ಉನ್ನತ ಶಿಕ್ಷಣ ಮತ್ತು ಸಂಶೋಧನೆ : ಪದವಿಪೂರ್ವ ಶಿಕ್ಷಣದ ಅನಂತರ ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣವನ್ನು ಕರ್ನಾಟಕದಲ್ಲಿ ಉನ್ನತ ಶಿಕ್ಷಣವೆಂದು ಪರಿಗಣಿಸಲಾಗಿದೆ .
ಎಂದರೆ ಏಳು ವರ್ಷ ಪ್ರಾಥಮಿಕ ಶಿಕ್ಷಣವೂ 3 + 2 ವರ್ಷ ಪ್ರೌಢಶಿಕ್ಷಣವೂ ಸೇರಿದಂತೆ ಒಟ್ಟು ಹನ್ನೆರಡು ವರ್ಷಗಳ ಶಾಲಾಶಿಕ್ಷಣದ ಅನಂತರದ ಶಿಕ್ಷಣಕ್ಕೆ ಸಾಮಾನ್ಯವಾಗಿ ಈ ಹೆಸರನ್ನು ಬಳಸಲಾಗುತ್ತದೆ .
ಇದು ವಿಶ್ವವಿದ್ಯಾಲಯಗಳಲ್ಲೂ ಅದರ ಆಂಗಿಕ ಮತ್ತು ಅಂಗೀಕೃತ ಕಾಲೇಜುಗಳಲ್ಲೂ ಸ್ನಾತಕೋತ್ತರ ವಿಭಾಗ ಅಥವಾ ಕೇಂದ್ರಗಳಲ್ಲೂ ಪರಿಗಣಿತ ವಿಶ್ವವಿದ್ಯಾಲಯಗಳಲ್ಲೂ ಇತರ ವಿಶಿಷ್ಟ ಶಿಕ್ಷಣ ಸಂಸ್ಥೆಗಳಲ್ಲೂ ವ್ಯವಸ್ಥೆಗೊಂಡಿದೆ .
ಬೋಧನೆ , ಸಂಶೋಧನೆ , ವಿಸ್ತರಣೆ - ಈ ಸಾಂಪ್ರದಾಯಿಕ ಅಂಶಗಳು ಇಲ್ಲಿನ ಉನ್ನತ ಶಿಕ್ಷಣದ ಕರ್ತವ್ಯಗಳಾಗಿವೆ. ..
ಆಧುನಿಕ ಕಾಲದಲ್ಲಿ ಅಸ್ತಿತ್ವಕ್ಕೆ ಬಂದಿರುವ ಉನ್ನತ ಶಿಕ್ಷಣ ವ್ಯವಸ್ಥೆ ಕರ್ನಾಟಕದಲ್ಲಿ 1853ರಲ್ಲಿ ಆರಂಭವಾಯಿತೆನ್ನಬಹುದು .
ಆ ವರ್ಷ ಮೈಸೂರಿನ ಮಹಾರಾಜ ಕಾಲೇಜು ಅನಂತರ 1858ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜು ಅಸ್ತಿತ್ವಕ್ಕೆ ಬಂದವು .
ಅವೆರಡೂ ಆಗ ಮದರಾಸು ವಿಶ್ವವಿದ್ಯಾಲಯದ ಅಂಗೀಕಾರ ಪಡೆದಿದ್ದವು .
ಮದ್ರಾಸ್ ಸರ್ಕಾರ 1869ರಲ್ಲಿ ಮಂಗಳೂರಿನಲ್ಲಿ ಎರಡನೆಯ ದರ್ಜೆ ಕಾಲೇಜನ್ನು ಸ್ಥಾಪಿಸಿತು .
1879ರಲ್ಲಿ ಮಂಗಳೂರಿನಲ್ಲಿ ಸೇಂಟ್ ಅಲಾಸಿಯಸ್ ಕಾಲೇಜು ಮತ್ತು 1882ರಲ್ಲಿ ಬೆಂಗಳೂರಿನಲ್ಲಿ ಸೇಂಟ್ ಜೋಸೆಫ್ರ ಕಾಲೇಜು ಅಸ್ತಿತ್ವಕ್ಕೆ ಬಂದವು .
1902ರಲ್ಲಿ ಮೈಸೂರಿನ ಮಹಾರಾಜ ಕಾಲೇಜನ್ನು ಪ್ರಥಮ ದರ್ಜೆಗೆ ಏರಿಸಲಾಯಿತು .
ಮೈಸೂರು ಸಂಸ್ಥಾನದಲ್ಲಿ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪಿಸಲು ನಡೆಸಿದ ಪ್ರಯತ್ನದ ಫಲವಾಗಿ 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಆರಂಭವಾಯಿತು .
ಅನಂತರ 1950ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವೂ 1964ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವೂ ಅಸ್ತಿತ್ವಕ್ಕೆ ಬಂದವು .
ಇವುಗಳ ಅಂಗ ಕಾಲೇಜು ಗಳು ಪ್ರತಿ ಜಿಲ್ಲೆಯಲ್ಲೂ ಅಸ್ತಿತ್ವಕ್ಕೆ ಬಂದವು .
1963ರಲ್ಲಿ ಹೆಬ್ಬಾಳಿನ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು .
ಹಿಂದೆ ರಾಜ್ಯದ ಸಾಮಾನ್ಯ ಶಿಕ್ಷಣದ ಮೂರು ವಿಶ್ವವಿದ್ಯಾಲಯಗಳೆಂದರೆ ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳು ಪ್ರತ್ಯೇಕ ರಾಜ್ಯ ಶಾಸನಗಳಿಂದ ಸಂಘಟಿತವಾಗಿ ತಮ್ಮದೇ ಆದ ರೀತಿಯ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದವು .
ಆಡಳಿತದಲ್ಲಿ ಏಕತೆಯನ್ನು ತರಲು ರಾಜ್ಯಸರ್ಕಾರ 1975ರ ಕರ್ನಾಟಕ ವಿಶ್ವವಿದ್ಯಾಲಯಗಳ ಶಾಸನ ರೀತ್ಯಾ , ತಾರೀಖು 25-09-1975 ರಂದು ಒಂದು ಸುಗ್ರೀವಾಜ್ಞೆಯನ್ನು ಹೊರಡಿಸಿ , ಮೂರು ವಿಶ್ವವಿದ್ಯಾಲಯಗಳಿಗೂ ಏಕರೂಪದ ಶಾಸನವನ್ನು ರೂಪಿಸಿತು. ..
ಕ್ರಮೇಣ ಸರ್ಕಾರ ತಂದ ವಿವಿಧ ಕಾಯಿದೆ ತಿದ್ದುಪಡಿಗಳಿಂದಾಗಿ ವಿಶ್ವವಿದ್ಯಾಲಯದ ಆಡಳಿತ ವ್ಯವಹಾರಗಳ ಬಗ್ಗೆ ಸರ್ಕಾರದ ನಿಯಂತ್ರಣ ಹೆಚ್ಚಿದೆ .
ವಿಶ್ವವಿದ್ಯಾಲಯದ ಪ್ರಮುಖ ಅಂಗವಾಗಿದ್ದ ಸೆನೆಟ್ ರದ್ದಾಗಿದ್ದು ಶಿಕ್ಷಣ ಮಂಡಳಿಯ ಸ್ವರೂಪವೂ ತೀವ್ರವಾಗಿ ಬದಲಾಗಿದೆ .
ಕುಲಪತಿಗಳ ನೇಮಕದಲ್ಲೂ ಸರ್ಕಾರ ಹೆಚ್ಚಿನ ಅಧಿಕಾರ ಹೊಂದಿದೆ .
ಮುಂದೆ ವಿಶ್ವವಿದ್ಯಾಲಯ ಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭವಾದವು .
ಮಂಗಳೂರು ವಿಶ್ವವಿದ್ಯಾಲಯ (1980), ಗುಲ್ಬರ್ಗಾ ವಿಶ್ವವಿದ್ಯಾಲಯ (1980), ಕುವೆಂಪು ವಿಶ್ವವಿದ್ಯಾಲಯ (1987), ಕನ್ನಡ ವಿಶ್ವವಿದ್ಯಾಲಯ (1991) - ಇವು ಪ್ರಾರಂಭವಾಗಿ ಸ್ನಾತಕೋತ್ತರ ಶಿಕ್ಷಣವು ವಿವಿಧ ಕೇಂದ್ರಗಳಲ್ಲಿ ಪ್ರಾರಂಭವಾಗಲು ಅವಕಾಶ ಕಲ್ಪಿತವಾಯಿತು .
ತುಮಕೂರು (ಈಗ ವಿಶ್ವವಿದ್ಯಾಲಯ) ಹಾಸನ , ಮಂಡ್ಯ , ದಾವಣಗೆರೆ , ಬಳ್ಳಾರಿ , ಬೆಳಗಾಂವಿ ಮೊದಲಾದವು ಸ್ನಾತಕೋತ್ತರ ಶಿಕ್ಷಣಗಳ ಕೇಂದ್ರಗಳನ್ನು ಪಡೆದಿವೆ .
ಮೈಸೂರಿನ ಜೆ.ಎಸ್.ಎಸ್.ನಂತಹ ಶಿಕ್ಷಣ ಸಂಸ್ಥೆಗಳು ಕೆಲವು ವಿಷಯಗಳಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ನೀಡುತ್ತಿವೆ .
ಚಾಮರಾಜನಗರದಲ್ಲಿ ಈ ಸಂಸ್ಥೆಯ ಸ್ನಾತಕೋತ್ತರ ಕೇಂದ್ರವಿದೆ .
ಮಣಿಪಾಲ ಶಿಕ್ಷಣ ಸಂಸ್ಥೆ ಸಂಭಾವ್ಯ (ಡೀಮ್ಡ್ ) ವಿಶ್ವವಿದ್ಯಾಲಯದ ಸ್ಥಾನಮಾನ ಪಡೆದಿದೆ .
ರಾಜ್ಯಾದ್ಯಂತ ಕಾನೂನು ಶಿಕ್ಷಣ ಕಾಲೇಜುಗಳು ಪ್ರಾರಂಭಗೊಂಡಿವೆ.
ವೈದ್ಯಕೀಯ, ದಂತವೈದ್ಯ ವಿಜ್ಞಾನ, ಆಯುರ್ವೇದ ಯುನಾನಿ, ಹೋಮಿಯೋಪತಿ, ದಾದಿವೃತ್ತಿ ಶಿಕ್ಷಣ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಶಿಕ್ಷಣ , ಅರಿವಳಿಕೆ ಹಾಗೂ ಔಷಧ ವಿಜ್ಞಾನಶಾಸ್ತ್ರದಲ್ಲಿ ಅನೇಕ ಪದವಿ ಮತ್ತು ಸ್ನಾತಕೋತ್ತರ ಕೇಂದ್ರಗಳು ಸ್ಥಾಪನೆಗೊಂಡಿವೆ .
ರಾಜ್ಯದಲ್ಲಿ ಸು.258 ಸಂಸ್ಥೆಗಳು ವಿವಿಧ ಆರೋಗ್ಯ ವಿಜ್ಞಾನ ವಿಷಯಗಳಲ್ಲಿ ಶಿಕ್ಷಣ ನೀಡುತ್ತಿವೆ (2000 ) .
ಈ ಸಂಸ್ಥೆಗಳ ಪರೀಕ್ಷೆಗಳ ನಿರ್ವಹಣೆ ಮತ್ತು ಉಸ್ತುವಾರಿಗಾಗಿ ರಾಜೀವಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ (1996) .
ಹಾಗೆಯೇ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಮುನ್ನೂರಕ್ಕೂ ಹೆಚ್ಚು ಎಂಜಿನಿಯರಿಂಗ್ ,ತಾಂತ್ರಿಕ ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್ಗಳನ್ನು ನಿರ್ವಹಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ (1999) .
ಪಶುವೈದ್ಯ ವಿಶ್ವವಿದ್ಯಾಲಯವೂ ಸ್ಥಾಪನೆಗೊಂಡಿದೆ (2004) .
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರಿನಲ್ಲಿದ್ದು ಇದು ಹಿಂದೆ ಮೈಸೂರು ವಿಶ್ವವಿದ್ಯಾನಿಲಯ ನಡೆಸುತ್ತಿದ್ದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯ ಕಾರ್ಯಭಾರವನ್ನು ವಹಿಸಿಕೊಂಡಿರುವುದಲ್ಲದೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ .
ಇತ್ತೀಚೆಗೆ ಬಿಜಾಪುರದಲ್ಲಿ ಮಹಿಳಾ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿದೆ (2004) .
ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ಶ್ರವಣ ಸಂಸ್ಥೆ , ಮೈಸೂರಿನ ಪ್ರಾದೇಶಿಕ ಕಾಲೇಜು , ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ , ಇನ್ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ , ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅಂಡ್ ಎಕಾನಾಮಿಕ್ ಚೇಂಜ್ ಮೊದಲಾದವು ವಿಶಿಷ್ಟ ವಿಷಯಗಳಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣ ನೀಡುತ್ತಿವೆ .
ಸಾಫ್ಟ್ವೇರ್ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಪ್ರಗತಿಯಾಗಿದ್ದು ಅವುಗಳಲ್ಲಿ ಶಿಕ್ಷಣ ನೀಡಲು ಹಲವಾರು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮುಂದಾಗಿವೆ.ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳೂ ಜನಸಾಮಾನ್ಯರಲ್ಲಿ ಉನ್ನತ ಶಿಕ್ಷಣದ ಪ್ರಸಾರಕಾರ್ಯ ವನ್ನು ನಿರ್ವಹಿಸುತ್ತಿವೆ .
ಪ್ರಚಾರೋಪನ್ಯಾಸ ಮತ್ತು ಪ್ರಕಟಣೆಗಳ ಮೂಲಕ ವಿಶ್ವವಿದ್ಯಾಲಯದ ನಿಯತ ವಿದ್ಯಾರ್ಥಿಗಳು ಪಡೆಯುತ್ತಿರುವ ಜ್ಞಾನಾರ್ಜನೆಯ ಸೌಲಭ್ಯವನ್ನು ರಾಜ್ಯದ ವಿವಿಧ ಭಾಗಗಳಲ್ಲಿರುವ ಜನಸಾಮಾನ್ಯರಿಗೂ ಒದಗುವಂತೆ ಅವಕಾಶ ಕಲ್ಪಿಸಿದೆ .
ಅದಕ್ಕಾಗಿ ಒಂದು ಪ್ರತ್ಯೇಕ ವಿಭಾಗವನ್ನೇ ವ್ಯವಸ್ಥೆಗೊಳಿಸಿಕೊಂಡಿವೆ .
ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಸಂಶೋಧನೆಗೆ ಅವಕಾಶವಿದ್ದರೂ ಅದು ಮುಖ್ಯವಾಗಿ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿಭಾಗಗಳಲ್ಲೂ ಸ್ನಾತಕೋತ್ತರ ಕೇಂದ್ರಗಳಲ್ಲೂ ನಡೆಯುತ್ತಿವೆ .
ಇವುಗಳ ಜೊತೆಗೆ ಸಂಶೋಧನೆಗೆಂದೇ ಮೀಸಲಾಗಿರುವ ಸಂಸ್ಥೆಗಳೂ ವಿಶಿಷ್ಟ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿವೆ .
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶಿಷ್ಟ ಕ್ಷೇತ್ರಗಳಲ್ಲಿ ಶಿಕ್ಷಣವೀಯುವುದರ ಜೊತೆಗೆ ಉದ್ಯೋಗ ಮತ್ತು ರಕ್ಷಣೆಯ ಕಾರ್ಯಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಕುರಿತು ಫಲದಾಯಕವಾದ ಸಂಶೋಧನೆ ನಡೆಸುತ್ತಿದೆ .
ವಿವಿಧ ಉದ್ಯೋಗಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಡಿಸಿಕೊಡುವುದರಲ್ಲೂ ಇದು ಗಣನೀಯ ಪಾತ್ರ ನಿರ್ವಹಿಸುತ್ತಿದೆ .
ಭಾರತೀಯ ಉದ್ಯಮಗಳೂ ರಕ್ಷಣಾಪಡೆಗಳೂ ಈ ಸಂಸ್ಥೆಯಿಂದ ಅನೇಕ ನೂತನ ವಿಧಾನಗಳನ್ನು ಪಡೆದುಕೊಂಡು ಕಾರ್ಯಕ್ಷೇತ್ರದಲ್ಲಿ ಬಳಸಿಕೊಳ್ಳುತ್ತಿವೆ .
ಇದರಂತೆ ದಿವಂಗತ ಸರ್.ಸಿ.ವಿ .ರಾಮನ್ ಬೆಂಗಳೂರಿನಲ್ಲಿ ಸ್ಥಾಪಿಸಿರುವ ರಾಮನ್ ಸಂಶೋಧನಾ ಸಂಸ್ಥೆಯೂ ಭೌತಶಾಸ್ತ್ರದ ಸಂಶೋಧನೆಗಳಲ್ಲಿ ನಿರತವಾಗಿದೆ .
ಔದ್ಯೋಗಿಕ ಮತ್ತು ವೈಜ್ಞಾನಿಕ ಸಂಶೋಧನ ಮಂಡಳಿಯ ನೇತೃತ್ವದಲ್ಲಿ ಏರ್ಪಟ್ಟಿರುವ ಎರಡು ಸಂಶೋಧನ ಸಂಸ್ಥೆಗಳು ಕರ್ನಾಟಕದಲ್ಲಿವೆ .
ಮೈಸೂರಿನ ಕೇಂದ್ರ ಆಹಾರ ಸಂಶೋಧನ ಸಂಸ್ಥೆ ಜನತೆಯ ಹಾಗೂ ಸೈನ್ಯದ ಆಹಾರ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತು ಸಂಶೋಧನೆ ನಡೆಸುತ್ತದೆ .
ಇದು ಭಾರತದ ಅನೇಕ ಕಡೆ ತನ್ನ ಪ್ರಾದೇಶಿಕ ಸಂಶೋಧನ ಕೇಂದ್ರಗಳನ್ನು ಸ್ಥಾಪಿಸಿಕೊಂಡಿದೆ .
ಆಹಾರ ತಯಾರಿಕೆಗೆ ಸಂಬಂಧಿಸಿದಂತೆ ಇದು ರೂಪಿಸಿದ ಅನೇಕ ವಿಧಾನಗಳು ಆಗಲೇ ವಾಣಿಜ್ಯ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಂದಿವೆ .
ಬೆಂಗಳೂರಿನ ರಾಷ್ಟ್ರೀಯ ವಾಯುಯಾನ ಸಂಶೋಧನ ಸಂಸ್ಥೆಯೂ ವಿಮಾನಗಳ ವಿನ್ಯಾಸ ಮತ್ತು ಚಲನೆಗೆ ಸಂಬಂಧಿಸಿದಂಥ ಹಲವು ಪ್ರಧಾನ ಸಂಶೋಧನೆಗಳನ್ನು ನಡೆಸಿದೆ .
ಬೆಂಗಳೂರು ಮತ್ತು ಧಾರವಾಡದ ಕೃಷಿ ವಿಶ್ವವಿದ್ಯಾಲಯಗಳು ವ್ಯವಸಾಯ ಮತ್ತು ವ್ಯವಸಾಯೋದ್ಯಮಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿವೆ .
ಬತ್ತ ,ಜೋಳ ,ರಾಗಿ , ಹತ್ತಿ ಮುಂತಾದವುಗಳ ನೂತನ ತಳಿಗಳ ನಿರ್ಮಾಣದ ಮೂಲಕ ರಾಜ್ಯದ ವ್ಯವಸಾಯದ ಪ್ರಗತಿಗೆ ಸಹಾಯ ಮಾಡಿವೆ .
ಇವು ಹೆಬ್ಬಾಳ , ಮಂಡ್ಯ , ಮೂಡಿಗೆರೆ , ಧಾರವಾಡ , ರಾಯಚೂರು - ಈ ಸ್ಥಳಗಳಲ್ಲಿ ಪ್ರಾದೇಶಿಕ ಸಂಶೋಧನ ಕೇಂದ್ರಗಳನ್ನು ಹೊಂದಿವೆ .
ಬೆಂಗಳೂರಿನ ಆಗ್ನೇಯದಲ್ಲಿ ಹೊಸೂರು ರಸ್ತೆಯ ಬಳಿ ಇರುವ ರಾಷ್ಟ್ರೀಯ ಕ್ಷೀರೋದ್ಯಮಕ್ಕೆ ಸಂಬಂಧಿಸಿದ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳನ್ನು ನಡೆಸುವುದರ ಜೊತೆಗೆ ಕ್ಷೀರೋದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತು ಸಂಶೋಧನೆಗಳನ್ನು ನಡೆಸಲಾಗುತ್ತಿದೆ .
ಅದು ಹರಿಯಾಣದ ಕರ್ನಾಲ್ನಲ್ಲಿರುವ ಕ್ಷೀರೋದ್ಯಮ ಸಂಶೋಧನ ಸಂಸ್ಥೆಯ ಅಂಗವಾಗಿ ನಡೆದುಕೊಂಡುಬರುತ್ತಿದೆ .
ಪ್ರಾಚೀನ ಕರ್ನಾಟಕದಲ್ಲಿ ಉನ್ನತ ಶಿಕ್ಷಣಕ್ಕೆ ವ್ಯಾಪಕವಾದ ವ್ಯವಸ್ಥೆಯಿತ್ತು .
ಪ್ರ.ಶ.ಪು.4ನೆಯ ಶತಮಾನದ ಕೊನೆಯಲ್ಲಿ ಇಲ್ಲಿಗೆ ಆಗಮಿಸಿದ ಚಂದ್ರಗುಪ್ತ ಮೌರ್ಯ ಮತ್ತು ಅವನ ಗುರು ಭದ್ರಬಾಹುವಿನೊಡನೆ ಜೈನಧರ್ಮವೂ ಜೈನಸಂಸ್ಥೆಗಳೂ ಆಗಮಿಸಿದುವು .
ನಾಡಿನ ಬೇರೆ ಬೇರೆ ಭಾಗಗಳಲ್ಲಿ ಜೈನಬಸದಿಗಳು ಆರಂಭವಾಗಿ ಮೋಕ್ಷಸಾಧನೆಗೆ ನಂಬಿಕೆ ,ಭಕ್ತಿ , ಪೂಜೆ ಪುನಸ್ಕಾರಗಳಂತೆ ಸುಜ್ಞಾನವೂ ಅಗತ್ಯವೆಂದು ಸಾರಿ ಉನ್ನತ ಶಿಕ್ಷಣಕ್ಕೆ ಧಾರ್ಮಿಕ ಮನ್ನಣೆಯನ್ನೂ ಪ್ರೋತ್ಸಾಹವನ್ನೂ ನೀಡಿದುವು .
ಅಶೋಕನ ಕಾಲದಲ್ಲಿ ಕರ್ನಾಟಕಕ್ಕೆ ಬೌದ್ಧ ಧರ್ಮದೊಡನೆ ಸಂಘಾರಾಮಗಳೂ ವಿಹಾರಗಳೂ ಆಗಮಿಸಿ ವ್ಯವಸ್ಥಿತ ರೀತಿಯ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದುವು .
ಕ್ರಿಸ್ತಶಕದ ಆರಂಭದ ವೇಳೆಗೆ ದೇಶದ ಅನೇಕ ಕಡೆ ಬೌದ್ಧ ಮಠಗಳೂ ವಿಹಾರಗಳೂ ಏರ್ಪಟ್ಟವು .
ಪ್ರಪಕ್ತಶಕ ಮೂರನೆಯ ಶತಮಾನದಲ್ಲಿ ಚುಟುಕುಲದ ಶಿವಸ್ಕಂದ ನಾಗಶ್ರೀ ಬನವಾಸಿಯಲ್ಲಿ ಒಂದು ಬೌದ್ಧವಿಹಾರವನ್ನು ಸ್ಥಾಪಿಸಿದ ವಿಷಯ ಅಲ್ಲಿನ ಮಧುಕೇಶ್ವರ ದೇವಾಲಯದ ನಾಗಶಿಲೆಯ ಶಾಸನವೊಂದರಿಂದ ತಿಳಿದುಬರುತ್ತದೆ .
ನಮಗೆ ದೊರೆತಿರುವ ಸಾಕ್ಷ್ಯಾಧಾರಗಳ ಪ್ರಕಾರ ಇದು ಕರ್ನಾಟಕದಲ್ಲಿ ಮೊಟ್ಟ ಮೊದಲು ಆರಂಭವಾದ ಉನ್ನತ ಶಿಕ್ಷಣ ಸಂಸ್ಥೆ .
ಜೈನ ಬೌದ್ಧ ಧರ್ಮಗಳು ಆರಂಭಿಸಿದ ಧಾರ್ಮಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳು ಇಲ್ಲಿ ಪೌರಾಣಿಕ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಗುರುಕುಲ ಮತ್ತು ಆಶ್ರಮ ಶಿಕ್ಷಣ ಪದ್ಧತಿಗಳ ಮೇಲೆ ಪರಿಣಾಮ ಬೀರಿ ಶಿಕ್ಷಣಕ್ಕೆ ಸಂಘ ಸಂಸ್ಥೆಗಳ ನಿಯಂತ್ರಣ ಆರಂಭವಾಯಿತು .
ಅವುಗಳಲ್ಲಿ ಘಟಿಕ ಎಂಬುವು ಅತ್ಯಂತ ಪ್ರಾಚೀನತಮ ಸಂಸ್ಥೆಗಳು .
ಕದಂಬ ಮಯೂರಶರ್ಮ ಉನ್ನತ ಶಿಕ್ಷಣದ ಪ್ರೇಮಿಯಾಗಿದ್ದು ಅಂದು ಕಾಂಚೀಪುರದಲ್ಲಿದ್ದ ಘಟಿಕಾಲಯದ ಮಾದರಿಯಲ್ಲಿ ತನ್ನ ರಾಜ್ಯದಲ್ಲೂ ಘಟಿಕಗಳನ್ನು ಸ್ಥಾಪಿಸಿದ್ದ ಎಂದು ಕೆಲವರ ಊಹೆ .
ನಾಗಾಯಿ, ಹೆಂಜಾರಪುರ, ಕಾಡಿಯೂರು, ಕುಕ್ಕೂರು , ಮೋರಿಗೆರೆ , ರಾಯಬಾಗ್ ಮುಂತಾದೆಡೆ ಖ್ಯಾತಿಪಡೆದ ಘಟಿಕಾಲಯಗಳು ಬೇರೆ ಬೇರೆ ಕಾಲಗಳಲ್ಲಿ ಅಸ್ತಿತ್ವದಲ್ಲಿದ್ದವು .
ಅಲ್ಲಿ ಶಿಕ್ಷಣ ಮುಗಿಸಿದವರಿಗೆ, ಸಮಾರಂಭವೊಂದನ್ನು ನಡೆಸಿ ಘಟಿಕಸಾಹಸ ಎಂಬ ಪ್ರಶಸ್ತಿ ನೀಡುತ್ತಿದ್ದರು .
ಘಟಿಕಗಳಂತೆ ಅಗ್ರಹಾರಗಳೂ ಬ್ರಹ್ಮಪುರಿಗಳೂ ನಾಡಿನ ಬೇರೆ ಬೇರೆ ಭಾಗಗಳಲ್ಲಿ ಅಸ್ತಿತ್ವದಲ್ಲಿದ್ದವು .
ಅವು ಬ್ರಾಹ್ಮಣಪಂಡಿತರ ವಸತಿಗಳಾಗಿದ್ದು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಒದಗಿಸುತ್ತಿದ್ದವು .
ತಾಳಗುಂದ, ಬಾದಾಮಿ, ಉಮ್ಮಚಿಗೆ, ದೇಗಾಂವಿ, ಕಾಡಿಯೂರು, ಸರ್ವಜ್ಞಪುರ ಮುಂತಾದ ಅಗ್ರಹಾರಗಳೂ ಬಳ್ಳಿಗಾವೆ, ತಲಕಾಡು, ವಿಕ್ರಮಪುರ ಮುಂತಾದ ಬ್ರಹ್ಮಪುರಿಗಳೂ ಉನ್ನತ ಶಿಕ್ಷಣದ ಪ್ರಸಿದ್ಧ ಕೇಂದ್ರಗಳಾಗಿದ್ದುವು .
10ನೇಯ ಶತಮಾನದ ವೇಳೆಗೆ ಬೌದ್ಧವಿಹಾರಗಳ ಮಾದರಿಯಲ್ಲಿ ವ್ಯವಸ್ಥೆಗೊಂಡ ಹಿಂದು ಮಠಗಳು ವೈವಿಧ್ಯಮಯವೆನ್ನಬಹುದಾದ ರೀತಿಯಲ್ಲಿ ಉನ್ನತ ಶಿಕ್ಷಣ ಕೊಡುತ್ತಿದ್ದುವು .
ಕೋಡಿಮಠ, ನಾಗಾಯಿಮಠ, ಊರೂರಿಗೂ ವ್ಯಾಪಿಸಿದ್ದ ವೀರಶೈವ ಮಠಗಳು ಇವೆಲ್ಲ ಉನ್ನತ ಶಿಕ್ಷಣವನ್ನು ಪ್ರಸಾರ ಮಾಡುತ್ತಿದ್ದವು .
10ನೇಯ ಶತಮಾನದ ಸುಮಾರಿಗೆ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ದೇವಾಲಯದ ವಿದ್ಯಾಪೀಠಗಳು ಅನೇಕ ಸ್ಥಳಗಳಲ್ಲಿ ಅಸ್ತಿತ್ವಕ್ಕೆ ಬಂದುವು .
ಅದುತನಕ ಸಂಸ್ಕೃತ ಉನ್ನತ ಶಿಕ್ಷಣದಲ್ಲಿ ಬೋಧನ ಮಾಧ್ಯಮವಾಗಿತ್ತು .
ಈಗ ಕನ್ನಡವೂ ಆ ಕಾರ್ಯಕ್ಕೆ ಬಳಕೆಯಾಗುವುದು ಆರಂಭವಾಯಿತು .
ಆ ಸುಮಾರಿಗೆ ಕನ್ನಡದಲ್ಲಿ ಸಾಹಿತ್ಯಿಕ , ಶಾಸ್ತ್ರೀಯ ಮತ್ತು ಇತರ ಗ್ರಂಥಗಳೂ ರಚನೆಯಾಗಿ ಅವುಗಳ ಅಧ್ಯಯನವೂ ನಡೆಯುತ್ತಿತ್ತು .
ಸಾಲೊಟಿಗೆ , ಹರಿಹರದ ಹರಿಹರೇಶ್ವರ ದೇವಾಲಯ, ತಾಳಗುಂದದ ಪ್ರಣವೇಶ್ವರ ದೇವಾಲಯ , ಮನಗೋಳಿಯ ವ್ಯಾಕರಣ ವಿದ್ಯಾಪೀಠ , ಹೆಬ್ಬಾಳಿನ ಬುಜವ್ವೇಶ್ವರ ದೇವಾಲಯ , ಜಟಿಂಗ ರಾಮೇಶ್ವರದ ವಿದ್ಯಾಪೀಠ , ಬಿಜಾಪುರದ ಮೀಮಾಂಸೆ ವಿದ್ಯಾಪೀಠ , ಕೂಡಲ ಸಂಗಮದೇವಾಲಯದ ವಿದ್ಯಾಪೀಠ - ಇವೆಲ್ಲ ಪ್ರಸಿದ್ಧ ಉನ್ನತ ಶಿಕ್ಷಣ ಕೇಂದ್ರಗಳಾಗಿದ್ದವು .
ಸಾಮಾನ್ಯವಾಗಿ ಪಠ್ಯಕ್ರಮದಲ್ಲಿ ವ್ಯಾಕರಣ , ಪುರಾಣ , ವೇದ , ಆಗಮ , ಕಾವ್ಯ , ನಾಟಕ ಮುಂತಾದುವು ಸೇರಿದ್ದುವು .
ಆದರೆ ಒಂದೊಂದು ಕೇಂದ್ರವೂ ತನ್ನದೇ ಆದ ವಿಶೇಷ ವಿಷಯದಲ್ಲಿ ಶಿಕ್ಷಣವೀಯಲು ಹೆಸರಾಗಿತ್ತು .
ಕೋಡಿಮಠದಲ್ಲಿ ಷಡ್ದರ್ಶನಗಳೂ ಕುಪ್ಪತ್ತೂರು ಮಠದಲ್ಲಿ ವಾತ್ಸಾಯನನ ಕಾಮಸೂತ್ರವೂ ವಿಶಿಷ್ಟ ಅಧ್ಯಯನ ವಿಷಯಗಳಾಗಿದ್ದುವು .
ಸರ್ವಜ್ಞಪುರ ಭಾಷಾಶಾಸ್ತ್ರದಲ್ಲೂ ಉಮ್ಮಚಿಗೆ ವ್ಯಾಕರಣ , ಛಂದಸ್ಸು , ಕಾವ್ಯರಚನೆ - ಇವುಗಳಲ್ಲೂ ವಿಶೇಷ ಶಿಕ್ಷಣ ನೀಡುತ್ತಿದ್ದುವು .
ನಾಗಾಯಿಮಠ ಮನುಧರ್ಮಶಾಸ್ತ್ರ , ಶುಕ್ರಶಾಸ್ತ್ರ ಮತ್ತು ವ್ಯಾಸಕೃತಿಗಳ ಬೋಧನೆಗೆ ಹೆಸರು ಗಳಿಸಿತ್ತು .
12-13ನೆಯ ಶತಮಾನಗಳಲ್ಲಿ ಆರಂಭವಾದ ಮುಸಲ್ಮಾನರ ದಾಳಿಯಿಂದ ಭಾರತದ ಇತರೆಡೆಗಳಂತೆ ಕರ್ನಾಟಕದಲ್ಲೂ ಉನ್ನತ ಶಿಕ್ಷಣಕ್ಕೆ ಧಕ್ಕೆಯೊದಗಿತು .
ಅವರ ದಾಳಿಗೆ ಸಿಕ್ಕಿದ ದೇವಾಲಯದ ವಿದ್ಯಾಪೀಠಗಳು ಮುಚ್ಚಿಹೋದವು .
ಅಗ್ರಹಾರ, ಬ್ರಹ್ಮಪುರಿ ಮುಂತಾದ ಇತರ ಉನ್ನತ ವಿದ್ಯಾವಸತಿಗಳು ಹಿಂದಿನ ಪ್ರೋತ್ಸಾಹವಿಲ್ಲದೆ ಹಿಂಬದಿಗೆ ಬಿದ್ದುವು .
ನಾಡಿನ ಎಲ್ಲೊ ಕೆಲವೆಡೆ ದಾಳಿಗೆ ಸಿಕ್ಕದೆ ಉಳಿದುಕೊಂಡಿದ್ದ ಹಲವು ಮಠಗಳು ತಮ್ಮ ವಿದ್ಯಾಪ್ರಸಾರವನ್ನು ಹಾಗೂ ಹೀಗೂ ಕೆಲಕಾಲ ಮುಂದುವರೆಸಿದುವು .
ವಿಜಯನಗರ ಸ್ಥಾಪನೆಯಾದ ಮೇಲೆ ಮುಖ್ಯನಗರಗಳಲ್ಲಿ ಮತ್ತೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹವೇನೋ ದೊರೆಯಿತು .
ಆದರೆ ಅದರ ಪತನಾನಂತರ ಸಣ್ಣಪುಟ್ಟ ಪಾಳೆಯಪಟ್ಟುಗಳು ಏರ್ಪಟ್ಟು ನಾಡು ನಿತ್ಯಕದನಗಳ ಬೀಡಾಗಿ ವ್ಯವಸ್ಥಿತ ರೀತಿಯಲ್ಲಿ ಶಿಕ್ಷಣ ಪ್ರಸಾರ ಇಲ್ಲವಾಯಿತು .
ಮುಸಲ್ಮಾನರು ಆಕ್ರಮಿಸಿದ ಪ್ರದೇಶಗಳಲ್ಲಿ ತಮ್ಮವರಿಗಾಗಿ ಮದ್ರಾಸಗಳೆಂಬ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು .
ಹದಿನಾಲ್ಕನೆಯ ಶತಮಾನದ ಮಧ್ಯಭಾಗದ ವೇಳೆಗೆ ಉತ್ತರ ಕರ್ನಾಟಕದಲ್ಲಿ ಅವು ಅಸ್ತಿತ್ವಕ್ಕೆ ಬಂದುವು .
ಮಸೀದಿಗಳ ಅಂಗವಾಗಿ ಏರ್ಪಟ್ಟಿದ್ದ ಆ ಸಂಸ್ಥೆಗಳಲ್ಲಿ ಮುಸ್ಲಿಂ ಧರ್ಮಗ್ರಂಥಗಳನ್ನು ಬೋಧಿಸುತ್ತಿದ್ದರು .
ಹೊನ್ನಾವರ ಪ್ರದೇಶದಲ್ಲಿದ್ದ ಕೆಲವು ಸಂಸ್ಥೆಗಳನ್ನು ಅಲ್ಲಿ ಸಂಚರಿಸುತ್ತಿದ್ದ ಇಬ್ನ ಬತೂತ ಕೊಂಡಾಡಿರುವನು .
ಬಹಮನೀ ಅರಸರು ಉನ್ನತ ಶಿಕ್ಷಣದ ಪ್ರಚಾರದಲ್ಲಿ ತುಂಬ ಆಸಕ್ತಿ ವಹಿಸಿದ್ದರು .
ಗುಲ್ಬರ್ಗಾ, ಬಿದರ್ ಮುಂತಾದೆಡೆ ಸ್ಥಾಪಿಸಿದ್ದ ಸಂಸ್ಥೆಗಳು ಪ್ರಸಿದ್ಧಿ ಪಡೆದಿದ್ದುವು .
15ನೇಯ ಶತಮಾನದ ಕೊನೆಯಲ್ಲಿ ಆ ರಾಜ್ಯದ ಮಂತ್ರಿಯಾಗಿದ್ದ ಮಹಮ್ಮದ್ ಗವಾನ್ ಬಿದರೆಯಲ್ಲಿ ವಿದ್ಯಾಲಯ ವೊಂದನ್ನು ಕಟ್ಟಿಸಿ ಧರ್ಮಶಾಸ್ತ್ರಗಳ ಜೊತೆಗೆ ಲೌಕಿಕ ವಿದ್ಯೆಗಳ ಬೋಧನೆಗೂ ವ್ಯವಸ್ಥೆಗೊಳಿಸಿದ .
ಅಲ್ಲಿನ ಗ್ರಂಥಾಲಯಕ್ಕೆ ದೇಶವಿದೇಶಗಳಿಂದ ಅಮೂಲ್ಯ ಕೃತಿಗಳನ್ನು ತರಿಸಿ ಒದಗಿಸಿದ್ದ .
ಅನಂತರ ಅಧಿಕಾರಕ್ಕೆ ಬಂದ ಆದಿಲ್ ಷಾಹೀ ಅರಸರು ಬಿಜಾಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಪ್ರಾಥಮಿಕ ಸಾರ್ವತ್ರಿಕ ಶಿಕ್ಷಣಕ್ಕಾಗಿ ಮಕ್ತಾಬ್ಗಳೆಂದು ಶಾಲೆಗಳನ್ನು ಆರಂಭಿಸಿ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಬರುವ ಅವಕಾಶ ಕಲ್ಪಿಸಿದರು .
ಅರಬ್ಬೀ ಮತ್ತು ಪಾರಸೀ ಭಾಷೆಗಳ ವ್ಯಾಸಂಗಕ್ಕೂ ಶಿಲ್ಪ , ವೈದ್ಯ ಮುಂತಾದ ವೃತ್ತಿಶಿಕ್ಷಣಕ್ಕೂ ಪ್ರೋತ್ಸಾಹವಿತ್ತರು .
ಕರ್ನಾಟಕದಲ್ಲಿ ಮುಸಲ್ಮಾನ ಆಳರಸರು ತಮ್ಮ ಮತದವರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರೂ ದೇಶೀಯ ಶಿಕ್ಷಣದ ಪುನರುಜ್ಜೀವನದ ಕಡೆಗೆ ಆಸಕ್ತಿ ತೋರಲಿಲ್ಲ .
ಅಲ್ಲದೆ , ರಾಜಾಸ್ಥಾನದಲ್ಲಿ ಪುರಸ್ಕಾರವಿಲ್ಲದೆ ಜನತೆಗೂ ಅದರಲ್ಲಿ ಆಸಕ್ತಿ ತಪ್ಪಿತ್ತು .
ಮೈಸೂರಿನ ಒಡೆಯರ ಕಾಲದಲ್ಲಿ ಅವರ ಆಡಳಿತ ಕ್ಷೇತ್ರದಲ್ಲೂ ರಾಜಧಾನಿಯಲ್ಲೂ ಸಂಗೀತ , ಶಾಸ್ತ್ರ , ಸಾಹಿತ್ಯ ಮುಂತಾದವಕ್ಕೆ ಪ್ರೋತ್ಸಾಹವನ್ನು ನೀಡಿದ್ದರು .
18ನೇಯ ಶತಮಾನದ ಆಡಳಿತ ಹೈದರ್ ಮತ್ತು ಅನಂತರ ಅವನ ಮಗ ಟಿಪ್ಪುವಿನ ಕೈಸೇರಿದಾಗ ಆ ಪ್ರೋತ್ಸಾಹ ಇಲ್ಲವಾಯಿತು .
ಒಟ್ಟಿನಲ್ಲಿ ಸುಮಾರು ಎರಡು ಸಹಸ್ರ ವರ್ಷಗಳಿಂದ ಬೆಳೆದು ಬಂದಿದ್ದ ಉನ್ನತ ಶಿಕ್ಷಣದ ದೇಶೀಯ ಸಂಪ್ರದಾಯ ಕ್ರಮಕ್ರಮವಾಗಿ ಕುಂದುತ್ತ ಬಂದು ಮುಂದೆ ತಲೆಯೆತ್ತಲು ಅವಕಾಶವಿಲ್ಲವಾಯಿತು .
ಸಂಪನ್ಮೂಲಗಳ ಕೊರತೆಗಳ ನಡುವೆಯೂ ನಾವು ಸಮರ್ಥವಾದ ಶಿಕ್ಷಣವನ್ನು ನೀಡುವಲ್ಲಿ ಯಶಸ್ಸನ್ನು ಕಂಡಿಲ್ಲ ; ಉನ್ನತ ಶಿಕ್ಷಣ ಕ್ಷೇತ್ರವು ನಮ್ಮ ಸಮಾಜದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿಲ್ಲ ಎಂಬ ಅಭಿಪ್ರಾಯವಿದೆ .
ಸಂಪನ್ಮೂಲಗಳ ಕೊರತೆಗಳೂ ಇವೆ .
" ಇಂದು ನಾವು ನೀಡುತ್ತಿರುವ ಶಿಕ್ಷಣದ ಗುಣಮಟ್ಟವು ಅಷ್ಟೇನು ಉತ್ತಮವಾದುದಲ್ಲ ಹಾಗೂ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ಬಹುಮಟ್ಟಿಗೆ ಒಳ್ಳೆಯ ಸಂಸ್ಥೆಗಳಲ್ಲ ಎನ್ನುವುದು ಸಹ ಎಲ್ಲರಿಗೂ ಗೊತ್ತಿರುವ ವಿಚಾರಗಳೆ .
ಈ ಸಂಸ್ಥೆಗಳಲ್ಲಿ ಬೋಧಿಸುವ ಅಧ್ಯಾಪಕರು ಶೈಕ್ಷಣಿಕವಲ್ಲದ ವಿಚಾರಗಳಲ್ಲಿಯೇ ಹೆಚ್ಚಿನ ಆಸಕ್ತಿ ಹೊಂದಿರುವವರು .
ಅವರ ಬದ್ಧತೆಯಷ್ಟೆ ಸಮಸ್ಯಾತ್ಮಕವಾಗಿದೆ ಅವರ ಶೈಕ್ಷಣಿಕ ಸಾಮರ್ಥ್ಯ ಮತ್ತು ಜ್ಞಾನಾರ್ಜನೆಯ ಸಂಕಲ್ಪ .
ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗಳು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ .
ಸಾಕಷ್ಟು ಸಂಪನ್ಮೂಲಗಳು, ಅದರಲ್ಲೂ ವಿದ್ಯಾರ್ಥಿವೇತನಗಳು , ಸಂಶೋಧಕರಿಗೆ ಲಭ್ಯವಿದೆ .
ಆದರೂ ಸಂಶೋಧನೆಯ ಗುಣಮಟ್ಟ ಸಂಪೂರ್ಣ ಕುಸಿದಿದೆ .
ಒಟ್ಟಾರೆಯಾಗಿ ಹೇಳುವುದಾದರೆ, ನಮ್ಮ ವಿಶ್ವವಿದ್ಯಾನಿಲಯಗಳು ತಮ್ಮ ಮೂಲ ಕರ್ತವ್ಯವಾದ ಜ್ಞಾನದ ಉತ್ಪಾದನೆ ಮತ್ತು ಪ್ರಸರಣಗಳಲ್ಲಿ ಶೋಚನೀಯವಾಗಿ ಸೋತಿವೆ .
ಉನ್ನತ ಶಿಕ್ಷಣ ಕ್ಷೇತ್ರದ ಹಲವು ರಾಚನಿಕ ಸಮಸ್ಯೆಗಳು ಸಹ ಎದ್ದು ಕಾಣುತ್ತವೆ " .ಎನ್ನುತ್ತಾರೆ ಕರ್ನಾಟಕ ಮುಕ್ತವಿಶ್ವವಿದ್ಯಾಲಯದ ಪ್ರಾಧ್ಯಾಪಕರು,ಪೃಥ್ವಿ ದತ್ತ ಚಂದ್ರ ಶೋಭಿ, ಹಿಂದೆ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳು ಜ್ಞಾನ ಸೃಷ್ಟಿಸುವ ಶ್ರೇಷ್ಠ ಕೇಂದ್ರಗಳಾಗಿರಲಿಲ್ಲ .
ಆದರೂ 1970 - 80ರ ದಶಕದ ತನಕ ಒಂದು ಮಟ್ಟದ ಸಂಶೋಧನಾ ಮತ್ತು ಜ್ಞಾನಸೃಷ್ಟಿಯ ಸಾಮರ್ಥ್ಯ ಮೈಸೂರು , ಬೆಂಗಳೂರು ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯಗಳಲ್ಲಿದ್ದವು.
ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿದ್ದ, ಜಾಗತಿಕ ನಿಯತಕಾಲಿಕಗಳಲ್ಲಿ ಪ್ರಕಟಿಸುತ್ತಿದ್ದ ಪ್ರಾಧ್ಯಾಪಕರು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಿದ್ದರು .
ಆದರೆ 1980ರ ನಂತರ ಜಾಗತಿಕ ಬೌದ್ಧಿಕ ಬೆಳವಣಿಗೆಗಳಿಗೆ ಸ್ಪಂದಿಸುವ ಶಕ್ತಿಯನ್ನು ಕಳೆದುಕೊಂಡಿದ್ದೇವೆ .
ನಾವು ಮಾಡಲೇಬೇಕಾಗಿರುವ ಬಹುಮುಖ್ಯ ಕೆಲಸವೆಂದರೆ ಅಧ್ಯಾಪಕರ ನೇಮಕಾತಿಯನ್ನು ಸರಿಯಾಗಿ ನಿರ್ವಹಿಸುವುದು .
ಅಧ್ಯಾಪಕರ ನೇಮಕಾತಿಯಲ್ಲಿ ಒಂದು ಸರಳ ಸೂತ್ರವನ್ನು ಅನುಸರಿಸುವುದು ಬಹಳ ಮುಖ್ಯ .
ಅದೇನೆಂದರೆ ತಮ್ಮ ಅಧ್ಯಯನ ಶಿಸ್ತಿನಲ್ಲಿ ಜಾಗತಿಕ ಮಟ್ಟಿದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅರ್ಥೈಸಿಕೊಂಡು , ಪ್ರತಿಕ್ರಿಯಿಸುವ ಸಾಮರ್ಥ್ಯ ಇರುವವರನ್ನು ಆದ್ಯತೆಯ ಮೇರೆಗೆ ನಮ್ಮ ವಿಶ್ವವಿದ್ಯಾನಿಲಯಗಳೊಳಗೆ ಎಲ್ಲ ಹಂತಗಳಲ್ಲಿಯೂ ತರಬೇಕು.
ಉನ್ನತ ಶಿಕ್ಷಣ ಕ್ಷೇತ್ರದ ಪುನಾರಚನೆ ದೃಢ ನೈತಿಕತೆ ಮತ್ತು ವೃತ್ತಿಪರತೆಯನ್ನು ಆಧರಿಸಿದ ಹೊಸ ಸಂಸ್ಕೃತಿಯ ಆಧಾರದ ಮೇಲೆ ಮಾತ್ರ ಸಾಧ್ಯ .
ಉನ್ನತ ಶಿಕ್ಷಣ ಕ್ಷೇತ್ರದ ನೈತಿಕ ಅಧಃಪತನವನ್ನು ಒಪ್ಪಿಕೊಂಡು ಪರಿಹಾರಗಳನ್ನು ರೂಪಿಸಬೇಕು .
ದೃಢ ನೈತಿಕತೆ ಮತ್ತು ವೃತ್ತಿಪರತೆಯನ್ನು ನೆಲಗಟ್ಟಾಗಿಸಿಕೊಂಡ ಸಾಂಸ್ಥಿಕ ಸಂಸ್ಕೃತಿ ನೆಲೆಯಾಗಬೇಕು .
ಶ್ರೇಣೀಕರಣದ ಸಾಂಸ್ಥಿಕ ವ್ಯವಸ್ಥೆ ಬದಲಾಗಬೇಕು .
ನಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೊಂದು ಶೈಕ್ಷಣಿಕ ಗುರಿಯನ್ನು ಕಂಡುಕೊಳ್ಳಬೇಕು .
ಜ್ಞಾನಶಿಸ್ತಿನ ಜಾಗತಿಕ ಬೆಳವಣಿಗೆಗಳಿಗೆ ಸ್ಪಂದಿಸುವ ಶಿಕ್ಷಕರ ನೇಮಕವಾಗಬೇಕು.
ಕರ್ನಾಟಕ ಬಜೆಟ್ಗಳಲ್ಲಿ ಉನ್ನತ ಶಿಕ್ಷಣಕ್ಕೆ ಕೊಡಿಗೆ : ರಾಜ್ಯದ 412 ಕಾಲೇಜುಗಳ ಪೈಕಿ 42 ಕಾಲೇಜುಗಳಿಗೆ ಮಾತ್ರ ಕಾಯಂ ಪ್ರಾಂಶುಪಾಲರಿದ್ದಾರೆ .
ರಾಜ್ಯದ ವಿವಿಧ ಕಾಲೇಜುಗಳಲ್ಲಿ 3,200 ಸಹಾಯಕ ಪ್ರಾಧ್ಯಾಪಕರ ಹುದ್ದೆ ಖಾಲಿ ಇದೆ.