪ್ರೋತ್ಸಾಹವೇನೂ ಇರಲಿಲ್ಲ. +ಕಲೆಕ್ಷನ್ನು ನೂರೈವತ್ತು ಇನ್ನೂರುರೂಪಾಯಿ ದಾಟುತ್ತಿರಲಿಲ್ಲ. +ಒಂದು ಸಲ ಅವನು ಕಳಿಸಿದ ನಂಬರುಗಳಿಗೆ ಮೂರು ದಿನವೂ ಅದೃಷ್ಟ ಖುಲಾಯಿಸಿದ ಮೇಲೆ ಅವನ ಅದೃಷ್ಟವೂ ಬದಲಾಯಿಸಿತು. +ಕಲೆಕ್ಷನ್ನು ಐದುನೂರರ ಮೇಲೆ ಆಗತೊಡಗಿತು. +ಕಮೀಷನ್ನು ಹೆಚ್ಚಿಗೆ ದೊರೆಯುತ್ತಿದುದರಿಂದ ಆದಾಯದ ಜತೆಗೆ ಜನ ಬಳಕೆಯೂ ಏರತೊಡಗಿತು. +ತಿಮ್ಮಣ್ಣಸೆಟ್ಟರು ಕೆಲವು ದಿನ ದೂರ ಇಟ್ಟಿದ್ದವರು ಹಿಂದಿನ ಮನಸ್ತಾಪ ಮರೆತು ಕರೆದು ಆದರಿಸುವಂತಾಯಿತು. +ಕಲೆಕ್ಷನ್ನು ಜಾಸ್ತಿಯಾಗುತ್ತಿದ್ದುದರಿಂದ ಕುಬೀರ ಹಮೀದಣ್ಣನನ್ನು ಕೇಳಿ ಟೈಲಾರಿ ಬಡಿಯಪ್ಪನಿಗೆ 'ನೀನುಒಂದಿಷ್ಟು ಮಾಡು' ಎಂದು ಹಂಚಿದನು. +ಸೆಟ್ಟರು ತನಗೂ ಕೊಡಿಸಲು ಕೇಳಿದ್ದರಿಂದ ಅವರನ್ನೂ ಏಜೆಂಟರನ್ನಾಗಿ ಮಾಡಲಾಯಿತು. +ಈ ಮಧ್ಯೆ, ಹೆಡ್‌ಲೈಟ್‌ ಕಟ್ಟಿಕೊಂಡು ಮೊಲದ ಶಿಕಾರಿ ಮಾಡಿ ಊಟಕ್ಕೆ ಕರೆಯುತ್ತಿದ್ದ ಗೋವಿಂದಣ್ಣನ ವರಾತವೂ ಜಾಸ್ತಿಯಾಗಿ ಅವನಿಗೂ ಕಲೆಕ್ಷನ್ನು ಮಾಡಲು ಹೇಳಿದನು. +ಆರಂಭವಾದ ನಾಲ್ಕೈದು ತಿಂಗಳಲ್ಲಿಯೇ ಓಪನ್ನು - ಕ್ಲೋಜುಗಳ ಮಟ್ಕಾ ಜೂಜಿನ ಜನಪ್ರಿಯತೆ ವಿಷಮಶೀತ ಜ್ವರದಂತೆ ಏರುತ್ತಿದ್ದು ನಾಲ್ವರು ಏಜೆಂಟರುಗಳಿಗೂ ಲಾಭ ತಂದುಕೊಡುತ್ತಿತ್ತು. +ಅಂಗಡಿ ಹೋಟೆಲುಗಳಿಗೆ ಬರುವ ಯಾವತ್ತೂ ಜನರೆಲ್ಲ ಒಂದಲ್ಲ ಒಂದು ಸಲ ಓಸಿಗೆ ಹಣ ಕಟ್ಟುತ್ತಿದ್ದವರೇ. +ಕುಬೀರನನ್ನು ಮೊದಲಿಂದಲೂ ನೋಡುತ್ತಿದ್ದವರಿಗೆ ಅವನಲ್ಲಾದ ಬದಲಾವಣೆಗಳು ಆಶ್ಚರ್ಯ ಹುಟ್ಟಿಸಿದ್ದವು. +ಸೆಟ್ಟರ ಹೋಟೆಲಿನ ಮೂಲೆಯಲ್ಲಿ ಮಂಕಾಗಿ ಕುಳಿತುಕೊಳ್ಳುತ್ತಿದ್ದ ಕುಬೀರನೇ ಈಗ ವಾಚು ಕಟ್ಟಿಕೊಂಡು ಎದೆಜೇಬಿನಲ್ಲಿ ಪುಸ್ತಕ ಪೆನ್ನು ಇಟ್ಟುಕೊಂಡು ವ್ಯವಹಾರ ಮಾಡುತ್ತಿದ್ದಾನೆಂದರೆ ಸೋಜಿಗವಾಗುತ್ತಿತ್ತು. +"ಅವಂದು ಏನೂ ಅಂತಾನೇ ಗೊತ್ತಾಗಲ್ಲ. +ಬರೇ ಓಸೀಲಿ ಹೆಂಗೆ ದುಡೀತಾನೆ" ಎಂದು ಕೆಲವರು ಹೇಳುತ್ತಿದ್ದರು. +ಅವನು ಯಾರೊಡನೆಯೂ ಹೆಚ್ಚು ಸ್ನೇಹ ಇಟ್ಟುಕೊಳ್ಳದೆ ಗಂಭೀರವಾಗಿ ಇತ್ತೀಚೆಗೆ ಇರುತ್ತಿದ್ದನು. +ಬಡಿಯಪ್ಪ ಗೋವಿಂದಣ್ಣ ಇವರ ಜತೆ ಮಾತ್ರ ಹೆಚ್ಚು ಸಲಿಗೆಯಿಂದ ಇರುವ ಅವನನ್ನು ನೋಡಿದರೆ ಇತ್ತೀಚೆಗೆ ಆಜುಬಾಜಿನಲ್ಲಿ ನಡೆಯುವ ಕೋಳಿ ಹುಂಜಗಳ ಕಳವಿನ ಜತೆ ತಳಕು ಹಾಕುವವರಿದ್ದರು. +ಆದರೆ ಅವನ ಎದುರಿಗಾಗಲೀ, ಅವನ ಸ್ನೇಹಿತರ ಎದುರಿಗಾಗಲೀ ಹಾಗೆ ಹೇಳುತ್ತಿರಲಿಲ್ಲ. +ಜಲಜಮ್ಮನ ಮನೆಗೆ ಕಮಲಕ್ಕ ಬಂದುದನ್ನು ಕುಬೀರ ನೋಡಿದನು. +"ಒಂದು ಸ್ವಲ್ಪ ಹೊತ್ತು ಏನೂ ಮಾತಾಡಬ್ಕಾಡ ಮಾರಾಯ. +ಮೊದಲು ನನ್ನ ಮೀಸೆ ಕಟ್‌ ಮಾಡು" ಎಂದು ಹೇಳಿ ಸುಮ್ಮನೆ ಕುಳಿತುಸೋಗೆ ತಟ್ಟಿಯ ಕಿಂಡಿಯಿಂದ ಜಲಜಮ್ಮನ ಮನೆಯ ಕಡೆ ನೋಡತೊಡಗಿದನು. +ಗುಲಾಬಿ ಕಾಫಿ ತಿಂಡಿಸಫ್ಲೈ ಮಾಡುತ್ತಿದ್ದಳು. +ಬೇರೆ ಸಮಯದಲ್ಲಾಗಿದ್ದರೆ ಚಂಗನೆ ನೆಗೆದು ಹೋಟ್ಲಿಗೆ ಹೋಗುವ ಮನಸ್ಸಾಗುತ್ತಿತ್ತು. +ಕಿಂಡಿಯಿಂದ ಇಣಿಕಿ ನೋಡಿದ ಗೋವಿಂದಣ್ಣ "ನೋಡಾ, ಹೆಂಗೆ ಸಪ್ಲೈ ಆಗ್ತಾ ಐತೆ" ಎಂದು ಕೀಟಲೆಯಿಂದ ತೊಡೆ ಚಿವುಟಿದನು. +"ಸರಿಯಾಗಿ ಮೀಸೆ ಕಟ್‌ ಮಾಡೋ ಮಾರಾಯ" ಎಂದು ಮೆಲ್ಲಗೆ ಹೇಳಿ ನೋಡುತ್ತಿದ್ದ ಹಾಗೆ ಜಲಜಮ್ಮನ ಮನೆಯ ಹಿತ್ತಲಿಗೆ ಕಟ್ಟಿಗೆ ತುಂಬಿದ ಗಾಡಿ ಬಂದು ನಿಂತಿತು. +ಗುಲಾಬಿ ಹಿತ್ತಲು ಕಡೆಹೋಗಿ "ಬೇಲಿ ಮೇಲೆ ಸೌದೆ ಹಾಕಿ ಬೀಳಿಸಬೇಡ" ಎಂದು ಎಚ್ಚರಿಕೆ ಕೊಟ್ಟುದು ಹಿತವಾಗಿ ಕೇಳಿಸಿತು. +ಕಮಲಕ್ಕ ಹೊರಟುಹೋದ ಮೇಲೆ ಇಬ್ಬರೂ ನಿಧಾನವಾಗಿ ಜಲಜಮ್ಮನ ಹೋಟೆಲಿಗೆ ಬಂದರು. +ಗೋವಿಂದಣ್ಣ "ಇವತ್ತು ಎಷ್ಟು ತರ ತಿಂಡಿ ಮಾಡಿದೀರಿ ಅಮ್ಮ" ಎಂದನು. +"ಐದು ತರ ತಿಂಡಿ ಇದೆ. +ಎಲ್ಲಾಒಂದೊಂದು ಕೊಡಲಾ?" ಎಂದು ಗುಲಾಬಿ ಕೇಳಿದಳು. +"ಹಂಗಾರೆ ಐದನೇ ನಂಬರಿಗೆ ಐದು ರೂಪಾಯಿಕಟ್ಟಿ. +ಇವತ್ತು ಅದೇ ನಂಬರಿಗೆ ಹೊಡಿಯೋದು" ಎಂದು ಗೋವಿಂದಣ್ಣ ಜೇಬಿನಿಂದ ಪಟ್ಟಿ ತೆಗೆಯತೊಡಗಿದನು. +ಪೇಟೆ ಕಡೆ ಹೊರಟ ನಾಗರಾಜನಿಗೆ ಹತ್ತು ಗಂಟೆ ಬಸ್ಸಿನಿಂದ ಬಂದ ಮರುಳಯ್ಯ ಎದುರಾಗಿ "ನಿಮ್ಮಂಥ ವಿದ್ಯಾವಂತರೆಲ್ಲ ಊರಲ್ಲಿದೀರಿ. +ನೋಡ್ತಾ ಇದೀರಲ್ಲ. +ಹೆಂಗಾರೂ ಮಾಡಿ ಈ ಪಿಡುಗನ್ನು ನಿಲ್ಲಿಸಕಾಗಲ್ವ. +ನಾನು ನೋಡ್ತಾ ಇದ್ದ ಹಾಗೆ ದಿನಕ್ಕೆ ಕನಿಷ್ಠ ಐನೂರು ರೂಪಾಯಾದ್ರೂ ಕಲೆಕ್ಟನ್‌ ಆಗುತ್ತೆ ಎಲ್ಲರ ಬಾಯಲ್ಲೂ ಅದೇ ಜಪ. +ಇದು ಹೀಗೇ ಮುಂದುವರಿದರೆ ಜನ ಪಾತ್ರೆ ಪಗಡಿ ಮಾರಿ ಓಸಿ ಕಟ್ನಾರೇನೋ ಅಂತ ಅನುಮಾನ ನಂಗೆ" ಎಂದು ಹೇಳಿದನು. +ನಾಗರಾಜನಿಗೂ ಅದು ತಿಳಿದಿತ್ತು. +"ಎನಾದರೂ ಮಾಡೋಣ"ಎಂದು ಹೇಳಿ ಪೇಟೆ ಕಡೆ ಹೊರಟನು. +ದಾರಿಯುದ್ದಕ್ಕೂ ಮರುಳಯ್ಯ ಹೇಳಿದ್ದು ನೆನಪಾಗುತ್ತಿತ್ತು. +ದಿನಾ ಅಕ್ಕಿ ಕೊಂಡು ಒಲೆ ಹೊತ್ತಿಸುವ ಕೂಲಿಯಾಳುಗಳೂ ಒಸಿಗಾಗಿ ಖರ್ಚು ಮಾಡುತ್ತಿದ್ದರು. +ಕೆಲವರು ಗೋವಿಂದಣ್ಣನಂತೆ ಅದೃಷ್ಟ ಸಂಖ್ಯೆಯನ್ನು ದಿನವಿಡೀ ಹುಡುಕುತ್ತಿದ್ದರು. +ಕೂಲಿಯವರ ಬಿಡಾರದಲ್ಲಿಯೂ ರಾತ್ರಿಯಿಡೀ ಪಂಚಾಯ್ತಿಯಂತೆ ಓಸಿಯ ಬಗ್ಗೆಮಾತುಕತೆ ನಡೆಯುತ್ತಿತ್ತು. +ಶಿವಣ್ಣನ ಅಂಗಡಿಯಲ್ಲಿ ಕುಳಿತು ಊರು ಪಂಚಾಯಿತಿ ನಡೆಸುವ ರಂಗಪ್ಪಸೆಟ್ಟರು ಒಂದೇ ನಂಬರನ್ನು ಫಾಲೋ ಮಾಡುತ್ತಿದ್ದರು. +ಅವರನ್ನು ನೋಡಿಕೊಂಡು ಇನ್ನೂ ಕೆಲವರು ಬೇರೆ ಜೇರೆ ನಂಬರುಗಳನ್ನು ಫಾಲೋ ಮಾಡುತ್ತಿದ್ದರು. +ಹೇಗಾದರೂ ಮಾಡಿ ಒಂದು ಸಲ ಹಿಡಿಸಿ ಹಾಕಿದರೆ ಎಷ್ಟೋಒಳ್ಳೆಯದೆಂದು ಯೋಚಿಸುತ್ತ ಪೇಟೆಯ ಸಹಪಾಠಿ ಮಂಜುನಾಥ ಕಿಣಿಯ ಅಂಗಡಿಗೆ ಬಂದನು. +ಅಲ್ಲಿಮುಖ ತೋರಿಸಿ ರೆವಿನ್ಯೂ ಇನ್ಸ್‌ಪೆಕ್ಟರ್‌ ಬಳಿ ಹೋದನು. +ಅವರು ದೇವಸ್ಥಾನದ ಜಮೀನಿಗೆ ಸಂಬಂಧಿಸಿದ ವ್ಯವಹಾರಗಳನ್ನು ನೋಡಿಕೊಳ್ಳುವ ತಹಸೀಲ್ದಾರ ಕಚೇರಿಗೆ ತಿಳಿಸಿ ಕೆಲವು ಮಾಹಿತಿ ಕೊಟ್ಟರು. +"ಪಹಣಿದಾರಫೌತಿ ಆಗಿದ್ರೆ ಮೆಜಾರ್ಟಿಗೆ ಬಂದ ಹಿರೇಮಗನಿಂದ ಅರ್ಜಿ ಹಾಕಿಸಿ, ವಿಧವೆ ಹೆಂಗಸಿಗೆ ಅದರಲ್ಲಿ ರಕ್ಷಣೆ ಸಿಗೋ ಹಾಗೆ ಜಂಟಿ ಖಾತೆ ಮಾಡಿಸಬಹುದೇನೋ" ಎಂದು ಹೇಳಿದರು. +ಅಲ್ಲಿಂದ ಕಿಣಿ ಅಂಗಡಿಗೆ ವಾಪಸುಬಂದು ಮಂಜುನಾಥನ ಜತೆ ಹೋಟೆಲಿಗೆ ಹೋದರು. +ಕಾಫಿ ಕುಡಿಯುತ್ತಿದ್ದಾಗ ನಾಗರಾಜ ಊರಿನ ವಿಷಯ ಹೇಳಿದನು. +"ಅದನ್ನ ಎಂಥ ಮಾಡೋದು ಮಾರಾಯ, ಎಲ್ಲಾ ಕಡೆ ಉಂಟಲ್ಲ. +ಇಲ್ಲೇ ಎಷ್ಟೊಂದುಇದೆ ಗೊತ್ತ. +ನಮ್ಮ ತಂದೆ ಕೂಡ ಕಲೆಕ್ಷನ್‌ ಮಾಡ್ತಾರೆ" ಎಂದು ಮಂಜುನಾಥ ಹೇಳಿದನು. +"ಒಂದು ಸಲ ಹೆದರಿಕೆ ಹುಟ್ಟಿಸಿದರೆ ಆ ಕೂಲಿಯವರಿಗಾದರೂ ಒಳ್ಳೆಯದಾಗುತ್ತೆ. +ಏನಾದರೂ ಮಾಡಲೇಬೇಕಲ್ಲ" ಎಂದು ನಾಗರಾಜ ಒತ್ತಾಯಿಸಿದನು. +"ಹಾಗಾದರೆ, ಬರೀ ಹೆದರಿಕೆ ಹುಟ್ಟಿಸುವುದಲ್ಲವಾ, ಗುರ್ತಿನವರು ಇದ್ದಾರೆ. . . ಏನಾದರೂ ಮಾಡುವಾ" ಎಂದು ಮಂಜುನಾಥ ಹೇಳಿದನು. +ಪೇಟೆಯಿಂದ ಮನೆ ಕಡೆಗೇ ಹೊರಟಾಗ ನಾಗರಾಜನಿಗೆ ಕಮಲಕ್ಕನ ಕೆಲಸ ಕೂಡಲೇ ಮಾಡಿಸಿಕೊಡುವ ಉತ್ಸಾಹವಿತ್ತು. +ನಾಲ್ಕು ಮೈಲು ನಡೆದು ದಣಿವಾಗಿದ್ದರೂ ಎಂದಿನಂತೆ ಶಿವಣ್ಣನ ಅಂಗಡಿಗೂ ಹೋಗದೆ ಮನೆಕಡೆ ಹಾದಿ ಹಿಡಿದನು. +ಸೆಟ್ಟರ ಹೋಟೆಲಿನ ಪಕ್ಕದಲ್ಲಿ ಹಾದು ಬರುವಾಗ ಅಲ್ಲಿ ಕುಳಿತಿದ್ದ ಗೋವಿಂದಣ್ಣ"ಇವತ್ತು ಬಲದಾ ಕಣ್ಣು ಹಾರ್ತಾ ಐತೆ, ಒಂದು ನಂಬರಿಗೆ ಐವತ್ತು ರೂಪಾಯಿ ಕಟ್ಟೇ ಬಿಡಲಾ. . ಆಂ. . " ಎಂದುಗಟ್ಟಿಯಾಗಿ ಹೇಳುತ್ತಿದ್ದುದು ಕೇಳಿಸಿತು. +ಕಮಲಕ್ಕನ ಮನೆ ಹತ್ತಿರ ಬಂದಾಗ ಅವಳ ಹತ್ತಿರ ಒಂದು ಅರ್ಜಿ, ಹೊಸದಾಗಿ ಬರೆಸಿ ತಾನೇ ಮುಂದಾಗಿಹೋಗಿ ಜಮೀನು ಪಹಣಿ ಬದಲಾವಣೆ ಆಗುವಂತೆ ಮಾಡುವುದು ಒಳ್ಳೆಯದೆಂದು ತೋರಿತು. +ಸಾವಂತ್ರಿಯ ಚಿತ್ರವೂ ಕಣ್ಮುಂದೆ ಸುಳಿಯಿತು. +ಕಮಲಕ್ಕನ ಮನೆ ಕಡೆ ಕಾಲು ಮುಂದಾದವು. +ಅಂಗಳದಲ್ಲಿ ನಾಗರಾಜ ಬಂದು ನಿಂತುದನ್ನು ನೋಡಿ ಮಕ್ಕಳ ಯೋಚನೆಯಲ್ಲಿ ಮುಳುಗಿದ್ದ ಕಮಲಕ್ಕ ದಿಗ್ಗನೆ ಎದ್ದಳು. +"ಬನ್ನಿ, ಬನ್ನಿ"ಎಂದು ಕರೆದು ಚಾಪೆ ಹಾಕಿದಳು. +ನಾಗರಾಜ ಕುಳಿತುಕೊಂಡವನು "`ಈಗ ಕುಬೇರನ ಹೆಸರಿಗೆ ಒಂದು ಹೊಸಾ ಅರ್ಜಿ ಬರೆದು ಹಾಕೋಣ. +ಅದನ್ನ ಏನೂ ಅಂತ ನಾನೇ ನೋಡ್ಕಂಡು ಬರ್ತೀನಿ" ಎಂದನು. +"ಅದೇನೋ ನೀವೇ ಬರೀರಿ. +ಇದೊಂದು ಉಪಕಾರ ಮಾಡಿ" ಎಂದಳು ಕಮಲಕ್ಕ. +"ಹಾಗಾದರೆ ಈಗ ಕುಬೇರ ಬೇಕಲ್ಲ. +ಅವನಿಂದಲೇ ಅರ್ಜಿ ಹಾಕಿಸಬೇಕು. +ಎಷ್ಟು ಹೊತ್ತಿಗೆ ಬರ್ದಾನೆ" ಎಂದು ಕೇಳಿದನು. +"ನೀವು ಅರ್ಜಿ ಬರೀತಾ ಇರಿ, ನಾನೇ ಹೋಗಿ ಅವನ್ನ ಕರ್ಕಂಡು ಬರ್ತೀನಿ, ಹೆಂಗೂ ಹೋಟ್ಲೂ ಮನೆ ತಾವ ಇದ್ದೇ ಇರ್ರಾನಂತೆ" ಎಂದು ಹೇಳಿ ಕಮಲಕ್ಕ ಹೊರಟಳು. +ನಾಗರಾಜ ವಾಚು ನೋಡಿಕೊಂಡ, ಗಂಟೆ ಆರರ ಮೇಲಾಗಿತ್ತು. +ಬೆಳಿಗ್ಗೆ ಊಟ ಮಾಡಿದ್ದು, ಹೊಟ್ಟೆ ಹಸಿಯುತ್ತಿತ್ತು. +ಕಮಲಕ್ಕನ ಮನೆಯಲ್ಲೆಲ್ಲ ಕಣ್ಣಾಡಿಸಿದ. +ಜಗುಲಿ ಮೂಲೆಯಲ್ಲಿ ಸಿಕ್ಕ ಕಟ್ಟ ಹೊದಿಸಿದ್ದ ಹೇಂಟೆ ಕೊರಗುಟ್ಟುತ್ತಿತ್ತು. +ಕತ್ತಲು ಕವಿಯಲು ಆರಂಂಭವಾಗುತ್ತಿದ್ದಂತೆ ಅರ್ಜಿ ಬರೆಯಲು ಅಣಿಯಾದ. +ಕೈಚೀಲದಿಂದ ಹಾಳೆ ತೆಗೆದು ಪೆನ್ನು ಹಿಡಿದು ತೊಡೆಗೆ ಒತ್ತಿಕೊಂಡು ಏನು ಬರೆಯುವುದೆಂದು ಯೋಚಿಸುತ್ತಿರುವಾಗ ಚಿಮಿಣಿ ಎಣ್ಣೆ ದೀಪ ಎದುರಿಗೆ ತಂದಿಟ್ಟ ಸಾವಂತ್ರಿ ಒಳಗೆ ಹೋಗಿ ಒಂದು ಲೋಟ ಕಾಫಿ ತಂದಿಟ್ಟಳು. +ಜಗುಲಿಯ ಇನ್ನೊಂದು ಮೂಲೆಯಲ್ಲಿ ಕೂಸು ಮಲಗಿತ್ತು. +ಸಾವಂತ್ರಿಯ ಚಿಕ್ಕ ತಂಗಿ ಬೆರಗಾಗಿ ನಾಗರಾಜನ ಪೆನ್ನು, ಹಾಳೆಯನ್ನು ನೋಡುತ್ತಿದ್ದಳು. +ಇನ್ನೊಬ್ಬಳು ಕೊಟ್ಟಿಗೆಯಲ್ಲಿ ಜಾನುವಾರುಗಳಿಗೆ ಕಣ್ಣಿ ಹಾಕುತ್ತ ಬೈಯುತ್ತಿರುವುದು ಕೇಳುತ್ತಿತ್ತು. +ಕಾಫಿ ತಂದಿಟ್ಟು ಕಂಬದ ಮರೆಯಲ್ಲಿ ನಿಂತಿದ್ದ ಸಾವಂತ್ರಿಯನ್ನು ಕತ್ತೆತ್ತಿ ನೋಡಿದ ನಾಗರಾಜ "ಸ್ಕೂಲಿಗೆ ಹೋಗಿದ್ಯಾ" ಎಂದು ಕೇಳಿದನು. +ಅವಳು ಸ್ವಲ್ಪ ತಡೆದು "ಇಲ್ಲ" ಎಂದಳು. +ಅಡಿಗೆ ಮನೆಗೆ ಹೋಗಲು ಅಣಿಯಾದಳು. +"ಯಾಕೆ ಹೋಗ್ತಿ, ಸ್ವಲ್ಪ ಹೊತ್ತು ಇಲ್ಲೇ ಇರು. +ನಿಮ್ಮ ಜಮೀನು ಎಷ್ಟು ಅಂತಬರ್ಯೋಬೇಕು. . . " ಎಂದು ಹೇಳಿ ಬರೆಯಲು ಪೆನ್ನು ತೆರೆದನು. +ದೀಪದ ಮಂದ ಬೆಳಕಿನಲ್ಲಿ ಸಾವಂತ್ರಿಯ ರೂಪು ಅಸ್ಪಷ್ಟವಾಗಿತ್ತು. +ಗೋವಿಂದಣ್ಣನ ಕಲೆಕ್ಷನ್ನು ಜಾಸ್ತಿಯಾಗಿತ್ತು. +ಹೋಟೆಲಿನಲ್ಲಿ ಕುಳಿತಾಗ ಬಡಿಯಪ್ಪ "ಅದೇನು ಮಾರಾಯ. +ಚೌರಕ್ಕೆ ಬಂದವರನ್ನೆಲ್ಲ ಹಿಡಿದು ಕಟ್ಟಿಸಿ ಕೊಳ್ತೀಯ" ಎಂದು ಕೇಳಿದ್ದನು. +ಸೆಟ್ಟರು ಕುಬೀರನನ್ನು ಒಳಗಡೆ ಕರೆದು "ಎಲ್ಲಾ ಅವನೇ ಮಾಡುತ್ತಾನೆ, ನಮ್ಮ ಗಿರಾಕಿಗಳನ್ನು ತಡೆದು ಅವ ಕಟ್ಟಿಸಿಕೊಳ್ಳುತ್ತಾನಲ್ಲ. +ನಾಳೆಯಿಂದ ಮಾರಾಯ, ಬೇರೆ ಯಾರಿಗಾದರು ಕೊಡಿಸು. +ಕಮೀಷನ್ನು ಅಂತ ಏನೆಲ್ಲ ಮಾಡಲಿಕ್ಕೆ ಉಂಟಾ?" ಎಂದು ಕೇಳಿದ್ದರು. +"ಅದೆಲ್ಲ ಯಂಥದ್ರೀ, ನೀವು ಗಡಗಡ ಪಟ್ಟಿ ಬರೆದು ಕೊಡಿ, ಇವತ್ತು ಹಮೀದಣ್ಣ ಸೊಲ್ಪ ಬೇಗಬರ್ತೀನಿ ಅಂತ ಹೇಳಿದ್ದ ಎಂದು ಹೇಳಿ, ಆಗಲೇ ಹೋಟೆಲು ಬಿಟ್ಟು ಹೋದ ಬಡಿಯಪ್ಪನನ್ನು ಹಿಂಬಾಲಿಸಿದನು. +ಬಡಿಯಪ್ಪನ ಅಂಗಡಿಯಲ್ಲಿ ಇತ್ತೀಚೆಗೆ ಹೊಲಿಗೆ ಕೆಲಸ ಬಿಟ್ಟು ಬೇರೆ ಎಲ್ಲವೂ ನಡೆಯುತ್ತಿತ್ತು. + ಅವನಿಗೆ ಮೊದಲಿನಂತೆ ಕೆಲಸದಲ್ಲಿ ಆಸಕ್ತಿಯೂ ಇರಲಿಲ್ಲ. +ಶಿವಣ್ಣ ಸೂಚಿಸಿದ ಹಾಗೆ ಸಾರಾಯಿ ಇಲ್ಲವೇ ಕಳ್ಳಿನ ಅಂಗಡಿ ಗುತ್ತಿಗೆ ಹಿಡಿಯಲು ಯೋಚಿಸಿದ್ದನು. +ಅವನ ಅಸಿಸ್ಟೆಂಟು, ಹಾಲನಿಗೆ ಶರ್ಟು ಹೊಲಿಯುವುದನ್ನು ಕಲಿಸಿದ್ದನು. +ಅವನಂತೂ ಜಾಕೀಟುಗಳನ್ನು ಬಿಟ್ಟು ಬೇರೇನೂ ಹೊಲಿಯುತ್ತಿರಲಿಲ್ಲ. +ಸೆಟ್ಟರ ಹೋಟೆಲಿನಿಂದ ಬಂದವನು ಗೋವಿಂದಣ್ಣನನ್ನು ಕಳಿಸಿ ದಿನದ ಒಟ್ಟಾರೆ ಕಲೆಕ್ಷನ್ನನ್ನು ಎಣಿಸಿ ಪಟ್ಟಿ ಬರೆಯಲು ಕುಳಿತಾಗ ಕುಬೀರ ಬಂದು "ಇವತ್ತು ಒಂಚೂರು ಮೊದ್ಲೇ ಕೊಡು, ಹಮೀದಣ್ಣ ಬೇಗ ಬರ್ತೀನಿ ಅಂತ ಹೇಳಿದಾನೆ" ಎಂದು ಎಚ್ಚರಿಸಿದನು. +ಗೋವಿಂದಣ್ಣನ ಪಟ್ಟಿಯನ್ನು ತೆಗೆದುಕೊಳ್ಳಲು ಹೋಗುವ ಮೊದಲು ಸ್ವಂತ ಕಲೆಕ್ಷನ್ನಿನ ಹಣ ಎಣಿಸಿ, ಹಣ ಕೊಟ್ಟವರ ಹೆಸರು ಕಟ್ಟಿದ ನಂಬರುಗಳ ಪಟ್ಟಿ ಬರೆಯತೊಡಗಿದನು. +ದುಡ್ಡನ್ನೂ ಪಟ್ಟಿಯನ್ನೂ ಮೂವರು ಏಜೆಂಟರಿಂದ ಒಟ್ಟು ಮಾಡಿ ಏಳು ಗಂಟೆ ಬಸ್ಸಿನ ಡೈವರ್‌ ಹಮೀದಣ್ಣನ ಕೈಯಲ್ಲಿ ಕೊಡುವ ಹೊಣೆ ಕುಬೀರನದಾಗಿತ್ತು. +ಪಟ್ಟಿಯನ್ನು ಬರೆದು ಮುಗಿಸುತ್ತಿದ್ದಂತೆ ಅವಸರವಾಗಿ "ನಾನು ಸ್ವಲ್ಪ ಕೆರೆ ಕಡೆ ಹೋಗಿ ಬರ್ತೀನೋ, ಬೇಗ ರಡಿ ಮಾಡು" ಎಂದು ಅಂಗಡಿಯ ಹಿಂಬಾಗಿಲಿನಿಂದ ಹೊರಟನು. +"ಇದೆಂಥಾ ದರಿದ್ರದ ಕೆಲಸ ಮಾರಾಯ, ಇದರಪ್ಪನ ಬಂಡಾಟಾನ ಬಿಸಾಕಾ" ಎಂದು ಗೊಣಗುತ್ತ ಬಂದ ಇಬ್ಬರು ಮಫ್ತಿ ಪೊಲೀಸರಿಗೆ ಸೆಟ್ಟರ ಹೋಟೆಲು ಕಣ್ಣಿಗೆ ಬಿತ್ತು. +ಬೀಡಿ,ಬೆಂಕಿಪೊಟ್ಟಣ, ಸಂಜೆಯ ಟೀ,ಮನೆಯ ಸಾಮಾನುಗಳಿಗಾಗಿ ಆಜುಬಾಜಿನ ಹಳ್ಳಿಯವರು ರಸ್ತೆಯಲ್ಲಿ ಬಂದು ಸೆಟ್ಟರ ಹೋಟೆಲಿನಲ್ಲಿ ಟೀ ಕುಡಿದು ಶಿವಣ್ಣನ ಅಂಗಡಿ ಕಡೆ ಹೋಗುವುದು ಕಾಣಿಸುತ್ತಿತ್ತು . +"ಅದು ಯಾವನೋ ಬಂದು ಹೇಳಿದನಂತೆ,ಇವತ್ತೇ ಹೋಗಿ ಅಂತಾರಲ್ಲ. +ಇಂಥವು ಪೇಟೇಲಿ ದಿನಾ ನಡೀತಾವಲ್ಲೋ ಪುಟ್ಟೋಜಿ" ಎಂದು ವಯಸ್ಸಾದವನು ಹೇಳಿದ್ದಕ್ಕೆ "ಅದೆಲ್ಲ ನಮಗ್ಯಾಕೆ ರಾಮಣ್ಣ. +ಇಲ್ಲೆ ವಿಚಾರ್ಲಿದೀವಲ್ಲ. +ಹೋಟ್ಟು ಮನೆ ಸೆಟ್ಟ,ಟೈಲಾರಿ ಬಡಿಯಪ್ಪ, ಚೌರದ ಗೋವಿಂದ ಮತ್ತೆ ಅವನು ಕುಬೀರ - ಇಷ್ಟು ಜನ ಕಲೆಕ್ಷನ್‌ ಮಾಡ್ತಾರಂತಲ್ಲ. +ಚೀಟಿ, ದುಡ್ಡು ಇದ್ರೆ ಮಾತ್ರ ಹಿಡ್ಕಂಡು ಬರಾದಕ್ಕೆ ಹೇಳಿದಾರಲ್ಲ. +ನಾ ಹೆಂಗೂ ಸೆಟ್ಟೀನ ನೋಡಿದೀನಿ. +ಅವನಿಗೆ ನಾಕು ಒದ್ದರೆ ಉಳಿದವರನ್ನೂ ಅವನೇ ತೋರಿಸ್ತಾನೆ. +ಮಾಲು ಸಮೇತ ಹಿಡ್ಕಂಡು ಹೋದ್ರೆಆಯ್ತು. . " ಎಂದು ಹೇಳಿದನು. +ರಾಮಣ್ಣ ವಾಚು ನೋಡಿಕೊಂಡ, ಆರು ಗಂಟೆಯೂ ಆಗಿರಲಿಲ್ಲ. +"ಸಾಕಷ್ಟು ಕತ್ಲಾದ ಮೇಲೆ ಒಂದೇ ಸಲ ನುಗ್ಗಿ ಬಿಡಾನ. +ಏಳು ಗಂಟೆ ಬಸ್ಸು ಅಂದರೆ ಅದು ಏಳೂವರೆಗೆ ಬಂದ್ರೂ ಹೆಂಗೂ ನಮಗೆ ಅರ್ಥ ಗಂಟೆ ಸಾಕು" ಎಂದು ಹೇಳುತ್ತಾ ರಸ್ತೆ ಬದಿಯಲ್ಲಿ ಕುಳಿತು ಬೀಡಿ ಹೊತ್ತಿಸಿದನು. +ಪುಟ್ಟೋಜಿಗೂ ಒಂದು ಬೀಡಿ ಎಸೆದು ಕಡ್ಡಿ ಗೀರಿದನು. +ಬಸ್ಸಿಗಾಗಿ ಬೇಗ ಬೇಗ ಬರುತ್ತಿದ್ದ ಮರುಳಯ್ಯನಿಗೆ ಕಮಲಕ್ಕ ಬರ್ದಂಡು ಹೋಗುತ್ತಿರುವುದು ಕಾಣಿಸಿತು. +ಹಿಂದಿನಿಂದ ಹೋಗಿ "ಏನು ಕಮಲಮ್ಮ ಬಹಳ ಜೋರಾಗಿ ಹೋಗ್ತಿ" ಎಂದು ಕೇಳಿದನು. +ಕಮಲಕ್ಕ ನಿಂತು ದಾರಿ ಬಿಟ್ಟಳು. +"ಕುಬೀರನ್ನ ಕರ್ಕಂಡು ಬರಾನ ಅಂತ ಹ್ವಂಟೆ, ಯಾರೋ ಬಂದಾರೆ. +ಎಲ್ಲಿ ಸಿಗ್ತಾನೋ ಏನೋ" ಎಂದು ಅನುಮಾನಿಸುತ್ತ ಹೇಳಿದಳು." +"ಅವನೆಲ್ಲಿ ಸಿಗ್ನಾನೆ? +ಹೋಟ್ಟು ವಾಸನೆ ಕುಡಿತಾ ಕುಂತ ಅಂದ್ರೆ ಕೆಲವು ಸಲ ದಿನವಿಡೀ ಕುಂತಿರ್ತಾನೆ. +ಇಲ್ಲೆ ಇದ್ರೆ ಇಡೀ ದಿನ ಎಲ್ಲೂ ಪತ್ತೆ ಇರೋದಿಲ್ಲ. +ಬಾಳ ಅರ್ಜೆಂಟಾದೆ ಒಂದು ಕೆಲಸ ಮಾಡು, ಇನ್ನು ಸ್ವಲ್ಪ ಹೊತ್ತಿಗೆ ಬಸ್ಸು ಬರುತ್ತಲ್ಲ. +ಆವಾಗ ಎಲ್ಲಿದ್ರೂ ಬಂದು ಡೈವರ್‌ ಹತ್ರ ಅವನು ಚೀಟಿ ಕೊಡಬೇಕು. +ನೀನು ಸುಮ್ಮನೆ ಸೆಟ್ಟರ ಹೋಟ್ಲು ಹಿಂದೆ ಕುಂತಿರು. +ಬಸ್ಸು ಬಂದು ನಿಂತ ಕೂಡ್ಲೆ ಬಂದ್ರೆ ಸಿಕ್ಕೇ ಸಿಗ್ತಾನೆ" ಎಂದು ಹೇಳಿ ಮುಂದೆ ಹೋದನು. +ಕಮಲಕ್ಕ ಹೋಟ್ಲು ಮನೆ ಹತ್ತಿರ ಬರುವಾಗ ಆಗಲೇ ಸಾಕಷ್ಟು ಜನ ಸೇರಿದ್ದರು. +ಸೆಟ್ಟರ ವ್ಯಾಪಾರ ಬರ್ದಂಡು ನಡೆಯುತ್ತಿತ್ತು. +ಗ್ಯಾಸ್‌ ಲೈಟು ಹತ್ತಿಸಿ ತಿಂಡಿಕಾಫಿಯ ಆರ್ಡರುಗಳನ್ನು ಸೆಟ್ಟರು ಜೋರಾಗಿ ಕೂಗುವುದು ಕಮಲಕ್ಕನಿಗೆ ಕೇಳಿಸುತ್ತಿತ್ತು. +ಪದೇಪದೇ ವಾಚು ನೋಡಿಕೊಳ್ಳುತ್ತಿದ್ದ ರಾಮಣ್ಣನಿಗೆ ಆರೂ ಮುಕ್ಕಾಲು ಆಗುತ್ತಲೂ ಎದೆ ಡವಗುಟ್ಟತೊಡಗಿತು. +ಸೆಟ್ಟರ ಹೋಟೆಲಿನಲ್ಲಿ ಸಾಕಷ್ಟು ಜನ ಸೇರಿದ್ದು ಗ್ಯಾಸ್‌ಲೈಟ್‌ ಬೆಳಕಲ್ಲಿ ಎದ್ದುತೋರುತ್ತಿತ್ತು. +ಡ್ರೆಸ್‌ನಲ್ಲಿಯೇ ಬಂದಿದ್ದರೆ ಎಂದೂ ಅನ್ನಿಸಿತು. +ಬಾಯಿಬಿಟ್ಟು ಹೇಳುವುದಕ್ಕೆ ಪುಟ್ಟೋಜಿಯ ಎದುರು ಕಷ್ಟವಾಗಿತ್ತು. +ಆದ್ದರಿಂದ "ಹೋಗಾನಾ" ಎಂದು ಕುಗ್ಗಿದ ಧ್ವನಿಯಲ್ಲಿ ಹೇಳಿದ್ದಕ್ಕೆ ಅದೇ ಇಳಿದ ಧ್ವನಿಯಲ್ಲಿಯೇ ಪುಟ್ಟೋಜಿ "ಎಂಥ ಸುಡುಗಾಡು ಕೆಲಸಾನೋ" ಎಂದು ಗೊಣಗಿಕೊಂಡು ಎದ್ದನು. +ದೊಣ್ಣೆಗಳನ್ನು ಕೈಯಿಂದ ಕೈಗೆ ಬದಲಾಯಿಸುತ್ತ ಅವರಿಬ್ಬರೂ ಬಂದರು. +ಜಬರ್‌ದಸ್ತಿನಲ್ಲಿ ಹೋಟೆಲು ನುಗ್ಗಬೇಕೆಂದುಕೊಂಡಿದ್ದರೂ ಹೇಗೋ ಏನೋ ಎಂದು ಅನ್ನಿಸುತ್ತಿತ್ತು. +ಒಬ್ಬರ ಮುಖ ಮಸುಕಾಗಿ ಕಾಣುವಷ್ಟು ಬೆಳಕು ಇತ್ತು. +ಕತ್ತಲು ಜಾಸ್ತಿಯಾದರೂ ಕಷ್ಟ. +ಬೆಳಕು ಇದ್ದರೂ ಕಷ್ಟ ಎನ್ನುವ ಪರಿಸ್ಥಿತಿಯಲ್ಲಿ ಹೋಟೆಲಿಗೆ ಬಂದು ಗ್ಯಾಸ್‌ಲೈಟು ಬೆಳಕಲ್ಲಿ ಎಲ್ಲರನ್ನೂ ನೋಡಿ ಒಂದು ನಿಮಿಷ ಸುಮ್ಮನೆ ನಿಂತರು. +ರಾಮಣ್ಣ ಸುಧಾರಿಸಿಕೊಂಡು ಸೆಟ್ಟರ ಗಲ್ಲಾದ ಟೇಬಲಿನ ಬಳಿ ನಿಂತು "ಒಂದು ಕಟ್ಟು ಬೀಡಿ ಕೊಡಿ" ಎಂದು ಕೇಳಿದನು. +ಒಳಗೆ ಹೋಗಿ ತಿಂಡಿ ತರುತ್ತಿದ್ದ ಸೆಟ್ಟರು "ಬೀಡಿಗೆ ಮುಂದಿನ ಅಂಗಡಿಗೆ ಹೋಗಿ" ಎಂದು ಹೇಳುತ್ತ ಸಪ್ಲೈ ಮಾಡಲು ಬಂದ ತಕ್ಷಣ ಸೆಟ್ಟರನ್ನು ಖಾತ್ರಿ ಮಾಡಿಕೊಂಡು, ದೊಣ್ಣೆಯನ್ನು ಟೇಬಲಿನ ಮೇಲಿಟ್ಟು ಒಂದು ಕೈಯಿಂದ ಸೆಟ್ಟರ ಶರಟನ್ನು ಹಿಡಿದು "ತಗೀ ಚೀಟಿ" ಎಂದು ಗಟ್ಟಿಯಾಗಿ ಹೇಳಿದನು. +ಅಷ್ಟರಲ್ಲಾಗಲೇ ಬಡಿಯಪ್ಪನ ಅಂಗಡಿಯನ್ನು ಕೇಳಿ ನೋಡಿದ್ದ ಪುಟ್ಟೋಜಿ ನೆಗೆದು ಟೇಬಲ್ಲಿನ ಬಳಿ ಬಂದನು. +ಇಬ್ಬರು ದೊಣ್ಣೆ ಹಿಡಿದು ಮೇಲೆ ಬಿದ್ದುದರಿಂದ ಕೈಲಿದ್ದ ಫ್ಲೇಟುಗಳನ್ನು ಕೆಳಗೆ ಹಾಕಿದ ಸೆಟ್ಟರ ನಾಲಿಗೆ ಒಣಗಿ ಕಾಲುಗಳು ಥರಥರ ನಡುಗತೊಡಗಿದವು. +"ತೆಗಿಯಯ್ಯ ಓಸಿ ಚೀಟಿ, ಬಂದಿರೋರು ಯಾರು ಅಂತ ಕಾಣಾದಿಲ್ಲೇನು" ಎಂದು ಪುಟ್ಟೋಜಿ ದೊಣ್ಣೆಯನ್ನು ಹೊಟ್ಟೆಗೆ ಅದುಮಿ ಹಿಡಿದು ಜೇಬುಗಳ ಜಜ್ಲಿಗೆ ತೊಡಗಿದನು. +ಹೋಟೆಲಿನಲ್ಲಿದ್ದವರೆಲ್ಲ ಸುಮ್ಮನೆ ನೋಡುತ್ತ ನಿಂತಿದ್ದಾಗ "ಉಳಿದವರು ತಪ್ಪಿಸಿಕೊಂಡಾರು ನೋಡು" ಎಂದು ರಾಮಣ್ಣ ಪಿಸುಗುಟ್ಟಿದನು. +ದೊಣ್ಣೆ ಹಿಡಿದು ಪುಟ್ಟೋಜಿ ರಸ್ತೆ ದಾಟಿ ಬಡಿಯಪ್ಪನ ಅಂಗಡಿ ಕಡೆ ನುಗ್ಗಿದನು. +ಕಲೆಕ್ಟ್ಷನ್ನಾದ ಹಣವನ್ನು ಎಣಿಸಿ ಪೊಟ್ಟಣ ಕಟ್ಟಿ ನಂಬರು ಚೀಟಿ ಬರೆಯುತ್ತ ಕುಳಿತಿದ್ದ ಬಡಿಯಪ್ಪನಿಗೆ ಎದುರುಸೆಟ್ಟರ ಹೋಟೆಲಿನಲ್ಲಿ ನಡೆದ ಗಲಾಟೆಯ ಸುದ್ದಿಯನ್ನು ಹೋಟೆಲು ಮೂಲೆಯಲ್ಲಿ ಕುಳಿತು ದಿಕ್ಕುನೋಡುತ್ತಿದ್ದ ಗಿರಿಯ ಮುಟ್ಟಸಿದಾಗ ದುಡ್ಡನ್ನು ಶಿವಣ್ಣನ ಅಂಗಡಿಗೆ ದಾಟಿಸಿ ಮಿಷನ್‌ ಮೇಲೆ ಕುಳಿತನು. +ಕೈಕಾಲು ಆಡದೆ ನಾಲಿಗೆಯೆಲ್ಲ ಆರಿ ತಪ್ಪಿಸಿಕೊಳ್ಳುವ ಹವಣಿಕೆಯಲ್ಲಿದ್ದಾಗ ಎದುರಿನಲ್ಲಿ ದೊಣ್ಣೆ ಹಿಡಿದು ಪುಟ್ಟೋಜಿ ಬರುವುದು ಕಂಡಿತು. +ಮಿಷನ್ನಿನ ಮೇಲೆ ನಂಬರು ಚೀಟಿ ಇತ್ತು . +ಸರಕ್ಕನೆ ತೆಗೆದು ಕತ್ತರಿಸಿಟ್ಟ ಜಾಕೀಟು ಬಟ್ಟೆಯ ಅಡಿ ಅದನ್ನು ಸೇರಿಸಿ ಮಿಷನ್ನು ಓಡಿಸಿದನು. +ಕೆಳಗಡೆ ದಾರವೇ ಇಲ್ಲದೆ ಹೊಲಿಗೆ ಕೂಡದೆ ಮಿಷನ್ನು ಓಡುತ್ತಿರುವಾಗ ಬಂದ ಪುಟ್ಟೋಜಿ "ನೀನೇನೋ ಟೈಲಾರಿ, ತಗೀ ಬೇಗ" ಎಂದು ದೊಣ್ಣೆಯನ್ನು ಮಿಷನ್ನಿನ ಮೇಲೆ ಕುಟ್ಟಿದನು. +ಬಡಿಯಪ್ಪ ಗಡಗಡ ನಡುಗುತ್ತ "ಯ. . . ಯ. . . ಯಾ. . . ವು. . . ದ್ರೀ. . . "ಎಂದು ಹೇಳುತ್ತಿದ್ದಂತೆ ಪುಟ್ಟೋಜಿ ಕೆನ್ನೆಗೊಂದು ಬಾರಿಸಿ ಅಂಗಿ ಜೇಬುಗಳನ್ನೆಲ್ಲ ಶೋಧಿಸತೊಡಗಿದನು. +ಒಂದೆರಡು ರೂಪಾಯಿ ನೋಟು, ಸ್ವಲ್ಪ ಚಿಲ್ಲರೆ, ಸಾಮಾನು ತಂದ ಚೀಟಿಗಳ ಹೊರತು ಇನ್ನೇನೂ ಕಂಡುಬರದೆ ಮಿಷನ್ನಿನ ಡ್ರಾ ಎಳೆದು ನೂಲಿನ ಉಂಡೆ, ಸೂಜಿ, ಗುಂಡಿ, ಬೆಂಕಿಪೊಟ್ಟಣ ಮೊದಲಾದವನ್ನು ಕಿತ್ತೆಸೆದು ರಪರಪನೆ ನಾಲ್ಕು ತಪರಾಕಿ ತಟ್ಟಿ "ಇನ್ನೊಂದು ಸಲ ಓಸಿ ಚೀಟಿ ಮುಟ್ಟಿದರೆ ಚಮಡಾ ನಿಕಾಲ್‌. +ಯಾರತ್ರ ಅಂತ ಮಾಡಿದೀಯಾ. . . " ಎಂದು ಹೇಳಿ ರಸ್ತೆಗೆ ಬಂದನು. +ಅಷ್ಟು ಹೊತ್ತಿಗೆ ಸೆಟ್ಟರನ್ನು ಜಫ್ತಿ ಮಾಡಿ ಬಂದ ರಾಮಣ್ಣ "ಗೋವಿಂದನ್ನ ಹುಡುಕು, ಅವನ ಹತ್ರ ಪಟ್ಟಿ ಐತಂತೆ" ಎಂದು ಕೂಗಿದನು. +ಚೌರದ ಸಾಮಾನೆಲ್ಲ ಹಡಪಕ್ಕೆ ತುಂಬಿ ಇಟ್ಟು ಬೀಗ ಹಾಕಿದ ಗೋವಿಂದಣ್ಣ ಶಾಪಿನ ಬಾಗಿಲು ಹಾಕಿ ಜಲಜಮ್ಮನ ಹೋಟೆಲಿಗೆ ಬಂದು ಟೀ ಕುಡಿಯುತ್ತಿದ್ದಾಗ ಸೆಟ್ಟರ ಹೋಟೆಲಿನಿಂದ ಬಡಿಯಪ್ಪನಿಗೆ ಸುದ್ದಿಮುಟ್ಟಿಸಿ ಜಲಜಮ್ಮನ ಹೋಟೆಲು ಕಡೆ ಓಡಿಬಂದ ಗಿರಿಯ "ಸೆಟ್ರ ಓಸಿ ಚೀಟಿನ ಪೋಲೀಸರು ಕಸ್ಕಂಡು"ಎಂದು ಉಸಿರು ಬಿಡುತ್ತ ಹೇಳಿದನು. +ಗಾಬರಿಯಾದ ಗೋವಿಂದಣ್ಣ ವಿಷಯ ಏನೆಂದು ಸರಿಯಾಗಿ ಕೇಳುತ್ತಿದ್ದಾಗ ಹೋಟೆಲಿನ ಕಡೆಯೇ ನಾಲ್ಕೈದು ಜನರು ಓಡಿಬರುತ್ತಿರುವುದು ಮಸುಕಾಗಿ ಕಾಣಿಸಿತು. +ದಿಗ್ಗನೆದ್ದು ಜಲಜಮ್ಮನ ಮನೆಯ ಒಳಗೆ ನುಗ್ಗಿದವನೇ ಹಿತ್ತಲು ಕಡೆ ಹಾರಿದನು. +ಕತ್ತಲಿಯಲ್ಲಿ ಏನೂ ಕಾಣಿಸದಿದ್ದಾಗ ಹಿತ್ತಲು ಬೇಲಿಯನ್ನು ತಡವಿ ನೋಡಿ ಅಂದಾಜಿನ ಮೇಲೆ ಒಂದೇ ರಭಸಕ್ಕೆ ನೆಗೆದುಬೇಲಿಯ ಮೇಲೆ ಹಾರಿದಾಗ ಮಧ್ಯಾಹ್ನ ಕಟ್ಟಿಗೆ ತಂದು ಹಾಕಿದ ಎತ್ತಿನ ಗಾಡಿಯ ಮೂಕಿಗೆ ಎದೆ ಹೊಡೆದು ಪ್ರಜ್ಞೆ ತಪ್ಪುವಷ್ಟು ನೋವಾದರೂ ಉಸಿರು ಹಿಡಿದು ನರಳುತ್ತ ಕಟ್ಟಿಗೆಯ ಮೇಲೆ ಕುಸಿದನು. +ರಾಮಣ್ಣ ಹೇಳಿದ ತಕ್ಷಣ ಗೋವಿಂದಣ್ಣನ ಶಾಪನ್ನು ಕೇಳಿಕೊಂಡು ಪುಟ್ಟೋಜಿ ಓಡಿ ಬರುತ್ತಿದ್ದಾಗ ಏಳುಗಂಟೆಯ ಬಸ್ಸು ಬಂದೇಬಿಟ್ಟಿತು. +"ಪುಟ್ಟೋಜಿ ಪುಟ್ಟೋಜಿ. . " ಎಂದು ರಾಮಣ್ಣ ಮತ್ತೆ ಕೂಗಿ ಕರೆಯುತ್ತಿದ್ದಾಗ ಬಸ್ಸು ಬಂದುದನ್ನು ನೋಡಿ ಕೆರೆ ಕಡೆಯಿಂದ ಓಡಿಬಂದ ಕುಬೀರನನ್ನು ನೋಡಿ ಆವತ್ತೂ ನಂಬರನ್ನು ಫಾಲೋ ಮಾಡಿದ್ದ ರಂಗಪ್ಪಸೆಟ್ಟರು "ಓಡು ಕುಬೀರ, ಪೋಲೀಸ್ನೋರು" ಎಂದು ಗಟ್ಟಿಯಾಗಿ ಕೂಗಿದರು. +ಅದುವರೆಗೆ ಇಲ್ಲಿನ ಯಾವ ಗಲಾಟೆಯನ್ನೂ ತಿಳಿಯದ ಕುಬೀರ ದಿಕ್ಕು ತೋಚದೆ ಜಲಜಮ್ಮನ ಮನೆ ಕಡೆ ಓಡತೊಡಗಿನು. +ರಾಮಣ್ಣನಿಗೆ ಕುಬೀರ ಓಡುತ್ತಿರುವುದು ಕಾಣಿಸಿತು. +"ಹಿಡಿ ಹಿಡಿ ಪುಟ್ಟೋಜಿ"ಎಂದು ಅರಚಿದನು. +ತನ್ನೆಡೆಗೆ ಬರ್ದಂಡು ಓಡಿಬರುತ್ತಿದ್ದ ಕುಬೀರನನ್ನು ಬಸ್ಸಿನ ಕಡೆ ಬರುತ್ತಿದ್ದ ಪುಟ್ಟೋಜಿ ಅನಾಮತ್ತು ತಬ್ಬಿ ಹಿಡಿದು, ತಕ್ಷಣ ಟವೆಲ್ಲಿನಿಂದ ಹಿಂಗಟ್ಟು ಹಾಕಿದನು. +ಜೇಬಿನಲ್ಲಿ ದುಡ್ಡಿನ ಪೊಟ್ಟಣ. +ಕೆಲವು ನಂಬರಿನ ಚೀಟಿಗಳೂ ಸಿಕ್ಕಿದವು. +ಹೊರಗೆ ಸ್ವಲ್ಪಕಾಲದಲ್ಲಿ ನಡೆದ ಎಲ್ಲಾ ಗಲಾಟೆಯನ್ನು ಸೆಟ್ಟರ ಹೋಟೆಲಿನ ಹಿಂದೆ ಕುಳಿತು ಆಲೈಸುತ್ತಿದ್ದ ಕಮಲಕ್ಕನಿಗೆ ಅದರ ತಲೆ ಬುಡ ಅರ್ಥವಾಗಿರಲಿಲ್ಲ. +ಬಸ್ಸು ಬಂದ ಸಪ್ಪಳ ಕೇಳಿ ಹೋಟೆಲಿನ ಮುಂದೆ ಬಂದಾಗ ದೊಡ್ಡ ಗುಂಪು ಸೇರಿದ್ದು ಗಮನಕ್ಕೆ ಬಂದಿತು. +ಬಸ್ಸಿನ ಬಳಿ ಹೋದಾಗ ಕುಬೀರನನ್ನು ಹಿಂಗಟ್ಟುಹಾಕಿ ದೊಣ್ಣೆ ಹಿಡಿದ ಇಬ್ಬರು ತಳ್ಳಿಕೊಂಡು ಬಸ್ಸು ಹತ್ತುತ್ತಿದ್ದುದು ಕಂಡಿತು. +ತುಕ್ಕಪೂಜಾರಿ ನಾಲ್ಕು ಮಕ್ಕಳ ತಂದೆಯಾದರೂ ರಂಗಪ್ಪಶೆಟ್ಟರು ಕರೆಯುವುದು ಸೇರೆಗಾರಿಕೆಯ ದರ್ಪದಿಂದಲೇ. +ಅಂದು ಬೆಳಿಗ್ಗೆ ಹಾಳೆ ಕೊಟ್ಟೆಯಲ್ಲಿ ಅವನು ಗಂಜಿಯನ್ನು ಸುರಿದು ಉಣ್ಣಾತ್ತಿದ್ದಾಗ ಸೇರೆಗಾರರ ಕೂಗು ಕೇಳಿಸಿತು. +"ಏ ತುಕ್ಕ, ಮೇಲಿನ ಗೌಡರ ಮನೆ ತೋಟಕ್ಕೆ ಸೊಪ್ಪು ಹಾಕುವುದಿತ್ತೊ ಬೇಗತಿಂದು ಹೋತ್ಯಾ". +ಉಡುಪಿ ಜಿಲ್ಲೆಯಿಂದ ಕೆಲಸ ಹುಡುಕಿ ಮಲೆನಾಡಿನ ಊರಿಗೆ ಬಂದ ಹತ್ತು ವರ್ಷದ ಒಳಗೇ ನಾಲ್ಕು ಎಕರೆ ಜಮೀನು ಮಾಡಿಕೊಂಡ ರಂಗಪ್ಪಶೆಟ್ಟರು ಊರಿನಲ್ಲಿ ಈಗ ಪ್ರತಿಷ್ಠಿತ ವ್ಯಕ್ತಿ . +ಅವರಮಾತು ಯಾರೂ ತೆಗೆದು ಹಾಕಲು ಸಾಧ್ಯವಿಲ್ಲದಂತೆ ರಸ್ತೆ ಬದಿ ಹೋಟೆಲು ವ್ಯಾಪಾರ ಇಡಿಸಿದ್ದಾರೆ. +ಹೋಟೆಲಿನ ಪಕ್ಕದಲ್ಲಿಯೇ ದಿನಸಿ ಅಂಗಡಿಯೂ ಇರುವುದರಿಂದ ಸುತ್ತಮುತ್ತಲ ಊರಿನವರಿಗೆ ಮಳೆಗಾಲಕ್ಕೆ ಸಾಲ ನೀಡುವವರೂ ಅವರೇ. +ಇಷ್ಟೆಲ್ಲ ಅನುಕೂಲ ಇದ್ದರೂ ತನ್ನನ್ನು ಬೆಳೆಸಿದ ಸೇರೆಗಾರಿಕೆಯನ್ನು ಇನ್ನೂ ಬಿಟ್ಟಿಲ್ಲ. +ಊರಿನ ಹತ್ತೆಕರೆ ತೋಟದ ಬೇಸಾಯವಷ್ಟೆ ಅಲ್ಲ ಗದ್ದೆ ಕೊಯ್ದು ಒಕ್ಕಲುಲ್ಲವೂ ಸೇರೆಗಾರರಿಂದಲೇ ನಡೆಯುವುದು. +ಅವರು ಕರೆತಂದ ತಂದ ಆಳುಗಳ ಪೈಕಿ ತುಕ್ಕಪೂಜಾರಿಯೇ ಹಳೆಯವ. +ಅವನ ಸಂಬಳದಲ್ಲಿ ಎರಡು ವರ್ಷದಿಂದ ಬಡ್ತಿಯಾಗಿಲ್ಲ. +ಹೆಬ್ಬೆಟ್ಟಿನ ಪ್ರಭುವಾದ ತುಕ್ಕನಿಗೆ ವಾರಕ್ಕೆ ನೂರುರೂಪಾಯಿ ಕೊಟ್ಟು ದಿನಕ್ಕೆ ಎರಡು ಸೇರು ಕುಚ್ಚಿಗೆ ಅಕ್ಕಿ ಕೊಡಿಸಿದರೆ, ಸೆಟ್ಟರ ಲೆಕ್ಕದಲ್ಲಿ ತೀರುತ್ತದೆ. +ಈ ಬಗ್ಗೆ ತುಕ್ಕ ಎಂದೂ ಪ್ರಶ್ನಿಸಿದವನಲ್ಲ. +ಉಪ್ಪು ಮೆಣಸಿಗಾದರೆ ಸೆಟ್ಟರೇ ಅಂಗಡಿಯಿಂದ ಕೊಡುತ್ತಾರೆ. +ಮುಂದಿನವಾರದ ಸಂಬಳದಲ್ಲಿ ಹಿಡಿಯುತ್ತಾರೆಂದಷ್ಟೇ ಅವನಿಗೆ ಗೊತ್ತಿದ್ದ ಲೆಕ್ಕ. +ಸೊಪ್ಪಗತ್ತಿಯನ್ನು ಕೊಂಡಿಗೆ ಸಿಕ್ಕಿಸಿಕೊಂಡು ಬಿಡಾರದಿಂದ ಹೊರಟಾಗ ಹೊತ್ತು ಎರಡಾಳು ಮೇಲೇರಿತ್ತು. +"ಎಷ್ಟು ಲೇಟಾಯಿತ್ತೆ" ಎಂದುಕೊಂಡು ಗಡಗಡ ಹೆಜ್ಜೆಹಾಕಿದ. +ತೀರ್ಥಹಳ್ಳಿ ರಸ್ತೆ ದಾಟಿ ತಾನು ಹೋಗುವಾಗ ಯಾರೊ ಇಬ್ಬರು ಬಿಳಿಬಟ್ಟೆಯವರು ಇವನನ್ನೇ ಕರೆದಂತಾಗಿ ನಿಂತ. +ದೂರದಿಂದಲೇ ಕೈಮುಗಿದ. +ಅವರು ಇವನ ಸೊಂಟಕ್ಕೆ ಸುತ್ತಿದ ಪಂಚೆ, ಎಲೆಅಡಿಕೆಯ ರಂಗಿಗೆ ಕಪ್ಪಾದ ಹಲ್ಲು, ಬಾಗಿದ ದೈನ್ಯವನ್ನು ಸೂಕ್ಷ್ಮವಾಗಿ ಗಮನಿಸಿ ಹೆಸರು ಕಸುಬು ಇತ್ಯಾದಿ ವಿಚಾರಿಸಿದರು. +"ರಂಗಪ್ಪ ಶೆಟ್ಟರೆಂದರೆ ಅದೇ ಅಂಗಡಿಯಿಟ್ಟಿದ್ದಾರಲ್ಲ ಅವರಾ!" ಎಂದು ಉದ್ಗರಿಸಿದರು. +"ಎಷ್ಟು ಸಂಬಳ ಕೊಡ್ತಾರೆ ಅಂದೆ" ಎಂದು ಮತ್ತೊಮ್ಮೆ ವಿಚಾರಿಸಿದರು. +ಇವನು ಹೇಳಿದ್ದು ಕೇಳಿ ಬೆಚ್ಚಿಬಿದ್ದರು. +"ನಾಲ್ಕು ಮಕ್ಕಳನ್ನು ಅಷ್ಟು ದುಡಿಮೆಯಲ್ಲಿ ಹೇಗೆ ಸಾಕ್ತಿಯಯ್ಯ?"ಎಂದು ಹೇಳಿ, "ನೋಡು ನಿಮ್ಮಂಥೋರ ಸಂಬಳವನ್ನೆಲ್ಲ ಜಾಸ್ತಿ ಮಾಡಿದಾರೆ. +ಆ ಸಂಬಳಕ್ಕೆ ನೀನು ದುಡಿಯುವುದು ಅಂದ್ರೆ ತುಂಬ ಅನ್ಯಾಯ. +ಹೆಚ್ಚು ಸಂಬಳ ಕೊಡೋಕೆ ವ್ಯವಸ್ಥೆ ಮಾಡ್ತೇವೆ. +ನಿನ್ನ ಸೇರೆಗಾರರ ಹತ್ರ ಮಾತನಾಡಬೇಕು ನಡಿ ಹೋಗೋಣ" ಎಂದರು. +ಏನೋ ಅಳುಕು. +ಸೊಪ್ಪು ಹಾಕದೆ ಮುಖ ತೋರಿಸಲು ಭಯ. +"ಏನೂ ಆಗದ ಹಾಗೆ ನೋಡ್ಕಳ್ತೇವೆ. +ಭಯಪಡದೆ ಬಾ" ಎಂದರು. +ಅಳುಕುತ್ತ ತುಕ್ಕ ಹೋಟೆಲಿನತ್ತ ತಿರುಗಿದ್ದ. +ರಂಗಪ್ಪಶೆಟ್ಟರು ಹೋಟೆಲಿನಲ್ಲಿ ಕುಳಿತು ಊರು ಪಂಚಾಯ್ತಿ ಮಾಡುವ ಸಮಯ ಅದು. +ಸೊಪ್ಪು ಹಾಕಲು ಕಳಿಸಿದ್ದ ತುಕ್ಕ ಹೋಟೆಲಿನ ಕಡೆಗೆ ಬರುತ್ತಿರುವುದನ್ನು ದೂರದಿಂದ ನೋಡಿದ ಶೆಟ್ಟರಿಗೆ ಮೈಕುದಿಯಿತು. +"ಮುಂಡೆ ಕುರ್ದೆಗೆ ಮಾಡ್ತೆ" ಅಂದುಕೊಳ್ಳುತ್ತಿರುವಾಗಲೇ ಬಿಳಿಬಟ್ಟೆಯ ಇಬ್ಬರು ತುಕ್ಕನ ಹಿಂದೆ ಬರುತ್ತಿರುವುದು ಕಂಡಿತು. +ಊರಿಗೆ ಬಂದ ಪರ ಊರಿನವರು ಗಣ್ಯರನ್ನು ನೋಡುವುದು ಸಾಮಾನ್ಯ ಎನ್ನಿಸಿ ಒಳಗೊಳಗೆ ಖುಷಿಯಾಗಿ "ಏ ಹುಡುಗ, ಆ ಕುರ್ಚಿ ಒರೆಸು" ಎಂದು ಆಜ್ಞಾಪಿಸಿದರು. +ಬರುತ್ತಿದ್ದವರು ಹತ್ತಿರವಾದಾಗ "ನಮಸ್ಕಾರ ಸ್ವಾಮಿಗಳಿಗೆ" ಎಂದು ಕುರ್ಚಿಯ ಆಸನಕ್ಕೆ ಆಮಂತ್ರಿಸಿದರು. +ಬಿಳಿ ಬಟ್ಟೆಯವರು ಆ ಮಧ್ಯಾಹ್ನವೆಲ್ಲ ಅಲ್ಲಿಯೇ ಇದ್ದರು. +ಶೆಟ್ಟರ ಆಳುಗಳನ್ನೆಲ್ಲ ಕರೆಸಿ ಹೆಸರು ಕುಲಗೋತ್ರಗಳನ್ನೆಲ್ಲ ವಿಚಾರಿಸಿಕೊಂಡರು. +ನಡು ನಡುವೆ ಶೆಟ್ಟರ ಕಡೆ ತಿರುಗಿ "ಇವರೆಲ್ಲ ಹ್ಯಾಗೆ ಬದುಕಬೇಕ್ರಿ?"ಎಂದು ಕೇಳುತ್ತಿದ್ದರು. +ಎಲ್ಲ ತಪಾಸಣೆ ಮುಗಿಯುವ ಹೊತ್ತಿಗೆ ಹೊತ್ತು ತಿರುಗಿತ್ತು. +ಶೆಟ್ಟರ ಹೋಟೆಲಿನಲ್ಲಿಯೇ ಊಟ ಮುಗಿಸಿದ ಮೇಲೆ ಎಲ್ಲ ಆಳುಗಳನ್ನೂ ಹೋಟೆಲಿನ ಎದುರು ಕರೆಸಿ ಅವರವರ ಸಂಬಳವನ್ನು ನಿಗದಿಮಾಡಿದರು. +"ದಿನಕ್ಕೆ ಎಂಟು ಗಂಟೆಯಷ್ಟೆ ಕೆಲಸ, ಕನಿಷ್ಠ ಕೂಲಿ ಇಷ್ಟು" ಎಂದು ಒತ್ತಿ ಹೇಳಿದರು. +ಆಳುಗಳೆಲ್ಲ ಚೆದುರಿದ ಮೇಲೆ ಶೆಟ್ಟರಿಗೆ "ಇರುವ ವಿಚಾರ ಇದು. +ಮೇಲಿನಿಂದ ಬಂದ ಹುಕುಂ. +ನೀವು ಗುತ್ತಿಗೆದಾರರಾಗಿದ್ದೀರಿ. +ಇದರ ಪಾಲನೆ ನಿಮ್ಮ ಧರ್ಮ" ಎಂದು ಸಾಂಕೇತಿಕವಾಗಿ ತಿಳಿಸಿದರು. +ಊಟದ ಹಣಕೊಡಲು ಹೋದರೆ, "ಅದೇನು ಮಹಾ, ಬಿಡಿರಿ ಮಹಾಸ್ವಾಮಿ" ಎಂದು ಕಾಲುಮುಟ್ಟುವಷ್ಟರ ಮಟ್ಟಿಗೆ ಬಾಗಿದರು ಶೆಟ್ಟರು. +ಆ ದಿನ ಕೆಲಸದವರ ಬಿಡಾರಗಳಲ್ಲಿ ಗುಸುಗುಸು ಪಂಚಾಯಿತಿ ನಡೆದು ಹೋಯಿತು. +"ಸೇರೆಗಾರರ ಉಪ್ಪು ತಿಂದಿದ್ದಲ್ಲು ಈಗ ಹಾಂಗೆ ಮೋಸ ಮಾಡುಕಾತ್ತು. +ಯಾರು ಏನೇ ಹೇಳಿನಿ. +ನಾನಂತು ಅವರಲ್ಲೇ ದುಡಿಯುವವ. +ಸಂಬಳ ಎಷ್ಟಾದರೂ ಆಯಿಲಿ" ಎಂದು ಭೈರ ಹೇಳಿದರೆ. +"ಅದು ಹ್ಯಾಂಗೆ ಅತ್‌, ಹೀಂಗೆ ಹೀಂಗೆ ಅಂತ ನಿಗದಿ ಮಾಡೀರಲ್ಲೆ. +ಹ್ಯಾಂಗೆ ಕೊಡದಿದ್ದರ ಶೆಟ್ಟರ ಬುಡಕ್ಕೆ ಬತ್ತತ್‌, ಕೊಟ್ಟರೇ ಕೊಡುಕ್‌. +ನಾವು ಒಟ್ಟು ನಿಂತರೆ ಏನಾಪುದಿಲ್ಲೆ" ಎಂದು ಗೋಪು ಹೇಳಿದ. +ತುಕ್ಕ ಪೂಜಾರಿಗೆ ಎರಡನೆಯ ವಾದ ಸಮ್ಮತಿಯಾಗಲಿಲ್ಲ. +"ಅನ್ನ ಇಟ್ಟವರಲ್ವಾ. +ಅವರಿಗೆ ಯಾಕೆ ಮೋಸ ಮಾಡುವುದು" ಎಂದು ಅನ್ನಿಸಿ ಏನೂ ಹೇಳದೆ ಸುಮ್ಮನಿದ್ದ. +ಬಿಡಾರಗಳಲ್ಲಿ ಎಲ್ಲರೂ ಕುಳಿತು ಮೀಟಿಂಗ್‌ ಮಾಡುವುದನ್ನು ಊಹಿಸಿದ್ದ ಶೆಟ್ಟರುರಾತ್ರಿಯ ವೇಳೆಗೆ ಬಿಡಾರಗಳ ಕಡೆಗೆ ಬಂದಿದ್ದರು. +ಇವರ ಮಾತುಕತೆಯನ್ನೆಲ್ಲ ಕೇಳಿಸಿಕೊಂಡವರು ಚರ್ಚೆ ಬಿಸಿಯಾಗುತ್ತಿದ್ದುದನ್ನು ಗಮನಿಸಿ ಒಮ್ಮೆಲೆ ಕಾಣಿಸಿಕೊಂಡರು. +"ಹೌದನಾ ಗೋಪು. +ಒಟ್ಟು ನಿಂತು ನೀವು ಮಾಡಿಕೊಂಬುದು ನನಗೆ ಗೊತ್ತಿಲ್ಲವಾ; +ಅವರವರ ಮಾತು ಬಿಡಿನಿ. +ನೀವು ಇಪ್ಪುದಲ್ಲಾ ದುಡಿಯುವಂತಿದ್ದರೆ ಹೇಳಿ. +ಒಂದು ರೂ.ಜಾಸ್ತಿ ಕೊಡ್ರೆ. +ಟೇಮಿನ ಬಾಬತ್ತು ನಮ್ಮಲ್ಲಿ ಇಲ್ಲೆ. +ನೀವಿಬ್ಬರು ನಾಳೆಯಿಂದ ಹಾಜರಾಗಿ. +ನೀನು ಮಾತ್ರ ಬ್ಯಾಡದಾ ತುಕ್ಕ" ಎಂದರು. +ಸೇರೆಗಾರರ ಉಗ್ರ ಸ್ವರೂಪ ನೋಡಿ ತುಕ್ಕನಿಗೆ ಏಕೆಂದು ಕೇಳಲು ಭಯ. +ಅದಕ್ಕೆ ಅವರೇ ಮುಂದುವರಿದು "ಯಾಕಂತ್ಯೇನಾ, ಅವರನ್ನು ಇಲ್ಲಿಗೆ ತಂದದ್‌ ಯಾರ್‌ ನೀನಲ್ಬನಾ. . . ಸೊಪ್ಪು ಹಾಕ್‌ ಅಂದ್ರೆ ಊರ ಉಸಾಬರಿ ಮಾಡ್ತ. +ನಾಳೆ ನಿನಗೆ ಕೆಲಸ ಇಲ್ಲೆ. +ಈ ಊರಲ್ಲಿ ಯಾರು ಕೊಡ್ತುಕೇಣಿ ಬಾ" ಎಂದವರೇ ಬ್ಯಾಟರಿಯ ಬೆಳಕಿಗೆ ಕೆಂಪು ಹರಳಿನ ಒಂಟಿಗಳು ಮಿರುಗುತ್ತಿರುವಾಗ ಮತ್ತೆ ಹೋಟೆಲು ಕಡೆ ತಿರುಗಿ ನಿಧಾನವಾಗಿ ನಡೆದರು. +ಶೆಟ್ಟರು ಹೋಗುತ್ತಲೂ ತುಕ್ಕನಿಗೂ ಎದೆಯೊಡೆದಂತಾಯಿತು. +ಅವನು ಗೋಪು ಬಿಡಾರಕ್ಕೆ ಹೋದದ್ದು ನಿಜವಾದರೂ ಪಂಚಾಯ್ತಿಗೆಂದಲ್ಲ. +ಅಲ್ಲಿಯೇ ಇದ್ದ ಭೈರನಿಂದಾಗಿ ಮಾತು ಬೆಳೆದಿತ್ತು. +ತಾನು ಬೆಳಿಗ್ಗೆ ನೇರಸೊಪ್ಪಿಗೆ ಹೋಗಿದ್ದರೆ ಈ ರಗಳೆ ಆಗುತ್ತಲೇ ಇರಲಿಲ್ಲ. +ಸೇರೆಗಾರರು ತುಂಬ ಸಿಟ್ಟಾಗಿದ್ದಾರಲ್ಲ ಎಂದುಕೊಂಡವನು ಗೋಪು ಕಡೆ ನೋಡಿದ. +"ಏನು ಮಾಡುವುದು ತುಕ್ಕಣ್ಣ, ಶೆಟ್ಟರು ಹೇಳಿದರಲ್ಲ" ಎಂದು ಭಯವನ್ನೇ ಹೆಚ್ಚಿಸಿದ. +ಭೈರ ಬೀಡಿಯ ತುಂಡನ್ನು ತಡಕಾಡಿ ಹುಡುಕುತ್ತ "ದುಡಿಯುವವರಿಗೆ ಎಲ್ಲಿದ್ದರೇನು ಮಾರಾಯ. +ಇವರಲ್ಲದಿದ್ದರೆ ಇವರಪ್ಪ ಕೆಲಸಕ್ಕೆ ಬರಗಾಲ ಇತ್ತಾ" ಎಂದ. +ಬೆಳಗಿನ ಗಂಜಿ ತೀರಿದರೆ, ಸಂಜೆಗಂಜಿಗೆ ಶೆಟ್ಟರ ಅಂಗಡಿಯಿಂದ ತರಬೇಕೆಂದಿದ್ದ ತುಕ್ಕನಿಗೆ ಏನೊ ಹೊಸ ಆಸೆ ಮೂಡಿತು. +ಬಿಳಿಬಟ್ಟೆಯವರ ಲೆಕ್ಕದ ಪ್ರಕಾರವಾದರೆ ಎಷ್ಟು ಸಂಪಾದನೆ ಮಾಡಬಹುದಿತ್ತು ಅನ್ನಿಸಿತು. +ಶೆಟ್ಟರು ಬೇಡ ಅಂದರಲ್ಲಾ, ಕಾಂಬ. +ಯಾರೂ ಕೆಲಸ ಕೊಡುವವರಿಲ್ಯಾ ಎಂದು ಧೈರ್ಯದಿಂದಲೇ ಎದ್ದು ಬಿಡಾರಕ್ಕೆ ಬಂದ. +ಆ ರಾತ್ರಿ ನಿದ್ದೆಯೇ ಸರಿಯಾಗಿ ಬರಲಿಲ್ಲ. +ಕೆಳಗಿನ ಊರಲ್ಲಿ ಒಂದೆರಡು ನಾಯ್ಕರ ಮನೆಗಳಿವೆ. +ಅಲ್ಲಿಗೆ ಹೋದರೆ ಕೆಲಸ ಸಿಗದೆ ಇರುತ್ತದೆಯೇ ಎಂದು ಯೋಚನೆ ಬಂತು. +ಮೇಲಿನ ಮನೆ ತೋಟದ ಬೇಸಾಯವನ್ನು ಶೆಟ್ಟರೆ ಹಿಡಿದುಕೊಂಡಿದ್ದಾರೆ. +ತೋಟದ ಕೆಲಸವಿಲ್ಲದಿದ್ದರೆ ಗದ್ದೆ ಕೆಲಸ ಇರುವುದಿಲ್ಲವೇ? +ಕೊನೆಗೆ ಏನಾದರೂ ಮಾಡುವುದಪ್ಪ ಎಂದುಕೊಂಡ. +ತಾನೇ ಸ್ವಂತವಾಗಿ ದುಡಿದು ಸೇರೆಗಾರಿಕೆ ಮಾಡುವುದು ಎಂಬ ಯೋಚನೆಯೇ ಅವನಲ್ಲಿ ಹೊಸ ಮಿಂಚಿನಂತೆ ಅಲೆಯೆಬ್ಬಿಸಿತು. +ಬೆಳಿಗ್ಗೆ ಎದ್ದು ಮುಖ ತೊಳೆಯುತ್ತಿದ್ದಾಗ ಸೇರೆಗಾರರು ಪಕ್ಕದ ಬಿಡಾರದಲ್ಲಿ ಮೇಲಿನ ತೋಟಕ್ಕೆ ಸೊಪ್ಪು ಹಾಕುವುದಿತ್ತೆ ಎಂದು ಹೇಳಿದ್ದು ಕೇಳಿಸಿತು. +ಅವರು ಬೈರನನ್ನು ಆಚೀಜೆಯ ಊರುಗಳ ಹೆಸರುಗಳನ್ನು ಹೇಳಿ ಕೆಲವು ಸಾಹುಕಾರರ ಹೆಸರನ್ನು ತಿಳಿಸಿ ಏನೇನೋ ಹೇಳಿದರು. +"ಸಂಜೆ ಒಳಗೆ ಬರಬೇಕು" ಎಂದು ಅಪ್ಪಣೆ ಕೊಟ್ಟದ್ದು ಸ್ಪಷ್ಟವಾಗಿಯೇ ಕೇಳಿಸಿತು. +ಗಂಜಿಯುಂಡು ಕೊಂಡಿಗೆ ಕತ್ತಿ ಸಿಕ್ಕಿಸಿಕೊಂಡು ತುಕ್ಕ ಕೆಳಗಿನ ಊರಿನ ನಾಯ್ಕರ ಮನೆ ಹಾದಿ ಹಿಡಿದ. +ಬಿಸಿಲು ಏರುವ ಮೊದಲೇ ಅಂಗಳ ತಲುಪಿದವನು ತುಳಸಿ ಕಟ್ಟೆಯ ಮೇಲಿರುವ ಹೊಸ ಹೂವುಗಳಿಂದ ನಾಯ್ಕರು ಇರುವುದನ್ನು ಖಾತ್ರಿ ಮಾಡಿಕೊಂಡ. +ಅಂಗಳದಲ್ಲಿ ಸ್ವಲ್ಪ ಹೊತ್ತು ನಿಂತ. +ನಾಯ್ಕರು ಹೊರಬಂದಾಗ ದೂರದಿಂದಲೇ ಅಡ್ಡ ಬಿದ್ದ. +"ಏನಾ ತುಕ್ಕ" ಎಂದವರು "ಹೌದನಾ, ಶೆಟ್ಟರ ಮೇಲೆ ಕಂಪ್ಲೇಂಟ್‌ ಕೊಟ್ಟೆಯಂತೆ. +ನೀ ಹೀಗೆ ಅಂತ ಗೊತ್ತಿದ್ದರೆ ಊರಿಗೆ ಸೇರಿಸುತ್ತಿರಲಿಲ್ಲ. +ಬೈರ ಈಗ ಬಂದು ಹೇಳಿ ಹೋದ. +ನೋಡು, ಹೀಗೆಲ್ಲ ಮಾಡುವುದಿದ್ದರೆ ಮೊದಲು ಊರು ಬಿಡುವುದು" ಎಂದು ಜೋರಾಗಿ ಆರ್ಭಟಸಿದರು. +ಅದಕ್ಕೆ ವಿವರಣೆ ಕೊಡಲು ಪ್ರಯತ್ನಿಸಿ ಇನ್ನಷ್ಟು ಉಗಿಸಿಕೊಂಡ. +ಸುತ್ತಮುತ್ತ ಒಂದು ಎರಡು ಕಿಲೋಮೀಟರ್‌ ದೂರದಲ್ಲಿಯೇ ಸಣ್ಣ ಸಣ್ಣ ಹಳ್ಳಿಗಳು. +ನಾಯ್ಕರ ಮನೆಯಲ್ಲಿ ಉಗಿಸಿಕೊಂಡವನು ಕೆಲಸ ಹುಡುಕುತ್ತ ಒಂದೊಂದು ಹಳ್ಳಿಯನ್ನೂ ಎಡತಾಕಿದ. +ಎಲ್ಲಿಯೂ ಕೆಲಸ ಕೊಡುವ ಸುಳಿವೇ ಕಾಣಲಿಲ್ಲ. +ಎಲ್ಲ ಹಳ್ಳಿಗಳನ್ನು ಸುತ್ತಿ ಬಂದವನಿಗೆ ಜೀವನವೇ ಬೇಸರವಾಯಿತು. +ಬಿಡಾರಕ್ಕೆ ಬಂದು ಸಣ್ಣ ಮಕ್ಕಳನ್ನು ನೋಡಿದ. +ಬೇರೆ ದಾರಿ ಕಾಣಲಿಲ್ಲ. +ದಣಿದ ದೇಹವನ್ನು ಎಳೆದುಕೊಂಡು ಶೆಟ್ಟರ ಹೋಟೆಲಿನ ದಾರಿ ಹಿಡಿದ. +ಹೋಟೆಲಿನಲ್ಲಿ ಶೆಟ್ಟರು ಇರಲಿಲ್ಲ. +ಮನೆ ಹಿಂದಿನ ಕೊಟ್ಟಿಗೆಯಲ್ಲಿ ಏನೋ ಕೆಲಸ ಮಾಡಿಸುತ್ತಿರುವರೆಂದು ಹೋಟೆಲಿನ ಕೆಲಸದವರು ತಿಳಿಸಿದರು. +ಹೋಟೆಲು ಬಳಸಿ ಹಿಂದುಗಡೆಯಿಂದ ಬಂದ ತುಕ್ಕ ಅಲ್ಲಿ ಠೀವಿಯಿಂದ ನಿಂತುಕೊಂಡಿದ್ದ ಶೆಟ್ಟರನ್ನು ಕಂಡವನೇ ಅನಾಮತ್ತು ಬಾಗಿ ಕಾಲು ಹಿಡಿದುಕೊಂಡ. +"ಯಾಕೋ ಎಲ್ಲೂ ಕೆಲಸ ಸಿಗಲಿಲ್ಲ" ಎಂದು ಅವರು ವ್ಯಂಗ್ಯವಾಗಿ ಕೇಳುವಾಗ ತುಕ್ಕನ ಜೀವ ಹಿಂಡಿತ್ತು"ಹೊಸ ಸಂಬಳ ಕೊಡೋಕಾತಿಲ್ದೆ. +ಅದೇ ಹಳೇ ಸಂಬಳ ಆದರೆ ಬಾ" ಎಂದರು. +ಹೊಸ ಕೆಲಸ ಸಂಪಾದಿಸಿದವನ ಹಾಗೆ ಎರಡು ಸೇರು ಕುಚ್ಚಿಗೆ ಅಕ್ಕಿ ಪಡೆದು ರಾತ್ರಿ ಸುಮಾರು ಹೊತ್ತಾದ ಮೇಲೆ ಬಿಡಾರ ಸೇರಿದ. +ಜೇಬಲಿ ಬಿಸಿಲು ಅಂಗಳದವರೆಗೂ ಬಂದಿತ್ತು. +ಮನೆಯ ನೆರಳು ತುಳಸಿ ಕಟ್ಟೆಯನ್ನು ದಾಟಿತ್ತು. +ಶೇಷಗಿರಿರಾಯರು ಅಂಗಳಕ್ಕಿಳಿದು ಹೆದ್ದಾರಿಪುರದ ದಾರಿ ನೋಡಿದರು. +ನೆರಳು ಕಟ್ಟೆಯನ್ನು ದಾಟಿದಾಗಲೇ ಶಿವಮೊಗ್ಗದಿಂದ ಬಸ್ಸು ಬರುವುದು ಅವರಿಗೆ ಗೊತ್ತಿತ್ತು. +ಶಿವಮೊಗ್ಗದಿಂದ ಹಯವದನ ತನ್ನೊಬ್ಬ ಬಯಲು ಸೀಮೆಯ ಗೆಳೆಯನೊಂದಿಗೆ ಬರುವುದಾಗಿ ಬರೆದ ಕಾಗದ ನಿನ್ನೆ ಸಿಕ್ಕಿತು. +ಹೊತ್ತು ಆಗಿದ್ದರಿಂದ ಹೆದ್ದಾರಿಪುರದ ಕಡೆ ನೋಡತೊಡಗಿದರು. +ಜಗುಲಿಯನ್ನು ಗುಡಿಸಿ ಒದ್ದೆ ಬಟ್ಟೆಯಲ್ಲಿ ಸಾರಿಸಿದ ಭಾಗೀರಥಿ ಕೈತೊಳೆದುಕೊಂಡು ಹಯವದನನಿಗಾಗಿ ಹಾಲು ಕಾಯಲು ಇಟ್ಟಳು. +ಅಂಗಳದ ಉಣುಗೋಲು ತೆರೆದ ಹಾಗೆಲ್ಲ ಹಯವದನ ಬಂದಿರಬಹುದೆಂದು ಒಂದೆರಡು ಸಲ ಜಗುಲಿಯ ಬಾಗಿಲವರೆಗೂ ಬಂದಿದ್ದಳು. +ಹಯವದನನ ತಾಯಿಗೆ ನೀರು ಬೆರೆಸಿ ಕೊಡಲು ಬಚ್ಚಲ ಕಡೆಗೆ ಹೋದಾಗ ಹೊರಗೆ ಉಣುಗೋಲಿನ ಸದ್ದಾಯಿತು. +ಅದರೊಂದಿಗೆ ರಾಯರು 'ಬಾಗೀ. . . . ನೀರು' ಎಂದದ್ದೂ ಕೇಳಿಸಿತು. +ಅವಸರದಿಂದ ಕೈಗಳನ್ನು ಒರೆಸಿಕೊಂಡು ಎರಡು ಚೆಂಬು ಬಿಸಿನೀರನ್ನು ಬಚ್ಚಲಿನಿಂದ ತಂದು ಜಗುಲಿಯ ಹಲಗೆಯ ಮೇಲಿಟ್ಟಳು. +ಜಗುಲಿಯಲ್ಲಿ ಚಾಪೆಯನ್ನು ಹಾಸಿ ದಿಂಬನ್ನು ಸರಿಯಾಗಿಟ್ಟಳು. +ಹಯವದನ ತನ್ನ ಗೆಳೆಯನೊಂದಿಗೆ ಕೈಕಾಲು ತೊಳೆದು, ತಂದಿದ್ದ ಚೀಲವನ್ನು ಒಳಗೆ ಎತ್ತಿಕೊಂಡು ಹೋದ. +ಸ್ವಲ್ಪ ಹೊತ್ತಿಗೆ ಹೊರ ಬಂದು ರಾಯರನ್ನು ಕರೆದು "ಇವರೇ ಅಣ್ಣ, ಮಂಜುನಾಥ್‌ ಅಂತ. +ಇವರು ನಮ್ಮ ತಂದೆ, ನಾವು ಕರೆಯೋದು ಅಣ್ಣ ಅಂತ" ಅಂದು ಪರಿಚಯಿಸಿ ಒಳಗೆ ಹೋದ. +ರಾಯರು ಮಂಜುನಾಥನ ಜೊತೆ ಕ್ಷೇಮ ಸಮಾಚಾರ ವಿಚಾರಿಸಿಕೊಳ್ಳುತ್ತ ಅವನ ಎದುರಿಗೆ ಕಂಬಕ್ಕೊರಗಿ ಕುಳಿತರು. +ದುಡ್ಡು ಕಾಸು, ಖರ್ದುವೆಚ್ಚದ ಮಾತಾಡುತ್ತಿದ್ದಾಗ ಹಯವದನ ಒಳಗಿನಿಂದ ಎರಡು ಲೋಟಗಳಲ್ಲಿ ಬಿಸಿ ಮಾಡಿದ ಹಾಲು ತಂದ. +ಹಿಂದೆಯೇ ಸ್ನಾನ ಮಾಡಿದ ಕೂದಲನ್ನು ಒರೆಸುತ್ತ ಬಂದ ಅಮ್ಮನನ್ನು ಪರಿಚಯಿಸಿ ಜೊತೆಗೆ ಬಂದ ಭಾಗೀರಥಿಯನ್ನು "ಇವರು ನಮ್ಮ ಚಿಕ್ಕಮ್ಮ ಎಂದು ಗುರುತು ಮಾಡಿದ. +ಎಲ್ಲರಿಗೂ ಕೈ ಮುಗಿದಂತೆ ತನಗೂ ಕೈ ಮುಗಿದಾಗ ಭಾಗೀರಥಿ ಸಂಕೋಚದಿಂದ ಒಳಗೆ ಮರೆಯಾದಳು. +ಅಮ್ಮನಿಗೂ ಹೊಸ ರೀತಿಯ ಪರಿಚಯ. +ಅವರು ಸುಮ್ಮನೆ ನಕ್ಕು ಒಳಗೆ ಹೋದರು. +ಉಪಚಾರದ ಮಾತುಗಳ ನಂತರ ಶೇಷಗಿರಿರಾಯರು "ಹಾಗಾದ್ರೆ ನೀವು ಸ್ನಾನ-ಗೀನ ಮಾಡಿ. +ನಾನು ಇಲ್ಲೇ ಕೆಳಗಿನೂರಿಗೆ ಹೋಗಿ ಬರ್ತೇನೆ" ಎಂದು ಹಾಸಿದ್ದ ವಸ್ತ್ರವನ್ನು ಹೆಗಲ ಮೇಲೆ ಹಾಕಿಕೊಂಡು ಅಂಗಳಕ್ಕಿಳಿದರು. +ಮತ್ತೇನಾಯಿತೋ ಹಿಂತಿರುಗಿ ಬಂದು ಅಡಿಗೆ ಮನೆಗೆ ಹಯವದನನನ್ನು ಜಗುಲಿಯಿಂದ ಕರೆದರು. +ಏನೇನೋ ಮಾತಾಡಿ ಹೊರಗೆ ಬಂದು ಅಂಗಳ ಇಳಿದರು. +ಒಳಗಿನಿಂದ ಬಂದ ಹಯದವನ ಹುಳ್ಳಗೆ ನಕ್ಕ ಮಂಜುನಾಥ ಅಡಿಗೆ ಮನೆಯ ಕಡೆ ಜಗುಲಿಯಿಂದಲೇ ದೃಷ್ಟಿ ಹರಿಸಿ ಮುಖ ತೊಳೆಯಬೇಕೆಂದು ಕೈಯಲ್ಲೇ ಸೂಚಿಸಿದ. +"ಅದಕ್ಕೇನು, ಸ್ನಾನನೇ ಮಾಡಿದ್ರಾಯ್ತು ಬಿಡಿ" ಎಂದು ಹಯವದನ ಜಗುಲಿಯ ಪಕ್ಕದಲ್ಲಿದ್ದ ಚೌಕಿಯನ್ನು ಬಳಸಿ ಹಿತ್ತಲು ಕಡೆ ಇರುವ ಬಚ್ಚಲು ಮನೆಗೆ ಬಂದ. +ಸ್ವಲ್ಪ ಹೊತ್ತಿಗೆ ಅಲ್ಲಿಂದಲೇ ಮಂಜುನಾಥನನ್ನು ಕರೆದ. +ಮಂಜುನಾಥ ಹೋದಾಗ ಹಂಡೆಯಿಂದ ಬಿಸಿನೀರನ್ನು ತೆಗೆದು ತಣ್ಣೀರಿನ ಚಿಕ್ಕದೊಂದು ಕಡಾಯಿಗೆ ಸುರಿಯುತ್ತಿದ್ದ. +"ನೀರು ಸರಿಯಾಯ್ತ?" ಎಂದು ಕೇಳಿಬೇಕಿದ್ರೆ ಇನ್ನೂ ಬಿಸಿ ಮಾಡ್ತೇನೆ ಅಂದ. +ಅದಕ್ಕೆ ಮಂಜುನಾಥ "ನಾನು ಬೇಕಾದ್ರೆ ಮಾಡ್ಕೋತೇನೆ. +ಹಂಡೆಯಿಂದ ಬಿಸಿ ನೀರು ಬೆರಸ್ಕೊಂಡ್ರಾಯ್ತಲ್ಲ" ಎಂದಾಗ ಹಯವದನ ಮೆತ್ತಗೆ, "ನಿಮಗೆ ಗೊತ್ತಲ್ಲ ಮಂಜು. +ನಮ್ಮ ತಾಯಿಯಂತೂ ತುಂಬ ಕನ್ಸರ್‌ವೇಟೀವ್‌. +ನಮ್ಮಣ್ಣ ಬಿಡಿ" ಎಂದು ಕೊರಗುವ ಹೊತ್ತಿಗೆ "ಅವರಿಗೆ ಗೊತ್ತೇನು?"ಎಂದು ಕಾತರದಿಂದ ಕೇಳಿದ. +ಹಾಗೆ ಕೇಳುವಾಗ ತಲೆ ಬಾಗಿತ್ತು. +ಗಂಟಲಿನಲ್ಲಿ ಪಸೆ ಆರಿದಂತಾಯಿತು. +"ಈಗಷ್ಟೇ ಕೇಳಿದರು. +ನಾನೂ ಸುಳ್ಳು ಹೇಳೋದು ಒಳ್ಳೇದಲ್ಲ ಅಂತ ಹೇಳಿಬಿಟ್ಟೆ ಊಟದ ಬಗ್ಗೆ ನೀವೇನೂ ಯೋಚನೆ ಮಾಡೋ ಹಾಗಿಲ್ಲ. +ನಾನೂ ಜೊತೇನೆ ಕೂರೇನೆ. +ಆದರೆ ಒಳಗೆ ಮನೇಲಿಬೇಡ. ಮತ್ತೆ. " ಅವನು ಮುಂದೆ ಹೇಳಲಾಗದೆ ನಿಲ್ಲಿಸಿದ. +ಗಂಟಲು ಇನ್ನಷ್ಟು ಒಣಗಿದರೂ "ಛೇ ಛೇ ಅದಕ್ಕೆಲ್ಲ ಯೋಚನೆ ಮಾಡೋದಿಲ್ಲ. +ಅದೇನು ಬಿಡಿ" ಅಂದ. +ಹಯವದನ ಮುಂದುವರಿದು ಬಿಸಿನೀರನ್ನೂ ಕೊಡದಿಂದ ತಣ್ಣೀರನ್ನೂ ಬೆರೆಸಿ ಸರಿಪಡಿಸುತ್ತಾ "ತಪ್‌ ತಿಳ್ಯೋಬೇಡಿ. +ನಾನು ನಿಮ್ಮನ್ನೂ ಅಮ್ಮನ್ನು ನೋಡಬೇಕು. +ಹಂಡೆಯಿಂದ ಬಿಸಿ ನೀರು ಬೇಕಾದ್ರೆ ಕರೀರಿ" ಎಂದಾಗ ಅದಕ್ಕೆ ಮೌನವಾಗಿ ಸಮ್ಮತಿಸಿದ. +ಕಡಾಯಿಯಲ್ಲಿ ಬೆರೆಸಿಟ್ಟ ಹದ ನೀರನ್ನು ಮಂಜುನಾಥ ಮೈಮೇಲೆ ಸುರಿದುಕೊಂಡ. +ನೀರು ತುಂಬಾ ಬಿಸಿ ಇತ್ತು. +ಹಯವದನ ಅಲ್ಲಿಯೇ ನಿಂತಿದ್ದರಿಂದ ತಣ್ಣೀರನ್ನು ಹಾಕಿಸಿಕೊಂಡ. +"ಈಗ ನೀವು ಹೋಗಿ. +ಇಷ್ಟು ನೀರಲ್ಲಿ ಸ್ನಾನ ಮಾಡಿ ಅಭ್ಯಾಸ ಇದೆ" ಎಂದು ಹೇಳಿದ. +ಹಂಡೆಯನ್ನು ಮುಟ್ಟದಿರುವಂತೆ ಹಯವದನ ಸೂಚ್ಯವಾಗಿ ಹೇಳಿದ್ದು ಅವನಿಗೆ ತಕ್ಷಣಕ್ಕೆ ಅರಗಿಸಿಕೊಳ್ಳಲಾಗಲಿಲ್ಲ. +ಹಯವದನ ಬಚಜ್ಚಲಿನಿಂದ ಹೊರಬಂದು ಅಡಿಗೆ ಮನೆಗೆ ಹೋಗಿ ಕುಳಿತ. +ಸ್ನಾನಕ್ಕೆ ಇಳಿದಿದ್ದ ಮಂಜುನಾಥನಿಗೆ ಮಲೆನಾಡಿನ ಬಯಲು ಬಚ್ಚಲು ವಿಚಿತ್ರವಾಗಿ ಕಂಡಿತು. +ಯಾವ ಮರೆಯೂ ಇಲ್ಲದೆ ಸ್ನಾನ ಮಾಡಬೇಕಿತ್ತು. +ಒಲೆಯಲ್ಲಿ ಹೂತಿಟ್ಟ ಹಂಡೆಯಲ್ಲಿ ಬಿಸಿ ನೀರು. +ಅದರಿಂದ ತೆಗೆದು ಇನ್ನೊಂದು ಕಡಾಯಿಗೆ ಬಗ್ಗಿಸಿಕೊಂಡು ಚೆಂಬಿನಲ್ಲಿ ನೀರು ಹಾಕಿಕೊಳ್ಳುವ ಕಸರತ್ತು ನಿಲ್ಲಲು ಕಲ್ಲಿನ ಚಪ್ಪಡಿ. +ಬಚ್ಚಲು ನೀರು ಹರಿದು ಹೋಗಲು ಚಿಕ್ಕ ಕಾಲುವೆ. +ಅದು ಪಕ್ಕದ ಬಾಳೆಹಿತ್ತಲಿನ ಕಡೆ ಹೋಗುತ್ತಿತ್ತು ಬಾಳೆಹಿತ್ತಲು ಬಚ್ಚಲಿಗೆ ಕಟ್ಟಿದ್ದ ಬಿದಿರು ತಟ್ಟಿಯ ಕಂಡಿಗಳಿಂದ ಕಾಣುತ್ತಿತ್ತು. +ನೀರೊಲೆಯ ಮೇಲಿನ ಅಡ್ಡ ಹಾಕಿದ್ದಗಳುವಿನಲ್ಲಿ ಒಂದು ವಸ್ತ್ರ ಒಂದೆರಡು ಜಾಕೀಟು, ಒಂದು ಒಳಬಾಡಿ ಒಣಗ ಹಾಕಿದ್ದರು. +ಆ ಬಾಡಿಯಾರದಿರಬಹುದೆಂದು ಯೋಚಿಸಿ ಬಚ್ಚಲು ಮನೆಗೂ ಬಾಳೆಯ ಹಿತ್ತಲಿಗೂ ಚಿಕ್ಕ ದಡಪೆಯ ದಾರಿಯಿರುವುದನ್ನು ಬಾಳೆಯ ಹಿತ್ತಲಿನಲ್ಲಿ ಹೂವಿನ ಗಿಡಗಳಿರುವುದನ್ನು ಗಮನಿಸಿದ. +ತಲೆ ತಿಕ್ಕಿಕೊಳ್ಳುತ್ತಿದ್ದಾಗ ಹಯವದನ ಹೇಳಿದ ಮಾತುಗಳು ನೆನಪಾದವು. +ನೀರು ತಣ್ಣಗಿದ್ದಂತೆ ಅನಿಸಿತು. +ಹಂಡೆಯನ್ನು ಮುಟ್ಟಲೇಎನ್ನಿಸಿತಾದರೂ ಚೆನ್ನಾಗಿರುವುದಿಲ್ಲ ಅಂದುಕೊಂಡ. +ಅದೇ ಹೊತ್ತಿಗೆ ಹಿತ್ತಲು ಕಡೆಯಿಂದ ಬಚ್ಚಲು ಮನೆಗೆ ಭಾಗೀರಥಿ ಬಂದಳು. +ಸ್ನಾನ ಮಾಡುತ್ತಿದ್ದವನನ್ನು ಅನಿರೀಕ್ಷಿತವಾಗಿ ಕಂಡವಳಂತೆ ಗಕ್ಕನೆ ನಿಂತು ಬೇಗಹೋಗಲು ಮುಂದಾದಾಗ ಮಂಜುನಾಥ ಬಾಯಲ್ಲಿ ತುಂಬಿಕೊಂಡ ನೀರನ್ನು ಉಗುಳಿ "ರೀ" ಎಂದು ಕರೆದ. +ಅವಳು ನಿಂತು "ಕರೀಬೇಕಿತ್ತಾ" ಅಂದಳು. +"ಇಲ್ಲ. ಸ್ಟಲ್ಪ ಬಿಸಿನೀರು ಬೆರೆಸಬೇಕಿತ್ತು"ಅಂದಾಗ ಅವಳು ಮಾತಾಡದೆ ತಂದಿದ್ದ ಹೂವುಗಳನ್ನು ಅಲ್ಲಿಯೇ ಇಟ್ಟು ಸೆರಗನ್ನು ಸಿಕ್ಕಿಸಿ ಕಡಾಯಿಯ ನೀರನ್ನು ಮುಟ್ಟಿನೋಡಿದಳು. +ಹಂಡೆಯಿಂದ ಬಿಸಿನೀರನ್ನು ತೋಡಿ ಕಡಾಯಿಗೆ ಹಾಕಿ ಕೈ ತೊಳೆದುಕೊಂಡು ಹೂವು ಹಿಡಿದು ಜಗುಲಿಯ ಕಡೆ ಹೊರಟಳು. +ಮಂಜುನಾಥ ಸ್ನಾನ ಮುಗಿಸಿ ಮೈಯೊರೆಸಿಕೊಳ್ಳುತ್ತಿದ್ದಾಗ ಶೇಷಗಿರಿರಾಯರು ಚೀಲವೊಂದನ್ನು ಹೊತ್ತುಕೊಂಡು ಮನೆಯೊಳಕ್ಕೆ ಬಂದರು. +ಚೀಲ ಇಳಿಸುತ್ತ "ಕೆಳಗಿನೂರಲ್ಲಿ ಇರೋರೆಲ್ಲ ದೀವರು. +ಇವತ್ತು ಅವರದ್ದೇನೋ ಹರಕೆ ಇದೆ ಅಂತ ಗೊತ್ತಾಯ್ತು ಅದಕ್ಕೆ ವಾಪಾಸ್‌ ಬಂದೆ" ಎಂದರು. +ಆ ಹೊತ್ತಿಗೆ ಸರಿಯಾಗಿ ವಾಲಗ ತಮ್ಮಟೆಗಳ ಸದ್ದು ದೂರದಿಂದ ಕೇಳಿ ಬಂತು. +ಓಹ್‌ ಆಗಲೇ ಶುರು ಮಾಡಿದ ಹಾಗಿದೆ. +ಇವತ್ತು ಎಷ್ಟು ಬಲಿಯೋ" ಎನ್ನುತ್ತ ರಾಯರು ವಸ್ತ್ರವನ್ನು ಬೆನ್ನಿಗೆ ತಿಕ್ಕಿಕೊಳ್ಳುತ್ತ ಒಳಮನೆಗೆ ನಡೆದರು. +ಹಯವದನ ಒಳಗಿನಿಂದ ಬಂದವನು ತುಟಿಗೆ ಅಂಟಿದ್ದ ಸಕ್ಕರೆಯ ಚೂರನ್ನು ಒರೆಸಿಕೊಂಡ. +ಮಂಜುನಾಥನಿಗೆ ಅದು ಗಮನಕ್ಕೆ ಬಂದು ಶಿವಮೊಗ್ಗದ ಹೋಟೆಲಿನಲ್ಲಿ ಇಬ್ಬರೂ ಒಂದೇ ತಟ್ಟೆಯಲ್ಲಿ ತಿಂಡಿ ತಿಂದುದರ ನೆನಪಾಯಿತು. +ತಲೆ ಬಾಜಿಕೊಳ್ಳುತ್ತಿದ್ದ ಮಂಜುನಾಥನಿಗೆ ಮೊದಲ ಸಲಕ್ಕೆ ಇಲ್ಲಿಗೆ ಬರಬಾರದಿತ್ತೆನಿಸಿತು. +ಮಾತಿಗೆ ಸಿಕ್ಕಂತಾಗಿತ್ತು ಹಯವದನನ ಜೊತೆ ಹೋಟೆಲಿನಲ್ಲಿ ಕುಳಿತಾಗ ಮಾತಿಗೆ ಹೇಳಿದ್ದ. +"ನಮ್ಮೂರಿಗೆ ಹೋಗೋಣವ" ಅಂದಾಗ ಯೋಚಿಸದೆ "ಹೋ ಅದಕ್ಕೇನು? +ನಾನು ಯಾವಾಗ್ಲೂ ರೆಡಿ" ಎಂದಿದ್ದ. +"ಹಾಗಾದ್ರೆ ನಾಡಿದ್ದು ಬೆಳಗಿನ ಬಸ್ಸಿಗೆ ರೆಡಿಯಾಗಿರಿ. +ನಾನು ಹೋಗ್ತಾ ಇದೀನಿ. +ಬೇರೆ ಮಾತಿಲ್ಲ. +ಹೂಂ ಅನ್ನಿ"ಎಂದಾಗ ಏನೂ ಹೇಳಲಾಗದೆ ಬಂದುಬಿಟ್ಟಿದ್ದ. +ಮೊದಲೇ ಪರಿಚಯವಿಲ್ಲದ ಜಾಗ. +ಮೇಲಾಗಿ ಬಳಕೆಯಿಲ್ಲದ ಕಡೆ ಇರಬೇಕಾದ ಪರಿಸ್ಥಿತಿ. +ಶಿವಮೊಗ್ಗದಲ್ಲಿ ಇದ್ದಂತೆ ಹಯವದನನಿಗೆ ಮನೆಯಲ್ಲಿಯೂ ಇರಲು ಸಾಧ್ಯವಾಗಲಾರದು. +ತಲೆಬಾಚಿಕೊಳ್ಳುತ್ತಿದ್ದಾಗ ಬಚ್ಚಲಿನಲ್ಲಿ ಬಿಸಿನೀರು ಬೆರೆಸಿ ಕೊಟ್ಟ ಭಾಗೀರಥಿಯ ಚಿತ್ರ ಕಣ್ಮುಂದೆ ಬಂತು. +ತನಗೊಬ್ಬ ಚಿಕ್ಕಮ್ಮ ಇರುವುದನ್ನು ಕಳೆದ ಎರಡು ವರ್ಷಗಳಲ್ಲಿ ತಿಳಿಸಿಯೇ ಇರಲಿಲ್ಲ. +ಬೆಳಗ್ಗೆ ಬಸ್ಸಿನಲ್ಲಿ ಬರುತ್ತ ಮಾತ್ರವೇ ತಿಳಿಸಿದ್ದ. +ಶೇಷಗಿರಿರಾಯರ ತಮ್ಮ ಮದುವೆಯಾದ ವರ್ಷದಲ್ಲೇ ಮನೆ ಬಿಟ್ಟು ಎಲ್ಲೋ ಹೋಗಿದ್ದನಂತೆ. +ಎಷ್ಟು ಹುಡುಕಿಸಿದರೂ ಸಿಗಲಿಲ್ಲವಂತೆ. +ಚಿಕ್ಕ ವಯಸ್ಸಿನ ಹೆಂಡತಿಯನ್ನು ಬಿಟ್ಟುಹೋಗಿದ್ದರಿಂದ ಮನೆಗೆ ಕೆಲಸಕ್ಕೆ ಅನುಕೂಲವಾಗಿತ್ತು. +ಇವರಲ್ಲಿ ಹೆಣ್ಣುಮಕ್ಕಳಿಗೆ ಬೇಗನೇ ಮದುವೆ ಮಾಡುತ್ತಾರಲ್ಲ. +ಗಂಡನನ್ನು ನೋಡಿದ್ದಳೋ ಇಲ್ಲವೋ, ಅಂತೂ ಆಕೆಗೆ ಗಂಡನ ಯೋಜನೆ ಇದ್ದಂತೆ ಕಂಡುಬರಲಿಲ್ಲ. +ಸ್ನಾನ ಮಾಡುತ್ತಿದ್ದಾಗ ಅವಳು ನೋಡುತ್ತಿದ್ದ ರೀತಿಯೇ ಚಳಿ ಹುಟ್ಟಿಸುವಂತಿದೆ ಎನಿಸಿತ್ತು. +ತಲೆ ಬಾಜಿದ್ದು ಮುಗಿಯುವಷ್ಟರಲ್ಲಿ ಭಾಗೀರಥಿ ಹೂವಿನ ದಂಡೆಯನ್ನು ಹಿಡಿದು ಜಗುಲಿ ಬದಿಯ ಕೋಣೆಗೆ ನಡೆದಳು. +ತಲೆ ಬಾಚಿಕೊಂಡ ಮೇಲೂ ಕನ್ನಡಿಯಲ್ಲಿ ತಲ್ಲೇನನಾಗಿದ್ದ ಮಂಜುನಾಥನನ್ನು ತಿವಿದು ಹಯವದನ "ಅಣ್ಣ ಹೇಳಿದ್ದು ಕೇಳಿಸ್ರ" ಅಂದ. +"ಅದೇ ಏನೋ ಹರಕೆ ಅಂದ್ರಲ್ಲ" ಅಂದಾಗ "ಅದು ಬರೀ ಹರಕೆ ಅಲ್ಲ, ನೀವು ನೋಡಬೇಕು. +ಇಲ್ಲೊಂದು ಚೌಡಿಯಿದೆ. +ಅದಕ್ಕೆ ಏನೋ ಹೆಸರಿದೆಯಪ್ಪ ಎಂಥದೋ ಚೌಡಿ. +ಅದು ಇರೋದು ಕೆಳಗಿನೂರು ಕಾನು ಮಧ್ಯೆ. +ವರ್ಷಕ್ಕೆ ಒಂದು ಸಲ ಅಲ್ಲಿ ಹೋಗಿ ಬಲಿಪೂಜೆಮಾಡಿ ಬರಬೇಕಂತೆ. +ಕೆಳಗಿನೂರಲ್ಲೆಲ್ಲ ಮನೆಗೊಂದು ಕುರಿ ಕೊಡ್ತಾರೆ ಅಂತ ಕಾಣುತ್ತೆ. +ಕುರಿ ಇಲ್ಲದವರು ಕೋಳಿನಾದ್ರು ಕೊಯ್ತಾರೆ. +ತುಂಬಾ ಬೀಭತ್ಸ ನೋಡಿ" ಅಂದ. +ಹಯವದನ ಹೇಳುತ್ತಿದ್ದಾಗ ಅದನ್ನು ನೋಡಬಹುದಿತ್ತೆನಿಸಿತು. +"ಎಷ್ಟು ದೂರ ಆಗುತ್ತೋ" ಅಂದ. +"ಹೆಚ್ಚು ದೂರ ಇಲ್ಲ. +ಒಂದರ್ಧ ಮೈಲಿ ಆಗಬಹುದು. +ನೋಡಬೇಕೂ ಅನ್ನಿಸುತ್ತಾ" ಎಂದು ಕೇಳಿದಾಗ ಹೌದೆಂದು ಸಮ್ಮತಿಸಿದ. +"ನಾನು ಬರುವಂತಿಲ್ಲ,ಅಣ್ಣ ಅಷ್ಟೇ ಅಲ್ಲ ಅಮ್ಮನಿಗೂ ಇಷ್ಟವಾಗುವುದಿಲ್ಲ ಎಂದು ಹಯವದನ ಹೇಳಿದಾಗ ತಾನೊಬ್ಬನೇ ಹೋಗಬಹುದೆನಿಸಿತು. +"ನಾನೂ ಸ್ನಾನ ಮುಗಿಸಿ ಬರ್ತೇನೆ, ತಿಂಡಿ ಮಾಡೋಣ" ಎನ್ನುತ್ತ ಟವೆಲ್‌ ಹಿಡಿದು ಹಯವದನ ಬಚ್ಚಲಿಗೆ ಹೊರಟ. +ಮಂಜುನಾಥ ಜಗುಲಿಯ ಕೋಣೆಯ ಕಡೆ ತಿರುಗಿದಾಗ ಭಾಗೀರಥಿಯ ಬೆನ್ನು ಕಾಣಿಸುತ್ತಿತ್ತು. +ತಿಂಡಿ ಮುಗಿಸಿದ ಮೇಲೆ ವಿಶ್ರಾಂತಿಗಾಗಿ ಜಗುಲಿಯಲ್ಲಿ ಅಡ್ಡಾದಾಗ ವಾಲಗ ತಮಟೆಗಳ ಸದ್ದು ಜೋರಾಗಿ ಕೇಳಿಸುತ್ತಿತ್ತು. +ದೂರದಲ್ಲಿ ನಾಯಿಗಳು ಕಚ್ಚಾಡುವುದು, ಯಾವುದೋ ಹಕ್ಕಿಗಳು ಕೂಗುವುದೂ ಒಂದು ರೀತಿಯ ವಿಚಿತ್ರ ಸಂತೋಷವನ್ನು ಕೊಡುತ್ತಿದ್ದವು. +ಸ್ವಲ್ಪ ಹೊತ್ತಿಗೆಲ್ಲ ಮಂಜುನಾಥನಿಗೆ ಹಯವದನ ಗಾಢನಿದ್ರೆಯಲ್ಲಿರುವುದು ಮಂಜುನಾಥನಿಗೆ ಗೊತ್ತಾಯಿತು. +ವಾಲಗ, ತಮ್ಮಟೆಗಳ ಸದ್ದು ಇನ್ನೂ ಕೇಳುತ್ತಲೇ ಇತ್ತು. +ಎದ್ದು ಕುಳಿತ. +ಜಗುಲಿಯ ಕೋಣೆಯಿಂದ ಅಮ್ಮ ಭಾಗೀರಥಿಗೆ ಏನನ್ನೋ ಪಿಸುಗುಟ್ಟುತ್ತಿದ್ದರು. +ಮಂಜುನಾಥ ಎದ್ದು ಷರ್ಟ್‌ತ ಗುಲಿಸಿಕೊಂಡ. +ಬಾಗಿಲು ದಾಟುತ್ತಿದ್ದಾಗ ಜಗುಲಿಯ ಕೋಣೆಯಿಂದ "ಹಾಗಾದ್ರೆ ನಾನು ತೋಟದ ಕಡೆ ಹೋಗಲಾ" ಅಂದದ್ದು ಕೇಳಿಸಿತು. +ಭಾಗೀರಥಿ ಹೇಳಿರಬಹುದೆಂದುಕೊಂಡ ಮಂಜುನಾಥ ಅಂಗಳಕ್ಕೆ ಇಳಿದ. +ಜೋರಾಗಿ ಕೇಳಿಸುವ ವಾಲಗ ತಮಟೆಗಳ ಸದ್ದು. +ಹೋಗಿ ಬಿಡಲೇ ಅನ್ನಿಸಿತು. +ಹಯವದನನ ನೆನಪಾಯಿತು. +ಕಾನಿನ ಮಧ್ಯದಿಂದ ಯಾರು ಯಾರನ್ನೋ ಕರೆಯುವ ಕೂಗು- ಕಾಕುಗಳು. +ಕುತೂಹಲ ಹೆಚ್ಚಿತು. +ಬೇಗ ಬಂದರಾಯಿತೆಂದುಕೊಂಡು ಕೆಳಗಿನೂರಿನ ಕಡೆ ಸವೆದ ಹಾದಿಯಲ್ಲಿ ನಡೆದ. +ಮುಂದುವರಿಯುತ್ತಿದ್ದಂತೆ ವಾಲಗ ತಮಟೆಗಳ ಸದ್ದು ಹತ್ತಿರವಾಗತೊಡಗಿತು. +ಕೆಳಗಿನೂರಿಗೆ ಬಂದಾಗ ಎದುರಿನ ಕಾನಿನ ಮಧ್ಯದಿಂದ ನಾಲ್ಕಾರು ಜನ ಬಂದು ಗದ್ದೆಯ ಬದಿಯ ಬಾವಿಯಿಂದ ನೀರನ್ನು ತುಂಬಿಕೊಂಡು ಕಾನಿನ ಕಡೆಗೆ ತಿರುಗಿದರು. +ಅವರನ್ನು ಹಿಂಬಾಲಿಸಿದ. +ಅವರು ಹೋಗುತ್ತಿರುವುದೆಲ್ಲಿಗೆ ಎಂದು ಕೇಳಿದ. +"ಚೌಡಿ ಬಾನಕ್ಕೆ" ಅಂದರು ಅವರು. +ತಾನು ಹಿಂದೆಂದೂ ಅಷ್ಟು ಭಯಂಕರ ಕಾನನ್ನು ಹೊಕ್ಕಿರಲಿಲ್ಲ. +ನೀರು ಹೊತ್ತು ತರುತ್ತಿದ್ದ ವಯಸ್ಸಾದವನೊಬ್ಬನನ್ನು ಮಾತಾಡಿಸಿದ. +ಶೇಷಗಿರಿರಾಯರ ಹೆಸರು ಹೇಳಿ ಪೂಜೆ ನೋಡಲು ಬಂದಿರುವುದಾಗಿ ತಿಳಿಸಿದ. +ವಯಸ್ಸಾದವನು ಸ್ವಲ್ಪಹಿಂದೆ ನಿಂತು ಗೌರವದಿಂದ ಅಲ್ಲಿಯ ರೀತಿ ರಿವಾಜುಗಳನ್ನ ತಿಳಿಸಿದ. +ಇಬ್ಬರೂ ಮಾತಾಡುತ್ತಾ ಸವೆದಿದ್ದ ಕಾಡುಹಾದಿಯಲ್ಲಿ ನಡು ಕಾನಿನವರೆಗೂ ಬಂದರು. +ತಲೆ ಎತ್ತಿ ನೋಡಿದರೆ ಆಕಾಶವೇ ಕಾಣದಂತೆ ಎತ್ತರವಾಗಿ ದೊಡ್ಡ ದೊಡ್ಡ ಮರಗಳ ಚಪ್ಪರ. +ಸುತ್ತ ಹೇಗೆ ಹೇಗೋ ಬೆಳೆದು ಹೆಣೆದುಕೊಂಡ ವಿಚಿತ್ರ ಗಿಡಬಳ್ಳಿಗಳು, ದೊಡ್ಡ ದೊಡ್ಡ ಪೊಟರೆಗಳು. +ಮಂಜುನಾಥನಿಗೆ ಯಾವುದೋ ಹೊಸ ಜಗತ್ತಿಗೆ ಬಂದಂತೆ ಅನ್ನಿಸಿತು. +ಕಾಡಿನ ಮಧ್ಯೆ ಚೌಡಿಯ ಬನದ ಕಾರ್ಯಕಲಾಪಗಳೆಲ್ಲ ಮರು ದನಿಗೊಡುತ್ತಿದ್ದವು. +ಹರಕೆಗೆ ತಂದಿದ್ದ ಕುರಿಹೋತಗಳ ಅರಚಾಟ. +ಕೋಳಿಗಳ ಕೂಗಾಟ ಕಾನನ್ನೇ ಜೀವಂತಗೊಳಿಸಿತ್ತು. +ಬನದ ಮಧ್ಯೆ ಸುತ್ತಲೂ ಸವರಿದ್ದರು. +ಸುತ್ತ ರಾಕ್ಷಸ ಮರಗಳ ಚಪ್ಪರ. +ಕೆಳಗೆ ವಿಶಾಲವಾದ ಬಯಲಿತ್ತು. +ಒಂದು ಮೂಲೆಯಲ್ಲಿ ಚೌಡಿಯ ವಿಗ್ರಹವನ್ನು ಬೆಳ್ಳಿಯ ಗಿರಿ ,ಕೊಡೆ, ತೊಟ್ಟಿಲುಗಳಿಂದ ಸಿಂಗರಿಸಿದ್ದರು. +ಎದುರಿಗೆ ತೆಂಗಿನ ಕಾಯಿ,ಬಾಳೆಹಣ್ಣುಗಳನ್ನು ಪೇರಿಸಿಟ್ಟಿದ್ದರು. +ಅಲ್ಲಿ ಮಾತ್ರ ಊದುಬತ್ತಿಯ ಕಂಪು. +ವಯಸ್ಸಾದವರೊಬ್ಬರು ಪೂಜೆ ಮಾಡುತ್ತಿದ್ದರು. +ಮಂಜುನಾಥ ಚೌಡಿ ವಿಗ್ರಹದ ಎದುರಿಗೆ ಸೇರಿದ್ದ ನೂರಾರು ಜನರಲ್ಲಿ ಒಬ್ಬನಾಗಿ ನೋಡಿದ. +ಸುತ್ತಲೂ ನಿಂತ ಜನ, ಹುಡುಗಿಯರು,ಜಿಗುರುಮೀಸೆಯ ಹುಡುಗರು, ಗಡ್ಡ ಹಣ್ಣಾದ ಮುದುಕರು, ಹಲ್ಲಿಲ್ಲದ ಮುದುಕಿಯರು, ಮೀಸೆ ಹುರಿ ಮಾಡಿದ ಗಂಡಸರು. +ಚೌಡಿಯ ಪಕ್ಕದಲ್ಲಿ ಬಲಿಗಾಗಿ ತಂದ ಕೋಳಿಗಳ ರಾಶಿ. +ಗಿಡಗಳಿಗೆ ಕಟ್ಟಿದ್ದ ಕುರಿ ಹೋತಗಳು ಸೊಪ್ಪು ತಿನ್ನುತ್ತ ಮೆಲುಕು ಹಾಕುತ್ತಾ ಕೂಗುತ್ತಾ ಇದ್ದವು. +ಕಾಲನ್ನು ಕಟ್ಟಿ ಕೊಂಬೆಗಳಿಗೆ ಸಿಕ್ಕಿಸಿದ್ದ ಕೋಳಿಗಳು ಆಗಾಗ ರೆಕ್ಕೆಗಳನ್ನು ಬಡಿದು ಕೂಗೆಬ್ಬಿಸುತ್ತಿದ್ದವು. +ಬಯಲಿನ ಇನ್ನೊಂದು ಮೂಲೆಯಲ್ಲಿ ಹೊಸ ಹೊಸ ಸೀರೆಯುಟ್ಟ ಹೆಂಗಸರು ಕಡುಬು ಚರುಪಿನ ಅನ್ನ ಮಾಡುವುದರಲ್ಲಿ ನಿರತರಾಗಿದ್ದರು. +ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬನನ್ನು ಪಿಸುದನಿಯಲ್ಲಿ ಮಂಜುನಾಥ "ಊಟ ಇಲ್ಲೇ ಮಾಡ್ತೀರಾ?"ಎಂದುಕೇಳಿದ. +ಅದಕ್ಕೆ ಆತ, "ಕುರಿ ಬೀಳದೆ ತಡ, ಹಂಗೇ ಹಸಿಗೆ ಮಾಡಿ ಬೇಯೋದಕ್ಕೆ ಇಡ್ತೀವಿ. +ಚೌಡಿಗೆ ನೇವೇದ್ಯ ಮಾಡಿ ಎಲ್ಲ ಇಲ್ಲೇ ಎಲ್ಲರೂ ಊಟ ಮಾಡ್ತೇವೆ" ಎಂದ. +ಹಣ್ಣುಕಾಯಿನ ಪೂಜೆ, ನೈವೇದ್ಯ ಮುಗಿದ ಮೇಲೆ ಬಲಿಯನ್ನು ಕೊಡಲು ತಯಾರಾಯಿತು. +ಒಂದು ದೊಡ್ಡ ಹೋತವನ್ನು ತಂದು ಚೌಡಿಯ ಎದುರು ನಿಲ್ಲಿಸಿದರು. +ಅದನ್ನು ನೋಡುತ್ತಲೇ ಮಂಜುನಾಥ ಜನರಿಂದ ಹಿಂದೆ ಸರಿದು ಹತ್ತಿರದ ಮರಕ್ಕೆ ಒರಗಿ ನಿಂತ. +ಒಬ್ಬ ಹುಡುಗ ಹೋತದ ಎದುರು ಕೊಂಬಿನ ನಡುವೆ ಕುತ್ತಿಗೆಯ ಹಗ್ಗ ಬರುವಂತೆ ಮುಂದೆ ಎಳೆದು ಹಿಡಿದ. +ಹಿಂದೆ ಇನ್ನೊಬ್ಬ ಎರಡು ತೊಡೆಗಳ ಕೂದಲನ್ನು ಜಗ್ಗಿ ಹಿಡಿದ. +ಅದಕ್ಕಾಗಿಯೇ ಮಾಡಿಸಿದ ಕತ್ತಿಯಿಂದ ಇನ್ನೊಬ್ಬ ಸಣಕಲು ವ್ಯಕ್ತಿ ತಲೆಯನ್ನು ಹಾರಿಸಲು ತಯಾರಾದ. +ಮಂಜುನಾಥನನ್ನು ಕರೆ ತಂದಿದ್ದ ಮನುಷ್ಯ ಎದುರಿಗೆ ಒಂದು ಚೆಂಬನ್ನು ಹಿಡಿದು ನಿಂತಿದ್ದ. +ಹೋತ ಒಂದು ಸ್ಥಿತಿಯಲ್ಲಿ ತಲೆಯನ್ನು ಅಲ್ಲಾಡಿಸದೆ ಗಂಭೀರವಾಗಿ ನಿಂತಿದ್ದಾಗ ಕತ್ತಿ ಹಿಡಿದ ಸಣಕಲು ವ್ಯಕ್ತಿ ಒಂದು ಸಾರಿ ಕುತ್ತಿಗೆಯ ಮೇಲೆ ಮೆಲ್ಲನೆ ಇಳಿಸಿ, ನಂತರ ಮೇಲೆ ಎತ್ತಿದವನೇ ಕತ್ತಿಯನ್ನು ಸ್ವಲ್ಪ ಓರೆಮಾಡಿ ರಭಸದಿಂದ ಇಳಿಸಿದ. +ಆ ಹೊಡೆತಕ್ಕೆ ಕುರಿಯ ತಲೆ ಚಕ್ಕನೆ ಮುಂದೆ ನೆಗೆದು ಬಿತ್ತು. +ರುಂಡದಿಂದ ಕಣ್ಣುಗಳು ಹಿಳಿಪಿಳಿಯಾಗುತ್ತ ಅದು ಬಾಯಿ ತೆರೆದು ನಾಲಗೆಯನ್ನು ಜಾಚುವ ಹೊತ್ತಿಗೆ ನೀರು ಹಿಡಿದಿದ್ದ ವ್ಯಕ್ತಿ ಬಾಯಿಗೆ ನೀರು ಬಿಟ್ಟ. +ಮುಂಡ ಒದ್ದಾಡುತ್ತಾ ರಕ್ತ ಕಾರುತ್ತಿತ್ತು. +ಸುರಿಯುತ್ತಿದ್ದ ರಕ್ತವನ್ನು ಮಂಜುನಾಥನಿಗೆ ನೋಡಲಾಗಲಿಲ್ಲ. +ಒಂದಾದ ಮೇಲೆ ಒಂದರಂತೆ ಕುರಿಗಳ ಬಲಿ ನಡೆಯುತ್ತಿದ್ದರೆ ಅದನ್ನು ನೋಡಲಾಗದೆ ಮಂಜುನಾಥನಿಗೆ ಸಂಕಟವಾಯಿತು. +ಕಾಲೆಲ್ಲ ಶಕ್ತಿಹೀನವಾಯಿತು. +ಇನ್ನು ತಡೆಯಲಾರೆ ಎನಿಸಿ ಬಂದ ಹಾದಿಯಲ್ಲಿಯೇ ಹಿಂತಿರುಗಿದೆ. +ರಭಸದಿಂದ ನಡೆಯುತ್ತ ಹಯವದನನ ಮನೆಯ ಹತ್ತಿರ ಬಂದ ಸಂಜೆಯಾಗಿತ್ತು. +ಊರಿನಿಂದ ದೂರವೇ ಇದ್ದ ಒಂಟಿ ಮನೆಯಲ್ಲಿ ನೀರವ ಮೌನ. +ಮನೆಯ ಬಾಗಿಲು ದಾಟಿ ಜಗುಲಿ ಪ್ರವೇಶಿಸಿದಾಗ ಪೂರ್ತಿ ಕತ್ತಲಾದಂತೆ ಏನೂ ಕಾಣಿಸಲಿಲ್ಲ. +ಮೈಯೆಲ್ಲ ಬೆವರು ಇಳಿಯುತ್ತಿತ್ತು. +ಮನೆಯಲ್ಲಿ ಯಾರೂ ಇದ್ದಂತೆ ಕಾಣಲಿಲ್ಲ. +ರಕ್ತ ನೋಡಿದ ದಿಗಿಲು ಹೆಚ್ಚಾಗಿತ್ತು. +ಬಚ್ಚಲು ಮನೆಯಲ್ಲಿ ಬಟ್ಟೆ ನೀರು ತೋಡುವ ಸದ್ದು ಕೇಳಿಸಿತು. +ಗಂಟಲು ಆರಿದ್ದು ಅನುಭವಕ್ಕೆ ಬಂತು. +ಮನೆ ಒಳಗಿನಿಂದ ಕುಡಿಯುವ ನೀರು ತರಿಸಿಕೊಳ್ಳಲು ಹಯವದನ ಕಾಣಲಿಲ್ಲ. +ಗಂಟಲಿಗೆ ನೀರು ಸುರಿದುಕೊಳ್ಳಬೇಕೆನಿಸಿತು. +ಬಚ್ಚಲು ಹಂಡೆಯ ನೀರಾದರೂ ಸರಿಯೆ ಬೇಕೇ ಬೇಕೆನಿಸಿತು. +ದಾಹ ಅತಿಯಾಗಿ ಬಚ್ಚಲು ಕಡೆಗೆ ತಿರುಗಿದ. +ಭಾಗೀರಥಿ ಬಟ್ಟೆ ಒಗೆಯುತ್ತಿದ್ದಳು. +ಇವನು ಬರುತ್ತಲೇ ಜಾಗ ಬಿಡಲು ಸರಿದಳು. +ಮಂಜುನಾಥ ನೀರಿನ ಜೆಂಬಿಗೆ ಕೈಕೊಟ್ಟ. +ಇಕ್ಕಟ್ಟಿನ ಬಚ್ಚಲಿನಲ್ಲಿ ವಾಲಿದಂತೆ ನಿಂತಿದ್ದ ಭಾಗೀರಥಿಯ ಇಡೀ ಮೈ ಅನಿರೀಕ್ಷಿತವಾಗಿ ತಗುಲಿತು. +ಅವಳಿಗೂ ಅನಿರೀಕ್ಷಿತ ಎನಿಸುವಂತೆ ಅವಳನ್ನು ಬಿಗಿಯಾಗಿ ಅಪ್ಪಿಕೊಂಡ. +ತಲೆಯೆಲ್ಲ ತಿರುಗುತ್ತಿದ್ದಂತೆ, ಸುತ್ತಲೂ ಕತ್ತಲಾಗುತ್ತಿದ್ದಂತೆ ಭಾಗೀರಥಿಗೆ ಏನು ಮಾಡಲೂ ತೋಚದೆ ಹೋಯಿತು. +ಅದೇ ಮೊದಲಬಾರಿಗೆ ಸ್ಪರ್ಶವನ್ನು ಅನುಭವಿಸಿದಂತೆ ಮಂಜುನಾಥನ ಬೆನ್ನಿಗೆ ಎರಡೂ ಕೈಗಳನ್ನು ಚಪ್ಪಳೆ ಹಾಕಿ ಹೆಣೆದಳು. +ಮೊಣಕಾಲವರೆಗೆ ಒದ್ದೆಯಾಗಿದ್ದ ಸೀರೆ,ತೋಟಕ್ಕೆ ಹೋಗಿದ್ದ ರಾಯರು, ಅಕ್ಕ, ಹಯವದನ ಬಂದಾರೆಂಬ ಭಯವಾಗಲಿ ಅವಳಿಗೆ ಬರಲಿಲ್ಲ. +ಅವಳ ಬಿಗಿ ಹಿಡಿತದಲ್ಲಿ ಮಂಜುನಾಥನಿಗೂ ಹಯವದನನ ನೆನಪು ಬರಲಿಲ್ಲ. +ಅವಳ ಎದೆಯಲ್ಲಿ ಮುಖವಿಟ್ಟು ಕಣ್ಣುಮುಚ್ಚಿದ. . . +ಸ್ವಲ್ಪ ಹೊತ್ತಿಗೆ ಕತ್ತಲು ದಟ್ಟವಾಗಿ ಕಣ್ಣು ಕಾಣಿಸದಾಯಿತು. +ಬಚ್ಚಲು ಮನೆಯಿಂದ ಹೊರಟು ಜಗುಲಿಯ ಮೇಲೆ ಬಂದು ಕುಳಿತಾಗ ಹಯವದನ ಅಂಗಳದಲ್ಲಿ ಬರುತ್ತಿರುವುದು ಕಂಡಿತು. +ಒಳಗಿನಿಂದ ಭಾಗೀರಥಿ ಲಾಟೀನು ತಂದು ಹೊತ್ತಿಸಿದಳು. +ಹಯವದನ ಲಾಟೀನು ಬೆಳಕಲ್ಲಿ "ನಮ್ಮ ಮನೆ ಹಿಂದೆ ಕೆರೆ ಇದೆ. +ನೀವು ಆ ಕಡೆ ಹೋಗಿದ್ರೇನೋ ಅಂತ ಅಂದುಕೊಂಡೆ. +ನಾನು ತೋಟ ತೋರಿಸಬೇಕು ಅಂದುಕೊಂಡಿದ್ದೆ. +ನಾಳೆ ಬೆಳಿಗ್ಗೆ ತೋಟಕ್ಕೆ ಹೋಗೋಣ . . "ಅಂದ. +ಅದನ್ನು ಲಕ್ಷಿಸಿದವನಂತೆ ಮಂಜುನಾಥ ನಗುವ ಮುಖಮಾಡಿ "ಅಮ್ಮನ ಜೊತೆ ತೋಟದಿಂದ ಈಗ ತಾನೇ ನೀವು ಬರ್ರಾ ಇದೀರಾ. . "ಎಂದ. +ಭಾಗೀರಥಿ ಸ್ಟೀಲು ಚೆಂಬು ಹಿಡಿದು ಹಾಲು ಕರೆಯಲು ಕೊಟ್ಟಿಗೆಯ ಕಡೆ ನಡೆದಿದ್ದಳು. +ಆನೆ ಬಂತೊಂದಾನೆ : +ಹೊತ್ತು ಮೂಡಿ ಬಹಳ ಮೇಲೆ ಬಂದಿದ್ದರಿಂದ ದನ ಬಿಡುವ ಹೊತ್ತಾಯಿತೆಂದು ದಾಸಣ್ಣ ಹೊಸೆಯುತ್ತಿದ್ದ ಕಣ್ಣಿ ಹುರಿಯನ್ನು ಮಡಿಚಿಟ್ಟು ಕೈಕಾಲು ತೊಳೆದುಕೊಂಡ. +ನಾಮ ಹಚ್ಚಿಕೊಂಡು ಅಡಿಗೆ ಮನೆಯಲ್ಲಿ ಕುಳಿತು ಗಂಜಿ ಕುಡಿಯುತ್ತಿದ್ದಾಗ "ಇವತ್ತು ನೀನೇ ಹೋಗ್ತೀಯಾ" ಎಂದು ಕೇಳಿದ ನಾಗಿಯ ಮಾತಿಗೆ "ಮತ್ತೆ ಆನೆಗಲಾಟೆ ಜಾಸ್ತಿ ಅಂತಾರೆ. +ಅವನ್ನ ಕಳಿಸಿದರೆ ಹೆಂಗೆ ತಂಗೀ, ಅವನಿಗೆ ಮರ ಹತ್ತಕ್ಕೂ ಬರಲ್ಲ. +ನಿನ್ನೆನೋ ಮೊನ್ನೆನೋ ಗೌಡರ ತ್ವಾಟದ ಹತ್ರಾನೇ ಹೆಜ್ಜೆ ಮೂಡಿದ್ದು ಅಂತ ನಿಂಗ ಹೇಳಿದ್ದ ಅಂದ. +ಊಟ ಮುಗಿಸಿ ಹಲ್ಲಿಗೆ ಕೊರಲು ಹಿಡಿಕಡ್ಡಿಯನ್ನು ಹಾಕುತ್ತ ಜಗುಲಿಗೆ ಬಂದ. +ಗೌಡರ ಮನೆಯ ಕೆಲಸದ ನಿಂಗ "ಹೋಯ್‌,ಗೌಡರು ಯಾಕೋ ಬರಾಕೆ ಹೇಳಿದ್ರು. +ಅದೇನೋ ಲೆಕ್ಕ ಚುಕ್ತಾ ಮಾಡ್ಕಬೇಕು ಅಂತಿದ್ರಪ್ಪ ಅಂದವನೇ ಹೆಚ್ಚಿನ ವಿವರಗಳನ್ನೇನೂ ಕೊಡದೆ ದಡಪೆ ದಾಟಿ ಹಿತ್ತಲಿನ ತಿರುವಿನಲ್ಲಿ ಮರೆಯಾದ. +ಕೊಟ್ಟಿಗೆಯಲ್ಲಿ ಇದ್ದ ಒಂದೆರಡು ಕಾಲ್ನಡೆಗಳ ಕಣ್ಣಿ ಬಿಡುತ್ತ "ಇದೊಳ್ಳೆ ಗ್ರಾಚಾರ ಆತಪ್ಪ" ಅಂದುಕೊಂಡು "ಈ ಸಲ ಆದ್ರೂ ಗೌಡರಿಂದ ಬಿಡುಗಡೆ ಆಗ್ದೇ ಇದ್ರೆ ಮುಂದೆ ನಾಗೀಗೇ ಏನೂ ಮಾಡಕಾಗಲ್ಲ. +ಗೌಡರ ಮನೆ ಬಿಟ್ಟೀ ದುಡಿಯೋದ್ರಲ್ಲೆ ಮಗನ್ನೂ ಮಗಳ್ನೂ ಸಾಕಿದಂಗಾತು" ಎಂದುಕೊಂಡು ಕಂಬಳಿಕೊಪ್ಪೆಯನ್ನು ಹೆಗಲಿಗೇರಿಸಿಕೊಂಡು ಊರ ಕಡೆ ಕೂಗುತ್ತ ದನ ಬಿಡಲು ಹೊತ್ತಾಯಿತೆಂದು ಎಚ್ಚರಿಸತೊಡಗಿದ. +ಕೆಳಗಿನೂರು ಮೇಲಿನೂರು ಜಾನುವಾರುಗಳೆಲ್ಲ ಒಟ್ಟಾಗುತ್ತ ಬಂದ ಹಾಗೆ ಬಿಸಿಲೂ ಏರತೊಡಗಿತು. +ದನಕೂಡಲು ಬಂದ ಒಬ್ಬ "ಯಾಕೋ ದಾಸಣ್ಣ ದಿನಾ ನೀನೇ ಹೋಗ್ರಿ. +ಭೈರ ಯಾಕೆ ಇತ್ತಿತ್ಲಾಗೆ ದನೀಗಬರಾದಿಲ್ಲ" ಅಂದ. +"ಹಂಗೆ ಮನೇ ಕಡೆ ಮಂಗ ಮುಸಿಯ ಅಂತ ಕಾಯಾಕೆ ಒಬ್ರು ಬೇಕಲ್ಲಪ್ಪ ಅದೂ ಅಲ್ಲೆ ಆನೆಕಾಟ ಒಂದು ಜಾಸ್ತಿಯಾಗಿತ್ತಂತೆ. +ಅವನ್ನೂ ಕಳಿಸಿ ನಾನೇನು ಮಂಗನ್ನ ಕಾಯ್ಲಾ" ಎಂದೆಲ್ಲ ತೋಡಿಕೊಳ್ಳುವುದರೊಳಗೆ ಆ ವ್ಯಕ್ತಿ ದೂರಹೋಗಿದ್ದ. +ಊರಿನ ಎಡಬಲದ ಏಳೆಂಟು ಮೈಲುಗಳ ಜಾಗದಲ್ಲಿ ಸಕ್ರೆಬಯಲಿನಿಂದ ಹಾದಿ ತಪ್ಪಿ ಬಂದ ಮೂರುಆನೆಗಳ ಹಾವಳಿಯೇ ದಾಸಣ್ಣ ತನ್ನ ಮಗ ಭೈರನನ್ನು ದನಗಾವಲಿಗೆ ಕಳಿಸದಿರಲು ಕಾರಣವಾಗಿತ್ತು. +ಯಾವ ಕಾರಣದಿಂದಲೋ ಮೂರು ಆನೆಗಳು ಸುತ್ತಮುತ್ತಲೂ ಬಂದು ಗದ್ದೆಗಳನ್ನೆಲ್ಲ ತುಳಿದು ಹಾಕುತ್ತಿವೆಯೆಂದೂ ಊರಿನ ಹತ್ತಿರದಲ್ಲೇ ಒಂದು ಕಬ್ಬಿನ ಗದ್ದೆಯನ್ನು ನೆಲಕ್ಕೆ ಹತ್ತ ಬೋಳಿಸಿವೆಯೆಂದು ಸುದ್ದಿಗಳಿದ್ದವು. +ಶಿವಮೊಗ್ಗದಿಂದ ಅಡಿಕೆ ಮಾರಾಟ ಮಾಡಿ ಬಂದವನೊಬ್ಬನು ಸಂಜೆಹೊತ್ತಿನಲ್ಲಿ ಹಾದಿಬದಿಯೇ ಕರ್ರಗಿರುವ ಭಾರಿ ಗಾತ್ರದ ಪ್ರಾಣಿಯೊಂದನ್ನು ನೋಡಿ ಕಂಗಾಲಾದಾಗಲೇ ಅದು ಕಿರನೆ ಫೀಳಿಟ್ಟುದರಿಂದ ತಂದಿದ್ದ ಸಾಮಾನುಗಳನ್ನೆಲ್ಲ ದಿಕ್ಕಾಪಾಲಾಗಿ ಚೆಲ್ಲಿ ಜೀವವುಳಿಸಿಕೊಂಡು ಬಂದನೆಂದೂ, ಬಂದ ಏಳೆಂಟುದಿನ ಅದೇ ಜ್ವರದಲ್ಲಿ ನರಳುತ್ತಿದ್ದಾನೆಂದೂ ಕೆಳಗಿನೂರವರು ಹೇಳುತ್ತಿದ್ದರು. +ಕೆಲವರು ಬಂದವು ಮೂರು ಆನೆಗಳೆಂತಲೂ,ಕೆಲವರು ಎರಡೇ ಎಂತಲೂ ಕೆಲವರು ಭಾರಿ ಹಿಂಡೇ ಬಂದಿದೆಯೆಂತಲೂ ಹೇಳುತ್ತಿದ್ದರು. +ಆನೆಯನ್ನು ಕಂಡಿರದವರು ಅಸಂಬದ್ಧ ವಾರ್ತೆಗಳನ್ನು ಹರಡುತ್ತಲೂ ಕೇಳುತ್ತಲೂ ಇದ್ದರು. +ಚೌರದ ಶಾಪಿನಲ್ಲಿ,ಕಳ್ಳಂಗಡಿಯಲ್ಲಿ, ಸಂತೆಯ ದಿನ ಪೇಟೆಯ ಹೋಟಲುಗಳಲ್ಲಿ ಆನೆಗಳನ್ನು ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಕೈಗೊಂಡ ಕೆಲಸಗಳನ್ನು ಕೆಲವರು ವಿವರಿಸುತ್ತಿದ್ದರು. +ತೋಟ ಜಮೀನು ಹಾಳುಮಾಡಿಕೊಂಡವರೆಲ್ಲ ಕೊಟ್ಟ ಅರ್ಜಿಗಳ ಮೇರೆಗೆ ಅವುಗಳನ್ನು ಗುಂಡಿ ತೋಡಿ ಹಿಡಿಯಲು ಆರಂಭಿಸಲಾಗಿದೆಯೆಂದೂ ವದಂತಿ ಹಬ್ಬಿತ್ತು ಸಕ್ರೆಬೈಲಿನಿಂದಲೇ ಸಾಕಿದ ಆನೆಗಳು ಬರ್ತಾವಂತೆ. +ಮಾವಟಿಗರೂ ಬರ್ತಾರಂತೆ. +ಗುಂಡಿ ತೋಡಿ ಆನೆಗಳನ್ನು ಬೀಳಿಸಿ ಆಮೇಲೆ ಸಾಕಿ ನಾಟಾಗೀಟಾ ಎಳೆಸ್ತಾರಂತೆ- ಎಂದೆಲ್ಲಾ ವಾರ್ತೆಗಳು ಆಗ ಬಿಸಿಬಿಸಿಯಾಗಿ ಹರಡುತ್ತಿದ್ದವು. +ಹೀಗಾಗಿ ದಾಸಣ್ಣ ತುಂಬಾ ಜಾಗರೂಕನಾಗಿದ್ದ. +ಆನೆಗಳನ್ನು ಹಿಡಿಯಲು ತೋಡಿರುವ ಹೊಂಡಗಳಾಗಲೀ,ಪ್ರಯತ್ನಿಸುತ್ತಿರುವ ಪ್ರದೇಶಗಳಾಗಲೀ ಅವನಿಗೆ ಗೊತ್ತಿರಲಿಲ್ಲ. +ಆದ್ದರಿಂದ ಸರ್ಕಾರಿ ರಸ್ತೆಯ ಬದಿಯಲ್ಲಿ ದನಗಳನ್ನು ನಡೆಸಿಕೊಂಡು ಒಂದು ಗುಡ್ಡದತ್ತ ತಿರುಗಿಸಿದ. +ಅದು ಅವನು ಪ್ರತಿದಿನ ಹೋಗಿ ಬರುವ ಸ್ಥಳವಾಗಿರಲಿಲ್ಲ. +ಅಲ್ಲಿ ಹುಲ್ಲು ಹಸಿರಾಗಿ ಬೆಳೆದದ್ದೇ ಬೇಗ ಮೇಯಿಸಿಕೊಂಡು ಹಿಂತಿರುಗಬೇಕೆಂಬ ಅವನ ಹಂಚಿಕೆಗೆ ಇಂಬಾಗಿತ್ತು. +ದಟ್ಟಕಾಡಿಗೆ ಹೊಂದಿಕೊಂಡ ಮೇವಿನ ಗುಡ್ಡ. +ಬಿಸಿಲೇರಿ ನೆಳಲು ದೇಹದಲ್ಲೇ ಅಡಗಿತ್ತು. +ರಸ್ತೆಯಿಂದ ದೂರಬಂದಂತಾಗಿತ್ತು. +ಹಿಂದೆ ನೋಡಿರದ ತಾವು ಸುತ್ತಲೂ ದಟ್ಟವಾದ ಕಾನು. +ಅಲ್ಲೊಂದು ಇಲ್ಲೊಂದು ಕೂಗುವ ಹಕ್ಕಿಗಳನ್ನು ಬಿಟ್ಟರೆ ಅಲ್ಲಿ ಚೀರುವ ಮೌನ. +ಆಗಲೋ ಈಗಲೋ ದನಗಳ ಕೊರಳಿಂದ ಬಾರಿಸುವ ದೊಂಟೆಯ ಸದ್ದು. +ಮೊದ ಮೊದಲು ಹೊಸ ಜಾಗವೆಂದು ದನಕರುಗಳು ನೆಲವನ್ನು ಮೂಸಿದವು. +ಹುಲ್ಲುನೋಡಿ ನಿರಾಳವಾಗಿ ಮೇಯುತ್ತ ಮುಂದುವರಿದವು. +ಕಾಡಿನ ಅಂಚಿನ ಹುಲ್ಲುಗಾವಲಿನಲ್ಲಿ ಸುತ್ತಾಡಿ ಒಂದೆಡೆ ತರುಬಿದಾಗ ಮಲಗಿದ್ದು ಮೆಲುಕು ಹಾಕುತ್ತಿದ್ದ ದನಕರುಗಳನ್ನು ಊರ ಕಡೆ ತಿರುಗಿಸುವಾಗ ಹೊತ್ತು ಇಳಿಮುಖವಾಗುತ್ತಿತ್ತು. +ಬೆಳಿಗ್ಗೆ ಉಂಡಿದ್ದ ಗಂಜಿಯ ಊಟ ಕರಗಿ ಹೋಗಿತ್ತು. +ಹಸಿವು ಅಭ್ಯಾಸವಿದ್ದ ದಾಸಣ್ಣ ದನಗಳನ್ನು ಹಿಂಬಾಲಿಸುತ್ತಿದ್ದಾಗ ಬಗಿನೆ ಸಸಿಗಳ ತಿರುಳನ್ನು ತಿಂದಿದ್ದ. +ಅಲ್ಲಲ್ಲಿ ಪರಂಗಿ ಹಣ್ಣು, ಕೆಂಡಸಂಪಿಗೆಹಣ್ಣು, ತುಂಬುರ ಹಣ್ಣು,ನೇರಳೆ ಹಣ್ಣು ಸಿಕ್ಕಿದ್ದನ್ನೂ ಆರಿಸಿ ತಿಂದಿದ್ದ. +ದೊಡ್ಡದೊಂದು ಹೆಬ್ಬಲಸಿನ ಮರದ ಬುಡದಲ್ಲಿ ಸಾಗುವಾಗ ಕೆಳಕ್ಕೆ ಬಿದ್ದಿದ್ದ ಎರಡು ಹಣ್ಣುಗಳನ್ನೂ ಕೈಯಲ್ಲಿಯೇ ಹಿಸಿದು ಅದರೊಳಗಿನ ಸಣ್ಣಕೆಂಪು ತೊಳೆಗಳನ್ನು ತಿಂದಿದ್ದ. +ಊರಕತಡೆ ಬಿಟ್ಟು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದ ದನಗಳನ್ನು ತಿರುಗಿಸಲು ಅಡ್ಡ ಹಾಯುತ್ತಿದ್ದಾಗ ಅಲ್ಲೊಂದು ಕಡೆ ಮರದ ಹೊಟ್ಟನಂತಹ ಹಸಿಯಾದ ಮುದ್ದೆ ಬಿದ್ದಿತ್ತು. +ನಿಂತು ಹತ್ತಿರ ಹೋಗಿ ನೋಡಿದಾಗ ಅಂಥದ್ದನ್ನು ಹಿಂದೆ ಕಂಡಿರಲಿಲ್ಲವಾದ್ದರಿಂದ ಅವನಿಗೆ ಏನೂ ಅನ್ನಿಸಲಿಲ್ಲ. +ಅಲ್ಲಿಯೇ ಹುಲ್ಲಿನ ಮೇಲೆ ದೊಡ್ಡ ದೊಡ್ಡಹೆಜ್ಜೆಗಳ ಗುರುತುಗಳಿದ್ದವು. +ದನಗಳನ್ನು ತಿರುಗಿಸುವ ಭರದಲ್ಲಿ ಅವನಿಗೆ ಅದರ ಕಡೆಗೆ ಲಕ್ಷ್ಯವೂ ಹರಿಯಲಿಲ್ಲ. +ಕಂಬಳಿಯನ್ನು ಹೆಗಲಿಗೆ ಏರಿಸಿಕೊಂಡು ಕೊಂಡಿಯಿಂದ ಕತ್ತಿ ಸಡಿಲಿಸಿಕೊಂಡು ಅಡ್ಡಡ್ಡ ತಿರುಗುತ್ತಿದ್ದ ದನಗಳನ್ನು ತಿರುಗಿಸಲು ಓಡುತ್ತಾ ಮುಂದೆ ನಡೆದ. +ತನಗೆ ಗೊತ್ತಿದ್ದ ಬೈಗುಳಗಳನ್ನು ಪ್ರಯೋಗಿಸುತ್ತಾ ಸ್ವಲ್ಪ ದೂರ ಓಡಿ ಬರುವಷ್ಟು ಹೊತ್ತಿಗೆ ಹತ್ತಿರದಲ್ಲೆಲ್ಲ ಸವರಿದ ಹಾಗೆ ಕಂಡು ಸ್ವಲ್ಪದೂರದಲ್ಲಿಯೇ ಬಯಲು ಪ್ರದೇಶವಿತ್ತು. +ಅದೇ ಕಡೆ ಇವನ ಕೂಗನ್ನು ಲೆಕ್ಕಿಸದೆ ಮುಂದುವರಿಯುತ್ತಿದ್ದ ಹೋರಿಯೊಂದನ್ನು ಸರಿದಾರಿಗೆ 'ತಿರುಗಲು' ಬಳಸಿ ಓಡುತ್ತಿದ್ದಾಗ ಆ ಜಾಗದಲ್ಲಿಯೇ ಎತ್ತರವಾದ ಅಟ್ಟಣಿಗೆ ಕಟ್ಟಿದ್ದವ್ನೂ ಗಮನಿಸಲಿಲ್ಲ. +ಅಲ್ಲೊಂದು ಜಾಗದಲ್ಲಿ ಹಸಿ ಮಣ್ಣು ಹರಡಿದಂತಿದ್ದು ಸೊಪ್ಪು ಸದೆ ಮುಚ್ಚಿದ ಹಾಗೆ ಇದ್ದುದನ್ನೂ ನೋಡಲಿಲ್ಲ. +ಹೋರಿಯನ್ನು ತಿರುಗಿಸುವ ಏಕೈಕ ಉದ್ದೇಶದಿಂದ ಎಲ್ಲೋ ಕಾಲಿಟ್ಟ. +ಕಣ್ಣುಮುಚ್ಚಿ ತೆರೆಯುವುದರೊಳಗೆ ಒಂದು ಕತ್ತಲೆಯ ಹೊಂಡದಲ್ಲಿ ಬಿದ್ದಿದ್ದ. +ಅದು ಸುಮಾರು ಎರಡೂವರೆ ಮೂರು ಆಳು ಆಳದ ಹೊಂಡ. +ಅದರಲ್ಲಿ ಬಿದ್ದ ಸುಮಾರು ಹೊತ್ತಿನವರೆಗೆ ಬಿದ್ದಾಗ ಆದ ನೋವಿನಿಂದಾಗಲೀ, ಬಿದ್ದ ಅರಿವಿನಿಂದಾಗಲೀ ಕೂಗಿಕೊಳ್ಳಲು ಆಗದಷ್ಟು ಕತ್ತಲು ಅಲ್ಲಿ ತುಂಬಿತ್ತು. +ಯಾವ ಯೋಜನೆಗೂ ಅವಕಾಶವಿಲ್ಲದಂತೆ ಆಕಸ್ಮಿಕ ನಡೆದಿತ್ತು. +ಸುಮಾರು ಹೊತ್ತಿನ ಮೇಲೆ ತಾನು ಬಿದ್ದಾಗ ಉಂಟಾದ ಕಿಂಡಿಯಿಂದ ಕೆಳಗಿಳಿಯುತ್ತಿದ್ದ ಬೆಳಕಿನಿಂದ ಸುತ್ತಲೂ ನೋಡಿದ. +ಅದೊಂದು ಈಚೆಗಷ್ಟೇ ಮಾಡಿದ ಗುಂಡಿಯಾಗಿತ್ತು. +ಮೇಲೆ ತೆಲೆಯೆತ್ತಿ ನೋಡಿದಾಗ ನೆಲಕ್ಕೆ ಸರಿಯಾಗಿ ಒಂದು ಹಾಸುಮಣ್ಣು ಹಾಸಿದ್ದರು. +ಕೆಳಗಿನಿಂದ ಆ 'ಹಾಸಿ'ಗೆ ಹಾಕಿದ್ದ ಬಿದಿರು ದಬ್ಬೆಗಳು ಕಾಣಿಸುತ್ತಿದ್ದವು. +ಅವನು ಬಿದ್ದಾಗ ಆದ ಕಿಂಡಿಯೊಂದು ಬಿಟ್ಟರೆ ಬೇರೆ ಎಲ್ಲಿಂದಲೂ ಬೆಳಕು ಕೂಡ ಬರುತ್ತಿರಲಿಲ್ಲ. +ಆ ಕಿಂಡಿಯಿಂದ ಆಕಾಶ ಮೇಲಿನಿಂದ ನೇರವಾಗಿ ಕೆಳಗೆ ಬಿದ್ದ ಹೊಡೆತಕ್ಕೆ ದಾಸಣ್ಣನಿಗೆ ಕಾಲಿಗೆ ಪೆಟ್ಟಾಗಿತ್ತು. +ಮುಂಗಾಲು ತರಚಿ ರಕ್ತ ಹನಿಯುತ್ತಿತ್ತು. +ಅಷ್ಟರ ಹೊರತು ಹೆಚ್ಚು ಏನೂ ಆಗಿರಲಿಲ್ಲ. +ಕಂಬಳಿಯೂ ಜೊತೆಗೆ ಅಂಟಿಕೊಂಡಂತೆ ಹೆಗಲಿನಲ್ಲಿಯೇ ಇತ್ತು. +ಆದರೆ ಸೊಂಟದ ಕೊಂಡಿಯಲ್ಲಿದ್ದ ಕತ್ತಿ ಮಾತ್ರ ಮೇಲೆ ಕಿಂಡಿಯ ಬದಿಜೋತಾಡುತ್ತಿತ್ತು. +ಅದು ಹೇಗೆ ಅಲ್ಲಿ ಸಿಕ್ಕಿಕೊಂಡಿತ್ತೋ ಗೊತ್ತಾಗಲಿಲ್ಲ. +ಸ್ವಲ್ಪ ಅಲುಗಾಡಿಸಿದರೆ ಕೆಳಕ್ಕೆ ಬೀಳುವ ಹಾಗೆ ಜೋತಾಡುತ್ತಿತ್ತು. +ಹೊರಗಿನಿಂದ ಯಾವ ಸದ್ದೂ ಕೇಳುತ್ತಿರಲಿಲ್ಲ. +ಒಂಟಿತನ, ನೋವು,ಅಪಾಯ ಎಲ್ಲಾ ಸೇರಿ ದಾಸಣ್ಣ ತುಂಬ ಹೊತ್ತು ಯೋಚಿಸಲಾಗಲಿಲ್ಲ. +ಸ್ವಲ್ಪ ಹೊತ್ತಿಗೆ ತಾನು ಸಿಕ್ಕಿಬಿದ್ದ ಪರಿಸ್ಥಿತಿ ಅರಿವಿಗೆ ಬಂತು. +ಕೂಗಿಕೊಳ್ಳಲೂ ಭಯವಾಗುವಷ್ಟು ಕತ್ತಲು ಕಂಡಿತು. +ಕಣ್ಣಿನ ಪರೆ ಹರಿಯುತ್ತ ಹೋದ ಹಾಗೆಲ್ಲ ತಾನು ಬಿದ್ದ ಹೊಂಡ ಆನೆ ಹಿಡಿಯಲು ಮಾಡಿದ ಹೊಂಡವಿರಬಹುದೇ ಎಂದು ಅನುಮಾನ ಬಂತು. +ಅಲ್ಲಿನ ಕೃತ್ರಿಮತೆ ಅದನ್ನು ಖಾತ್ರಿ ಮಾಡುತ್ತಲೇ ಆನೆಗಳನ್ನು ಹೊಂಡದಲ್ಲಿ ಬೀಳಿಸಿ ನಂತರ ಹಿಡಿಯುತ್ತಾರೆ ಎಂಬ ಸುದ್ದಿಗಳು ಹರಡಿದ್ದು ನೆನಪಾಗಿ ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಆನೆಯೊಂದು ಅದರಲ್ಲಿ ಬೀಳಬಹುದೆಂದು ಅನಿಸಿತು. +ಹಾಗೆ ಅನಿಸುತ್ತಲೇ ಮೈಯ ಕಸುವೆಲ್ಲ ಇಂಗಿ ಕಸಕ್ಕನೇ ಕುಳಿತು ತಲೆಗೆ ಕೈಕೊಟ್ಟ. +ಗುಡಿಸಲಲ್ಲಿ ಮಗಳು ನಾಗಿ, ಮಗ ಭೈರನ ನೆನಪಾಗಿ ಕಣ್ಣಲ್ಲಿ ನೀರು ಉದುರಿದವು. +ಸ್ವಲ್ಪ ಹೊತ್ತಿಗೆಲ್ಲ ಚೇತರಿಸಿಕೊಂಡ. +ಧೈರ್ಯ ತಂದುಕೊಂಡು ಎದ್ದ. +ಕೊನೆಯ ಪ್ರಯತ್ನವನ್ನು ನಿಶ್ಚಯಿಸಿದಂತೆ ಸುತ್ತಲೂ ನೋಡಿದಾಗ, ಸುತ್ತ ಕೆತ್ತಿದ್ದ ಗೋಡೆ ಸಾಪಾಗಿ ಏರಲು ಸಾಧ್ಯವಾಗದಂತೆ ನಯವಾಗಿ ಕಂಡಿತು. +ಕಿಡಿ ಬಳಿ ತೂರಾಡುತ್ತಿದ್ದ ಕತ್ತಿಯಾದರೂ ಕೆಳಗೆ ಬಿದ್ದರೆ ಎಂದು ಯೋಚಿಸಿದ. +ಪ್ರತಿಭೆ ಹೊಳೆದಂತೆ ಕಂಬಳಿಯನ್ನು ಹುರಿಯಂತೆ ಸುತ್ತಿ ಕತ್ತಿಯತ್ತ ಬೀಸಿದ. +ಒಂದೆರಡು ಸಲ ಅದು ಕಂಬಳಿಗೆ ತಾಗಲೇ ಇಲ್ಲ. +ಮತ್ತೊಮ್ಮೆ ಎಸೆದಾಗ ಕಂಬಳಿಯ ಕರೆ ಸಿಕ್ಕಿ ಕತ್ತಿ ಜಾರಿತು. +ಅದು ಕೆಳಕ್ಕೆ ಬಿದ್ದಾಗ ತಪ್ಪಿಕೊಳ್ಳಲು ಯತ್ನಿಸಿದನಾದರೂ ಅದರ ಹಿಡಿ ಭುಜಕ್ಕೆ ಕುಕ್ಕಿದ್ದರಿಂದ ಇನ್ನೊಮ್ಮೆ ಏಟಾಯಿತು. +ಗಾಯವಾಗದೇ ಇದ್ದುದರಿಂದ ಅದನ್ನು ಉಜ್ಜಿಕೊಂಡು ಮುಂದೇನೆಂದು ಯೋಚಿಸುತ್ತಿದ್ದಾಗ ಕಿಂಡಿಯಿಂದ ಇಳಿಯುತ್ತಿದ್ದ ಬೆಳಕು ಕ್ಷೀಣವಾಗತೊಡಗಿದ್ದು ಗಮನಕ್ಕೆ ಬಂತು. +ಅದೇ ಮೊದಲ ಸಲಕ್ಕೆ ಧೈರ್ಯಕ್ಕಾಗಿ ಊರ ಭೂತರಾಯನನ್ನೂ ಕೆರೆಯಾಚೆಯ ಚೌಡಿಯನ್ನೂ ನೆನೆಸಿಕೊಂಡು ಕತ್ತಿಯ ಹಿಡಿಯನ್ನು ಭದ್ರವಾಗಿ ಹಿಡಿದುಕೊಂಡು ಮೆಟ್ಟಲುಗಳನ್ನು ಕೊರೆಯಲು ಆರಂಭಿಸಿದ. +ಕತ್ತಿಯ ಮೂತಿಯಿಂದ ಕುಕ್ಕಿದ ಹಾಗೆ ಕಲ್ಲಿನ ಮಲೆ ಕುಟ್ಟಿದಂತೆ ಕೈ ಉರಿಯುತ್ತಿತ್ತು. +ಒಂದು ಹಿಡಿ ಮಣ್ಣು ಪ್ರತಿಸಲಕ್ಕೆ ಉದುರುತ್ತಿತ್ತು. +ಯಾವ ಆಧಾರವೂ ಇಲ್ಲದೆ ಹತ್ತಬೇಕಿದ್ದುದರಿಂದ ಕೆಳಗಿನ ಮೆಟ್ಟಿಲುಗಳು ದೊಡ್ಡವಾಗಿರಬೇಕೆಂದು ಅಂದಾಜು ಮಾಡಿದ. +ಮೈಮೇಲೆ ಆವೇಶ ಬಂದವನಂತೆ ಮೆಟ್ಟಿಲುಕೊರೆಯುತ್ತಿದ್ದರಿಂದ ಕತ್ತಲು ಕವಿಯುವ ಸೂಚನೆಯಾಗಿ ಜೀರುಂಡೆಗಳು ಕರ್ಕಶವಾಗಿ ಅರಚುವುದು ಅವನಿಗೆ ಕೇಳಿಸಲೇ ಇಲ್ಲ. +ಕೊರೆದ ಕೆಳಗಿನ ಮೆಟ್ಟಿಲುಗಳ ಮೇಲೆ ನಿಂತುಕೊಂಡು ಮೇಲೆ ಕೊರೆಯುತ್ತಿದ್ದಾಗ ಕಣ್ಣಿಗೆ ಮಣ್ಣು ಉದುರಿ ಬೀಳುತ್ತಿತ್ತು. +ಕತ್ತಲಿನಲ್ಲಿ ಎಷ್ಟೋ ಏಟುಗಳು ವ್ಯರ್ಥವಾಗಿ ಹೋಗುತ್ತಿದ್ದವು. +ಸುಮಾರು ನಾಲ್ಕೈದು ಮೆಟ್ಟಿಲುಗಳನ್ನು ಕೊರೆಯುವ ಹೊತ್ತಿಗೆ ಅರ್ಧ ಹೆಣವಾದಂತಾಗಿದ್ದ ಇನ್ನೂ ಸುಮಾರು ಒಂದಾಳು ಹತ್ತಬೇಕಾಗಿದ್ದದರಿಂದ ಮತ್ತೆ ಎಲ್ಲ ಬಲವನ್ನು ಒಟ್ಟುಗೂಡಿಸಿ ಹುಚ್ಚನಂತೆ ಕತ್ತಿಯಿಂದ ಕುಕ್ಕಿ ಮಣ್ಣು ಉದುರಿಸತೊಡಗಿದ. +ಕೈಚಾಚಿದರೆ ನೆಲ ಸಿಗಬಹುದಾದಷ್ಟು ಮೇಲೆ ಬಂದು ಸುತ್ತ ನೋಡಿದಾಗ ದಾಸಣ್ಣನಿಗೆ ಅಲ್ಲಿಯವರೆಗೆ ಉಳಿಸಿಕೊಂಡಿದ್ದ ಧೈರ್ಯವೆಲ್ಲ ಇಂಗಿಯೇ ಹೋಯಿತು. +ದಟ್ಟವಾದ ಕತ್ತಲು. +ಅಲ್ಲಲ್ಲಿ ಮಿಂಚುವ ಹುಳುಗಳ ಮಿಣುಕು ಬೆಳಕು. +ಮೇಲೇರಲು ಪ್ರಯತ್ನಿಸುತ್ತ ಪೆಟ್ಟಾಗಿದ್ದ ಕಾಲನ್ನು ಮಗ್ಗುಲಾಗಿ ಹೊರಳಿ ಎತ್ತಿ ಹಾಕಿ, ಕೈಗೆ ಆಧಾರವಾಗಿ ನೆಲದ ಮೇಲಿನ ಹುಲ್ಲನ್ನೋ, ಗಿಡಗಳನ್ನೋ ತಡವತ್ತಿದ್ದಾಗ ದೂರದಲ್ಲೆಲ್ಲೋ ಬೆಳಕಿನ ಮಿಂಚು ಹರಿದಂತಾಯಿತು. +ಅದು ಬ್ಯಾಟರಿಯ ಬೆಳಕೆಂದು ಅವನು ಯೋಚಿಸುವ ಮೊದಲೇ ಕಾಡೆಲ್ಲ ಮೊಳಗುವಂತೆ ಭಯಂಕರ ಶಬ್ದವಾಗಲು ಅದೇ ಸ್ಥಿತಿಯಲ್ಲಿ ಹೊರಳ ಹೊಸಲೋಕಕ್ಕೆ ಬಂದ ಹಾಗೆ ಉಸಿರೆಳೆಯುವ ಹೊತ್ತಿಗೆ ದೂರದಲ್ಲಿ ಮಾತುಗಳು ಕೇಳತೊಡಗಿದವು. +ಸ್ವಲ್ಪ ಹೊತ್ತಿಗೆ ಮತ್ತೊಂದು ಅಂಥದೇ ಸದ್ದಾಗಲು ಅದು ಬಂದೂಕಿನ ಸದ್ದೆಂದು ತಿಳಿಯುವ ಮೊದಲೇ ಜೋರಾಗಿ ಕಿರುಚಿ ಪ್ರಜ್ಞಾಹೀನನಾಗಿ ಅಲ್ಲೇ ಮಗ್ಗುಲಾದ. +ಕಾಲುಗಳು ಇನ್ನೂ ಕಿಂಡಿಯ ಹತ್ತಿರವೇ ಇದ್ದವು. +ಶಿಕಾರಿ: +"ಇಲ್ಲಿ ಈ ಕೊಟ್ಟಿಗೆ ಕಟ್ಟಿದೀನಲ್ಲ, ಒಂದಾನೊಂದು ಕಾಲದಲ್ಲಿ ಈ ಜಾಗದಲ್ಲಿ ಹುಲಿ ಮಲಗ್ವಿತ್ತು ಅಂತಾರೆನೋಡಿ. +ಅಷ್ಟು ದೊಡ್ಡಕಾನು, ನರಸಪ್ಪನೋರೆ. +ಈಗ ನೋಡಿ ಕಾನೆಲ್ಲ ಬಯಲಾಗಿದೆ. +ನಮ್ಮ ಈ ಮಲೆನಾಡು,ಬಯಲುಸೀಮೆ ಆಗೋದೇನು ಜಾಸ್ತಿ ವರ್ಷ ಇಲ್ಲ" ಎನ್ನುತ್ತಾ ಅವರು ಮುಂದೆ ತಮ್ಮ ಜಮೀನು ಕಡೆ ನಡೆದರು. +ನರಸಪ್ಪ ಜೊತೆಯಲ್ಲಿ ಬಂದವನನ್ನು ಉದ್ದೇಶಿಸಿ, "ನಿನಗೆ ಇವರು ಯಾರೂಂತ ಹೇಳಲೇ ಇಲ್ಲವಲ್ಲ, ಇವರೇ ಭೈರನಾಯ್ಕರು ಅಂತ. +ನಾನು ಇಲ್ಲಿಗೆ ಮೊದಲು ಬಂದಾಗ ಬಾಳ ಸಹಾಯ ಮಾಡಿದೋರು" ಎಂದು ಗದ್ದೆ ಇಳಿಯುತ್ತಿದ್ದ ನಾಯ್ಕರನ್ನು ಕೂಡಿಕೊಳ್ಳಲು ಬೇಗ ಬೇಗ ನಡೆದ. +ವಯಸ್ಸಾದ ನಾಯ್ಕರು ಒಂದೆರಡು ಗದ್ದೆಯ ನೀರು ಕಟ್ಟಿದರು. +ಬೆಳೆದು ನಿಂತ ಬತ್ತದ ಮಧ್ಯೆ ಹೋಗಿ ಒಂದುಗೂಟವನ್ನು ನೆಟ್ಟು ತುದಿಗೆ ಹುಲ್ಲು ಸಿಂಬೆ ಸುತ್ತಿದರು. +ಇಲಿಗಳಿಗೂ, ಗ್ವಾಕ ಎಂಬ ಇಲಿಗಳ ಜಾತಿಯ ಪ್ರಾಣಿಗಳಿಗೂ ಅದರಿಂದ ಅಂಜಿಕೆಯಾಗಿ ಪೈರು ನಾಶವಾಗುವುದು ಸ್ವಲ್ಪಮಟ್ಟಿಗಾದರೂ ತಪ್ಪುವುದಂತೆ. +ನರಸಪ್ಪ, ನಾಯ್ಕರನ್ನು ಸಮೀಪಿಸುತ್ತ "ಈ ವರ್ಷ ಬೆಳೆ ಹೇಗೆ ನಾಯ್ಕರೇ" ಎಂದು ವಿಚಾರಿಸಲು ಆರಂಭಿಸಿದ. +ನಾಯ್ಕರು ಆ ಮಾತಿಗೆ ಏನೂ ಹೇಳದೆ ನರಸಪ್ಪನ ಜೊತೆಯಲ್ಲಿದ್ದ ಹೊಸ, ಅವನು ನರಸಪ್ಪನಂತೇ ಖಾಕಿ ಷರಟು ಹಾಕಿ ಅದೇ ತರದ ಪ್ಯಾಂಟು ಹಾಕಿದ್ದ. +ವ್ಯಕ್ತಿಯನ್ನು ನೋಡಿ "ನನ್ನ ಮರೆವು ನೋಡಿ, ಈ ಹೊಸಬರ್ಯಾರು ಅಂತ ಆಗಲೇ ಕೇಳಲಿಲ್ಲ" ಎಂದರು. + "ಇವರು, ನನಗೆ ಈಗ ವರ್ಗ ಆಯ್ತಲ್ಲ. +ನನ್ನ ಜಾಗಕ್ಕೆ ಇವರು ಬಂದಿದಾರೆ ಹನುಮಂತಪ್ಪ ಅಂತ. +ಹೀಗೆ ಸ್ಥಳ ಪರಿಚಯ ಆಗ್ಲಿ ಅಂತ ಸಾಹೇಬರು ಕಳಿಸಿದಾರೆ. +ಅದಕ್ಕೇ ಇವತ್ತು ನಾವು ಬಂದದ್ದು" ಎಂದು ತಾವು ಸೈಕಲ್ಲಿನಲ್ಲಿ ಸರ್ಕಾರಿ ರಸ್ತೆಯಿಂದ ಐದಾರು ಮೈಲುದೂರದ ಆ ಹಳ್ಳಿಗೆ ಬಂದ ಉದ್ದೇಶವನ್ನು ಹೇಳಿದ. +ನಾಯ್ಕರು "ಹಂಗಾರೆ ಹೆಂಗೂ ಹೊಸಬರುಬಂದಿದಾರೆ. +ನಾಳೆ ಭೂಮಿ ಹುಣ್ಣಿಮೆ. +ಇವತ್ತು ಇಲ್ಲೇ ಉಳುದು ಹೋಗಬಹುದಲ್ಲ" ಎಂದು ಹನುಮಂತಪ್ಪನ ಮುಖ ನೋಡಿದರು. +ಹನುಮಂತಪ್ಪನ ಬದಲಿಗೆ ನರಸಪ್ಪನೇ ಬಾಯಿ ಹಾಕಿ, "ಈಗ ಹೆಂಗೂ ಹೊತ್ತಿದೆಯಲ್ಲ,ಇವನಿಗೆ ಈ ಕಡೆಯ ಕೆಲವು ಕಾನುಗಳನ್ನು ತೋರಿಸಿ ಕರ್ಕಂಡು ಬರ್ತೀನಿ. +ಸಾಯಂಕಾಲ ಹೆಂಗೂ ನಿಮ್ಮಲ್ಲಿ ಉಳೀಬಹುದು" ಎಂದ. +"ಹಂಗಾರೆ ಸೈಕಲ್ಲು ಇಲ್ಲೇ ಇಟ್ಟು ಹೋಗಿ. +ಕಾನು ಹಾದಿಯಲ್ಲಿ ಸೈಕಲ್ಲು ತಳ್ಳೋದಕ್ಕೂ ಆಗಲ್ಲ. +ಸಾಯಂಕಾಲ ಕಾಯ್ತೇವಿ" ಎಂದು ಹೇಳುತ್ತ ನಾಯ್ಕರು ಗದ್ದೆ ಕಡೆಯಿಂದ ತಮ್ಮ ತೋಟದತ್ತ ತಿರುಗಿ ಮರೆಯಾದರು. +ಹನುಮಂತಪ್ಪ ಸುಮಾರು ಇಪ್ಪತ್ತು ಇಪ್ಪತ್ತೆರಡರ ಯುವಕನಾಗಿದ್ದ. +ಓದಿದ್ದು ಎಸ್ಸೆಸ್ಸೆಲ್ಸಿ. +ಅವನಿಗೆ ಮುಂದೆ ಓದಲು ಶಕ್ತಿಯಿಲ್ಲದ್ದರಿಂದ ಎರಡು ಮೂರು ವರ್ಷ ಕೆಲಸಕ್ಕೆ ಅಲೆದಾಡಿದ್ದ. +ಕೆಲಸ ಸಿಗದೆ ಬೇಸತ್ತು ಕೂಲಿಗೆ ಹೋಗುತ್ತಿದ್ದಾಗ ಅವನ ಬಗ್ಗೆ ತಿಳಿದ ಆ ಭಾಗದ ದೊಡ್ಡಮನುಷ್ಯರೊಬ್ಬರು ಫಾರೆಸ್ಟ್‌ ಗಾರ್ಡ್‌ ಕೆಲಸ ಕೊಡಿಸಿದರು. +ಅವನು ಗಾರ್ಡ್‌ ಆಗಿ ಬಯಲು ಸೀಮೆಯ ಕಡೆ ಅಲೆದಾಡಿಕೊಂಡೇ ಸಂಬಳ ಪಡೆಯತೊಡಗಿದ. +ಅವನಿಗೆ ಈಗ ಮಲೆನಾಡಿಗೆ ವರ್ಗವಾಯಿತು. +ಅವನ ಊರು ಹೊನ್ನಾಳಿಯ ಕಡೆಯ ಹಳ್ಳಿಯಾದುದರಿಂದ ಮಲೆನಾಡು ಅವನಿಗೆ ಬರಿಯ ಪುಸ್ತಕದಷ್ಟಕ್ಕೆ ಸೀಮಿತವಾಗಿತ್ತು . +ದೂರದಲ್ಲಿ ಮಸುಕಾಗಿ ಕಾಣುವ ಪಶ್ಚಿಮ ಘಟ್ಟಗಳೂ ಸಹ್ಯಾದ್ರಿಯ ಶ್ರೇಣಿಯೂ ಅವನಿಗೆ ಮಲೆನಾಡಿನ ದಟ್ಟಣೆಯನ್ನು ನೆನಪಿಸುತ್ತಿದ್ದವು. +ಹೊಸದಾಗಿ ಕಾಡಿನಲ್ಲಿ ತಿರುಗಾಡಬಹುದಾದ ಅನುಭವಕ್ಕೆ ಅವನು ಕಾತರನಾಗಿದ್ದ. +ರೇಂಜರ್‌ಸಾಹೇಬರು ಅವನು ಬಂದ ಸುರುವಿನಲ್ಲಿ ಸ್ಥಳ ಪರಿಚಯಕ್ಕೆ ಹಳೆಯ ಗಾರ್ಡ್‌ ನರಸಪ್ಪನನ್ನೇ ಹೆಸರಿಸಿ ಕಳಿಸಿದ್ದರು. +ಹಾಗಾಗಿ ಅವರಿಬ್ಬರೂ ಅಂದು ಸೈಕಲ್ಲು ತುಳಿದಿದ್ದರು. +ಭೈರನಾಯ್ಕರ ಮನೆ ಕಳಸೆ ಘಟ್ಟದ ತಪ್ಪಲಲ್ಲಿ ಇದ್ದಿತ್ತಾದ್ದರಿಂದ ಒಂದೆರಡು ಬೀಟಿನ ಜಾಗಗಳನ್ನು ನೋಡಲು ಅವರು ಕಳಸೆ ಘಟ್ಟವನ್ನು ಏರಿ ಅದರಾಚೆಯ ಕಣಿವೆಯನ್ನು ಇಳಿದು ತಮ್ಮ ವ್ಯಾಪ್ತಿಯ ಜಾಗಗಳನ್ನು ತಲುಪಬೇಕಿತ್ತು. +ಮಲೆನಾಡಿನಲ್ಲಿ ಐದು ಹತ್ತು ಎಕರೆ ವಿಸ್ತಾರದಲ್ಲಿ ಇರುವ ಕಾನಿಗೂ ಪ್ರತ್ಯೇಕ ಹೆಸರುಗಳಿರುವ ಸಾಧ್ಯತೆಯಿರುವುದರಿಂದ ಸಾಹೇಬರು ಹೇಳಿದ ಕಾನುಗಳು ಅಷ್ಟು ದೊಡ್ಡವೂ ವ್ಯಾಪ್ತಿಯುಳ್ಳವೂ ಆಗಿರಲಿಲ್ಲ. +ಆದರೂ ತಮ್ಮ ಬೀಟಿನ ಗಡಿಗಳನ್ನು ತಿಳಿದಿರಬೇಕೆಂದು ರೇಂಜ್‌ ಸಾಹೇಬರ ಉದ್ದೇಶವಾಗಿತ್ತು. +ಅವರಿಬ್ಬರೂ ಅದೂ ಇದೂ ಮಾತಾಡುತ್ತ ಕಳಸೆ ಘಟ್ಟವನ್ನು ಏರುತ್ತಿದ್ದಾಗ ಹಿಂಬದಿಯಿಂದ ಯಾರೋ ಕೆಮ್ಮಿದ ಸದ್ದಾಯಿತು. +ತಿರುಗಿ ನೋಡಿದಾಗ "ನೀವಿನ್ನೂ ಇಲ್ಲೇ ಹೋಗ್ತಾ ಇದೀರ" ಎನ್ನುತ್ತ ವಯಸ್ಸಾದ ಭೈರನಾಯ್ಕರು ಬೇಗ ಬೇಗ ಬಂದು ಕೂಡಿಕೊಂಡರು. +ಮೂರು ಜನ ಕೊರಕಲು ಹಾದಿಯಲ್ಲಿ ಒಬ್ಬರ ಹಿಂದೆಒಬ್ಬರು ನಡೆಯತೊಡಗಿದರು. +ನಾಯ್ಕರಿಗೆ ಪರಿಚಿತ ಹಾದಿಯಾದುದರಿಂದ ಅವರಷ್ಟು ಚುರುಕಾಗಿ ಹೆಜ್ಜೆಹಾಕಲು ಹನುಮಂಂತಪ್ಪನಿಗಿರಲಿ, ನಾಲ್ಕೈದು ವರ್ಷ ಅಲ್ಲೇ ಕಳೆದಿದ್ದ ನರಸಪ್ಪನಿಗೂ ಸಾಧ್ಯವಾಗಲಿಲ್ಲ. +ಬಿಸಿಲುಜೋರಾಗಿದ್ದುದು ಅವರೆಲ್ಲರ ದಣಿವಿನಿಂದ ಸ್ಪಷ್ಟವಾಗಿತ್ತು. + ಹನುಮಂತಪ್ಪನ ಕಂಕುಳಲ್ಲೆಲ್ಲ ಬೆವರು ಸುರಿದು ಒದ್ದೆಯಾಗಿತ್ತು. + ಮುಂದೊಂದು ಕಡೆ ಚಾಚಿದ ಬಂಡೆಯೊಂದರ ಮೇಲೆ ಅವರೆಲ್ಲ ನಿಂತರು. +ಅಲ್ಲಿಯವರೆಗೂ ಸುತ್ತಮುತ್ತ ನೋಡಲು ಅವನಿಗೆ ಸಾಧ್ಯವಾಗಿರಲಿಲ್ಲ. +ಬಂಡೆಯ ಮೇಲೆ ನಿಂತವನು ಸುತ್ತ ನೋಡಿದಾಗ ಹೊಸ ಪ್ರಪಂಚಕ್ಕೆ ಬಂದವನಂತೆ ಬೆಚ್ಚುವಂತಾದ. +ಸುತ್ತಲೂ ಕೆಳಗೆ ಪ್ರಪಾತದಂತಹ ಕಣಿವೆ, ಮೇಲೆ ನೋಡಿದರೆಇನ್ನೂ ಏರಬೇಕಾದ ಘಟ್ಟ ಇದಕ್ಕೆ ಘಟ್ಟ ಅನ್ನುವುದಕ್ಕಿಂತ ಪರ್ವತ ಅನ್ನುವುದೇ ಸೂಕ್ತ ಅನ್ನಿಸಿದರೂಅದನ್ನು ಹೇಳಲು ಹೋಗಲಿಲ್ಲ. +ಭೈರನಾಯ್ಕರು ಬೆರಗಾಗಿ ನೋಡುತ್ತಿದ್ದ ಹನುಮಂತಪ್ಪನತ್ತ ತಿರುಗಿ, "ಎನು ಅಷ್ಟು ನೋಡ್ತೀರಿ ರಾಯ್ರೇ? +ನೀವು ಎಷ್ಟೇ ಎಚ್ಚರಿಕೆಯಿಂದ ಇದ್ರೂ ಕಿಟ್ಟಪ್ಪಯ್ಯನ ಕಣ್ಣಿಂದ ಯಾವ್ದೇ ಬೀಟೆಮರ ತಪ್ಪಿಸಿಕೊಳ್ಳೋದಿಲ್ಲ" ಎನ್ನುತ್ತಾ ನಕ್ಕರು. +ನರಸಪ್ಪನಿಗೆ ಕಿಟ್ಟಪ್ಪಯ್ಯ ಯಾರು ಎನ್ನುವುದು ಗೊತ್ತಿದ್ದರೂ ಅದು ನಾಯ್ಕರಿಂದಲೇ ಬರಲಿ ಎಂದು ಸುಮ್ಮನಾದ. +ಹೊಸಬನಾದ ಹನುಮಂತಪ್ಪ "ಯಾರು ಆ ಕಿಟ್ಟಪ್ಪಯ್ಯ?" ಎಂದು ನಾಯ್ಕರನ್ನೂ ನರಸಪ್ಪನನ್ನೂ ನೋಡಿದ. +ನಾಯ್ಕರು ಮಾತಾಡದೆ ಬಂಡೆಯಿಂದ ಕೆಳಗೆ ಸ್ವಲ್ಪ ದೂರ ಇಳಿದು ಮರಗಳ ಸಂದಿನಿಂದ ಕಿರಿದಾಗಿ ನೋಡಿ ಕೈಸನ್ನೆಯಿಂದ ಹನುಮಂತಪ್ಪನನ್ನು ಕರೆದರು. +ಅಲ್ಲೊಂದು ಗದ್ದೆಯ ಕೋವು ಚಿಕ್ಕದಾಗಿ ಕಾಣಿಸುತ್ತಿತ್ತು. +ಜೊತೆಗೆ ಹಂಚಿನ ಮನೆ, ಅಡಿಕೆ ತೋಟ. +"ಅಲ್ಲಿಕಾಣ್ತಾ ಐತಲ್ಲ, ಅದೇ ಕಿಟ್ಟಪ್ಪಯ್ಯನ ಮನೆ" ಎಂದರು. +ಹನುಮಂತಪ್ಪ ಕಿರಿದಾಗಿ ದಿಟ್ಟಿಸಿದ. +ಅಲ್ಲಲ್ಲಿ ದೊಡ್ಡದೊಡ್ಡ ಮರಗಳನ್ನು ಕಡಿದ ಗುರುತುಗಳಿದ್ದವು. +ಕೆಲವನ್ನು ಗರಗಸದಿಂದಲೂ ಕೆಲವನ್ನು ಕೊಡಲಿಯಿಂದಲೂ ಕಡಿದಿದ್ದರು. +ಮರದ ಬುಡದಿಂದ ಚೂರಿಯ ಅಲಗಿನಂತೆ ಚಕ್ಕೆಗೆಳೆದ್ದಿದ್ದವು. +ಕೆಳಗೆ ಕಣಿವೆ ಪ್ರಪಾತದಂತಿತ್ತು. +ಅನುಭವವಿಲ್ಲದವರಿಗೆ ತಲೆ ಸುತ್ತು ಬರಬಹುದಾದ ಕಂದಕಗಳು. +ಕೆಳಗೆ ಕಣಿವೆಯಲ್ಲಿದ್ದ ಬಿದಿರು ಒಂಡಿಲುಗಳು ಸಣ್ಣದಾಗಿ ಕಾಣುತ್ತಿದ್ದವು. +ಸುತ್ತಲೂ ನೋಡುತ್ತ ನಾಯ್ಕರ ಕಡೆ ತಿರುಗಿದಾಗ ಅವರು ಮತ್ತೆ ಮುಂದುವರಿಸಿದರು. +"ಈ ನಮ್ಮ ಹೋಬಳಿಗೆ ಅವನಿಲ್ದೆ ಹೋಗಿದ್ರೆ ಎಷ್ಟೋ ಒಳ್ಳೆದಾಗಿತ್ತು ನೋಡಿ. +ಊರು ತುಂಬಾ ಅವಂದೇ ಕಿತಾಪತಿ. +ಊರು ಪಂಚಾತಿಗೆ ನಡೆಸೋದು, ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಇದೇ ಉಸಾಬರಿ ಮಾಡ್ಕಂಡು ಪುಟ್ಟ ಲಾಯರಾಗಿದಾನೆ. +ಹೋದ ವರ್ಷ ಸ್ವಲ್ಪ ಗಂಧ ಸಾಗಿಸಿದ್ದ ಅಂತ ವರ್ತಮಾನ. +ಬೀಟೇನೂ ಹೋಯ್ತು ಅಂತಾರೆ. +ಇನ್ನೆನೋ ಈ ವರ್ಷ ಹೋಯ್ತಂತೆ. +ಸರ್ಕಾರ ಇಷ್ಟು ಕೆಲಸ ಮಾಡ್ತೀನಿ ಅಂತ ಹಟಾತೊಟ್ರೂ ಕಾನಾಗೆ ಮರ ಕಡಿಯೋದು ನಿಂತಿಲ್ಲ. +ನಾನು ಆಗ್ಲೇ ಹೇಳಿದ್ದೆಲ್ಲ. +ನೀವಿನ್ನೇನು ಮಾಡೋದು? +ಸರಿಯಾಗಿ ಕಾನೇ ಇರೋಕಡೆ ಕಡೀತೀರಿ. +ನೀಲಗಿರೀನೋ ಇನ್ನೇನೊ ಹಾಕ್ತೀರಿ. +ದೇಶದ್ದೇ ಆಸ್ತಿ ಇರಬಹುದು. +ಆದರೆ ಕಾಡೆಲ್ಲ ಕಡಿಮೆಯಾಗಿ ಇತ್ತೀಚೆಗೆ ಬರೋ ಮಳೆ ಯಾತ್ಯಾತಕ್ಕೂ ಸಾಲದು,ನೋಡಿ" ಎಂದರು. +ಹನುಮಂತಪ್ಪ ನಾಯ್ಕರ ಮಾತಿಗೆ ಸುಮ್ಮನೆ ತಲೆಯಾಡಿಸುತ್ತಿದ್ದ. +ನರಸಪ್ಪನಿಗೆ ಇದೆಲ್ಲ ಹಿಂದೆ ಎಷ್ಟೋ ಸಲ ಕೇಳಿಯಾಗಿತ್ತು. +ಅವರು ಘಟ್ಟ ಏರಿ, ತುದಿಯನ್ನು ಮುಟ್ಟಿ ಆಚೆಯ ಕಣಿವೆ ಇಳಿಯುವವರೆಗೂ ನಾಯ್ಕರೊಬ್ಬರೇ ಮಾತಾಡುತ್ತಿದ್ದರು. +ಕಳಸೆ ಘಟ್ಟದ ಆಜೆಯ ಮೈಯನ್ನು ಇಳಿದು ಸಮಜಾಗಕ್ಕೆ ಬಂದಾಗ ಅವರು ತಿರುಗಿ,"ನಾನು ಇಲ್ಲೇ ಹೋಗ್ಬೇಕು. +ಸಾಯಂಕಾಲ ಬಂದ್ದಿಡಿ" ಎಂದು ಅಡ್ಡದಾರಿಯೊಂದನ್ನು ಹಿಡಿದರು. +ಸ್ವಲ್ಪ ದೂರಹೋಗಿ ನಿಂತು, "ಹೊತ್ತು ಇದ್ದ ಹಾಗೇನೇ ಬನ್ನಿ" ಎಂದು ಕೂಗಿದರು. +ಹನುಮಂತಪ್ಪ ಹೊಸ ಹೊಸ ಜಾಗಗಳನ್ನು ಬೆರಗಾಗಿ ನೋಡುತ್ತಿದ್ದ ಆಶ್ವೀಜದ ಮೋಡಗಳು ಆಕಾಶದಲ್ಲಿ ಚದುರಿದ್ದವು. +ಕೆಳಗೆ ದೃಷ್ಟಿ ಹರಿಯುವವರೆಗೂ ಕಣ್ಣು ತುಂಬುವ ಹಸಿರು. +ಎಷ್ಟು ನೋಡಿದರೂ ತೀರದಷ್ಟು ಹಸಿರು. +ಮಧ್ಯಾಹ್ನದ ಆ ಇಳಿ ಹೊತ್ತಿನಲ್ಲಿ ಅಲ್ಲೊಂದು ಇಲ್ಲೊಂದು ಪಿಕಳಾರ ಹೊರಸಲು ಹಕ್ಕಿಗಳ ಕೂಗುಬಿಟ್ಟರೆ ಉಳಿದಂತೆ ಸುತ್ತಲೂ ನೀರವತೆ. +ಅವನು ಸುಮ್ಮನೆ ನಡೆಯುತ್ತಿದ್ದುದನ್ನು ನರಸಪ್ಪ "ಈಗ ನಾವು ಇಲ್ಲೇ ಹುಲಿಕೆರೆ ಜಡ್ಡು ಅಂತ ಇದೆ, ಅಲ್ಲೀವರೆಗೆ ಹೋಗಿ ಬಂದರೆ ಸಾಲದಾ? +ಹೆಂಗೂ ನೀನು ಇಲ್ಲೇ ಇರಾಂವಸೈಯಲ್ಲ?" ಎಂದು ತನ್ನ ಆಯಾಸವನ್ನು ವ್ಯಕ್ತಪಡಿಸಿದ. +"ಹಾಗಾದ್ರೆ ಹಂಗೇ ಮಾಡುವ, ಎಷ್ಟು ದೂರ ಆಗುತ್ತೆ ಆ ಜಡ್ಡು?" ಎಂದು ಹನುಮಂತಪ್ಪ ತನ್ನ ಸಮ್ಮತಿಯನ್ನು ಸೂಚಿಸಿದ. +"ಇಲ್ಲೇ, ಒಂದು ಒಂದೂವರೆ ಮೈಲಾಗಬಹುದು" ಎಂದು ನರಸಪ್ಪ ಅಲ್ಲಿಯೇ ಒಂದು ಒಳದಾರಿಯನ್ನು ಹಿಡಿದ. +ಹಿಂಬಾಲಿಸಿದ ಹನುಮಂತಪ್ಪನಿಗೆ ಅದುವರೆಗಿನ ಆಯಾಸಕ್ಕಿಂತಲೂ ಹೆಚ್ಚಾಗಿ ಕಳಸೆ ಘಟ್ಟದ ಸಂದಿನಿಂದ ಕಂಡಪುಟ್ಟ ಹಂಚಿನ ಮನೆ, ತೋಟಗಳ ಕಿಟ್ಟಪ್ಪಯ್ಯನೇ ಯೋಚನೆಯಾಗಿತ್ತು. +ಅವರು ಸುಮಾರು ಒಂದು ಮೈಲು ನಡೆದಿರುವ ಹೊತ್ತಿಗೆ ಅಲ್ಲಿಗೆ ಇಪ್ಪತ್ತು ಮೂವತ್ತು ಜನಗಳ ಕೂಗುಗಳು ಒಂದೇ ಸಮನೆ ಎದುರು ದಿಕ್ಕಿನಿಂದ ಕೇಳಿಸತೊಡಗಿತು. +ದೂರದಿಂದ ಬರಿಯ ಹುಯ್ಯಲಿನಂತೆ ಕೇಳಿಸುತ್ತಿದ್ದ ಆ ಗಲಾಟೆ ಹತ್ತಿರ ಹತ್ತಿರವಾದಂತೆ ಸ್ಪಷ್ಟವಾಗತೊಡಗಿತು. +ಹಳಬನಾದ ನರಸಪ್ಪನಿಗೆ ಆ ಹುಯ್ಯಲಿನಇತ್ಯೋಪರಿಗಳೆಲ್ಲ ಗೊತ್ತಿದ್ದರಿಂದ "ಸೂಳೇಮಕ್ಕಳು ಬೇಟೆ ಕೂಡಿದಾರಂತ ಕಾಣುತ್ತೆ. +ಹೋಗೋಣವಾ?"ಎಂದು ಹನುಮಂತಪ್ಪನ ಮುಖ ನೋಡಿದ. +ಉತ್ಸುಕತೆಯನ್ನು ತುಂಬಿಕೊಂಡಂತೆ ಇದ್ದ ಹನುಮಂತಪ್ಪ "ನಡೀರಿ" ಅಂದ. +ಅವರು ಬೇಗ ಬೇಗ ಹೆಜ್ಜೆ ಹಾಕಲು ಆರಂಭಿಸಿದರು. +ಮೊದಲೇ ಘಟ್ಟ ಹತ್ತಿ ಆಯಾಸವಾಗಿದ್ದವರಿಗೆ ಇನ್ನಷ್ಟು ಆಯಾಸವಾಗತೊಡಗಿತು. +ಆದರೆ ಅದನ್ನು ಇಬ್ಬರೂ ತೋರಿಸಿಕೊಳ್ಳಲು ಇಷ್ಟಪಡಲಿಲ್ಲ. +ನರಸಪ್ಪ ಏದುತ್ತಲೇ ಮಾತಾಡುತ್ತಿದ್ದ. +"ನಾಯ್ಕರು ನಾಳೆ ಹಬ್ಬ ಅಂದ್ರಲ್ಲ. +ಅದಕ್ಕೆ ಕಡುಬು ಅದೂ ಇದೂ ಮಾಡ್ತಾರೆ. +ಬಾಡು ಏನಾದ್ರೂ ಇದ್ರೆ ಅವನ್ನ ಖರ್ಚು ಮಾಡಬಹುದು ಅಂತ ಹೀಗೆಸೋಬೇಟೆ ಕೂಡಿದಾರೆ" ಎಂದು ಒಂದೆಡೆ ನಿಂತ. +ಹನುಮಂತಪ್ಪನೂ ತುದಿಗಾಲಲ್ಲಿ ನಿಂತು ಆ ಗಲಾಟೆ ಹತ್ತಿರಹತ್ತಿರವಾಗುತ್ತಿರುವುದನ್ನು ಗಮನಿಸತೊಡಗಿದ. +ಸುಮಾರು ಮೂವತ್ತು ನಲವತ್ತು ಜನರ ಹುಯ್ಯಲು, ಒಂದು ಫರ್ಲಾಂಗ್‌ ದೂರದ ಅಂತರದಿಂದ ಹತ್ತಿರಹತ್ತಿರ ಸುತ್ತುವರಿದು ಬರುತ್ತಿತ್ತು ಆಗಾಗ ಮೊಟ್ಟುಗಳನ್ನು ಬಡಿಯುವುದು, ಬಿದಿರಿನ ಒಣ ಬೊಂಬುಗಳನ್ನು ದೊಣ್ಣೆಯಿಂದ ಹೊಡೆಯುತ್ತಿರುವುದೂ ಕೇಳಿಸುತ್ತಿತ್ತು. +ಕೋತಿಗಳ ಚೀರಾಟ, ಮೇಲೆ ಹಕ್ಕಿಗಳ ಹಾರಾಟವೂ ತ್ವರಿತವಾಗಿ ರಭಸದಿಂದ ಸಾಗಿತ್ತು. +ಆ ಗುಲ್ಲು ಹತ್ತಿರವಾಗುತ್ತಿದ್ದಂತೆ ನರಸಪ್ಪ "ಒಂದೊಂದು ಸಣ್ಣ ಕಾನಿಗೆ ಕಟ್ಟು ಅಂತ ಕರೀತಾರೆ. +ಈಗ ಆ ಕಡೆಯಿಂದ ಬಂದ್ರಲ್ಲ. +ಏನಾದ್ರೂ ಪ್ರಾಣಿ ಇದ್ರೆ ಅವು ಈ ಕಡೆ ಹೋಗಿತ ಪ್ಪಿಸಿಕೊಳ್ಳೋದಕ್ಕೆ ಓಡ್ತವೆ. +ಆದ್ರೆ ಅವು ಹೋಗೋ ಕಣಿವೆ ಕಡೆ ನೋಡಿ ಕೋವಿ ಹಿಡಿದವರು ಕೂತು ಅವನ್ನ ಹೊಡೀತಾರೆ. +ಇನ್ನೇನು ಈಗ ಒಂದೆರಡು ಗುಂಡಾದ್ರೂ ಹಾರಬಹುದು" ಎಂದು ಬೇಟೆಯ ಬಗ್ಗೆ ತನಗೆ ಗೊತ್ತಿದ್ದ ಅಂಶಗಳನ್ನು ವಿವರಿಸಿದ. +ಬೇಟೆಯವರ ಕೂಗುಗಳು ಸ್ಪಷ್ಟವಾಗಿ ಕೇಳತೊಡಗಿದವು. +"ಸೂಳೆ ಮಕ್ಕಳಾ, ಆಜೆಕಡೆ. . ಬರ್ರೋ". +"ನಿಂಗೇನಾಗಿತ್ತಲೇ ಧಾಂಡಿಗ ಬೋಳಿಮಗನೇ. +ಅತ್ಲಾಗೆ ಹೋಗ್ತೀಯಲ್ಲ. . " +"ಮೆಟ್ಟೀ ಹೋಗಕ್ಕೆ ಧಾಡಿ ಸೂಳೆಮಕ್ಳಿಗೆ". +"ಬಾಡು ಅಂದ್ರೆ ಹಲ್ಲು ಚಿಲಿತೀರೇನೋ" ಇತ್ಯಾದಿ ಒಬ್ಬನೇ ವ್ಯಕ್ತಿಯ ತಾರಕಕ್ಕೇರಿದ ಮಾತುಗಳು ಇಬ್ಬರಿಗೂ ಕೇಳಿಸಿದವು. +ನರಸಪ್ಪ ಮೆಲ್ಲಗೆ ತಿರುಗಿ "ಇವನೇ ನೋಡು ಆ ಕಿಟ್ಟಪ್ಪಯ್ಯ ಅಂದ್ರೆ. +ಇಂತದ್ನೆಲ್ಲ ಇವನೇ ಮುಂದಾಳಾಗಿ ಮಾಡೋವ್ತ್ನು" ಎಂದು ಪಿಸುಗುಟ್ಟಿದ. +ನರಸಪ್ಪನ ಧ್ವನಿ ಇದ್ದಕ್ಕಿದ್ದಂತೆ ಬದಲಾಗಿತ್ತು. +ಹನುಮಂತಪ್ಪನಿಗೆ ಎದೆಯ ಬಡಿತ ತೀವ್ರವಾಗಿದೆಯೆನ್ನಿಸಿತು. +ಅದೇ ಧ್ವನಿಯಲ್ಲಿಯೇ ನರಸಪ್ಪ "ಏನು ಮಾಡೋಣ?" ಎಂದ. +"ನಮಗೆ ಹ್ಯಾಗೂ ಕಾನೂನಿದೆಯಲ್ಲ, ನಡೀರಿ" ಎಂದು ಹನುಮಂತಪ್ಪನೇ ಮುಂದಾದ. +ಅವರು ಊಹಿಸಿದ್ದಂತೆ ಅಲ್ಲಿಗೆ ತೀರ ಕೆಳಗಡೆ ಒಂದರ ಹಿಂದೆ ಒಂದರಂತೆ ಎರಡು ಗುಂಡುಗಳು ಹಾರಿದವು. +ಗುಂಡಿನ ಶಬ್ದ ಕಾಡಲ್ಲಿ ಇನ್ನೂ ಮೊಳಗುತ್ತಿರುವಾಗಲೇ ಸೋಯುತ್ತ ಬರುತ್ತಿರುವ ಹುಯ್ಯಲು ಇನ್ನೂ ಎತ್ತರಕ್ಕೆ ಏರಿತು. +ಮಧ್ಯೆ, ಮಧ್ಯೆ ಬಿತ್ತು ಕಣ್ರಾ ಮುಂಡೇಗಂಡದು. +ನಾ ಆಗೇ ಹೇಳ್ದೆ ಕಡ ಎದ್ವು ಅಂತ' ಇತ್ಯಾದಿ ಮಾತುಗಳು ಗಲಾಟೆಯೊಂದಿಗೆ ಸೇರಿದವು. +ಏನಾದರೂ ಶಿಕಾರಿಯಾಗಿರುವದು ಖಾತ್ರಿಯೆಂದು ಇಬ್ಬರು ನಿಶ್ಚಯಿಸಿ ಮರದ ಸಂದಿನಲ್ಲಿ ನಿಂತು ಸ್ವಲ್ಪ ತಡೆದು ಹೋಗುವುದೆಂದು ನಿರ್ಧರಿಸಿದರು. +ಅರ್ಥ ಗಂಟೆಯ ನಂತರ ಅವರು ಜಾಗಕ್ಕೆ ಸ್ವಲ್ಪ ದೂರದವರೆಗೆ ಬಂದು ನಿಂತರು. +"ಹಳ್ಳಿ ಜನ, ಖಾಕಿ ಬಟ್ಟೆ ನೋಡಿದ ತಕ್ಷಣ ಉಜ್ಜೇ ಹೊಯ್ಯೊಳ್ಳೆ ಇದ್ರೆ ಕೇಳಿ ಎಂದು ನರಸಪ್ಪ ಹೇಳುತ್ತ ಮುಂದೆ ನಡೆದ. +ಆದರೆ ಅವನಿಗೆ ಇದೇ ಮೊದಲ ಸಲವಾಗಿತ್ತು. +ಕಾನೂನಿನ ಹೆಸರಿನಲ್ಲಿ ಕ್ರಮ ಕೈಗೊಳ್ಳುವುದು ಅವನಿಗೆ ಅಭ್ಯಾಸವೇ ಆಗಿರಲಿಲ್ಲ. +ಅವನು ಹಾಕಿದ್ದ ಚಕ್ಕಳದ ಮೆಟ್ಟು ಬೆವರಿನಿಂದಲೂ ದೂಳಿನಿಂಲೂ ಕೆಂಪಾಗಿ ರಂಗಾಗಿತ್ತು. +ಅವರು ಆ ಗುಂಪಿನ ಹತ್ತಿರ ಹೋಗುತ್ತಿರುವ ಹೊತ್ತಿಗೆ, ಪೊದೆಯ ಸಂದುಗಳಲ್ಲಿ ಕುಳಿತು ಬೀಡಿ ಸೇದುತ್ತ ಎಲೆಯಡಿಕೆ ಮೆಲ್ಲುತ್ತಿದ್ದ ಮುಂಡಾಸು ಸುತ್ತಿದ್ದ ವ್ಯಕ್ತಿಗಳಲ್ಲಿ ಕೆಲವರು ಎದ್ದು ನಿಂತರು. +ಇನ್ನು ಹಲವರು ಕೋವಿಯನ್ನು ಹಿಡಿದೇ ಇವರತ್ತ ನೋಡಿದರು. +ಅಲ್ಲೇ ಬದಿಯಲ್ಲಿ ಒಂದು ಕಡವೆಯನ್ನು ತಂದು ಹಾಕಿದ್ದರು. +ಅದರ ಹಣೆಯಿಂದ ರಕ್ತ ಇಳಿದು ಹೆಪ್ಪುಗಟ್ಟಿತ್ತು. + ಕವಲು ಕವಲಾದ ಕೊಂಬುಗಳು ಆಕರ್ಷಕವಾಗಿ ನೆಲಕ್ಕೆ ಊರಿದ್ದವು. +ನರಸಪ್ಪ ಅಲ್ಲಿಯ ಕೆಲವರು ಪರಿಚಿತರನ್ನು ನೋಡಿ ಹಿಂದೆ ಸರಿದು ನಿಂತ. +ಉತ್ಸಾಹದಿಂದಿದ್ದ ಹನುಮಂತಪ್ಪ ಮುಂದೆ ನಿಂತು "ನೀವೆಲ್ಲಾ ಯಾರು?" ಎಂದ ಕಾನು ಮೌನವಾಗಿತ್ತು. +ವಯಸ್ಸಾದ ವ್ಯಕ್ತಿಯೊಬ್ಬ ಎಲೆಯಡಿಕೆ ಉಗುಳಿದ. +ಯಾರೂ ಉತ್ತರಿಸದಿದ್ದುದರಿಂದ ಮತ್ತೆ "ಶಿಕಾರಿ ಮಾಡೋದು ತಪ್ಪು ಅಂತ ಗೊತ್ತಿಲ್ತೇವ್ರಯ್ಯಾ, ಯಾಕೆ ನೆಲ ನೋಡ್ತಾ ಇದೀರಿ, ಬೊಗಳ್ರಿ"ಎಂದು ಮತ್ತೊಮ್ಮೆ ಜೋರಾಗಿ ಕೂಗಿದ. +ಒಂದು ಪೊದೆಯ ಸಂದಿಯಿಂದ "ಏನು ಮಾಡ್ತೀರ್ರೀ ಮಾಡಿದ್ರೆ' ಎಂದು ಅಶರೀರ ವಾಣಿಯೊಂದು ಬಂತು. +ಹನುಮಂತಪ್ಪ ಸಿಟ್ಟಿನಿಂದ ನಡುಗುತ್ತಿದ್ದ. +ಧ್ವನಿಯೂ ಒಡೆಯುತ್ತಿತ್ತು. +ತನ್ನ ಅಧಿಕಾರವನ್ನೇ ಪ್ರಶ್ನಿಸಿದಂತಾಯಿತು. +"ಶಿಕಾರಿನ ಸೀಜ್‌ ಮಾಡಿ ರೇಂಜರ್‌ ಆಫೀಸಿಗೆ ಹಾಕಿ, ಕೋಳ ಹಾಕಿ ಹಿಡ್ಕಂಡು ಹೋಗ್ತೀವಿ" ಎಂದು ಆರ್ಭಟಿಸಿದ. +ಪೊದೆಯ ಸಂದಿಯಿಂದ 'ಯಾವನಲೇ ಅವು, ಕೋಳ ಹಾಕೋ ನನ್ಮಗ' ಎಂದು ಹೇಳುತ್ತಾ ದಪ್ಪಮೀಸೆಯ ಸೈಂಧವ ವ್ಯಕ್ತಿ ಪೊದೆಯಿಂದ ಹೊರಬಂದು ಎದುರಾದ. +ಹನುಮಂತಪ್ಪನ ಹಿಂದೆ ಧೈರ್ಯಉಡುಗಿ ನಿಂತಿದ್ದ ನರಸಪ್ಪ ಮೆಲ್ಲಗೆ "ಕಿಟ್ಟಪ್ಪಯ್ಯ" ಎಂದು ಉಗುಳು ನುಂಗಿದ. +"ಏನು ನೋಡ್ತೀರೋ, ಈ ಸೂಳೇಮಕ್ಕಳನ್ನ ಆ ಮರಕ್ಕೆ ಬಿಗಿದು ಹಾಕಿ ಸೌದಿ ತಂದು ಸುಡೋದು ಬಿಟ್ಟು. . "ಎಂದು ಕಿಟ್ಟಪ್ಪಯ್ಯ ಗುಡುಗಿದ. +ಹತ್ತಾರು ಜನ ಎದ್ದರು. +ಒಂದಿಬ್ಬರು ಬೆಂಕಿ ಉರಿಸಲು ಪುಳ್ಳೆಗಳನ್ನು ತರಗೆಲೆಗಳನ್ನು ಆರಿಸಿ ಹೊಗೆಯಾಡಿಸಿದರು. +ಉಳಿದವರು ಒಣ ಮರಗಳನ್ನು ರಾಶಿ ಹಾಕತೊಡಗಿದರು. +ಒಣಮರವೊಂದರ ಬುಡದಲ್ಲಿ ಕಟ್ಟಿಗೆಗಳನ್ನು ರಾಶಿ ಹಾಕಿದರು. +ಮೊದಲು ಹೊಗೆಯಾಡಿಸುತ್ತಿದ್ದ ಬೆಂಕಿಯನ್ನು ಅಲ್ಲಿಗೆ ವರ್ಗಾಯಿಸತೊಡಗಿದರು. +ಕಡವೆಯ ಕಾಲುಗಳನ್ನು ಒಟ್ಟಿಗೆ ಜೋಡಿಸಿ ಹೊರಲು ಅನುಕೂಲವಾಗುವಂತೆ ಕಟ್ಟಿದ್ದ ಹಗ್ಗವನ್ನು ಒಬ್ಬ ಬಿಚ್ಚತೊಡಗಿದ. +ಕಿಟ್ಟಪ್ಪಯ್ಯ ಅಲ್ಲಿಯೇ ಕಂಬಳಿ ಹಾಸಿಕುಳಿತುಕೊಂಡ. +ಎಲೆಯಡಿಕೆಯ ಸಂಚಿಯನ್ನು ಬಿಚ್ಚಿದ. +ಕೋವಿ ಹಿಡಿದ ನಾಲ್ಕಾರು ಜನ ಕಡವೆಯನ್ನು ಬಳಸಿ ಏನು ಮಾಡಲೂ ತೋಚದೆ ಕಂಗಾಲಾಗಿ ನಿಂತಿದ್ದ ಇವರ ಕಡೆಗೆ ತಿರುಗಿದಾಗ ಅದುವರೆಗೂ ಉಸಿರು ಬಿಗಿಹಿಡಿದು ನಿಂತಿದ್ದ ನರಸಪ್ಪ ಹಿಂದೆ ತಿರುಗಿಯೂ ನೋಡದೆ ಒಂದೇ ರಭಸಕ್ಕೆ ಅಲ್ಲಿಂದ ದೌಡಾಯಿಸಿದ. +ಅವನ ತಲೆಯಲ್ಲಿ ಯಾವುದೋ ಸೀಮೆಯಲ್ಲಿ ಉದ್ರಿಕ್ತ ಜನರು ಸರ್ಕಾರಿ ಅಧಿಕಾರಿಗಳನ್ನು ಜೀವಸಹಿತ ಸುಟ್ಟ ಪ್ರಸಂಗ ನೆನಪಾಗುತ್ತಿತ್ತು. +ಸಿಟ್ಟು ಅಸಹಾಯಕತೆಯಿಂದ ಉರಿಯುತ್ತ ನಿಂತ ಹನುಮಂತಪ್ಪನತ್ತ ಕಿಟ್ಟಪ್ಪಯ್ಯ ತಿರುಗಿನೋಡಿದ. +ಮುಖವನ್ನು ದಿಟ್ಟಸಿ ನೋಡಿ, "ಹೊಸಬನಾ ನೀನು? +ಇನ್ನೂ ಮದುವೆ ಆಗಿಲ್ಲ ತಾನೆ?" ಅಂದ. +ಹನುಮಂತಪ್ಪನ ಮೈಯೆಲ್ಲ ಒದ್ದೆಯಾಗಿತ್ತು. +ನೆಲವೆಲ್ಲ ಪೂರ್ತಿ ಕಾದಂತೆ ಅವನಿಗೆ ಅನ್ನಿಸುತ್ತಿತ್ತು. +ಕೆಲವರು ಕಡವೆಯ ಹಿಂಗಾಲುಗಳಿಂದ ಚರ್ಮ ಸುಲಿಯಲು ಆರಂಭಿಸಿದರು. +ಸುಲಿದಂತೆ ಜೋತು ಬೀಳುವ ಚರ್ಮ ನೆಲದಲ್ಲಿ ಊಡುತ್ತಿತ್ತು. +ಬಿಳಿಯ ನರಗಳಿಂದ ಹೆಣೆದ ಕೆಂಪು ಮಾಂಸ, ಹಿಂಗಾಲಿನ ಎಲುಬು, ಮೀನಖಂಡಗಳಲ್ಲಿ ಎದ್ದು ಕಾಣುತ್ತಿತ್ತು. +ಚಾಕುವಿನ ಬಾಯಿಗೆ ಕರಕರ ಹರಿಯುತ್ತಿದ್ದ ಚಕ್ಕಳ. +ಮಾಂಸವನ್ನು ಚರ್ಮದಿಂದ ಬೇರ್ಪಡಿಸುವಾಗಿನ ನಾಜೂಕು, ಸುಲಿಯುತ್ತಿದ್ದವನ ಮುಖದ ಬೆವರಿನ ಹನಿಗಳಲ್ಲಿ ಕಾಣುತ್ತಿತ್ತು. +ಅವರು ಹೊತ್ತಿಸಿದ್ದ ಬೆಂಕಿ ದೊಡ್ಡದಾಗುತ್ತಿತ್ತು. +ಉರಿ ಎತ್ತರವಾಗುತ್ತ ಅಕ್ಕಪಕ್ಕದಲ್ಲಿದ್ದ ಹಸಿಮರಗಳ ಎಲೆಗಳನ್ನು ಪಟಪಟಗೊಳಿಸುತ್ತಿತ್ತು. +ತನ್ನನ್ನು ಸಂಪೂರ್ಣ ನಿರ್ಲಕ್ಷಿಸಿ ತಮ್ಮ ಕೆಲಸವನ್ನು ಮುಂದುವರಿಸುತ್ತಿದ್ದ ಅವರ ಚರ್ಯೆಗಳನ್ನು ಅಸಹಾಯಕನಾಗಿ ನೋಡುತ್ತಾ ನಿಂತಿದ್ದ ಹನುಮಂತಪ್ಪನಿಗೆ ತನ್ನನ್ನು ಯಾರಾದರೂ ಬೆಂಕಿಗೆ ದೂಡಬಾರದೇ ಅನ್ನಿಸುತ್ತಿತ್ತು. +ಮುಕ್ತ: +ಹಿರಿಯ ಮಕ್ಕಳೆಲ್ಲ ಬೇರೆಯಾಗಿ ಒಲೆ ಹೊತ್ತಿಸಿದ ಮೇಲೆ ಅವನು ಪೇಟೆಯ ಕಡೆ ಸುಳಿದದ್ದು ಬಹಳ ಕಡಿಮೆ. +ತಾನಾಯಿತು ತನ್ನ ಕೆಲಸವಾಯಿತು. +ಯಾವಾಗಲೂ ಹೊರಗಡೆಗೇ ಬರುತ್ತಿರಲಿಲ್ಲ. +ತೋಟದಲ್ಲೋ ಗದ್ದೆಹರದಲ್ಲೋ ಕೆಲಸ ಮಾಡುತ್ತಲೋ, ಮಾಡಿಸುತ್ತರೋ ಇರುವುದನ್ನು ಯಾವಾಗಲೂ ನೋಡಬಹುದಿತ್ತು. +ಯಾರಾದರೂ ಮಾತಿಗೆ ಸಿಕ್ಕರೆ ಮಾತ್ರ ತನ್ನ ಕಿರಿಯ ಮಗನ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನಾಡುತ್ತಿದ್ದ. +"ಅವನು ಬುದ್ಧಿವಂತ ಕಣ್ರೀ" ಎಂದು ನಾಲ್ಕು ಜನ ಹೇಳಿದಾಗ ಖುಷಿಯಿಂದ "ಅದಕ್ಕೇ ಅವನ್ನ ಓದಕ್ಕೆ ಬೆಂಗಳೂರಿಗೆ ಕಳಿಸಿದ್ದು" ಎಂದು ಹೇಳಿ ಕೀರಲಾಗಿ ನಗುತ್ತಿದ್ದ. +ಕೂದಲೆಲ್ಲ ಉದುರಿ ಬೋಳಾಗಿದ್ದ ತಲೆಯ ಮೇಲೆ ಎಣ್ಣೆಯ ಕಮಟು ಹಿಡಿದ ಹಳೆಯ ಟೋಪಿಯನ್ನು ಹಾಕಿಕೊಂಡು, ಪಾಣಿಪಂಜೆಯನ್ನು ಎತ್ತಿ ಕಟ್ಟಿ ತರಕಾರೀ ಏರಿಗಳನ್ನು ಕೊಚ್ಚಲು ಹಿಡಿದನೆಂದರೆ ಅವನಿಗೆ ಊಟ ತಿಂಡಿಗಳ ಪರಿವೇ ಇರುವುದಿಲ್ಲವೆಂದು ಊರವರು ಹೇಳುತ್ತಿದ್ದರು. +ಅಷ್ಟಕ್ಕೂ ಅವನಿಗೆ ಬಿಸಿಲು ಬೆಂಕಿಗಳ ಪರಿವೆಯೇ ಇದ್ದಂತೆ ಕಾಣುತ್ತಿರಲಿಲ್ಲ. +ಬಹಳ ದಿನಗಳಿಂದ ಪೇಟೆಯ ಕಡೆಗೆ ಸುಳಿಯುತ್ತಿದ್ದವನು ಕಂಬಳಿ ಕೊಪ್ಪೆ ಸೂಡಿಕೊಂಡು ಬರುತ್ತಿದ್ದಾಗ ಪೈಗಳ ಹೋಟೆಲಿನಿಂದ ದೂರದಿಂದಲೇ ಗಮನಿಸಿದವರು ಯಾಕೋ ಇವತ್ತು ಅಜ್ಜನಿಗೆ ಪುರುಸೊತ್ತು ಸಿಕ್ಕಿದೆಯಲ್ಲ" ಎಂದು ಆಶ್ಚರ್ಯ ಪಡುತ್ತಿದ್ದರು. +ಹತ್ತಿರ ಹತ್ತಿರ ಬಂದಂತೆಲ್ಲ ಹೋಟೆಲಿನಲ್ಲಿ ಬೆಚ್ಚಗೆ ಕುಳಿತು ಬೀಡಿ ಸೇದುತ್ತ ಪಂಚಾಯ್ತಿ ನಡೆಸುವವರೆಲ್ಲ ಮೆಲ್ಲಮೆಲ್ಲನೆ ಜಾರಿಕೊಳ್ಳಲು ಪ್ರಯತ್ನಿಸುತ್ತಿದ್ದರು. +ಯಾಕೆಂದರೆ ಉಂಡಾಡಿಗಳು, ಸೋಮಾರಿಗಳನ್ನು ಕಂಡರೆ ಅವನಿಗೆ ಆಗುತ್ತಿರಲಿಲ್ಲ. +ಅವರು ಯಾರೇ ಆಗಿದ್ದರೂ ಸಂದು ನೋಡಿ ಮಾತಿನಲ್ಲಿಯೇ ಚುಚ್ಚಿಬಿಡುತ್ತಿದ್ದ. +ಮೊದಲಿನಿಂದ ಯಾರಿಗೂ ಮಣಿಯದೆ ಬದುಕುತ್ತಿದ್ದ ಅವನನ್ನ ಕಂಡು ಸೋಮಾರಿಗಳೂ ಅಲ್ಲದೆ, ಊರಿನ ಇತರ ಹಿರಿಯ ವ್ಯಕ್ತಿಗಳೂ ಹೆದರುತ್ತಿದ್ದರು. +ಮುದಿ ವಯಸ್ಸಿನಲ್ಲಿ ಅವನೇ ಗುದ್ದಲಿ ಹಿಡಿಯುವುದನ್ನು ಅವರು ನೋಡಿ ತಮ್ಮ ಬಗ್ಗೆ ಸಂಕೋಚ ಪಟ್ಟುಕೊಳ್ಳುತ್ತಿದ್ದರು. +ಅವನು ಹೋಟೆಲಿನ ಬದಿ ಹಾದು ಹೋಗುವಾಗ ಪೈಗಳು "ಓಹೋ ಏನು ಅಪರೂಪ. +ಬನ್ನಿ ನಾಯ್ಕರು"ಎಂದು ಸ್ವಾಗತಿಸಿ ಕರೆದರು. +ಅವನು ಸಂಕೋಚದಿಂದ ಒಳಬಂದು ಹೋಟೆಲಿನ ಮೂಲೆಯ ಕುರ್ಚಿಯಲ್ಲಿ ಕುಳಿತು ಕಂಬಳಿಕೊಪ್ಪೆಯನ್ನು ಹೆಗಲಿಗೆ ಜಾರಿಸಿಕೊಳ್ಳುತ್ತಿದ್ದಾಗ ಪೈಗಳು ತಿಂಡಿ ಕೊಡುತ್ತಿದ್ದ ಮಾಣಿಗೆ "ಬಿಸಿ ಗೋಲಿಬಜೆ ಯಜಮಾನರಿಗೆ ಕೊಡು" ಎಂದು ಹೇಳಿ ಹತ್ತಿರ ಬಂದು ಕುಳಿತು ಹುಳ್ಳಗೆ ನಗುತ್ತ ಎಲೆ ಅಡಕೆ ಚೀಲಕ್ಕೆ ಕಣ್ಣು ಬೀರಿದರು. +ಇದೆಲ್ಲ ಸಾಮಾನ್ಯ ಸಂಗತಿಯೆಂಬಂತೆ ಉಳಿದ ಗಿರಾಕಿಗಳು ನೋಡಿ ತಮ್ಮಲ್ಲೇ ನಗೆಯಾಡಿಕೊಂಡರು. +ಪೈಗಳು ತಮ್ಮ ಹಲವು ವರ್ಷಗಳ ಹೋಟೆಲ್‌ ದಂಧೆಯಲ್ಲಿ ನಾಯ್ಕರಂತವರನ್ನು ಕಂಡದ್ದು ಅಪರೂಪ ಅವರೇ ಹಾಗೆ ಹೇಳಿಕೊಳ್ಳುತ್ತಿದ್ದರು. +ಹತ್ತಿರ ಕುಳಿತು ಕುಶಲ ವಿಚಾರಿಸಿದರು. +ನಾಯ್ಕರ ಚೀಲದಿಂದ ತಾಂಬೂಲ ಸೇವಿಸುತ್ತ ಆ ಮಾತು ಈ ಮಾತು ಆಡಿ ಲೋಕದ ಜನ, ನೀತಿ ನಡವಳಿಕೆಗಳನ್ನು ಟೀಕಿಸಿ "ಎಲ್ಲಿ ನಾಯ್ಕರೇ ನಿಮ್ಮ ಕಿರಿಯ ಮಗ, ಬಂದಿದ್ದನೋ ಈಚೆಗೆ?" ಅಂದಾಗ ಹೊಸ ಹುರುಪು ತಂದುಕೊಂಡು ಅವನು ಬೆಂಗಳೂರಿನಲ್ಲಿ ಓದುತ್ತಿರುವುದನ್ನು ಹೇಳಿ "ನಾಳೆ ರಜಕ್ಕೆ ಬರುತ್ತಾನೆ" ಎಂದು ಹೇಳುವ ಹೊತ್ತಿಗೆ ಮಾಣಿ ಫ್ಲೇಟಿನಲ್ಲಿ ಬಿಸಿಯಾದ ಗೋಲಿ ಬಜೆಯನ್ನು ತಂದಿಟ್ಟ. +ಹಲ್ಲಿಲ್ಲದಿದ್ದರೂ ಹೊರಳಾಡಿಸಿ ನುಂಗಿ ನೀರು ಕುಡಿದು "ಹಲ್ಲು ಹೋದ ಮೇಲೆ ನೋಡಿ ಪೈಗಳೇ ರುಚಿ ಅನ್ನೋದೇ ಹೊಂಟು ಹೋದಂಗೆ" ಎಂದು ಮಾತು ಆರಂಭಿಸಿ ತನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದ ಪೈಗಳು ಅವನು ಸಾಹಸಗಳನ್ನು ಹೇಳುವಾಗ ಬೆರಗಾಗುತ್ತ ಮಧ್ಯೆ ವಧ್ಯೆ ಮಾತಿಗೆ ಒತ್ತು ಕೊಡುತ್ತಿದ್ದರು. +"ಅಂದಹಾಗೆ, ನಾಯ್ಕರೆ ನಿಮ್ಮ ಹಿರಿಯ ಮಕ್ಕಳೆಲ್ಲ ಈಗ ಹೇಗೆ? +ಅನ್ನ ನೀರಿಗೆ ನಿರುಂಬಳವೋ?" ಎಂದಾಗ ಅವನಿಗೆ ಮೈಯಲ್ಲಿ ಮುಳ್ಳು ಸವರಿದಂತಾಗಿ ನಡುನೀರಿನಲ್ಲಿ ತನ್ನನ್ನು ಕೈಬಿಟ್ಟ ಜೋಭದ್ರ ಮಕ್ಕಳಿಗೆ ಹಿಡಿಶಾಪ ಹಾಕಿ"ಏನೋ ಪೈಗಳೆ, ನಮ್ಮ ನಮ್ಮ ಕರ್ಮ" ಎನ್ನುತ್ತಾ ಹೆಗಲಿಗೆ ಜಾರಿದ್ದ ಕಂಬಳಿ ಕೊಪ್ಪೆಯನ್ನು ಎತ್ತಿ ತಲೆಗೆಸೂಡಿಕೊಂಡು ಹೊರಡಲು ತಯಾರಾದಾಗ ಪೈಗಳಿಗೆ ಕನಿಕರ ಬಂದು "ಯಾಕೆ ನಾಯ್ಕರೇ, ನಿಮ್ಮ ಕಿರಿಮಗನಿದ್ದಾನಲ್ಲ ಹೇಗೋ ನಿಮ್ಮಿಬ್ಬರಿಗೆ ಅನ್ನ ನೀರು ಕಾಣಿಸಲಾರನಾ. +ದೇವರು ದೊಡ್ಡವನು ನೋಡಿ. +ಆ ಮಗ ಒಬ್ಬ ನಿಮ್ಮ ಕೈಯಲ್ಲಿದ್ದರೆ ಸಾಕಲ್ಲ. +ನಿನ್ನೆ ನಿಮ್ಮ ಮಗಳೂ ಬಂದ ಹಾಗಿತ್ತು" ಎಂದು ಸಮಾಧಾನಪಡಿಸಲು ಯತ್ನಿಸಿದರು. +"ಹೌದು ಪೈಗಳೆ" ಎನ್ನುತ್ತಾ ಮಗಳ ವಿಚಾರ ಬಂದಾಗ ಶಾಂತವಾಗಿ ಕಣ್ಣುಗಳನ್ನು ಮುಚ್ಚಿ "ನಿನ್ನೆ ಸಂಜೆ ಬಂದಳು. . +ನಾಳೆ ಹೋಗಬೇಕು ಅಂತಿದ್ದಳು" ಎನ್ನುತ್ತಾ ತಿಂಡಿಯ ಹಣಕ್ಕೆ ಜೇಬಿಗೆ ಕ್ಶೈ ಹಾಕಿದಾಗ ಪೈಗಳು "ಬೇಡ ನಾಯ್ಕರೆ, ಅಪರೂಪಕ್ಕೆ ಬರುತ್ತೀರಿ, ಇರಲಿ ಬಿಡಿ, ವಿಶ್ವಾಸ ಮುಖ್ಯ"ಎಂದು ನಕ್ಕು ಬೀಳ್ಕೊಟ್ಟು ಬೇರೆ ಗಿರಾಕಿಗಳ ಕಡೆ ತಿರುಗಿದಾಗ, ಒಳಗೆ ಬೆಚ್ಚಗೆ ಮುದುರಿ ಕುಳಿತಿದ್ದವರೆಲ್ಲ"ಮುದುಕ ತೊಲಗಿದನಲ್ಲ" ಎಂಬ ಸಮಾಧಾನದ ನಿಟ್ಟುಸಿರು ಬಿಡುತ್ತಾ ವಿರಾಮವಾಗಿ ಕುಳಿತುಕೊಂಡರು. +ಅವನು ದೂರ ಹೋದದ್ದು ಖಾತ್ರಿಯಾದ ಮೇಲೆ ನಡು ವಯಸ್ಸಿನವರು "ನೋಡ್ರಿ ಅರವತ್ತೋ ಎಪ್ಪತ್ತೋ ವರ್ಷದ ಮುದುಕ, ಅವನ ಕೆಲಸ ಯಾರು ಮಾಡುತ್ತಾರೆ?" ಎಂದು ಉಂಡಾಡಿ ಹುಡುಗರನ್ನು ಕೇಳುತ್ತಾ ಬೀಡಿ ಹೊತ್ತಿಸುತ್ತಿದ್ದರು. +ಅವನಿಗೆ ಊರಿನ ಪುಡಾರಿಗಳೆಲ್ಲ ಬೆನ್ನ ಹಿಂದೆ ಆಡಿಕೊಳ್ಳುತ್ತಿರುವುದೂ ಗೊತ್ತಿತ್ತು. +ಕೆಲವರು ಪೈಗಳ ಹೋಟೆಲಿನಲ್ಲಿಯೇ "ಇಷ್ಟು ವಿರೋಧ ಮಕ್ಕಳ ಮೇಲೆ ಕಟ್ಟಬಾರದು" ಎಂದು ಹೇಳಿ ಟೀಕಿಸುತ್ತಿದ್ದುದು ಅವನ ಕಿವಿಗೆ ಬಿದ್ದಿದ್ದವು. +ಆದರೂ ಅವನು ಲೆಕ್ಕಿಸುತ್ತಿರಲಿಲ್ಲ. +ಪ್ರಾಯದಲ್ಲಿ ಅವನನ್ನು ಕಂಡವರು "ಭಯಂಕರ ಮನುಷ್ಯ" ಎಂದು ಹೇಳುತ್ತಿದ್ದರು. +ಈಗ ಅವನಿಗೆ ವಯಸ್ಸು ಐಪ್ಪತ್ತರ ಮೇಲಾಗಿದ್ದರೂ ಅವನ ಕೋಪ ಕಡಿಮೆ ಆಗಿರಲಿಲ್ಲ. +ವಯಸ್ಸಾಗಿದ್ದರೂ ಹೆಂಡತಿಯನ್ನು ಬಯ್ಯುವುದು ನಿಲ್ಲಿಸಿರಲಿಲ್ಲ. +ಓದುತ್ತಿದ್ದ ಕಿರಿಯ ಮಗ ಬಂದಾಗಲೇ ಅವನ ಸಿಟ್ಟು ಶಾಂತವಾಗುತ್ತಿತ್ತು. + ಹಿರಿಯ ಮೂರು ಮಕ್ಕಳಂತೂ ಮದುವೆಯಾಗುವವರೆಗೂ ಏಟು ತಿಂದವರೇ. +ಮದುವೆಯಾದ ಮೇಲೆ ಹೆಂಡತಿಯರ ಎದುರು ಹೊಡೆಯುವುದಕ್ಕೆ ಹೋಗಿರಲಿಲ್ಲ. +ಅವರ ಕೆಲಸಗಳಲ್ಲಿ ತಪ್ಪು ಕಂಡಾಗ ಬೈಯುವುದರಲ್ಲಿ ಶಾಂತನಾಗಬೇಕಾಗಿತ್ತು. +ಹಿರಿಯ ಮೂವರು ಗಂಡು ಮಕ್ಕಳಿಗೆ ಮದುವೆ ಮಾಡಿದ ಮೇಲೆ ನಿರುಂಬಳ ಇರಬಹುದೆಂದು ಎಣಿಸಿದ್ದು ತಪ್ಪಾಗಿತ್ತು. +ತಲೆ ನೆರೆಯುತ್ತಿದ್ದ ಹೆಂಡತಿ ಆಗಾಗ್ಗೆ ಸಿಡುಕು ತೋರುತ್ತಿದ್ದರೂ ಮಕ್ಕಳು ಸೊಸೆಯರ ಎದುರು ಗಂಡನನ್ನು ಎದುರು ಹಾಕಿಕೊಳ್ಳುತ್ತಿರಲಿಲ್ಲ. +ಸೋಮಾರಿತನವೆಂದರೆ ಉರಿದು ಬೀಳುತ್ತಿದ್ದ ಅವನಿಗೆ ಮಕ್ಕಳೆಲ್ಲ ಕೆಲಸ ಮರೆತು ಕುಳಿತಿರುವುದು ಸಹ್ಯವಾಗುತ್ತಿರಲಿಲ್ಲ. +ಹೊಲಗದ್ದೆಗಳ ಕೃಷಿ ಹದ ಮೀರಿ ನಡೆದಾಗಿ ಅವನ ಕೋಪ ಎಲ್ಲರ ಮೇಲೂ ತಿರುಗಿ ದುಡ್ಡು ಕಳಿಸಲು ಕಾಗದ ಬರೆಯುತ್ತಿದ್ದ ಕಿರಿಯ ಮಗನ ಮೇಲೆ ಕೊನೆಯಾಗುತ್ತಿತ್ತು. +ಗಂಡು ಮಕ್ಕಳು ತೋಟಗದ್ದೆಗಳ ಕೃಷಿಯ ಮೇಲೆ ತೋರಿಸುತ್ತಿದ್ದ ನಿರ್ಲಕ್ಷ್ಯದಿಂದ ಅವನಿಗೆ ಸಹಿಸಲಾಗುತ್ತಿರಲಿಲ್ಲ. +ಕೆಲವು ವರ್ಷ ಕಳೆದರೂ ತನ್ನ ನಿರೀಕ್ಷೆಯಂತೆ ಮನೆ ಕೆಲಸಗಳು ನಡೆಯುತ್ತಿಲ್ಲ ಎಂಬುದನ್ನು ಮನಗಂಡ ಅವನು ಓದಲು ಹೋಗಿದ್ದ ನಾಲ್ಕನೆಯ ಮಗನನ್ನು ತುರ್ತಾಗಿ ಕರೆಸಿದ. +ಊರಹಿರಿಯರ ಎದುರು ಆಸ್ತಿಯೆಲ್ಲ ವಿಭಾಗಿಸಿ ಹಂಚಿಕೊಟ್ಟು, "ನಿಮ್ಮ ಹಂಗೇ ಬೇಡ"ವೆಂದು ಮಕ್ಕಳಿಗೆ ಹೇಳಿ ಆ ರಾತ್ರಿ ನಿರುಂಬಳವಾಗಿ ನಿದ್ದೆ ಮಾಡಿದ. +ಮಗಳು ಮುಖ್ಯ ಸುದ್ದಿಯೊಂದನ್ನು ಹೊತ್ತು ಬಂದಿದ್ದಳು. +ಬೆಂಗಳೂರಿನಲ್ಲಿ ಓದುತ್ತಿರುವ ತಮ್ಮನಿಗೆ ತನ್ನ ಗಂಡನ ಮನೆ ಕಡೆ ಸಂಬಂಧದ ಪ್ರಸ್ತಾಪವನ್ನು ತಂದಿದ್ದ ಅವಳು ಮೊದಲು ಅವ್ವನ ಹತ್ತಿರ ಪ್ರಸ್ತಾಪಿಸಿದಳು. +ಬೇರೆಯಾಗಿ ಉಳಿದ ಮೇಲೆ ತಾಯಿ ಇಳಿವಯಸ್ಸಿನಲ್ಲಿ ಕೈಸುಟ್ಟುಕೊಳ್ಳುತ್ತಿರುವುದನ್ನು ಕಂಡು ಕನಿಕರಿಸಿದಳು. +ತಮ್ಮ ನಾಳೆ ಬರುತ್ತಾನೆಂದು ಅಪ್ಪನಿಂದ ತಿಳಿದ ಕೂಡಲೇ ಏನಾದರೂ ವಿಶೇಷ ಮಾಡಬೇಕೆಂದು ಅಪ್ಪನ ಎದುರು ಹೇಳಿದಳು. +ಅವನು ಅವಳು ಹೇಳಿದ ಸಾಮಾನುಗಳನ್ನು ತರಲು ಪೇಟೆಗೆ ಬಂದ. +ಪೈಗಳ ಹೋಟೆಲಿನಲ್ಲಿ ಕುಳಿತು ಮಾತಾಡಿ ಹೊರಬಂದು ಅಲ್ಲಿಂದ ಸ್ವಲ್ಪ ದೂರವಿದ್ದ ಕಾಮತರ ಅಂಗಡಿಯಲ್ಲಿ ಸಾಮಾನು ಕೊಳ್ಳುತ್ತಿರುವಾಗ ನಾಳೆ ಬರುತ್ತೇನೆಂದಿದ್ದ ಮಗ ಪೇಟೆಯಲ್ಲಿ ಬಸ್ಸಿನಿಂದ ಇಳಿದ. +ಅಪ್ಪನಕಂಬಳಿಕೊಪ್ಪೆಯ ವೇಷವನ್ನು ಕಂಡು ಮುಖ ಕಿವುಚಿನಾದರೂ ತೋರಿಸಿಕೊಳ್ಳಲಿಲ್ಲ. +ತುಂಬಾ ನಯವಾಗಿ ಬೆಂಗಳೂರಿನಲ್ಲಿ ತಾನು ಕಷ್ಟಪಡುತ್ತಿರುವುದನ್ನು ಬಣ್ಣಿಸಿದ. +"ಅವ್ವ ಹೇಗಿದ್ದಾಳೆ" ಎಂದು ವಿಚಾರಿಸಿಕೊಂಡ. +"ನೀನು ಇನ್ನು ಮುಂದೆ ಜಾಸ್ತಿ ದುಡ್ಡು ಕಳಿಸಬೇಕಾಗುತ್ತದೆ" ಎನ್ನುತ್ತಾ ಹಣವಿಲ್ಲದೆ ಒದ್ದಾಡಿದ ಘಟನೆಯೊಂದನ್ನು ಬಣ್ಣಿಸಿದ. +ಬೇರೆಯಾಗಿರುವ ಅಣ್ಣಂದಿರ ಬಗ್ಗೆ ಕೇಳುತ್ತಾ ಪೇಟೆಯಿಂದ ಅರ್ಧ ಮೈಲುನಡೆದು ಮನೆ ಸಮೀಪ ಬಂದರು. +ಮನೆಯ ಹತ್ತಿರ ಬಂದಾಗ ತೋಟ ಗದ್ದೆಗಳ ಬಗ್ಗೆ ವಿಚಾರಿಸಿಕೊಂಡು ಮನೆ ಸೇರಿದ. +ಅವ್ವ ತಂದಿಟ್ಟ ಬಿಸಿನೀರಿನಿಂದ ಕಾಲು ತೊಳೆದು ಅಕ್ಕನೊಂದಿಗೆ ಮಾತನಾಡುತ್ತ ಊಟ ಮುಗಿಸಿ ಪ್ರಯಾಣದ ಬಳಲಿಕೆಯನ್ನು ಕಳೆಯಲು ಹಾಸಿಗೆ ಹಾಸಿಕೊಂಡು ಮಲಗಿದ. +ಸಂಜೆಯ ಹೊತ್ತಿಗೆ ಎದ್ದು ಅಕ್ಕ ತಂದು ಕೊಟ್ಟ ಕಾಫಿಯನ್ನು ಕುಡಿದ. +ತೋಟ ಗದ್ದೆಗಳನ್ನು ನೋಡಲು ಹೊರಟು ಕತ್ತಲಾಗುತ್ತಲೂ ಮನೆಗೆ ಬಂದ. +ಅಣ್ಣಂದಿರ ಮನೆಗಳೂ ಅವರವರಿಗೆ ಬಂದ ಗದ್ದೆಗಳ ಅಂಚಿನಲ್ಲಿದ್ದವು. +ಅವ್ವನಿಗೆ ಹೇಳಿ ಹಿರಿಯ ಅಣ್ಣನ ಮನೆಗೆ ಕತ್ತಲಲೇ ಹೊರಟ. +ಬೆಂಗಳೂರಿನಲ್ಲಿ ಖರ್ಚು ಹೆಚ್ಚಾಗುತ್ತಿದ್ದರೂ ಅಪ್ಪ ಯಾಕೆ ಜಾಸ್ತಿ ದುಡ್ಡು ಕಳಿಸುತ್ತಿಲ್ಲ ಎಂದು ಯೋಚಿಸುತ್ತಾ ದೊಡ್ಡಣ್ಣನ ಮನೆಯ ಉಣುಗೋಲು ದಾಟಿ ಅಂಗಳಕ್ಕೆ ಬಂದು ಅನುಮಾನದಿಂದ ನಿಂತಿರುವಾಗ ಅತ್ತಿಗೆ ಹೊರ ಬಂದು "ಯಾಕೆ ಹಾಗೆ ನೋಡ್ತೀರಿ. +ಒಳಗೆ ಬರೋದು ಬಿಟ್ಟು ಎಂದು ಒಳಕ್ಕೆ ಕರೆದಳು. +ಚಾಪೆಯೊಂದನ್ನು ಹಾಸಿ,"ಮಹ್ನಾನನೇ ಬಂದ್ರಂತೆ" ಎಂದಳು. +ನಡುಮನೆಯಲ್ಲಿ ಕಂಬಳಿ ಹಾಸಿ ಒರಗಿಕೊಂಡು ಬೀಡಿ ಸೇದುತ್ತಿದ್ದ ಅಣ್ಣ ಬೀಡಿಯನ್ನು ನೆಲಕ್ಕೆ ಒತ್ತಿ ಆರಿಸಿ ಬಾಯಿಂದ ಹೊಗೆ ಬರುತ್ತಿದ್ದಂತೆಯೇ ಮಾತಾಡಿಸಿದ. +ಚೆನ್ನಾಗಿ ಓದುತ್ತೀಯಂತೆ" ಎಂದು ಹೊಗಳಿದ. +"ಅಪ್ಪ ಎಷ್ಟು ದುಡ್ಡು ಕಳಿಸ್ತಾನೆ" ಎಂದು ವಿಚಾರಿಸಿಕೊಳ್ಳುತ್ತಿದ್ದಂತೆ ಸ್ಟೀಲಿನ ಲೋಟಗಳಲ್ಲಿ ಕಾಫಿ ಬಂತು. +ಇಬ್ಬರೂ ಸೊರಗುಟ್ಟಿಸುತ್ತಾ ಕುಡಿದರು. +ಅತ್ತಿಗೆಯೂ ಮಾತಿಗೆ ಸೇರಿದಮೇಲೆ ಆಟ ರಂಗೇರಿದಂತೆ ಅಪ್ಪನ ಕೆಲಸಗಳನ್ನೆಲ್ಲ ಅತ್ತಿಗೆ ವರದಿಯೊಪ್ಪಿಸಿದಳು. +"ಅಪ್ಪ ಇರೋವರೆಗೂ ಕಿರಿಯರಿಗೆ ಸ್ವಾತಂತ್ರ್ಯವೇ ಇಲ್ಲ" ಎಂದು ಅಣ್ಣ ಹೇಳಿದ. +"ಮಾವಯ್ಯ ಕಳಿಸೋ ಹಣ ನಿಮಗೆ ಯಾತರಖದ್ದಿಗೆ" ಎಂದು ಅತ್ತಿಗೆ ಚುಚ್ಚಿದಳು. +"ಇದೆಲ್ಲ ಸರಿಯಾ" ಎಂದು ಪೇಚಿಗೆ ಸಿಕ್ಕಿಸಿದಳು. +"ನಾವೂ ಕಳಿಸಬಹುದಿತ್ತು" ಎಂದು ಇಬ್ಬರೂ ಅಂದರು. +ಸ್ವಲ್ಪ ಹೊತ್ತಿನ ನಂತರ ಆಸ್ತಿ ವಿಷಯ ಮಾತಾಡಿದರು. +ತನ್ನ ಖರ್ಚಿಗೆ ಅಪ್ಪ ಕಳಿಸುವ ಹಣ ಸಾಲದೆಂದು ಇವನು ತೋಡಿಕೊಂಡ. +ತಮಗೆ ಮೋಸ ಆಗಿದೆಯೆಂದು ಇಬ್ಬರೂ ಒಪ್ಪಿಕೊಂಡರು. +"ನೀನೂ ಓದಿದವನು. +ನಮ್ಮ ಸುಖ ಕಷ್ಟ ನಿನಗೆ ಗೊತ್ತಾಗುತ್ತೆ ನಿನಗೇನೂ ನಾವು ಕಡಿಮೆ ಮಾಡಲ್ಲ" ಎಂದು ಇಬ್ಬರೂ ಭರವಸೆಯಿತ್ತರು. +ಅತ್ತಿಗೆಯಂತೂ "ನಿಮ್ಮ ಒಳ್ಳೇಯದಕ್ಕೆ ಹೇಳಿರೋದು. +ಆ ಮೇಲಿನ ತೋಟ ನಮ್ಮ ಕೈಗೆ ಬಂದ್ರೆ ನಿಮಗೆ ತಿಂಗಳಿಗೆ ಐನೂರಲ್ಲ, ಸಾವಿರವಾದ್ರೂ ಕಳಿಸಬಹುದು" ಎಂದು ಹೇಳಿದಳು. +ಬಹಳ ಹೊತ್ತು ಮಾತಾಡಿದ ನಂತರ ಅವನು ಅಲ್ಲಿಂದ ಹೊರಟು ಮನೆ ಸೇರಿದ. +ಆ ಹೊತ್ತಿಗಾಗಲೇ ಇವನಿಗಾಗಿ ಕಾದು ಅಪ್ಪ ಊಟ ಮುಗಿಸಿದ್ದ. +ಹಿರಿಯ ಮಗನ ಮನೆಗೆ ಹೋಗಿದ್ದನ್ನು ನೋಡುತ್ತಲೇ ಮುದುಕನಿಗೆ ಸೊಸೆಯ ಮೇಲಿನ ಅನುಮಾನ ಕಾಡತೊಡಗಿತು. +ಸುಕ್ಕು ಸುಕ್ಕಾಗಿದ್ದ ಮುಖ ಮತ್ತೂ ಸುಕ್ಕಾಯಿತು. +ಚಿಮಿಣಿ ದೀಪದ ಬೆಳಕಿನಲ್ಲಿ ಕಣ್ಣಿನ ಗುಳಿ ಇನ್ನೂ ಆಳವಾದವು. +ಮಗಳು ಊಟಕ್ಕೆ ಕರೆದಾಗ ಅವನು ಬರಲಿ ಎಂದು ಕಾದಿದ್ದ. +ಕೊನೆಗೆ ಬೇಸರವಾಗಿ ಊಟ ಮಾಡಿ ವಾಡಿಕೆಯಂತೆ ಎರಡು ದಮ್ಮು ಗಾಂಜಾ ಎಳೆದು ಮಲಗುವ ಹೊತ್ತಿಗೆ ಅಂಗಳದಲ್ಲಿ ಅವನು ಬಂದ ಸಪ್ಪಳವಾಯಿತು. +ಅಂತೂ ಬಂದನಲ್ಲ ಎಂದುಕೊಂಡು ಮುಸುಕೆಳೆದು ಮಲಗಿಕೊಂಡ. +ಮಗ ಒಳಗೆ ಬಂದು ಅವ್ವ, ಅಕ್ಕನೊಟ್ಟಿಗೆ ಮಾತಾಡುತ್ತ ಊಟ ಮುಗಿಸಿದ್ದು ಅವನಿಗೆ ನಿದ್ದೆಯ ಮಂಪರಿನಲ್ಲಿ ಅಸ್ಪಷ್ಟವಾಗಿತ್ತು. +ಮಾರನೆಯ ದಿನ ಮಗಳು ಹೊರಟಳು. +ತಮ್ಮ "ಇಷ್ಟು ಬೇಗ ಮದುವೆನಾ" ಎಂದು ಕೇಳಿ ಆ ಯೋಚನೆ ಸದ್ಯಕ್ಕಿಲ್ಲವೆಂದು ನಿರಾಕರಿಸಿದ್ದ. +ಅವಳಿಗೆ ನಿಲ್ಲಲು ಮನಸ್ಸಿರಲಿಲ್ಲ. +ಇನ್ನೂ ಒಂದೆರಡು ದಿನ ಇರುವಂತೆ ಅವ್ವ ಒತ್ತಾಯಿಸಿದರೂ ಕೇಳದೆ ಅವಳು ಹೊರಟಿದ್ದಳು. +ಮಗ ಬೆಂಗಳೂರಿನಿಂದ ಬಂದ ನಾಲ್ಕೇ ದಿನಕ್ಕೆ ಭಯಂಕರವಾಗಿ ಗಾಳಿ ಬೀಸಿತು. +ತೋಟದಲ್ಲಿ ಹತ್ತಾರು ಅಡಿಕೆ ಮರಗಳು ನೆಲಕ್ಕೊರಗಿದವು. +ಬಾಳೆಯ ಮರಗಳು ಬಿದ್ದುದು ಲೆಕ್ಕಕ್ಕೆ ಸಿಗುವಂತಿರಲಿಲ್ಲ. +ತೋಟ ನೋಡಿ ಆಗಿರುವ ನಷ್ಟಕ್ಕೆ ಹೊಟ್ಟೆ ಉರಿಸಿಕೊಂಡು ಮನೆಗೆ ಬಂದು ಊಟಮಾಡುತ್ತಿದ್ದಾಗ ಮಗ ಮಾತಿಗೆ ಪೀಠಿಕೆಹಾಕಿದ. +"ಬೆಂಗಳೂರಿನಲ್ಲಿ ವಿಪರೀತ ಖರ್ಚು" ಎಂದ. +"ಖರ್ಚುಕಡಿಮೆ ಮಾಡು" ಅಪ್ಪನ ದ್ವನಿ ಬಿರುಸಾಗಿತ್ತು. +"ಈಗ ಕಳಿಸ್ತಾ ಇರೋದು ಸಾಲದು" ಎಂದುದಕ್ಕೆ "ನಾನೇನೂ ದುಡ್ಡಿನ ಮರ ನೆಟ್ಟಿಲ್ಲ" ಎಂದು ಉತ್ತರ ಬಂತು. +ಊಟ ಮುಗಿಯುವವರೆಗೂ ಮಾತು ಬೆಳೆಯಲಿಲ್ಲ. +"ತಿಂಗಳಿಗೆ ಕನಿಷ್ಠ ಅಂದ್ರೆ ಐನೂರಾದ್ರೂ ಬೇಕು" ಎಂದು ಮಗ ಅಂದುದಕ್ಕೆ "ಯಾರೋ ನಿನಗೆ ಹೇಳಿಕೊಟ್ಟದ್ದು" ಎಂದು ಅಪ್ಪ ಬಿರುಸಾದ. +"ಹೀಗೆಲ್ಲ ಆಡ್ಬೇಡ ತಮ್ಮಾ? +ಅವ್ವ ರಮಿಸಲು ಪ್ರಯತ್ನಿಸಿದಳು. +ಮಗ ಒದರಾಡಿದ. +"ನೀವು ಹಿಂಗೆಲ್ಲಾ ಮಾಡಿದ್ರೆ ನಾನೇನು ಸಾಯ್ದ?"ಅಂದ ಮಗ. +"ಹಾಗಾದರೂ ಮಾಡು" ಎಂದುದಕ್ಕೆ "ನನ್ನ ಪಾಲಿನ ಆಸ್ತಿ ಇದೆಯಲ್ಲ" ಎಂದು ಮುಂದೇನೂ ಹೇಳಲಾಗದೆ ತಡವರಿಸಿದಾಗ ಅಪ್ಪನಿಗೆ ತಡೆಯಲಾಗಲಿಲ್ಲ. +"ಆಸ್ತಿಯೋ" ಎನ್ನುತ್ತಾ ಎದ್ದು ಕಪಾಳಕ್ಕೆ ಒಂದು ಬಿಗಿದ. +ತಡೆಯಲು ಬಂದ ಅವ್ವನಿಗೂ ಕೈ ಬಿರುಸಾಗಿ ತಾಗಿತು. +ಅಪ್ಪನಿಂದ ಅಂಥ ಪ್ರತಿಕ್ರಿಯೆಯನ್ನು ನಿರೀಕ್ಷಿಸದೆ ಇದ್ದ ಮಗ ತತ್ತರಿಸಿದ. +ಅವನತ್ತ ತಿರಸ್ಕಾರದ ನೋಟ ಬೀರಿದ ಅಪ್ಪ "ನಾಯಿ ಸೂಳೆಮಗ"ಎನ್ನುತ್ತಾ ಮನೆಯಿಂದ ಹೊರಬಿದ್ದ. +ಸ್ವಲ್ಪ ಹೊತ್ತಿಗೆ ಊರ ಹಿರಿಯರು ಬಂದರು. +ಹಿಂದೆ ನಾಲ್ಕಾರು ಜನ ಸಮಸ್ತರೂ ಇದ್ದರು. +ತನ್ನಲ್ಲಿ ಉಳಿದಿದ್ದ ಇಬ್ಬರ ಪಾಲನ್ನು ವಿಭಾಗಿಸುವಾಗ ಅವನಿಗೆ "ಕಾಲ ಹೀಗೆ ಇರೋಲ್ಲ. +ನಾಯ್ಕರೇ ಯೋಜನೆ ಮಾಡಿ. +ನಿಮಗೆ ಈಗ ಕಾಲ ಅಲ್ಲ" ಎಂದರು. +ಅದೆಲ್ಲ ಅವನಿಗೆ ಬೇಕಾದಂತಿರಲಿಲ್ಲ. +"ಮಕ್ಕಳೇ ಹುಟ್ಟಿಲ್ಲ ಅಂದ್ಕೊಂಡ್ರೆ ಆಯು"ಎಂದು ಅವರನ್ನೇ ಕೇಳಿದ. +ಹೆಂಡತಿ ಆಳುತ್ತಿದ್ದಳು. +"ಇದೆಲ್ಲ ಅನುಭವಿಸಬೇಕಾದದ್ದೇ, ಯಾರ ಹಂಗೂ ನಮಗೆ ಬೇಡ" ಎಂದು ಅವಳನ್ನು ಸಮಾಧಾನ ಪಡಿಸಿದ. +ಅವರ ನೆರೆತ ಕೂದಲು, ಸುಕ್ಕಾಗುತ್ತಿದ್ದ ಚರಬೊಚ್ಚಾಗುತ್ತಿದ್ದ ಬಾಯಿ ನೋಡಿ ಸೇರಿದ ಊರವರು ಕನಿಕರಪಡುತ್ತಿದ್ದರು. +ಅವನು ಯಾವುದನ್ನೂ ಕೇಳುವಂತಿರಲಿಲ್ಲ. +ಕಿರಿಯ ಮಗ ತನ್ನ ಸಾಮಾನು ಜೋಡಿಸುತ್ತಿದ್ದ ಅತ್ತಕಡೆ ತಿರುಗಿಯೂ ನೋಡದೆ,ಹಾಸಿದ್ದ ಕಂಬಳಿಯನ್ನು ಜಾಡಿಸಿ ಹೆಗಲ ಮೇಲೆ ಹಾಕಿಕೊಂಡು ತನ್ನ ಪಾಲಿನಲ್ಲಿ ಉಳಿದ ತೋಟದಡೆಗೆ ಹೊರಟ. +ಅವನಲ್ಲಿ ಹೊಸ ಹುರುಪು ಮತ್ತೆ ಮೂಡಿದಂತಿತ್ತು. +ಅನಿಸಿಕೆ- ಅಭಿಪ್ರಾಯಗಳು: +ವರ್ತಮಾನದ ಪ್ರಶ್ನೆಗಳಾಗಿಯೂ ಮುಂದುವರಿದಿರುವ ಬದುಕಿನ ಒಂದಷ್ಟು ಅರ್ಥಹೀನ ಸಿದ್ಧ ನಂಬಿಕೆಗಳ ಬಗ್ಗೆ ಹಾಗೂ ಅವುಗಳಿಂದ ಬಿಡಿಸಿಕೊಳ್ಳಲು ಅಗತ್ಯವಿರುವ "ಉತ್ತರಣಕ್ರಿಯೆ"ಗಳ ಬಗ್ಗೆ ಇಲ್ಲಿಯ ಕೆಲವು ಕತೆಗಳು ತುಂಬ ಎಚ್ಚರದಿಂದ ಮಾತನಾಡುತ್ತವೆ. +'ಅವ್ವ' ಅಂಥ ಉತ್ತಮ ಕತೆಗಳಲ್ಲಿ ಒಂದು. +ದುಡಿಯುವ ವರ್ಗಕ್ಕೆ ಸೇರಿದ ಗಂಡು ಹೆಣ್ಣುಗಳ ಮಧ್ಯದ ದೈಹಿಕ ಸೆಳೆತಗಳು ಕುಟುಂಬವೆಂಬ ಸಾಮಾಜಿಕ ವ್ಯವಸ್ಥೆಗೆ ಮಣಿಯಲೇಬೇಕಾದ ಸೂಕ್ಷ್ಮ ಬಿಕ್ಕಟ್ಟುಗಳ ಸೊಗಸಾದ ಚಿತ್ರಣವನ್ನು ಎರಡು ಕತೆಗಳಲ್ಲಿ (ಮೈತ್ರಿ, ಸಪ್ತಪದಿ)ಕಾಣಬಹುದಾಗಿದೆ. +ಕಳೆಗೆಟ್ಟ ಕಾನೂನು ಹಾಗೂ ಅವಕಾಶವಾದವನ್ನು ಚೆನ್ನಾಗಿ ವಿಡಂಬಿಸುವ ಕತೆ 'ಅಪಘಾತ'. +ಬೆಳೆದ ಮಕ್ಕಳ ಮುಂದೆ ಹೇಳಿಕೊಳ್ಳಲಾಗದ ಒಳಗಿನ ವಾಂಛೆಯನ್ನು ಹಿಕ್ಕತ್ತಿನಿಂದ ಈಡೇರಿಸಿಕೊಳ್ಳಲು ಯತ್ನಿಸುವ 'ಅಣ್ಣ'. +ಅತಿಮುದ್ದಿನ ಅಡ್ಡ ಪರಿಣಾಮಗಳ ತೋರು ಬೆರಳಂತಿರುವ 'ಒಬ್ಬಳೇಮಗಳೆಂದು. . ' + ಒಂದು ಮಾಗಿದ ಮನಸಿನ ಪಳಗಿದ ಕತೆಗಾರನ ಸಹವಾಸದಲ್ಲಿ ನಾವಿದ್ದೇವೆ ಎಂಬ ಭಾವನೆಯನ್ನು ಓದುಗರಿಗೆ ಹುಟ್ಟಿಸುತ್ತವೆ. +ಸಣ್ಣಕತೆಗಳ ಅಸಲೀ ಜಾಯಮಾನಕ್ಕೆ ತಕ್ಕಂಥ ನಡಿಗೆ ಇಲ್ಲಿಯ ಕತೆಗಳದ್ದು. +ಲಕ್ಷ್ಮಣ ಕೊಡಸೆ ಅವರದ್ದೇ ಆದ ಶೈಲಿಯ ಸೊಂಪು ಕೂಡ ಇದೆ. +ಲಕ್ಷ್ಮಣ ಕೊಡಸೆ ಅವರ ಕತೆಗಳಲ್ಲಿ ಸಹಜತೆ ಇದೆ; +ಓದಿನಲ್ಲಿ ಸುಖ ಕೊಡುವ ಗುಣ ಕಾಣುವುದು. +ಅನಗತ್ಯ ವರ್ಣನೆಗಳಾಗಲಿ, ಬೇಕಿಲ್ಲದ ಮಾತುಗಳಾಗಲಿ ಇಲ್ಲಿ ಕಂಡುಬರುವುದಿಲ್ಲ. +ಇಲ್ಲಿನ ಬರವಣಿಗೆಯಲ್ಲಿ ಸುಲಭವಾಗಿ ದಕ್ಕದ ಸಂಯಮ ಇದೆ. +ಒಟ್ಟು ನೋಟ ಮತ್ತು ಪರಿಣಾಮಕ್ಕೆ ಆವಶ್ಯಕವಾದ ಅಂಶಗಳು ತಮ್ಮ ಉದ್ದೇಶ ಸಾಧನೆಗೆ ಸಂಯೋಜನೆಗೊಳ್ಳುವುದು ಈ ಕತೆಗಳ ವಿಶೇಷ. +ಅವ್ವ ಮತ್ತು ಅಣ್ಣ ಕೂಡು ಕುಟುಂಬ ಅಥವಾ ಅವಿಭಾಜ್ಯ ಸಂಸಾರ ವಿದ್ಯೆ ಉದ್ಯೋಗ ಕಾರಣಗಳಿಗಾಗಿ ಬೇರೆ ಬೇರೆ ಊರುಗಳಲ್ಲಿ ಬದುಕಬೇಕಾದುದರಿಂದ ಶಿಥಿಲಗೊಳ್ಳುವ ಸ್ಥಿತಿಗೆ ಸಂಬಂಧಿಸಿವೆ. + 'ಒಬ್ಬಳೇ ಮಗಳೆಂದು. . . ','ಮೈತ್ರಿ', ಮತ್ತು 'ಸಪ್ತಪದಿ' ಕ್ರಮವಾಗಿ ಗಂಡ, ಹೆಂಡತಿ ಮತ್ತು ಮಕ್ಕಳಿರುವ ಒಂಟಿ ಸಂಸಾರಗಳಿಗೆ ಸಂಬಂಧಿಸಿದವು. +'ಅಪಘಾತ'-ಸಂಸಾರದ ಚೌಕಟ್ಟಿನ ಆಚೆಗೆ ನಗರದ ರಸ್ತೆಯಲ್ಲಿ ನಡೆಯುವ ಕತೆ. +ಅವ್ವ ಮತ್ತು ಅಣ್ಣ ಪ್ರಧಾನವಾಗಿ ಗ್ರಾಮೀಣ ಪರಿಸರದಲ್ಲಿ ನಡೆದರೆ ಉಳಿದ ಕತೆಗಳು ನಗರ ಪ್ರದೇಶಗಳ ವಾತಾವರಣದಲ್ಲಿ ಸಂಭವಿಸುತ್ತವೆ. +ಕತೆಗಾರ ಲಕ್ಷ್ಮಣ ಕೊಡಸೆ ಅವರಿಗೆ ಹಳ್ಳಿ ಮತ್ತು ಪಟ್ಟಣಗಳ ಚಿತ್ರಣ ನೀಡುವ ಕಲೆ ಸಿದ್ಧಿಸಿದೆ. +'ಅವ್ವ' ಕತೆಯಲ್ಲಿ ನಿರೂಪಕ ತಂದೆಯ ಸಾವಿನ ವಿಚಾರ ಹೇಳುತ್ತಾ ಒಂದು ಸಮುದಾಯದ ಆಚಾರವಿಚಾರಗಳ ಹಾಗೂ ನಂಬಿಕೆ ನಡಾವಳಿಗಳನ್ನು ತೆರೆಯುತ್ತಾನೆ. +ಸಾವಿನಂಥ ಸಂದರ್ಭದಲ್ಲಿ ಮತ್ತು ಉತ್ತರಕ್ರಿಯೆಯ ಹೊತ್ತಿನಲ್ಲಿ ಬಂದು ಹೋಗುವ ನೆಂಟರಿಷ್ಟರ ಸಂಬಂಧ ಎಷ್ಟು ಗಾಢ ಹಾಗೂ ನವುರಾದುದು ಎಂದು ತಿಳಿಯುವುದು. +ತಂದೆಯನ್ನು ಎಡಬಿಡದೆ ನೋಡಿಕೊಂಡ ತಾಯಿಯ ಚಿತ್ರ ಉದಾತ್ತವಾಗಿ ಮೂಡುವುದಲ್ಲದೆ ಎಲ್ಲವನ್ನೂ ಸಾವರಿಸಿಕೊಂಡು ಉತ್ತರಕ್ರಿಯಾದಿಗಳೆಲ್ಲ ಮುಗಿದ ಮೇಲೆ ಆಕೆ ಬದಲಾಗುವಕ್ರಮ ಜೇತೋಹಾರಿಯಾದುದು. +'ಅವ್ವ ಬಳೆ ತೊಟ್ಟು ಹೂ ಮುಡಿದು ಕುಂಕುಮ ಧರಿಸಿದ್ದನ್ನು 'ನಿರೂಪಕ ನೋಡುತ್ತಾನೆ. +ಅಪ್ಪ ಹೇಳುತ್ತಿದ್ದ ಮಾತುಗಳಿಗೆ ಅವ್ವನೇ ಇಷ್ಟು ಬೇಗ ದೊಡ್ಡ ನಿದರ್ಶನ ಒದಗಿಸುತ್ತಾರೆ ಎಂಬುದನ್ನು ನಾನು ಊಹಿಸಲೂ ಇರಲಿಲ್ಲ ಎಂದು ಆತ ಅಚ್ಚರಿಪಡುವಂತಾಗುತ್ತದೆ. +ಇದು ಅವ್ವನ ಜೀವನ ಪ್ರೀತಿಯನ್ನು ತೋರಿಸುವ ಅಪರೂಪದ ಗುಣ ಮತ್ತು ಶಕ್ತಿ ಈಜಿನ ದಿನಗಳಲ್ಲಿ ಅರ್ಥಹೀನ ಸಂಪ್ರದಾಯಗಳನ್ನು ತೊರೆಯುವುದರ ಗುರುತಾಗಿ ಕತೆ ಮುಗಿಯುತ್ತದೆ. +ಸ್ವೀನಿಷ್ಠವಾದದ ಬೇರೊಂದು ಮಜಲನ್ನು ಇಲ್ಲಿ ನೋಡಬಹುದು, ಯಾವ ಅಬ್ಬರ ಇಲ್ಲದೆ. +'ಅಣ್ಣ' ಕತೆಯಲ್ಲಿ ತನ್ನ ಮಡದಿಯನ್ನು ಕಳೆದುಕೊಂಡ ಹಿರಿಯಣ್ಣನ ಬವಣೆ ಬೇಜವಾಬ್ದಾರಿತನಗಳು ಬಿಚ್ಚಿಕೊಳ್ಳುವ ಪರಿ ಇದೆ. +ಅವನ ಒಬ್ಬ ಮಗ ಮದುವೆಯಾಗಿ ಹೋಗಿದ್ದಾನೆ, ಇನ್ನೊಬ್ಬ ಮಗ ಮತ್ತು ಮಗಳು ಮದುವೆ ಆಗುವ ವಯಸ್ಸಿನಲ್ಲಿ ಇದ್ದಾರೆ. +ಆದರೂ ಇನ್ನೊಂದು ಮದುವೆ ಆಗಬೇಕೆಂಬ ಈ ಅಣ್ಣನ ಚಪಲ ಪ್ರಕಟವಾಗುವ ರೀತಿ ಸ್ವಾರಸ್ಯಕರವಾಗಿದೆ. +ಅತಿ ಮುದ್ದು ಮಾಡುವ ಯಾವ ತಂದೆ ತಾಯಿಗಳು ಹಾಗೂ ಅದೇ ರೀತಿ ನಡೆದುಕೊಂಡ ವೃದ್ಧಮಾತಾಪಿತ್ಯಗಳು ಪಡುವ ಪಾಡಿನಿಂದ ಬಾಳಿನ ಅತಿರೇಕವನ್ನು ಹೇಳುತ್ತಲೇ ಅಂಥದ್ದನ್ನು ತಹಬಂದಿಗೆ ತಂದುಕೊಳ್ಳಬೇಕೆಂಬ ಸೂಚನೆ 'ಒಬ್ಬಳೇ ಮಗಳೆಂದು. . . ' ಕತೆಯಲ್ಲಿ ಮೂಡಿದೆ. +ಈ ಕತೆಗಳಲ್ಲಿ ರಕ್ತಸಂಬಂಧವನ್ನು ಪ್ರೀತಿಸುವ, ಗೌರವಿಸುವ ನಿರೂಪಕ ಇದ್ದಾನೆ. +ಅವನು ನಿರೂಪಣೆಯಲ್ಲಿ ನಿರ್ಲಿಪ್ತತೆ ಸಾಧಿಸುವುದಲ್ಲದೆ ಭಾಗಿಯಾಗುವನು. +ಅವನಲ್ಲಿ ಭಾವತಪ್ಪತೆ ಇಲ್ಲ; +ಭಾವ ತೀವ್ರತೆಯ ಝರಿ ಇದೆ. +ಪ್ರಾರಂಭದಲ್ಲಿ ಮುಗ್ಧೆಯಾಗಿದ್ದ ಮಡದಿ ಬೆಳೆದು ಪ್ರತಿಭಟಿಸುವ ಕ್ರಮವನ್ನು 'ಸಪ್ತಪದಿ' ಕತೆ ಚಿತ್ರಿಸುವುದು ಸುಂದರವಾಗಿರುವುದು. +ಈಕೆ ತನ್ನ ಗಂಡನ ಸ್ವೈರ ವೃತ್ತಿಯ ಮೇಲೆ ದಾಳಿ ಮಾಡುವಾಗ ಸಂಸಾರದ ಗುಟ್ಟು ಗೌರವ ಕಾಪಾಡಿಕೊಳ್ಳುತ್ತ, ತನ್ನ ಮಕ್ಕಳಿಗೂ ಅದು ಗೊತ್ತಾಗದ ರೀತಿಯಲ್ಲಿ ಪ್ರತಿಭಟಿಸುವ ವಿಧಾನ ಸುಸಂಸ್ಕೃತವಾಗಿದೆ. +ಸ್ವೀನಿಷ್ಠವಾದದ ಪ್ರಬುದ್ಧ ಸ್ಥಿತಿ ಇದು ಎನ್ನಿಸುವುದು. +'ಸಪ್ತಪದಿ'ಯಲ್ಲಿ ವೃತ್ತಿ ಮಾಡುವ ಅವಿವಾಹಿತ ಯುವತಿಗೆ ತಿಳಿಹೇಳುವ ಪರಿ ಇದೆ. +ಆದರೆ ಈ ಕತೆಗಳಲ್ಲಿ ಗಂಡು ತನ್ನ ಚಾಳಿಗೆ ನಾಚುವ, ಅವಮಾನ ಪಡುವ ಅಂಶಗಳು ಇಲ್ಲ. +ಆದ್ದರಿಂದ ಇವು ಪುರುಷ ಕೇಂದ್ರಿತ ಕತೆಗಳಾಗಿ ತೋರಿಬರಬಹುದು. +'ಅಪಘಾತ' ಕನ್ನಡದಲ್ಲಿ ಗೋಚರಿಸುವ ಒಂದು ಅಪರೂಪ ಕತೆ. +ಶೀರ್ಷಿಕೆ ಸಾಂಕೇತಿಕವಾಗಿ ಅರ್ಥಪಡೆದುಕೊಳ್ಳುತ್ತದೆ. +ಇಲ್ಲಿ ಕಾರಿಗೆ ಮಾತ್ರ ಅಪಘಾತವಾಗಿಲ್ಲ; +ಕಾನೂನಿಗೆ ಅಪಘಾತವಾಗಿದೆ. +ಮನುಷ್ಯನ ನಾಗರಿಕ ಪ್ರಜ್ಞೆ ಮತ್ತು ಆರೋಗ್ಯಕರವಾಗಿರಬೇಕಾದ ಆಡಳಿತ ವ್ಯವಸ್ಥೆಗೆ ಅಪಘಾತ ಸಂಭವಿಸಿದೆ. +ಅಪಘಾತದಲಾಭವನ್ನು ಎಲ್ಲರೂ- ಕಾರಿಗೆ ಗುದ್ದಿದ ಟ್ಯಾಕ್ಸಿ ತಂಡ, ಕಾರಿನ ಮಾಲೀಕ, ಮೆಕ್ಯಾನಿಕ್‌ ಮಂಜು, ಪೊಲೀಸರು ಸೇರಿ ಎಗರಿಸಲು ಹವಣಿಸುತ್ತಾರೆ. +ಪ್ರತಿಯೊಬ್ಬರ ಊಸರವಳ್ಳಿ ತನವನ್ನು ಕತೆ ಸೂಕ್ಷವಾಗಿ ತೋರಿಸುತ್ತದೆ. +ಈ ಕತೆಯನ್ನು ಓದಿದ ನನಗೆ ಮಹಾ ಕತೆಗಾರ ಆಂಟನ್‌ ಚೆಕಾವ್‌ನ 'ಗೋಸುಂಬೆ' ಕತೆ (ಇದನ್ನು ಪ್ರೊ.ಕೆ.ಆರ್‌.ನಾರಾಯಣಶೆಟ್ಟ ಕನ್ನಡಕ್ಕೆ ಅನುವಾದಿಸಿದ್ದಾರೆ) ನೆನಪಾಯಿತು. +ಭಾರವೂ ಹಗುರವೂ ಅಲ್ಲದ ಸದಭಿರುಚಿಯ ಭಾಷೆ ಈ ಕತೆಗಳಲ್ಲಿ ಬಳಕೆಯಾಗಿರುವುದರಿಂದ ಓದು ಆಹ್ಲಾದಕಾರಿಯಾಗುತ್ತದೆ. +ಇವುಗಳಲ್ಲಿನ ಪ್ರಸಂಗಗಳು ಮತ್ತು ಸಂಗತಿಗಳು ಜೀವನದಿಂದ ನೇರವಾಗಿ ಕತೆಗಳಿಗೆ ಇಳಿದಿರುವಂತೆ ಭಾಸವಾಗುವುದು. +ಬಾಳಿನ ವಿಘಟನೆಗಳನ್ನು ನಿವಾರಿಸಿ ಜೀವನವನ್ನು ಹೆಚ್ಚು ಸಹ್ಯಗೊಳಿಸಿ ಸುಂದರ ಮಾಡಬೇಕೆಂಬ ಅಂತರ್‌ದೃಷ್ಟಿ ಈ ರಚನೆಗಳಲ್ಲಿ ಅರಿವಾಗುತ್ತದೆ. +'ಅಪಘಾತ' ಮತ್ತೊಂದು ಬಗೆಯ ತಬರನ ಕಥೆ. +ಆದರೆ ವ್ಯಾವಹಾರಿಕ ಜಾಣ್ಮೆಯಿಂದ ಕಥಾನಾಯಕ'ತಬರ'ನಾಗುವುದಂತೂ ತಪ್ಪಿತು. +ವ್ಯವಸ್ಥೆ ಸಂಘಟಿತವಾಗಿ, ಬಲಿಷ್ಠವಾಗಿ ಶ್ರೀಸಾಮಾನ್ಯರನ್ನು ಅಸಹಾಯಕರಾಗಿಸಿ ತನ್ನೊಳಗೆ ಎಳೆದುಕೊಳ್ಳುವುದನ್ನು ನಿರೂಪಿಸಿರುವ ಪರಿ ಮನವನ್ನು ತಟ್ಟುತ್ತದೆ. +'ಆಸರೆ' ಕಥೆ ಹೊಸ ಬಗೆ ಎನಿಸಿತು. +ಅದು ನಿವೃತ್ತರ ಮುಪ್ಪಿನ ಜಂಜಾಟ, ಸಂಕಟಗಳನ್ನು ಚೆನ್ನಾಗಿ ವರ್ಣಿಸುತ್ತದೆ. +ಬದಲಾದ ಕಾಲವನ್ನು ಸೂಕ್ಷ್ಮವಾಗಿ ಧ್ವನಿಸುವುದು. +ಇದರಲ್ಲಿ 'ಮಕ್ಕಳಂತೂ ಆಗೋದಿಲ್ಲ'ಎಂಬ ಮಾತು ಬರುತ್ತದೆ. +ಆ ಮಾತು ಸುಳ್ಳಾಗುವಂಥ ಸುದ್ದಿಗಳು ಇತ್ತೀಚೆಗೆ ಬರುತ್ತಿವೆ. +ಅದೂ ಕೂಡ ಕಥೆಯಲ್ಲಿ ಸೂಚಿತವಾಗಿದ್ದರೆ ಕಥೆ ರಮ್ಯವಾಗಿರುತ್ತಿತ್ತೇನೋ. . +ಜೀವನ ಹೀಗೇ ಎಂದು ಹೇಳುವುದು ಕಷ್ಟ'ಆಸರೆ' ಕಥೆಯ ಶಿವರಾಮುವಿನ ನಿರ್ಧಾರ ಸರಿ ಇದೆ ಎನಿಸಿತು. +ನಮ್ಮ ಸುತ್ತಮುತ್ತ ಸಹ ಇಂಥ ಘಟನೆ ನಡೆದಿದೆ. +ನಮ್ಮ ಸಹೋದ್ಯೋಗಿಯೊಬ್ಬರು ತಮ್ಮ ಇಳಿವಯಸ್ಸಿನಲ್ಲಿ ಒಬ್ಬರಿಗೆ ಆಸರೆ ನೀಡಿದ್ದನ್ನು ನೋಡಿದ್ದೆ. +ಆದ್ದರಿಂದ ಈ ಕಥೆ ಅಚ್ಚರಿಯನ್ನುಂಟು ಮಾಡಲಿಲ್ಲ. +ನಿಮ್ಮ ಕಾದಂಬರಿ ಆಮೂಲಾಗ್ರವಾಗಿ (ಒಂದೇ ಮೆಟ್ಟಿನಲ್ಲಿ ಅಲ್ಲ) ಓದಿಸಿಕೊಂಡು ಹೋಯಿತು. +ಕತೆಗಳಲ್ಲಿದ್ದಂತೆಯೇ ನೇರ ಸರಳ ನಿರೂಪಣೆ ಎನಿಸಿದರೂ ಅಲ್ಲಲ್ಲಿ ಉಕ್ತಿ ಚಾತುರ್ಯ ಮನಸ್ಸಿಗೆ ಹಿಡಿಯುವಂತಿದೆ. +ವಿಲೋಮ ಪದ್ಧತಿಯಿಂದ ಅಂದರೆ ಹಿಂದಿನ ನೆನಪುಗಳನ್ನು “ಇಂದು' ಹೇಳುತ್ತಿರುವ ರೀತಿಯಲ್ಲಿ ಬರೆದಿದ್ದೀರಿ. +ಬಸ್ಸಿನ ಪಯಣ ಜೀವನಯಾತ್ರೆಯೂ ಆಗಿ ಕಲಾವಂತಿಕೆ ಕಾಣಿಸುತ್ತದೆ. +ಇದು ಅಪ್ಪಟ ಪ್ರಾದೇಶಿಕ ಕಾದಂಬರಿ. +ಪ್ರಾದೇಶಿಕವಾದದ್ದು ಎಂದರೆ ಬರಿ ಗ್ರಾಮೀಣ ಚಿತ್ರವಲ್ಲ. +ಯಾವುದೊಂದು ಸಮಸ್ಯೆಯಾಗಲೀ, ಪ್ರೇಮಕಥೆಯಾಗಲೀ ಮುಖ್ಯವಲ್ಲ. +ಇಡೀ ಪರಿಸರದ ಸ್ಪಷ್ಟ ಕಲ್ಪನೆ ಬರುವಂತೆ ಅದರ ಹರಹು ಇರಬೇಕು. +ಮರಳಿ ಮಣ್ಣಿಗೆ ಓದಿದಾಗ ನಿಸರ್ಗವನ್ನೂ ಓದಿದಾಗ ಆಗುವ ಅನುಭವವೇ ಇಲ್ಲಿದೆ. +ಬರೀ ಶಹರದ ಹಿನ್ನೆಲೆಯೇ ಪ್ರಮುಖವಾಗಿರುವ ಕಾದಂಬರಿಗಳು (ಅವೂ ಬಹಳಅಲ್ಲ) ಈಗ ಬರುತ್ತಿರುವಾಗ ನಿಮ್ಮದು ರೆಫೆಶಿಂಗ್‌ ಆಗಿ ಬಂದಿದೆ. +ನಿಮ್ಮ ಸಣ್ಣ ಕತೆಗಳನ್ನು ಓದಿ ಮೆಚ್ಚಿಕೊಂಡಿದ್ದ ನನಗೆ ನಿಮ್ಮ ಹೊಸ ಕಾದಂಬರಿ ಹೇಗೆ ಇರಬಹುದು ಎಂಬ ಕುತೂಹಲ ಇತ್ತು. +ಆ ಕಾರಣಕ್ಕೆ ಅದನ್ನು ಓದಬೇಕೆಂದು ಕಾದಿರಿಸಿದ್ದೆ. +ಓದಲು ಕೈಗೆತ್ತಿಕೊಂಡ ಮೇಲೆ ಅದು ಎಷ್ಟು ಚೆನ್ನಾಗಿ ಓದಿಸಿಕೊಂಡು ಹೋಯಿತು ಎಂದರೆ,ನಾನು ಆ ಕಾದಂಬರಿ ಎಲ್ಲಿ ನಡೆಯಿತೋ ಅಲ್ಲಲ್ಲಿಗೆಲ್ಲ ನಡೆದುಕೊಂಡೇ ಹೋಗಿ ಅವರನ್ನೆಲ್ಲ ನೋಡಿ ಮಾತಾಡಿಸಿ ಬಂದಷ್ಟು ಖುಷಿಯಾಯಿತು. +ನಿಮ್ಮ ಕಾದಂಬರಿಯ ತಂತ್ರ ಪ್ರಾಯಃ ಕನ್ನಡಕ್ಕೆ ಹೊಸ ಬಗೆಯದು. +ಜೀವನ ಎನ್ನುವುದು ನಿರಂತರ ಪಯಣವೇ. +ಕಾದಂಬರಿಯು ಕರೇನಾಯ್ಕರ ಜೀವನದ ಪಯಣದ ಜೊತೆಗೆ ಇಡೀ ಮಲೆನಾಡು ಬದಲಾಗುತ್ತಾ ಹೋಗುವುದು (ಅಂದರೆ ಅಲ್ಲಿನ ಜನಜೀವನವೂ ಬದಲಾಗುವುದು) ಒಂದು ಪಯಣವೇ ಎಂಬುದನ್ನು ಸಾಂಕೇತಿಕವಾಗಿ ಧ್ವನಿಸಿದೆ. +ಕರೇನಾಯ್ಕರ ಪಯಣ ಎಷ್ಟು ಸಹಜವಾಗಿ ಚಿತ್ರಿತವಾಗಿದೆ ಎಂದರೆಇದು ನೀವು ನೋಡಿದ ಹಿರಿಯರೊಬ್ಬರನ್ನು ಕಂಡರಿಸಿ ಇಲ್ಲಿ ತಂದಿಟ್ಟಿದ್ದೀರಿ ಎನ್ನುವಷ್ಟು ಇಷ್ಟಕ್ಕೂ ಈಒಂದು ಪುಟ್ಟ ಕಾದಂಬರಿ ಬಹುವಿಸ್ತಾರವಾದ ಮಲೆನಾಡಿನ ಚಿತ್ರಣವನ್ನು ಸ್ಟೈಡಿನಲ್ಲಿ ಸೆರೆಹಿಡಿದ ಹಾಗೆ ಚಿತ್ರಿಸಿದೆ. +ನಿಮ್ಮ ಚಿತ್ರಕಶಕ್ತಿಗೆ ನಿಮ್ಮ ಪತ್ರಕರ್ತನ ಸೃಜನಶೀಲತೆ ಅಡ್ಡಿಬರಲಿಲ್ಲ ಬದಲು ಪೂರಕವಾಗಿದೆ. +ನನ್ನಂಥವ ಹತ್ತು ಸಾಲುಗಳಲ್ಲಿ ಹೇಳುವುದನ್ನು ನೀವು ಒಂದು ಸಾಲಿನಲ್ಲಿ ಹೇಳಿದ್ದೀರಿ. +ಅದು ಇಡೀ ಕಾದಂಬರಿಗೆ ಆಕರ್ಷಕ ಓದನ್ನೂ ಕುತೂಹಲವನ್ನೂ ತಂದುಕೊಟ್ಟಿದೆ. +ಕರೇನಾಯ್ಕನ ಪಾತ್ರ ಒಂದು ಅಪರೂಪದ ಸೃಷ್ಟಿ ಆತ ಒಬ್ಬ ಸಾಮಾನ್ಯನಾಗಿದ್ದರೂ, ಆತನ ಜೀವನಪ್ರೀತಿಮತ್ತು ಛಲ ಮತ್ತು ಸಾಧನೆಯಿಂದ ಆತ, ಮಲೆನಾಡಿನ ಗೌಡರಿಗೆ ಸಮಾನವಾಗಿ ಬೆಳೆಯುತ್ತಾನೆ. +ಅವನು ಕಂಡುಕೊಂಡ ಜೀವನದರ್ಶನ, ಅವನನ್ನು ನಂಬಿಸಿ ಮೋಸ ಮಾಡಲು ಹೊರಟ ಕುರಂಬಳ್ಳಿ ಗೌಡರಘಾತುಕ ಬುದ್ಧಿ, ತಮ್ಮವರೇ ಆದ ಬಡೇನಾಯ್ಕರ ಕುಟುಂಬದಲ್ಲಿ ತಮ್ಮ ಲಕ್ಷ್ಮಣನಿಗೆ ಅಣ್ಣ ರಾಮ ಮಾಡಿದ ಮೋಸದಂಥ ಪ್ರತಿ ಪ್ರಕರಣಗಳೂ ಇಲ್ಲಿ ಸಹಜವಾಗಿ ಮೂಡಿ ಕಾದಂಬರಿಗೆ ಮಹತ್ವವನ್ನು ತಂದಿದೆ. +ಕುವೆಂಪು ಅವರ ನೆನಪಿನ ದೋಣಿಯಲ್ಲಿ ಕುವೆಂಪು ಅವರು ಮೊದಲ ಸಲ ಮೈಸೂರಿನಲ್ಲಿ ಕಕ್ಕಸನ್ನು ನೋಡಿದಾಗ ಅನುಭವಿಸಿದ ಭೀಭತ್ಸದಂತೆ ಇಲ್ಲಿಯೂ ಹಳ್ಳಿಯ ಮಂದಿ ಕಮೋಡ್‌ನ್ನು ಎದುರಿಸುವ ಚಿತ್ರಣವು ಕಾಲಾತೀತವಾಗಿ ರೂಪುಗೊಂಡದ್ದು ನೋಡಿ ನಿಮ್ಮ ಸೂಕ್ಷ್ಮ ಸಂವೇದನೆಗೆ ಬೆರಗಾದೆ. +ಎಲ್ಲಕ್ಕಿಂತ ಹೆಚ್ಚಾಗಿ ಕಾದಂಬರಿಯ ಮುಕ್ತಾಯವು ತನಗೆ ತಾನೇ ಪಡೆದುಕೊಂಡ ತಿರುವು ಸಹಜವೂ ಮರ್ಮಭೇದಕವೂ ಆಗಿದೆ. +ದುರಂತ ಎಂದರೆ ಎರಡು ತಲೆಮಾರುಗಳ ನಡುವೆ (ಅಪ್ಪ ಮಗನೇ ಆಗಲಿ) ಆಗುವ ಸ್ಥಿತ್ಯಂತರ ಮತ್ತು ಅದರ ಅನಿವಾರ್ಯತೆ, ಬದಲಾಗುತ್ತಾ ಹೋಗುವ ಜೀವನದೃಷ್ಟಿ ಎಲ್ಲದಕ್ಕೂ ಈ ತಿರುವು ರೂಪಕವಾದ ಹಾಗೆಮೂಡಿ ಬಂದಿದೆ. +ಕರೇನಾಯ್ಕನ ಇಬ್ಬರು ಮಕ್ಕಳಲ್ಲಿ ರಾಮಚಂದ್ರ ದಾರಿ ತಪ್ಪವುದು, ಶಂಕರ ಊರಪಂಚಾಯಿತಿ ಮಾಡುವಷ್ಟು ದೊಡ್ಡವನಾಗಿ ಬೆಳೆಯುವುದು ಇವು ಎರಡೂ ಕರೇನಾಯ್ಕನಿಗೆ ಬೆರಗು ಹುಟ್ಟಿಸಿ ಏಕಕಾಲದಲ್ಲಿ ಅನುಭವಕ್ಕೆ ಬರುವುದು ತುಂಬಾ ಅರ್ಥಪೂರ್ಣವಾಗಿದೆ. +ಆ ಸಂದರ್ಭದಲ್ಲಿ ಕರೇನಾಯ್ಕ ಆಡುವ 'ಈ ಹುಡುಗರು ನಮ್ಮನ್ನು ಮೀರಿಸಿಬಿಟ್ಟಿದ್ದಾರೆ' ಎನ್ನುವ ಮಾತು ತುಂಬ ಮಹತ್ವದ್ದು . + ಅದು ಬದುಕನ್ನು ಹೇಗೆ ಸ್ವೀಕರಿಸಬೇಕು ಎಂಬ ತಟಸ್ಥ ಧೋರಣೆಗೆ ಪ್ರತಿಮೆಯೂ ಹೌದು. . . + ಇದು ಕರೇನಾಯ್ಕರ ಮಾಗುವಿಕೆಯಷ್ಟೇ ಅಲ್ಲ, ಕಾದಂಬರಿಕಾರರಾದ ನಿಮ್ಮ ಮಾಗುವಿಕೆಯೂ ಹೌದು. +ಇಂಥ ಒಂದು ಕಾದಂಬರಿ ಇಂದಿನ ದಿನಗಳಲ್ಲಿ ತೀರಾ ಅಪರೂಪ. +ಅಷ್ಟೇ ಅಲ್ಲ ಮಹತ್ವದ್ದೂ ಹೌದು. +ಅದಕ್ಕಾಗಿ ಹಾರ್ದಿಕ ಅಭಿನಂದನೆಗಳು. +ನಿಮ್ಮ ಪಯಣ ಕಾದಂಬರಿಯನ್ನು ಅಂಕಿತಾದಿಂದ ತಂದವಳು ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಕುಳಿತಲ್ಲಿಂದ ಕದಲದೆ ಒಂದೇ ಸಮನೆ ಓದಿಬಿಟ್ಟೆ. +ಈ ರೀತಿ ಕಾದಂಬರಿಯನ್ನು ಓದಿ ಎಷ್ಟು ವರ್ಷವಾಗಿತ್ತೋ. +ನಾ ಕಾಣದ ಮಲೆನಾಡಿನ ಆತ್ಮೀಯ ಪಯಣ ನನ್ನಲ್ಲಿ ಏನೋ ಒಂದು ಸಂತಸವನ್ನು ಹುಟ್ಟು ಹಾಕಿದ್ದಕ್ಕೆ ನಿಮಗೆ ಹೇಗೆಧ ನ್ಯವಾದ ಅರ್ಪಿಸಲಿ? +ಸಣ್ಣಪುಟ್ಟ ಅಲೆಗಳೆದ್ದರೂ, ಅಲ್ಲಲ್ಲಿ ಸುಳಿಗಳಿದ್ದರೂ, ಹೊಳೆಯಂತೆ ಪ್ರಶಾಂತವಾಗಿ ಹರಿದುಹೋಗುವ ಬದುಕುಗಳ ಚಿತ್ರಣ ಮನಸ್ಸಿಗೆ ಆಪ್ತವಾಗುತ್ತದೆ. +ಬದುಕಿನ ದಟ್ಟ ಅನುಭವಗಳು ಗಮನಿಸುವಿಕ್ಕೆ ಬರಹಗಾರನಿಗೆ ಇರಬೇಕಾದ ಅಗತ್ಯ ಗುಣ ಎನಿಸಿತು. +ನನ್ನ'ಎಲ್ಲಿ ಜಾರಿತೋ ಮನವು' ಕಾದಂಬರಿಯಲ್ಲಿ ಹಳ್ಳಿಯ ಚಿತ್ರಣ ಬಂದಿದ್ದರೂ ಅದು ಕಾಲ್ಬನಿಕವಾಗಿದೆ. +ನಿಮ್ಮ ಮಲೆನಾಡಿನ ಚಿತ್ರಣ ವಾಸ್ತವದ ನೆಲೆಗಟ್ಟನ್ನು ಹೊಂದಿದ್ದು ಜೀವಂತವಾಗಿದೆ . +ಈ ಕಾದಂಬರಿಯನ್ನು ಓದಿ ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ. +ನೀವು ಮಲೆನಾಡ ಬಗ್ಗೆ ಬರೆದಂತೆ ನಾನು ಬೆಂಗಳೂರ ಬಗ್ಗೆ ಬರೆಯುತ್ತೇನೆ. +ಬಸ್ಸಿನ ಪ್ರಯಾಣ ಬದುಕಿನ ಪ್ರಯಾಣವೂ ಆಗಿ ಮೂಡಿ ಬಂದಿರುವ ರೀತಿ ತೀರಾ ಭಿನ್ನವಾಗಿದೆ. +ರಾಮರಾಯನಂಥವರನ್ನು ಸಾಮಾನ್ಯ ಜನ ಶಿಕ್ಷಿಸಲಾಗದಿದ್ದರೂ ವಿಧಿಕೊಟ್ಟ ಹೊಡೆತ ಮಾಡಿದ ತಪ್ಪಿಗೆ ಶಿಕ್ಷೆಯಾಗಲೇಬೇಕು ಎಂಬುದು ಪ್ರಕೃತಿ ನಿಯಮವಿರಬೇಕು. +ನಾವು ಒಳ್ಳೆಯದು ಮಾಡಿದರೆ ಒಳ್ಳೆಯದು,ಕೆಟ್ಟದ್ದು ಮಾಡಿದರೆ ಕೆಟ್ಟದ್ದು. +ನಾವು ಬುದ್ಧಿ ವಂತರಾದರೆ ಯಾರಿಗೂ ಕೆಟ್ಟದ್ದು ಮಾಡಬಾರದು. +ಇದು ನಾನು ಬದುಕಿನಲ್ಲಿ ಕಂಡುಕೊಂಡಿರುವ ಸತ್ಯ. + ಸಂದೇಶವನ್ನು ರಾಮರಾಯನ ಪಾತ್ರದ ಮೂಲಕ ಎಷ್ಟು ಚಂದವಾಗಿ ಕಟ್ಟಿಕೊಟ್ಟಿದ್ದೀರಿ. +ಬದುಕಿನ ಏರಿಳಿತಗಳು ವ್ಯಕ್ತಿಗಳನ್ನು ಹೇಗೆ ಬದಲಾಯಿಸುತ್ತವೆ ಎನ್ನುವುದಕ್ಕೆ ಗೌಡರ ವರ್ತನೆಯೇ ಸಾಕ್ಷಿ. +ಯಲ್ಲನಾಯ್ಕರ ಕಣಬ್ಬದ ವೈಭವದ ಬಗೆಗಿನ ವಿವರಣೆ. +ಮನೆಗೆ ಬಂದ ನೆಂಟರಿಷ್ಟರೆಲ್ಲ ಎಲ್ಲ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದ ಪರಿ. +ನನ್ನಜ್ಜಿ ಹೇಳುತ್ತಿದ್ದ ಅಂದಿನ ಕಾಲದ ಮದುವೆ, ಆವನಿ ಜಾತ್ರೆಯ ನೆನಪನ್ನು ತಂದಿತು. +ನನ್ನ ಜಿಲ್ಲೆ ಕೋಲಾರ. +ನಿಮ್ಮದು ಮಲೆನಾಡು. +ಆದರೆ ಆ ತಲೆಮಾರಿನ ಜನ ಆಲೋಚಿಸಿದ, ಬದುಕಿದ ರೀತಿ,ನೆಂಟರಿಷ್ಟರೊಂದಿಗಿನ ಬೆಸುಗೆ, ಅದಕ್ಕೆ ನೆಪವಾಗಿ ಬರುವ ಹಬ್ಬ ಹರಿದಿನಗಳು. +ಆ ಸಮಷ್ಠಿ ಪ್ರಜ್ಞೆ ಭಾರತದಎಲ್ಲ ಕಡೆಯೂ ಒಂದೇ ಆಗಿತ್ತೇನೋ ಎನಿಸಿತು. +ಮಕ್ಕಳು ಎಷ್ಟೇ ದೊಡ್ಡವರಾದರೂ, ಅವರಿಗೆ ಮನೆಯ ಜವಾಬ್ದಾರಿಯನ್ನು ನೀಡಲು ಬಯಸದ ಹಿರಿಯರ ಪ್ರತಿನಿಧಿಯಾಗಿ ಕರೇನಾಯ್ಕ, ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸುವ ಬಡೇನಾಯ್ಕ. +ಎಂತಹ ಅದ್ಭುತ ಪಾತ್ರಗಳು! +ಈ ಅಕ್ಟೋಬರ್‌ ರಜೆಯಲ್ಲಿ ಒಂದು ಒಳ್ಳೆಯ ಕಾದಂಬರಿ ಓದಿದ ತೃಪ್ತಿ ನನಗೆ ದಕ್ಕಿದೆ. +ಸಿಟಿಯ ಬದುಕು, ನಾಗರಿಕತೆ ಮನುಷ್ಯನನ್ನು ಅವಿಭಕ್ತ ಕುಟುಂಬದಿಂದ ಹೊರಬರುವಂತೆ ಮಾಡಿದೆ. +ಒಬ್ಬೊಬ್ಬರು ಒಂದೊಂದು ದ್ವೀಪವಾಗಿ ಬಿಟ್ಟಿದ್ದಾರೆ ಎನಿಸಿ ಖೇದವಾಗುತ್ತಿದೆ. +ಆರು ತಿಂಗಳಾಗಿತ್ತು ಅಮ್ಮನ ಮನೆಗೆ ಹೋಗಿ. +ಈ ಕೃತಿ ಓದಿದ ನಂತರ ಅಮ್ಮನನ್ನು, ತಮ್ಮ ತಮ್ಮನ ಮಗುವನ್ನು ಮಾತನಾಡಿಸಿಕೊಂಡು ಬರುವ ಎನಿಸಿ ಹೊರಟಿದ್ದೇನೆ. +ಓದು ನಮ್ಮನ್ನು ಬದಲಾಯಿಸುವುದು ಬೆರಗಿನ ವಿಷಯವಲ್ಲವೇ? +ಥ್ಯಾಂಕ್ಯೂ ಲಕ್ಷ್ಮಣ ಕೊಡಸೆಯವರೆ, ಹೊಸ ದೃಷ್ಟಿಕೋನದಿಂದ ಬದುಕನ್ನು ನೋಡಲು ನನಗೆ ಕಲಿಸಿದ್ದಕ್ಕೆ. +ವಿಮರ್ಶೆ ತಮ್ಮ ಸಣ್ಣ ಕತೆಗಳ ಮೂಲಕ ಸಾಹಿತ್ಯವಲಯಕ್ಕೆ ಈಗಾಗಲೇ ಪರಿಚಿತರಾಗಿರುವ ಲಕ್ಷ್ಮಣ ಕೊಡಸೆ ಅವರ ಮೊದಲ ಕಾದಂಬರಿ 'ಪಯಣ'. +ಪ್ರಜಾವಾಣಿ ಪತ್ರಿಕೆಯ ಸಾಪ್ತಾಹಿಕ ಪುರವಣಿಯ ಹೊಣೆ ಹೊತ್ತಿರುವ ಇವರು, ಅವರೇ ಹೇಳುವಂತೆ, 'ಪದಗಳ ಮಿತಿಯಲ್ಲಿ, ಕಥೆಗಳನ್ನೋ, ವರದಿಗಳನ್ನೋ ವಿಶೇಷವರದಿಗಳನ್ನೋ ಬರೆಯುವ ವೃತ್ತಿ'ಯಲ್ಲಿರುವವರು. +ಈ ಬಗೆಯ 'ಪದಬಂಧನ'ಕ್ಕೆ ಒಳಗಾದ ನಮ್ಮ ಅನೇಕ ಒಳ್ಳೆಯ ಬರಹಗಾರರು ತಮ್ಮ ಸೃಜನಶೀಲತೆಯನ್ನೇ ಕಳೆದುಕೊಂಡಿದ್ದಾರೆ. +ಆದರೆ ಕೊಡಸೆ ಪಯಣದ ಮೂಲಕ ತಮ್ಮ ಹಾದಿಯ ಅಗಲೀಕರಣ ಉದ್ದೀಕರಣ ಎರಡನ್ನೂ ಸಾಧಿಸಿದ್ದಾರೆ. +ತೊಂಬತ್ತು ಪುಟಗಳ ಈ ಕಾದಂಬರಿಯನ್ನು ಬರೆಯಲು ಅವರು ಐದು ತಿಂಗಳು ತಗೊಂಡರು. +ಆದರೆ ಇದನ್ನು ಓದುಗರು ಒಂದೇ ಮೆಟ್ಟಿಗೆ ಮುಗಿಸಬೇಕೆಂದು ಅವರ ಆಶಯ. +ಅದಕ್ಕೆ ಕಾರಣವೂ ಇದೆ. +ಮಲೆನಾಡಿನ ಪರಿಸರದ ಅನುಭವ ದ್ರವ್ಯ ಇಲ್ಲಿ ಹರಡಿಕೊಳ್ಳುವುದು ಕರೇನಾಯ್ಕರ ನೆನಪುಗಳ ಮೂಲಕ. +ಹೆದ್ದಾರಿಪುರದಿಂದ ಸುರುವಾದ ಅವರ ಬಸ್‌ ಪಯಣ, ಸಿ.ಎನ್‌.ರಾಮಚಂದ್ರನ್‌ ಹೇಳುವಂತೆ, 'ವಾಸ್ತವ ಪಯಣದ ಮೂಲಕ ಬದುಕಿನ ಪಯಣವನ್ನೂ ದಾಖಲಿಸಿದೆ'. +ಕರೇನಾಯ್ಕರು ಸಂಧಿಸುವ ಇತರ ಪ್ರಯಾಣಿಕರ ನೆನಪುಗಳ ಮೂಲಕ ಒಂದು ಕಾಲ ಘಟ್ಟದಲ್ಲಿ ಒಂದು ಸಮುದಾಯ ಕ್ರಮಿಸಿದ ಬದುಕಿನ ಪಯಣದ ವೈವಿಧ್ಯಮಯ ವಿವರಗಳೇ ಇಡೀ ಕಥಾನಕದ ನೇಯ್ಗೆಯನ್ನು ಅಂದಗೊಳಿಸಿವೆ. +ಇಂಡಿಯಾದ ಹಳ್ಳಿಗಾಡಿನ ಬದುಕಿನ ಸ್ಥಿತ್ಯಂತರಗಳು ಮನುಷ್ಯ ಸಂಬಂಧಗಳಲ್ಲಿನ ಏರುಪೇರಿನ ಮೂಲಕ ಸೂಕ್ಷವಾಗಿ ಬಿಚ್ಚಿಕೊಂಡಿವೆ. +ಬಸ್‌ ನಿಂತಾಗ ಕೆಲವರು ಇಳಿಯುತ್ತಾರೆ. +ಹಲವರು ಹತ್ತುತ್ತಾರೆ. +ಕುಶಲ ಸಮಾಚಾರಗಳ ಮೂಲಕ ಮತ್ತೆ ನೆನಪುಗಳ ಖೋ ಖೋ ಆಟ ಮುಂದುವರಿಯುತ್ತದೆ. +'ಪಯಣ'ದಲ್ಲಿ ನೆನಪುಗಳ ಭೂತಕಾಲಕ್ಕೆ ಹೋಗಿ ವರ್ತಮಾನಕ್ಕೆ ಹಿಂತಿರುಗುವ ತಂತ್ರವನ್ನು ಬೆನ್ನುಡಿಯಲ್ಲಿ ಪ್ರಸ್ತಾಪಿಸಿದ ಸಂದೀಪ ನಾಯಕ ಹೇಳುತ್ತಾರೆ: "ಹರಿಯುವ ಬದುಕಿನ ನದಿಯಿಂದ ಒಂದು ಕೊಡ ನೀರನ್ನು ಪ್ರೀತಿಯಿಂದಎತ್ತಿಕೊಂಡಂತೆ ಈ ಬರಹ ಇದೆ". +ಕಾದಂಬರಿಯ ಕೊನೆ ಕುತೂಹಲಕಾರಿಯಾಗಿದೆ. +ಹಳ್ಳಿಯಲ್ಲಿ ಸಮಸ್ತರೆಲ್ಲ ಕೂಡಿ ಪಂಚಾಯ್ತಿ ಮಾಡಿದ್ದನ್ನು ನೆನೆಯುತ್ತ ಕರೇನಾಯ್ಕರು ತಮ್ಮ ಮಗ ಆ ಕೆಲಸವನ್ನು ತಾನೊಬ್ಬನೇ ಮುಗಿಸಿದ್ದನ್ನು ನೆನೆಯುತ್ತ "ಈಹುಡುಗರು ನಮ್ಮನ್ನು ಮೀರಿಸಿದ್ದಾರೆ" ಎನ್ನುತ್ತ ಹೋಟಲಿನಲ್ಲಿ ಬಿರಿಯಾನಿ ಫ್ಲೇಟಿಗೆ ಕೈ ಹಾಕುತ್ತಾರೆ. +ಅರ್ಥಾತ್‌ಪಯಣ ಬೇರೆ ಹಾದಿಗರ ಮೂಲಕ ಮುಂದೆ ಸಾಗುತ್ತದೆ. +ಇಂಥ ಆರೋಗ್ಯಕರ ಮಾನವೀಯ ನಿಲುವು ಲಕ್ಷ್ಮಣ ಕೊಡಸೆ ಅವರದು. +ಅತ್ಯಂತ ಸಂಯಮದ, ಆದರೆ ಯಾವುದೇ 'ಬಿಗಿ'ಯನ್ನು ಓದುಗರಿಗೆ ತಾರದ,ವಿಶಿಷ್ಟ ಬರವಣಿಗೆ ಇಲ್ಲಿದೆ. +ಕಥಾನಕ ಮತ್ತು ಭಾಷೆ ಮೇಲಿನ ಹಿಡಿತ ಕೊಡಸೆಯವರನ್ನು ಇನ್ನೂ ಹೆಚ್ಚು ವಿಸ್ತಾರವಾದ ವಸ್ತು ನಿರ್ವಹಣೆಗೆ ಪ್ರಚೋದಿಸುವಂತಿದೆ. +'ಪಯಣ'ದ ಇಷ್ಟುದ್ದ ಹಾದಿಯಗುಂಟ ಒಂದೇ ಒಂದು ಹೆಣ್ಣಾಗಲೀ, ಅವಳ ಸೆರಗಿನ ಗಾಳಿಯಾಗಲೀ ಸುಳಿಯದಿರುವುದು ಸ್ವಲ್ಪ ವಿಚಿತ್ರ ಹಾಗೂ ಅಸಂಗತ ಅನ್ನಿಸುತ್ತದೆ. +ಯಾಕೆ ಹೀಗೆ ಅಂತ ಕಾದಂಬರಿಕಾರರನ್ನೇ ಕಟಕಟೆಯಲ್ಲಿ ನಿಲ್ಲಿಸಬೇಕು. +ಭೂಮಿ ಹುಣ್ಣಿಮೆ (ಕಾದಂಬರಿ)ಇದು ಅನಿಸಿಕೆ ಮಾತ್ರ ವಿಮರ್ಶೆಯಲ್ಲ. +ಮಲೆನಾಡಿನ ರೈತಾಪಿ ಶೂದ್ರ ಸಮುದಾಯಗಳ ಬದುಕಿನ ಪಲ್ಲಟಗಳನ್ನು ಕಾಲಾಂತರದಲ್ಲಿ ಆದಕುಟುಂಬಗಳಲ್ಲಿ ಮೌಲ್ಯ ಬದಲಾವಣೆಗಳನ್ನು ಅತ್ಯಂತ ಸಾವಧಾನದಿಂದ, ಪಕ್ಚವಾದ ದೃಷ್ಟಿಕೋನದಿಂದ ಸರಳ ಹಾಗೂ ಕೃತಕವಲ್ಲದ ಸಹಜ ಚೆಲುವಿನ ಭಾಷೆಯ ಮೂಲಕ ತೆರೆದಿಡುವ ಈ ಕಾದಂಬರಿ ನಿಜಕ್ಕೂ ಅಪರೂಪದ ಗುಣವನ್ನು ಹೊಂದಿದೆ. +ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ,ಚಿದಂಬರ ರಹಸ್ಯ(ಮತ್ತು ತೇಜಸ್ವಿ ಅವರ ಕಥೆಗಳು) ಮಲೆನಾಡಿನ ಶೂದ್ರರ ಬದುಕಿನ ಚೆಲುವನ್ನು ಒಂದು ಬಗೆಯಲ್ಲಿ ಸೆರೆಹಿಡಿದರೆ ಈ ಕಾದಂಬರಿ ಅದೇ ಕೆಲಸವನ್ನು ಇನ್ನೊಂದು ಅಂಚಿನಲ್ಲಿ ನಿಂತು ಮಾಡುತ್ತದೆ. +ಮುಂಜಾವಿನ ಸರಳ ವಿವರಣೆಯೊಂದಿಗೆ ಆರಂಭವಾಗುವ ಕಥೆ ಬೆಳೆಯುತ್ತ ಸುರುಳಿಯಂತೆ ಸುತ್ತಿಸುತ್ತಿ ಅತ್ಯಂತ ಸಂಕೀರ್ಣ ಪದರುಗಳನ್ನು ಬಿಡಿಸುತ್ತ ಹೋಗುವ ಪರಿ ಮನೋಜ್ಯವಾಗಿದೆ. +ಮಲೆನಾಡಿನ ಸಾಂಸ್ಕೃತಿಕ ವಿವರಗಳು ಸೊಗಸಾಗಿ ದಾಖಲಾಗಿವೆ. +ಜತೆಗೆ ಅಲ್ಲಿನ ಒಟ್ಟಾರೆ ಬದುಕು ರೂಪಾಂತರ ಪ್ರಕ್ರಿಯೆಗೆ ಒಳಗಾಗುತ್ತಿರುವುದನ್ನು ಸಮರ್ಥವಾಗಿ ದಾಖಲಿಸುತ್ತವೆ. +ಮೇಲುನೋಟಕ್ಕೆ ಸಣ್ಣ ಗ್ರಾಮದಿಂದ ಪಟ್ಟಣ ಸೇರಿದ ಇಬ್ಬರು ಅಣ್ಣತಮ್ಮಂದಿರ ಕಥೆಯನ್ನು ಇದು ಹೇಳುವಂತೆ ಕಂಡರೂ ಬೆಳೆಯುತ್ತ ಅದು ಪಡೆದುಕೊಳ್ಳುವ ಅರ್ಥ ಶ್ರೀಮಂತಿಕೆ ಬೆರಗುಗೊಳಿಸುವಂತಿದೆ. +ಒಂದು ಪ್ರದೇಶದ ಶೂದ್ರ ಸಮುದಾಯಗಳ ತಾಪತ್ರಯಗಳು, ನೋವು,ದುಃಖ ಮತ್ತು ಅದಕ್ಕೆ ಘನತೆಯಿಂದ ಅವರು ಸ್ಪಂದಿಸುವ ರೀತಿ ಮೆಚ್ಚುಗೆಗೆ ಪಾತ್ರವಾಗುವಂತಿವೆ. +ಪ್ರತಿ ಪಾತ್ರವೂ ಪರಿಚಯವಾಗುವುದರೊಂದಿಗೆ, ಅದರೊಂದಿಗೆ ಸಹಜವಾಗಿ ಹುಟ್ಟಿಕೊಳ್ಳುವ ಬದುಕಿನವಿಷಾದ, ನೋವು, ಖುಷಿಗಳನ್ನು ಒಳಗೊಂಡ ಸಂಗತಿಗಳನ್ನು ಕಟ್ಟಿರುವ ಶೈಲಿ ಸಹಜ ಮತ್ತು ಸುಂದರವಾಗಿವೆ. +ಈ ಎರಡು ಗುಣಗಳೇ ಕಾದಂಬರಿಯ ಅರ್ಥವನ್ನು ಹಿಗ್ಗಿಸಲು ಸಹಕಾರಿಯಾಗಿವೆ. +ರತ್ನ ಮತ್ತು ಶಿವಮೂರ್ತಿಗಳ ಮುಗ್ಧತೆ,ನೇರ ಸ್ವಭಾವ ಮನಮುಟ್ಟುವಂತಿದೆ. +ಜಯಪ್ಪ-ಚಂದ್ರಮ್ಮ; ಶಂಕರ-ಹೊನ್ನಮ್ಮರ ಪಾತ್ರಗಳೂ ಅಷ್ಟೇ ಪರಿಣಾಮಕಾರಿಯಾಗಿ ಮೂಡಿಬಂದಿವೆ. +ಒಂದು ಜೋಡಿ ಮನುಷ್ಯ ಸಹಜತೆಯನ್ನು, ಬದುಕಿನ ಮೌಲ್ಯಗಳನ್ನು ಎಚ್ಚರದಿಂದ ಕಾಪಾಡಿಕೊಂಡು ಬಂದು ಸಾರ್ಥಕತೆ ಕಂಡುಕೊಂಡರೆ ಇನ್ನೊಂದು ಜೋಡಿ ತಮಗರಿವಿಲ್ಲದೆ ನಗರವಾಸದ ಕೃತಕತೆಯನ್ನೇ ಜೀವನಶೈಲಿಯಾಗಿಸಿಕೊಂಡು ಮುಗ್ಧತೆ ಕಳೆದುಕೊಂಡು ರಾಕ್ಷಸರಾಗುವ ಬಗೆ ಬಹಳ ಕಾಲ ಕಾಡುತ್ತದೆ. +ಹಾಗೆಂದು ನಿರೂಪಕ ಎಲ್ಲಿಯೂ ಈ ಜೋಡಿಯನ್ನು ಏಕಪಕ್ಷೀಯವಾಗಿ ದೂರುವಂತಹ ಶೈಲಿಯನ್ನು ಬಳಸದಿರುವುದು, ಅತ್ಯಂತ ಮುಕ್ತನಾಗಿರುವುದು ಇಲ್ಲಿನ ವಿಶೇಷವಾಗಿದೆ. +ಶಂಕರನ ಬದುಕಿನ ವಿವರಗಳು ಬಂದಲ್ಲಿ ಆತ ಹಳೆಯ ಬದುಕಿನ ನೆನಪುಗಳ ಲಹರಿಯಲ್ಲಿ ಮುಳುಗಿದಾಗ ಕಾದಂಬರಿ ಭಾವಗೀತಾತ್ಮಕವಾಗುತ್ತದೆ. +ಈ ಭಾಗಗಳು ಚೆಲುವಾಗಿವೆ. +ಆತ ನೆನಪಿಸಿಕೊಳ್ಳುವ ಭೂಮಿ ಹುಣ್ಣಿಮೆ,ದೀಪಾವಳಿಯ ನೆನಪುಗಳಂಂತೂ ಬಹಳ ಸುಂದರವಾಗಿ ಮೂಡಿಬಂದಿವೆ. +ಗಂಗಕ್ಕ-ದುಗ್ಗಬಾವ ಮತ್ತು ಅವರ ಬದುಕಿನ ವಿವರಗಳು ಹಾಗೂ ಮಗುವಿನಿಂದಾಗಿ ಗಂಗಕ್ಕ ಅನುಭವಿಸುವ ಸಂಕಟ ಬಹಳ ಚೆನ್ನಾಗಿ ಬಂದಿವೆ. +ಗೋಪಾಲಣ್ಣನ, ಕುಬೀರನ ಮಾನವೀಯ ಮುಖಗಳು ಸಹಜವಾಗಿ ಬಂದಿವೆ ಮತ್ತು ಪರಿಣಾಮಕಾರಿಯಾಗಿವೆ. +ಕಮಲಕ್ಕ, ರಮೇಶ, ಗೋವಿಂದಣ್ಣ ಹೀಗೆ ಪ್ರತಿ ಸಣ್ಣ ಪಾತ್ರವೂಮುಖ್ಯ ಭೂಮಿಕೆಯಾಗಿ ಕಾರ್ಯನಿರ್ವಹಿಸುವುದು ನಿರೂಪಕನ ಸಾಮರ್ಥ್ಯವನ್ನು, ಸಂಯಮವನ್ನು ತೋರಿಸುವಂತಿವೆ. +ಈ ಕಾದಂಬರಿ ಒಂದು ಒಳ್ಳೆಯ ಓದನ್ನು ನೀಡುತ್ತದೆ. +ಮುಚ್ಚಿಗೆ ಮನೆಯ ಮೇಲಿನ ಕೋಣೆಯಲ್ಲಿ ಮಲಗಿದ್ದ ಜಯಪ್ಪನಿಗೆ ಹೆಂಡತಿ ಪಕ್ಕದಲ್ಲಿ ಮಲಗಿದ್ದರೂ ಭೋರ್ಗರೆಯುವ ಗೊರಕೆ. +ಚಂದ್ರಮನಿಗೆ ಅದೆಲ್ಲ ಅಭ್ಯಾಸವಾಗಿ ಎಷ್ಟೋ ವರ್ಷಗಳು ಕಳೆದಿವೆ. +ಗೊರಕೆಯ ಮಧ್ಯೆ ನಿದ್ದೆ ಮಾಡುವುದು ರೂಢಿಯಾಗಿದೆ. +ಜಯಪ್ಪನಿಗೆ ರಾತ್ರಿ ಮಲಗುವುದು ತಡವೇ ಆಗಿದ್ದರೂ ಬೆಳಗಿನ ಜಾವವೇ ಎಚ್ಚರವಾಯಿತು. +ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸಿದ. +ಅವನಿಗೆ ತಾನು ಊರಲ್ಲಿ ಮಹಡಿ ಮೇಲಿನ ಕೋಣೆಯಲ್ಲಿ ಮಂಚವಿದ್ದರೂ ಒರಟಾಗಿದ್ದ ಹಾಸಿಗೆಯ ಮೇಲೆ ಮಲಗಿದ್ದು ಕ್ಷಣಮಾತ್ರದಲ್ಲಿ ಅರಿವಿಗೆ ಬಂತು. +ದಪ್ಪ ರೀಪಿನ ಸರಳಿನ ಕಿಟಕಿ. +ಅವಕ್ಕೆ ಮರದ ಬಾಗಿಲು. +ಮುಚ್ಚುವುದು ನೆಪಕ್ಕಷ್ಟೆ. +ಮನೆಹಳತಾಗಿ ಕಿಟಕಿ ಬಾಗಿಲುಗಳಿಗೆ ಮಸಿ ಹಿಡಿದು, ಮುಚ್ಚಿದರೂ ಬೆರಳು ಗಾತ್ರದ ಪಡವು. +ತಣ್ಣನೆಯ ಗಾಳಿ ಮೈಕೊರೆಯುವಂತೆ ಸುಳಿಯುತ್ತದೆ. +ಊರಿಂದ ತಂದ ನುಣ್ಣನೆಯ ಉಣ್ಣೆಯ ಶಾಲನ್ನು ಒಳಗೆ ಹಾಕಿ ಅದರಮೇಲೆ ಚಾದರದಂತಹ ಹೊದಿಕೆಯನ್ನು ಹಾಕಿದ್ದರೂ ರಾತ್ರಿ ಒಂದು ಹೊತ್ತಿನಲ್ಲಿ ಚಳಿಗಾಳಿ ನುಗ್ಗಿದ ಕಾರಣ ಕಾಲದಸಿ ಇದ್ದ ಒರಟು ಕಂಬಳಿಯನ್ನು ಎಳೆದುಕೊಂಡಿದ್ದ. +ರಾತ್ರಿ ಕತ್ತಲಿನಲ್ಲಿ ಪತ್ನಿ ಚಂದ್ರಮ್ಮ ಹೊದಿಕೆಯ ರಕ್ಷಣಾ ವಲಯದಿಂದ ಹೊರಗುಳಿದದ್ದು ಗಮನಕ್ಕೆ ಬಂದು ಅವಳಿಗೂ ಹೊದಿಸಿದ. +ನಿದ್ದೆಯ ಮಂಪರಿನಲ್ಲಿ ಏನನ್ನೋ ಗೊಣಗಿಕೊಂಡು ಅವಳು ಇವನಿಗೆ ಬೆನ್ನು ಹಾಕಿ ಮಲಗಿಕೊಂಡಿದ್ದಳು +ಲಕ್ಷ್ಮಣ ಕೊಡಸೆ ಅವರ 'ಭೂಮಿ ಹುಣ್ಣಿಮೆ' ಕಾದಂಬರಿ ಆರಂಭವಾಗುವುದು ಹೀಗೆ. +ಕೌಟುಂಬಿಕ ವಾತಾವರಣದಿಂದ ಕಾದಂಬರಿ ಆರಂಭಗೊಳ್ಳುತ್ತದೆ. +ಗೊರಕೆಯಲ್ಲಿ ನಿಸ್ಸೀಮನಾದ ಜಯಪ್ಪನ ಎಚ್ಚರದ ಸ್ಥಿತಿಯನ್ನು ಆಸಕ್ತಿಯಿಂದ ನಿರೂಪಿಸುವ ಕಾದಂಬರಿ ಕುಟುಂಬದ ಒಳಹೊರಗನ್ನ ಸೂಕ್ಷವಾಗಿ ಗಮನಿಸುವತ್ತ ಕ್ರಿಯಾಶೀಲವಾಗುತ್ತದೆ. +ಒಂದಾನೊಂದು ಕಾಲದ ಸಮೃದ್ಧ ಬದುಕನ್ನು ಸಮೃದ್ಧವಾಗಿ ಕಟ್ಟಕೊಟ್ಟ ಕಲಾಕೃತಿಗಳು ಕನ್ನಡದಲ್ಲಿ ಹಲವಾರಿವೆ. +ಅದರಲ್ಲೂ ಮಲೆನಾಡಿನ ಜನಜೀವನವನ್ನು ಅತ್ಯಂತ ಸಹಜವಾಗಿ ಕುವೆಂಪು ತೇಜಸ್ವಿ ತಮ್ಮ ಕಥಾಸಾಹಿತ್ಯದಲ್ಲಿ ಸಮರ್ಥವಾಗಿ ಹಿಡಿದಿಡುವುದರ ಮೂಲಕ ಸಹ್ಯಾದ್ರಿ ಜಾನಪದೀಯತೆಯನ್ನು ಮತ್ತು ಅದರ ಅಂತಸ್ಸತ್ವವನ್ನ ಸಹೃದಯರು ಸವಿಯುವಂತೆ ಮಾಡಿದರು. +ಈಗಲೂ ಅದು ಚರ್ಚಿತವಾದ ಸಂಗತಿಯೇ. +ಮಲೆನಾಡಿನ ಶೂದ್ರ ನೆಲೆಗಳ ಬದುಕನ್ನು ಮತ್ತು ಪರಿವರ್ತನಶೀಲತೆಯನ್ನ ಕುವೆಂಪು,ತೇಜಸ್ವಿಯವರಿಗಿಂತ ಭಿನ್ನ ನೆಲೆಯಲ್ಲಿ ನೋಡಿದ ಪ್ರಾಮಾಣಿಕ ಪ್ರಯತ್ನವಾಗಿ 'ಭೂಮಿ ಹುಣ್ಣಿಮೆ' ಬಿತ್ತಿ ಇದೆ. +ಮಲೆನಾಡಿನ ಪರಿಸರದ ಕೃಷಿ ಚಟುವಟಿಕೆಯ ಸಣ್ಣ ಸಂಗತಿಯೂ ಜೀವನಾನುಭವವೂ ಮರೆಯಾಗದಂತೆ ವ್ಯಕ್ತಗೊಂಡಿರುವುದೇ ಈ ಕಾದಂಬರಿಯ ವಿಶೇಷ. +ಮರದ ಹಲಗೆಯನ್ನ ಬಂದಾಬಸ್ತಾಗಿ ಸಟ್ಟು ಗೋಡೆಗೆ ಆನಿಸಿದ ಏಣಿಯಿಂದ ಮಹಡಿಯಿಂದ ಇಳಿದ ಜಯಪ್ಪ ಜಗುಲಿಗೆ ಬಂದ. +ಅಲ್ಲಿ ಕತ್ತಲು ಇನ್ನೂ ಉಳಿದಿತ್ತು. +ಜಗುಲಿಯ ಮೇಲೆ ಅಡಿಕೆ ಸುಲಿಯಲು ಬಂದಿದ್ದ ಪಕ್ಕದ ಮನೆಯ ಹೆಂಗಸು ಕಂಬಳಿ ಹೊದ್ದು ಮಲಗಿತ್ತು. +ಅಡಿಕೆ ಸಿಪ್ಪೆಯ ರಾಶಿ. +ಅಡಿಕೆ ಸುಲಿದವರು ಕೆಲಸ ಮುಗಿಸಿ ಏಳುವಾಗ ಅಡಿಕೆ ಮಣೆಯನ್ನ ಅಡ್ಡ ಮಲಗಿಸಿ ಹೋಗಿದ್ದರು. +ಅಡಿಕೆ ಸುಲಿಯುವ ಮೆಟ್ಟುಗತ್ತಿ ಸಿಪ್ಪೆಯೊಳಗೆ ಹುದುಗಿದ್ದವು. +ಮನೆಯಲ್ಲಿ ಹಿರಿಯ ಯಜಮಾನರಿದ್ದಿದ್ದರೆ ಇಂತಹ ಕೆಲಸಗಳಿಗೆ ಬೆಳಿಗ್ಗೆ ಬೆಳಿಗ್ಗೆಯೇ ಮಂಗಳಾರತಿ ಮಾಡದೆ ಬಿಡುತ್ತಿರಲಿಲ್ಲ ಎಂದುಕೊಂಡ ಜಯಪ್ಪ ಅಡಿಕೆಮಣೆಗಳನ್ನ ನಿಧಾನವಾಗಿ ಎತ್ತಿ ಕೆಳಜಗುಲಿಯಲ್ಲಿ ಅದಕ್ಕಾಗಿಯೇ ಮಾಡಿದ್ದ ಜಾಗದಲ್ಲಿ ಇರಿಸಿದ. +ಯಾರಾದರೂ ಎಡವಿ ಬಿಟ್ಟರೆ ಮೆಟ್ಟುಗತ್ತಿಯಿಂದ ಹಾನಿ ಮಾಡಿಕೊಳ್ಳಬಾರದೆಂದು ಎಚ್ಚರಿಕೆಯನ್ನು ಅವನು ವಹಿಸಿದನಾದರೂ ಅಂತಹ ಅಪಾಯಕ್ಕೆ ಗುರಿಯಾಗುವ ಯಾವ ಮಕ್ಕಳೂ ಮನೆಯಲ್ಲಿಲ್ಲ ಎಂಬುದೂ ಅವನ ಗಮನಕ್ಕೆ ಬಂತು. +ಹೀಗೆ ಬದುಕನ್ನು ಕಾಣುವ ಸೂಕ್ಷತೆ, ಅದರ ಬಗೆಗಿನ ಕಾಳಜಿ ಕಾದಂಬರಿಯ ಪುಟ ಪುಟಗಳಲ್ಲಿಯೂ ವ್ಯಕ್ತವಾಗುವ ಅಂಶವಾಗಿದೆ. +ಹಳ್ಳಿಗಳ ಗೃಹ ನಿರ್ಮಾಣ ಸ್ಥಿತಿಯನ್ನು, ದೈನಂದಿನಕಾರ್ಯ ಕಲಾಪಗಳನ್ನು ಎಳೆಎಳೆಯಾಗಿ ವಿವರಿಸುವುದನ್ನು ಗಮನಿಸಿದರೆ ಬದುಕಿನ ಸಂಚಲನವನ್ನ ಪರಿಪೂರ್ಣವಾಗಿ ಕಾದಂಬರಿ ಗ್ರಹಿಸಿದೆ ಎನಿಸದಿರದು. +ಅದರಲ್ಲೂ ಪರಿಪಕ್ವಗೊಂಡ ಜೀವನಾನುಭವಗಳು ಸಾಂದರ್ಭಿಕವಾಗಿ ಹೊಮ್ಮುವ ಬಗೆಯಿಂದಲೂ ಕೃತಿಯ ಸ್ವರೂಪವೇ ವಿನೂತವವೆನಿಸುತ್ತದೆ. +ಗ್ರಾಮ ನೆಲೆಯಿಂದ ನಗರದ ನೆಲೆಗೆ ಸಂದ ಜಯಪ್ಪ ಶಂಕರ ಎಂಬ ಇಬ್ಬರು ಅಣ್ಣ ತಮ್ಮಂದಿರ ಜೀವನ ಕಥೆಯನ್ನು ವ್ಯಕ್ತಗೊಳಿಸುತ್ತಿರುವಂತೆ ಹೊರನೋಟದಲ್ಲಿ ಕಾಣಿಸಿದರೂ ಅದರ ವಿಕಸನಶೀಲತೆಯಲ್ಲಿ ಲಭಿಸುವ ಪ್ರತಿಷ್ಠೆ, ಅವಕಾಶ ಮತ್ತು ಅನಾರೋಗ್ಯಕರ ಬೆಳವಣಿಗೆಯ ಬಗೆಗೆ ಆಶ್ಚರ್ಯ, ಕುತೂಹಲಗಳು ಮೂಡುತ್ತವೆ. +ಆ ಮೂಲಕ ಮನುಷ್ಯನ ಒಟ್ಟಾರೆ ಬೆಳವಣಿಗೆಯನ್ನ ಬೆರಗುಗಣ್ಣಿನಿಂದ ನೋಡುವ ತವಕ ಉಂಟಾಗದಿರದು. +ಈ ಕಾದಂಬರಿಯಲ್ಲಿ ಶಂಕರ- ಹೊನ್ನಮ್ಮ ಸಹಜ ಬದುಕನ್ನ ಬಾಳಿ ಜನಪದ ತತ್ತ್ವಗಳಿಗೆ ಬದ್ಧರಾದವರು. +ಹಾಗಾಗಿ ಈ ದಂಪತಿಗಳು ಮೌಲ್ಯಗಳ ಪರವಾಗಿಯೇ ಕಾಣಿಸುತ್ತಾರೆ. +ಆದರೆ, ಜಯಪ್ಪ- ಚಂದ್ರಮ್ಮ ಬಣ್ಣದ ಬದುಕಿಗೆ ಆಕರ್ಷಿತರಾದವರು. +ಅದೇ ನಿಜವಾದ ಜೀವನಶೈಲಿ ಎಂದು ಭಾವಿಸಿ ತಮ್ಮನ್ನು ತಾವು ಮೈಮರೆತವರಾಗಿ ಕಾಣುತ್ತಾರೆ. +ಹಾಗಾಗಿ ಈ ದಂಪತಿಗಳ ಬದುಕು ಹಲವು ಶಂಕೆಗಳಿಗೂ ಆಸ್ಪದವಾಗುವುದುಂಟು. +ಒಂದೇ ಮೂಲದಿಂದ ಬಂದು ಬೇರೆ ಬೇರೆ ನೆಲೆಗಳನ್ನು ಕಂಡುಕೊಂಡ ಸೋದರ ಕುಟುಂಬಗಳ 'ಸಹಜತೆ' ಮತ್ತು 'ಸ್ಥಿತ್ಯಂತರ'ವನ್ನು ಕಾದಂಬರಿಕಾರ ಪಕ್ಷಪಾತ ದೃಷ್ಟಿಯಿಂದ ನಿರ್ವಹಿಸುವುದೇ ಇಲ್ಲ. +ದೂರು ಪೆಟ್ಟಿಗೆಯಲ್ಲಿ ನಿಲ್ಲಬೇಕಾದ ಅಪರಾಧಿತನದ ಹೊಣೆಯನ್ನ ಹೊರಿಸುವ ಶೈಲಿ ಬಳಕೆಯಾಗದೆ ನಿರ್ಲಿಪ್ತ ಧೋರಣೆ ತಾಳುವುದು ಗಮನಿಸತಕ್ಕ ಅಂಶ. +ನಂಬಿದ ಮೌಲ್ಯಗಳನ್ನು, ಸತ್ಯಗಳನ್ನು ಮತ್ತು ಅವನ್ನು ಮೀರುವ ಕುಟುಂಬದ ಇಂಗಿತವನ್ನು ಗ್ರಹಿಸುವ, ಮೌಲ್ಯೀಕರಿಸುವ ಜವಾಬ್ದಾರಿಯನ್ನ ಓದುಗರಿಗೇ ಬಿಟ್ಟಿರುವುದು ಕಾದಂಬರಿಯ ಮತ್ತೊಂದು ವಿಶಿಷ್ಟತೆ. +ವರ್ತಮಾನದಲ್ಲಿದ್ದು ಭೂತವನ್ನು ನೆನಪಿಸುವ ಭೂಮಿ ಹುಣ್ಣಿಮೆಯಲ್ಲಿ ಪರಂಪರಾಗತ ಬದುಕಿನ ಬೇರುಗಳು ಸಮೃದ್ಧವಾಗಿ ಹರಡಿಕೊಂಡಿವೆ. +ಇಲ್ಲಿ ಬದುಕೇ ಬೇರೆಯಾಗಿ ಆಚರಣೆಯೂ ಬೇರೆಯಾಗಿ ಕಂಡಿಲ್ಲ. +ಅವೆರಡಕ್ಕೂ ಅವಿನಾಭಾವ ಸಂಬಂಧವಿದೆ. +ಕುಲವೃತ್ತಿಯ ಭಾಗವಾಗಿ ಜರುಗುವ ಆಚರಣೆಗಳ ಸರಮಾಲೆಯೇ ಇಲ್ಲಿದೆ. +ಅಂದರೆ ಪರಂಪರೆಯಿಂದ ಬಂದ ಆಚರಣೆಗಳನ್ನು, ಸಂಪ್ರದಾಯಗಳನ್ನ ನೆನಪಿಗೆ ತರುತ್ತಲೇ ಆ ಸಮೃದ್ಧಿಯ ಗರ್ಭದಿಂದಲೇ ವಿಘಟನೆಗೊಳ್ಳುವ ಕೌಟುಂಬಿಕ ಚಿತ್ರಣದತ್ತ ಓದುಗನ ಗಮನಹರಿಯುವಂತೆ ಮಾಡುವಲ್ಲಿ ಕಾದಂಬರಿಯ ಯಶಸ್ಸಿದೆ. +ಕುಲಕಸುಬುಗಳಿಗೆ ಅಂಟಿಕೊಂಡಿದ್ದ ಸಮುದಾಯಗಳು ಆಧುನಿಕ ಶಿಕ್ಷಣದ ಫಲಾಫಲಗಳನ್ನು ಅನುಭವಿಸುವಾಗ ಎದುರಾಗುವ ಸಮಸ್ಯೆ ಸವಾಲುಗಳು ಮತ್ತು ಕುಲವೃತ್ತಿಗಳಲ್ಲಾದ ಪಲ್ಲಟಗಳ ವಿವರಗಳು ಕಾದಂಬರಿಯುದ್ದಕ್ಕೂ ಬಿತ್ತರಗೊಂಡಿವೆ. +ಕಾದಂಬರಿಯ ಬೆನ್ನುಡಿಯಲ್ಲಿ ಕೃಷ್ಣಮೂರ್ತಿ ಹನೂರು ಹೇಳುವಂತೆ ಕಾದಂಬರಿಯ ಮುಖ್ಯ ಪಾತ್ರವೊಂದು ತನ್ನ ಬಾಲ್ಯ ಕಾಲದ ಕನಸಿನ ಗ್ರಾಮಕ್ಕೆ ಉತ್ಸಾಹದಿಂದ ಪ್ರಯಾಣಿಸುವಲ್ಲಿ ದಾರಿಯ ಗೋಡೆಯೊಂದರ ಮೇಲೆ 'ಅಕ್ಷರತುಂಗಾ ಮೂರುಕೋಟ ನುಂಗ' ಎಂಬ ವ್ಯಂಗ್ಯಬ ರೆಹವೂ ಕಾಣಿಸಿಕೊಳ್ಳುತ್ತದೆ. +ಅಂದರೆ ಒಂದು ಸಂಸಾರ ಕಥೆ ಅದರ ಕುಲವೃತ್ತಿಯೇ ಅಲ್ಲದೆ ಪರಿಸರದಜಾನಪದ ಆಚರಣೆಗಳಿಂದ ಹೊರಡುವ ಕಾದಂಬರಿಯ ಕಥಾನಕ, ಕ್ರಮೇಣ ಅದೇ ದೇಶದ ವಿದ್ಯಮಾನ ಎಂಬುದರ ಕಡೆಗೂ ತನ್ನ ಬಿಸಿಲಕೋಲನ್ನು ಚಾಚುತ್ತದೆ. +ಪ್ರಯಾಣ ಮತ್ತು ಬದುಕಿನ ಪಯಣವನ್ನ ಒಟ್ಟೊಟ್ಟಿಗೆ ಬೆಳೆಸುವಾಗ ಕಷ್ಟ ಸುಖಗಳ ಕಥಾನಕಗಳು ಹಲವಾರು. + ರೈತರ ಕಷ್ಟಗಳು , ಬದಲಾದಕುಟುಂಬ ಪರಿಸ್ಥಿತಿ , ಶೈಕ್ಷಣಿಕ ಸ್ಥಿತಿಗತಿ , ಟ್ಯೂಷನ್ನಿನಂತಹ ಅಪರೂಪದ ಸಂಗತಿಗಳು, ಜಕಣಿ ಕೂಡಿಸುವುದು , ದೀಪಾವಳಿ , ನೋನಿ , ಬಲೀಂದ್ರಪೂಜೆ ಚೌಡಿಹಬ್ಬ , ಮಲೆನಾಡಿನ ಸ್ವರೂಪ, ಮನೆಯ ಪರಿಸರ, ಹಳ್ಳಿಯ ಸಂಬಂಧಗಳು,ಅಲ್ಲಿಯ ನಡವಳಿಕೆಗಳು. + ಇವೆಲ್ಲ ಕಾದಂಬರಿಕಾರನ ನೆನಪಿನಂಗಳದಲ್ಲಿ ಸುಸಂದರ್ಭವನ್ನು ಹುಡುಕಿಕೊಂಡಿವೆ. +ಆದ್ದರಿಂದಲೇ ಕೌಟುಂಬಿಕ ವಿದ್ಯಮಾನಗಳ ಆಜುಬಾಜಿನಲ್ಲಿ ಈಗಾಗಲೇ ಕಣ್ಮರೆಯಾಗುತ್ತಿರುವ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಡುವ ನಮ್ರ ಪ್ರಯತ್ನವಾಗಿಯೂ ಕಾದಂಬರಿ ಕಾಣಿಸುತ್ತದೆ. +ತೇಜಸ್ವಿಯವರ "ಕರ್ವಾಲೊ' ಕಾದಂಬರಿಯ ಬರವಣಿಗೆಯ ಕ್ರಮವನ್ನು ಇದು ನೆನಪಿಸುತ್ತದೆ. +ಸಾಮಾನ್ಯವಾಗಿ ಸರಳವಾದ ಬರವಣಿಗೆ ಎನಿಸಿದರೂ ಏನೆಲ್ಲ ಬದುಕಿನ ಅದ್ಭುತಗಳನ್ನ, ರಹಸ್ಯಗಳನ್ನು ಸರಳ ಭಾಷೆಯಲ್ಲಿ ತೇಜಸ್ವಿ ಹೇಳತೊಡಗುತ್ತಾರೆಂಬ ಸಂಗತಿಯೇ ರೋಮಾಂಚನಕಾರಿಯಾದುದು. +ಅದೇ ರೀತಿ ಲಕ್ಷ್ಮಣ ಕೊಡಸೆ ಅವರ ಈ ಕಾದಂಬರಿಯು ಕೌಟುಂಬಿಕ ಸ್ಥಿತಿಗತಿ, ಜೀವನ ಕ್ರಮ, ಶೂದ್ರರ ವಿದ್ಯಾಭ್ಯಾಸ, ಆಚರಣೆಗಳು,ಭೂಮಿಯ ಮೇಲಿನ ಹೋರಾಟಗಳು, ವಿಕೃತಿಗಳು- ಇವೆಲ್ಲವನ್ನ ತುಂಬ ಆತ್ಮೀಯವಾಗಿ ಸುಲಲಿತವಾದ ಗದ್ಯದಲ್ಲಿ ಅನಾವರಣಗೊಳಿಸುತ್ತದೆ. +ಜಯಪ್ಪ, ಶಂಕರ, ನಾಗನಾಯ್ಕ, ಕರೇನಾಯ್ಕರ ಕುಟುಂಬಗಳ ಕತೆ ಇಲ್ಲಿ ನೆಪ ಮಾತ್ರ. +ಜಯಪ್ಪ, ಶಂಕರನ ಸಂಸಾರಗಳಂತೆ ನಾಗನಾಯ್ಕರ ಕುಟುಂಬದ ವಾತಾವರಣಕ್ಕೂ ಕರೆನಾಯ್ಕರ ಕುಟುಂಬದ ವಾತಾವರಣಕ್ಕೂ ಇದ್ದ ಅಂತರವನ್ನು ಗ್ರಹಿಸುವುದೂ ಸಹ ಇಲ್ಲಿ ಮುಖ್ಯ ಉದ್ದೇಶವಾಗಿದೆ. +ಈ ಜೀವನಶೈಲಿಗಳ ಆಯ್ಕೆಯ ಮೂಲಕ ಬದಲಾವಣೆಯನ್ನ ಗ್ರಹಿಸುವ ಗಂಭೀರ ಪ್ರಯತ್ನವಾಗಿಯೂ ಇದು ಕಂಡು ಬರುತ್ತದೆ. +ಸಾಧಾರಣ ಸಂಗತಿಯನ್ನೂ ಮನುಷ್ಯನ ಬವಣೆಯೊಂದಿಗೆ ಚಿತ್ರಿಸುವಾಗ ಸಮೃದ್ಧವಾದ ಬದುಕೊಂದು ಕಣ್ಮರೆಯಾಗುತ್ತಿದೆ ಎಂಬ ಭಾವ ಹೊಮ್ಮಿದರೂ ಕಾದಂಬರಿಕಾರನಿಗೆ ಅದರ ಬಗೆಗೆ ವ್ಯಥೆ ಇದೆಯೇ ಅಥವಾ ಸಮಾಧಾನವಿದೆಯೋ ತಿಳಿಯುವುದಿಲ್ಲ. +ಅಂದರೆ ಅಷ್ಟು ನಿರ್ಲಿಪ್ತರಾಗಿ ಬದುಕಿನ ಮುಖಗಳನ್ನ ಮುಖಾಮುಖಿಯಾಗಿಸುತ್ತಾರೆ. +ಒಟ್ಟು ಬದುಕಿನ, ಸಮೃದ್ಧತೆಯನ್ನು ಬಿಂಬಿಸುವ ಈ ಕಾದಂಬರಿಗೆ 'ಭೂಮಿ ಹುಣ್ಣಿಮೆ' ಎಂದು ನಾಮಕರಣ ಮಾಡಿರುವುದು ಔಚಿತ್ಯಪೂರ್ಣವಾಗಿದೆ. +'ಭೂಮಿಹುಣ್ಣಿಮೆ ಹಬ್ಬವೆಂದರೆ ಬೆಳೆದು ನಿಂತ ಬತ್ತದ ಪೈರಿನ ಎದುರಿಗೆ ಪೂಜೆ ಸಲ್ಲಿಸಿ ಸಮೃದ್ಧಿಯನ್ನ ಬೇಡುವ ಸಂದರ್ಭ'. +ಮಳೆಗಾಲ ಕಳೆದು ಗದ್ದೆಗಳಲ್ಲಿ ಪೈರು ತುಂಬಿದಾಗ ಬಸಿರಿಯಂತೆ ಭೂಮಿ ಕಂಗೊಳಿಸುತ್ತದೆ. +ಬಸಿರಿಗೆ ಬಯಕೆ ಸಲ್ಲಿಸುವಂತೆ ರೈತರು ಈ ಹಬ್ಬ ಮಾಡುತ್ತಾರೆ. +ಸಮೃದ್ಧಿಯ ಸಂಕೇತವಾಗಿರುವ ಇಂಥ ಆಚರಣೆಗಳೆಲ್ಲ ಇಂದು ಕಣ್ಮರೆಯಾಗುತ್ತಿವೆ ಎಂಬ ಅಸಮಾಧಾನದ ದನಿ ಇರುವಂತೆ, ಬದುಕೇ ಬದಲಾವಣೆಗೊಳಪಟ್ಟಿರಬೇಕಾದರೆ ಅದರ ಭಾಗವಾದ ಆಚರಣೆಗಳೂ ಕೊಂಚವಾದರೂ ಬದಲಾಗಲೇಬೇಕಲ್ಲವೇ? +ಎಂಬ ಸಮಾಧಾನದ ಭಾವನೆಯೂ ಇದ್ಬಂತಿದೆ. " +ರತ್ನ ಕೊಟ್ಟ ಕಾಫಿ ಕುಡಿದ ಮೇಲೆ ಬೆಳಗಿನ ಒತ್ತಡದಿಂದ ಎದ್ದ. +ಸ್ನಾನದ ಕೋಣೆಗೆ ಹೊಂದಿಕೊಂಡಿದ್ದ ಶೌಚಾಲಯದತ್ತ ತೆರಳಿದ. +ಮನೆಯ ಹಿಂದೆ ಎತ್ತರದ ಜಾಗದಲ್ಲಿ ನೀರಿನ ಶೇಖರಣೆಗೆ ದೊಡ್ಡ ತೊಟ್ಟ ಇದೆ. +ಅದರಿಂದಲೇ ಅಡುಗೆ ಮನೆಗೆ ಬಚ್ಚಲು ಮನೆಗೆ ಕೊಳವೆ ಹಾಕಿ ಸಂಪರ್ಕ ಪಡೆಯಲಾಗಿದೆ. +ಆದರೆ ಶೌಚಾಲಯಕ್ಕೆ ತೊಟ್ಟಿಯಿಂದ ನೇರ ಸಂಪರ್ಕ ಇಲ್ಲ. +ಶೌಚಾಲಯದ ಹೊರಗಡೆ ಇನ್ನೊಂದು ಸಣ್ಣ ತೊಟ್ಟಿಯನ್ನು ಕಟ್ಟಿಸಿದ್ದಾರೆ. +ಅದರಿಂದ ಶೌಚಾಲಯಕ್ಕೆ ಕೊಳವೆ ಸಂಪರ್ಕ ಕಲ್ಪಿಸಿ ಅಲ್ಲೊಂದು ನಲ್ಲಿ ಇರಿಸಲಾಗಿದೆ. +ಸಣ್ಣ ತೊಟ್ಟಿಯಲ್ಲಿ ನೀರಿದ್ದರೆ ಮಾತ್ರ ಗಮನ ಹರಿಸಿದ ಇಂತಹ ವಿವರಣೆಗಳೆಲ್ಲ ತೀರಾ ಸಾಮಾನ್ಯವೆನಿಸಿದರೂ ಪ್ರತಿನಿತ್ಯದ ಅಗತ್ಯಗಳು. +ಇವನ್ನ ಸರಿಮಾಡಿಕೊಳ್ಳದಿದ್ದರೆ ಹೇಗೆಂಬ ಪ್ರಶ್ನೆಯೂ ಇದೆ. +ಜೊತೆಗೆ ಪ್ರಾದೇಶಿಕ ವೈಶಿಷ್ಟದತ್ತಲೂ ಕಾದಂಬರಿಯ ದೃಷ್ಟಿ ಇದೆ. +ಹಾಸನದ ಎಳೆಸೌತೆಕಾಯಿ, ಕ್ಯಾತ್ಸಂದ್ರದ ಇಡ್ಲಿ ,ರಾಮಣ್ಣನ ಹೋಟಲು , ಶಿಕಾರಿ , ಕೋಳಿ-ಮೀನಿನ ಖಾದ್ಯ, ಇಡ್ಲಿ ತಿನ್ನುವ ರಿವಾಜು, ಏಟಿ ಚಟ್ನಿಯ ರುಚಿ ಮುಂತಾದವನ್ನು ಹೆಸರಿಸಬಹುದು. +ಕಾದಂಬರಿಯಲ್ಲಿ ಮುಖ್ಯ ಪಾತ್ರಗಳಷ್ಟೇ ಪರಿಣಾಮಕಾರಿಯಾಗಿ ಕುಬೇರ, ಟೇಕಪ್ಪ, ನಾಗನಾಯ್ಕ, ವಾಸಣ್ಣ,ಚಂದ್ರಮ್ಮ ಕಮಲಮ್ಮ ರಮೇಶ, ಗೋವಿಂದ, ರತ್ನ, ಶಿವಮೂರ್ತಿ, ಗಂಗಕ್ಕ- ದುಗ್ಗಭಾವ, ಗೋಪಾಲಣ್ಣ ಮುಂತಾದ ಪಾತ್ರಗಳೂ ಪರಿಣಾಮಕಾರಿಯಾಗಿ ಮೂಡಿ ಬಂದಿವೆ. +ಕಾದಂಬರಿಯ ಕತೆಯಷ್ಟೆ ಅದನ್ನು ಕೇಳುವವರ ಮನಸ್ಸನ್ನು ಉಲ್ಲಾಸಗೊಳಿಸುವ ನಿರೂಪಣಾ ವಿಧಾನವೂ ಮುಖ್ಯ. +ನಿರೂಪಿತ ವಸ್ತು ಮತ್ತು ಲೇಖಕನ ಧೋರಣೆಗೆ ಪ್ರಾಶಸ್ತ್ಯ ದೊರಕಬೇಕು. +ಇವೆಲ್ಲವೂ ಇಲ್ಲಿ ಫಲಿಸಿವೆ. +ಕುತೂಹಲ ಮೂಡಿಸುವಂತೆ ಹೇಳುವ ರೀತಿ, ಪಾತ್ರಗಳ ಪರಸ್ಪರ ಸಂಬ೦ಧ, ಉದ್ದೇಶ ಚಿತ್ರಿಸುವ ಕೌಶಲ, ಸನ್ನಿವೇಶಗಳನ್ನು ಆಕರ್ಷಕವಾಗಿ ಚಿತ್ರಿಸುವ ಬುದ್ಧಿ ವಂತಿಕೆ ಇತ್ಯಾದಿಗಳ ದೃಷ್ಟಿಯಿಂದಲೂ ಕಾದಂಬರಿಯ ಯಶಸ್ಸಿದೆ. +ಉತ್ತಮಕತೆಗಾರರಾಗಿಯೂ ಪತ್ರಕರ್ತರಾಗಿಯೂ ಖ್ಯಾತಿವೆತ್ತ ಲಕ್ಷ್ಮಣ ಕೊಡಸೆಯವರ ಮಾಗಿದ ಅನುಭವ ಮತ್ತು ಪ್ರಬುದ್ಧವಾದ ಮನಸ್ಸು ಆ ಆಚರಣಾ ಪ್ರಧಾನವಾದ ಕಲಾಕೃತಿಯ ಯಶಸ್ಸಿನ ಹಿನ್ನೆಲೆಯಲ್ಲಿ ಸಂಯಮದಿಂದ ಕಾರ್ಯ ನಿರ್ವಹಿಸಿದೆ. +ಆದ್ದರಿಂದಲೇ ಕೇಶವ ಮಳಗಿ ಹೇಳುವಂತೆ 'ಈ ಕಾದಂಬರಿ ಒಂದು ಒಳ್ಳೆಯಓದನ್ನು ನೀಡುತ್ತದೆ'- ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. +'ಅನ್ಯ'ದ ಮುಖಾಮುಖಿ'ಭೂಮಿ ಹುಣ್ಣಿಮೆ' ಲಕ್ಷ್ಮಣ ಕೊಡಸೆಯವರ ಎರಡನೆಯ ಕಾದಂಬರಿ. +ಒಂದರ್ಥದಲ್ಲಿ ಮೊದಲ ಕಾದಂಬರಿ'ಪಯಣ'ದ ಮುಂದುವರಿದ ಕಥಾವಸ್ತುವಿದು. +'ಪಯಣ'ದ ಕೇಂದ್ರ ಪಾತ್ರವಾದ ಕರೇನಾಯ್ಕನ ನಂತರದ ಎರಡು ತಲೆಮಾರು ಬದುಕನ್ನು ಪ್ರಸ್ತುತಗೊಳಿಸುವ ಮತ್ತು ಬದುಕಿನ ಅರ್ಥವನ್ನು ಶೋಧಿಸುವ 'ಭೂಮಿಹುಣ್ಣಿಮೆ' ಕೃತಿಯು ಒಂದು ದಿನದಲ್ಲಿ ನಡೆಯುವ ಘಟನೆಗಳಲ್ಲಿ, ಬಿಚ್ಚಿಕೊಳ್ಳುವ ನೆನಪುಗಳಲ್ಲಿ ತೆರೆದುಕೊಳ್ಳುತ್ತದೆ. +ಮಲೆನಾಡಿನ ಹಳ್ಳಿಯೊಂದರಲ್ಲಿ ಬದುಕನ್ನು ಕಟ್ಟಿದ ಕರೇನಾಯ್ಕನಿಗೆ ಆತ ಬದುಕಿದ್ದ ಹಳ್ಳಿ ಅಲ್ಲಿನ ಜನರೆಆತನ ಅಸ್ತಿತ್ವ ಜಾತಿಯ ಮುಖಂಡನಾಗಿ, ನಾಲ್ಕು ಮಂದಿಗೆ ಸದಾ ಬೇಕಾದವನಾಗಿ ಬದುಕಿದ ಕರೇನಾಯ್ಕಹೊರ ಜಗತ್ತನ್ನು ಅರಿಯುವುದು, ನಿಯಂತ್ರಿಸುವುದು ಮತ್ತು ನಿರ್ವಹಿಸುವುದು ತನ್ನೊಳಗೇ ತನ್ನ ಭಾಗವಾಗಿಯೇ ಇರುವ ಹಳ್ಳಿಯಿಂದ ಕರೇನಾಯ್ಕನ ಬದುಕು ದೇಸಿ ಸಂಸ್ಕೃತಿಯನ್ನು ಪ್ರತಿನಿಧಿಸುವುದಷ್ಟೇಅಲ್ಲ, ಆ ಸಂಸ್ಕೃತಿಯ ಒಂದು ಮುಖ್ಯ ಆಯಾಮವೇ ಅವನ ಜೀವನ. +ಆತನ ಸಾವಿನ ನಂತರ ಮಕ್ಕಳಾದ ರಾಮಚಂದ್ರ, ಜಯಪ್ಪ, ಶಂಕರ ಹುಟ್ಟಿದ ಮನೆ-ಹಳ್ಳಿ ಪ್ರಭಾವಿಸಿದ ಪರಿಸರವನ್ನು ಪರಿಭಾವಿಸುವ ರೀತಿಕರೇನಾಯ್ಕನ ಜೀವನಕ್ಕೆ ಹೋಲಿಸಿದರೆ ತೆಳು ರಚನೆಯಂಥದ್ದು. +ದೇಸಿ ಮತ್ತು ಜಾಗತೀಕರಣದ ಸಂದರ್ಭಕ್ಕೆ ತೆರೆದುಕೊಂಡು ಬದುಕುವ ಇವರ ಜೀವನ ನಿರ್ವಹಣೆಯಲ್ಲೇ ಒಂದು ರೀತಿಯ 'ಸಮಯಸಾಧಕತೆ'ದತ್ತಕವಾಗಿದೆ. +ಹೀಗಾಗಿಯೇ ಜೀವನಾನುಭವವೇ ತೆಳು ರಚನೆಯಾಗಿ ಕಂಡುಬರುತ್ತದೆ. +ಅಸ್ತಿತ್ವದ ಬೇರುಗಳನ್ನು ಭದ್ರವಾಗಿ ಶೋಧಿಸಲಾರದ ಮೂರನೇ ತಲೆಮಾರು, ಅವರ ಮಕ್ಕಳ ಜೀವನ, ಹಳ್ಳಿಗೆ ಎಂದೂ ಮರಳಲಾಗದ, ಕಾಂಕ್ರೀಟ್‌ ಕಾಡುಗಳಲ್ಲಿ ಕಣ್ಮರೆಯಾಗುವ ಪಾತ್ರಗಳು. . 'ಭೂಮಿ ಹುಣ್ಣಿಮೆ' ಈ'ವೈರುದ್ಧ್ಯ'ವನ್ನು ನಿಭಾಯಿಸಲು, ಪುನಾರಚಿಸಲು ಹೆಣಗುವ ಕೃತಿಯಾಗಿದೆ. +ಇಲ್ಲಿ ಕೃತಿಯ ಒಳಗೆ ವ್ಯಕ್ತಿಗಳ ಬದುಕು ದೇಸೀಯತೆಗೆ ಮುಖಾಮುಖಿಗೊಳ್ಳುವುದು ಮೂರು ನೆಲೆಗಳಲ್ಲಿ. + ಜಾಗತೀಕರಣದ ಸ೦ದರ್ಭದಲ್ಲಿ ಕೃಷಿಯನ್ನು ನಂಬಿ ಹಳ್ಳಿಯ ಕುಟುಂಬದ ಮನೆಯಲ್ಲಿ ಉಳಿದುಕೊಂಡು 'ಮೂಲ'ವನ್ನು ದಕ್ಕಿಸಿಕೊಳ್ಳಲು ಹೆಣಗುವ ಶಿವಮೂರ್ತಿ, ಸೊಸೆ ರತ್ನ; + ಹಳ್ಳಿಯ ಬಗ್ಗೆ ತೀವ್ರವಾದ ತುಡಿತವಿದ್ದರೂ ಉದ್ಯೋಗದ ನಿಮಿತ್ತಕರ್ನಾಟಕದ ಬೇರೆಬೇರೆ ಕಡೆಗಳಲ್ಲಿ ಇದ್ದು ಜಾಗತೀಕರಣದ ಸ್ಪರ್ಧೆಯಲ್ಲಿ ಸಫಲರಾಗುವಂತೆ ಮಕ್ಕಳಿಬ್ಬರನ್ನು ಬೆಳೆಸಿ ಸ್ವತಂತ್ರ ನೆಲೆ ಕಲ್ಪಿಸಿ 'ಮರಳಿ ಮಣ್ಣಿಗೆ' ಬರಲು ತವಕಿಸುವ ಶಂಕರ ಆತನ ಪತ್ನಿ ಹೊನ್ನಮ್ಮ ಹಳ್ಳಿಯ ಜಮೀನಿನಿಂದ ಬರುವ ವರಮಾನದ ಮೇಲಷ್ಟೇ ಕಣ್ಣಿಟ್ಟು ಪಟ್ಟಣದ ಸಹಜ ಸ್ವಾರ್ಥವನ್ನೆಲ್ಲ ಮೈಗೂಡಿಸಿಕೊಂಡಂತೆ ಕಾಣುವ ಜಯಪ್ಪ ಮತ್ತು ಚಂದ್ರಮ್ಮ ಇವರ ನೇರ ವರ್ತನೆ- ನಿಲುವು, ಸ್ಮೃತಿಗಳು ಒಂದೇ ದಿನದಲ್ಲೇ ಇದ್ದರೂ ಇದೊಂದು ಸೂತ್ರಬದ್ಧ ಕಥನ. +ಕೃತಿಯೊಳಗಿನ ಮುಖ್ಯ ಪಾತ್ರಗಳನ್ನು ನೆನಪುಗಳಲ್ಲಿ ಹೆಕ್ಕಿ ಓದುಗರಿಗೆ ನೀಡುವ ಹಳ್ಳಿಗರಾದ ಕುಬೀರ, ರಮೇಶ, ಕಮಲಕ್ಕ ಇವರು ಸಂಬಂಧಗಳ ಇಬ್ಬಗೆಯ ದರ್ಶನ ರೂಪಿಸುವುದು ಇಲ್ಲಿ ಮನಸೆಳೆಯುವ ಅಂಶ. +ವ್ಯಕ್ತಿ ಮತ್ತು ಪ್ರಕೃತಿಯ ಪ್ರಭಾವೀ ಅಂತರ್‌ರೂಪಣೆಯನ್ನು ಕಟ್ಟುವ ಹಾಗೂ ಸಂಬಂಧದ ಸ್ವಾರ್ಥಲಾಲಸೆಗಳನ್ನು ಬಯಲು ಮಾಡುವ ಹಿನ್ನೆಲೆಯಿಂದ ಮಾತ್ರವಲ್ಲ, ರಕ್ತ ಸಂಬಂಧಗಳ ಒಳಗೆ ಕೂಡ 'ಅನ್ಯ'ರನ್ನು ಸೃಷ್ಟಿಸುತ್ತಾ ಅವರೊಡನೆ ಮುಖಾಮುಖಿಗೊಳ್ಳುವ ತಲ್ಲಣದಿಂದಲೇ ತನ್ನೆಲ್ಲಾ ಶಕ್ತಿಯನ್ನು ವ್ಯರ್ಥಗೊಳಿಸುವಂತೆ ಬಾಳುವ ವ್ಯಕ್ತಿಗಳ ಜೀವದರ್ಶನದ ನೆಲೆಯಿಂದ 'ಭೂಮಿ ಹುಣ್ಣಿಮೆ' ಒಂದು ಧ್ವನಿಪೂರ್ಣ ರಚನೆಯಾಗಿದೆ. +ಕಾದಂಬರಿಯು ಅದರ ಶೀರ್ಷಿಕೆ ವಸ್ತು ಮತ್ತು ಪಾತ್ರಗಳ ಪ್ರಸ್ತುತತೆಯಲ್ಲಿಯೇ ಮೂರು ತಲೆಮಾರಿನ ವ್ಯಕ್ತಿಸಂಬಂಧದ ಒಂದು 'ಚಲನೆ'ಯನ್ನು, ಚಲನೆಯ ದಿಕ್ಕನ್ನು ಇಲ್ಲಿ ಗುರುತಿಸಬಹುದು. +ಕೃತಿಯ ಆಕೃತಿ, ಚಾರಿತ್ರಿಕ ಪ್ರಾಮಾಣಿಕತೆ ಮತ್ತು ಭವಿಷ್ಯವಾದೀ ಸೂಚನಾತ್ಮಕತೆಯಿಂದ ಈ ಪಠ್ಯದ ಜೊತೆಗೆ ಒಂದುಅರ್ಥಪೂರ್ಣವಾದ ಸಂವಾದ ನಡೆಸುವುದು ಸಾಧ್ಯವಾಗುತ್ತದೆ. +ನೆರಳು (ಕಾದಂಬರಿ)ನಿಷ್ಕಳಂಕ ಪ್ರೀತಿಯ ಹುಡುಕಾಟ'ನೆರಳು' ಲಕ್ಷಣ ಕೊಡಸೆಯವರ ಮೂರನೆಯ ಕಾದಂಬರಿ. +ಬೇರೆ ಬೇರೆ ಊರುಗಳಲ್ಲಿ ವಾಸವಾಗಿರುವ ಮೂರು ಸಂಬಂಧಿಕ ಕುಟುಂಬಗಳಲ್ಲಿ ಮೂರು ದಿನಗಳಲ್ಲಿ ನಡೆಯುವ ಘಟನಾವಳಿಗಳ ಸುತ್ತ ಈ ಕಾದಂಬರಿ ರಚಿತವಾಗಿದೆ. +ಚಂದ್ರಶೇಖರ, ಸೋಮಶೇಖರ ಹಾಗೂ ರೇಣುಕಾಂಬ ಅನ್ನಪೂರ್ಣಮ್ಮನವರ ಮಕ್ಕಳು. +ಚಂದ್ರಶೇಖರ ಸರ್ಕಾರಿ ನೌಕರಿಯಿಂದ ನಿವೃತ್ತನಾಗಿದ್ದರೆ, ಉಳಿದಿಬ್ಬರು ನಡುವಯಸ್ಸಿನವರಾಗಿದ್ದು, ಇವರ ಮಕ್ಕಳೆಲ್ಲಾ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. +ರೇಣುಕಾಂಬ ಕರಿಯಪ್ಪ ಎಂಬ ಮೇಷ್ಟರನ್ನು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದಾಳೆ. +ಗಂಡನನ್ನು ಕಳೆದುಕೊಂಡಿರುವ ಅನ್ನಪೂರ್ಣಮ್ಮ ಏಕಾಂಗಿ. +ಬದುಕಿನ ಕಷ್ಟಸುಖಗಳಲ್ಲಿ ಈ ಕುಟುಂಬಗಳು ಪರಸ್ಪರ ಹೇಗೆ ಸ್ಪಂದಿಸುತ್ತವೆ, ಪ್ರಮುಖವಾಗಿ ಅನ್ನಪೂರ್ಣಮ್ಮನನ್ನು ಆಕೆಯ ಮಕ್ಕಳು - ಸೊಸೆಯಂದಿರು ಹಾಗೂ ಅಳಿಯ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಕಾದಂಬರಿಯ ಪ್ರಧಾನ ಕಾಳಜಿಯಾಗಿದೆ. +ಕುಟುಂಬಗಳ ವಿಘಟನೆಗೆ ಹಾಗೂ ಮನುಷ್ಯ ಸಂಬಂಧಗಳಲ್ಲಿನ ಬಿರುಕುಗಳಿಗೆ ಜಾಗತೀಕರಣ, ಆಧುನಿಕತೆಯ ಕಾರಣಗಳನ್ನು ನೀಡಿ ಸಮಸ್ಯೆಯನ್ನು ತೀರ ಸರಳವಾಗಿ ನೋಡುವ ದೃಷ್ಟಿಕೋನ ಅನೇಕ ಲೇಖಕರಲ್ಲಿ ಸಾಮಾನ್ಯವಾಗಿದೆ. +ಆದರೆ ಇಂತಹ ವಿಘಟನೆ ಹಾಗೂ ಬಿರುಕುಗಳಿಗೆ ಮನುಷ್ಯರಲ್ಲಿಯೇ ಇರುವ ಸಣ್ಣತನ,ಅಹಂಕಾರ, ಅಧಿಕಾರದಾಹ ಹಾಗೂ ಸ್ಟಾರ್ಥಗಳು ಹಿನ್ನೆಲೆಗೆ ಸರಿಯುತ್ತವೆ. +ಈ ಹಿನ್ನೆಲೆಯಲ್ಲಿ 'ನೆರಳು'ವಶೇಷ ಗಮನ ಸೆಳೆಯುತ್ತದೆ. +ಇಳಿವಯಸ್ಸಿನಲ್ಲಿರುವ ಅನ್ನಪೂರ್ಣಮ್ಮ ತನ್ನ ಗಂಡುಮಕ್ಕಳ ಮತ್ತು ಸೊಸೆಯಂದಿರಿಂದ ಅವಕೃಪೆಗೆ ಪಾತ್ರರಾಗಲು ಇವರೆಲ್ಲರ ಸಣ್ಣತನ ಮತ್ತು ಸ್ಟಾರ್ಥಗಳು ಮಾತ್ರ ಕಾರಣವಾಗುವುದಿಲ್ಲ. +ಮನೆಗೆಲಸದವರ ಮೇಲೆ ಅಧಿಕಾರ ಚಲಾಯಿಸುವ, ಪರಸ್ಪರರ ಮೇಲೆ ಚಾಡಿ ಹೇಳುವ, ಅಗತ್ಯ ಸಂದರ್ಭಗಳಲ್ಲಿ ಮಕ್ಕಳು ಸೊಸೆಯಂದಿರ ನೆರವಿಗೆ ನಿಲ್ಲದ ಅನ್ನಪೂರ್ಣಮ್ಮನವರ ವ್ಯಕ್ತಿತ್ವವೂ ಕಾರಣವಾಗುತ್ತದೆ. +ಉದ್ಯೋಗಸ್ಥ ಅನುಕೂಲಸ್ಥ ಮಕ್ಕಳು ತಾಯಿಯನ್ನೊಂದು ಹೊರೆ ಎಂದು ಭಾವಿಸುವಾಗ ಈ ಪಾತ್ರಗಳ ಬಗ್ಗೆ ಮೂಡುವ ತಿರಸ್ಕಾರದ ಭಾವ ಅನ್ನಪೂರ್ಣಮ್ಮನವರ ಪರವಾದ ಅನುಕಂಪವಾಗಿ ಪರಿವರ್ತಿತವಾಗುವುದಿಲ್ಲ. +ಲೇಖಕ ಪಾತ್ರ ನಿರ್ಮಾಣದಲ್ಲಿ ಪಡೆದ ಯಶಸ್ಸನ್ನು ಇದು ತೋರುತ್ತದೆ. +ಕಾದಂಬರಿಯ ಎಲ್ಲ ಪಾತ್ರಗಳೂ ಜೀವಂತವಾಗಿ ಮೂಡಿಬಂದಿವೆ. +ಭಾವಾವೇಶವನ್ನು ಮೂಡಿಸುವಂತಹ ವಿಪುಲ ಸನ್ನಿವೇಶಗಳಿದ್ದರೂ ಅವುಗಳನ್ನೆಲ್ಲ ತಣ್ಣಗೆ ನಿರೂಪಿಸುವ ಲೇಖಕ ಓದುಗನನ್ನು ವಶೀಕರಿಸಿಕೊಳ್ಳಲು ಅದನ್ನು ದುರ್ಬಳಕೆ ಮಾಡಿಕೊಂಡಿಲ್ಲ. +ಕಾದಂಬರಿಯ ಅಂತ್ಯ ಓದುಗನಿಗೆ ನಿರೀಕ್ಷಿತವೆನಿಸಿದರೆ ಅಚ್ಚರಿಯಿಲ್ಲ. +ಶೌಚ-ಉಪಹಾರ-ಕಾಫಿ ಸೇವನೆಯ ಪುನರಾವರ್ತನೆಗಳು ಕಾದಂಬರಿಯನ್ನು ಕೊಂಚ ಭಾರವಾಗಿಸಿದೆ. +"ನೆರಳು ಗೋಳಿನ ಕಾದಂಬರಿಯೇನೂ ಅಲ್ಲ. +ನಿಷ್ಠಳಂಕ ಪ್ರೀತಿ ತೋರುವ ಕರಿಯಪ್ಪ, ರೇಣುಕಾಂಬ,ಸಣ್ಣನಾಯ್ಕರಂತಹ ಪಾತ್ರಗಳೂ ಇಲ್ಲಿ ಹೃದಯಸ್ಪರ್ಶಿಯಾಗಿ ಒಡಮೂಡಿವೆ. +ಒಂದರ್ಥದಲ್ಲಿ ಈ ಕಾದಂಬರಿ ನಿಷ್ಕಳಂಕ ಪ್ರೀತಿಯ ಹುಡುಕಾಟವೇ ಆಗಿದೆ. +ಮೂರು ದಿನದ ಘಟನಾವಳಿಗಳು ಕುತೂಹಲಕರವಾಗಿ ಬಿಚ್ಚಿಕೊಳ್ಳುತ್ತಾ ಸಾಗುವ ಈ ಪುಟ್ಟ ಕಾದಂಬರಿಯನ್ನು ಒಂದೇ ಗುಕ್ಕಿನಲ್ಲಿ ಓದಿ ಬಿಡಬಹುದು. +'ಪಾಡು' ಕಾದಂಬರಿ ಜನಜೀವನವನ್ನು ಉತ್ತಮ ಪಡಿಸಬೇಕೆಂಬ ಉದ್ದೇಶ ಇಟ್ಟುಕೊಂಡು ನಡೆಯುವ ಹೋರಾಟಗಳು ಸಾಹಿತ್ಯರಚನೆಯ ಮೇಲೆ ಗಂಭೀರ ಪ್ರಭಾವ ಬೀರುವುದು ಸಹಜ. +ಬದುಕನ್ನು ತೀವ್ರವಾಗಿ ಗಮನಿಸುವ ಸಾಹಿತಿ ಅದನ್ನು ಕಲಾತ್ಮಕವಾಗಿ ಮೂಡಿಸಲು ಹವಣಿಸುತ್ತಾನೆ. +ಕಳೆದ ಇಪ್ಪತ್ತನೆಯ ಶತಮಾನದ ಎಪ್ಪತ್ತು ಮತ್ತು ಎಂಬತ್ತರ ದಶಕಗಳು ಕನ್ನಡನಾಡಿನ ಚರಿತ್ರೆಯಲ್ಲಿ ಬಹಳ ಮುಖ್ಯವಾದ ಕಾಲಮಾನಗಳು. +ಈ ಅವಧಿಯಲ್ಲಿ ರೈತ ಚಳವಳಿ, ದಲಿತ ಚಳವಳಿ, ವಿಚಾರಾತ್ಮಕ ಆಂದೋಲನ, ಜಾತಿವಿನಾಶ ಚಳವಳಿ, ವನಿತಾ ವಿಮೋಚನೆ ಘಟಿಸಿದವು. +ಹಳ್ಳಿಯ ಬಾಳಿನಲ್ಲಿ ಹಿಂದೆ ಇರದಿದ್ದ ಹೊಸ ಹುರುಪು, ಚಪಲ, ಎಚ್ಚರ ಕಾಣಿಸಿಕೊಂಡಿದ್ದು ನಿಜ. +ಆದರೆ ಅದು ಪೋಷಕಾತ್ಮಕವಾಗಿ ಉಳಿಯಿತೆ?ಎಂದು ಪ್ರಶ್ನಿಸಿಕೊಂಡರೆ ಸಿಗಬಹುದಾದ ಉತ್ತರ ಸಕಾರಾತ್ಮಕವಾಗಿಲ್ಲದಿರಬಹುದು. +ಆದಾಗ್ಯೂ ಇವು ಸಾಮಾನ್ಯ ಬದುಕು ಮತ್ತು ಸರ್ಕಾರದ ಮೇಲೆ ಸಾಕಷ್ಟು ಪರಿಣಾಮ ಉಂಟು ಮಾಡಿದ್ದನ್ನು ನಿರಾಕರಿಸಲಾಗುವುದಿಲ್ಲ. +ಏಕೆಂದರೆ ಒಂದು ಸರ್ಕಾರ (ಗುಂಡೂರಾವ್‌)ಉರುಳಿ ಇನ್ನೊಂದು ಸರ್ಕಾರ ಗದ್ದುಗೆಗೆ ಏರಿತು. +ಇಷ್ಟಾದರೂ ಸಮಾಜ ಎಮ್ಮೆಯ ಹಾಗೆ ಬಗ್ಗಡದಲ್ಲಿ ಬಿದ್ದು ಹೊರಳಾಡುವುದನ್ನು ಇಷ್ಟಪಡುವಂತೆ ಕಂಡು ಬರುತ್ತದೆ. +ಇಂಥ ತಾತ್ಟಿಕಾಂಶಗಳು ಹೊರಡಿಸಿದ ಪರಿಣಾಮಗಳು ಕನ್ನಡ ಸಾಹಿತ್ಯದಲ್ಲಿ ಅಷ್ಟಾಗಿ ಮೈಪಡೆಯಲಿಲ್ಲ. +ಇಲ್ಲಿನ ಕಥಾ ಸಾಹಿತ್ಯದಲ್ಲಿ ಕತೆ ಮತ್ತು ಕಾದಂಬರಿ ಪ್ರಕಾರಗಳಲ್ಲಿ (ನನ್ನ ಅಧ್ಯಯನದ ಮಿತಿಯಲ್ಲಿ ಹೇಳುವುದಾದರೆ)ಹಳ್ಳಿ ಮತ್ತು ಪಟ್ಟಣ ಅಥವಾ ನಗರಗಳಲ್ಲಿ ಮುಖಾಮುಖಿ ವಿಶೇಷವಾಗಿ ನಡೆದಿಲ್ಲ. +ಇವುಗಳಲ್ಲಿ ಯಾವುದಾದರೂ ಒಂದನ್ನು ಕುರಿತು ಕತೆಗಳು ಅಥವಾ ಕಾದಂಬರಿಗಳು ಹುಟ್ಟಿಕೊಂಡಿವೆ. +ಮೇಲಿನ ಕೆಲವು ಅಂಶಗಳು ಲಕ್ಷ್ಮಣ ಕೊಡಸೆ ಅವರ 'ಪಾಡು' ಕಾದಂಬರಿಯಲ್ಲಿ ತೆರೆದುಕೊಂಡಿರುವುದನ್ನು ಕಾಣಬಹುದು. +ಈ ಕೃತಿಯಲ್ಲಿ ಒಂದೆರಡು ಕುಟುಂಬಗಳು ಅಂತರಜಾತಿ ಮದುವೆ ಮಾಡಿಕೊಂಡು ಸಾಕಷ್ಟುಕಾಲ - ಎರಡು ಮೂರು ದಶಕಗಳು - ಸಂಸಾರ ನಡೆಸಿವೆ. +ಕನ್ನಡ ಸಾಹಿತಿಗಳಲ್ಲಿ ಕೆಲವರು - ಶಿವರಾಮಕಾರಂತ, ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ - ವಿಜಾತಿ ವಿವಾಹವಾಗಿ ಬಾಳಿ ಬದುಕಿದವರು. +ಬೇರೆಬೇರೆ ಜಾತಿಯವರು ಕಲ್ಯಾಣವಾಗಿ ಬಾಳಿದವರು ಎಂಬುದನ್ನು ತಮ್ಮ ಕಥಾ ಸಾಹಿತ್ಯದಲ್ಲಿ ಚಿತ್ರಿಸಿಲ್ಲ ಎನಿಸುತ್ತದೆ. +ಈ ದೃಷ್ಟಿಯಿಂದ ಸಾಂಸ್ಕೃತಿಕವಾಗಿ ಲಕ್ಷ್ಮಣ ಕೊಡಸೆ ಗಮನಾರ್ಹವಾಗಿ ಕಾಣುತ್ತಾರೆ. +ಇವರು ಕುಲ ಬಿಟ್ಟು ಬೇರೆ ಕುಲದಲ್ಲಿ ಲಗ್ನವಾದವರು . +ಕೆಲವರು ತುಂಟತನದಿಂದ ಹೇಳಬಹುದು: ಹೆಣ್ಣು ಅನ್ನುವುದು ಒಂದು ಜಾತಿ; +ಗಂಡು ಅನ್ನುವುದು ಇನ್ನೊಂದು ಜಾತಿ. +ಇದೇ ಅಂತರ್‌ಜಾತಿ ವಿವಾಹ ಅಲ್ಲವೆ? ಎಂದು. +ಇದು ಸಿನಿಕತನದ ಮಾತು ಅಷ್ಟು. +ಕೊಡಸೆ ಅವರು 'ಪಾಡು'ದಲ್ಲಿ ಅಂತರ್‌ಜಾತಿ ವಿವಾಹವಾಗಿ ಸುಮಾರು ಮೂವತ್ತು ವರ್ಷಗಳಷ್ಟು ದೀರ್ಘಕಾಲ ಬದುಕಿರುವ ಹಾಲಪ್ಪ ಮತ್ತು ಪ್ರಮೀಳಾರ ಜೋಡಿ ಜೀವನವನ್ನು ಕೊಟ್ಟಿದ್ದಾರೆ. +ಇವರ ದಾಂಪತ್ಯದಲ್ಲಿ ಸಣ್ಣಪುಟ್ಟ ಮಾತುಕತೆಗಳು ಮತ್ತು ತಿಕ್ಕಾಟಗಳು ಆಗುತ್ತವೆ. +ಅದನ್ನೇ ದೊಡ್ಡದು ಮಾಡಿ ಜೀವನವನ್ನು ರಂಪವಾಗಿಸುವ ಸ್ವಭಾವ ಇಬ್ಬರಲ್ಲೂ ಗೋಚರಿಸುವುದಿಲ್ಲ. +ಆದರೂ ಪ್ರಮೀಳೆಯದು ಜೋರುಬಾಯಿ. +"ಏನಯ್ಯ ಮಾಡ್ತೀಯ ನೀನು? +ಈಗ ಯಾರನ್ನು ಕಟ್ಟಿಕೊಂಡು ಹೋದರೂ ನನಗೆ ಬೇಜಾರಿಲ್ಲ. +ಮಹಾರಾಜನ ಹಾಗೆ ಹೋಗು" + "ಯಾವನು ಇಂಥ ವ್ಯವಸ್ಥೆಯನ್ನು ಮಾಡಿದ್ದಾನೋ. . + ಮನೆ ಕೆಲಸವನ್ನೆಲ್ಲ ಹೆಂಗಸರೇ ಮಾಡಬೇಕು, ಗಂಡಸು ಮಾತ್ರ ದರ್ಬಾರು ಮಾಡಬೇಕು ಅಂತ ಹೇಳಿದವನು ಸಿಕ್ಕಿದರೆ ಕೊಚ್ಚಿ ಹಾಕಬೇಕು. +ನಾವು ಇಲ್ಲಿ ಮನೆಯೊಳಗೆ ಪ್ರತಿಯೊಂದಕ್ಕೂ ಸಾಯಬೇಕು. +ಹೊರಗಡೆಯೂ ದುಡಿಯಬೇಕು" + "ಏನು ಖರ್ಮಾನೋ,. +ಸೀರೆ ಗಂಟು ಹಿಡ್ಕಂಡು ಓಡಿ ಬಂದುದಕ್ಕೆ ಸಂಸಾರದಲ್ಲಿ ಉಳ್ಳೋಬೇಕು" +ಹಾಲಪ್ಪನ ಮಡದಿ ಪ್ರಮೀಳೆಯ ಮೇಲಿನ ಸ್ವಗತಗಳಲ್ಲಿ ಹೆಣ್ಣಿನ ಬವಣೆಗಳು ಚೆನ್ನಾಗಿ ಪ್ರಕಟವಾಗಿವೆ. +ಮಹಿಳಾ ಚಳವಳಿಯ ಘಾಟು ಮತ್ತು ಬಿಸಿಯನ್ನು ಈ ಮಾತುಗಳಲ್ಲಿ ಕಾಣಬಹುದು. +ಸಂಸಾರದಿಂದ ಬಿಡಿಸಿಕೊಂಡು ಹೊರಗೆ ದುಡಿದು ಸಂಪಾದನೆ ಮಾಡುತ್ತಿದ್ದೇನೆಂದು ಹೆಮ್ಮೆಪಡುವ ಹೆಂಗಸು, ಸಂಸಾರಕ್ಕೆ ಸಿಕ್ಕಿಕೊಂಡುಅನುಭವಿಸುವ ಬೇಗುದಿಯ ಸಂಕ್ರಮಣ ಸ್ಥಿತಿಯನ್ನು ಇದು ಸೂಚಿಸುತ್ತದೆ. +ಆದರೆ ಹೆಡ್‌ಮಾಸ್ಟರ್‌ ಹಾಲಪ್ಪನ ಸ್ಥಿತಿಯೇ ಬೇರೆ. +"ಆಡಿದರೂ ಕಷ್ಟ ಆಡದಿದ್ದರೂ ಕಷ್ಟವಾಯ್ತಲ್ಲ"ಎಂಬ ಪೀಕಲಾಟ ಅವನದು. +ಆಗಾಗ್ಗೆ ಅವಳ ಧ್ವನಿಯಲ್ಲಿನ "ಸಹಜತೆಗೆ ಬೆರಗಾದ ಹಾಲಪ್ಪನಿಗೆ ಕೆಲವೇ ನಿಮಿಷಗಳ ಮೊದಲು ತನ್ನನ್ನು ಮರ್ಮಭೇದಕ ಮಾತುಗಳಿಂದ ಚುಚ್ಚಿದವಳು ಇವಳೇನಾ" ಎನ್ನಿಸುತ್ತದೆ. +ಕುಟುಂಬಕ್ಕೆ ಪ್ರಮೀಳೆಯಿಂದ ಆಗಿರುವ ನೆರವು ಮತ್ತು ಕೊಡುಗೆಯನ್ನು ಹಾಲಪ್ಪ ನೆನಪಿಸಿಕೊಳ್ಳುತ್ತಾನೆ. +ಹೀಗೆ ಹೇಗೂ ಸಂಸಾರ ಸಾಗುತ್ತಿದ್ದರೂ ಊರಿನ ತೋಟದ ಬದಿಯಲ್ಲಿ ಒಂದು ರೂಮನ್ನು ಕಟ್ಟಲು ಹಾಲಪ್ಪ ವ್ಯವಸ್ಥೆ ಮಾಡುವುದನ್ನು ನೋಡಿದರೆ ಅವನ ಮುಂದಿನ ಗತಿ ಏನೆಂದು ಅರಿವಾಗಬಹುದು. +ಲೇಖಕ ಇಲ್ಲಿನ ಎಲ್ಲ ಪಾತ್ರಗಳ ಬಗೆಗೆ ಸಮತೋಲನ ಮತ್ತು ಸಮದೂರ ಕಾಯ್ದುಕೊಂಡಿದ್ದಾರೆ ಎನ್ನಬೇಕು. +ಈ ಕಾದಂಬರಿ ಹೆಣ್ಣು ಮತ್ತು ಗಂಡಿನ ಸಂಬಂಧದ ಜೊತೆ ಹೆಣ್ಣು ಹೊರಗೆ-ಒಳಗೆ ದುಡಿಯುವ ಪರಿಸ್ಥಿತಿಯನ್ನು ಕುರಿತು ಶೋಧಿಸ ಹೊರಟಿದೆ ಎನ್ನಿಸುತ್ತದೆ. +'ಪಾಡು' ಕಾದಂಬರಿಯ ಇನ್ನೊಂದು ಅಂತರ್‌ಜಾತಿ ಮದುವೆ ಆಗಿ ಸಂಸಾರ ನಡೆಸುತ್ತಿರುವ ಸಂಬಂಧ ಕರಿಯಪ್ಪ ಮತ್ತು ರೇಣುಕಾಂಬ ಅವರದು. +ಇವರಲ್ಲಿ ಅಂಥ ತಕರಾರುಗಳು ಗೋಚರಿಸುವುದಿಲ್ಲ. +ಈ ಕಾದಂಬರಿಯ ಕಾಲಗತಿಯಲ್ಲಿ ಕ್ರಮದಿಂದ ಗಮನಿಸಿದರೆ ನೋಡಬಹುದಾದ ಮೂರನೆಯ ಸಂಸಾರ ಸಣ್ಣನಾಯ್ಕ ಮತ್ತು ಗಂಗಮ್ಮರದು. +ಗ್ರಾಮೀಣ ಪರಿಸರದಲ್ಲಿ ತಮ್ಮ ಹೊಲ ಮನೆ ಮಕ್ಕಳು ಮರಿ ಎಂದು ಬದುಕುತ್ತಿರುವ ಕುಟುಂಬ ಇದು. +ಈ ಮೂರು ಸಂಸಾರಗಳು ಚಿತ್ರಿತವಾಗಿರುವ ರೀತಿಯನ್ನು ನೋಡಿದರೆ,ಕಾದಂಬರಿಕಾರನಿಗೆ ಎಲ್ಲೋ ಸುಪ್ತವಾಗಿ, ಈ ಸಂಸಾರದ ಬಗೆಗೆ ಮೆಚ್ಚಿಕೆ ಅಥವಾ ಒಲವು ಇರುವಂತೆ ಭಾಸವಾಗುವುದು. + ಆದರೆ ಎಲ್ಲ ಕಡೆ ನಿರ್ಲಿಪ್ತವಾಗಿ ಇರುವ ನಿರೂಪಕ ಸಮಚಿತ್ತತೆಯನ್ನು ಕಾಪಾಡಿಕೊಂಡಿದ್ದರೂ ಅವನನ್ನೂ ದಾಟಿ ಕಥನ ಕ್ರಮ ಹಾಗೆ ಅದನ್ನು ಸೂಚಿಸುವಂತೆ ಕಾಣುತ್ತಿದೆ. +ಇದರ ಫಲಿತ ಏನು?ಎಂದು ಓದುಗರೇ ತಮ್ಮ ಯಥಾಶಕ್ತಿ ಗ್ರಹಿಸಬೇಕಾಗುವುದು. +ಅಂತರಜಾತಿ ಮದುವೆಯಿಂದ ಜಾತಿಯನ್ನು ಮೀರುವಿಕೆ ಅಥವಾ ಅಳಿಸುವಿಕೆಯ ಆಶಯವನ್ನು ಇಟ್ಟುಕೊಂಡು ಅದರ ಮಿತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಕೊಡಸೆ. +ಆದರೆ ಅದನ್ನು ಇನ್ನೂ ವಿವಿಧ ಮಗ್ಗುಲುಗಳಿಂದ ಸಮೀಕ್ಷಿಸಬಹುದಿತ್ತು. +ಇಡೀ ಒಂದು ಸಂಸ್ಕೃತಿಯ ಅರೆಕೊರೆಗಳನ್ನು ಅನಾವರಣಗೊಳಿಸಿ, ಅದು ಏರಬೇಕಾದ ಸ್ವರಗಳನ್ನು ಧ್ವನಿಸಲು ಅವಕಾಶ ಒದಗಿದುದನ್ನು ಕೊಡಸೆ ಸರಿಸಿದ್ದಾರೆನ್ನಿಸುತ್ತದೆ. +ವಾಸ್ತವತಾದೃಷ್ಟಿಗೆ ಅಂಟಿಕೊಂಡೇ ಇಲ್ಲ, ಇದ್ದ ಶಕ್ತಿಯನ್ನು ತೊಡಗಿಸಲು ಸಂಕೋಚಪಟ್ಟೋ ಈ ಕೃತಿಗೆ ಸಿಗಬಹುದಾದ ಎತ್ತರ ಬಿತ್ತರಗಳನ್ನು ಕಳೆದುಕೊಂಡಿದ್ದಾರೆ ಲಕ್ಷ್ಮಣ ಕೊಡಸೆ ಅವರು. +ಒಂದು ಸಂಗತಿಯನ್ನು ಎತ್ತಿಕೊಂಡರೆ ಎಷ್ಟೊಂದು ಆಯಾಮಗಳಿಂದ ಕಾಣಿಸುತ್ತಾರೆ ದೊಸ್ತೊವ್‌ಸ್ಕಿ,ಟಾಲ್‌ಸ್ಟಾಯ್‌, ಕುವೆಂಪು ಎಂಬುದನ್ನು ಗಮನಿಸುವುದು ಒಳ್ಳೆಯದು. +ಅದಕ್ಕೆ ವ್ಯಾಪಕವಾದ ಸಿದ್ಧತೆ ಮತ್ತು ಕ್ರಾಂತದೃಷ್ಟಿಯ ಅಗತ್ಯವಿದೆ. +'ಪಾಡು' ಕಾದಂಬರಿಯ ಇನ್ನೊಂದು ಪ್ರಮುಖ ಆಶಯ ಮೌಢ್ಯದ ವಿರುದ್ಧ ಹೋರಾಡುವುದು ಅಥವಾ ಮೂಢನಂಬಿಕೆಯನ್ನು ನಿವಾರಿಸುವುದು. +ಹುಚ್ಚಪ್ಪನ ಮನೆಯ ಎಮ್ಮೆ ಕೆಚ್ಚಲಿಗೆ ಕೈ ಹಾಕಿದರೆ ಒದೆಯುತ್ತದೆ. +ಇದನ್ನು ಹೋಗಲಾಡಿಸಲು ಅವನು ಮೈಮೇಲೆ ದೇವರು ಬರುವ ನೇಮಯ್ಯನ ಹತ್ತಿರ ಹೋಗುತ್ತಾನೆ. +ನೇಮಯ್ಯ ನಿಂಬೆ ಹಣ್ಣುಗಳನ್ನು ಮಂತ್ರಿಸಿ ಕೊಟ್ಟು "ಕೊಟ್ಟಿಗೆ ಹೊಸಲು ಮೇಲೆ, ಎಲ್ಲ ಜಾನುವಾರುಗಳುಒಳಗೆ ಬಂದ ಮೇಲೆ ಕತ್ತರಿಸಿ ಉತ್ತರಕ್ಕೆ ಹಣಿ" ಎನ್ನುತ್ತಾನೆ. +ನೇಮಯ್ಯನ ಹೆಂಡತಿ ವಸ್ತುಸ್ಥಿತಿ ಸೂಚಿಸುತ್ತಾಳೆ. + "ಎಮ್ಮೆ ಮಲೆ ಒಡೆದಿದ್ರೆ ಹಾಲು ಕೊಡಾದಿಲ್ಲ. +ಅದಕ್ಕೇನಾದ್ರೂ ಔಷ್ಟಿ ಮಾಡಿ" +ಇದು ನಿಜಕ್ಕೂ ಕಲಾವಿದ ಕೊಡಸೆ ಅವರ ಲೇಖನಿಯ ಮಿಂಚು ಮತ್ತು ವಿನ್ಯಾಸ. +ಇದಲ್ಲದೆ 'ನೋನಿ ಹಬ್ಬದ' ಸಂದರ್ಭದಲ್ಲಿ ಸಣ್ಣನಾಯ್ಕರು ಅರ್ಚಕನನ್ನು ಧಿಕ್ಕರಿಸುತ್ತಾರೆ. +ದೇವಸ್ಥಾನದಲ್ಲಿ ಯಾರಿಗೋ ಕಾಯುತ್ತ ಪೂಜೆ ತಡವಾದುದಕ್ಕೆ ರೋಸಿ ಹೋಗಿ ಅವರು ತಾವು ತಂದಿದ್ದ ಹಣ್ಣು ಕಾಯಿತಟ್ಟೆಯನ್ನು ಎತ್ತಿಕೊಂಡು ಹೋಗುವಾಗ ಅವರನ್ನು ತಡೆಯಲು ಪೂಜಾರಿ ಅವರ ಕಾಲಿಗೆ ಬಾಗುತ್ತಾನೆ. +ಇದನ್ನು ಬಹಳವಾಗಿ ಜನರು ಆಕ್ಷೇಪಿಸುತ್ತಾರೆ. . +ಈ ಪ್ರಸಂಗವನ್ನು ಕೊಡಸೆ ಆಕರ್ಷಕವಾಗಿ ಬಿಡಿಸಿದ್ದಾರೆ. +ಎರಡೂ ಕಡೆಯವರ ಅವಿವೇಕ, ಕಂದಾಚಾರ,ಅಜ್ಜಾನ ಚಿತ್ರಿಸುವುದರ ಜೊತೆಗೆ ಸಣ್ಣನಾಯ್ಕರು ಮತ್ತು ಅವರ ಮನೆಯವರು ಹಾಗೂ ಸಂಬಂಧಿಗಳ ದಿಗಿಲನ್ನು ಕಾಣಿಸಿದ್ದಾರೆ. +ಅಲ್ಲದೆ, ಅವರಿಗೆಲ್ಲ ಹಾಲಪ್ಪ ಧೈರ್ಯ ತುಂಬುತ್ತಾನೆ. +"ಅಯ್ಯೋ ಅದರಲ್ಲೇನು? +ಇಷ್ಟು ವರ್ಷ ನಾವೆಲ್ಲ ಅವರ ಕಾಲು ಹಿಡೀಲಿಲ್ವ ಅವನು ಒಂದು ಸಲ ಹಿಡಿದಿದ್ದಾನೆ. +ಅಷ್ಟಕ್ಕೂ ಅವನನ್ನು ಇನ್ನೂ ಯಾಕೆ ಉಳಿಸಿಕೊಂಡಿದ್ದೀರಿ? +ಏನು ದೇವರೆಲ್ಲಾ ಅವರ ಗುತ್ತಿಗೆನಾ? +ಶ್ರದ್ಧೆಯಿಂದ ಯಾವನು ಪೂಜೆಮಾಡ್ತಾನೋ ಅವನಿಗೆ ದೇವರು ಒಲೀತಾನೆ ಅಂತ ನಾವೇ ಪಾಠ ಹೇಳ್ತೀವಿ. +ಇಲ್ಲಿ, ಈ ಪೂಜಾರಿಗಳಿಗೆ ಹೆದರ್ತೀವಿ. +ಏನೂ ಆಗಲ್ಲ, ಅಷ್ಟಕ್ಕೂ ದೇವರು ಇವರ ಮನೆ ಆಳೆ ನೀವೇನೂ ಅಧೈರ್ಯ ಮಾಡಿಕೊಬೇಡ. +ಅನಂತರ ಕರಿಯಪ್ಪ ಇದೇ ರೀತಿ ಅವರಿಗೆಲ್ಲ ಅಭಯದ ಮಾತು ತಿಳಿಸುತ್ತಾನೆ "ವಿಚಾರವಾದ ಪರಿಣಾಮಕಾರಿಯಾಗಿ ಬಂದಿದೆ. +ಆದರೆ ದೇವರ ಬಗೆಗೆ ಇರುವ ಭಾವನೆಯ ಭಯಕ್ಕೆ ಮೂಲ, ದೇವರು ಹುಟ್ಟಿದ್ದೇ ಭಯದಿಂದ ಎಂದು ಚಿತ್ರಿಸಬೇಕಿತ್ತು. +ಹಳ್ಳಿ ಮತ್ತು ಪಟ್ಟಣ ಅಥವಾ ನಗರದ ಜೀವನ ವರ್ಣನೆಯಲ್ಲಿ ಯುವಜನರ ಗಮನ ನಗರ ಜೀವನದ ಕಡೆಗೆ ಇರುವುದು ಕಾಣುತ್ತದೆ. +ದೇಹಶ್ರಮದ ದುಡಿಮೆ ಮಾಡುವುದಕ್ಕಿಂತ ಸರ್ಕಾರಿ ನೌಕರಿಯ ಕಡೆಗೆ ಅವರು ಆಕರ್ಷಿತರಾಗಿದ್ದಾರೆ. +ಗ್ರಾಮೀಣ ಬದುಕಿನಲ್ಲಿ ಕಾಂತಿಯುಕ್ತವಾಗಿರುವ ಬಾಂಧವ್ಯ, ಸಾಮರ್ಥ್ಯ ಬಾವುಣಿಕೆ ಸುಂದರವಾಗಿ ಕೃತಿಗೊಂಡಿದೆ. +ಪಾತ್ರಗಳಾಡುವ ಮಾತುಕತೆ ದಿನನಿತ್ಯದ ಕನ್ನಡ ನುಡಿಯಾಗಿದೆ ಎಂದು ಮೇಲೆ ಅಲ್ಲಲ್ಲೆ ಉಲ್ಲೇಖಿಸಿರುವ ಸಂಭಾಷಣೆಯಿಂದ ತಿಳಿಯುತ್ತದೆ. +ಸಂವಾದದ ಭಾಷೆ ಆಯಾ ಪಾತ್ರದ ಸ್ವಭಾವವನ್ನು ಪ್ರಕಟಿಸುವ ಪರಿಯಲ್ಲಿ ಪ್ರಯೋಗವಾಗಿದೆ. +ಕಾದಂಬರಿಯ ಶೈಲಿ ಸ್ವಾರಸ್ಯಕರವಾಗಿ ಓದಿಸಿಕೊಳ್ಳುತ್ತದೆ. +"ಈಳಿಗೆ ಮಣೆಯಿಂದ ಕೊಯ್ಯುವಂತೆ ಹೇಳಿ', 'ನಾಯಿ ಬಾಯಿಗೆ ಕೋಲು ಹೆಟ್ಟುವ ಹಾಗೆ ಹಾರನ್ನು ಬಾರಿಸುತ್ತಾನೆ" - ಇಂಥ ಹೊಸ ಹೋಲಿಕೆಗಳಿವೆ. +ಛತ್ರಿಯನ್ನು ಬಿಚ್ಚಿದರೆ ಹರಡಿಕೊಳ್ಳುತ್ತದೆ. +ಆದರೆ ಅದರ ಎಲ್ಲ ತಂತಿಗಳೂ ಅವುಗಳ ಮೇಲಿನ ಮುಚ್ಚುಬಟ್ಟೆಯೂ ಕೇಂದಕ್ಕೆ ಕಚ್ಚಿಕೊಂಡಿರುತ್ತವೆ. +ಮುಚ್ಚಿದಾಗ ಕೊಡೆಯ ಶಡ್ಡಿಗಳೆಲ್ಲ ಮುಚ್ಚು ಬಟ್ಟೆ ಸಮೇತ ಒಂದೆಡೆ ಬಂದು ಸೇರುತ್ತವೆ. +ಈ ರೀತಿ ಇದೆ ಈ ಕಾದಂಬರಿಯ ಕಥಾಬಂಧ. +ಕೃತಿಯ ಘಟನೆಗಳು ಸ್ವತಂತ್ರವಾಗಿ ನಡೆಯುವಂತೆ ಕಂಡರೂ ಒಂದು ಅಥವಾ ಸಮಗ್ರ ದೃಷ್ಟಿಗೆ ಒಳಪಟ್ಟಿವೆ. +'ಪಾಡು' ಅಪರೂಪದ ಕಾದಂಬರಿ. +ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಸಹಜವಾಗಿಯೇ ಕತೆ, ಕಾದಂಬರಿ, ವಿಮರ್ಶೆಗಳಂತಹ ಗದ್ಯದ ಸೆಳೆತಉಂಟಾಗಿದೆ. +ಅವರೇ ಹೇಳುವ ಹಾಗೆ ದಿನಪತ್ರಿಕೆಯಲ್ಲಿ ಕೆಲಸದಲ್ಲಿರುವ ನನಗೆ ಪದಗಳ ಸಂಖ್ಯೆ ಅನುಸರಿಸಿ ವರದಿಯನ್ನೋ, ವಿಶೇಷ ಲೇಖನವನ್ನೋ ಬರೆಯುವ ಕಾಲಘಟ್ಟಕ್ಕೆ ಬಂದು ನಿಂತಿರುವ ಭಾವನೆ ಇದೆ. +ಈಗ ಪತ್ರಿಕೆಗಳ ವಾರದ ವಿಶೇಷ ಪುರವಣಿಯಲ್ಲಿ ಕಥೆಗಳನ್ನು ಆಹ್ವಾನಿಸುವಾಗ ಇಂತಿಷ್ಟೇ ಪದಗಳಮಿತಿಯಲ್ಲಿರುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುವ ಪರಿಸ್ಥಿತಿಯೂ ಅವೆ. +ಸ್ಥಳದ ಅಭಾವ ಒಂದು ಕಾರಣ. +ಓದುಗರೇ ಸುದೀರ್ಫವಾದ ಕಥೆಗಳನ್ನು ವಿಶೇಷ ಲೇಖನಗಳನ್ನು ಇಷ್ಟಪಡುವುದಿಲ್ಲ ಎಂಬ ಸಮೀಕ್ಷೆಗಳೂ ಬರೆಹಗಳಿಗೆ ಸ್ಥಳಮಿತಿಯನ್ನು ಹೇರುವುದಕ್ಕೆ ಕಾರಣವಾಗಿದೆ. . . +ಪದಗಳ ಮಿತಿಯಲ್ಲಿ ಕಥೆಗಳನ್ನೋ, ವರದಿಗಳನ್ನೋ, ವಿಶೇಷ ಲೇಖನಗಳನ್ನೋ ಬರೆಯುವ ವ್ಯಕ್ತಿಯಲ್ಲಿರುವ ನಾನು ಈಬರೆಹಗಳಿಗೆ ಹೋಲಿಸಿದರೆ ದೀರ್ಫ್ಥವೇ ಎನ್ನಬಹುದಾದ ಕಾದಂಬರಿಯಲ್ಲಿ ಬರೆಯಲು ಮುಂದಾಗಿದ್ದು ನನಗಂತೂ ಆಶ್ಚರ್ಯದ ಸಂಗತಿಯೇ. +ಕೊಡಸೆ ಅವರ ಈ ಮಾತಿನಲ್ಲಿ ಪತ್ರಿಕಾ ಬರೆಹದ ಹಿಂದಿರುವ ಸಾಂಸ್ಕೃತಿಕ ಒತ್ತಡ ಇಲ್ಲಿ ವ್ಯಕ್ತವಾಗುತ್ತದೆ. +ಇಂದಿನ ಜಾಗತೀಕರಣ, ನಗರೀಕರಣ, ಖಾಸಗೀಕರಣ, ಔದ್ಯೋಗೀಕರಣ ಪ್ರಕ್ರಿಯೆಯಲ್ಲಿ ಸಾಹಿತ್ಯ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ವ್ಯಕ್ತವಾಗುತ್ತದೆ. +ಓದುಗರನ್ನು ಸೆಳೆಯಲು ಕಡಿಮೆ ಸಮಯದಲ್ಲಿ ಓದಿಮುಗಿಸುವಂತಹ ಗದ್ಯವನ್ನು ಸೃಷ್ಟಿಸಬೇಕಾದ ಅವಶ್ಯಕತೆ ಕೊಡಸೆ ಅವರ ಬರವಣಿಗೆಗೆ ಇದೆ. +ಕೊಡಸೆ ಪತ್ರಿಕಾ ಸಂಪಾದಕರಾಗಿದ್ದರಿಂದ ಇಂದಿನ ಹೈಟೆಕ್‌ ಯುಗದ ಓದುಗರ ಮನಸ್ಸನ್ನು ಸಹಜವಾಗಿ ಅರಿತವರು. +ಅವರಅವಶ್ಯಕತೆ, ಹಂಬಲ, ಒತ್ತಡ ಯಾವುದೆಂದು ತಿಳಿದವರು. +ಹಾಗಾಗಿ ಇಂದಿನ ಓದುಗರ ಹಿತಾಸಕ್ತಿಗೆ ಅನುಗುಣವಾಗಿ ಅವರ ಗದ್ಯ ಸಾಹಿತ್ಯ ರೂಪುಗೊಂಡಿವೆ ಎನ್ನಬಹುದು. +ಪರಂಪರೆಯ ಗದ್ಯ ಬರೆಹಗಾರರಿಗೆ ಹೋಲಿಸಿದರೆ ಇಂದಿನ ಗದ್ಯ ಬರೆಹಗಾರರ ಜವಾಬ್ದಾರಿ ಒತ್ತಡಗಳು ಬೇರೆಯೇ ಆಗಿವೆ. +ಹಿಂದಿನ ಸಂದರ್ಭದಲ್ಲಿ ಆಧುನಿಕತೆಯ ಪ್ರಕ್ರಿಯೆ ಇಷ್ಟು ತೀವ್ರವಾಗಿಲ್ಲದ ಕಾರಣ ಸಾಹಿತ್ಯ ಓದುಗರು ಹೆಚ್ಚಾಗಿದ್ದರು. +ಬಿಡುವಿನ ವೇಳೆಯಲ್ಲಿ ಪುಸ್ತಕ ಓದುವ ಅಭ್ಯಾಸವಿಟ್ಟುಕೊಂಡಿದ್ದರು. +ಆದರೆ ಇಂದು ಟಿ.ವಿ.ರೇಡಿಯೋ, ಇಂಟರ್‌ನೆಟ್‌, ಮೊಬೈಲ್‌ಗಳ ಬಳಕೆಯ ಅಭ್ಯಾಸ ಹೆಚ್ಚಾಗುತ್ತಿದೆ. +ಹಾಗೆ ಮನುಷ್ಯನ ಬದುಕು ವ್ಯಾವಹಾರಿಕವಾಗಿ ಮಾನವೀಯ ಸಂಬಂಧಗಳು, ಮೌಲ್ಯಗಳು, ಕುಸಿಯುತ್ತಿರುವುದರಿಂದ ಸಾಹಿತ್ಯ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. +ಇಂತಹ ಪಕ್ಷುಬ್ಧ ಪರಿಸ್ಥಿತಿಯಲ್ಲಿ ಓದುಗರನ್ನು ಆಕರ್ಷಿಸುವ, ಯುವಜನತೆಯನ್ನು ಸಾಹಿತ್ಯದತ್ತ ಸೆಳೆಯುವ ಮಹತ್ತರ ಜವಾಬ್ದಾರಿ ಇಂದಿನ ಬರೆಹಗಾರರಿಗಿದೆ. +ಈ ಯುಗದ ಅವಶ್ಯಕತೆ, ಒತ್ತಡಗಳನ್ನು ಅರಿತು ಆ ನಿಟ್ಟಿನಲ್ಲಿ ಸಾಹಿತ್ಯವನ್ನು ರಚಿಸಬೇಕಾದ ಮತ್ತು ಈ ಒತ್ತಡಗಳ ನಡುವೆಯೂ ಜಾಗತೀಕರಣದ ನಾಗಾಲೋಟದಲ್ಲಿ ದೇಸಿ ಮೌಲ್ಯಗಳ ಸಂಸ್ಕೃತಿಯನ್ನು ಪ್ರತಿಪಾದಿಸಿ ಅದನ್ನು ಉಳಿಸಿಕೊಳ್ಳಬೇಕಾದ ಈ ಅರಿವು ಯಾವ ಜನತೆಯಲ್ಲಿ ಮೂಡಿಸಬೇಕಾದ ತುರ್ತು ಇಂದಿನ ಬರೆಹಗಾರರಿಗಿದೆ. +ಈ ನಿಟ್ಟಿನಲ್ಲಿ ಕೊಡಸೆ ಅವರ ಗದ್ಯ ಬರೆಹ ಪ್ರಸ್ತುತ ಮತ್ತು ಅವಶ್ಯಕವೆನಿಸಿದೆ ಮತ್ತು ಇಂದಿನ ಬರೆಹಗಾರರ ಜವಾಬ್ದಾರಿಯನ್ನು ಕೊಡಸೆ ಅವರು ನಿರ್ವಹಿಸುತ್ತಿದ್ದಾರೆ ಎನ್ನಬಹುದು. +ಈ ನಿರ್ವಹಣೆಗೆ ಅವರ ಪತ್ರಿಕಾ ಬರವಣಿಗೆಯ ಪ್ರಭಾವವೂ ಇದೆ. +ಈ ನಿಟ್ಟಿನಲ್ಲಿ ಅವರ ಕತೆ, ಕಾದಂಬರಿ,ವಿಮರ್ಶೆ, ಗದ್ಯ ಬರೆಹಗಳು ಪ್ರಮುಖ ಪಾತ್ರವಹಿಸಿವೆ. +ಇವರ ಕತೆ, ಕಾದಂಬರಿಗಳು ನಗರೀಕರಣದ ಗೊಂದಲದ ಬದುಕಿನಲ್ಲಿ ಸಿಲುಕಿ ಬೇಸತ್ತ ಮನಸ್ಸುಗಳಿಗೆ ದೇಸಿ ಸಂಸ್ಕೃತಿಯ ಅಮೃತವನ್ನು ಉಣಬಡಿಸುತ್ತವೆ. +ಜಾಗತೀಕರಣ ಪ್ರಕ್ರಿಯೆಯಲ್ಲಿ ಸಿಲುಕಿ ಅನಾಥ ಪ್ರಜ್ಞೆಯನ್ನು ಅನುಭವಿಸುವ ಮನಸ್ಸುಗಳಿಗೆ ದೇಸಿ ಚಿಂತನೆಯ ತಾಯ್ತನದ ಪ್ರೀತಿಯನ್ನು ಎರೆಯುತ್ತವೆ. +ಅಸ್ತಿತ್ವ ಇಲ್ಲದೆ ತಾಕಲಾಟದ ಬದುಕಿನಲ್ಲಿ ಬದುಕುವ ಮನಸ್ಸುಗಳಿಗೆ ಒಂದು ಅಸ್ತಿತ್ವವನ್ನು ರೂಪಿಸಿ ಕೊಡುತ್ತದೆ. +ಕುಸಿಯುತ್ತಿರುವ ಜೀವನ ಮಟ್ಟಗಳಿಗೆ ಗ್ರಾಮೀಣ ನೆಲೆಯಲ್ಲಿ ಸಾಂತ್ವನ ಹೇಳುತ್ತವೆ. +ಅವರ ವಿಮರ್ಶಾ ಬರೆಹಗಳು ಈ ಯುಗದ ಓದುಗರನ್ನು ಚಿಂತನೆಗೆ ಒಳಪಡಿಸುತ್ತವೆ. +ಕೊಡಸೆ ಅವರು ದೀರ್ಫ್ಥವೇ ಎನ್ನಬಹುದಾದ ಕಾದಂಬರಿಗಳನ್ನು ರಚಿಸಿದ್ದರೂ ಇಲ್ಲಿಯೂ ಪತ್ರಿಕಾ ಬರೆಹದ ಪ್ರಭಾವವಿದೆ. +ಏಕೆಂದರೆ ಇವರ ಕಾದಂಬರಿಗಳು ಏಕಗಂಟಿನಲ್ಲಿ ಓದಿ ಮುಗಿಸುವಂತಹ ಕಥಾ ವಿನ್ಯಾಸವನ್ನು ಒಳಗೊಂಡಿವೆ. +ಅನಗತ್ಯ ವರ್ಣನೆಗಳಾಗಲೀ, ಬೇಕಿಲ್ಲದ ಮಾತುಗಳಾಗಲಿ ಇಲ್ಲಿ ಕಂಡುಬರುವುದಿಲ್ಲ. +ಇಲ್ಲಿನ ಬರವಣಿಗೆ ಸರಳ ಭಾಷೆ ಸುಲಭವಾಗಿ ಓದುಗನಿಗೆ ದಕ್ಕುವಂತಹ ಶೈಲಿ. +ಇವು ಓದುಗ ಸ್ನೇಹಿಯಾಗಿವೆ. +ಪತ್ರಿಕಾ ಬರೆಹಗಳನ್ನು ಅವಸರದ ಬರೆವಣಿಗೆಗಳೆಂದು ಪತ್ರಿಕಾ ಬರೆಹಗಾರರನ್ನು ಪ್ರತ್ಯೇಕಿಸುವ ಪರಂಪರೆಯೊಂದಿತ್ತು. +ಆದರೆ ಇಂದು ಈ ಪತ್ರಿಕಾ ಬರೆಹಗಳೆ ಸಾಹಿತ್ಯಾಸಕ್ತರನ್ನು ಬೆಳೆಸುವ ಪ್ರಯತ್ನ ಮಾಡುತ್ತಿವೆ. +ಪತ್ರಿಕಾ ಬರೆಹಗಾರರೂ ಸಹ ಓದುಗರ ಒತ್ತಡ ಆಸಕ್ತಿಯನ್ನರಿತು ಬರೆಯುತ್ತಿದ್ದಾರೆ. +ಮಹತ್ವದ ಚಿಂತನಾಶೀಲ ಗ್ರಹಿಕೆಗಳ ಮೂಲಕ ಸಮಕಾಲೀನ ಗದ್ಯ ಬರೆಹದ ಎಲ್ಲೆಯನ್ನು ವಿಸ್ತರಿಸುತ್ತಿದ್ದಾರೆ. +ಅಕಾಡೆಮಿಕ್‌ವಲಯಕ್ಕಷ್ಟೇ ಸೀಮಿತವಾಗಿದ್ದ ಸಾಹಿತ್ಯ ಇಂದು ತನ್ನ ವ್ಯಾಪ್ತಿಯನ್ನು ಈ ಮೂಲಕ ವಿಸ್ತರಿಸಿಕೊಳ್ಳುತ್ತಿದೆ. +ಈ ನಿಟ್ಟಿನಲ್ಲಿ ಲಕ್ಷ್ಮಣ ಕೊಡಸೆ ಅವರ ಗದ್ಯಬರೆಹವು ಪ್ರಮುಖ ಪಾತ್ರವಹಿಸುತ್ತದೆ ಎನ್ನಬಹುದು. +ಕೊಡಸೆ ಅವರ ಗದ್ಯ ಶೈಲಿ ವಾಸ್ತವಿಕ ನೆಲೆಯುಳ್ಳದ್ದು. +ಅವರ ಕತೆ, ಕಾದಂಬರಿಗಳಾಗಲೀ ವಿಮರ್ಶಾಬರೆಹಗಳಾಗಲಿ, ಪತ್ರಿಕಾ ಬರೆಹಗಳಾಗಲಿ ವಾಸ್ತವಿಕ ಪ್ರಜ್ಞೆಯಲ್ಲಿ ಒಡಮೂಡಿರುವಂಥವು. +ಆರಂಭದ ಕನ್ನಡ ಸಾಹಿತ್ಯದ ವಸ್ತು ಕಾಲ್ಪನಿಕ ಸ್ವರೂಪದ್ದಾಗಿತ್ತು. +ಈ ಕಾಲ್ಪನಿಕ ಕಥಾವಸ್ತುವಿನಲ್ಲಿ ವಾಸ್ತವತೆ ಅಲ್ಲಲ್ಲಿ ಬಂದು ಹೋಗುವ ನೆಂಟನಂತೆ ಬಳಕೆಯಾಗುತ್ತಿತ್ತು. +ಇಲ್ಲಿ ರಾಜ ಮಹಾರಾಜರ ವೈಭವ, ಶೃಂಗಾರ,ಹೆಣ್ಣಿನ ವರ್ಣನೆ, ದೇವತೆಗಳ ಪವಾಡ, ಅತಿಮಾನುಷ ಶಕ್ತಿ, ಯುದ್ಧ ಇಂತಹವುಗಳ ಕಾಲ್ಬನಿಕತೆಯಲ್ಲಿ ವಾಸ್ತವ ಬದುಕಿನ ಚಿತ್ರಣ ಗೌಣವಾಗಿತ್ತು. +ಆದರ ಬ್ರಿಟಿಷರಿಂದ ಆಗಮನವಾದ ಆಧುನಿಕ ಪ್ರಕ್ರಿಯೆಯಿಂದ ಸಾಹಿತ್ಯದಲ್ಲಿ ಮಹತ್ತರ ಬದಲಾವಣೆಗಳು ಕಂಡು ಬಂದು ಸಾಹಿತ್ಯ, ವಾಸ್ತವ ಬದುಕಿನತ್ತ ಮುಖ ಮಾಡಿತು. +ಇಲ್ಲಿ ಶ್ರೀಸಾಮಾನ್ಯರ ಬದುಕು ಸಾಹಿತ್ಯದ ಮುಖ್ಯವಾಹಿನಿಗೆ ಬಂದಿತು. +ಈ ವಾಸ್ತವತೆಯ ಬಳಕೆ ಆಧುನಿಕ ಸಾಹಿತ್ಯಘಟ್ಟದಲ್ಲಿ ವಿಭಿನ್ನವಾಗಿ ಬಳಕೆಯಾಯಿತು. +ನವೋದಯ ಸಂದರ್ಭದಲ್ಲಿ ವಾಸ್ತವತೆಯ ಚಿತ್ರಣವಿದ್ದರೂ ಇದು ಆದರ್ಶವಾದ, ರೊಮ್ಯಾಂಟಿಸಂ, ರಾಷ್ಟ್ರೀಯತೆಯ ಪರಿಕಲ್ಪನೆ ಪ್ರಕೃತಿ ಚಿತ್ರದಂತಹ ಭಾವನಾ ಪ್ರಪಂಚ ಹೆಚ್ಚು ಪ್ರಾಮುಖ್ಯತೆ ಪಡೆದಿತ್ತು. +ಸಾಹಿತ್ಯ ಕಲೆಗೆ ಹೆಚ್ಚು ಒತ್ತು ನೀಡಿತ್ತು. +ಸಾಹಿತ್ಯ ಸಂಪೂರ್ಣವಾಗಿ ವಾಸ್ತವಿಕ ಬದುಕಿಗೆ ಒಡ್ಡಿಕೊಂಡದ್ದು ಪ್ರಗತಿಶೀಲ ಸಾಹಿತ್ಯ ಸಂದರ್ಭದಲ್ಲಿ ವಾಸ್ತವ ಬದುಕಿನ ಸಮಸ್ಯೆಗಳು ಸ್ಥಿತ್ಯಂತರಗಳು ಪ್ರಗತಿಶೀಲರಿಗೆ ಮುಖ್ಯವಾಗಿ ಕಂಡಿತು. +"ಕಲೆಗಾಗಿ ಕಲೆ ಅಲ್ಲ,ಬದುಕಿಗಾಗಿ ಕಲೆ" ಎಂದು ಘೋಷಿಸಿದರು. +ಹಾಗಾಗಿ ನವೋದಯ ಸಾಹಿತ್ಯದ ಗದ್ಯಬರೆಹಗಳಲ್ಲಿ ಏಕಾಗ್ರತೆ,ಸಂಯಮ, ಕಲಾತ್ಮಕತೆ, ಸ್ಥಾಯೀಭಾವವಾದರೆ, ಪ್ರಗತಿಶೀಲ ಬರೆಹಗಳಲ್ಲಿ ಸಿಟ್ಟು ಆಕ್ರೋಶ, ಅಬ್ಬರ,ಸ್ಥಾಯೀಭಾವವಾಗಿದೆ. +ವಾಸ್ತವವಾದದ ತನ್ನ ನೆಲೆಯನ್ನು ವಿಸ್ತರಿಸಿಕೊಂಡ ಪ್ರಗತಿಶೀಲ ಗದ್ಯ ಬರೆಹ ಲೇಖಕ ಮತ್ತು ಓದುಗರ ನಡುವೆ ಸಾಮಾಜಿಕ ಪ್ರಜ್ಞೆಯನ್ನು ತೀಕ್ಷ್ಣಗೊಳಿಸಿತು. +ಹಾಗಾಗಿ ಪ್ರಗತಿಶೀಲ ಗದ್ಯ ಸಾಹಿತ್ಯದಲ್ಲಿ ಭಾಷೆ,ಸಹಜತೆಯಲ್ಲಿ ವ್ಯಕ್ತವಾಗುತ್ತದೆ. +ನವ್ಯದ ಗದ್ಯದ ಭಾಷೆಯ, ಪ್ರತಿಮೆ, ಪ್ರತೀಕರೂಪಕಗಳನ್ನಳವಡಿಸಿಕೊಂಡ ಕಾವ್ಯಮಯ ಭಾಷೆಯಾಗಿದೆ. +ಒಮ್ಮೊಮ್ಮೆ ಈ ಭಾಷೆ ಕವನವಾಗಿ ಹೆಪ್ಪುಗಟ್ಟುತ್ತದೆ. +ವಸ್ತು ಮತ್ತು ಭಾಷೆಗಳ ನಡುವೆ ಹೊಂದಾಣಿಕೆಯಲ್ಲಿ ಸಾಂಗ್ಯವನ್ನು ಸಾಧಿಸುವಲ್ಲಿ ನವ್ಯದ ಗದ್ಯಬರೆಹ ಸಾಫಲ್ಯ ಕಂಡಿದೆ. +ಸರಳತೆ ಹಾಗೂ ನೇರ ನಿರೂಪಣೆಯಿಂದ ಸಂಕ್ಷಿಪ್ತತೆ ಹಾಗೂ ಸೂಕ್ಷತೆಯಿಂದ ಗಮನಸೆಳೆಯಿತು. +ಈ ನೆಲೆಯಲ್ಲಿ ಆಧುನಿಕ ಗದ್ಯದ ಬೆಳವಣಿಗೆಗೆ ನವ್ಯ ಸಾಹಿತ್ಯ ಮಹತ್ವದ ಕೊಡುಗೆ ಸಲ್ಲಿಸಿದೆ. +ದಲಿತ ಬಂಡಾಯ ಸಾಹಿತ್ಯವು ಸಹ ಪ್ರಗತಿಶೀಲ ಗದ್ಯಬರೆಹದ ಪ್ರಭಾವವನ್ನು ಒಳಗೊಂಡಿವೆ. +ಇಲ್ಲಿನ ಕತೆ,ಕಾದಂಬರಿ, ವಿಮರ್ಶೆ, ನಾಟಕ ಎಲ್ಲವು ದಮನಿತರ ದನಿಯಾಗಿ ಹೊರಹೊಮ್ಮಿದವು. +ವರ್ಣ ಸಂಕರದ ಕಡೆಗೆಸಮಾಜ ಸಾಗುತ್ತಿರುವ ವಾಸ್ತವ ಸ್ಥಿತಿಯನ್ನು ಚಿತ್ರಿಸಿದವು. +ಇಲ್ಲಿಯೂ ಸಹ ಕಲೆಗಿಂತ ವಾಸ್ತವಿಕ ಬದುಕು ಮುಖ್ಯವಾಯಿತು. +ಇಂದು ದಲಿತ ಬಂಡಾಯ ಸಾಹಿತ್ಯದ ತಾತ್ಮಿಕತೆಗೆ ಭಿನ್ನವಾಗಿ ಜಾಗತೀಕರಣ ಪ್ರಕ್ರಿಯೆಯಲ್ಲಿ ಗದ್ಯ ಸಾಹಿತ್ಯಹೊಸ ಹೊರಳಿಕೆಯನ್ನು ಪಡೆಯುತ್ತಿದೆ. +ಬದಲಾಗುತ್ತಿರುವ ಆಧುನಿಕತೆಯ ಪ್ರಕ್ರಿಯೆಗಳು ಭಯೋತ್ಪಾದಕ ವಾತಾವರಣವನ್ನು ಸೃಷ್ಟಿಸುತ್ತಿವೆ. +ಪರಂಪರೆ,ಸಂಪ್ರದಾಯಗಳು, ಅನುಮಾನವನ್ನು ಉಂಟು ಮಾಡಿವೆ. +ಈ ನಡುವೆ ಹೊಸ ಸಮಾಜ, ಸಂಸ್ಕೃತಿ,ಸಾಹಿತ್ಯವನ್ನು ಸೃಜಿಸುವ ಮತ್ತು ಮಾನವೀಯತೆಯನ್ನು ಹುಡುಕುವ ಅನನ್ಯತೆ ಎಂದಿಗಿಂತ ಇಂದು ಲೇಖಕರ ಮೇಲೆ ಹೆಚ್ಚಿನ ಹೊಣೆಗಾರಿಕೆಯಿಂದ ಕೂಡಿದೆ. +ಈ ಹೊಣೆಗಾರಿಕೆ ಪ್ರತಿಯೊಬ್ಬ ಸೃಜನಶೀಲ ಬರೆಹಗಾರನ ಕರ್ತವ್ಯವಾಗಬೇಕಿದೆ. +ಈ ನೆಲೆಯಲ್ಲಿ ಕೊಡಸೆ ಅವರ ಗದ್ಯ ಬರೆಹವನ್ನು ವಾಸ್ತವಿಕ ಪ್ರಜ್ಞೆಯ ಮೂಲಕ ವಿಶ್ಲೇಷಿಸಬಹುದು. +ಕೊಡಸೆ ಅವರು ಪತ್ರಿಕಾ ಬಳಗದಲ್ಲಿ ಕೆಲಸ ಮಾಡುತ್ತಿರುವವರಾದ್ದರಿಂದ ಇಂದಿನ ಓದುಗರ ಅಪೇಕ್ಷೆಯ ಒತ್ತಡವನ್ನು ಅರಿತವರು. +ಹಾಗಾಗಿ ಅವರ ಸಾಹಿತ್ಯ ಬದುಕಿನ ದಟ್ಟ ಅನುಭವಗಳನ್ನು ಸರಳವಾಗಿ ವಾಸ್ತವದ ಜೀವಂತಅನುಭವಗಳಾಗಿ ಹೊರಹೊಮ್ಮುತ್ತದೆ. + ಕೆ.ಎಸ್‌.ಭಗವಾನರು ಹೇಳುವಾಗ "ಭಾರವೂ, ಹಗುರವೂ ಅಲ್ಲದ ಸದಭಿರುಚಿಯ ಭಾಷೆ" ಇವರ ಗದ್ಯದ ವೈಶಿಷ್ಟ್ಯ ಎನ್ನಬಹುದು. +ಇವರ 'ಪಯಣ' ಕಾದಂಬರಿಯು ವಾಸ್ತವಿಕ ನೆಲೆಯಲ್ಲಿ ಬಹುಮುಖ್ಯವಾದುದು. +ಪಯಣ ಕಾದಂಬರಿಯ ಶೀರ್ಷಿಕೆಯು ಪರೋಕ್ಷವಾಗಿ ಬದುಕಿನ ಪಯಣವನ್ನೇ ಒಳಗೊಂಡಿದೆ. +ಚಂಪಾ ಅವರು ಈ ಬಗ್ಗೆ ಈ ರೀತಿಹೇಳುತ್ತಾರೆ. +"ಮಲೆನಾಡಿನ ಪರಿಸರದ ಅನುಭವ ದ್ರವ್ಯಗಳಲ್ಲಿ ಹರಡಿಕೊಳ್ಳುವುದು ಕರೇನಾಯ್ಕರ ನೆನಪುಗಳ ಮೂಲಕ. +ಹೆದ್ದಾರಿಪುರದಿಂದ ಶುರುವಾದ ಅವರ ಬಸ್‌ ಪಯಣ, ಸಿ.ಎನ್‌.ರಾಮಚಂದ್ರನ್‌ ಹೇಳುವಂತೆ ವಾಸ್ತವ ಪಯಣದ ಮೂಲಕ ಬದುಕಿನ ಪಯಣವನ್ನು ದಾಖಲಿಸಿದೆ". +ಕರೇನಾಯ್ಕರು ಸಾಧಿಸುವ ಇತರಪ್ರಯಾಣಿಕರ ನೆನಪುಗಳ ಮೂಲಕ ಒಂದು ಕಾಲಘಟ್ಟದಲ್ಲಿ ಒಂದು ಸಮುದಾಯ ಕ್ರಮಿಸಿದ ಬದುಕಿನ ಪಯಣದ ವೈವಿಧ್ಯಮಯ ವಿವರಗಳೇ ಇಡೀ ಕಥಾನಕದ ನೇಯ್ಗೆಯನ್ನು ಅಂದಗೊಳಿಸಿವೆ. +ಇಂಡಿಯಾದ ಹಳ್ಳಿಗಾಡಿನ ಬದುಕಿನ ಸ್ಥಿತ್ಯಂತರಗಳು ಮನುಷ್ಯ ಸಂಬಂಧಗಳಲ್ಲಿನ ಏರುಪೇರಿನ ಮೂಲಕ ಸೂಕ್ಷವಾಗಿ ಬಿಚ್ಚಿಕೊಂಡಿದೆ. + ಕೊಡಸೆ ಅವರ ಕೃತಿ ವಾಸ್ತವ ನೆಲೆಯಲ್ಲಿ ರೂಪುಗೊಂಡಿರುವುದನ್ನು ಮೇಲಿನ ಅಭಿಪ್ರಾಯಗಳು ನಿರೂಪಿಸುತ್ತವೆ. +ಇವರ ಕಾದಂಬರಿಗಳಲ್ಲಿ ಬರುವ ಹಳ್ಳಿಯ ಬದುಕಿನ ಚಿತ್ರಣ ಮಲೆನಾಡಿನ ಚಿತ್ರಣ ವಾಸ್ತವದ ಜೀವಂತ ಅನುಭವಗಳಾಗಿವೆ. +ಇಂತಹ ಅನುಭವಗಳು ಇಂದಿನ ಜಾಗತೀಕರಣದ ಬಿಸಿ ದಾಳಿಯಿಂದ ನೊಂದ ಮನಸ್ಸುಗಳಿಗೆ ತಂಪನ್ನು ಎರೆಯುತ್ತವೆ. +ದೇಸಿತನದ ಔಷಧವನ್ನು ನೀಡಿ ನವ್ಯ ಪರಂಪರೆ ಸಂಪ್ರದಾಯಗಳಲ್ಲಿ ಉಂಟಾಗುತ್ತಿರುವ ಅನುಮಾನಗಳನ್ನು ನಿವಾರಿಸುತ್ತವೆ. +ಅವರ 'ಅವ್ವ' ಕತೆಯಲ್ಲಿ ಬರುವ ಮಾನವೀಯ ಸಂಬಂಧಗಳ ಗಟ್ಟಿತನ ನೆರಳು ಕಾದಂಬರಿಯಲ್ಲಿ ಕುಸಿಯುತ್ತಿರುವ ಮಾನವೀಯ ಸಂಬಂಧಗಳು, 'ಭೂಮಿಹುಣ್ಣಿಮೆ' ಕಾದಂಬರಿಯಲ್ಲಿನ ಸಂಸ್ಕೃತಿಯ ಆಚರಣೆಗಳ ವಿವರಗಳು, 'ಪಾಡು' ಕಾದಂಬರಿಯಲ್ಲಿ ವ್ಯಕ್ತವಾಗುವ ಹಾಲಪ್ಪ ಮತ್ತು ಪ್ರಮೀಳಾರ ಜೋಡಿ ಅಂತರ್ಜಾತಿ ವಿವಾಹವಾಗಿ ಬದುಕುವ ಚಿತ್ರಣ, ಇಂತಹ ಹಲವಾರು ವಸ್ತು ಚಿತ್ರಣಗಳು ವಾಸ್ತವಿಕ ಬದುಕಿನಿಂದ ಮೂಡಿ ಬಂದಂತಹವುಗಳಾಗಿವೆ. +ಇಲ್ಲಿನ ಪಾತ್ರಗಳ ಭಾಷೆಯೂ ಸಹ ಸಹಜವೆನಿಸುತ್ತದೆ. +ಮಲೆನಾಡಿನ ಆಡುಭಾಷೆ ಇವರ ಗದ್ಯದ ವಿಶೇಷವಾದರೂ ಕಥಾ ನಿರೂಪಣೆ ಶಿಷ್ಟಭಾಷೆಯದ್ದಾಗಿದೆ. +ಇಲ್ಲಿ ಪಾತ್ರಗಳ ನಡುವೆ ನಡೆಯುವ ಸಂವಾದದ ಭಾಷೆ ಆ ಪಾತ್ರದ ಸ್ವಭಾವವನ್ನು ಕಟ್ಟಿಕೊಡುವಲ್ಲಿ ಸಫಲವಾಗಿವೆ. +ಹಲವು ಪ್ರಾದೇಶಿಕ ಗಾದೆ ಮಾತುಗಳು ಹೋಲಿಕೆಗಳಿಂದ ಇವರ ಕತೆ, ಕಾದಂಬರಿಗಳು ವಾಸ್ತವತೆಯ ಹಸಿರನ್ನು ಕೊನೆಯವರೆಗೂ ಹಾಗೆ ಉಳಿಸಿಕೊಂಡು ಓದುಗನ ಮನಸ್ಸಿನಲ್ಲಿ ವಾಸ್ತವದ ಚಿಂತನೆಯನ್ನು ಮೂಡಿಸುತ್ತವೆ. +ಕೊಡಸೆ ಅವರ ಕೃತಿಗಳು ಓದುಗನಲ್ಲಿ ಬೀರುವಪ್ರಭಾವ ಎಂತಹದ್ದು ಎಂಬುದನ್ನು ಭುವನಾ ಸುರೇಶ್‌ ಅವರು 'ಪಯಣ' ಕಾದಂಬರಿ ಓದಿದ್ದರ ಬಗೆಗಿನ ಅನಿಸಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ. +ಯಲ್ಲನಾಯ್ಕರ ಕಣಬ್ಬದ ವೈಭವದ ಬಗೆಗಿನ ವಿವರಣೆ. +ಮನೆಗೆ ಬಂದ ನೆಂಟರಿಷ್ಟರೆಲ್ಲ ಎಲ್ಲ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದ ಪರಿ ನನ್ನಬ್ಬೆ ಹೇಳುತ್ತಿದ್ದ ಅಂದಿನ ಕಾಲದ ಮದುವೆ, ಆವನಿ ಜಾತ್ರೆಯ ನೆನಪನ್ನು ತಂದಿತು. +ನನ್ನ ಜಿಲ್ಲೆ ಕೋಲಾರ, ನಿಮ್ಮದು ಮಲೆನಾಡು, ಆದರೆ ಆ ತಲೆಮಾರಿನ ಜನ ಆಲೋಚಿಸಿದ ಬದುಕಿದ ರೀತಿ, ನೆಂಟರಿಷ್ಟರೊಂದಿಗಿನ ಬೆಸುಗೆ, ಅದಕ್ಕೆ ನೆಪವಾಗಿ ಬರುವ ಹಬ್ಬ ಹರಿದಿನಗಳು, ಆ ಸಮಷ್ಟಿಪ್ರಜ್ಞೆ ಭಾರತದ ಎಲ್ಲ ಕತೆಯೂ ಒಂದೇ ಆಗಿತ್ತೇನೋ ಎನಿಸಿತು. . . +ಮಕ್ಕಳು ಎಷ್ಟೇ ದೊಡ್ಡವರಾದರೂ, ಅವರಿಗೆ ಮನೆಯ ಜವಾಬ್ದಾರಿಯನ್ನು ನೀಡಲು ಬಯಸದ ಹಿರಿಯರ ಪ್ರತಿನಿಧಿಯಾಗಿ ಕರೇನಾಯ್ಕ, ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸುವ ಬಡೇನಾಯ್ಕ ಎಂತಹ ಅದ್ಭುತ ಪಾತ್ರಗಳು! +ಈ ಅಕ್ಟೋಬರ್‌ ರಜೆಯಲ್ಲಿ ಒಂದು ಒಳ್ಳೆಯ ಕಾದಂಬರಿ ಓದಿದ ತೃಪ್ತಿ ನನಗೆ ಸಿಕ್ಕಿದೆ. +ಸಿಟಿಯ ಬದುಕು, ನಾಗರಿಕತೆ ಮನುಷ್ಯನನ್ನು ಅವಿಭಕ್ತ ಕುಟುಂಬದಿಂದ ಹೊರ ಬರುವಂತೆ ಮಾಡಿದೆ. +ಒಬ್ಬೊಬ್ಬರು ಒಂದೊಂದು ದ್ವೀಪವನ್ನಾಗಿಸಿ ಬಿಟ್ಟಿದೆ ಎನಿಸಿದರೆ ಖೇದವಾಗುತ್ತದೆ. +ಆರು ತಿಂಗಳಾಗಿತ್ತು ಅಮ್ಮನ ಮನೆಗೆ ಹೋಗಿ, ಈ ಕೃತಿ ಓದಿದ ನಂತರ ಅಮ್ಮನನ್ನು, ತಮ್ಮ ತಮ್ಮನ ಮಗನನ್ನು ಮಾತನಾಡಿಸಿಕೊಂಡುಬರುವ ಎನಿಸಿ ಹೊರಟಿದ್ದೇನೆ. +ಓದು ನಮ್ಮನ್ನು ಬದಲಾಯಿಸುವುದು ಬೆರಗಿನ ವಿಷಯವಲ್ಲವೇ? +ಥ್ಯಾಂಕ್ಯೂ ಲಕ್ಷ್ಮಣ ಕೊಡಸೆಯವರೆ, ಹೊಸ ದೃಷ್ಟಿಕೋನದಿಂದ ಬದುಕನ್ನು ನೋಡಲು ನನಗೆ ಕಲಿಸಿದ್ದಕ್ಕೆ . +ಕೃತಿ ಬದುಕಿನ ಗರ್ಭದಿಂದ ಉದಯಿಸಿದಾಗಲೇ ಓದುಗನಲ್ಲಿ ಈ ರೀತಿಯ ಬದಲಾವಣೆ ಉಂಟು ಮಾಡಲುಸಾಧ್ಯ. +ಕೊಡಸೆ ಅವರು ಈ ನಿಟ್ಟಿನಲ್ಲಿ ಸಫಲರಾದ ಕಾರಣದಿಂದಲೇ ಅವರ ಕೃತಿಯ ಬಗೆಗೆ ಈ ರೀತಿಯ ಅಭಿಪ್ರಾಯ ಮೂಡಿ ಬರಲು ಸಾಧ್ಯವಾಗಿದೆ. +ಕೃತಿ ಓದುಗನಲ್ಲಿ ಬದಲಾವಣೆ ತಂದಾಗಲೇ ಅದು ಸಾರ್ಥಕ ಪಡೆಯುತ್ತದೆ ಎನ್ನಬಹುದು. +ಈ ನಿಟ್ಟಿನಲ್ಲಿ ಕೊಡಸೆ ಅವರ ಕೃತಿಗಳು ಇದನ್ನು ಸಾಧಿಸಿದೆ ಎನ್ನಬಹುದು. +ಕೊಡಸೆಯವರ ಸಾಹಿತ್ಯದ ಜಿಂತನೆಗಳ ಸಮಕಾಲೀನ ಪ್ರಸ್ತುತತೆ ಕೊಡಸೆ ಅವರ ಬರಹಗಳು ಹೆಚ್ಚು ಆಸಕ್ತಿ ವಹಿಸುವುದು ದೇಶಿ ಸಂಸ್ಕೃತಿ ಚಿಂತನೆಯ ಕಡೆಗೆ. +ಅವರ ಯಾವುದೇ ಕೃತಿಗಳು ಸಾಂಸ್ಕೃತಿಕ ಸಂಘರ್ಷವನ್ನು ಒಡೆದು ತೋರುತ್ತವೆ. +ಸಂಸ್ಕೃತಿ ಮತ್ತು ಸಮಾಜಗಳ ನಡುವಿನ ಒಳ ಸಂಘರ್ಷಗಳ ನೆಲೆಗಳನ್ನು ಇವರ ಗದ್ಯ ಬರೆಹ ಹುಡುಕುತ್ತದೆ. +ಕೃತಿ ಎಂದರೆ ಅದು ಕಲಾತ್ಮಕ ಅಭಿವ್ಯಕ್ತಿ ಮಾತ್ರವಲ್ಲ ಎಂಬುದನ್ನು ಕೊಡಸೆ ಅವರ ಗದ್ಯ ಬರಹ ನಿರೂಪಿಸುತ್ತದೆ. +ಹಾಗಾಗಿ ಇವರ ಕಥನ ಹೊಸದೊಂದು ನಿಟ್ಟಿನಲ್ಲಿ ಸಾಗುತ್ತದೆ ಎನ್ನಬಹುದು. +ಮನುಷ್ಯನ ಬದುಕಿನಲ್ಲಿ ಆಗುತ್ತಿರುವ ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಹುಡುಕುವ ನಿಟ್ಟಿನಲ್ಲಿ ಕೊಡಸೆ ಅವರ ಗದ್ಯ ಬರೆಹ ಸಾಗುತ್ತದೆ. +ಬಿಸಿಲು ಇಳಿಯುತ್ತಿತ್ತು ಹಳ್ಳಿ ಮನೆಗಳಲ್ಲಿ ಬಾಗಿಲು ಮುಚ್ಚಿ ಹೋಗುವ ಪರಿಪಾಠ ಇರುವುದಿಲ್ಲ. +ಈಗಿನ ಸ್ಥಿತಿ ಬೇರೆ. +ಮನೆಯಲ್ಲಿ ಯಾರಾದರೊಬ್ಬರು ಇರಲು ಸಾಧ್ಯವಿಲ್ಲದ ಕಾರಣ ಬಾಗಿಲಿಗೆ ಬೀಗ ಹಾಕಿ ಹೋಗುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. +ಇಂತಹ ವಿವರಗಳು ತೀರಾ ಸಾಮಾನ್ಯ ಎನಿಸಿದರು,ಸಾಂಸ್ಕೃತಿಕ ಸ್ಥಿತ್ಯಂತರಗಳ ಚಿಂತನೆಗಳ ಜೊತೆಗೆ, ಬದಲಾಗುತ್ತಿರುವ ಬದುಕಿನ ಕ್ರಮ ಅದರ ಹಿಂದಿನ ಒತ್ತಡಗಳ ಚಿಂತನೆಗೆ ದಾರಿ ಮಾಡಿಕೊಡುತ್ತದೆ. +ಕೊಡಸೆ ಅವರ ಬರೆಹದಲ್ಲಿನ ಸಂಸ್ಕೃತಿ ಚಿಂತನೆಯನ್ನು 'ಪಿ.ಜಿ.ವಿಜು ಪೂಣಚ್ಚ' ಅವರು ಹೀಗೆ ಗುರುತಿಸುತ್ತಾರೆ. +"ಶಿವಮೊಗ್ಗ, ಚಿಕ್ಕಮಗಳೂರು, ಅಡವಿಯಂಚಿನ ಪ್ರದೇಶಗಳ ಗ್ರಾಮೀಣ ಬದುಕಿನಲ್ಲಿ ಇದೀಗ ನಗರೀಕರಣ ಪ್ರಕ್ರಿಯೆ ಚುರುಕಾಗಿದೆ. +ಕುವೆಂಪು, ತೇಜಸ್ವಿ, ಬಿಳುಮನೆ ರಾಮದಾಸ್‌, ಶ್ರೀಕಂಠ ಕೂಡಿಗೆ ಅವರ ಬರೆಹಗಳಲ್ಲಿ ಕಂಡುಬರುವ ಈ ಮಲೆನಾಡು ಪರಿಸರದ ಶೂದ್ರಲೋಕದ ವೈವಿಧ್ಯಮಯ ಸಂಸ್ಕೃತಿ ಕಣ್ಮರೆಯ ಹಾದಿಯಲ್ಲಿದೆ. +ಆ ವಿಭಿನ್ನ ಲೋಕದ ಭಾವ ಬದುಕುಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕಟ್ಟಿಕೊಟ್ಟವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. +ಇಂತಹ ಕಾಲಘಟ್ಟದಲ್ಲಿ ಲಕ್ಷ್ಮಣ ಕೊಡಸೆ ಅವರ ಕಥೆ, ಕಾದಂಬರಿಗಳು,ಸಾಂಸ್ಕೃತಿಕ ನೆಲೆಯಲ್ಲಿ ಅಮೂಲ್ಯ ಎನಿಸುವಂಥವು. +ಕಾನನಗಳ ನಡುವಣ ಗದ್ದೆ ತೋಟಗಳಲ್ಲಿಗೇಯುತ್ತಿದ್ದವರಲ್ಲಿ ಅಕ್ಷರ ಲೋಕಕ್ಕೆ ತೆರೆದುಕೊಂಡ ಮೊದಲ ಪೀಳಿಗೆಯವರು ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಗಾಬರಿಗೊಂಡು ಸಾಂಸ್ಕೃತಿಕವಾಗಿ ಎಲ್ಲಿಯೋ ಕಳೆದುಹೋಗುವುದು ಹೆಚ್ಚು. +ಆದರೆ ಲಕ್ಷ್ಮಣ ಕೊಡಸೆ ಅವರ ಬರೆಹಗಳು ಅಪ್ಪಟ ಗ್ರಾಮೀಣ ಬದುಕಿನ ಕೈಗನ್ನಡಿ. +ಇವರು ಮೂರು ದಶಕಗಳ ನಗರ ಬದುಕಿನ ಏಳು ಬೀಳುಗಳ ನಡುವೆಯೂ ಹೃದಯದಾಳದಲ್ಲಿ ಬಚ್ಚಿಟ್ಟುಕೊಂಡಿದ್ದ ಊರು ಮನೆ ನೆನಪುಗಳ ಬುತ್ತಿ ಬಿಚ್ಚಿಟ್ಟಾಗ ಘಮಘಮಿಸುತ್ತಿರುವುದೇ ಅವರ ಕತೆ, ಕಾದಂಬರಿ ಮತ್ತು ಅಂಕಣ ಬರೆಹಗಳು. +ಕೊಡಸೆ ಅವರ ಬರೆಹಗಳ ಆ ಪರಿಸರದ ಸಾಮಾಜಿಕ ಬದುಕಿನ ಅತಿ ಸುಂದರ ಸಾಂಸ್ಕೃತಿಕ ದಾಖಲೆಯಂತಿವೆ. +ನಗರೀಕರಣದಿಂದ ಜೀವನ ಮೌಲ್ಯಗಳು ಕುಸಿಯುತ್ತಿರುವುದನ್ನು ದಾಖಲಿಸುತ್ತಲೇ ಗ್ರಾಮೀಣ ನೆಲೆಯಲ್ಲಿ ಸಾಂತ್ವನ ಕಂಡುಕೊಳ್ಳುವ ಪ್ರಯತ್ನ ಅವರ ಬರಹಗಳಲ್ಲಿವೆ. +ಈ ನೆಲೆಯಲ್ಲಿ ಕೊಡಸೆ ಅವರ ಸಂಸ್ಕೃತಿ ಚಿಂತನೆ ಬಹುತ್ವದ ಆಯಾಮ ಪಡೆದುಕೊಳ್ಳುತ್ತದೆ. +ಅದರ ವ್ಯಾಪ್ತಿ ಸಮಾಜ-ಸಮುದಾಯ, ಗ್ರಾಮ-ನಗರ ಪರಂಪರೆ ಮತ್ತು ಆಧುನಿಕತೆ, ಹೀಗೆ ಹಲವು ಆಯಾಮಗಳನ್ನು ಅದು ಪಡೆದುಕೊಳ್ಳುತ್ತದೆ. +ಲಕ್ಷ್ಮಣ ಕೊಡಸೆ ಅವರ ಕಾದಂಬರಿ ಮತ್ತು ಅಂಕಣ ಬರಹಗಳ ಅಧ್ಯಯನ ನಡೆಸಿ ಸಲ್ಲಿಸಿದ ಪ್ರೌಢ ಪ್ರಬಂಧದಲ್ಲಿ ಈ ಅಧ್ಯಯನಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಲಭಿಸಿದೆ. +ಈ ಭೂಮಿಯ ಮೇಲಿನ ಸಹಸ್ರಾರು ಕೋಟಿ ಜೀವರಾಶಿಗಳಲ್ಲಿ ಮಾನವ ಅತಿ ಬುದ್ಧಿವಂತ ಪ್ರಾಣಿ. + ಈತ ಇತರ ಪ್ರಾಣಿಗಳಿಗಿಂತ ತೀರ ಭಿನ್ನವಾಗಿ ಕಂಡು ಬರುವುದು ಎರಡು ಲಕ್ಷಣಗಳಿಂದ ಒಂದು ಮಾತನಾಡುವ ಭಾಷೆ ಮತ್ತು ಮನಸ್ಸಿನ ವಿವೇಚನ ಶಕ್ತಿಯಿಂದ ಭೂಮಿಯ ಮೇಲೆ ಒಡೆಯನಾಗಿ ಬದುಕುತ್ತಿದ್ದಾನೆ. +ಮನುಷ್ಯನಿಗೆ ಭಾಷೆ ಒಂದು ಪ್ರಮುಖ ಸಾಧನ. +ಪ್ರಯತ್ನ ಪೂರಕವಾಗಿ ಕಲಿತಿರಬಹುದು. +ಅದೇನೆ ಇರಲಿ ಮನುಷ್ಯನು ತನ್ನ ಭಾವನೆಗಳನ್ನು ಹೊರಹಾಕಲು ಅಥವಾ ಇತರರಿಗೆ ಹೇಳುವುದಕ್ಕೆ ಭಾಷೆಯ ಅನಿವಾರ್ಯತೆ ಇದೆ. +ಭಾಷೆಯೆಂಬ ಬೆಳಕು ಜೀವನದುದ್ದಕ್ಕೂ ಬೆಳಗದಿದ್ದರೆ ಮೂರು ಲೋಕವೆಲ್ಲವೂ ಕತ್ತಲಿನಿಂದ ತುಂಬಿ ಹೋಗುತ್ತಿತ್ತು? +ಮಾತು ಭಾಷೆಯ ಮಹತ್ವವನ್ನು ಒತ್ತಿ ಹೇಳುತ್ತದೆ. +ಖ್ಯಾತ ವಚನಕಾರ ಅಲ್ಲಮಪ್ರಭು 'ಮಾತೆಂಬುದು ಜೋತಿರ್‌ಲಿಂಗ' ಎಂದು ಅಭಿಪ್ರಾಯ ಪಟ್ಟಿದ್ದಾನೆ. +ಸಾಮಾನ್ಯವಾಗಿ ಭಾಷೆ ಎಂದರೆ ಮನುಷ್ಯನು ತನ್ನ ಮನಸ್ಸಿನ ವಿಚಾರಗಳನ್ನು ಇತರರಿಗೆ ತಿಳಿಯುವ ಹಾಗೆ ವ್ಯಕ್ತಪಡಿಸುವ ಮಾಧ್ಯಮವೆ ಭಾಷೆ. +ಭಾಷೆಯನ್ನು ಕುರಿತು 'ಒಂದು ಸಮಾಜದ ವ್ಯಕ್ತಿಗಳು ಪರಸ್ಪರ ವ್ಯವಹಾರಕ್ಕಾಗಿ ಬಳಸುವ ಯಾದೃಚ್ಛಿಕದ್ದನಿ ಸಂಕೇತಗಳ ಒಂದು ವ್ಯವಸ್ಥೆಯೆ ಭಾಷೆ' ಎಂದು ಭಾಷಾ ವಿಜ್ಞಾನಿಗಳಾದ 'ಬ್ಲಾಕ್‌ ಮತ್ತು ಟ್ರೆಗರ್‌' ಹೇಳಿಕೆ ಅರ್ಥಪೂರ್ಣವಾಗಿದೆ. +ಭಾಷೆ ಬೆಳೆದಂತೆ ಮಾನವನು ತನ್ನ ಅಭಿವೃದ್ಧಿಯನ್ನು ಕಾಣುತ್ತ ಬಂದಿದ್ದಾನೆ. +ಭಾಷೆಯಿಂದಲೇ ಸರ್ವತ್ವ, ಭಾಷೆಯನ್ನು ಬಿಟ್ಟು ಸಮಾಜದಲ್ಲಿ ಬದುಕುವುದಕ್ಕೆ ಮನುಷ್ಯನಿಗೆ ಸಾಧ್ಯವಿಲ್ಲ. +ಭಾಷೆ ಎಂಬುದು ಮಾನವನ ಉಸಿರು. +ಪ್ರಾಚೀನ ಕಾಲದಿಂದ ಇಂದಿನವರೆಗೂ ಕನ್ನಡ ಸಾಹಿತ್ಯವನ್ನು ಅವಲೋಕಿಸಿದಾಗ 'ಕುರಿತೋದದೆಯುಂಕಾವ್ಯ ಪ್ರಯೋಗ ಪರಿಣಿತಮತಿಗಳ್‌' ಎಂಬ ಕವಿರಾಜಮಾರ್ಗಕಾರನ ಅಭಿಪ್ರಾಯದಂತೆ ಕನ್ನಡಿಗರು ಸಾಹಿತ್ಯದ ರಚನೆಯಲ್ಲಿ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. +ಕಾಲ ಬದಲಾದಂತೆ ಸಾಹಿತ್ಯದ ದಿಕ್ಕು ಬದಲಾಯಿತು. +ಹೊಸ ಸಂಸ್ಕೃತಿಯೊಡನೆ ಬೆರೆತುಕೊಂಡ ಆಧುನಿಕ ಕನ್ನಡ ಸಾಹಿತ್ಯ ತನ್ನ ಹೊಸ ನಿಲುವನ್ನು ಬದಲಾಯಿಸಿಕೊಂಡಿತು. +ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಎಲ್ಲ ಕಾಲಘಟ್ಟದ ಸಾಹಿತ್ಯದಲ್ಲಿ ಧರ್ಮ,ಜಾತಿ, ಸಾಮಾಜಿಕ ಹಾಗೂ ಧಾರ್ಮಿಕ ಚಿಂತನೆಗಳನ್ನು ಗಮನಿಸಬಹುದಾದರೂ ಅದರ ಭಾಷೆ ಶೈಲಿ, ತಂತ್ರ ಹಾಗೂ ಮಾದರಿಯಲ್ಲಿ ವಿಭಿನ್ನ ಬದಲಾವಣೆಗಳನ್ನು ಗಮನಿಸಬಹುದು. +ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕತೆಗಾರರಾಗಿ ಚಿರಪರಿಚಿತರಾದ ಲಕ್ಷ್ಮಣ ಕೊಡಸೆಯವರ ಕಥಾ ಸಾಹಿತ್ಯದ ಭಾಷೆ ಜನಸಾಮಾನ್ಯರ ಸರಳ ಭಾಷೆಯಾಗಿದ್ದು ಮಲೆನಾಡಿನ ಪ್ರದೇಶದ ಅಪ್ಪಟ ದೇಶಿ ಭಾಷೆಯನ್ನು ಸರಳವಾಗಿ ತಮ್ಮ ಕತೆಗಳಲ್ಲಿ ಬಳಸಿದ್ದಾರೆ. +ಲೇಖಕರು ಸಮಾಜದಲ್ಲಿನ ನೋವು,ನಲಿವು, ಸಂಕಟ, ಜಾತಿ,ಮತ, ಧರ್ಮ ಹಾಗೂ ಅನ್ಯಾಯಗಳನ್ನು ಕಂಡವರು ಹಾಗೂ ಸ್ವತಹ ಅನುಭವಿಸಿದವರು. +ಹಾಗಾಗಿ ಪ್ರಸ್ತುತ ಸಮಾಜದಲ್ಲಿನ ಸ್ಥಿತಿಗತಿಗಳನ್ನು ತಮ್ಮ ಕಥೆಗಳ ಮೂಲಕ ಈ ಸಮಾಜದ ಮುಂದೆ ಬಿಚ್ಚಿಟ್ಟಿದ್ದಾರೆ. +ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂಧಿಸಿದ್ದಾರೆ. +ಇವರ ಕತೆಯ ವಸ್ತು ಪ್ರಸ್ತುತ ದಿನಗಳಲ್ಲಿ ನಡೆಯುವ ಘಟನೆಗಳಾಗಿವೆ. +ಮಲೆನಾಡಿನ ಶೂದ್ರಕವಿ ಕುವೆಂಪು ಹಾಗೂ ಪೂರ್ಣಚಂದ್ರ ತೇಜಸ್ವಿ ತಮ್ಮ ಕಥಾಸಾಹಿತ್ಯದಲ್ಲಿ ಸಮರ್ಥವಾಗಿ ಹಿಡಿದಿಡುವುದರ ಮೂಲಕ ಸಹ್ಯಾದ್ರಿ ಜಾನಪದೀಯನ್ನು ಮತ್ತು ಅದರ ಅಂತಸ್ಸತ್ವವನ್ನು ಸಹೃದಯರು ಸವಿಯುವಂತೆ ಮಾಡಿದರು. +ಈಗಲೂ ಅದು ಚರ್ಚಿತವಾದ ಸಂಗತಿಯೇ ಮಲೆನಾಡಿನ ಶೂದ್ರ ನೆಲೆಗಳ ಬದುಕನ್ನು ಮತ್ತು ಪರಿವರ್ತನ ಶೀಲತೆಯನ್ನು ಕುವೆಂಪು, ತೇಜಸ್ವಿಯವರಿಗಿಂತ ಭಿನ್ನ ನೆಲೆಯಲ್ಲಿ ನೋಡಿದ ಪ್ರಾಮಾಣಿಕ ಪ್ರಯತ್ನವಾಗಿ ಲಕ್ಷ್ಮಣ ಕೊಡಸೆಯವರ ಕತೆ, ಕಾದಂಬರಿಗಳಲ್ಲಿ ಅಡಗಿದೆ. +ಕೊಡಸೆಯವರ ಕತೆಗಳು ಗ್ರಾಮೀಣ ಬದುಕಿನ ಸಂವೇದನಗಳಾಗಿವೆ. +ಮಲೆನಾಡಿನ ಶೂದ್ರ ಕಥೆಗಾರರಾದ ಲಕ್ಷ್ಮಣ ಕೊಡಸೆಯವರು ಶೂದ್ರ ಸಂವೇದನೆಯುಳ್ಳ ಲೇಖಕರು. +ಇವರು ತಮ್ಮ ಕಥಾ ಕಣಜದಲ್ಲಿ ನಿಜ ಜೀವನದ ಘಟನೆಗಳನ್ನು ಹಲವಾರು ರೀತಿಯಲ್ಲಿ ವ್ಯಕ್ತಪಡಿಸುತ್ತಾ ಹೋಗಿದ್ದಾರೆ. +ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳಿಗೆ ಒಂದು ರೀತಿಯ ಮನ್ನಣೆ ಕೊಟ್ಟು ಅವುಗಳ ಮುಖಾಂತರ ಗ್ರಾಮೀಣ ಸರಳ ಭಾಷೆಯಲ್ಲಿ ಈ ಸಮಾಜಕ್ಕೆ ಪರಿಹಾರೋಪಾಯವನ್ನು ಕೊಡುತ್ತ ಕಥೆಗಳಲ್ಲಿ ಹಲವಾರು ಸಂಕಿರಣಗಳನ್ನು ಹೆಣೆದಿದ್ದಾರೆ. +ಇವರ ಭಾಷೆಯಲ್ಲಿ, ದಲಿತರ, ಕಾರ್ಮಿಕರ, ಶೂದ್ರರ, ಜನಸಾಮಾನ್ಯರ ನೋವು, ಹತಾಶೆ,ಸಂಕಟ, ವೇದನೆಗಳನ್ನು ಗಮನಿಸಬಹುದು. +ವರ್ತಮಾನದ ಪ್ರಶ್ನೆಗಳಾಗಿಯೂ ಮುಂದುವರೆದಿರುವ ಬದುಕಿನ ಒಂದಿಷ್ಟು ಅರ್ಥಹೀನ ಸಿದ್ದ ನಂಬಿಕೆಗಳ ಬಗ್ಗೆ ಹಾಗೂ ಅವುಗಳಿಂದ ಬಿಡಿಸಿಕೊಳ್ಳಲು ಅಗತ್ಯವಿರುವ ಬಗ್ಗೆ ಇಲ್ಲಿ ಕೆಲವು ಕತೆಗಳು ತುಂಬ ಎಚ್ಚರದಿಂದ ಮಾತನಾಡುತ್ತವೆ. +'ಅವ್ವ' ಅಂಥ ಉತ್ತಮ ಕತೆಗಳಲ್ಲಿ ಒಂದು. +ಇಲ್ಲಿ ಲೇಖಕರು ಅತ್ಯಂತ ಸರಳವಾದ ಭಾಷೆಯಲ್ಲಿ "ಗಂಡ ಸತ್ತ ಮೇಲೆ ಹೆಂಗಸರ ಬಳೆ ಯಾಕೆ ತಗೀತಾರೆ? +ತಲೆ ಯಾಕೆ ಬೋಳಿಸ್ತಾರೆ? +ಈ ಹುಚ್ಚು ಮುಂಡೆಗಂಡ್ರು ಮನೆ ಹೆಂಗಸರು ಮನೆ ಒಳ್ಗೆ ತಮ್ಮ ಅಂಕೇಲಿ ಬಿದ್ದಿರಲಿ ಅಂತ ಮಾಡಿಕೊಂಡಿರೋಹುನ್ನಾರ"ಎಂದು ಅರ್ಥಹೀನ ಸಂಪ್ರದಾಯವನ್ನು ತಿರಸ್ಕರಿಸುತ್ತ ನಯವಾಗಿ ಟೀಕಿಸಿದ್ದಾರೆ. +ದುಡಿಯುವ ವರ್ಗಕ್ಕೆ ಸೇರಿದ ಗಂಡು ಹೆಣ್ಣುಗಳ ಮಧ್ಯದ ದೈಹಿಕ ಸೆಳೆತಗಳು ಕುಟುಂಬವೆಂಬ ಸಾಮಾಜಿಕ ವ್ಯವಸ್ಥೆಗೆ ಮಣೆಯಲೇಬೇಕಾದ ಸೂಕ್ಷ್ಮ ಬಿಕ್ಕಟ್ಟುಗಳ ಸೊಗಸಾದ ಚಿತ್ರಣವನ್ನು ಮೈತ್ರಿ ಮತ್ತು ಸಪ್ತಪದಿ ಕತೆಗಳಲ್ಲಿ ಕಾಣಬಹುದು. +ಸಪ್ತಪದಿ ಕತೆಯಲ್ಲಿ "ಸುಮ್ನೆ ಇರಯ್ಯ ಕಂಡಿದ್ದೀನಿ, ಮಹಾ ಗಂಡಸಂತೆ ಗಂಡಸು,ನಿನ್ನ ಹೊರಳಾಟಕ್ಕೆ ಪ್ರತಿ ವರ್ಷ ಒಬ್ಬೊಬ್ಬಳು ಬೇಕು. +ನಿನ್ನ ಯೋಗ್ಯತೆ ನನಗೆ ಗೊತ್ತಿಲ್ಲವಾ?"ಎಂದು ಹೆಣ್ಣಿನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. +ಕುಲಗೆಟ್ಟ ಕಾನೂನು ಹಾಗೂ ಅವಕಾಶವಾದವನ್ನು ಚೆನ್ನಾಗಿ ವಿಡಂಬಿಸುವ ಕತೆ 'ಅಪಘಾತ'. +ಬೆಳೆದ ಮಕ್ಕಳ ಮುಂದೆ ಹೇಳಿಕೊಳ್ಳಲಾಗದ ಒಳಗಿನ ವಾಂಛೆಯನ್ನು ಹಿಕ್ಕತ್ತಿನಿಂದ ಈಡೇರಿಸಿಕೊಳ್ಳಲು ಯತ್ನಿಸುವ 'ಅಣ್ಣ', ಅತಿ ಮುದ್ದಿನ ಅಡ್ಡ ಪರಿಣಾಮಗಳ ತೋರುಬೆರಳಂತಿರುವ 'ಒಬ್ಬಳೆಮಗಳೆಂದು' ಕತೆಯಲ್ಲಿ ಲೇಖಕರು 'ಯಾವ ಛಪ್ಪರ್‌ ನನ್ಮಗ ನಿನಗೆ ಈ ಇನಿಶಿಯಲ್‌ ಕೊಟ್ಟ' ಎಂದು ತಂದೆತಾಯಿ ಪ್ರೀತಿಯನ್ನು ತಿರಸ್ಕರಿಸುವ, ಅರ್ಥ ಮಾಡಿಕೊಳ್ಳದ ಆಧುನಿಕ ಮಕ್ಕಳ ಪರಿಭಾಷೆಯನ್ನು ಸೂಕ್ಷವಾಗಿ ಚಿತ್ರಿಸಿದ್ದಾರೆ. +ಸಣ್ಣ ಕತೆಗಳ ಅಸಲೀ ಜಾಯಮಾನಕ್ಕೆ ತಕ್ಕಂಥ ನಡಿಗೆ ಇಲ್ಲಿಯ ಕತೆಗಳದ್ದು. +ಲಕ್ಷ್ಮಣ ಕೊಡಸೆ ಅವರದ್ದೆ ಆದ ಶೈಲಿಯ ಸೊಗಡು ಈ ಕತೆಗಳಲ್ಲಿ ಅಡಗಿದೆ. +ಕೊಡಸೆ ಅವರ ಕತೆಗಳಲ್ಲಿ ಸಹಜತೆ ಇದೆ. +ಓದಿನಲ್ಲಿ ಸುಖ ಕೊಡುವ ಗುಣ ಕಾಣುವುದು. +ಅನಗತ್ಯ ವರ್ಣನೆಗಳಾಗಲಿ, ಬೇಕಿಲ್ಲದ ಮಾತುಗಳಾಗಲಿ ಇಲ್ಲಿ ಕಂಡುಬರುವುದಿಲ್ಲ. +ಇಲ್ಲಿನ ಬರವಣಿಗೆಯಲ್ಲಿ ಸುಲಭವಾಗಿ ದಕ್ಕದ ಸಂಯಮ ಇದೆ. +ಒಟ್ಟು ನೋಟ ಮತ್ತು ಪರಿಣಾಮಕ್ಕೆ ಅವಶ್ಯಕವಾದ ಅಂಶಗಳು ತಮ್ಮ ಉದ್ದೇಶ ಸಾಧನೆಗೆ ಸಂಯೋಜನೆಗೊಳ್ಳುವುದು ಇವರ ಕತೆಗಳ ವಿಶೇಷ. +"ಭಾರವೂ ಹಗುರವೂ ಅಲ್ಲದ ಸದಭಿರುಚಿಯ ಭಾಷೆ. +ಈ ಕತೆಗಳಲ್ಲಿ ಬಳಕೆಯಾಗಿರುವುದರಿಂದ ಓದು ಅಹ್ಲಾದಕಾರಿಯಾಗುತ್ತದೆ. +ಇವುಗಳಲ್ಲಿನ ಪ್ರಸಂಗಗಳು ಮತ್ತು ಸಂಗತಿಗಳು ಜೀವನದಿಂದ ನೇರವಾಗಿ ಕತೆಗಳಿಗೆ ಇಳಿದಿರುವಂತೆ ಭಾಸವಾಗುವುದು. +ಬಾಳಿನ ವಿಘಟನೆಗಳನ್ನು ನಿವಾರಿಸಿ ಜೀವನವನ್ನು ಹೆಚ್ಚು ಸಹ್ಯಗೊಳಿಸಿ ಸುಂದರ ಮಾಡಬೇಕೆಂಬ ಅಂತರ್‌ದೃಷ್ಟಿ ಈ ರಚನೆಗಳ ಅರಿವಾಗುತ್ತದೆ ಎಂದು ಖ್ಯಾತ ಸಾಹಿತಿ ಡಾ.ಕೆ.ಎಸ್‌.ಭಗವಾನ್‌ಅವರು ಅಭಿಪ್ರಾಯಪಟ್ಟಿದ್ದಾರೆ. +ಲಕ್ಷ್ಮಣ ಕೊಡಸೆಯವರು ಅಲ್ಲಲ್ಲಿ ಗ್ರಾಂಥಿಕ ಭಾಷೆಯನ್ನು ಸೊಗಸಾಗಿ ಸರಳ ಶೈಲಿಯಲ್ಲಿ ಬಳಸಿದ್ದಾರೆ. +"ನಿಮ್ಮ ಒಳ್ಳೆಯದಕ್ಕೆ ಹೇಳ್ತಿರೋದು ಆ ಮೇಲಿನ ತೋಟ ನಮ್ಮ ಕೈಗೆ ಬಂದ್ರೆ ನಿಮಗೆ ತಿಂಗಳಿಗೆ ಐನೂರಲ್ಲ. +ಸಾವಿರವಾದ್ರೂ ಕಳಿಸಬಹುದು" ಎಂಬ ಗ್ರಾಂಥಿಕ ಭಾಷೆ ಸೇರಿ ಕತೆಗೆ ಹೊಸ ಕಳೆಬಂದಿದೆ. +ಲೇಖಕರು ಅಲ್ಲಲ್ಲಿ ಈ ದೇಶದ ಬಡ ಕಾರ್ಮಿಕರ, ದಲಿತರ ಅಂಗಳದ ಸಮಸ್ಯೆಗಳನ್ನು ತೆಗೆದುಕೊಂಡು ಭಾಷಾ ಶೈಲಿಯಿಂದ ಕಥೆಗಳಿಗೆ ಜೀವ ತುಂಬಿದ್ದಾರೆ. +ಮಲೆನಾಡಿನ ಪ್ರದೇಶದೊಂದಿಗೆ ಜೀತ ಕತೆಯಲ್ಲಿ "ಸೇರೆಗಾರರ ಉಪ್ಪು ತಿಂದಿದ್ದಲ್ಲ. +ಈಗ ಹಾಂಗೆ ಮೋಸ ಮಾಡುಕಾತ್ತು? +ಯಾರು ಏನೇ ಹೇಳಿನಿ, ನಾನಂತು ಅವರಲ್ಲೇ ದುಡಿಯುವ. +ಸಂಬಳ ಎಷ್ಟಾದರೂ ಆಯಿಲಿ. +ಮತ್ತು ಅದು ಹ್ಯಾಂಗೆ ಅತ್‌, ಹಿಂಗೆ ಅಂತ ನಿಗದಿ ಮಾಡೀರಲ್ಲೆ. +ಹ್ಯಾಂಗೆ ಕೊಡದಿದ್ದರ ಶೆಟ್ಟರ ಬುಡಕ್ಕೆ ಬತ್ತತ್‌, ಕೊಟ್ಟರೆ ಕೊಡುಕ್‌, ನಾವು ಒಟ್ಟು ನಿಂತರೆ ಏನಾಪುದಿಲೆ" ಎಂದು ವಿಶಿಷ್ಟವಾದ ಶೈಲಿಯಲ್ಲಿ ಗ್ರಾಮೀಣ ಭಾಷೆಯನ್ನು ಬಳಸಿದ್ದಾರೆ. +ಲಕ್ಷ್ಮಣ ಕೊಡಸೆಯವರ ಕತೆಯ ತಂತ್ರಗಾರಿಕೆ ತುಂಬ ವಿಶಿಷ್ಟವಾಗಿದೆ. +ಏಕೆಂದರೆ ಬಹಳಷ್ಟು ಜನ ಕಥೆಯನ್ನು ನೇರವಾಗಿಯೇ ಹೇಳಿಬಿಡುತ್ತಾರೆ. +ತಾವೇ ನಿರೂಪಕನಾಗಿ ಕಥೆಯನ್ನು ರಚಿಸುವವರು ಬಹಳ ಜನ. +ಆದರೆ ಪಾತ್ರಗಳ ಮುಖಾಂತರ ನೇರವಾಗಿ ಏಕಾಂತ ಭಾಷಣ ಪಾತ್ರಗಳನ್ನು ಮಾತನಾಡಿಸುವುದು ಇವರ ತಂತ್ರಶೈಲಿಯಾಗಿದೆ. +"ಅವರೇ ಕಣೆ, ಗೊತ್ತಿಲ್ವ? +ಒಳ್ಳೆ ಹುಡುಗಿ ಕಣೆ ನೀನು, ಕತೆ ಕಾದಂಬರಿ ಓದಿದ್ದಕ್ಕೂ ಸಾರ್ಥಕ. +ಪ್ರಕಾಶ ಅನ್ನೋ ಹೆಸರು ಹೇಳೋಕೆ ನಾಚಿ ಲೈಟು ತೋರಿಸ್ತೀಯಲ್ಲ" ಎಂದು ಸ್ನೇಹಳಂತಹ ಪರಸ್ಪರ ಪಾತ್ರಗಳು ನೇರವಾಗಿಯೇ ಮಾತನಾಡುತ್ತವೆ . +ಲಕ್ಷ್ಮಣ ಕೊಡಸೆಯವರು ಕಥಾ ಸಾಹಿತ್ಯದಂತೆ ಕಾದಂಬರಿ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ. +ಇವರ ಕಾದಂಬರಿಗಳಲ್ಲಿ ಕುವೆಂಪು, ತೇಜಸ್ವಿಯವರಂತೆ ಮಲೆನಾಡಿನ ಸೊಗಡನ್ನು ಕಾಣಬಹುದು. +ಪ್ರತಿಯೊಂದು ಕಾದಂಬರಿಗಳಲ್ಲಿ ಮಲೆನಾಡಿನ ನೈಸರ್ಗಿಕ ಸೌಂದರ್ಯ ಓದುಗರಿಗೆ ರಸದೌತಣ ನೀಡುತ್ತ ಮನಸ್ಸಿಗೆ ತಂಪನ್ನು ತರುತ್ತವೆ. +ಇವರ 'ಪಯಣ' ಕಾದಂಬರಿ ಇದು ಅಪ್ಪಟ ಮಲೆನಾಡಿನ ಪ್ರಾದೇಶಿಕ ಕಾದಂಬರಿಯಾಗಿದ್ದು, ಬರಿ ಗ್ರಾಮೀಣ ಚಿತ್ರವಲ್ಲ. +ಯಾವುದೊಂದು ಸಮಸ್ಯೆಯಾಗಲೀ ಪ್ರೇಮ ಕತೆಯಾಗಲಿ ಮುಖ್ಯವಲ್ಲ. +ಇಡೀ ಪರಿಸರದ ಸ್ಪಷ್ಟ ಕಲ್ಪನೆ ಬರುವಂತೆ ಅದರ ಹರಹು ಇದೆ. +ಮರಳಿ ಮಣ್ಣಿಗೆ ಓದಿದಾಗ ಆಗುವ ನಿಸರ್ಗದ ಅನುಭವ ಈ ಕಾದಂಬರಿಯಲ್ಲಿ ಆಗುತ್ತದೆ. +ಈ ಕಾದಂಬರಿಯ ಶೈಲಿ, ತಂತ್ರ, ಪ್ರಾಯಶಃ ಕನ್ನಡಕ್ಕೆ ಹೊಸ ಬಗೆಯದು. +ಜೀವನ ಎನ್ನುವುದು ನಿರಂತರ ಪಯಣವೇ. +ಕಾದಂಬರಿಯು ಕರೇನಾಯ್ಕರ ಜೀವನದ ಪಯಣದ ಜೊತೆಗೆ ಇಡೀ ಮಲೆನಾಡು ಬದಲಾಗುತ್ತಾ ಹೋಗುವುದು. +ಅಂದರೆ ಅಲ್ಲಿನ ಜನ ಜೀವನವೂ ಬದಲಾಗುವುದು ಒಂದು ಪಯಣವೇ ಎಂಬುದನ್ನು ಸಾಂಕೇತಿಕವಾಗಿ ಧ್ವನಿಸಿದೆ. +ಕರೇನಾಯ್ಕರ ಪಯಣ ಎಷ್ಟು ಸಹಜವಾಗಿ ಚಿತ್ರಿತವಾಗಿದೆ ಎಂದರೆ,ಲೇಖಕರು ನೋಡಿದ ಹಿರಿಯರೊಬ್ಬರನ್ನು ಕಂಡರಿಸಿ ಇಲ್ಲಿ ತಂದಿಟ್ಟಿದ್ದಾರೆ ಎನ್ನುವಷ್ಟು! +ಇಷ್ಟಕ್ಕೂ ಈ ಒಂದು ಪುಟ್ಟ ಕಾದಂಬರಿ ಬಹು ವಿಸ್ತಾರವಾದ ಮಲೆನಾಡಿನ ಚಿತ್ರಣವನ್ನು ಸ್ಲೈಡಿನಲ್ಲಿ ಸೆರೆಹಿಡಿದ ಹಾಗೆ ಚಿತ್ರಿಸಿದೆ. +ಕೊಡಸೆಯವರು ಕಾದಂಬರಿಯ ತಂತ್ರಗಾರಿಕೆಯಿಂದ ಪ್ರತಿಪಾತ್ರಗಳಿಗೂ ಜೀವ ತುಂಬಿದ್ದಾರೆ. +ಇಲ್ಲಿಯ ಪಾತ್ರಗಳ ಪರಸ್ಪರ ಸಂಭಾಷಣೆ ಮಾಡುವುದನ್ನು ಲೇಖಕರು ತುಂಬ ಸೊಗಸಾಗಿ ಸರಳ ಭಾಷೆಯ ಶೈಲಿಯಲ್ಲಿ ನಿರೂಪಿಸಿರುವುದನ್ನು ಗಮನಿಸಬಹುದು. +"ನಮಗೇನೂ ಮಾಡಬೇಡ್ರಿ, ನಾವು ಏನೂ ಮಾಡಿಲ್ಲ. +ದೊಡ್ಡ ಗೌಡ್ರೇ ಈ ಬ್ಯಾಟರಿ, ಬಂದೂಕ ಕೊಟ್ಟು ಕಳಿಸಿದ್ರು. +ಇಲ್ಲಿ ಕೆರೆಯಲ್ಲಿ ಹೆಣ ಮೇಲೆ ಬಂದ್ರೆ ಒಂದು ಗುಂಡು ಹೊಡೆದು ಬರ್ರಿ ಅಂತ ಕಳಿಸಿದ್ರಿ. +ಅದಕ್ಕೆ ಇಲ್ಲಿ ಕಾಯ್ದಿದ್ದಿರಿ" ಎಂಬಲ್ಲಿ ಗ್ರಾಮೀಣ ಭಾಷೆಯ ಶೈಲಿಯನ್ನು ಗಮನಿಸಬಹುದು. +ಮುಂಜಾವಿನ ಸರಳ ವಿವರಣೆಯೊಂದಿಗೆ ಆರಂಭವಾಗುವ ಕಥೆ ಬೆಳೆಯುತ್ತ ಸುರುಳಿಯಂತೆಸುತ್ತಿ ಸುತ್ತಿ ಅತ್ಯಂತ ಸಂಕೀರ್ಣ ಪದರುಗಳನ್ನು ಬಿಡಿಸುತ್ತ ಹೋಗುವ ಪರಿ ಮನೋಜ್ಞವಾಗಿದೆ. +ಮಲೆನಾಡಿನ ಸಾಂಸ್ಕೃತಿಕ ವಿವರಗಳು ಸೊಗಸಾಗಿ ದಾಖಲಾಗಿವೆ. +ಜತೆ ಅಲ್ಲಿನ ಒಟ್ಟಾರೆ ಬದುಕು ರೂಪಾಂತರ ಪಕ್ರಿಯೆಗೆ ಒಳಗಾಗುತ್ತಿರುವುದನ್ನು ಸಮರ್ಥವಾಗಿ ದಾಖಲಿಸುತ್ತವೆ. +ಪ್ರತಿ ಪಾತ್ರವೂ ಪರಿಚಯವಾಗುವುದರೊಂದಿಗೆ ಸಹಜವಾಗಿ ಹುಟ್ಟಿಕೊಳ್ಳುವ ಬದುಕಿನ ವಿಷಾದ, ನೋವು ಖುಷಿಗಳನ್ನು ಒಳಗೊಂಡ ಸಂಗತಿಗಳನ್ನು ಕಟ್ಟಿರುವ ಶೈಲಿ ಸಹಜ ಮತ್ತು ಸುಂದರವಾಗಿವೆ. +ಈ ಎರಡು ಗುಣಗಳೇ ಕಾದಂಬರಿಯ ಅರ್ಥವನ್ನು ಹಿಗ್ಗಿಸಲು ಸಹಕಾರಿಯಾಗಿವೆ. +ರತ್ನ್ನ ಮತ್ತು ಶಿವಮೂರ್ತಿಗಳ ಮುಗ್ಧತೆ, ನೇರ ಸ್ವಭಾವ ಮನಮುಟ್ಟುವಂತಿದೆ. +ಜಯಪ್ಪ-ಚಂದ್ರಮ ಶಂಕರ-ಹೊನ್ನಮ್ಮರ ಪಾತ್ರಗಳು ಅಷ್ಟೆಪರಿಣಾಮಕಾರಿಯಾಗಿ ಮೂಡಿಬಂದಿವೆ. +ಒಂದು ಜೋಡಿ ಮನುಷ್ಯ ಸಹಜತೆಯನ್ನು, ಬದುಕಿನ ಮೌಲ್ಯಗಳನ್ನು ಎಚ್ಚರದಿಂದ ಕಾಪಾಡಿಕೊಂಡು ಬಂದು ಸಾರ್ಥಕತೆ ಕಂಡುಕೊಂಡರೆ ಇನ್ನೊಂದು ಜೋಡಿ ತಮಗರಿವಿಲ್ಲದೆ ನಗರವಾಸದ ಕೃತಕತೆಯನ್ನೇ ಜೀವನ ಶೈಲಿಯಾಗಿಸಿಕೊಂಡು ಮುಗ್ಧತೆ ಕಳೆದುಕೊಂಡು ರಾಕ್ಷಸರಾಗುವ ಬಗೆ ಬಹಳ ಕಾಲ ಕಾಡುತ್ತದೆ. +ಹಾಗೆಂದು ನಿರೂಪಕ ಎಲ್ಲಿಯೂ ಈ ಜೋಡಿಯನ್ನು ಏಕಪಕ್ಷೀಯವಾಗಿ ದೂರವಂತಹ ಶೈಲಿಯನ್ನು ಬಳಸದಿರುವುದು. +ಅತ್ಯಂತ ಮುಕ್ತನಾಗಿರುವುದು ಇಲ್ಲಿನ ವಿಶೇಷವಾಗಿದೆ. +ಶಂಕರನ ಬದುಕಿನ ವಿವರಗಳು ಬಂದಲ್ಲಿ ಆತ ಹಳೆಯ ಬದುಕಿನ ನೆನಪುಗಳ ಲಹರಿಯಲ್ಲಿ ಮುಳುಗಿದಾಗ ಕಾದಂಬರಿ ಭಾವಗೀತಾತ್ಮಕವಾಗುತ್ತದೆ. +ಈ ಭಾಗಗಳು ಚೆಲುವಾಗಿವೆ. +ಆತ ನೆನಸಿಕೊಳ್ಳುವ ಭೂಮಿ ಹುಣ್ಣಿಮೆ, ದೀಪಾವಳಿಯ ನೆನಪುಗಳಂತೂ ಬಹಳ ಸುಂದರವಾಗಿ ಮೂಡಿಬಂದಿವೆ. +ಭಾಷೆ, ಶೈಲಿ,ತಂತ್ರದ ದೃಷ್ಟಿಯಿಂದ ಈ ಕಾದಂಬರಿ ವಿಶಿಷ್ಟವಾಗಿದೆ. +ಕುಟುಂಬಗಳ ವಿಘಟನೆಗೆ ಹಾಗೂ ಮನುಷ್ಯನ ಸಂಬಂಧಗಳಲ್ಲಿನ ಬಿರುಕಗಳಿಗೆ ಜಾಗತೀಕರಣ,ಆಧುನಿಕತೆಯು ಕಾರಣಗಳನ್ನು ನೀಡಿ ಸಮಸ್ಯೆಯನ್ನು ತೀರ ಸರಳವಾಗಿ ನೋಡುವ ದೃಷ್ಟಿಕೋನ ಅನೇಕ ಲೇಖಕರಲ್ಲಿ ಸಾಮಾನ್ಯವಾಗಿದೆ. +ಆದರೆ ಇಂತಹ ವಿಘಟನೆ ಹಾಗೂ ಬಿರುಕುಗಳಿಗೆ ಮನುಷ್ಯರಲ್ಲಿಯೇ ಇರುವ ಸಣ್ಣತನ, ಅಹಂಕಾರ ಅಧಿಕಾರದಾಹ ಹಾಗೂ ಸ್ವಾರ್ಥಗಳ ಹಿನ್ನೆಲೆಗೆ ಸರಿಯುತ್ತವೆ. +ಈ ಹಿನ್ನೆಲೆಯಲ್ಲಿ ನೆರಳು ವಿಶೇಷ ಗಮನ ಸೆಳೆಯುತ್ತದೆ. +ಈ ಕಾದಂಬರಿಯ ಎಲ್ಲ ಪಾತ್ರಗಳೂ ಜೀವಂತವಾಗಿ ಮೂಡಿಬಂದಿವೆ. +ಇಲ್ಲಿಯ ಪಾತ್ರಗಳಸಂಭಾಷಣೆಯನ್ನು ಮಲೆನಾಡಿನ ಪ್ರಾದೇಶಿಕ ಶೈಲಿಯಲ್ಲಿ, ಸುಂದರವಾಗಿ ನಿರೂಪಿಸಿದ್ದಾರೆ. +ಇಲ್ಲಿಯ ತಂತ್ರ,ಶೈಲಿ, ತುಂಬ ನಾಜೂಕಾಗಿದೆ. +ಅಲ್ಲಲ್ಲಿ ಗಾದೆ ಮಾತುಗಳನ್ನು ಬಳಸಿದ್ದಾರೆ. +ಪಾತ್ರಗಳ ಭಾವವೇಶವನ್ನು ಮೂಡಿಸುವ ವಿಪುಲ ಸನ್ನಿವೇಶಗಳಿದ್ದರೂ ಅವುಗಳನ್ನೆಲ್ಲ ತಣ್ಣಗೆ ನಿರೂಪಿಸುವ ಲೇಖಕ ಓದುಗನನ್ನು ವಶೀಕರಿಸಿಕೊಳ್ಳಲು ಅದನ್ನು ದುರ್ಬಳಕೆ ಮಾಡಿಕೊಂಡಿಲ್ಲ. +ಕಾದಂಬರಿಯ ಅಂತ್ಯ ಓದುಗನಿಗೆ ನಿರೀಕ್ಷಿತವೆನಿಸಿದರೆ ಅಚ್ಚರಿಯಿಲ್ಲ. +ಅಲ್ಲಲ್ಲಿ ಪ್ರಾದೇಶಿಕ ಬೈಗುಳ, ಆಂಗ್ಲ ಭಾಷೆಯ ಬಳಕೆ ಗಮನ ಸೆಳೆಯುತ್ತವೆ. +ಕೊಡಸೆಯವರು 'ಪಾಡು' ಕಾದಂಬರಿಯಲ್ಲಿ ಅಂತರ್‌ಜಾತಿ ವಿವಾಹವಾಗಿ ಸುಮಾರು ಮೂವತ್ತು ವರ್ಷಗಳಷ್ಟು ದೀರ್ಫಕಾಲ ಬದುಕಿರುವ ಹಾಲಪ್ಪ ಮತ್ತು ಪ್ರಮೀಳಾರ ಜೋಡಿ ಜೀವನವನ್ನು ಕೊಟ್ಟಿದ್ದಾರೆ. +ಇವರ ದಾಂಪತ್ಯದಲ್ಲಿ ಸಣ್ಣ ಪುಟ್ಟ ಮಾತುಕತೆಗಳು ಮತ್ತು ತಿಕ್ಕಾಟಗಳು ಆಗುತ್ತವೆ. +ಅದನ್ನೆ ದೊಡ್ಡದು ಮಾಡಿ ಜೀವನವನ್ನು ರಂಪಾಟವಾಗಿಸುವ ಸ್ವಭಾವ ಇಬ್ಬರಲ್ಲೂ ಗೋಚರಿಸುವುದಿಲ್ಲ. +ಆದರೂ ಪ್ರಮೇಳೆಯದು ಜೋರುಬಾಯಿ. +ಇದನ್ನು ಲೇಖಕರು ಗ್ರಾಂಥಿಕ ಭಾಷೆ ಶೈಲಿಯಲ್ಲಿ ಸುಂದರವಾಗಿ ನಿರೂಪಿಸಿದ್ದಾರೆ. +ಏನಯ್ಯ ಮಾಡ್ತೀಯ ನೀನು? +ಈಗ ಯಾರನ್ನು ಕಟ್ಟಿಕೊಂಡು ಹೋದರೂ ನನಗೆ ಬೇಜಾರಿಲ್ಲ. +ಮಹಾರಾಜನ ಹಾಗೆ ಹೋಗು, ಯಾವನು ಇಂಥ ವ್ಯವಸ್ಥೆಯನ್ನು ಮಾಡಿದ್ದಾನೋ, ಮನೆ ಕೆಲಸವನ್ನೆಲ್ಲ ಹೆಂಗಸರೇ ಮಾಡಬೇಕು,ಗಂಡಸು ಮಾತ್ರ ದರ್ಬಾರು ಮಾಡಬೇಕು ಅಂತ ಹೇಳಿದೋನು ಸಿಕ್ಕಿದರೆ ಕೊಚ್ಚಿ ಹಾಕಬೇಕು. +ನಾವು ಇಲ್ಲಿ ಮನೆಯೊಳಗೆ ಪ್ರತಿಯೊಂದಕ್ಕೂ ಸಾಯಬೇಕು, ಹೊರಗಡೆಯೂ ದುಡಿಯಬೇಕು. +ಪಾತ್ರಗಳಾಡುವ ಮಾತುಕತೆ ದಿನನಿತ್ಯದ ಕನ್ನಡ ನುಡಿಯಾಗಿದೆ ಎಂದು ಮೇಲೆ ಅಲ್ಲಲ್ಲೇ ಉಲ್ಲೇಖಿಸಿರುವ ಸಂಭಾಷಣೆಯಿಂದ ತಿಳಿಯುತ್ತದೆ. +ಸಂವಾದದ ಭಾಷೆ ಆಯಾ ಪಾತ್ರದ ಸ್ವಭಾವವನ್ನು ಪ್ರಕಟಿಸುವ ಪರಿಯಲ್ಲಿ ಪ್ರಯೋಗವಾಗಿದೆ. +ಕಾದಂಬರಿಯ ಶೈಲಿ ಸ್ವಾರಸ್ಯಕರವಾಗಿ ಓದಿಸಿಕೊಳ್ಳುತ್ತದೆ. +'ಈಳಿಗೆ ಮಣೆಯಿಂದ ಕೊಯ್ಯುವಂತೆ ಹೇಳಿ', 'ನಾಯಿ ಬಾಯಿಗೆ ಕೋಲು ಹೆಟ್ಟುವ ಹಾಗೆ ಹಾರನ್ನು ಬಾರಿಸುತ್ತಾನೆ.'ಇಂತಹ ಹೊಸ ಹೋಲಿಕೆಗಳಿವೆ. +ಛತ್ರಿಯನ್ನು ಬಿಚ್ಚಿದರೆ ಹರಡಿಕೊಳ್ಳುತ್ತದೆ. +ಆದರೆ ಅದರ ಎಲ್ಲ ತಂತಿಗಳೂ ಅವುಗಳ ಮೇಲಿನ ಮುಚ್ಚು ಬಟ್ಟೆಯೂ ಕೇಂದಕ್ಕೆ ಕಟ್ಟಿಕೊಂಡಿರುತ್ತವೆ. +ಮುಚ್ಚಿದಾಗ ಕೊಡೆಯ ಠಡ್ಡಿಗಳೆಲ್ಲ ಮುಚ್ಚು ಬಟ್ಟೆ ಸಮೇತ ಒಂದೆಡೆ ಬಂದು ಸೇರುತ್ತವೆ. +ಈ ರೀತಿ ಇದೆ ಈ ಕಾದಂಬರಿಯ ಕಥಾಬಂದ, ಕೃತಿಯ ಘಟನೆಗಳು ಸ್ವತಂತ್ರವಾಗಿ ನಡೆಯುವಂತೆ ಕಂಡರೂ ಒಂದು ಅಥವಾ ಸಮಗ್ರ ದೃಷ್ಟಿಗೆ ಒಳಪಟ್ಟಿವೆ. +'ಪಾಡು' ಒಂದು ಅಪರೂಪದ ಕಾದಂಬರಿಯಾಗಿದೆ. +ಒಟ್ಟಿನಲ್ಲಿ ಲಕ್ಷ್ಮಣ ಕೊಡಸೆಯವರು ಗ್ರಾಮೀಣ ಮತ್ತು ನಗರ ಬದುಕನ್ನು ಅನುಭವಿಸಿದವರು ಮತ್ತು ಗಮನಿಸಿದವರು. +ಹಾಗಾಗಿ ಅವರ ಕತೆ ಮತ್ತು ಕಾದಂಬರಿಗಳಲ್ಲಿ ಸರಳವಾದ ಮಲೆನಾಡಿನ ಪ್ರಾದೇಶಿಕ ಭಾಷೆ,ಶೈಲಿ ತುಂಬಿಕೊಂಡಿದೆ. +ಅಲ್ಲಲ್ಲಿ ಆಂಗ್ಲ ಭಾಷೆಯ ಬಳಕೆ ಕಂಡುಬರುತ್ತದೆ. +ಕತೆಗಳನ್ನು ನೇರವಾಗಿ,ನಾಟಕೀಯವಾಗಿ, ಗದ್ಯಾತ್ಮಕವಾಗಿ, ಹೇಳಿದ್ದಾರೆ. +ಕೆಲವೊಂದು ಕತೆಗಳನ್ನು ಪಾತ್ರಗಳ ಮುಖಾಂತರ ನೇರವಾಗಿ ಕಥೆ ಹೇಳುವ ತಂತ್ರವನ್ನು ಅನುಸರಿಸಿದ್ದಾರೆ. +ಲಕ್ಷ್ಮಣ ಕೊಡಸೆಯವರು ಕಥೆ ಮತ್ತು ಕಾದಂಬರಿ ಭಾಷೆ, ಶೈಲಿ ಹಾಗೂ ತಂತ್ರ ದೃಷ್ಟಿಯಿಂದ ಶ್ರೇಷ್ಠವಾದ ಕಥೆಗಳನ್ನು, ಕಾದಂಬರಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. +ಸಹಾಯಕ ಸಂಪಾದಕ ಹುದ್ದೆಯಲ್ಲಿ ಪ್ರಜಾವಾಣಿಯ ಕೇಂದ್ರ ಕಚೇರಿಯಲ್ಲಿ 8 ವರ್ಷಗಳ ಸೇವೆ. +ಸಂಪಾದಕೀಯ ಬರಹ, ಅಂಕಣ ಬರಹ, ಲೇಖನಗಳ ಆಯ್ಕೆ,ದೀಪಾವಳಿ ಸಂಚಿಕೆಗಳ ನಿರ್ವಹಣೆ.ವಾರ್ಷಿಕ ಕಥಾಸ್ಪರ್ಧೆ, ಪ್ರಬಂಧ ಸ್ಪರ್ಧೆಗಳ ನಿರ್ವಹಣೆ. +ವೃತ್ತಿಯನ್ನು 1975ರಲ್ಲಿ ಪ್ರವೇಶಿಸಿ, 1978 ರಿಂದ 2012ರ ವರೆಗೆ 34 ವರ್ಷ ಪ್ರಜಾವಾಣಿಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ. +2012ರಲ್ಲಿ ನಿವೃತ್ತನಾದ ಮೇಲೆ ವಿವಿಧ ಮಾಸ ಪತ್ರಿಕೆಗಳಿಗೆ ರಾಜಕೀಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಕುರಿತ ಅಂಕಣಗಳನ್ನು ಈಗಲೂ ಬರೆಯುತ್ತಾ ವೃತ್ತಿಯಲ್ಲಿ ಸಕ್ರಿಯ. +ಸಂಘಟನೆ: ಕರ್ನಾಟಕ ಪತ್ರಕರ್ತರ ಸಹಕಾರ ಸಂಘಕ್ಕೆ ನಿರ್ದೇಶಕ, ಗೌರವ ಕಾರ್ಯದರ್ಶಿ ಮತ್ತು ಮೂರುವರ್ಷ ಅಧ್ಯಕ್ಷನಾಗಿ ಸೇವೆ(1980-83). +ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಸಂಘದ ಬೆಳ್ಳಿ ಹಬ್ಬ ಆಚರಣೆ. +ಬೆಂಗಳೂರು ಪ್ರೆಸ್‌ ಕ್ಷಬ್‌ ಆಡಳಿತ ಮಂಡಲಿ ಸದಸ್ಯ (1988), ಭಾರತೀಯ ಕಾರ್ಯನಿರತ ಪತ್ರಕರ್ತರ ರಾಷ್ಟ್ರೀಯ ಮಂಡಲಿಗೆ (ಐಎಫ್‌ಡಬ್ಬುಜೆ) ಸದಸ್ಯನಾಗಿ ಒಂದು ಅವಧಿಗೆ ರಾಜ್ಯದ ಪ್ರತಿನಿಧಿ(1994). +ಕನ್ನಡ ಸಂಘರ್ಷ ಸಮಿತಿ ಸಂಸ್ಥಾಪಕ ಖಜಾಂಜಿ. +ಮೈಸೂರು ವರದಿಗಾರರ ಕೂಟದ ಸಂಸ್ಥಾಪಕ ಅಧ್ಯಕ್ಷ (1993). +ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಪರಿಷತ್ಪತ್ರಿಕೆಯ ಗೌರವ ಸಂಪಾದಕನಾಗಿ (1979-80) ಕೆಲಸನಿರ್ವಹಣೆ; +ಕರ್ನಾಟಕ ಜಾನಪದ ಅಕಾಡೆಮಿಯ ಪ್ರಕಟಣೆ ಜಾನಪದ ಗಂಗೋತ್ರಿಯ ಸಂಪಾದಕನಾಗಿ(2012) ಕಾರ್ಯನಿರ್ವಹಣೆ. +ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪತ್ರಿಕೆ 'ಕನ್ನಡ ಜಾಗೃತಿ'ಯ ಸಂಪಾದಕನಾಗಿ ಕಾರ್ಯನಿರ್ವಹಣೆ(2016-2019). +ಜಾಲಪ್ಪ ಅಕಾಡೆಮಿಯಲ್ಲಿ ಟ್ರಸ್ಟಿ (20), ಕಾರ್ಯದರ್ಶಿಯಾಗಿಕಾರ್ಯನಿರ್ವಹಣೆ (2016ರಿಂದ) +ಪ್ರಶಸ್ತಿಗಳು: 1.ಮಂಗಳೂರಿನ ಸಂದೇಶ ಪ್ರತಿಷ್ಠಾನದಿಂದ ಸಂದೇಶ ಮಾಧ್ಯಮ ಪ್ರಶಸ್ತಿ- (2006). +2.ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಮಾಧ್ಯಮ ಪ್ರಶಸ್ತಿ- (2011). +3.ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ -(2014)4, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಕಿಟ್ಟಪ್ಪಗೌಡ ದತ್ತಿ ಪ್ರಶಸ್ತಿ(2015). +4.ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (ಹೊಸನಗರ ತಾಲ್ಲೂಕು 4ನೇ ಸಾಹಿತ್ಯ ಸಮ್ಮೇಳನ,ರಿಪ್ಪನ್‌ಪೇಟೆ- 2015). -- GitLab