ದಕ್ಷಿಣದಲ್ಲಿರುವ ಎಲ್ಲಾ ಬೆಟ್ಟಗಳಲ್ಲಿ ಲುವೀನಾ ಬೆಟ್ಟವೇ ತೀರ ಎತ್ತರ, ಮತ್ತೆ ಅದರ ತುಂಬ ಕಲ್ಲು ಬಂಡೆ.
ಸುಣ್ಣ ಮಾಡುತ್ತಾರಲ್ಲ, ಅಂಥ ಕಲ್ಲು ಜಾಸ್ತಿ ಇವೆ.
ಲುವೀನಾದಲ್ಲಿ ಯಾರೂ ಸುಣ್ಣ ಅರೆಯುವುದಿಲ್ಲ.
ಅಥವಾ ಆ ಕಲ್ಲನ್ನ ಬೇರೆ ರೀತಿ ಉಪಯೋಗಿಸುವುದೂ ಇಲ್ಲ.
ಅದನ್ನ ಅವರು ಒಡ್ಡಗಲ್ಲು ಅನ್ನುತ್ತಾರೆ.
ಲುವೀನಾದ ಕಡೆಗೆ ಇರುವ ಏರನ್ನು ಒಡ್ಡಗಲ್ಲು ಬೆಟ್ಟ ಅಂತ ಕರೆಯುತ್ತಾರೆ.
ಗಾಳಿ, ಬಿಸಿಲು ಸೇರಿ ಒಡ್ಡಗಲ್ಲನ್ನು ಮುರಿದಿವೆ.
ಅದರ ಸುತ್ತ ಇರುವ ಮಣ್ಣು ಬೆಳಗಿನ ಇಬ್ಬನಿ ಬಿದ್ದಿದೆಯೋ ಅನ್ನುವ ಹಾಗೆ ಬೆಳ್ಳಗೆ ಹೊಳೆಯುತ್ತಿದೆ.
ಇದೆಲ್ಲ ಬರಿಯ ಮಾತು ಅಷ್ಟೇ.
ಲುವೀನಾದಲ್ಲಿ ಹಗಲು ಕೂಡ ರಾತ್ರಿಯಷ್ಟೇ ಚಳಿ ಇರುತ್ತದೆ.
ಇಬ್ಬನಿ ನೆಲಕ್ಕೆ ಬೀಳುವ ಮೊದಲು ಇರುಳ ಆಕಾಶದಲ್ಲಿ ದಟ್ಟವಾಗಿ ಇರುಕಿಕೊಂಡಿರುತ್ತದೆ.
ನೆಲ, ಕಡಿದಾದ ಇಳಿಜಾರು.
ಅಲ್ಲಲ್ಲಿ ಕೊಚ್ಚಿ ಹಾಕಿದ ಹಾಗೆ ದೊಡ್ಡ ಕಮರಿಗಳು.
ತಳವೇ ಕಾಣುವುದಿಲ್ಲ ಅನ್ನುವಷ್ಟರ ಆಳ.
ಈ ಕಮರಿಗಳಿಂದ ಕನಸು ಎದ್ದು ಬರುತ್ತವೆ ಅನ್ನುತ್ತಾರೆ ಲುವೀನಾದ ಜನ.
ನನಗೆ ಕೇಳುವುದು ಆ ಕಮರಿಗಳಿಂದ ಗಾಳಿ ಮೇಲೆದ್ದು ಬರುವುದು-ತಳದಲ್ಲಿ ಯಾರೋ ಸೆರೆಯಲ್ಲಿಟಿದ್ದು ಈಗ ಬಿಡಿಸಿಕೊಂಡು ಬರುತ್ತಿದೆ ಅನ್ನುವ ಹಾಗೆ ಸುಂಟರಗಾಳಿಯ ಥರ ಎದ್ದು ಬರುವ ಗಾಳಿ ಮಾತ್ರ.
ಎಲ್ಲಾ ಕಡೆ ಬೆಳಯುವ ಕಹಿ ಎಲೆ… ಬಿಡುವುದಿಲ್ಲ ಅದು.
ಆ ಪುಟ್ಟಗಿಡಗಳು ಬೆಟ್ಟದ ಮೈಗೆ ಒತ್ತಿಕೊಂಡ ಹಾಗೆ ಅವುಕಿಕೊಂಡಿದ್ದರೂ ಗಾಳಿ ಕಿತ್ತು ಬಿಸಾಡುತ್ತದೆ.
ಬಂಡೆಗಳ ನಡುವೆ, ನೆರಳು ಇರುವ ಕಡೆ, ಅಪರೂಪಕ್ಕೆ ಪುಟ್ಟ ಚಿಕಲೋಟೆ ಗಿಡ ಬೆಳದು ಬಿಳಿಯ ಹೂ ಬಿಡುತ್ತವೆ.
ಆದರೆ ಮಾತ್ರ ಬೇಗ ಒಣಗುತವೆ.
ಚಿಕಲೋಟೆ ಗಿಡಗಳ ಮುಳ್ಳು ಕಡ್ಡಿಗಳು ಗಾಳಿಯನ್ನು ಪರಚುತ್ತ ಸಾಣೆ ಕಲ್ಲಿನ ಮೇಲಿನ ಚಾಕುವಿನ ಹಾಗೆ ಸದ್ದು ಮಾಡುತ್ತವೆ.
"ಲುವೀನಾ ಮೇಲೆ ಬೀಸುವ ಗಾಳಿ ನೀನೇ ನೋಡುತ್ತೀಯ.
ಕಪ್ಪಗೆ ಇರುತದೆ.
ಜ್ವಾಲಾಮುಖಿಯ ಮರಳು ಹೊತ್ತು ಬರುತದೆ, ಅದಕ್ಕೇ ಕಪ್ಪಗೆ ಅನ್ನುತಾರೆ.
ನಿಜ ಏನು ಅಂದರೆ ಗಾಳಿಯೇ ಕಮ್ರ ಗಾಳಿ ನೀನೇ ನೋಡುತೀಯ.
ಲುವೀನಾಕ್ಕೆ ಬಂದು ವಾಸ್ತವ್ಯ ಮಾಡಿ ಊರಿನ ಎಲ್ಲ ವಸ್ತುಗಳನ್ನೂ ಕಚ್ಚುವ ಹಾಗೆ ಅಂಟಿಕೊಂಡು ಜೋತು ಬಿದ್ದಿರುತದೆ.
ಎಷ್ಟೋ ದಿನ ಮನೆ ಮನೆಯ ಚಾವಣಿಗಳನ್ನು ಹುಲ್ಲಿನ ಟೋಪಿಗಳ ಹಾಗೆ ಹೊತ್ತುಕೊಂಡು ಹೋಗುತ್ತದೆ.
ಮನೆಗಳನ್ನೆಲ್ಲ ರಕ್ಷಣೆ ಇಲ್ಲದೆ ಬತ್ತಲಾಗಿ ನಿಲ್ಲಿಸುತದೆ.
ಆಮೇಲೆ ಗಾಳಿ, ಉಗುರು ಇದೆಯೇನೋ ಅದಕ್ಕೆ ಅನ್ನುವ ಹಾಗೆ ಪರಚುತ್ತದೆ.
ಹಗಲೂ ರಾತ್ರಿ ಗಂಟೆಗಟಲೆ ಹೊತ್ತು ಬಿಡುವೇ ಇಲ್ಲದೆ ಗೋಡೆಗಳನ್ನು ಪರಚುತ್ತ, ಇಷ್ಟಿಷ್ಟಗಲ ನೆಲದ ಮಣ್ಣು ಕೆತ್ತಿಕೊಂಡು ಹೋಗುತ್ತ, ಬಾಗಿಲ ಬುಡವನ್ನು ಹಾರೆಯ ಹಾಗೆ ಎಬ್ಬುತ್ತ ನಮ್ಮೊಳಗೂ ಸೇರಿ ಪ್ರಕ್ಷುಬ್ಧವಾಗಿ ಅಬ್ಬರಿಸುತ್ತ ಮೂಳೆ ಕೀಲುಗಳನ್ನೆಲ್ಲ ಕಳಚಿ ಹಾಕುತದೆ ನೀನೇ ನೋಡುತೀಯ .
ಮಾತನಾಡುತ್ತಾ ಇದ್ದ ಮನುಷ್ಯ ಹೊರಗೆ ನೋಡುತ್ತಾ ಸ್ವಲ್ಪ ಹೊತ್ತು ಸುಮ್ಮನಿದ್ದ.
ನದಿಯ ನೀರು ಕಾಮಿಚಿನ್ ಕೊಂಬೆಗಳ ಮೇಲೆ ಹರಿಯುವ ಶಬ್ದ ಅವರ ಕಿವಿಯನ್ನು ಮುಟ್ಟುತಿತ್ತು.
ಬಾದಾಮಿ ಮರದ ಎಲೆಗಳ ನಡುವೆ ಗಾಳಿ ಸುಳಿಯುತ್ತಿರುವ ಸುದ್ದಿ, ಅವರಿದ್ದ ಅಂಗಡಿಯಿಂದ ಬೀದಿಯ ಮೇಲೆ ಬೀಳುತಿದ್ದ ಬೆಳಕಿನ ಇಷ್ಟಗಲ ಜಾಗದಲ್ಲಿ ಆಡುತಿದ್ದ ಹುಡುಗರ ಚೀರಾಟ ಇವೂ ಅವರಿಗೆ ತಲುಪುತಿದ್ದವು.
ಪತಂಗಗಳು ಬಂದು ಎಣ್ಣೆಯ ದೀಪಕ್ಕೆ ಎರಗುತ್ತ ರೆಕ್ಕೆ ಸುಟ್ಟು ಬೀಳುತಿದ್ದವು. ರಾತ್ರಿ ಕತ್ತಲು ಹೂರಗೆ ಮತ್ತೂ ಮುಂದಡಿ ಇಡುತ್ತ ಬರುತಿತ್ತು.
"ಹೇಯ್, ಕ್ಯಾಮಿಲೋ! ಇನ್ನೂ ಎರಡು ಬಿಯರ್ ಕೊಡು."ಅಂದು ಆ ಮನುಷ್ಯ ಮಾತು ಮತ್ತೆ ಶುರುಮಾಡಿದ.
"ಇನ್ನೂ ಇದೆ ಸ್ವಾಮೀ.
ನಿಮಗೆ ಲುವೀನಾದಲ್ಲಿ ನೀಲಿ ಆಕಾಶ ಕಾಣುವುದೇ ಇಲ್ಲ.
ಇಡೀ ದಿಗಂತಕ್ಕೆ ಬಣ್ಣವೇ ಇಲ್ಲ.
ಯಾವಾಗಲೂ ಮೋಡ ಮುಚ್ಚಿರುತ್ತದೆ.
ಬೂದಿ ಮಂಕು ಬಣ್ಣ ಹೋಗುವುದೇ ಇಲ್ಲ.ಬೆಟ್ಟದ ನೆತ್ತಿ ಬೋಳು.
ಒಂದು ಮರವೂ ಇಲ್ಲ.
ಕಣ್ಣಿನ ನೋಟ ತಡೆದು ನಿಲ್ಲುವುದಕ್ಕೆ ಹಸಿರು ಅನ್ನುವುದು ಎಲ್ಲೂ ಇಲ್ಲ.
ಸುಣ್ಣಧೂಳು ಬೆರೆತ ಮೋಡವೇ ಎಲ್ಲೆಲ್ಲೂ ಕವಿದುಕೊಂಡಿರುತದೆ.
ನೀನೇ ನೋಡುತ್ತೀಯ ಆ ಬೆಟ್ಟಗಳನ್ನ.
ಬೆಳಕು ಸತ್ತಿದೆಯೋ ಅನ್ನುವ ಹಾಗೆ ಇರುವ ಜಾಗ.
ಮೇಲೆ, ತುದಿಯಲ್ಲಿ ಲುವೀನಾ, ಬಿಳೀ ಮನೆಗಳ ಊರು, ಸತ್ತ ಮನುಷ್ಯನ ತಲೆಯ ಕಿರೀಟದ ಹಾಗೆ…"
ಮಕ್ಕಳ ಗಲಾಟೆ ಇನ್ನೂ ಹತ್ತಿರವಾಗುತ್ತ ಅಂಗಡಿಯೊಳಕ್ಕೇ ಬಂದಿತು.
ಅದಕ್ಕೇ ಆ ಮನುಷ್ಯ ಎದ್ದು ನಿಂತ.
ಬಾಗಿಲಿಗೆ ಹೋದ.
"ಹೋಗಿ ಇಲ್ಲಿಂದ ತೊಂದರೆ ಕೊಡಬೇಡಿ.
ಹೊರಗೆ ಹೋಗಿ ಆಟ ಆಡಿಕೊಳ್ಳಿ.
ಗಲಾಟೆ ಮಾಡಬೇಡಿ,"ಅಂದ.
ವಾಪಸ್ಸು ತಾನು ಕೂತಿದ್ದ ಟೇಬಲ್ಲಿಗೆ ಹೋಗಿ ಕೂತು ಮಾತು ಮುಂದುವರೆಸಿದ:
"ಹ್ಞೂಂ ಹೇಳತಾ ಇದ್ದೆನಲ್ಲ.
ಇಲ್ಲಿ ಮಳೆ ತುಂಬ ಕಡಮೆ.
ವರ್ಷದ ಮಧ್ಯದಲ್ಲಿ ಒಂದಾದ ಮೇಲೆ ಇನ್ನೊಂದು ಬಿರುಗಾಳಿ ಬಂದು ಅಪ್ಪಳಿಸುತದೆ.
ಭೂಮಿಯನ್ನೆಲ್ಲ ಸೀಳಿ ಹಾಕಿ ಒಳಗಿದ್ದ ಕಲ್ಲುಗಳ ಸಮುದ್ರವನ್ನಷ್ಟೇ ನೆಲದ ಮೇಲೇ ತೇಲುವ ಹಾಗೆ ಉಳಿಸಿ ಹೋಗುತದೆ.
ಆಮೇಲೆ, ತಿದಿಯ ಹಾಗೆ ಉಬ್ಬಿಕೊಂಡು ಬೆಟ್ಟದಿಂದ ಬೆಟ್ಟಕ್ಕೆ ಅಲೆಯುವ ಮೋಡ ನಿಧಾನವಾಗಿ ಉರುಳಿಕೊಂಡು ಹೋಗಿ ಬೆಟ್ಟದ ನೆತ್ತಿಗೆ ಡಿಕ್ಕಿ ಹೊಡೆದು, ಸದ್ದು ಮಾಡಿ, ಹಿಮ್ಮೆಟ್ಟಿ, ಬೆಟ್ಟದ ಅಂಚು ಸೀಳುವ ಹಾಗೆ ಮತ್ತೆ ಒತ್ತರಿಸಿಕೊಂಡು ಹೋಗುವುದನ್ನು ನೋಡುವುದಕ್ಕೆ ಚೆನ್ನಾಗಿರತದೆ.
ಹತ್ತು ಹನ್ನೆರಡು ದಿನ ಹೀಗಿದ್ದು ಹೋಗಿ ಬಿಡುತವೆ, ಮತೆ ಮುಂದಿನ ವರ್ಷದವರೆಗೂ ಪತ್ತೆ ಇರುವುದಿಲ್ಲ.
ಒಂದೊಂದು ಸಾರಿ ಎಷ್ಟೋ ವರ್ಷ ಬರುವುದೇ ಇಲ್ಲ…"
ಹ್ಞೂಂ ಮಳೆ ಕಡಮೆ.
ಇಲ್ಲವೇ ಇಲ್ಲ.
ಬಿದ್ದರೂ ನಾಕೈದು ಹನಿ.
ನೆಲ ಹಳೆಯ ಚರ್ಮದ ಹಾಗೆ ಒಣಗಿ, ಕುಗ್ಗಿ, ಬಿರುಕು ಬಿಟ್ಟಿದೆ.
ಆ ಬಿರುಕುಗಳನ್ನ ನೀರಿನ ದಾರಿ ಅಂತ ಕರೆಯುತ್ತಾರೆ ಇಲ್ಲಿನ ಜನ.
ಮತ್ತೇನಿಲ್ಲ, ಅವು ಕಲ್ಲಿನಷ್ಟು ಗಟ್ಟಿಯಾಗಿರುವ ಮೊನಚು ತುದಿಯ ಮಣ್ಣ ಹೆಂಟೆಗಳು.
ಕಾಲಿಗೆ ತಾಕಿದರೆ ಮುಳ್ಳು ನೆಲದ ಮೇಲೆ ನಡೆದಷ್ಟು ನೋವು.
ಇಲ್ಲಿ ನೆಲ ಇರುವುದೇ ಹಾಗೆ."
ಬಾಟಲಿಯ ತಳದಲ್ಲಿ ಬುರುಗು ಮಾತ್ರ ಉಳಿಸಿ ಬಿಯರ್ ಪೂರಾ ಕುಡಿದು ಮತ್ತೆ ಮಾತಾಡಿದ.
"ಯಾವ ಥರ ನೋಡಿದರೂ ಲುವೀನಾ ದುಃಖದ ಊರು.
ಈಗ ನೀನೇ ಅಲ್ಲಿಗೆ ಹೋಗತೀಯಲ್ಲ, ನನ್ನ ಮಾತಿನ ಅರ್ಥ ಆಗುತ್ತದೆ.
ದುಃಖ ಗೂಡು ಕಟ್ಟಿಕೊಂಡಿರುವ ಊರು ಅನ್ನತೇನೆ ನಾನು.
ನಗು ಅನ್ನುವುದು ಅಲ್ಲಿ ಯಾರಿಗೂ ಗೊತ್ತೇ ಇಲ್ಲ.
ಎಲ್ಲಾ ಮುಖಗಳೂ ಹುಟುತ್ತಲೇ ಸೆಟೆದುಕೊಂಡ ಹಾಗೆ ಇವೆ.
ನೀನು ಕಣ್ಣು ಬಿಟ್ಟು ನೋಡಿದರೆ ಒಂದೊಂದು ತಿರುವಿನಲ್ಲೂ ದುಃಖ ಎದುರಿಗೆ ಬರುತ್ತದೆ.
ಊರಲ್ಲಿ ಬೀಸುವ ಗಾಳಿ ದುಃಖವನ್ನು ಚದುರಿಸುತ್ತದೆ.
ಯಾವತ್ತೂ ಹಾರಿಸಿಕೊಂಡು ಹೋಗುವುದಿಲ್ಲ.
ದುಃಖ ಹುಟಿದ್ದೇ ಅಲ್ಲಿ ಆ ಊರಲ್ಲಿ ಅನ್ನುವ ಹಾಗೆ ಅಲ್ಲೇ ಇದ್ದುಬಿಟ್ಟದೆ.
ನೀನು ಬೇಕಾದರೆ ಅದನ್ನು ಮುಟ್ಟಿ ನೋಡಬಹುದು, ರುಚಿ ನೋಡಬಹುದು.
ನಿನ್ನ ಮೇಲೆ ಒತ್ತುತ್ತ ಇರುತದೆ, ಅದುಮುತ್ತ ಇರುತದೆ.
ಎದೆಯ ಗಾಯಕ್ಕೆ ಪೋಲ್ಟೀಸು ಕಟ್ಟಿದ ಹಾಗೆ ಇರುತದೆ.
"…ಹುಣ್ಣಿಮೆಯ ದಿನಗಳಲ್ಲಿ ಲುವೀನಾ ಬೀದಿಗಳಲ್ಲಿ ಕರೀ ಕಂಬಳಿ ಎಳೆದುಕೊಂಡು ಅಲೆಯುವ ಗಾಳಿಯ ಆಕಾರ ಕಾಣುತದೆ ಅನ್ನುತ್ತಾರೆ ಅಲ್ಲಿನ ಜನ.
ಆದರೆ ನನಗೆ ಮಾತ್ರ ಲುವೀನಾದ ಹುಣ್ಣಿಮೆಗಳಲ್ಲಿ ಹತಾಶೆಯ ಆಕಾರ ಮಾತ್ರ ಕಾಣುತಿತ್ತು… ಯಾವಾಗಲೂ.
"ಬಿಯರ್ ಕುಡಿ ನೀನು.
ಮುಟ್ಟೇ ಇಲ್ಲವಲ್ಲಾ, ಹಾಗೇ ಇದೆ ಕುಡಿ.
ಅಥವಾ ನಿನಗೆ ಬೆಚ್ಚಗಿರುವ ಬಿಯರ್ ಇಷ್ಟವಾಗುವುದಿಲ್ಲವೇನೋ.
ಇಲ್ಲಿ ಬೇರೆ ಥರ ಬಿಯರ್ ಸಿಗುವುದಿಲ್ಲ.
ಬೆಚ್ಚಗಿರುವ ಬಿಯರ್‌ಗೆ ರುಚಿ ಇರುವುದಿಲ್ಲ, ಗೊತ್ತು.
ಕತ್ತೆಯ ಉಚ್ಚೆಯ ಹಾಗೆ ಇರುತ್ತದೆ.
ಇಲ್ಲಿಗೆ ಬರತೀಯಲ್ಲ.
ಅಭ್ಯಾಸ ಆಗುತ್ತದೆ ಬಿಡು.
ಲುವೀನಾದಲ್ಲಿ ಇದೂ ಸಿಗಲ್ಲ.
ಅಲ್ಲಿ ಏನಿದ್ದರೂ ಹೋಹಾಸ್ ಎಲೆಗಳನ್ನು ಹಾಕಿ ಮಾಡಿದ ಮೆಸ್ಕಾಲ್ ಹೆಂಡ ಮಾತ್ರ.
ಎರಡು ಗುಟುಕು ಕುಡಿದರೆ ಸಾಕು, ಪೆಟ್ಟು ತಿಂದಾಗ ಆಗುವ ಹಾಗೆ ತಲೆ ಗಿರ್‌ರ್ ಅನ್ನುತದೆ.
ಆಮೇಲೆ ಕಪ್ಪು ಮಡಕೆಗಳನ್ನು ಹೊತ್ತು ನೆರಳುಗಳ ಹಾಗೆ ನಡೆದು ಹೋದರು.
"ಲುವೀನಾದಲ್ಲಿ ನಾನು ಕಳೆದ ಮೊದಲ ರಾತ್ರಿಯನ್ನು ಯಾವತ್ತೂ ಮರೆಯಲಾರೆ, ಈ ಕತೆ ಕೇಳಿದ ಮೇಲೆ ಇನ್ನೊಂದು ಬಿಯರ್ ಹಾಕಬೇಕು ಅನ್ನಿಸಿಲ್ಲವಾ? ನನಗಂತೂ ಆ ನೆನಪಿನ ಕೆಟ್ಟ ರುಚಿ ಹೋಗಿಸುವುದಕ್ಕೆ ಇನ್ನೊಂದು ಬೇಕು."
"ಲುವೀನಾದಲ್ಲಿ ನಾನು ಎಷ್ಟು ವರ್ಷ ಇದ್ದೆ ಅಂತ ಕೇಳಿದೆ.
ಅಲ್ಲವಾ?… ನಿಜ ಹೇಳತೇನೆ, ನನಗೆ ಗೊತಿಲ್ಲ.
ನನಗೆ ಒಂದು ಸಲ ಜ್ವರ ಬಂದು ವಾಸಿ ಆಗುವ ಹೊತ್ತಿಗೆ ಹೊತ್ತು ಗೊತ್ತು ಎಲ್ಲಾ ಅರಿವೂ ಹೊರಟು ಹೋಗಿತ್ತು.
ಅನಂತ ಕಾಲವೇ ಆಯಿತೇನೋ.
ಯಾಕೆಂದರೆ ಅಲ್ಲಿ ಕಾಲ ಬಲು ಉದ್ದ.
ಅಲ್ಲಿ ಯಾರೂ ಗಂಟೆಗಳ ಲೆಕ್ಕ ಹಾಕುವುದಿಲ್ಲ.
ವರ್ಷಗಳು ಉರುಳುವುದನ್ನೂ ಅವರು ಯಾರೂ ಗಮನಿಸಲ್ಲ.
ದಿನ ಶುರುವಾಗಿ ದಿನ ಮುಗಿಯುತದೆ.
ಆಮೇಲೆ ರಾತ್ರಿ.
ಹಗಲು ದಿನ ರಾತ್ರಿ ದಿನ ರಾತ್ರಿ.
ಸಾಯುವ ತನಕ ಇಷ್ಟೇ.
ಅಲ್ಲಿನ ಜನಕ್ಕೆ ಯಾವ ಆಸೆಯೂ ಇಲ್ಲ, ಭರವಸಯೂ ಇಲ್ಲ.
"ಹೇಳಿದ್ದೇ ಹೇಳತೇನೆ ಅಂದುಕೊಳುತ್ತೀಯೇನೋ.
ಆದರೂ ಇದು ನಿಜ.
ಹೊಸ್ತಿಲ ಮೇಲೆ ಕೂರುವುದು, ಸೂರ್ಯ ಹುಟ್ಟುವುದು, ನೆತ್ತಿಯ ಮೇಲೆ ಬರುವುದು, ಇಳಿದು ಮುಳುಗುವುದನ್ನ ನೋಡುವುದು.
ಮೈಯ ಕೀಲುಗಳೆಲ್ಲ ಸಡಿಲವಾಗುವವರೆಗೂ ಹೀಗೇ ಸುಮ್ಮನೆ ಅನಂತ ಕಾಲದವರೆಗೆ ನೋಡುತ್ತಾ ಇರುವುದು.
ಅಲ್ಲಿನ ಮುದುಕರು ಮಾಡುವುದು ಇಷ್ಟೇ.
"ಲುವೀನಾದಲ್ಲಿ ಇರುವವರೆಲ್ಲ ಮುದುಕರು, ಮತ್ತೆ ಜನ ಹೇಳುವ ಹಾಗೆ ಇನ್ನೂ ಹುಟ್ಟದೆ ಇರುವವರು, ಅಷ್ಟೆ.
ಹೆಂಗಸರು ಇದಾರೆ ಮೂಳೆ ಚಕ್ಕಳವಾಗಿ ನವೆದು ಹೋದವರು.
ಅಲ್ಲಿ ಹುಟ್ಟಿದ ಮಕ್ಕಳೆಲ್ಲ ಊರು ಬಿಟ್ಟು ಹೋಗಿದ್ದಾರೆ.
ಬೆಳಗಿನ ಹೊತ್ತು ಹುಟ್ಟುತಿದ್ದ ಹಾಗೇ ಮಕ್ಕಳು ವಯಸಿಗೆ ಬಂದು ಊರು ಬಿಟ್ಟು ಹೋಗುತಿದ್ದರು.
ತಾಯಿಯ ಎದೆ ಹಾಲು ಕುಡಿಯುವ ಮಕ್ಕಳು ಅಲ್ಲಿಂದ ಹಾಗೇ ನೆಗೆದು ಗುದ್ದಲಿ ಹಿಡಿದು ಊರು ಬಿಟ್ಟು ಹೋಗುತ್ತಾರೆ.
ಹಾಗೆ ಅನ್ನುತಾರೆ ಅಲ್ಲಿನ ಜನ.
"ಮುದುಕರು, ದಿಕ್ಕಿಲ್ಲದ ಹೆಂಗಸರು, ಗಂಡ ದಿಕ್ಕಾಪಾಲಾಗಿ ಹೋದ ಹೆಂಗಸರು ಮಾತ್ರ ಅಲ್ಲಿದ್ದಾರೆ.
ಊರಲ್ಲಿ ಆಗಾಗ ಜೋರು ಗಾಳಿ ಬೀಸುತದೆ ಅನ್ನುತಿದ್ದೆನಲ್ಲ ಹಾಗೇನೇ ಊರೂ ಬಿಟ್ಟು ಹೋದವರೂ ಒಂದೊಂದು ಸಾರಿ ಬರುತಾರೆ.
ಅವರು ಬಂದಾಗ ಊರೆಲ್ಲ ಪಿಸುಪಿಸು ಮಾತು, ಅವರು ಹೊರಟ ತಕ್ಷಣ ನರಳಾಟ, ಗೊಣಗಾಟ.
ಬಂದವರು ಮುದುಕರಿಗೆ ಅಂತ ಒಂದಿಷ್ಟು ದಿನಸಿ, ಹೆಂಡತಿಯರ ಬಸಿರಲ್ಲಿ ಒಂದು ಮಗು ಇರಿಸಿ ಹೊರಟು ಹೋಗುತ್ತಾರೆ.
ಬಂದರೆ ಮತ್ತೆ ಮುಂದಿನ ವರ್ಷವೇ.
ಒಂದೊಂದು ಸಲ ಹೋದವರು ಬರುವುದೇ ಇಲ್ಲ.
ಇದೇ ಸಂಪ್ರದಾಯ.
ಅಲ್ಲಿನವರು ಇದನ್ನು ಕಾನೂನು ಅನ್ನುತಾರೆ.
ಎರಡೂ ಒಂದೇ.
ಮಕ್ಕಳು ಅಪ್ಪ ಅಮ್ಮಂದಿರಿಗಾಗಿ ದುಡಿಯುತ್ತಾರೆ, ಅವರ ಹಿರಿಯರು, ಹಿರಿಯರ ಹಿರಿಯರು, ಅವರ ಹಿರಿಯರು ಮಾಡಿದ ಹಾಗೇ.
ಎಷ್ಟು ತಲೆಮಾರಿನಿಂದ ಈ ಕಾನೂನು ನಡೆದುಕೊಂಡು ಬಂದಿದೆಯೋ…
"ಮುದುಕರು ಹೊಸ್ತಿಲ ಮೇಲೆ ಕೂತು, ಕೈ ಇಳಿಬಿಟ್ಟುಕೊಂಡು ಅವರು ಬರಲಿ, ಸಾವು ಬರಲಿ ಅಂತ ಕಾಯುತ್ತಾರೆ.
ಆ ಊರಿನ ಒಂಟಿತನದಲ್ಲಿ ಮಕ್ಕಳ ಕೃತಜ್ಞತೆಯ ಕರುಣೆಗೆ ಕಾಯುತ್ತಾರೆ.
"ಒಂದು ಸಲ ಅವರ ಮನಸ್ಸು ಬದಲಾಯಿಸುವುದಕ್ಕೆ ನೋಡಿದೆ.
ಒಳ್ಳೆಯ ಜಮೀನು ಇರುವ ಕಡೆಗೆ ಯಾಕೆ ಹೋಗಬಾರದು ಅಂತ ಅವರನ್ನು ಒಪ್ಪಿಸುವುದಕ್ಕೆ ನೋಡಿದೆ.
ನಾವೆಲ್ಲಾ ಊರು ಬಿಟ್ಟು ಹೋಗೋಣ.
ಒಳ್ಳೆಯ ಜಾಗದಲ್ಲಿ ಬೇರೆ ಎಲ್ಲಾದರೂ ಇರೋಣ.
ಸರ್ಕಾರ ನಮಗೆ ಸಹಾಯ ಮಾಡತದೆ ಅಂದೆ.
"ಕಣ್ಣು ರೆಪ್ಪೆ ಮಿಟುಕಿಸದೆ ನನ್ನ ಮಾತು ಕೇಳಿದರು.
ಕಣ್ಣಿನ ಆಳದಿಂದ ಅವರ ದೃಷ್ಟಿ ನನ್ನನ್ನು ನೋಡುತಿತ್ತು.
ಒಳಗಿನಿಂದ ಎಲ್ಲೋ ಒಂದಿಷ್ಟೆ ಬೆಳಕು.
"ಸರ್ಕಾರ ನಮಗೆ ಸಹಾಯ ಮಾಡುತ್ತದೆ ಅನ್ನುತೀರಲ್ಲ ಮೇಷ್ಟರೇ, ಸರ್ಕಾರ ನಿಮಗೆ ಪರಿಚಯ ಇದೆಯಾ?" ಅಂತ ಕೇಳಿದರು.
"ಸರ್ಕಾರ ಗೊತ್ತು "ಅಂದೆ.
"ನಮಗೂ ಗೊತ್ತು.
ಸರ್ಕಾರ ನಮಗೂ ಗೊತ್ತು.
ಸರ್ಕಾರದ ತಾಯಿ ಯಾರು, ಅದು ನಮಗೆ ಗೊತಿಲ್ಲ ಅಂದರು."
ಈ ದೇಶ ನಮ್ಮ ಜನ್ಮದಾತ ಅಂದೆ.
ಅವರು ಅಲ್ಲ ಅನ್ನುವ ಹಾಗೆ ತಲೆ ಆಡಿಸಿದರು ನಕ್ಕರು.
ಲುವೀನಾದ ಜನ ನಕ್ಕಿದ್ದನ್ನು ಅದೊಂದೇ ಸಾರಿ ನಾನು ನೋಡಿದ್ದು.
ಹುಳುಕು ಹಲ್ಲು ಕಾಣುವ ಹಾಗೆ ನಕ್ಕು, ಇಲ್ಲ, ಸರ್ಕಾರಕ್ಕ ತಾಯಿ ಇಲ್ಲ ಅಂದರು."
ನಿನಗೆ ಗೊತ್ತಾ? ಅವರು ಹೇಳಿದ್ದು ಸರಿ.
ಅವರ ಮಕ್ಕಳಲ್ಲಿ ಯಾರಾದರೂ ಏನಾದರೂ ತಪ್ಪು ಮಾಡಿದಾಗ ಮಾತ್ರ ಸರ್ಕಾರ ಅವರನ್ನು ಜ್ಞಾಪಿಸಿಕೊಳ್ಳುತದೆ.
ಜನರನ್ನು ಕಳಿಸಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುತ್ತದೆ, ಕೊಲ್ಲುತ್ತದೆ.
ಅದರಾಚೆಗೆ ಈ ಜನ ಇದ್ದಾರೆ ಅನ್ನುವುದು ಸರ್ಕಾರಕ್ಕೆ ಗೊತ್ತುಕೂಡ ಇಲ್ಲ.
"ನಾವು ಲುವೀನಿಯಾ ಬಿಡಬೇಕು ಅನ್ನುತ್ತೀರ ಮೇಷ್ಟರೇ.
ನಿಮ್ಮ ಪ್ರಕಾರ ನಾವು ಹಸಿದುಕೊಂಡು ಬದುಕಿದ್ದು, ಹಸಿದಿರುವ ಅಗತ್ಯವಿಲ್ಲದೆ ಇದ್ದರೂ ಹಸಿದುಕೊಂಡಿರುವುದು ಸಾಕು ಅನ್ನುತ್ತೀರಿ.
ನಾವು ಊರು ಬಿಟ್ಟು ಹೋದರೆ ಇಲ್ಲಿ ಬದುಕಿದ್ದ ನಮ್ಮ ಹಿರೀಕರನ್ನ ನೋಡುವವರು ಯಾರು?