ಉನ್ನತ ಪ್ರೌಢಶಾಲೆಯ (ಹೈಯರ್ ಸೆಕೆಂಡರಿ ಸ್ಕೂಲ್ ) ಅನಂತರದ ಶಿಕ್ಷಣ ; ಸಾಮಾನ್ಯವಾಗಿ ಸಾಂಸ್ಕೃತಿಕ ಶಿಕ್ಷಣಕ್ಕೆ ಮಾತ್ರ ಈ ಹೆಸರನ್ನು ಬಳಸುವುದು ಸಂಪ್ರದಾಯವಾಗಿದ್ದರೂ ಈಚೆಗೆ ಆ ಮಟ್ಟದ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಕ್ಕೂ ಬಳಸಲಾಗುತ್ತಿದೆ ; ಸ್ನಾತಕೋತ್ತರ ಶಿಕ್ಷಣಕ್ಕೂ ಇದೇ ಹೆಸರಿದೆ .
ಉನ್ನತ ಶಿಕ್ಷಣದ ಅಥವಾ ವಿಶ್ವವಿದ್ಯಾಲಯದ ಶಿಕ್ಷಣದ ಪ್ರಥಮ ಪದವಿಯ ಶಿಕ್ಷಣ ಇದರ ಮೊದಲ ಹಂತ ; ಇದರ ಎರಡನೆಯ ಹಂತವೇ ಸ್ನಾತಕೋತ್ತರ ಶಿಕ್ಷಣ (ಡಾಕ್ಟರೇಟ್ ಮತ್ತು ಸಂಶೋಧನೆಯ ಭಾಗವನ್ನು ಒಳಗೊಂಡಂತೆ ); ವಿಶ್ವವಿದ್ಯಾಲಯದ ಅಂಗಸಂಸ್ಥೆಯಲ್ಲಿ ವ್ಯವಸ್ಥೆಗೊಳಿಸಿರುವ ಯಾವುದೇ ರೀತಿಯ ಶಿಕ್ಷಣಕ್ಕೂ ಇದನ್ನು ಬಳಸುವುದೂ ಉಂಟು ; ಸ್ವಯಮಾಧಿಕಾರ ಹೊಂದಿರುವ ವಿಶ್ವವಿದ್ಯಾಲಯದ ಯಾವುದೇ ಸಂಸ್ಥೆಯೊಂದು ವ್ಯವಸ್ಥೆಗೊಳಿಸಿರುವ ಶಿಕ್ಷಣವಿದು.
ಸಾಮಾನ್ಯವಾಗಿ ಕಾಲೇಜು ಶಿಕ್ಷಣ ಹದಿನೆಂಟನೆಯ ವರ್ಷದಿಂದ ಆರಂಭವಾಗುತ್ತದೆ .
ಅದುವರೆಗೆ 5 ವರ್ಷ ವಯಸ್ಸಿನಿಂದ ಹನ್ನೊಂದು - ಹನ್ನೆರಡು ವರ್ಷಗಳ ಪೂರ್ವಭಾವಿ ಶಿಕ್ಷಣ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದೊರಕಿರುತ್ತದೆ .
ಪ್ರಾಚೀನ ಭಾರತದಲ್ಲಿ 16 - 18ನೆಯ ವಯಸ್ಸಿನ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಶಿಕ್ಷಣವೀಯುತ್ತಿದ್ದ ಉನ್ನತ ಶಿಕ್ಷಣ ಸಂಸ್ಥೆಗಳೆಲ್ಲ ಕಾಲೇಜು ಮಟ್ಟದ ಶಿಕ್ಷಣವೀಯುತ್ತಿದ್ದುವೆಂದು ಭಾವಿಸುವುದುಂಟು .
ಆ ಶಿಕ್ಷಣ 6 - 8 ವರ್ಷಗಳ ಕಾಲಾವಧಿಯ ವರೆಗೆ ನಡೆಯುತ್ತಿತ್ತು .
ಇಂದು ವಿಶ್ವವಿದ್ಯಾಲಯದ ಇಡೀ ಶಿಕ್ಷಣಕ್ಕೆ ಈ ಹೆಸರನ್ನು ಬಳಸುವಾಗ ಈ ಕಾಲವಧಿ ಒಪ್ಪುವಂತೆಯೇ ಇರುವುದು ಸ್ಪಷ್ಟವಾಗುತ್ತದೆ.
ವಿಶ್ವವಿದ್ಯಾಲಯದ ಅಥವಾ ಉನ್ನತ ಶಿಕ್ಷಣದ ಉದ್ದೇಶವೇ ಕಾಲೇಜು ಶಿಕ್ಷಣದ ಉದ್ದೇಶವೂ ಆಗಿದೆ , ಜ್ಞಾನ ಸಂಸ್ಕೃತಿಗಳ ಪರಿಚಯ , ವಿವೇಚನೆ ಮತ್ತು ಸಂವರ್ಧನ ಇವೆಲ್ಲವನ್ನೂ ಅದು ಒಳಗೊಂಡಿದೆ .
ಈ ಮೂರು ಉದ್ದೇಶಗಳಲ್ಲಿ ಕೇವಲ ಪ್ರಥಮ ಪದವಿಗೇ ಮೀಸಲಾಗಿರುವ ಕಾಲೇಜು ಶಿಕ್ಷಣದಲ್ಲಿ ಕೊನೆಯೆರಡು ಉದ್ದೇಶಗಳು ಪ್ರಧಾನವೆನಿಸುತ್ತವೆ .
ಕಾಲೇಜಿಗೆ ಬರುವ ವೇಳೆಗೆ ವಿದ್ಯಾರ್ಥಿಗಳು ಸ್ವತಂತ್ರವಾಗಿ ವಿವೇಚಿಸುವ ಶಕ್ತಿ ಪಡೆದಿರುವುದರಿಂದ ಅಲ್ಲಿ ಬೋಧಿಸಿದ ಅಂಶಗಳನ್ನು ಕುರಿತು ಸ್ವಂತ ಅಭಿಪ್ರಾಯವನ್ನು ರೂಪಿಸಿಕೊಂಡು ತಮ್ಮದೇ ಆದ ರೀತಿಯಲ್ಲಿ ವಿಷಯವನ್ನು ಗ್ರಹಿಸುವುದು ಸಾಧ್ಯ .
ಸ್ನಾತಕೋತ್ತರ ಶಿಕ್ಷಣಕ್ಕೆ ಇದು ಅಗತ್ಯವೆನಿಸುವ ಪೂರ್ವ ಸಿದ್ಧತೆ .
ಇದರ ಆಧಾರದ ಮೇಲೆ ಜ್ಞಾನ ಸಂಸ್ಕøತಿಗಳ ಸಂವರ್ಧನಕ್ಕೆ ನೆರವಾಗುವಂತೆ ಅಲ್ಲಿ ಸಂಶೋಧನೆ ನಡೆಸುವುದು ಸಾಧ್ಯವಾಗುತ್ತದೆ .
ಎಲ್ಲ ದೇಶಗಳಲ್ಲೂ ಕಾಲೇಜು ಶಿಕ್ಷಣದ ಪ್ರವೇಶನಿಯಮಗಳು ಏಕರೀತಿಯಾಗಿಲ್ಲ .
ಒಂದು ದೇಶದ ಎಲ್ಲ ಕಾಲೇಜುಗಳೂ ಒಂದೇ ರೀತಿಯ ನಿಯಮಗಳನ್ನು ರೂಪಿಸಿಲ್ಲ .
ಅಮೆರಿಕದ ಸಂಯುಕ್ತ ಸಂಸ್ಥಾನದ ಬೇರೆ ಬೇರೆ ರಾಜ್ಯಗಳ ಬೇರೆ ಬೇರೆ ಕಾಲೇಜುಗಳಲ್ಲಿ ಈ ನಿಯಮಗಳು ಹೆಚ್ಚು ವೈವಿಧ್ಯವನ್ನು ತೋರುತ್ತವೆ .
ಯೂರೋಪ್ , ಇಂಗ್ಲೆಂಡ್ ಮತ್ತು ಭಾರತದ ಕಾಲೇಜುಗಳಲ್ಲೂ ವ್ಯತ್ಯಾಸಗಳಿದ್ದರೂ ಅಷ್ಟು ವೈಪರೀತ್ಯ ಕಂಡುಬರುವುದಿಲ್ಲ .
ಸಾಮಾನ್ಯವಾಗಿ ಕಾಲೇಜು ಶಿಕ್ಷಣಕ್ಕೆ ವಿದ್ಯಾರ್ಥಿಯೊಬ್ಬ 11-12 ವರ್ಷಗಳ ವರೆಗೆ ಆಗಲೆ ಶಾಲಾಶಿಕ್ಷಣ ಪಡೆದಿರಬೇಕು .
ಎಂದರೆ ಮಾತೃಭಾಷೆ , ರಾಷ್ಟ್ರಭಾಷೆ , ವ್ಯಾವಹಾರಿಕಭಾಷೆ ,ಗಣಿತ,ಸಮಾಜಪಾಠ , ವಿಜ್ಞಾನ ಮತ್ತು ಕೆಲವು ವೇಳೆ ಆಯ್ದ ವಿಷಯ - ಇವುಗಳಲ್ಲಿ ಶಿಕ್ಷಣ ಪಡೆದಿದ್ದು ಅಂಗೀಕೃತ ಸೆಕೆಂಡರಿ ಶಿಕ್ಷಣ ಅಥವಾ ಪ್ರೀ - ಯೂನಿವರ್ಸಿಟ್ ಅಥವಾ ಇಂಟರ್ಮಿಡಿಯೆಟ್ ಪರೀಕ್ಷಾ ಮಂಡಲಿ ನಡೆಸುವ ಪ್ರಿ - ಯೂನಿವರ್ಸಿಟಿ ಅಥವಾ ಹೈಯರ್ ಸೆಕೆಂಡರಿ ಶಾಲೆ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಬೇಕು .
ಅಮೆರಿಕದ ಕೆಲವು ಕಾಲೇಜುಗಳು ವಿದ್ಯಾರ್ಥಿಗೆ 18 ವರ್ಷ ವಯಸ್ಸಾಗಿದ್ದು ಆ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರದಿದ್ದರೂ ಆತ ಕಾಲೇಜಿನ ಶಿಕ್ಷಣಕ್ಕೆ ಯೋಗ್ಯನಾಗಿರುವನೆಂದು ನಿರ್ಧರವಾದರೆ ,ಅವನಿಗೆ ಪ್ರವೇಶಾವಕಾಶವನ್ನು ನೀಡುವುದುಂಟು .
ಶಿಕ್ಷಣಾಭಿವೃದ್ಧಿಗೆ ಸಂಬಂಧಿಸಿದಂತೆ ಮೇಲೆ ಸೂಚಿಸಿದ ನಿಯಮಗಳಂತೆ ಇತರ ನಿಯಮಗಳನ್ನೂ ರೂಪಿಸಿರುವುದುಂಟು .
ಸೆಕೆಂಡರಿ ಶಾಲಾಪರೀಕ್ಷೆಯಲ್ಲಿ ವಿದ್ಯಾರ್ಥಿ ಪಡೆದುಕೊಂಡಿರುವ ಅಂಶಗಳ ಬಗ್ಗೆ ಕನಿಷ್ಟ ಸೇಕಡಾ ಪ್ರಮಾಣವನ್ನು ಸಮಗ್ರ ಅಥವಾ ಕೆಲವು ವಿಷಯಗಳಲ್ಲಿ ಮಾತ್ರ ಗೊತ್ತುಮಾಡಿರಬಹುದು .
ಉದಾ : ಕೆಲವು ತಾಂತ್ರಿಕ ಅಥವಾ ವೈದ್ಯಕೀಯ ಕಾಲೇಜುಗಳು ಆಯ್ದುಕೊಂಡು ವಿಷಯಗಳಲ್ಲಿ ಕನಿಷ್ಟ .ಪಕ್ಷ ಸೇ .45 ಅಂಕಗಳನ್ನು ಪಡೆದಿರಬೇಕೆಂದು ಪ್ರವೇಶನಿಯಮ ಮಾಡಿರುವುದುಂಟು , ಕೆಲವು ವೃತ್ತಿಶಿಕ್ಷಣದ ಕಾಲೇಜುಗಳು ನಿರ್ದಿಷ್ಟ ವಿಷಯಗಳನ್ನು ಅಧ್ಯಯನ ಮಾಡಿರುವವರನ್ನು ಮಾತ್ರ ಸೇರಿಸಿಕೊಳ್ಳುವುವು .
ಉದಾ : ವೈದ್ಯಕೀಯ ಕಾಲೇಜು ಶಿಕ್ಷಣಕ್ಕೆ ಭೌತಶಾಸ್ತ್ರ , ರಸಾಯನಶಾಸ್ತ್ರ , ಜೀವಶಾಸ್ತ್ರ ಇತ್ಯಾದಿ ವಿಜ್ಞಾನ ವಿಭಾಗಗಳನ್ನು ಅಭ್ಯಾಸ ಮಾಡಿರುವುದುಂಟು .
ಇತರ ಕೆಲವು ಕಾಲೇಜುಗಳು ವಿದ್ಯಾರ್ಥಿಗಳ ಗುಣಶೀಲಗಳಿಗೂ ಮಹತ್ತ್ವ ಕೊಟ್ಟು ಪ್ರವೇಶಾವಕಾಶದ ನಿಯಮಗಳನ್ನು ರೂಪಿಸುವುದುಂಟು : ಅದಕ್ಕಾಗಿ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ವಿದ್ಯಾರ್ಥಿಯ ಗುಣ , ವ್ಯಕ್ತಿತ್ವ , ಶಿಕ್ಷಣ ಕಾರ್ಯಗಳಲ್ಲೂ ಆಟಪಾಟಗಳಲ್ಲೂ ತೆಳೆದಿರುವ ಆಸಕ್ತಿ ಇತ್ಯಾದಿ ಅಂಶಗಳ ಬಗ್ಗೆ ಕೊಟ್ಟಿರುವ ಯೋಗ್ಯತಾಪತ್ರವನ್ನು ಪರಿಗಣನೆಗೆ ತೆಗೆದುಕೊಳ್ಳುವುದಂಟು .
ಇನ್ನು ಕೆಲವು ಕಾಲೇಜುಗಳು ಸೆಕೆಂಡರಿ ಶಾಲಾಪರೀಕ್ಷೆಯ ಜೊತೆಗೆ ತಮ್ಮವೇ ಆದ ಪ್ರವೇಶ ಪರೀಕ್ಷೆಗಳನ್ನೂ ನಡೆಸಿ ಅದರಲ್ಲಿ ವಿದ್ಯಾರ್ಥಿ ಪಡೆಯುವ ಫಲಿತಾಂಶವನ್ನು ಆಧಾರ ಮಾಡಿಕೊಳ್ಳುವುದುಂಟು .
ಕೆಲವು ವೇಳೆ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರ ಅಭಿರುಚಿ , ವ್ಯಕ್ತಿತ್ವ , ದೈಹಿಕ ಸ್ವರೂಪ , ಸಂವೇಗ ಜೀವನ (ಭಾವಜೀವನ) ಇತ್ಯಾದಿಗಳನ್ನು ಪರಿಶೀಲಿಸುವುದೂ ಉಂಟು .
ಅದಕ್ಕಾಗಿ ಅಭಿರುಚಿ ಪರೀಕ್ಷಣ (ಆಪ್ಟಿಟ್ಯೂಡ್ ಟೆಸ್ಟ್ ), ಬುದ್ಧಿ ಪರೀಕ್ಷಣ , ಆಸಕ್ತಿ , ಪರೀಕ್ಷಣ , ವ್ಯಕ್ತಿತ್ವ ಪರೀಕ್ಷಣ - ಇತ್ಯಾದಿ ಅಳತೆಯ ಸಾಧನಗಳನ್ನು ಬಳಸುವುದು ಅಮೆರಿಕದಲ್ಲಿ ಹೆಚ್ಚು .
ಭಾರತದಲ್ಲಿ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣ ಆಚರಣೆಗೆ ಬಂದ ಮೇಲೆ ಸೆಕೆಂಡರಿ ಶಿಕ್ಷಣ ಅಗಾಧವಾಗಿ ಬೆಳೆದಿದೆ .
ಇದರ ಫಲವಾಗಿ ವರ್ಷಂಪ್ರತಿ ಕಾಲೇಜು ಶಿಕ್ಷಣಕ್ಕಾಗಿ ಬರತಕ್ಕವರ ಸಂಖ್ಯೆ 8 -10 ಪಾಲು ಹೆಚ್ಚಿದೆ .
ಇದರಿಂದ ಅವರೆಲ್ಲರಿಗೂ ಅವಕಾಶ ಕಲ್ಪಿಸುವುದು ಅಸಾಧ್ಯವಾಗಿ ಪ್ರತಿಯೊಂದು ಕಾಲೇಜೂ ವಿದ್ಯಾರ್ಥಿಗಳನ್ನು ಆಯ್ದುಕೊಳ್ಳವುದು ಅನಿವಾರ್ಯವಾಗುತ್ತಿದೆ .
ಹಾಗೆ ಮಾಡುವಾಗ ಬಹುಮಟ್ಟಿಗೆ ಹೈಯರ್ ಸೆಕೆಂಡರಿ , ಪ್ರಿ -ಯೂನಿವರ್ಸಿಟಿ ಅಥವಾ ಇಂಟರ್ಮಿಡಿಯಟ್ ಪರೀಕ್ಷೆಯಲ್ಲಿ ಪಡೆದ ಅಂಕಗಳ ಪ್ರಮಾಣ ಆಧಾರವಾಗುತ್ತಿದೆ .
ಅಷ್ಟಾಗಿ ಅಂಕಗಳನ್ನು ಪಡೆಯದವರನ್ನು ಅಧಿಕ ತಲೆಗಂದಾಯ ವಸೂಲು ಮಾಡಿ ಪ್ರವೇಶಾವಕಾಶ ಕೊಡುವ ಸಂಪ್ರದಾಯವೂ ಕೆಲವು ಖಾಸಗಿ ಕಾಲೇಜುಗಳಲ್ಲಿ ತಲೆಹಾಕಿಕೊಂಡಿದೆ .
ಗಿರಿಜನ ಹರಿಜನರಿಗಾಗಿ ಪ್ರವೇಶ ನಿಯಮಗಳನ್ನು ಸಡಿಲ ಮಾಡಿರುವುದುಂಟು .
ಅಮೆರಿಕ, ಭಾರತ ಮುಂತಾದೆಡೆಗಳಲ್ಲಿ ಸೆಕೆಂಡರಿ ಹಂತದ ಕೊನೆಯ ಎರಡು ತರಗತಿಗಳನ್ನು ಪ್ರತ್ಯೇಕಗೊಳಿಸಿ ಜೂನಿಯರ್ ಕಾಲೇಜುಗಳೆಂದು ಕರೆದಿರುವರು .
ಅಲ್ಲಿ ಕಾಲೇಜೆಂಬ ಹೆಸರಿದ್ದರೂ ಅದು ಕಾಲೇಜು ಶಿಕ್ಷಣವಲ್ಲ ; ಅದು ಪ್ರೌಢಶಾಲಾ ಶಿಕ್ಷಣದ ಮುಂದುವರಿಸಿದ ಶಿಕ್ಷಣ ಮಾತ್ರ .
ಇದು ತನಕ ಭಾರತದ ಅನೇಕ ಕಡೆಗಳಲ್ಲಿ ಜೂನಿಯರ್ ಕಾಲೇಜಿನ ಮೊದಲ ವರ್ಷದ ಶಿಕ್ಷಣ ಸೆಕೆಂಡರಿ ಶಾಲೆಗೂ ಎರಡನೆಯ ವರ್ಷದ ಶಿಕ್ಷಣದ ವಿಶ್ವವಿದ್ಯಾನಿಲಯಕ್ಕೂ ಸೇರಿತ್ತು .
ಈಗ ಜೂನಿಯರ್ ಕಾಲೇಜುಗಳ ಆಡಳಿತಕ್ಕಾಗಿ ಪ್ರಿ -ಯೂನಿವರ್ಸಿಟಿ ಬೋರ್ಡ್ ಎಂಬ ಪ್ರತ್ಯೇಕ ಸಂಸ್ಥೆಯನ್ನು ಆರಂಭಿಸಲಾಗಿದೆ .
ಪಠ್ಯಕ್ರಮ ಮತ್ತು ಉದ್ದೇಶಗಳನ್ನನುಸರಿಸಿ ಕಾಲೇಜುಗಳನ್ನು ಸಾಂಸ್ಕ್ರತಿಕ ಶಿಕ್ಷಣದ ಕಾಲೇಜುಗಳನ್ನು ಮಾನವಿಕ ವಿಷಯಗಳ ಕಾಲೇಜು, ವಿಜ್ಞಾನ ಶಾಸ್ತ್ರದ ಕಾಲೇಜು , ವಾಣಿಜ್ಯಶಾಸ್ತ್ರದ ಕಾಲೇಜು , ಲಲಿತ ಕಲಾ ಕಾಲೇಜು , ಎಂದು ನಾಲ್ಕು ವಿಧಗಳನ್ನಾಗಿ ಗುರುತಿಸಬಹುದು .
ತಾಂತ್ರಿಕ ಶಿಕ್ಷಣದ ಕಾಲೇಜುಗಳೇ ಬೇರೆ ; ವೃತ್ತಿಶಿಕ್ಷಣದ ಕಾಲೇಜುಗಳೇ ಬೇರೆ .
ತಾಂತ್ರಿಕ ಶಿಕ್ಷಣದ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಮತ್ತು ಔದ್ಯೋಗಿಕ ವಿಜ್ಞಾನದ (ಟೆಕ್ನಾಲಜಿ ) ಕಾಲೇಜುಗಳೇ ಬೇರೆ ; ವೃತ್ತಿ ಶಿಕ್ಷಣದ ಕಾಲೇಜುಗಳೇ ಬೇರೆ .
ವೈದ್ಯ , ವ್ಯವಸಾಯ , ಪಶುವೈದ್ಯ , ನ್ಯಾಯಶಾಸ್ತ್ರ , ಇತ್ಯಾದಿ ವೃತ್ತಿಗಳಲ್ಲಿ ಶಿಕ್ಷಣವೀಯುವ ಸಂಸ್ಥೆಗಳು ವೃತ್ತಿಶಿಕ್ಷಣಕ್ಕೆ ಸೇರುತ್ತವೆ .
ಅಧ್ಯಾಪಕರ ವೃತ್ತಿಶಿಕ್ಷಣದ ಕಾಲೇಜುಗಳು ವಿಶಿಷ್ಟ ರೀತಿಯವಾಗಿದ್ದು ಅಧ್ಯಾಪಕರ ವೃತ್ತಿಶಿಕ್ಷಣಕ್ಕೆ ಮೀಸಲಾಗಿವೆ .
ಆಡಳಿತ ದೃಷ್ಟಿಯಿಂದ ಕಾಲೇಜು ಶಿಕ್ಷಣ ಮೂರು ಮುಖ್ಯ ಕ್ಷೇತ್ರಗಳಿಗೆ ಹಂಚಿಹೋಗಿದೆ .
ವಿಶ್ವವಿದ್ಯಾನಿಲಯ ಮತ್ತು ಅದರ ಆಂಗಿಕ (ಕಾನ್ಸ್ಟಿಟ್ಯೂಯೆಂಟ್ ) ಕಾಲೇಜುಗಳಲ್ಲೂ ಸರ್ಕಾರದ , ಸ್ಥಳೀಯ ಸರ್ಕಾರಗಳ ಮತ್ತು ಖಾಸಗಿ ಸಂಸ್ಥೆಗಳ ಅಂಗೀಕೃತ ( ಅಫಿಲಿಯೇಟಿಡ್ ) ಕಾಲೇಜುಗಳಲ್ಲೂ ಆ ಶಿಕ್ಷಣ ಹರಡಿದೆ .
ಯುದ್ಧಪೂರ್ವದಲ್ಲಿ ಖಾಸಗಿ ಕಾಲೇಜುಗಳಿಗೆ ಅನುದಾನ ಅಷ್ಟಾಗಿ ಇರಲಿಲ್ಲವಾಗಿ ಅವುಗಳ ಸಂಖ್ಯೆಯೂ ಕಡಿಮೆಯಾಗಿತ್ತು .
ಈಚೆಗೆ ಅವಕ್ಕೆ ಹೆಚ್ಚು ಉದಾರವಾಗಿ ಧನಸಹಾಯ ದೊರಕುವಂತಾಗಿ ಆ ಕ್ಷೇತ್ರ ಬಹುವಾಗಿ ವಿಸ್ತರಿಸಿದೆ .
ಶಿಕ್ಷಣದ ಅಂತಸ್ತನ್ನು ಆಧರಿಸಿ ಪರಿಗಣಿಸಿದಾಗ ಕಾಲೇಜು ಶಿಕ್ಷಣದಲ್ಲಿ ಎರಡು ಹಂತಗಳಿವೆ .
ಮೊದಲ ಹಂತದಲ್ಲಿ ಪದವಿಯ ಸ್ನಾತಕ ಪೂರ್ವ ಶಿಕ್ಷಣ (ಅಂಡರ್ ಗ್ರಾಜುಯೇಟ್ ) ಮತ್ತು ಸ್ನಾತಕೋತ್ತರ ಶಿಕ್ಷಣ (ಪೋಸ್ಟ್ ಗ್ರಾಜುಯೇಟ್ ) .
ಎರಡನೆಯ ಹಂತದಲ್ಲಿ ಎಂ.ಎ., ಎಂ.ಎಸ್ಸಿ., ಎಂ.ಕಾಂ., ಎಂ.ಇ., ಎಂ.ಎಲ್., ಇತ್ಯಾದಿ ಮಾಸ್ಟರ್ ಪದವಿಯ ಶಿಕ್ಷಣವೂ ಡಾಕ್ಟರ್ ಪದವಿಯ ಶಿಕ್ಷಣವೂ ಇತರ ಉನ್ನತ ಸಂಶೋಧನೆಯ ಶಿಕ್ಷಣವೂ ಸೇರಿವೆ .
ಬಹುಮಟ್ಟಿಗೆ ಸ್ನಾತಕೋತ್ತರ ಶಿಕ್ಷಣ ವಿಶ್ವವಿದ್ಯಾನಿಲಯದ ಬೇರೆ ಬೇರೆ ವಿಭಾಗಗಳಲ್ಲಿ ಅಥವಾ ಆಂಗಿಕ ಸಂಸ್ಥೆಗಳಲ್ಲಿ ಇದ್ದು ,ಅದರ ನೇರ ಆಡಳಿತದಲ್ಲಿ ನಡೆಯುತ್ತದೆ .
ಎಲ್ಲೊ ಕೆಲವು ಅಂಗೀಕೃತ ಕಾಲೇಜುಗಳಲ್ಲೂ ಸ್ನಾತಕೋತ್ತರ ಶಿಕ್ಷಣದ ವ್ಯವಸ್ಥೆಯುಂಟು .
ಮುಂದೆ ನೂತನವಾಗಿ ವಿಶ್ವವಿದ್ಯಾನಿಲಯವೊಂದನ್ನು ಆರಂಭಿಸಬೇಕಾಗಿರುವ ಸ್ಥಳದಲ್ಲೂ ಸ್ನಾತಕೊತ್ತರ ಶಿಕ್ಷಣ ಕೇಂದ್ರವನ್ನು ಪೂರ್ವಭಾವಿಯಾಗಿ ಆರಂಭಿಸುವುದುಂಟು .
ಕೆಲವು ಶಿಕ್ಷಣಸಂಸ್ಥೆಗಳು ಕಾಲೇಜು ಎಂಬ ಹೆಸರನ್ನು ಹೊಂದಿಲ್ಲವಾದರೂ ಕಾಲೇಜು ಹಂತದ ಶಿಕ್ಷಣವನ್ನು ವ್ಯವಸ್ಥೆಗೊಳಿಸಿರುತ್ತವೆ .
ಉದಾ :ಸ್ಕೂಲ್ ಆಫ್ ಮೆಡಿಸನ್,ಸ್ಕೂಲ್ ಆಫ್ ಮೈನಿಂಗ್,ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ -ಇತ್ಯಾದಿ .
ಭಾರತದಲ್ಲಿ ಕಾಲೇಜು ಶಿಕ್ಷಣ : ಪ್ರಾಚೀನ ಭಾರತದಲ್ಲಿ ಕಾಲೇಜು ಮಟ್ಟದ ಶಿಕ್ಷಣ ತುಂಬ ಅಭಿವೃದ್ಧಿ ಸ್ಥಿತಿಯಲ್ಲಿತ್ತು .
ವೇದಗಳ ಆರಂಭ ಕಾಲದಲ್ಲಿ ಮೊದಲಾದ ಆ ಶಿಕ್ಷಣ ಮಧ್ಯಯುಗಗಳ ವರೆಗೂ ನಡೆದುಕೊಡು ಬಂದು ಮುಸಲ್ಮಾನರ ದಾಳಿಗೆ ಸಿಕ್ಕು ನಾಮಾವಶೇಷವಾಯಿತು .
ಅಳಿದುಳಿದುಕೊಂಡಿದ್ದ ಕೆಲವು ಕಾಲೇಜುಗಳು 19ನೇಯ ಶತಮಾನದ ಮಧ್ಯಕಾಲದಲ್ಲಿ ಇಂಗ್ಲಿಷ್ ಶಿಕ್ಷಣ ಪದ್ಧತಿ ಆರಂಭವಾದಂತೆ ಕೊನೆಗೊಂಡುವು .
ಬಂಗಾಳ ,ಬಿಹಾರಗಳಲ್ಲಿ ಇನ್ನೂ ಉಳಿದುಕೊಂಡು ಬಂದಿರುವ ಕೆಲವು ತೋಲ್ ಎಂಬ ಸಂಸ್ಕøತ ಶಿಕ್ಷಣಸಂಸ್ಥೆಗಳೂ ಮದ್ರಸಾ ಎಂಬ ಮುಸಲ್ಮಾನರ ಸಂಸ್ಥೆಗಳೂ ಸಂಸ್ಕ್ರತ ಮಹಾಪಾಠಶಾಲೆಗಳೂ ಇಂದಿಗೂ ಅವನ್ನು ನೆನಪಿಗೆ ತರುವಂತೆ ನಡೆದುಕೊಂಡು ಬರುತ್ತಿವೆ .
ಕ್ರಿ.ಪೂ .7ನೇಯ ಶತಮಾನಕ್ಕೂ ಹಿಂದೆ ಆರಂಭವಾಗಿದ್ದ ತಕ್ಷಶಿಲೆಯ ವಿಶ್ವವಿದ್ಯಾನಿಲಯ ಇಲ್ಲಿನ ಪ್ರಾಚೀನತಮ ಉನ್ನತ ಶಿಕ್ಷಣ ಸಂಸ್ಥೆ .
ಮೊದಮೊದಲು ಇದು ಬ್ರಾಹ್ಮಣ (ಹಿಂದೂ ) ವಿದ್ಯಾಕೇಂದ್ರವಾಗಿದ್ದರೂ ಕ್ರಿ.ಪೂ .ಎರಡನೆಯ ಶತಮಾನದ ವೇಳೆಗೆ ಬೌದ್ಧ ವಿಶ್ವವಿದ್ಯಾನಿಲಯವಾಯಿತು .
ಇಲ್ಲಿ ವೇದ,18 ಕಲೆ (ವೃತ್ತಿ ) ಅಥವಾ ಸಿಪಾಗಳನ್ನು ಕಲಿಸುತ್ತಿದ್ದರು .
ಹದಿನೆಂಟು ಕಲೆಗಳಲ್ಲಿ ವೈದ್ಯ , ಧನುರ್ವಿದ್ಯೆ , ಸರ್ಪವಿದ್ಯೆ , ವ್ಯವಸಾಯ , ಮಂತ್ರಗಾರಿಕೆ ಇತ್ಯಾದಿ ವೃತ್ತಿಶಿಕ್ಷಣವೂ ಜೋತಿಷ್ಯ , ಖಗೋಳವಿಜ್ಞಾನ , ಲೆಕ್ಕಗಾರಿಕೆ , ವಾಣಿಜ್ಯ ಇತ್ಯಾದಿಗಳೂ ಸೇರಿದ್ದುವು .
ಜೊತೆಗೆ ವ್ಯಾಕರಣ , ತರ್ಕ , ಕಾವ್ಯಮೀಮಾಂಸೆ , ಪುರಾಣ ಇವೂ ಸೇರಿಕೊಂಡಿದ್ದುವು .
ಅನಂತರ ಆರಂಭವಾದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಾಶಿ , ನಾಳಂದ , ವಲಭಿ (ವಾಲಾ ) , ವಿಕ್ರಮಶಿಲ , ಧನ್ಯಕಟಕ ಮುಂತಾದವು ಖ್ಯಾತಿ ಪಡೆದಿದ್ದುವು .
ಕರ್ಣಾಟಕದಲ್ಲಿ ದೇವಸ್ಥಾನದ ಅಥವಾ ಮಠಗಳ ಅಂಗವಾಗಿ ಕಾಲೇಜು ಮಟ್ಟದ ಶಿಕ್ಷಣ ವ್ಯವಸ್ಥೆಗೊಂಡಿತ್ತು .
ಅಂಥ ಕಾಲೇಜುಗಳಲ್ಲಿ ಸಾಲೊಟಗಿ , ಹೆಬ್ಬಾಳು (ಧಾರವಾಡ ಜಿಲ್ಲೆ ) , ಭುಜವೇಶ್ವರ ದೇವಾಲಯ , ಚಿತ್ರದುರ್ಗ ಜಿಲ್ಲೆಯ ಜಟಿಂಗ ರಾಮೇಶ್ವರ ದೇವಾಲಯ , ಬಿಜಾಪುರ , ತಾವರೆಗೆರೆ , ಮನಗೋಳಿ , ಬೆಳಗಾಂವಿಯ ದಕ್ಷಿಣೇಶ್ವರ ದೇವಾಲಯ , ತಾಳಗುಂದದ ಪ್ರಣವೇಶ್ವರ ದೇವಾಲಯ ಮುಂತಾದೆಡೆಗಳಲ್ಲಿ ಅಂಥ ಕಾಲೇಜು ಶಿಕ್ಷಣಕ್ಕೆ ವ್ಯವಸ್ಥೆ ಮಾಡಿತ್ತು .
ಬಹುಮಟ್ಟಿಗೆ ಅವೆಲ್ಲ ಸಂಸ್ಕ್ರತ ಪಾಠಶಾಲೆಗಳು .
ಆ ಕಾಲದಲ್ಲಿ ಅಗ್ರಹಾರಗಳೂ (ಬಾಹ್ಮಣರ ವಸತಿಗಳು ) ಬ್ರಹ್ಮಪುರಿಗಳೂ ( ನಗರದ ಬ್ರಾಹ್ಮಣರು ವಾಸಿಸುತ್ತಿದ್ದ ಭಾಗಗಳು ) ಉನ್ನತ ಶಿಕ್ಷಣದ ಕ್ಷೇತ್ರಗಳಾಗಿದ್ದುವು .
ಆಧುನಿಕ ಭಾರತದಲ್ಲಿ ಕಾಲೇಜು ಶಿಕ್ಷಣ : ಹತ್ತೊಂಬತ್ತನೆಯ ಶತಮಾನದ ಮಧ್ಯಕಾಲದಿಂದ ಭಾರತದಲ್ಲಿ ಇಂದಿನ ರೀತಿಯ ಕಾಲೇಜು ಶಿಕ್ಷಣ ಆರಂಭವಾಯಿತು .
ಆ ಶತಮಾನದ ಮಧ್ಯಕಾಲದ ವೇಳೆಗೆ ಸೆಕೆಂಡರಿ ಶಾಲೆಗಳು ಹೆಚ್ಚಿ ಕಾಲೇಜಿನ ಅಗತ್ಯ ಹೆಚ್ಚಿತು .
ಅನಂತರ ಇಂಗ್ಲಿಷ್ ಆಡಳಿತ ಅದಕ್ಕೆ ನೀಡಿದ ಪ್ರೋತ್ಸಾಹದಿಂದ ನೂತನ ಮಾದರಿಯ ಕಾಲೇಜುಗಳು ಅಧಿಕ ಸಂಖ್ಯೆಯಲ್ಲಿ ಹೆಚ್ಚಿದುವು .
ಸ್ವಾತಂತ್ರ್ಯಾ ನಂತರ ಕಾಲೇಜು ಶಿಕ್ಷಣ 8 -10 ಪಾಲು ವಿಸ್ತರಿಸಿತು .
ಸದ್ಯದಲ್ಲಿ ಆ ಶಿಕ್ಷಣ ದೇಶಾದ್ಯಂತ ಇರುವ 3,297 ಕಾಲೇಜುಗಳಲ್ಲೂ 9 ಪರಿಗಣಿತ ವಿಶ್ವವಿದ್ಯಾನಿಲಯಗಳಲ್ಲೂ 10 ರಾಷ್ಟ್ರೀಯ ಪ್ರಾಮುಖ್ಯ ಪಡೆದ ಸಂಸ್ಥೆಗಳಲ್ಲೂ ನಡೆಯುತ್ತಿದೆ .
ಈ ಕಾಲೇಜುಗಳಲ್ಲಿ 185 ವಿಶ್ವವಿದ್ಯಾಲಯದ ಆಂಗಿಕ ಕಾಲೇಜುಗಳೂ ; ಮಿಕ್ಕ 3112 ಅಂಗೀಕೃತ ಕಾಲೇಜುಗಳು .
ಅವುಗಳಲ್ಲಿ ಸೇ .5.4 ರಷ್ಟು ಕಾಲೇಜುಗಳು ; ಮಾತ್ರ 1947ರ ಹಿಂದೆ ಆರಂಭವಾಗಿದ್ದುವು .
ಮಿಕ್ಕ ಕಾಲೇಜುಗಳು ಅನಂತರ ಆರಂಭವಾದುವು .
ಇಂದಿನ ಕಾಲೇಜುಗಳ ಸಂಖ್ಯೆಯ ಸುಮಾರು ಮುಕ್ಕಾಲುಭಾಗ 1961 - 64ರ ಅವಧಿಯಲ್ಲಿ ಆರಂಭವಾಗಿರುವುದನ್ನು ಗಮನಿಸಬಹುದು .
ಕಾಲೇಜು ಶಿಕ್ಷಣದಲ್ಲಿ ವಿದ್ಯಾರ್ಥಿ ಸಂಖ್ಯೆ : ಭಾರತದಲ್ಲಿ 1967ರಿಂದ 1970ರ ವರೆಗೆ ವಿವಿಧ ಬಗೆಯ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿ ಸಂಖ್ಯೆಯನ್ನು ಪಟ್ಟಿ 1ರಲ್ಲಿ ಸೂಚಿಸಿದೆ :
1950-51ರಲ್ಲಿ ಈ ಮಟ್ಟದ ಶಿಕ್ಷಣದಲ್ಲಿ ಒಟ್ಟು 2,63,000 ವಿದ್ಯಾರ್ಥಿಗಳಿದ್ದರು .
ಅದು 1969-70ರಲ್ಲಿ 27,92,630 ಕ್ಕೆ ಹೆಚ್ಚಿದೆ .
ವರ್ಷಂಪ್ರತಿ ಸೇ .19 ರಷ್ಟು ಹೆಚ್ಚುತ್ತಿರುವ ಈ ಸಂಖ್ಯೆ 1970 - 71ರಲ್ಲಿ 31 ಲಕ್ಷದ ಸುಮಾರಿಗೆ ಹೆಚ್ಚುವುದೆಂದು ಊಹಿಸಬಹುದು .
1950-51ರಲ್ಲಿ ಈ ಮಟ್ಟದ ಶಿಕ್ಷಣದಲ್ಲಿದ್ದ ವಿದ್ಯಾರ್ಥಿಗಳ ಒಟ್ಟು ಸಂಖ್ಯಾಪ್ರಮಾಣದಲ್ಲಿ ಕೇವಲ ಸೇ .13 ರಷ್ಟಿದ್ದ ವಿದ್ಯಾರ್ಥಿನಿಯರ ಸೇ .ಪ್ರಮಾಣ 1969 - 70ರಲ್ಲಿ ಸೇ .28 ಕ್ಕೆ ಹೆಚ್ಚಿದೆ .
ಅದು 1970-71ರ ವೇಳೆಗೆ ಸೇ .29ಕ್ಕೆ ಹೋಗುವ ನಿರೀಕ್ಷೆಯಿದೆ .
ಆಧುನಿಕ ಕರ್ಣಾಟಕದಲ್ಲಿ ಕಾಲೇಜು ಶಿಕ್ಷಣ : ಕರ್ಣಾಟಕದಲ್ಲಿ ಕಾಲೇಜು ಶಿಕ್ಷಣ ಮೈಸೂರು ವಿಶ್ವವಿದ್ಯಾಲಯ ,ಬೆಂಗಳೂರು ವಿಶ್ವವಿದ್ಯಾನಿಲಯ ,ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯ ಮತ್ತು ಕರ್ನಾಟಕದ ವಿಶ್ವವಿದ್ಯಾಲಯ ಈ ನಾಲ್ಕು ವಿಶ್ವವಿದ್ಯಾಲಯಗಳಿಗೆ ಸೇರಿದೆ .
ವಿಶ್ವವಿದ್ಯಾನಿಲಯದ 10 ಆಂಗಿಕ ಕಾಲೇಜುಗಳಲ್ಲೂ 227 ಅಂಗೀಕೃತ ಕಾಲೇಜುಗಳಲ್ಲೂ ಎಂದರೆ ಒಟ್ಟನಲ್ಲಿ 237 ಕಾಲೇಜುಗಳಲ್ಲಿ ಅದು ವ್ಯವಸ್ಥೆಗೊಂಡಿದೆ .
ಬೆಂಗಳೂರಿನ ಇಂಡಿಯನ್ ಇನ್ಸಿ ಟ್ಯೂಟ್ ಆಫ್ ಸೈನ್ಸ್ನಲ್ಲೂ (ಪರಿಗಣಿತ ವಿಶ್ವವಿದ್ಯಾನಿಲಯ ) ಅದಕ್ಕೆ ಅವಕಾಶ ಕಲ್ಪಿಸಿದೆ .
ಪ್ರಾಚ್ಯವಿದ್ಯೆಗೂ ಸಂಸ್ಕøತಕ್ಕೂ ಸಂಬಂಧಿಸಿದ ಉನ್ನತ ಶಿಕ್ಷಣವನ್ನು ಸಂಸ್ಕøತ ಕಾಲೇಜುಗಳಲ್ಲೂ ಇತರ ಕೆಲವು ಸಂಸ್ಥೆಗಳಲ್ಲೂ ಏರ್ಪಡಿಸಲಾಗಿದೆ .