ಜ್ಞಾಪಿಸಿಕೊಂಡ: ಡಾನ್ ಲೂಪಿ ಟೆರೆರೋ, ಪ್ಯುಯೆರ್ಟಾ ಡಿ ಪಿಯೆದ್ರಾದ ಒಡೆಯ, ಅಲ್ಲದೆ ಅವನ ದಾಯಾದೀ ಭಾಗೀದಾರ.
ಪ್ಯುಯೆರ್ಟಾ ಡಿ ಪಿಯೆದ್ರಾದ ಭಾಗೀದಾರನಾಗಿದ್ದರೂ ಅಲ್ಲಿ ದನ ಕುರಿ ಮೇಯಿಸುವುದಕ್ಕೆ ಅವನಿಗೆ ಬಿಟ್ಟಿರಲಿಲ್ಲ.
ಮೊದಮೊದಲು ಅವನು ಏನೂ ಮಾಡಿರಲಿಲ್ಲ.
ಆಮೇಲೆ, ಬರ ಬಂದಾಗ, ದನ, ಕರು, ಕುರಿ ಎಲ್ಲ ಹೊಟ್ಟೆಗಿಲ್ಲದೆ ಒಂದೊಂದೇ ಸಾಯುವಾಗ ಪ್ಯುಯೆರ್ಟಾದಲ್ಲಿ ಮೇಯಿಸುವುದಕ್ಕೆ ದಾಯಾದೀ ಭಾಗೀದಾರ ಲೂಪಿ ಅವಕಾಶವನ್ನೇ ಕೊಡದೆ ಇದ್ದಾಗ ಜುವೆನ್ಸಿಯೋ ನಾವ ಬೇಲಿಯಲ್ಲಿ ಕಿಂಡಿ ಮಾಡಿ, ಮೂಳೆ ಚಕ್ಕಳವಾಗಿದ್ದ ತನ್ನ ಪಶುಪ್ರಾಣಿಗಳನ್ನು ಅಲ್ಲಿ ಬೆಳೆದಿದ್ದ ಹುಲ್ಲು ಹೊಟ್ಟೆತುಂಬ ಮೇಯುಲೆಂದು ಬಿಟ್ಟಿದ್ದ.
ಡಾನ್ ಲೂಪಿಗೆ ಇದು ಇಷ್ಟವಿರಲಿಲ್ಲ, ಬೇಲಿ ರಿಪೇರಿ ಮಾಡಿಸಿದ್ದ.
ಜುವೆನ್ಸಿಯೋ ನಾವಾ ಬೇಲಿಯಲ್ಲಿ ಮತ್ತೆ ಕಿಂಡಿ ಮಾಡಬೇಕಾಗಿ ಬಂದಿತ್ತು.
ಹಗಲಿನಲ್ಲಿ ರಿಪೇರಿಯಾದ ಕಿಂಡಿ ರಾತ್ರಿ ಮತ್ತೆ ತೆರೆದುಕೊಳ್ಳುತ್ತ ಪ್ರಾಣಿಗಳು ದಿನವಿಡೀ ಬೇಲಿಯ ಪಕ್ಕದಲ್ಲೇ ಕಾಯುತ್ತ ನಿಂತಿರುತಿದ್ದವು.
ಹುಲ್ಲಿನ ರುಚಿ ನೋಡಲಾಗದೆ ಸುಮ್ಮನೆ ವಾಸನೆ ಹೀರಿಕೊಂಡು ಇರುತಿದ್ದವು.
ಅವನಿಗೂ ಡಾನ್ ಲೂಪಿಗೂ ವಾದ ನಡೆದೇ ನಡೆಯಿತು, ತೀರ್ಮಾನ ಮಾತ್ರ ಆಗಲಿಲ್ಲ.
‘ನೋಡು ಜುವೆನ್ಸಿಯೋ, ನಿನ್ನ ದನವೋ ಕುರಿಯೋ ಇನ್ನೊಂದು ಸಾರಿ ನನ್ನು ಜಮೀನಿಗೆ ಕಾಲಿಟ್ಟರೆ ಕೊಂದು ಹಾಕುತ್ತೇನೆ,’ ಅಂತ ಕೊನೆಗೆ ಒಂದು ದಿನ ಡಾನ್ ಲೂಪಿ ಅಂದ.
‘ನೋಡು ಡಾನ್ ಲೂಪಿ, ಪ್ರಾಣಿಗಳು ತಮ್ಮ ಪಾಡು ತಾವು ನೋಡಿಕೊಂಡರೆ ಅದು ನನ್ನ ತಪ್ಪಲ್ಲ.
ಅರಿಯದ ಜೀವಗಳು.
ಅವನ್ನ ಕೊಂದರೆ ನಿನ್ನ ಸುಮ್ಮನೆ ಬಿಡಲ್ಲ,’ ಅಂತ ಜುವೆನ್ಸಿಯಾ ಉತ್ತರ ಕೊಟ್ಟಿದ್ದ.
ಒಂದು ವರ್ಷದ ಮರಿಯನ್ನು ಹೊಡೆದು ಹಾಕಿದ.
‘ಇದು ಆಗಿದ್ದು ಮೂವತ್ತೈದು ವರ್ಷದ ಹಿಂದೆ, ಮಾರ್ಚ್ ತಿಂಗಳಳ್ಲಿ, ಯಾಕೆ ಅಂದರೆ ಏಪ್ರಿಲ್ ಹೊತ್ತಿಗೆ ನಾನು ಆಗಲೇ ಬೆಟ್ಟ ಸೇರಿದ್ದೆ, ಸಮನ್ಸ್ ತಪ್ಪಿಸಿಕೊಂಡು ಓಡುತಿದ್ದೆ.
ಜಡ್ಜಿಗೆ ಹತ್ತು ಹಸು ಕೊಟ್ಟರೂ ಉಪಯೋಗವಾಗಲಿಲ್ಲ, ಮನೆ ಅಡ ಇಟ್ಟರೂ ಜೇಲು ತಪ್ಪಿಸಿಕೊಳ್ಳಲು ಆಗಲಿಲ್ಲ.
ನನ್ನ ತಂಟೆಗೆ ಬರದೆ ಇರುವುದಕ್ಕೆ ನನ್ನ ಹತ್ತಿರ ಉಳಿದಿದ್ದನ್ನೆಲ್ಲ ತಗೊಂಡರು, ಆದರೂ ಮತ್ತೆ ಬೆನ್ನು ಬೀಳುತಿದ್ದರು.
ಅದಕ್ಕೇ ಮಗನನ್ನು ಕರೆದುಕೊಂಡು ಪಾಲೊ ಡಿ ವೆನಾಡೊದಲಿದ್ದ ನನ್ನ ಇನ್ನೊಂದು ತುಂಡು ಭೂಮಿಗೆ ಬಂದುಬಿಟ್ಟೆ.
ಮಗ ಬೆಳೆದು ದೊಡ್ಡವನಾದ, ಇಗ್ನಾಸಿಯಳನ್ನು ಮದುವೆಯಾದ.
ನನ್ನ ಮನೆಗೆ ಸೊಸೆ ಬಂದಳು.
ಮಗನಿಗೆ ಈಗ ಎಂಟು ಮಕ್ಕಳಿದ್ದಾರೆ.
ಹೀಗೆ ಎಲ್ಲಾ ಆಗಿ ಎಷ್ಟೋ ಕಾಲವಾಯಿತು.
ಇಷ್ಟು ಹೊತ್ತಿಗೆ ಇದನ್ನ ಮರೆತೇಬಿಡಬೇಕಾಗಿತ್ತು.
ಮರೆತಿಲ್ಲ ಅನ್ನುವುದು ಸ್ಪಷ್ಟವಾಗಿಯೇ ಇದೆ.
‘ನೂರು ಪೆಸೋ ಖರ್ಚು ಮಾಡಿದರೆ ಎಲ್ಲ ಸರಿಹೋಗುತದೆ ಅಂದುಕೊಂಡೆ.
ಸತ್ತು ಹೋದ ಡಾನ್ ಲೂಪಿಯ ಹೆಂಡತಿ ಇದ್ದಳು.
ಇನ್ನೂ ಅಂಬೆಗಾಲಿಡುತಿದ್ದ ಎರಡು ಮಕ್ಕಳು ಇದ್ದವು.
ಆ ಹೆಂಗಸೂ ಸತ್ತು ಹೋದಳು -ದುಃಖ ತಾಳಲಾರದೆ ಅನುತ್ತಾರಪ್ಪ.
ಮಕ್ಕಳನ್ನ ಯಾರೋ ನಂಟರು ಕರಕೊಂಡು ಹೋದರು.
ಅವರಿಂದ ಇನ್ನು ಭಯ ಇರಲಿಲ್ಲ.
‘ಆದರೆ ಮಿಕ್ಕ ಜನ ನನ್ನ ಮೇಲೆ ಇನ್ನೂ ವಾರಂಟು ಇದೆ, ನನ್ನ ವಿಚಾರಣೆ ಬಾಕಿ ಇದೆ ಅನ್ನುವುದನ್ನು ಬಳಸಿಕೊಂಡರು.
ಊರಿಗೆ ಯಾರೇ ಹೊಸಬರು ಬಂದರೂ ‘ಯಾರೋ ಗೊತ್ತಿಲ್ಲದ ಜನ ಬಂದಿದಾರೆ ಜುವೆನ್ಸಿಯೋ,’ ಅಂತ ನನಗೆ ಬಂದು ಹೇಳುತಿದ್ದರು.
‘ನಾನು ತಕ್ಷಣ ಬೆಟ್ಟದ ದಿಕ್ಕಿಗೆ ಓಡುತಿದ್ದೆ.
ಒತ್ತಾಗಿ ಬೆಳೆದ ಮರ್ಡೋನೆ ಮರಗಳ ಮಧ್ಯ ಅವಿತಿಟ್ಟುಕೊಳ್ಳುತಿದ್ದೆ ಎಷ್ಟೋ ದಿನ ಮರದ ಕಾಯಿ, ಹಣು ತಿಂದುಕೊಂಡು ಇರುತ್ತಿದ್ದೆ.
ಒಂದೊಂದು ಸಾರಿ ಮಧ್ಯರಾತ್ರಿಯಲ್ಲೇ ಓಡಿ ಹೋಗಬೇಕಾಗಿತು.
ನಾಯಿಗಳು ಅಟ್ಟಸಿಕೊಂಡು ಬಂದರೆ ಓಡುವ ಹಾಗೆ.
ಬದುಕೆಲ್ಲ ಹೀಗೇ ಕಳೆದೆ.
ಒಂದು ವರ್ಷ, ಎರಡು ವರ್ಷವಲ್ಲ, ಇಡೀ ಬದುಕು ಹೀಗೇ.’
ಈಗ ಅವರು ಬಂದಿದ್ದರು.
ಇನ್ನು ಯಾರೂ ಬರುವುದಿಲ್ಲ, ಜನ ಎಲ್ಲವನ್ನೂ ಮರೆತಿದ್ದಾರೆ, ನಾನಿನ್ನು ಆಯುಷ್ಯದ ಉಳಿದ ದಿನಗಳನ್ನ ನೆಮ್ಮದಿಯಾಗಿ ಕಳೆಯಬಹುದು ಅಂತ ಅವನು ವಿಶ್ವಾಸದಿಂದ ಇರುವಾಗ ಬಂದಿದ್ದರು.
‘ಕೊನೆಯ ಪಕ್ಷ ನನ್ನ ಮುದಿ ವಯಸ್ಸಲ್ಲಾದರು ನೆಮ್ಮದಿ ಇರುತದೆ, ನನ್ನ ಪಾಡಿಗೆ ನನ್ನ ಬಿಡುತ್ತಾರೆ,’ ಅಂದುಕೊಂಡಿದ್ದ.
ಇದೇ ಆಸೆಗೆ ಪೂರಾ ತೆತ್ತುಕೊಂಡಿದ್ದ.
ಅದಕ್ಕೇ ಈಗ ಹೀಗೆ ಸಾಯಬೇಕಲ್ಲ, ಇದ್ದಕಿದ್ದ ಹಾಗೆ, ಈ ಮುದಿ ವಯಸ್ಸಲ್ಲಿ, ಸಾವನ್ನು ದೂರ ಇಡುವುದಕ್ಕೆ ಇಷ್ಟೆಲ್ಲ ಹೆಣಗಾಡಿ ಆದಮೇಲೆ, ಭಯವು ನನ್ನನ್ನು ಊರಿಂದೂರಿಗೆ ಅಟ್ಟಾಡಿಸುತ್ತ, ಈ ಮೈಯಿ ಎಳಕೊಂಡು ಊರೂರು ಸುತ್ತುತ್ತ ಈಗ ಹೆಣದ ಮೂಳೆ ಚಕ್ಕಳವಾಗಿ, ಬದುಕೆಲ್ಲ ಮಿಕ್ಕವರಿಂದ ತಲೆ ತಪ್ಪಿಸಿಕೊಳ್ಳುವದರಲ್ಲೇ ಕಳೆದು ಈಗ ಹೀಗೆ ಸಾಯಬೇಕಲ್ಲ ಅನ್ನಿಸಿ ಕಷ್ಟಪಡುತಿದ್ದ.
ಹೆಂಡತಿ ಕೂಡ ಅವನನ್ನು ತೊರೆದು ಹೋಗುವುದಕ್ಕೆ ಬಿಟ್ಟಿರಲಿಲ್ಲವೇ?
ಹೆಂಡತಿ ತನ್ನ ಬಿಟ್ಟು ಹೋದಳು ಅನ್ನುವುದು ಗೊತ್ತಾದ ದಿವಸ ಅವಳನ್ನು ಹುಡುಕಿಕೊಂಡು ಹೋಗಬೇಕು ಅನ್ನುವ ಯೋಚನೆ ಕೂಡ ಅವನ ಮನಸ್ಸಿನಲ್ಲಿ ಸುಳಿದಿರಲಿಲ್ಲ.
ಯಾರ ಜೊತೆ ಹೋದಳು, ಎಲ್ಲಿಗೆ ಹೋದಳು ಅಂತ ಕೂಡ ವಿಚಾರಿಸಿರಲಿಲ್ಲ.
ಹಾಗೆ ವಿಚಾರಿಸಲು ಊರಿಗೆ ಕಾಲಿಡುವುದನ್ನೇ ತಪ್ಪಿಸಿಕೊಂಡಿದ್ದು, ಎಲ್ಲವನ್ನೂ ಬಿಟ್ಟ ಹಾಗೆ ಅವಳನ್ನೂ ಬಿಟ್ಟಿದ್ದ.
ಒಂದಿಷ್ಟೂ ಕೊಸರಾಡದೆ ಏನೇ ಬರಲಿ, ಜೀವ ಉಳಿಸಿಕೊಳ್ಳಬೇಕು ಉಳಿಸಿಕೊಂಡಿದ್ದ.
ತನ್ನನ್ನು ಕೊಲ್ಲುವುದಕ್ಕೆ ಅವಕಾಶ ಕೊಟ್ಟಿರಲಿಲ್ಲ.
ಈಗಂತೂ ಬಿಲ್ಕುಲ್ ಅವಕಾಶ ಕೊಡಲ್ಲ.
ಅವನನ್ನು ಕೊಲ್ಲುವುದಕ್ಕೇನೇ ಪಾಲೊ ಡಿ ವೆನಾಡೊದಿಂದ ಅವನನ್ನು ಇಲ್ಲಿಗೆ ಕರಕೊಂಡು ಬಂದಿದ್ದರು.
ತಮ್ಮ ಹಿಂದೆಯೇ ಬರುವ ಹಾಗೆ ಅವನಿಗೆ ಬೇಡಿ ಹಾಕುವ ಅಗತ್ಯವಿರಲಿಲ್ಲ.
ಭಯದ ಬೇಡಿಯನ್ನಷ್ಟೇ ತೊಡಿಸಿಕೊಂಡು ಅವರ ಹಿಂದೆ ಹೆಜ್ಜೆ ಹಾಕಿದ್ದ.
ಲಡ್ಡು ಹಿಡಿದ ಹಗ್ಗದಂಥ ಕಾಲು ಸಾವಿನ ಭಯಕ್ಕೆ ಕುಗ್ಗಿದ್ದ ಆ ಮುದಿಮೈಯನ್ನು ಹೊತ್ತುಕೊಂಡು ಓಡಿಹೋಗಲಾರದು ಅನ್ನುವುದು ಅವರಿಗೆ ಗೊತ್ತಾಗಿತ್ತು.
ಹೆಜ್ಜೆ ಹಾಕುತಿದ್ದ ಸಾಯವುದಕ್ಕೆ ಹಾಗಂತ ಹೇಳಿದ್ದರು.
ಆವಾಗ ಅವನಿಗೆ ಗೊತ್ತಾಗಿತ್ತು.
ಸಾವು ಹತ್ತಿರದಲ್ಲೇ ಕಂಡಾಗೆಲ್ಲ ಆಗುತಿದ್ದ ಹಾಗೆ ಹೊಟ್ಟೆ ತೊಳಸಿ, ಕಣ್ಣಲ್ಲಿ ಭಯ ಹೊಮ್ಮಿ, ಕಷ್ಟಪಟ್ಟು ನುಂಗಬೇಕಾದ ಹುಳಿ ನೀರು ಬಾಯಲ್ಲಿ ತುಂಬಿತು.
ಪದ ಕುಸಿಯುತ್ತ, ತಲೆ ಧಿಮಿಗುಡುತ್ತ, ಎದೆ ಪಕ್ಕೆಲುಬಿಗೆ ಒತ್ತುತ್ತ, ಇಲ್ಲ, ಅವರು ಕೊಲ್ಲುತ್ತಾರೆ ಅನ್ನುವುದನ್ನ ಮನಸ್ಸು ಒಪ್ಪುತ್ತಲೇ ಇಲ್ಲ.
ಏನಾದರೂ ಭರವಸೆ ಇದ್ದೀತು.
ಒಂದಿಷ್ಟು ಆಸೆಗೆ ಎಲ್ಲಾದರೂ ಜಾಗ ಇದ್ದೀತು.
ಅವರು ತಪ್ಪು ಮಾಡಿದ್ದಾರು.
ಅವನಲ್ಲದೆ ಬೇರೆ ಯಾರೋ ಜುವೆನ್ಸಿಯೋ ನಾವಾನನ್ನು ಹುಡುಕುತ್ತ ಇದ್ದಾರು.
ಕೈ ಜೋತುಬಿಟ್ಟುಕೊಂಡು ಅವರ ಜೊತೆಯಲ್ಲಿ ಸುಮ್ಮನೆ ಹೆಜ್ಜೆ ಹಾಕಿದ.
ಬೆಳಗಿನ ಜಾವದ ಕತ್ತಲಿತ್ತು ನಕ್ಷತ್ರಗಳಿರಲಿಲ್ಲ.
ಗಾಳಿ ನಿಧಾನವಾಗಿ ಬೀಸುತಿತ್ತು.
ರಸ್ತೆಯ ಧೂಳನ್ನು ಆಡಿಸುತ್ತಿತ್ತು.
ಮಣ್ಣಿನ ರಸ್ತೆಗಳಲ್ಲಿರುವಂಥ ಉಚ್ಚೆಯಂಥ ವಾಸನೆ ಮೂಗಿಗೆ ಅಡರುತಿತ್ತು.
ವಯಸಾಗಿದ್ದ ಅವನ ಮೆಳ್ಳೆಗಣ್ಣಿನ ನೋಟ ಕತ್ತಲಿದ್ದರೂ ಪಾದದ ಕೆಳಗಿನ ನೆಲವನ್ನೇ ದಿಟ್ಟಿಸುತಿತ್ತು.
ಆ ಮಣ್ಣಿನಲ್ಲಿ ಅವನ ಇಡೀ ಬದುಕು ಇತ್ತು.
ಅರುವತ್ತು ವರ್ಷದ ಇಡೀ ಬದುಕು.
ಅರುವತ್ತು ವರ್ಷದಿಂದ ಮುಷ್ಠಿಯಲ್ಲಿ ಬಿಗಿಯಾಗಿ ಹಿಡಿದಿದ್ದ.
ತುತ್ತು ಮಾಂಸವೇನೋ ಅನ್ನುವ ಹಾಗೆ ಕಣ್ಣಲ್ಲೇ ತುತ್ತು ಮುರಿಯುತ್ತ ಇದೇ ಬದುಕಿನ ಕೊನೆಯ ತುತ್ತು ಅನ್ನುವ ಹಾಗೆ ಒಂದೊಂದೂ ಗಳಿಗೆಯನ್ನು ರುಚಿ ನೋಡುತ್ತ ನಡೆದಿದ್ದ.
ಏನೋ ಹೇಳಬೇಕು ಅನ್ನುವ ಹಾಗೆ ಪಕ್ಕದಲ್ಲಿ ನಡೆಯುತಿದ್ದವರನ್ನು ನೋಡಿದ.
ನನ್ನನ್ನು ಬಿಟ್ಟುಬಿಡಿ ಅನ್ನುವವನಿದ್ದ.
‘ಅಣ್ಣಾ, ಯಾರಿಗೂ ನೋವು ಮಾಡಿಲ್ಲಣ್ಣಾ ನಾನು’, ಅನ್ನಬೇಕು ಅಂದುಕೊಂಡಿದ್ದ.
ಆದರೆ ಸುಮ್ಮನೆ ಇದ್ದ.
‘ಸ್ವಲ್ಪ ದೂರ ಹೋದಮೇಲೆ ಹೇಳುತೇನೆ,’ ಅಂದುಕೊಂಡ.
ಸುಮ್ಮನೆ ಅವರನ್ನು ನೋಡಿದ.
ಇವರೆಲ್ಲ ಸ್ನೇಹಿತರು ಅಂದುಕೊಳ್ಳಬಹದೇನೋ ಅಂದುಕೊಳ್ಳಲಿಲ್ಲ, ಸ್ಕೇಹಿತರಲ್ಲ ಅವರು.
ಅವರು ಯಾರೋ ಗೊತ್ತೇ ಇಲ್ಲ.
ಪಕ್ಕದಲ್ಲೇ ಹೆಜ್ಜೆ ಹಾಕುತ್ತ ರಸ್ತೆ ಹೇಗೆ ತಿರುಗಿದೆ ಅಂತ ಆಗಾಗ ಬಗ್ಗಿ ನೋಡುತಿದ್ದರು.
ಮುಸ್ಸಂಜೆ ಮುಗಿದು ರಾತ್ರಿ ಶುರುವಾಗುವ ಸಂಧಿಯಲ್ಲಿ, ಎಲ್ಲವೂ ಸೀದು ಹೋದಹಾಗೆ ಕಾಣುವ ಹೊತ್ತಿನಲ್ಲಿ ಅವರನ್ನು ಮೊದಲು ನೋಡಿದ್ದ, ಉತ್ತ ನೆಲದ ಮೇಲೆ, ಎಳೆಯ ಮೊಳಕೆಗಳನ್ನು ತುಳಿದುಕೊಂಡು ಬಂದಿದ್ದರು ಅದಕ್ಕೇ ಅವನು ಕೆಳಕ್ಕಿಳಿದು ಬಂದಿದ್ದ.
ಬೆಳೆ ಹಾಳಾಗುತ್ತದೆ, ತುಳಿಯಬೇಡಿ ಅನ್ನುವುದಕ್ಕೆ ಬಂದಿದ್ದ.
ಅವರು ನಿಂತಿರಲಿಲ್ಲ.
ಸರಿಯಾದ ಹೊತ್ತಿಗೆ ಅವರನ್ನು ನೋಡಿದ್ದ.
ಯಾವಾಗಲೂ ಎಲ್ಲವನ್ನೂ ಸರಿಯಾದ ಹೊತ್ತಿಗೇ ನೋಡುತಿದ್ದ ಅದೃಷ್ಟವಂತ ಅವನು.
ಅವನು ಬಚ್ಚಿಟ್ಟುಕೊಂಡೇ ಇರಬಹುದಾಗಿತ್ತು.
ಬೆಟ್ಟದಲ್ಲಿ ಇನ್ನೊಂದಷ್ಟು ಮೇಲೆ ಹೋಗಿ ಅವರೆಲ್ಲ ಹೋಗುವವರೆಗೆ ಒಂದೆರಡು ಗಂಟೆ ಕಾದಿದ್ದು ಆಮೇಲೆ ಕೆಳಕ್ಕಿಳಿದು ಬರಬಹುದಾಗಿತ್ತು.
ಹೇಗಿದ್ದರೂ ಬೆಳೆ ಕೈಗೆ ಹತ್ತುತಿರಲಿಲ್ಲ.
ಇಷ್ಟು ಹೊತ್ತಿಗೆ ಮಳೆ ಬರಬೇಕಾಗಿತ್ತು ಬಂದಿರಲಿಲ್ಲ.
ಬೆಳೆ ಒಣಗುತಿತ್ತು ಇವತ್ತಲ್ಲದಿದ್ದರೆ ನಾಳೆ ಪೂರಾ ಸಾಯುತಿತ್ತು.
ಅದಕ್ಕೇ ಅವನು ಕೆಳಕ್ಕೆಳಿದುಬಂದು ಮತ್ತೆ ಯಾವತ್ತೂ ತಪ್ಪಿಸಿಕೊಳ್ಳಲು ಆಗದ ಹಾಗೆ ಅವರ ಕೈಗೆ ಸಿಕ್ಕಿಬೀಳಬೇಕಾಗಿರಲಿಲ್ಲ.
ನನ್ನನ್ನ ಬಿಟ್ಟುಬಿಡಿ ಅಂತ ಹೇಳಬೇಕಾದ ಮಾತನ್ನು ತಡೆದುಕೊಂಡು ಈಗ ಅವರ ಪಕ್ಕದಲ್ಲಿ ಹೆಜ್ಜೆ ಹಾಕುತಿದ್ದ.
ಅವರ ಮುಖ ಕಾಣುತ್ತಿರಲಿಲ್ಲ.
ಮೈಗಳು ಮಾತ್ರ ಕಾಣುತಿದ್ದವು.
ಅತ್ತ ಇತ್ತ ವಾಲಾಡಿಕೊಂಡು ನಡೆಯುತಿದ್ದರು.
ಅದಕ್ಕೇ ಅವನು ಮಾತಾಡಿದಾಗ ಅವರು ಕೇಳಿಸಿಕೊಂಡರೋ ಇಲ್ಲವೋ ಅವನಿಗೆ ತಿಳಿಯಲೇ ಇಲ್ಲ.
‘ಯಾವತ್ತೂ ಯಾರನ್ನೂ ನೋಯಿಸಿಲ್ಲ,’ ಅಂದ.
ಏನೂ ಬದಲಾವಣೆ ಇಲ್ಲ.
ಯಾವ ಮನುಷ್ಯಾಕಾರವೂ ಗಮನಕೊಟ್ಟ ಹಾಗೆ ಕಾಣಲಿಲ್ಲ.
ಮುಖ ತಿರುಗಿಸಿ ಅವನತ್ತ ನೋಡಲಿಲ್ಲ.
ಅವರ ಮುಖ ನಿದ್ದೆ ಮಾಡುವವರ ಮುಖದ ಹಾಗೆ ಬದಲಾಗದೆ ಹಾಗೇ ಇದ್ದವು.
ಆಮೇಲೆ ತಾನು ಹೇಳಬೇಕಾದದ್ದು ಇನ್ನೇನೂ ಇಲ್ಲ, ಬೇರೆ ಇನ್ನೆಲ್ಲಾದರೂ ಆಸೆಯನ್ನು ಹುಟ್ಟಿಸಿಕೊಳ್ಳಬೇಕು ಅಂದುಕೊಂಡ.
ರಾತ್ರಿಯ ಕತ್ತಲಲ್ಲಿ ಕಪ್ಪಾಗಿ ಕಾಣುತಿದ್ದ ನಾಲ್ಕು ಜನರ ಮಧ್ಯೆ ಅವನು ಕೈ ಜೋತು ಬಿಟ್ಟುಕೊಂಡು ನಡೆಯುತ್ತ ಹಳ್ಳಿಯ ಮನೆಗಳ ಮೊದಲ ಸಾಲು ದಾಟಿದ.
‘ಕರ್ನಲ್, ಆಸಾಮಿ ಇಲ್ಲಿದಾನೆ.’ಮುಚ್ಚಿದ್ದ ಬಾಗಿಲ ಮುಂದೆ ನಿಂತರು.
ಅವನು ಗೌರವಕ್ಕೆಂದು ಹ್ಯಾಟು ತೆಗೆದು ಕೈಯಲ್ಲಿ ಹಿಡಿದುಕೊಂಡು ಯಾರಾದರೂ ಹೊರಗೆ ಬರುತ್ತಾರೆಂದು ಕಾಯುತಿದ್ದ.
ಧ್ವನಿ ಮಾತ್ರ ಹೊರಗೆ ಬಂದಿತು.
‘ಯಾವ ಆಸಾಮಿ?’ ಅಂದಿತು.
‘ಪಾಲೊ ಡಿ ವೆನಾಡೊದವನು, ಕರ್ನಲ್.
ನೀವು ಆಜ್ಞೆ ಮಾಡಿದ್ದಿರಲ್ಲ ಅವನು.’
‘ಅವನು ಯಾವತ್ತಾದರೂ ಅಲಿಮಾದಲ್ಲಿ ಇದ್ದನೋ, ಕೇಳಿ,’ ಒಳಗಿನಿಂದ ಮತ್ತೆ ಧ್ವನಿ ಕೇಳಿಸಿತು.
ಅವನೆದುರು ನಿಂತಿದ್ದ ಸಾರ್ಜೆಂಟು, ‘ಏಯ್, ನೀನು ಯಾವತ್ತಾದರೂ ಅಲಿಮಾದಲ್ಲಿ ಇದ್ದೆಯೇನೋ?’ ಪ್ರಶ್ನೆಯನ್ನು ಮತ್ತೆ ಕೇಳಿದ.
‘ಹೂಂ. ನಾನು ಅಲ್ಲಿನವನೇ ಅಂತ ಕರ್ನಲ್ಗೆ ಹೇಳಿ.
ಮೊನ್ನೆ ಮೊನ್ನೆವರಗೂ ಅಲ್ಲೇ ಇದ್ದೆ.’
‘ಅವನಿಗೆ ಗ್ವಡಲೂಪೆ ಟೆರೆರೋ ಗೊತ್ತಾ ಅಂತ ಕೇಳಿ.’
‘ನಿನಗೆ ಗ್ವಡಲೂಪೆ ಟೆರೆರೋ ಗೊತ್ತಾ ಅಂತ ಕೇಳುತ್ತಿದಾರೆ.’
‘ಡಾನ್ ಲೂಪೆ?
ಹೂಂ, ನನಗೆ ಗೊತ್ತು ಅಂತ ಹೇಳಿ ತೀರಿಕೊಂಡಿದಾನೆ. ’
ಒಳಗಿದ್ದ ಧ್ವನಿಯ ಲಕ್ಷಣ ಬದಲಾಯಿತು.
ಜೊಂಡಿನ ಗೋಡೆಯ ಆಚೆ ಇರುವ ಇನ್ಯಾರ ಜೊತೆಗೋ ಮಾತಾಡುತ್ತಿರುವ ಹಾಗೆ ಇತ್ತು.
‘ಅವನು ಸತ್ತ ಅಂತ ಗೊತ್ತು ನನಗೆ.
ಗ್ವಡಲೂಪೆ ಟೆರೆರೋ ನಮ್ಮಪ್ಪ.
ದೊಡ್ಡವನಾದಮೇಲೆ ಅಪ್ಪನ್ನ ಹುಡುಕಿಕೊಂಡು ಹೋದೆ.
ಸತ್ತು ಹೋದ ಅಂದರು.’
ಯಾರ ಆಸರೆಯಲ್ಲಿ ಬೇರು ಬಿಟ್ಟು ಬೆಳೆಯಬೇಕೋ ಅವರೇ ಸತು ಹೋಗಿದಾರೆ ಅನ್ನುವುದನ್ನು ಗೊತ್ತುಮಾಡಿಕೊಂಡು ಬೆಳೆಯುವುದು ತೀರ ಕಷ್ಟ.
ನಮಗೆಲ್ಲ ಆಗಿದ್ದು ಅದೇನೇ.
‘ನಮಪ್ಪನನ್ನು ಮೊದಲು ಮಚ್ಚು ಕತ್ತಿಯಲ್ಲಿ ಕೊಚ್ಚಿ ಆಮೇಲೆ ದನ ತಿವಿಯುವ ಕೋಲನ್ನು ಹೊಟ್ಟೆಗೆ ಚುಚ್ಚಿ ಸಾಯಿಸಿದ್ದರು ಅನ್ನುವುದು ಆಮೇಲೆ ಗೊತ್ತಾಯಿತು.
ಒಣಗಿ ಹೋದ ಕಾಲುವೆಯಲ್ಲಿ ಬಿದ್ದಿದ್ದ, ಎರಡು ದಿನ ನೋವು ತಿನ್ನುತ್ತ ನರಳಿದ, ನಮ್ಮ ಮನೆ, ಮಕ್ನಳನ್ನ ನೋಡಿಕೊಳ್ಳಿ ಅನ್ನುತಿದ್ದ ಅಂದರು ಜನ.
‘ಕಾಲ ಕಳೆದ ಹಾಗೆ ಮರೆತು ಹೋಯಿತು ಅನ್ನಿಸುತದೆ.
ಮರೆಯುವುದಕ್ಕೆ ಪ್ರಯತ್ನ ಪಡುತ್ತೇವೆ.
ಇದನ್ನೆಲ್ಲ ಮಾಡಿದ ಮನುಷ್ಯ ಇನ್ನೂ ಜೀವಂತವಾಗಿದಾನೆ, ತಾನು ಮಾತ್ರ ಶಾಶ್ವತವಾಗಿ ಇರುತ್ತೇನೆ ಅನ್ನುವ ಆಸೆಯಲ್ಲಿ ತನ್ನ ಆತ್ಮ ಕೊಬ್ಬಿಸುತ್ತ ಇರುತ್ತಾನ ಅನ್ನುವುದನ್ನ ಮಾತ್ರ ಮರೆಯುವುದಕ್ಕೆ ಆಗದು.