Commit 03ede731 authored by Narendra VG's avatar Narendra VG

Upload New File

parent fd20b23e
ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ.
ಜೇಬಿಗೆ ಕೈ ಹಾಕಿ ನೋಡಿದ.
ಬರೇ ಇಪ್ಪತ್ತೇಳು ರೂಪಾಯಿ ಮಾತ್ರ ಉಳಿದಿದೆ.
ಇದರಲ್ಲಿ ಮನೆಗೆ ಹಿಂತಿರುಗಿ ಹೋಗಲು ಬಸ್ಸಿಗೆ ಸುಮಾರು ಹದಿನೆಂಟು ರೂಪಾಯಿ ಬೇಕು.
ಮತ್ತೆ ಉಳಿಯುವುದು ಬರೇ ಒಂಭತ್ತು ರೂಪಾಯಿ.
ಇದರಲ್ಲಿ ಚಹಾ, ತಿಂಡಿ ಸಿಗುವುದು ಕಷ್ಟ.
ಖಾಲಿ ಚಹಾ ಕುಡಿದರೂ ಹಸಿವು ನೀಗಲಾರದು.
ಕಡ್ಲೆ ಮಾರುವ ಹುಡುಗ ಪಕ್ಕದಲ್ಲೇ ಹಾದು ಹೋದಾಗ ಪುರಂದರನ ಮುಖದಲ್ಲಿ ನಗು ಅರಳಿತು.
ಐದು ರೂಪಾಯಿ ಕೊಟ್ಟು, ಒಂದು ಕಡ್ಲೆಕಾಯಿ ಪೊಟ್ಟಣ ತೆಗೆದುಕೊಂಡು ತಿನ್ನತೊಡಗಿದ.
ತನ್ನ ಕೈಯಲ್ಲಿದ್ದ ಫೈಲನ್ನು ಕಲ್ಲು ಬೆಂಚಿನ ಮೇಲಿಟ್ಟು, ಕಾಲನ್ನು ಚಪ್ಪಲಿಯಿಂದ ಕಳಚಿ ಮೇಲೆಳೆದು ಕೊಂಡು ಮಡಚಿ ಕುಳಿತು ಕಡಲೆ ತಿನ್ನುವ ಕಾರ್ಯವನ್ನು ಮುಂದುವರಿಸಿದ.
ಸ್ವಲ್ಪ ಹಾಯೆನಿಸಿತು.
ಪುರಂದರ ಈಗ ವಾಸ್ತವಕ್ಕೆ ಬಂದ.
ಅವನು ಮೈದಾನದ ಮೂಲೆಯನ್ನು ದೃಷ್ಟಿಸಿದ.
ಅಲ್ಲಿ ಬೃಹದಾಕಾರದ ವೇದಿಕೆ ಸಜ್ಜುಗೊಂಡಿತ್ತು.
ವೇದಿಕೆಯ ಮೇಲೆ ಬೆಲೆ ಬಾಳುವ ಅಲಂಕರಿಸಿದ ಕುರ್ಚಿ ಮೇಜುಗಳನ್ನು ಸಾಲಾಗಿ ಇಟ್ಟಿದ್ದರು.
ವೇದಿಕೆಯ ಒಳಗೆ ಹಾಗೂ ಹೊರಗೆ ದೊಡ್ಡ ದೊಡ್ಡ ಬ್ಯಾನರುಗಳು ರಾರಾಜಿಸುತ್ತಿದ್ದುವು.
ಈಗಾಗಲೇ ಅರ್ಧಾಂಶ ಕುರ್ಚಿಗಳು ಜನರಿಂದ ತುಂಬಿದ್ದು ಜನ ಸಾಗರ ತಂಡೋಪ ತಂಡವಾಗಿ ಮೈದಾನದ ಕಡೆಗೆ ನುಗ್ಗುತಿತ್ತು.
ಕೆಲವರ ಕೈಯಲ್ಲಿ ಪತಾಕೆಗಳು, ಹೆಗಲಿನಲ್ಲಿ ಚಿತ್ರಗಳಿಂದ ಮುದ್ರಿತವಾದ ಬಣ್ಣದ ಶಾಲುಗಳು, ಕೆಲವರ ತಲೆಯಲ್ಲಿ ಬಣ್ಣದ ಮುಂಡಾಸು, ಟೋಪಿಗಳು, ಲೋರಿಗಳಲ್ಲಿ, ಮೆಟಡೋರು ವಾಹನಗಳಲ್ಲಿ, ಕಾರುಗಳಲ್ಲಿ ಬಂದ ಜನರು ಉಲ್ಲಾಸದಿಂದ ಮೈದಾನದಲ್ಲಿ ಜಮಾಯಿಸಿದರು.
ಕೆಲವೇ ಗಂಟೆಗಳಲ್ಲಿ ಮೈದಾನ ಜನಸಾಗರದಿಂದ ತುಂಬಿ ಹೋಯಿತು.
ಧ್ವನಿವರ್ಧಕ ಅರ್ಭಟಿಸ ತೊಡಗಿತು.
“ಹಲೋ, ವನ್… ಟೂ…. ತ್ರೀ…. .
ಮೈಕ್ ಟೆಸ್ಟಿಂಗ್… ಹಲೋ…… ಎಲ್ಲಾ ಬಾಂಧವರಿಗೆ ಸ್ವಾಗತ.
ನಿಮ್ಮ ನೆಚ್ಚಿನ ಜನ ನಾಯಕ, ಯುವ ಶಕ್ತಿಯ ನೇತಾರರಾದ ಮಾನ್ಯ ಸಚಿವರು ಇನ್ನು ಕೆಲವೇ ಕ್ಷಣಗಳಲ್ಲಿ ವೇದಿಕೆಯನ್ನು ಅಲಂಕರಿಸಲಿದ್ದಾರೆ.
ದಯವಿಟ್ಟು ಎಲ್ಲರೂ ಕುಳಿತು ಕೊಂಡು ಅವರ ಮಾತನ್ನು ಆಲಿಸಬೇಕು.
ಗಲಾಟೆ ಗೊಂದಲಕ್ಕೆ ಅವಕಾಶ ನೀಡದೆ ಶಾಂತ ರೀತಿಯಲ್ಲಿ ಸಭೆಯನ್ನು ನಡೆಸಿ ಕೊಡಬೇಕಾಗಿ ವಿನಂತಿಸುತ್ತಿದ್ದೇವೆ.”
ಪುರಂದರನ ಕೈಯಲ್ಲಿದ್ದ ಕಡಲೆ ಮುಗಿಯಿತು.
ಖಾಲಿ ಕಾಗದವನ್ನು ಬಿಡಿಸಿ ಅದರ ತಳದಲ್ಲಿದ್ದ ಕೊನೆಯ ಕಡಲೆಯನ್ನು ಬಾಯಿಗೆ ಹಾಕಿ ಕಾಗದವನ್ನು ಓದ ತೊಡಗಿದ.
ಅದೂ ಅಂದಿನ ಕಾರ್ಯಕ್ರಮದ ಕರಪತ್ರ, ಸಚಿವರ ಫೋಟೋದೊಂದಿಗೆ ಅವರ ಜನಪರ ಕಾಳಜಿಯ ಬಗ್ಗೆ ವಿವರ ಕೊಡಲಾಗಿತ್ತು.
ತನ್ನ ಜೀವನದಲ್ಲಿ ರಾಜಕೀಯ ಹಾಗೂ ಧರ್ಮ ಎರಡಕ್ಕೂ ನಿಕೃಷ್ಟ ಸ್ಥಾನ ಕೊಟ್ಟಿದ್ದ ಪುರಂದರ, ಕರಪತ್ರ ಬಿಸಾಡಿ, ಕಾಲನ್ನು ಕೆಳಕ್ಕೆ ಬಿಟ್ಟು ಚಪ್ಪಲಿ ಸಿಕ್ಕಿಸಲು ನೋಡಿದಾಗ ಬರೇ ಒಂದು ಚಪ್ಪಲಿ ಮಾತ್ರ ಉಳಿದಿತ್ತು.
ಪುರಂದರ ಲಕ್ಷ ರೂಪಾಯಿ ಕಳಕೊಂಡವನಂತೆ ಗಾಬರಿಗೊಂಡ.
ಇದ್ದ ಒಂದು ಚಪ್ಪಲಿಯನ್ನು ಕಾಲಿಗೆ ಸಿಕ್ಕಿಸಿ ಜನರ ಮಧ್ಯದಿಂದ ದಾರಿ ಮಾಡಿಕೊಂಡು ಮೈದಾನದ ಮೂಲೆಗೆ ಬೇಲಿ ಹಾಕಿದ ಸ್ಥಳದ ಕಡೆ ಓಡಿದ.
ದೂರದಲ್ಲಿ ನಾಯಿಯೊಂದು ಅವನ ಚಪ್ಪಲಿಯನ್ನು ಬಾಯಲ್ಲಿ ಕಚ್ಚಿಕೊಂಡು ದೂರ ಓಡುತಿತ್ತು.
ಮೈದಾನದ ಪೆವಲಿನಿನ ಕಟ್ಟಡದ ಹಿಂಬದಿಗೆ ಓಡಿದ ನಾಯಿ ಅಲ್ಲಿಯೇ ಇದ್ದ ಮರದ ಕೆಳಗೆ ಅಡ್ಡಾದಿಡ್ಡಿ ಬಿದ್ದು ಕೊಂಡಿರುವ ಭಿಕ್ಷುಕರ ಮಧ್ಯೆ ಅದನ್ನು ಬಿಸಾಡಿ ಓಡಿ ಹೋಯಿತು.
ಪುರಂದರ ಓಡಿ ಹೋಗಿ ಚಪ್ಪಲಿಯನ್ನು ತನ್ನ ಕಾಲಿಗೆ ಸಿಕ್ಕಿಸಿದ.
ಅದರ ಅಂಗುಷ್ಟ ಕಿತ್ತು ಹೋಗಿತ್ತು.
ನಾಯಿಗೆ ಹಿಡಿಶಾಪ ಹಾಕಿ ಮನೆಗೆ ಹೋಗಲು ಸರ್ವಿಸ್ ಬಸ್‌ಸ್ಟಾಂಡಿಗೆ ಕುಂಟುತ್ತಾ ಸಾಗಿದ.
ಧ್ವನಿವರ್ಧಕ ಮತ್ತೆ ಆರ್ಭಟಿಸಿತು.
“ಯುವ ನೇತಾರ, ಯುವ ಶಕ್ತಿ, ಬಡವರ ಬಂಧು, ಮಾನ್ಯ ಸಚಿವರು ವೇದಿಕೆ ಏರುತ್ತಿದ್ದಾರೆ.
ಎಲ್ಲರೂ ಎದ್ದು ನಿಂತು ಚಪ್ಪಾಳೆಯೊಂದಿಗೆ ಸ್ವಾಗತಿಸಬೇಕು.”
ಇಡೀ ಜನಸ್ತೋಮ ಸಮ್ಮೋಹನಕ್ಕೆ ಒಳಗಾದಂತೆ ಎದ್ದು ನಿಂತು ಜಯಕಾರ ಕೂಗಿತು.
ಪುರಂದರ ಮನೆ ಕಡೆಗೆ ಹೊರಟವನು ಒಮ್ಮೆ ವೇದಿಕೆಯತ್ತ ನೋಡಿದ.
ವೇದಿಕೆಯಿಂದ ಸುಮಾರು ಅರ್ಧ ಪರ್ಲಾಂಗು ದೂರದಲ್ಲಿದ್ದ ಅವನಿಗೆ ವೇದಿಕೆಯಲ್ಲಿದ್ದ ಗಣ್ಯರ ಮುಖ ಚರ್ಯೆ ಸರಿಯಾಗಿ ಕಾಣಲಿಲ್ಲ.
ಧ್ವನಿವರ್ಧಕ ಮತ್ತೆ ಅರ್ಭಟಿಸಿತು.
“ಕ್ಷಮಿಸಬೇಕು ಸಚಿವರು ದಿನದ ಇಪ್ಪತ್ತನಾಲ್ಕು ಗಂಟೆಯೂ ಜನಪರ ಕಾಳಜಿಯಲ್ಲಿದ್ದು ಸಮಯವಕಾಶ ಇಲ್ಲವಾದುದರಿಂದ ಮತ್ತೆ ಮುಂದಿನ ಅವರ ಕಾರ್ಯಕ್ರಮಕ್ಕೆ ವಿಳಂಬವಾಗುವ ಸಾಧ್ಯತೆಯಿರುವುದರಿಂದ ಬಾಂಧವರನ್ನು ಉದ್ದೇಶಿಸಿ ನೇರವಾಗಿ ಎರಡು ಮಾತು ಆಡಲಿದ್ದಾರೆ….”
ಪುರಂದರ ಮನಸ್ಸು ಬದಲಿಸಿದ.
ಹೇಗೂ ಮನೆಗೆ ತಡವಾಗುತ್ತದೆ.
ಹೋಗಿ ಮಾಡುವಂತದ್ದು ಏನೂ ಇಲ್ಲ.
ಎರಡು ನಿಮಿಷ ಭಾಷಣ ಕೇಳಿ ಬಿಡುವ ಎಂದು ತೀರ್ಮಾನಕ್ಕೆ ಬಂದ.
ಬಿಳಿ ಜುಬ್ಬಾ, ಬಿಳಿ ಧೋತಿ ಉಟ್ಟಮಾನ್ಯ ಸಚಿವರು ಅತ್ಯುತ್ಸಾಹದಿಂದ ಮಾತಿಗಿಳಿದರು.
ಬಾಂಧವರೇ, ಸಾಧಿಸಬೇಕು ಎಂಬ ಛಲ ಇದ್ದರೆ ನಮ್ಮ ಸರಕಾರದಿಂದ ಸಹಾಯ, ಸಹಕಾರ ಖಂಡಿತ ಇದೆ.
ಮುಖ್ಯವಾಗಿ ವಿದ್ಯಾವಂತ ಯುವ ಪೀಳಿಗೆ ಮುಂದೆ ಬರಬೇಕು.
ಸ್ವ ಉದ್ಯೋಗ ಮಾಡಲು ಎಷ್ಟೋ ಯೋಜನೆಗಳು ಕಾರ್ಯ ನಿರತವಾಗಿವೆ.
ಬ್ಯಾಂಕ್ ಉದ್ದಿಮೆಗಳು ನಿಮ್ಮ ಸೇವೆಗೆ ಸದಾ ಸಿದ್ದವಾಗಿ ನಿಂತಿವೆ.
ಬೃಹತ್ ಉದ್ದಿಮೆ ಸಂಸ್ಥೆಗಳು ಅಲ್ಲಲ್ಲಿ ತಲೆ ಎತ್ತಿವೆ.
ಉದ್ಯೋಗಕ್ಕೆ ಬರವಿಲ್ಲ.
ಮೊದಲಾಗಿ ನಿಮಗೆ ಬೇಕಾದುದು ಆತ್ಮಬಲ, ಆತ್ಮ ಸ್ಥೆರ್ಯ, ಮನೋಬಲ, ಯುವ ಜನತೆಯ ಕೈಯಲ್ಲಿ ಈ ದೇಶದ ಚುಕ್ಕಾಣಿ ಇದೆ.
ನಿಮ್ಮ ಶಕ್ತಿಯಲ್ಲಿ ಈ ದೇಶದ ಬಲ ಅಡಗಿದೆ.
ಬನ್ನಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ನಮ್ಮಲ್ಲಿ ಹಲವಾರು ಯೋಜನೆಗಳಿವೆ.
ಹತಾಶರಾಗುವ ಅಗತ್ಯವಿಲ್ಲ.
ಯಾವುದೇ ಘಳಿಗೆಯಲ್ಲಿ, ಎಲ್ಲಾದರೂ ಸರಿ, ನನ್ನನ್ನು ನೇರ ಸಂಪರ್ಕಿಸಿದರೆ ನಿಮಗೆ ಪೂರ್ಣ ರೀತಿಯ ಸಹಾಯ ಸಹಕಾರ ನೀಡಲಾಗುವುದು…. . ”
ಮಾತು ಮುಗಿದಿಲ್ಲ.
ಕರತಾಡನ ಮುಗಿಲು ಮುಟ್ಟಿತು.
ಅದರೊಂದಿಗೆ ಜಯಕಾರ.
ಪುರಂದರ ತನ್ನ ಪಕ್ಕದಲ್ಲಿ ನಿಂತುಕೊಂಡು ಎರಡೂ ಕೈಯ ಕುಣಿ ಕುಣಿದು ಚಪ್ಪಾಳೆ ತಟ್ಟುವ ಯುವಕನನ್ನು ನೋಡಿದ.
ಅವನು ಚಪ್ಪಾಳೆ ತಟ್ಟಿ ಸುಸ್ತಾಗಿ ನಿಂತುಕೊಂಡ ನಂತರ ಪುರಂದರ ಅವನ ಹೆಗಲು ಮುಟ್ಟಿ ಕೇಳಿದ.
“ಈ ಮಂತ್ರಿಗಳು ಹೇಳಿದ ಮಾತಿನಲ್ಲಿ ನಿಮಗೆ ನಂಬಿಕೆಯಿದೆಯೇ?”
ಆ ತರುಣನ ಮುಖ ಗಂಭೀರವಾಯಿತು.
ಪುರಂದರನ ಪ್ರಶ್ನೆಗೆ ಉತ್ತರಿಸುವಷ್ಟು ವ್ಯವಧಾನ ಅವನಲ್ಲಿರಲಿಲ್ಲ.
ಅವನು ಗಳಿಗೆಗೊಮ್ಮೆ ವೇದಿಕೆಯನ್ನು ನೋಡುತಿದ್ದ.
ಪುರಂದರ ತನ್ನ ಪ್ರಶ್ನೆ ವ್ಯರ್ಥವಾಯಿತೇನೋ ಎಂದು ಆಲೋಚಿಸುವಾಗ ಆ ಯುವಕ ಒಂದೇ ಸವನೆ ಹೇಳ ತೊಡಗಿದ.
“ನಾನು ನೋಡಿದ ಮಂತ್ರಿಗಳಲ್ಲಿ ಅತ್ಯಂತ ಜನಪರ ಕಾಳಜಿಯಿರುವ ವ್ಯಕ್ತಿಯೆಂದರೆ ಇವರೊಬ್ಬರೇ.
ನುಡಿದಂತೆ ನಡೆಯುವ ವ್ಯಕ್ತಿತ್ವ.
ತನ್ನ ಬಳಿ ಬಂದ ಯಾರೇ ಆಗಲಿ, ಅವರ ಕೆಲಸ ಪೂರೈಸಿಕೊಡದೆ ಇರುವುದಿಲ್ಲ.
ಅವರ ಮಾತು, ಕೃತಿ ಎರಡೂ ಒಂದೇ.
ಮತ್ತೆ ನಿಮಗೇನಾದರೂ ಸಮಸ್ಯೆ ಇದೆಯಾ?”
ಆ ತರುಣ ಪುರಂದರನಿಗೆ ಮರು ಪ್ರಶ್ನೆ ಹಾಕಿದ.
“ಸಮಸ್ಯೆ ಇದೆ.
ಅವರನ್ನು ವೈಯುಕ್ತಿಕವಾಗಿ ಕಾಣಬೇಕಾಗಿತ್ತು.”
ಪುರಂದರ ಸಪ್ಪೆ ಮುಖ ಮಾಡಿಕೊಂಡು ಹೇಳಿದ.
“ಅದಕ್ಕೇನಂತೆ, ನೀವೊಂದು ಕೆಲಸ ಮಾಡಿ, ನಾಳೆ ಉಪ್ಪಿನಂಗಡಿಯ ಕರಾಯ ಗ್ರಾಮದಲ್ಲಿ ಅವರ ಗ್ರಾಮ ವಾಸ್ತವ್ಯಯಿದೆ.
ನಾಳೆ ಬೆಳಿಗ್ಗೆ ಎಂಟು ಗಂಟೆಗೆ ನೀವು ಅಲ್ಲಿ ಹಾಜರಾದರೆ ನಿಮಗೆ ಖಂಡಿತ ಮಾತಾಡಲು ಸಿಗುತ್ತಾರೆ.
ಇದಕ್ಕೆ ಯಾರ ಪರಿಚಯ ಪತ್ರದ ಅಗತ್ಯವಿಲ್ಲ.
ಅವರೇ ತುಂಬಾ ಆತ್ಮೀಯವಾಗಿ ಮಾತಾಡಿ ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತಾರೆ.”
ಮಂತ್ರಿಗಳು ವೇದಿಕೆಯಿಂದ ಕೆಳಗಿಳಿಯುವುದನ್ನೇ ಕಾಯುತಿದ್ದ ಯುವಕ ವೇದಿಕೆಯತ್ತ ದೌಡಾಯಿಸಿದ.
ಮರುದಿನ ಬೆಳಿಗ್ಗೆ ಪುರಂದರ ಮಂತ್ರಿ ಮಹಾಶಯರ ಗ್ರಾಮ ವಾಸ್ತವ್ಯ ಸ್ಥಳದಲ್ಲಿ ಹಾಜರಾದ.
ಅದೊಂದು ಕುಗ್ರಾಮವಾದರೂ ಈಗ ಗ್ರಾಮ ವಾಸ್ತವ್ಯದ ಹೆಸರಲ್ಲಿ ಪ್ರಚಾರಕ್ಕೆ ಬಲಿಯಾದ ಊರು.
ಹೊಸದಾಗಿ ನಿರ್ಮಾಣವಾದ ಮಣ್ಣಿನ ರಸ್ತೆ, ರಸ್ತೆಯ ಇಕ್ಕಲಗಳಲ್ಲಿ ಸಾಲು ಸಾಲಾಗಿ ನಿಂತ ವಾಹನಗಳು, ಬ್ಯಾನರ್‌ಗಳು ಮತ್ತು ಮಂತ್ರಿವರ್ಯರ ಕಟೌಟುಗಳು, ಮಾನ್ಯ ಮಂತ್ರಿಗಳು ಇದ್ದಾರೆ ಎಂದು ಪುರಂದರನಿಗೆ ಖಾತ್ರಿಯಾದಾಗ ಅವನ ಪ್ರಯಾಣದ ಶ್ರಮವೆಲ್ಲಾ ಮಾಯವಾಯಿತು.
ಪುರಂದರ ಸ್ಥಳಕ್ಕೆ ಮುಟ್ಟುವ ಮೊದಲೇ ನೂರಾರು ಜನರು ಸಮಸ್ಯೆಯೊಂದಿಗೆ ಕ್ಯೂ ನಿಂತಿದ್ದರು.
ಕೈಯಲ್ಲಿ ಅಹವಾಲು ಪತ್ರ, ಪುರಂದರ ಕೂಡಾ ಆ ಕ್ಯೂನಲ್ಲಿ ನಿಂತುಕೊಂಡ.
ತನ್ನ ಪೈಲನ್ನು ಒಮ್ಮೆ ತೆರೆದು ನೋಡಿ ಎಲ್ಲಾ ಸರಿಯಿದೆ ಎಂದು ತೃಪ್ತಿ ಪಟ್ಟುಕೊಂಡ.
ಪುರಂದರನ ಸರದಿ ಬಂದಾಗ ಸೂರ್ಯ ನೆತ್ತಿಗೇರಿದ್ದ.
ಹೊಟ್ಟೆ ಚುರುಗುಟ್ಟುತ್ತಿತ್ತು.
ಬೆಳಿಗ್ಗೆಯಿಂದ ಹೊಟ್ಟೆಗೆ ಏನೂ ಬಿದ್ದಿರಲಿಲ್ಲ.
ಆದರೂ ತನ್ನ ಆಸೆ ಈಡೇರಿದರೆ ಸಾಕು ಎಂಬ ಆತ್ಮವಿಶ್ವಾಸದೊಂದಿಗೆ ಜನರ ನೂಕು ನುಗ್ಗಲು ಮಧ್ಯೆ ದಾರಿ ಮಾಡಿಕೊಂಡು ಪುರಂದರ ಮಂತ್ರಿಗಳ ಕೋಣೆ ಹೊಕ್ಕಿದ.
ಅದೊಂದು ಖಾಸಗಿ ಕಟ್ಟಡ.
ಆ ವಿಶಾಲವಾದ ಕೋಣೆಯಲ್ಲಿ ಸುಮಾರು ಹತ್ತು ಹದಿನೈದು ಮಹಾನುಭಾವರು ಮಾನ್ಯ ಮಂತ್ರಿಗಳನ್ನು ಸುತ್ತುವರಿದಿದ್ದರು.
ಬಹುಶಃ ಮಂತ್ರಿಗಳಿಗೆ ತೀರಾ ಆಪ್ತರಾದವರು ಇರಬೇಕು ಎಂದೆನಿಸಿತು ಪುರಂದರನಿಗೆ.
ಅವರ ಹಾವಭಾವ, ಮಾತಿನ ಗಂಭೀರತೆ, ಬೆಲೆ ಬಾಳುವ ಉಡುಗೆ ತೊಡುಗೆ ಎಲ್ಲವನ್ನೂ ಒಂದರೆ ಕ್ಷಣದಲ್ಲಿ ನೋಡಿದ ಪುರಂದರ ತೀರಾ ಕುಬ್ಜನಾಗಿ ಹೋದ.
ಆದರೂ ಧೈರ್ಯ ಮಾಡಿ ಮಾನ್ಯ ಮಂತ್ರಿಯವರ ಎದುರು ನಿಂತು ಪೈಲು ಸಮೇತ ಕೈ ಮುಗಿದ.
ಮಾನ್ಯ ಮಂತ್ರಿಯವರು ನಗುತ್ತಾ ಬಲಗೈ ಮುಂದೆ ಮಾಡಿದರು.
ಪುರಂದರ ಕ್ಷಣ ಮಾತ್ರದಲ್ಲಿ ತನ್ನ ಪೈಲಿನಿಂದ ರೆಸ್ಯೂಮು ತೆಗೆದು ಬಾಗಿದ ಭಂಗಿಯಲ್ಲಿ ಅವರ ಕೈಗಿತ್ತ.
ರೆಸ್ಯೂಮಿನ ಮೇಲೆ ಕಣ್ಣಾಡಿಸಿದ ಮಾನ್ಯ ಮಂತ್ರಿಯವರು ಒಂದು ದೇಶಾವರಿ ನಗು ನಕ್ಕರು.
“ಕುಳಿತು ಕೊಳ್ಳಿ ಪುರಂದರ ರೇ”.
ಮಾನ್ಯ ಮಂತ್ರಿಗಳು ಪುರಂದರನ ಹೆಗಲ ಮೇಲೆ ಆತ್ಮೀಯವಾಗಿ ಕೈ ಹಾಕಿ ತನ್ನ ಪಕ್ಕದಲ್ಲಿ ಕುಳ್ಳಿರಿಸಿದರು.
ಪುರಂದರ ಮಾನ್ಯ ಮಂತ್ರಿಗಳ ಸೌಜನ್ಯತೆಯಿಂದ ಬೆವತು ಹೋದ.
ಅವನ ಬಾಯಿಯಿಂದ ಮಾತೇ ಹೊರಡಲಿಲ್ಲ.
ಅಲ್ಲಿ ನೆರೆದಿದ್ದ ಮಹಾನುಭಾವರು ಗುಂಪು ಗುಂಪಾಗಿ ಹರಟೆ ಹೊಡೆಯುತ್ತಾ, ನಗೆ ಕಡಲಲ್ಲಿ ತೇಲಾಡುತಿದ್ದರು.
ಕೆಲವರು ಮೊಬೈಲ್ ಕರೆಗಳಲ್ಲಿ ತಲ್ಲೀನರಾಗಿದ್ದರು.
ಮತ್ತೆ ಕೆಲವರು ಚಹಾ, ಕಾಫಿ ಹೀರುತ್ತಿದ್ದರು.
“ಏನಾಗ ಬೇಕಿತ್ತು?” ಮಾನ್ಯ ಮಂತ್ರಿಗಳು ಮತ್ತೊಮ್ಮೆ ಪುರಂದರನ ಬೆನ್ನು ತಟ್ಟಿದರು.
ಪುರಂದರ ಮಾತಾಡಲು ಬಾಯಿ ತೆರೆದ.
“ಸಾರ್…. ನನಗೆ…. . ”ಮಾನ್ಯ ಮಂತ್ರಿಗಳ ಆಪ್ತ ಕಾರ್ಯದರ್ಶಿ ಮೊಬೈಲ್‌ನೊಂದಿಗೆ ಹಾಜರಾದ.
ಮಂತ್ರಿ-ವರ್ಯರು ಮೊಬೈಲ್‌ನಲ್ಲಿ ಸಂಭಾಷಣೆಗೆ ನಿರತರಾದರು.
ಸುಮಾರು ಹತ್ತು ನಿಮಿಷದವರೆಗೆ ನಡೆದ ಮಾತುಕತೆಯನ್ನು ಆಲಿಸುತ್ತಾ ಪುರಂದರ ಕುಳಿತಿದ್ದ, ಕರೆ ಮುಗಿಯಿತು.
ಆಪ್ತ ಸಹಾಯಕ ಹೊರಟು ಹೋದ.
“ಹೇಳಿ ಪುರಂದರರೇ” ಪುನಃ ಬೆನ್ನು ತಟ್ಟಿದರು ಮಂತ್ರಿ ವರ್ಯರು.
“ಸಾರ್…. ನನಗೆ ಒಂದು……”ಮಾನ್ಯ ಮಂತ್ರಿಯವರ ವಾಹನ ಚಾಲಕ ಹಾಜರಾಗಿ ಮಾನ್ಯ ಮಂತ್ರಿಯವರ ಕಿವಿಯಲ್ಲಿ ಏನೋ ಅರುಹಿದ.
“ಸರಿ, ಸರಿ, ನೀನು ಅಮ್ಮಾವ್ರನ್ನು ದೇವಸ್ಥಾನಕ್ಕೆ ಕರಕೊಂಡು ಹೋಗಿ ಪೂಜೆ ಮುಗಿಸಿ ಬೇಗ ಕರಕೊಂಡು ಬಾ, ಮಧ್ಯಾಹ್ನದ ಮೇಲೆ ಬೇರೆ ಕಾರ್ಯಕ್ರಮ ಇದೆ. ಹುಷಾರು. ” ವಾಹನ ಚಾಲಕ ಹೊರಟು ಹೋದ.
“ಹೇಳಿ ಪುರಂದರರೇ….
ಹೇಳಿ… ಹೇಳಿ…” ಮಾನ್ಯ ಮಂತ್ರಿಯವರು ಅವಸರ ಪಡಿಸಿದರು.
“ಸಾರ್, ನಾನು ಸ್ನಾತಕೋತ್ತರ ಪದವೀಧರ, ಸ್ವ ಉದ್ಯೋಗ ಮಾಡಬೇಕೆಂಬ ಆಸೆ.
ನನಗೆ ಬ್ಯಾಂಕಿಗೆ ಮತ್ತು ಇತರ ಕಛೇರಿಗಳಿಗೆ ಅಲೆದು ಅಲೆದು ಸಾಕಾಯಿತು.
ಸ್ವಾವಲಂಬನೆಯ ಕೆಲಸ ಬೇಡ ಅಂತ ನಿರ್ಣಯಕ್ಕೆ ಬಂದಿದ್ದೇನೆ.
ದಯವಿಟ್ಟು ನನಗೊಂದು ಉದ್ಯೋಗ ದೊರಕಿಸಿ ಕೊಡಿ.” ಪುರಂದರ ಎದ್ದು ನಿಂತು ಎರಡೂ ಕೈ ಮುಗಿದ.
“ಕುಳಿತು ಕೊಳ್ಳಿ ನಿಮ್ಮಂತಹ ಸ್ನಾತಕೋತ್ತರ ಪದವೀಧರರಿಗೆ ಕೆಲಸ ಸಿಗದೆ ಇರಲು ಸಾಧ್ಯವಿಲ್ಲ, ಹಟ ಬೇಕು, ಹಟ, ಇರಲಿ ಬಿಡಿ, ನಿಮಗೆ ಮಂಗಳೂರಿನಲ್ಲಿ ಕೆಲಸ ಕೊಡಿಸುವುದು ಕಷ್ಟ.
ನೀವು ಬೆಂಗಳೂರಿನಲ್ಲಿ ಕೆಲಸ ಮಾಡುವುದಾದರೆ ನಾನು ಮಾಡಿಸಿಕೊಡ ಬಲ್ಲೆ.”
ಮಾನ್ಯ ಮಂತ್ರಿಯವರು ಪುರಂದರನ ರೆಸ್ಯೂಮನ್ನು ಬಲಗೈಯಲ್ಲಿ ತಿರುಗಿಸುತ್ತಾ ಹೇಳಿದರು.
“ಎಲ್ಲಿಯೂ ಆಗಬಹುದು ಸಾರ್…. . ” ಪುರಂದರನ ಮುಖ ಅರಳಿತು.
“ಸರಿ, ನೀವು ಒಳಗೆ ಹೋಗಿ ನನ್ನ ಆಪ್ತ ಸಹಾಯಕರನ್ನು ಕಂಡು ಅವರ ಮೊಬೈಲ್ ನಂಬ್ರ ಪಡಕೊಳ್ಳಿ, ನಾನು ಬೆಂಗಳೂರಿನಲ್ಲಿದ್ದಾಗ ನನ್ನನ್ನು ಭೇಟಿಯಾಗಿ, ಉದ್ಯೋಗ ಮಾಡಿಸಿಕೊಡುತ್ತೇನೆ ಭಯಬೇಡ. ” ಮಾನ್ಯ ಮಂತ್ರಿಯವರು ಪುರಂದರನ ಭುಜ ತಟ್ಟಿ ಅಭಯ ನೀಡಿದರು.
ಪುರಂದರ ಆಪ್ತ ಸಹಾಯಕರನ್ನು ಕಂಡು ಅವರ ಮೊಬೈಲ್ ನಂಬ್ರ ಪಡೆದು ಹೊರ ಬರುವಾಗ ಸಾಕು ಸಾಕಾಯಿತು.
ಆ ಜನ ಸಂದಣಿಯಿಂದ ದೂರ ಬಂದು ನಿಂತಾದ ಮೇಲೆಯೇ ಅವನಿಗೆ ನೆಮ್ಮದಿಯಾಯಿತು.
ದಿನಗಳು ಉರುಳಿದುವು.
ಮಾನ್ಯ ಮಂತ್ರಿಗಳು ಜನ ಸಂಪರ್ಕ ಕಾರ್ಯಕ್ರಮ, ಹಾಗೂ ಗ್ರಾಮ ವಾಸ್ತವ್ಯ ಮುಗಿಸಿ ರಾಜಧಾನಿಗೆ ಹಿಂತಿರುಗುವಾಗ ಒಂದು ವಾರ ಹಿಡಿಯಬಹುದೆಂದು ಆಪ್ತ ಸಹಾಯಕರು ಹೇಳಿದುದ್ದರಿಂದ ಪುರಂದರ ಒಂದು ವಾರ ದಾಟುವುದನ್ನೇ ಕಾಯುತಿದ್ದ.
ಹಾಗೆಯೇ ವಾರ ಕಳೆದ ಮೇಲೆ ಪುರಂದರ ಆಪ್ತ ಸಹಾಯಕರನ್ನು ಮೊಬೈಲ್‌ನಲ್ಲಿ ಸಂಪರ್ಕಿಸಲು ಯತ್ನಿಸಿದ.
ಕೆಲವೊಮ್ಮೆ ಮೊಬೈಲ್ ಬಿಝಿಎಂತಲೂ, ಮತ್ತೊಮ್ಮೆ ಸಂಪರ್ಕವಿಲ್ಲವೆಂತಲೂ ಬರುತಿತ್ತು.
ಒಂದು ಮೂರು ದಿನದ ಎಡೆ ಬಿಡದ ಪ್ರಯತ್ನದಿಂದಾಗಿ ಕೊನೆಗೂ ಮಾನ್ಯ ಮಂತ್ರಿಗಳ ಆಪ್ತ ಸಹಾಯಕರು ಮಾತಾಡಲು ಸಿಕ್ಕಿದರು.
ಮಾನ್ಯ ಮಂತ್ರಿಗಳಿಗಿಂತಲೂ ಅವರು ತುಂಬಾ ಒತ್ತಡದಲ್ಲಿದ್ದಂತೆ ಪುರಂದರನಿಗೆ ಕಂಡು ಬಂತು.
“ಇನ್ನೊಂದು ಮೂರು ದಿನದಲ್ಲಿ ಬೆಂಗಳೂರಿಗೆ ಬರಬಹುದು.” ಆಪ್ತ ಸಹಾಯಕರಿಂದ ಸಂಕ್ಷಿಪ್ತ ಉತ್ತರ ಬಂತು.
ಮುಂದೆ ಮಾತಾಡಲು ಅವಕಾಶ ಸಿಗದೆ ಮೊಬೈಲ್ ಸಂಪರ್ಕ ನಿಂತು ಹೋಯಿತು.
ಪುರಂದರ ಆಲೋಚನೆಗೆ ಬಿದ್ದ.
ಏನೇ ಆಗಲಿ ಬೆಂಗಳೂರಿಗೆ ಹೊರಟೇ ಬಿಡುವಾ.
ಹೇಗೂ ಉದ್ಯೋಗ ಇಲ್ಲ.
ಈ ಅವಕಾಶ ಬಿಟ್ಟರೆ ಮತ್ತೆ ಮಾನ್ಯ ಮಂತ್ರಿಯವರು ತನ್ನನ್ನು ಮರೆತು ಬಿಟ್ಟರೇ?
ಹಟ ಹಿಡಿದು ಕೆಲಸ ಮಾಡಿಸಿ ಕೊಳ್ಳಬೇಕು ಎಂದು ನಿರ್ಣಯಿಸಿ, ಮನೆಯವರಿಂದ ಸ್ವಲ್ಪ ಹಣ ಒಟ್ಟು ಮಾಡಿಸಿ ರಾಜಧಾನಿಗೆ ಪ್ರಯಾಣ ಬೆಳೆಸಿದ.
ರಾಜಧಾನಿಯಲ್ಲಿ ಆಪ್ತ ಸಹಾಯಕರನ್ನು ಬೇಟಿಯಾಗಿ ಮಾನ್ಯ ಮಂತ್ರಿಯವರ ಬೆಂಗಳೂರಿನ ಕಾರ್ಯಕ್ರಮವನ್ನು ವಿಚಾರಿಸಿದ.
ಇನ್ನೆರಡು ದಿನಗಳಲ್ಲಿ ಮಾನ್ಯ ಮಂತ್ರಿಗಳು ನಗರ ನೈರ್ಮಲ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುತ್ತಾರೆ ಎಂದು ತಿಳಿದುಕೊಂಡ ಪುರಂದರ, ಎರಡು ದಿನ ಕಳೆದು ಮಾನ್ಯ ಮಂತ್ರಿಗಳು ಬರುವುದು ಖಾತ್ರಿಯಾಯಿತು.
ಪುರಂದರ ನಿಗಧಿತ ಸಮಯಕ್ಕೆ ಸುಮಾರು ಮೂರು ಗಂಟೆ ಮೊದಲೇ ಮಾನ್ಯ ಮಂತ್ರಿಗಳ ಭೇಟಿಗಾಗಿ ವಿಶ್ರಾಂತಿ ಗೃಹದಲ್ಲಿ ಕಾದು ಕುಳಿತ.
ಸಂಜೆಯವರೆಗೂ ಕಾದರೂ ಮಾನ್ಯ ಮಂತ್ರಿಗಳ ಆಗಮನವಾಗಲಿಲ್ಲ.
ಪುನಃ ವಿಚಾರಿಸಲಾಗಿ ಹವಾಮಾನ ಪ್ರತಿಕೂಲದಿಂದಾಗಿ ಮಾನ್ಯ ಮಂತ್ರಿಗಳ ರಾಜಧಾನಿ ಬೇಟಿ ಒಂದು ದಿನ ತಡವಾಗಬಹುದೆಂಬ ಮಾಹಿತಿ ಸಿಕ್ಕಿ ಪುರಂದರನಿಗೆ ನಿರಾಶೆಯಾಯಿತು.
ಮೂರು ದಿನದಲ್ಲಿ ಇದ್ದ ಹಣ ಖರ್ಚಾಗಿ ಜಾಸ್ತಿ ದಿನ ಉಳಕೊಳ್ಳುವುದು ದುಸ್ತರವಾಯಿತು.
ಆದರೂ ಒಂದು ದಿನ ಜಾಸ್ತಿ ಉಳಕೊಂಡು ಮಾನ್ಯ ಮಂತ್ರಿಗಳ ಭೇಟಿಗಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತ.
ಮರುದಿನ ಆಪ್ತ ಸಹಾಯಕರನ್ನು ಭೇಟಿಯಾಗಿ ತನ್ನ ಅಹವಾಲನ್ನು ಹೇಳಿಕೊಂಡ.
ಹಲವಾರು ಸಾರಿ ಮಾತಾಡಿ ಮುಖ ಪರಿಚಯವಾದುದರಿಂದಲೋ ಏನೋ ಅಥವಾ ಪುರಂದರನ ದುರವಸ್ಥೆಗೆ ಮರುಗಿಯೋ ಏನೋ ಆಪ್ತ ಸಹಾಯಕ ಒಂದು ಸೂಚನೆಯನ್ನು ಪುರಂದರನಿಗೆ ಕೊಟ್ಟ.
ಇವತ್ತಿನ ನಗರ ನೈರ್ಮಲ್ಯ ಕಾರ್ಯಕ್ರಮ ರದ್ದಾಗಿದ್ದು ಆ ಕಾರ್ಯಕ್ರಮವನ್ನು ನಾಳೆ ಹತ್ತು ಘಂಟೆಗೆ ಪುನಃ ಆಯೋಜಿಸಲಾಗಿದೆ.
ನೀವು ನಾಳೆ ಬೆಳಿಗ್ಗೆ ಎಂಟು ಗಂಟೆಗೆ ವಿಶ್ರಾಂತಿ ಗೃಹಕ್ಕೆ ಹೋದರೆ ಮಾನ್ಯ ಮಂತ್ರಿಗಳನ್ನು ಕಾಣಬಹುದು ಎಂದು ಗೋಪ್ಯವಾಗಿ ಹೇಳಿದ.
ಪುರಂದರ ಎರಡೂ ಕೈಯಿಂದ ಆಪ್ತ ಸಹಾಯಕನಿಗೆ ಕೈ ಮುಗಿದು ಧನ್ಯವಾದ ಸಮರ್ಪಿಸಿದ.
ಆದರೆ ಇಲ್ಲೊಂದು ಸಮಸ್ಯೆ ಪುರಂದರನಿಗೆ ಎದುರಾಗಿತ್ತು.
ಮನೆಯವರು ಕೊಟ್ಟಹಣ ಖಾಲಿಯಾಗಿ ಬರೇ ಬಸ್ಸಿನ ಹಣ ಮಾತ್ರ ಉಳಿದಿತ್ತು.
ನಾಳೆಗೆ ರೂಮನ್ನು ಮುಂದುವರಿಸಿದರೆ ಬಾಡಿಗೆ ಕೊಡಲು ದುಸ್ತರವಾಗಬಹುದು.
ಪುರಂದರ ರೂಮಿಗೆ ಬಂದು ರೂಮು ಖಾಲಿ ಮಾಡಿದ .
ಇವತ್ತಿನ ರಾತ್ರಿಯನ್ನು ಸರಕಾರಿ ಬಸ್ ನಿಲ್ದಾಣದಲ್ಲಿ ಕಳೆದು ನಾಳೆ ಬೆಳಿಗ್ಗೆ ಮಾನ್ಯ ಮಂತ್ರಿಗಳನ್ನು ಕಂಡು ಅಂದೇ ಮಂಗಳೂರಿಗೆ ಹಿಂತಿರುಗುವುದೆಂದು ನಿರ್ಣಯಿಸಿದ.
ಮರುದಿನ ಒಂದು ಗಂಟೆ ಮುಂಚಿತವಾಗಿ ಪುರಂದರ ವಿಶ್ರಾಂತಿ ಗೃಹಕ್ಕೆ ಬಂದ.
ರಾತ್ರಿ ಇಡೀ ಬಸ್ ನಿಲ್ದಾಣದಲ್ಲಿ ಸೊಳ್ಳೆಗಳೊಂದಿಗೆ ಜಾಗರಣೆ ಮಾಡಿರುವುದರಿಂದ ಅವನ ಮನಸ್ಸು ಸ್ಥಿಮಿತದಲ್ಲಿರಲಿಲ್ಲ.
ಸುಸ್ತು, ನಿಶ್ಯಕ್ತಿಯನ್ನು ಹೊತ್ತು ಕೊಂಡು ಮಾನ್ಯ ಮಂತ್ರಿಗಳ ಇರುವಿಕೆಯನ್ನು ಸ್ಥಿರೀಕರಿಸಿಕೊಂಡ.
ಮಾನ್ಯ ಮಂತ್ರಿಗಳ ಭೇಟಿಗೆ ಅಣಿಯಾದಾಗ ಸಮಯ ಹತ್ತು ಘಂಟೆ ದಾಟಿತ್ತು.
ಜನ ಸಂದಣಿಯ ಮಧ್ಯೆ ಹೇಗಾದರೂ ದಾರಿ ಮಾಡಿಕೊಂಡು ಪುರಂದರ ಮಾನ್ಯ ಮಂತ್ರಿಗಳ ವಿಶ್ರಾಂತಿ ಗೃಹ ಪ್ರವೇಶಿಸಿದ.
ವಿಶ್ರಾಂತಿಗೃಹದ ಕೋಣೆಯೊಂದರಲ್ಲಿ ಮಾನ್ಯ ಮಂತ್ರಿಗಳು ಹೊರಡುವ ತುರಾತುರಿಯಲ್ಲಿದ್ದರು.
ಅವರ ಸುತ್ತಲೂ ರಾಜಕೀಯ ಮುಖಂಡರು, ಎಲ್ಲರೂ ನಗರ ನೈರ್ಮಲ್ಯ ಕಾರ್ಯಕ್ರಮಕ್ಕೆ ಅಣಿಯಾಗಿ ನಿಂತವರು.
ಎಲ್ಲಾ ಕಡೆ ಗಡಿಬಿಡಿ, ಎಲ್ಲರ ಮುಖದಲ್ಲೂ ಉದ್ವೇಗ, ರಾಜಕಾರಿಣಿಗಳ ನೂಕು ನುಗ್ಗಲ ಮಧ್ಯೆ ಪುರಂದರ ಧೈರ್ಯ ಮಾಡಿ, ದಾರಿ ಮಾಡಿಕೊಂಡು ಮಾನ್ಯ ಮಂತ್ರಿಗಳ ಕೋಣೆ ಹೊಕ್ಕು ಎರಡೂ ಕೈ ಜೋಡಿಸಿದ.
ಮಾನ್ಯ ಮಂತ್ರಿಗಳಿಗೆ ಪುರಂದರ ಎದುರು ನಿಂತರೂ ಅವನ ಜೋಡಿಸಿದ ಕೈ ಕಾಣಲೇ ಇಲ್ಲ.
ಪುರಂದರ ತನ್ನ ದೇಹವನ್ನು ಕಿರಿದು ಮಾಡಿಕೊಂಡು, ಹಿಂದೆ ಮುಂದೆ ಹೋಗಿ ಮತ್ತೊಮ್ಮೆ ಕೈ ಜೋಡಿಸಿದ, ಈಗ ಮಾನ್ಯ ಮಂತ್ರಿಗಳ ಗಮನ ಅವನತ್ತ ಹೋಯಿತು.
ಏನು ಎಂಬಂತೆ ಅವನನ್ನೊಮ್ಮೆ ನೋಡಿದರು.
ಇದೇ ಸದವಕಾಶ ಎಂಬಂತೆ ಪುರಂದರ ತನ್ನ ರೆಸ್ಯೂಮನ್ನು ಅವರ ಕೈಗೆ ಕೊಡುತ್ತಾ ಅಂದ.
“ಸಾರ್…. . ನಾನು ಪುರಂದರ, ಮಂಗಳೂರಿನ ಕರಾಯ ಗ್ರಾಮ ವಾಸ್ತವ್ಯ ಕಾರ್ಯಕ್ರಮದಂದು ತಮ್ಮನ್ನು ಭೇಟಿಯಾಗಿದ್ದೆ.
ತಾವು ಬೆಂಗಳೂರಿಗೆ ಬಂದು ಕಾಣಲು ಹೇಳಿರುವಿರಿ. ನನಗೊಂದು…. ”
“ಯಾರು….?ಏನು? …. ” ಮಾನ್ಯ ಮಂತ್ರಿಗಳು ರೆಸ್ಯೂಮನ್ನು ಒಮ್ಮೆ ಮೇಲೆ ಕೆಳಗೆ ಮಾಡಿದರು.
ಬಿಡಿಸಿ ನೋಡಲೇ ಇಲ್ಲ.
ಪುರಂದರ ಕೈಕೈ ಹಿಸುಕಿ ಕೊಂಡ.
ಮತ್ತೊಮ್ಮೆ ಧೈರ್ಯ ಮಾಡಿ ಅಂದ.
“ಸಾರ್…. . ನಾನು ಪುರಂದರ, ಕರಾಯ ಗ್ರಾಮ ವಾಸ್ತವ್ಯದಂದು……. ”ಮಂತ್ರಿಗಳಿಗೆ ಅವನ ಅಹವಾಲು ಕೇಳಲೇ ಇಲ್ಲ.
ಆದರೂ ಏನೋ ಒಣನಗು ನಕ್ಕು ಪುರಂದರನ ಭುಜ ತಟ್ಟಿದರು.
ಪುರಂದರನ ಕಿಸೆಯಿಂದ ಪೆನ್ನು ತೆಗೆದು ರೆಸ್ಯುಮ್‌ನ ಮೇಲೆ ಏನೋ ಬರೆದು ಹಿಂದೆ ನಿಂತಿದ್ದ ರಾಜಕಾರಿಣಿಯೊಬ್ಬರ ಕೈಗಿತ್ತು ನಗರ ನೈರ್ಮಲ್ಯ ಕಾರ್ಯಕ್ರಮಕ್ಕೆ ನಡೆದೇ ಬಿಟ್ಟರು.
ಪುರಂದರ ನಿಂತಲೇ ನಿಂತ.
ಐದು ನಿಮಿಷದಲ್ಲಿ ಜನ ಜಂಗುಳಿ ಖಾಲಿಯಾಯಿತು.
ವಾಹನಗಳೆಲ್ಲಾ ಮಾಯವಾದುವು.
ರೆಸ್ಯೂಮು ಪಡೆದ ರಾಜಕಾರಿಣಿಯೂ ಮಾಯಾವಾದ.
ಕೊನೆಗೆ ವಿಶ್ರಾಂತಿ ಗೃಹದಲ್ಲಿ ಉಳಿದದ್ದು ಪುರಂದರ ಮತ್ತು ನೆಲಗುಡಿಸುತ್ತಿರುವ ಮೇಟಿ ಮಾತ್ರ.
ಪುರಂದರ ನಿರಾಶೆಯಿಂದ ಊರಿಗೆ ಮರಳಿದ.
ತಿಂಗಳುಗಳು ಉರುಳಿದುವು.
ಪುರಂದರ ಮಂಗಳೂರು ಟೌನ್ ಹಾಲ್‌ನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಚಪ್ಪಡಿಯ ಮೇಲೆ ಕುಳಿತಿದ್ದ.
ಉದ್ಯೋಗದ ಆಶೆಯನ್ನು ಎಂದೋ ತೊರೆದಿದ್ದ.
ಭಾನುವಾರವಾದುದರಿಂದ ಮೈದಾನದಲ್ಲಿ ಜನಸಾಗರ ತುಂಬಿ ತುಳುಕುತ್ತಿತ್ತು.
ಅವನ ಗಮನ ದೂರದ ಬೃಹದಾಕಾರದ ಸ್ಟೇಜಿನತ್ತ ಹೋಯಿತು.
ರಾಜಕಾರಿಣಿಗಳ ಕಟೌಟುಗಳು, ವೇದಿಕೆಯ ಮೇಲೆ ಕುಳಿತು ಕೊಂಡ ಜನ ನಾಯಕರುಗಳು, ಸುತ್ತಲೂ ಹಾರಾಡುವ ಧ್ವಜಗಳು, ಧ್ವನಿವರ್ಧಕದ ಅಬ್ಬರ, ನೆರೆದಿದ್ದ ಜನಸಾಗರ, ಜಯ ಘೋಷಣೆ, ಚಪ್ಪಾಳೆ, ಭಾಷಣ ಅಲೆ-ಅಲೆಯಾಗಿ ಕೇಳಿ ಬರುತಿತ್ತು.
“ವಿದ್ಯಾವಂತ ಯುವಕರೇ, ಎದ್ದೇಳಿ, ಯುವ ಶಕ್ತಿಯಲ್ಲಿ ದೇಶದ ಅಭಿವೃದ್ಧಿ ಅಡಗಿದೆ.
ನಿಮ್ಮ ಸೋಮಾರಿತನ, ಆಲಸ್ಯ, ಹಿಂಜರಿಕ ಬದಿಗಿಟ್ಟು ನಮ್ಮಲ್ಲಿಗೆ ಬನ್ನಿ.
ನಿಮ್ಮ ಭವಿಷ್ಯ ಉಜ್ವಲಗೊಳಿಸಲು ನಮ್ಮಲ್ಲಿ ಯೋಜನೆಗಳಿವೆ.
ಕೆಲಸಗಳಿವೆ ಹತಾಶರಾಗುವ ಅಗತ್ಯವಿಲ್ಲ.
ಯಾವುದೇ ಘಳಿಗೆಯಲ್ಲಿ, ಎಲ್ಲಾದರೂ ಸರಿ, ನನ್ನನ್ನು ನೇರ ಸಂಪರ್ಕಿಸಿದರೆ ನಿಮಗೆ ಪೂರ್ಣ ರೀತಿಯ ಸಹಕಾರ ನೀಡಲಾಗುವುದು…. . ”
ಮಾನ್ಯ ಮಂತ್ರಿಗಳು ಭಾಷಣ ಬಿಗಿಯುತ್ತಾ ಇದ್ದರು.
ಜನರ ಚಪ್ಪಾಳೆ ತಾರಕಕ್ಕೇರಿತು.
ಪುರಂದರ ಎದ್ದು ನಿಂತ.
ತನ್ನ ಫೈಲನ್ನು ಬಿಡಿಸಿ ಅದರಲ್ಲಿದ್ದ ಎಲ್ಲಾ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಸರ್ಟಿಫಿಕೆಟ್‌ಗಳನ್ನು ಹರಿದು ಹತ್ತಿರದಲ್ಲಿದ್ದ ಸಿಮೆಂಟಿನ ತೊಟ್ಟಿಯೊಳಗೆ ಬಿಸಾಕಿ, ನಿರಾಳ ಮನಸ್ಸಿನೊಂದಿಗೆ ಮನೆಯ ಕಡೆ ಸಾಗಿದ.
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment