ತಗ್ಗಿದ ದನಿಯಲ್ಲಿ ಮಾತನಾಡುವ ಹಿರಿಯರ ಮಾತಿಗೆ ಎದುರಾಡದ ಅಷ್ಟೇನು ಫ್ಯಾಷನ್ ಮಾಡದೆ ಸರಳತೆಯನ್ನು ಉಡುಪಿನಲ್ಲೂ ಸ್ವಭಾವದಲ್ಲೂ ಅಳವಡಿಸಿಕೊಂಡಿದ್ದ ಅವಳು ಬರುಬರುತ್ತಾ ನನಗೂ ಇಷ್ಟವಾದಳು.
ಎಷ್ಟೋ ಸಲ ಅವಳು ಮನೆಗೆ ಬಂದಾಗ ಬೇಕೆಂದೇ ನಾನು ಓದುತ್ತಲೋ ಬರೆಯುತ್ತಲೋ ಕೂತು ಬಿಡುತ್ತಿದ್ದೆ.
ಆಗ ನೋಡಬೇಕು ಅವಳ ಚಡಪಡಿಕೆ.
ನನ್ನ ರೂಮಿಗೆ ಒಬ್ಬಳೆ ನುಗ್ಗಿ ಬರುವಷ್ಟು ಧೈರ್ಯ ಅವಳಿಗಿದ್ದಿರಬಹುದಾದರೂ ನನ್ನಮ್ಮನ ಕಣ್ಣಿನ ಸರ್ಪ ಗಾವಲು ದಾಟಿ ಒಳ ಬರುವಷ್ಟು ಧಾರ್ಷ್ಟ್ಯವೆಲ್ಲಿಯದು?
ನಾನು ಓದುವಾಗ ಬರೆವಾಗ ಡಿಸ್ಟರ್ಬ್ ಆದೀತು ಎಂದು ಮನೆಯವರು ಯಾರೇ ಆಗಲಿ ರೂಮಿನತ್ತ ತಲೆ ಹಾಕುತ್ತಿರಲಿಲ್ಲ.
ನಮ್ಮ ಮನೆಗೆ ಎಂಟ್ರಿ ಆದೊಡನೆ ಪಟಾಕಿಯಂತೆ ಸದ್ದು ಮಾಡುತ್ತಾ ಚುರುಕಾಗಿರುತ್ತಿದ್ದ ಶೋಭಾ ನಾನವಳನ್ನು ಗಮನಿಸುತ್ತಿಲ್ಲವೆಂಬುದು ಅರಿವಾಗುತ್ತಲೇ ಮೂಡ್ ಔಟಾಗಿ ಠುಸ್ ಪಟಾಕಿಯಂತೆ ಸದ್ದಿಲ್ಲ ಕಿಡಿಯೂ ಇಲ್ಲ ಹೋಗುವಾಗೊಮ್ಮೆ ರೂಮಿನತ್ತ ಕಣ್ಣುಹಾಯಿಸಿ "ಬರ್ತೀನಿ ಸಾರ್"ಎಂದು ಹೇಳದೆ ಮಾತ್ರ ಹೋದವಳಲ್ಲ.
ನನ್ನ ಕಥೆ ಸಂಪಾದಕರ ವಿಷಾದ ಪತ್ರ ಹೊತ್ತು ವಾಪಸ್ ಬಂದರೆ ನನಗಿಂತ ಅವಳಿಗೇ ಹೆಚ್ಚು ಬೇಸರ, "ಸಾರ್, ಆ ಪತ್ರಿಕೆಯ ಪುರವಣಿ ಸಂಪಾದಕ ಗ್ಯಾರಂಟಿ ಮುದ್ಕ ಸಾರ್.
ಈ ಮುದುಕರಿಗೆ ಪ್ರೇಮವೆಂದರೇನೇ ಅಲರ್ಜಿ…
ಇನ್ನೊಂದು ಪೇಪರ್ಗೆ ಕಳ್ಸಿ ಸಾರ್ ಹುರುಪು ತುಂಬುತ್ತಿದ್ದಳು.
ತಾನೇ ಸ್ಟಾಂಪ್ ಹಚ್ಚಿ ಪೋಸ್ಟ್ ಮಾಡುವಷ್ಟು ಕಾಳಜಿ ತೋರುತ್ತಿದ್ದ ಅವಳು,ದಿನಗಳೆದಂತೆ ನಾನು ತಿದ್ದಿ ತೀಡಿ ಗೀಚಿದ ಕಥೆಗಳನ್ನು ಮನೆಗೋಯ್ದು ತಾಳ್ಮೆಯಿಂದ ನೀಟಾಗಿ ಪ್ರತಿ ಮಾಡಿ ತರುವ ಹೊಣೆ ಹೊತ್ತಳು.
ನನ್ನಂತಹ ಆರ್ಡಿನರಿ ಸಾಹಿತಿಗೂ ಶಿಷ್ಯೆಯೊಬ್ಬಳು ಸಿಕ್ಕಳಲ್ಲ ಎಂಬ ಖುಷಿಯನ್ನು ಮೊದಲಬಾರಿಗೆ ಎದೆಯ ಚಿಪ್ಪಿನಲ್ಲಿ ತುಂಬಿದ್ದು ಅವಳೇ.
ಹೀಗಾಗಿ ನೇರ ನನ್ನ ರೂಮಿಗೆ ಬರುವಷ್ಟು 'ಪ್ರೀ' ಆದಳು.
ಮನೆಯವರೂ ಚಕಾರವೆತ್ತಲಿಲ್ಲ.
ಈಗವಳು ತಾನಾಗಿಯೇ ಮನೆಗೆ ಬರುತ್ತಿದ್ದಳು.
ಸುಶಿಯ ನೆಪ ಬೇಕಿರಲಿಲ್ಲ ನನ್ನ ಬರವಣಿಗೆಯ ಲಿಪಿಕಾರಳ ಪಟ್ಟ ಗಿಟ್ಟಿಸಿಕೊಂಡಿದ್ದ ಅವಳು ಮನೆಯ ಒಳಗೂ ಹೊರಗೂ ನನ್ನೊಂದಿಗೂ ಬಿಡುಬೀಸಾಗಿ ವರ್ತಿಸುವ ಸ್ವಾತಂತ್ರ್ಯ ಪಡೆದುಕೊಂಡಳು.
ನಾನು ಅಗ್ರಿಕಲ್ಚರ್ ಇಲಾಖೆಯಲ್ಲಿ ಗುಮಾಸ್ತನಾಗಿದ್ದುಕೊಂಡು ಕಛೇರಿ ವೇಳೆಯ ನಂತರವೇ ಸಾಹಿತ್ಯಿಕ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕಿದ್ದರಿಂದ ನೀಟಾಗಿ ಪ್ರತಿ ತೆಗೆಯುವಲ್ಲಿ ಉಂಟಾಗುತ್ತಿದ್ದ ಶ್ರಮವನ್ನು ತಪ್ಪಿಸಿದ ಶೋಭಾ ಮತ್ತವಳ ಸ್ನೇಹವೀಗ ನನಗೂ ಅನಿವಾರ್ಯ ಎನಿಸಿತು.
ಅವಳ ಪ್ರಶಂಸೆಯಿಂದಾಗಿ ಒಂದು ತೆರನಾದ ಸ್ಪೂರ್ತಿ ನನ್ನ ಬರವಣಿಗೆಯಲ್ಲಿ ಆವಿರ್ಭವಿಸುವಾಗ ಅದರ ಲಾಭವನ್ನು ಪಡಯದೆ ಇರಲುಂಟೆ?
ಪ್ರಶಂಸೆಗೆ ದೇವರೇ ಸೋಲುವಾಗ ನನ್ನಂತಹ ಹುಲು ಮಾನವನ ಪಾಡೇನು-ಸೋತೆ.
ನಾನೆಲ್ಲಾದರೂ ತಲೆನೋವು ಎಂದರೆ ಸಾಕು, ಅವಳು ಅದೆಷ್ಟು ಸಂಕಟಪಡುತ್ತಿದ್ದಳೆಂದರೆ ತಾನೇ ಮನೆಯವರಿಂದ ಜಂಡುಬಾಮ್ ಕೇಳಿ ಪಡೆದು ಸ್ವಲ್ಪವೂ ಅಳುಕದೆ ತಾನೇ ಹಣೆಗೆ ಲೇಪಿಸುವಾಗ ನನಗೇ ಒಳಗೆ ಪುಕು ಪುಕು.
ಒಂದು ದಿನ ಗ್ರಹಚಾರಕ್ಕೆ ಜ್ವರ ಕಾಣಿಸಿಕೊಂಡಿತು.
ಅಂದೇ ನನ್ನ ಕಥೆಯೊಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಪತ್ರಿಕೆ ಹಿಡಿದೇ ಬಂದ ಶೋಭಾ ಗಾಬರಿಗೊಂಡಳು.
"ಅದೇನು ಮಾಡತ್ತಮ್ಮ, ಪ್ಯಾರಾಸಿಟಮೋಲ್ ತಗೊಂಡಿದ್ದಾನೆ ಸಂಜೆ ಹೊತ್ತಿಗೆ ಬಿಡುತ್ತೆ"ಅಂದರು ಅಪ್ಪ ಅವಳು ಬಿಡಬೇಕಲ್ಲ?
"ಬನ್ನಿ ಬನ್ನಿ… ನಮ್ಮ ಫ್ಯಾಮಿಲಿ ಡಾಕ್ಟರ್ ಒಬ್ಬರಿದಾರೆ"ಅಂತ ದುಂಬಾಲು ಬಿದ್ದಳು.
ಇವಳದೇಕೋ ಅತಿರೇಕವಾಯಿತೆಂದು ಮನೆಯವರಿಗೆ ಅನ್ನಿಸಿರಬೇಕು.
ಅಪ್ಪನ ಮೋರೆಯಲ್ಲಿ ಸಿಡುಕು ಒಡಮೂಡಿತು.
ಆದರೆ ಶೋಭಾ ಕ್ಯಾರೆ ಮಾಡಲಿಲ್ಲ.
ಅವಳ ಆಕ್ಕರೆಯನ್ನು ತಳ್ಳಿ ಹಾಕುವಷ್ಟು ಪವರ್ ನಾನೆಂದೋ ಕಳೆದುಕೊಂಡಿದ್ದರಿಂದ ಅವಳ ವಹಿಕಲ್ನ ಹಿಂದೆ ಕೂತೆ.
ಡಾಕ್ಟರ್ ಪರೀಕ್ಷಿಸಿದರು.
"ಫೀವರ್ ತುಂಬಾ ಇದೆ"ಅಂದರು.
ಸಿರೀಂಜ್ನಿಂದ ರಕ್ತ ತೆಗೆದು ಪುಟ್ಟ ಬಾಟಲಿನಲ್ಲಿ ಶೇಖರಿಸಿ ರಕ್ತಪರೀಕ್ಷೆ ಮಾಡಿಸಿ ಎಂದು ಚೀಟಿ ಬರೆದು ಕೊಟ್ಟರು.
ನನ್ನನ್ನು ಬೆಂಚಿನ ಮೇಲೆ ಕೂರಿಸಿದ ಶೋಭಾ ತಾನೇ ಬೀದಿ ಕೊನೆಯಲ್ಲಿರುವ ವಾಸವಿ ಲ್ಯಾಬ್ಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಬಂದಳು.
"ನಾನು ಗೆಸ್ ಮಾಡಿದ್ಹಾಗೆ ಇಟ್ ಈಸ್ ಟಾಯ್‍ಫೈಡ್"ಅಂದರು ಡಾಕ್ಟರು.
ಇವಳು ಅಳೋದಕ್ಕೆ ಶುರುಮಾಡಿದಳು.
"ಈಗೆಲ್ಲಾ ಇದು ಹೆದರುವಂತಹ ಖಾಯಿಲೆ ಆಲ್ಲಾರಿ… ಟೇಕ್ ಇಟ್ ಈಸಿ…
ಒಳ್ಳೆಯ ಅಂಟಿಬಯೋಟಿಕ್ಸ್ ಬರೆದುಕೊಡುತ್ತೇನೆ.
ವಿತ್ ಇನ್ ಎ ವೀಕ್ ಹಿ ವಿಲ್ ಬಿ ಆಲ್ ರೈಟ್"ಡಾಕ್ಟರ್ ನಕ್ಕರೂ ಇವಳು ನಗಲೇ ಇಲ್ಲ.
ಮನೆಗೆ ಬಂದೆವು.
ವಿಷಯ ತಿಳಿದ ಮೇಲೆ ಗಂಟಿಟ್ಟ ಮೋರೆಗಳು ಸಡಿಲಗೊಂಡು ಅದರ ಜಾಗದಲ್ಲೀಗ ಗಾಬರಿ ಇಣುಕಿತು.
ಸಮಯಕ್ಕೆ ಸರಿಯಾಗಿ ಬಂದು ಕರೆದೊಯ್ದ ಶೋಭಾಗೆ ಎಲ್ಲರೂ ‘ಥ್ಯಾಂಕ್ಸ್’ ಹೇಳುವವರೆ.
ಒಂದೆರಡು ವಾರದಲ್ಲಿ ಜ್ಜರಬಿಟ್ಟು ಮೊದಲಿನಂತಾದೆ.
ಆಗಂತೂ ದಿನವೂ ಬಂದಳು.
ಹೆಚ್ಚು ಹೊತ್ತು ರೂಮಿನಲ್ಲೇ ಕಳೆದಳು.
ನಾನು ಕೆಮ್ಮಿದರೂ ಶೀನಿದರೂ ಅವಳಿಗೆ ಎದೆಗುದಿ.
ಅನೇಕ ಸಲ ಕಛೇರಿಗೇ ಬಂದುಬಿಡುತ್ತಿದ್ದಳು.
ಆಗೆಲ್ಲಾ ಅವಳಿಗಾಗಿ ನಾನೂಂದಿಷ್ಟು ಖರ್ಚು ಮಾಡಬೇಕಿತ್ತು.
ಹತ್ತಿರದ ಹೋಟೆಲ್ಲಿಗೆ ಕರೆದೋಯ್ದು ದೋಸೆ ಕಾಫೀ ಆತಿಥ್ಯ ನೀಡುವುದಿತ್ತು.
ಅನೇಕ ಸಲ ಜೇಬಿನಲ್ಲಿ ಕಾಸಿಲ್ಲದಾಗ ಸಹೋದ್ಯೋಗಿಗಳಿಂದ ಸಾಲ ಎತ್ತಿ ಲಿಪಿಕಾರಳನ್ನು ತಣಿಸಬೇಕಿತ್ತು.
ಮನೆಯಲ್ಲಿ ಅಂತಹ ಅನುಕೂಲವಿರಲಿಲ್ಲ.
ತಂದೆಯ ಪೆನ್ಷನ್ ಮತ್ತು ನನ್ನ ಸಂಬಳದಲ್ಲಿ ಮನೆ ಸಾಗಬೇಕಿತ್ತು.
ಆದರ್ಶದ ಕನಸುಗಳನ್ನು ಕಂಡವನಲ್ಲ ನನ್ನ ಹೆತ್ತವರಂತೂ ಮಹಾ ಸಂಪ್ರದಾಯಸ್ಥರು.
ನಿವೃತ್ತಿಯ ನಂತರ ಅಪ್ಪನಂತೂ ತ್ರಿಕಾಲ ಸಂದ್ಯಾವಂದನೆ ಮಠದಲ್ಲಿ ಪುರಾಣ ಹೇಳುತ್ತ ಬ್ರಾಹ್ಮಣರ ಪಳೆಯುಳಿಕೆಯಂತಾಗಿ ಬಿಟ್ಟಿದ್ದರು.
ಶೋಭಾಳ ವೈಖರಿ ಮನೆಯವರಲ್ಲಾಗಲೆ ದಿಗಿಲು ಮೂಡಿಸಿತ್ತು.
ಸುಶಿ, ಶೋಭಾಳನ್ನು ಹೆಚ್ಚು ಹಚ್ಚಿಕೊಳ್ಳದೆ ನುಣುಚಿಕೊಳ್ಳುತ್ತಿದ್ದಳು.
ಫೇಲಾದರು ಸರಿ ಆ ಪೀಡೆಯ ಸ್ನೇಹ ನಿನಗೆ ಬೇಡವೆಂದಿದ್ದರಂತೆ ಅಪ್ಪ.
ಸುಶಿ ಹೇಳಿದ್ದಳು, "ಶೋಭಾ ಮನೆಗೆ ಬರೋದು ಯಾರಿಗೂ ಇಷ್ಟವಾಗುತ್ತಿಲ್ಲ ಕಣೋ"ಎಂದು ನನ್ನನ್ನು ಒಂದರ್ಥದಲ್ಲಿ ಎಚ್ಚರಿಸಿದ್ದಳು.
ಅವಳು ಬಂದರೆ ಯಾರೊಬ್ಬರೂ ಸರಿಯಾಗಿ ಮಾತನಾಡಿಸದಂತಾದಾಗ ತೊಂದರೆಯಾದದ್ದು ನಾನು ಗೀಚಿದ ಕಥೆಗಳಿಗೆ.
ಆವಳು ಮನೆಗೆ ಸಂಪೂರ್ಣ ಬರದಂತಾದ ಮೇಲೆಯೇ ಅವಳ ಮಾತು, ಸಾಂತ್ವಾನ, ಸನಿಹ, ಪ್ರಶಂಸೆ, ಅಕ್ಕರೆಗಳಿಲ್ಲದೆ ನಾನೂ ಬರಿದಾದೆ ಎನ್ನಿಸಿದ್ದು.
ನನ್ನಿಂದ ಒಂದು ಕಥೆಯೂ ಹುಟ್ಟದಂತಾದಾಗ ನನಗೇ ವಿಸ್ಮಯ.
ಅವಳ ಮನೆಗೇ ಹೋದರೆ ಹೇಗೆ?
ಎದೆ ಡವಗುಟ್ಟಿತು.
ಆಕೆ ಗೌಡರ ಮನೆ ಹೆಣ್ಣು.
ತೋಟ ತುಡಿಕೆ ಇರುವ ಸಿರಿವಂತ ಜನ.
ಸಿರಿಯ ಎದುರು ಜಾತಿಗೆ ಸೆಟೆದು ನಿಲ್ಲುವಷ್ಟು ದಮ್ಮು ಎಲ್ಲಿಯದು?
ಕೇವಲ ಕಥೆ ಕಾವ್ಯಗಳಲ್ಲಿ ಮಾತ್ರವೇ ಅಮರರಾದ ಪ್ರೇಮಿಗಳು ಸುಖಪಟ್ಟ ಮಾತಿರಲಿ ಸಾವನ್ನಪ್ಪಿದ ಉದಾಹರಣೆಗಳೇ ಹೆಚ್ಚು.
ನನಗೂ ಇದೆಲ್ಲಿಯ ಉಸಾಬರಿಯಪ್ಪ ಎಂಬ ಒಳಗುದಿ.
ಆದರೆ ಅವಳು ಕಚೇರಿಗೆ ಬಂದಳು.
ಕಚೇರಿಯಲ್ಲಿ ಗುಸುಗುಸು ಎದ್ದ ಮೇಲೆ ಅಲ್ಲಿ ಇಲ್ಲಿ ಭೇಟಿ ಮಾಡೋದು.
ಬರ್ತ್ ಡೇ ಗಿಫ್ಟ್ ಗಳ ವಿನಿಮಯ.
ಕದ್ದು ಪಿಕ್ಚರ್ಗೆ ಹೋಗೋದು.
ಬೇಕೆಂದೇ ಸಿಟಿಬಸ್ ಗಳಲ್ಲಿ ಕೂತು ಹರಟುತ್ತಾ ಬೇಕೆಂದಲ್ಲಿ ಹತ್ತಿ ಇಳಿಯೋದು.
ಹೀಗೆ ಹೊಸ ವ್ಯವಸ್ಥೆ ತಾನಾಗಿಯೇ ಸೃಷ್ಟಿಯಾಗಿ ನೆರವಿಗೆ ನಿಂತಿತು.
ಇಬ್ಬರೂ ‘ಐ ಲವ್ ಯೂ’ ಅಂತ ಎಂದೂ ಒಬ್ಬರಿಗೊಬ್ಬರು ಹೇಳದಿದ್ದರೂ ನಾವಿಬ್ಬರೂ ಎಂದೋ ಪ್ರೇಮಿಸುತ್ತಿದ್ದೇವೆಂಬುದು ಇಬ್ಬರಿಗೂ ತಿಳಿದಿತ್ತು.
ಇದು ಊರ ತುಂಬಾ ಸುದ್ದಿಯಾದಾಗ ಶೋಭಾಳ ಮನೆಯವರು ನನ್ನನ್ನು ಮನೆಗೆ ಕರೆಸಿ ಛೀಮಾರಿ ಹಾಕಿ ಬೆದರಿಸಿದರು.
ಏನು ಮಾತನಾಡಬೇಕೋ ತೋಚದೇ ಮೌನವಾಗಿದ್ದನಾದರೂ ಶೋಭಾ ಮಾತ್ರ ಎದುರಾಡಿ ಪ್ರತಿಭಟಿಸಿದ್ದಳು.
"ನಾವಿಬ್ಬರೂ ಮದುವೆಯಾಗೋದನ್ನು ಯಾರೂ ತಡೆಯೋಕೆ ಸಾಧ್ಯವಿಲ್ಲ"ಎಂದು ಶೋಭಾ ಸಿನಿಮಾ ಹೀರೋಯಿನ್ನಂತೆ ಚೀರಾಡಿದ್ದಳು.
ನನ್ನ ಎದುರೇ ಅವಳಿಗೆ ಹೊಡೆತಗಳು ಬಿದ್ದವು.
"ನಾನು ಮೆಜಾರಿಟಿಗೆ ಬಂದಿದ್ದೇನೆ.
ನಿಮ್ಮನ್ನು ಪೋಲಿಸ್ ಕಟ್ಟೆ ಹತ್ತಿಸುತ್ತೇನೆ… ಬಿ ಕೇರ್ ಫುಲ್"ಎಂದು ತಿರುಗಿ ಬಿದ್ದಳು.
"ಹಾಳಾಗಿ ಹೋಗು… ನೀನು ಹುಟ್ಟೇ ಇರಲಿಲ್ಲ ಅಂದ್ಕೋತೀವಿ"ಎಂದು ಅವಳ ಸಮೇತ ನನ್ನನ್ನು ಆಚೆಗೆ ತಳ್ಳಿದರು.
ಆಗ ನೆರವಿಗೆ ನಿಂತವರು ಆಫೀಸಿನವರು.
ನನ್ನ ಮನೆಯವರಂತೂ ಹೊರಗೇ ನಿಲ್ಲಿಸಿದರು.
"ತೊಲಗಿ ಹೋಗು ಶ್ವಾನವೇ.
ಹೆತ್ತವರು ಒಡಹುಟ್ಟಿದವರಿಗಿಂತ ಪ್ರೇಮ ಹೆಚ್ಚೇನೋ ಅವಿವೇಕಿ.
ಈವತ್ತು ನಿನಗಾಗಿ ಹೆತ್ತೋರನ್ನ ಬೆನ್ನಲ್ಲಿ ಬಿದ್ದವರನ್ನು ಬಿಟ್ಟು ಬಂದ ಈ ಪ್ರಾರಬ್ಧ;
ನಾಳೇ ಸಿರಿವಂತ ಸಿಕ್ಕರೆ ನಿನ್ನನ್ನೂ ಬಿಟ್ಟು ಹೋಗ್ದೆ ಇರ್ತಾಳೇನೋ ಶತಮೂರ್ಖ"ಅಪ್ಪನ ನಾಲಿಗೆಗೆ ಹಿಡಿತವೇ ಇರಲಿಲ್ಲ.
ಅನ್ನಬಾರದ್ದನ್ನೆಲ್ಲಾ ಅಂದರು.
ನಾವು ನಿಂತ ಜಾಗಕ್ಕೆ ಗೋಮೂತ್ರ ಚಿಮುಕಿಸಿ ಮಡಿ ಮಾಡಿಕೊಂಡರು.
ನನ್ನ ಜವಾಬ್ದಾರಿಗಳ ಅರಿವು ನನಗಿತ್ತು.
ಕ್ಷಣದಲ್ಲೇ ರಸ ಹೀರಿದ ಕಬ್ಬಿನ ಸಿಪ್ಪೆಯಂತಾಗಿಬಿಟ್ಟಿದ್ದ ತಂಗಿಯರು, ಪುಟ್ಟ ತಮ್ಮ ಚಿಂತೆಯಿಂದ ಕಂಗಾಲಾದ ಅಮ್ಮ ಇವರ ಮೋರೆ ನೋಡುವಾಗ ಕರುಳ ಸಂಬಂಧವನ್ನು ನಿರಂತರವಾಗಿ ಕಳೆದುಕೊಳ್ಳುವ ಸ್ಥಿತಿಗೆ ಬಂದು ನಿತ್ರಾಣವಾಗಿ ಅನಾಥನಂತೆ ನಿಂತಿದ್ದ ನನ್ನ ಕೈಯನ್ನು ಹಿಡಿದು ಶೋಭಾ, ಭರವಸೆ ನೀಡುವಂತೆ ಮೆದುವಾಗಿ ಅಮುಕಿದ್ದಳು.
ಪುನಃ ಪ್ರಾಣ ವಾಹಿನಿ ನರನರಗಳಲ್ಲಿ ಹರಿಯಲಾರಂಭಿಸಿತ್ತು .
ಪ್ರೇಮಕ್ಕೆ ಇಂತಹ ಅದ್ಭುತ ಶಕ್ತಿ ಇದೆಯೆ ಎಂದು ಎಚ್ಚರಗೊಂಡೆ.
ಬೇರೆ ಮನೆ ಮಾಡಿಕೊಂಡೆವು.
ಅರಿತ ಮನಗಳ ಮಿಲನ ಅದೆಷ್ಟು ಸುಖ ನೀಡುತ್ತೆ ಎಂಬುದರ ಅರಿವಾಗಿತ್ತು.
ಪ್ರತಿತಿಂಗಳು ನನ್ನ ಮನೆಗೆ ಇಂತಿಷ್ಟು ಹಣ ಎಂ.ಒ.ಮಾಡಿ ಅಪರಾಧಿ ಭಾವದಿಂದಲೂ ಮುಕ್ತನಾದೆ.
ಅವಳ ಮನೆಯವರಾಗಲಿ ನಮ್ಮವರಾಗಲಿ ನಮ್ಮತ್ತ ತಲೆ ಹಾಕದಿದ್ದರೂ ಮೊದಲಿನಂತೆ ಚಿಂತಿಸದೆ ಕೆಣ್ಣೀರ್ಗರೆಯದೆ ನಾವೆಂದೂ ಪಶ್ಚಾತಾಪ ಪಡಬಾರದೆಂಬ ನಿಲುವಿಗೆ ಬಂದಿದ್ದೆವು.
ಸುಖವಾಗಿಯೇ ಒಂದಷ್ಟು ತಿಂಗಳುಗಳು ಕಳೆದವು.
ಎರಡು ಸಂಸಾರದಂತಾದಾಗ ಕೈ ಸಾಲಗಳು ಸರ್ಕಾರಿ ಫೋನ್‍ಗಳೂ ಹೆಚ್ಚಿ ನಿಜವಾಗಲೂ ನಾವು ಸುಖವಾಗಿ ಇದ್ದೇವೆಯೇ ಎಂಬ ಅನುಮಾನ ನನ್ನನ್ನಂತೂ ಇತ್ತೀಚೆಗೆ ಕಾಡಲಾರಂಭಿಸಿದೆ.
ಅದಕ್ಕೆ ಇಂಬು ಕೊಡುವಂತೆ ಶೋಭಾಳ ನಡವಳಿಕೆಯಲ್ಲೂ ಏರುಪೇರಾದದ್ದು ಮತ್ತಷ್ಟು ಅಧೀರನನ್ನಾಗಿಸಿದೆ.
ನಾನು ಬರೆವ ಕಥೆಗಳಲ್ಲಿ ಅವಳಿಗೆ ಮುಂಚಿನ ಆಸಕ್ತಿಯೇ ಉಳಿದಿಲ್ಲ ನೀಟಾದ ಪ್ರತಿ ತೆಗೆದುಕೊಡುವ ಮಾತಂತೂ ದೂರವೇ ಉಳಿಯಿತು.
ನನ್ನ ಮೇಲೆ ಆಕ್ಷೇಪಣೆಗಳೂ ಶುರುವಾಗಿವೆ.
"ದಂಡಿ ಕೆಲಸ ಮಾಡಿ ನನ್ನ ಸೊಂಟವೇ ಬಿದ್ದು ಹೋಗಿದೆ.
ನಾನೇ ಎದ್ದು ಹೋಗಿ ಒಂದು ಲೋಟ ನೀರೂ ತೆಗೆದುಕೊಂಡು ಕುಡಿದವಳಲ್ಲ ಕೆಲಸದವಳನ್ನಾದರೂ ಇಟ್ಕೊಳ್ಳೋಣ ಅಂದ್ರೆ ನೀವು ಕಿವಿ ಮೇಲೇ ಹಾಕ್ಕೊಳ್ಳೋದಿಲ್ಲ"ಅಂತ ಶೋಭಾಳ ಪ್ರಲಾಪ ಹೆಚ್ಚಿದೆ.
ಹಾಲು, ಮೊಸರು, ರೇಷನ್, ವಿದ್ಯುತ್‍ಗೆ ಹಣ ಹೊಂಚಲೇ ಪರದಾಡುವ ನನ್ನ ಸ್ಥಿತಿ ಅವಳಿಗೆಲ್ಲಿ ಅರ್ಥವಾಗಬೇಕು?
ಎಂತಹ ಮುನಿಸೂ ಹಾಸಿಗೆಯಲ್ಲಿ ಕರುಗುತ್ತವಂತೆ.
ನಮ್ಮ ಮುನಿಸುಗಳು ರೈಸ್ ಆಗುತ್ತಿದ್ದುದೇ ಹಾಸಿಗೆಯಲ್ಲಿ.
ಇಂಥವಳಿಗಾಗಿ ಮನೆಯವರನ್ನೆಲ್ಲಾ ನಡುನೀರಿನಲ್ಲಿ ಬಿಟ್ಟು ಬಂದೆ.
ಜನಿವಾರ ಕಿತ್ತೆಸೆದೆ.
ಆದದ್ದೇನು?ನಾನು ತಲೆ ನೋವೆಂದು ಮಲಗಿದರೂ ಅಡಿಗೆಮನೆ ಬಿಟ್ಟು ಬರುವುದೇ ಇಲ್ಲ.
ಜ್ವರದಿಂವ ನರಳುತಿದ್ದರೂ ಇವಳೂ ಬಟ್ಟೆ ಸೆಳೆದು ಒಣ ಹಾಕಿ, ಅನ್ನ ಬೇಯಿಸಿ ಕಸ ಮುಸುರೆ ಪೂರೈಸಿ ಆಮೇಲೆ ಬಂದು ಹಣೆ ಮುಟ್ಟಿ ನೋಡುವಷ್ಟು ದಯೆಯನ್ನಂತೂ ಉಳಿಸಿಕೊಂಡಿದ್ದಾಳೆ.
ಎಲ್ಲಿ ಹೋಯಿತು ಇವಳ ಕಾಳಜಿ, ಕಳಕಳಿ, ಇನ್ನಿಲ್ಲದಾ ಪ್ರೀತಿ?
ಮೊದಲಾದರೂ ಇದ್ದಿತೋ ಇಲ್ಲವೋ ಅಥವಾ ಇದೆಲ್ಲಾ ಹರೆಯದ ಹುಚ್ಚಾಟವೋ?"ಎಂತ ಸತ್ವಹೀನ ಕಥೆಗಳನ್ನು ಬರಿತೀರಪ್ಪಾ… ಬಾಳು ಬಾಳು.
ಒಂದಿಷ್ಟು ಜೀವನಕ್ಕೆ ಹತ್ತಿರವಾದ ಕಥೆಗಳನ್ನು ಬರೀರಿ.
ಗಳಿಸಿರೋ ಹೆಸರಾದರೂ ಉಳಿಸಿಕೊಳ್ಳಿ"ಅಂತ ಟೀಕಿಸುವಷ್ಟು ಬದಲಾದ ಇವಳು ಅದೇ ಶೋಭಾನಾ?, ಅನುಮಾನ ಹೆಡೆ ಎತ್ತುತ್ತದೆ.
ಸಂಬಳ ತಂದು ಕೈಗಿಟ್ಟ ದಿನವೂ ಒಂದು ನಗೆಯಿಲ್ಲ "ಈ ಸಾರಿ ಕರೆಂಟ್ ಚಾರ್ಜು ಐನೂರು ಬಂದಿದೆ ಕಾಣ್ರಿ.
ರಾತ್ರಿ ಹೆಚ್ಚು ಹೊತ್ತು ದೀಪ ಉರಿಸ್ಬೇಡಿ"ಅಂತಾಳೆ!
ಇದರರ್ಥ ಕಥೆ ಬರೀತಾ ಕೂರಬೇಡಿ ಅಂತ ತಾನೆ?
ಈಗೀಗಂತೂ ಯಾವುದೋ ಹಳೇ ಸೀರೆ ಸುತ್ತಿಕೊಂಡು ತಲೆ ಗಂಟು ಹಾಕ್ಕೊಂಡು ಹತ್ತು ಮಕ್ಕಳನ್ನು ಹೆತ್ತವಳಿಗಿಂತಲೂ ಹೆಚ್ಚು ಕೊಳಕುಕೊಳಕಾಗಿರುತ್ತಾಳೆ .
ಕಚೇರಿಯಿಂದ ಸುಸ್ತಾಗಿ ಬಂದರೆ ಸೋಫಾದಲ್ಲಿ ಮಲಗಿದ್ದವಳು ಏಳೋದೇ ಇಲ್ಲ.
ಒಂದು ಕಾಫಿ ಮಾಡಿ ಬಸಿಯಲೂ ಉದಾಸೀನ.
ಎಲ್ಲದರಲ್ಲೂ ಅಶ್ರದ್ಧೆ.
ಕೆಲಸಕ್ಕೆ ಬೇರೆ ಟ್ರೈ ಮಾಡುತ್ತಿದ್ದಳು.
"ಹೊರಗಡೇನೆ ಕರ್ಕೊಂಡು ಹೋಗೋದಿಲ್ಲ.
ಮೂರು ಹೊತ್ತೂ ಮನೆಯಲ್ಲಿಯೇ ಸಾಯೋದೇ ಆತು"ಅಂತ ಸದಾ ವಟ ವಟ, ಹೊರ ಹೊರಟರೆ ಆಟೋನೇ ಬೇಕು.
ಹೊರಗಡೆ ಹೋದ್ಮೇಲೆ ಹೋಟೆಲ್ಗೆ ಹೋಗಿ ಕನಿಷ್ಟ ಕಾಫೀನಾದ್ರೂ ಕುಡಿದೇ ಬರೋದ್ಹೇಗೆ?
ಅದಕ್ಕೆಲ್ಲ ನನಗೆ ಬರುವ ಪುಟುಗೋಸಿ ಸಂಬಳ ಸಾಕಾದೀತೆ ಅನ್ನೋ ಪರಿಜ್ಞಾನವೂ ಅವಳಿಗಿಲ್ಲದಂತಾದದ್ದು ನನ್ನ ಕರ್ಮ.
ನಾನು ದುಡಿದು ತಂಡು ಹಾಕಿದ್ದನ್ನು ತಿಂದೇ ಇಷ್ಟು ಧಿಮಾಕು ಮಾಡುವ ಇವಳು, ತಾನು ದುಡಿದು ತಂದರೆ ನನ್ನನ್ನು ಕ್ಯಾರೆ ಮಾಡಿಯೊಳೆ ಎಂದು ಅಧೀರನಾದೆ.
ಯಾರೋ ಅವಳ ಸಂಬಂಧಿಕನಂತೆ, ಮಠದ ಸ್ಕೂಲಲ್ಲಿ ಡ್ರಿಲ್ ಟೀಚರ್, ಸಖತ್ತಾಗಿದ್ದ.
ಅವನಿಂದಾಗಿ ಶೋಭಾಳಿಗೆ ಮಠದ ಶಾಲೆಯಲ್ಲಿ ಟೀಚರಮ್ಮನ ಕೆಲಸ ಸಿಕ್ಕಿತು.
"ಮಠದವರು ಹೇಳೋದೊಂದು ಮಾಡೋದು ಒಂದು.
ಅವರೆಲ್ಲಾ ನೆಟ್ಟಗೆ ಸಂಬಳ ಕೊಡೋದಿಲ್ಲ ನೀ ಏನು ನನಗೆ ದುಡಿದು ಹಾಕೋದು ಬೇಡ"ಎಂದು ನಯವಾಗಿ ಹೇಳಿದೆ.
ಕೇಳದಿದ್ದಾಗ ಗದರಿದೆ, ಕೆನ್ನಗೊಂದು ಬಿಟ್ಟೆ.
"ನೀವು ಮನೆಗೂ ಹಣ ಕಳಿಸಿ ಉಳಿದಿದ್ದರಲ್ಲಿ ನಾಳೆ ನನ್ನನ್ನು ಹೇಗೆ ಸಾಕ್ತೀರಾ?
ಬಂದಷ್ಟು ಬರಲಿ ನನ್ನನ್ನು ತಡೆಯಬೇಡಿ"ಎಂದು ರಂಪ ಮಾಡಿದಳು.
ಅವಳು ಸಂಬಳ ತರುವಂತಾದಾಗ ತಾಪತ್ರಯಗಳೇನೋ ದೂರವಾದರೂ ಮನಸ್ಸಿಗೆ ನೆಮ್ಮದಿ ಇಲ್ಲ.
ಆಗೀಗ ಅವಳನ್ನು ಬೈಕಲ್ಲಿ ತಂದು ಮನೆಗೆ ಬಿಡುವ ಡ್ರಿಲ್ ಟೀಚರ್ ತಲೆನೋವಾದ.
ಮೊದಲಿನಂತೆ ಚೂಡಿದಾರ್ ತೊಟ್ಟು ಲವಲವಿಕೆಯ ಪ್ರತೀಕದಂತಾದ ಶೋಭಾ, ನನ್ನಲ್ಲಿ ನಾನಾ ನಮೂನೆಯ ಪ್ರಶ್ನೆಗಳನ್ನು ಹುಟ್ಟು ಹಾಕಿದಳು.
ತನ್ನ ಮನೆಯವರನ್ನೂ ಹೆದರಿಸಿ ಬಂದ, ನನ್ನ ಮನೆಯವರನ್ನೂ ಎದುರಿಸಿ ಬಂದ, ಸಮಾಜವನ್ನು ಧಿಕ್ಕರಿಸಿದ ಅವಳು ನನಗೆ ಮಾತ್ರ ಹೆದರುತ್ತಾಳೆಯೇ?
ಇಂಥವಳ ಜೊತೆ ಏಗೋದಾದರೂ ಹೇಗೆ?
ಅವನ ಜೊತೆಯಲ್ಲಿ ಬೈಕಲ್ಲಿ ಬರಬೇಡ ಕಣೆ…
ನನಗೆ ಹಿಡಿಸೊಲ್ಲವೆಂದರೆ ಉತ್ತರ ರೆಡಿ.
"ಮಠದಿಂದ ಊರಿಗೆ ಬರಲು ಇಪ್ಪತ್ತು ರೂಪಾಯಿ ಆಟೋಕ್ಕೆ ದಿನವೂ ಇಡಬೇಕಲ್ರಿ.
ಸಿಟಿ ಬಸ್ ನಮ್ಮ ಟೈಮೆಗೆಲ್ಲಾ ಎಲ್ಲಿ ಬರುತ್ತೆ?"ಅನ್ನುತ್ತಿದ್ದಳು.
"ಅವನಿಗೂ ಹೆಂಡತಿ ಮಕ್ಕಳಿದ್ದಾರೆ, ನೀವೇನೂ ಅಂಜಬೇಡಿ"ಅಂತ ನಗುತ್ತಿದ್ದಳು.
ಕೊನೆಗೆ ಹಣ ಹೋದರೆ ಕತ್ತೆಬಾಲ ಅಂತ ಇವಳನ್ನು ಕರೆದೊಯ್ದು ಕರೆತರಲು ತಿಂಗಳಿಗಿಷ್ಟು ಅಂತ ರಿಯಾಯಿತಿ ದರದ ಮೇಲೆ ಆಟೋ ಒಂದನ್ನು ಗುರುತು ಮಾಡಿದೆ.
"ನನ್ನ ಮೇಲೆ ಇಷ್ಟು ಬೇಗ ಅಪನಂಬಿಕೆ ಶುರುವಾಯಿತೆನ್ನಿ"ಎಂದು ಹಂಗಿಸಿ ನನ್ನನ್ನು ಸಣ್ಣವನನ್ನಾಗಿಸಿ ಬಿಡುತ್ತಿದ್ದಳು.
ಮಾತಿನ ಮಲ್ಲಿ ಮಾತೇ ಮರೆತುಬಿಟ್ಟಿದ್ದಳು.
ಅಥವಾ ನನ್ನೊಡನೆ ಮಾತನಾಡಲೂ ಅಸಡ್ಡೆಯೋ, ಇವಳನ್ನು ಡೈವೊರ್ಸ್ ಮಾಡಿದರೆ ಹೇಗೆಂಬ ದುಷ್ಟ ಆಲೋಚನೆ ಆಗೀಗ ತಲೆಯಲ್ಲಿ ಸುಳಿಯುವಂತಾಗಲು ಇವಳೇ ಇಂಬು ಕೊಟ್ಟಳು.
ಇವಳನ್ನು ಬಿಟ್ಟು ಮತ್ತೆ ಸ್ವಜಾತಿ ಒಳಗೇ ವಿಲೀನಗೊಂಡು ಬೇರೂಂದು ಹುಡುಗಿಯನ್ನು ಲಗ್ನವಾಗೋದು ಸರ್ಕಾರಿ ನೌಕರಿಯಲ್ಲಿರುವ ಗಂಡಾದ ನನಗೆ ಕಷ್ಟ ಸಾಧ್ಯವೇನಲ್ಲ.
ಆಟೋ ಗೊತ್ತು ಮಾಡಿದರೂ ಆಗೊಮ್ಮೆ ಈಗೊಮ್ಮೆ ಡ್ರಿಲ್ ಟೀಚರನ ಬೈಕ್ ಮೇಲೆ ಬಂದಿಳಿದಾಗ ಹೃದಯದ ಕವಾಟುಗಳಲ್ಲಿ ವಿಶಲ್ ಹಾಕಿದ ಶಬ್ದ.
ಮನಸ್ಸೆಂಬ ಮೈದಾನದಲ್ಲಿ ಒಬ್ಬನೇ ನಿಂತು ಡ್ರಿಲ್ ಮಾಡುವ ಮನೋರೋಗಕ್ಕೆ ತುತ್ತಾದೆ ಸದಾ ಡಿಪ್ರೆಷನ್.
ನನ್ನನ್ನು ಅರ್ಥಮಾಡಿಕೊಳ್ಳಲಾಗದೆ ಅವಳನ್ನು ಅರ್ಥಮಾಡಿಕೊಳ್ಳುವಲ್ಲಿಯೂ ವಿಫಲನಾದೆ.
ಬಡತನದಲ್ಲೂ ಸಣ್ಣನೌಕರಿಯಲ್ಲೂ ನನ್ನ ಪುಟ್ಟ ಮನೆಯಲ್ಲಿ ನೆಮ್ಮದಿಯಿಂದಿದ್ದ ನಾನು ಈ ಸ್ಥಿತಿಗೆ ಬಂದಿದ್ದು ಸ್ವಯಂಕೃತ ಅಪರಾಧವೇ ಹೊರತು ಯಾರನ್ನೂ ದೂಷಿಸಿ ಪ್ರಯೋಜನವಿಲ್ಲವೆಂದು ನಿಟ್ಟುಸಿರುಗಳ ಜೊತೆಗಾರನಾದೆ.
ಶೋಭಾ ಹೀಗೇಕಾದಳು? .
ಶೋಭಾಳನ್ನು ಇದೇ ಪ್ರಶ್ನೆ ಕಾಡಹತ್ತಿತ್ತು.
ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಸುಬ್ಬು ಹೀಗೇಕಾದ!
ಅವನಿಷ್ಟು ಬದಲಾಗುತ್ತಾನೆಂದು ಕನಸಲ್ಲೂ ಎಣಿಸಿರಲಿಲ್ಲ.
ಅವನಿಗಾಗಿಯೇ ತನ್ನ ಬದುಕಿನ ಎಲ್ಲಾ ಕಲರಪುಲ್ ಕನಸುಗಳನ್ನು ಕೊಂದು ಸುಬ್ಬುವೇ ತನ್ನ ನಿಜವಾದ ಕನಸೆಂದು ತಿಳಿದು ನಂಬಿ ಹಿಂದೆ ಬಂದಿದ್ದ ನನ್ನನ್ನು ಅಪಾರ್ಥ ಮಾಡಿಕೊಂಡು ನೋವಿನ ಮೂಟೆಯಂತಾಗಿರುವ ಇವನನ್ನು ನನ್ನಿಂದಲಂತೂ ನೋಡಲಾಗುತ್ತಿಲ್ಲ.
ಸುಖದ ಸುಪ್ಪತ್ತಿಗೆಯಲ್ಲಿ ಇರಬೇಕಾದ ತಾನು ಪ್ರೇಮವನ್ನೇ ನಂಬಿದ್ದೆ.
ಪ್ರೇಮ ಕುರುಡು ಅನ್ನೋ ಮಾತನ್ನು ಸರ್ವಥಾ ನಂಬಿರಲಿಲ್ಲ.
ಪ್ರೇಮಿಗಳೇ ಕುರುಡರು ಅನ್ನೋದು ಪ್ರಾಯಶಃ ಸತ್ಯವಿದ್ದಿರಬಹುದು.
ಪ್ರೇಮವೆಂದರೇನು ಅಂತ ಪ್ರೇಮಿಸಿ ಮದುವೆಯಾದವರನ್ನು ಕೇಳಿದರೆ ಏನು ಉತ್ತರ ಹೇಳಿಯಾರು?
ಭಗ್ನ ಪ್ರೇಮಿಗಳ ಅನುಭವ ಎಂತದ್ದು ಇದ್ದೀತು?
ನನಗನ್ನಿಸುತ್ತೆ ಕುರುಡರು ಆನೆಯನ್ನು ಮುಟ್ಟಿ ನೋಡಿದ ಅನುಭವದಂತೆ ಒಬ್ಬೊಬ್ಬರದೂ ಅವರದೇ ಆದ ಆನುಭವ.
ಅಭಿಪ್ರಾಯ ಭಿನ್ನಾಭಿಪ್ರಾಯಗಳೇ ನಿರ್ಣಯವಾದೀತಲ್ಲವೆ?
ಸುಬ್ಬು ಬರೆವ ಕಥೆಗಳಲ್ಲಿ ಹೆಪ್ಪುಗಟ್ಟಿದ ಪ್ರೇಮವನ್ನೇ ಬಸಿದುಕೊಂಡೆ.
ಅವನ ಕಥಗಳಲ್ಲಿನ ಹೀರೋಗಳಲ್ಲಿ ಅವನನ್ನೇ ಕಂಡೆ.
ದುರಂತವಾದರೂ ಪ್ರೇಮವನ್ನು ಪಡೆವುದೇ ಒಂದು ದಿವ್ಯಾನುಭವ ಎಂಬ ಅವನ ಸಾಲುಗಳನ್ನು ವಿಶ್ವಾಸಿಸಿದೆ, ಪ್ರೇಮಿಸಿದೆ.
ಅವನ ಕಥಾನಾಯಕಿಯರಂತೆ ಅಂಜುಬುರುಕಿಯಾಗದೆ ಪ್ರೇಮಿಸಿದವನಿಗೆ ವಂಚಿಸಿ ಸಿರಿವಂತನನ್ನು ವರಿಸಿ ಬೀದಿಯಲ್ಲಿ ಸಿಕ್ಕಾಗೊಮ್ಮೆ "ಏನಣ್ಣಾ ಚೆನ್ನಾಗಿದ್ದೀಯಾ?"ಎಂದು ಕೇಳಿ ದಂಗು ಬಡಿಸದೆ ಪ್ರೇಮದ ಹಾದಿಯಲ್ಲಿ ದಾಂಗಡಿಯಿಟ್ಟು ಗುರಿ ಸೇರಿದ್ದೆ.
ಆಮೇಲೆಯೇ ತಿಳಿದಿದ್ದು ಪ್ರೇಮಕ್ಕೂಂದು ಖಿಚಿತವಾದ ಗುರಿಯಿಲ್ಲ ಗುರಿ ಸೇರಿದ ಮೇಲೆ ಪ್ರೇಮ ಬದುಕುಳಿಯುವುದಿಲ್ಲ.
ಗಂಡ ಹೆಂಡಿರಾಗಲು ಮಾತ್ರ ಮೆಟ್ಟಿಲಾಗಬಹುದೇ ವಿನಃ ಗಂಡ ಹೆಂಡಿರು ಪ್ರೇಮಿಗಳಾಗಲು ಆಸಾಧ್ಯ ಎಂಬ ವಿಚಿತ್ರಾನುಭವ ಉಂಟಾಗಿತ್ತು.
ಕಥೇ ಬರೆಯುತ್ತಾನೆಂದು ಆಕರ್ಷಿತಳಾದರೂ ಕಥೇಗಾರನೆಂತಲೇ ಪ್ರೇಮಿಸಲಿಲ್ಲ ಹಾಗೆ ಪ್ರೇಮಿಸಬೇಕೆಂದಿದ್ದರೆ ನನ್ನಂತಹ ಚೆಂದದ ಹೆಣ್ಣಿಗೆ ಮತ್ತಷ್ಟು ಪ್ರಸಿದ್ಧ ಕಥೇಗಾರನ ಮನಸ್ಸನ್ನು ಅಪಹರಿಸುವುದು ಅಸಾಧ್ಯದ ಮಾತೇನಾಗಿರಲಿಲ್ಲ.
ನನಗೆ ಹಿಡಿಸಿದ್ದು ಅವನ ಕಥೆಗಳಲ್ಲಿನ ಹೀರೋಗಳಂತೆ ಅವನದ್ದು ಮೃದು ಸ್ವಭಾವ.
ಪ್ರಾಮಾಣಿಕ ದುರಾಸೆಗಳಿಲ್ಲದವ, ಬಡತನದಲ್ಲೂ ಸುಖ ಕಾಣುವ ಮಾಸದ ನಗೆಯ ಅವನ ಸಾನಿಧ್ಯ ಶಾಶ್ವತವಾಗಿ ನನಗೇ ಬೇಕೆನಿಸಿತು.
ಹಠಕ್ಕೆ ಬಿದ್ದೆ.
ಜಾತಿಯಿಂದಷ್ಟೇ ನನಗಿಂತ ಮೇಲು ಸ್ತರದಲ್ಲಿದ್ದ ಅವನ ಜಾತಿ ನನಗೆಂದೂ ಮುಖ್ಯವಾಗಲಿಲ್ಲ.
ಅಂಥವನೀಗ ನಿನಗಾಗಿ ನನ್ನವರನ್ನೆಲ್ಲಾ ತೊರೆದು ಬಂದೆ.
ದೊಡ್ಡ ಜಾತಿಯನ್ನು ತ್ಯಜಿಸಿದೆ ಎಂದಾಡಿ ಸಣ್ಣವನಾಗುತ್ತಿದ್ದಾನೆ.
ನಾನೆಂದೂ ಅವನಿಗಾಗಿ ಏನೆಲ್ಲಾ ತ್ಯಾಗ ಮಾಡಿದೆ ಎಂದು ನೆನೆದವಳು ಅಲ್ಲ.
ನಿಟ್ಟುಸಿರು ಬಿಟ್ಟವಳೂ ಅಲ್ಲ.
ತನ್ನ ಗುಮಾಸ್ತಿಕೆಯ ಸಂಬಳದಲ್ಲಿ ಅವನು ಮನೆಯವರಿಗೂ ಪಾಲು ಕೊಟ್ಟಾಗ ಪ್ರಶ್ನಿನಿಸಿದವಳೂ ಅಲ್ಲ.
ಬಡತನದಲ್ಲೂ ಸುಖವಾಗಿರುವ ಅವನು ನೀಡುವ ಸುಖಕ್ಕಿಂತ ಸಂಬಳ ಅಮುಖ್ಯವೆಂದುಕೊಂಡೆ.
ಆದರೆ ಅವನೀಗ ನಗುವುದನ್ನೇ ಮರೆತಿದ್ದ.
ಸದಾ ದುಡ್ಡಿಗಾಗಿ ಹಪಹಪಿಸುತ್ತಿದ್ದ.
ಒಂದು ದಿನವೂ ಪ್ರೀತಿಯಿಂದ ಹೋಟಲಿಗೆ ಸಿನಿಮಾಕ್ಕೆ ಕರೆದೊಯ್ಯಲಿಲ್ಲವಲ್ಲ ಎಂಬುದು ಖಂಡಿತ ನನ್ನ ಸಂಕಟವಲ್ಲ.
ಪ್ರೀತಿಯಿಂದ ಅವನು ದೂರವಾಗುತ್ತಿದ್ದಾನೆ.
ಥೇಟ್ ಗಂಡನಾಗುತಿದ್ದಾನೆಂಬುದೇ ನನ್ನ ಪರಮ ಸಂಕಟ.
ಅದವನಿಗೆ ಅರ್ಥವಾಗದಷ್ಟು ಬದಲಾಗಿದ್ದ.
ಬೇರೆಯೇ ಮನುಷ್ಯನಾಗಿ ಪೊರೆ ಬಿಡುತ್ತಿದ್ದ.
ಮನೆಯಲ್ಲಿನ ದಂಡಿ ಕೆಲಸ ಮಾಡಿ ಹಾಸಿಗೆಗೆ ಬಂದರೆ ಸಿಡುಕುತ್ತಿದ್ದ.
ನನಗೆ ಜ್ವರ ಬಂದರೆ ಕೇಳೋರೆ ಇಲ್ಲವೆನ್ನುವ, ಕೂಗಾಡಿ ಆಪಾದಿಸುವ ಅವನು ನನ್ನ ಆರೋಗ್ಯ ಅನಾರೋಗ್ಯ ಆಯಾಸದ ಬಗ್ಗೆ ಎಂದೂ ಕಾಳಜಿ ಪಟ್ಟವನಲ್ಲ.
ಅಂವಾ ಕಥೆಗಾರನಾಗಿ ಯಶಸ್ವಿಯಾಗಿದ್ದರಿಂದ ಅವನ ಕಥೆಗಳೀಗ ಪತ್ರಿಕೆಗಳಲ್ಲಿ ಬರುತ್ತಿದ್ದವೇ ವಿನಹ ಅವುಗಳಲ್ಲಿ ಮೊದಲಿನ ಅಸಲಿಯತ್ತಾಗಲಿ ತಾಕತ್ತಾಗಲಿ ಇದ್ದಿಲ್ಲ.
ಹೀಗಾಗಿ ಅವನ ಕಥೆಗಳನ್ನು ಓದಿ ನೀಟಾಗಿ ಪ್ರತಿ ಮಾಡಲು ನನಗಾದರೂ ಮೊದಲಿನ ಉತ್ಸಾಹ ಉಳಿದೀತಾದರೂ ಹೇಗೆ?
ಈಗವನ ಕಥೆಗಳ ಥೀಮು ವಿವಾಹೇತರ ಸಂಬಂಧಗಳ ಮೇಲೆ ಜೊಲ್ಲು ಸುರಿಸುತ್ತಿದ್ದುದರಿಂದ ನನ್ನಲ್ಲಿ ಅಸಹ್ಯ ಹುಟ್ಟಿಸುತ್ತಿದ್ದವು.
ಅದೇನವನ ಎದೆಗುದಿಯೋ ಹಂಬಲವೋ ನನ್ನ ಮೇಲಿನ ಅಪನಂಬಿಕೆಯೋ ಅನುಮಾನವೋ ಹತಾಶೆಯೋ ಒಂದೂ ಅರ್ಥವಾಗದಾದಾಗ ನನ್ನ ಬದುಕಿನ ಭವಿಷ್ಯ ಗಾಳಿಗಿಟ್ಟ ಸೊಡರಿನಂತಾದೀತೆಂಬ ಭಯ ನನ್ನನ್ನು ಮುತ್ತಿಕೊಂಡಿತ್ತು.
ತಾಪತ್ರಯಗಳಿಗೆಲ್ಲಾ ಅಂಜಿ ನಾನು ಕೆಲಸವನ್ನು ಬೇಡಿದವಳಲ್ಲ.
ಬದುಕಿನಲ್ಲಿ ಕಳೆದು ಹೋಗುತ್ತಿರುವ ಭರವಸೆ, ಸುಬ್ಬುವು ನನ್ನಲ್ಲಿ ಉಂಟುಮಾಡುತ್ತಿರುವ ಅಭಧ್ರತೆಯಿಂದಾಗಿಯೇ ಟೀಚರಮ್ಮಳಾದೆ.
ನನ್ನ ಮೇಲೆ ಅನುಕಂಪ ತೋರುವ ಡ್ರಿಲ್ ಮಾಸ್ಟರ್, ಸುಬ್ಬುವಿನ ಪಾಲಿಗೆ ವಿಲನ್ ಆಗಬಾರದೆಂದು ನಾನು ಯತ್ನಿಸಿದಷ್ಟು ಜಿದ್ದು ಬೆಳೆಸಿಕೊಂಡ.
ಹೀಗಾಗಿ ಅವನ ಬಳಿ ಮೊದಲಿನಂತೆ ಮಾತನಾಡಲು ಭಯವಾಗಿ ಮೌನಿಯಾದೆ.
ಶತ್ರುಗಳಂತೆ ಕಾದಾಡುತ್ತಾ ಒಂದೇ ಸೂರಿನಡಿ ಸಂಸಾರ ಮಾಡುವ ದಂಪತಿಗಳ ಬಗ್ಗೆ ಕೇಳಿದ್ದ ನಾನು, ನನ್ನ ಬಾಳು ಹಾಗಾಗದೆ ಇರಲೆಂದು ದುಡಿದಿದ್ದಲ್ಲಾ ಅವನ ಕೈಗೆ ಸುರಿದರೂ ಮುಖದಲ್ಲಿ ಮೊದಲಿನ ನಗೆ ಮೂಡಲೇ ಇಲ್ಲ ಕಣ್ಣುಗಳಲ್ಲಿ ಜಿನುಗುವ ಅನುಮಾನ ಇಂಗಲೇಯಿಲ್ಲ.
ಬಟ್ಟೆಯಲ್ಲೂ ಬೆತ್ತಲಾದ ಅನುಭವಕ್ಕೆ ದೂಡಿದ ಸುಬ್ಬುವಿನ ಪ್ರೇಮದ ಒಳ ಹರಿವು ಇಷ್ಟೇ ಏನು!
ಒಟ್ಟಾರೆ ಪ್ರೇಮವೆಂದರೆ ಇಷ್ಟೇನಾ?
ಯೋಚನೆಗೆ ಸಿಲುಕಿದೆ.
ಪ್ರೇಮವೇ ದೇವರು ಅಂತಾರೆ.
ಖಂಡಿತ ಈ ಮಾತು ಸತ್ಯ.
ಯಾಕೆಂದರೆ ದೇವರನ್ನು ಕಂಡವರಿಲ್ಲ ಅದೊಂದು ವಿಶ್ವಾಸ, ನಂಬಿಕೆ.