ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ಉತ್ತಮ ಕೃತಿಗಳು ಲಭ್ಯವಾಗಬೇಕೆನ್ನುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವಾರು ಪ್ರಕಟಣಾ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯರೂಪಕ್ಕೆ ತರುತ್ತಿದೆ.
ಪ್ರಸಕ್ತ ವರ್ಷ ಡಾ.ಅನಂತಮೂರ್ತಿಯವರ ಸಮಗ್ರ ಸಾಹಿತ್ಯ, ಹೀಗೆ ಪ್ರಮುಖ ಸಾಹಿತಿಗಳ ಸಮಗ್ರ ಸಾಹಿತ್ಯ ಹಾಗೂ ವಿಜಯನಗರದ ಕಲೆ ಮತ್ತು ಸಾಹಿತ್ಯ, ಎಚ್.ಡಿ.ಇಂಚಲರ ಸಮಗ್ರ ಕಾವ್ಯ ಮತ್ತು ರಾವ್ ಬಹದ್ದೂರ್,ಎಲ್.ಬಸವರಾಜು ಹಾಗೂ ಗೌರೀಶ ಕಾಯ್ಕಿಣಿ ಅವರುಗಳ ಆಯ್ದ ಕೃತಿಗಳನ್ನು ಹೊರತರಲಾಗುತ್ತಿದೆ.
ಈಯೋಜನೆಯಡಿ ಸುವರ್ಣ ಕರ್ನಾಟಕದ ಅಂಗವಾಗಿ ಮರು ಮುದ್ರಿಸಿದ್ದ ಕರ್ನಾಟಕದ ಪರಂಪರೆ ಕೃತಿಗಳ ಮರುಮುದ್ರಣವೂ ಒಂದಾಗಿದೆ.
ಕರ್ನಾಟಕ ಎಂದೊಡನೆ ಒಂದು ಉಜ್ವಲವಾದ, ಪುರಾತನವಾದ, ಅಪರಂಪರವಾದ ಸಾಂಸ್ಕೃತಿಕ ಪರಂಪರೆಯ ವಿರಾಟ್ ದೃಶ್ಯವೇ ಕಣ್ಣೆದುರು ಗೋಚರಿಸುತ್ತದೆ.
ಇತಿಹಾಸ, ಸಂಸ್ಕೃತಿ, ಭಾಷೆ, ಸಂಗೀತ,ಸಾಹಿತ್ಯ, ಶಿಲ್ಪಕಲೆ, ನಾಟ್ಯ, ಮುಂತಾದ ಸುದೀರ್ಘ ಇತಿಹಾಸವುಳ್ಳ ಶ್ರೀಮಂತ ಸಂಸ್ಕೃತಿಯ ಸಂಪದ್ಭರಿತನಾಡು.
ಈ ಚೆಲುವ ಕನ್ನಡ ನಾಡಿನ ವೈಭವ, ಚಿತ್ತಾಕರ್ಷಕ ಕಲೆ, ಪ್ರತಿಭಾ ವಿಲಾಸಗಳನ್ನು ಕಂಡು `ಕನ್ನಡಮೆನಿಪ್ಪಾನಾಡು ಚೆಲ್ವಾಯ್ತು’ ಎಂದು ಕವಿ ಆಂಡಯ್ಯ ಉದ್ಗರಿಸಿರುವುದು.
ಕರ್ನಾಟಕ ಎಂಬ ಹೆಸರಿಗೆ ಪುರಾತನ ಇತಿಹಾಸವಿದೆ.
ಈ ಹೆಸರಿನ ಹಿಂದೆ ನಾಡಿನ ಪುರಾತನ ಸಂಸ್ಕೃತಿಮತ್ತು ಸಂಪ್ರದಾಯವಿದೆ.
ಕರ್ನಾಟಕದ ಧರ್ಮ, ಇತಿಹಾಸ, ಭಾಷೆ, ಕಲೆ, ಆಚಾರ-ವಿಚಾರ, ಪರಂಪರೆ ಮುಂತಾದವುಗಳಿಗೆ ಒಂದು ವಿಶಿಷ್ಟತೆಯಿದೆ;
ಇವು ಇಲ್ಲಿನ ಸಂಸ್ಕೃತಿಯ ಸಜೀವ ಭಂಡಾರಗಳಾಗಿವೆ.
ಕರ್ನಾಟಕ ಪರಂಪರೆ ಗ್ರಂಥವು ಪ್ರಾಚೀನ ಕಾಲದಿಂದ ಆರಂಭವಾಗಿ ಕರ್ನಾಟಕದ ಭೂವಿಕಾಸ, ಪ್ರಾಕೃತಿಕ ಲಕ್ಷಣಗಳು, ಭಾಷೆ, ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ವಿಜಯನಗರ ಹೀಗೆ ಕರ್ನಾಟಕವನ್ನು ಆಳಿದ ರಾಜವಂಶಗಳು, ಸಾಂಸ್ಕೃತಿಕ ಬದುಕಿನ ಉಜ್ವಲತೆ, ನಮ್ಮ ನಾಡಿನ ಭವ್ಯ ಪರಂಪರೆಯನ್ನು ಪರಿಚಯಿಸುತ್ತದೆ.
ಕರ್ನಾಟಕ-ಕನ್ನಡಿಗ ಪ್ರಪಂಚದ ಕೆಲವೇ ಅತಿ ಪುರಾತನ ನಾಗರಿಕತೆಗಳಲ್ಲೊಂದಾದ ಕಿಷ್ಕಿಂದಾ ನಾಗರಿಕತೆಯ ವಾರಸುದಾರ.
ಭಾರತವು ಪೂರ್ಣಸ್ವರೂಪ ತಾಳದ ಮುನ್ನವೇ ಜಗತ್ಪ್ರಸಿದ್ಧವಾಗಿದ್ದ ಜಂಬೂದ್ವೀಪದ ಗರ್ವಶಾಲಿ ಮೂಲಪುರುಷ, ಐತಿಹಾಸಿಕ ವೈಭವಕ್ಕೆ ಸರಿಜೋಡಿಲ್ಲದ ಸಾಹಿತ್ಯ-ಸಂಗೀತ, ಕಲಾ ನೈಪುಣ್ಯಕ್ಕೆ ಸಾಟಿಯಿಲ್ಲದ ಸಾಂಸ್ಕೃತಿಕ ಗೌರವಕ್ಕೆ ಹಕ್ಕುದಾರ.
ಭಾರತದಲ್ಲಿ ಮತ್ತಾವ ಪ್ರದೇಶದಲ್ಲೂ ಕಾಣಸಿಗದಷ್ಟು ದೀರ್ಘಕಾಲದ ಚಕ್ರವರ್ತಿತನ;
ಅದರೊಡನೆಯೇ ಆಧ್ಯಾತ್ಮಿಕ ಶ್ರೇಯ,ಸಾಹಿತ್ಯಕ ಮೇಲ್ಮೆಯನ್ನು ಮೆರೆಸಿದ ನಾಡು ಕರ್ನಾಟಕ.
ಇಂತಹ ಸಮೃದ್ಧ ಕರ್ನಾಟಕದ ಸಾಂಸ್ಕೃತಿಕ,ಭೌಗೋಳಿಕ, ಧಾರ್ಮಿಕ, ರಾಜಕೀಯ, ಸಾಹಿತ್ಯಕ ಪರಂಪರೆ ಮತ್ತು ಇತಿಹಾಸವನ್ನು ಸ್ಥೂಲವಾಗಿ ಪರಿಚಯಿಸುವ `ಕರ್ನಾಟಕದ ಪರಂಪರೆ’ ಎಂಬ ಈ ಅಮೂಲ್ಯ ಗ್ರಂಥವು ಮೈಸೂರು ಸರ್ಕಾರ ೧೯೬೮ರಲ್ಲಿ ಪ್ರಕಟಿಸಿದ್ದ ‘Karnataka Through the Age’ ಎಂಬ ಆಂಗ್ಲ ಗ್ರಂಥದ ಅನುವಾದವಾಗಿದೆ.
ಇದನ್ನು ಕೆ. ಸಂಪದ್ಗಿರಿರಾವ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಭಾಷಾಂತರ ಯೋಜನಾ ಸಮಿತಿಯ ಮೂಲಕ ಕನ್ನಡಕ್ಕೆ ಅನುವಾದಿಸಿ, ೧೯೭೦ರಲ್ಲಿ ಪ್ರಕಟಿಸಲಾಗಿತ್ತು.
ನಂತರ ೧೯೯೨ರಲ್ಲಿ ಮರು ಮುದ್ರಿಸಲಾಗಿತ್ತು.
ನಂತರ ಇದಕ್ಕೆ ಅಪಾರ ಬೇಡಿಕೆ ಇದ್ದುದರಿಂದ ೨೦೦೬ರಲ್ಲಿ ಸುವರ್ಣ ಕರ್ನಾಟಕದ ಅಂಗವಾಗಿ ಮರು ಮುದ್ರಿಸಲಾಯಿತು.
ಈಗ ಮತ್ತೆ `ಕರ್ನಾಟಕದ ಪರಂಪರೆ’ಯ ಪ್ರತಿಗಳು ಮುಗಿದಿದ್ದು, ಇದಕ್ಕೆ ಅಪಾರಬೇಡಿಕೆ ಇರುವುದರಿಂದ ಮರು ಮುದ್ರಿಸಲಾಗುತ್ತಿದೆ.
ನಿಸರ್ಗವು ಪ್ರಯೋಗಗಳ ಆಗರ.
ನಿರಂತರ ಬದಲಾವಣೆಯೇ ಅದರ ಸ್ಥಾಯಿ.
ಹೀಗಾಗಿ ಕರ್ನಾಟಕದ ಇತಿಹಾಸದಲ್ಲಿ ಭೌಗೋಳಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಇಂದು ಹಲವಾರು ಬದಲಾವಣೆಗಳಾಗಿವೆ.
ಇಂತಹ ಬದಲಾವಣೆಗಳನ್ನು ಸ್ಪಷ್ಟವಾಗಿ ಗುರುತಿಸಲು ಪ್ರಾಚೀನ ಐತಿಹಾಸಿಕ ಮಾಹಿತಿ, ದಾಖಲೆಗಳನ್ನೊಳಗೊಂಡ ಗ್ರಂಥಗಳ ಅಗತ್ಯವಿದೆ.
ಅಂಥ ಗ್ರಂಥಗಳ ಪೈಕಿ ಕರ್ನಾಟಕದ ಪ್ರಾಚೀನ ಪರಂಪರೆಯ ಭವ್ಯ ಚಿತ್ರಣವನ್ನು ನೀಡುವ ಸುಮಾರು ಎರಡು ಸಾವಿರ ವರ್ಷಗಳ ಕಾಲಾವಧಿಯಲ್ಲಿ ಹರಿದು ಬಂದಿರುವ ನಮ್ಮ ನಾಡಿನ ಅಮೂಲ್ಯ ಪರಂಪರೆಯನ್ನು ಕುರಿತ `ಕರ್ನಾಟಕದ ಪರಂಪರೆ’ ಗ್ರಂಥವು ಕನ್ನಡಿಗರಲ್ಲಿ ಕರ್ನಾಟಕದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸಲಿ ಎಂದು ಆಶಿಸುತ್ತಾ ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಕುರಿತ ಈ ಅಮೂಲ್ಯ ಗ್ರಂಥದ ಪ್ರಯೋಜನವನ್ನು ಪಡೆದುಕೊಳ್ಳಲಿ ಎಂದು ಹಾರೈಸುತ್ತೇನೆ.
ಈ ಕೃತಿಯ ಪ್ರಯೋಜನವನ್ನು ಕನ್ನಡ ಜನತೆ ಪಡೆದುಕೊಂಡರೆ ನಮ್ಮ ಶ್ರಮ ಸಾರ್ಥಕ.