From fd20b23e9aa3bb13d0bf17741035967ea5fecb40 Mon Sep 17 00:00:00 2001 From: Narendra VG Date: Mon, 17 Apr 2023 15:43:42 +0530 Subject: [PATCH] Upload New File --- ...7\340\262\267\340\263\215\340\262\257.txt" | 217 ++++++++++++++++++ 1 file changed, 217 insertions(+) create mode 100644 "Data Collected/Kannada/MIT Manipal/Kannada-Scrapped-dta/\340\262\234\340\263\215\340\262\257\340\263\213\340\262\244\340\262\277\340\262\267\340\263\215\340\262\257.txt" diff --git "a/Data Collected/Kannada/MIT Manipal/Kannada-Scrapped-dta/\340\262\234\340\263\215\340\262\257\340\263\213\340\262\244\340\262\277\340\262\267\340\263\215\340\262\257.txt" "b/Data Collected/Kannada/MIT Manipal/Kannada-Scrapped-dta/\340\262\234\340\263\215\340\262\257\340\263\213\340\262\244\340\262\277\340\262\267\340\263\215\340\262\257.txt" new file mode 100644 index 0000000..f94f2bb --- /dev/null +++ "b/Data Collected/Kannada/MIT Manipal/Kannada-Scrapped-dta/\340\262\234\340\263\215\340\262\257\340\263\213\340\262\244\340\262\277\340\262\267\340\263\215\340\262\257.txt" @@ -0,0 +1,217 @@ +"ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. +ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. +ಸಮಯ, ಸಂಧ್ಯಾ ಕಾಲ. +ಲೇಡೀಸ್ ಕ್ಲಬ್‌ನ (ಮಹಿಳಾ ಸಮಾಜ) ಉಪವನದ ಒಂದು ಮೂಲೆಯಲ್ಲಿ ಮೇಜಿನ ಸುತ್ತ ಮುವ್ವರು ಚಿಕ್ಕ ವಯಸ್ಸಿನ ಯುವತಿಯರು ಕುಳಿತು ಸಂಭಾಷಣೆಯಲ್ಲಿ ತೊಡಗಿದ್ದರು. +"ನೀನು ಹಾಗೆ ಹೇಳಲು ಕಾರಣ ನನಗೆ ಗೊತ್ತು" ಎಂದಳು ದೇವಕಿ. +"ಏನು ಕಾರಣ?" +"ನಿನ್ನ ಮದುವೆಗೆ ಮುಹೂರ್ತವನ್ನು ನೋಡಿ ಹೇಳಿದವರು ಅವರು ತಾನೇ" +"ಇಲ್ಲವೇ ಇಲ್ಲ. +ಮುಹೂರ್ತ ನೋಡಿ ಮದುವೆ ಮಾಡಿದ್ದರೆ ತಾನೇ ಅವರು ನೋಡಿ ಹೇಳುವುದಕ್ಕೆ ?" +"ಹಾಗಾದರೆ ನಿನಗೆ ಒಳ್ಳೆಯ ಗಂಡ ಸಿಕ್ಕುತ್ತಾನೆ ಎಂದಾದರೂ ಜ್ಯೋತಿಷ್ಯ ಹೇಳಿರಬೇಕು ಅವರು." +"ಅದೂ ಇಲ್ಲ. +ಅದಕ್ಕೆ ಅವರು ವಿರೋಧವಾಗಿಯೇ ಹೇಳಿದರು" ಎಂದು ಕಮಲಾ ಮಾತನ್ನು ಲಂಬಿಸಿ ಎಳೆದು ಹೇಳಿದಳು. +"ಹಾಗೆ ಅವರು ಹೇಳಿದುದು ತಾನೇ ಅಂತಹುದೇನು? +ನಿನ್ನ ಗಂಡನಿಗೆ ಒಳ್ಳೆಯ ಹೆಂಡತಿ ಸಿಕ್ಕುತ್ತಾಳೆ ಎಂದು ತಾನೇ. +ಅದಕ್ಕಾಗಿ ಶಾಸ್ತ್ರಿಗಳಿಗೆ ಚಿನ್ನದ ತೋಡಾ ಕೊಡಬೇಕೆನ್ನತ್ತೀಯಾ?"ಎಂದು ಕೇಳಿದಳು ಸರಳಾ. +ಎಲ್ಲರೂ ನಕ್ಕರು. +"ನನ್ನ ಸ್ವಂತ ವಿಷಯ ಇರಲಿ, ನನ್ನ ಮಾತಿನ ಪುಷ್ಟಿಗಾಗಿ ಬೇರೆ ದೃಷ್ಟಾಂತ ಹೇಳುತ್ತೇನೆ. +ನನ್ನ ಪ್ರೇಮದ ಗೆಳತಿ ವಿಮಲಾ ತನಗೆ ಸಂಭವಿಸಿದುದನ್ನು ಸ್ವಲ್ಪವೂ ಮುಚ್ಚು ಮರೆಯಿಲ್ಲದೆ ನನ್ನೊಂದಿಗೆ ಹೇಳಿದ್ದಾಳೆ. +ಅದನ್ನು ಹಾಗೆಯೇ ಒಂದು ಅಕ್ಷರವನ್ನೂ ಕೂಡ ಬದಲಾಯಿಸದೆ ಹೇಳುತ್ತೇನೆ. +ಅದನ್ನು ಕೇಳಿದ ಮೇಲೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ" ಎಂದಳು ಕಮಲಾ. +ಮೂವರೂ ಮೂರು ಐಸ್‌ಕ್ರೀಂ ತರಿಸಿಕೊಂಡು ಸಾವಧಾನವಾಗಿ ಕತೆ ಹೇಳಲೂ ಕೇಳಲೂ ತೊಡಗಿದರು. +ವಿಮಲಾ ತನ್ನೊಡನೆ ಹೇಳಿದುದನ್ನು ಕಮಲಾ ಹಾಗೆಯೇ ಹೇಳತೊಡಗಿದಳು. +ವಿಮಲಾ ಕಮಲೆಗೆ ಹೇಳಿದುದು ನನ್ನನ್ನು ಮದುವೆಯಾಗಲು ಬಯಸಿ ಬರುವವರ ಜಾತಕಗಳನ್ನೆಲ್ಲಾ ನಮ್ಮ ತಂದೆ ರಾಮಲಿಂಗ ಜೋಯಿಸರಿಗೆ ಸರಿ ನೋಡಲು ಕೊಡುವುದು ಪದ್ಧತಿ. +ಅವರು ಪ್ರತಿ ಜಾತಕದಲ್ಲಿಯೂ ಏನಾದರೊಂಮ ತಪ್ಪನ್ನು ಕಂಡು ಹಿಡಿದೇ ಹಿಡಿಯುತ್ತಿದ್ದರು. +ನನಗೂ ಹದಿನೈದು ವರ್ಷ ತುಂಬಿ ಹೋಗಿತ್ತು. +ಕೊನೆಯಲ್ಲಿ ನಮ್ಮ ತಂದೆ ಒಂದು ಜಾತಕವನ್ನು ಕೊಟ್ಟು "ಶಾಸ್ತ್ರಿಗಳೇ ಇದಾದರೂ ಕೂಡುತ್ತದೆಯೇ ನೋಡಿ, ಆರಣಿ (ಆಶಾಢ, ಶ್ರಾವಣ) ಮಾಸವಾದರೂ ಚಿಂತೆಯಿಲ್ಲ, ಈಗಲೇ ವಿವಾಹವನ್ನು ಮುಗಿಸಿಬಿತ್ತೇನೆ" ಎಂದರು. +ಶಾಸ್ತ್ರಿಗಳು ಕನ್ನಡಕವನ್ನು ಹಾಕಿಕೊಂಡು ನನ್ನ ಜಾತಕವನ್ನೂ ನಮ್ಮ ತಂದೆ ಕೊಟ್ಟ ಜಾತಕವನ್ನೂ -ಎರಡನ್ನೂ ಸ್ವಲ್ಪ ನೋಡಿದರು. +ಅನಂತರ ಕನ್ನಡಕವನ್ನು ಹಣೆಯ ಮೇಲಕ್ಕೆ ತಳ್ಳಿ ಬಿಟ್ಟು ನನ್ನ ಜಾತಕವನ್ನೇ ಮತ್ತೊಂದು ಸಲ ನೋಡಿದರು. +ಕೊನೆಯಲ್ಲಿ ದೊಡ್ಡದಾಗಿ ನಿಟ್ಟುಸಿರು ಬಿಟ್ಟು ಎರಡು ಜಾತಕಗಳನ್ನೂ ನೆಲದ ಮೇಲೆ ಹಾಕಿದರು. +ನನ್ನ ತಂದೆಗೆ ಎದೆ ಡವ ಡವಕೆಂದು ಹೊಡೆದುಕೊಂಡಿತು. +"ಏನು ಶಾಸ್ತ್ರಿಗಳೇ ಹೆಣ್ಣಿಗೆ ಶನಿದೋಷ ಬಲವಾಗಿದೆಯೋ?"ಎಂದು ಕೇಳಿದರು ನಮ್ಮ ತಂದೆ. +"ಹಾಗಿದ್ದರೂ ಏನೂ ಬಾಧಕವಿಲ್ಲ" ಎಂದರು ಶಾಸ್ತ್ರಿಗಳು. +"ಏನು?ಶನಿ ದೋಷ ಬಾಧಕವಿಲ್ಲವೆ? " +"ಹೌದು. ಶನಿ ದೋಷವಾಗಿದ್ದರೆ ಕೂಡಲೇ ಪರಿಹಾರ ಮಾಡಿ ಬಿಡುತ್ತಿದ್ದೆ". +"ಹಾಗಾದರೆ ಅದಕ್ಕಿಂತ ಕೆಟ್ಟದ್ದು ಏನಿರಬಹುದು ಜಾತಕದಲ್ಲಿ?" +"ಇದುವರೆಗೆ ನನ್ನ ವಿದ್ಯೆಯೇ ಸುಳ್ಳಾಗಿರಬಹುದೆಂದುಕೊಂಡು ನಿಮ್ಮೊಂದಿಗೆ ತಿಳಿಸದೆ ಇದ್ದೆ, ಇನ್ನು ಮುಚ್ಚಿಟ್ಟು ಪ್ರಯೋಜನವಿಲ್ಲ. +ಯಾಕೆಂದರೆ ನಾವು ನಿರೀಕ್ಷಿಸದ ಪುರುಷ ಇವಳನ್ನು ಸೇರುತ್ತಾನೆ. +ಇವಳ ಜಾತಕ ಸೀತಾ ದೇವಿಯ ಚಕ್ರದಂತೆ, ಆದರೆ ಇನ್ನೂ ಬಲವಾಗಿ ವಕ್ರನಾಗಿ ಇದೆ. +ಸೀತಾ ದೇವಿಯನ್ನಾದರೋ ವಿವಾಹವಾದ ನಂತರ ರಾವಣನು ಎತ್ತಿಕೊಂಡು ಹೋಗುವುದು ಸಂಭವಿಸಿತು. +ರಾವಣನನ್ನು ರಾಮನು ಧ್ವಂಸ ಮಾಡಿ ಸೀತೆಯನ್ನು ಹಿಂದಕ್ಕೆ ಕರೆದುಕೊಂಡು ಬಂದನು. +ನಿಮ್ಮ ಹೆಣ್ಣಿಗೆ ಜಾತಕದಲ್ಲಿ ತೋರುವ ವಿಧಿಯೊ? + ನಾನು ಏನು ಹೇಳಲಿ? +ನನಗೆ ನಾಲಗೆಯೇ ಏಳುವುದಿಲ್ಲ. +ಆದರೂ ಹೇಳುತ್ತೇನೆ. +ನಿಮ್ಮ ಈ ಕನ್ಯೆಯನ್ನು ಒಬ್ಬನು ಬಲಾತ್ಕಾರವಾಗಿ ಹಾರಿಸಿಕೊಂಡು ಹೋಗಿ ಮದುವೆ ಮಾಡಿಕೊಳ್ಳುತ್ತಾನೆ" ಎಂದರು. +"ಹಾಗೆಯೇ"?ಎಂದು ನಮ್ಮ ತಂದೆ ಗಾಬರಿಯಿಂದ ಕೇಳಿದರು. +"ಹೌದು, ಶ್ರೀ ಜಯಂತಿ ಇನ್ನೂ ಒಂದು ವಾರವಿದೆ. +ಈ ಏಳು ದಿನಗಳಲ್ಲಿಯೇ ಇದು ನಡೆಯುವುದು" ಎಂದು ಶಾಸ್ತ್ರಿಗಳು ಲೆಕ್ಕಾಚಾರವಾಗಿ ಖಂಡಿತವಾಗಿಯೇ ಹೇಳಿದರು. +ನನ್ನ ತಂದೆಗೂ ತಾಯಿಗೂ ಅರ್ಧ ಮೂರ್ಛೆಯೇ ಉಂಟಾಯಿತು. +ಶಾಸ್ತ್ರಿಗಳು ಓಲೆಗರಿ ಪುಸ್ತಕವನ್ನೂ ಜಾತಕಗಳನ್ನೂ ಎತ್ತಿಕೊಂಡು ಹೊರಟು ಹೋದರು. +ಸ್ವಲ್ಪ ಹೊತ್ತಿನ ನಂತರ ಮೊದಲು ನಮ್ಮ ತಾಯಿಗೇ ಸ್ವಲ್ಪ ಸಮಾಧಾನವುಂಟಾಯಿತು. +"ಇನ್ನು ಒಂದು ಗಳಿಗೆಯೂ ಈ ಗ್ರಾಮದಲ್ಲಿರುವುದು ಭದ್ರವಲ್ಲ, ಪಟ್ಟಣದಲ್ಲಿ ಎಲ್ಲಿಯಾದರೂ ಪೋಲೀಸ್ ಕಾವಲಿನಲ್ಲಿಯೇ ಇನ್ನು ಇರಬೇಕು" ಎಂದಳು. +ನಮ್ಮ ತಂದೆ ಚಿಂತೆಯಿಂದ "ಯಾವ ನಗರಕ್ಕೆ ಹೋಗುವುದು ತಾನೇ ನಮ್ಮಿಂದ ಸಾಧ್ಯ?" ಎಂದರು. +"ತಿರುಚನಾಪಲ್ಲಿಗೆ ಹೋಗೋಣ. +ಅಲ್ಲಿ ನಮ್ಮ ಸೋದರತ್ತೆಯ ಮಗ ಅತ್ತಾನ್ (ಸೋದರತ್ತೆಯ ಮಗನನ್ನು ತಮಿಳಿನಲ್ಲಿ "ಆತ್ತಾನ್" ಎನ್ನುತ್ತಾರೆ.) ಸಬ್ ಕಲೆಕ್ಟರ್ ಆಗಿ ಬಂದಿದ್ದಾನೆ. +ಈ ಕತೆಯಲ್ಲಿ ಉದ್ದಕ್ಕೂ ಆ ಮಾತನ್ನೇ ಬಳಸಿದೆ. +ಅಲ್ಲಿ ಹೋದರೆ ನಮಗೆ ಯಾವ ಯೋಚನೆಯೂ ಇರುವುದಿಲ್ಲ" ಎಂದು ಉಪಾಯ ಹೇಳಿದಳು ನನ್ನ ತಾಯಿ. +ಅತ್ತಾನ್‍ನ ಸಹಾಯ ಬೇಡುವುದು ನಮ್ಮ ತಂದೆಗೆ ಅಷ್ಟು ಇಷ್ಟವಿಲ್ಲ. +ಅವರು ಸೀಮೆಗೆ ಹೋಗಿ ಬಂದವರು. +ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಧಿಕಾರ ದೊರೆತು ಇನ್ನೂ ಒಂದು ವರುಷವಾಗಿತ್ತು, ನನ್ನ ಜಾತಕಕ್ಕಾಗಿ ಹೇಳಿ ಕಳುಹಿಸಿದ್ದರು. +ನಮ್ಮ ತಾಯಿಗೆ ಇಷ್ಟವೇ. +ಆದರೆ ನಮ್ಮ ತಂದೆ ಒಪ್ಪಲಿಲ್ಲ. +"ಒಳ್ಳೆಯ ಮಾತು ಹೇಳಿದೆ. +ಸೀಮೆಗೆ ಹೋಗಿ ಬಂದವನು ಜಾತಿ ಭ್ರಷ್ಣ, ಅವನಿಗೆ ನನ್ನ ಮಗಳನ್ನು ಕೊಡುವುದು ಸಾಧ್ಯವಿಲ್ಲ" ಎಂದು ಬಿಟ್ಟಿದ್ದರು. +ಅಳಿಯನ ಅಂತಸ್ತಿಗೆ ಅರ್ಹವಾಗಿ ಮರ್ಯಾದೆ ಮಾಡಿ ವಿವಾಹ ಮಾಡುವುದು ಕಷ್ಟವೆಂಬ ಭಾವನೆಯೂ ನಮ್ಮ ತಂದೆಗೆ ಇದ್ದಿರಬಹುದು, ಅವರಲ್ಲಿ ಈಗ ಹೋಗಿ ಸಹಾಯ ಕೇಳುವುದಕ್ಕೆ ನಮ್ಮ ತಂದೆಗೆ ಲಜ್ಜೆಯಾದುದು ಸ್ವಾಭಾವಿಕವೇ? +ಹೀಗಿದ್ದರೂ ನಮ್ಮ ತಾಯಿ ಹೇಳಿದಂತೆ ನಮಗೆ ಬೇರೆ ಗತಿ ಇರಲಿಲ್ಲ. +ಹೇಗಾದರೂ ಅವರ ಸಹಾಯವನ್ನು ನಾವು ಯಾಚಿಸುವುದು ಈ ಒಂದು ವಾರಕ್ಕಾಗಿ ತಾನೆ? +ಈ ಕಾರಣಗಳಿಂದ ಕೊನೆಯಲ್ಲಿ ನಮ್ಮ ತಂದೆ ಸಮ್ಮತಿಸಿದರು. +ತಿರುಚನಾಪಳ್ಳಿಯಲ್ಲಿ ನಮ್ಮ ಅತ್ತಾನ್‍ರ ಬಂಗಲಿಯ ಮಗ್ಗಲು ಮನೆಯೊಂದು ನಮಗೆ ಸಿಕ್ಕಿತು. +ನಮ್ಮ ಅತ್ಯಾನ್‌ರನ್ನ ನಾನು ನೋಡಿ ಕೆಲವು ವರುಷಗಳಾಗಿದ್ದವು. +ಮೊದಲು ಅವರು ನನ್ನನ್ನು ವಿವಾಹವಾಗಲು ಬೇಡಿದಾಗ ತಿರಸ್ಕರಿಸಿದುದರಿಂದ ಈಗ ಅವರ ಸಹಾಯವನ್ನು ಅಪೇಕ್ಷಿಸಲು ನನಗೆ ಸಂಕಟವಾಗಿತ್ತು. +ಒಂದು ಪಕ್ಷ ಅವರಿಗೆ ಇನ್ನೂ ನನ್ನ ಮೇಲೆ ಕೋಪವೇ ಇರಬಹುದು" ಎಂದು ಹೆದರಿದ್ದೆನು. +ಆದರೆ ಅವರು ನನ್ನನ್ನು ನೋಡಿದಾಗ ಅವರ ಕಣ್ಣುಗಳು ಸ್ವಲ್ಪ ಜ್ವಲಿಸಿದುವೇ ಹೊರತು ಮಾತುಗಳಲ್ಲಿ ಕೋಪವೇನೂ ಕಾಣಲಿಲ್ಲ. +"ಬಾ ಸೀತಾ"ಎಂದರು. +ಅವರು ಉತ್ಸಾಹವಾಗಿ ಒಳ್ಳೆ ನಗು ಮುಖವಾಗಿದ್ದರು. +ಆದರೂ ನಮ್ಮ ತಂದೆ ಪದೇ ಪದೇ ಹೇಳಿ ಹೇಳಿ ಅಭ್ಯಾಸವಾಗಿದ್ದಂತೆ "ಅವನು ಜಾತಿಭ್ರಷ್ಟ" ಎಂದು ಖಿನ್ನರಾಗಿ ಹೇಳಿಕೊಂಡರು. +ಆದರೆ ಬಾಗಿಲಿನಲ್ಲಿ ಯಾವಾಗಲೂ ನಮಸ್ಕರಿಸುತ್ತ ನಿಂತಿದ್ದ ಇಬ್ಬರು ಜವಾನರನ್ನು ನೋಡಿ ತಂದೆಯವರ ಮನಸ್ಸೂ ಸ್ವಲ್ಪ ಮೃದುವಾಯಿತು. +ಹೇಳಿದ್ದಂತೆ ಅತ್ಯಾನ್ ನಿತ್ಯ ಬೆಳಿಗ್ಗೆ ಬರುತ್ತಿದ್ದರು. +ನಮ್ಮ ತಂದೆಯವರು ಆ ಕಾಲದಲ್ಲಿಯೇ ಪ್ರಾತಃಕಾಲದ ಜಪದಲ್ಲಿ ತೊಡಗಿರುತ್ತಿದ್ದರು. +ನಮ್ಮ ತಾಯಿಗೆ ಹಳ್ಳಿಯಲ್ಲಿ ಮೊಸರು ಕಡೆಯುವ ಅಭ್ಯಾಸವಾಗಿದ್ದುದರಿಂದ ತಾವೇ ಮೊಸರನ್ನು ಕಡೆದ ಹೊರತು ಅವರಿಗೆ ಸಮಾಧಾನವಾಗುತ್ತಿರಲಿಲ್ಲ. +ಆದುದರಿಂದ ನಮ್ಮ ಅತ್ತಾನ್ ಬಂದಾಗ ಅವರಿಗೆ ಮಾತಿಗೆ ಸಿಕ್ಕುತ್ತಿದ್ದವಳು ನಾನು ಒಬ್ಬಳೇ. +ಆದರೆ ಅದರಿಂದ ಅವರಿಗೆ ಅತೃಪ್ತಿಯಾದಂತೆ ತೋರಲಿಲ್ಲ. +"ನಿನ್ನ ಸ್ನೇಹಿತೆ ವಿಮಲಾವನ್ನು ಒಂದು ಸಲ ನೋಡಬೇಕೆಂದು ಆಸೆಯಾಗಿದೆ"ಎಂದು ದೇವಕಿ,"ನನಗೂ ಹಾಗೆಯೇ" ಎಂದು ಸರಳಾ ಅನುಮೋದಿಸಿದಳು. +"ಏತಕ್ಕಾಗಿಯೋ?" ಎಂದು ಕಮಲಾ ಸ್ವಲ್ಪ ಕೋಪದಿಂದ ಕೇಳಿದಳು. +"ಏನೂ ಇಲ್ಲ ಮುಂದೆ ಹೇಳು . + ಅವರಿಬ್ಬರೂ ಏನನ್ನು ಕುರಿತು ದಿನವೂ ಮಾತ ನಾಡಿಕೊಳ್ಳುತ್ತಿದ್ದರೋ!" + ಕಮಲಾ ಮತ್ತೆ ಮುಂದುವರಿಸಿ ವಿಮಲಾ ತನ್ನೊಂದಿಗೆ ಹೇಳಿದುದನ್ನು ಹೇಳತೊಡಗಿದಳು. +ನಾವು ಏನೇನು ಮಾತನಾಡಿಕೊಂಡೆವು ಎಂಬುದು ನನಗೆ ಜ್ಞಾಪಕವಿಲ್ಲ. +ಆದರೆ ಹೊತ್ತು ಬಹಳ ಕಳೆದು ಹೋಯಿತು. +ಮೂರನೆಯ ದಿವಸ ನಮ್ಮ ಮನೆಯಿಂದ ಹೊರಡುವಾಗ ಅತ್ತಾನ್ ನನಗೆ ಒಂದು ಪಠವನ್ನು ತೋರಿಸಿದರು. +"ಇದು ಯಾರು ಹೇಳು ನೋಡೋಣ?" +"ಅದು ಒಂದು ರಾಜಾ?" +"ಅಲ್ಲ, ಅಲ್ಲ" +ಅಲ್ಲವಾದರೆ ಅಮರ ಸಿಂಹಾಸನ ಟಾಕೀಸ್‌ನಲ್ಲಿ ರಾವಣ ವೇಷಧಾರಿಯ ಚಿತ್ರ ಪತ್ರಿಕೆಗಳಲ್ಲಿ ಬಿದ್ದಿತ್ತು. +ಇದು ಅವನಾಗಿರಬಹುದು. +"ಅದೂ ಅಲ್ಲ. +ಇವನಂತಿರುವ ಒಬ್ಬನು ಶ್ರೀ ಜಯಂತಿಗೆ ಮೊದಲು ನಿನ್ನನ್ನು ಹಾರಿಸಿಕೊಂಡು ಹೋಗುತ್ತಾನೆ." +"ಈ ವಿಚಾರ ನಿಮಗೆ ಹೇಗೆ ಗೊತ್ತು?"ಎಂದು ಕೇಳಿದೆ. +ಅವರು ಪ್ರತ್ಯುತ್ತರ ಕೊಡದೆ ಹೊರಟು ಹೋದರು. +ಅವರು ಮರು ದಿವಸ ಬಂದಾಗ ಮತ್ತೆ ಅದೇ ವಿಷಯವನ್ನು ಕೇಳಿದೆ. +"ಅದೇ?ಒಂದು ಹೆಣ್ಣನ್ನು ಹಾರಿಸಿಕೊಂಡು ಹೋದುದಕ್ಕಾಗಿ ಸೆರೆಯಲ್ಲಿರುವ ಖೈದಿಯ ಚಿತ್ರ, ನಿನಗಾಗಿ ಬರುವ ಪುರುಷ ಹೇಗಿರುತ್ತಾನೆಂಬುದನ್ನು ತೋರಿಸಲು ಅದನ್ನು ತರಿಸಿದೆ." +"ಅವನ ಮುಖ ನನಗೇನೂ ಒಪ್ಪಿಗೆಯಿಲ್ಲ" ಎಂದು ಹೇಳಿ ಪಟವನ್ನು ಕಿತ್ತುಕೊಂಡು ಹರಿದು ಹಾಕಿದೆ. +"ಹಾಗಾದರೆ ನಿನಗೆ ಬೇರೆ ಒಬ್ಬನ ಪಠವನ್ನು ತೋರಿಸಲೆ?" +"ಯಾರ ಪಟ?" +"ಯಾರೊ ಒಬ್ಬ, ಒಂದು ಹೆಣ್ಣನ್ನು ಹಾರಿಸಿಕೊಂಡು ಹೋಗಿ ಅವಳನ್ನು ವಿವಾಹವಾಗುತ್ತಾನಂತೆ. +ಹಾಗೆ ಅವನಿಗೆ ಒಬ್ಬ ಜೋಯಿಸರು ಹೇಳಿದ್ದಾರೆ." +"ಎಲ್ಲಿ ತೋರಿಸಿ, ನಿಮ್ಮ ಪಠವೇ; +ಹ್ಯಾಟ್ ಹಾಕಿಕೊಂಡ ಮಾತ್ರಕ್ಕೆ ನನಗೆ ತಿಳಿಯದೆ? +ಸುಮ್ಮನೆ ಯಾಕೆ ಸುಳ್ಳೆಲ್ಲ ಹೇಳುತ್ತೀರಿ?" +"ಏನು ಸುಳ್ಳು ಹೇಳಿದೆ? +ನಿನಗೆ ಜೋಯಿಸ ಹೇಳಿದುದು ನಿಜ, ನನಗೆ ಹೇಳಿದರೆ ಮಾತ್ರ ಸುಳ್ಳು ಅಲ್ಲವೇ? +ಕೆಲವು ಕಾಲದಿಂದಲೇ, ಹಾರಿಸಿಕೊಂಡು ಹೋಗಬೇಕಾದ ಹೆಣ್ಣನ್ನೂ ಸಹ ಹುಡುಕಿ ಇಟ್ಟಿದ್ದೇನೆ" ಎಂದು ಹೇಳಿಕೊಂಡೇ ಅವರು ಹೊರಟು ಹೋದರು. +ಮರು ದಿವಸ ಅವರು ಬಂದು "ಅವನ ವಿಚಾರ ಸತ್ಕಾರಕ್ಕೆ ಬರೆದಿದ್ದೇನೆ" ಎಂದರು. +"ಯಾರ ವಿಚಾರ?" +"ನಿನ್ನೆ ಹೇಳಿದೆನಲ್ಲ ಆ ಖೈದಿಯ ವಿಚಾರ" +"ಏನೆಂತ ಬರೆದಿದ್ದೀರೋ?" +"ಉಳಿದಿರುವ ಶಿಕ್ಷೆಯನ್ನು ವಜಾ ಮಾಡಬೇಕೆಂದು" +"ಆ ರೀತಿ ಯಾಕೆ ಬರೆದಿರಿ?" +"ನೀನೇ ಹೇಳು, ನಾನು ಮಾತ್ರ ನಿನ್ನನ್ನು ಹಾರಿಸಿಕೊಂಡು ಹೋಗಿ ವಿವಾಹ ಮಾಡಿಕೊಂಡು ನನ್ನ ಅಧಿಕಾರದಲ್ಲಿರುವಾಗ, ಅದೇ ರೀತಿ ಮಾಡಿದ ಮತ್ತೊಬ್ಬನು ಜೈಲಿನಲ್ಲಿರುವುದು ನ್ಯಾಯವೆ?" +"ನೀವೇನೂ ನನ್ನನ್ನು ಹಾರಿಸಿಕೊಂಡು ಹೋಗುವುದಿಲ್ಲ" ಎಂದು ಖಂಡಿತವಾಗಿ ಹೇಳಿದೆ. +"ಹಾಗೆಯೆ?ನಮ್ಮಿಬ್ಬರಿಗೂ ಹೇಳಿರುವ ಜ್ಯೋತಿಷ್ಯ ಸುಳ್ಳಾಗಿ ಹೋಗುವುದೆ? +ನಾನು ಇಷ್ಟು ಕಷ್ಟ ಪಟ್ಟು ದೇವಸ್ಥಾನದ ಧರ್ಮದರ್ಶಿಗಳಿಂದ ಸಂಪಾದಿಸಿರುವ ಈ ಆಶೀರ್ವಾದ ಪತ್ರವೂ ವ್ಯರ್ಥವಾಗಿ ಹೋಗುವುದೇ?" ಎಂದರು. +ನಾನೇನೂ ಬದಲು ಹೇಳಲಿಲ್ಲ. +ತಟಕ್ಕನೆ ಅವರ ಕೈಯ್ಯಲ್ಲಿದ್ದ ಕೆಂಪು ಚೀಟಿಯನ್ನು ಕಿತ್ತುಕೊಂಡೆ, ಮರು ದಿವಸ ಗುಣಕ್ಷೇತ್ರ ದೇವಸ್ಥಾನದಲ್ಲಿ ವಿವಾಹವನ್ನು ನಡೆಸಿಕೊಳ್ಳಲು ದೇವಾಲಯದ ಅಧಿಕಾರಿಗಳು ಕೊಟ್ಟಿದ್ದ ಅನುಮತಿ ಪತ್ರ ಅದು. +ವಧುವಿನ ಹೆಸರು ವಿಮಲಾ ಎಂದು ಇತ್ತು. +ಅದಕ್ಕೆ ಮೇಲೆ ಅಳಿಯನಾಗುವವನು ಎಂಬಲ್ಲಿ ಅತ್ತಾನ್ ರ ಹೆಸರಿತ್ತು. +ಶುಭಮಸ್ತು ಎಂಬ ಧರ್ಮದರ್ಶಿಗಳ ಆಶೀರ್ವಚನವೂ ಇತ್ತು. +ಅತ್ತಾನೆ ಹೀಗೆ ಮಾಡಿದುದಕ್ಕೆ, ನನಗೆ ಮಾತ್ರ ಅವರು ಸಮಯ ಕೊಟ್ಟಿದ್ದರೆ, ಅವರಿಗೆ ಸಾವಿರ ಆಕ್ಷೇಪಣೆ ಹೇಳಿರುತ್ತಿದ್ದೆ. +ಆದರೆ ನಾನು ಅದನ್ನು ಪೂರ್ಣ ಓದುವುದಕ್ಕೆ ಮುಂಚೆಯೇ ಅವರು ಕಿತ್ತುಕೊಂಡು ಹೋಗಿಬಿಟ್ಟರು. +ಅವರನ್ನು ಮತ್ತೆ ಕಂಡಾಗ ಹೇಗೆ ಹೇಗೆ ಗದರಿಸಬೇಕೆಂದು ಆ ಹಗಲು ರಾತ್ರಿಯೆಲ್ಲಾ ಉರು ಹಾಕಿಕೊಂಡಿದ್ದೆ. +ಎಷ್ಟೇ ಅತ್ತಾನಿಯಾಗಿರಲಿ, ಸುಂದರನಾಗಿರಲಿ, ಪ್ರಿಯನಾಗಿರಲಿ, ಈ ರೀತಿ ಅವರೊಂದಿಗೆ ಓಡಿಹೋಗಿ ಯಾರೂ ಕಾಣದಂತೆ ಮದುವೆ ಮಾಡಿಕೊಳ್ಳುವುದು ಚೆನ್ನಾಗಿರುತ್ತದೆಯೇ? +ಅವರೊಂದಿಗೆ ಪ್ರಕಾಶವಾಗಿ ಮಣೆಯ ಮೇಲೆ ಕುಳಿತು ವಿವಾಹವಾಗಲು ನನ್ನ ತಂದೆ ಒಪ್ಪುವುದಿಲ್ಲವೆಂಬ ಮಾತಂತೂ ಇರಲಿ, ನನ್ನ ಮದುವೆಗೆ ನಾನು ಮೊದಲು ಒಪ್ಪಬೇಡವೇ? +ನನ್ನನ್ನು ಬಾಯಿ ಮಾತಿಗಾದರೂ ಕೇಳಿ ಒಪ್ಪಿಸದೆ ನನ್ನ ಸಮ್ಮತಿ ತಮ್ಮ ಕೈಯ್ಯಲ್ಲಿಯೇ ಇದೆಯೆಂದು ತಿಳಿದು ತೀರ್ಮಾನಿಸುವುದೇ? +ಎಷ್ಟು ಧೈರ್ಯ? +ಇದಕ್ಕಾಗಿಯಾದರೂ ಅವನು ಮದುವೆ ಮಾಡಿಕೊಂಡು ಅನಂತರ ದಿನವೂ ಅವರ ಮಾತನ್ನು ಮೀರಿ ನಡೆದ ಸೇಡು ತೀರಿಸಿಕೊಳ್ಳಬೇಕೆಂದು ಕೂಡ ನನಗೆ ಆಗಾಗ್ಗೆ ತೋರಹತ್ತಿತ್ತು. +ಆದರೆ ಮರು ದಿನ ಬೆಳಿಗ್ಗೆ ಅವರನ್ನು ನೋಡಿದಾಗ ನನಗೆ ಅಯ್ಯೋ ಪಾಪ ಎನ್ನಿಸಿತು. +ಕಿವಿಯನ್ನು ಮುಚ್ಚಿ ದವಡೆ ಸುತ್ತ ಒಂದು ಕೆಂಪು ಬಣ್ಣದ ಶಾಲನ್ನು ಸುತ್ತಿದ್ದರು. +ಗಾಬರಿಯಿಂದ "ಏನು ಸಮಾಚಾರ" ಎಂದು ಕೇಳಿದೆ. +"ಕಿವಿ ನೋವು. +ಎರಡು ಕಿವಿಗಳಲ್ಲಿಯೂ ಚುಚ್ಚುತ್ತಿದೆ. +ರಾತ್ರಿಯೆಲ್ಲಾ ಕಣ್ಣನ್ನೇ ಮುಚ್ಚಲಿಲ್ಲ"ನನಗೆ ಕರುಣೆ ಹೆಚ್ಚಾಗಿ ಕೋಪ ಇಳಿದು ಹೋಯಿತು. +"ಏನಾದರೂ ಔಷಧಿ ಮಾಡಿಕೊಳ್ಳಬಾರದೆ?" ಎಂದೆ. +"ಒಂದು ಔಷಧಿಯೂ ಬಾಕಿಯಿಲ್ಲ. +ಇನ್ನು ಮಂತ್ರಿಸಿ ನೋಡಬೇಕು ಅಷ್ಟೆ"ನಮ್ಮ ತಂದೆಯವರಿಗೆ ಮಂತ್ರದಲ್ಲಿ ಪೂರ್ಣ ನಂಬಿಕೆ. +ಯಾವ ರೋಗ ಬಂದರೂ ಊರಿನಲ್ಲಿ ಅವರು ಮಾಂತ್ರಿಕನನ್ನೇ ಕರೆಸುತ್ತಾರೆ. +ನನಗೆ ಅದರಲ್ಲಿ ಅಷ್ಟು ನಂಬಿಕೆ ಇಲ್ಲ. +ಆದರೆ ನಮ್ಮ ಅತ್ತಾನ್ ತುಂಬ ಓದಿದವರು. +ಅವರೇ ಹೇಳುವಾಗ ಯಾಕೆ ಮಾಡಿ ಪರೀಕ್ಷಿಸಬಾರದು?ಎಂದು ನನಗೆ ತೋರಿತು. +ಅತ್ಯಾನ್ ಹೇಳಿದರು"ಆದರೆ ಕಿವಿಯ ನೋವಿಗೆ ಮಂತ್ರಿಸುವುದೆಂದರೆ ಬಹಳ ತಾಪತ್ರಯ. +ಮದುವೆಯಾಗದ ಹೆಣ್ಣು ಮಂತ್ರಿಸಿದರೆ ಮಾತ್ರ ಫಲಿಸುತ್ತೆ" +"ಅದೇನೂ ಅಂತಹ ಮಹಾ ತಾಪತ್ರಯವೆ? +ನಾನು ಸ್ನಾನ ಮಾಡಿ ಶುದ್ಧಳಾಗಿದ್ದೇನೆ. +ಮಂತ್ರವನ್ನು ಹೇಳಿ, ಜಪಿಸುತ್ತೇನೆ" ಎಂದೆ. +"ಜಪಿಸಬೇಡ, ಮಂತ್ರವನ್ನು ನನ್ನ ಕಿವಿಯಲ್ಲಿ ಒಂದು ಸಲ ಹೇಳಿದರೆ ಸಾಕು" ಎಂದು ಹೇಳಿ ಕಿವಿಗೆ ಕಟ್ಟಿದ್ದ ಶಾಲುವನ್ನು ಬಿಚ್ಚಿದರು. +ರಾತ್ರಿಯೆಲ್ಲಾ ಎಚ್ಚರವಾಗಿದ್ದಿದ್ದರೂ ಮುಖವೇನೂ ಬಾಡಿರಲಿಲ್ಲ. +"ಮೊದಲು ಬಲ ಕಿವಿಯಲ್ಲಿ ನಾನು ಹೇಳುವಂತೆ ಹೇಳು" ಎಂದರು. +"ಓಂ""ಓಂ""ಅಗ್ನಿ ಸಾಕ್ಷಿ""ಅಗ್ನಿ ಸಾಕ್ಷಿ""ತವಂ ಮೇ""ತವಂ ಮೇ""ಕಾಂತಃ""ಕಾಂತಃ""ಸರಿ, ಈಗ ಅರ್ಧ ನೋವು ನಿಂತು ಹೋಯಿತು. +ಇನ್ನು ಎಡ ಕಿವಿಯಲ್ಲಿ ಇದಕ್ಕೆ ನಮ್ಮ ಭಾಷೆಯಲ್ಲಿ ಹೇಳಿದರೆ ಸಾಕು""ಓಂ""ಓಂ""ಅಗ್ನಿ ಸಾಕ್ಷಿ-ಅಗ್ನಿ ಭಗವಂತನೇ ಸಾಕ್ಷಿಯಾಗಿರಲಿ""ಅಗ್ನಿ ಸಾಕ್ಷಿ-ಅಗ್ನಿ ಭಗವಂತನೇ ಸಾಕ್ಷಿಯಾಗಿರಲಿ""ತವಂ-ನೀನು""ತವಂ-ನೀನು""ಮೇ-ನನಗೆ""ಕಾಂತಃ-ಕಾಂತನು""ಕಾಂ-ನಾನು ಹೇಳುವುದಿಲ್ಲ""ಆಗಲೇ ಹೇಳಿಯೇ ಆಯಿತೆಲ್ಲ, ಸಂಸ್ಕೃತದಲ್ಲಿ ಅದೂ ಬಲ ಕಿವಿಯಲ್ಲಿ ಹೇಳುವುದು ತಾನೇ ಮುಖ್ಯವಾದುದು. +ಅಗ್ನಿ ಸಾಕ್ಷಿಯಾಗಿ ಹೇಳಿದ ಮಾತುಗಳನ್ನು ಇನ್ನು ಹೇಗೆ ಅಳಿಸುವುದು? +ಬೇರೆ ಪುರುಷನನ್ನು ಹೇಗೆ ಮದುವೆ ಯಾಗುವುದು? +ಆ ಚೀಟಿ ಎಲ್ಲಿ"? +"ಆ ಮೇಜಿನ ಡ್ರಾಯರ್‌ನಲ್ಲಿದೆ ನಾನು ಯಾತಕ್ಕೂ ಸಮ್ಮತಿಸುವುದಿಲ್ಲ" +"ಕಿಟಕಿಯ ಆಚೆ ಇಣಕಿ ನೋಡು, ಬಾಗಿಲಿನಲ್ಲಿ ಮೋಟಾರು ಸಿದ್ದವಾಗಿದೆ." +"ನಾನು ಇಣಕಿ ನೋಡುವುದಿಲ್ಲ. +ಅಬ್ಬ ಎಷ್ಟು ದೊಡ್ಡ ಕಾರು!" +"ಊಟಕ್ಕೆ ಮತ್ತೆ ಹಿಂದಿರುಗಿ ಬಿಡಬಹುದು?" +ಒಂದು ಹೆಜ್ಜೆಯನ್ನೂ ಎತ್ತಿ ಇಡುವುದಿಲ್ಲ. +ನಾನು ಒಳ್ಳೆ ಸೀರೆ ಕೂಡ ಉಟ್ಟುಕೊಂಡಿಲ್ಲ"ನನ್ನ ಪಾಡಿಗೆ ನಾನು ಆಕ್ಷೇಪಿಸುತ್ತಲೇ ಇದ್ದೆ. +ಹೇಗೋ ಮೋಟಾರಿನ ಸಮೀಪಕ್ಕೆ ಹೋಗಿಯೇ ಇದ್ದೆವು. +ಹನ್ನೊಂದು ಗಂಟೆಗೆ ವಿವಾಹಿತ ದಂಪತಿಗಳಾಗಿ ಅತ್ತಾನ್‌ರ ಮನೆಗೆ ಹಿಂತಿರುಗಿದೆವು. +ಆ ದಿನ ಪೂರ್‍ತ ನಮ್ಮ ತಂದೆ ಕೋಪವಾಗಿಯೇ ಇದ್ದರು. +ನಮ್ಮ ಮುಖವನ್ನು ಇನ್ನು ನೋಡುವುದಿಲ್ಲವೆಂದೇ ಹೇಳಿದರು. +ಮರು ದಿನ ನಮ್ಮ ತಾಯಿ "ಚೆನ್ನಾಗಿದೆ. +ಇಂದು ಶ್ರೀ ಜಯಂತಿ ಹಬ್ಬದ ದಿನ ನಮ್ಮ ಒಬ್ಬಳೇ ಹೆಣ್ಣನ್ನೂ ಅಳಿಯನನ್ನೂ ಕರೆಸಿ ಒಂದು ತುತ್ತು ಅನ್ನವನ್ನೂ ಕೂಡಾ ಬಡಿಸದಿದ್ದರೆ ದೇವರು ಏನಾದರೂ ಶಾಪ ಕೊಡುತ್ತಾನೆ" ಎಂದು ಹೇಳಿದ ನಂತರವೇ ನಮ್ಮ ತಂದೆ ನಮ್ಮನ್ನು ಮನ್ನಿಸಿದರು." +ಹೇಗಿದ್ದರೂ ಶಾಸ್ತ್ರಿಗಳು ಹೇಳಿದ್ದ ಜೋತಿಷ್ಯ ಸುಳ್ಳಾಗಲು ಸಾಧ್ಯವೆ? +ಜೋತಿಷ್ಯ ವಿಶೇಷಗಳನ್ನು ಶಾಸ್ತ್ರಿಗಳನ್ನು ಕೇಳುವ ಆವಶ್ಯಕತೆ ತಾನೆ ಏನು? +ನಿಮಗೆ ತಿಳಿಯದ ವಿಷಯವೆ?" ಎಂದು ಅತ್ತಾನ್ ಹೇಳಿದ ನಂತರ ನಮ್ಮ ತಂದೆಗೂ ನಮಗೂ ಪೂರ್ಣವಾಗಿ ರಾಜಿಯಾಗಿಬಿಟ್ಟಿತು. +ನಮ್ಮ ತಂದೆ ಬಹಳ ಬೇಗ "ಅತ್ತಾನ್ ಭ್ರಷ್ಟ" ಎಂಬ ಮಾತನ್ನೇ ಮರೆತುಬಿಟ್ಟರು. +ಶ್ರೀ ಜಯಂತಿಯ ರಾತ್ರಿ ನಾವೆಲ್ಲಾ ಒಟ್ಟಿಗೆ ಊಟಕ್ಕೆ ಕುಳಿತೆವು. +ಈಗೆಲ್ಲಾ ನಮ್ಮ ತಂದೆ ಅಳಿಯಂದಿರು ಎಂದು ಹೇಳುವುದಿಲ್ಲ. +"ಕಲೆಕ್ಟರ್ ಕರೆಯುತ್ತಾರೆ" "ಕಲೆಕ್ಟರ್ ಹೇಳಿದರು" ಎನ್ನುತ್ತಾರೆ. +ಅವರ ಮಾತು ಫಲಿಸಿ ಶೀಘ್ರವಾಗಿ ಕಲೆಕ್ಟರ್ ಕೆಲಸವಾಗುವುದನ್ನು ನಿರೀಕ್ಷಿಸುತ್ತಿದ್ದೇನೆ. +"ಹೀಗೆ ವಿಮಲಾ ನನಗೆ ಹೇಳಿದಾಳೆ, ಈಗಲಾದರೂ ರಾಮಲಿಂಗ ಶಾಸ್ತ್ರಿಗಳ ಜೋತಿಷ್ಯವನ್ನು ನಂಬುತೀರಾ ಇಲ್ಲವೆ?" ಎಂದು ಕಮಲಾ ಕೇಳಿ ಮುಗಿಸಿದಳು. +"ಕತೆ ಏನೋ ಸರಿಯಾಗಿ ಮುಗಿಯಿತು. +ಆದರೆ ಹೆಣ್ಣನ್ನು ಬಲಾತ್ಕಾರವಾಗಿ ಹಾರಿಸಿಕೊಂಡು ಹೋಗಿ ವಿವಾಹವಾಗುತ್ತಾನೆಂದು ಜೋಯಿಸರು ಹೇಳಿರಲಿಲ್ಲವೆ?" ನೀನು ಹೇಳುವುದರಲ್ಲಿ ಹಾಗೆ ಬಲಾತ್ಕಾರವಾಗಿ ಹಾರಿಸಿಕೊಂಡು ಹೋದುದು ಕಾಣುವುದಿಲ್ಲವಲ್ಲ?ಎಂದಳು ಸರಳಾ. +"ಕಾಣುವುದಿಲ್ಲವೆ ನಿನಗೆ?ಎಂದು ಕಮಲಾ ಕೋಪದಿಂದ ಹೇಳಿದಳು." + "ನನ್ನನ್ನು ಅತ್ತಾನ್ ಕಟ್ಟಿ ಎತ್ತಿಕೊಂಡು ಮಹಡಿಯ ಮೆಟ್ಟಿಲುಗಳನ್ನಿಳಿದು ಮೋಟಾರಿನಲ್ಲಿ ಹಾಕಿದುದನ್ನು ನೀನು ನೋಡಿದ್ದರೆ ಹೀಗೆ ಹೇಳುತ್ತಿರಲಿಲ್ಲ" ಎಂದಳು. +"ಓಹೊ ನಿನ್ನನ್ನೆ? +ನಿನ್ನ ಅತ್ತಾನ್ ಕಟ್ಟಿ ಎತ್ತಿಕೊಂಡು ಹೋದುದು? +ಈಗ ಚೆನ್ನಾಗಿ ತಿಳಿಯಿತು. +ನಿನ್ನ ಸ್ನೇಹಿತೆಯ ಕತೆಯನ್ನು ಒಂದು ಅಕ್ಷರವೂ ಕೂಡ ತಪ್ಪದಂತೆ ಜ್ಞಾಪಕವಾಗಿ ಹೇಳುವ, ನಿನ್ನ ಶಕ್ತಿಯೂ ತಿಳಿಯಿತು. +ವಿಮಲಾವನ್ನು ಪ್ರತ್ಯಕ್ಷವಾಗಿ ನೋಡಬೇಕೆಂದು ನನ್ನ ಆಸೆ ಎಂದು ಹೇಳಲಿಲ್ಲವೆ? +ಆ ವ್ಯರ್ಥವಾದ ಮಾತನ್ನು ಇನ್ನೂ ಬಿಟ್ಟೆ" ಎಂದಳು ದೇವಕಿ. +ಅವಳೂ ಸರಳಳೂ ನಕ್ಕರು. +ಕಮಲಾ ಲಜ್ಜೆಯಿಂದ ತಲೆ ತಗ್ಗಿಸಿಕೊಂಡು ಸ್ವಲ್ಪ ಹೊತ್ತು ಮೌನವಾಗಿದ್ದಳು. +"ನಿನ್ನ ಜೋಯಿಸರನ್ನು ಕುರಿತು ನನಗೆ ಸ್ವಲ್ಪ ಸಂದೇಹವುಂಟಾಗಿದೆ" ಎಂದು ದೇವಕಿ ಮತ್ತೆ ಪ್ರಾರಂಭಿಸಿದಳು. +"ಏನು ಸಂದೇಹ?" +"ನಿನ್ನ ಅಡ್ವಾನ್‌ರಿಗೆ ಅವರು ಮೊದಲಿನಿಂದ ಗೊತ್ತು ಅಲ್ಲವೆ?" +"ಹಾಗೇ ಇರಬೇಕು. +ಅವರ ಮಗನಿಗೆ ಸ್ವಲ್ಪ ದಿನಗಳ ಕೆಳಗೆ ಅತ್ತಾನ್ ಶಿಪಾರಸು ಹೇಳಿ ಒಂದು ಗುಮಾಸ್ತೆ ಕೆಲಸವನ್ನು ಕೊಡಿಸಿದರು. +"ಹೋಗಲಿ ಪ್ರಪಂಚದಲ್ಲಿ ಕೃತಜ್ಞತೆ ಎಂಬುದು ಇನ್ನೂ ಇದೆ." +"ಹಾಗಂದರೇನು?" ಎಂದು ಕಮಲಾ ಗೊಣಗುಟ್ಟಿದಳು. +"ಹಾಗೆಂದರೆ ಆ ಮಹಡಿ ಮೆಟ್ಟಿಲು ದೃಶ್ಯವನ್ನು ನೋಡಲು ಲಭ್ಯವಾಗದೇ ಹೋಯಿತಲ್ಲಾ ಎಂದು ವಿಷಾದಪಡುತ್ತೇನೆ" ಎಂದಳು ದೇವಕಿ. +"ಅವಳ ಮಾತಿರಲಿ, ನಾನು ಸ್ವಲ್ಪ ಜೋತಿಷ್ಯ ಹೇಳುತ್ತೇನೆ ಕೇಳು" ಎಂದಳು ಸರಳಾ. +"ಏನು ಜೋತಿಷ್ಯ ?" +"ಶಾಸ್ತ್ರಿಗಳೂ ಅವರ ದೇವಿಯರೂ, ಮೊದಲು ಉಡುತ್ತಿದ್ದ ಹರಕಲು ಪಂಚೆಯನ್ನೂ ನೂಲು ಕಂಬಿ ಸೀರೆಯನ್ನೂ ಬಿಟ್ಟು, ರೇಶ್ಮಿ ಅಂಚಿನ ಸಂಚಿಯನ್ನೂ ಬೆಂಗಳೂರು ರೇಷ್ಮೆ ಸೀರೆಯನ್ನೂ ಕೊಳ್ಳುವವರಾಗಿದ್ದಾರೆ ಅಲ್ಲವೆ?" +"ಆಗಲೇ ಕೊಂಡುಕೊಂಡು ಆಯಿತಲ್ಲ" +"ಹಾಗೋ!ಹಾಗಾದರೆ ಆಕೆಗೆ ಹೊಸದಾಗಿ ಒಡವೆಗಳನ್ನೂ ಮಾಡಿಸಿ ಕೊಳ್ಳುವ ಆಸೆ ಇರಬಹುದೆ?" +"ಸವರನ್ ಬೆಲೆ ಹೇಗಿದೆ ವಿಚಾರಿಸಿ ಬರೆಯಿರಿ ಎಂದು ಆಕೆ ನನಗೆ ಬರೆದಿದ್ದಾಳೆ" +ಇವೆಲ್ಲ ಅವರ ಮಗ ಸಂಪಾದಿಸುತ್ತಿರುವ ೩೦ ರೂಪಾಯಿ ಗುಮಾಸ್ತೆ ಕೆಲಸದಿಂದ ಆಗುತ್ತಿದೆಯಲ್ಲವೆ? + ಈಶ್ವರನ ಜಡೆಯಿಂದ ಗಂಗಾ ಪ್ರವಾಹದಂತೆ ಅಲ್ಲಿ ಹಣ ಸುರಿಯುತ್ತಿರಬಹುದು"ಸರಳಳೂ ದೇವಕಿಯೂ ನಕ್ಕರು. +ಕಮಲಾ ಸಹ ನಗುವಿನಲ್ಲಿ ಸೇರದಿರಲು ಸಾಧ್ಯವಾಗಲಿಲ್ಲ. +ಅನಂತರ "ಅದೆಲ್ಲಾ ಏನೂ ಇಲ್ಲ. +ನಮ್ಮ ಜೋಯಿಸರದು ಏನೂ ತಪ್ಪಿಲ್ಲ" ಎಂದಳು ಕಮಲಾ. +"ತಪ್ಪು ಎಂದು ಹೇಳಲಿಲ್ಲವಲ್ಲ. +ನಾನೂ ಸಹ ಶಾಸ್ತ್ರಿಗಳನ್ನು ಕರೆಸಿ ಜೋತಿಷ್ಯ ಕೇಳಬೇಕೆಂದು ನಿಶ್ಚಯಿಸಿದ್ದೇನೆ" ಎಂದಳು ಸರಳಾ. +"ಎಲ್ಲಾ ಬಿಟ್ಟು ಶಾಸ್ತ್ರಿಗಳು ಯಾಕೆ ಸುಂದರರಾಗಿ ಒಳ್ಳೆಯವರಾಗಿ ಸಬ್ ಕಲೆಕ್ಟರ್ ಆಗಿರುವ ಒಬ್ಬ ಅತ್ಯಾನ್ ಇದ್ದರೇ ಸಾಕಲ್ಲ!"ಎಂದಳು ದೇವಕಿ. -- GitLab