diff --git "a/Data Collected/Kannada/MIT Manipal/Kannada-Scrapped-dta/Book7-\340\262\206\340\262\257\340\263\215\340\262\246_\340\262\250\340\262\276\340\262\256\340\262\276\340\262\247\340\262\276\340\262\260\340\262\277_\340\262\225\340\262\245\340\262\250\340\262\227\340\263\200\340\262\244\340\263\206\340\262\227\340\262\263\340\263\201.txt" "b/Data Collected/Kannada/MIT Manipal/Kannada-Scrapped-dta/Book7-\340\262\206\340\262\257\340\263\215\340\262\246_\340\262\250\340\262\276\340\262\256\340\262\276\340\262\247\340\262\276\340\262\260\340\262\277_\340\262\225\340\262\245\340\262\250\340\262\227\340\263\200\340\262\244\340\263\206\340\262\227\340\262\263\340\263\201.txt" new file mode 100644 index 0000000000000000000000000000000000000000..8db2c2724d9cc8a5d21a015cec51b1c9c3338a6b --- /dev/null +++ "b/Data Collected/Kannada/MIT Manipal/Kannada-Scrapped-dta/Book7-\340\262\206\340\262\257\340\263\215\340\262\246_\340\262\250\340\262\276\340\262\256\340\262\276\340\262\247\340\262\276\340\262\260\340\262\277_\340\262\225\340\262\245\340\262\250\340\262\227\340\263\200\340\262\244\340\263\206\340\262\227\340\262\263\340\263\201.txt" @@ -0,0 +1,227 @@ +“ಅರ್ಜುನ ಜೋಗಿ” ಎಂದು ಹೆಸರಿಸಿದ ಕಥನ ಗೀತದಲ್ಲಿ ಅರ್ಜುನ ಮತ್ತು ಆತ ಜಾಲಗುನ್ನಿಯನ್ನು ಮಾಡಿ ಕದ್ದುಕೊಂಡು ಹೋದ ಹೆಂಗಸು ಸುಭದ್ರೆ ಎಂದು ತಿಳಿಸಿದ್ದರು. +ಇವರು ಮಹಾಭಾರತದ ಅರ್ಜುನ ಸುಭದ್ರೆ ಅಲ್ಲ. +ಮಹಾಭಾರತದ ಕಥೆಯ ಪಾಠಗಳಲ್ಲಿ ಅರ್ಜುನನು ಜೋಗಿ ವೇಷ ತೊಟ್ಟು ಕಳಿಸಿದ ಹಲವು ಗೀತ ಪಾಠಗಳಿವೆಯಾದರೂ ಇಲ್ಲಿ ಹೆಸರುಗಳನ್ನು ಬಿಟ್ಟರೆ ಇದೊಂದು ಬಹಳ ಜನಪ್ರಿಯವಾದ ಜನಪದ ಕಥೆಯ ಪಾಠ. +ಇಲ್ಲಿ ಏಳು ಮಂದಿ ಮಕ್ಕಳು ಒಬ್ಬ ತಾಯಿಗೆ ಮತ್ತು ಅವರಿಗೂ, ಮಹಾಭಾರತ ಕಥೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವೇ ಇದೆ. +ಹಿಂದಿನ ಕಾಲದ ಹಲವು ಗೀತಗಳಲ್ಲಿಯಂತೆ ಯುದ್ಧಕ್ಕೆ ಹೋಗಲು ದಂಡಿನ ಕರೆಯೋಲೆ ಬರುವದು ಇಲ್ಲೂ ಇದೆ. +ಸಶಕ್ತ ಗಂಡು ಹುಡುಗರು ಪ್ರಾಯ ಬರುವಾಗ ಆ ಕಾಲದ ಯುದ್ಧದಲ್ಲಿ ಬಳಸುವ ಆಯುಧಗಳನ್ನು ಉಪಯೋಗಿಸುವುದನ್ನು ಕಲಿತಿರುತ್ತಿದ್ದರು. +ದಂಡಾಡಲು ಹಿರಿಯನು ಹೊರಡುವ ಮೊದಲು-- ತಾಯಿ ಅಡಿಗೆ ಮಾಡುವ, ಬಚ್ಚಲ ನೀರು ಕಾಯಿಸುವ ಸಂಕ್ಷಿಪ್ತ ಬಣ್ಣನೆ, ಬೇಕಾದ ವಿವರಗಳು ಇಲ್ಲಿವೆ. +ಇಲ್ಲಿ ದೇವರ ಪೂಜೆ ಮಾಡಿ, ಉಂಡು, ಕುದುರೆ ಹತ್ತಿದ ಏಳು ಜನರಿಗೆ ಹೆಂಡಿರು ಚಿನ್ನದ ಆರತಿಯನ್ನು ಬೆಳಗಿ ಕಳಿಸುವ ಸುಂದರ ಚಿತ್ರಣವೂ ಇದೆ. +ಅವರು ಹೋದ ಮೇಲೆ ಬಂದ ಅರ್ಜುನ ಜೋಗಿಯು ತಾಳ ಹೊಡೆದು ಬಂದು ಕೂತನು. +ಇವನು ಮಾಂತ್ರಿಕ ಶಕ್ತಿಯುಳ್ಳ ದುಷ್ಟ. +ಆರು ಜನರು ಮಡದಿಯರು ‘ಪಡಿಧಾನ್ಯ ಕೊಡುವೆ’ ಅಂದರೆ, ‘ಕಿರಿಯ ಸುಭದ್ರೆಯೇ ಪಡಿ ಕೊಡಬೇಕು’ ಎಂದು ಹೇಳುವನು. +ಹೆಂಗಳೆಯರು ಕೈಕೈ ಹಿಡಿದು ನಿಂತಾಗವನು ಮಂಡಲ ಬರೆದು- ‘ಅದರಲ್ಲಿ ಕೊಡಬೇಕು’ ಎಂದನು. +ಕಿರಿಯ ಸುಭದ್ರೆಯ ಅಂದ-ಚೆಂದ ಅಸಾಧಾರಣ. +ಆರು ಅಕ್ಕಂದಿರು ತಂಗಿಯನ್ನು ಹಿಡಿದವರು ಅವನು ಎಲ್ಲರೂ ಬಿಡಿರೆಂದು ಹೇಳಲು ಬಿಟ್ಟರು. +ಮಾಂತ್ರಿಕ ಹರಳನ್ನು ಒಗೆದು ಅವಳನ್ನು ಜಾಲಗುನ್ನಿ ರೂಪಕ್ಕೆ ಪರಿವರ್ತಿಸಿದನು. +ಈ ಮಾಂತ್ರಿಕ ನಾಯಿಯೊಡನೆ ನಡೆದನು. +ಹಿರಿಯನಿಗೆ ಈ ಘಟನೆಯ ತಾರುಕ್ ಆಯಿತು, ಕಿರಿಯಳನ್ನು ಒಯ್ದದ್ದೇ ಅವರಿಗೆ ಸ್ಪಷ್ಟ ತಿಳಿಯದಿದ್ದರೂ ‘ಏನೋ ಅನಾಹುತವಾಯಿತೆಂ’ದು ಮರಳುವ ಎತ್ತುಗಡೆ ಮಾಡಿದರು. +ಹೆಜ್ಜೆ ಹೆಜ್ಜೆಗೂ ಕಥನ ಕಲೆಯ ಸ್ಪರ್ಶವಿರುವದು ಇಲ್ಲಿ ಕಾಣುತ್ತದೆ. +ನುಡಿತದಲ್ಲಿ ಸಿದ್ಧಶೈಲಿಯ ಸಾಲುಗಳು ಅಲ್ಲಲ್ಲಿ ಮಿನುಗುತ್ತವೆ. +ವಿಷಯ ತಿಳಿದ ‘ಏಳು ಮಂದಿ ಶೋಧನೆಗಾಗಿ ಹೊರಟರು.’ +ಅಪಹರಿಸಿದಾಗ ಮೂರು ತಿಂಗಳ ಗರ್ಭಿಣಿ ಹಿರಿಯನ ಹೆಂಡತಿ. +ಸುಭದ್ರೆ ಜೋಗಿಗೆ, ‘ತನ್ನವರು ಏಳು ಮಂದಿ ಬಂದರೆ ನಿನ್ನನ್ನು ಕೊಲ್ಲುವರೆಂ’ದು ಬೆದರಿಸುತ್ತಾಳೆ. +ಬಂದ ಅವರನ್ನು ಜೋಗಿ ಹರಳು ಹೊಡೆದು ಕಲ್ಲು ಮಾಡಿದ. +ಹಿರಿಯನ ಗರ್ಭಿಣಿ ಹೆಂಡತಿಗೆ ಮಗ ಹುಟ್ಟಿ ಬಾಲ್ಯದಲ್ಲಿ ‘ಸ್ಕೂಲಿಗೆ ಹೋಗುವೆ’ ಎಂದಿದ್ದು, ಶಾಲೆಯ ಹುಡಗರು ಚೆಂಡಿನ ಆಟವನ್ನು ಗೆದ್ದು ಹುಡುಗನಿಗೆ ‘ರಂಡೆಗೆ ಹುಟ್ಟಿದ ಪೋರ’ ಎಂದುದೂ, ಅಪ್ಪ ಇಲ್ಲದೆ ಹುಟ್ಟಿದವ ಎಂದುದೂ ಹಲವು ಕಥೆಗಳಲ್ಲಿ ಬರುವಂತಹದೇ. +ಒಂದು ನೆನುಪು ಆಗಲು ಚಂಡಿಕೆಗೆ ಗಂಟು ಹಾಕಿದುದು, ಸ್ನಾನ ಮಾಡಿಸುವಾಗ ತಾಯಿ ಕೇಳುವದು, ಹುಡುಗನ ತಂದೆ ಮತ್ತು ಅವನ ತಮ್ಮಂದಿರೂ, ಚಿಕ್ಕತಾಯಿಯ (ಜಾಲಗುನ್ನಿ ಆದದ್ದು) ಶೋಧಕ್ಕೆ ಹೋದುದನ್ನು ಹೇಳಿದ್ದು ಸಂಕ್ಷಿಪ್ತವಾಗಿ ಸರಿಯಾಗಿ ಬಣ್ಣತವಾಗಿದೆ. +ಮುಂದೆ ಶೋಧ ಪ್ರಯಾಣ ಮಾಡಿದ ಹುಡುಗ ಅಜ್ಜವ್ವಿಯ ಮನೆಗೆ ಹೋಗಿ ಉಳಿದು, ಮುಂದೆ ಅವ ದಂಡೆ ಕಟ್ಟಿ ಚಿಕ್ಕಿಗೆ ಚೀಟಿ ಬರೆದು ಕಳಿಸಿದ್ದು ಸಮರ್ಪಕವಾಗಿದೆ. +ಮುಂದೆ ಜೋಗಿಯ ಪ್ರಾಣ ಏಳು ಸಮುದ್ರದಾಚೆಯ ಪಂಜರದ ಗಿಳಿಯಲ್ಲಿರುವದನ್ನು ತಿಳಿದು ಚಿಕ್ಕತಾಯಿ ಹೇಳುವಳು. +ಹುಡುಗ ಹರಳಿನ ಸಹಾಯದಿಂದ ಸಮುದ್ರದಾಟಿ ಹೋಗಿ ನವಿಲನ್ನು ಮಂತ್ರಿಸಿದ ಹರಳು ಹೊಡೆದು ಮುದ್ದೆ ಮಾಡಿದ್ದು, ಕ್ರಮೇಣ ಕೈಕಾಲು ರುಂಡ ಮುರಿದು ಕೊಂದಾಗ ಜೋಗಿ ಸಾಯುವುದು. . . ಹಲವು ಕಥೆಗಳಲ್ಲಿ ಬರುವ ಆಶಯ ಭಾಗವಾಗಿರುತ್ತಿದ್ದು. +ವಿವರ ಹೆಚ್ಚು ಬೆಳೆಸದೆಯೇ ಕಥೆ ಮುಂದುವರಿಸಿರುವದು ಇಲ್ಲಿದೆ. +ಅಲ್ಲಲ್ಲಿ ನಿರೂಪಣೆಯ ಜಾಣ್ಮೆಕಾಣುತ್ತದೆ. +ಹುಡುಗನು ತನಗೆ ಆಶ್ರಯ ನೀಡಿದ್ದ ಅಜ್ಜಿಗೆ ಜೋಗಿಯ ಸಂಪತ್ತನ್ನು ಕೊಟ್ಟು, ಚಿಕ್ಕಿಯೊಡನೆ ಹೊರಟು ಮಂತ್ರಿಸಿದ ಹರಳಿನಿಂದ ಎಲ್ಲರನ್ನೂ ಮನುಷ್ಯರನ್ನಾಗಿ ಮಾಡಿ ಮರಳುವದು ಒಳ್ಳೇ ಕಥಾ ಸರಣಿಯಲ್ಲಿದೆ. +“ಮಗಳೂ ನಾನೇ ಮಗನೂ ನಾನೇ” ಕಥನ ಗೀತವು ಗ್ರೀಕ್ ರುದ್ರ ನಾಟಕಗಳ ವಸ್ತುವಿನ ನೆನಪು ಮಾಡುವ ದುಃಖಾಂತ ಗೀತಗಳಲ್ಲಿ ಒಂದಾಗಿದೆ. +ಈ ಗೀತದ ನಡೆಯಲ್ಲಿ ಸವೇಗವಾದ, ಹಿತಮಿತವಾದ ಕಥನವಿದೆ. +ಇಲ್ಲಿನ ತಂಗಿಯು-- ಅಣ್ಣನು ಧರಿಸಿದ್ದ ಆಭರಣಗಳನ್ನು ತನ್ನ ಗಂಡನು ಮೈಮೇಲೆ ಧರಿಸುವಂತೆ ಮಾಡಲು ಕರೆಯಲು ಬಂದ ಅಣ್ಣನನ್ನು ಕತ್ತಿಯಿಂದ ಕೊಲ್ಲುತ್ತಾಳೆ. +ಕೇವಲ ಎರಡು ಆಭರಣ. +ಉಂಗುರ ಮತ್ತು ಬೆಳ್ಳಿಯ ನೇವಳದ ಸಲುವಾಗಿ ಕೊಲೆಯನ್ನು ಮಾಡುವುದು ವಾಸ್ತವಿಕವಾದ ನೆಲೆಯಲ್ಲಿ ಸಾಧ್ಯವಿದೆ. +ಯುರಿಪಿಡೀಸನ ‘ಮೀಡಿಯಾ’ ರುದ್ರ ನಾಟಕದಲ್ಲಿ-- ಮೀಡಿಯಾಳಿಗೆ ತನ್ನ ಗಂಡ ಬೇರೆ ಹೆಂಗಸನ್ನು ಮದುವೆಯಾಗಲಿರುವನೆಂಬ ಕ್ರೋಧದಲ್ಲಿ ಭಯಂಕರವಾದ ರೀತಿಯಲ್ಲಿ ಅವಳನ್ನ, ತನಗೆ ಗಂಡನ ಮೇಲೆ ಮತ್ತೆ ಸೇಡುತೀರಿಸಿಕೊಳ್ಳಲು ಮಕ್ಕಳನ್ನೂ ವಧಿಸುವುದಕ್ಕೆ ಒಂದು ರೀತಿಯಿಂದ ಪ್ರಬಲವಾದ ಕಾರಣವಿರುವಂತೆ, ಇಲ್ಲಿನ ತಂಗಿ ಅಣ್ಣನ ಕೊಲೆ ಮಾಡಲು ಬಲವತ್ತರವಾದ ಕಾರಣವಿರುವುದಿಲ್ಲ. +‘ನನ್ನ ಗಂಡ ಬಡವ. +ನೀನು ಧರಿಸಿರುವ ಆಭರಣಗಳನ್ನು ಕೊಡು, ಅವನು ಧರಿಸುವದನ್ನು ನಾನು ನೋಡಬೇಕು’ ಎಂದ್ದಿದ್ದರೆ, ಅಣ್ಣನು ತಾನಾಗಿಯೇ ಅವನ್ನು ಕೊಡಬಹುದಾಗಿತ್ತು. +ಆದರೆ, ಆಸೆಯ ತೆಕ್ಕೆಯಲ್ಲಿ ಮುಂದಾಗುವವಳಿಗೆ ಇಂಥ ವಿವೇಕದಿಂದ ನಡೆಯುವುದು ಸಾಧ್ಯವಿರಲಿಲ್ಲ. +ಹೀಗೆ ಈ ದುರಂತಕ್ಕೆ ಬಲವಾದ ಕಾರಣವಿಲ್ಲದಿದ್ದರೂ ಅನರ್ಥವು ನಡೆಯುವುದು. +ಇಲ್ಲಿನ ತಂಗಿಯ ವಿಶಿಷ್ಟ ಪಾತ್ರದಲ್ಲಿ ಅವಳು ತನಗಾಗಿ ಈ ಆಭರಣಗಳನ್ನು ಬಯಸಲಿಲ್ಲ, ಗಂಡನ ಪ್ರೇಮ ಮತ್ತು ಬಹುಶಃ ಸುಂದರನಾಗಿದ್ದ ಅವನ ಆಕರ್ಷಣೆಗೆ ಆಭರಣಗಳು ಹೆಚ್ಚು ಸೊಬಗನ್ನು ನೀಡುತ್ತವೆ, ತನ್ನ ಗಂಡನ ಪ್ರಣಯದಲ್ಲಿ ಹೆಚ್ಚು ಸೊಗಸು ತನಗೆ ಲಭಿಸುವುದು ಎಂದು ಅವಳು ಭಾವಿಸಿದ್ದಳು ಎಂದು ಊಹಿಸಬಹುದು. +ಇಲ್ಲಿ ಮೂಲ ಗೀತದಲ್ಲಿ ಅವಳು ಸಾರಾಯಿ ಕುಡಿದು ಅದರ ಆಮಲಿನಿಂದ ಈ ಹೇಯ ಕೃತ್ಯವನ್ನು ಮಾಡಿದ್ದಳೆಂದು ಚಿತ್ರಣ ಇದ್ದಿರಬಹುದಾದರೂ ನಿರೂಪಣೆಯಲ್ಲಿ ಈ ಬಗ್ಗೆ ಯಾವುದೇ ಸೂಚನೆ ಕಾಣುವುದಿಲ್ಲ; ದುರಂತನಾಯಕಿಯೂ ಅವಳಾಗಲಿಲ್ಲ. +ಆದರೆ, ಇಲ್ಲಿನ ದುಃಖದ, ದುರಂತದ ತೀವ್ರತೆಯು ಹೆಚ್ಚುವುದು ಅಣ್ಣ-ತಂಗಿಯರ ತಂದೆ-ತಾಯಿ ಇಬ್ಬರೂ ಕುರುಡಾಗಿದ್ದರೆಂದು ಪ್ರಾರಂಭವಾಗುವುದು. +ಕೊನೆಯಲ್ಲೂ ಸಹ ಹೃದಯಸ್ಪರ್ಶಿಯಾಗುವಂತೆ ಮುಕ್ತಾಯವು ಬರುವುದಕ್ಕೆ ಸಹಾಯಕವಾಗಿ ನಿರೂಪಣೆಯು ಕಲೆಗಾರಿಕೆಗೆ ಮೇಲ್ಮೆಯನ್ನು ತರುತ್ತದೆ. +ಗಂಡನಿಗೆ ತನ್ನ ಪ್ರೇಮವನ್ನು ತೋರಿಸುವಲ್ಲಿ ಅವಳ ಅನ್ಯಾಯದ ಫಲದ ಕುರಿತು ಅವಳ ಕುರುಡತನವನ್ನು ಕಥಾನಕವು ಸೂಚಿಸುತ್ತದೆ. +ಅವಳ ಗಂಡನು ಭಾವನ ಮತ್ತು ಇಬ್ಬರ ಹೆಣ ಸುಡಲು ಗುಡಸಲಿಗೆ ಬೆಂಕಿ ಹಚ್ಚುವ ರೌದ್ರ ಸೇಡಿನ ಚಿತ್ರಣದಿಂದ ಕಥಾನಕಕ್ಕೆ ವಿಶೇಷ ಶಕ್ತಿ ಬರುತ್ತದೆ. +ಮುಂದೆ ಅತ್ತೆಯ ಮನೆಗೆ ಹೋದಾಗ, ಅತ್ತೆಯು ತನ್ನ ಮಗ-ಮಗಳು ಬರಲೆಲ್ಲವೆಂದು ತಿಳಿಯದ ಸನ್ನಿವೇಶವು, ಅಳಿಯ ಅತ್ತೆ-ಮಾವಂದಿರಿಗೆ ಹೇಳುವ ರೀತಿ ತುಂಬ ಕಲಾತ್ಮಕವಾಗಿದೆ. +‘ನನಗೆ ತಾಯಿಯಿಲ್ಲ. +ನೀವೇ ನನ್ನ ತಾಯಿ-ತಂದೆ. . . ನಾನೇ ನಿಮ್ಮ ಮಗ-ಮಗಳು, ನಿಮಗೆ ಆಧಾರ ನಾನೇ’ ಎನ್ನುವ ನಾಟಕೀಯ ಮುಕ್ತಾಯವು ಒಳ್ಳೇ ಧಾರಾವಾಹಿಯಾಗುವ ಸಾಧ್ಯತೆಯನ್ನು ತೋರಿಸುತ್ತದೆ. +‘ನಿಮ್ಮ ಮಗ ನಾನೇ. . . ನಿಮ್ಮನ್ನು ಸಲುಹುವವ ನಾನೇ’ ಎಂದು ಅಳಿಯ ಹೇಳುವ ಹಾಗೂ ಅತ್ತೆ-ಮಾವ ಇವರ ಮಾತುಗಳು ಒಳ್ಳೇ ಸಮಂಜಸವಾದವುಗಳು. +ಕುರುಡರಾದುದರಿಂದ ‘ನೀವು ಯಾರು?’ ಎಂದು ಅವರು ಅಳಿಯನನ್ನೇ ಕೇಳುತ್ತಾರೆ. +ಇದು ತೀರ ವಿರಳ. +‘ತಾಯಿ-ತಂದೇ, ನಾನೇ ನಿಮ್ಮ ಮಗ’ ಎಂದನು ಅಳಿಯ. +ಅಳಿಯ-ಮಗಳ ಮನೆ ತಿಂಗಳ ರಾಜ್ಯದಲ್ಲಿದೆ ಎಂಬುದು, ಅವರ ಮನೆ ದೂರದಲ್ಲಿತ್ತು ಎಂದು ಸೂಚಿಸುತ್ತದೆ. +“ಘಾತಕ ಅಣ್ಣ” ಪ್ರಸಿದ್ಧವಾದ ಒಂದು ಕಥೆಯ ಪಾಠಾಂತರವಾಗಿದೆ. +ಆದರೆ, ಇಲ್ಲಿಯೂ ಪವಾಡದಿಂದ ಹಾವು ಕಚ್ಚಿ ಮಡಿದ ಅಣ್ಣನ ಜೀವವನ್ನು ಬದುಕಿಸುವುದಿದೆ. +ಈ ಬದುಕಿಸಿದ್ದು ಬುದ್ಧಿವಂತ ಎತ್ತು. +ಇದರಲ್ಲಿ ಹಲವು ವೈಶಿಷ್ಟ್ಯಗಳುಂಟು. +ಎತ್ತುಗಳ ಮೇಲೆ ಕೂತು ಸವಾರಿ ಮಾಡುವುದಿತ್ತು ಹಿಂದಿನ ಕಾಲದಲ್ಲಿ. +ಬುದ್ಧಿವಂತ ಎತ್ತು ಕುದುರೆ ಸಾಲೆಯಲ್ಲಿತ್ತು. +ಅದನ್ನೇರಿಕೊಂಡು ಬೇಕಾದ ವೇಷಭೂಷಣ ತೊಟ್ಟು ತಂಗಿಯನ್ನು ಹಬ್ಬಕ್ಕೆ ಕರೆಯಲು ಹೋದ ಅಣ್ಣನನ್ನು ತಂಗಿಯು ಮಾತಾಡಿಸುವಲ್ಲಿ ಸಿದ್ಧವಾದ ಮಾತಿನ ಸರಣಿ ಕಾಣುತ್ತದೆ. +ಮೆಟ್ಟಿ(ಕಟ್ಟಿದ) ಹೂ ದಂಡೆ ಮಾಡಿದ ತಂಗಿಯು-- ತೌರಮನೆಗೆ ಹೊರಡಲು ಬೇಕಾದ ರೇಶ್ಮೆ ಪಟ್ಟೆ ಉಟ್ಟು, ಬೇಕಾದ ಚಿನ್ನ ಧರಿಸಿ ಸಿದ್ಧಳಾದಳು. +ತಂಗಿಯನ್ನು ಮುಂದೆ ಕುಳ್ಳಿಸಿಕೊಂಡ ಅಣ್ಣ ಅಡವಿಯ ದಾರಿಯನ್ನು ಹಿಡಿದ. +ಅದು ಸಮೀಪದ ದಾರಿ ಎಂದು ಸಮಜಾಯಿಸಲು ನೋಡಿದನು. +ತಂಗಿಯ ಆಭರಣಗಳ ಆಸೆಯಿಂದ ತಂಗಿಯನ್ನು ಕೊಲಲ್ಲು ಚೂರಿಯನ್ನು ತೆಗೆದ ಅಣ್ಣ ಅವಳ ಕೈಯನ್ನು, ಕಣ್ಣನ್ನು ಕಟ್ಟಿ ಕಲ್ಲನ್ನು ಮರಿಸಿದುದು ಯಾಕೆ? +ಕಲ್ಲನ್ನೆತ್ತಿ ತಂಗಿಯನ್ನು ಕೊಲ್ಲಲು ಬಯಸಿದ್ದರೆ ಚೂರಿ ತೆಗೆದುದು ಯಾಕೆ?ಎಂದು ತಿಳಿಯಲಿಲ್ಲ. +ಇಲ್ಲಿನ ‘ಹುಳ’ ಅಂದರೆ ನಾಗರಹಾವು, ಸರ್ಪ ಎನ್ನಲು ಹಳ್ಳಿಗರು ಬಳಸುವ ಶಬ್ದ. +ಸರ್ಪ ಕಚ್ಚಿದ್ದನ್ನು ‘ಹುಳ ಮುಚ್ಚಿತು’ ಎನ್ನುವ ರೂಢಿ. +‘ಹುಳ ಮುಟ್ಟಿದ್ದಕ್ಕೆ ಮದ್ದು ಹೇಳು’ ಎಂದ ಅಣ್ಣನಿಗೆ ‘ಕಣ್ಣು, ಕೈ ಬಿಚ್ಚು’ ಎಂದು ತಂಗಿ ಹೇಳಿದರೂ ಅಣ್ಣನು ಅವಳ ಕಣ್ಣು, ಕೈ ಬಿಡಿಸಲಿಲ್ಲ. +ಅವನ ದುಷ್ಟ ಆಸೆಯ ಕಾರಣ ಅವಳು ಅವನಿಗೆ ಮದ್ದನ್ನು ಹೇಳಲೇ ಇಲ್ಲ, ಬುದ್ಧಿವಂತ ಎತ್ತು ಅದೇ ಸ್ಥಿತಿಯಲ್ಲಿ ತಂಗಿಯನ್ನು ತೌರಿಗೆ ಕರೆತಂದಿತು; + ತಾಯಿಗೆ ಕಣ್ಣು-ಕೈ ಬಿಡಿಸಲು ಮಗಳು ಹೇಳಿದಳು. +ತಾಯಿಯು ದುಃಖದಿಂದ ಹೊರಳಾಡಿದ್ದನ್ನು ನೋಡಿದ ಎತ್ತು ಓಡಿ ಹೋಗಿ ಮದ್ದನ್ನು ತಂದು ಅಣ್ಣನನ್ನು ಬದುಕಿಸಿತು. +ಇಲ್ಲಿ ಇನ್ನೂ ವಿವರ ಬೇಕಾಗಿತ್ತು. +ಮೂಲ ಗೀತದಲ್ಲಿ ಮುಂಗುಸಿ ಮತ್ತು ಹಾವಿನ ಹೋರಾಟದ ಬಣ್ಣನೆಯಿತ್ತು. +ಏನೋ ಮುಂಗುಸಿಯು ಸರ್ಪದ ವಿಷ ಪರಿಹಾರದ ಬೇರನ್ನು ಕಿತ್ತುದನ್ನು ನೋಡಿ ಎತ್ತು ಅದನ್ನು ತಂದು ಅಣ್ಣನಿಗೆ ಬಾಯಿಗೆ ಹಾಕಿ ಬದುಕಿಸಿದ್ದರಬಹುದೇನೋ. +ಹೀಗೆ ಒಂದು ನಿರೂಪಣೆಯ ಕೊರತೆ ಇದ್ದರೂ, ಸರಳವಾಗಿ ಸಂಭಾಷಣೆಯನ್ನು ತಂದು ಕಥನವನ್ನು ಮುಗಿಸಿದ ಜಾಣ್ಮೆ ಇಲ್ಲಿದೆ. +ಗಂಡನಿಗೆ ತನ್ನ ಅಣ್ಣ ಮಾಡಿದ್ದ ದ್ರೋಹವನ್ನು ತಿಳಿಸಲಿಲ್ಲ ಅವಳು. +ಉತ್ತರ ಕನ್ನಡದಲ್ಲಿ (ಬೇರೆಡೆ ಸಹಾ) ಕ್ಷಾತ್ರ ಪರಂಪರೆಯುಳ್ಳ ದೀವರ (ನಾಮಧಾರಿ ಎಂದು ಪ್ರಸಿದ್ಧಿ ಪಡೆದ), ಹಳೇ ವೈಕರ ಸೈನ್ಯ ಸಾಹಸದ ಇನ್ನೊಂದು ಕಥನಗೀತ-- “ನನಗೇ ಕುದ್ರಿಗೇ ವಂದೇ ಸೊಡ್ಲೆ”. +‘ಸೊಡ್ಲೆ’-- ಸುಡಲು ಒಯ್ಯುವ ಸ್ಥಳ ಸ್ಮಶಾನ. +‘ಇಲ್ಲಿನ ಹಾಲಪ್ಪ ದೊರೆಯ ಕತೆ ಲಾಯಕದೆ’ ಎಂದ ನಿರೂಪಕಿ ಸೌ.ಮಾಸ್ತಿ ರಾಮ ನಾಯ್ಕ, ನನಗೆ ಮೊದಲೇ ಹೇಳಿದ್ದ ಸ್ವಾರಸ್ಯವಾದ ಗೀತ ಇದು, ಸಂದೇಹವಿಲ್ಲ. +ಹಾಲಪ್ಪ ದೊರೆ ದೀವರವನು ಎಂದು ಗೀತದಲ್ಲಿ ಉಲ್ಲೇಖ ಬಂದಿಲ್ಲ. +ಹೀಗಿದ್ದರೂ ವೀರಪುತ್ರರನ್ನು ಪಡೆದಿದ್ದ ಹಾಲಪ್ಪ ದೀವರವನೇ ಇದ್ದಿರಬಹುದು. +ಮೂವರು ಮಕ್ಕಳ ತಂದೆ ಹಾಲಪ್ಪ ದೊರೆ ಮಕ್ಕಳಿಗೆ ಕ್ಷಾತ್ರ ಪರಂಪರೆಯ ವಿದ್ಯೆ ಕಲಿಸಲು ತನ್ನ ಮುಪ್ಪಿನ ಕಾಲದಲ್ಲಿ ಶಾನಭಾಗರಿಗೆ ಅಪ್ಪಣೆ ಮಾಡಿದನು. +ಶಾನಭಾಗರು ವಿದ್ಯೆ ಕಲಿಸಿದ ಮೇಲೆ, ಅಡವಿಗೆ ಕಳಿಸಿ ಗರಡಿ ಕಂಬ ತರಿಸಲು ಹೇಳಿದ ಮೇಲೆ ತಲೆ ಕೆಳಗೆ ಮಾಡಿ, ಕಾಲು ಮೇಲೆ ಮಾಡಿ ಗರಡಿ ಸಾಧಕ ಸಹ ಕಲಿಸಿದ ವಿವರವು ಲಕ್ಷಿಸತಕ್ಕದ್ದಾಗಿದೆ. +ದಂಡಿನ ಕರೆ ಬಂತು-- ಮೂವರು ಯುದ್ಧಕ್ಕೆ ಹೊರಟು ಕುದುರೆಯೇರಿ ಹೋಗಿ, ಯುದ್ಧ ಮಾಡಿದ ಚಮತ್ಕಾರಿಕ ಬಣ್ಣನೆ ಸ್ವಾರಸ್ಯವಾಗಿದೆ. +ಇಲ್ಲಿಯೂ ಹಾರುವರ ದಂಡನ್ನು ಹಾರಾಡಿ ಕಡಿದ ಉಲ್ಲೇಖವಿದೆ. +ತುರುಕರ ದಂಡನ್ನು ತುದಿಕಾಲಲ್ಲಿ ಕಡಿದ, ಮೊಗಲರ ಮುಡುಗಿದ ದಂಡಾಳುಗಳ ಸೈನ್ಯವನ್ನು ನಾಶ ಮಾಡಿ ಕುದುರೆಯ ಮೇಲೆಯೇ ತಿರುಗಿದವನನ್ನು ಕಳ್ಳರು ಮುಂದೆ, ಹಿಂದೆ ನಿಂತು ಗುಂಡಿಕ್ಕಿ ಕೊಂದರು. +ಮಹಾವೀರನು- ‘ಅಡಗಿ ತನ್ನನ್ನು ಹೇಡಿಗಳಂತೆ ಗುಂಡಿಕ್ಕಿ ಕೊಲ್ಲುವವರು ಹೆಂಗಸರಿಗಿಂತ ಕಡೆಯಾದರಿ’ ಎಂದು ಹೀಯಾಳಿಸಿ, ಕುದುರೆಯ ಕೊರಳಿಗೆ- ‘ತನಗೂ, ತನ್ನ ಕುದುರೆಗೂ ಒಂದೇ ಸುಡು ಜಾಗ’ ಎಂದು ಬರೆದದ್ದನ್ನು ಕಟ್ಟಿ ಮನೆಗೆ ಬಂದಾಗಲೂ, ‘ವಿಜಯದ ಆರತಿ ತನ್ನಿ’ ಎಂದು ಹೇಳಿದ ವೀರನು ಅಸಾಮಾನ್ಯ ಧೀರ ಸೈನಿಕನೇ. +ಹಿತಮಿತವಾಗಿ, ಸರಳ ಸುಂದರವಾಗಿ ನಿರೂಪಿಸಿದ ಈ ವೀರಶ್ರೀ ಗಾಥೆಯು ಮೆಚ್ಚುವಂತಹದು. +“ಅತ್ತೆ ನಾಗಮ್ಮ ಸೊಸೆ ಹೊನ್ನಮ್ಮ” ಕಥನ ಗೀತವು ಪ್ರಾರಂಭ ಭಾಗದಲ್ಲಿ ಉತ್ತಮವಾಗಿ ನಿರೂಪಿತವಾಗಿದೆ. +ಮುಂದೆ ಶಂಕೆಯಿಂದ ಸತಿಯನ್ನು ಕೊಂದ ಪತಿ, ರಣಹದ್ದಿನ ವೇಷದಿಂದ ಅರಳಿಯ ಮರದ ಮೇಲೆ ಕೂತ ಎಂಬಲ್ಲಿಯವರೆಗೆ ಉತ್ತಮವೇ ಆಗಿದೆ. +ಮುಂದೆ ಕೊಲ್ಲಿಸಲ್ಪಟ್ಟ ಹೊನ್ನಮ್ಮನು ಕೆರೆಯಲ್ಲಿ ಅರಳಿದ ಕಮಲವಾಗಿ ಯಾರ ಕೈಗೂ ಸಿಗದೆಯೇ ಕೊಂದ ಗಂಡನ ಕೈಗೆ ಹೂವು ಸಿಕ್ಕ ಬಣ್ಣನೆಯು ಹಲವು ಗೀತಗಳಲ್ಲಿಯೂ ಇರುವುದು. +ಅಲ್ಲದೆ, ಈ ಅಸಹಜವಾದ ನಿರೂಪಣೆಯಿಂದ ಕಥನಗೀತದ ಮೇಲ್ಮೆ ಕುಗ್ಗಿದೆ ಎಂದೇ ನನ್ನ ಅಭಿಪ್ರಾಯ. +ನಾಗಮ್ಮನ ಮಗನು ದಂಡಿಗೆ ಹೋಗುವಾಗ, ‘ಸೊಸೆಯನ್ನು ನೀರಿಗಾಗಲಿ, ಬೆಂಕಿಗಾಗಲಿ ಹೊರಗೆ ಕಳಿಸಬೇಡ’ ಎಂದು ತಾಯಿಗೆ ಹೇಳಿ ಹೋಗಿದ್ದನು. +ನಾಗಮ್ಮನು ಬಳೆಗಾರ ಬಂದಾಗ. +‘ಅವನಿಂದ ಬಳೆ ತೊಡಿಸಿಕೋ’ ಎಂದು ಅತ್ತೆ ಹೇಳಿದ ಮೇಲೆ ಹೊನ್ನಮ್ಮ ಬಳೆ ತೊಡಿಸಿಕೊಂಡಿದ್ದು-- ಗಂಡನಿಗೆ ಅಲ್ಲಿ ಸ್ವಪ್ನದಿಂದ ತಿಳಿದುಬಂದಿದ್ದು. . . . ಇದೆಲ್ಲ ಚೆನ್ನಾಗಿಯೇ ಬಂದಿದೆ. +ಆದರೆ, ಇದರಲ್ಲಿ ಹೊನ್ನಮ್ಮ ಅತ್ತೆಯ ಮಾತನ್ನು ಪಾಲಿಸಿದಳು. +ಅವಳ ತಪ್ಪೇನೂ ಇರಲಿಲ್ಲ ಎಂಬುದು ಗಂಡನಿಗೆ ತಿಳಿಯಲೇ ಇಲ್ಲ. +ತಾಯಿ ಹೇಳಿದ ಮೇಲೆ ಮಡದಿ ಆರತಿ ತಂದುದು, ನೀರು ತಂದುದು ಸರಿಯಾದ ಬಣ್ಣನೆಯೇ ಆಗಿದೆ. +ಸಂಶಯ ಪಿಶಾಚಿಯ ತೆಕ್ಕೆಯಲ್ಲಿದ್ದ ಗಂಡನಿಗೆ ತಿಳಿಯಲೇ ಇಲ್ಲ. +ತಾಳ್ಮೆಯೇ ಬರಲಿಲ್ಲ. +ಇದು ಸಹಜವಾದ ಮಾನುಷೀ ದೌರ್ಬಲ್ಯ. +ಇದರಿಂದ ನಿರಪರಾಧಿಗೆ ಘೋರ ಶಿಕ್ಷೆ ಮಾಡಿದುದು ಸಹಜವಾಗಿಯೇ ರೂಪಿತವಾಗಿರುವುದು. +ಆದರೂ ಹೊನ್ನಮ್ಮನು ಔದಾರ್ಯದಿಂದ ಗಂಡನನ್ನು ಕ್ಷಮಿಸಿದ ಬಣ್ಣನೆಯಲ್ಲಿ ಕಾವ್ಯನ್ಯಾಯವನ್ನು ಸರಿಯಾಗಿ ಪಾಲಿಸಲಿಲ್ಲವೆಂದೇ ತೋರುತ್ತದೆ. +ಇಲ್ಲಿ ಸ್ತ್ರೀಯ ಪ್ರತಿಭಟನೆಯ ಅಂಶವೇ ಕಾಣುವುದಿಲ್ಲ. +ಅದನ್ನು ತೋರಿಸಿದ್ದರೆ ಗೀತದ ಸತ್ವವು ಹಿರಿದಾಗಿರುತ್ತಿತ್ತು. +ಬಂದ ಅವಳ ಏಳು ಜನ ಅಣ್ಣಂದಿರೂ ಭಾವನ ಘೋರ ಅಪರಾಧವನ್ನು ಮಾತಿನಿಂದಲಾದರೂ ಪ್ರತಿಭಟಿಸದಿದ್ದುದು ಗೀತ ನಿರೂಪಣೆಯಲ್ಲಿನ ಇನ್ನೂಂದು ದೋಷವಾಗಿದೆ. +“ಕೆಂಚಮ್ಮ” ಕಥನಗೀತವು ಪ್ರಖ್ಯಾತಳಾದ, ಶ್ರೇಷ್ಠ ನಿರೂಪಕಿ-- ಬಿಳಿಯಮ್ಮ ಪುಟ್ಟು ನಾಯ್ಕ ಹೊಸಾಕುಳಿ ಇವರು ಹೇಳಿದ್ದು. +ಕೆಂಚಮ್ಮನ ಹರಕೆ ‘ಮಗ ಹುಟ್ಟಿದರೆ ಗಾರಹೊಳೆಗೆ ತಾನು ಬಲಿಯಾಗುವೆ’ ಎಂಬುದು ನಮ್ಮ ಕನ್ನಡದ ವೀರ ರಮಣಿಯರ, ವೀರರ ಬಲಿದಾನದ ಗಾಥೆಗೆ ಇನ್ನೊಂದು ಜೋಡಣೆಯಾಗಿದೆ. +‘ಕೆಂಚು’ ಎಂದರೆ- ಮರದ ನಡುವಿನ ಗಟ್ಟಿಯಾದ ತಿರುಳು, ಅಂಧ ಮನಸ್ಸಿನ ದೃಢತೆಯ ಸಂಕೇವೂ ‘ಕೆಂಚಮ್ಮ’ ಎಂಬ ಹೆಸರಿನಲ್ಲಿದೆ. +ವಾಸ್ತವಿಕ ನೆಲೆಯಲ್ಲಿ ಕೆಂಚಮ್ಮ ಹರಕೆಯನ್ನು ತೀರಿಸಲು ಹೊಳೆಯಲ್ಲಿ ಬಿದ್ದು ಮುಳುಗಿ ಬಲಿಯಾಗಿದ್ದಿರಬೇಕು, ನಮ್ಮ ಜನಪದರು ಇಂಥ ಕೆಚ್ಚಿನ ವೀರರಿಗೆ ವೀರರಮಣಿಯರಿಗೆ ದೇವತ್ತ್ವವನ್ನು ಕಲ್ಪಿಸಿ, ಪವಾಡ ರೂಪದಲ್ಲಿ ಅವರ ಕೊನೆಯನ್ನು ಬಣ್ಣಿಸುವ ಚಟವೇ ಹಲವು ಗೀತ–ಕಥೆಗಳಲ್ಲಿ ಕಾಣುತ್ತದೆ. +ಕೆಂಚಮ್ಮನಿಗೆ ಗಂಡಾಗಲಿ, ಹೆಣ್ಣಾಗಲಿ ಹುಟ್ಟುವ ಬಸಿರೇ ಆಗಿದ್ದಿರಲಿಲ್ಲ. +ಅದನ್ನು ನಿರೂಪಕಿಯು-- ‘ಮುಟ್ಟಳ ಕೆಂಚಮ್ಮ’ ಎಂಬ ಪ್ರಾರಂಭದ ನುಡಿಯಲ್ಲೇ ಸೂಚಿಸಿದ್ದಳು. +ಮುಟ್ಟಾಗಿದ್ದವಳು ತಿಂಗಳು ತಿಂಗಳೂ ಮುಟ್ಟಾಗಿ ನಡೆಯುತ್ತಿದ್ದಳು. +ಕೆಂಚಮ್ಮ ಅವಳು ಮುಟ್ಟಾಗಿ ಮೀಯಲು ಹರಿವ ನದಿಗೆ ಹೋಗಿ ಮುಳುಗಿ ಮಿಂದಳು. +ಹೀಗೆ ಶುದ್ಧಳಾಗಿ ಕನ್ನೆಯರಿಗೆ ಕೈಮುಗಿದು ಹರಕೆಯನ್ನು ಹೇಳಿಕೊಂಡಳು. +ಇಲ್ಲಿ ಕನ್ನೆಯರು ನದೀ ದೇವತೆಗಳು ನದಿಯಲ್ಲಿ ಮಧ್ಯಾಹ್ನದ ಬಿಸಿಲಿನಲ್ಲಿ ಹಾವಸೆಯು ನೀರಿನಲ್ಲಿ ಪ್ರತಿಫಲಿಸಿದಾಗ ನದೀ ದೇವತೆಗಳು ಮಿಂದರು’ ಎಂದು ಜನರು ನಂಬಿ ನುಡಿಯುತ್ತಾರೆ. +ಅಂಥ ಏಳು ಮಂದಿ ಜಲದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ, ‘ಬಂಜೆ ಎಂಬುದನ್ನು ತಪ್ಪಿಸಲು ತನಗೆ ಸಂತತಿ ಕರುಣಿಸಿದರೆ ಗಾರ ಹೊಳೆಯಲ್ಲಿ ಬಿದ್ದು ಬಲಿಯಾಗುವೆ’ ಎಂದು ಹೇಳಿ ಹರಕೆಯನ್ನು ಹೊತ್ತಳು ಕೆಂಚಮ್ಮ. +ಕೆಂಚಮ್ಮ ಮುಟ್ಟಾಗೊಂದು ತಿಂಗಳಾ, ಮುಟಾಗಿರುವಲ್ಲಿ ಮುಟ್ಟಾಗದೆ ಒಂದು ತಿಂಗಳು. . . ಹೀಗೆಲ್ಲ ತಿದ್ದಿಕೊಳ್ಳಬೇಕು. +ಯಾಕಂದರೆ, ಗರ್ಭಿಣಿಯಾದಾಗ ಮುಟ್ಟಾಗುವದೇ ಇಲ್ಲ. +ಇಲ್ಲಿ ಬಸುರಿಯ ಬಯಕೆಯ, ಸೀಮಂತದ ಯಾವುದೇ ಬಣ್ಣನೆ ಮಾಡದೆ ಒಂಬತ್ತು ತಿಂಗಳಾಗಿ ಗಂಡು ಮಗುವನ್ನು ಹಡೆದಳು ಎಂದು ತಿಳಿಸಿದ್ದು ವಿಶೇಷ. +ಚಿನ್ನದುಂಗುರದಿಂದ ಬಾಣಂತಿಯ ಬೆನ್ನು ತಿಕ್ಕಿದ್ದು, ಎಣ್ಣೆ ತಿಕ್ಕಿದ್ದರಿಂದ, ಸೀಗೆ ಹುಡಿಯಿಂದ ಮೀಯಿಸಿದ ಸಣ್ಣ ವಿವರ ಇಲ್ಲಿದೆ. +ಕೆಂಚಮ್ಮನು ಹೊಳೆಗೆ ಬೀಳಲು ಹೊರಟಾಗ ಕತ್ತಿ ಹಿಡಿದವರು, ಕೋವಿ ಹಿಡಿದವರು ತಡೆಯಲು ಬಂದರು. +ಆಕೆ ಲೆಕ್ಕಿಸದೆ ಹೊಳೆಗೆ ಮೀಯಲು ಹೋಗಿ ತಾಯಿ ಬಳಗಕ್ಕೂ, ತಂದೆಯ ಬಳಗಕ್ಕೂ, ಗಂಡನ ಬಳಗಕ್ಕೂ (ಮೂರು) ಓಲೆ ಬರೆದ ಕೆಂಚಮ್ಮ ಓದು-ಬರೆಹ ಬಲ್ಲವಳು. +ತಂದೆಯು ತಾಯಿಯೊಡನೆ, ‘ಒಂದೇ ಮಗಳನ್ನು ಹೊಳೆಗೆ ಆಹುತಿ ಕೊಡುವ’ ಎಂದು ದುಃಖಿಸಿ ಹೇಳುವುದಿದೆ. +ಗಂಡನು ಬಂದು ಕೂತಾಗಿನ ಸಂಭಾಷಣೆಯೂ ಚಿಕ್ಕದಾಗಿ ಬಂದಿದೆ. +‘ಕಂದಯ್ಯನ ಗೊಡವೆ ಇಲ್ಲ; ಹೂಗಳ ಗೂಡವೆ ಇಲ್ಲ; ತಂದೆಯ, ತಾಯಿಯ, ಅಣ್ಣನ, ತಮ್ಮನ ಯಾರ ಗೊಡವೆಯೂ ಇಲ್ಲ’ ಎಂಬ ಆಕೆಯ ನುಡಿಯು ಕೆಂಚಮ್ಮನ ದೃಢ ಮನಸ್ಸನ್ನು ಚೆನ್ನಾಗಿ ನಿರೂಪಿಸಿದೆ. +ಕೆಂಚಮ್ಮನು, ‘ಗಂಡನಿಗೆ ತನ್ನ ತಂಗಿಯನ್ನು ಮದುವೆ ಮಾಡಿ ಕೊಡಿ’ ಎಂದು ಹೇಳಲು ಮರೆಯಲಿಲ್ಲ. +ಹೊಳೆಗೆ ಬೀಳಲು ಬಂದಾಗ ಹಣ್ಣು, ಹೂಗಳ ರಾಶಿಯನ್ನೇ ಬಳಗದವರು ತಂದರು, ಹೊಳೆಗೆ ಪೂಜೆ ಸಲ್ಲಿಸಿದ ಕೆಂಚಮ್ಮ ಹೊಳೆಯಲ್ಲಿ ಹಾರಿದ್ದಿರಬೇಕು. +ಆ ಸಾಲುಗಳು ಇಲ್ಲಿ ಹಾರಿಹೋಗಿವೆ. +ಮಗನನ್ನು ಸಲಹಿಕೊಳ್ಳಲು ತಂಗಿಯನ್ನು ಗಂಡನಿಗೆ ಮದುವೆ ಮಾಡಿಸಲು ಹೇಳಿ ಹೊಳೆಯಲ್ಲಿ ಬೀಳುವಷ್ಟರಲ್ಲಿ, ‘ದೇವಲೋಕದಿಂದ ದಂಡಿಗೆ (ಪಲ್ಲಕ್ಕಿ) ಬಂದು, ಕೆಂಚಮ್ಮ ಅದರಲ್ಲಿ ಕೂತುಕೊಂಡು ಸ್ವರ್ಗಕ್ಕೆ ಹೋದಳು’ ಎಂದು, ನದಿಗೆ ಹಾರಿ ಪ್ರಾಣದ ಆಹುತಿ ನೀಡಿದ್ದ ಕೆಂಚಮ್ಮನಿಗೆ ಸೌಕುಮಾರ್ಯದಿಂದ ದೇವಲೋಕಕ್ಕೆ ಸೇರಿಸಲು ನಾಟಕೀಯವಾಗಿ ಪಲ್ಲಕ್ಕಿಯನ್ನು ಕಳಿಸಿದ ಬಣ್ಣನೆಯಿದೆ. +ಕನ್ನಡದ ವೀರರು ಕಟ್ಟಾಯದ ಭಾಷೆಯನ್ನು ಸಲ್ಲಿಸಲು ವೀರಮರಣವನ್ನು ಪಡೆದುದರ ಒಂದು ಉದಾಹರಣೆಯಿಂದ ಈ ಬಲಿದಾನದ ವೈಶಿಷ್ಟ್ಯವನ್ನು ತಿಳಿಸಲಾಗಿದೆ. +ಒಂದೆರಡು ಲೋಪದೋಷಗಳಿದ್ದರೂ ಈ ಕಥನ ಗೀತ ಉತ್ತಮ ರೀತಿಯಲ್ಲಿ ನಿರೂಪಿತವಾಗಿದೆ. +“ಅತ್ತೆ ಗೌರಮ್ಮ, ಸೊಸೆ ಹೊನ್ನಮ್ಮ” ಕಥನ ಗೀತವು ಅರ್ಧ ಭಾಗದಲ್ಲಿ ಶ್ರೇಷ್ಠತೆಯನ್ನು ಮೆರೆದುದು ಮುಂದೆ ನಿರೂಪಕಿಯು ಸುಖಾಂತವಾಗಿ ಮುಗಿಸುವ ಚಾಪಲ್ಯದಿಂದಾಗಿ ಗಂಡನಿಂದ ಕೊಲ್ಲಲ್ಪಟ್ಟ, ಅಣ್ಣಂದಿರಿಂದ ಸುಡಲ್ಪಟ್ಟವಳನ್ನು ತಾವರೆ ಹೂ ಮಾಡಿ ಗೀತದ ಹಿರಿಮೆಯೇ ಕುಗ್ಗುವಂತೆ ಆಗಿದೆ. +ಇಲ್ಲಿಯೂ ಸಹ ಅರಸು, ದಂಡಿಗೆ ಹೋಗಲು ಹೊರಟು – ‘ಸೊಸೆಯನ್ನು ನೀರಿಗೆ ಕಳಿಸಬೇಡ, ಬೆಂಕಿಗೆ ಕಳಿಸಬೇಡ’ ಎಂದು ಹೇಳಿಹೋದ. +ಇಲ್ಲಿ ಮದುವೆಯಾದರೂ ಹೆಂಡತಿಯನ್ನು ಮನೆಯಲ್ಲಿ ಇರಿಸಿ, ಯುದ್ಧ ಮಾಡಲು ಹೊರಟ ಗಂಡನು ಸುಂದರಿಯಾದ ತನ್ನ ಹೆಂಡತಿಯು ಮನೆಯ ಹೊರಗೆ ಹೋದರೆ, ಹೊಸಲು ದಾಟಿದರೆ, ಕಾಮುಕ ಗಂಡಸರ ದೃಷ್ಟಿಗೆ ಬಿದ್ದು, ಶೀಲಭ್ರಷ್ಟಳಾಗಬಹುದು ಎಂಬ ಸಂದೇಹ ಪಡುವಂಥವನು ಮತ್ತು ತನ್ನ ಅಪ್ಪಣೆ ಮೀರಿ ನೀರಿಗೆ ಅವಳು ಹೋದಾಗ ಕ್ರೂರತನದಿಂದ ಅವಳನ್ನು ಬೇರೆ ಯಾವ ತಪ್ಪು ಕಾಣದಿದ್ದರೂ ಕೊಲ್ಲುವಂಥ ನರಾಧಮನಾಗಿದ್ದಾನೆ. +ಆತ ‘ದಂಡಿಗೆ ಹೋಗುವೆ’ ಎಂದುದು ತನ್ನ ಹೆಂಡತಿಯ ನಿಷ್ಠೆಯನ್ನು ಪರೀಕ್ಷಿಸುವ ಸಲುವಾಗಿ ಮಾತ್ರ ಎಂದು ಈ ಗೀತದಲ್ಲಿ ತೋರುತ್ತದೆ. +ಅವನು ಸುಂದರನಾಗಿ ಸಿರಿವಂತನಾಗಿದ್ದ ಎಂಬುದು ಆತನ ಹೆಂಡತಿ ಬೆಳ್ಳಿಯ ಕೊಡ, ಚಿನ್ನದ ಕೊಡ ತಕ್ಕೊಂಡು ನೀರಿಗೆ ಹೋದಳೆಂಬುದರಿಂದ ಸೂಚಿತವಾಗಿದೆ. +ಗಂಡನು ಆಗ ಕೆರೆಗೆ ಬಂದಿದ್ದನ್ನು ತಿಳಿದ ಹೊನ್ನಮ್ಮ ಅವನ ಕ್ರೂರ ಶಿಕ್ಷೆಗೆ ಹೆದರಿದ್ದು, ಮುತ್ತಿನ ಕಣ್ಣೀರನ್ನು ಬಿಟ್ಟಳು ಎಂಬುದರಿಂದ ಸೂಚಿತವಾಗಿದೆ. +ತಿರುಗಿ ಬಂದವಳು ಕುದುರೆಗೆ ಆರತಿಯನ್ನು ತಂದರೂ ಅವನ ಕ್ರೋಧ ಇಳಿಯಲಿಲ್ಲ. +‘ನಿನ್ನ ಸೊಸೆಯನ್ನು ತೌರಮನೆಗೆ ಕರೆದುಕೊಂಡು ಹೋಗುವೆ’ ಎಂದು ಸುಳ್ಳನ್ನು ಹೇಳಿ ಅಡವಿಗೆ ಒಯ್ದು, ಅವಳ ಶಿರಚ್ಛೇದ ಮಾಡಿದನು. +ದಾರಿ ತಪ್ಪಿತು ಎಂದ ಹೆಂಡತಿಗೆ ಸಬೂದು ಹೇಳಿ ಮೋಸ ಮಾಡಿದನು. +ಇತ್ತ ಅವಳ ತಾಯಿಗೆ ಸ್ವಪ್ನ ಬಿದ್ದು ಮಗಳನ್ನು ಅಳಿಯ ಮೋಸದಿಂದ ಕೊಂದನೆಂಬುದು ತಿಳಿಯಿತೆಂಬುದು ಉತ್ತಮವಾದ ಜೋಡಣೆ. +ಮಕ್ಕಳಿಗೆ ತಿಳಿಸಿ ಅವರು ಹೊರಟು ಬಂದರು. +ನಿಜವಾಗಿ ಈ ಗೀತ ಅಸಾಧಾರಣವಾಗಿ ಹಿರಿಮೆಯನ್ನು ಪಡೆದ ಸಂದರ್ಭವು ಯಾವುದೆಂದರೆ, ಹೆಂಡತಿಯನ್ನು ಕೊಂದು ಬಂದ ಮಗನನ್ನು ಕೊಲ್ಲಲು ತಾಯಿಯು ಖಡ್ಗವನ್ನು ಹಿಡಿದು ಹೊಸ್ತಿಲಲ್ಲಿ ಕೂತು ಕೊಂಡಿದ್ದುದು. +ಮಗನು ಮಾಡಿದ ಅನ್ಯಾಯವನ್ನು ತಾಯಿಯು ಪ್ರತಿಭಟಿಸಿ ಮಗನ ಮೇಲಿನ ಮಮತೆಯನ್ನು ಬಿಟ್ಟಿದ್ದು ಅದ್ಭುತವಾದ ಕಲ್ಪನೆಯಾಗಿದೆ; +ಕನ್ನಡಿತಿಯರ ಕೆಚ್ಚು ಇದರಿಂದ ತಿಳಿದು ಬರುವಂತಿದೆ. +ಆದರೆ, ತಾಯಿ ಮಗನನ್ನು ಕೊಲ್ಲುವುದನ್ನು ತಪ್ಪಿಸಲು ಗೀತರಚನೆಯನ್ನು ಮಾಡಿದವಳೋ, ಮುಂದೆ ಅದನ್ನು ಹೇಳಿದ ಹೆಂಗಸೋ ಅಣ್ಣಂದಿರೆ ಅಡವಿಯಲ್ಲಿ ಹೋಗಿ ಅವಳ ಹೆಣವನ್ನು ಸುಟ್ಟು ಬೂದಿ ಮಾಡಿದುದನ್ನು ತಿಳಿಸಿಯೂ ಕೃತ್ರಿಮವಾಗಿ ಸುಖಾಂತವಾಗಿ ಮಾಡಿದುದು ಇದರ ಹಿರಿಮೆಗೆ ಕುಂದು ಆಗಿದೆ. +ಸರಳವಾಗಿ ಹೇಳಿದ ಈ ಗೀತವು ಈ ಅನೌಚಿತ್ಯವನ್ನು ಮೀರಿಯೂ ಉತ್ತಮವಾಗಿದೆ. +ಪ್ರಖ್ಯಾತ ಜರ್ಮನ ಮನೋವಿಜ್ಞಾನಿ ಕಾರ್ಲೆಯರಿಗೆ ಅವರು ಪ್ರತಿಪಾದಿಸಿದ್ದ “ಟೆರ್ರಿಬಲ್ ಮದರ್”-- ಭಯಂಕರ ತಾಯಿ ಎಂಬುದನ್ನು ನೆನಪಿಗೆ ತರುತ್ತಾಳೆ ಇಲ್ಲಿನ ವೀರಮಾತೆ. +“ಕೋಳಿ ಜನ್ಮ” ಗೀತದ ಕಥೆಯು ತಕ್ಕಮಟ್ಟಿಗೆ ಜನಪ್ರಿಯವಾಗಿದೆ. +‘ಗೇಣುಗಡ್ಡದ ಕುಳ್ಳ’ ಕಥೆಯಲ್ಲಿ ಗಡ್ಡದ ಕುಳ್ಳನು ರಾಜನ ಮಗಳ ಲಗ್ನವಾಗಲು ಬರುವಾಗ ಬೇರೆ ಬೇರೆ ಪ್ರಾಣಿಗಳನ್ನು ತನ್ನ ಕಿವಿಯಲ್ಲಿ ಅಡಗಿಸಿಕೊಂಡು ಬಂದುದರ ಆಶಯಗಳ ನೆನಪು ಈ ಗೀತ ಕಥೆಯಲ್ಲಿ ಆಗುತ್ತದೆ. +ಅಲ್ಲದ, ಗೊಂಡರ ಪದದಲ್ಲಿ ಮತ್ತು ಬೇರೆ ಕಥೆಯಲ್ಲೂ ಕೋಳಿಯು ರಾಜನ ಮಗಳನ್ನು ಮದುವೆಯಾಗಲು ಹೋದುದಿದೆ. +ಅಲ್ಲಿ ಕುಳ್ಳ ಚಿಕ್ಕ ರೂಪದ ಮನುಷ್ಯ. +ಉಳಿದ ಪಾಠಗಳ ಕೋಳಿಯು ದೇವತಾಶಕ್ತಿಯುಳ್ಳದಾಗಿ ಕಾಣಲು ಕೋಳಿಯಾಗಿದ್ದರೂ ಮುಂದೆ ರೂಪಪರಾವರ್ತನದಿಂದ ಮನುಷ್ಯ ರೂಪ ಪಡೆಯುವುದು. +ಇಲ್ಲಿನ ಕೋಳಿಯನ್ನು ಬಹಳ ಮಹತ್ವಾಕಾಂಕ್ಷೆಯುಳ್ಳ ಮನುಷ್ಯನ ಪ್ರತಿನಿಧಿ ಎನ್ನಬಹುದು. +ಅವನಿಗೆ ಮಾಟಗಾರಿಕೆಯ ಶಕ್ತಿ ಇರುತ್ತದೆ. +ನಮ್ಮ ‘ಕೋಳಿ ಜನ್ಮ’ ಗೀತದ ಕೋಳಿಗೆ ಚಿನ್ನದ ವರುಣ(ವರ್ಣ) ಅಂದರೆ ಇದು ಸಾಮಾನ್ಯ ಕೋಳಿಯಲ್ಲ ಮತ್ತು ಮಾತಾಡುವ ಶಕ್ತಿಯುಳ್ಳ ಮನುಷ್ಯನ ಪ್ರತಿನಿಧಿ. +ಆದರೆ, ಇಲ್ಲಿ ನಿರೂಪಕಳು ಮನುಷ್ಯ ರೂಪವನ್ನು ಕೋಳಿಯು ಮದುವೆಯಾದಾಗ ಪಡೆದುದನ್ನು ತಿಳಿಸದಿರುವುದು ದೊಡ್ಡ ಲೋಪವಾಗಿದೆ. +ನಾಲ್ಕಾಣೆಗೆ ಕೋಳಿಯನ್ನು ಅಜ್ಜಿಯು ಕೊಂಡಿದ್ದಳು. +ಆಗಿನ ಸೋಯಿ ಕಾಲದ ದರ ಇದು. +ಈ ಕಾಲದಲ್ಲಿ ಕಡಿಮೆಯೆಂದರೆ ಎಪ್ಪತ್ತೈದು ರೂಪಾಯಿ ಕೋಳಿಯ ಬೆಲೆ. +ಮಾಟದ ಶಕ್ತಿಯಿಂದ ದೊಡ್ಡ ಭಯಂಕರ ಪ್ರಾಣಿಗಳನ್ನು ಚಿಕ್ಕದಾಗಿ ಮಾಡಿ, ಕಿವಿಯಲ್ಲಿಟ್ಟು ರಾಜನ ಮನೆಗೆ ಹೋಗಿ ಮಗಳನ್ನು ಮದುವೆಯಾಗುವ ಎಂದಂತೆ ಮದುವೆಯಾಯಿತು. +ಆದರೆ, ಆದ ಮೇಲೆ ಮನುಷ್ಯ ರೂಪ ಅದಕ್ಕೆ ಬರಲಿಲ್ಲ, ಅದನ್ನು ಇಲ್ಲಿ ತಿಳಿಸಲಿಲ್ಲ. +ಮಕ್ಕಳ ಮನರಂಜನೆಗೆ ಈ ಗೀತ ಕಥೆ ಯೋಗ್ಯವಾಗಿದೆ. +‘ಕಾಸೀ ದೇಸಾಂತ್ರೇ ನೆಡುದಾನೇ’ ಚಿಕ್ಕ ಗೀತದಲ್ಲಿ ಪ್ರಸಿದ್ಧವಾದ, “ತಿಮ್ಮಕ್ಕನ ಪದಗಳು” ಗ್ರಂಥದಲ್ಲಿರುವ ‘ಮಾರಕ್ಕ ದೇವಿಯ ಮದುವೆ’ ಎಂಬ ಕಥನ ಗೀತದ ಹೋಲಿಕೆಯಿದೆ. +ತಿಮ್ಮಕ್ಕ ಹೇಳಿದ ಹಾಡಿನಲ್ಲಿನ ‘ಮಂಡಲಗೊಂಡಿತ್ತೇ ಗುರುಗುಂಜೇ’ ಎಂಬ ಧ್ವನಿರಮ್ಯವಾದ ಸಾಲಿನ ಮಹತ್ವವು ‘ಸಂಗಡ ಗುಲಗಂಜೀ ಬಲ ಬಂದು’ ಎಂಬ ಸಾಲಿನಲ್ಲಿ ಇಲ್ಲ. +ಅಲ್ಲಿನ ಗುರುಗುಂಜಿಯು ಮಾರಕ್ಕನು ಋತುಮತಿಯಾಗಿದ್ದುದನ್ನು ಸೂಚಿಸುತ್ತದೆ. +ಇಲ್ಲಿನ ಗುಲಗಂಜಿ ಶಬ್ದಕ್ಕೆ-- ‘ಬಲಬಂದು’ ಎಂಬ ಶಬ್ದ ಜೋಡಣೆಯಾಗಿ ಅರ್ಥವು ದುರ್ಬಲವಾಗಿದೆ. +ಅಲ್ಲಿನ ಮಂಡಲಗೊಂಡ ಗುರುಗುಂಜಿಯ ಬಣ್ಣವು ಋತುಮತಿಯ ಯೋನಿ ಸೂಚಕವಾಗಿರುತ್ತದೆ. +ಇಲ್ಲಿ ಅಣ್ಣನು ಸೋದರಭಾವನಿಗೆ ತಂಗಿಯನ್ನು ಲಗ್ನ ಮಾಡಿಕೊಡಲು ಮನಸ್ಸಿದ್ದವನಾದರೂ, ‘ಹನ್ನೆರಡು ವರ್ಷದ ತಲದಂಡಿನ ಕಾಳಗಕ್ಕೆ ಹೋಗಿ ಬಂದು ಧಾರೆ ಎರೆಯುವೆ’ ಎಂದುದು ವ್ಯಾವಹಾರಿಕ ವಿಚಾರವಲ್ಲ. +ತಂಗಿಗೆ ಹೇಳುವ, ‘ಗೆಂಟ ಕಟ್ಟಲು ಬೇಡಾ’ ಎಂಬುದು ಕಿರುಗಣಿ ಉಡುವ ಹುಡುಗಿಯು ತರುಣಿಯಾಗಿ ಸೆರಗಿನ ಗಂಟನ್ನು ಎದೆ ಮೇಲೆ ಕಟ್ಟುವ ಹಾಲಕ್ಕಿ ಹೆಂಗಸರ ರೂಢಿಯನ್ನು ನೆನಪಿಗೆ ತರುತ್ತದೆ. +ಅಣ್ಣ ಐದು ಖಂಡುಗ ಬೀಜ ಬಿತ್ತುವಷ್ಟು ವಿಸ್ತಾರವಾದ ಗದ್ದೆಗಳ ಒಡೆಯ, ಸಿರಿವಂತ. +ಅದರಿಂದಲೇ ಮನೆಯು ಕಲ್ಲು ಕದ, ಕಲ್ಲು ಮಾಳಿಗೆಯುಳ್ಳದ್ದಾಗಿರಲು ಸಾಧ್ಯವಾದುದು. +ಇಲ್ಲಿನ ಸಲುಜಾಣನ ಹಂಚಿಕೆಯೂ ಹೊಸದಲ್ಲ, ಅತ್ತಿಗೆಯ ಮೇಲೆ ಮೋಹ ಮಾಡಿ ಬಂದ ಮೈದುನನೂ ಆಕೆ ಕದ ತೆಗೆಯದಿದ್ದಾಗ, ಅವಳು ಹೊರಗೆ ಬರುವಂತೆ ಮಾಡಲು ಕೊಟ್ಟಿಗೆಯ ದನಗಳನ್ನು ಬಿಡುವುದಿದೆ. +ತಿಮ್ಮಕ್ಕನ ಪದದಲ್ಲೂ ಇದೇ ಹಂಚಿಕೆಯಿದೆ. +ಇಲ್ಲಿ ಬಣ್ಣ ಹಚ್ಚಿದ ಡಾಬನ್ನು ಹಿಡಿದುಕೊಂಡು ಹುಡುಗಿ ಮಾಲಕ್ಷ್ಮಿ ಕಲ್ಲು ಮಾಳಿಗೆ ಇಳಿದು ಬಂದುದರಲ್ಲಿ ಸ್ವಲ್ಪ ಮಾತ್ರ ವೈಶಿಷ್ಟ್ಯವಿದೆ. +ಪ್ರಾಯದ ಮದವತಿ ಮಾಲಕ್ಷ್ಮಿಯು ಸುಲಭವಾಗಿ ಸೋದರ ಭಾವನಿಗೆ ಈಲಾಗುತ್ತಾಳೆ. +ಅವಳು ತನ್ನನ್ನು ಒಲಿದವಳು ಎಂಬುದನ್ನು ಖಾತ್ರಿ ಮಾಡಿಕೊಳ್ಳಲು ಸಲುಜಾಣನು ಅತ್ತಿಯ ಮಗನಲ್ಲ ಯಂತಾಗಿ ಹೇಳಿದುದು, ಅವನು ಜಾಣ ಎಂಬುದನ್ನು ಸೂಚಿಸುತ್ತದೆ. +ಪಗಡೆಯಾಡುವದು ಇಲ್ಲಿ ಇಲ್ಲ. +ಇಬ್ಬರೂ ಸಹಭೋಜನ ಮಾಡಿದ್ದಷ್ಟರಲ್ಲಿ ಅಣ್ಣನು ಹಿಂತಿರುಗಿ ಬಂದುದಿದೆ. +ಪಗಡೆಯಾಟ ಮೂಲಗೀತದಲ್ಲಿದ್ದಿರಬೇಕು. +ಅಣ್ಣನಿಗೆ ಸ್ವಪ್ನ ಬಿದ್ದು ಬರುವ ಪ್ರಸಂಗ ಇಲ್ಲಿಲ್ಲ. +ಮಾಲಕ್ಷ್ಮಿಗೆ ಪ್ರಾಯ ಬಂದುದು ಅಣ್ಣನಿಗೆ ತಿಳಿದಿದ್ದಿರಲಿಲ್ಲ ಎಂದು ತಿಳಿವಂತಿದೆ. +ಅವಳು ಕಿರುಗಣಿ ಉಡುತ್ತಿದ್ದಳು. +ಕಿರುಗಣಿ ಉಡುವಾಗ ಬರೇ ಸೊಂಟದವರೆಗೆ ಸೀರೆ ಸುತ್ತಿ, ರವಕೆ ಹಾಕಿಕೊಳ್ಳುವ ಪದ್ಧತಿ ಹಿಂದೆ ಇತ್ತು. +ಇತ್ತೀಚೆಗೆ ಕಿರುಗಣಿ ಉಡುವುದನ್ನು ಬಿಟ್ಟು ಹುಡುಗಿಯರು ಅಂಗಿಯನ್ನಾಗಲಿ, ಸ್ಕರ್ಟ ಆಗಲಿ ಧರಿಸುವುದು ರೂಢವಾಗಿದೆ. +ಆದರೆ, ಈ ಗೀತದ ರಚನೆಯ ಕಾಲವು ಹಳೇ ಕಾಲ. +ಅದರಿಂದ ಕಿರುಗಣಿಯನ್ನು ಉಟ್ಟ ತಂಗಿಯ ಪ್ರಾಯ ಬಂದು, ಮೊಲೆ ಮೂಡಿಬಂದುದು ಅಣ್ಣನಿಗೆ ತಿಳಿಯದೆಯೇ ‘ತಂಗಿ ಇನ್ನೂ ಚಿಕ್ಕವಳು’ ಎಂದು ‘ತಾನು ಯುದ್ಧಕ್ಕೆ ಹೋಗಿ ಬರುವೆ’ ಎಂದು ಹೇಳಿ ಯುದ್ಧಕ್ಕೆ ಹೋಗಲು ಹೊರಟವನು ದನಗಳ ಗುಂಪನ್ನು ಹೊರಗೆ ದಬ್ಬಿದ್ದನ್ನು ನೋಡಿ ಮರಳಿ ಮನೆಗೆ ಬಂದನು. +ಆಗ ತಂಗಿಯು ಭಾವನೊಡನೆ ಊಟ ಮಾಡಿ, ಚಂದವಾಗಿ ಉಳಿದಿದ್ದರಿಂದ ‘ಪ್ರಾಯ ಬಂದಿದೆ ಅವಳಿಗೆ’ ಎಂದು ತಿಳಿದ ಅಣ್ಣನು ತಾನೇ ಭಾವನೊಡನೆ ಜತೆಯಾಗಿದ್ದುದನ್ನು ನೋಡಿ, ‘ಇನ್ನು ಮದುವೆ ಮಾಡಿಕೊಳ್ಳಿ’ ಎಂದು ಹೇಳಿ ದೇಶಾಂತರಕ್ಕೆ ಹೋದನು ಎಂಬಲ್ಲಿಗೆ ಮುಕ್ತಾಯವಾಗಿದೆ. +ಕೆಲವು ವಿವರಗಳ ಕೊರತೆಯಿದ್ದ ಈ ಪಾಠದಲ್ಲಿ ವೈಶಿಷ್ಟ್ಯಗಳು ಇರುವುದರಿಂದ ಇದಕ್ಕೆ ತಕ್ಕಮಟ್ಟಿಗಿನ ಗುಣ ಬಂದಿರುತ್ತದೆ. +ಇಲ್ಲಿ ತನ್ನ ತಂಗಿಯನ್ನು ಬೇರೆ ಕಡೆಗೆ ಮದುವೆ ಮಾಡಿ ಕಳಿಸಲಾರದ ಅಣ್ಣನ ಪ್ರೇಮದ ಚಿತ್ರಣವಿದೆ. +ಅದು ಸೋದರ ಭಾವನೊಡನೆ ಅವಳು ಮದುವೆಯಾದರೂ ತವರಮನೆಗೆ ಎರವಾಗುವಳು ಎಂಬ ಬೇಸರ ಅಣ್ಣನಿಗಿತ್ತು. +ಸುಪ್ರಸಿದ್ಧವಾದ “ಕಾಳಿಂಗರಾಯ” ಕಥನಗೀತದ ಪ್ರಭಾವವು ಕರ್ನಾಟಕದಲ್ಲೆಲ್ಲಾ ಪಸರಿಸಿದ್ದಿತು. +ವಿವರವಾಗಿ ನಾಟಕೀಯವಾಗಿ ನಿಬಿಡವಾದ ಕಾವ್ಯ ಗುಣದಿಂದ ಕೂಡಿ ಕರಾಕ್ರ ಸಂಪಾದಿತ-- ‘ಕಾಳಿಂಗರಾಯ’ ಕಥನಗೀತವು ಹಿರಿಮೆಯನ್ನು ಪಡೆದು ಪ್ರಸಿದ್ಧವಾಗಿದೆ. +ಡಾ| ಎಂ.ಎಸ್.ಸುಂಕಾಪುರರು ಸಂಪಾದಿಸಿದ ಗ್ರಂಥದಲ್ಲಿ ‘ಚೆನ್ನಮ್ಮನ ದಂಡಿ’ ಎಂಬ ಹೆಸರಿನಿಂದ ಈ ಕಥನಗೀತವು ಪ್ರಸಿದ್ಧವಾಗಿದೆ. +ನನ್ನ ಸಂಗ್ರಹದ “ಕಾಳಿಂಗರಾಯ” ಅತಿಶಯ ಸಂಕ್ಷಿಪ್ತವಾಗಿ, ಸರಳವಾಗಿ ಕಥನವನ್ನು ನಿರೂಪಿಸಿ ಲಗುಬಗನೆ ಮುಗಿದುಹೋಗಿದೆ. +ಇಲ್ಲಿನ ಕತ್ತಲರಾಯ ಹೇಗಿದ್ದ ಎಂಬುದನ್ನು ‘ಚಿತ್ರೊಳ್ಳಾ ಬಿನುಮಣ್ಣಾ’ ಎಂದು ಸೂಚಿಸಲಾಗಿದೆ. +ಚಿತ್ರದಲ್ಲಿ ಬರುವಂತೆ ಬಿನುಮ ಚಂದವಾಗಿದ್ದನಂತೆ. +ಮುಪ್ಪಿನ ಕಾಲದಲ್ಲಿ ಸಂತತಿಗಾಗಿ ಬೇಡಲು ಸೂಲಿಸಕರ (ಸೂರ್ಯಚಕ್ರ) ಸೂರ್ಯದೇವನ ಬಳಿಗೆ ಹೋದನೆಂಬಲ್ಲಿ ಒಂದು ವೈಶಿಷ್ಟ್ಯವಿದೆ. +ಸೂರ್ಯ ಕಣ್ಣಿಗೆ ಕಾಣುವ ದೇವರು, ಅವನ ಬಳಿ ಆಸೆಯನ್ನು ತಿಳಿಸಿದಾಗ-- ಮಾವಿನ ಹಣ್ಣನ್ನು ದೇವರು ಕೊಟ್ಟು, “ಮಡದಿ ಮಾಲಕ್ಷ್ಮಿಗೆ ಕೊಡು” ಎಂದು ಹೇಳಿದನು. +ಒಂದು ಅವಳು ಅದನ್ನು ತಿನ್ನಬೇಕೆಂದು ಕೊಡುವಾಗ ಹೇಳಿದುದು, ಅವಳು ಅದನ್ನು ಕಚ್ಚಿಯೋ, ಕೊಯ್ದೋ ತಿಂದುದು ಇದ್ದ ಸಾಲುಗಳನ್ನು ಹೇಳಲಿಲ್ಲ. +ಮುಂದೆ ಗರ್ಭಿಣಿಯಾಗಿ ಒಂದೊಂದು ತಿಂಗಳಲ್ಲೂ ಒಂಬತ್ತು ತಿಂಗಳಲ್ಲಿ ಹಡೆದುದು ಮಾತ್ರ, ಅವಳಿಗುಂಟಾದ ಬಯಕೆಗಳನ್ನು ಸ್ವಲ್ಪ ವಿವರವಾಗಿ ತಿಳಿಸಿದ್ದು, ನಮ್ಮ ಹೆಂಗಳೆಯರು ಪೂರೈಸಿದರೆಂಬುದು ಇಲ್ಲಿ ಉಕ್ತವಾಗಿಲ್ಲ; +ಇಲ್ಲಿ ಸೂಲಗಿತ್ತಿ ಬಂದುದನ್ನು ಹೇಳಲಿಲ್ಲ. +ಪುತ್ರ ಜನಿಸಿದ ಮೇಲೆ ಭಟ್ಟರ ಬಳಿಗೆ ಹೋಗಿ ನಾಮಕರಣ ಯಾವುದೆಂದು ಕೇಳಿ ಹುಟ್ಟಿದ ಗಳಿಗೆಯನ್ನು ಕೇಳಿದುದುಂಟು. +ಪಂಚಾಂಗ ತೆಗೆದು ನೋಡಿ (ಭಟ್ಟರು ಕೊಟ್ಟ ಹೆಸರು) ‘ಹನ್ನೆರಡು ವರ್ಷ ವಯಸ್ಸಿಗೆ ಕಾಳಿಂಗರಾಯ ಹುಲಿಯ ರೂಹ (ಚಿತ್ರ) ನೋಡಿ ಮಡಿಯುತ್ತಾನೆ’ ಎಂದು ಹೇಳಿದ್ದನ್ನು ಕೇಳಿ ಬಂದನು ರಾಜ. +ಹನ್ನೆರಡು ವರ್ಷ ಪ್ರಾಯದಲ್ಲಿ ಅಂಬು-ಬಿಲ್ಲು ಬೇಕೆಂದು ತಾಯಿಗೆ ಹೇಳಿ ಪಡೆದು ಹಕ್ಕಿ ಬೇಟೆಗೆ ಹೋದನು ಕಾಳಿಂಗ. +ಹುತ್ತಿನ ಕೆಳಗೆ ಹುಲಿ ರೂಪನ್ನು ನೋಡಿಯೇ ಮಡಿದನು. +ಬಾಲಕರು ಹೇಳಿದ ಮಾತು ಕೇಳಿದ ತಾಯಿ-ತಂದೆ ದುಃಖಪಟ್ಟರು ಮತ್ತು ದೇವಾಲಯದಲ್ಲಿ ಮಗನ ಶವವನ್ನಿಟ್ಟ ರಾಜ- ಹತ್ತು ಹೇರು ಹೊನ್ನ ಕೊಟ್ಟ, ಬಡವನ ಏಳನೆ ಮಗಳು ಹೊನ್ನಮ್ಮನನ್ನು ಸೊಸೆಯಾಗಿ ತಂದನು. +ಹೊನ್ನನ್ನು ಅಳೆದು ಕೊಟ್ಟು ತಂದವಳು ಹೊನ್ನಮ್ಮ. +ಹೊನ್ನಮ್ಮನನ್ನೇ ಚಿನ್ನಮ್ಮ ಎಂದು ಕರೆದುದುಂಟು. +ಗೀತದಲ್ಲಿ ತಂದೆ ಹೊನ್ನಮ್ಮನನ್ನು ಸತ್ತವನಿಗೆ ಮದುವೆ ಮಾಡಿಕೊಡುವ ಕಾರ್ಯಕ್ರಮವನ್ನು ಹೇಳದೆ-- ‘ಹಾಳುಬಿದ್ದ ದೇವಾಲಯದಲ್ಲಿ ಹೆಣದೊಡನೆ ಅವಳನ್ನು ಕೂಡಿ ಹಾಕಿ ಕತ್ತಲರಾಯನು ಮೀಡ(ಅಗುಳಿ) ಜಡಿದು ಹೋದ’ ಎಂದು ತಿಳಿಸಿದ್ದು ನಿರೂಪಣೆಯ ಅವಸರದ ಸರಣಿಯನ್ನೇ ತೋರಿಸುತ್ತದೆ. +ಮೂರು ಎಳ್ಳುಂಡೆಗಳನ್ನು ತಾಯಿ ಕೊಟ್ಟಿದ್ದಳು ಚಿನ್ನಮ್ಮನಿಗೆ, ಅವನ್ನು ಮುರಿದು ಬಹುಶಃ ಹಾರಿಹೋದ ಸಾಲುಗಳಲ್ಲಿ ದೇವರಿಗೆ ಅರ್ಪಿಸಿದ್ದಿರಬೇಕು. +ಪಾರ್ವತಿಪರಮೇಶ್ವರರು ಬಂದರು. +ಯಾರೆಂದು ಕೇಳಿದಾಗ, ಅದಕ್ಕೆ ಹೇಳಿದ್ದು ‘ಇಲ್ಲಿಲ್ಲ, ಗಂಡನ ಹೆಣದ ಕೈಹಿಡಿದು ಕುಳ್ಳಿರಿಸು’ ಎಂದು ಹೇಳಿ ಮಾಯವಾದರು ಅವರು. +ಬೆಳಗಾದ ಮೇಲೆ ಬೆಂಕಿಪೆಟ್ಟಿಗೆ ಸೌದೆ ತಂದನು ಕತ್ತಲರಾಯ, ಇತ್ತ ಇಬ್ಬರೂ ಪಗಡೆಯಾಟ ಆಡುತ್ತ ಕುಳಿತಿದ್ದರು. +ಇದು ಕಥೆಯಲ್ಲಿ ಒಳ್ಳೇ ಸಂದು(ಆಶಯ). +ಕತ್ತಲರಾಯ ಅವನು ನೋಡಿ ಬಾಗಿಲು ತೆರೆದು ಹಕ್ಕಿ ಬೇಟೆಗೆ ಹೋಗಿದ್ದು, ಇದು ಕಥಾನಕದ ಚಮತ್ಕಾರ ಆಶಯವಾಗಿದೆ. +ವರ್ತಮಾನ ತಿಳಿದು ಅತ್ತೆ ಓಡೋಡಿ ಬಂದು ಚಿನ್ನಮ್ಮನನ್ನು ಕರೆತಂದು ಮುತ್ತ ಕಂಡಂತೆ ಸಲುಹಿದಳು. +ಈ ಎಲ್ಲಾ ಗೀತಗಳ ನಿರೂಪಣೆಯಲ್ಲಿ ಎಲ್ಲಿಯೂ ಯಾವುದೇ ಗೋಜಲು ಇಲ್ಲ, ಸಲೀಸಾಗಿ ಹೇಳಲಾಗಿದೆ. +ವಿವರ ಇದ್ದರೆ ಒಳ್ಳೆಯದಾಗಿತ್ತು, ಮುಖ್ಯ ಕಥೆಯ ಸಂಕ್ಷಿಪ್ತ ರೂಪವನ್ನಷ್ಟೇ ಹೇಳಿ ಮುಗಿಸಲಾಗಿದೆ ಇಲ್ಲಿ. +“ಸೂರ್ಯಚಕ್ರ” ಕಥನ ಗೀತವು ಒಂದು ಒಳ್ಳೆಯ ಕಥನ ಗೀತವಾಗಿದೆ. +ಅಣ್ಣ-ತಮ್ಮ, ತಂಗಿಯರ ಒಬ್ಬರ ಮೇಲೊಬ್ಬರ ಗೌರವ, ಪ್ರೀತಿ ಬಹಳ ಸುಂದರವಾಗಿ ನಿರೂಪಿತವಾಗಿದೆ. +ಎಲ್ಲರೂ ತುಂಬಾ ಅನ್ಯೋನ್ಯವಾಗಿದ್ದಾರೆ. +ದಂಡಿಗೆ ಹೊರಟಾಗ ಆದ ಅಪಶಕುನಗಳಿಂದ ಹೆದರಿದ ಹೆಂಡತಿ ಬಹಳವಾಗಿ ಗಂಡನನ್ನು ಪ್ರಾರ್ಥಿಸುತ್ತಾಳೆ. +ಆದರೂ ಕರ್ತವ್ಯ ನಿಷ್ಠನಾದ ತಮ್ಮ ಸೂರ್ಯಚಕ್ರ ಅದೊಂದನ್ನೂ ಲೆಕ್ಕಿಸದೆ ದಂಡಿಗೆ ಹೋಗಿ ಕಾದಾಡುತ್ತಾನೆ ಗುಂಡು ತಾಗಿದರೂ ತಿರುಗಿ ಮನೆಗೇ ಬಂದು ಪ್ರಾಣಬಿಡುತ್ತಾನೆ.