diff --git "a/Data Collected/Kannada/MIT Manipal/Kannada-Scrapped-dta/\340\262\262\340\263\201\340\262\265\340\263\200\340\262\250\340\262\276.txt" "b/Data Collected/Kannada/MIT Manipal/Kannada-Scrapped-dta/\340\262\262\340\263\201\340\262\265\340\263\200\340\262\250\340\262\276.txt" new file mode 100644 index 0000000000000000000000000000000000000000..bde2f90b1bb6e53d833535b55f6a04eb663af7d4 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\262\340\263\201\340\262\265\340\263\200\340\262\250\340\262\276.txt" @@ -0,0 +1,305 @@ +ದಕ್ಷಿಣದಲ್ಲಿರುವ ಎಲ್ಲಾ ಬೆಟ್ಟಗಳಲ್ಲಿ ಲುವೀನಾ ಬೆಟ್ಟವೇ ತೀರ ಎತ್ತರ, ಮತ್ತೆ ಅದರ ತುಂಬ ಕಲ್ಲು ಬಂಡೆ. +ಸುಣ್ಣ ಮಾಡುತ್ತಾರಲ್ಲ, ಅಂಥ ಕಲ್ಲು ಜಾಸ್ತಿ ಇವೆ. +ಲುವೀನಾದಲ್ಲಿ ಯಾರೂ ಸುಣ್ಣ ಅರೆಯುವುದಿಲ್ಲ. +ಅಥವಾ ಆ ಕಲ್ಲನ್ನ ಬೇರೆ ರೀತಿ ಉಪಯೋಗಿಸುವುದೂ ಇಲ್ಲ. +ಅದನ್ನ ಅವರು ಒಡ್ಡಗಲ್ಲು ಅನ್ನುತ್ತಾರೆ. +ಲುವೀನಾದ ಕಡೆಗೆ ಇರುವ ಏರನ್ನು ಒಡ್ಡಗಲ್ಲು ಬೆಟ್ಟ ಅಂತ ಕರೆಯುತ್ತಾರೆ. +ಗಾಳಿ, ಬಿಸಿಲು ಸೇರಿ ಒಡ್ಡಗಲ್ಲನ್ನು ಮುರಿದಿವೆ. +ಅದರ ಸುತ್ತ ಇರುವ ಮಣ್ಣು ಬೆಳಗಿನ ಇಬ್ಬನಿ ಬಿದ್ದಿದೆಯೋ ಅನ್ನುವ ಹಾಗೆ ಬೆಳ್ಳಗೆ ಹೊಳೆಯುತ್ತಿದೆ. +ಇದೆಲ್ಲ ಬರಿಯ ಮಾತು ಅಷ್ಟೇ. +ಲುವೀನಾದಲ್ಲಿ ಹಗಲು ಕೂಡ ರಾತ್ರಿಯಷ್ಟೇ ಚಳಿ ಇರುತ್ತದೆ. +ಇಬ್ಬನಿ ನೆಲಕ್ಕೆ ಬೀಳುವ ಮೊದಲು ಇರುಳ ಆಕಾಶದಲ್ಲಿ ದಟ್ಟವಾಗಿ ಇರುಕಿಕೊಂಡಿರುತ್ತದೆ. +ನೆಲ, ಕಡಿದಾದ ಇಳಿಜಾರು. +ಅಲ್ಲಲ್ಲಿ ಕೊಚ್ಚಿ ಹಾಕಿದ ಹಾಗೆ ದೊಡ್ಡ ಕಮರಿಗಳು. +ತಳವೇ ಕಾಣುವುದಿಲ್ಲ ಅನ್ನುವಷ್ಟರ ಆಳ. +ಈ ಕಮರಿಗಳಿಂದ ಕನಸು ಎದ್ದು ಬರುತ್ತವೆ ಅನ್ನುತ್ತಾರೆ ಲುವೀನಾದ ಜನ. +ನನಗೆ ಕೇಳುವುದು ಆ ಕಮರಿಗಳಿಂದ ಗಾಳಿ ಮೇಲೆದ್ದು ಬರುವುದು-ತಳದಲ್ಲಿ ಯಾರೋ ಸೆರೆಯಲ್ಲಿಟಿದ್ದು ಈಗ ಬಿಡಿಸಿಕೊಂಡು ಬರುತ್ತಿದೆ ಅನ್ನುವ ಹಾಗೆ ಸುಂಟರಗಾಳಿಯ ಥರ ಎದ್ದು ಬರುವ ಗಾಳಿ ಮಾತ್ರ. +ಎಲ್ಲಾ ಕಡೆ ಬೆಳಯುವ ಕಹಿ ಎಲೆ… ಬಿಡುವುದಿಲ್ಲ ಅದು. +ಆ ಪುಟ್ಟಗಿಡಗಳು ಬೆಟ್ಟದ ಮೈಗೆ ಒತ್ತಿಕೊಂಡ ಹಾಗೆ ಅವುಕಿಕೊಂಡಿದ್ದರೂ ಗಾಳಿ ಕಿತ್ತು ಬಿಸಾಡುತ್ತದೆ. +ಬಂಡೆಗಳ ನಡುವೆ, ನೆರಳು ಇರುವ ಕಡೆ, ಅಪರೂಪಕ್ಕೆ ಪುಟ್ಟ ಚಿಕಲೋಟೆ ಗಿಡ ಬೆಳದು ಬಿಳಿಯ ಹೂ ಬಿಡುತ್ತವೆ. +ಆದರೆ ಮಾತ್ರ ಬೇಗ ಒಣಗುತವೆ. +ಚಿಕಲೋಟೆ ಗಿಡಗಳ ಮುಳ್ಳು ಕಡ್ಡಿಗಳು ಗಾಳಿಯನ್ನು ಪರಚುತ್ತ ಸಾಣೆ ಕಲ್ಲಿನ ಮೇಲಿನ ಚಾಕುವಿನ ಹಾಗೆ ಸದ್ದು ಮಾಡುತ್ತವೆ. +"ಲುವೀನಾ ಮೇಲೆ ಬೀಸುವ ಗಾಳಿ ನೀನೇ ನೋಡುತ್ತೀಯ. +ಕಪ್ಪಗೆ ಇರುತದೆ. +ಜ್ವಾಲಾಮುಖಿಯ ಮರಳು ಹೊತ್ತು ಬರುತದೆ, ಅದಕ್ಕೇ ಕಪ್ಪಗೆ ಅನ್ನುತಾರೆ. +ನಿಜ ಏನು ಅಂದರೆ ಗಾಳಿಯೇ ಕಮ್ರ ಗಾಳಿ ನೀನೇ ನೋಡುತೀಯ. +ಲುವೀನಾಕ್ಕೆ ಬಂದು ವಾಸ್ತವ್ಯ ಮಾಡಿ ಊರಿನ ಎಲ್ಲ ವಸ್ತುಗಳನ್ನೂ ಕಚ್ಚುವ ಹಾಗೆ ಅಂಟಿಕೊಂಡು ಜೋತು ಬಿದ್ದಿರುತದೆ. +ಎಷ್ಟೋ ದಿನ ಮನೆ ಮನೆಯ ಚಾವಣಿಗಳನ್ನು ಹುಲ್ಲಿನ ಟೋಪಿಗಳ ಹಾಗೆ ಹೊತ್ತುಕೊಂಡು ಹೋಗುತ್ತದೆ. +ಮನೆಗಳನ್ನೆಲ್ಲ ರಕ್ಷಣೆ ಇಲ್ಲದೆ ಬತ್ತಲಾಗಿ ನಿಲ್ಲಿಸುತದೆ. +ಆಮೇಲೆ ಗಾಳಿ, ಉಗುರು ಇದೆಯೇನೋ ಅದಕ್ಕೆ ಅನ್ನುವ ಹಾಗೆ ಪರಚುತ್ತದೆ. +ಹಗಲೂ ರಾತ್ರಿ ಗಂಟೆಗಟಲೆ ಹೊತ್ತು ಬಿಡುವೇ ಇಲ್ಲದೆ ಗೋಡೆಗಳನ್ನು ಪರಚುತ್ತ, ಇಷ್ಟಿಷ್ಟಗಲ ನೆಲದ ಮಣ್ಣು ಕೆತ್ತಿಕೊಂಡು ಹೋಗುತ್ತ, ಬಾಗಿಲ ಬುಡವನ್ನು ಹಾರೆಯ ಹಾಗೆ ಎಬ್ಬುತ್ತ ನಮ್ಮೊಳಗೂ ಸೇರಿ ಪ್ರಕ್ಷುಬ್ಧವಾಗಿ ಅಬ್ಬರಿಸುತ್ತ ಮೂಳೆ ಕೀಲುಗಳನ್ನೆಲ್ಲ ಕಳಚಿ ಹಾಕುತದೆ ನೀನೇ ನೋಡುತೀಯ . +ಮಾತನಾಡುತ್ತಾ ಇದ್ದ ಮನುಷ್ಯ ಹೊರಗೆ ನೋಡುತ್ತಾ ಸ್ವಲ್ಪ ಹೊತ್ತು ಸುಮ್ಮನಿದ್ದ. +ನದಿಯ ನೀರು ಕಾಮಿಚಿನ್ ಕೊಂಬೆಗಳ ಮೇಲೆ ಹರಿಯುವ ಶಬ್ದ ಅವರ ಕಿವಿಯನ್ನು ಮುಟ್ಟುತಿತ್ತು. +ಬಾದಾಮಿ ಮರದ ಎಲೆಗಳ ನಡುವೆ ಗಾಳಿ ಸುಳಿಯುತ್ತಿರುವ ಸುದ್ದಿ, ಅವರಿದ್ದ ಅಂಗಡಿಯಿಂದ ಬೀದಿಯ ಮೇಲೆ ಬೀಳುತಿದ್ದ ಬೆಳಕಿನ ಇಷ್ಟಗಲ ಜಾಗದಲ್ಲಿ ಆಡುತಿದ್ದ ಹುಡುಗರ ಚೀರಾಟ ಇವೂ ಅವರಿಗೆ ತಲುಪುತಿದ್ದವು. +ಪತಂಗಗಳು ಬಂದು ಎಣ್ಣೆಯ ದೀಪಕ್ಕೆ ಎರಗುತ್ತ ರೆಕ್ಕೆ ಸುಟ್ಟು ಬೀಳುತಿದ್ದವು. ರಾತ್ರಿ ಕತ್ತಲು ಹೂರಗೆ ಮತ್ತೂ ಮುಂದಡಿ ಇಡುತ್ತ ಬರುತಿತ್ತು. +"ಹೇಯ್, ಕ್ಯಾಮಿಲೋ! ಇನ್ನೂ ಎರಡು ಬಿಯರ್ ಕೊಡು."ಅಂದು ಆ ಮನುಷ್ಯ ಮಾತು ಮತ್ತೆ ಶುರುಮಾಡಿದ. +"ಇನ್ನೂ ಇದೆ ಸ್ವಾಮೀ. +ನಿಮಗೆ ಲುವೀನಾದಲ್ಲಿ ನೀಲಿ ಆಕಾಶ ಕಾಣುವುದೇ ಇಲ್ಲ. +ಇಡೀ ದಿಗಂತಕ್ಕೆ ಬಣ್ಣವೇ ಇಲ್ಲ. +ಯಾವಾಗಲೂ ಮೋಡ ಮುಚ್ಚಿರುತ್ತದೆ. +ಬೂದಿ ಮಂಕು ಬಣ್ಣ ಹೋಗುವುದೇ ಇಲ್ಲ.ಬೆಟ್ಟದ ನೆತ್ತಿ ಬೋಳು. +ಒಂದು ಮರವೂ ಇಲ್ಲ. +ಕಣ್ಣಿನ ನೋಟ ತಡೆದು ನಿಲ್ಲುವುದಕ್ಕೆ ಹಸಿರು ಅನ್ನುವುದು ಎಲ್ಲೂ ಇಲ್ಲ. + ಸುಣ್ಣಧೂಳು ಬೆರೆತ ಮೋಡವೇ ಎಲ್ಲೆಲ್ಲೂ ಕವಿದುಕೊಂಡಿರುತದೆ. + ನೀನೇ ನೋಡುತ್ತೀಯ ಆ ಬೆಟ್ಟಗಳನ್ನ. + ಬೆಳಕು ಸತ್ತಿದೆಯೋ ಅನ್ನುವ ಹಾಗೆ ಇರುವ ಜಾಗ. + ಮೇಲೆ, ತುದಿಯಲ್ಲಿ ಲುವೀನಾ, ಬಿಳೀ ಮನೆಗಳ ಊರು, ಸತ್ತ ಮನುಷ್ಯನ ತಲೆಯ ಕಿರೀಟದ ಹಾಗೆ…" +ಮಕ್ಕಳ ಗಲಾಟೆ ಇನ್ನೂ ಹತ್ತಿರವಾಗುತ್ತ ಅಂಗಡಿಯೊಳಕ್ಕೇ ಬಂದಿತು. +ಅದಕ್ಕೇ ಆ ಮನುಷ್ಯ ಎದ್ದು ನಿಂತ. +ಬಾಗಿಲಿಗೆ ಹೋದ. +"ಹೋಗಿ ಇಲ್ಲಿಂದ ತೊಂದರೆ ಕೊಡಬೇಡಿ. +ಹೊರಗೆ ಹೋಗಿ ಆಟ ಆಡಿಕೊಳ್ಳಿ. +ಗಲಾಟೆ ಮಾಡಬೇಡಿ,"ಅಂದ. +ವಾಪಸ್ಸು ತಾನು ಕೂತಿದ್ದ ಟೇಬಲ್ಲಿಗೆ ಹೋಗಿ ಕೂತು ಮಾತು ಮುಂದುವರೆಸಿದ: +"ಹ್ಞೂಂ ಹೇಳತಾ ಇದ್ದೆನಲ್ಲ. +ಇಲ್ಲಿ ಮಳೆ ತುಂಬ ಕಡಮೆ. +ವರ್ಷದ ಮಧ್ಯದಲ್ಲಿ ಒಂದಾದ ಮೇಲೆ ಇನ್ನೊಂದು ಬಿರುಗಾಳಿ ಬಂದು ಅಪ್ಪಳಿಸುತದೆ. +ಭೂಮಿಯನ್ನೆಲ್ಲ ಸೀಳಿ ಹಾಕಿ ಒಳಗಿದ್ದ ಕಲ್ಲುಗಳ ಸಮುದ್ರವನ್ನಷ್ಟೇ ನೆಲದ ಮೇಲೇ ತೇಲುವ ಹಾಗೆ ಉಳಿಸಿ ಹೋಗುತದೆ. +ಆಮೇಲೆ, ತಿದಿಯ ಹಾಗೆ ಉಬ್ಬಿಕೊಂಡು ಬೆಟ್ಟದಿಂದ ಬೆಟ್ಟಕ್ಕೆ ಅಲೆಯುವ ಮೋಡ ನಿಧಾನವಾಗಿ ಉರುಳಿಕೊಂಡು ಹೋಗಿ ಬೆಟ್ಟದ ನೆತ್ತಿಗೆ ಡಿಕ್ಕಿ ಹೊಡೆದು, ಸದ್ದು ಮಾಡಿ, ಹಿಮ್ಮೆಟ್ಟಿ, ಬೆಟ್ಟದ ಅಂಚು ಸೀಳುವ ಹಾಗೆ ಮತ್ತೆ ಒತ್ತರಿಸಿಕೊಂಡು ಹೋಗುವುದನ್ನು ನೋಡುವುದಕ್ಕೆ ಚೆನ್ನಾಗಿರತದೆ. +ಹತ್ತು ಹನ್ನೆರಡು ದಿನ ಹೀಗಿದ್ದು ಹೋಗಿ ಬಿಡುತವೆ, ಮತೆ ಮುಂದಿನ ವರ್ಷದವರೆಗೂ ಪತ್ತೆ ಇರುವುದಿಲ್ಲ. +ಒಂದೊಂದು ಸಾರಿ ಎಷ್ಟೋ ವರ್ಷ ಬರುವುದೇ ಇಲ್ಲ…" +ಹ್ಞೂಂ ಮಳೆ ಕಡಮೆ. +ಇಲ್ಲವೇ ಇಲ್ಲ. +ಬಿದ್ದರೂ ನಾಕೈದು ಹನಿ. + ನೆಲ ಹಳೆಯ ಚರ್ಮದ ಹಾಗೆ ಒಣಗಿ, ಕುಗ್ಗಿ, ಬಿರುಕು ಬಿಟ್ಟಿದೆ. + ಆ ಬಿರುಕುಗಳನ್ನ ನೀರಿನ ದಾರಿ ಅಂತ ಕರೆಯುತ್ತಾರೆ ಇಲ್ಲಿನ ಜನ. + ಮತ್ತೇನಿಲ್ಲ, ಅವು ಕಲ್ಲಿನಷ್ಟು ಗಟ್ಟಿಯಾಗಿರುವ ಮೊನಚು ತುದಿಯ ಮಣ್ಣ ಹೆಂಟೆಗಳು. + ಕಾಲಿಗೆ ತಾಕಿದರೆ ಮುಳ್ಳು ನೆಲದ ಮೇಲೆ ನಡೆದಷ್ಟು ನೋವು. + ಇಲ್ಲಿ ನೆಲ ಇರುವುದೇ ಹಾಗೆ." +ಬಾಟಲಿಯ ತಳದಲ್ಲಿ ಬುರುಗು ಮಾತ್ರ ಉಳಿಸಿ ಬಿಯರ್ ಪೂರಾ ಕುಡಿದು ಮತ್ತೆ ಮಾತಾಡಿದ. +"ಯಾವ ಥರ ನೋಡಿದರೂ ಲುವೀನಾ ದುಃಖದ ಊರು. +ಈಗ ನೀನೇ ಅಲ್ಲಿಗೆ ಹೋಗತೀಯಲ್ಲ, ನನ್ನ ಮಾತಿನ ಅರ್ಥ ಆಗುತ್ತದೆ. +ದುಃಖ ಗೂಡು ಕಟ್ಟಿಕೊಂಡಿರುವ ಊರು ಅನ್ನತೇನೆ ನಾನು. +ನಗು ಅನ್ನುವುದು ಅಲ್ಲಿ ಯಾರಿಗೂ ಗೊತ್ತೇ ಇಲ್ಲ. +ಎಲ್ಲಾ ಮುಖಗಳೂ ಹುಟುತ್ತಲೇ ಸೆಟೆದುಕೊಂಡ ಹಾಗೆ ಇವೆ. +ನೀನು ಕಣ್ಣು ಬಿಟ್ಟು ನೋಡಿದರೆ ಒಂದೊಂದು ತಿರುವಿನಲ್ಲೂ ದುಃಖ ಎದುರಿಗೆ ಬರುತ್ತದೆ. +ಊರಲ್ಲಿ ಬೀಸುವ ಗಾಳಿ ದುಃಖವನ್ನು ಚದುರಿಸುತ್ತದೆ. +ಯಾವತ್ತೂ ಹಾರಿಸಿಕೊಂಡು ಹೋಗುವುದಿಲ್ಲ. + ದುಃಖ ಹುಟಿದ್ದೇ ಅಲ್ಲಿ ಆ ಊರಲ್ಲಿ ಅನ್ನುವ ಹಾಗೆ ಅಲ್ಲೇ ಇದ್ದುಬಿಟ್ಟದೆ. + ನೀನು ಬೇಕಾದರೆ ಅದನ್ನು ಮುಟ್ಟಿ ನೋಡಬಹುದು, ರುಚಿ ನೋಡಬಹುದು. + ನಿನ್ನ ಮೇಲೆ ಒತ್ತುತ್ತ ಇರುತದೆ, ಅದುಮುತ್ತ ಇರುತದೆ. + ಎದೆಯ ಗಾಯಕ್ಕೆ ಪೋಲ್ಟೀಸು ಕಟ್ಟಿದ ಹಾಗೆ ಇರುತದೆ. +"…ಹುಣ್ಣಿಮೆಯ ದಿನಗಳಲ್ಲಿ ಲುವೀನಾ ಬೀದಿಗಳಲ್ಲಿ ಕರೀ ಕಂಬಳಿ ಎಳೆದುಕೊಂಡು ಅಲೆಯುವ ಗಾಳಿಯ ಆಕಾರ ಕಾಣುತದೆ ಅನ್ನುತ್ತಾರೆ ಅಲ್ಲಿನ ಜನ. +ಆದರೆ ನನಗೆ ಮಾತ್ರ ಲುವೀನಾದ ಹುಣ್ಣಿಮೆಗಳಲ್ಲಿ ಹತಾಶೆಯ ಆಕಾರ ಮಾತ್ರ ಕಾಣುತಿತ್ತು… ಯಾವಾಗಲೂ. +"ಬಿಯರ್ ಕುಡಿ ನೀನು. +ಮುಟ್ಟೇ ಇಲ್ಲವಲ್ಲಾ, ಹಾಗೇ ಇದೆ ಕುಡಿ. +ಅಥವಾ ನಿನಗೆ ಬೆಚ್ಚಗಿರುವ ಬಿಯರ್ ಇಷ್ಟವಾಗುವುದಿಲ್ಲವೇನೋ. +ಇಲ್ಲಿ ಬೇರೆ ಥರ ಬಿಯರ್ ಸಿಗುವುದಿಲ್ಲ. +ಬೆಚ್ಚಗಿರುವ ಬಿಯರ್‌ಗೆ ರುಚಿ ಇರುವುದಿಲ್ಲ, ಗೊತ್ತು. +ಕತ್ತೆಯ ಉಚ್ಚೆಯ ಹಾಗೆ ಇರುತ್ತದೆ. +ಇಲ್ಲಿಗೆ ಬರತೀಯಲ್ಲ. +ಅಭ್ಯಾಸ ಆಗುತ್ತದೆ ಬಿಡು. +ಲುವೀನಾದಲ್ಲಿ ಇದೂ ಸಿಗಲ್ಲ. +ಅಲ್ಲಿ ಏನಿದ್ದರೂ ಹೋಹಾಸ್ ಎಲೆಗಳನ್ನು ಹಾಕಿ ಮಾಡಿದ ಮೆಸ್ಕಾಲ್ ಹೆಂಡ ಮಾತ್ರ. +ಎರಡು ಗುಟುಕು ಕುಡಿದರೆ ಸಾಕು, ಪೆಟ್ಟು ತಿಂದಾಗ ಆಗುವ ಹಾಗೆ ತಲೆ ಗಿರ್‌ರ್ ಅನ್ನುತದೆ. +ನೀನು ಬಿಯರ್ ಕುಡಿ ಈಗ, ಹೇಳತೇನೆ. +ನನಗೆ ಎಚ್ಚರ ಇದೆ, ಏನು ಹೇಳತಾ ಇದೇನೆ ನನಗೆ ಗೊತ್ತು. +ಹೊರಗೆ ನದಿಯ ಹೆಣಗಾಟ ಇನ್ನೂ ಕೇಳುತಿತ್ತು. +ಗಾಳಿ ಸಣ್ಣಗೆ ಬೀಸುತಿತ್ತು. +ಮಕ್ಕಳು ಆಡುತಿದ್ದರು. +ಈಗಿನ್ನೂ ರಾತ್ರಿ ಶುರುವಾಗಿದೆ ಅನ್ನಿಸುತಿತ್ತು. +ಆ ಮನುಷ್ಯ ಮತ್ತೆ ಎದ್ದು ಬಾಗಿಲವರೆಗೂ ಹೋಗಿ ನೋಡಿ ಬಂದ. +ಈಗ ಮತ್ತೆ ಹೇಳತಾ ಇದಾನೆ: +"ಇಲ್ಲಿ ಕೂತು ನೋಡುವುದು, ಜ್ಞಾಪಿಸಿಕೊಂಡು ಹೇಳುವುದು ಸುಲಭ. +ಒಂದಕ್ಕೊಂದಕ್ಕೆ ಸಂಬಂಧ ಇರಲ್ಲ. +ನನಗೆ ಅಂಥ ಕಷ್ಟ ಇಲ್ಲ. +ಲುವೀನಾ ಬಗ್ಗೆ ಗೊತ್ತಿರುವುದನ್ನೇ ಹೇಳತೇನೆ. +ಅಲ್ಲಿದ್ದೆ ನನ್ನ ಬದುಕನ್ನ ಅಲ್ಲೇ ಬಿಟ್ಟು ಬಂದೆ… +ನನ್ನ ಭ್ರಮೆಗಳೆಲ್ಲ ಗಾಸಿಯಾಗದೆ ಸರಿಯಾಗೇ ಇದ್ದವು ಅಲ್ಲಿಗೆ ಹೋದಾಗ. +ವಾಪಸ್ಸು ಬಂದಾಗ ಮುದುಕನಾಗಿ ಸವೆದು ಬಿಸಾಕುವ ಹಾಗಾಗಿದ್ದೆ. +ಈಗ ನೀನು ಹೋಗತಾ ಇದೀಯ… ಸರಿ. +ನಡದದ್ದೆಲ್ಲ ನನಗೆ ಮೊದಲಿಂದಲೂ ಜ್ಞಾಪಕ ಇದ್ದಹಾಗಿದೆ. +ನಿನ್ನ ಜಾಗದಲ್ಲಿ ನಿಂತು ಯೋಚನೆ ಮಾಡಿ ಹೇಳತೇನೆ. +ನೋಡು, ನಾನು ಮೊದಲು ಲುವೀನಾಕ್ಕೆ ಹೋದಾಗ, ತಾಳು ನಿನ್ನ ಬಿಯರ್ ಕೊಡು ಇಲ್ಲಿ. +ನೀನಂತೂ ಅದನ್ನ ಮುಟ್ಟೇ ಇಲ್ಲ. +ನಾನಾದರೂ ಕುಡೀತೇನೆ. +ನನ್ನ ಪಾಲಿಗೆ ಅದು ಔಷಧ. +ತಲೇನೆಲ್ಲ ಕರ್‍ಪೂರದ ಎಣ್ಣೆ ಹಾಕಿ ತೊಳೆದ ಹಾಗೆ ಇರತದೆ… ಇರಲಿ. +ನಿನಗೆ ಹೇಳತಾ ಇದ್ದೆನಲ್ಲ, ನಾನು ಮೊದಲು ಲುವೀನಾಕ್ಕೆ ಹೋದಾಗ ಕತ್ತೆಗಳ ಮೇಲೆ ಹೇರು ತಂದಿದ್ದವನು ಪ್ರಾಣಿಗಳಿಗೆ ಒಂದಿಷ್ಟು ಬಿಡುವು ಕೂಡ ಕೊಡದೆ ವಾಪಸ್ಸು ಹೊರಟುಬಿಟ್ಟ. +"ನಾನು ಹೊರಟೆ," ಅಂದ. +"ತಾಳು. ಪಾಪ ಅವು ಸ್ವಲ್ಪ ಸುದಾರಿಸಿಕೊಳ್ಳಲಿ,"ಅಂದೆ. +"ಇಲ್ಲಿದ್ದರೆ ಇನ್ನೂ ಅಧ್ವಾನ ಹೊರಟೆ,"ಅಂದ. +"ನಮ್ಮನ್ನ ಒಡ್ಡಗಲ್ಲು ಬೆಟ್ಟದ ಹತ್ತಿರ ಬಿಟ್ಟು, ದೆವ್ವ ಕಂಡರೆ ಓಡುವವನ ಹಾಗೆ ದಡ ದಡ ಹೋಗಿಬಿಟ್ಟ. +"ನಾವು, ಅಂದರೆ ನನ್ನ ಹೆಂಡತಿ, ಮತ್ತೆ ಮೂರು ಮಕ್ಕಳು ಖಾಲಿ ಸಂತೆ ಮಾಳದಲ್ಲಿ ನಿಂತಿದ್ದೆವು. +ನಮ್ಮ ಸಂಸಾರದ ಸಾಮಗ್ರಿಯೆಲ್ಲ ನಮ್ಮ ಜೊತೆಯಲ್ಲೇ ಇತ್ತು. +ಅಲ್ಲಿ ಬರೀ ಗಾಳಿಯ ಸದು ಮಾತ್ರ ಕೇಳುತಿತ್ತು. +"ಗಾಳಿಗೆ ಅಡ್ಡವಾಗಿ ಒಂದೇ ಒಂದು ಗಿಡವೂ ಸಸಿಯೂ ಇಲ್ಲದೆ ನಾವು ಗಾಳಿಗೊಡ್ಡಿಕೊಂಡು ನಿಂತಿದ್ದವು. +"ನನ್ನ ಹೆಂಡತಿಯನ್ನ ಕೇಳಿದೆ-"ಇದು ಯಾವೂರು ಅಗ್ರೀಪಿನಾ? +"ಅವಳು ಸುಮ್ಮನೆ ಭುಜ ಹಾರಿಸಿದಳು. +"ಎಲ್ಲಾದರೂ ತಿನ್ನುವುದಕ್ಕೆ ಏನಾದರೂ ಸಿಗುತ್ತದೋ, ರಾತ್ರಿ ಉಳಿಯುವುದಕ್ಕೆ ಜಾಗ ಇದೆಯೋ ನೋಡಿಕೊಂದು ಬರುತೀಯ? ನಾನು ಮಕ್ಕಳ ಜೊತೆ ಇಲ್ಲೇ ಇರತ್ತೇನೆ,"ಅಂದೆ. +ಚಿಕ್ಕ ಮಗುವನ್ನು ಕರಕೊಂಡು ಹೋದಳು. +ವಾಪಾಸ್ಸು ಬರಲೇ ಇಲ್ಲ. +ಸಂಜೆ ಹೊತ್ತಿಗೆ, ಬೆಟ್ಟದ ನೆತ್ತಿಯ ಮೇಲೆ ಮಾತ್ರ ಬಿಸಿಲು ಇದ್ದಾಗ ಅವಳನ್ನು ಹುಡುಕಿಕೊಂಡು ಲುವೀನಾದ ಇಕ್ಕಟ್ಟು ಬೀದಿಗಳಲ್ಲಿ ಹೊರಟೆ. +ಕೊನೆಗೆ ಚರ್‍ಚಿನಲ್ಲಿ ಸಿಕ್ಕಿದಳು. +ಖಾಲಿ ಚರ್‍ಚಿನ ಮಧ್ಯೆ ನೆಲದ ಮೇಲೆ ಕೂತಿದ್ದಳು. +ಮಗು ತೊಡೆಯ ಮೇಲೆ ಮಲಗಿ ನಿದ್ದೆ ಹೋಗಿತ್ತು. +"ಇಲ್ಲಿ ಏನು ಮಾಡತಾ ಇದೀಯಾ, ಅಗ್ರೀಪಿನಾ? +"ಪಾರ್ಥನೆ ಮಾಡತಾ ಇದೀನಿ." ಅಂದಳು. +ಯಾಕೆ? ಅಂದೆ. +"ಸುಮ್ಮನೆ ಭುಜ ಹಾರಿಸಿದಳು." +ಪಾರ್ಥನೆ ಮಾಡುವುದಕ್ಕೆ ಅಲ್ಲೇನೂ ಇರಲಿಲ್ಲ. +ಖಾಲೀ ಲಟಾರಿ ಕಟ್ಟಡ. +ಬಾಗಿಲು ಇರಲಿಲ್ಲ. +ಮುರಿದ ಕಿಟಕಿ, ಮುರಿದ ಚಾವಣಿ. +ಜರಡಿಯಲ್ಲಿ ಸೋಸಿಕೊಂಡು ಬಂದ ಹಾಗೆ ಗಾಳಿ. +"ಹೋಟೆಲು ಎಲ್ಲಿದೆ?" +ಹೋಟೆಲು ಇಲ್ಲ. +"ಛತ್ರ?"ಛತ್ರ ಇಲ್ಲ. +"ಯಾರಾದರೂ ಕಣ್ಣಿಗೆ ಬಿದ್ದರಾ? +ಇಲ್ಲಿ ಯಾರಾದರೂ ಜನ ಇದಾರಾ? +"ಹೂಂ. ಅಗೋ ಅಲ್ಲಿ ಎದೂರಿಗೆ ಹೆಂಗಸರು. +ಇನ್ನೂ ಇದಾರೆ, ನೋಡು ಬಾಗಿಲ ಹಿಂದೆ, ಬಿರುಕಿನಲ್ಲಿ ಕಣ್ಣಿಟ್ಟು ನಮ್ಮನ್ನೇ ನೋಡತಾ ಇದಾರೆ. +ಕಣ್ಣು ಹೊಳೀತಾ ಇವೆ ನೋಡು. +ಅವರ ಕಣ್ಣು ಗುಡ್ಡೆ ಹೊಳೀತಾ ಇವೆ. +ನಮಗೆ ತಿನ್ನುವುದಕ್ಕೆ ಕೊಡುವಂಥದ್ದು ಅವರ ಹತ್ತಿರ ಏನೂ ಇಲ್ಲ. + ತಲೆ ಕೂಡ ಹೊರಗೆ ಹಾಕದೆ "ಈ ಊರಲ್ಲಿ ತಿನ್ನೋದಕ್ಕೆ ಏನೂ ಇಲ್ಲ,"ಅಂದರು. + ದೇವರೇ ಕಾಪಾಡು ಅಂತ ಪ್ರಾರ್ಥನೆ ಮಾಡುವುದಕ್ಕೆ ಇಲ್ಲಿಗೆ ಬಂದೆ. +"ವಾಪಸ್ಸು ಯಾಕೆ ಬರಲಿಲ್ಲ. +ನೀನು ಬರತೀಯ ಅಂತ ಕಾಯುತಾ ಇದ್ದೆವು." +ಪ್ರಾರ್ಥನೆ ಮಾಡೋದಕ್ಕೆ ಬಂದೆ. ಇನ್ನೂ ಮುಗಿದಿಲ್ಲ. +"ಯಾವ ಸೀಮೆ ಇದು, ಅಗ್ರೀಪಿನಾ?" +ಮತ್ತೆ ಭುಜ ಕೊಡವಿದಳು. +"ಅವತ್ತು ರಾತ್ರಿ ಚರ್‍ಚಿನ ಮೂಲೆಯಲ್ಲಿ ಮಲಗಿದೆವು. +ಪಾದ್ರಿಯ ವೇದಿಕೆ ಅರ್ಧ ಕಳಚಿ ಹಾಕಿದ್ದರು. +ಅದರ ಹಿಂದೆ ಮಲಗಿದೆವು. +ಅಲ್ಲೂ ಗಾಳಿ ಬೀಸುತ್ತಾ ಇತ್ತು. +ಅಷ್ಟು ಜೋರಾಗಿರಲಿಲ್ಲ. +ನಮ್ಮ ಮೇಲೆ ಬೀಸಿಕೊಂಡು ಊಳಿಡುತ್ತಾ ಮುರುಕಲು ಬಾಗಿಲಲ್ಲಿ ನುಗ್ಗಿ ಕೊಂಡು ಹೋಗುವುದು, ಬರುವುದು ಕೇಳುತಿತ್ತು. +ಹದಿನಾಲ್ಕು ಶಿಲುಬೆ ಸ್ಟೇಷನ್ನುಗಳಲ್ಲಿದ್ದ ಶಿಲುಬೆಗಳನ್ನು ಗಾಳಿಗೈ ಬಡಿಯುತಿತ್ತು. +ಚರ್ಚಿನ ಗೋಡೆಯುದ್ದಕ್ಕೂ ನೇತು ಹಾಕಿದ್ದ ಶಿಲುಬೆಗಳು, ಅವಕ್ಕೆ ಕಟ್ಟಿದ್ದ ತಂತಿಗಳು ಗಾಳಿ ಬೀಸಿದಾಗ ಒಂದಕ್ಕೊಂದು ಉಜ್ಜಿಕರಕರ ಹಲ್ಲು ಮಸೆದ ಹಾಗೆ ಕೇಳುತಿತ್ತು. +"ಮಕ್ಕಳು ಅಳುತಿದ್ದವು. +ಅವಕ್ಕೆ ಭಯ. +ನಿದ್ರೆ ಬಂದಿರಲಿಲ್ಲ. +ನನ್ನ ಹೆಂಡತಿ ಮಕ್ಕಳನ್ನೆಲ್ಲ ಅಪ್ಪಿಕೊಂಡು ಸಮಾಧಾನ ಮಾಡುತಿದ್ದಳು. +ಏನು ಮಾಡಬೇಕೋ ನನಗೆ ತೋಚಲಿಲ್ಲ. +"ಹೊತ್ತು ಹುಟ್ಟುವುದಕ್ಕೆ ಸ್ವಲ್ಪ ಮೊದಲು ಗಾಳಿ ಕಡಮಯಾಯಿತು. +ಆಕಾಶ ಭೂಮಿ ಎರಡೂ ಒಟ್ಟಿಗೆ ಸೇರಿವೆ. +ಒಟ್ಟಿಗೆ ಸೇರಿ ಎಲ್ಲಾ ಸದ್ದನ್ನೂ ಅದುಮಿಟ್ಟಿವೆ ಅನ್ನಿಸುವಂಥ ಹೊತ್ತು ಬೆಳಗಿನ ಜಾವದಲ್ಲಿ ಸ್ವಲ್ಪ ಹೊತ್ತು ಇರುತ್ತದೆ. +ಮಕ್ಕಳು ಆರಾಮವಾಗಿ ಉಸಿರಾಡುತಿದ್ದರು ಈಗ. +ಪಕ್ಕದಲ್ಲಿದ್ದ ಹೆಂಡತಿಯ ಉಸಿರು ಭಾರವಾಗಿದೆ ಅನಿಸುತಿತ್ತು. +"ಏನದು? "ಅಂದಳು ಹೆಂಡತಿ. +"ಏನು, ಏನು? "ಅಂದೆ. +"ಅದು ಶಬ್ದ" ಅಂದಳು. +"ನಿಶ್ಶಬ್ದ ಮಲಗು ನೀನು. + ಸ್ವಲ್ಪವಾದರೂ ನಿದ್ರೆಮಾಡು. + ಇನ್ನೇನು ಬೆಳಕಾಗತದೆ, ಅಂದೆ. +"ಆಮೇಲೆ ನನಗೂ ಕೇಳಿಸಿತು ಅದು. + ಕತ್ತಲಲ್ಲಿ ನಮ್ಮ ಹತ್ತಿರವೇ ಬಾವಲಿಗಳು ರೆಕ್ಕೆ ಬಡಿದ ಹಾಗೆ. + ಬಾವಲಿಗಳ ರೆಕ್ಕೆ ನೆಲ ಗುಡಿಸುತ್ತಿರುವ ಹಾಗೆ. + ಎದ್ದು ಕೂತೆ ಶಬ್ದ ಜೋರಾಯಿತು. + ಬಾವಲಿಗಳ ಗುಂಪು ಬೆದರಿ, ಹಾರಿ ಹೋಗಲು ಬಾಗಿಲಲ್ಲಿ ಎಲ್ಲಿ ರಂಧ್ರವಿದೆಯೋ ಹುಡುತ್ತಿರುವ ಹಾಗೆ. + ನನ್ನ ಎದುರಿಗೇ ಪಿಸುದನಿ ಕೇಳಿತು ಅನ್ನಿಸಿ ತುದಿಗಾಲಲ್ಲಿ ನಡೆಯುತ್ತ ಬಾಗಿಲಿಗೆ ಹೋದೆ. + ಬಾಗಿಲಲ್ಲೇ ನಿಂತೆ. + ಅಲ್ಲಿ ಅವರನ್ನೆಲ್ಲ ನೋಡಿದೆ. + ಲುವೀನಾದಲ್ಲಿದ್ದ ಎಲ್ಲಾ ಹೆಂಗಸರು ತಲೆಯ ಮೇಲೆ ಶಾಲು ಹೊದ್ದು, ಭುಜದ ಮೇಲೆ ದೊಡ್ಡ ಪಾತ್ರೆ ಇಟ್ಟುಕೊಂಡು, ಕತ್ತಲಿನ ಹಿನ್ನೆಲೆಯಲ್ಲಿ ನೆರಳುಗಳ ಹಾಗೆ ಹೋಗುತಿದ್ದರು. +"ಯಾರು ನೀವು? ಇಷ್ಟು ಹೊತ್ತಿನಲ್ಲಿ ಎಲ್ಲಿಗೆ ಹೋಗುತಿದ್ದೀರಿ? ಏನು ಹುಡುಕತಿದ್ದೀರಿ, "ಅಂತ ಕೇಳಿದೆ. +"ಅವರಲ್ಲಿ ಒಬ್ಬಳು "ನೀರು ತರುವುದಕ್ಕೆ ಹೋಗುತಿದ್ದೇವೆ"ಅಂದಳು. +"ನನ್ನೆದುರಿಗೇ ಇದ್ದರು. +ನನ್ನನ್ನೇ ನೋಡುತಿದ್ದರು. +ಆಮೇಲೆ ಕಪ್ಪು ಮಡಕೆಗಳನ್ನು ಹೊತ್ತು ನೆರಳುಗಳ ಹಾಗೆ ನಡೆದು ಹೋದರು. +"ಲುವೀನಾದಲ್ಲಿ ನಾನು ಕಳೆದ ಮೊದಲ ರಾತ್ರಿಯನ್ನು ಯಾವತ್ತೂ ಮರೆಯಲಾರೆ, ಈ ಕತೆ ಕೇಳಿದ ಮೇಲೆ ಇನ್ನೊಂದು ಬಿಯರ್ ಹಾಕಬೇಕು ಅನ್ನಿಸಿಲ್ಲವಾ? ನನಗಂತೂ ಆ ನೆನಪಿನ ಕೆಟ್ಟ ರುಚಿ ಹೋಗಿಸುವುದಕ್ಕೆ ಇನ್ನೊಂದು ಬೇಕು." +"ಲುವೀನಾದಲ್ಲಿ ನಾನು ಎಷ್ಟು ವರ್ಷ ಇದ್ದೆ ಅಂತ ಕೇಳಿದೆ. +ಅಲ್ಲವಾ?… ನಿಜ ಹೇಳತೇನೆ, ನನಗೆ ಗೊತಿಲ್ಲ. +ನನಗೆ ಒಂದು ಸಲ ಜ್ವರ ಬಂದು ವಾಸಿ ಆಗುವ ಹೊತ್ತಿಗೆ ಹೊತ್ತು ಗೊತ್ತು ಎಲ್ಲಾ ಅರಿವೂ ಹೊರಟು ಹೋಗಿತ್ತು. +ಅನಂತ ಕಾಲವೇ ಆಯಿತೇನೋ. +ಯಾಕೆಂದರೆ ಅಲ್ಲಿ ಕಾಲ ಬಲು ಉದ್ದ. +ಅಲ್ಲಿ ಯಾರೂ ಗಂಟೆಗಳ ಲೆಕ್ಕ ಹಾಕುವುದಿಲ್ಲ. +ವರ್ಷಗಳು ಉರುಳುವುದನ್ನೂ ಅವರು ಯಾರೂ ಗಮನಿಸಲ್ಲ. +ದಿನ ಶುರುವಾಗಿ ದಿನ ಮುಗಿಯುತದೆ. +ಆಮೇಲೆ ರಾತ್ರಿ. +ಹಗಲು ದಿನ ರಾತ್ರಿ ದಿನ ರಾತ್ರಿ. +ಸಾಯುವ ತನಕ ಇಷ್ಟೇ. +ಅಲ್ಲಿನ ಜನಕ್ಕೆ ಯಾವ ಆಸೆಯೂ ಇಲ್ಲ, ಭರವಸಯೂ ಇಲ್ಲ. +"ಹೇಳಿದ್ದೇ ಹೇಳತೇನೆ ಅಂದುಕೊಳುತ್ತೀಯೇನೋ. +ಆದರೂ ಇದು ನಿಜ. +ಹೊಸ್ತಿಲ ಮೇಲೆ ಕೂರುವುದು, ಸೂರ್ಯ ಹುಟ್ಟುವುದು, ನೆತ್ತಿಯ ಮೇಲೆ ಬರುವುದು, ಇಳಿದು ಮುಳುಗುವುದನ್ನ ನೋಡುವುದು. +ಮೈಯ ಕೀಲುಗಳೆಲ್ಲ ಸಡಿಲವಾಗುವವರೆಗೂ ಹೀಗೇ ಸುಮ್ಮನೆ ಅನಂತ ಕಾಲದವರೆಗೆ ನೋಡುತ್ತಾ ಇರುವುದು. +ಅಲ್ಲಿನ ಮುದುಕರು ಮಾಡುವುದು ಇಷ್ಟೇ. +"ಲುವೀನಾದಲ್ಲಿ ಇರುವವರೆಲ್ಲ ಮುದುಕರು, ಮತ್ತೆ ಜನ ಹೇಳುವ ಹಾಗೆ ಇನ್ನೂ ಹುಟ್ಟದೆ ಇರುವವರು, ಅಷ್ಟೆ. +ಹೆಂಗಸರು ಇದಾರೆ ಮೂಳೆ ಚಕ್ಕಳವಾಗಿ ನವೆದು ಹೋದವರು. +ಅಲ್ಲಿ ಹುಟ್ಟಿದ ಮಕ್ಕಳೆಲ್ಲ ಊರು ಬಿಟ್ಟು ಹೋಗಿದ್ದಾರೆ. +ಬೆಳಗಿನ ಹೊತ್ತು ಹುಟ್ಟುತಿದ್ದ ಹಾಗೇ ಮಕ್ಕಳು ವಯಸಿಗೆ ಬಂದು ಊರು ಬಿಟ್ಟು ಹೋಗುತಿದ್ದರು. +ತಾಯಿಯ ಎದೆ ಹಾಲು ಕುಡಿಯುವ ಮಕ್ಕಳು ಅಲ್ಲಿಂದ ಹಾಗೇ ನೆಗೆದು ಗುದ್ದಲಿ ಹಿಡಿದು ಊರು ಬಿಟ್ಟು ಹೋಗುತ್ತಾರೆ. +ಹಾಗೆ ಅನ್ನುತಾರೆ ಅಲ್ಲಿನ ಜನ. +"ಮುದುಕರು, ದಿಕ್ಕಿಲ್ಲದ ಹೆಂಗಸರು, ಗಂಡ ದಿಕ್ಕಾಪಾಲಾಗಿ ಹೋದ ಹೆಂಗಸರು ಮಾತ್ರ ಅಲ್ಲಿದ್ದಾರೆ. +ಊರಲ್ಲಿ ಆಗಾಗ ಜೋರು ಗಾಳಿ ಬೀಸುತದೆ ಅನ್ನುತಿದ್ದೆನಲ್ಲ ಹಾಗೇನೇ ಊರೂ ಬಿಟ್ಟು ಹೋದವರೂ ಒಂದೊಂದು ಸಾರಿ ಬರುತಾರೆ. +ಅವರು ಬಂದಾಗ ಊರೆಲ್ಲ ಪಿಸುಪಿಸು ಮಾತು, ಅವರು ಹೊರಟ ತಕ್ಷಣ ನರಳಾಟ, ಗೊಣಗಾಟ. +ಬಂದವರು ಮುದುಕರಿಗೆ ಅಂತ ಒಂದಿಷ್ಟು ದಿನಸಿ, ಹೆಂಡತಿಯರ ಬಸಿರಲ್ಲಿ ಒಂದು ಮಗು ಇರಿಸಿ ಹೊರಟು ಹೋಗುತ್ತಾರೆ. +ಬಂದರೆ ಮತ್ತೆ ಮುಂದಿನ ವರ್ಷವೇ. +ಒಂದೊಂದು ಸಲ ಹೋದವರು ಬರುವುದೇ ಇಲ್ಲ. +ಇದೇ ಸಂಪ್ರದಾಯ. +ಅಲ್ಲಿನವರು ಇದನ್ನು ಕಾನೂನು ಅನ್ನುತಾರೆ. +ಎರಡೂ ಒಂದೇ. +ಮಕ್ಕಳು ಅಪ್ಪ ಅಮ್ಮಂದಿರಿಗಾಗಿ ದುಡಿಯುತ್ತಾರೆ, ಅವರ ಹಿರಿಯರು, ಹಿರಿಯರ ಹಿರಿಯರು, ಅವರ ಹಿರಿಯರು ಮಾಡಿದ ಹಾಗೇ. +ಎಷ್ಟು ತಲೆಮಾರಿನಿಂದ ಈ ಕಾನೂನು ನಡೆದುಕೊಂಡು ಬಂದಿದೆಯೋ… +"ಮುದುಕರು ಹೊಸ್ತಿಲ ಮೇಲೆ ಕೂತು, ಕೈ ಇಳಿಬಿಟ್ಟುಕೊಂಡು ಅವರು ಬರಲಿ, ಸಾವು ಬರಲಿ ಅಂತ ಕಾಯುತ್ತಾರೆ. +ಆ ಊರಿನ ಒಂಟಿತನದಲ್ಲಿ ಮಕ್ಕಳ ಕೃತಜ್ಞತೆಯ ಕರುಣೆಗೆ ಕಾಯುತ್ತಾರೆ. +"ಒಂದು ಸಲ ಅವರ ಮನಸ್ಸು ಬದಲಾಯಿಸುವುದಕ್ಕೆ ನೋಡಿದೆ. +ಒಳ್ಳೆಯ ಜಮೀನು ಇರುವ ಕಡೆಗೆ ಯಾಕೆ ಹೋಗಬಾರದು ಅಂತ ಅವರನ್ನು ಒಪ್ಪಿಸುವುದಕ್ಕೆ ನೋಡಿದೆ. +ನಾವೆಲ್ಲಾ ಊರು ಬಿಟ್ಟು ಹೋಗೋಣ. +ಒಳ್ಳೆಯ ಜಾಗದಲ್ಲಿ ಬೇರೆ ಎಲ್ಲಾದರೂ ಇರೋಣ. +ಸರ್ಕಾರ ನಮಗೆ ಸಹಾಯ ಮಾಡತದೆ ಅಂದೆ. +"ಕಣ್ಣು ರೆಪ್ಪೆ ಮಿಟುಕಿಸದೆ ನನ್ನ ಮಾತು ಕೇಳಿದರು. +ಕಣ್ಣಿನ ಆಳದಿಂದ ಅವರ ದೃಷ್ಟಿ ನನ್ನನ್ನು ನೋಡುತಿತ್ತು. +ಒಳಗಿನಿಂದ ಎಲ್ಲೋ ಒಂದಿಷ್ಟೆ ಬೆಳಕು. +"ಸರ್ಕಾರ ನಮಗೆ ಸಹಾಯ ಮಾಡುತ್ತದೆ ಅನ್ನುತೀರಲ್ಲ ಮೇಷ್ಟರೇ, ಸರ್ಕಾರ ನಿಮಗೆ ಪರಿಚಯ ಇದೆಯಾ?" ಅಂತ ಕೇಳಿದರು. +"ಸರ್ಕಾರ ಗೊತ್ತು "ಅಂದೆ. +"ನಮಗೂ ಗೊತ್ತು. +ಸರ್ಕಾರ ನಮಗೂ ಗೊತ್ತು. +ಸರ್ಕಾರದ ತಾಯಿ ಯಾರು, ಅದು ನಮಗೆ ಗೊತಿಲ್ಲ ಅಂದರು." +ಈ ದೇಶ ನಮ್ಮ ಜನ್ಮದಾತ ಅಂದೆ. +ಅವರು ಅಲ್ಲ ಅನ್ನುವ ಹಾಗೆ ತಲೆ ಆಡಿಸಿದರು ನಕ್ಕರು. +ಲುವೀನಾದ ಜನ ನಕ್ಕಿದ್ದನ್ನು ಅದೊಂದೇ ಸಾರಿ ನಾನು ನೋಡಿದ್ದು. +ಹುಳುಕು ಹಲ್ಲು ಕಾಣುವ ಹಾಗೆ ನಕ್ಕು, ಇಲ್ಲ, ಸರ್ಕಾರಕ್ಕ ತಾಯಿ ಇಲ್ಲ ಅಂದರು." +ನಿನಗೆ ಗೊತ್ತಾ? ಅವರು ಹೇಳಿದ್ದು ಸರಿ. +ಅವರ ಮಕ್ಕಳಲ್ಲಿ ಯಾರಾದರೂ ಏನಾದರೂ ತಪ್ಪು ಮಾಡಿದಾಗ ಮಾತ್ರ ಸರ್ಕಾರ ಅವರನ್ನು ಜ್ಞಾಪಿಸಿಕೊಳ್ಳುತದೆ. +ಜನರನ್ನು ಕಳಿಸಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುತ್ತದೆ, ಕೊಲ್ಲುತ್ತದೆ. +ಅದರಾಚೆಗೆ ಈ ಜನ ಇದ್ದಾರೆ ಅನ್ನುವುದು ಸರ್ಕಾರಕ್ಕೆ ಗೊತ್ತುಕೂಡ ಇಲ್ಲ. +"ನಾವು ಲುವೀನಿಯಾ ಬಿಡಬೇಕು ಅನ್ನುತ್ತೀರ ಮೇಷ್ಟರೇ. + ನಿಮ್ಮ ಪ್ರಕಾರ ನಾವು ಹಸಿದುಕೊಂಡು ಬದುಕಿದ್ದು, ಹಸಿದಿರುವ ಅಗತ್ಯವಿಲ್ಲದೆ ಇದ್ದರೂ ಹಸಿದುಕೊಂಡಿರುವುದು ಸಾಕು ಅನ್ನುತ್ತೀರಿ. + ನಾವು ಊರು ಬಿಟ್ಟು ಹೋದರೆ ಇಲ್ಲಿ ಬದುಕಿದ್ದ ನಮ್ಮ ಹಿರೀಕರನ್ನ ನೋಡುವವರು ಯಾರು? + ಎಷ್ಟೋ ತಲೆಮಾರಿನ ನಮ್ಮ ಹಿರಿಯರೆಲ್ಲ ಇಲ್ಲೇ ಇದಾರೆ. + ನಾವು ಅವರನ್ನ ಬಿಟ್ಟು ಬರಲಾರೆವು ಅಂದರು. +"ಅವರೆಲ್ಲ ಇನ್ನೂ ಅಲ್ಲೇ ಇದಾರೆ. +ಅಲ್ಲಿಗೆ ಹೋದಾಗ ನೀನೇ ನೋಡತೀಯ. +ಮೆಸ್‌ಕ್ವೀಟ್ ಹೆಂಡದ ಸೊಪ್ಪು ಜಗಿದು ರಸ ನುಂಗಿ ಹಸಿವು ಕಳೆಯುತ್ತಾ, ಗೋಡೆಗೆ ಒತ್ತಿಕೊಂಡು ನೆರಳಿನ ಹಾಗೆ ಜರುಗುತ್ತಾ, ಗಾಳಿ ಅವರನ್ನ ಎಳೆದುಕೊಂಡು ಹೋಗುತ್ತಿದೆ ಅನ್ನುವ ಹಾಗಿರುವ ಜನರನ್ನ ನೋಡತೀಯ. +"ಗಾಳಿಯ ಶಬ್ಬ ಕೇಳುವುದಿಲ್ಲವೇ? ಸತ್ತು ಹೋಗುತ್ತೀರ,|" ಅಂದೆ. +"ಏನು ಸಹಿಸಬೇಕೋ ಅದನ್ನ ಸಹಿಸಲೇಬೇಕು. +ದೇವರ ಇಚ್ಛೆ ಅದು. +ಗಾಳಿ ಬೀಸುವುದು ನಿಂತರೆ ಲುವೀನಾದಲ್ಲಿ ಬಿಸಿಲು ಜೋರಾಗಿ ನಮ್ಮ ಮೈಯಲ್ಲಿರುವ ನೀರಿನ ಪಸೆ ಒಣಗಿ ಸತ್ತು ಹೋಗತೇವೆ. +ಹೀಗೆ ಬೀಸುವ ಗಾಳಿಯಿಂದಲೇ ಬಿಸಿಲ ಶಾಖ ನಮಗೆ ತಗಲುವುದಿಲ್ಲ. +ಹೀಗಿರುವುದೇ ಸರಿ ಅಂದರು." +ನಾನು ಏನೂ ಅನ್ನಲಿಲ್ಲ. +ಲುವೀನಾ ಬಿಟ್ಟೆ, ಮತ್ತೆ ಹೋಗಲಿಲ್ಲ, ಹೋಗುವುದೂ ಇಲ್ಲ." +ಈ ಲೋಕ ಹೇಗೆ ಲಾಗ ಹಾಕತದೆ ನೋಡು. +ಇನ್ನು ಸ್ವಲ್ಪ ಹೊತ್ತಿನಲ್ಲಿ ನೀನು ಅಲ್ಲಿಗೆ ಹೋಗತೀಯ. +ಹದಿನೈದು ವರ್ಷದ ಹಿಂದೆ ನನಗೂ ಕೂಡ "ನೀನು ಸಾನ್ ಹ್ವಾನ್ ಲುವೀನಾಗೆ ಹೋಗತೀಯ,"ಅಂದಿದ್ದರು. +"ಆ ಕಾಲದಲ್ಲಿ ನಾನು ಒಳ್ಳೆ ಶಕ್ತಿಯಾಗಿದ್ದೆ. +ತಲೆಯ ತುಂಬ ಐಡಿಯಾಗಳಿದ್ದವು. +ಮೇಷ್ಟರ ತಲೆಗಳಿಗೆ ಎಂತೆಂಥ ಐಡಿಯಾ ತುಂಬುತಾರೆ ನಿನಗೂ ಗೊತ್ತಲ್ಲ. +ಆ ಐಡಿಯಾಗಳ ಹೊರೆ ಹೊತ್ತುಕೊಂಡು, ಏನಾದರೂ ಸಾಧಿಸಬೇಕು. +ಮಾಡಬೇಕು ಅಂದುಕೊಂಡು ಹೋಗತೇವೆ. +ಲುವೀನಾದಲ್ಲಿ ಇದೇನೂ ನಡೆಯಲಿಲ್ಲ. + ಪ್ರಯೋಗ ಮಾಡಿದೆ ಫಲವಿಲ್ಲ. +"ಸಾನ್ ಹ್ವಾನ್ ಲುವೀನಾ. +ದೇವಲೋಕದ ಹೆಸರಿನ ಹಾಗೆ ಕೇಳಿಸಿತ್ತು. + ಆದರೆ, ಅದು ನರಕ. + ಇಡೀ ಉರು ಸಾವಿನ ಹಾಸಿಗೆಯ ಮೇಲೆ ಬಿದ್ದುಕೊಂಡಿದೆ. + ಅಲ್ಲಿ ನಾಯಿಗಳೂ ಸತ್ತು ಹೋಗಿವೆ. + ಅಲ್ಲಿನ ನಿಶ್ಶಬ್ದದಲ್ಲಿ ಯಾರನ್ನಾದರೂ ನೋಡಿ ಬೊಗಳುವುದಕ್ಕೆ ಅಲ್ಲಿ ಯಾರೂ ಇಲ್ಲ. + ಅಲ್ಲಿನ ಗಾಳಿಗೆ ಹೊಂದಿಕೊಂಡ ತಕ್ಷಣ ಬರಿಯ ಮೌನವಷ್ಟೇ ಕೇಳಿಸುತ್ತದೆ, ಎಲ್ಲ ಏಕಾಂತಗಳಲ್ಲಿ ಇರುವಂಥ ಮೌನ. + ಆ ಮೌನ ನಿನ್ನನ್ನ ತೇಯ್ದು ಬಿಡುತ್ತದೆ. + ನನ್ನನ್ನ ನೋಡು ಮೌನ ಹೇಗೆ ನನ್ನ ನವೆದುಬಿಟ್ಟಿದೆ. + ನೀನೇ ಹೋಗತಾ ಇದೀಯಲ್ಲ, ಈಗ ನಾನು ಹೇಳತಾ ಇರುವುದೆಲ್ಲ ಇನ್ನೇನು ನಿನಗೇ ಗೊತಾಗತದೆ… +"ಸ್ವಲ್ಪ ಮೆಸ್ಕಾಲ್ ಹೆಂಡ ತರಿಸಿದರೆ ಹೇಗೆ? +ಬಿಯರ್ ಕುಡಿದರೆ ಮತ್ತೆ ಮತ್ತೆ ಏಳಬೇಕಾಗತದೆ. +ಮಾತಿಗೆ ಅಡ್ಡಿ. +ಹೇಯ್, ಕ್ಯಾಮಿಲೋ, ನಮಗೆ ಮೆಸ್ಕಾಲ್ ತಂದುಕೊಡು… +"ಅದೇ, ನಿನಗೆ ಹೇಳತಾ ಇದ್ದೆನಲ್ಲ…" +ಆ ಮನುಷ್ಯ ಏನೂ ಹೇಳಲಿಲ್ಲ. +ರೆಕ್ಕೆ ಸುಟ್ಟ ಪತಂಗಗಳು ಟೇಬಲ್ಲಿನ ಮೇಲೆ ಸುಮ್ಮನೆ ಸುತ್ತು ಹಾಕುತಿದ್ದ ಜಾಗವನ್ನೇ ಸುಮ್ಮನೆ ದಿಟ್ಟಿಸುತ್ತಾ ಇದ್ದ. +ಹೊರಗಡೆ ರಾತ್ರಿ ಮುಂಬರಿದು ಬರುತಿತ್ತು. +ಕಾಮಿಚಿನ್ ಮರದ ಬೊಡ್ಡೆಗಳಗೆ ಅಪ್ಪಳಿಸುವ ನದಿಯ ನೀರಿನ ಶಬ್ದ ಕೇಳುತಿತ್ತು. +ಮಕ್ಕಳ ಕೂಗಾಟ ದೂರದಲ್ಲಲ್ಲೋ ಕೇಳುತಿತ್ತು. + ಬಾಗಿಲ ಚೌಕಟ್ಟಿನಲ್ಲಿ ಕಾಣುತಿದ್ದ ಇಷ್ಟಗಲ ಆಕಾಶದಲ್ಲಿ ನಕ್ಷತ್ರಗಳು ಇದ್ದವು. +ಟೇಬಲ್ಲಿನ ಮೇಲಿದ್ದ ಪತಂಗಗಳನ್ನು ನೋಡುತಿದ್ದ ಆ ಮನುಷ್ಯ ಕುಸಿದು ಟೇಬಲ್ಲಿನ ಮೇಲೆ ತಲೆ ಇಟ್ಟು ನಿದ್ರೆಹೋಗಿಬಿಟ್ಟ.