ನನ್ನ ಬಕೆಟ್ ಎಷ್ಟು ಹಗುರವಾಗಿದೆ ಎಂದರೆ ನಾನು ಅದರಲ್ಲಿ ಸವಾರಿ ಮಾಡಬಲ್ಲೆ, ದಯೆತೋರು.
ನನಗೆ ಅನುಕೂಲವಾದಾಗ ದುಡ್ಡು ಕೊಡುತ್ತೇನೆ.”
ವ್ಯಾಪಾರಿ ಕಿವಿಗೆ ಕೈಯಿಟ್ಟು ಆಲಿಸುತ್ತಾನೆ.
“ಸರಿಯಾಗಿ ಕೇಳಿಸುತ್ತಿದೆಯೇ” ತನ್ನ ಹೆಂಡತಿಯ ಕಡೆಗೆ ತಿರುಗಿ ಕೇಳುತ್ತಾನೆ.
“ಸರಿಯಾಗಿ ಕೇಳಿಸುತ್ತಿದೆಯೇ? ಗಿರಾಕಿ ಇದ್ದಂತಿದೆ.”
“ನನಗೇನೂ ಕೇಳಿಸುತ್ತಿಲ್ಲ.” ಹೆಂಡತಿ ಹೇಳುತ್ತಾಳೆ ತನ್ನ ಹೊಲಿಗೆಯನ್ನು ಮುಂದುವರೆಸುತ್ತ.
“ಹೋ! ಕೇಳಿಸಿಕೊಳ್ಳಲೇಬೇಕು.! ನಾನು … ನಿಮ್ಮ ಹಳೆಯ ಗಿರಾಕಿ… ಈಗ ಕೈ ಬರಿದಾಗಿದೆ.”
ಅದು ಯಾರೋ ಕರೆಯುತ್ತಿರುವ ಹಾಗಿದೆ. ವ್ಯಾಪಾರಿ ಹೇಳುತ್ತಾನೆ, “ನನ್ನ ಹಳೆಯ ಗಿರಾಕಿಗಳಾರೋ ಇರಬೇಕು.
ನನ್ನ ಕಿವಿಗಳು ಮೋಸಹೋಗುವುದಿಲ್ಲ.”
“ಯಾಕೆ ಸುಮ್ಮನೆ ಪೇಚಾಡುತ್ತೀರಿ?” ಹೆಂಡತಿ ಹೊಲಿಯುವುದನ್ನು ನಿಲ್ಲಿಸಿ ಹೇಳುತ್ತಾಳೆ.
“ಯಾರೂ ಇಲ್ಲ, ರಸ್ತೆ ನಿರ್ಜನವಾಗಿದೆ.
ನಮ್ಮ ಎಲ್ಲ ಗಿರಾಕಿಗಳಿಗೂ ಸಾಕಷ್ಟು ಇದ್ದಿಲು ಕೂಟ್ಟಾಗಿದೆ.
ಕೆಲವು ದಿವಸ ಅಂಗಡಿ ಮುಚ್ಚಿ ವಿಶ್ರಾಂತಿ ತೆಗೆದುಕೊಳ್ಳಬಹುದು.”
ಇಲ್ಲಿ, ಬಕೆಟ್ ಮೇಲೆ ಕುಳಿತಿದ್ದೇನೆ.
ನಾನು ಕಿರುಚುತ್ತೇನೆ.
ನನ್ನ ಕಣ್ಣು ಮಂಜಾಗುತ್ತದೆ.
“ದಯವಿಟ್ಟು ಒಂದು ಸಲ ಇಲ್ಲಿ…. ಮೇಲೆ ನೋಡಿರಿ.
ಒಂದೇ ಒಂದು ಸಲಿಕೆ ಇದ್ದಿಲು…. ದಯ ತೋರಿ…..”
“ಬಂದೆ ನಿಲ್ಲು…” ವ್ಯಾಪಾರಿ ಎದ್ದು ನಿಲ್ಲುತ್ತಾನೆ. ಅವನ ಹೆಂಡತಿ ಅವನನ್ನು ತಡೆಯುತ್ತಾಳೆ.
“ನೀವು ಇಲ್ಲೇ ಇರಿ. ನಿಮ್ಮ ಆರೋಗ್ಯ ಚೆನ್ನಾಗಿಲ್ಲ, ನಿನ್ನೆ ರಾತ್ರಿ ಎಷ್ಟು ಕಮ್ಮುತ್ತಿದ್ದಿರಿ! ಒಂದು ಸಣ್ಣ ಗಿರಾಕಿಗಾಗಿ ಈ ಕೊರೆಯುವ ಚಳಿಯಲ್ಲಿ ಹೊರಗೆ ಹೋಗಿ ಆರೋಗ್ಯ ಕೆಡಿಸಿಕೊಳ್ಳುವುದು ಬೇಡ, ಹೆಂಡತಿ, ಮಕ್ಕಳ ಬಗ್ಗೆ ಯೋಚಿಸಿ ಅದಾರೋ ನಾನು ನೋಡುತ್ತೇನೆ.”
“ಹಾಗಾದರೆ ನಮ್ಮಲ್ಲಿ ದೊರೆಯುವ ಎಲ್ಲ ವಿಧದ ಇದ್ದಿಲನ್ನು ತೋರಿಸು ಗಿರಾಕಿಗೆ ಬೆಲೆಯನ್ನು ನಾನು ಇಲ್ಲಿಂದಲೇ ಕೂಗಿ ಹೇಳುತ್ತೇನೆ.”
“ಆಗಲಿ” ಎನ್ನುತ್ತ ಆಕೆ ಹೊರಗೆ ಬರುತ್ತಾಳೆ ನನ್ನನ್ನು ನೋಡುತ್ತಾಳೆ.