ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು.
ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ ಅವುಗಳಲ್ಲಿ ಹುರುಳಿಲ್ಲ ಎಂದು ನನಗೆ ಖಾತ್ರಿಯಾಗಿ ಗೊತ್ತಿತ್ತು.
ಕ್ಲೇರಾ ಮುಂಬಯಿಯಲ್ಲಿ ರೂಪದರ್ಶಿಯಾಗಿದ್ದು ಅಲ್ಲಿ ಜನ-ಜೀವನದಿಂದ ಬೇಸತ್ತು ಇಲ್ಲಿ ಉದ್ಯೋಗಕ್ಕೆ ಸೇರಿದ್ದಾಳೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಕಂಪನಿಯ ಮನೇಜಿಂಗ್ ಡೈರೆಕ್ಟರ್‌ರ ಉಪಪತ್ನಿ ಎಂಬ ಆಪಾದನೆಯನ್ನೂ ಅವಳ ಮೇಲೆ ಹೊರಿಸಿದ್ದರು.
ಇದಾವುದರ ಪರಿವೆಯಿಲ್ಲದೆ ಕ್ಲೇರಾ ತನ್ನ ಕೆಲಸವನ್ನು ಕರ್ತವ್ಯವೆಂಬಂತೆ ನಿರ್ವಹಿಸುತ್ತಿದ್ದಳು.
ಕ್ಲೇರಾಳ ಸನಿಹದಲ್ಲೇ ಕುಳಿತು ಕೆಲಸ ಮಾಡುತ್ತಿರುವ ನನಗೆ ಅವಳಿಗೆ ಕೆಲಸದ ಬಗ್ಗೆ ಆಗಾಗ್ಗೆ ಮಾರ್ಗದರ್ಶನ ನೀಡುವ ಜವಾಬ್ದಾರಿಯೂ ಇತ್ತು.
ಈ ಸಂದರ್ಭದಲ್ಲಿ ನಮ್ಮಿಬ್ಬರ ಮಧ್ಯೆ ಯಾವುದೇ ವೈಯಕ್ತಿಕ ವಿಷಯಗಳು ಚರ್ಚೆಗೆ ಬರುತ್ತಿರಲಿಲ್ಲ.
ಯಾವಾಗಲೂ ಗಂಭೀರ ಮುಖ ಮಾಡಿಕೊಂಡು ತನ್ನ ಪಾಡಿಗೆ ತನ್ನ ಕೆಲಸ ಮುಗಿಸಿ ಹೊರಟು ಹೋಗುತ್ತಿದ್ದಳು.
ಬೆಳಗ್ಗೆ ಎಲ್ಲರಿಗಿಂತ ಮೊದಲು ಬಂದು ಕಂಪ್ಯೂಟರಿನ ಎದುರು ಆಸೀನಳಾದರೆ ಮತ್ತೆ ಎದ್ದು ಹೋಗುವುದು ಸಂಜೆ ಎಲ್ಲರೂ ಹೋದ ಮೇಲೆಯೇ.
ಯಾರೊಂದಿಗೂ ಮಾತಿಲ್ಲ, ಹರಟೆಯಿಲ್ಲ, ನಗುವಿಲ್ಲ, ಏನಾದರೂ ಮಾಡಿ ಅವಳ ವೈಯಕ್ತಿಕ ವಿಷಯವನ್ನು ಕೆದಕ ಬೇಕೆಂದು ನನ್ನ ಮನಸ್ಸು ಬಯಸಿದರೂ ಅವಳ ನಿರ್ಲಿಪ್ತ ಗಂಭೀರ ಮುಖ ನೋಡಿದೊಡನೆ ನನ್ನ ಧೈರ್ಯವೆಲ್ಲಾ ಕರಗಿ ಹೋಗುತ್ತಿತ್ತು.
ಅವಳು ತನ್ನಷ್ಟಕ್ಕೆ ನನ್ನಲ್ಲಿ ಆಸಕ್ತಿ ಹೊಂದಲಿ ಎಂದು ನಾನು ಮಾಡಿದ ಹಲವು ಪರೋಕ್ಷ ಪ್ರಯೋಗಗಳು ಕೂಡಾ ಫಲ ನೀಡಲಿಲ್ಲ.
ಬಹುಶಃ ನನ್ನ ಈ ಹುಚ್ಚಾಟಿಕೆ ಅವಳಿಗೆ ತಿಳಿದಿದೆಯೋ ಇಲ್ಲವೋ ಎಂದು ನನಗೆ ಧೈರ್ಯವಾಗಿ ಹೇಳಲಿಕ್ಕಾಗದು.
ನನ್ನ ಈ ಪ್ರಯೋಗಕ್ಕೆ ಮುಖ್ಯ ಕಾರಣ ನಾನು ಅವಳನ್ನು ಮೆಚ್ಚಿಕೊಂಡದ್ದು.
ಅವಳ ಎತ್ತರ, ಬಣ್ಣ, ರೂಪ ಯಾವ ಸಿನಿಮಾ ನಟಿಯರಿಗಿಂತಲೂ ಕಮ್ಮಿ ಇರಲಿಲ್ಲ.
ಆದರೆ ನನ್ನ ಏಕಮುಖ ಪ್ರೀತಿಯನ್ನು ಅರುಹಲು ನನಗೆ ಅವಕಾಶವನ್ನೇ ಅವಳು ನೀಡಿರಲಿಲ್ಲ.
ಅವಳು ಯಾವ ಊರಿನವಳು, ಎಲ್ಲಿ ವಾಸ, ಕುಟುಂಬದ ಮಾಹಿತಿ ಎಲ್ಲಾ ತಿಳಿದುಕೊಳ್ಳಬೇಕೆಂದು ಹಲವು ಬಾರಿ ಪ್ರಯತ್ನಿಸಿ ವಿಫಲನಾಗಿದ್ದೆ.
ಅಕಸ್ಮತ್ತಾಗಿ ತನ್ನ ವೈಯಕ್ತಿಕ ವಿಷಯ ಮಾತಿನಲ್ಲಿ ಬಂದಾಗಲೆಲ್ಲಾ ಗಂಭೀರವಾಗಿ ಬಿಡುತ್ತಿದ್ದಳು.
ಅವಳ ನಗುವಿಲ್ಲದ ಮುಖ ಛಾಯೆಯಿಂದಾಗಿ ನನ್ನ ಮುಂದಿನ ಪ್ರಶ್ನೆ ತನ್ನಿಂದ ತಾನೇ ಮರೆತು ಹೋಗುತ್ತಿತ್ತು.
ಒಂದು ದಿನ ಬೆಳಿಗ್ಗೆ ಅವಳು ಎಂದಿನಂತೆ ಕಂಪ್ಯೂಟರ್ ಎದುರು ಕುಳಿತಿದ್ದಳು.
ನಾನು ಬಂದವನೇ ನನ್ನ ಕೆಲಸದಲ್ಲಿ ಮಗ್ನನಾಗಿದ್ದೆ.
ಅವಳು ನನ್ನ ಬಲಬದಿಗೆ ಬಾಗಿ ಮೆಲು ಸ್ವರದಲ್ಲಿ ಅಂದಳು.
“ನಾಳೆ ಊರಿಗೆ ಹೋಗುತ್ತಿದ್ದೇನೆ, ಸಮಯವಕಾಶ ಇದ್ದರೆ ಬರುವಿರೇನು?” ನನಗೆ ಆಶ್ಚರ್ಯವಾಯಿತು.
ಮೂರು ವರ್ಷದ ಕಚೇರಿ ಒಡನಾಟದಲ್ಲಿ ಅವಳು ಕೇಳಿದ ಮೊದಲ ವೈಯಕ್ತಿಕ ಪ್ರಶ್ನೆ ಅದಾಗಿತ್ತು.
ಅಚಾನಕ್ ಬಿದ್ದ ಪ್ರಶ್ನೆಯಿಂದ ನಾನು ಒಮ್ಮೆ ದಿಗಿಲುಗೊಂಡರೂ ಕೂಡಲೆ ಸಾವರಿಸಿಕೊಂಡೆ.
ಆದರೆ ನನಗಾದ ಸಂತೋಷವನ್ನು ನನ್ನ ಮುಖದಲ್ಲಿ ವ್ಯಕ್ತಪಡಿಸಲಿಲ್ಲ.
ನನ್ನ ಮನಸ್ಸಿನ ಇಂಗಿತವನ್ನು ಅವಳಿಗೆ ಸುಲಭವಾಗಿ ತಿಳಿಸಬಾರದು.
ನಾನು ಏನು ಎಂಬಂತೆ ಅವಳ ಮುಖ ನೋಡಿದೆ.
ನಗುವಿಲ್ಲ, ಅದೇ ನಿರ್ಲಿಪ್ತ ಮುಖ.
ಅವಳಂದಳು “ಸ್ತ್ರೀ ಪುರುಷ ಸಂಬಂಧಗಳಲ್ಲಿ ಸ್ವಪ್ರೇರಿತ ಪ್ರಾಮಾಣಿಕತೆಯೇ ನಿಜವಾದ ಆದರ್ಶ, ಎಡರು ತೊಡರುಗಳು, ದುಃಖ ದುಮ್ಮಾನಗಳು ಮನುಷ್ಯನನ್ನು ಪರಿಶುದ್ಧನನ್ನಾಗಿಸುತ್ತದೆ.
ನೀವು ನನ್ನೊಂದಿಗೆ ಖಂಡಿತ ಬರುತ್ತೀರಿ ತಾನೇ?” ನಾನು ತಲೆಯಲ್ಲಾಡಿಸಿ ಸಮ್ಮತಿ ಸೂಚಿಸಿದೆ.
ಮತ್ತೆ ಮಾತಿಲ್ಲ, ಮೌನ, ನಾವು ಕಚೇರಿ ಕೆಲಸದಲ್ಲಿ ಲೀನವಾದೆವು.
ಮರುದಿನ ಸುಮಾರು ಒಂದು ಗಂಟೆಯ ಬಸ್ಸು ಪ್ರಯಾಣ ಮುಗಿಸಿ ನಾನು ಮತ್ತು ಕ್ಲೇರಾ ಯಾವುದೋ ಕುಗ್ರಾಮದಲ್ಲಿ ಇಳಿದೆವು.
ಸುತ್ತಲೂ ಕಾಡು, ಸೂರ್ಯನ ಬಿಸಿಲನ್ನುತಡೆ ಹಿಡಿದು ಪ್ರಯಾಣಿಕನಿಗೆ ತಂಪೆರೆಯುವ ಆ ಬ್ರಹತ್ ಗಾತ್ರದ ಮರ-ಬಳ್ಳಿಗಳ ನಡುವಿನ ಕಾಲು ದಾರಿಯಲ್ಲಿ ನಡೆಯುತ್ತಿದ್ದೆವು.
ಸುಮಾರು ಒಂದು ಫರ್ಲಾಂಗು ನಡೆದ ಮೇಲೆ ಒಂದು ಸಣ್ಣ ತೊರೆ ಅಡ್ಡ ಬಂತು.
ಬಿದಿರಿನ ತೆಪ್ಪದಲ್ಲಿ ಪ್ರಯಾಣ “ಭಯವಾಗುತ್ತಿದೆ” ನಾನಂದೆ.
ಕ್ಲೇರಾ ಉತ್ತರಿಸಲಿಲ್ಲ.
“ಹೂ” ಅಂದಳು.
ತೆಪ್ಪವನ್ನು ಅವಳೇ ನಡೆಸುತ್ತಿದ್ದಳು.
ಅವಳ ಮುಖದಲ್ಲಿ ಏನೋ ಆಲೋಚನೆಯಿತ್ತು.
ನಾನು ಸುತ್ತಲೂ ನೋಡಿದೆ.
ಶಾಂತವಾದ ನೀರನ್ನು ಸೀಳಿಕೊಂಡು ತೆಪ್ಪ ಮುಂದೆ ಹೋಗುತ್ತಿತ್ತು.
ನೀಲ ಆಕಾಶ, ಸುತ್ತಲೂ ಬೆಟ್ಟ ಹಾಗೂ ಬಯಲುಗಳು, ನೀಲ ಆಕಾಶಕ್ಕೆ ಹಸಿರಿನ ಹೊದಿಕೆ.
ಮಧ್ಯದಲ್ಲಿ ತಣ್ಣಗೆ ಹರಿವ ತೊರೆ, ತಪ್ಪದಲ್ಲಿ ನಾವಿಬ್ಬರು ಮೌನದಲ್ಲಿ ಒಂದು ರೀತಿಯ ಸಂತೋಷ, ಕ್ಲೇರಾಳನ್ನು ಕೇಳಿಯೇ ಬಿಡೋಣ ಎಂದೆನಿಸಿದರೂ ಯಾವ ರೀತಿಯ ಪ್ರತಿಕ್ರಿಯೆ ಬರಬಹುದೆಂಬ ಗೊಂದಲದಲ್ಲಿ ಬಿದ್ದೆ.
ತೆಪ್ಪ ದಡ ತಲುಪಿತು.
ಇಳಿದು ಮುಂದೆ ನಡೆದೆವು, ಹಸಿರು ಜಮಾಖಾನ ಹರಡಿದಂತೆ ಕಾಣುವ ಭತ್ತದ ಗದ್ದೆಗಳು, ತೆನೆಗಳು ಗಾಳಿಗೆ ತೂಗುತ್ತಿದ್ದವು.
ಗದ್ದೆಯ ಹುಣಿಯಲ್ಲಿ ಸಾಗುತ್ತಿದ್ದೆವು.
ಕ್ಲೇರಾ ಮುಂದೆ, ನಾನು ಹಿಂದೆ, ಹುಣಿಯ ಮೇಲಿದ್ದ ಕಪ್ಪೆಗಳು ಆಗಂತುಕರ ಕಾಲ ಸಪ್ಪಳಕ್ಕೆ ಹೆದರಿ ಗದ್ದೆಯೊಳಗೆ ಒಂದೊಂದೇ ‘ಫಲಕ್…ಫಲಕ್’ ಎಂದು ನೆಗೆಯುತ್ತಿದ್ದವು.
ಈ ಮೌನವನ್ನು ದೀರ್ಘಕಾಲದವರೆಗೆ ಮುಂದುವರಿಸಲು ನನ್ನಿಂದ ಸಾಧ್ಯವಾಗಲಿಲ್ಲ.
“ಕ್ಲೇರಾ” ಅಂದೆ.
ಅವಳು ಒಮ್ಮೆಲೆ ನಿಂತು ತಿರುಗಿ ನೋಡಿದಳು.
ಏನು ಎಂಬಂತೆ ಅವಳ ಮುಖ ಭಾವವಿತ್ತು.
ಗಂಡಸು ನೂರು ಮಾತಿನಲ್ಲಿ ಹೇಳಿದುದನ್ನು ಸ್ತ್ರೀ ಒಂದೇ ನೋಟದಿಂದ ಹೇಳುತ್ತಾಳೆ.
“ನಾನೊಂದು ಪ್ರಶ್ನೆ ಕೇಳಲೇ?” ನಾನಂದೆ.
“ಬೇಡ. ನೀವು ಏನು ಕೇಳುವಿರಿ ಎಂದು ನನಗೆ ಗೊತ್ತಿದೆ” ಅವಳಂದಳು.
ಅವಳ ಮುಖ ಗಂಭೀರವಾಯಿತು.
ಸ್ವಲ್ಪ ಹೊತ್ತು ಮೌನ.
ನಂತರ ಅವಳು ನಿಧಾನವಾಗಿ ನಡೆಯ ತೊಡಗಿದಳು.
ಈ ನಡಿಗೆಯಲ್ಲಿ ಯೋಚನೆಗಳಿದ್ದುವು.
ಕ್ಷಣ ತಡೆದು ಕ್ಲೇರಾ ಕೇಳಿದಳು.
“ನೀವು ನನ್ನನ್ನು ಯಾಕೆ ಪ್ರೀತಿಸುತ್ತೀರಿ?”ನನಗೆ ಆಶ್ಚರ್ಯವಾಯಿತು.
ಇದುವರೆಗೂ ನಮ್ಮಲ್ಲಿ ವೈಯಕ್ತಿಕ ವಿಷಯದ ಬಗ್ಗೆ ಚರ್ಚೆ ನಡೆದಿರಲಿಲ್ಲ.
ಬರೇ ನನ್ನ ಹಾವ-ಭಾವ, ಮುಖ ಚರ್ಯೆಯಿಂದಲೇ ನನ್ನ ಮನದಾಳಕ್ಕೆ ಕ್ಲೇರಾ ಲಗ್ಗೆ ಹಾಕಿದ್ದಳು.
ಆಕಸ್ಮಿಕವಾಗಿ ಬಿದ್ದ ಪ್ರಶ್ನೆಯ ಹೊಡೆತದಿಂದ ಚೇತರಿಸಲು ನಾನು ಒದ್ದಾಡುತ್ತಿದ್ದೆ.
ಅವಳು ಸ್ವಲ್ಪ ಏರಿದ ಧ್ವನಿಯಲ್ಲಿ ಮತ್ತೆ ಕೇಳಿದಳು.
“ಹೇಳಿ. ನೀವು ನನ್ನನ್ನು ಯಾಕೆ ಪ್ರೀತಿಸುತ್ತೀರಿ?”
“ಕ್ಲೇರಾ, ನಿಜ ಹೇಳುತಿದ್ದೇನೆ.
ನಿಮ್ಮ ವ್ಯಕ್ತಿತ್ವ, ಗುಣ ನನಗೆ ಇಷ್ಟವಾಯಿತು ಅದಕ್ಕೆ. ”
“ಸುಳ್ಳು. ನಾನಿದನ್ನು ನಂಬುವುದಿಲ್ಲ.
ಬೇರೆಯವರ ಭಾವನೆಯ ಜೊತೆ ನೀವು ಆಟವಾಡುವುದು ಸರಿಯಲ್ಲ.
ಆಟವನ್ನು ನೀವು ಗೆಲ್ಲಬಹುದು.
ಆದರೆ ಆ ವ್ಯಕ್ತಿಯನ್ನು ಮಾತ್ರ ಕಳೆದುಕೊಳ್ಳಬೇಕಾಗುತ್ತದೆ.
ನಿಮ್ಮ ಉದ್ದೇಶ ಸಾಧನೆಗೆ ಇತರರನ್ನು ಬಲಿಗೊಡದಿರುವುದು ಮಾನವೀಯತೆ, ಹಣದಿಂದ ಎಲ್ಲವನ್ನೂ ಪಡೆಯಬಹುದು.