Commit 987d3261 authored by Narendra VG's avatar Narendra VG

Upload New File

parent 2ed86af6
ಒಂದೂ ಕಾಲು ಶತಮಾನಕ್ಕೂ ಹೆಚ್ಚು ಕಾಲ ಪಾಶ್ಚಾತ್ಯ ಶಿಕ್ಷಣಪದ್ಧತಿ ಭಾರತದ ಆದ್ಯಂತವೂ ಅಸ್ತಿತ್ವದಲ್ಲಿದ್ದರೂ ಅದು ಇಲ್ಲಿನವರ ಅಗತ್ಯಗಳನ್ನು ಪುರೈಸಿರಲಿಲ್ಲ ;
ಆಶೋತ್ತರಗಳನ್ನು ಈಡೇರಿಸಿರಲಿಲ್ಲ .
ಉನ್ನತ ಶಿಕ್ಷಣದಲ್ಲಿ ಇಂಗ್ಲಿಷ್ ಬೋಧನಮಾಧ್ಯಮವಾದ್ದರ ಫಲವಾಗಿ ಜನಸಾಮಾನ್ಯಕ್ಕೂ ಶಿಕ್ಷಣಪಡೆದವರಿಗೂ ಅಂತರ ಏರ್ಪಟ್ಟು ಜ್ಞಾನದ ಸಾರ್ವತ್ರಿಕ ಪ್ರಸಾರಕ್ಕೆ ಅವಕಾಶವಿಲ್ಲವಾಗಿತ್ತು .
ಅನ್ಯಭಾಷೆಯಾದ ಇಂಗ್ಲಿಷಿಗೆ ಕೊಟ್ಟಿದ್ದ ಅನುಚಿತ ಪ್ರಾಧಾನ್ಯದ ಫಲವಾಗಿ , ಅದು ವಿದ್ಯಾವಂತರ ಮೇಲೆ ಒಂದು ಹೊರೆಯಾಗಿ ಪರಿಣಮಿಸಿ ಅವರ ಮನಶ್ಶಕ್ತಿಯನ್ನು ಕುಂದಿಸಿ ತಮ್ಮ ನಾಡಿನಲ್ಲೆ ಅವರು ಅಪರಿಚಿತರಂತಾಗುವಂತೆ ಮಾಡಿತ್ತು .
ವೃತ್ತಿಶಿಕ್ಷಣಕ್ಕೆ ಅಷ್ಟಾಗಿ ಅವಕಾಶವಿಲ್ಲದಿದ್ದ ಆ ಪದ್ಧತಿ ವಿದ್ಯಾವಂತರನ್ನು ಉನ್ನತಕಾರ್ಯಗಳಿಗೆ ಯೋಗ್ಯರಲ್ಲದವರನ್ನಾಗಿ ಮಾಡಿ ಅವರ ದೈಹಿಕ ಶಕ್ತಿಯನ್ನು ಕುಂದಿಸುತ್ತಿತ್ತು .
ಪ್ರಾಥಮಿಕ ಶಿಕ್ಷಣದಿಂದ ಕಲಿತ ಅಷ್ಟಿಷ್ಟೂ ಮರೆತುಹೋಗಿ , ಅದರ ನಗರ ಅಥವಾ ಗ್ರಾಮಜೀವನದಲ್ಲಿ ಅನುಪಯುಕ್ತವೆನಿಸುತ್ತಿತ್ತು .
ಆ ಮಟ್ಟಿಗೆ ಅದರ ಮೇಲೆ ಹೂಡಿದ ಹಣ ವ್ಯರ್ಥ ವ್ಯಯವಾಗುತ್ತಿತ್ತು .
ಅಲ್ಲದೆ ಆ ಪದ್ಧತಿಯಿಂದ ತೆರಿಗೆ ತೆರುವವನಿಗಾಗಲಿ ಅವನ ಮಕ್ಕಳಿಗಾಗಲಿ ಅನುಕೂಲ ಆಗುತ್ತಿರಲಿಲ್ಲ .
ಎಲ್ಲೊ ಕೆಲವರಿಗೆ ಸರ್ಕಾರದ ಉದ್ಯೋಗ ದೊರಕುತ್ತಿತ್ತೇ ಹೊರತು ಬಹುತೇಕ ಜನತೆ ನಿರುದ್ಯೋಗ , ಅಜ್ಞಾನ , ದಾರಿದ್ರ್ಯ ಇವುಗಳಲ್ಲಿ ತೊಳಲುವಂತೆ ಮಾಡಿತ್ತಲ್ಲದೆ ಅಸಮಾನತೆ , ಅನುಚಿತಸ್ಪರ್ಧೆ , ಅಸೂಯೆ , ಹಿಂಸೆ ಇವುಗಳಿಗೆ ಪ್ರೋತ್ಸಾಹವೀಯುವಂತೆ ಮಾಡಿತ್ತು .
ಆದರೆ ಗಾಂಧೀಜಿಯವರ ಕಲ್ಪನೆಯ ಸರ್ವೋದಯ ಸಮಾಜರಚನೆಗೆ ಸಮಾನತೆ , ಸಹಕಾರ , ಪ್ರೇಮ , ಅಹಿಂಸೆ ಈ ಅಂಶಗಳು ಆಧಾರವಾಗಬೇಕಿತ್ತು .
ಅದಕ್ಕೆ ಜನತೆಯಲ್ಲಿ ಜ್ಞಾನ , ಉದ್ಯೋಗ , ಪ್ರಸಾರ , ದಾರಿದ್ರ್ಯ ನಿವಾರಣೆ ಇವು ಅಗತ್ಯವಾಗಿ ಆಗಬೇಕಾಗಿತ್ತು .
ಅದಕ್ಕೆ ಶಿಕ್ಷಣ ಸೂಕ್ತ ರೀತಿಯಲ್ಲಿ ಮಾರ್ಪಾಡಾಗಬೇಕಾಗಿತ್ತು .
ಏಕೆಂದರೆ ಸಮಾಜ ಪರಿವರ್ತನೆಗೆ ಅದು ಉಪಕರಣವೆಂಬುದನ್ನು ಅವರು ಗ್ರಹಿಸಿದ್ದರು .
ಅಂಥ ಶಿಕ್ಷಣಪದ್ಧತಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಏಳು ವರ್ಷಗಳ ಕಾಲಾವಧಿಗಾದರೂ ಹೆಚ್ಚಿಸಿ , ಅದರಿಂದ ಮೆಟ್ರಿಕ್ಯುಲೇಷನ್ ಹಂತದಲ್ಲಿ ದೊರೆಯುವಷ್ಟು ಸಾಮಾನ್ಯ ಜ್ಞಾನವೂ ( ಇಂಗ್ಲಿಷನ್ನುಳಿದು ) ವೃತ್ತಿಯೊಂದರಲ್ಲಿ ಶಿಕ್ಷಣವೂ ದೊರಕುವಂತೆ ಅವಕಾಶಕಲ್ಪನೆಯಾಗಬೇಕೆಂದು ತೀರ್ಮಾನಿಸಿಕೊಂಡರು .
ಈ ಬದಲಾವಣೆಗಳನ್ನು ಅಂದು ಇದ್ದ ಶಿಕ್ಷಣ ಪದ್ಧತಿಗೆ ತೇಪೆಹಾಕಿ ನೇರಮಾಡುವುದು ಅಸಾಧ್ಯವೆಂದುಕೊಂಡು ಪ್ರತ್ಯೇಕ ಶಿಕ್ಷಣಪದ್ಧತಿಯೊಂದರ ಅನುಷ್ಠಾನಕ್ಕೆ ಯತ್ನಿಸಿದರು .
ರಾಷ್ಟ್ರದ ಅಂದಿನ ತೀವ್ರ ಸಮಸ್ಯೆಗಳನ್ನೂ ನಿವಾರಿಸಿ ತಮ್ಮ ಕನಸಿನ ಸರ್ವೋದಯ ಸಮಾಜವನ್ನು ರಚಿಸಬಲ್ಲ ಆ ಪದ್ಧತಿಯಲ್ಲಿ ಗ್ರಾಮೋದ್ಯೋಗಗಳಿಗೆ ಪ್ರಾಧಾನ್ಯವಿರಬೇಕೆಂದು ಭಾವಿಸಿದರು .
ಏಕೆಂದರೆ , ಇಲ್ಲಿನ ಶೇ.80 ರಷ್ಟು ಜನತೆ ಗ್ರಾಮವಾಸಿ ಗಳಾಗಿದ್ದರು .
ರಾಷ್ಟ್ರದ ಪ್ರಧಾನ ಸಮಸ್ಯೆಗಳನ್ನೂ ಪರಿಹರಿಸಿ ಸಮಾಜದಲ್ಲಿ ಪರಿವರ್ತನೆ ಮಾಡಬಲ್ಲ ಆ ಶಿಕ್ಷಣವನ್ನು ಅವರು ‘ ಗ್ರಾಮೀಣ ರಾಷ್ಟ್ರೀಯ ಶಿಕ್ಷಣ ’ ಎಂದು ಕರೆದರು .
ಸಮಕಾಲೀನ ಶಿಕ್ಷಣವೇತ್ತರು ರಾಷ್ಟ್ರೀಯ ಶಿಕ್ಷಣ ಎಂಬುದಕ್ಕೆ ಬೇರೆ ಬೇರೆ ಅರ್ಥ ವ್ಯಾಪ್ತಿಯನ್ನು ಕಲ್ಪಿಸಿದ್ದರು .
ಗಾಂಧಿಜಿಯವರ ಮೇಲಿನ ಅರ್ಥಕಲ್ಪನೆ ಅದೆಲ್ಲಕ್ಕಿಂತ ಭಿನ್ನವಾಗಿದೆ .
ಅವರ ಮಾತಿನಲ್ಲೆ ಹೇಳುವುದಾದರೆ ‘ ಇದು ಗ್ರಾಮೀಣ .
ಏಕೆಂದರೆ ಉನ್ನತ ಅಥವಾ ಇಂಗ್ಲಿಷ್ ಶಿಕ್ಷಣವನ್ನು ತ್ಯಜಿಸಿರುತ್ತದೆ ; ರಾಷ್ಟ್ರೀಯ .
ಏಕೆಂದರೆ ಸತ್ಯ , ಅಹಿಂಸೆ , ಗ್ರಾಮೋದ್ಯೋಗಗಳ ಮೂಲಕ ( ಎಂದರೆ ಅದನ್ನು ಕಲಿಸುವ ಅಧ್ಯಾಪಕರು ಮಕ್ಕಳಿಗೆ ತಾವು ಆರಿಸಿಕೊಂಡ ಕಸಬಿನ ಮೂಲಕ ) ಯಾವ ನಿರ್ಬಂಧ ಹಸ್ತಕ್ಷೇಪಗಳೂ ಇಲ್ಲದೆ ಅವರ ಸರ್ವಸಾಮರ್ಥ್ಯಗಳೂ ವಿಕಸಿಸುವಂತೆ ಮಾಡುವರು , ಇದು ಯಾವ ದೃಷ್ಟಿಯಲ್ಲೂ ಪಾಶ್ಚಾತ್ಯ ವಿಧಾನದಿಂದ ಪ್ರಭಾವಿತವಾದುದಲ್ಲವೆಂಬುದು ಇದರಿಂದ ಸ್ಪಷ್ಟಪಡುತ್ತದೆ .
ವ್ಯಕ್ತಿಯ ಸರ್ವತೋಮುಖವಾದ ಬೆಳೆವಣಿಗೆಯಾಗಲು ಸಾಧ್ಯವಾದಮಟ್ಟಿಗೆ ಎಲ್ಲ ಶಿಕ್ಷಣವನ್ನೂ ಒಂದು ಲಾಭದಾಯಕ ಕಸಬಿನ ಮೂಲಕ ಒದಗಿಸಬಹುದೆಂದು ಗಾಂಧೀಜಿ ತಮ್ಮ ಪ್ರಯೋಗಗಳಿಂದ ಸ್ಪಷ್ಟವಾಗಿ ಅರಿತು ಕೊಂಡಿದ್ದರು .
ಶಿಕ್ಷಣದ ಕೇಂದ್ರವನ್ನಾಗಿ ಮಾಡಿಕೊಳ್ಳಲು ಆರಿಸಿಕೊಳ್ಳುವ ಕಸಬು ವಿದ್ಯಾರ್ಥಿಯ ದೃಷ್ಟಿಯಲ್ಲಿ ಮೂರು ಉದ್ದೇಶಗಳನ್ನು ಸಾಧಿಸಬೇಕು :
ಮೊದಲನೆಯದಾಗಿ , ತನ್ನ ಶಿಕ್ಷಣದ ವೆಚ್ಚವನ್ನು ತನ್ನ ದುಡಿಮೆಯ ಫಲವಾದ ಉತ್ಪನ್ನದಿಂದ ಗಳಿಸಿಕೊಳ್ಳುವಂತಾಗಬೇಕು ;
ಎರಡನೆಯದಾಗಿ , ತನ್ನ ವ್ಯಕ್ತಿತ್ವದ ಎಲ್ಲ ಮುಖಗಳನ್ನು ಬೆಳೆಸಲು ಅದು ನೆರವಾಗಬೇಕು ;
ಮೂರನೆಯದಾಗಿ , ಮುಂದೆ ಅದು ತನ್ನ ಜೀವನೋಪಾಯಕ್ಕಾಗಿ ಅನುಸರಿಸಬಹುದಾದ ಉದ್ಯೋಗವೂ ಆಗಬೇಕು .
ಹತ್ತಿ , ಉಣ್ಣೆ , ರೇಷ್ಮೆ - ಇವುಗಳ ಬಳಕೆಗೆ ಸಂಬಂಧಿಸಿದಂತೆ ಸಂಗ್ರಹ , ಶುದ್ಧೀಕರಣ , ಬೀಜ ತೆಗೆಯುವುದು (ಹತ್ತಿಯ ವಿಷಯದಲ್ಲಿ ಮಾತ್ರ ) , ಎಕ್ಕುವುದು , ನೂಲುವುದು , ಬಣ್ಣಕಟ್ಟುವುದು , ಗಂಜಿಕಟ್ಟುವುದು , ಹಾಸುಮಾಡುವುದು , ಇಮ್ಮಡಿ ನುಲಿಕೆ , ಮಾದರಿ ರಚನೆ , ಮತ್ತು ನೇಯ್ಗೆ - ಇತ್ಯಾದಿಯಾದ ಎಲ್ಲ ಕೆಲಸಗಳೂ ಕಸೂತಿ , ಹೊಲಿಗೆ , ಕಾಗದ ತಯಾರಿಕೆ , ಪುಸ್ತಕಕ್ಕೆ ರಟ್ಟು ಕಟ್ಟುವುದು , ಮರಗೆಲಸ , ಆಟಿಕೆಗಳ ತಯಾರಿಕೆ , ಮನೆಕಟ್ಟುವುದು - ಇವೆಲ್ಲ ಸರಾಗವಾಗಿ ಕಲಿಯಬಹುದಾದ ಹಾಗೂ ಅಷ್ಟಾಗಿ ಬಂಡವಾಳ ಬೇಡದ ಕಸಬುಗಳು .
ಪ್ರಾಥಮಿಕ ಕಲಿಕೆ ಬಾಲಕಬಾಲಕಿಯರಿಗೆ ಜೀವನೋಪಾಯಕ್ಕೆ ನೆರವಾಗಬಲ್ಲ ಶಿಕ್ಷಣ ಒದಗಿಸಬೇಕು .
ಅವರು ಕಲಿತಿರುವ ಕಸಬಿಗೆ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಸರ್ಕಾರ ಆಶ್ವಾಸನೆ ನೀಡಬೇಕು .
ಅಥವಾ ಅವರು ತಯಾರಿಸುವ ಉತ್ಪನ್ನಗಳನ್ನು ಸೂಕ್ತ ಬೆಲೆಗೆ ಕೊಂಡುಕೊಳ್ಳಬೇಕು .
ಆಗ ಶಿಕ್ಷಣ ವ್ಯಕ್ತಿಗೂ ಸಮಾಜಕ್ಕೂ ಅನುಕೂಲವಾಗುವುದಲ್ಲದೆ ಆರ್ಥಿಕವಾಗಿ ಸ್ವಾವಲಂಬಿಯೂ ಆಗಿರಬಲ್ಲದು .
ಇವು ಗಾಂಧೀಜಿಯವರ ಮನಸ್ಸಿನಲ್ಲಿ 20ನ ೆಯ ಶತಮಾನದ ಆದಿಯಿಂದಲೂ ಶಿಕ್ಷಣದ ಬಗ್ಗೆ ಪುಟಗೊಳ್ಳುತ್ತಿದ್ದ ಭಾವನೆಗಳು .
1902 ರಲ್ಲೆ ಟಾಲ್ಸ್ಟಾಯ್ ಫಾರಮ್ಮಿನಲ್ಲಿ ಅಂಥ ಶಿಕ್ಷಣ ಸ್ವಾವಲಂಬಿಯಾಗಬಲ್ಲದೆಂದು ದೃಢಪಡಿಸಿಕೊಂಡಿದ್ದರೂ ಆ ಬಗ್ಗೆ ನಿರ್ದಿಷ್ಟವಾಗಿ ಪ್ರಕಟಿಸಿದ್ದು 1921 ರಲ್ಲಿ .
ಹರಿಜನ ಪತ್ರಿಕೆಯಲ್ಲಿ ಮೊಟ್ಟಮೊದಲನೆಯದಾಗಿ ತಮ್ಮ ಶಿಕ್ಷಣದ ಸ್ಥೂಲ ರೂಪರೇಷೆಗಳನ್ನು ವಿವರಿಸಿದರು .
ಆದರೆ ಅದನ್ನು ಸಾರ್ವತ್ರಿಕವಾಗಿ ಆಚರಣೆಗೆ ತರಲು ಅಂದು ದೇಶದಲ್ಲಿ ಪರಕೀಯ ಆಡಳಿತ ಅಸ್ತಿತ್ವದಲ್ಲಿದ್ದುದರಿಂದ ಅವಕಾಶವಾಗಲಿಲ್ಲ .
ಮೇಲಾಗಿ ಅವರು ಇಂಗ್ಲಿಷರ ಆಡಳಿತದ ವಿರುದ್ಧ ಚಳವಳಿ ಹೂಡಿ ಸ್ವಾತಂತ್ರ್ಯ ಸಂಗ್ರಾಮ ನಡೆಸುತ್ತಿದ್ದುದರಿಂದ ಸರ್ಕಾರ ಅವರ ಪದ್ಧತಿಗೆ ಪುರಸ್ಕಾರ ನೀಡುವುದಾದರೂ ಸಾಧ್ಯವೇ ?
ಆದರೂ ಅವರು ವರ್ಧಾದಲ್ಲಿ ಅದನ್ನು ಪ್ರಾಯೋಗಿಕವಾಗಿ ಆಚರಣೆಗೆ ತಂದೇ ಇದ್ದರು .
ತಮ್ಮ ನೆಚ್ಚಿನ ಆ ಶಿಕ್ಷಣಪದ್ಧತಿಯನ್ನು ದೇಶಾದ್ಯಂತ ಆಚರಣೆಗೆ ತರಲು ಸೂಕ್ತ ಸನ್ನಿವೇಶಗಳಿಗಾಗಿ ಕಾದಿದ್ದರು .
1937 ರಲ್ಲಿ ಪ್ರಾಂತೀಯ ಸ್ವಾತಂತ್ರ್ಯ ಆಚರಣೆಗೆ ಬಂತು .
ಪ್ರಾಂತ್ಯಗಳಲ್ಲಿ ಜನನಾಯಕರು ಶಿಕ್ಷಣ ಸಚಿವರಾಗಿ ಜನತೆಯ ಆಶೋತ್ತರಗಳನ್ನು ಈಡೇರಿಸುವಂತೆ ಶಿಕ್ಷಣ ವ್ಯವಸ್ಥೆ ಮಾಡಲು ಸಿದ್ಧರಾದರು .
ಅಂದಿಗಾಗಲೆ ಕಡ್ಡಾಯ ಶಿಕ್ಷಣವನ್ನು ದೇಶಾದ್ಯಂತ ಆಚರಣೆಗೆ ತರಬೇಕೆಂಬ ಕೂಗು ಎಲ್ಲೆಲ್ಲೂ ಆರಂಭವಾಗಿತ್ತು .
ಹಣದ ಅಭಾವದ ಕಾರಣವನ್ನು ಮುಂದೊಡ್ಡಿ ಸರ್ಕಾರ ಅದನ್ನು ನಿರ್ಲಕ್ಷಿಸುತ್ತ ಬಂದಿತ್ತು .
ಈಗ ಜನನಾಯಕರು ಆಡಳಿತಕ್ಕೆ ಬಂದಿದ್ದುದರಿಂದ ಅವರು ಅದನ್ನು ಇನ್ನೂ ಮುಂದೂಡುವುದು ಅಸಾಧ್ಯವಾಯಿತು .
ಆದರೆ ಅದಕ್ಕೆ ಬೇಕಾದ ಹಣಕ್ಕೆ ಮಾತ್ರ ಅಭಾವವಿತ್ತು .
ಜೊತೆಗೆ ಕಾಂಗ್ರೆಸ್ ಸರ್ಕಾರಗಳು ಪಾನನಿರೋಧವನ್ನು ಆಚರಣೆಗೆ ತರಲು ತೀರ್ಮಾನಿಸಿದ್ದರಿಂದ ಅದರಿಂದ ಬರುತ್ತಿದ್ದ ಆದಾಯವೂ ನಿಂತುಹೋಗಿತ್ತು .
ಆದ್ದರಿಂದ ಸರ್ಕಾರ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿತ್ತು .
ಆ ಸಮಯದಲ್ಲಿ ಗಾಂಧೀಜಿ ಅಷ್ಟಾಗಿ ಹಣದ ವೆಚ್ಚವಿಲ್ಲದೆ ರಾಷ್ಟ್ರವ್ಯಾಪಕವಾಗಿ ಆಚರಣೆಗೆ ತರಬಹುದಾದ ತಮ್ಮ ಪ್ರಾಥಮಿಕ ಶಿಕ್ಷಣ ಯೋಜನೆಯನ್ನು ಜನತೆಯ ಮುಂದಿಟ್ಟರು .
ಅಂದಿಗಾಗಲೇ ಅವರ ಶಿಕ್ಷಣ ಪದ್ಧತಿಗೆ ತಕ್ಕಷ್ಟು ಪ್ರಚಾರ ದೊರೆತಿದ್ದು , ಬೇಕಾದ ಹಾಗೆ ಖಂಡನೆ ಮಂಡನೆಗಳು ಪ್ರಕಟವಾಗಿದ್ದುವು ಹಾಗೂ ಆ ಶಿಕ್ಷಣ ಪದ್ಧತಿಯ ಸ್ವಾವಲಂಬನೆಯ ಬಗ್ಗೆ ತೀವ್ರತರ ಟೀಕೆಗಳು ಬಂದಿದ್ದುವು .
ಆದ್ದರಿಂದ ಅದನ್ನು ಆಚರಣೆಗೆ ತರುವ ಮುನ್ನ ತಜ್ಞರು ಅದನ್ನು ಪರಿಶೀಲಿಸಬೇಕೆಂದು ಅವರ ಅಭಿಪ್ರಾಯವಾಗಿತ್ತು .
1937 ರ ಅಕ್ಟೋಬರ್ 23 ರಂದು ವರ್ಧಾದಲ್ಲಿ ರಾಷ್ಟ್ರೀಯ ಶಿಕ್ಷಣ ಸಮ್ಮೇಳನ ನಡೆಯಿತು .
ಗಾಂಧೀಜಿ ಹರಿಜನ ಪತ್ರಿಕೆಯ ಮೂಲಕ ಪ್ರಕಟಿಸಿದ್ದ ಶಿಕ್ಷಣ ಪದ್ಧತಿಯ ಬಗ್ಗೆ ಟೀಕೆಗಳು ಬರಹತ್ತಿದ್ದುವು .
ಆ ಪದ್ಧತಿಯನ್ನು ಸಮ್ಮೇಳನ ಚೆನ್ನಾಗಿ ಪರಿಶೀಲಿಸಿತು .
ಸಮ್ಮೇಳನದಲ್ಲಿ ಅಂದು ಕಾಂಗ್ರೆಸ್ ಅಧಿಕಾರದಲ್ಲಿದ್ದ ಏಳು ಪ್ರಾಂತ್ಯಗಳ ಶಿಕ್ಷಣ ಸಚಿವರೂ ರಾಷ್ಟ್ರೀಯ ಶಿಕ್ಷಣದಲ್ಲಿ ಆಸಕ್ತಿಯಿದ್ದ ಶಿಕ್ಷಣ ತಜ್ಞರೂ ಇತರರೂ ಇದ್ದರು .
ಗಾಂಧೀಜಿಯ ಶಿಕ್ಷಣಯೋಜನೆಯ ಮೇಲೆ ತೀವ್ರರೀತಿಯಲ್ಲಿ ಚರ್ಚೆ ನಡೆಯಿತು .
ಕಡೆಗೆ ಸಮ್ಮೇಳನ ಈ ಕೆಲವು ತೀರ್ಮಾನಗಳನ್ನು ಕೈಕೊಂಡಿತು : 1 ರಾಷ್ಟ್ರವ್ಯಾಪಕವಾಗಿ ಏಳು ವರ್ಷಗಳ ಉಚಿತ ಕಡ್ಡಾಯ ಶಿಕ್ಷಣವನ್ನು ದೊರಕಿಸಬೇಕು ;
2 ಬೋಧನಮಾಧ್ಯಮ ಮಾತೃಭಾಷೆಯಾಗಿರಬೇಕು ;
3 ಈ ಕಾಲಾವಧಿಯ ಶಿಕ್ಷಣ ಗಾಂಧೀಜಿ ಸಲಹೆ ಮಾಡಿರುವಂತೆ , ಒಂದು ಉತ್ಪನ್ನದಾಯಕ ಕೈಕಸಬನ್ನು ಕೇಂದ್ರಮಾಡಿಕೊಂಡಿರಬೇಕು .
ಮಕ್ಕಳಲ್ಲಿ ಮೂಡಿಸಬೇಕಾದ ಮಿಕ್ಕೆಲ್ಲ ಸಾಮಥ್ರ್ಯ ಗಳೂ ಕೊಡಬೇಕಾದ ತರಬೇತೂ ಸಾಧ್ಯವಾದ ಮಟ್ಟಿಗೆ ಮಗುವಿನ ಸನ್ನಿವೇಶದಿಂದ ಆರಿಸಿಕೊಂಡ ಆ ಕೈಕಸಬಿನೊಡನೆ ಸಂಬಂಧಿಸಿರಬೇಕು ;
4 ಈ ಶಿಕ್ಷಣ ಪದ್ಧತಿ ಕ್ರಮಕ್ರಮವಾಗಿ ಅಧ್ಯಾಪಕರ ಸಂಭಾವನೆಯ ಬಗ್ಗೆ ಸ್ವಯಂಪೂರ್ಣವಾಗಬೇಕು ಎಂದು ಸಮ್ಮೇಳನ ಆಶಿಸುವುದು .
ಈ ತೀರ್ಮಾನಗಳನ್ನು ಆಧಾರ ಮಾಡಿಕೊಂಡು ಗಾಂಧೀಜಿ ಶಿಕ್ಷಣ ಯೋಜನೆಗೆ ಒಂದು ಶಾಸ್ತ್ರೀಯ ಚೌಕಟ್ಟನ್ನು ಕೊಡಬೇಕಾಗಿತ್ತು .
ಅದಕ್ಕಾಗಿ ಸಮ್ಮೇಳನ ಜಾಕೀರ್ ಹುಸೇನ್ರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಿತು .
ಸಮಿತಿ ಎರಡು ತಿಂಗಳೊಳಗಾಗಿ ಈ ಕಾರ್ಯವನ್ನು ಪುರೈಸಿ ವರ್ಧಾ ಶಿಕ್ಷಣ ಯೋಜನೆ ಎಂಬ ಹೆಸರಿನ ವರದಿಯನ್ನು ಸಲ್ಲಿಸಿತು .
ಭಾರತೀಯ ಶಿಕ್ಷಣದ ಇತಿಹಾಸದಲ್ಲಿ ಇದೊಂದು ಪ್ರಧಾನ ದಾಖಲೆ .
ಆನಂತರ 1938 ರಲ್ಲಿ ಹರಿಪುರದಲ್ಲಿ ಸಮಾವೇಶಗೊಂಡಿದ್ದ ಕಾಂಗ್ರೆಸ್ ಅಧಿವೇಶನ ಅದಕ್ಕೆ ತನ್ನ ಒಪ್ಪಿಗೆ ನೀಡಿತು .
ಕಾಂಗ್ರೆಸ್ ಅಧಿಕಾರದಲ್ಲಿದ್ದ ಏಳು ಪ್ರಾಂತ್ಯಗಳಲ್ಲೂ ಯೋಜನೆ ಮೂಲಶಿಕ್ಷಣ (ಬೇಸಿಕ್ ಎಜುಕೇಷನ್ ) ಎಂಬ ಹೆಸರಿನಲ್ಲಿ ಅನುಷ್ಠಾನಕ್ಕೆ ಬಂತು .
ಮೂಲಶಿಕ್ಷಣವನ್ನು ರೂಪಿಸಿದ ಗಾಂಧೀಜಿ ಮೂಲತಃ ಶಿಕ್ಷಣವೇತ್ತರಲ್ಲ .
ಅವರು ಅದನ್ನು ಶಿಕ್ಷಣಶಾಸ್ತ್ರದ ಬೆಳಕಿನಲ್ಲಿ ರೂಪಿಸುವ ಯತ್ನವನ್ನೂ ಮಾಡಿದವರಲ್ಲ .
ಆದರೂ ಅವರ ಯೋಜನೆಯಲ್ಲಿ ಶಿಕ್ಷಣಶಾಸ್ತ್ರ ಎತ್ತಿಹಿಡಿಯುವ ಹಲವು ಸಲ್ಲಕ್ಷಣಗಳನ್ನು ಗುರುತಿಸಬಹುದು .
ಉತ್ಪನ್ನದಾಯಕ ಚಟುವಟಕೆಯೊಂದರ ಮೂಲಕ ಮಕ್ಕಳಿಗೆ ಶಿಕ್ಷಣವೀಯಲು ನಿಯೋಜಿಸಿರುವ ಅವರ ಯೋಜನೆ ಎಲ್ಲ ಆಧುನಿಕ ತತ್ತ್ವಗಳಿಗೂ ಒಪ್ಪುವಂತಿದೆ .
ಮಕ್ಕಳ ಸಮಗ್ರವೂ ಸರ್ವತೋಮುಖವೂ ಆದ ವಿಕಾಸಕ್ಕೆ ಅದು ಪರಿಣಾಮಕಾರಿ ವಿಧಾನವೆಂಬುದನ್ನು ಎಲ್ಲ ಶಿಕ್ಷಣತತ್ತ್ವಗಳೂ ಒಪ್ಪುತ್ತವೆ .
ಅರ್ಥವಾಗದ ಸೈದ್ಧಾಂತಿಕರೂಪದ ಜ್ಞಾನವನ್ನು ಕಲಿಯಲು ಮಕ್ಕಳ ಮನಸ್ಸು ಬೇಸರಗೊಳ್ಳುವುದರಿಂದ ಅದು ವಿಹಿತವೆನಿಸದ ವಿಧಾನವಾಗುತ್ತದೆ .
ಮೂಲಶಿಕ್ಷಣದಲ್ಲಿ ಬೌದ್ಧಿಕ ಮತ್ತು ಅಭ್ಯಾಸಾತ್ಮಕ ( ಕ್ರಿಯಾಪ್ರದ ) ಅಂಶಗಳೆರಡೂ ಸೇರಿರುವುದರಿಂದ ಅವರ ದೈಹಿಕ ಮತ್ತು ಮಾನಸಿಕ ಬೆಳೆವಣಿಗೆ ಗಳೆರಡೂ ಸಮನ್ವಯಗೊಂಡು ಅಭಿವೃದ್ಧಿಯಾಗುತ್ತವೆ ;
ಮಕ್ಕಳು ಬರಿಯ ಗಿಳಿ ಓದಿನ ಅಕ್ಷರ ವಿದ್ಯೆಯನ್ನು ಸಾಧಿಸದೆ ರಚನಾತ್ಮಕ ಉದ್ದೇಶಗಳಿಗಾಗಿ ಬುದ್ಧಿ ಮತ್ತು ಕೈಗಳನ್ನು ಬಳಸಿಕೊಂಡು ಶಿಕ್ಷಣ ಪಡೆಯುತ್ತಾರೆ ;
ಸುಮ್ಮನೆ ಕೇಳಿ ಅಥವಾ ಓದಿ ಕಲಿಯುವುದರ ಬದಲು ಮಾಡಿ ಕಲಿಯುವ ಅವಕಾಶವಿರುವುದರಿಂದ ಈ ಪದ್ಧತಿಯಿಂದ ಕಲಿತ ಶಿಕ್ಷಣ ದೃಢವಾಗಿ ನಿಲ್ಲುವುದರ ಜೊತೆಗೆ ಅವರ ಜೀವನದಲ್ಲಿ ಹೆಚ್ಚು ಪರಿಣಾಮಕಾರಿಯೂ ಆಗಬಲ್ಲದು .
ಯಾವುದೇ ಜ್ಞಾನವನ್ನು ಅವರಿಗೆ ಕಲಿಸಬೇಕಾದರೂ ಕಸಬನ್ನು ಮಾಡಲು ಅನಿವಾರ್ಯವೆನಿಸಿದಾಗ ಆ ಕಾರ್ಯಕ್ಕೆ ಯತ್ನಿಸುವುದರಿಂದ ಕಲಿತದ್ದು ಅರ್ಥವತ್ತಾಗಿರುವುದಲ್ಲದೆ ಅದನ್ನು ಕಲಿಯಲು ಮನಸ್ಸಿನಲ್ಲಿ ಆಸಕ್ತಿ , ಸಿದ್ಧತೆ ಮತ್ತು ಉದ್ದೇಶಗಳು ರೂಪುಗೊಂಡಿರುತ್ತವೆ .
ಇವೆಲ್ಲ ಮನಶ್ಯಾಸ್ತ್ರಕ್ಕೆ ಸಮ್ಮತವೆನಿಸಿರುವ ಅಂಶಗಳು .
ಶೈಕ್ಷಣಿಕ ಸಮಾಜಶಾಸ್ತ್ರದ ದೃಷ್ಟಿಯಲ್ಲೂ ಮೂಲಶಿಕ್ಷಣ ಹಲವು ಉತ್ತಮ ಗುಣಗಳಿಂದ ಕೂಡಿರುವುದನ್ನು ಕಾಣಬಹುದು .
ಸರ್ವೋದಯ ತತ್ತ್ವವ್ಯಕ್ತಿಯ ಜೀವನದಲ್ಲಿ ಅಂಕುರಿಸಿ ಸಮಾಜ ಜೀವನದಲ್ಲಿ ಆವಿಷ್ಕಾರವಾಗಬೇಕೆಂಬುದು ಗಾಂಧೀಜಿಯ ಅಭಿಲಾಷೆಯಾಗಿತ್ತು .
ಅಂಥ ಪರಿವರ್ತನೆ ಅಹಿಂಸೆ ಅಥವಾ ಪ್ರೇಮದಿಂದ ಉದ್ಭವಿಸಬೇಕು .
ಅದು ಎಲ್ಲ ಮಾನವರ (ಸಮಾಜದ ) ಪರಮ ಒಳಿತಿನಲ್ಲಿ ಅಡಗಿದೆ .
ಸಮಾಜ ಈಶ್ವರನ ವ್ಯಕ್ತಸ್ವರೂಪ .
ಇದು ಜೀವಂತ ಚೈತನ್ಯದಲ್ಲಿನ (ದೇವ ) ಅವರ ನೈಜವಾದ ನಂಬಿಕೆ .
ವ್ಯಕ್ತಿಯ ಸಾಧನೆ ( ಶಿಕ್ಷಣ ), ಸಂಪತ್ತು, ಕಾಣಕೆಯ ರೂಪದಲ್ಲಿ ಸಮಾಜಕ್ಕೆ ಸಲ್ಲಬೇಕು .
ಸಮಾಜ ಸಂಗ್ರಹಿಸಿಕೊಂಡು ರಕ್ಷಿಸಿಕೊಂಡು ಬಂದಿರುವ ಮಾನವಜನಾಂಗದ ಸಂಸ್ಕೃತಿ ಸಂಪತ್ತನ್ನು ವ್ಯಕ್ತಿ ಬಳಸಿಕೊಂಡು ತನ್ನ ಹಿತವನ್ನು ಸಾಧಿಸಿಕೊಂಡು ಸಮಾಜ ಹಿತಕ್ಕೆ ತನ್ನ ಸೇವೆಯನ್ನು ಸಲ್ಲಿಸಲು ಶಕ್ತನಾಗಬೇಕು .
ಈ ದೃಷ್ಟಿಯಲ್ಲಿ ಅವರ ಸರ್ವೋದಯ ಸಮಾಜದ ತತ್ತ್ವ ಸಾಮಾಜಿಕದೊಡನೆ ಆಧ್ಯಾತ್ಮಿಕವನ್ನು ಅಳವಡಿಸಿಕೊಂಡು ಅದನ್ನು ಕಾರ್ಯರೂಪಕ್ಕೆ ತರಲು ಶಿಕ್ಷಣವನ್ನೊಂದು ಉಪಕರಣವನ್ನಾಗಿ ಮಾಡಿಕೊಂಡಿತೆನ್ನಬಹುದು .
ಅಂಥ ಶಿಕ್ಷಣದಿಂದ ದೇಶದ ಮಕ್ಕಳೆಲ್ಲ ಕೈಗಾರಿಕೆಯಲ್ಲಿ ತೊಡಗುವುದರಿಂದ ಬುದ್ಧಿಜೀವನಕ್ಕೂ ಶ್ರಮಜೀವನಕ್ಕೂ ಹಿಂದಿನಿಂದಲೂ ಬೆಳೆದುಕೊಂಡು ಬಂದಿದ್ದ ವ್ಯತ್ಯಾಸ ಕಡಿಮೆಯಾಗುವುದರ ಜೊತೆಗೆ ಬೇರೆ ಬೇರೆ ಕಸಬುಗಳಿಗಿರುವ ಭಿನ್ನತೆಯನ್ನೂ ಅಂತರವನ್ನೂ ನಿವಾರಿಸಿದಂತಾಗುತ್ತದೆ .
ಸಮಾಜಕ್ಕೆ ಎಲ್ಲ ಕಸಬುಗಳೂ ಅಗತ್ಯವೆಂಬ ಅಂಶ ವ್ಯಕ್ತಪಟ್ಟು ಎಲ್ಲ ವೃತ್ತಿಗಳಿಗೂ ಸಮಾನ ಗೌರವ ಲಭಿಸುತ್ತದೆ .
ಮೂಲಶಿಕ್ಷಣ ಈ ಎಲ್ಲ ಸಾಮಾಜಿಕ ಮೌಲ್ಯಗಳನ್ನೂ ವೃದ್ಧಿಪಡಿಸಿ ಸಮಾಜದ ಪ್ರಗತಿಗೆ ರಕ್ತರಹಿತ ಕ್ರಾಂತಿಯ ಮೂಲಕ ನೆರವಾಗಬೇಕು .
ಆರ್ಥಿಕ ದೃಷ್ಟಿಯಿಂದ ಪರಿಗಣಿಸಿದರೂ ಮೂಲಶಿಕ್ಷಣದಲ್ಲಿ ಪ್ರಗತಿಪರ ಅಂಶಗಳು ಕಾಣುತ್ತವೆ .
ಪ್ರತಿಯೊಬ್ಬನೂ ಶಿಕ್ಷಣ ಮುಗಿಸಿಕೊಂಡು ಜೀವನೋಪಾಯವನ್ನು ಸಾಧಿಸಿಕೊಳ್ಳಲು ಶಕ್ತಿ ಪಡೆದಿರುತ್ತಾನೆ .
ಅಲ್ಲದೆ ಅವನು ತನ್ನ ವೃತ್ತಿಯಲ್ಲಿ ಕುರುಡುಕರ್ಮ ಮಾಡದೆ ಬುದ್ಧಿಯನ್ನೂ ಬಳಸುವುದರಿಂದ ವೃತ್ತಿಯಲ್ಲೂ ಪ್ರಗತಿ ಸಾಧನೆಯಾಗಿ ರಾಷ್ಟ್ರದ ಆರ್ಥಿಕ ಪ್ರಗತಿಗೂ ಅವಕಾಶವಾಗುತ್ತದೆ .
ಶುದ್ಧ ಶಿಕ್ಷಣಶಾಸ್ತ್ರದ ದೃಷ್ಟಿಯಿಂದ ನೋಡಿದರೂ ಜೀವನದಲ್ಲಿ ಅನುಸರಿಸುವ ಒಂದು ಕಸಬು ಶಾಲೆಯಲ್ಲಿ ಬೋಧನೆಯ ಕೇಂದ್ರವಿಷಯವಾಗಿರುವುದರಿಂದ ಜೀವನಕ್ಕೂ ಶಿಕ್ಷಣಕ್ಕೂ ನಿಕಟಸಂಬಂಧವಿರುವುದು ವ್ಯಕ್ತವಾಗಿ ಜೀವನವೇ ಬೇರೆ ಶಿಕ್ಷಣವೇ ಬೇರೆ ಎನ್ನುವ ಕೃತಕ ಅಹಿತದೃಷ್ಟಿ ಮಾಯವಾಗುತ್ತದೆ .
ಯಾವ ಶಿಕ್ಷಣಪದ್ಧತಿಯೇ ಆಗಲಿ ವ್ಯಕ್ತಿಗೆ ಸತ್ಪೌರನಾಗಿ ಬಾಳಲು ಸಿದ್ಧತೆ ನೀಡಬೇಕು .
ತಾವು ವೃತ್ತಿಯೊಂದರಲ್ಲಿ ಸಿದ್ಧತೆ ಪಡೆದಿರುವುದರಿಂದ ವ್ಯಕ್ತಿ ತನ್ನ ಜೀವನೋಪಾಯದ ಜೊತೆಗೆ ಸಮಾಜಕ್ಕೆ ಅಗತ್ಯವೆನಿಸುವ ಸೇವಾಕಾರ್ಯವನ್ನೂ ನಿರ್ವಹಿಸಬಲ್ಲನು .
ಸಹಕಾರದ ಸನ್ನಿವೇಶದಲ್ಲಿ ಕಲಿತ ಆ ವೃತ್ತಿಮನೋಭಾವ ಸಮಾಜ ಜೀವನಕ್ಕೂ ಹರಿದುಬಂದು ವ್ಯಕ್ತಿಯಲ್ಲಿ ಸೇವಾದೃಷ್ಟಿಯನ್ನು ಬೆಳೆಸುವುದಲ್ಲದೆ , ವೈಯಕ್ತಿಕ ಮೌಲ್ಯ , ಆತ್ಮಗೌರವ , ವೃತ್ತಿದಕ್ಷತೆ ಮುಂತಾದ ಸದ್ಗುಣಗಳನ್ನೂ ಮೂಡಿಸುತ್ತದೆ .
ಗಾಂಧೀಜಿ ಗ್ರಾಂಥಿಕ ಶಿಕ್ಷಣವನ್ನೇನೂ ವಿರೋಧಿಸಲಿಲ್ಲ .
ಆದರೆ ಪುಸ್ತಕದ ಓದು ಕಲಿಸುವುದಕ್ಕಾಗಿಯೇ ಕೋಟಿಗಟ್ಟಲೆ ಹಣ ತಿನ್ನುವ ಪ್ರಾಥಮಿಕ ಶಿಕ್ಷಣ ಮಕ್ಕಳ ಮನಶ್ಯಕ್ತಿಯನ್ನು ಶೋಷಿಸದಿರಬೇಕೆಂದು ಅವರ ಆಶಯವಾಗಿತ್ತು .
ತಕಲಿ ಮುಂತಾದ ಉಪಕರಣಗಳಿಂದ ಕೆಲಸ ಮಾಡುವುದು ಮಕ್ಕಳಿಗೊಂದು ಆಟದ ರೂಪದಲ್ಲಿದ್ದು ಅಂಥ ಶೋಷಣೆಯಿಂದ ಅವರನ್ನು ವಿಮುಕ್ತಿ ಮಾಡುವುದೆಂದು ಅವರು ಪ್ರತಿಪಾದಿಸುತ್ತಿದ್ದರು .
ಮೂಲಶಿಕ್ಷಣ ಕೇವಲ ಕಸಬೊಂದನ್ನು ಕಲಿಸುವ ಮಧ್ಯಯುಗಗಳ ಉಮೇದುವಾರಿ ತರಬೇತಿನಂತಿರಲಿಲ್ಲ ;
ಸಾಮಾನ್ಯ ಶಿಕ್ಷಣದ ಜೊತೆಗೆ ಕೈಗಾರಿಕೆಯೊಂದನ್ನು ಕಲಿಸುವ ಶಿಕ್ಷಣವೂ ಆಗಿರಲಿಲ್ಲ ;
ಅದು ನಿಜವಾಗಿ , ಯಾವುದಾದರೂ ಕೈಗಾರಿಕೆಯ ಮಾಧ್ಯಮದ ಮೂಲಕ ಇಡೀ ಶಿಕ್ಷಣವನ್ನು ದೊರಕಿಸಿ , ವೃತ್ತಿಶಿಕ್ಷಣದ ಮೂಲಕ ಮಕ್ಕಳ ವ್ಯಕ್ತಿತ್ವವನ್ನೇ ರೂಪಿಸುವ ಒಂದು ಯೋಜನೆ .
ಉನ್ನತ ಶಿಕ್ಷಣದ ಬಗ್ಗೆ ಗಾಂಧೀಜಿಯ ದೃಷ್ಟಿ : 20ನೇಯ ಶತಮಾನದ ಪುರ್ವಾರ್ಧ ದಲ್ಲಿ ಭಾರತದಲ್ಲಿದ್ದ ವಿಶೇಷ ರಾಜಕೀಯ , ಸಾಮಾಜಿಕ , ಆರ್ಥಿಕ ಸ್ಥಿತಿಗತಿಗಳಿಂದಾಗಿ ಗಾಂಧೀಜಿ ಪ್ರಾಥಮಿಕ ಶಿಕ್ಷಣದ ಕಡೆಯೇ ಹೆಚ್ಚು ಗಮನ ಹರಿಸಿದ್ದರೂ ಶಿಕ್ಷಣದ ಇತರ ಹಂತಗಳ ಬಗ್ಗೆಯೂ ಚಿಂತನೆ ನಡೆಸಿದ್ದರು .
ಪ್ರಾಥಮಿಕ ಪುರ್ವದ ಮಕ್ಕಳ ಶಿಕ್ಷಣದ ಪ್ರಾಮುಖ್ಯವನ್ನೂ ಅಗತ್ಯವನ್ನೂ ಅವರು ಮನಗಂಡಿದ್ದರು .
ರಾಷ್ಟ್ರದ ಮುನ್ನಡೆಗೆ ಉನ್ನತ ಶಿಕ್ಷಣದ ಅಗತ್ಯವನ್ನೂ ಅದರ ಪುನರ್ವ್ಯವಸ್ಥೆಯ ಅಗತ್ಯವನ್ನೂ ವ್ಯಕ್ತಪಡಿಸಿದ್ದಾರೆ .
ಆದರೆ ಅಂದು ಪ್ರಾಥಮಿಕಶಿಕ್ಷಣ ಎಲ್ಲ ದೇಶಗಳಂತೆ ಭಾರತದಲ್ಲೂ ತೀರ ಅಗತ್ಯವೆನಿಸಿದ್ದುದರಿಂದ ಅವರು ತಮ್ಮ ಗಮನವನ್ನು ಮುಖ್ಯವಾಗಿ ಆ ಕಡೆ ವಿನಿಯೋಗಿಸಿದರು .
ಗಾಂಧೀಜಿಯ ದೃಷ್ಟಿಯಲ್ಲಿ ಮೂಲಶಿಕ್ಷಣ ದೃಷ್ಟಿಯನ್ನೇ ಉನ್ನತಶಿಕ್ಷಣಕ್ಕೂ ವಿಸ್ತರಿಸಬಹುದಾಗಿತ್ತು .
ಹರಿಜನ ಪತ್ರಿಕೆಯಲ್ಲಿ ಆ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ .
ಅದರ ರೂಪುರೇಖೆಯೂ ಮೂಲಶಿಕ್ಷಣಕ್ಕೆ ಆಧಾರವಾದ ಸ್ವಯಂ ಉದ್ಯೋಗ , ಸ್ವಾವಲಂಬನೆ , ಶ್ರಮಜೀವನ - ಇವುಗಳನ್ನೇ ಅವಲಂಬಿಸಿದ್ದು , ಪ್ರಾಥಮಿಕ ಶಿಕ್ಷಣದಂತೆ ಆ ಮೂಲಕ ಉನ್ನತ ಶಿಕ್ಷಣದಲ್ಲೂ ಕ್ರಾಂತಿಕಾರಕ ಬದಲಾವಣೆಗಳಾಗ ಬೇಕೆಂಬುದು ಅವರ ಅಭಿಪ್ರಾಯವಾಗಿತ್ತು .
‘ ಅದು ರಾಷ್ಟ್ರೀಯ ಆವಶ್ಯಕತೆಗಳನ್ನು ಆಧಾರಮಾಡಿಕೊಂಡು ವ್ಯವಸ್ಥೆಗೊಳ್ಳಬೇಕು ;
ಯಂತ್ರ ಪರಿಣಿತರು , ತಾಂತ್ರಿಕ ತಜ್ಞರು , ವಿವಿಧ ವೃತ್ತಿನಿಪುಣರು - ಇತ್ಯಾದಿಯವರನ್ನು ಸಿದ್ಧಪಡಿಸಲು ವೃತ್ತಿಶಿಕ್ಷಣ ವ್ಯವಸ್ಥೆಯೂ ಇದ್ದೇ ಇರಬೇಕು ’ ಎಂದು ಅವರು ಭಾವಿಸಿದ್ದರು .
ಆದರೆ ಔದ್ಯೋಗಿಕ ಶಿಕ್ಷಣ ಆಯಾ ಉದ್ಯೋಗಕ್ಕೆ ಹೊಂದಿಕೊಂಡಂತಿದ್ದು ಅಲ್ಲಿಗೆ ಅಗತ್ಯವಾಗುವ ಪದವೀಧರರ ಶಿಕ್ಷಣವನ್ನು ಆ ಉದ್ಯೋಗ ಕ್ಷೇತ್ರವೇ ನಿರ್ವಹಿಸಬೇಕೆಂದು ಅವರು ಪ್ರತಿಪಾದಿಸಿರುವರು .
ಅದರ ಪ್ರಕಾರ ತಾತಾ ಔದ್ಯೋಗಿಕ ಸಂಸ್ಥೆಗಳಂಥವು ರಾಷ್ಟ್ರದ ಮೇಲ್ವಿಚಾರಣೆಯಲ್ಲಿ ಇಂಜಿನಿಯರಿಂಗ್ ಕಾಲೇಜೊಂದನ್ನು ನಡೆಸಬಹುದು .
ಗಿರಣಿ ಕೆಲಸಗಾರರು ತಮ್ಮ ಉದ್ಯೋಗಗಳಿಗೆ ಬೇಕಾಗುವ ತಾಂತ್ರಿಕ ಪದವೀಧರರಿಗೆ ಶಿಕ್ಷಣವೀಯಲು ಕಾಲೇಜು ಗಳನ್ನು ನಡೆಸಬಹುದು ;
ವಾಣಿಜ್ಯಕ್ಷೇತ್ರ ವಾಣಿಜ್ಯಕಾಲೇಜುಗಳನ್ನೂ ನಡೆಸಬಹುದು ;
ವೈದ್ಯವೃತ್ತಿ ಧನಿಕರ ಆಸಕ್ತಿಯನ್ನು ಗಳಿಸಿರುವುದರಿಂದ ಖಾಸಗಿ ಅಂಗೀಕೃತ ಕಾಲೇಜುಗಳಲ್ಲಿ ಆ ಶಿಕ್ಷಣವನ್ನು ವ್ಯವಸ್ಥೆಗೊಳಿಸಬಹುದು .
ಇವೆಲ್ಲ ಸರ್ಕಾರದ ಧನಸಹಾಯವಿಲ್ಲದಿದ್ದರೂ ಆರ್ಥಿಕವಾಗಿ ಸ್ವಾವಲಂಬಿಯಾಗಿ ಕೆಲಸಮಾಡಬಲ್ಲವು .
ಎಷ್ಟೋ ಕಲಾಶಾಸ್ತ್ರ ಮತ್ತು ವಿಜ್ಞಾನಶಾಸ್ತ್ರದ ಖಾಸಗಿ ಕಾಲೇಜುಗಳೂ ಆ ರೀತಿಯಲ್ಲಿ ನಡೆಯಲು ಸಾಧ್ಯವೆಂಬುದು ಆಗಲೆ ವ್ಯಕ್ತವಾಗಿತ್ತು .
ಹಾಗೆಯೇ ಕೃಷಿ ಕಾಲೇಜುಗಳೂ ಸ್ವಾವಲಂಬಿಯಾಗಿ ನಡೆಯಬೇಕೆಂದು ಅವರು ಭಾವಿಸಿದ್ದರು .
ಕೃಷಿಕ್ಷೇತ್ರದಲ್ಲೇ ಅವರಿಗೆ ಶಿಕ್ಷಣವೀಯುವುದಾದರೆ ಅದು ಸಾಧ್ಯವಾಗುವುದೆಂದೂ ಅಲ್ಲಿನ ವಿದ್ಯಾರ್ಥಿಗಳು ಪದವೀಧರರಾದ ಮೇಲೆ ವ್ಯವಸಾಯ ಕ್ಷೇತ್ರಕ್ಕೆ ಗಣನೀಯಸೇವೆ ಸಲ್ಲಿಸುವರೆಂದೂ ಅವರು ಸೂಚಿಸಿರುವರು ;
ಹೀಗೆಯೇ ಇತರ ವೃತ್ತಿಶಿಕ್ಷಣಗಳೂ ಸ್ವಾವಲಂಬಿಯಾಗಿ ಕೆಲಸ ಮಾಡುವುದು ಸಾಧ್ಯವೆಂದು ತೋರಿಸಿರುವರು .
ಈ ದೃಷ್ಟಿ ವೈಪರೀತ್ಯವನ್ನು ಮುಟ್ಟಿರುವಂತೆ ತೋರಿದರೂ ಸಾಧ್ಯವೆಂಬುದನ್ನು ಅವರು ಮನಗಂಡಿದ್ದರು .
ಮೇಲಾಗಿ ಅವರ ಆಸಕ್ತಿ ಮುಖ್ಯವಾಗಿ ಪ್ರಾಥಮಿಕ ಶಿಕ್ಷಣದ ಕಡೆಗೆ ಇದ್ದುದರಿಂದ ಉನ್ನತ ಶಿಕ್ಷಣವನ್ನೆಲ್ಲ ಖಾಸಗೀ ಸಂಸ್ಥೆಗಳೇ ನಡೆಸುವಂತಾದರೆ ಸರ್ಕಾರ ತನ್ನ ಪೂರ್ಣಗಮನವನ್ನು ಪ್ರಾಥಮಿಕ ಶಿಕ್ಷಣದ ಕಡೆಗೆ ಮೀಸಲಿಡಲು ಸಾಧ್ಯವಾಗುವುದೆಂದು ಅವರು ಆಲೋಚಿಸಿದರು .
ಭಾರತ ಸರ್ಕಾರ ಮೂಲಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ಪದ್ಧತಿಯೆಂದು ಅಂಗೀಕರಿಸಿ ಅದರ ಪ್ರಗತಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ಒದಗಿಸಿತು .
ಅದರೊಡನೆ ಅಂಟಿಕೊಂಡಿದ್ದ ‘ ವಿದ್ಯಾರ್ಥಿ ದುಡಿಮೆಯಿಂದ ಅಧ್ಯಾಪಕರ ವೇತನವನ್ನು ದೊರಕಿಸಿಕೊಳ್ಳಬೇಕೆಂಬ ’ ಅಂಶವನ್ನು ಕೈಬಿಡಲಾಯಿತು .
ಆದರೂ ಅದು ದೇಶಾದ್ಯಂತ ಆಚರಣೆಗೆ ಬರಲಿಲ್ಲ .
ಜನತೆಗೆ ಇಂದು ಅದರಲ್ಲಿ ಆಸಕ್ತಿಯಿಲ್ಲವಾಗಿದೆ .
ಅದು ಉತ್ತಮ ತತ್ತ್ವಗಳ ಬುನಾದಿಯ ಮೇಲೆ ರಚನೆಯಾಗಿರುವುದೆಂದು ದೇಶವಿದೇಶಗಳ ಪಂಡಿತರನೇಕರು ಒಪ್ಪಿದ್ದರೂ ಅದು ತನ್ನ ಜನ್ಮಭೂಮಿಯಲ್ಲೇ ಪ್ರಚಾರಕ್ಕೆ ಬರಲಾರದಾದುದು ಆಶ್ಚರ್ಯದ ಸಂಗತಿ .
ಆ ಪದ್ಧತಿಯ ಮೇಲೆ ಟೀಕೆಗಳೇನೋ ಹೇರಳವಾಗಿ ಬಂದುವು .
ಅವುಗಳಲ್ಲಿ ವಾಸ್ತವಿಕವೆನ್ನಬಹುದಾದ ಕೆಲವನ್ನು ಇಲ್ಲಿ ಸೂಚಿಸಿದೆ .
1 ತೀರ ಚಿಕ್ಕ ವಯಸ್ಸಿನಲ್ಲಿ ಅವರ ಸ್ವಾಭಾವಿಕ ಆಸಕ್ತಿಗಳಿಗೆ ವಿರುದ್ಧವಾದ ವೃತ್ತಿಶಿಕ್ಷಣದ ವಾತಾವರಣವನ್ನು ಕಲ್ಪಿಸುತ್ತದಾಗಿ ಈ ಪದ್ಧತಿ ಮಕ್ಕಳಿಗೆ ಶಿಕ್ಷಣವೆಂದರೆ ಜಿಗುಪ್ಸೆ ಹುಟ್ಟಿಸುತ್ತದೆ .
2 ತಲೆಗೆಲ್ಲ ಒಂದೇ ಮಂತ್ರವೆಂದು ನೂಲುವುದನ್ನು ಎಲ್ಲರಿಗೂ ಕಲಿಸಹೋದರೆ ಯಾವ ಪುರುಷಾರ್ಥ ತಾನೆ ಸಾಧನೆಯಾದೀತು ?
ಮುಂದಿನ ಜನಾಂಗವೆಲ್ಲ ಅದೇ ಕೈಗಾರಿಕೆಯನ್ನು ಅನುಸರಿಸಿದರೆ ಮುಂದೆ ಗತಿಯೇನು ?
3 ದಿನದ ಅರ್ಧಭಾಗದಲ್ಲಿ ತಮ್ಮ ಸ್ವಾಭಾವಿಕ ಆಸಕ್ತಿಗೆ ವಿರುದ್ಧವಾಗಿ ಇತರರು ಹೇರಿದ ಉದ್ಯೋಗದಲ್ಲಿ ತೊಡಗಿ ಆ ಸ್ವಾಭಾವಿಕ ಆಸಕ್ತಿಗಳ ಪ್ರಕಾಶನಕ್ಕೆ ಅಡಚಣೆಯಾಗಿ ಅವರ ವ್ಯಕ್ತಿತ್ವದಲ್ಲಿ ತೊಡಕುಗಳು ಮೂಡಿಕೊಳ್ಳುವುದಿಲ್ಲವೆ ?
4 ಕಸಬೇ ಪ್ರಧಾನವಾಗಿರುವ ಈ ಪದ್ಧತಿ ಮಗುವನ್ನೇ ಮರೆತಿರುವುದಲ್ಲದೆ ದೈಹಿಕ ಶಿಕ್ಷಣ , ನೈತಿಕ ಶಿಕ್ಷಣಗಳಿಗೆ ಅವಕಾಶ ಕಲ್ಪಸಿಲ್ಲ .
5 ಕಸಬಿಗೆ ಸಂಬಂಧಿಸಿದಂತೆ ವಿಷಯವನ್ನು ಬೋಧಿಸುವ ಯತ್ನದಲ್ಲಿ ಗೊಂದಲಕ್ಕೂ ಕೃತಕತೆಗೂ ಅವಕಾಶವಾಗಿ ಶಾಲೆಗೂ ಜೀವನಕ್ಕೂ ಅಂತರ ಹುಟ್ಟಿಕೊಳ್ಳುತ್ತದೆ .
6 ಪಠ್ಯಪುಸ್ತಕಗಳಿಗೆ ಪುರಸ್ಕಾರವೀಯದ ಈ ಶಿಕ್ಷಣ ಹೇಗೆ ತಾನೆ ಜನಪ್ರಿಯವಾದೀತು - ದೇವರಿಲ್ಲದ ಗುಡಿಯಂತೆ ?
7 ಮೇಲ್ಮಟ್ಟದ ಶಿಕ್ಷಣಕ್ಕೆ ಈ ಪದ್ಧತಿಯ ಅನ್ವಯ ಯೋಗ್ಯವಲ್ಲ .
ಈಚೆಗೆ ಈ ದಿಕ್ಕಿನಲ್ಲಿ ಮೂಲಶಿಕ್ಷಣವನ್ನು ಸುಧಾರಿಸುವ ಯತ್ನ ನಡೆದಿದೆ .
ಆದರೂ ಮೂಲಶಿಕ್ಷಣಕ್ಕೆ ಸ್ವಾತಂತ್ರ್ಯದ ಆರಂಭದಲ್ಲಿ ಲಭಿಸಿದ್ದ ಜನಪ್ರಿಯತೆ ಈಗ ಇಲ್ಲವಾಗಿದೆ .
ಅದನ್ನು ಆ ರೂಪದಲ್ಲಿ ದೇಶಾದ್ಯಂತ ಪ್ರಚಾರಕ್ಕೆ ತರುವ ಯತ್ನವೂ ಹಿಂಬದಿಗೆ ಬಿದ್ದಂತೆ ಕಾಣುತ್ತದೆ .
ಹೊಸದಾಗಿ ಪ್ರಚಾರಕ್ಕೆ ಬಂದ ಎಲ್ಲ ಶಿಕ್ಷಣಪದ್ಧತಿಗಳಿಗೂ ಇದೇ ಪಾಡು ಒದಗಿದೆ .
ಅವು ಮೊದಲು ಪರಮೋತ್ಕೃಷ್ಟವೆಂದು ಹೊಗಳಿಸಿಕೊಳ್ಳುತ್ತವೆ ;
ಅನಂತರ ಅವುಗಳ ಕುಂದುಕೊರತೆಗಳನ್ನು ಕಂಡು ಜನತೆ ಅವನ್ನು ಕಟುವಾಗಿ ಟೀಕಿಸುತ್ತದೆ .
ಆಮೇಲೆ ಅದರಲ್ಲಿರುವ ಉತ್ತಮಾಂಶಗಳನ್ನು ಮಾತ್ರ ಇಂದಿನ ಪದ್ಧತಿಯಲ್ಲಿ ಅಳವಡಿಸಿಕೊಳ್ಳಲು ಯತ್ನಿಸುತ್ತದೆ .
ಮೂಲಶಿಕ್ಷಣದ ಬಗ್ಗೆಯೂ ಈ ಮಾತು ಒಪ್ಪುತ್ತದೆ .
ಈಗ ಅದು ತನ್ನ ಆ ಮೂರನೆಯ ಅಂತಸ್ತನ್ನು ಮುಟ್ಟಿದೆ .
ಅದರಲ್ಲಿರುವ ಉತ್ತಮಾಂಶಗಳು ನಮ್ಮ ಪ್ರಾಥಮಿಕ ಶಿಕ್ಷಣಕ್ಷೇತ್ರವನ್ನು ಈಗಾಗಲೇ ಪರಿಣಾಮಗೊಳಿಸಿವೆ .
ಕಸಬು , ಕಲೆ , ಕೈಕೆಲಸ ಮುಂತಾದ ಕಾಯಕಾನುಭವಗಳನ್ನೊದಗಿಸುವ ಚಟುವಟಿಕೆಗಳು ಅಲ್ಲಿನ ಪಠ್ಯಕ್ರಮದಲ್ಲಿ ಹೊಸದಾಗಿ ಸೇರಿಕೊಂಡಿವೆ .
ಜೀವನಕ್ಕೆ ಹೊಂದಿಸಿಕೊಂಡು ವಿಷಯಗಳನ್ನು ಸಮೀಕರಿಸಿಕೊಂಡು ಪಾಠ ಬೋಧಿಸುವ ನೂತನ ಬೋಧನಕ್ರಮ ಬಳಕೆಗೆ ಬರುತ್ತಿದೆ .
ತಮ್ಮ ಶಾಲೆಯನ್ನು ತಾವೇ ಚೊಕ್ಕಟವಾಗಿಟ್ಟುಕೊಳ್ಳುವ ಸ್ವಾವಲಂಬನೆಯ ದೃಷ್ಟಿ ಆಚರಣೆಗೆ ಬರುತ್ತಿದೆ .
ಕೈಕೆಲಸಗಳ ಮೂಲಕ ಮಕ್ಕಳ ಕ್ರಿಯಾತ್ಮಕ ಶಕ್ತಿಗೆ ಪೋಷಣೆ ದೊರೆಯುವುದರ ಜೊತೆಗೆ ಅವರ ಮನಸ್ಸಿನಲ್ಲಿ ಶ್ರಮಜೀವನದ ಬಗ್ಗೆ ಗೌರವ ಬೆಳೆಯಲು ಅವಕಾಶವಾಗಿದೆ .
ಶಾಲೆಯೊಡನೆ ಸುತ್ತಣ ಸಮಾಜದ ಜೀವನವನ್ನು ಹೊಂದಿಸಿಕೊಂಡು ಕೆಲಸಮಾಡುತ್ತ ಶಾಲೆ , ಸಮಾಜದ ಕ್ಷೇಮಚಿಂತನೆಗೂ ಅಭಿವೃದ್ಧಿಸಾಧನೆಗೂ ಕೆಲಸ ಮಾಡಬೇಕಾದ ಸಂಸ್ಥೆಯಾಗಿ ರೂಪುಗೊಳ್ಳುತ್ತಿದೆ .
ಇಷ್ಟೆಲ್ಲ ಮೂಲಶಿಕ್ಷಣ ಪ್ರಾಥಮಿಕ ಶಿಕ್ಷಣದ ಮೇಲೆ ಇತ್ತೀಚಿನ ದಿನಗಳಲ್ಲಿ ಬೀರಿರುವ ಪ್ರಭಾವವೆನ್ನಬಹುದು .
ಆದರೂ ಅದು ತನ್ನ ಶುದ್ಧರೂಪದಲ್ಲಿ ದೇಶಾದ್ಯಂತ ಆಚರಣೆಗೆ ಬರಲೇಬೇಕೆಂದು ವಾದಿಸತಕ್ಕವರು ಇಂದಿಗೂ ಉಳಿದುಕೊಂಡೇ ಇರುವರು .
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment