ಏಷ್ಯ ಮತ್ತು ದೂರ ಪ್ರಾಚ್ಯಗಳ ಆರ್ಥಿಕ ಆಯೋಗ : ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿ ಏರ್ಪಡಿಸಿರುವ ನಾಲ್ಕು ಪ್ರಾದೇಶಿಕ ಸಂಸ್ಥೆಗಳಲ್ಲಿ ಒಂದು .
ಇದರ ಎಕನಾಮಿಕ್ ಕಮಿಷನ್ ಫಾರ್ ಏಷ್ಯ ಅಂಡ್ ದಿ ಫಾರ್ ಈಸ್ಟ್ ಎಂಬ ಇಂಗ್ಲಿಷ್ ಹೆಸರಿನ ಮುಖ್ಯ ಶಬ್ದಗಳ ಮೊದಲಕ್ಷರಗಳಾದ ಇ.ಸಿ.ಎ.ಎಫ್.ಇ ಎಂಬ ಅಕ್ಷರಗಳನ್ನು ಸೇರಿಸಿ ಇಕಾಫೆ ಎಂದು ಕರೆಯುವುದು ರೂಢಿಯಾಗಿದೆ .
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿಯ ಒಂದು ನಿರ್ಣಯದ ಮೇರೆಗೆ ಇದು 1947 ಮಾರ್ಚ್ 28ರ ಂದು ಅಸ್ತಿತ್ವಕ್ಕೆ ಬಂತು .
ಇದರ ಪ್ರಥಮ ಸಭೆ ಅದೇ ವರ್ಷದ ಜೂನಿನಲ್ಲಿ ನಡೆಯಿತು .
ಈ ಆಯೋಗದ ಮೂಲಕ ಏಷ್ಯ ಮತ್ತು ದೂರಪ್ರಾಚ್ಯ ಪ್ರದೇಶಗಳ ಶೀಘ್ರಪ್ರಗತಿ ಸಾಧಿಸುವುದೇ ಇದನ್ನು ಸ್ಥಾಪಿಸಿದ ಉದ್ದೇಶ .
ಇಕಾಫೆ ಮಂಡಳಿಯ ಕಾರ್ಯಚಟುವಟಿಕೆಗಳ ಭೌಗೋಳಿಕ ವ್ಯಾಪ್ತಿಗೆ ಒಳಪಟ್ಟಿರುವ ಆಫ್ಫಾನಿಸ್ತಾನ, ಬ್ರೂನೈ , ಮಯನ್ಮಾರ್ , ಕಾಂಬೋಡಿಯ , ಶ್ರೀಲಂಕ , ಚೀನ , ಮಲಯ , ಹಾಂಗ್ಕಾಂಗ್ , ಭಾರತ , ಇಂಡೋನೇಷ್ಯ , ಇರಾನ್ ,ಜಪಾನ್ ,ಕೊರಿಯ , ಲಾವೋಸ್ , ಮಂಗೋಲಿಯ , ನೇಪಾಲ , ಉತ್ತರ ಬೋರ್ನಿಯೊ , ಪಾಕಿಸ್ತಾನ , ಫಿಲಿಪೀನ್ಸ್ , ಸಾರವಾಕ್ , ಸಿಂಗಪುರ , ಥೈಲೆಂಡ್ ಮತ್ತು ವಿಯಟ್ನಾಂ.ಇಕಾಫೆ ಮಂಡಳಿಯಲ್ಲಿ 27 ಸದಸ್ಯರಾಷ್ಟ್ರಗಳೂ ಎರಡು ಸಹಸದಸ್ಯ ರಾಷ್ಟ್ರಗಳೂ ಇವೆ ( 1969 ) .
ಆಫ್ಘಾನಿಸ್ತಾನ , ಆಸ್ಟ್ರೇಲಿಯ ,ಬರ್ಮ ,ಕಾಂಬೋಡಿಯ , ಶ್ರೀಲಂಕ , ಚೀನ , ಫ್ರಾನ್ಸ್ , ಭಾರತ , ಇಂಡೋನೇಷ್ಯ , ಇರಾನ್ , ಜಪಾನ್ , ಕೊರಿಯ ಗಣರಾಜ್ಯ , ಲಾವೋಸ್ , ಮಲೇಷಿಯ , ಮಂಗೋಲಿಯ ,ನೇಪಾಲ ,ನೆದರ್ಲೆಂಡ್ಸ್ , ನ್ಯೂ ಜಿûೕಲೆಂಡ್ , ಪಾಕಿಸ್ತಾನ , ಫಿಲಿಪೀನ್ಸ್ , ಸಿಂಗಪುರ ಥೈಲೆಂಡ್ , ಸೋವಿಯತ್ ಒಕ್ಕೂಟ , ಬ್ರಿಟನ್ , ಅಮೆರಿಕ ಸಂಯುಕ್ತ ಸಂಸ್ಥಾನ , ಫ್ರಾನ್ಸ್ , ಸೋವಿಯತ್ ಒಕ್ಕೂಟ , ನೆದರ್ಲೆಂಡ್ಸ್ , ಆಸ್ಟ್ರೇಲಿಯ , ನ್ಯೂ ಝೀಲೆಂಡ್ ಇವು ಏಷ್ಯ ಮತ್ತು ದೂರ ಪ್ರಾಚ್ಯ ಪ್ರದೇಶದ ಹೊರಗಿರುವ ಸದಸ್ಯರಾಷ್ಟ್ರಗಳು .
ಈ ರಾಷ್ಟ್ರಗಳಿಂದ ಆರ್ಥಿಕ ಸಹಾಯ ಪಡೆದುಕೊಳ್ಳುವುದು ಆಯೋಗದ ಉದ್ದೇಶ .
ಆಯೋಗದ ಸಭೆಗೆ ಈ ಸದಸ್ಯರನ್ನಲ್ಲದೆ ವಿವಿಧ ದೇಶಗಳಿಂದ ಸಮಾಲೋಚಕ ಸದಸ್ಯರನ್ನೂ ಆಹ್ವಾನಿಸುವುದುಂಟು .
ಇಕಾಫೆ ಪ್ರದೇಶದಲ್ಲಿರುವ ರಾಷ್ಟ್ರಗಳ ಆರ್ಥಿಕ ಗತಿಯನ್ನು ಚುರುಕುಗೊಳಿಸುವುದು .
ಆ ರಾಷ್ಟ್ರಗಳಲ್ಲಿ ಎಲ್ಲ ರಂಗಗಳಲ್ಲೂ ಪರಸ್ಪರ ಸಂಪರ್ಕವನ್ನು ವೃದ್ಧಿಗೊಳಿಸುವುದು .
ಆ ರಾಷ್ಟ್ರಗಳು ವಿಶ್ವದ ಎಲ್ಲ ರಾಷ್ಟ್ರಗಳೊಡನೆ ಸಹಕಾರ ಬೆಳೆಸುವಂತೆ ನೋಡಿಕೊಳ್ಳುವುದು .
ಆ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿಯನ್ನು ಚುರುಕುಗೊಳಿಸುವುದು .
ಆರ್ಥಿಕ ಹಾಗೂ ತಾಂತ್ರಿಕ ವಿಷಯಗಳಿಗೆ ಸಂಬಂಧಪಟ್ಟಂತೆ ಸಂಶೋಧನೆಗಳನ್ನು ನಡೆಸುವುದು ಮತ್ತು ನಿಯೋಜಿಸುವುದು .
ಆರ್ಥಿಕ , ತಾಂತ್ರಿಕ ವಿಷಯಗಳಿಗೆ ಸಂಬಂಧಪಟ್ಟ ಅಂಕಿ ಅಂಶಗಳನ್ನು ಸಂಗ್ರಹಿಸುವುದು ಮತ್ತು ಅವುಗಳನ್ನು ಪ್ರಕಟಿಸುವುದು .
ವಿಶ್ವಸಂಸ್ಥೆಯ ತಾಂತ್ರಿಕ ನೆರವಿನ ಯೋಜನೆಯಲ್ಲಿ ಸೇರಿರದ ವಿಷಯಗಳ ಬಗ್ಗೆ ಸದಸ್ಯರಾಷ್ಟ್ರಗಳಿಗೆ ಸಲಹೆ ನೀಡುವುದು .
ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯ ಕಾರ್ಯಗಳು ಸಫಲವಾಗುವಂತೆ , ಆರ್ಥಿಕ ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಅದಕ್ಕೆ ಸಹಾಯ ಮಾಡುವುದು .
ಆರ್ಥಿಕ ಅಭಿವೃದ್ಧಿಯ ಸಾಮಾಜಿಕ ವಿಷಯಗಳಲ್ಲಿ ಸಹಾಯ ಮಾಡುವುದು.
ಒಟ್ಟಿನಲ್ಲಿ ತನ್ನ ಸದಸ್ಯರಾಷ್ಟ್ರಗಳಲ್ಲಿ ಆರ್ಥಿಕ ಅಭಿವೃದ್ಧಿಯನ್ನು ತೀವ್ರಗೊಳಿಸುವುದು ಇಕಾಫೆಯ ಗುರಿ .
ಈ ಆಯೋಗ ಇಕಾಫೆ ಕ್ಷೇತ್ರಕ್ಕೆ ಸಂಬಂಧಿಸಿದ್ದಾದರೂ ಇದು ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಸಹಕಾರವೃದ್ಧಿಗಾಗಿ ಏರ್ಪಟ್ಟಿರುವ ಒಂದು ಸಂಸ್ಥೆ .
ಇದು ಮಾತೃಸಂಸ್ಥೆಯಾದ ಆರ್ಥಿಕ ಮತ್ತು ಸಾಮಾಜಿಕ ಸಮಿತಿಯ (ಎಕನಾಮಿಕ್ ಅಂಡ್ ಸೋಷಿಯಲ್ ಕೌನ್ಸಿಲ್ ) ಮತ್ತು ವಿಶ್ವಸಂಸ್ಥೆಯ ಮಹಾಸಭೆಯ ನಿರ್ದೇಶಕ್ಕನುಗುಣವಾಗಿ ಕಾರ್ಯ ನಡೆಸುತ್ತದೆ .
ಇದರ ಕಾರ್ಯಕ್ರಮ ರೂಪಿತವಾಗುವುದು ವಾರ್ಷಿಕ ಸಭೆಗಳಲ್ಲಿ .
ಆಯೋಗದ ಮುಖ್ಯ ಕಛೇರಿ ಬ್ಯಾಂಗ್ಕಾಕಿನಲ್ಲಿದೆ.
ಪ್ರಾರಂಭದ ವರ್ಷಗಳಲ್ಲಿ ವರ್ಷಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಇದರ ಅಧಿವೇಶನಗಳು ನಡೆಯುತ್ತಿದ್ದುವು .
ಆದರೆ 1949ರ ಿಂದೀಚೆಗೆ ಇದು ವರ್ಷಕೊಮ್ಮೆ ಮಾತ್ರ ನಡೆಯುತ್ತದೆ .
ಸಭೆ ಸದಸ್ಯರಾಷ್ಟ್ರಗಳಲ್ಲಿ ಎಲ್ಲಾದರೂ ನಡೆಯಬಹುದು .
ಈ ಅಧಿವೇಶನಗಳನ್ನು ಏಷ್ಯದ ಆರ್ಥಿಕ ಪಾರ್ಲಿಮೆಂಟ್ ಎಂಬುದಾಗಿ ಹೇಳಲಾಗಿದೆ .
ಸದಸ್ಯರಾಷ್ಟ್ರಗಳಿಗೆ ಸಂಬಂಧಪಟ್ಟ ಎಲ್ಲ ಆರ್ಥಿಕ ಸಮಸ್ಯೆಗಳ್ನೂ ಕೂಲಂಕಷವಾಗಿ ಚರ್ಚಿಸುವುದಲ್ಲದೆ ಇವನ್ನು ಯಾವ ರೀತಿಯಲ್ಲಿ ಎದುರಿಸಬೇಕು ಎಂಬುದನ್ನೂ ನಿರ್ಧರಿಸಲಾಗುತ್ತದೆ .
ಇಕಾಫೆ ಆಯೋಗದಲ್ಲಿ ಮೂರು ಖಾಯಂ ಸಮಿತಿಗಳಿವೆ : ಔದ್ಯೋಗಿಕ ಹಾಗೂ ಪ್ರಾಕೃತಿಕ ಸಂಪನ್ಮೂಲಗಳ ಸಮಿತಿ , ವ್ಯಾಪಾರ ಸಮಿತಿ ಹಾಗೂ ಅಂತವಾರ್ಯ್ಪಾರ ಮತ್ತು ಸಂಪರ್ಕ ಸಮಿತಿ .
ಈ ಸಮಿತಿಗಳು ವರ್ಷಕ್ಕೂಮ್ಮೆ ಕೂಡುತ್ತವೆ .
ಅದರಲ್ಲಿ ಮಂಡಳಿಯ ಎಲ್ಲ ಸದಸ್ಯರಾಷ್ಟ್ರಗಳೂ ಸಹಸದಸ್ಯರಾಷ್ಟ್ರಗಳೂ ಭಾಗವಹಿಸುತ್ತವೆ .
ನಿರ್ದಿಷ್ಟ ಸಮಸ್ಯೆಗಳನ್ನು ಪರಿಶೀಲಿಸುವುದಕ್ಕೋಸ್ಕರ ರಚಿತವಾಗಿರುವ ಅನೇಕ ಉಪ ಸಂಸ್ಥೆಗಳುಂಟು .
ಕ್ರಿಯಾತಂಡಗಳೂ ಚರ್ಚಾಗೋಷ್ಠಿಗಳೂ ಸಮಾಲೋಚಕ ತಂಡಗಳೂ ಅಧ್ಯಯನ ತಂಡಗಳೂ ಆಯೋಗದ ಕಾರ್ಯಗಳ ವಿವಿಧ ಸಮಸ್ಯೆಗಳನ್ನು ಪರಿಶೀಲಿಸುತ್ತವೆ .
ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ತಾಂತ್ರಿಕ ಸಹಾಯ ಕಾರ್ಯಮಂಡಳಿಯೊಂದಿಗೆ .
( ಬ್ಯೂರೊ ಆಫ್ ಟೆಕ್ನಿಕಲ್ ಆಸಿಸ್ಟೆನ್ಸ್ ಆಪರೇಷನ್ಸ್ ) ವಿಚಾರ ವಿನಿಮಯ ನಡೆಸುತ್ತದೆ .
ಅನೇಕ ರಾಷ್ಟ್ರಗಳ ಸರಕಾರೇತರ ಸಂಸ್ಥೆಗಳಿಂದಲೂ ಆಯೋಗಕ್ಕೆ ದೊರಕುತ್ತಿರುವ ಸಹಾಯ ಅಪಾರ .
ಆಯೋಗದ ಕಾರ್ಯಕ್ರಮಕ್ಕೆ ಮುಖ್ಯವಾಗಿ ಮೂರು ಮುಖಗಳಿವೆ : 1 ಮಾಹಿತಿಯ ಸಂಗ್ರಹಣೆ , ವಿಶ್ಲೇಷಣೆ .
2 ರಾಷ್ಟ್ರಗಳಿಗೆ ಸಂಬಂಧಿಸಿದ ಆರ್ಥಿಕ ಕಾರ್ಯಕ್ರಮಗಳ ಬಗ್ಗೆ ಕಾರ್ಯಾಚರಣೆಯ ನಿರ್ದೇಶನ , 3 ತಾಂತ್ರಿಕ ಮತ್ತು ವಿಶೇಷ ಆರ್ಥಿಕ ನಿಧಿಯ ಯೋಜನೆಯ ಬಗ್ಗೆ ಸಲಹೆ ಸೇವೆಗಳ ನೀಡಿಕೆ .
ಅಧ್ಯಯನ ಮತ್ತು ಸಂಶೋಧನೆಗಳಿಂದ ನಿರ್ದಿಷ್ಟ ಕಾರ್ಯಾಚರಣೆಗಳ ಬಗ್ಗೆ ಮಂಡಳಿಯ ಗಮನ ಈಚೆಗೆ ಹರಿದಿದೆ .
ಆರ್ಥಿಕ ಅಭಿವೃದ್ಧಿಗಾಗಿ ಯೋಜನೆಗಳು , ಸಂಶೋಧನೆ ಮತ್ತು ಅಂಕಿ - ಅಂಶಗಳು , ವಿದೇಶೀ ವ್ಯಾಪಾರ , ಕೈಗಾರಿಕಾಕ್ಷೇತ್ರ ಮತ್ತು ಪ್ರಾಕೃತಿಕ ಸಂಪನ್ಮೂಲಗಳು , ಸಾರಿಗೆ ಮತ್ತು ಸಂಪರ್ಕ , ಪ್ರವಾಹ ಹತೋಟಿ ಮತ್ತು ಜಲಸಂಪದಭಿವೃದ್ಧಿ , ಕೃಷಿ , ಸಮಾಜಕಲ್ಯಾಣ - ಇವು ಆಯೋಗದ ಗಮನ ಸೆಳೆದಿರುವ ಕೆಲವು ಮುಖ್ಯ ಕ್ಷೇತ್ರಗಳು .
ಆರ್ಥಿಕ ಅಭಿವೃದ್ಧಿಗಾಗಿ ಯೋಜನೆಗಳು : 1959ರ ವರೆಗೆ ಆಯೋಗ ತನ್ನ ರಾಷ್ಟ್ರಗಳಿಗೆ ಯೋಜನೆಗಳನ್ನು ರೂಪಿಸಲು ಅನೇಕ ಬಗೆಯಲ್ಲಿ ಸಹಾಯ ಮಾಡಿತು .
ಯೋಜನೆಗಳನ್ನು ಹೆಚ್ಚು ದೃಢವೂ ಪರಿಣಾಮಕಾರಿಯೂ ಆಗುವಂತೆ ಮಾಡಲು 1959 ರಿಂದ ಹೊಸ ಬಗೆಯ ಯತ್ನ ನಡೆದಿದೆ .
ಅಭಿವೃದ್ಧಿಯೋಜನೆಗಳ ಸಿದ್ಧಾಂತ ಮತ್ತು ಅನುಷ್ಠಾನಗಳ ಬಗ್ಗೆ ಚರ್ಚೆ ನಡೆಸಲು ಪ್ರತಿವರ್ಷವೂ ತಜ್ಞರು ಸಭೆ ಸೇರುತ್ತಾರೆ .
ಮೊದಲನೆಯ ಸಭೆಯ ವರದಿ 1960ರಲ ್ಲಿ ಪ್ರಕಟವಾಯಿತು .
ಇಂಥ ಉಪಯಕ್ತ ವರದಿಗಳು ಅನಂತರ ಸಹ ಪ್ರಕಟವಾಗುತ್ತ ಬಂದಿವೆ .
ಏಷ್ಯದ ಆರ್ಥಿಕ ಯೋಜಕರ ಪ್ರಥಮ ಸಮ್ಮೇಳನ ನಡೆದದ್ದು 1961ರಲ ್ಲಿ .
1964ರ ಜನವರಿಯಲ್ಲಿ ಏಷ್ಯನ್ ಆರ್ಥಿಕಾಭಿವೃದ್ಧಿ ಸಂಸ್ಥೆ ( ಏಷ್ಯನ್ ಇನ್ಸ್ಟಿಟ್ಯೂಟ್ ಫಾರ್ ಎಕನಾಮಿಕ್ ಡೆವೆಲಪ್ಮೆಂಟ್ ) ಅಸ್ತಿತ್ವಕ್ಕೆ ಬಂತು .
ಪರಿಣತ ಯೋಜನಾ ಸಿಬ್ಬಂದಿಗೆ ಇಲ್ಲಿ ತರಬೇತಿ ಕೊಡಲಾಗಿದೆ .
ಏಷ್ಯ ಮತು ದೂರಪ್ರಾಚ್ಯಗಳ ಆರ್ಥಿಕ ಆಯೋಗ ತನ್ನ ಆರಂಭದ ದಿನಗಳಿಂದಲೂ ಸದಸ್ಯರಾಷ್ಟ್ರಗಳಿಗೆ ಸಂಬಂಧಿಸಿದಂತೆ ಉಪಯುಕ್ತ ಅಂಕಿ - ಅಂಶಗಳನ್ನು ಸಂಗ್ರಹಿಸಿ ಪ್ರಕಟಿಸುವ ಕಾರ್ಯದಲ್ಲಿ ತೊಡಗಿದೆ .
1957ರ ಿಂದ ಏಷ್ಯನ್ ಅಂಕಿ - ಅಂಶ ತಜ್ಞರ ಸಮ್ಮೇಳನಗಳು ಆಗಿಂದಾಗ್ಗೆ ನಡೆಯುತ್ತಿವೆ .
ಸದಸ್ಯರಾಷ್ಟ್ರಗಳಲ್ಲಿ ಅಂಕಿ - ಅಂಶ ವಿಧಾನಗಳನ್ನು ಹೆಚ್ಚು ವೈಜ್ಞಾನಿಕವನ್ನಾಗಿ ಮಾಡುವುದು .
ಅವುಗಳನ್ನು ಯೋಜನೆಗಳಿಗೆ ಪುರಕವನ್ನಾಗಿ ಮಾಡುವುದು - ಇವು ಈ ಸಮ್ಮೇಳನಗಳ ಗುರಿ .
ಜನಸಂಖ್ಯೆ , ಗೃಹವಸತಿ ಮತ್ತು ಕೃಷಿಯ ಬಗ್ಗೆ ಅನೇಕ ಉಪಯುಕ್ತ ಅಂಕಿ -ಅಂಶಗಳನ್ನು ಸಂಗ್ರಹಿಸಲಾಗಿದೆ .
ವ್ಯಾಪಾರ ಸಮಿತಿ ಈ ಆಯೋಗದ ಒಂದು ಪ್ರಮುಖ ಅಂಗ .
ಸದಸ್ಯರಾಷ್ಟ್ರಗಳ ನಡುವಿನ ವ್ಯಾಪಾರ, ಅದರ ಪ್ರಗತಿ, ಹೊರ ಪ್ರದೇಶದ ವ್ಯಾಪಾರದಿಂದ ಮಂಡಳಿಯ ಮೇಲೆ ಆಗುತ್ತಿರುವ, ಆಗಬಹುದಾದ ಪರಿಣಾಮ - ಇವುಗಳನ್ನು ಕುರಿತು ವಿವೇಚನೆ ನಡೆಸುವುದು ಇದರ ಉದ್ದೇಶ .
ಪ್ರಾದೇಶಿಕ ವ್ಯಾಪಾರ ಒಪ್ಪಂದಗಳಿಂದ ( ಉದಾ : ಐರೋಪ್ಯ ಸಾಮಾನ್ಯ ಮಾರುಕಟ್ಟೆ ) ಆಯೋಗದ ಸದಸ್ಯರಾಷ್ಟ್ರಗಳ ವ್ಯಾಪಾರದ ಮೇಲಿನ ಪರಿಣಾಮಗಳು, ಆಯಾತ - ನಿರ್ಯಾತ ನಿಯಮಗಳ ಬದಲಾವಣೆಯ ಕಾಯಿದೆಗಳು, ಅಂತಾರಾಷ್ಟ್ರ ವ್ಯಾಪಾರ ಪ್ರದರ್ಶನಗಳ ಸಾಧ್ಯತೆಗಳು , ಜಹಜು ಮತ್ತು ಸಮುದ್ರ ಸಾಗಾಣಿಕೆಯ ಮೇಲೆ ನಿರ್ಧರಿಸಬಹುದಾದ ದರಗಳು, ಸುಂಕನಿರ್ವಹಣೆ, ಪ್ರಾದೇಶಿಕ ವ್ಯಾಪಾರ ಸಹಕಾರ ಸಾಧ್ಯತೆ ಮುಂತಾದವು ವ್ಯಾಪಾರ ಸಮಿತಿಯ ವಾರ್ಷಿಕ ಸಮ್ಮೇಳನಗಳ ಮುಂದೆ ಚರ್ಚಗೆ ಬರುವ ವಿಚಾರಗಳು .
ಅಂತಾರಾಷ್ಟ್ರೀಯ ವ್ಯಾಪಾರ ವರ್ಧನ ಸಮ್ಮೇಳನ ಪ್ರತಿವರ್ಷವೂ ನಡೆಯುವು ದುಂಟು .
ಸುಂಕನಿಯಮಗಳನ್ನು ಪರಸ್ಪರ ರಾಷ್ಟ್ರಗಳ ಸಡಿಲಗೊಳಿಸಬಹುದಾದ ಸಾಧ್ಯತೆ ಬಗ್ಗೆ ಸುಂಕನಿರ್ವಹಣೆಯ ಕ್ರಿಯಾಮಂಡಲಿ ಅನೇಕ ಶಿಫಾರಸ್ಸುಗಳನ್ನು ಮಾಡಿದೆ .
ಇವಲ್ಲದೆ ವಾಣಿಜ್ಯಕ ಪಂಚಾಯತಿ ಪದ್ಧತಿಯ ಪ್ರೋತ್ಸಾಹಕ್ಕಾಗಿ ಒಂದು ಕೇಂದ್ರವನ್ನು ತೆರೆಯಲಾಗಿದೆ .
ಅದು ಏಷ್ಯನ್ ರಾಷ್ಟ್ರಗಳ ವ್ಯಾಪಾರದ ಬಗ್ಗೆ ಒಂದು ಒಪ್ಪಂದಕ್ಕೆ ಬರುವುದಕ್ಕೆ ಸಹಾಯ ಮಾಡುತ್ತಿದೆ .
1966ರ ಡಿಸೆಂಬರಿನಲ್ಲಿ ಪ್ರಪ್ರಥಮವಾಗಿ ಥೈಲೆಂಡಿನಲ್ಲಿ ಏಷ್ಯನ್ ಅಂತಾರಾಷ್ಟ್ರೀಯ ವ್ಯಾಪಾರಮೇಳವನ್ನು ನಡೆಸಲಾಯಿತು .
ಏಷ್ಯ ಹಾಗೂ ಏಷ್ಯೇತರ ರಾಷ್ಟ್ರಗಳಿಂದ ಸು .3,000 ರಾಷ್ಟ್ರಗಳು ಈ ಮೇಳದಲ್ಲಿ ಭಾಗವಹಿಸಿದ್ದುವು .
ಕೈಗಾರಿಕೆಯ ಮತ್ತು ಪ್ರಾಕೃತಿಕ ಸಂಪನ್ಮೂಲಗಳು : ಕೈಗಾರಿಕಾ ಕ್ಷೇತ್ರದಲ್ಲಿ ಆಯೋಗದ ಕೆಲಸ ಮುಖ್ಯವಾಗಿ ವಿದ್ಯುಚ್ಛಕ್ತಿ , ಖನಿಜ ಅಭಿವೃದ್ಧಿ , ಎಂಜಿನಿಯರಿಂಗ್ , ಸಣ್ಣಪ್ರಮಾಣದ ಕೈಗಾರಿಕೆ , ವಸತಿನಿರ್ಮಾಣ ಇವುಗಳಿಗೆ ಸಂಬಂಧಿಸಿದೆ .
ಏಷ್ಯ ಮತ್ತು ದೂರಪ್ರಾಚ್ಯ ರಾಷ್ಟ್ರಗಳಲ್ಲಿನ ಒಂದು ಪ್ರಮುಖ ಕೊರತೆಯೆಂದರೆ , ವ್ಯವಸ್ಥಿತವಾಗಿ ತಯಾರದ ಕೈಗಾರಿಕಾ ಯೋಜನಾರಾಹಿತ್ಯ ಮತ್ತು ಯಾವ ಯಾವ ಕೈಗಾರಿಕೆಗಳಲ್ಲಿ ಹಣ ನಿವೇಶಿಸಬಹುದು ಮುಂತಾದ ವಿಷಯಗಳ ಬಗ್ಗೆ ಸರಿಯಾದ ಮಾಹಿತಿಯ ಅಭಾವ .
ಆದ್ದರಿಂದ ಆಯೋಗ ಪ್ರಾದೇಶಿಕ ಕೈಗಾರಿಕಾ ಸಮಸ್ಯೆಗಳ ಪರೀಶಿಲನೆ ನಡೆಸುತ್ತಿದೆ .
ಮಯನ್ಮಾರ್ ಮತ್ತು ಸಿಂಗಪುರಗಳಲ್ಲಿ ಕೈಗಾರಿಕಾ ಸಾಧ್ಯತೆ ಸಮೀಕ್ಷೆ ನಡೆಸಲಾಗಿದೆ .
ಕೈಗಾರಿಕಾ ಹಾಗೂ ಪ್ರಕೃತಿ ಸಂಪತ್ತಿನ ಸಮಿತಿಯ ಕೈಕೆಳಗೆ ವಿದ್ಯುಚ್ಛಕ್ತಿ , ಖನಿಜಸಂಪತ್ತು , ಕಬ್ಬಿಣ ಮತ್ತು ಉಕ್ಕು ಇವುಗಳಿಗೆ ಸಂಬಂಧಪಟ್ಟ ಸಮಿತಿಗಳು ಕೆಲಸ ಮಾಡುತ್ತಿವೆ .
ಏಷ್ಯನ್ ರಾಷ್ಟ್ರಗಳಲ್ಲಿ ಕೈಗಾರಿಕೆ ಅಭಿವೃದ್ಧಿಯನ್ನು ತೀವ್ರಗೊಳಿಸುವ ಉದ್ದೇಶದಿಂದ 1966 ಮಾರ್ಚ್ನಲ್ಲಿ ಸ್ಥಾಪಿತವಾದ ಏಷ್ಯನ್ ಕೈಗಾರಿಕಾಭಿವೃದ್ಧಿ ಸಮಿತಿ ಮತ್ತು ಕೈಗಾರಿಕೀಕರಣ ಸಮ್ಮೇಳನ ಖಾಯಂ ವಿಭಾಗಗಳು .
ಪ್ರಾದೇಶಿಕ ಕೈಗಾರಿಕಾಭಿವೃದ್ಧಿ ಮತ್ತು ಯೋಜನಾ ಕೇಂದ್ರ ಸ್ಥಾಪಿತವಾದದ್ದು 1965ರ ಜನವರಿಯಲ್ಲಿ .
ಸದಸ್ಯರಾಷ್ಟ್ರಗಳಲ್ಲಿ ರಾಷ್ಟ್ರೀಯ ಕೈಗಾರಿಕಾ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ವಿಷಯಗಳನ್ನು ಸಂಗ್ರಹಿಸುವುದು ಮತ್ತು ಮಾಹಿತಿಯನ್ನು ಪ್ರಕಟಿಸುವುದು , ಸಹಕಾರ ಸಾಧ್ಯವಿರುವ ಕೈಗಾರಿಕಾ ಕ್ಷೇತ್ರಗಳನ್ನು ಗುರುತಿಸುವುದು - ಮುಂತಾದ ನಾನಾ ವಿಚಾರಗಳಲ್ಲಿ ಇದರ ಪರಿಣತರು ಸೇವೆ ಸಲ್ಲಿಸುತ್ತಿದ್ದಾರೆ .
ಗ್ರಾಮಾಂತರ ಪ್ರದೇಶಗಳ ವಿದ್ಯುಚ್ಛಕ್ತಿ ಆವಶ್ಯಕತೆಗಳನ್ನು ಆಯೋಗ ಮನಗಂಡಿದೆ .
ಈ ಬಗ್ಗೆ ಅದು ವಿವರವಾದ ಅಧ್ಯಯನ ನಡೆಸಿ ಮಾಹಿತಿಯನ್ನು ಪ್ರಕಟಿಸಿದೆ .
ಗ್ರಾಮಾಂತರ ವಿದ್ಯುಚ್ಛಕ್ತಿ ಸರಬರಾಯಿಯ ವಿಷಯದಲ್ಲಿ ಪರಿಣತರ ತಂಡವೊಂದು ರಚಿತವಾಗಿದೆ .
ಸದಸ್ಯರಾಷ್ಟ್ರಗಳ ಕೋರಿಕೆಯ ಮೇರೆಗೆ ಅವುಗಳಿಗೆ ಭೇಟಿ ನೀಡಿ ಸಲಹೆ ನೀಡುವುದು ಈ ತಂಡದವರ ಕಾರ್ಯಭಾರ .
ಆಯೋಗದ ಭೂವಿಜ್ಞಾನ ಕಾರ್ಯತಂಡ 1954ರಲ ್ಲಿ ತನ್ನ ಕೆಲಸ ಪ್ರಾರಂಭಿಸಿ , ಈ ಪ್ರದೇಶದ ಭೂವೈಜ್ಞಾನಿಕ ಪಟಗಳ ಕೆಲಸ ಮುಗಿಸಿದೆ .
ಈ ಕ್ಷೇತ್ರದ ಪ್ರತಿಯೊಂದು ರಾಷ್ಟ್ರಕ್ಕೂ ಭೂವೈಜ್ಞಾನಿಕ ಹಾಗೂ ಖನಿಜ ಸಾಧನೆಗಳ ಪಟಗಳನ್ನು ತಯಾರಿಸಲಾಗಿದೆ .
ಭಾರತದ ಭೂವೈಜ್ಞಾನಿಕ ಸರ್ವೆಯ ನಿರ್ದೇಶಕರು ಪ್ರಾದೇಶಿಕ ಭೂವೈಜ್ಞಾನಿಕ ಪಟಗಳ ಸಮನ್ವಯಾಧಿಕಾರಿಯಾಗಿದ್ದರು .
ಪೆಟ್ರೋಲಿಯಂ ಕ್ಷೇತ್ರದಲ್ಲಿ ಸಮಾವೇಶ ನಡೆಸಲು ಆಸಕ್ತಿವಹಿಸಿದ ಪ್ರಥಮ ವಿಶ್ವಸಂಸ್ಥೀಯ ಅಂಗವೆಂದರೆ ಇದೇ .
1958 ಡಿಸೆಂಬರ್ನಲ್ಲಿ ಏಷ್ಯ ಹಾಗೂ ದೂರಪ್ರಾಚ್ಯದ ಪೆಟ್ರೋಲಿಯಂ ಸಂಪತ್ತಿನ ಅಭಿವೃದ್ಧಿಯನ್ನು ಕುರಿತ ಸಮಾವೇಶವನ್ನು ನವದೆಹಲಿಯಲ್ಲಿ ನಡೆಸಲಾಯಿತು .
ಎರಡನೆಯ ಸಮಾವೇಶ ಸೇರಿದ್ದು 1962 ಸೆಪ್ಟೆಂಬರ್ನಲ್ಲಿ - ಟೆಹರಾನಿನಲ್ಲಿ .
ಲೋಹ ಮತ್ತು ಎಂಜಿನಿಯರಿಂಗ್ ಉಪಸಮಿತಿಯ ಮೂಲಕ ಏಷ್ಯ ಹಾಗೂ ಏಷ್ಯೇತರ ತಜ್ಞರನ್ನು ವಿಚಾರ ವಿನಿಮಯಕ್ಕಾಗಿ ಒಂದುಗೂಡಿಸಲಾಗುತ್ತಿದೆ .
ಈ ಉಪಸಮಿತಿ ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆಗಳ ಬಗ್ಗೆ ಹೊಸ ವಿಧಾನವನ್ನು ಸೂಚಿಸಿದೆ .
ಈ ಪ್ರದೇಶದ ದೇಶಗಳಲ್ಲಿ ಸಿಗುವ ನಾನ್ಕೋಕಿಂಗ್ ಕಲ್ಲಿದ್ದಲನ್ನು ಹೇಗೆ ಉಪಯೋಗಿಸಿಕೊಳ್ಳಬಹುದೆಂಬುದರ ಬಗ್ಗೆ ಸಲಹೆಗಳನ್ನು ಕೊಟ್ಟಿದೆ .
ಆಗಿಂದಾಗ್ಗೆ ಪ್ರಕಟವಾಗುವ ‘ ಕಬ್ಬಿಣ ಮತ್ತು ಉಕ್ಕು ’ ಪತ್ರಿಕೆಯ ಮೂಲಕ ಈ ಬಗ್ಗೆ ಉಪಯುಕ್ತ ಮಾಹಿತಿಗಳು ಪ್ರಕಟವಾಗುತ್ತಿವೆ .
ಹಡಗು ಮತ್ತು ದೋಣಿ ನಿರ್ಮಾಣ , ಯಂತ್ರ ಕೈಗಾರಿಕೆ ಮುಂತಾದವಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಆಯೋಗ ಪರಿಶೀಲಿಸುತ್ತದೆ .
ಇವುಗಳ ಅಭಿವೃದ್ಧಿಯ ಬಗ್ಗೆ ಇದು ಸದಸ್ಯರಾಷ್ಟ್ರಗಳಿಗೆ ನೀಡುತ್ತಿರುವ ಸಲಹೆ ಸಹಾಯ ಅಪಾರ .
ಕಡಿಮೆ ವರಮಾನದ ಜನಗಳ ವಸತಿ ಸಮಸ್ಯೆಗಳನ್ನು ಬಗೆಹರಿಸಲು ಪ್ರತ್ಯೇಕವಾದ ಕಾರ್ಯತಂಡವೊಂದುಂಟು .
ವಸತಿ ನಿರ್ಮಾಣ ಸಮಸ್ಯೆಗಳನ್ನು ಸತತವಾಗಿ ಅಭ್ಯಸಿಸಲು ವಿಶ್ವರಾಷ್ಟ್ರಸಂಸ್ಥೆ ಮತ್ತಿತರ ರಾಷ್ಟ್ರಗಳ ಸಹಕಾರದೊಂದಿಗೆ ನವದೆಹಲಿ ಮತ್ತು ಬಾಂಡುಂಗ್ಗಳಲ್ಲಿ ಪ್ರಾದೇಶಿಕ ಗೃಹನಿರ್ಮಾಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ .
ಸಾರಿಗೆ ಮತ್ತು ಸಂಪರ್ಕ : ಇದಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಪರಿಹಾರಕ್ಕಾಗಿ ಒಳನಾಡಿನ ಸಾರಿಗೆ ಮತ್ತು ಸಂಪರ್ಕ ಸಮಿತಿ ವಿವಿಧ ಸಾರಿಗೆ ವ್ಯವಸ್ಥೆಗಳ ಸಮನ್ವಯ ಸಾಧ್ಯತೆ , ಸಾರಿಗೆ ಅಭಿವೃದ್ಧಿ ಮತ್ತು ಯೋಜನೆ ಮುಂತಾದ ವಿಷಯಗಳಲ್ಲಿ ಅಧ್ಯಯನ ನಡೆಸಿದೆ .
ರೈಲ್ವೆ ಮತ್ತು ರಸ್ತೆ ಸಾರಿಗೆ ಸಂಪರ್ಕ ಮುಂತಾದವುಗಳ ಅಭಿವೃದ್ಧಿಗಾಗಿ ಅನೇಕ ಅಧ್ಯಯನ ತಂಡಗಳೂ ಸಮೀಕ್ಷೆಗಳೂ ನಡೆದಿವೆ .
ಆಯೋಗದ ಗಮನ ಸೆಳೆದಿರುವ ಇನ್ನೊಂದು ಮುಖ್ಯ ವಿಚಾರವೆಂದರೆ ಪ್ರವಾಸೋದ್ಯಮ .
ಪ್ರವಾಹ ಹತೋಟಿ ಮತ್ತು ಜಲಸಂಪದಭಿವೃದ್ದಿ ಬ್ಯೂರೋವನ್ನು 1949ರಲ ್ಲಿ ಸ್ಥಾಪಿಸಲಾಯಿತು .
ಈ ಬ್ಯೂರೋ ಸದಸ್ಯ ರಾಷ್ಟ್ರಗಳಲ್ಲಿನ ಜಲಸಂಪದಭಿವೃದ್ದಿಯನ್ನು ಕುರಿತ ವಿಷಯಗಳ ಅಧ್ಯಯನ , ಪ್ರಕಟನೆ , ಸೂಕ್ತನೆರವು ನೀಡುತ್ತಿರುವುದಲ್ಲದೆ ಕೃಷಿ ಅಭಿವೃದ್ಧಿಗಾಗಿ ಈ ಆಯೋಗ ಆಹಾರ ಮತ್ತು ಕೃಷಿ ಸಂಸ್ಥೆಯೊಂದಿಗೆ ಸಹವರ್ತಿಸುತ್ತಿದೆ .( ಸಿ.ಕೆ.ಆರ್. )