Commit e7834ad9 authored by Narendra VG's avatar Narendra VG

Upload New File

parent 72ce8ad7
ಸಿನಿಮಾದ ಶಕ್ತಿ ಅಪರಿಮಿತವಾದುದು.
ಜನರನ್ನು ತಲಪುವ ಮತ್ತು ಜನರ ಮೇಲೆ ಪರಿಣಾಮವನ್ನುಂಟು ಮಾಡುವ ದೃಷ್ಟಿಯಿಂದ ಈ ಮಾತನ್ನು ಹೇಳುತ್ತಿದ್ದೇನೆ.
ಜನಸಮುದಾಯದ ಜೊತೆಗಿನ ಸಂಬಂಧವನ್ನು ಗಮನಿಸಿದಾಗ ಸಿನಿಮಾ, ನಿಜವಾದ ಅರ್ಥದಲ್ಲಿ ಸಮೂಹ ಮಾಧ್ಯಮ.
ಆದ್ದರಿಂದ ಸಿನಿಮಾವನ್ನು ಸಮೂಹ ಸನ್ನಿಯ ಮಾಧ್ಯಮವಾಗದಂತೆ ಎಚ್ಚರವಹಿಸುವ ಸಮೂಹ ಪ್ರಜ್ಞೆಯ ಮಾಧ್ಯಮವಾಗುವಂತೆ ಕ್ರಿಯಾಶೀಲರಾಗುವ ಜವಾಬ್ದಾರಿ ನಮ್ಮ ಮೇಲಿದೆ.
ಬುದ್ಧಿ ಜೀವಿಗಳು ಮತ್ತು ವಿವಿಧ ಸೃಜನಶೀಲ ಮಾಧ್ಯಮಗಳಲ್ಲಿ ಮಗ್ನರಾದ ಕ್ರಿಯಾಶೀಲರು ಸಿನಿಮಾವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.
ಹಾಗೆ ನೋಡಿದರೆ, ಆರಂಭದ ದಿನಗಳಲ್ಲಿ ಸಿನಿಮಾವನ್ನು ‘ಕಲೆ’ಯೆಂದು ಒಪ್ಪಿಕೊಂಡಿರಲಿಲ್ಲ.
ಸಿನಿಮಾವು ಕೇವಲ ನಕಲು ಮಾಡುತ್ತದೆಯೆಂದೂ, ಅದು ತಂತ್ರಜ್ಞಾನ ಪ್ರಧಾನವೆಂದೂ ಕಾರಣ ಕೊಡುತ್ತ ಕಲೆಯ ಪಟ್ಟಿಯಿಂದ ದೂರ ಇಡಲಾಗಿತ್ತು!
ಕಾಲ ಕಳೆದಂತೆ ಸಿನಿಮಾದ ಸೃಜನಶೀಲತೆಯ ಅರಿವಾಗಿ, ಅದು ಸಹ ಒಂದು ಕಲಾಪ್ರಕಾರವೆಂದು ಪರಿಗಣಿತವಾಯಿತು.
ಆಗ ೧೯೪೦ರಲ್ಲಿ ಆಂಡ್ಯೂರ ಬ್ರೆಜಿನ್ ತನ್ನ ‘The Evolution of the language of Cinema’ ಎಂಬ ಪುಸ್ತಕದಲ್ಲಿ ಕಡೆಗೂ ಚಲನಚಿತ್ರ ನಿರ್ದೇಶಕ, ಕಾದಂಬರಿಕಾರರಿಗೆ ಸಮಾನವೆಂದು ಪರಿಗಣಿತನಾದ ಎಂದು ಸಮಾಧಾನದ ನಿಟ್ಟುಸಿರು ಬಿಡುತ್ತಾನೆ.
ಇದು ಹಳೆಯ ಕತೆ.
ತೀರಾ ಇತ್ತೀಚಿನ ಕತೆ ಕೇಳಿ : ಕನ್ನಡ ಚಿತ್ರರಂಗದ ಮೇಲೆ ಪರಭಾಷಾ ಚಿತ್ರಗಳ ಹಾವಳಿ ಜಾಸ್ತಿಯಾಗಿದೆಯೆಂದೂ ಪ್ರದರ್ಶಕರು ಕನ್ನಡ ಚಿತ್ರಗಳಿಗೆ ಆದ್ಯತೆ ಕೊಡಬೇಕೆಂದೂ ಆಗ್ರಹಿಸಿ ೨೦೦೪ರಲ್ಲಿ ಕನ್ನಡ ಚಿತ್ರರಂಗದ ಅನೇಕರು ಪ್ರತಿಭಟನೆಗೆ ಇಳಿದಾಗ ವಾದ ವಿವಾದಗಳು ನಡೆದವು.
ಆಗ ಆಂಗ್ಲ ಪತ್ರಿಕೆಯೊಂದರಲ್ಲಿ ಪ್ರತಿಕ್ರಿಯಿಸಿದ ಕನ್ನಡದ ಕೆಲವು ಪ್ರತಿಷ್ಠಿತ ಸಾಹಿತ್ಯ ವಿಮರ್ಶಕರು “ಸಿನಿಮಾ ಎನ್ನುವುದು ಸಂಸ್ಕೃತಿಯ ಭಾಗವಲ್ಲ” ಎಂದು ಅಭಿಪ್ರಾಯ ಮಂಡಿಸಿ ಸಿನಿಮಾವನ್ನು ಒಂದು ಸಂಸ್ಕೃತಿ ಎಂದು ಕರೆಯಲಾಗದು ಎಂಬ ನಿರ್ಣಯಾತ್ಮಕ ಹೇಳಿಕೆ ನೀಡಿದರು.
ಬೌದ್ಧಿಕ ವಲಯದ ಕೆಲವರು ಸಿನಿಮಾದ ಬಗ್ಗೆ ತಳೆದಿರುವ ತಪ್ಪು ನಿಲುವು ಮತ್ತು ತಪ್ಪು ಗ್ರಹಿಕೆಗೆ ಇದೊಂದು ನಿದರ್ಶನ.
ನಮ್ಮ ಬೌದ್ಧಿಕ ವಲಯವು ‘ಜನಪ್ರಿಯ ಸಂಸ್ಕೃತಿ’ಯ ಬಗ್ಗೆ ತಳೆಯುತ್ತ ಬಂದ ಅನಾದರಕ್ಕೂ ಇದೊಂದು ಉದಾಹರಣೆಯಾಗಬಲ್ಲದು.
ನಿಜ; ಸಿನಿಮಾ ಒಂದು ಉದ್ಯಮವೂ ಆಗಿದೆ.
ಆದ್ದರಿಂದ ಅದನ್ನು ಸಂಸ್ಕೃತಿಯಲ್ಲಿ, ಸಂಸ್ಕೃತಿಯ ಭಾಗವಲ್ಲ ಎಂದು ಹೇಳಲಾಗದು.
ಅಸಂಖ್ಯಾತ ಜನಸಾಮಾನ್ಯರು ಪ್ರೀತಿಸುವ ಕಾರಣಕ್ಕಾಗಿ ಜನಪ್ರಿಯ ಸಂಸ್ಕೃತಿಯ ಭಾಗವಾದ ಸಿನಿಮಾವನ್ನು ‘ಜನಪ್ರಿಯ’ ಎಂಬ ಕಾರಣಕ್ಕಾಗಿಯೇ ಅಗ್ಗದ ಪ್ರಕಾರವೆಂದು ತುಚ್ಚೀಕರಿಸಲಾಗದು.
ಜನಪ್ರಿಯ ಸಂಸ್ಕೃತಿಯನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ಜನಪರ ಸಂಸ್ಕೃತಿಯಾಗಿ ಜೀವಂತವಾಗಿಡುವ ಹೊಣೆಗಾರಿಕೆಯು ಬೌದ್ಧಿಕ ವಲಯದ ಮೇಲಿದೆ ಎಂಬುದನ್ನು ಮರೆಯಬಾರದು.
ಯಾಕೆಂದರೆ ಜನಸಾಮಾನ್ಯರು ಮತ್ತು ಜನಪ್ರಿಯ ಸಂಸ್ಕೃತಿಯನ್ನು ಸಮೀಪಿಸದೆ ಸಾಮಾಜಿಕ ಚಲನಶೀಲತೆ ಸಾಧ್ಯವಾಗುವುದಿಲ್ಲ.
ಆದ್ದರಿಂದ, ಸಿನಿಮಾ ಮಾಧ್ಯಮವನ್ನು ಬಂಡವಾಳಿಗರ ಉದ್ಯಮ ಮಾತ್ರವಾಗಿ ಉಳಿಸಲು ನಮ್ಮ ಅನಾದರ ಅವಕಾಶ ಕೊಡಬಾರದು.
ಜಾಗತೀಕರಣದ ಈ ಸನ್ನಿವೇಶದಲ್ಲಿ ನಮ್ಮ ಜವಾಬ್ದಾರಿ ಮತ್ತಷ್ಟು ಗುರುತರವಾದುದು.
ಜಾಗತೀಕರಣವು ಮೂಲತಃ ಬಂಡವಾಳೀಕರಣ.
ಇದರ ಫಲವಾಗಿ ಸಾಮಾಜಿಕ ಸಾಂಸ್ಕೃತಿಕ ಆದ್ಯತೆಗಳು ಪಲ್ಲಟಗೊಳ್ಳುತ್ತವೆ.
ಬಂಡವಾಳವಿಲ್ಲದೆ ಸೃಷ್ಟಿ ಸಾಧ್ಯವಿಲ್ಲದ ಸಿನಿಮಾದ ಸ್ವರೂಪ ಮತ್ತು ಆದ್ಯತೆಗಳ ಮೇಲೆ ಜಾಗತೀಕರಣದ ಸೂಕ್ಷ್ಮಗಳು ಪ್ರಭಾವ ಬೀರುತ್ತವೆ.
ಈ ಚರ್ಚೆಯನ್ನು ಮುಂದುವರೆಸುವುದಕ್ಕೆ ಮುಂಚೆ ಜಾಗತೀಕರಣದ ಮೂಲ ನೆಲೆಯನ್ನು ಕುರಿತಂತೆ ಸ್ಪಷ್ಟ ತಿಳುವಳಿಕೆಯನ್ನು ಪಡೆಯಬೇಕು.
ಯಾಕೆಂದರೆ ನಾನು ಗಮನಿಸಿದಂತೆ ಬೌದ್ಧಿಕ ವಲಯದ ಕೆಲವರು ಕೈಗಾರಿಕೀಕರಣ ಮತ್ತು ಜಾಗತೀಕರಣಗಳ ನಡುವೆ ವ್ಯತ್ಯಾಸವಿಲ್ಲವೆಂಬಂತೆ ಅಥವಾ ವ್ಯತ್ಯಾಸದ ಅರಿವಿಲ್ಲದೆ ಮಾತನಾಡುವುದನ್ನು ಕೇಳಿದ್ದೇನೆ.
ಈ ಹಿನ್ನೆಲೆಯಲ್ಲಿ ನನ್ನ ನಮ್ಮ ತಿಳುವಳಿಕೆಗೆ ದಕ್ಕಿದಷ್ಟು ವಿಷಯಗಳನ್ನು ವಿನಯದಿಂದ ಸಾದರಪಡಿಸುತ್ತೇನೆ.
ನಾನು ಚರ್ಚಿಸಿದ ಅಥವಾ ಮಾತನಾಡಿದ ಸಂದರ್ಭದಲ್ಲಿ ಕೆಲವರು ಭಾವಿಸಿರುವುದು ಹೀಗೆಂದು ಅನ್ನಿಸಿತು .
ಜಾಗತೀಕರಣ ಬಂದು ನಮ್ಮ ಗುಡಿಕೈಗಾರಿಕೆಗಳು ಹಾಳಾದವು;
ಕುಲ ಕಸುಬುಗಳು ನಾಶವಾದವು.
ಯಂತ್ರಗಳು ಮೇಲುಗೈ ಪಡೆದವು.
ಬೆಸ್ತರಿಗೆ ದೋಣಿಯ ಬದಲು ಯಂತ್ರಚಾಲಿತ ವಾಹನಗಳು ಬೇಕಾಗಿ ಬಡ ಬೆಸ್ತನ ಬದುಕು ದುಸ್ತರವಾಯಿತು;
ಕುಂಬಾರರ ಮಡಕೆ ಮಾಡುವ ಕಾಯಕಕ್ಕೆ ಧಕ್ಕೆಯಾಯಿತು.
ಬುಟ್ಟಿ ಹೆಣೆಯುವವರ ಕಸುಬು ಕೈತಪ್ಪಿತು.
ಕೃಷಿಯಲ್ಲಿ ಯಂತ್ರಗಳ ಬಳಕೆ ಪ್ರಧಾನವಾದಂತೆ ಬಡರೈತನಿಗೆ ಬದುಕು ಕಷ್ಟವಾಯಿತು ಇತ್ಯಾದಿ.
ಈ ಎಲ್ಲ ಸ್ಥಿತ್ಯಂತರಗಳು ಆಗಿರುವುದು, ಆಗುತ್ತಿರುವುದು ನಿಜ.
ಆದರೆ ಇವು ಜಾಗತೀಕರಣವೆಂದು ಕರೆಯಲ್ಪಡುವ ಆರ್ಥಿಕ ಉದಾರೀಕರಣದ ಫಲವಾಗಿ ಸಂಭವಿಸಲಿಲ್ಲ.
ಈ ಸ್ಥಿತ್ಯಂತರವು ಕೈಗಾರಿಕೀಕರಣದ ಸಂದರ್ಭದಲ್ಲೇ ಶುರುವಾಯಿತು.
ಆದ್ದರಿಂದ ಕೈಗಾರಿಕೀಕರಣದ ಫಲಿತಗಳನ್ನು ಜಾಗತೀಕರಣಕ್ಕೆ ಆರೋಪಿಸುವ ಗ್ರಹಿಕೆ ಸರಿಯಲ್ಲ.
ಆದರೆ ಕೆಲವರು ಈ ಅಂಶಗಳನ್ನು ಜಾಗತೀಕರಣದ ಫಲವೆಂಬಂತೆ ಬಿಂಬಿಸುವ ಸಿನಿಮಾ ಮತ್ತು ಸಾಹಿತ್ಯ ಸೃಷ್ಟಿ ಮಾಡಿರುವುದೂ ಉಂಟು.
ಹೀಗಾಗಿ ಜಾಗತೀಕರಣ ಮತ್ತು ಕೈಗಾರಿಕೀಕರಣಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ.
ನಾನು ಹೀಗೆ ಹೇಳುವಾಗ ಸ್ಥಿತ್ಯಂತರದ ಸ್ಥಿತಿಯನ್ನು ಅಸತ್ಯವೆಂದು ಪ್ರತಿಪಾದಿಸುತ್ತಿಲ್ಲ.
ಈ ಸ್ಥಿತಿಗೆ ಕಾರಣವಾದದ್ದು ಕೈಗಾರಿಕೀಕರಣವೇ ಹೊರತು ಜಾಗತೀಕರಣವಲ್ಲವೆಂದು ತಿಳಿಸುವುದು ನನ್ನ ಅಪೇಕ್ಷೆ.
ಜೊತೆಗೆ ಕೈಗಾರಿಕೀಕರಣವು ಜಾಗತೀಕರಣದಷ್ಟು ಅಪಾಯಕಾರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ.
ನಿಜ; ಕೈಗಾರಿಕೀಕರಣ ಮತ್ತು ಜಾಗತೀಕರಣ – ಈ ಎರಡೂ ನೆಲೆಗಳಿಗೆ ಬಂಡವಾಳ ತೊಡಗಿಸುವಿಕೆಯು ಒಂದು ಮುಖ್ಯ ಕ್ರಿಯೆ.
ಆದರೆ ಒಟ್ಟು ಸ್ವರೂಪ ಮತ್ತು ಪರಿಣಾಮದಲ್ಲಿ ಸಾಕಷ್ಟು ಅಂತರವಿರುವುದನ್ನು ಕಾಣಬಹುದು.
ಕೈಗಾರಿಕೀಕರಣವು ಗುಡಿಕೈಗಾರಿಕೆಗಳಿಗೆ ಹಿನ್ನಡೆಯುಂಟು ಮಾಡಿತೆಂಬುದು ಸತ್ಯವಾದರೂ ಕುಲಮೂಲ ಕಸುಬಿನ ಕಲ್ಪನೆಯನ್ನು ದೊಡ್ಡ ಪ್ರಮಾಣದಲ್ಲಿ ಉಲ್ಲಂಘಿಸಲು ಕಾರಣವಾದದ್ದು ಒಂದು ಸಕಾರಾತ್ಮಕ ಬೆಳವಣಿಗೆ ಜಾತಿವ್ಯವಸ್ಥೆಯ ಭಾಗವಾಗಿ ಬೆಳೆದ ಉತ್ಪಾದನಾ ವಿಧಾನಕ್ಕೆ ಕೈಗಾರಿಕೀಕರಣದಿಂದ ಧಕ್ಕೆಯಾದ್ದರಿಂದ ಜಾತಿ ವ್ಯವಸ್ಥೆಗೂ ಪೆಟ್ಟು ಬಿದ್ದಿತು.
ಜೊತೆಗೆ, ಕೈಗಾರಿಕೀಕರಣದ ಫಲವಾಗಿ ಬಂದ ‘ಸಾಮೂಹಿಕ ಉತ್ಪಾದನಾ ವಿಧಾನ’ವು ವಿವಿಧ ಸಾಮಾಜಿಕ ಮೂಲದವರು ಒಂದೇ ಸೂರಿನಡಿ ಕೆಲಸ ಮಾಡುವ ಅನಿವಾರ್ಯತೆಯನ್ನು ತಂದೊಡ್ಡಿತು.
ಕೆಲಸದ ಸಮಯದಲ್ಲಾದರೂ ಅಸ್ಪೃಶ್ಯತೆಯ ಆಚರಣೆ ಸಾಧ್ಯವಿಲ್ಲವಾಯಿತು.
ಮಧ್ಯಮವರ್ಗದ ಹುಟ್ಟಿಗೆ ಕಾರಣವಾಯಿತು.
ಮುಖ್ಯವಾಗಿ, ಕೈಗಾರಿಕೀಕರಣವು ಮುಕ್ತ ಆರ್ಥಿಕ ಪದ್ಧತಿಯ ಸಿದ್ಧಾಂತವನ್ನು ಹೊತ್ತು ಬರಲಿಲ್ಲ.
ನಮ್ಮ ದೇಶದಲ್ಲಿ ಮಿಶ್ರ ಆರ್ಥಿಕ ಪದ್ಧತಿ ಜಾರಿಗೆ ಬಂತು.
ಆರ್ಥಿಕ ಕ್ಷೇತ್ರ ಹಾಗೂ ಉತ್ಪಾದನಾ ವಲಯದಲ್ಲಿ ಖಾಸಗಿ ಸರ್ವಾಧಿಕಾರಕ್ಕೆ ಅವಕಾಶವಿರಲಿಲ್ಲ.
ಆದರೆ ಜಾಗತೀಕರಣದಲ್ಲಿ ಅಂತಹ ಸ್ಥಿತಿಯಿಲ್ಲ.
ಇಲ್ಲಿ ಖಾಸಗಿಯವರದೇ ಮೇಲುಗೈ.
ಕೈಗಾರಿಕೀಕರಣದ ಸಂದರ್ಭದಲ್ಲಿ ದುಡಿಯುವ ಜನರ ಸಂಘಟನೆಗೆ ಮುಕ್ತ ಅವಕಾಶವಿದ್ದರೆ, ಜಾಗತೀಕರಣದ ಸಂದರ್ಭದಲ್ಲಿ ಬಂಡವಾಳಿಗರ ಸಂಘಟನೆಗೆ ಮುಕ್ತ ಅವಕಾಶವಿದೆ.
ಮಿಶ್ರ ಆರ್ಥಿಕ ಪದ್ಧತಿಯ ಬದಲು ಮುಕ್ತ ಆರ್ಥಿಕ ಪದ್ಧತಿ ಜಾರಿಯಲ್ಲಿದೆ.
ಈ ಪದ್ಧತಿಯ ಸ್ವರೂಪವನ್ನು ಕುರಿತು Herbert Aptekar ಅವರು ತಮ್ಮ ‘The Nature of democracy: Freedom and revolution’ಎಂಬ ಪುಸ್ತಕದಲ್ಲಿ ತುಂಬಾ ಸ್ಪಷ್ಟವಾಗಿ ವಿವರಿಸಿದ್ದಾರೆ.
ಅವರು ಸರಿಯಾಗಿ ಗುರುತಿಸಿರುವಂತೆ (ಜಾಗತೀಕರಣದ ಫಲವಾದ) ಮುಕ್ತ ಆರ್ಥಿಕ ಪದ್ಧತಿಯ ಉದ್ದೇಶ ಮತ್ತು ನೀತಿ (Purpose and Policy) ಹೀಗಿದೆ : ‘ಸರ್ಕಾರವು ಬಂಡವಾಳಶಾಹಿಯನ್ನು ನಿಯಂತ್ರಿಸಬಾರದು.
ಆದರೆ ಬಂಡವಾಳ ಶಾಹಿಯು ಸರ್ಕಾರವನ್ನು ನಿಯಂತ್ರಿಸಬಹುದು.
ಆರ್ಥಿಕ ಅಸಮಾನತೆಯು ಸಮಾಜದ ಸಹಜ ಸ್ವಾಭಾವಿಕ ಅಂಶ;
ಸ್ವಾತಂತ್ರ್ಯವೆನ್ನುವುದು ರಾಜಕೀಯಕ್ಕೆ ಮಾತ್ರ ಸಂಬಂಧಿಸಿದ್ದು, ಆರ್ಥಿಕ ವಿಚಾರಗಳಿಗಲ್ಲ.
ಹರ್‍ಬರ್‍ಟಅಪ್ತೇಕರ್ ಅವರು ಪ್ರಸ್ತಾಪಿಸಿದ ಅಂಶಗಳ ಅನುಭವ ನಮಗೀಗ ಆಗುತ್ತಿದೆ.
ಜಾಗತೀಕರಣದ ಫಲವಾಗಿ ಸ್ವಾತಂತ್ರ್ಯ ಮತ್ತು ಸಮಾನತೆಯ ಕಲ್ಪನೆ ಪಲ್ಲಟಗೊಂಡಿದೆ.
ಮೂಲತಃ ಆರ್ಥಿಕ ಕೇಂದ್ರಿತ ಜಾಗತೀಕರಣವು ಒಟ್ಟು ರಾಜಕೀಯ ವ್ಯವಸ್ಥೆಯನ್ನು ಬಂಡವಾಳ ಶಾಹಿ ಪರವಾಗಿ ತಿರುಗಿಸುತ್ತದೆ.
ಮುಕ್ತ ಆರ್ಥಿಕತೆ, ಮುಕ್ತ ಮಾರುಕಟ್ಟೆಗಳ ಪರಿಣಾಮದಿಂದ ಸ್ಥಳೀಯ ಉತ್ಪನ್ನಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ.
ಇದರ ಫಲವಾಗಿ ರೈತರು, ಬೆಸ್ತರು ಕರ ಕುಶಲಿಗರು ತಕ್ಕ ಮಾರುಕಟ್ಟೆಯಿಲ್ಲದೆ ಅಥವಾ ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಾಗದೆ ನರಳುತ್ತಾರೆ.
ಕೈಗಾರಿಕೀಕರಣದ ಫಲವಾಗಿ ಬಂದ ಯಂತ್ರ ನಾಗರಿಕತೆಗೆ ಒಗ್ಗಿಕೊಂಡಿದ್ದರೂ ಜಾಗತೀಕರಣದ ಫಲವಾಗಿ ಬಂದ ಮುಕ್ತ ಆರ್ಥಿಕ ನೀತಿಗೆ ‘ಶ್ರಮ ಸಮುದಾಯಗಳು’ ಬಲಿಪಶುಗಳಾಗುತ್ತಾರೆ.
ಇದು ಜಾಗತೀಕರಣದ ನೇರ ದುಷ್ಪರಿಣಾಮ.
ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ಭೂಸುಧಾರಣೆ ರಾಷ್ಟ್ರೀಕರಣದಂತ ಕಲ್ಪನೆಗಳು ನೆಲಕಚ್ಚಿ ಖಾಸಗೀಕರಣವು ಮುಕ್ತವಾಗಿ ವಿಜೃಂಭಿಸತೊಡಗಿದಂತೆ ಖಾಸಗಿ ಬದುಕು ಸಹ ‘ಮುಕ್ತ’ವಾಗುತ್ತ ತನ್ನದೇ ಸಾಮಾಜಿಕ-ಸಾಂಸ್ಕೃತಿಕ ಪರಿಣಾಮಗಳಿಗೆ ಕಾರಣವಾಗುತ್ತದೆ.
ಬದುಕಿನ ಆದರ್ಶಗಳು ಪಲ್ಲಟಗೊಳ್ಳುತ್ತವೆ.
ಇದು ವಿಶೇಷವಾಗಿ ಸಿನಿಮಾದಂತಹ ಸಮೂಹ ಮಾಧ್ಯಮಗಳಲ್ಲಿ ಬೇಗ ಪ್ರತಿಫಲಿತವಾಗುತ್ತದೆ.
ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಹೊಸ ತಾಂತ್ರಿಕ ಸಾಧ್ಯತೆಗಳಿಗೆ ಜಾಗತೀಕರಣವು ಕಾರಣವಲ್ಲ.
ಮುಂದುವರಿದ ಕೈಗಾರಿಕೀಕರಣದ ಶೋಧನಾತ್ಮಕತೆ ಕಾರಣ.
ಆದರೆ ಜಾಗತೀ ಕರಣವು ಸಿನಿಮಾದ ಆತ್ಮಕ್ಕೆ ಲಗ್ಗೆ ಹಾಕುತ್ತದೆ;
ಸಂವೇದನೆಗಳನ್ನು ಬದಲಾಯಿಸುತ್ತದೆ.
ಜಾಗತೀ ಕರಣಕ್ಕೆ ಮುಂಚೆಯೇ ಸಿನಿಮಾದಲ್ಲಿ ಸಂವೇದನೆ Vs ಸಂಪಾದನೆಯ ಅಂಶ ಇತ್ತು.
ಸಿನಿಮಾವನ್ನು ಮಾಧ್ಯಮ ಪ್ರಧಾನವಾಗಿ ಪರಿಗಣಿಸಿದವರು ಸಂವೇದನೆಗೂ, ಉದ್ಯಮ ಪ್ರಧಾನವಾಗಿ ಪರಿಗಣಿಸಿದವರು ಸಂಪಾದನೆಗೂ ಆದ್ಯತೆ ನೀಡುತ್ತ ಬಂದಿದ್ದಾರೆ.
ಈ ತಿಕ್ಕಾಟದ ನಡುವೆ ಮುಖ್ಯವಾಹಿನಿ ಚಿತ್ರಗಳು ಉದ್ಯಮ ಪ್ರಧಾನವಾದ ಅನೇಕ ಮುಖ್ಯವಾಹಿನಿ ಚಿತ್ರಗಳು ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿವೆ.
ವಿಧವಾ ವಿವಾಹ, ಅಂತರ್ ಜಾತಿಯ ವಿವಾಹ, ವರದಕ್ಷಿಣೆ ವಿರೋಧ, ಮುಂತಾದ ವಸ್ತುಗಳಲ್ಲದೆ ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆಗಳನ್ನು ಪ್ರತಿಪಾದಿಸಿವೆ.
ಈ ಅಂಶಗಳು ನಮ್ಮ ಸಮಾಜದಲ್ಲಿ ಜಾಗೃತ ಪ್ರಜ್ಞೆಯಾಗಿ ಕೆಲಸ ಮಾಡುತ್ತ ಬಂದದ್ದರ ಫಲವಾಗಿಯೂ ಮುಖ್ಯವಾಹಿನಿ ಚಿತ್ರಗಳು ಸಾಮಾಜಿಕ ಕಾಳಜಿಯ ಕಥಾವಸ್ತುಗಳನ್ನು ಸ್ವೀಕರಿಸಿರಬಹುದು.
ಆದರೆ ಮುಕ್ತ ಆರ್ಥಿಕತೆ, ಮುಕ್ತ ಮಾರುಕಟ್ಟೆಗಳ ಫಲವಾಗಿ ರೂಪುಗೊಳ್ಳುವ ‘ಮುಕ್ತ ಸಂವೇದನೆಗಳು’ ಸಾಮಾಜಿಕ ಕಾಳಜಿಯ ಕಥಾವಸ್ತುವನ್ನು ಕಡೆಗಣ್ಣಿಂದ ನೋಡುತ್ತವೆ ‘ಮುಕ್ತ ನಡವಳಿಕೆ’ಯ ಜೀವನ ಶೈಲಿಯನ್ನು ಆದರ್ಶವಾಗಿ ಸ್ವೀಕರಿಸುತ್ತವೆ.
ಅವುಗಳನ್ನು ರೋಚಕವಾಗಿ, ನವಿರಾಗಿ, ಚಿತ್ರಿಸುವುದರ ಮೂಲಕ ‘ಹೊಸ ಮಾದರಿ’ಗಳಾಗತೊಡಗುತ್ತವೆ.
ಈ ‘ಹೊಸ ಮಾದರಿ’ಗಳ ಸಾಮಾಜಿಕ-ನೈತಿಕ ಆಶಯಗಳು ಅಪ್ರಸ್ತುತವಾಗುತ್ತವೆ.
ನಮ್ಮ ಸಿನಿಮಾಗಳಲ್ಲಿನ ಪ್ರೇಮಿಗಳಿಗೆ ಪಾರ್ಕುಗಳ ಬದಲು ಪಬ್‌ಗಳು ಪ್ರಿಯವಾಗುತ್ತವೆ.
ಪ್ಯೂಡಲ್ ಕುಟುಂಬದ ವಿವಾಹೇತರ ಸಂಬಂಧದಲ್ಲೂ ಅಚಲ ಪ್ರೇಮನಿಷ್ಠೆ ತೋರುತ್ತ ಕುಡುಕನಾದ ಶರಶ್ಚಂದ್ರ ಚಟರ್ಜಿಯವರ ದೇವದಾಸ್ ಬದಲು ಚಟದ ದೇವದಾಸರು ಮುಖ್ಯರಾಗುತ್ತಾರೆ.
ಆರ್ಥಿಕ ಖಾಸಗೀ ಕರಣದಲ್ಲಿ ಖಾಸಗಿಯಾದದ್ದೆಲ್ಲ ಸಾರ್ವಜನಿಕ ಸ್ಥಾನಕ್ಕೆ ಬಂದಂತೆ ವ್ಯಕ್ತಿಯ ಖಾಸಗಿತನವೆಲ್ಲ ಸಾರ್ವಜನಿಕವಾಗುತ್ತದೆ.
ಮುಕ್ತ ಆರ್ಥಿಕತೆಯಂತೆ ಮುಕ್ತ ಮೈ ಬಯಲಾಗುತ್ತದೆ.
ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧೆಯೇ ಮುಖ್ಯವಾಗಿ ಮನುಷ್ಯ ಮನಸ್ಸು ಸಂಕುಚಿತವಾಗುತ್ತದೆ.
ಕೆಳಮಧ್ಯಮವರ್ಗ ಮತ್ತು ಕೆಳವರ್ಗಗಳ ಹತಾಶೆಯನ್ನು ತಣಿಸುವ ಉಪಾಯವಾಗಿ ‘ಹಿಂಸೆ’ ತೆರೆಯನ್ನು ತುಂಬುತ್ತದೆ.
ಕ್ಲಬ್‌ನಲ್ಲಿ ಮಾತ್ರ ನಡೆಯುತ್ತಿದ್ದ ಕ್ಯಾಬರೆ ನೃತ್ಯ ಬೀದಿಯಲ್ಲಿ ನಡೆಯಲಾರಂಭಿಸುತ್ತದೆ.
ಕ್ಯಾಬರೆ ನರ್ತಕಿಯರ ಸ್ಥಾನಚ್ಯುತಿಯಾಗಿ ನಾಯಕಿಯರೇ ಆ ಸ್ಥಾನವನ್ನು ತುಂಬುತ್ತಾರೆ.
ಊಟಕ್ಕೆ ಪಲ್ಯ ದಂತಿದ್ದ ಅಂಶಗಳೆಲ್ಲ ಊಟವೇ ಆಗುತ್ತವೆ.
ಕೊಲ್ಲುವ ಕ್ರೌರ್ಯದಲ್ಲಿ ಖುಷಿಪಡುವ, ಕಂಡವರ ಹೆಣ್ಣಿನ ಕಾಮದಲ್ಲಿ ಸುಖಿಸುವ ವಿಕೃತಿಗಳು ಆದರ್ಶ ಆಕೃತಿಗಳಾಗಿ ನೋಡುಗರ ಉತ್ಸಾಹ ಉಕ್ಕುತ್ತದೆ.
ಬೇರೆಯವರ ಹೆಂಡತಿಯನ್ನೂ ಬೇರೆಯವರಿಗೆ ನಿಶ್ಚಿತಾರ್ಥವಾದ ಹೆಣ್ಣನ್ನೊ ಪ್ರೇಮಿಸಿ ಪರಿತಪಿಸುವ ನಾಯಕರು ತಾವೇ ಆದಂತೆ ಆನಂದಿಸುವ ಪ್ರವೃತ್ತಿ ಕಾಣುತ್ತದೆ.
ಹಿಂಸೆ, ಕ್ರೌರ್ಯಗಳನ್ನು ಖಂಡಿಸಿದರೂ ಪ್ರೇಮದ ಹೆಸರಲ್ಲಿ ಕಾಮವನ್ನು ಕಟ್ಟಿಕೊಡುವ ನವಿರುತನಕ್ಕೆ ನವಿಲಾಗುವ ವಿಮರ್ಶೆಯ ವಿಲಾಸ ಕುಣಿಯುತ್ತದೆ.
ಈ ಎಲ್ಲ ವಿಲಾಸ ವಿಭ್ರಮಗಳ ಮಧ್ಯೆ ಸ್ಪಷ್ಟ ಸಾಮಾಜಿಕ ಕಾಳಜಿಯ ಸಿನಿಮಾಗಳಿಗೆ ಸಿನಿಕ ನೋಟ ಎದುರಾಗುತ್ತದೆ.
‘ಮನಸ್ಸಿಗೆ ಮೋಸ ಮಾಡುವ ಮಾದರಿಗಳು’ ಮೇಲುಗೈ ಪಡೆದು ಚಿಂತನಶೀಲ, ಸೃಜನಶೀಲ ಸಿನಿಮಾಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ.
ಇದು ಜಾಗತೀಕರಣದ ಆರ್ಥಿಕ ರಾಜಕೀಯದ ಫಲವಾದರೆ, ಸಿನಿಮೇತರ ಕಾರಣಗಳಿಗಾಗಿ ಕೆಲವು ಸಿನಿಮಾಗಳನ್ನು ಮೆಚ್ಚುವ, ಕೆಲವು ಸಿನಿಮಾಗಳನ್ನು ಕೊಚ್ಚುವ ‘ಸಾಂಸ್ಕೃತಿಕ ರಾಜಕೀಯ’ವು ಮೊದಲಿಂದಲೂ, ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬಂದಿದೆ.
‘ಪೂರ್ವಾಗ್ರಹ ಪ್ರಭುಗಳು ತಮಗೆ ಇಷ್ಟವಾದ ವ್ಯಕ್ತಿ ಮತ್ತು ವಸ್ತುಗಳ ಸಿನಿಮಾಗಳಲ್ಲಿ ಮಾತ್ರ ಶ್ರೇಷ್ಠತೆಯನ್ನು ಕಾಣುವ ಕ್ಷುಲ್ಲಕ ರಾಜಕೀಯಕ್ಕೇನೂ ಇಲ್ಲಿ ಕಡಿಮೆಯಿಲ್ಲ.
ಈ ಮಧ್ಯೆ ನಿಜವಾದ ರಾಜಕೀಯ ಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆಯ ಸಿನಿಮಾಗಳು ಬದುಕಬೇಕಾಗಿದೆ.
ಸಿನಿಮಾ ರಾಜಕೀಯ ಮತ್ತು ಸಿನಿಮಾದಲ್ಲಿ ರಾಜಕೀಯ – ಎರಡೂ ನೆಲೆಗಳು ಸಿನಿಮಾ ಮಾಧ್ಯಮದ ಭಾಗವಾಗಿವೆ.
ನೇರವಾಗಿ ರಾಜಕೀಯ ವಸ್ತುವನ್ನು ಪಡೆಯದಿದ್ದರೂ ವಿಶಾಲಾರ್ಥದಲ್ಲಿ ಸಿನಿಮಾದ್ದೇ ಒಂದು ರಾಜಕೀಯ ಇರುತ್ತದೆ – ಸಿನಿಮಾಕ್ಕೆ ಒಂದು ಎಕನಾಮಿಕ್ಸ್ ಇದ್ದ ಹಾಗೆ.
ಈ ಅಂಶವನ್ನು ಜೇಮ್ಸ್ ಮೊನೇಕೊ ಅವರು ತಮ್ಮ 'How to read a Film' ಎಂಬ ಗ್ರಂಥದಲ್ಲಿ ವಿವರಿಸುತ್ತಾರೆ.
ಜೇಮ್ಸ್ ಮೊನೇಕೊ ಅವರು ‘ಸಿನಿಮಾದ ರಾಜಕೀಯ’ವನ್ನು ಅದು ಜಗತ್ತಿನ ಜೊತೆ ಪಡೆದ ಸಂಬಂಧದ ಮೂಲಕ ಕಾಣಬಯಸುತ್ತಾರೆ.
ಅಂದರೆ ಒಂದು ಸಿನಿಮಾ ಮಾನವನ ಅನುಭವಗಳನ್ನು ಹೇಗೆ ಒಳಗೊಳ್ಳುತ್ತದೆ ಮತ್ತು ಹೇಗೆ ಪ್ರತಿಫಲಿಸುತ್ತದೆ ಎಂಬ ನೆಲೆಯಲ್ಲಿ ಅದರ ‘ಸಮಾಜೋ ರಾಜಕೀಯ’ ಕಂಡುಬರುತ್ತದೆ.
ಅಥವಾ ಸಿನಿಮಾದ ‘ಸಮಾಜೋ ರಾಜಕೀಯ’ವು ಮಾನವನ ಅನುಭವಗಳನ್ನು ಒಳಗೊಂಡ ಮತ್ತು ಪ್ರತಿಫಲಿಸಿದ ರೀತಿಯನ್ನು ವಿವರಿಸುತ್ತದೆ.
ವೈಯಕ್ತಿಕ ಹಾಗೂ ನಿರ್ದಿಷ್ಟ ಸಂಬಂಧವನ್ನು ಸಿನಿಮಾದ ‘ಮನೋರಾಜಕೀಯ’ವು ವಿವರಿಸುತ್ತದೆ.
ನನಗನ್ನಿಸುತ್ತದೆ : ಎಷ್ಟೋ ಸಿನಿಮಾಗಳು ‘ಸಮಾಜೋ ರಾಜಕೀಯ’ವನ್ನು ಪ್ರಧಾನವಾಗಿ ಪರಿಗಣಿಸದೆ ಇರಬಹುದು ಅಥವಾ ತಮ್ಮ ದೃಷ್ಟಿ ಅದಲ್ಲ ಎಂದು ನಿರ್ದೇಶಕರು ಹೇಳಬಹುದು.
ಹೀಗೆ, ಸಮಾಜೋರಾಜಕೀಯದ ಸಂಬಂಧಕ್ಕೆ ದೂರವಾಗಿರುವುದೇ ಒಂದು ಸಮಾಜೋ ರಾಜಕೀಯ’ – ಎಂದು ನನಗನ್ನಿಸುತ್ತದೆ.
ಯಾಕೆಂದರೆ, ಮನುಷ್ಯನ ಅನುಭವಗಳು ರೂಪುಗೊಳ್ಳುವುದು ಒಂದು ನಿರ್ದಿಷ್ಟ ಸಮಾಜದಲ್ಲಿ ಮತ್ತು ಆ ನಿರ್ದಿಷ್ಟ ಸಮಾಜ ರೂಪುಗೊಳ್ಳುವುದು ನಿರ್ದಿಷ್ಟ ರಾಜಕೀಯ ಸಂರಚನೆಯ ಒತ್ತಾಸೆಯಲ್ಲಿ.
ಸಮಾಜ, ಸಮಾಜ ಸಂರಚನೆಯ ರಾಜಕೀಯ, ಅದರ ಆರ್ಥಿಕ ಆಯಾಮ ಇವೆಲ್ಲವೂ ಪರಸ್ಪರ ಸಂಬಂಧವುಳ್ಳ ಅಂಗಗಳು.
ತನಗೆ ಮತ್ತು ತನ್ನ ಸಿನಿಮಾಕ್ಕೆ ಯಾವುದೇ ಸಾಮಾಜಿಕ ನಿಲುವಿಲ್ಲ, ಯಾವುದೇ ರಾಜಕೀಯ ನಿಲುವಿಲ್ಲ, ತಾನು ನಿರ್ಲಿಪ್ತ ಎಂದು ಹೇಳುವ ನಿರ್ದೇಶಕನದೂ ಒಂದು ರಾಜಕೀಯವೇ ಆಗಿರುತ್ತದೆ.
ನಿರ್ದಿಷ್ಟ ನಿಲುವನ್ನು ನಿರೀಕ್ಷಿಸುವ ಸಿನಿಮಾಗಳಲ್ಲೂ ತಾನು ನಿರ್ಲಿಪ್ತ ಎಂದು ಹೇಳುವ ಮೂಲಕ ಜಾಣತನದ ನಿಲುವನ್ನು ತಳೆದಂತಾಗುವುದರಿಂದ, ಸೂಕ್ಷ್ಮತೆಯ ಸೋಗಿನಲ್ಲಿ ಸರ್ವಮಾನ್ಯತೆ ಪಡೆಯುವ ರಾಜಕೀಯ ತಂತ್ರವಾಗಿ ‘ನಿರ್ಲಿಪ್ತತೆ’ಯು ಬಳಕೆಯಾಗುತ್ತದೆ.
ನಿರ್ಲಿಪ್ತತೆ ನಪುಂಸಕತ್ವವಾಗಬಾರದು.
ಪೂರ್ವನಿಶ್ಚಿತ ನಿಲುವುಗಳ ಮೂಲಕವೇ ವಸ್ತುವೊಂದನ್ನು ಪ್ರವೇಶಿಸುವ ಬದಲು ನಿರ್ಲಿಪ್ತವಾಗಿ ಪ್ರವೇಶಿಸಿ, ಪರಿಶೀಲಿಸಿ, ಆನಂತರ ನಿಲುವೊಂದನ್ನು ತಳೆಯುವುದು, ಪ್ರತಿಫಲಿಸುವುದು ಸರಿಯಾದ ಪ್ರಕ್ರಿಯೆ ಮತ್ತು ನಿರ್ಲಿಪ್ತತೆಯ ಪರಿಕಲ್ಪನೆಯು ವಸ್ತು ಪ್ರವೇಶಕ್ಕೆ ಅನ್ವಯಿಸುವ ಅಂಶವಾಗಿ ಮಾನ್ಯವಾದುದು.
ಯಾವುದೇ ನಿಲುವನ್ನು ತಳೆಯದೆ ನಿರ್ಲಿಪ್ತನಾಗಿದ್ದೇನೆಂದು ಭಾವಿಸುವುದು ಮತ್ತು ಅದನ್ನೇ ಪ್ರತಿಪಾದಿಸುವುದು ಸಮಾಜ ವಿಮುಖತೆಯೂ ಆಗಬಹುದಾದ ಅಪಾಯವಿದೆಯಲ್ಲವೆ?
ಸಮಾಜದ ಅನಾರೋಗ್ಯಕರ ನಿಲುವುಗಳಿಗೆ ಪ್ರತಿ ನಿಲುವು ತಳೆಯದೆ ಹೋದರೆ ಮೌನ ಸಮ್ಮತಿಯ ರಾಜಕೀಯವಾಗುವುದಿಲ್ಲವೆ?
ಈ ಪ್ರಶ್ನೆಗಳು ಪ್ರಬಲ ಸಮೂಹ ಮಾಧ್ಯಮವಾದ ಸಿನಿಮಾ ಸಂಬಂಧದಲ್ಲಿ ಹೆಚ್ಚು ಪ್ರಸ್ತುತವಾಗುತ್ತವೆ.
ನನ್ನ ಮಾತಿಗೆ ಪೂರಕವಾಗಿ ಮತ್ತೆ ಜೇಮ್ಸ್ ಮೊನೇಕೊ ಅವರ ವ್ಯಾಖ್ಯಾನವನ್ನು ಉಲ್ಲೇಖಿಸುತ್ತೇನೆ:“Film is such a wide spread popular phenomenon, it plays a very important part in modern culture, socio politically.
ಜೇಮ್ಸ್ ಮೊನೇಕೊ ಅವರು ಮುಂದುವರೆದು ‘ಸಿನಿಮಾದ ರಾಜಕೀಯ’ದಲ್ಲಿರುವ ವೈರುಧ್ಯಗಳನ್ನೂ ಗುರುತಿಸುತ್ತಾರೆ ಮತ್ತು ಈ ವೈರುಧ್ಯಗಳು ಸಿನಿಮಾದ ರಾಜಕೀಯವನ್ನು ನಿಯಂತ್ರಿಸುತ್ತವೆಯೆಂದು ಹೇಳುತ್ತಾರೆ.
ಸಿನಿಮಾಕ್ಕೆ ಒಂದು ಎಕನಾಮಿಕ್ಸ್ ಇದ್ದ ಹಾಗೆಯೇ ಒಂದು ಪಾಲಿಟಿಕ್ಸ್ ಇರುತ್ತದೆ ಎಂಬ ಅಂಶವು ಸಿನಿಮಾದ ಸ್ವರೂಪಕ್ಕೆ ಸಂಬಂಧಿಸಿದ್ದು.
ಸಿನಿಮಾದ ವಸ್ತುವೊಂದು ನಿರ್ದಿಷ್ಟ ಸಾಮಾಜಿಕ-ರಾಜಕೀಯ ನಿಲುವುಗಳನ್ನು ತಳೆಯುವುದು ಅಗತ್ಯ ಎಂಬ ಅಂಶವು ನಿರ್ದೇಶಕನ ದೃಷ್ಟಿಕೋನಕ್ಕೆ ಸಂಬಂಧಿಸಿದ್ದು.
ಜಾಗತೀಕರಣವು ಮುಕ್ತ ಆರ್ಥಿಕ ಪದ್ಧತಿಯ ರಾಜಕೀಯ ದೃಷ್ಟಿಧೋರಣೆಗಳ ಫಲವಾದ್ದರಿಂದ ಸಿನಿಮಾವನ್ನೂ ಒಳಗೊಂಡಂತೆ ಒಟ್ಟು ಸಾಂಸ್ಕೃತಿಕ ಕ್ಷೇತ್ರವು ನಿರ್ದಿಷ್ಟ ನಿಲುವು ತಳೆಯುವುದು ಮತ್ತು ತಂತಮ್ಮ ಕ್ಷೇತ್ರದ ಸೃಜನಶೀಲಕ್ರಿಯೆಯಲ್ಲಿ ಪ್ರತಿಸ್ಪಂದಿಸುವುದು ಅಗತ್ಯವಾದ ಸಂದರ್ಭದಲ್ಲಿ ನಾವು ನಿಂತಿದ್ದೇವೆ.
ಹಾಗೆ ನೋಡಿದರೆ, ಎಲ್ಲ ಕಲೆಗಳೂ ವಿಶಾಲಾರ್ಥದಲ್ಲಿ ಸಾಮಾಜಿಕ ಸಂಭವಗಳಾದ್ದರಿಂದ, ಈ ಸಂಬಂಧದ ‘ಸಮಾಜೋ ರಾಜಕೀಯ’ ಚರ್ಚೆ ಪ್ರಸ್ತುತವಾಗುತ್ತದೆ.
ಅಷ್ಟೇ ಅಲ್ಲ ಎಲ್ಲ ಕಲೆಗಳೂ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ.
‘ಜನಗಳಿಗೆ ಜವಾಬ್ದಾರ’ ಎಂಬುದನ್ನು ಸಾಂಸ್ಕೃತಿಕ ಕ್ಷೇತ್ರ ಮರೆಯಬಾರದು.
ಸಿನಿಮಾವನ್ನು ಜನಗಳಿಗೆ ಜವಾಬ್ದಾರಿಯಾದ ಅಭಿವ್ಯಕ್ತಿಯೆಂದು ನಂಬಿದ ಋತ್ವಿಕ್ ಘಟಕ್ ಅವರ ಮಾತು ಇಲ್ಲಿ ಉಲ್ಲೇಖನೀಯ .
ಎಲ್ಲಾ ಕಲಾಕಾರರೂ (ಸಿನಿಮಾ ನಿರ್ದೇಶಕರನ್ನೂ ಒಳಗೊಂಡಂತೆ) ಒಂದಲ್ಲ ಒಂದು ವರ್ಗಕ್ಕೆ ಸೇರಿದ ರಾಜಕೀಯ ನೆಲೆ ಹೊಂದಿರುತ್ತಾರೆಂಬ ಧ್ವನಿಯನ್ನು ಋತ್ವಿಕ್ ಘಟಕ್ ಅವರ ಮಾತುಗಳಲ್ಲಿ ಗುರುತಿಸಬಹುದು.
ಈ ಕಾರಣದಿಂದಲೇ ಸಿನಿಮಾವನ್ನು ನೋಡುವ, ವಿಮರ್ಶಿಸುವ ನೆಲೆಯೂ ನಿಯಂತ್ರಿತವಾಗುತ್ತದೆಯಲ್ಲವೆ ಎಂಬ ಪ್ರಶ್ನೆಯನ್ನು ಪರಿಶೀಲಿಸುವುದು ಅಗತ್ಯ.
ನಾನು, ನನ್ನದೇ ಚಿತ್ರಗಳ ಮೂಲಕ ಈ ಅಂಶವನ್ನು ಪರಿಶೀಲಿಸಬಯಸುತ್ತೇನೆ.
ನನ್ನ ಎಲ್ಲ ಚಿತ್ರಗಳೂ ಸಮಾಜೋ ರಾಜಕೀಯ ವಸ್ತುಗಳನ್ನು ಪಡೆದಿವೆ.
ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಸೂಚ್ಯವಾಗಿ ನಿರ್ದಿಷ್ಟ ನಿಲುವನ್ನು ಪ್ರಕಟಿಸುತ್ತವೆ.
ಪ್ರೇಮ, ಸಾಂಪ್ರದಾಯಿಕ ಸಂಬಂಧ, ಅತಿಭಾವುಕ ಸೆಳೆತಗಳಂತಹ ಸಾಮಾಕೃತ ಅನುಭವಗಳ ಬದಲು ಸಮಾಜದ ನಿರ್ದಿಷ್ಟ ವಲಯದ, ನಿರ್ದಿಷ್ಟ ಅನುಭವದ ನೆಲೆ – ನಿಲುವುಗಳಿಂದ ರೂಪುತಳೆದ ನನ್ನ ಸಿನಿಮಾಗಳನ್ನು ಪ್ರತಿಷ್ಠಿತ ವಿಮರ್ಶಾವಲಯ ಸಂಭ್ರಮದಿಂದೇನೂ ಸ್ವಾಗತಿಸಿಲ್ಲ.
ಕೆಲವರು ಹಾಡಿ ಹೊಗಳುವ ಸಿನಿಮಾಗಳ ಜೊತೆ ನನ್ನ ಸಿನಿಮಾಗಳನ್ನು ಸ್ವವಿಮರ್ಶೆಯ ನೆಲೆಯಲ್ಲಿ ತುಲನೆ ಮಾಡಿ ನೋಡಿದ್ದೇನೆ.
ಕೆಲವೇ ಕೆಲವರ ರಚನಾತ್ಮಕ ವಿಮರ್ಶೆಯ ಹೊರತಾಗಿ ಅನೇಕರ ವಿಚಿತ್ರ ‘ವಾರೆನೋಟ’ಕ್ಕೆ ವ್ಯಕ್ತಿ ಮತ್ತು ವಸ್ತುವನ್ನು ಕುರಿತ ಸಿನಿಕತನ ಮತ್ತು ಅಸಹನೆಗಳೇ ಕಾರಣವೆಂಬ ಅರಿವು ನನಗಾಗಿದೆ.
ಸ್ವಸಮರ್ಥನೆಗಾಗಿ ಈ ಮಾತನ್ನು ಹೇಳುತ್ತಿಲ್ಲ.
ಕನ್ನಡ ಚಿತ್ರರಂಗದಲ್ಲಿ ಸದಾ ಸಾಮಾಜಿಕ – ರಾಜಕೀಯ ಪ್ರಜ್ಞೆಯ ಸಿನಿಮಾಗಳನ್ನು ನಿರ್ದೇಶಿಸುತ್ತಿರುವ ನನಗೆ ಸರಿಯಾದ ವಿಮರ್ಶೆಯ ನ್ಯಾಯ ಸಿಕ್ಕಿಲ್ಲವೆಂಬ ಸತ್ಯ ಸಂಗತಿಯು ವೈಯಕ್ತಿಕ ನೆಲೆಯನ್ನು ಮೀರಿದ ಗಂಭೀರ ಚರ್ಚೆಯನ್ನು ಬಯಸುತ್ತದೆ.
ವ್ಯಕ್ತಿ ಮತ್ತು ವಸ್ತುವನ್ನು ಕುರಿತ ಸಿನಿಕತನ ಮತ್ತು ಅಸಹನೆಗಳಿಗೆ ವೈಯಕ್ತಿಕ ಕಾರಣಗಳಿರುವಂತೆಯೇ ಸಾಮಾಜಿಕ – ರಾಜಕೀಯ ಕಾರಣಗಳು ಇರುತ್ತವೆ ಅಥವಾ ಸಾಮಾಜಿಕ – ರಾಜಕೀಯ ಕಾರಣಗಳಿಂದ ಸಿನಿಕತನ ಮತ್ತು ಅಸಹನೆಗಳು ಪ್ರೇರಿತವಾಗಿರುತ್ತವೆ.
ಕಲಾತ್ಮಕತೆ ಮತ್ತು ಸೌಂದರ್ಯ ಪ್ರಜ್ಞೆಗೆ ಸಂಬಂಧಿಸಿದ ಸಿದ್ಧಮಾದರಿಗಳೂ ಮನಸ್ಸಿನಲ್ಲಿ ಕೆಲಸ ಮಾಡಿರುತ್ತವೆ.
ಸಿನಿಮಾವೊಂದನ್ನು ಮೂಲೆಗೆ ತಳ್ಳಲು ಕಲಾತ್ಮಕತೆ, ತಾಂತ್ರಿಕತೆ ಮುಂತಾದ ಮಾತುಗಳು ಸುಲಭ ಸಾಧನವಾಗಿ ‘ಈ ಚಲನಚಿತ್ರದ ವಸ್ತು ಚೆನ್ನಾಗಿದೆ.
ಆದರೆ ತಾಂತ್ರಿಕ ಕುಶಲತೆ ಇಲ್ಲ’ ಎಂದು ಸಲೀಸಾಗಿ ಪರ್ಮಾನು ಹೊರಡಿಸಲಾಗುತ್ತದೆ.
ಕಲಾತ್ಮಕತೆ, ತಾಂತ್ರಿಕ ಕುಶಲತೆ ಎಂದರೆ ಏನು?
ಆಧುನಿಕ ತಂತ್ರಜ್ಞಾನದ ಪರಿಕರಗಳನ್ನು ಬಳಸಿ ಮಾಡುವ ತಾಂತ್ರಿಕ ಕಸರತ್ತು ಅಥವಾ ಚಮತ್ಕೃತಿ (ಗಿಮಿಕ್ಸ್) ಗಳನ್ನು ಕೆಲವರು ತಾಂತ್ರಿಕ ಪರಿಣತಿ ಎಂದು ಭಾವಿಸುವುದುಂಟು.
ಯಾವುದೇ ವೈಚಾರಿಕ ಒಳ ಸೆಲೆಯಿಲ್ಲದೆ ಸಾಮಾನೀಕೃತ ಅನುಭವಗಳನ್ನು ರಂಜಕವಾಗಿ ನಿರೂಪಿಸಿದರೆ ಕಲಾತ್ಮಕ ಪರಿಣತಿ ಎಂದು ಭಾವಿಸುವವರೂ ಉಂಟು.
ಆದರೆ ಪ್ರಖರ ಸಾಮಾಜಿಕ – ರಾಜಕೀಯ ವಸ್ತುಗಳನ್ನು ಒಳಗೊಂಡ ಸಿನಿಮಾಗಳು ಈ ಮಾದರಿಯ ಕಲಾತ್ಮಕತೆ ಮತ್ತು ತಾಂತ್ರಿಕ ಕುಶಲತೆಗೆ ಹೊರತಾಗಿ ಬೇರೊಂದು ‘ಬಂಧ’ವನ್ನು ಕಂಡುಕೊಳ್ಳಲು ಹವಣಿಸುತ್ತದೆಯಾದ್ದರಿಂದ ಸಿನಿಮಾ ವಿಮರ್ಶೆಯು ಈ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.
ತಾಂತ್ರಿಕ ಕುಶಲತೆ ಅಥವಾ ಪರಿಣತಿಗಳು, ತಾಂತ್ರಿಕ ಪರಿಕರಗಳ ಬಳಕೆಗೆ ಮಾತ್ರ ಮೀಸಲಾದರೆ ಸಾಲದು.
ಒಟ್ಟು ಸಿನಿಮಾದ ನಿರೂಪಣಾ ತಂತ್ರ ಮತ್ತು ವಸ್ತು ನಿರ್ವಹಣೆಯ ಸೂಕ್ಷ್ಮ ವಿಧಾನವು ಕಲಾತ್ಮಕ ಮತ್ತು ತಾಂತ್ರಿಕ ಕುಶಲತೆಯ ಪ್ರಮುಖ ಅಂಶವೆಂದು ನನ್ನ ತಿಳುವಳಿಕೆ.
ಸಾಮಾಜಿಕ – ರಾಜಕೀಯ ಪ್ರಜ್ಞೆಯ ಸಿನಿಮಾಗಳಲ್ಲಿ ಈ ಅಂಶಗಳಿದ್ದರೂ ಪೂರ್ವನಿಶ್ಚಿತ ಸಾಮಾಜಿಕ ಸಾಂಸ್ಕೃತಿಕ ಅಭಿಪ್ರಾಯಗಳ ಕಾರಣದಿಂದ ಕೆಲ ವಿಮರ್ಶಕರಿಗೆ ಮತ್ತು ಪ್ರಬುದ್ಧ ಪ್ರೇಕ್ಷಕರಿಗೆ ‘ಪ್ರೀತಿಯ ಪ್ರವೇಶ’ ಸಾಧ್ಯವಾಗದೆ ಹೋಗ ಬಹುದು.
ಇಂಥವರ ಮನಸ್ಸಿನಲ್ಲಿ ನೆಲೆಯೂರಿರುವ ಸೌಂದರ್ಯ ಪ್ರಜ್ಞೆಗೂ ವರ್ಗಪ್ರಜ್ಞೆಗೂ ಸಂಬಂಧವಿರಬಹುದು.
ಆದ್ದರಿಂದ ಪ್ರೇಕ್ಷಕ ಮತ್ತು ವಿಮರ್ಶಕರ ಮನಸ್ಸಿನಲ್ಲಿ ತಮ್ಮನ್ನು ತಾವು ಮೀರಿ ಬೇರೊಂದು ಮಾದರಿಯ ಜೊತೆ ಸಂವಾದಿಸುವ ಸ್ಥಿತಿಯೊಂದು ಬೇಕಾಗುತ್ತದೆ.
ಯಜಮಾನ ಸಂಸ್ಕೃತಿಯಿಂದ ಪ್ರಣಿತವಾದ ಪ್ರಬುದ್ಧ ಜ್ಞಾನವು ಜನವಿರೋಧಿ ಆಶಯಗಳನ್ನು ಒಳಗೊಂಡಿರುತ್ತದೆಯೆಂಬ ಎಚ್ಚರ ಸದಾ ಇರಬೇಕಾಗುತ್ತದೆ.
ನಮ್ಮ ದೇಶದಲ್ಲೂ ಇಂತಹದೇ ಇತಿಹಾಸವಿದೆ.
ಆದರೆ ಈಗ ಎಲ್ಲ ಜನ ವರ್ಗಗಳಿಗೂ ಶಿಕ್ಷಣ ಮತ್ತಿತರ ಸೌಲಭ್ಯಗಳು ಲಭ್ಯವಾಗುತ್ತಿರುವುದರಿಂದ ಸಾಮಾಜಿಕ ಚಲನಶೀಲತೆ ಸಾಧ್ಯವಾಗಿ ಜನವಿಮೋಚನೆಯ ಆಶಯ ಮತ್ತು ಹೋರಾಟಗಳು ದಟ್ಟವಾಗುತ್ತ ಬಂದಿವೆ.
ಆದರೆ ಇದೇ ಸಂದರ್ಭದಲ್ಲಿ ಮುಕ್ತ ಆರ್ಥಿಕ ನೀತಿಯ ರಾಜಕೀಯ ವ್ಯವಸ್ಥೆ ಮೇಲುಗೈ ಪಡೆದು ಜನ ವಿಮೋಚನೆಯ ಆಶಯಗಳಿಗೆ ಹಿನ್ನಡೆಯಾಗುತ್ತಿದೆ.
ವಿಮೋಚನೆಯ ಹೋರಾಟಗಳಲ್ಲಿದ್ದ ಕೆಲವು ದೌರ್ಬಲ್ಯಗಳೇ ದೊಡ್ಡದಾಗಿ ಬಿಂಬಿತವಾಗುತ್ತಿವೆ.
ಜಾಗತೀಕರಣದ ಹೆಸರಲ್ಲಿ ಬಂದ ಆರ್ಥಿಕ ಉದಾರೀಕರಣವೇ ಅಂತಿಮ ಪರಿಹಾರವೆಂಬ ಭ್ರಮೆಯನ್ನು ಬೆಳೆಸಲಾಗುತ್ತಿದೆ.
ಇಂತಹ ಸನ್ನಿವೇಶದಲ್ಲಿ ವಿಮೋಚನೆಯ ಹೋರಾಟಗಳು ಆತ್ಮವಿಮರ್ಶೆಗೆ ತೊಡಗುವುದರೊಂದಿಗೆ ಸೂಕ್ತ ಕಾರ್ಯ ತಂತ್ರಗಳನ್ನು ರೂಪಿಸಿಕೊಂಡು ಜನಪರ ಆಶಯಗಳನ್ನು ಜೀವಂತವಾಗಿಡ ಬೇಕಾಗಿದೆ.
ಸಿನಿಮಾದಂತಹ ಸಮೂಹ ಮಾಧ್ಯಮಗಳು ಕಡೇ ಪಕ್ಷ ಜನವಿರೋಧಿಯಾಗದಂತೆ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ.
ಇದು ಎಲ್ಲ ಕಲೆಗಳ ಕೆಲಸವೂ ಹೌದು.
ಎಪ್ಪತ್ತರ ದಶಕದಲ್ಲಿ ಪ್ರಬಲವಾಗಿದ್ದ ಪ್ರಗತಿಪರ ಚಿಂತನೆಗಳು ಈಗ ಮತ್ತೊಮ್ಮೆ ಹೊಸ ಜೀವಶಕ್ತಿಯಿಂದ ಬೆಳಗಬೇಕಾಗಿದೆ.
ವಿಶೇಷವಾಗಿ, ಸಿನಿಮಾ ಎಂಬ ಶಕ್ತಿಯನ್ನು ನಮ್ಮ ಬೌದ್ಧಿಕ ವಲಯವು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಶ್ರೀ ಎಂ.ಬಿ. ಶ್ರೀನಿವಾಸನ್ ಅವರು ೧೯೭೮ರಲ್ಲಿ ಹೇಳಿದ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ.
ಸಿನಿಮಾ ಮಾಧ್ಯಮವನ್ನು ಅನಾದರದಿಂದ ಕಾಣುತ್ತಿರುವ ಬೌದ್ಧಿಕವಲಯದ ಅನೇಕರು ಈ ದಿಕ್ಕಿನಲ್ಲಿ ಚಿಂತಿಸಬೇಕಾಗಿದೆ.
ಸಿನಿಮಾವನ್ನು ಒಳಗೊಂಡಂತೆ ಜನಪ್ರಿಯ ಸಂಸ್ಕೃತಿಯ ಮಾದರಿಗಳನ್ನು ಪ್ರೀತಿಯಿಂದ ಕಾಣುವ, ಚರ್ಚಿಸುವ, ಸಂವಾದಿಸುವ, ಪರಿವರ್ತಿಸುವ ಪ್ರಕ್ರಿಯೆಗೆ ಹೊಸ ಚಾಲನೆ ದೊರಕಬೇಕಾಗಿದೆ.
ಒಂದು ಪ್ರಶ್ನೆ ಸಹಜವಾಗಿ ಏಳುತ್ತದೆ .
ಸಿನಿಮಾ ಮಾಧ್ಯಮವು ಒಂದಲ್ಲ ಒಂದು ರೀತಿಯಲ್ಲಿ ‘ಸಮಾಜೋ ರಾಜಕೀಯ’ ಆಯಾಮಾವನ್ನು ಪಡೆದಿರುತ್ತದೆಯೆಂಬುದನ್ನು ಒಪ್ಪಬಹುದಾದರೂ ರಾಜಕೀಯ ವಸ್ತುವಿನ ಸಿನಿಮಾಗಳು ಮಾತ್ರ ಮುಖ್ಯವೆ ಮತ್ತು ಜಾಗತೀಕರಣವನ್ನು ಎದುರಿಸಲು ಎಲ್ಲರೂ ರಾಜಕೀಯ ಸಿನಿಮಾಗಳನ್ನೇ ಮಾಡಬೇಕೆ?
ಯಾವುದೇ ಕಲೆಗೆ ಹೀಗೆ ಕಡಿವಾಣ ಹಾಕುವುದಾಗಲಿ, ಕಟ್ಟಪ್ಪಣೆ ವಿಧಿಸುವುದಾಗಲಿ ಸರಿಯಲ್ಲ.
ಏಕಮುಖಿಯಾದ ಸಿನಿಮಾಗಳನ್ನೇ ನಿರ್ಮಿಸಬೇಕೆಂದು ಪ್ರತಿಪಾದಿಸುವುದು ನನ್ನ ಈ ಲೇಖನದ ಆಶಯವಲ್ಲ.
ನನ್ನಲ್ಲಿ ಅಂತಹ ಅಭಿಪ್ರಾಯವೂ ಇಲ್ಲ.
ತಮಗೆ ತಾವೇ ರಾಜಕೀಯೇತರ ಕಲೆಗಾರರೆಂದು ಭಾವಿಸುವವರು ಸಹ ರಾಜಕೀಯದ ಭಾಗವಾಗಿರುತ್ತಾರೆಂದು ಮನವರಿಕೆ ಮಾಡಿಕೊಡುವುದು.
ಸಾಮಾನ್ಯೀಕೃತ ಅನುಭವಗಳ ರೋಚಕ ಸಿನಿಮಾಗಳನ್ನು ವೈಭವೀಕರಿಸಿ ಅಂಥ ಸಿನಿಮಾಗಳೇ ಸಮಕಾಲೀನ ಶ್ರೇಷ್ಠ ಮಾದರಿಗಳೆಂಬಂತೆ ಬಿಂಬಿಸುವುದು ಸರಿಯಲ್ಲವೆಂದು ಸ್ಪಷ್ಟವಾಗಿ ತಿಳಿಸುವುದು.
ನಿರ್ದಿಷ್ಟ ಸಾಮಾಜಿಕ – ರಾಜಕೀಯ ವಸ್ತುವಿನ ಸಿನಿಮಾಗಳಿಗೆ ಆಗುತ್ತಿರುವ ಅನ್ಯಾಯವನ್ನು ತಿಳಿಸಿ ಸಿನಿಮಾದ ಸಾಮಾಜಿಕ ಜವಾಬ್ದಾರಿಯನ್ನು ಪ್ರತಿಪಾದಿಸುವುದು ನನ್ನ ಈ ಲೇಖನದ ಪ್ರಧಾನ ಆಶಯವಾಗಿದೆ.
ಯಾವುದೇ ವಸ್ತುವನ್ನು ಒಳಗೊಂಡಿದ್ದರೂ ಸಿನಿಮಾದಲ್ಲಿ ಅದರ ಆತ್ಮಸಂಬಂಧಗಳನ್ನು ಸಾಮಾಜಿಕವಾಗಿಸುವ ಮೂಲಕ ವೈಯಕ್ತಿಕ ನೆಲೆಯನ್ನು ಮೀರಿದ ಪ್ರಾತಿನಿಧಿಕತೆಯನ್ನು ತಂದು ಕೊಡಬಹುದು.
ಈ ಮೂಲಕ ವೈವಿಧ್ಯಮಯ ವಸ್ತು ಸಂಪತ್ತನ್ನು ನಮ್ಮ ಸಿನಿಮಾದ ಅಮೂಲ್ಯ ಕೊಡುಗೆಯಾಗಿಸಬಹುದು.
ಆದ್ದರಿಂದ, ನೀವು ಯಾವುದೇ ವಸ್ತುವುಳ್ಳ ಸಿನಿಮಾ ಮಾಡಿ;
ಆದರೆ ಜನವಿರೋಧಿ ಆಶಯಗಳನ್ನು ಬಿತ್ತಬೇಡಿ.
ಇದು ನನ್ನ ಮೊದಲ ಮನವಿ.
ಸಮಾಜದಲ್ಲಿ ವಿವಿಧ ವರ್ಗಗಳು, ವಿವಿಧ ಅಭಿರುಚಿಗಳು ಇರುವುದರಿಂದ ಅದಕ್ಕನುಗುಣವಾದ ಸಿನಿಮಾಗಳು ನಿರ್ಮಾಣವಾಗುವುದು ಸಹಜ.
ಇದರ ಫಲವಾಗಿ ಜನವಿರೋಧಿಯಾದ ವಸ್ತುವುಳ್ಳ ಸಿನಿಮಾಗಳು ಬರಬಹುದು;
ಪ್ರತಿಗಾಮಿ ಪ್ರತಿಪಾದನೆಯ ಸಿನಿಮಾಗಳು ನಿರ್ಮಾಣ ವಾಗಬಹುದು.
ಸಾಮಾಜಿಕ ಚಲನಶೀಲತೆಗೆ ವಿರುದ್ಧವಾದ ಜಡಸಂಪ್ರದಾಯ ಹಾಗೂ ಹಿಂಸೆಯನ್ನು ವೈಭವೀಕರಿಸುವ ಚಿತ್ರಗಳು ತಯಾರಾಗಬಹುದು.
ನಾವು ಇವುಗಳ ನಿರ್ಮಾಣವನ್ನು ತಡೆಯಲಿಕ್ಕಾಗದು.
ಆದರೆ ಇಂತಹ ಚಿತ್ರಗಳನ್ನು ಸೂಕ್ತ ವಿಮರ್ಶೆಗೆ ಒಳಪಡಿಸಿ ಜನರನ್ನು ಚಲನಶೀಲಚಿಂತನೆಗೆ ತೊಡಗಿಸುವ ಕೆಲಸವನ್ನು – ಸಿನಿಮಾ ಚಿಂತಕರು, ವಿಮರ್ಶಕರು, ಪತ್ರಕರ್ತರು, ಲೇಖಕರು – ಒಟ್ಟಾರೆ ಸಾಧ್ಯವಾದ ಎಲ್ಲರೂ ಮಾಡಬೇಕಾಗಿದೆ.
ಬಹು ಸುಲಭವಾಗಿ ಮುದಗೊಳಿಸುವ ಜನಪ್ರಿಯ ಮಾದರಿಯೊಂದು ನಮ್ಮಲ್ಲಿದೆ.
ಒಂದು ಪ್ರೇಮಕತೆಯನ್ನು ತೆಗೆದುಕೊಂಡು ಸೂಕ್ಷ್ಮೋಪಾಯಗಳ ಮೂಲಕ ಪ್ರೇಕ್ಷಕರ ಕಾಮನೆಗಳನ್ನು ಬೆಚ್ಚಗೆ ಮಾಡುವುದು ಈ ಮಾದರಿ.
ಪ್ರೇಮಕಥಾವಸ್ತುವಿಗೆ ದೊಡ್ಡ ಪರಂಪರೆಯೇ ಇದೆ.
ಪ್ರೇಮ ಪ್ರಧಾನ ಚಿತ್ರ ಮಾಡುವುದು ತಪ್ಪಲ್ಲ; ಅದರ ಆಶಯ ತಪ್ಪು ದಾರಿ ಹಿಡಿಯಬಾರದು ಅಷ್ಟೆ.
ತಪ್ಪುದಾರಿ ಹಿಡಿದಿದೆಯೆಂದು ಗುರುತಿಸಲಾಗದಂತೆ ನವಿರು ನಿರೂಪಣೆಯ ಸಾಮರ್ಥ್ಯ ಪಡೆದ ಸಿನಿಮಾಗಳಿಂದ ‘ಮೋಸ ಹೋಗದೆ’ ಅವುಗಳ ಸ್ಥಾನ ನಿರ್ದೇಶನ ಮಾಡಬೇಕಾದ್ದು ಪ್ರಬುದ್ಧ ವಿಮರ್ಶೆಯ ಕೆಲಸ.
ಯಾಕೆಂದರೆ ಇಂತಹ ಚಿತ್ರಗಳಿಗೂ ಸಿನಿಮಾರಂಗದಲ್ಲಿ ತನ್ನದೇ ಆದ ಸ್ಥಾನವಿದೆ.
ಇಂತಹ ಚಿತ್ರಗಳು ವಹಿಸುವ ಪಾತ್ರವನ್ನು ಗಂಭೀರವಾಗಿ ಪರಿಗಣಿಸಿ ಚರ್ಚಿಸುವ ಮೂಲಕ ವೈವಿಧ್ಯಮಯ ವಸ್ತುಗಳ ನಡುವೆ ಉತ್ತಮವಾದದ್ದನ್ನು ಹುಡುಕಬೇಕು, ಗುರುತಿಸ ಬೇಕು, ಅರ್ಹತೆಗೆ ತಕ್ಕ ಗೌರವ ನೀಡಬೇಕು.
ಅದು ಬಿಟ್ಟು ಚಿತ್ರರಂಗದಲ್ಲಿ ಕ್ರಾಂತಿ ಸಂಭವಿಸುತ್ತದೆಯೆಂಬಂತೆ ಹುಸಿ ಸಂಭ್ರಮವನ್ನು ಬಿತ್ತುತ್ತ ಬಂಡವಾಳಶಾಹಿ ಸಂಸ್ಕೃತಿಯ ಲಾಭಕೋರ ಸೂಕ್ಷ್ಮಗಳಿಗೆ ಸೋಲುವುದು ಸರಿಯಲ್ಲ.
ಚಿತ್ರರಂಗದಲ್ಲಿ ಹುಸಿ ಉನ್ಮಾದಗಳು ಹೆಚ್ಚಾದ್ದರಿಂದ ಈ ಮಾತು ಹೇಳುತ್ತಿದ್ದೇನೆ.
ಜೇಮ್ಸ್ ಮೊನೇಕೊ ಅವರು ಸಿನಿಮಾಗಳ sociopolitics, psychopolitics ಜೊತೆಗೆ sexual politics ಅನ್ನು ಪ್ರಸ್ತಾಪಿಸುತ್ತಾರೆ.
ಪ್ರೇಮಕತೆಯ ಮೂಲಕ ಸೂಕ್ಷ್ಮವಾಗಿ ಮಾಡುವ ಸಿನಿಮಾಗಳ ವಿಷಯದಲ್ಲಿ ನಾವು – ವಿಶೇಷವಾಗಿ ಚಿಂತಕರು, ವಿಮರ್ಶಕರು ಮೈಮರೆಯಬಾರದು.
ನೇರವಾಗಿ ಸೆಕ್ಸ್ ಸಿನಿಮಾ ಹಣೆಪಟ್ಟಿಯಿಂದ ಬರುವ ಚಿತ್ರಗಳು ಕಡೇ ಪಕ್ಷ ಸ್ಪಷ್ಟವಾಗಿರುತ್ತವೆ.
ಆದರೆ ಸೆಕ್ಸ್ ಅನ್ನು ಸೂಕ್ಷ್ಮ ಸ್ತರಗಳಲ್ಲಿ ಅಳವಡಿಸುವ ಪ್ರೇಮಸಿನಿಮಾಗಳ sexual politics ಬೇರೆ ರೀತಿಯದು.
ಯಾವುದೇ ಮಾನವೀಯ ಮೌಲ್ಯಗಳಿಗೆ ನಿಷ್ಠವಾಗದ ಸಿನಿಮಾಗಳ sexual politics ಬಗ್ಗೆ ಎಚ್ಚರದ ಕಣ್ಣಿರಬೇಕು.
ಜಾಗತೀಕರಣದ ಸಂದರ್ಭದಲ್ಲಿ ಎಲ್ಲರೂ ‘ರಾಜಕೀಯ ಸಿನಿಮಾ’ಗಳನ್ನೇ ಮಾಡಬೇಕೆಂದು ನಾನು ಹೇಳುವುದಿಲ್ಲ.
ರಾಜಕೀಯ ಸಿನಿಮಾಗಳನ್ನು ಸೋಲಿಸುವ, ಸಾಯಿಸುವ, ಸಿನಿಮಾ ರಾಜಕೀಯವಿಲ್ಲದಿದ್ದರೆ ಸಾಕು;
ಸಾಮಾಜಿಕ – ರಾಜಕೀಯ ಪ್ರಜ್ಞೆಯ ಸಿನಿಮಾಗಳಿಗೆ ನ್ಯಾಯ ಸಿಗಬೇಕು.
ಈ ಆಶಯ ಸಿನಿಮಾ ನೋಟಕ್ಕೆ ಸಾರ್ಥಕ ಸಾಧ್ಯತೆಯೊಂದು ಸೇರಿದಂತಾಗುತ್ತದೆ.
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment